ಗುರುವಾರ, ಡಿಸೆಂಬರ್ 28, 2017

ಕನ್ನಡ ಹಸ್ತಪ್ರತಿಗಳು: ಬಹುಮುಖಿ ಪ್ರಯೋಜನ ( ಚಾರಿತ್ರಿಕ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಭಾಷಿಕ ಮಹತ್ವ ) ಡಾ.ಸಿ.ನಾಗಭೂಷಣ

       ಕನ್ನಡ ಹಸ್ತಪ್ರತಿಗಳು: ಬಹುಮುಖಿ ಪ್ರಯೋಜನ
( ಚಾರಿತ್ರಿಕ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಭಾಷಿಕ ಮಹತ್ವ )
                           ಡಾ.ಸಿ.ನಾಗಭೂಷಣ


  1. ವಿಷಯ ಪ್ರವೇಶಿಕೆ
  2. ಹಸ್ತಪ್ರತಿಗಳ ಚಾರಿತ್ರಿಕ ಮಹತ್ವ
  3. ಹಸ್ತಪ್ರತಿಗಳು ಮತ್ತು ಸಂಸ್ಕೃತಿಯ ಗ್ರಹಿಕೆ:
  4. ಸಾಹಿತ್ಯ ಚರಿತ್ರೆಯ ಅಧ್ಯಯನದ ಆಕರಗಳಾಗಿ ಹಸ್ತಪ್ರತಿಗಳು:
  5. ಸಾಂಸ್ಕೃತಿಕ ಆಯಾಮದ ಹಿನ್ನೆಲೆಯಲ್ಲಿ ಹಸ್ತಪ್ರತಿಗಳ ಭಾಷೆಯ ಗ್ರಹಿಕೆ
  6. ಮಾತು-ಬರೆಹ ಸಂಪಾದನೆ
  7. ಸಮಾರೋಪ


  1. ವಿಷಯ ಪ್ರವೇಶಿಕೆ: ಹಸ್ತಪ್ರತಿಗಳು ನಾಡಿನ ಸಂಸ್ಕೃತಿಯ ಭಂಡಾರಗಳು.ಸಾಹಿತ್ಯ ಸಂಸ್ಕೃತಿಯ ಸೃಷ್ಟಿಶೀಲ ಉತ್ಪನ್ನಗಳು. ಹಸ್ತಪ್ರತಿಗಳು ಯಾವುದೋ ಕಾಲದಲ್ಲಿ ಬರೆದಿಟ್ಟ ಏಕಘನಾಕೃತಿಯ ಸ್ಥಿರ ಪಠ್ಯಗಳಲ್ಲ. ಕಾಲ ಕಾಲದಲ್ಲಿ ಕನ್ನಡ ಸಂಸ್ಕೃತಿಯು ಪುನಾರಚಿಸಿಕೊಳ್ಳುತ್ತಾ ಬಂದ ಚರಪಠ್ಯಗಳು. ಹಸ್ತಪ್ರತಿಗಳ ಪರಂಪರೆಯು ಒಂದು ಕಾಲಾವಧಿಯಲ್ಲಿ ರಚಿತವಾಗಿರುವ ಕೃತಿಗಳ ಸಂಕಲನವಲ್ಲ. ಕೃತಿ-ಸಂಸ್ಕೃತಿ ನಡುವಿನ ಅರ್ಥಪೂರ್ಣ ಸಂಬಂಧಗಳ ಬೆಸುಗೆಯಾಗಿದೆ. ಕನ್ನಡಿಗರ ವಿದ್ಯಾಸಂಪತ್ತನ್ನು ಸಾಂಸ್ಕೃತಿಕ ಮಹತ್ವವನ್ನು ಗರ್ಭೀಕರಿಸಿಕೊಂಡಿವೆ. ಪ್ರಾಚೀನ ಕನ್ನಡಿಗರ ಬದುಕಿನ ಒಲವುಗಳನ್ನು, ವಿದ್ಯಾಭಿಮಾನ ಮತ್ತು ಧರ್ಮಾಭಿಮಾನಗಳನ್ನು ಅರಿತು ಕೊಳ್ಳಬಹುದು. ಕನ್ನಡ ಹಸ್ತಪ್ರತಿಗಳನ್ನು ಯಾವುದೇ ಕಾಲದ ಪಳೆಯುಳಿಕೆಗಳೆನ್ನದೆ ಹಾಗೂ ನಮ್ಮ ಕಾಲಕ್ಕೆ ಅಗತ್ಯವಲ್ಲದ ಪರಿಕರಗಳೂ ಎಂದು ಭಾವಿಸದೇ ಅವುಗಳನ್ನು ಕನ್ನಡ ನಾಡಿನ ಸಮಾಜ ಹಾಗೂ ಸಂಸ್ಕೃತಿ, ಭಾಷೆಗಳ ಕ್ರಿಯಾಶೀಲ ನಡೆವಳಿಕೆಗಳು ಎಂದು ಅರಿವಿನ ವಿಸ್ತಾರಗಳ ಪರಿಧಿಯಲ್ಲಿ ಗುರುತಿಸ ಬೇಕು. ಹಸ್ತಪ್ರತಿಗಳಲ್ಲಿ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಪೂರ್ಣ ವಿವರಗಳು ಕಂಡು ಬರುತ್ತವೆ. ಜ್ಞಾನದ ಅಧೀನತೆಯನ್ನು ಮೀರಿನಿಂತ ಹಸ್ತಪ್ರತಿಗಳು ಓದುವ-ಕೇಳುವ ಸ್ವಭಾವವನ್ನು ಹೊಂದಿದ್ದು ಸಂವಹನ ಹಾಗೂ ಅನುಭವ ಕಥನವನ್ನು ಆಧರಿಸಿವೆ. ಮಧ್ಯಕಾಲೀನ ಕನ್ನಡ ನಾಡಿನ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸಂದರ್ಭದ ಕನ್ನಡದ ದೈಹಿಕ ಮಾನಸಿಕ ಬೌದ್ಧಿಕ ಹಾಗೂ ಭಾವನಾತ್ಮಕ ಅಂತಃಸತ್ವಗಳೊಂದಿಗೆ ರೂಪುಗೊಂಡಿವೆ. ಅಧುನಿಕ ಪೂರ್ವದಲ್ಲಿ ಹಸ್ತಪ್ರತಿಗಳು ರೂಪುಗೊಳ್ಳುವಿಕೆಯಲ್ಲಿ, ಆಯುರಾರೋಗ್ಯಭಾಗ್ಯ, ಪುತ್ರಸಂತಾನ, ಸಕಲೈಶ್ವರ್ಯ ಸಿದ್ಧಿ, ಜೀವನಸುಖ, ಮನೋಭಿಷ್ಟ-ಕಾರ್ಯಸಿದ್ಧಿ, ಸ್ವ-ಸುಖದ ಹಾರೈಕೆ, ಸಂಪ್ರೀತಿ, ಸಮಯನಿಷ್ಠೆ, ಮೋಕ್ಷ ಸಂಪಾದನೆ, ರೋಗರುಜಿನಗಳ ನಿವಾರಣೆ, ಜ್ಞಾನಾರ್ಜನೆ, ಜ್ಞಾನರಕ್ಷಣೆ, ಅನಿಷ್ಟ ನಿವಾರಣೆ, ಮಳೆ ಬರುವಿಕೆ ಇತ್ಯಾದಿ ಹಲವು ರೀತಿಯ ಜೀವನೋಪಯೋಗಿ ಕಾರ್ಯಗಳು ಕಾರಣವಾಗಿರುವುದನ್ನು ಗುರುತಿಸ ಬಹುದಾಗಿದೆ. ಹಸ್ತಪ್ರತಿಗಳಲ್ಲಿರುವ ಅಧ್ಯಯನದ ವಿಷಯಗಳು ಹಲವಾರು. ಸಾಹಿತ್ಯ, ಸಮಾಜ, ಭಾಷೆ, ಇತಿಹಾಸ, ಧರ್ಮ ನಂಬಿಕೆ, ಆಚರಣೆ, ಆಚಾರ-ವಿಚಾರ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವೈದ್ಯ ಇತ್ಯಾದಿ ಲೌಕಿಕ ಶಾಸ್ತ್ರಗಳು ಇತ್ಯಾದಿ ನಮ್ಮ ಪರಂಪರೆಯ ಜ್ಞಾನಶಾಖೆಗಳೆಲ್ಲವೂ ಹಸ್ತಪ್ರತಿ ಅಧ್ಯಯನದ ವಸ್ತುಗಳೇ ಆಗಿವೆ. ಇವೆಲ್ಲವೂ ಆಯಾ ಕಾಲದ ಜನರ ಅಗತ್ಯಗಳಿಗಾಗಿಯೇ ರೂಪುಗೊಂಡಂತಹವುಗಳು. ಇವುಗಳ ಸೃಷ್ಟಿಯಲ್ಲಿ ಪ್ರಾದೇಶಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಹಾಗೂ ಲಿಂಗ, ಜಾತಿ ಇತ್ಯಾದಿ ಆಯಾಮಗಳಿವೆ. ಹಸ್ತಪ್ರತಿಗಳು ನಾಡಿನ ಸಂಸ್ಕೃತಿಯ ಭಂಡಾರಗಳು.ಸಾಹಿತ್ಯ ಸಂಸ್ಕೃತಿಯ ಸೃಷ್ಟಿಶೀಲ ಉತ್ಪನ್ನಗಳು. ಕನ್ನಡ ನಾಡಿನ ಜನ ಬದುಕಿನ ಪ್ರತೀಕಗಳಾದ ಹಸ್ತಪ್ರತಿಗಳ ಅಧ್ಯಯನವು ಕನ್ನಡ ಪರಂಪರೆ, ಕನ್ನಡ ಮನಸ್ಸು ಮತ್ತು ಕನ್ನಡ ಸಂಸ್ಕೃತಿಯ ಅಧ್ಯಯನದ ಗುರುತಾಗಿದೆ.
    ಹಸ್ತಪ್ರತಿ ರಕ್ಷಕರೂ, ಹಾಗೂ ಹಸ್ತಪ್ರತಿ ಸಂಗ್ರಹಕಾರರ ಬಗ್ಗೆ `ಅವರಿಗೆ ಹಸ್ತಪ್ರತಿಗಳ ಮಹತ್ವವೇ ತಿಳಿದಿರುವುದಿಲ್ಲ. ಮೂಢತೆಯನ್ನು ಹೊಂದಿರುತ್ತಾರೆ' ಎಂಬ ನಿಲುವನ್ನು ಸ್ವೀಕರಿಸ ಬಹುದಾದರೂ ಎಷ್ಟೋ ಕುಟುಂಬಗಳಲ್ಲಿ ಕಳೆದ ತಲೆಮಾರಿನಲ್ಲಿ ಕೂಡಾ ಹಸ್ತಪ್ರತಿಗಳನ್ನು ಓದುವವರಿದ್ದರು ಎಂಬುವುದನ್ನು ಮರೆಯುವಂತಿಲ್ಲ. ಹಸ್ತಪ್ರತಿಗಳನ್ನು ನೋಡುವವರಿರಲಿ, ಇಲ್ಲದಿರಲಿ ಒಳಗಣ ವಿಷಯ ತಿಳಿಯಲಿ, ತಿಳಿಯದಿರಲಿ ಅವುಗಳನ್ನು ಸಂಗ್ರಹಿಸುವ ಹವ್ಯಾಸ ಮನೋಭಾವವನ್ನು ನಮ್ಮ ಪೂರ್ವಿಕರಲ್ಲಿ ಹಲವರು ತಾಳಿದ್ದರಿಂದಲೇ ಇಂದು ನಾಡಿನಾದ್ಯಂತ ಹಾಗೂ ಹೊರಗಡೆ ಹಸ್ತಪ್ರತಿಗಳ ಸಂಗ್ರಹವಾಗಿರುವುದು. ಕನ್ನಡ ಹಸ್ತಪ್ರತಿಗಳ ರಕ್ಷಣೆಯನ್ನು ಧಾರ್ಮಿಕ ಕಾರಣಕ್ಕಾಗಿ ಮಾಡುತ್ತಿದ್ದರು ಎಂಬುದು ಮುಖ್ಯ ವಿಚಾರವಾದರೂ ಆ ಧಾರ್ಮಿಕ ಕಾರಣವನ್ನು ಕೇವಲ ಪೂಜೆ ಮಾಡುವುದಕ್ಕೆ ಎಂದು ಭಾವಿಸುವುದು ಸರಿಯಲ್ಲ. ಹಸ್ತಪ್ರತಿಗಳ ರಚನೆಯ ಅಗತ್ಯ ಆಧುನಿಕ ಜಗತ್ತಿನ ಸಮಾಜದ ಧಾರ್ಮಿಕರಿಗೆ ಇಲ್ಲದಿದ್ದರೂ ಹಸ್ತಪ್ರತಿಗಳ ರಕ್ಷಣೆಯ ಸಾಮಾಜಿಕ ಅಗತ್ಯ ಇಂದಿಗೂ ಇದ್ದೇ ಇದೆ.  ಮಠಗಳು ಸಂಸ್ಥೆಗಳ ಹಾಗೆ ಎಷ್ಟೋ ಜನ ವ್ಯಕ್ತಿಗಳು ತಮ್ಮ ತಮ್ಮ ಪರಿಸರದಲ್ಲಿ ತಾವು ನಂಬಿದ ಧಾರ್ಮಿಕತೆಯನ್ನು ಜೀವಂತವಾಗಿಸುವ ಮುಖ್ಯ ಅಂಶವಾಗಿ ಹಸ್ತಪ್ರತಿಗಳ ಸಂಗ್ರಹಣೆ, ಸಂರಕ್ಷಣೆಗಳನ್ನು ಹಿಂದಿನಿಂದಲೂ ಕೈಗೊಂಡಿದ್ದಾರೆ. 
     ಹಸ್ತಪ್ರತಿಗಳಲ್ಲಿ ಬಹುಪಾಲು ಪ್ರಕಟಗೊಂಡಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ. ಉಳಿದ ಜ್ಞಾನ ಶಾಖೆಗಳ ಹಸ್ತಪ್ರತಿಗಳಲ್ಲಿ ಕೆಲವು ಮಾತ್ರ ಪ್ರಕಟಗೊಂಡಿವೆ. ಉಳಿದ ಹಸ್ತಪ್ರತಿಗಳು ಉಪೇಕ್ಷಿತ ಹಸ್ತ ಪ್ರತಿಗಳಾಗಿಯೇ ಉಳಿದಿವೆ. ಕೃತಿಗಳ ಹೆಸರು ಗೊತ್ತಿದ್ದು ಅವುಗಳ ಹಸ್ತಪ್ರತಿಗಳು ದೊರೆತಿರುವುದಿಲ್ಲ. ಗೊತ್ತಿರದ ಎಷ್ಟೋ ಗ್ರಂಥಗಳು ಹಸ್ತಪ್ರತಿಗಳಲ್ಲಿ ಅಜ್ಞಾತವಾಗಿಯೇ ಉಳಿದಿವೆ. ಅವುಗಳ ಬಗೆಗೆ ಆಸಕ್ತರ ಹಾಗೂ ಸಂಗ್ರಹಕಾರರ ಮನವೊಲಿಸಿ ಹೊರತೆಗೆಯಬೇಕಾಗಿದೆ. ಹಸ್ತಪ್ರತಿಗಳನ್ನು ಸಾಂಸ್ಕೃತಿಕ ಅಧ್ಯಯನದ ಬಹುಮುಖ ನೆಲೆಗಟ್ಟುಗಳಲ್ಲಿ ರೂಪಿಸಿ ಕೊಳ್ಳುವುದಕ್ಕೂ ಮೊದಲು ಸಮಗ್ರ ಹಸ್ತಪ್ರತಿಗಳ ಸಂಗ್ರಹ ಮತ್ತು ಸಂರಕ್ಷಣೆಯಾಗ ಬೇಕು. ಜೊತೆಗೆ ಲಭ್ಯವಿರುವ  ಸಾಹಿತ್ಯೇತರ ಹಸ್ತಪ್ರತಿಗಳನ್ನು  ಪ್ರಕಟಿಸುವ ವ್ಯವಸ್ಥೆ ಆಗಬೇಕಾಗಿದೆ. ಇಂದು ಕನ್ನಡ ಹಸ್ತಪ್ರತಿಗಳ ಅಧ್ಯಯನ ಹೆಚ್ಚು ಚರ್ಚೆಗಳಿಲ್ಲದೆ ಕೇವಲ ಶಿಷ್ಟ ದಾಖಲೀಕರಣದ ಉತ್ಪನ್ನ ಎನ್ನುವ ಸಾಮಾನ್ಯ ತಿಳಿವಳಿಕೆಯನ್ನು ಮರುಪರಿಶೀಲಿಸ ಬೇಕಾಗಿದೆ. ಹಸ್ತಪ್ರತಿಗಳನ್ನು ಮಾತೃಕೆಯ ಮೂಲಕ ರೂಪುತಾಳುವ ಪೀಳಿಗೆಗಳ ಅಧ್ಯಯನದ  ಜೊತೆಗೆ ಸಾಂಸ್ಕೃತಿಕ ನಿರ್ಮಾಣದ ಬಹುಪಠ್ಯೀಯ ನೆಲೆಗಳ ಹಿನ್ನೆಲೆಯಲ್ಲಿಯೂ ಅಧ್ಯಯನ ಮಾಡಬೇಕಾಗಿದೆ. ಹಸ್ತಪ್ರತಿಗಳು ಒಂದೊಂದು ಪ್ರದೇಶದ ಸಾಂಸ್ಕೃತಿಕ ಸನ್ನಿವೇಶದ ಹಂಬಲ ಮತ್ತು ಹುನ್ನಾರಗಳ ಪ್ರತೀಕವೂ ಆಗಿದೆ.
     ವೈದ್ಯ, ಜ್ಯೋತಿಷ್ಯ, ವಾಸ್ತು,ಶಿಲ್ಪ, ಅಶ್ವ, ಗಜಶಾಸ್ತ್ರ, ಪಶುವೈದ್ಯ, ಮಾಟ-ಮಂತ್ರ ಮೋಡಿ ಮುಂತಾದ ವಿಷಯಗಳ ಹಸ್ತಪ್ರತಿಗಳಲ್ಲಿ ಕನ್ನಡ ಲಿಪಿ, ಲಿಪಿಕಾರರ ಕಾಲಾನುಕ್ರಮ ಬೆಳವಣಿಗೆಯ  ಚಿಂತನೆಗಳನ್ನು ಭಿನ್ನ ಮತಧರ್ಮಗಳ ಆಚಾರ ವಿಚಾರ ಮತ್ತು ಕನ್ನಡಿಗರ ಸೃಜನಾತ್ಮಕ ಪ್ರವೃತ್ತಿಯನ್ನು ತಿಳಿಯ ಬಹುದಾಗಿದೆ. ಹಸ್ತಪ್ರತಿಗಳ ಪಸರಣ ಕ್ರಿಯೆಯ ಮೂಲಕವಾಗಿ ಸಾಂಸ್ಕೃತಿಕವಾಗಿ ಮಹತ್ವ ಪಡೆದ ಮತ್ತು ಜನೋಪಯೋಗಿ ಕೃತಿಗಳು ಸಾಂಸ್ಕೃತಿಕ ಪರಿಚಲನೆಗೆ ಹಾಗೂ ಸಾಂಸ್ಕೃತಿಕ ಪಲ್ಲಟಕ್ಕೆ ಯಾವರೀತಿ ಒಳಗಾಗುತ್ತಿದ್ದವು ಎಂಬುದನ್ನು ಹಾಗೂ ಪ್ರತೀಕರಣ ಕ್ರಿಯೆಯಲ್ಲಿ ಕಾಲದಿಂದ ಕಾಲಕ್ಕೆ ವಿಭಿನ್ನ ಹಂತಗಳಲ್ಲಿ ಬದಲಾವಣೆ ಯಾವರೀತಿ ಆಗುತ್ತಿತ್ತು ಎಂಬುದು ಮಹತ್ವದ ಅಂಶವಾಗಿದೆ. ಹಸ್ತಪ್ರತಿಗಳು ರೂಪಾಂತರಗೊಳ್ಳುವ ಪ್ರಕ್ರಿಯೆಯಲ್ಲಿ ಭಾಷೆಯ ಶುದ್ಧ-ಆಶುದ್ಧತೆಯ ಬಗೆಗೆ ಚರ್ಚಿಸುವ ಅಗತ್ಯತೆ ಇಲ್ಲ ಎಂದೆನಿಸುತ್ತದೆ. ಏಕೆಂದರೆ ಪಠ್ಯ ಚಲನಶೀಲವಾಗಿರುವುದರಿಂದ ಆಯಾ ಕಾಲಘಟ್ಟದ ಹಾಗೂ ಭಾಷಿಕ ಸಮುದಾಯದ ಸಾಮಾಜಿಕ ನೆಲೆಗೆ ಒತ್ತು ಕೊಟ್ಟರೆ ಕೃತಿ ಪಡೆದುಕೊಳ್ಳುವ ಆಯಾಮ ಭಿನ್ನವಾಗಿರುತ್ತದೆ. ಪ್ರತಿಕರಣ ಕ್ರಿಯೆಯಲ್ಲಿ  ಪ್ರತಿಕಾರನ ಸಾಮಾಜಿಕ ಚಹರೆ ಕವಿ ಕೃತಿಯ ಮೇಲೆ ಪ್ರಭಾವ ಬೀರಿರುತ್ತದೆ ಪ್ರತಿಕಾರನ ಆಡುರೂಪಗಳು ಹಸ್ತಪ್ರತಿಯಲ್ಲಿದ್ದರೆ ಅವುಗಳನ್ನು ಸಾಂಸ್ಕೃತಿಕ ಹಾಗೂ ಭಾಷಿಕ ನೆಲೆಯಲ್ಲಿ ಅಧ್ಯಯನಕ್ಕೊಳ ಪಡಿಸ ಬಹುದಾಗಿದೆ. ಹಸ್ತಪ್ರತಿಯ ಪಠ್ಯದ ಮಹತ್ವವನ್ನು ಅನುಸರಿಸಿ ಚಲನಶೀಲತೆಯ ಗತಿ ಮತ್ತು ಪ್ರಮಾಣ ಭಿನ್ನವಾಗಿರುತ್ತದೆ. ಧಾರ್ಮಿಕ ಹಾಗೂ ನಿತ್ಯೋಪಯೋಗಿ ಕೃತಿಗಳ ಚಲನಶೀಲತೆಯ ಗತಿ ತೀವ್ರವಾಗಿರುತ್ತದೆ. ಮಿಕ್ಕ ಶಾಸ್ತ್ರ ಕೃತಿಗಳ ಚಲನಶೀಲತೆಯ ಗತಿ ನಿಧಾನ ಮತ್ತು ಕಡಿಮೆ.  ಈ ಪ್ರಕ್ರಿಯೆಯಲ್ಲಿ ಭಾಷಿಕರು ತಮ್ಮ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು  ಪ್ರಯತ್ನಿಸುತ್ತಾರೆ. ಬಹುಪಠ್ಯೀಯ ನೆಲೆಯನ್ನು ಹೊಂದಿರುವ ಹಸ್ತಪ್ರತಿಗಳು ತನ್ನ ಅರಿವಿನ ಪರಿಧಿಯನ್ನು ಆಧುನಿಕ ಕಾಲಘಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಆನ್ವಯಿಕತೆ ಮತ್ತು ಸಂವಹನದ ಮೂಲಕ ಸಕಾಲಿಕಗೊಳಿಸಿಕೊಳ್ಳ ಬೇಕಾಗಿದೆ. ತನ್ನಲ್ಲಿರುವ ಮಾಹಿತಿ ಸಂಪತ್ತನ್ನು ವರ್ತಮಾನದ ಬದುಕಿಗೆ ಅಗತ್ಯವಾಗುವ ರೀತಿಯಲ್ಲಿ ಪುನರಚಿಸಿಕೊಳ್ಳುವುದರ ಮೂಲಕ ಹಸ್ತಪ್ರತಿಗಳನ್ನು ಪ್ರಜಾಪ್ರಭುತ್ವೀಕರಣ ಗೊಳಿಸಬೇಕಾಗಿದೆ. ಚರಿತ್ರೆ, ವೈದ್ಯಶಾಸ್ತ್ರ, ಗಜಶಾಸ್ತ್ರ, ಅಶ್ವಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಕೃಷಿ ಶಾಸ್ತ್ರ ಮುಂತಾದ ಉಪೇಕ್ಷಿತ ವಿಷಯಗಳ ಹಸ್ತಪ್ರತಿಗಳನ್ನು ಅಧ್ಯಯನ ಮಾಡುವುದರ ಮೂಲಕ ಕುಸಿಯುತ್ತಿರುವ ದೇಸಿಪರಂಪರೆಯನ್ನು ಪುನರುಜ್ಜೀವನಗೊಳಿಸ ಬೇಕಾಗಿದೆ.    ಆಧುನಿಕ ತಂತ್ರಜ್ಞಾನವು ಹಸ್ತಪ್ರತಿಗಳ ಪಠ್ಯದ ಚಲನಶೀಲತೆ ಮತ್ತು ಪರಿಷ್ಕರಣಕ್ಕೆ ಪ್ರಬಲವಾದ ಸಾಧನವಾಗಿದೆ.
ಹಸ್ತಪ್ರತಿಗಳ ಅಧ್ಯಯನವನ್ನು ಗ್ರಂಥಸಂಪಾದನೆಯ ಚೌಕಟ್ಟಿನಿಂದ ಬದಿಗೆ ಸರಿಸಿ ನೋಡಿದಾಗ ಮಾತ್ರ ಅವುಗಳ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಸ್ತಪ್ರತಿಗಳಲ್ಲಿ ಕಂಡು ಬರುವ ಭಿನ್ನ ಪಾಠಗಳನ್ನು ಸಾಂಸ್ಕೃತಿಕ ಅಂಶಗಳ ಹಿನ್ನೆಲೆಯಲ್ಲಿ ನೋಡಬೇಕು. ಒಂದು ಕೃತಿಗೆ ಸಂಬಂಧಿಸಿದ ವಿವಿಧ ಹಸ್ತಪ್ರತಿಗಳಲ್ಲಿ ಕಂಡು ಬರುವ ಭಿನ್ನ ಪಾಠಗಳು ಅಥವಾ ಸ್ಖಾಲಿತ್ಯಗಳನ್ನು ಹಸ್ತಪ್ರತಿ ಅಧ್ಯಯನದ ನೆಲೆಯಲ್ಲಿ ಬೇರೆ ಬೇರೆ ಆಯಾಮಗಳ ಚೌಕಟ್ಟಿನನಡಿಯಲ್ಲಿ ಗುರುತಿಸ ಬೇಕಾಗಿದೆ. ಇವುಗಳು ಸಾಂಸ್ಕೃತಿಕ ಅಧ್ಯಯನದಲ್ಲಿ ಸಮಾಜದ ಪಠ್ಯಗ್ರಹಿಕೆಯ ಸ್ವರೂಪ ಮತ್ತು ಭಾಷಿಕವಾಗಿ ಪ್ರಾದೇಶಿಕ ಭಾಷೆಯ ಮಾದರಿಯ ಆಯಾಮವನ್ನು ಯಾವರೀತಿ ಪಡೆದುಕೊಂಡಿದೆಂಬುದನ್ನು ಗ್ರಹಿಸಬಹುದು. ಹಸ್ತಪ್ರತಿಗಳ ಅಧ್ಯಯನದ ಮೂಲಕ ಪ್ರಾಚೀನ ಕಾಲದ ಜನತೆಯ ವಿದ್ಯಾಭಿಮಾನ, ಧರ್ಮಾಭಿಮಾನ ಹಾಗೂ ಬದುಕಿನ ಪ್ರಜ್ಞೆಯನ್ನು ತಿಳಿದುಕೊಳ್ಳಲು ಸಾಧ್ಯ ಇರುವುದರಿಂದ ಮಹತ್ತರವಾದ ಸಾಂಸ್ಕೃತಿಕ ದಾಖಲೆಗಳಾಗಿವೆ. ಹಸ್ತಪ್ರತಿ ಪುಷ್ಪಿಕೆಗಳಲ್ಲಿ ಮತ್ತು ಭಿನ್ನಪಾಠಗಳಲ್ಲಿ ಅಡಗಿರುವ ಹೇರಳವಾದ ಸಾಂಸ್ಕೃತಿಕ- ಸಾಹಿತ್ಯ ವಿವರಗಳು ಸಂಸ್ಕೃತಿಯ ಪುನರ್ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. 
2.ಹಸ್ತಪ್ರತಿಗಳ ಚಾರಿತ್ರಿಕ ಮಹತ್ವ

     ಹಸ್ತಪ್ರತಿ ಪುಷ್ಟಿಕೆಗಳಲ್ಲಿ ದೊರೆಯುವ ಮತ್ತೊಂದು ಮುಖ್ಯ ಸಂಗತಿ ಎಂದರೆ `ಸ್ಥಳೀಯ ಅರಸರ ಚರಿತ್ರೆ, ಇವತ್ತು ಇತಿಹಾಸದಲ್ಲಿ ದಾಖಲಾಗದೆ ಇರುವ ಎಷ್ಟೋ ಸ್ಥಳೀಯ ವಿವರಗಳು ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿ ದೊರೆಯುತ್ತವೆ. ಜೊತೆಗೆ ಅಧಿಕಾರ ಇತ್ಯಾದಿ ವಿವರಗಳು ದೊರೆಯುತ್ತಿದ್ದು ಸ್ಥಳೀಯ ಅರಸರಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವಲ್ಲಿ ಪುಷ್ಪಿಕೆಗಳಲ್ಲಿಯ ಈ ಸಂಗತಿಗಳನ್ನು ಮೂಲ ಆಕರಗಳಾಗಿ ಪರಿಗಣಿಸ ಬೇಕಾಗಿದೆ. ನಿದರ್ಶನಕ್ಕೆ ಈಗಾಗಲೇ  ಬಿಜ್ಜಾವರದ ಮಹಾನಾಡ ಪ್ರಭುಗಳು ಹಾಗೂ ಹಾಗಲವಾಡಿ ಪಾಳೆಯಗಾರರ ಚರಿತ್ರೆಯನ್ನು ಅರಿಯುವಲ್ಲಿ ಹಸ್ತಪ್ರತಿಗಳ ಪುಷ್ಪಿಕೆಗಳು ಒದಗಿಸಿರುವ ಮಾಹಿತಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿರುವುದನ್ನು ಕಾಣಬಹುದು.  ಅದೇರೀತಿ ಕಳಲೆ ಮನೆತನ, ಕೆಳದಿ ಮನೆತನದ ಬಗೆಗೆ ಹಸ್ತಪ್ರತಿಗಳಲ್ಲಿ ಉಲ್ಲೇಖವಿದೆ.
ನಿದರ್ಶನಕ್ಕೆ.
 ಕಳಲೆ ನಂಜರಾಜನ ಹೆಸರಿನಲ್ಲಿ ದೊರೆಯುವ ಹಾಲಾಸ್ಯ ಮಾಹಾತ್ಮ್ಯ ಇತ್ಯಾದಿ ಕೃತಿಗಳ ಹಸ್ತಪ್ರತಿಗಳಲ್ಲಿ ಚಂದ್ರವಂಶೋದ್ಭವರಾದ ಭಾರದ್ವಾಜ ಗೋತ್ರದಾಶ್ವಲಾಯನ ಸೂತ್ರದ ರುಗ್ವೇದಿಗಳಾದ ಮಹಿಶೂರ ದಳವಾಯಿ ದೊಡ್ಡಯ್ಯನವರ ಪುತ್ರರಾದ ಕಳಿಲೆ ವೀರರಾಜಯ್ಯನವರ ಪುತ್ರರಾದ ನಂಜರಾಜೈಯ್ಯನವರು ಎಂಬ( ಕ.ಹ.ವ.ಸೂ. ಸಂ.9 ಕ್ರ.ಸಂ.358) ವಿವರಗಳಿದ್ದು ಕಳಲೆ ಮನೆತನದ ಅರಸರ ಬಗೆಗೆ ವಿವರಗಳು ತಿಳಿದು ಬರುತ್ತವೆ.   ಹದಿನೆಂಟನೆಯ ಶತಮಾನದಲ್ಲಿ ಮೈಸೂರು ಭಾಗದಲ್ಲಿ ಆಳ್ವಿಕೆ ನಡೆಸಿದ್ದ ಕಳಲೆ ನಂಜರಾಜನ ಬಗೆಗೆ ಆತನೇ ರಚಿಸಿದ ಭಕ್ತವಿಲಾಸ ದರ್ಪಣ ಕೃತಿಯ ಹಸ್ತಪ್ರತಿಯ ಪುಷ್ಪಿಕೆಯಿಂದ ಮಹತ್ತರವಾದ ಸಂಗತಿಗಳು ತಿಳಿದು ಬರುತ್ತವೆ.
   ಇಂತು ಕರ್ಣಾಟಕ ಭಾಷಾವಿರಚಿತಮಾಗಿ ಶ್ರೀಮಹಿಶೂರ ಸೇನಾಧಿಪ ದೊಡ್ಡರಾಜಪೌತ್ರ ವೀರರಾಜತನೂಜ ದಳಪತಿ ದೇವರಾಜಾನುರಾಜ ಕಳಲೆ ನಂಜರಾಜ ವಿರಚಿತಮಾದ ಭಕ್ತವಿಲಾಸದರ್ಪಣವೆಂಬ ಟೀಕಿನಲ್ಲಿ ವ್ಯಾಸಕೃತಮಾದ ಸ್ಕಂದೋಪಪುರಾಣದಲ್ಲಿ ಶಿವಭಕ್ತ ಮಹಾತ್ಮ್ಯದಲ್ಲಿ ಏಣಾದಿನಾಥರ ಚರಿತ್ರೆಯೆಂಬ ಇಪ್ಪತ್ತನೆಯ ಅಧ್ಯಾಯದ ಅರ್ಥ ನಿರೂಪಣಕ್ಕೆ ಮಂಗಳಂ
 `` ಇತಿ ಶ್ರೀಮದವಿತ ನಮಿತಾಂಭೋಜ ಸಂಭವ ಜಂಭಾರಿ ಪ್ರಮುಖ ನಿಖಿಲ ಸುರಾಸುರ ವಂದ್ಯಮಾನ ಗರಳಪುರಾಧಿನಾಥ ಚರಣಾರವಿಂದ ಸೇವಾಸಮಾಸಾದಿತ  ಗೀರ್ವಾಣಾಂಧ್ರ ಕರ್ಣಾಟಾಕಾದಿ ನಾನಾ ಭಾಷಾ ವಿಶೇಷ ಕಾವ್ಯರಚನಾ ಚಾತುರೀಧುರೀಣ ಶ್ರೀಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ರಾಜಮಾರ್ತಾಂಡ ಪ್ರೌಢಪ್ರತಾಪಾಪ್ರತಿಮ ವೀರ ನರಪತಿ ಬಿರುದಂತೆಂಬರ ಗಂಡ ಬಿರುದಾಂಕಿತ ಶಂಖಚಕ್ರ ಮಕರಮತ್ಸ್ಯ ಹನುಮದ್ಗುರುತ ಗಂಡಭೇರುಂಡ ಸಿಂಹ ಶರಭ ಸಾಲ್ವ ಭೂವರಾಹಾದಿ ನಾನಾವಿಧ ದೈವಧ್ವಜ ಬಿರುದಾಂಕಿತ ಸಕಲ ದೇಶಾಧೀಶ ಕಿರೀಟಕೋಟಿ ಮಣಿ ಫೃಣಿ ಸೀರಾಜಿತ ಚರಣಯುಗಳ ಯಾದವವಂಶ ತಿಲಕ ಮಹೀಸೂರ ಕೃಷ್ಣರಾಜ ಸೇನಾ ದೊಡ್ಡರಾಜ ಪೌತ್ರ ವೀರರಾಜತನೂಜ ದೇವರಾಜಾನುಜ ಕಳಲೆ ನಂಜರಾಜ ಪರರಾಜ ಮಧೇಭ ಪಂಚಾನನ ದಾನಕ್ಷೌತ್ರಾಧೀಶ್ವರ ಹನುಮಧ್ವಜ ಬಿರುದಾಂಕಿತ ಶಿವಪೂಜಾಧುರಂಧರ ಭಾರಧ್ವಾಜ ಗೋತ್ರಾಶ್ವಲಾಯನ ಸೂತ್ರ ಬುಕ್ಕಾಖಾಧ್ಯಾಯಿಕ ವಿಬುಧ ವಿಧೇಯ ರಾಜಮಾನ್ಯ ರಾಜ ಶ್ರೀಕಳಲೆ ನಂಜರಾಜ ವಿರಚಿತಮಾಗಿ.’’  ಹಸ್ತಪ್ರತಿ ಪುಷ್ಪಿಕೆಯಲ್ಲಿಯ ಈ ವಿವರಗಳು ಕಳಲೆ ನಂಜರಾಜನಂತಹ ಸ್ಥಳೀಯ ಅರಸರ ಬಗೆಗೆ ಶಾಸನಗಳಲ್ಲಿ ದೊರೆಯದೇ ಇರುವ ಮಾಹಿತಿಗಳನ್ನು ಒದಗಿಸಿವೆ. ಕೃಷ್ಣ ಕಥಾರತ್ನಾಕರ ಎಂಬ ಕೃತಿಯ ಆದಿಯಲ್ಲಿಯ  ಶ್ರೀಕೃಷ್ಣರಾಜ ಮಹಾರಾಜ ಕಂಠೀರವರಿಂದ ಶಕ 1787 ನೇ ರಕ್ತಾಕ್ಷಿ ಸಂವತ್ಸರದ ಚೈತ್ರಶುದ್ಧ 15 ಗುರುವಾರ ವಿರಚಿತಮಾದ ಎಂಬ ಹಾಗೂ ಅಂತ್ಯದಲ್ಲಿಯ ಶ್ರೀ ಮದ್ರಾಜಾಧಿರಾಜ ರಾಜಮಾರ್ತಾಂಡ ಕಂಠೀರವಾದ್ಯನೇಕ ಬಿರುದಾಂಕಿತ ಚಂಡಪ್ರಚಂಡೋದ್ದಂಡ ರಿಪುತಿಮಿರಮಾರ್ತಾಂಡ ಸರಸ ಕವಿತಾ ಚಮತ್ಕಾರ ಚತುರ ಶಿವಪೂಜಾ ಬದ್ಧ ದೀಕ್ಷಾ ದುರಂಧರ ನಂಜರಾಜಾಭಿದ ಮುಂಮಡಿ ಕೃಷ್ಣರಾಜ ವಡಯರವರಿಂ ಪ್ರಕಾಶಿತವಾದ ಶ್ರೀಕೃಷ್ಣಕಥಾರತ್ನಾಕರ ವೆಂಬ ಗ್ರಂಥದೊಳ್ ಎಂಬ ( ಕ.ಹ.ವ.ಸೂ. ಸಂ.1 ಕ್ರ.ಸಂ.327)  ಉಲ್ಲೇಖದಲ್ಲಿ ಮೈಸೂರು ಒಡೆಯರ ವಿಶೇಷಣಗಳನ್ನು ಗುರುತಿಸ ಬಹುದು. ಹಾಗೆಯೇ ಇಲ್ಲಿಯ ಹಸ್ತಪ್ರತಿಗಳಲ್ಲಿ  ಮೈಸೂರರಸರ ಪಟ್ಟಾಭಿಷೇಕ ಮುಹೂರ್ತ,ಮೈಸೂರು ಒಡೆಯರುಗಳಾದ ಚಾಮರಾಜ ಒಡೆಯರು ( ಶಾಲಿವಾಹನ ಶಕ 1493), ರಾಜವಡೆಯರು ಬೆಟ್ಟದ ಚಾಮರಾಜ     ಒಡೆಯರು( ಶಾಲಿವಾಹನ ಶಕ 1718)  ಕೃಷ್ಣರಾಜ ಒಡೆಯರ ಆಳ್ವಿಕೆಯ( ಶಾಲಿವಾಹನ ಶಕ 1721) ವೃತ್ತಾಂತ, ಮೈಸೂರು ನಗರದ ಪೂರ್ವೋತ್ತರ ಸಂಗತಿ, ಮೈಸೂರು ರಾಜವಂಶಾವಳಿ ಇತ್ಯಾದಿ ವಿವರಗಳು( ಕ.ಹ.ವ.ಸೂ. ಸಂ.9 ಕ್ರ.ಸಂ.580,581,582 583)   ದೊರೆಯುತ್ತವೆ. ಕಳಲೆ, ಹದಿನಾಡ ಮತ್ತು ಉಮ್ಮತ್ತೂರ  ಅರಸರು ಮತ್ತು ಮೈಸೂರಿನ ಒಡೆಯರಿಗೆ ಸಂಬಂಧಿಸಿದ   ಈ ಮಾಹಿತಿಗಳನ್ನು ಮೈಸೂರು ಒಡೆಯರ  ಹಾಗೂ  ಈ ಭಾಗದ ಸ್ಥಳೀಯ ಅರಸರ ಇತಿಹಾಸದ ಪುನರ್ರಚನೆಯಲ್ಲಿ ಪೂರಕ ಆಕರಗಳಾಗಿ ಬಳಸಿ ಕೊಳ್ಳ ಬಹುದು.
  ಬಿ.ವಿ.ಶಿರೂರ ಅವರು ಸಂಪಾದಿಸಿರುವ ಧೂಪದ ನಂಜೇಶ ಕವಿ ಬರೆದಿರುವ( ಕ್ರಿ..ಶ.1650) ಮೊಲ್ಲೆ ಬೊಮ್ಮಯ್ಯರ ಕಾವ್ಯದ ಹಸ್ತಪ್ರತಿಯು ಯಲಬುರ್ಗಾದ ಹಿರೇಮಠದಲ್ಲಿ ದೊರೆತಿದ್ದುಜಗದೇವನೊಂದಿಗೆ ಸೇರಿ ಬಿಜ್ಜಳನನ್ನು ಕೊಂದ ಮಲ್ಲೆಬೊಮ್ಮಯ್ಯನ ಇತಿವೃತ್ತವನ್ನು ಒಳಗೊಂಡಿದ್ದು ಯಲಬುರ್ಗಾ ಪರಿಸರದ ಕ್ರಿ.ಶ.1154 ಮತ್ತು 1186 ರ ಕಲ್ಲೂರು ಶಾಸನಗಳಲ್ಲಿಯ ಮಲ್ಲೆ ಬೊಮ್ಮಯ್ಯನ ವಿವರಗಳನ್ನು  ಸಮರ್ಥಿಸುತ್ತದೆ. ಹೀಗಾಗಿ ಈ ಹಸ್ತಪ್ರತಿಗೆ ಚಾರಿತ್ರಿಕ ಮಹತ್ವ ಸಲ್ಲುತ್ತದೆ.
 ಎಂ.ಎಂ.ಕಲಬುರ್ಗಿ ಮತ್ತು ವೀರಣ್ಣ ರಾಜೂರ ಅವರು ಸಂಪಾದಿಸಿರುವ ಕಂಪಲಿಯ ದೊಡ್ಡನಗೌಡರ ಮನೆಯಲ್ಲಿ ದೊರೆತ ಹೊಸ ಕುಮಾರ ರಾಮನ ಸಾಂಗತ್ಯ  ಹಸ್ತಪ್ರತಿಯಲ್ಲಿಯ ವಿವರಗಳು ಕೊಪ್ಪಳ ಶಾಸನದಲ್ಲಿ ಪ್ರಸ್ತಾಪಿಸಿದ್ದ, ಕುಮಾರರಾಮನು ಕಮ್ಮಟ ದುರ್ಗದ ಜೈನರನ್ನು ಹೊರಹಾಕಲು ನಿಜವಾದ ಕಾರಣ ಸಂಗತಿಗಳನ್ನು ತಿಳಿಸುತ್ತದೆ. ಅಂದರೆ ಈ ಹಸ್ತಪ್ರತಿಯು ಕುಮ್ಮಟ ದುರ್ಗವನ್ನು ಆಳಿದ ಕುಮಾರ ರಾಮ ಮತ್ತು  ಅಲ್ಲಿಯ ಜೈನಮನೆತನದ ವ್ಯಕ್ತಿಗಳ ಮನಸ್ತಾಪಕ್ಕೆ ಕಾರಣವಾದ ಜಾತಿಸೂತಕ ಸಂದರ್ಭದ ಬಗೆಗೆ ವಿವರಗಳಿವೆ. ಅಂದರೆ ಕುಮಾರರಾಮನನ್ನು ಪ್ರೀತಿ ಗೌರವಾದರಗಳಿಂದ ಬರಮಾಡಿಕೊಂಡ ಕುಮ್ಮಟದುರ್ಗದ ಜೈನಮನೆತನದ ವ್ಯಕ್ತಿಗಳು ಸತ್ಕರಿಸಿ ಕಳುಹಿಸಿ, ನಂತರ ಕುಮಾರ ರಾಮ ಕುಳಿತ ಸ್ಥಳ ಮಲಿನವಾಯಿತೆಂಬ ಭಾವನೆಯಿಂದ ಅದನ್ನು ಶುದ್ಧಗೊಳಿಸಿದರೆಂಬ ವದಂತಿಯನ್ನು ಕೇಳಿ ತಿಳಿದ ಕುಮಾರ ರಾಮ ಜೈನರನ್ನು ಕುಮ್ಮಟ ದುರ್ಗದಿಂದ ಹೊರ ಹಾಕಿದ್ದಲ್ಲದೆ, ಜೈನ ಬಸದಿಯಲ್ಲಿ ಕುರಿಕೋಣಗಳನ್ನು ವಧಿಸಿದ ಪ್ರಸಂಗಗಳನ್ನು ಈ ಹಸ್ತಪ್ರತಿಯು ಉಲ್ಲೇಖಿಸುತ್ತದೆ.
  ಕೆಳದಿ ವಸ್ತು ಸಂಗ್ರಹಾಲಯದಲ್ಲಿರುವ 17 ನೇ ಶತಮಾನಕ್ಕೆ ಸೇರಿದ ಶ್ರೀರಂಗಪಟ್ಟಣಕ್ಕೆ ಸಂಬಂಧಿಸಿದ ಇತಿಹಾಸ ಗ್ರಂಥ ಹಸ್ತಪ್ರತಿ (ಹಸ್ತಪ್ರತಿ ಸಂಖ್ಯೆ:244)ಯಲ್ಲಿರುವ ಶ್ರೀರಂಗಪಟ್ಟಣದ ವರ್ಣನೆಯ ವಿªಹಸ್ರಪ್ರತಿಯಲ್ಲಿರುವ ಶ್ರೀರಾಮಾನುಜಾಯ ನಮ:ಶ್ರೀ ಕೃಷ್ಣದೇವರಾಯನ ಉಲ್ಲೇಖ, ಬಿಜಾಪುರದ ಆಲಿ ಆದಿಲ್ ಷಾಹ, ಅಹಮ್ಮದ್ ನಗರದ ನಿಜಾಂಷಹ,ಗೋಲ್ಕಂಡದ ನವಾಬನ ಚಾರಿತ್ರಿಕ ಸಂಗತಿಗಳನ್ನು ನಾಡಿನ ಸ್ಥಳೀಯ ಚರಿತ್ರೆಯ ಅಧ್ಯಯನಕ್ಕೆ ಬಳಸಿಕೊಳ್ಳಬಹುದಾಗಿದೆ. ಅದೇ ರೀತಿ ಶಿವಮೊಗ್ಗಾ ತಾಲೋಕಿನ ಕುಸ್ಕೂರಿನಲ್ಲಿ ದೊರೆತು ಈಗ ಕೆಳದಿ ವಸ್ತು ಸಂಗ್ರಹಾಲಯದಲ್ಲಿರುವ ಕೆಳದಿ ಅರಸರ ನಿರೂಪಗಳು ಹಸ್ತಪ್ರತಿಯಲ್ಲಿಯ ಕೆಳದಿ ಚೆನ್ನಾಮ್ಮಾಜಿಯ ವಿವರಗಳು, ಭದ್ರಪ್ಪನಾಯಕರು ವೆಂಕಟಗೆ ಬರಸಿ ಕಳುಹಿದ ಕಾರ್ಯ ಮುಂತಾದ ಚಾರಿತ್ರಿಕ ದಾಖಲೆಗಳು ಕೆಳದಿ ಅರಸರನ್ನು ಅರ್ಥೈಸಲು ಸಹಕಾರಿಯಾಗಿವೆ. (ಹಸ್ತಪ್ರತಿ ಸಂಖ್ಯೆ:286. ಪು.23) 

 ಕೆಳದಿ ಅರಸರು, ಇಕ್ಕೇರಿ ಅರಸರು, ಸ್ವಾದಿ ಅರಸರು, ಬಿದನೂರಿನ ಅರಸರನ್ನು ಉಲ್ಲೇಖಿಸುವ ಹಸ್ತಪ್ರತಿಗಳನ್ನು ಶೋಧಿಸಿ ಅಧ್ಯಯನಕ್ಕೊಳ ಪಡಿಸ ಬೇಕಾಗಿದೆ, ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ  ಕಾಲದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಇಮ್ಮಡಿ ಬಸವಪ್ಪನಾಯಕನ  ಶಿವತತ್ವರತ್ನಾಕರಕೆಳದಿ ಗಂಗದೇವಿಯದೆಂದು ಹೇಳಲಾದ ಕೆಳದಿ ರಾಜಾಭ್ಯುದಯ, ಬಸವರಾಜಾಭುದ್ಯಯಕರ್ನಾಟಕ ಶಿವಗೀತೆ, ಪರಮದೇವ ಕವಿ ವಿರಚಿತ ತುರಂಗ ಭಾರತ ಹಾಗೂ  ಕೆಳದಿ ಅರಸರನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಕೀರ್ತನೆಗಳು ಇತ್ಯಾದಿ ಲಭ್ಯವಿರುವ ಹಸ್ತಪ್ರತಿಗಳೆಲ್ಲವನ್ನು   ವ್ಯವಸ್ಥಿತವಾಗಿ ಅಧ್ಯಯನಕ್ಕೆ ಒಳಪಡಿಸುವ ಮೂಲಕ ಹೊಸ  ಅಂಶಗಳನ್ನು ಹೊರತೆಗೆಯ ಬೇಕಾಗಿದೆ. ಈಗಾಗಲೇ ಕೆಳದಿ ನೃಪ ವಿಜಯ, ಕೆಳದಿ ಸಂಸ್ಥಾನದ ರಾಯರ ವಂಶಾವಳಿ ಇತ್ಯಾದಿ ಕೃತಿಗಳನ್ನು ಆಧರಿಸಿ ಕೆಳದಿ ಮನೆತನದ ಬಗೆಗೆ ಅಧ್ಯಯನ ನಡೆದಿದೆ.  ಕೆಳದಿನೃಪವಿಜಯವು  ಹರಪನಹಳ್ಳಿ ಪಾಳೆಗಾರರು ಮೊದಲುಗೊಂಡು ಇತರೆ ಸ್ಥಳೀಯ ಅರಸರ ಜೊತೆಗೆ ಹೊಂದಿದ್ದ ಸಂಬಂಧಗಳು ಇತ್ಯಾದಿ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ  ಅಂಶಗಳನ ಅಧ್ಯಯನ ಮಾಡ ಬೇಕಾಗಿದೆ.
ಮೈಸೂರು. ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯ ವರ್ಣನಾತ್ಮಕ ಹಸ್ತಪ್ರತಿ ಸೂಚಿ  ಸಂಪುಟ 1 ರಲ್ಲಿಯ( ಪು.203) ಕದಿರೇರಾಯರ ಪೂರ್ವ ವೃತ್ತಾಂತ ಕಾಲ.1750, ಹಸ್ತಪ್ರತಿಯಲ್ಲಿ ಕದಿರೆರಾಯರ ಆಳ್ವಿಕೆಗೆ ಸಂಬಂಧಪಟ್ಟ ಗ್ರಾಮಗಳು, ಅವರ ಅಧೀನರು, ಹುದ್ದೆದಾರರ ಅಧಿಕಾರದ ವಿವರಗಳು, ಅವರ ವೇತನಾದಿಗಳು, ಗ್ರಾಮದಾನ ( ದೇವಸ್ಥಾನ ಮುಂತಾದವುಗಳಿಗೆ)ವಿವರವು, ಸಾಳುವ ಕೃಷ್ಣದೇವರಸವಡೇರು ಮೊದಲು ಮಾಡಿ ಬೆಳಗುತ್ತಿ ವಂಶಾವಳಿಯಲ್ಲಿ ಚಲುವ ರಂಗಪ್ಪ ನಾಯಕರ ಮಗ ಮಾರಭೂಪರಾಯರ ವರೆಗಿನ ವಿವರಗಳಲ್ಲಿ ಶಿವಮೊಗ್ಗಾ ಜಿಲ್ಲೆಯ ಪರಿಸರದ ಇತಿಹಾಸದ ವಿವರಗಳನ್ನು ಕಾಣಬಹುದು.
   ಚೆಲುವ ರಂಗಪ್ಪ ನಾಯ್ಕನು ಹೊಂನಾಳಿಯಂಬುದಾಗಿ ದೊಡ್ಡದಾಗಿ ಕೋಟೆ ಕಟ್ಟಿದ್ದು, ಹೊನ್ನಾಳಿ ಕಿಲ್ಲೇದ ಅಧಿಕಾರ ಮಾಡಿದ್ದು ಶಕ 1283 ಪ್ರವಸಂವತ್ಸರದ ಆರಭ್ಯ ಶಕ 1303 ದುರ್ಮತಿ ವರೆಗೆ  20 ವರುಷ ಆಳಿದ್ದರ ಬಗೆಗೆ, ಇದೇ ಅವಧಿಯಲ್ಲಿಯೇ ಹೊನ್ನಾಳಿಯ ಕೋಟೆಯನ್ನು ನಿರ್ಮಿಸಿದ ಬಗೆಗೆ ವಿವರ ನೀಡಿದೆ. ಜೊತೆಗೆ ಈ ಹಸ್ತಪ್ರತಿಯಲ್ಲಿ ಶಿವಮೊಗ್ಗೆ ಪೂರ್ವರಾಯರ ವೃತ್ತಾಂತ, ಪೂರ್ವರಾಯರ ಪೈಕಿ ನಗರದ ವೃತ್ತಾಂತ, ಸಾಗರದ ಪೂರ್ವ ರಾಯರ ವೃತ್ತಾಂತ, ಹೊದಿಗೆರೆ ವೃತ್ತಾಂತ, ಸೂಳೇಕೆರೆ ಪೂರ್ವರಾಯರ ವೃತ್ತಾಂತ ಇತ್ಯಾದಿ ವಿವರಗಳು ಇವೆ. ಈ ವಿವರಗಳು ಆಯಾ ಸ್ಥಳೀಯ ಅರಸರ ಕಾಲ ನಿರ್ಣಯಮಾಡಲು ಸಹಕಾರಿಯಾಗಿದೆ. ಈ ಹಸ್ತಪ್ರತಿಯಲ್ಲಿಯ ಮಾಹಿತಿಗಳನ್ನು ಪೂರಕ ಆಕರಗಳೊಂದಿಗೆ ಅಧ್ಯಯನಕ್ಕೆ ಬಳಸಿ ಕೊಳ್ಳ ಬಹುದಾಗಿದೆ.
    
  ಅದೇ ರೀತಿ ಕ್ರಿ.ಶ.1820 ಕ್ಕೆ ಹಿಂದೆ ತಳೇವಾಡ ಗ್ರಾಮದ ರೇವಣಯ್ಯ ಸ್ವಾಮಿಗಳಿಂದ ರಚಿತವಾದ ಬೊಮ್ಮಲಿಂಗದೇವರ ಕಾವ್ಯ ಎಂಬ ಅಪ್ರಕಟಿತ ಹಸ್ತಪ್ರತಿಯು ಉತ್ತರ ಕರ್ನಾಟಕ ಭಾಗದ ಹಂಜಿಗೆ,ಮಂಗಳಪುರ, ಅಕ್ಕಲಕೋಟೆ, ಕಲಬುರ್ಗಿ, ಕಮಲಪುರ, ಜಿನಪುರ ಮತ್ತು ಜೇವೂರಗಳ ಸ್ಥಳೀಯ ಚರಿತ್ರೆಯನ್ನು ಒದಗಿಸಿದೆ. ಅದೇರೀತಿ ಯಕ್ಷಗಾನ ಪ್ರಕಾರದಲ್ಲಿ ರಚಿತವಾಗಿರುವ ನುಂಕಮಲೆ ಸಿದ್ಧೇಶ್ವರ ಪುರಾಣ ಅಪ್ರಕಟಿತ ಹಸ್ತಪ್ರತಿಯು ಮೇಲ್ನೋಟಕ್ಕೆ ಪುರಾಣಕಾವ್ಯವೆನಿಸಿದ್ದರೂ ಒಂದು ರೀತಿಯಲ್ಲಿ ಸ್ಥಳನಾಮಚರಿತ್ರೆಯೂ ಆಗಿದೆ. ಸ್ಥಳೀಯ ಸಾಂಸ್ಕೃತಿಕ ಚಹರೆಗಳನ್ನು, ನಾಡಿನ ಭೌಗೋಳಿಕ ಸ್ವರೂಪಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ. ಗುಡ್ಡ,ಬೆಟ್ಟ,ಹಳ್ಳ,ಕೊಳ್ಳ, ಜೋಗಿಬಾವಿ ಮುಂತಾದ ಒಂದೊಂದು ಪ್ರದೇಶದ ಪೂರ್ಣವಿವರಗಳು  ಹಾಗೂ ನುಂಕೆಮಲೆ,ನೆಲಮಲೆ,ಯರಮಲೆ ಮುಂತಾದ ಮುಂತಾದ ಬೆಟ್ಟಗಳ ವಿವರಗಳು ದೊರೆಯುತ್ತವೆ.
     ಇಂದು ನಾಡಿನ ಸಂಸ್ಕೃತಿಯ ಅಧ್ಯಯನ ತನ್ನ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಶಿಷ್ಟ ಆಕರಗಳ ಜೊತೆಗೆ ಆಯಾ ಸ್ಥಳಗಳ ಜನಾಂಗ, ಸಮುದಾಯ, ಸಂಸ್ಕೃತಿಗಳೊಂದಿಗೆ ಬೆರತು ಅವರ ಆಚರಣೆ,ನಂಬಿಕೆ, ಸಂಪ್ರದಾಯಗಳನ್ನು ಯಾವುದೇ ಜಾತಿ ಪಂಗಡ ಹಾಗೂ ಸಾಮಾಜಿಕ ಸ್ತರಗಳ ಪೂರ್ವಾಗ್ರಹ ಪೀಡಿತರಾಗದಂತೆ ಕಟ್ಟಿಕೊಡುವ ಸ್ಥಳೀಯ ಚರಿತ್ರೆಗಳ ಅಗತ್ಯತೆ ತುರ್ತಾಗಿ ಬೇಕಾಗಿದೆ. ಒಂದು ಪ್ರದೇಶದ ಧಾರ್ಮಿಕ ಚಾರಿತ್ರಿಕ ಹಾಗೂ ಭೌಗೊಳಿಕ ತಿಳಿವಳಿಕೆ ವಿಸ್ತರಿಸಿಕೊಳ್ಳಲು ಈ ರೀತಿಯ ಕೃತಿಗಳು  ನೆರವನ್ನು ನೀಡುತ್ತವೆ. ಆದರೆ ಈ ತೆರನಾದ ಕೃತಿಗಳು ಉಪೇಕ್ಷೆಗೆ, ವಿದ್ವಾಂಸರ ಅನಾದಾರಣೆಗೆ ಈಡಾಗಿವೆ. ಚರಿತ್ರೆಯಲ್ಲಿ ದಾಖಲಾಗದೆ ಇರುವ ಸ್ಥಳೀಯ ಅರಸರ ಬಗೆಗೆ ಬೆಳಕು ಚೆಲ್ಲುವ ಹಸ್ತಪ್ರತಿಗಳು ಲಭ್ಯವಿದ್ದು ಅಪ್ರಕಟಿತ ಸ್ಥಿತಿಯಲ್ಲಿವೆ. ಲಿಪಿಕಾರರು ವಾಸಿಸುತ್ತಿದ್ದ ಗ್ರಾಮ ಅಥವಾ ಪ್ರತಿಮಾಡಿದ ಸ್ಥಳಗಳು ಹಸ್ತಪ್ರತಿಗಳ ಪ್ರಾದೇಶಿಕತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತವೆ.ಜೊತೆಗೆ ಅಧಿಕಾರ ವರ್ಗ, ಬೊಕ್ಕಸ ಮತ್ತು ಅರಮನೆಯ ಉಗ್ರಾಣದ ಕರಣಿಕೆ ವ್ಯಕ್ತಿಗಳ ಉಲ್ಲೇಖ ಕಸಬಾ ಪರಗಣಿ, ಮಾಗಣಿ, ಸಂಸ್ಥಾನ ಇತ್ಯಾದಿ ಆಡಳಿತ ವಿಭಾಗಗಳು, ಕೊತ್ವಾಲ, ಥಾಣೇದಾರ,ದಳವಾಯಿ, ನಾಡಗೌಡ,ಪಟ್ಟಣಶೆಟ್ಟಿ, ನಿರೂಪದ ಚಾವಡಿ, ಪೊತ್ತದಾರಭಕ್ಷಿ,ಮಾಮಲೆ. ಸ್ಥಾನಿಕ, ಸುಬೇದಾರ ಇತ್ಯಾದಿ ವಿವರಗಳು ದೊರೆಯುತ್ತಿದ್ದು ಸ್ಥಳೀಯ ಅರಸರಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವಲ್ಲಿ ಪುಷ್ಪಿಕೆಗಳಲ್ಲಿಯ ಈ ಸಂಗತಿಗಳನ್ನು ಮೂಲ ಆಕರಗಳಾಗಿ ಪರಿಗಣಿಸ ಬಹುದಾಗಿದೆ.
3.ಹಸ್ತಪ್ರತಿಗಳು ಮತ್ತು ಸಂಸ್ಕೃತಿಯ ಗ್ರಹಿಕೆ:
 ಸಂಸ್ಕೃತಿಯ ಸಂವಹನಕಾರರಾದ ಹಸ್ತಪ್ರತಿ ಲಿಪಿಕಾರರ ಚರಿತ್ರೆಗೆ ಸಂಬಂಧಿಸಿದಂತೆ ಲಿಪಿಕಾರರ ಹೆಸರು, ವಾಸಿಸುತ್ತಿದ್ದ ಗ್ರಾಮ, ತಂದೆ, ಗುರು, ಇಷ್ಟ ದೈವ, ವಂಶ, ಗೋತ್ರ ಇತ್ಯಾದಿ ವಿವರಗಳು ದೊರೆಯುತ್ತವೆ. ಲಿಪಿಕಾರರು ವಾಸಿಸುತ್ತಿದ್ದ ಗ್ರಾಮ ಅಥವಾ ಪ್ರತಿಮಾಡಿದ ಸ್ಥಳಗಳು ಹಸ್ತಪ್ರತಿಗಳ ಪ್ರಾದೇಶಿಕತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತವೆ.ಜೊತೆಗೆ ಅಧಿಕಾರ ವರ್ಗ, ಬೊಕ್ಕಸ ಮತ್ತು ಅರಮನೆಯ ಉಗ್ರಾಣದ ಕರಣಿಕೆ ವ್ಯಕ್ತಿಗಳ ಉಲ್ಲೇಖ ಕಸಬಾ ಪರಗಣಿ, ಮಾಗಣಿ, ಸಂಸ್ಥಾನ ಇತ್ಯಾದಿ ಆಡಳಿತ ವಿಭಾಗಗಳು, ಕೊತ್ವಾಲ, ಥಾಣೇದಾರ,ದಳವಾಯಿ, ನಾಡಗೌಡ,ಪಟ್ಟಣಶೆಟ್ಟಿ, ನಿರೂಪದ ಚಾವಡಿ, ಪೊತ್ತದಾರಭಕ್ಷಿ,ಮಾಮಲೆ. ಸ್ಥಾನಿಕ, ಸುಬೇದಾರ ಇತ್ಯಾದಿ ವಿವರಗಳು ದೊರೆಯುತ್ತಿದ್ದು .ಇಂದು ನಾಡಿನ ಸಂಸ್ಕೃತಿಯ ಅಧ್ಯಯನ ತನ್ನ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಶಿಷ್ಟ ಆಕರಗಳ ಜೊತೆಗೆ ಆಯಾ ಸ್ಥಳಗಳ ಜನಾಂಗ, ಸಮುದಾಯ, ಸಂಸ್ಕೃತಿಗಳೊಂದಿಗೆ ಬೆರತು ಅವರ ಆಚರಣೆ,ನಂಬಿಕೆ, ಸಂಪ್ರದಾಯಗಳನ್ನು ಯಾವುದೇ ಜಾತಿ ಪಂಗಡ ಹಾಗೂ ಸಾಮಾಜಿಕ ಸ್ತರಗಳ ಪೂರ್ವಾಗ್ರಹ ಪೀಡಿತರಾಗದಂತೆ ಸ್ಥಳೀಯ ಚರಿತ್ರೆಗಳನ್ನು   ರೂಪಿಸುವಲ್ಲಿ  ಹಸ್ತಪ್ರತಿಗಳ ಬಹುಪಠ್ಯೀಯನೆಲೆಯಲ್ಲಿ ಕಂಡುಬರುವ ಸಾಂಸ್ಕೃತಿಕ ವಿವರಗಳನ್ನು ಬಳಸಿಕೊಳ್ಳುವ ತುರ್ತು ಇಂದು ನಮ್ಮ ಮುಂದಿದೆ. ಇಂದು ನಾವು ದೇಸಿ ಕಾವ್ಯಗಳನ್ನು ಸಾಂಸ್ಕೃತಿಕ ಪಠ್ಯಗಳಾಗಿ ಪರಿಗಣಿಸಿ ಆ ನೆಲೆಯಲ್ಲಿಯೇ ಸಾಗ ಬೇಕಾಗಿದೆ. ಯಾವುದೋ ಕಾಲಘಟ್ಟದಲ್ಲಿ ರೂಪುತಳೆದ ಕಾವ್ಯವು ವರ್ತಮಾನದಲ್ಲಿ ಹೇಗೆ ಸಮಕಾಲೀನ ಮೌಲ್ಯಗಳನ್ನು ಸ್ವೀಕರಿಸಿಕೊಂಡು ಬಹುಪಠ್ಯೀಯತೆಯನ್ನು ಪಡೆಯಲು ಸಾಧ್ಯವಾಯಿತು ಎಂಬುದರತ್ತ ಗಮನ ಹರಿಸ ಬೇಕಾಗಿದೆ
ಹಸ್ತಪ್ರತಿಗಳನ್ನು ಕೇವಲ ಸಾಹಿತ್ಯ ಅಧ್ಯಯನದ ಪ್ರಾಚೀನ ಸಾಮಗ್ರಿಗಳಾಗಿ ನೋಡಿದರಷ್ಟೇ ಸಾಲದಾಗಿದೆ. ಗ್ರಂಥಸಂಪಾದನೆಗಷ್ಟೇ ಸೀಮಿತವಾಗದೆ ಸಾಂಸ್ಕೃತಿಕ ಅಧ್ಯಯನದ ಆಕರಗಳಾಗಿ ಹಸ್ತಪ್ರತಿಗಳ ಅಧ್ಯಯನವನ್ನು ವಿಸ್ತøತಗೊಳಿಸಬೇಕಾಗಿದೆ. ಇವು ಸಂಸ್ಕೃತಿಯನ್ನು ದಾಖಲಿಸುವ ಪ್ರಮುಖ ಕೋಶಗಳಲ್ಲಿ ಒಂದಾಗಿವೆ. ಶಾಸನಗಳು, ಕಡತಗಳು, ಬಖೈರುಗಳ ಮಾದರಿಯಲ್ಲಿ ಹಸ್ತಪ್ರತಿ ಪುಷ್ಪಿಕೆಗಳು ಸಹ ಸಂಸ್ಕೃತಿಯನ್ನು ಪುನರ್ರಚಿಸುವ ಆಕರಗಳಾಗಿವೆ. ಹಸ್ತಪ್ರತಿಗಳಲ್ಲಿರುವ ಆದಿ, ಅಂತ್ಯದ ಹೇಳಿಕೆಗಳು ಕೃತಿಯನ್ನು ಬರೆದವರ, ಬರೆಯಿಸಿದವರ ಚರಿತ್ರೆ ಮತ್ತು ಇತರೆ ವಿಷಯಗಳ ಬಗ್ಗೆ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ. ಸ್ಥಳೀಯ ಸಂಸ್ಕೃತಿಯನ್ನು ತಿಳಿಯುವಲ್ಲಿ ಪುಷ್ಪಿಕೆಗಳು ಪ್ರಧಾನವಾಗಿರುವುದರಿಂದ ಮೂಲ ಆಕರ ಸಾಮಗ್ರಿಗಳಾಗಿ ಪರಿಗಣಿಸಬಹುದಾಗಿದೆ. ಹಸ್ತಪ್ರತಿಯಲ್ಲಿ ಉಕ್ತವಾದ ಸಾಮಾಜಿಕ ಅಂಶಗಳು ಆಗಿನ ಕಾಲದ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿಯೆನ್ನಬಹುದು.
   
     ಲಿಂಗಣ್ಣ ಕವಿಯು ತನ್ನ ಕೃತಿಯಲ್ಲಿ` ಮುಗುಳ್ದಿಕ್ಕೇರಿಯರಮನೆಯೊಳ್ ವಿಚಿತ್ರ ತೆರೆ ರಚನಾ ಕೌಶಲ್ಯದಿಂ ನಾಟಕ  ಶಾಲೆಯಂ ನಿರ್ಮಾಣಗೈಸಿ ಎಂದು ಹೇಳಿರುವ ಹಿನ್ನೆಲೆಯಲ್ಲಿ  ಕೆಳದಿ ಅರಸರು  ಜನಪದ ರಂಗಭೂಮಿಯ  ಯಕ್ಷಗಾನ ಕಲೆಗೆ ಯಾವ ರೀತಿ ಕಾಯಕಲ್ಪ ಕೊಟ್ಟರು ಹಾಗೂ ಜನಪದ ಕಲೆಯೊಂದು ರಾಜಾಶ್ರಯ ಪಡೆದು ಅರಮನೆಯ ಗೌರವಾದರಕ್ಕೆ  ಯಾವ ರೀತಿ ಪಾತ್ರವಾಗಿದ್ದಿತು ಎಂಬುದನ್ನು  ಗುರುತಿಸ ಬಹುದಾಗಿದೆ. ಇದಕ್ಕೆ ನಿದರ್ಶನವಾಗಿ ಯಕ್ಷಗಾನದ ಹಸ್ತಪ್ರತಿಗಳಾದ ಅಭಿಮನ್ಯು ಕಾಳಗ, ಕನಕಾಂಗಿ ಕಲ್ಯಾಣ,ಕೃಷ್ಣಾರ್ಜುನ ಕಾಳಗ, ಕುಶಲವರ ಕಾಳಗ,ಪಾರಿಜಾತ ಪ್ರಸಂಗ, ಬಬ್ರುವಾಹನ ಕಾಳಗ ಇತ್ಯಾದಿ ಹಸ್ತಪ್ರತಿಗಳು ಕೆಳದಿ ಪರಿಸರದಲ್ಲಿ ದೊರೆತಿರುವುದನ್ನು ಗಮನಿಸ ಬಹುದಾಗಿದೆ.  ಶಿವತತ್ವರತ್ನಾಕರದ  ಲಭ್ಯವಿರುವ ಎಲ್ಲ ಹಸ್ತಪ್ರತಿಗಳನ್ನು ವ್ಯವಸ್ಥಿತ ಅಧ್ಯಯನಕ್ಕೆ ಒಳಪಡಿಸುವ ಮೂಲಕಕೆಳದಿ ಅರಸರ ಕಾಲದ  ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಗತಿಗಳ ಬಗೆಗೆ ಬೆಳಕು ಚೆಲ್ಲಬಹುದಾಗಿದೆ. ಶಿವಮೊಗ್ಗಾ ಜಿಲ್ಲೆಯ ಕಾಸರವಳ್ಳಿ ಮನೆತನದಲ್ಲಿ ಲಭ್ಯವಿರುವ ಹಸ್ತಪ್ರತಿ ದಾಖಲೆಗಳು  (ಶಹ ಪುಸ್ತಕಗಳು) 16 ಮತ್ತು 18 ನೇ ಶತಮಾನದ ಇತಿಹಾಸ ರಚನೆಗೆ ಯಾವ ರೀತಿ ಪೂರಕವಾಗಿವೆ ಎಂಬುದನ್ನು  ಅಧ್ಯಯನ ಕ್ಕೊಳಪಡಿಸ ಬೇಕಾಗಿದೆ.
      ಹಸ್ತಪ್ರತಿ ಲಿಪೀಕರಣ ಕಾರ್ಯವು ಸ್ತ್ರೀಯರ ಶಿಕ್ಷಣದ ಹಿನ್ನಲೆಯಲ್ಲಿಯೂ ನಡೆದಿರುವ ಈ ವಿವರಗಳು ಹಸ್ತಪ್ರತಿಗಳ ಪುಷ್ಪಿಕೆಯಲ್ಲಿ ದೊರೆಯುತ್ತಿದ್ದು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವವೆನಿಸಿದೆ.  ಲಿಪೀಕರಣ ಕ್ರಿಯೆಯಲ್ಲಿ ಗಮನಿಸತಕ್ಕ ಸಂಗತಿ ಎಂದರೆ ಕೆಲವು ಸ್ತ್ರೀಯರುಗಳೇ ಲಿಪೀಕರಣ ಕಾರ್ಯದಲ್ಲಿ ಪಾಲ್ಗೊಂಡಿರುವುದು. ಸ್ತ್ರೀಯರು ಪ್ರತಿಮಾಡಿದ ಹಸ್ತಪ್ರತಿಗಳು ಆದಿ ಅಂತ್ಯದಲ್ಲಿನ ಅವರ ಪ್ರಶಸ್ತಿ ವಾಕ್ಯಗಳಿಂದ ಆ ಕಾಲದ ಸ್ತ್ರೀಯರ ಶಿಕ್ಷಣದ ಬಗೆಗೆ ಮಾಹಿತಿ ವ್ಯಕ್ತವಾಗುತ್ತದೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನನ್ನ ಗಮನಕ್ಕೆ ಬಂದ ಹಾಗೆ ಸುಮಾರು 13ಜನ ಸ್ತ್ರೀ ಲಿಪಿಗಾರ್ತಿಯರು ಹಸ್ತಪ್ರತಿ ನಕಲು ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ವಿವರ ಸಹ ನಮ್ಮ ಕನ್ನಡ ಸಾಂಸ್ಕೃತಿಕ ಸಂದರ್ಭದ ಹಿನ್ನಲೆಯಲ್ಲಿ ಬಹಳ ಮಹತ್ತರವಾದುದು. ಇನ್ನೊಂದು ಅಂಶ ಎಂದರೆ ಇನ್ನೊಂದು ಬಗೆಯಲ್ಲಿ ಅಂದರ ಸ್ತ್ರೀಯರ ಶಿಕ್ಷಣದ ಹಿನ್ನೆಲೆಯಲ್ಲಿಯೂ ಪ್ರತಿಲಿಪಿಕರಣ ಕಾರ್ಯ ನಡೆದಿರುವುದು. ‘ಅಮರೇಂದ್ರ ವಂದಿತ ಶ್ರೀ ಸುಕುಮಾರನ ಚಾರು ಚರಿತದ ಪ್ರತಿಯನು ಜಿನಚಂದ್ರನು ತನ್ನ ಪುತ್ರೀತ್ರಯರನೋದಿಸಲೆಂದು ಬರೆದನು’ ಎನ್ನುವ ಉಲ್ಲೇಖದಲ್ಲಿ ತಂದೆಯು ತನ್ನ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಸಲುವಾಗಿ ಪ್ರತಿಗಳು ನಕಲುಗೊಳ್ಳುತ್ತಿದ್ದುದು ಪ್ರಮುಖ ಅಂಶವಾಗಿದೆ. ಇದಕ್ಕಿಂತ ಮಹತ್ತರವಾದ ಉಲ್ಲೇಖವೆಂದರೆ, ‘ಸಿಗ್ಗಾವಿಯ ಚನ್ನಗೌಡರ ಸೊಸೆ ಬೈರಾಜಿ ತಂಮ ಶ್ರೀ ಗುರುವಿನ ಕೃಪೆಯಿಂದ ಲಿಂಗಲೀಲಾವಿಲಾಸದ ಪುಸ್ತಕವನು ಪ್ರತಿಮಾಡಿ ಮಹಾ ಗಣಂಗಳಿಗೆ ಹಂಚಿದುದು.’ ಆಗಿನ ಕಾಲಕ್ಕೆ ಬೇರೆಯವರು ಪ್ರತಿಮಾಡಿದ್ದನ್ನು ಅಭ್ಯಸಿಸುವುದೇ ಒಂದು ದೊಡ್ಡ ಸಾಹಸವಾಗಿರುವಾಗ ತಾನು ಲಿಪಿಕಾರ್ತಿಯಾಗಿ ಕೃತಿಯನ್ನು ಪ್ರತಿಮಾಡಿ ಮಹಾ ಗಣಂಗಳಿಗೆ ಹಂಚಿರುವುದು ಆಗಿನ ಕಾಲದ ಸಾಮಾಜಿಕ ಸಂದರ್ಭದಲ್ಲಿ ಗುರುತರವಾದುದು. ಆಯಾ ಕಾಲಾವಧಿಯ ಹಿನ್ನಲೆಯಲ್ಲಿ ಓದಿಸುವ ಗುರುಬಸವಣ್ಣ ದೇವರು ಹಾಗೂ ಯಲ್ಲಣ್ಣ ಇವರು ಅಂದು ಹೆಣ್ಣು ಸಂತತಿಗೆ ಲೇಖನ ವಿದ್ಯಾ ಪರಂಪರೆಯಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದು ಪ್ರಗತಿಪರವಾದ ಸಂಗತಿ. ಅಚ್ಚರಿಯ ಸಂಗತಿ ಎಂದರೆ ‘ಕೆಸ್ತೂರು ಉಪಾಧ್ಯಾಯರ ಮಗ ರಂಗಪ್ಪ ಬರೆದು ಕೊಟ್ಟಿದು ತಳಕಾಡು ನಾಯಿಕಶ್ಯಾನಿ ಕೆಂಪಿ ಮಗಳು ನಂಜಿಗೆ’ ಎಂಬ ಹಸ್ತಪ್ರತಿಯ ಪುಷ್ಟಿಕೆಯಲ್ಲಿಯ ಉಲ್ಲೇಖವು ‘ಗಣಿಕೆ ಕುಲದಲ್ಲಿ ಹುಟ್ಟಿದ ನಾಯಿಕಶ್ಯಾನಿ ಸ್ತ್ರೀಯೊಬ್ಬಳು ತನ್ನ ಮಗಳು ನಂಜಿಗೆ ಭಾಮಿನಿ ಷಟ್ಪದಿ ರೂಪದ ಐರಾವತ ಕೃತಿಯನ್ನು ಪ್ರತಿಮಾಡಿಸಿ ಕೊಟ್ಟಿರುವುದು. ಆ ಕಾಲದ ಒಂದು ಸಾಂಸ್ಕೃತಿಕ ದಾಖಲೆಯೇ ಸರಿ.. ನಂಜಿಯಂತಹ ದೇವದಾಸಿ ಕುಲದ ಸ್ತ್ರೀಯು ಓದು ಬರೆಹದ ಅವಕಾಶ ಪಡೆದಿದ್ದು ಮಹತ್ತರವಾದ ಸಂಗತಿಯಾಗಿದೆ. ಆಯಾ ಧರ್ಮದ ಚೌಕಟ್ಟಿನ ದೃಷ್ಟಿಯಿಂದ ಮಹಿಳೆಯರು ಜ್ಞಾನವನ್ನುಅಭ್ಯಸಿಸಿದ್ದು ಅನ್ನುವ ಸಂಗತಿ ಮತ್ತು ಆ ಹಿನ್ನೆಲೆಯಲ್ಲಿ ಹಸ್ತಪ್ರತಿಗಳು ಲಿಪೀಕರಣಗೊಂಡು ಪ್ರಸರಣಗೊಂಡಿದ್ದು ಗುರುತರವಾದದ್ದು. ಆಯಾ ಕಾಲಘಟ್ಟದ ಹಿನ್ನಲೆಯಲ್ಲಿ ಹಸ್ತಪ್ರತಿಗಳಲ್ಲಿ ಸಿಗುವಂತಹ ಇಂಥ ಮಾಹಿತಿಯನ್ನು ನಾವು ಹೆಕ್ಕಿ ತೆಗೆದು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಬೇಕಾಗಿದೆ. ಹಸ್ತಪ್ರತಿಯ ಅಧ್ಯಯನದಲ್ಲಿ  ಇಂದು ಪಠ್ಯದ ಚಲನಶೀಲತೆಯನ್ನು ಮತ್ತು ಅದರ ಹಿಂದಿರುವ ಆಶಯಗಳನ್ನು ಅಧ್ಯಯನ ಮಾಡಬೇಕಾಗಿದೆ.
   ಹಸ್ತಪ್ರತಿ ಪುಷ್ಟಿಕೆಯಲ್ಲಿ ದೊರೆತಿರುವ ಈ ಉಲ್ಲೇಖವನ್ನು ಇಲ್ಲಿ ಪ್ರಸ್ತಾಪ ಮಾಡಬೇಕಾಗುತ್ತದೆ. `ಉತ್ತೊಳಲಲ್ಲಿ ನಿರುದ್ಯೋಗದಲ್ಲಿದ್ದಾಗ ಭಾರತ ಪುಸ್ತಕ ಬರದ್ದು.ಬರದೋನು ಶೇಷಯ್ಯನ ಬರೆಹ, ಈ ಹೇಳಿಕೆಯನ್ನು ನಾವು ಎರಡು ರೀತಿಯಿಂದ ನೋಡಬೇಕಾಗುತ್ತದೆ. ಒಬ್ಬ ವ್ಯಕ್ತಿ ನಿರುದ್ಯೋಗದಲ್ಲಿ ಇದ್ದಾಗ ಅಂತಹ ಸಮಯವನ್ನು ಪ್ರತಿಮಾಡುವಂತಹ ಕಾರ್ಯಕ್ಕೆ ಸದುಪಯೋಗ ಪಡಿಸಿಕೊಳ್ಳುತ್ತಿದ್ದನೇ ಅಥವಾ ಈಗಿನ ಆಧುನಿಕ ಕಾಲದಲ್ಲಿ ಇರುವ ಹಾಗೆ ಆ ಕಾಲದಲ್ಲಿಯೂ ನಿರುದ್ಯೋಗದಂತಹ ಸ್ಥಿತಿ ನಿರ್ಮಾಣವಾಗಿದ್ದಿತೆ? ಎಂಬ ಅಂಶ ಗಮನಾರ್ಹವಾದುದು.  
        ಹಸ್ತಪ್ರತಿಗಳ ಸೃಷ್ಟಿ ಮತ್ತು ಪ್ರತಿಮಾಡುವ ಕಾರ್ಯವು ಬಸದಿ ಹಾಗೂ ಮಠಗಳಲ್ಲಿ ನಿರಂತರವಾಗಿ ನಡೆದು ಬಂದಿರುವ ಬಗ್ಗೆ ಹಸ್ತಪ್ರತಿ ಪುಷ್ಪಿಕೆಗಳಿಂದ ತಿಳಿದು ಬರುತ್ತದೆ. ಬಸದಿ ಮತ್ತು ಮಠಗಳಲ್ಲಿ ಹಸ್ತಪ್ರತಿಗಳ ರಚನಾಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಆಗಿನ ಜನಸಮುದಾಯ ಶ್ರದ್ಧೆಯಿಂದ ಅವುಗಳನ್ನು ಪೋಷಿಸಿ ಪುರಸ್ಕರಿಸುತ್ತಿದ್ದ ನಿದರ್ಶನಗಳು ಪುಷ್ಪಿಕೆಗಳಲ್ಲಿ ದೊರೆಯುತ್ತವೆ. ರಾಜರು, ರಾಜವಂಶಸ್ಥರು, ಅಧಿಕಾರಿಗಳು, ಧರ್ಮಾಧಿಕಾರಿಗಳು, ಗ್ರಾಮ ಮುಖಂಡರುಗಳು ಹಸ್ತಪ್ರತಿಗಳ ಪಾಲನೆ, ಪೋಷಣೆ ಮಾಡಿ ಹಸ್ತಪ್ರತಿಗಳ ನಿರ್ಮಾಣಕ್ಕೆ ಕಾರಣ ಕರ್ತರಾಗಿದ್ದಾರೆ.ಹಸ್ತಪ್ರತಿಗಳ ಸೃಷ್ಟಿಯ ಹಿಂದೆ ಪೋಷಕ ಸಮುದಾಯ ಮಿಡಿದಿರುವುದನ್ನು ಗುರುತಿಸ ಬಹುದಾಗಿದೆ. ಪೋಷಕರು ಹಸ್ತಪ್ರತಿಗಳನ್ನು, ದೈವಭಕ್ತಿ,ಸಮಯನಿಷ್ಠೆ, ಜ್ಞಾನಾರ್ಜನೆ, ಅನಿಷ್ಟ ನಿವಾರಣೆ,ಆಯುರಾರೋಗ್ಯ ಭಾಗ್ಯ, ಗಂಡು ಸಂತಾನ, ಗುರುಭಕ್ತಿ ಮತ್ತು ಪುಣ್ಯಸಂಪಾದನೆಗಾಗಿಯೂ ಬರೆಸಿದ್ದಾರೆ. ಹಸ್ತಪ್ರತಿಗಳು ಒಂದು ರೀತಿಯಲ್ಲಿ ಆಧುನಿಕ ಪೂರ್ವ ಕರ್ನಾಟಕದ ಜನಜೀವನ, ಬದುಕಿನ ರೀತಿ ನೀತಿಯನ್ನು  ಅರಿಯಲು ಕಾರಣೀಭೂತವಾಗಿವೆ. ನೂರಾರು ಹಸ್ತಪ್ರತಿಗಳ ಪುಷ್ಪಿಕೆಗಳಲ್ಲಿ ಲಿಪಿಕಾರರ ಅನುಭವ ಹಾಗೂ  ಭಾಷಾ ಸಾಮಥ್ರ್ಯವನ್ನು ಕಾಣಬಹುದು. ಲಿಪಿಕಾರರು ಬದುಕಿ ಬಾಳುತ್ತಿದ್ದ ಸಂಸ್ಕೃತಿಯ ಸ್ವರೂಪವನ್ನು ಗುರುತಿಸಬಹುದು. ಪ್ರತಿ ಕಾರ್ಯದಲ್ಲಿ ತೊಡಗಿದ್ದ ಲಿಪಿಕಾರರನ್ನು ಆಗಿ ಕಾಲದ  ಜನಸಮುದಾಯ ಪ್ರೀತಿ ವಿಶ್ವಾಸ ಹಾಗೂ ಗೌರವದಿಂದ ಕಾಣುತ್ತಿತ್ತು. ಹಸ್ತಪ್ರತಿ ಲಿಪಿಕಾರರು ಪುಷ್ಪಿಕೆಗಳಲ್ಲಿ ತಮ್ಮ ಚರಿತ್ರೆ ಹೇಳುವ ನೆಪದಲ್ಲಿ ನಾಡಿನ ಸಾಂಸ್ಕೃತಿಕ ಚರಿತ್ರೆಗೆ ಉಪಯುಕ್ತವಾದ ಸಂಗತಿಗಳನ್ನು ನಿರೂಪಿಸಿದ್ದಾರೆ. ಸಂಸ್ಕೃತಿಯ ಸಂವಹನಕಾರರಾದ ಹಸ್ತಪ್ರತಿ ಲಿಪಿಕಾರರ ಚರಿತ್ರೆಗೆ ಸಂಬಂಧಿಸಿದಂತೆ ಲಿಪಿಕಾರರ ಹೆಸರು, ವಾಸಿಸುತ್ತಿದ್ದ ಗ್ರಾಮ, ತಂದೆ, ಗುರು, ಇಷ್ಟ ದೈವ, ವಂಶ, ಗೋತ್ರ ಇತ್ಯಾದಿ ವಿವರಗಳು ದೊರೆಯುತ್ತವೆ. ಲಿಪಿಕಾರರು ವಾಸಿಸುತ್ತಿದ್ದ ಗ್ರಾಮ ಅಥವಾ ಪ್ರತಿಮಾಡಿದ ಸ್ಥಳಗಳು ಹಸ್ತಪ್ರತಿಗಳ ಪ್ರಾದೇಶಿಕತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತವೆ. 
   ಕನ್ನಡ ನಾಡಿನ ಅಸಂಖ್ಯಾತ ವೀರಶೈವ, ಜೈನ, ಬ್ರಾಹ್ಮಣ ಮಠಗಳ ಹೆಸರು. ಸಂಖ್ಯೆ, ಮಠಾಧೀಶರ ಹೆಸರು ಕಾಲಾವಧಿ, ಶಿಷ್ಯ ಪರಂಪರೆ ಇತ್ಯಾದಿ ಉಪಯುಕ್ತ ಮಾಹಿತಿಗಳು ಪುಷ್ಪಿಕೆಗಳಲ್ಲಿ ದೊರೆಯುತ್ತಿದ್ದು ನಾಡಿನ ಮಠಗಳ ಚರಿತ್ರೆ ಮತ್ತು ಮಠಾಧೀಶರ ಕಾಲನಿರ್ಣಯದಲ್ಲಿ ಪ್ರಾಮುಖ್ಯತೆ ಪಡೆದಿವೆ. ವೀರಶೈವಸಾಹಿತ್ಯವನ್ನು ಉಳಿಸಿಕೊಂಡು ಬರುವಲ್ಲಿ ಮಠಗಳು  ವಹಿಸಿದ ಪಾತ್ರವನ್ನು ಪುಷ್ಪಿಕೆಗಳ ಮೂಲಕ ಗುರುತಿಸ ಬಹುದಾಗಿದೆ. ಎಸ್. ಶಿವಣ್ಣನವರು ಸಂಪಾದಿಸಿರುವ ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು ಕೃತಿಯಲ್ಲಿಯೇ ಸುಮಾರು 180 ಮಠಗಳ ಪ್ರಸ್ತಾಪವಿದೆ. ಹಸ್ತಪ್ರತಿಗಳು ಉಲ್ಲೇಖಿಸಿರುವ ಕೆಲವು ಮಠಗಳು ಇಂದು ಅಸ್ತಿತ್ವದಲ್ಲಿ ಇರದಿದ್ದರೂ ಅಂತಹ ಅಳಿದು ಹೋದ ಮಠಗಳನ್ನು ಹಸ್ತಪ್ರತಿಗಳಲ್ಲಿಯ ಉಲ್ಲೇಖದ ಮೂಲಕ ಗುರುತಿಸ ಬಹುದಾಗಿದೆ. ಪೂರ್ವಿಕರಲ್ಲಿ ಕೆಲವರು ವೈಯಕ್ತಿಕವಾಗಿ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದ್ದರ ಬಗೆಗೆ ಪುಷ್ಪಿಕೆಗಳಲ್ಲಿ ವಿವರಗಳು ದೊರೆಯುತ್ತವೆ. ನಿದರ್ಶನಕ್ಕೆ ಕರೆವೃಷಭನ ಪುಸ್ತಕವು, ಕರಿಯ ಬಂಟನ ಪುಸ್ತಕ,ಪರಪ್ಪನ ಪುಸ್ತಕÀ, ನಾರಣರಾಜಯ್ಯ ಅರಸಿನವರ ಪುಸ್ತಕ, ಸಾಲೆ ವೀರಂಣನ ಪುಸ್ತಕ, ಯಾನ್ಗೋಡ ಮಠದ ಚರಂತಿ ದೇವರ ಪುಸ್ತಕವು ಇತ್ಯಾದಿ.
      ಭೂಮಿಯಲ್ಲಿ ತೋಟವನ್ನು ಬೆಳಸಿ ಅನುಭವಿಸುವ ಬಗೆಗಿನ ಷರತ್ತುಗಳನ್ನು ಉಲ್ಲೇಖಿಸುವ ಸಾತ್ರೆಯ ಪಟ್ಟಿಯ ವಿವರ ಎಂಬ ಹಸ್ತಪ್ರತಿಯಲ್ಲಿ, ( ಕ.ಹ.ವ.ಸೂ. ಸಂ.9 ಕ್ರ.ಸಂ.103)   ಬರುವ ಶ್ರೀ ವೀರಪ್ರದಾಪ ವೀರವೆಂಕಟಪತ್ತಿರಾಯರವರು ಪೃತ್ವಿರಾಜ್ಯಗೈವಲ್ಲಿ ಆಮತು ನರಸರಾಜ ಅಯ್ಯನವರ ನಿರೂಪದಿಂದಿಂದಲ್ಸು ದಳವಾಯಿ  ನಂಜರಾಜಯ್ಯನವರು ಶಂಕರ ಭಟ್ಟರಿಗೆ ಕೊಟ್ಟ ಸಾತ್ರೆಯ ಪಟ್ಟಿಉ ಕ್ರಮವೆಂತೆಂದಡೆ ಎಂಬ ಆದಿಯ ಪದ್ಯ ಹಾಗೂ ಅಂತ್ಯದಲ್ಲಿಯ ಆ ತೋಟದ ಫಲಕ್ಕೆ ಬಂದಾಗ ಮೊದಲೊರುಷ ಮಾನ್ಯ ಯರಡನೆ ವರುಷ ಮುಕ್ಕುಪ್ಪೆ ಮೂ¾ುನೆ ವರುಷ ವಾರ ನಾಲ್ಕನೆ ವರುಷಕ್ಕೆ ಯೆಣಿಸಿಕೊಂಬಲ್ಲಿ ದಶವಿಧ ಮರನ ಕಳಿವವಿವರ ಕೋಡಿ ಕಲ್ಲುಳಿ ಕತೆವಾಲ ಬಾವಿತಡಿ ಬಿಸಿಲ ಹೊಡೆ ಬಿಸಮರ ತಾಟಿ ಪೋಟಿ ತೊಂನ ತುರುಗ ಕಡಲ ಗರಿಕೆ ಯಿಂತೀ ದಶವಿಧದ ಮರನ ಕಳಿದು ದ್ರಷ್ಟಮರ ಸಾವಿರಕ್ಕೆ ಅಡಕೈಕ್ಷವನ್ನು ಸುಲಿವಾಗ ದಶವಿಧದ ಅಡಕೆಯ ಕಳಿವ ವಿವರ ಕಾಟಿ ಪೋಟಿ ಗೋಟು ಗಂಟಿಕೆ ಚಿಲ್ಲು ಹೊಡೆ ಹುಣುಬು ತೊಂನ್ನ ಕಡಲ ಗರಿಕೆ ಯಿಂತೀ ದಶವಿಧದ ಅಡಕೆಯಂ  ಎಂಬ ವಿವರದಲ್ಲಿ ದಶವಿಧ ಅಡಕೆಯ ವಿವರ ಅಡಿಕೆ ತೋಟವನ್ನು ಬೆಳಸಿ ಅನುಭವಿಸುವ ಷರತ್ತುಗಳ ವಿವರವನ್ನು  ಆರ್ಥಿಕ  ಹಾಗೂ ವ್ಯವಹಾರಿಕ ಒಪ್ಪಂದದ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಗ್ರಹಿಸ ಬಹುದಾಗಿದೆ. ಆಗಿನ ಜನಸಮುದಾಯ ಶ್ರದ್ಧೆಯಿಂದ ಅವುಗಳನ್ನು ಪೋಷಿಸಿ ಪುರಸ್ಕರಿಸುತ್ತಿದ್ದ ನಿದರ್ಶನಗಳು ಪುಷ್ಪಿಕೆಗಳಲ್ಲಿ ದೊರೆಯುತ್ತವೆ.
     ಇಂದು ನಾಡಿನ ಸಂಸ್ಕೃತಿಯ ಅಧ್ಯಯನ ತನ್ನ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಶಿಷ್ಟ ಆಕರಗಳ ಜೊತೆಗೆ ಆಯಾ ಸ್ಥಳಗಳ ಜನಾಂಗ, ಸಮುದಾಯ, ಸಂಸ್ಕೃತಿಗಳೊಂದಿಗೆ ಬೆರತು ಅವರ ಆಚರಣೆ,ನಂಬಿಕೆ, ಸಂಪ್ರದಾಯಗಳನ್ನು ಯಾವುದೇ ಜಾತಿ ಪಂಗಡ ಹಾಗೂ ಸಾಮಾಜಿಕ ಸ್ತರಗಳ ಪೂರ್ವಾಗ್ರಹ ಪೀಡಿತರಾಗದಂತೆ ಕಟ್ಟಿಕೊಡುವ ಸ್ಥಳೀಯ ಚರಿತ್ರೆಗಳ ಅಗತ್ಯತೆ ತುರ್ತಾಗಿ ಬೇಕಾಗಿದೆ. ಒಂದು ಪ್ರದೇಶದ ಧಾರ್ಮಿಕ ಚಾರಿತ್ರಿಕ ಹಾಗೂ ಭೌಗೊಳಿಕ ತಿಳಿವಳಿಕೆ ವಿಸ್ತರಿಸಿಕೊಳ್ಳಲು ಈ ರೀತಿಯ ಕೃತಿಗಳು  ನೆರವನ್ನು ನೀಡುತ್ತವೆ. ಆದರೆ ಈ ತೆರನಾದ ಕೃತಿಗಳು ಉಪೇಕ್ಷೆಗೆ, ವಿದ್ವಾಂಸರ ಅನಾದಾರಣೆಗೆ ಈಡಾಗಿವೆ. ಚರಿತ್ರೆಯಲ್ಲಿ ದಾಖಲಾಗದೆ ಇರುವ ಸ್ಥಳೀಯ ಅರಸರ ಬಗೆಗೆ ಬೆಳಕು ಚೆಲ್ಲುವ ಹಸ್ತಪ್ರತಿಗಳು ಲಭ್ಯವಿದ್ದು ಅಪ್ರಕಟಿತ ಸ್ಥಿತಿಯಲ್ಲಿವೆ.
    ಅದೇ ರೀತಿ ಕ್ರಿ.ಶ.1820 ಕ್ಕೆ ಹಿಂದೆ ತಳೇವಾಡ ಗ್ರಾಮದ ರೇವಣಯ್ಯ ಸ್ವಾಮಿಗಳಿಂದ ರಚಿತವಾದ ಬೊಮ್ಮಲಿಂಗದೇವರ ಕಾವ್ಯ ಎಂಬ ಅಪ್ರಕಟಿತ ಹಸ್ತಪ್ರತಿಯಲ್ಲಯ ವಿವರಗಳು ಇಂದು ಚಿತ್ರದುರ್ಗ ಜಿಲ್ಲೆಯ ಪರಿಸರದಲ್ಲಿ ಇಂದಿಗೂ ಆಚರಣೆಯಲ್ಲಿರುವ ಸಿದ್ಧಪ್ಪನ ಅರ್ಚನೆ, ತುಪ್ಪದಮ್ಮನ ಸಿಡಿ, ತುಪ್ಪದೋಕುಳಿ, ಭೈರವನಿಗೆ ಹಣ್ಣು ಕಾಯಿ ಪಲ್ಲಕ್ಕಿ ಉತ್ಸವ ಮುಂತಾದ ವಿವರಗಳು ಈ ಅಪ್ರಕಟಿತ ಹಸ್ತಪ್ರತಿಯಲ್ಲಿ ದೊರೆಯುತ್ತಿದ್ದು ಪ್ರಾಚೀನ ಕಾಲದ ಅನೇಕ ಧಾರ್ಮಿಕ ಆಚರಣೆ, ನಂಬಿಕೆಗಳ ಅಧ್ಯಯನವನ್ನು ಮಾಡಲು ನೆರವನ್ನು ನೀಡುತ್ತವೆ. ಕುಮಾರವ್ಯಾಸನ ವಿರಾಟಪರ್ವವನ್ನು ಮಳೆಗಾಗಿ ಪಟಿಸುವ ಸಾಂಸ್ಕೃತಿಕ ಜಗತ್ತು ಪಠ್ಯದ ಶುದ್ಧ-ಅಶುದ್ಧ   ಎನ್ನುವ ಲಿಖಿತ ಸಂಸ್ಕಾರದಗೊಡವೆಗೆ ಹೋಗದೆ ಮಳೆಯ ಆಶಯದ ದೃಷ್ಟಿಯಿಂದ ಅದನ್ನು ಓದುವ- ಕೇಳುವ ಅಂದರೆ ಕಥಾಂತರಿಸುತ್ತ ಹೋಗುತ್ತದೆ. ಈ ಪ್ರಕ್ರಿಯೆಗೆ  ಆ ಕ್ಷಣದ ಫಲಾಪೇಕ್ಷೆ ಮುಖ್ಯವಾಗುತ್ತದೆ. ಇಂಥ ನೂರಾರು ಪಠ್ಯದ ಹಸ್ತಪ್ರತಿಗಳನ್ನು ಆಧುನಿಕ ಪೂರ್ವದಲ್ಲಿ ಪಠಿಸುತ್ತಿದ್ದರು.
   ಇಂದು ನಾಡಿನ ಸಂಸ್ಕೃತಿಯ ಅಧ್ಯಯನ ತನ್ನ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಶಿಷ್ಟ ಆಕರಗಳ ಜೊತೆಗೆ ಆಯಾ ಸ್ಥಳಗಳ ಜನಾಂಗ, ಸಮುದಾಯ, ಸಂಸ್ಕೃತಿಗಳೊಂದಿಗೆ ಬೆರತು ಅವರ ಆಚರಣೆ,ನಂಬಿಕೆ, ಸಂಪ್ರದಾಯಗಳನ್ನು ಯಾವುದೇ ಜಾತಿ ಪಂಗಡ ಹಾಗೂ ಸಾಮಾಜಿಕ ಸ್ತರಗಳ ಪೂರ್ವಾಗ್ರಹ ಪೀಡಿತರಾಗದಂತೆ ಕಟ್ಟಿಕೊಡುವ ಸ್ಥಳೀಯ ಚರಿತ್ರೆಗಳ ಅಗತ್ಯತೆ ತುರ್ತಾಗಿ ಬೇಕಾಗಿದೆ. ಒಂದು ಪ್ರದೇಶದ ಧಾರ್ಮಿಕ ಚಾರಿತ್ರಿಕ ಹಾಗೂ ಭೌಗೊಳಿಕ ತಿಳಿವಳಿಕೆ ವಿಸ್ತರಿಸಿಕೊಳ್ಳಲು ಈ ರೀತಿಯ ಕೃತಿಗಳು  ನೆರವನ್ನು ನೀಡುತ್ತವೆ. ಆದರೆ ಈ ತೆರನಾದ ಕೃತಿಗಳು ಉಪೇಕ್ಷೆಗೆ, ವಿದ್ವಾಂಸರ ಅನಾದಾರಣೆಗೆ ಈಡಾಗಿವೆ. ಚರಿತ್ರೆಯಲ್ಲಿ ದಾಖಲಾಗದೆ ಇರುವ ಸ್ಥಳೀಯ ಅರಸರ ಬಗೆಗೆ ಬೆಳಕು ಚೆಲ್ಲುವ ಹಸ್ತಪ್ರತಿಗಳು ಲಭ್ಯವಿದ್ದು ಅಪ್ರಕಟಿತ ಸ್ಥಿತಿಯಲ್ಲಿವೆ. ಲಿಪಿಕಾರರು ವಾಸಿಸುತ್ತಿದ್ದ ಗ್ರಾಮ ಅಥವಾ ಪ್ರತಿಮಾಡಿದ ಸ್ಥಳಗಳು ಹಸ್ತಪ್ರತಿಗಳ ಪ್ರಾದೇಶಿಕತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತವೆ.ಜೊತೆಗೆ ಅಧಿಕಾರ ವರ್ಗ, ಬೊಕ್ಕಸ ಮತ್ತು ಅರಮನೆಯ ಉಗ್ರಾಣದ ಕರಣಿಕೆ ವ್ಯಕ್ತಿಗಳ ಉಲ್ಲೇಖ ಕಸಬಾ ಪರಗಣಿ, ಮಾಗಣಿ, ಸಂಸ್ಥಾನ ಇತ್ಯಾದಿ ಆಡಳಿತ ವಿಭಾಗಗಳು, ಕೊತ್ವಾಲ, ಥಾಣೇದಾರ,ದಳವಾಯಿ, ನಾಡಗೌಡ,ಪಟ್ಟಣಶೆಟ್ಟಿ, ನಿರೂಪದ ಚಾವಡಿ, ಪೊತ್ತದಾರಭಕ್ಷಿ,ಮಾಮಲೆ. ಸ್ಥಾನಿಕ, ಸುಬೇದಾರ ಇತ್ಯಾದಿ ವಿವರಗಳು ದೊರೆಯುತ್ತಿದ್ದು ಸ್ಥಳೀಯ ಅರಸರಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವಲ್ಲಿ ಪುಷ್ಪಿಕೆಗಳಲ್ಲಿಯ ಈ ಸಂಗತಿಗಳನ್ನು ಮೂಲ ಆಕರಗಳಾಗಿ ಪರಿಗಣಿಸ ಬಹುದಾಗಿದೆ. ಜಿಲ್ಲೆಯಲ್ಲಿ ಇಂದು  ನಾಮಾವಶೇಷವಾಗಿರುವ ಮಠ ಮಾನ್ಯಗಳ ಹೆಸರು, ಮಠಾಧೀಶರ ಹೆಸರು ಕಾಲಾವಧಿ, ಶಿಷ್ಯ ಪರಂಪರೆ ಇತ್ಯಾದಿ ಉಪಯುಕ್ತ ಮಾಹಿತಿಗಳು ಪುಷ್ಟಿಕೆಗಳಲ್ಲಿ ದೊರೆಯುತ್ತಿದ್ದು ಜಿಲ್ಲೆಯ ಮಠಗಳ ಚರಿತ್ರೆ ಮಠಾಧೀಶರ ಕಾಲನಿರ್ಣಯದಲ್ಲಿ ಪ್ರಾಮುಖ್ಯತೆ ಪಡೆದಿವೆ.  
    ಇಂದು ಉಪೇಕ್ಷಿತ ಹಸ್ತಪ್ರತಿಗಳು ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಹಸ್ತಪ್ರತಿಗಳಲ್ಲಿರುವ ಮಾಹಿತಿಯನ್ನು ನಾವು  ಪ್ರಾಯೋಗಿಕವಾಗಿ  ಆಚರಣೆಗೆ ತರಬೇಕಾಗಿದೆ. ಇಂದು ಭೂಗರ್ಭ ಶಾಸ್ತ್ರಜ್ಞರು (ಜಿಯೊಲಾಜಿಸ್ಟ್) ನೀರನ್ನು ನೋಡುವ ಪದ್ಧತಿಯಂತಹ ವಿವರವು ಹತ್ತನೇ ಶತಮಾನದ ಲೋಕೋಪಕಾರ ಕೃತಿಯಲ್ಲಿದೆ. ಆ ಕೃತಿಯಲ್ಲಿರುವ ಮಾಹಿತಿಯನ್ನು ಪರೀಕ್ಷಿಸಿ ಫಲಿತಾಂಶ ತಿಳಿದುಕೊಳ್ಳಬೇಕಾಗಿದೆ. ವೈದ್ಯಶಾಸ್ತ್ರ ಕೃತಿಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಮಾಹಿತಿಗಳು ಲಭ್ಯ ಇವೆ. ಅದೇ ರೀತಿ ಗಜಶಾಸ್ತ್ರ, ಪಾಕಶಾಸ್ತ್ರ, ಹಯಶಾಸ್ತ್ರ ಇತ್ಯಾದಿ ವಿವರಗಳು ಉಪೇಕ್ಷಿತ ಹಸ್ತಪ್ರತಿಗಳಲ್ಲಿ ಲಭ್ಯ ಇದೆ. ಪಂಚಮಹಾಭೂತಗಳ ರಹಸ್ಯವನ್ನು ಬೇಧಿಸಿ, ನಕ್ಷತ್ರ,ಗ್ರಹ,ಸೂರ್ಯ, ಭೂಮಿ, ಚಂದ್ರಾದಿಗಳ ಚಲನವಲನಗಳನ್ನು ಗುರುತಿಸಿ ಮಳೆಬೆಳೆಗಳ ಶುಭಾಶುಭಗಳನ್ನು ತಿಳಿಸುವಂತಹ ರಟ್ಟಮತದಂತಹ ಶಾಸ್ತ್ರ ಕೃತಿಯಲ್ಲಿಯ ವಿವರಗಳನ್ನು ಪರೀಕ್ಷಿಸಿ ಜನತೆಯ ಕಲ್ಯಾಣಕ್ಕೆ ಅನ್ವಯಿಸಿಕೊಳ್ಳ ಬೇಕಾಗಿದೆ. ಉಪೇಕ್ಷೆಗೆ ಒಳಗಾಗಿರುವ ಇಂತಹ ಶಾಸ್ತ್ರಕೃತಿಗಳು ಕನ್ನಡನಾಡಿನ ನೆಲ-ಜಲ,ಜನಮನಗಳ ಪ್ರತಿನಿಧಿಯಾಗಿ ನಿಲ್ಲುವಂಥಹವುಗಳು. ಮಳೆ ಬೆಳೆ, ಸೂರ್ಯ-ಚಂದ್ರ, ಫಲ-ಶಕುನ, ಜ್ಯೋತಿಷ್ಯ, ಫಲ-ಪುಷ್ಪ, ಗ್ರಹಣ ಇತ್ಯಾದಿ ಪ್ರಾಕೃತಿಕ ಸಸ್ಯಗಳುಮನುಷ್ಯ ಪ್ರಾಣಿ-ಪಕ್ಷಿಗಳ ಬದುಕಿನ ಕ್ರಮವನ್ನು ಆಗುಹೋಗುಗಳನ್ನು ವ್ಯಾಖ್ಯಾನಿಸುವ ಮತ್ತು ಬದುಕಿನ ಕ್ರಮವನ್ನು ಆ ಸಂಕಷ್ಟಗಳಿಗೆ ಹೊಂದಿಕೊಳ್ಳುವ ನೆಲೆಗಳನ್ನು  ತಿಳಿಸಿ ಕೊಡುವ ಉಪೇಕ್ಷೆಗೆ ಒಳಗಾಗಿರುವ ರಟ್ಟಕವಿಯ ರಟ್ಟಮತ ಕೃತಿಯು 12 ಅಧ್ಯಾಯಗಳನ್ನು ಒಳಗೊಂಡಿದ್ದು ಮದ್ರಾಸ್ ವಿ.ವಿ.ಯಿಂದ ಎಚ್.ಶೇಷಯ್ಯಂಗಾರ್ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಎಂಟನೆಯ ಅಧ್ಯಾಯದಲ್ಲಿಯ ಮಳೆಯ ನೀರು ಹೇಗೆ ಬೀಳಬೇಕು ಎಂಬ ಕ್ರಮವನ್ನು ತಿಳಿಸುತ್ತ, ಭೂಮಿಯಲ್ಲಿ ಭಾವಿಯನ್ನು ತೋಡಿದರೆ ನೀರು ಬರುವುದು, ಬರದಿರುವುದು, ಒಂದು ವೇಳೆ ನೀರು ಬರುವಂತೆ ಇದ್ದರೆ ಅದರ ಪ್ರಮಾಣವನ್ನು ಹೇಳುವುದರೊಂದಿಗೆ, ಹತ್ತುಮರಗಳ ವಿಸ್ಮಯ, ಹುಲ್ಲು ಹಸಲೆ ಇವುಗಳ ವಿಶೇಷದಿಂದ ಬಾವಿಯ ನೀರು ಅರ್ಧಾಳುದ್ದ, ಮೊದಲ ಅಯ್ದಾಳುದ್ದ ಪ್ರಮಾಣದಲ್ಲಿ ನೀರ ಧಾರೆ ಹುಟ್ಟುವ ಕ್ರಮವನ್ನು ಹೇಳಿ, ಬಾವಿ ತೋಡುವಾಗ ಸಿಕ್ಕುವ ಕಲ್ಲುಬಂಡೆಗಳನ್ನು ಮಿದುಮಾಡಿ ಒಡೆದು ತೆಗೆಯುವ ಕ್ರಮ, ಕಲ್ಲು ಒಡೆಯುವ ಉಳಿಹಾಕಿ ಇವುಗಳ ಬಾಯನ್ನು ವಜ್ರದಂತೆ ಗಟ್ಟಿಮಾಡಲು ನೀರುಣಿಸುವ ಕ್ರಮಗಳನ್ನು ಹೇಳಿ, ತೋಡಿದ ಬಾವಿಯನ್ನು ಉತ್ತಮ ರೀತಿಯಲ್ಲಿ ಅಂದರೆ ನೀರು ಕೆಡದಂತೆ ಇರಲು ಮಾಡ ಬೇಕಾದ ಕ್ರಮ, ಬಾವಿಯನ್ನು ತೋಡುವ ದಿಕ್ಕಿನ ಫಲ, ಬಾವಿಯನ್ನು ತೋಡುವಾಗ ಮತ್ತು ಮೊದಲು ನೀರಿನ ಧಾರೆ ತೋರಿದಾಗ ಮಾಡಬೇಕಾದ ಪೂಜಾ ಕ್ರಮಗಳನ್ನು ವಿವರಿಸಿದೆ. ಇಂತಹ ವಿಷಯಗಳನ್ನು ಪ್ರಾಯೋಗಿಕವಾಗಿ ಪರಿಶೀಲಿಸಬೇಕಾಗಿದೆ. ಉಪೇಕ್ಷಿತ ಹಸ್ತಪ್ರತಿಗಳಲ್ಲಿಯ ವಿವರಗಳನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ ಪ್ರಶ್ನೆ. ಅವರು ಏನ್ಹೇಳಿದ್ದಾರೆ ಅದನ್ನು ಮೊದಲು ಆಚರಣೆಗೆ ತರಲು ಪ್ರಯತ್ನಿಸಬೇಕು. ಅದು ದೇಸಿ ಪದ್ಧತಿಯೇ ಇರಬಹುದು. ಅದನ್ನು ಪರೀಕ್ಷಾರ್ಥವಾಗಿಯಾದರೂ ಅನುಸರಿಸಬೇಕಾಗಿದೆ. ಆ ಹಿನ್ನಲೆಯಲ್ಲಿ ನಾವು ಉಪೇಕ್ಷಿತ ಹಸ್ತಪ್ರತಿಗಳಲ್ಲಿರುವ ಮಾಹಿತಿ ಸಂಪತ್ತನ್ನು ಒಂದು ರೀತಿ ಜನತೆಯ ಕಲ್ಯಾಣದ ಹಿನ್ನಲೆಯಲ್ಲಿ ಬಳಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ.
ಹಸ್ತಪ್ರತಿಗಳಲ್ಲಿ ಒಡಮೂಡಿರುವ ಚಿತ್ರಕಲೆಗಳಲ್ಲಿಯ ಸಂಸ್ಕೃತಿಯ ಗ್ರಹಿಕೆ:
   ಪಾರಂಪರಿಕ ವರ್ಣಚಿತ್ರಗಳ ಚರಿತ್ರೆಯ ಅಧ್ಯಯನದಲ್ಲಿ ಇಂದಿಗೂ ಹಸ್ತಪ್ರತಿಗಳ ಚಿತ್ರಗಳ ಅಧ್ಯಯನವನ್ನು ಸೇರಿಸಿಯೇ ಇಲ್ಲ. ಹಸ್ತಪ್ರತಿಗಳಲ್ಲಿ ಒಡಮೂಡಿರುವ ಚಿತ್ರಗಳನ್ನು ಸೇರಿಸಿ ಅಧ್ಯಯನ ಮಾಡಿದರೆ ಕರ್ನಾಟಕ ವರ್ಣಚಿತ್ರಗಳ ಚರಿತ್ರಗೆ ಹೊಸ ಆಯಾಮವನ್ನು ಕಲ್ಪಿಸಿದಂತಾಗುತ್ತದೆ.   ಪ್ರತಿಯೊಬ್ಬ ಲಿಪಿಕಾರನೂ ಅಕ್ಷರಗಳ ಅಂಗರಚನೆ, ಒಳವರ್ತುಲಗಳ ಆಯ, ಪ್ರಮಾಣಗಳನ್ನು ಬಲ್ಲಿದವನಾಗಿದ್ದ. ಪೊಕ್ಕಳು, ತಲೆಕಟ್ಟು ಮುಂತಾದ ಕ್ರಮಾನುಗತವನ್ನು ಲಿಪಿಕಾರರು ಬಲ್ಲವರಾಗಿದ್ದರು.  ಕೆಲವು ಲಿಪಿಕಾರರು  ಅಕ್ಷರಗಳಲ್ಲಿ ಪುಷ್ಪ,ಪಕ್ಷಿ, ಪ್ರಾಣಿಗಳನ್ನು ಬಿಡಿಸಿ ಸೌಂದರ್ಯ ಪ್ರಜ್ಞೆಯನ್ನು ಮೂಡಿಸಿದ್ದಾರೆ.  ಹಸ್ರಪ್ರತಿಗಳಲ್ಲಿ ಕಂಡು ಬರುವ ಚಿತ್ರಕಲೆಯು ಸಾಂಸ್ಕೃತಿಕ ಅಧ್ಯಯನದ ವಿಧಾನವೇ ಆಗಿದೆ. ಸಚಿತ್ರ ಹಸ್ತಪ್ರತಿಗಳನ್ನು  ಸಂವಹನ ವಿಧಾನಗಳ ನೆಲೆಯಲ್ಲಿ ಪರಿಶೀಲಿಸ ಬಹುದಾಗಿದೆ.
 ಪಠ್ಯಕೇಂದ್ರಿತವಾಗಿ ಪಠ್ಯದ ಒಂದು ಭಾಗವಾಗಿ ಹಸ್ತಪ್ರತಿಗಳಲ್ಲಿ ವರ್ಣ ಚಿತ್ರಗಳು ಬಳಸಲ್ಪಟ್ಟಿವೆ. ಧಾರ್ಮಿಕ ಗ್ರಂಥವಾದರೆ ಧರ್ಮದ ವಿಚಾರವನ್ನು ಹೇಳುವುದಕ್ಕೆ, ತಾಂತ್ರಿಕ   ವಿಷಯವುಳ್ಳ ಹಸ್ತಪ್ರತಿಗಳು ತಾಂತ್ರಿಕ ಚಿತ್ರಗಳನ್ನು, ವೈದ್ಯದ ವಿಷಯವುಳ್ಳ ಹಸ್ತಪ್ರತಿಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ವರ್ಣ ಚಿತ್ರಗಳು ಮತ್ತು ರೇಖಾ ಚಿತ್ರಗಳು ಕಂಡು ಬರುತ್ತಿದ್ದು ಇವುಗಳನ್ನು ಪಾರಂಪರಿಕ ವರ್ಣಚಿತ್ರಗಳ ಸಾಲಿನಲ್ಲಿ ಸೇರಿಸಿ ಅಧ್ಯಯನ ಮಾಡಬಹುದಾಗಿದೆ. ಈ ತೆರನಾದ ಅಧ್ಯಯನವನ್ನು ಬಿ.ಕೆ. ಹಿರೇಮಠ ಅವರು ಕನ್ನಡ ಹಸ್ತಪ್ರತಿಗಳ ಅಧ್ಯಯನದ ಪುಸ್ತಕದಲ್ಲಿ ಮಾಡಿದ್ದಾರೆ. ಹಸ್ತಪ್ರತಿ ಚಿತ್ರಗಳು ನಮ್ಮ ಪೂರ್ವಿಕರ ವಿಚಾರ, ಚಿಂತನೆಗಳು ಮತ್ತು ಧರ್ಮಗಳ ಬೆಳವಣಿಗೆಯಲ್ಲಿ ಯಾವ ತೆರನಾದ ಸಂಬಂಧವನ್ನು ಹೊಂದಿದ್ದವು ಎಂಬುದನ್ನು ಗ್ರಹಿಸ ಬಹುದಾಗಿದೆ. ಕೆಲವು ಹಸ್ತಪ್ರತಿಗಳಲ್ಲಿ ಕಾವ್ಯದ ಪ್ರಮುಖವಾದ ಪ್ರಸಂಗ  ಅಥವಾ ಸನ್ನಿವೇಶಗಳ ಚಿತ್ರಗಳ ರಚನೆಯನ್ನು ಕಾಣಬಹುದು. ಶÀಬ್ದರೂಪವಾಗಿರುವ ಕಾವ್ಯದ ಸಂದರ್ಭಗಳನ್ನು ಚಾಕ್ಷುಷಗೊಳಿಸಿರುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಪ್ರತಿಕಾರನು ಒಂದು ಕೃತಿಯನ್ನು ಬರಹಕ್ಕಿಳಿಸುತ್ತ ಅದನ್ನು ಆಸ್ವಾದಿಸುತ್ತ ಸುಂದರ ಸನ್ನಿವೇಶಗಳನ್ನು ಅಂತರಂಗದಲ್ಲಿ ಪರಿಭಾವಿಸಿಕೊಳ್ಳುತ್ತಾ ದೃಶ್ಯಮಾಲೆಯನ್ನು ಸೃಷ್ಟಿಸಿರುವುದನ್ನು ಮನಗಂಡರೆ  ಹಸ್ತಪ್ರತಿಕಾರರು  ಚಿತ್ರಕಲಾ ಪರಿಣಿತಿಯನ್ನು ಹೊಂದಿದ್ದರು ಎಂಬುದು ಸಾಬೀತಾಗುತ್ತದೆ. ಹಸ್ತಪ್ರತಿಗಳಲ್ಲಿನ ಚಿತ್ರರಚನೆಗೆ ಇರುವ ಅವಕಾಶ ಸೀಮಿತವಾಗಿದ್ದು ಅತ್ಯಂತ ದಕ್ಷತೆಯಿಂದ ಕೌಶಲಪೂರ್ಣವಾಗಿ ಮಾಡಬೇಕಾದ ಕೆಲಸ. ಹಸ್ತಪ್ರತಿ ಚಿತ್ರಕಾರರು ತಮ್ಮ ಕಲ್ಪನೆ, ಸಂಸ್ಕಾರ ಪರಿಸರಗಳನ್ನು ಮೈಗೂಡಿಸಿಕೊಂಡು ಮುಕ್ತವಾಗಿಯೂ ವೈವಿಧ್ಯಪೂರ್ಣವಾಗಿಯೂ ಅಲ್ಲಲ್ಲಿ ಸ್ವಾತಂತ್ರ್ಯ ವಹಿಸಿ ಚಿತ್ರ ರಚನೆ ಮಾಡಿರುವುದು ಹಾಗೂ ಚಿತ್ರಗಳಿಗೆ ತಮ್ಮ ಪರಿಸರದ ವೇಷಭೂಷಣಗಳನ್ನು ತೊಡಿಸಿರುವುದು ಕರ್ನಾಟಕ ಚಿತ್ರಕಲಾ ಪರಂಪರೆಯಲ್ಲಿ ಗಮನಾರ್ಹವಾದುದಾಗಿದೆ. ನಿದರ್ಶನವಾಗಿ ನಂಜುಂಡ ಕವಿಯ ವೃಷಭೇಂದ್ರ ವಿಲಾಸ ಎಂಬ ಯಕ್ಷಗಾನ ಕೃತಿ, ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ವನಿಧಿ ಮತ್ತು ಸೌಗಂಧಿಕಾ ಪರಿಣಯ, ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿ ಇರುವ ಅಶ್ವಶಾಸ್ತ್ರಕ್ಕೆ ಸಂಬಂಧಿಸಿದ ಎರಡು ಸಚಿತ್ರ ಹಸ್ತಪ್ರತಿಗಳನ್ನು ಹೆಸರಿಸಬಹುದಾಗಿದೆ. ಸುತ್ತೂರು ಮಠದ ಜಗದ್ಗುರುಗಳಲ್ಲಿ ಇದ್ದಂತಹ ಬಸವಣ್ಣನವರ ಜೀವನವನ್ನು ಚಿತ್ರರೂಪದಲ್ಲಿ ಚಿತ್ರಿಸಿರುವ ವೃಷಭೇಂದ್ರ ವಿಲಾಸದ ಹಸ್ತಪ್ರತಿಯು ಒಂದೂವರೆ ಅಡಿ ಉದ್ದ ಅರ್ಧ ಅಡಿ ಅಗಲದ ಕಾಗದದ ರೂಪದಲ್ಲಿದೆ. ಪ್ರತಿಯೊಂದು ಪುಟದ ಅಂಚಿಗೆ ಹಳದಿ ಬಣ್ಣವನ್ನು ಲೇಪಿಸಿದ್ದು ವಿಶೇಷವಾಗಿದೆ. ಪ್ರತಿಯೊಂದು ಪುಟದಲ್ಲಿಯೂ ಕಥಾ ನಿರೂಪಣೆಯ ಒಂದು ಅಥವಾ ಎರಡು ಪದ್ಯಗಳಿದ್ದು ಉಳಿದಂತೆ ಚಿತ್ರಗಳನ್ನು ಅಧಿಕವಾಗಿ ಕಾಣಬಹುದು. ಬಸವಣ್ಣನವರ ಕಥೆಯ ಆರಂಭದಿಂದ ಕೊನೆಯವರೆಗಿನ ಅಂದರೆ ಬಸವಣ್ಣನ ಮತ್ರ್ಯದ ಮಣಿಹವನ್ನು ಮುಗಿಸಿ ಕೂಡಲಸಂಗಮದಲ್ಲಿ ಐಕ್ಯವಾಗಿ ಕೈಲಾಸಕ್ಕೆ ಬರುವ ವರೆಗಿನ ಸನ್ನಿವೇಶಗಳನ್ನು ಸಾಂಕೇತಿಕವಾಗಿ ಚಿತ್ರಿಸಿದೆ. ಚಿತ್ರಕಲಾಪರಂಪರೆಯಲ್ಲಿಯೇ ಅವಿಸ್ಮರಣೀಯವಾದ  ಸಾವಿರಾರು ಚಿತ್ರಗಳುಳ್ಳ ಈ ಹಸ್ತಪ್ರತಿಯು ಸುತ್ತೂರು ಮಠದ ಜಗದ್ಗುರುಗಳಿಂದಲೇ ಸಂಪಾದನೆಗೊಂಡು ಸಚಿತ್ರ ಸಮೇತ ಪ್ರಕಟಗೊಂಡಿದೆ.
  ಅದೇ ರೀತಿ ಆಗಮ,ಶಿಲ್ಪ, ಜ್ಯೋತಿಷ್ಯ, ಸಂಗೀತ,ಕ್ರೀಡೆ ಇತ್ಯಾದಿ ಒಂಭತ್ತು ವಿಭಾಗಗಳನ್ನು ಹೊಂದಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ವನಿಧಿ ಕೃತಿಯಲ್ಲಿ ಪ್ರತಿಯೊಂದು ಪುಟದಲ್ಲಿಯ ಶ್ಲೋಕಗಳಿಗೆ ಅನುಗುಣವಾಗಿ 1886 ವರ್ಣಚಿತ್ರಗಳು ಹಾಗೂ 450 ರೇಖಾಚಿತ್ರಗಳನ್ನು ರೂಪಿಸಲಾಗಿದೆ. ಈ ಕೃತಿಯ ಮೂರು ಸಚಿತ್ರ ಹಸ್ತಪ್ರತಿಗಳು ಜಿಲ್ಲೆಯಲ್ಲಿ ಉಪಲಬ್ದವಿವೆ. ಎಸ್.ಕೆ.ರಾಮಚಂದ್ರರಾವ್ ಅವರು ತಮ್ಮಲ್ಲಿದ್ದ ಹಸ್ತಪ್ರತಿಯನ್ನು ಮೂಲವಾಗಿಟ್ಟುಕೊಂಡು ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ವನಿಧಿ ಸಂಪುಟ-1 ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ.
    ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿಯ ಕ್ರಮಾಂಕ 572ನೇ  ಅಶ್ವಪರೀಕ್ಷೆ ಎಂಬ ಹಸ್ತಪ್ರತಿಯು ಚಾಮರಾಜ ಒಡೆಯರ ಕಾಲದಲ್ಲಿ ರಚಿತವಾಗಿದ್ದು  ಅಶ್ವ ಪರೀಕ್ಷೆಯ ಲಕ್ಷಣಗಳ ಬಗೆಗಿನ 203 ಉಲ್ಲೇಖಗಳಿವೆ. ಆರಂಭದ 105 ಉಲ್ಲೇಖಗಳಿಗೆ ವರ್ಣರಂಜಿತ ಕುದುರೆಯ ಚಿತ್ರಗಳಿದ್ದು  ಆ ಚಿತ್ರಗಳಿಗನುಗುಣವಾಗಿ ವಿವರಣೆಗಳನ್ನು ಕೊಡಲಾಗಿದೆ.  ಅಶ್ವವೈದ್ಯ ಸಚಿತ್ರ ಎಂಬ ಇನ್ನೊಂದು ಹಸ್ತಪ್ರತಿಯು ಇಲ್ಲಿದ್ದು ( ಕ್ರ.ಸಂ.571) 84 ಪತ್ರಗಳಿವೆ.  ಈ ಪತ್ರಗಳಲ್ಲಿ ಕುದುರೆಗೆ ಬರುವ ರೋಗಗಳನ್ನು ಹಾಗೂ ಇಲಾಜನ್ನು ಕುರಿತು ವೈವಿದ್ಯಮಯವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಹಸ್ತಪ್ರತಿಯಲ್ಲಿ ಏಕಪ್ರಕಾರವಾಗಿ ವರ್ಣ ಚಿತ್ರಗಳನ್ನು ಹಸ್ತಪ್ರತಿಗಳು ಸಾಹಿತ್ಯಕ ಮೌಲ್ಯದೊಂದಿಗೆ ತಮ್ಮಲ್ಲಿರುವ ಚಿತ್ರ,ವರ್ಣಚಿತ್ರ ರಚನೆಗಳಿಂದಾಗಿ ಚಾರಿತ್ರಿಕ ಸಾಂಸ್ಕೃತಿಕ ಮತ್ತು ಕಲಾ ಪರಂಪರೆಯ ಮೌಲ್ಯಗಳನ್ನು  ವ್ಯಕ್ತ ಪಡಿಸಿವೆ.  ಅದೇ ರೀತಿ ಹಂಪಿಯ ಕನ್ನಡ ವಿ.ವಿ.ಯು ಪ್ರಕಟಿಸಿರು, ರವೀಂದ್ರನಾಥ.ಕೆ. ಅವರು ಸಂಪಾದಿಸಿರುವ ಉದ್ಧರಣೆ ಸಾಹಿತ್ಯದಲ್ಲಿಯ ಚಿತ್ರಕಲೆಯನ್ನು ಬಿಂಬಿಸುವ ಉದ್ಧರಣ ಪಟಲಗಳು ಗಮನಿಸತಕ್ಕದ್ದಾಗಿವೆ.
  ಹಸ್ತಪ್ರತಿ ಚಿತ್ರಗಳು ನಮ್ಮ ಪೂರ್ವಿಕರ ವಿಚಾರ, ಚಿಂತನೆಗಳು ಮತ್ತು ಧರ್ಮಗಳ ಬೆಳವಣಿಗೆಯಲ್ಲಿ ಯಾವ ತೆರನಾದ ಸಂಬಂಧವನ್ನು ಹೊಂದಿದ್ದವು ಎಂಬುದನ್ನು ಗ್ರಹಿಸ ಬಹುದಾಗಿದೆ. ಶ್ರವಣಬೆಳಗೊಳದ  ಶ್ರೀಜೈನಮಠದ ಹಸ್ತಪ್ರತಿ ಭಂಡಾರದಲ್ಲಿಯ 15-16 ನೇಶತಮಾನಕ್ಕೆ ಸೇರಿದ ಹಸ್ತಪ್ರತಿಯ ಗರಿಗಳ ಮೇಲೆ ಗ್ರಂಥದ ಬರೆಹ ಮತ್ತು ಚಿತ್ರದ ರಚನೆಗಳಿರುವುದನ್ನು ಬಿ.ಕೆ.ಹಿರೇಮಠ ಅವರು ಗುರುತಿಸಿದ್ದಾರೆ. ಈ ಹಸ್ತಪ್ರತಿಯ ಗರಿಗಳಲ್ಲಿ ಜೈನಬಸದಿ,ದೇವಾಲಯಗಳ ಮುಂಭಾಗದಲ್ಲಿ ಕಂಗೊಳಿಸುವ ಮಾನಸ್ತಂಭಗಳನ್ನು ಬಿಡಿಸಿ ತೋರಿಸಲಾಗಿದೆ. ಸ್ತಂಭದ ಪೀಠ, ಮೇಲಿನ ಸ್ತಂಭರಚನೆ, ಅದಕ್ಕೂ ಮೇಲಿರುವ ಮಂಟಪ ಈ ಪ್ರಮುಖ ಭಾಗಗಳನ್ನು ಪ್ರಮಾಣಬದ್ಧವಾಗಿ ತೋರಿಸಲಾಗಿದೆ. ಈ ರೀತಿಯ ಹಸ್ತಪ್ರತಿಗಳಲ್ಲಿ ದೇವಸ್ಥಾನ, ಬಸದಿಗಳಲ್ಲಿ ನಡೆಯುತ್ತಿದ್ದ ವೈಭವದ ಪೂಜೆಗಳಿಗೆ ಬೇಕಾಗುವ ಅಲಂಕರಣ ವಸ್ತು ಸಾಧನ ಸಾಮಗ್ರಿಗಳ ಚಿತ್ರ ವಿವರಗಳು ಇದ್ದು ಆ ಕಾಲದ ಜಿನಧರ್ಮದ  ಧಾರ್ಮಿಕ ಆಚರಣೆಯ ಸ್ವರೂಪಗಳನ್ನು ತಿಳಿದುಕೊಳ್ಳ ಬಹುದಾಗಿದೆ. ಕೆಲವು ಹಸ್ತಪ್ರತಿಗಳಲ್ಲಿ ಕಾವ್ಯದ ಪ್ರಮುಖವಾದ ಪ್ರಸಂಗ  ಅಥವಾ ಸನ್ನಿವೇಶಗಳ ಚಿತ್ರಗಳ ರಚನೆಯನ್ನು ಕಾಣಬಹುದು. ಶಬ್ದರೂಪವಾಗಿರುವ ಕಾವ್ಯದ ಸಂದರ್ಭಗಳನ್ನು ಚಾಕ್ಷುಷಗೊಳಿಸಿರುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಪ್ರತಿಕಾರನು ಒಂದು ಕೃತಿಯನ್ನು ಬರಹಕ್ಕಿಳಿಸುತ್ತ ಅದನ್ನು ಆಸ್ವಾದಿಸುತ್ತ ಸುಂದರ ಸನ್ನಿವೇಶಗಳನ್ನು ಅಂತರಂಗದಲ್ಲಿ ಪರಿಭಾವಿಸಿಕೊಳ್ಳುತ್ತಾ ದೃಶ್ಯಮಾಲೆಯನ್ನು ಸೃಷ್ಟಿಸಿರುವುದನ್ನು ಮನಗಂಡರೆ  ಹಸ್ತಪ್ರತಿಕಾರರು  ಚಿತ್ರಕಲಾ ಪರಿಣಿತಿಯನ್ನು ಹೊಂದಿದ್ದರು ಎಂಬುದು ಸಾಬೀತಾಗುತ್ತದೆ. ಹಸ್ತಪ್ರತಿಗಳಲ್ಲಿನ ಚಿತ್ರರಚನೆಗೆ ಇರುವ ಅವಕಾಶ ಸೀಮಿತವಾಗಿದ್ದು ಅತ್ಯಂತ ದಕ್ಷತೆಯಿಂದ ಕೌಶಲಪೂರ್ಣವಾಗಿ ಮಾಡಬೇಕಾದ ಕೆಲಸ. ಹಸ್ತಪ್ರತಿ ಚಿತ್ರಕಾರರು ತಮ್ಮ ಕಲ್ಪನೆ, ಸಂಸ್ಕಾರ ಪರಿಸರಗಳನ್ನು ಮೈಗೂಡಿಸಿಕೊಂಡು ಮುಕ್ತವಾಗಿಯೂ ವೈವಿಧ್ಯಪೂರ್ಣವಾಗಿಯೂ ಅಲ್ಲಲ್ಲಿ ಸ್ವಾತಂತ್ರ್ಯ ವಹಿಸಿ ಚಿತ್ರ ರಚನೆ ಮಾಡಿರುವುದು ಹಾಗೂ ಚಿತ್ರಗಳಿಗೆ ತಮ್ಮ ಪರಿಸರದ ವೇಷಭೂಷಣಗಳನ್ನು ತೊಡಿಸಿರುವುದು ಕರ್ನಾಟಕ ಚಿತ್ರಕಲಾ ಪರಂಪರೆಯಲ್ಲಿ ಗಮನಾರ್ಹವಾದುದಾಗಿದೆ. ಹಸ್ತಪ್ರತಿಗಳು ಸಾಹಿತ್ಯಕ ಮೌಲ್ಯದೊಂದಿಗೆ ತಮ್ಮಲ್ಲಿರುವ ಚಿತ್ರ,ವರ್ಣಚಿತ್ರ ರಚನೆಗಳಿಂದಾಗಿ ಚಾರಿತ್ರಿಕ ಸಾಂಸ್ಕೃತಿಕ ಮತ್ತು ಕಲಾ ಪರಂಪರೆಯ ಮೌಲ್ಯಗಳನ್ನು  ವ್ಯಕ್ತ ಪಡಿಸಿವೆ.
     ಹಸ್ತಪ್ರತಿಗಳ ಅಧ್ಯಯನದ ಮೂಲಕ ಪ್ರಾಚೀನ ಕಾಲದ ಜನತೆಯ ವಿದ್ಯಾಭಿಮಾನ, ಧರ್ಮಾಭಿಮಾನ ಹಾಗೂ ಬದುಕಿನ ಪ್ರಜ್ಞೆಯನ್ನು ತಿಳಿದುಕೊಳ್ಳಲು ಸಾಧ್ಯ ಇರುವುದರಿಂದ ಮಹತ್ತರವಾದ ಸಾಂಸ್ಕೃತಿಕ ದಾಖಲೆಗಳಾಗಿವೆ. ಹಸ್ತಪ್ರತಿ ಪುಷ್ಪಿಕೆಗಳಲ್ಲಿ ಮತ್ತು ಭಿನ್ನಪಾಠಗಳಲ್ಲಿ ಅಡಗಿರುವ ಹೇರಳವಾದ ಸಾಂಸ್ಕೃತಿಕ- ಸಾಹಿತ್ಯ ವಿವರಗಳು ಸಂಸ್ಕೃತಿಯ ಪುನರ್ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿವೆ.
 4. ಸಾಹಿತ್ಯ ಚರಿತ್ರೆಯ ಅಧ್ಯಯನದ ಆಕರಗಳಾಗಿ ಹಸ್ತಪ್ರತಿಗಳು:
      ಹಸ್ತಪ್ರತಿಗಳಲ್ಲಿಯ ಕೆಲವು ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಕವಿಗಳ ಹೆಸರನ್ನು ಕಾವ್ಯಗಳ ಕಾಲವನ್ನು ಅರ್ಥೈಸಲು ಸಹಕಾರಿಯಾಗಿವೆ. ಈ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ ಸಂಗತಿಗಳು ಸಾಹಿತ್ಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸಿವೆ.
    ಪ್ಲವ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು   ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.1607ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿದ್ದನ್ನು ತಿಳಿಸುತ್ತದೆ. ಪಾರಮಾರ್ಥಿಕದ ಪುಸ್ತಕ ಸರ್ವಜ್ಞನ ವಚನ ಸಂಕಲನ ವಾಗಿದ್ದು ಇದರಲ್ಲಿ 77ಪದ್ಧತಿಗಳಿದ್ದು 937 ತ್ರಿಪದಿಗಳಿವೆ, ಹಸ್ತಪ್ರತಿ ತಜ್ಞರಾದ ಎಸ್.ಶಿವಣ್ಣನವರ ಪ್ರಕಾರ ಈ ಪುಷ್ಟಿಕೆಯಲ್ಲಿಯ ಉಲ್ಲೇಖವು ಕಾಲೋಲ್ಲೇಖವಿರುವ ಸರ್ವಜ್ಞನ ಕೃತಿಯ ಪ್ರತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕೃತಿಯಾಗಿದ್ದು, ಈ ಪ್ರತಿಯಲ್ಲಿಯ ಕಾಲದ ಉಲ್ಲೇಖವು ಸರ್ವಜ್ಞನ ಕಾಲನಿರ್ಣಯಕ್ಕೆ ಒಂದು ಮೈಲುಗಲ್ಲಾಗಿದೆ.
      ಕ್ರಿ.ಶ.1603ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ. 1603ರಲ್ಲಿ ಗೂಳೂರು ಸಿದ್ಧವೀರೇಶ್ವರದೇವರು ಜೀವಿಸಿದ್ದರು ಎಂಬುದು ತಿಳಿದುಬರುತ್ತವೆ.
      ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರಶಿಷ್ಯರಾಗಿದ್ದು, ಐದನೆಯ ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ. ಇವರ ಶೂನ್ಯಸಂಪಾದನೆಯನ್ನು ವಿರಕ್ತ ತೊಂಟದಾರ್ಯ ಕ್ರಿ.ಶ,1616ರಲ್ಲಿ ಪ್ರತಿಮಾಡಿದ್ದಾರೆ. ಈ ಹಸ್ತಪ್ರತಿಯ ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯಕ್ಕೆ ಆಕರವಾಗಿದೆ.
ಕುಣಿಗಲ್ ಶ್ರಾವಕ ಮಾಣಿಕ್ಯ ರಾಜಯ್ಯನವರ ಮನೆಯಲ್ಲಿದ್ದ ಹಸ್ತಪ್ರತಿಗಳ ಸಂಗ್ರಹದಲ್ಲಿ ಚನ್ನಬಸವ ಪುರಾಣದ ಕಟ್ಟು ಕಂಡು ಬಂದಿದ್ದು, ಈ ಕೃತಿಯ ಹಸ್ತಪ್ರತಿಯ ಅಂತ್ಯದಲ್ಲಿ` ಯಿದು ಸಹ ವೀರಮಾಹೇಶ್ವರರ ಸದ್ವಿಮಲ ಹೃದಯಾಬ್ಜಮಿತ್ರನುರು ಷಟ್ಸ್ಥಲ ಬ್ರಹ್ಮನೆಂಬುದಧಿ ವಧ್ನ ಸೋಮನೆನಿಪ ಗುರುಸಿದ್ಧ ವೀರೇಶ್ವರನ ಸದಮಲಜ್ಞಾನಿ ಸಕಲಾಗಮ ಪುರಾಣ ಕೋವಿದನೆನಿಪ ವಿರೂಪಾಕ್ಷ ಪಂಡಿತಾರಾಧ್ಯರತಿಮುದದಿ ಪೇಳ್ದೀ ಕಥೆಯೊಳರಚನೆಯ ಖಾಂಡಂ ಅಂತು ಸಂಧಿ 27ಕ್ಕಂ ಪದನೂ 1007ಕ್ಕಂ ಮಂಗಳಮಹಾಶ್ರೀ' ಎಂಬ ಪುಷ್ಪಿಕೆಯ ಉಲ್ಲೇಖದ ಪ್ರಕಾರ ಚೆನ್ನಬಸವ ಪುರಾಣದ ಕತೃವಿನ ಹೆಸರು ವಿರೂಪಾಕ್ಷಪಂಡಿತ ಅಲ್ಲಾ ವಿರೂಪಾಕ್ಷಪಂಡಿತಾರಾಧ್ಯ ಎಂಬುದಾಗಿ ತಿಳಿದು ಬರುತ್ತದೆ.
  ನಾಲ್ಕನೇ ಶೂನ್ಯ ಸಂಪಾದನಾಕಾರನಾದ ಗುಮ್ಮಳಾಪುರದ ಸಿದ್ಧಲಿಂಗ ಯತಿಗೂ ತುಮಕೂರು ಜಿಲ್ಲೆಯ ಪರಿಸರಕ್ಕೂ ಇದ್ದ ನಿಕಟ ಸಂಪರ್ಕದ ಬಗೆಗೆ ಜಿಲ್ಲೆಯ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಮಾಹಿತಿಯನ್ನು ಒದಗಿಸುತ್ತದೆ.
 
ಜಕ್ಕಣಾರ್ಯ ಸಂಕಲಿತ ಏಕೋತ್ತರ ಶತಸ್ಥಲ ಹಸ್ತಪ್ರತಿ ಸಂಬಂಧಿಸಿದ ಪುಷ್ಪಿಕೆಯ ಆದಿಯಲ್ಲಿ  

 ಶ್ರೀ ಗುಮಳಾಪುರ ಸಿದ್ಧಲಿಂಗಾಯ ನಮಃ| ಯೆಕೋತ್ತರ ಸ್ವರವಚನ|
 ಪಿಂಡಸ್ಥಲ ರಾಗಮಧುಮಾಧವಿ ಬಿಂದು-ವಿನ್ನಾಣದೊಳಗಂದವಿಟ್ಟಿಹ..........ಎಂದು

ಅಂತ್ಯದಲ್ಲಿ......ಹೆಬ್ಬೂರ ದೇವರು ಬರದ್ದು ಗುರುಲಿಂಗವೇ ಗತಿ, ಮತಿ,ಶುಭಮಸ್ತು, ನಿರ್ವಿಘ್ನಮಸ್ತು ಗುಮ್ಮಳಾಪುರದ ಸಿದ್ಧಲಿಂಗದೇವರ ಪಾದವೆ ಗತಿ ಮತಿ ಅಯ್ಯ.......ಗುಂಮಳಾಪುರಾಧಿಪ ಸಿದ್ಧಲಿಂಗಾಯ ನಮಃ  ಎಂದಿದೆ.
ಹಾಗೆಯೇ ಅದೇ ಕಟ್ಟಿನಲ್ಲಿಯ ಕೊನೆಯ ನಾಲ್ಕುಗರಿಗಳಲ್ಲಿ ವಾರ್ತೆ ಸೋಮಣ್ಣನ `ಪಂಚೀಕರಣ ಪದಗಳು' ಪರಿವರ್ಧಿನಿಷಟ್ಪದಿಯ ಕೃತಿಯ ಆದಿಯಲ್ಲಿ ಶ್ರೀಗುರುಗುಮ್ಮಳಾಪುರ ಸಿದ್ಧಲಿಂಗಾಯ ನಮಃ ಎಂದಿದೆ.
ಈ ಹಸ್ತಪ್ರತಿಗಳ ಉಲ್ಲೇಖಗಳು ಶೂನ್ಯ ಸಂಪಾದನಾಕಾರ ಗುಮ್ಮಳಾಪುರ ಸಿದ್ಧಲಿಂಗಯತಿಗೂ ತುಮಕೂರು ಜಿಲ್ಲೆಗೂ ಇದ್ದ ಸಂಬಂಧ ಹಾಗೂ ತೋಂಟದಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಯವನು ಎಂಬುವುದಕ್ಕೆ ಪುರಾವೆಯನ್ನು ಒದಗಿಸುತ್ತದೆ.

ಬೇಡತ್ತೂರಿನ ರಾಮಾಂಜನೇಯವರ ಸಂಗ್ರಹದಲ್ಲಿದ್ದ ಪ್ರಭುಲಿಂಗಲೀಲೆಯ ಹಸ್ತಪ್ರತಿಯ ಪುಷ್ಪಿಕೆಯಲ್ಲಿಯ ಶ್ರೀಗುರು ಬಸವಲಿಂಗಾಯ ನಮಃ ಹಂಪೆ ಚಾಮರಸೈಯ್ಯನವರು ನಿರೂಪಿಸಿದ ಪ್ರಭುಲಿಂಗಲೀಲೆ ಬರೆಯುವುದಕ್ಕೆ ಶುಭಮಸ್ತು ಎಂಬ ಉಲ್ಲೇಖವು ಪ್ರಭುಲಿಂಗಲೀಲೆಯ ಕರ್ತೃ ಚಾಮರಸ ಹಾಗೂ ಆತ ಹಂಪೆಯವನು ಎನ್ನುವ ವಿಷಯವನ್ನು ಸ್ಥಿರೀಕರಿಸುತ್ತದೆ. 

  ಹಸ್ತಪ್ರತಿಗಳಿಂದ ಸಂಪಾದಿತವಾಗಿರುವ ಮುದ್ರಿತವಾದ ಗ್ರಂಥಗಳಲ್ಲಿಯ ಪಾಠಾಂತರಗಳು, ಭಿನ್ನಪಾಠಗಳು, ಮಾತೃಕೆಗಳು, ಸ್ಖಾಲಿತ್ಯಗಳು ಸಾಮಾಜಿಕ ಭಾಷಾ ಸ್ವರೂಪದ ಅಧ್ಯಯನಕ್ಕೆ, ಸಾಹಿತ್ಯ ಗ್ರಹಿಕೆಯ ಅಧ್ಯಯನಕ್ಕೆ , ಪ್ರಾದೇಶಿಕ ಪಠ್ಯಬದಲಾವಣೆಯ ಅಧ್ಯಯನಕ್ಕೆ, ಪಾಠಭಿನ್ನತೆಯ ಸಾಂಸ್ಕೃತಿಕ ಸಂಗತಿಗಳ ಅಧ್ಯಯನಕ್ಕೆ ಆಕರಗಳಾಗುವುದನ್ನು ನಾವು ಪರಿಶೀಲಿಸ ಬಹುದಾಗಿದೆ. ಅದೇ ರೀತಿ ಸಂಪಾದಿತ ಗ್ರಂಥಗಳಲ್ಲಿ ಕೊಟ್ಟಿರುವ ಅಡಿಟಿಪ್ಪಣಿಗಳ ಅಧ್ಯಯನ ಸಹ ಆಯಾ ಸಾಹಿತ್ಯ ಕೃತಿಗಳ ಬಗೆಗೆ ಭಿನ್ನ ಭಿನ್ನ ಗ್ರಹಿಕೆಗಳನ್ನು ಗುರುತಿಸಲು ಸಹಾಯಕವಾಗುವುದನ್ನು ಗಮನಿಸ ಬಹುದಾಗಿದೆ.    

    ತುಮಕೂರು ಜಿಲ್ಲೆಯ ಪರಿಸರದಲ್ಲಿ 18ನೇ ಶತಮಾನದಿಂದ 20ನೇ ಶತಮಾನದ ಪೂರ್ವಾರ್ಧದಲ್ಲಿ ಎಷ್ಟೋ ಜನ ಸ್ವರವಚನಕಾರರೂ, ಕವಿಗಳು ಆಗಿಹೋಗಿದ್ದಾರೆ. ಅವರ ಉಲ್ಲೇಖ ಎಲ್ಲಿಯೂ ದಾಖಲಾಗದಿರುವುದು ದುರಾದೃಷ್ಟಕರ. ಸಿರಿಗನ್ನಡ ಗ್ರಂಥ ಚರಿತ್ರ ಕೋಶದಲ್ಲಿ ಕೆಲವು ಕವಿಗಳ ಉಲ್ಲೇಖ ಮಾತ್ರ ಸಿಗುತ್ತದೆ. ಕೆಲವು ಕವಿಗಳ ಉಲ್ಲೇಖ ಎಲ್ಲಿಯೂ ಸಿಕ್ಕಿಲ್ಲ. ಆದಾಗ್ಯೂ ಎಸ್.ಶಿವಣ್ಣನವರು ಹಸ್ತಪ್ರತಿ ಸಂಗ್ರಹಗಳಲ್ಲಿಯ ಹಸ್ತಪ್ರತಿಗಳ ಪರಿಶೀಲಿಸಿ ಹಾಗೂ ಸ್ವರವಚನ ಸಂಪುಟಗಳಲ್ಲಿ ದಾಖಲಾಗಿರುವ ಜಿಲ್ಲೆಯ ಕವಿಗಳ, ಸ್ವರವಚನಕಾರರ ಹೆಸರುಗಳು ಹಾಗೂ ಕೃತಿಗಳ ಬಗೆಗೆ ಗಮನ ಸೆಳೆದಿದ್ದಾರೆ. ಈ ಕವಿಗಳ ಬಗೆಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಈ ಬಗೆಗೆ ಹಸ್ತಪ್ರತಿ ಪುಷ್ಪಿಕೆಗಳಲ್ಲಿಯ ಮಾಹಿತಿಯನ್ನು ಆಧರಿಸಿ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ. ಬಹಳಷ್ಟು ಅನಾಮಧೇಯ ಕವಿಗಳು ಮಧುಗಿರಿ ತಾಲ್ಲೋಕಿನಲ್ಲಿಯೇ ಕಂಡುಬಂದಿರುವುದನ್ನು ಎಸ್.ಶಿವಣ್ಣನವರು ಶೋಧಿಸಿದ್ದಾರೆ. ಮದ್ದಗಿರಿ ಪದ್ದಯ್ಯ, ಮಧುಗಿರಿ ಬ್ರಹ್ಮಸೂರಿ ಕವಿ (ಭಾವನಾಸ್ತುತಿ, ಸಾಂಗತ್ಯ), ಮಧುಗಿರಿ ಪದುಮಯ್ಯ (ವಿಮಲನಾಥ ಸ್ವಾಮಿ ಪಂಚಕಲ್ಯಾಣ ದ್ವಿಪದಿ), ಮಧುಗಿರಿ ಒಡೆಯ (ಸ್ವರವಚನ) ಮಧುಪುರಿವಾಸ ಮಲ್ಲಿಕಾರ್ಜುನ, ಸ್ವರವಚನ, ಮಿಡಗೇಸಿ ಮುದ್ದಮಲ್ಲ (ಸ್ವರವಚನ) ಇತ್ಯಾದಿ. ಹಾಗೆಯೇ ಜಿಲ್ಲೆಯಲ್ಲಿ ಕವಿಗಳ ಹೆಸರುಗಳು ಅನಾಮಧೇಯವಾಗಿದ್ದು ಅವರು ರಚಿಸಿರುವ ಸ್ವರವಚನಗಳ ಅಂಕಿತ ದೊರೆತಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ನಿಡುಗಲ್ಲು ವೀರಭದ್ರಾಷ್ಟಕ, ಅಮರಕುಂಡ ಮಲ್ಲಿನಾಥಯ್ಯ, ಕರಿಗಿರಿಚೆನ್ನ, ಕರಿಗಿರಿನಾರಸಿಂಹ (ನರಸಿಂಹಾಷ್ಟಕ) ಗುಬ್ಬಿ ಮಲ್ಲೇಶ, ಗುಬ್ಬಿಪುರದ ಮುರಿಗೆ ಚೆನ್ನಬಸವ, ಮಧುಗಿರಿ ಲಿಂಗ, ಮಧುಗಿರಿ ವರನಿಲಯ, ಮಧುಗಿರಿ ಪುರಾವರಧೀಶ್ವರ,ಭಾವನಾಸ್ತುತಿ (ಸಾಂಗತ್ಯ) ಅನಾಮಧೇಯ ಇತ್ಯಾದಿ ಅಂಕಿತಗಳಲ್ಲಿ ಸ್ವರವಚನಗಳನ್ನು ರಚಿಸಿದ್ದಾರೆ. ಈ ಹಾಡುಗಾರರ ಇತಿವೃತ್ತದ ಬಗೆ  ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಗೂಳೂರು ಶಂಕರ ಕವಿ, ಗುಬ್ಬಿಯ ಮಲ್ಲೇಶ ಕವಿಗಳ (ಬಹುಶಃ ಕವಿಇದ್ದಿರಬೇಕು) ಇತಿವೃತ್ತ ಹಾಗೂ ಕಾವ್ಯಗಳ ಬಗೆಗೆ ಬೆಳಕು ಚೆಲ್ಲಬೇಕಾಗಿದೆ. ಈ ಅನಾಮಧೇಯ ಕವಿಗಳು ರಚಿಸಿರುವ ಹಾಡುಗಳು, ಕೃತಿಗಳು ಹಸ್ತಪ್ರತಿಗಳಲ್ಲಿಯೇ ಉಳಿದಿವೆ.   ತುಮಕೂರು ಜಿಲ್ಲೆಯಲ್ಲಿ ಆಗಿಹೋದ ಎಷ್ಟೋ ಜನ ಕವಿಗಳು ಬರೆದಿರುವ ಕೃತಿಗಳ ಹಾಡುಗಳು, ಸ್ವರವಚನಗಳ ಬಗೆಗೆ ಶೋಧ ನಡೆಯಬೇಕಾಗಿದೆ. ಇವೆಲ್ಲವೂ ಹಸ್ತಪ್ರತಿಗಳಲ್ಲಿಯೇ ಅಜ್ಞಾತವಾಗಿಯೇ ಉಳಿದಿವೆ. ಶೋಧಕಾರ್ಯ ನಡೆಯಬೇಕಾಗಿದೆ. 19 ಹಾಗೂ 20ನೇ ಶತಮಾನದ ಆದಿಭಾಗದಲ್ಲಿದ್ದ ಅಜ್ಞಾತ ಕರ್ತೃಗಳ ಹಾಡುಗಳು ಕೃತಿಗಳ ಹಸ್ತಪ್ರತಿಗಳ ಶೋಧ ಹಾಗೂ ಸೂಚಿಕಾರ್ಯ ಮಾಡಬೇಕಾಗಿದೆ.
      ಕಡಬದ ನಂಜೇಶನ ಶಿಷ್ಯ ನಂಜನು ರಚಿಸಿರುವ ಸ್ವರವಚನಗಳು ಇತ್ಯಾದಿ ಜಿಲ್ಲೆಯ ಅಲಕ್ಷಿತ ಕವಿಗಳ ಕೃತಿಗಳು ಹಾಡುಗಳ ಹಸ್ತಪ್ರತಿಗಳ ಬಗೆಗೆ ಸರ್ವೇಕ್ಷಣೆ ನಡೆಯಬೇಕಾಗಿದೆ. ಕ್ರೀಡಾಪುರದ (ಗುಳೂರು) ಪ್ರೌಢಲಿಂಗಾರ್ಯ  ಕವಿಯು ರೇಣುಕಾ ಚರಿತ್ರೆಯೆಂಬ ವಚನ ಕಾವ್ಯವನ್ನು ರಚಿಸಿರುವುದಾಗಿ ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.  ಉಪೇಕ್ಷೆಗೆ ಒಳಗಾಗಿರುವ ಕವಿಗಳ ಕೃತಿಗಳು ಇನ್ನೂ ಹಸ್ತಪ್ರತಿಗಳಲ್ಲಿ ಅಜ್ಞಾತವಾಗಿ ಉಳಿದಿವೆ.
      ಸಿದ್ಧಲಿಂಗೇಶ್ವರ ಕಾವ್ಯವನ್ನು ಬರೆದಿರುವ ಹೆಬ್ಬೂರು ಹೇರಂಬ ಕವಿಯು ಘನಪುರಿವಾಸಾ ಅಂಕಿತದಲ್ಲಿ ನೀತಿಕಂದಗಳನ್ನು ಬರೆದಿದ್ದು ಅದು ಕಾಗದ ಪ್ರತಿಯಲ್ಲಿದೆ. ಅದೇ ರೀತಿ ನಿಡುಮಾಮಿಡಿ ಕರಿಸಿದ್ಧಯ್ಯ ಲಿಂಗಸ್ತುತಿ ಎಂಬ ಕಾವ್ಯವನ್ನು ಮಂದಾನಿಲ ರಗಳೆಯಲ್ಲಿ ರಚಿಸಿದ್ದಾನೆ. ಕೃತಿಯ ಆದಿಯಲ್ಲಿ ಕೃತಿಕಾರ ಘನಪುರಿವಾಸ ವಿಘ್ನೇಶನನ್ನು ಹೆಸರಿಸಿದ್ದಾನೆ. ಹೀಗಾಗಿ ಈ ಕೃತಿಕಾರ ತುಮಕೂರು ಜಿಲ್ಲೆಯ ಹೆಬ್ಬೂರಿನ ನಿವಾಸಿಯಾಗಿರಬೇಕು ಎಂದು ಊಹಿಸಬಹುದಾಗಿದೆ. ಈ ಕೃತಿಯು ಕಾಗದದ ಪ್ರತಿಯಾಗಿದ್ದು ಇದು ಬೆಂಗಳೂರಿನ ಬೇಲಿಮಠ ಸಂಸ್ಥಾನದ ಸಂಗ್ರಹದಲ್ಲಿದೆ.
   ಮಹಾನಾಡು ಪ್ರಭುಗಳ ಶಾರದಾ ಭಂಡಾರ ಹಾಗೂ ಅದರಲ್ಲಿದ್ದ ಹಸ್ತಪ್ರತಿಗಳ ಪುಷ್ಟಿಕೆಗಳು ಒದಗಿಸುವ ಮಾಹಿತಿಗಳ ಮಹತ್ವದ ಬಗೆಗೆ ಪ್ರಸ್ತಾಪಿಸಲೇ ಬೇಕಾಗಿದೆ. 17ನೇ ಶತಮಾನದಲ್ಲಿ ಬಿಜ್ಜಾವರದ ಮಹಾನಾಡುಪ್ರಭುಗಳು ಅದರಲ್ಲಿಯು ಇಮ್ಮಡಿ ಚಿಕ್ಕಪ್ಪಗೌಡರ ಆಳ್ವಿಕೆಯ ಕಾಲದಲ್ಲಿ ತಮ್ಮ ಅರಮನೆಯಲ್ಲಿ ಶಾರದಾ ಭಂಡಾರವನ್ನು ಹೊಂದಿದ್ದರು ಎಂಬ ಸಂಗತಿ ಐತಿಹಾಸಿಕ ಮಹತ್ವ ಪಡೆದಿದೆ.  ತಮ್ಮ ಅರಮನೆಯ ಶಾರದಾ ಭಂಡಾರಕ್ಕೆ ಬೇರೆಯವರಿಂದ ಪ್ರತಿಮಾಡಿಸಿ ಸೇರಿಸುತ್ತಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಮಹಾನಾಡು ಸಂಸ್ಥಾನದ ಶಾರದ ಭಂಡಾರದಲ್ಲಿ ಹಸ್ತಪ್ರತಿಗಳ ಬಗೆಗೆ ಸಂಬಂಧಿಸಿದ ಹಾಗೆ ಕ್ರಿ.ಶ.1601ರಿಂದ1621 ಕಾಲಾವಧಿಯಲ್ಲಿ 7 ಹಸ್ತಪ್ರತಿಗಳ ಪುಷ್ಟಿಕೆಗಳು ಲಭ್ಯವಿವೆ. ಸಾನಂದ ಪುರಾಣ, ಭರತೇಶ ಚರಿತೆ, ಪಂಚಪ್ರಕಾರ ಗದ್ಯ, ಪಾರಮಾರ್ಥಿಕ ಪುಸ್ತಕ ಸ್ತೋತ್ರಭಾಷ್ಯಗಳ ಪುಸ್ತಕ, ಆರಾಧ್ಯ ಚಾರಿತ್ರೆ, ಜನವಶ್ಯ ಕೃತಿಗಳನ್ನು ಬರೆಸಿ ಶಾರದ ಭಂಡಾರಕ್ಕೆ ಸೇರಿಸಿದ್ದರ ಬಗೆಗೆ ಪುಷ್ಪಿಕೆಗಳಿಂದ ತಿಳಿದು ಬರುತ್ತದೆ. 1620ರಲ್ಲಿ ರಚಿತವಾದ ಸ್ತೋತ್ರಭಾಷ್ಯಗಳ ಪ್ರತಿಯ ಪುಷ್ಪಿಕೆಯಲ್ಲಿ ಇಮ್ಮಡಿ ಚಿಕ್ಕಪ್ಪಗೌಡರ ಶಾರದಾ ಭಂಡಾರದ ಉಲ್ಲೇಖವಿದೆ. ಸ್ಥಳೀಯ ಅರಸರೊಬ್ಬರ ಆಳ್ವಿಕೆಯ ಕಾಲದಲ್ಲಿ ಸರಸ್ವತಿ ಭಂಡಾರದ ಸ್ಥಾಪನೆ ಹಾಗೂ ಅದರ ಸಲುವಾಗಿ ವಿಶೇಷ ಆಸಕ್ತಿ ವಹಿಸಿ ಕೆಲವು ಪ್ರಮುಖ ಕೃತಿಗಳನ್ನು ಪ್ರತಿಮಾಡಿಸಿ ಶಾರದಾ ಭಂಡಾರಕ್ಕೆ ಸೇರಿಸಿದ್ದು ಮಹತ್ತರ ಸಂಗತಿಯಾಗಿದೆ.
   
 ಗೋವಿಂದವೈದ್ಯನ ಕಂಠೀರವ ನರಸರಾಜೇಂದ್ರ ವಿಜಯದ ಹಸ್ತಪ್ರತಿಯ ಅಂತ್ಯದಲ್ಲಿ,`` ಸ್ವಸ್ತಿಶ್ರೀ ವಿಜಾಯಾಭ್ಯುದಯ ಶಾಲಿವಾಹನ ಶಕ 1570 ಸಂದ ಸರ್ವಧಾರಿ ಸಂವತ್ಸರದ ಜೇಷ್ಠ ಶುದ್ಧ11 ಚಂದ್ರವಾರದಲ್ಲೂ ಶ್ರೀ ಮನ್ಮಹಾದೇವ ದೇವೋತ್ತಮನಾದ ಶ್ರೀ ಲಕ್ಷ್ಮೀನರಸಿಂಹನು ಕಂಠೀರವ ನರಸರಾಜೇಂದ್ರನಿಗೆ ಆಯುರಾರೋಗ್ಯೈಶ್ವರ್ಯಾಭಿವೃದ್ಧ್ಯಷ್ಟಪುತ್ರ ಬಹುಧನವನು ಕೊಟ್ಟು ರಕ್ಷಿಸಲಿ ಎಂದು ರಂಗನಾಥಸ್ವಾಮಿಯ ಕೃಪೆಯಿಂದ ಶ್ರೀನಿವಾಸ ಪಂಡಿತರ ಮಗ ಗೋವಿಂದ ವೈದ್ಯನು ಕಂಠೀರವ ನರಸರಾಜ ವಿಜಯವನ್ನು ವಿರಚಿಸಿ ಅಚಂದ್ರಾರ್ಕವಾಗಿ ಭೂಮಿಯೊಳಿರಲಿಯೆಂದು ಭಾರತಿ ನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರ ಪಡಿಸಿದುದು.
 ಕವಿಯು ತನ್ನ ಕೃತಿಯನ್ನು ಅದರ ಕಥಾನಾಯಕನ ಎದುರಿಗೆ ಭಾರತಿ ನಂಜ ಎಂಬ ಗಮಕಿಯಿಂದ ಓದಿಸಿದ ಸ್ವಾರಸ್ಯ ಸಂಗತಿ ಇದರಿಂದ ವ್ಯಕ್ತವಾಗುತ್ತದೆ. ಕಂಠೀರವ ನರಸರಾಜನ ಆಶ್ರಯದಲ್ಲಿ ಭಾರತಿ ನಂಜ ಎಂಬ ಗಮಕಿಯಿದ್ದ ಎಂಬ ಅಂಶವೂ ಗಮಕ ಕಲೆಯ ದೃಷ್ಟಿಯಿಂದ ಗಮನಾರ್ಹವಾದುದಾಗಿದೆ.

  ಹರಿಹರ ಕವಿಯ ನಂತರ ಅವನು ಹುಟ್ಟು ಹಾಕಿದ ರಗಳೇ ಸಾಹಿತ್ಯ ಪ್ರಕಾರ ನಂತರದ ಸಾಹಿತ್ಯ ಚರಿತ್ರೆಯ ಪರಂಪರೆಯಲ್ಲಿ ಮುಂದುವರೆಯಲಿಲ್ಲ ಎನ್ನುವ ಅಭಿಪ್ರಾಯ ವಿದ್ವಾಂಸರಿಂದ ವ್ಯಕ್ತವಾಗಿದೆ. ಆದರೆ ಈ ಅಭಿಪ್ರಾಯವನ್ನು ದೊರೆತ ಹಸ್ತಪ್ರತಿಗಳ ಮೂಲಕ ನಿರಾಕರಿಸುವಂತಾಗಿದೆ. ಹರಿಹರನು ಹುಟ್ಟು ಹಾಕಿದ ರಗಳೆ ಸಾಹಿತ್ಯ ಪ್ರಕಾರವನ್ನು ನಂತರದ ಕಾಲದಲ್ಲಿ ಅವನಷ್ಟು ವಿಪುಲವಾಗಿ ಹಾಗೂ ಸಮರ್ಥವಾಗಿ ಶಂಕರಕವಿ, ವಿರಕ್ತ ತೋಂಟದಾರ್ಯ, ಸೋಮೆಕಟ್ಟೆ ಚೆನ್ನವೀರಸ್ವಾಮಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. ಈ ವಿಷಯವನ್ನು ತುಮಕೂರು ಜಿಲ್ಲೆಯ ಪರಿಸರದಲ್ಲಿ ದೊರೆತ  ಹಸ್ತಪ್ರತಿಗಳು ಸಮರ್ಥಿಸುತ್ತವೆ.
ಕೆಲವು ವಿದ್ವಾಂಸರುಗಳು  ಹಸ್ತಪ್ರತಿಗಳ ಅನ್ವೇಷಣಾ ಕಾರ್ಯದಲ್ಲಿ ಪ್ರವೃತ್ತರಾಗಿದ್ದು,ಅಮೂಲ್ಯ ಹಸ್ತಪ್ರತಿ ಸಂಪತ್ತನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ನಿದರ್ಶನಕ್ಕೆ ಹೇಳುವುದಾದರೆ ತಿಪಟೂರು ತಾಲೋಕ್ ಹೊನ್ನವಳ್ಳಿ ಕರಿಸಿದ್ಧೇಶ್ವರ ಮಠದಲ್ಲಿ ಅಜ್ಞಾತವಾಗಿದ್ದಂತಹ ಸಂಸ್ಕೃತ,ಕನ್ನಡ,ತೆಲುಗು ಭಾಷೆಯ ಅಪ್ರಕಟಿತ ಸುಮಾರು 500 ಕೃತಿಗಳ ಹಸ್ತಪ್ರತಿಗಳ ಕಟ್ಟನ್ನು  ಪತ್ತೆಹಚ್ಚಿರುವುದು. ಈ ಹಸ್ತಪ್ರತಿಗಳ ಶೋಧನೆಯಿಂದ ಮಹತ್ತರವಾದ ಸಂಗತಿಗಳು ಬೆಳಕಿಗೆ ಬಂದವು. ಬೇರೆಡೆ ಎಲ್ಲಿಯೂ ದೊರೆಯದಂತಹ ಆರುಸಾವಿರ ವಚನಗಳ ಕಟ್ಟು ಈ ಮಠದಲ್ಲಿಯೇ ದೊರೆತಿರುವುದು. ಇಲ್ಲಿಯವರೆಗೂ ಒಂದುಸಾವಿರ, ಎರಡು ಸಾವಿರ, ಮೂರು ಸಾವಿರ ವಚನಗಳ ಕಟ್ಟುಗಳು ಮಾತ್ರ ಲಭ್ಯಗೊಂಡಿದ್ದವು. ಈ ಕಟ್ಟಿನ ಸಹಾಯದಿಂದ ಅಕ್ಕಮಹಾದೇವಿಯ ಸುಮಾರು 60ಕ್ಕೂ ಹೆಚ್ಚಿನ ಹೊಸವಚನಗಳು, ಮೊದಲಬಾರಿಗೆ ನೀಲಮ್ಮನ 162 ಹೊಸವಚನಗಳು ಹಾಗೂ ಸಿದ್ಧರಾಮರ ಅಪ್ರಕಟಿತ ವಚನಗಳನ್ನು ಸಾ.ಶಿ.ಮರುಳಯ್ಯ ಹಾಗೂ ಎಸ್.ಶಿವಣ್ಣನವರು ಸಂಪಾದಿಸಿ ಪ್ರಕಟಿಸಿದ್ದಾರೆ.
  ಸಾಹಿತ್ಯದ ಅಧ್ಯಯನವಾಗಿಯೂ ಹಸ್ತಪ್ರತಿಗಳ ಅಧ್ಯಯನ ಇಂದು ಮುಖ್ಯವಾಗಿದೆ. ಆಧುನಿಕ ಪೂರ್ವಯುಗದಲ್ಲಿ ಸಾಹಿತ್ಯ ಕೃತಿಯೊಂದರ ಪ್ರಸರಣವನ್ನು ಲಭ್ಯವಿರುವ  ಆ ಕೃತಿಯ ಹಸ್ತಪ್ರತಿಗಳ ಸಂಖ್ಯೆಯನ್ನು ಆಧರಿಸಿ ಗ್ರಹಿಸ ಬಹುದಾಗಿದೆ. ವಚನಕಾರರ ವಚನಗಳು, ಹರಿದಾಸರ ಕೀರ್ತನೆಗಳು, ಭೀಮಕವಿಯ ಬಸವಪುರಾಣ, ವಿರೂಪಾಕ್ಷ ಪಂಡಿತನ ಚನ್ನಬಸವಪುರಾಣ, ಲಕ್ಷ್ಮೀಶನ ಜೈಮಿನ ಭಾರತ, ಕುಮಾರವ್ಯಾಸನ ಕುಮಾರವ್ಯಾಸ ಭಾರತ ಇತ್ಯಾದಿ ಕೃತಿಗಳ ಅಸಂಖ್ಯಾತ ಹಸ್ತಪ್ರತಿಗಳು ದೊರೆಯುತ್ತವೆ. ಈ ದೇಶೀ ಕಾವ್ಯಗಳೇ ಏಕೇ ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ. ಪಂಪಭಾರತ, ಗದಾಯುದ್ಧದಂತಹ ಚಂಪೂಕೃತಿಗಳ ಹಸ್ತಪ್ರತಿಗಳೇಕೆ ಅಷ್ಟು ಸಂಖ್ಯೆಯಲ್ಲಿ ದೊರೆಯುವುದಿಲ್ಲ ಎಂಬುದನ್ನು ಅಧ್ಯಯನಕ್ಕೊಳಪಡಿಸ ಬಹುದಾಗಿದೆ. ಕೃತಿಗಳ ಕುರಿತ ಲಭ್ಯವಿರುವ ಹಸ್ತಪ್ರತಿಗಳ ಸಂಖ್ಯೆಯ ಆಧಾರದ ಮೇಲೆ ಆ ಕಾಲದ ಓದುಗವರ್ಗದ ಮನೋಭಾವವನ್ನು ಚರ್ಚೆಗೊಳಪಡಿಸ ಬಹುದಾಗಿದೆ. ಒಂದು ಕೃತಿಯ ಹಸ್ತಪ್ರತಿಗಳು ದೊರೆಯುವ ಭೌಗೋಳಿಕ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಪ್ರಾದೇಶಿಕ ಭಿನ್ನಪಾಠಗಳನ್ನು ಗುರುತಿಸ ಬಹುದಾಗಿದೆ. ಯಾವ ಯಾವ ಪ್ರದೇಶದಲ್ಲಿ ಯಾವ ಯಾವ ಕವಿಯ ಕೃತಿಗಳನ್ನು ಅಧ್ಯಯನ ಮಾಡುವ ಓದುವ ವರ್ಗ ಇದ್ದಿತು? ಅವರ ಮನೋಭಾವ ಎಂತಹದ್ದು ಎಂಬುದನ್ನು ಗುರುತಿಸ ಬಹುದು. ಜೊತೆಗೆ  ಕೃತಿಗಳ ಜನಪ್ರಿಯತೆ ಹೇಗಿತ್ತು? ಏನಿತ್ತು? ಆಕಾಲದ ಜನರ ಮನೋಧೋರಣೆ ಯಾವ ರೀತಿಯಾಗಿತ್ತು? ಎಂಬ ಅಂಶವು ಮನದಟ್ಟಾಗುತ್ತದೆ.
  ಹಸ್ತಪ್ರತಿಗಳ ಅಧ್ಯಯನವನ್ನು ಗ್ರಂಥಸಂಪಾದನೆಯ ಚೌಕಟ್ಟಿನಿಂದ ಬದಿಗೆ ಸರಿಸಿ ನೋಡಿದಾಗ ಮಾತ್ರ ಅವುಗಳ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಸ್ತಪ್ರತಿಗಳಲ್ಲಿ ಕಂಡು ಬರುವ ಭಿನ್ನ ಪಾಠಗಳನ್ನು ಸಾಂಸ್ಕೃತಿಕ ಅಂಶಗಳ ಹಿನ್ನೆಲೆಯಲ್ಲಿ ನೋಡಬೇಕು. ಒಂದು ಕೃತಿಗೆ ಸಂಬಂಧಿಸಿದ ವಿವಿಧ ಹಸ್ತಪ್ರತಿಗಳಲ್ಲಿ ಕಂಡು ಬರುವ ಭಿನ್ನ ಪಾಠಗಳು ಅಥವಾ ಸ್ಖಾಲಿತ್ಯಗಳನ್ನು ಹಸ್ತಪ್ರತಿ ಅಧ್ಯಯನದ ನೆಲೆಯಲ್ಲಿ ಬೇರೆ ಬೇರೆ ಆಯಾಮಗಳ ಹಿನ್ನೆಲೆಯಲ್ಲಿ ಗುರುತಿಸ ಬೇಕಾಗಿದೆ. ಇವುಗಳು ಸಾಂಸ್ಕೃತಿಕ ಅಧ್ಯಯನದಲ್ಲಿ ಸಮಾಜದ ಪಠ್ಯಗ್ರಹಿಕೆಯ ಸ್ವರೂಪ ಮತ್ತು ಭಾಷಿಕವಾಗಿ ಪ್ರಾದೇಶಿಕ ಭಾಷೆಯ ಮಾದರಿಯ ಆಯಾಮವನ್ನು ಯಾವರೀತಿ ಪಡೆದುಕೊಂಡಿದೆಂಬುದನ್ನು ಗ್ರಹಿಸಬಹುದು.  ಹಸ್ತಪ್ರತಿಗಳ ಪಾಠದಲ್ಲಿ ಸಾಂಸ್ಕೃತಿಕ ಸಂಸ್ಕರಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಹಸ್ತಪ್ರತಿ ಪಾಠನಿರ್ಣಯದಲ್ಲಿ ಒಂದು ಕೃತಿ ಹುಟ್ಟಿದ ಕಾಲ ಮತ್ತು ಆ ಕಾಲದ ಸಾಂಸ್ಕೃತಿಕ ಮೌಲ್ಯದ ತಿಳುವಳಿಕೆಯೊಂದಿಗೆ ಪರಿಷ್ಕರಿಸಬೇಕು. ವಚನ, ಕೀರ್ತನೆ ಮುಂತಾದ ಹಾಡುಗಬ್ಬಗಳ ಪ್ರಕಾರಗಳಲ್ಲಿ ಈ ತಿಳುವಳಿಕೆಯು ಅಪೇಕ್ಷಣೀಯ.  ಒಂದು ಪಠ್ಯ ಮಾತಿನ ಮೂಲಕ ಅಭಿವ್ಯಕ್ತವಾಗುವಾಗ ನಿರ್ದಿಷ್ಟ ಪ್ರದೇಶವೊಂದರ ವೈಲಕ್ಷ್ಯಣ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ.  ಅಂತಹ ಸಂದರ್ಭದಲ್ಲಿ ಲಿಖಿತ ಪಠ್ಯ ಮೌಖಿಕವಾಗಿ ಅಭಿವ್ಯಕ್ತವಾಗುವಾಗ ವ್ಯತ್ಯಾಸಗಳು ಕಂಡುಬರುತ್ತವೆ. ಗ್ರಂಥಸಂಪಾದನೆಯ  ಅಧ್ಯಯನವನ್ನು ಸಾಂಸ್ಕೃತಿಕ ಅಧ್ಯಯನವಾಗಿ ಗುರುತಿಸಲು ಸಾಧ್ಯವಿಲ್ಲ.

5.ಸಾಂಸ್ಕೃತಿಕ ಆಯಾಮದ ಹಿನ್ನೆಲೆಯಲ್ಲಿ ಹಸ್ತಪ್ರತಿಗಳ ಭಾಷೆಯ ಗ್ರಹಿಕೆ:
  ವಿವಿಧ ಕಾಲಘಟ್ಟಗಳಲ್ಲಿ ಸೃಷ್ಟಿಯಾಗಿರುವ ಹಸ್ತಪ್ರತಿಗಳಲ್ಲಿಯ ಬರೆಹ ಭಾಷೆಯನ್ನು ಅಧ್ಯಯನಕ್ಕೊಳ ಪಡಿಸ ಬಹುದಾಗಿದೆ. ಕನ್ನಡ ಭಾಷೆಯ ವಿಕಾಸ ಕ್ರಮವನ್ನು ಅರಿಯಲು ಸ್ವಲ್ಪ ಮಟ್ಟಿಗೆ ಹಸ್ತಪ್ರತಿಗಳ ನೆರವನ್ನು ಪಡೆದು ಕೊಳ್ಳಬಹುದು. ಒಂದು ಕಾಲದ ಅಥವಾ ಪ್ರದೇಶದ ಭಾಷೆಯ ಸ್ವರೂಪವನ್ನು ತಿಳಿಯಲು ಹಸ್ತಪ್ರತಿಗಳು ಆಕರಗಳಾಗಿ ಕೆಲಸ ಮಾಡುತ್ತವೆಂಬುದು  ಪ್ರಮುಖ ಸಂಗತಿ. ಹಸ್ತಪ್ರತಿ ಲಿಪಿಕಾರರು ಒಂದು ಕಾಲಘಟ್ಟದ ಭಾಷಿಕ ಸಂಕಥನಕಾರರು. ಹಸ್ತಪ್ರತಿಗಳ ಪ್ರಸರಣ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಲಿಪಿಕಾರರು ಲಿಪಿಕರಣ ಕ್ರಿಯೆಯಲ್ಲಿ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರು.  ಬರೆಹದ ಪ್ರಕ್ರಿಯೆಯಲ್ಲಿ ಆಡುನುಡಿಯ ಜೊತೆ ಸಂಬಂಧವನ್ನು ಬೆಳಸಿಕೊಂಡಿದ್ದಾರೆ. ಗ್ರಂಥಸಂಪಾದನೆಯ ಮೂಲಕ  ಪ್ರಕಟಿಸಿರುವ ಪ್ರಾಚೀನ ಕೃತಿಗಳಲ್ಲಿಯ ಭಾಷೆಯು ಹಸ್ತಪ್ರತಿಗಳ ಭಾಷೆಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಗ್ರಂಥ ಸಂಪಾದನೆಯ ವಿಧಾನದಲ್ಲಿ ಹಸ್ತಪ್ರತಿಗಳಲ್ಲಿರುವ ಅನೇಕ ಭಾಷಿಕ ರೂಪಗಳನ್ನು ತಿದ್ದಿ ಗ್ರಾಂಥಿಕ ಕನ್ನಡ ಪದಗಳನ್ನು ಬಳಸಲಾಗಿದೆ. ಅವರು ತಮ್ಮಕಾಲದ ಭಾಷಾ ಬಳಕೆಯ ವಿಧಾನವನ್ನು, ಉಚ್ಛಾರಣೆಯ ಕ್ರಮವನ್ನು ಅರಿತಿದ್ದರು. ಅವರು ಅನೇಕ ಸಂದರ್ಭಗಳಲ್ಲಿ ಪ್ರತಿಯನ್ನು ನಕಲುಮಾಡುವಾಗ ಮೂಲಕೃತಿಗೆ ನಿಷ್ಠರಾಗಿರಲಿಲ್ಲ. ಮೂಲ ಕೃತಿಯ ರೂಪಗಳನ್ನು ತಮ್ಮಕಾಲದ ಉಚ್ಛಾರಣೆಗೆ ತಕ್ಕಂತೆ ಮಾರ್ಪಡಿಸಿಕೊಂಡಿರುವುದಕ್ಕೆ ಉದಾಹರಣೆಗಳು ಸಿಗುತ್ತವೆ.ಇದಕ್ಕೆ ನಿದರ್ಶನವಾಗಿ  ವೀರೇಶ ಬಡಿಗೇರ ಮತ್ತು ಎಸ್.ಆರ್. ಚೆನ್ನವೀರಪ್ಪ ಅವರಿಂದ ಸಂಪಾದನೆಗೊಂಡು ಕನ್ನಡ ವಿಶ್ವವಿದ್ಯಾಲಯದ ಮೂಲಕ ಪ್ರಕಟಗೊಂಡಿರುವ  ವಿಷ್ಣುಶರ್ಮನ ಪಂಚತಂತ್ರಕತೆಗಳ ಕನ್ನಡ ಸಾರಸಂಗ್ರಹ ಕೃತಿಯನ್ನು ಹೆಸರಿಸ ಬಹುದು. ಈ ಕೃತಿಯಲ್ಲಿ ಲಿಪಿಕಾರ ತನ್ನಕಾಲದ ಕನ್ನಡ ಭಾಷೆಯನ್ನು ಬಳಸಿದ್ದಾನೆ.ಉದಾಹರಣೆಗೆ ಗದ್ಯದ ಒಂದು ಭಾಗವನ್ನು ನೋಡ ಬಹುದು. `ಯಿವು ಮೊದಲಾದ ಪೂರ್ವ ಲಿಖಿತವ ಮೀರ ಕೂಡದು ಯೆಂದು| ತಾನು ಪೂರ್ವದಲ್ಲಿ ಅಕ್ಕಸಾಲಿಗೆ| ವುಪಕಾರವ ಮಾಡಲು| ಅವನು ನಂನ್ನನು ಯಿಷ್ಟು ಭಂಗಕ್ಕೆ ತಂದನು| ಆದರೆ ಯೇನಾಯಿತು| ಹಿಂದೆ ನಾನು ಸರ್ಪಗೆ ವುಪಕಾರ ಮಾಡಿಯಿದ್ದೆನಲ್ಲಾ|ಅದನೆನಸಿ ನೋಡುವೆಯೆಂದು| ಆ ಸರ್ಪಂ ನೆನೆಯಲಾಗಿ| ಆ ಸರ್ಪನು ಬಂದು ವಂದನೆಯ ಮಾಡಿಯಿದು ಯೇನೆಂದು ಕೇಳಲು| ಯೀ ಅಕ್ಕಸಾಲೆಯು ಮಾಡಿದ ವೃತ್ತಾಂತವಂ ಹೇಳಲು|ಯಿದು ಯೆಷ್ಠರ ಕೆಲಸವುಂಟು| ಯೀ ಶೆರೆಯ ಯರಡು ಮೂರು ದಿನದೊಳಗೆ ಪರಿಹರಿಸುತ್ತೇನೆ ಯೆಂದು ಹೇಳಿ| ಯಿತ್ತೇಂದಿತು. ಈ ಕೃತಿಯಲ್ಲಿ ಉದ್ದಕ್ಕೂ  ಯಿವು, ವುಪಕಾರ, ಯೀ, ಯರಡು ಇತ್ಯಾದಿ ಆಡುಭಾಷೆಯ ಪದಗಳೇ ಕಂಡು ಬಂದಿವೆ. ಪ್ರಮಾಣೀಕೃತ ಬರೆಹದ ರೂಪಗಳು ಉಚ್ಚಾರಣೆಗೆ ತಕ್ಕಂತೆ ಈ ಕಾವ್ಯದಲ್ಲಿ ದಾಖಲಾಗಿವೆ. ಕಾವ್ಯದ ಈ ಆಡು ಭಾಷಾ ರೂಪಗಳು ಹಸ್ತಪ್ರತಿಯು ದೊರೆತಿರುವ ಬಳ್ಳಾರಿ ಪ್ರದೇಶದ ಕಡೆಯಲ್ಲಿ ಪ್ರಾದೇಶಿಕವಾಗಿ ಬಳಕೆಯಲ್ಲಿವೆ. ಹಸ್ತಪ್ರತಿಗಳಲ್ಲಿ ಕಂಡು ಬರುವ ಭಾಷಿಕ ಪ್ರಬೇಧಗಳನ್ನು ಆಯಾಕಾಲದ ಪ್ರತಿಕಾರರ ಕನ್ನಡಂಗಳ ವೈಶಿಷ್ಟ್ಯವೆಂದು ಭಾಷಿಕ ಸಂಕಥನವೆಂದೂ, ಬರವಣಿಗೆಯ ಬಹುಸಾಧ್ಯತೆಗಳ ವಿಕಾಸವೆಂದು ಭಾವಿಸಿದರೆ ಕನ್ನಡ ಬರವಣಿಗೆ ಮತ್ತು ಉಚ್ಛಾರದ ಹಲವು ವೈವಿಧ್ಯಗಳು ದೊರೆತು ಬರವಣಿಗೆಗೆ ಸಾಮಾಜಿಕ ನೆಲೆಯು ಪ್ರಾಪ್ತವಾಗುತ್ತದೆ. ಹಸ್ತಪ್ರತಿಗಳನ್ನು ವಿವಿಧ ಕಾಲಘಟ್ಟಗಳಲ್ಲಿ ಪ್ರತಿಮಾಡಿದ ಪ್ರತಿಕಾರರು ಅವರ ಕಾಲದ ಆಡುಮಾತಿನ ರೂಪಗಳನ್ನು, ಅಕ್ಷರ ರೂಪಗಳನ್ನು ವಿವಿಧ ವಿನ್ಯಾಸಗಳಿಂದ ಮೂಡಿಸಿದ್ದಾರೆ. ಆ ಅಕ್ಷರಗಳ ವಿನ್ಯಾಸ ಹಾಗೂ ಪದಗಳ ಸ್ವರೂಪಗಳ ಮೂಲಕ ಆ ಭಾಷೆಯ ಸ್ವರೂಪವನ್ನು ಅಧ್ಯಯನ ಮಾಡಿದರೆ ಆಯಾ ಕಾಲದ ಆಡುಭಾಷೆಯ ಸ್ವರೂಪವನ್ನು ಸ್ವಲ್ಪ ಮಟ್ಟಿಗೆ ಹಸ್ತಪ್ರತಿಗಳ ಬರೆಹದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ. ಕನ್ನಡ ಭಾಷೆಯು ಹಸ್ತಪ್ರತಿಗಳಲ್ಲಿ ಸ್ಪಷ್ಟವಾದ ನೆಲೆಯನ್ನು ಕಂಡುಕೊಂಡಿದ್ದು, ಆಡುನುಡಿ ಮತ್ತು ಆ ಕಾಲದ ಪ್ರಮಾಣ ಭಾಷೆಯನ್ನು ಗಟ್ಟಿಯಾಗಿ ತೋರಿಸಿದೆ.  
     ಕನ್ನಡ ಭಾಷೆಯು ಹಸ್ತಪ್ರತಿಗಳಲ್ಲಿ ಸ್ಪಷ್ಟವಾದ ನೆಲೆಯನ್ನು ಕಂಡುಕೊಂಡಿದ್ದು, ಆಡುನುಡಿ ಮತ್ತು ಆ ಕಾಲದ ಪ್ರಮಾಣ ಭಾಷೆಯನ್ನು ಗಟ್ಟಿಯಾಗಿ ತೋರಿಸಿದೆ.  ಪ್ರತಿಕಾರರು ಪ್ರತಿಕರಣ ಕ್ರಿಯೆಯಲ್ಲಿ ತಮ್ಮಕಾಲದ ಆಡು ಮಾತಿನ ಬರೆಹಗಳನ್ನು ಬಳಸಲು ಉದ್ದೇಶವೇನು? ಅದರ ಹಿಂದಿನ ಒತ್ತಡಗಳು, ಆಯ್ಕೆಯ ಅನಿವಾರ್ಯದ ಕಾರಣಗಳು ಇತ್ಯಾದಿ ಪ್ರಶ್ನೆಗಳನ್ನು ಪ್ರತಿಕಾರರ ಪ್ರತೀಕರಣ ಕಾರ್ಯದಲ್ಲಿ ಹಾಕಿಕೊಳ್ಳಬಹುದಾಗಿದೆ. ಜೊತೆಗೆ ಪಾಠಾಂತರಗಳು ಯಾಕೆ ಹುಟ್ಟಿಕೊಳ್ಳುತ್ತವೆ? ಅವುಗಳ ಸ್ವರೂಪ ವೇನು? ಇತ್ಯಾದಿ ಪ್ರಶ್ನೆಗಳನ್ನು ಇಟ್ಟುಕೊಂಡು ಮುಂದುವರೆದರೆ ಸಂಪಾದಕನ ಜವಾಬ್ದಾರಿ ಶುದ್ಧಪಾಠ ನಿಷ್ಕರ್ಷೆಗಿಂತ ಭಿನ್ನವಾದುದದ್ದು, ಸಾಂಸ್ಕೃತಿಕ ಹಿನ್ನೆಲೆಯುಳ್ಳದ್ದು ಹಾಗೂ  ಸಂಪಾದನಾ ಶಾಸ್ತ್ರದ ದಿಕ್ಕು ದೆಸೆಗಳನ್ನು ವಿಸ್ತರಿಸ ಬಲ್ಲದ್ದು ಎಂಬ ನೆಲೆಯನ್ನು ತಲುಪುತ್ತದೆ.
  ಲಿಪಿಕಾರರು ಮತ್ತು ಭಾಷೆಯ ಬಳಕೆ
   ಇಂದು ನಮಗೆ ಮೂಲ ಪ್ರತಿಗಳು ಸಿಗುವುದಿಲ್ಲ. ಮೂಲ ಪ್ರತಿಗಳು ದೊರೆತಿದ್ದರೆ ಇಷ್ಟೊಂದೆಲ್ಲ ಮಾತಾಡುವ ಅವಶ್ಯಕತೆ ನಮಗೆ ದೊರೆಯುತ್ತಿರಲಿಲ್ಲ. ಇವತ್ತು ಪ್ರಾಚೀನ ಕವಿಯ ಸನಿಹದ ಕಾಲಾವಧಿಯಲ್ಲಿ ಹುಟ್ಟಿದಂತಹ ಹಸ್ತಪ್ರತಿಗಳು ಸಿಗುವುದು ಸಹ ವಿರಳವಾಗಿದೆ. ಇಲ್ಲಿಯವರೆಗೂ ಕವಿ ಕೃತಿಯಿಂದಿಡಿದು ಪ್ರತಿ, ಮರು ಪ್ರತಿ ಇತ್ಯಾದಿ ರೂಪದಿಂದಲೂ ಹಸ್ತಪ್ರತಿಗಳು ಕಾಲಾಂತರದಲ್ಲಿ ಸಾಗಿ ಬಂದಿರುವುದನ್ನು ಕಾಣುತ್ತೇವೆ. ಕವಿಯ ಮೂಲಪ್ರತಿಗೂ ನಕಲು, ಮರುನಕಲುಗೊಂಡ ಪ್ರತಿಗಳಿಗೂ ಬಹುಮಟ್ಟಿಗೆ 200-300 ವರ್ಷಗಳ ಅಂತರ ಇದೆ. ಪ್ರತಿಕಾರರು ನಾಡಿನ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಅತ್ಯಂತ ಶ್ರದ್ಧೆಯಿಂದ ದುಡಿದವರಾಗಿದ್ದಾರೆ. ಕನ್ನಡ ಕಾವ್ಯಗಳು ಸಾಹಿತ್ಯ ಸಂಸ್ಕೃತಿ ಪ್ರಸಾರದ ಮೂಲಕ ಸಹೃದಯರ ಕೈ ಸೇರುವಲ್ಲಿ ಲಿಪಿಕಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಸ್ತಪ್ರತಿಗಳ ಸ್ವರೂಪ ಮತ್ತು ಸ್ವಭಾವವೇ ಭೌತಿಕ ಹಾಗೂ ಹೇಳುವ ಕೇಳುವ ಪರಂಪರೆಗೆ ಸೇರಿದುದಾಗಿದೆ. ತನ್ನ ಲಿಖಿತ ಗುಣದಲ್ಲಿ ಶ್ರವಣ ಪರಂಪರೆಯ ಬಹುಮುಖಿ ಲಕ್ಷಣಗಳನ್ನು ಉಳಿಸಿಕೊಂಡು ಬಂದಿದೆ. ಲಿಪಿಕಾರರು ಪ್ರತಿಮಾಡುವ ಪಠ್ಯಗಳು ಬಹುಮುಖಿ ಸಂವೇದನೆಗಳನ್ನು, ಕಾಲದ ಒತ್ತಡಗಳನ್ನು ಲಿಪಿಕಾರನ ಸಾಂಸ್ಕೃತಿಕ ಸಂದರ್ಭವನ್ನು ಒಳಗೊಂಡು ರೂಪುಗೊಂಡಿರುತ್ತವೆ. ಆದರೆ ಲಿಪಿಕಾರರು ಪ್ರತಿಮಾಡಿಕೊಳ್ಳುವಲ್ಲಿ, ಪಾಠಶುದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಅನುಸರಿಸಿದ ಮಾರ್ಗದ ಬಗ್ಗೆ ಯಾವ ಮಾಹಿತಿಯ ಲಭ್ಯ ಇಲ್ಲ. ಲಿಪಿಕಾರರ ಉತ್ಸಾಹ, ಪರಿಶ್ರಮ,ಪ್ರಯತ್ನ ಮತ್ತು ಅವರ ಅರ್ಪಣ ಮನೋಭಾವದಿಂದ ತಾವು ಮಾಡಿದ ನಕಲು ಕಾರ್ಯದ ಪರಿಣಾಮವಾಗಿ ಪ್ರಾಚೀನ ಸಾಹಿತ್ಯ ಮುಂದಿನ ಜನಾಂಗಕ್ಕೆ ತಲುಪುವಂತಾಗಿದೆ. ಮಧ್ಯಕಾಲೀನ ಕರ್ನಾಟಕದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸಂದರ್ಭದ ಕನ್ನಡದ ದೈಹಿಕ, ಮಾನಸಿಕ,ಬೌದ್ಧಿಕ ಹಾಗೂ ಭಾವನಾತ್ಮಕ ಅಂತಃಸತ್ವಗಳೊಂದಿಗೆ ರೂಪುಗೊಂಡ ಹಸ್ತಪ್ರತಿಗಳನ್ನು ಅವುಗಳ ರೂವಾರಿಗಳಾದ ಲಿಪಿಕಾರರಿಂದ ಹೊರಗಿಟ್ಟು ನೋಡಲು ಸಾಧ್ಯವಿಲ್ಲ.
   ಲಿಪಿಕಾರರಲ್ಲಿ ಸುಂದರ ಲೇಖನ, ಸಣ್ಣಲಿಪಿ ಲೇಖನ, ಅಲಂಕಾರ ಲೇಖನ, ಶೀಘ್ರ ಲೇಖನ, ಬಹುಲಿಪಿ ಲೇಖನ ಇತ್ಯಾದಿ ಬಹು ಅಭಿರುಚಿಯುಳ್ಳ ಲಿಪಿಕಾರರಿದ್ದುದು ಕಂಡು ಬರುತ್ತದೆ. ಲಿಪಿಕಾರರಿಗೆ ಧಾರ್ಮಿಕಮನೋಭಾವದ ಜನತೆಯೆ ಜೀವನಾಧಾರವಾಗಿದ್ದರು.ಲಿಪಿಕಾರರು ಸ್ವ ಪ್ರಯೋಜನ, ಪರ ಪ್ರಯೋಜನಗಳಿಗಾಗಿ ಲಿಪೀಕರಣ ಕಾರ್ಯ ಮಾಡಿದ್ದಾರೆ. ಲಿಪಿಕಾರರು ಸಮಯ ನಿಷ್ಠೆಗೆ, ತಮಗೆ ಪೂಜ್ಯರಾದವರ ಬಗೆಗಿನ ಗೌರವಕ್ಕೆ, ತಮ್ಮ ವಾತ್ಸಲ್ಯ- ಸಂಪ್ರೀತಿಗೆ ಭಾಜನರಾದ ಭಕ್ತ, ಶಿಷ್ಯಕೋಟಿಗೆ, ಇಷ್ಟರಾದವರ ಸ್ನೇಹ, ಪ್ರೀತಿ ದ್ಯೋತಕವಾಗಿ, ಸ್ವಂತದ ಜ್ಞಾನಾಭಿವೃದ್ಧಿ ವಿಕಾಸಗಳಿಗಾಗಿ ಪ್ರತೀಕರಣ ಕಾರ್ಯ ಮಾಡಿದ್ದಾರೆ. ಅನ್ಯರ ಅಗತ್ಯಗಳಿಗನುಗುಣವಾಗಿ ಲಿಪಿಕಾರರ ಮೂಲಕ ಪ್ರತೀಕರಣಗೊಳ್ಳುವ ಹಸ್ತಪ್ರತಿಗಳು ಸಹಜವಾಗಿ ಕೆಲವು ದೋಷಗಳನ್ನು ಒಳಗುಮಾಡಿಕೊಳ್ಳುತ್ತವೆ. ಹಸ್ತಪ್ರತಿಯ ಪ್ರತಿಕರಣ ಕಾರ್ಯವು ವಿಶೇಷವಾಗಿ ಬರೆಪಕಾರ ಮತ್ತು ಧಾತೃಗಳ ಶ್ರದ್ಧೆಯನ್ನು ಆಧರಿಸಿ ಉಳಿದು ಬಂದಿರುವುದನ್ನು ಮನಗಂಡರೆ ಲಿಪಿಕಾರರನ್ನು ಅಂದಂದಿನ ಸಮಾಜವು ಗೌರವ ಪೂರ್ವಕವಾಗಿ ಕಾಣುತ್ತಿದ್ದಿತು.ಇದು ಲಿಪಿಕಾರರ ವಿನಮ್ರಭಾವ,ತಾಳ್ಮೆ,ಸಹನೆ ಪ್ರಾಮಾಣಿಕತೆ, ಗಂಭೀರ ಮನೋಧರ್ಮ ಹಾಗೂ ಅವರ ವ್ಯಕ್ತಿತ್ವ ಗೋಚರವಾಗುತ್ತದೆ. ಕೆಲವು ಲಿಪಿಕಾರರು ಜನತೆಯಲ್ಲಿದ್ದ ನಂಬಿಕೆ ಶ್ರದ್ಧೆಗಳ ಹಿನ್ನೆಲೆಯಲ್ಲಿ ತಮ್ಮ ಮೇಲೆ ಬರಬಹುದಾದ ದೋಷದ ಆರೋಪಗಳನ್ನು ನಿವಾರಿಸಿಕೊಳ್ಳಲು ಯತ್ನಿಸಿರುವುದು ಕಂಡು ಬರುತ್ತದೆ.`` ಅರಿಯದವ ಬರೆದುಯಿದ್ದೇನೆ ಅರಿತಂತ ಮಹಾನುಭಾವಿಗಳು ಬೈದರೆ ಪಾಪಂ’’ ಎಂಬ ಲಿಪಿಕಾರರ ಅನಿಸಿಕೆಯಲ್ಲಿ ಅವರ ಸಾಮಾಜಿಕ ಕಳಕಳಿ ಮತ್ತು ಅವರ ಧೋರಣೆಗಳು ವ್ಯಕ್ತವಾಗುತ್ತವೆ.
  ಹಸ್ತಪ್ರತಿಗಳ ಅಧ್ಯಯನವೆಂದರೆ ಒಂದು ರೀತಿಯಲ್ಲಿ ಲಿಪಿಕಾರರ ಜೀವನ ಮತ್ತು ಸಾಧನೆಯ ಮತ್ತು ಮನೋಧರ್ಮದ ಅಧ್ಯಯನವಾಗುತ್ತದೆ. ಲಿಪಿಕಾರನ ಮನೋಧರ್ಮ, ಸಾಮಾಜಿಕ ಚಹರೆ, ಲಿಪಿಯ ವಿನ್ಯಾಸ, ಲಿಪಿಯ ಸ್ವರೂಪ ಮತ್ತು ಶೈಲಿಗಳ ಅಧ್ಯಯನವೂ ಆಗಿದೆ. ಅನೇಕ ಕೃತಿಗಳನ್ನು ಓಲೆ ಮೇಲೆ ಬರೆದು ಹಸ್ತಪ್ರತಿಗಳ ಸಂಗ್ರಹವನ್ನು ಅಧಿಕಮಾಡಿ ಕೊಂಡಿದ್ದಾರೆ ಕೆಲವು ಮುದ್ರಿತ ಪುಸ್ತಕಗಳನ್ನು ಮತ್ತೆ ಹಸ್ತಪ್ರತಿ  ಪ್ರತಿಮಾಡಿ ಕೊಂಡಿದ್ದಾರೆ. ಇಂತಹ ಎಷ್ಟೋ ಜನ ಲಿಪಿಕಾರರು ನಾಡಿನಲ್ಲಿ ಆಗಿಹೋಗಿದ್ದು ಅನಾಮಧೇಯರಾಗಿಯೇ ಉಳಿದಿದ್ದಾರೆ. 
ನೂರಾರು ಹಸ್ತಪ್ರತಿಗಳ ಪುಷ್ಪಿಕೆಗಳಲ್ಲಿ ಲಿಪಿಕಾರರ ಅನುಭವ ಹಾಗೂ  ಭಾಷಾ ಸಾಮಥ್ರ್ಯವನ್ನು ಕಾಣಬಹುದು. ಲಿಪಿಕಾರರು ಬದುಕಿ ಬಾಳುತ್ತಿದ್ದ ಸಂಸ್ಕೃತಿಯ ಸ್ವರೂಪವನ್ನು ಗುರುತಿಸಬಹುದು. ಮಧ್ಯಕಾಲೀನ ಕರ್ನಾಟಕದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸಂದರ್ಭದ ಕನ್ನಡದ  ದೈಹಿಕ, ಮಾನಸಿಕ, ಭೌದ್ಧಿಕ ಹಾಗೂ ಭಾವನಾತ್ಮಕ ಅಂತಸತ್ವಗಳೊಡನೆ ರೂಪುಗೊಂಡ ಹಸ್ತಪ್ರತಿಗಳನ್ನು ಅವುಗಳ ರೂವಾರಿಗಳಾದ ಲಿಪಿಕಾರರನ್ನು  ಪ್ರತೀಕರಣದ  ಸಂದರ್ಭದ ಹಿನ್ನೆಲೆಯಲ್ಲಿ  ನೋಡ ಬೇಕಾಗುತ್ತದೆ.
     ಹಸ್ತಪ್ರತಿ ಲಿಪಿಕಾರರನ್ನು ಆಯಾ ಕಾಲಘಟ್ಟದ ಭಾಷಿಕ ಸಂಕಥನಕಾರರು ಎನ್ನಬಹುದು. ಒಂದುಕಾಲದ/ಪ್ರದೇಶದ ಭಾಷೆಯ ಸ್ವರೂಪವನ್ನು ತಿಳಿಯಲು ಹಸ್ತಪ್ರತಿಗಳನ್ನು ಮುಖ್ಯ ಆಕರಗಳಾಗಿ ಬಳಸಿಕೊಳ್ಳ ಬಹುದಾಗಿದೆ. ಲಿಪಿಕಾರರ ವಂಶಾವಳಿ, ಅವರ ಉದ್ದೇಶ, ಆಶ್ರಯ, ಪ್ರತಿಮಾಡಿದ ಸ್ಥಳ ಇತ್ಯಾದಿ ಸಾಂಸ್ಕೃತಿಕ ವಿವರಗಳು ನಮ್ಮ ಪೂರ್ವಿಕರ ಬದುಕಿನ ಹಲವು ಮಜಲುಗಳ ಬಗೆಗೆ ತಿಳಿವಳಿಕೆಯನ್ನು ವಿಸ್ತರಿಸುವುದರ ಜೊತೆಗೆ ಹಸ್ತಪ್ರತಿ ಶಾಸ್ತ್ರವನ್ನು ಆಧುನಿಕ ಸಂದರ್ಭದೊಡನೆ ಮುಖಾಮುಖಿಯಾಗಿಸುವುದರ ಮೂಲಕ ಪುನರ್ ಮೌಲ್ಯೀಕರಣ ಅಗತ್ಯತೆಯ ತುರ್ತನ್ನು ಸೂಚಿಸುತ್ತವೆ. ದೇಸಿ ಕಾವ್ಯಗಳ ಸಂಪಾದನೆಯಲ್ಲಿ, ಹಸ್ತಪ್ರತಿಗಳಲ್ಲಿರುವ ಅನೇಕ ಭಾಷಿಕ ರೂಪಗಳನ್ನು ಸಂಪಾದನೆಗೆ ಒಳಪಡಿಸುವಾಗ ದೋಷಗಳು ಅಥವಾ ಸ್ಕಾಲಿತ್ಯಗಳು ಅನ್ನುವ ರೀತಿಯಲ್ಲಿ ತಿದ್ದಿ ಗ್ರಾಂಥಿಕ ರೂಪಗಳಲ್ಲಿ ಕೊಡುವುದಾಗಿದೆ. ಆದರೆ ನಾವು ದೋಷಗಳೆಂದು ಪರಿಗಣಿಸಿರುವ ಇವುಗಳು  ಆ ಹಸ್ತಪ್ರತಿಯನ್ನು ಪ್ರತಿಮಾಡಿದ ಪ್ರತಿಕಾರರು ತಮ್ಮ ಕಾಲದ ಆಡು ಮಾತಿನ ರೂಪಗಳನ್ನು ಅಕ್ಷರ ರೂಪಗಳನ್ನು ಬಳಸಿರುವುದರ ಕುರುಹುಗಳಾಗಿವೆ. ಅಂತಹ ಅಕ್ಷರ ರೂಪಗಳನ್ನು, ವಿನ್ಯಾಸಗಳನ್ನು, ಪದ ಸ್ವರೂಪಗಳನ್ನು ಮತ್ತು ಆ ಭಾಷೆಯ ಸ್ವರೂಪಗಳನ್ನು ಅಧ್ಯಯನ ಮಾಡಿದರೆ ಆಯಾ ಕಾಲದ ಆಡುಮಾತಿನ ಭಾಷೆಯನ್ನು ಅಧ್ಯಯನ ಮಾಡಲು ಸಹಾಯಕವಾಗುತ್ತದೆ. ಪ್ರತಿಕಾರ ಪ್ರತಿಕರಣ ಮಾಡುವ ಸಂದರ್ಭದಲ್ಲಿ ಯಾಕೆ ಬೇರೆ ಪದವನ್ನು ತೆಗೆದುಕೊಂಡ, ಆ ಪದವನ್ನು ಯಾವ ಹಿನ್ನೆಯಲ್ಲಿ ಅರ್ಥಮಾಡಿಕೊಂಡಿದ್ದ ಇತ್ಯಾದಿಗಳನ್ನು ಪಾಠಾಂತರ ಹಿನ್ನೆಲೆಯಲ್ಲಿ ಚರ್ಚೆಮಾಡಬಹುದಾಗಿದೆ. ಹಸ್ತಪ್ರತಿಗಳಲ್ಲಿಯ ಬರೆಹಗಳನ್ನು ಅಧ್ಯಯನ ಮಾಡುವುದರ ಮೂಲಕ ಬರೆಹ ರೂಪದಲ್ಲಿಯೂ ಹಸ್ತಪ್ರತಿಗಳ ಅಧ್ಯಯನವನ್ನು ಸಾಂಸ್ಕೃತಿಕರಣ ಗೊಳಿಸಲು ಹಾಗೂ ಸಾಂಸ್ಕೃತಿಕ ಆಯಾಮದ ಹಿನ್ನೆಲೆಯಲ್ಲಿ ನೋಡಲು ಸಾಧ್ಯವಾಗುತ್ತದೆ. ಲಿಪಿಕಾರರ ಹಸ್ತಪ್ರತಿಗಳ ಪ್ರತೀಕರಣ ಕ್ರಿಯೆಯಲ್ಲಿ ಭಾಷಿಕವಾಗಿ ಶುದ್ಧ-ಅಶುದ್ಧತೆಯ ಪ್ರಶ್ನೆಗೆ ಅವಕಾಶವಿರುವುದಿಲ್ಲ. ಪ್ರತಿಮಾಡುವಾಗ ಲಿಪಿಕಾರನ ಆಡು ರೂಪಗಳು ಹಸ್ತಪ್ರತಿಯಲ್ಲಿ  ಕಾಣ ಸಿಗುತ್ತವೆ ಎಂಬುದಕ್ಕೆ  ಹಸ್ತಪ್ರತಿಗಳ ಪುಷ್ಪಿಕೆಗಳಲ್ಲಿ ಕಂಡು ಬರುವ ಆನಂದ ಸಂಸ್ತರ, ಸಪತಮಿ, ತಿಂಮಯ್ಯನಾ, ಲ್ಲಿಂಗಯ್ಯಗ, ದುಗಯ್ಯನ, ಸುಳನಾಡ ಶಿಮೆ ಕಳುರ ಬಿರೈಯಗೌಡರಮಗ ಜಟೈಯಗೌಡ, ಇತ್ಯಾದಿ ಆಡು ರೂಪಗಳು ನಿದರ್ಶನವಾಗಿದ್ದು ಅವುಗಳನ್ನು ಸಂಪಾದಕರು ಗಂಭೀರವಾಗಿ ತೆಗೆದುಕೊಳ್ಳ ಬೇಕೇ ಹೊರತು ದೋಷವೆಂದು ವಿಕಲ್ಪವೆಂದು ತಿಳಿಯ ಬಾರದು. ಹಸ್ತಪ್ರತಿಗಳ ಪುಷ್ಪಿಕೆಗಳ ಭಾಷಿಕ ಸ್ವರೂಪವನ್ನು ಭಾಷಾವೈಜ್ಞಾನಿಕ ನೆಲೆಯ ಹಿನ್ನೆಲೆಯಲ್ಲಿ ಗಮನಿಸ ಬೇಕಾಗುತ್ತದೆ. ಶುದ್ಧಪಾಠ ಮಾದರಿಗೆ ಬದಲಾಗಿ ಪ್ರತಿಕಾರರ ಭಾಷಾ ಬಳಕೆಯ ಹಿಂದಿನ ಕನ್ನಡ ಭಾಷಾ ವ್ಯವಸ್ಥೆಯ ಉಚ್ಛಾರಣಾ ವಿಧಾನವನ್ನು ಪರಿಗಣಿಸ ಬೇಕಾಗುತ್ತದೆ. ಪ್ರತಿಕರಣ ಕ್ರಿಯೆಯಲ್ಲಿ ಕಂಡು ಬರುವ ಕಣ್ತಪ್ಪು, ಮರೆವು, ಆಲಸ್ಯ, ಸಾದೃಶ ದೋಷಗಳು, ವರ್ಣ ವ್ಯತ್ಯಯ, ಲೋಪ, ಆಗಮ, ಆದೇಶ ಒಟ್ಟೊಟ್ಟಿಗೆ ಅವರ ಭಾಷಾ ಬಳಕೆಗೆ ಇರುವ ಕಾರಣಗಳನ್ನು ಶೋಧಿಸ ಬೇಕಾಗುತ್ತದೆ. ಪ್ರತಿಕಾರರು ಪ್ರತೀಕರಣ ಕ್ರಿಯೆಯಲ್ಲಿ ಮೂಲ ಕೃತಿಗೆ ನಿಷ್ಠರಾಗಿದ್ದುಕೊಂಡೇ ಪ್ರತಿ ಮಾಡುತ್ತಿದ್ದರೂ ನಕಲು ಕ್ರಿಯೆಯಲ್ಲಿ ತನ್ನ ಕಾಲದ ಆಡುಭಾಷೆಯ ತಿಳಿವಳಿಕೆಯನ್ನು ಸೇರಿಸಿರುವುದು ದೋಷವಾಗುವುದರ ಬದಲು ಸಹಜ ಉಚ್ಚಾರಣೆಯೊಂದು ಬರವಣಿಗೆಯಾಗುವ ಗುಣಾತ್ಮಕ ಅಂಶವೆಂದು ನಾವು ಯಾಕೆ ಪರಿಗಣಿಸ ಬಾರದು? ಯಾಕೆಂದರೆ ಕವಿ ಬಳಸಿರುವ ಕಾಲಘಟ್ಟದ ಬರಹ ಕನ್ನಡದಲ್ಲಿನ ಸಂಸ್ಕೃತ ಪದಗಳು, ಶಿಷ್ಟ ರೂಪಗಳು ಲಿಪಿಕಾರನಿಗೆ ತೊಡಕಾಗುತ್ತವೆ. ಆತನ ಉಚ್ಛಾರಣೆಯ ಅಕ್ಷರ ವ್ಯವಸ್ಥೆ, ಪದ ವ್ಯವಸ್ಥೆ, ಆಡುನುಡಿ ನಿಯಮಗಳು ಲಿಪಿಕಾರನ ಬರೆಹ ಪ್ರಕ್ರಿಯೆಯನ್ನು ನಿಯಂತ್ರಿಸುತ್ತವೆ. ಆದರೆ ಗ್ರಂಥ ಸಂಪಾದನಾ ನಿಯಮವು ಹೆಚ್ಚಾಗಿ ಶಿಷ್ಟರೂಪದ ಭಾಷಾಬರೆಹದ ನಿಯಮಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ಪ್ರತಿಕಾರನ  ತನ್ನಕಾಲದ ಆಡುಭಾಷೆಯ ಸೇರ್ಪಡೆಯನ್ನು ದೋಷವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಪ್ರತಿಕಾರನ ಭಾಷಾ ನೆಲೆಯನ್ನು ಬರೀ ಸ್ಖಾಲಿತ್ಯವೆಂದು ನೋಡುವುದರ ಬದಲು ಮೂಲಕವಿಕೃತಿಯ ಬರವಣಿಗೆ ವ್ಯತ್ಯಾಸವಾಗಲು ಕಾರಣಗಳೇನೆಂಬುದನ್ನು ಪರಿಶೀಲಿಸ ಬೇಕಾಗುತ್ತದೆ. ಪ್ರತಿಕಾರರು ಪ್ರತಿಯ ಆದಿ ಮತ್ತು ಅಂತ್ಯದಲ್ಲಿ ಹಿಡಿದಿಟ್ಟಿರುವ ಕನ್ನಡ ಭಾಷೆಯ ಉಚ್ಛರಣಾ ವ್ಯವಸ್ಥೆಯ ಸಂಬಂಧಗಳನ್ನು  ಮರುಪರಿಶೀಲನೆಗೆ ಒಳಪಡಿಸ ಬೇಕಾಗುತ್ತದೆ. ಇದು ಹಸ್ತಪ್ರತಿಕಾರರ ಭಾಷಿಕ ನೆಲೆಯನ್ನು ಆಭಿಜ್ಞಿಸುವ ನೆಲೆಯನ್ನು ಸೂಚಿಸುತ್ತದೆ. ಹಸ್ತಪ್ರತಿಕಾರರ ಅಕ್ಷರ ಬದಲಾವಣೆಗಳು ಅವರಕಾಲದ ಉಚ್ಛಾರಣಾ ಭಾಷೆಯ ವ್ಯವಸ್ಥೆಗೆ ಸಂಬಂಧಪಟ್ಟವುಗಳಾಗಿರುವುದರಿಂದ ಪ್ರತಿಕಾರರ ಕಾಲಘಟ್ಟದ ಭಾಷೆಯ ನೈಜಸ್ವರೂಪವನ್ನು ಗ್ರಹಿಸಲು ಸಾಧ್ಯವಾಗುತ್ತದೆ.ಜೊತೆಗೆ ಇದು ಪ್ರತಿಕಾರರ ಸೃಜನಶೀಲತೆಯ ಭಾಷಾ ಸಾಧ್ಯತೆಯಾಗಿ ತನ್ನ ಕಾಲ ಘಟ್ಟದ ಭಾಷಿಕ ಉಚ್ಛಾರಣಾ ವ್ಯವಸ್ಥೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ದೇಸಿ ಕಾವ್ಯಗಳನ್ನು ಪ್ರತಿಮಾಡಿರುವ ಪ್ರತಿಕಾರರ ಪ್ರತಿಗಳ ಪುಷ್ಪಿಕೆಗಳಲ್ಲಿಯ ಪ್ರತಿಕಾರರ ಭಾಷಾ ಬರಹದ ಪ್ರಯೋಗಗಳನ್ನು ಗಮನಿಸಿದರೆ ಕನ್ನಡದ ನಿಜವಾದ ಭಾಷಿಕರು ಹಸ್ತಪ್ರತಿ ಲಿಪಿಕಾರರು ಎಂದೆನಿಸುತ್ತದೆ. ಅವರು ಗ್ರಾಂಥಿಕ ಪದಗಳಿಗೆ ಬದಲಾಗಿ ಬಳಸಿರುವ ತಮ್ಮಕಾಲದ ಆಡುಭಾಷೆಯ ಪದಗಳನ್ನು ನಾವು ಅಜ್ಞಾನ, ಅನ್ಯರ್ಥಜ್ಞಾನ, ಮರೆವು ಇತ್ಯಾದಿಗಳ ವಿಶ್ಲೇಷಣೆಯ ಅಡಿಯಲ್ಲಿ ಗುರುತಿಸುವುದಕ್ಕಿಂತ ಭಾಷಿಕ ಹಿನ್ನೆಲೆಯಲ್ಲಿ ಅವರು ತಮ್ಮಕಾಲದ ಮಾತಿಗೆ ಹತ್ತಿರವಾಗಿ  ತಮ್ಮ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಎಂದು ಯಾಕೆ  ತಿಳಿದುಕೊಳ್ಳ ಬಾರದು ಎಂದೆನಿಸುತ್ತದೆ. ಇದು ಕನ್ನಡ ಭಾಷೆಯ  ಲಿಪಿ ಉಳಿಯುವಿಕೆ ಹಾಗೂ ಭಾಷೆಯ ಪ್ರಜಾಪ್ರಭುತ್ವೀಕರಣಕ್ಕೆ ಹಸ್ತಪ್ರತಿ ಲಿಪಿಕಾರರು ಪಟ್ಟ ಪರಿಶ್ರಮದ  ದ್ಯೋತಕ ಎಂದು ಭಾವಿಸ ಬಹುದಾಗಿದೆ.
6.ಮಾತು-ಬರೆಹ ಸಂಪಾದನೆ
    ಕನ್ನಡ ಸಂಶೋಧನೆಯೊಂದರ ಭಾಗವಾಗಿದ್ದ ಗ್ರಂಥ ಸಂಪಾದನೆಯು ಮಾರ್ಗಕಾವ್ಯದಿಂದ ದೇಸಿ ಕಾವ್ಯದ ವರೆಗೂ ಒಂದೇ ಬಗೆಯ ವಿಧಾನವನ್ನು ಅನುಸರಿಸಿದ್ದಿತು. ಸಂಪಾದನಾ ವಿಧಿ ವಿಧಾನಗಳು ಹಸ್ತಪ್ರತಿಗಳ ಪಾಠಾಂತರ ವಿಮರ್ಶೆ, ಶುದ್ಧಪಾಠ ನಿರ್ಧಾರ, ಕವಿಯ ಕಾಲ ಸ್ಥಳ ಇತ್ಯಾದಿ ಚರ್ಚೆ, ಕಥಾಸಾರ, ಛಂದಸ್ಸು ಶೈಲಿ ವಿಚಾರ ಇತ್ಯಾದಿಗಳ ವರ್ಗೀಕೃತ ಚೌಕಟ್ಟಿಗೆ ಬದ್ಧವಾಗಿದೆ. ಆದರೆ ನಂತರದ ಕಾಲದಲ್ಲಿ ಗ್ರಂಥಸಂಪಾದನೆ ಒಂದು ಶಿಸ್ತಾಗಿ ರೂಪುಗೊಂಡ ಹಾಗೆ ಸಂಪಾದನೆಯ ವಿಧಾನಗಳಲ್ಲಿಯು ಬದಲಾವಣೆಗೊಂಡಿದೆ. ಸಂಪಾದನೆಯಲ್ಲಿ ಇಂದು ಮಾರ್ಗ ಸಾಹಿತ್ಯ ಸಂಪಾದನೆ, ದೇಸಿ ಸಾಹಿತ್ಯ ಸಂಪಾದನೆ, ವಚನ ಸಾಹಿತ್ಯ ಸಂಪಾದನೆ,ವಚನ, ಸ್ವರವಚನ ಸಾಹಿತ್ಯ ಸಂಪಾದನೆ, ದಾಸ ಸಾಹಿತ್ಯ ಸಂಪಾದನೆ ಇತ್ಯಾದಿ ಮಾದರಿಗಳು ಕಂಡು ಬರುತ್ತವೆ. ಇಂದು ಸಂಪಾದನೆಯಲ್ಲಿ ` ಮಾರ್ಗಕಾವ್ಯ ಸಂಪಾದನೆಗೆ ಹೆಚ್ಚು ಪ್ರತಿ ಬಳಸಿದಷ್ಟು ಪಠ ಹೆಚ್ಚು ಶುದ್ಧವಾಗುತ್ತದೆ, ದೇಸಿ ಕಾವ್ಯ ಸಂಪಾದನೆಗೆ ಹೆಚ್ಚು ಪ್ರತಿ ಬಳಸಿದಷ್ಟು ಪಾಠ ಹೆಚ್ಚು ಅಶುದ್ಧವಾಗುತ್ತದೆ ಎಂಬ ನಿಲುವು ಮೌಲಿಕತೆಯನ್ನು ಪಡೆದುಕೊಂಡಿದೆ.
ದೇಸೀ ಕಾವ್ಯದ ಹಸ್ತಪ್ರತಿಗಳನ್ನು ಇದ್ದ ಹಾಗೆಯೇ ವ್ಯವಸ್ಥಿತವಾಗಿ ಪರಿಷ್ಕರಿಸಬೇಕಾಗಿದೆ ಎಂಬ ನಿಲುವು ಇತ್ತೀಚಿನ ದಿನಮಾನಗಳಲ್ಲಿ ವ್ಯಕ್ತಗೊಂಡಿದೆ. ಹಸ್ತಪ್ರತಿಗಳ ಸಾಂಸ್ಕೃತಿಕ ಅಧ್ಯಯನದ ನೆಲೆಯಿಂದಾಗಿ ಹಸ್ತಪ್ರತಿಗಳ ಅಧ್ಯಯನದಲ್ಲಿ ಓದುಗನ ಮನೋಭಾವ, ಪಠ್ಯಬದಲಾವಣೆಗಳ, ಸಾಂಸ್ಕೃತಿಕ ಸಂಗತಿಗಳ ಪಲ್ಲಟದ ಆಯಾಮವನ್ನು ಗುರುತಿಸ ಬಹುದಾಗಿದೆ. ದೇಶಿಕಾವ್ಯಗಳು ಹೆಚ್ಚು ಜನಮುಖಿಯಾಗಿದ್ದು ಜನರ ನಡುವೆ ಹಾಡು ಕುಣಿತ, ಆಚರಣೆಗಳ ಮೂಲಕ ಚಲನಗೊಳ್ಳುವ ಹಿನ್ನೆಲೆಯಲ್ಲಿ ಭಾಷಿಕ ರಚನೆಗಳೂ  ಆಯಾ ಕಾಲದ, ಆಯಾ ಕಾಲದ, ಆಯಾ  ನೆಲದ ಚರಣ ಚಿನ್ಹೆಗಳನ್ನು ಪಡೆದುಕೊಂಡೇ ಹೋಗುತ್ತವೆ. ಮಧ್ಯಕಾಲೀನ ಯುಗದಲ್ಲಿ ಕೆಲವು ಕವಿಗಳು ಕೇಳಲು ಯೋಗ್ಯವಾದ ಪಠ್ಯವನ್ನು ರಚಿಸಿ ಆ ಪಠ್ಯದ ಯೋಗ್ಯತೆಯನ್ನು ವರ್ಧಿಸುವ ರಾಗ ತಾಳಗಳ ಸೂಚನೆಯನ್ನು ಕೊಟ್ಟಿದ್ದಾರೆ. ಆದರೆ ದೇಸೀ ಕಾವ್ಯ ಪ್ರಕಾರಗಳಲ್ಲಿ (ಹಾಡುಗಬ್ಬಗಳು) ಕಾವ್ಯಗಳನ್ನು ರಚಿಸುವುದರ ಜೊತೆಗೆ ಆ ಪಠ್ಯಗಳನ್ನು ಕೇಳುವ ಹಿನ್ನಲೆಯಲ್ಲಿ ನೀಡಿದ್ದ ಸಂಗೀತಕ್ಕೆ ಸಂಬಂಧಿಸಿದ ರಾಗ-ತಾಳಗಳ ಸೂಚನೆಯನ್ನು ಕೈಬಿಟ್ಟು ಪ್ರಕಟಿಸಿದ್ದಾರೆ. ಹಾಡುಗಬ್ಬಗಳ ಪರಿಷ್ಕರಣೆಯ ಸಂದರ್ಭದಲ್ಲಿ ಹಸ್ತಪ್ರತಿಗಳಲ್ಲಿರುವ ಗಮಕ ಪದ್ಧತಿ ಹಾಗೂ ಸಂಗೀತಕ್ಕೆ ಸಂಬಂಧಿಸಿದ ರಾಗ-ತಾಳಗಳ ಸೂಚನೆಗಳನ್ನು ನಿರೂಪಿಸಿ ಅವುಗಳ ಮಹತ್ವವನ್ನು ಮೌಲ್ಯೀಕರಿಸಬೇಕಾಗಿದೆ. ಎಲ್.ಬಸವರಾಜು ಅವರು ಸಂಪಾದಿಸಿರುವ ‘ಶಿವದಾಸ ಗೀತಾಂಜಲಿ’ ಮಾದರಿಯಲ್ಲಿ ಸಿದ್ಧಗೊಳ್ಳಬೇಕಾಗಿದೆ. ಹಸ್ತಪ್ರತಿಗಳ ಪಾಠದಲ್ಲಿ ಸಾಂಸ್ಕೃತಿಕ ಸಂಸ್ಕರಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಹಸ್ತಪ್ರತಿ ಪಾಠನಿರ್ಣಯದಲ್ಲಿ ಒಂದು ಕೃತಿ ಹುಟ್ಟಿದ ಕಾಲ ಮತ್ತು ಆ ಕಾಲದ ಸಾಂಸ್ಕೃತಿಕ ಮೌಲ್ಯದ ತಿಳುವಳಿಕೆಯೊಂದಿಗೆ ಪರಿಷ್ಕರಿಸಬೇಕು. ವಚನ, ಕೀರ್ತನೆ ಮುಂತಾದ ಹಾಡುಗಬ್ಬಗಳ ಪ್ರಕಾರಗಳಲ್ಲಿ ಈ ತಿಳುವಳಿಕೆಯು ಅಪೇಕ್ಷಣೀಯ.  ಒಂದು ಪಠ್ಯ ಮಾತಿನ ಮೂಲಕ ಅಭಿವ್ಯಕ್ತವಾಗುವಾಗ ನಿರ್ದಿಷ್ಟ ಪ್ರದೇಶವೊಂದರ ವೈಲಕ್ಷ್ಯಣ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ.  ಅಂತಹ ಸಂದರ್ಭದಲ್ಲಿ ಲಿಖಿತ ಪಠ್ಯ ಮೌಖಿಕವಾಗಿ ಅಭಿವ್ಯಕ್ತವಾಗುವಾಗ ವ್ಯತ್ಯಾಸಗಳು ಕಂಡುಬರುತ್ತವೆ. ಗ್ರಂಥಸಂಪಾದನೆಯ  ಅಧ್ಯಯನವನ್ನು ಸಾಂಸ್ಕೃತಿಕ ಅಧ್ಯಯನವಾಗಿ ಗುರುತಿಸಲು ಸಾಧ್ಯವಿಲ್ಲ. ಇಂದುಕನ್ನಡಕ್ಕೆ ಬೇಕು ಕನ್ನಡದ್ದೇ ಆದ ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ಶಾಸ್ತ್ರ ಎಂಬ ನಿಲುವು ಹೊರ ಬರಬೇಕಾಗಿದೆ.  ಹಾಡುಗಬ್ಬಕಾವ್ಯಗಳು ನಮಗೆ ಹಸ್ತಪ್ರತಿಯಲ್ಲಿ ಸಿಕ್ಕರೂ ಅವು ಮೌಖಿಕ ಕಾವ್ಯ ಹುಟ್ಟುವ ರೀತಿಯಲ್ಲಿಯೇ ಹುಟ್ಟಿ ನಂತರದಲ್ಲಿ ಹಸ್ತಪ್ರತಿ ರೂಪದಲ್ಲಿ ತಾಳಿವೆ. ಹಸ್ತಪ್ರತಿಗೆ ಬಂದಮೇಲೆ ಮತ್ತೆ ಹಾಡು ಗಮಕ ವಾಚನ ಸಂಪ್ರದಾಯದ ಮೂಲಕ ಅಂದರೆ ಮೌಖಿಕದ ಮೂಲಕ ಜನರಿಗೆ ಸಂವಹನವಾಗುತ್ತಿದ್ದವು.  ಇಂದಿಗೂ ಬಸವಪುರಾಣ, ಚೆನ್ನಬಸವಪುರಾಣ, ಗದುಗಿನ ಭಾರತ, ಜೈಮಿನಿ ಭಾರತ, ಭಾಗವತ ಇತ್ಯಾದಿ ದೇಸಿ ಕಾವ್ಯಗಳು  ಪಾರಾಯಣ, ಗಮಕ ಇತ್ಯಾದಿ ಮೌಖಿಕ ಪರಂಪರೆಯ ಮೂಲಕವೂ ಹೆಚ್ಚು ಪ್ರಸಾರವಾಗುತ್ತಿವೆ. ಕೊಡೆಕಲ್ ಬಸವಣ್ಣನನ್ನು ಕುರಿತ ಹಾಗೆ ಇರುವ ಕೊಡೆಕಲ್ ಸಾಹಿತ್ಯ ಈಗ ಕಾಗದದ ಪ್ರತಿಯಲ್ಲಿ ದೊರೆಯುತ್ತ ಇದ್ದರೂ ಮೊದಲು ಅದು ಮೌಖಿಕವಾಗಿ ಹುಟ್ಟಿರ ಬಹುದು. ಇಂದು ಕೊಡೆಕಲ್ ಜಾತ್ರೆಯ ಆಚರಣೆಯ ಸಂದರ್ಭದಲ್ಲಿ ಕೊಡೆಕಲ್ ಸಾಹಿತ್ಯವನ್ನು  ಹಾಡಲಾಗುತ್ತದೆ. ಜನ ಆಲಿಸುತ್ತಾರೆ ಆವಾಗ ಇದು ಮತ್ತೆ ಮೌಖಿಕ ಪರಂಪರೆಯ ಪರಿಧಿಯಲ್ಲಿ ಕಾಣಸಿಗುತ್ತದೆ. ದೇಸಿ ಸಾಹಿತ್ಯವು ಮೌಖಿಕದಿಂದ ಬರೆಹ, ಬರೆಹದಿಂದ ಮತ್ತೆ ಮೌಖಿಕ, ಮೌಖಿಕ ಮತ್ತೆ ಬರೆಹ ಈ ರೂಪಾಂತರಗಳನ್ನು ತಾಳಿರುವುದು. ಇದು ಹಸ್ತಪ್ರತಿಯ ಅಕ್ಷರ ಬರೆಹ ವಾಚನದ ಪ್ರತೀಕವಾಗಿದೆ. ಮೌಖಿಕ ಕಾವ್ಯ ಸಂಪಾದನೆಗೆ ಗ್ರಂಥ ಸಂಪಾದನೆಯ ವಿಧಿ ವಿಧಾನಗಳನ್ನು ಅನುಸರಿಸ ಬೇಕಾದ ಅಗತ್ಯವಿಲ್ಲ.ಈ ಕಾವ್ಯಗಳಲ್ಲಿ ಬರುವ ಪಾಠಗಳಲ್ಲಿಯ  ಭಿನ್ನ ಭಿನ್ನ ಪಾಠಗಳು ಅಥವಾ ಸ್ಕಾಲಿತ್ಯಗಳು ಸಾಂಸ್ಕೃತಿಕ ಅಧ್ಯಯನವನ್ನು ಪಡೆದು ಕೊಳ್ಳುತ್ತಾ  ಹೋಗುತ್ತವೆ.ಇವು ಒಂದು ರೀತಿಯಲ್ಲಿ ಹಸ್ತಪ್ರತಿ ಅಧ್ಯಯನವನ್ನು ಬೇರೆ ನಿಟ್ಟಿನತ್ತ ತಿರುಗಿಸುವ ನೆಲೆಯವುಗಳಾಗಿವೆ.
   ಪ್ರತಿಕಾರರು ಧಾರ್ಮಿಕ ಬದ್ಧತೆಯ ನಡುವೆಯೂ ಬರವಣಿಗೆಯಲ್ಲಿ ವೈವಿಧ್ಯತೆಯನ್ನುಳಿಸಿಕೊಂಡು ಅದನ್ನು ಸೃಜನ ಕಲೆಯನ್ನಾಗಿಸಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಪ್ರತಿಕಾರರಿಗೆ ಯಥಾವತ್ ಲಿಪಿಯೇ  ಮುಖ್ಯವಾಗಿದ್ದರೆ ಹಸ್ತಪ್ರತಿಗಳ ಬರವಣಿಗೆಯಲ್ಲಿ  ವೈವಿಧ್ಯತೆಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಲಿಪಿಕಾರನ ಸ್ವತಂತ್ರ ಮನೋಭೂಮಿಕೆಯೊಂದಿಗೆ ಭಾಷೆ ಮತ್ತು ಲಿಪಿ ಪರಿಣತಿ, ಓರಣದ ಒಲವು, ಸೌಂದರ್ಯ ಪ್ರಜ್ಞೆಗಳಂತಹ ಸೃಜನಾತ್ಮಕ ನೆಲೆಗಳನ್ನು ಇಂದು ಲಿಪಿಕಾರರ ಬರೆಹದಲ್ಲಿ ಗುರುತಿಸಲು ಸಾಧ್ಯವಾಗಿದೆ.  ದೇಸಿಕಾವ್ಯಗಳ ಹಸ್ತಪ್ರತಿಗಳು ಸಂಸ್ಕೃತಿ ಪ್ರಧಾನವಾದ ಒಂದು ಸ್ಥಳೀಯ ಭಾಷಿಕ ಸಂವೇದನೆಗಳನ್ನು ತನ್ನ ಬರವಣಿಗೆಯ ಭಾಷೆಯನ್ನಾಗಿಸಿಕೊಳ್ಳುವತ್ತ ಗಮನ ಹರಿಸಿರುವುದನ್ನು ಕಾಣಬಹುದಾಗಿದೆ. ವಚನಕಾರರು, ಕೀರ್ತನಕಾರರು, ತತ್ವಪದಕಾರರು ಎಲ್ಲರೂ ಸಿದ್ಧ ಹಾಗೂ ಶುದ್ಧ ಎನ್ನುವ ಭಾಷಾ ಸಾಮಗ್ರಿಗಳಿಗೆ ಬದಲಾಗಿ ಜನತೆಯ ಮಧ್ಯದಿಂದಲೇ ಅಂಥ ಭಾಷಿಕ ಸಾಮಥ್ರ್ಯಗಳನ್ನು ಕಟ್ಟಿಕೊಂಡಿದ್ದಾರೆ. ಆಡು ಮಾತಿನ ಕಾಕು ಹಾಗೂ ಉದ್ಗಾರಗಳು ಭಾಷೆಯ ಸಶಕ್ತೀಕರಣ ಗೊಳಿಸುವುದರ ಜೊತೆಗೆ ಕನ್ನಡ ಬರವಣಿಗೆಯ ಚಾರಿತ್ರಿಕ ವಿಕಾಸ ಮತ್ತು ಉಚ್ಛಾರಣೆಯ ಪ್ರಾದೇಶಿಕ ವಿಕಲ್ಪಗಳ ಮೂಲಕ ಬರವಣಿಗೆಯನ್ನು  ಸಾಮಾಜಿಕ ನೆಲೆಯತ್ತ ತೆಗೆದುಕೊಂಡು ಹೋಗಿವೆ ಎಂದೆನಿಸುತ್ತದೆ. ಹೀಗಾಗಿ ಹಸ್ತಪ್ರತಿಗಳ ಬರಹಗಳು ಕೇವಲ ಬರೆಹಗಳು ಎಂದೆನಿಸದೇ ಸಾಂಸ್ಕೃತಿಕ ಸಂಕಥನಗಳಾಗಿ ಹಾಗೂ ಲಿಪಿಗಳು ಸಾಂಸ್ಕೃತಿಕ ವಿನ್ಯಾಸಗಳಾಗಿ ಗೋಚರಿಸುತ್ತವೆ.
7.ಸಮಾರೋಪ:      
   ಹಸ್ತಪ್ರತಿ ಅಧ್ಯಯನವು ತನ್ನ ಅರಿವಿನ ಕಾಲಘಟ್ಟದಲ್ಲಿ  ತನ್ನನ್ನು ಸಕಾಲಿಕಗೊಳಿಸುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನಯುಗದ ಸಂದರ್ಭದಲ್ಲಿ ಹಸ್ತಪ್ರತಿಗಳ ಅನ್ವಯಕತೆ ಮತ್ತು ಸಂವಹನ ಕ್ರಿಯಾ ವಿಧಾನಗಳು ಬದಲಾಗ ಬೇಕಾಗಿದೆ. ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಮತ್ತು ಸಂಯೋಜನೆಯಷ್ಟೇ  ಅದರ ಮಾಹಿತಿಯನ್ನು ಹರಡುವುದು ಮುಖ್ಯವಾಗಿದೆ. ನಮ್ಮ ದೇಸಿ ಜ್ಞಾನ ಪರಂಪರೆಯನ್ನು ಮರುಶೋಧಿಸಿ ಆಮೂಲಕ ನಮ್ಮ ಸಂಸ್ಕೃತಿಯ ಅಸ್ತಿತ್ವವನ್ನು  ಸದೃಢಪಡಿಸ ಬೇಕಾಗಿದೆ. ಹಸ್ತಪ್ರತಿ ಭಂಡಾರಗಳಲ್ಲಿ ಸಂಗ್ರಹಗೊಂಡು ಅನಾದಾರಣೆಗೆ ಒಳಗಾಗಿರುವ ಉಪೇಕ್ಷಿತ ಹಸ್ತಪ್ರತಿಗಳೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಶಾಸ್ತ್ರಕೃತಿಗಳನ್ನು ಜರೂರಾಗಿ ಸಂಪಾದಿಸಿ ಪ್ರಕಟಗೊಳಿಸುವುದರ ಮೂಲಕ ಅವುಗಳಲ್ಲಿ ಹುದುಗಿರುವ ದೇಸಿಪರಂಪರೆಯನ್ನು ಶೋಧಿಸ ಬೇಕಾಗಿದೆ. ಪ್ರಸ್ತುತ ಹಸ್ತಪ್ರತಿಗಳಲ್ಲಿರುವ ಅಪಾರ ವಿಷಯ ಸಾಮಗ್ರಿಗಳನ್ನು, ಮಾಹಿತಿಗಳನ್ನು ಆಧುನಿಕ ಚಿಂತನಾ ಕ್ರಮಕ್ಕೆ ಅಳವಡಿಸ ಬೇಕಾಗಿದೆ. ಹಸ್ತಪ್ರತಿಗಳಲ್ಲಿಯ ಮಾಹಿತಿ ಸಂಪತ್ತನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸುವುದು, ಪ್ರಾಚೀನ ನಂಬಿಕೆ, ವಿಚಾರ, ಮೌಲ್ಯಗಳನ್ನು ಸಂವಾದಕ್ಕೆ ಪ್ರೇರೇಪಿಸುವುದು, ಆಯಾ ಜ್ಞಾನಶಾಸ್ತ್ರಗಳ ಪಾರಂಪರಿಕ ಹಾಗೂ ಸಮಕಾಲೀನ ಕ್ಷೇತ್ರಗಳ ಮೌಲ್ಯ ವಿವೇಚನೆ ಮಾಡುವುದು, ಹಸ್ತಪ್ರತಿ ಸಂಪತ್ತನ್ನು ಇಂದಿನ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ ಅನ್ವಯಿಸುವುದು. ಆಧುನಿಕ ವೈಜ್ಞಾನಿಕ- ವೈಚಾರಿಕ ಚಿಂತನೆಗಳ ನೆಲೆಯಲ್ಲಿ ಪಾರಂಪರಿಕ ಮೌಲ್ಯಗಳನ್ನು ಅದ್ದಿ ತೆಗೆದು ಅವುಗಳ ಸಾರ್ವತ್ರಿಕ ಮಹತ್ವಗಳನ್ನು ದಾಖಲಿಸುವುದರ ಮೂಲಕ  ಅವುಗಳ ಪರಿಚಯವಿಲ್ಲದ ಆಧುನಿಕ ಸಮಾಜಕ್ಕೆ ಹಸ್ತಪ್ರತಿಗಳ ಮಹತ್ವದ ಬಗೆಗೆ ಅರಿವು ಮೂಡಿಸ ಬೇಕಾಗಿದೆ. ಹಸ್ತಪ್ರತಿಗಳಲ್ಲಿ ಅಡಗಿರುವ ಮಾಹಿತಿ ಕಣಜವನ್ನು ಹಾಗೂ ಸಾಂಸ್ಕೃತಿಕ ಸಂಪತ್ತನ್ನು ವಿವಿಧ ಮಗ್ಗುಲಗಳಿಂದ ಅಧ್ಯಯನ ಮಾಡಿ ಅವುಗಳ  ಶಾಸ್ತ್ರೀಯ ಜ್ಞಾನಕ್ಷೇತ್ರದ ಮಹತ್ವವನ್ನು ಆಧುನಿಕ ಜಗತ್ತಿಗೆ ಪರಿಚಯಿಸ ಬೇಕಾಗಿದೆ.
    ಹಸ್ತಪ್ರತಿಗಳ ಅಧ್ಯಯನದಲ್ಲಿ ಇನ್ನು ಆಗ ಬೇಕಾಗಿರುವ ಕಾರ್ಯಗಳು:   ಸಮಗ್ರ ಹಸ್ತಪ್ರತಿಗಳ ಪುಷ್ಟಿಕೆಗಳನ್ನು ಸಿದ್ಧಪಡಿಸಿ ಪ್ರಕಟಿಸುವುದು. ಹಸ್ತಪ್ರತಿ ಲಿಪಿಕಾರರ ಸ್ವರೂಪ-ವೈವಿಧ್ಯತೆಯನ್ನು ಅಧ್ಯಯನ ಮಾಡುವುದು. ಹಸ್ತಪ್ರತಿಗಳ ಪುಷ್ಟಿಕೆಗಳ ಆದಿ-ಅಂತ್ಯಗಳಲ್ಲಿಯ ಮಾಹಿತಿಗಳನ್ನು ಸಾಹಿತ್ಯೇತರ ಅಧ್ಯಯನದ ನೆಲೆಗಟ್ಟಿನಲ್ಲಿ ನೋಡಬೇಕಾಗಿರುವುದು. ಉಪೇಕ್ಷಿತ ಹಸ್ತಪ್ರತಿಗಳಲ್ಲಿರುವ ಮಾಹಿತಿ ಸಂಪತ್ತನ್ನು ಜನತೆಯ ಕಲ್ಯಾಣದ ಹಿನ್ನಲೆಯಲ್ಲಿ ಬಳಸಿಕೊಳ್ಳುವಂತಹ ಅನ್ವಯಿಕ ವಿಧಾನವನ್ನು ಅನುಸರಿಸುವುದು.
   ಹಸ್ತಪ್ರತಿಗಳ ಬಗೆಗಿನ ಸಾಂಸ್ಕೃತಿಕ ತಿಳಿವಳಿಕೆಗಳನ್ನು ಜಾಗೃತಗೊಳಿಸಿ ನಮ್ಮ ಸಂದರ್ಭಕ್ಕೆ ಅಳವಡಿಸಿಕೊಳ್ಳುವ ಕಾರ್ಯ ಆಗಬೇಕಾದರೆ ಇಂದು ಪಾರಂಪರಿಕ ಸಂರಕ್ಷಣಾ ಕ್ರಮಗಳಿಗಿಂತಲೂ ಮಾಹಿತಿತಂತ್ರಜ್ಞಾನದ ಮೂಲಕ ಸಮರ್ಪಕವಾಗಿ ಹಾಗೂ ಬಹುಕಾಲದ ಪ್ರಯೋಜನಕ್ಕಾಗಿ ಡಿಜಿಟಲ್ ರೂಪದಲ್ಲಿ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಬೇಕಾಗಿದೆ. ಇಂದು ಎಲ್ಲಾ ಶೈಕ್ಷಣಿಕ ಶಿಸ್ತುಗಳು ವೈಜ್ಞಾನಿಕ ಸ್ವರೂಪ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹಸ್ತಪ್ರತಿಗಳಿಗೂ ಆಧುನಿಕ ಕಾಯಕಲ್ಪವನ್ನು ಕೊಡಬೇಕಾಗಿದೆ. ಹಸ್ತಪ್ರತಿಗಳನ್ನು ಗಣಕೀಕರಣಗೊಳಿಸಿದರೆ ಮಹತ್ತರವಾದ ಪ್ರಯೋಜನವಿದೆ. ಅದು ತನ್ನಷ್ಟಕ್ಕೆ ತಾನೆ ವರ್ಣನಾತ್ಮಕ ಸೂಚಿ, ಸೂಚಿಗಳ ಸೂಚಿ, ಅಕಾರಾದಿ ಪದಪ್ರಯೋಗ ಕೋಶ, ವಸ್ತುಕೋಶ, ಭಾಷಾ ಪ್ರಯೋಗಗಳನ್ನು ಸಿದ್ಧಪಡಿಸುತ್ತದೆ. ಈ ರೀತಿ ಕಾರ್ಯ ನಡೆದಾಗ ಹಸ್ತಪ್ರತಿಗಳ ಬಹುಮುಖ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಸ್ತಪ್ರತಿಗಳ ಪರಂಪರಾಗತ ತಿಳಿವಳಿಕೆ ಮತ್ತು ಅಧ್ಯಯನಗಳ ಮುಂದುವರಿಕೆಯಾಗಿ ಆಧುನಿಕ ವಿಧಿವಿಧಾನಗಳನ್ನು ಅನ್ವಯಿಸಿಕೊಳ್ಳುವುದರ ಮೂಲಕ ಹೊಸ ದೃಷ್ಟಿಕೋನವನ್ನು ಕಂಡು ಕೊಳ್ಳಬೇಕಾಗಿದೆ. ಇಲ್ಲಿಯವರೆಗೂ  ಹಸ್ತಪ್ರತಿಗಳ ಸಂಗ್ರಹ,ಸಂರಕ್ಷಣೆ, ಸಂಪಾದನೆ ಯಂತಹ ಪಾರಂಪರಿಕ ಕೆಲಸಗಳ ಮೂಲಕ ಬಹುಪಾಲು ಪಠ್ಯ ಕೇಂದ್ರಿತ ಸಂಪಾದನೆಯ ಪ್ರಕ್ರಿಯೆಗಳೇ ಹೆಚ್ಚಾಗಿ ನಡೆದಿರುವುದು. ಇಂದು ಈ ಪ್ರಕ್ರಿಯೆಯ ಜೊತೆಗೆ. ನಾಡಿನ ಹಸ್ತಪ್ರತಿಗಳನ್ನು ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟುಗಳ ಮೂಲಕ ಸೂಕ್ಷ್ಮತರದ ಅಧ್ಯಯನವನ್ನು ಕೈಗೊಳ್ಳಬೇಕಾಗಿದೆ. ಇತ್ತೀಚಿನ ಆಧುನೀಕರಣದ ಸಂದರ್ಭದಲ್ಲಿ ಅಧ್ಯಯನಗಳು ಹೊಸತನದ ಸ್ವರೂಪಕ್ಕೆ ಒಗ್ಗಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಸ್ತಪ್ರತಿಗಳ ಅಧ್ಯಯನವೂ ಸಹ ಹೊಸತನವನ್ನು ಅಳವಡಿಸಿಕೊಳ್ಳ ಬೇಕಾಗಿದೆ.    


   ಗ್ರಂಥ ಋಣ

1.ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು ಸಂ: ವೀರೇಶ ಬಡಿಗೇರ
   ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. 2005  
2. ಮಣಿಹ ಸಂ: ಎಂ.ವಿ.ಸೀತಾರಾಮಯ್ಯ
   ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು. 1970
3. ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು ಸಂ: ಎಸ್.ಶಿವಣ್ಣ
   ವೀರಶೈವ ಅಧ್ಯಯನ ಸಂಸ್ಥೆ, ಗದಗ 1994
4. ಸಿ.ನಾಗಭೂಷಣ. 1.ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ  
    ಸಿ.ವಿ.ಜಿ.ಪಬ್ಲಿಕೇಷನ್, ಬೆಂಗಳೂರು, 2007
     2. ನುಡಿ ಪಸರ, ಅವಿರತ ಪ್ರಕಾಶನ
        ಬೆಂಗಳೂರು, 2011
5.  ಎಸ್.ಎಸ್.ಅಂಗಡಿ. ಕನ್ನಡ ಹಸ್ತಪ್ರತಿ ರಚನೆ ಭಾಷಿಕ ವಿವೇಚನೆ
    ಪ್ರಸಾರಾಂಗ. ಕನ್ನಡ ವಿಶ್ವವಿದ್ಯಾಲಯ ಹಂಪಿ.2006
6, ಬಿ.ಕೆ.ಹಿರೇಮಠ, ಕನ್ನಡ ಹಸ್ರಪ್ರತಿಗಳು ಒಂದು ಅಧ್ಯಯನ
    ವೀರಶೈವ ಅಧ್ಯಯನ ವೇದಿಕೆ, ಮುಧೋಳ,1992 
7. ನಾ. ಗೀತಾಚಾರ್ಯ:ಹಸ್ತಪ್ರತಿ ಅಧ್ಯಯನ ಶಾಸ್ತ್ರ
    ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು2009
8.  ವೀರೇಶ ಬಡಿಗೇರ: ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು
    ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. 2006  
9 ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟಗಳು 1 ರಿಂದ 9
    ಮೈಸೂರು ವಿಶ್ವವಿದ್ಯಾಲಯ, ಮೈಸೂರು.
10. ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ  ಸಂ. ಬಿ.ಎಸ್.ಸಣ್ಣಯ್ಯ
    ಶ್ರುತಕೇವಲಿ ಎಜುಕೇಶನ್ ಟ್ರಸ್ಟ್, ಶ್ರವಣ ಬೆಳಗೊಳ 1997
                                                                                                                     



  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...