ಸೋಮವಾರ, ಏಪ್ರಿಲ್ 23, 2018

ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳು: ವಿವರಣಾತ್ಮಕ ಅಧ್ಯಯನ ಡಾ.ಸಿ.ನಾಗಭೂಷಣ


ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳು: ವಿವರಣಾತ್ಮಕ ಅಧ್ಯಯನ
                     ಡಾ.ಸಿ.ನಾಗಭೂಷಣ

  ತೋಂಟದ ಸಿದ್ಧಲಿಂಗ ಯತಿಗಳು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಯೋಗಿಗಳು. ವಚನಕಾರರು, ಪ್ರಬುದ್ಧ ಷಟ್‍ಸ್ಥಲಜ್ಞಾನಿಗಳು, ಶಾಸ್ತ್ರಕಾರರು, ವೀರಶೈವ ಗುರು ಪ್ರಮುಖರು. ಇವರ ಶಿಷ್ಯ-ಪ್ರಶಿಷ್ಯರ ಬಳಗ ದೊಡ್ಡದು. ವಚನಕಾರರಾಗಿ ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು. ಮಠವೊಂದರ ಪೀಠಾಧಿಪತಿಯಾಗಿ ಮಠ ಪರಂಪರೆಯನ್ನೇ ಸೃಷ್ಟಿಸಿದವರು. ಅನುಭವಿಗಳಾಗಿ ಷಟ್‍ಸ್ಥಲ ಶಾಸ್ತ್ರವನ್ನು ಸಾರೋದ್ಧಾರಗೊಳಿಸಿದವರು. ತಿಳಿಯದ ತತ್ವ ವಿವೇಕವನ್ನು ತಿಳಿಯಾದ ಮಾತುಗಳಲ್ಲಿ ತಿಳಿಸಿ ಹೇಳಿದವರು. ಭಕ್ತ ಕುಲ ಕೋಟಿಗೆ ಸಾಕ್ಷಾತ್ ಪರಶಿವಮೂರ್ತಿಯಾಗಿ ಪರಿಣಮಿಸಿದವರು. ವ್ಯಕ್ತಿಯಾಗಿ ಜನಿಸಿ ಕಾಲ ದೇಶ ಪರಿಸರದ ಮೇಲೆ ಮೀರಿ ಬೆಳೆದವರು ತಪಸ್ಸುದಾಯಕದ ಮೂಲಕ ಸಿದ್ಧಿಪಡೆದ ಅಲ್ಲಮನ ಅವತಾರಿಗಳು ಇಂತಹವರ ಸಾಂಸ್ಕೃತಿಕ  ಕೊಡುಗೆ ಅದ್ಭುತವಾಗಿದೆ.
      ಷಟ್‍ಸ್ಥಲ ಜ್ಞಾನಸಾರಾಮೃತ ಕೃತಿಯನ್ನು ಮುಂದಿಟ್ಟುಕೊಂಡು ಆಳವಾಗಿ ಅಧ್ಯಯನ ಮಾಡಿದಾಗ ಅದರಲ್ಲಿ ಸಿದ್ಧಲಿಂಗರ ವಚನಮಯ ವ್ಯಕ್ತಿತ್ವ ಮಹತ್ತರವಾಗಿ ಗೋಚರವಾಗುತ್ತದೆ. ಕಲ್ಯಾಣ ಕ್ರಾಂತಿಯ ನಂತರದ ದಿನಮಾನಗಳಲ್ಲಿ ನೇಪಥ್ಯಕ್ಕೆ ತರುವಲ್ಲಿ ಮತ್ತು ಅದನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ತರ ಪಾತ್ರ ಶಿವಯೋಗಿಗಳದು.  ಬಸವೋತ್ತರ ಯುಗದ ವಚನ ಸಾಹಿತ್ಯದ ಆದ್ಯ ಪ್ರವರ್ತಕ ಸಿದ್ಧಲಿಂಗ ಯತಿ ಎಂಬುದು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ. ತೋಂಟದ ಸಿದ್ಧಲಿಂಗರ  ಅವತಾರದಿಂದ ಕರ್ನಾಟಕ ಮಾತ್ರವಲ್ಲ ಭಾರತವೆ ಪುನೀತವಾಗಿದೆ.  ತೋಂಟದ ಸಿದ್ಧಲಿಂಗ ಯತಿಗಳು ಏಕೋತ್ತರ ಶತಸ್ಥಲದ ಪರಂಪರೆಯ ನಿರ್ಮಾಪಕರು ಹೌದು. ಇವರ ನೇತೃತ್ವದಲ್ಲಿ ವಚನಗಳ ಸಂಗ್ರಹ, ಸಂಪಾದನೆ, ಅಧ್ಯಯನ ತತ್ವ ತಳಹದಿಯ ಮೇಲಿನ ವೈವಿಧ್ಯಮಯ ಸಂಕಲನಗಳ ಮಹತ್ತರ ಕಾರ್ಯ ನಡೆಯಿತು. ಇವರ ಅನೇಕ ಜನ ಕರಕಮಲ ಸಂಜಾತ ಶಿಷ್ಯರು-ಪ್ರಶಿಷ್ಯರುಗಳು ಸ್ವತಃ  ವಚನಕಾರರಾಗಿದ್ದಾರೆ. ಶೂನ್ಯಸಂಪಾದನಾಕಾರರಾಗಿದ್ದಾರೆ. ಷಟ್‍ಸ್ಥಲ ತತ್ವಕ್ಕನುಗುಣವಾಗಿ ವಚನಗಳನ್ನು ಸಂಕಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಶಾಸ್ತ್ರಕ್ಕೆ ಟೀಕೆ, ವ್ಯಾಖ್ಯಾನ, ಟಿಪ್ಪಣಿ ಬರೆದಿದ್ದಾರೆಅಷ್ಟೇ ಅಲ್ಲ ವೀರಶೈವ ಪುರಾಣ ಕರ್ತೃಗಳು ಆಗಿದ್ದಾರೆ. ಹೀಗೆ ಇದನ್ನೆಲ್ಲ ಮನನ ಮಾಡುತ್ತಾ ಹೋದಾಗ ಸಿದ್ಧಲಿಂಗ ಯತಿಯ ಹಿಂದೆ ಒಂದು ಸಾಹಿತ್ಯ ಪರಂಪರೆ ಮತ್ತೊಂದು ಶಾಸ್ತ್ರ ಪರಂಪರೆ, ಒಂದು ಗುರು ಪರಂಪರೆ, ಒಂದು ಆಧ್ಯಾತ್ಮ ಪರಂಪರೆ, ಒಂದು ವೀರಶೈವ ಧರ್ಮ ಪರಂಪರೆ ಅದಕ್ಕೆ ಆಗರವಾದ ಮಠ ಪರಂಪರೆ ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮುಖಗಳ ವಿಕಾಸಕ್ಕೆ ಕಾರಣವಾದ ಹಿನ್ನೆಲೆ ಇರುವುದು ಕಂಡು ಬರುತ್ತದೆ.  ಆ ಮಹಿಮಾಶಾಲಿ ವ್ಯಕ್ತಿತ್ವದ ಪ್ರಭಾವಗಳು ಹಿಂದಿಗೂ ಅಚ್ಚಳಿಯದೇ ಉಳಿದಿದೆ. ಸಿದ್ಧಲಿಂಗ ಯತಿಗಳ ಕುರಿತಾಗಿ ಪಂಡಿತರಿಂದ ಹಿಡಿದು ಪಾಮರರ ವರೆಗೆ ಎಲ್ಲ ವರ್ಗದ ಜನರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
  ಸಿದ್ಧಲಿಂಗರ ವಚನ ಸಾಹಿತ್ಯ, ಶಾಸ್ತ್ರಗಳ ಕುರಿತಾಗಿ ಪ್ರಕಟವಾದ ಪುಸ್ತಕ, ಲೇಖನಗಳಿಗೆ ಕೊರತೆಯಿಲ್ಲ. ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಬಸವಣ್ಣನವರನ್ನು ಹೊರತು ಪಡಿಸಿದರೆ ಅಧಿಕ ಸಂಖ್ಯೆಯಲ್ಲಿ ಕಾವ್ಯ-ಪುರಾಣಗಳಲ್ಲಿ ಉಲ್ಲೇಖಿತರಾದವರು ಇವರೇ ಆಗಿದ್ದಾರೆ. ಅವರು ಅವತಾರ ಪುರುಷರಾಗಿ ಅನೇಕ ಪವಾಡ ಮಹಿಮಾ ವಿಶೇಷಣಗಳನ್ನು ಮಾಡಿ ಎರಡನೆಯ ಪ್ರಭುದೇವರೆಂಬ ಪ್ರಶಂಸೆ ಪಡೆದುದ್ದನ್ನು ಅರಿತು ಅವರಲ್ಲಿ ಅಪಾರವಾದ ಪ್ರೀತಿ ಉಂಟಾಗಿ ಅವರ ಮೇಲೆ ಹೆಚ್ಚಿನ ಕಾವ್ಯ ಪುರಾಣ ಬರೆಯುವ ಪರಿಪಾಠವನ್ನು ಕವಿಗಳು ಮಾಡಿದರು. ಆಯಾ ಕವಿಗಳಲ್ಲಿ ಪ್ರಮುಖರಾದವರೆಂದರೆ ಶಾಂತೇಶ, ವಿರಕ್ತತೋಂಟದಾರ್ಯ,ಸುವ್ವಿಮಲ್ಲ,
ವಿರೂಪಾಕ್ಷ ಪಂಡಿತ, ಸಿದ್ಧನಂಜೇಶ, ಚೆನ್ನವೀರಜಂಗಮ, ಯತಿಬಸವಲಿಂಗ, ಹೇರಂಬ  ಮೊದಲಾದವರು.    
     ತೋಂಟದ ಸಿದ್ಧಲಿಂಗರೊಬ್ಬ ಅನುಭಾವಿ ಸಂಕಲನಕಾರರಾಗಿ, ವ್ಯಾಖ್ಯಾನಕಾರರಾಗಿದ್ದು, ವೀರಶೈವ ಸಾಹಿತ್ಯ ಸಮೃದ್ಧಿಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು, ವೀರಶೈವರು ಆಚರಿಸಬೇಕಾದ ಷಟಸ್ಥಲ ಸಿದ್ಧಾಂತ ಹಾಗೂ ಅಷ್ಟಾವರಣ ವಿಧಿ ವಿಧಾನಗಳು ನಿಯಮಗಳನ್ನು ಕುರಿತು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಮಹಾ ತಾತ್ವಿಕ ಪ್ರತಿಭಾವಂತರು. ವೀರಶೈವ ಧರ್ಮದ ಪುನರುದ್ಧಾರಕರಾದ ತೋಂಟದ ಸಿದ್ಧಲಿಂಗರು ವೀರಶೈವ ತತ್ವ ಶಾಸ್ತ್ರ ವಾಙ್ಮಯ ಪ್ರಪಂಚಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ವೀರಶೈವ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವುದಕ್ಕಾಗಿ ಅನೇಕ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡ ಸಾಹಿತ್ಯ ಪ್ರೇಮಿ. ಬಿಜ್ಜಾವರ ದೊರೆ ತೋಂಟದ ಸಿದ್ಧಲಿಂಗ ಭೂಪಾಲಕನು ಪಾದ ಪೂಜೆ ಮಾಡಿದ ಘಟನೆ ಇವರ ದಿವ್ಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗೆ ತೋಂಟದ ಸಿದ್ಧಲಿಂಗರು ಸಾಧಕರಾಗಿ 701 ಜನ ಶಿಷ್ಯರೊಂದಿಗೆ ಇಡೀ ಭಾರತದ ತುಂಬ ಯಾತ್ರೆ ಕೈಗೊಂಡು ಭಾರತ ಖಂಡವನ್ನು ಪಾವನಗೊಳಿಸಿದರು. ತಮ್ಮ ಅದ್ಭುತ ದೈವಿ ಶಕ್ತಿ, ಪವಾಡ ಮತ್ತು ವಚನವಾಣಿಯ ಮೂಲಕ ಜನರಲ್ಲಿ ಧರ್ಮ ಜಾಗೃತಿ ಉಂಟುಮಾಡಿದರು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಭಿತ್ತಿ ಬೆಳೆಸಿದವರು. ಅಲ್ಲಮಪ್ರಭು ಸಂಪ್ರದಾಯದ ಹರದನಹಳ್ಳಿಯ ಗೋಸಲ ಪೀಠದ ಚೆನ್ನಬಸವೇಶ್ವರ ಕರಕಮಲ ಸಂಜಾತರಾಗಿ ನಾಡಿನಾದ್ಯಾಂತ ಪ್ರಭಾವ ಬೀರಿದವರು.
       ವೀರಶೈವ ಸಾಹಿತ್ಯ ಸಂಸ್ಕೃತಿಗೆ ಪುರುಜ್ಜೀವನ ನೀಡಿ ನಂತರದ ವಚನಕಾರರ ಮೇಲೆ ಪ್ರೇರಣೆ, ಪ್ರಭಾವ ನೀಡಿದ ಸಿದ್ಧಲಿಂಗರ ಬದುಕನ್ನು ತಿಳಿಯುವುದಲ್ಲದೇ ತನ್ಮೂಲಕ ಆ ಕಾಲದ ವೀರಶೈವ ಧರ್ಮದ ಷಟ್‍ಸ್ಥಲ ತತ್ವ, ಅಷ್ಟಾವರಣ ಸ್ವರೂಪವನ್ನು ಸಂಕ್ಷಿಪ್ತವಾಗಿ ಗುರುತಿಸಲಾಗಿದೆ. ಹೀಗಾಗಿ 16ನೇ ಶತಮಾನದಲ್ಲಿ ಸಾಹಿತ್ಯವನ್ನು ನಿರ್ಮಿಸುವುದಷ್ಟೇ ಅಲ್ಲ ಸಮಾಜವನ್ನು ಉದ್ಧರಿಸಿ ಬೀರಿದ ಪ್ರಭಾವವನ್ನು ಅವರನ್ನು ಕುರಿತ ಕೃತಿಗಳ ಹಿನ್ನೆಲೆಯಲ್ಲಿ ಗುರುತಿಸಲಾಗಿದೆ.
ತೋಂಟದ ಸಿದ್ಧಲಿಂಗ ಯತಿಗಳ ಹೆಸರು ಕಾಲ:
      ಸಿದ್ಧಲಿಂಗ ಯತಿಗಳು ಅಥವಾ ಶಿವಯೋಗಿಗಳು ಎಂಬ ಹೆಸರಿನೊಂದಿಗೆ ಗುಮ್ಮಳಾಪುರದ ಸಿದ್ಧಲಿಂಗ, ಸ್ವತಂತ್ರ ಸಿದ್ಧಲಿಂಗ ಎಂಬ ಹೆಸರುಗಳು ಇವೆ. ತೋಂಟದ ಸಿದ್ಧಲಿಂಗ ಎಂಬ ಹೆಸರಿನೊಂದಿಗೆ ವಿರಕ್ತ ತೋಂಟದಾರ್ಯ ಎಂಬ ಹೆಸರು ಕೇಳಿಬರುತ್ತದೆ. ವಿದ್ವಾಂಸರ ದೃಷ್ಟಿಯಿಂದ ಅಲ್ಲವಾದರೂ ಜನಸಾಮಾನ್ಯರ ದೃಷ್ಟಿ ಈ ಎಲ್ಲ ಹೆಸರುಗಳು ಗೊಂದಲ ಮಯವಾಗಿ ಕಾಣುತ್ತವೆ. ತೋಂಟದ ಸಿದ್ಧಲಿಂಗ ಯತಿಗಳು ಗೋಸಲ ಪೀಠದ ಚೆನ್ನಬಸವ ಶಿವಯೋಗಿಗಳ ಶಿಷ್ಯರು. ಬಿಜ್ಜಾವರದ ಇಮ್ಮಡಿ ಚಿಕ್ಕಭೂಪಾಲರ ಹಿರಿಯ ಸಮಕಾಲೀನರು  ಇವರ ಕಾಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ವಿದ್ವಾಂಸರು ತೋಂಟದ ಸಿದ್ಧಲಿಂಗರ ಕಾಲವನ್ನು  ಹದಿನಾರನೇ ಶತಮಾನದ ಮೊದಲು 7-8 ದಶಕಗಳಲ್ಲಿ ಜೀವಿಸಿದುದಾಗಿ ನಿರ್ಧರಿಸಿದ್ದು, ಸುಮಾರು ಕ್ರಿ.ಶ. 1561 ಎಂದು ಸೂಚಿಸಬಹುದಾಗಿದೆ ಎಂದಿದ್ದಾರೆ. ಗುಮ್ಮಳಾಪುರದ ಸಿದ್ಧಲಿಂಗನು ತೋಂಟದ ಸಿದ್ಧಲಿಂಗರ ಮತ್ತು ಬೋಳಬಸವೇಶ್ವರ ಶಿಷ್ಯ ಪರಂಪರೆಯವನಾಗಿದ್ದು ಹೆಸರೇ ಹೇಳುವಂತೆ ಗುಮ್ಮಳಾಪುರದವನಾಗಿದ್ದಾನೆ. ಷಟ್‍ಸ್ಥಲ ಲಿಂಗಾಂಗ ಸಂಬಂಧದ ನಿರ್ವಚನ ಎಂಬ ವಚನ ಸಂಕಲನ ಮತ್ತು ಶೂನ್ಯ ಸಂಪಾದನೆಯ ಕರ್ತೃ ಆಗಿದ್ದಾನೆ. ಸ್ವತಂತ್ರ ಸಿದ್ಧಲಿಂಗೇಶ್ವರ ಎಂಬುವವನು ಇನ್ನೊಬ್ಬ ವಚನಕಾರನಾಗಿದ್ದು 700 ವಚನಗಳನ್ನು ರಚಿಸಿದಂತೆ ತಿಳಿದು ಬರುತ್ತದೆ. ‘ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ’ ಎಂಬುದು ಈತನ ವಚನದ ಅಂಕಿತ.  ಜಂಗಮ ರಗಳೆ, ಮುಕ್ತಾಯಂಗನ ಕಂಠಮಾಲೆ ಈತನ ಇನ್ನೆರಡು ಕೃತಿಗಳಾಗಿವೆ.  ಸ್ವತಂತ್ರ ಸಿದ್ಧಲಿಂಗನು ಎಡೆಯೂರು ತೋಂಟದ ಸಿದ್ಧಲಿಂಗರ ಶಿಷ್ಯ.  ಹೀಗಾಗಿ ತೋಂಟದ ಸಿದ್ಧಲಿಂಗರು, ಸ್ವತಂತ್ರ ಸಿದ್ಧಲಿಂಗರ ಬಗೆಗೆ ಯಾವ ಗೊಂದಲವೂ ಉಳಿಯುವುದಿಲ್ಲ.
  ವಿರಕ್ತ ತೋಂಟದಾರ್ಯ ಈತನು ಕೂಡ ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯ ಪರಂಪರೆಯವನಾಗಿದ್ದು ಸಿದ್ಧೇಶ್ವರ ಪುರಾಣದ ಕರ್ತೃವಾಗಿದ್ದಾನೆ. ಈತನ ಕಾಲ ಕ್ರಿ.ಶ. 1616. ಒಟ್ಟಿನಲ್ಲಿ ತೋಂಟದ ಸಿದ್ಧಲಿಂಗರನ್ನು ಹೊರತು ಪಡಿಸಿ ಉಳಿದ ಸಿದ್ಧಲಿಂಗರು ಬೇರೆ ವ್ಯಕ್ತಿಗಳು ಎಂಬುದಂತೂ ಸ್ಪಷ್ಟವಿದೆ. ಹೀಗಾಗಿ ಇವರೂ ಸಹ ತೋಂಟದ ಸಿದ್ಧಲಿಂಗ ಯತಿಗಳ ಪರಂಪರೆಯವರಾಗಿದ್ದರೆಂಬುದು ಇನ್ನೂ ಸ್ಪಷ್ಟವಾಗುತ್ತದೆ. ತೋಂಟದ ಸಿದ್ಧಲಿಂಗ ಯತಿ ಮಹಾನುಭಾವರು, ಕಾರಣಿಕ ಪುರುಷ, ವಚನಕಾರರ ತತ್ತ್ವವೆತ್ತ ಶರಣ ಗಣದ ಶಿಖಾಮಣಿ. ವೀರಶೈವ ಧರ್ಮೋದ್ಧಾರಕ, ಅವರ ಜನನ ತಂದೆ, ತಾಯಿ, ಘಟನೆಗಳು ನಡೆದ ಸಂವತ್ಸರ ವಾರ ತಿಥಿ ನಕ್ಷತ್ರ ಇತ್ಯಾದಿ ಕಾಲ ಸೂಚನೆ ಇರುವ ಚರಿತ್ರಾರ್ಹ ಗ್ರಂಥಗಳಿಲ್ಲ. ಹೀಗಾಗಿ ತೋಂಟದ ಸಿದ್ಧಲಿಂಗ ಯತಿಗಳ ಕಾಲ ನಿರ್ಣಯದಲ್ಲಿ ಕೂಡ ನೇರ ಪ್ರಮಾಣಗಳಿಗಿಂತ ಪರೋಕ್ಷ ಪ್ರಮಾಣಗಳನ್ನೇ ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ.
ಸಿದ್ಧಲಿಂಗ ಯತಿಗಳ ಕಾಲನಿರ್ಣಯಕ್ಕಾಗಿ ನೇರವಾಗಿ ಪ್ರಯತ್ನಿಸಿದ ವಿದ್ವಾಂಸರ ಲೇಖನಗಳಗಳನ್ನೆಲ್ಲ ಅವಲೋಕಿಸಿದಾಗ ಈ ಕೆಳಕಂಡ ನಿರ್ಣಯಗಳು ವ್ಯಕ್ತವಾಗುತ್ತವೆ.
1.     ಕಾಲನಿರ್ಣಯಕ್ಕೆ ಸಿದ್ಧಲಿಂಗೇಶ್ವರರ ವಚನ ಕೃತಿ ಷಟ್‍ಸ್ಥಲ ಜ್ಞಾನಾಮೃತದಲ್ಲಿ ಕಾಲದ ಸೂಚನೆ ಇಲ್ಲ.
2.    ಕೇವಲ ಪುರಾಣಗಳಲ್ಲಿ ದೊರೆಯುವ ಪರೋಕ್ಷ ಪ್ರಮಾಣಗಳನ್ನು ಅವಲಂಬಿಸಬೇಕಾಗಿದೆ.
3.     ಸಿಕ್ಕಿರುವ ಸಾಮಗ್ರಿಯು ತೀರ ಸ್ವಲ್ಪ.
4.    ಈ ಮಿತಿಯಲ್ಲಿಯೇ ತೋಂಟದ ಸಿದ್ಧಲಿಂಗ ಯತಿಗಳ ಕಾಲ ನಿರ್ಣಯಕ್ಕಾಗಿ ವಿದ್ವಾಂಸರು ಪ್ರಯತ್ನಿಸಿದ್ದಾರೆ.
5.     ಸಧ್ಯಕ್ಕಂತೂ ಹೆಚ್ಚಿನ ಹೊಸ ಸಾಕ್ಷ್ಯಾಧಾರಗಳು ಅನುಪಲಬ್ಧತೆ.
ಈ ಅಂಶಗಳನ್ನು ಗಮನಿಸಿದಾಗ ತೋಂಟದ ಸಿದ್ಧಲಿಂಗ ಯತಿಗಳ ಕಾಲನಿರ್ಣಯ ಅತ್ಯಂತ ತೊಡಕಿನದಾಗಿದ್ದು; ಖಚಿತವಾದ ಕಾಲನಿರ್ಣಯ ಸಾಧ್ಯವಾಗದೆ ಅಂದಾಜು ಕಾಲಮಾನವನ್ನು ನಿರ್ಣಯಿಸಲಾಗಿದೆ.ವಿದ್ವಾಂಸರು ಸೂಚಿಸಿರುವ ಕಾಲದ ವಿವರ ಈ ರೀತಿ ಇದೆ.
1.     ಶ್ರೀ ಬಸಪ್ಪ ವೀರಪ್ಪ ಕೋಟಿ ಕ್ರಿ.ಶ. 1281-1381
2.    ಪ್ರೊ. ಸಿ. ಮಹಾದೇವಪ್ಪ ಕ್ರಿ.ಶ. 1400-1470
3.     ಶ್ರೀ ಆರ್. ನರಸಿಂಹಾಚಾರ್ಯರು ಕ್ರಿ.ಶ. 1470
4.    ಪ್ರೊ. ಎಚ್. ದೇವೀರಪ್ಪ ಕ್ರಿ.ಶ. 1450-1500
5.     ಪ್ರೊ. ಆರ್.ಸಿ. ಹಿರೇಮಠ ಕ್ರಿ.ಶ. 1480
6.    ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿ ಕ್ರಿ.ಶ. 1510
ಈ ಎಲ್ಲಾ ಅಭಿಪ್ರಾಯಗಳು  ಸಿದ್ಧಲಿಂಗರ ಬಗೆಗೆ ಹೆಚ್ಚಿನ ಆಧಾರಗಳು ದೊರೆಯುವ ಪೂರ್ಣದಲ್ಲಿ ವ್ಯಕ್ತಪಡಿಸಿರುವ ಪ್ರಾಥಮಿಕ ಹಂತದ ಪ್ರಯತ್ನಗಳು ಆಗಿವೆ.
  ಜಿಗುನಿ ಮರುಳಾರ್ಯನು ‘ನಿಜಗುರುಸಿದ್ಧಶಾಂತ’ ಅಂಕಿತದಲ್ಲಿ ಸ್ವರವಚನಗಳನ್ನು ರಚಿಸಿದ್ದಾನೆ. ಒಂದು ಸ್ವರವಚನದಲ್ಲಿಯ  ‘ಯೋಗಿಬಂದಕಾಣೆಯಮ್ಮ ರಾಗ ವಿರಾಗ ವಿದೂರ ಜಂಗಮಲಿಂಗಯೋಗಿ ಬಂದ ಕಾಣೆ’ ಎಂಬ ಪಲ್ಲವಿಯೊಂದಿಗೆ ಆರಂಭವಾಗಿದೆ.  ಈ ಸ್ವರವಚನದಲ್ಲಿ ಜಂಗಮಲಿಂಗ ಯೋಗಿ ವಿರಕ್ತ ಸಿದ್ಧಲಿಂಗನ ವರ್ಣನೆ ಬಂದಿದ್ದು ಅವರು ತೋಂಟದ ಸಿದ್ಧಲಿಂಗರೇ ಆಗಿದ್ದಾರೆ. ಎಲ್. ಬಸವರಾಜರವರು ತಮ್ಮ ಲೇಖನವೊಂದರಲ್ಲಿ  ತೋಂಟದ ಸಿದ್ಧಲಿಂಗ ಯತಿಗಳು ಕ್ರಿ.ಶ.1530ರವರೆಗೆ ಇನ್ನೂ ಹುಟ್ಟಿರಲಿಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ.
  ಎಸ್.ಶಿವಣ್ಣನವರು ಲೇಖನವೊಂದರಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ಕಾಲ ವಿಚಾರ ಕುರಿತಂತೆ ಮರು ಪರಿಶೀಲನೆ ಮಾಡಿದ್ದಾರೆ.ತೋಂಟದಾರ್ಯನ ಪ್ರಮುಖ ಶಿಷ್ಯರಲ್ಲೊಬ್ಬನಾದ ಘನಲಿಂಗಿ ದೇವನ ಪರಂಪರೆಯಲ್ಲಿ ಬರುವ ಪರ್ವತದೇವ - ಭಂಡಾರಿ ಬಸವಪ್ಪೊಡೆಯರಿಗೆ ಸಂಬಂಧಿಸಿದ ಕ್ರಿ.ಶ.1514ರ ಎರಡು ಶಾಸನಗಳು ನಂಜನಗೂಡಿನಲ್ಲಿ ಸಿಗುತ್ತವೆ. ತಲೆ ಮಾರಿಗೆ 26 ವರ್ಷ ಹಿಡಿದರೆ ಶಿಷ್ಯ ಕೂಗಲೂರು ನಂಜಯ್ಯನ ಕಾಲ ಕ್ರಿ.ಶ. 1539. ಪ್ರಶಿಷ್ಯ ಘನಲಿಂಗಿದೇವನ ಕಾಲ ಕ್ರಿ.ಶ. 1564 ಆಗುತ್ತದೆ. ಈ ಘನಲಿಂಗಿ ದೇವರಿಗೆ ಹಿರಿಯ ಸಮಕಾಲೀನನಾದ ಸಿದ್ಧಲಿಂಗ ಯತಿಯ ಕಾಲವು ಕ್ರಿ.ಶ.1564 ಆಗಿರಬಹುದು. ಹೀಗೆ ಘನಲಿಂಗಿ ದೇವನು ಹೇಳಿಕೊಂಡಿರುವ ತನ್ನ ಪರಂಪರೆಯ ಜಾಡನ್ನು ಅವಲಂಬಿಸಿ ಎಸ್.ಶಿವಣ್ಣನವರು ಹೇಳುವ ಕ್ರಿ.ಶ.1561 ಮತ್ತು ವಿವಿಧ ಮೂಲಗಳಿಂದ ಎಲ್.ಬಸವರಾಜು ತಳೆದ ಅಭಿಪ್ರಾಯ ಕ್ರಿ.ಶ. 1584 ಇವುಗಳಲ್ಲಿ ಕಾಣುವ ಅಂತರ ಅಷ್ಟೇನು ದೊಡ್ಡದಲ್ಲ. ತೋಂಟದಾರ್ಯರು ಚೆನ್ನಬಸವ ಪುರಾಣದ ಕಾಲವಾದ ಕ್ರಿ.ಶ.1584ರ ವರೆಗೆ ಬದುಕಿದ್ದರೆಂದು ಇನ್ನೂ ಸ್ಪಷ್ಟವಾಗುತ್ತದೆ. ಈ ಅವಧಿಯಲ್ಲಿ ಗುರು ತೋಂಟದಾರ್ಯರ ಸ್ಮಾರಕವೊಂದು ಇಮ್ಮಡಿ ಚಿಕ್ಕಭೂಪಾಲನು ಸಿದ್ಧಾಪುರ ಹೆಸರಿನ ಗ್ರಾಮವನ್ನು ಕಟ್ಟಿಸಿರಬಹುದೆಂದು ಸಿದ್ಧಾಪುರ ಶಾಸನ (1594) ದಿಂದ ಭಾವಿಸಬಹುದಾಗಿದೆ. ಈ ಎಲ್ಲ ಸಂಗತಿಗಳ ಆಧಾರದಿಂದ ತೋಂಟದ ಸಿದ್ಧಲಿಂಗಯತಿಗಳು  ಬದುಕಿದ ಅವಧಿ ಎಸ್. ಶಿವಣ್ಣ, ಬಿ.ಆರ್.ಹಿರೇಮಠ ಮತ್ತು ವೀರಣ್ಣ ರಾಜೂರ ಮುಂತಾದ ನಾಡಿನ ವಿದ್ವಾಂಸರು ಸೂಚಿಸಿರುವ ಹಾಗೂ ಹೆಚ್ಚು ಕಡಿಮೆ ಎಲ್.ಬಸವರಾಜುರವರು ವ್ಯಕ್ತಪಡಿಸಿರುವ ಕಾಲನಿರ್ಣಯವನ್ನೇ ಒಪ್ಪಬಹುದಾಗಿದೆ. ಆದ್ದರಿಂದ ಕ್ರಿ.ಶ.1500-1584ರ ನಡುವೆ ತೋಂಟದ ಸಿದ್ಧಲಿಂಗ ಯತಿಗಳು ಜೀವಿಸಿರಬೇಕೆಂದು ಸದ್ಯಕ್ಕೆ ನಿರ್ಣಯಿಸಬಹುದಾಗಿದೆ.
ತೋಂಟದ ಸಿದ್ಧಲಿಂಗಯತಿಗಳ ಜೀವನ: ಇತಿಹಾಸ ಮತ್ತು ದಂತ ಕತೆ:
      ತೋಂಟದ ಸಿದ್ಧಲಿಂಗ ಯತಿಗಳ ಜೀವಿತದ ರೂಪರೇಷಗಳನ್ನು ಪುನರ್ ರಚಿಸಲು ಆಕರ ಸಾಮಗ್ರಿಗಳೆಂದರೆ, ತೋಂಟದ ಸಿದ್ಧಲಿಂಗಯತಿಗಳ ಸ್ವಂತ ಕೃತಿಗಳು, ಸಮಕಾಲೀನ ಹಾಗೂ ನಂತರದ ಶಾಸನಗಳು, ವಚನಕಾರರ ವಚನಗಳು,ಕವಿಗಳ ಕಾವ್ಯ ಪುರಾಣಗಳು ಮತ್ತು ಇತರೆ ಮೂಲಗಳಿಂದ ದೊರೆತ ಮಾಹಿತಿಗಳನ್ನುಸಂಗ್ರಹಿ ಸತ್ಯಾಸತ್ಯತೆಯನ್ನು ಓರೆಹಚ್ಚುವುದು.ಸಿದ್ಧಲಿಂಗಯತಿಗಳ    ಜೀವಿತದಕಾಲಾನಂತರ ಬಂದಕೃತಿಗಳೆಷ್ಟು?ಅವುಗಳೊಂದಿಗೆ ಕಾಲಕಳೆದಂತೆಲ್ಲಾ ಹಲವಾರು ಮಾರ್ಪಾಡುಗಳೊಡನೆ ಸೇರುತ್ತಾ ಬಂದ ವೃತ್ತಾಂತಗಳಾವುವು ? ಸೇರಲಿಕ್ಕೆ ಕಾರಣಗಳೇನು? ವಸ್ತು ದೃಷ್ಟಿಯಿಂದ ಎಷ್ಟು ವಿಭಾಗ ಮಾಡಬಹುದು? ಸೇರ್ಪಡೆಯಾದ ಪುರಾಣ ಸಂಗತಿಗಳಲ್ಲಿ ಐತಿಹಾಸಿಕತೆಯ ಗ್ರಹಿಕೆ, ತೋಂಟದ ಸಿದ್ಧಲಿಂಗ ಯತಿಯ ಚರಿತ್ರೆಯ ಬೆಳವಣಿಗೆಯ ರೀತಿ ಇತ್ಯಾದಿಗಳನ್ನು ಕುರಿತ ಸಂಗತಿಗಳನ್ನು ಶಾಸನ-ಕಾವ್ಯ-ಪುರಾಣ, ಕ್ಷೇತ್ರಕಾರ್ಯಗಳನ್ನು ಅನುಲಕ್ಷಿಸಿ ಸಂಕ್ಷಿಪ್ತವಾಗಿ ನಿರೂಪಿಸ ಬಹುದಾಗಿದೆ.
      ಮೊಟ್ಟಮೊದಲಿಗೆ ಶಾಂತೇಶನ ಸಿದ್ಧೇಶ್ವರ ಪುರಾಣದಲ್ಲಿ ಉಕ್ತಗೊಂಡ ತೋಂಟದ ಸಿದ್ಧಲಿಂಗ ಯತಿಗಳ ಜೀವನ ಚರಿತ್ರೆಯು ವೀರಶೈವ ಕಾವ್ಯ ಪುರಾಣಗಳಲ್ಲಿ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಬೆಳೆದಿದೆ. ತೋಂಟದ ಸಿದ್ಧಲಿಂಗರ ಕಥೆಯ ಬೆಳವಣಿಗೆಯಲ್ಲಿ ಉಂಟಾಗಿರುವ ಮಾರ್ಪಾಡುಗಳನ್ನು ಕ್ರಮವಾಗಿ ಗುರುತಿಸುವುದರ ಮೂಲಕ ತೋಂಟದ ಸಿದ್ಧಲಿಂಗಯತಿಗಳ ಚರಿತ್ರೆಯನ್ನು ಪುನರ್ ರಚಿಸಬೇಕಾಗಿದೆ. 1೬ನೇ ಶತಮಾನದಿಂದ ಹಿಡಿದು 18ನೇ ಶತಮಾನದ ವರೆಗಿನ ಶಾಸನ ಹಾಗೂ ವೀರಶೈವ ಸಾಹಿತ್ಯದಲ್ಲಿ ತೋಂಟದ ಸಿದ್ಧಲಿಂಗರ ದಂತ ಕಥೆ ಹಲವಾರು ಮಾರ್ಪಾಡುಗಳೊಡನೆ ಮೈದಾಳಿದೆ. ತೋಂಟದ ಸಿದ್ಧಲಿಂಗರ ಕಾವ್ಯ-ಪುರಾಣಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಆಗಿರುವುದುಂಟು. ಸಿದ್ಧಲಿಂಗರನ್ನು ಕುರಿತ ಶಾಸನ ಕಾವ್ಯ ಪುರಾಣಗಳಲ್ಲಿ ಮತ್ತು ಹಲವು ಪರೋಕ್ಷವಾಗಿ ಉಲ್ಲೇಖಿಸಲ್ಪಟ್ಟವುಗಳಾಗಿವೆ. ಸಿದ್ಧಲಿಂಗರ ಕುರಿತಾಗಿ ಶಾಸನ-ಕಾವ್ಯ-ಪುರಾಣಗಳಲ್ಲಿ ರಚಿಸಿರುವ ಕವಿಗಳು ಕೂಡ ಸಾಹಿತ್ಯ ಪ್ರಚಲಿತವಿರುವ ಕಾವ್ಯ ಪ್ರಕಾರಗಳನ್ನು ಕಾವ್ಯ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಚಂಪು, ರಗಳೆ, ಷಟ್ಪದಿ, ಸಾಂಗತ್ಯ ಪ್ರಕಾರಗಳಲ್ಲಿ ಸಿದ್ಧಲಿಂಗರ ವಿವರ ಚಲ್ಲವರಿದಿದೆ.
ತೋಂಟದ ಸಿದ್ಧಲಿಂಗ ಯತಿಗಳ ಕಥೆ ಹಲವಾರು ಮಾರ್ಪಾಡುಗಳೊಂದಿಗೆ ಶಾಸನ ಮತ್ತು ವೀರಶೈವ ಸಾಹಿತ್ಯದಲ್ಲಿ ಬೆಳವಣಿಗೆಗೊಂಡ ಬಗೆಯನ್ನು ಗ್ರಹಿಸಲು ಕಾವ್ಯ ಪುರಾಣಗಳನ್ನು ಮೂರು ರೀತಿಯಲ್ಲಿ ಗುರುತಿಸಲಾಗಿದೆ.
ಶಾಸನಗಳು :
ಎಡೆಯೂರು ಮತ್ತು ಕಗ್ಗೆರೆ ಶಾಸನ    
1. ಸಂಪೂರ್ಣ ರೂಪದ ಸ್ವತಂತ್ರ ರಚನೆಗಳು:
1561 : ಶಾಂತೇಶನ-ಸಿದ್ಧೇಶ್ವರ ಪುರಾಣ (ಭಾ.ಷ)
1570 : ಕವಿ ಪವಾಡನ - (ತೋಂಟದ ಸಿದ್ಧಲಿಂಗ ತಾರಾವಳಿ)
1600 : ಸುವ್ವಿಮಲ್ಲ - ಸಿದ್ಧೇಶ್ವರ ಸಾಂಗತ್ಯ ಮತ್ತು ತೋಂಟದ ಸಿದ್ಧೇಶ್ವರ ತಾರಾವಳಿ
1600 : ಸಿದ್ಧನಂಜೇಶ ತೋಂಟದ ಸಿದ್ಧದೇಶಿಕನ ಭಾವರತ್ನಾಭರಣ (ವಾ.ಷ)
1600 : ಚೆನ್ನವೀರ ಜಂಗಮದೇವ - ಷಟ್‍ಸ್ಥಲ ವಲ್ಲಭ (ಚಂ)
1616 : ವಿರಕ್ತ ತೋಂಟದಾರ್ಯ - ಸಿದ್ಧೇಶ್ವರ ಪುರಾಣ(ವಾ.ಷ.)
1616 : ವಿರಕ್ತ ತೋಂಟದಾರ್ಯ ತೋಂಟದಾರ್ಯ ರಗಳೆ
1620-30 : ಯತಿಬಸವಲಿಂಗ ತೋಂಟದ ಸಿದ್ಧೇಶ್ವರ ಸಾಂಗತ್ಯ
1640 : ಗರಣಿ ಬಸವಲಿಂಗ - ಸಿದ್ಧೇಶ್ವರನ ಮಹಿಮಾತಾರಾವಳಿ
1719-71 : ಹೇರಂಬ (ನಾರಾಯಣ) - ಸಿದ್ಧಲಿಂಗೇಶ್ವರ ಸಾಂಗತ್ಯ
1912 : ನಂ.ಶಿವಪ್ಪಶಾಸ್ತ್ರಿ - ಸಿದ್ಧಲಿಂಗೇಶ್ವರ ವಿಜಯ (ಗದ್ಯ)

2. ಪರೋಕ್ಷವಾಗಿ ಸ್ತುತಿಸಿರುವ ಕಾವ್ಯ-ಪುರಾಣಗಳು

1584 : ವಿರೂಪಾಕ್ಷ ಪಂಡಿತನ -ಚೆನ್ನಬಸವ ಪುರಾಣ (ವಾ.ಷ)
1600 : ಸಿದ್ಧನಂಜೇಶ ಗುರುರಾಜ ಚಾರಿತ್ರ(ವಾ.ಷ)
1650 : ಮರುಳಸಿದ್ಧೇಶ - ಗುರುಲಿಂಗ ಜಂಗಮ ಚಾರಿತ್ರ(ಸಾಂಗತ್ಯ)
1750 : ಪುರಾಣದ ಶಿವಲಿಂಗ -ಷಟ್‍ಸ್ಥಲ ಶಿವಾಯಣ (ಭಾ.ಷ)
1963-70 : ಮಹಾದೇವ ಮಹಾಲಿಂಗೇಂದ್ರ ವಿಜಯ (ವಾ.ಷ)
19ನೇ ಶ. ? : ಪಟ್ಟವಲ್ಲರಿ (ಗದ್ಯ)
19ನೇ ಶ. : ನಿರಂಜನ ವಂಶ ರತ್ನಾಕರ (ಗದ್ಯ) ಸಂ;ಫ.ಗು.ಹಳಕಟ್ಟಿ
19ನೇ ಶ. : ನಿರಂಜನ ವಂಶ ರತ್ನಾಕರ (ಭಾಗ-2, ಗದ್ಯ) ಸಂ:ಚೆನ್ನಮಲ್ಲಿಕಾರ್ಜನ
1909 : ಬಸವಪ್ಪ ವೀರಪ್ಪ ಕೋಟಿ - ನಿರಂಜನ ಜಂಗಮ ವಂಶ ದರ್ಪಣ (ಗದ್ಯ)

3. ಸಿದ್ಧಲಿಂಗರ ಸ್ತುತಿ ರೂಪದ ರಚನೆಗಳು:
ಸು. 1650 : ನಂದೀಕೃತ - ಸಿದ್ಧೇಶ್ವರ ತ್ರಿವಿಧಿ (55)
ಸು. 1650 : ಸಿದ್ಧಲಿಂಗೇಶ್ವರನ - ಸಿದ್ಧೇಶ್ವರ ತ್ರಿವಿಧಿ (37)
ಸು. 1750 : ಸಿದ್ಧಲಿಂಗ ಮುನಿ - ಸಿದ್ಧಲಿಂಗ ರಗಳೆ
ಸು. 1800 : ಬಸವಲಿಂಗರಾಜ ಎಡೆಯೂರು ಸಿದ್ಧಲಿಂಗ ದಯಾನಿಧಿ ಅಷ್ಟಕ (9ವೃ)
ಸು. 1800 :  ತೋಂಟದ ಸಿದ್ಧಲಿಂಗಾಷ್ಟಕ (8 ವೃ) (ಸ್ತುತಿಸಿ ಬದುಕುವೆ)
ಸು. 1800 : ತೋಂಟದ ಸಿದ್ಧೇಶ್ವರನ ಅಷ್ಟಕ (8 ವೃ +1 ಕಂ) (ಶ್ರೀ ಮದ್ದೇವ)
ಸು. 1800 : ಸಿದ್ಧಲಿಂಗಾಷ್ಟಕ (8 ವೃ) (ಶ್ರೀ ಮದ್ವಾದಿರಾಜ)
ಸು. 1800 : ಸಿದ್ಧೇಶ್ವರ ಅಷ್ಟಕ (8 ವೃ) (ಭೂವನಿತೆ)
ಸು. 1800 : ಸಿದ್ಧಲಿಂಗಾಷ್ಟಕ (ವಾ.ಷ. 9) (ಸುದತಿ ಕೇಳ್)
 ?      : ತೋಂಟದ ಸಿದ್ಧಲಿಂಗೇಶ್ವರನ ವಾರ್ದಿಕ (25 ವಾ.ಷ)
ಸು. 1912 ; ಮಾಗಡಿ ವೀರಪ್ಪ ಶಾಸ್ತ್ರಿಗಳ ಸಿದ್ಧಲಿಂಗೇಶ್ವರ ಶತಕ (ವಾ.ಷ)
3. ಸಂಕಲನ ರೂಪದ ಕೃತಿ ‘ಸಿದ್ಧಲಿಂಗ ಸ್ತೋತ್ರ ಪರಿಮಳ’ದಲ್ಲಿ 50 ಸ್ವರವಚನಗಳಿವೆ. ಇವುಗಳಲ್ಲಿ ಏಳು ಮಂದಿ ಕೃತಿಕರ್ತೃಗಳ ಹೆಸರುಗಳು ಲಭಿಸಿದ್ದು ಇಂತಿವೆ.
1.     ಇಮ್ಮಡಿ ಗುರುಸಿದ್ಧ (?-1729) (30, 41, 42)
2.    ಐನೂಲಿ ಕರಿಬಸವಾರ್ಯ (1745-1840) (31)
3.     (ಚೀಲಾಳ ಸ್ವಾಮಿ) (18ನೇ ಶತಮಾನ) (1, 26, 38)
4.    ಚೆನ್ನ (?) (48)
5.     ನಂಜ (?) (14)
6.    ನಾಗಭೂಷಣ ಶಿವಯೋಗಿ (1829-84) (16, 44)
7.     ಹೊನ್ನಾಳೆ ಸಿದ್ಧಲಿಂಗಪ್ಪ (19ನೇ ಶತಮಾನ) (39)
      ಸಿದ್ಧಲಿಂಗರ ವಚನಗಳನ್ನು ಸಂಪಾದನೆ ಚನ್ನಂಜದೇವ (1580), ಎಳಮಲೆ ಗುರುಶಾಂತದೇವ (1600), ಸಂಪಾದನೆ ಪರ್ವತೇಶ (1698) ಮೊದಲಾದ ಸುಮಾರು 20-25 ಜನರು ತಮ್ಮ ತಮ್ಮ ಸಂಕಲನಗಳಲ್ಲಿ ಉದಾಹರಿಸಿದ್ದಾರೆ. ಅಲ್ಲದೆ ‘ಉದ್ಧರಣೆವಾಚ್ಯ’ಗಳ ವಿವರಣೆಯಲ್ಲಿ ಇವರ ವಚನಗಳಿವೆ.
ಜನ್ಮಸ್ಥಳ ಹಾಗೂ ಬಾಲ್ಯಜೀವನ :    
ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯದಂತೆ ಜನ್ಮ ಸ್ಥಳ ನಿರ್ಣಯಕ್ಕೂ ತೃಪ್ತಿಕರವಾದ ಆಧಾರಗಳು ಲಭ್ಯವಿಲ್ಲ. ಸಿದ್ಧಲಿಂಗೇಶ್ವರರ ಜನನ ಬಾಲ್ಯದ ವಿಷಯ ರಹಸ್ಯಮಯವಾಗಿದೆ. ಇವರನ್ನು ಕುರಿತು ಕಾವ್ಯ ರಚಿಸಿದ ಶಿವ ಕವಿಗಳು ಇವರ ಜನ್ಮ ಸ್ಥಳ, ಜನನಿ, ಜನಕರ ಹೆಸರು, ಇವರು ಬಾಲ್ಯದಲ್ಲಿ ಬೆಳೆದ ರೀತಿಯ ಪೂರ್ಣ ವಿವರಗಳನ್ನು ನೀಡಿರುವುದಿಲ್ಲ.
      ಆದರೂ ಸ್ವತಃ ತೋಂಟದಾರ್ಯರೇ ಜನ್ಮ ನೀಡಿದ ತಂದೆ ತಾಯಿಗಳ ಹೆಸರನ್ನು ಹೇಳಿಕೊಳ್ಳದೆ "ಗುರುವೇ ತಾಯಿ, ಗುರುವೇ ತಂದೆ ಗುರುವೇ ಬಂಧು ಬಳಗ ಗುರುವಿನಿಂದ ಪರವಿನ್ನಾರಿಲ್ಲ." ಎಂದು ಹೇಳಿದರೆ, ಇವರನ್ನು ಕುರಿತು ಕಾವ್ಯ ಬರೆದ ಶಾಂತೇಶ, ವಿರಕ್ತ ತೋಂಟದಾರ್ಯರು ಧರೆಯೊಳಗೆ ವೀರಶೈವಾಚಾರ ಹುದುಗಿದುದನ್ನು ನಾರದ ಶಿವನಿಗೆ ಭಿನ್ನವಿಸಲು. ಎಂಟು ವರ್ಷದ ಶಿಶು ರೂಪವನ್ನು ತಳೆದು ಭೂಮಿಗೆ ಅವತರಿಸಿದರು ಎಂದು ಹೇಳಿದ್ದಾರೆ.            
   ಸುವ್ವಿಮಲ್ಲಗೆ ವಡೇರು ಮತ್ತು ಯತಿಬಸವಲಿಂಗೇಶನನ್ನು ಒಳಗೊಂಡಂತೆ ವೀರಶೈವ ಕವಿಗಳೀರ್ವರೂ ಸಿದ್ಧಲಿಂಗರ  ಬಾಲ್ಯಜೀವನದ ಬಗ್ಗೆ ಸ್ಪಷ್ಟವಾಗಿ ಚಿತ್ರಣವನ್ನು   ಕೊಟ್ಟಿರುವುದಿಲ್ಲ. ಅವರಿಗೆ ಸಿದ್ಧಲಿಂಗರ ಹುಟ್ಟು, ಬಾಲ್ಯಗಳನ್ನು  ಕುರಿತು ಒಂದು ವಿಚಾರಕೂಡ ತಿಳಿಯದು. ಅವರು ಸಿದ್ಧಲಿಂಗರನ್ನು ಗುರುತಿಸುವುದು  ಅಯೋನಿಜನಾದ ಎಂಟುವರ್ಷದ ಬಾಲಕನಿದ್ದಾಗಿನಿಂದ ಮಾತ್ರ. ನಿರಂಜನ ಗಣಾಧೀಶ್ವರರೇ ದೇವಲೋಕದಿಂದ ಇಳಿದು ಬಂದು ಎಂಟು ವರ್ಷದ ಬಾಲಕನಾಗಿ ಭೂಮಿಯಲ್ಲಿ ಅವತರಿಸಿದನೆಂದು ಹೇಳಿದ್ದಾರೆ.  ಕ್ರಿ.ಶ. 1530ರಲ್ಲಿ ಹುಟ್ಟಿರುವ ತೋಂಟದ ಸಿದ್ಧಲಿಂಗಯತಿಗಳ ತಂದೆ ತಾಯಿ ಮತ್ತು ಜನ್ಮ ಸ್ಥಳದ ಬಗ್ಗೆ ವಿವರ ಇರುವುದು ಹೇರಂಬ ಕವಿಯ ಸಿದ್ಧಲಿಂಗ ಯತಿಗಳ ಸಾಂಗತ್ಯ ಮತ್ತು ಸುವ್ವಿಮಲ್ಲನ ಸಿದ್ಧೇಶ್ವರ ಸಾಂಗತ್ಯದಲ್ಲಿ ಮಾತ್ರ. ಸಿದ್ಧಲಿಂಗರನ್ನು ಕುರಿತ ವೀರಶೈವ ಪುರಾಣಗಳಲ್ಲಿ. ನಿರಂಜನ ಗಣೇಶ್ವರನು 8 ವರ್ಷದ ಬಾಲಕನಾಗಿ ಭೂಮಿಯಲ್ಲಿ ಅವತರಿಸಿ ಗೋಸಲ ಚೆನ್ನಬಸವೇಶ್ವರನಿಂದ ದೀಕ್ಷೆ ಪಡೆದು ತೋಂಟದ  ಸಿದ್ಧಲಿಂಗಯತಿ ಎಂಬ ಅಭಿದಾನ ಹೊಂದಿದ. 
     ವೀರಶೈವ ಸಂಪ್ರದಾಯಕ್ಕೆ ಸಂಬಂಧ ಪಡದ ಹೇರಂಬ ಕವಿಯು,
ಕಾವೇರಿ ನದಿಯ ತೀರದೊಳು ದಕ್ಷಿಣದೊಳು | ಕೇವಲ ಪುಣ್ಯಸುಕ್ಷೇತ್ರ
ತಾವೊಪ್ಪಿತು ಹರದನಹಳ್ಳಿ ಪಟ್ಟಣ | ದೇವ ಶರಣರ ಸಂಸ್ಥಾನ’’    ಎಂಬುದಾಗಿ ಹೇಳಿ, ಸಿದ್ಧಲಿಂಗಯತಿಗಳ ಜನ್ಮಸ್ಥಳ ಹರದನಹಳ್ಳಿ ಎಂದು ಸೂಚಿಸಿದ್ದಾನೆ. ಇನ್ನೊಂದು ಪದ್ಯದಲ್ಲಿಯ ವಿವರಗಳಿಂದ     ಹರದನಹಳ್ಳಿಯ ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ಎಂಬ ಸಂತಾನಹೀನ ದಂಪತಿಗಳಿಗೆ ಗೋಸಲ ಚೆನ್ನಬಸವೇಶ್ವರ ವರಪ್ರಸಾದದಿಂದ ಜನಿಸಿದ ಶ್ರೀ ಗುರುವೆ ತೋಂಟದ ಸಿದ್ಧಲಿಂಗ ಯತಿಗಳು ಎಂಬ ಸಂಗತಿ ತಿಳಿದು ಬರುತ್ತದೆ.   ಸುವ್ವಿಮಲ್ಲನ ತೋಂಟದ ಸಿದ್ಧೇಶ್ವರ ಸಾಂಗತ್ಯದಲ್ಲಿ,
    ಚಿಕ್ಕ ಬಾಲಕನಾಗಿ ಹರದನಪುರದೊಳು
    ಹೊಕ್ಕು ವಿನೋದ ಮಾರ್ಗದಲಿ ಎಂಬ ಹಾಗೂ
    ಗುರುಸೇವೆಯ ಮಾಡುತಿರುತಿರೆ ಸಿದ್ದೇಶ
       ಹರದನಹಳ್ಳಿಯ ಪುರದಿ      ಎಂಬ ಹೇಳಿಕೆಗಳಲ್ಲಿಯೂ ಸಿದ್ಧಲಿಂಗೇಶರು ಹರದನಹಳ್ಳಿಯಲ್ಲಿ ಚಿಕ್ಕ ಬಾಲಕನಾಗಿ ಕಾಣಿಸಿಕೊಂಡು ಗುರುಸೇವೆಯನ್ನು ಬಹಳ ಭಕ್ತಿಯಿಂದ ಫಲಪುಷ್ಪಗಳನ್ನು ಅರ್ಪಿಸಿ ಮಾಡುತ್ತಿದ್ದ ಎಂಬುದನ್ನು ನೋಡಿದರೆ ತೋಂಟದ ಸಿದ್ಧಲಿಂಗ ಯತಿಗಳ ವಾಸಸ್ಥಳ ಹರದನಹಳ್ಳಿ ಎಂದು ಗುರುತಿಸಬಹುದಾಗಿದೆ.
ಒಟ್ಟಿನಲ್ಲಿ ಹೇರಂಬ ಕವಿ ಹೇಳುವ ಪ್ರಕಾರ ಸಿದ್ಧಲಿಂಗ ಯತಿಗಳ ಜನ್ಮಸ್ಥಳ ಹರದನಹಳ್ಳಿ ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ ಆಗಿದ್ದಾರೆ.  
ಆದರೆ ಇವರ ಜೀವನದ ಮೇಲೆ ಹೊಸ ಬೆಳಕನ್ನು ಬೀರುವ ಕಾವ್ಯವೆಂದರೆ ಹೆಬ್ಬೂರಿನ ಹೇರಂಬ ಎಂಬ ಬ್ರಾಹ್ಮಣ ಕವಿ ಬರೆದ `ಸಿದ್ಧೇಶ್ವರ ಸಾಂಗತ್ಯ'. ವೈಷ್ಣವಮತದ  ಕವಿಯಾದ ಹೇರಂಬನು ತನ್ನ ಕೃತಿಯಲ್ಲಿ ಸಿದ್ಧಲಿಂಗರನ್ನು ಹರದನಹಳ್ಳಿಯ ಹರದಗೆ ಶಿಶುವಾಗಿ ಜನಿಸಿದನೆಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಸಿದ್ಧಲಿಂಗರ ಬಾಲ್ಯ ಜೀವನದ ಸ್ಪಷ್ಟ ಚಿತ್ರಣವನ್ನು ಕೊಟ್ಟಿದ್ದಾನೆ.  ಇದುವರೆಗೂ ಸಿದ್ಧಲಿಂಗರನ್ನು  ಕುರಿತು ಬಂದಂತಹ ಕೃತಿಗಳಲ್ಲಿ ಹೇಳದೇ ಇದ್ದಂತಹ ಮಾತಾ ಪಿತೃ ವಿಹೀನನಾದ ಸಿದ್ಧಲಿಂಗನಿಗೆ ತಂದೆ  ತಾಯಿಯರನ್ನು (ಮಲ್ಲಿಕಾರ್ಜುನ  ಮತ್ತು  ಜ್ಞಾನಾಂಬೆಯರನ್ನು) ಒದಗಿಸಿಕೊಟ್ಟು  ಮಹತ್ವದ ಅಂಶವೊಂದನ್ನುಬೆಳಕಿಗೆ ತಂದಿದ್ದಾನೆ. ಈ ವಿಷಯವನ್ನು ತನ್ನ ಸಾಂಗತ್ಯ ಕಾವ್ಯದಲ್ಲಿ ಉಲ್ಲೇಖಿಸಿ ಹೇರಂಬನು ವಾಸ್ತವಿಕ ಅಂಶವನ್ನು ಒದಗಿಸಿಕೊಟ್ಟಿದ್ದಾನೆ. ಅನ್ಯ ಮತೀಯನಾದ ಇವನು ಯಾವ ಭಾವುಕತೆಗಳಿಗೆ ಎಡೆಕೊಡದೇ ಮಲ್ಲಿಕಾರ್ಜುನ ಜ್ಞಾನಾಂಬೆಯರು ಮಕ್ಕಳಿಲ್ಲದಕ್ಕೆ ಗೋಸಲ ಚೆನ್ನಬಸವಣ್ಣನವರ ಮೊರೆ ಹೋದರು. ಈ ದಂಪತಿಗಳಿಗೆ ಗುರು ಮೆಚ್ಚಿ ಒಂದು ಕೂಸನ್ನು ಕರುಣಿಸಿದನು. ಅದನ್ನು ಇವರು ಸಾಕಿ ಸಲುಹಿದರು. ಆದರೆ ಜ್ಞಾನಾಂಬೆಯ ಗರ್ಭದಿಂದ ಜನಿಸಿದ ಮಗನೆಂದು ಇಲ್ಲಿಯೂ ಹೇಳಿಲ್ಲ. ಬಾಲ್ಯದಲ್ಲಿ ಅಸಾಧಾರಣ ವ್ಯಕ್ತಿತ್ವವನ್ನು ಪಡೆದ ಶಿವಯೋಗಿ ವಿದ್ಯೆಯನ್ನು ಕಲಿಯಲಾರದೆ ತನ್ನ ಓರಿಗೆ ಗೆಳೆಯರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದ್ದ. ಲೌಕಿಕ ವಿಷಯಾದಿಗಳ ಕಡೆ ಗಮನ ಹರಿಸದೇ ಶಿವಧ್ಯಾನಾಸಕ್ತನಾಗುತ್ತಿದ್ದ. ಆಧ್ಯಾತ್ಮ ಜೀವನವನ್ನು ಪ್ರೀತಿಸುತ್ತಿದ್ದ. ಇದರಿಂದಾಗಿ ತಂದೆತಾಯಿಗಳು ತಮ್ಮ ಮಗ ತಮಗಷ್ಟೇ ಸೀಮಿತವಲ್ಲವೆಂದರಿತು ಗುರು ಗೋಸಲಚೆನ್ನಬಸವದೇವರಿಗೆ ತಂದೊಪ್ಪಿಸಿದರು. ಗುರುಗಳು ಶಿವದೀಕ್ಷೆ ಮಂತ್ರೋಪದೇಶ ನೀಡಿ ಶಿಷ್ಯನೆಂದು ಸ್ವೀಕರಿಸಿ ಏಕಮುಖ ರುದ್ರಾಕ್ಷಿಯನ್ನು ಶಿವತತ್ವದರಿವಿನ ಲಿಂಗವನ್ನು ದಯಪಾಲಿಸಿ ಸಿದ್ಧಲಿಂಗರೆಂದು ಕರೆದರು. ಕೃತಿಗಳು ಸಿದ್ಧಲಿಂಗರ ಗುರುಗಳನ್ನು ಗೋಸಲ ಚೆನ್ನಬಸವೇಶ್ವರನೆಂದು ಹೇಳಿವೆ. ಇನ್ನು ಸಿದ್ಧಲಿಂಗರು ಬಾಲ್ಯದಲ್ಲಿ ಕೆಲವು ಪವಾಡಗಳನ್ನು ಎಸಗುತ್ತಾರೆ. ಗೋಸಲ ಚನ್ನಬಸವೇಶ್ವರರು ಮಠದಲ್ಲಿರುವಾಗ ಸಿದ್ಧಲಿಂಗರು ಒಂದು ದಿನ ನಂದಿ ಹೋಗುತ್ತಿರುವ  ದೀಪಕ್ಕೆ ನೀರನ್ನು ಎರೆದು ದೀಪ ಉರಿಸುತ್ತಾರೆ. ಈ ವಿವರ ಸಿದ್ಧಲಿಂಗರನ್ನು ಕುರಿತ ಮೂರೂ ಸಾಂಗತ್ಯ ಕೃತಿಗಳಲ್ಲಿ ಉಲ್ಲೇಖಗೊಂಡಿರುವುದನ್ನು ನೋಡಬಹುದು.
 ಗುರುಗಳು ಸಂಜೆಯ ಸಮಯಕ್ಕೆ ಗುರುಮಠದಲ್ಲಿ ದೀಪ ಬೆಳಗಿಸಲು ಎಣ್ಣೆಯನ್ನು ತರಲು ಶಿಷ್ಯರಿಗೆ ಕರೆದು ಹೇಳುತ್ತಾರೆ.ಉಳಿದ ಶಿಷ್ಯರೊಡಗೂಡಿ ಸಿದ್ಧಲಿಂಗರು ಊರೊಳಗೆ ಎಣ್ಣೆಯನ್ನು ತರಲು ಬಂದರು. ಉಳಿದ ಚಿಟ್ಟಿಗರು ಊರೆಲ್ಲಾ ಸುತ್ತಿಬಂದರೂ ಎಣ್ಣೆ ಸಿಕ್ಕದೇ ಹಿಂತಿರುಗಿದರು.ಆದರೆ ಸಿದ್ಧಲಿಂಗರು ಎಣ್ಣೆಗೆ ಬಂದು ನೀರನ್ನು ಕೇಳಿದರು;ಎಲ್ಲ ಚಿಟ್ಟಿಗರು ದೀಪಕೆ ತೈಲ ಕೇಳಲು ಆಗ ಹೆಂಗಸರು ಎಲೈ ಚಿಟ್ಟಿಗನೇ ಕೈಯಲ್ಲಿ ಎಣ್ಣೆ ಲಳಿಗೆಯನ್ನು ಹಿಡಿದುಕೊಂಡು ಎಣ್ಣೆಗಾಗಿ ಬಂದು ಉದಕವನ್ನು ಕೇಳುತ್ತಿರುವೆಯಲ್ಲ ಎಂದು ಹಾಸ್ಯ ಮಾಡುತ್ತಾರೆ. ಆದರೆ ಸಿದ್ಧಲಿಂಗರು,ಬೇಗ ಅಗ್ಗವಣಿ(ನೀರು)ಯನ್ನು ನೀಡು ನಮ್ಮಯ್ಯನ ಪೂಜೆಗೆ ಈ ಕ್ಷಣವೇ ಬೇಕಾಗಿದೆ ಎಂದು ಒತ್ತಾಯ ಮಾಡಲು,ಆ ಸತಿಯು ಚೆಂಬಿನಲ್ಲಿ ನೀರು ತಂದು ಲಳಿಗೆಯಲ್ಲಿ ನೀಡಲು, ನೀಡಿದ ನೀರು ಎಣ್ಣೆಯಾಗಿ ಪರಿವರ್ತನೆಯಾಗಲು ಮನದಲ್ಲಿ ಮಹಾಮಹಿಮನೆಂದು ಕೊಂಡಾಡಿದಳು. ಸುವ್ವಿಮಲ್ಲನು ಉಳಿದ ಚಿಟ್ಟಿಗರೆಲ್ಲಾ ತಮ್ಮ  ಬಿಂದಿಗೆಗಳಲ್ಲಿ ಅಗ್ಗಣಿಯನ್ನು ತುಂಬಿಕೊಂಡು ಹೋಗಲು,ಸಿದ್ಧೇಶನು ಬಿಂದಿಗೆ  ನೀರಿನಲ್ಲಿ  ಮುಳುಗಿತು  ಅವನನ್ನು ಅಲ್ಲಿಯೇ ಬಿಟ್ಟು ಹೊರಟುಹೋದರು. ಸಿದ್ಧಲಿಂಗರು ಬರದಿದ್ದುದನ್ನು ಕಂಡು ಊರ ಹಿರಿಯರು ಪ್ರಶ್ನಿಸಲು, ಚಿಟ್ಟಿಗರು ನಡೆದ  ಘಟನೆಯನ್ನು ಹೇಳಲು, ಆಗ ಎಲ್ಲರೂ ಬಂದು ಮರೆಯಲ್ಲಿ ನಿಂತು ನೋಡಲು ಗಂಗಾದೇವಿಯೇ ಪ್ರತ್ಯಕ್ಷಳಾಗಿ ಅವನಿಗೆ ಕೊಡವನ್ನು ಹೊರಸಿದ ಪ್ರಸಂಗವಿದೆ. ಬುಟ್ಟಿಯನ್ನು ಗಿಡಕ್ಕೆ ತಗುಲುಹಾಕಿ ಬಿಂದಿಗೆಯನ್ನು ನೀರಿನಲ್ಲಿಟ್ಟು ಆಡುತ್ತಿರಲು ಓರೆಗೆ  ಬಾಲಕರು  ಕರೆದೊಡನೆ ಹೂತುಂಬಿದ ಬುಟ್ಟಿ ನೀರು ತುಂಬಿದ ಬಿಂದಿಗೆ ಅವನ ಕರಶಿರಗಳಿಗೆ  ಚಕ್ಕನೆ  ತಾವಾಗಿಯೇ ಏರಿಬರುತ್ತಿದ್ದವು ಎಂಬುದಾಗಿ ಕಾವ್ಯ-ಪುರಾಣಗಳಲ್ಲಿ ವ್ಯಕ್ತಗೊಂಡಿದೆ. ಸಿದ್ಧಲಿಂಗರು ಕಲ್ಲುಬಸವನಿಗೆಎಡೆಯನ್ನು ತಿನ್ನಿಸಿದ ಪವಾಡವನ್ನು ಬಾಲ್ಯದಲ್ಲಿಯೇ ನಡೆಸಿದುದಾಗಿ ತಿಳಿದು ಬರುತ್ತದೆ.
 ಹೀಗೆ ಬಾಲ್ಯದಲ್ಲಿಯೇ ಅಘಟಿತ ಘಟನೆಗಳನ್ನು ಪ್ರಕಟಿಸಿದ ತೋಂಟದ ಸಿದ್ಧಲಿಂಗಯತಿಗಳ  ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡ ಗುರುಗಳು ಅವರಿಗೆ ಷಟ್‍ಸ್ಥಲವನ್ನು ಬೋಧಿಸಿ, ಚರಪಟ್ಟವನ್ನು ಕಟ್ಟಿ ತಾವು ಶಿವ ಸಾಯುಜ್ಯವನ್ನೈದಿದರು. ಮುಂದೆ ಗುರುವಿನ ಅಪ್ಪಣೆಯಂತೆ ದೇಶ ಸಂಚಾರಮಾಡಿ ಸಾವಿರಾರು ಜನ ಭಕ್ತರಿಗೆ ಧರ್ಮದ ತಿಳುವಳಿಕೆಯನ್ನು ಅನುಗ್ರಹಿಸಿದರು.
ತೋಂಟದ ವಿಶೇಷಣ :
  ಕಗ್ಗೆರೆಯ ತೋಟದಲ್ಲಿ ಶಿವಧ್ಯಾನದಲ್ಲಿದ್ದ ಸಿದ್ಧಲಿಂಗರ ಮೇಲೆ ಬೆಳೆದ ಹುತ್ತದಬಗೆಗಿನ ವಿವರವು ಮೊದಲು ಚೆನ್ನಬಸವಪುರಾಣದಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಗೊಂಡಿದೆ.ವಿರಕ್ತ ತೋಂಟದಾರ್ಯನ `ಸಿದ್ಧೇಶ್ವರ ಪುರಾಣ',ಚೆನ್ನವೀರ ಜಂಗಮನ `ಷಟ್‍ಸ್ಥಲಪ್ರಭ', ಸುವ್ವಿಮಲ್ಲಿಗೆವಡೇರನ ಕಾವ್ಯದಲ್ಲಿ, ಹೇರಂಬನ`ಸಿದ್ಧಲಿಂಗೇಶ್ವರಸಾಂಗತ್ಯ'...ಮುಂತಾದ ಕೃತಿಗಳಲ್ಲಿ ವಿಸ್ತೃತವಾಗಿ ಮೂಡಿದೆ. ಸುವ್ವಿಮಲ್ಲ ಕವಿಯು ಸ್ವತಃ ಈ ಪ್ರಸಂಗವನ್ನು ನೋಡಿದ್ದಿರಬೇಕೆಂದೆನಿಸುತ್ತದೆ. ಹುತ್ತದ ಪ್ರಸಂಗವು ಸುದೀರ್ಘವಾಗಿ ಮತ್ತು ಅತ್ಯಂತ ಸಹಜವಾಗಿ ತನ್ನ ಕಾವ್ಯದಲ್ಲಿ ವರ್ಣಿಸಿದ್ದಾನೆ. ಸುವ್ವಿಮಲ್ಲನ ಕಾವ್ಯದಲ್ಲಿನ ಹುತ್ತದ ಪ್ರಸಂಗದ ವಿವರ ಈ ರೀತಿಯಾಗಿದೆ. ಕಗ್ಗೆರೆಯ ನಂಬಿಯಣ್ಣ ಆತನ ಸತಿ ಚೆನ್ನಮ್ಮರು ಸಿದ್ಧಲಿಂಗರನ್ನು ಪೂಜೆಗೆ ಆಹ್ವಾನಿಸಿದ್ದು, ಆ ಸಮಯದಲ್ಲಿ ಹುತ್ರಿದುರ್ಗದ ಪಾಳೆಗಾರನ ದಾಳಿಯಿಂದ ಪ್ರಜೆಗಳು ಘಾಸಿಯಾಗಿ ಗೂಳೆ ಹೊರಟಿದ್ದು, ನಂಬಿಯಣ್ಣನು ಗೂಳೆಯ ಹೋಗಿ ನೆಲೆನಿಂತ ಠಾವಿನಲ್ಲಿ ನಂಬಿಯಣ್ಣನ ಸ್ವಪ್ನದಲ್ಲಿ ಬಂದು ನಿನ್ನ ಬಿನ್ನಹವನ್ನು ಒಪ್ಪಿಕೊಂಡು ನೀವು ಗೂಳೆಯಿಂದ ಹಿಂತಿರುಗಿ ಬರುವವರೆಗೂ ನಾವು ಈ ಜಾಗವನ್ನು ಬಿಟ್ಟು ಏಳುವುದಿಲ್ಲ,ಇದನ್ನು ಮರೆಯದಿರು ಎಂದು ಹೇಳಿ ಕಗ್ಗೆರೆಯ ತೋಪಿನಲ್ಲಿಯ ಮಾವಿನ ಮರದಡಿಯಲ್ಲಿ ಮೂರ್ತಗೊಂಡು ಆರು ತಿಂಗಳು ಕಾಲ ಶಿವಯೋಗದಲ್ಲಿದ್ದು,  ಸಿದ್ಧಲಿಂಗರ ಮೇಲೆ ಹುತ್ತವ ಬೆಳೆದುದ್ದು ಆರು ತಿಂಗಳಗಳ ಕಾಲದ ನಂತರ ಗೂಳೆ ಹೋದವರು ಹಿಂತಿರುಗಿ ಬಂದದ್ದು, ನಂಬಿಯಣ್ಣನು  ಸಿದ್ಧಲಿಂಗರಿಗೆ  ಮಾಡಿದ್ದ ಬಿನ್ನಹವನ್ನು ಮರೆತದ್ದು, ನಂಬಿಯಣ್ಣನ ಆಹ್ವಾನವನ್ನು ಅವನ ಹಸುವೊಂದರ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಲ್ಲದೇ ಸಿದ್ಧಲಿಂಗರು ನಂಬಿಯಣ್ಣನ  ಸ್ವಪ್ನದಲ್ಲಿ  ಬಂದು ಬಿನ್ನಹದ ಬಗೆಗೆ ತಿಳಿಸಿದ್ದು, ನಂತರ ಎಚ್ಚೆತ್ತುಕೊಂಡು, ಕಗ್ಗೆರೆ ಪುರವನ್ನಾಳುವ ದೊರೆ ಬಸವೇಂದ್ರ, ಮಲ್ಲರಸಯ್ಯ, ಹಿರಿಯಪಟ್ಟಣಸ್ವಾಮಿ ಮುಂತಾದವರೊಡನೆ ಸಿದ್ಧಲಿಂಗರು  ಶಿವಯೋಗದಲ್ಲಿದ್ದು ಹುತ್ತದ ತಾಣಕ್ಕೆ ಬಂದು ಹತ್ತೆಂಟು ಮಂದಿಗಳನ್ನು ಕರೆಸಿ ಹುತ್ತದ ಸುತ್ತ ಮುಸುಕು ಬೆಳೆದಿದ್ದ ಕತ್ತರಿ ಮೆಳೆಯನ್ನು ಕಡಿಸಿ ನಾಲ್ಕೂರು ದಿಕ್ಕಿನಿಂದ  ನೀರು ತರೆಸಿ ಆ ಹುತ್ತದ ಮೇಲೆರೆದು ಹುತ್ತವನ್ನು ಕರಗಿಸಿದ್ದು,ನಂತರ ಸಿದ್ಧಲಿಂಗರು ನಂಬಿಯಣ್ಣನ ಬಿನ್ನಹವನ್ನು ಸಲ್ಲಿಸಲು ಕಗ್ಗೆರೆಗೆ ಹೊರಡಲನುವಾದದ್ದು, ಸಿದ್ಧಲಿಂಗರು ತೋಟವನ್ನು ದಾಟಿ ನಂಬಿಯಣ್ಣನ ಮನೆಗೆ ಪಲ್ಲಕ್ಕಿ ಏರಿ ಉತ್ಸವದಿಂದ ಬಂದಿದ್ದು ಕಗ್ಗೆರೆಯಲ್ಲಿದ್ದ  ನಂಬಿಯಣ್ಣನ ಮನೆಯಲ್ಲಿನ ಸತಿಪತಿಯರೀರ್ವರಿಂದ ಬಿನ್ನಹವನ್ನು  ಸ್ವೀಕರಿಸಿ  ಕಗ್ಗೆರೆಯಲ್ಲಿಯೇ ಕೆಲವು ಕಾಲ ಇದ್ದರೆಂಬ ವಿವರವಿದೆ. ಸುವ್ವಿಮಲ್ಲನ ಕಾವ್ಯದಲ್ಲಿ ಈ ಪ್ರಸಂಗವು  ಸುದೀರ್ಘವಾಗಿ ಮತ್ತು ಅತ್ಯಂತ ಸಹಜವಾದ ರೀತಿಯಲ್ಲಿ ಮೂಡಿಬಂದಿರುವುದನ್ನು ಕಾಣಬಹುದು. ಹಾಗೆಯೇ ಸ್ವತಃ ಕವಿಯೇ ಈ ಪ್ರಸಂಗವನ್ನು ನೋಡಿರಬೇಕೆಂದೆನಿಸುತ್ತದೆ. ಹುತ್ತದ ಪ್ರಸಂಗ ನಿರ್ಮಾಣದಲ್ಲಿ ಸಾಂದರ್ಭಿಕ ಹಿನ್ನೆಲೆಗಳು ಬೇರೆಬೇರೆ ಆಗಿದ್ದರೂ ತಪೋನಿರತ ಸಿದ್ಧಲಿಂಗರ ಮೇಲೆ ಹುತ್ತ ಬೆಳೆದ ವಿವರಒಂದೇ ಆಗಿದೆ. ಹುತ್ತದ ಪ್ರಸಂಗ  ಇವರನ್ನು ಕುರಿತ ಕೃತಿಗಳಲ್ಲಿ ಹಾಸುಹೊಕ್ಕಾಗಿ ಬಂದಿದ್ದರೂ ಕೂಡ ಅದರಲ್ಲಿನ ವಿವರಣೆಗಳು ಅಲ್ಪಸ್ವಲ್ಪ ವ್ಯತ್ಯಾಸವಾಗಿರುವುದನ್ನು ಈ ಮುಂದಿನ ಅಂಶಗಳಿಂದ ತಿಳಿಯಬಹುದು. ಸುವ್ವಿಮಲ್ಲನು ಹುತ್ರಿದುರ್ಗದ ಪಾಳೆಗಾರನು ಬಂದು ದಾಳಿಮಾಡಿದನೆಂದು ಹೇಳಿದರೆ,ಯತಿಬಸವಲಿಂಗೇಶನು ಕೆಂಚ-ರೆಡ್ಡರೆಂಬ ಬೇಡರಿಬ್ಬರು ಮುತ್ತಿಗೆ ಹಾಕುವರೆಂದು ಮತ್ತು ಏಳುನೂರು ಬಂಡುಗ ಹಾಲನ್ನೆರೆದು ಹುತ್ತವ ಕರಗಿಸಿದರೆಂದು ಆರುತಿಂಗಳುಗಳಕಾಲ ತಪಸ್ಸನ್ನು ಆಚರಿಸಿದನೆಂದು ಹೇಳಿದ್ದಾನೆ;
   ಹೇರಂಬ ಕವಿಯ ಕಗ್ಗೆರೆಯ ಮೇಲೆ ತುರುಕರ ದಂಡು ದಾಳಿಯಿಟ್ಟಿತೆಂದು ಮತ್ತು ಚಂಡಿಪ್ರಚಂಡಿ ಎಂಬ ಭೂತಗಳು ಅವನ ರಕ್ಷಣೆಗೆ ನಿಂತಿದ್ದವು ಎಂದು ಹಾಗೂ ಹನ್ನೆರಡುವರ್ಷ ಹುತ್ತದಲ್ಲಿಯೇ ಇದ್ದು ತಪಸ್ಸು ಆಚರಿಸಿದನೆಂದು ತಿಳಿಸಿದ್ದಾನೆ; ಪೇಳಲಪಿ ಮಹಾದ್ಭುತ ತುರುಕರ ದಂಡುದಾಳಿಯ ಗೈಯೆ ಸೀಮೆಗಳಗೋಳನ್ನೆಬ್ಬಿಸಿ ಪ್ರಜೆಗಳ ನೋಯಿಸುತ ಚಿಂತಾವೇಳೆಗೆ ಕಗ್ಗೆರೆಯೆಡೆಗೆ (24-10) ಈ ಮೇಲಿನ ಎಲ್ಲಾ ಅಂಶಗಳನ್ನು ಅವಲೋಕಿಸಿದಾಗ ಇಲ್ಲಿ ಸುವ್ವಿಮಲ್ಲನುಹೇಳಿದ ವಿಚಾರಗಳೇ ಸತ್ಯಕ್ಕೆ ಸಮೀಪವೆಂದು ತೋರುತ್ತವೆ. ಕಾರಣ ಯತಿಬಸವಲಿಂಗನುಹೇಳಿದಂತೆ  700 ಬಂಡುಗ  ಹಾಲನ್ನು ತಂದು ಸುರಿಯುವುದು ಅಸಾಧ್ಯವಾದ ಮಾತು. ಹೇರಂಬನು ಹೇಳಿದಂತೆ ಹುತ್ತಿನೊಳಗೆ ಹನ್ನೆರಡು ವರ್ಷಗಳ ಕಾಲ ಇರುವುದು ಕೂಡ ಅಸಾಧ್ಯವಾದುದು.  ಆದ್ದರಿಂದ ಸುವ್ವಿಮಲ್ಲನ ಹೇಳಿಕೆಗಳೇ ನೈಜತೆಯನ್ನು ಹೊಂದಿವೆಯೆಂದು ಹೇಳಬಹುದು.  ಹುತ್ರಿದುರ್ಗವು  ಕಗ್ಗರೆಯ ಸುತ್ತಮುತ್ತಲಿನ ಒಂದು ಪ್ರದೇಶವಾಗಿದೆ.  ಸುವ್ವಿಮಲ್ಲನ ಕಾವ್ಯದಲ್ಲಿ  ಈ ಪ್ರಸಂಗವು ಸುದೀರ್ಘವಾಗಿ ಮತ್ತು ಅತ್ಯಂತ ಸಹಜ ರೀತಿಯಲ್ಲಿ ಮೂಡಿಬಂದಿರುವುದನ್ನು ಕಾಣಬಹುದು. ಹಾಗೆಯೇ ಸ್ವತಃ ಕವಿಯೇ ಈ ಪ್ರಸಂಗವನ್ನು ನೋಡಿದ್ದಿರಬೇಕು.  ಹುತ್ತದ ಪ್ರಸಂಗದ ನಿರ್ಮಾಣದಲ್ಲಿ ಸಾಂದರ್ಭಿಕ ಹಿನ್ನೆಲೆಗಳು ಬೇರೆಬೇರೆ ಆಗಿದ್ದರೂ ತಪೋನಿರತ ಸಿದ್ಧಲಿಂಗರ ಮೇಲೆ ಹುತ್ತಬೆಳೆದ ವಿವರ ಒಂದೇ ಆಗಿದೆ. ಸುವ್ವಿಮಲ್ಲನ ಕೃತಿಯಲ್ಲಿ ಹುತ್ತಕ್ಕೆ ಸಂಬಂಧಿಸಿದ ಪ್ರಸಂಗದಲ್ಲಿ ಶಿವಯೋಗದಲ್ಲಿ ಮಗ್ನರಾಗಿದ್ದ ಸಿದ್ಧಲಿಂಗರ ಮೇಲೆ ಹುತ್ತವು ಬೆಳೆಯಿತು ಎಂಬುದು ಮಾತ್ರ ಪವಾಡ ಅಂಶವಾಗಿ ತೋರಿದ್ದು, ಉಳಿದೆಲ್ಲಾ ವಿವರವು ಸಹಜವಾಗಿಯೇ ಮೂಡಿಬಂದಿದೆ.ಒಂದು ವೇಳೆಸಹಜವಾದುದಷ್ಟೇ ಘಟನೆ  ನಡೆದದ್ದು  ಉಳಿದುದನ್ನು ಆ ಮಹನೀಯನಿಗೆ ಅಪಚಾರಮಾಡಿದರೆ ಒಳ್ಳೆಯಾಗುವದಿಲ್ಲ ಎಂಬುದನ್ನು ಒತ್ತಿಹೇಳಲು ತನ್ನಕಥೆ ಕಲ್ಪಿಸಿರಬಹುದೆಂದೆನಿಸುತ್ತದೆ. ಅದನ್ನೆ ಕೃತಿಕಾರರು ತಮ್ಮ ಕೃತಿಯಲ್ಲಿ ಅಳವಡಿಸಿಕೊಂಡಿರಬೇಕೆನಿಸುತ್ತದೆ. ನಂಬಿಯಣ್ಣನ  ಮನೆಯ ಹಸುವಿನ ಹೆಸರು `ಕಪಿಲೆ' ಎಂಬುದಾಗಿ ಯತಿಬಸವಲಿಂಗೇಶ ಮತ್ತು ಹೇರಂಬ ಕವಿ ಇವರಿಬ್ಬರೂ ಪ್ರಸ್ತಾಪಿಸಿದರೆ, ಸುವ್ವಿಮಲ್ಲನಕೃತಿಯಲ್ಲಿ ಈ ಹೆಸರನ್ನು  ಕಾಣುವದಿಲ್ಲ. ಹಸು ಹಾಲು ಕರೆಯುತ್ತಿರುವುದನ್ನು  ಸ್ವತಃನಂಬಿಯಣ್ಣನೆ  ನೋಡಿರುವಂತೆ  ಸುವ್ವಿಮಲ್ಲ ಮತ್ತು  ಯತಿಬಸವಲಿಂಗೇಶ ಹೇಳಿದ್ದರೆ, ಹೇರಂಬನು ಮನೆಯ `ಗೋಪಾಲ'ನು ನೋಡಿದುದಾಗಿ  ಹೇಳಿದ್ದಾನೆ. ಕಗ್ಗೆರೆಯ ತೋಟದಲ್ಲಿ ಧೀರ್ಘಕಾಲದ ತಪಸ್ಸನ್ನುಆಚರಿಸಿದ್ದರಿಂದ ಸಿದ್ಧಲಿಂಗರಿಗೆ `ತೋಂಟದ'ಎಂಬ ಹೆಸರುಬರಲು ಕಾರಣವಾಯಿತು ಎಂದು  ಯತಿಬಸವಲಿಂಗೇಶ ಮಾತ್ರ ಹೇಳಿದ್ದಾನೆ.ಸುವ್ವಿಮಲ್ಲಹಾಗೂ ಹೇರಂಬನ ಕೃತಿಗಳಲ್ಲಿ ಇದರ ಉಲ್ಲೇಖವಿಲ್ಲ.
      ದಿನಾಲು ಹುತ್ತಿನ ಮೇಲೆ ಹಾಲು ಸುರಿಸುವ ಸಂಗತಿ ಅವನಿಗೆ ಆಶ್ಚರ್ಯವನ್ನುಟ್ಟಿಸಲು ಊರವರೊಂದಿಗೆ ಹೋಗಿ ಹುತ್ತ ಅಗೆದು ಧ್ಯಾನನಿರತ ಶಿವಯೋಗಿಗಳನ್ನು ಕಾಣುವಲ್ಲಿ ತಾನು ಹಿಂದೆ ಭಿನ್ನಹ ನೀಡಿದ ಸಂಗತಿ ನೆನೆಪಿಗೆ ಬರುತ್ತದೆ. ಊರವರೆಲ್ಲ ಸೇರಿ ಸಕಲ ಮರ್ಯಾದೆಗಳಿಂದ ಶಿವಯೋಗಿಗಳನ್ನು ಕರೆತಂದರು. ಶಿವಯೋಗಿಗಳು ಅವರನ್ನು ಗ್ರಹಿಸಿ ಧರ್ಮತತ್ವಗಳನ್ನು ತಿಳಿಹೇಳಿ ಅಲ್ಲಿಯೇ  ಸಮೀಪದ ಎಡೆಯೂರಿಗೆ ಬಂದುನಿಂತರು. ಕಗ್ಗೆರೆಯ ತೋಟದಲ್ಲಿ ದೀರ್ಘ ಕಾಲ ತಪಗೈದ ನಿಮಿತ್ತ ಅವರಿಗೆ "ತೋಂಟದ" ಸಿದ್ಧಲಿಂಗನೆಂಬ ಹೆಸರು ಬಂತು. ಈ ರೀತಿ ಶಿಷ್ಯೋದ್ದಾರ ಧರ್ಮ ಪ್ರಚಾರ ಮಹಾತಪಸ್ಸುಗಳ ಮೂಲಕ ವಿರಕ್ತ ಪರಂಪರೆಯಲ್ಲಿ ಖ್ಯಾತಿವೆತ್ತು ಆ ಪರಂಪರೆಗೆ ತನ್ನ ಪೀಠಕ್ಕೆ ಘನತೆ ಗೌರವಗಳನ್ನು ತಂದು ಕೊಟ್ಟರು. ಆಗಾಗ ಪವಾಡಗಳನ್ನು ಮೆರೆದು ಭಕ್ತರ ಮನದ ಅಂಧಕಾರವನ್ನು ಹೋಗಲಾಡಿಸಿ ಧರ್ಮ ತತ್ವಗಳನ್ನು ತಿಳಿಹೇಳಿ ಧರ್ಮಾಚರಣೆಯ ಕಡೆಗೆ ಜನರ ಮನಸ್ಸನ್ನು ಹೊರಳಿಸಿ ತಮ್ಮ ನಂತರ ಬೋಳಬಸವರಿಗೆ ಷಟ್‍ಸ್ಥಲವನ್ನು ಅರುಹಿ ಪಟ್ಟಗಟ್ಟಿ ಎಡೆಯೂರಿನಲ್ಲಿ ಜೀವಂತ ಸಮಾಧಿಸ್ಥರಾದರು.
ಸಿದ್ಧಗಂಗೆಯ ಹೆಸರಿನ ಬಗೆಗೆ;
 ತೋಂಟದ ಸಿದ್ಧಲಿಂಗರನ್ನು ಕುರಿತಾದ ಕೃತಿಗಳಲ್ಲಿ ಇತ್ತೀಚಿನ ಕೃತಿಯಾದ ಹೇರಂಬನ ಸಾಹಿತ್ಯ ಕೃತಿಯಲ್ಲಿ ಮಾತ್ರ ಸಿದ್ಧಗಂಗೆ ಉದ್ಭವಿಸಿದ ಪವಾಡದ ಬಗೆ ಉಲ್ಲೇಖಗೊಂಡಿದೆ ಎಂದು ಇಲ್ಲಿಯವರೆಗೂ ಭಾವಿಸಲಾಗಿತ್ತು.  ಆದರೆ ಸಿದ್ಧಗಂಗೆ ಉದ್ಭವಿಸಿದ ಪವಾಡದ ಬಗೆಗೆ ಹೇರಂಬನಿಗಿಂತ 120 ವರ್ಷಗಳಷ್ಟು ಪ್ರಾಚೀನವಾದ ಸುವ್ವಿಮಲ್ಲಿಗೆ ವಡೇರನ ಕಾವ್ಯದಲ್ಲಿಯೇ ತೋರುತ್ತಾ, ಕೇತ್ಸಮುದ್ರ (ಕ್ಯಾತ್ಸಂದ್ರ)ಕ್ಕೆ ದಯ ಮಾಡಿಸಿದಾಗ ಕೇತ್ಸಮುದ್ರದ ಸಮೀಪದ ಬೆಟ್ಟದಲ್ಲಿನ ‘ಗವಿಯೊಳಗೆ ಇದ್ದಂಥಾ ವ್ರತನಿಷ್ಠರಾದ ಮಾಹೇಶ್ವರರು ಹರ್ಷದಿಂದ ಬಂದು ಶ್ರೀ ಸಿದ್ಧೇಶನಡಿಗೆರಗಿ ಗವಿಗೆ ದಯಮಾಡಿಸಬೇಕೆಂದು ಬಿನ್ನವಿಸಿಕೊಳ್ಳುತ್ತಾರೆ’. ಆ ಯತಿಗಳ ಬಿನ್ನಹವನ್ನಂಗೀಕರಿಸುತ್ತಾರೆ.ಅಲ್ಲಿ ಸೇರಿದ್ದ ಜಂಗಮರ ಲಿಂಗ ಮಜ್ಜನಕ್ಕೆ ನೀರು ಇಲ್ಲದಿರಲು, ಆ ಜಂಗಮವೆಲ್ಲಾ ನೀರು ತರಲೆಂದು ಕಾಡುಗಟ್ಟೆಗೆ ಹೊರಟರು.ಆಗ ಸಿದ್ಧಲಿಂಗರು ಆ ಕಾಡುಕಟ್ಟೆಯಲ್ಲಿರ್ಪ ಆ ಗಂಗೆ ಈ ಗವಿಯಲ್ಲಿಲ್ಲವೇ? ನೀವೆಲ್ಲರೂ ಆಯಾಸ ಪಟ್ಟುಕೊಂಡು ಅಲ್ಲಿಗೆ ಹೋಗಲೇಕೆ?ಎಂದು ಪ್ರಶ್ನೆಗೈಯುತ್ತಾ, ಗವಿಯ ಕಲ್ಲು ಬಂಡೆಯನ್ನು ಸೀಳಿ ಅಲ್ಲಿ ಗಂಗೆಯನ್ನು ತೋರಿಸಿದರು. ಆಗ ಸರ್ವರೂ ಸಿದ್ದೇಶನ ಮಹಿಮೆಯನ್ನು ನೋಡಿ ಭಕ್ತಿಯಿಂದ ಪಾದಕ್ಕೆ ಬೀಳುತ್ತಾರೆ.ಹೀಗೆ ತೋಂಟದ ಸಿದ್ಧಲಿಂಗರು ಆ ಮಹೇಶ್ವರರಿಗೆ ಗವಿಯೊಳಗೆ ಬಂಡೆಯನ್ನು ಸೀಳಿ ಮಜ್ಜನಕ್ಕೆ ಗಂಗೆಯನ್ನು ಬರಿಸಿಕೊಟ್ಟುದಾಗಿ ಲೋಕದಲ್ಲಿ ಸಿದ್ಧಗಂಗೆ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಸಿದ್ಧಲಿಂಗರ ಅಂತಿಮ ಜೀವನ :
ಸಿದ್ಧಲಿಂಗರ ಅಂತಿಮ ಜೀವನದ ಬಗ್ಗೆ ಉಳಿದೆಲ್ಲಾ ಕೃತಿಗಳಿಗಿಂತ ಸುವ್ವಿಮಲ್ಲನ ಕೃತಿಗಳಲ್ಲಿ ಹೆಚ್ಚಿನ ಅಂಶಗಳಿರುವುದು ಕಂಡುಬರುತ್ತದೆ. ಆ ವಿವರ ಇಂತಿದೆ. ಶಿವನಿರೂಪದಂತೆ ಹಿರಿಯರಾದ ದೊಡ್ಡ  ಸಿದ್ಧೇಶ್ವರರೊಡನೆ ಸಮಾಲೋಚಿಸಿ ಅವರ ಮತ್ತು ಚರಮೂರ್ತಿಗಳ ಒಪ್ಪಿಗೆ ಪಡೆದು ದೊರೆ ಬಸವೇಂದ್ರನಿಗೆ ನೆಲಮಾಳಿಗೆ ಮತ್ತು ಪುಷ್ಪಕವನ್ನು ಸಿದ್ಧಪಡಿಸುವಂತೆ ಅಪ್ಪಣೆ ಮಾಡುತ್ತಾರೆ. ಅದೇರೀತಿ ದೊರೆಯು ನೆಲಮಾಳಿಗೆಯನ್ನು ತೆಗೆಸಿ ಭದ್ರವಾದ  ತೊಲೆಕಂಬಗಳನ್ನು  ಹಾಕಿ ಮೇಲುಗಡೆ ಹಾಸುಗಲ್ಲು ಹೊದಿಸಿ ಒಳ ಭಾಗದಲ್ಲಿ  ಅಂದವಾಗಿರುವಂತೆ ಮಾಡಿ ಆ ನೆಲ ಮಾಳಿಗೆಯಲ್ಲಿ ಮಜ್ಜನಶಾಲೆ, ಬಿಂದಿಗೆ, ಸಿದ್ಧಲಿಂಗನ ಪೂಜೆಗಾಗಿ ರತ್ನಗಂಬಳಿಯ ಗದ್ದುಗೆಯನ್ನು ಹಾಕಿ,ಗದ್ದುಗೆಯ  ಮುಂಭಾಗದಲ್ಲಿ ಹೂವಿನ  ತಟ್ಟೆಯನ್ನಿಟ್ಟು ಹೂವಿನ ರಾಶಿಯನ್ನು, ಗಂಧಅಕ್ಷತೆಯನ್ನು ಅಣಿಮಾಡಿ ನೆಲಮಾಳಿಗೆಯ ಒಳಗಡೆ ನಾಲ್ಕೂ ದಿಕ್ಕಿನಲ್ಲಿ ಸರಪಳಿಯಿಂದತೂಗಾಡುವ ನಾಲ್ಕು  ಠಾಣ  ದೀವಿಗೆಗಳನ್ನು  ಅಳವಡಿಸಿ  ನೆಲಮಾಳಿಗೆಯನ್ನು ಸಿದ್ಧಪಡಿಸುತ್ತಾನೆ.ಜೊತೆಯಲ್ಲಿಯೇ ಸಿದ್ಧಲಿಂಗರ  ಅಪ್ಪಣೆ ಪಡೆದು ಪುಷ್ಪಕವನ್ನು ತಯಾರು ಮಾಡುತ್ತಾನೆ. ತೋಂಟದ ಸಿದ್ಧಲಿಂಗರು ಹಿರಿಯರ  ಮತ್ತು  ಚರಮೂರ್ತಿಗಳ ಅಪ್ಪಣೆಪಡೆದು ನೆಲಮಾಳಿಯನ್ನು ಪ್ರವೇಶಿಸಲು ಪುಷ್ಪಕದೊಳು ಮೂರ್ತವ ಮಾಡುತ್ತಾರೆ. ನೆಲಮಾಳಿಗೆಯ ಬಳಿಗೆ ಸಾಗಿದ ಬಳಿಕ ಸಿದ್ಧಲಿಂಗರು  ಪುಷ್ಪಕದಿಂದ ಹೊರಬಂದು ನೆಲಮಾಳಿಗೆಯನ್ನು ಪ್ರವೇಶಿಸಲು ಎಲ್ಲೆಲ್ಲೋ ಧೂಪದ ಧೂವಂ ಮುಸುಕುತ್ತದೆ.ಆ ಧೂಪದಿಂದಾಗಿ ಇಡೀ ಎಡೆಯೂರು ಹಗಲು ಕತ್ತಲೆಯಿಂದ ಕವಿದು ಹೋದಂತಾಯಿತು. ಆ ವೇಳೆಯಲ್ಲಿ ಕೈಲಾಸದಿಂದ ಪುಷ್ಪಕ  ಇಳಿದು ಬರಲು ಆ ಪುಷ್ಪಕವನ್ನೇರಿ ಕೈಲಾಸದ ಪಥಕಡರಿದನು ಎಂಬ  ವಿವರಣೆಯನ್ನು ಕೊಟ್ಟಿದ್ದಾನೆ.  ಯತಿಬಸವಲಿಂಗೇಶ ಮತ್ತು ಹೇರಂಬ ಕವಿಗಳನ್ನು ಒಳಗೊಂಡಂತೆ, ಮತ್ತಾವ ಕವಿಗಳಲ್ಲಿ ಸುವ್ವಿಮಲ್ಲನ ಕೃತಿಯಲ್ಲಿ ಇರುವಷ್ಟು ಸಿದ್ಧಲಿಂಗರ ಅಂತಿಮ ಜೀವನದ ವಿವರವನ್ನು ಕಾಣುವುದಿಲ್ಲ. ಸಿದ್ಧಲಿಂಗರನ್ನು ಕುರಿತ ಉಳಿದ ಕೃತಿಗಳಲ್ಲಿ ಸಿದ್ಧಲಿಂಗರು ಐಕ್ಯವಾಗುವ ಸಮಯದಲ್ಲಿ ಹಿರಿಯ ಸಮಕಾಲೀನರಾದ ಬೋಳ ಬಸವರಾಜರಿಗೆ ಚರಪಟ್ಟವನ್ನು ಕಟ್ಟುವ ಬಗೆಗೆ  ಉಲ್ಲೇಖವಿದ್ದರೆ, ಸುವ್ವಿಮಲ್ಲನ ಕೃತಿಯಲ್ಲಿ ಬೋಳ ಬಸವರಾಜನ ಬಗ್ಗೆ  ಉಲ್ಲೇಖವಿಲ್ಲ.  ಹಿರಿಯರಾದ ದೊಡ್ಡಸಿದ್ಧೇಶ್ವರರ ಉಲ್ಲೇಖ  ಬರುತ್ತದೆ. ಇದರಿಂದಾಗಿ ದೊಡ್ಡ ಸಿದ್ಧೇಶ್ವರರು ಸಿದ್ಧಲಿಂಗರ ಸಮಕಾಲೀನ ಐತಿಹಾಸಿಕ ವ್ಯಕ್ತಿಯಾಗಿದ್ದರೆಂಬುದಾಗಿ ತಿಳಿದು ಬರುತ್ತದೆ.
ರಥೋತ್ಸವದ ವರ್ಣನೆ:
ಸಿದ್ಧೇಶ್ವರರು ಎಡೆಯೂರಲ್ಲಿ ಐಕ್ಯರಾದ ನಂತರ ವಿಸ್ತಾರವಾದ ಗುಡಿಯ ಪ್ರಕಾರವನ್ನು ಕಟ್ಟಿದ ಕಲುಕುಟಿಗ ವ್ಯಕ್ತಿ ಹಂಪಯ್ಯನು ನಿರ್ಮಿಸುತ್ತಾನೆ. ಸಿದ್ಧಲಿಂಗರ ರಥೋತ್ಸವದ ವರ್ಣನೆಯನ್ನು ಕಾವ್ಯಗಳಲ್ಲಿ ಕಾಣಬಹುದಾಗಿದೆ. ರಥೋತ್ಸವವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಸಪ್ತಮಿಯ ದಿನದಂದು ಪ್ರತಿವರ್ಷವೂ ನಡೆಯುತ್ತದೆಂದು ತಿಳಿದು ಬರುತ್ತದೆ. ಇಂದಿಗೂ ಕೂಡ ಇದೇ ದಿನದಂದು ರಥೋತ್ಸವವು ನಡೆಯುತ್ತಿರುವುದು ವಿಶೇಷವಾದ ಸಂಗತಿಯಾಗಿದೆ.  ಸುವ್ವಿಮಲ್ಲ ಕೃತಿಯಲ್ಲಿ ಈ ರಥೋತ್ಸವದ ವರ್ಣನೆಯನ್ನು ಸ್ವತಃ ತಾನೇ ಕಣ್ಣಾರೆ ನೋಡಿದ್ದನೇನೋಎಂಬಂತೆ ಕಣ್ಣಿಗೆ  ಕಟ್ಟುವಂತೆ ಚಿತ್ರಿಸಿದ್ದಾನೆ.  ಸಿದ್ಧಲಿಂಗರ  ರಥೋತ್ಸವವನ್ನು  ಚೈತ್ರಮಾಸದ ಶುಕ್ಲ ಪಕ್ಷದ ಸಪ್ತಮಿಯ ದಿನದಲ್ಲಿ ನಡೆಸಲು ತೇರನ್ನು  ನಿರ್ಮಾಣ ಮಾಡಿ ತೇರಿಗೆ ಬರುವಂತೆ  ಆಹ್ವಾನ  ಪತ್ರಿಕೆಗಳನ್ನು  ಎಲ್ಲಾ ದಿಕ್ಕಿಗೂ ಕಳುಹಿಸುತ್ತಾರೆ. ಸಿದ್ಧಲಿಂಗರ  ತೇರನ್ನು ನೋಡಲು ವಿವಿಧ  ಭಾಗಗಳಿಂದ ಮಹನೀಯರು ಆಗಮಿಸುತ್ತಾರೆ. ಸಪ್ತಮಿಯ ದಿವಸದಲ್ಲಿ ನಡೆಯುವ ಮಹಾರಥೋತ್ಸವಕ್ಕೆ ಸಮಸ್ತ ಜನ ಸಮೂಹವೂತೋಪಿನಲ್ಲಿ ಬೀಡುಬಿಟ್ಟಿತು.  ತೋಪಿನ ಎರಡು ಪಕ್ಕಗಳಲ್ಲಿ ಜನರ  ಊಟೋಪಚಾರ,ಸುತ್ತಣ ಎಲ್ಲಾ ಜನರ ಮಹಾಪರುಶೆ ಕೂಡಿಕೊಂಡು ಬಂದು ತೇರಿನ ಸಮೀಪದಲ್ಲಿ ನಿಂತಿದ್ದಿತು. ತೇರು ಬೀದಿಯ ಎರಡುಸಾಲುಗಳಲ್ಲೂ ವರ್ತಕರು ತಮ್ಮ ಒತ್ತಿನಲ್ಲಿ ಮುತ್ತಿನ ಅಂಗಡಿಗಳನ್ನು,ಬೆಲ್ಲ ಕಡಲೆ ಕಬ್ಬು ಒಳ್ಳೆಯ ಬಾಳೆಹಣ್ಣು,ತೆಂಗಿನ ಕಾಯ್ಗಳ ರಾಶಿ,ಇವುಗಳನ್ನೂ, ಮಲ್ಲಿಗೆ ಮುಡಿವಾಳ,ಜಾಜಿ,ಸಂಪಗೆ ಹೂಗಳಿಂದ ಕಟ್ಟಿದಹೂವಿನ ಹಾರಗಳನ್ನು, ಸುಗಂಧ ದ್ರವ್ಯಗಳಾದ ಕಸ್ತೂರಿ, ಪುನುಗು, ಜವಾಜಿಗಳನ್ನು,  ಕುಂಕಮವನ್ನಿಟ್ಟುಕೊಂಡು ವ್ಯಾಪಾರ  ಮಾಡುತ್ತಿದ್ದರು. ಚಿಕ್ಕ ಚಿಕ್ಕ ಪ್ರಾಯದ ಜಾಣರು ಅಲ್ಲಲ್ಲಿ ಹತ್ತಿಪ್ಪತ್ತು ಮಂದಿ ಕೂಡಿ ತಂಡ ತಂಡವಾಗಿ ಆ ಅಂಗಡಿಗಳ ಸಾಲುಗಳಲ್ಲಿ ಕೊಳ್ಳಲು ಮುತ್ತಿಕೊಂಡಿದ್ದರಂತೆ. ವಿವಿಧ ವೇಷಭೂಷಣಗಳನ್ನು, ಆಭರಣಗಳನ್ನು ಧರಿಸಿದ ವ್ಯಕ್ತಿಗಳು ಇಕ್ಕೆಡೆಯಲ್ಲಿ ನಿಂತಿದ್ದರಂತೆ; ಬಣ್ಣದ ಸೀರೆಯುಟ್ಟು ಬೈತಲೆಗೆ ಮುತ್ತಿನ ಬೊಟ್ಟಿಟ್ಟು,ಸಣ್ಣಬಳೆಗಳನ್ನು ತೊಟ್ಟು ಎಣ್ಣೆಹಚ್ಚಿದ ಕೂದಲನ್ನು ಗಂಟಿಕ್ಕಿ ಕಣ್ಣೆಗೆ ಕಪ್ಪನ್ನಿಟ್ಟುಕೊಂಡು ಬಂದಿದ್ದ ಹೆಣ್ಣು ಮಕ್ಕಳು ನಿಂತು ತೇರನ್ನು ನೋಡಿದರು. ಕೈಕಡಗ, ಪಟ್ಟಸೀರೆ, ಮುತ್ತಿನಸರ, ಚಿನ್ನದಬಿಂದಿ,ಚಂದ್ರಗಾವಿಯ ಸೀರೆ ಇವುಗಳನ್ನು ತೊಟ್ಟುಕೊಂಡು ತೇರಿನ  ಎರಡು ಬದಿಗಳಲ್ಲಿ ನಿಂತಿದ್ದರಂತೆ. ಇದೇರೀತಿ ಹಲವಾರು ರೀತಿಯಲ್ಲಿ ಜಾತ್ರೆಗೆ ಆಗಮಿಸಿದ್ದ ಜನರ  ವರ್ಣನೆ ಮಾಡಿದ್ದಾನೆ.ಬಡಗ ದಿಕ್ಕಿಗೆ ರಥವು ಸಾಗಿ ತನ್ನ ಸ್ಧಾನಕ್ಕೆ ಬಂದು ನಿಂತಿತಂತೆ.ಸಂಜೆಯಲ್ಲಿ ಸಿದ್ದಲಿಂಗರ ಉತ್ಸವಮೂರ್ತಿಯನ್ನೇರ್ಪಡಿಸಿದರಂತೆ. ಈರಾತ್ರಿ ಉತ್ಸವದ ಸಮಯದಲ್ಲಿ ಆಗಮಿಸಿದ್ದ ಜನರನ್ನು ರಂಜಿಸಲು ಬುರುಗಿನ ವಾದ್ಯದವರು, ನಾಟ್ಯವಾಡುವವರು, ವತಾದಿ ವಾದ್ಯದವರು,ವಿಚಿತ್ರ ವೇಷದವರು, ಕೋಲಾಟದವರು, ಬಿರುದಾಂತ ಸುವ್ವಿಯ ಮೇಳದವರು ಇತ್ಯಾದಿಹತ್ತಾರು ಅವತಾರದವರು  ಸಿದ್ಧಲಿಂಗೇಶ್ವರರ  ಮೂರ್ತಿಯ ಉತ್ಸವದ ಸಂದರ್ಭದಲ್ಲಿಭಾಗವಹಿದ್ದರಂತೆ. ಹೀಗೆ ವೈಭವೋಪೆತವಾಗಿ ನಾನಾಮೇಳಗಳಿಂದ ಕೂಡಿದ ಸಿದ್ಧಲಿಂಗರಉತ್ಸವ ಮೂರ್ತಿಯ ಪ್ರದರ್ಶನ ಹದಿನಾರು ಗಳಿಗೆ ಕಾಲ ನಡೆಯಿತಂತೆ. ಈ ರೀತಿಯ ವರ್ಣನೆಯಲ್ಲಿ ಪರುಶೆಗೆ ಸಂಬಂಧಿಸಿದ ಅದ್ಭುತವಾದ ವಿವರಗಳಿಗೆ ಎಡೆ ದೊರೆತಿದೆ. ಈ ಅಂಶಗಳನ್ನು ಸಿದ್ಧಲಿಂಗರ ಕುರಿತಾಗಿ ಬಂದಂತಹ ಉಳಿದ ಗ್ರಂಥಗಳಲ್ಲಿ ಕಾಣಲು ಸಾಧ್ಯವಿಲ್ಲ.ಕವಿ ಇವುಗಳನ್ನು ವರ್ಣಿಸಿದ್ದ ರೀತಿಯನ್ನು ನೋಡಿದರೆ ಬಹುಶ: ಆತ ಸಿದ್ಧಲಿಂಗರ ಸಮಕಾಲೀನನಿರಬಹುದೆಂದು ಅನ್ನಿಸುತ್ತದೆ. ಅಲ್ಲದೆ ತಾನೆ ಕಣ್ಣಾರೆ ಜಾತ್ರೆಯನ್ನು ನೋಡಿದ್ದಿರಬೇಕು ಎಂದೆನಿಸುತ್ತದೆ. ಇಂದಿಗೂ ಚೈತ್ರಮಾಸದ  ಶುಕ್ಲಪಕ್ಷದ ಸಪ್ತಮಿಯ ದಿವಸದಂದು ಎಡೆಯೂರಿನಸಿದ್ಧಲಿಂಗೇಶ್ವರರ ದೇವಾಲಯದ ಎಡಬಲದ ಒತ್ತಿನ ತೋಪಿನಲ್ಲಿ ಜಾತ್ರೆ ನಡೆಯುತ್ತಿದೆ. ಇದೇ ಕವಿಯು ತನ್ನ ಕೃತಿಯಲ್ಲಿ ರಥೋತ್ಸವಕ್ಕೆ ಆಗಮಿಸಿದ್ದ ವಿವಿಧ ಕಡೆಯ ಜನರನ್ನು ಹೆಸರಿಸಿದ್ದಾನೆ. ಅವರುಗಳೆಂದರೆ ನುಗ್ಗಿ ಹಳ್ಳಿಯ ಗುರುಸ್ವಾಮಿ,ನೊಣಬನ ಕೆರೆಯ ಬೆಳ್ಳಿಯ ಕರಡಿಗೆಯಯ್ಯನವರು, ಸೆಟ್ಟಿಕೆರೆಯ ಪಟ್ಟದಸ್ವಾಮಿ, ತುರುವೆಕೆರೆಯ ಕಲ್ಮಠದನಂಜೇಶ, ತುಮಕೂರಿನಗುರು ನಂಜೇಶ, ಹೊನ್ನವಳ್ಳಿಯ ಕರಿಯಸಿದ್ಧೇಶ,ದೊಡ್ಡ ಹಂಪಯ್ಯ,ಸಂಪಿಗೆಯ ಪ್ರಭು ಸ್ವಾಮಿ, ಕಡಬದ ಕಂತೆಯ ಸ್ವಾಮಿಯು,  ಬಿಜ್ಜಾವರದ ಬೋಳ ಬಸವರಾಜದೇವರು, ಮಾದಾಪುರದ ಮರುಳೇಶ, ಮುಂತಾದವರನ್ನು ಉಲ್ಲೇಖಿಸಿದ್ದಾನೆ. ಈ ವ್ಯಕ್ತಿಗಳ ಹೆಸರು ಬೇರೆ  ಕೃತಿಗಳಲ್ಲಿ ಕಾಣುವುದಿಲ್ಲ. ಸುವ್ವಿಮಲ್ಲನು ಎಡೆಯೂರಿನ ಸಿದ್ಧಲಿಂಗರ ಗುಡಿಯಲ್ಲಿ ಸಿದ್ಧಲಿಂಗ ಮೂರ್ತಿಗೆ ಆಗುತ್ತಿದ್ದ ದಿನಚರಿಯ ಸೇವೆಯನ್ನು ವರ್ಣಿಸಿದ್ದಾನೆ. ಪ್ರತಿನಿತ್ಯವೂ ಮಂಗಳಾರತಿಗಳನ್ನು ಹೇಳುವವರು,ಮದ್ದಳೆ ಬಾರಿಸುವವರು, ತಂಬೂರಿ ನುಡಿಸುವವರು,ಸಂಗೀತ ಹಾಡುವವರು,ಶಾಸ್ತ್ರ ಪಾಠಕರು ಮತ್ತು ಸ್ತುತಿಗೈವ ಕವಿಜನರೂ ಮುಂದುಗಡೆಯ ಹಜಾರದಲ್ಲಿ ಕುಳಿತು ತಮ್ಮ ತಮ್ಮ ಸೇವೆಯನ್ನು ಸಿದ್ಧಲಿಂಗರಿಗೆ ಸಲ್ಲಿಸುತ್ತಿದ್ದರಂತೆ.ಜೊತೆಗೆ ನಾಗಸ್ವರದ ಸೇವೆ,ಡೊಳ್ಳಿನ ಸೇವೆ,ಈರಣದ ಸೇವೆ,ಕೈತಾಳದ ಸೇವೆ, ಸುತ್ತಲೂ ತೂಗಿ ಬೀಸುವ ಚಾಮರ ಸೇವೆಗಳು ದಿನನಿತ್ಯವೂ ನಡೆಯುತ್ತಿದ್ದವಂತೆ. ಸಿದ್ಧಲಿಂಗರ ಉತ್ಸವ ಮೂರ್ತಿಯನ್ನು  ನಿರ್ಮಿಸಿ ಅದಕ್ಕೆ ನಿತ್ಯೋತ್ಸವ,ಪಕ್ಷೋತ್ಸವ. ಮಾಸೋತ್ಸವ, ದೀಪೋತ್ಸವ, ಪುಷ್ಪೋತ್ಸವ, ಪಲ್ಲಕಿಯುತ್ಸವ, ವೃಷಭವಾಹನೋತ್ಸವ, ಬಿಲ್ವ ವೃಕ್ಷೋತ್ಸವ,ಚಂದ್ರಮಂಡಲೋತ್ಸವ,ಸೂರ್ಯಮಂಡಲೋತ್ಸವ ಮುಂತಾದ ಉತ್ಸವಗಳನ್ನು ಏರ್ಪಡಿಸಿದರಂತೆ. ಇಂದಿಗೂ ಸಿದ್ಧಲಿಂಗರ ಉತ್ಸವ ಮೂರ್ತಿಗೆ ಸುವ್ವಿಮಲ್ಲನು ತನ್ನ ಕಾವ್ಯದಲ್ಲಿ ವರ್ಣಿಸಿರುವ ದಿನಚರಿಯ ಸೇವೆ ಹಾಗೂ ನಾನಾ ಬಗೆಯ ಉತ್ಸವಗಳು ತಪ್ಪದೆ ನಡೆಯುತ್ತಿವೆ.
 ಕನ್ನಡ ಸಂಸ್ಕೃತಿಯಲ್ಲಿ ತೋಂಟದ ಸಿದ್ಧಲಿಂಗರ ಸ್ಮಾರಕ ಮತ್ತು ಕುರುಹುಗಳು:  ಬಹುಜನ ಒಪ್ಪಿತವಾದ ಕಾಲ ಮತ್ತು ವಾಸಸ್ಥಾನ ಮೈಸೂರು ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿರಬಹುದು. ನಂತರದಲ್ಲಿ ತುಮಕೂರ ಮುಂತಾದ ಕಡೆ ಸಂಚರಿಸಿ ಕುಣಿಗಲ್ ತಾಲೂಕಿನ ಎಡೆಯೂರಲ್ಲಿ ಲಿಂಗೈಕ್ಯರಾಗಿರಬಹುದು. ಸಿದ್ಧಲಿಂಗರು ಒಬ್ಬ ವ್ಯಕ್ತಿಯಾಗದೆ ಒಂದು ಅವ್ಯಾಹತ ಶಕ್ತಿಯಾಗಿ ಬೆಳೆದು ಕರ್ನಾಟಕದಾದ್ಯಂತ  ವೀರಶೈವ ಧರ್ಮ,ಸಂಸ್ಕೃತಿಯ ಬೆಳಕನ್ನು ಕಾಣಲಿಕ್ಕೆ ಪ್ರಭಾವ ಬೀರಿದವರು. ಹೀಗೆ ಜನ ಮಾನಸದಲ್ಲಿ ದಟ್ಟವಾದ ಪ್ರಭಾವ ಬೀರಿ 16ನೇ ಶತಮಾನದ ಅಂತ್ಯದಲ್ಲಿ ವೀರಶೈವ ಸಾಹಿತ್ಯ ಪುನಃಚೇತನ ಪಡೆದುಕೊಳ್ಳಲು ಕಾರಣ ಕರ್ತರಾದವರು.
      ವೀರಶೈವ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವುದರಲ್ಲಿ ತೋಂಟದ ಸಿದ್ಧಲಿಂಗರ ಪಾತ್ರ ಪ್ರಮುಖವಾದುದರ ಬಗ್ಗೆ ಶಾಸನ ಕಾವ್ಯ ಪುರಾಣ, ಸಾಂಗತ್ಯ, ರಗಳೆಗಳಲ್ಲಿ ಉಲ್ಲೇಖ ದೊರೆಯುವುದು. ತುಮಕೂರು ಜಿಲ್ಲೆಯ ಕುಣಿಗಲ್ಲ ತಾಲೂಕಿನ ಎಡೆಯೂರು, ಕಗ್ಗೆರೆ, ಮೈಸೂರಿನಲ್ಲಿ ಬರುವ ಹರದನಹಳ್ಳಿ, ಸಿದ್ಧಗಂಗೆ, ಹೊರನಾಡಾದ ಕೇರಳ ಮುಂತಾದ ಕಡೆಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ದೊರೆತ ಅಮೂಲ್ಯ ಮಾಹಿತಿಗಳ ಪ್ರಕಾರ ತೋಂಟದ ಸಿದ್ಧಲಿಂಗರ ಬಗೆಗಿನ ಕುರುಹುಗಳನ್ನು ಗುರುತಿಸ ಬಹುದಾಗಿದೆ.
      ತೋಂಟದ ಸಿದ್ಧಲಿಂಗರ ಐತಿಹಾಸಿಕತೆಯನ್ನು ಪ್ರತಿ ಬಿಂಬಿಸುವ ಶಿಲ್ಪಗಳು ಮತ್ತು ಸ್ಮಾರಕಗಳು ಮೈಸೂರಿನಲ್ಲಿ ಬರುವ ಹರದನಹಳ್ಳಿ, ಕಗ್ಗೆರೆ, ನಾಗಿಣಿ ನದಿ, ಸಿದ್ಧಗಂಗೆ, ಗದಗ, ಹೊರನಾಡಿನ ಕೇರಳ ಮುಂತಾದಕಡೆ ದೊರೆತಿವೆ. ಎಡೆಯೂರಲ್ಲಿ ತೋಂಟದ ಸಿದ್ಧಲಿಂಗರ ಮಠದ ಗರ್ಭಗುಡಿಯಲ್ಲಿ ಸಿದ್ಧಲಿಂಗರು  ಲಿಂಗೈಕ್ಯರಾಗಿದ್ದು ಅವರ ಸ್ಮಾರಕವಾಗಿ ಲಿಂಗವೊಂದನ್ನು ಇಲ್ಲಿ ಸ್ಥಾಪಿಸಿದ್ದಾರೆ. ಈ ಮಠದಲ್ಲಿ ಕ್ರಿ.ಶ.1600ರಲ್ಲಿದ್ದ ಶಾಸನ ಇದೆ. ಈ ಶಾಸನವು ಸಿದ್ಧಲಿಂಗರ ಜೀವಿತಾವಧಿಯಲ್ಲಿ ರಚಿತವಾಗಿಲ್ಲ ಎನ್ನಬಹುದು. ಮೂಜಗಕ್ಕೊಡೆಯನಾದ ಸಿದ್ಧೇಶನು ಮೂರ್ತನಾದ ನೆಲೆಮಾಳಿಗೆಯ ಮೇಲಿನ ಸಜ್ಜೆಯ ಗೃಹವನ್ನು ಮರೆ ವಿಗ್ರಹ (ಉತ್ಸವ ಮೂರ್ತಿ, ಲಿಂಗ ಮೂರ್ತಿ)ವಿಟ್ಟು ಸಕಲ ಸಂಭ್ರಮಗಳಿಂದ ಅಲಂಕರಿಸಿ ಅದಕ್ಕೆ ತಲತಲನೆ ಹೊಳೆಯುವ ನಾಗಾಭರಣವನ್ನು ಅಳವಡಿಸಿ ಮಝರೆ ಎಂದು ಹರ್ಷಧ್ವನಿಗೈದು ಸಹಸ್ರ ನಾಮದ ಪೂಜೆಗೂ ಅಣಿ ಮಾಡಿರುವುದನ್ನು ಈಗಲೂ ಕಾಣಬಹುದಾಗಿದೆ. ಆ ಸಿದ್ಧಲಿಂಗನ ಗುಡಿಗೆ ಲಗತ್ತಿಸಿದಂತೆ ಬಸವನಂಕಣ, ಕುಳಿತು ಪ್ರಸಾದವನ್ನು ನೀಡುವ ಮಂಚವಿರುವ ಪಟ್ಟಸಾಲೆ, ಕುಶಲ ಕತ್ತನೆಯ ನವರಂಗ ಮತ್ತು ಪಾತಾಳಂಕಣ ಇವುಗಳ ಕಂಭಗಳು ಹೊಸ ರೀತಿಯಲ್ಲಿ ನಿರ್ಮಿಸಲ್ಪಟ್ಟಿವೆ. ನವರಂಗದ ಮಧ್ಯದ ಹೊತ್ತಿನಲ್ಲಿ ಚಿತ್ರಕಾರರಿಂದ ರಚಿತವಾದ ನಾನಾ ವಿಧ ಪ್ರತಿಮೆಗಳು ಇಡಲ್ಪಟ್ಟಿವೆ. ಹಾಗೆಯೇ ಭುವನೇಶ್ವರಿ ಮೇಲ್ಗಡೆಯಲ್ಲಿ  ಶಿವರಣರ, ಸದ್ಭಕ್ತರ ಹಾಗೂ ವ್ರತಿಗಳ ಪ್ರತಿಮೆಗಳು ಅಲಂಕೃತವಾಗಿ ಕೆತ್ತಲ್ಪಟ್ಟಿವೆ. ಗುಡಿಯ ಸುತ್ತಲೂ ಬಳಸಿಕೊಂಡಿದ್ದ ಪ್ರಾಕಾರದಂಕಣ ಕೆತ್ತುಗಲ್ಲಿನ ಕಳಶಗಳು ಮತ್ತು ಚಿತ್ರಗಾರರು ಬರೆದ ನಾನಾ ಬಗೆಯ ಪ್ರತಿಮೆಗಳು ವಿರಾಜಿತವಾಗಿವೆ. ಈಗಲೂ ದೇವಾಲಯದ ಹೊರ ಗೋಡೆ ಮತ್ತು ಒಳ ಗೋಡೆಯ ಮೇಲೆ ಆತ್ಮ ಲಿಂಗ ಶರಣನ ಶಿಲ್ಪ ತಪೋವನಗೈದ ಹುತ್ತದ ಪ್ರಸಂಗ ಶಿಲ್ಪಗಳು ಕಂಡು ಬರುತ್ತವೆ. ಎಡೆಯೂರು ಹಾಗೂ ಕಗ್ಗೆರೆಗಳಲ್ಲಿ ಇರುವ ದೇವಸ್ಥಾನಗಳ ಕಂಭಗಳಲ್ಲಿ ಸಿದ್ಧಲಿಂಗರ ಉಬ್ಬು ಶಿಲ್ಪವನ್ನು ಕಾಣಬಹುದಾಗಿದೆ. ಎಡೆಯೂರಿನಿಂದ ಸ್ವಲ್ಪ ದೂರದಲ್ಲಿ ನಾಗಿಣಿ ನದಿ, ಅಲ್ಲಿಂದ ಮುಂದೆ ಕಗ್ಗೆರೆಯ ತೋಟದಲ್ಲಿ ತಪಸ್ಸುಗೈದುದರಿಂದ ತೋಂಟದ ಎಂಬ ಹೆಸರು ಬಂದಿರುವುದು. ಅಲ್ಲಿಯೂ ಕೂಡ ಮಠ ಸ್ಥಾಪನೆ ಕಂಡು ಬರುತ್ತದೆ.ಕಗ್ಗೆರೆಯಲ್ಲಿ ತೋಂಟದ ವಿಶೇಷಣಕ್ಕೆ ಕಾರಣನಾದ ಗೋಪಾಲಕನ ಸಮಾಧಿ ಇದೆ. ಹರದನ ಹಳ್ಳಿಯಲ್ಲಿ ಗೋಸಲ ಪೀಠ ಪರಂಪರೆಯ ಕುರುಹುಗಳನ್ನು ಹಾಗೂ ದಿವ್ಯಲಿಂಗೇಶ್ವರ ದೇವಾಲಯವನ್ನು ಈಗಲೂ ಕಾಣಬಹುದಾಗಿದೆ.
ಗುರು ಪರಂಪರೆ :
ಷಟಸ್ಥಲ ಜ್ಞಾನಾಮೃತದ ಎಂಟನೆ ವಚನ ಇದು ಸ್ವಯಂ ತೋಂಟದ ಸಿದ್ಧಲಿಂಗ ಯತಿಗಳ ರಚನೆಯಾದುದರಿಂದ ಅತ್ಯಂತ ಹಳೆಯ ಅಧಿಕೃತ ಆಕರವಾಗಿದೆ. ಈ ವಚನದಲ್ಲಿ ಗುರು ಪರಂಪರೆಗೂ ವಂಶಾವಳಿಯಾಗಿ ಉಲ್ಲೇಖಿತವಾಗಿದೆ. ಇದರಂತೆ 1. ಅನಾದಿ ಗಣೇಶ್ವರ 2. ಆದಿ ಗಣೇಶ್ವರ 3. ನಿರ್ಮಾಯ ಗಣೇಶ್ವರ 4. ನಿರಂಜನ ಗಣೇಶ್ವರ 5. ಜ್ಞಾನನಂದ ಗಣೇಶ್ವರ 6. ಆತ್ಮ ಗಣೇಶ್ವರ 7. ಆಧ್ಯಾತ್ಮ ಗಣೇಶ್ವರ 8. ರುದ್ರ ಗಣೇಶ್ವರ ಅಂತು ಎಂಟು ಗಣೇಶ್ವರರು ತರುವಾಯದಲ್ಲಿ 1. ಬಸವಪ್ರಭುದೇವರು 2. ಆದಿಲಿಂಗದೇವರು 3. ಚೆನ್ನವೀರೇಶ್ವರ ದೇವರು 4. ಹರದನಹಳ್ಳಿ ಗೋಸಲ ದೇವರು 5. ಶಂಕರ ದೇವರು 6. ದಿವ್ಯಲಿಂಗ ದೇವರು 7. ಚೆನ್ನಬಸವೇಶ್ವರ ದೇವರು ಅಂತು ಏಳು ದೇವರುಗಳು ಅನುಸೂತ್ಯವಾಗಿ ಗುರು ಪರಂಪರೆಯಲ್ಲಿ ಉಲ್ಲೇಖಿತರಾಗಿದ್ದಾರೆ. 7ನೆಯ ಚೆನ್ನಬಸವೇಶ್ವರ ದೇವರ ಕರಕಮಲ ಸಂಜಾತರು ತಾವೆಂದು ತೋಂಟದ ಸಿದ್ಧಲಿಂಗ ಯತಿಗಳೆ ನೇರವಾಗಿ ಹೇಳಿದ್ದಾರೆ.
ಈ ಹೇಳಿಕೆಯನ್ನು ಪರಿಶೀಲಿಸಿ ನೋಡಿದಾಗ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಮೊದಲು ಉಕ್ತರಾದ ಎಂಟು ಗಣೇಶ್ವರರು ನೈಜ ವ್ಯಕ್ತಿಗಳಾಗಿರದ ಸಿದ್ಧಾಂತ ಪರಿಭಾಷೆಯವರು ಆಗಿದ್ದಾರೆ. ಹರದನಹಳ್ಳಿಯಲ್ಲಿಯ ದಿವ್ಯ ಲಿಂಗೇಶ್ವರ ಸ್ಥಾವರ ಲಿಂಗವು ಸ್ಥಾಪಿತವಾದದ್ದು ಕ್ರಿ.ಶ.1317ರಲ್ಲಿ ಎಂಬುದು ಶಾಸನೋಕ್ತ ಐತಿಹಾಸಿಕ ಸತ್ಯ.
   ಇದೇ ಅನ್ವಯದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಮೊದಲು ಉಕ್ತರಾದ ಎಂಟು ಗಣೇಶ್ವರರು ನೈಜ ವ್ಯಕ್ತಿಗಳಾಗಿರದೆ ಸಿದ್ಧಾಂತ ಪರಿಭಾಷೆಯಾಗಿದ್ದಾರೆ. ಮತ್ತು ಏಳು ದೇವರುಗಳೇ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯ ನೈಜವ್ಯಕ್ತಿಗಳಾಗಿದ್ದಾರೆ.ಆದುದರಿಂದ ವಾಸ್ತವಿಕವಾಗಿ ತೋಂಟದ ಸಿದ್ಧಲಿಂಗ ಯತಿಗಳ ಷಟ್ಸ್ಥಲಜ್ಞಾನ ಸಾರಾಮೃತದ ಎಂಟನೆಯ ವಚನದಲ್ಲಿ ಉಕ್ತರಾದ ಏಳು ದೇವರುಗಳ ಪೈಕಿ ಮೊದಲನೆಯವರಾದ ಬಸವ ಪ್ರಭುದೇವರೇ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯ ಆದಿ ಗುರುವಾಗಿದ್ದಾರೆ. ಆ ಲೆಕ್ಕದಂತೆ ಏಳು ದೇವರುಗಳ ತರುವಾಯ ಸ್ವಯಂ ಉಲ್ಲೇಖಸಿಕೊಂಡ ತೋಂಟದ ಸಿದ್ಧಲಿಂಗ ಯತಿಗಳು ಆ ವಂಶಾವಳಿಯಲ್ಲಿ ಎಂಟನೆಯ ಗುರುವೆನಿಸಿಕೊಂಡಿದ್ದಾರೆ.
ಹೀಗೆ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಬಸವ ಪ್ರಭು ದೇವರಿಂದ ಹಿಡಿದು ಗೋಸಲ ಚೆನ್ನಬಸವೇಶ್ವರ ವರೆಗಿನ ಏಳು ವ್ಯಕ್ತಿಗಳು ಸಂದಿದ್ದಾರೆ ಎಂದು ನಿರ್ಧರಿಸಬಹುದು. ಈ ಏಳು ವ್ಯಕ್ತಿಗಳ ಮೇಲೆ ಸಾಕಷ್ಟು ಪೌರಾಣಿಕ ಕಥೆಗಳಿದ್ದರೂ ಅವೆಲ್ಲವನ್ನೂ ಇತಿಹಾಸವೆನ್ನಲಾಗುವುದಿಲ್ಲ. ಒಟ್ಟಿನಲ್ಲಿ ಏಳು ಮಹನೀಯರು ಬಸವಾದಿ ಪ್ರಮಥರ ಗುರು ಪರಂಪರೆಯವರು. ಎಂಬುದಕ್ಕೆ ಆದಿ ಗುರುವಿನ ಬಸವ ಪ್ರಭುದೇವರೇ ಎಂಬ ಹೆಸರೆ ಸಾಕ್ಷಿಯಾಗಿದೆ. ಏಳುನೂರೊಂದು ವಿರಕ್ತರಲ್ಲಿ ತೋಂಟದ ಸಿದ್ಧಲಿಂಗಯತಿಗಳು ನಾಯಕ ವ್ಯಕ್ತಿಯಾಗಿದ್ದಾರೆ. ಎಂಬ ಅಭಿಪ್ರಾಯ ಸರ್ವ ಸಮ್ಮತವಾಗಿದೆ. ವಾಸ್ತವಿಕವಾಗಿ ತೋಂಟದ ಸಿದ್ಧಲಿಂಗ ಯತಿಗಳು ಏಳುನೂರೊಂದು ವಿರಕ್ತರ ಪರಂಪರೆಯವರಾಗಿದ್ದಾರೆ.  ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಏಳುನೂರೊಂದು ವಿರಕ್ತರು ಬಸವ ಪ್ರಭು ದೇವರಿಂದ ತೊಡಗಿ ಗೋಸಲ ಚೆನ್ನಬಸವೇಶ್ವರರ ವರೆಗೆ ಸಂದಿದ್ದಾರೆ ಎಂದು ತಿಳಿದಂತಾಯಿತು.   ತದನಂತರ ಗೋಸಲ ಚೆನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದು ಭಕ್ತಿಭಾವದಿಂದ ಸೇವೆ ಮಾಡುತ್ತಿದ್ದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಅಸಾಧಾರಣವಾದ ಭಕ್ತಿಭಾವವನ್ನು ಕಂಡು ಗುರುಗಳು ಅವರಿಗೆ ತನ್ನ ಪಟ್ಟಾಧಿಕಾರವನ್ನು ವಹಿಸಿ ಕೊಡುವರು. ನಂತರ ದೇಶ ಸಂಚಾರಕ್ಕಾಗಿ ತೋಂಟದ ಸಿದ್ಧಲಿಂಗ ಯತಿಗಳು ಅನೇಕ ಚರಮೂರ್ತಿಗಳನ್ನೊಳಗೊಂಡು ಹೊರಡುವರು. ಶ್ರೀಶೈಲ, ಸೌರಾಷ್ಟ್ರ, ಕೊಲ್ಲಿಪಾಕಿ, ಕೇದಾರ, ದ್ರಾಕ್ಷಾರಾಮ, ಹಂಪಿ, ಗೋಕರ್ಣ, ಪೊನ್ನಾಂಬಲ, ಶಿವಗಂಗೆ, ರಾಮೇಶ್ವರ, ಚಿದಂಬರ, ಕಂಚಿ, ಕಾಳಹಸ್ತಿ ಮುಂತಾದ ಕ್ಷೇತ್ರಗಳನ್ನು ಸಂದರ್ಶನ ಮಾಡಿ ಅರುಣಾಚಲಕ್ಕೆ ಬರುವರು. ಅಲ್ಲಿಯೂ ಶಿವಭಕ್ತರಿಂದ ಅನೇಕ ಕಪ್ಪಕಾಣಿಕೆ ಮತ್ತು ರತ್ನಹಾರಗಳನ್ನು ಸ್ವೀಕರಿಸುವರು.  ಹೀಗೆ ಸಂಚಾರವನ್ನು ಮಾಡುತ್ತಾ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅನೇಕ ಪವಾಡಗಳನ್ನು ಮಾಡಿ; ಮೈಸೂರು ಭಾಗದ ತುಮಕೂರು ಜಿಲ್ಲೆಯ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸುವರು. ಮುಂದೆ ಕಗ್ಗೆರೆ ಹೊರವಲಯದಲ್ಲಿರುವ ತೋಪಿನ ಹೂದೋಂಟದಲ್ಲಿ ಮಾವಿನ ಮರದಡಿಯಲ್ಲಿ ತೋಂಟದ ಶಿವಯೋಗಿಗಳು ಹುತ್ತಿನಲ್ಲಿ ಆರುತಿಂಗಳು ಶಿವಧ್ಯಾನ ಮಗ್ನರಾಗಿ, ಹುತ್ತದ ಪ್ರಸಂಗದ ಹಿನ್ನೆಲೆಯಲ್ಲಿ ತೋಂಟದ ವಿಶೇಷಣವನ್ನು ಪಡೆದು. ನಂತರ ಕಗ್ಗೆರೆ ಸಮೀಪದಎಡೆಯೂರಲ್ಲಿ ಸಿದ್ಧಲಿಂಗ ಶಿವಯೋಗಿಗಳು ಬಂದು ಕೆಲವು ಕಾಲ ಧರ್ಮ ಪ್ರಸರಣ ಕಾರ್ಯದಲ್ಲಿ ನಿಂತು, ಬಳಿಕ  ಬೋಳಬಸವೇಶ್ವರರಿಗೆ ತಮ್ಮ ನಿರಂಜನ ಪಟ್ಟಕಟ್ಟಿ ಸಪ್ಪೆದೇವರು, ಉಪ್ಪಿನಳ್ಳಿಯ ಸ್ವಾಮಿ, ಗುಮ್ಮಳಾಪುರದ ಸಿದ್ಧಲಿಂಗ ದೇವರು, ಶೀಲವಂತ ದೇವರು ಮುಂತಾದವರಿಗೆ ದೀಕ್ಷೆಯನ್ನು ಕೊಟ್ಟು ಎಡೆಯೂರು ಕಲ್ಲುಮಠದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಹೊಂದುವರು. ಹೀಗೆ ಅಂದಿನಿಂದ ಮಹತ್ವ ಪಡೆದ ಎಡೆಯೂರು ಒಂದು ಸುಕ್ಷೇತ್ರವಾಗಿ ಲಕ್ಷೋಪಲಕ್ಷ ಭಕ್ತ ಜನರು ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಲಿದ್ದಾರೆ.

     
ತೋಂಟದ ಸಿದ್ಧಲಿಂಗ ಯತಿಗಳು ಹಾಗೂ ಶೂನ್ಯಸಂಪಾದನೆ: ತುಮಕೂರು ಜಿಲ್ಲೆಯ ಪರಿಸರದ ಹಸ್ತಪ್ರತಿ ಸಂಪತ್ತು ವೈವಿಧ್ಯತೆಯಿಂದ ಕೂಡಿದೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ.  ತುಮಕೂರು ಜಿಲ್ಲೆಯು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನ ಕಾಲದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ವಚನ ರಚನೆಯ ಪರಂಪರೆಯಲ್ಲಿಯೂ   ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತುಮಕೂರು ಪರಿಸರದ ಎಡೆಯೂರು, ಗುಬ್ಬಿ, ಗೂಳೂರು, ಅದರಂಗಿ ಸುತ್ತಮುತ್ತಲ ಪರಿಸರವು ಸಂಘಟನೆಯ ಪ್ರಧಾನ ಕೇಂದ್ರಗಳಾಗಿದ್ದು ವೀರಶೈವ ಧರ್ಮದ ಅಧ್ಯಯನ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು ಕಲ್ಪಿಸಿಕೊಟ್ಟವು. ಪರಿಣಾಮ ವೀರಶೈವ ಸಾಹಿತ್ಯ ಹುಲುಸಾಗಿ ಸೃಷ್ಟಿಯಾಯಿತು.  ಜಿಲ್ಲೆಯ ಶರಣರು ವಚನ ಸಾಹಿತ್ಯ ಪರಂಪರೆಯ ದ್ವಿತೀಯ ಘಟ್ಟದಲ್ಲಿ ವಚನಗಳನ್ನು ರಚಿಸುವುದರ ಮೂಲಕ ದ್ವಿತೀಯ ಘಟ್ಟದ ಪರಂಪರೆಯ ಪ್ರವರ್ತಕರಾಗಿದ್ದಾರೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ. ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ.     ವಚನ ರಚನೆ ಹಾಗೂ ವಚನ ರಕ್ಷಣೆ,ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. ಕಲ್ಯಾಣ ಕ್ರಾಂತಿಯ ವಿಪ್ಲವದನಂತರ ಅಳಿದುಳಿದ ವಚನಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ಕಾಪಾಡಿಕೊಂಡು ಬರಲು ಜಿಲ್ಲೆಯ ವಚನಕಾರರು, ಸಂಕಲನಕಾರರು ಕಾರಣರಾಗಿದ್ದಾರೆ. ಆಕರ ವಸ್ತು ವಿನ್ಯಾಸ, ನಿರೂಪಣ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ  ಆದ ವೈಶಿಷ್ಠ್ಯವನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನ ಗಳಿಸಿರುವ ಶೂನ್ಯ ಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾಗಿದ್ದು  ತುಮಕೂರು ಜಿಲ್ಲೆಯ ತೋಂಟದಸಿದ್ಧಲಿಂಗಯತಿಗಳ ಶಿಷ್ಯರ ಮೂಲಕ ಸಂಪಾದನೆಗೊಂಡವುಗಳಾಗಿವೆ. ಮೊದಲನೆ ಶೂನ್ಯ ಸಂಪಾದನಾಕಾರ ಶಿವಗಣ ಪ್ರಸಾದಿಮಹದೇವಯ್ಯನನ್ನು ಹೊರತು ಪಡಿಸಿ ಉಳಿದ ನಾಲ್ವರು ಶೂನ್ಯಸಂಪಾದನಾಕಾರರು ತುಮಕೂರು ಜಿಲ್ಲೆಯ ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರಾಗಿದ್ದಾರೆ. ಶೂನ್ಯಸಂಪಾದನೆಯ ಮೂರು ಪರಿಷ್ಕರಣಗಳು ನಡೆಯುವ ಸಂದರ್ಭದಲ್ಲಿ ಮತ್ತು ಆ ಕಾಲದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಮತ್ತು ಪ್ರಭಾವವನ್ನು ಪಡೆದಿದ್ದ ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಬೋಳಬಸವೇಶ್ವರರು ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರಿದವರಾಗಿ ಕಂಡು ಬರುತ್ತಾರೆ. ಮೂರನೇ ಮತ್ತು ನಾಲ್ಕನೇ ಶೂನ್ಯಸಂಪಾದನಕಾರರಾದ ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರು ನೇರವಾಗಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಮತ್ತು ಪ್ರಶಿಷ್ಯರಾಗಿದ್ದಾರೆ.  ಜೊತೆಗೆ ಗುಮ್ಮಳಾಪುರದ ಸಿದ್ಧಲಿಂಗಯತಿಯು ಶೂನ್ಯಸಂಪಾದನೆಯಲ್ಲಿ ತನ್ನ ಬಗೆಗೆ ` ಅನಾದಿ ಪರಶಿವ ತಾನೆ ಲೀಲಾ ಕ್ರೀಡೆಗೋಸ್ಕರ ಮರ್ತ್ಯಕ್ಕೆ ಬಿಜಯಂಗೈದ ಕರಚರಣ ಅವಯವಮಂ ಧರಿಸಿದ ತೋಂಟದ ಸಿದ್ಧೇಶ್ವರನ  ವರಪುತ್ರನಾಗಿ ಜಗಹಿತಾರ್ಥವಾಗಿ ಗುಮ್ಮಳಾಪುರದ ಸಿದ್ಧಲಿಂಗದೇವರೆಂಬ ನಾಮವಿಡಿದು ಮತ್ತು ಶ್ರೀಮದ್ದೇಶಿಕ ಚಕ್ರವರ್ತಿಯೆನಿಪಾ ಸತ್ನೀರ್ತಿಕಾಂತಂ ಬುಧಸ್ತೋಮಾಂಬೋನಿಧಿ ಪೂರ್ಣಚಂದ್ರನನಿಶಂ ಶ್ರೀ ತೋಂಟದಾರ್ಯಂಗೆ ಸತ್ಕ್ರೀಯಂಬೆತ್ತಗದೂರ ಬೋಳಬಸವೇಶಾಚಾರ್ಯ ಕಾರುಣ್ಯದಿಂ ಭೌಮಂ ಸಿದ್ಧಸುಲಿಂಗ ಪೇಳ್ದನೊಲವಿಂದೀ ಶೂನ್ಯಸಂಪಾದನೆಯಂ’ ಎಂದು ಹಾಗೂ ಕೃತಿಯ ಕೊನೆಯಲ್ಲಿ  ಅನಾದಿ ಪರಶಿವ ತಾನೆ ತೋಂಟದ ಸಿದ್ಧೇಶ್ವರದೇವರ ದಿವ್ಯಶ್ರೀಪಾದಕ್ಕೆ ಸಮರ್ಪಿಸಿದ ಶೂನ್ಯ ಸಂಪಾದನೆ ಎಂದು  ಹೇಳಿಕೊಂಡಿದ್ದಾನೆ.   ಜೊತೆಗೆ ಸಮಾಪ್ತಿ ಕಂದ ಪದ್ಯ 4 ರಲ್ಲಿ, ತೋಂಟದ ಸಿದ್ಧೇಶ್ವರನ ಪಾದಮೂಲದ ಬಳಿ ಕುಳಿತ ಗುಮ್ಮಳಾಪರಾಧೀಶನಾದ ತಾನು ಮೀಟೆನಿಸುವ ವಚನಾಮೃತದೂಟವ(ಶೂನ್ಯ ಸಂಪಾದನೆಯನ್ನು) ಶರಣಜನರ ಕರ್ಣಕ್ಕಿತ್ತುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕ್ರಿ.. 1580 ರ ಎಡೆಯೂರು ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ  ಜೊತೆಗೆ ಇದ್ದ ಇತರ ವಿರತರುಗಳ ಜೊತೆ ಗುಮ್ಮಳಾಪುರದ ಸಿದ್ಧಲಿಂಗರೂ ಇದ್ದರು ಎಂಬ ವಿವರ ಹಾಗೂ ಸಿದ್ಧನಂಜೇಶನ ರಾಘವಾಂಕ ಚರಿತದಲ್ಲಿಯ,  ತುಮಕೂರಿನಲ್ಲಿ ನಡೆದ  ತೋಂಟದ ಸಿದ್ಧಲಿಂಗರ ಮೆರವಣಿಗೆಯಲ್ಲಿ ಗುಮ್ಮಳಾಪುರದ ಸಿದ್ಧಲಿಂಗನೂ ಭಾಗವಹಿಸಿದ್ದನೆಂಬ ಹೇಳಿಕೆಯು ತೋಂಟದ ಸಿದ್ಧಲಿಂಗ ಯತಿಗಳ ಪರಂಪರೆಯವನು ಎಂಬುದನ್ನು ಸ್ಥಿರೀಕರಿಸುತ್ತದೆ.    ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರಶಿಷ್ಯರಾಗಿದ್ದು, ಐದನೆಯ ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ.  ಗುಮ್ಮಳಾಪುರದ ಸಿದ್ಧಲಿಂಗರ ಪ್ರಭಾವ ತನ್ನ ಮೇಲೆ ಆಗಿರುವ ಬಗೆಗೆ ಸ್ವತಹ ಗೂಳೂರುಸಿದ್ಧವೀರಣ್ಣೊಡೆಯರೇ ಕೃತಿಯ  ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ತೋಂಟದ ಸಿದ್ಧಲಿಂಗಯತಿಗಳು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವರು.ಇವರು ವಚನರಚನೆ ಮತ್ತು ವಚನಸಾಹಿತ್ಯ ಸಂರಕ್ಷಣೆಯ ಜೊತೆಗೆ ಶೂನ್ಯಸಂಪಾದನೆಯ ಪರಿಷ್ಕರಣ ಹೊಸದಿಕ್ಕನ್ನು ಹಿಡಿಯಲು ಕಾರಣಕರ್ತರಾದವರು.       
      ಒಟ್ಟಿನಲ್ಲಿ ತೋಂಟದ ಸಿದ್ಧಲಿಂಗರ ಪ್ರಭಾವ ಮತ್ತು ಪರಂಪರೆಯ ಶಿಷ್ಯಂದಿರು ಶೂನ್ಯ ಸಂಪಾದನೆಗಳಿಗೆ ಹೊಸ ಜೀವ ತುಂಬಿದುದಲ್ಲದೆ ಅವುಗಳ ಮಹತ್ವವನ್ನು ಹೆಚ್ಚಿಸಿದ್ದಾರೆ.  ಅಂದರೆ ಶೂನ್ಯ ಸಂಪಾದನೆಯ ಬೆಳವಣಿಗೆಯಲ್ಲಿ ತೋಂಟದ ಸಿದ್ಧಲಿಂಗರ ಪ್ರಭಾವವು ಕೆಲಸ ಮಾಡಿದೆ ಎಂಬುದನ್ನು ಒಪ್ಪಲೇಬೇಕು.
ವಚನ ಪರಂಪರೆಯಲ್ಲಿ ಸಿದ್ಧಲಿಂಗ ಯತಿ:
ತೋಂಟದ ಸಿದ್ಧಲಿಂಗರು ವಚನಕಾರರು ಹೌದು, ಅನುಭಾವಿಗಳೂ ಹೌದು; ಅನೇಕರಿಗೆ ಮಾರ್ಗದರ್ಶಕರಾದ ಮಹಾತ್ಮರು ಹೌದು. ವೀರಶೈವ ಧರ್ಮದ ಇತಿಹಾಸದಲ್ಲಿಯೇ ಅಲ್ಲಮಪ್ರಭುಗಳನ್ನು ಬಿಟ್ಟರೆ ಅಷ್ಟೇ ಪ್ರಭಾವದ ವ್ಯಕ್ತಿತ್ವವುಳ್ಳ ಮತ್ತೊಬ್ಬ ಗುರುಗಳನ್ನು 16ನೇ ಶತಮಾನದಲ್ಲಿ ಕಾಣುತ್ತೇವೆ. ಇವರ ವ್ಯಕ್ತಿತ್ವ ಪ್ರಭಾವ ಕಂಡು ಶಿಷ್ಯರಾದ ಘನಲಿಂಗಿದೇವ, ತೋಂಟದ ಅಲ್ಲಮನೆಂದು ಭಾವಿಸಿಯೂ ಇದ್ದಾರೆ. ಅದೇನೇ ಇದ್ದರೂ, ಸಿದ್ಧಲಿಂಗರಂತೂ ತಾವು ಬಸವ ಅಲ್ಲಮ ಮೊದಲಾದ ವಚನಕಾರರ ಪರಂಪರೆಯವನೆಂದು ತನ್ನನ್ನು ತಾನು ಕರೆದುಕೊಂಡಿರುವುದು ಗಮನಾರ್ಹವಾಗಿದೆ.       ತೋಂಟದ ಸಿದ್ಧಲಿಂಗ ಯತಿಗಳು ವಚನಕಾರರು, ಅನುಭಾವಿಗಳು ಅವರ ನುಡಿಗಳೊಂದಾದ ಪರಿಯಿಂದ ಅವರ ವಚನಗಳು ಮೂಡಿಬಂದಿವೆ. ಅವರು ಶರಣ ಸಿದ್ಧಾಂತ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದುದಲ್ಲದೇ ಅದೇ ರೀತಿಯಲ್ಲಿ ಬದುಕಿದ್ದ ಪರಮಶ್ರೇಷ್ಠರು. ಹೀಗಾಗಿ ಅವರ ವಚನಗಳಲ್ಲಿ ಶಾಸ್ತ್ರೀಯ ತಾತ್ವಿಕ ನಿರೂಪಣೆಯೊಂದಿಗೆ ಹರಳು ಗಟ್ಟಿರುವ ಅನುಭಾವ ಸಮೃದ್ಧಿ ಕಾಣಬಹುದಾಗಿದೆ. ಇವರ ವಚನ ಪ್ರಭಾವದಡಿಯಲ್ಲಿಯೇ ಮುಂದಿನ ವಚನಕಾರರಾದ ಘನಲಿಂಗಿದೇವ, ಗುಮ್ಮಳಾಪುರದ ಸಿದ್ಧಲಿಂಗ ದೇವರು, ಸ್ವತಂತ್ರ ಸಿದ್ಧಲಿಂಗೇಶ್ವರರು ಮುಂತಾದವರು ವಚನ ಸಾಹಿತ್ಯ ಸೃಜಿಸಿದ್ದಾರೆ.  ಗುರುವಿನ ಗುರು ಪರಮಾರಾಧ್ಯ ಮೂರ್ತಿಗಳೆನಿಸಿದ ಸಿದ್ಧಲಿಂಗ ಯತಿಗಳ ಜಾಡಿನಲ್ಲಿಯೇ ಸಾಗಿದ ನಂತರದ ವಚನಕಾರರು ಅನುಭವ ಸಮೃದ್ಧಿಗಳಿಂದ ಕೂಡಿದ ವಚನ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿದರು.
ಸಿದ್ಧಲಿಂಗನ ವಚನಗಳ ವಸ್ತು ಮುಖ್ಯವಾಗಿ ಧರ್ಮ ಮತ್ತು ತತ್ವ ಆದರೂ ಅವನ ಸಾಧಕ ಜೀವನದ ಬಗೆಬಗೆಯ ಅನುಭವಗಳು ಅಂತರಂಗದ ಹೋರಾಟ ಕಳವಳ, ಉದ್ಧೇಶ ಇತ್ಯಾದಿಗಳು ಅವನ ವಚನಗಳಲ್ಲಿ ಮೂಡಿ ಬಂದಿವೆ.ಸಿದ್ಧಲಿಂಗರಿಗೆ ಒದಗಿದ ಪ್ರಲೋಭಗಳು, ಅವುಗಳೊಂದಿಗೆ ಹಾದು ಬರುವಾಗ ಅವರ ಅಂತರಂಗ ಪಟ್ಟಪಾಡು, ಕಡೆಗೆ ಗುರು ಕೃಪೆಯಿಂದ ಈ ಕೋಟಲೆಗಳು ಬಿಡುಗಡೆಯಾಗಿ ಸ್ವಸ್ವರೂಪದ ಅನುಸಂಧಾನದ ಹಾದಿಗೆ ಹಚ್ಚಿದ ಗುರುವಿನ ನಿರ್ದೇಶನ ಇವಿಷ್ಟು ಪ್ರಾಮಾಣಿಕವಾಗಿ ನಿರೂಪಿತವಾಗಿವೆ.
 ಅಡವಿಯ ಹುಲ್ಲ ಮೇದ ಪಶು
 ಮಡುವಿನಗ್ಘವಣಿಯ ಕುಡಿದ ನಡುಬೀದಿಯಲ್ಲಿ ಬರುತ್ತಿರಲು,
 ಕಡೆಯಲಿರ್ದ ಹುಲಿ ಬಂದು ಹಿಡಿಯಲು,
 ನಿನ್ನೊಡವೆಯನೇನ ಬಳಸಿಕೊಂಡೆನೋ ಎಂದು ತನ್ನೊಡೆಯನ ಕರೆಯಲು
 ಹಿಡಿದ ಹುಲಿ ಬಿಟ್ಟೋಡಿತು ನೋಡಾ
 ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!     (ವ.ಸಂ:136)
ಹೀಗೆ ಬಸವಣ್ಣನ ಹಸುವಿನ ಪ್ರತಿಮೆಯನ್ನು ಸಿದ್ಧಲಿಂಗ ಬಳಸಿಕೊಂಡಿದ್ದಾನೆ ಎಂಬುದನ್ನು ಗಮನಿಸಿದಾಗ(ಉದಾ:ಕಾಡಬಸವನ ಹುಲಿ ಕೊಂಡೊಯ್ಯನೆ ಆರಯ್ಯಲಾಗದೆ ? ಬಸವಣ್ಣ) ಒಂದು ಸಮಗ್ರ ಅನುಭವವನ್ನು ವಿಶಿಷ್ಟವಾದ ಶಬ್ದ ಚಿತ್ರವನ್ನು ರೂಪಿಸುವ ಸಿದ್ಧಲಿಂಗರ ಈ ವಚನ ಒಂದು ಪುನರ್ ನಿರ್ಮಿತಿಯೇ ಸರಿ. ಶ್ರದ್ಧೆಯಲ್ಲಿ ಬದುಕುವ ಮುಗ್ಧ ಜೀವವೊಂದಕ್ಕೆ ಅರಿವಿಲ್ಲದೆ ಎರಗಿ ಬಂದ ಪ್ರಲೋಭನೆ ತಕ್ಕಷ್ಟು ಎಚ್ಚರದಿಂದ ತನ್ನೊಡೆಯನಿಗೆ ಮೊರೆಯಿಟ್ಟು ಕಾರಣದಿಂದ ದೊರೆತ ಬಿಡುಗಡೆ- ಹೀಗೆ ಬದುಕಿನ ಅನುಭವವನ್ನು ತಕ್ಕ ಚಿತ್ರವೊಂದರ ಮೂಲಕ ಅಭಿವ್ಯಕ್ತ ಪಡಿಸುವ ಕೌಶಲ್ಯ ಕೇವಲ ಅನುಕರಣೆಗೆ ಸಾಧ್ಯವಲ್ಲ. ಅಲ್ಲದೆ ವಚನದ ಹಾಸು-ಬೀಸ; ಒಳಪ್ರಾಸಗಳ ಸಂಯೋಜನೆ, ಇಡೀ ಚಿತ್ರದ ರಚನೆ ಇವೆಲ್ಲ ಸ್ವತಂತ್ರ ನಿರ್ಮಾಣ ಸಮರ್ಥವಾದ ಹಾಗೂ ತಂತ್ರ ಪರಿಣಿತವಾದ ವ್ಯಕ್ತಿತ್ವವನ್ನೇ ಸೂಚಿಸುತ್ತವೆ. ಆದರೆ ಮೇಲಿನ ವಚನದ ಪ್ರತಿಮೆ ತನ್ನಷ್ಟಕ್ಕೆ ಜಾಲಾಗಿರುವಂತೆ ತೋರುತ್ತದೆ. ಅಡವಿಯಲ್ಲಿ ಹುಲ್ಲು ಮೇದು ಬರುತ್ತಿದ್ದ ಹಸುವನ್ನು ನಿನ್ನೊಡೆಯನೇನೆ ಬಳಸಿಕೊಂಡನೋ? ಎಂದು ತನ್ನ ಒಡೆಯನನ್ನು ಭಾಷೆಯಲ್ಲಿ ಕರೆಯುವುದಾಗಲಿ ಅಷ್ಟಕ್ಕೆ ಹುಲಿ ಬಿಟ್ಟು ಓಡಿದ್ದಾಗಲಿ ಸಹಜವೆಂದು ಅನ್ನಿಸುವುದಿಲ್ಲ. ಹೀಗಾಗಿ ಪ್ರತೀಕ ಓದುಗರ ಮನಸ್ಸಿನಲ್ಲಿ ಒಡೆದು ನಿಲ್ಲುತ್ತದೆ. ಅಥವಾ ನಿಂತು ಒಡೆಯುತ್ತದೆ.
      ತೋಂಟದ ಸಿದ್ಧಲಿಂಗರು ತಮ್ಮ ಹಿಂದಿನ ವಚನಕಾರರಿಂದ ಪ್ರಭಾವಿತರಾಗಿ ಏನಾದರೂ ಸ್ವಂತಿಕೆಯನ್ನು ಮೆರೆದಿದ್ದಾರೆಯೇ ಎನ್ನುವ ಪ್ರಶ್ನೆಯು ಉದ್ಭವಿಸುವುದು ಸಹಜ. ಪ್ರಭಾವದ ಸಂಗತಿಯನ್ನು ಬಿಟ್ಟು ತಮ್ಮ ಅನೇಕ ವಚನಗಳಲ್ಲಿ ಅವರು ಸ್ವಂತಿಕೆಯನ್ನು ಮೆರೆದಿದ್ದಾರೆ.
       ತೋಂಟದ ಸಿದ್ಧಲಿಂಗ ಯತಿಗಳನ್ನು ಸಾಹಿತಿಗಳೆನ್ನುವುದಕ್ಕಿಂತ ಅನುಭಾವಿಗಳು, ದೊಡ್ಡ ವ್ಯಕ್ತಿಗಳು ಎಂದು ಭಾವಿಸುವುದೇ ಉಚಿತ. ವಚನ ಪರಂಪರೆಯನ್ನು ತಮ್ಮಲ್ಲಿ ಕೂಡಿಸಿಕೊಂಡು ಮುಂದುವರಿಯಲು ಒಂದು ಮಾಧ್ಯಮವಾಗಿ ಹಲವಾರು ಸುಂದರ ವಚನಗಳನ್ನು ಕೊಟ್ಟವರು. ಅವರ ವಚನಗಳಲ್ಲಿ ಕಾವ್ಯಗುಣ ಕಡಿಮೆಯಿದ್ದರೂ ಷಟ್‍ಸ್ಥಲಶಾಸ್ತ್ರ ನಿರೂಪಣೆಯ ದೃಷ್ಟಿಯಿಂದ ಅವುಗಳಿಗೆ ಬೆಲೆಯಿದೆ. ಏಕೆಂದರೆ ಅವರು ಪ್ರತ್ಯಕ್ಷವಾಗಿ ಷಟ್‍ಸ್ಥಲವನ್ನು ಬದುಕಿ ತೋರಿಸಿದ ಮಹನೀಯರು. ಆದ್ದರಿಂದಲೇ ಮುಂದಿನ ನೂರಾರು ಶರಣರಿಗೆ, ಕವಿಗಳಿಗೆ, ವಿದ್ವಾಂಸರಿಗೆ ಆದರ್ಶಪ್ರಿಯರೂ, ಪ್ರಚೋದಕರು ಆಗಿ ಪರಿಣಮಿಸಿದರು. ಆದ್ದರಿಂದಲೇ ಅವರ ವಚನಗಳಿಗಿಂತ ಹೆಚ್ಚು ಅಮೂಲ್ಯ ಅವರು ಬರೆದ ವ್ಯಕ್ತಿಗಳು ಎಂದು ನಾನು ಹಿಂದೊಮ್ಮೊ ಹಾಡಿದ ಮಾತು ಎಂಬ ಚಿದಾನಂದ ಮೂರ್ತಿಗಳ ಹೇಳಿಕೆ ಒಪ್ಪತಕ್ಕದ್ದಾಗಿದೆ. ಅವರು ವಚನಕಾರರಾಗಿ ಪ್ರಭಾವ ಬೀರುವುದಕ್ಕಿಂತ ವ್ಯಕ್ತಿಯಾಗಿ ಬೀರಿರುವ ದಿಟ್ಟ ಪ್ರಭಾವವೇ ಹೆಚ್ಚು.
ವಚನ ಪರಂಪರೆಯಲ್ಲಿ ಸಿದ್ಧಲಿಂಗರ ಸ್ಥಾನ :
      ವಚನ ಪರಂಪರೆಯಲ್ಲಿ ಸಿದ್ಧಲಿಂಗರ ಸ್ಥಾನವನ್ನು ಕುರಿತು ಗಮನಿಸಿದಾಗ ಅವರ ನಂತರವೂ ಮುಂದುವರಿದ ಆ ಪರಂಪರೆಗೆ ಅವರ ಕಾಣಿಕೆ ಏನೆಂಬುದನ್ನು ಪ್ರಸ್ತಾಪಿಸುವುದು ಉಚಿತವಾಗುತ್ತದೆ. ಇದನ್ನು ಎರಡು ದೃಷ್ಟಿಕೋನದಿಂದ ನೋಡಬಹುದು. ಒಂದು ವಚನ ಸಂರಕ್ಷಣೆ ಮತ್ತು ವ್ಯಾಖ್ಯಾನ, ಇನ್ನೊಂದು ವಚನ ಸೃಷ್ಟಿ. ಸಿದ್ಧಲಿಂಗ ಯತಿಗಳು ತಾವೇ ಸ್ವತಃ ವಚನ ಸಂಕಲನ ವ್ಯಾಖ್ಯಾನ ಮಾಡಿದಂತೆ ಹೇಳಲು ಆಧಾರಗಳಿಲ್ಲದಿದ್ದರೂ ಅವರು ಅಂತಹ ಮಹಾನ್ ಕಾರ್ಯಗಳಿಗೆ ಪ್ರೇರಣೇ ಪ್ರೋತ್ಸಾಹವನ್ನು ನೀಡಿರುವಂತೆ ಕಾಣುತ್ತದೆ. ಗುಮ್ಮಳಾಪುರದ  ಸಿದ್ಧಲಿಂಗ ಯತಿ ಮತ್ತು ಗೂಳೂರು ಸಿದ್ಧವೀರಣ್ಣೋಡೆಯರ ಆಲೋಚನೆ ರೂಪುಗೊಳ್ಳಲು ಸಿದ್ಧಲಿಂಗಯತಿಗಳು ಕಾರಣರಾಗಿದ್ದಾರೆ. ಎಂಬುದಕ್ಕೆ ಇದೊಂದು ಸ್ಪಷ್ಟ ಆಧಾರ. ವಾಸ್ತವವಾಗಿ ಅವರಿಬ್ಬರು ಇವರ ಶಿಷ್ಯರೆ. ಗುಮ್ಮಳಾಪುರ ಸಿದ್ಧಲಿಂಗಯತಿ ಅವರ ನೇರ ಶಿಷ್ಯ; ಸಿದ್ಧವೀರಣ್ಣೊಡೆಯ ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶಿಷ್ಯ ಇಬ್ಬರೂ ತೋಂಟದ ಸಿದ್ಧಲಿಂಗ ಯತಿಗಳನ್ನು ಭಕ್ತಿಯಿಂದ ಸ್ಮರಿಸಿದ್ದಾರೆ.
      ಸಿದ್ಧಲಿಂಗ ಯತಿಗಳಿಂದ ಆರಂಭವಾದ ವಚನ ಪುನರುಜ್ಜೀವನ ಕಾರ್ಯ ಅವರ ಬಳಿಕವು ನಿಲ್ಲದೆ ಮುಂದುವರೆಯಿತು. ಅವರ ಶಿಷ್ಯರಾದ ಸ್ವತಂತ್ರ ಸಿದ್ಧಲಿಂಗೇಶ್ವರರು ಮತ್ತು ಗುಮ್ಮಳಾಪುರದ ಸಿದ್ಧಲಿಂಗಲೇಶ್ವರರು ಅನೇಕ ವಚನಗಳನ್ನು ಬರೆದಿದ್ದಾರೆ. ಈ ಸಾಲಿನಲ್ಲಿಯೇ ಸಿದ್ಧಲಿಂಗೇಶ್ವರನು ಸಿದ್ಧಲಿಂಗ ಯತಿಗಳಂತೆ ಬಸವಾದಿಗಳ ವಚನಗಳಿಗೆ ಸಂಪೂರ್ಣ ಮಾರು ಹೋಗಿದ್ದ ವ್ಯಕ್ತಿ. ಏಕೆಂದರೆ ಆತನ ಮೇಲೆ ಬಸವ ಮೊದಲಾದ ಪ್ರಭಾವ ಆಗಿರುವುದನು ಗುರುತಿಸ ಬಹುದಾಗಿದೆ. ಸಿದ್ಧಲಿಂಗ ಯತಿಗಳ ಇನ್ನೊಬ್ಬ ಶಿಷ್ಯರಾದ ಘನಲಿಂಗಿ ದೇವರು ಸಾಹಿತ್ಯ ದೃಷ್ಟಿಯಿಂದ ಹೆಚ್ಚು ಗಮನಾರ್ಹವಾದ ವಚನಗಳನ್ನು ಸೃಷ್ಟಿಸಿದ್ದಾರೆ.
      ಹೀಗೆ ವಚನ ಸಂಕಲನ ವ್ಯಾಖ್ಯಾನಗಳಿಗೆ ಮಹಾಲಿಂಗ ಜಕ್ಕಣ್ಣ ಮುಂತಾದವರ ಬಳಿಕ ಎರಡನೆ ಕೇಂದ್ರ ವ್ಯಕ್ತಿಯಾಗಿ ಪರಿಣಮಿಸಿ ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಆ ಕೆಲಸಗಳನ್ನು ನಡೆಸಿದರು. ವಚನ ಸೃಷ್ಟಿಯ ಕಾರ್ಯ ಕನ್ನಡದಲ್ಲಿ ಎರಡನೆ ಬಾರಿ ನಡೆದದ್ದಕ್ಕೆ ತಾವೇ ಸ್ವತಃ ಆದ್ಯರಾದರು. ಹೀಗೆ ವಚನ ಪರಂಪರೆಯಲ್ಲಿ ಮಹತ್ವಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
   ತೋಂಟದ ಸಿದ್ಧಲಿಂಗರ ವಚನಗಳಲ್ಲಿ ಹೇರಳವಾದಂತಹ ಲೋಕಾನುಭವ ಸಿಗುತ್ತದೆ. ತಮ್ಮ ವಿಚಾರಗಳನ್ನು ಲೋಕದ ಉದಾಹರಣೆಗಳಿಂದ ತಿಳಿಸಿ ಹೇಳುವ, ಪ್ರತಿಪಾದಿಸುವ ಇಲ್ಲವೆ ವಿಷಯವನ್ನು ಪ್ರತಿಷ್ಠಾಪಿಸುವ ಸಮರ್ಥಿಸುವ ವಚನಗಳಲ್ಲಿ ವಿಚಾರದ ಪ್ರತಿಪಾದನೆಗೆ ಲೌಕಿಕ ಘಟನೆ, ಪ್ರಸಂಗ, ಸಂಗತಿ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ರೀತಿಯನ್ನು 12ನೇ ಶತಮಾನದ ಎಲ್ಲ ಶರಣರಲ್ಲೂ ಸಾಮಾನ್ಯವಾಗಿ ಕಾಣುತ್ತೇವೆ. ಆ ಸಂಪ್ರದಾಯ ತೋಂಟದ ಸಿದ್ಧಲಿಂಗರಲ್ಲಿಯೂ ಸಾಮೂಹಿಕ ನೆಲೆಯಲ್ಲಿಯೂ ಪರಾಮರ್ಶೆ ಮಾಡುವಾಗ ವಚನಗಳಲ್ಲಿ ಲೋಕಾನುಭವ ಸೇರಿರುವುದು ಸಹಜವೆ ಆಗಿದೆ. ಲೌಕಿಕ ಸಂದರ್ಭ ಘಟನೆ ವಿಚಾರಗಳನ್ನು ಬಳಸುವುದರ ಮೂಲಕ ಉದ್ದಿಷ್ಟ ವಿಚಾರದ ಪರಿಣಾಮಕಾರಿ ಅಭಿವ್ಯಕ್ತಿಯನ್ನು ಸಾಧಿಸುತ್ತಾರೆ. ಮಾತು ಹರಿತವು ಶೀಘ್ರ ಪರಿಣಾಮಕಾರಿಯಾಗಿಯೂ ಸಂವಹನಗೊಂಡು ಓದುಗನ, ಕೇಳುಗನ ಚಿತ್ತವನ್ನು ಬೇಧಿಸುತ್ತದೆ. ಆ ಮೂಲಕ ಲೌಕಿಕದಿಂದ ಮನಸ್ಸನ್ನು ಚಿತ್ತದಂತೆ ಸೆಳೆದು ಅಲೌಕಿಕದಡೆ ಕರೆದೊಯ್ಯುತ್ತದೆ. ಈ ಲೋಕಾನುಭವವು ಅಲಂಕಾರಗಳಂತೆ ಉಪಮೆ, ರೂಪಕ, ಪ್ರತಿಮಾ ವಿಧಾನದಲ್ಲಿ ಬಳಕೆಯಾಗಿವೆ ಎಂಬುದನ್ನು ಗಮನಿಸಬೇಕು.
ಉದಾಹರಣೆಗೆ:
      ಪುರಜಂನಗಳ ಮಚ್ಚಿಸುವಾಗ ಪುರುಷಾರ್ಥಿಯೆ ಶರಣ ?
      ಪರಿಜನಂಗಳ ಮಚ್ಚಿಸುವಾಗ ಪಾದರಗಿತ್ತಿಯೆ ಶರಣ ?
      ಸರ್ವರ ಮಚ್ಚಿಸುವಾಗ ಸಂತೆಯ ಸೂಳೆಯ ಶರಣ ?
      ತನ್ನ ಲಿಂಗದ ನಚ್ಚು    ಮಚ್ಚು ಪರಬ್ರಹ್ಮದಚ್ಚು:
      ನಿಂದಕರ ಸುಡುವ ಎಡೆಗಿಚ್ಚು ನೋಡಾ.
      ಕೆಂಡವೊಕೊಂಡು ಮಂಡೆಯ ತುರುಸುವಂತೆ
      ಕೆಂಡಗಣ್ಣಿನ ಶರಣರ ಇರವನರಿಯದೆ
      ದೂಷಣೆಯ ಮಾಡುವ ನರಕಿ ಜೀವಿಗಳ
      ನರಕದಲ್ಲಿಕ್ಕದ ಮಾಬನೆ?
      ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ!"          (ವ.ಸಂಖ್ಯೆ-326)
      ಬೆಡಗಿನ ವಚನಗಳು :
      ತೋಂಟದ ಸಿದ್ಧಲಿಂಗರಲ್ಲಿ ಬೆಡಗಿನ ವಚನಗಳದು ಒಂದು ವಿಶೇಷವಾಗಿದೆ. ಬೆಡಗನ್ನು ಬಳಸುವುದರಲ್ಲಿ ಅಲ್ಲಮಪ್ರಭು ಮೊದಲಿಗರು. ತೋಂಟದ ಸಿದ್ಧಲಿಂಗರು ಆ ಪರಂಪರೆಯಲ್ಲಿ ಒಬ್ಬರು. ಅವರು ಷಟ್‍ಸ್ಥಲ ಜ್ಞಾನಸಾರಾಮೃತದ 701 ವಚನಗಳ ಪೈಕಿ 124 ವಚನಗಳು ಬೆಡಗಿನ ವಚನಗಳಾಗಿವೆ. ಸಾಮಯಿಕವಾಗಿ ವಿವಿಧ ಸ್ಥಲಗಳಲ್ಲಿ ಬೆಡಗಿನ ವಚನಗಳು ಪೋಣಿಸಲ್ಪಟ್ಟಿವೆ. ಸುಮಾರಾಗಿ ವಿವಿಧ ಸ್ಥಲಗಳಲ್ಲಿ ಕಂಡು ಬರುವ ಬೆಡಗಿನ ವಚನಗಳ ಸಂಖ್ಯೆ ಈ ಕೆಳಗಿನಂತಿದೆ. ಪಿಂಡಸ್ಥಲದಲ್ಲಿ-12, ಸಂಸಾರಹೇಯ ಸ್ಥಲ-15, ಗುರುಕರಣಸ್ಥಲ-1, ಮಹೇಶ್ವರಸ್ಥಲ-2, ಪ್ರಸಾದಸ್ಥಲ-6, ಪ್ರಾಣಲಿಂಗಸ್ಥಲ-41, ಶರಣಸ್ಥಲ-16, ಐಕ್ಯಸ್ಥಲ-33 ಹೀಗಾಗಿ ತೋಂಟದ ಸಿದ್ಧಲಿಂಗರಲ್ಲಿ ಬೆಡಗಿನ ವಚನಗಳಿಗೂ ಅಗ್ರ ಸ್ಥಾನವಿದೆ.
ತೋಂಟದ ಸಿದ್ಧಲಿಂಗರಲ್ಲಿ ಇರುವುದು ಬಸವಾದಿ ಶರಣರ ಮಾರ್ಗದಲ್ಲಿ ನಡೆಯುವ ಆಧ್ಯಾತ್ಮಿಕ ವಿಚಾರಧಾರೆಗಳ ಹೊನಲು ಅಂತೆಯೇ ಸಾಮಾಯಿಕವಾದ ಶಿವಯೋಗಿಗಳ ಬೆಡಗು ಆಧ್ಯಾತ್ಮಿಕ ತಿರುಳನ್ನು ತಿಳಿಸಿಕೊಡುವುದಾಗಿದೆ. ಪಿಂಡಜ್ಞಾನ ಸ್ಥಲದ ವಚನ ನೀರಜದೊಳಗೆ ಹುಟ್ಟಿದ ವಾರಿಧಿಯ ಕುಡಿವುದ ಕಂಡೆನಯ್ಯ(ವ.ಸಂ. 90) ಎಂಬ ವಚನವೇ ಪ್ರಥಮ ಬೆಡಗಿನ ವಚನವಾಗಿದೆ. ಪ್ರತಿಸ್ಥಲದಲ್ಲೂ ಆಯಾ ಸ್ಥಲಕ್ಕೆ ಉಚಿತವಾದ ರೀತಿಯಲ್ಲಿ ಬೆಡಗಿನ ವಚನಗಳು ಷಟ್‍ಸ್ಥಲ ಜ್ಞಾನಸಾರಾಮೃತದಲ್ಲಿವೆ.
ಕೆಲವು ಬೆಡಗಿನ ವಚನಗಳು ಅರ್ಥದ ಸುಳಿವು ನೀಡದೆ ಕ್ಲಿಷ್ಟಕರವಾಗಿ ತೋರಿದರೆ, ಮತ್ತೆ ಕೆಲವು ಬೆಡಗಿನ ವಚನಗಳಲ್ಲಿ ಅರ್ಥದ ಗೊತ್ತು ತೋರುವ ಸುಳಿವು ಸೂಚನೆಗಳು ಸಿಗುತ್ತವೆ.
ಷಟಸ್ಥಲ ಜ್ಞಾನಸಾರಮೃತದ ಕುರಿತು ಟೀಕಾ ಸಾಹಿತ್ಯ:    
ಷಟಸ್ಥಲಜ್ಞಾನ ಸಾರಾಮೃತ ವಚನಗಳ ಬಗೆಗೆ ಪ್ರಾಚೀನ ಮೂರು ಟೀಕೆಗಳು ಪ್ರಕಟಗೊಂಡಿವೆ. ಈ ಟೀಕಾಕಾರರಲ್ಲಿ  ಇಬ್ಬರು ಟೀಕಾಕಾರರ ಹೆಸರು ಲಭ್ಯವಿದ್ದು, ಉಳಿದ ಒಬ್ಬ ಟೀಕಾಕಾರರ ಅಜ್ಞಾತದೇವರು ಆಗಿದ್ದಾರೆ. ಆತನ ಸ್ವಂತಿಕೆಯ ವಿವರಗಳ ಬಗೆಗೆ ಆತನ ಟೀಕಾ ಕೃತಿಯಲ್ಲಾಗಲಿ ಅಥವಾ ಬೇರೆಡೆಯಲ್ಲಾಗಲಿ ಮಾಹಿತಿ ತಿಳಿದು ಬಂದಿಲ್ಲ.
1.     ಷಟಸ್ಥಲ ಜ್ಞಾನಿ ಸೋಮಶೇಖರ್ ಶಿವಯೋಗಿ ಕೃತ ತೋಂಟದ ಸಿದ್ಧಲಿಂಗೇಶ್ವರನ ಷಟಸ್ಥಲಜ್ಞಾನಸಾರಾಮೃತದ ಬೆಡಗಿನ ವಚನದ ಟೀಕೆ. ಈ ಕೃತಿಯನ್ನು ಬಿ.ವ್ಹಿ.ಶಿರೂರು ಅವರು ಸಂಪಾದಿಸಿದ್ದು ಗದುಗಿನ ವೀರಶೈವ ಅಧ್ಯಯನ ಸಂಸ್ಥೆಯು 1977ರಲ್ಲಿ ಪ್ರಕಟಿಸಿದೆ.
2.    ತೋಂಟದ ಸಿದ್ಧಲಿಂಗೇಶ್ವರರ ಷಟಸ್ಥಲ ಜ್ಞಾನ ಸಾರಾಮೃತ ವಚನ ಟೀಕೆ ಕೃತಿಯು ಸಿದ್ಧೇಶ್ವರರ ವಚನಗಳಿಗೆ ಬರೆದ ಟೀಕಾ ಸಾಹಿತ್ಯಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಟೀಕಾ ಕರ್ತೃ ಅಜ್ಞಾತ ಎಂದು ಭಾವಿಸಲಾಗಿತ್ತು. ಇತ್ತೀಚೆಗೆ ಎಸ್.ಶಿವಣ್ಣನವರು ಟೀಕಾಕಾರ ಹುಮನಬಾದ ನಿರಂಜನಸ್ವಾಮಿ ಎಂಬುದಾಗಿ ಗುರುತಿಸಿದ್ದಾರೆ. ಇವರ ಕಾಲ ಕ್ರಿ.ಶ.1800 ಎಂದು ತಿಳಿದುಬರುತ್ತದೆ. ಈ ಟೀಕಾ ಸಾಹಿತ್ಯದ ವೈಶಿಷ್ಟ್ಯ ಎಂದರೆ ತೋಂಟದ ಸಿದ್ಧೇಶ್ವರರ ಎಲ್ಲಾ ವಚನಗಳಿಗೂ ಟೀಕೆ ರಚಿತವಾಗಿರುವುದು ಈ ಕೃತಿಯನ್ನು ಸಾ.ಶಿ.ಮರುಳಯ್ಯ ಸಂಪಾದಿಸಿದ್ದು ಎಡೆಯೂರಿನಿಂದ ಪ್ರಕಟವಾಗಿದೆ.
3.     ಅಜ್ಞಾತ ಟೀಕಾಕಾರರ ಷಟಸ್ಥಲ ಜ್ಞಾನ ಸಾರಾಮೃತ ಟೀಕೆ ಈ ಟೀಕಾ ಕೃತಿಯಲ್ಲಿ ತೋಂಟದ ಸಿದ್ಧೇಶ್ವರರ 266 ವಚನಗಳಗೆ ಟೀಕೆ ರಚಿತವಾಗಿದೆ. ಈ ಕೃತಿಯನ್ನು ಎಸ್.ವಿದ್ಯಾಶಂಕರವರು ಸಂಪಾದಿಸಿ 1987 ರಲ್ಲಿ ಪ್ರಿಯದರ್ಶಿನಿ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ.
    ಒಟ್ಟಾರೆ ಸಿದ್ಧಲಿಂಗ ಯತಿಗಳು ಯಾವುದೇ ಗುಡ್ಡಗವಿಯಲ್ಲಿ ಕುಳಿತು ತಪಸ್ಸನ್ನಾಚರಿಸದೆ, ಮಠಕ್ಕೆ ಮಾತ್ರ ಸೀಮಿತವಾಗಿರದೆ, ಕರ್ನಾಟಕವನ್ನಷ್ಟೆ ಯಾತ್ರೆ ಮಾಡದೆ ಹೊರರಾಜ್ಯಗಳಲ್ಲಿಯೂ ಹೋಗಿ ಧರ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿದರು. ಒಂದು ವೇಳೆ ಹಾಗೆ ಮಾಡದಿದ್ದರೆ ಸಾಹಿತ್ಯ ಸಂಸ್ಕೃತಿ ಪುನರುಜ್ಜೀವಗೊಳ್ಳುತ್ತಿರಲಿಲ್ಲ. ಅದಕ್ಕೇನೆ ಅವರು  ಜನತೆಯ ಮಧ್ಯದಲ್ಲಿಯೆ ತಲೆಯೆತ್ತಿ ಈ ಪ್ರಯತ್ನದ ಹೊಣೆ ಹೊತ್ತು ಜನತೆಯ ಮಧ್ಯದಲ್ಲಿಯೇ ಅನುರಕ್ತವಾಗಿ ಹೋದ ಪುಣ್ಯಪುರುಷರು. ತೋಂಟದ ಸಿದ್ಧಲಿಂಗ ಶಿವಯೋಗಿಗಳಲ್ಲಿ ವೀರಶೈವ ಧರ್ಮ ಪುನಃ ಚೇತನಗೊಳಿಸಿದ ಗುಣಗಳು ಕಂಡುಬರುತ್ತವೆ. ಎಡೆಯೂರಿನ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಬ್ಬ ಜನಸಾಮಾನ್ಯನ ಮನೆಯ ಮನದ ಪೀಠದಲ್ಲಿ ಎಡೆ ಪಡೆದವರು. ಅನೇಕ ಶಾಖಾ ಮಠಗಳನ್ನು ಸ್ಥಾಪಿಸಿ ಶಿಷ್ಯ ಕೋಟಿಯನ್ನು ನೇಮಿಸಿದವರು. ಕೊನೆಗೆ ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾದಿ ಹೊಂದಿ ಅದನ್ನು ಜಾಗೃತ ಧರ್ಮ ಕ್ಷೇತ್ರವನ್ನಾಗಿ ಮಾಡಿದರು. ಮುಸ್ಲಿಂ ಅರಸುಗಳ ಆಡಳಿತ ಮತ್ತು ಧರ್ಮ ಭಾಷೆಗಳ ಪ್ರಭಾವ ದಟ್ಟವಾಗಿರುವಾಗಲೇ ವಚನ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿ ಮತ್ತು ವೀರಶೈವ ಧರ್ಮ ಇವುಗಳಿಗೆ ಶಕ್ತಿ ತುಂಬಿದವರು. ನಮ್ಮತನದ ಜ್ಯೋತಿಯನ್ನು ಬೆಳಗಿಸಿದವರು. ಗೋಸಲ ಪೀಠದ ಸ್ವಾಮಿಗಳಾಗಿಲ್ಲದೆ ಆ ಪೀಠ ಪರಂಪರೆಯನ್ನು ಉನ್ನತಿಗೇರಿಸಿದರು. ಗದಗ, ಡಂಬಳ, ಎಡೆಯೂರು ಮುಂತಾದ ಕಡೆ  ಶೂನ್ಯಪೀಠಗಳನ್ನು ಸ್ಥಾಪಿಸಿದವರು. ಪರವಾದಿಗಳನ್ನು ಗೆದ್ದು ಧರ್ಮ ಸ್ಥಾಪನೆ ಮಾಡಿದರು. ಮಹಾನಾಡ ಪ್ರಭುಗಳಿಗೆ ರಾಜಗುರುಗಳಾದರು. ತಮಿಳುನಾಡಿನ ಮತ್ತು ಕೇರಳದ ಪ್ರಭುಗಳ ಮೇಲೆ ಜನತೆಯ ಮೇಲೂ ದಟ್ಟ ಪ್ರಭಾವ ಹೊಂದಿದವರು ಆಗಿದ್ದಾರೆ. ಹಿಂದಿನ ಸಂಸ್ಕೃತಿಯ ಆಚಾರ-ವಿಚಾರದ ಜ್ಞಾನಕ್ಷಿತಿಜವನ್ನು ಅಂದಿನ ಜನಾಂಗಕ್ಕೆ ಸೀಮಿತಗೊಳಿಸದೇ ಮುಂದಿನ ಜನಾಂಗದವರಿಗೂ ನೀಡಿ ಹೋದರು.
      ಹನ್ನೆರಡನೇ ಶತಮಾನದ ನಂತರ ಹದಿನಾರನೇ ಶತಮಾನದ ಮಧ್ಯದ ಅವಧಿಯಲ್ಲಿ ವೀರಶೈವ  ಸಾಹಿತ್ಯ-ಸಂಸ್ಕೃತಿ ಚೇತನ ಶಕ್ತಿ ಕಮರಿ ಹೋಗಿದ್ದನ್ನು ಅದಕ್ಕೆ ಜೀವ ತೈಲವನ್ನೆರೆದು ಪುನಶ್ಚೇತನ ಶಕ್ತಿ ಕೊಟ್ಟ ಎಡೆಯೂರಿ ತೋಂಟದ ಸಿದ್ಧಲಿಂಗರ ಪ್ರಯತ್ನ ಅವಿಸ್ಮರಣೀಯವಾದುದು. ಅದು ಮುಂದಿನ ಜನಾಂಗದವರಿಗೂ ಇಂತಹ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳಸಿಕೊಂಡು ಹೋಗಲು ಸ್ಫೂರ್ತಿ ನೀಡಿದಂತಾಗಿದೆ.
ಗ್ರಂಥ ಋಣ

1. ಶಾಂತೇಶನ ತೋಂಟದ ಸಿದ್ಧೇಶ್ವರಪುರಾಣ  ಸಂ:ಬಿ.ನಂ.ಚಂದ್ರಯ್ಯ                                                ಪ್ರ.ಶರತ್ ಪ್ರಕಾಶನ,                                  ಮೈಸೂರು. 1971
2. ಯತಿ ಬಸವಲಿಂಗೇಶ ವಿರಚಿತ ತೋಂಟದ ಸಿದ್ಧೇಶ್ವರ ಸಾಂಗತ್ಯ  ಸಂ:ಎಸ್.ಶಿವಣ್ಣ,
3.   ವೀರಶೈವ ಅಧ್ಯಯನ ಸಂಸ್ಥೆ ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ. 1997                                  
4. ವಿರಕ್ತ ತೋಂಟದಾರ್ಯ ವಿರಚಿತ ಸಿದ್ಧೇಶ್ವರ ಪುರಾಣ     ಸಂ:ಮೈಲಹಳ್ಳಿ  ರೇವಣ್ಣ,
   ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಮೈಸೂರು ವಿ.ವಿ.ಮೈಸೂರು. 2001
5.    ತೋಂಟದ ಸಿದ್ಧಲಿಂಗ ಶಿವಯೊಗಿವಿರಚಿತ ಷಟಸ್ಥಲ ಜ್ಞಾನಸಾರಾಮೃತ ಸಂ:ಆರ್.ಸಿ.ಹಿರೇಮಠ,
       ವೀರಶೈವ ಅಧ್ಯಯನ ಸಂಸ್ಥೆ  ಶ್ರೀಜಗದ್ಗುರು ತೋಂಟದಾರ್ಯ   ಸಂಸ್ಥಾನ ಮಠ, ಗದಗ. 1999
6.  ಸುವ್ವಿಮಲ್ಲನ ತೋಂಟದ ಸಿದ್ಧೇಶ್ವರನ ಸಾಂಗತ್ಯ ಸಂ:ಎಂ.ಎಸ್.ಬಸವರಾಜಯ್ಯ,
       ಶಿವ ಧರ್ಮ ಗ್ರಂಥಮಾಲ ಗುರು ನಿವಾಸ, ತಿಪಟೂರು. 1995
7. ಹೇರಂಬ ಕವಿ ವಿರಚಿತ ಸಿದ್ಧಲಿಂಗೇಶ್ವರ            ಸಂ:ಎನ್. ಬಸವಾರಾಧ್ಯ
    ಸಾಂಗತ್ಯ ಪ್ರಕಾಶಕರು  ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ,    ಎಡೆಯೂರು. 1981
8. ಸಂಕೀರ್ಣ ವಚನ ಸಂಪುಟ-6 (ಸಂ:ಎಸ್.ಶಿವಣ್ಣ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 1993                                      
9. ಸಿ.ನಾಗಭೂಷಣ,     ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ   ಅಮೃತ ವರ್ಷಿಣಿ ಪ್ರಕಾಶನ, ನಂದಿ ಹಳ್ಳಿ. 1999
10. ಸಿ.ನಾಗಭೂಷಣ ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು  , ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2000
11. ಆರ್.ಸಿ.ಹಿರೇಮಠ, ಷಟ್‍ಸ್ಥಲ ಪ್ರಭೆ  :   ಪ್ರ:ಕ.ವಿ.ವಿ., ಧಾರವಾಡ. 1966

              

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...