ಗುರುವಾರ, ಡಿಸೆಂಬರ್ 28, 2017

ಅಪೂರ್ವ ನವ ವರ್ಣ-ಮಾತ್ರಾವೃತ್ತಗಳ ಅನ್ವೇಷಣಕಾರ ಛಂದೋನಿಜಗುಣಿ ಡಾ.ಸಿ.ನಾಗಭೂಷಣ

ಅಪೂರ್ವ ನವ ವರ್ಣ-ಮಾತ್ರಾವೃತ್ತಗಳ ಅನ್ವೇಷಣಕಾರ ಛಂದೋನಿಜಗುಣಿ                                                                            ಡಾ.ಸಿ.ನಾಗಭೂಷಣ
  ನಿಜಗುಣ ಶಿವಯೋಗಿಗಳ ಮಾನಸ ಪುತ್ರ ಎಂದೇ ಗುರುತಿಸಲ್ಪಡುವ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರು( ಪೂರ್ವಾಶ್ರಮದ ಹೆಸರು ಪಿ.ಬಸವಣ್ಣ)1933 ಜೂನ್ 15 ರಂದು  ಕೊಳ್ಳೆಗಾಲದ ಮುಳ್ಳೂರು ಗ್ರಾಮದ ಪರುವಪ್ಪ ಮತ್ತು ಪುಟ್ಟಮಲ್ಲಮ್ಮ ದಂಪತಿಗಳಿಗೆ ಕಿರಿಯ ಪುತ್ರರಾಗಿ ಜನಿಸಿದರು. ಇವರು ತಮ್ಮ ಸಾಂಸಾರಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ-ಅನುಭವಗಳ ನಂತರ 1981 ರಲ್ಲಿ ಸನ್ಯಾಸ ದೀಕ್ಷೆ  ಸ್ವೀಕರಿಸಿದರು. ನಿಜಗುಣರ ಕೃಪೆಯಾಗಿ ಅವರ ಷಟ್ ಶಾಸ್ತ್ರಗಳನ್ನು ಮನನಮಾಡಿಕೊಂಡು ಹಾನಗಲ್ಲ ಅಪ್ಪಗಳಿಗೆ ಬೋಧಿಸಿದರು. ಕುಮಾರಸ್ವಾಮಿಗಳವರು ಗುರುಗಳ ಅಪ್ಪಣೆಯಂತೆ ಸಮಾಜಸೇವೆಗೆ ತಮ್ಮನ್ನೇ ಅಪರ್ಪಿಸಿಕೊಂಡರು. ಸುಮಾರು ಎಂಟುದಶಕಗಳ ತರುವಾಯ ನಿಜಗುಣ ಕ್ಷೇತ್ರಕ್ಕೆ ಕಳೆ ತಂದವರು ಪಿ.ಬಸವಣ್ಣನವರು ವೃತ್ತಿಯಿಂದ ವಕೀಲರಾಗಿ, ಸಂಸಾರಿಯಾಗಿ ಸಂಸಾರದಿಂದ  ಸದ್ಗತಿಕಾಣಲು ಹಂಬಲಿಸಿ ಪೂರ್ವಾಶ್ರಮವನ್ನು ನಿರಸನಮಾಡಿ ನಿಜಗುಣರ ನಿಜದನುವನ್ನು ಹೊಂದಿಕೊಂಡರು.
ತಮ್ಮ ನೆಚ್ಚಿನ ನಿಜಗುಣ ಶಿವಯೋಗಿಗಳ ಸನ್ನಿಧಾನವಾದ ಶಂಭುಲಿಂಗನ ಬೆಟ್ಟವನ್ನು ತಮ್ಮ ಕಾಯಕ ಭೂಮಿಯಾಗಿರಿಸಿಕೊಂಡು ತಮ್ಮ ಇಷ್ಟಲಿಂಗಾನುಸಂಧಾನ, ತಪಃಸಾಧನೆಗಳ ಜೊತೆಗೆ ಜನಸೇವೆ ಮತ್ತು ಸಾಹಿತ್ಯ ಸೇವೆ ಮುಂದುವರೆಸಿಕೊಂಡು ಬರುತ್ತಿದ್ದಾರೆ ನಿಜಗುಣರ ಕಾರ್ಯಕ್ಷೇತ್ರವಾದ ಚಿಲುಕವಾಡಿಯಲ್ಲಿ ಅರ್ಥಾತ್ ಶಂಭುಲಿಂಗನ ಕ್ಷೇತ್ರದಲ್ಲಿ ಅದ್ಭುತಸಾಧನೆಗೈದರು. ಶ್ರೀನಿಜಗುಣಾನುಭವಮಂಟಪವನ್ನು ನಿಮರ್ಮಿಸುವದರೊಂದಿಗೆ ನಿಜಗುಣರ ಚಿರಂರತ ಸ್ಮಾರಕವೆಂಬಂತೆ ಕೈವಲ್ಯ ಕೌಸ್ತುಭವನ್ನು  ಹೊರತಂದರು. ಫೂಜ್ಯರು ಶ್ರೀ ಶಂಭಲಿಂಗನ ಕ್ಷೇತ್ರದಲ್ಲಿರುವ ಶ್ರೀಮನ್ನಿಜಗುಣರ ತಪೋಸ್ಧಾನವಾದ ಗವಿಯನ್ನು ಹಾಗೂ ಮುಪ್ಪಿನ ಷಡಕ್ಷರಿಗಳ ಗವಿಯನ್ನು ಜೀಣೋದ್ಧಾರೆ ಮಾಡಿ ಸಾಧಕರಿಗೆ ವಾಸಿಸಲು ಅನುವಾಗುವಂತೆ ವ್ಯವಸ್ಥೆಮಾಡಿದ್ದಾರೆ. ಜೊತೆಗೆ  ಬಸವಾದಿ ಪ್ರಮಥರ ದಾಸೋಹಪರಂಪರೆಯನ್ನು ಎತ್ತಿಹಿಡಿಯುವಂತೆ ಶ್ರೀಕ್ಷೇತ್ರದಲ್ಲಿರುವ ಭಿಕ್ಷದ ಮಠದಲ್ಲಿ ಸದಾಕಾಲ ದಾಸೋಹ ಏರ್ಪಡಿಸಿದ್ದಾರೆ. ಪ್ರತೀಪೌರ್ಣಿಮೆಗೆ ನಡೆಯುವ ಪೌರ್ಣಿಮೆಯ ಕಾರ್ಯಕ್ರಮಗಳನ್ನು  ಭಾಗದಲ್ಲಿ ನಡೆಯುವ ಸಮಕಾಲೀನಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಎದ್ದು ಕಾಣುವಂತಿವೆ. ಪೂಜ್ಯರ ಜೀವನಸಾಧನೆಯನ್ನು ಅವರು ಗೈದ ಮಹತ್ತರವಾದ ಶ್ರಮನಿಷ್ಠತೆಯನ್ನು ಅವರ ತಪಸ್ಸುಸಾಧನೆಯನ್ನು ಅವರು ಲಿಂಗಪೂಜಾನಿಷ್ಠಯನ್ನು ಸಾಹಿತ್ಯದ  ಸೃಷ್ಟಿಯ  ಸೃಜನಶೀಲತೆಯನ್ನು ಸಂಘಟನಾಕೌಶಲ್ಯವನ್ನು ಮಾತಿಗೆ ಮೀರಿದ ಅವರ ವ್ಯಕ್ತಿತ್ವ ಮತ್ತು  ಸಾಧನೆಯನ್ನು ಹೇಳಲು ಭಾಷೆಯ ಅಸಮರ್ಥವಾಗುತ್ತದೆ.
 ಪಿ.ಬಸವಣ್ಣನವರು ಕುಮಾರನಿಜಗುಣರಾಗಿ ಮರುಹುಟ್ಟು  ಪಡೆದ ಪ್ರಕ್ರಿಯೆಯೇ ಒಂದು ಪವಾಡ ಛಂದಸ್ಸಿನ ಅನಂತಸಾಧ್ಯತೆಗಳ ಅನ್ವೇಷಣೆ ಅವರ ಕುತೂಹಲದ  ಲೋಕವಾದರೆ ಆತ್ಮೋನ್ನತಿಯ ಎತ್ತರಬಿತ್ತರಗಳ ಅನೂಹ್ಯಸ್ಥಿತಿಗಳಲ್ಲಿ ನಿಸ್ತರಂಗಿತಮಸ್ಕರಾಗಿ ಬದುಕುವುದು ಅವರ ಮನೋಲೋಕದ ಮತ್ತೋಂದುಜಲು ಕಾವ್ಯಸೃಷ್ಟಿ ಅವರಿಗೆ ಕೇವಲ ಕಾಲಹರಣದ ರಂಜನೆಯ ಕ್ರಿಯೆಯಲ್ಲ: ಶಿವಪಥದ ಅನ್ವೇಷಣೆ ಬ್ರಹ್ಮಾನಂದಕ್ಕೆ  ಕೀಲಿಕೈ. ನಡುವೆ ಇಂತಹ  ಒಂದು  ಚೇತನ ಇರುವುದೇ ಪುಣ್ಯ ಪ್ರದವಾದದ್ದು.ಕನ್ನಡ, ಸಂಸ್ಕೃತ, ಇಂಗ್ಲೀಷ್ ಹಾಗೂ ತಮಿಳು ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಇವರು ಶಾಸ್ತ್ರ ವಿಷಯಗಳಲ್ಲಿ ಅದರಲ್ಲಿಯೂ ಛಂದಸ್ಸಿನ ವಿಷಯದಲ್ಲಿ ಆಳವಾದ ಅಧ್ಯಯನಮಾಡಿ ತಮ್ಮ  ಮಹೋನ್ನತ ಪ್ರತಿಭೆಯ ಮೂಲಕ ಇಲ್ಲಿಯವರೆಗೂ ಸಂಸ್ಕೃತ ಮತ್ತು ಕನ್ನಡದ ಪ್ರಾಚೀನ ಹಾಗೂ ಆರ್ವಾಚೀನ ಲಾಕ್ಷಣೀಕರಾರು ಕೈಗೊಳ್ಳದ ನೂತನ ಛಂದೋ ಆವಿಷ್ಕಾರಗಳನ್ನು ಆವಿಷ್ಕರಿಸಿ ಛಂಧೋವಾಙ್ಮಯ ಪ್ರಪಂಚದಲ್ಲಿ ಮಹಾನ್  ಸಾಧನೆಯನ್ನು ಮಾಡಿದ್ದಾರೆ.ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಕುವೆಂಪು, ಬೇಂದ್ರೆ, ಡಿ.ವಿ.ಜಿ. ವಿ.ಕೃ.ಗೋಕಾಕ್, ಪು.ತಿ. ಅವರೊಂದಿಗೆ ಗಾಢವಾದ ವಿದ್ವತ್ ಸಂಬಂಧವನ್ನು  ಪಡೆದಿದ್ದುದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಶ್ರೀ ಕುಮಾರನಿಜಗುಣರ ಇನ್ನೊಂದು ಮಹತ್ ಸಾಧನೆ ಎಂದರೆ .ಪೂ.ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳನ್ನು ಉತ್ತರಕರ್ನಾಟಕಭಾಗದಿಂದ  ಮೈಸೂರಿಗೆ ಕರೆತಂದು ಪರಿಚಯಸಿದುದು. ಇಲ್ಲಿಯ ಜಿಜ್ಞಾಸುಗಳಿಗೆ ಜ್ಞಾನಯೋಗಿಯ ಪ್ರವಚನಸುಧೆಯನ್ನು ಉಣಬಡಿಸಿದುದು. ಇಂತಹ  ಮಹಾಸೌಭಾಗ್ಯಕ್ಕಾಗಿ ಇಲ್ಲಿಯ ಜನತೆ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ ಎನಿಸುತ್ತದೆ.ಇದಕ್ಕೂ  ಮಿಗಿಲಾಗಿ ವಿಸ್ಮಯದ್ಯೋತಕವೋ ಎಂಬಂತೆ ನಿಜಗುಣರಿಗೆ  ಮತ್ತು ಮುಪ್ಪಿನಾರ್ಯರಿಗೆ ರಸಕಾವ್ಯ ಕನ್ನಿಕೆಯನ್ನು ಧಾರೆಯೆರದು ಕೊಟ್ಟಂತೆ ಶಂಭುಲಿಂಗನು ಕೃಪೆದೋರಿ  ಕುಮಾರನಿಜಗುಣರಿಗೆ ಕವಿತಾಸಾಮರ್ಥ್ಯವನ್ನು ಕೊಟ್ಟನು. ಕಾವ್ಯದೇವಿ ಒಲಿದು ಕೈಹಿಡಿದಳು. ಹಿಎಇದ ಲೆಕ್ಕಣಿಕೆಗೆ ಬಿಡುವಿಲ್ಲದಂತೆ ಲೆಕ್ಕಕ್ಕೆ ಸಿಗದಷ್ಟು ಛಂದೋವೃತ್ತಗಳನ್ನು ಲಕ್ಷಣ- ಲಕ್ಷ್ಯಗಳಿಂದ ಕೂಡಿ ಹೊರತರುತ್ತಾ ಸಾಮಾನ್ಯ ಓದುಗರನ್ನಷ್ಟೇ ಅಲ್ಲ. ಪಂಡಿತವರೇಣ್ಯರನ್ನೂ ಬೆರಗುಗೊಳಿಸುವಂತಹ ಪ್ರೌಢಕಾವ್ಯಗಳನ್ನು ರಚಿಸಿದರು. ಹಿಂದೆ ಕಾನೂನುಶಾಸ್ತ್ರದಲ್ಲಿ  ಬಲ್ಲಿದರೆನಿಸಿದ್ದವನು ಈಗ  ಕಾವ್ಯಶಾಸ್ತ್ರ , ಛಂದೋಶ್ಯಾಸ್ತ್ರಗಳಲ್ಲಿ ಕೋವಿದರೆನಿಸಿದುದು ಒಂದು ಸೋಜಿಗ!
 ಬೋಳು ಬಸವನ ಬೊಂತೆ,ಪಾರ್ವತಿ ಪ್ರಣಯ ಕಲಹ,ತ್ರಿಷಷ್ಠೀ ಪುರಾತನ ಸ್ತೋತ್ರ, ಶ್ರೀಶಿವಕುಮಾರ ಚರಿತಂ,ನಿರೀಕ್ಷೆ ಮುಂತಾದ ವಿದ್ವತಪ್ರೌಢಿಮೆಯುಳ್ಳ ಕೃತಿಗಳನ್ನು ರಚಿಸಿದ್ದಾರೆ. ನಾಗವರ್ಮನು  ಛಂದೋಂಬುಧಿ ಗ್ರಂಥವನ್ನು ರಚಿಸಿರುವನು ಮಹಾಕವಿಗಳ ತಮ್ಮ ವಸ್ತುವಿಗೆ  ಒಪ್ಪುವ ಛಂದಸ್ಸನ್ನು  ತಾವೇ ರೂಪಿಸಿಕೊಳ್ಳುವರು ಚಂಪೂ-ಷಟ್ಟದಿ-ರಗಳೆ-ಸಾಂಗತ್ಯ ಇವೆಲ್ಲ ಕವಿಗಳ ಮನಸ್ಸಿನಿಂದ ಲಯಬದ್ದವಾಗಿ ಪ್ರವಹಿಸಿ ಓದುಗರನ್ನು  ಮಂತ್ರಮುಗ್ಧಗೊಳಿಸುವವು. ಪೂಜ್ಯ ಕುವೆಂಪುರವರು  ರಾಮಾಯಣದರ್ಶನಕ್ಕೆ  ತಾವು  ಬಳಸಿದ  ಛಂದಸ್ಸುನ್ನು ಮಹಾಛಂದಸ್ಸು ಎಂದು ಕರೆದರು, ಪ್ರಮುಖಕವಿಗಳ ಬಳಸಿರುವ ಛಂದಸ್ಸು  ಹಲವಾರುಮಂದಿಗೆ ಮಹಾಛಂದಸ್ಸ್ಸೇ ಸರಿ! ಇವರು ಮಾತ್ರೆಗಳನ್ನು ಎಣಿಸಿ ಲೆಕ್ಕಾಚಾರವಾಗಿ  ಪದ್ಯಗಳನ್ನು ಕಟ್ಟಿಲ್ಲ. ಇವರ ಭಾವವೇ  ವಸ್ತುವಿನ್ಯಾಸವನ್ನು ಛಂದೋಬದ್ದವಾಗಿ ನಡೆಸಿದೆ.
      ದಿ.ಬಸವಣ್ಣನವರು ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು ಕ್ಲಿಷ್ಟವಾದ ವೃತ್ತಗಳನ್ನು ಇವರು ಲೀಲಾಜಾಲವಾಗಿ ರಚಿಸಿಬಿಡುವರು ಕೆಲವು ಖಂಡಕಾವ್ಯಗಳನ್ನು  ರಚಿಸಿ ತ್ರಿಕರಣಗಳನ್ನು ಹದಗೊಳಿಸಿಕೊಂಡಿರುವರು. ಪಿ.ಬಸವಣ್ಣನವರಲ್ಲಿ ನಾನು ಕಂಡ ನನಗೆ ಅಚ್ಚರಿಮೂಡಿಸಿದ ಸಂಗತಿ ಎಂದರೆ ಅವರ ಕವಿತಾಪ್ರೇಮ ಕಾವ್ಯಸಾಧನೆ ಛಂದೋಪರಿಣಿತ  ಇದು ಹೇಗೆ ಅವರಲ್ಲಿ ಬಂದಿತು ಎಂಬುದು ನನಗಿನ್ನೂ ರಹಸ್ಯದ ಸಂಗತಿಯೇ ಆಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಉನ್ನತವ್ಯಾಸಂಗಮಾಡಿ ವಿಶೇಷಸಂಶೊಧನೆಮಾಡಿದ ಅನೇಕಪ್ರಾಧ್ಯಾಪಕರಿಗೆ ವಿದ್ವಾಂಸರಿಗೆ ಸಿದ್ಧಸಲಾಗದ  ಛಂದಶ್ಯಾಸ್ತ್ರಪರಿಣಿತ ಇವರಲ್ಲಿರುವುದು ಕಾವ್ಯಕೃತಿಗಳು ಛಂದೋಪ್ರಯೋಗಗಳನ್ನು ಕುರಿತು ಕೃತಿಗಳು ಎಂದರೆ ತಪ್ಪಾಗದು.
      ೧೯೯೧ರಲ್ಲಿ ಪ್ರಕಟಗೊಂಡ ಶ್ರೀ ಶಿವಕುಮಾರಚರಿತಂ (೧೪೫ ಷಟ್ಟದಿಗಳಲ್ಲಿ ಶ್ರೀ ಶಿವಕುಮಾರಸ್ವಾಮಿಗಳನ್ನು ಕುರಿತು ಜೀವನಚರಿತ್ರೆ) ೧೯೯೫ರಲ್ಲಿ ಪ್ರಕಟಗೊಂಡ ವೃತ್ತವಿಲಾಸವೈಭವ  (೨೭೦ನವೋತ್ಪಾದ್ಯವೃತ್ತಗಳು ಲಕ್ಷ್ಯ-ಲಕ್ಷಣಗ್ರಂಥ) ೨೦೦೨ ರಲ್ಲಿ ಪ್ರಕಟವಾದ ಗಣಾಕ್ಷರವೃತ್ತಶತಕ (ವೃತ್ತನಾಮಗಳಲ್ಲಿಯೇ ಲಕ್ಷಣಗಳನ್ನೊಳಗೊಂಡ ೧೦೦ ವೃತ್ತಗಳ ಆವಿಷ್ಕರಣದ ಗ್ರಂಥ) ಛಂದೋಗ್ರಂಥಗಳು ಕನ್ನಡಸಾಹಿತ್ಯಕ್ಕೆ ಅಷ್ಟೇ ಅಲ್ಲ. ಭಾರತೀಯಛಂದೋಶಾಸ್ತ್ರಕ್ಕೆ ಅನುಪಮಕೊಡುಗೆಗಳಾಗಿವೆ. ಇವು ಸಂಸ್ಕೃತ-ಹಿಂದಿಗೆ ಅನುವಾದವಾಗಬೇಕಾದ ಅಗತ್ಯವಿದೆ.
      ಪಿ.ಬಸವಣ್ಣನವರು  ಕೇವಲ ಶುಷ್ಕಶಾಸ್ತ್ರಕಾರರಾದ ವಿದ್ವಾಸರಲ್ಲ ಸಹೃದಯಾನುಭವ ರಸಪೂರ್ಣಕವಿಗಳು ಸಂಪ್ರದಾಯಶೀಲಛಂದೋರಚನೆಗಳಲ್ಲಿ ಆಧುನಿಕತೆ ತರಲೆತ್ನಿಸುವ ಕವಿಗಳು ಧಾರ್ಮಿಕ ಪೌರಾಣಿಕಕಾವ್ಯವಸ್ತುಗಳಲ್ಲಿ ಒಲವಿರುವ ಕವಿಗಳು ಅವರ ಶಿವನ  ಪಂಚವಿಂಶತಿಲೀಲೆಗಳು (೧೯೭೦) ಪಾರ್ವತೀಪ್ರಣಯಕಲಹಂ (೧೯೭೧) ಅನುವಾದಗಳಲ್ಲಿ  ಧಾರ್ಮಿಕ ಪೌರಾಣಿಕ ಸಂಗತಿಗಳಿದ್ದರೆ ಭಿಕ್ಷ (೧೯೫೧) ದಲ್ಲಿ ಪ್ರೇಮ ಕಂಡರೆ  ಸಂಗಮೇಶ್ವರಶತಕದಲ್ಲಿ ನವೀನಾಂಶಗಳನ್ನು ಕಾಣುತ್ತೇವೆ. ಸರಳವಾಗಿ ವಿಶಿಷ್ಟವಚನಾಸಾಹಿತ್ಯವಾಗಿರುವ ಬಸವಣ್ಣನವರು ವಚನಗಳನ್ನು ಅದರಲ್ಲಿ ವಾರ್ಧಕಷಟ್ಟದಿಗಳಲ್ಲಿ  ಅನುವಾದಿಸಿದ್ದರಿಂದ ಗಮಕಿಗಳು ಹಾಡಲು ಅನುಕೂಲವಾಯಿತು. ಕೇವಲ ಮಲ್ಲಿಕಾರ್ಜುನಮನ್ಸೂರ ಬಸವರಾಜರಾಜಗುರು ಶೇಷಾದ್ರಿಗವಾಯಿತು. ಜಂಜಲದಿನ್ನಿ  ಹಾಡಿ ಪ್ರಸಿದ್ದಗೊಳಿಸಿ ಕೇವಲಶಾಸ್ತ್ರೀಯಸಂಗೀತಮಾಧ್ಯಮಕ್ಕೆ ಮೀಸಲಾದ ವಚನಗಳು ಹಾಡುಗಾರಿಕೆಯನ್ನು ಗಮಕವಲಯಕ್ಕೆ ತಂದ ಹಿರಿಮೆ ಪಿ.ಬಸವಣ್ಣನವರದು ನಮ್ಮ ಗಮಕಿಗಳು ಕಡೆ ವಿಶೇಷ ಗಮನವೀಯಬೇಕಾಗಿದೆ. ಇವರು ಕನ್ನಡಕಾವ್ಯಕ್ಕೆ ನೀಡಿದ  ಕೊಡುಗೆಗಳಲ್ಲಿ ಷಟ್ಟದಿ ವೃತ್ತಗಳು ರಚನೆಯ ಜತೆಗೆ ಚಿತ್ರಕವಿತ್ವವೂ ಸೇರಿದೆ ಮತ್ತು ನಿಜಗುಣರ ಪ್ರಭಾವದಿಂದ ಉತ್ತಮಕೀರ್ತನೆಗಳನ್ನೂ ರಚಿಸಬಲ್ಲರು ಎಂಬುದಕ್ಕೆ ಭಿಕ್ಷ ಕವನಸಂಕಲದಲ್ಲಿ ಸಾಕಷ್ಟು ನಿದರ್ಶನೆಗಳನ್ನು ಕಾಣಬಹುದು.ಬಸವಣ್ಣ ಅಂಕಿತವನ್ನು ಬಳಸಿದ್ದರೂ ಎಲ್ಲ ಕೀರ್ತನೆಗಳಲ್ಲೂ ಬಳಸಿಲ್ಲಿ ಪಲ್ಲವಿಗಳಿದ್ದರೂ ಅನುಪಲ್ಲವಿಗಳು ಕಾಣುವುದಿಲ್ಲ ಕೀರ್ತನೆಗಳಲ್ಲಿ ಪಿ,ಬಸವಣ್ಣನವರು ಕೇವಲ ಭಾವುಕಕವಿಗಳು ಕೀರ್ತನಕಾರರು ಅಷ್ಟೆ ಅಲ್ಲದೆ ಪಾಂಡಿತ್ಯದ  ಕವಿಗಳು ಹೌದು. ಅಕ್ಷರಮಾಲಿಕೆಯ ಶಬ್ದಸಂಪತ್ತು ಅಚ್ಚರಿಗೊಳಿಸುತ್ತದೆ. ಶಿವರಾತ್ರಿರಾಜೇಂದ್ರ ರಕ್ಷಿಸುಶ್ರೀ ಶಿವಕುಮಾರಸ್ವಾಮಿ ಅಷ್ಟಕಂಮೊದಲಾದ ಕವಿಯ ರಚನಾಚಾತುರ್ಯಕ್ಕೆ ನಿದರ್ಶನವಾಗಿದೆ. ನಿರೀಕ್ಷೆ ಕವನಸಂಕಲನ ಕವಿಯ ಪ್ರಾರಂಭದ ಹಂತಕ್ಕೆ ಸಾಕ್ಷಿ.
       ಇಂದು ನಿರ್ಲಕ್ಷಕ್ಕೆ ಒಳಗಾಗಿರುವ ಛಂದಸ್ಸು ಶಾಸ್ತ್ರ ವಿಷಯದಲ್ಲಿ ಇವರು ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಛಂದೋ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಯಾರು ಮಾಡಿರದ ನೂತನ ಛಂದೋವೃತ್ತಗಳನ್ನು ಆವಿಷ್ಕರಿಸಿ ಛಂದೋವಾಙ್ಮಯ ಕ್ಷೇತ್ರದಲ್ಲಿ ಅದ್ವಿತೀಯ ವಿದ್ವನ್ಮಣಿಗಳಾಗಿದ್ದರೂ ಇವರ ಈವಿದ್ವತ್ ಸಾಧನೆಯನ್ನು ಯಾರೂ ಗುರುತಿಸದಿರುವುದು ದುರಂತವೇ ಸರಿ. ಸ್ವತಃ ಕವಿಗಳಾದ ಕುಮಾರನಿಜಗುಣರು   ನೂತನ ಛಂದೋ ಆವಿಷ್ಕಾರ ಕೃತಿಗಳನ್ನು ಸಾಹಿತ್ಯಲೋಕಕ್ಕೆ  ಅರ್ಪಿಸುವ ಮೂಲಕ ಕನ್ನಡನಾಡಿನ ಸಾಹಿತ್ಯ ಸಾರಸ್ವತಖಜಾನೆಯನ್ನು ಇನ್ನಷ್ಟು ಮತ್ತಷ್ಟು ಸಮೃದ್ಧಗೊಳಿಸಿದ್ದಾರೆ ಮತ್ತು ಸಂಪದ್ಭರಿತಗೊಳಿಸಿದ್ದಾರೆ. ಹಳೆಗನ್ನಡ ಮತ್ತು ಛಂದಶ್ಯಾಸ್ತ್ರದ ಮೇಲೆ ಅವರಿಗಿರುವ ಪ್ರಭುತ್ವ ಅಪರಿಮಿತ ಮತ್ತು ಅನುಪಮಛಂದೋಸರಸ್ವತಿ ಸಂಪೂರ್ಣ ಅನುಗ್ರಹಕ್ಕೆ ಅವರು ಪಾತ್ರರಾಗಿದ್ದಾರೆ. ಛಂದೋಬದ್ಧತೆ ಅವರ ಕಾವ್ಯಗಳ ವೈಶಿಷ್ಟ್ಯ. ಸ್ವತಃ ಕವಿಗಳಷ್ಟೇ ಅಲ್ಲ ಛಂದಶ್ಯಾಸ್ತ್ರನಿಪುಣರು. ಅಗಣಿತಛಂದೋರೂಪಗಳನ್ನು ಸೃಷ್ಟಿಸಬಲ್ಲಂತಹ ಕೋವಿದರು.
     ವರ್ಣ ಛಂದಸ್ಸು ಸಂಸ್ಕೃತ ಛಂದೋ ಗ್ರಂಥಗಳಲ್ಲಿ ಪ್ರತಿಪಾದಕ್ಕೆ ಒಂದು ಅಕ್ಷರವುಳ್ಳ ಉಕ್ತಾ ಹೆಸರಿನ ವೃತ್ತದಿಂದ ತೊಡಗಿ ಇಪ್ಪತ್ತಾರು ಅಕ್ಷರಗಳಿರುವ ಉತ್ಕೃತಿಯವರೆಗೆ ಬೇರೆ ಬೇರೆ ಛಂದೋ ಹೆಸರುಗಳನ್ನು ಒಳಗೊಂಡಿದೆ. 1 ರಿಂದ 26 ಅಕ್ಷರಗಳನ್ನು ಹೊರತು ಪಡಿಸಿ 27 ರಿಂದ 54 ಅಕ್ಷರಗಳುಳ್ಳ ವೃತ್ತಗಳೂ ಇದ್ದು ದಂಡಕಗಳು ಎಂಬ ಹೆಸರಿನಿಂದ ಸೂಚಿಸಲ್ಪಟ್ಟಿವೆ. ಈ ದಂಡಕದಲ್ಲಿ ಪ್ರತಿಪಾದದಲ್ಲಿ ಇಪ್ಪತ್ತಾರಕ್ಕಿಂತ ಹೆಚ್ಚುಅಕ್ಷರಗಳಿರಬೇಕೆಂದಿದೆಯೇ ಹೊರತು ಗರಿಷ್ಟವಾಗಿ ಎಷ್ಟಿರಬೇಕೆಂದು ತಿಳಿದುಬಂದಿಲ್ಲ.
     ಈ ದಂಡಕ ಅಥವಾ ಮಾಲಾವೃತ್ತಗಳನ್ನು ಹೊರತುಪಡಿಸಿ 26ರ ವರೆಗಿನ ಅಕ್ಷರಗಳನ್ನು ಬೇರೆ ಬೇರೆ ಗಣವಿನ್ಯಾಸಕ್ಕನುಗುಣವಾಗಿ 134217726 ಸಮವೃತ್ತಗಳಾಗಿ ರಚಿಸಬಹುದು ಎಂಬುದು ಛಂದೋ ಲಾಕ್ಷಣಿಕರ ಅಭಿಪ್ರಾಯ. ಈ ಸಮವೃತ್ತಗಳು ಅಸಂಖ್ಯಾತ ಸಂಖ್ಯೆಯಲ್ಲಿದ್ದರೂ ಎಲ್ಲಾ ವೃತ್ತಗಳ ಲಕ್ಷಣ ಉದಾಹರಣೆಗಳನ್ನು ಯಾವ ಛಂದೋಗ್ರಂಥಗಳು ನಿರೂಪಿಸುವ ಗೋಜಿಗೆ ಹೋಗಿಲ್ಲ. ಅಲ್ಲಲ್ಲಿ ಸಂಸ್ಕೃತ ಕವಿಗಳು ಪ್ರಯತ್ನಪಟ್ಟರೂ ಸಾರ್ವತ್ರ್ರಿಕವಾಗಿಲ್ಲ.
     ಕನ್ನಡ ಸಾಹಿತ್ಯದಲ್ಲಿ ಈ ರೀತಿಯ ಸಮವೃತ್ತಗಳಲ್ಲಿ ಯಾವ ಯಾವ ವೃತ್ತಗಳು ಪ್ರಯೋಗಗೊಂಡಿವೆ ಎಂಬುದನ್ನು ಕನ್ನಡ ಕೈಪಿಡಿಯಲ್ಲಿ ಕಾಣಬಹುದಾಗಿದೆ. ಕೈಪಿಡಿಯಲ್ಲಿನ ವಿವರದ ಪ್ರಕಾರ ಪಾದವೊಂದಕ್ಕೆ ಎರಡಕ್ಷರಗಳಿರುವ ಗೇಯ ವೃತ್ತದಿಂದ ತೊಡಗಿ ಪಾದವೊಂದಕ್ಕೆ ಇಪ್ಪತ್ತಾರು ಅಕ್ಷರಗಳಿರುವ ಶಂಭುನಟನ ವೃತ್ತದವರೆಗಿನ ಲಕ್ಷಣಗಳನ್ನು, ಅವುಗಳಿಗೆ ಕನ್ನಡದ ಉದಾಹರಣೆಗಳನ್ನು ಕಾಣಬಹುದಾಗಿದೆ. ದಂಡಕ ಅಥವಾ ಮಾಲಾವೃತ್ತ ವರ್ಗಕ್ಕೆ ಸೇರುವ ಲಯಗ್ರಾಹಿ ವೃತ್ತ ಇದೆ. ಅರ್ಧ ಸಮವೃತ್ತಗಳಲ್ಲಿ ನಾಲ್ಕರ ಲಕ್ಷಣ, ಉದಾಹರಣೆಗಳಿವೆ. ಇವೆಲ್ಲವನ್ನು ಮನಗಂಡರೆ ಒಟ್ಟು ಎಪ್ಪತ್ತಕ್ಕಿಂತ ಹೆಚ್ಚಿನ ವೃತ್ತಗಳನ್ನು ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿಲ್ಲವೆಂದು ಕಾಣುತ್ತದೆ. ಆದರೆ ಮೊಟ್ಟ ಮೊದಲ ಬಾರಿಗೆ ಕುಮಾರ ನಿಜಗುಣರು ತಮ್ಮ ಕೃತಿಯಲ್ಲಿ ನೂತನ ವೃತ್ತಗಳನ್ನು ಪ್ರಯೋಗಿಸುವುದರ ಮೂಲಕ ಪೂರ್ವ ಸಂಸ್ಕೃತ ಕವಿಗಳ ದಾಖಲೆಗಳನ್ನು ಮುರಿಯುವುದರೊಂದಿಗೆ ಕನ್ನಡದಲ್ಲಿಯೂ ಸಾಧ್ಯ ಎಂಬುದನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದು ಎಂತಹವರಿಗೂ ದಿಗ್‍ಭ್ರಮೆ ಹುಟ್ಟಿಸುವ ಅಚ್ಚರಿ ಹುಟ್ಟಿಸುವ ಸಂಗತಿಯಾಗಿದೆ. ಕುಮಾರ ನಿಜಗುಣರು ನೂತನ ವೃತ್ತಗಳ ಪ್ರಯೋಗದಲ್ಲಿ ಕನ್ನಡ ಕೈಪಿಡಿಕಾರರ ವಿಧಾನ ಮಾರ್ಗವನ್ನೇ ಅನುಸರಿಸಿದ್ದಾರೆ. ಪ್ರಯೋಗಿಸಿದ ನೂತನ ವೃತ್ತಗಳಿಗೆ ಹೆಸರನ್ನು ಸೂಚಿಸುವಾಗ ಸಮಯಸ್ಪೂರ್ತಿಗೆ ತಕ್ಕಂತೆ ಭಾವಕ್ಕೆ ತೋರುವ ಹೆಸರನ್ನೇ ಸೂಚಿಸಿದ್ದಾರೆ. ಪ್ರತಿಯೊಂದು ವೃತ್ತವೂ ಯಾವ ಛಂದಸ್ಸಿನ ಎಷ್ಟನೇ ವೃತ್ತವೆಂಬುದನ್ನು ಉದ್ದಿಷ್ಟ ಪ್ರತ್ಯಯದ ಪ್ರಕಾರ ಲೆಕ್ಕ ಹಾಕಿ ತಾವು ಪ್ರಯೋಗಿಸಿದ ಎಲ್ಲಾ ನೂತನ ವೃತ್ತಗಳಿಗೂ ಕೊಟ್ಟಿದ್ದಾರೆ. ನಮ್ಮ ಪ್ರಾಚೀನ ಕವಿಗಳೇ ತಮ್ಮ ಚಂಪೂ ಕಾವ್ಯಗಳಲ್ಲಿ ಸಂಸ್ಕೃತದಿಂದ ಎರವಲು ಪಡೆದ ಅಕ್ಷರ ವೃತ್ತಗಳ (ಖ್ಯಾತ ಕರ್ನಾಟಕಗಳಂ ಹೊರತುಪಡಿಸಿ) ಛಂದೋವೈವಿಧ್ಯವನ್ನು ಕ್ವಚಿತ್ತಾಗಿ ಬಳಸಿರುವುದನ್ನು ಕಾಣಬಹುದು. ಅರ್ವಾಚೀನರಲ್ಲಿಯಂತೂ ಈ ವಿಷಯದ ಬಗೆಗೆ ‘ಇದು ನಮಗಲ್ಲ ಪಂಡಿತರಿಗೆ ಮಾತ್ರ’ ಎಂಬ ಪ್ರತ್ಯೇಕತಾಭಾವನೆ ಮತ್ತು ಅಸಡ್ಡೆಯನ್ನು ತೋರಿಸುವಂತಹ ಸಂದರ್ಭದಲ್ಲಿ ಕುಮಾರ ನಿಜಗುಣರು ಛಂದೋಲಾಕ್ಷಣಿಕರ ಮಾರ್ಗದಲ್ಲಿ ನಡೆದು ಹೊಸ ಬಗೆಯ ವೃತ್ತಗಳನ್ನು ಅರ್ವಾಚೀನ ಕಾಲದಲ್ಲಿಯೂ ಪ್ರಯೋಗಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರು ತೋರಿಸಿಕೊಟ್ಟಿರುವ ಈ ನೂತನ ಮಾರ್ಗದಲ್ಲಿ ಛಂದೋ ಆಸಕ್ತರು ಕಾವ್ಯ ಕೃಷಿ ನಡೆಸಿದರೆ ಈಗಿರುವ ಅಕ್ಷರ ಛಂದಸ್ಸಿನ ಚರಿತ್ರೆಯನ್ನು ಬದಲಾಯಿಸಬೇಕಾಗುತ್ತದೆ. ಅಂತಹ ಕಾರ್ಯ ತತ್ಪರ ವಿದ್ವತ್ ಮಣಿಗಳು ಇದ್ದಾರೆಯೇ ಎಂಬುದು ಯೋಚಿಸತಕ್ಕ ಮಾತಾಗಿದೆ. ಗಣಾಕ್ಷರವೃತ್ತಶತಕವು ಛಂದೋಸಕ್ತರಿಗೆ ಕುತೂಹಲಕಾರಿಯಾದ ವೃತ್ತಜಾತಿಗಳ ಹೊಸ ಲಕ್ಷಣ, ವೃತ್ತಗಳ ನೂತನ ಬಗೆಯ ಹೆಸರು, ನಿದರ್ಶನಗಳನ್ನು ಒಳಗೊಂಡಿದೆ. ಸಂಸ್ಕೃತದ ವರ್ಣ ವೃತ್ತಗಳಲ್ಲಿ ಅನಂತ ಸಂಖ್ಯೆಯ ಪ್ರಕಾರಗಳಿಗೆ ಅವಕಾಶವಿದ್ದರೂ ಮಹಾಕವಿಗಳು ಅವುಗಳ ಲಕ್ಷಣಗಳನ್ನು ನಿರೂಪಿಸುವಾಗ 26 ಅಕ್ಷರಗಳ ಸಂಖ್ಯೆಗೆ ತಮ್ಮ ಶಾಸ್ತ್ರವನ್ನು ಕಾವ್ಯತ್ವವನ್ನು ಸೀಮಿತಗೊಳಿಸಿದ್ದರು. ಉಳಿದ ಲಾಕ್ಷಣಿಕರಾರು ಈ ನಿಟ್ಟಿನಲ್ಲಿ ಅನಂತ ಸಂಖ್ಯೆಯ ವೃತ್ತಪ್ರಕಾರಗಳಿಗೆ ಲಕ್ಷ್ಯ ಹಾಗೂ ಲಕ್ಷಣವನ್ನು ಹೇಳುವ ಪ್ರಯತ್ನವನ್ನು ಮಾಡಲಿಲ್ಲ. ಹಾಗೆಯೇ ಹಳಗನ್ನಡ ಪ್ರಕಾರದಲ್ಲಿ ಕಾವ್ಯ ರಚಿಸಿರುವ ಚಂಪೂ ಕವಿಗಳು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರಲಿಲ್ಲ. ಆದರೆ ಈ ಪ್ರಯತ್ನದಲ್ಲಿ ಪ್ರಾಚೀನರಿಂದ ಹಿಡಿದು ಅರ್ವಾಚೀನರಲ್ಲಿ ಯಶಸ್ವಿ ಪ್ರಯೋಗ ನಡೆಸಿದವರು ಪೂಜ್ಯ ಶ್ರೀಕುಮಾರ ನಿಜಗುಣರು. ತಮ್ಮ ವೃತ್ತವಿಲಾಸ ವೈಭವ, ಗಣಾಕ್ಷರ ವೃತ್ತ ಶತಕ, ತ್ರಿಷಷ್ಠಿ ಪುರಾತನಸ್ತೋತ್ರ, ನಿಜಗುಣೀಯಂ ಮಹಾಕಾವ್ಯದ ಪೀಠಿಕಾ ಪ್ರಕರಣ ಇತ್ಯಾದಿ ಕೃತಿಗಳಲ್ಲಿ 26 ಅಕ್ಷರಗಳಲ್ಲೂ ಅವುಗಳ ಎಲ್ಲಾ ಬಗೆಗಳಲ್ಲಿಯೂ ಹೊಸ ಬಗೆಯ ವೃತ್ತಗಳನ್ನು ಯಾವ ರೀತಿ ಅವಿಷ್ಕರಿಸಬಹುದು ಎಂಬುದನ್ನು ಮತ್ತು 27 ಮತ್ತು 28 ನೇ ಅಕ್ಷರಗಳಲ್ಲೂ ಅವುಗಳ ಎಲ್ಲಾ ಪ್ರಕಾರಗಳಲ್ಲಿಯೂ ನೂತನ ವೃತ್ತಗಳ ಪ್ರಯೋಗವನ್ನು ಕನ್ನಡದಲ್ಲಿಯೇ ರಚಿಸಬಹುದು ಎಂಬುದನ್ನು ಪ್ರಪ್ರಥಮ ಬಾರಿಗೆ ನಿದರ್ಶನ ಸಹಿತವಾಗಿ ನಿರೂಪಿಸಿದ್ದಾರೆ. ಕುಮಾರ ನಿಜಗುಣರ ಈ ಪ್ರಯೋಗ ಇಡೀ ಕನ್ನಡ ಛಂದೋ ವಾಙ್ಮಯದಲ್ಲಿ ಅತ್ಯಂತ ಮಹತ್ತರತೆಯನ್ನು ಪಡೆದಿದ್ದು ವಿದ್ವನ್ಮಣಿಗಳಲ್ಲಿ ಅಚ್ಚರಿ ಹಾಗೂ ಕುತೂಹಲವನ್ನುಂಟು ಮಾಡಿದೆ.
ಗಣಾಕ್ಷರ ವೃತ್ತ ಶತಕವು ನೂರು ವೃತ್ತಗಳನ್ನು ಒಳಗೊಂಡಿದೆ. ಇಲ್ಲಿಯ ನೂರು ವೃತ್ತಗಳು ಎಲ್ಲವು ಹೊಸದಾಗಿವೆ. ಪೂರ್ವೋಕ್ತ ಪ್ರಾಚೀನ ಹಾಗೂ ಆಧುನಿಕ ಚಂಪೂಕಾವ್ಯಗಳೆರಡರಲ್ಲಿಯೂ ಹಿಂದೆಂದೂ ರಚನೆಗೊಳ್ಳದವುಗಳಾಗಿವೆ. ಪ್ರತಿಯೊಂದು ವೃತ್ತದ ಲಕ್ಷಣದ ಉಲ್ಲೇಖದೊಂದಿಗೆ ಅದಕ್ಕೊಪ್ಪುವ ಶೀರ್ಷಿಕೆಗಳನ್ನು ಒಳಗೊಂಡಿರುವುದು ವಿಶೇಷ.
     ನೂರು ವೃತ್ತಗಳು ನೂರು ವಿಷಯಗಳನ್ನು ಒಳಗೊಂಡಿವೆ. ಗತ ಕಾಲದ ವಿವರಗಳೊಂದಿಗೆ ಆಧುನಿಕ ಕಾಲದ ಸ್ಥಿತಿಗತಿಗಳ ವಿವರದ ವರ್ಣನೆಗಳಿಂದ ಕೂಡಿರುವುದು ಗಮನ ಸೆಳೆಯುವಂತಿದೆ.     ಗಣಾಕ್ಷರ ವೃತ್ತ ಶತಕವು ಪ್ರತಿಯೊಂದು ಪದ್ಯಗಳಲ್ಲಿಯೂ ಹೊಸ ಹೊಳಹನ್ನು ಹೊಂದಿದ್ದು ಲಕ್ಷಣ ಗರ್ಭಿತವಾದ ವೃತ್ತಕ್ಕೆ ಲಕ್ಷ್ಯವಾದ ಪದ್ಯವು ಅದರ ಹೆಸರೆಂಬ ಸೂತ್ರವನ್ನೇ ವಿಶದೀಕರಿಸಿ ವ್ಯಾಖ್ಯಾನಿಸುವ ಭಾಷ್ಯವಾಗಿ ವ್ಯಕ್ತಗೊಂಡಿರುವುದು ಅರ್ಥಗರ್ಭಿತವಾಗಿದೆ.       ಕುಮಾರ ನಿಜಗುಣರು ಶಾಸ್ತ್ರ ಗ್ರಂಥಗಳ ರಾಶಿಯನ್ನು ಕೆದಕಿ ಬೆದಕಿ ಛಂದೋವೃತ್ತಗಳನ್ನು ನಿರ್ಮಿಸಿದ ಪಂಡಿತ ಕವಿಗಳಲ್ಲ. ಅದು ತಾನಾಗಿಯೇ ಅವರಿಗೆ ಒಲಿದು ಅವರಿಗೆ ಸಿದ್ಧಿಸಿದೆ. ಛಂದೋ ವಾಙ್ಮಯದಲ್ಲಿ ಕೋಟಿಗಟ್ಟಲೇ ಛಂದಸ್ಸುಗಳು ಪ್ರಸ್ತಾರ ಕ್ರಮದಿಂದ ದೊರೆಯುತ್ತವೆಯಾದರೂ ಸಂಶೋಧಕರ ಪ್ರಕಾರ ಭಾರತೀಯ ಭಾಷೆಗಳಲ್ಲಿ ಇದುವರೆಗೂ ಕಂಡು ಬಂದಿರುವುದು ಸುಮಾರು ಏಳುನೂರು ವೃತ್ತಗಳಾಗಿವೆ. ಆದರೆ ಕುಮಾರ ನಿಜಗುಣ ರೊಬ್ಬರೇ ವರ್ಣಛಂದಸ್ಸಿನಲ್ಲಿ ಸುಮಾರು 700 ಅಧಿಕ ನೂತನ ಸೃಷ್ಟಿಯ ವೃತ್ತಗಳನ್ನು ರಚಿಸಿ ವರ್ಣವೃತ್ತಗಳ ಸಂಖ್ಯೆಯನ್ನು ಇಮ್ಮಡಿಗೊಳಿಸಿದ್ದಾರೆ.
ಛಂದಸ್ಸಿನ ಹೊಸ ದೃಷ್ಟಿಯು ಶಾಸ್ತ್ರ ವಾಹಿನಿಯ ಸುಭದ್ರ ತೀರಗಳ ನಡುವೆ ಸಂಯಮದಿಂದ ಹರಿಯುತ್ತ ಛಂದೋ ಸಾಧ್ಯತೆಗಳನ್ನು ವಾಸ್ತವವಾಗಿಸುತ್ತ ಸಾಹಿತ್ಯ ಚಮತ್ಕೃತಿಗಳ ದೊಂಬರಾಟ ಮಾತ್ರವಾಗದೆ ಜೀವನಾನುಭವಗಳ ರಸವನ್ನು ರೂಢಿಸುತ್ತಾ ಭೂತಭವಿಷ್ಯತ್ ವರ್ತಮಾನಗಳ ಛಂದೋಪ್ರಕಾರಗಳನ್ನು ಸಂಗಮಿಸುತ್ತ ಹರಿಯುತ್ತಿರುವುದನ್ನು ಇಲ್ಲಿ ಕಾಣಬಹುದು. ಹೊಸ ಛಂದಸ್ಸುಗಳಿಗೆ ಅದಕ್ಕೊಪ್ಪುವ ಭಾವಪೂರ್ಣವಾದ ಹೊಸ ಹೆಸರುಗಳು, ಕಟ್ಟುನಿಟ್ಟಿನ ಪರಿಪಾಲನೆ, ವರ್ಣನೆಯಲ್ಲಿ ವಿಷಯ ವೈವಿದ್ಯದ ವಸ್ತುವಿನ ಪರಿಚಯ, ಚಿತ್ರ ಬಂಧದ ಬಂಧುರ ನಿದರ್ಶನ ಆಧ್ಯಾತ್ಮಿಕ ಭಾವದಲ್ಲಿ ಲೋಕ ಜ್ಞಾನದ ಸಮರ್ಪಣೆ, ವೃತ್ತಗಳಲ್ಲಿ ಏಕಪ್ರಾಸ, ಬಹುಪ್ರಾಸ, ಅನುಪ್ರಾಸ, ಒಳಪ್ರಾಸಗಳ ಬಳಕೆ ಇತ್ಯಾದಿಗಳನ್ನು ಇಲ್ಲಿ ಗುರುತಿಸಬಹುದಾಗಿದೆ.
     ಗಣಾಕ್ಷರ ವೃತ್ತ ಶತಕದಲ್ಲಿ ನವನವೋನ್ಮೇಷವೂ ನವನವೋಲ್ಲೇಖವೂ ಆದ ಕವಿ ಪ್ರತಿಭೆ ಕೆಲಸಮಾಡಿದೆ. ಕಾವ್ಯಕ್ಕೆ ಕಾವ್ಯವಾಗಿ, ಶಾಸ್ತ್ರಕ್ಕೆ ಶಾಸ್ತ್ರವಾಗಿ ಶೋಭಿಸುವ ಈ ಕೃತಿ ಕಾವ್ಯ-ಶಾಸ್ತ್ರ, ಸಂಗೀತಗಳ ತ್ರಿವೇಣಿ ಸಂಗಮವಾಗಿದೆ. ವೈವಿಧ್ಯಮಯವಾದ ಪದ್ಯ ಜಾತಿಗಳ ಸಮ್ಮಿಲನವಾಗಿದೆ. ಕನ್ನಡ ಶಾಸ್ತ್ರ ವಾಙ್ಮಯದಲ್ಲಿ ಈ ಕೃತಿಯು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಛಂದಸ್ಸಿನ ವಿಷಯದಲ್ಲಿ ಕುಮಾರ ನಿಜಗುಣರಿಗಿರುವ ಪ್ರಭುತ್ವ ಹಾಗೂ ಸೃಜನಶೀಲತೆಯ ಸಮರ್ಥನೆಯನ್ನು ಈ ಕೃತಿಯು ಸಾಬೀತು ಪಡಿಸುತ್ತದೆ. ಪಾಂಡಿತ್ಯದ ಜೊತೆಗೆ ಪ್ರತಿಭೆಯು ಸೇರಿದೆ. ಛಂದೋ ವೈಚಿತ್ರ್ಯ ಹಾಗೂ ಕಾವ್ಯ ವಿಲಾಸಗಳು ಒಟ್ಟಿಗೆ ಇಲ್ಲಿ ಮೇಳೈಸಿವೆ. ಪ್ರಯೋಗಶೀಲರಾದ ಇವರು ಛಂದಸ್ಸಿನ ಶಿಸ್ತಿನೊಳಗೆ ಕಸರತ್ತು ಮಾಡಿ ವಿವಿಧ ನೂತನ ವೃತ್ತಗಳನ್ನು ರಚಿಸಿರುವ ಛಂದಸ್ಸಾಧಕರು.
     ಈ ಕೃತಿಯಲ್ಲಿಯ ಪ್ರಯೋಗಗಳು ಅಸಾಧ್ಯವೆನಿಸಿದ್ದನ್ನು ಸಾಧ್ಯ ಮಾಡಿ ತೋರಿರುವ, ಅವಜ್ಞೆಗೊಳಗಾದುದನ್ನು ಬೆಳಕಿಗೆ ತರುವ ಪ್ರಯತ್ನದ ಕುರುಹುಗಳಾಗಿವೆ. ವಿಫುಲವಾದ ಛಂದೋ ಪ್ರಯೋಗಗಳು ಹಾಗೂ ವೈವಿಧ್ಯಮಯದಿಂದಾಗಿ ಈ ಕೃತಿಗೆ ಕನ್ನಡ ಛಂದ: ಪ್ರಯೋಗ ಪ್ರಪಂಚದಲ್ಲಿ ಮಹತ್ತರವಾದ ಸ್ಥಾನ ಇದೆ. ವರ್ಣ ಛಂದಸ್ ಕ್ಷೇತ್ರದಲ್ಲಿ ಬಳಕೆಯಾಗದ ಬಂಧಗಳನ್ನು ಗುರುತಿಸಿ ಅವುಗಳಲ್ಲಿಯೇ ಏಕೆ ರಚಿಸಬಾರದು ಎಂದು ಪ್ರಯೋಗಶೀಲತೆಯ ಹಿನ್ನಲೆಯಲ್ಲಿ ರಚಿತವಾಗಿರುವ ಈ ನೂತನ ಪ್ರಯೋಗಗಳು ಪ್ರಯೋಗಶೀಲರಿಗೆ, ಆಸಕ್ತರಿಗೆ ಮಾರ್ಗದರ್ಶಕವಾಗಿವೆ. ಈ ಕೃತಿಗಳಲ್ಲಿಯ ಪ್ರಯೋಗಗಳು ಇದುವರೆವಿಗೂ ಯಾರು ಮಾಡದ, ಮಾಡಲಾಗದ ಅಸಾಧ್ಯವಾದುದನ್ನು ಸಾಧ್ಯಗೊಳಿಸಿರುವ ಕೀರ್ತಿಗೆ ಭಾಜನವಾಗಿವೆ.
     ಪ್ರಾಚೀನರು ಅವಗಣಿಸಿರುವ ಅನೇಕ ಛಂದೋಬಂಧಗಳಿಗೆ ಇಲ್ಲಿ ಎಡೆದೊರೆತಿದೆ. ಮುಂದಿನ ಕವಿಗಳಿಗೆ ಇದು ಮಾರ್ಗದರ್ಶಿಯಾಗಬಲ್ಲುದು. ಇವು ಹೊಸ ವೃತ್ತಗಳಾದರೂ ಪೂರ್ವೋಕ್ತವಾದ ಹಳೆಯ ವೃತ್ತಗಳಿಗಿಂತ ಅತ್ಯಂತ ಆಪ್ತವಾಗಿವೆ.
     ಒಟ್ಟಾರೆ ಗಣಾಕ್ಷರ ವೃತ್ತ ಶತಕವು ಛಂದೋಕ್ಷೇತ್ರದಲ್ಲಿ ನೂತನ ರೂಪಗಳಲ್ಲಿ ಕೃತಿ ರಚಿಸುವವರಿಗೆ, ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಿಕೊಳ್ಳುವವರಿಗೆ ಪ್ರೇರಣೆ-ಪ್ರಚೋದನೆಯನ್ನು ನೀಡುತ್ತದೆ. ಇಲ್ಲಿಯ ನೂತನಾವಿಷ್ಕರಣ ವೃತ್ತಗಳು ಛಂದೋ ಪ್ರಪಂಚದಲ್ಲಿ  ಅವರಿಗಿರುವ ಆಳವಾದ ಪಾಂಡಿತ್ಯ, ವ್ಯುತ್ಪತ್ತಿ ಕಾವ್ಯಪ್ರಜ್ಞೆ ಹಾಗೂ ಭಾಷಾ ಪ್ರೌಢಿಮೆಯ ಸಂಕೇತವಾಗಿದೆ. ಆಧುನಿಕ ಕಾಲದಲ್ಲಿ ‘ವರ್ಣ ಛಂದಸ್ಸಿನ ನೂತನ ಪ್ರಯೋಗಗಳ ಆವಿಷ್ಕಾರಿ’ ಎಂಬ ಹೆಗ್ಗಳಿಕೆಗೆ ಕುಮಾರ ನಿಜಗುಣರು ಪಾತ್ರರಾಗಿದ್ದಾರೆ. ಯಾರ ಹಂಗಿಲ್ಲದೆ ಕನ್ನಡ ಸಾಹಿತ್ಯಕ್ಕೆ ಬೆಳ್ಳಿ ಬಂಗಾರದ ಆಭರಣ ತೊಡೊಸೊದರು. ಗುರು-ಲಘು ಲಯ, ವಿನ್ಯಾಸದೊಳಗೆ ಸಿರಿಸೊಬಗ ಹೆಚ್ಚಿಸಿದರು. ಛಂದೋಲೋಕದೊಳು ಕಾವ್ಯವನ್ನು  ಅಂದಗೊಳಿಸಿದರು. ಕನ್ನಡ ಇತಿಹಾಸದಲ್ಲಿಯೇ ಯಾರೂ ಮಾಡದ ಸಾಧನೆ ಮಾಡಿ, ಹೊಸಹೆಜ್ಜೆ ಮೂಡಿಸಿದರು. ಕನ್ನಡ  ಕಾವ್ಯಪ್ರಪಂಚದಲ್ಲಿಯೇ ಒಟ್ಟು ಪ್ರಯೋಗಿಸಲ್ಪಟ್ಟ ಷಟ್ಟದಿಗಳು ಎಂಟು ಅವುಗಳಲ್ಲಿ ಎಲ್ಲ  ಕವಿಗಳು ಹೆಚ್ಚಾಗಿ ಶರ, ಕುಸುಮ ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕಷಟ್ಟದಿಗಳನ್ನೇ ಪ್ರಯೋಗಿಸಿದ್ದಾರೆ. ಕನ್ನಡಕಾವ್ಯರಂಗದಲ್ಲಿ ಇವೇ ಹೆಚ್ಚು ಪರಿಚಿತ ರಾಘವಾಂಕನು ಉದ್ದಂಡಷಟ್ಟದಿಯೊಂದನ್ನು ಕಂಡುಹಿಡಿದ  ಅನಂತರ ಪ್ರೌಢಷಟ್ಟದಿ ಇತ್ತೀಚೆಗೆ  ಜನ್ಮ ತಾಳಿತು.
      ಇಂದು ಕುಮಾರನಿಜಗುಣರೊಬ್ಬರೇ ೧೩೭ ಹೊಸಷಟ್ಟದಿಗಳನ್ನು ಸೃಷ್ಟಿಸಿ ಕಾವ್ಯದಲ್ಲಿ ಪ್ರಯೋಗಿಸಿ ಸಾಬೀತುಪಡಿಸಿದ್ದಾರೆ. ಇದು ಕನ್ನಡಕಾವ್ಯರಂಗದಲ್ಲಿಯೇ ದೊಡ್ಡದಾಖಲೆ ಅವರು ಬರೆದ ಶ್ರೀ ಶಿವಕುಮಾರಚರಿತಂ ಇದಕ್ಕೆ ಸಾಕ್ಷಿಯಾಗಿದೆ. ಕುಮಾರನಿಜಗುಣರ ಸಾಹಿತ್ಯಸೇವೆ ಅನುಪಮವಾದುದು ಅವರು ನಿರೀಕ್ಷೆ ಪಾರ್ವತೀಪ್ರಣಕಲಹಂ ಬೋಳುಬಸವನ ಬೊಂತೆ ತ್ರಿಪಷ್ಠಿಪುರಾತನ ಸ್ತೋತ್ರ  ಶ್ರೀ ಶಿವಕುಮಾರಚರಿತಂ ಮೊದಲಾದ ಕಾವ್ಯಗಳನ್ನು ರಚಿಸಿದ್ದಾರೆ. ಛಂದಃಶಾಸ್ತ್ರಕ್ಕೆ ಕುಮಾರನಿಜಗುಣರು ಅಪೂರ್ವಕಾಣಿಕೆಯನ್ನು ನೀಡಿದ್ದಾರೆ. ಅವರದು ಅಸಾಧ್ಯವೆನಿಸಿದ್ದನ್ನು ಸಾಧ್ಯಮಾಡಿತೋರಿಸುವ  ಅವಜ್ಞೆಗೊಳಗಾದುವನ್ನು ಬೆಳಕಿಗೆತರುವ ಸಾರ್ಥಕಪ್ರಯತ್ನ ಇವರ ಪ್ರಯತ್ನ ಕನ್ನಡಛಂದೋಲೋಕದಲ್ಲಿ ಸಾಗುವವರಿಗೆ ದಾರಿಗಂಬ, ಕೈದೀವಿಗೆ! ಅವರ  ಛಂದೋಪ್ರಯೋಗ ಅದ್ಭುತ ವಿದ್ವತ್ ಪ್ರಪಂಚದ ಅವರ ಪ್ರಯೋಗಶೀಲತೆಯನ್ನು ಕೊಂಡಾಡಿದೆ. ಛಂದಸ್ಸಿನ ಶಾಸ್ತ್ರಕಾರರು ನಿರ್ಣಯಿಸದೇ ಇರುವ ವೃತ್ತ ಷಟ್ಟದಿಗಳ ಸಾಧ್ಯತೆಯನ್ನು  ಪ್ರತಿಭಾಸಂಪನ್ನರೂ ಶಾಸ್ತ್ರಕೋವಿದರೂ ಅದ ಕುಮಾರನಿಜಗುಣರು ಕಂಡುಕೊಂಡರು. ತಮ್ಮ ಕೃತಿಗಳ ಮೂಲಕ ಅದನ್ನು ಲಕ್ಷ್ಯ-ಲಕ್ಷಣಸಮನ್ವಿತವಾಗಿ ತೋರಿದರು. ಹೀಗಾಗಿ ಅವರ ಕೃತಿಗಳೆಂದರೆ ಪ್ರತಿಭೆ ಮತ್ತು ವಿದ್ವತ್ತುಗಳ ಅಪೂರ್ವಸಂಗಮ ಯಾವುದೇ ಭಾರತೀಯಭಾಷೆಗಳಲ್ಲಿ ಇದುವರೆಗೆ ಕಂಡು ಬರುವುದು ಸುಮಾರು ೭೦೦ ವೃತ್ತಗಳು ಕುಮಾರನಿಜಗುಣರೊಬ್ಬರೇ ೬೦೦ಕ್ಕೂ ಹೆಚ್ಚು ಹೊಸವೃತ್ತಗಳುನ್ನುಸೇರಿಸಿದ್ದಾರೆ. ಇಲ್ಲಿವರೆಗೆ ಯಾರೂ ಊಹಿಸಿದ ೧೩೬ ಷಟ್ಟದಿ ಪ್ರಕಾರಗಳನ್ನು ಅವರು ಸೃಷ್ಟಿಸಿದ್ದಾರೆ. ಶ್ರೀ ಶಿವಕುಮಾರಚರಿತಂ ಕೃತಿಯಲ್ಲಿ ಅವರು ನೂರಾರು ಹೊಸಹೊಸಷಟ್ಟದಿಪದ್ಯಗಳನ್ನು ರಚಿಸಿದ್ದಾರೆ. ಈಗ ಅವರುನಿಜಗುಣೀಯಂಎಂಬ ಮಹಾಕಾವ್ಯವನ್ನು ರಚಿಸುತ್ತಿದ್ದು ಹೊಸಹೊಸ ಛಂದಸ್ಸಿನ ಪದ್ಯಗಳು ಜಗತ್ತಿನ ಯಾವುದೇ ಭಾಷೆಯ ಗ್ರಂಥಗಳಲ್ಲಿ ಇಲ್ಲವೆಂಬ ಹೆಗ್ಗಳಿಕೆಗೆ ಅದಕ್ಕೆ ಪ್ರಾಪ್ತವಾಗಿದೆ. ಅವರ ಛಂದೋವಿಲಾಸವೈಭವ ಕೃತಿ ಪವಾಡಸದೃಶವಾದ ವಿದ್ವತ್ ಸಾಹಸ ಎಂಬ ಹಿರಿಮೆ ಪಡೆದಿದೆ.

      ಇಷ್ಟೆ ಅಲ್ಲ ೧೫೦೦ ವರ್ಷಗಳ ಇತಿಹಾಸದ  ಹೊಂದಿರುವ ಭಾರತೀಯಭಾಷೆಗಳಲ್ಲಿ ಎಲ್ಲ  ಕವಿಗಳು ಸೇರಿ ಒಟ್ಟು ೭೦೬ ಅಕ್ಷರವೃತ್ತಗಳನ್ನು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ. ಆದರೆ ಇಂದು ಕುಮಾರನಿಜಗುಣರೊಬ್ಬರೇ ಏಕಾಂಗಿಯಾಗಿ ಅಕ್ಷರಗಣಗಳ ೬೫೭ ಹೊಸ  ಪದ್ಯಜಾತಿಗಳನ್ನು (ವೃತ್ತಗಳನ್ನು) ಸೃಷ್ಟಿಸಿ ಮತ್ತೊಂದು ದಾಖಲೆ ಮಾಡಿದ್ದಾರೆ. ಎಂದೂ ಯಾರೂ ಮಾಡದ ಸಾಧನೆಯನನ್ಉ ಕುಮಾರನಿಜಗುಣರು ತಮ್ಮ ಕಣ್ಣುಂದೆಯೆ ಮಾಡಿದ್ದಾರೆ! ಇದು ನಿಗೂಢಶಕ್ತಿಯ ಆಟ.
      ಇವರ ಕಾವ್ಯ ಸೃಷ್ಟಿ ಓದಿಕಲಿತದ್ದಲ್ಲ, ಕಲಿತುಬಂದ್ದಲ್ಲ ತಲೆಯೊಳಗೆ ಇಳಿದು  ಬಂದದ್ದು ವಿಚಾರದಂಗಳದಲ್ಲಿ ಊರ್ಜಿತಗೊಂಡದ್ದು ನಾದತರಂಗದಲ್ಲಿ ತೇಲಿಬಂದದ್ದು. ಇಂದು ನಿಜಗುಣಿಯಂ ಮಹಾಕಾವ್ಯದ ರಚನೆಗೆ ತೊಡಗಿದ್ದಾರೆ. ಇಂಥ ಅದ್ವಿತೀಯಕವಿಪುಂಗವ ಕಣ್ಮುಂದೆ ಸುಳಿದಾಗ ಕಾಡುವ ಪ್ರಶ್ನೆಗಳು ಹಲವು:
). ಭಾಷಾವಿದ್ವಾಂಸರನ್ನೇ ಬೆರಗುಗೊಳಿಸುವ ಇವರ ಕಾವ್ಯಗಳು ಪದವಿಗೆ ಏಕ ಪಠ್ಯವಾಗಿಲ್ಲ?
). ನೂರಾರು ಪುಸ್ತಕಗಳನ್ನು ಕೆದರಿ ೧೦೦ ಪುಟ ಬರೆದದ್ದಕ್ಕೆ ಪಿಎಚ್.ಡಿ ಪದವಿ ಕೊಡುವ
    ವಿಶ್ವವಿದ್ಯಾಲಯಗಳಿಗೆ ಇವರ ಸಾಧನೆ ಏಕೆ ಕಂಡಿಲ್ಲ?
). ರನ್ನ, ಪಂಪ, ರಾಘವಾಂಕನ, ಲೋಕನಿರ್ಮಿಸಿದ, ಕನ್ನಡಭಾಷೆಯನ್ನೇ ಶ್ರೀಮಂತಗೊಳಿಸಿದ
    ಕವಿಯನ್ನು ಕರ್ನಾಟಕಸರ್ಕಾರ ಏಕೆ ಗುರುತಿಸಿಲ್ಲ?
). ಭಾರತೀಯಕಾವ್ಯ ಲೋಕದಲ್ಲಿ ಏಕಾಂಗಿಯಾಗಿ ದಾಖಲೆಮಾಡಿದ ನವ್ಯ ಷಟ್ಟದೀ ಜನಕನಿಗೆ
     ಪ್ರಶಸ್ತಿಗಳೇಕೆ ಇಲ್ಲ?
   ಒಟ್ಟಿನಲ್ಲಿ ವಕೀಲವೃತ್ತಿಯಲ್ಲಿಯೇ ಕೊನೆಯತನಸ ಮುಂದುವರಿದಿದ್ದ ಪಕ್ಷದಲ್ಲಿ ಮುಂದಿನ  ದಿನಮಾನಗಳಲ್ಲಿ ಲೋಕದ ದೃಷ್ಟಿಯಿಂದ ಮರೆಯಾಗಲಿದ್ದ ಅವರು ಕುಮಾರನಿಜಗುಣರಾಗಿ ಸಾಹಿತ್ಯಸೃಷ್ಟಿಯ ಕಡೆಗೆ-ಅದರಲ್ಲಿಯೂ ಅಸಂಖ್ಯಸಂಖ್ಯೆಯ ನೂತನಛಂದೋಬಂಧಗಳ ಹೊಸಹೊಸ ಅವಿಷ್ಕಾರಗಳ ಕೃತಿರಚನೆಗಳಲ್ಲಿ ತೊಡಗಿದುದರಿಂದ ಕನ್ನಡಕಾವ್ಯಲೋಕದಲ್ಲಿ ಅಜರಾಮರಕೀರ್ತಿಗೆ ಪಾತ್ರರಾಗಿ ಸಾಂಸ್ಕೃತಿಕ ಇತಿಹಾಸದಲ್ಲಿ ಚಿರಂಜೀವಿಯಾಗಿ ಉಳಿಯಲಿದ್ದಾರೆಂಬುದು ಅಭಿನಂದನೀಯಸಂಗತಿ.  ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಕಂಡು ಬರುತ್ತಿರುವ  ಸೋಜಿಗದ ಸಂಗತಿಯಾದ ಕುಮಾರಪರಂಪರೆಯಲ್ಲಿ ಅಂದರೆ  ವ್ಯಾಸ-ಕುಮಾರವ್ಯಾಸ, ವಾಲ್ಮೀಕಿ-ಕುಮಾರವಾಲ್ಮೀಕಿ, ಪದ್ಮರಸ-ಕುಮಾರಪದ್ಮರಸ, ಇದ್ದಂತೆ ನಿಜಗುಣ ಕುಮಾರ ನಿಜಗುಣರ ಪರಂಪರೆ ಮಹತ್ತರತೆಯನ್ನು ಪಡೆದಿದೆ. ಕುಮಾರನಿಜಗುಣರು ಭಾರತೀಯಭಾಷಾ ಇತಿಹಾಸದಲ್ಲಿಯೇ ಹೊಸದಾಖಲೆ ಸೃಷ್ಟಿಸಿ ವಿದ್ವಾಂಸರೆಲ್ಲ ಬೆರಗಾಗುವಂತೆ ಮಾಡಿದ್ದಾರೆ. ಕಲಿಯುವವರಿಗೆಲ್ಲಾ ಚೈತನ್ಯದ ಹಾದಿಯನ್ನು ನಿರ್ಮಿಸಿದ್ದಾರೆ. ಮಧ್ಯವಯಸ್ಸಿನ ಬಾಳಿನ ಸೆಳೆತದ ಸಂಸಾರವನ್ನು ಕಡೆಗಣಿಸಿ ವಿರಕ್ತಿಯಿಂದ ಶಂಭುಲಿಂಗನ ಬೆಟ್ಟದ ಗವಿಯೊಳಗೆ ಬರಹವೆಂಬ ತಪಸ್ಸನ್ನಾಚರಿಸಿ ಶಿವಶರಣರ ಸಂದೇಶವನ್ನು ಲೋಕದ ಜನಗಳ  ಮಡಿಲಿಗೆ ಹಾಕುವ ಜ್ಞಾನಿಯಾಗಿ ನಿಜವಾದ ಅರ್ಥದಲ್ಲಿ ನಿಜಗುಣಶಿವಯೋಗಿಗಳ ಕುಮಾರರಾದರು.







  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...