ಬುಧವಾರ, ಮೇ 19, 2021

 

                                                          

                                    


 

ಡಾ.ಸಿ.ನಾಗಭೂಷಣ

ಪ್ರಾಧ್ಯಾಪಕರು

ಕನ್ನಡ ಅಧ್ಯಯನ ಕೇಂದ್ರ

ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು 560056

ದೂರವಾಣಿ: 080-23157900

ಮೊಬೈಲ್: 94480 07630, 84950 60401

        7022229110,  94828 37500

 

email:nagabhushana.c@gmail.com

                  nagabhushana.c@hotmail.co.in

 

                             Blog:kannadasahityasamscrutiasmite.blogspot.com

 

ವಚನಕಾರರ ಕಾವ್ಯ ಸೌಂದರ್ಯ ದೃಷ್ಟಿ. ಡಾ.ಸಿ.ನಾಗಭೂಷಣ

 

ವಚನಕಾರರ ಕಾವ್ಯ ಸೌಂದರ್ಯ ದೃಷ್ಟಿ

ಡಾ.ಸಿ. ನಾಗಭೂಷಣ

 ವಚನ ಸಾಹಿತ್ಯದ ಸ್ವರೂಪದ ಬಗೆಗೆ ಇಪ್ಪತ್ತನೇ ಶತಮಾನದಲ್ಲಿ ವ್ಯಾಪಕ ಮಟ್ಟದಲ್ಲಿ ಚರ್ಚೆ ನಡೆದಿದೆ. ವಚನಗಳು ಗದ್ಯವೆಂದೂ, ಪದ್ಯದ ಮಾದರಿ ಎಂದೂ, ಗದ್ಯ-ಪದ್ಯ ಮಿಶ್ರಿತವಾದವುಗಳು ಎಂಬು ವಿಭಿನ್ನ ನಿಲುವುಗಳು ವ್ಯಕ್ತಗೊಂಡಿವೆ. ವಚನಗಳಲ್ಲಿ ಕಂಡು ಬರುವ ಲಯ ಬದ್ಧತೆಯಿಂದಾಗಿಯೇ ವಚನಗಳನ್ನು ಹಾಡುಗಳೆಂದು ಕರೆಯಬಹುದು ಎಂಬ ಅನಿಸಿಕೆಯು ವ್ಯಕ್ತಗೊಂಡಿದೆ. ವಚನಕಾರರ ಮನಸ್ಸಿನ ತೀವ್ರಾನುಭವದ ಅಭಿವ್ಯಕ್ತಿಯ ಸೃಷ್ಟಿಯಾದ ವಚನಗಳು ಒಂದು ರೀತಿಯಲ್ಲಿ ಕಾವ್ಯವೇ ಆಗಿವೆ. ಆಧುನಿಕ ಕಾಲದಲ್ಲಿ ಮಿಮರ್ಶಕರು ವಚನಗಳನ್ನು ಕಾವ್ಯದ ಮಾನದಂಡಗಳಿಂದಲೇ ವಿಶ್ಲೇಷಿಸುವ ವಿಮರ್ಶಿಸುವ ದೃಷ್ಟಿಕೋನವನ್ನು ತಾಳಿದವರಾಗಿದ್ದಾರೆ. ವಚನಗಳನ್ನು ಶಿಲ್ಪ ಮತ್ತು ಸೌಂದರ್ಯದ ನೆಲೆಗಟ್ಟಿನಿಂದ ನೋಡ ಬಯಸಿದ್ದಾರೆ. ವಚನಕಾರರು ಕಾವ್ಯ ಸೃಷ್ಟಿಯ ಬಗೆಗೆ ನೇರವಾಗಿ ಹೇಳಿರದಿದ್ದರೂ ಅವರ ವಚನಗಳಲ್ಲಿ ವ್ಯಕ್ತವಾಗಿರುವ ಕಾವ್ಯ ಸೃಷ್ಟಿಗೆ ಸಂಬಂಧಿಸಿದ ವಚನಗಳು ಬಹುಮಟ್ಟಿಗೆ ಸಾಂಸ್ಕೃತಿಕವಾಗ ಅರ್ಥವಿಸ್ತಾರಕ್ಕೆ ಬದ್ಧವಾಗಿದ್ದರೂ ಕೆಲವೆಡೆ ಸಾಹಿತ್ಯಕ ಮೀಮಾಂಸೆಯಿಂದ ಕೂಡಿರುವುದನ್ನು ಗುರುತಿಸಿಬಹುದಾಗಿದೆ.

   ವಚನ ಸಾಹಿತ್ಯದಲ್ಲಿ ಪೂರ್ವದ ಕಾವ್ಯಗಳ ಪುರಾಣ ವಸ್ತುವಾಗಲೀ, ಅಷ್ಟಾದಶ ವರ್ಣನೆಗಳಾಗಲೀ ನಿಸರ್ಗ ಚಿತ್ರಗಳಾಗಲೀ ಕಂಡುಬರದೇ ಇದ್ದರೂ ವಚನಗಳಲ್ಲಿ ಅಲ್ಲಲ್ಲಿ ಶ್ರೇಷ್ಠ ಕಾವ್ಯದ ಗುಣಗಳಿರುವುದನ್ನು ವಿಮರ್ಶಕರು ಹಾಗೂ ಸಂಶೋಧಕರೂ ಒಪ್ಪುತ್ತಾರೆ. ವೀರಶೈವ ಮತಧರ್ಮದ ನೆಲೆಗಟ್ಟಿನಿಂದ ನೋಡುವವರಿಗೆ ಸಿದ್ಧಾಂತ ನೆಲೆಯಲ್ಲಿ ಪರಿಭಾವಿಸುವವರಿಗೆ ವಚನಗಳು ಶಾಸ್ತ್ರದೋಪಾದಿಯಲ್ಲಿ ತೋರಿದರೂ ಸಾಹಿತ್ಯಮೀಮಾಂಸೆಯ ದೃಷ್ಟಿಯಿಂದ ನೋಡುವವರಿಗೂ ವಚನಗಳು ಕಾವ್ಯದ ರೀತಿಯಲ್ಲಿ ಕಂಡುಬರುತ್ತವೆ.

   ಸೌಂದರ್ಯ ಪದವನ್ನು ಲೋಕಸಂಬಂಧಿ ಅರ್ಥ ಹಾಗೂ ಕಲಾ ಸಂಬಂಧಿ ಅರ್ಥಗಳೆರಡರಲ್ಲಿಯೂ ಪ್ರಾಚೀನ ಕಾಲದಿಂದಲೂ ಬಳಸಲಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಸೌಂದರ್ಯ ಈ ಸಾಮಾನ್ಯ ಪದವನ್ನು ಕಾವ್ಯ ಮೀಮಾಂಸೆಯ ಪರಿಭಾಷೆಯಲ್ಲಿ ಅಲಂಕಾರ ಎಂದೇ ಬಳಸಲಾಗಿದೆ.

 ಕಲೆ ಎನ್ನುವುದು ಸೌಂದರ್ಯವನ್ನು ಸೆರೆಗೈಯುವ ಒಂದು ವಿಶೇಷ ಕ್ರಿಯೆ. ಕಲಾವಿದ ತನ್ನ ಪ್ರತಿಭೆಯಿಂದ ಹೊರಜಗತ್ತನ್ನು ಗ್ರಹಿಸಿ ಒಂದು ವಿಶಿಷ್ಟವಾದ ಕಲಾ ಜಗತ್ತನ್ನು ಸೃಜಿಸುತ್ತಾನೆ. ಈ ಹಿನ್ನೆಲೆಯಲ್ಲಿ ಸೌಂದರ್ಯ ಎನ್ನುವುದು ಪ್ರತಿಭಾಸೃಷ್ಟಿ ಎಂದು ಗುರುತಿಸಹುದಾಗಿದೆ. ಜೊತೆಗೆ ಸೌಂದರ್ಯ ಎನ್ನುವುದು ಅಭಿವ್ಯಕ್ತಿಯೂ ಹೌದು. ಸೌಂದರ್ಯಕ್ಕೆ ಸಂಬಂಧಿಸಿದಂತೆ ಕವಿಯ ಮನಸ್ಸಿನ ಪ್ರತಿಭಾ ವ್ಯಾಪಾರವು ಸುಂದರವಾದ ವಸ್ತುವನ್ನು ಕುರಿತ ಕಲಾವಿದನ ಅಂತರಂಗದಲ್ಲಿ ಆಗುವ ಮೂಡಿಕೆಗಳು. ಮನಸ್ಸಿನಲ್ಲಿ ಆಗುವ ರಸವ್ಯಾಪಾರ ಅಥವಾ ಅಭಿವ್ಯಕ್ತಿಯನ್ನು ಒಳಗೊಂಡಿರುತ್ತದೆ. ಕಾವ್ಯದಲ್ಲಿ ಸೌಂದರ್ಯ ಎಂದರೇನು ಎಂಬ ಪ್ರಶ್ನೆಗೆ ಅಲಂಕಾರ ಎಂಬ ಉತ್ತರದಿಂದ ಪ್ರಾರಂಭವಾಗಿ ಅಲಂಕಾರ ಎಂಬ ಉತ್ತರದವರೆಗೂ ಇಂದು ಚರ್ಚೆ ಬೆಳೆದು ತನ್ನ ನಿಲುಗಡೆಯನ್ನು ಕಂಡುಕೊಂಡಿದೆ. ಅಲಂಕಾರ   ಮತ್ತು ರಸ ಈ ಎರಡು ಕಾವ್ಯ ಸೌಂದರ್ಯವನ್ನು ಸೂಚಿಸುವ ಪ್ರಾಚೀನ ಪದಗಳಾಗಿವೆ.

   ಭಾರತೀಯ ಅಲಂಕಾರಿಕರಲ್ಲಿ ರಸವು ಕಾವ್ಯದಲ್ಲಿಯ ನಿಜವಾದ ಸೌಂದರ್ಯವಾಗಿದೆ. ರಸ ಎನ್ನುವುದು ಕಾವ್ಯಕಲೆಗಳಲ್ಲಿ ಸಹೃದಯನಿಗೊದಗುವ ಅಹ್ಲಾದ ರೂಪವಾದ ಒಂದು ಅನುಭವ ವಿಶೇಷ ಈ ರಸವೇ ಕಾವ್ಯದ ಸಾರ ಈ ರಸ ರೂಪವಾದ ಅನುಭವವನ್ನು ಯಾವು ಯಾವುದು ನೀಡುವುದೋ ಅದೆಲ್ಲವೂ ಸುಂದರ (ಸೌಂದರ್ಯ ಸಮೀಕ್ಷೆ ಪು.154) ಕಾವ್ಯದ ಸಾರ ರಸ. ಅದುವೇ ಕಾವ್ಯ ಸೌಂದರ್ಯ ಸೌಂದರ್ಯಾನುಭವವು ರಸಾನುಭವವನ್ನು ತನ್ನೊಂದು ಅಂಗವಾಗಿ ಸ್ವೀಕರಿಸುತ್ತದೆ. ಕಾವ್ಯ ಮೀಮಾಂಸಕರು ಸೌಂದರ್ಯವನ್ನು ಅಲಂಕಾರ ಎಂಬ ಪರಿಭಾಷೆಯಿಂದ ಕರೆದು ರಸಾನುಭವವನ್ನು ಅಲಂಕಾರದ ಒಮದು ಅಂಗವಾಗಿ ಪರಿಗಣಿಸಿದ್ದಾರೆ.

 ವಚನಕಾರರು ತಾವು ಬರೆದದ್ದು ಸಾಹಿತ್ಯ ಹೌದೊ ಅಲ್ಲವೋ ಎಂಬುದರ ಬಗೆಗೆ ಯಾವ ಉತ್ತರ ಅವರಲ್ಲಿ ದೊರೆಯದಿದ್ದರೂ ಆಧುನಿಕ ಕಾಲದಲ್ಲಿ ಅವುಗಳನ್ನು ಸಾಹಿತ್ಯದ ಪರಿಧಿಯಲ್ಲಿಯೇ ಪರಿಗಣಿಸಲಾಗಿದೆ. ಬಸವಣ್ಣನವರ ಆನು ಒಲಿದಂತೆ ಹಾಡುವೆ ಎಂಬ ನುಡಿಯು ವಚನಕಾರರ ಕಾವ್ಯ ತತ್ತ್ವದ ಸಂಕೇತವಾಗಿದೆ. ವಚನಕಾರರು ಬರೆದಿದ್ದು ನಿಜವಾಗಿರುವಾಗ ಅವರು ಗಮನಿಸದಿದ್ದ ಈ ಬರವಣಿಗೆಯ ಹಿನ್ನಲೆಗೆ ಇರಬೇಕಾದ ಕೆಲವು ಸಾಹಿತ್ಯಕ ಧೋರಣೆಗಳನ್ನು ಕಾವ್ಯ ತತ್ವವೆಂದು ಕೆಲವು ವಿಮರ್ಶಕರು ಈಗಾಗಲೇ ಪರಿಭಾವಿಸಿ ಆ ಹಿನ್ನೆಲೆಯಲ್ಲಿ ವಚನಗಳನ್ನು ಸಾಹಿತ್ಯದ ಚೌಕಟ್ಟಿನಲ್ಲಿಯೂ ಪ್ರತಿಪಾದಿಸಿದ್ದಾರೆ. ವಚನಗಳಲ್ಲಿಯ ಕೆಲವು ನಿದರ್ಶನಗಳನ್ನು ಕಾವ್ಯ ತತ್ವದ ಸಮರ್ಥನೆಗಾಗಿ ಅಂಶಿಕವಾಗಿಯೋ ಇಡಿಯಾಗಿಯೋ ಉದಾಹರಿಸಿ ಅರ್ಥವನ್ನು ಹಚ್ಚಿದ್ದಾರೆ.

     ಕಾವ್ಯ ಮೀಮಾಂಸೆಯ ಪ್ರಕಾರ ವ್ಯಕ್ತಿಯ ವಿಶಿಷ್ಟಾಭಿವ್ಯಕ್ತಿಯೇ ಶೈಲಿ. ಈ ಹಿನ್ನಲೆಯಲ್ಲಿ ವಚನಕಾರರ ಅಭಿವ್ಯಕ್ತಿಯು ವಿಶಿಷ್ಟವಾಗಿದೆ. ವಚನಕಾರರು ತಮಗೆ ಹಿನ್ನಲೆಯಾಗಿದ್ದ. ಆಗಲೇ ಸಿದ್ಧವಾಗಿದ್ಧ ಚಂಪೂ ಶೈಲಿಯನ್ನಾಗಲೀ, ಆ ಪರಂಪರೆಯ ಕಥಾವಸ್ತು ಕ್ರಮಗಳನ್ನಾಗಲೀ ಅನುಸರಿಸದೆ ತಮ್ಮದೇ ಆದ ನೂತನ ಅಭಿವ್ಯಕ್ತಿಯನ್ನು ರೂಪಿಸಿಕೊಂಡವರಾಗಿದ್ದಾರೆ. ವಚನಗಳ ಶೈಲಿಯ ಮುಖ್ಯ ಗುಣಗಳು ಸರಳತೆ, ಸ್ಪಷ್ಟತೆ, ಸಂಕ್ಷಿಪ್ತತೆ, ಚಿತ್ರಕತೆಗಳಾಗಿವೆ. ತಾವು ಅಭಿವ್ಯಕ್ತಿಸಿದ ನುಡಿ ಕೇಳುವವರ ಮನಮುಟ್ಟಬೇಕು. ಎಂಬ ಹಂಬಲದಿಂದ ಮೂಡಿದ ವಚನಗಳಲ್ಲಿ ಕ್ಲಿಷ್ಟತೆ, ಅಸ್ಪಷ್ಟತೆಗಳಿಗೆ ಅವಕಾಶವೇ ಇಲ್ಲ. ಸಾಮಾನ್ಯ ಜನತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸುತ್ತಮುತ್ತಣ ಜನರು ಆಡುತ್ತಿದ್ದ ಅಚ್ಚಗನ್ನಡ ಮಾತುಗಳನ್ನೇ ವಚನಗಳಲ್ಲಿ ಬಳಸಿದರು. ಆಡುಮಾತನ್ನು ಬಳಸಿ ಹೇಳಬೇಕಾದುದನ್ನು ಕೇಳುವವರ ಮನಮುಟ್ಟಿಸುವುದರ ಮೂಲಕ ಕಾವ್ಯಾಭಿವ್ಯಕ್ತಿಗೆ ಗದ್ಯದ ಸತ್ವವನ್ನು ಮೈಗೂಡಿಸಿಕೊಂಡು ಆಡುಮಾತಿನ ಮೂಲಕವೆ ಪದ್ಯವನ್ನಾಗಿಸಿ ವಚನಕಾರರ ಮನೋಧರ್ಮವು ಜನಭಾಷೆಯ ಬಗೆಗೆ ಎಷ್ಟರ ಮಟ್ಟಿನ ಎಚ್ಚರವನ್ನು ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆ. ವಚನಸಾಹಿತ್ಯವನ್ನು ಕುರಿತು ನಡೆದಿರುವ ಸಾಹಿತ್ಯದ ಅಧ್ಯಯನದಲ್ಲಿ ವಚನಗಳನ್ನು ಕಾವ್ಯ ಪ್ರಕಾರದ ಒಂದು ಉಪ ರೂಪವಾಗಿ ಮುಕ್ತಭಾವಗೀತೆಯಾಗಿ ವಿಶ್ಲೇಷಿಸಲಾಗಿದೆ. ಧಾರ್ಮಿಕ ದೃಷ್ಟಿಕೋನದ ಜೊತೆಗೆ ಶುದ್ಧ ಕಾವ್ಯವಾಗಿ ಕಲಾ ರಚನೆಯ ಕೌಶಲ ದೃಷ್ಟಿಯಿಂದ ವಿವರಿಸುವ ಪ್ರಯತ್ನವು ನಡೆದಿದೆ. ಹೋಲಿಕೆ, ಸ್ವಭಾವೋಕ್ತಿ, ವಸ್ತುನಿಷ್ಠವರ್ಣನೆಗಳನ್ನು ಪ್ರಾಚೀನರು ಅಲಂಕಾರದ ವ್ಯಾಪ್ತಿಯಲ್ಲಿ ಗುರುತಿಸಿದ್ದಾರೆ. ಭಾವನೆಗಳನ್ನು ಅನುಭವಗಳನ್ನು ಮನಮುಟ್ಟುವಂತೆ ನಿರೂಪಿಸುವಾಗ ಉಪಮೆ ರೂಪಕಗಳ ಭಾವ ಸ್ಪಷ್ಟತೆಗೆ ಸ್ಫುಟತೆಗೆ ನೆರವಾಗುತ್ತವೆ.

   ವಚನಗಳಲ್ಲಿ ಕೆಲವೆಡೆ ಕಾವ್ಯ ಸೌಂದರ್ಯವನ್ನು ಗ್ರಹಿಸಬಹುದಾಗಿದೆ. ಕವಿಹೃದಯವುಳ್ಲ ವಚನಕಾರರ ಕಾವ್ಯದ ಕಸುವಿನಿಂದ ಕೂಡಿದ್ದು ಕಲಾಕೃತಿಗಳಾಗಿ ನಿಲ್ಲುವ ಶಕ್ತಿಯನ್ನು ಪಡೆದುಕೊಂಡಿವೆ. ಲೋಕದ ಮಾತಿಗಿಂತ ಭಿನ್ನವಾದ ಮನೋಹರವಾದ ಉಕ್ತಿಯಿಂದ ಕೂಡಿರುವುದನ್ನು ಕಾವ್ಯ ಎಂದು ಕಾವ್ಯಮೀಮಾಂಸೆಯ ಪರಿಭಾಷೆಯಲ್ಲಿ ಹೇಳುತ್ತೇವೆ. ಇಂತಹ ಉಕ್ತಿಗಳನ್ನು ವಚನಗಳಲ್ಲಿ ಅಲ್ಲಲ್ಲಿ ಹುಡುಕ ಬಹುದಾಗಿದೆ.

 ದೃಷ್ಟಾಂತಗಳು, ಉಪಮೆ, ರೂಪಕಗಳು, ಶಬ್ದಚಿತ್ರಗಳು, ವಚನಗಳಲ್ಲಿ ಕಾಣಿಸುತ್ತವೆ. ವಚನಕಾರರು ಕವಿಯಾಗಿ ಯಶಸ್ಸು ಪಡೆಯಬೇಕೆಂಬ ಬಯಕೆಯನ್ನು ಹೊಂದಿದವರಲ್ಲ. ವೀರಶೈವ ಧರ್ಮದ ಪ್ರಸಾರ, ಜನತೆಯನ್ನು ಸುಧಾರಿಸಬೇಕೆಂಬ ಕಳಕಳಿ, ಮನದ ಹೊಯ್ದಾಟವನ್ನು ತೋಡಿಕೊಳ್ಳಬೇಕೆಂಬ ಹಂಬಲ ಇವುಗಳ ಜೊತೆಗೆ ಅಂದಂದಿನ ತಮ್ಮ ಅನುಭವದ ತೀವ್ರತೆ, ಒತ್ತಡಗಳಿಂದಾಗಿ ವಚನಗಳು ಹೊರಹೊಮ್ಮಿದವುಗಳು. ವಚನಕಾರರಲ್ಲಿ ಕೆಲವರು ಕವಿ ಹೃದಯವುಳ್ಳವರಾದ್ದರಿಂದ ಅವರಾಡಿದ ಮಾತು ಅವರಿಗರಿವಿಲ್ಲದೆಯೇ ಕಾವ್ಯ ಸ್ವರೂಪ ಪಡೆಯಿತು. ಇಂತಹ ವಚನಗಳಲ್ಲಿ ಭಾವಗೀತೆಯ ಸತ್ಯ ಸೌಂದರ್ಯಗಳನ್ನು ಒಡಗೂಡಿಸಿಕೊಂಡ ಅಂಶಗಳನ್ನು ಕಾಣಬಹುದಾಗಿದೆ. ಬಸವಾದಿ ಪ್ರಮಥರು ತಮ್ಮ ಸುತ್ತ ಮುತ್ತ ಕಂಡ ಬದುಕಿನ ಎಲ್ಲಾ ದೃಶ್ಯಗಳನ್ನೂ ಅನುಭವಗಳನ್ನು ತಮ್ಮ ಅಭಿವ್ಯಕ್ತಿಗೆ ಸಾಧನವನ್ನಾಗಿ ಬಳಸಿಕೊಂಡು ವಚನಗಳ ಮೂಲಕ ಕಾವ್ಯತ್ವವನ್ನು ಪ್ರತಿಪಾದಿಸಿದರು.

    ವಚನಗಳಲ್ಲಿ ಕಾವ್ಯದ ಯಾವ ಸಾಂಪ್ರದಾಯಿಕ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಕಾವ್ಯದ ಅಂತರಂಗದ ಲಕ್ಷಣಗಳ ಸುಳುಹುಗಳನ್ನು ಗುರುತಿಸಬಹುದಾಗಿದೆ. ಬಹುಮಟ್ಟಿಗೆ ವಚನಕಾರರು ಆಗಲೇ ಸಿದ್ಧಗೊಂಡಿದ್ದ ವಸ್ತು ಮಾಧ್ಯಮದ ಕೃತಕತೆಯನ್ನು ಅವಲಂಬಿಸದೆ ತಮ್ಮ ವೈಯಕ್ತಿಕವಾದ, ಪ್ರಾಮಾಣಿಕವಾದ ಅನುಭವಗಳನ್ನು ಮುಕ್ತ ಹಾಗೂ ನೇರ ಮನಸ್ಸಿನಿಂದ ತೋಡಿಕೊಂಡಿರುವುದರಿಂದಲೇ ವಚನಗಳ ವಸ್ತು ಸೌಂದರ್ಯದ ವಿಶಿಷ್ಟತೆಗೆ ಕಾರಣವಾಗಿದೆ. ಅಂತರಂಗದ ಅನಿಸಿಕೆಗಳ ಕಥೆಯೇ ವಚನಗಳು ವಸ್ತು. ಒಂದೇ ವ್ಯಕ್ತಿತ್ವ ಅನೇಕ ಸಂದರ್ಭಗಳಲ್ಲಿ ಬದುಕನ್ನು ತೀವ್ರವಾಗಿ ಅನುಭವಿಸಿದ್ದರ ವರ್ಣನೆ ವಚನಗಳ ತುಂಬೆಲ್ಲಾ ವ್ಯಾಪಿಸಿದೆ. ಇಂತಹ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾವ್ಯ ಸೌಂದರ್ಯದ ಸುಳುಹುಗಳನ್ನು ಹುಡುಕ ಬಹುದಾಗಿದೆ. ವಚನಕಾರರಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿಯರ ವಚನಗಳಲ್ಲಿ ಹೆಚ್ಚಾಗಿ ಕಾವ್ಯ ಸೌಂದರ್ಯವನ್ನು ಗುರುತಿಸಬಹುದಾಗಿದೆ.

 ಬಸವಣ್ಣನವರು ತಮ್ಮ ವಚನಗಳಲ್ಲಿ ದೃಷ್ಟಾಮತ-ಅಲಂಕಾರಗಳನ್ನು ಬಳಸಿದ್ದಾರೆ.

‘ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ

ಅಂಬುಜಕ್ಕೆ ಭಾನುವಿನ ಉದಯದ ಚಿಂತೆ

ಭ್ರಮರಕ್ಕೆ ಪರಿಮಳದ ಉಂಡುಂಬ ಚಿಂತೆ

ಎನಗೆ ನಮ್ಮ ಕೂಡಲ ಸಂಗಮ ದೇವರ ನೆನೆವುದೆ ಚಿಂತೆ’ (ಸ.ವ.ಸಂ-1.ವ.ಸಂ.265)

ಇಂತಹ ವಚನಗಳಲ್ಲಿ ಜನಜನಿತ ದೃಷ್ಟಾಂತಗಳನ್ನು ಬಳಸಿ ಭಗವಂತನ ಬಗೆಗಿನ ತಮ್ಮ ಹಂಬಲವನ್ನು ಪ್ರಾಮಾಣಿಕವಾಗಿ ನಿವೇದಿಸಿಕೊಂಡಿದ್ದಾರೆ.

 ವಚನಕಾರರು ತಮ್ಮಸುತ್ತಮುತ್ತಲ ಜನಜೀವನದಿಂದ ಉಪಮೆಗಳನ್ನು ಎತ್ತಿಕೊಂಡು ವಚನಗಳಲ್ಲಿ ಬಳಸಿದ್ದಾರೆ. ಕೆಲವೆಡೆ ಇವರ ವಚನಗಳಲ್ಲಿ ಕಂಡುಬರುವ ಉಪಮೆಗಳು ಬರೀ ಹೋಲಿಕೆಯಾಗಿ ಕಂಡುಬರುವುದಿಲ್ಲ. ದಿಢೀರನೆ ಕಣ್ಣೆದುರು ಒಂದು ಚಿತ್ರವನ್ನು ತಂದು ನಿಲ್ಲಿಸುವ, ಆಡಿದ ಮಾತನ್ನು

 ನಿದರ್ಶನಕ್ಕೆ ಬಸವಣ್ಣನವರು ಈ ವಚನವನ್ನು ಪರಿಶೀಲಿಸಬಹುದಾಗಿದೆ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತು

ಸಸಿಯೊಳಗಣ ರಸದ ರುಚಿಯಂತಿದ್ದಿತು

ನನೆಯೊಳಗಣ ಪರಿಮಳದಂತಿದ್ದಿತು

ಕೂಡಲ ಸಂಗಮದೇವಾ ಕನ್ನೆಯ ಸ್ನೇಹದಂತಿದ್ದಿತು’ (ಸ.ವ.ಸಂ-1.ವ.ಸಂ.1)

ಈ ವಚನದಲ್ಲಿ ಮೊದಲ ಸಾಲು ಒಂದರೊಳಗೊಂದು ಅಡಗಿರುವ ಆದರೆ ಪರಸ್ಪರ ವಿರುದ್ಧವಾದ ಎರಡು ವಸ್ತುಗಳನ್ನು ಕುರಿತು ಹೇಳಿದರೆ, ಎರಡನೇ ಸಾಲು ಚಂದ್ರನಲ್ಲಿ ಅಡಗಿರುವ ಬೆಳದಿಂಗಳ ರುಚಿಯ ಇಂದ್ರಿಯಾತೀತವಾದ ಅನುಭವವನ್ನು ಹೇಳುತ್ತದೆ. ಮೂರನೆಯ ಸಾಲು ಒಂದರೊಳಗೊಂದು ಬೆರತು ಹೋದ ಬೇರ್ಪಡಿಸಲಾಗದ ನನೆಯೊಳಗಣ ಪರಿಮಳವನ್ನು ಹೇಳಿದರೆ ಕೊನೆಯ ಸಾಲು ಕನ್ನೆಯಲ್ಲಿ ಮುಗ್ಧವಾಗಿ, ಗುಪ್ತವಾಗಿ, ಅಡಗಿರುವ ಭಾವನಾತ್ಮಕ ಸಂಬಂಧವನ್ನು ಹೇಳುತ್ತದೆ. ಈ ವಚನವನ್ನು ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸಿದ ಎಂ.ಜಿ.ಕೃಷ್ಣಮೂರ್ತಿವರು ಬಯ್ಕೆಯ ಕಿಚ್ಚಿನ ಅದಮ್ಯತೆಯನ್ನು ಮೊದಲ ಸಾಲು ಸೂಚಿಸಿದರೆ ಉಳಿದ ಮೂರು ವಾಕ್ಯಗಳು ಬೆಳದಿಂಗಳು, ಪರಿಮಳ ಕನ್ನೆಯ ಸ್ನೇಹ, ಇವುಗಳ ಆಹ್ಲಾದತೆ, ಉಲ್ಲಾಸ, ಮಾರ್ದವತೆಯನ್ನು ಸಹಜವಾದ ಭಾಷೆಯಲ್ಲಿ ಹೊರ ಹೊಮ್ಮಿಸಿವೆ ಎಂಬ ಮಾತು ಒಪ್ಪತಕ್ಕದ್ದಾಗಿದೆ. ಇವುಗಳಲ್ಲಿ ಅಡಗಿದ ಯಾವುದೋ ರಹಸ್ಯ ಹಾಗೂ ಶೀತಲ ಗಾಂಭೀರ್ಯಗಳು ಕನ್ನೆಯ ಸ್ನೇಹದ ಅನಿರ್ವಚನೆಯ ಅತೀತವಾದ ಅನುಭಾವದ ಅನುಭವವನ್ನು ಮೂರ್ತಗೊಳಿಸುವಲ್ಲಿ ಯಶಸ್ವಿಯಾಗಿರುವುದನ್ನು ಸೂಚಿಸುತ್ತದೆ.

ಮತ್ತೊಂದು ವಚನದಲ್ಲಿ ಬರುವ

ಕೂಡಲ ಸಂಗನ ಶರಣರೊಡನೆ ಮರೆದು ಸರಸವಾಡಿದರೆ

ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಮಡು ಮಡುವ ಬಿದ್ದಂತೆ’ ಎಂಬಲ್ಲಿ ಕೂಡಲ ಸಂಗನ ಶರಣರೊಡನೆ ಮೈಮರೆತು ಉದ್ಧಟತನದಿಂದ ವರ್ತಿಸಿದರೆ ಸುಣ್ಣದ ಕಲ್ಲನ್ನು ಕಟ್ಟಿಕೊಂಡು ಮಡುವಿಗೆ ಬಿದ್ದಂತೆ ಎಂದು ಹೇಳುವಲ್ಲಿ ಬಳಸಿರುವ ಮಾಲೋಪಮೆ ಮೃತ್ಯು ಭಯಂಕರ ಚಿತ್ರದ ಮಾಲೆಯನ್ನು ಸೃಷ್ಟಿಸಿದೆ.

 ವಚನಕಾರರ ಅಭಿವ್ಯಕ್ತಿ ಉಪಮೆ, ರೂಪಕ, ದೃಷ್ಟಾಂತ, ಪ್ರತಿಮೆ ಇವುಗಳಿಮದ ಇಡಿಕಿರಿದು ಅಂದಂದಿನ ಸಾಮಾಜಿಕ ಪ್ರಜ್ಞೆ, ಧಾರ್ಮಿಕ ಶ್ರದ್ಧೆ, ಸೂಕ್ಷ ನಿರೀಕ್ಷಣ ಶಕ್ತಿ, ಪ್ರಾಮಾಣಿಕವಾದ ಆತ್ಮ ಪರಿಶೋಧನೆ ಈ ಗುಣಗಳಿಂದ ಕೂಡಿದವಾಗಿದ್ದು ಉತ್ತಮ ಕಾವ್ಯ ಲಕ್ಷಣಗಳನ್ನು ಪಡೆದಿವೆ.

 ವಚನಕಾರರ ಜೀವನದ ಅಂತರಂಗ, ಬಹಿರಂಗಗಳೆರಡೂ ಅವರ ಶೈಲಿಯಲ್ಲಿ ಒಡಮೂಡಿವೆ. ವಚನಕಾರರ ವಚನಗಳ ಚಿತ್ರಕಶಕ್ತಿ ಅನನ್ಯವಾದುದು. ಉಪಮೆ, ರೂಪಕ, ಪ್ರತಿಮೆಗಳಲ್ಲಿ ಚಿತ್ರಗಳ ಮಾಲೆಯನ್ನೇ ಪೋಣಿಸುತ್ತಾರೆ. ಒಂದೊಂದು ಸಾಲಿನಲ್ಲಿಯೂ ಒಂದೊಂದು ಜೀವಂತ ಚಿತ್ರವನ್ನು ಕಟ್ಟಿಕೊಡಬಲ್ಲವರಾಗಿದ್ದಾರೆ. ಅಚ್ಚಗನ್ನಡ ನುಡಿಯ ನಾಡಿಮಿಡಿತವನ್ನು ಬಲ್ಲ ವಚನಕಾರರು ಒಂದೇ ಮಾತನ್ನೇ ಮತ್ತೆ ಮತ್ತೆ ಬಳಸುವುದರ ಮೂಲಕ ಅಭಿವ್ಯಕ್ತಿಗೆ ತೀವ್ರವಾದ ಗಾಢತೆಯನ್ನು ತರುತ್ತಾರೆ. ಈ ಅಂಶವು ಬಸವಣ್ಣನವರಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ

ಎನ್ನ ಶಿರವ ಸೋರೆಯ ಮಾಡಯ್ಯ

ಎನ್ನ ನರವ ತಂತಿಯ ಮಾಡಯ್ಯಾ

ಎನ್ನ ಬೆರಳ ಕಡಿಕಿಯ ಮಾಡಯ್ಯಾ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ

ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ

ಅಯ್ಯಾ ಅಯ್ಯಾ ಎಂದು ಕರೆಯುತ್ತಲಿದ್ದೇನೆ

ಅಯ್ಯಾ ಅಯ್ಯಾ ಎಂದೊರಲುತ್ತಿದ್ದೇನೆ

ಓ ಎನ್ನಲಾಗದೆ ಅಯ್ಯಾ (ಸ.ವ.ಸಂ-1.ವ.ಸಂ.499)

ಈ ವಚನಗಳಲ್ಲಿ ಮಾಡಯ್ಯಾ ತಂದೆ, ಅಯ್ಯಾ, ಅಯ್ಯಾ ಎಂಬ ಶಬ್ದಗಳನ್ನು ಮತ್ತೆ ಮತ್ತೆ ಬಳಸುವುದರ ಮೂಲಕ ಈ ಅಭಿವ್ಯಕ್ತಿಗೆ ಅರ್ಥಪೂರ್ಣವಾದ ಆರ್ತತೆ ಮತ್ತು ಗೇಯತೆಗಳು ಬಂದಿರುವುದನ್ನು ಕಾಣಬಹುದು. ಅದೇ ರೀತಿ ಬಸವಣ್ಣನವರ ಈ ಕೆಳಕಂಡ ವಚನವು ಕಾವ್ಯ ಶಿಲ್ಪ ಮತ್ತು ಬಂಧದಿಂದ ಕಾವ್ಯ ಸೌಂದರ್ಯವನ್ನು ಇಮ್ಮಡಿಸಿದೆ.

ಅವಳ ವಚನ ಬೆಲ್ಲದಂತೆ ಹೃದಯದಲ್ಲಿಪ್ಪುದು ನಂಜು ಕಂಡಯ್ಯ

ಕಂಗಳಲ್ಲೊಬ್ಬನ ಕರೆವಳು, ಮನದಲ್ಲೊಬ್ಬನ ನೆರೆವಳು

ಕೂಡಸಂಗಮ ದೇವಯ್ಯ

ಮಾನಿಸಗಳ್ಳಿಯ ನಂಬದಿರಯ್ಯಾ (ಸಮ.ವ.ಸಂ-1.ವ.ಸಂ.110)

ಈ ವಚನದಲ್ಲಿಯ ಬೆಲ್ಲದಂತೆ, ನಂಜು ಕಂಡಯ್ಯ, ಕಂಗಳು-ಮನ, ಕರೆವಳು-ನೆರವಳು ಈ ಪದಗಳ ಬಂಧವು ವಚನಕ್ಕೆ ಕಾವ್ಯದ ಮೆರುಗನ್ನು ತಂದುಕೊಟ್ಟಿದೆ. ಚಂಚಲ ಮನಸ್ಸಿನ ಸ್ತ್ರೀಯ ಪ್ರತಿಮೆಯ ಮೂಲಕ ಮನುಷ್ಯನ ಮನಸ್ಸಿನ ಚಂಚಲತೆಯನ್ನು ನಿರೂಪಿಸ ಹೊರಟಿರುವ ಈ ವಚನ ಸಹಜವಾಗಿ ಮೂಡಿ ಬಂದಿದೆ. ಕಂಗಳಲ್ಲೊಬ್ಬನ ಕರೆವಳು ಮನದಲ್ಲೊಬ್ಬನ ನೆರೆವಳು’ ಎಂಬ ವಚನದ ಸಾಲುಗಳಂತೂ ಶಕ್ತಿಯುತ ಸಾಲುಗಳಾಗಿವೆ.

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು

ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆವುತ್ತಲ್ಲದೆ

ಅಂದಂದೇ ಹುಟ್ಟಿತ್ತು ಅಂದಂದೇ ಹೊಂದಿತ್ತು

ಕೊಂದಹರುಳಿದರೆ ಕೂಡಲ ಸಂಗಮ ದೇವ (ಸ.ವ.ಸಂ-1.ವ.ಸಂ.126)

ಈ ವಚನ ಶಿಲ್ಪವು ಕಾವ್ಯ ಸೌಂದರ್ಯವನ್ನು ಕಟ್ಟಿಕೊಟ್ಟಿದೆ. ಈ ವಚನದಲ್ಲಿ ಒಳಪ್ರಾಸಗಳನ್ನು ಕಾಣಬಹುದು. ಹರಕೆ,ತೋರಣ ತಳಿರು,ಕೊಂದಿಹರು, ಅರಿಯದೆ, ಉಳಿದರೇ?ಮುಂತಾದ ಪ್ರಾಸಾನುಪ್ರಾಸನಗಳು ವಚನದ ಗೇಯಾಂಶದ ಸೂಚಕಗಳಾಗಿದ್ದು ಹಾಡುಗಾರಿಕೆಯನ್ನು ತಂದು ಕೊಟ್ಟಿವೆ. ಜೊತೆಗೆ ವಚನದಲ್ಲಿಯ ಮೇಯಿತ್ತು.ಹುಟ್ಟಿತು.ಹೊಂದಿತ್ತು ಇತ್ಯಾದಿ ಲಯಾನುಸಾರಿಯಾದ ಪದಗಳು ಕಾವ್ಯ ಶರೀರದ ಅವಿಭಾಜ್ಯ ಅಂಗಗಳಂತೆ ರೂಪಗೊಂಡಿದ್ದು ಅನಿರ್ವಚನೀಯವಾದ ಸೌಂದರ್ಯವನ್ನು ವ್ಯಕ್ತಪಡಿಸುತ್ತವೆ.

ಅಕ್ಕಮಹಾದೇವಿಯ ಈ ಕೆಳಕಂಡ

ಬಂಜೆ ಬೇನೆಯನರಿವಳೇ

ಬಲದಾಯಿ ಮುದ್ದಬಲ್ಲಳೇ

ನೊಂದ ನೋವ ನೋಯದವರೆತ್ತ ಬಲ್ಲರು?

ಚೆನ್ನಮಲ್ಲಿಕಾರ್ಜುನನಿರಿದಲಗು ಒಡಲಲ್ಲಿ ಮುರಿದು

ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ (ಸ.ವ.ಶಂ.5ವ.ಸಂ.237)

ವಚನದಲ್ಲಿ ಅಕ್ಕಳ ಮನಸ್ಸಿನ ಅನುಭವದ ಉತ್ಕಟತೆಯ ನೆನಪಿನ ಭಾವನೆಯ ತೀವ್ರತೆಯನ್ನು ಪರಿಣಾಮಕಾರಿಯಾಗಿ ವ್ಯಕ್ತಗೊಂಡಿದೆ. ಬಹಿರಂಗದ ದೃಶ್ಯಾನುಭವವನ್ನು ತನ್ನ ಅಂತರಂಗದ ಅನುಭವಕ್ಕೆ ವಸ್ತುಪ್ರತಿರೂಪವಾಗಿ ಕೊಟ್ಟಿದ್ದಾಳೆ. ಮತ್ತೆ ಮತ್ತೆ ಕಾಡುವ ಈ ಅನುಭವದ ಯಾತನೆ ಚೆನ್ನಮಲ್ಲಿಕಾರ್ಜುನ ನಿರಿದಲಗು ಒಡಲಲ್ಲಿ ಮುರಿದು ಹೊರಳುವ ಅಳಲಾಗಿ ಅಭಿವ್ಯಕ್ತಿಗೊಂಡಿದೆ.

ವಚನಕಾರರಲ್ಲಿ ಕಲ್ಪನೆ, ಪ್ರತಿಮಾ ನಿರ್ಮಾಣಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಅದರಲ್ಲಿಯೂ ಅಲ್ಲಮ ಪ್ರಭುವಿನಲ್ಲಿ ಪ್ರತಿಮಾ ನಿರ್ಮಾಣಶಕ್ತಿ ಹೆಚ್ಚು ಆತನ ಒಂದು ವಚನದಲ್ಲಿ ಭಕ್ತ ಭವಿಯಾದರೆ ಅವನನ್ನು ಏನೆಂದು ಹೇಳುವುದನ್ನು ಯಾವುದಕ್ಕೆ ವರ್ಣಿಸುವುದು?

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯಾ

ಬಯಲು ಬತ್ತಲೆಯಿದ್ದರೆ ಏನ ನುಡಿಸುವರಯ್ಯಾ.(ಸ.ವ.ಸಂ.2.ವ.ಸಂ.109)

ಇದು ಸುಂದರವಾದ ಬೆರಗುಗೊಳಿಸುವ ಕಲ್ಪನೆಯಾಗಿದೆ. ವಚನಕಾರರು ವ್ಯಕ್ತಿಗತ ಅನುಭವವನ್ನು ಅಭಿವ್ಯಕ್ತಿಗೊಳಿಸುವುದರ ಜೊತೆಗೆ ವೀರಶೈವ ಧರ್ಮದ ಸತ್ವ ತತ್ವಗಳನ್ನು ಸಾಮಾನ್ಯರಿಗೆ ಮುಟ್ಟಿಸಬೇಕಾದ ಉದ್ದೇಶ್ಯವನ್ನು ಹೊಂದಿದ್ದರು. ಹೀಗಾಗಿ ಜನಬಳಕೆಯಲ್ಲಿದ್ದ ಸಂಗತಿಗಲನ್ನು ಅಭಿವ್ಯಕ್ತಿಗೆ ಬಳಸಿಕೊಂಡರು. ವ್ಯಕ್ತಿಯ ಅಂತರಂಗ ಅವನ ಬಹಿರಂಗ ಶುಚಿತ್ವದಲ್ಲೂ. ವರ್ತನೆಯಲ್ಲಿಯೂ ಕಾಣಬರುವುದನ್ನು ಬಸವಣ್ಣನವರ ವಚನದಲ್ಲಿ ಈ ಕೆಳಕಂಡಂತೆ ಧ್ವನಿಸಿದೆ.

ಮನೆಯೊಳಗೆ ಮನೆಯೊಡೆಯ ನಿದ್ದಾನೋ ಇಲ್ಲವೋ?

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜತುಂಬಿ

ಮನೆಯೊಳಗೆ ಮನೆಯೊಡಯನಿದ್ದಾನೋ ಇಲ್ಲವೋ?

ತನುವಿನೊಳಗೆ ಹುಸಿತುಂಬಿ ಮನದೊಳಗೆ ವಿಷಯ ತುಂಬಿ.(ಸ.ವ.ಸಂ.2.ವ.ಸಂ.೯೭)

 ಸಾಹಿತಿಯಾದವನು ವರ್ತಮಾನ ಕಾಲದ ಸಮಕಾಲೀನ ಸಾಹಿತ್ಯ ಪರಿಸರದಲ್ಲಿ ನಿಂತು ತನಗೆ ಹಿನ್ನಲೆಯಾದ ಒಂದು ಪರಂಪರೆಯಲ್ಲಿ ತನ್ನ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತಾನೆ. ಅಂತಹವನಿಗೆ ಪರಂಪರೆಯ ಅರಿವು ಇದ್ದಿರಬೇಕಾಗುತ್ತದೆ. ಸೂಕ್ಷ್ಮವಾಗಿ ವಚನಕಾರರ ಕೆಲವು ವಚನಗಳನ್ನು ಗಮನಿಸಿದರೆ ಈ ಅಂಶ ಭಾಗಶ: ಕಂಡುಬರುತ್ತದೆ.

ಇದಕ್ಕೆ ನಿದರ್ಶನವಾಗಿ ಅಲ್ಲಮ ಪ್ರಭುವಿನ

ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ

ನಿಂದ ಹೆಜ್ಜೆಯ ನರೆಯಬಾರದು    ಎಂಬ ವಚನದಲ್ಲಿಯ ಹಿಂದಣ ಹೆಜ್ಜೆ ಹಾಗೂ ನಿಂದ ಹೆಜ್ಜೆಗಳು ಒಂದು ರೀತಿಯಲ್ಲಿ ಪರಂಪರೆ ಹಾಗೂ ಸಮಕಾಲೀನತೆಯ ಸಂಕೇತಗಳಾಗಿವೆ. ಕವಿಯಾದವನು ಈ ಹೆಜ್ಜೆ ಗುರುತುಗಳ ನಡುವೆ ನಿಂತಿರುತ್ತಾನೆ.

 ಸಾಹಿತ್ಯದಲ್ಲಿ ಬಯಲರೂಪ ಮಾಡಬಲ್ಲ ಶೈಲಿ ಅಥವಾ ಅನುಭವ ಆಕಾರ ಪಡೆಯುವ ಪದರಚನೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಚನಕಾರರು ಶಬ್ದ ಪದದ ಬದಲು ನುಡಿ ಮಾತುಗಳನ್ನು ಅಭಿವ್ಯಕ್ತಿಯ ಅರ್ಥದಲ್ಲಿ ಬಳಸುತ್ತಾರೆ. ಬಸವಣ್ಣನವರು ಈ ಕೆಳಕಂಡ ವಚನದಲ್ಲಿ ನುಡಿ ಅಥವಾ ಅಭಿವ್ಯಕ್ತಿ ಹೇಗಿರಬೇಕು ಎಂಬುದನ್ನು

ನುಡಿದಡೆ ಮುತ್ತಿನ ಹಾರದಂತಿರಬೇಕು

ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು

ನುಡಿದಡೆ ಲಿಂಗಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದಡೆ

ಕೂಡಲಸಂಗಮ ದೇವನೆಂತೊಲಿವನಯ್ಯಾ ಎಂದಿದ್ದಾರೆ (ಸ.ವ.ಸಂ.-1.ವಸಂ.803) ನುಡಿಯ ಲಕ್ಷಣವನ್ನು ಈ ವಚನವು ಅತ್ಯುತ್ತಮವಾಗಿ ಪ್ರತಿಪಾದಿಸಿದೆ. ಶಬ್ದಗಳ ಜೋಡಣೆಯನ್ನು ಕುರಿತ ಮಾತಾಗಿ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದಾಗಿದೆ. ಅನುಭವ ಅಥವಾ ಅಭಿವ್ಯಕ್ತಿಯು ನುಡಿಗಳಲ್ಲಿ (ಶಬ್ದಗಳು) ಪದಗಳಲ್ಲಿ ವಿನ್ಯಾಸಗೊಳ್ಳುವ ಕ್ರಮವಾಗಿದೆ. ಮುತ್ತಿನ ಹಾರದ ಹೋಲಿಕೆಯ ಮೂಲಕ ಶಬ್ದಗಳ ಜೋಡಣೆಯನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆ. ಮುತ್ತಿನ ಹಾರದಲ್ಲಿ ಮುತ್ತುಗಳು ಒಂದೇ ಸಮನಾಗಿ ನಿಬಿಡವಾಗಿ ಏರುಪೇರಿಲ್ಲದೆ ಮನೋಹರವಾಗಿ ಹೇಗೆ ಕೂಡಿಕೊಳ್ಳುತ್ತವೆಯೋ ಹಾಗೆ, ಪದಗಳೆಲ್ಲ ಭಾವದ ಸೂತ್ರದಲ್ಲಿ ಹೊಂದಿಕೊಂಡಿರಬೇಕು ಎಂಬ ನಿಲುವು ಈ ವಚನದಲ್ಲಿ ವ್ಯಕ್ತಗೊಂಡಿದೆ. ಈ ವಚನವು ಕಾವ್ಯದಲ್ಲಿ ಅತ್ಯುತಮವಾದ ಶೈಲಿ ಹೇಗಿರಬೇಕು ಎಂಬುದರ ಬಗೆಗೆ ಸೂತ್ರವಾಗಿರುವುದರ ಜೊತೆಗೆ ವಚನಕಾರರ ಶೈಲಿಯ ವಿವರಣೆಯ ಪ್ರತೀಕವು ಆಗಿದೆ.

 ವಚನಗಳಲ್ಲಿ ಬಾಹ್ಯ ನಿಸರ್ಗದ ವರ್ಣನೆಗಿಂತ ಅಂತರಂಗದ ನಿಸರ್ಗದ ವರ್ಣನೆ. ಮನುಷ್ಯ ಪ್ರಕೃತಿಯ ಚಿತ್ರಣಗಳನ್ನು ಕಾಣಬಹುದು. ಪ್ರಾಚೀನ ಕವಿಗಳ ಸೌಂದರ್ಯ ಪ್ರಜ್ಞೆಯು ಬಾಹ್ಯ ನಿಸರ್ಗದ ಸೌಂದರ್ಯ ದೃಷ್ಟಿಯಿಂದ ಕೂಡಿದ್ದರೆ, ವಚನಕಾರರ ಸೌಂದರ್ಯ ಪ್ರಜ್ಞೆ ಅದರಿಂದ ಹೊರತಾಗಿವೆ. ವಚನಕಾರರಲ್ಲಿ ಉದಯ, ಅಸ್ತಮಾನಗಳು ಪ್ರಸ್ತಾಪಗೊಂಡರೂ ಕೇವಲ ಕಾಲಸೂಚಕವಾಗಿವೆ. ವಚನಕಾರರು ನಿಸರ್ಗ ವ್ಯಾಪಾರಗಳ ರಮ್ಯತೆಯ ಕಡೆಗೆ ಅಷ್ಟಾಗಿ ಗಮನ ಹರಿಸಿಲ್ಲ. ನಿಸರ್ಗದ ವ್ಯಾಪಾರಗಳನ್ನು ತಮ್ಮ ಮನಃ ಸ್ಥಿತಿಯನ್ನು ಸೂಚಿಸುವ ದೇವರ ವಿಚಾರದಲ್ಲಿರುವ ತಮ್ಮ ಸಂಬಂಧದ ಕಾತರತೆಯನ್ನು ವ್ಯಕ್ತಗೊಳಿಸಲು ಮಾತ್ರ ನಿಯುಕ್ತವಾಗಿವೆ ಎಂದೆನಿಸುತ್ತದೆ. ಬಸವಣ್ಣನವರಿಗಂತೂ ಸುತ್ತಣ ನಿಸರ್ಗದ ರಮಣೀಯತೆಯ ಬಗೆಗೆ ಗಮನ ಹರಿಸದೆ ಪೂಜಾ ಸೌಂದರ್ಯದ ಕಡೆಗೆ ಮಾತ್ರ ಕೇಂದ್ರೀಕರಿಸಿದ್ದಾರೆ. ಆದರೆ ಅಕ್ಕಮಹಾದೇವಿ ಹಾಗೂ ಜೇಡರ ದಾಸಿಮಯ್ಯಗಳ ವಚನಗಳಲ್ಲಿ ವಿಸ್ಮಯಮೂಲವಾದ ನಿಸರ್ಗ ಪ್ರಿಯತೆಯನ್ನು ಕಾಣಬಹುದಾಗಿದೆ.

 ಯಾವ ಕವಿಯೂ ತಾನು ಎಷ್ಟೋ ಸ್ವತಂತ್ರನೆಂದು ತಿಳಿದುಕೊಂಡರೂ ಅವನ ಅರಿವಿಲ್ಲದೆಯೇ ಪರಂಪರೆಯ ಕೆಲವು ಅಂಶಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿರುತ್ತಾನೆ. ವಚನಕಾರರು ಇದಕ್ಕೆ ಹೊರತಿಲ್ಲ ಎಂದೇಳಬಹುದು. ವಚನಕಾರರಲ್ಲಿ ಪೂರ್ವದ ಚಂಪೂ ಕವಿಗಳಲ್ಲಿ ಕಂಡುಬರುವ ಅಷ್ಟಾದಶ ವರ್ಣನೆಗಳು ಕಂಡು ಬರದಿದ್ದರೂ ಕೆಲವು ಕವಿಸಮಯ ಹಾಗೂ ಪುರಾಣ ಪ್ರಜ್ಞೆಗಳನ್ನು ಉಳಿಸಿಕೊಂಡಿರುವುದನ್ನು ಕಾಣಬಹುದು. ವಚನಗಳಲ್ಲಿ ಅಲ್ಲಲ್ಲಿ ಸಿಗುವ ಸೂರ್ಯ, ತಾವರೆ, ಅಂಬುಧಿ, ಚಂದ್ರೋದಯ, ಚಕೋರ, ಚಂದ್ರ, ರಾಹು ಇತ್ಯಾದಿ ಕವಿಸಮಯ ಸಂಗತಿಗಳು ವಚನಕಾರರ ಅಂದಂದಿನ ಮನಃ ಸ್ಥಿತಿಯ ಪ್ರತಿಮೆಗಳಾಗಿ ವ್ಯಕ್ತಗೊಂಡಿವೆ. ವಚನ ಸಾಹಿತ್ಯ ಪ್ರಕಾರವು ಹಿಂದಿನಿಂದ ಕಾವ್ಯವೆಂದು ಒಪ್ಪಿಕೊಂಡು ಬಂದ ಯಾವ ಲಕ್ಷಣಗಳ ಕಡೆಗೂ ಗಮನ ಕೊಡದೆ ತನಗೆ ತೋರಿದಂತೆ ಅಭಿವ್ಯಕ್ತಿಯನ್ನು ರೂಪಿಸಿಕೊಂಡಿತು. ತಮಗರಿವಿಲ್ಲದೆಯೇ ಮಾಡಿಕೊಂಡ ಅಭಿವ್ಯಕ್ತಿಯನ್ನು ಕುರಿತು ಅದನ್ನು ಸಮರ್ಥಿಸಿಕೊಳ್ಳುವ ತನಗೆ ತಾನೆ ಅರ್ಥವಾಡಿಕೊಳ್ಳುವ ಪ್ರಯತ್ನದಲ್ಲಿ ಬಸವಣ್ಣನಂತಹವರ ಈ ಕೆಳಕಂಡ

 ತಾಳಮಾನ ಸರಿಸವನರೆಯೆ,

 ಓಜೆಬಜಾವಣೆಯಲೆಕ್ಕವನಱಿಯೆ

ಅಮೃತಗಣ ದೇವಗಣವನರಱಿಯೆ

ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ (ಸ.ವ.ಸಂ.-1ವ.ಸಂ.494) ಎಂಬ ನಿರ್ಭಿಡತ್ವದ ಉಕ್ತಿ ಅಂದಿನ ತನಕ ಯಾವ ಕವಿಯೂ ತೋರದ ವ್ಯಕ್ತಿ ಸ್ವಾತಂತ್ರ್ಯದ ಧೈರ್ಯವನ್ನು ವಚನಕಾರರು ತೋರಿದರು ಎಂಬುದನ್ನು ಸೂಚಿಸುತ್ತದೆ. ಇಂತಹ ಹೇಳಿಕೆಯಲ್ಲಿ ತಮ್ಮ ಅಭಿವ್ಯಕ್ತಿಯಲ್ಲಿ ಕಂಡು ತಮಗೆ ಅನ್ನಿಸಿದ ಅಥವಾ ಯಾರೋ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಧಾಟಿಯಲ್ಲಿ ಮಾಡಿಕೊಂಡ ಕಾವ್ಯ ಸಮರ್ಥನೆಯಂತಿದೆ. (ಸಮಗ್ರಗದ್ಯ-1. ಪುಟ.127) ಈ ವಿವರಣೆಯು ವಚನಗಳು ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ತಾನು ಒಲಿದಂತೆ ಹಾಡುವೆ ಎಂಬ ವ್ಯಕ್ತಿನಿಷ್ಠತೆಯನ್ನು ಸೂಚಿಸುತ್ತದೆ.

ಬಷವಣ್ಣನವರ ವಚನಗಳ ಕಾವ್ಯ ಸೌಂದರ್ಯವನ್ನು ಕುರಿತು ಜಿ.ಎಸ್.ಶಿವರುದ್ರಪ್ಪವರು ಈ ರೀತಿ ವಿವರಿಸುತ್ತಾರೆ. ಬಸವಣ್ಣನವರ ವಚನಗಳಲ್ಲಿ ಮೂರಸ್ಥಲಗಳನ್ನು ನಾವು ಗುರುತಿಸಬಹುದು.

1.ಬಸವಣ್ಣನವರಿಗೆ ಆದಂಥ ಅನುಭವ. ಅದು ಅವರ ವ್ಯಕ್ತಿತ್ವದ ರಸಮಯತೆಯಿಂದ ಒಂದು ಮಟ್ಟದಲ್ಲಿ ಕಾವ್ಯವಾಗುತ್ತದೆ. ಅನಂತರ ಅದರಲ್ಲಿ ಬರುವ ವಿವರಣಾತ್ಮಕವಾದ ವಾಕ್ಯ, ತಮಗೆ ಏನು ಅನ್ನಿಸಿತೋ ಅದು ಉಳಿದ ಸಾಮಾನ್ಯರಿಗೂ ಅರ್ಥವಾಗಬೇಕು ಎನ್ನುವ ಅನುಕಂಪದಿಂದ ಮಾಡಿದ್ದು ಮೂರನೆಯದ್ದು ಈ ಒಂದು ತತ್ವ್ತವೋ, ನೀತಿಯೋ ಈ ಸಮಾಜ ಸುಧಾರಣೆಗೆ ಉಪಯೋಗವಾಗಬೇಕು ಎನ್ನುವುದು. ಹಾಗಾಗಬೇಕಾದರೆ ಈ ಅನುಭವವನ್ನು ಅಭಿವ್ಯಕ್ತಗೊಳಿಸುವ ಭಾಷಾಮಾಧ್ಯಮ ಹೇಗಿರಬೇಕು ಎಂಬ ವಿಚಾರದಲ್ಲಿ ಅವರು ತಾಳಿದ ವಿಶೇಷ ರೀತಿಯ ಎಚ್ಚರ’ (ಸಮಗ್ರ ಗದ್ಯ-1.ಪು.129). ಈ ವಿವರಣೆಯು ಸಹಜ ಕವಿಗಿರಬೇಕಾದ ಲಕ್ಷಣ ಬಸವಣ್ಣನವರಲ್ಲಿದೆ ಎಂಬುದನ್ನು ಸೂಚಿಸುತ್ತದೆ.

 ವಚನಕಾರರು ಹಿಂದಿನ ಕಾವ್ಯ ಪರಂಪರೆಯೊಂದಿಗೆ ತಮ್ಮ ಸಂಬಂಧವನ್ನು ಕಳಚಿಕೊಂಡಿದ್ದರೂ ಸ್ವತಂತ್ರ ವ್ಯಕ್ತಿತ್ವದ ಮೂಲಕ ವಿಫುಲ ಪ್ರತಿಮಾ ಸಂಪತ್ತನ್ನು ನಿರ್ಮಾಣ ಮಾಡಿದ್ದಾರೆ. ಇವರು ಕಾವ್ಯಾಭಿವ್ಯಕ್ತಿಗೆ ಗದ್ಯದ ಸತ್ವವನ್ನು ಕೂಡಿಸಿಕೊಂಡು ಆಡುಭಾಷೆಯನ್ನು ಆಡುಭಾಷೆಯನ್ನಾಗಿಯೇ ಉಳಿಸಿಕೊಂಡು ಪದ್ಯದ ಸೊಗಸನ್ನು ವಚನಗಳಲ್ಲಿ ಕಾಣಿಸಿರುವುದು ಮಹತ್ವದ ಸಂಗತಿಯಾಗಿದೆ. ಬಸವಣ್ಣ ಅಕ್ಕಮಹಾದೇವಿ ಅಲ್ಲಮಪ್ರಭು ಜೇಡರದಾಸಿಮಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಸೂಕ್ತಿ ಸದೃಶವಾದ ಉಕ್ತಿಗಳು ಉಪಮಾ ರೂಪಕಗಳು ಪ್ರತಿಮಾ ಪರಂಪರೆಗಳು. ಮಾತಿನ ಹೊಂದಾಣಿಕೆಯಲ್ಲಿ ಕಂಡುಬರುವ ಅನುಪ್ರಾಸ, ಅಂತ್ಯಪ್ರಾಸಗಳ ರಮ್ಯತೆ, ಇವುಗಳಲ್ಲಿ ಅಂತರ್ಗತವಾಗಿರುವ ಅನೇಕ ಛಂದೋವೈವಿದ್ಯಗಳು ಗಓಚರವಾಗುತ್ತವೆ. ಬದುಕಿನ ಅನೇಕ ಮುಖಗಳಿಂದ ಚಿತ್ರಗಲನ್ನೆತ್ತಿಕೊಂಡು ತಮ್ಮ ಅಂತರಂಗದ ಬದುಕನ್ನು ವ್ಯಂಜಿಸುವ ವಿಸ್ಮಯ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ವಚನಗಳ ಕಾವ್ಯ ಸೌಂದರ್ಯವು ಪರಂಪರಾಗತವಾದ ಕಾವ್ಯ ಸೌಂದರ್ಯದಿಂದ ಬೇರೆಯಾಗಿ ಜೀವನವೇ ಕಾವ್ಯವಾದಾಗ ಸಂಭವಿಸುವ ಸೌಂದರ್ಯದ ಪ್ರತೀಕವಾಗಿದೆ.

 ಅಕ್ಕಮಹಾದೇವಿಯ ಜೀವನವೇ ಒಂದು ಕಾವ್ಯದಂತಿರುವಾಗ ಅಕ್ಕಳ ಅಂತ ಸ್ಫುರಣಿಯಿಂದ ಹೊರಹೊಮ್ಮಿದ ವಚನಗಳಲ್ಲಿ ಕಾವ್ಯಸೌಂದರ್ಯ ಒಡಮೂಡಿರುವುದು ಎಲ್ಲರೂ ತಿಳಿದಿರತಕ್ಕ ವಿಷಯವೇ ಆಗಿದೆ. ಆಕೆ ತನ್ನ ಇಷ್ಟ ದೈವನಿಗಾಗಿ ಪಟ್ಟ ಬವಣೆ, ಅನುಭವಿಸಿದ ವಿರಹ, ನೊಂದ ನೋವು, ಪಟ್ಟ ಪಡು ಇವೆಲ್ಲವೂ ಸಹಜವಾಗಿ ಆಕೆಯ ಪ್ರತಿಭಾ ಕೌಶಲ್ಯದ ಮೂಸೆಯಲ್ಲಿ ಸುಂದರ ವಚನಗಳಾಗಿ ಹಾಡುಗಳಾಗಿ ಹೊರಹೊಮ್ಮಿವೆ. ಅಕ್ಕಮಹಾದೇವಿಯ ವಚನಗಳಲ್ಲಿ ಆಧ್ಯಾತ್ಮ ಮತ್ತು ಗದ್ಯ ಕವಿತ್ವದ ಸಮ್ಮಿಲನದಿಂದಾಗಿಯೇ ಮೊದಲ ಕವಿಯತ್ರಿ ಎಂಬ ಖ್ಯಾತಿಗೆ ಒಳಗಾಗಿರುವುದು. ಅಕ್ಕಮಹಾದೇವಿಯ ವಚನಗಳು ಕಾವ್ಯ ಸೌಂದರ್ಯಕ್ಕೆ ಹೇಳಿ ಮಾಡಿಸಿದಂತಿವೆ. ತನ್ನ ಇಷ್ಟದೈವವನ್ನೇ ತನ್ನ ಗಂಡನೆಂದು ಭಾವಿಸಿದ ಅಕ್ಕಳ ದೈವದ ಕಲ್ಪನೆ ಅಂದಿನ ವೀರಶೈವ ಧರ್ಮದ ಕಲ್ಪನೆಗಿಂತ ಭಿನ್ನವಾಗಿದೆ. ಆಕೆಯ ಪತಿ ಮಲ್ಲಿಕಾರ್ಜುನ ಪರಮ ಸಾಕಾರ ಸುಂದರ ಮೂರ್ತಿ ವಚನಗಳಲ್ಲಿ ಆತನನ್ನು ರೂಪಿಸಲ್ಪದ ಚಲುವನೆಂದು ವರ್ಣಿಸಿದ್ದಾಳೆ. ಇಷ್ಟ ದೈವವನ್ನೆ ಗಂಡನೆಂದು ಕಲ್ಪಿಸಿಕೊಂಡ ಅಕ್ಕಳ ಕಣ್ಣಿಗೆ

ಹೊಳೆವ ಕೆಂಜೆಡೆಗಳ ಎಳೆವೆಳುದಿಂಗಳ

ಫಣಿಮಣಿ ಕರ್ಣ ಕುಂಡಲದವನು

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲಗೊರವನು

ಮಣಿಮುಕುಟದ ಫಣಿ ಕಂಕಣದ ನಗೆಮೊಗದ’ (ಸ.ವ.ಸಂ.5ವ.ಸಂ.352)

ಸುಲಿಪಲ್ಲ ಸೊಬಗ’ ನಾಗಿ ಕಾಣುತ್ತಾನೆ. ತನ್ನ ಇಷ್ಟ ದೈವದ ಗಂಡನೊಂದಿಗೆ ಒಂದಾಗುವ ಸ್ಥಿತಿ ಕೇವಲ ಬಯಲ ಅಥವಾ ಬೆಳಕಿನ ಅಥವಾ ಕೇವಲ ಜ್ಯೋತಿಯ ಸ್ಥಿತಿ ಮಾತ್ರವಾಗದೆ ಅದು ಉತ್ಕಟವಾದ ಪ್ರಣಯಾನುಭವವಾಗಿದ್ದು ಶೃಂಗಾರ ರೂಪಕಗಳ ಮೂಲಕವಾಗಿಯೇ ವರ್ಣಿತವಾಗಿದೆ. ಅಕ್ಕಳ ಅನುಭಾವ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಕನಸು ಹಂಬಲ ಹಾಗೂ ತಳಮಳಗಳ ರೂಪದ ಅನ್ವೇಷಣೆಯ ಸ್ಥಿತಿಯಾಗಿರುವುದರಿಂದ ಅಂತರ್ಮುಖ ಪ್ರವೃತ್ತಿಯಾಗಿದೆ. ತಾನೊಲಿದ ಗಂಡನೊಂದಿಗೆ ತನಗೆ ಒದಗಿದ ವಿರಹ ಹಾಗೂ ಆತನೊಂದಿಗೆ ತಾನು ಒಂದಾಗುವ ಉತ್ಕಟವಾದ ಹಂಬಲದ ಪ್ರಯಾಣದ ಉದ್ದಕ್ಕೂ ಅವಳು ಆಡುವ ಮಾತೆಲ್ಲ ಭಾರತೀಯ ಪ್ರೇಮ ಕಾವ್ಯದ ವಿರಹಗೀತೆಗಳ ಮಾದರಿಗಳಂತಿವೆ. ಅವಳ ವಚನಗಳಲ್ಲಿ ಉತ್ಕಟವಾದ ಶೃಂಗಾರಭಾವದ ಅನೇಕ ಕ್ಷಣಗಳು ದಾಖಲಾಗಿವೆ.

ಬಸವಣ್ಣನವರ

ಕೆರೆಹಳ್ಳಬಾವಿಗಳು ಮೈದೆಗೆದಡೆ

ಗುಳ್ಳೆಗೊರಚೆ ಚಿಪ್ಪುಗಳು ಕಾಣಬಹುದು

ವಾರುಧಿ ಮೈದೆಗೆದಡೆ ರತ್ನಂಗಳು ಕಾಣಬಹುದು

ಕೂಡಲಸಂಗನ ಶರಣರು ಮನದೆರೆದು ಮಾತನಾಡಿದಡೆ

ಲಿಂಗವ ಕಾಣಬಹುದು (ಸ.ವ.ಸಂ-1.ವ.ಸಂ.365) ಎಂಬ ವಚನದಲ್ಲಿ ದಿವ್ಯವಾದ ಸೌಂದರ್ಯವನ್ನು ಕಾಣಬಹುದಾಗಿದೆ. ಪರೋಕ್ಷವಾಗಿ ಈ ವಚನ ಕವಿ ಕಾವ್ಯದ ಪರವಾಗಿ ವಿಪುಲಾರ್ಥವನ್ನು ಧ್ವನಿಸುತ್ತದೆ. ಈ ವಚನದಲ್ಲಿಯ ಕೆರೆಹಳ್ಳಬಾವಿ-ಸಮುದ್ರ-ಶರಣರು: ಗುಳ್ಳೆಗೊರಚೆ ಚಿಪ್ಪು-ರತ್ನ-ಲಿಂಗ ಹೀಗೆ ಚಿತ್ರವು ಬೆಳೆದುಕೊಂಡು ಹೋಗಿರುವುದನ್ನು ಕಾಣಬಹುದಾಗಿದೆ. ಈ ವಚನ ಹಿನ್ನೆಲೆಯಲ್ಲಿ ಕವಿನಿರ್ಮಿತ ಕಾವ್ಯರಾಶಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಕವಿಗಳಲ್ಲಿ ಕೆಲವರು ದಿನಿತ್ಯದ ಸಾಧಾರಣ ವಾಸ್ತವ ವಿಷಯಗಳಷ್ಟರಲ್ಲೆ ರಮಿಸಿ ವಿರಮಿಸಿ ಅಷ್ಟರಲ್ಲಿಯೇ ತೃಪ್ತಿಯನ್ನು ಹೊಂದುತ್ತಾರೆ. ಅಂಥವರ ಸಾಹಿತ್ಯದ ಸ್ವರೂಪವನ್ನು ಮೇಲ್ಕಂಡ ವಚನದ ಮೊದಲನೆ ರೂಪಕ ಧ್ವನಿಸುತ್ತದೆ. ಅಂತಹ ಕವಿಗಳ ವೈಯಕ್ತಿತ್ವನ್ನು ಕೆರೆ,ಹಳ್ಳ, ಭಾವಿ ಎನ್ನುವ ಪ್ರತಿಮೆಗಳು ಸೂಚಿಸುತ್ತವೆ. ಕವಿಗಳಲ್ಲಿ ಮತ್ತಲವರು ವಾರಿಧಿ ಸದೃಶರಾದ ಮಹಾಕವಿಗಳು. ಅವರ ಕಾವ್ಯಗಳಲ್ಲಿ ಎಲ್ಲಾ ಕಾಲಕ್ಕೂ ಬೆಲೆಯುಳ್ಳ ಚಿರಂತನ ಭಾವರತ್ನಗಳಾಗಿವೆ. ವಚನದ ಎರಡನೇ ರೂಪದ ಅಂತಹ ಮಹಾಕವಿಗಳ ವ್ಯಕ್ತಿತ್ವನ್ನು ವಾರಿಧಿ ರತ್ನ ಮುಂತಾದ ಪ್ರತಿಮೆಗಳ ಮೂಲಕ ಕಾವ್ಯದ ಮಹತ್ವದನ್ನು ಸೂಚಿಸುತ್ತದೆ. ವಚನದ ಮೂರನೆಯ ರೂಪಕವು ಇವೆರಡನ್ನೂ ಮೀರಿದ ಶರಣ ಸಾಹಿತ್ಯದ ಅನುಭಾವಿಗಳ ಅಮೃತವಾಣಿಯ ಮಹಿಮೆಯನ್ನು ವಿವರಿಸುತ್ತದೆ. ಶರಣರು ಮನದೆರೆದು ಮಾತನಾಡಿದರೆ ಲಿಂಗವೇ ದೈವೀ ಪ್ರಕಾಶದ ಹಾಗೆ ಕಾಣುತ್ತದೆ.

   ವಚನಕಾರರು ಲೋಕದ ಚಲುವಿಗೆ ಬೆರಗಾಗಿ ಆಶ್ಚರ್ಯ ಚಕಿತರಾಗಿ ಬಣ್ಣಿಸುವುದಾಗಲಿ ತಮ್ಮ ಕಲ್ಪನೆಯ ಕಣ್ಣಿನಿಂದ ಚೆಲುವಿನ ಅನುಭವವನ್ನು ಸಿಂಗರಿಸಿ ಹಾಡುವುದಾಗಲಿ ಬಲ್ಲರು. ಇವರು ಲೋಕದ ಚೆಲುವನ್ನು ಕಂಡರೂ ಒಲಿದರೂ ಅವರ ಕಣ್ಣು ಅದರಾಚೆಯ ಬೆಳಕಿಗೆ ಕಾತರಿಸಿರುವ ಗುಣವನ್ನು ಹೊಂದಿದವರು. ನಿದರ್ಶನಕ್ಕೆ ಜೇಡರದಾಸಿಮಯ್ಯನ ಈ ವಚನವನ್ನು ಪರಿಶೀಲಿಸಬಹುದು.

ಲೋಕದ ಚೆಲುವನ್ನು ನೋಡಿ ದಾಸಿಮಯ್ಯರು

ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ

ಅಂಬರಕ್ಕೆ ಗದ್ದುಗೆ ಬೋದುಗೆ ಲ್ಲದಂತಿರಿಸಿದೆ’(ಸ.ವ.ಸಂ.7.ವ.ಸಂ.854) ಎಂದು ಉದ್ಗಾರ ಎತ್ತಿದ್ದಾರೆ. ಸುತ್ತಲೂ ಕಡಲಿನ ಅಪಾರ ಜಲರಾಶಿ ನಡುವೆ ಈ ನೆಲ. ಅದು ಹೇಗೆ ಈ ನೆಲದ ಮಣ್ಣು ಕರಗಿ ಹೋಗದೆ ಇದೆ. ಮೇಲಿನ ಆಕಾಶ ನೀಲಿಯ ಗುಮ್ಮಟದಂತೆ ತೋರುತ್ತದೆ. ಆದರೆ ಅದನ್ನು ಹಿಡಿದು ನಿಲ್ಲಿಸಿರುವ ಯಾವ ಗದ್ದುಗೆಯೂ ಬೋದುಗೆಯೂ ಇಲ್ಲವಲ್ಲ ಈ ಉದ್ಗಾರದಲ್ಲಿ ಎಂತಹ ಕವಿ ಸಹಜವಾದ ಬೆರಗು ವ್ಯಕ್ತಗೊಂಡಿದೆ.

ಅದೇ ರೀತಿ ಅಕ್ಕಮಹಾದೇವಿಯು ವಚನವೊಂದರಲ್ಲಿ ಸುತ್ತಮುತ್ತಲಿನ ತರು,ಮರಾದಿಗಳನ್ನು ನೋಡಿ ನೆಲವೊಂದೇ ಜಲವೊಂದೇ ಆದರೂ ಅವುಗಳಲ್ಲಿಯ ತರತಮಗಳನ್ನು ಅಂದರೆ ಮಾವಿನಲ್ಲಿ ಸಿಹಿ, ಈಳೆಯಲ್ಲಿ ಹುಳಿ, ಮರುಗ, ಮಲ್ಲಿಗೆಯಲ್ಲಿ ಪರಿಮಳಗಳನ್ನು ಆಶ್ಚರ್ಯ ಚಕಿತಳಾಗಿ ಈ ರೀತಿ ವ್ಯಕ್ತ ಪಡಿಸುತ್ತಾರೆ.

ಈಳೆ ನಿಂಬೆ ಮಾವು ಮಾದಲಕ್ಕೆ

ಹುಳಿ ನೀರನೆರೆದವರಾರಯ್ಯ

ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ

ಸಿಹಿನೀರನೆರೆದರರಾರಯ್ಯ

ಕಳವೆಶಾಲಿಗೆ ಓಗರದ ಉದಕವನೆರೆದವರಾರಯ್ಯ

ಮರುಗ ಮಲ್ಲಿಗೆ ಪಚ್ಚೆಗೆ

ಪರಿಮಳದುದಕವ ನೆರೆದವರಾರಯ್ಯ

ಇಂತೀ ಜಲವು ಒಂದೇ ನೆಲವು ಒಂದೇ

ಆಕಾಶವೂ ಒಂದೇ (ಸ.ವ.ಸಂ.5.ವ.ಸಂ.66)

ಈ ಆಶ್ಚರ್ಯವನ್ನು ಕಂಡ ಅಕ್ಕಮಾಹಾದೇವಿಯು ಆಶ್ಚರ್ಯಕರವಾದ ಮಾತಿನಲ್ಲಿ ಕಟ್ಟಿರುವುದು ಆಕೆಯ ಕವಿಹೃದಯವನ್ನು ಸೂಚಿಸುತ್ತದೆ.

   ಅಕ್ಕಮಹಾದೇವಿ. ಜೇಡರದಾಸಿಮಯ್ಯ ಬಸವಣ್ಣ ನಂತಹ ವಚನಕಾರರು ಸೃಷ್ಟಿಯ ಸೊಬಗನ್ನು ಬಣ್ಣಿಸುತ್ತಿಲ್ಲ. ಸೃಷ್ಟಿಯ ರಮ್ಯೋಜ್ವಲವರ್ಣ ವಿಲಾಸವನ್ನು ಚಿತ್ರಿಸ ಹೊರಟವರಲ್ಲ, ಎಲ್ಲರನ್ನೂ ಸೆಳೆಯುವ ಬಹಿರಂಗ ಅವರಿಗೆ ಅಪ್ರಸ್ತುತ. ಬಹಿರಂಗದಾಚೆಯಿರುವ ಶಿವನ ನೆಲೆಯ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾರೆ. ವಚನಕಾರರಲ್ಲಿ ನಿರಾಕಾರದ ಸೌಂದರ್ಯವೇ ಪ್ರಧಾನವಾಗಿ ಗೋಚರಿಸತಕ್ಕದ್ದು. ಬಹು ಪಾಲು ವಚನಗಳಲ್ಲಿ ಲಿಂಗ ಚೆಲುವನ್ನೇ ವರ್ಣಿಸಿರುವುದು. ವಚನಕಾರರ ವಚನ ಭಾಷೆಯಲ್ಲಿ ಕ್ಲಿಷ್ಟತೆ ಇಲ್ಲ. ನುಡಿಗಳು ಬಹು ಸುಲಭ ಹಾಗೂ ಸರಳತೆಯಿಂದ ಕೂಡಿದ್ದರೂ ಮಾಧುರ್ಯತನವನ್ನು ಕಾಣಬಹುದು. ಬಹುಪಾಲು ವಚನಗಳ ಶಿಲ್ಪದ ವೈಶಿಷ್ಟ್ಯವನ್ನು ಈ ರೀತಿ ಗುರುತಿಸಬಹುದು. ಒಂದು ವಿಚಾರ, ಅದನ್ನು ಮನದಟ್ಟು ಮಾಡಲು ಒಂದು ನಿದರ್ಶನ, ಇವೆಲ್ಲದರ ಅಭಿವ್ಯಕ್ತಿಗೆ ಪುಟ್ಟ ಪುಟ್ಟ ಪದಗಳ ಅಳವಡಿಕೆ. ವಚನಗಳು ಪಾರಮಾರ್ಥಿಕ ನಿರೂಪಣೆಯ ಕಡೆಗೆ ಹೆಚ್ಚಿನ ಒಲವನ್ನು ಪ್ರಕಟಿಸಿದ್ದರೂ ಬಹುಮಟ್ಟಿಗೆ ಅರ್ಥವಾಗುವಂತಿವೆ. ವಚನಕಾರರು ತಾವು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಉಪಮೆ, ದೃಷ್ಟಾಂತ, ಜಾಣ್ಣುಡಿಗಳನ್ನು ಸರಳ ದೇಸಿವಾಕ್ಯಗಳನ್ನು ಬಳಸಿದ್ದಾರೆ, ಇವರ ಶಬ್ದ ಸಂಪತ್ತಿನಲ್ಲಿ ಅಚ್ಚಗನ್ನಡ ಶಬ್ದಗಳೇ ಹೇರಳವಾಗಿವೆ. ವಚನಗಳ ಶೈಲಿಯು ಹಲವೆಡೆ ವಿಸ್ತೃತದಿಂದ ಕೂಡಿದ್ದು ಗದ್ಯಲಯವನ್ನು ಹೊಂದಿದೆ ಎಂದೆನಿಸುತ್ತದೆ. ಯಾವುದೇ ಗಹನವಾದ ತಾತ್ವಿಕ ಹಾಗೂ ಪಾರಮಾರ್ಥಿಕ ವಿಚಾರಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಬಹುದು ಎಂಬುದನ್ನು ವಚನಗಳು ಸೂಚಿಸಿವೆ. ವಚನಗಳಲ್ಲಿ ಅಲ್ಲಲ್ಲಿ ಕಾವ್ಯಗುಣ ಇಣುಕಿ ಹಾಕಿದೆ. ಇದು ಅವರ ಸಾಹಿತ್ಯ ಗುಣವನ್ನು ಎತ್ತಿತೋರಿಸುತ್ತದೆ. ಜನಜೀವನದ ಸಾಮನ್ಯ ದೃಷ್ಟಾಂತಗಳನ್ನು ಉದಾಹರಣೆಯಾಗಿ ಕೊಟ್ಟು ಗಾದೆ. ನಾಣ್ಣುಡಿಗಳನ್ನು ಸೇರಿಸಕೊಂಡು ಸರಳ ರೀತಿಯಲ್ಲಿ ತತ್ವವನ್ನು ಪ್ರತಿಪಾದಿಸಿದ್ದಾರೆ. ಸಾಹಿತ್ಯಕ ದೃಷ್ಟಿಯಿಂದ ಕೆಲವು ವಚನಗಲು ಮಹತ್ವ ಪಡೆದಿವೆ. ಸಕಲೇಶ ಮಾದರಸರ.

‘ಸರವರದ ಮಂಡೂಕನು

ತಾವರೆಯ ನೆಳಲ ಸಾರಿದಡೆ ಪರಿಮಳವದಕ್ಕೆ ಅಯ್ಯಾ

ಅ ಅ ಅ ಅ ಅರೆಯಬಾರದು ಪರಿಮಳವದಕ್ಕೆ ಅಯ್ಯಾ

ಅ ಅ ಅ ಅ ಅರೆಯಬಾರದು ಮರಾಳಿಗಲ್ಲದೆ ಅಯ್ಯಾ (ವ.ಸಂ.124)

ಸಕಲೇಶ್ವರದೇವಾ ನಿಮ್ಮವೇಧಿಸಿದ ವೇದ್ಯರಿಗಲ್ಲದೆ’

 ಎಂಬ ವಚನದಲ್ಲಿ ಒಂದೇ ಸರೋವರದಲ್ಲಿರುವ ಕಪ್ಪೆ ದುಂಬಿಗಳೆರಡೂ ಕಮಲದ ಬಳಿಯಿದ್ದರೂ ದುಂಬಿಗೆ ಮಾತ್ರ ಒಂದೇ ಸುವಾಸನೆ ತಿಳಿಯುತ್ತದೆ. ಕಪ್ಪೆಗೆ ತಿಳಿಯುವುದಿಲ್ಲ ಎನ್ನುವಾಗ ಅ ಅ .. ಎಂದು ಅಕ್ಷರಗಳನ್ನು ಪುನರಾವರ್ತನೆ ಮಾಡುವುದು, ಅರಿಯದ ಮೂಢರು ತೊದಲುವುದನ್ನು ಧ್ವನಿಸುತ್ತದೆ. ಅಂದರೆ ಅ ಅ ಅ ಅ ಎಂಬುದು ಎನೂ ಅರಿಯದ ಮೂಢ ಎನೋ ಹೇಳಲಿಕ್ಕೆ ಹೋಗಿ ತಡವರಿಸುವುದನ್ನು ಶಕ್ತವಾಗಿ ಧ್ವನಿಸಿದೆ.

 ವಚನಕಾರರ ಅನೇಕ ವಚನಗಳಲ್ಲಿ ಸಾಹಿತ್ಯ ಮನೋಧರ್ಮವುಳ್ಳ ಅನುಭವಿಯ ಸಹಜ ಸುಂದರವಾದ ಅಭಿವ್ಯಕ್ತಿಗಳನ್ನು ಕಾಣಬಹುದಾಗಿದೆ. ಇವರ ಬಹುಪಾಲು ವಚನಗಳಲ್ಲಿ ಉಪಮೆ, ರೂಪಕಗಳು, ದೃಷ್ಟಾಂತಗಳು ತರತರನಾಗಿ ಕಾಣಿಸಿಕೊಂಡಿದ್ದು ಅವರಲ್ಲಿರುವ ಕವಿ ಮನೋಭಾವವನ್ನು ಓದುಗರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿವೆ.

ಬಸವಣ್ಣನವರ ವಚನಗಳಲ್ಲಿ ರಚನಾ ಶಿಲ್ಪ ಎದ್ದು ಕಾಣುವಂತಹದ್ದಾಗಿದೆ.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ

ಇದ್ದರೇನು ಶಿವಾಶಿವಾ ! ಹೋದರೇನು ಶಿವಾ!

ಕೂಡಲಸಂಗಮದೇವಯ್ಯ,

ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ (ಸ.ವ.ಸಂ-ವ.ಸಂ.109)

ಈ ವಚನದಲ್ಲಿ ಗಂಡ-ಸ್ನೇಹ-ಹೆಂಡತಿ: ಲಿಂಗ-ನಿಷ್ಠೆ-ಭಕ್ತ ಇವುಗಳಿಗಿರುವ ಹೋಲಿಕೆಯನ್ನುಅರ್ಥಗರ್ಭಿತವಾಗಿ ಸೂಚಿಸಿದೆ. ವಚನದಲ್ಲಿಯ ಇದ್ದರೇನು ಶಿವಾಶಿವಾ ! ಹೋದರೇನು ಶಿವಾ! ಎಂಬುದು ಆಡು ಮಾತಿನ ಶೈಲಿಯ ಸಾರ್ಥಕ ಬಳಕೆಯನ್ನು ಸೂಚಿಸುತ್ತದೆ. ಕೊನೆಯಲ್ಲಿಯ ಉಪಮೆಯು ಗಾದೆಯ ಮಾತಿನ ರೀತಿಯಲ್ಲಿದ್ದು, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ತಾತ್ಸಾರ ಭಾವನೆ ವ್ಯಕ್ತವಾಗಿದೆ. ವಚನದ ಕೊನೆಯ ಸಾಲಿನಲ್ಲಿಯ ಹೋಲಿಕೆ ಭಕ್ತನಿಗೆ ದೇವರು ಬೇಕಿಲ್ಲದಿದ್ದರೆ ದೇವರಿಗೂ ಅವನೂ ಬೇಕಿಲ್ಲ ಎಂಬ ಧ್ವನಿಯನ್ನೂ ಸೂಚಿಸುತ್ತದೆ.

    ವಚನಗಳು ಸರ್ವಕಾಲೀನ ಸಾರ್ವಜನೀನ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಮೂರ್ತ ಸ್ವರೂಪವಾಗಿದ್ದು, ಕವಿಹೃದಯದ ವಚನಕಾರನ ಭಕ್ತಾರ್ದ್ರವೂ ಪ್ರಾಮಾಣಿಕವೂ ಆದ ಹೃದಯವಂತಿಕೆಯ ರಸಲೇಪದಿಂದ ಕೂಡಿದ ಸಾಹಿತ್ಯ ಸುಧೆಯ ಸಾರವಾಗಿವೆ. ಈ ಕಾರಣದಿಂದ ಕೆಲವು ವಚನಗಳನ್ನು ಮತ್ತೆ ಮತ್ತೆ ಓದಿದರೂ ಅವು ಸವಿಯೆನಿಸುತ್ತವೆ. ಅವುಗಳ ಹೊಸತನ ಹೊಳಪು ಮಾಸುವುದಿಲ್ಲ’ ಉಪಮೆ, ರೂಪಕ, ದೃಷ್ಟಾಂತ ಗಳನ್ನೊಳಗೊಂಡ ಬಹುಪಾಲು ವಚನಗಳು ಕವಿಮನೋಭಾವದಿಂದ ಹೊಮ್ಮಿವೆ.

   ವಚನಕಾರರು ಪ್ರಾಣಿ ಪಕ್ಷಿ ಪ್ರಪಂಚದಿಂದಲೂ ಸಾಕಷ್ಟು ರೂಪಕಗಳನ್ನು ರೂಪಿಸಿದ್ದಾರೆ. ವಚನಕಾರರು ತಮ್ಮ ಅಂತರಂಗದ ಅಂದಂದಿನ ತೊಳಲಾಟವನ್ನು ವಚನಗಳ ಮೂಲಕ ತೋಡಿಕೊಳ್ಳುವಂತಹ ಸಂದರ್ಭದಲ್ಲಿ ಪ್ರಾಣಿ ರೂಪಕಗಳನ್ನು ಕೆಲವೆಡೆ ಬಳಸಿದ್ದಾರೆ. ನಾಯಿಯ ಚಿತ್ರ, ಮರ್ಕಟ, ಹಸು, ಕಾಗೆ, ಇತ್ಯಾದಿಗಳನ್ನು ಮನಸ್ಸಿನ ಚಾಂಚಲ್ಯವನ್ನು ಚಿತ್ರಿಸಲು ಬಳಸಿಕೊಂಡಿರುವುದನ್ನು ಕಾಣುಬಹುದು. ಒಂದೇ ಪ್ರಾಣಿ ಅಥವಾ ಪಕ್ಷಿ ರೂಪಕವನ್ನು ವಿವಿಧಾರ್ಥಗಳನ್ನು ದುಡಿಸಿಕೊಳ್ಳಲು ಬಳಸಿರುವುದು ಗಮನಿಸಬೇಕಾದ ಸಂಗತಿ.

 ಗಿಳಿಯೊದಿ ಫಲವೇನು ?

 ಬೆಕ್ಕು ಬಹುದ ಹೇಳಲರಿಯದು

 ಹಂಜರ ಬಲ್ಲಿತೆಂದು ಅಂಜದೆ ಓದುವ ಗಿಳಿಯೇ

 ಎಂದೆಂದೂ ಅಳಿಯನೆಂದು ಗುಡಿಗಟ್ಟಿದೆಯಲ್ಲಾ

 ನರವಿಂಧ್ಯದೊಲಗೆನ್ನ ಹುಲಗಿಳಿಯಮಾಡಿ

 ಸಲಹುತ್ತ ಶಿವಶಿವಾ ಎಂದೋದಿಸಯ್ಯಾ (ಸ.ವ.ಸಂ.-1ವ.ಸಂ.123)

ಈ ವಚನಗಳ ಸಾಲುಗಳಲ್ಲಿ ಗಿಳಿಯ ಚಿತ್ರ ಬಂದರು ಅದು ಮೂರು ಬೇರೆ ಬೇರೆಯ ಅರ್ಥಗಳನ್ನು ಕೊಡಲು ನಿಯೋಜಿತವಾಗಿದೆ. ಮೊದಲನೆಯ ರೂಪಕ ಪಾಂಡಿತ್ಯದ ನಿಷ್ಫಲತೆಯನ್ನು ಮೃತ್ಯು ತತ್ವದ ಹಿನ್ನಲೆಯಲ್ಲಿ ಹೇಳಿದರೆ, ಎರಡನೆಯ ರೂಪಕ ಶರೀರದ ಶಾಶ್ವತತೆಯ ಭ್ರಮೆಯನ್ನು ಹೇಳುತ್ತದೆ. ಮೂರನೆಯ ರೂಪಕ ಸದ್ಗುರುವಿನ ಬಳಿ ನಿಜವಾದ ಶಿಷ್ಟನಾಗಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ಹಂಬಲವನ್ನು ಹೇಳುತ್ತದೆ.

 ಬಸವಣ್ಣನವರ ಮತ್ತೊಂದು ಪ್ರಸಿದ್ಧ ವಚನವಾದ,

 ‘ನೆರೆಕೆನ್ನೆಗೆ, ತೆರೆಗಲ್ಲಕೆ ಶರೀರಗೂಡುವೋಗದ ಮುನ್ನ

 ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ

 ಕಾಲಮೇಲೆ ಕೈಯನೂರ ಕೋಲಹಿಡಿಯದ ಮುನ್ನ

 ಮುಪ್ಪಿಂದೊಪ್ಪವಳಿಯದ ಮುನ್ನ ಮೃತ್ಯು ಮುಟ್ಟದ ಮುನ್ನ

 ಪೂಜಿಸು ನಮ್ಮ ಕೂಡಲ ಸಂಗಮದೇವನ’ (ಸ.ವ.ಸಂ.-1.ವ.ಸಂ.161)

 ಈ ವಚನದಲ್ಲಿಯ ಒಂದೊಂದು ಸಾಲು ಹಂತ ಹಂತವಾಗಿ ಮುಪ್ಪಿನ ಚಿತ್ರವನ್ನು ಕಟ್ಟಿಕೊಡುತ್ತದೆ. ಇಲ್ಲಿಯ ವಚನದ ಸಾಲುಗಳಲ್ಲಿ ಮುಪ್ಪಿನ ದೃಶ್ಯವನ್ನು ಭಾವಾಭಿನಯದ ಮೂಲಕ ಮೂಡಿ ತೋರಿಸುವಷ್ಟು ಜೀವಂತ ಮತ್ತು ಸುಂದರವಾಗಿವೆ. ಇಂತಹ ನಿದರ್ಶನಗಳನ್ನು ವಚನ ಸಾಹಿತ್ಯದಲ್ಲಿ ವಿಫುಲವಾಗಿ ಕಾಣಬಹುದಾಗಿದೆ.

   ವಚನಕಾರರ ಅನುಭವ ಅಭಿವ್ಯಕ್ತಿಗಳು ವಿಶಿಷ್ಟವಾದವುಗಳು. ಅವರ ಜೀವನದ ಅಂತರಂಗ ಮತ್ತು ಬಹಿರಂಗಗಳೆರಡೂ ಅವರ ವಚನಗಲ ಶೈಲಿಗಳಲ್ಲಿ ಒಡಮೂಡಿದೆ. ವಚನಗಳಲ್ಲಿಯ ಗಾದೆಮಾತುಗಳು ಹಾಗೂ ಸೂಕ್ತಿ ಸದೃಶವಾದ ನುಡಿಮುತ್ತುಗಳಿಂದಾಗಿ ಕಾವ್ಯದ ಚೆಲುವನ್ನು ಪಡೆದಿವೆ.

 ಅದರಕ್ಕೆ ಕಹಿ ಉದರಕ್ಕೆ ಸಿಹಿ

 ಆನೆಯ ಮೇಲೆ ಹೋಹುನ ಶ್ವಾನ ಕಚ್ಚಬಲ್ಲದೆ

 ಊರ ಸೀರೆಗೆ ಅಸಗ ತಡಿಬಡಿಹಡೆದಂತೆ

 ಬಡವನ ಕೋಪ ಅವುಡಿಗೆ ಮೃತುವಾದಂತೆ

ಇತ್ಯಾದಿ ಜನಸಾಮಾನ್ಯರ ಬಳಕೆಯಲ್ಲಿದ್ದ ಗಾದೆ ಮಾತುಗಳು ವಚನಕಾರರ ಅಭಿವ್ಯಕ್ತಿಗೆ ದೇಸಿಯ ಸೊಗಡು, ರಮ್ಯತೆ ಅರ್ಥವಂತಿಕೆಗಳನ್ನು ತಂದಿದೆ.

 ದಯವಿಲ್ಲದ ಧರ್ಮವಾವುದಯ್ಯಾ

 ಆಚಾರವೇ ಸ್ವರ್ಗ ಅನಾಚಾರವೇ ನರಕ

ಇತ್ಯಾದಿ ಸರಳತೆಯನ್ನು ಹೊಂದಿದ ನಿರಲಂಕಾರವನ್ನು ಹೊಂದಿದ ನುಡಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.

 ವಚನಗಳಲ್ಲಿ ಚಿತ್ರಕ ಶಕ್ತಿಯನ್ನು ಹೇರಳವಾಗಿ ಕಾಣಬಹುದಾಗಿದೆ. ರೂಪಕ, ಉಪಮೆ ಪ್ರತಿಮೆಗಳಲ್ಲಿ ಚಿತ್ರಗಳ ಮಾಲೆ ಮಾಲೆಯನ್ನೇ ಎಣಿದಿದ್ದಾರೆ. ಕೆಲವು ವಚನಗಳಂತೆ ಒಂದೊಂದು ಸಾಲಿನಲ್ಲಿಯೂ ಒಂದೊಂದು ಜೀವಂತ ಚಿತ್ರವನ್ನು ಕಟ್ಟಿಕೊಡುತ್ತವೆ.

ನಿರ್ದಶನಕ್ಕೆ : ಸಾಸಿವೆಯ ಮೇಲೆ ಸಾಗರ ಹರಿದಂತಾದ

ಅದೇ ರೀತಿ ಬಸವಣ್ಣ ಅಕ್ಕಮಹಾದೇವಿ ಮುಂತಾದವರ ವಚನಗಳಲ್ಲಿ ಕಾವ್ಯ ಶೈಲಿಯ ಒಂದು ಗುಣವಾದ ಮಾರ್ದವತೆಯನ್ನು ಗುರುತಿಸಬಹುದಾಗಿದೆ.

 ‘ನೀನೊಲಿದರೆ ಕೊರಡು ಕೊನರುವುದಯ್ಯಾ

 ನೀನೊಲಿದರೆ ಬರಡು ಹಯನಹುದಯ್ಯಾ’ ಎಂದು ಭಗವಂತನ ಭಕ್ತಿಯ ಹಿರಿಮೆಯನ್ನು ಹೊಗಳುವಲ್ಲಿ ಕೆಲವಡೆ ಲಯ, ಒಳ ಪ್ರಾಸ ಅನುಪ್ರಾಸಗಳು ಕಂಡುಬರುತ್ತಿದ್ದು ಅವರ ಅಭಿವ್ಯಕ್ತಿಯ ವಿಶಿಷ್ಟ ಗೇಯತೆಯನ್ನು ಸೂಚಿಸುತ್ತವೆ.

 ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

 ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

 ಮಾಡಿದನೆಂಬುದು ಮನದಲ್ಲಿ ಹಳೆದೆಡೆ

 ಏಡಿಸಿ ಕಾಡಿತ್ತು ಶಿವನ ಡಂಗುರ

 ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ

 ಭಿತ್ತಿ ಬೆಳೆಯಬಹುದೆ ಧರೆಯಿಲ್ಲದೆ’ (ಸ.ವ.ಸಂ.1.ವ.ಸಂ.233.234)

ಇತ್ಯಾದಿ ವಚನಗಳ ಸಾಲುಗಳಲ್ಲಿಯ ಪ್ರಾಸ.ಪ್ರಕಾರಗಳಿಂದಾಗಿಯೇ ಗೇಯತೆ ಕಂಡುಬರುತ್ತಿದ್ದು ಸರಾಗವಾಗಿ ಹಾಡಲು ಸಹಕಾರಿಯಾಗಿವೆ.

 ಶ್ಲೇಷಾರ್ಥದ ಬಳಕೆಯ ಕೆಲವು ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಬರುತ್ತದೆ. ಇದರಿಂದಾಗಿ ವಚನಗಳಿಗೆ ರಮ್ಯತೆಯು ಸಿದ್ದಿಸುತ್ತದೆ.

 ವಚನದಲ್ಲಿ ನಿಮ್ಮ ನಾಮಮೃತ ತುಂಬಿ

 ನಯನದಲ್ಲಿ ನಿಮ್ಮ ಮೂರುತಿ ತುಂಬಿ

 ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

 ಮನದಲ್ಲಿ ನಿಮ್ಮ ನೆನಹು ತುಂಬಿ

 ಕೂಡಲ ಸಂಗಮದೇವಾ ನಿಮ್ಮ ಚರಣ ಕಮಲದೊಳಗಾನುತುಂಬಿ (ಸ.ವ.ಸಂ.-1.ವ.ಸಂ.492)

   ಈ ವಚನದಲ್ಲಿ ತುಂಬಿ ಎನ್ನುವ ಪದ ಶ್ಲೇಷಾರ್ಥದಲ್ಲಿ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಮುಖವಿದೆ. ಜೊತೆಗೆ ಸಮಾಜದ ಕೆಳವರ್ಗದವರ ಕನಸು ಕಾಳಜಿ ಕುರಿತಾದ ಧ್ವನಿಗಳಿವೆ. ಹೀಗಾಗಿಯೆ ವಚನಸಾಹಿತ್ಯ ಚಲನಶೀಲತೆಗೆ ಒಗ್ಗುವಂತಿರುವುದು. ವಚನಕಾರರು ತಮ್ಮ ಕಾಲದ ಆಡುಭಾಷೆಯನ್ನೆ ವಚನಗಳನ್ನು ಕಟ್ಟುವ ಪ್ರಕ್ರಿಯಲ್ಲಿ ಬಳಸಿರುವುದು. ಆಡುಭಾಷೆಯ ಪುನರ್ ಸಂಯೋಜನೆಯಿಂದಾಗಿ ಭಾಷೆಗೆ ಒಂದು ಬಗೆಯ ಅಡಕತನದ ಸಿದ್ಧಿ ಪ್ರಾಪ್ತವಾಗುತ್ತದೆ. ಅನುಭವವನ್ನು ಹರಳುಗಟ್ಟಿಸುವ ಪ್ರಯತ್ನವೇ ವಚನಕಾರರ ಶೈಲಿಯ ಮುಖ್ಯ ಆಶಯವಾಗಿದೆ. ಭಕ್ತಿಯ ಸ್ವರೂಪವನ್ನು ನಿರೂಪಿಸುವಲ್ಲಿ ಉಪಮೆ ರೂಪಕಗಳನ್ನು ವಚನಕಾರರೂ ಬಳಸಿದ್ದಾರೆ.

 ಮುಗಿಲ ಮರೆಯ ಸೂರ್ಯನಂತೆ

 ನೆಲದ ಮರೆಯ ನಿಧಾನದಂತೆ

 ಒರೆಯ ಮರೆಯ ನಿಧಾನದಂತೆ

 ಒರೆಯ ಮರೆಯ ಅಲುಗಿನಂತೆ

 ಹೆಣ್ಣಿನೊಳಗಿನ ರಸದಂತೆ

 ಶರಣ ಶರೀರದ ಮರೆಗೊಂದು ಪರಮಪಾವನ ಮೂರ್ತಿ

 ಪರಾಪರ ತಾನು ತಾನಾಗಿರ್ದುದದೇನೆಂಬೆನಯ್ಯ

 ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ’ (ಸ.ವ.ಸಂ.9.ವ.ಸಂ.456)

ಇಂತಹ ವಚನಗಳಲ್ಲಿ ಶಬ್ದ, ಭಾವ, ಪ್ರತಿಮೆ, ಲಯ, ಪಾದರಚನೆಗಳು ಪುನಾರಾವೃತ್ತಿಯಾಗಿರುವುದನ್ನು ಕಾಣಬಹುದು. ಪುನರಾವೃತ್ತಿಯು ವಚನಗಳ ಶಾಬ್ದಿಕ ವಿನ್ಯಾಸಕ್ಕೆ ಒಮ್ಮೊಮ್ಮೆ ಕಾರಣವಾಗುತ್ತವೆ.

  ವಚನಗಳಲ್ಲಿ ಗದ್ಯದ ಸರಳತೆ ಇದೆ. ಪದ್ಯದ ಲಯವಿದೆ. ಶಿಷ್ಟ ಮತ್ತು ವ್ಯವಾಹಾರಿಕ ಭಾಷೆಯ ಶಬ್ದ ಸಾಮಗ್ರಿಗಳನ್ನು ಒಳಗೊಂಡಿದೆ ಚಿಕ್ಕ ಚಿಕ್ಕ ವಾಕ್ಯಗಳ ರಚನೆಗಳನ್ನು ಒಳಗೊಂಡಿದೆ ವಚನಕಾರರು ತಮ್ಮ ಪರಿಸರದ ರೂಪಕಗಳನ್ನು ಬಳಸಿರುವುದು ವಚನಗಳ ಸೌಂದರ್ಯಕ್ಕೆ ಕಾರಣವಾಗಿದೆ.

 ‘ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ

 ಅಗೆದು ಕಳೆದನಯ್ಯಾ ಭ್ರಾಂತಿನ ಬೇರೆ

 ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ

 ಅಖಂಡಮಂಡಲವೆಂಬ ಭಾವಿ.ಪವನವೆ ರಾಟಾಳ

 ಸುಷುಮ್ನನಾಳದಿಂದ ಉದಕವ ತಿದ್ದಿ

 ಬಸವಗಳೈವರು ಹಸಗೆಡಿಸಿಹವೆಂದು

 ಸಮತೆ ಸೈರಣೆಯೆಂಬ ಬೇಲಿಯ ನಿಕ್ಕಿ’ (ಸ.ವ.ಸಂ.2.ವ.ಸಂ.1229)

ಈ ವಚನದಲ್ಲಿ ಕೃಷಿಕರಿಗೆ ತೋಟದ ಕೃಷಿಯ ಮೂಲಕವೇ ಆಧ್ಯಾತ್ಮದ ರಹಸ್ಯವನ್ನು ಸುಲಭವಾಗಿ ಬೋಧಿಸಬಹುದೆಂಬುದನ್ನು ಅಲ್ಲಮನ ಈ ಮೆಲ್ಕಂಡ ವಚನದಲ್ಲಿಯ ರೂಪಕಗಳು ತಿಳಿಸುತ್ತವೆ. ಜನತೆಯ ಭಾಷೆಯಲ್ಲಿ ನೀಡುವ ಬೋಧನೆ ಪರಿಣಾಮಕಾರಿಯಾದದ್ದು ಎಂಬುದನ್ನು ಧ್ವನಿಸುತ್ತದೆ.

 ವಚನಗಳಲ್ಲಿ ಅನಾಯಾಸವಾಗಿ ಮೂಡುವ ಪ್ರಾಸಗಳ ವಿನ್ಯಾಸ ವಚನಗಳ ಭಾಷೆಗೆ ಅಪೂರ್ವ ಸೌಂದರ್ಯವನ್ನೊದಗಿಸಿವೆ.

 ‘ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ

 ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ

 ಛಲಬೇಕು ಶರಣಂಗೆ ಪರದೈವನೊಲ್ಲೆಂಬೆ

 ಛಲಬೇಕು ಶರಣಂಗೆ ಲಿಂಗ ಜಂಗಮ ಒಂದೆಂಬ

 ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ

 ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ (ಸ.ವ.ಸಂ.-1.ವ.ಸಂ.977)

ಈ ವಚನದಲ್ಲಿಯ ಪುನರುಕ್ತಿ, ವಿವಿಧ ರೀತಿಯಲ್ಲಿ ಸಂಯೋಜನೆಗೊಂಡು ಪ್ರಾಸಗಳು, ಲಯ ಶುಧ್ದತೆ, ಶಬ್ದಗಳ ಸಮತೋಲನ. ನಿಖರತೆ, ಪದಗಳ ಆವೃತ್ತತೆ ಇತ್ಯಾದಿಗುಣಗಳು ಲಯತ್ಮಾಕ ಪದ್ಯದ ಹೃದ್ಯತೆಗೆ ಹತ್ತಿರವಾಗಿದ್ದು ಕಾವ್ಯ ಸೌಂದರ್ಯವನ್ನು ಇಮ್ಮಡಿಸಿವೆ.

   ವಚನಕಾರರು ತಮ್ಮ ಅಭಿವ್ಯಕ್ತಿಯಲ್ಲಿ ಶಿಷ್ಟ ಹಾಗೂ ವ್ಯವಾಹಾರಿಕ ಶೈಲಿಯನ್ನು ಬಳಸಿದ್ದಾರೆ. ಗ್ರಾಂಥಿಕ ಶೈಲಿಯು ಬರಹದ ಭಾಷೆಗೆ ನಿಕಟವಾಗಿದ್ದು ಔಪಾಚಾರಿಕ ಭಾಷಿಕ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಆದರೆ ವ್ಯವಾಹಾರಿಕ ಶೈಲಿಯ ಮಾತು ಮತ್ತು ಬರವಣಿಗೆಯಲ್ಲಿ ಪರಸ್ಪರ ಆತ್ಮಿಯತೆಯನ್ನು ಉಂಟುಮಾಡುತ್ತದೆ. ಕೆಲವಡೆ ವಚನಕಾರರು ಪ್ರತಿಮೆಯ ಮೂಲಕವೇ ಮಾತಾನಾಡುತ್ತಾರೆ. ಸಸ್ಯ,ಪ್ರಾಣಿ, ಪಕ್ಷಿ, ಸಾಮಾಜಿಕ ವಸ್ತುವನ್ನು ಪ್ರತಿಮೆಯ ಮೂಲಕ ಬಿಂಬಿಸುತ್ತಾರೆ. ಮಾತನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ, ಅಮೂರ್ತ ಅನುಭವವನ್ನು ಮೂರ್ತಗೊಳಿಸುವಲ್ಲಿ ಪ್ರತಿಮೆಗಳು ಪ್ರಮುಖ ಪಾತ್ರವಹಿಸುತ್ತವೆ. ವಚನಗಳಲ್ಲಿ ಗಾದೆ, ನುಡಿಗಟ್ಟು, ಪ್ರತಿಮೆಗಳಂತೆ ಅನುಕರಣವಾಚಕಗಳು. ಆಯಾ ಸನ್ನಿವೇಶವನ್ನು ವಿವರಿಸುವಾಗ ಜೀವನಾಡಿಯಂತೆ ಪ್ರವೇಶಿಸಿವೆ. ವಚನಗಳಿಗೆ ಜೀವಂತ ಚೆಲುವನ್ನು ತಂದುಕೊಟ್ಟಿವೆ. ಅಕ್ಕಮಹಾದೇವಿಯ ವಚನಗಳಲ್ಲಿ ಕಾಣಸಿಗುವ

 ಚಿಲಿಪಿಲಿಎಂದೋದುವ ಗಿಳಿಗಳಿರಾ

 ನೀವು ಕಾಣಿರೆ? ನೀವು ಕಾಣಿರೆ? (ಸ.ವ.ಸಂ.5.ವ.ಸಂ.174)

ಎಂಬಂತಹ ಅನುಕರಣ ವಾಚಕ ಶಬ್ದಗಳು ಕ್ರಿಯೆಯನ್ನು ಅಭಿನಯಿಸುವಂತೆ ಭಾಸವಾಗಿ ವಚನದ ಸೌಂದರ್ಯವನ್ನು ಹೆಚ್ಚಿಸಿವೆ. ಇವುಗಳು ವಚನಗಳಲ್ಲಿ ಸಹಜವಾಗಿ, ಕಲಾತ್ಮಕವಾಗಿ ಮೂಡಿಬಂದಿದೆಯೇ ಹೊರತು ಹೊರೆಯಾಗಿ ಬಂದಿಲ್ಲ. ಈ ಕಾರಣದಿಂದಲೇ ಇಂದು ವಚನಗಳನ್ನು ಕಾವ್ಯ ಸೌಂದರ್ಯದ ನೆಲೆಗಟ್ಟಿನಿಂದ ಪರಿಭಾವಿಸಲು ಸಾಧ್ಯವಾಗಿರುವುದು.

   ವಚನಕಾರರ ವಚನಗಳಲ್ಲಿ ಬದುಕಿಗೂ ಬರಹಕ್ಕೂ ನೇರ ಸಂಬಂಧವಿದೆ. ಇವರು ತಮ್ಮ ವೃತ್ತಿಯ ಬಗ್ಗೆ ಅಭಿಮಾನವಿರಿಸಿಕೊಂಡು ವೃತ್ತಿಯ ಪರಿಭಾಷೆಯಲ್ಲಿ ಅನುಭವಗಳಿಗೆ ರೂಪಕಪ್ರತಿಮೆಗಳ ರೂಪನೀಡಿ ಯಾವ ಪದಗಳು ಸಾಹಿತ್ಯದಲ್ಲಿ ಅಸ್ಪಶ್ಯವಾಗಿ ಉಳಿದುಕೊಂಡಿದ್ದವೋ ಅಂತಹ ಪದಗಳಿಗೆ ಸಾಹಿತ್ಯದ ಸಂಸ್ಕಾರ ನೀಡಿ ಜೀವಂತಿಕೆಯನ್ನು ಕಲ್ಪಿಸಿ ಮೌಲ್ಯದ ನುಡಿಗಳನ್ನಾಗಿಸಿದರು. ವಚನಗಳಲ್ಲಿಯ ಕೆಲವು ಭಾಗಗಳು ಗದ್ಯ ಪದ್ಯಗಳ ಉತ್ತಮಾಂಶಗಳನ್ನು ಒಳಗೊಂಡಿರುವುದರಿಂದ ಗೇಯತೆಯ ಗದ್ಯ ಗೀತೆಗಳಾಗಿವೆ. ವಚನಗಳಲ್ಲಿ ಅಲಂಕಾರಗಳು ಅನುಭವವನ್ನು ಅಭಿವ್ಯಕ್ತಗೊಳಿಸುವ ಅಂಗಗಳಾಗಿ ಸಹಜವಾಗಿ ಹೊರಹೊಮ್ಮಿವೆ. ಇವರು ತಮ್ಮ ರಚನೆಗಳಲ್ಲಿ ಕಟ್ಟಿಕೊಡುವ ಉಪಮಾನ. ರೂಪಕ ಸಾದೃಶ ಪ್ರತಿಮೆಗಳು ಅರ್ಥದ ಆಳವನ್ನು ಹೆಚ್ಚಿಸುತ್ತವೆ. ಪ್ರತಿಮಾವಿಧಾನ ಚಿಂತನೆ, ಭಾಷೆ, ವಚನಗಳಲ್ಲಿ ಒಂದಕ್ಕೊಂದು ನೇರ ಸಂಬಂಧ ಹೊಂದಿದ್ದು ಅನುಭವದ ಹಿನ್ನಲೆಯಲ್ಲಿ ಪ್ರತಿಮಾ ಲೋಕವನ್ನು ನಮ್ಮೆದುರಿಗೆ ಹಿಡಿದಿರಿಸಿವೆ.

 ಅಕ್ಕಮಹಾದೇವಿ, ಸತ್ಯಕ್ಕೆ ಮುಂತಾದ ವಚನಕಾರ್ತಿಯರಲ್ಲಿ ಶರಣ ಸತಿ ಲಿಂಗ ಪತಿ ಭಾವ ವ್ಯಕ್ತಗೊಂಡಿದೆ. ಅಲ್ಲಿ ಕೆಲವಡೆ ಶೃಂಗಾರದ ಪ್ರತಿಮೆ ಕಂಡುಬರುವುದನ್ನು ಗುರುತಿಸಬಹುದು.

 ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ

 ಮನದಿಚ್ಚೆಯನರಿವ ಸಖಿಯರಿಲ್ಲ ಇನ್ನೇವೆನವ್ವಾ?

 ಮನುಮಥ ವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು

 ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯಿ ?

 ದಿನವೃಥಾ ಹೋತಯಿತ್ತಾಗಿ ಯೌವನ ಬೀಸರವಾಗದ ಮುನ್ನ

 ಪಿನಾಕಿಯ ನೆರಹವ್ವಾ ಶಂಭುಕೇಶ್ವರನ (ಸ.ವ.ಸಂ.5.ವ.ಸಂ.964)

   ಸತಿಯು ತನ್ನ ಪ್ರಿಯತಮನ ಪ್ರೀತಿಗಾಗಿ ಹಂಬಲಿಸಿ ಹಾತೊರೆಯುತ್ತಾಳೆ. ಪ್ರಿಯತಮನು ಕಾಮವೈರಿಯಾಗಿದ್ದು ಪ್ರಿಯತಮೆಯನ್ನು ಕೂಡಿಕೊಳ್ಳಲು ಆತುರವಿಲ್ಲ. ಆತನ ನಿರ್ಮೋಹಿತನದಿಂದ ಸತಿಗೆ ದುಃಖವಾಗಿದೆ. ತನ್ನ ಬೇಗುದಿಯನ್ನು ವಿರಹ ವೇದನೆಯನ್ನು ತೋಡಿಕೊಂಡು ಮನಸು ಹಗುರ ಮಾಡಿಕೊಳ್ಳಲು ಪ್ರಯತ್ನಿಸಿದರೆ ಮನದಿಂಗಿತ ಅರಿತ ಸಖಿಯರಿಲ್ಲವಾಗಿದೆ. ಯೌವನ ವ್ಯರ್ಥವ್ಯಯವಾಗುತ್ತಿದೆ. ಅದು ಹಾಳಾಗುವುದಕ್ಕೆ ಮುನ್ನ ಪ್ರಿಯತಮ ಪಿನಾಕಿಯ ನೆರೆಹವ್ವಾ ಎಂದು ಸತ್ಯಕ್ಕ ಮೇಲಿನ ವಚನದಲ್ಲಿ ಹಂಬಲಿಸಿರುವುದನ್ನು ಕಾಣಬಹುದು. ಈ ವಚನ ವಿರಹದ ಮಧುರ ಭಾವನೆಯನ್ನು ಪ್ರಕಟಿಸುವ ಸುಂದರ ಭಾವಗೀತೆಯಂತಿದೆ. ವಿರಹದ ಹಂಬಲದಿಂದ ಕೂಡಿದ ವಿಪ್ರಲಂಭ ಶೃಂಗಾರದ ಪ್ರತಿಮೆಯಾಗಿ ರೂಪಗೊಂಡಿದ್ದು ಶರಣಸತಿ ಲಿಂಗಪತಿ ಭಾವವನ್ನು ಸುಂದರವಾಗಿ ನಿರೂಪಿಸಿದೆ.

   ಒಟ್ಟಾರೆ ಬಸವಾದಿ ಪ್ರಮಥರ ವಚನಗಳು ಸರಳ ಸ್ವಚ್ಛಂದದ, ಸಾಮಾಜಿಕ ಕಳಕಳಿಯುಳ್ಳವುಗಳಾಗಿದ್ದು ದೇಸಿನೆಲೆಯ ಸಂವೇದನೆಯನ್ನು ಹೊಂದಿವೆ. ಬದುಕಿನ ಬಗೆಗೆ ಬರೆದ ಭಾಷ್ಯದಂತಿರುವ ಅವುಗಳು ಬದುಕಿನ ನಿಜದ ನೆಲೆಯನ್ನು ಕಂಡುಕೊಳ್ಳವುಗಳಾಗಿವೆ. ವಚನ ರಚನೆಗಳಲ್ಲಂತೂ ಕೆಲವೆಡೆ ಸತ್ಯವೇ ಸೌಂದರ್ಯವಾಗುವ ಬಗೆಯ ಬೆರಗುತನವನ್ನು ಹೊಂದಿವೆ. ವಚನಗಳು ಸರಳ ನಿರೂಪಣೆಯಿಂದ ಸಂಕೀರ್ಣತೆಯವರೆಗೂ ವಿಸ್ತರಿಸಿದ್ದು. ಸಾಹಿತ್ಯಕ ವೀಮಾಂಸೆಯ ನೂರಾರು ರಚನೆಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ.

 ಪರಾಮರ್ಶನ ಗ್ರಂಥಗಳು:

1. ಜಿ.ಎಸ್.ಶಿವರುದ್ರಪ್ಪ

ಅ. ಸಮಗ್ರ ಗದ್ಯ ಸಂಪುಟ 1

 ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು 2004 (ದ್ವಿ.ಮು)

ಆ. ಸೌಂದರ್ಯ ಸಮೀಕ್ಷೆ

 ಕಾಮಧೇನು ಪ್ರಕಾಶನ

 ಬೆಂಗಳೂರು 1999(ಚ.ಮು0

2. ಎಂ. ಚಿದಾನಂದಮೂರ್ತಿ, ವಚನ ಸಾಹಿತ್ಯ.

ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 2000 (ದ್ವಿ.ಮು)

3. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂ.ಜಿ.ಎಸ್.ಶಿವರುದ್ರಪ್ಪ)ಸಂ.3

ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 1976

4. ಸಿ.ನಾಗಭೂಷಣ

ಅ. ಸಕಲೇಶ ಮಾದರಸ, ಶರಣ ಪರಂಪರೆಯ ಪುಸ್ತಕ ಮಾಲೆ

 ಬಸವ ಸಮಿತಿ, ಬೆಂಗಳೂರು 2006

ಆ. ಶರಣ ಸಾಹಿತ್ಯ - ಸಂಸ್ಕೃತಿ ಕೆಲವು ಅಧ್ಯಯನಗಳು

 ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 2000

5. ಎಸ್.ಎಂ.ಹಿರೇಮಠ, ವಚನಕಾರರ ಕಾವ್ಯ ಮೀಮಾಂಸೆ

 ಅಶ್ವಿನಿಪ್ರಕಾಶನ, ಕಲಬುರ್ಗಿ, 1999

ಮಂಗಳವಾರ, ಮೇ 18, 2021

ಸಮಕಾಲೀನ ಕನ್ನಡ ಸಾಹಿತ್ಯದ ಸಮಸ್ಯೆ: ಸವಾಲು ಮತ್ತು ಸಾಧ್ಯತೆಗಳು * ಡಾ.ಸಿ.ನಾಗಭೂಷಣ

 

               

ಸಮಕಾಲೀನ ಕನ್ನಡ ಸಾಹಿತ್ಯದ ಸಮಸ್ಯೆ: ಸವಾಲು ಮತ್ತು ಸಾಧ್ಯತೆಗಳು *

                                       ಡಾ.ಸಿ.ನಾಗಭೂಷಣ

 

 

   ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರ ವರ್ಷಗಳ ಲಿಖಿತ ಪರಂಪರೆಯ ಇತಿಹಾಸ ಇದೆ.ಇವೊತ್ತಿನ ಭಾರತದ ಸಾಹಿತ್ಯದಲ್ಲಿ ಕನ್ನಡಕ್ಕೆ ಮೇಲ್ಪಂಕ್ತಿಯ ಸ್ಥಾನವಿದೆ. ಭಾರತೀಯ ಭಾಷೆಯಗಳಲ್ಲಿಯೇ ಎಂಟು  ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡ ಹಿರಿಮೆ ಕನ್ನಡಕ್ಕಿದೆ. ಇದು ಕನ್ನಡ ಸಾಹಿತ್ಯ ತನ್ನಲ್ಲಿರುವಅಂತಃಸತ್ವದಿಂದ ಗಿಟ್ಟಿಸಿಕೊಂಡ ಸ್ಥಾನ, ಅದನ್ನು ಯಾರೂ ಕಸಿದುಕೊಳ್ಳಲಾರರು.

    ಆಧುನಿಕ ಜಗತ್ತಿನಲ್ಲಿ ಸಾಹಿತ್ಯದ ಬದಲಾವಣೆಗೆ ಹಿಂದಿನ ಹಾಗೆ ಸಾವಿರಾರು ವರ್ಷ ಕಾಯಬೇಕಾಗಿಲ್ಲ. ದಿನದಿಂದ ದಿನಕ್ಕೆ ಬದುಕು ತೀವ್ರಗತಿಯಿಂದ ಬದಲಾಗುತ್ತಿದೆ. ಪರಿಸರ ಬದಲಾದ ಹಾಗೆ ಸಾಹಿತ್ಯಾಭಿವ್ಯಕ್ತಿಯಲ್ಲೂ ಬದಲಾವಣೆಗಳಾಗಿವೆ. ಆಧುನಿಕ ಪೂರ್ವದ ಕನ್ನಡಸಾಹಿತ್ಯ ಶತಮಾನಗಳಿಗೊಮ್ಮೆ ಸ್ವರೂಪದಲ್ಲಿ ಬದಲಾವಣೆಗೊಂಡರೆ ಹೊಸಗನ್ನಡ ಸಾಹಿತ್ಯ ಒಂದು ಶತಮಾನದಲ್ಲಿಯೇ ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯಗಳೆಂಬ ನಾಲ್ಕು ತಿರುವುಗಳನ್ನುಕಂಡಿದೆ. ಇಂದಿನ ಸಾಹಿತಿಗಳಿಗೆ ನೇರವಾಗಿ ಜನತೆಯೊಂದಿಗೆ ಬೆಸೆದುಕೊಳ್ಳುವ ಕಾಲ ಒದಗಿದೆ. ಸಾಹಿತಿಗಳು ಯಾವ ಜನತೆಯ ಆಶೋತ್ತರಗಳನ್ನು ಪ್ರತಿನಿಧಿಸುತ್ತಾರೋ ಆ ಜನತೆಯ ಬದುಕನ್ನು ಒಳಹೊಕ್ಕು ನೋಡಬೇಕಾಗಿದೆ.

 ಸಮಕಾಲೀನ ಸಂದರ್ಭದಲ್ಲಿ  ಕನ್ನಡ ಸಾಹಿತ್ಯವನ್ನು ಈ ಕೆಳಕಂಡ ಮೂರು ಅಂಶಗಳ ಹಿನ್ನೆಲೆಯಲ್ಲಿಯೂ  ಪರಾಮರ್ಶನ ಮಾಡಬೇಕಾಗಿದೆ.

 ೧. ಸಾಮಾಜಿಕ ಅಭಿವ್ಯಕ್ತಿಗೆ ಸಾಹಿತ್ಯದ ಕೊಡುಗೆ

೨. ಸಾಂಸ್ಕೃತಿಕ ವಿಭಿನ್ನತೆಯಲ್ಲಿ ಸಾಹಿತ್ಯದ ಹೊಣೆಗಾರಿಕೆ

೩. ಸಾಹಿತ್ಯದಲ್ಲಿ ಸಮಕಾಲೀನ ಬದುಕಿನ ಚಿತ್ರಣ

 

   ಭವಿಷ್ಯದ ಸಾಹಿತ್ಯ ಸುತ್ತಣ ಬದುಕಿನ ತನ್ಮಯತೆಯಿಂದಾಗಿ ತನ್ನ ಸ್ಪೂರ್ತಿಗೆ, ಪ್ರೇರಣೆಗೆ ಪಾಶ್ಚಾತ್ಯ ಪ್ರಭಾವ, ಮಾದರಿಗಳನ್ನು ಅವಲಂಬಿಸಿದ ಒಳ್ಳೆಯ ಪರಿಸ್ಥಿತಿ ಒದಗಬಹುದು. ನಿಜವಾದ ಮಣ್ಣಿನವಾಸನೆ ಭವಿಷ್ಯದಲ್ಲಿ ಹೊಡೆಯಬಹುದು. ನಾಳಿನ ಸಾಹಿತ್ಯಕ್ಕೆ ತನ್ನ ಕಾಲ ಕೆಳಗಿನ ನೆಲೆಯನ್ನು, ಅದರಮೇಲೆ ಬದುಕುವ ಜನವನ್ನು ಅವರ ರಕ್ತದಲ್ಲಿರುವ ಸಾಂಸ್ಕೃತಿಕ ಪರಂಪರೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಳ್ಳುವ ಅವಕಾಶ ಜಾಸ್ತಿ ಒದಗಬಹುದು.

      ಹಾಗೆಯೇ ತಾವು ಯಾವ ಸಮುದಾಯದಿಂದ ಎದ್ದು ಬಂದು ಬರೆಯುತ್ತಿದ್ದೇವೆ ಎಂಬ ಅನಿಸಿಕೆಯಿಂದ ಸಾಹಿತಿಗಳು ಹೊರಟಿದ್ದಾರೋ ಅದೇ ರೀತಿ ಆ ಜನಕ್ಕೆ ತಾವು ಬರೆದದ್ದು ತಲುಪಬೇಕೆಂಬ ಕಳಕಳಿಯನ್ನು ಪ್ರಧಾನವಾಗಿ ಹೊಂದಿರಬೇಕು. ಭವಿಷ್ಯದಲ್ಲಿಯ ಸಾಹಿತ್ಯ ತಮ್ಮ ಸುತ್ತಣ ಜನವನ್ನು ಅರ್ಥಮಾಡಿಕೊಳ್ಳುವ ಹಾಗೂ ನಮ್ಮ ಸಂಸ್ಕೃತಿಯನ್ನು ಹೊಸದಾಗಿ ಸಮೀಕ್ಷಿಸುವ ಸ್ಥಿತಿಯನ್ನು ಒಳಗೊಳ್ಳಬೇಕಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಈ ನಿಟ್ಟಿನಲ್ಲಿ ಸಾಹಿತ್ಯ ಹೆಜ್ಜೆ ಇಡುತ್ತಿರುವುದನ್ನು  ಕಾಣಬಹುದಾಗಿದೆ.

     ಸಾಹಿತಿಯಾದವನಿಗೆ ತನ್ನ ಪರಿಸರದಲ್ಲಿ ಪರಂಪರಾಗತವಾದ ಸಾಹಿತ್ಯದ ಸತ್ವದಿಂದ ಪುಷ್ಟನಾಗದ ಹೊರತು ಅವನಿಂದ ನಿಜವಾದ ಸಾಹಿತ್ಯ ಸೃಷ್ಟಿ ಅಸಾಧ್ಯ ಎನಿಸುತ್ತದೆ. ಸಾಹಿತಿಯು ತನ್ನ ವರ್ತಮಾನದ ಕೇಂದ್ರ ಬಿಂದುವಿನಲ್ಲಿ ನಿಂತಿದ್ದರೂ ಆತ ತಾನು ನಿಂತ ನೆಲೆಗೆ ಹಿನ್ನೆಲೆಯಾದ ಸಾಹಿತ್ಯ ಪರಂಪರೆಯನ್ನು ತನ್ನದಾಗಿಸಿಕೊಳ್ಳುವ ಜವಾಬ್ದಾರಿ ಪ್ರಮುಖವಾದುದು. ತಮಗೆ ಹಿಂದಿನ ಸಾಹಿತ್ಯ ಪರಂಪರೆಯ ಅರಿವಿಲ್ಲದಿರುವುದು ಅಷ್ಟೇನೂ ಮಹತ್ವದ ಸಂಗತಿಯಲ್ಲವೆಂದು ಕಡೆಗಣಿಸುವ ಹಾಗೂ ಕನ್ನಡದ ಸಾಹಿತ್ಯಕ ಪರಂಪರೆಯಿಂದ ತಾವು ಕಲಿಯಬೇಕಾದುದೇನೂ ಇಲ್ಲವೆಂಬ ಧೋರಣೆ ಉಂಟಾದರೆ ಭವಿಷ್ಯದಲ್ಲಿಯ ನೂತನ  ಸಾಹಿತ್ಯಕ್ಕೆ ಆಂತರಿಕ ಸತ್ವದ ಆಳ-ಅಗಲಗಳ ಕೊರತೆಯಾಗಬಹುದು.

    ಸಾಹಿತಿಗಳು ನಿಜವಾದ ಅರ್ಥದಲ್ಲಿ ಮೊದಲು ಕನ್ನಡಿಗರಾಗದ ಹೊರತು _ಸಮಸ್ತ ಕನ್ನಡಿಗರ ಆಸೆ-ಆಕಾಂಕ್ಷೆಗಳನ್ನು ಭಾವನೆಗಳನ್ನು ಮತ್ತು ಜೀವನವನ್ನು ಅಭಿವ್ಯಕ್ತಿಸಲು ಖಂಡಿತ ಸಾಧ್ಯವಿಲ್ಲ. ಕನ್ನಡನಾಡಿನ ಲೇಖಕ ತನ್ನ ಪರಿಸರ, ತನ್ನ ಸುತ್ತಣ ಜನರ ಬದುಕು, ತನ್ನ ಸಾಹಿತ್ಯ ಪರಂಪರೆಯೆಂಬ ವಿಶಾಲಾರ್ಥವುಳ್ಳವನಾಗಿ ಕನ್ನಡ ನಾಡಿನ ಮಣ್ಣಿನಲ್ಲಿ ಬೇರೂರಿದರೆ ಮಾತ್ರ ಅವನ ಸಾಹಿತ್ಯದಲ್ಲಿ ಸಹಜವಾಗಿ ಮಣ್ಣಿನ ವಾಸನೆ ಉಂಟಾಗುತ್ತದೆ. ಸಾಹಿತ್ಯ ಸೃಷ್ಟಿ ಇಂದು ಸಂದುದ್ದು, ಭವಿಷ್ಯದಲ್ಲಿ ಸಲ್ಲುವಂತಾಗುವ ಗುಣವನ್ನು ಪಡೆದುಕೊಂಡಿದೆಯೆ ಎಂಬುದರ ಕಡೆಗೆ ಗಮನ ಹರಿಸಬೇಕಾಗಿದೆ. ಭವಿಷ್ಯದಲ್ಲಿ ಕನ್ನಡ ಸಾಹಿತ್ಯಪರಂಪರೆಯ ಅರಿವಿಲ್ಲದವರ ಸಾಹಿತ್ಯ ಸೃಷ್ಟಿ ಅಸಮರ್ಪಕವಾದೀತು. ಆಧುನಿಕ ಜಗತ್ತಿನಲ್ಲಿ ಜನತೆಯ ಅನುಭವ, ಸಂಸ್ಕಾರ, ಅಭಿಪ್ರಾಯ, ಅಧ್ಯಯನಕ್ಕನುಗುಣವಾಗಿ ಸಾಹಿತ್ಯ ತಲುಪುತ್ತದೆ. ಓದುಗರಲ್ಲಿ ಜ್ಞಾನಿಗಳು, ಪಂಡಿತರು, ವೈಚಾರಿಕರು, ಶ್ರೀಸಾಮಾನ್ಯರು, ಪಾಮರರು,ಅಲ್ಪರು ಎಂದು ಗುರುತಿಸಬಹುದು. ಅವರವರ ನೆಲೆ-ಬೆಲೆಗಳನ್ನು ಅರಿತು ಸಾಹಿತ್ಯ ತಲುಪಬೇಕಾಗುತ್ತದೆ. ಸಾಹಿತ್ಯ ಕೃತಿಗಳನ್ನು ಹೆಚ್ಚು ಜನರಿಗೆ ತಲುಪುವ ವ್ಯವಸ್ಥೆ ಮಾಡಬೇಕಾಗಿದೆ. ಉತ್ತಮ ಕೃತಿಗಳನ್ನು ಬೇರೆ ಬೇರೆ ಮಾಹಿತಿ ತಂತ್ರಜ್ಞಾನ ಮತ್ತು ಸಮೂಹ ಮಾಧ್ಯಮಗಳ ಮೂಲಕ ಜನತೆಗೆ ಮುಟ್ಟಿಸುವ ಸ್ಥಿತಿಯನ್ನು ಅನುಸರಿಸಬೇಕಾಗಿದೆ. ಸಾಹಿತಿಯ ಮನೋಭಾವವೇ ಆತನ ಕೃತಿಯನ್ನು ಓದುಗನಲ್ಲಿ ತಲುಪಿಸುವ ವಿಸ್ತಾರ-ವ್ಯಾಪ್ತಿಯನ್ನು ಪಡೆಯಬೇಕಾಗಿದೆ.

     ಸಾಹಿತಿ ಮೊದಲು ತನ್ನ ಅನುಭವದ ತೀವ್ರತೆ ವ್ಯಾಪ್ತಿಗಳಿಗೆ ಖಚಿತ ವ್ಯಾಖ್ಯಾನ ನೀಡಲು ಪ್ರಯತ್ನಿಸುತ್ತಾನೆ. ಒಂದು ನಿರ್ದಿಷ್ಟ ಸಂರಚನೆಯ ನೆರಳಿನಲ್ಲೆ ನಿಂತು ಹೊಸ ರೀತಿಯ ಭಾಷಾ ಶೋಧನೆ, ಪಾತ್ರಶೋಧನೆ, ಸನ್ನಿವೇಶ ಶೋಧನೆ ಇತ್ಯಾದಿ ಪ್ರಯೋಗಶೀಲತೆಯ ಸೂಕ್ಷ್ಮ ಜಾಡನ್ನು ಅರಿತುಕೊಳ್ಳಲು ಓದುಗನು ಸಮರ್ಥನಾಗಿದ್ದಾನೆಯೇ, ಸಿದ್ಧನಾಗಿದ್ದಾನೆಯೇ ಎಂಬ ಪ್ರಶ್ನೆಯನ್ನು ಸ್ವತಃ ತಾನೇ ಹಾಕಿಕೊಳ್ಳಬೇಕಾಗುತ್ತದೆ. ತನ್ನ ಕಾಲಕ್ಕೆ ಮಾತ್ರ ಸ್ಪಂದಿಸುತ್ತ ಸರಳೀಕೃತ ಅನುಭವಗಳನ್ನು ಮುಂದಿಡುತ್ತ ಹೋಗುವ ಸಾಹಿತಿ ಬಹುಬೇಗ ಜನಪ್ರಿಯತೆಯನ್ನು ಹೊಂದಿ ಅಷ್ಟೇ ಬೇಗ ಮೂಲೆಗೆ ಸರಿಯುತ್ತಾನೆ.ಇನ್ನೊಂದೆಡೆ ತನ್ನ ಕಾಲಕ್ಕೆ ಸ್ಪಂದಿಸುವುದರ ಜೊತೆಗೆ ಬದುಕಿನ ಸಾರ್ವತ್ರಿಕ ಸಮಸ್ಯೆಗಳನ್ನು ಶೋಧಿಸಲು ಹೊರಟ ಸಾಹಿತಿ ಅಷ್ಟಾಗಿ ಜನರನ್ನು ತಲುಪಲಾಗದ ಸಮಸ್ಯೆಯನ್ನು ಎದುರಿಸಬೇಕಾದ ಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಸಮಕಾಲೀನ ಮತ್ತು ಮುಂದಿನ ಭವಿಷ್ಯದಲ್ಲಿ ಸಾಹಿತ್ಯ ಓದುಗನ ಸರಳ ಬಯಕೆಗಳನ್ನು ಹಿಂಗಿಸಿ ಆತನಲ್ಲಿ ಒಳನೋಟ ಬಲಿಯುವಂತೆ ಮಾಡಿ ಅವನನ್ನು ಬೆಳೆಸಬೇಕಾಗಿದೆ. ಓದುಗನು ಬಯಸುವ ಮಟ್ಟದಲ್ಲೆ ಬರೆದು ಓದುಗರ ಅಭಿರುಚಿಯನ್ನು ತಣಿಸಿ ತೃಪ್ತಿ ತಂದುಕೊಂಡು ಇದ್ದಲ್ಲೇ ಉಳಿಯುವುದಕ್ಕಿಂತ ಓದುಗನನ್ನು ಹೊಸ ಹೊಸ ಸೃಷ್ಟಿ ಕೌಶಲ್ಯಗಳ ಲೋಕಕ್ಕೆ, ಅನುಭವ ಶೋಧನೆಯ ಸಂಕೀರ್ಣ ಲೋಕಕ್ಕೆ ಎಳೆದುಕೊಂಡು ಹೋಗಬೇಕಾದ ಸವಾಲನ್ನು ಸ್ವೀಕರಿಸಬೇಕಾಗಿದೆ. ಓದುಗನಲ್ಲಿ ವಾಚನಶೀಲತೆಯನ್ನು ಬೆಳೆಸಬೇಕಾಗಿದೆ.

    ಸಮಗ್ರವಾಗಿ ಮನುಷ್ಯನನ್ನು ಅರ್ಥೈಸಿಕೊಳ್ಳುವ ಸವಾಲು ಸಾಹಿತ್ಯಕ್ಕೆ ಹಿಂದೆ ಇರುವ ಹಾಗೆ ಮುಂದೆಯೂ ಇರಬೇಕಾಗಿದೆ. ಹೀಗಾಗಿ ಯಾವ ಕಾಲದ ಸಾಹಿತಿಯೇ ಆದರೂ ಈ ಹೊತ್ತಿಗೂ ಅವನು ನಮಗೆ ಶ್ರೇಷ್ಠನೆನಿಸಿದಾಗ ಮಾತ್ರ ಅರ್ಥಪೂರ್ಣವಾಗುತ್ತಾನೆ. ಕೇವಲ ವರ್ತಮಾನಕ್ಕೆ ಒತ್ತುಕೊಟ್ಟು ಭೂತಕಾಲವನ್ನು ಉಪೇಕ್ಷಿಸುವ ಅಥವಾ ಭವಿಷ್ಯದ ಕನಸುಗಾರಿಕೆಯಲ್ಲಿ ಮಾತ್ರ ವಿಹರಿಸುವಂಥದಾದರೆ ಅಂತಹ ಸಾಹಿತ್ಯ ಶ್ರೇಷ್ಠವಾಗುವುದಿಲ್ಲ. ವರ್ತಮಾನ ಸಾಧ್ಯತೆಗಳಿಗೆಲ್ಲಾ ಅದು ನೀಡಬಹುದಾದ ಅನುಭವ ಸಮಸ್ತಗಳಿಗೆಲ್ಲಾ ಮನಸ್ಸನ್ನು ಮುಕ್ತವಾಗಿ ತೆರೆಯುವುದರ ಜೊತೆಗೆ,ಪರಂಪರೆಯಿಂದ ಪಡೆದಿದ್ದನ್ನ ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳುವ ಸಂವೇದನಾ ಶೀಲವಾದ ವ್ಯಕ್ತಿಯ ಸಂದರ್ಭದಲ್ಲಿ ಪ್ರಕಟವಾದರೆ ಮಾತ್ರ ಭವಿಷ್ಯದ ಜನತೆಗೆ ಅರ್ಥಪೂರ್ಣವಾದ ರೀತಿಯಲ್ಲಿ ಫಲಿಸುತ್ತದೆ.    ಕನ್ನಡಿಗರಲ್ಲಿ ತಮ್ಮ ಭಾಷೆಯ ಸಾಹಿತ್ಯದ ಸಂಸ್ಕೃತಿಯನ್ನು ಅರಿವನ್ನು ತಂದವರೆಲ್ಲ ಬಹುತೇಕ ಕನ್ನಡ ಭಾಷೆಯ ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿದವರೇ ಆಗಿದ್ದಾರೆ.ಯಾವುದೇ ಒಂದು ಭಾಷೆಯ ಉಳಿಯುವುದು ಬೆಳೆಯುವುದು ಆಯಾ ಭಾಷೆಯನ್ನಾಡುವ ಜನರಿಂದ.ಆಯಾ ಭಾಷೆಯಲ್ಲಿ ವಿಚಾರ ಮಾಡುವುದರಿಂದ, ಆಯಾ ಭಾಷೆಯ ಅರ್ಥವಂತಿಕೆಯ ಸಾಧ್ಯತೆಗಳನ್ನು ಅನ್ವೇಷಿಸುವುದರಿಂದ, ಅದರ ಆಯಾಮಗಳನ್ನು ವಿಸ್ತರಿಸುವ ಪ್ರಯೋಗ ಪರಿಣತ ಮತಿಗಳಿಂದ. ಭವಿಷ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಅನುಷ್ಠಾನಗೊಳಿಸಬೇಕು ಎಂಬುವುದು ನಮ್ಮೆಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಜೀವನದ ಸಮಸ್ತ ರಂಗಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ಕನ್ನಡಿಗರ ದುರ್ಬಲತೆಯಿಂದ ಆಘಾತಕ್ಕೆ ಒಳಗಾಗಿರುವ ಕನ್ನಡ ತನವನ್ನು ಉಳಿಸಿಕೊಳ್ಳಬೇಕಾಗಿದೆ. ಕನ್ನಡತನ ಉಳಿಸಿಕೊಳ್ಳಲು ಸಂವಹನ ಮಾಧ್ಯಮ ಬಳಕೆ ಸಮರ್ಥವಾಗಬೇಕು. ಕನ್ನಡವಲ್ಲದೆ ಬೇರೆ ಭಾಷೆಯ ಕಲಿತರೆ ಕನ್ನಡತನ ಹಾಳಾದೀತೆಂಬ ಭಾವನೆಗಿಂತ ಕಲಿತ ಭಾಷೆಯನ್ನು ಕನ್ನಡದ ಹಿತಕ್ಕಾಗಿ ಬಳಸಿಕೊಳ್ಳುವುದು ಮುಖ್ಯ. ಆಗ ಕನ್ನಡ ವಿಸ್ತಾರವನ್ನು ಪಡೆಯುತ್ತದೆ. ಕನ್ನಡತನ ಭಾವುಕವಾಗಿರದೆ ವೈಜ್ಞಾನಿಕ ನಿಲುವಾಗಿರಬೇಕು. ಸಹ ಭಾಷೆಯ ಸಹಿಷ್ಣುವು ಆಗಿರಬೇಕು. ಕನ್ನಡ ಕೇವಲ ಭಾಷೆಗೆ ಸೀಮಿತವಾದುದ್ದಲ್ಲ. ಅದು ಪರಿವರ್ತನಾಶೀಲವಾದ ಜೀವನ ಕ್ರಮಕ್ಕೆ ಸಾಕ್ಷಾತ್ಕಾರವಾಗಬೇಕು. ಭಾಷೆ-ಸಂಸ್ಕೃತಿ ಜನಜೀವನ ಈ ಮೂರನ್ನು ಕನ್ನಡತನ ಒಳಗೊಂಡಿರಬೇಕು. ಕನ್ನಡತನ ಉಳಿಯಬೇಕಾದರೆ ಆರ್ಥಿಕವಾಗಿ, ರಾಜಕೀಯವಾಗಿ ಬೌದ್ಧಿಕವಾಗಿ ಕ್ರಿಯಾಶೀಲರಾಗಿ ನಮ್ಮಶಕ್ತಿಗಳನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳು ಉಳಿಯುವುದು ಬೆಳೆಯುವುದು ಅವುಗಳಲ್ಲಿರುವ ಧಾತುಗಳನ್ನು ಅವಲಂಬಿಸಿರುತ್ತದೆಯೇ ಹೊರತು ಅವುಗಳ ಬಗೆಗೆ ಜನಕ್ಕಿರುವ ಕುರುಡು ಅಭಿಮಾನದಿಂದಲ್ಲ.

    ಮತ್ತೊಂದೆಡೆ ಆಧುನಿಕ  ಮಾಹಿತಿ ತಂತ್ರಜ್ಞಾನದ ಡಿಜಿಟಲ್‌ ಯುಗದಲ್ಲಿ ಕನ್ನಡ ಸಾಹಿತ್ಯ ಗಂಭೀರವಾದ ಸವಾಲನ್ನುಎದುರಿಸಬೇಕಾದ ಸ್ಥಿತಿಗೆ ತಲುಪಿದೆ. ಸಂವಹನ ಕ್ಷೇತ್ರದಲ್ಲಾಗಿರುವ ಕ್ರಾಂತಿ, ವಿವಿಧ ರಾಜಕೀಯ ಪ್ರಣಾಲಿಗಳ ಒತ್ತಡ, ತೀವ್ರಗತಿಯಲ್ಲಿ ನಡೆದಿರುವ ರಾಷ್ಟ್ರದಲ್ಲಿಯ ನಗರೀಕರಣ, ಔದ್ಯೋಗೀಕರಣ, ಜಾಗತೀಕರಣ,ಗಣಕೀಕರಣ, ಶಿಕ್ಷಣದ ವಿಸ್ತಾರ, ಹೊರಜಗತ್ತಿನಿಂದ ಬರುವ ವೈಚಾರಿಕ ಹಾಗೂ ಸಾಹಿತ್ಯಕ ಆಂದೋಲನಗಳ ಪ್ರಭಾವ ಇತ್ಯಾದಿಗಳಿಂದಾಗಿ ಇಲ್ಲಿಯ ಜೀವನ ದೃಷ್ಟಿ ಹಾಗೂ ಸಾಹಿತ್ಯಕ ಚಟುವಟಿಕೆಗಳು ತ್ವರಿತವಾಗಿ ಬದಲಾಗ ಬೇಕಾದ ಸಾಧ್ಯತೆ ಇದೆ.

      ಆಧುನಿಕ ಜಗತ್ತಿನಲ್ಲಿ ಸಾಹಿತ್ಯದ ಓದಿನ ಬಗೆಗಿನ ಸಹಜ ಕಳಕಳಿ, ಇನ್ನಿತರ ಆಕರ್ಷಣೆಗಳ ದೆಸೆಯಿಂದ ಕಳೆಗುಂದಿದೆ ಎನ್ನಬಹುದು. ಬದಲಾಗುತ್ತಿರುವ ಜೀವನಶೈಲಿಯ ಇಂದಿನ ಜನತೆಗೆ ಸಾಹಿತ್ಯದ ಅವಶ್ಯಕತೆ ಹಿಂದಿನಷ್ಟೇ ಇದೆಯೇ? ಒಂದು ವೇಳೆ ಇದ್ದ ಪಕ್ಷದಲ್ಲಿ ಇಂದಿನ ಅಗತ್ಯಗಳಿಗೆ ಅನುಸಾರವಾಗಿ ಅದನ್ನು ಪೂರೈಸುವ ಬಗೆ ಹೇಗೆ?  ಸಮಕಾಲೀನ ಮತ್ತು ಮುಂದಿನ ಭವಿಷ್ಯದಲ್ಲಿ ಮುದ್ರಿತ ಪುಸ್ತಕಗಳಿಗೆ ಮುಂಚೆ ಇದ್ದ ಸ್ಥಾನಮಾನ ಸಾಧ್ಯವೇ ? ಡಿಜಿಟಲ್‌ ಯುಗದ ಶ್ರೀಸಾಮಾನ್ಯನಿಗೆ ಬೇಕಾಗುವ ಸಾಹಿತ್ಯದ ಸ್ವರೂಪ ಎಂತಹದ್ದು? ಈ ಪ್ರಶ್ನೆಗಳು ಇಂದು ನಮ್ಮೆದುರಿಗೆ ಸವಾಲಾಗಿ ನಿಂತಿವೆ. ಚಿಂತನೆಗೆ ಒಳಗುಮಾಡಿವೆ.ವೈಜ್ಞಾನಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಹೊಂದಿ ವಿಶಿಷ್ಟ ಕಾರ್ಯಕ್ಷೇತ್ರಕ್ಕೆ ಅಂಟಿಕೊಂಡ ವ್ಯಕ್ತಿಗಳು ಸಾಹಿತ್ಯ ಕಲೆಗಳ ವಿಷಯದಲ್ಲಿ ಅಜ್ಞರಲ್ಲದಿದ್ದರೂ ಅನಭಿಜ್ಞರು. ಇವರಿಗೆ ಸಾಹಿತ್ಯ ಎಂದರೆ ಜೀವನದ ಪ್ರಖರ ವಾಸ್ತವ್ಯಕ್ಕೆ ಪ್ರತಿಯಾಗಿ ನಿಂತು ಕಂಗೆಡಿಸುವ ವ್ಯರ್ಥ ಕಲ್ಪನಾವಿಲಾಪ. ಸಾಹಿತ್ಯದ ಬಗೆಗೆ ತಲೆಕೆಡಿಸಿಕೊಳ್ಳುವುದು ಸಮಯದ ಅಪವ್ಯಯದಂತೆ ಅನಿಸಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕಲೆಗಳು ಜನರ ಬದುಕಿಗೆ ವಿಜ್ಞಾನ, ತಂತ್ರಜ್ಞಾನಗಳಷ್ಟೆ ಅತಿ ಅನಿವಾರ್ಯವೇ? ಒಂದು ನಿರ್ದಿಷ್ಟ ಕಾಲಮಾನದ ನಾಗರಿಕತೆಗೆ ಐಹಿಕ ಬಾಳ್ವೆಯ ಸೌಕರ್ಯ ಸಮೃದ್ಧಿಗಳಿಗೆ ಸಾಹಿತ್ಯ ಸಂಗೀತಾದಿ ಕಲೆಗಳ ಕೊಡುಗೆ ಎಷ್ಟು ಮಹತ್ವದ್ದು ಎನ್ನುವುದರ ಜಿಜ್ಞಾಸೆ ಕುತೂಹಲಕಾರಿಯಾಗಿದೆ. ಇಂದು ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಕಾರ್ಯತತ್ಫರರಾಗಬೇಕಾಗಿದೆ. ಅದರಲ್ಲಿಯೂ ಇಂದು ಕನ್ನಡವನ್ನು ಒಳಗೊಂಡಂತೆ ಸ್ಥಳೀಯ ಭಾಷೆಗಳನ್ನು ಈ ಕೆಳಕಂಡ ಅಂಶಗಳ ಹಿನ್ನೆಲೆಯಲ್ಲಿ  ಅಳವಡಿಸಿಕೊಳ್ಳುವತ್ತ ಗಮನ ಹರಿಸ ಬೇಕಾಗಿದೆ.

೧. ತಂತ್ರಜ್ಞಾನದಲ್ಲಿ ಭಾರತೀಯ ಭಾಷೆಗಳ ಬಳಕೆ

೨. ವಾಣಿಜ್ಯ-ವ್ಯವಹಾರದಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆ

 

      ಮಾಹಿತಿ ತಂತ್ರಜ್ಞಾನದ ಯುಗದಲ್ಲಿ  ಆಧುನಿಕ ಜಗತ್ತಿನ ಸ್ಥಾನವನ್ನು ಇಂದು ಮೂರು ಅಂಶಗಳು ಅತಿಕ್ರಮಿಸಿವೆ. ಸರಳವಾಗಿ ಅದನ್ನು I.C.E. ಎಂದು ಗುರುತಿಸಲಾಗಿದೆ, Information. Communication , Entertainment ಮಾಹಿತಿ ತಂತ್ರಜ್ಞಾನ, ಸಂವಹನ ಹಾಗೂ ಮನೋರಂಜನೆ, ಮನೋರಂಜನೆಯ ವಿವಿಧ ಸಾಧನಗಳಾದ ಆಡಿಯೋ,ವಿಡಿಯೋ, ಕೇಬಲ್ ಟಿ.ವಿ.ಗಳು, ಡಿ.ಟಿ.ಎಚ್.‌ ಇತ್ಯಾದಿಗಳು  ಸಾಹಿತ್ಯದ ಸ್ಥಾನವನ್ನು ಕಬಳಿಸಿವೆ ಎಂದರೆ ತಪ್ಪಾಗಲಾರದು. ಡಿಜಿಟಲ್‍ತಂತ್ರಜ್ಞಾನ, ಕ್ಲೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನ, ಗಣಕ ಯಂತ್ರ, ಟ್ಯಾಬ್ಲೆಟ , ಮೊಬೈಲ್‌ ಗಳಂತೂ ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ದೊಡ್ಡ ಬಿರುಗಾಳಿಯನ್ನೆಬಿಸಿವೆ. ವಿದ್ಯುನ್ಮಾನದ ಕಣ್ಣು ಕುಕ್ಕುವ ಉನ್ಮಾದದ ಪ್ರಖರತೆಯಲ್ಲಿ ಸಾಹಿತ್ಯದ ಬಡಹಣತೆ ಮೂಲೆ ಗುಂಪಾಗಿದೆ. ಮೈಕ್ರೋ ಫಿಲ್ಮ, ವಿದ್ಯುನ್ಮಾನ ಪುಸ್ತಕಗಳು, ಡಿಜಿಟಲೈಷನ್  ಮುಂತಾದ  ಆಧುನಿಕ  ತಂತ್ರಜ್ಞಾನ ಸೌಲಭ್ಯ ಗಳು ಇಂದು ಕಾಗದ ಅಚ್ಚಿನ ಮನೆಸ್ಥಳದ ಸಮಸ್ಯೆಗಳನ್ನು ಬಗೆಹರಿಸಲು ಉತ್ಸಾಹದಿಂದ ಮುನ್ನುಗ್ಗುತ್ತಿವೆ. ಪುಸ್ತಕಗಳ ವಾಚನಕ್ಕಿಂತ ಕಡಿಮೆ ಸಮಯದಲ್ಲಿ ಹೆಚ್ಚು ಏಕಾಗ್ರತೆ ಕುತೂಹಲವನ್ನು ಆಗಗೊಳಿಸಿ ಸಾಹಿತ್ಯ ಕಲೆ ಜ್ಞಾನವನ್ನು ದಶದಿಕ್ಕಿಗೆ ಹರಡಲು ಪಣ ತೊಟ್ಟಿರುವ ಈ ವೈಜ್ಞಾನಿಕ ಸಾಧನಗಳ ಎದುರು ಅಕ್ಷರ ಜಗತ್ತಿನ ಭವಿಷ್ಯ ನಡುಕ ಹುಟ್ಟಿಸುತ್ತದೆ. ಸಾಹಿತ್ಯದ ಅಳಿವು ಉಳಿವಿನ ಪ್ರಶ್ನೆ ಇನ್ನು ಮುಂದೆ ವೈಜ್ಞಾನಿಕ ಸಾಧನ ಸಲಕರಣೆಗಳ ಮರ್ಜಿಗೆ ಒಳಪಡಬೇಕಾದ ಸ್ಥಿತಿ ಉಂಟಾಗಿದೆ. ಸಾಹಿತ್ಯದ ಓದಿಗಿಂತ ದೃಶ್ಯ ಶ್ರವಣಗಳ ಮೋಡಿ ಮನುಷ್ಯನ ಮನಸ್ಸನ್ನು ಸೆರೆಯಾಳಾಗಿಸಿ ಅಧಿಕಾರ ಚಲಾಯಿಸುತ್ತಿದೆ. ಸಂವಹನಗಳ ಸಾಧನಗಳಾದ ದೂರದರ್ಶನ,ಚಲನಚಿತ್ರ, ಸಂಗೀತ ಇತ್ಯಾದಿಗಳ ಮೂಲಕ ನೋಟಕ ಮತ್ತು ಕೇಳುಗರಲ್ಲಿ ಲೇಖಕರ ಕೃತಿಗಳ ಬಗೆಗೆ ಆಸಕ್ತಿ ಉಂಟುಮಾಡುವಂತಹ ಅನಿವಾರ್ಯ ಸ್ಥಿತಿಯನ್ನು ಇಂದು ಹೆಚ್ಚು, ಹೆಚ್ಚು ತೀವ್ರಗೊಳಿಸ ಬೇಕಾಗಿದೆ.

    ವಿಜ್ಞಾನದ ಸಾಧನೋಪಾಯಗಳಿಂದ ವಿದ್ಯಾಬುದ್ಧಿ ಸಂಪನ್ನನಿಗೂ, ಸಾಮಾನ್ಯನಿಗೂ ಅಪರಿಮಿತಲಾಭವಾಗುವ ಹಾಗೆ ಸಾಹಿತ್ಯದಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.ಆಧುನಿಕ ಜನತೆಗೆ ಸಾಹಿತ್ಯ ಸ್ವರೂಪವು ಯಾವ ರೀತಿ ಇರಬೇಕು ಎಂಬಲ್ಲಿ, ಆತ ಸುಲಿದ ಬಾಳೆಯಹಣ್ಣಿನಂಥ, ಕ್ಯಾಪ್ಸೂಲ್ ಬಗೆಯ ಸಾಹಿತ್ಯವನ್ನು ನಿರೀಕ್ಷಿಸುತ್ತಾನೆ. ಈಗಿನ ಜನ ಸಾಮಾನ್ಯನು ಸಹಜವಾಗಿ ತನ್ನನ್ನು ಗುರುತಿಸಿಕೊಳ್ಳುವ ಸಾಹಿತ್ಯವನ್ನು ಬಯಸುವುದು ಸಹಜವಾಗಿದೆ. ದೈನಂದಿನ ಕೋಟಲೆಗಳನ್ನು ಮರೆಯುವ ಮನೋರಂಜನೆ ಸಹ ಅನಿವಾರ್ಯ. ಭವಿಷ್ಯದಲ್ಲಿ ಜನಜೀವನ ಮಟ್ಟದ ಸಾಂಸ್ಕೃತಿಕ ಕಾಳಜಿಗಳ ಸಾಮೀಪ್ಯ ನಿಕಟತೆಗಳನ್ನು ಸಮಾಜದ ಸ್ವಾಸ್ಥ್ಯ ಸಾಮರಸ್ಯಗಳನ್ನು ಕಾಪಾಡುವಲ್ಲಿ ಸಾಹಿತ್ಯದ ಅಗತ್ಯ ಎಂದಿಗಿಂತ ಹೆಚ್ಚಾಗಿದೆ.

    ವೈಜ್ಞಾನಿಕ ಸಾಧನಗಳು ಸಾಹಿತ್ಯ ಕೃತಿಗಳ ಹಿರಿಮೆ ಗರಿಮೆಗಳನ್ನು ಮಣ್ಣು ಮುಕ್ಕಿಸಲು,ಸಾರ್ವಭೌಮತ್ವವನ್ನು ಆಕ್ರಮಿಸಲು ನಾಗಾಲೋಟದಿಂದ ಮುನ್ನುಗ್ಗುತ್ತಿವೆ. ಇಂದಿನ ಆಧುನಿಕ ಮಾನವನಿಗೆ ಪುಸ್ತಕಗಳನ್ನು ಓದಲು ಬೇಕಾಗಿರುವ ಬಿಡುವು, ಏಕಾಗ್ರತೆ ಎಲ್ಲಿದೆ? ಬದುಕಿನ ನಿಷ್ಠುರ ವಾಸ್ತವತೆಯ ಎದುರಿಗೆ ವಿಶ್ರಾಂತಿಗೆ ಅವಕಾಶವೇ ಇಲ್ಲ. ಎಲ್ಲದರಲ್ಲೂ ತ್ವರಿತ, ಆತುರ, ಸ್ಪರ್ಧೆ, ಸಕಲವು ಸುಲಭದಲ್ಲಿ ಸಲ್ಲಬೇಕು ಎನ್ನುವ ಅಭಿಲಾಷೆಯ. ಆಧುನಿಕ ಮನುಷ್ಯನ ತ್ವರಿತ ಆಕಾಂಕ್ಷೆಗಳನ್ನು ಪೂರೈಸಲು ಟಿ.ವಿ.,ವಿಡಿಯೋ, ಆಡಿಯೋ ಕಂಪ್ಯೂಟರ್‍ಗಳು  ಮತ್ತಿತರ ವಿದ್ಯುನ್ಮಾನ  ಮಾಧ್ಯಮಗಳು ಟೊಂಕಕಟ್ಟಿ ನಿಂತಿವೆ. ಮುದ್ರಿತ ಗ್ರಂಥಗಳ ಭವಿಷ್ಯ ಡೋಲಾಯಮಾನ ಸ್ಥಿತಿಯನ್ನು ತಲುಪಿವೆ.

      ಆದಾಗ್ಯೂ ಇಂದಿಗೂ ಸಾಹಿತ್ಯ ಕೈಗೊಂಡಿರುವ ಕೆಲವು ವಿಷಯಗಳು ಅತ್ಯಾಧುನಿಕ ಯಂತ್ರಸಾಧನಗಳಿಂದ  ನೆರವೇರಲು ಸಾಧ್ಯವಿಲ್ಲ. ಜನತೆ ಎಲ್ಲಿದ್ದರೂ, ಯಾವ ಹೊತ್ತಿನಲ್ಲಾದರೂ ಎಂಥ ಬಗೆಯ ಪ್ರಯಾಣ ಕೈಗೊಂಡಿದ್ದರೂ ಪುಸ್ತಕವನ್ನು ಕೊಂಡೊಯ್ಯಬಹುದು, ಇಷ್ಟವಾದುದನ್ನು ಓದಿ ಆನಂದಿಸಬಹುದು. ಯಾರದೇ ಮರ್ಜಿ ಮುಲಾಜಿಗಳಿಗೆ ಒಳಗಾಗುವಂತಿಲ್ಲ. ಸಾಹಿತ್ಯ ಕೃತಿಗಳು ಯಾವಾಗ ಬೇಕಾದರೂ ಆಜ್ಞೆಯನ್ನು ಪೂರೈಸುವ ಸುರಲೋಕದ ಕಾಮದೇನುವಿನಂತೆ ಎಂದು ಹೇಳಬಹುದು.

 

   ಇಂದು `ಕಂಪ್ಯೂಟರ್‌ನಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಎಂದರೆ ಅದು ಯುನಿಕೋಡ್ ಕನ್ನಡದ ಬಳಕೆಯೇ ಆಗಿರಲೇಬೇಕು. ಹಾಗಾದರೆ ಮಾತ್ರ ಕನ್ನಡ ತಂತ್ರಾಂಶ ಇಲ್ಲದ ಜಾಗತಿಕ ಕಂಪ್ಯೂಟರ್‌ಗಳಲ್ಲೂ ಕನ್ನಡ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಯಾವುದೇ ವಿಷಯದ ಕನ್ನಡದಭಾಷೆಯ  ಕಡತವನ್ನು ಅಂತರ್ಜಾಲದಲ್ಲಿ ಹುಡುಕುವವರಿಗೆ ಸುಲಭದಲ್ಲಿ ಯುನಿಕೋಡ್ ಫೈಲುಗಳು ಕನ್ನಡದಲ್ಲಿಯೇ ದೊರೆಯುತ್ತವೆ.

     ಯಾವುದೇ ತಂತ್ರಾಂಶವನ್ನು ಬೇಡದ ಯಾವುದೇ ಕಂಪ್ಯೂಟರಿನಲ್ಲೂ ಪ್ರತ್ಯಕ್ಷವಾಗಿ ಬಿಡುವ ವಿಶ್ವ ಸಂಕೇತವಾಗಿರುವ ಯುನಿಕೋಡ್ ಕನ್ನಡದ ಬೆಳವಣಿಗೆಗೆ ಇಂದಿನ ಅವಶ್ಯಕತೆಯಾಗಿದೆ. ಯುನಿಕೋಡ್ ಒಂದು ಜಾಗತಿಕ ಶಿಷ್ಟತೆ. ಜಗತ್ತಿನ ಎಲ್ಲ ಭಾಷೆಗಳ ಸಂಕೇತೀಕರಣಕ್ಕೆ ಇರುವ ಶಿಷ್ಟತೆ .   ಯುನಿಕೋಡ್ ಅಂದರೆ, ಇಂಟರ್ನೆಟ್ಟಿನಲ್ಲಿ ಬಳಸುವ ಅಕ್ಷರಗಳ ಒಂದು ಶಿಷ್ಟಪದ್ಧತಿ. ಜಗತ್ತಿನ ನೂರಾರು ಭಾಷೆಯ ಅಕ್ಷರಗಳನ್ನು ಇದೊಂದೇ ನಮೂನಿಯಲ್ಲಿ ಬರೆಯಬಹುದು ಹಾಗೂ ಓದಬಹುದು. ಇದರಿಂದಾಗಿ, ಬೇರೆ ಬೇರೆ ಭಾಷೆಯವರು ಬೇರೆ ಬೇರೆ ಭಾಷೆಯ ಫಾಂಟುಗಳನ್ನು ಸಿಕ್ಕ ಸಿಕ್ಕ ಕಂಪ್ಯೂಟರಿನಲ್ಲೆಲ್ಲಾ Install ಮಾಡಿಕೊಳ್ಳಬೇಕೆಂಬ ತಾಪತ್ರಯವಿಲ್ಲ. ಇದರ ವೈಶಿಷ್ಟ್ಯವೆಂದರೆ ಜಗತ್ತಿನ ಎಲ್ಲ ಭಾಷೆಗಳಿಗೂ ಇದರಲ್ಲಿ ಪ್ರತ್ಯೇಕ ಸಂಕೇತವನ್ನು ನೀಡಲಾಗಿದೆ. ಅಂದರೆ ಇಂಗ್ಲೀಶ್‌ನ ಜಾಗದಲ್ಲಿ ನಮ್ಮ ಭಾಷೆಯನ್ನು ಕೂರಿಸಬೇಕಾಗಿಲ್ಲ. ಯೂನಿಕೋಡ್ ವಿಧಾನದಿಂದ ಮಾಹಿತಿಯನ್ನು ಶೇಖರಿಸುವುದರಿಂದ ಪ್ರಪಂಚದ ಎಲ್ಲ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಲು ಸಾಧ್ಯ.  ಯುನಿಕೋಡ್ ಆಧಾರಿತ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಮಾಹಿತಿ ಶೇಖರಣೆಯ ಸಂಕೇತವಾದ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ. ಯುನಿಕೋಡ್‌ನಲ್ಲಿ ತಯಾರಿಸಿದ ಕಡತವನ್ನು ಬೇರೊಬ್ಬರಿಗೆ ಕಳುಹಿಸುವಾಗ ಕಡತದ ಜೊತೆ ನಮ್ಮ ಅಕ್ಷರಶೈಲಿಯನ್ನೂ ಕಳುಹಿಸುವ ಅಗತ್ಯವಿಲ್ಲ. ಸರ್ಕಾರದ ವೆಬ್‌ನಿಂದ ಹಿಡಿದು ಎಲ್ಲವೂ ಯುನಿಕೋಡ್‌ನಲ್ಲಿದ್ದರೆ ಆಸಕ್ತರಿಗೆ ಅನುಕೂಲವಾಗುತ್ತದೆ. ಈಗ ಚಾಲ್ತಿಯಲ್ಲಿರುವ ಕನ್ನಡದ ತಂತ್ರಾಶಗಳಾದ   `ಬರಹ`, `ನುಡಿ`, `ಪ್ರಕಾಶಕ್`, `ಶ್ರೀ` ಹೀಗೆ ಯಾವುದೇ ಕನ್ನಡ ಸಾಫ್ಟ್‌ವೇರ್ ಆದರೂ ಪ್ರತಿಯೊಂದಕ್ಕೂ ಅದರದೇ ಎನ್‌ಕೋಡಿಂಗ್ ಇರುತ್ತದೆ. ಟೈಪಿಂಗ್ ಕ್ರಮವೂ ಬೇರೆಯೇ ಇರುತ್ತದೆ. ಯಾವುದೇ ತಂತ್ರಾಂಶದಲ್ಲಿ ಟೈಪ್ ಮಾಡಿದರೂ ಬೇರೊಂದು ಕಂಪ್ಯೂಟರಿನಲ್ಲಿ ಓದಲು ಅದೇ ತಂತ್ರಾಂಶ ಬೇಕಾಗುತ್ತದೆ. ಇತ್ತೀಚಿಗೆ ಕನ್ನಡ ಗಣಕ ಪರಿಷತ್ತಿನವರು ಹೊರ ತಂದಿರುವ ನುಡಿ ತಂತ್ರಾಂಶದ ೬ ನೇ ಆವೃತ್ತಿಯು ಸಂಪೂರ್ಣವಾಗಿ ಯೂನಿಕೋಡ್‌ ಆಧಾರಿತ ಕನ್ನಡ ತಂತ್ರಾಂಶವಾಗಿದೆ.

   ಯುನಿಕೋಡ್ ಮಾಹಿತಿಯನ್ನು ಕಾರ್ಯಾಚರಣೆ ವ್ಯವಸ್ಥೆಗಳು ಅರ್ಥಮಾಡಿಕೊಳ್ಳುವುದರಿಂದ ಕಡತಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು ಹುಡುಕಬಹುದು. ಪತ್ರಿಕೆಗಳು ಯುನಿಕೋಡ್ ಬಳಸಿ ಕಡತ ತಯಾರಿ ಮಾಡಿದರೆ ಒಂದು ವಿಷಯದ ಬಗ್ಗೆ ಮಾಹಿತಿ ಯಾವ ಕಡತದಲ್ಲಿದೆ ಎಂದು ಸುಲಭವಾಗಿ ಹುಡುಕಿ ತೆಗೆಯಬಹುದು. ಅಂತರಜಾಲದಲ್ಲಿ ಮಾಹಿತಿಯನ್ನು ಹುಡುಕುವ ತಾಣವಾದ ಗೂಗ್ಲ್ ಕೂಡ ಯುನಿಕೋಡ್ ಮೂಲಕವೇ ಕನ್ನಡದ ಮಾಹಿತಿಯನ್ನು ಹುಡುಕುತ್ತದೆ. ಕನ್ನಡ ಭಾಷೆಯನ್ನು ಯುನಿಕೋಡ್ ವಿಧಾನದಲ್ಲಿ ಬಳಸಲು ಈಗ ಇಚ್ಛಾಶಕ್ತಿಯ ಹೊರತಾಗಿ ಬೇರೆ ಯಾವ ತೊಡಕೂ ಇಲ್ಲ.

     ಇತ್ತೀಚೆಗೆ ಅಂತರಜಾಲದಲ್ಲಿ ತುಂಬ ಜನಪ್ರಿಯವಾಗುತ್ತಿರುವ ಬ್ಲಾಗಿಂಗ್‌ಗೆ ಎಲ್ಲರೂ ಬಳಸುತ್ತಿರುವುದು ಕನ್ನಡ ಯುನಿಕೋಡ್‌ನ್ನೇ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ಯುನಿಕೋಡ್ ಬಳಸಿ ಬ್ಲಾಗಿಂಗ್ ನಡೆಸುತ್ತಿದ್ದಾರೆ. ಕನ್ನಡ ಬ್ಲಾಗಿಗರ ಒಕ್ಕೂಟವೂ ಅಸ್ತಿತ್ವಕ್ಕೆ ಬಂದಿದೆ. ಈಗ ಇಂಟರ್ನೆಟ್ಟಿನಲ್ಲಿ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ಬ್ಲಾಗುಗಳು ಹಾಗೂ ವೆಬ್ ಸೈಟುಗಳು ಬಳಸುವುದು ಯೂನಿಕೋಡ್ ಮಾದರಿಯ ಅಕ್ಷರಗಳನ್ನೇ. ಇತ್ತೀಚೆಗೆ ಬ್ಲಾಗಿಸುವಿಕೆ ತುಂಬ ಜನಪ್ರಿಯವಾಗುತ್ತಿದೆ. ಕನ್ನಡ ಬ್ಲಾಗಿಗರ ಒಕ್ಕೂಟಕ್ಕೆ ನಾಲ್ಕು ಸಾವಿರಕ್ಕೆ ಮೇಲ್ಪಟ್ಟು ಸದಸ್ಯರಿದ್ದಾರೆ. ಈ ಬ್ಲಾಗಿಸುವಿಕೆ ಸಾಧ್ಯವಾಗಿರುವುದು ಯುನಿಕೋಡ್‌ನಿಂದಾಗಿ. ಅಂತರಜಾಲದ ಮೂಲಕ ಒಬ್ಬರಿಗೊಬ್ಬರು ಸಂಪರ್ಕ ಕಲ್ಪಿಸಿ ತಮಗಿಷ್ಟವಾದ ವಿಷಯಗಳ ಬಗ್ಗೆ ಗುಂಪುಗಳನ್ನು ಕಟ್ಟಿಕೊಳ್ಳಲು ಇರುವ ಸವಲತ್ತು ಜಾಲತಾಣಗಳಾದ ಆರ್ಕುಟ್, ಫೇಸ್‌ಬುಕ್, ವಾಟ್ಸ್‌ ಆಫ್‌ ,ಚುಟುಕು ಬ್ಲಾಗಿಂಗ್‌ನ ಟ್ವಿಟ್ಟರ್ ಎಲ್ಲವೂ ಕನ್ನಡ ಯೂನಿಕೋಡ್‌ ಬೆಂಬಲಿಸುವುದರ ಜೊತೆಗೆ  ಯೂನಿಕೋಡ್‌ ಮೂಲಕವೇ ಕಾರ್ಯ ನಿರ್ವಹಿಸುತ್ತಿವೆ. ಯುನಿಕೋಡ್ ಮೂಲಕವೇ. ಕನ್ನಡದಲ್ಲಿ ಸಂದೇಶ ಕಳುಹಿಸಲು ಬಳಸುವ ಇಮೈಲ್ ಮತ್ತು ಮಾತುಕತೆ ನಡೆಸುವ ಸವಲತ್ತುಗಳು ಕೂಡ ಯುನಿಕೋಡ್ ಮೂಲಕವೇ ಕೆಲಸ ಮಾಡುತ್ತವೆ. ಯುನಿಕೋಡ್ ಬಳಸುವ ಮೂಲಕ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಫ್ರೆಂಚ್, ಇತ್ಯಾದಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ವ್ಯವಹಾರ ಮಾಡಬಹುದು.

     ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (ಇನ್‌ಫೊರ್ಮೇಶನ್ ಸೂಪರ್ ಹೈವೇ) ಎಂಬ ಹೆಸರೂ ಇದೆ. ಈ ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿಗಳ ಪಯಣದ ಸಂಚಾರವುತೀವ್ರಗೊಳ್ಳ ಬೇಕಾಗಿದೆ. ಇತ್ತೀಚೆಗೆ ಯುನಿಕೋಡ್ ವಿಧಾನದಲ್ಲಿ ಕನ್ನಡದ ಹಲವು ಜಾಲತಾಣಗಳು ಲಭ್ಯವಿವೆ. ಈಗಾಗಲೇ ವಿವರಿಸಿದಂತೆ ಯುನಿಕೋಡ್ ವಿಧಾನದಲ್ಲಿ ಇರುವ ಜಾಲತಾಣದ ಮಾಹಿತಿಯನ್ನು ಗೂಗ್ಲ್ ಬಳಸಿ ಹುಡುಕಬಹುದು. ಕನ್ನಡ ಲಿಪಿಯಲ್ಲಿ ಬೇಂದ್ರೆಎಂದು ಬೆರಳಚ್ಚು ಮಾಡಿ ಗೂಗ್ಲ್‌ನಲ್ಲಿ ಹುಡುಕಿದರೆ ಕನ್ನಡದ ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ. ರಾ. ಬೇಂದ್ರೆಯವರ ತಾಣಕ್ಕೆ ಕೊಂಡಿ ಸಿಗುತ್ತದೆ ಅದೇ ಇಂಗ್ಲೀಷಿನಲ್ಲಿ bendre ಎಂದು ಬೆರಳಚ್ಚಿಸಿ ಹುಡುಕಿದರೆ ಸೊನಾಲಿ ಬೇಂದ್ರೆ ಸಿಗುತ್ತಾಳೆ!

      ಜಾಗತೀಕರಣದ ಪ್ರಭಾವದಿಂದ ಗಣಕ ವಲಯ ಇಂಗ್ಲೀಷ್‌  ಮಯವಾಗುವುದೆಂದು ಮೊದಮೊದಲು ಆತಂಕ ಉಂಟಾದುದು ನಿಜ. ಆದರೆ ಮಾರುಕಟ್ಟೆಯ ವಿಸ್ತರಣೆಯ ಅಗತ್ಯ ಕಂಡ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಭಾಷೆಗಳನ್ನು ಸಂಪೂರ್ಣವಾಗಿ ಅವಗಣಿಸುವುದು ಮಾರುಕಟ್ಟೆಯ ವಿಸ್ತರಣೆಗೆ ಮಾರಕವಾಗುವ ಅಂಶವೆಂದು ಬೇಗನೆ ತಿಳಿದುಕೊಂಡವು. ಆದರೆ       ಗಣಕಯಂತ್ರದಲ್ಲಿ ಕನ್ನಡ ಬಳಕೆಗೆ ಇರುವ ಮುಖ್ಯ ಸಮಸ್ಯೆ ಎಂದರೆ ತಾಂತ್ರಿಕ ಪರಿಣತರು, ಭಾಷಾ ತಜ್ಞರು ಮತ್ತು ಬಳಕೆದಾರರು ಇವರು ಒಂದೇ ವೇದಿಕೆಯಲ್ಲಿ ಸಂವಾದಕ್ಕೆ ತೊಗದಿರುವುದೇ ಆಗಿದೆ. ತಾಂತ್ರಿಕ ಪರಿಣಿತರು ತಾತ್ವಿಕವಾಗಿ ಕನ್ನಡದ ಸಾಧ್ಯತೆಯನ್ನು ಹೊಂದಿರುವ ತಂತ್ರಜ್ಞಾನವನ್ನು ರೂಪಿಸಿಕೊಡುವಾಗ ಭಾಷಾ ತಜ್ಞರ ನೆರವನ್ನು ಪಡೆಯಬೇಕಾಗುತ್ತದೆ. ಕನ್ನಡ ಭಾಷಾ ರಚನೆಯ ಲಕ್ಷಣಗಳನ್ನು ಅರಿತು ಅದಕ್ಕನುಗುಣವಾಗಿ ಕಾರ್ಯವಾಹಿಯನ್ನು ರೂಪಿಸಿದರೆ ಕೆಲಸ ಹೆಚ್ಚು ಪರಿಪೂರ್ಣವಾಗುತ್ತದೆ.

     ಜಾಗತಿಕವಾಗಿ ಗಣಕವನ್ನು ಮಾಹಿತಿ ಕಣಜವನ್ನಾಗಿ ಬಳಸಲಾಗುತ್ತಿದೆ. ಕಾಗದದ ಮೇಲೆ ಮುದ್ರಣಗೊಂಡ ಸೃಜನಾತ್ಮಕ ಕೃತಿಗಳು ಸೇರಿದಂತೆ ಹಲವು ಸಾವಿರ ಕೃತಿಗಳನ್ನು ಗಣಕದ ನೆನಪಿನಲ್ಲಿ ಇರಿಸುವ ಪ್ರಯತ್ನಗಳು ನಡೆದಿವೆ. ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಈ ಯತ್ನ ಸಾಗಿರುವ ರೀತಿಗೆ ಹೋಲಿಸಿದರೆ ಕನ್ನಡದಲ್ಲಿ ನಡೆದಿರುವ ಪ್ರಯತ್ನಗಳು ತೀರಾ ಅಲ್ಪ. ಈ ಅಂಕೀಕರಣವು ತರಲಿರುವ ಎರಡು ಸಮಸ್ಯೆಗಳನ್ನು ನಾವಿಲ್ಲಿ ಗಮನಿಸಬೇಕು. ಒಂದು : ಹೀಗೆ ಗಣಕದಲ್ಲಿ ಅಳವಟ್ಟ ಕನ್ನಡ ಪುಸ್ತಕವನ್ನು ಓದುವವರು ಯಾರು ಎಂಬುದು? ಬರಹ ಅನಕ್ಷರತೆಯೇ ತುಂಬಿರುವ ಈ ಸಂದರ್ಭದಲ್ಲಿ ಗಣಕ ಅನಕ್ಷರತೆಯೂ ಇನ್ನೂ ತೀವ್ರರೂಪದಲ್ಲಿದೆ. ಹಾಗಾಗಿ ಗಣಕದಲ್ಲಿ ಮರೆಯಾಗಿ ನಿಂತ ಕನ್ನಡ ಗ್ರಂಥಗಳು ಸುರಕ್ಷಿತವಾಗಿ ಉಳಿಯಬಹುದೇನೋ ನಿಜ. ಆದರೆ ಅದು ಹೆಚ್ಚು ಜನರ ಓದಿಗೆ ದೊರಕದೇ ಹೋಗಬಹುದು. ಅಲ್ಲದೆ ಮುದ್ರಿತ ಪುಸ್ತಕದ ಹಾಳೆಯೊಂದನ್ನು ಓದಲು ನಮ್ಮ ದೇಹದ ವಿವಿಧ ಅಂಗಾಂಗಗಳು ತರಬೇತು ಪಡೆದಂತೆ ಗಣಕದ ತೆರೆಯ ಮೇಲೆ ಓದಲು ಸಿದ್ಧವಾಗಿಲ್ಲ. ಇದು ತುಂಬಾ ಆಯಾಸದ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು.

       ಇಂದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಆಗಬೇಕಾದ ಮಹತ್ತರ ಕಾರ್ಯವೆಂದರೆ ಕನ್ನಡದಲ್ಲಿ ಅತ್ಯಂತ ವ್ಯವಸ್ಥಿತವಾಗಿ OCR(optical character recognition software) ತಂತ್ರಾಂಶ ಕೆಲಸ ಮಾಡುವಂತೆ ಸಿದ್ಧಪಡಿಸ ಬೇಕಾಗಿರುವುದು. . ಓ.ಸಿ.ಆರ್. ಅಂದರೆ ಆಪ್ಟಿಕಲ್ ಕ್ಯಾರೆಕ್ಟರ್ ರೀಡರ್. ಕನ್ನಡದ ಸಂದರ್ಭದಲ್ಲಿ ಇದರ ಅಗತ್ಯ ಜರೂರಿದೆ. ಇಂಗ್ಲೀಷ್ನಲ್ಲಿ ಮಾತ್ರ ಸಾಧ್ಯವಿರುವ ಇದು ಟೈಪಿಂಗ್ ಮತ್ತು ಸ್ಕ್ಯಾನಿಂಗ್ ನ ಲಕ್ಷಣಗಳಿಗಿಂತ ಭಿನ್ನವಾದುದು.

      ಕೈಬರಹದ ದಾಖಲೆಗಳನ್ನು ಗಣಕಕ್ಕೆ ಅಳವಡಿಸುವ ಸರಳ ವಿಧಾನವೆಂದರೆ ಸ್ಕ್ಯಾನಿಂಗ್. ಹೀಗೆ ಮಾಡಿದಾಗ ಮೂಲ ಕೈಬರಹದ ದಾಖಲೆ ಒಂದು ಚಿತ್ರವಾಗಿ ಗಣಕದಲ್ಲಿ ಉಳಿಯುತ್ತದೆ. ಈ ಮೊದಲೇ ಹೇಳಿದ ಹಳೆಗಾಲದ ದಾಖಲೆಗಳ ಗಣಕೀಕರಣವು ಇದೇ ಮಾದರಿಯಲ್ಲಿ ನಡೆಯುವುದು. ಇಂತಹ ಪ್ರಯತ್ನಗಳು ಕೈಬರಹದ ದಾಖಲೆಗಳಿಗೂ ಸಾಧ್ಯ. ಆದರೆ ಕೈಬರಹದ ದಾಖಲೆಗಳನ್ನು ಚಿತ್ರಗಳನ್ನಾಗಿ ಮಾಡದೆ, ಪಠ್ಯಗಳನ್ನಾಗಿ ಬದಲಿಸಲು ಬೇರೆಯೇ ತಂತ್ರಜ್ಞಾನಬೇಕು. ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಎಂದು ಕರೆಯಲಾಗುವ ಈ ತಂತ್ರಜ್ಞಾನ ಇಂಗ್ಲೀಷಿನಂತಹ ಭಾಷೆಗಳಿಗೆ ಲಭ್ಯವಿದೆ. ಕನ್ನಡದ ಮಟ್ಟಿಗಂತೂ ತೀರಾ ಪ್ರಾಥಮಿಕ ಹಂತದ ಕೆಲವು ಪ್ರಯತ್ನಗಳನ್ನು ಹೊರತುಪಡಿಸಿದರೆ ಈ ತಾಂತ್ರಿಕ ಸೌಲಭ್ಯ ಇನ್ನೂ ದುರ್ಲಭವಾಗಿಯೇ ಉಳಿದಿದೆ.  

     ಸ್ಕ್ಯಾನರ್ ಮೂಲಕ ಯಾವುದೇ ತರಹದ ಕೈ ಬರಹವುಳ್ಳ ಕನ್ನಡದ ಹಸ್ತಪ್ರತಿಯನ್ನು ಕಂಪ್ಯೂಟರಿಗೆ ಅಳವಡಿಸಿದಾಗ ಅದು ದರ್ಶಕದ ಮೇಲೆ ಮೂಡುವ ಹೊತ್ತಿಗೆ ಶುದ್ಧಪ್ರತಿಯಾಗಿ ಪ್ರಕಟವಾಗುತ್ತದೆ. ಅಂದರೆ ನಾವು ಬಳಸುವ ಹಲವಾರು ಫಾಂಟುಗಳಲ್ಲಿ ಕೈ ಬರಹವನ್ನು ಟೈಪಿಂಗ್ ಸಹಾಯವಿಲ್ಲದೆಯೇ ನೇರವಾಗಿ ಮುದ್ರಿಸಿಕೊಳ್ಳಬಹುದಾಗಿದೆ. ಹೀಗಾಗಬೇಕಾದರೆ ಕನ್ನಡದಲ್ಲಿ ಬಳಕೆಯಾಗುವ ಅಕ್ಷರಗಳ, ಅದರ ಎಲ್ಲ ಸಾಧ್ಯತೆಗಳ ಗುಣಲಕ್ಷಣಗಳನ್ನು ಗಣಕಕ್ಕೆ ಉಣಿಸಬೇಕಾಗುತ್ತದೆ. ಇದಕ್ಕೆ ಭಾಷಾಶಾಸ್ತ್ರಜ್ಞರ, ಕಂಪ್ಯೂಟರ್ ಮತ್ತು ಸಾಫ್ಟ್ ವೇರ್ ತಂತ್ರಜ್ಞರ ಜಂಟಿಪ್ರಯತ್ನ ಅನಿವಾರ್ಯವಾಗುತ್ತದೆ. ಈ ಪ್ರಯತ್ನ ಕನ್ನಡಕ್ಕೆ ಜರೂರಾಗಿ ಬರಬೇಕಾಗಿದೆ. ಇದರಿಂದ ಮುದ್ರಿತ ಸಂದರ್ಭದ ವೇಳೆ, ಹಣ, ಶ್ರಮ ಎರಡೂ ಉಳಿತಾಯವಾಗುತ್ತದೆ.      ಇದುವರೆಗೂ ಸ್ಕ್ಯಾನಿಂಗ್ ನಲ್ಲಿ ಪೋಟೋಗ್ರಫಿಯಂತೆ ಮೂಲಪ್ರತಿಯ ಯಥಾವತ್ತಾದ ನಕಲನ್ನು ಮಾತ್ರ ನೋಡುವ ಸಾಧ್ಯತೆ ನಮಗಿತ್ತು. ಈ OCRದ ಸಹಾಯದಿಂದ ಹಸ್ತಪ್ರತಿಗಳಲ್ಲಿನ ಬರಹವನ್ನು ನಮಗೆ ಬೇಕಾದಲ್ಲಿ ಬೇಕಾದ ಹಾಗೆ ಬದಲಾಯಿಸಬಹುದಾಗಿದೆ. ಅಂದರೆ ಗಣಕೀಕೃತ ಪಠ್ಯದಲ್ಲಿನ ಅಕ್ಷರಗಳನ್ನು ಬೋಲ್ಡ್ ಮಾಡುವ, ಪ್ಯಾರಾ ಮಾಡಿಕೊಳ್ಳುವ, ಬೇಕಾದ ಅಳತೆಗೆ ಹಿಗ್ಗಿಸುವ ಮತ್ತು ಕುಗ್ಗಿಸಿಕೊಳ್ಳುವ, ಪಠ್ಯವೊಂದಕ್ಕೆ ಬೇಕಾದ ತಲೆಬರಹ ಕೊಡುವ ಸೌಲಭ್ಯಾಕಾಂಕ್ಷೆಗಳು ಪ್ರಾಪ್ತವಾಗಿವೆ. ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (ಓಸಿಆರ್) ತಂತ್ರಜ್ಞಾನದ ಸಹಾಯದಿಂದ ಕನ್ನಡದ ಮುದ್ರಿತ ಪಠ್ಯವನ್ನೂ ಡಿಜಿಟಲ್ ರೂಪಕ್ಕೆ ಬದಲಿಸಿಕೊಳ್ಳುವುದು, ಬೇಕಾದ ಬದಲಾವಣೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಈ ಕೆಲಸ ಮಾಡುವ ಮೊಬೈಲ್ ಆಪ್ಗಳೂ ಬಂದಿವೆ.           ಕನ್ನಡ ಪಠ್ಯದ ಗಣಕೀಕರಣದಲ್ಲಿರುವ ಬಹುದೊಡ್ಡ ಅಡ್ಡಿ ಎಂದರೆ ಕನ್ನಡದಲ್ಲಿ OCR(optical character recognition software) ಇಲ್ಲದಿರುವುದು. ಹೆಚ್ಚೂ ಕಮ್ಮಿ ಎಲ್ಲ ಭಾರತೀಯ ಭಾಷೆಗಳಲ್ಲೂ ಬಳಕೆಗೆ ಲಭ್ಯವಿರುವ OCR ಕನ್ನಡದಲ್ಲಿ ಇನ್ನೂ ಲಭ್ಯವಿಲ್ಲ. ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ TDIL (Technology Development for Indian Languages) ಸಂಸ್ಥೆಯು ಕನ್ನಡವನ್ನು ಹೊರತುಪಡಿಸಿ ಎಲ್ಲಾ ಭಾಷೆಗಳಲ್ಲೂ OCR ಮತ್ತು ಯೂನಿಕೋಡ್ ಫಾಂಟ್‍ನಂತಹ ಆನ್ವಯಿಕ ತಂತ್ರಾಂಶಗಳನ್ನು ಉಚಿತವಾಗಿ ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುತ್ತಿದೆ.

   

        ಪತ್ರಿಕೆಯ ಸಂದರ್ಭಕ್ಕೆ ಬಂದಾಗ ವರದಿಗಾರರಿಂದ ದಿನನಿತ್ಯ ಬರುವ ವರದಿಗಳನ್ನು ಬೆರಳಚ್ಚು ಮಾಡದೆ ನೇರ ಮುದ್ರಿತ ಹಂತಕ್ಕೆ ಬದಲಾಯಿಸಿಕೊಳ್ಳುವುದರಿಂದ ಪತ್ರಿಕೆಯನ್ನು ನಿಗದಿತ ಸಮಯಕ್ಕೆ ಹೊರತರಬಹುದಾಗಿದೆ. ಅಲ್ಲದೆ ಯಾವುದೇ ಒಬ್ಬ ಕವಿ, ಅಥವಾ ಕಾದಂಬರಿಕಾರ ಬರೆದುಕೊಡುವ ಕವನ, ಧಾರಾವಾಹಿಗಳ ಹಸ್ತಪ್ರತಿ ರೂಪಗಳನ್ನು ಈ OCR ಮೂಲಕ ತಪ್ಪುಗಳಿಲ್ಲದೆ ಲಗುಬಗೆಯಿಂದ ಮುದ್ರಿಸಬಹುದಾಗಿದೆ. ಇದರಿಂದ ಕರಡು ತಿದ್ದುವ ಕಿರಿಕಿರಿಯೇ ಮಾಯವಾಗುತ್ತದೆ. ಹಾಗೇನಾದರೂ ದೋಷಗಳಿದ್ದರೆ ಎಡಿಟಿಂಗ್ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ.

       OCR ಕನ್ನಡದಲ್ಲಿ ಬಂದರೆ ಹಸ್ತಪ್ರತಿಶಾಸ್ತ್ರ ಮತ್ತು ಪತ್ರಿಕಾರಂಗಕ್ಕೆ ಉಪಯುಕ್ತ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ಸಾಫ್ಟ್ ವೇರ್ ತಂತ್ರಜ್ಞರು ಇದನ್ನು ಸಾಧ್ಯವಾಗಿಸಿದರೆ ಕನ್ನಡಕ್ಕೆ ಮತ್ತೊಂದು ತಾಂತ್ರಿಕ ಸಾಧ್ಯತೆ ದಕ್ಕಿದಂತಾಗುತ್ತದೆ. ಇಂತಹ ತಾಂತ್ರಿಕತೆ ನೆನಪಿನಲ್ಲಿ ಸಂಗ್ರಹವಾಗುವ ಬಗೆಯನ್ನು ಈಗಿರುವ ಚೌಕಟ್ಟಿಗಿಂತ ಬೇರೆ ರೀತಿಯಲ್ಲಿ ರೂಪಿಸಬಲ್ಲುದು. ಬರಲಿರುವ ದಶಕಗಳಲ್ಲಿ ಕನ್ನಡ ಬರವಣಿಗೆ ಈ ತಂತ್ರಜ್ಞಾನ ಪ್ರಭಾವಕ್ಕೆ ಒಳಗಾಗಲಿದೆ.

      ಅಂತರ್ ಜಾಲದ ಮಾಧ್ಯಮದಲ್ಲಿ ಹೊಸದಾಗಿ ರೂಪಗೊಂಡಿರುವ ಸಂವಹನ ಸಾಧ್ಯತೆಯನ್ನು ಜಾಗತಿಕವಾಗಿ ಚಾಟಿಂಗ್ ಎನ್ನುತ್ತಾರೆ. ದೇಶಸ್ಥವಾಗಿ ದೂರದಲ್ಲಿರುವ ಅಥವಾ ದೂರದಲ್ಲಿದ್ದೇವೆಂದು ತಿಳಿದಿರುವ ಇಬ್ಬರು ತಮ್ಮ ತಮ್ಮ ನಡುವೆ ನಡೆಸುವ ಸಂಭಾಷಣೆಯೇ ಚಾಟಿಂಗ್ . ಇದರಲ್ಲಿ ಯಾವ ವಿಷಯವನ್ನು ಕುರಿತು ಮಾತಾಡಲಾಗುತ್ತದೆ ಎಂಬುದು ನಮಗೆ ಮುಖ್ಯವಲ್ಲ. ಆದರೆ ಇದರ ತಾಂತ್ರಿಕ ನೆಲೆಗಳು ಭಾಷೆಯ ಮೇಲೆ ಬೀರುತ್ತಿರುವ ಪರಿಣಾಮಗಳು ಮಾತ್ರ ನಮಗಿಲ್ಲಿ ಮುಖ್ಯವಾಗುತ್ತವೆ. ಈ ಬಗೆಯ ಸಂವಹನವನ್ನು ಗಣಕದ ನೆರವಿನ ಸಂವಹನ (ಕಂಪ್ಯೂಟರ್ ಮೀಡಿಯೇಟೆಡ್ ಕಮ್ಯೂನಿಕೇಷನ್ ) ಎನ್ನುತ್ತಾರೆ. ಕಂಪ್ಯೂಟರ್ ಬಳಸುತ್ತಿರುವವರ ಕನ್ನಡದ ಬಗೆಗಿನ ಸಮಸ್ಯೆಗಳಿಗೆ ಉತ್ತರ ಸಿಗಬಹುದಾದ ಜಾಲತಾಣವೊಂದು ಅವಶ್ಯವಾಗಿದೆ. ಒಟ್ಟಾರೆಯಾಗಿ ತಂತ್ರಜ್ಞಾನದ ವಲಯದಲ್ಲೂ ಕನ್ನಡಕ್ಕೆ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯ ಇದರಿಂದ ಕನ್ನಡದ ಪ್ರಸಾರ ಮತ್ತಷ್ಟು ಹೆಚ್ಚಲಿದೆ.

     ಸಮಕಾಲೀನ ಮಾಹಿತಿ ತಂತ್ರಜ್ಞಾನ ಯುಗದಲ್ಲಿಯ ಸಾಮಾಜಿಕ  ಜಾಲಗಳಲ್ಲಿ, ಜಾಲತಾಣಗಳಲ್ಲಿ ಇದೀಗ ಕನ್ನಡ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಿದೆ. ಕನ್ನಡ ಲಿಪಿಯಲ್ಲಿ ಹೆಚ್ಚಿನ ಮಾಹಿತಿ ಸೃಷ್ಟಿಯಾದಂತೆ ಆ ಮಾಹಿತಿಯನ್ನು ಹೊಸ ಬಗೆಗಳಲ್ಲಿ ಬಳಸಬಲ್ಲ ತಂತ್ರಜ್ಞಾನಗಳೂ ಅಭಿವೃದ್ಧಿಯಾಗುತ್ತಿವೆ. ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಪಠ್ಯರೂಪದ ಮಾಹಿತಿ ಮಾತ್ರವೇ ಅಲ್ಲ. ಪಠ್ಯವನ್ನು ಧ್ವನಿಗೆ(ಟೆಕ್ಸ್ಟ್ ಟು ಸ್ಪೀಚ್), ಧ್ವನಿಯನ್ನು ಪಠ್ಯಕ್ಕೆ (ಸ್ಪೀಚ್ ಟು ಟೆಕ್ಸ್ಟ್) ಬದಲಿಸುವ ತಂತ್ರಜ್ಞಾನಗಳೂ ಇದೀಗ ಕನ್ನಡದಲ್ಲಿವೆ. ಕಡತದಲ್ಲಿರುವ ಪಠ್ಯವನ್ನು ಧ್ವನಿರೂಪಕ್ಕೆ ಬದಲಿಸಿಕೊಂಡು ಆರಾಮವಾಗಿ ಕೇಳುವುದು, ನಮ್ಮ ಮಾತುಗಳನ್ನು ಕಂಪ್ಯೂಟರಿಗೋ ಮೊಬೈಲಿಗೋ ಹೇಳಿ ಬರೆಸುವುದು ಇದರಿಂದ ಸಾಧ್ಯವಾಗಿದೆ. ತಂತ್ರಜ್ಞಾನದ ಪ್ರಯೋಜನ ಹೊಸದಾಗಿ ಸೃಷ್ಟಿಯಾದ ಪಠ್ಯಕ್ಕೆ ಮಾತ್ರವೇ ಸೀಮಿತವಾದರೆ ಏನು ಪ್ರಯೋಜನ?ನಮಗೆ ಬೇಕಾದ ಮಾಹಿತಿ ಪ್ರಪಂಚದ ಯಾವುದೇ ಭಾಷೆಯಲ್ಲಿರುವುದು ಸಾಧ್ಯ. ಅಂತರ್ಜಾಲದಲ್ಲಿ ಸುಲಭವಾಗಿ ದೊರಕುವ ಈ ಮಾಹಿತಿಯೆಲ್ಲ ನಮ್ಮ ಭಾಷೆಯ ಇರುವಂತಿದ್ದರೆ? ಇದನ್ನು ಸಾಧ್ಯವಾಗಿಸಲು ಅನುವಾದ ತಂತ್ರಾಂಶಗಳು ನೆರವಾಗುತ್ತವೆ. ಇತರ ಭಾಷೆಗಳನ್ನು ಕನ್ನಡಕ್ಕೆ, ಕನ್ನಡದ ಮಾಹಿತಿಯನ್ನು ಇತರ ಭಾಷೆಗಳಿಗೆ ಅನುವಾದಮಾಡಿಕೊಡುವ ತಂತ್ರಾಂಶಗಳನ್ನು ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

   ತಂತ್ರಜ್ಞಾನದ ಸಹಾಯ ಪಡೆದು ಓದುವ ಹವ್ಯಾಸಕ್ಕೆ ನೀರೆರೆಯುವ ಪ್ರಯತ್ನದಲ್ಲಿ ವಿದ್ಯುನ್ಮಾನ ಪುಸ್ತಕಗಳು (ಇ-ಬುಕ್) ತೊಡಗಿಕೊಂಡಿವೆ. ವಿದ್ಯುನ್ಮಾನ ಸಾಧನಗಳಲ್ಲಿ ಪುಸ್ತಕಗಳನ್ನು ಓದಲು, ಕೇಳಲು ನೆರವಾಗುವ ವ್ಯವಸ್ಥೆಗಳು ಕನ್ನಡದಲ್ಲೂ ನಿಧಾನಕ್ಕೆ ಬೆಳೆಯುತ್ತಿವೆ. ಸರಕಾರವೇ ನಡೆಸುವ ‘ಕಣಜ’ದಂತಹ ತಾಣ, ನ್ಯಾಷನಲ್‌ ಆರ್ಖೀವ್ಸ ಮುಂತಾದ ತಾಣಗಳು ಹಳೆಯ ಮತ್ತು ನೂತನ  ಇ-ಪುಸ್ತಕಗಳನ್ನು ಒದಗಿಸುತ್ತಿವೆ. ತಂತ್ರಜ್ಞಾನ ಜಗತ್ತಿನಲ್ಲಿ ಕನ್ನಡದ ಪ್ರಾರಂಭಿಕ ಬೆಳವಣಿಗೆ ಸಾಧ್ಯವಾದದ್ದು ಹಲವು ಉತ್ಸಾಹಿಗಳು ವೈಯಕ್ತಿಕ ಮಟ್ಟದಲ್ಲಿ ಮಾಡಿದ ಕೆಲಸಗಳಿಂದ. ಅಲ್ಲಿಂದ ಶುರುವಾದ ಕನ್ನಡದ ಟೆಕ್ ಯಾತ್ರೆಗೆ ಬೆಂಬಲವಾಗಿ ಇದೀಗ ಗೂಗಲ್‌ನಂತಹ ವಾಣಿಜ್ಯ ಸಂಸ್ಥೆಗಳೂ ಕೈಜೋಡಿಸಿವೆ. 

    ತಂತ್ರಜ್ಞಾನ ಜಗತ್ತಿನಲ್ಲಿ ಕನ್ನಡದ ಮಾರುಕಟ್ಟೆ ಬೆಳೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಟೆಕ್ ಲೋಕದಲ್ಲಿ ಕನ್ನಡ ಬೆಳೆಯುವ ನಿಟ್ಟಿನಲ್ಲಿ ಸಮುದಾಯದ ಕೊಡುಗೆಯೂ ದೊಡ್ಡಮಟ್ಟದ್ದಾಗಿದ್ದು ಅವು ಮಾಡಿರುವ ಕೆಲಸವನ್ನು ಕನ್ನಡ ಜನತೆಗೆ ತಿಳಿ ಹೇಳುವುದರ ಜೊತೆಗೆ ಪ್ರಶಂಸಿಸ ಬೇಕಾಗಿದೆ. ಕನ್ನಡ ವಿಕಿಪೀಡಿಯದಂತಹ ವೇದಿಕೆಯ ಮಹತ್ವದ ಬಗೆಗೆ ಇಂದು ಜನತೆಯಲ್ಲಿ ಅರಿವು ಮೂಡಿಸ ಬೇಕಾಗಿದೆ.  ಉಚಿತವಾಗಿ ಲಭ್ಯವಿರುವ  ಮುಕ್ತ ತಂತ್ರಾಂಶಗಳನ್ನು ಕನ್ನಡಕ್ಕೆ ತರುವುದರಲ್ಲಿ, ಆಸಕ್ತ ಕನ್ನಡಿಗರ ಗುಂಪುಗಳು ಹಲವು ಮಹತ್ವದ ಸಾಧನೆಗಳನ್ನು ಮಾಡಿವೆ ಅವುಗಳ ಸಾಧನೆಯನ್ನು ಗುರುತಿಸ ಬೇಕಾಗಿದೆ. ಇಂದು ಈ ತೆರನಾದ ತಾಂತ್ರಿಕ  ಕೆಲಸ ಮಾಡುವ  ಇಂತಹ ಸಮುದಾಯಗಳೊಡನೆ ಕೈಜೋಡಿಸುವುದು, ಹೊಸ ಪ್ರಯತ್ನಗಳನ್ನು ಬೆಂಬಲಿಸುವುದು ನಾವೆಲ್ಲರೂ ಮಾಡಬೇಕಾದ ಕೆಲಸವಾಗಬೇಕಾಗಿದೆ. ಅದರ ಮೂಲಕ ಮಾಹಿತಿ ತಂತ್ರಜ್ಞಾನ ಜಗತಿನಲ್ಲಿ ಕನ್ನಡ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ ಸದೃಢವಾಗಿ ಬೆಳಸಲು ಸಾಧ್ಯವಾಗುತ್ತದೆ.

 

                                 

               

 

 

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...