ಭಾನುವಾರ, ಏಪ್ರಿಲ್ 7, 2019

ಅಜ್ಞಾತ ವಚನಕಾರರ ಸಾಮಾಜಿಕ ಚಿಂತನೆಗಳು ಡಾ.ಸಿ.ನಾಗಭೂಷಣ


 ಅಜ್ಞಾತ ವಚನಕಾರರ ಸಾಮಾಜಿಕ ಚಿಂತನೆಗಳು  ಡಾ.ಸಿ.ನಾಗಭೂಷಣ
 (ಕೆಂಭಾವಿ ಭೋಗಣ್ಣ, ಚಂದಿಮರಸ , ಹೆಂಡದ ಮಾರಯ್ಯ, ಕೂಗಿನ ಮಾರಿತಂದೆ, ಮನುಮುನಿ ಗುಮ್ಮಟದೇವ, ಭೋಗಣ್ಣ, ತೆಲುಗೇಶ ಮಸಣಯ್ಯ, ಮಡಿವಾಳಯ್ಯಗಳ ಸಮಯಾಚಾರಗಳ ಮಲ್ಲಿಕಾರ್ಜುನದೇವ, ಬೊಕ್ಕಸದ ಚಿಕ್ಕಣ್ಣ ಇವರುಗಳ ವೈಯಕ್ತಿಕ ವಿವರ ಹಾಗೂ ವಚನಗಳನ್ನು  ಅನುಲಕ್ಷಿಸಿ)
   ಕನ್ನಡನಾಡಿನ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು. ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ.  ಸಾಹಿತಿ ಅಥವಾ ಕವಿಯಾಗಬೇಕಾದರೆ ವಿದ್ವಾಂಸನಾಗಿರಬೇಕಾಗಿಲ್ಲ. ಅರ್ಥವಾಗದ ಆಡಂಬರ ಭಾಷೆಯಲ್ಲಿ ಬರೆಯ ಬೇಕಾಗಿಲ್ಲ. ಅಂತರಂಗದನುಭವಗಳನ್ನು ತುಮುಲಗಳನ್ನು ನೇರವಾಗಿ ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲುದು ಎಂಬುದನ್ನು ತೋರಿಸಿ ಕೊಟ್ಟರು. ಜನಸಾಮಾನ್ಯರ ಆಡುಮಾತನ್ನೇ ಅಂತರಂಗದ ಸೂಕ್ಷ್ಮವಾದ,ನವುರಾದ ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಲ್ಲದೆ, ಗಹನವಾದ ಶಾಸ್ತ್ರವಿಚಾರಗಳಿಗೂ ನಿಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ ಮಾಧ್ಯಮವಾಗಿಸಿದರು. ಸ್ತ್ರೀ-ಪುರುಷರ ನಡುವಿನ ಅಂತರವನ್ನು ನಿರಾಕರಿಸಿ ವರ್ಣಭೇದ, ವರ್ಗ ಭೇದಗಳನ್ನು ಪ್ರತಿಭಟಿಸಿ ವಿಪ್ರ ಹಾಗೂ ಅಂತ್ಯಜರನ್ನು ಒಂದೇ ಎನ್ನುವ ಸಮಾನತೆಯ ಚೌಕಟ್ಟಿನಲ್ಲಿರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಚನ ಚಳುವಳಿಯು ಒದಗಿಸಿ ಕೊಟ್ಟಿತು ಶಿವಶರಣರ ಆಂದೋಲನದ ನಿಮಿತ್ತವಾಗಿ ರೂಪುಗೊಂಡ ವಚನ ಸಾಹಿತ್ಯವು ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಚಿಂತನೆಯ ಪ್ರತಿಪಾದನೆಯೂ ಆಗಿದೆ. ವಚನಕಾರರು  ಶಿವಭಕ್ತರೂ ಹೌದು, ಸಮಾಜಚಿಂತಕರೂ ಹೌದು. ಏಕೆಂದರೆ ವಚನಕಾರರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಕೆಲವು ಘಟನೆಗಳು ಆ ಕಾಲದ
ಸಾಮಾಜಿಕ ದಾಖಲೆಗಳಾಗಿಯೂ ಕಂಡು ಬರುತ್ತವೆ. ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದ್ದು ಭಾರತೀಯ ಭಕ್ತಿಪಂಥದ ಒಂದಂಗವಾದ ವಚನಚಳುವಳಿಯಲ್ಲೇ ಎಂಬುದು ಗಮನಾರ್ಹ ಅಂಶವಾಗಿದೆ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟಗೊಂಡಿದೆ. ಸಾಮಾನ್ಯ ಜನಸ್ತರವನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳ ಬೇಕು ಎಂಬುದು ಭಕ್ತಿಪಂಥದ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನ ಚಳುವಳಿಯು ಧಾರ್ಮಿಕ ವ್ಯಕ್ತಿಗಳ ನೂತನ ಪರಂಪರೆಯನ್ನು ಹುಟ್ಟು ಹಾಕಿದ್ದಲ್ಲದೆ ಧಾರ್ಮಿಕ ವ್ಯಕ್ತಿ ಹೇಳುವ ಬದುಕುವ ಮಾರ್ಗವು ವೈಯಕ್ತಿಕವಾಗಿರುವುದರ ಜೊತೆಗೆ ಭಕ್ತಿಚಳುವಳಿಯ ಅನುಭಾವಿಕ ಮನಃಸ್ಥಿತಿಯ ಆಶಯದ ಪ್ರಾತಿನಿಧಕವೂ ಆಗಿದೆ. ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತಶಾಹಿಯ ಭೌತಿಕ ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ ಹಂತವನ್ನು ತಲುಪಿದ್ದನ್ನು ಗುರುತಿಸ ಬಹುದಾಗಿದೆ.ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ವಚನ ಚಳುವಳಿಯು ಪಟ್ಟಭದ್ರ ಹಿತಾಸಕ್ತಿಯ ಮೂಲ ಅಂಶಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ಸೂಚನೆಯೊಂದಿಗೆ ಭಾಷೆಯ ಬಳಕೆಯಲ್ಲಿ ದೇಸಿ ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ವಚನ ಚಳುವಳಿಯ ಮುಖ್ಯ ಲಕ್ಷಣ ಎಂದರೆ ಅದರ ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಟ್ಟಿದ್ದು. ವಚನಕಾರರು ವೈದಿಕ ವ್ಯವಸ್ಥೆಯ ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ನಡೆದು ತನ್ನದೇ ಆದ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು.
    ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಉತ್ಪ್ರೇಕ್ಷೆ ಇಲ್ಲ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು. ಸಾಮಾಜಿಕ ಪ್ರಜ್ಞೆಯು ಸಮಾಜದ ವಸ್ತು ಸ್ಥಿತಿಯನ್ನು ತಿಳಿಸಿ ಕುಂದು ಕೊರತೆಗಳನ್ನು ಟೀಕಿಸುವುದಷ್ಟೇ ಅಲ್ಲ ಅದನ್ನು ಸುಧಾರಿಸುವ, ಬದಲಿಸುವ ಮಾರ್ಗದರ್ಶಕ ಕಾರ್ಯವನ್ನು ನಿರ್ವಹಿಸುವಂತೆಯೂ ಮಾಡುತ್ತದೆ. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ವಚನಕಾರರ ಸಾಮಾಜಿಕ ಪ್ರಜ್ಞೆ ಅತ್ಯುನ್ನತ ಮಟ್ಟದ್ದಾಗಿತ್ತು. ಬಸವಾದಿ ಪ್ರಮಥರ ಸಾಮಾಜಿಕ ಪ್ರಜ್ಞೆಯಲ್ಲಿ ತಮ್ಮ ಸಮಕಾಲೀನ ಹದಗೆಟ್ಟ ಸಮಾಜವನ್ನು ಯೋಗ್ಯರೀತಿಯಲ್ಲಿ ನಡೆಯಿಸುವ ಧರ್ಮದ ಡಾಂಭಿಕತೆಯನ್ನು ಹೊಡೆದೋಡಿಸಿ ಮಾನವತೆಯನ್ನು ಎಚ್ಚರಗೊಳಿಸುವ, ಪರಂಪರಾಗತ ಶುಷ್ಕ, ಅರ್ಥಹೀನ, ಸವಕಳಿ ನಡೆ ನುಡಿಗಳನ್ನು ತಿದ್ದಿ ಸಜೀವಗೊಳಿಸುವ, ಅಂಧಾನುಕರಣೆಯಲ್ಲಿ ಮುಳುಗಿ ಹೋಗಿದ್ದ ಜನತೆಗೆ ತಮ್ಮ ತಮ್ಮ ವ್ಯಕ್ತಿ ವೈಶಿಷ್ಟ್ಯದ ಬಗೆಗೆ ಅರಿವು ಮೂಡಿಸುವ ಹಲವಾರು ಅಂಶಗಳನ್ನು ಗುರುತಿಸಬಹುದಾಗಿದೆ. ಸಂಪ್ರದಾಯ ನಿಷ್ಠೆಯ ವಿರುದ್ಧ, ಸ್ವಾಯತ್ತತೆಯ ವಿರುದ್ಧ ಪ್ರತಿಭಟನೆಯ ಅಂಶಗಳನ್ನು ಕಾಣಬಹುದಾಗಿದೆ. ಸಾಮಾಜಿಕ ಪ್ರಜ್ಞೆಯಲ್ಲಿ ವಿಡಂಬನೆಯು ಒಳಗೊಂಡಿದೆ. ವಚನಕಾರರಿಂದ ಪ್ರವರ್ತನಗೊಂಡ ವೀರಶೈವ ಧರ್ಮವು ಕೇವಲ ಧಾರ್ಮಿಕ ಅವಶ್ಯಕತೆಯಿಂದ ರೂಪುಗೊಂಡಿದ್ದಲ್ಲ. ಅದು ಸಮಾಜೋಧಾರ್ಮಿಕ ಚಳುವಳಿಯ ಫಲಿತ. ಯಾವ ಧರ್ಮಕ್ಕೆ ಸಾಮಾಜಿಕ ಹೊಣೆಗಾರಿಕೆ ಎಂಬುದು ಇಲ್ಲವೋ ಅದು ಧರ್ಮವೇ ಅಲ್ಲ. ಒಂದು ಧರ್ಮಕ್ಕೆ ಸಾಮಾಜಿಕ ಜವಾಬ್ದಾರಿ ಇರಬೇಕು. ಒಂದು ಸಮಾಜವು ಸುಭದ್ರವಾಗಿ ನೆಮ್ಮದಿಯಿಂದ ಬದುಕಬೇಕಾದರೆ ಅದು ಯಾವ ಯಾವ ಲೌಕಿಕ, ಆಧ್ಯಾತ್ಮಿಕ ಹಾಗೂ ನೈತಿಕ ನಿಲುವುಗಳು ಅಗತ್ಯವೋ ಅವುಗಳನ್ನು ರೂಪಿಸುವ ಸಾಮರ್ಥ್ಯವನ್ನು ಧರ್ಮವು ಹೊಂದಿರಬೇಕು. ಧರ್ಮವು ಸಮಾಜದ ಸರ್ವತೋಮುಖವಾದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಅದು ಸಮಾಜದ ಎಲ್ಲಾ ಸ್ತರಗಳ ಹಿತವನ್ನು ತನ್ನ ಕಕ್ಷೆಗೆ ತೆಗೆದುಕೊಳ್ಳುವಂತಿರಬೇಕು. ವಚನಕಾರರಿಂದ ಪ್ರವರ್ತನಗೊಂಡ ಧಾರ್ಮಿಕ ನಿಲುವುಗಳು ಹಿಂದೂ ಧರ್ಮದ ಸಾಮಾಜಿಕ ಕಲ್ಪನೆಗೆ ಹಾಗೂ ವಾಸ್ತವತೆಗಳಿಗೆ ತೋರಿದ ಪ್ರತಿಕ್ರಿಯೆ ಮತ್ತು ಪ್ರತಿಭಟನೆಯ ಅಂಶಗಳಾಗಿವೆ.
     ಶಿವಶರಣರ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯೇ ಹೊರತು ರಾಜಕೀಯ, ಆರ್ಥಿಕ ಚಳುವಳಿಯಲ್ಲ. ಧಾರ್ಮಿಕ, ಸಾಮಾಜಿಕ ಅಸಮಾನತೆಯನ್ನು ಮತ್ತು ಧಾರ್ಮಿಕವಾಗಿ ಎಲ್ಲಾ ಸವಲತ್ತುಗಳನ್ನು ಪಡೆದವರನ್ನು ಶರಣರು ವಿರೋಧಿಸಿದರು. ಶಿವಶರಣರ ಚಳುವಳಿಗೆ ತುತ್ತಾದವರು ಬ್ರಾಹ್ಮಣರೇ ಹೊರತು ರಾಜರಲ್ಲ. ಸಮಾಜವನ್ನು ವರ್ಣಾಶ್ರಮ ಪದ್ಧತಿಗೆ ಅನುಸಾರವಾಗಿ ಒಡೆದು ಆಳುವ ಧಾರ್ಮಿಕ, ಸಾಮಾಜಿಕ ಪರಿಸರದಲ್ಲಿ ರಾಜತ್ವವನ್ನು ವಿರೋಧಿಸುವ ರಾಜಕೀಯಕ್ಕೆ ಕೈಹಾಕದೆ ರಾಜನನ್ನು ಹಾಗೂ ಅವನ ಬೆಂಬಲಕ್ಕೆ ನಿಂತ ವರ್ಗಗಳನ್ನು ನಿಯಂತ್ರಿಸುವ ಧರ್ಮವನ್ನು ತೀವ್ರವಾದ ಚಿಕಿತ್ಸೆಗೆ ಒಳಪಡಿಸುವ ವೈಚಾರಿಕತೆಯ ಮೂಲಕ ವಚನಕಾರರು ತಾವು ಒಂದು ಸಮಾಜವನ್ನು ತತ್ಪರಿಣಾಮವಾಗಿ ಧರ್ಮವನ್ನು ನೆಲೆಗೊಳಿಸಿದ್ದು ಮಹತ್ತರ ಸಂಗತಿಯಾಗಿದೆ. ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ; ಎಲ್ಲಿ ವ್ಯಕ್ತಿಯ ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ ಪರಸ್ಪೃರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ವಚನ ಚಳುವಳಿಯು ವಹಿಸಿ ಕೊಂಡಿತು. ಈ ಒಂದು ಮಹತ್ತರವಾದ ಜವಾಬ್ದಾರಿ ಅಂದಿನ ವಚನಕಾರರೆಲ್ಲರ ಚಿಂತನೆಯ ಮೂಸೆಯಲ್ಲಿ ಹೊರಹೊಮ್ಮಿದ ಕಾರಣ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಪಾಲುದಾರರು. ಅದರ ಮುಖ್ಯ ಉದ್ದೇಶ ಮಾತ್ರ ಬಹುಜನರ ಹಿತವನ್ನು ಸಾಧಿಸುವ ಒಂದು ಸಾಮಾಜಿಕ ಧರ್ಮವನ್ನು ರೂಪಿಸುವುದಾಗಿತ್ತು. ವಚನ ಚಳುವಳಿಯು ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಬಯಸಿತು. ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜವನ್ನು ನಿರ್ಮಿಸುವ ಉದ್ದೇಶ್ಯವನ್ನು ಹೊಂದಿತ್ತು. ಪುರುಷಾರ್ಥಗಳನ್ನು ವರ್ಣವ್ಯವಸ್ಥೆಯ ಹಿನ್ನೆಲೆಯಲ್ಲಿ ಆರ್ಥೈಸದೆ ಸಮಾನತೆಯ ಹಿನ್ನೆಲೆಯಲ್ಲಿ ಅರ್ಥೈಸಿತು. ಆ ಮೌಲ್ಯಗಳ ಮಹತ್ವವನ್ನು ಸಾರ್ವತ್ರಿಕಗೊಳಿಸಿತು. ಲಿಂಗ-ವರ್ಣ-ವರ್ಗಗಳ ಭೇದವನ್ನಳಿಸಿ, ಸ್ವಾತಂತ್ರತೆ-ಸಮಾನತೆ-ಮಾನವೀಯತೆಯನ್ನು ಅರಳಿಸುವಲ್ಲಿ, ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಸುವಲ್ಲಿ ವಚನ ಚಳುವಳಿ ಗಮನೀಯ ಪಾತ್ರ ವಹಿಸಿದೆ. ವೃತ್ತಿಸಂಬಂಧಿ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯುವ ಪ್ರಯತ್ನವನ್ನು ಮಾಡಿದರು. ಕೆಳವರ್ಗದವರಿಗೆ ನೈತಿಕ ಬೆಂಬಲವನ್ನು ನೀಡುವುದರ ಮೂಲಕ  ಮೇಲ್ಮುಖ ಚಲನೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟರು. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ವ್ಯವಸ್ಥಿತ ಅಧ್ಯಯನಕ್ಕೊಳ ಪಡದ ಮೇಲೆ ಉಲ್ಲೇಖಿಸಿರುವ ಕೆಲವು ಅಜ್ಞಾತ ಕಾರರ ಜೀವನ ಚರಿತ್ರೆ ಮತ್ತು ವಚನಗಳನ್ನು ಅನುಲಕ್ಷಿಸಿ  ಅಲಕ್ಷಿತ ವಚನಕಾರರ ಸಾಮಾಜಿಕ ಚಿಂತನೆ ಮತ್ತು ವಚನಗಳಲ್ಲಿಯ  ಕಾವ್ಯಾತ್ಮಕ  ಸಂಗತಿಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ.  ಅಜ್ಞಾತ ವಚನಕಾರರು ಯಾರೂ  ತಮ್ಮ ವಚನಗಳಲ್ಲಿ ನೇರವಾಗಿ ತಮ್ಮ ಸ್ವಕೀಯ ವಿವರಗಳನ್ನು ಹೇಳಿಕೊಂಡಿಲ್ಲ. ಆನುಷಂಗಿಕವಾಗಿ ಅಲ್ಲಲ್ಲಿ ದೊರೆಯುವ ವಿವರಗಳನ್ನೇ ಆಶ್ರಯಿಸ ಬೇಕಾಗಿದೆ. ಇಲ್ಲಿಯ ಕೆಲವು ಅಜ್ಞಾತ ವಚನ ಕಾರರ  ಇತಿವೃತ್ತದ ಬಗೆಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಕ್ವಚಿತ್ತಾಗಿ ವಿವರಗಳು, ಸಂಪಾದನೆಯ ಪರ್ವತೇಶನ ಚತುರಾಚಾರ್ಯ ಚಾರಿತ್ರ, ಕಿಕ್ಕೇರಿ ನಂಜುಂಡಾರಾಧ್ಯನ ಭೈರವೇಶ್ವರ ಕಾವ್ಯ ಹಾಗೂ ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಮುಂತಾದ ವೀರಶೈವ ಕಾವ್ಯ-ಪುರಾಣ, ಸಂಕಲನ ಕೃತಿಗಳಲ್ಲಿ ದೊರೆಯುತ್ತವೆ.
   ಬಸವಪೂರ್ವ ಯುಗದಲ್ಲಿಯೂ ವರ್ಣಜಾತಿ ಕುಲಗಳನಿರಾಕರಿಸಿ  ಯಾವುದೇ  ಕುಲಜಾತಿಯವನಾಗಿರಲಿ  ಶಿವಲಿಂಗವ  ಧರಿಸಿದ  ವ್ಯಕ್ತಿಯನ್ನು  ಜಂಗಮನೆಂದುಸತ್ಕರಿಸಿದ,  ರಾಜರನ್ನೇ  ಶಿವನಿಷ್ಠೆಯ  ಮೂಲಕ  ತಮ್ಮಲ್ಲಿಗೆ  ಬರಮಾಡಿಕೊಂಡಂತಹ  ಚಟುವಟಿಕೆಗಳನ್ನು ನಡೆಸಿದ  ವ್ಯಕ್ತಿಗಳು  ಕಂಡು  ಬರುತ್ತಾರೆ.    ಶರಣರ  ಚಟುವಟಿಕೆಗಳು      ಯುಗಧರ್ಮ ಸಮಾಜೋಧಾರ್ಮಿಕ ಆಂದೋಲನದ ಪ್ರತೀಕಗಳಾಗಿರುವುದರ ಜೊತೆಗೆ ಭಕ್ತಿಪಾರಮ್ಯದ ಚಟುವಟಿಕೆಗಳು ಆಗಿವೆ. ಇಂತಹ ಶರಣರಲ್ಲಿ ಕೆಂಬಾವಿ ಭೋಗಣ್ಣನು ಒಬ್ಬ. ಕೆಂಭಾವಿ ಭೋಗಣ್ಣನು ಬಸವ ಪೂರ್ವ ಯುಗದ ವೀರಮಾಹೇಶ್ವರ ನಿಷ್ಠೆ ಮತ್ತು ಜಂಗಮನಿಷ್ಠೆಯುಳ್ಳ ಶರಣ. ಜಾತೀಯತೆಯನ್ನು ವಿರೋಧಿಸಿದ ರಾಜತ್ವವನ್ನು ಪ್ರತಿಭಟಿಸಿದ ಅಪ್ರತಿಮ ಶಿವಭಕ್ತ. ಈತನ ಭಕ್ತಿ ಮತ್ತು ಜಂಗಮ ನಿಷ್ಠೆಯನ್ನು ಕುರಿತು ಬಸವಾದಿ ಪ್ರಮಥರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಅಪ್ರತಿಮ ನಿಷ್ಠೆ ಮತ್ತು ಭಕ್ತಿಯಿಂದ ಶಿವನನ್ನೇ ಕರೆಯಿಸಿಕೊಂಡ ಶರಣ.  ಈ ಶಿವಶರಣನನ್ನು ಕುರಿತು ಕಾವ್ಯ ರಚಿಸಿದ ಕವಿಗಳಲ್ಲಿ ಹರಿಹರ ಹಾಗೂ ಪಾಲ್ಕುರಿಕೆಯ ಸೋಮನಾಥರೇ ಮೊದಲಿಗರಾಗಿದ್ದಾರೆ. ಬಸವ ಪೂರ್ವದ ಶಿವಶರಣರು ಏಕ ಕಾಲಕ್ಕೆ ರಾಜತ್ವ ಮತ್ತು ವೈದಿಕತ್ವಗಳೆರಡನ್ನು  ಪ್ರತಿಭಟಿಸಿದ್ದು  ಅಲ್ಲದೆ  ವರ್ಣ,  ಜಾತಿ,  ವರ್ಗಗಳ  ನಿರಾಕರಣೆ  ಇವರ  ಮುಖ್ಯಗುರಿಯಾಗಿತ್ತು.  ಯಾವ ಕುಲ ಜಾತಿಯವನೆ ಇರಲಿ ಶಿವಲಿಂಗವ ಧರಿಸಿದಾತ ಜಂಗಮನೆಂದು ಪರಿಗಣಿಸಿ ಅಸ್ಪೃಶ್ಯರನ್ನು ಶಿವಭಕ್ತರನ್ನಾಗಿಸಿದ್ದರು.  ಅಂತೆಯೇ ಮತ ಸಂಘರ್ಷ, ವರ್ಣ ಸಂಘರ್ಷ ಮತ್ತು ಧರ್ಮಸಂಘರ್ಷಗಳ ಮೂಲಕ ವೀರಮಾಹೇಶ್ವರ ನಿಷ್ಠೆ ಹಾಗೂ ಶಿವ ಸಂಸ್ಕೃತಿಯ ಪಾರಮ್ಯವನ್ನು ಸ್ಥಾಪಿಸಿದ್ದಾರೆ. ಹೀಗಾಗಿ    ಶರಣರು  ಜನಪರ  ಹಾಗೂ  ಜೀವನ  ಪರ  ಧೋರಣೆ  ಹೊಂದಿದ ವರಾಗಿದ್ದು, ಪರಂಪರಾನುಗತವಾದ ಆಚರಣೆಗಳ ನಿರಾಕರಣೆ ಮಾಡಿದ್ದನ್ನು ಒಳಗೊಂಡಿದ್ದು ಆ ವಿವರಗಳು ಅವರ ವೈಯಕ್ತಿಕ ಚರಿತ್ರೆಯನ್ನು ಬಿಂಬಿಸುವ ಅನೇಕ ಶಾಸನ-ಕಾವ್ಯಪುರಾಣಗಳ ಮೂಲಕ ತಿಳಿಯಬಹುದಾಗಿದೆ. ಮೇಲೆ ಸೂಚಿಸಿರುವ ಅಜ್ಞಾತ ವಚನಕಾರರುಗಳ ವೈಯಕ್ತಿಕ ಚರಿತ್ರೆ ಮತ್ತು ಲಭ್ಯವಿರುವ ವಚನಗಳ ಮೂಲಕ ಅವರ ಸಾಮಾಜಿಕ ಚಿಂತನೆಯ ಎಳೆಯನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ.
  ಕೆಂಬಾವಿ ಭೋಗಣ್ಣನನ್ನು ಕುರಿತ ಕಾವ್ಯ ಪುರಾಣಗಳಲ್ಲಿಯ ವಿವರಗಳಿಂದ ತಿಳಿದು ಬರುವ ಸಂಗತಿಗಳನ್ನು ಈ ಕೆಳಕಂಡಂತೆ ನಿರೂಪಿಸ ಬಹುದು. ಕೆಂಭಾವಿ ಪುರದಲ್ಲಿ ಭೋಗಣ್ಣನೆಂಬ ಜಂಗಮ ಭಕ್ತನು ಶಿವಭಕ್ತರಲ್ಲಿ ಜಾತಿ ಭೇದವ ಕಲ್ಪಿಸದೆ ಇರುತ್ತಿರಲು, ಇವನ ಮಹಿಮೆಯನ್ನು ಲೋಕಕ್ಕೆ ತಿಳಿಸ ಬೇಕೆಂದು ಪರಶಿವನು ಒಂದು ದಿವಸ ಹೊಲೆಯ ವೇಷದಲ್ಲಿ ಕರುವಿನ ಶವವನ್ನು ಹೊತ್ತು ಹೆಗಲಲ್ಲಿ ಮಿಣಿ,  ಕೈಯಲ್ಲಿಸಂಬಳಿಗೋಲು, ಜಂಗಮನಂತೆ ಹಣೆಯಲ್ಲಿ ಸೊಗಯಿಪ ವಿಭೂತಿ, ಕೊರಳಲ್ಲಿ ರುದ್ರಾಕ್ಷಿಯ ಕೃಪಾಕರಂ, ಪಿರಿಯವೇಷಗೊಂಡು ಮನೆಯ ಮುಂದೆ  ಸುಳಿಯುತ್ತಾನೆ.   ಭೋಗಣ್ಣನು   ಜಂಗಮ ಸ್ವರೂಪಿಯಾದ ಇವನನ್ನು ನೋಡಿ ಕೊರಳಲ್ಲಿದ್ದ ಲಿಂಗವ ಕಂಡು ಈ ಶರಣನನ್ನು ಮನೆಯ ಒಳಗೆ ಕರದುಕೊಂಡು ಹೋಗಿಭಯಭಕ್ತಿಯಿಂದ ಉನ್ನತಾಸನದಲ್ಲಿ ಕುಳ್ಳಿರಿಸಿ ಪನ್ನಾಗಾಭರಣನ ಪದದ್ವಯಮುಮಾ ತೊಳೆದು ಪಾದೋದಕ ಪ್ರಸಾದಮಂ ಸಲ್ಲಿಸುತ್ತಾನೆ.   ಈ ವಿಷಯ ತಿಳಿದ   ಅಕ್ಕಪಕ್ಕದ ಬ್ರಾಹ್ಮಣರು, ವೈದಿಕಾಚಾರವೆಲ್ಲವು ಕೆಟ್ಟುಹೋಯಿತೆಂದು ಕುಪಿತರಾಗಿ ಕೆಂಬಾವಿಯ ಅರಸನಾದ ಚಂದಿಮರಸನಲ್ಲಿಗೆ ದೂರು ಹೋಗುತ್ತಾರೆ. ಎಲೆ ಅರಸ ನಿಮ್ಮೂರ ಭೋಗಣ್ಣ ಮುಂಡೆಯ ಮಗ, ಚಂಡಾಲನಿಲ್ಲಿ ಮಿಣಿಯ ಮಾರುತ್ತಿರೆ ಕರಕೊಂಡು ಹೋದನು ತನ್ನ ಮನೆಗೆ. ಕಾಲ ತೊಳೆದು ನೀರ ಕುಡಿದನು, ವಿಪ್ರಜಾತಿಯನೆಲ್ಲವನು ನೀರಿಲಿ ನೆರಹಿದನು,ಹೊಲಗೇರಿಯಾದವು  ನಮ್ಮ  ಮನೆಗಳೆಲ್ಲ  ತೊಲಗುವೇವೀ  ಗ್ರಾಮದಿಂದ  ಎನ್ನುತ್ತಾರೆ.    ರೀತಿಯಲ್ಲಿ ಆರ್ಭಟಿಸಿದ ವಿಪ್ರರ ಮಾತು ಕೇಳಿ ಚಂದಿಮರಸನು ಕುಪಿತನಾಗಿ ಭೋಗಣ್ಣನನ್ನು ಕರೆಯಿಸಿ ಅವನನ್ನುಕುರಿತು ` ಏನಯ್ಯಾ ಪುರದೊಳಗೆ ಕೃತ್ಯಮಂ ಮಾಳ್ಪರೆ? ಏನಾದೊಡಂ ಪೊಲೆಯರ ಪುಗಿಸಿ ಬಾಳವರೇ?ಮನೆಯೊಳಗನಾಮಿಕರ  ಪುಗಿಸುವರೆ  ಭೋಗಯ್ಯಾ?  ಮನೆವಾರೆ  ನಿಮ್ಮದಾಚಾರವೇ  ಭೋಗಯ್ಯಾ? ಎಂಬುದಾಗಿ ಪ್ರಶ್ನಿಸಿದನು.ನಿನಗೆ ತಿಳಿವಿಲ್ಲ, ತಿಳಿವಿಲ್ಲ ದೊರೆ ಕೇಳರಸ
ನಾರಾಯಣ ಕ್ರಮಿಕರಂ ಪುಗಿಸಿದೆನೆ ಮನೆಗೆ
ಸೂರಿ ಭಟ್ಟರ ನೈದೆ ಪುಗಿಸಿದೆನೆ ಮನೆಯೊಳಗೆ ಕೃಷ್ಣ ಪೆದ್ದಿಗಳನೊಮ್ಮೆಯು ಕರೆದು ಬಲ್ಲೆನೇ
ಪೊಲೆಯನಂ ಪುಗಿಸಲಿಲ್ಲ
ಮನೆಯೊಳಗರಸ ನಿನಗೆ ತಿಳಿವಿಲ್ಲ ತಿಳಿವಿಲ್ಲದೊಡೆ ಕೇಳರಸ
ಶಿವನನರಿಯದ ಹೊಲೆಯರಂ ಹೊಗಿದೆ ನಾನರಸ
ಶಿವಭಕ್ತನಂ ಪುಗಿಸಿದೇಂ ತಪ್ಪೆ ಹೇಳರಸ ಎಂದು ಉತ್ತರಿಸಿ ಈ ಆಚರಣೆಯಲ್ಲಿ ನನ್ನ ತಪ್ಪೇನಿದೆ ಎಂದು ರಾಜನಿಗೆ ಮರು ಪ್ರಶ್ನೆ ಹಾಕುತ್ತಾನೆ. ಶಿವನನರಿಯದ ವಿಪ್ರನೇ ಹೊಲೆಯನು ಎಂಬ ಭೋಗಣ್ಣನ ವಾದವನ್ನು ಕೇಳಿ ವಿಪ್ರರು ಕುಪಿತರಾಗಿ, ಚಂದಿಮರಸರಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟರು. ಚಂದಿಮರಸನು ವಿಪ್ರರ ಪಕ್ಷವನ್ನು ವಹಿಸಿ ಕೆಂಬಾವಿಯ ಭೋಗಣ್ಣನ ಮೇಲೆ ಕುಪಿತರಾಗಿ ಇನ್ನು ಮೇಲೇ
ನೀನು ನಮ್ಮ ಊರಲ್ಲಿ ಇರಬೇಡ, ಹೊರಟುಹೋಗು ಎಂದು ಭೋಗಣ್ಣನಿಗೆ ಅಪ್ಪಣೆ ಮಾಡಿದನು. ಈಸಂದರ್ಭದಲ್ಲಿ ಭೋಗಣ್ಣ ರಾಜ-ರಾಜತ್ವ, ಬ್ರಾಹ್ಮಣ-ಬ್ರಾಹ್ಮಣತ್ವವವನ್ನು ಪ್ರತಿಭಟಿಸಿದ್ದು ಆತನನ್ನು ಕುರಿತ ಕಾವ್ಯಗಳಿಂದ ತಿಳಿದು ಬರುತ್ತದೆ. ಈ ಘಟನೆಯಿಂದ ತಿಳಿದು ಬರುವುದೇನೆಂದರೆ, ಅನ್ಯಮತಿಯರೊಂದಿಗೆ ತಾನು ನಡೆಸಿದ ವಾದ-ವಿವಾದಗಳು ಅಷ್ಟಿಷ್ಟಲ್ಲ.   ತನ್ನ ಪ್ರಾಣದಾಸೆಯಿಲ್ಲದೆ ಪ್ರತಿಭಟಿಸಿದ ಪ್ರಸಂಗ ಈ ಶರಣನ ಚರಿತ್ರೆಯಿಂದ ತಿಳಿದು ಬರುತ್ತದೆ.  ಈ ಮೇಲಿನ ವಿವರದಲ್ಲಿ ಬ್ರಾಹ್ಮಣ್ಯದ ಅಪಮೌಲ್ಯ ಹಾಗೂ ಕೆಳವರ್ಗದ ಮೌಲೀಕರಣ ಕಾರ್ಯ ನಡೆದಿರುವುದು ಗುರುತಿಸಬಹುದಾಗಿದೆ. ಯಾವ ಜಾತಿಯವನೇ ಆಗಿರಲಿ ಶಿವಭಕ್ತರನ್ನಾಗಿಸಿ ಸತ್ಕರಿಸಿದ ಪ್ರಸಂಗ ಈ ಶರಣನ ಚರಿತ್ರೆಯಿಂದ ಕಂಡು ಬರುತ್ತದೆ. ಶಿವಭಕ್ತರು ಜಡ ವ್ಯವಸ್ಥೆಯಿಂದ ಮುಕ್ತರಾಗಲು ಪ್ರಯತ್ನಿಸಿ, ಸಮಾನತೆಯ ಚೌಕಟ್ಟಿನಲ್ಲಿ ಒಂದಾಗಲು ಪ್ರಯತ್ನಿಸಿದಾಗ ಸಂಪ್ರದಾಯ ವರ್ಗದವರ ವಿರೋಧಕ್ಕೆ ಪ್ರತಿರೋಧ ವ್ಯಕ್ತವಾಗಿರುವುದು ಕಂಡು ಬರುತ್ತದೆ.  ಇಲ್ಲಿ ಒಂದುರೀತಿಯ ಮಾನಸಿಕ ಮತ್ತು ಸಾಮಾಜಿಕ ಸಂಘರ್ಷ ಈ ಎರಡು ವರ್ಗಗಳ ನಡುವೆ ನಡೆದಿರುವುದು ಕಂಡುಬರುತ್ತದೆ.  ಹೀಗಾಗಿ ಅನ್ಯ ಮತಿಯರು ಉನ್ನತ ಮೌಲ್ಯಗಳೆಂದು ಪ್ರಚಾರ ಮಾಡುತ್ತ, ಕೆಳ ವರ್ಗದವರ ಶೋಷಣೆ ಮಾಡುತ್ತಿರುವವರ ಮೌಲ್ಯ, ನಂಬಿಕೆ ಹಾಗೂ ಆದರ್ಶಗಳಿಗೆ ಈ ಶರಣ ಕೊಡಲಿ ಪೆಟ್ಟುಹಾಕಿರುವುದು ಈತನ ಚರಿತ್ರೆಯಿಂದ ತಿಳಿದು ಬರುತ್ತದೆ.  ಈ ರೀತಿಯಲ್ಲಿ ಭೋಗಣ್ಣ ಅನ್ಯ ಮತಿಯರೊಡನೆ ವಾದ-ವಿವಾದ ನಡೆಸಿ ರಾಜ ಮತ್ತು ಬ್ರಾಹ್ಮಣ ವರ್ಗದೊಂದಿಗೆ ಪ್ರತಿಭಟಿಸಿ, ಅಸ್ಪೃಶ್ಯರನ್ನು ಶಿವಭಕ್ತರನ್ನಾಗಿ ಪರಿವರ್ತಿಸಿದ್ದಾನೆ. ಅವರಿಗೆ ಸಾಮಾಜಿಕ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾನೆಂದು ಹೇಳಬಹುದು.
ಕೆಂಬಾವಿ ಭೋಗಣ್ಣನು ವಚನಕಾರನೇ?ಕೆಂಬಾವಿ  ಭೋಗಣ್ಣನು  ವಚನಗಳನ್ನು  ರಚಿಸಿದ್ದಾನೆಯೇ?    ಪ್ರಶ್ನೆ  ಇಂದು  ಬಿಡಿಸಲಾಗದ ಕಗ್ಗಂಟಾಗಿದೆ. ಕವಿಚರಿತೆಕಾರರು ಮತ್ತು ಹಳಕಟ್ಟಿಯವರು ಭೋಗಯ್ಯನೆಂಬ ವಚನಕಾರರನ್ನು ಹೆಸರಿಸಿ ಅವನವಚನಗಳ ಅಂಕಿತ ನಿಜಗುರುಭೋಗಸಂಗ ಎಂದಿರುವರು. ಎಲ್.ಬಸವರಾಜು, ಹಳಕಟ್ಟಿ ಮತ್ತು ಕವಿಚರಿತೆಕಾರರು  ಹೇಳುವ  `ನಿಜಗುಭೋಗಸಂಗ’  ಎಂಬ  ಅಂಕಿತದಲ್ಲಿ  ವಚನಗಳನ್ನು  ರಚಿಸಿರುವ ಭೋಗಣ್ಣನು ಹರಿಹರನ ರಗಳೆಯಲ್ಲಿ ಬರುವ ಕೆಂಬಾವಿ ಭೋಗಣ್ಣನೇ ಇರಬೇಕೆಂದು ಸಂದೇಹಿಸಿರುವರು. ಹರಿಹರನ ಭೋಗಣ್ಣನನ್ನು ಕುರಿತ ರಗಳೆಯಲ್ಲಿ ಕೆಂಬಾವಿಯಲ್ಲಿ ಭೋಗನಾಥ ಎಂಬ ದೇವರು ಇರುವುದರ ಬಗೆಗೆ ಉಲ್ಲೇಖ ಇದೆ. ಭೋಗಣ್ಣನೆಂಬ ವಚನಕಾರನು ನಿಜಗುರುಭೋಗೇಶ್ವರ ಎಂಬ ಅಂಕಿತದಲ್ಲಿ 22 ವಚನಗಳನ್ನು ರಚಿಸಿದ್ದಾನೆ. ಈ ವಚನಗಳಲ್ಲಿಯ ಆಂತರಿಕ ಮಾಹಿತಿಗಳ ಪ್ರಕಾರ ಈ ಭೋಗಣ್ಣನು ಬಸವಯುಗದ      ಕೊನೆಯವನಾಗಿ      ಕಂಡುಬರುತ್ತಾನೆ.      ಕೆಂಬಾವಿ      ಭೋಗಣ್ಣನು ಬಸವಪೂರ್ವಯುಗದವನಾಗಿದ್ದು  ಜೇಡರದಾಸಿಮಯ್ಯನ  ಸಮಕಾಲೀನ  ಮತ್ತು  ಬಸವಾದಿ  ಪ್ರಮಥರ ವಚನಗಳಲ್ಲಿ ಸ್ತುತಿಸಲ್ಪಟ್ಟವನಾಗಿದ್ದಾನೆ. ಕೆಂಬಾವಿ ಭೋಗಣ್ಣ ವಚನಗಳನ್ನು ಬರೆದಿರುವುದಿಲ್ಲ ಎಂಬುದಕ್ಕೆ ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ಸುಳುಹು ಸಿಗುತ್ತದೆ. ಈ ಕಾವ್ಯದಲ್ಲಿ ಎಲ್ಲಾ ಶರಣರ ಚರಿತ್ರೆಯನ್ನು ನಿರೂಪಿಸಿ ಕೊನೆಯಲ್ಲಿ ಅವರ ಇಷ್ಟದೈವವನ್ನು (ವಚನಗಳ ಅಂಕಿತ) ಕೊಡಲ್ಪಟ್ಟಿದೆ. ಆದರೆ ಕೆಂಬಾವಿ ಭೋಗಣ್ಣನನ್ನು ಕುರಿತು ಜೀವನ ಚರಿತ್ರೆ ಇದ್ದರೂ ಇಷ್ಟದೈವ(ವಚನಗಳ ಅಂಕಿತ)ದ ಉಲ್ಲೇಖ ಕಂಡು ಬರುವುದಿಲ್ಲ. ಕೃತಿಯಲ್ಲಿ ಭೋಗಣ್ಣನನ್ನು ಕುರಿತ ಕೊನೆಯ ಭಾಗದಲ್ಲಿ `ಪುರವ ಮುನ್ನಿನಂತೆ ರಚಿಸಿವಿಪ್ರರಿಗೆ ಅಭಯವಂಕೊಟ್ಟು ಶಿವಭಕ್ತಿಯ ಮಾಡಿ ಭೋಗಣ್ಣನು ಲಿಂಗದೊಳಡಗಿದನು ‘ ಎಂಬ ವಿವರ ಇದೆಯೇ  ಹೊರತು    ಶಿವಭಕ್ತಿಯಾಚಾರವನಾಚರಿಸಿ  ಗುರುಕೃಪೆಯಿಂದ  ನಿಜವನರಿದು  ನಿಜಗುರುಭೋಗಸಂಗನೆಂಬ ತಮ್ಮಿಷ್ಟಲಿಂಗದಲ್ಲಿ ಚರಿಸಾಡುತ್ತಿರ್ದು’ ಎಂಬವಿವರ ಇಲ್ಲ. ಹೀಗಾಗಿ ಸದ್ಯಕ್ಕೆ ಕೆಂಬಾವಿಭೋಗಣ್ಣನು  `ನಿಜಗುರುಭೋಗಸಂಗ’  ಅಂಕಿತದಲ್ಲಿ  ವಚನಗಳನ್ನು  ರಚಿಸಿರುವ  ಭೋಗಣ್ಣನಿಗಿಂತ ಬೇರೆಯವನು ಎಂದು ಹೇಳಬಹುದಾಗಿದೆ. ಈತನು ವಚನಗಳನ್ನು ರಚಿಸಿದ್ದಾನೆಯೇ ಎಂಬುದಕ್ಕೆ ಖಚಿತ ಆಧಾರಗಳು ದೊರೆಯುವವರೆಗೂ ಏನನ್ನೂ ಹೇಳುವಂತಿಲ್ಲ. ಈ ಶರಣನ ಚಟುವಟಿಕೆಗಳು ಆ ಯುಗಧರ್ಮದ ಸಮಾಜೋಧಾರ್ಮಿಕ ಆಂದೋಲನದ ಪ್ರತೀಕಗಳಾಗಿರುವುದರ ಜೊತೆಗೆ ಭಕ್ತಿ ಪಾರಮ್ಯದ ಚಟುವಟಿಕೆಗಳು ಆಗಿವೆ. ಕೆಂಬಾವಿಭೊಗಣ್ಣನು  ಹೊಲೆಯ ವೇಷದ ಶಿವನನ್ನು ತನ್ನ ಮನೆಗೆ ಆದರಿಸಿದ ಪರಿಣಾಮ ಬ್ರಾಹ್ಮಣ ಜನ ಮತ್ತು ರಾಜರ ಕೋಪಕ್ಕೆ ತುತ್ತಾದ ವಿವರ ಕಂಡುಬರುತ್ತದೆ. ಭೋಗಣ್ಣನ ಈ ಚರಿತ್ರೆಯಲ್ಲಿ ರಾಜ-ಪ್ರಜೆ, ಮೇಲ್ಜಾತಿ-ಕೆಳಜಾತಿ, ಬ್ರಾಹ್ಮಣ-ಹೊಲೆಯ,  ಸ್ಪೃಶ್ಯ-ಅಸ್ಪೃಶ್ಯ,  ಮಡಿ-ಮೈಲಿಗೆಗಳನ್ನು    ಭಕ್ತಿಯ  ನೆಪದಲ್ಲಿಪ್ರತಿಭಟಿಸಿದ ಆಶಯವನ್ನು ಕಾಣಬಹುದಾಗಿದೆ. ವೀರಶೈವ ಚಳುವಳಿಗೆ ಪ್ರಚೋದನೆ ನೀಡಿದ ಕೆಂಬಾವಿಭೋಗಣ್ಣನ ಕಾಲದಲ್ಲಿ ನಡೆದ ಚಟುವಟಿಕೆಗಳಲ್ಲಿ ಕಂಡುಬರುವ ಪ್ರಮುಖ ಅಂಶ ಎಂದರೆ ಅಸ್ಪೃಶ್ಯರ ಪರವಾಗಿ ಹೋರಾಡಿದ್ದು, ರಾಜತ್ವ ಮತ್ತು ಸ್ಪೃಶ್ಯರನ್ನು ಪ್ರತಿಭಟಿಸಿದ್ದು, ಜಾತಿಗಳಲ್ಲಿ ಶ್ರೇಷ್ಠ ಎನಿಸಿದ್ದ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಅಪಮೌಲ್ಯೀಕರಿಸಿದ್ದು, ಜಾತಿಶ್ರೇಣಿಯಲ್ಲಿ ಅತ್ಯಂತ ಕೆಳಸ್ಥಿತಿಯಲ್ಲಿದ್ದ ಅಸ್ಪೃಶ್ಯನು ಸ್ಪೃಶ್ಯನಿಗಿಂತ ಕೀಳಿಲ್ಲ ಎಂಬುದನ್ನು ಸಾರಿದುದರ ಆಶಯವನ್ನು ಗುರುತಿಸಬಹುದಾಗಿದೆ. ಕೆಂಭಾವಿ ಭೋಗಣ್ಣನ ಚರಿತ್ರೆಯಲ್ಲಿ ಕಂಡು ಬರುವ ಘಟನೆ ಆ ಕಾಲದ ಪರಿಸ್ಥಿತಿಗೆ ರನ್ನದ ಕನ್ನಡಿಯಾಗಿದೆ. ಭೋಗಣ್ಣನ ಚರಿತ್ರೆಯು ಸೂಚ್ಯವಾಗಿ ಜಾತಿ ಸಮಸ್ಯೆಯನ್ನು ಪ್ರಸ್ತಾಪಿಸಿದೆ. ಭೋಗಣ್ಣನ ಕಥೆಯಲ್ಲಿ ಜಂಗಮನಿಷ್ಠೆಯೇ ಪ್ರಮುಖ ಎಂದೆನಿಸಿದರೂ “ಹೊಲೆಯ ವೇಷದಿಂದ” ಬಂದ ಶಿವನನ್ನು ಈತನು ಮನೆಗೆ ಕರೆದೊಯ್ದು ಉಪಚರಿಸಿದ ಪ್ರಸಂಗದಿಂದ ಉದ್ಭವಿಸಿದ ವಿಪ್ರಕುಲದ ಪ್ರತಿಭಟನೆ ಮತ್ತು ಘರ್ಷಣೆಗಳು ಅದಕ್ಕೆ ವಿರುದ್ಧವಾಗಿ ವ್ಯಕ್ತವಾಗುವ ಭೋಗಣ್ಣನನಿಲುವುಗಳು ಆ ಯುಗ ಧರ್ಮದ ವರ್ಣ ಸಂಘರ್ಷದ ದಾಖಲೆಗಳಾಗಿವೆ. ಬಸವಾದಿ ವಚನಕಾರರು ಎತ್ತಿಹಿಡಿದ ಕುಲದ ಸಂಗತಿಯು ಭೋಗಣ್ಣನ ಚರಿತ್ರೆಯಲ್ಲಿ ಪ್ರಮುಖ ವಿಷಯವಾಗಿರುವುದು ಮಹತ್ತರವಾದಸಂಗತಿಯಾಗಿದೆ. ಶ್ವಪಚರ ಅಥವಾ ಅಸ್ಪೃಶ್ಯರೆಂಬ ವರ್ಗವೊಂದರ ಬಗೆಗೆ ಶರಣಧರ್ಮ ತಾಳಿದ ನಿಲುವಿಗೂ ಪರಂಪರಾಗತವಾಗಿ ಅಸ್ಪೃಶ್ಯರನ್ನು ಕೀಳೆಂದು ಕಂಡ ಉಚ್ಛವರ್ಣದವರ ನಿಲುವಿಗೂ ಒದಗಿದ ಘರ್ಷಣೆಯೇ ಕೆಂಭಾವಿ ಭೋಗಣ್ಣನ ಕಥೆಯ ಮೂಲ ಸೂತ್ರವಾಗಿದೆ. ಕೆಂಭಾವಿ ಭೋಗಣ್ಣನ ಚರಿತ್ರೆಯಲ್ಲಿ ಕಂಡುಬರುವ ಪ್ರಮುಖ ಅಂಶವಾದ ಘರ್ಷಣೆಯು ಆ ಯುಗ ಧರ್ಮದಲ್ಲಿಯ ಸಾಮಾಜಿಕ ನೆಲೆಯಲ್ಲಿ ಸಂಭವಿಸಿದ ಘರ್ಷಣೆಯಾಗಿದ್ದು ಅದು ವರ್ಣ ಸಂಘರ್ಷದ ದಾಖಲೆಯಾಗಿರುವುದರ ಜೊತೆಗೆ ಶಿವಭಕ್ತಿಯ ಮೌಲ್ಯವನ್ನು ಎತ್ತಿಹಿಡಿದಿದೆ. ಅಲ್ಲದೆ ಭೋಗಣ್ಣನ ಕಥೆಯಲ್ಲಿ ಒಂದು ಕಡೆ ರಾಜ ಮತ್ತು ಅವನ ಸುತ್ತಮುತ್ತಲಿನ ಬ್ರಾಹ್ಮಣವರ್ಗ, ಇನ್ನೊಂದು ಕಡೆ ಶಿವಭಕ್ತಿ ಹಾಗೂ ಅವನ ಸುತ್ತಮುತ್ತಲಿನ ಅಸ್ಪೃಶ್ಯ ವರ್ಗಗಳನ್ನು ಕಾಣಬಹುದಾಗಿದೆ. ಈ  ಎರಡು  ಪಕ್ಷಗಳ  ನಡುವೆ  ನಡೆಯುವ  ಹೋರಾಟವು  ಹನ್ನೆರಡನೇ  ಶತಮಾನದ  ಕರ್ನಾಟಕದ ಜನಜೀವನದ ವೈಲಕ್ಷಣ, ಜಡ ಸಂಪ್ರದಾಯ ಮತ್ತು ಮನುಷ್ಯತ್ವಗಳಿಗೆ ಸಂಕೇತವಾಗಿದೆ. ಶಿವನಿಷ್ಠೆಯುಳ್ಳ  ಶಿವಭಕ್ತನಾದ    ಶರಣನು  ತನ್ನ  ಜೀವನದುದ್ದಕ್ಕೂ  ರಾಜ  ಮತ್ತು  ಆತನ ಸುತ್ತಮುತ್ತಲಿರುವ   ಬ್ರಾಹ್ಮಣವರ್ಗಕ್ಕೂ   ಪ್ರಶ್ನಿಸುತ್ತ   ಅಸ್ಪೃಶ್ಯ   ವರ್ಗ   ಹಾಗೂ   ಲಿಂಗವಂತರನ್ನು
ಶಿವಭಕ್ತರನ್ನಾಗಿಸುತ್ತ   ಶ್ರಮಿಸಿದ್ದಾನೆ.   ಈ ಶರಣನ ದೃಷ್ಠಿಯಲ್ಲಿ ಯಾವ ಜಾತಿಗಳಿಲ್ಲ.   ಶಿವಲಿಂಗ ಧರಿಸದವರು ಶೂದ್ರರು. ಶಿವಲಿಂಗವ ಧರಿಸಿದವರು ಶಿವಭಕ್ತರು ಎನ್ನುವ ತಾತ್ವಿಕತೆ ಈತನದಾಗಿದೆ. ಹೀಗಾಗಿ ಈ ಶರಣ ರಾಜ-ಪ್ರಜೆ, ಮೇಲ್ಜಾತಿ-ಕೀಳಜಾತಿ, ಬ್ರಾಹ್ಮಣ-ಹೊಲೆಯ, ಸ್ಪೃಶ್ಯ-ಅಸ್ಪೃಶ್ಯ, ಮಡಿ-ಮೈಲಿಗೆ ಈ ದ್ವಂದ್ವಗಳಿಗೆ ಕೊಡಲು ಪೆಟ್ಟು ಹಾಕಿ ಸರ್ವರು ಸಮಾನರು ಎಂಬ ಏಕತಾ ಮನೋಭಾವನೆ  ಸರ್ವರಲ್ಲೂ ಬರಲು ಪವಾಡಗಳನ್ನು ಮೆರೆದಿದ್ದಾನೆ. ಹೀಗಾಗಿ ಈ ಶರಣ ಶಿವಭಕ್ತನಾಗಿದ್ದಂತೆ ಸಮಾಜಚಿಂತಕನೂ ಆಗಿದ್ದಾನೆಂದು ಹೇಳಲು ಆತನ ಪವಾಡಗಳೇ ಸಾಕ್ಷಿಯಾಗಿವೆ.
 ಚಂದಿಮರಸನು ಬಸವಪೂರ್ವಯುಗದಿಂದಲೂ ಜೀವಿಸಿದ್ದು ವಯಸ್ಸಿನಲ್ಲಿ ಹಿರಿಯವನಾಗಿ ಬಸವಣ್ಣನ ಹಿರಿಯ ಸಮಕಾಲೀನನಾಗಿ ಕಂಡುಬರುತ್ತಾನೆ. ಮೊದಲು ಬ್ರಾಹ್ಮಣ ಧರ್ಮದ ಪರವಾಗಿದ್ದು ಅನಂತರ ವೀರಶೈವಧರ್ಮವನ್ನು ಸ್ವೀಕರಿಸಿದವರಲ್ಲಿ ಈತನೂ ಒಬ್ಬ. ವಚನಗಳ ಅಂಕಿತ ‘ಸಿಮ್ಮಲಿಗೆಯ ಚೆನ್ನರಾಮ’ ಇರುವುದರಿಂದ ಈತನ ಹೆಸರನ್ನು ಸಿಮ್ಮಲಿಗೆಯ ಚೆನ್ನಯ್ಯನೆಂದು ಕವಿಚರಿತೆಕಾರರು ಊಹಿಸಿದ್ದಾರೆ. ಆದರೆ ಈತನ ಹೆಸರನ್ನು ಸಿಮ್ಮಲಿಗೆಯ ಚೆನ್ನಯ್ಯನೆಂದು ಕವಿಚರಿತೆಕಾರರು ಹೇಳಿರುವ ಚಂದಿಮರಸ ಮತ್ತು ಚೆನ್ನಯ್ಯರೀರ್ವರೂ ಅಭಿನ್ನರಾಗಿದ್ದಾರೆ.
        ಕಾಲದ ಹಿನ್ನೆಲೆಯಲ್ಲಿ ಗೊಂದಲವುಂಟಾಗಿ ಚಂದಿಮರಸ ಹೆಸರಿನ ವ್ಯಕ್ತಿಗಳು ಇಬ್ಬರು ಎನ್ನುವ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿರುವುದುಂಟು. ಬಸವಪೂರ್ವ ಯುಗದಲ್ಲಿದ್ದ ಕೆಂಬಾವಿ ಭೋಗಣ್ಣನ ಸಮಕಾಲೀನ ಚಂದಿಮರಸ ಒಬ್ಬ. ಬಸವಯುಗದಲ್ಲಿದ್ದು ವಚನಗಳನ್ನು ರಚಿಸಿರುವ ಚಂದಿಮರಸ ಒಬ್ಬ ಎನ್ನುವ ಅನಿಸಿಕೆಯನ್ನು ಹುಟ್ಟುಹಾಕಿದ್ದಾರೆ. ಆದರೆ ಉಪಲಬ್ಧವಿರುವ ಆಕರಗಳ ಹಿನ್ನೆಲೆಯಲ್ಲಿ ಬಸವಪೂರ್ವ ಯುಗದಲ್ಲಿದ್ದ ಕೆಂಬಾವಿ ಭೋಗಣ್ಣನ ಸಮಕಾಲೀನನಾದ ಚಂದಿಮರಸನೇ ಸಿಮ್ಮಲಿಗೆಯ ಚೆನ್ನರಾಮ ಅಂಕಿತದಲ್ಲಿ ವಚನಗಳನ್ನು ರಚಿಸಿದವನಾಗಿದ್ದು; ಈ ಹೆಸರಿನ ವ್ಯಕ್ತಿ ಒಬ್ಬನೇ ಎನ್ನುವ ನಿಲುವನ್ನು ವ್ಯಕ್ತಪಡಿಸಬಹುದು. ಚಂದಿಮರಸನು ಬಸವಪೂರ್ವ ಯುಗದಿಂದಲೂ ಜೀವಿಸಿದ್ದು ನಂತರವೂ ಕೆಲವು ಕಾಲ ಬದುಕಿದ್ದಿರಬೇಕು ಎಂದು ಊಹಿಸಲು ಅವಕಾಶ ಇದೆ. ‘ಚಂದಿಮರಸನು ನಿಜಗುಣಯೋಗಿಯ ಶಿಷ್ಯನಾಗಿರುವುದರಿಂದ ಬಸವ ಸಮಕಾಲೀನನಾಗುತ್ತಾನೆಯೇ ಹೊರತು ಸುಮಾರು ಕ್ರಿ.ಶ.1020ರಲ್ಲಿ ಕೆಂಬಾವಿ ಭೋಗಣ್ಣನ ಸಮಕಾಲೀನನಾಗಲಾರ’ ಎಂಬ ಅಭಿಪ್ರಾಯವನ್ನು ವಿದ್ವಾಂಸರು ವ್ಯಕ್ತಪಡಿಸಿದರೂ ಈ ಮಾತನ್ನು ಒಪ್ಪಲಾಗದು. ಚಂದಿಮರಸನ ಕೆಂಬಾವಿ ಭೋಗಣ್ಣನ ಸಮಕಾಲೀನ ಎಂಬುದನ್ನು ಕೆಲವೊಂದು ಬಲಿಷ್ಠವಾದ ಆಧಾರಗಳು ಬೆಂಬಲಿಸುತ್ತವೆ. ವೀರಶೈವ ಕಾವ್ಯ-ಪುರಾಣಗಳು ಕೆಂಬಾವಿ ಭೋಗಣ್ಣನ ಚರಿತ್ರೆಯನ್ನು ಉಲ್ಲೇಖಿಸುವಾಗ ಚಂದಿಮರಸನನ್ನು ಕುರಿತು ಜೊತೆ ಜೊತೆಯಲ್ಲಿಯೇ ಪ್ರಸ್ತಾಪಿಸಿವೆ. ಹರಿಹರನ ಕೆಂಬಾವಿ ಭೋಗಣ್ಣನ ರಗಳೆ ಮತ್ತು ಚೆನ್ನಯ್ಯನ ಕೆಂಬಾವಿ ಭೋಗಣ್ಣನ ಸಾಂಗತ್ಯದಂತಹ ಪೂರ್ಣಪ್ರಮಾಣದ ಕೃತಿಗಳ ಜೊತೆಗೆ ಹರಿಹರನ ರಗಳೆಯನ್ನು ಅನುಸರಿಸಿ ರಚಿತವಾದ ಕಾವ್ಯ-ಪುರಾಣಗಳು ಕ್ವಚಿತ್ತಾಗಿ ಚಂದಿಮರಸನನ್ನು ಉಲ್ಲೇಖಿಸಿವೆ. ಕೆಂಬಾವಿ ಭೋಗಣ್ಣನ ಕಾವ್ಯ-ಪುರಾಣಗಳು ಕ್ವಚಿತ್ತಾಗಿ ಚಂದಿಮರಸನನ್ನು ಉಲ್ಲೇಖಿಸಿವೆ. ಕೆಂಬಾವಿ ಭೋಗಣ್ಣನ ಹೆಸರಿನೊಂದಿಗೆ ಈ ಕೃತಿಗಳಲ್ಲಿ ಚಂದಿಮರಸನ ಹೆಸರು ತಳಕು ಹಾಕಿಕೊಂಡಿದೆ. ಚಂದಿಮರಸ ಪ್ರಸ್ತಾಪ ಬಸವಪೂರ್ವ ಯುಗದ ಶಿವಶರಣರ ಆಂದೋಲನದ ಸಂದರ್ಭದಲ್ಲಿ ಕಂಡುಬಂದಿರುವುದು ಮಹತ್ತರ ಸಂಗತಿಯಾಗಿದೆ.
        ಭೋಗಣ್ಣನು ಜೀವಿಸಿದ್ದ ಕೆಂಬಾವಿಯ ಅರಸನಾಗಿದ್ದ ಚಂದಿಮರಸನು ಆರಂಭದಲ್ಲಿ ವೈದಿಕ ಧರ್ಮದ ಪರವಾಗಿದ್ದವನು. ಭೋಗಣ್ಣನ ಅಪ್ರತಿಮ ಶಿವನಿಷ್ಠೆ ಮತ್ತು ಜಂಗಮನಿಷ್ಠೆಯ ಮಹಿಮೆಯಿಂದ ಪ್ರಭಾವಿತನಾಗಿ ವೀರಶೈವ ಧರ್ಮವನ್ನು ಸ್ವೀಕರಿಸುವುದಾಗಿ ಕಾವ್ಯ-ಪುರಾಣಗಳ ಉಲ್ಲೇಖದಿಂದ ತಿಳಿದುಬರುತ್ತದೆ. ನಂತರದ ಕಾಲದಲ್ಲಿ ರಾಜತ್ವವನ್ನು ತ್ಯಜಿಸಿ ಕೆಂಬಾವಿಯನ್ನು ಬಿಟ್ಟು ಕೃಷ್ಣಾನದಿ ತೀರದಲ್ಲಿರುವ ಚಿಮ್ಮಲಗಿ ಗ್ರಾಮದಲ್ಲಿ ವಾಸಿಸಿದನೆಂದು ತಿಳಿದುಬರುತ್ತದೆ. ಈ ಅವಧಿಯಲ್ಲಿಯೇ ನಿಜಗುಣ ಯೋಗಿಯಿಂದ ಶಿವದೀಕ್ಷೆಯನ್ನು ಪಡೆದುಕೊಂಡಿರಬಹುದಾಗಿದೆ. ತನ್ನ ಕೊನೆಯ ಕಾಲವನ್ನು ಇಲ್ಲಿಯೇ ಕಳೆದಿರಬಹುದಾಗಿ ತಿಳಿದುಬರುತ್ತದೆ. ಚಂದಿಮರಸನ ಹೆಸರಿನ ದೇವಾಲಯವು ಚಿಮ್ಮಲಗಿ ಗ್ರಾಮದಲ್ಲಿ ಇದೆ. ಈ ಗ್ರಾಮವು ಗದಗ-ವಿಜಾಪುರ ರೈಲುಮಾರ್ಗದ ಸೀತಿಮನೆ ಸ್ಟೇಶನ್ನಿನ ಸಮೀಪದಲ್ಲಿ ಕೃಷ್ಣಾನದಿಯ ಸೇತುವೆಯ ಪಶ್ಚಿಮಕ್ಕೆ ಎರಡು ಮೈಲಿ ದೂರದಲ್ಲಿರುವುದಾಗಿ ಫ.ಗು.ಹಳಕಟ್ಟಿಯವರು ತಮ್ಮ ‘ಶಿವಶರಣರ ಚರಿತ್ರೆಗಳು’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಚಿಮ್ಮಲಗಿಯಲ್ಲಿರುವ ಚಂದಿಮರಸನ ಹೆಸರಿನ ದೇವಾಲಯವು ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜಿನ ಹಿನ್ನೀರಿನಲ್ಲಿ ಮುಳುಗಿರುತ್ತದೆ. ನೀರು ಕಡೆಮೆಯಾದಾಗ ದೇವಾಲಯ ಕಂಡುಬರುತ್ತದೆ. ಈ ದೇವಾಲಯ ಈಗಲೂ ಅಲ್ಲಿರುವುದನ್ನು ಕೇಳಿ ಖಚಿತಪಡಿಸಿಕೊಂಡಿದ್ದೇನೆ. ಈತನು ಸಿಮ್ಮಲಿಗೆಯ ಚೆನ್ನರಾಮ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದು ಸದ್ಯಕ್ಕೆ 157 ವಚನಗಳು ಲಭ್ಯವಿವೆ. ಈತನ ವಚನಗಳಲ್ಲಿ ಅರಿವು,ಗುರು-ಶಿಷ್ಯ ಸಂಬಂಧ,ಇಷ್ಟಲಿಂಗ, ದೀಕ್ಷೆ, ಮಾಯೆ, ದೈವ, ಜನರ ಅಜ್ಞಾನ ಮುಂತಾದ ವಿಷಯಗಳ ಬಗೆಗೆ ಪ್ರಸ್ತಾಪಿಸಿರುವುದನ್ನು ಗುರುತಿಸ ಬಹುದು. ಸರಳವಾದ ದೈನಂದಿನ ಮಾತುಕತೆಯ ರೂಪದಲ್ಲಿ ಈತನ ವಚನಗಳು ಹೊರ ಹೊಮ್ಮಿವೆ.
 ತನ್ನದಾದಡೇನೋ ಕನ್ನಡಿ ಅನ್ಯರದಾದಡೇನೋ ಕನ್ನಡಿ ತನ್ನ ರೂಪ ಕಂಡಡೆ ಸಾಲದೆ ಎಂಬ ಹೋಲಿಕೆಯ ಮೂಲಕ ಸದ್ಗುರು ಆವನಾದಡೇನೋ ತನ್ನನರುಹಿಸಿದಡೆ ಸಾಲದೆ ಎಂದು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಸದ್ಗುರು ಯಾರಾದರೇನು ಎಂದು ಪ್ರಶ್ನಿಸಿದ್ದಾನೆ. (ವ.ಸಂ.607) ಮತ್ತೊಂದು ವಚನದಲ್ಲಿ ತನ್ನ ಮರೆವನ್ನು ಶ್ರೀಗುರುವಿನ ವಚನದಿಂದ ತಿಳಿದು ನೋಡು ಎಂದಿದ್ದಾನೆ (ವ.ಸಂ.608). ಈತನ ಪ್ರಕಾರ ನಿಜವಾದ ಗುರು ‘ಶರಣರಲಿ ಗುಣದೋಷವನೇನುವರಸದೆ ಸುಖವನ್ನುಂಟುಮಾಡುವವನು’ (ವ.ಸಂ.658) ಆಗಿದ್ದಾನೆ. ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ‘ಅರಿಯದ ಗುರುವು ಅರಿಯದ ಶಿಷ್ಯಂಗೆ ಅನುಗ್ರಹವ ಮಾಡಿದಡೆ ಅದು ಅಂಧಕನ ಕೈಯ ಅಂಧಕ ಹಿಡಿದಂತಾಗುತ್ತದೆ’ ಎಂದಿದ್ದಾನೆ. ಸರಳ ಮತ್ತು ನೇರವಾದ ಮಾತುಗಳಲ್ಲಿಯೇ ಜಾಣ ಯಾರು? ಎಂಬುದನ್ನು ವಚನವೊಂದರಲ್ಲಿ ಹೇಳಿದ್ದಾನೆ. ಆತನ ಪ್ರಕಾರ ಸದ್ಗುರುವ ನಂಬುವವ ಜಾಣ, ವಿಷಯಂಗಳ ಬಿಡುವವ, ಅವಿದ್ಯವ ಗೆಲ್ಲುವವ, ತನ್ನ ತಾನರಿದವನು ಜಾಣ. (ವ.ಸಂ.602) : ಪೂರ್ವಾಶ್ರಮದಲ್ಲಿ ಭೋಗಣ್ಣನ ಘಟನೆಯಲ್ಲಿಯ ವರ್ಣ ಸಂಘರ್ಷದಲ್ಲಿ ಬ್ರಾಹ್ಮಣರ ಪರವಾಗಿ ನಿಲುವನ್ನು ವ್ಯಕ್ತಪಡಿಸಿ ನಂತರದಲ್ಲಿ ಭೋಗಣ್ಣನ ಮಹಿಮೆಯಿಂದ ಪರಿವರ್ತಿತನಾದ ಚಂದಿಮರಸನು ಕೆಳಕಂಡ ವಚನದಲ್ಲಿ ಸಾಮಾಜಿಕ ನೆಲೆಯಲ್ಲಿ ಕುಲದ ಪ್ರಶ್ನೆಯನ್ನು ಗಂಭೀರವಾಗಿ ಪ್ರತಿಪಾದಿಸಿದ್ದಾನೆ.
ಸಮುದ್ರದಿಂದಾದ ತೆರೆಗಳು ಸಮುದ್ರದೊಳಗಡಗುತ್ತ
ಆ ಸಮುದ್ರದೊಳಗೇ ಇಹವು.
ತೆರೆಗಳು ಬೇರೊಂದುದುಕವೆ?
ನಿಮ್ಮಿಂದಲಾದ ಜಗವು ನಿಮ್ಮಲ್ಲಿಯೇ ಇದ್ದು
ನಿಮ್ಮಲ್ಲಿಯೇ ಅಡಗುವುದು.
ಬೇರೆ ಬೇರೆ ಕುಲವುಂಟೆ ಈ ಜಗಕ್ಕೆ?
...................................
ಕುಲವೂ ಇಲ್ಲ ಛಲವೂ ಇಲ್ಲ.  (ವ.ಸಂ.691) ಶಿವಶರಣರಿಗೆ ಕುಲವೆಂಬುದಿಲ್ಲ, ಸಮುದ್ರದಿಂದ ಉದ್ಭವವಾದ ತೆರೆಗಳು ಸಮುದ್ರದೊಳಗೆ ಅಡಗಿ ಅಲ್ಲಿಯೇ ಇರುವವು. ಹಾಗೆಯೇ ಪರಮಾತ್ಮನಿಂದಾದ ಜಗತ್ತು ಪರಮಾತ್ಮನಲ್ಲಿಯೇ ಇದ್ದು ಅವನಲ್ಲಿಯೇ ಅಡಗುವುದು. ಹೀಗಿರುವಾಗ ಜಗತ್ತಿಗೆ ಬೇರೆ ಬೇರೆ ಕುಲಗಳಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾನೆ.
  ಈತನ ವಚನಗಳಲ್ಲಿ ಸಾಮಾಜಿಕ ವಿಡಂಬನೆ ಅಷ್ಟಾಗಿ ಕಂಡುಬರುವುದಿಲ್ಲ. 159 ವಚನಗಳಲ್ಲಿ ಕೇವಲ ಎರಡು ವಚನಗಳು ಮಾತ್ರ ವಿಡಂಬನೆಗೆ ಸಂಬಂಧಿಸಿದವುಗಳಾಗಿವೆ. ಒಂದು ವಚನವಂತೂ ಅಗ್ನಿಯನ್ನು ದೈವವೆಂದು ಭಾವಿಸಿ ಯಜ್ಞವನ್ನು ಮಾಡುವ ಬ್ರಾಹ್ಮಣ ಪದ್ಧತಿಯನ್ನು ಟೀಕಿಸುವ ರೀತಿಯಿಂದ ಕೂಡಿದೆ.
ಕಿಚ್ಚು ದೈವವೆಂದು ಹವಿಯ ಬೇಳುವರು.
ಕಿಚ್ಚು ಹಾರುವರ ಮನೆಯ ಸುಡುವಾಗ ನಮಸ್ಕರಿಸುವುದನ್ನ ಬಿಟ್ಟು
ಅಗ್ನಿಯನ್ನು ನಂದಿಸಲು ಬಚ್ಚಲ ಕೆಸರು, ಬೀದಿಯ ಧೂಳನ್ನು ಚೆಲ್ಲುವರು
ಸಹಾಯಕ್ಕಾಗಿ ಬೊಬ್ಬಿರಿದು ಕರೆಯುವರು. (ವ.ಸಂ.585)
ಎಂದು ಗೇಲಿ ಮಾಡಿದ್ದಾನೆ.
        ಈತನ ಪ್ರಕಾರ
ಇಹಲೋಕವೆಂಬುದು, ಸಕಲ ದುಃಖದಾಗರ, ನರಕದ ಪಾಕುಳ
ಬಾರದ ಭವಂಗಳಲ್ಲಿ ಬಂದು ದೇಹದಿಚ್ಚೆಗೆ ಸಂದು
ಹೂಸಿ ಮೆತ್ತಿ ಹೊದಿಸಿದ ದೇಹದಂತುವ ಕಂಡು
ಮರುಗುವೆ ಮರುಳು ಮಾನವಾ.
ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ ಮನುಷ್ಯ ದೇಹ
ಎಲುವು ತೊಗಲು, ನರಮಾಂಸ ಪುರೀಷ
ಶ್ಲೇಷ್ಮ ರಕ್ತ ಶುಕ್ಲ ಕ್ರಿಮಿ ಕೊಕ್ಕರೆ, ಜರೆ ಮರಣ ಜಂತು
ಹಲವು ರೋಗಂಗಳ ತವರ್ಮನೆ
ನೋಡುವಡೆ ಪಾಪದ ಪುಂಜ
ಇಂತೀ ಹೇಸಿಕೆಯೊಳಗೆ ಏತರ ಸುಖವನರಸುವೆ? (ವ.ಸಂ.571)
ಎಂದು ತಿಳಿಸಿದ್ದಾನೆ. ಸಂಸಾರಿಯು ಜಂಗಮನಾಗಲು ಸಾಧ್ಯವಿಲ್ಲ ಎಂಬುದನ್ನು,
ಹಂದಿ ದೈವವಲ್ಲ, ಸಂಸಾರಿ ಜಂಗಮವಲ್ಲ
ಸಂಸಾರಿ ಜ್ಞಾನಿಗೂ ನಿರಾಭಾರಿ ಹೆಡತನಕ್ಕೂ ಸರಿಯೆನ್ನಬಹುದೆ
ಎಂದು ಹೋಲಿಕೆಯ ಮೂಲಕ ನಿರೂಪಿಸಿದ್ದಾನೆ.
        ಒಂದು ವಚನದಲ್ಲಿ ರೂಪಕ ಕಥಾಸರಣಿಯ ಮೂಲಕ, ಈ ಸಂಸಾರ ಸುಖ ವಿಚಾರಿಸಿ ನೋಡಿದರೆ ದುಖಃದ ಆಗರ. ಇದನ್ನು ತಿಳಿದು ಸಕಲ ವಿಷಯಗಳಲ್ಲೂ ಸುಖ ಇಷ್ಟೇ ಎಂದು ನಂಬಿ ವಿಷಯ ವಾಸನಾರಹಿತನಾಗಿ ನಿಂತವನೇ ಪರಮಾತ್ಮ ಎನ್ನುವ ನಿಲುವನ್ನು ಪ್ರತಿಪಾದಿಸಿದ್ದಾನೆ. ಈತನ ವಚನಗಳಲ್ಲಿ ನೀತಿಬೋಧನೆಯು ಇದೆ. ದುರ್ವಿಷಯಿಗೆ ಸದ್ಗುರು ಬೋಧನೆ ನಿರ್ವಿಷವಾಗಿರುವುದನ್ನು
ನಾಯಿಕುನ್ನಿಯ ಕಚ್ಚಬೇಡ, ಬಗುಳಬೇಡವೆಂದಡೆ ಮಾಣ್ಬುದೇ?
ಹಂದಿಯನ ಶುದ್ಧವ ತಿನಬೇಡ, ಹೊರಳಬೇಡವೆಂದಡೆ ಮಾಣ್ಬುದೆ?
ನಯದಿ ಬುದ್ಧಿಗಲಿಸಿದಡೆ ಮಾಣ್ಬದೆ ತಮ್ಮ ಸಹಜವ (ವ.ಸಂ.627)
ಎಂದು ದೃಷ್ಟಾಂತದ ಮೂಲಕ ಪ್ರತಿಪಾದಿಸಿದ್ದಾನೆ. ಅದೇ ರೀತಿ ಮನುಷ್ಯರು ನೇಣ ಹಾವೆಂದು ಬಗೆದವರ ಹಾಗೆ ತನ್ನ ಭ್ರಮೆಯಿಂದ ಇಲ್ಲದ ಸಂಸಾರದ ಸಕಲ ದುಃಖಕ್ಕೊಳಗಾಗಿದ್ದನ್ನು ಕಂಡು ದುಃಖಿಸಿದ್ದಾನೆ. ಮಾಯಾಮಯಂಗಳೆಂಬ ಮುನ್ನಿನ ಭ್ರಮೆಗಳ ಬಿಡಲರಿಯದ ಬಡ ಮನುಜರಿಗೆ ನಿಜಸುಖವು ಸಾಧ್ಯವಿಲ್ಲ ಎಂದಿದ್ದಾರೆ.  ಅದೇ ರೀತಿ  ಸಾವು-ನರಕ  ಎಂದೆಲ್ಲ ಚಿಂತಿಸುವುದು ತರವಲ್ಲ, ಗುರುವಿನ ಮೇಲೆ ಭಕ್ತಿ ಇರಿಸಿದರೆ ಸಾಕು ಎಂದು ನುಡಿದಿದ್ದಾನೆ. ವಚನ ಚಳುವಳಿಯು ‘ನಮ್ಮ ಪರಂಪರೆಯ ಬದುಕಿನುದ್ದಕ್ಕೂ ನಂಬಿದ್ದ ಹಣೆಯ ಬರೆಹ ಪ್ರಾರಬ್ಧ ಉಂಡಲ್ಲದೆ ತೀರದು’ ಎಂಬ ಸಿದ್ಧಾಂತವನ್ನು ತಿರಸ್ಕರಿಸಿತ್ತೋ ಅದೇ ಸಿದ್ಧಾಂತವನ್ನು ಚಂದಿಮರಸನು ಒಪ್ಪಿಕೊಂಡಿರುವುದನ್ನು ಆವ ಕಾಲದೊಳಾದಡೂ ಆವ ದೇಶದೊಳಾದಡೂ  ತನ್ನ ಲಲಾಟ ಲಿಖಿತ ಪ್ರಾರಬ್ಧ ಕರ್ಮ ಉಂಡಲ್ಲದೆ ತೀರದು ಎಂಬ ಅವನ ವಚನವು ಸೂಚಿಸುತ್ತದೆ.
     ಹೆಂಡದ ಮಾರಯ್ಯನು  ಹೆಂಡದ ಕಾಯಕವನ್ನು ಒಳ್ಳೆಯ ಉದ್ದೇಶದ ಹಿನ್ನೆಲೆಯಲ್ಲಿಯೇ ಕೈಗೊಂಡಿದ್ದು  ದೋಷವಿಲ್ಲವೆಂಬುದಾಗಿ ಬಸವಣ್ಣನಿಂದಲೇ ಮೆಚ್ಚುಗೆ ಪಡೆದಿದ್ದನು. ಹೆಂಡದ ಮಾರಯ್ಯನ ವಚನಗಳು ಒಟ್ಟು 14 ದೊರೆತಿದ್ದು, ವಚನಗಳ ಅಂಕಿತವು ಧರ್ಮೇಶ್ವರ ಲಿಂಗವಾಗಿದೆ. ಹೆಂಡ ಕುಡಿಯಲು ಬರುವವರಿಗೆ ವಿವೇಕ ಬೋಧನೆ ಮಾಡುತ್ತಿರುವ ರೀತಿಯಲ್ಲಿ ಉಪದೇಶಾತ್ಮಕವಾಗಿ ಕಂಡು ಬರುತ್ತವೆ. ಹೆಂಡದ ಮಾರಾಟಕ್ಕೆ ಸಂಬಂಧಿಸಿದ ಉಪಮೆ, ದೃಷ್ಟಾಂತ, ಪದ ಪ್ರಯೋಗಗಳ ವಿಶೇಷಣವನ್ನು ಬಳಸುವುದರ ಮೂಲಕವೇ ನೀತಿ ಬೋಧನೆಯನ್ನು ಒಳಗೊಂಡಿರುವುದನ್ನು ಕಾಣಬಹುದಾಗಿದೆ. ಶಿವಾನುಭವದ ಫಲಪ್ರಧೆಯನ್ನು ಪಡೆಯ ಬೇಕಾದರೆ ಕರಣ, ಮದ, ಸಪ್ತವ್ಯಸನ ಮತ್ತು ಅರಿಷಡ್ವರ್ಗಗಳನ್ನು ತ್ಯಜಿಸುವುದು ಅಗತ್ಯ ಎಂಬುದನ್ನು ಇಲ್ಲವಾದರೆ ಶಿವಾನುಭವ ಸುಧೆ ಸಾಧ್ಯವಿಲ್ಲವೆಂಬುದನ್ನುಈ ವಚನದಲ್ಲಿ ಹೇಳಿದ್ದಾನೆ.
  ಕರಣ ನಾಲ್ಕು, ಮದವೆಂಟು, ವ್ಯಸನವೇಳು
 ಅರಿಷಡ್ವರ್ಗಂಗಳಲ್ಲಿ ,ಇಂತೀ ಉರವಣೆಗೊಳಗಾಗುತ್ತ
 ಅಣವ ಮಾಯಾ ಕಾರ್ಮಿಕ ಮೂರು
 ಸುರೆಯಲ್ಲಿ ಮುದುಡುತ್ತ ನಾ ತಂದ ಸುಧೆ ನಿಮಗಿಲ್ಲ ಎಂದೆ
ಅದು ಧರ್ಮೇಶ್ವರ ಲಿಂಗದ ಅಪ್ಪಣೆ
 ಇನ್ನೊಂದು ವಚನದಲ್ಲಿ ಮಣ್ಣು ಹೊನ್ನು, ಹೆಣ್ಣುಗಳಿಗೆ ದಾಸರಾದರೆ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಿಲ್ಲವೆಂಬುದನ್ನು,
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ
ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ
ವಸ್ತುವ ಮುಟ್ಟುವುದಕ್ಕೆ ದೃಷ್ಟವಿಲ್ಲದೆ
ಕಷ್ಟದ ಮರೆಯಲ್ಲಿ ದೃಷ್ಟದ ಸುರಾಪಾನವ ಕೊಂಡು ಮತ್ತರಾಗುತ್ತ
ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ  ಎಂಬುದಾಗಿ ಮಾರ್ಮಿಕವಾಗಿ ಹೇಳಿದ್ದಾನೆ. ಅದೇ ರೀತಿ ಮದ್ಯಪಾನ ಮಾಡಿ ಐಹಿಕ ಭೋಗಸುಖದಲ್ಲಿ ಮುಳುಗಿ ಹೋಗುವ ಜನರ ಬಗೆಗೆ ಕನಿಕರವನ್ನು ವ್ಯಕ್ತಪಡಿಸುತ್ತಲೇ ಮದ್ಯಪಾನದಲ್ಲಿ ಮೈಮರೆತ ಇವರು ತಾನು ನೀಡುವ ಅಮೃತವನ್ನು ಸ್ವೀಕರಿಸುತ್ತಿಲ್ಲವಲ್ಲ ಎಂಬ  ವ್ಯಥೆಯನ್ನು ನಾ ಮಾರ ಬಂದ ಸುಧೆಯ ಕೊಂಬವರಾರೂ ಇಲ್ಲ ಎಂಬುದಾಗಿ ತಾಳಿದ್ದಾನೆ. ವಚನಕಾರರರಲ್ಲಿ ಎಲೆಮರೆಯ ಕಾಯಿಯಂತಿರುವ ಹೆಂಡದ ಮಾರಯ್ಯನು ತನ್ನ ವಿಶಿಷ್ಟ ವ್ಯಕ್ತಿತ್ವದ ಕಾಯಕವನ್ನು ಬಳಸಿಕೊಂಡು ತನ್ನ ಬಳಿಗೆ ಬರುವ ಮಧ್ಯಪಾನ ವ್ಯಸನಿಗಳಿಗೆ ಉಪದೇಶ ಮಾಡುವುದರ ಮೂಲಕ ಸನ್ಮಾರ್ಗಕ್ಕೆ ತರಲು ಪ್ರಯತ್ನಿಸಿರುವುದನ್ನು ಈತನ ಲಭ್ಯವಿರುವ ವಚನಗಳಲ್ಲಿ ಗ್ರಹಿಸ ಬಹುದಾಗಿದೆ. ಮಾರಯ್ಯನಂತಹ ಅಜ್ಞಾತ ವಚನಕಾರ ತನ್ನ ವ್ಯಕ್ತಿತ್ವ ಮತ್ತು ಹಾಗೂ ಕೈಗೊಂಡ ಕಾಯಕದ ಮೂಲಕ ಸಮಾಜದ ಉದ್ಧಾರಕ್ಕೆ ಕಾರಣವಾಗಿದ್ದ ಎಂಬುದು ವಚನ ಪರಂಪರೆಯಲ್ಲಿ ಗಮನಿಸ ತಕ್ಕ ಹಾಗೂ ಯೋಚಿಸ ತಕ್ಕ ಸಂಗತಿಯಾಗಿದೆ.
    ಮನುಮುನಿ ಗುಮ್ಮಟದೇವನು ಬಸವಯುಗದಲ್ಲಿ ಕಂಡು ಬರುವ ವಚನಕಾರನಾಗಿದ್ದು, ಈತನ ವೈಯಕ್ತಿಕ ವಿಚಾರಗಳ ಕುರಿತು ಹೆಚ್ಚಿನ ವಿಷಯಗಳು ತಿಳಿದು ಬಂದಿಲ್ಲ. ಇವನ ವಚನಗಳಲ್ಲಿಯ ಕೆಲವು ಆಂತರಿಕ ಸಾಕ್ಷ್ಯಗಳು ಕೆಲವು ಮಾಹಿತಿಯನ್ನು ಪರೋಕ್ಷವಾಗಿ ಒದಗಿಸಿವೆ. ಈತನ ವಚನಗಳ ಸಂಕಲನದ ಆರಂಭದಲ್ಲಿಯ ಪೀಠಿಕಾ ಭಾಗದಲ್ಲಿಯ ಗದ್ಯಭಾಗವು ಈತನು ಮೊದಲು ಜೈನಮತದವನಾಗಿದ್ದು ನಂತರ ವೀರಶೈವ ಮತಕ್ಕೆ ಪರಿವರ್ತನೆ ಹೊಂದಿದವನೆಂಬುದರ ಸೂಚನೆಯನ್ನು ಒದಗಿಸುತ್ತದೆ.  ಆ ಭಾಗ ಇಂತಿದೆ.
        ಬಿಜ್ಜಳಂಗೆ ಹದಿನೆಂಟು ದೋಷಂಗಳ ತೀರ್ಚಿ ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳ ಸರ್ವ ಆತ್ಮ ಭೂತ ಹಿತವಾಗಿ ಇರೆಂದು ಆತಂಗೆ ಗುರುವಾದ ಮೀಮಾಂಸಕ ಆ ಮೀಮಾಂಸಕಂಗೆ ಸಕಲ ವ್ರತನೇಮ ನಿತ್ಯ ವ್ರತಮಾನ ಕೃತ್ಯ ಜಿನನೇಮ ಗುಣನಾಮವಂ ಬೋಧಿಸಿದ, ಬೌದ್ಧಂ ಅವತಾರಕ್ಕೆ ಮುಖ್ಯ ಆಚಾರ್ಯನಾದ ತನ್ನ ಸಮಯಕ್ಕೆ ಸಿಂಧು ಚಂದ್ರನಾದ ಮನುಮುನಿ ಗುಮ್ಮಟದೇವಗಳ ವಚನ .
ಮನುಮುನಿ ಗುಮ್ಮಟದೇವನು ಸಮಸ್ಯಾತ್ಮಕ ವ್ಯಕ್ತಿಯಾಗಿದ್ದಾನೆ. ಆದಾಗ್ಯೂ ಈತನು ಮೊದಲಿಗೆ ಜೈನನಾಗಿದ್ದು ಅನಂತರ ವೀರಶೈವ ಮತಕ್ಕೆ ಪರಿವರ್ತನೆ ಹೊಂದಿದ ವ್ಯಕ್ತಿಯಾಗಿದ್ದಾನೆಂಬುದಕ್ಕೆ ಈತನ ವಚನದಲ್ಲಿಯ ‘ಜಿನವಾಸ ಬಿಟ್ಟು ದಿನನಾಶನ ವಾಸವಾಯಿತ್ತು’ ಎಂಬ ನುಡಿಗಳು ಸಮರ್ಥಿಸುತ್ತವೆ. ಕವಿಚರಿತೆಕಾರರು ಈತನ ಕಾಲವನ್ನು ಬಸವನ ಸಮಕಾಲೀನರ ಕಾಲವನ್ನು ಹೇಳುವ ಹಾಗೆ ಕ್ರಿ.ಶ.1160 ಎಂದು ಗುರುತಿಸಿದ್ದು, ಈತನು ತನ್ನ ವಚನಗಳನ್ನು ಬಸವಣ್ಣನನ್ನು ಕುರಿತು ಸ್ಮರಿಸದಿದ್ದರೂ ಒಂದು ವಚನದಲ್ಲಿ
ಅಂದಿಂಗೆ ಅನಿಮಿಷ ಕೈಯಲ್ಲಿ
ಇಂದಿಗೆ ಪ್ರಭುವಿನ ಗುಹೆಯಲ್ಲಿ ಗುಹೇಶ್ವರನಾದೆ
ಎನ್ನ ಗುಡಿಗೆ ಬಂದು ಗುಮ್ಮಟಂಗೆ ಮಠಸ್ಥನಾದೆ
ಅಗಮ್ಯೇಶ್ವರ ಲಿಂಗವೇ’ (ವ.ಸಂ.1092, ಸ.ವ.ಸಂ.3.)
ಎಂದು ಅಲ್ಲಮ ಪ್ರಭುವಿನ ಬಗೆಗೆ ಉಲ್ಲೇಖಿಸಿರುವುದರಿಂದ ಈತನು ಬಸವಯುಗದ ಒಬ್ಬ ವಚನಕಾರನೆಂದು ಭಾವಿಸಬಹುದಾಗಿದೆ. ಈತನ ಹೆಸರಿನಲ್ಲಿ ದೊರೆಯುವ ವಚನಗಳ ಸಂಖ್ಯೆ 100 ಎಂದು ಕವಿಚರಿತೆಕಾರರು ಹೇಳಿದ್ದರೂ ಸದ್ಯಕ್ಕೆ 99 ವಚನಗಳು ಮಾತ್ರ ದೊರೆತಿವೆ. ಕ.ವಿ.ವಿ.ಯಿಂದ ಸುಂಕಾಪುರರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಕಲ ಪುರಾತನರ ವಚನಗಳು ಸಂಪುಟದಲ್ಲಿ 1ರಲ್ಲಿ ಹಾಗೂ ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ಪ್ರಕಟವಾಗಿರುವ ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿಯ ಸಂಕೀರ್ಣ ವಚನ ಸಂಪುಟ 3ರಲ್ಲಿಯೂ ಈತನ ಹೆಸರಿನಲ್ಲಿ 99 ವಚನಗಳು ಮಾತ್ರ ಪ್ರಕಟವಾಗಿವೆ. ಈ ವಚನಗಳ ಅಂಕಿತವು ‘ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರ ಲಿಂಗ, ಅಥವಾ ‘ಗೂಡಿನೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ’, ಆಗಿದೆ.
ಈತನು ಜೈನಮತದಿಂದ ವೀರಶೈವ ಧರ್ಮದ ಮತಾಂತರ ಹೊಂದಿದ ನಂತರ ವಚನಗಳನ್ನು ರಚಿಸಿದ್ದರೂ ಈತನ ಬಹುಪಾಲು ವಚನಗಳಲ್ಲಿ ಹೆಚ್ಚಾಗಿ ಭಕ್ತಸ್ಥಲ ಹಾಗೂ ಐಕ್ಯಸ್ಥಲದ ವಿಚಾರಗಳ ಗ್ರಹಿಕೆಯನ್ನು ಕಾಣಬಹುದಾಗಿದೆ. ಈತನ ವಚನಗಳಲ್ಲಿ ದಯವೇ ಧರ್ಮದ ಮೂಲ, ಏಕದೇವೋಪಾಸನೆ ಪರಮತ ದೂಷಣೆಯಂತಹ ಸಂಗತಿಗಳ ಬಗೆಗೆ ವಿವರಣೆ ವಿರಳವಾಗಿ ಕಂಡು ಬರುತ್ತದೆ. ಈತನ ಬಹುಪಾಲು ವಚನಗಳು ಬೆಡಗಿನ ವಚನಗಳಾಗಿವೆ.  ಮನುಮುನಿ ಗುಮ್ಮಟದೇವನ ವಚನಗಳು ಕಿರಿದರಲ್ಲಿ ಹಿರಿದರ್ಥವನ್ನು ತುಂಬಿಕೊಂಡು ಭಾಷೆಬಂಧಗಳ ಬಿಗುವನ್ನು ಹೊಂದಿವೆ. ಕೆಲವೆಡೆ ಸ್ವಂತಿಕೆಯುಂಟು. ಸ್ವಾನುಭವದ ಅಚ್ಚಿನಲ್ಲಿ ಒಡಮೂಡಿರುವ ಶಿವಾನುಭವನ್ನು ಕೆಲವೆಡೆ ಗುರುತಿಸ ಬಹುದಾಗಿದೆ. ಈತನ ವಚನಗಳಲ್ಲಿ ಸಾಮಾಜಿಕ ಚಿಂತನೆಯ ಎಳೆಗಳು ಅಷ್ಟಕ್ಕಷ್ಟೇ. ಮನುಮುನಿ ಗುಮ್ಮಟದೇವರಂತಹ ಅಲಕ್ಷಿತ ವಚನಕಾರರು ಕೀರ್ತಿಗಾಗಿ, ಪಾಂಡಿತ್ಯ ಪ್ರದರ್ಶನಕ್ಕಾಗಿ ಎಂದಿಗೂ ವಚನಗಳನ್ನು ರಚಿಸಿದವರಲ್ಲ. ಅವರ ಅಂತರಂಗದ ಅನುಭಾವ ಹೃದಯತುಂಬಿ ಹೊರಸೂಸಿ ವಚನರೂಪ ತಾಳಿವೆ. ತಾವು ಪಡೆದ ಆಧ್ಯಾತ್ಮ ಜ್ಞಾನವನ್ನು ತಮ್ಮ ಲೌಕಿಕ ಜ್ಞಾನದೊಂದಿಗೆ ಸಮ್ಮಿಳಿನಗೊಳಿಸಿ ಸರಳ ಸುಂದರ ಶೈಲಿಯಲ್ಲಿ ವಚನಗಳನ್ನು ರಚಿಸಿದವರಾಗಿದ್ದಾರೆ.  ಈತನ ವಚನಗಳನ್ನು ಪರಿಶೀಲಿಸಿದಾಗ ಉತ್ತಮ ದರ್ಜೆಯ ವಚನಕಾರನಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆಯಾದರೂ ಈತನು ಇನ್ನೂ ಅಜ್ಞಾತಕಾರನಾಗಿ ಉಳಿದಿದ್ದು ಹೆಚ್ಚಿನ ಅಧ್ಯಯನ ನಡೆಯದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಭೋಗಣ್ಣ:  ಹನ್ನೆರಡನೆಯ ಶತಮಾನದ ಬಸವಣ್ಣನವರ ಹಿರಿಯ ಸಮಕಾಲೀನ ವಚನಕಾರರ ಚರಿತ್ರೆಯನ್ನು ಅಧ್ಯಯನ ಮಾಡುವಾಗ  ನಮಗೆ ಮೂವರು ಮಂದಿ ಭೋಗಣ್ಣರು ಕಾಣಸಿಗುತ್ತಾರೆ.ಕೆಂಬಾವಿ ಭೋಗಣ್ಣ 2. ಪ್ರಸಾದಿಭೋಗಣ್ಣ 3. ಭೋಗಣ್ಣ .  ಈ ಮೂವರು ವಚನಕಾರರೇ? ಆಗಿದ್ದರೆ ಇವರ ವಚನಗಳ ಅಂಕಿತ, ಇವರ  ಅಂಕಿತದ ಹೆಸರಿನಲ್ಲಿ ದೊರೆಯುವ ವಚನಗಳ ಸಂಖ್ಯೆ ಇತ್ಯಾದಿಗಳ  ಬಗೆಗೆ  ಇಂದಿಗೂ ಸರ್ವಸಮ್ಮತವಾದ  ಉತ್ತರವನ್ನು ಕಂಡುಕೊಳ್ಳಲು ವಿದ್ವಾಂಸರಲ್ಲಿ  ಸಾಧ್ಯವಾಗಿಲ್ಲ. ವಚನಕಾರ  ಭೋಗಣ್ಣನ ಇತಿವೃತ್ತದ ಬಗೆಗೆ ಆತನ ವಚನಗಳಿಂದಾಗಲೀ, ವೀರಶೈವ ಕಾವ್ಯ-ಪುರಾಣಗಳಿಂದಾಗಲೀ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ. ನಿಜಗುರು ಭೋಗೇಶ್ವರ ಅಂಕಿತದಲ್ಲಿ ಈತನು ರಚಿಸಿರುವ 22 ವಚನಗಳು ಸದ್ಯಕ್ಕೆ ಉಪಲಬ್ಧವಿವೆ. ಈತನು ತನ್ನಕೆಳಕಂಡ ವಚನಗಳಲ್ಲಿ,     ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ ( ವ.ಸಂ.13) ಎಂದು ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಅಜಗಣ್ಣರನ್ನು ಧನ್ಯತಾ ಭಾವದಿಂದ ಸ್ತುತಿಸಿರುವುದನ್ನು ನೋಡಿದರೆ ಈತನು  ಬಸವಾದಿ ಪ್ರಮಥ ಸಮಕಾಲೀನನಾಗಿದ್ದು ಆತನ ಕಾಲವನ್ನು ಕ್ರಿ.ಶ.1160 ಎಂದು  ಊಹಿಸ ಬಹುದಾಗಿದೆ.  ಅಜ್ಞಾತ ವಚನ ಕಾರರಲ್ಲಿಯೇ ಕವಿಹೃದಯವುಳ್ಳವನು. ಈತನು ವಾಗದ್ವೈತದಿಂದ ಒಡಲ ಹೊರೆವ ಶಬ್ದ ಬೋಧಕರಿಗೆ ಶರಣರ ಪದ ದೊರೆಯುವುದಿಲ್ಲವೆಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾನೆ. ಈತನ ಪ್ರಕಾರ ಆಗಮ ನಿಗಮ ಶಾಸ್ತ್ರ  ಪುರಾಣವೆಂಬ ಆಂಧಕನ ಕೈಗೆ ಕೋಲಕೊಟ್ಟು ನಡಸಿಕೊಂಡು ಹೋಗುವಾಗ, ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ ಎರಡಕ್ಕೆ ಕೆಟ್ಟ ಜಂಬುಕನಂತೆ ಆದವರು, ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದವರು, ಸಂತೆಯಲ್ಲಿ ಗುಡಿಸಲನಿಕ್ಕಿ ಹಡದುಂಬ ಸೂಳೆಯಂತೆ ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನ್ನಿಕ್ಕಿಕೊಂಡು ವಾಚಾಳಿಗತನದಿಂದ ಒಡಲಹೊರೆವವರೆಲ್ಲರೂ  ನಿಜಶರಣರಾಗಲು ಸಾಧ್ಯವಿಲ್ಲ.
 ಒಂದು ವಚನದಲ್ಲಿ ಭವಿ-ಭಕ್ತರನ್ನು ಕುರಿತು,
  ಆಚಾರವುಳ್ಳನ್ನಕ್ಕ ಭಕ್ತನಲ್ಲ
  ಅನಾಚಾರವುಳ್ಳನ್ನಕ್ಕ ಭವಿಯಲ್ಲ
  ಅಂಗ ನಷ್ಟವಾಗಿ ಕಂಗಳಲ್ಲಿ ಅರ್ಪಿಸಿ
   ತಲೆಯಲ್ಲಿ ಉಣ್ಣಬಲ್ಲಡೆ ಭಕ್ತ.
  ಅರ್ಪಿಸಿಕೊಳ್ಳದ, ಅನರ್ಪಿತವ ಮುಟ್ಟದೆ
  ಅಚ್ಚಪ್ರಸಾದವ ಕೊಳಬಲ್ಲಡೆ ಭವಿ ( ವ.ಸಂ.5) ಎಂದು ನಿರ್ವಚಿಸಿದ್ದಾನೆ. ಒಟ್ಟಾರೇ ಈತನ ವಚನಗಳಲ್ಲಿ, ಅಷ್ಟಾವರಣಗಳ ಬಗೆಗೆ, ಭಕ್ತ-ಭವಿ, ಸಾಕಾರ-ನಿರಾಕಾರ, ಅಂಗ-ಲಿಂಗ, ವೇಷಡಂಭಕ-ಶಬ್ದಬೋಧಕ, ಭವಭಾರಿಗಳ ಬಗೆಗೆ ವಿವರಣೆ ಕಂಡು ಬರುತ್ತದೆ. ಈತನ ವಚನಗಳಲ್ಲಿ ಆರು ವಚನಗಳು ಬೆಡಗಿನ ವಚನಗಳ ಧಾಟಿಯನ್ನು ಹೊಂದಿವೆ. ಕೆಲವೆಡೆ ಈತನ ವಚನಗಳು ಉಪಮೆಗಳ ಮೂಲಕ ಕಾವ್ಯದ ಸ್ಪರ್ಶವನ್ನು  ಪಡೆದಿವೆ. ಆದಾಗ್ಯೂ ಈತನ ವಚನಗಳು ಬಹುಪಾಲು ಗದ್ಯಲಯಕ್ಕೆ ಸಮೀಪವಾಗಿದ್ದು ನೇರವಾದ ರಚನೆಯಿಂದಲೇ ಓದುಗರನ್ನು ಸೆಳೆಯುತ್ತವೆ.   ತನ್ನ ಇಷ್ಟ ದೈವದ ಅನನ್ಯತೆಯನ್ನು ಹೇಳುವಾಗ ಅವನು ಕೊಡುವ ಸಾದೃಶಗಳೆಲ್ಲವೂ ಹೊಸತನದಿಂದ ಕೂಡಿವೆ. ಪಕ್ಕ ಮುರಿದ ಹಕ್ಕಿಯಂತೆ, ಸಾಸಿವೆಯನ್ನು ಒಕ್ಕಿದ ಎತ್ತಿನಂತೆ, ಬೆಳಗ ಕಂಡು ಮೈಮರೆದ ಜಿಂಕೆಯಂತೆ, ಅಳಿಕುಲಕ್ಕೆ ವಿಷವಾದ  ಸಂಪಗೆಯ ಪುಷ್ಪದಂತೆ ನನ್ನ ತನುಮನ ಸಮೂಹಕ್ಕೆ ನಿಮ್ಮ ನೆನಹು ಎನ್ನುವ ಜ್ವಾಲೆ ತಾಗಿ ಸಾಯದಂತೆ ಸತ್ತೆನು. ಹುಲ್ಲಿನ ಹಗ್ಗದಲ್ಲಿ ಕಟ್ಟಿದ ಕಿಚ್ಚಿನಲ್ಲಿ ಬೇಯದಂತೆ ಬೆಂದೆನು ನಿಜಗುರು ಭೋಗೇಶ್ವರಾ ನಿಮ್ಮ ಸಂಗಸುಖವದೇಕೋ ಎಂದು ನುಡಿದಿರುವ ವಚನದಲ್ಲಿ ಪ್ರತಿಮೆಗಳು ತುಂಬಿ ಹೋಗಿ ಒಂದು ಹೊಸ ಅನುಭೂತಿಯನ್ನು ಪಡೆಯುವಂತಾಗುತ್ತದೆ. ಸರಳತೆ,ಸ್ಪಷ್ಟತೆಗಳು ತಕ್ಕಮಟ್ಟಿಗೆ ಈತನ ವಚನಗಳಲ್ಲಿ ಕಂಡು ಬರುತ್ತವೆ.
 ಮತ್ತೊಬ್ಬ ಅಜ್ಞಾತ ವಚನಕಾರನಾದ  ಬೊಕ್ಕಸದ ಚಿಕ್ಕಣ್ಣನು ಬಸವಣ್ಣ ಪ್ರಿಯ ನಾಗರೇಶ್ವರ ಲಿಂಗ ಅಂಕಿತದಲ್ಲಿ ರಚಿಸಿರುವ  10 ವಚನಗಳು ಸದ್ಯಕ್ಕೆ ಉಪಲಬ್ಧವಿದ್ದು ಆತನ ವಚನಗಳಲ್ಲಿ ಸಾಮಾಜಿಕ ಚಿಂತನೆಗಿಂತ ತತ್ವ ಪ್ರತಿಪಾದನೆಯನ್ನು ಹೆಚ್ಚಾಗಿ ಕಾಣ ಬಹುದಾಗಿದೆ.ತತ್ವ ಪ್ರತಿಪಾದನೆಗಾಗಿ ಬೊಕ್ಕಸವನ್ನೇ ರೂಪಕ,ಪ್ರತಿಮೆಯಾಗ ಬಳಸಿದ್ದಾನೆ ತನ್ನ ವೃತ್ತಿಯನ್ನೇ ತಾತ್ವಿಕ  ನೆಲೆಗಟ್ಟಿಗೆ ಹೊರಳಿಸಿದ್ದಾನೆ. ಈತನು ವಚನವೊಂದರಲ್ಲಿ ತನ್ನ ಕಾಯಕದ ಬಗೆಗೆ, ಎಲ್ಲರ ಪರಿಯಲ್ಲ ಎನ್ನ ಊಳಿಗ, ಬಸವಣ್ಣ ಚೆನ್ನ ಬಸವಣ್ಣ ಕೊಟ್ಟ ಕಾಯಕ, ಕಾಯಕ ಶುದ್ಧವಾಗಿದ್ದರೆ ಅದು ಮುತ್ತಾಗುತ್ತದೆ,ರತ್ನವಾಗುತ್ತದೆ, ವಜ್ರವಾಗುತ್ತದೆ. ಬೊಕ್ಕಸದ ಕಾಯಕದಲ್ಲಿ ಹುಸಿ ಕಳವು ಇಲ್ಲದಿರಬೇಕು. ಅದರಿಂದ ಲಿಂಗಾಂಗ ಸಾಧ್ಯವಾಗುತ್ತದೆ ( ವಚನ ಸಂಖ್ಯೆ 396) ಎಂದಿದ್ದಾನೆ. ಗೋವುಗಳ ಬಣ್ಣ ಬೇರೇ ಅವುಗಳ ಹಾಲು( ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ) ಒಂದೇ ಬಣ್ಣವಾದಂತೆ, ಕಾಯಕಗಳು ಹಲವು ಆದರೆ ಕಾಯಕದಲ್ಲಿ ಮಾಡುವ ಕಾರ್ಯ ಹಾಗೂ ಶರಣರೊಳಗೆ ಆಟ ಬೇರೆ ಬೇರೆ, ಆದರೆ ಲಿಂಗವನ್ನು ಕೂಡುವ ಕೂಟ ಒಂದೇ ಆಗಿರ ಬೇಕು. ಎಂಬ ಆತನ ಅನಿಸಿಕೆಯು ಆತನ  ಆಲೋಚನಾ ಕ್ರಮ ಪರಿಯನ್ನು ಪರಿಚಯಿಸುತ್ತದೆ. ಬೆಳಗಿನಿಂದ ರಾತ್ರಿ ಮಲಗುವ ವರೆಗಿನ ಚಟುವಟಿಕೆಗಳಲ್ಲಿ ಒಂದಕ್ಕೂ ಮತ್ತೊಂದಕ್ಕೂ ಸಾಮರಸ್ಯವಲ್ಲದಿರುವುದನ್ನು ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸ ಬೇಕು, ಉಷ್ಣವುಳ್ಳನ್ನಕ್ಕ ಶೀತವು ಪ್ರತಿಪಾದಿಸ ಬೇಕು ಎಂದು ಹೇಳುತ್ತಾ ಸಾಮರಸ್ಯದಲ್ಲಿ ಹೊಂದಾಣಿಕೆಯದ್ದು ಪ್ರಧಾನ ಪಾತ್ರವೆಂದು ಹೇಳಿರುವುದು ಮತ್ತು ಆತನ ಒಲವಿನಲ್ಲಿ ಕುಲವ ಕಾಣಬೇಕು ಎಂಬ ನುಡಿ ಮುತ್ತು ಇಂದು ಹೆಚ್ಚು ಪ್ರಸ್ತುತತೆಯನ್ನು ಪಡೆಯುತ್ತದೆ.
    ಕೂಗಿನ ಮಾರಯ್ಯನ 11 ವಚನಗಳು ಲಭ್ಯವಿದ್ದು ಮಹಾಮಹಿಮಾ ಮಾರೇಶ್ವರ ಎಂಬುದು ಅಂಕಿತವಾಗಿದೆ. ಪ್ರಸಿದ್ಧ ಶಿವಾನುಭಾವಿಯಾಗಿದ್ದ ಈತನ ಹೆಸರಿನ ಹಿಂದಿನ ಕೂಗಿನ ಎಂಬ ವಿಶೇಷಣವು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಇವನು ಶರಣರೊಡನಿದ್ದುಕೊಂಡು ಬಿಜ್ಜಳನ ಸೈನ್ಯ ಬಂದಾದ ಉಚ್ಛದನಿಯಲ್ಲಿ ಕೂಗು ಹಾಕುತ್ತಿದ್ದನು ಆಗ ಶರಣ ಪಡೆ ಎಚ್ಚತ್ತುಕೊಂಡು ಬಿಜ್ಜಳನ ಸೈನ್ಯದೊಂದಿಗೆ ಯುದ್ಧಮಾಡಲು ಸನ್ನದ್ಧವಾಗುತ್ತಿತ್ತು ಕಾರಣದಿಂದಾಗಿ ಈತನಿಗೆ ಕೂಗಿನ ಮಾರಯ್ಯ ಎಂಬ ಹೆಸರು ಬಂದುದ್ದಾಗಿ ಸಂಪಾದನೆಯ ಪರ್ವತೇಶನ ಚತುರಾಚಾರ್ಯ ಚರಿತದಿಂದ ತಿಳಿದು ಬರುತ್ತದೆ. ಅಜ್ಞಾತ  ವಿದ್ಯಾವಂತನಲ್ಲದ ವಚನಕಾರನ ವಚನದ ಅಭಿವ್ಯಕ್ತಿಯಲ್ಲಿ ಹೊಸತನ ಹಾಗೂ ಕಾವ್ಯದ ಸ್ಪೃರ್ಶಗುಣವನ್ನು ಕಾಣಬಹುದಾಗಿದೆ. ನಿದರ್ಶನಕ್ಕೆ, ಸತ್ಯದ ಖಚಿತ ಸ್ವರೂಪವನ್ನು ತಿಳಿಯದವನ ವಾಚಾರಚನೆಯಲ್ಲಿ ಅರ್ಥವಿಲ್ಲದಿರುವುದನ್ನು ಹೇಳುವಾಗ ಅವನು ಕೊಡುವ ಮೂರು ಸಾದೃಶ್ಯಗಳಾದ ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸ ಬಹುದೇ?, ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯ ಬಹುದೇ? ಮಣ್ಣಿನ ಹರಿಗೋಲನ್ನೇರಿ ನದಿಯ ಇನ್ನೊಂದು ದಡ ತಲುಪಬಹುದೇ?, ಇತ್ಯಾದಿ ಹೇಳಿಕೆಗಳು  ಕಾವ್ಯಮಯವಾಗಿರುವುದನ್ನು ಕಾಣಬಹುದಾಗಿದೆ.  ಅದೇ ರೀತಿ ಸಂಸಾರಿಗನಿಗೆ,ಸಂಕಲ್ಪಿಗೆ, ವಿಷಯ ಲಂಪಟನಿಗೆ, ಜೂಜು, ಬೇಟೆ, ಜಗಳ, ರಾಗದ್ವೇಷಗಳಿಂದ ಕೂಡಿರುವವನಿಗೆ, ತಥ್ಯ ಮಿಥ್ಯವನ್ನು ಹೊತ್ತಾಡುವವನಿಗೆ, ಮದಾಂಧನಿಗೆ ಭಕ್ತಿಸ್ಥಲ ಅಳವಡುದು ಎಂಬ ಹಾಗೂ ಮುಗ್ಧ,ಮೂಢ,ಕುಬ್ಜ, ಕುಷ್ಠ,ಅಂಧಕ, ಮೂಗ, ನಪುಂಸಕ- ಇವರು ಮುಕ್ತಿಯನ್ನು ಅನುಗ್ರಹಿಸದ ದೈವಗಳು. ದೈವಗಳಿಗೆ ಇಕ್ಕಿ,ಎರೆದು,ಕೊಟ್ಟು, ಕೊಂಡು ಭಕ್ತಿಯ ಮಾಡುವಾತ ಭಕ್ತನಲ್ಲ ಎಂಬ ನುಡಿಯಲ್ಲಿ ಖಂಡನಾ ವಾದವನ್ನು ಗುರುತಿಸ ಬಹುದಾಗಿದೆ. 12 ನೇಶತಮಾನದ ಸಮಾಜೋಧಾರ್ಮಿಕ ಆಂದೋಲನದ ಸಾಮೂಹಿಕ ಚಿಂತನೆಯ ಪರಿಧಿಯೊಳಗೆ ಕೂಗಿನ ಮಾರಯ್ಯನಂತಹ ಒಬ್ಬ ಅಜ್ಞಾತ ವಚನಕಾರ ಕಾಣಿಸಿಕೊಂಡಿರುವುದರ ಜೊತೆಗೆ ಚಿಂತಿಸುವ ಪ್ರವೃತ್ತಿ ಮತ್ತು ಕವಿಹೃದಯವನ್ನು ಪಡೆದುಕೊಂಡಿರುವುದು ಗಮನಿಸ ತಕ್ಕ ಸಂಗತಿಯಾಗಿದೆ.
   ತೆಲುಗೇಶ ಮಸಣಯ್ಯಾ ಅಜ್ಞಾತ ವಚನಕಾರನು ತೆಲುಗೇಶ್ವರ ಎಂಬ ಅಂಕಿತದಲ್ಲಿ ರಚಿಸಿರುವ 7 ವಚನಗಳು ಲಭ್ಯವಿವೆ. ಈತ ಗೋವಳಿಗನಾಗಿದ್ದು ಗೋವು ಕಾಯಕ ಮಾಡುತ್ತಿದ್ದ ಸಂಗತಿ ಆತನ ಗೋವಳಿಗ ವೇಷವನ್ನು ಕುರಿತ
ಹಳದಿ ಸೀರೆಯನುಟ್ಟು
ಬಳಹದೋಲೆಯ ಕಿವಿಯಲಿಕ್ಕಿ
ಮೊಳ  ಡಂಗೆಯ ಪಿಡಿದು
ಗುಲಗಂಜಿ ದಂಡೆಯ ಕಟ್ಟಿ
ತುತ್ತುರು ತುರು ಎಂಬ ಕೊಳಲ ಬಾರಿಸುತ
ಅಪಳ ಚಪಳನೆಂಬ ಉಲಿವ ಗಂಟೆಯ ಕಟ್ಟಿ
ತುತ್ತುರು ಜಂಗುಳಿ ದೈವಗಳನೆಲ್ಲವ ಹಿಂಡು ಮಾಡಿ ಕಾವ ನಮ್ಮ ಶಂಭೂ ತೆಲುಗೇಶ್ವರನ ಮನೆಯ ಗೋವಳನೀತ ಎಂಬ ವಚನದಿಂದ ತಿಳಿದು ಬರುತ್ತದೆ. ಜಂಗುಳಿ ಅಥವಾ ಕ್ಷುದ್ರ ದೈವಗಳನ್ನು ಗೋಳಾಡಿಸುವವನು ಎಂಬುದು ಹಾಗೂ ತೆಲುಗೇಶ್ವರ ಎಂಬ ಅಂಕಿತವನ್ನಿಟ್ಟುಕೊಂಡಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಅದೇ ರೀತಿ ಕರಕಷ್ಟದ ಮಾನವರು ಪರಪುಟ್ಟದ ಮರಿಯಂತೆ ಹರನ ದಾನವನುಂಡು ಬೇರೆ ಪರದೈವವುಂಟೆಂದು ಬೆಸಕೈವರು ಎಂಬಲ್ಲಿ ಈತನ ಏಕದೈವೇಶ್ವರ ವಾದದ ನಿಲುವನ್ನು ಕಾಣಬಹುದಾಗಿದೆ.
ಮಡಿವಾಳ ಮಾಚಿದೇವರ ನಿಕಟವರ್ತಿಯಾಗಿದ್ದ ಸಮಯಾಚಾರದ ಮಲ್ಲಿಕಾರ್ಜುನ ಎಂಬ ಅಜ್ಞಾತ ವಚನಕಾರನು ಪರಮ ಪಂಚಾಕ್ಷರ ಮೂರ್ತಿ ಶಾಂತಮಲ್ಲಿಕಾರ್ಜುನಯ್ಯ ಅಂಕಿತದಲ್ಲಿ ಬರೆದಿರುವ 5 ವಚನಗಳು ಸದ್ಯಕ್ಕೆ ಲಭ್ಯವಿವೆ. ಈತನ  ವಚನವೊಂದರಲ್ಲಿ ಇಷ್ಟಲಿಂಗವನ್ನು ಬಿಟ್ಟು ಸ್ಥಾವರ ಪ್ರತಿಮೆಗಳಿಗೆ ನಮಸ್ಕರಿಸುವವರನ್ನು ನರಕಿನಾಯಿಗಳೆಂದು ಕರೆದಿದ್ದಾನೆ.  ಈತನು ವಿಷಯ ಸ್ಪಷ್ಟತೆಗಾಗಿ ವಚನದಲ್ಲಿ ದೈನಂದಿನ ಜೀವನದ ಹೋಲಿಕೆಗಳನ್ನು ಕೊಡ ಮಾಡಿದ್ದಾನೆ. ತಾನು ಸಂಸಾರವು ಕೊಡುವ ಸುಖದಲ್ಲಿ ಪರವಶನಾಗಿದ್ದುದ್ದನ್ನು       ಸತಿಯ ನೋಡಿ ಸಂತೋಷವ ಮಾಡಿ
                        ಸುತರ ನೋಡಿ ಸುಮ್ಮಾನವ ಮಾಡಿ
                        ಮತಿಯ ಹೆಚ್ಚುವಿನೊಂದಿಗೆ ಮೈಮರೆದೊರಗಿ
                        ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು
                        ಮರುಳಾದುದನೇನೆಂಬೆ ಎಂದು(ವಚನಸಂ.796) ಎಂದು ಹೇಳಿಕೊಂಡಿದ್ದಾನೆ. ಈತನ ವಚನಗಳು ಗದ್ಯದ ಲಯವನ್ನು ನೆನಪಿಸುತ್ತವೆ.
        ವಚನಚಳುವಳಿಯು ಇತರೆ ಭಕ್ತಿ ಪಂಥದ ಚಳುವಳಿಗಿಂತ ಹಲವು ರೀತಿಯಲ್ಲಿ ವಿಶಿಷ್ಟವಾಗಿದೆ.ಎಲ್ಲ ಭಕ್ತಿ ಪಂಥಗಳೂ ಎಲ್ಲ ಮನುಷ್ಯರ ಆಧ್ಯಾತ್ಮಿಕ ಸಮಾನತೆಯನ್ನು ಪ್ರತಿಪಾದಿಸಿವೆ. ಆದರೆ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ್ದು ಮೊತ್ತ ಮೊದಲು ವಚನ ಚಳುವಳಿಯೇ, ಬ್ರಾಹ್ಮಣರಿಗೂ ದಲಿತರಿಗೂ ಅವರು ಶಿವಭಕ್ತರಾಗಿದ್ದರೆ ಯಾವುದೇ ಭೇದ ಅವರ ಮಧ್ಯೆ ಇರುವುದಿಲ್ಲವೆಂದು ಪ್ರತಿಪಾದನೆ ಮಾಡಿದ್ದು ಮಾತ್ರವಲ್ಲದೆ ಆ ಎರಡೂ ಜಾತಿಗಳ ಮಧ್ಯೆ ವಿವಾಹ ಸಂಬಂಧಕ್ಕೆ ಒಪ್ಪಿಗೆ ಕೊಟ್ಟು ಅಂತಹ ಕಾರ್ಯಕ್ಕೆ ಮುಂದಾದ ಏಕೈಕ ಉದಾಹರಣೆ ವಚನ ಚಳುವಳಿಯದು. ವ್ಯಕ್ತಿಯ ಹುಟ್ಟು ಏನೇ ಆಗಿರಲಿ, ಆ ವ್ಯಕ್ತಿಯ ವೃತ್ತಿ ಉಳಿದ ಯಾವುದೇ ವೃತ್ತಿಗೂ ಕಡಿಮೆಯಲ್ಲ ಎಂಬುದನ್ನು ಪ್ರತಿಪಾದಿಸಿದ ಮೊದಲ ಉದಾಹರಣೆ ಆ ಚಳುವಳಿಯದು. ಅದರಿಂದಾಗಿಯೇ ನೂರಕ್ಕೂ ಮೇಲ್ಪಟ್ಟು ಜಾತಿ, ಲಿಂಗ, ವೃತ್ತಿ, ಭೇದವಿಲ್ಲದೆ ವಿವಿಧ ವೃತ್ತಿಯ, ಜಾತಿಯ ವ್ಯಕ್ತಿಗಳು ಒಂದೆಡೆ ಸೇರಿ ತಮ್ಮ ಮನಸ್ಸಿನ ಭಾವನೆಗಳನ್ನು ವೃತ್ತಿ, ಜಾತಿ, ಕರ್ತವ್ಯ, ನೀತಿ, ಲೋಕ- ಪರಲೋಕ ಇತ್ಯಾದಿ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಯಿಸಿದ್ದು ಭಾರತೀಯ ಇತಿಹಾಸದಲ್ಲಿ ಅದೇ ಮೊದಲ ಬಾರಿ. ಎಲ್ಲಾ ವಚನಕಾರರು  ಒಂದೆಡೆ ಸೇರಿ  ವಚನ ಚಳುವಳಿಯು ಸಾಮಾಜಿಕ ಉದ್ದೇಶ್ಯಗಳಿಂದ ಪ್ರೇರಿತವಾಗಿ ವರ್ಣಾಶ್ರಮ ಧರ್ಮ ಹಾಗೂ ಜಾತಿ ಸಂಕೋಲೆಗಳ ಬಂಧನಗಳಿಗೆ ಈಡಾಗಿದ್ದ ಸಮಾಜವನ್ನು ಮತ್ತು ಜನತೆಯನ್ನು ಪಾರುಮಾಡಿ ಸಮಾನತೆಯ ಚೌಕಟ್ಟಿನಡಿಯಲ್ಲಿ ನವ ಸಮಾಜವನ್ನು ನಿರ್ಮಾಣ ಮಾಡುವುದರ ಜೊತೆಗೆ ಸಾಂಪ್ರದಾಯಿಕ ದ್ವಂದ್ವತೆಗಳನ್ನು ತಿರಸ್ಕರಿಸಿ ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಗೌರವಗಳನ್ನು  ಮೇಲ್ಕಂಡ  ಆಯಾಮಗಳಲ್ಲಿ ಮೂಡಿಸುವಂತಹ ನೆಲೆಯನ್ನು ತಲುಪಿದ್ದಾಗಿದೆ. ಈ ನಿಟ್ಟಿನಲ್ಲಿ ಅಜ್ಞಾತ ವಚನಕಾರರ ಕೊಡುಗೆಯೂ  ಗಮನಾರ್ಹವಾದುದ್ದಾಗಿದೆ.

  ಪರಾಮರ್ಶನ ಗ್ರಂಥಗಳು
1.     ಸಂಕೀರ್ಣ ವಚನಸಂಪುಟ- 3 ( ಸಂ. ಬಿ.ಆರ್.ಹಿರೇಮಠ)
          ಕನ್ನಡ ಸಂಸ್ಕೃತಿ ನಿರ್ದೇಶನಾಲಯ
           ಬೆಂಗಳೂರು.  1993
2.      ಸಂಕೀರ್ಣ ವಚನಸಂಪುಟ- 2. ( ಸಂ. ಎಸ್.ವಿದ್ಯಾಶಂಕರ)
ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ದ್ವಿತೀಯ ಪರಿಷ್ಕೃತ ಮುದ್ರಣ,
ಬೆಂಗಳೂರು.  2001
3. ಸಿ.ನಾಗಭೂಷಣ,  ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು
               ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2000
                ವೀರಶೈವಸಾಹಿತ್ಯ : ಕೆಲವು ಒಳನೋಟಗಳು
                ವಿಜೇತ ಪ್ರಕಾಶನ, ಗದಗ,2008
4,ಎಸ್.ವಿದ್ಯಾಶಂಕರ, ವೀರಶೈವ ಸಾಹಿತ್ಯ ಚರಿತ್ರೆ ಸಂ.1
 (ವಚನ ಸಾಹಿತ್ಯ) ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, 2013
5.    ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ
     ( ಪ್ರ.ಸಂ. ಹಾ.ಮಾ.ನಾಯಕ) ಸಂ.4
   ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು. 1977




  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...