ಭಾನುವಾರ, ಅಕ್ಟೋಬರ್ 8, 2023

 

                ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ

                                             ಸಿ.ನಾಗಭೂಷಣ

    

   “ಶೂನ್ಯಸಂಪಾದನೆ” ಕೃತಿಯು ಶರಣರ ವಚನಗಳನ್ನು ಬಳಸಿಕೊಂಡು ಶರಣರ ಜೀವನ ಚಿತ್ರವನ್ನು ಬಿಡಿಸುವ ಹಾಗೂ ಶರಣತತ್ವವನ್ನು ಪ್ರತಿಪಾದಿಸುವುದಾಗಿದೆ. ಶೂನ್ಯಸಂಪಾದನೆಯು ತನ್ನ ಸಮಕಾಲೀನ ಸಂದರ್ಭದ ಅಗತ್ಯಗಳಿಗೆ ಸ್ಪಂದಿಸಿದರೆ, ಶರಣರು ರಚಿಸಿದ ಮೂಲ ವಚನಗಳು ಸಮಕಾಲೀನತೆಯ ಜತೆಗೆ ಸಾರ್ವಕಾಲಿಕ ಸತ್ಯಗಳ ಪ್ರತಿಪಾದನೆಗಳನ್ನು ಒಳಗೊಂಡಿವೆ.

     ʻಶೂನ್ಯಸಂಪಾದನೆʼ ಎನ್ನುವ ಮಾತೇ ಬಹಳ ವಿಲಕ್ಷಣವಾದುದು, ಅದರಲ್ಲಿ ಮೇಲ್ನೋಟಕ್ಕೆ ಪರಸ್ಪರ ವಿರುದ್ಧವೆಂದು ತೋರುವ ಅರ್ಥಗಳನ್ನುಳ್ಳ ಎರಡು ಪದಗಳು ಹುದುಗಿವೆ. ʼಶೂನ್ಯʼ ಎನ್ನುವುದು ಯಾವುದೇ ವಸ್ತುವಿನ ಅಭಾವವನ್ನು, ಏನು ಇಲ್ಲದಿರುವಿಕೆಯನ್ನು ಸೂಚಿಸುತ್ತದೆ. ʻಸಂಪಾದನೆʼ ಎನ್ನುವುದು ವಸ್ತುವಿನ ಗಳಿಕೆ ಅಥವಾ ಪಡೆಯುವಿಕೆಯನ್ನು ಹೇಳುತ್ತದೆ. ಆದಾಗ್ಯೂ ಶೂನ್ಯತತ್ವದ ಸಂಪಾದನೆಯ ಕುರಿತಾದ ಮಾರ್ಗವನ್ನು  ಸೂಚಿಸುತ್ತದೆ.  ಜೊತೆಗೆ ಮಾನವನ ಬದುಕಿಗೆ ಮೂಲವಾಗಿ ಬೇಕಾಗಿರುವ ಆಧ್ಯಾತ್ಮದ ತಿರುಳನ್ನು ತಿಳಿಸಿಕೊಡುತ್ತದೆ.

    ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ನಡೆದ ಧಾರ್ಮಿಕ ಚಿಂತನೆಯಲ್ಲಿ ನಿರ್ಮಾಣವಾದ ವಚನಗಳ ವಾಸ್ತವಿಕತೆಯನ್ನು ಹದಿನಾರನೆಯ ಶತಮಾನದಲ್ಲಿ ಪೂರಕ ಸಾಮಗ್ರಿಗಳಿಂದ ಕಟ್ಟಿಕೊಡುವ ಪ್ರಯತ್ನ ನಡೆಯಿತು. ಶಿವಶರಣರು ಆಡಿದ ಮಾತನ್ನು ಬರಹಕ್ಕಿಳಿಸಿ ಅದನ್ನು ಅರ್ಥವಿಸುವ ಅನೇಕ ಪ್ರಯತ್ನಗಳು ನಂತರದ ಕಾಲದಲ್ಲಿ ನಡೆದವು. ಕಾವ್ಯ, ಪುರಾಣ ಸಂಕಲನ ಸಂಗ್ರಹ ಮೊದಲಾದ ಪ್ರಕಾರಗಳ ಮೂಲಕವೂ ಈ ಪ್ರಯತ್ನನಡೆಯಿತು. ಅಂತಹವುಗಳಲ್ಲಿ “ಶೂನ್ಯ ಸಂಪಾದನೆ”ಯು ಒಂದಾಗಿದೆ. ವೀರಶೈವ ತಾತ್ವಿಕ ಕೃತಿಗಳಲ್ಲಿ “ಶೂನ್ಯ ಸಂಪಾದನೆ” ಅತ್ಯಂತ ಮಹತ್ವದ ಕೃತಿಯಾಗಿದೆ. “ಶೂನ್ಯ ಸಂಪಾದನೆ ಶರಣಧರ್ಮದ ಪರಿಭಾಷೆಯಾಗಿ ತೋರಿದರೂ ಅದೊಂದು ವಿಶಿಷ್ಟ ಬಗೆಯ ವೀರಶೈವ ಪುನರುಜ್ಜೀವನ ಕಾಲದ ಸಂಕಲನ ಗ್ರಂಥ ಎಂಬುದು ಎಲ್ಲರೂ ತಿಳಿದಿರತಕ್ಕ ಸಂಗತಿಯಾಗಿದೆ. ಬಿಡಿವಚನಗಳೇ ಶೂನ್ಯ ಸಂಪಾದನೆಯ ಮೂಲಸಾಮಗ್ರಿಗಳಾಗಿದ್ದು, ಅವುಗಳಿಂದ ವಾಸ್ತವವಾಗಿ ನಡೆದಿರಬಹುದಾದ ಘಟನೆಗಳನ್ನು ನಾಟಕೀಯವಾಗಿ ಚಿತ್ರಿಸಿರುವುದೇ ಶೂನ್ಯ ಸಂಪಾದನೆಯ ಪ್ರಮುಖ ಗುರಿಯಾಗಿದೆ. ವಚನ ಕರ್ತೃಗಳು ರಚಿಸಿರುವ ಬಹುಪಾಲು ವಚನಗಳು. ಅವು ಯಾವ ಸಂದರ್ಭದಲ್ಲಿ ಹೊರಬಂದವು ಎಂಬುದಕ್ಕೆ ಸೂಚನೆಗಳು ಕಂಡುಬರದಿದ್ದರೂ ಮುಕ್ತಕಗಳಂತಹ ವಚನಗಳನ್ನು ಆರಿಸಿಕೊಂಡು ಅವುಗಳನ್ನು ಒಂದು ಸಂದರ್ಭದಲ್ಲಿಟ್ಟು, ಸಂಭಾಷಣೆಯ ರೂಪದಲ್ಲಿ ಹೆಣೆದು, ನಡುನಡುವೆ ಗದ್ಯದ ವಿವರಣೆಯನ್ನು ಕೊಟ್ಟು, ನಡುವೆ ಉತ್ತರ ಪ್ರತ್ಯುತ್ತರವಾಗಿ ಸಂಭಾಷಣೆಯು ಏರ್ಪಟ್ಟಿರುವಂತೆ ಹೊಂದಿಸಿ ಮಧ್ಯೆ ಮಧ್ಯೆ ಸಂಕಲನಕಾರ ವಿಷಯ ಸ್ಪಷ್ಟತೆಗಾಗಿ ತನ್ನ ಮಾತುಗಳನ್ನು ಜೋಡಿಸಿ ನಾಟಕೀಯ ಸನ್ನಿವೇಶಗಳನ್ನು ಚಿತ್ರಿಸಿದ ನೆಲೆಯಲ್ಲಿ ರೂಪಿತವಾಗಿದ್ದು  ಸ್ವತಂತ್ರ ಗ್ರಂಥದ ಸ್ಥಾನವನ್ನು  ಶೂನ್ಯಸಂಪಾದನೆ ಪಡೆದುಕೊಂಡಿದೆ. ಒಂದು ರೀತಿಯಲ್ಲಿ ಇದು ʻವಚನಕಾರರು ಎದುರಿಸಿದ ಸನ್ನಿವೇಶ ಮತ್ತು ಅಲ್ಲಿ ವ್ಯಕ್ತವಾಗುವ ಅವರ ಗುಣ ಸ್ವಭಾವಗಳನ್ನು  ಅವರು ಪಡೆದ ಶೂನ್ಯದ ಲಾಭವನ್ನು ಅವರವರ ಮಾತುಗಳ ಮೂಲಕವಾಗಿಯೇ ಹೊಮ್ಮಿಸಿರುವ ಒಂದು ಅಪೂರ್ವಗ್ರಂಥ ಎಂದರೂ ತಪ್ಪಾಗಲಾರದು.” ವಚನಗಳನ್ನು ಸಂಭಾಷಣೆಯ ರೀತಿಯಲ್ಲಿ ಜೋಡಿಸಿರುವ ಶೂನ್ಯ ಸಂಪಾದನೆಗಳು ಮರು ಓದಿನಿಂದ ಸೃಷ್ಟಿಯಾಗಿವೆ.

   ಶೂನ್ಯಸಂಪಾದನೆಗಳು ಸಿದ್ಧವಚನಗಳನ್ನು ಬಳಸಿಕೊಂಡು ಸಂವಾದರೂಪದಲ್ಲಿ ಹೆಣೆದ ಹೊಸ ರೀತಿಯ ಸಾಂಸ್ಕೃತಿಕ ಪಠ್ಯಗಳು ಎಂದು ವಿದ್ವಾಂಸರಿಂದ ಕರೆಯಿಸಿಕೊಂಡಿವೆ. ವಚನಕಾರರ ಜೀವನ ಹಾಗೂ ವಚನಗಳ ಮೂಲಕ ಸಾಂಸ್ಕೃತಿಕ ವಿದ್ಯಮಾನವಾಗಿ ಪರಿಣಮಿಸಿರುವ ಶೂನ್ಯ ಸಂಪಾದನೆಯು ಇಂದಿಗೂ ತನ್ನ ಮಹತ್ತರತೆಯನ್ನು ಕಾಯ್ದುಕೊಂಡಿದೆ. ಮುಕ್ತರ ಮಾರ್ಗ ವಚನಗಳನ್ನು ಉತ್ತರ-ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ, ಮರ್ತ್ಯಲೋಕದ ಮಹಾಗಣಂಗಳಿಗೆ ಮಹಾಪ್ರಸಂಗಮಂ ಮಾಡಿಕೊಡುವಂತಹ ಈ ಕೆಲಸವು ನಿಜವಾಗಿಯೂ ಒಂದು ಸೃಜನಶೀಲ ಸಾಹಿತ್ಯದಷ್ಟೇ ಸವಾಲಿನದಾಗಿತ್ತು. ಇದಕ್ಕೆ ಇದ್ದ ಅನುಕೂಲವೆಂದರೆ ವಚನಗಳ ಮುಕ್ತಕ ಸ್ವರೂಪ. ಒಂದು ಅರ್ಥದಲ್ಲಿ ಬಂಧನಕ್ಕೆ ಸಿಗದೆ ಬಹುಮುಖಿಯಾಗಿಯೂ ಸ್ವತಂತ್ರವಾಗಿ ಉಳಿಯುವ ವಚನಗಳ ಸ್ವಾಯತ್ತ ಸ್ವರೂಪದ ಅನುಕೂಲವು  ಬಹುಮಟ್ಟಿಗೆ ಶೂನ್ಯಸಂಪಾದನೆಯ ಸೃಷ್ಟಿಗೆ ಅನುಕೂಲವಾಗಿದೆ.

    ಶೂನ್ಯಸಂಪಾದನೆಯು ಅಪೂರ್ವ ಸಾಂಸ್ಕೃತಿಕ ಪಠ್ಯವೆನಿಸಲು ಕಾರಣ ಅದರಲ್ಲಿರುವ ಜಾನಪದ ಪರಂಪರೆಯ ಗುಣ ಎಂಬ ಅನಿಸಿಕೆಯನ್ನು ಈಗಾಗಲೇ ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಸರಿ ಅನ್ನಿಸಿದ್ದೆಲ್ಲವನ್ನು ಒಳಗೊಳ್ಳುವ ಗುಣ. ಒಳಗೊಂಡದ್ದನ್ನು ಅರಗಿಸಿಕೊಂಡು ಮೂರನೆಯದೊಂದನ್ನು ಹುಟ್ಟು ಹಾಕಲು ಯತ್ನಿಸುವ ಸಮನ್ವಯ ಗುಣ. ಶೂನ್ಯಸಂಪಾದನೆಯು ಆಧುನಿಕ ಮೌಲ್ಯಗಳ ಅರ್ಥದಲ್ಲಿ ಸಂವಾದವನ್ನು ಒಳಗೊಂಡಿರುವ ಪಠ್ಯವೇನಲ್ಲ. ಆದರೆ ಕನ್ನಡದಲ್ಲಿ ಕಳೆದ 500 ವರುಷಗಳ ಹಿಂದೆ ಇಂತಹದೊಂದು ಸಂವಾದ ರಚನೆಯನ್ನು ಕಲ್ಪಿಸಿಕೊಂಡ ಮನಸ್ಸು ಮಾತ್ರ  ಈ ಕಾಲಘಟ್ಟದಲ್ಲಿಯೂ ದೊಡ್ಡದು ಎಂದೆನಿಸುತ್ತದೆ. ಗತಕಾಲದ ಸಾಧನೆಯನ್ನು ಅದರ ಗ್ರಹಿಕೆಯೊಂದಿಗೆಯೂ ವರ್ತಮಾನದ ಸಾಧನೆಯನ್ನು ಅದರ ಮಿತಿಗಳೊಂದಿಗೂ ಸಂವಾದ ಮಾಡುವವರಿಗೆ ಶೂನ್ಯಸಂಪಾದನೆಯೂ  ಪ್ರೇರಣೆಯನ್ನು ಉಂಟು ಮಾಡಿದೆ.  

    ತುಮಕೂರು ಜಿಲ್ಲೆಯು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನ ಕಾಲದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ವಚನ ರಚನೆಯ ಪರಂಪರೆಯಲ್ಲಿಯೂ  ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತುಮಕೂರು ಪರಿಸರದ ಎಡೆಯೂರು, ಗುಬ್ಬಿ, ಗೂಳೂರು, ಅದರಂಗಿ ಸುತ್ತಮುತ್ತಲ ಪರಿಸರವು ಸಂಘಟನೆಯ ಪ್ರಧಾನ ಕೇಂದ್ರಗಳಾಗಿದ್ದು ವೀರಶೈವ ಧರ್ಮದ ಅಧ್ಯಯನ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು ಕಲ್ಪಿಸಿಕೊಟ್ಟವು. ಪರಿಣಾಮ ವೀರಶೈವ ಸಾಹಿತ್ಯ ಹುಲುಸಾಗಿ ಸೃಷ್ಟಿಯಾಯಿತು.  ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ.

  ತೋಂಟದ ಸಿದ್ಧಲಿಂಗಯತಿಗಳು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿ, ವಚನರಚನೆ ಮತ್ತು ವಚನಸಾಹಿತ್ಯ ಸಂರಕ್ಷಣೆಯ ಜೊತೆಗೆ ಆಕರ ವಸ್ತು ವಿನ್ಯಾಸ, ನಿರೂಪಣ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ  ಆದ ವೈಶಿಷ್ಠ್ಯವನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನ ಗಳಿಸಿರುವ ಶೂನ್ಯ ಸಂಪಾದನೆಗಳ ಪರಿಷ್ಕರಣ ಹೊಸದಿಕ್ಕನ್ನು ಹಿಡಿಯಲು ಕಾರಣಕರ್ತರಾದವರು. ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ವಚನ ಸಾಹಿತ್ಯದ ದ್ವಿತಿಯ ಘಟ್ಟದಲ್ಲಿನ ಕೈಗೊಳ್ಳುವುದರ ಮೂಲಕ ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ಈ ಕಾರ್ಯ ವಿಧಾನದಲ್ಲಿ ಆಧುನಿಕ ಸಂಶೋಧನೆ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ, ವಿಶ್ಲೇಷಣೆ ಎಂಬ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಅಲ್ಲಲ್ಲಿ ಅಡಗಿದ್ದ   ವಚನಗಳನು   ಶೋಧಿಸುವಲ್ಲಿ,   ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ,ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ, ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥ ಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ. ಪಾಶ್ಚಾತ್ಯರ ಮೂಲಕ ಆಧುನಿಕ ಗ್ರಂಥ ಸಂಪಾದನೆಯ  ತತ್ವಗಳು ನಮ್ಮಲ್ಲಿಗೆ ಪ್ರವೇಶಿಸುವ ಪೂರ್ವದಲ್ಲಿಯೇ ಆ ತತ್ವಗಳು ಸಂಕಲನಕಾರರಿಗೆ ತಿಳಿದಿದ್ದವು ಎಂಬುದು ದಾಖಲಾರ್ಹ ಸಂಗತಿಗಳಾಗಿವೆ.

   ಮೊದಲನೆ ಶೂನ್ಯ ಸಂಪಾದನಾಕಾರ ಶಿವಗಣ ಪ್ರಸಾದಿಮಹದೇವಯ್ಯನನ್ನು ಹೊರತು ಪಡಿಸಿ ಉಳಿದ ನಾಲ್ವರು ಶೂನ್ಯಸಂಪಾದನಾಕಾರರು ತುಮಕೂರು ಜಿಲ್ಲೆಯ ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರಾಗಿದ್ದಾರೆ. ಶೂನ್ಯಸಂಪಾದನೆಯ ಪರಿಷ್ಕರಣಗಳು ಗೂಳೂರು, ಗುಬ್ಬಿ, ಅದರಂಗಿ ಮತ್ತು ಗುಮ್ಮಳಾಪುರ ಇವುಗಳ ಸುತ್ತಲೇ ಅಂದರೆ ತುಮಕೂರು ಜಿಲ್ಲೆಯ ಪರಿಸರದಲ್ಲಿ ಸೃಷ್ಟಿಯಾದವುಗಳಾಗಿರುವುದು. ಇತ್ತೀಚಿನ ಸಂಶೋಧನೆಗಳು ಕೆಂಚವೀರಣ್ಣೊಡೆಯನು ಶೂನ್ಯಸಂಪಾದನೆ ಯನ್ನು ರಚಿಸಿದ್ದಾನೆನ್ನುವ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ವಾದವನ್ನು ಮತ್ತೇ ಜೀವಂತಗೊಳಿಸಿವೆ.  ಶೂನ್ಯಸಂಪಾದನೆಯಂತಹ ಮಹಾಪ್ರಸಂಗವೊಂದು ರೂಪುಗೊಂಡಿದ್ದು, ಅನಂತರ ಅದು ಅಂದಿನ ಧಾರ್ಮಿಕ ಅಗತ್ಯಗಳನ್ನು ಪೂರೈಸಲೆಂಬಂತೆ ಹೆಚ್ಚು ಮತೀಯವಾಗಿ ಪರಿಷ್ಕರಣಗೊಂಡಿದ್ದು, ಅದು ಮತ್ತೆ ಮಹಾದೇವಯ್ಯನ ದರ್ಶನದ ಜಾಡನ್ನೇ ಹಿಡಿದು ಕಲಾತ್ಮಕತೆಯನ್ನು ಒಳಗೊಳ್ಳುತ್ತಲೇ ತನ್ನ ಪರಿಧಿಯೊಳಕ್ಕೆ ಶರಣರ ಮಹಾದರ್ಶನದ ಎಳೆಗಳನ್ನು ಒಳಗೊಂಡಿದ್ದು ತುಮಕೂರು ಪರಿಸರದ ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ. 

      ಸದ್ಯಕ್ಕೆ ಮಾನ್ಯ ಮಾಡಿರುವ ನಾಲ್ಕು ಜನ ಶೂನ್ಯ ಸಂಪಾದಕರಲ್ಲಿ ಗೂಳೂರು ಸಿದ್ಧವೀರಣ್ಣೊಡೆಯ ನಾಲ್ಕನೆಯವನಾಗಿದ್ದಾನೆ. ಗೂಳೂರು ಸಿದ್ದವೀರಣ್ಣೊಡೆಯನು ನೇರವಾಗಿ ತೋಂಟದ ಸಿದ್ದಲಿಂಗಯತಿಗಳ ಶಿಷ್ಯನಾಗಿದ್ದು ತುಮಕೂರು ಜಿಲ್ಲೆಗೆ ಸಂಬಂಧಪಟ್ಟವನಾಗಿದ್ದಾನೆ. ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರ ಶಿಷ್ಯನಾಗಿದ್ದು, ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾನೆ.  ಗುಮ್ಮಳಾಪುರದ ಸಿದ್ಧಲಿಂಗರ ಪ್ರಭಾವ ತನ್ನ ಮೇಲೆ ಆಗಿರುವ ಬಗೆಗೆ ಸ್ವತಹ ಗೂಳೂರು ಸಿದ್ಧವೀರಣ್ಣೊಡೆಯನೇ ಕೃತಿಯ  ಕೊನೆಯಲ್ಲಿ ಉಲ್ಲೇಖಿಸಿದ್ದಾನೆ.  ಗೂಳೂರುಸಿದ್ಧವೀರಣ್ಣೊಡೆಯನು ತನ್ನ ಕೃತಿಯ ಸಮಾಪ್ತಿ ವಾಕ್ಯದಲ್ಲಿ ಬರುವ ಗದ್ಯಭಾಗ ಮತ್ತು  ಅನಂತರ ಬರುವ ಮೂರು ವೃತ್ತ ಮತ್ತು ಕಂದಪದ್ಯಗಳಲ್ಲಿ ತನ್ನ ಕೃತಿ ಬಗ್ಗೆ ಮತ್ತು ಗುರುಪರಂಪರೆಯ ಬಗೆಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾನೆ. ಈತನು ಬೋಳಬಸವೇಶ್ವರರಾದ ಮೇಲೆ ಅನುಕ್ರಮವಾಗಿ ಶೂನ್ಯಪೀಠದ ಗಾದಿಗೇರಿದನು. ಈತ ಶೂನ್ಯಸಂಪಾದನೆಯ ಪರಿಷ್ಕರಣವನ್ನು ಕೈಗೆತ್ತಿಕೊಂಡಿದ್ದು ಗಮನಾರ್ಹವಾದುದಾಗಿದೆ.   ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು ` ಇಲ್ಲಿ ವಚನಕ್ರಮ ತಪ್ಪಿದಡೆ ನಿಮ್ಮ ಪರಿಜ್ಞಾನದಿಂದ ತಿದ್ದಿಕೊಂಬುದೆಂದು ಎನಲಾಗಿ ಆ ವಾಕ್ಯವಿಡಿದು ಗುಮ್ಮಳಾಪುರದ ಸಿದ್ಧಲಿಂಗದೇವರು, ಅಲ್ಲಿ ಸಿದ್ಧರಾಮಯ್ಯದೇವರಿಗೆ ದೀಕ್ಷಾಕ್ರಮವಿಲ್ಲದಿರಲು, ಬಸವಾದಿ ಪ್ರಮಥರ ವಚನ ಪ್ರಸಿದ್ಧವಾಗಿ ಸೇರಿಸಿದರು. ಆ ಪರಿಯಲೆ, ಅನಿರ್ವಾಚ್ಯ ಪರಂಜ್ಯೋತಿಸ್ವರೂಪ ಷಟ್‍ಸ್ಥಲ ಸಂಪನ್ನ ಷಡುಲಿಂಗಾಂಗಭರಿತ,ಶರಣ ಜನಬಾಂಧವ, ಶರಣಜಹೃತ್ಕಮಲ ಕರ್ಣಿಕಾವಾಸ ಅನಾದಿ ಪರಶಿವನೆನಿಸುವ  ತೋಂಟದ ಸಿದ್ಧಲಿಂಗೇಶ್ವರನು. ಆ ತೋಟದ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳ ಬಸವೇಶ್ವರನು. ಆ ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯ ದೇವರೆಂಬ ದಿವ್ಯ ಜ್ಞಾನಾನುಭವಿಯು ಈ ಶೂನ್ಯಸಂಪಾದನೆಯಂ ರಚಿಸಿ  ಷಟ್ಸ್ಥಲ ಲಿಂಗಾಂಗ ಸಂಬಂಧಿಗಳಾಧ ವೀರಮಾಹೇಶ್ವರರುಗಳ ಶ್ರೀ ಪಾದಕ್ಕೆ ಸಮರ್ಪಿಸಿದೆನು”(ಗೂಳೂರು ಸಿದ್ಧವೀರಣ್ಣೊಡೆಯರಯ ರಚಿಸಿದ ಪ್ರಭುದೇವರ ಶೂನ್ಯಸಂಪಾದನೆ, ಪು.೫೬೧) ಎಂದು ಹೇಳಿಕೊಂಡಿದ್ದಾನೆ. ಮತ್ತೊಂದು ಪದ್ಯದಲ್ಲಿ ಗೂಳೂರು ಸಿದ್ಧವೀರೇಶ್ವರನೆಂಬ ಮಹಾನುಭಾವಿಯು ನಿತ್ಯ ನಿರಂಜನ ನಿರ್ಮಾಯನೆನಿಪ ʼಅಲ್ಲಮʼ ಪ್ರಭುದೇವರು ಸಮಸ್ತ ಮಹಾಗಣಂಗಳಿಗೆ ದಿವ್ಯ ಜ್ಞಾನ ಪ್ರಸಂಗಮಂ ಭೋದಿಸಿದ ಕ್ರಮಮಂ ಅಖಿಳ ಪುರಾತನರ ವಚನಂಗಳಿಂದ ಸಂಗ್ರಹಿಸಿದೆವು”. ( ಅದೇ, ಪು.೨) ಎಂದು ಹೇಳಿಕೊಂಡಿದ್ದಾನೆ.

   ತೋಂಟದ ಸಿದ್ಧಲಿಂಗನ ಶಿಷ್ಯನಾದ ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದರೂ ಕೊನೆಯ ಕಂದ ಪದ್ಯದಲ್ಲಿ ಈತ ತನ್ನನ್ನು ` ಗುರುತೋಂಟದ ಸಿದ್ಧೇಶನ ಚರಣಾಂಬೋಜಾತಮಂ ಸ್ಥಿರೀಕೃತ ಚಿತ್ತೋತ್ಕರ ಸಿದ್ಧವೀರಯೋಗೀಶ್ವರ ಎಂದು ಕರೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಿದ್ಧವೀರಣಾರ್ಯನು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯಪರಂಪರೆಯಲ್ಲಿಯೇ ಬಂದು ಅವರ ಪ್ರಶಿಷ್ಯರಾಗಿ ಗುಮ್ಮಳಾಪುರ ಸಿದ್ಧಲಿಂಗಯತಿಗಳ ತರುವಾಯ ಶೂನ್ಯಪೀಠದ ಅಧ್ಯಕ್ಷರಾಗಿದ್ದಾನೆ. ಈತನು ತನ್ನ ಗುರುವಿನ ಹೆಸರನ್ನು ಹೇಳುವಾಗ ತೋಟದ ಸಿದ್ಧಲಿಂಗರನ್ನು ಮತ್ತು ಬೋಳಬಸವರಿಬ್ಬರನ್ನು ಪ್ರಸ್ತಾಪ ಮಾಡುತ್ತಾನೆ. ಹೀಗಾಗಿ ತೋಂಟದ ಸಿದ್ಧಲಿಂಗ ಯತಿಗಳೂ ಮತ್ತು ಬೋಳಬಸವೇಶರೂ  ಈರ್ವರೂ ಗುರುಗಳಾಗಿದ್ದಾರೆ.   

   ಗೂಳೂರು ಸಿದ್ಧವೀರ ನ್ನನ್ನು “ಗೂಳೂರ ಸಿದ್ಧವೀರಾಚಾರ್ಯ' (ದ-೩), “ಗೂಳೂರುಸಿದ್ಧವೀರೇಶ್ವರ'(ಆದಿಗದ್ಯ.`ಗೂಳೂರಸಿದ್ಧವೀರಣ್ಣೊಡೆಯ'(ಪದ). ಗೂಳೂರುಸಿದ್ಧವೀರಯತೀಶ" (ಅತ್ಯವೃತ್ತ-೧). 'ಸಿದ್ಧವೀರಯತಿ' (ಂತ್ಯವೃತ್ತ-೨). `ಸಿದ್ಧವೀರಯೋಗೀಶ್ವರ” (ಅಂತ್ಯ ಕಂದ) - ಎಂದು ಮುಂತಾಗಿ ಕರೆದುಕೊಂಡಿದ್ದಾನೆ. ಈ ವಿಶೇಷಗಳಿಂದ ಆತ ಆಚಾರ್ಯನಾಗಿದ್ದ, ಯತಿ-ಶಿವಯೋಗಿ-ಒಡೆಯ ಎನಿಸಿದ್ದ ಎಂಬುದಾಗಿ ತಿಳಿದು ಬರುತ್ತವೆ. ಇದಕ್ಕೆ ಅವನ ಕೃತಿಯಲ್ಲಿ ಹೆಜ್ಜೆ ಹೆಜ್ಜೆಗೂ ನಿದರ್ಶನಗಳು ಎದುರಾಗುತ್ತವೆ.

    ಕ್ರಿ.ಶ.1603ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರ ವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ.( ಸಿ.ನಾಗಭೂಷಣ, ಕನ್ನಡ ಸಾಹಿತ್ಯ-ಸಂಸ್ಕೃತಿ ಬಾಗಿನ,ಪು.೧೬೮) ಈ ಹಸ್ತಪ್ರತಿಯ ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯಕ್ಕೆ ಆಕರವಾಗಿದೆ. ಗೂಳೂರುಸಿದ್ಧವೀರಣ್ಣನ ಕಾಲದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ತೋಂಟದ ಸಿದ್ಧಲಿಗರಶಿಷ್ಯಪರಂಪರೆಗೆ ಸೇರಿದವನಾದುದರಿಂದ ಈತನ ಕಾಲವನ್ನು ಸಿದ್ಧಲಿಂಗರ ಕಾಲದ(೧೪೭೦) ಹಿನ್ನೆಲೆಯಲ್ಲಿ ಈ ಮೊದಲು ೧೫೧೬ ಎದು ನಿರ್ಧರಿಸಲಾಗಿತ್ತು. ಆದರೆ ಈಚಿನ ಸಂಶೋಧನೆಯಿಂದ ತೋಂಟದ ಸಿದ್ಧಲಿಗರ ಕಾಲ ನೂರು ವರ್ಷ ಮುಂದೆ ಹೋಗಿರುವುದರಿಂದ, ಗೂಳೂರು ಸಿದ್ಧವೀರಣ್ಣನ ಕಾಲವನ್ನೂ ಸಹಜವಾಗಿ ಮುಂದೆ ಸರಿಸಬೇಕಾಗುತ್ತದೆ. ತೋಂಟದ ಸಿದ್ಧಲಿಂಗೇಶ್ವರರ ಪ್ರಶಿಷ್ಯನಾಗಿರುವ ಈತನಿಗೆ ಬೋಳಬಸವೇಶ್ವರನು ದೀಕ್ಷಾಗುರು. ಈತನು ಗುಮ್ಮಳಾಪುರದ ಸಿದ್ಧಲಿಂಗಯತಿಯನಂತರ ಶೂನ್ಯಪೀಠವನ್ನೇರಿದನೆಂದು ಹೇಳುವರು. ಸೋಮಶೇಖರ ಶಿವಯೋಗಿ 'ತೋಂಟದ ಸಿದ್ಧಲಿಂಗ- ಬೋಳಬಸವ-ಗುಮ್ಮಳಾಪುರದ ಸಿದ್ಧಲಿಂಗ -ಗೂಳೂರು ಸಿದ್ಧವೀರಯ್ಯ -ಗಗನದಯ್ಯ- ಕಟ್ಟಗೆಹಳ್ಳಿ ಸಿದ್ಧಲಿಂಗ ಮುರಿಗಿಶಾಂತವೀರ -ಮುರಿಗೆ ಗುರುಸಿದ್ದೇಶ್ವರ ಸೋಮಶೇಖರ ಶಿವಯೋಗಿ ಎಂದು ತನ್ನ ಗುರು-ಶಿಷ್ಯ ಪರಂಪರೆಯನ್ನು ಹೇಳಿಕೊಂಡಿದ್ದಾನೆ.  'ಉತ್ತಮ ಗುರು ಪರಂಪರೆಯೊಂದಿಗೆ ವಿರಕ್ತ ತೋಂಟದಾರ್ಯ, ಎಳಂದೂರು ಹರೀಶ್ವರರಂತಹ ಪ್ರಸಿದ್ಧ ಶಿಷ್ಯವರ್ಗವನ್ನು ಪಡೆದಿರುವನು.

ಸಿದ್ದನಂಜೇಶನ 'ರಾಘವಾಂಕ ಚಾರಿತ್ರ (೧೮ -೯೨) ದಲ್ಲಿ;

ಸುರಮನುಮುನಿ ಪ್ರಮಥಸಂಕುಳಕೆ ವಟಿಕುಜದ

ವರಮೂಲದಲ್ಲಿ ಕುಳಿತು ಸಕಲವೇದಾಗಮೋ

ತ್ಕರ ರಹಸ್ಯಂಗಳಂ ಬೋಧಿಸುವ ದಕ್ಷಿಣಾಮೂರ್ತಿಯಂದದಿ ಧರೆಯೊಳ್‌ |

ಪರತರ ಶ್ರೀ ವೀರಮಾಹೇಶ್ವರಾವಳಿಗೆ

ಗುರುಬಸವ ಪುರಾತನರೊರೆದ ವಚನಗಳ

ಹರುಷದಿಂ ಬೋಧಿಸುವ ಗೂಳೂರು ಸಿದ್ಧವೀರೇಶ್ವರಾಚಾರ್ಯ ಸಲಹು!" (ರಾಘವಾಂಕ ಚಾರಿತ್ರ ಸಂ: ಸ.ಸ.ಮಾಳವಾಡ. ೧೯೫೪: ೧೮-೯೨)ಎಂದು ಹೊಗಳಿರುವನು. ಈತನ ಶಿಷ್ಯ ವಿರಕ್ತ ತೋಂಟದಾರ್ಯನು ಗುರುವಿಗಾಗಿ 'ಪಾಲ್ಕುರಿಕಿ ಸೋಮೇಶ್ವರ ಪುರಾಣ'ಹಾಗೂ 'ಪ್ರಭುದೇವರ ಶೂನ್ಯಸಂಪಾದನೆ' ಯನ್ನು ಪ್ರತಿ ಮಾಡಿದ್ದಾನೆ.  ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯಕೇಂದ್ರದ ಹಸ್ತಪ್ರತಿ ಭಡಾರಕ್ಕೆ ಸೇರಿದ ತಾಡವೋಲೆ ಪ್ರತಿ ಸಂಖ್ಯೆ-ಕೆ. ಕೆ. ೨೨೯ ನೆಯ ಹಸ್ತಪ್ರತಿ ಕಟ್ಟಿನಲ್ಲಿ ಎರಡು ಕೃತಿಗಳಿವೆ.೧. ಎಲ್ಲ ಪುರಾತನರ ಬೆಡಗಿನ ವಚನಗಳು. ೨. ಶೂನ್ಯಸಂಪಾದನೆ. ಇದರಲ್ಲಿಒಟ್ಟು ೨೬೬ ಗರಿಗಳಿವೆ. ಶೂನ್ಯಸಂಪಾದನೆ ೧೪೫ನೆಯ ಗರಿಯಿಂದ ಆರಂಭವಾಗಿ೨೬೬ ಕ್ಕೆ ಮುಕ್ತಾಯವಾಗುತ್ತದೆ. ಗರಿಗಳಿಗೆ ಪುಟ ಸಂಖ್ಯೆ ಒಂದೆ ಕಡೆಗೆ ಹಾಕಲಾಗಿದೆ.ಅದನ್ನು ಎರಡುಪಟ್ಟು ಮಾಡಿದರೆ ಒಟ್ಟು ೨೪೨ ಪುಟಗಳಲ್ಲಿ ಈ ಕೃತಿ ವ್ಯಾಪಿಸಿಕೊಂಡಿದೆ ಎಂದು ವಿದಿತವಾಗುತ್ತದೆ. ಹಸ್ತಪ್ರತಿಯ ಉದ್ದ ೧೩ ೧/೨ ಇಂಚು, ಅಗಲ-೩ ಇಂಚು, ಅಕ್ಷರ-ಸಣ್ಣ,ಮಂಡಿಗೆ, ಪತಿ ಶುದ್ಧವಾಗಿದೆ, ಸಮಗ್ರವೆನಿಸಿದೆ. ಪ್ರತಿಯೊಂದು ಗರಿಯಲ್ಲಿ ೧೨ರಿಂದ ೧೫ ರವರೆಗೆ ಸಾಲುಗಳಿವೆ. ಹಸ್ತಪ್ರತಿ ಪುಷ್ಪಿಕೆಯ   ಆದಿಯಲ್ಲಿ 'ಶ್ರೀ ಗುರು ಬಸವಲಿಂಗಾಯನಮಃ ಮಂಗಳಮಸ್ತು ಪ್ರಭುದೇವರ ಶೂನ್ಯಸಂಪಾದನೆ ಶ್ರೀ" ಎಂದು,  ಅಂತ್ಯದಲ್ಲಿʻಸ್ವಸ್ತಿ ಶ್ರೀ ಜಯಾಭ್ಯುದಯ ಸಾಲಿವಾಹನ ಶಕ ವರುಷ ೧೫೩೮ ನೆಯ ನಳನಾಮ ಸಂವತ್ಸರ ಮಾಘ ಬಹುಳ ೧೪ ಸೋಮವಾರದಲ್ಲಿ ಗೂಳೂರಸಿದ್ಧವೀರೊಣ್ಣಡೆಯನಿಗೆ ನಂದಿಯ ಪುರದ ಪರ್ವತದೇವರ ಶಿಷ್ಯರು ತೋಟದ ದೇವರು ಲೇಖನ ಮಾಡಿದ ಪ್ರಭುದೇವರ ಶೂನ್ಯಸಂಪಾದನೆ ಸಮಾಪ್ತ ಮಂಗಳ ಮಹಾಶ್ರೀ” ಎಂದು ಈ ಪ್ರಶಸ್ತಿ ವಾಕ್ಯವು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿರುವ ಹಸ್ತಪ್ರತಿ ಭಂಡಾರದಲ್ಲಿಯ ಗೂಳೂರು ಶೂನ್ಯ ಸಂಪಾದನೆಯ ಕಾಗದ ಪ್ರತಿಯ ಕೊನೆಯಲ್ಲಿ ಬರುತ್ತದೆ.  ಬರೆಯಲಾಗಿದೆ. ಇದರಿಂದ ಈ ಹಸ್ತಪ್ರತಿ ಕ್ರಿ.ಶ.೧೬೧೬ (೧೫೩೮+೭೮=೧೬೧೬)ರಲ್ಲಿ ರಚಿತವಾದುದೆಂದೂ ಇದನ್ನು ಗೂಳೂರಸಿದ್ಧವೀರಣ್ಣೊಡೆಯನಿಗೆ (ಅಂದರೆ ಸ್ವತಃ ಕರ್ತೃವಿಗೆ) ನಂದಿಯ ಪುರದ ಪರ್ವತದೇವರ ಶಿಷ್ಯ ತೋಟದಯ್ಯ ಪ್ರತಿ ಮಾಡಿ ಕೊಟ್ಟನೆಂದೂ ತಿಳಿದು ಬರುವುದರಿಂದ ಇದು ಕರ್ತೃವಿನ ಜೀವಿತಕಾಲದಲ್ಲಿಯೇ ಸಿದ್ಧಪಡಿಸಿದ ಪ್ರತಿಯಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇದರ ಇನ್ನೊಂದು ಕಾಗದದ ಹಸ್ತಪ್ರತಿ ಮೈ.ವಿ.ವಿ. ಹಸ್ತಪ್ರತಿ ಭಾಂಡಾರದಲ್ಲಿರುವುದಾಗಿ ತಿಳಿದು ಬಂದಿದೆ. ಅದಕ್ಕೆ ಈ ತಾಳೆ ಪ್ರತಿ ಮೂಲವಾಗಿರಬೇಕು. ಈತನ ಕಾಲವನ್ನು ಎಂ. ಚಿದಾನಂದಮೂರ್ತಿಯವರು ಕ್ರಿ.ಶ. ೧೫೭೦- ೮೦ ಎಂದು ಹೇಳಿರುವರು. ಆರ್‌. ಸಿ. ಹಿರೇಮಠರು ಕ್ರಿ. ಶ. ೧೫೧೦ ಎಂದು ಅಭಿಪ್ರಾಯ ಪಟ್ಟಿದ್ದರೂ ಸಹ, ಸದ್ಯಕ್ಕೆ ಎಸ್‌.ಶಿವಣ್ಣನವರು ಲಭ್ಯವಿರುವ ಆಕರಗಳ ಹಿನ್ನೆಲೆಯಲ್ಲಿ ತಾಳಿರುವ ಗೂಳೂರು ಸಿದ್ಧವೀರಣ್ಣೊಡೆಯನ ಕಾಲ ಕ್ರಿ.ಶ. ೧೬೧೬ ಅನ್ನು ಪರಿಗಣಿಸಲಾಗಿದೆ.

     ಈ ಶೂನ್ಯಸಂಪಾದನೆಯನ್ನು ರಚಿಸಿದ ಪದ್ಧತಿಯು ಹೊಸ ಮಾದರಿಯದಾಗಿದೆ. ಈ ಪದ್ಧತಿಯನ್ನು ಅವನ ಹಿಂದೆ ಯಾರೂ ಅನುಸರಿಸಿಲ್ಲ. ಸಿದ್ಧವೀರಣಾಚಾರ್ಯನನ್ನು ನಾವು ಕರ್ನಾಟಕದ ಪ್ಲೇಟೊ ಎಂದು ಕರೆಯಬಹುದು ಎಂಬ ಹಳಕಟ್ಟಿಯವರ ಮಾತು ವಿಚಾರಾರ್ಹವಾಗಿದೆ. (ಫ.ಗು.ಹಳಕಟ್ಟಿ. ೧೯೩೦: ಪ್ರಸ್ತಾವನೆ ಪು. ೩-೪)  ಕಾಲಕಾಲಕ್ಕೆ ಪರಿಷ್ಕರಣಗೊಳ್ಳುತ್ತ ಬಂದ ಬಂದ “ಶೂನ್ಯಸಂಪಾದನೆ'ಗಳ ಸರಣಿಯಲ್ಲಿ ಗೂಳೂರು ಸಿದ್ಧವೀರಣ್ಣೊಡೆಯನದು ನಾಲ್ಕನೆಯದು” ಹಾಗೂ ಕೊನೆಯದು. ಆದರೆ ಪ್ರಸಿದ್ಧಿ ಹಾಗೂ ಜನಪ್ರಿಯತೆಯ ದೃಷ್ಟಿಯಿಂದ ಮೊದಲನೆಯದು. ಇದಕ್ಕೆ ಎಲ್ಲಕ್ಕಿಂತ ಮೊದಲು ಪ್ರಕಟವಾದದ್ದು ಒದು ಕಾರಣವಾದರೆ, ಹೆಚ್ಚು   ಅಚ್ಚುಕಟ್ಟಾಗಿರುವುದು ಮತ್ತೊಂದು ಕಾರಣ. ಕ್ರಿ.ಶ. 1930 ರಲ್ಲಿ ಫ.ಗು.ಹಳಕಟ್ಟಿಯವರು ತಮ್ಮ ಶಿವಾನುಭವ ಗ್ರಂಥಮಾಲಿಕೆಯ ಮೂಲಕ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಸಂಪಾದಿಸಿ ಪ್ರಥಮ ಬಾರಿಗೆ ಪ್ರಕಟಿಸಿದರು. ನಂತರದಲ್ಲಿ ಈ ಶೂನ್ಯಸಂಪಾದನೆಯನ್ನು 1958 ರಲ್ಲಿ ಶಿ.ಶಿ.ಭೂಸನೂರಮಠ ಅವರು ಸಂಪಾದಿಸಿ ಗುಲಬರ್ಗಾ ಜಿಲ್ಲೆಯ ರಾವೂರ ಶ್ರೀ.ಸಿದ್ಧಲಿಂಗೇಶ್ವರ ಮಠದ ಮೂಲಕ ಪ್ರಕಟಿಸಿದರು. ೧೯೫೮ರಲ್ಲಿ ಸಂ.ಶಿ. ಭೂಸನೂರಮಠರು ಇದನ್ನೇ ಮತ್ತೊಮ್ಮೆ ಶಾಸ್ತ್ರೀಯವಾಗಿ ಪರಿಷ್ಕರಿಸಿ ಪ್ರಕಟಿಸಿದರು. ೧೯೬೫. ೧೯೮೬, ೧೯೯೯ರಲ್ಲಿ ಮರುಮುದ್ರಣಗಳು ಹೊರಬಂದವು. ಈ ಕೃತಿಯನ್ನೇ ಆಧರಿಸಿ ಭೂಸನೂರ ಮಠರು ೧೯೬೯ರಲ್ಲಿ 'ಶೂನ್ಯಸಂಪಾದನೆಯ ಪರಾಮರ್ಶೆ"ಎಂಬ ಬೃಹತ್‌ ವ್ಯಾಖ್ಯಾನ ಗ್ರಂಥವನ್ನು ರಚಿಸಿದರು. ಜ.ಚ.ನಿ. ಅವರಿಂದ "ಸಂಪಾದನೆಯ ಸಂಪಾದನೆಯ ಸೊಂಪು” ಗ್ರಂಥದ ನಾಲ್ಕು ಸಂಪುಟಗಳು ಹೊರಬಂದವು (೧೯೭೭-೭೯). ಜೋಳದರಾಶಿ ದೊಡ್ಡನಗೌಡರ “ಬಯಲಗಳಿಕೆಯ ಬೆಳಗು” ಕೂಡ ಇದೇ ಕೃತಿಯನ್ನು ಆಧರಿಸಿದೆ (೧೯೮೫) ಮಠ-ಮಾನ್ಯಗಳಲ್ಲಿ ಪ್ರವಚನ ಗಂಥವಾಗಿ, ವಿಶ್ವವಿದ್ಯಾಲಯಗಳಲ್ಲಿ' ಪಠ್ಯಪ್ರಸ್ತಕವಾಗಿ ಇದು ಬಳಕೆಗೊಂಡಿತು. ಇದರ ಇಂಗ್ಲಿಷ್‌ ಅನುವಾದವನ್ನು ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಸಿತು(೧೯೬೫-೭೨). ನಂತರದಲ್ಲಿ ಎಂ.ಎಂ.ಕಲಬುರಗಿ ಮತ್ತು ವೀರಣ್ಣ ರಾಜೂರ ಅವರು ಈ ಶೂನ್ಯಸಂಪಾದನೆಯನ್ನು ಸಂಪಾದಿಸಿ ಗದುಗಿನ ಲಿಂಗಾಯತ ಅಧ್ಯಯನಸಂಸ್ಥೆಯ ಮೂಲಕ ೨೦೧೬ ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿ ಪರಿಷ್ಕರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯಕೇಂದ್ರದ ಹಸ್ತಪ್ರತಿ ಭಾಂಡಾರಕ್ಕೆ ಸೇರಿದ ತಾಡವೋಲೆ ಪ್ರತಿ ಸಂಖ್ಯೆ-ಕೆ. ೨೨೯ನ್ನು ಮೂಲ ಪ್ರತಿಯಾಗಿ ಬಳಸಿಕೊಂಡಿದ್ದಾರೆ ಮತ್ತು  ಪ್ರೊ.ಭೂಸನೂರಮಠ ಅವರ ಮುದ್ರಿತ ಕೃತಿಯನ್ನು ಪೂರಕ ಪ್ರತಿಯನ್ನಾಗಿ ಸ್ವೀಕರಿಸಿ ಸಂಪಾದನೆ ಮಾಡಿದ್ದಾರೆ. ಇಂದು ಆಧುನಿಕ ಕಾಲ ಘಟ್ಟದಲ್ಲಿ ಶೂನ ಸಂಪಾದನೆಯ ಕುರಿತು ಬಂದಿರುವ ಹೊಸ ನೆಲೆಯ ಕೃತಿಗಳಿಗೆ ಮೂಲ ಈ ಶೂನ್ಯ ಸಂಪಾದನೆಯೇ ಆಗಿದೆ.

   ಹೀಗೆ ಅನೇಕ ರೀತಿಯಲ್ಲಿ ಇದಕ್ಕೆ ದೊರೆತ ಪ್ರಚಾರದಿಂದಾಗಿ, "ಶೂನ್ಯಸಂಪಾದನೆ"ಎಂದರೆ ಗೂಳೂರು ಸಿದ್ಧವೀರಣ್ಣನ “ಶೂನ್ಯಸಂಪಾದನೆ`ಯೇ ಎನ್ನುವಷ್ಟರ ಮಟ್ಟಗೆ ಇದು ಜನಮನದಲ್ಲಿ ಬೇರೂರಿದೆ. ಇಂದಿಗೂ ಹೆಚ್ಚು ಪ್ರಸಾರದಲ್ಲಿದ್ದು, ನ್ನ ಜನಪ್ರಿಯತೆಯನ್ನು ಹಚ್ಚಹಸಿರಾಗಿ "ಉಳಿಸಿಕೊಂಡಿರುವ  ಶೂನ್ಯ ಸಂಪಾದನೆಯು ಗೂಳೂರು ಸಿದ್ದವೀರಣ್ಣೊಡೆಯನ `ಶೂನ್ಯಸಪಾದನೆಯೇ ಆಗಿದೆ  ಎಂಬುದು ಗಮನಿಸತಕ್ಕ ಸಂಗತಿಯಾಗಿದೆ.

     ಶಿವಗಣ ಪ್ರಸಾದಿ ಮಹಾದೇವಯ್ಯನು ಮೊದಲು ರೂಪಿಸಿದ ಶೂನ್ಯಸಂಪಾದನೆಯ ತಳಹದಿ ಹಾಗೂ ಆ ಚೌಕಟ್ಟಿನಲ್ಲಿಯೇ ನಂತರದ ನಾಲ್ಕು ಶೂನ್ಯ ಸಂಪಾದನೆಗಳ ಪರಿಷ್ಕರಣೆ ಹಾಗೂ ಕೆಲವು ನೂತನ ಪ್ರಸಂಗಗಳ ಸೇರ್ಪಡೆಯೊಂದಿಗೆ ರೂಪಿಸಲ್ಪಟ್ಟಿವೆ. ಶೂನ್ಯ ಸಂಪಾದನಾ ಸಂಕಲನ ಕೃತಿಗಳಲ್ಲಿ ಹೆಚ್ಚಿನ ಶರಣರ ವಚನಗಳು ಸಂದರ್ಭಕ್ಕನುಸಾರವಾಗಿ ಸೇರಲ್ಪಟ್ಟಿವೆ.

    ಈತನು ತನ್ನ ಸಂಪಾದನೆಯಲ್ಲಿ ಶಿನಗಣಪ್ರಸಾದಿ ಮಹಾದೇವಯ್ಯನನ್ನು ಮತ್ತು ಗುಮ್ಮಳಾಪುರದ ಸಿದ್ಧಲಿಂಗಯತಿಯನ್ನು ಸ್ಮರಿಸಿರುವನು. ಹಲಗೆಯಾರ್ಯನನ್ನು ಸ್ಮರಿಸಿಲ್ಲ. ಇದರಲ್ಲಿ ಅವನು ಹಿಂದಿನ ಶೂನ್ಯಸಂಪಾದನೆಯಲ್ಲಿ ಕಂಡುಬಂದಿರುವ ಸಮಸ್ಯೆಗಳಿಗೆ ತನಗೆ ಅನಿಸಿದ ರೀತಿಯಲ್ಲಿ ಪರಿಹಾರವನ್ನು ಹೇಳುತ್ತಾ, ಕೆಲವು ಹೊಸ ಸಂಗತಿಗಳನ್ನು ಸೇರಿಸುವುದರೊಂದಿಗೆ, ಹಿಂದಿನವರು ಅಖಂಡವಾಗಿ ಹೇಳಿರುವುದನ್ನು ೨೧ ಖಂಡವನ್ನಾಗಿ ಮಾಡಿ ಅವುಗಳಿಗೆ 'ಸಂಪಾದನೆ' ಎಂಬ ಹೆಸರನ್ನು ಕೊಡುವುದರ ಜೊತೆಗೆ ವ್ಯವಸ್ಥಿತವಾದ ರೂಪವನ್ನು ಕೊಟ್ಟಿರುವನು. ಕನ್ನಡ ಸಾಹಿತ್ಯವಲ್ಲದೇ ವಿಶ್ವ ಸಾಹಿತ್ಯದಲ್ಲಿಯೇ ವಿಶೇಷವಾದ ಸ್ಥಾನವನ್ನು ಶೂನ್ಯ ಸಂಪಾದನೆಯು ಪಡೆಯುವಲ್ಲಿ ಗೂಳೂರು ಸಿದ್ಧವೀರಣ್ಣೊಡೆಯನ  ಪಾತ್ರವು ಹಿರಿದು.

   ಶೂನ್ಯಸಂಪಾದನೆಯು ಹಲವು ಸಂಕಲನಕಾರರ ಕೈಯಲ್ಲಿ ಪರಿಷ್ಕರಣೆಗೆ ಒಳಪಟ್ಟಿದ್ದು ಇಂತಹ ಪರಿಷ್ಕೃತವಾದುದನ್ನು ಗೂಳೂರು ಸಿದ್ಧವೀರಣ್ಣೊಡೆಯರು ಮತ್ತೊಮ್ಮೆ ಕೈಗೆತ್ತಿಕೊಂಡು ಅದಕ್ಕೆ ಒಂದು ಹೊಸ ರೂಪವನ್ನು ಕೊಟ್ಟರು, ಈತನು ಕೃತಿಯನ್ನು ಸಂಧಿಗಳನ್ನಾಗಿ ವಿಭಾಗಿಸಿ ಅವುಗಳನ್ನು ಸಂಪಾದನೆ ಅಥವಾ ಉಪದೇಶವೆಂದು ಹೆಸರಿಸಿದ್ದಾನೆ. ಉಪದೇಶದ ಆರಂಭದಲ್ಲಿ ಕಂದ ಪದ್ಯ ಬಳಸಿರುವುದು ಕಂಡು ಬರುತ್ತದೆ. ಉಪದೇಶದ ಕೊನೆಯಲ್ಲಿ ಸಮಾಪ್ತಿಯ ಗದ್ಯವನ್ನು ಬರೆದು ಉಪದೇಶದ ಹೆಸರೂ ಹಾಗೂ ಅದುವರೆಗೂ ಬಳಸಿಕೊಂಡಿರುವ ಸಂಖ್ಯೆಯನ್ನು ಕೊಟ್ಟಿದ್ದಾನೆ. ಇವನ ವಿಭಾಗ ಕ್ರಮದ ಅನುಕ್ರಮಣಿಕೆ ಮೊದಲ ಮೂರು ಶೂನ್ಯ ಸಂಪಾದನಾಕಾರರಲ್ಲಿ ಗೋಚರಿಸುವುದಿಲ್ಲ ಆದ್ದರಿಂದ ಇದು ಹೊಸತನವಾದುದೆಂದೆನಿಸುತ್ತದೆ.

   ಈ ಶೂನ್ಯಸಂಪಾದನೆಯಲ್ಲಿ ಇಪ್ಪತ್ತೊಂದು ಉಪದೇಶಗಳಿವೆ ಹಾಗೂ ಮೋಳಿಗೆಯ ಮಾರಯ್ಯ ಮತ್ತು ಗಟ್ಟಿವಾಳಯ್ಯ ಎಂಬ ಎರಡು ಹೊಸ ಸನ್ನಿವೇಶಗಳನ್ನು ನಿರೂಪಿಸಿದ್ದಾನೆ. ಶೂನ್ಯ ಸಂಪಾದನೆಯು ಶಿವಗಣಪ್ರಸಾದಿ ಮಹಾದೇವಯ್ಯನಿಂದ ಪ್ರಾರಂಭವಾಗಿ ಗೂಳೂರು ಸಿದ್ಧವೀರಣ್ಣೊಡೆಯರಲ್ಲಿ ಪೂರ್ಣತೆ ಪಡೆದಿದೆ ಎಂದೇಳಬಹುದು.

      ಶೂನ್ಯಸಂಪಾನೆಯು ಪರಿಷ್ಕರಣಗಳಲ್ಲಿ ಹೊಸ ಹೊಸ ಪ್ರಸಂಗಗಳು ಕೂಡಿಕೊಂಡು ಜೊತೆಜೊತೆಯಲ್ಲಿಯೇಮೂಲದಲ್ಲಿದ್ದ ಪ್ರಸಂಗಗಳು ಅರ್ಥಪೂರ್ಣವಾಗಿ ಗೂಳೂರು ಸಿದ್ಧ ವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯಸಂಪಾದನೆಯಲ್ಲಿ ಮೂಡಿಬಂದಿದೆ. ಶೂನ್ಯವನ್ನು ಸಂಪಾದಿಸಿದ ಹಲವು ಶರಣರ ಚರಿತ್ರೆಗಳು ಶೂನ್ಯ ಸಂಪಾದನೆಯಲ್ಲಿ ಕಾಣಬರುತ್ತವೆ. ಶೂನ್ಯ ಸಂಪಾದನೆಯಲ್ಲಿ ಅಲ್ಲಮಪ್ರಭುವೇ ಕೇಂದ್ರ ವ್ಯಕ್ತಿಯಾದ್ದರಿಂದ ಶೂನ್ಯ ಸಂಪಾದನೆಗೆ ಪ್ರಭುದೇವರ ಶೂನ್ಯ ಸಂಪಾದನೆ ಎಂಬ ಪರ್ಯಾಯ ಹೆಸರು ಉಂಟು. ಅಲ್ಲಮಪ್ರಭು ತನ್ನ ಜೀವಿತದುದ್ದಕ್ಕೂ ಹಲವಾರು ವ್ಯಕ್ತಿಗಳನ್ನು ಸಂದರ್ಶಿಸಿದವನು. ನಿಜವಾಗಿಯೂ ಜ್ಞಾನಿಯಾಗಿದ್ದರೂ ಅಣ್ಣನ ಸಾವಿನಿಂದ ಜರ್ಝರಿತವಾಗಿ ಶೋಕಿಸುತ್ತಿದ್ದ ಮುಕ್ತಾಯಕ್ಕ, ಕೇವಲ ಲೌಕಿಕ ಕಾಯಕದಲ್ಲಿಯೆ ತಲ್ಲೀನನಾಗಿ ಅದರಾಚೆಯ ಪರವಸ್ತುವನ್ನು ಅಲಕ್ಷಿಸಿದ್ದ ತೋಟಿಗಗೊಗ್ಗಯ್ಯ, ಕಾಯಕ ಯೋಗಿ ಸಿದ್ಧರಾಮ, ಅಧ್ಯಾತ್ಮ ಸಾಧನೆಯಲ್ಲಿ ಉನ್ನತ ಹಂತವನ್ನು ಮುಟ್ಟಿದ್ದ ಆದರೆ ಬಹುಜನರಿಗೆ ಅಜ್ಞಾತವಾಗಿದ್ದಮರುಳಶಂಕರದೇವ, ಗೋರಕ್ಷ, ಅಕ್ಕಮಹಾದೇವಿ ಇತ್ಯಾದಿ ಶರಣ ಶರಣೆಯರು ಅಲ್ಲಮನೊಡನೆ ಸಂಭಾಷಿಸಿ ಆತನ ಜ್ಞಾನದ ಬೆಳಕಿನಲ್ಲಿ ತಮ್ಮ ಅರಿವಿನ ಮಾರ್ಗವನ್ನು ಕೈಗೊಂಡು ಶೂನ್ಯವನ್ನು ಸಂಪಾದಿಸಿಕೊಂಡ ವಿವರವೇ ಶೂನ್ಯ ಸಂಪಾದನೆಯಲ್ಲಿ ಪ್ರಮುಖ ಭಾಗವಾಗಿದೆ. ಶೂನ್ಯಸಂಪಾದನೆಯಲ್ಲಿ ಬರುವ ಪಾತ್ರಗಳೆಲ್ಲವೂ ಶಿವಶರಣರ ಪಾತ್ರಗಳಾಗಿವೆ. ಅಲ್ಲದೇ ಅವುಗಳನ್ನು ಅವರ ವಚನಗಳ ಮೂಲಕವೇ ಚಿತ್ರಿಸಿರುವರು. ಪಾತ್ರಗಳ ವ್ಯಕ್ತಿತ್ವ ಮೂಲವಾದ ಘಟನಾವಳಿ ಸನ್ನಿವೇಶಗಳ ಮೂಲಕ ಕಲಾಕೃತಿ ಕಥಾವಸ್ತು ರೂಪ ತಾಳುತ್ತದೆ. ಸೀಮಿತ ಪಾತ್ರ ಸಂಖ್ಯೆಯಂತೆಯೇ ಆಯ್ದ ಸನ್ನಿವೇಶಗಳ ಮೂಲಕ ಕಥೆಯ ಸಾಂದ್ರತೆ ಇನ್ನೂ ಯಶಸ್ವಿಯಾಗಿ ಫಲಿಸುತ್ತದೆ. ಈತನ ಶೂನ್ಯ-ಸಂಪಾದನೆಯು ಒಂದು ಅನುಭಾವ ಕೃತಿಯಾಗಿರುವುದರಿಂದ ಇಲ್ಲಿ ಪಾತ್ರಗಳ ಚಿತ್ರಣಕ್ಕಿಂತ ತತ್ತ್ವಪ್ರತಿಪಾದನೆಯು ಮುಖ್ಯವಾಗಿದೆ. ಇಲ್ಲಿ ಹಲವು ಶರಣರ ಪಾತ್ರಗಳು ಕಾಣಿಸಿಕೊಳ್ಳಬೇಕಾದುದರಿಂದ ಅವುಗಳ ಗಾತ್ರ ಚಿಕ್ಕದಾಗಿ ಕಾಣುತ್ತದೆ. ಅವುಗಳ ಚಟುವಟಿಕೆಗೆ ಸಂಪೂರ್ಣ ಅವಕಾಶವನ್ನು ಕೊಟ್ಟಿಲ್ಲವಾದರೂ, ಪರಿಮಿತ ಅವಕಾಶದಲ್ಲಿಯೇ ಪೂರ್ಣಪ್ರಮಾಣದ ಚಿತ್ರಗಳನ್ನು ಕೊಡಲು ಸಾಧ್ಯವಿಲ್ಲವೆಂಬ ಹಿನ್ನೆಲೆಯಲ್ಲಿಯೇ ಶೂನ್ಯಸಂಪಾದನೆಯ ಪಾತ್ರಗಳನ್ನು ಪರಿಗಣಿಸಬೇಕಾಗುತ್ತದೆ.   

   ಈತನು ಶೂನ್ಯ ಸಂಪಾದನೆಯನ್ನು ಇದು ಪರಮಗುರು ಪರಮ ವೀರಶೈವ ಸಿದ್ಧಾಂತ ತತ್ವಜ್ಞಾನ; ಇದು ವೀರಶೈವಾಚಾರ ಪ್ರತಿಷ್ಠಾಪನಾಚಾರ್ಯ; ಇದು ದಿವ್ಯ ವೇದಾಂತ ಶಿರೋಮಣಿ; ಇದುಸಮಸ್ತ ಶಾಸ್ತ್ರ ಮುಖ್ಯ ಮುಖದರ್ಪಣ; ಇದು ಮಹಾಜ್ಞಾನ ಪ್ರವರ್ಧನಪರಮಾನುಭಾವ ಸಂಜೋಧೆ; ಇದು ಸರ್ವಾಚಾರ ಸಂಪನ್ನ ಸಮಾರೂಢಸಂಗ್ರಹ; ಇದು ಪರಮ ರಾಜಯೋಗ ಸಾಧ್ಯ ಸಂಪಾದನ ಎಂದು ಕರೆದು ಕೊಂಡಿದ್ದಾನೆ.( ಪ್ರಭುದೇವರ ಶೂನ್ಯ ಸಂಪಾದನೆ, ಪು.೫೬೦) ಈ ಶೂನ್ಯ ಸಂಪಾದನೆ ಕೃತಿಯ ಸ್ವರೂಪ ವೆಂದರೆ, ಇದರ ಪ್ರತಿ ಅಧ್ಯಾಯದ ಆರಂಭದಲ್ಲಿ ಒಂದೊಂದು ಕಂದಪದ್ಯವಿದ್ದು, ಅದರಲ್ಲಿ ಆ ಭಾಗದ ಪ್ರಸಂಗದ ಸಾರಸಂಗ್ರಹ ಕೊಡಲಾಗಿದೆ.  ಗೂಳೂರು ಸಿದ್ಧವೀರಣ್ಣೊಡೆಯನು ಈ ಶೂನ್ಯ-ಸಂಪಾದನೆಯನ್ನು ಸಂಕಲಿಸುವಲ್ಲಿ ಒಟ್ಟು ೧೪೩೦ ವಚನಗಳು, ೨೧ ಹಾಡುಗಳನ್ನು ಬಳಸಿದ್ದಾನೆ.

  ಗೂಳೂರ ಸಿದ್ಧವೀರಣ್ಣನ “ಶೂನ್ಯಸಂಪಾದನೆ' ೨೧ ಅಧ್ಯಾಯಗಳಲ್ಲಿ ವಿಭಜನೆಗೊಂಡಿದೆ.ಅಧ್ಯಾಯಗಳನ್ನು "ಉಪದೇಶ' ಎಂದು ಕರೆಯಲಾಗಿದೆ. ಇವುಗಳಲ್ಲಿ ೧೬ ಉಪಸಂಪಾದನೆಗಳಿದ್ದರೆ. ೫ ಭಿನ್ನ ಪ್ರಸಗಗಳು ಇವೆ. ಮೊದಲಿನ ಮೂರು ಶೂನ್ಯಸಂಪಾದನೆಗಳು ಭಾಗಗಳನ್ನು ಮಾಡಿಕೊಳ್ಳದೆ ಅಖಂಡವಾಗಿ ಸಾಗುತ್ತವೆ. ಆದರೆ ಈತನು ತನ್ನ ಶೂನ್ಯಸಂಪಾದನೆಯಲ್ಲಿ ೨೧ ಅಧ್ಯಾಯಗಳನ್ನು ಮಾಡಿಕೊಂಡು ಅವುಗಳಿಗೆ ಉಪದೇಶ ಅಥವಾ ಸಂಪಾದನೆಯೆಂದು ಕರೆದಿದ್ದಾನೆ. ಇವುಗಳಲ್ಲಿ ೧೬ ಉಪಸಂಪಾದನೆಗಳಿವೆ, ೫ ಭಿನ್ನಪ್ರಸಂಗಗಳಿವೆ.ಅವುಗಳು ಈ ಕೆಳಕಂಡಂತಿವೆ. ೧. ಪ್ರಥಮೋಪದೇಶ ೨. ಮುಕ್ತಾಯಕ್ಕಗಳ ಸಂಪಾದನೆ ೩. ಸಿದ್ದರಾಮಯ್ಯಗಳ ಸಂಪಾದನೆ ೪. ಬಸವೇಶಚೆನ್ನಬಸವೇಶಂಗನುಗ್ರಹ ಮಾಡಿದ ಸಂಪಾದನೆ ೫. ಪ್ರಭು ಕಲ್ಯಾಣಕ್ಕೆ ಬಂದ ಸಂಪಾದನೆ ೬. ಮರುಳಶಂಕರದೇವರಸಂಪಾದನೆ ೭. ಬಸವೇಶ್ವರನ ಸಂಪಾದನೆ ೮. ಚನ್ನಬಸವೇಶ್ವರನ ಸಂಪಾದನೆ ೯. ಮಡಿವಾಳಯ್ಯಗಳ ಸಂಪಾದನೆ. ೧೦.ಸಿದ್ದರಾಮೇಶ್ವರನ ಗುರುಕರುಣೆ ೧೧. ಪ್ರಭುದೇವರ ಪೂಜಾಸ್ತುತಿ ೧೨. ಆಯ್ದಕ್ಕಿ ಮಾರಯ್ಯಗಳ ಸಂಪಾದನೆ, ೧೩. ಮೋಳಿಗೆ ಮಾರಯ್ಯಗಳ ಸಂಪಾದನೆ ೧೪. ನುಲಿಯ ಚಂದಯ್ಯಗಳ ಸಂಪಾದನೆ ೧೫. ಘಟ್ಟಿವಾಳಯ್ಯಗಳ ಸಂಪಾದನೆ ೧೬. ಮಹಾದೇವಿಯಕ್ಕಗಳ ಸಂಪಾದನೆ ೧೭. ಪ್ರಭುದೇಶಾಂತರಪೋಗಿ ಬಂದ ಸಂಪಾದನೆ ೧೮. ಪ್ರಭುದೇವರುಶೂನ್ಯಸಿಂಹಾಸನವೇರಿದ ಸಂಪಾದನೆ ೧೯. ಪ್ರಭುದೇವರ ಆರೋಗಣೆ ೨೦. ಶರಣರ ಅವಸಾನ ಪರಾಮರಿಕೆ ೨೧. ಗೋರಕ್ಷನ ಸಂಪಾದನೆ ಮತ್ತು ಎಲ್ಲಾ ಗಣಂಗಳ ಐಕ್ಯ.  ಎಂಬುದಾಗಿ ವರ್ಗೀಕರಿಸಿದ್ದಾನೆ.

   ಶೂನ್ಯಸಂಪಾದನಾಕಾರರು ಪ್ರತಿಯೊಂದು ಅಧ್ಯಾಯದ ಪ್ರಾರಂಭದಲ್ಲಿ ಹಿಂದಿನ ಅಧ್ಯಾಯದಲ್ಲಿ ನಡೆದಿರುವ ಸನ್ನಿವೇಶದ ಚಿತ್ರವನ್ನು ಕೊಟ್ಟು, ಈ ಅಧ್ಯಾಯಕ್ಕೆ ಕೊಂಡಿಯನ್ನು ಹಾಕುವ ರೀತಿಯಲ್ಲಿ ಗದ್ಯವನ್ನು ಬಳಸುತ್ತಾರೆ.ʻಸಿದ್ದರಾಮಯ್ಯಗಳ ಸಂಪಾದನೆ'ಯಲ್ಲಿ "ಅದಂತೆಂದೊಡಾ ಪ್ರಭುದೇವರು ಮುಕ್ತಾಯಕ್ಕಗಳ ಪ್ರತಾಪಮಂ ನಿಲಿಸಿ,ಮಹಾನುಭಾವಮಂ ಬೋಧಿಸಿ, ಅಜಗಣ್ಣ ದೇವರ ನಿಲವನು ಆಕೆಯ ಸರ್ವಾಂಗದೊಳು ಪ್ರತಿಷ್ಠಿಸಿ ತೋರಿ, ನಿರವಯಲಸಮಾಧಿಯೊಳು ನಿಲಿಸಿ, ಅಲ್ಲಂ ಸೊನ್ನಲಿಗೆಯ ಪುರಕ್ಕಭಿಮುಖವಾಗಿ..." ಎನ್ನುವಲ್ಲಿ ಹಿಂದಿನ ಅಧ್ಯಾಯದಲ್ಲಿ ಅಲ್ಲಮಪ್ರಭುವು ನೊಂದ ಮುಕ್ತಾಯಕ್ಕನಿಗೆ ಸಂತೈಸಿ, ಅವಳನ್ನು ಮುಕ್ತಿಮಾರ್ಗದ ಕಡೆಗೆ ಸಾಧನೆಗೆ ಹಚ್ಚಿ ಸೊನ್ನಲಾಪುರಕ್ಕೆ ಬರುವುದನ್ನು ತಿಳಿಸುವ ಈ ಗದ್ಯವು ಓದುಗನಿಗೆ ಮಾರ್ಗದರ್ಶಕದಂತಿದೆ.( ಅದೇ, ಪು.೪೬) ಅದೇ ರೀತಿ ಕೊನೆಯದಾದ ಅಧ್ಯಾಯ'ಗೋರಕ್ಷನಸಂಪಾದನೆ ಮತ್ತು ಎಲ್ಲಾ ಗಣಂಗಳ ಐಕ್ಕ'ದಲ್ಲಿ "ಅದೆಂತೆಂದೊಡಾ ಪ್ರಭುದೇವರು ಬಸವರಾಜದೇವರು ಚೆನ್ನಬಸವರಾಜದೇವರು, ಮಡಿವಾಳಮಾಚಿತಂದೆಗಳು ಮೊದಲಾದ ಅಸಂಖ್ಯಾತ ಮಹಾಗಣಂಗಳೆಲ್ಲರೂ ತಮ್ಮ ತಮ್ಮ ನಿಜಪದದ ನಿಜೈಕ್ಯಮಂ ಪೇಳಲು, ಪ್ರಭುದೇವರು ಕೇಳ್ದು ತಮ್ಮ ನಿಜಪದಮಂ ಪೇಳಿ, ಮತ್ತೆಲ್ಲಾ ಅಸಂಖ್ಯಾತರಿಗೆ ನಿರ್ವಾಹ ಸ್ಥಿತಿಗತಿಯನಿರೂಪಿಸುವ ಪ್ರಸ್ತಾವದ ವಚನ (ಅದೇ, ಪು.೫೩೩). ಇಲ್ಲಿ ಹಿಂದಿನ ಅಧ್ಯಾಯದಲ್ಲಿ ಅಲ್ಲಮಪ್ರಭುವು ಶರಣರೊಂದಿಗೆ ನಡೆಸಿದ ನಿಜದರಿವಿನ ಅನುಭಾವ ಗೋಷ್ಠಿಯನ್ನು ಮುಗಿಸಿಕೊಂಡು ಮುಂದೆ ಸಾಗುತ್ತಾ, ನಿರ್ವಯಲ ಸ್ಥಿತಿಯನ್ನು ತಿಳಿಸಲು ಮುಂದಾಗುವುದನ್ನು ಮತ್ತು ವಚನಗಳಿಗೆ ಸಂಪರ್ಕವನ್ನು ಸಾಧಿಸುವ ಕೆಲಸವನ್ನು ಮಾಡುವುದರ ಮೂಲಕ, ಸಹೃದಯನಿಗೆ ಸ್ಪಷ್ಟವಾದ ಚಿತ್ರಣವು ದೊರೆಯುವಂತೆ ಮಾಡಿರುವರು. ಸಂಪರ್ಕಗದ್ಯಗಳಿಲ್ಲದಿದ್ದರೇ ಓದುಗನಿಗೆ ಸಂದರ್ಭ, ಸನ್ನಿವೇಶ, ವಿಷಯದಹೊಂದಾಣಿಕೆಯ ಗೊಂದಲವುಂಟಾಗುತ್ತಿತ್ತು. ಅದನ್ನರಿತ ಇವರು ಸಂಪರ್ಕ ಗದ್ಯದ ಮೂಲಕ ಗೊಂದಲಕ್ಕೆ ಎಡೆಮಾಡಿ ಕೊಡುವುದಿಲ್ಲ. ಇನ್ನು ಸಿದ್ಧವೀರಣ್ಣೊಡೆಯ ಬಳಸಿರುವ ಸಂಪರ್ಕ ಗದ್ಯಗಳಲ್ಲಿ ಕೆಲವೊಂದು ದೀರ್ಘ ಗದ್ಯವನ್ನು ಬಳಸಿದ್ದಾನೆ, ಕೆಲವು ಕಡೆ ಒಂದೇ ವಾಕ್ಯ ಅಥವಾ ಎರಡು, ಮೂರು ಶಬ್ದಗಳಲ್ಲಿ ಸಂಪರ್ಕ ಗದ್ಯವನ್ನು ಬಳಸಿ ಸನ್ನಿವೇಶದ ಮುನ್ನಡೆಗೆ ಕಾರಣನಾಗಿದ್ದಾನೆ.

    ಶೂನ್ಯಸಂಪಾದನೆಯ ಕೊನೆಯ ಸಮಾಪ್ತಿ ವಾಕ್ಯದ ಗದ್ಯವನ್ನು ಹೇಳಿದ ನಂತರ ಒಂದು ವೃತ್ತವನ್ನು ಹೇಳಿ, ಕೊನೆಯಲ್ಲಿ ಒಂದು ಕಂದ ಪದ್ಯವನ್ನು ಹೇಳುವ ಮೂಲಕ ಕೃತಿಯನ್ನು ಸಮಾಪ್ತಿಗೊಳಿಸುತ್ತಾರೆ. ಶೂನ್ಯಸಂಪಾದನೆಯಲ್ಲಿ ಬಂದಿರುವ ಕಂದ ವೃತ್ತಗಳು ಶೂನ್ಯ -ಸಂಪಾದನಾಕಾರನ ಕವಿತಾ ರಚನೆಯ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ ಎಂದು ಹೇಬಹುದು.

   ಗದ್ಯವನ್ನು ಬರೆದು ಆಯಾ ಅಧ್ಯಾಯದ ಹೆಸರು ಮತ್ತು ಸಂಖ್ಯೆಯನ್ನು ನೀಡಿದ್ದು, ಇದು ಇವನಲ್ಲಿ ಮಾತ್ರ ಕಂಡುಬರುತ್ತದೆ. ಇದರಿಂದ ಒಂದು ಶಿಸ್ತು ಬದ್ಧತೆಯು ಈತನ ಸಂಪಾದನೆಯಲ್ಲಿ ಕಂಡುಬಂದಿದೆ.   ಪ್ರಥಮೋಪದೇಶವು ಕೃತಿಯ ಪೀಠಿಕಾ ಭಾಗದಂತಿದೆ. ಇಲ್ಲಿ ಸಂಪ್ರದಾಯದಂತೆ ಗುರುಸ್ತುತಿಯೊಂದಿಗೆ ಪ್ರಾರಂಭವಾಗಿ, ಕೃತಿಗೆ ಬೋಳಬಸವೇಶ್ವರರ ಪ್ರೇರಣೆ ಎಂದು ಹೇಳುತ್ತಾ, ಪುರಾತನರ ಅನೇಕ ವಚನಗಳನ್ನು ಸಂಗ್ರಹಿಸಿರುವುದಾಗಿ, ಗುರು-ಲಿಂಗ-ಜಂಗಮರ ಮಹಿಮೆಯನ್ನು ಅವರ ಕಾರ್ಯವನ್ನು ಅವರ ಅವತಾರವನ್ನು ತಿಳಿಸುತ್ತಾ, ಮೊದಲೆರಡು ಶೂನ್ಯಸಂಪಾದನೆಯಲ್ಲಿ ಹೇಳಿದಂತೆ ಶರಣರು ಶಾಪಗ್ರಸ್ತರಾಗಿ ಭೂಲೋಕಕ್ಕೆ ಬಂದರೆಂಬುದನ್ನು ತೀವ್ರವಾಗಿ ಟೀಕಿಸುತ್ತಾನೆ." ಗುರು ಲಿಂಗ ಜಂಗಮ ಮೂರು ಆ ನಿಃಕಲಪರಶಿವಲಿಂಗ ತಾನೆ. ಆ ಪರಶಿವಲಿಂಗವು ಜಗಹಿತಾರ್ಥವಾಗಿ ಮೂಱಾಗಿ ಮರ್ತ್ಯಕ್ಕೆ ಅವತರಿಸಿದರೆ, ಇದೇನು ಕಾರಣ ಮರ್ತ್ಯಕ್ಕೆ ಬಂದರೆಂದು ಸಂಕಲ್ಪಿಸಿ,ಶಾಪದಿಂದ ಬಂದರೆಂದು ಅವನಾನೊಬ್ಬ ನುಡಿವುತಿದ್ದಾನು. ಅವನು ಇಪ್ಪತ್ತೆಂಟುಕೋಟಿ ನರಕದಲ್ಲಿ ರವಿಶಶಿವುಳ್ಳನ್ನಬರ ನರಕವನನುಭವಿಸುತ್ತಿರ್ಪನು. ಇಂತೀ ಪರಶಿವಲಿಂಗವು ತನ್ನಲೀಲಾವಿನೋದಕ್ಕೆ ದೇವಭಕ್ತನೆಂಬ ಉಭಯನಾಮವ ಧರಿಸಿದ ಕ್ರಿಯಾಂಗವ ನಡೆಯದೆ, ಶಾಪದಿಂದ ಬಂದರೆಂದು ಸಂಕಲ್ಪಿಸಿ ನುಡಿವವರಿಗೆ ನಾಯಕನರಕ ತಪ್ಪದು,'( ಪ್ರಥಮೋಪದೇಶ, ಪು.೩) ಎಂಬುದಾಗಿ ಹೇಳುವುದರ ಮೂಲಕ ಪರೋಕ್ಷವಾಗಿ ಹರಿಹರನನ್ನು ಟೀಕಿಸಿದ್ದಾನೆ.  ಶರಣರು ಲೋಕಕಲ್ಯಾಣಕ್ಕಾಗಿ ಈ ಭುವಿಗೆ ಬಂದವರೆಂದು ಪ್ರತಿಪಾದಿಸುತ್ತಾನೆ.

     ಪ್ರಭುದೇವರ ವಿಚಾರದಲ್ಲಿ ಮೂಲ ಶೂನ್ಯಸಂಪಾದನೆಯಲ್ಲಿ ಪ್ರಭುದೇವರು ಎಲ್ಲ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮುಂದಿನವರ ಶೂನ್ಯಸಂಪಾದನೆಗಳಲ್ಲಿ ಹೊಸದಾಗಿ ಸೇರಿದ ನುಲಿಯ ಚಂದಯ್ಯ, ಆಯ್ದಕ್ಕಿಮಾರಯ್ಯ, ಘಟ್ಟಿವಾಳಯ್ಯರ ಪ್ರಸಂಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇಲ್ಲಿ ಅದರಲ್ಲಿಯೂ ಮೋಳಿಗಯ್ಯಗಳ ಸಂಪಾದನೆಯಲ್ಲಿ ಸಂಪೂರ್ಣವಾಗಿ ಪ್ರಭುದೇವರು ಮರೆಯಾಗಿರುವನು. ಮುಂದೆ ವಚನಗಳ ಮೂಲಕ ಪ್ರಭುದೇವರು ನಿರೂಪಿಸಿದ ಸ್ಥಲಗಳ, ಲಿಂಗ, ಪ್ರಾಣ, ಭಕ್ತ, ಷಟ್‌ಸ್ಥಲಗಳ ನಿಲುವನ್ನು ತಿಳಿಸುವನು. ಹೀಗೆ ಅನೇಕ ವೀರಶೈವ ಸಿದ್ಧಾಂತವನ್ನು ತಿಳಿಸುವುದರ ಜೊತೆಗೆ ಗೊಗ್ಗಯ್ಯನ, ಮೋಳಿಗಯ್ಯನ ಸನ್ನಿವೇಶ ಸೃಷ್ಟಿಗೆ ೪೯ ವಚನಗಳನ್ನು ಮತ್ತು ಘಟ್ಟಿವಾಳಯ್ಯನ ಸನ್ನಿವೇಶ ಸೃಷ್ಟಿಗೆ ೫೭ ವಚನಗಳನ್ನು ಹೊಸದಾಗಿ ಬಳಸಿಕೊಂಡಿದ್ದಾನೆ.

      ಇದು, ಪ್ರಭುದೇವನ ಹಾಗೆಯೇ, ಎಲ್ಲ ಶರಣರ ಬದುಕನ್ನು ಬಣ್ಣಿಸುವ ಒಂದು ಮಹಾತ್ಮೆ. ಅವರ ಅನುಭಾವದ ಅಭಿವ್ಯಕ್ತಿಗಳಾದ ವಚನಗಳಿಂದ ಹೆಣೆದ ಸಂಭಾಷಣಾರೂಪದ ದಿವ್ಯಜ್ಞಾನ ಪ್ರಸಂಗ." ಲಿಂಗಾಂಗ ಸಾಮರಸ್ಯ ಅಥವಾ ಶೂನ್ಯ ತತ್ತ್ವವನ್ನು ಬೋಧಿಸುವ “ಪರಮಾನುಭಾವ ಬೋಧೆ” ಎನಿಸಿದೆ. ಸೇರುವಲ್ಲಿಪ್ಪುಳ್ಳಡೆ ನಿಮ್ಮ ಪರಮಜ್ಞಾನದಿಂ ತಿದ್ದಿ ಈ ವಚನಾನುಭಾವ ಪ್ರಸಂಗಮಂ ಮಾಡಿ ಸುಖಿಸುವುದು” ಎಂಬ ಮಾತು ಈ ಪರಿಷ್ಕರಣಗಳಿಗೆ ಮುಖ್ಯ ಪ್ರೇರಣೆಯಾಗಿ ನಿಂತಂತೆ ತೋರುತ್ತದೆ. ಇದರ ಜೊತೆಗೆ-ಪರಿಷ್ಕರಣಕಾರರೇ ಹೇಳಿಕೊಂಡಂತೆ -ಅದರಲ್ಲಿ ಸಿದ್ಧರಾದೀಕ್ಷಾಪ್ರಸಂಗ ಇಲ್ಲದೇ ಹೋದದ್ದು ಮತ್ತೊಂದು ಮುಖ್ಯ ಕಾರಣ. ಇವುಗಳ ಜೊತೆಗೆ ಇನ್ನೂ ಕೆಲವು ಪೂರಕ ಕಾರಣಗಳೂ ಇರುವುದು ಒಂದೊಂದು ಪ್ರಕರಣವನ್ನೂ ಕೂಲಂಕಷವಾಗಿ ಪರಿಶೀಲಿಸಿದಾಗ ಗಮನಕ್ಕೆ ಬರುತ್ತದೆ. ಗೂಳೂರು ಸಿದ್ಧವೀರಣ್ಣೊಡೆಯನ ಪರಿಷ್ಕರಣದ ಮೂಲ ಉದ್ದೇಶ-ವೀರಶೈವ ತತ್ತ್ವಗಳನ್ನು ತನ್ನ ಕೃತಿಯಲ್ಲಿ ಗಾಢವಾಗಿ ತುಂಬ ಬೇಕೆಂಬುದಾಗಿದೆ.  ಈ ಲೇಖನದಲ್ಲಿ ಬಳಸಿಕೊಂಡಿರುವ ಶರಣ-ಶರಣೆಯರ ವಚನಗಳು ಎಂ.ಎಂ ಕಲಬುರಗಿ ಮತ್ತು ವೀರಣ್ಣ ರಾಜೂರ ಅವರು ಸಂಪಾದಿಸಿರುವ ಗೂಳೂರು ಸಿದ್ಧವೀರಣ್ಣೊಡೆಯರು ರಚಿಸಿದ ಪ್ರಭುದೇವರ ಶೂನ್ಯ ಸಂಪಾದನೆ ಕೃತಿಯಿಂದ ಆಯ್ದುಕೊಂಡವುಗಳಾಗಿವೆ.

    ಗೂಳೂರು ಸಿದ್ಧವೀರಣ್ಣೊಡೆಯನು ಪ್ರತಿಯೊಂದು ಅಧ್ಯಾಯದ ವಚನ ಮತ್ತು ಹಾಡುಗಳಿಗೆ ಬೇರೆ ಬೇರೆ ಸಂಖ್ಯೆಗಳನ್ನು ಕೊಟ್ಟಿರುವನು. ಪ್ರತಿಯೊಂದು ಅಧ್ಯಾಯದ ಪ್ರಾರಂಭದಲ್ಲಿ ಕಂದಪದ್ಯದ ಮೂಲಕ" ಪ್ರಾರಂಭಿಸಿದ್ದಾನೆ. ಮುಕ್ತಾಯಕ್ಕಳ ಸಂಪಾದನೆಯಲ್ಲಿ ʻಕಾಯಗುಣದೂರನಲ್ಲಮ ರಾಯನು ಮುಕ್ತಾಯಿ ಗೊಲವಿನಿಂ ನಿಜಪದವನುಪಾಯದೊಳಿತ್ತುದ ಪೇಳ್ವೈನಿ ರಾಯಸದಿಂ ಶರಣ ಜನರ ಕಿವಿಗಿದೆನಿಸಲ್‌" ಹೀಗೆ ಆ ಅಧ್ಯಾಯದ ವಿಷಯದಿಂದ ಪ್ರಾರಂಭವಾಗಿ, ಕೊನೆಯಲ್ಲಿ "ಇಂತೀ ಶ್ರೀಮತ್‌ ಸಕಲ ಗಣ ಪುರಾತನರೊಳ್‌ ಪ್ರಭುದೇವರು ಮಹಾನುಭಾವ ಸದ್ಗೋಷ್ಠಿಯಂ ಮಾಡಿದ ಶೂನ್ಯಸಂಪಾದನೆಯೊಳ್‌ ಮುಕ್ತಾಯಕ್ಕಗಳ ಸಂಪಾದನೆಗಂ ದ್ವಿತೀಯೋಪದೇಶಂ ಸಮಾಪ್ತಂ ಅಂತು ವಚನ ೧೧೯ಕ್ಕಂ ಮಂಗಳಮಹಾಶ್ರೀ" ಎಂದು ನಿರೂಪಿಸಲ್ಪಟ್ಟಿದ್ದಾನೆ.   ( ಮುಕ್ತಾಯಕ್ಕಳ ಸಂಪಾದನೆ, ಪು.೨೯ ಮತ್ತು ೪೫)  

       ವಚನಗಳನ್ನು ಆಧರಿಸಿ ಹುಟ್ಟಿಕೊಂಡ ಏಕೋತ್ತರಶತಸ್ಥಲಗಳಂಥ ಸಂಕಲನಗಳು ತಾತ್ವಿಕ ಪಠ್ಯಗಳಾದರೆ; ಶೂನ್ಯಸಂಪಾದನೆಗಳು ಅನುಭಾವಿಕ ಪಠ್ಯಗಳೆಂಬುದನ್ನು ಅವಶ್ಯವಾಗಿ ನಾವು ಗಮನಿಸಬೇಕಾಗಿದೆ. ಮುಂದೆ ಈ ಅನುಭಾವ ಸಂಸ್ಕೃತಿಯನ್ನು ಪರಂಪರೆಯಂತೆ ನಿರೂಪಿಸಿದವರು ಹಲಗೆಯಾರ್ಯ, ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯರಾದ ಗೂಳೂರು ಸಿದ್ಧವೀರಣ್ಣೊಡೆಯರು. ಒಂದು ರೀತಿಯಲ್ಲಿ  ಕೇಂದ್ರೀಯ ರೂಪದಲ್ಲಿದ್ದ ಕಲ್ಯಾಣದ ಅನುಭವ ಮಂಟಪದಲ್ಲಿಯ ವಚನಸಾಹಿತ್ಯದ  ಆಶಯವನ್ನು ಎಡೆಯೂರು, ಗುಬ್ಬಿ, ಗೂಳೂರು, ಶಿವಗಂಗೆ ಮುಂತಾದ ಕಡೆ ವಿಕೇಂದ್ರೀಕರಣಗೊಳಿಸಿದ ಕೀರ್ತಿ ಶೂನ್ಯಸಂಪಾದನಾಕಾರರಿಗೆ ಸಲ್ಲುತ್ತದೆ.  ಶಿವಗಣ ಪ್ರಸಾದಿ ಮಹಾದೇವಯ್ಯನ ಕೃತಿಯ ನಂತರ ನಿರ್ಮಾಣವಾದ ಕೃತಿಗಳು ಏನಿದ್ದರೂ ಆ ಮೂಲವನ್ನೇ ಆಧರಿಸಿ ಅಲ್ಪ ಸ್ವಲ್ಪ ಬದಲಾವಣೆ ಹಾಗೂ ಕೆಲವು ಹೊಸ ಪ್ರಸಂಗಗಳು ಅಳವಡಿಸಲ್ಪಟ್ಟ ಪರಿಷ್ಕರಣಗಳಾಗಿವೆ. ಮಹಾದೇವಯ್ಯನ ಮೂಲಕೃತಿ ನಂತರದ ಸಂಕಲನಕಾರರಿಂದ ಪರಿಷ್ಕರಣಗೊಳ್ಳಲು ಬಹುಮುಖ್ಯ ಕಾರಣ ಸಿದ್ಧರಾಮಯ್ಯ ದೀಕ್ಷಾ ಪ್ರಸಂಗ ಇದರ ಜೊತೆಗೆ ಅಲ್ಲಮ ಕಾಮಲತೆಯರ ಪ್ರಸಂಗ, ಅಕ್ಕ ಕೌಶಿಕರ ಸಂಬಂಧ, ಕಿನ್ನರಯ್ಯನ ಪ್ರಸಂಗ ಮತ್ತು ಕಾಲ ಕಾಲಕ್ಕೆ ಸಂಕಲನಗೊಂಡ ನಂತರದ ಶೂನ್ಯ ಸಂಪಾದನೆಗಳಲ್ಲಿ ಕೆಲವು ಸನ್ನಿವೇಶಗಳು ಹೊಸದಾಗಿ ಸೇರ್ಪಡೆಯಾಗಿವೆ. ಶೂನ್ಯ ಸಂಪಾದನಾ ಸಂಕಲನ ಕೃತಿಗಳಲ್ಲಿ ಹೆಚ್ಚಿನ ಶರಣರ ವಚನಗಳು ಸಂದರ್ಭಕ್ಕನುಸಾರವಾಗಿ ಸೇರಲ್ಪಟ್ಟಿವೆ.

      ಲಭ್ಯವಿರುವ  ನಾಲ್ಕು ಶೂನ್ಯಸಂಪಾದನೆಗಳು ಕೇವಲ ಪ್ರದರ್ಶನಗೊಳ್ಳದೆ ಕಾಲಕಾಲಕ್ಕೆ ಪರಿಷ್ಕರಣೆಗೊಂಡು ಪ್ರಯೋಗಕ್ಕೆ ಒಳಗಾದವುಗಳು. ಮೂಲಶೂನ್ಯಸಂಪಾದನೆಯ ಒಟ್ಟು ಆಶಯಕ್ಕೆ ಚ್ಯುತಿಬಾರದಂತೆ ಶರಣ ತತ್ವ, ಶರಣರಚರಿತ್ರೆ, ವಿಶೇಷವಾಗಿ ಸಂಪಾದಕರ ಅಭಿರುಚಿಯನ್ನು ಪ್ರತಿನಿಧಿಸುವ ಕಾರಣದಿಂದ ಶೂನ್ಯಸಂಪಾದನೆಗಳು ವಚನಕಾರರ ಆತ್ಮಮುಖಿ ಮತ್ತು ಸಮಾಜಮುಖಿ ಅಧ್ಯಯನಗಳಾಗಿವೆ.  ಶತಶತಮಾನದಲ್ಲಿ ಅಡಗಿಹೋದ ವಚನಗಳನ್ನು ಹುಡುಕಿ, ಅವುಗಳನ್ನು ಸಂಗ್ರಹ, ಸಂಕಲನ, ಸಂಪಾದನೆಗಳ ಮೂಲಕ ಕೂಡಿಟ್ಟಿರುವುದು ಮಹತ್ತರವಾದ ಸಂಗತಿಯಾಗಿದೆ. ಸಂಪಾದನಾಕಾರರ ಆ ಪ್ರಯತ್ನದಿಂದಾಗಿ ನಮಗಿಂದು ಸಿಕ್ಕಿರುವ ವಚನಗಳು ಅಲ್ಪವೆನಿಸಿದರೂ ಸಹ, ಅವರ ಪ್ರಯತ್ನವಿಲ್ಲದಿದ್ದರೆ ಇಷ್ಟೂ ವಚನಗಳು ನಮಗೆ ದೊರಕುತ್ತಿರಲಿಲ್ಲವೆಂದು ಹೇಳಬಹುದು. ಆ ಕಾರಣವಾಗಿ ಶೂನ್ಯ ಸಂಪಾದನಾಕಾರರನ್ನು ಒಳಗೊಂಡಂತೆ ಸಂಗ್ರಹ, ಸಂಕಲನ, ಸಂಪಾದನಾಕಾರರಿಗೆ ನಾವು ಇಂದು ಋಣಿಯಾಗಿರ ಬೇಕಾಗಿದೆ.  ಇಂದು ನಾಲ್ಕು ಶೂನ್ಯಸಂಪಾದನೆಗಳಿದ್ದರೂ ಅವು ಮುಖ್ಯವಾಗಿ ಎರಡು ಪರಂಪರೆಗೆ ಸೇರಿವೆ. ಶಿವಗಣಪ್ರಸಾದಿ ಮಹಾದೇವಯ್ಯ ಹಾಗೂ ಹಲಗೆದೇವರ ಶೂನ್ಯಸಂಪಾದನೆಗಳು ಹರಿಹರ ಕವಿಯ ಪರಂಪರೆಗೆ ಸೇರಿದರೆ, ಗುಮ್ಮಳಾಪುರ ಸಿದ್ಧಲಿಂಗದೇವರು ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಗಳು ಚಾಮರಸ ಕವಿಯ ಪರಂಪರೆಗೆ ಸೇರುತ್ತವೆ. ಚಾಮರಸ ನೂರೊಂದು ವಿರಕ್ತರಲ್ಲಿ ಒಬ್ಬ. ಗುಮ್ಮಳಾಪುರ ಸಿದ್ಧಲಿಂಗದೇವರು ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರು ಕೂಡಾ ಇದೇ ಪರಂಪರೆಗೆ ಸೇರಿದವರು. ಪ್ರಭುದೇವರು ಶಾಪದಿಂದ ಬಂದುದು, ಕಾಮಲತೆಯ ಪ್ರಸಂಗವಿರುವುದು, ಅಕ್ಕ-ಕೌಶಿಕರ ಸಂಬಂಧವಿರುವುದು ಮೊದಲಿನ ಎರಡು ಸಂಪಾದನೆಗಳಲ್ಲಿ ಕಂಡುಬಂದರೆ, ನಂತರ ರಚನೆಯಾದ  ಸಿದ್ಧವೀರಣ್ಣೊಡೆಯರ ಸಂಪಾದನೆಯಲ್ಲಿ ಈ ಪ್ರಸಂಗಗಳು ಕಾಣುವುದಿಲ್ಲ.

 “ಅಲ್ಲಮಪ್ರಭುವಿನ ಅನುಭಾವ ಕೇಂದ್ರಿತವಾದ (ಆತ್ಮತತ್ವ) ಶೂನ್ಯಸಂಪಾದನೆಗೆ ಬಸವಣ್ಣನ ಸಾಮಾಜಿಕದೃಷ್ಟಿ ಕೇಂದ್ರಿತವಾದ (ಸಮಾಜತತ್ವ) ಹೊಸ ಆಯಾಮವನ್ನು ಜೋಡಿಸುವ ಉದ್ದೇಶವೂ ಇದ್ದಿತಾದರೂ ಅದು ಪರಿಷ್ಕರಣಗಳಲ್ಲಿ ಪರಿಪೂರ್ಣಗೊಂಡಿಲ್ಲ ಎಂದೆನಿಸುತ್ತದೆ.      

    ಶಿವಗಣಪ್ರಸಾದಿ ಹಾಗೂ ಹಲಗೆದೇವರಲ್ಲಿ ಕೇವಲ ಉಲ್ಲೇಖವಾಗಿ ಬಂದಿದ್ದ, ಶೂನ್ಯಸಂಪಾದನೆಯ ಕಥನವನ್ನು ಸಿದ್ಧವೀರಣ್ಣೊಡೆಯನು “೨೧ ಭಾಗಗಳಾಗಿ ವಿಂಗಡಿಸಿದ್ದರೂ ಕ್ರಮಬದ್ಧವಾಗಿ ವರ್ಗೀಕರಣ ಸಾಧ್ಯವಾಗಿಲ್ಲ. ಒಂದೂಂದು ಭಾಗದ ಗಾತ್ರವೂ ಭಿನ್ನವಾಗಿದೆ. ಪ್ರಥಮೋಪದೇಶ, ಸಿದ್ದರಾಮನ ಗುರುಕರುಣ; ಪ್ರಭುದೇವರ ಪೂಜಾಸ್ತುತಿ, ಪ್ರಭುದೇವರಆರೋಗಣೆ, ಶರಣರ ಅವಸಾನ ಪರಾಮರಿಕೆ, ಎಲ್ಲ ಗಣಗಳ ಐಕ್ಯ - ಇವು ಸಂಪಾದನೆಗಳಲ್ಲ, ಸಂಪಾದನೆಯ ಭಾಗಗಳೇ ಬೇರೆ, ಈ ಭಾಗಗಳೇ ಬೇರೆ ಎಂದು ಅರ್ಥವಾಗುವುದುಟು. ಗ್ರಂಥದ ಶಿಲ್ಪದ ದೃಷ್ಟಿಯಿಂದ ಗೋರಕ್ಷನ ಸಂಪಾದನೆ ಮತ್ತು ಶರಣರ ಐಕ್ಯ ಒಂದರೊಳಗೊಂದು ಸೇರಿಕೊಳ್ಳುತ್ತವೆ. ಸಿದ್ಧರಾಮನ ಸಂಪಾದನೆ ಎರಡು ಖಂಡಗಳಾಗಿ ವಿಭಜಿಸಲ್ಪಟ್ಟಿದೆ. ಮಡಿವಾಳಯ್ಯ, ಮರುಳಶಂಕರದೇವರ ಸಂಪಾದನೆಗಳನ್ನು ಹಿಂದೆ-ಮುಂದೆ ಮಾಡಿ ಜೋಡಿಸಿದ್ದಾನೆ. ಅಲ್ಲಲ್ಲಿ ಚಲ್ಲುವರಿದಿದ್ದ ಪ್ರಭುದೇವರ ಪೂಜಾಸ್ತುತಿಗೆ ಸಂಬಂಧಿಸಿದ ವಚನಗಳನ್ನು ಒಂದೆಡೆ ಸಂಗ್ರಹಿಸಿ ಕೊಟ್ಟಿದ್ದಾನೆ. ಬಸವಣ್ಣ ಎಲ್ಲ ಗಣಗಳ ಕೈಯಿಂದ ಬೀಳ್ಕೊಂಡು, ಕೂಡಲಸಂಗಮದತ್ತ ಹೊರಡುವ ಪ್ರಸಗದಲ್ಲಿ ವಿಸ್ತಾರವಾಗಿ ಗದ್ಯದಲ್ಲಿ ಮಾಡಿದ ವರ್ಣನೆಯನ್ನು ಸಂಕ್ಷೇಪಗೊಳಿಸಿದ್ದಾನೆ. ಉಳಿದ ಶೂನ್ಯಸಂಪಾದಕರು ಅಖಂಡವಾಗಿ ನಿರೂಪಿಸಿದ ಕೃತಿಯನ್ನು ಈತ ಪ್ರಥಮಬಾರಿಗೆ ಅಧ್ಯಾಯಗಳಾಗಿ ವಿಭಜಿಸಿ  ಉಪದೇಶ ಎಂಬುದಾಗಿ ಕರೆದಿದ್ದಾನೆ. ಹೀಗಾಗಿ  ಈತನ ಶೂನ್ಯ ಸಂಪಾದನೆಯ ಅಧ್ಯಯನ ಮತ್ತು ಅನುಸಂಧಾನಗಳಿಗೆ  ನಂತರದಲ್ಲಿ  ಹೆಚ್ಚಿನ ಅನುಕೂಲತೆ ಒದಗಿಸಿ ಕೊಡಲು ಸಾಧ್ಯವಾಗಿದೆ.  

     ಗೂಳೂರು ಸಿದ್ಧವೀರಣ್ಣನೆದುರು ಮೂರು ಸಂಪಾದನೆಗಳಿದ್ದರೂ, ಆತ ನೇರವಾಗಿ ಪರಿಷ್ಕರಿಸಲು ಎತ್ತಿಕೊಂಡದ್ದು ತನ್ನ ಗುರುವಾದ ಗುಮ್ಮಳಾಪುರದ ಸಿದ್ಧಲಿಂಗನ ಕೃತಿಯನ್ನು, ಪ್ರಭು-ಸಿದ್ಧರಾಮರ ಭೇಟಿಯ ಸಂದರ್ಭವನ್ನು ೧೧೯ ವಚನಗಳಿಂದ ೧೪೦ ವಚನಗಳಿಗೆ ವಿಸ್ತರಿಸಿದ್ದಾನೆ. ಆತನಲ್ಲಿ ೬ ಪುಟದಷ್ಟು ವಿಸ್ತಾರವಾಗಿ ಬಂದ ಬಸವೇಶ್ವರನ ಅವತಾರದ ಕಥೆಯನ್ನು ಈತ ೬ ಸಾಲುಗಳಿಗೆ ಇಳಿಸಿದ್ದಾನೆ.  ಬಸವಣ್ಣನ ವ್ಯಕ್ತಿತ್ವಕ್ಕೆ ಕುಂದು ಉಂಟುಮಾಡುವಂತಿದ್ದ ಪ್ರಭುವನ್ನು ಕರೆತರಲು ಪರಿಚಾರಕವನ್ನು ಕಳಿಸುವ ಪ್ರಸಂಗವನ್ನು ತೆಗೆದುಹಾಕಿ, ಹಡಪದ ಅಪ್ಪಣ್ಣನನ್ನು ಕಳಿಸುವಂತೆ ಮಾಡಿದ್ದಾನೆ. ಸಿದ್ದರಾಮೇಶ್ವರನ ಗುರುಕರುಣ ಪ್ರಸಂಗ

ಗುಮ್ಮಳಾಪುರದ ಸಂಪಾದನೆಯಲ್ಲಿ ತುಂಬ ವಿಸ್ತಾರವಾಗಿ ಬೆಳೆದಿದೆ. ೨೫೫ ವಚನ ಹಾಗೂ ಉದ್ದುದ್ದ ಗದ್ಯ ಖಂಡಗಳಿಂದ ಕೂಡಿದ ಇದನ್ನು ಗೂಳೂರ ಸಿದ್ಧವೀರಣ್ಣ ಮುರಿದು ಕಟ್ಟಿ ೧೦೫ ವಚನಗಳಿಗೆ ಇಳಿಸಿದ್ದಾನೆ. "'ಯೋಗಿನಾಥ' ಅಂಕಿತದ ೧೨೦ ವಚನಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಂಡು, ಉಳಿದುವನ್ನು ಕೈಬಿಟ್ಟದ್ದಾನೆ. “ಕಪಿಲ ಸಿದ್ಧಮಲ್ಲಿಕಾರ್ಜುನ' ಅಂಕಿತದ ೬೭ ವಚನಗಳಲ್ಲಿ ೫೦ನ್ನು ಇಟ್ಟುಕೊಂಡಿದ್ದಾನೆ. ಮಡಿವಾಳಯ್ಯ, ಮರುಳಶಕರದೇವರಸಂಪಾದನೆಗಳನ್ನು ಹಿಂದೆ-ಮುಂದೆ ಮಾಡಿ ಜೋಡಿಸಿದ್ದಾನೆ. ಅಲ್ಲಲ್ಲಿ ಚಲ್ಲುವರಿದಿದ್ದ ಪ್ರಭುದೇವರ ಪೂಜಾಸ್ತುತಿಗೆ ಸಂಬಂಧಿಸಿದ ವಚನಗಳನ್ನು ಒಂದೆಡೆ ಸಂಗ್ರಹಿಸಿ ಕೊಟ್ಟಿದ್ದಾನೆ. ಬಸವಣ್ಣ ಎಲ್ಲ ಗಣಗಳ ಕೈಯಿಂದ ಬೀಳ್ಕೊಂಡು, ಕೂಡಲಸಂಗಮದತ್ತ ಹೊರಡುವ ಪ್ರಸಗದಲ್ಲಿ ವಿಸ್ತಾರವಾಗಿ ಗದ್ಯದಲ್ಲಿ ಮಾಡಿದ ವರ್ಣನೆಯನ್ನು ಸಂಕ್ಷಿಪ್ತಗೊಳಿಸಿದ್ದಾನೆ.

     ಉಳಿದ ಶೂನ್ಯ ಸಂಪಾದಕರು ಅಖಂಡವಾಗಿ ನಿರೂಪಿಸಿದ ಕೃತಿಯನ್ನು ಈತ ಪ್ರಥಮ ಬಾರಿಗೆ ಅಧ್ಯಾಯಗಳಾಗಿ ("ಉಪದೇಶ” ಎಂದು ಕರೆದಿದ್ದಾನೆ) ಒಡೆದು, ಈ ಮಹಾಗ್ರಂಥದ ಅಭ್ಯಾಸ ಮತ್ತು ಅನುಸಂಧಾನಗಳಿಗೆ ಅಲ್ಲಲ್ಲಿ ವಿರಾಮ-ವಿಶ್ರಾಂತಿಗಳಿಗೆ ಅನುಕೂಲತೆ ಒದಗಿಸಿಕೊಟ್ಟಿದ್ದು (ಅವು ನಾಟಕದ ಒಂದೊಂದು ದೃಶ್ಯದಂತೆ ತೋರುತ್ತವೆ) ವಿಂಗಡಣೆಗೊಳ್ಳುತ್ತದೆ. ವೀರಣ್ಣ ರಾಜೂರರ ಪ್ರಕಾರ ಸಿದ್ಧವೀರಣ್ಣನ ಕೃತಿಯಲ್ಲೂ ಇನ್ನೂ ತಿದ್ದಬಹುದಾದ ಪಠ್ಯ ಉಳಿದುಕೊಂಡಿದೆ.

   ಶಿವಗಣಪ್ರಸಾದಿಯಿಂದ ರಚನೆಯಾದ ಶೂನ್ಯಸಂಪಾದನೆಯನ್ನು ಮುಂದೆ ಪರಿಷ್ಕರಣಗೊಳ್ಳುತ್ತಾ ಕೆಲವು ಸಂಗತಿಗಳು ಸೇರುತ್ತಾ, ಕೆಲವು ಬಿಡುತ್ತಾ, ಗಾತ್ರವು ಚಿಕ್ಕದು -ದೊಡ್ಡದಾಗುತ್ತಾ ಕೊನೆಗೆ ಈ ಪರಿಷ್ಕರಣ ಕಾರ್ಯಕ್ಕೆ ಸಂಪೂರ್ಣ ಸಮಾಪ್ತಿಯು ಗೂಳೂರು ಸಿದ್ಧವೀರಣ್ಣೊಡೆಯನಿಂದಾಯಿತು. 'ಶೂನ್ಯಸಂಪಾದನೆ'ಯ ಮೂಲಶಿಲ್ಪಿಯಾದ ಶಿವಗಣಪ್ರಸಾದಿ ಮಹಾದೇವಯ್ಯ ಕೃತಿಯನ್ನು ೧೮೬ ವರ್ಷಗಳ ಕಾಲಾವಧಿಯಲ್ಲಿ ಮೂರು ಜನ ಅನುಭಾವಿಗಳು ಮರುಪರಿಷ್ಕರಣಕ್ಕೊಳಪಡಿಸಿದ್ದಾರೆ.   ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆಯನ್ನು ೩ನೇ ಬಾರಿ ಮತ್ತು ಕೊನೆಯದಾಗಿ ಪರಿಷ್ಕರಣ ಮಾಡಿದವನು ಗೂಳೂರು ಸಿದ್ಧವೀರಣ್ಣೊಡೆಯ. ಇವನ ಶೂನ್ಯಸಂಪಾದನೆ ನಾಲ್ಕನೆಯದು. ಆದರೆ ಜನಪ್ರಿಯತೆಯ ಮತ್ತು ಪ್ರಕಟಣೆಯ ದೃಷ್ಟಿಯಿಂದ ಎಲ್ಲಕ್ಕಿಂತ ಮೊದಲಾದದ್ದು. ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯು ಹಿಂದಿನ ಮೂರು ಸಂಪಾದನೆಗಳಿಗಿಂತ ಹೆಚ್ಚು ಅಚ್ಚುಕಟ್ಟಾಗಿ ಬಂದಿದೆ. ಈ ಕೃತಿಯ ಪರಿಷ್ಕರಣಕ್ಕೆ ಕಾರಣ-ಪ್ರೇರಣೆ ಏನು, ಈ ಹಿದಿನ ಪುಷ್ಕರಣಗಳಿಂದ ಇದು ಏನನ್ನು ಉಳಿಸಿಕೊಂಡಿದೆ, ಏನನ್ನು ಬಿಟ್ಟಿದ, ಹೆಚ್ಚಿನದೇನನ್ನು ಸೇರಿಸಿಕೊಂಡಿದೆ. ಆ ಮೂಲಕ ಒಟ್ಟು ವೈಶಿಷ್ಟ್ಯಗಳೇನನ್ನು ತೋರುತ್ತದೆ ಎಂಬುದನ್ನು ಕಾಣಬಹುದಾಗಿದೆ. ಈಗಾಗಲೇ ವಿದ್ವಾಂಸರು ಗುರುತಿಸಿರುವ  ಈತನ ಸಂಕಲನದಲ್ಲಿಯ ವಿಶೇಷತೆಗಳು ಈ ಕೆಳಕಂಡಂತಿವೆ.

೧. ಗೊಗ್ಗಯ್ಯನ ಪ್ರಸಂಗ ಇವನಲ್ಲಿ ಹೊಸದಾಗಿ ಬಂದು ಸೇರಿದೆ. ಗೊಗ್ಗಯ್ಯ ಓರ್ವ ತೋಟಿಗ ಅವನ ಲೌಕಿಕ ಕೃಷಿಯನ್ನು ಕಂಡು ಬೇಸರಗೊಂಡು ಪ್ರಭು ತನ್ನದೆ ದ ಆಧ್ಯಾತ್ಮ ತೋಟ ನಿರ್ಮಾಣವನ್ನು ನಿರೂಪಿಸುತ್ತಾನೆ.

ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು

ಕಳೆದೆನಯ್ಯ ಭ್ರಾಂತಿನ ಬೇರ, ಒಡೆದು ಸಂಸಾರದ ಹೆಂಟೆಯ

ಬಗೆದು ಬಿತ್ತಿದೆನಯ್ಯ ಬ್ರಹ್ಮ ಬೀಜವ, ಅಖಂಡ ಮಂಡಲವೆಂಬ

ಬಾವಿ, ಪವನವೇ ರಾಟಾಳ, ಸುಷುಮ್ನಾ ನಾಳದಿಂದ ಉದಕವ ತಿದ್ದಿ

ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ

ಬೇಲಿಯನಿಕ್ಕಿ, ಅವಾಗಳೂ ಈ ತೋಟದಲ್ಲಿ ಜಗರವಿದ್ದು

ಸಸಿಯ ಸಲಹಿದೆನು ಕಾಣಾ ಗೊಹೇಶ್ವರಾ.( ಅದೇ, ಪ್ರಥಮೋಪದೇಶ,ಪು.೧೧-೧೨)

     ಗೊಗ್ಗಯ್ಯನ ತೋಟದ ಕಾಯಕವನ್ನೇ ಉಪಮೆಯಾಗಿ ಬಳಸಿಕೊಂಡು ಹೃದಯ ವ್ಯವಸಾಯವನ್ನು ಮಾಡಿ ಪಂಚೇಂದ್ರಿಯಗಳನ್ನು ಗೆದ್ದು ಬ್ರಹ್ಮ ಜ್ಞಾನದ ಸಸಿಯನ್ನು ಬೆಳೆಸುವ ಮಹಾಕೃಷಿಯನ್ನು ಮಾಡಬೇಕೆಂದು ಹೇಳುವ ಈ ವಚನ ಉಪಮೆಯ ಸೊಗಸಿನಿಂದ ಭಾವದ ಭಾರದಿಂದ ಕಂಗೊಳಿಸುತ್ತದೆ. ಇಲ್ಲಿಂದ ಮುಂದೆ ‘ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ, ಬಯಸುವ ಬಯಕೆ ಕೈಸಾರುವಂತೆ’ ಗುರು ಅನಿಮಿಷ ದೇವರನ್ನು ದರ್ಶಿಸಿ ಆ ‘ಕಾಣಬಾರದ ಕಾಯ, ನೋಡಬಾರದ ತೇಜ, ಉಪಮಿಸಬಾರದ ನಿಲುವನ್ನು’ ಕೊಂಡಾಡಿ ಪುಳಕಿತ ಗಾತ್ರನಾಗುತ್ತಾನೆ. ‘ಸ್ಫಟಿಕದ ಘಟದಂತೆ ಒಳ ಹೊರಗಿಲ್ಲ’ದ ಆ ಗುರುಮೂರ್ತಿಯ ಮಹಿಮೆಗೆ ಬೆರಗಾಗುತ್ತಾನೆ. ‘ನೀನೆನಗೆ ಗುರುವಪ್ಪೊಡೆ, ನಾ ನಿನಗೆ ಶಿಷ್ಯನಪ್ಪೊಡೆ,. ನೀನೆನ್ನ ಕಲಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗೊಹೇಶ್ವರಾ’ ಎಂದು ಮೊರೆಯಿಡುತ್ತಾನೆ.

ʻʻಮಾಯಾವಿಲಾಸವನ್ನು ನಿವೃತ್ತಿ ಮಾಡಿ, ಗುರುದರ್ಶನಕ್ಕೆ ಸಾಗಿದ ಪ್ರಭುದೇವ ಮಾರ್ಗಮಧ್ಯದಲ್ಲಿ ಲೌಕಿಕ ಕೃಷಿಯಲ್ಲಿ ತೊಡಗಿದ್ದ ಗೊಗ್ಗಯ್ಯನಿಗೆ ಪಾರಮಾರ್ಥಿಕ ಕೃಷಿಯಲ್ಲಿ ತೊಡಗುವಂತೆ ಮಾಡಿದ ಸನ್ನಿವೇಶವನ್ನು ಸೃಷ್ಟಿಸಿದ್ದು, ಇದಕ್ಕೆ ಪ್ರೇರಣೆ  ಬಹುಶಃ ಚಾಮರಸನಿಂದ ದೊರೆತಿದೆ ಎಂದೆನಿಸುತ್ತದೆ.

. ಕಾಯಕದ ಮಹತ್ವವನ್ನು ಸಾರುವ ಮೋಳಿಗೆ ಮಾರಯ್ಯನ ಸಂಪಾದನೆ, ಇಷ್ಟಲಿಂಗದ ಮಹತಿಯನ್ನು ಹೇಳುವ ಘಟ್ಟಿವಾಳಯ್ಯನ ಸಂಪಾದನೆಗಳನ್ನು ಹೊಸದಾಗಿ ಅಳವಡಿಸಿರುವುದು.

. ಬಸವಣ್ಣ ಕೂಡಲಸಂಗಮಕ್ಕೆ ಹೋಗಿ, ಕಲ್ಯಾಣದಲ್ಲಿಯೇ ಉಳಿದಿದ್ದ ಸತಿ ನೀಲಲೋಚನೆಯನ್ನು ಕರೆತರಲು ಹಡಪದಣ್ಣನನ್ನು ಕಳಿಸಲು, ಆಕೆ “ಪರಿಣಾಮ ಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಗಯ್ಯನ ಹಂಗು ನಮಗೇತಕೆಯ್ಯಾ ಅಪ್ಪಣ್ಣ”ಎಂದು ಅಂಗೈಯ ಲಿಂಗದಲ್ಲಿ ಐಕ್ಯವಾದ ಪ್ರಸಂಗವನ್ನು ಆಕೆಯ “ನೋಡು ನೋಡುನೋಡು ನೋಡು ನೋಡು ಲಿಂಗವೆ” ಎಂಬ ಹಾಡಿನೊಂದಿಗೆ ಪ್ರಥಮವಾಗಿ ಸೇರಿಸಿರುವುದು.

. ಶಿವಗಣಪ್ರಸಾದಿ ಹಾಗೂ ಹಲಗೆದೇವರಲ್ಲಿ ಕೇವಲ ಉಲ್ಲೇಖವಾಗಿ ಬಂದಿದ್ದ, ಗುಮ್ಮಳಾಪುರದ ಸಿದ್ಧಲಿಂಗನಲ್ಲಿ ೫ ವಚನಗಳಲ್ಲಿ ಸಂವಾದ ರೂಪವಾಗಿ ಕಾಣಿಸಿಕೊಂಡ ಗೋರಕ್ಷ ಪ್ರಸಂಗವನ್ನು ಇನ್ನೂ ಕೆಲಮಟ್ಟಿಗೆ ವಿಸ್ತರಿಸಿ, ಅವನ ವಜ್ರಕಾಯದ ಭ್ರಮೆಯನ್ನು ಬಿಡಿಸಿ, ಲಿಂಗಾಗ ಸಂಬಂಧವನ್ನು ಉಪದೇಶ ಮಾಡಿ ಉದ್ಧರಿಸಿರುವುದು.

    ಈ ತತ್ಫೂರ್ವದಲ್ಲಿ ಶೂನ್ಯಸಂಪಾದಕರು ತಮ್ಮ ತಮ್ಮ ಗ್ರಂಥಗಳಲ್ಲಿ ಮಾಡಿ ಕೊಂಡಿದ್ದ ಪ್ರಸಂಗ ಜೋಡಣೆ, ವಚನ ಜೋಡಣೆಯ ಕ್ರಮವನ್ನು ತನ್ನ ಕಲಾತ್ಮಕ ಜಾಣ್ಮೆಯಿಂದ,ಅನುಭಾವದ ಕಾಣ್ಕೆಯ ಹಿನ್ನೆಲೆಯಲ್ಲಿ ವಿಮರ್ಶಿಸಿ, ಪುನರ್‌ ಸಂಯೋಜನೆ ಮಾಡಿ ಪೂರ್ಣ ರೂಪ ಕೊಡಲು ಪ್ರಯತ್ನಿಸಿ, ಅಧಿಕ ಯಶಸ್ಸು ಸಾಧಿಸಿದ್ದು ಗೂಳೂರು ಸಿದ್ಧವೀರಣ್ಣೊಡೆಯನ ಹೆಗ್ಗಳಿಕೆಯಾಗಿದೆ.

   ಹೀಗೆಂದ ಮಾತ್ರಕ್ಕೆ ಈತನ ಕೃತಿಯಲ್ಲಿ ದೋಷಗಳೇ ಇಲ್ಲವೆಂದಲ್ಲ. ಒಂದು ಎದ್ದುಕಾಣುವ ಸಂಗತಿಯೆಂದರೆ, ಮೊದಲ ಎರಡು ಸಂಪಾದನೆಗಳಲ್ಲಿ ಇಲ್ಲದ, ಗುಮ್ಮಳಾಪುರದ ಸಿದ್ಧಲಿಂಗನಲ್ಲಿ ಮಾತ್ರ ಕಾಣುವ, ಬಿಜ್ಜಳನ ಕೊಲೆಗೆ ಬಸವಣ್ಣ ಪ್ರೇರಣೆ ನೀಡಿದನೆಂದು, “ಆ ಬಸವರಾಜದೇವರು ಶಿವಭಕ್ತಿದ್ರೋಹಿ ಬಿಜ್ಜಳನ ಸಂಹರಿಸಿ ನನ್ನಿಯಂ ಮೆರೆ ಎಂದು ಜಗದೇವಗೆ ಬೆಸನಿತ್ತು..” (ಪು. ೩೯೦) ಎಂದು ಸೇರಿಸಿದ್ದು. ಇದು ಬಸವಣ್ಣನ ವ್ಯಕ್ತಿತ್ವಕ್ಕೆ ಶೋಭೆ ತರುವಂಥ ಹೇಳಿಕೆಯಲ್ಲ. ಇದೊಂದು ಪ್ರಸಂಗ ಗೂಳೂರು ಸಿದ್ಧವೀರಣ್ಣನ ಸಂಪಾದನೆಗೆ ದೃಷ್ಟಿಬೊಟ್ಟಿನಂತೆ ತೋರುವ ಕಪ್ಪು ಚುಕ್ಕೆ ಎನಿಸಿದೆ.

  ಅದೇ ರೀತಿ ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯಲ್ಲಿ “ಸಮಯದ ವಾಕ್ಯ” ಎಂಬ ಹೊಸ ಪಾತ್ರ ಬರುತ್ತದೆ. ಸಮಯದ ವಾಕ್ಯವೆಂಬ ಹೆಸರಿನಲ್ಲಿ ಅನೇಕ ಖೊಟ್ಟಿವಚನಗಳನ್ನು ಸೇರಿಸಲಾಗಿದೆ. ಘಟ್ಟಿವಾಳಯ್ಯನ ಸಂಪಾದನೆಯನ್ನು ಹೊಸದಾಗಿ ಸೃಷ್ಟಿಸಿದ ಸಿದ್ಧವೀರಣ್ಣೊಡೆಯ ಇದೇ ಅಧ್ಯಾಯದಲ್ಲಿ ಸಮಯದ ವಾಕ್ಯ ಹೇಳುವ ವಚನಗಳನ್ನೂ ಸೇರಿಸಿದ್ದಾನೆ. ಇಲ್ಲಿಯೂ ಕೂಡ ಇಷ್ಟಲಿಂಗದ ಪ್ರಸ್ತಾಪವೇ ಮುಖ್ಯವಾಗಿದೆ. ಘಟ್ಟಿವಾಳಯ್ಯ ಮತ್ತು ಪ್ರಭು ದೇವರ ನಡುವೆ ಚರ್ಚೆಯಲ್ಲಿ, ಪ್ರಭುದೇವರ ಹೆಸರಿನಲ್ಲಿ ಅನೇಕ ಹೊಸ ವಚನಗಳು ಸೃಷ್ಟಿಯಾಗಿವೆ ಎಂಬುದು ವಿದ್ವಾಂಸರ ಅಭಿಮತವಾಗಿದೆ. ಅದೇ ರೀತಿ ಆಯ್ದಕ್ಕಿ ಮಾರಯ್ಯಗಳ ಸಂಪಾನೆಯಲ್ಲಿಯೂ ಕೂಡ ಕಾಯಕದ ಬಗೆಗೆ ಗೌರವವನ್ನು ತೋರಿಸಿಲ್ಲ. “ಕಾಯಕದಲ್ಲಿ ನಿರತನಾದರೆ ಗುರುದರುಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು. ಜಂಗಮಮುಂದಿದ್ದಡೂ ಹಂಗು ಹರೆಯಬೇಕು” ಎನ್ನುವ ವಚನವನ್ನು ಹೇಳುತ್ತಲೇ ಆಯ್ದಕ್ಕಿ ಮಾರಯ್ಯನ ಪ್ರವೇಶವಾಗುತ್ತದೆ. ಇದನ್ನು ಕೇಳಿ ಶೂನ್ಯಸಂಪಾದನಾಕಾರರ ಪ್ರಭುವು ಹೀಗೆ ಹೇಳುತ್ತಾನೆ. “ಮಾಡಿಹನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ. ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು ಆಯ್ದಕ್ಕಿಯ ಮಾರಯ್ಯ” ಎಂದು ವಿವರಿಸುವ ಪ್ರಭುವಿನ ಈ ವಚನ ಕೂಡಾ ಶೂನ್ಯ ಸಂಪಾದನಾಕಾರರ ಸೃಷ್ಟಿಯೇ ಆಗಿದೆ. ಎಲ್‌. ಬಸವರಾಜು ಅವರು ಸಂಪಾದಿಸಿರುವ “ಅಲ್ಲಮನ ವಚನಗಳು” ಕೃತಿಯಲ್ಲಿ ಈ ವಚನ ಕಂಡು ಬರುವುದಿಲ್ಲ. ಇಂತಹ ಅನೇಕ ವಚನಗಳನ್ನು ಗೂಳೂರು ಸಿದ್ಧವೀರಣ್ಣೊಡೆಯ ಸೃಷ್ಟಿಸಿ ಪ್ರಭುವಿನ ಹೆಸರಿನಲ್ಲಿ ಇಲ್ಲಿ ಕೊಡಮಾಡಿದ್ದಾರನೆ.

    ವಿದ್ವಾಂಸರು ಅಭಿಪ್ರಾಯ ಪಟ್ಟಿರುವಂತೆ ಕನ್ನಡ ಸಾಹಿತ್ಯ ಸಾಗರಲ್ಲಿಯ ವಿಶೇಷವಾಗಿರುವ        ಶೂನ್ಯಸಂಪಾದನೆಯು ತನ್ನ ಒಡಲೊಳಗೆ ಅನೇಕ ವೈಶಿಷ್ಟತೆಯನ್ನು ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾಗಿರುವುದು ಅಲ್ಲಿ ಬಂದಿರುವ ಸ್ತ್ರೀಪಾತ್ರಗಳು. ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಿದ್ಧವೀರಣ್ಣೊಡೆಯನು ತನ್ನ ಪರಿಷ್ಕರಣೆಯಲ್ಲಿ ಸ್ತ್ರೀ ಪಾತ್ರಗಳನ್ನು ತಂದಿದ್ದಾನೆ.

  ಶೂನ್ಯಸಂಪಾದನೆಯಲ್ಲಿ ಬಂದಿರುವ ಸ್ತ್ರೀ ಪಾತ್ರಗಳು :

   ಶಿವಗಣಪ್ರಸಾದಿ ಮಹಾದೇವಯ್ಯನಿಂದ ಪ್ರಾರಂಭವಾದ ಶೂನ್ಯಸಂಪಾದನೆಯ ರಚನಾ ಸೃಷ್ಟಿಯು ನಂತರ ಮೂರುಪರಿಷ್ಕರಣಗಳನ್ನು ಪಡೆದುಕೊಂಡಿತು. ಹೀಗೆ ಪರಿಷ್ಕರಣಗೊಂಡರೂ ಸಹ ಸ್ತ್ರೀಪಾತ್ರಗಳ ದೃಷ್ಟಿಯಿಂದ ನೋಡಿದರೆ ನಾಲ್ಕೂ ಶೂನ್ಯಸಂಪಾದನೆಗಳಲ್ಲಿ ಸ್ತ್ರೀಪಾತ್ರಗಳ ಸಂಖ್ಯೆ ಕಡಿಮೆ. ಆದರೂ ಬಳಸಿಕೊಂಡಿರುವ ಕೆಲವೇ ಸ್ತ್ರೀಪಾತ್ರಗಳು ಇಡೀ ಸ್ತ್ರೀಜನಾಂಗಕ್ಕಷ್ಟೇ ಅಲ್ಲದೇ ಇಡೀ ಮಾನವ ಜನಾಂಗಕ್ಕೇ ಮಾದರಿಯಾಗುವಂತೆ ಚಿತ್ರಿಸಿದ್ದಾನೆ. ಹೀಗೆ ನಾಲ್ಕೂ ಶೂನ್ಯಸಂಪಾದನೆಯಲ್ಲಿ ಸ್ತ್ರೀ ಪಾತ್ರಗಳ ಚಿತ್ರಣಕ್ಕೆ ಅತಿ ಹೆಚ್ಚು  ವಚನಗಳನ್ನು, ಹಾಡುಗಳನ್ನು ಬಳಸಿರುವವನು ಗೂಳೂರು ಸಿದ್ಧವೀರಣ್ಣೊಡೆಯನೇ ಆಗಿದ್ದಾನೆ. 'ಶಿವಗಣಪ್ರಸಾದಿ ಮಹಾದೇವಯ್ಯ ೩ ಜನ ವಚನಕಾರ್ತಿಯರ ೪೬ ವಚನಗಳನ್ನು ಬಳಸಿಕೊಂಡಿದ್ದರೆ, ಹಲಗೆಯಾರ್ಯನು ೩ ಜನ ವಚನಕಾರ್ತಿಯರ ೯೦ ವಚನಗಳನ್ನು, ೩ ಹಾಡುಗಳನ್ನು ಬಳಸಿದ್ದಾನೆ. ಗುಮ್ಮಳಾಪುರದ ಸಿದ್ದಲಿಂಗಯತಿಯು ೪ ಜನ ವಚನಕಾರ್ತಿಯರ ೯೧ ವಚನಗಳನ್ನು ಬಳಸಿದ್ದಾನೆ. ಆದರೆ ಗೂಳೂರು ಸಿದ್ಧವೀರಣ್ಣೊಡೆಯ  ೬ ಜನ ವಚನಕಾರ್ತಿಯರ ೧೪೭ ವಚನಗಳನ್ನು, ಒಂದು ಹಾಡನ್ನು (೩ ನುಡಿಗಳ) ಬಳಸಿಕೊಂಡಿದ್ದಾರೆ.

    ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯಲ್ಲಿ ಶಿವಶರಣೆಯರ ಪಾತ್ರ ಚಿತ್ರಣವು ಮನಮುಟ್ಟುವಂತೆ ಮೂಡಿಬಂದಿವೆ. ಈ ಶೂನ್ಯಸಂಪಾದನೆಯಲ್ಲಿ ಮೂಡಿಬಂದಿರುವ ವಚನಕಾರ್ತಿಯರ ಪಾತ್ರಗಳು ಸಾಮಾನ್ಯ ಸ್ತ್ರೀಯಂತೆ ರೂಪ ತಳೆದು, ಲೋಕದಲ್ಲಿರುವ ತಮ್ಮ ಗಂಡಂದಿರಿಗೆ ಹೆಂಡತಿಯಾಗಿದ್ದುಕೊಂಡು, ತಮ್ಮ ಕಾಯಕದ ಮೂಲಕ ಸಾಧನೆಯ ಶಿಖರವನ್ನು ತಲುಪಿದವರಾಗಿದ್ದಾರೆ. ಇವರು ತಮ್ಮ ಪತಿಯ ಸಾಧನೆಯಲ್ಲಿ ಭಾಗಿಗಳಾಗಿದ್ದು, ಅಷ್ಟೇ ಅಲ್ಲದೇ ತಮ್ಮ ಪತಿಯು ತನ್ನ ದಾರಿಯನ್ನು ಮರೆತಿರುವಾಗ ಅವನನ್ನು ಸರಿದಾರಿಗೆ ತರುವ ಕೆಲಸವನ್ನು ಕೈಗೊಂಡಿರುವುದು. ಪತಿಗೆ ಬುದ್ಧಿ ಹೇಳುವ ಮಟ್ಟಕ್ಕೆ ಪ್ರಬುದ್ಧತೆಯನ್ನು ಪಡೆದವರಾಗಿದ್ದಾರೆ. ಇಲ್ಲಿ ಬರುವ ಸ್ತ್ರೀಪಾತ್ರಗಳ ಸ್ಥಾನ- ಮಾನ, ಕಾಯಕ, ವಯಸ್ಸಿನಲ್ಲಿ ಭಿನ್ನತೆಯಿದ್ದರೂ ಎಲ್ಲರಲ್ಲಿಯು ಆಧ್ಯಾತ್ಮದ ಗುರಿ ಒಂದೇ ಆಗಿದೆ ಎಂಬುದು ಗಮನಿಸತಕ್ಕ ಸಂಗತಿಯಾಗಿದೆ.

೧. ಮುಕ್ತಾಯಕ್ಕ :

   ಶೂನ್ಯಸಂಪಾದನೆಯು ಪ್ರಾರಂಭದಲ್ಲಿ ಬರುವ ಪ್ರಥಮೋಪದೇಶವನ್ನು ಬಿಟ್ಟರೆ, ಪ್ರಾರಂಭವಾಗುವುದೇ ಸ್ತ್ರೀಪಾತ್ರವಾದ 'ಮುಕ್ತಾಯಕ್ಕನ ಸಂಪಾದನೆ'ಯ ಮೂಲಕವೆನ್ನುವುದು ವಿಶೇಷವಾಗಿದೆ. ಈ ಸಂಪಾದನೆಯು ಮುಂದೆ ಬರುವ ಎಲ್ಲ ಸಂಪಾದನೆಗಳ ಹಾಗೂ ಇಡೀ ಶೂನ್ಯಸಂಪಾದನೆ ಗ್ರಂಥದ ಘನತೆ, ಗಾಂಭೀರ್ಯತೆ, ಹಿರಿಮೆಯನ್ನು ಪ್ರತಿನಿಧಿಸುತ್ತದೆ. ಗುಪ್ತ ಭಕ್ತನಾಗಿದ್ದ ಅಜಗಣ್ಣನ, ಅಲ್ಲಮಪ್ರಭುವಿನ ಆಧ್ಯಾತ್ಮಿಕ ಎತ್ತರ -ಬಿತ್ತರಗಳನ್ನು ಈ ಪ್ರಸಂಗವು ನಿಬ್ಬೆರಗುಗೊಳಿಸಿದೆ. ಅಲ್ಲಮಪ್ರಭುವಿನೊಡನೆ ಮುಕ್ತಾಯಕ್ಕಗಳು ನಡೆಸಿದ ಸಂವಾದದಲ್ಲಿ ಕೆಲವು ಸೂಕ್ಷ್ಮ,ತಾತ್ವಿಕ, ಆಧ್ಯಾತ್ಮಿಕ ಮೌಲ್ಯಗಳ ಜಿಜ್ಞಾಸೆ ನಡೆದಿರುವುದನ್ನು ಕಾಣಬಹುದು. ಗ್ರಂಥದುದ್ದಕ್ಕೂ ಕಂಡುಬರುವಂತೆ ಈ ಸಂಪಾದನೆಯಲ್ಲಿಯೂ ಸಂಚಲನವನ್ನುಂಟು ಮಾಡುವ ಬೆಡಗಿನ ವಚನಗಳನ್ನು ಬಳಕೆ ಮಾಡಿಕೊಂಡಿದ್ದರಿಂದ ಸನ್ನಿವೇಶದ ತಾತ್ವಿಕತೆ ಮತ್ತು ಕಾವ್ಯಮಯತೆಗೆ ಮೆರಗನ್ನು ತರುವ ಕೆಲಸವು ನಡೆದಿದೆ. ಇಲ್ಲಿ ಅಜಗಣ್ಣನ ಲಿಂಗೈಕ್ಯನಾದ ಸನ್ನಿವೇಶವನ್ನು ಬಳಸಿಕೊಳ್ಳುವುದರ ಮೂಲಕ ಶರಣ ತತ್ತ್ವಗಳಲ್ಲೊಂದಾದ 'ಮರಣವೇ ಮಹಾನವಮಿ' ಎಂಬುದನ್ನು ಪ್ರತಿಪಾದಿಸುವಂತೆ ಕಾಣುತ್ತದೆ. ಗುಪ್ತಭಕ್ತನಾಗಿದ್ದ ಅಜಗಣ್ಣನ ತಂಗಿ ಮುಕ್ತಾಯಕ್ಕ ಅಣ್ಣನ ಮರಣದಿಂದ ದುಃಖಿತಳಾದ ಮುಕ್ತಾಯಕ್ಕನನ್ನು ಕಂಡ ಅಲ್ಲಮಪ್ರಭು ಅವಳನ್ನು ಮಾತನಾಡಿಸುವುದರೊಂದಿಗೆ ಅವಳಲ್ಲಿ ಹುದುಗಿರುವ ಆಧ್ಯಾತ್ಮಿಕ ನಿಲುವನ್ನು ಹೊರಗೆಡುವ ಪ್ರಯತ್ನವನ್ನು ಮಾಡಿರುವುದು ವಿಶೇಷವಾಗಿದೆ. 

   ಮುಕ್ತಾಯಕ್ಕನ ದುಃಖದಲ್ಲಿ ಲೌಕಿಕ ದುಃಖದ ಛಾಯೆ ಕಾಣಿಸದು. ಅಲ್ಲಿರುವುದು ಆಧ್ಯಾತ್ಮಿಕ ಶೋಕ, ಆಧ್ಯಾತ್ಮಿಕ ಚಿಂತನೆಯ ಹಾದಿಯನ್ನು ಕಳೆದುಕೊಂಡೆನೆಂಬ ದುಃಖದ ಪರಿಯದು. ಇಲ್ಲಿ ದುಃಖ ತಪ್ಪಳಾದ ಮುಕ್ತಾಯಕ್ಕ ತಪ್ಪಿಯೂ ಎಲ್ಲೂ ಕ್ಷಣಿಕ ತೃಪ್ತಿಯ ಆಸೆಗಾಗಿ ಹಂಬಲಿಸುವ ಸಾಮಾನ್ಯ ಸ್ತ್ರೀಯಂತೆ ಕಾಣಿಸುವುದಿಲ್ಲ. ಇಲ್ಲಿ ಇನ್ನೊಂದು ವಿಶೇಷವೇನೆಂದರೆ ಶೂನ್ಯ-ಸಂಪಾದನೆಯ ಗ್ರಂಥದುದ್ದಕ್ಕೂ ಜ್ಞಾನನಿಧಿಯಾದ ಅಲ್ಲಮಪ್ರಭುವು ಎಲ್ಲ ಶರಣ-ಶರಣೆಯರನ್ನು ರೀಕ್ಷೆ ಮಾಡುವ ಮೂಲಕ ಅವರಲ್ಲಿರುವ ಆಧ್ಯಾತ್ಮ ಜ್ಞಾನವನ್ನು ಒರೆಗೆ ಹಚ್ಚಿ, ಅನುಮಾನಗಳನ್ನು, ಸಂದೇಹಗಳನ್ನು ಪರಿಹರಿಸುವ ಕೆಲಸವನ್ನು ಮಾಡಿರುವುದನ್ನು ಕಾಣಬಹುದಾಗಿದೆ. ಆದರೆ, ಈ ಸಂಪಾದನೆಯಲ್ಲಿ ಮಾತ್ರ ಜ್ಞಾನನಿಧಿಯಾದ ಅಲ್ಲಮಪ್ರಭುವನ್ನೇ ಪರೀಕ್ಷೆಗೊಳಪಡಿಸುವದರ ಮೂಲಕ ಮುಕ್ತಾಯಕ್ಕ ಅಲ್ಲಮಪ್ರಭುವನ್ನು ಒರೆಗೆ ಹಚ್ಚುವಂತೆ ಸೃಷ್ಟಿಸಿರುವುದು ಗಮನ ಸೆಳೆದಿದೆ.  ಈ ಪ್ರಸಂಗವು ಅಂದು ಶರಣರು ಮಹಿಳೆಯರಿಗೆ ಕೊಟ್ಟ ಸಮಾನ ಸ್ಥಾನ-ಮಾನ, ಸ್ವಾತಂತ್ರ್ಯವನ್ನು ತಿಳಿಸಿ ಕೊಟ್ಟಿದ್ದರ ಪ್ರತೀಕವಾಗಿದೆ.

   ಅಲ್ಲಮಪ್ರಭುದೇವರು ಆಧ್ಯಾತ್ಮದ ಉತ್ತುಂಗ ಶಿಖರವನ್ನು ಮುಟ್ಟಿ, ಜ್ಞಾನದ ಖಣಿಯಾಗಿ ನಿಜಜಂಗಮನಾಗಿಲೋಕ ಕಲ್ಯಾಣಾರ್ಥವಾಗಿ ಸಂಚರಿಸುತ್ತಾ ಬರುವಾಗ ಅವನನ್ನು ಮೊದಲು ಕಾಣುವುದು ಮುಕ್ತಾಯಕ್ಕ. ಅಲ್ಲಮಪ್ರಭುವು ಮುಕ್ತಾಯಕ್ಕನನ್ನು ಕಂಡಾಗ ಅವಳು ತನ್ನ ಜೀವನಕ್ಕೆ ಪ್ರೇರಕ ಚೇತನದಂತಿದ್ದ, ಆಧ್ಯಾತ್ಮದ ಗುರುವಾಗಿದ್ದ ಅಪ್ರತಿಮಯೋಗಿ, ಗುಪ್ತಭಕ್ತಿಯ ಅಜಗಣ್ಣನು ಲಿಂಗೈಕ್ಯನಾಗಿರುವುದರಿಂದ ದಿಗ್‌ ಭ್ರಮೆಗೊಂಡು ಪ್ರಲಾಪಿಸುತ್ತಿರುವುದನ್ನು ಕಾಣುತ್ತಾನೆ. ಅವಳ ದುಃಖವು ಸಾಮಾನ್ಯ ಸ್ತ್ರೀಯರಂತಲ್ಲ. ಅಜಗಣ್ಣನ ಗುಪ್ತಯೋಗವನ್ನು ಅರಿಯಲಿಲ್ಲವಲ್ಲವೆಂಬ ಅರಿವಿನ ತೃಷೆಯಿಂದಾದ ದುಃಖವದಾಗಿತ್ತು. ಅವಳ ಮಾತಿನಲ್ಲಿಯೇ ಅದನ್ನು ಕೇಳಬೇಕು.

 "ಅಂಧಕನ ಕಯ್ಯ ಅಂಧಕ ಹಿಡಿದಂತಿರಬೇಕು ಅಣ್ಣಾ, ಮೂಗನ ಕಯ್ಯಲಿ ಕಾವ್ಯವ ಕೇಳದಂತಿರಬೇಕು. ದರ್ಪಣದೊಳಗಣಪ್ರತಿಬಿಂಬದಂತೆ ಹಿಡಿವರಿಗಳವಲ್ಲದಿರಬೇಕು ಅಣ್ಣಾ. ಕೂರ್ಮನ ಶಿಶುವಿನ 'ಸ್ನೇಹದಂತಿರಲೊಲ್ಲದೆ' ಆರೂಢ ಗೆಟ್ಟಿಯೊ ಅಜಗಣ್ಣಾ" ( ಅದೇ, ವ.ಸಂ.೮೦ ಪು.೩೦.)ಇಲ್ಲಿ ಅವಳ ಅಂತರಂಗದ ಭಾವನೆಗಳು ಪರಿಣಿತವಾಗಿರುವುದನ್ನು ನಾವು ಕಾಣಬಹುದು. ಅವಳುಮುಂದೊರೆದು "ಸ್ಪಟಿಕ ಪ್ರಜ್ವಲಜ್ಕೋತಿ ಘತದೊಳಗೆ ತೋರಿತ್ತಿರೆ, ದಿಟಪುಟಿವನತಿಗಳೆದು ಸಟೆಯ ಬಳಸುವರೆ?ಅಂತರಂಗದ ಶುದ್ಧಿಯ ಬಹಿರಂಗಕ್ಕೆ ತಂದು ಸಂತೈಸಲರಿಯದೆ ಮರುಳಾದಿರಣ್ಣಾ. ಜಂತ್ರದ ಕೀಲು ಕೂಟದ ಸಂಚದಭೇದವು ತಪ್ಪಿ, ಮಂತ್ರ ಭಿನ್ನವ ಆಗಿ ನುಡಿವರೆ ಅಜಗಣ್ಣಾ?"”” ( ಅದೇ, ವ.ಸಂ.೮೨ ಪು.೩೦)ಈ ವಚನದಲ್ಲಿ ಅಜಗಣ್ಣನ ಆಧ್ಯಾತ್ಮದ ಅತ್ಯುನ್ನತನೆಲೆಯ ಅರಿವಾಗುತ್ತದೆ. ಅಂತರಂಗ -ಬಹಿರಂಗಗಳಲ್ಲಿ ಏಕಪ್ರಕಾರವಾಗಿ ಪ್ರಜ್ವಲಿಸುವ ಆತನ ದಿವ್ಯವ್ಯಕ್ತಿತ್ವವನ್ನುಕಾಣಬಹುದು. ಅಜಗಣ್ಣಾ ತನ್ನ ಯೋಗದ ರಹಸ್ಯವನ್ನು ತಿಳಿಸದೆ ಹೋದ. ಅವರಿಬ್ಬರ ಗುರು-ಶಿಷ್ಠ ಸಂಬಂಧ ಅವ್ಯಕ್ತವಾಗಿಯೇ ಮುನ್ನಡೆದಿತ್ತು. ಇದ್ದಕ್ಕಿದ್ದಂತೆಯೇ ಅವನ ಆತ್ಮಜ್ಯೋತಿ ಇಂಗಿ ನಿರಾಕಾರದಲ್ಲಿ ಲೀನವಾಗಿರುವುದನ್ನು-"ಕೊಡನೊಳಗಣ ಜ್ಯೋತಿಯ ಅಡಗಿಸಲರಿಯದೆ ಮಿಗೆವರಿದಂತಾದೆಯೋ ಅಜಗಣ್ಣಾ" ಹೀಗೆ ತಿಳಿಸುತ್ತಾ, ತನ್ನಜೀವನದಲ್ಲಿ ಕವಿದಿರುವ ಅಂಧಕಾರದ ಕರಿನೆರಳನು ಸೂಚಿಸುತ್ತಿರುವಳು. ಅವಳ ಆ ಸ್ಥಿತಿಯನ್ನು ಸಿದ್ಧವೀರಣ್ಣೊಡೆಯರು"ಇಂತು ತನ್ನ ಅರಿವಿನ ಮುಂದೆ ಇದಿರಿಟ್ಟು ತೋರುವ ಪರವಸ್ತುವಿನಲ್ಲಿ ವಿಕಳಾವಸ್ಥೆಯನೈದಿ ನೆರೆವ ಭರದಿಂದಿರ್ಪ ಮುಕ್ತಾಯಕ್ಕಗಳನು..." ಎಂದು ಒಂದೇ ವಾಕ್ಯದಲ್ಲಿ ಪ್ರಭುದೇವರಿಗೆ ತಿಳಿಸುವಂತೆ ಹೇಳಿರುವರು. ಅಣ್ಣ ಅಜಗಣ್ಣನನ್ನು ಕಳೆದುಕೊಂಡು ಆಧ್ಯಾತ್ಮದ ಹಸಿವಿನಿಂದ ಪ್ರಲಾಪಿಸುತ್ತಿರುವ ಮುಕ್ತಾಯಕ್ಕನನ್ನು ನೋಡಿದ ಪ್ರಭುದೇವರು ಅವಳ ಮನದ ಇಂಗಿತವನ್ನು ಅರಿತುಕೊಂಡೇ ಅವಳನ್ನು ಕುರಿತು ಪ್ರಶ್ನಿಸುತ್ತಾರೆ-" ಅಂಗೈಯೊಳಗೊಂದು ಅರಳ್ಹ ತಲೆಯ ಹಿಡಿದುಕೊಂಡು,

ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ? ಸಂದ ಸಂಪಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವಪರಿತಾಪವೇನು ? ಒಂದೆಂಬೆನೆ ? ಎರಡಾಗಿಯಿದೆ. ಎರೆಡೆಂಬೆನೆ? ಒಂದಾಗಿಯಿದೆ. ಅರಿವಿನೊಳಗಣ ಮರಹಿದೇನುಹೇಳಾ ? ದುಃಖವಿಲ್ಲದ ಅಕ್ಕೆ, ಅಕ್ಕ ಇಲ್ಲದ ಅನುತಾಪ, ನಮ್ಮ ಗೂಹೇಶ್ವರ ಲಿಂಗದಲ್ಲಿ ತೋರುತ್ತಿದೆ. ನೀನಾರೆಂದುಹೇಳಾ ಎಲೆ ಅವ್ವಾ?"( ಅದೇ, ವ.ಸಂ.೮೩, ಪು.೩೧,) ಎಂಬ ಅಲ್ಲಮಪ್ರಭುವಿನ ಕಾವ್ಮಮಯವಾದ ಪ್ರಶ್ನೆಯಲ್ಲಿ ಮುಕ್ತಾಯಕ್ಕನು ಆಧ್ಯಾತ್ಮದಉನ್ನತಿಯನ್ನು ಮುಟ್ಟಿದ್ದ ಬಗ್ಗೆ ಕುರುಹು ಕಾಣುತ್ತದೆ. ಪ್ರಭುವು ಬಳಸುವ 'ಅರಳ್ಡ್ಹ ತಲೆ' ಎಂಬ ವಿಶೇಷ ಪದದಿಂದ ತಿಳಿದುಬರುತ್ತದೆ. ಜನಸಾಮಾನ್ಯರದು ಅರಳದೆ ಇರುವ ತಲೆ, ಅಂದರೆ ಆಧ್ಯಾತ್ಮದ ಉತ್ತುಂಗವನ್ನು ತಲುಪದವರೆಂಬುದನ್ನುಸೂಚಿಸುತ್ತಾ, ಅವಳ ಆ ಅದ್ಭುತ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಳ್ಳಲು ಬಯಸುತ್ತಾನೆ.

 ಪ್ರಭುವಿನ ಕಾವ್ಯಮಯವಾದ ಪ್ರಶ್ನೆಗೆ ಮುಕ್ತಾಯಕ್ಕನ ಉತ್ತರವಿಂತಿದೆ-” ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿಎನ್ನ ಅಜಗಣ್ಣತಂದೆಯ ಬೆನ್ನ ಬಳಿಯವಳಾನಯ್ಯ.' ಹೀಗೆ ತನ್ನ ಕುರುಹನ್ನು ಪ್ರಭುದೇವರಿಗೆ ಉತ್ತರವಾಗಿ ನೀಡುವುದರಜೊತೆಗೆ ತನಗೆ ಪ್ರಶ್ನೆಯನ್ನು ಕೇಳುವ ನೀನಾರು? ಎಂದು ಪ್ರಭುವಿಗೆ ಪ್ರಶ್ನೆ ಕೇಳುತ್ತಾಳೆ. ".... ನಾ ನಿಮ್ಮ ಭಾವನಲ್ಲಯ್ಯನು,ನೀನೆನಗೆ ನಗೆವೆಣ್ಣು, ನಮ್ಮ ಗುಹೇಶ್ವರನ ಕೈವಿಡಿದು ಪರಮಸುಖಿಯಾಗಿ, ಕಳವಳದ ಕಂದೆರವಿಯೇನು ಹೇಳಾ?"ಹೀಗೆ ತನ್ನ ಕುರುಹನ್ನು ಹೇಳುತ್ತಾ, ಅಜಗಣ್ಣನು ಮರೆಯಾದನೆಂದು ದುಃಖಿಸುವ ಪರಿಯಾದರೂ ಏಕೆ? ಎಂದು ಅವಳದುಃಖಕ್ಕೆ ಸ್ಪಂದಿಸಿ, ಅವಳನ್ನು ಸಂತೈಸುತ್ತಾ "ಅರಿವರತು ಮರಹುಗೆಟ್ಟು, ತನ್ನಲ್ಲಿ ತಾನು ಸನ್ನಹಿತವಾದಂಗೆ ದುಃಖಿಸುವರೆಹೇಳಾ? ಶೋಕಿಸುವರೆ ಹೇಳಾ ? ಒಡಲಿಲ್ಲದಾತಂಗೆ ಎಡೆಯಲೊಂದು ಅಳಿವುಂಟೆಂದು ನುಡಿದು ಹೇಳು ಮಾತು ಭ್ರಾಂತುನೋಡಾ! ಎರಡಿಲ್ಲದ ಐಕ್ಕಂಗೆ ಒಳಹೊರಗಿಲ್ಲ ನೋಡಾ ಗುಹೇಶ್ವರನ ಶರಣ ಅಜಗಣ್ಣಂಗೆ" ( ಅದೇ, ವ.ಸಂ೮೯೦,ಪು.೩೩)ಅರಿವು ಮರವೆಗಳಿಗೆ ಅತೀತನಾದ, ಅಂತರಂಗ -ಬಹಿರಂಗದ ಭೇದವನ್ನು ಕಳೆದು ಏಕೈಕನಾದ ಬಯಲ ಮೂರುತಿ ಅಜಗಣ್ಣ, ನಿಃಶೂನ್ಯ ನಿರಾಕಾರಪರಬ್ರಹ್ಮವೆ ಸಾಕಾರವಾಗಿ ಅಜಗಣ್ಣನ ರೂಪದಿ ಜನ್ಮ ತಳೆದು ಮತ್ತೆ ಆ ವಿಶ್ವಾಕಾಶದ ಬಯಲಿನಲ್ಲಿ ಬಯಲಾಗಿಹೋದ ಬಯಲು ಮೂರುತಿಯಾದ ಅಜಗಣ್ಣನನ್ನು ಅಗಲಿದೆನೆಂಬ ಭ್ರಮೆ ಏಕೆ? ಎಂದು ಮುಕ್ತಾಯಕ್ಕನಿಗೆ ನಿರ್ವಯಲಪ್ರಜ್ಞೆಯನ್ನು ಅವಳ ಮನಸ್ಸಿಗೆ ತರುವಲ್ಲಿ ಪ್ರಭುದೇವರು ಪ್ರಯತ್ನಿಸುತ್ತಾರೆ. ಮುಕ್ತಾಯಕ್ಕ ತನ್ನಲ್ಲುಂಟಾಗಿರುವ ಅನೇಕಸಂದೇಹಗಳಿಗೆ ಪ್ರಭುದೇವರಲ್ಲಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಂದೇಹಗಳನ್ನು ನಿವಾರಿಸಿಕೊಳ್ಳತೊಡಗುತ್ತಾಳೆ.

ತನ್ನ ಗುರುವಾದ ಅಜಗಣ್ಣನು ನಿರಾಕಾರದ ನಿಲುವನ್ನು ತಿಳಿಯುವ ಬಗೆಯನ್ನು ತಿಳಿಸಿದೆ ಮಧ್ಮದಲ್ಲಿಯೇ ತನ್ನನ್ನುಬಿಟ್ಟುಹೋದನೆಂಬ ಭ್ರಮೆಯಲ್ಲಿರುವವಳಿಗೆ, ಗುರು-ಶಿಷ್ಠರ ಸಂಬಂಧದ ಸೂಕ್ಷ್ಮತೆಯನ್ನು ತಿಳಿಸುತ್ತಾ "ಗುರುವಿಂಗೂ ಶಿಷ್ಯಂಗೂ ಆವುದು ದೂರ, ಆವುದು ಸಾರೆಯೆಂಬುದನಾರು ಬಲ್ಲರು? ಗುರುವೆ. ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ, ಕರ್ಮವೆಂಬ ಕೌಟಿಲ್ಯ ಎಡವೊಕ್ಕೆ ಕಾರಣ, ಭಿನ್ನವಾಗಿ ಇದ್ದಿತೆಂದರೆ ಅದು ನಿಶ್ಚಯವಹುದೇ?ಆದಿಯನಾದಿಯಿಂದತ್ತತ್ತ ಮುನ್ನಲಾದ ಪರತತ್ತ್ವಮಂ ತಿಳಿದು ನೋಡಲು, ನೀನೆ ಸ್ವಯಂ ಜ್ಯೋತಿ ಪ್ರಕಾಶನೆಂದರಿಯಲು, ನಿನಗೆ ನೀನೇ ಗುರುವಲ್ಲದೆ ನಿನ್ನಿಂದಧಿಕಮಪ್ಪ ಗುರು ಉಂಟೇ? ಇದು ಕಾರಣ ಗುಹೇಶ್ವರ ಲಿಂಗವು ತಾನೆ ಎಂಬುದನೂನಿನ್ನಿಂದ ನೀನೆ ಅರಿಯಬೇಕು ನೋಡಾ." ಅವರಲ್ಲಿರುವ ರಹಸ್ಯವನ್ನು ಬಿಡಿಸಿ ತೋರಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಮುಕ್ತಾಯಕ್ಕ "ತನ್ನತಾನರಿದವಂಗೆ ಅರಿವೆ ಗುರು, ಅರಿವರತುಮರಹು ನಷ್ಟವಾದಲ್ಲಿ, ದೃಷ್ಟ ನಷ್ಟವೆಗುರು. ದೃಷ್ಟನಷ್ಟ- ಗುರುತಾನಾದಲ್ಲಿ, ಮುಟ್ಟಿ ತೋರಿದವರಿಲ್ಲದಡೇನು? ಸಹಜವ ನೆಲೆಗೊಳಿಸುವ ನಿರ್ಣಯನಿಃಪತಿಯೆ ಗುರು ನೋಡಾ, ಗುರುತಾನಾದರೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ" ಗುರುವಿನ ಮಹಿಮೆಯನ್ನು ಬಲ್ಲವಳಾಗಿದ್ದಳು. ಗುರುವಾದವನಿಗೂ ಸಹ ಗುರುವಿನ ಅವಶ್ಯಕತೆಯನ್ನು ತಿಳಿಸುತ್ತಾಳೆ. ಅಂತರಂಗದ ಅರಿವಿನ ಮಾರ್ಗಸೂಚಿಗೆ ಬಾಹ್ಯ ಗುರುವಿನ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತಾಳೆ. ಆದರೆ ಪ್ರಭುದೇವರು ಅವಳ ಆ ಮಾತಿಗೆ ಪ್ರತಿಯಾಗಿ "ಸಹಜ ಸಂಬಂಧಕ್ಕೆ ಗುರುವಲ್ಲದೆ, ಅಸಹಜಕ್ಕೆ ಗುರುವುಂಟೆ" ಎಂದು ಪ್ರಶ್ನಿಸುತ್ತಾನೆ. ಪ್ರಭುವಿನ ಮಾತುಗಳನ್ನುಳಿದ ಮುಕ್ತಾಯಕ್ಕ ಅಜಗಣ್ಣನೊಡನೆ ಪ್ರಭುವನ್ನು ತುಲನೆ ಮಾಡುತ್ತಾ ಆಡುವ ಮಾತಿದು "ಅದ್ವೈತವ ನೆಲೆಗೊಳಿಸಿಎರಡಳಿದೆನೆಂಬುವರು, ಶಿಶು ಕಂಡ ಕನಸಿನಂತಿರಬೇಕಲ್ಲದೆ, ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ? ಅರಿವರತುಮರಹು ನಷ್ಟವಾಗಿ ಗುರುವ ತೋರಿದೆನೆಂಬವರು, ಇದರಿಂಗೆ ಕರುಳ ಕಲೆಯ ನರುಹುವ ಪರಿಯೆಂತು ಹೇಳಾ? ಮನದನೆಯ ಮೊನೆಯ ಮೇಲಣ ಅರಿವಿನ ಕಣ್ಣ ಮುಂದೆ ಸ್ವಯಂ ಪ್ರಕಾಶ ತೋರಿತ್ತಿರ್ದಡೆ ತಾನಾಗಬಲ್ಲನೇ? ನೆರೆಯರಿತುಮರೆಯಬಲ್ಲರೆ ಎನ್ನ ಅಜಗಣ್ಣನಂತೆ ಶಬ್ದಮುಗ್ಧವಾಗಿರಬೇಕಲ್ಲದೆ, ಶಬ್ದಸಂದಣಿಯ ಮಾತು ಸಯವಲ್ಲ ನೋಡಾಪ್ರಭುವೆ (ಅದೇ, ವ.ಸಂ.೧೦೫,ಪು.ಸಂ.೪೦) ಹೀಗೆ ಅವಳಲ್ಲಿರುವ ಸಂದೇಹಗಳಿಗೆ, ಸಂಶಯಗಳನ್ನು ಪ್ರಭುವಿನ ಮುಂದೆ ಧೈರ್ಯವಾಗಿ ಆಡುವುದನ್ನು ನೋಡಿದರೆ ಅವಳ ದಿಟ್ಟ ವ್ಯಕ್ತಿತ್ವದ ಅರಿವಾಗುತ್ತದೆ. ಅವಳ ಸಂಶಯ, ಸಂದೇಹಗಳಿಗೆ ಪ್ರತಿಯಾಗಿ ಪ್ರಭುವು ನೀಡುವ ಪ್ರಸಿದ್ದವಾದ ವಚನ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ತ್ವ, ತಾಳೋಷ್ಟ ಸಂಪುಟ ವೆಂಬುದು ನಾದಬಿಂದು ಕಳಾತೀತ, ಗುಹೇಶ್ವರ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರಳೆ(ಅದೇ, ವ.ಸಂ.೨೮, ಪು.ಸಂ.೪೦)  ಭಾಷೆ, ಅನುಭಾವಗಳ ಸಂಕೀರ್ಣತೆಯನ್ನು ಕಂಡ ಬಗೆಯನ್ನು ಸೂಕ್ಷ್ಮವಾಗಿ ವಿವೇಚಿಸುತ್ತದೆ. ಅನುಭವವು ಮಾತಿನಲ್ಲಿ ವ್ಯಕ್ತಗೊಳ್ಳುವ ಕ್ರಿಯೆಯು, ನಿರಾಕಾರವು ಸಾಕಾರಗೊಳ್ಳುವ ಕ್ರಿಯೆಯಂತೆ ಸಹಜ ವಾಗಿರುವಂತಹುದು ಎನ್ನುವ ಅಲ್ಲಮಪ್ರಭುವಿನ ಮಾತಿಗೆ ಮುಕ್ತಾಯಕ್ಕನಿನಗಿನ್ನೂ ಒಡಲ ಹಂಗು ಬಿಡದು, ಮಾತಿನ ಮಥನ ಹಿಂಗದು, ನಡೆ -ನುಡಿಗಳಿಗೆ ಹಂಗಿಗನಾದ ನೀನು ಪರರಿಗೆ ಹೇಳುವುದುಏನು? ಎನ್ನುತ್ತಾಳೆ. "ನುಡಿಯ ಹಂಗಿನ್ನೂ ನಿಮಗೆ ಹಿಂಗದು, ನಡೆಯನೆಂತು ಪರರಿಗೆ ಹೇಳುವಿರಿ? ಒಡಲ ಹಂಗಿನಸುಳುಹು ಬಿಡದು, ಎನ್ನೊಡನೆ ಮತ್ತೇತರನುಭವವಣ್ಣಾ? ತಾನಾದಲ್ಲದೆ ಇದಿರಿಂಗೆ ಹೇಳಬಹುದೆ? ಅರಿವ ತೋರಬಲ್ಲರೆ,ತನ್ನನರುಹದೆ ಅರಿವನು ಕಾಣಾ ಎನ್ನ ಅಜಗಣ್ಣ ತಂದೆ"(ಅದೇ, ವ.ಸಂ.೧೦೯, ಪು.ಸಂ.೪೧)  ಹೀಗೆ ತನ್ನ ನಿಷ್ಠುರ ನುಡಿಗಳಿಂದ ಅಲ್ಲಮಪ್ರಭುವನ್ನು ವ್ಯಂಗ್ಯವಾಗಿ ಪ್ರಶ್ನಿಸುವ ಅವಳ ಧೈರ್ಯವನ್ನು ಮೆಚ್ಚುವಂತಹುದಾಗಿದೆ.

    ಅಲ್ಲಮಪ್ರಭುದೇವರು ಮತ್ತು ಮುಕ್ತಾಯಕ್ಕಗಳ ನಡುವೆ ನಡೆದ ಸಂವಾದದ ಮೂಲಕ ಮುಕ್ತಾಯಕ್ಕನಿಗೆ ತಲೆದೋರಿರುವ ಸಂದೇಹ, ಸಂಶಯಗಳಿಗೆ ಸಮರ್ಥವಾದ ಉತ್ತರವನ್ನು ಹುಡುಕುವದರ ಜೊತೆಗೆ, ಅಜಗಣ್ಣನ ಆಧ್ಯಾತ್ಮದ ನಿಲುವನ್ನು ತಿಳಿಸುವ ಹಾಗೂ ಮುಕ್ತಾಯಕ್ಕನ ತಾತ್ವಿಕತೆಯನ್ನು ಹೊರಗೆಡಹುವ ಕೆಲಸವನ್ನು ಅಲ್ಲಮಪ್ರಭುದೇವರು ಮಾಡುತ್ತಾರೆ. ಅವಳ ದುಃಖವನ್ನು ದೂರಮಾಡುವುದರೊಂದಿಗೆ ಅವಳಣ್ಣನ ಹಾಗೆ ನೀನು ಬಯಲನ್ನು ಬೆರೆಸಿದ ಬಯಲಂತೆ, ಮನೋಲಯದಲ್ಲಿ ನಿರವಯಲ ಸಮಾಧಿಸ್ಥಳಾಗೆಂದು ಉಪದೇಶಿಸಿ ಅವಳ ವ್ಯಕ್ತಿತ್ವವನ್ನು ಪುಟಕ್ಕಿಟ್ಟ ಚಿನ್ನದಂತೆ ಒರೆಗೆ ಹಚ್ಚಿ ಅಪ್ಪಟ ಚಿನ್ನವನ್ನಾಗಿಸಿ ಅಲ್ಲಮಪ್ರಭು ಮುಂದೆ ಸಾಗುತ್ತಾನೆ.

     ಶೂನ್ಯಸಂಪಾದನೆಯಲ್ಲಿ ಬಂದಿರುವ ಮುಕ್ತಾಯಕ್ಕನ ಪ್ರಸಂಗದಿಂದಾಗಿ ಅವಳ ಸಂಪೂರ್ಣ ವ್ಯಕ್ತಿತ್ವದ ಅಭಿವ್ಯಕ್ತಿ ಮಗಾಗುತ್ತದೆ. ಅಲ್ಲಪ್ರಭುವನ್ನು ಧೈರ್ಯವಾಗಿ ದಿಟ್ಟತನದಿಂದ ಎದುರುಗೊಂಡು ಅವನೊಡನೆ ಅನುಭಾವದ ನುಡಿಗಳಿಗೈದು, ತನ್ನ ಸಂದೇಹ, ಸಂಶಯಗಳಿಗೆ ಉತ್ತರವನ್ನು ಕಂಡುಕೊಳ್ಳುವುದರ ಜೊತೆಗೆ ಅಲ್ಲಮಪ್ರಭುವಿನ ಧೀಮಂತ ವ್ಯಕ್ತಿತ್ವಕ್ಕೆ, ನಿಲುಕದ ನಿಲುವಿಗೆ ಮಣಿದು ಶರಣಾಗುತ್ತಾಳೆ.  ಹೀಗಾಗಿ ಶಿವಯೋಗ ಸಾಧನೆಯ ಸಾಧಕಿಯರಲ್ಲಿ ಮುಕ್ತಾಯಕ್ಕ ಆಗ್ರಪಂಕ್ತಿಯಲ್ಲಿ ನಿಲ್ಲುತ್ತಾಳೆ.

೨. ಆಯ್ದಕ್ಕಿ ಲಕ್ಕಮ್ಮ:

ಶೂನ್ಯಸಂಪಾದನೆಯಲ್ಲಿ ಲಕ್ಕಮ್ಮನ ಪ್ರಸಂಗವು ಸೇರಿರುವುದು ಗುಮ್ಮಳಾಪುರದ ಸಿದ್ಧಲಿಂಗಯತಿಯಿಂದಾಗಿ,ಇವನ ನಂತರ ಗೂಳೂರು ಸಿದ್ಧವೀರಣ್ಣೊಡೆಯರು ಈ ಪ್ರಸಂಗವನ್ನು ಉಳಿಸಿಕೊಳ್ಳುವುದರ ಜೊತೆಗೆ ಗುಮ್ಮಳಾಪುರಸಿದ್ಧಲಿಂಗಯತಿಯು ಬಳಸಿದ ವಚನಗಳನ್ನು ಒಳಗೊಂಡ ಹಾಗೆ ಅಧಿಕವಾಗಿ ೮ ವಚನಗಳನ್ನು ಬಳಸಿಕೊಂಡು ಈ ಪ್ರಸಂಗವನ್ನು ನಿರೂಪಿಸಿದ್ದಾನೆ.

     ೧೨ನೇ ಶತಮಾನದಲ್ಲಿ ಬರುವ ಎಲ್ಲ ಶರಣ -ಶರಣಿಯರು ಸಂಸಾರ ಧರ್ಮವನ್ನು ಹಾಗೂ ಆಧ್ಯಾತ್ಮವನ್ನು ಸಮನ್ವಯದಿಂದ ನೋಡುವುದರ ಮೂಲಕ ಬದುಕನ್ನು ಶ್ರೀಮಂತಗೊಳಿಸಿ ಕೊಂಡವರಾಗಿದ್ದಾರೆ. ಅಂತಹವರಲ್ಲಿ ಆಯ್ದಕ್ಕಿಮಾರಯ್ಯ -ಲಕ್ಕಮ್ಮ ದಂಪತಿಗಳು ಒಬ್ಬರಾಗಿದ್ದರು. ಕಾಯಕವನ್ನೆ ನಂಬಿ ಬದುಕು ಸಾಗಿಸುತ್ತಿದ್ದರು. ಕಾಯಕವಿಲ್ಲದೆಒಂದು ತುತ್ತನ್ನೂ ತಿನ್ನದ ಕಾಯಕ ನಿಷ್ಠರಾಗಿದ್ದರು. ಮಾರಯ್ಯನ ಕಾಯಕ ಶರಣರ ಅಂಗಳದಲ್ಲಿ ಬಿದ್ದಿರುವ ಅಕ್ಕಿಯನ್ನುಆಯ್ದು ತಂದು ದಾಸೋಹವನ್ನು ಮಾಡುವುದರ ಮೂಲಕ ತೃಪ್ತಿಯನ್ನು ಪಡುತ್ತಿದ್ದರು. ಅದಕ್ಕಾಗಿಯೇ ಅವನಿಗೆ ಆಯ್ದಕ್ಕಿಮಾರಯ್ಯ ಎಂಬ ನಾಮವು ಕೂಡಿರಬೇಕು. ಅವನು ಕಾಯಕದ ಮೇಲೆ ಅಪಾರವಾದ ನಿಷ್ಠೆಯುಳ್ಳವನಾಗಿದ್ದನು. ಹೀಗೆ ದಿನನಿತ್ಯದ ಕಾಯಕದಲ್ಲಿ ನಿರತನಾಗಿರುತ್ತಿದ್ದನು. ಒಂದು ದಿನ ಸುಖಾನುಭವ ಗೋಷ್ಠಿಯಲ್ಲಿ ಎಲ್ಲ ಶರಣರ ಮುಂದೆಆಯ್ದಕ್ಕಿ ಮಾರಯ್ಯನು ಕಾಯಕದ ವಿಚಾರವನ್ನು ಮಂಡಿಸುತ್ತಿರುತ್ತಾನೆ. "ಕಾಯಕದಲ್ಲಿ ನಿರತನಾದರೆ, ಗುರುದರುಶವಾದಡೂಮರೆಯಬೇಕು. ಲಿಂಗ ಪೂಜೆಯಾದಡೂ ಮರೆಯಬೇಕು. ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು. ಕಾಯಕವೆಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು" ( ಆಯ್ದಕ್ಕಿ ಮಾರಯ್ಯಗಳ ಸಂಪಾದನೆ, ಪ್ರಭುದೇವರ ಶೂನ್ಯ ಸಂಪಾದನೆ, ವ.ಸಂ.೭೪೫, ಪು.ಸಂ.೩೦೦)ಎಂದು ತನ್ನ ಕಾಯಕದ ನಿಲುವನ್ನುವಿವರಿಸುತ್ತಾನೆ. ದೈವಕ್ಕೂ ಸಹ ಕಾಯಕ ಬಿಟ್ಟದ್ದಲ್ಲವೆಂಬಲ್ಲಿ ಅವನ ಧೈರ್ಯವನ್ನು ಮೆಚ್ಚುವಂತಹದು. ಇಲ್ಲಿ ಇನ್ನೊಂದುವಿಚಾರವನ್ನು ತಿಳಿಸಬೇಕಾಗಿದೆ. 'ಕಾಯಕವೇ ಕೈಲಾಸ' ವೆಂಬ ಜನಪ್ರಿಯವಾದ ಶರಣರು ವಿಶ್ವಕ್ಕೆ ಕೊಡಮಾಡಿದ ಅತ್ಯಮೂಲ್ಯವಾದ ತತ್ತ್ವವಾಗಿದೆ. ಆದರೆ ಇದನ್ನು ಹೇಳಿದವರು ಬಸವಣ್ಣನೆಂದು ಪ್ರಚಾರದಲ್ಲಿದೆ. ನಿಜವಾಗಿಯೂ ಈ ಯುಕ್ತಿಯನ್ನು ಹೇಳಿದವನು ಆಯ್ದಕ್ಕಿ ಮಾರಯ್ಯನಾಗಿದ್ದಾನೆ. ಅವನಿಗೆ ಆ ಗೌರವ ಸಲ್ಲಬೇಕು. ಹೀಗೆ ಕಾಯಕದಿಂದಲೇ ಕೈಲಾಸವನ್ನು ಕಾಣುವ ಪರಿಯನ್ನು ಕುರಿತು ತನ್ನ ನಿಷ್ಠೆಯನ್ನು ಮಂಡಿಸುತ್ತಿರುವಾಗ, ತನ್ನ ಕಾಯಕದ ವೇಳೆಯನ್ನು ಮರೆತು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮಾರಯ್ಯನನ್ನು ಎಚ್ಚರಿಸಲು ಸತಿಯಾದ ಲಕ್ಕಮ್ಮ ಬಂದು ಎಲ್ಲ ಶರಣರಿಗೂ ನಮಸ್ಕರಿಸಿ, "ಕಾಯಕನಿಂದಿತ್ತು ಹೋಗಯ್ಯ ಎನ್ನಾಳ್ದನೆ, ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು, ನಿಶ್ಚೈಸಿಮಾಡಬೇಕು. ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಬೇಗ ಹೋಗ ಮಾರಯ್ಯಾ'" (ಅದೇ, ವ.ಸಂ.೭೫೫, ಪು.ಸಂ.೩೦೩) ಎಂದು ಎಚ್ಚರಿಸುತ್ತಾಳೆ. ಸತಿಯಚ್ಚರದ ಮಾತುಗಳನ್ನು ಮೆಲುಕು ಹಾಕದೇ ಅವಸರವಸರವಾಗಿ; ಹೊತ್ತಾಗಿದೆ ಎಂಬುದೊಂದೇ ಅವನ ಮನದಲ್ಲಿಭಾವಿಸಿ ಬೇಗ ಹೋಗಿ ಅಕ್ಕಿಯನ್ನು ತರಬೇಕೆಂದು ಬಸವಣ್ಣನ ಅಂಗಳದಲ್ಲಿ ಚೆಲ್ಲಿದ್ದ ಅಕ್ಕಿಯನ್ನು ಬಳಿದು ಕೊಳ್ಳುವುದರ ಮೂಲಕ ಮತ್ತೆ ಇಲ್ಲಿ ಕಾಯಕದಲ್ಲಿರಬೇಕಾದ ಅವನ ಮನ ಎಲ್ಲೋ ಅಡಗಿದೆ.ದಿನನಿತ್ಯದ ಕಾಯಕದಿಂದ ತರುವ ಅಕ್ಕಿಗಿಂತ ಹೆಚ್ಚಿನದನ್ನು ತಂದಿರುವ ಪತಿಯನ್ನು ಗಮನಿಸಿ, ಲಕ್ಕಮ್ಮನುತಿಳಿಹೇಳುವ ನಿಷ್ಠುರ ನುಡಿಗಳನ್ನು ಕಂಡರೆ ಬೆರಗು ತರುವಂತಹದು. "ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ?ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯಾ" (ಅದೇ, ವ.ಸಂ.೭೫೮, ಪು.ಸಂ.೩೦೪) ಎಂದು ಪ್ರಶ್ನಿಸುತ್ತಾಳೆ. ಇಂದಿನ ಸಮಾಜದ ಮನಃಸ್ಥಿತಿಗೆ ವಿರುದ್ಧವಾಗಿ ಹೇಳುವುದನ್ನು ಕಂಡರೆ ಅವಳಲ್ಲಿರುವ ಪ್ರಾಮಾಣಿಕ ಮನೋಭಾವವೆಂತಹದೆಂಬುದು ಅರ್ಥವಾಗುತ್ತದೆ. ಅವಳ ಆ ಮನಸ್ಥಿತಿ ಇಂದಿನ ಸಮಾಜದಲ್ಲಿ ಎಲ್ಲರಿಗೂ ಬಂದರೆ, ಸಮಾಜದಲ್ಲಿ ಯಾರೂ ಅನ್ನವಿಲ್ಲದೇ ಇರಲಾರರು. ಮುಂದುವರೆದು "ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?...." ಮತ್ತು ".... ಭಕ್ತಂಗೆಬಡತನವುಂಟೆ? ನಿತ್ಯಂಗೆ ಮರಣವುಂಟೆ?" ಎಂದು ಹಲವು ವಚನಗಳ ಮೂಲಕ ಪತಿಯನ್ನು ಎಚ್ಚರಿಸುತ್ತಾ, (ಅದೇ, ವ.ಸಂ.೭೫೯,೭೬೨, ಪು.ಸಂ.೩೦೫)  ತನ್ನ ಪತಿಯ ಚಿತ್ತದ ಹಾದಿಯನ್ನು ತಪ್ಪಿಸಿರುವವರನ್ನು ಪ್ರಶ್ನಿಸುವ ಅವಳ ಕಾಯಕದ ಕೆಚ್ಚು ಮೆಚ್ಚುವಂತಹದು " ಒಮ್ಮನವ ಮೀರಿ ಇಮ್ಮನದಲ್ಲಿ ತಂದಿ, ಇದು ನಿಮ್ಮ ಮನವೋ? ಬಸವಣ್ಣನ ಅನುಮಾನದ ಚಿತ್ತವೋ? ಈ ಮಾತು ಮಾರಯ್ಯ

ಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲದ ಬೋನ, ಅಲ್ಲಿಯೆ ಸುರಿದು ಬನ್ನಿ ಮಾರಯ್ಯ" (ಅದೇ, ವ.ಸಂ.೭೬೬, ಪು.ಸಂ.೩೦೬) ಎಂದು ಬಸವಣ್ಣನನ್ನೆ ಪ್ರಶ್ನಿಸುವ,ಸವಾಲನ್ನು ಹಾಕುವ ಆಕೆಯ ಎದೆಗಾರಿಕೆ ಹಾಗೂ ಅವಳ ಆ ಉನ್ನತ ಭಾವದ ಅರಿವು ನಮಗಾಗದಿರದು. ಅವಳ ಉನ್ನತ ನಿಲುವನ್ನು ಅರಿತ ಮಾರಯ್ಯ ತನ್ನೊಳಗೆ ಸುಳಿದಾಡುತ್ತಿರುವ ಸಂದೇಹವನ್ನು ಕೇಳುತ್ತಾನೆ. ಲಿಂಗದೊಳಗೆ ಭೇದವಿಲ್ಲದೆ ಬೆರೆವ ಪರಿಯನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತಾನೆ. ಲಕ್ಕಮ್ಮ ತನ್ನ ಅನುಭಾವದ ಮೂಲಕ "ಪ್ರತಿಷ್ಠೆಗೆ ಮಾಟವಲ್ಲದೆ ಸ್ವಯಂಭುವಿಗುಂಟೆ? ನನಗೂ ನಿನಗೂ ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿವುದಕ್ಕೆ ಬೇರೊಂದು ಠಾವುಂಟೆಮಾರಯ್ಯಾ?" (ಅದೇ, ವ.ಸಂ.೭೭೫, ಪು.ಸಂ.೩೦೮)  ಎಂದು ತಿಳಿಹೇಳುತ್ತಾಳೆ. ಇನ್ನೂ ಹಲವು ಉದಾಹರಣೆಗಳ ಮೂಲಕ ಮಾರಯ್ಯನಿಗೆ ಆಧ್ಯಾತ್ಮದನಿಲುವನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಾಳೆ. ಲಕ್ಕಮ್ಮನಿಗೆ ತನ್ನ ಪ್ರತಿನಿತ್ಯದ ಕಾಯಕದಲ್ಲಿ ತಪ್ಪಿದೆನಲ್ಲ ಎಂಬನೋವು ಒಂದೆಡೆ, ಬಸವಣ್ಣನು ತನ್ನ ಸಿರಿವಂತಿಕೆಯ ಮಬ್ಬಿನಲ್ಲಿ ಶರಣರನ್ನು ಬಡವರನ್ನಾಗಿ ಕಂಡನಲ್ಲ ಎಂಬ ದುಃಖಇನ್ನೊಂದು ಕಡೆ. ತನ್ನ ಕಾಯಕವ ಪ್ರಾಮಾಣಿಕತೆ, ನಿಷ್ಠೆಯ ಫಲವನ್ನು ಬಸವಣ್ಣನಿಗೆ ತಿಳಿಸಬೇಕೆಂದು, ಎಲ್ಲ ಪ್ರಮಥಮಹಾಗಣಂಗಳಿಗೂ ಪ್ರಸಾದಕ್ಕೆ ಬಿನ್ನೈಸಿ ಬನ್ನಿ ಎಂದು ಪತಿಗೆ ಹೇಳುತ್ತಾಳೆ. ಮಾರಯ್ಯ ತನ್ನ ಬಡತನದ ಮನೆಯಲ್ಲಿ ಅವರನ್ನು ತೃಪ್ತಿಪಡಿಸಲು ಸಾಧ್ಯವೇ ಎಂದು ಅನುಮಾನಿಸಿದಾಗ ಮತ್ತೆ ಲಕ್ಕಮ್ಮ ಪತಿಯ ಅನುಮಾನವನ್ನು ಈ ರೀತಿಕಳೆಯುತ್ತಾಳೆ. "ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕʼ(ಅದೇ, ವ.ಸಂ.೭೮೦,ಪು.ಸಂ.೩೧೦) ಎಂದು ಪತಿಯ ಮನದಲುದ್ಭವಿಸಿದ ಅನುಮಾನವನ್ನು ಹೋಗಲಾಡಿಸಲು ಮಾರಯ್ಯನು ಸಂತೋಷದಿಂದ ಎಲ್ಲ ಮಹಾಗಣಂಗಳನ್ನು ಆಮಂತ್ರಿಸಿ, ಅವರವರಿಗೆ ಉಚಿತವಾದ ರೀತಿಯಲ್ಲಿ ತೃಪ್ತಿಪಡಿಸುತ್ತಾರೆ ಎಂಬುದು ಇಂದಿನ ಆಧುನಿಕ ದೃಷ್ಟಿಗೆ ಸ್ವಲ್ಪ ಅತಿಶಯ ಎನಿಸಿದರೂ, ಇಲ್ಲಿರುವ ಸಂಪಾದನೆಯ ಆಶಯವನ್ನು ಗಮನಿಸ ಬೇಕು.

      ಆಯ್ದಕ್ಕಿ ಲಕ್ಕಮ್ಮ ಶೂನ್ಯಸಂಪಾದನೆಯಲ್ಲಿ ಗೋಚರಿಸಿರುವ ರೀತಿ, ಅವಳ ತತ್ತ್ವಾರ್ಥಜ್ಞಾನ, ಕಾಯಕ ನಿಷ್ಠೆ, ಮುಕ್ತಿಯ ಪರಮ ಮೂಲಜ್ಞಾನವನ್ನು ಕುರಿತು ವಿಸ್ತಾರವಾಗಿ ಹೇಳುವ ಮೂಲಕ ಅಸಂಖ್ಯಾತ ಶಿವಗಣಂಗಳಿಗೆ ತನ್ನ ನಿಶ್ಚಲ ಭಕ್ತಿ, ಕಾಯಕ ನಿಷ್ಠೆಯಿಂದ ಸಂಪೂರ್ಣ ತೃಪ್ತಿ ಪಡಿಸಿದ ರೀತಿ, ಅವಳು ಪತಿಗೆ ಹೇಳುವ ಆಧ್ಯಾತ್ಮದ ತಿರುಳ ಘನತೆಯನ್ನು ಇನ್ನೂ ಹೆಚ್ಚಿಸಿದೆ. ಅವಳ ಆ ಪ್ರಾಮಾಣಿಕ ಮನಸ್ಥಿತಿ, ಕಾಯಕ ನಿಷ್ಠೆಯಿಂದಾಗಿ ಮೂಲ ಶೂನ್ಯಸಂಪಾದನೆಯಲ್ಲಿ ಇಲ್ಲದೇ ಇರುವ ಈ ಪ್ರಸಂಗವನ್ನು ತನ್ನಶೂನ್ಯಸಂಪಾದನೆಯಲ್ಲಿ ಸೇರಿಸುವುದರ ಮೂಲಕ ಸ್ತ್ರೀಪಾತ್ರಗಳಿಗೆ ಹೆಚ್ಚಿನ ಮನ್ನಣೆಯನ್ನು ಗೂಳೂರು ಸಿದ್ಧವೀರಣ್ಣೊಡೆಯ ಕಲ್ಪಿಸಿ ಕೊಟ್ಟಿರುವುದು ವಿಶೇಷವಾಗಿದೆ.

೩. ಮಹಾದೇವಮ್ಮ: ಗೂಳೂರು ಸಿದ್ಧವೀರಣ್ಣೊಡೆಯನು ಮೋಳಿಗೆ ಮಾರಯ್ಯ ಪ್ರಸಂಗವನ್ನು ಶೂನ್ಯಸಂಪಾದನೆಯಲ್ಲಿ ನೂತನವಾಗಿ ಸೇರಿಸುವ ಮೂಲಕ ಮಹಾದೇವಮ್ಮನ ವ್ಯಕ್ತಿತ್ವವನ್ನು ಪರಿಚಯಿಸಿದ್ದಾನೆ.

  ಶೂನ್ಯಸಂಪಾದನೆಯಲ್ಲಿ ಚಿತ್ರಣವಾಗಿರುವಂತೆ ಕಾಶ್ಮೀರದ ರಾಜ ಮಹಾದೇವ ಭೂಪಾಲನು ಕಲ್ಯಾಣದಲ್ಲಿ ನಡೆದಿರುವ ಕಾಯಕದ ಕ್ರಾಂತಿಗೆ ಬಸವಣ್ಣನ ಮಹಿಮೆಗೆ ಮನಸೋತು ರಾಜ್ಯವನ್ನು ತೊರೆದು ಪತ್ನಿಯೊಡನೆ ಕಲ್ಯಾಣಕ್ಕೆಬಂದು, ಕಟ್ಟಿಗೆ ಒಡೆಯುವ ಕಾಯಕ ಕೈಗೊಂಡು 'ಮೋಳಿಗೆ ಮಾರಯ್ಯ ನೆಂದು ಹೆಸರು ಪಡೆದನು. ಪತ್ನಿ ಗಂಗಾದೇವಿ ಮಹಾದೇವಮ್ಮನಾಗಿ, ಪತಿಯೊಂದಿಗೆ ಆಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ದಂಪತಿಗಳಾಗಿದ್ದರು. ಇವರು ಕಾಯಕವನ್ನು ಮಾಡಿ ಜಂಗಮ ದಾಸೋಹವನ್ನು ಮಾಡುತ್ತಿದ್ದರು. ಒಂದು ದಿನ ನಿತ್ಯದಂತೆ ಜಂಗಮರ ದಾಸೋಹವನ್ನು ಮಾಡಿರುವಾಗ, ಜಂಗಮರು ಇವರ ಮನೆಯ ಅಂಬಲಿಯ ರುಚಿಯನ್ನು ಹೊಗಳುವುದನ್ನು ಕಂಡಬಸವಣ್ಣನಿಗೂ ಇವರ ಮನೆಯ ಅಂಬಲಿಯನ್ನು ಸವಿಯುವಾಸೆಯಾಗಿ ಜಂಗಮ ವೇಶದಿಂದ ಅವರ ಮನೆಗೆ ಬಂದು,ಅಂಬಲಿಯನ್ನು ಸವಿದು, ಅವರ ಸ್ಥಿತಿಯನ್ನು ನೋಡಿ ಸಹಾಯವಾಗಲೆಂದು ಹೊನ್ನ ಜಾಳಿಗೆಗಳನ್ನು ಇಟ್ಟು ಬರುತ್ತಾನೆ.ಇದನ್ನು ತಿಳಿದ ಮಾರಯ್ಯ ಆ ಹೊನ್ನನ್ನು ತಿರಸ್ಕರಿಸುತ್ತಾ, ಜಂಗಮರಿಗೆ ಪ್ರಸಾದ ಮಾಡಿಸಿ, ಪಾದೋದಕವನ್ನು ತಾನು ತಂದಿರುವ ಕಟ್ಟಿಗೆಗೆ ಸಿಂಪಡಿಸುವ ಮೂಲಕ ಕಟ್ಟಿಗೆಯ ತುಂಡುಗಳನ್ನು ಹೊನ್ನಾಗಿಸಿ ಎಲ್ಲ ಜಂಗಮರಿಗೂ ಕೊಟ್ಟುಕಳಿಸುತ್ತಾನೆ. ಇದನ್ನು ತಿಳಿದ ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮಯ್ಯ ಮುಂತಾದವರು ನಿರಂಹಭಾವದಿಂದ ಮಾರಯ್ಯನ ಕ್ಷಮೆಯಾಚಿಸಿದ್ದನ್ನು ನೋಡುತ್ತೇವೆ. ಈ ಪ್ರಸಂಗವು ಮುಗಿದಮೇಲೆ ಮಾರಯ್ಯ ಉದ್ವಿಗ್ಗಗೊಳ್ಳುತ್ತಾನೆ.ತಾನು ಲಿಂಗೈಕ್ಯನಾಗಬೇಕೆಂದು ಹಂಬಲಿಸುತ್ತಾನೆ. ಇಲ್ಲಿ ಮಹಾದೇವಮ್ಮನ ಪ್ರವೇಶವಾಗುತ್ತದೆ.ಮಾರಯ್ಯನು ದಿನನಿತ್ಯದ ಕಾಯಕಕ್ಕೆ ಹೋಗದೆ ಕುಳಿತಿರುವುದನ್ನು ನೋಡಿ ಅವನಿಗೆ ಆವರಿಸಿರುವ ಭ್ರಾಂತಿಯನ್ನುಅರಿತುಕೊಂಡು, ಅವಳಾಡುವ ನುಡಿಗಳನ್ನು ನೋಡಬೇಕು. "ಅದೇತಕಯ್ಯಾ, ಶಿವನೊಳಗೆ ಕೂಟಸ್ಥ ನಾದೆಹೆನೆಂಬ ಹಲುಬಾಟ? ಇದು ಭಕ್ತಿ ಸತ್ಯದ ಆಟವಲ್ಲ, ಇನ್ನಾರಕೇಳಿ, ಮತ್ತಿನ್ನಾರಿಗೆ, ಹೇಳಿ, ನೀ ಮಾಡುವ ಮಾಟ? ಮುನ್ನ ನೀನಾರೆಂದಿದ್ದೆ ಹೇಳಾ? ಆ ಭಾವವನರಿದು ನಿನ್ನ ನೀನೆ ತಿಳಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ"( ಮೋಳಿಗೆ ಮಾರಯ್ಯಗಳ ಸಂಪಾದನೆ,ಪ್ರಭುದೇವರ ಶೂನ್ಯ ಸಂಪಾದನೆ, ವ.ಸಂ.೮೨೧, ಪು.ಸಂ.೩೨೬)

  ಹೀಗೆ ಅವನನ್ನು ಎಚ್ಚರಿಸುವ ನುಡಿಗಳನ್ನಾಡುತ್ತಾ, ಪತಿಯನ್ನು ತಿದ್ದುವ ಕೆಲಸವನ್ನು ಮಾಡುತ್ತಾಳೆ. "ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತಕತನವೆ ನಿಮ್ಮ ಭಕ್ತಿ? ಸಕಲ ದೇಶಕೋಶವಾಸ ಭಂಡಾರ 'ಸವಾಲಕ್ಷ' ಮುಂತಾದ ಸಂಬಂಧ ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ?.......""  ಅದೇ, ವ.ಸಂ.೮೨೨, ಪು.ಸಂ.೩೨೬) ಹೀಗೆ ಅವನಲ್ಲಿ ಆವರಿಸಿರುವ ಈ ದ್ವಂದ್ವ ಭಾವಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾಳೆ. ಮಾರಯ್ಯನಿಗೆ ಅರಿವಿನ ಕಣ್ಣು ತೆರೆದಂತಾಗಿ ತನ್ನ ಅರಿವಿನ ಕಣ್ಣನ್ನು ತೆರೆದ ಸತಿ ಮಹಾದೇವಮ್ಮನಲ್ಲಿ ತನ್ನಲ್ಲಿರುವ ಸಂದೇಹವನ್ನು ತಿಳಿಸುತ್ತಾನೆ. ಅವನ ಸಂದೇಹಗಳಿಗೆ ಉತ್ತರ ಹೇಳುತ್ತಾ "ಕೂಟಕ್ಕೆ ಕುರುಹಾದುದನರಿಯದೆ, ಆತ್ಮಕ್ಕೆ ಅರಿವಾದುದನರಿಯದೆ, ಕೈಲಾಸವೆಂಬ ಸೂತ್ರದ ಒಳಗಿಗೆ ಮನ ಸೋತಿರಲ್ಲಾ! ಅಂಧಕನಕೈಯ ರತ್ನದಂತೆ ಆದಿರಲ್ಲಾ! ಪಂಗುಳನ ಕೈಯ ಶಸ್ತ್ರದಂತೆ ಆದಿರಲ್ಲಾ! ಈ ನಿರಂಗವ ತಿಳಿದು ನಿಂದಲ್ಲಿ, ಬೇರೆ ಅಂಗವಡಗುವದಕ್ಕೆ ಉಭಯವುಂಟೆಂಬ ದಂದುಗ ಬೇಡ ತಾ ನಿಂದಲ್ಲಿಯೆ ನಿಜಕೂಟ; ತಿಳಿದಲ್ಲಿಯೆ ನಿರಂಗವೆಂಬುದು,ಉಭಯವಿಲ್ಲ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ''” ( ಅದೇ, ವ.ಸಂ. ೮೩೫, ಪು.ಸಂ.೩೩೧) ಹೀಗೆ ಅನೇಕ ಮಾತುಗಳ ಮೂಲಕ ಅವನನ್ನುಸಮಾಧಾನಗೊಳಿಸುವ ಪ್ರಯತ್ನದಲ್ಲಿ ತನ್ನ ಇರುವನ್ನು ಮರೆಯದ ಮಹಾದೇವಮ್ಮ ತನ್ನ ಸ್ತ್ರೀಜಾತಿಯ ಮನಃಸ್ಥಿತಿಯನ್ನುಇಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡುತ್ತಾಳೆ. "ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತನಿಸಿ ನಡೆವುತ್ತಿಹವೆ? ಅವು ಸೂತ್ರಾಧಿಕನ ಭೇದ, ಎನ್ನ ಶಕ್ತಿ ಜಾತಿಯ ಲಕ್ಷಣ. ನಿಮ್ಮ ಭಕ್ತಿ ಸೂತ್ರದಿಂದ ಎನ್ನ ಸ್ತ್ರೀಜಾತಿ ನಿಮ್ಮ ಶ್ರೀಪಾದದಲ್ಲಿಅಡಗಿತ್ತು. ಎನಗೆ ಬಿನ್ನದ ಮಾತಿಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನೆಂಬವರು ನೀವೆ?" (ಅದೇ, ವ.ಸಂ. ೮೩೨, ಪು.ಸಂ.೩೩೦) ಸತಿಯಾಗಿ ತನ್ನ ವಿನಯವನ್ನೂ, ಸಾಧಕಿಯಾಗಿ ತನ್ನ ಆಧ್ಯಾತ್ಮಿಕ ನಿಲುವನ್ನೂ ಅನೇಕ ರೀತಿಯಲ್ಲಿ ಸೂಚಿಸಿ ಪತಿಯ ಸಾಧನೆಗೆಊರುಗೋಲಾಗಿ ಮಹಾದೇವಮ್ಮ ನಿಲ್ಲುತ್ತಾಳೆ. ಅವಳು ಉಪದೇಶಿಸುವ ತತ್ತ್ವಗಳಲ್ಲಿ ವೀರಶೈವ ರಹಸ್ಯವನ್ನುಕಾಣುತ್ತೇವೆ. ಕಾಯಕವೇ ಕೈಲಾಸ, ಮುಕ್ತಿಯೆಂಬುದು ದೇಶಾಂತರದಲ್ಲಿ, ಕಾಲಾಂತರದಲ್ಲಿ, ಅವಸ್ಥಾಂತರದಲ್ಲಿ ಅನುಭವಿಸುವ ವಸ್ತುವಲ್ಲ. ಅದು ಇಲ್ಲಿಯೇ ಇದ್ದು ಇಲ್ಲೇ ಅನುಭವಕ್ಕೆ ತಂದುಕೊಂಡು ಅನುಭವಿಸುವ ಸ್ಥಿತಿಯಾಗಿದೆ ಎಂಬ ವೀರಶೈವ ಸಿದ್ಧಾಂತವು ಇಲ್ಲಿ ಬಹು ಸ್ಫುಟವಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ.

    ಮಹಾದೇವಮ್ಮನು ತನ್ನ ಪತಿಗೆ ಒದಗಿರುವ ದ್ವಂದ್ವತೆಯನ್ನು ಹೋಗಲಾಡಿಸುವುದರ ಮೂಲಕ, ಅವನಲ್ಲಿರುವ ಸಮರಸ ಭಾವವನ್ನು ಜಾಗೃತಿಗೊಳಿಸುವ ಮೂಲಕ ತನ್ನಲ್ಲಡಗಿರುವಂತ ಆಧ್ಯಾತ್ಮದ ನಿಲುವನ್ನು ಪರಿಚಯಿಸುತ್ತಾಳೆ. ಈ ರೀತಿಯಾಗಿ ಗೂಳೂರು ಸಿದ್ಧವೀರಣ್ಣೊಡೆಯ ಮಹಾದೇವಮ್ಮನನ್ನು ಪರಿಚಯಿಸಲು ಪ್ರಯತ್ನ ಪಟ್ಟಿದ್ದಾನೆ. ಮೋಳಿಗೆ ಮಹಾದೇವಮ್ಮನ ಸಂಪಾದನೆಯ ಸೃಷ್ಟಿಗೆ ಒಟ್ಟು ೪೯ ವಚನಗಳನ್ನು ಬಳಸಿಕೊಂಡಿದ್ದಾರೆ. ಈ ಸಂಪಾದನೆಯಲ್ಲಿ ಮಹಾದೇವಮ್ಮನ ಪರಿಚಯವಾದ ನಂತರ ಅವಳ ವ್ಯಕ್ತಿತ್ವವನ್ನು ಬಿಂಬಿಸಲು ೨೭ ವಚನಗಳನ್ನು ಉಪಯೋಗಿಸಿಕೊಂಡು ಈ ಸ್ತ್ರೀಪಾತ್ರಕ್ಕೆ ಹೆಚ್ಚಿನ ಗೌರವವನ್ನು ತಂದುಕೊಡುವಲ್ಲಿ  ಸಿದ್ಧವೀರಣ್ಣೊಡೆಯನು ಯಶಸ್ವಿಯಾಗಿದ್ದಾನೆ.

ಅಕ್ಕಮಹಾದೇವಿ :

    ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯಲ್ಲಿ ೧೬ನೇ ಅಧ್ಯಾಯವಾಗಿ ಬಂದಿರುವುದು'ಮಹಾದೇವಿಯಕ್ಕಗಳ ಸಂಪಾದನೆ. ಎಲ್ಲ ಶೂನ್ಯಸಂಪಾದನೆಗಳಲ್ಲಿ ಬಹಳವಾಗಿ ಚರ್ಚೆಯಾದ ಸ್ತ್ರೀಪಾತ್ರವಿದಾಗಿದೆ. ಶಿವಗಣ ಪ್ರಸಾದಿಯ ಶೂನ್ಯಸಂಪಾದನೆಯ ನಂತರ ಬಂದಂತಹ ಶೂನ್ಯ ಸಂಪಾದನೆಗಳ ರಚನೆಗೆ ಕಾರಣವಾದ ವಿಷಯಗಳಲ್ಲಿ ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ಸರಿಯಾಗಿ ಚಿತ್ರಿಸಿಲ್ಲವೆಂಬುದು ಒಂದಾಗಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

  ಅಕ್ಕಮಹಾದೇವಿಯು ಐತಿಹಾಸಿಕ ವ್ಯಕ್ತಿಯಾದರೂ ಸಹ ಅವಳ ಜೀವನಚರಿತ್ರೆಯು ಸ್ಪಷ್ಟವಾಗಿ ಎಲ್ಲಿಯೂ ಕಂಡುಬರದೇ ಇರುವುದು ವಿಷಾದದ ಸಂಗತಿ. ಅಕ್ಕನ ಪರಿಚಯವು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಕಂಡುಬರುವುದು ಹರಿಹರನ 'ಮಹಾದೇವಿಯಕ್ಕನ ರಗಳೆ'ಯಲ್ಲಿ. ಹರಿಹರನು ಎಲ್ಲ ಶರಣರನ್ನುಪರಿಚಯಿಸಿದ ರೀತಿಯಲ್ಲಿಯೇ ಅಕ್ಕಮಹಾದೇವಿಯನ್ನು ಕೈಲಾಸದಿಂದಲೇ ಪರಿಚಯ ಮಾಡಿಕೊಡುತ್ತಾನೆ. ಕೈಲಾಸದಲ್ಲಿ ನಡೆದ ಒಂದು ಘಟನೆಯಿಂದಾಗಿ, ಗಿರಿಜೆಯು ಒಬ್ಬ ರುದ್ರಕನ್ನಿಕೆಗೆ "ನೀನು ಭೂಮಿಯಲ್ಲಿ ಹುಟ್ಟಿ,ಭವಿಯ ಹೆಂಡತಿಯಾಗಿ, ಭಕ್ತರಿಗೆ ಶರಣೆಂದು ಬಾಳಿ ಶ್ರೀಗಿರಿಗೆ ನಡೆತಂದು, ಬಳಿಕ ಇಲ್ಲಿಗೆ ಬಾ ಎಂದು ಆಜ್ಞೆ ಮಾಡುತ್ತಾಳೆ.ಅವಳ ಆಜ್ಞೆಯಂತೆ ಉಡುತಡಿಯಲ್ಲಿ ಶಿವಭಕ್ತರಾದ ನಿರ್ಮಲಶೆಟ್ಟಿ -ಸುಮತಿಯರಿಗೆ ಮಹಾದೇವಿಯಾಗಿ ಜನಿಸುತ್ತಾಳೆ.

     ಹೀಗೆ ಹರಿಹರನು ಅಕ್ಕಮಹಾದೇವಿಯನ್ನು ಚಿತ್ರಿಸಿದರೆ, ಚಾಮರಸನು ತನ್ನ 'ಪ್ರಭುಲಿಂಗಲೀಲೆ' ಯಲ್ಲಿ ಅಕ್ಕನ ಚರಿತ್ರೆಯನ್ನು  ಬೇರೆ ರೀತಿಯಾಗಿ ಚಿತ್ರಿಸಿದ್ದಾನೆ. ಅಲ್ಲಮನನ್ನು ಗೆಲ್ಲದೆ ಕೈಲಾಸಕ್ಕೆ ಮರಳಿ ಬಂದ ಪಾರ್ವತಿಯ ತಾಮಸ ಕಳೆಯಿಂದ ಬೇಸರಗೊಂಡು ಪಾರ್ವತಿಯು ಶಿವನ ಸಲಹೆಯಂತೆ ತನ್ನ ಸಾತ್ವಿಕ ಕಳೆಯನ್ನು ಭೂಲೋಕಕ್ಕೆ ಕಳಿಸುತ್ತಾಳೆ. ಅವಳೇ ಅಕ್ಕಮಹಾದೇವಿಯಾಗಿ ಉಡುತಡಿಯ ನಿರ್ಮಳ -ಸುಮತಿಯರೆಂಬ ಶಿವಭಕ್ತರಿಗೆ ಮಗುವಾಗಿ ಜನಿಸಿ ಶಿವಭಕ್ತೆಯಾಗಿಬೆಳೆಯ ತೊಡಗಿದಳು ಎಂದು ಚಾಮರಸನಲ್ಲಿ ಚಿತ್ರಿತವಾಗಿದೆ. ಮೊದಲನೇ, ಮೂರನೇ ಮತ್ತು ನಾಲ್ಕನೇ ಶೂನ್ಯಸಂಪಾದನೆಗಳಲ್ಲಿ ಅಕ್ಕನ ಜೀವನ ಚರಿತ್ರೆಯನ್ನು ಸಂದರ್ಭಕ್ಕೆ ಸೂಕ್ತವೆನ್ನುವಂತೆ "ಪರಮೇಶ್ವರನ ನಿರೂಪದಿಂದ ಒಬ್ಬ ರುದ್ರಕನ್ನಿಕೆ ಮರ್ತ್ಯದೊಳೊಗೆದು, ಉಡುತಡಿಯ ಮಹಾದೇವಿಯಕ್ಕನೆಂಬ ನಾಮವಂ ಧರಿಸಿ ಎಂದು ಚಿತ್ರಿಸಲಾಗಿದೆ.

   ಗೂಳೂರು ಸಿದ್ಧವೀರಣ್ಣೊಡೆಯರು  ಗುಮ್ಮಳಾಪುರದ ಸಿದ್ಧಲಿಂಗ ಯತಿಯ ಶೂನ್ಯಸಂಪಾದನೆಯನ್ನೇ ಅನುಸರಿಸುತ್ತಾ 'ಲಿಂಗಧಾರಣವಾಗಲೊಲ್ಲನೆಂಬಭವಿಯಂಸೊಂಕದೆ' ಎಂದು ಹೇಳುತ್ತಾನೆ. ಮೊದಲಿನೆರಡು ಶೂನ್ಯಸಂಪಾದನೆಗಳು ಹರಿಹರನಂತೆ ಅಕ್ಕಮಹಾದೇವಿಯು ಮದುವೆಯಾಗಿದ್ದಳು, ಕೌಶಿಕನನ್ನು ಬಿಟ್ಟು ಬಂದಳೆಂದು ಹೇಳುತ್ತವೆ. ಆದರೆ ಕೊನೆಯ ಎರಡು ಶೂನ್ಯಸಂಪಾದನೆಗಳಾದ ಗುಮ್ಮಳಾಪುರ ಸಿದ್ದಲಿಂಗಯತಿಯ ಶೂನ್ಯಸಂಪಾದನೆ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಗಳು ಅಕ್ಕಮಹಾದೇವಿಯು ಕೌಶಿಕನನ್ನು ಮದುವೆಯಾಗಿದ್ದಳು ಎನ್ನುವ ವಿಷಯವನ್ನೇ ಪ್ರಸ್ತಾಪಿಸದೆ ಅವಳ ವೈರಾಗ್ಯ ಪರಳಾಗಿ "ಸರ್ವಕರಣಂಗಳ ಅರುಹಿಂಗಾಹುತಿಯನಿಕ್ಕಿ ದಿಗಂಬರ ದುಡಿಗೆಯನುಟ್ಟು, ತನ್ನ ಕೇಶವೆಂಬಂಬರಮಂ ಮುಸುಕಿಟ್ಟು.......... ತನ್ನ ಕೇಳ್ದು ಕಂಡು ಕೈಮುಗಿದು ಸಕಲ ಜನಂಗೆಳೆಲ್ಲರ ಕೃತಾರ್ಥರಂ ಮಾಡುತ್ತಾ, ಬಪ್ಪಾಗಳು"” ( ಮಹಾದೇವಿಯಕ್ಕಳ ಸಂಪಾದನೆ, ಪ್ರಭುದೇವರ ಶೂನ್ಯ ಸಂಪಾದನೆ, ಪು.೩೭೫)ಎಂದು, ಕಲ್ಯಾಣದ ಕಡೆಗೆ ಹೊರಟುಬರುತ್ತಾಳೆ ಎಂದಿದೆ. ಹೀಗೆ ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಅವಳ ಚಿತ್ರಣವು ಈ ರೀತಿಯಾಗಿ ಭಿನ್ನ ಭಿನ್ನವಾಗಿ ಚಿತ್ರಿತವಾಗಿ ಕಂಡುಬರುತ್ತದೆ.

 ಅಕ್ಕನ ಧೀಮಂತ ವ್ಯಕ್ತಿತ್ವದ ಅರಿವು ಇಲ್ಲಿ  ನಮಗಾಗದೇ ಇರದು. ಅಕ್ಕ -ಅಲ್ಲಮರ ನಡುವೆ ನಡೆದ ತಾತ್ವಿಕ ಸಂವಾದವನ್ನು ರಚಿಸಲು ನಾಲ್ಕನೇ ಶೂನ್ಯ -ಸಂಪಾದನಾಕಾರನು ೩೫ ವಚನಗಳನ್ನು ಬಳಸಿಕೊಂಡಿದ್ದಾರೆ.

     ಶೂನ್ಯಸಂಪಾದನೆಯಲ್ಲಿ ಬಂದಿರುವ ಅಕ್ಕನ ಅನುಭಾವಿಕ ನೆಲೆಯು ಉನ್ನತ ಮಟ್ಟದಲ್ಲಿ ಬಿತ್ತರವಾಗಿದೆ. ಅಕ್ಕ ಕೌಶಿಕನನ್ನು ತೊರೆದು ದಿಗಂಬರೆಯಾಗಿ ಕಲ್ಯಾಣದತ್ತ ಬರುವಾಗ ಅವಳಿಗೆ ಆದ ಅಪಮಾನಗಳು ಅಷ್ಟಿಷ್ಟಲ್ಲವೆಂದು ಊಹಿಸಬಹುದು. ಏಕೆಂದರೆ, ಒಬ್ಬ ಹೆಣ್ಣು ಮಗಳು ಗಂಡನ ಮನೆಯನ್ನು, ತವರು ಮನೆಯನ್ನು ಬಿಟ್ಟು ಬರುವಳೆಂದರೇನೆ ಅವಳನ್ನು ಕುರಿತು ಲೋಕ ಮಾತನಾಡಿಕೊಳ್ಳುತ್ತದೆ. ಅಂತಹದರಲ್ಲಿ ದಿಗಂಬರೆಯಾಗಿರುವ ಅಕ್ಕನನ್ನು ಕಂಡುಆಡಿಕೊಳ್ಳದಿರಲು ಸಾಧ್ಯವಿಲ್ಲ. ಆದ್ದರಿಂದ ಇಂಥಹ ಮಾತುಗಳು ಅಕ್ಕನ ಕುರಿತು ಬರದಿರಲೇಬೇಕೆಂದು ಅಲ್ಲಮಪ್ರಭುವಿನ ಮೂಲಕ ಕಟು ಪರೀಕ್ಷೆಗೆ ಒಳಗು ಪಡಿಸುವಂತೆ ಮಾಡಿರುವನು ಸಂಪಾದನಾಕಾರ. ಕಲ್ಯಾಣದಲ್ಲಿ ಬಂದ ಅಕ್ಕನು ಅನುಭವಮಂಟಪವನ್ನು ಪ್ರವೇಶಿಸಿದಾಗ ಅಲ್ಲಮಪ್ರಭುವಿನಿಂದ ಬಂದಂತಹ ಕಟು ಪ್ರಶ್ನೆಗಳಿಗೆ, ತನ್ನ ವೈಯಕ್ತಿಕ ಬದುಕನ್ನು ಪ್ರಶ್ನಿಸುತ್ತಿರುವ ಬಿರುನುಡಿಗಳಿಗೆ ಅಕ್ಕ ತಾಳ್ಮೆಯಿಂದಲೇ ಉತ್ತರವನ್ನು ಕೊಡುತ್ತಾಳೆ. ಶರಣರು ಆಡಿದ ನುಡಿಗಳು ಹೇಗೆಇದ್ದರೂ ಅವು ತನ್ನ ಗತಿಸೋಪಾನವಾಗಿವೆಯೆಂದು ಅರಿತುಕೊಂಡು" ..... ಚೆನ್ನಮಲ್ಲಿಕಾರ್ಜುನ ಗಂಡನೆನಗೆ ಮಿಕ್ಕಿನಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ" (ವಚನ ಸಂಖ್ಯೆ ೯೬೯, ಪ್ರಭುದೇವರ ಶೂನ್ಯ ಸಂಪಾದನೆ, ಪು.೩೮೦) ಎಂದು ಉತ್ತರವನ್ನು ನೀಡುತ್ತಾಳೆ. ಅವಳಲ್ಲಿರುವ ಆನಿಶ್ಚಲತೆಯನ್ನು ಅರಿಯಬೇಕು. ದೈವವನ್ನೆ ಪತಿಯಾಗಿ ಸ್ವೀಕರಿಸುವ ಭಾವ ಎಲ್ಲರಿಗೂ ಬಾರದು. ಬಂದರು ಅದನ್ನು ಸಂಕಲ್ಪಿಸಿ ಕಾರ್ಯರೂಪಕ್ಕೆ ತರುವುದು ಸುಲಭದ ಪ್ರಯತ್ನವಲ್ಲ. ಅಲ್ಲಮನು ಸುಮ್ಮನಿರದೆ ಮುಂದುವರೆಯುತ್ತಾ,

  ಅವಳು ಬಟ್ಟೆಯ ಬಿಟ್ಟು ಕೂದಲನ್ನು ಮರೆಮಾಡಿಕೊಂಡಿರುವುದು ಏಕೆ? ಎಂದು ಪ್ರಶ್ನಿಸುತ್ತಾನೆ. "ದೇವನೊಲಿದ,ನೀನೊಲಿದೆನೆಂಬುದು ಅದಾವುದಕ್ಕೆ? ಭಾವ ಶುದ್ಧವಾದಲ್ಲಿ ಸೀರೆಯನಳಿದು ಕೂದಲು ಮರೆಸಲೇತಕ್ಕೆ? ಅದು ಅಂತರಂಗದನಾಚಿಕೆ ಬಾಹ್ಯದಲ್ಲಿ ತೋರಿತ್ತು. ಅದು ಗೊಹೇಶ್ವರಲಿಂಗಕ್ಕೆ ಒಲವರವಲ್ಲ."( ಅದೇ, ವ.ಸಂ.೯೭೨,ಪು.೩೮೦) ಎಂಬ ಅಲ್ಲಮನ ಪ್ರಶ್ನೆಗೆ ಅಕ್ಕನು ನೀಡುವ ಉತ್ತರರೂಪದ ವಚನವು ಅವಳ ಅನುಭಾವದ ಎತ್ತರವನ್ನು ತಿಳಿಸುತ್ತದೆ. "ಫಳ ಒಳಗೆ ಪಕ್ಚವಾಗಿಯಲ್ಲದೆ, ಹೊರಗಣಸಿಪ್ಪೆ ಒಪ್ಪಗೆಡದು, ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು, ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ?ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರ ದೇವನ ಒಳಗಾದವಳಾ"” (ಅದೇ, ವ.ಸಂ.೯೭೩,ಪು.೩೮೧) ಈ ಮೇಲಿನ ಎರಡು ವಚನಗಳು ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯಲ್ಲಿ ಮಾತ್ರ ಕಂಡುಬರುತ್ತವೆ. ಅಕ್ಕನ ಉತ್ತರಕ್ಕೆ ತೃಪ್ತಿಯಾಗದ ಅಲ್ಲಮಪ್ರಭುವು ಅವಳಲ್ಲಿರು, ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ? ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರ ದೇವನ ಒಳಗಾದವ ಆಧ್ಯಾತ್ಮದ ತಿರುಳನ್ನು ಹೆಕ್ಕಿಹೆಕ್ಕಿ ತೆಗೆಯುವ ಕೆಲಸವನ್ನು ಹಲವು ವಚನ ಪ್ರಶ್ನೆಗಳ ಮೂಲಕ ಮಾಡುತ್ತಾನೆ. "ರೂಪಿಂಗೆ ಕೇಡುಂಟು. ನಿರೂಪಿಂಗೆ ಕೇಡಿಲ್ಲ. ರೂಪು ನಿರೂಪನೊಡಗೂಡುವ ಪರಿ ಎಂತು ಹೇಳಾ? ಅಸಂಬಂಧ ಸಂಬಂಧವಾಗಿ ಇದೆ. ದೇಹ ಇಂದ್ರಿಯವೆಂಬ ಜಾತಿಸೂತಕವಿರಲು, ಗುಹೇಶ್ವರಲಿಂಗವ ಮುಟ್ಟಬಾರದು ಕೇಳವ್ವಾ'"” (ಅದೇ, ವ.ಸಂ.೯೭೯,ಪು.೩೮೨) ಎಂದು ಪ್ರಶ್ನಿಸಲು ಅಕ್ಕನು ಸಂಗ- ಸಂಬಂಧಗಳು ಹೇಗೆ ಹಿತವಾಗಿರಲು ಸಾಧ್ಯವೆಂಬುದನ್ನು ಹೇಳುತ್ತಾಳೆ. "ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲರೆ ಹಾವಿನ ಸಂಗವೆ ಲೇಸು ಕಂಡಯ್ಯಾ, ಕಾಯದ ಸಂಗವ ವಿವರಿಸಬಲ್ಲರೆ, ಕಾಯದ ಸಂಗವೆ ಲೇಸು ಕಂಡಯ್ಯಾ. ತಾಯಿ ರಕ್ಕಸಿಯಾದಂತೆ ಕಾಯವಿಕಾರವು. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದವರ ಕಾಯಗೊಂಡಿದ್ದರೆನಬೇಡಾ.' (ಅದೇ, ವ.ಸಂ.೯೮೦,ಪು.೩೮೨)‌ ಅಕ್ಕನು ಕಾಯದ ವಿಕಾರತೆಯನ್ನು ಗೆದ್ದವಳಾಗಿದ್ದಳು. ಹಾವಿನ ಹಲ್ಲುಕಿತ್ತ ಮೇಲೆ, ಹಾವಿನ ಕುರಿತು ಯಾವ ಭಯವುಂಟಾಗುವುದಿಲ್ಲ. ಅದೇ ರೀತಿ ಈ ಕಾಯದಲ್ಲಿಯ ಕಾಮ, ಕ್ರೋಧ,ಲೋಭ, ಮದ, ಮತ್ಸರಗಳೆಂಬ ವಿಷದ ಹಲ್ಲನ್ನು ಕಿತ್ತರೆ ಕಾಯದ ಸಂಗವೇ ಲೇಸು ಎನ್ನುವುದರ ಮೂಲಕ ತನ್ನ ಅನುಭವ ವೇಧನೆಯು ಅಗಾಧವಾಗಿರುವುದೆಂದು ತೋರಿಸಿಕೊಡುತ್ತಾಳೆ.

  ಅಕ್ಕಮಹಾದೇವಿಯು ಅನುಭಾವಿಯಿಂದ ಬರುವ ಅನುಭವಯುಕ್ತ ಪ್ರಶ್ನೆಗಳಿಗೆ ತನ್ನ ಅನುಭಾವದ ಅರಿವಿನಿಂದ ಉತ್ತರವನ್ನು ಕೊಡುತ್ತಾ, ದೇಹ-ಇಂದ್ರಿಯಗಳ ವಿಚಾರವನ್ನು ವಿಸ್ತಾರವಾಗಿ ತಿಳಿಸುತ್ತಾಳೆ. ದೇಹೇಂದ್ರಿಯಗಳ ಶಕ್ತಿಯನ್ನು ನಾಶಪಡಿಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಭಕ್ತಿಶಕ್ತಿಯಾಗಿ ಪರಿವರ್ತಿಸುವ ಮೂಲಕ ಅನುಭಾವದ ಲೆಯಲ್ಲಿ ತೇಲಾಡಲು ಸಾಧ್ಯವಾಗುವದು. ಇದು ಇಂದ್ರಿಯ ಗೋಚರಳಾದ ಅಕ್ಕ, ಇಂದ್ರಿಯ ಅಗೋಚರನಾದ ಚೆನ್ನಮಲ್ಲಿಕಾರ್ಜುನನ್ನು ಬೆರೆದಳೆಂಬುದನ್ನು ಸೂಚ್ಯವಾಗಿ  ಇಲ್ಲಿ ಅರ್ಥೈಸಬಹುದಾಗಿದೆ.

     ಲೌಕಿಕದ ಒಬ್ಬ ಹೆಣ್ಣು ಮಗಳು ತಂದೆ- ತಾಯಿಯಿಂದ ಹುಟ್ಟಿ, ತಾಯಿಯಹಾಲನುಂಡು ಬೆಳೆಯುತ್ತಾಳೆ. ಬೆಳೆದ ಮಗಳಿಗೆ ಒಳ್ಳೆಯ ಅನುರೂಪನಾದ ಗಂಡು ನೋಡಿ ಮದುವೆ ಮಾಡುತ್ತಾರೆ.ಗಂಡನ ಮನೆಗೆ ಕಳಿಸಲು ಊರಿನವರೆಲ್ಲರೂ ಹೋಗುತ್ತಾರೆ. ಆಗ ಆ ಹುಡುಗಿಗೆ ಹಿರಿಯರು, ತಾಯಿ-ತಂದೆಯರು'ಕೊಟ್ಟ ಮನೆಗೂ ಹೆತ್ತ ಮನೆಗೂ ಕೀರ್ತಿಯನ್ನ ತಾ ಮಗಳೆ ಎಂದು ಹೇಳುತ್ತಾರೆ. ಈ ಸನ್ನಿವೇಶವು ಇಲ್ಲಿ ಅಲೌಕಿಕಾರ್ಥದಲ್ಲಿ ಚಿತ್ರಣಗೊಂಡು, ಅಕ್ಕ ಎಲ್ಲ ಶರಣರ ಮನವು ಕರಗುವಂತೆ ನುಡಿಯುತ್ತಾಳೆ. ಈ ವಚನವು ಮೊದಲೆರಡು ಶೂನ್ಯಸಂಪಾದನೆಯಲ್ಲಿ ಬಂದಿಲ್ಲ. ಶೂನ್ಯಸಂಪಾದನೆಯಲ್ಲಿ ಅರ್ಥಗರ್ಭಿತವಾಗಿ ಬಂದಿದೆ.

    ಸಿದ್ಧವೀರಣ್ಣೊಡೆಯನು ಅಕ್ಕಮಹಾದೇವಿಯ ಬಗೆಗೆ ಕೈಲಾಸದಿಂದ ಭುವಿಗಿಳಿದು ಬಂದವಳೆಂಬ ಪೂಜ್ಯಭಾವನೆಯನ್ನು ಹೊಂದಿರುವನು. ಹೀಗಾಗಿ ಮಹಾದೇವಿಯಕ್ಕನ ದಿವ್ಯವೈರಾಗ್ಯವನ್ನು ನಿರೂಪಿಸಲಿಕ್ಕಾಗಿಯೇ ತನ್ನ ಶೂನ್ಯಸಂಪಾದನೆಯಲ್ಲಿ ಕಿನ್ನರಯ್ಯನ ಪರೀಕ್ಷಾ ಪ್ರಸಂಗವನ್ನು ವಿಸ್ತೃತವಾಗಿಯೇ ಸೃಜಿಸಿದ್ದಾನೆ. ಪ್ರಭುದೇವರು ಕಿನ್ನರಯ್ಯನ ಪರೀಕ್ಷೆಯ ಹಿನ್ನೆಲೆಯಲ್ಲಿರುವಂತೆ ಚಿತ್ರಿಸುವುದರ ಮೂಲಕ ಅಕ್ಕಮಹಾದೇವಿಯ ಲೋಕೋತ್ತರವಾದ ವೀರವೈರಾಗ್ಯವನ್ನು ಕಲ್ಯಾಣದ ಮಹಾಗಣಗಳಿಗೆ ತಿಳಿಯಪಡಿಸುವ ಸಾತ್ವಿಕ ಧೋರಣೆಇರುವುದನ್ನು ಕಾಣಬಹುದಾಗಿದೆ. ಅಕ್ಕಮಹಾದೇವಿಯ ಸನ್ನಿವೇಶವು ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯಲ್ಲಿ ಹೆಚ್ಚು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಬರುವುದರ ಮೂಲಕ ಅಕ್ಕನನ್ನು ಚಿತ್ರಿಸುವಲ್ಲಿ ಹೆಚ್ಚು ಯಶಸ್ಸು ದೊರೆತಿರುವುದು ಕಂಡುಬರುತ್ತದೆ.

೫. ಅಕ್ಕನಾಗಮ್ಮ:

ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯಲ್ಲಿ ಮಾತ್ರ "ಪ್ರಭುದೇವರ ಶೂನ್ಯಸಿಂಹಾಸವನ್ನೇರಿದ ಸಂಪಾದನೆ'ಯ ಕೊನೆಗೆ "ನಾಗಲಾಂಬಿಕೆಯಮ್ಮನು ನಿವಾಳಿಯನೆತ್ತುವ......"” ಎಂಬ ಗದ್ಯ ಮತ್ತು ಮೋಳಿಗೆ ಮಾರಯ್ಯನವಚನದಲ್ಲಿ "ಕೊಟ್ಟ ದ್ರವ್ಯವನು............. ಅವರವರ ಕೈಯ ನಿವಾಳಿಗಳನೀಸಿಕೊಂಡು ನಾಗಾಯವ್ಹೆಗಳು..."” ( ಪ್ರಭುದೇವರ ಶೂನ್ಯ ಸಂಪಾದನೆ, ಪು.೪೪೮)ಹೀಗೆ ಅಕ್ಕನಾಗಮ್ಮನ ಹೆಸರು ಬರುತ್ತದೆ. ಈ ವಚನ ಮೊದಲಿನ ಮೂರು ಶೂನ್ಯಸಂಪಾದನೆಗಳಲ್ಲಿ ಕಂಡು ಬರುವುದಿಲ್ಲ.

ಪ್ರಭುದೇವರ ಆರೋಗಣೆಯ ಸಂದರ್ಭದಲ್ಲಿ ಕಾಣಿಸಿಕೊಂಡ ಅಕ್ಕನಾಗಾಯಿಯು ಪ್ರಭುದೇವರನ್ನು, ಬಸವಣ್ಣನನ್ನು ಹಾಗೂ ಚೆನ್ನಬಸವಣ್ಣನನ್ನು ಸ್ತುತಿಸುವ ಎರಡು ವಚನಗಳು ಬರುತ್ತವೆ.ಅಕ್ಕನಾಗಮ್ಮನನ್ನು ನಾವು ಶೂನ್ಯಸಂಪಾದನೆಯಲ್ಲಿ ಕಾಣುವುದನ್ನು ಬಿಟ್ಟರೆ, ಅವಳ ವೈಯಕ್ತಿಕ ಬದುಕಿನ ಹೆಚ್ಚಿನ ವಿಷಯಗಳು ತಿಳಿದುರುವುದಿಲ್ಲ.  ಕಲ್ಯಾಣಕ್ಕೆ ಬಂದ ಅಕ್ಕನಾಗಮ್ಮನಿಗೆ ಬಸವಣ್ಣನ ಮೇಲೆ ಎಲ್ಲಿಲ್ಲದ ಪ್ರೀತಿ. ಅವನ ಆಧ್ಯಾತ್ಮಿಕ ನಿಲುವನ್ನುಅರಿತವಳಾಗಿದ್ದಳು.

    ಹೀಗೆ ಅಕ್ಕನಾಗಮ್ಮ ಅತೀ ಸರಳ ಸಜ್ಜನಿಕೆಯ, ಮಾತೃವಾತ್ಸಲ್ಯದ ಮೂರುತಿಯಾಗಿ, ಬಸವಣ್ಣನಿಗೆ ಮಮತೆಯ ಸೋದರಿಯಾಗಿ, ಚೆನ್ನಬಸವಣ್ಣನಿಗೆ ವಾತ್ಯಲ್ಯದ ಖಣಿಯಾಗಿ ಶೂನ್ಯಸಂಪಾದನೆಯಲ್ಲಿ ಸಂಕ್ಷಿಪ್ತವಾಗಿ ಅಕ್ಕನಾಗಮ್ಮನ ವ್ಯಕ್ತಿತ್ವ ಚಿತ್ರಣವಾಗಿದೆ.

೬. ನೀಲಾಂಬಿಕೆ:

ಶಿವಶರಣೆ ನೀಲಾಂಬಿಕೆಯು ಸಂಸಾರದಿಂದಲೇ ಸದ್ಗತಿ ಹೊಂದುವ, ಉನ್ನತ ನಿಲುವಿನ, ಆಧ್ಯಾತ್ಮಿಕ ಜೀವನದ ಸೂತ್ರಗಳಿಗೆ ಕಾರಣರಾದುದು ಶರಣ ಪರಂಪರೆ. ೧೨ನೇ ಶತಮಾನದಕಾರಣಿಕ ಯುಗಪುರುಷ, ಭಕ್ತಿಭಂಡಾರಿ, ಜಗಜ್ಕೋತಿ ಬಸವೇಶ್ವರರ ಕಿರಿಯ ಸಹಧರ್ಮಿಣಿಯಾಗಿದ್ದವಳು ನೀಲಾಂಬಿಕೆ,

` ಬಸವಣ್ಣನವರ ದಾಸೋಹ ಸೇವೆಗೆ ಹಿನ್ನೆಲೆ ಕಾರ್ಯಶಕ್ತಿಯಾಗಿ ನಿಂತವಳು. ಬಸವಣ್ಣನ ನೆರಳಿಗೆ ನೆರಳಾಗಿದ್ದವಳು ನೀಲಾಂಬಿಕೆ. ಆಧ್ಯಾತ್ಮದ ಉತ್ತುಂಗವನ್ನು ಮುಟ್ಟಿದ್ದವಳಾಗಿದ್ದಳು. ವಚನಗಳನ್ನು ರಚಿಸಿರುವುದಷ್ಟೇ ಅಲ್ಲದೆ ಸ್ವತಃ ಸಂಗೀತಗಾರಳಾಗಿದ್ದು ಸುಶ್ರಾವ್ಯವಾಗಿ ವಚನಗಳನ್ನು ಪದಗಳನ್ನು ಹಾಡುತ್ತಿದ್ದಳು. ಇಂದು ನೀಲಾಂಬಿಕೆಯ "ಒಟ್ಟು೧೨೫ ವಚನಗಳು, ೧೨ ಸ್ವರವಚನಗಳು" ನಮಗೆ ಲಭ್ಯವಾಗಿವೆ.

    ನೀಲಾಂಬಿಕೆಯ ಸ್ವಲ್ಪ ಹೆಚ್ಚು ರೂಪವು ನಮಗೆ ಕಂಡುಬರುವುದು ಗೂಳೂರು ಸಿದ್ದವೀರಣ್ಣೊಡೆಯನ

ಶೂನ್ಯಸಂಪಾದನೆಯಲ್ಲಿ ಮಾತ್ರ.  ಕಲ್ಯಾಣದಲ್ಲುಂಟಾದ ಕ್ರಾಂತಿಯಿಂದಾಗಿ ಬಸವಣ್ಣನು ಕಲ್ಯಾಣವನ್ನು ಬಿಟ್ಟು ಕೂಡಲಕೆ ಹೋಗಿ ಅಲ್ಲಿಂದ ಹಡಪದ ಅಪ್ಪಣ್ಣನಿಗೆ ನೀಲಾಂಬಿಕೆಯನ್ನು ಕರೆದುಕೊಂಡು ಬರುವಂತೆ ತಿಳಿಸುತ್ತಾನೆ."..... ಇತ್ತ ಬಸವರಾಜದೇವರು ಇನಿತಂ ಕೇಳಿ ಸಂತೋಷಿಸಿ ಕೂಡಲಿಗೆಗೆ ಬಂದು, ಆ ಸಮಯದೊಳು ನೀಲಲೋಚನೆಯ ಕರೆದುಕೊಂಡುಬನ್ನಿ ಎಂದು ಹಡಪದಪ್ಪಣ್ಣಗಳ ಕಳುಹಲು....." ಈ ಗದ್ಯದಲ್ಲಿ ನೀಲಾಂಬಿಕೆಯ ಪ್ರವೇಶವಾಗುತ್ತದೆ. ಎಲ್ಲ ಶರಣರಿಗೂ ಮಾತೃವಿನ ರೂಪವಾಗಿ, ಪ್ರೀತಿಯ ಮಡದಿಯಾಗಿ, ಸಂಗೀತಜ್ಞೆಯಾಗಿ ಬದುಕನ್ನು ಬಂಗಾರವಾಗಿಸಿಕೊಂಡಿರುವ ನೀಲಾಂಬಿಕೆಯನ್ನು ಗೂಳೂರು ಸಿದ್ಧವೀರಣ್ಣೊಡೆಯರು ಸಂಕ್ಷಿಪ್ತವಾಗಿಯಾದರೂ, ಮರೆಯಲಾಗದ ವ್ಯಕ್ತಿಯಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಬಹುದು. ಇಲ್ಲಿ ನೀಲಾಂಬಿಕೆಯ ೧೦ ವಚನಗಳನ್ನು, ೧ ಪದ್ಯವನ್ನು ಬಳಸಿಕೊಂಡಿದ್ದಾನೆ.

     ಶೂನ್ಯಸಂಪಾದನೆಯಲ್ಲಿ ಚಿತ್ರಿತವಾಗಿರುವ ಸ್ತ್ರೀಪಾತ್ರಗಳು ವಾಸ್ತವದ ನೆಲೆಗಟ್ಟಿನ ಮೇಲೆ ರೂಪ ತಳೆಯುತ್ತವೆ. ಆ ಎಲ್ಲ ಸ್ತ್ರೀಪಾತ್ರಗಳು ಮಾತನಾಡಬೇಕೆಂದು ಮಾತನಾಡದೇ, ಸಹಜವಾಗಿಯೇ ಮಾತನಾಡುತ್ತವೆ. ಅವರಾಡುವ ಮಾತುಗಳಿಗೆ ಆ ಕಾಲದಲ್ಲಿ ಮೌಲ್ಯವು ಸಿಗುತ್ತಿತ್ತು ಎಂಬಂತೆ ಇಲ್ಲಿ ಚಿತ್ರಿತವಾಗಿವೆ. ಆ ಎಲ್ಲ ಪಾತ್ರಗಳಿಗೂ ಬಂಧನವಿಲ್ಲದ, ಅಡ್ಡಿಯಿಲ್ಲದ ವಾತಾವರಣವು ಸೃಷ್ಟಿಯಾದ ಕಾರಣ ಅವರ ಪಾತ್ರಗಳಿಗೆ ವಿಶೇಷತೆಯು ದೊರಕಿತು. ದಿನನಿತ್ಯದ ಜಂಜಾಟಗಳನ್ನು, ಸಮಸ್ಯೆಗಳನ್ನು ಆಧ್ಯಾತ್ಮಿಕ ನೆಲೆಯ ಹಿನ್ನಲೆಯಲ್ಲಿ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿವೆ. ಈ ಪಾತ್ರಗಳೆಲ್ಲವೂ ಸ್ತ್ರೀಗೆ ಸಹಜವಾಗಿರುವ ಭಯ, ಹಿಂಜರಿಕೆಯನ್ನು ಬಿಟ್ಟು ಮುಂದೆ ಬಂದು ಶರಣರೊಟ್ಟಿಗೆ ಸಮಾನವಾಗಿ ನಿಲ್ಲುವಂತೆ ಹಾಗೂ ಓದುಗರಲ್ಲಿ ಗೌರವಭಾವನೆಯೂ ಮೂಡುವಂತೆ ಚಿತ್ರಿಸುವಲ್ಲಿ ಶೂನ್ಯಸಂಪಾದನಾಕಾರ ಯಶಸ್ವಿಯಾಗಿದ್ದಾನೆ.

  ಶರಣರ ಪಾತ್ರಗಳ ಸನ್ನಿವೇಶ ನಿರ್ಮಾಣ ಮತ್ತು ಚಿತ್ರಣ  :

     ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯಲ್ಲಿ ಬರುವ ಪಾತ್ರಗಳೆಲ್ಲವೂ ಶಿವಶರಣರ ಪಾತ್ರಗಳಾಗಿವೆ. ಅಲ್ಲದೇ ಅವುಗಳನ್ನು ಅವರ ವಚನಗಳ ಮೂಲಕವೇ ಚಿತ್ರಿಸಿರುವರು. ಶೂನ್ಯ-ಸಂಪಾದನೆಯು ಒಂದು ಅನುಭಾವ ಕೃತಿಯಾಗಿರುವುದರಿಂದ ಇಲ್ಲಿ ಪಾತ್ರಗಳ ಚಿತ್ರಣಕ್ಕಿಂತ ತತ್ತ್ವಪ್ರತಿಪಾದನೆಯು ಮುಖ್ಯವಾದರೂ ಸಹ, ಇಲ್ಲಿ ಹಲವು ಶರಣರ ಪಾತ್ರಗಳು ಕಾಣಿಸಿಕೊಳ್ಳಬೇಕಾದುದರಿಂದ ಅವುಗಳಗಾತ್ರ ಚಿಕ್ಕದಾಗಿ ಕಾಣುತ್ತದೆ. ಅವುಗಳ ಚಟುವಟಿಕೆಗೆ ಸಂಪೂರ್ಣ ಅವಕಾಶವನ್ನು ಕೊಟ್ಟಿಲ್ಲವಾದರೂ, ಪರಿಮಿತ ಅವಕಾಶದಲ್ಲಿಯೇ ಪೂರ್ಣಪ್ರಮಾಣದ ಚಿತ್ರಗಳನ್ನು ಕೊಡಲು ಸಾಧ್ಯವಿಲ್ಲವೆಂಬ ಹಿನ್ನೆಲೆಯಲ್ಲಿಯೇ ಶೂನ್ಯಸಂಪಾದನೆಯ ಪಾತ್ರಗಳನ್ನು ಪರಿಭಾವಿಸಬೇಕಾಗುತ್ತದೆ. ಅಲ್ಲಮಪ್ರಭುದೇವರು, ಬಸವಣ್ಣ, ಚೆನ್ನಬಸವಣ್ಣ ಕೆಲವೇ ಶರಣರ ಚರಿತ್ರೆಯು ವಿಸ್ತಾರವಾಗಿ ಬಂದಿದ್ದರೂ, ಅಲ್ಲಿಯೂ ವರ್ತಮಾನದ ಘಟನಾವಳಿಗಳು ತುಂಬಿದ್ದು, ಪಾತ್ರಗಳು ಮೈದುಂಬಿಕೊಂಡು ಬರಲು ಸಾಧ್ಯವಾಗಿಲ್ಲ. ಸನ್ನಿವೇಶದ ಬೆಳವಣಿಗೆಯ ಕ್ರಮದಲ್ಲಿಯೇ ಕೆಲವು ಪಾತ್ರಗಳ ಸ್ವಭಾವ ವೈಶಿಷ್ಟ್ಯ ಗೋಚರವಾಗುವಂತೆ ಸಂಪರ್ಕ ಗದ್ಯದಲ್ಲಿ ಕಥೆಯನ್ನು, ಸನ್ನಿವೇಶವನ್ನು ಹೇಳುವ ಮೂಲಕ, ಸನ್ನಿವೇಶಕ್ಕೆ ಕಳೆಕಟ್ಟುವಂತೆ ಇವರು ಸಫಲ ಪ್ರಯತ್ನವನ್ನು ಮಾಡಿರುವರು.

    ಶರಣರ ವಚನಗಳಮೂಲಕ ಶರಣರ ಚರಿತ್ರೆಯನ್ನು ಚಿತ್ರಿಸಲು ಹೊರಟಿರುವ ಸಿದ್ಧವೀರಣ್ಣೊಡೆಯನು ನಡುನಡುವೆ ತನ್ನ ಮಾತುಗಳ ಮೂಲಕ, ಸಂದರ್ಭ, ಸನ್ನಿವೇಶಗಳ ಪರಿಚಯವನ್ನು ಮತ್ತು ಅವುಗಳ ಮುನ್ನಡೆಗೆ ಸಂಪರ್ಕವನ್ನು ಕಲ್ಪಿಸುವ ಕಾರ್ಯವನ್ನು ಮಾಡುವುದರಿಂದ ಅವರ ಮಾತುಗಳು ಇಲ್ಲಿ ಸಂಪರ್ಕ ಗದ್ಯಗಳಾಗಿ ಕೆಲಸ ನಿರ್ವಹಿಸುತ್ತವೆ.

       ಶೂನ್ಯ ಸಂಪಾದನೆಯಲ್ಲಿ ಸಂಪಾದನಾಕಾರನು ಶರಣರ ವಚನಗಳ ಮೂಲಕ, ಶರಣರ ಜೀವನ ಚಿತ್ರವನ್ನು ಬಿಡಿಸಲು ಹೊರಟಿರುವುದರಿಂದ ಎಲ್ಲಾ ಸನ್ನಿವೇಶಗಳನ್ನಾಗಲಿ, ವಿಷಯ ವಸ್ತುವನ್ನಾಗಲಿ, ಕಣ್ಣಿಗೆ ಕಟ್ಟುವಂತೆ ಚಿತ್ರಿಸುವುದು ಎಲ್ಲೆಡೆ ಸಾಧಿಸಿದೆಯೆನ್ನುವಂತಿಲ್ಲ. ಕೆಲವು ಸಂದರ್ಭಗಳಲ್ಲಿ ಇನ್ನೂ ವಿವರಣೆ ವರ್ಣನೆ (ಅನಿಮಿಷಯ್ಯನ ಚಿತ್ರಣದಲ್ಲಿ)ಅಗತ್ಯವಿದೆಯೆಂಬ ಭಾವನೆ ಓದುಗನಿಗಾಗುತ್ತದೆ. ಇಲ್ಲಿ ಬಳಕೆಯಾಗಿರುವ ವಚನಗಳಲ್ಲಿ  ಕಂಡು ಬರುವ ಸಾಹಿತ್ಯಕಾಂಶಗಳನ್ನು ವಿದ್ವಾಂಸರುಗಳು ಈಗಾಗಲೇ  ಗುರುತಿಸುವ ಕೆಲಸ ಮಾಡಿದ್ದಾರೆ.    

      ಶೂನ್ಯ ಸಂಪಾದನೆಯಲ್ಲಿಯ ಪ್ರಸಂಗಗಳು ಬಹುಮಟ್ಟಿಗೆ, ವೀರಶೈವ ಧಾರ್ಮಿಕ ತತ್ವಗಳನ್ನು ನುಡಿದು ನಡೆದವರ ವಚನಕಾರರ ಪ್ರಸಂಗಗಳೇ ಆಗಿವೆ. ಶೂನ್ಯ ಸಂಪಾದನೆಯಲ್ಲಿ ವೀರಶೈವ ಧರ್ಮದ ಮೂಲಭೂತ ತತ್ವಗಳ ಮತ್ತು ಅದರ ಸತ್ಯದ ಅರಿವಿನ ನಿರೂಪಣೆಗೆ ವಚನಕಾರರ ವಚನಗಳನ್ನೇ ಮೂಲ ಆಕರವಾಗಿ ತೆಗೆದು ಕೊಂಡಿರುವುದನ್ನು ಗಮನಿಸಬಹುದು.

      ಶರಣರ ವಚನಗಳಿಂದ ಅನುಭವಮಂಟಪದಲ್ಲಿ ಗೋಷ್ಠಿಗಳು ನಡೆದವು ಎಂಬಂತೆ ಕಟ್ಟಿಕೊಟ್ಟಿದ್ದಾನೆ. ಶರಣರ ಆಲೋಚನಾ ಅನುಭವಗಳು ಅಭಿವ್ಯಕ್ತಿಯ ಜೊತೆಗೆ ತನ್ನ ವಿಚಾರಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾನೆ.  ವಚನಕಾರರ ವೀರಶೈವ ಧರ್ಮದ ತಾತ್ವಿಕ ಸಿದ್ಧಾಂತ, ಆಚರಣೆಗಳು ಪರಮೋದ್ದೇಶ ಆದರ್ಶಗಳ ಪರಿಚಯವನ್ನು ಅಭ್ಯಾಸಿಗಳಿಗೆ ಮಾಡಿಕೊಡುವಲ್ಲಿ ಶೂನ್ಯಸಂಪಾದನಾ ಕೃತಿಯು ಯಶಸ್ವಿಯಾಗಿದೆ. ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯನ್ನು ಅಭ್ಯಾಸ ಮಾಡಿದರೆ ವೀರಶೈವ ಧರ್ಮದ ಪರಿಚಯದ ಜೊತೆಗೆ ವಚನಕಾರರ ತಾತ್ವಿಕ ನಿಲುವುಗಳ ಪರಿಚಯವಾಗುತ್ತದೆಂಬ ಹೇಳಿಕೆಯಲ್ಲಿ ಅತಿಶಯೋಕ್ತಿಯಾಗಲಾರದು. ವಚನಗಳನ್ನು ಅರ್ಥಪೂರ್ಣವಾಗಿ ಕ್ರಮಬದ್ಧವಾಗಿ ಗ್ರಹಿಸಿಕೊಡುವುದು ಸುಲಭವಾದ ಕೆಲಸವಾಗಿರಲಿಲ್ಲ. ಈ ರೀತಿಯ ಸಾಹಸದಲ್ಲಿ ತೊಡಗುವವರಿಗೆ ತಾಳ್ಮೆ ಹಾಗೂ ಪಾಂಡಿತ್ಯ ಬೇಕಿತ್ತು ಅಂತಹ ತಾಳ್ಮೆ ಹಾಗೂ ಪಾಂಡಿತ್ಯ ಹೊಂದಿದ್ದವನು ಗೂಳೂರು ಸಿದ್ಧವೀರಣಾರ್ಯ ಎಂಬುದು ಈ ಶೂನ್ಯ ಸಂಪಾದನೆಯಿಂದ ತಿಳಿಯುತ್ತದೆ.    

      ಧಾರ್ಮಿಕ ಸಾಧನೆಯ ಮಹತ್ವವು ಶರಣರ ನಿತ್ಯ ಜೀವನದಲ್ಲಿಯೇ ಕಾಣಬರುತ್ತದೆಂಬುದನ್ನು ಶೂನ್ಯಸಂಪಾದನೆಯಲ್ಲಿ ಕಾಣಬಹುದು. ಜೀವನದಲ್ಲಿ ವ್ಯಕ್ತಿ ಸತ್ಯಶುದ್ಧ ಕಾಯಕದಲ್ಲಿ ನಿರತನಾಗಿದ್ದರೆ ಅವನು ಯಾವುದೇ ರಂಗದಲ್ಲಿದ್ದರೂ ಏನೇ ಉದ್ಯೋಗವನ್ನು ಅವಲಂಬಿಸಿದ್ದರೂ ಆತನ ಸಾಧನೆಗೆ ಪ್ರಗತಿಗೆ ಅಡ್ಡಿಯಾಗುವುದಿಲ್ಲ ಎಂಬುದು ವ್ಯಕ್ತವಾಗಿದೆ. ಶೂನ್ಯಸಂಪಾದನೆಯಲ್ಲಿ ಆಧುನಿಕ ಯುಗದ ಮನೋಧರ್ಮಕ್ಕೆ ಹತ್ತಿರವಾದುದ್ದು ಎಂದರೆ ಸ್ವತಂತ್ರ ವಿಚಾರಶೀಲತೆ ಮತ್ತು ಸತ್ಯ ನಿಷ್ಠುರತೆ.

      ಶೂನ್ಯ ಸಂಪಾದನೆಯಲ್ಲಿ ಮುಖ್ಯವಾಗಿ, ನಿಲುವಿಗೇರಿರುವ, ನಿಲುವಿನಲ್ಲಿಯೇ ಸದಾ ಸಂಚರಿಸಬಲ್ಲ ಮಹಾ ಅನುಭಾವಿ ಅಲ್ಲಮಪ್ರಭುವೇ ಶೂನ್ಯಸಂಪಾದನೆಯ ಕೇಂದ್ರ ಶಕ್ತಿಯಾದುದರಿಂದ ಇತರ ಶರಣರು ಆ ಮಟ್ಟಕ್ಕೇರಲು ಆತ ಮಾರ್ಗದರ್ಶಕನಾಗಿರುವುದನ್ನು ಕಾಣುತ್ತೇವೆ. ಸಾಧನೆಯ ಆ ನಿಲುವಿನಲ್ಲಿಯೇ ನಿಂತು ಜೀವನ ಮಹತ್ತರವಾದ ಬೆಲೆಯನ್ನು ಹೆಜ್ಜೆ ಹೆಜ್ಜೆಗೂ ಎತ್ತಿ ತೋರಿಸಿರುವುದನ್ನು ಲ್ಲಿ ಪ್ರಮುಖವಾಗಿ ಗುರುತಿಸಬಹುದಾಗಿದೆ.     

     ಹೀಗೆ ಈ ಸಂಕಲನದ ಎಲ್ಲಾ ವಚನಗಳು ಅನುಭವದ ಸಾರವನ್ನು ಜೀವನ ದರ್ಶನವನ್ನು ನೀಡುತ್ತವೆ. ನಾಟಕೀಯ ಶೈಲಿಯಲ್ಲಿ ನಿರೂಪಣೆಗೊಂಡಿರುವ ಶೂನ್ಯ ಸಂಪಾದನೆಯಲ್ಲಿ ಅಲ್ಲಮ ಪ್ರಭು ಮುಖ್ಯನಾಗುತ್ತಾನೆ, ಈ ಕೃತಿಯ ಆರಂಭದಿಂದ ಅಂತ್ಯದ ವರೆಗೂ ಬೇರೆ ಬೇರೆ ಸಂದರ್ಭದಲ್ಲಿ ಅವನು ಕಾಣಿಸಿ ಕೊಳ್ಳುತ್ತಾನೆ, ಅಲ್ಲಮನು ಮಾನವಜನಾಂಗದಲ್ಲಿ ಉಳಿದು ಕೊಂಡು ಬರಬಹುದಾದ ಶಾಶ್ವತ ಜೀವನ ಮೌಲ್ಯಗಳನ್ನು ಇಲ್ಲಿ ಪ್ರತಿಪಾದಿಸಿದ್ದಾನೆ ಅಂತವುಗಳನ್ನು ಸಾಮಾನ್ಯ ಜನತೆಯ ಮುಂದಿಟ್ಟು ಅವರ ಬದುಕನ್ನು ಹಸನುಗೊಳಿಸುವುದೆ ಇವರ ಮುಖ್ಯ ಉದ್ದೇಶವಾಗಿದೆ. ಮಾನವನಿಗೆ ಪ್ರಧಾನವಾಗಿ ಬೇಕಾಗಿರುವ ತಿಳುವಳಿಕೆ, ಜ್ಞಾನ, ಮಾರ್ಗದರ್ಶನಗಳೆಲ್ಲಾ ಇಲ್ಲಿ ಅಡಕವಾಗಿವೆ. ಜನರಲ್ಲಿ ತುಂಬಿಕೊಂಡಿರುವ ಅಜ್ಞಾನ, ಮೂನಂಬಿಕೆ, ಜಾತಿತಾರತಮ್ಯ, ಲಿಂಗತಾರತಮ್ಯ, ಹಿಂಸೆ,ಕ್ರೌರ್ಯ, ಸೂಯೆ, ಧೂರ್ತತೆ, ಕುತಂತ್ರ ತುಂಬಿ ತುಳುಕಿರುವುದರಿಂದ ಅದನ್ನು ಹೊಗಲಾಡಿಸಬೇಕು ಇದರಿಂದ ಹೊಬರಲು ಅಲ್ಲಮಪ್ರಭು ಮತ್ತು ಇತರ ವಚನಕಾರರು ತೋರಿಸಿದ ದಾರಿಯಲ್ಲಿ ಮುನ್ನಡೆಯಬೇಕು. ಹೀಗೆ ವಚನಕಾರರ ತತ್ವಾದರ್ಶಗಳನ್ನು ಇಲ್ಲಿ ಅಚ್ಚುಕಟ್ಟಾಗಿ ತಿಳಿಯ ಪಡಿಸಿದ್ದಾನೆ.

    ಶೂನ್ಯಸಂಪಾದನೆಗಳು ಕೂಡ ತಮ್ಮ ಚಾರಿತ್ರಿಕ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳಿಕೊಂಡು ತಮ್ಮ ವರ್ತಮಾನದ ಆಶೋತ್ತರಗಳಿಗೆ ಸ್ಪಂದಿಸಿರುವ ಕೃತಿಗಳಾಗಿವೆ. ವಚನಕಾರರಿಗೆ ಪ್ರತಿಕ್ರಿಯೆಯಾಗಿ ಮೂಡಿದ ಶೂನ್ಯಸಂಪಾದನೆಗೆ ಪ್ರತಿಕ್ರಿಯೆಯಾಗಿ, ಭಿನ್ನಾಭಿಪ್ರಾಯವಾಗಿ ಮತ್ತು ತಿದ್ದುಪಡಿಯಾಗಿ ಈ ಶೂನ್ಯಸಂಪಾದನೆಯು ಒಡಮೂಡಿದೆ. ನಾಲ್ಕು ಶೂನ್ಯ ಸಂಪಾದನೆಗಳ ಸ್ವರೂಪವೇನೇ ಇರಲಿ, ಇವು ಭಿನ್ನಾಭಿಪ್ರಾಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಚರ್ಚೆ ಬೆಳೆಸುವ ಪ್ರಜಾಸತ್ತಾತ್ಮಕಗುಣದ ಭಾಗವಾಗಿ ಬಂದವುಗಳು ಎಂಬುದು ಇಲ್ಲಿ ಗಮನಿಸ ಬೇಕಾದ ಸಂಗತಿಯಾಗಿದೆ. ಶೂನ್ಯಸಂಪಾದನೆಯ ಈ ಸರಣಿ ಪ್ರತಿಕ್ರಿಯೆಗಳು ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಬಹುದೊಡ್ಡ ವಿದ್ಯಮಾನವಾಗಿರುವುದನ್ನು ವಿದ್ವಾಂಸರೂ ಗುರುತಿಸಿದ್ದಾರೆ.

    ಶೂನ್ಯ ಸಂಪಾದನೆಯಲ್ಲಿ ಅಲ್ಲಮಪ್ರಭುವೇ ಕೇಂದ್ರ ವ್ಯಕ್ತಿಯಾದ್ದರಿಂದ ಶೂನ್ಯ ಸಂಪಾದನೆಗೆ ಪ್ರಭುದೇವರ ಶೂನ್ಯ ಸಂಪಾದನೆ ಎಂಬ ಪರ್ಯಾಯ ಹೆಸರು ಉಂಟು. ಶರಣ ಶರಣೆಯರು ಅಲ್ಲಮನೊಡನೆ ಸಂಭಾಷಿಸಿ ಆತನ ಜ್ಞಾನದ ಬೆಳಕಿನಲ್ಲಿ ತಮ್ಮ ಅರಿವಿನ ಮಾರ್ಗವನ್ನು ಕೈಗೊಂಡು ಶೂನ್ಯವನ್ನು ಸಂಪಾದಿಸಿಕೊಂಡ ವಿವರವೇ ಶೂನ್ಯ ಸಂಪಾದನೆಯಲ್ಲಿ ಪ್ರಮುಖ ಭಾಗವಾಗಿದೆ. ಶ್ರೇಷ್ಠವಾದ ಅನುಭವದ ಸ್ಥಿತಿಯನ್ನು ಪಡೆದು ಪೂರ್ಣವಾಗುವುದನ್ನು ಸಂಕೇತಿಸುತ್ತದೆ. ವೀರಶೈವ ಧರ್ಮದ ಪ್ರಕಾರ ಮನುಷ್ಯನ ಅತ್ಯುಚ್ಛ ಆದರ್ಶವಾದ ಶೂನ್ಯವನ್ನು ಸಂಪಾದಿಸಿದವರ ಕಥೆಗಳ ಮಾಲಿಕೆಯಾಗಿದೆ.      ರಾಚನಿಕವಾಗಿ ಗೂಳೂರು ಸಿದ್ಧವೀರಣ್ಣೊಡೆ ಯನನ್ನು ಬಿಟ್ಟರೆ, ಉಳಿದವರಲ್ಲಿ ಸಂಪಾದನೆ ಅಥವಾ ಉಪದೇಶದ ವಿಭಜನೆ ಇಲ್ಲ, ಈತನ ಶೂನ್ಯ ಸಂಪಾದನೆಯನ್ನು ಅತ್ಯಂತ ಪರಿಷ್ಕೃತ ವೈಜ್ಞಾನಿಕ ಸಂಪಾದನೆ ಎಂದು ಹೇಳಲಾಗಿದೆ. ಇಂದಿನವರಲ್ಲಿ ಮುಖ್ಯವಾಗಿ ಶಿವಗಣಪ್ರಸಾದಿ ಮಹಾದೇವಯ್ಯನಲ್ಲಿ ತಾನು ಕಂಡುಕೊಂಡ ದೋಷಗಳನ್ನು ಆತ ತಿದ್ದಿದ್ದಾನೆ. ಪರಿಚ್ಛೇದದಲ್ಲಿ ಬರುವ ಪ್ರಸಂಗದ ಸಾರವನ್ನು ಆರಂಭದ ಕಂದಪದ್ಯದಲ್ಲಿ ಭಟ್ಟಿ ಇಳಿಸಿ ವಚನರೂಪಿ ಸಂವಾದದಲ್ಲಿ ಅದನ್ನು ಪ್ರತಿಪಾದಿಸಿಕೊಂಡು ಹೋಗಿದ್ದಾನೆ ಅಂತ್ಯದಲ್ಲಿ ʼಇಂತಿ ಶ್ರೀಮತ್ ಸಕಲಗಣ ಪುರಾತನರೊಳ್‌ ಪ್ರಭುದೇವರು ಮಹಾನುಭಾವ ಸದ್ಘೋಷ್ಠಿಯಂ ಮಾಡಿದ ಶೂನ್ಯಸಂಪಾದನೆಯೊಳ್ ಎಲ್ಲಾ ಗಣಂಗಳ ನಿರ್ವಯಲ ಸಮಾಧಿ ಏಕವಿಂಶತ್ಯುಪದೇಶಂ ಸಮಾಪ್ತ ಅಂತು ವಚನ೧೫೪೩ ಕಂ ಮಂಗಳ ಮಹಾಶ್ರೀʼ ಎಂಬ ನಮೂನೆ( ಪ್ರಭುದೇವರ ಶೂನ್ಯ ಸಂಪಾದನೆ, ಪು.೫೬೦) ಇರುವುದನ್ನು ಕಾಣಬಹುದಾಗಿದೆ.

   ಶೂನ್ಯಸಂಪಾದನೆ'ಯಲ್ಲಿ ನಾಯಕ ಪಾತ್ರವು ಅಲ್ಲಮ ಪ್ರಭುವಿಗೆ ಮೀಸಲಾಗಿದೆ. ಅಲ್ಲಮ ಐತಿಹಾಸಿಕ ವ್ಯಕ್ತಿಯಾಗಿದ್ದದ್ದು ನಿಜ, ಅವನು ಕಲ್ಯಾಣಕ್ಕೆ ಬಂದು ಶರಣರೊಡನೆ ಗೋಷ್ಠಿಯನ್ನು ನಡೆಸಿದ್ದು ನಿಜ ಆದರೆ ಅಲ್ಲಮ ಕಲ್ಯಾಣದವನಲ್ಲ. "ಶೂನ್ಯಸಂಪಾದನೆ'ಯ ಪ್ರಕಾರ ಅವನು ಸಿದ್ಧರಾಮನೊಡನೆ ಕಲ್ಯಾಣಕ್ಕೆ ಬಂದು ಬಸವಣ್ಣನವರ ಮಹಿಮಾತಿಶಯವನ್ನು ಕೊಂಡಾಡಿದ್ದು ನಿಜ, ಆದರೆ ಕಲ್ಯಾಣದಲ್ಲಿ ಮಹಾಮನೆ”ಯನ್ನು ಬಸವಣ್ಣ ಟ್ಟಿದವನು.  ಆದರೆ ಕಲ್ಯಾಣದಲ್ಲಿ ಕಲ್ಯಾಣವನ್ನು ಹುಡುಕಿದವನು ಅಲ್ಲಮ. ಅದ್ದರಿಂದ ಕಲ್ಯಾಣದಲ್ಲಿ ಶೂನ್ಯಸಿಹಾಸನವನ್ನೇರಿ ಶರಣರನ್ನು ಅಲ್ಲಮ ಕೃತಾರ್ಥರನ್ನಾಗಿ ಮಾಡುತ್ತಾನೆ. ಅಲ್ಲಮನಿಗೂ ಶರಣ ಸದೋಹಕ್ಕೂ ಇರುವ ಸಂಬಂಧ ಆಧ್ಯಾತ್ಮಿಕವಾದದ್ದು. ಇಲ್ಲಿ ಶರಣರ ಅನುಭವವನ್ನು ಅವರ ಮಾತುಗಳನ್ನು ಪರೀಕ್ಷಿಸಿ ಅರ್ಥವಿಸುವವನೂ ಆತನೇ ಆಗಿದ್ದಾನೆ. ಬಸವಣ್ಣನವರ ನಿಜ ಅಲ್ಲಮನಿಂದ ಬಯಲಾದಂತೆ ಅಲ್ಲಮನ ನಿಜವೂ ಬಸವಣ್ಣನವರಿಂದಲೇ ಬಯಲಾಗಬೇಕು. ಅಲ್ಲಮ ಮತ್ತು ಮುಕ್ತಾಯಕ್ಕ ಎದುರಾಗಿ ಮಾತಾಡದಿದ್ದರೆ ಮುಕ್ತಾಯಕ್ಕನ ನಿಜ ಪ್ರಕಟವಾಗುತ್ತಿರಲಿಲ್ಲ.

   ಸ್ಪತಂತ್ರವಾಗಿ ತನ್ನ ಕಾಯಕದಲ್ಲಿ ತೊಡಗಿದ್ದ ಸಿದ್ಧರಾಮ ಅಲ್ಲಮನೊಡನೆ ಕಲ್ಯಾಣಕ್ಕೆ ಬಂದು ಬಸವಣ್ಣನವರನ್ನು ಕಾಣುತ್ತಿರಲಿಲ್ಲ. ಅಲ್ಲಮನಿಲ್ಲದಿದ್ದರೆ ಮಹದೇವಿಯಕ್ಕನ ಅದ್ಭುತವಾದ ನಿಲುವು ಪ್ರಕಟವಾಗುತ್ತಿರಲಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಶರಣರ ವಚನಗಳನ್ನು ಅರ್ಥವಿಸುವವನು ಅಲ್ಲಮ. ಅಲ್ಲಮ ಇನ್ನೊಬ್ಬರನ್ನು ಪರೀಕ್ಷಿಸುವಾಗ ತನ್ನನ್ನೂ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾನೆ. ಮಾಯೆಯ ಆವರಣದಿದ ಬಿಡಿಸಿಕೊಂಡು ತನ್ನನಿಜಜೀವನದ ಹುಟ್ಟು, ಬೆಳವಣಿಗೆ ಮತ್ತು ಪರಿಣಾಮಗಳನ್ನು ಪುನಃ ಸೃಷ್ಟಿಸುತ್ತಾನೆ.

`ಶೂನ್ಯಸಂಪಾದನೆ'ಗೆ ಅಲ್ಲಮ ನಾಯಕನಾಗುವದು ಈ ದೃಷ್ಟಿಯಿಂದ ಅರ್ಥಪೂರ್ಣವಾಗಿದೆ. 'ಶೂನ್ಯಸಂಪಾದನೆ`'ಯ ಅಲ್ಲಮ ಮಾಯೆಯ ವಶಕ್ಕೆ ಸಿಕ್ಕವನಲ್ಲ. ಅವನು ಚಾಮರಸನ ಅಲ್ಲಮನಂತೆ "ಮಾಯಾಕೋಳಾಹಳ'. ಅವನು ಕಲ್ಯಾಣಕ್ಕೆ ಎರಡು ಸಾರಿ ಬಂದನೆಂದು"ಶೂನ್ಯಸಂಪಾದನೆಯಲ್ಲಿ ಪ್ರಸ್ತಾಪ ಇದೆ.        

 "ಯಾವ ಒಂದು ಮಹಾ ಉದ್ದೇಶವನ್ನಿಟ್ಟುಕೊಂಡು ಪ್ರಸಾದಿ ಮಹಾದೇವಯ್ಯನವರು ಶೂನ್ಯಸಂಪಾದನೆಯನ್ನು ಮೊಟ್ಟಮೊದಲು ಸಂಭಾಷಣೆಯ ರೂಪದಲ್ಲಿ ಸಂಗ್ರಹಿಸಿದರೊ ಅದು ಉಳಿದ ಶೂನ್ಯಸಂಪಾದನಾಕಾರರ ಕೈಯಲ್ಲಿ ಕ್ರಮೇಣ ವಿಕಾಸಗೊಂಡು ಸಿದ್ಧವೀರಣ್ಣೊಡೆಯರಲ್ಲಿ ಪೂರ್ಣತೆಯನ್ನು ಪಡೆದಿದೆ ಎಂದು ಹೇಳಬಹುದು." ಎಂಬ ಡಾ. ಎಚ್‌. ತಿಪ್ಪೇರುದ್ರಸ್ವಾಮಿ ಅವರ ಮಾತು ಒಪ್ಪುವಂಥದ್ದು. ಗೂಳೂರು ಸಿದ್ಧವೀರಣ್ಣೊಡೆಯರ ಆಶಯವು, ಶರಣರ ಬಾಳಿನ ಚಿತ್ರಣದ ಜೊತೆಗೆ, ಪ್ರಭುವಿನ ವ್ಯಕ್ತಿತ್ವವನ್ನು ಜನಮನಕ್ಕೆ ತಿಳಿಸುವುದು ಮತ್ತು ವೀರಶೈವ ಸಿದ್ಧಾಂತವನ್ನರುಹುವ ಒಂದುಗ್ರಂಥ ರಚನೆಯ ಕಾರ್ಯವಾಗಿ ಸರಿಯಾದ ರೀತಿಯಲ್ಲಿ, ತಮಗೆ ತೋಚಿದ ರೀತಿಯಲ್ಲಿ ಹೇಳುವ ಮೂಲಕ ಆ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದವನಾಗಿದ್ದಾನೆ.  

     ಒಟ್ಟಾರೆ ಕೊನೆಯ ಪರಿಷ್ಕರಣನಾದ ಗೂಳೂರ ಸಿದ್ಧವೀರಣ್ಣೊಡೆಯನು ತನ್ನ  ಕಣ್ಣ ಮುಂದೆ ಇದ್ದ ಶಿವಗಣಪ್ರಸಾದಿ. ಹಲಗೆದೇವ, ಗುಮ್ಮಳಾಪುರದ ಸಿದ್ಧಲಿಂಗ ಶೂನ್ಯಸಂಪಾದನೆಗಳ ಒಂದೊಂದು ಸಂಪಾದನೆಯಲ್ಲಿಯೂ ಕಂಡು ಬಂದಿರುವ ಗುಣ-ದೋಷಗಳನ್ನೆಲ್ಲ ಪರಿಗಣಸಿರುವುದರ ಜೊತೆಗೆ ನೂತನವಾಗಿ ದೊರೆತ ಅಪಾರ ವಚನರಾಶಿಯನ್ನು ಬಳಸಿಕೊಂಡು, ಹಿಂದಿನ ಮೂವರಿಗಿಂತಲೂ ವಿಶಿಷ್ಟವಾದ ಮತ್ತು ವ್ಯವಸ್ಥಿತವಾದ ಸಂಪಾದನೆಯನ್ನು ಸಿದ್ಧಪಡಿಸಿ ಕೊಟ್ಟಿದ್ದಾನೆ. ತನಗಿಂತ ಹಿಂದಿನ ಮೂರು ಶೂನ್ಯಸಂಪಾದನೆಗಳಲ್ಲಿದ್ದಂತಹ ಅಭಾಸ-ಅತಿರೇಕಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದ್ದಾನೆ. ನೂತನವಾದ ವಸ್ತು-ಸಂಗತಿಗಳನ್ನು ಸೇರಿಸಿದ್ದಾನೆ. ಕುಂದು ಕೊರತೆಗಳನ್ನು ಕಂಡುಕೊಂಡು, ಅವುಗಳನ್ನು ತನಗೆ ತೋಚಿದ ರೀತಿಯಲ್ಲಿ ಸರಿಪಡಿಸುವ ಕಾರ್ಯವನ್ನು ಮಾಡುವ ಮೂಲಕ, ನೂತನವಾದ ರೂಪವನ್ನು ಕೊಟ್ಟು, ಪ್ರಭುದೇವರ ಶೂನ್ಯ-ಸಂಪಾದನೆಗೊಂದು ಪರಿಪೂರ್ಣವಾದ ಸ್ವರೂಪವನ್ನು ತಂದು ಕೊಡಲು ಪ್ರಯತ್ನಿಸಿ ಯಶಸ್ವಿಯಾಗಿ, ಹಿಂದಿನ ಸಂಪಾದನೆಗಳಲ್ಲಿದ್ದ ಅದರ ಪರಿಷ್ಕರಣದ ತೆರೆ ಎಳೆದಿದ್ದಾನೆ.  ಶೂನ್ಯಸಂಪಾದನೆಯು ಒಂದು ಧಾರ್ಮಿಕ ಕೃತಿಯಾದರೂ ಸಹ,  ಸಿದ್ಧವೀರಣ್ಣೊಡೆಯರ ಪ್ರಜ್ಞಾಪೂರ್ವಕ ಪಾಂಡಿತ್ಯ ಪ್ರತಿಭೆಯಿಂದಾಗಿ ಕಾವ್ಯ ಮತ್ತು ಧರ್ಮ ಎರಡು ಮೇಳೈಸಿಕೊಂಡು ಕೃತಿಯಲ್ಲಿ ಒಡಮೂಡಿವೆ ಎಂದು ಹೇಳಬಹುದು. ನಾಲ್ಕನೆಯ ಹಾಗೂ ಕೊನೆಯದಾದ ಗೂಳೂರು ಸಿದ್ಧವೀರಣ್ಣೊಡೆಯರ ಪ್ರಭುದೇವರ ಶೂನ್ಯಸಂಪಾದನೆಯು ಹೆಚ್ಚು ಪ್ರಚಲಿತವಿರುವ ಹಾಗೂ ಪ್ರಸಿದ್ಧಿಯನ್ನು ಪಡೆದ ಕೃತಿಯಾಗಿದೆ. ಇದು ಶೂನ್ಯಸಂಪಾದನೆಯ ವಿನ್ಯಾಸ ದೃಷ್ಟಿಯಿಂದ ಅಚ್ಚುಕಟ್ಟಾದ ಬಹು ಮಹತ್ವವಾದ ಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

            ಪರಾಮರ್ಶನ ಗ್ರಂಥಗಳು:

೧. ಗೂಳೂರು ಸಿದ್ಧವೀರಣ್ಣೊಡೆಯ ಶೂನ್ಯಸಂಪಾದನೆ ಸಂ.ಪ್ರೊ. ಸಂ. ಶಿ. ಭೂಸನೂರಮಠ, ಪ್ರಕಾಶನ ಮಠಾಧಿಪತಿಗಳುಸಿದ್ದಲಿಂಗೇಶ್ವರ ಸಂಸ್ಥಾನಮಠ, ರಾವೂರ, ನಾಲ್ಕನೇ ಮುದ್ರಣ, ೧೯೯೯.

೨. ಗೂಳೂರು ಸಿದ್ಧವೀರಣ್ಣೊಡೆಯರು ರಚಿಸಿದ ಪ್ರಭುದೇವರ ಶೂನ್ಯ ಸಂಪಾದನೆ ಸಂ: ಎಂ.ಎಂ.ಕಲಬುರ್ಗಿ, ವೀರಣ್ಣ ರಾಜೂರ, ಲಿಂಗಾಯತ ಅಧ್ಯಯನ ಸಂಸ್ಥೆ, ಡಂಬಳ-ಗದಗ, ೨೦೧೬

೩.ಕನ್ನಡ ಸಾಹಿತ್ಯ ಸಮೀಕ್ಷೆ, ಜಿ. ಎಸ್‌. ಶಿವರುದ್ರಪ್ಪ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ- ೧೯೭೫

೪. ಹೆಚ್‌. ತಿಪ್ಪೇರುದ್ರಸ್ವಾಮಿ ಶರಣರ ಅನುಭಾವ ಸಾಹಿತ್ಯ ಪ್ರಕಾಶನ: ಡಿ. ವಿ. ಕೆ. ಮೂರ್ತಿ ಪ್ರಕಾಶನ,

    ಮೈಸೂರು. ನಾಲ್ಕನೇ ಮುದ್ರಣ - ೧೯೯೪.

೫. ರಂ. ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ- ಗೀತಾ ಬುಕ್‌ ಹೌಸ್‌, ಮೈಸೂರು -೧೯೯೮.

೬.ಎಂ.ಚಿದಾನಂದಮೂರ್ತಿ,ಶೂನ್ಯಸಂಪಾದನೆಯನ್ನುಕುರಿತು, ಪ್ರಿಯದರ್ಶಿನಿ ಪ್ರಕಾಶನ,ಬೆಂಗಳೂರು ೧೯೮೮.

೭. ಎಂ. ಎಂ. ಕಲಬುರ್ಗಿ, ಮಾರ್ಗ-1॥ ಪ್ರಕಾಶನ : ಕರ್ನಾಟಕ ಬುಕ್‌ ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್‌,

  ತ್ರಿಭುವನಚಿತ್ರಮಂದಿರದ ಎದುರು ಗಾಂಧಿನಗರ, ಬೆಂಗಳೂರು- ೦೯, ೧೯೯೫.

೮. ಎಸ್. ವಿದ್ಯಾಶಂಕರ. ಶಬ್ದ ಸಂಪುಟ. ಸ್ನೇಹ ಪ್ರಕಾಶನ, ಬೆಂಗಳೂರು- ೨೦೦೮  

೯.ಎಸ್.ವಿದ್ಯಾಶಂಕರ.ವೀರಶೈವ ಸಾಹಿತ್ಯ ಚರಿತ್ರೆ ಸಂ.೩, ಭಾಗ ೧, ಪ್ರಿಯದರ್ಶಿನಿ ಪ್ರಕಾಶನ,ಬೆಂಗಳೂರು೨೦೧೪

೦.ಸಿ.ನಾಗಭೂಷಣ ಶರಣ ಸಾಹಿತ್ಯ ದೀಪಿಕೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ,೨೦೧೭

೧೧. ಸಿ.ನಾಗಭೂಷಣ ಕನ್ನಡ ಸಾಹಿತ್ಯ-ಸಂಸ್ಕೃತಿ ಬಾಗಿನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೨೦

೧೨.ಶೂನ್ಯ ಸಂಪಾದನೆ ಸಂ. ಬಸವರಾಜ ಸಬರದ, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ,

   ಗುಲಬರ್ಗಾ,೨೦೧೧

 

                       

                             

 

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...