ಭಾನುವಾರ, ಏಪ್ರಿಲ್ 7, 2019

ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಳ ಗ್ರಹಿಕೆ ಡಾ.ಸಿ.ನಾಗಭೂಷಣ


ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ  ಹಾಗೂ ಸಾಂಸ್ಕೃತಿಕ ನೆಲೆಗಳ ಗ್ರಹಿಕೆ      ಡಾ.ಸಿ.ನಾಗಭೂಷಣ                                     

        ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಣ್ಣನವರ ನೇತೃತ್ವದಲ್ಲಿ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಉತ್ಪ್ರೇಕ್ಷೆ ಇಲ್ಲ. ಬಸವಣ್ಣನವರ ವಚನಗಳ ರಚನೆಯು ಅವರಲ್ಲಿ ಮೂಡಿದ ಸಾಮಾಜಿಕ ಅರಿವಿನ ಸಂಕೇತ ಎನ್ನುವ ಕಾರಣದಿಂದ ಮಹತ್ವವನ್ನು ಪಡೆಯುತ್ತವೆ. ಬಸವಣ್ಣನವರು ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು  ವಚನಗಳ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು.
        ಬಸವಣ್ಣನವರ ಬಗೆಗೆ ಯಾವ ನಿಟ್ಟಿನಿಂದ ನೋಡಿದರೂ ಸಾಲದು ಎನಿಸುವಷ್ಟು ವ್ಯಕ್ತಿತ್ವವನ್ನು ಅವರು ಪಡೆದವರಾಗಿದ್ದಾರೆ. ಶ್ರೇಷ್ಠ ವಚನಗಳನ್ನು ರಚಿಸಿರುವುದರಿಂದ ಕವಿಗಳು. ಭಗವಂತನ ಸಾಕ್ಷಾತ್ಕಾರಕ್ಕಾಗಿ ಜೀವನದುದ್ದಕ್ಕೂ ಹಂಬಲಿಸಿದ್ದುದರಿಂದ ಸಾಧಕರು. ಸಮಾಜದ ಬಗೆಗೆ ಚಿಂತನೆ ನಡೆಸುವದರಿಂದ ಸಮಾಜದ ದಾರ್ಶನಿಕರು. ನೂತನ ಸಮಾಜವನ್ನು ನಿರ್ಮಾಣಮಾಡಲು ಪ್ರಯತ್ನಿಸಿದ್ದರಿಂದ ಸಮಾಜಸುಧಾರಕರು. ಪ್ರಮುಖ ಅರಸುಮನೆತನದಲ್ಲಿ ಕೆಲಸ ಮಾಡಿದ ರಾಜನೀತಿ ವಿಶಾರದರು. ಕನ್ನಡನಾಡಿನ ಪ್ರಮುಖ ಧರ್ಮವಾದ ವೀರಶೈವ ಧರ್ಮದ ಪ್ರಮುಖ ನಾಯಕರು ಇಷ್ಟೆಲ್ಲಾ ವ್ಯಕ್ತಿತ್ವವನ್ನು ತನ್ನೊಳಗೆ ಹುದುಗಿಸಿಕೊಂಡಿದ್ದರೂ ಅದರಾಚೆ ಉಳಿಯುವ ವ್ಯಕ್ತಿಗಳು ಹೌದು. ಸಂಪ್ರದಾಯಪ್ರಿಯ ವರ್ಗದಲ್ಲಿ ಜನಿಸಿ  ಅದರ ವಿರುದ್ಧವಾಗಿಯೇ ಸಿಡಿದು ನಿಂತು ಸಮಾಜದ  ತೀರಕೆಳವರ್ಗದ ಜನತೆಯ ಒಳಿತಿಗಾಗಿ ಶ್ರಮಿಸಿದವರು. ಬಸವಣ್ಣ ನವರಷ್ಟು ಸ್ಪೃಷ್ಟವಾಗಿ ಮತ್ತು ಕಟುಕವಾಗಿ ಸಮಾಜದ ಉನ್ನತ ವರ್ಗದ ಡಂಬಾಚಾರಗಳನ್ನು ಖಂಡಿಸಿದವರು. ತಮ್ಮನ್ನುತಾವು ತೆರೆದ ಮನಸ್ಸಿನಿಂದ ವಿಮರ್ಶಿಸಿಕೊಂಡವರು ಮತ್ತಾರು ದೊರಕಲಾರರು. ಇವರು ಬೃಹತ್ ಪ್ರಮಾಣದಲ್ಲಿ ಸಾಮಾಜಿಕ ವ್ಯತ್ಯಾಸವೊಂದಕ್ಕಾಗಿ ಶ್ರಮಿಸಿದವರು. ಬಸವಣ್ಣ ಮಧ್ಯಕಾಲೀನ ಯುಗಕ್ಕೆ ಸೇರಿದವರಾದರೂ ಆಧುನಿಕರಾಗಿ ಕಾಣಬರುತ್ತಾರೆ. ಸರಳ ಭಕ್ತರೆನಿಸಿದ್ದ ಬಸವಣ್ಣ ಇಡೀ ಪ್ರಪಂಚದಲ್ಲಿ ತಾನೊಬ್ಬನೇ ಭಕ್ತನೆಂದೂ, ಉಳಿದ ಶರಣರೆಲ್ಲಾ ತನಗೆ ಭಗವಂತನ ಸ್ವರೂಪಿಗಳೆಂದು ವಿನಯದಿಂದ ಸಾರಿದರು. ಸಂಪ್ರದಾಯ ಜಡತೆಯಿಂದ ನಿಶ್ಚೇಷ್ಟಿತವಾಗಿದ್ದ ಒಂದು ಇಡೀ ಯುಗಕ್ಕೆ ಉತ್ಸಾಹ ರೂಪದಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಸಾಂಪ್ರದಾಯಿಕ ವೈದಿಕ ಶಿಕ್ಷಣ ಕೇಂದ್ರವಾಗಿದ್ದ ಅಗ್ರಹಾರವೊಂದರ ಬ್ರಾಹ್ಮಣನೊಬ್ಬನ ಮಗನಾಗಿ ಜನಿಸಿದ ಅವರು ಬ್ರಾಹ್ಮಣ್ಯವು ಭಕ್ತಿಗಿಂತ ಕರ್ಮಕ್ಕೆ ಪ್ರಾಮುಖ್ಯ ನೀಡುವುದೆಂದು ಚಿಕ್ಕವಯಸ್ಸಿನಲ್ಲಿ   ಉಪನಯನವನ್ನು ತಿರಸ್ಕರಿಸಿದವರು. ತಾನು ಕೈಗೊಂಡಿದ್ದ ಧಾರ್ಮಿಕ ಆಂದೋಲನದ ಎಲ್ಲಾ ಪ್ರಗತಿಪರ ಬೀಜಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದ್ದ ಶರಣಧರ್ಮವು ಬಸವಣ್ಣನವರ ನೇತೃತ್ವದಲ್ಲಿ ವ್ಯಾಪಕತ್ವವನ್ನು ಪಡೆಯಿತು.
        ಸಾಮಾಜಿಕ ಪ್ರಜ್ಞೆಯು ಸಮಾಜದ ವಸ್ತುಸ್ಥಿತಿಯನ್ನು ತಿಳಿಸಿ ಕುಂದು ಕೊರತೆಗಳನ್ನು ಟೀಕಿಸುವುದಷ್ಟೇ ಅಲ್ಲ ಅದನ್ನು ಸುಧಾರಿಸುವ, ಬದಲಿಸುವ ಮಾರ್ಗದರ್ಶಕ ಕಾರ್ಯವನ್ನು ನಿರ್ವಹಿಸುವಂತೆಯೂ ಮಾಡುತ್ತದೆ. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ಬಸವಣ್ಣನವರ ಸಾಮಾಜಿಕ ನೆಲೆಯು ಅತ್ಯುನ್ನತ ಮಟ್ಟದ್ದಾಗಿತ್ತು. ತಮ್ಮ ಸಮಕಾಲೀನ ಹದಗೆಟ್ಟ ಸಮಾಜವನ್ನು ಯೋಗ್ಯರೀತಿಯಲ್ಲಿ ನಡೆಯಿಸುವ ಧರ್ಮದ ಡಾಂಭಿಕತೆಯನ್ನು ಹೊಡೆದೋಡಿಸಿ ಮಾನವತೆಯನ್ನು ಎಚ್ಚರಗೊಳಿಸುವ, ಪರಂಪರಾಗತ ಶುಷ್ಕ, ಅರ್ಥಹೀನ, ಸವಕಳಿ ನಡೆ ನುಡಿಗಳನ್ನು ತಿದ್ದಿ ಸಜೀವಗೊಳಿಸುವ, ಅಂಧಾನುಕರಣೆಯಲ್ಲಿ ಮುಳುಗಿ ಹೋಗಿದ್ದ ಜನತೆಗೆ ತಮ್ಮ ತಮ್ಮ ವ್ಯಕ್ತಿ ವೈಶಿಷ್ಟ್ಯದ ಬಗೆಗೆ ಅರಿವು ಮೂಡಿಸುವ ಹಲವಾರು ಅಂಶಗಳನ್ನು  ಸಾಮಾಜಿಕ ನೆಲೆಯಲ್ಲಿ ಗುರುತಿಸಬಹುದಾಗಿದೆ. ಸಂಪ್ರದಾಯ ನಿಷ್ಠೆಯ ವಿರುದ್ಧ, ಸ್ವಾಯತ್ತತೆಯ ವಿರುದ್ಧ ಪ್ರತಿಭಟನೆಯ ಅಂಶಗಳನ್ನು ಕಾಣಬಹುದಾಗಿದೆ.   
        ಹೊಸತನದ ಹುಟ್ಟಿಗಾಗಿ ಪ್ರಾರಂಭಿಸಿದ ಸಮಾಜೋ ಧಾರ್ಮಿಕ ಆಂದೋಲನದ ನೇತಾರರಾಗಿ ವ್ಯವಸ್ಥಾಬದ್ಧ ಸಮಾಜದ ವಿರುದ್ಧ ಕ್ರಾಂತಿಯನ್ನೇ ಸಾರಿದ ಬಸವಣ್ಣನವರ ವಚನಗಳಲ್ಲಿಯ ಸಾಮಾಜಿಕ ಪ್ರಜ್ಞೆಯನ್ನು ಕುರಿತಾದ ವಚನಗಳು ಸಮಾಜದಲ್ಲಿಯ ಅಂಕು ಡೊಂಕುಗಳ ಬಗೆಗೆ ಅರಿವು ಮೂಡಿಸುವ ರೀತಿಯಲ್ಲಿವೆ. ವೈಯಕ್ತಿಕ ನೆಲೆಯಲ್ಲಿ ಬಸವಣ್ಣನವರು ತನ್ನನ್ನು ತಾನು ಅಪವರ್ಗೀಕರಣಗೊಳಿಸಿಕೊಳ್ಳುವುದರ ಮೂಲಕ ಬ್ರಾಹ್ಮಣ ವರ್ಗದ ಶುದ್ಧತೆಯ ತಾತ್ವಿಕ ನೆಲೆಗಳನ್ನು ದೃಢವಾಗಿ ನಿರಾಕರಿಸುವ ಮಟ್ಟವನ್ನು ಹೊಂದಿದ್ದಾರೆ. ತನ್ನ ಬದುಕಿನುದ್ದಕ್ಕೂ ಬಡವರ ಜೊತೆ ಅಬ್ರಾಹ್ಮಣರ ಜೊತೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಯತ್ನಿಸಿದ ಬಸವಣ್ಣ ಅಂದಿನ ಆಂದೋಲನದ ಕೇಂದ್ರ ವ್ಯಕ್ತಿಯಾಗಿದ್ದವರು. ಅಸ್ಪೃಶ್ಯ  ಜಾತಿಯಿಂದ ಬಂದಿದ್ದ ದಲಿತರನ್ನು ಬಸವಣ್ಣನ ನೇತೃತ್ವದ ಚಳುವಳಿಯು ಹಿರಿಯಮಾಹೇಶ್ವರರೆಂದು, ಹಿರಿಯ ಕುಲದವರೆಂದು ಕರೆಯುತ್ತಿದ್ದುದು ಅತ್ಯಂತ ಗಮನಾರ್ಹ ಸಂಗತಿ. ಮಾಹೇಶ್ವರ ಎಂದರೆ ಶಿವನ ಅನುಯಾಯಿಗಳು ಮೇಲ್ವರ್ಗದ ವೀರಶೈವರು ಮಾಹೇಶ್ವರರಾದರೆ, ಕೆಳವರ್ಗದಿಂದ ಬಂದ ವೀರಶೈವರು ಹಿರಿಯ ಮಾಹೇಶ್ವರರು. ಬಹುಶಃ ಕೆಳವರ್ಗದ ವೀರಶೈವರನ್ನು ಉಳಿದವರಿಗಿಂತ ಕಡಿಮೆಯಾಗಿ ಕಾಣುವ ಕೆಲವು ವೀರಶೈವರು ಆ ಕಾಲದಲ್ಲಿದ್ದಿರಬೇಕು. ಅಂತಹ ಮನೋಭಾವವನ್ನು ತೊಲಗಿಸಬೇಕಾದರೆ ಕೆಳವರ್ಗದ ವೀರಶೈವರು ಉಳಿದವರ ಸಮಾನರು ಮಾತ್ರವಲ್ಲ ಉಳಿದವರಿಗಿಂತ ಶ್ರೇಷ್ಠರು ಎಂದು ಹೇಳುವುದು ಅಗತ್ಯವಾಗಿತ್ತು. ಬಸವಣ್ಣನವರು ಸಮಾಜದಿಂದ ತಿರಸ್ಕಾರಕ್ಕೆ ಗುರಿಯಾಗಿದ್ದ ದಲಿತರ ಸಖ್ಯ ಬೆಳೆಸಿದರು. ನಿರ್ಬಂಧಗಳಿಂದ ಧರ್ಮವನ್ನು ಮುಕ್ತಗೊಳಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ಸರಳಗೊಳಿಸಿದರು. ನೂತನ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಧರ್ಮ ಮಂದಿರದ ಎಲ್ಲಾ ಬಾಗಿಲುಗಳನ್ನು ತೆರೆದು ಕೆಳಸ್ತರದ ಎಲ್ಲಾ ವ್ಯಕ್ತಿಗಳಿಗೂ ಅವಕಾಶ ಕಲ್ಪಿಸಿಕೊಟ್ಟರು. ತನ್ನ ಬದುಕಿನುದ್ದಕ್ಕೂ ಬಡವರ ಜೊತೆ, ಅಬ್ರಾಹ್ಮಣರ ಜೊತೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಯತ್ನಿಸಿದ ಬಸವಣ್ಣ ಅಂದಿನ ಆಂದೋಲನದ ಕೇಂದ್ರವ್ಯಕ್ತಿಯಾಗಿದ್ದವರು. ಒಬ್ಬ ಬ್ರಾಹ್ಮಣ ಮತ್ತು ಅಸ್ಪೃಶ್ಯನನ್ನು ಅವರ ಹುಟ್ಟಿನಿಂದ ಗುರುತಿಸಬಾರದು. ಯಾವನೇ ಸದ್ ವ್ಯಕ್ತಿಯನ್ನು ಬ್ರಾಹ್ಮಣನೆಂದೂ, ಯಾವನೇ ಕೆಟ್ಟ ವ್ಯಕ್ತಿಯನ್ನು ಅಸ್ಪೃಶ್ಯನೆಂದು ಕರೆಯಬಹುದು. ಎಲ್ಲರಿಗೂ ಒಳಿತನ್ನೇ ಬಯಸುವವನೇ ಶ್ರೇಷ್ಠ ಕುಲಜ ಎಂದು ಪ್ರತಿಪಾದಿಸಿದರು. ಬಸವಣ್ಣ ತನ್ನನ್ನು ತಾನೇ ಸ್ವವಿಮರ್ಶೆ ಮಾಡಿಕೊಳ್ಳುತ್ತಾ ತನ್ನ ಹುಟ್ಟಿನಿಂದ ಹಿಡಿದು ಸರ್ವಸ್ವವನ್ನು ದಲಿತರ ಜೊತೆ ಸಮೀಕರಿಸಿಕೊಂಡಿರುವುದನ್ನು ಅವರ ವಚನಗಳು ಸ್ಥಿರೀಕರಿಸುತ್ತವೆ.
     ಕ್ರಾಂತಿಕಾರಿ ಧೋರಣೆಯುಳ್ಳ ಬಸವಣ್ಣ ಮೊದಲಿಗೆ ಕೊಳೆತು ನಾರುತ್ತಿದ್ದ ಸಮಾಜ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದವರು. ಹೊಸತನದ ಹುಟ್ಟಿಗಾಗಿ ಪ್ರಾರಂಭಿಸಿದ ಸಮಾಜೋ ಧಾರ್ಮಿಕ ಆಂದೋಲನದ ನೇತಾರರಾಗಿ ವ್ಯವಸ್ಥಾಬದ್ಧ ಸಮಾಜದ ವಿರುದ್ಧ ಕ್ರಾಂತಿಯನ್ನೇ ಸಾರಿದ ಬಸವಣ್ಣನವರ ಸಾಮಾಜಿಕ  ನೆಲೆಯಲ್ಲಿಯ ವಚನಗಳು ಸಮಾಜದಲ್ಲಿಯ ಅಂಕು ಡೊಂಕುಗಳ ಬಗೆಗೆ ಅರಿವು ಮೂಡಿಸುವ ರೀತಿಯಲ್ಲಿವೆ.       
ಸಮಾಜ ಸುಧಾರಣೆಯ ಕಾರ್ಯದಲ್ಲಿ ಮನುಷ್ಯ ಮೊದಲು ತನ್ನನ್ನು ತಾನು ತಿದ್ದಿಕೊಳ್ಳಬೇಕು ತನ್ನ ಲೋಪದೋಷಗಳನ್ನು ನಿವಾರಿಸಿಕೊಂಡು ಆತ್ಮಶ್ರೀಯನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ.ಅನಕ್ಷರಸ್ತರೂ ಆದ ಕೆಳವರ್ಗದವರಿಗೆ ಧಾರ್ಮಿಕ ಆಚರಣೆಗಳಲ್ಲಿಯೂ ಅವಕಾಶ ಕಲ್ಪಿಸುವ ಸಲುವಾಗಿ
ಹಾಲನೇಮ ಹಾಲಕೆನೆಯ ನೇಮ
ಕೆನೆತಪ್ಪಿದಬಳಿಕ ಕಿಚ್ಚಡಿಯನೇಮ
ಬೆಣ್ಣೆಯ ನೇಮ ಬೆಲ್ಲದನೇಮ
ಅಂಬಲಿಯ ನೆನೆದವರಾರನೂ ಕಾಣೆ
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ (ವ.ಸಂ.232)
ಎಂದು ದೈವೋಪಾಸನೆಯಲ್ಲಿದ್ದ ಡಾಂಭಿಕತೆಗೆ ಬದಲು ಕೆಳವರ್ಗದ ದಲಿತ ಜನರಿಗೆ ಸುಲಭವಾಗಿ ಎಟಕುತಿದ್ದ ಅಂಬಲಿಗೆ ಮಹತ್ವ ಕಲ್ಪಿಸಿ ಆ ಜನರಿಗೆ ಧಾರ್ಮಿಕ ನೆಲೆಯನ್ನು ಕಲ್ಪಿಸಿಕೊಟ್ಟರು. ದಲಿತೋದ್ಧಾರದ ಕಾರ್ಯದಲ್ಲಿ ಧರ್ಮವು ಚೇತನದಾಯಕ ಅಂಶವಾಗಿ ಮಾರ್ಪಟ್ಟಿತು. ತಮ್ಮ ಅಜ್ಞಾನದಲ್ಲಿಯೇ ಮುಳುಗಿದ್ದ ಕೆಳವರ್ಗದ ಜನತೆಗೆ ವೇದದ ನಿಜಸಂದೇಶವನ್ನು ಮರೆಮಾಚಿ ಜ್ಞಾನಜ್ಯೋತಿಯನ್ನು ಅವರಿಗೀಯದೆ ಅಳಿಯುತ್ತಿದ್ದ ಅಂದಿನ ಪುರೋಹಿತ ಸಂಸ್ಕೃತಿಯನ್ನು ವಿರೋಧಿಸಿ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರೂ ಒಂದೇ ಎಂದು ನಂಬುವುದೆನ್ನ ಮನವು ಎಂದು ಸಾರಿದ ಬಸವಣ್ಣ ಒಂದು ರೀತಿಯಲ್ಲಿ `ಸ್ಥಗಿತ ಸಮಾಜದ ವ್ಯವಸ್ಥೆಗೆ ಪ್ರಗತಿಪರ ಸಸಿಯನ್ನು ಕಸಿಯಾಗಿ ಬೆಳೆಸಲು' ಪ್ರಯತ್ನಿಸಿದವರಾಗಿದ್ದಾರೆ.    
    ಬಸವಣ್ಣನವರು ಮಾನವನಿಂದ ಮಾನವನ ಶೋಷಣೆಯಿಲ್ಲದ ಮುಕ್ತ ಸಮಾಜವನ್ನು ಕಟ್ಟ ಬಯಸಿದರು. ಚತುರ್ವರ್ಣಗಳು ಹುಟ್ಟಿನಿಂದಲೇ ಯೋಗ್ಯತೆಯನ್ನು ನಿರ್ಧರಿಸುವ ಚತುರ್ ಸಾಧನವಾಗಿ ಪರಿಣಮಿಸಿ ಸಮಾಜದ ಚೌಕಟ್ಟಿನಲ್ಲಿ ನಾಲ್ಕು ವರ್ಣಗಳಲ್ಲದೆ ಅದರ ಹೊರಗೆ ಪಂಚಮರಿದ್ದರು. ಆಗಿನ ಕಾಲದಲ್ಲಿ ಇವರ ಸ್ಥಿತಿಯು ಚಿಂತಾಜನಕವಾಗಿದ್ದಿತು. ಅವರು ಊರೊಳಗೆ ಬರಬೇಕಾದರೆ `ಸಂಬೋಳಿ-ಸಂಬೋಳಿ’ ಎಂದು ಕೂಗುತ್ತ ಬರಬೇಕಾಗಿತ್ತು. ಅಂತ್ಯಜರು ಅಂದು ವೇದಶಾಸ್ತ್ರಗಳನ್ನು ಓದುವುದಿರಲಿ, ಕಿವಿಯಿಂದ ಕೇಳಿಸಿಕೊಂಡರೂ ಕಿವಿಗೆ ಸೀಸ ಕಾಯಿಸಿ ಬಿಡುವಷ್ಟು ಕರ್ಮದ ಆಚರಣೆ ಕ್ರೂರವಾಗಿತ್ತು. ಬಸವಾದಿ ಪ್ರಮಥರು ಶೋಷಣೆಗೆ ಒಳಗಾಗಿದ್ದ ಇಂತಹವರ ಜೊತೆಗೆ ಮೊದಲಿಗೆ ಸಖ್ಯವನ್ನು ಬೆಳಸಿ, ಅದುವರೆವಿಗೂ ಇದ್ದ ನಿರ್ಬಂಧಗಳಿಂದ ಧರ್ಮವನ್ನು ವಿಮುಕ್ತಗೊಳಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ಸರಳಗೊಳಿಸಿದರು. ಹೊಸ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣ ಮಾಡಿದ ಮೊದಲನೆ ಕೆಲಸವೆಂದರೆ, ತಮ್ಮ ಧರ್ಮ ಮಂದಿರದ ಎಲ್ಲಾ ಬಾಗಿಲುಗಳನ್ನು ಕೂಡಾ ತೆರೆದಿದ್ದು. ಅಲ್ಲಿ ಉತ್ತಮ-ಹೀನ ಎಂಬ ಭೇದವಿಲ್ಲ. ಶ್ರೀಮಂತ-ದರಿದ್ರರೆಂಬ ತಾರತಮ್ಯವಿಲ್ಲ. ಅವರು ಬೋಧಿಸಿದ ಧರ್ಮವೂ ಅತ್ಯಂತ ಸರಳವಾದುದು. ವಚನಕಾರರು ಜನರಿಗೆ ತಿಳಿಸಿದ ಸೂತ್ರಗಳು ಅತ್ಯಂತ ಸರಳ. ಕಳಬೇಡ ಕೊಲಬೇಡ ಹುಸಿಯ ನುಡಿಯ ಬೇಡ, ದಯವಿಲ್ಲದ ಧರ್ಮವಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳೆಲ್ಲದರಲ್ಲಿ, ದೇವಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿರೋ, ಆಚಾರವೇ ಸ್ವರ್ಗ ಅನಾಚಾರವೇ ನರಕ ಇತ್ಯಾದಿ ಸರಳ ನುಡಿಗಳಿಗೆ ಮನಸೋತ ಹತಾಶರಾಗಿದ್ದ ಕೆಳವರ್ಗದ ಜನತೆ ಬಸವಣ್ಣನ ವಿನೂತನ ಧರ್ಮಕ್ಕೆ ತಂಡೋಪತಂಡವಾಗಿ ಪಾಲ್ಗೊಂಡರು. ವೈದಿಕರಿಂದ ಬರುತ್ತಿದ್ದ ಅಡೆತಡೆಗಳಿಗೆ `ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ. ವೇದ ಘನವೆಂಬೆನೆ ಪ್ರಾಣಿವಧೆಯ ಹೇಳುತ್ತಿದೆ’ ಎಂದು ವೈದಿಕರ ದೋಷಗಳಿಂದಲೇ ಪಡೆದ ಅಸ್ತ್ರಗಳನ್ನುಪಯೋಗಿಸಿಕೊಂಡು ಅವರ ಎಲ್ಲಾ ಡಾಂಭಿಕತೆ,ಕುಟಿಲ ತಂತ್ರಗಳನ್ನೆಲ್ಲ ಮುಲಾಜಿಲ್ಲದೇ ಖಂಡಿಸಿದರು.`ಕೀಳಾಗಲಲ್ಲದೆ ಮೇಲಾಗಲೊಲ್ಲೆನು, ನಾನು ಹಾರುವನೆಂದರೆ ಕೂಡಲಸಂಗಮದೇವ ನಗುವನಯ್ಯಾ’ ಎನ್ನುತ್ತ ತನ್ನ ಹುಟ್ಟಿನ ನಿಜದ ತಂದೆ ತಾಯಿಗಳ ಬದಲಿಗೆ ಅಂದಿನ ಸಮಾಜದ ಅತ್ಯಂತ ಕೆಳ ಮಟ್ಟದಲ್ಲಿದ್ದ ಜನರನ್ನೇ ತನ್ನ ತಂದೆ ತಾಯಿಗಳೆಂದು ಸ್ವೀಕರಿಸಿದರು. ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ ಎಂದು ಅದುವರೆವಿಗೂ ಪ್ರಚಲಿತವಿದ್ದ ಅಥವಾ ನಂಬಿದ್ದ ಮೌಲ್ಯಗಳನ್ನು ಧಿಕ್ಕರಿಸುತ್ತ ದಲಿತರ ಮನೋಸ್ಥೈರ್ಯಗಳನ್ನು ಹೆಚ್ಚಿಸುವ ಅಂಶಗಳನ್ನು ಬಳಸಿಕೊಂಡು ಸಮಾಜದ ಬದಲಾವಣೆಗಳನ್ನು ಮಾಡ ಹೊರಟರು. ಬಸವಣ್ಣನ ವಚನಗಳಲ್ಲಿ ಹಿಂದೂ ಧಾರ್ಮಿಕ ಸಾಮಾಜಿಕ ವ್ಯವಸ್ಥೆಯು ರೂಪಿಸಿದ್ದ ಶುದ್ಧ ಅಶುದ್ಧತೆಯ ಕಲ್ಪನೆಗಳನ್ನು ನಿರಾಕರಿಸುತ್ತದೆ. ಶಾಶ್ವತ ಅಶುದ್ಧತೆಯ ಒತ್ತಾಯಗಳಿಂದ ಸಾಮಾಜಿಕವಾಗಿ ಜಡಗೊಂಡಿದ್ದ ಕೆಳವರ್ಗದವರ ಬಗ್ಗೆ ಹೊಸ ಕಾಳಜಿಗಳನ್ನು ಇವರ ವಚನಗಳಲ್ಲಿ ಕಾಣಬಹುದು. ಹುಟ್ಟೇ ಕಾರಣವಾಗಿ ಜಾತಿ ಮತ್ತು ಅಸ್ಪೃಶ್ಯತೆಯ ಮಿತಿಗಳಿಗೆ ಒಳಗಾಗುತ್ತಿದ್ದ ಸ್ಥಾವರ ಹಾಗೂ ಕಠೋರ ನಿಯಮಗಳು ವಚನಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ.  ಈ ಚಳುವಳಿಯ ಪ್ರಕಾರ ವೀರಶೈವರಾಗುವುದು ಎಂದರೆ  ಕೆಳಜಾತಿ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳುವುದಾಗಿತ್ತು. ಬಸವಾದಿ ಪ್ರಮಥರು ತಮ್ಮ ವಚನಗಳ ಮೂಲಕ ಸಾಂಪ್ರದಾಯಿಕ ಮೌಲ್ಯ-ನಿಯಮಗಳಿಗೆ ಪ್ರತಿಯಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾನದಂಡವಾಗಿ ಬಳಸುವ ಪದ್ಧತಿಯನ್ನು ಅನುಸರಿಸಿದರು. ಶಿವಭಕ್ತನಾದರೆ ಅಶುದ್ಧತೆಯ ಎಲ್ಲಾ ಅಂಶಗಳು ನಿವಾರಣೆಗೊಳ್ಳುತ್ತವೆ. ಈ ಕಲ್ಪನೆಯು ಆ ಕಾಲಕ್ಕೆ ಅನಿವಾರ್ಯವಾದ ಐತಿಹಾಸಿಕ ಅವಶ್ಯಕತೆಯೂ ಆಗಿತ್ತು.   `ಎಡದ ಕೈಯಲ್ಲಿ ಕತ್ತಿ ಬಲದ ಕೈಯಲ್ಲಿ ಮಾಂಸ
   ಬಾಯಲ್ಲಿ ಸೂರೆಯಗಡಿಗೆ,ಕೊರಳಲ್ಲಿ ದೇವರಿರಲಿ
   ಅವರ ಲಿಂಗವೆಂಬೆ, ಸಂಗವೆಂಬೆ
   ಕೂಡಲ ಸಂಗಮದೇವಾ
   ಅವರ ಮುಖಲಿಂಗಿಗಳೆಂಬೆನು’ ( ಬ.ವ.ಸಂ.720)
 `ಆವನಾದಡೇನು ಶ್ರೀ ಮಹಾದೇವನ ನೆನೆವನ
 ಶಿವಲಿಂಗ ದೇವರ ಅಂಗದ ಮೇಲೆ ಉಳ್ಳವರ
 ಬಾಯ ತಂಬುಲವ ಮೆಲುವೆನು
 ಬೀಳುಡೆಯ ಹೊದೆವೆ
 ಪಾದರಕ್ಷೆಯ ಕಾದು ಬದುಕುವೆ
 ಕೂಡಲ ಸಂಗಮದೇವಾ’ (ಬ.ವ.ಸಂ.464)  ಬಸವಣ್ಣನವರ ಈ ವಚನಗಳಲ್ಲಿ ಕೆಳವರ್ಗದ ಜನತೆ ಯಾವ ಸಂಸ್ಕೃತಿಯಿಂದ ಬಂದರೂ ಲಿಂಗಧಾರಿಗಳಾಗಿದ್ದರೆ ಶ್ರೇಷ್ಠ ಎನ್ನುವ ಧೋರಣೆಯನ್ನು ಕಾಣ ಬಹುದಾಗಿದೆ. ಕೆಳವರ್ಗದವರ ಸಂಸ್ಕೃತಿಯನ್ನು ಶಿವಧರ್ಮದ ಚೌಕಟ್ಟಿನಲ್ಲಿ ವಚನಕಾರರು ಸ್ವೀಕರಿಸಿದ್ದರು.
  ಕೆಳವರ್ಗದ ಜನ ಬಸವಣ್ಣನವರ ಈ ಧಾರ್ಮಿಕ ಕರೆಗೆ ಓಗೊಟ್ಟೇ ಶರಣ ಚಳುವಳಿಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಶರಣರ ಕಲ್ಪನೆಯು ಹಾರುವವನಿಗೆ ಅಧಿಕ ಎನ್ನುವ ವಚನಕಾರರ ಮಾತುಗಳು ಶುದ್ಧತೆಯ ಅಂಶವನ್ನು ಬ್ರಾಹ್ಮಣ ವರ್ಗದ ಶುದ್ಧತೆಯ ತಾತ್ವಿಕ ನೆಲೆಗಳ ಜೊತೆಗೆ ಹೋಲಿಸಿ ಹೇಳಿದಂತವುಗಳೇ ಆಗಿವೆ. ವಚನಗಳು ಸೂಚಿಸಿದ್ದ ಭಕ್ತ(ಕೆಳವರ್ಗ) ವರ್ಗದ ಅಂತರಂಗ ಬಹಿರಂಗದ ಶುದ್ಧತೆಯಾಗಲಿ, ನಡತೆಯಲ್ಲಿನ ಶುದ್ಧತೆಯಾಗಲಿ ಇವೆಲ್ಲವೂ ಬ್ರಾಹ್ಮಣ ವರ್ಗದ ಶುದ್ಧತೆಯ ಕಲ್ಪನೆಗಳಿಗೆ ಸಮನಾಂತರವಾದ ಬೆಳವಣಿಗೆಯಾಗಿದ್ದು, ಪರಂಪರಾಗತ ಸಾಮಾಜಿಕ ವ್ಯವಸ್ಥೆಗೆ ಕೊಟ್ಟ ದೊಡ್ಡ ಕೊಡಲಿ ಪೆಟ್ಟೇ ಆಗಿದೆ.
        ದೇವರು-ಧರ್ಮದ ಬಗೆಗೆ ಬಸವಣ್ಣನವರು ತಳೆದಿರುವ ನಿಲುವುಗಳು ಸಾಂಪ್ರದಾಯಿಕ ನಿಲುವುಗಳಿಗಿಂತ ಬೇರೆಯಾಗಿದ್ದು ಪ್ರಗತಿ ಪರವಾಗಿವೆ. ಸಾಮಾನ್ಯ ಜನತೆಯಲ್ಲಿ ವೈಚಾರಿಕ ಶಕ್ತಿಯನ್ನು ಮೂಡಿಸುವಂತಹವುಗಳಾಗಿವೆ.
ದೇವರ ಸ್ವರೂಪವನ್ನು ಕುರಿತ ಬಸವಣ್ಣನವರ ಈ ವಚನದಲ್ಲಿಯ
ಕಲ್ಲದೇವರು ದೇವರಲ್ಲ ಮಣ್ಣುದೇವರು ದೇವರಲ್ಲ
ಪಂಚಲೋಹದಲ್ಲಿ ಮಾಡುವ ದೇವರು ದೇವರಲ್ಲ
ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ
ಕೇದಾರ ಮೊದಲಾದ ಅಷ್ಟಾಷಷ್ಠಿ ಪುಣ್ಯತೀರ್ಥಗಳು
ಪುಣ್ಯಕ್ಷೇತ್ರಗಳಲ್ಲಿಹ ದೇವರು ದೇವರಲ್ಲ
ತನ್ನ ತಾನರಿದು ತಾನಾರೆಂಬುದ ತಿಳಿದಡೆ
ತಾನೇ ದೇವ ನೋಡಾ
ಎಂಬ ವಿವರಣೆಯಲ್ಲಿ ದೇವರು ತನ್ನಲ್ಲೇ ಇರುವನೆಂದು ಸೂಚಿಸಿದ್ದಾರೆ.   
        ಬಸವಣ್ಣನವರ ಸಾಮಾಜಿಕ ನೆಲೆಯು ಸಮಾಜ ಸುಧಾರಕ ಮನಸ್ಸಿನಂತಹದ್ದು. ತಾನು ನಂಬಿದ ಧರ್ಮಶ್ರದ್ಧೆಯನ್ನು ಸಾರ್ವತ್ರಿಕಗೊಳಿಸುವಂತಹದ್ದು. ಅನುಷ್ಠಾನ ಮಾರ್ಗದಲ್ಲೂ, ಸುತ್ತಲಿನ ಸಮಾಜವನ್ನು ಸುಧಾರಿಸುವಾಗ ಓರೆ-ಕೋರೆಗಳನ್ನು ಕಾಣುವಾಗ ಇತರರಿಗೆ ತಿದ್ದಲು ಹೇಳುವುದರ ಜೊತೆಗೆ ತಾನು ತಿದ್ದಿಕೊಳ್ಳುವ ಭಕ್ತ ಹೃದಯದ ಕಳಕಳಿ ಆತ್ಮತೆಯನ್ನು ಸಾಮಾಜಿಕ ವಿಡಂಬನೆಯಲ್ಲಿ ಗುರುತಿಸಬಹುದಾಗಿದೆ. ಭಕ್ತಿಭಂಡಾರಿಯಾಗಿ, ಸಮಾಜಸುಧಾರಕನಾಗಿ, ಮಾನವತಾವಾದಿಯಾಗಿ, ಮಹಾಮಂತ್ರಿಯಾಗಿ ಬಸವಣ್ಣನವರು ಗಳಿಸಿದ ಲೋಕಾನುಭವ ಹಾಗೂ ಜೀವನಾನುಭವಗಳು ಅವರ ಹಲವು ವಚನಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಕಾಣಬಹುದು. ಸಕಲ ಜೀವಿಗಳಿಗೂ ಒಳ್ಳೆಯದನ್ನು ಬಯಸುವವನೇ ಶ್ರೇಷ್ಠ ಕುಲಜ ಎಂಬ ಪ್ರತಿಪಾದನೆಯನ್ನು ಕಾಣಬಹುದೆಂದು ನುಡಿದ ಬಸವಣ್ಣನವರು ಜಾತಿಯ ಉಚ್ಛ-ನೀಚ ಭ್ರಮೆಗೆ ಈಡಾಗಿದ್ದವರನ್ನು ದಾರಿಗೆ ತರಲು ಪ್ರಯತ್ನಿಸಿದರು. ಅಂಧ ಸಂಪ್ರದಾಯ, ಕಂದಾಚಾರ, ಮೂಢ ನಂಬಿಕೆಗಳು, ಅಮಾನವೀಯ ಆಚರಣೆಗಳನ್ನು ಬಸವಣ್ಣನವರು ಸಾರಸಗಟಾಗಿ ತಿರಸ್ಕರಿಸಿ ಅಲ್ಲಗಳೆದಿದ್ದಾರೆ.
   ಜನರ ಮೂಢ ನಂಬಿಕೆಗಳನ್ನೇ ಅವಲಂಬಿಸಿದ್ದ ಹಲವಾರು ಕ್ಷುದ್ರದೈವಗಳ ಆರಾಧನೆಯನ್ನು ಅವರು ತಪ್ಪಿಸಿ ಏಕದೇವೋಪಾಸನೆಯನ್ನು ಪ್ರೋತ್ಸಾಹಿಸಿದರು. ಏಕದೇವೋಪಾಸನೆಗೆ ಮಹತ್ತ್ವ ನೀಡಿದ ಬಸವಣ್ಣನವರು ತಮ್ಮ ವಚನಗಳಲ್ಲಿ ಸತಿ-ಪತಿಗಳ ವಿರಸದಿಂದ ಇಡೀ ಕೌಟುಂಬಿಕ ಪರಿಸರವು ಅಜ್ಞಾನದಲ್ಲಿ ಮುಳುಗಿ ತೇಲಿ ಹೋಗುತ್ತಿದ್ದು ಅದನ್ನು ತಪ್ಪಿಸುವ ಹಿನ್ನಲೆಯಲ್ಲಿ ಈ ರೀತಿಯಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ಸತಿಪತಿಗಳಲ್ಲಿರುವ ಧರ್ಮ ಸಂಬಂಧದ ಆಚರಣೆ ನಂಬಿಕೆಗಳನ್ನು ಮೂದಲಿಸುವುದರ ಜೊತೆಗೆ ಪರಸ್ಪರ ಐಕ್ಯಮತ್ಯವಿಲ್ಲದಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ನುಡಿದಿದ್ದಾರೆ. ಜನರ ಮೂಢ ನಂಬಿಕೆಗಳನ್ನೇ ಅವಲಂಬಿಸಿದ್ದ ಹಲವಾರು ಕ್ಷುದ್ರದೈವಗಳ ಆರಾಧನೆಯನ್ನು ಅವರು ತಪ್ಪಿಸಿ ಏಕದೇವೋಪಾಸನೆಯನ್ನು ಪ್ರೋತ್ಸಾಹಿಸಿದರು.ಬಸವಣ್ಣನವರು ದಯೆಯನ್ನು ಮಾನವರಿಗೆ ಮಾತ್ರ ಸೀಮಿತಗೊಳಿಸದೆ ಯಜ್ಞಯಾಗಗಳ ಹೆಸರಿನಲ್ಲಿ ಪ್ರಾಣಿವಧೆ ಮಾಡುವ ಪದ್ಧತಿಯನ್ನು ಟೀಕಿಸುವುದರ ಮೂಲಕ ಪ್ರಾಣಿಗಳಿಗೂ ವಿಸ್ತರಿಸಿದ್ದಾರೆ.               
   ಬಸವಣ್ಣನವರ ನೇತೃತ್ವದ ವಚನ ಚಳುವಳಿಯಂತಹ ಭಕ್ತಿ ಪಂಥವು ವ್ಯಕ್ತಿಯ ಧಾರ್ಮಿಕ ನಂಬಿಕೆ ಹಾಗೂ ಗ್ರಹಿಕೆಗಳನ್ನು ವೈಯಕ್ತಿವೆಂದು ಪ್ರತಿಪಾದಿಸಿತು. ದೇವರನ್ನು ಕುರಿತ ಹಾಗೆ ಕಠಿಣ ನಿಯಮ ಆಚರಣೆಗಳಿಗೆ ಬದಲಾಗಿ ಮಾನವೀಯ ಸಂಬಂಧಗಳು ಏರ್ಪಡುವಂತೆ ಮಾಡಿರುವುದು ವಚನಗಳ ಆಶಯಗಳಲ್ಲಿ ಪ್ರಮುಖವಾಗಿದೆ. ಭಾರತೀಯ ಭಕ್ತಿ ಚಳುವಳಿಗಳು ಮನುಷ್ಯರ ಆಧ್ಯಾತ್ಮಿಕ ಸಮಾನತೆಯನ್ನು ಮಾತ್ರ ಪ್ರತಿಪಾದಿಸಿದುವು, ಆದರೆ ಸಾಮಾಜಿಕ ಸಮಾನತೆಯ ಬಗ್ಗೆ ಮೌನ ವಹಿಸಿದವು. ಶರಣ ಚಳುವಳಿಯೊಂದೇ, ಆಧ್ಯಾತ್ಮಿಕ ಸಮಾನತೆಗೆ ಬೆಲೆ ಬರುವುದು ಸಾಮಾಜಿಕ ಸಮಾನತೆಯಿಂದ ಮಾತ್ರ ಎಂಬುದನ್ನು ಪ್ರತಿಪಾದಿಸಿದ್ದು ಮತ್ತು ಆಚರಣೆಗೆ ತಂದದ್ದು. ಭಾರತದ ಭಕ್ತಿ ಚಳುವಳಿಗಳಲ್ಲೆಲ್ಲ ಬ್ರಾಹ್ಮಣ ಮತ್ತು ಅಸ್ಪೃಶ್ಯರ ಮಧ್ಯೆ ವಿವಾಹಕ್ಕೆ ಅವಕಾಶ ಮಾಡಿಕೊಟ್ಟದ್ದು  ಇವರ ನೇತೃತ್ವದ ಶರಣ ಚಳುವಳಿಯೊಂದೇ ಎಂಬುದನ್ನು ನೆನೆದಾಗ ಅದರ ವೈಶಿಷ್ಟ್ಯ ಎದ್ದು ಕಾಣುತ್ತದೆ.
   ವಚನ ಚಳುವಳಿಯು ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಬಯಸಿತು. ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜವನ್ನು ನಿರ್ಮಿಸುವ ಉದ್ದೇಶ್ಯವನ್ನು ಹೊಂದಿತ್ತು. ಪುರುಷಾರ್ಥಗಳನ್ನು ಬಸವಣ್ಣನವರುವರ್ಣವ್ಯವಸ್ಥೆಯ ಹಿನ್ನೆಲೆಯಲ್ಲಿ ಆರ್ಥೈಸದೆ ಸಮಾನತೆಯ ಹಿನ್ನೆಲೆಯಲ್ಲಿ ಅರ್ಥೈಸಿದರು. ಆ ಮೌಲ್ಯಗಳ ಮಹತ್ವವನ್ನು ಸಾರ್ವತ್ರಿಕಗೊಳಿಸಿದರು. ಲಿಂಗ-ವರ್ಣ-ವರ್ಗಗಳ ಭೇದವನ್ನಳಿಸಿ, ಸ್ವಾತಂತ್ರತೆ-ಸಮಾನತೆ-ಮಾನವೀಯತೆಯನ್ನು ಅರಳಿಸುವಲ್ಲಿ, ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಸುವಲ್ಲಿ ವಚನ ಚಳುವಳಿ ಗಮನೀಯ ಪಾತ್ರ ವಹಿಸಿದೆ. ಅಂದಿನ ಸಮಾಜದಲ್ಲಿ ಅರ್ಥವನ್ನು ಕಳೆದುಕೊಂಡು ಪುರುಷಾರ್ಥಗಳಿಗೆ ಹೊಸ ಆಯಾಮವನ್ನು ನೀಡಿತು. ಬಸವಣ್ಣನವರು ತಮ್ಮ ವಚನಗಳಲ್ಲಿಯ ಲಿಂಗಧಾರಿತ ಜಾತೀಯ ಪರಿಕಲ್ಪನೆಯ ಮೂಲಕ ವೈದಿಕ ಧರ್ಮದ ವರ್ಣವ್ಯವಸ್ಥೆಗೆ ಉತ್ತರವನ್ನು ಕಂಡುಕೊಂಡರು. ವೃತ್ತಿಸಂಬಂಧಿ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯುವ ಪ್ರಯತ್ನವನ್ನು ಮಾಡಿದರು.ಕೆಳವರ್ಗದವರಿಗೆ ನೈತಿಕ ಬೆಂಬಲವನ್ನು ನೀಡುವುದರ ಮೂಲಕ  ಮೇಲ್ಮುಖ ಚಲನೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟರು.
       ಬಸವಣ್ಣನವರ ಸಾಮಾಜಿಕ ಹಾಗೂ ಧಾರ್ಮಿಕ ಸಾಂಸ್ಕೃತಿಕ ಆಲೋಚನೆಗಳು ವೈದಿಕ ಧರ್ಮದಲ್ಲಿಯಂತೆ ಕಗ್ಗಂಟಾಗಿರದೆ ಸಹಜ ಹಾಗೂ ಸರಳವಾಗಿದ್ದು ಜಗತ್ತಿನ ಸಂಬಂಧವನ್ನು ಜಟಿಲಗೊಳಿಸದವುಗಳಾಗಿದ್ದವು. ವಚನಕಾರರು, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೀಳಾಗಿ ಕಾಣದೆ ಅವನು ತನ್ನಂತೆಯೇ ಇರುವ ಒಂದು ಜೀವ ಎಂದು ಭಾವಿಸಿ ಆ ಜೀವದೊಂದಿಗೆ ಯಾವ ತಾರತಮ್ಯವನ್ನು ಮಾಡದೆ ಪ್ರೀತಿ ವಿಶ್ವಾಸ ಗೌರವದೊಂದಿಗೆ ವ್ಯವಹರಿಸುವುದೇ ನಿಜವಾದ ಧರ್ಮ ಎಂದು ಭಾವಿಸಿದ್ದರು. ಅದಕ್ಕಾಗಿಯೇ ಅವರು ` ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಎಂದು ನುಡಿದಿದ್ದು. ಜಾತಿವ್ಯವಸ್ಥೆ, ಶ್ರೇಣೀಕರಣ ಇತ್ಯಾದಿ ವಿಷಯಗಳಲ್ಲಿ ಹಿಂದಿನವರಿಗಿಂತ ವಿಭಿನ್ನವಾದ ನಿಲುವುಗಳನ್ನು ವ್ಯಕ್ತಪಡಿಸಿದರು. ಅರಸನಾಗಲೀ-ಸೇವಕನಾಗಲೀಮೇಲ್ಜಾತಿಯವನಾಗಿರಲಿ-ಅಂತ್ಯಜನಾಗಿರಲಿ, ಅಕ್ಷರಸ್ಥನಾಗಿರಲಿ-ನಿರಕ್ಷರಸ್ಥನಾಗಿರಲಿ ಎಲ್ಲರ ಹುಟ್ಟು ಒಂದೆ ಬಗೆಯೆಂಬ ನಿಲುವನ್ನು ತಾಳಿದವರು. ಸಮಯೋನಿ ಸಮುದ್ಭವನಾಗಿಯೂ ತಾನು ಮೇಲು ಎಂಬ ಪೊಳ್ಳು ಪ್ರತಿಷ್ಠೇಕೆ? ಎಂಬ ಪ್ರಶ್ನೆಯನ್ನು ಸಮಾಜದ ಮುಂದಿಟ್ಟರು. ಪಾರಂಪರಿಕ ಚಾತುವರ್ಣ ವ್ಯವಸ್ಥೆಯ ಫಲವಾಗಿ ಧರ್ಮ ಎಂಬುದು ಕೀಳು ವ್ಯವಹಾರವಾಗಿ ಭಕ್ತಿಯೆಂಬುದು ತೋರುಂಬ ಲಾಭವಾಗಿ ಮಾರ್ಪಟ್ಟಿತ್ತು. ವಚನ ಚಳುವಳಿಯು, ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಧರ್ಮ ಎಂದು ಅರ್ಥೈಸದೇ ದಯವೇ ಧರ್ಮದ ಮೂಲವಯ್ಯಾ ಎಂದು ಸಾರಿದರು. ಮನುಷಧರ್ಮಕ್ಕೆ ಪ್ರಾಮುಖ್ಯತೆ ನೀಡಿದರು.  ಮನುಷ್ಯ-ಮನುಷ್ಯರ ನಡುವೆ ತಾರತಮ್ಯ ಕಲ್ಪಿಸಿ ಆ ಮೂಲಕ ಎಲ್ಲಾ ಬಗೆಯ ಭೋಗಭಾಗ್ಯಗಳನ್ನು ಹೊಡೆದು ಕೊಳ್ಳಬೇಕೆಂಬ ಹುನ್ನಾರಗಳಿಂದ ಸೃಷ್ಟಿಗೊಂಡ ಚಾತುವರ್ಣದ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದರು. ತಮಗೆ ಅನುಕೂಲವಾಗುವಂತಹ ಶಾಸ್ತ್ರಗಳನ್ನು ಸೃಷ್ಟಿಸಿ ಅನಾದಿಕಾಲದಿಂದಲೂ ಮಾನವೀಯತೆಯನ್ನು ಮರೆತ ಕೆಟ್ಟವರ್ಣಾಶ್ರಮ ವ್ಯವಸ್ಥೆಯಿಂದ ಉದ್ಭವಿಸಿದ್ದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳುವ ಪ್ರಯತ್ನವನ್ನು ಮಾಡಿದರು. ಕುಲ ಗೋತ್ರದ ಪಾರಮ್ಯತೆಯನ್ನು,
             `ಕೊಲುವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ
              ಕುಲವೇನೋ ಆವಂದಿರ ಕುಲವೇನೋ?
              ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
              ನಮ್ಮ ಕೂಡಲಸಂಗನ ಶರಣರೇ ಕುಲಜರು’ (ಬ.ವ.ಸಂ.591)                     
ಎಂಬ ನುಡಿಯ ಮೂಲಕ ಸರ್ವಸಮಾನತೆಯ ಶರಣ ಧರ್ಮವನ್ನು ಜಾಗೃತಿಗೊಳಿಸಿದರು. ವಚನಕಾರರ ದೃಷ್ಟಿಯಲ್ಲಿ ಈ ಬಗೆಯ ವ್ಯವಸ್ಥೆಗೆ ಯಾವುದೇ ಅರ್ಥವಿಲ್ಲ. ಭಕ್ತಿಯ ಕಾರಣದಿಂದಾಗಿ ಶಿವಶರಣರೆಲ್ಲರೂ ಸಮಾನರು. ಜಾತಿ ತಾರತಮ್ಯ ಅನುಸರಿಸಬಾರದು ಎಂಬ ಬಸವಣ್ಣನ ಭರವಸೆ ಹಾಗೂ ವಿನಮ್ರತೆಗಳು ಈ ವಚನದಲ್ಲಿ ಅಡಕವಾಗಿವೆ.
             ರೂಢಿಗತವಾದ ಜಾತಿ ಆಧಾರಿತ ತಾರತಮ್ಯವನ್ನು ಮೀರಿ ಮಾನವ ಸಮಾನತೆಯನ್ನು ವಚನ ಚಳುವಳಿ ಸಾರಿತು.
   ` ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ
    ಜಲವೊಂದೆ ಶೌಚಾಚಮನಕ್ಕೆ
    ಕುಲವೊಂದೆ ತನ್ನತಾನರಿದವಂಗೆ
    ಫಲವೊಂದೆ ಷಡುದರುಷನ ಮುಕ್ತಿಗೆ
    ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ’(ಬ.ವ.ಸಂ.879)
ಒಂದೇ ಎಂಬ ಪದವನ್ನು ಒತ್ತಿ ಒತ್ತಿ ಹೇಳುವ ಮೂಲಕ ಈ ವಚನದಲ್ಲಿ ಮಾನವ ನಿರ್ಮಿತ ಭೇದಭಾವಗಳಿಗೆ ಪ್ರತಿಯಾಗಿ ವಚನವು ತನ್ನ ಪರಿಭಾಷೆಯಲ್ಲಿ ಏಕತೆಯ ಅಗತ್ಯವನ್ನು ಒತ್ತಿಹೇಳುತ್ತದೆ. ದೇವಾಲಯ ಊರಮಧ್ಯದಲ್ಲಿ ನೆಲೆಗೊಂಡಿದ್ದರೆ ಅಸ್ಪೃಶ್ಯರ ವಸತಿ ತಾಣ ಊರಿನ ಹೊರವಲಯದಲ್ಲಿರುತ್ತದೆ. ಆದರೆ ದೇವಾಲಯ ಮತ್ತು ಅಸ್ಪೃಶ್ಯರ ವಸತಿ ಹೊಲಗೇರಿಗಳೆರಡನ್ನೂ ಮಣ್ಣಿನ ಮೇಲೆ ಕಟ್ಟಲಾಗಿದೆ. ಈ ವಚನದಲ್ಲಿ ಶ್ರೇಣಿ ರಚನೆಯ ಪವಿತ್ರತೆ ಮತ್ತು ಅಪವಿತ್ರತೆ ಎಂಬ ಎರಡು ಅಂತ್ಯಗಳನ್ನು ಕೂಡಿಸುವ ಕೆಲಸವನ್ನು ಮಾಡಲಾಗಿದೆ. ಎರಡಕ್ಕೂ ಸಮಾನವಾದ ನೆಲೆಯು ಧಾರ್ಮಿಕ ಪಾವಿತ್ರತೆಯನ್ನು ಆಧರಿಸಿದ ಕೃತಕ ತಾರತಮ್ಯಕ್ಕಿಂತ ಮಹತ್ವತೆಯನ್ನು ಪಡೆದಿದೆ.
     ವಚನ ಚಳುವಳಿಯಲ್ಲಿ, ಅಷ್ಟಾವರಣಗಳಲ್ಲಿ ಒಂದಾದ ಲಿಂಗವು ಸಹ ಸಮಾನತೆಯ ಸಾಧನವಾಗಿ ಪರಿಣಮಿಸಿದೆ. ವಚನ ಚಳುವಳಿಯು ಭಕ್ತರ ಸಮುದಾಯದಲ್ಲಿ ಸಮಾನತೆಯನ್ನು ಅನುಭವಿಸ ಬಹುದು ಎಂಬುದನ್ನು ಸಾರಿ ಸಾರಿ ಹೇಳಿದೆ. ಶಿವನ ಸಂಕೇತವಾದ ಲಿಂಗವನ್ನು ಆರಾಧನೆಯ ಕೇಂದ್ರವನ್ನಾಗಿ ಮಾಡಿಕೊಂಡಿದೆ.  ಈ ಚಳುವಳಿಯ ಅತ್ಯಂತ ಪ್ರಮುಖವಾದ ಪ್ರತಿಮೆಯೆಂದರೆ ಇಷ್ಟಲಿಂಗ. ಅದನ್ನು ಪ್ರತಿಯೊಬ್ಬ ಭಕ್ತನೂ ದೇಹದ ಮೇಲೆ ಧರಿಸುತ್ತಿದ್ದನು ಮತ್ತು ಆರಾಧಿಸುತ್ತಿದ್ದನು. ಇಷ್ಟಲಿಂಗಾರಾಧನೆಯ ನಿಮಿತ್ತ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯಾಗುವುದರ ಸುಳುಹನ್ನು ಇವರ ಕೆಲವು ವಚನಗಳಲ್ಲಿ ಕಾಣಬಹುದಾಗಿದೆ.
   `ಬಂದು ಬಲ್ಲಹ ಬಿಡಲು ಹೊಲಗೇರಿ ಎಂಬ ಹೆಸರೊಳವೆ ಅಯ್ಯಾ?
   ಲಿಂಗವಿದ್ದವರ ಮನೆ ಕೈಲಾಸವೆಂದು ನಂಬಬೇಕು.
    --------------------------
    ಲೋಕದ ಡಂಬಕರ ಮಾತು ಬೇಡ
   ಕೂಡಲಸಂಗನಿದ್ದುದೇ ಕೈಲಾಸ’ (ಬ.ವ.ಸಂ.82) ಈ ವಚನದಲ್ಲಿ ಅರಿವನ್ನು ಸಾಧಿಸಿಕೊಂಡ ಭಕ್ತ ಕೆಳವರ್ಗದವರ ಬೀದಿಗೆ ಬಂದು ನಿಂತಾಗ ಆ ಸ್ಥಳದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಭಕ್ತನು ತನ್ನ ಜೊತೆಯಲ್ಲಿ ಇಷ್ಟಲಿಂಗವನ್ನು ಅಲ್ಲಿಗೆ ತಂದಿರುವುದರಿಂದ, ಲಿಂಗವು ಪರಮಾತ್ಮನ ಪ್ರತಿನಿಧಿಯಾಗಿರುವುದರಿಂದ ಕೆಳವರ್ಗದವರ ಬೀದಿಯಲ್ಲಿಯೂ ಪರಮಾತ್ಮನಿದ್ದನೆಂಬ ಆಶಯ ವ್ಯಕ್ತವಾಗುತ್ತದೆ. ಹೊಲಗೇರಿಯ ಬೀದಿಯಲ್ಲಿಯೂ ಪರಮಾತ್ಮನಿದ್ದಾನೆ. ಹೀಗಾಗಿ ಇಲ್ಲಿ  ಅಸ್ಪೃಶ್ಯತೆಯ ಪರಿಕಲ್ಪನೆಯೇ ತನ್ನ ಅರ್ಥವನ್ನು ಕಳೆದುಕೊಂಡು ಬಿಡುತ್ತದೆ. ಶಿವನ ಆವಾಸ ಕೈಲಾಸವಾದುದರಿಂದ ಆಸ್ಪೃಶ್ಯರ ಬೀದಿಯನ್ನು ಆ ಪವಿತ್ರ ಕೈಲಾಸದ ಹೆಸರಿನಲ್ಲಿಯೇ ಕರೆಯ ಬೇಕೆಂಬ ನಿಲುವು ಇಲ್ಲಿ ಕಂಡು ಬರುತ್ತಿದ್ದು ಸಂಪ್ರದಾಯ ವಿರೋಧಿ ನಿಲುವಾಗಿದೆ. ಲಿಂಗದ ರೂಪದಲ್ಲಿ ಪರಮಾತ್ಮನು ನೆಲೆಸಿರುವುದರಿಂದ ಅಸ್ಪೃಶ್ಯರ ಸಮುದಾಯ ಕೂಡ ಉನ್ನತ ಮಟ್ಟಕ್ಕೇರ ಬಹುದು ಎಂಬ ಸಂದೇಶವನ್ನು ವಚನ ಚಳುವಳಿ ಸಾರಿದೆ. ಕೆಳವರ್ಗದವರಲ್ಲಿ ಜನಿಸಿದವರನ್ನು ಲಿಂಗವು ಉತ್ತಮರನ್ನಾಗಿಸಿ ಬಿಡುವುದೆಂಬ ಆಶಯವನ್ನು ಹೊಂದಿದ್ದಿತು. ಜೊತೆಗೆ ಇಷ್ಟಲಿಂಗವೇ ಮಾನದಂಡವಾದಾಗ ಸಾಂಪ್ರದಾಯಿಕ ಉನ್ನತ ಸ್ಥಾನಮಾನಗಳೇ ತಮ್ಮ ಪ್ರಭಾವ ಕಳೆದುಕೊಂಡು ಬಿಡುತ್ತದೆ.ಇಷ್ಟಲಿಂಗ ಸ್ಪರ್ಶ ಮಾತ್ರದಿಂದ ಜನತೆಯ ಸ್ಥಾನಮಾನಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗಬಹುದು. ಜೊತೆಗೆ ಇಷ್ಟಲಿಂಗದ ಸಂಪರ್ಕವಿಲ್ಲದವನಿಗೆ ಯಾವ ಸ್ಥಾನಮಾನವೂ ಇಲ್ಲ. ಯಾರು ಲಿಂಗವನ್ನು ಧರಿಸುವುದಿಲ್ಲವೋ ಅವರು ಕೀಳುಜಾತಿಯವರಾಗಿ ಪರಿಗಣಿಸಲ್ಪಡುತ್ತಾರೆ. ಅಂದರೆ ವಚನ ಚಳುವಳಿಯು ಲಿಂಗದಿಂದ ಮಾತ್ರ ಸಮಾಜದಲ್ಲಿ ಸ್ಥಾನಮಾನ ಪ್ರಾಪ್ತಿಯಾಗುತ್ತದೆ. ಹೆಣ್ಣಾಗಲೀ ಗಂಡಾಗಲೀ ಇಷ್ಟಲಿಂಗದ ಆಧಾರದ ಮೇಲೆ ಅವರ ಸ್ಥಾನಮಾನಗಳು ನಿರ್ಧರಿತವಾಗುತ್ತವೆ. ಬಸವಣ್ಣನವರು ಜಾತಿಗೆ ಸಹವರ್ತಿಯಾಗಿರುವ ಮೈಲಿಗೆಯ ಕುರಿತು ,
   `ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ
   ಕುಲವುಂಟೆ  ಜಂಗಮವಿದ್ದೆಡೆಯಲ್ಲಿ
   ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?
 ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ’ ( ಬ.ವ.ಸಂ.770)  ಎಂದು ನುಡಿಯುವುದರ ಮೂಲಕ ಲಿಂಗವಿದ್ದೆಡೆಯಲ್ಲಿ ಅಪವಿತ್ರತೆ ಇರಲು ಸಾಧ್ಯವಿಲ್ಲ. ಲಿಂಗವು ಎಲ್ಲ ವಿಧದ ಅಪವಿತ್ರತೆಯನ್ನು ಹೋಗಲಾಡಿಸುತ್ತದೆ. ಅದೇ ರೀತಿ ಪ್ರಸಾದವೂ ಅಷ್ಟೇ.  ಪವಿತ್ರತೆಯ ಮೂಲವಾದ ಲಿಂಗವನ್ನು ಯಾರು ಧರಿಸಿದ್ದಾರೆಯೋ ಅವರು ಎಲ್ಲಾ ವಿಧದ ಮೈಲಿಗೆಯಿಂದಲೂ ಮುಕ್ತರು. ವಚನ ಚಳುವಳಿಯು ಪರಮಾತ್ಮನಿಂದಲೂ ಬೇರ್ಪಡಿಸಲಾಗದ ಲಿಂಗಧರಿಸಿದವರ ಜೊತೆಗೆ ತಾನು ಸಾಧಿಸಿಕೊಳ್ಳಬೇಕಾದ ಸಂಬಂಧಕ್ಕೆ ಎಲ್ಲವನ್ನೂ ಅವರ ಅಧೀನಕ್ಕೆ ಒಪ್ಪಿಸುತ್ತೇನೆಂಬ ನಿಲುವನ್ನು
 `ಆವನಾದಡೇನು
 ಶಿವಲಿಂಗದೇವರ ಅಂಗದ ಮೇಲೆಉಳ್ಳವರ
 ಪಾದರಕ್ಷೆಯ ಕಾದು ಬದುಕುವೆ ಎಂದು’  (ಬ.ವ.ಸಂ.464)ತಾಳಿದೆ.   
        ಹೊಸತನದ ಹುಟ್ಟಿಗಾಗಿ ಪ್ರಾರಂಭಿಸಿದ ಸಮಾಜೋ ಧಾರ್ಮಿಕ ಆಂದೋಲನದ ನೇತಾರರಾಗಿ ವ್ಯವಸ್ಥಾಬದ್ಧ ಸಮಾಜದ ವಿರುದ್ಧ ಕ್ರಾಂತಿಯನ್ನೇ ಸಾರಿದ ಬಸವಣ್ಣನವರ ವಚನಗಳಲ್ಲಿಯ ಸಾಮಾಜಿಕ ಪ್ರಜ್ಞೆಯನ್ನು ಕುರಿತಾದ ವಚನಗಳು ಸಮಾಜದಲ್ಲಿಯ ಅಂಕು ಡೊಂಕುಗಳ ಬಗೆಗೆ ಅರಿವು ಮೂಡಿಸುವ ರೀತಿಯಲ್ಲಿವೆ. ವೈಯಕ್ತಿಕ ನೆಲೆಯಲ್ಲಿ ಬಸವಣ್ಣನು ತನ್ನನ್ನು ತಾನು ಅಪವರ್ಗೀಕರಣಗೊಳಿಸಿಕೊಳ್ಳುವುದರ ಮೂಲಕ ಬ್ರಾಹ್ಮಣ ವರ್ಗದ ಶುದ್ಧತೆಯ ತಾತ್ವಿಕ ನೆಲೆಗಳನ್ನು ದೃಢವಾಗಿ ನಿರಾಕರಿಸುವ ಮಟ್ಟವನ್ನು ಹೊಂದಿದ್ದಾನೆ.
        ಶುದ್ಧತೆ-ಅಶುದ್ಧತೆಯ ನೆಲೆಗಳ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಒಂದು ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿದ್ದುದು ಉಂಟು. ಅದು ಅಶುದ್ಧತೆಯ ನೆಲೆಗಳನ್ನು ಹೋಗಲಾಡಿಸುವ ಬಸವಣ್ಣನ ಆಲೋಚನಾ ಸ್ವರೂಪವನ್ನು ಕುರಿತದ್ದೇ ಆಗಿದೆ. ಸ್ಪಷ್ಟವಾಗಿ ಬಸವಣ್ಣನ ವಚನಗಳು, ಶುದ್ಧತೆಯ ಸ್ವರೂಪವನ್ನು ವ್ಯಕ್ತಿಯು ಭಕ್ತನಾಗುವ ಕ್ರಿಯೆಯಲ್ಲಿ ಸಮೀಕರಿಸುತ್ತವೆ. ಈ ಕ್ರಿಯೆ ವಾಸ್ತವವಾಗಿ ವ್ಯಕ್ತಿಗೆ ಹೊಸ ಧಾರ್ಮಿಕ ನೆಲೆಯೊಂದನ್ನು ಒದಗಿಸುವುದೇ ಆಗಿದೆ. ಸಂಗ್ರಹವಾಗಿ ಹೇಳುವುದಾದರೆ ಸಾಂಸ್ಕೃತಿಕವಾಗಿ ಹೊಸ ವ್ಯಕ್ತಿತ್ವವನ್ನು ಹುಟ್ಟುಹಾಕಬೇಕೆನ್ನುವ ನಿಲುವುಗಳನ್ನು ಅಲ್ಲಿ ಕಾಣುತ್ತೇವೆ. ಈ ನಿಲುವುಗಳು ವ್ಯವಸ್ಥೆಗೆ ಸೇರಿಹೋಗಿದ್ದ ಎಲ್ಲ ಅಂಶಗಳನ್ನು ನಿರಾಕರಿಸುವ ಹಂತದಿಂದಲೇ ಪ್ರಾರಂಭವಾಗ ಬೇಕಾಗುತ್ತದೆ.      
   ಬಸವಣ್ಣನವರ ವಚನಗಳ ಪ್ರಮುಖ ಧೋರಣೆಯಲ್ಲಿ ಆರ್ಥಿಕ ವಿಚಾರಗಳು ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ವಿಧಿ ವಿಧಾನ ಆಚರಣೆಯಲ್ಲಿ ದುಡಿದು ತಿನ್ನುವುದು,ಕಾಯಕವನ್ನು ಮಾಡುವ ಪರಂಪರೆಯನ್ನು ಕಡ್ಡಾಯವನ್ನಾಗಿ ಮಾಡಿದ್ದು ವಚನ ಚಳುವಳಿಯ ಪ್ರಮುಖ ಅಂಶವಾಗಿದೆ. ಕಾಯಕ ವೃತ್ತಿಯನ್ನು ಕೇಂದ್ರೀಕೃತಗೊಳಿಸಿಗೊಂಡು ನಿಷ್ಠೆ,ಪರಿಶ್ರಮ,ಶ್ರದ್ಧೆಯೊಂದಿಗೆ ತಮ್ಮ ಶರೀರವನ್ನು ಮನಸ್ಸನ್ನು ಶುದ್ಧೀಕರಿಸಿ ಆಧ್ಯಾತ್ಮಿಕ ಚಿಂತನೆಗೆ ಅವಕಾಶ ಮಾಡಿಕೊಡುವ ನೂತನ ವಿಧಾನವನ್ನು ಕಾಯಕದ ಪರಿಕಲ್ಪನೆಯೊಂದಿಗೆ ಹುಟ್ಟು ಹಾಕಿದರು. ಸರಳ ಜೀವನವನ್ನು ಸಾಗಿಸುತ್ತಲೇ ಸಮಾಜ,ಸಮಗ್ರತೆಯನ್ನು ಭಕ್ತಿ ಮಾಧ್ಯಮದ ಮೂಲಕ ಆರ್ಥಿಕ ಮೂಲವನ್ನು ಸುಧಾರಿಸುವತ್ತ ನಡೆದ ಸೂಕ್ಷ್ಮ ಹೆಜ್ಜೆಗಳು ಗಮನಾರ್ಹವಾಗಿವೆ.
`ಸಂಸಾರವೆಂಬುದೊಂದು ಗಾಳಿಯ ಸೊಡರು
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ
ಇದನೆಚ್ಚಿ ಕೆಡಬೇಡ
ಸಿರಿಯೆಂಬುದ ಮರೆದು ಪೂಜಿಸು ನಮ್ಮ ಕೂಡಲ ಸಂಗಮದೇವನ’ (ಬ.ವ.ಸಂ.164)
ಎಂದು ನುಡಿಯುವಲ್ಲಿ ಬದುಕು ಕ್ಷಣಿಕ ಎಂದು ಹೇಳುವುದರ ಜೊತೆಗೆ  ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ   ಎಂದು ಹೇಳುತ್ತಾ ಸಿರಿಯ ಮಾಯಾಮುಖಗಳನ್ನು ಬಯಲುಮಾಡಿ ಅರ್ಥಪೂರ್ಣ ರೂಪಕವನ್ನು ಸಂತೆಯ ಮಂದಿಯನ್ನಾಗಿಸಿ ನೀಡುವ ಪರಿಣಾಮ ಅರ್ಥಸ್ಫುರಣೆಯ ನೀತಿಯನ್ನು ಪರಿಣಾಮಗೊಳಿಸಿದೆ. ಮಾನವನ ಅಳಿಯಾಸೆಗಳನ್ನು ಕಾಳಬೆಳದಿಂಗಳುಗಳಂತೆ ಸಿರಿಯೂ ಸ್ಥಿರವಲ್ಲವೆಂದೂ ಭಾವಿಸುವ ಬಗೆ- ಮನುಷ್ಯನ ಆಸೆ ಮತ್ತು  ಭ್ರಷ್ಟತೆಯ ಮುಖಗಳನ್ನು ನಿರಾಕರಿಸುತ್ತದೆ. ಸಮಾಜವನ್ನು ಮಾನವೀಯವಾಗಿ ರಚಿಸಿಕೊಡುವುದರ ಮೂಲಕ ಆರ್ಥಿಕ ಮೂಲವನ್ನು ಶೋಧಸಿಕೊಳ್ಳುತ್ತ ಬದುಕನ್ನು  ಶಿವನ ಬಗೆಗಿನ ಭಕ್ತಿ ಜನರ ನಡುವಿನ ಅಡ್ಡಗೋಡೆಗಳನ್ನು ಒಡೆದು  ಹಾಕುವಂತಹ ಸಮಾನತೆಯ ಮಾರ್ಗದ ಚಿಂತನೆಯನ್ನು ಇವರ ವಚನಗಳಲ್ಲಿ ಕಾಣಬಹುದಾಗಿದೆ.     
      ವಚನಕಾರರ ವಚನಗಳಲ್ಲಿ ಬಡತನ ಹಾಗೂ ಸಿರಿತನಗಳ ವೈರುಧ್ಯವು ಪ್ರಮುಖವಾಗಿ ಚರ್ಚಿತವಾಗಿದೆ. ಮಾನವೀಯ ಸಂಬಂಧಗಳ ಅರ್ಥಪೂರ್ಣ ನೆಲೆಗಳನ್ನು ಬಡತನ-ಸಿರಿತನದ ಲಕ್ಷಣಗಳು ಕಳೆದು ಬಿಡುತ್ತವೆ ಎನ್ನುವುದು ವಚನಕಾರರ ಆತಂಕವಾಗಿದೆ. ಬಸವಣ್ಣನವರು ಬಡತನದ ಪರವಾಗಿ ವಾದ ಮಾಡಿದ್ದಾರೆ. ಸಿರಿಯೆಂಬುದು ಸಂತೆಯ ಮಂದಿ ಎನ್ನುವಲ್ಲಿ ಸಿರಿಯು ವ್ಯಕ್ತಿತ್ವವನ್ನೇ ಮರೆಮಾಡಿಬಿಡುವ ಅಂಶವನ್ನು ಕುರಿತ ಪ್ರಸ್ತಾಪವು ಮೂಡಿ ಬಂದಿದೆ. `ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬುವವರಿಲ್ಲ’ ಎನ್ನುವ ನುಡಿಯು ಸಿರಿತನದ ಕ್ಷಣಿಕತೆ ಹಾಗೂ ನಿಷ್ಪ್ರಯೋಜಕತೆಯನ್ನು ಕುರಿತು ಹೇಳಿದ್ದಾಗಿದೆ.
        ಭಕ್ತಿಯ ಸಂದರ್ಭದಲ್ಲಿ ಸಿರಿತನ ಹಾಗೂ ಬಡತನಗಳ ಲಕ್ಷಣಗಳು ರೂಪುತಳೆಯುವ ವಿನ್ಯಾಸಗಳನ್ನು ಕುರಿತು ವಿವರಣೆಯಿದೆ. `ಹತ್ತು ಮತ್ತರದ ಭೂಮಿ, ಬತ್ತುವ ಹಯನು ನಂದಾದೀವಿಗೆಯ ನಡೆಸಿಯೆವೆಂಬರ ಮುಖವ ನೋಡಲಾಗದು; ಅವರ ನುಡಿಯ ಕೇಳಲಾಗದು. ಎನ್ನಿಂದಲೇ ಆಯಿತ್ತು; ಎನ್ನಿಂದಲೇ ಹೋಯಿತ್ತು ಎಂಬುವವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೇ ಕೂಡಲ ಸಂಗಮದೇವ?’ ಎನ್ನುವ ವಚನವು ಕೇವಲ ಆಚರಣೆ, ಪ್ರತಿಷ್ಠೆಗೆ ಕಾರಣವಾಗಿರುವ ಸಿರಿವಂತರ ಭಕ್ತಿಯನ್ನು ಟೀಕಿಸುತ್ತದೆ. ಮನಸ್ಸಿನ ಶುದ್ಧತೆ, ಪ್ರಾಮಾಣಿಕತೆಗಳು ಬಡವನಲ್ಲಿ ಮಾತ್ರ ಸಾಧ್ಯವೆನ್ನುವ ವಾದವನ್ನು ವಚನಗಳು ವ್ಯಕ್ತಪಡಿಸುತ್ತವೆ.
           ಕಾಯಕ ತತ್ವದ ಮೂಲಕ ವೃತ್ತಿ ಪಾವಿತ್ರಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟರು. ಕಾಯಕದಲ್ಲಿ ಮೇಲು ಕೀಳೆಂಬ ಭಾವ ಸಲ್ಲದೆ ತಾನು ಮಾಡುವ ಕಾಯಕ ಧರ್ಮ ವಿರೋಧಿಯಾಗದೇ ಸತ್ಯಶುದ್ಧಕಾಯಕವಾಗಬೇಕೆಂಬ ಆಶಯವನ್ನು ವಚನಕಾರರು ಬಯಸಿದರು. ಬದುಕಿಗಾಗಿ ಮಾಡುವ ಎಲ್ಲಾ ಕಾಯಕಗಳು ಬಹಳ ಪವಿತ್ರವಾದವುಗಳು. ವಚನಕಾರರು ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ತಂದುಕೊಟ್ಟರು. ಆಧುನಿಕ ಕಾಲದಲ್ಲಿ ಸಂಘಟಿತ ಜಗತ್ತಿನಲ್ಲಿ ಆಧುನಿಕ ಮಾನವನ ಒಟ್ಟು ಮನಸ್ಸು ವ್ಯಾಪಾರೀಕರಣವಾಗಿ ತನ್ನ ಸಹಜ ಮಾನವೀಯ ಮೌಲ್ಯಗಳನ್ನು ನಾಶಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಬಸವಾದಿ ಪ್ರಮಥರ ನುಡಿ ಮುತ್ತುಗಳು ಸಾಂತ್ವಾನವನ್ನು ನೀಡುವಂತಾಗಿವೆ. ಸರಳ ಜೀವನವನ್ನು ಸಾಗಿಸುತ್ತಲೇ ಸಮಾಜ,ಸಮಗ್ರತೆಯನ್ನು ಭಕ್ತಿ ಮಾಧ್ಯಮದ ಮೂಲಕ ಆರ್ಥಿಕ ಮೂಲವನ್ನು ಸುಧಾರಿಸುವತ್ತ ನಡೆದ ಸೂಕ್ಷ್ಮ ಹೆಜ್ಜೆಗಳು ಗಮನಾರ್ಹವಾಗಿವೆ. ಸಮಾಜವನ್ನು ಮಾನವೀಯವಾಗಿ ರಚಿಸಿಕೊಡುವುದರ ಮೂಲಕ ಆರ್ಥಿಕ ಮೂಲವನ್ನು ಶೋಧಸಿಕೊಳ್ಳುತ್ತ ಬದುಕನ್ನು ಅರ್ಥದೊಂದಿಗೆ ಸಾರ್ಥಕಗೊಳಿಸಿ ಕೊಳ್ಳಬೇಕು ಎಂಬುದು ಬಸವಣ್ಣನವರ ನಿಲುವಾಗಿದೆ.
   ವ್ಯಕ್ತಿತ್ವ ವಿಕಸನದಲ್ಲಿ ಆತ್ಮಶೋಧನೆಯು ಅಗತ್ಯ ಎಂಬುದನ್ನು ಬಸವಣ್ಣನವರು ಗ್ರಹಿಸಿರುವುದು  ಪ್ರಮುಖವಾದ ಅಂಶ. ವಚನಕಾರರಲ್ಲಿ ಆತ್ಮಶೋಧನೆ ಕ್ರಿಯೆಯು, ವ್ಯಕ್ತಿಗತವಾಗಿ ತನ್ನ ಮನಸ್ಸನ್ನು ತಾನು ತಿದ್ದಿಕೊಳ್ಳುವುದರ ಜೊತೆಗೆ ತನ್ನ ಮೂಲಕ ಸಮುದಾಯದ ಮನಸ್ಸನ್ನು ತಿದ್ದುವುದಾಗಿದೆ. ಆತ್ಮಶೋಧನೆಯು ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತ ಪರೀಕ್ಷೆಗೊಳಪಡಿಸಿ ಕೊಳ್ಳುತ್ತ ಅರಿವಿನ ಸಾಧ್ಯತೆಗಳನ್ನು ಕಂಡುಕೊಳ್ಳುತ್ತದೆ. ವಚನಗಳಲ್ಲಿ ಆತ್ಮ ಪ್ರಶಂಸೆಯ ನಿರಾಕರಣೆಯ  ಜೊತೆಗೆ ಆತ್ಮಶೋಧನೆ ಪ್ರಮುಖವಾಗಿದೆ. ವಚನಕಾರರಲ್ಲಿ ಬಸವಣ್ಣನವರ ವಚನಗಳಲ್ಲಿ ಮಾತ್ರ ಆತ್ಮಶೋಧನೆಯ ವಚನಗಳು ಹೆಚ್ಚಾಗಿ ಕಂಡು ಬರುತ್ತವೆ. ಇವರ ವಚನಗಳಲ್ಲಿಯ ಆತ್ಮಶೋಧನೆಯ ಕ್ರಿಯೆಯು ವ್ಯಕ್ತಿಮುಖಿಯಾಗಿರದೇ ಸಮಾಜಮುಖಿಯಾಗಿದೆ. ಬಸವಣ್ಣ ಒಬ್ಬ ವ್ಯಕ್ತಿಯಾಗಿ ಸಮಾಜದ ಹೊರಗಡೆ ನಿಂತು ಆತ್ಮ ಶೋಧನೆ ಮಾಡಿಕೊಳ್ಳದೆ ಸಮಾಜದ ಪ್ರತಿನಿಧಿಯಾಗಿದ್ದು ಸಮಾಜದೊಳಗಿದ್ದುಕೊಂಡೆ ಆತ್ಮ ಶೋಧನೆಗೆ ತೊಡಗಿದ್ದಾರೆ.
     ` ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ’ ಎಂಬ ವಚನದಲ್ಲಿ ಭಕ್ತಿಯ ಬಗೆಗಿನ ವಿವರಣೆಯಿದ್ದು ಭಕ್ತಿ ಅರ್ಥವಂತಿಕೆಯನ್ನು ಪಡೆದುಕೊಳ್ಳ ಬೇಕಾದರೆ ಅದನ್ನು ಅರಿದು ಆಚರಿಸಬೇಕಾಗುತ್ತದೆ. ಅರಿಯದೇ ಆಚರಿಸುವ ಭಕ್ತಿ ಎಳ್ಳಿಲ್ಲದ ಗಾಣವನಾಡಿದ ರೀತಿ ವ್ಯರ್ಥವಾಗುತ್ತದೆ. ಇಲ್ಲಿ ಆತ್ಮಶೋಧನೆಯ ಜೊತೆಗೆ ಆತ್ಮ ವಿಮರ್ಶೆಯು ನಡೆದಿರುವುದನ್ನು ಗುರುತಿಸ ಬಹುದಾಗಿದೆ. ವಚನಕಾರರು ಆತ್ಮಸ್ತುತಿಗೆ ಬದಲಾಗಿ ಆತ್ಮವಿಮರ್ಶೆಗೆ ಪ್ರಾಮುಖ್ಯತೆಯನ್ನು ಕಲ್ಪಿಸಿಕೊಟ್ಟರು. ಆತ್ಮ ಪ್ರಶಂಸೆಯನ್ನು ಅಲ್ಲಗಳೆದು, ಹೊಗಳಿಕೆಯನ್ನು,ಸ್ತೋತ್ರ ಸಂಸ್ಕೃತಿಯನ್ನು ವಿರೋಧಿಸಿದರು. ಹೊಗಳಿ ಹೊಗಳಿ ಎನ್ನವರು ಹೊನ್ನಶೂಲದಲ್ಲಿಕ್ಕಿದರಯ್ಯಾ ಎನ್ನುವ ಮಾತು ಇದಕ್ಕೆ ನಿದರ್ಶನ.
       ವಚನಕಾರರಲ್ಲಿ ಏಕದೇವೋಪಾಸನೆಯು ಪ್ರಮುಖ ಧೋರಣೆಯಾಗಿದ್ದು, ಶಿವನು ಒಪ್ಪಿತವಾದ ಒಬ್ಬನೇ ಒಬ್ಬ ದೇವರಾಗಿದ್ದಾನೆ. ಬಸವಣ್ಣನವರ ವಚನಗಳ ಅಂಕಿತದಲ್ಲಿಯ ಕೂಡಲಸಂಗಮದೇವನು, ಹರ, ಶಿವ, ಮಹೇಶ್ವರ, ರುದ್ರ ಮೊದಲಾದ ಪರ್ಯಾಯ ಹೆಸರುಗಳಿಂದ ಪ್ರಯೋಗಿಸಲ್ಪಟ್ಟಿದ್ದಾನೆ. ವಚನಗಳಲ್ಲಿ ಶಿವಪಾರಮ್ಯವನ್ನು ಪ್ರತಿಪಾದಿಸುವ ಅನೇಕ ವಚನಗಳು ಸಿಗುತ್ತವೆ. ಪ್ರತಿಯೊಬ್ಬ ವಚನಕಾರನಿಗೂ ತನ್ನದೇ ಆದ ಭಾವನೆಗಳ ಅಂಕಿತನಾಮವಾಗಿ ಶಿವನು ರೂಪುಗೊಂಡಿದ್ದಾನೆ.
        ದೈವಗಳ ನಾನಾ ಸ್ವರೂಪಗಳನ್ನು ತೋರುವ ಅನೇಕ ರಚನೆಗಳನ್ನು ನಾವು ಬಸವಣ್ಣನ ವಚನಗಳಲ್ಲಿ ಕಾಣಬಹುದು. ಕೆಳವರ್ಗದ ದೇವಿ ನಂಬಿಕೆಗಳು ಹಾಗೂ ಆಚರಣೆಗಳನ್ನು ವಿರೋಧಿಸುವ ಇಲ್ಲಿಯ ನೆಲೆಯನ್ನು ಬಸವಣ್ಣ “ಲೌಕಿಕ ಪ್ರಯೋಜನ”ದ ದೃಷ್ಟಿಯಿಂದಲೇ ಪ್ರಾರಂಭಿಸುತ್ತಾನೆ. ಮನುಷ್ಯನ ಮೇಲೆ ಅವಲಂಬಿತವಾಗಿರುವ ದೈವಗಳು, (ಲೋಗರ ಬೇಡಿಕೊಂಡುಂಬ ದೈವಗಳು); ಮನುಷ್ಯನಿಗೆ ಯಾವ ರೀತಿಯ ಪ್ರಯೋಜನಗಳಾಗಲಾರವು ಎನ್ನುವುದನ್ನು ವಚನಗಳು ಹೇಳುತ್ತವೆ. ಈ ದೈವಗಳಿಗೆ ಇದ್ದಿತೆಂದು ನಂಬಲಾದ ಮಾಟ, ಮಂತ್ರದ ಶಕ್ತಿಗಳ ನಿರಾಕರಣೆಯು ಇಲ್ಲಿ ನಡೆಯುತ್ತದೆ. ವಚನಕಾರರು ಮೂಲತಃ ಮಾಟಕ್ಕೆ ತಂತ್ರ ಸಾಧ್ಯತೆಗಳಿಗೆ ರೂಪಿತವಾದ ಕೆಳವರ್ಗದ ದೈವಗಳನ್ನು ಕುರಿತು ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಟೀಕೆಗಳ ಮುಖ್ಯ ಲಕ್ಷಣ ಅವುಗಳ ದೌರ್ಬಲ್ಯವನ್ನು ಕುರಿತದ್ದೇ ಆಗಿದೆ. ವಚನಗಳಲ್ಲಿ ಬ್ರಾಹ್ಮಣ ವರ್ಗದ ಧಾರ್ಮಿಕ ನೆಲೆಗಳು ಹಾಗೂ ಆಚರಣೆಗಳ ಟೀಕೆಯೂ ತೀಕ್ಷ್ಣವಾಗಿ ವ್ಯಕ್ತವಾಗಿದೆ. ವೇದ ಶಾಸ್ತ್ರ ಪುರಾಣಗಳ ಟೀಕೆಯಿಂದ ಹಿಡಿದು ಆ ವರ್ಗದ ನಡಾವಳಿಯ ಟೀಕೆಗಳವರೆಗೂ ವಚನಗಳ ವಿಮರ್ಶೆಯಿದೆ.        
   ವಚನಕಾರರು ಅಂತರಂಗ ಶುದ್ಧಿಯ ಕಡೆಗೆ ತಮ್ಮ ಗಮನವನ್ನು ನೀಡಿ ಮೈಲಿಗೆ ಹೊಲೆತನದ ಕಲ್ಪನೆಯನ್ನು ಎಲ್ಲೆಲ್ಲಿ ಅಂಟಿಸಲಾಗಿದ್ದಿತ್ತೋ ಅದೆಲ್ಲವನ್ನೂ ಅವಹೇಳನ ಮಾಡುತ್ತಾ ಅಂತಹ ವಿಚಾರಗಳಿಂದ ವಚನಕಾರರು ದೂರವಾಗಿರಬೇಕೆಂದು ಅವರು ವಿನಯಶಾಲಿಗಳು, ನೀತಿವಂತರು, ಶುದ್ಧಾತ್ಮರೂ ಆಗಿ ತಮ್ಮ ಧರ್ಮಕ್ಕೂ ಸಮಾಜಕ್ಕೂ ಆದರ್ಶವಾಗಿ ಜೀವಿಸಬೇಕೆಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಜಗಕ್ಕೆಲ್ಲ ದೇವರು ಒಬ್ಬನೇ ಇದ್ದಾನೆಂದು ಹೇಳಿದ್ದಲ್ಲದೆ ಜನತೆಗೂ ತಿಳಿಯಲಿ ಎಂದು ಜನತೆಯ ಭಾಷೆಯಲ್ಲಿಯೇ
        ನಂಬಿದ ಹೆಂಡತಿಗೆ ಗಂಡನೊಬ್ಬನೇ ಕಾಣಿರೋ
        ನಂಬ ಬಲ್ಲ ಭಕ್ತರಿಗೆ ದೇವನೊಬ್ಬನೇ ಕಾಣಿರೋ
        ಬೇಡ ಬೇಡ, ಅನ್ಯದೈವದ ಸಂಗ ಹೊಲ್ಲ.
      ಬೇಡ ಬೇಡ, ಪರದೈವದ ಸಂಗ ಹೊಲ್ಲ.
        ಬೇಡ ಬೇಡ, ಅನ್ಯದೈವವೆಂಬುದು ಹಾದರ, ಕಾಣಿರೋ.
        ಕೂಡಲಸಂಗಮದೇವ ಕಂಡಡೆ, ಮೂಗ ಕೊಯ್ಯುವ ಕಾಣಿರೋ.’ (ಬ.ವ.ಸಂ.617)
   ಏಕದೈವದಲ್ಲಿರಬೇಕಾದ ನಂಬುಗೆ ಎಷ್ಟು ನೇರವೂ, ಪ್ರಾಮಾಣಿಕವೂ ಆಗಿರಬೇಕೊ ಅಷ್ಟೇ ನೇರವಾದ, ಪ್ರಾಮಾಣಿಕ ದೃಷ್ಟಿ ಆ ದೇವನನ್ನು ಪೂಜಿಸುವಲ್ಲಿಯೂ ಇರುವುದು ಅತ್ಯಗತ್ಯ. ಆದರೆ ಹಿಂದೂ ಬ್ರಾಹ್ಮಣ ಹಾಗೂ ಭಕ್ತಿಧರ್ಮಗಳು ಬೆಳೆಸಿಕೊಂಡು ಬಂದಿದ್ದ ಉತ್ಸವ, ವಿಗ್ರಹಪೂಜೆ, ಆಡಂಬರದ ಪ್ರಕ್ರಿಯೆಗಳನ್ನು ಬಸವಣ್ಣ ಒಪ್ಪಲಿಲ್ಲ. ಬಹುದೈವತಾವಾದವು ಅವನಿಗೆ ಎಷ್ಟು ಖಂಡನೀಯವಾಗಿತ್ತೋ ಆಡಂಬರದ ಹಾಗೂ ಡಾಂಭಿಕ ಧಾರ್ಮಿಕ ಪೂಜೆಗಳು ಅಷ್ಟೇ ಖಂಡನೀಯವಾಗಿದ್ದವು. ಅಂತರಂಗಶುದ್ಧಿಯಿಂದ ದೇವರು ಸಂಪ್ರೀತಿಗೊಳ್ಳುವನು. ನಂಬುಗೆಯಿಂದ ತನ್ನನ್ನು ಕರೆದವರಿಗೆ ‘ಓ’ಯೆಂಬನು. ಆದರೆ ಆ ದಾರಿಯನ್ನು ಬಿಟ್ಟು, ಸ್ನಾನ, ಮಡಿ, ಮೈಲಿಗೆಗಳನ್ನು ಆಚರಿಸುತ್ತ ಬಂಡಿಗಟ್ಟಲೆ ಹೂವು ಪತ್ರೆಗಳನ್ನು ಏರಿಸುತ್ತ ಏನೆಷ್ಟು ಆಡಂಬರದ ಆಚಾರವನ್ನು ಮಾಡಿದರೆ ತನ್ನ ದೇವರಿಗೆ ಅದು ಅರ್ಪಿತವಾಗಲಾರದೆಂದು ಬಸವಣ್ಣನ ಹೇಳಿಕೆ. ಆತ್ಮಗತವಾದ ತನ್ನ ಧರ್ಮವನ್ನು ಅಂತರ್ಗತ ಮಾಡಿಕೊಳ್ಳುವುದಕ್ಕೆ ಅತ್ಯಂತ ಅವಶ್ಯಕವಾದ ಸಾಧನವೆಂದರೆ ಅಂತಃಕರಣ ಶುದ್ಧಿ. ದೇವರು ಎಲ್ಲ ಕಡೆಯಲ್ಲಿಯೂ ಇರುವನು ಎನ್ನುವುದನ್ನು ಮರೆತು ಆತನು ಕಲ್ಲಿನಲ್ಲಿದ್ದಾನೆ, ಮರದಲ್ಲಿದ್ದಾನೆ, ಹರಿವ ಜಲದಲ್ಲಿ ಇದ್ದಾನೆಂದು ತಿಳಿದು ಅವುಗಳನ್ನು ಆರಿಸಿಕೊಂಡು ಹೋಗುವುದು ತ್ಯಾಜ್ಯವೆಂದು ಬಸವಣ್ಣನವರ ವಿಧಿಯಾಗಿದೆ
        ದೇವರ ಒಲುಮೆಯನ್ನು ಪ್ರಾಯಶ್ಚಿತ್ತವೆಂಬ ಲಂಚದಿಂದ ಪಡೆಯುವುದಕ್ಕೆ ಹೇಗೆ ಸಾಧ್ಯವಿಲ್ಲವೋ, ಹಾಗೆಯೆ ನಂಬುಗೆಯಿಲ್ಲದ ಧ್ಯಾನ, ಜಪತಪಾದಿಗಳೂ ನಿರರ್ಥಕವಾಗುತ್ತವೆ. ದೇವಾಲಯದಲ್ಲಿ ದೇವರಿದ್ದಾನೆಂಬ ತಪ್ಪು ತಿಳಿವಳಿಕೆಯಿಂದ ಅಲ್ಲಿನ ಕಲ್ಲುದೇವರ ಮುಂದೆ ಕುಳಿತು ನಮಸ್ಕಾರ ಮಾಡುತ್ತ, ಧ್ಯಾನವನ್ನೆಲ್ಲ ಹೊರಗೆ ಬಿಟ್ಟುಬಂದು ಕೆರಹಿನ ಮೇಲೆ ಇಟ್ಟವರ ದಾರಿ ಶರಣರ ದಾರಿಯಲ್ಲ, ಅದು ಭವಕ್ಕೆ ಈಡಾದ ಭವಿಗಳ ದಾರಿಯಾಗಿದೆ. ಅಂತಹ ಭವಿಗಳನ್ನು ಕುರಿತು ಹಾಸ್ಯವಾಗಿ ನುಡಿಯುತ್ತ ಅವರು “ಮೀಂಬುಲಿಗನ ಹಕ್ಕಿಯಂತೆ” ನೀರ ತಡಿಯಲ್ಲಿದ್ದು ಮೂಗ ಹಿಡಿದು ಧ್ಯಾನ ಮಾಡುವರು ಬಿಟ್ಟ ಮಂಡೆವರಸಿ, ಬಾಯ ಮಿಡಕಿಸುತ್ತ, ಕಣ್ಣಮುಚ್ಚಿ ಬೆರಳನೆಣಿಸುವರು (ಬ.ವ. 577); ಅಂತಹವರ ಧ್ಯಾನ ಯಾತಕ್ಕೂ ಸಲ್ಲದು ಎಂದು ಹೇಳಿದ ಬಸವಣ್ಣ ತನ್ನ ಜನತೆಗೆ ಚಿತ್ತಶುದ್ಧಿಯನ್ನು ಬೆಳಸಿಕೊಳ್ಳಲು ಕರೆಯಿತ್ತನು. ಕೋಟಿಕೋಟಿ ಜಪತಪ ಮಾಡಿ ಕೋಟಲೆಗೊಳ್ಳಬೇಡಿರಿ. ಮನಮುಟ್ಟಿ ದೇವರನ್ನು ನೆನೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
        ಒಟ್ಟಾರೆಯಾಗಿ ಬಸವಣ್ಣನವರ ಸಾಮಾಜಿಕ ಹಾಗೂ ಸಾಂಸ್ಕೃತಿಕ  ನೆಲೆಯುಳ್ಳ ವಚನಗಳ ಮೂಲಕ ಗ್ರಹಿತವಾಗುವ ಸಂಗತಿ ಎಂದರೆ, ಇವರ   ಸಮಾಜ ವಿಮರ್ಶೆ ಮತ್ತು ವಿಡಂಬಣೆಯಲ್ಲಿ ಉತ್ಕಟವಾದ ಸಮಾಜಪ್ರಜ್ಞೆ ಜಾಗೃತವಾಗಿರುವುದನ್ನು ಅರಿಯಬಹುದು. ಸಮಾಜಸುಧಾರಣೆಯ ಕಳಕಳಿ ಪ್ರವೃತ್ತಗೊಂಡಿದೆ. ವ್ಯಕ್ತಿ-ವ್ಯಕ್ತಿಗಳ ಅಂತರಂಗದ ಪರಿಶೋಧನೆಗೆ ಪ್ರೇರಣೆ ದೊರೆತಿದೆ. ಇದರಿಂದಾಗಿ ಸಮಾಜ ಸುಧಾರಣೆಯತ್ತ ಎಲ್ಲರ ಗಮನ ಕೇಂದ್ರಿಕೃತವಾಯಿತು. ಇವರ ಈ ವಚನಗಳಲ್ಲಿ ಮಾನವತೆಗೆ ಹತ್ತಿರವಾಗುವ ಆಚಾರ-ವಿಚಾರಗಳು ಹುಟ್ಟಿಕೊಂಡಿರುವುದನ್ನು ಗುರುತಿಸಬಹುದು. ಜನತೆಯಲ್ಲಿ ದೇವರು, ಧರ್ಮ, ಪೂಜೆ, ಮುಕ್ತಿ, ಲೌಕಿಕ, ಪಾರಮಾರ್ಥಿಕ ಇವುಗಳ ಬಗೆಗೆ ಹೊಸ ಅರ್ಥವಂತಿಕೆ ಮೂಡಿತು. ಬಾಹ್ಯಾಡಂಬರ, ಬಾಹ್ಯಲಾಂಛನ, ನೇಮನಿತ್ಯ ಇವೇ ದೇವರು ಧರ್ಮ ಸಾಧನೆಗಳು ಎಂದು ಭಾವಿಸಿದ್ದ ಮೂಢ ಸಮಾಜಕ್ಕೆ ತನ್ನ ತಾನರಿದಡೆ ತನ್ನರಿದೇ ಗುರು ಎಂಬ ಅಂತರಾತ್ಮ ಜಾಗೃತಗೊಂಡಿತು. ಸಮಾಜದಲ್ಲಿ ಸೌಹಾರ್ದತೆ, ಸಮಾನತೆಗಳು, ಅಗತ್ಯವೆನಿಸಿದವು. ಸಮಾಜ ಹೊಸ ಅಧ್ಯಾಯದಲ್ಲಿ ಕಾಲಿಟ್ಟು ಹೊಸ ಜೀವನದಲ್ಲಿ ಪ್ರವೇಶವನ್ನು ಪಡೆಯಿತು. ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಉದ್ದೇಶ್ಯಗಳಿಂದ ಪ್ರೇರಿತವಾಗಿ ವರ್ಣಾಶ್ರಮ ಧರ್ಮ ಹಾಗೂ ಜಾತಿ ಸಂಕೋಲೆಗಳ ಬಂಧನಗಳಿಗೆ ಈಡಾಗಿದ್ದ ಸಮಾಜವನ್ನು ಮತ್ತು ಜನತೆಯನ್ನು ಪಾರುಮಾಡಿ ಸಮಾನತೆಯ ಚೌಕಟ್ಟಿನಡಿಯಲ್ಲಿ ನವ ಸಮಾಜವನ್ನು ನಿರ್ಮಾಣ ಮಾಡುವುದರ ಜೊತೆಗೆ ಸಾಂಪ್ರದಾಯಿಕ ದ್ವಂದ್ವತೆಗಳನ್ನು ತಿರಸ್ಕರಿಸಿ ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಗೌರವಗಳನ್ನು  ಮೇಲ್ಕಂಡ  ಆಯಾಮಗಳಲ್ಲಿ ಮೂಡಿಸುವಂತಹ ನೆಲೆಯನ್ನು ತಲುಪಿರುವುದನ್ನು ಗುರುತಿಸ ಬಹುದಾಗಿದೆ.

  ಗ್ರಂಥಋಣ
1.ಬಸವಣ್ಣನವರ ವಚನಗಳು ಸಂ: ಎಂ.ಎಂ.ಕಲಬುರ್ಗಿ
 ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ದ್ವಿ.ಮು.2001
2.ಎಂ.ಚಿದಾನಂದಮೂರ್ತಿ,
    ಸ್ಥಾವರ-ಜಂಗಮ
 ಚಿದಾನಂದ ಸಮಗ್ರ ಸಂಪುಟ-4
 ಸ್ವಪ್ನ ಪುಸ್ತಕಾಲಯ, ಬೆಂಗಳೂರು, 2004
  ವೀರಶೈವ ಧರ್ಮ:ಭಾರತೀಯ ಸಂಸ್ಕೃತಿ
  ಮಿಂಚು ಪ್ರಕಾಶನ
  ಬೆಂಗಳೂರು,2000
3. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-1
  ಸ್ವಪ್ನ ಪುಸ್ತಕಾಲಯ, ಬೆಂಗಳೂರು, 1995
5.ವಿದ್ಯಾಶಂಕರ ಎಸ್, ವಚನಾನುಶೀಲನ
  ಸ್ನೇಹಪ್ರಕಾಶನ,ಬೆಂಗಳೂರು,1989
6.ಸಿ.ನಾಗಭೂಷಣ,  ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು
               ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2000
                ವೀರಶೈವಸಾಹಿತ್ಯ : ಕೆಲವು ಒಳನೋಟಗಳು
                ವಿಜೇತ ಪ್ರಕಾಶನ, ಗದಗ,2008


  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...