ಸೋಮವಾರ, ಜನವರಿ 1, 2018

ಕನ್ನಡ ಸಂಶೋಧನೆಯಲ್ಲಿ ಶಾಸನ ಆಕರಗಳ ವೈವಿಧ್ಯ ನಿಲುವುಗಳು (ಸಾಂಸ್ಕೃತಿಕ, ಐತಿಹಾಸಿಕ,ಸಾಹಿತ್ಯಕ, ಭಾಷಿಕ, ಛಂದಸ್ಸುಗಳ ಅಧ್ಯಯನದ ನೆಲೆಗಟ್ಟಿನಲ್ಲಿ) ಡಾ.ಸಿ.ನಾಗಭೂಷಣ

ಕನ್ನಡ ಸಂಶೋಧನೆಯಲ್ಲಿ ಶಾಸನ ಆಕರಗಳ ವೈವಿಧ್ಯ ನಿಲುವುಗಳು
(ಸಾಂಸ್ಕೃತಿಕ, ಐತಿಹಾಸಿಕ,ಸಾಹಿತ್ಯಕ, ಭಾಷಿಕ, ಛಂದಸ್ಸುಗಳ ಅಧ್ಯಯನದ ನೆಲೆಗಟ್ಟಿನಲ್ಲಿ)
                                                                                                  ಡಾ.ಸಿ.ನಾಗಭೂಷಣ
  ಕನ್ನಡ ಸಂಶೋಧನೆಯು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಕನ್ನಡ ನಾಡನ್ನು ಪ್ರವೇಶಿಸಿದ ಒಂದು ಶೈಕ್ಷಣಿಕ ಶಿಸ್ತು. ಇಪ್ಪತ್ತನೇ ಶತಮಾನದಲ್ಲಂತೂ ಕನ್ನಡ ಸಂಶೋಧನೆ ಅನೇಕ ಮಹತ್ವದ ನೆಲೆಗಳನ್ನು ಪ್ರವೇಶಿಸಿದೆ. ‘Researchಎಂಬ ಚಟುವಟಿಕೆಗೆ ಸಮಾನಾಂತರವಾಗಿ ನಾವು ನಡೆಸುತ್ತಿರುವ ಬೌದ್ಧಿಕ ಕ್ರಿಯೆಯಾಗಿದೆ.  ಇಂದು ಕನ್ನಡ ಸಂಶೋಧನಾ ಅಧ್ಯಯನದ ಭಿತ್ತಿಯು ದೇಸಿ ಬೇರುಗಳು ಗುರುತಿಸುವಿಕೆಯಾಗ ಬೇಕಾಗಿದೆ. ಯಾಕೆಂದರೆ ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಕನ್ನಡ ಸಂಶೋಧನಾಧ್ಯಯನವು ಪಳೆಯುಳಿಕೆಯ ಶಾಸ್ತ್ರವಾಗದೆ ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ದಿಕ್ಕನ್ನು ಬದಲಾಯಿಸಿ ಕೊಳ್ಳುತ್ತ ಬಂದಿದೆ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಕಾಲ ಘಟ್ಟದಲ್ಲಿ ಸಕಾಲಿಕ ಗೊಳ್ಳುವುದು ಅನಿವಾರ್ಯವಾಗಿದೆ. ಜಾಗತೀಕರಣಕ್ಕೆ ಪ್ರತಿರೋದವಾಗಿ ನಮ್ಮ ದೇಸೀಯ ಜ್ಞಾನ ಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಪಡಿಸಿ ಬೇಕಾಗಿದೆ. ಸಾಹಿತ್ಯ-ಸಂಸ್ಕೃತಿಯ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಸೀ ಪರಂಪರೆಯ ಜ್ಞಾನದ ಹುಡುಕಾಟ ನಡೆಯ ಬೇಕಾಗಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನದ ಮೂಲಕ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪಗಳನ್ನು ಪರಿಚಯಿಸ ಬೇಕಾಗಿದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯ ಭಾಗವಾಗಿರುವ ಸಂಶೋಧನಾಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ಪರಿಧಿಗೆ ಜೋಡಿಸಿ ಕೊಳ್ಳುತ್ತ ಬಂದಿದೆ. ಸಂಶೋಧನೆ ಎರಡು ಬಗೆಯದ್ದಾಗಿದೆ. 1.ಭೂತಕಾಲಕ್ಕೆ ಸಂಬಂಧಿಸಿದ್ದಾಗಿದ್ದು, ಹಳೆಯದ್ದನ್ನು ಹುಡುಕುವುದು. ಮಾನವಿಕ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು. 2.ಈವರೆವಿಗೂ ಇಲ್ಲದ ಹೊಸತನ್ನು ಹುಡುಕುವುದು. ಭವಿಷತ್ಕಾಲಕ್ಕೆ ಸಂಬಂಧಿಸಿದುದು. ಹೆಚ್ಚಾಗಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಸಂಶೋಧನೆ ಎಲ್ಲಾ ಶಿಸ್ತುಗಳಿಗೂ ಸಂಬಂಧಿಸಿದಂತೆ ನಡೆಯುವ ಒಂದು ಚಟುವಟಿಕೆಯಾಗಿದೆ. ಯಾವ ತೆರನಾದ ಸಂಶೋಧನೆಯಾಗಲೀ ಅದು ಗೊತ್ತಿರದ ವಿಷಯವನ್ನು ಗೊತ್ತು ಮಾಡಿಕೊಳ್ಳುವಿಕೆಯಾಗಿದೆ. ಒಂದು ಸಂಗತಿಯನ್ನು ನಿಖರವಾಗಿ ಸಂಪೂರ್ಣವಾಗಿ ಗೊತ್ತಾಗುವಂತೆ ಮಾಡಿಕೊಳ್ಳುವುದು. ಸಂಶೋಧನೆಯು ಸಮಸ್ಯೆಯನ್ನು ವ್ಯಾಖ್ಯಾನಿಸುವುದು. ಪುನ: ಪುನ: ವ್ಯಾಖ್ಯಾನಿಸುವುದು. ಮುಂದುವರಿದು ಹೇಳುವುದಾದರೆ ಸಂಶೋಧನೆಯ ಪರಿಕಲ್ಪನೆಯನ್ನು ಬಹುಮುಖಿ ರೀತಿಯಲ್ಲಿಯೂ ಅರ್ಥೈಸಬಹುದು.
1.ಹೊಸ ಹೊಸ ಸಂಗತಿಗಳನ್ನು ಶೋಧಿಸಿ ತೋರಿಸಬಲ್ಲುದು.
2.ಸತ್ಯವನ್ನು ಹೊರಗೆಡಬಲ್ಲುದು. ಅಸ್ಪಷ್ಟವಾಗಿರುವ ಸಂಗತಿಗಳನ್ನು ಹೆಚ್ಚು ಹೆಚ್ಚು ಸ್ಪಷ್ಟಗೊಳಿಸುವುದು.
3.ಶೋಧಿತ ಸಂಗತಿಗಳನ್ನು ಹೊಸ ದೃಷ್ಟಿಯಿಂದ ಪರಿಶೀಲಿಸಬಹುದು, ವಿಶ್ಲೇಷಿಸಬಹುದು.
4.ಊಹಾ ಪೋಹಗಳಿಗೆ ಕೊನೆಯ ತೆರೆಯನ್ನೆಳೆಯಬಹುದು.
5.ವ್ಯವಸ್ಥಿತ ಆಲೋಚನಾ ಕ್ರಮವನ್ನು ಬೆಳೆಸಬಲ್ಲುದು.
     ಕನ್ನಡ ನಾಡಿನ ಚರಿತ್ರೆ, ಸಂಸ್ಕೃತಿ, ಸಾಹಿತ್ಯ, ಜಾನಪದ ಇತ್ಯಾದಿ ಕ್ಷೇತ್ರಗಳಲ್ಲಿ ನಡೆದಿರುವ ಸಂಶೋಧನೆಯ ಸ್ವರೂಪ ಹಲವಾರು ಗ್ರಹಿಕೆಗಳಲ್ಲಿ ರೂಪುತಾಳಿದೆ.
1.ಸಂಶೋಧಕ ತಾನು ತಲುಪಬೇಕಾದ ನಿಜದ ನೆಲೆಯನ್ನು ಮೊದಲೆ ಅರಿತುಕೊಂಡು ಅದಕ್ಕೆ ಅಗತ್ಯವಾದ ಆಂತರೀಕ ಹಾಗೂ ಬಾಹ್ಯ ಆಧಾರಗಳನ್ನು ಹುಡುಕುವುದರ ಮೂಲಕ ಸಂಶೋಧನೆಯನ್ನು ಕೈಗೊಂಡಿರುವುದು.
2.ಇರುವ ಆಧಾರಗಳನ್ನು ಕಲೆಹಾಕಿ, ಪರಸ್ಪರ ಸಂಬಂಧಗಳನ್ನು ಹೊಂದಿಸಿ ಅವುಗಳಿಂದ ಕೊನೆಯ ನಿರ್ಣಯವನ್ನು, ಸತ್ಯವನ್ನು ರೂಪಿಸುವುದು.
3.ಒಂದೇ ಸತ್ಯವನ್ನು ಶೋಧಿಸುವ ಗುರಿಯನ್ನಿಟ್ಟುಕೊಂಡು ಹೊರಟು ಹಲವು ಸತ್ಯಗಳ ಶೋಧನೆ ನಡೆಸಿರುವುದು.
4.ಸಿದ್ಧ ಮಾದರಿಯ ಬೆಳಕಿನಲ್ಲಿ ಅನ್ವಯಿಕವಾಗಿ ಸಂಶೋಧನೆ ಮಾಡಿರುವುದು.
5.ನೂತನ ಮಾದರಿಯನ್ನು ರೂಪಿಸಿಕೊಂಡು ಸಂಶೋಧನೆಯನ್ನು ಕೈಗೊಂಡಿರುವುದು.
6.ಹಿಂದಿನವರು ಆಗಲೇ ಕೈಗೊಂಡಿದ್ದ ಸಂಶೋಧನೆಯು ಪೂರ್ಣಗೊಂಡಿರದಿದ್ದ ಸಂದರ್ಭದಲ್ಲಿ ಆ ನೆಲೆಯಲ್ಲಿಯೇ ಮುಂದುವರಿದು ಪೂರ್ಣಗೊಳಿಸಿರುವುದು.
7.ಹೆಚ್ಚಿನ ಸಂಶೋಧನೆಗೆ ಪೂರಕವಾಗಬಲ್ಲ ಚಿಕ್ಕ ಚಿಕ್ಕ ಸಂಶೋಧನೆಗಳನ್ನು ಕೈಗೊಂಡಿರುವುದು.
     ಸಂಶೋಧನೆಯೆಂಬುದು ಇತ್ತೀಚೆಗೆ ಕೇವಲ ಬೌದ್ಧಿಕ ಚಟುವಟಿಕೆಯಾಗಿ ಉಳಿಯದೆ ಹಲವರ ಶ್ರಮ ಹಾಗೂ ಸಹಯೋಗವನ್ನು ಬಯಸುವ ಹಾಗೂ ಎಲ್ಲರನ್ನೂ ಒಂದಲ್ಲ ಒಂದು ವಿಧದಲ್ಲಿ ಪ್ರಭಾವಿಸುವ ಸಾಮಾಜಿಕ ಕ್ರಿಯೆಯಾಗಿದೆ. ಈ ಸಂಶೋಧನೆ ಶುದ್ಧಾಂಗವಾಗಿ ಜ್ಞಾನಸಂಬಂಧಿಯಾದ ಚಟುವಟಿಕೆ ಎಂದು ಪರಿಗಣಿಸಬಹುದು. ಸಾಹಿತ್ಯ-ಸಂಸ್ಕೃತಿಯನ್ನು ಕುರಿತ ಸಂಶೋಧನೆಯ ಚಟುವಟಿಕೆಗಳನ್ನು ಬೇರೆ ಬೇರೆ ವಿಧಾನಗಳಲ್ಲಿ ವರ್ಗೀಕರಿಸಬಹುದು. 1.ವೈಯಕ್ತಿಕ-ಸಾಂಸ್ಥಿಕ. 2.ನಿರ್ದಿಷ್ಟ ಉದ್ದೇಶ್ಯಬದ್ಧ-ಉದ್ದೇಶ್ಯ ರಹಿತ. 3.ಕ್ರಿಯಾತ್ಮಕ-ನಿಷ್ಕ್ರಿಯಾತ್ಮಕ. 4.ಮಾಹಿತಿನಿಷ್ಠ-ಊಹಾತ್ಮಕ 5.ಮೂಲ-ಅನುಷಂಗಿಕ. 6.ಮೂರ್ತ-ಅಮೂರ್ತ. ಈ ರೀತಿಯ ವರ್ಗೀಕರಣವು ಸಂಶೋಧನೆಯ ಸ್ವಯಂ ಪೂರ್ಣತೆಯನ್ನು ಪಡೆಯುವುದಿಲ್ಲವಾದರೂ ಕೆಲಮಟ್ಟಿಗೆ ಸಂಶೋಧನೆಯ ಸ್ವರೂಪವನ್ನು ಅರಿಯಲು ನೆರವಾಗುತ್ತದೆ.
     ಸಂಶೋಧಕರು ಸತ್ಯವನ್ನು ಹುಡುಕುವುದೇ ಪ್ರಮುಖ ಉದ್ದೇಶ್ಯವಾಗಿರಿಸಿಕೊಂಡು ತಮ್ಮ ಶೋಧನೆಯ ಫಲಿತಗಳನ್ನು ಸತ್ಯವೆಂದೇ ತಿಳಿದಿರುತ್ತಾರೆ. ಆದರೆ ಈ ಸಂಶೋಧನೆಗಳು ಪೂರ್ಣಸತ್ಯವಲ್ಲ. ಅವರಿಗೆ ಲಭ್ಯವಿರುವ ಮಾಹಿತಿ ವಿಶ್ಲೇಷಣಾ ಪರಿಕರ, ಅವಲಂಬನೆಯ ಆಧಾರದ ಮೇಲೆ ಸದ್ಯಕ್ಕೆ ಸತ್ಯವೆಂದು ತಿಳಿಯಬಹುದಾದುದ್ದನ್ನು ಈ ಸಂಶೋಧಕರು ಹೇಳಿರುತ್ತಾರೆ. ಹೊಸಮಾಹಿತಿ, ಹೊಸ ವಿಶ್ಲೇಷಣಾ ಪರಿಕರಗಳು ದೊರೆತ ಹಾಗೆಲ್ಲ ಈ ಸಂಶೋಧನೆ ಪರಿಷ್ಕೃತಗೊಳ್ಳುತ್ತದೆ.ಆದಾಗ್ಯೂ ಕನ್ನಡದಲ್ಲಿ ಸಂಶೋಧನೆಯನ್ನು ಗುರುತಿಸುವಾಗ ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಸಂಶೋಧನೆಯ ಆರಂಭವನ್ನು ಗುರುತಿಸುತ್ತೇವೆ. ಈ ಕಾಲದಲ್ಲಾದ ಸಂಶೋಧನೆಯ ಬಗೆಗೆ ಗುರುತಿಸುವುದಾದರೆ ಸಂಶೋಧನೆಯ ಚಟುವಟಿಕೆಗಳು ಪ್ರಮಾಣದಲ್ಲಿ ಹೆಚ್ಚಾದವು ಮತ್ತು ಸಾಮಗ್ರಿ ಸಂಕಲನದ ವ್ಯಾಪಕತೆ ಹೆಚ್ಚಾಯಿತು. ಸಂಶೋಧಕನಾದವನು ಶೋಧಿಸಬೇಕಾಗಿದ್ದ ಆಕರಗಳು ನಾಲ್ಕು ಬಗೆಯವುಗಳಾಗಿದ್ದವು. 1.ವಸ್ತುಸಾಮಗ್ರಿ. 2.ಭಾಷಾಸಾಮಗ್ರಿ. 3.ಕ್ರಿಯಾ ಸಾಮಗ್ರಿ. 4.ಜ್ಞಾನ ಸಾಮಗ್ರಿ.  ವಸ್ತು ಸಾಮಗ್ರಿ ಭೂಮಿಯ ಮೇಲೆ ಹಾಗೂ ಒಳಗೆ ಸಿಗುವಂತಹದ್ದಾಗಿದ್ದರೆ, ಭಾಷಾ ಸಾಮಗ್ರಿಗಳು ಲಿಖಿತ ರೂಪದಲ್ಲಿದ್ದವು. ಜನರ ದೈನಂದಿನ ಕ್ರಿಯೆ, ಆಚರಣಾತ್ಮಕ ಕ್ರಿಯೆಗಳು ಕ್ರಿಯಾಸಾಮಗ್ರಿಗಳಾಗಿದ್ದವು.
     ಸಂಶೋಧನಾ ಚಟುವಟಿಕೆಯ ಸ್ವರೂಪದಲ್ಲಿ ಆದ ಮುಖ್ಯ ವ್ಯತ್ಯಾಸ ಎಂದರೆ, ಸಾಮಗ್ರಿಗಳು, ಆಕರಗಳು ಆಧುನಿಕ ರೀತಿಗೆ ಪರಿವರ್ತನೆಗೊಂಡವು. ಮೌಕಿಕವಾದದ್ದು ಲಿಖಿತರೂಪ ಪಡೆದುಕೊಂಡಿತು. ಇಲ್ಲಿಯವರೆಗೂ ಕನ್ನಡದಲ್ಲಿ ಈ ಪ್ರಕ್ರಿಯೆ ಮುಗಿದಿಲ್ಲ. ಶಾಸನಗಳನ್ನು, ಹಸ್ತಪ್ರತಿಗಳನ್ನು ಮುದ್ರಿತ ರೂಪಕ್ಕೆ ತರುವ ಕ್ರಿಯೆ ನಡೆಯುತ್ತಿದ್ದು ಪರಿಪೂರ್ಣಗೊಂಡಿಲ್ಲ. ಈ ಪರಿವರ್ತನೆಯ ಕೆಲಸವನ್ನೇ ಒಂದು ಬಗೆಯ ಸಂಶೋಧನಾ ಚಟುವಟಿಕೆ ಎಂದು ಕರೆಯುವುದು. ಈ ಪರಿವರ್ತನೆಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಅವಶ್ಯಕವಾದ ಪರಿಕರ ಹಾಗೂ ತಂತ್ರಜ್ಞಾನವನ್ನು ಪಡೆಯಲು ವಿಶೇಷ ತರಬೇತಿಯ ಸೌಲಭ್ಯವೂ ಇದೆ. ಮುದ್ರಣ ರೂಪಕ್ಕೆ ಪರಿವರ್ತಿಸುವಾಗ ಅಧಿಕೃತ ಯುಗದಲ್ಲಿ ಪ್ರಾರಂಭಗೊಂಡ ಸಂಶೋಧನೆಯ ಸ್ವರೂಪವನ್ನು ಹಲವು ರೀತಿಯಲ್ಲಿ ಗುರುತಿಸಬಹುದು.
1.ಸಾಮಗ್ರಿ ಎಲ್ಲವೂ ಭಾಷಿಕ ರೂಪವನ್ನು ಪಡೆದಿವೆ. ಈಗಾಗಲೇ ಭಾಷೆಯ ರೂಪದಲ್ಲಿದ್ದ ಸಾಮಗ್ರಿಗಳಲ್ಲದೆ ಉಳಿದ ಭಾಷೇತರ ಮಾಹಿತಿಯು ಭಾಷಿಕವಾಗಿ ಪರಿವರ್ತನೆ ಹೊಂದಿತು. ಭೂ ಉತ್ಖನನ, ದೇವಾಲಯ ರಚನೆ, ಸಾಮುದಾಯಿಕ ಆಚರಣೆಗಳು ಇತ್ಯಾದಿ ಭಾಷೇತರ ಸಂಗತಿಗಳನ್ನು ಭಾಷೆಯಲ್ಲಿ ರಚಿಸುವುದು ಈಗಲೂ ಬಳಕೆಯಲ್ಲಿದೆ. ಮೊದಲು ಭಾಷಿಕದಲ್ಲಿರದ ಈ ಆಕರಗಳೇ ಮುಂದೆ ಭಾಷಿಕ ರೂಪದಲ್ಲಿ ಮೂಲ ಆಕರಗಳಾದವು.
2.ಆಯಾ ಕಾಲದ ಅಧ್ಯಯನದ, ನಿರೀಕ್ಷಣೆಯ ಫಲಿತಗಳಾಗಿದ್ದ ಸಾಮಗ್ರಿಗಳು ತಮ್ಮ ಅಧ್ಯಯನದ ಫಲಿತ ಲಕ್ಷಣಗಳನ್ನು ಕಳೆದುಕೊಂಡು ಮುಂದೆ ಭಾಷಿಕ ರೂಪದಲ್ಲಿ ಆಕರಗಳಾದವು. ಉದಾ||ಹದಿನೈದನೆಯ ಶತಮಾನದಲ್ಲಿ ವೀರಶೈವ ಸಾಹಿತ್ಯದ ಪುನರುಜ್ಜೀವನದ ಸಂದರ್ಭದಲ್ಲಿ ಹನ್ನೆರಡನೇ ಶತಮಾನದ ವಚನ ರಾಶಿಯನ್ನು ಸಂಕಲಿಸಿದ ಕೃತಿಗಳೆ ಇಂದು ಆಕರಗಳಾಗಿವೆ. ಆಕರಗಳನ್ನು ರೂಪಿಸುವುದು, ಸಂಯೋಜಿಸುವುದು. ಕನ್ನಡದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಯಾಗಿದೆ. ಚರಿತ್ರೆ, ಪ್ರಾಕ್ತನಶಾಸ್ತ್ರ, ಸಾಹಿತ್ಯ, ಜಾನಪದ ವಲಯಗಳಲ್ಲಿ ಇಂದಿಗೂ ಮಾನ್ಯತೆ ಪಡೆದಿದೆ.
            ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಮೂಲ ಪಾಠದ ಪುನಾರಚನೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಅಕ್ಷರದ ಪಾವಿತ್ರ್ಯ ಹಾಗೂ ಅಧಿಕತೆಯನ್ನು ಒಪ್ಪುವ ಸಂಸ್ಕೃತಿ ಚಿಂತನೆಗಳು ಈ ಮೂಲ ಪಾಠಕ್ಕೆ ಮಾನ್ಯತೆ ಕೊಟ್ಟಿವೆ. ಮೌಕಿಕ ಪರಂಪರೆಯನ್ನು ಅಧೀನಗೊಳಿಸಿ ಸೀಮಿತ ವ್ಯಾಪ್ತಿಯ ಅಕ್ಷರಕ್ಕೆ ಪ್ರಾಧಾನ್ಯತೆ ಕಲ್ಪಿಸಿರುವ ಅಧ್ಯಯನಕಾರರು ಕೃತಿಗಳ ಅಧಿಕೃತ ಪಾಠಗಳ ಸಿದ್ಧತೆಗೆ ಸನ್ನದ್ಧರಾದರು. ಹಸ್ತಪ್ರತಿಗಳು, ಶುದ್ಧಪ್ರತಿಗಳು, ನಕಲುಗಳು, ಪಾಠಗ್ರಂಥಿಗಳು, ಪಾಠಾಂತರಗಳ ಮಾತೃಕೆ ಹತ್ತಾರು ಪರಿಕಲ್ಪನೆಗಳು ಹುಟ್ಟಿಕೊಂಡವು. ಇಲ್ಲೆಲ್ಲಾ ಪಾಠ ಭಿನ್ನತೆಗಳ ನಿರಾಕರಣೆ ಮುಖ್ಯವಾಯಿತೇ ಹೊರತು ಅವುಗಳ ಹಿಂದಿನ ಕಾರಣಗಳ ಅನ್ವೇಷಣೆಯಲ್ಲ. ಮೂಲಪಾಠದ ಅಧಿಕೃತತೆಯನ್ನು ಜನಪದ ಸಾಹಿತ್ಯಕ್ಕೂ ವಿಸ್ತರಿಸಿದವರುಂಟು. ಸಾಂಸ್ಕೃತಿಕ ಪುನಾರಚನೆಯು ಹೇಗಿರಬೇಕೆಂದು ನಿರ್ದಿಷ್ಟ ಕಾಲಮಾನದಲ್ಲಿ ಚಲಾವಣೆಯಲ್ಲಿರುವ ಅನಿಸಿಕೆಗಳು ಒಂದಿಲ್ಲೊಂದು ವಿಧದಲ್ಲಿ ಅಧ್ಯಯನದ ವಿವಿಧ ನೆಲೆಗಳನ್ನು ಪ್ರಭಾವಿಸುತ್ತವೆ.
ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನಗಳು ಶುದ್ಧ ವೈಜ್ಞಾನಿಕ ನೆಲೆಗಟ್ಟಿಗೆ ಸೇರಲು ಸಾಧ್ಯವಿಲ್ಲ. ಸಂಸ್ಕೃತಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವುದಾಗಲೀ, ವಿವರಿಸುವುದಾಗಲೀ, ವ್ಯಾಖ್ಯಾನಿಸುವುದಾಗಲೀ ತನಗೆ ತಾನೆ ಪೂರ್ಣರೂಪಿಯಾದ ಕಾಲದೇಶ ವಿಮುಕ್ತವಾದ ಸಂಗತಿಯಲ್ಲ. ಸಂಸ್ಕೃತಿಗೆ ಸಂಬಂಧಿಸಿದ ಹಿಂದಿನ ಸಿದ್ಧಾಂತ ಇಂದಿನ ನಮ್ಮ ಸಾಂಸ್ಕೃತಿಕ ವೈರುದ್ಧ್ಯಗಳ ಫಲಿತವಾಗಿ ತೋರುತ್ತವೆ. ನಿದರ್ಶನಕ್ಕೆ ವಿಜಯನಗರ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ದೇವಾಲಯಗಳು ನಾಶಗೊಂಡವು. ಈ ಪ್ರಕ್ರಿಯೆಯಲ್ಲಿ ಮುಸ್ಲಿಂ ಪ್ರಮುಖ ಪಾತ್ರವನ್ನು ವಿವರಿಸುವ ಚಾರಿತ್ರಿಕ ಪುನಾರಚನೆಯ ವಿಶ್ಲೇಷಣೆಯು ವಿಜಯನಗರದ ಶೈವ ಮತ್ತು ವೈಷ್ಣವ ದೇವಾಲಯಗಳಲ್ಲಿ ಅಧಿಕ ವೈಷ್ಣವ ದೇವಾಲಯಗಳೇ ವಿನಾಶವಾಗಿ ಸಾಕಷ್ಟು ಶೈವ ದೇವಾಲಯಗಳು ನಾಶವಾಗದೆ ಉಳಿದುದರ ಹಿನ್ನಲೆಗೆ ಸಾಕಾಗದು. ಇನ್ನು ಹೆಚ್ಚಿನ ಮಾಹಿತಿ ಮತ್ತು ವಿವರಣೆಗಳು ಅವಶ್ಯಕವಾಗಿ ಬೇಕಾಗುತ್ತವೆ. ಇದು ಸಾಂಸ್ಕೃತಿಕ ಅಧ್ಯಯನಗಳನ್ನು ರೂಪಿಸುವ ಸಿದ್ಧಾಂತಗಳು ಸದ್ಯದ ಒತ್ತಡಗಳಿಂದ ನಿರ್ದೇಶಿತವಾಗಿರುತ್ತವೆಂಬ ಅನಿಸಿಕೆಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ ಮಾಹಿತಿಯಾಗಲೀ, ವರ್ಣನೆಯಾಗಲೀ ವಸ್ತುನಿಷ್ಠವಾಗಿ ಉಳಿಯಲು ಸಾಧ್ಯವಿಲ್ಲ.     ಇಂದು ಸಂಶೋಧನೆಯ ಪರಿಕಲ್ಪನೆ ವ್ಯಾಪಕವಾಗಿದೆ. ಸಾಂಸ್ಕೃತಿಕ ಸಂಶೋಧನೆಯು ಆಧುನಿಕ ಕಾಲಘಟ್ಟದ ಕೊಡುಗೆಯಾಗಿದೆ. ಸಾಂಸ್ಕೃತಿಕ ಸಂಶೋಧನೆಯ ಮುಖ್ಯ ಉದ್ದೇಶ ಗತಕಾಲವನ್ನು ವರ್ತಮಾನಕಾಲದ ಅಗತ್ಯಕ್ಕೆ ತಕ್ಕಂತೆ ಮರುಚಿಂತನೆ ಮಾಡಿಕೊಳ್ಳುವುದು. ಸಂಸ್ಕೃತಿ ಎನ್ನುವುದು ಅರ್ಥಪೂರ್ಣ ಕ್ರಿಯೆಗಳ ವ್ಯವಸ್ಥೆ. ರಾಜಕೀಯ ಹಾಗೂ ಆರ್ಥಿಕ ಶಕ್ತಿಗಳ ಕಾರಣದಿಂದ ಮೂಡುತ್ತದೆ. ಸಂಸ್ಕೃತಿಯನ್ನು ಕುರಿತು ಕನ್ನಡ ನಾಡಿನಲ್ಲಿ ನಡೆದಿರುವ ಅಧ್ಯಯನವು ಎರಡು ನೆಲೆಗಟ್ಟುಗಳಲ್ಲಿ ನಡೆದಿದೆ.
1. ಸಂಸ್ಕೃತಿ ಶೋಧ, 2.ಸಂಸ್ಕೃತಿ ಚಿಂತನೆ
ಸಂಸ್ಕೃತಿ ಶೋಧವು ಸಾಂಸ್ಕೃತಿಕ ಚಿಂತನೆಯ ನೆಲೆಗಳನ್ನು ಆಶ್ರಯಿಸುತ್ತದೆ ಮತ್ತು ರೂಪಿಸುತ್ತದೆ. ಸಂಸ್ಕೃತಿ ಚಿಂತನೆಯ ನೆಲೆಯು ಸಾಂಸ್ಕೃತಿಕ ಶೋಧಗಳ ಫಲಿತಾಂಶಗಳನ್ನು ಒಳಗೊಂಡಿರುತ್ತದೆ. ಚರಿತ್ರೆ, ಧರ್ಮ, ಜನಾಂಗಿಕ, ಕಲಾತ್ಮಕ ವಿಷಯಗಳು ಸಾಹಿತ್ಯ ಮುಂತಾದವು ಕನ್ನಡ ಸಂಸ್ಕೃತಿಯ ಚಿಂತನೆಯ ಹಲವು ಮುಖ್ಯ ಕೇಂದ್ರಗಳಾಗಿವೆ. ಸಂಸ್ಕೃತಿ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಕೆಲವು ನಿರ್ದಿಷ್ಟ ಆಸಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ಬೆಳೆದಿವೆ. ಸಂಸ್ಕೃತಿಯ ಶೋಧವು ಪ್ರಮುಖವಾಗಿ ಶಾಸನಗಳನ್ನು ಮುಖ್ಯ ಆಕರಗಳೆಂದು, ಸಾಹಿತ್ಯ ಕೃತಿಗಳು, ಐತಿಹ್ಯಗಳು, ಇತರೆ ಕಲೆಗಳನ್ನು ಅನುಷಂಗಿಕ  ಆಕರಗಳೆಂದು ಪರಿಗಣಿಸಿವೆ. ಸಂಶೋಧನೆಯಲ್ಲಿ ಅಂತರಶಿಸ್ತೀಯ ಅಧ್ಯಯನ ಪ್ರಾಮುಖ್ಯತೆ ಪಡೆದಿದೆ. ಸಂಶೋಧಕರು ಆಯ್ಕೆ ಮಾಡಿಕೊಂಡ ವಸ್ತುವನ್ನು ಪೂರಕ ಆಕರಗಳೊಡನೆ ಅಧ್ಯಯನಕ್ಕೊಳಪಡಿಸಿ ಅಧ್ಯಯನ ನಡೆಸಿರುವುದುಂಟು.
      ಸಾಂಸ್ಕೃತಿಕ ಸಂಶೋಧನೆಯು ಆರಂಭದಲ್ಲಿ ಸಂಸ್ಕೃತಿಯನ್ನು ಚರಿತ್ರೆಯ ಒಂದು ಭಾಗವಾಗಿ ಪರಿಗಣಿಸಿ ಸಾಂಸ್ಕೃತಿಕ ಕಥನವನ್ನು ರೂಪಿಸುವ ಮಾದರಿಯಾಗಿತ್ತು. ಜೊತೆಗೆ ಗತಕಾಲವನ್ನು ಕಾಲಾನುಕ್ರಮದಲ್ಲಿ ಹೊಂದಿಸುವುದಾಗಿತ್ತು. ಕನ್ನಡ ಸಂಸ್ಕೃತಿ ಚರಿತ್ರೆಯ ಹಳಮೆಯನ್ನು ಸಾಧಿಸುವುದು ಆ ಮೂಲಕ ಅಭಿಮಾನವನ್ನು ಮೂಡಿಸುವುದಾಗಿತ್ತು. ಸಂಸ್ಕೃತಿಯನ್ನು ಧರ್ಮದೊಡನೆ ಮುಖ್ಯವಾಗಿ ಗುರುತಿಸಿಕೊಂಡ ಸಂಶೋಧನೆಯು ಜೈನ, ಬೌದ್ಧ, ಮತ್ತು ವೀರಶೈವ ಧರ್ಮದ ನಂಬಿಕೆಗಳು ಮತ್ತು ಕಲಾತ್ಮಕ ಸೃಷ್ಟಿಗಳು ವೈದಿಕ ಹಿಂದೂ ಧರ್ಮದ ನಂಬಿಕೆಗಳು ಹಾಗೂ ತಾತ್ವಿಕ ನಿಲುವುಗಳಿಗಿಂತ ಭಿನ್ನವಾದವು ಎಂಬುದನ್ನು ಬಹುಮಟ್ಟಿಗೆ ಪ್ರತಿಬಿಂಬಿಸುತ್ತವೆ.

      ನಿರ್ದಿಷ್ಟ ಸಾಮಾಜಿಕವೊಂದರ ಅಧ್ಯಯನದಲ್ಲಿ ತೊಡಗುವಾತ ಆ ಸಂದರ್ಭದ ಪ್ರಚಲಿತ ಸಿದ್ಧಾಂತಗಳ ಮೂಲಕ ಪ್ರಭಾವಿತನಾಗಿರುವುದರಿಂದ ಅವನ ಅಧ್ಯಯನದ ಮಾಹಿತಿಯ ನೆಲೆ ಹಾಗೂ ವರ್ಣನೆಯ ನೆಲೆಗಳು ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವಿತವಾಗುತ್ತವೆ. ಈ ಅಧ್ಯಯನದ ನಿಯಮ ಒಂದು ರೂಪಿಕೆಯಾಗಿದ್ದು ಇದನ್ನು ಆ ಸಾಮಾಜಿಕ ಸಂದರ್ಭದ ಹಿನ್ನಲೆಯಲ್ಲಿಯೇ ಅರಿಯಬೇಕು. ಸತ್ಯವೆನ್ನುವುದು ಇರುವುದಿಲ್ಲ. ಅದನ್ನು ರೂಪಿಸಲಾಗುತ್ತದೆ. ಹೀಗೆ ರೂಪಿಸಿದ ಸತ್ಯವೇ ಇದ್ದ ಸತ್ಯವೆಂದು ತಿಳಿಯಲಾಗುತ್ತದೆ.
  ಕನ್ನಡ ಸಂಶೋಧನೆ 20ನೇ ಶತಮಾನದಲ್ಲಿ ಅನೇಕ ಮಹತ್ವದ ನೆಲೆಗಳನ್ನು ಪ್ರವೇಶಿಸಿದೆ. ಅದರಲ್ಲಿ ಶಾಸನ ಶಾಸ್ತ್ರವು ಒಂದು. ಶಾಸನಗಳನ್ನು ಪುರಾತತ್ವ ಶಾಸ್ತ್ರದ ಒಂದು ಅಂಗವಾಗಿ ಗುರುತಿಸಲಾಗಿದೆ. ಪ್ರಾರಂಭಕಾಲದಲ್ಲಿ ಶಾಸನಗಳನ್ನು ಕುರಿತಾದ ಅಧ್ಯಯನವು ಪುರಾತತ್ತ್ವ ಇಲಾಖೆಯಡಿಯಲ್ಲಿಯೇ ನಡೆದಿದ್ದು ಇತರೆ ಅಂಗಗಳಾದ ಭೂಶೋಧನೆ, ಉತ್ಖನನ, ನಾಣ್ಯಶಾಸ್ತ್ರ, ಸ್ಮಾರಕಗಳು, ವಾಸ್ತುಶಿಲ್ಪಗಳ ಜೊತೆಯಲ್ಲಿ ಇದನ್ನು ಗುರುತಿಸಿದ್ದಾರೆ.  ನಂತರದ ಕಾಲದಲ್ಲಿ ಪ್ರತ್ಯೇಕವಾಗಿಯೂ ನಡೆದಿರುವುದುಂಟು. ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆ ಇಲ್ಲ ಎನ್ನುವ ಭಾವನೆ ಪಾಶ್ಚಾತ್ಯ ವಿದ್ವಾಂಸರಲ್ಲಿ ಪ್ರಕಟವಾದ ಸಂದರ್ಭದಲ್ಲಿ, ಇತಿಹಾಸದ ಅಧಿಕೃತ ದಾಖಲೆಗಳಿಲ್ಲ ಎಂದು ಅಪಾದಿಸುತ್ತಿದ್ದ ಸಂದರ್ಭದಲ್ಲಿ ಪಾಶ್ಚಾತ್ಯ ವಿದ್ವಾಂಸರಿಗೆ ಶಾಸನಗಳು ನಂಬುವಂತಹ ಅಧಿಕೃತ ದಾಖಲೆಗಳೆನಿಸಿದ್ದವು. ಶಾಸನಗಳು ಪ್ರಮುಖವಾಗಿ ಒಂದು ಕಾಲದಲ್ಲಿ ನಡೆದ ವ್ಯವಹಾರಗಳ ಲಿಖಿತ ದಾಖಲೆಗಳು. ನಾಡಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವ ಮೂಲ ಸಾಮಗ್ರಿಗಳೆನಿಸಿವೆ.   ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ರಚಿಸುವಲ್ಲಿ ಉಳಿದವುಗಳಿಗಿಂತ ಶಾಸನಗಳು ಮಹತ್ತರವಾದವುಗಳು ಎನಿಸಲು ಮಹತ್ವದ ಕಾರಣಗಳೆಂದರೆ 1. ಬಹುತೇಕ ಶಾಸನಗಳು ತಾನು ಹುಟ್ಟಿದ ಕಾಲಕ್ಕೆ, ಸ್ಥಾನಕ್ಕೆ, ಪರಿಸರಕ್ಕೆ ಸಂಬಂಧ ಪಟ್ಟವುಗಳಾಗಿರುವುದು. 2. ಶಾಸನಗಳ ಪಾಠಗಳನ್ನು ಬರೆಯಲು ಆರಿಸಿಕೊಂಡ ಶಿಲೆಗಳು ಅಥವಾ ತಾಮ್ರ ಪಟಗಳ ಸ್ಥಳಗಳು ಸೀಮಿತವಾಗಿರುವುದು. 3. ಯಾವ ವಿಷಯವನ್ನು ದಾಖಲು ಮಾಡಲು ಶಾಸನಗಳನ್ನು ಬರೆಯ ಬೇಕಿತ್ತೋ ಆ ವಿಷಯದ ನಿರೂಪಣೆಗೆ ಲಭ್ಯವಿದ್ದ ಜಾಗದಲ್ಲಿ ನಿರ್ದಿಷ್ಟ ಜಾಗವನ್ನು ಮೀಸಲಿಡಬೇಕಾಗಿದ್ದಿತು. ಶಾಸನವು ಸಾಂದರ್ಭಿಕವಾದುದು, ನಿರ್ದೇಶಿತವಾದುದು, ತನ್ನ ಅಭಿವ್ಯಕ್ತಿಗೆ ಆಶ್ರಯಿಸಬೇಕಾದ ರೀತಿಯಿಂದ ನಿರ್ಬಂಧಿತವಾದುದಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸನಗಳಲ್ಲಿರುವ ಮಾಹಿತಿಯು ವಾಸ್ತವ ಸಂಗತಿಯಿಂದ ಕೂಡಿದ್ದು ಸತ್ಯದ ಸಂಗತಿಯತ್ತ ಸಾಗುವುದೆಂಬ ಆಶಯವನ್ನು ಕಲ್ಪಿಸಿಕೊಂಡ ಪಾಶ್ಚಾತ್ಯ ಮತ್ತು ದೇಶೀಯ ವಿದ್ವಾಂಸರಿಗೆ ಶಾಸನಗಳು ಮೊದಲ ವರ್ಗದ ಆಕರಗಳಾಗಿ ಕಂಡುಬಂದವು.ಸಾಹಿತ್ಯ-ಸಂಸ್ಕೃತಿಯ ಆಕರಗಳಾದ ಶಾಸನಗಳು ಮತ್ತು ಹಸ್ತಪ್ರತಿಗಳು ಅಂದಿನ ಕಾಲದ ಭಾಷೆಯ ಮುಖಾಂತರ ಸಾಮುದಾಯಿಕ, ಸಾಮಾಜಿಕ, ಸಾಂಸ್ಕೃತಿಕ ಮಾಹಿತಿಯನ್ನು ಗರ್ಭೀಕರಿಸಿ ಕೊಂಡಿವೆ.
    ಶಾಸನಗಳ ಸಾಂಸ್ಕೃತಿಕ ಸಂಶೋಧನೆ 20ನೇ ಶತಮಾನದ ಮಧ್ಯಭಾಗದಲ್ಲಿ ಕನ್ನಡ ನಾಡಿನಲ್ಲಿ ವ್ಯವಸ್ಥಿತವಾಗಿ ಕಾಣಿಸಿಕೊಂಡ ಶೈಕ್ಷಣಿಕಶಿಸ್ತು. ನಾಡಿನ ಸಾಂಸ್ಕೃತಿಕ ಚರಿತ್ರೆ ಕುರಿತು ಶಾಸನ ಮತ್ತು ಪೂರಕ ಆಕರಗಳ ಮೂಲಕ ನಡೆದಿರುವ ಅಧ್ಯಯನವು ಸಂಶೋಧನಾ ಕ್ಷೇತ್ರದ ಬೇರೆ ಬೇರೆ ಆಯಾಮಗಳನ್ನು ಗುರುತಿಸಲು ನೆರವಾಗಿದೆ. ಸಾಹಿತ್ಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಶಾಸನಗಳನ್ನು ಕುರಿತು ಅಧ್ಯಯನ ಕೈಗೊಂಡ ಮೇಲೆ ಶಾಸನಗಳನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಉಂಟಾಯಿತು. ಅಲ್ಲಿಯವರೆಗೂ ಐತಿಹಾಸಿಕ ದಾಖಲೆಗಳ ಆಕರಗಳು ಎಂದು ಭಾವಿಸಿದ್ದ ಶಾಸನಗಳನ್ನು ಸಾಂಸ್ಕೃತಿಕ ಹಿನ್ನಲೆಯಲ್ಲಿ ನೋಡುವ ಪರಿಕಲ್ಪನೆ ಉಂಟಾಯಿತು. ಶಾಸನಗಳಂತಹ ಆಕರಗಳಿಂದ ಗ್ರಹಿಸಿದ ಸಾಂದರ್ಭಿಕ ನೆಲೆಗಳು ಅಭಿವ್ಯಕ್ತವಾಗುವ ಊಹಾ ಸಾಧ್ಯತೆಗಳನ್ನು ವಿಭಿನ್ನ ನೆಲೆಗಟ್ಟಿನಲ್ಲಿ ಪೂರಕ ಶಿಸ್ತುಗಳೊಂದಿಗೆ ಅಧ್ಯಯನ ಮಾಡಲು ಪ್ರಯತ್ನಿಸಿದರು. ರಾಜಮನೆತನಗಳ ಇತಿಹಾಸವು ನಾಡಿನ ಇತಿಹಾಸ ರಚನೆಗೆ ಅಸ್ತಿಪಂಜರದಂತೆ ಎಂದು ಭಾವಿಸಿ ಈ ಅಸ್ತಿಪಂಜರಕ್ಕೆ ರಕ್ತಮಾಂಸಗಳನ್ನು ತುಂಬುವುದು ನಾಡಿನ ಜನತೆಯನ್ನು ಕುರಿತಾದ ಸಾಂಸ್ಕೃತಿಕ ಅಧ್ಯಯನ ಎಂದು ಮನಗಂಡರು.
  ಕನ್ನಡ ನಾಡಿನಲ್ಲಿ ಪ್ರಕಟಗೊಂಡ ಶಾಸನಗಳನ್ನು ವಸ್ತು ವಿಷಯಕ್ಕನುಗುಣವಾಗಿ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಅಧ್ಯಯನಗಳನ್ನು ನಡೆಸಿದ್ದಾರೆ. ಆರಂಭಕಾಲದಲ್ಲಿ ಶಾಸನಗಳನ್ನು ಸರ್ವೇಕ್ಷಣೆ ಮಾಡಿ ಸಂಪಾದಿಸಿ ಪ್ರಕಟಿಸಿದ ವಿದ್ವಾಂಸರಲ್ಲಿ ಕೆಲವರಾದರೂ ಶಾಸನಗಳನ್ನು ಆಧರಿಸಿ ಇತಿಹಾಸವನ್ನು ರೂಪಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಬಿ.ಎಲ್.ರೈಸ್‍ರ Mysore and Coorg from Inscriptions, Mysore Gazatteer, eÉ.J¥sï.¦èÃmïgÀ Dynasties of the Canerese Inscriptions, ªÉÆgɸï CªÀgÀ Kadamba kulaUÀ¼À£ÀÄß   ಹೆಸರಿಸಬಹುದು. ಆರಂಭದಲ್ಲಿ ಶಾಸನಗಳನ್ನು ಕುರಿತಾದ ಅಧ್ಯಯನ ಕೇವಲ ಇತಿಹಾಸಕ್ಕೆ ಮಾತ್ರ ಸೀಮಿತವಾಗಿತ್ತು. ಇತಿಹಾಸ ಅಧ್ಯಯನ ಕೇವಲ ರಾಜರ ಮತ್ತು ರಾಜಮನೆತನದ ಘಟನೆಗಳಿಗೆ ಸಂಬಂಧ ಪಟ್ಟ ದಾಖಲೆಗಳೆಂದು ಗ್ರಹಿಸಲಾಯಿತು. ಚರಿತ್ರೆಯ ವಿಷಯವು ರಾಜರ ಹೋರಾಟ, ಗೆಲುವು ಸೋಲುಗಳನ್ನು ವಿವರಿಸುವ ಕೆಲಸಕ್ಕೆ ಮಾತ್ರ ಸೀಮಿತವಾಯಿತು. ಹಿಂದಿನ ರಾಜರು ಆರ್ಥಿಕ, ಸಾಮಾಜಿಕ, ಜೀವನವನ್ನು ರೂಪಿಸುವ ಶಕ್ತಿಯಾಗಿದ್ದರು ಎನ್ನುವ ಪರಿಕಲ್ಪನೆಯಿಂದ ಚರಿತ್ರೆಯನ್ನು ರೂಪಿಸಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಚರಿತ್ರೆಯ ಅಧ್ಯಯನದಲ್ಲಿ ಶಾಸನಗಳನ್ನು ಮೂಲ ಸಾಮಗ್ರಿಯಾಗಿ ಗ್ರಹಿಸಿದ ಚರಿತ್ರೆಕಾರರು ಅವುಗಳನ್ನು ಪ್ರತಿಯೊಂದು ರಾಜ ಅಥವಾ ರಾಜಮನೆತನದ ವ್ಯಕ್ತಿಗಳ ವೈಯಕ್ತಿಕ ವಿವರವನ್ನು ಮುಖ್ಯವಾಗಿ ವಿವರಿಸುವಲ್ಲಿ ತದನಂತರ ಅನುಬಂಧದೋಪಾದಿಯಲ್ಲಿ ರಾಜ ತಾನು ಕಟ್ಟಿಸಿದ ದೇವಾಲಯ, ಬಿಟ್ಟ ದತ್ತಿ, ಕವಿಗಳಿಗೆ ಕೊಟ್ಟ ಆಶ್ರಯ ಇತ್ಯಾದಿ ಬಿಡಿ ಸಂಗತಿಗಳನ್ನು ಆ ಕಾಲದ ಪ್ರಮುಖ ಆರ್ಥಿಕ, ಸಾಮಾಜಿಕ ಕಾರ್ಯಗಳೆಂಬಂತೆ ಗುರುತಿಸುವಷ್ಟಕ್ಕೆ ಸೀಮಿತವಾಗಿ ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಲ್ಲೆಲ್ಲಾ ಶಾಸನಗಳ ವಿಷಯಗಳನ್ನು ಇತಿಹಾಸದ ವರದಿಯಂತೆ ಬಳಸಿಕೊಳ್ಳಲಾಗಿದೆ. ಶಾಸನಗಳಲ್ಲಿ ವ್ಯಕ್ತಗೊಂಡ ಅರಸ ಅಥವಾ ಇನ್ನಿತರ ಕಾರ್ಯಗಳೇ ಪ್ರಮುಖ ಎನ್ನುವ ಭಾವನೆಯನ್ನು ತಾಳಿದ ಹಾಗೆ ಕಂಡುಬರುತ್ತದೆ. ಆರಂಭಕಾಲದ ಚರಿತ್ರೆಕಾರರು ಶಾಸನಗಳನ್ನು ಮೊದಲ ವರ್ಗದ ಆಕರಗಳ ನಿಖರವಾದ ದಾಖಲೆಗಳು ಎಂದು ಪರಿಭಾವಿಸಿದ್ದರಿಂದ ಶಾಸನಗಳು ಕೊಡುವ ಎಲ್ಲಾ ಮಾಹಿತಿಯು ಇವರಿಗೆ ಅತಿಮುಖ್ಯ ಎನಿಸಿಬಿಟ್ಟಿತು. ಶಾಸನಗಳು ವೈಭವೀಕರಿಸುವ ಸಂಗತಿಗಳನ್ನು ಸಂದೇಹಾಸ್ಪದವಾಗಿ ಪರಿಶೀಲಿಸದೆ ಅಧಿಕೃತ ದಾಖಲೆಗಳೆಂದು ಕಣ್ಣುಮುಚ್ಚಿಕೊಂಡು ಸ್ವೀಕರಿಸಿದರು. ಈ ಅಂಶವನ್ನು ಬಿ.ಎಲ್.ರೈಸ್‍ರ Mysore and Coorg from Inscriptions  ಪುಸ್ತಕದಲ್ಲಿ ಗ್ರಹಿಸಬಹುದು. ಪೌರಾಣಿಕ, ಧಾರ್ಮಿಕ, ಪರಿಭಾಷೆಯ ಶಾಸನದ ವಿಷಯವನ್ನು ಅಧಿಕೃತ ಎಂದು ಪರಿಭಾವಿಸಿದರು. ಶಾಸನವಲ್ಲದ ಉಳಿದ ಆಕರಗಳನ್ನು ಕಲ್ಪಿತ, ಅಲೌಕಿಕ ಎಂದು ಪರಿಭಾವಿಸಿ ಗಣನೆಗೆ ತೆಗೆದುಕೊಳ್ಳದ ಕಾರಣ ಈ ವಿಷಯದಲ್ಲಿ ಅವುಗಳನ್ನು ಪೂರಕ ಆಕರಗಳಾಗಿ ಬಳಸುವ ಪ್ರಯತ್ನ ಮಾಡಲಿಲ್ಲ. ಶಾಸನಗಳಂತಹ ಆಕರಗಳ ಸಾಂದರ್ಭಿಕ ನೆಲೆಗಳಿಂದ ಅಭಿವ್ಯಕ್ತವಾಗುವ ಊಹಾಸಾಧ್ಯತೆಗಳನ್ನು ಪೂರಕ ಆಕರಗಳೊಂದಿಗೆ ಹೋಲಿಸುವ ಪ್ರಯತ್ನ ಶಾಸನಗಳನ್ನಾಧರಿಸಿದ  ಆರಂಭ ಕಾಲದ ಚರಿತ್ರೆಯ ಅಧ್ಯಯನದಲ್ಲಿ ಗುರುತಿಸಲು ಸಾಧ್ಯವಿಲ್ಲ.
      ಶಾಸನಗಳ ಸಾಂಸ್ಕೃತಿಕ ಅಧ್ಯಯನವು ಅನ್ವೇಷಣೆ ಮತ್ತು ಪ್ರಕಟನೆಯನ್ನು ಮೀರಿದ್ದು. ಶಾಸನಗಳಲ್ಲಿ ಹುದುಗಿರುವ ಸಂಗತಿಯನ್ನು ಅದುವರೆವಿಗೂ ನಡೆದಿರುವ ಅಧ್ಯಯನದ ಬೆಳಕಿನಲ್ಲಿ ಪೂರಕ ಆಕರಗಳೊಂದಿಗೆ ವಿಶ್ಲೇಷಿಸುವುದು, ಜ್ಞಾನದಿಗಂತವನ್ನು ವಿಸ್ತರಿಸುವಲ್ಲಿ ಸಾಂಸ್ಕೃತಿಕ ಅಧ್ಯಯನ ಮಹತ್ತರ ಪಾತ್ರ ಪಡೆದಿದೆ. ಶಾಸನಗಳನ್ನಾಧರಿಸಿದ ಸಾಂಸ್ಕೃತಿಕ ಸಂಶೋಧನಾ ಬರಹಗಳಲ್ಲಿ ಶಾಸನಗಳು ಹೇಳುವ ಬಿಡಿ ಘಟನೆಗಳೇ ಇತಿಹಾಸವೆನ್ನುವ ಹಳೆಯ ವಿಧಾನಕ್ಕಿಂತ ಮೂಲ ಆಕರಗಳು ತಮ್ಮ ಆಂತರಿಕ ಪ್ರಮಾಣಗಳ ಮೂಲಕ ಬಾಹ್ಯ ವಾತಾವರಣವೊಂದರ ಗ್ರಹಿಕೆಗೆ ಅವಕಾಶ ಕಲ್ಪಿಸಿಕೊಡುವ ಸಂಸ್ಕೃತಿಯ ವಿನ್ಯಾಸಗಳು ಎಂಬ ನಿಲುವು ಗ್ರಹಿತವಾಗಿದೆ. ಸಾಂಸ್ಕೃತಿಕ ಸಂಶೋಧನಾ ಅಧ್ಯಯನದಲ್ಲಿ ಶಾಸನಗಳು ಒದಗಿಸುವ ಮಾಹಿತಿಯನ್ನು ವಿಶ್ಲೇಷಿಸುವಾಗ ಆ ವಿಷಯದಲ್ಲಿ ಇದುವರೆಗೂ ಬೇರೆ ಬೇರೆ ಶಿಸ್ತುಗಳಲ್ಲಿ ದೊರಕುವ ಸಂಗತಿಯನ್ನು ಪರೀಕ್ಷಿಸಿ ಅವುಗಳು ತಮ್ಮ ಅಧ್ಯಯನದ ಸಂದರ್ಭದಲ್ಲಿ ನೀಡುವ ಆಧಾರಗಳ ಮೇಲೆ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಈ ಅಧ್ಯಯನದಲ್ಲಿ ವ್ಯಕ್ತವಾಗುವ ಸಂಗತಿಗಳನ್ನು ಖಚಿತವಾಗಿ ಮತ್ತು ಸ್ವಲ್ಪ ವಿವರಣಾತ್ಮಕವಾಗಿಯೂ ದಾಖಲಿಸುವುದು. ಶಾಸನಗಳ ಸಾಂಸ್ಕೃತಿಕ ಅಧ್ಯಯನದ ವಸ್ತು ಕ್ಷೇತ್ರಕಾರ್ಯವನ್ನು ಕೆಲವೊಮ್ಮೆ ಅಪೇಕ್ಷಿಸುತ್ತದೆ.
      ಶಾಸನಗಳ ಸಾಂಸ್ಕೃತಿಕ ಅಧ್ಯಯನವು ವ್ಯಾಖ್ಯಾನನಿಷ್ಠ ಶೋಧಕ್ಕೆ ಮಾದರಿಯಾಗಿದೆ. ಘಟನಾ ನಿಷ್ಠ ಶೋಧದಲ್ಲಿ ಹೊಸ ಆಕರ ಸಾಮಗ್ರಿಗಳು ಪ್ರಮುಖ ಎಂದೆನಿಸಿದರೆ ಈ ಶೋಧದಲ್ಲಿ ಶಾಸನಗಳು ಒದಗಿಸುವ ಮಾಹಿತಿಯನ್ನು ಬೇರೆ ಬೇರೆ ನಿಟ್ಟುಗಳಿಂದ ನೋಡಿ ಈ ವರೆಗಿನ ಶೋಧ ಮತ್ತು ಆಶಯಕ್ಕಿಂತ ವಿಭಿನ್ನವಾದ ಫಲಿತಾಂಶಗಳನ್ನು ನೀಡುವುದಾಗಿದೆ.
ನಿದರ್ಶನಕ್ಕೆ: ಎಂ.ಚಿದಾನಂದಮೂರ್ತಿ ಅವರ ಸಂಶೋಧನಾ ಲೇಖನಗಳು.
ಈ ಅಧ್ಯಯನ ಕ್ರಮದಲ್ಲಿ ಶಾಸನಗಳೆಂಬ ವೈವಿಧ್ಯಪೂರ್ಣ ಸಾಮಗ್ರಿಯನ್ನು ಸಂಸ್ಕೃತಿಯ ಅನ್ವೇಷಣೆಗಾಗಿ ಸಂಯೋಜಿಸುವುದು. ತದನಂತರ ಅಲ್ಲಿ ವ್ಯಕ್ತವಾಗಿರುವ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಗ್ರಹಿಸುವುದು. ಈ ಸಂಶೋಧನೆಯಲ್ಲಿ ಏಕಕಾಲಕ್ಕೆ ಘಟನೆಗಳ ಶೋಧ ಹಾಗೂ ಅವುಗಳ ಹಿಂದಿರುವ ಸಾಂಸ್ಕೃತಿಕ ಶೋಧ ಎರಡು ಸಾಧ್ಯವಾಗುತ್ತದೆ. ಇದು ಮೊದಲಿಗೆ ಪ್ರಾರಂಭಗೊಂಡಿದ್ದು ಚಿದಾನಂದಮೂರ್ತಿ ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಮೂಲಕ. ಸಂಸ್ಕೃತಿ ಶೋಧ ಸಹಜವಾಗಿಯೇ ಮೌಲ್ಯ ಶೋಧವಾಗಿದೆ. ಶಾಸನಗಳ ಸಾಂಸ್ಕೃತಿಕ ಅಧ್ಯಯನವು ರಾಜಕೀಯೇತರ ವಿಷಯಗಳನ್ನು ಶೋಧಿಸುವ, ವಿಶ್ಲೇಷಿಸುವ ಅಂಶಗಳನ್ನು ಒಳಗೊಂಡಿದೆ. ಈ ಸಂಶೋಧನೆಯು ಇಲ್ಲಿಯವರೆಗೂ ಇದ್ದ ಇತಿಹಾಸದ ಸಂಶೋಧನೆಗಿಂತ ಭಿನ್ನವಾದ ಆಯಾಮವನ್ನು ಶಾಸನ ಕ್ಷೇತ್ರಕ್ಕೆ ದೊರೆಕಿಸಿ ಕೊಟ್ಟಿತು. ಅನೇಕ ಹೊಸ ಅಂಶಗಳು ಇದರಿಂದಾಗಿ ಬೆಳಕಿಗೆ ಬಂದವು. ಕರ್ನಾಟಕದ ವೀರಗಲ್ಲುಗಳು, ಕನ್ನಡ ಶಾಸನಗಳ ಶಿಲ್ಪ, ಕರ್ನಾಟಕದ ಸ್ತ್ರೀ ಸಮಾಜ, ಕರ್ನಾಟಕದಲ್ಲಿ ಸತಿಪದ್ಧತಿ, ಕರ್ನಾಟಕದ ವರ್ತಕರು,ಐಹೊಳೆ ಸಂಸ್ಕೃತಿ ಮತ್ತು ಕಲೆ ಇತ್ಯಾದಿ ವಿಷಯಗಳು ಕುರಿತ ಸಾಂಸ್ಕೃತಿಕ ಅಧ್ಯಯನ  ಮಾಡುವಂತಾಯಿತು.
      ಶಾಸನಗಳ ಸಾಂಸ್ಕೃತಿಕ ಅಧ್ಯಯನ ಪದ್ಧತಿಯಲ್ಲಿ ಸಂಸ್ಕೃತಿ ಶೋಧನೆ ಮತ್ತು ಸಮಾಜ ಮುಖ್ಯವಾಗುತ್ತದೆ. ಜೊತೆಗೆ ಸಮಾಜೋಧಾರ್ಮಿಕ ಅಂಶಗಳು ಮುಖ್ಯವಾಗುತ್ತವೆ.ಸಾಂಸ್ಕೃತಿಕ ಅಂಶಗಳನ್ನು ಪ್ರತಿಬಿಂಬಿಸುವ ಸಾಮಾಜಿಕ ಜೀವನ,ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದಶಿಕ್ಷಣ,ದೇವಾಲಯ,ಸ್ತ್ರೀ ಪದ್ಧತಿ ಮುಂತಾದ ವಿಷಯಗಳು ಅಧ್ಯಯನಕ್ಕೊಳ ಪಡುತ್ತವೆ. ಸಾಂಸ್ಕೃತಿಕ ಅಧ್ಯಯನ ಹುಟ್ಟುಹಾಕಿದ ಹೊಸ ಮಾರ್ಗದಿಂದಾಗಿ ಶಾಸನಗಳ ಅಧ್ಯಯನದಲ್ಲಿ ವಿಭಿನ್ನ ನೆಲೆಯ ಅಧ್ಯಯನ ಪ್ರಾರಂಭವಾದ ಹಾಗೆ ಸಾಹಿತ್ಯ ಕೃತಿಗಳ ಸಾಹಿತ್ಯೇತರ ಅಧ್ಯಯನದ ಕಡೆಗೂ ಹೊರಳಿತು. ಯಾವುದೇ ಕೃತಿ ಸಾಹಿತ್ಯದೊಂದಿಗೆ ಸಾಂಸ್ಕೃತಿಕವಾಗಿಯೂ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು. ಸಾಂಸ್ಕೃತಿಕ ಅಧ್ಯಯನದಲ್ಲಿ ಗಮನಿಸಬೇಕಾದ್ದುದು ಅಂತರಶಿಸ್ತೀಯತೆ, ಒಂದಕ್ಕಿಂತ ಹೆಚ್ಚು ವಿಷಯಗಳ ವಿಷಯಶಾಖೆಗಳ ವ್ಯಾಸಂಗವನ್ನು ಪರಸ್ಪರ ಪೂರಕವಾಗಿ ಬಳಸಿಕೊಂಡು ನಡೆಸುವ ಅಭ್ಯಾಸವೇ ಅಂತರ್ ಶಿಸ್ತೀಯ ಅಧ್ಯಯನ. ಅಂತರ್ ಶಿಸ್ತೀಯ ಅಧ್ಯಯನ ಕನ್ನಡ ಶಾಸನಗಳ ಅಧ್ಯಯನದಲ್ಲಿಯೇ ಮೊದಲಿಗೆ ನಡೆದಿರುವುದು. ಆರಂಭದಲ್ಲಿ ಆರ್.ನರಸಿಂಹಾಚಾರ್ಯರು ಶಾಸನಗಳ ಅಧ್ಯಯನದಲ್ಲಿ ಘಟನಾ ಶೋಧಕ್ಕೆ ಈ ಪದ್ಧತಿಯನ್ನು ಬಳಸಿಕೊಂಡಿದ್ದರು. ನಂತರ ಚಿದಾನಂದಮೂರ್ತಿ ಅವರು ಈ ಪದ್ಧತಿಯನ್ನು ಸಮರ್ಪಕವಾಗಿ ಶಾಸನಗಳ ಅಧ್ಯಯನದಲ್ಲಿ ಬಳಸಿಕೊಂಡರು. ಶಾಸನೇತರ ಕ್ಷೇತ್ರಗಳನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಸಂಶೋಧನೆಗೆ ವೈವಿದ್ಯ ಲಕ್ಷಣವನ್ನು ಒದಗಿಸುವ ಕೆಲಸ ಮಾಡಿದರು. ಯಾವುದೇ ವಿಷಯ ಯಾವುದೇ ಅಧ್ಯಯನಕ್ಕೆ ಅಪ್ರಯೋಜಕವಲ್ಲವೆಂಬಂಥ ದೃಷ್ಟಿ ಸಂಶೋಧನಾ ಕ್ಷೇತ್ರದಲ್ಲಿ ಮೂಡಿತು. ಶಾಸನಗಳಲ್ಲಿಯೇ ಉಪೇಕ್ಷಿತವಾಗಿದ್ದ ಅನೇಕ ವಿಷಯಗಳಿಗೆ ಪ್ರಾಮುಖ್ಯತೆ ಬಂದಿತು. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನವು ಶಾಸನವನ್ನು ಸಾಹಿತ್ಯದಿಂದ, ಸಾಹಿತ್ಯವನ್ನು ಶಾಸನದಿಂದ ಸಮರ್ಥಿಸಿಕೊಳ್ಳುತ್ತ ನಡೆದಿದೆ.
      ಈ ಅಧ್ಯಯನದಲ್ಲಿ ದಾಖಲೆಯಾಧಾರಿತ ಸಂಶೋಧನೆ ಹಾಗೂ ಕ್ಷೇತ್ರಕಾರ್ಯ ಸಂಶೋಧನೆ ಎರಡು ವಿಧಾನಗಳನ್ನು ಅನುಸರಿಸಲಾಗುತ್ತದೆ. ಚಿದಾನಂದಮೂರ್ತಿ ಅವರ ಪಂಪ ಕವಿ ಮತ್ತು ಮೌಲ್ಯ ಪ್ರಸಾರ ಲೇಖನದಲ್ಲಿ ಶಾಸನಗಳನ್ನು ಆಧರಿಸಿ ಪಂಪಭಾರತ ಹಾಗೂ ಪಂಪದ ಕಾಲದ ಮೌಲ್ಯಗಳನ್ನು ವಿವೇಚಿಸಿದ್ದಾರೆ. ಪಂಪಕವಿಯು ಹೇಳುವ ನನ್ನಿ, ಬೀರ, ಚಾಗ, ಶೌಚ ಮುಂತಾದ ಮೌಲ್ಯಗಳು ಆತನ ಕಾಲದ ಜನಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದ್ದವು ಎಂಬುದನ್ನು ಆತನ ಕಾಲ ಹಾಗೂ ನಂತರ ಕಾಲದ ಶಾಸನಗಳನ್ನಾಧರಿಸಿ ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಪ್ರಾಚೀನಕಾಲದ ಸಾಂಸ್ಕೃತಿಕ ವಿಚಾರಗಳ ವಿಶ್ಲೇಷಣೆ ಇದೆ. ಈ ವಿಧಾನ ಒಂದು ರೀತಿಯಲ್ಲಿ ಸಾಹಿತ್ಯದ ಶಿಸ್ತಿಗೆ ಇತಿಹಾಸದ ಶಿಸ್ತನ್ನು ಅಳವಡಿಸಿ ಪರಿಶೀಲಿಸುವ ಪ್ರಯತ್ನವಾಗಿದೆ. ಇಲ್ಲಿ ಅಪಾರವಾದ ಮಾಹಿತಿಯನ್ನು ಕಾವ್ಯ ಮತ್ತು ಶಾಸನಗಳಿಂದ ಸಂಗ್ರಹಿಸಲಾಗಿದೆ. ದಾಖಲೆಗಳನ್ನು ಕಾಲಾನುಕ್ರಮದಲ್ಲಿ ಸಂಕಲಿಸಿ, ವಿಷಯಾನುಗುಣವಾಗಿ ಸಂಯೋಜಿಸಿ ಪ್ರತಿಭಾ ಬಲದಿಂದ ವಿಶ್ಲೇಷಿಸಿ ಸಂಶೋಧನಾ ಫಲಿತಗಳನ್ನು ಈ ವಿಧಾನದ ಮೂಲಕ ಪ್ರಕಟಿಸಿರುವುದನ್ನು ಕಾಣಬಹುದು. ಈ ವಿಧಾನದಲ್ಲಿ ಕ್ಷೇತ್ರಕಾರ್ಯವೂ ಕೆಲವೊಮ್ಮೆ ಮುಖ್ಯ ಎನಿಸುತ್ತದೆ. ಕ್ಷೇತ್ರಕಾರ್ಯದಿಂದ ವ್ಯಕ್ತಗೊಳ್ಳುವ ಮಾಹಿತಿಗಳು ಶಾಸನಗಳಲ್ಲಿಯ ವಿಷಯವನ್ನು ಸ್ಥಿರೀಕರಿಸುತ್ತದೆ. ಜಿನವಲ್ಲಭನ ಕುರಿಕ್ಯಾಲ ಶಾಸನದಲ್ಲಿ ಪ್ರಸ್ತಾಪಿತವಾದ ಪಂಪ ಕವಿಗೆ ಸಂಬಂಧಿಸಿದ ವಿಷಯದಲ್ಲಿ, ಅಂದರೆ `ಅರಿಕೇಸರಿಯು ಪಂಪ ಕವಿಗೆ ನೀಡಿದ ಧರ್ಮಪುರದ ಅಗ್ರಹಾರದ ಕುರುಹುಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಶೋಧಕರು' ಗುರುತಿಸಿದ್ದನ್ನು ಇಲ್ಲಿ ಉದಾಹರಿಸಬಹುದು.
      ಶಾಸನಗಳು ಜನಜೀವನದಿಂದ ಮೂಡಿ ಬಂದಿವೆಯಾದ್ದರಿಂದ ಅನೇಕ ಸಾಮಾಜಿಕ ಅಂಶಗಳು ಶಾಸನಗಳಲ್ಲಿ ದೊರೆಯುತ್ತವೆ. ಸಾಂಸ್ಕೃತಿಕ ಅಧ್ಯಯನದಿಂದಾಗಿಯೇ ಶಾಸನಗಳು ಇಂದು ಗಣ್ಯಶಿಸ್ತಿನ ವಿಷಯವಾಗಿವೆ. ಸಾಂಸ್ಕೃತಿಕ ಅಧ್ಯಯನ ಇಂದು ಸ್ನಾತಕೋತ್ತರ ಪದವಿಗಳ ತರಗತಿಗಳಲ್ಲಿ ಪಠ್ಯಕ್ರಮದಲ್ಲಿ ಸೇರಿದೆ. ಇದು ಆ ಕ್ಷೇತ್ರದ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಅಧ್ಯಯನದಲ್ಲಿ ತಾರ್ಕಿಕತೆ, ಪ್ರಾಮಾಣಿಕತೆ, ಅಧ್ಯಯನದ ಶಿಸ್ತು, ಅರ್ಥೈಸುವಲ್ಲಿನ ವಾಸ್ತವಿಕ ಹಾಗೂ ವೈಜ್ಞಾನಿಕ ಮನೋಭಾವ, ಕಾಲಾನುಕ್ರಮದಲ್ಲಿ ಬದಲಾದ ಮೌಲ್ಯಗಳನ್ನು ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವ ಬಗೆ ಇವು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.
      ಎಂ.ಚಿದಾನಂದಮೂರ್ತಿ ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಮೂಲಕ ಈ ರೀತಿಯ ಅಧ್ಯಯನ ಶಾಸನಗಳ ಕುರಿತ ಅಧ್ಯಯನದಲ್ಲಿ ಪ್ರಾರಂಭವಾಯಿತು. ಕ್ರಿ.ಶ.450ರಿಂದ 1150ರ ವರೆಗಿನ ಶಾಸನಗಳನ್ನು ಇಟ್ಟುಕೊಂಡು ಸಾಂಸ್ಕೃತಿಕ ಅಧ್ಯಯನ ಮಾಡಿರುವುದನ್ನು ಗುರುತಿಸಬಹುದು. ಈ ಅವಧಿಯಲ್ಲಿ ಕನ್ನಡಿಗರು ಹೇಗೆ ಬಾಳಿದರು, ಅವರ ಸಂಸ್ಕೃತಿಯ ವೈಶಿಷ್ಟ್ಯವೇನು ಎಂಬುದರ ಗ್ರಹಿಕೆ ವ್ಯಕ್ತವಾಗಿದೆ. ಸಂಸ್ಕೃತಿಯ ವಿವಿಧ ಮಜಲುಗಳಾದ ಧಾರ್ಮಿಕ ವಿವರ, ದೇವಾಲಯ, ವಿದ್ಯಾಭ್ಯಾಸ, ಯುದ್ಧಪದ್ಧತಿ, ವೀರಜೀವನ, ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳ ಕುರಿತ ವಿಶ್ಲೇಷಣೆಯನ್ನಾಧರಿಸಿ ಪೂರಕ ಆಕರಗಳೊಂದಿಗೆ ಅಧ್ಯಯನ ಮಾಡಲಾಗಿದೆ. ಇವರ ಶಾಸನಗಳನ್ನು ಕುರಿತ ವಿಭಿನ್ನ ನೋಟದ ಅಧ್ಯಯನ ನಂತರದ ಸಂಶೋಧಕರಿಗೆ ಸಂಸ್ಕೃತಿಯ ವಿವಿಧ ಅಂಶಗಳನ್ನು ಪ್ರತ್ಯೇಕವಾಗಿ ಕೈಗೊಳ್ಳಲು ಅನುಕರಣೀಯವಾಗಿದೆ. ಈ ಅಧ್ಯಯನದಲ್ಲಿ ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಸ್ಥೂಲವಾಗಿ ಪರಿಚಯಿಸುತ್ತವೆ. ಇಲ್ಲಿ ಉಪಲಬ್ಧವಿರುವ ಎಲ್ಲಾ ಶಾಸನಗಳಲ್ಲದೆ ಅವುಗಳಿಗೆ ಪೂರಕವಾಗಿ ಆ ಕಾಲಾವಧಿಯ ಕಾವ್ಯ ಮತ್ತು ಇತರೆ ಅಂಶಗಳನ್ನು ಅನ್ವಯಿಸಿಕೊಂಡು ವಿಶ್ಲೇಷಿಸಿದ್ದಾರೆ. ಎಚ್ಚರಿಕೆಯಿಂದ ಪರಿಶೀಲಿಸಿ ಆ ಮೂಲಕ ಪ್ರಾಚೀನ ಕರ್ನಾಟಕದ ಚರಿತ್ರೆ ಮತ್ತು ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಪ್ರಾಚೀನ ಕನ್ನಡಿಗರು ಬದುಕಿದ ರೀತಿ ಅವರ ಧರ್ಮಗಳು, ಆರ್ಥಿಕ ವ್ಯವಸ್ಥೆ, ಜಾತಿನೀತಿಗಳು, ಮೌಲ್ಯಗಳು ಒಟ್ಟಿನಲ್ಲಿ ಅವರ ಜೀವನ ವಿಧಾನ ಇವುಗಳನ್ನು ನಿರೂಪಿಸುವ ಆಶಯವನ್ನು ಈ ಸಾಂಸ್ಕೃತಿಕ ಅಧ್ಯಯನದಲ್ಲಿ ಗುರುತಿಸಬಹುದಾಗಿದೆ. ಈ ಅಧ್ಯಯನ ವಿಧಾನವು ಜನಜೀವನ ಅಥವಾ ಸಮುದಾಯದ ಚಿತ್ರಣವು ಶಾಸನಗಳಲ್ಲಿ ಹುದುಗಿದೆ ಎಂಬುದರ ಕಡೆಗೆ ಗಮನ ಸೆಳೆದಿದೆ.
      ಶಾಸನಗಳಲ್ಲಿ ವ್ಯಕ್ತಗೊಂಡಿರುವ ಸಂಗತಿಗಳನ್ನು ಜನಸಮುದಾಯಗಳ ಸಾಂಸ್ಕೃತಿಕ ಲಕ್ಷಣಗಳ ಹಿನ್ನಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಈ ವಿಧಾನದಲ್ಲಿ ಮೂಲ ಆಕರಗಳೊಂದಿಗೆ ಅಲಕ್ಷಿಸಲ್ಪಟ್ಟ ಹಾಗೂ ಅನುಷಂಗಿಕ ಆಕರಗಳು ಹಲವೆಡೆ ಬಳಸಲ್ಪಡುತ್ತವೆ. ಮಾಹಿತಿ ಸಂಗ್ರಹಣೆ, ವರ್ಗೀಕರಣ ವಿಶ್ಲೇಷಣೆ, ನಿರೂಪಣೆ ಮೊದಲಾದ ಸಂಶೋಧನಾ ಸಂಗತಿಗಳ ಅಳವಡಿಕೆ ಪ್ರಮುಖವಾಗಿರುತ್ತದೆ. ವಿವಿಧ ಚಾರಿತ್ರಿಕ ಕಾಲಘಟ್ಟಗಳಂತೆ ಸಾಂಸ್ಕೃತಿಕ ವಿವರಗಳು ಅನೇಕ ಕಾಲ-ಮಿತಿಯ ವ್ಯಾಪ್ತಿಗೊಳಪಟ್ಟಿರುತ್ತವೆ. ಶಾಸನಗಳು ನೀಡುವ ಮಾಹಿತಿಯು ಸಾಂಸ್ಕೃತಿಕ ಚರಿತ್ರೆಯನ್ನು ಮರುಜೋಡಣೆ ಮಾಡುವ ಕಾರ್ಯವಾಗಿದೆ. ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ತೊಡಗುವವರಿಗೆ ಆಯಾ ಭಾಷೆಯ ಸಾಹಿತ್ಯದ ಪರಿಚಯವಿರಬೇಕು. ಸಾಂಸ್ಕೃತಿಕ ಇತಿಹಾಸದ ಸಂಶೋಧಕರಿಗೆ ಸಮಕಾಲೀನ ಸಾಹಿತ್ಯ ಕೃತಿಗಳು ನೀಡುವ ಮಾಹಿತಿಗಳು ಉಪಯುಕ್ತವಾಗಿರುತ್ತವೆ.
      ಈ ಅಧ್ಯಯನದಲ್ಲಿ ಸಂಸ್ಕೃತಿಯನ್ನು ಚರಿತ್ರೆಯ ಸಂಬಂಧಿ ಎಂದು ಗ್ರಹಿಸಲಾಗುತ್ತದೆ. ಚರಿತ್ರೆಯನ್ನು ಗತಕಾಲಕ್ಕೆ ಸಂಬಂಧಿಸಿದೆಂದು ನಂಬಲಾಗುತ್ತದೆ. ಈ ವಿಧಾನದಲ್ಲಿ ಆಕರಗಳ ನಿಷ್ಠೆ ಹಾಗೂ ಆಕರಗಳ ವಸ್ತುನಿಷ್ಠ ಅಧ್ಯಯನಕ್ಕೆ ಮಹತ್ವ ಕೊಡಲಾಗುತ್ತದೆ. ಶಾಸನಗಳಲ್ಲಿ ಉಕ್ತವಾಗಿರುವ ಮಾಹಿತಿಗಳು ಮತ್ತು ಘಟನೆಗಳು ಆಯಾ ಕಾಲದ ಸಾಂಸ್ಕೃತಿಕ ಮೌಲ್ಯವನ್ನು ನಿರೂಪಿಸುತ್ತವೆಂಬ ಆಶಯ ಈ ಅಧ್ಯಯನದಲ್ಲಿ ವ್ಯಕ್ತಗೊಳ್ಳುತ್ತದೆ. 
      ಶಾಸನಗಳಂತಹ ಮೂಲ ಆಕರಗಳನ್ನು ಆಧರಿಸಿ ನಡೆಸಿರುವ, ಸಂಸ್ಕೃತಿಯ ಅಧ್ಯಯನದ ಚೌಕಟ್ಟಿನಲ್ಲಿ ರಚಿತವಾಗಿರುವ ಸಂಶೋಧಕರ ಕೃತಿಗಳು ಹಾಗೂ ಲೇಖನಗಳಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸಿರುವುದು ಕಂಡು ಬರುತ್ತದೆ. ಶಾಸನಗಳು ತಮ್ಮ ಆಂತರಿಕ ಪ್ರಮಾಣಗಳಿಂದ ಹೊರಡುವ ಮಾಹಿತಿಗಳ ಹಿನ್ನಲೆಯಲ್ಲಿ ಭಾಷೆಯ ವಾತಾವರಣವೊಂದರ ಗ್ರಹಿಕೆಗೆ ಯಾವರೀತಿ ಅವಕಾಶ ಕಲ್ಪಿಸಿಕೊಡುತ್ತವೆಂಬ ನಿಲುವನ್ನು ಗುರುತಿಸಬಹುದಾಗಿದೆ.
      ಬಿ.ಆರ್.ಗೋಪಾಲರ ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರು ಕೃತಿಯು ಸಂಪೂರ್ಣವಾಗಿ ಶಾಸನಗಳನ್ನಾಧರಿಸಿ ರಚಿತವಾಗಿದೆ. ಈ ಕೃತಿಯಲ್ಲಿ ಶ್ರೀರಾಮಾನುಜರು ಶೈವದೊರೆಗಳಾದ ಚೋಳರಸರ ಉಪಟಳವನ್ನು ತಡೆಯಲಾರದೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದರು ಎಂಬ ಸಾಂಪ್ರದಾಯಿಕ ನಂಬುಗೆಗಳಿಗಿಂತ ಭಿನ್ನವಾಗಿ ಇವರು ಕ್ರಿ.ಶ.1138 ರಿಂದ 1150ರ ವರೆಗೆ ಕರ್ನಾಟಕದಲ್ಲಿದ್ದರೆಂದು ತೋರಿಸಿದ್ದಾರೆ. ಶಾಸನಗಳು ಒದಗಿಸುವ ಮಾಹಿತಿಯ ಹಿನ್ನೆಲೆಯಲ್ಲಿ ಮೂಲತ: ಜೈನನಾದ ಬಿಟ್ಟಿದೇವನನ್ನು ವಿಷ್ಣುವರ್ಧನನಾಗಿ ಶ್ರೀವೈಷ್ಣವ ಧರ್ಮಕ್ಕೆ  ಮತಾಂತರಗೊಳಿಸಿದರು ಎಂಬುದು ಸಾಧಾರವಲ್ಲ. ಆದರೆ ಹೊಯ್ಸಳದೊರೆ ವಿಷ್ಣುವರ್ಧನನ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಬಹಳವಾಗಿದೆ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬೇಲೂರಿನ ಚೆನ್ನಕೇಶವ ದೇವಾಲಯದ ಸ್ಥಾಪನೆಯಲ್ಲಿ ಅವರ ಪಾತ್ರವಿಲ್ಲದಿರುವುದನ್ನು, ಮೇಲುಕೋಟೆಗೆ ದೆಹಲಿಯಿಂದ ಶಿಲ್ಪ ಪಿಳ್ಳೈ ವಿಗ್ರಹವನ್ನು ತಂದುದು ಇವೆಲ್ಲವು ಸರಿಯಲ್ಲವೆಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ಕೃತಿಯಲ್ಲಿ ಸಾಂಪ್ರದಾಯಿಕ ನಂಬುಗೆಗಳಲ್ಲಿಯ ದೋಷಗಳನ್ನು ಶಾಸನಗಳಂತಹ  ಮೂಲ ದಾಖಲೆಗಳೊಂದಿಗೆ ಹೋಲಿಸಿ ನೋಡಿ ಆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಶೀಲಿಸಿ ವಸ್ತುಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ಸಂಪ್ರದಾಯ ನಿಷ್ಠರಿಂದ ಬಹಿಷ್ಕಾರದ ಅವಕೃಪೆಗೆ ಅವರು ಒಳಗಾಗಬೇಕಾದ ಸ್ಥಿತಿಯು ಒದಗಿತ್ತು.
  ಶಾಸನಗಳನ್ನಾಧರಿಸಿದ ಕರ್ನಾಟಕದ ವೀರಗಲ್ಲುಗಳು ಕೃತಿಯಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ ಸಾಮಾಜಿಕ ಪದ್ಧತಿಯ ಚಿತ್ರಣದ ವಿವರಣೆಯನ್ನು ಕಾಣ ಬಹುದು. ವೀರಗಲ್ಲುಗಳ ವಿವಿಧ ಮಾದರಿಗಳು, ವೀರಗಲ್ಲು ಶಾಸನಗಳಲ್ಲಿ ಬಳಸಲಾದ ಪಾರಿಭಾಷಿಕ ಪದಗಳ ವಿಶ್ಲೇಷಣೆ, ಭಿನ್ನ ಭಿನ್ನ ವೀರಗಲ್ಲುಗಳ ವೈಶಿಷ್ಟ್ಯ ಇತ್ಯಾದಿಗಳ ಕುರಿತ ಅಧ್ಯಯನವನ್ನು ಕಾಣಬಹುದು. ಆಯಾ ಅರಸುಮನೆತನಗಳ ಆಳ್ವಿಕೆಯ ಕಾಲದಲ್ಲಿ ಕಂಡುಬರುವ ವೀರಗಲ್ಲುಗಳ ಸಂಖ್ಯೆಯಲ್ಲಿಯ ವ್ಯತ್ಯಾಸಗಳು, ಆ ವ್ಯತ್ಯಾಸಗಳಿಗೆ ಇದ್ದಿರಬಹುದಾದ ಕಾರಣಗಳು ಇತ್ಯಾದಿ ವಿಷಯಗಳಲ್ಲಿ ಹೆಚ್ಚಿನ ವಿವರಣೆಯನ್ನು ಒದಗಿಸಬಹುದಾಗಿತ್ತು. ಆದಾಗ್ಯೂ ಕರ್ನಾಟಕ ಸಂಸ್ಕೃತಿ,ಯುದ್ಧದ ಚರಿತ್ರೆ,ಪ್ರಾಚೀನ ಕರ್ನಾಟಕದ ವಸ್ತ್ರ ಒಡವೆ ಆಯುಧಗಳು ಇತ್ಯಾದಿಗಳ ತಿಳಿವಳಿಕೆಯನ್ನು ಮೂಡಿಸುವಲ್ಲಿ ಸಹಕಾರಿಯಾಗಿದೆ.
      ಎಸ್.ಶೆಟ್ಟರ್ ಅವರು ಲೇಖನವೊಂದರಲ್ಲಿ ಮೂಲಗಳ ಆಂತರಿಕ ಪ್ರಮಾಣಗಳಿಂದ ಹೊರಡುವ ಸಂಗತಿಗಳನ್ನು ವಿಶ್ಲೇಷಿಸುವುದರ ಮೂಲಕ ಸಾಂಸ್ಕೃತಿಕ ಚರಿತ್ರೆಯ ಅಂಶಗಳನ್ನು ಗುರುತಿಸಿರುವುದನ್ನು ಗಮನಿಸಬಹುದು. ಅವರು ಜೈನಧರ್ಮದ ಅವನತಿಯನ್ನು ಶಾಸನಗಳ ಮೂಲಕ ತಿಳಿದುಕೊಂಡಿದ್ದು ಹೀಗೆ. ಕ್ರಿ.ಶ.122-1336ರ ವರೆಗೆ ಸಿಗುವ ಎಲ್ಲಾ ಹೊಯ್ಸಳ ಶಾಸನಗಳನ್ನು ಅಭ್ಯಾಸ ಮಾಡಿದಾಗ ನಮಗೆ ದೊರೆತ ಚಿತ್ರ ಹೀಗಿದೆ. ಇಮ್ಮಡಿ ನಾರಸಿಂಹನು ಸ್ವತಃ ಯಾವ ಬಸದಿಯನ್ನು ಕಟ್ಟಿಸಲಿಲ್ಲ. ದೋರ ಸಮುದ್ರದ ವಿಜಯ ಪಾರ್ಶ್ವ ಬಸದಿಗೆ ಈ ಅರಸನು ದತ್ತಿ ಕೊಟ್ಟನೇನೋ ನಿಜ. ಆದರೆ ಈ ಬಸದಿಯು 1254ರಲ್ಲಿ ಪುನಃ ದುಸ್ಥಿತಿಗಳೊಳಗಾಗಿ ಅಂದಿನ ಅರಸನಾದ ಸೋಮೇಶ್ವರನಿಂದ ಜೀರ್ಣೋದ್ಧಾರಗೊಂಡಿತು. ಅಂದರೆ ಎಲ್ಲಿಯೂ ಹೊಯ್ಸಳ ರಾಜರು ಹೊಸ ದೇವಾಲಯಗಳನ್ನು ಕಟ್ಟಿಸಿದ್ದು ಕಾಣಿಸುವುದಿಲ್ಲ. ಹಳೆಯ ಬಸದಿಗಳಿಗೆ ದತ್ತಿ ಅಥವಾ ಜೀರ್ಣೋದ್ಧಾರಗಳ ಮಾಡಿಸಿದ ಉಲ್ಲೇಖಗಳು ಕಂಡು ಬರುತ್ತವೆ. ವೈಷ್ಣವ ದೇವಾಲಯಗಳ ಹೊಸ ನಿರ್ಮಾಣ ಈ ಕಾಲದಲ್ಲಿ ಹೆಚ್ಚು ಆಗಿದೆ. ಈ ವಿವರದಲ್ಲಿ ಘಟನೆಗಳೇ ಇತಿಹಾಸವೆಂದು ತಿಳಿದರೆ ದತ್ತಿ ಮತ್ತು ಜೀರ್ಣೋದ್ಧಾರಗಳ ರಾಜನು ಮಾಡಿದ ಸಾಮಾಜಿಕ ಕಾರ್ಯಗಳಾಗಿ ಪರಿವರ್ತನೆ ಹೊಂದುತ್ತವೆ. ಆದರೆ ಮೂಲತಃ ಈ ಸಂಗತಿಗಳು ಅಂದರೆ ಜಿನಾಲಯಗಳಿಗೆ ಸಂಬಂಧಿಸಿದ ಆ ವಿವರಗಳು ಅಂದು ಹಾಳು ಬೀಳುತ್ತಿದ್ದ ಜಿನಾಲಯಗಳ ಚಿತ್ರಣ ತಿಳಿಸುತ್ತವೆ ಎಂದು ನಿರೂಪಿಸುತ್ತ ಕ್ರಿ.ಶ.1150ಕ್ಕಿಂತ ಹಿಂದೆ ಜೈನರಿಗಿದ್ದ ಪ್ರತಿಷ್ಠಿತಸ್ಥಾನ ಈ ಅವಧಿಯಲ್ಲಿ ಕಳೆದು ಕೊಂಡಿದ್ದರೂ ರಾಜ್ಯದ ಹಲವು ಹಿರಿಯ ಅಧಿಕಾರಿಗಳ ವಣಿಕರ ಹಾಗೂ ಸಣ್ಣ ಪುಟ್ಟ ಅಧಿಕಾರಿಗಳ ಪ್ರೋತ್ಸಾಹದಿಂದ ಮುಂದುವರಿಯಲು ಪ್ರಯತ್ನಿಸುತ್ತಿತ್ತು ಎಂಬ ಅಂಶವನ್ನು ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಮಧ್ಯಕಾಲೀನ ಧಾರ್ಮಿಕ ಪರಿಸರದಲ್ಲಿ ಜೈನಧರ್ಮದ ಸ್ಥಿತಿಗತಿಯ ಚಿತ್ರಣ ಯಾವ ರೀತಿ ಶಾಸನಗಳ ಆಧಾರಗಳ ಮೂಲಕ ಗ್ರಹಿತವಾಗಿದೆ ಎಂಬುದನ್ನು ಸೂಕ್ಷ್ಮಸ್ತರವಾಗಿ ಗಮನಿಸಿರುವುದನ್ನು ನೋಡಬಹುದಾಗಿದೆ.
   ಶಾಸನಗಳಲ್ಲಿ ಕರ್ನಾಟಕದ ವರ್ತಕರು ಕೃತಿಯಲ್ಲಿ ಶಾಸನಗಳ ಹಿನ್ನೆಲೆಯಲ್ಲಿ ಪ್ರಾಚೀನ ಕಾಲದ ವರ್ತಕರುಗಳು, ವರ್ತಕ ಸಂಘಗಳು,ಅವರ ವ್ಯಾಪಾರದ ಸ್ವರೂಪ,ಸಾಮಾಜಿಕ-ಧಾರ್ಮಿಕ ಜೀವನ ಮುಂತಾದ ವಿಷಯಗಳ ವಿಸ್ತೃತವಾದ ಆಧ್ಯಯನವನ್ನು ಕಾಣಬಹುದು.  ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ಹಾಗೆ ಕಂಡು ಬರುವ ಪಾರಿಭಾಷಿಕ ಪದಗಳನ್ನು ಗುರುತಿಸಿ ಅವುಗಳ ವಿಶೇಷ ಅರ್ಥಗಳನ್ನು ಪೂರಕ ಆಕರಗಳ ಮೂಲಕ ಗುರುತಿಸಿರುವುದು ಮಹತ್ವದ್ದಾಗಿದೆ. ಈ ಕೃತಿಯಲ್ಲಿ ಅಯ್ಯಾವೊಳೆ ಐನೂರ್ವರಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ಮತ್ತು ಗುಡ್ಡಶಾಸ್ತ್ರ ಮತ್ತು ಗುಡ್ಡಧ್ವಜ ಪದಗಳ ವಿಶ್ಲೇಷಣೆ ಗಮನಾರ್ಹವಾದುದಾಗಿದೆ.
         ಜೆ.ಎಂ. ನಾಗಯ್ಯ ಅವರ ಆರನೆಯ ವಿಕ್ರಮಾದಿತ್ಯನ ಶಾಸನಗಳ ಕುರಿತ ಅಧ್ಯಯನವು ಕಲ್ಯಾಣ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿಯ ಒಂದು ಸಾಮಾಜಿಕ ಕಾಲ ಘಟ್ಟದ ಪ್ರಾತಿನಿಧಿಕ ದಾಖಲೆಗಳಾದ ಶಾಸನಗಳನ್ನು ಬಿಡಿಬಿಡಿಯಾಗಿ ಅಭ್ಯಸಿಸುವುದರ ಮೂಲಕ ಆತನ ರಾಜಕೀಯ ಆಡಳಿತದ ವಿಸ್ತೃತ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಈ ಅಧ್ಯಯನವು ಪೂರಕ ಸಾಮಗ್ರಿಯಾಗಿ ಸಾಹಿತ್ಯ ಕೃತಿಗಳನ್ನು ಹಾಗೂ ಇನ್ನಿತರ ಆಕರಗಳನ್ನು ಬಳಸಿಕೊಂಡಿದೆ. ಈ ಕೃತಿಯಲ್ಲಿ ಶಾಸನಗಳ ಹಿನ್ನೆಲೆಯಲ್ಲಿಆಳುವವರ್ಗಕ್ಕಿಂತ ಆಡಳಿತವರ್ಗದ ಮಹಾ ಸಾಮಂತಾಧಿಪತಿ,ಮಹಾಪ್ರಚಂಡದಂಡನಾಯಕ, ದಂಡನಾಯಕ,ರಾಜ್ಯಾಧ್ಯಕ್ಷ, ಅಂತ:ಪುರಾಧ್ಯಕ್ಷ, ನಿಯೋಗಿ,ಪಡೆವಳ,ಹಡಪವಳ,ಪಡಿಹಾರ,ಪೆರ್ಗಡೆ,ಕರಣಿಕ,ಸೇನಭೋವ,ಕುಳಕರಣಿ,ತಳವಾರ ಇತ್ಯಾದಿ ಅಧಿಕಾರ ಶ್ರೇಣಿವರ್ಗವನ್ನು ಗುರುತಿಸಿ, ಅವುಗಳ ಸ್ವರೂಪ-ವ್ಯಾಪ್ತಿ,ಈ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳ ವಿವರಣೆಯನ್ನು ಕಟ್ಟಿಕೊಟ್ಟಿರುವುದು ಗಮನಾರ್ಹವಾಗಿದೆ.ಅದಕ್ಕಿಂತ ಮುಖ್ಯವಾಗಿ ಈ ಕೃತಿಯಲ್ಲಿಯ ಆಡಳಿತವಿಭಾಗಗಳ ಶೋಧ,ಆಡಳಿತ ಪದ್ಧತಿಯ ಶೋಧ, ಆಡಳಿತ ಚರಿತೆಗಾರರ ಶೋಧವು ಶಾಸನಗಳ ಸಾಂಸ್ಕೃತಿಕ ಶೋಧನೆಗೆ ಮಾದರಿಯಂತಿದೆ. ಶಾಸನಗಳಂತಹ ಆಕರಗಳನ್ನು ಸಂಗ್ರಹಿಸುವುದು,ಸಂಯೋಜಿಸುವುದು,ಆಕರಗಳ ವಿಶ್ಲೇಷಣೆ ಹಾಗೂ ಅವುಗಳು ನೀಡುವ ಫಲಿತದ ಮೂಲಕ ಖಚಿತ ನಿಲುವಿಗೆ ಬರುವಂತಹ ವಿಧಾನವನ್ನು ಇಲ್ಲಿ ಅನುಸರಿಸಿರುವುದು ಕಂಡು ಬರುತ್ತದೆ.
          ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಸಂಖ್ಯಾನಿಷ್ಠ ಸಂಶೋಧನಾ ವಿಧಾನವು ಬಹಳ ಪ್ರಮುಖ ಪಾತ್ರವಹಿಸಿದೆ. ಸಂಖ್ಯಾನಿಷ್ಠ ಶೋಧನೆ ಎನ್ನುವುದು ಎಂ.ಎಂ.ಕಲಬುರ್ಗಿ ಅವರ ಮಾತಿನಲ್ಲಿ ಹೇಳುವುದಾದರೆ `ಅಧ್ಯಯನಕ್ಕೆ ಆಯ್ದುಕೊಂಡ ಘಟಕವೊಂದರ ಪ್ರಸಾರದ ವಿರಳತೆ ಸಾಂದ್ರತೆ ಐತಿಹಾಸಿಕ ಬೆಳವಣಿಗೆಯ ವಿರಳತೆ ಸಾಂದ್ರತೆಗಳನ್ನು ನಿರ್ಧಿಷ್ಟವಾಗಿ ತಿಳಿದು ಕೊಳ್ಳುವುದು ಸ್ವರೂಪದ ಸ್ಥಿರತೆ-ಬದಲಾವಣೆಗಳನ್ನು ಗುರುತಿಸುವುದು ಮತ್ತು ಅವುಗಳ ಹಿಂದಿರುವ ಕಾರಣಗಳನ್ನು ಕಂಡು ಹಿಡಿಯುವುದಾಗಿದೆ' ಶಾಸನಗಳ ಕುರಿತು ಅಧ್ಯಯನದಲ್ಲಿ ಈ ವಿಧಾನ ಕೆಲವೊಮ್ಮೆ ವೈಜ್ಞಾನಿಕ ರೀತಿಯ ಫಲಿತಾಂಶವನ್ನು ನೀಡುತ್ತದೆ.
ಉದಾ: ಚನ್ನಕ್ಕ ಪಾವಟೆ ಅವರ ಶಾಸನಗಳಲ್ಲಿ ಕರ್ನಾಟಕ ಸ್ತ್ರೀ ಸಮಾಜ ಕೃತಿಯಲ್ಲಿಸೌರಪಂಥ ಸಂಪ್ರದಾಯದ ನೆಲೆಯನ್ನು ಸಂಖ್ಯಾ ನಿಷ್ಠ ಸಂಶೋಧನೆಯ ಮೂಲಕ ಕಂಡು ಕೊಂಡಿರುವುದನ್ನು ಗುರುತಿಸಬಹುದಾಗಿದೆ. ಪ್ರಾಚೀನ ತಾಂತ್ರಿಕ ಪಂಥಗಳಲ್ಲಿ ಸೌರ ಪಂಥವು ಒಂದು. ಸೂರ್ಯ ವಿಗ್ರಹಗಳೂ ಸೂರ್ಯಗ್ರಹಣ ಸಂದರ್ಭದಲ್ಲಿ ಚಿತಾಪ್ರವೇಶ ಮಾಡಿದ ಉಲ್ಲೇಖವುಳ್ಳ ಶಾಸನಗಳು ಅಲ್ಲಲ್ಲಿ ಸಿಗುವುದರಿಂದ ಈ ಪಂಥ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದಿತೆಂಬುದು ತಿಳಿದು ಬರುತ್ತದೆ. ಅಂದರೆ ಯಾವ ಯಾವ ಪ್ರದೇಶದಲ್ಲಿ? ಯಾವ ಯಾವ ಶತಮಾನಗಳಲ್ಲಿ ? ಎಷ್ಟು ಸಂಖ್ಯೆಯಲ್ಲಿ ಸೂರ್ಯ ವಿಗ್ರಹಗಳಿವೆ? ಎಷ್ಟು ಚಿತಾಪ್ರವೇಶ ಘಟನೆಗಳು ಜರುಗಿವೆ? ಎಂಬ ಕೋಷ್ಟಕ ಸಿದ್ಧಪಡಿಸಿ ಅದರಿಂದ ಈ ಉಪಾಸನೆಯ ಭೌಗೋಲಿಕ ಪ್ರಸಾರ, ಐತಿಹಾಸಿಕ ಬೆಳವಣಿಗೆಯನ್ನು ಗುರುತಿಸುವುದು, ರೂಪ-ವ್ಯತ್ಯಾಸವನ್ನು ಕಂಡು ಹಿಡಿಯುವುದು, ಅದರ ಹಿಂದಿರುವ ಕಾರಣಗಳನ್ನು ಶೋಧಿಸುವುದು ಇತ್ಯಾದಿ ವಿವರಗಳನ್ನು ಸಂಖ್ಯಾನಿಷ್ಠ ಸಂಶೋಧನ ವಿಧಾನದ ಮೂಲಕ ಕಂಡು ಕೊಳ್ಳಲು ಪ್ರಯತ್ನಿಸಿದ್ದಾರೆ.
    ಸೂರ್ಯಗ್ರಹಣ ಸಮಯದ ಚಿತಾಪ್ರವೇಶವನ್ನು ಹಿನ್ನಲೆಯಾಗಿಟ್ಟುಕೊಂಡು ಸಂಶೋಧನೆ ಕೈಗೊಂಡ ಸಂಶೋಧಕರು ಆ ವಿಷಯಕ್ಕೆ ಸಂಬಂಧಿಸಿದ ಒಟ್ಟು 10ಶಾಸನಗಳಲ್ಲಿ 5ಶಾಸನಗಳು ಹಾನಗಲ್ಲು ತಾಲ್ಲೋಕಿನ ನೆರೆ ಹೊರೆಯಲ್ಲಿಯೇ ಲಭ್ಯವಿರುವುದನ್ನು ಗುರುತಿಸಿದ್ದಾರೆ. ಈ ಪ್ರದೇಶದಲ್ಲಿಯೇ ಸೌರಪಂಥದ ಸಂಪ್ರದಾಯ ಸಾಂದ್ರವಾಗಿದ್ದಿತೆಂಬ ಅಂಶ ವ್ಯಕ್ತವಾಗುತ್ತದೆ. ಅದರಲ್ಲಿಯೂ 12ನೇ ಶತಮಾನದಲ್ಲಿಯೇ ಈ ದಾಖಲೆಗಳು ಕಾಣಿಸಿಕೊಳ್ಳವುದರಿಂದ ಈ ಕಾಲದಲ್ಲಿ ಈ ಆಚರಣೆ ಅಸ್ತಿತ್ವದಲ್ಲಿತ್ತೆಂಬ ಗ್ರಹಿಕೆಗೆ ಖಚಿತತೆ ಒದಗಿಸುತ್ತದೆ.
     ಹಾಗೆಯೇ  Memorial Stones : A study of Their Origin Significance and Variety  JA§ ¥ÀĸÀÛPÀzÀ°èAiÀÄ J¸ï.±ÉlÖgï gÀªÀgÀ  Memorial Stones  in  South India   ಲೇಖನದಲ್ಲಿ ಸಂಖ್ಯಾನಿಷ್ಠ ಸಂಶೋಧನ ವಿಧಾನದ ಮೂಲಕ ಕನ್ನಡ ನಾಡಿನ ನಿಷದಿಗಲ್ಲು, ವೀರಗಲ್ಲು, ಮಾಸ್ತಿಗಲ್ಲು, ಮೊದಲಾದ ಸ್ಮಾರಕ ಶಿಲೆಗಳ ಭೌಗೋಲಿಕ ಪ್ರಸರಣ, ಐತಿಹಾಸಿಕ ಬೆಳವಣಿಗೆಗಳನ್ನು ಅಂಕಿ ಅಂಶಗಳಿಂದ ಅರಿತು ಅಲ್ಲಿ ತೋರುವ ಸಂಖ್ಯಾ ವ್ಯತ್ಯಾಸದ ಹಿಂದಿರುವ ಕಾರಣಗಳನ್ನು ಸಾಮಾಜಿಕ ಒತ್ತಡಗಳನ್ನು ಅಧ್ಯಯನ ಮಾಡಿರುವುದನ್ನು ಗುರುತಿಸಬಹುದಾಗಿದೆ. ಸಂಶೋಧನೆಯ ವಿವರವನ್ನು ಅವರ ಹೇಳಿಕೆಯಲ್ಲಿಯೇ ಉಲ್ಲೇಖಿಸುವುದಾದರೆ, ಕರ್ನಾಟಕದಲ್ಲಿ ಲಭ್ಯವಿರುವ 2650 ಲಿಖಿತ ಸ್ಮಾರಕ ಶಿಲೆಗಳಲ್ಲಿ ವೀರಗಲ್ಲು 2200, ನಿಷದಿಗಲ್ಲು 300, ಸತಿಗಲ್ಲು 150, ಉಳಿದವು ಸಿಡಿತಲೆ, ಗರುಡಗಲ್ಲು ಇತ್ಯಾದಿ. ಈ ಸ್ಮಾರಕ ಶಿಲೆಗಳು ಕದಂಬರ ಕಾಲವಾದ 5ನೇ ಶತಮಾನದಿಂದ ಹಿಡಿದು ಒಡೆಯರ ಕಾಲವಾದ 19ನೇ ಶತಮಾನದವರೆವಿಗೂ ಬೆಳೆದು ಬಂದಿದೆ. ಹತ್ತರಿಂದ 13ನೇ ಶತಮಾನದಲ್ಲಿ ಈ ಸಂಖ್ಯೆ 1100ನ್ನು ತಲುಪಿದ್ದು ಇವುಗಳಲ್ಲಿ ಹೊಯ್ಸಳರಿಗೆ ಸಂಬಂಧಿಸಿದವು 375. ಬಾದಾಮಿ ಚಾಲುಕ್ಯರ ಕಾಲದಲ್ಲಿ ಒಂದೇ ಒಂದು ಲಿಖಿತ ಸ್ಮಾರಕ ಶಿಲೆ ಸಿಕ್ಕಿದೆ. ಕದಂಬ, ರಾಷ್ಟ್ರಕೂಟ, ಗಂಗ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕ್ರಮವಾಗಿ 95.35.150ಮತ್ತು 125 ಸಿಕ್ಕಿವೆ. ಈ ಲಿಖಿತ ಸ್ಮಾರಕ ಶಿಲೆಗಳನ್ನು ಪ್ರಾದೇಶಿಕ ದೃಷ್ಟಿಯಿಂದ ನೋಡಿದರೆ ಕುತೂಹಲಕಾರಿ ಅಂಶಗಳು ವ್ಯಕ್ಯವಾಗುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿ 750, ಹಾಸನ ಜಿಲ್ಲೆಯಲ್ಲಿ 470, ಮಂಡ್ಯ ಮೈಸೂರು ಜಿಲ್ಲೆ ಸೇರಿ 325, ತುಮಕೂರು ಜಿಲ್ಲೆಯಲ್ಲಿ 240, ಧಾರವಾಡ ಜಿಲ್ಲೆಯಲ್ಲಿ 180, ಚಿಕ್ಕಮಗಳೂರು ಜಿಲ್ಲೆಯಲ್ಲಿ 150 ಸಿಗುತ್ತವೆ. ಇಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೆಚ್ಚು ಸಂಖ್ಯೆಯ ಸ್ಮಾರಕಗಳಿರುವುದಕ್ಕೆ ಈ ಪ್ರದೇಶ ಕದಂಬ, ಗಂಗ, ಚಾಲುಕ್ಯ- ಹೊಯ್ಸಳ, ಹೊಯ್ಸಳ-ಕಲಚೂರಿ, ಹೊಯ್ಸಳ-ಸೇವುಣರ ಸೀಮಾ ಪ್ರದೇಶವಾಗಿದ್ದು ಇಲ್ಲಿ ಸಹಜವಾಗಿಯೇ ಯುದ್ಧಗಳು ಪದೇ ಪದೇ ಸಂಭವಿಸಿರಬಹುದು. ಈ ವಿವರಗಳು ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಸಂಖ್ಯಾನಿಷ್ಠ ಸಂಶೋಧನೆಯ ಸ್ವರೂಪ ಮತ್ತು ಮಹತ್ವವನ್ನು ತೋರಿಸುತ್ತದೆ.
         ಕವಿರಾಜ ಮಾರ್ಗದಲ್ಲಿ ವ್ಯಕ್ತವಾಗುವ ಆ ಕಾಲದ ಕನ್ನಡ ನಾಡಿನ ಭೌಗೋಳಿಕ ವಿಸ್ತಾರತೆಯನ್ನು ಕುರಿತಾದ `ಕಾವೇರಿಯಿಂದಮಾ ಗೋದಾವರಿವರ ಮಿರ್ಪ ನಾಡದಾ ಕನ್ನಡ ದೊಳ್’ ಎಂಬ ಹೇಳಿಕೆಯಲ್ಲಿಯ ಪ್ರಾಚೀನ ಕರ್ನಾಟಕದ ಭೌಗೋಲಿಕ ವಿಸ್ತಾರದ ವ್ಯಾಪಕತ್ವವನ್ನು ಮಹಾರಾಷ್ಟ್ರದ ಕನ್ನಡ ಶಾಸನಗಳು ಪುಷ್ಠೀಕರಿಸುತ್ತವೆ. ಈ ವಿವರವನ್ನು ಮಹಾರಾಷ್ಟ್ರದಲ್ಲಿ ದೊರೆಯುವ ಕನ್ನಡ ಶಾಸನಗಳನ್ನು ಭೌಗೋಲಿಕವಾಗಿ ಹಾಗೂ ಐತಿಹಾಸಿಕವಾಗಿ ಸಮೀಕ್ಷೆ ಮಾಡಿ ಸಂಖ್ಯಾನಿಷ್ಠ ಸಂಶೋಧನಾ ವಿಧಾನದ ಮೂಲಕ ಎಂ.ಎಂ. ಕಲಬುರ್ಗಿಯವರು ಗುರುತಿಸಿದ್ದಾರೆ.
      ಮಹಾರಾಷ್ಟ್ರದಲ್ಲಿ ಕನ್ನಡ ನಾಡಿನಲ್ಲಿ ದೊರೆತಂತೆ ಹೆಚ್ಚಿನ ಸಂಖ್ಯೆಯ ಶಾಸನಗಳು ದೊರೆತಿಲ್ಲ. ಕೇವಲ 1000 ಶಾಸನಗಳು ದೊರೆತಿವೆ. ಇವುಗಳಲ್ಲಿ ಪ್ರಾಚೀನ ಶಾಸನಗಳೆಲ್ಲ ಸಂಸ್ಕೃತ ಭಾಷೆಯ ತಾಮ್ರಪಟಗಳು ನಂತರದವು ಕನ್ನಡ ಭಾಷೆಯ ಶಿಲಾಶಾಸನಗಳು. ಒಟ್ಟು ಒಂದು ಸಾವಿರ ಶಾಸನಗಳಲ್ಲಿ ಪ್ರಾಕೃತ 300, ಸಂಸ್ಕೃತ 300, ಕನ್ನಡ300, ಮರಾಠಿಭಾಷೆಯವು 100, ಪ್ರಾಕೃತ ಶಾಸನಗಳಾದರೊ ಅಗ್ರಹಾರದ ದತ್ತಿ ದಾಖಲೆಗಳು. ಕನ್ನಡ ಭಾಷೆಯ ಶಾಸನಗಳು ಮಾತ್ರ ದೇವಾಲಯದ ದತ್ತಿ ದಾಖಲೆಗಳಾಗಿದ್ದರೂ ಸಾಹಿತ್ಮಾತ್ಮಕವಾಗಿ ಕೂಡಿವೆ. ಈ ಕನ್ನಡ ಶಾಸನಗಳು ಕರ್ನಾಟಕದ ಹೊರೆಗೆ ಸುತ್ತಲೂ ಅಂಟಿಕೊಂಡಿರುವ ಕೊಲ್ಲಾಪುರ, ಸಾಂಗಲಿ, ನಾಂದೇಡ ಸೊಲ್ಲಾಪುರ, ಉಸ್ಮನಾಬಾದ್ ಜಿಲ್ಲೆಗಳಲ್ಲಿ ದಟ್ಟವಾಗಿ ಕಂಡು ಹರಡಿದ್ದು ಮರಾಠಿ ಭಾಷೆಯ ಶಾಸನಗಳು ಅಲ್ಲಲ್ಲಿ ವಿರಳವಾಗಿ ಮಾತ್ರ ಕಂಡು ಬರುತ್ತವೆ. ಇದರಿಂದಾಗಿ ಈ ಜಿಲ್ಲೆಗಳ ಪ್ರದೇಶ ಮೂಲತಃ ಕನ್ನಡವೆಂದು ಸ್ಷಷ್ಟವಾಗುತ್ತದೆ. ಕನ್ನಡ ಭಾಷೆಯ ಶಾಸನಗಳು ಪುಷ್ಠೀಕರಿಸುತ್ತವೆ. ಈ ವಿಧಾನವು ಮೌಲ್ಯಯುತವಾಗಿದೆ. ಈ ಸಂಶೋಧನೆಯ ವಿಧಾನದಿಂದ ಹೊರಡುವ ನಿಲುವುಗಳಿಗೆ ಖಚಿತತೆ ಇದೆ.
      ಒಂದು ಶಾಸನದಲ್ಲಿ ವ್ಯಕ್ತವಾಗುವ ಸಂಗತಿಯ ಸಂಧಿಗ್ದತೆಯಿಂದ ಕೂಡಿದ್ದರೆ ಅ ಪದದ ಅರ್ಥ ಸ್ಪಷ್ಟತೆಗಾಗಿ ಬೇರೆ ಶಾಸನಗಳಲ್ಲಿಯ ಮಾಹಿತಿಗಳನ್ನು ಆಧರಿಸಿ ಖಚಿತವಾಗಿ ಗ್ರಹಿಸಲು ಪ್ರಯತ್ನಿಸಿರುವುದಕ್ಕೆ ನಿದರ್ಶನವಾಗಿ ಕಪ್ಪೆ ಅರಭಟನ ಶಾಸನವನ್ನು ಉದಾಹರಿಸಬಹುದಾಗಿದೆ.
   ಪ್ರಾಚೀನ ಕನ್ನಡ ಸಂಸ್ಕೃತಿಯ ಒಂದಂಶವನ್ನು ಶಾಸನರೂಪದಲ್ಲಿ ಸಾಮಾನ್ಯ ಜನತೆಗೆ ಮನದಟ್ಟು ಮಾಡಿ ಕೊಡುವ ಬಾದಾಮಿ ಶಾಸನದಲ್ಲಿ ಬರುವ `ಕಪ್ಪೆ ಅರಭಟ’ ಎನ್ನುವ ವೀರನ ಹೆಸರಿನ ಹಿಂದೆ ಇರುವ ಕಪ್ಪೆ ಎಂಬುದು ಏನನ್ನು ಸೂಚಿಸಿರುತ್ತದೆಂಬುದು.
   ಕ್ರಿ.ಶ. 1156ರ ಮಲ್ಲಾಪುರ ಶಾಸನದಲ್ಲಿ ಬರುವ ಸೇನಭೋವ ಕಪ್ಪೆಯರ ಚಾವುಣಯ್ಯನ ಸ್ವಹಸ್ತ ಲಿಖಿತ ಎಂಬ ವಾಕ್ಯದ ಹಿನ್ನಲೆಯಲ್ಲಿ ನೋಡಿದರೆ ಕಪ್ಪೆ ಅರಭಟ ಹೆಸರಿನಲ್ಲಿಯ ಕಪ್ಪೆ ಎಂಬುದು ಮನೆತನದ ಅಥವಾ ವರ್ಗವನ್ನು ಸೂಚಿಸುತ್ತದೆ. ಈ ಹಿನ್ನಲೆಯಲ್ಲಿ ಸಂಶೋಧಕರು ಕಪ್ಪೆ ಎಂಬುದು ಮನೆತನದ ಹೆಸರಾಗಿದ್ದು ಅರಭಟ ಎಂಬ ವ್ಯಕ್ತಿಯು ಈ ಕಪ್ಪೆ ಮನೆತನಕ್ಕೆ ಸೇರಿದ ಒಬ್ಬ ಭಟ್ಟನೋ ಅಥವಾ ಭಟನೋ ಆಗಿರಬೇಕು ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.
   ಈ ಶಾಸನದಲ್ಲಿಯೇ ಬರುವ ಮಾಧುರ್ಯಂಗೆ ಮಾಧುರ್ಯನ್ ಎಂಬ ವಾಕ್ಯದಲ್ಲಿಯ ಮಾಧುರ್ಯನ್ ಶಬ್ದದ ಅರ್ಥ ಮಧುರತೆಯ ಗುಣವಾಗಿ ಉಳ್ಳವನು ಎಂದು ಪರಿಭಾವಿಸುವುದು ಎಷ್ಟರ ಮಟ್ಟಿಗೆ ಸರಿ. ಮಧುರ ಗುಣವಿರುವವನು ಮಾಧುರ್ಯನ್ ಅಲ್ಲ ಮಧುರನ್ ಆಗುತ್ತಾನೆ. ಈ ಹಿನ್ನಲೆಯಲ್ಲಿ ಈ ಅರ್ಥ ಕಪ್ಪೆ ಅರಭಟನ ವೀರತನವನ್ನು ಪ್ರತಿಪಾದಿಸುತ್ತಿರುವ ಸಂದರ್ಭದಲ್ಲಿ ಸರಿಹೊಂದಲಾರದು. ಈ ನಿಟ್ಟಿನಲ್ಲಿ ಮಾಧುರ್ಯನ್ ಶಬ್ದವನ್ನು ಅಥ್ರ್ಯೆಸಲು ಬೇರೆಬೇರೆ ಆಕರಗಳ ನೆರವನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಟಿ.ವಿ.ವೆಂಕಟಚಲಶಾಸ್ತ್ರೀ11 ಅವರು ಅನುಸರಿಸಿರುವ ವಿಧಾನವನ್ನು ಇಲ್ಲಿ ಪ್ರಸ್ತಾಪಿಸಬಹುದು.
   ಮಹಾ+ದುರ್ಯನ್> ಮಾಧುರ್ಯನ್ ಇವೆರಡು ಪದಗಳು ಪರಿಚಿತ ಸಂಸ್ಕೃತ ಪದಗಳು. ಈ ಶಾಸನದಲ್ಲಿ ಬಳಕೆಯಾಗಿರುವ ಮಾಧುರ್ಯನ್ ಪದವು ಕನ್ನಡದ ಜಾಯಮಾನವನ್ನು ಅನುಸರಿಸಿ ಒಂದು ಸಂಸ್ಕೃತ ಸಮಾಸ ಪದವಾಗಿದೆ. ಉದಾ:ಮಹಾ+ದೇವಂ>ಮಾದೇವ ಆದ ಹಾಗೆ. ದುರ್ಯ ಶಬ್ದಕ್ಕೆ ಅರ್ಥ ಮುಖ್ಯವಾದ ಕಾರ್ಯಗಳನ್ನು ವಹಿಸಿಕೊಳ್ಳಲು ಸಮರ್ಥನಾದವನು. ಮುಂಚೂಣಿಯಲ್ಲಿರತಕ್ಕವನು, ಅಗ್ರಗಣ್ಯ ನಾಯಕ ಇತ್ಯಾದಿ ಅರ್ಥಗಳಿವೆ. ಇವುಗಳಲ್ಲಿ ಯಾವುದಾದರೊಂದು ಅರ್ಥವನ್ನು ಕಪ್ಪೆ ಅರಭಟನಿಗೆ ಅರ್ಥೈಸಿದರೆ, ಈತನು ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನ ವಿಷಯದಲ್ಲಿ ತಾನೂ ಕಾರ್ಯ ನಿರ್ವಹಿಸುವ ಸಾಮಥ್ರ್ಯವನ್ನುಳ್ಳ ಅಧಿಕನು ಅಂತಲೋ ಪ್ರಮುಖರ ನಡುವೆ ತಾನೂ ಪ್ರಮುಖ ಎಂದು ಅರ್ಥೈಸಬಹುದು.
     ಸಾಮುದಾಯಿಕ ಬದುಕಿನಲ್ಲಿ ಎಷ್ಟುರ ಮಟ್ಟಿಗೆ ದೇವಾಲಯಗಳ ಅವಶ್ಯಕತೆ ಇದ್ದಿತು. ಅವುಗಳ ನಡುವೆ ಪರಸ್ಪರ ಕೊಳು, ಕೊಡಿಗೆಗಳಂತಹ ಸಮುದಾಯವನ್ನು ದೇವಾಲಯಗಳು ಎಷ್ಟರ ಮಟ್ಟಿಗೆ ನಿಯಂತ್ರಿಸಿದ್ದವು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಬದುಕಿನಲ್ಲಿ ದೇವಾಲಯಗಳ ಪಾತ್ರವೆಂತಹದ್ದು ಎಂಬಂತಹ ಅಧ್ಯಯನಗಳು ಶಾಸನಗಳನ್ನಾಧರಿಸಿ ನಡೆದಿವೆ. ನಿದರ್ಶನಕ್ಕೆ ಶಾಸನಗಳ ಹಿನ್ನಲೆಯಲ್ಲಿ ಕಲ್ಯಾಣ ಚಾಲುಕ್ಯರ ದೇವಾಲಯಗಳ ಸಾಂಸ್ಕೃತಿಕ ಅಧ್ಯಯನ. ತಲಕಾಡಿನ ಗಂಗರ ದೇವಾಲಯಗಳ ಸಾಂಸ್ಕೃತಿಕ ಅಧ್ಯಯನ, History of Somanathapura Temple complex ಕೃತಿಗಳನ್ನು ಹೆಸರಿಸಬಹುದಾಗಿದೆ.
      ಡಿ.ವಿ. ದೇವರಾಜು ಅವರ ಕೃತಿಯಲ್ಲಿ ಸೋಮನಾಥಪುರದದೇವಾಲಯವನ್ನು ಚಾರಿತ್ರಿಕ, ಸಾಂಸ್ಕೃತಿಕ ಆರ್ಥಿಕ ದೃಷ್ಟಿಕೋನಗಳಿಂದ ಗಮನಿಸಿ ಆ ಗ್ರಾಮವು 13ನೇ ಶತಮಾನದಲ್ಲಿ ಎಷ್ಟರ ಮಟ್ಟಿಗೆ ಬೇಸಾಯ ಹಾಗೂ ವಾಣಿಜ್ಯಗಳ ಕೇಂದ್ರವಾಗಿತ್ತು ಎಂಬುದನ್ನು ಗುರುತಿಸಲಾಗಿದೆ. ಸೋಮನಾಥಪುರದ ದೇವಾಲಯದ ಸಂಕೀರ್ಣದಲ್ಲಿ ವಿಷ್ಣು ಹಾಗೂ ಅವನ ಅವತಾರಗಳಿಗೆ ಸಂಬಂಧಿಸಿದ ಕೇಶವ ದೇವಾಲಯಗಳು ಹಾಗೂ ಶಿವನಿಗೆ ಸಂಬಂಧಿಸಿದ ಪಂಚಲಿಂಗ ದೇವಾಲಯವನ್ನು ಸೋಮನಾಥ ದಂಡನಾಯಕನು ಕಟ್ಟಿಸಿದ್ದಾನೆ. ಸೋಮನಾಥ ದಂಡನಾಯಕನು ಶೈವ ಮತಾನುಯಾಯಿಯಾಗಿದ್ದು ತನ್ನ ದೊರೆ ನರಸಿಂಹನನ್ನು ಮೆಚ್ಚಿಸಲು ಕೇಶವ ದೇವಾಲಯವನ್ನು ಕಲಾತ್ಮಕವಾಗಿ ಹಾಗೂ ಭವ್ಯತೆಯಿಂದ ನಿರ್ಮಿಸಿದ್ದರೆ ಪಂಚಲಿಂಗ ದೇವಾಲಯವು ಸರಳವಾಗಿ ನಿರ್ಮಿತವಾಗಿದೆ. ಆದರೆ ಸಂಕೀರ್ಣ ದೇವಾಲಯದ ವಸತಿನೆಲೆಗೆ ಕಟ್ಟಿರುವ ಹೆಸರು ಸೋಮನಾಥ. ಈ ಹೆಸರು ದಂಡನಾಯಕನ ಹೆಸರಲ್ಲ ಎಂದೆನಿಸುತ್ತದೆ. ಅದು ಶಿವನ ಹೆಸರು. ಸೋಮನಾಥಪುರದ ವಸತಿನೆಲೆಯಲ್ಲಿ ಶೈವ ಹಾಗೂ ವೈಷ್ಣವ ದೇವತೆಗಳ ಸಾಮರಸ್ಯತೆ-ಭಾವ್ಯೆಕ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರ ವಿವರಗಳನ್ನು ಶಾಸನಗಳು ಹಾಗೂ ಪೂರಕ ಆಕರಗಳ ಅಧ್ಯಯನ ವಿಧಾನದಲ್ಲಿ ಮಾಡಿದ್ದಾರೆ. ಪ್ರಾಚೀನ ಹಾಗೂ ಮಧ್ಯಕಾಲೀನ ದೇವಾಲಯಗಳು ಆ ಕಾಲದ ಜನರಲ್ಲಿ ಬೇರೂರಿದ ಜೀವನಶ್ರದ್ಧೆ, ಹಾಗೂ ನಿಷ್ಠೆಗಳ ಪ್ರತೀಕವೂ ಆಗಿದೆ. ಸಮಾಜದಲ್ಲಿಯ ಎಲ್ಲಾ ವರ್ಗದ ಜನತೆಯೂ ದೇವಾಲಯಗಳೊಡನೆ ಸಂಬಂಧ ಇರಿಸಿಕೊಂಡಿದ್ದು ಶಾಸನಗಳಿಂದ ತಿಳಿದು ಬರುತ್ತದೆ.
     `ಜನತೆಯ ಅಂತರಂಗದ ಬದುಕು ದೇವಾಲಯಗಳಿಗೆ ಸ್ಪಂದಿಸಿದ ರೀತಿ, ದೇವಾಲಯಗಳು ಜನತೆಯ ಅಂತರಂಗವನ್ನು ವಿಕಸಿಸಿದ ರೀತಿಯನ್ನು ಆಯಾ ಕಾಲದ ಶಾಸನಗಳ ಮೂಲಕ ತಿಳಿಯಬಹುದಾಗಿದೆ. ಆಯಾ ಅರಸುಮನೆತನಗಳ ಕಾಲದ ಧಾರ್ಮಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅನುಸರಿಸಿ ನಿರ್ಮಾಣವಾದ ದೇವಾಲಯಗಳು ಸಮಾಜಕ್ಕೆ ಸಲ್ಲಿಸಿದ ಕೊಡುಗೆ  ಅಪಾರ'.
         ದೇವಾಲಯಗಳ ನಿರ್ಮಾಣದ ಪ್ರೇರಣೆ ಪ್ರಚೋದನೆಯ ವಿವರ ಶಾಸನಗಳಲ್ಲಿಯೇ ಗ್ರಹಿಸಬೇಕು. ಹಲವಾರು ವ್ಯಕ್ತಿಗಳು ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದಲ್ಲಿ ದೇವಸ್ಥಾನಗಳ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ.
     ಉದಾ: 1124ರ ಶಾಸನವು ಧರ್ಮವೊಳಲನ ಅಜ್ಜಮಯ್ಯ ಅಥವಾ ಅಜ್ಜಮನಾಯಕ ಎಂಬಾತನು ಕನಸಿನಲ್ಲಿ ಮುಕ್ಕಣನ ಪಾದಗಳನ್ನು ಕಂಡು ನಮಃ ಶಿವಾಯ ಎಂದು ಕನವರಿಸುತ್ತಿದ್ದನಂತೆ. ಅವನು ತನ್ನ ತೋಳ್ಬಲದಿಂದ ಸಂಪಾದಿಸಿದ ಐಶ್ಚರ್ಯವನ್ನು ಸಾರ್ಥಕಗೊಳಿಸಲು ಅಜ್ಜಮೇಶ್ವರ ಎಂಬ ಹೆಸರಿನ ಶಿವಾಲಯವನ್ನು ಸ್ಥಾಪಿಸಿದ ವಿವರವನ್ನು ತಿಳಿಸುತ್ತದೆ. (B.K.I.Vol. No.1, 175, A.D.1124)  ವ್ಯಕ್ತಿಗಳು ತಮ್ಮ ತೋಳ್ಬಲದಿಂದ ಸಂಪಾದಿಸಿದ ಐಶ್ವರ್ಯದಿಂದ ಸಾರ್ಥಕತೆಯನ್ನು ಪಡೆಯಲು ತನ್ನ ಹೆಸರಿನ ಜೊತೆಯಲ್ಲಿ ಇಷ್ಟದೈವವನ್ನು ಸೇರಿಸಿ ಆ ಹೆಸರಿನಲ್ಲಿ ದೇವಾಲಯ ನಿರ್ಮಿಸುತ್ತಿದ್ದ ವಿವರ ತಿಳಿದು ಬರುತ್ತದೆ. ವ್ಯಕ್ತಿಗಳು ಯಾವುದಾದರೊಂದು ಸಂದರ್ಭದಿಂದ ಪ್ರಚೋದನೆಯನ್ನು ಪಡೆದು ತನ್ನ ಹೆಸರಿನ ಜೊತೆಗೆ ಇಷ್ಟ ದೈವದ ಹೆಸರನ್ನು ಸೇರಿಸಿ ದೇವಾಲಯವನ್ನು ಸ್ಥಾಪಿಸಿರುವ ವಿವರಗಳು 1186ರ ಶಿರಸಂಗಿಯ ಹಬ್ಬೆನಾಯಕನ ಶಾಸನ ತಿಳಿಸುತ್ತದೆ.(K.I.Vol.1, 25). ಚಾಲುಕ್ಯ ವಿಕ್ರಮನ ಮಹಾಮಂಡಳೇಶ್ವರ ಚಾವುಂಡರಾಯನಿಗೆ ಶಂಭುವು ಸ್ವಪ್ನದಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸೆಂದು ಸಂಜ್ಞೆತೋರಲು ಅದರಂತೆ ದೇವಾಲಯವನ್ನು ನಿರ್ಮಿಸಿದ ವಿವರ 195ರ ಯಡ್ರಾಮಿ ಶಾಸನ ತಿಳಿಸುತ್ತದೆ.
      11ಮತ್ತು 12ನೇ ಶತಮಾನಗಳಲ್ಲಂತೂ ದೇವಾಲಯ ನಿರ್ಮಿಸಬೇಕೆಂಬ ಉತ್ಸಾಹ ವೀರವ್ರತವಾಗಿ ಪರಿಣಮಿಸಿತ್ತು ಎಂಬುದನ್ನು ಶಾಸನಗಳ ಮೂಲಕ ತಿಳಿಯಬಹುದಾಗಿದೆ.
     ಕುಂಬಾರ ಜಾತಿಯ ಬಮ್ಮಣ ಎಂಬಾತನು ತಲೆಯನ್ನು ತೊಳೆಯದೆ ಅನ್ನವುಣ್ಣದ ವೀರವ್ರತವನ್ನು ಕೈಗೊಂಡು ತನ್ನ ವೃತ್ತಿ ದೈವ ಕುಂಬೇಶ್ವರ ದೇವರನ್ನು ಪ್ರತಿಷ್ಟಾಪನೆ ಮಾಡಿದ ವಿವರ 1126ರ ಹೊಳಲ್ಕೆರೆ ಶಾಸನದಿಂದ ತಿಳಿದುಬರುತ್ತದೆ.
          ವಿವಿಧ ಅರಸುಮನೆತನಗಳ ಆಳ್ವಿಕೆಗೆ ಅನುಗುಣವಾಗಿ ದೇವಾಲಯಗಳ ರಚನೆಯ ಉತ್ತಮ ಪರಂಪರೆಯೇ ನಿರ್ಮಿತವಾಗಿದೆ. ದೇವಾಲಯಗಳನ್ನು ರಾಜರುಗಳು, ರಾಜಮನೆತನದವರು, ಮಾಂಡಳಿಕರು, ದಂಡನಾಯಕರು, ಸಾಮಂತರು ವಣಿಕರು, ಸಾಮಾನ್ಯ ಜನರು ತಮ್ಮ ಅಧಿದೈವ ಹಾಗೂ ಬೇರೆಯವರ ಸ್ಮರಣಾರ್ಥದ ಹೆಸರುಗಳ ಹಿನ್ನಲೆಯಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಬಹು ಪಾಲು ಶಾಸನಗಳಲ್ಲಿ ನೇರವಾಗಿ ದೇವಾಲಯಗಳನ್ನು ಯಾರು ಯಾರ ಹೆಸರಿನಲ್ಲಿ ಯಾರನ್ನು ಸಂಪ್ರೀತಿಗೊಳಿಸಲು ಪ್ರತಿಷ್ಠಾಪಿಸಿದ್ದಾರೆ ಎಂಬ ಉಲ್ಲೇಖಗಳು ಹೆಚ್ಚಿಗೆ ದೊರೆಯುವುದಿಲ್ಲ. ದೇವಾಲಯಗಳ ರಚನೆಯ ಬಗೆಗೆ ಏನನ್ನೂ ತಿಳಿಸದೆ ದೇವಾಲಯಗಳಿಗೆ ನೀಡಿದ ದಾನ ದತ್ತಿಗಳನ್ನಷ್ಟೇ ಉಲ್ಲೇಖಿಸುತ್ತವೆ. ಶಾಸನಗಳನ್ನಾಧರಿಸಿ ಕನ್ನಡ ನಾಡಿನಲ್ಲಿ ವಿವಿಧ ಅರಸುಮನೆತನಗಳ ಆಳ್ವಿಕೆಗೆ ಅನುಗುಣವಾಗಿ ನಿರ್ಮಿತವಾದ ದೇವಾಲಯಗಳ ಹೆಸರುಗಳು ವೈವಿಧ್ಯಮಯವಾಗಿವೆ. 1.ಪ್ರಸಿದ್ಧ ದೇವರ ಹೆಸರಿನಲ್ಲಿ 2.ಪ್ರಸಿದ್ಧ ಪುರಾಣ ಪುಣ್ಯ ಕ್ಷೇತ್ರಗಳ ಹೆಸರಿನಲ್ಲಿ 3. ಗುರುಗಳ ಹೆಸರಿನಲ್ಲಿ 4. ವ್ಯಕ್ತಿಗಳ ಹೆಸರಿನಲ್ಲಿ 5.ತಂದೆ-ತಾಯಿಯರ ಹೆಸರಿನಲ್ಲಿ 6. ರಾಜ ಮನೆತನದವರು ರಾಜರು ರಾಣಿಯರು ನಿರ್ಮಿಸಿದ ದೇವಾಲಯಗಳು 7. ದಂಡನಾಯಕರು ತಮ್ಮ ಅಧಿರಾಜರ ಸ್ಮರಾಣರ್ಥ ಹಾಗೂ ತಮ್ಮ ಹೆಸರಿನಲ್ಲಿ ಇಷ್ಟ ದೈವದ ಹೆಸರಿನಲ್ಲಿ, ಇನ್ನಿತರ ಹೆಸರಿನಲ್ಲಿ 8. ಊರಗಾವುಂಡರು ಹಾಗೂ ಇತರ ಸಾಮೂಹಿಕವಾಗಿ ಅಧಿದೈವದ ಹೆಸರಿನಲ್ಲಿ 9.ವಣಿಕ ವರ್ಗ ನಿರ್ಮಿಸಿದ ದೇವಾಲಯಗಳು 10. ಸಾಮಾನ್ಯ ಜನತೆ ತಮ್ಮ ಇಷ್ಟ ದೈವದ ಹೆಸರಿನಲ್ಲಿ ನಿರ್ಮಿಸಿರುವ ದೇವಾಲಯ ಎಂದು ವರ್ಗೀಕರಿಸಲಾಗಿದೆ.
      `ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ ಹಲವಾರು ಏರಿಳಿತಗಳ ನಡುವೆಯೂ ಅರಸರುಗಳ, ಸಾಮಂತರ, ಅಮಾತ್ಯರ, ಸ್ಥಳೀಯ ಅರಸರ ಸಾಮಾನ್ಯ ಜನತೆಯ ಆಶಯದ ಪ್ರತೀಕವಾಗಿದ್ದು ಸಾಂಸ್ಕೃತಿಕ ಜೀವನ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಶಾಸನಗಳ ಅಧ್ಯಯನ ವಿಧಾನದಿಂದ'ಗುರುತಿಸಿರುವುದನ್ನು ಗಮನಿಸ ಬಹುದಾಗಿದೆ.
      ಶಾಸನಗಳನ್ನು ಕುರಿತ ಸಂಶೋಧನಾ ಅಧ್ಯಯನ ವಿಧಾನದ ಪ್ರಾರಂಭಿಕ ಘಟ್ಟದಲ್ಲಿ ಶಾಸನಗಳಂತಹ ಆಕರಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಚರಿತ್ರೆಯನ್ನು ಭಾಗಶಃ ಅಥವಾ ಬಿಡಿಯಾಗಿ ಕಟ್ಟುವ ಘಟನಾ ಶೋಧನಿಷ್ಠ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಿದ್ದರು.
ಉದಾ: ಕ್ರಿ.ಶ.1368ರ ಬುಕ್ಕರಾಯನ ಶ್ರವಣಬೆಳಗೊಳದ ಶಾಸನವನ್ನು ಶೋಧಿಸಿದ ಬಿ.ಎಲ್.ರೈಸ್ ಮತ್ತು ಆರ್.ನರಸಿಂಹಾಚಾರ್ಯರು ಆ ಶಾಸನದಲ್ಲಿ ವ್ಯಕ್ತವಾಗಿರುವ ಮಾಹಿತಿಯನ್ನು ಧರ್ಮಸಮನ್ವಯದ ದ್ಯೋತಕವೆಂಬ ರೀತಿಯಲ್ಲಿ ಗ್ರಹಿಸಿದ್ದರು. ಮತೀಯ ಒಪ್ಪಂದದ ಹಿಂದೆ ಮತೀಯ ಕಲಹ ಇದೆ ಎಂಬ ಅಂಶವನ್ನು ಒತ್ತುಕೊಟ್ಟು ಹೇಳಿರಲಿಲ್ಲ. ಇದು ಧರ್ಮ ಸಮನ್ವಯದ ಶಾಸನವೆಂಬಂತೆ ತೋರಿದ್ದರೂ ಧರ್ಮ ಕಲಹದ ಶಾಸನವಾಗಿಯೂ ಕಂಡುಬರುತ್ತದೆಂಬ ಘಟನೆಯ ಇನ್ನೊಂದು ಮುಖವನ್ನು ಶೋಧಿಸಿ ವ್ಯಕ್ತಪಡಿಸಿದ್ದು ನಂತರದ ಕಾಲದಲ್ಲಿ, 14ನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳುಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ, ಭೀತಿಯ ನೆರಳಲ್ಲಿ ಅವರು ಬದುಕಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥಮಾಡಿಕೊಂಡ ದೊರೆ ಬುಕ್ಕರಾಯನು ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ ಎರಡೂ ಪಂಗಡಗಳ ಮಧ್ಯೆ ವಿರಸ ಹೆಚ್ಚಾಗದ ರೀತಿಯಲ್ಲಿ ತೀರ್ಪನ್ನು ನೀಡಿದ. ಬುಕ್ಕನ ತೀರ್ಪು ಜೈನ ಮತ್ತು ಶ್ರೀವೈಷ್ಣವ ಮತಗಳ ನಡುವಿನ ಘರ್ಷಣೆಯ ತೀವ್ರತೆಯನ್ನು ಕಡಿಮೆ ಮಾಡಿತೇ ಹೊರತು ಘರ್ಷಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದವಾಗಿದೆ. ಈ ಶಾಸನದಲ್ಲಿಯ ವೈಷ್ಣವ ಮತ್ತು ಜೈನಧರ್ಮಗಳ ನಡುವಿನ ಈ ತಿಕ್ಕಾಟದಲ್ಲಿ ವೈಷ್ಣವ ಧರ್ಮದ ಆಕ್ರಮಣ ಶೀಲತೆಯು ಎದ್ದು ಕಾಣುವುದನ್ನು ಗುರುತಿಸಬಹುದಾಗಿದೆ.
      ಶಾಸನಗಳಲ್ಲಿಯ ಅಲಕ್ಷಿತ ಸಂಗತಿಗಳ ಬಗೆಗೆ ಗಮನ ಕೊಡಬೇಕಾಗಿರುವುದರ ಜೊತೆಗೆ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ತನ್ನದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಸ್ಥಳೀಯ ಅರಸರ ಕಾಲದ ಸಾಂಸ್ಕೃತಿಕ ಅಂಶಗಳನ್ನು ವಿಶ್ಲೇಷಣೆಗೊಳಪಡಿಸಬೇಕಾಗಿದೆ.
      ವಿಜಯನಗರ ಸಾಮ್ರಾಜ್ಯವು ಉಚ್ಛ್ರಾಯಕಾಲದಲ್ಲಿದ್ದಾಗ ಕಲೆ ಹಾಗೂ ಅದರ ಸಂಸ್ಕೃತಿಯು ನಾಡಿನಾದ್ಯಂತ ವ್ಯಾಪಿಸಿಕೊಂಡಿತ್ತು ಎಂಬ ನಿಲುವು ವ್ಯಕ್ತಗೊಂಡಿದೆ. ಆದರೆ ಈ ಸಾಮ್ರಾಜ್ಯದ ಅಡಿಯಲ್ಲಿಯೇ ಹಲವಾರು ಸ್ಥಳೀಯ ಅರಸರುಗಳು ತಮ್ಮ ಸೀಮಿತ ಪ್ರದೇಶಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಇವರು ವಿಜಯನಗರ ಅರಸರಿಗೆ ಸಾಮಂತರಾಗಿದ್ದುದರಿಂದ ಇವರ ಸಂಸ್ಕೃತಿ, ಜೀವನ ಶೈಲಿಯು ವಿಜಯನಗರದ ಅರಸರ ಸಂಸ್ಕೃತಿಯಾಗಿತ್ತೆಂದೂ ಒಮ್ಮತದ ನಿಲುವಿಗೆ ಬರುವುದು ಅವಸರದ ತೀರ್ಮಾನವಾಗುತ್ತದೆ. ಪ್ರತಿಯೊಂದು ಪ್ರದೇಶ ಅಥವಾ ಅರಸುಮನೆತನವು ಅದು ಪಾಳೆಯಪಟ್ಟೇ ಆಗಿರಲಿ ಅದಕ್ಕೆ ಅದರದ್ದೇ ಆದಂತಹ ಆಡಳಿತ ಜೀವನ, ವಿಧಾನ ಕಲೆ ಇತ್ಯಾದಿ ಸಾಂಸ್ಕೃತಿಕ ಅಂಶಗಳು ಇದ್ದೇ ಇರುತ್ತವೆ. ಅಂತಹ ಅಂಶಗಳನ್ನು ಶಾಸನಗಳಂತಹ ಆಕರಗಳ ಹಿನ್ನಲೆಯಲ್ಲಿ ಬೇರೊಂದು ನಿಟ್ಟಿನಲ್ಲಿ ಗುರುತಿಸಬೇಕಾಗುತ್ತದೆ.
      ದಾನ ಶಾಸನಗಳ ಕುರಿತಾದ ಅಧ್ಯಯನದಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ನಾಡಿನ ಶಾಸನಗಳಲ್ಲಿ ದಾನ ಶಾಸನಗಳದ್ದೇ ಮೇಲುಗೈ. ದಾನ ಶಾಸನಗಳಲ್ಲಿ ರಾಜನೋ ಅಧಿಕಾರಿಯೋ ಒಂದು ದಾನ ನೀಡಿದ್ದರೆ ಒಟ್ಟಾರೆ ಇಂತಿಷ್ಟು ಭೂಮಿಯನ್ನು ದೇವರಿಗೊ, ಬ್ರಾಹ್ಮಣರಿಗೊ, ಸಂಘ ಸಂಸ್ಥೆಗಳಿಗೊ ದಾನ ನೀಡಬೇಕೆಂಬ ಅಂಶ ಕಂಡುಬರುತ್ತದೆ. ಬಹಳಷ್ಟು ದಾನ ಶಾಸನಗಳಲ್ಲಿ ನೀಡುವ ದಾನವನ್ನು ಹೇಗೆ ವಿತರಿಸಬೇಕು ಎಂಬ ವಿವರಗಳು ಕಂಡು ಬರುವುದು ಕಡಿಮೆ. ಇಂತಹ ಸಂದರ್ಭಗಳಲ್ಲಿ ಗ್ರಾಮದ ಯಾವುದೇ ಒಂದು ನಿರ್ದಿಷ್ಟ ಭೂಮಿ ಮೂಲತಃ ಯಾರಿಗೆ ಸೇರಿದ್ದು, ಅದನ್ನು ಯಾರಿಗೆ ನೀಡಿದ್ದು, ಅನಂತರ ಅದು ಹೇಗೆಲ್ಲಾ ಕೈ ಬದಲಾವಣೆಗಳಾಗಿವೆ. ಅದರಿಂದ ಬರುವ ಆದಾಯವೆಷ್ಟು ಎಂಬುದರ ಬಗೆಗೆ ನಿರ್ದಿಷ್ಟ ವಿವರಗಳು ದೊರೆಯುವುದಿಲ್ಲ.ಇಂತಹ ಸಂದರ್ಭದಲ್ಲಿ ಒಂದು ಗ್ರಾಮದಲ್ಲಿಯ ಶಾಸನೋಕ್ತ ದತ್ತಿರೂಪದ ಎಲ್ಲಾ ಭೂಮಿಗಳ ಒಟ್ಟು ವಿವರಗಳನ್ನು  ಪರಿಗಣನೆಗೆ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ.  ಒಟ್ಟಾರೆ ಶಾಸನಗಳನ್ನಾಧರಿಸಿ ಆಯಾ ಕಾಲದ ಜನತೆಯ ಸಾಮಾಜಿಕ, ಆರ್ಥಿಕ, ಧಾರ್ಮಿಕ ಪರಿಸ್ಥಿತಿಗಳನ್ನು ಗುರುತಿಸುವ ಪ್ರಯತ್ನವನ್ನು ಸಾಂಸ್ಕೃತಿಕ ಸಂಶೋಧನೆಯಲ್ಲಿ ಕಾಣಬಹುದಾಗಿದೆ.
ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಮುನ್ನೋಟ
      ಸಾಂಸ್ಕೃತಿಕ ಅಧ್ಯಯನದ ಕ್ರಮಪದ್ಧತಿಯಲ್ಲಿ ಇಲ್ಲಿಯವರೆಗೂ ಬಹುಪಾಲು ಆಕರ ಸಾಮಗ್ರಿಯನ್ನು ವಿಶ್ಲೇಷಣಾತ್ಮಕವಾಗಿ ಅಭ್ಯಸಿಸಿ ಒಂದು ವಿಷಯದ ಅಥವಾ ಸಮಗ್ರ ಬದುಕಿನ ರೂಪನಿಷ್ಠಶೋಧವನ್ನು ಮಾತ್ರ ನಡೆಸಲಾಗಿದೆ.ಅಂದರೆ ಘಟನಾ ಪ್ರಧಾನ ಮತ್ತು ದಾಖಲೆ ಪ್ರಧಾನ ಸಂಶೋಧನೆಯನ್ನು ಮಾತ್ರ ಕೈಗೊಳ್ಳಲಾಗಿದೆ. ಅವುಗಳನ್ನು ಇನ್ನು ವ್ಯಾಪಕವಾಗಿ ಅಂದರೆ ವ್ಯಾಖ್ಯಾನಾತ್ಮಕವಾಗಿ ಅಧ್ಯಯನ ಮಾಡಿ ಬದುಕಿನ ಗುಣನಿಷ್ಠ ಶೋಧವಾಗಿ ಮಾಡಬೇಕಾಗಿದೆ ಎಂಬ ನಿಲುವು ಇತ್ತೀಚಿನ ಕೆಲವು ಸಂಶೋಧಕರಲ್ಲಿ ವ್ಯಕ್ತವಾಗಿದೆ.
      ವೀರಜೀವನ ಹಾಗೂ ಆತ್ಮಬಲಿ ಕುರಿತ ಸಾಂಸ್ಕೃತಿಕ ಅಧ್ಯಯನದಲ್ಲಿ ಶಾಸನಗಳು ಹಾಗೂ ಇನ್ನಿತರ ಅನುಷಂಗಿಕ ಆಕರಗಳು ನೀಡುವ ಮಾಹಿತಿಗಳು ಪ್ರಾಚೀನ ಕಾಲದಲ್ಲಿ ಸತಿಪದ್ಧತಿ, ವೀರಮರಣ, ಪ್ರಕಾರಗಳು ಪ್ರಚಲಿತವಿದ್ದವು ಎಂಬುದನ್ನು ತೋರಿಸಿಕೊಟ್ಟಿವೆ. ಜೊತೆಗೆ ಅವುಗಳ ಆಚರಣೆಯ ವಿಧಾನ ಐತಿಹಾಸಿಕ ಬೆಳವಣಿಗೆ, ಪ್ರಾದೇಶಿಕ ಪ್ರಸಾರಗಳನ್ನು ಗ್ರಹಿಸುವ ಅಧ್ಯಯನವು ನಡೆದಿದೆ. ಆದರೆ ಇನ್ನೊಂದು ನಿಟ್ಟಿನಿಂದಲೂ ಇವುಗಳನ್ನು ಅಭ್ಯಸಿಸಬೇಕಾಗಿದೆ. ಈ ಪದ್ಧತಿಗಳು ಅಸ್ತಿತ್ವಕ್ಕೆ ಬರಲು ಇದ್ದ ಒತ್ತಡಗಳು, ಜನರು ಅವುಗಳಿಗೆ ತೋರಿಸುತ್ತಲಿದ್ದ ನಿಜವಾದ ಪ್ರತಿಕ್ರಿಯೆಗಳು, ಅವುಗಳ ಒಳಿತು-ಕೆಡುಕುಗಳು ಇತ್ಯಾದಿ ಅಂಶಗಳನ್ನು ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ವ್ಯಾಖ್ಯಾನಿಸಬೇಕಾಗುತ್ತದೆ. ಆತ್ಮಬಲಿಯ ಕುರಿತಾದ ಶಾಸನಗಳು ಹಾಗೂ ಶಿಲ್ಪಗಳಲ್ಲಿಯ ವಿವರಗಳು ಆತ್ಮ ಬಲಿಯ ಬಗೆಗೆ ಗೌರವ ಮೂಡಿಸುತ್ತವೆಯೇ ಹೊರತು ಅವುಗಳ ಹಿಂದೆ ಇದ್ದ ಒತ್ತಡಗಳೇನು ಎಂಬುದನ್ನು ಗ್ರಹಿಸಬೇಕಾಗಿದೆ. ರಾಜತ್ವವು ಜನ ಸಾಮಾನ್ಯರಿಗೆ ವೀರಮರಣದ ಸ್ವರ್ಗ ಪ್ರಾಪ್ತಿ ಎನ್ನುವ ನಂಬಿಕೆಯನ್ನು ಹೇಳುವುದರ ಮೂಲಕ ರಾಜನಿಗೆ ಮನಪೂರ್ವಕವಾಗಿ ದುಡಿಯುವ ತ್ಯಾಗ ಮಾಡುವ ರೀತಿಯಲ್ಲಿ ಯಾವ ರೀತಿ ಪ್ರಚೋದಿಸಲಾಗಿತ್ತು ಎಂಬ ಅಂಶಗಳ ಕಡೆಗೂ ಅಧ್ಯಯನ ಮಾಡಬೇಕಾಗಿದೆ. ರಾಜನಿಗಾಗಿ ಮಡಿದ ವೀರರ ತ್ಯಾಗ, ಬಲಿದಾನಗಳ ವರ್ಣನೆ ಸ್ಮಾರಕಗಳ ಸ್ಥಾಪನೆ ಒಂದು ದೃಷ್ಟಿಯಿಂದ ರಾಜತ್ವದ ಆರಾಧನೆ ಮತ್ತು ವೈಭವೀಕರಣದ ಸಂಕೇತ ಎಂಬ ಗ್ರಹಿಕೆ ಇಂದು ಕೆಲವರಲ್ಲಿ ಉಂಟಾಗಿದೆ. ರಾಜತ್ವದ ಶ್ರೇಷ್ಠತೆಗಾಗಿ, ರಾಜ ತೋರಿದ ಪ್ರೀತಿಗಾಗಿ ವೇಳೆವಾಳಿಗಳು ತಮ್ಮನ್ನು ತಾವು ಕೊಂದುಕೊಳ್ಳುವುದು ನ್ಯಾಯಯುತವಾಗಿದ್ದಿತೇ? ಎಂಬ ಅನುಮಾನವೂ ಕೆಲವು ಸಂಶೋಧಕರನ್ನು ಕಾಡಿದೆ. ರಾಜತ್ವದ ಮೌಲ್ಯಗಳನ್ನೇ ಸಾಂಸ್ಕೃತಿಕ ಮೌಲ್ಯಗಳೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಸ್ಕೃತಿಯನ್ನು ಚರಿತ್ರೆಯ ಒಂದು ಭಾಗವೆಂದು ಪರಿಗಣಿಸಿದರೆ ಅದು ಕೇವಲ ರಾಜರ ಚರಿತ್ರೆಯಷ್ಟೇ ಅಲ್ಲವೇ. ಇದರಿಂದಾಗಿ ಸಂಸ್ಕೃತಿಯ ಪರಿಪೂರ್ಣ ಅಧ್ಯಯನ ಆಯಿತೇ? ಎಂಬ ಪ್ರಶ್ನೆಯು ನಮ್ಮ ಮುಂದಿದೆ.
      ಶಾಸನಗಳಂತಹ ಆಕರಗಳನ್ನು ಆಧರಿಸಿದ  ಸಾಂಸ್ಕೃತಿಕ ಅಧ್ಯಯನ ಇಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿದೆ. ಕೆಲವು ಅರೆಕೊರೆಗಳಿದ್ದರೂ ಇಂದು ಈ ಅಧ್ಯಯನದಲ್ಲಿ ಸಮಾಜ ಸಮ್ಮತ ಆಚಾರ-ವಿಚಾರಗಳ ಅಧ್ಯಯನ ಬಲಗೊಳ್ಳುತ್ತಿರುವುದು ಆಶಾದಾಯಕವಾಗಿದೆ. ಇತ್ತೀಚೆಗೆ ಹಲವಾರು ಸಂಶೋಧಕರು ಎಡಪಂಥೀಯ ಗುಣನಿಷ್ಠ ಪ್ರಕಾರದ ಸಂಶೋಧನಾ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಾರೆ. ಜನಸಾಮಾನ್ಯರ ಸಂಸ್ಕೃತಿ ನಿಜವಾದ ಸಂಸ್ಕೃತಿಯಾಗುವುದರಿಂದ ಇವರು ಶಾಸನಗಳಂತಹ ಆಕರಗಳನ್ನು ಕುರಿತ ಸಾಂಸ್ಕೃತಿಕ ಅಧ್ಯಯನದಲ್ಲಿ ಮಾಹಿತಿಗಳನ್ನು ಯಜಮಾನ್ಯ ದೃಷ್ಟಿಯಿಂದ ಪರಿಗಣಿಸದೆ ಜನಪರ ದೃಷ್ಟಿಯಿಂದ ಗ್ರಹಿಸುವ, ಆ ಘಟನೆಗಳ ಹಿಂದೆ ಅಡಗಿರುವ ನೋವಿನ ನೆಲೆಗಳನ್ನು ಅರಸುವ ಇತ್ಯಾದಿ ಹೊಸ ದೃಷ್ಟಿಕೋನಗಳತ್ತ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಇವರ ಸಂಶೋಧನೆಯಲ್ಲಿ ಇಲ್ಲಿಯವರೆಗಿನ ಶಾಸನಗಳು ನೀಡಿರುವ ಸಂಗತಿಗಳ ಕುರಿತ ಮರು ವ್ಯಾಖ್ಯಾನವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ವೈಚಾರಿಕ ಶೋಧ ಎನಿಸಿದೆ. ಆಕರಗಳ ಕುರಿತ ಇವರ ವೈಚಾರಿಕ ಶೋಧವು ವಿಮರ್ಶೆಯ ಬರವಣಿಗೆಯನ್ನು ಸಮೀಪಿಸುತ್ತಿದೆ ಎಂದೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಸಂಶೋಧನೆಗೆ ಅಧಿಕೃತವಾದಂತಹ ಶಾಸನಗಳಂತಹ ಆಕರಗಳನ್ನು ಲಭ್ಯವಿರುವ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ದ್ರಾವಿಡ ನೆಲೆಯ ದೇಸಿವಾದದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಇತಿಹಾಸವನ್ನು  ಪುನರ್ ರಚಿಸುವ ಪ್ರಯತ್ನಗಳು ನಡೆಯುತ್ತಿರುವುದು ಇತಿಹಾಸ ಸಂಶೋಧನೆಯ ಪೂರ್ಣತೆಯನ್ನು ಸಾಕಾರಗೊಳಿಸಲು ಸಹಕಾರಿಯಾಗಿವೆ.









       

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...