ಭಾನುವಾರ, ಡಿಸೆಂಬರ್ 2, 2018

ವಚನ ಸಾಹಿತ್ಯ ಸಂಪಾದನೆ,ಸಂಶೋಧನೆ ಮತ್ತು ಎಸ್.ಎಂ.ಹುಣಶಾಳ(1916-1966) ಡಾ.ಸಿ.ನಾಗಭೂಷಣ

    ವಚನ ಸಾಹಿತ್ಯ ಸಂಪಾದನೆ,ಸಂಶೋಧನೆ ಮತ್ತು ಎಸ್.ಎಂ.ಹುಣಶಾಳ(1916-1966)
                                            ಡಾ.ಸಿ.ನಾಗಭೂಷಣ
   ಎಸ್.ಎಂ. ಹುಣಶಾಳರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿದ್ದ ದೇಶಿಯ ವಿದ್ವಾಂಸರಲ್ಲಿ ಪ್ರಮುಖರು ಹಾಗೂ ಮೊದಲಿಗರಾಗಿ ಕಂಡು ಬರುತ್ತಾರೆ.  ಸಂಶೋಧಕರು, ಸೃಜನಶೀಲ ಸಾಹಿತಿಗಳು, ಹಾಗೂ ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲಿ ಪ್ರಭುತ್ವವನ್ನು ಪಡೆದಿದ್ದ ಇವರ ಬಗೆಗೆ, ನಾಡಿನ ವಿದ್ವಾಂಸರನ್ನು ಪರಿಚಯಿಸುವ ಪುಸ್ತಕಗಳಲ್ಲಾಗಲೀ ಇತರೆ ಕಡೆಗಳಲ್ಲಾಗಲಿ ದಾಖಲುಗೊಳಿಸದಿರುವುದು ಇಂತಹ ವಿದ್ವಾಂಸರ ಬಗೆಗೆ ನಾವು ತೋರಿಸುತ್ತಿರುವ ಅಗೌರವದ ಪ್ರತೀಕವಾಗಿದೆ.  ಇಂತಹ ವಿಷಯಗಳಲ್ಲಿ ನಾವು ತಾಳಿರುವ ಉದಾಸೀನತೆಯನ್ನು ಮತ್ತಾರು ತಾಳಿಲ್ಲ ಎನ್ನಬಹುದು.
     ಇಂದಿನ ಪೀಳಿಗೆಯ ಸಂಶೋಧಕರು ಪೂರ್ವದ ವಿದ್ವಾಂಸರು ಕೊಡ ಮಾಡಿದ ಹಳಗನ್ನಡ, ನಡುಗನ್ನಡ ಕಾಲಘಟ್ಟದ ಸಾಹಿತ್ಯದ ಪ್ರಜ್ಞಾಪೂರ್ಣ ಕೊಡುಗೆಯನ್ನು ಇಂದಿನ ಬರವಣಿಗೆಯಲ್ಲಿ ಪರಾಮರ್ಶನ ಮತ್ತು ಪೂರಕ ಆಕರವಾಗಿ ಅವೆಲ್ಲವುಗಳನ್ನು ಬಳಸಿಕೊಂಡು ಸಂಶೋಧನಾ ವ್ಯಾಸಂಗದ ತಳಹದಿಯಲ್ಲಿ ಸತ್ಯದ ಸಮೀಪಕ್ಕೆ ಬರುವಂತಾಗಲು ಸಾಧ್ಯವಾಗಿದೆ. ವಚನ ಸಾಹಿತ್ಯದ ಆಳ ಅಂತರವೆಂದರೆ ವಚನಕಾರರು ಮತ್ತು ಅವರು ರಚಿಸಿದ ವಚನಗಳು, 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಮತ್ತು 12ನೆಯ ಶತಮಾನದ ನಂತರದ ಕಾಲದಲ್ಲಿ ಹಲವಾರು ವಚನಕಾರರು, ವಚನಕಾರ್ತಿಯರು ಆಗಿಹೋಗಿದ್ದಾರೆ. ವಚನಗಳ ಸಂಗ್ರಹ-ಸಂಪಾದನೆಯಂತಹ ಕೆಲಸವು ಬಹಳ ಮಹತ್ವವಾದುದು. ಅದರಂತೆ ವಚನಕಾರರ ಕಾಲ, ಇತಿವೃತ್ತ, ಅವರ ವಚನಗಳು ಶಾಸ್ತ್ರೀಯ ಸಂಪಾದನೆ ಮುಂತಾದವುಗಳನ್ನು ಅಚ್ಚುಕಟ್ಟಾಗಿ ಗ್ರಹಿಸುವುದು ಇಂದು  ಪ್ರಮುಖವಾದ ಅಂಶವಾಗಿದೆ. ಈಗೆಲ್ಲಾ ವಚನಕಾರರು ಅವರ ಕಾಲ ಅಂಕಿತನಾಮಗಳನ್ನು ಮತ್ತು ವಚನಗಳು ಒಳಗೊಂಡಿರುವ  ವಿದ್ವದಾವೃತ್ತಿ ಮತ್ತು ಸಾರಸಂಗ್ರಹ ಆವೃತ್ತಿಗಳು  ನಮ್ಮ ಮುಂದಿದೆ. ಈ ರೀತಿಯಾಗಿ ಸಿಗುವಿಕೆಯಲ್ಲಿ ಅನೇಕ ವಿದ್ವಾಂಸರ ಶ್ರಮವಿದೆ. ಈ ವಿದ್ವತ್ ಕಾರ್ಯಗಳ ಪ್ರಮುಖ ಕಾರಣರಾದಂತಹವರಲ್ಲಿ ಎಸ್.ಎಂ.ಹುಣಶಾಳರು ಒಬ್ಬರಾಗಿದ್ದಾರೆ. ವಚನ ಸಾಹಿತ್ಯದ ಬಗೆಗಿನ ಆಕರಗಳ ಶೋಧದ ಹಿನ್ನೆಲೆಯಲ್ಲಿ ಹಲವೆಡೆ ಅಡಗಿ ಚದುರಿಹೋಗಿದ್ದ ವಚನಗಳನ್ನು ಹುಡುಕಿ, ಸಂಗ್ರಹಿಸಿ ಒಂದೆಡೆ ಕಲೆಹಾಕಿ ನಾಮಾನುಗುಣ ಹಾಗು ವಿಷಯಾನುಗುಣವಾಗಿ ಹೊಂದಿಸುವಲ್ಲಿ ಇವರ ವಚನಸಾಹಿತ್ಯ ಕುರಿತ ಸಂಶೋಧನೆಗಳು ಗಮನಾರ್ಹವಾಗಿವೆ. ಅಲಕ್ಷಿತ ವಚನಕಾರ ವಚನಗಳ ಅನ್ವೇಷಣೆ ಹಾಗೂ ಅನುಪಲಬ್ಧ ವಚನಗಳನ್ನು ಬೆಳಕಿಗೆ ತರುವಂತಹ ಗ್ರಂಥಸಂಪಾದನೆಯ ಕಾರ್ಯದಲ್ಲಿ ಇವರು ನಿಜಾಂ ಕರ್ನಾಟಕ ಭಾಗದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದವರು.
     ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಜನ ಜಾಗೃತಿಯನ್ನು ಪ್ರಮುಖವಾಗಿ ಇಟ್ಟುಕೊಂಡು ನಾಡು-ನುಡಿಗಾಗಿ ತಮ್ಮನ್ನು ತಾವೇ ಸದ್ದು-ಗದ್ದಲವಿಲ್ಲದೇ ಅರ್ಪಿಸಿಕೊಂಡ ಎಸ್.ಎಂ. ಹುಣಶಾಳರ ಜೀವನ ಮಹತ್ವಪೂರ್ಣವಾದುದು.  ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಮುಂತಾದ ಶಬ್ದಗಳು ಕೇವಲ ಅರ್ಥಕೋಶದಲ್ಲಿ ಮಾತ್ರ ಉಳಿದುಕೊಳ್ಳುತ್ತಿರುವ ಸಂದರ್ಭದಲ್ಲಿ, ಆ ಶಬ್ದಗಳಿಗೆ ಮತ್ತೆ ಜೀವದಾನ ಮಾಡಿದವರು ಇವರು.  ಹುಣಶಾಳರು ತಮ್ಮ ಜೀವನದ ಮೂಲಕವೇ ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾದರು. ಹಿಡಿದದ್ದನ್ನು ಬಿಡದೇ ಸಾಧಿಸಿದವರು.  ಅವರ ಬದುಕು-ಬರಹಗಳ ನಡುವೆ ಅಂತರವನ್ನು ಹುಡುಕಲು ಸಾಧ್ಯವೇ ಇಲ್ಲ.  ಆದಾಗ್ಯೂ ರಾಯಚೂರು ಪರಿಸರದಲ್ಲಿ ಹುಣಶಾಳರ ಸಾಹಿತ್ಯ ಸೇವೆಯನ್ನು ನಂತರದ ಕಾಲದಲ್ಲಿ ಗುರುತಿಸದೆ ಇಂದಿಗೂ ಎಲೆಮರೆಯ ಕಾಯಿಯಂತೆ ಉಳಿದಿರುವುದು ದುರದೃಷ್ಟಕರ ಸಂಗತಿಯಾಗಿದೆ.  ಈ ಭಾಗದಲ್ಲಿ ಆಗಿನ ಕಾಲಕ್ಕೆ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಭುತ್ವವನ್ನು ಪಡೆದಿದ್ದವರು ಬಹುಮಟ್ಟಿಗೆ ಇವರೊಬ್ಬರೇ.  ಸೃಜನ, ಸಂಪಾದನೆ, ಸಂಶೋಧನಾ ಸಾಹಿತ್ಯ ಪ್ರಕಾರಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಪಡೆದಿದ್ದವರಲ್ಲಿ ರಾಯಚೂರು ಭಾಗದಲ್ಲಿ ಹುಣಶಾಳರು ಮೊದಲಿಗರಾಗಿ ಕಂಡು ಬರುತ್ತಾರೆ.  ಆಗಿನ ಕಾಲಕ್ಕೆ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯುವಷ್ಟು ಮೇಲ್ಮಟ್ಟದ ಅರ್ಹತೆಯನ್ನು ಪಡೆದಿದ್ದ ಹುಣಶಾಳರು ಅವಕಾಶ ವಂಚಿತರಾಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದುಕೊಂಡೇ ಯಾವುದೇ ಪದವಿ-ಪ್ರಶಸ್ತಿಗಳನ್ನು ಬಯಸದೇ ನಿಷ್ಕಾಮ ಮನಸ್ಸಿನವರಾಗಿ ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿಗೈದವರಾಗಿದ್ದಾರೆ.  ಹುಣಶಾಳರಿಗೆ ತಾವಿದ್ದ ಪರಿಸರದಲ್ಲಿ ಜನತೆಯ ಜೊತೆ ನಿಕಟವಾದ ಸಂಪರ್ಕ ಅಷ್ಟಾಗಿ ಏರ್ಪಡಲಿಲ್ಲ. ಉಳಿದ ಸಾಹಿತಿಗಳಿಗೆ, ಸಂಶೋಧಕರಿಗೆ ಇದ್ದ ಮಿತ್ರವೃಂದವಾಗಲೀ ಶಿಷ್ಯವೃಂದವಾಗಲಿ ಇವರಿಗೆ ಇರದೆ ಹೋದದ್ದರಿಂದಲೋ ಎನೋ ಕನ್ನಡ ನಾಡಿನ ಸಂಶೋಧಕರ, ಸಾಹಿತಿಗಳ ಚರಿತ್ರೆಯಲ್ಲಿ ದಾಖಲಾಗದೆ ಹೋಯಿತು.  ಜೊತೆಗೆ ಹುಣಶಾಳರ ಸಾಹಿತ್ಯ ಸೃಷ್ಟಿಯು ವ್ಯವಸ್ಥಿತವಾಗಿ ದೊರಕದೆ ಹೋದದ್ದು ಒಂದು ಕಾರಣವಾಗಿದೆ.    
      ಎಸ್.ಎಮ್.ಹುಣಶಾಳರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ದಿನಾಂಕ: 25-03-1916 ಜನಿಸಿದರು.  ತಂದೆ ಮಹಾಲಿಂಗಪ್ಪ ತಾಯಿ ಗುರುಲಿಂಗಮ್ಮ. ಅವರ ಅಡ್ಡ ಹೆಸರು ಸೊಲಬಣ್ಣಾ ಹುಣಶಾಳರು.  ಆರುವರ್ಷದ ಮಗುವಾಗುತ್ತಲೇ ಅವರು ಕನ್ನಡ ಪ್ರಾಥಮಿಕ ಶಾಲೆಯನ್ನು ಸೇರಿದರು.  ಒಂದನೇ ತರಗತಿಯಿಂದ ನಾಲ್ಕನೆಯ ತರಗತಿಯನ್ನು ಮಹಾಲಿಂಗಪುರ ಮತ್ತು ಬನಹಟ್ಟಿಯಲ್ಲಿ ಪೂರೈಸಿದರು.  1930ನೇ ಇಸವಿಯಲ್ಲಿ ಬೆಳಗಾವಿಯ KARNATAKA LINGAYAT EDUCATION (KLE) ಸಂಸ್ಥೆಯ ‘ಅರ್‍ಟಾಳ್ ಗಿಲಗಂಚಿ’ ಮಾಧ್ಯಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಪ್ರವೇಶ ಪಡೆದರು.  ಮಹಾಲಿಂಗಪುರದಲ್ಲಿ ಹುಣಶಾಳರ ಮನೆತನದ ಪ್ರಮುಖ ಉದ್ಯೋಗ ನೇಕಾರಿಕೆಯಾಗಿದ್ದು ಅದುವೇ ಜೀವನಾಧಾರವಾಗಿತ್ತು.  ನೇಕಾರಿಕೆ ಕೆಲಸದಿಂದ ಅವರ ಜೀವನ ನಿರ್ವಹಿಸುವುದು ತುಂಬಾ ಕಷ್ಟದ ಕೆಲಸವೇ ಆಗಿತ್ತು.  ಈ ನಡುವೆಯೇ ಆ ಊರಿನಲ್ಲಿ ಶಿಕ್ಷಣದ ಗಂಧಗಾಳಿ ಬೀಸುತ್ತಿತ್ತು.  ಅಂತಹ ಕಷ್ಟತಮ ಜೀವನದಲ್ಲಿಯೇ ಹುಣಶಾಳರು ಶಿಕ್ಷಣವನ್ನು ಪ್ರಾರಂಭಿಸಿದರು.  ಶರಣಧರ್ಮದ ಕುಟುಂಬದವರಾದುದರಿಂದ, ಆ ಧರ್ಮದ ತತ್ವಗಳು, ಸಿದ್ಧಾಂತಗಳು, ಮನೆತನದ ವಾತಾವರಣದ ಮೂಲಕ ಅವರಿಗೆ ಮನಸೊರೆಗೊಂಡಿದ್ದವು.  ಆ ನಂತರ ಅವರನ್ನು ಶರಣ ಸಾಹಿತ್ಯ ಆಕರ್ಷಿಸಿತು. ಬಾಲ್ಯದಿಂದಲೂ ಚುರುಕಾಗಿದ್ದ ಹುಣಶಾಳರು ತಮ್ಮ ಬದುಕಿನುದ್ದಕ್ಕೂ ಕ್ರಿಯಾಶೀಲರಾಗಿದ್ದರು. 
       ಯಾವುದೇ ಕಾಲದ ಕವಿಗೆ ಅಂದಂದಿನ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ ಸ್ಥಿತ್ಯಂತರಗಳ, ಪರಿಸರದ ಪ್ರಭಾವ ಬೀರುವುದು ಕಂಡು ಬರುತ್ತದೆ.  ಅಂತೆಯೇ ಹುಣಶಾಳರಿಗೆ ತಾವು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿಯೇ ಗುರುಗಳಿಂದ ದಟ್ಟವಾದ ಪ್ರಭಾವ ಬೀರಿರುವುದು ಗುರುತರವಾಗಿ ವಿದಿತವಾಗುತ್ತದೆ.  ಬೆಳಗಾವಿಯ ‘ಅರ್‍ಟಾಳ್ ಗಿಲಗಂಚಿ’ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿ ಗುರುವರ್ಯರಾದ ಶಿವಲಿಂಗ ಶಿವಯೋಗಪ್ಪ ಬಸವನಾಳ್, ಮಹಾರುದ್ದಪ್ಪ ದೇವಪ್ಪಸಾಂಕರೆ, ಬಸವಂತಪ್ಪ ಬಾಳಪ್ಪ ಮಮದಾಪುರ, ಹುಚ್ಚಯ್ಯ ಫಕೀರಯ್ಯ ಕಟ್ಟೀಮನಿ, ಪಂಡಿತಪ್ಪರಾಮಪ್ಪ ಚಿಕ್ಕೋಡಿ, ಬಸಪ್ಪಸಿದ್ಧಲಿಂಗಪ್ಪ ಹಂಚಿನಾಳ, ವೀರನಗೌಡ ವೀರಬಸನಗೌಡ ಪಾಟೀಲ್, ಇಂತಹ ಗುರುಗಳ ಮಾರ್ಗದರ್ಶನದಲ್ಲಿ ಪ್ರಭಾವಿತರಾದ ಹುಣಶಾಳರು ಮುಂದೆ ಪ್ರೌಢಶಾಲಾ ವಿದ್ಯಾಭ್ಯಾಸದ ಸಂದರ್ಭದಲ್ಲಿಯೂ ಕೂಡ ಅಲ್ಲಿನ ಗುರುವರ್ಯರಾದ ಎಸ್.ಸಿ.ನಂದೀಮಠ, ಆಲೂರು ವೆಂಕಟರಾಯರು ಇಂತಹ ಮಹಾ ಗುರುಗಳ ಸಂಪರ್ಕದಲ್ಲಿ  ಪಕ್ವತೆ ಪಡೆದು ಮುಂದೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯಕವಾಯಿತು..
      ಧಾರವಾಡದಲ್ಲಿಯ ಎಲ್ಲಾ ಮಹಾಗುರುವರ್ಯರ ಸಂಪರ್ಕದಲ್ಲಿ ಉತ್ತಮ ಶಿಕ್ಷಣ-ಸಂಸ್ಕೃತಿ ಪಡೆದು ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದರು.  ಧಾರವಾಡ ಸರಸ್ವತಿ ಮಾತೆಯಿಂದ ಪುನೀತರಾದ ದೊಡ್ಡ ದೊಡ್ಡ ವಿದ್ವಾಂಸರಿಂದ ಕೂಡಿದ ತಾಣ.  ಇಂತಹ ಗುರುವರ್ಯರ ಸಂಪರ್ಕದಿಂದ ರೂಪಿತರಾದ ಹುಣಶಾಳರು ಬಿ.ಇಡಿ ಮತ್ತು ಎಂ.ಎ ಅಧ್ಯಯನವನ್ನು ಪೂರ್ಣಗೊಳಿಸಿದರು. ಬಿ.ಎ., ಬಿ.ಇಡಿ, ಎಂಎ, ಪಿಎಚ್.ಡಿ ಪದವೀಧರರಾಗಿ ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡವರು.  ಹಮ್‍ದರ್ದ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಸ್ಥರಾಗಿ, ಹಾಗೂ ಹಮ್‍ದರ್ದ್  ಪದವಿ ಪೂರ್ವ ಕಾಲೇಜಿನ ಪ್ರಪ್ರಥಮ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದರು.
  ಡಾ.ಜಿ.ನಂಜುಂಡಸ್ವಾಮಿವೈದ್ಯರ ಸಲಹೆ, ಒತ್ತಡದ ಮೂಲಕ ಹುಣಶಾಳರು ಲಖನೌ (ಉತ್ತರ ಪ್ರದೇಶ) ವಿಶ್ವವಿದ್ಯಾಲಯದಲ್ಲಿ ಡಾ. ಸುರಮದಾಸ್ ಗುಪ್ತಾ ಎಂ.ಎ., ಪಿ.ಎಚ್.ಡಿ., ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಇವರ ಮಾರ್ಗದರ್ಶನದ ಮುಖಾಂತರ ‘THE VIRASHAIVA PHILOSOPHY ಈ ಮಹಾ ಪ್ರಬಂಧದ ವಿಷಯದ ಮೇಲೆ 1954ರಲ್ಲಿ ಪಿಎಚ್.ಡಿ ಪಡೆದರು.
      ಅವರ ಪಿಎಚ್.ಡಿ ಸಂಶೋಧನಾ ನಿಬಂಧ ‘THE VIRASHAIVA PHILOSOPHY’ ಯನ್ನು ಮೆಚ್ಚಿ ಅದರ ಪ್ರಕಟಣೆಗಾಗಿ ಹುಬ್ಬಳ್ಳಿಯ ಮೂರು ಸಾವಿರ ಮಠದವರು ಅಂದು 62000/- (ಅರವತ್ತೆರಡು ಸಾವಿರ ರೂಪಾಯಿಗಳು) ಹುಂಡಿ (ಡಿ.ಡಿ) ಯನ್ನು ಕಳುಹಿಸಿಕೊಟ್ಟಿದ್ದನ್ನು ಮನಗಂಡರೆ ಆ ಪ್ರಬಂಧದ ಮೌಲಿಕತೆ ಎಷ್ಟಿತ್ತೆಂಬುದು ಅರ್ಥವತ್ತಾಗುತ್ತದೆ.  ಆದರೆ ಆ ಸಂದರ್ಭದಲ್ಲಿ ಹುಣಶಾಳರು ದೈವಾಧೀನರಾಗಿದ್ದರು.  ಆ ನಂತರ ಆ ಡಿ.ಡಿಯನ್ನು ಪುನಃ ವಾಪಸ್ಸು ಕಳುಹಿಸಿಕೊಡಲಾಯಿತಂತೆ.
     ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವೀರಶೈವ ಸಾಹಿತ್ಯದ ಕೊಡುಗೆ ಅಪಾರವಾಗಿದೆ.  ಸಾಮಾಜಿಕ ಚಳುವಳಿಯ ಮೂಲಕ ಹುಟ್ಟುಕೊಂಡ ವಚನ ಸಾಹಿತ್ಯ, ಸಾರ್ವಕಾಲಿಕವಾದ ಸತ್ಯದ ಘಟನೆಗಳನ್ನು ಒಳಗೊಂಡ ಜೀವಂತ ನಿದರ್ಶನ.  ಇಂತಹ ವಚನ ಸಾಹಿತ್ಯದ ಅಮೂಲಾಗ್ರ ಸಂಶೋಧನೆ ಮಾಡಿದವರಲ್ಲಿ ಫ.ಗು.ಹಳಕಟ್ಟಿಯವರು ಮೊದಲಿಗರು ಎಂಬುದು ಸರ್ವವಿದಿತ. ಹಳಕಟ್ಟಿಯವರ ನಂತರ ವಚನ ಸಾಹಿತ್ಯದ ಪರಿಷ್ಕರಣ ಮತ್ತು ಸಂಪಾದನೆ, ಸಂಶೋಧನೆಗಳಿಗೆ ಹೊಸ ದಿಕ್ಕು ದೆಸೆ ಮೂಡಿಸಿದವರಲ್ಲಿ ಶಿ.ಶಿ. ಬಸವನಾಳ, ಮಧುರ ಚೆನ್ನ, ಆರ್.ಸಿ.ಹಿರೇಮಠ, ಎಲ್.ಬಸವರಾಜು ಪ್ರಮುಖರು.  ಸಾಹಿತ್ಯ ಸಂಶೋಧನೆಯ ಗಾಳಿಸೋಂಕದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ (ರಾಯಚೂರು) ಸಾಹಿತ್ಯಸಂಶೋಧನಾ ಕೃಷಿಯನ್ನು ವೀರಶೈವ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ಮೊದಲಿಗೆ ಆರಂಭಿಸಿದವರಾಗಿದ್ದಾರೆ. ಎಸ್.ಎಮ್.ಹುಣಶಾಳರು ವೀರಶೈವ ಸಾಹಿತ್ಯದ ಸಂಶೋಧನೆ ಬಗೆಗೆ ಪ್ರತ್ಯೇಕವಾಗಿ ಕಾರ್ಯಕೈಗೊಳ್ಳದಿದ್ದರೂ, ಹೈದ್ರಾಬಾದ್ ಕರ್ನಾಟಕದ ಭಾಗದಲ್ಲಿ ಅವರು ಅಂದು ಕೈಗೊಂಡ ಸಂಶೋಧನಾ ಕಾರ್ಯ ಶ್ಲಾಘನೀಯವಾದುದು, ಮಹತ್ವಪೂರ್ಣವಾದುದು ಹಾಗೂ ಸತ್ವಯುತವಾದುದು.  ಆಗಿನ ಕಾಲಕ್ಕೆ ಈ ಭಾಗದಲ್ಲಿ ವಚನ ಸಾಹಿತ್ಯ ಕುರಿತಾದ ಸಂಶೋಧನಾಧ್ಯಯನ ಅಷ್ಟಾಗಿ ನಡೆದಿರಲಿಲ್ಲವೆಂದೆ ಹೇಳ ಬೇಕಾಗುತ್ತದೆ.  ಇಂತಹ ಸಂದರ್ಭದಲ್ಲಿ ಶ್ರೀಯುತರು ವೀರಶೈವ ಸಾಹಿತ್ಯವನ್ನು ಕುರಿತು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಹಲವಾರು ಕೃತಿಗಳನ್ನು ರಚಿಸುವುದರ ಮೂಲಕ ಈ ಭಾಗದಲ್ಲಿ ಸಂಶೋಧನಾ ಚಟುವಟಿಕೆಯನ್ನು ಪ್ರಾರಂಭಿಸಿದವರಾಗಿದ್ದಾರೆ.  ಅವರು 1954ರಲ್ಲಿ ರಚಿಸಿದ(“The Lingayat Movement A Social Revolution in Karnataka”)  “ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯ ಆಂದೋಲನವಾಗಿ ವಚನ ಚಳುವಳಿ” ಎಂಬ ಕೃತಿಯು ವೀರಶೈವ ಸಾಹಿತ್ಯದ ಚಳುವಳಿಯ ಇತಿಹಾಸವನ್ನು ಪ್ರಸ್ತುತ ಪಡಿಸುತ್ತದೆ ಹಾಗೂ ಚಾರಿತ್ರಿಕವಾಗಿ ಪ್ರಮುಖವೆನಿಸುತ್ತದೆ.  ಎಸ್.ಎಮ್.ಹುಣಶಾಳರವರಿಗೆ ಕನ್ನಡ ಭಾಷೆಯಲ್ಲಿ ಪ್ರಭುತ್ವ ಪಡೆದಿರುವಂತೆ, ಆಂಗ್ಲಭಾಷೆಯಲ್ಲಿ ಕೂಡ ಪ್ರಭುತ್ವವನ್ನು ಹೊಂದಿದ್ದರು ಎಂಬುದಕ್ಕೆ ಆಂಗ್ಲ ಭಾಷೆಯಲ್ಲಿ ರಚಿಸಿರುವ ಕೃತಿಗಳೇ ನಿದರ್ಶನವಾಗಿವೆ.  ಅವರ ಪಿಎಚ್.ಡಿ. ಪದವಿಗಾಗಿ 1954 ರಲ್ಲಿ ಆಂಗ್ಲಭಾಷೆಯಲ್ಲಿ ಸಿದ್ಧಪಡಿಸಿದ ಸಂಶೋಧನಾ ನಿಬಂಧ ‘THE VEERASAIVA PHILOSOPHY’ ಮೌಲಿಕವಾದುದಾಗಿದೆ.  ಕೃತಿಯ ಪೀಠಿಕೆಯಲ್ಲಿ, ಈ ನಿಬಂಧವನ್ನು ಕುರಿತು, “I Proceeded to Lucknow in 1951 A.D. to conduct researches in the Virashaiva philosophy.  Being already in the field of research and having published a book entitled ‘THE LINGAYAT MOVEMENT’ I was very glad to further my researches so I Jointed the Lucknow University and completed the thesis under the Supervision of Dr.SURAMADASGUPTA Reader philosophy Department Lucknow University.  The Present thesis is based on Sanskrit Sourcess” 
ಎಂಬುದಾಗಿ ಅವರೇ ಹೇಳಿಕೊಂಡಿದ್ದಾರೆ.  ಈ ಕೃತಿಯಲ್ಲಿ ಒಟ್ಟು ಎಂಟು ಬೃಹತ್ ಅಧ್ಯಾಯಗಳಿವೆ.  ಭಾರತೀಯ ಧಾರ್ಮಿಕ ಸಿದ್ದಾಂತಗಳಾದ ವೇದ, ಆಗಮ, ಉಪನಿಷತ್, ಸ್ಮೃತಿ-ಇವುಗಳ ಹಿನ್ನೆಲೆಯನ್ನು ಇಟ್ಟುಕೊಂಡು, ಬಸವಣ್ಣನ ವೀರಶೈವ ಧರ್ಮ ಸಿದ್ದಾಂತಗಳೊಂದಿಗೆ ತೌಲನಿಕವಾದ ಅಧ್ಯಯನಗಳನ್ನೊಳಗೊಂಡ ಸಂಶೋಧನಾ ನಿಬಂಧವಾಗಿದೆ.
      ‘THE VEERASHAIVA SOCIAL PHILOSOPHY’ ಕೃತಿಯನ್ನು ಕುರಿತು ಜೆ.ಬಿ.ಮಲ್ಲಾರಾಧ್ಯರು ಹೇಳುತ್ತಾ-“Dr. Hunashals approach to the Subjeet Should have a Special appeal to its readers thought provoking.  The book is undoubtedly a welcome addition to similar literature on veerashaiva philosophy in general”  ಎಂಬುದಾಗಿ ಹೇಳುತ್ತಾ ಹುಣಶಾಳರ ಈ ಅದ್ಭುತವಾದ ವೀರಶೈವ ಸಾಹಿತ್ಯದ ತತ್ವಗಳು ಓದುಗರಿಗೆ ತಲುಪಿ, ಖಂಡಿತವಾಗಿ ಸಾರ್ಥಕವಾಗುತ್ತದೆ ಎಂದು ಸ್ಪಷ್ಟ ಪಡಿಸಿರುವುದನ್ನು ಅವಲೋಕಿಸಿದಾಗ ಅವರ ಈ ಆಂಗ್ಲಕೃತಿಯ ಮಹತ್ವ, ಎತ್ತರ ಎಂತಹದ್ದು ಎಂಬುದು ಸ್ಪಷ್ಟವಾಗುತ್ತದೆ.
   ಆಗಿನ ಕಾಲಕ್ಕೆ ವೀರಶೈವ ಸಾಹಿತ್ಯ ಕುರಿತಾದ ಹೆಚ್ಚಿನ ಗ್ರಂಥಗಳು ಪ್ರಕಟಗೊಳ್ಳದಂತಹ ಸಂದರ್ಭದಲ್ಲಿ ಕೆಲವೆಡೆ ಹಸ್ತಪ್ರತಿಗಳನ್ನು ಪರಿಶೀಲಿಸಿ ವಚನ ಚಳುವಳಿಯನ್ನು ಕುರಿತು ಸಮಾಜೋ ಧಾರ್ಮಿಕ ನೆಲೆಗಟ್ಟಿನಿಂದ ವಿಶ್ಲೇಷಿಸಿರುವುದು ಮಹತ್ತರವಾದುದು.  ಈ ಕೃತಿಯನ್ನು ಕುರಿತು ಖ್ಯಾತ ವಿದ್ವಾಂಸರು, ಚಿಂತಕರು ಕಲ್ಕತ್ತಾದ ಸಂಪಾದಕರು‘The Marxian Way’ ಹಾಗೂ ಶ್ರೀಯುತರ ಮೇಲೆ ದಟ್ಟವಾಗಿ ಪ್ರಭಾವಬೀರಿದವರಲ್ಲೊಬ್ಬರಾದ ಎಂ.ಎನ್.ರಾಯ್ ರವರು ಹೇಳುತ್ತಾ,But it has the great merit of applying the scientific method to the study of history.  Therefore it is to be appreciated as a valuable indeed hiter-to unique contribution to Indian historical research”  ಎನ್ನುತಾ ಮುಂದುವರೆದು ವೀರಶೈವ ಚಳುವಳಿಯ ಮಹತ್ವದ ಬಗ್ಗೆ ತಿಳಿಸುವಲ್ಲಿ ಈ ಕೃತಿಯು ಸಾರ್ಥಕಥೆಯನ್ನು ಪಡೆದಿದೆ ಎಂದು ನುಡಿದಿದ್ದಾರೆ.  ಈ ಕೃತಿಗೆ ಮುನ್ನುಡಿಯನ್ನು ಬರೆದು, ಕೃತಿಯ ಮೌಲ್ಯವನ್ನು ಎತ್ತಿಹಿಡಿದ ಆಂಧ್ರದ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಸಿ.ರಾಮಲಿಂಗರೆಡ್ಡಿಯವರು, “Mr.Hunashal has done a great service to our country by recalling to us the determined manner in which the great basava fought against immeasurable odds and amidst difficulties which would have baffled any other man…………Basava has a message for all times and therefore for this age also which the talented author of this book has sou sought to bring out to the best of his knowledge and judgement………….Mr.Hunaashal’s book is an inspiring contribution to the proper under standing of basava and his great mission” ಎಂದು ಹೇಳುತ್ತಾ ಮುಂದುವರೆದು ಹನ್ನೆರಡನೇ ಶತಮಾನದ ವಚನಕಾರರಲ್ಲಿ ಪ್ರಮುಖರಾದ ಬಸವಣ್ಣನವರ ಕ್ರಾಂತಿಕಾರಿ ಚಳುವಳಿ ವಾಸ್ತವ ಬದುಕಿನ ನೆಲೆಗಟ್ಟಿನ ಹಿನ್ನೆಲೆಯನ್ನು ಎತ್ತಿಹಿಡಿದಿದೆ ಎಂಬುದಾಗಿ ತಿಳಿಯಪಡಿಸುತ್ತಾರೆ.
      ಧಾರವಾಡದ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರು, ಸಂಶೋಧಕರು, ಶ್ರೇಷ್ಠಸಾಹಿತಿಗಳು ಆದ ಪ್ರೊ.ಶಿ.ಶಿ.ಬಸವನಾಳ ಅವರು ‘The Lingayat movement was not merely a reformation on the religious plane but was what is more important a thorough going revolution on the social plane also ಎಂಬುದಾಗಿ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ.  ಬಿಜಾಪುರದ ‘ಶಿವಾನುಭವ’ ಪತ್ರಿಕೆಯ ಸಂಪಾದಕರು ಮತ್ತು ವಚನ ಪಿತಾಮಹರಾದ ಡಾ.ಫ.ಗು.ಹಳಕಟ್ಟಿಯವರು ‘The author has given a comparative view of lingayatism comparing it to the doctrines of several religious.  This part is worth Studying’ ‘ಎಂಬ ಅನಿಸಿಕೆಯನ್ನು  ವ್ಯಕ್ತಪಡಿಸಿದ್ದಾರೆ. ಈ ಕೃತಿಯನ್ನು ಕುರಿತಾದ ಮೇಲ್ಕಂಡ ಆ ಕಾಲದ ಶ್ರೇಷ್ಠ ವಿದ್ವಾಂಸರರ ಅನಿಸಿಕೆಗಳು ಕೃತಿಯ ಸಾರ್ವಕಾಲಿಕ ಮೌಲ್ಯದ ಪ್ರತೀಕಗಳಾಗಿವೆ.
      ಎಸ್.ಎಂ.ಹುಣಶಾಳರವರ ವೈಚಾರಿಕತೆ ಶ್ರೇಷ್ಠಮಟ್ಟದ್ದು ಎಂಬುದನ್ನು ಈ ಕೃತಿಯು ಸಾಬೀತು ಪಡಿಸುತ್ತದೆ.  ಪ್ಲೇಟೋನ ಆದರ್ಶರಾಜ್ಯದ ಪರಿಕಲ್ಪನೆಯನ್ನು ಹನ್ನೆರಡನೆ ಶತಮಾನದ ಬಸವಣ್ಣನವರ ಕಲ್ಯಾಣರಾಜ್ಯದ ಪರಿಕಲ್ಪನೆಗೆ ಸಮೀಕರಿಸುತ್ತಾರೆ.  ಧರ್ಮ-ತತ್ವಶಾಸ್ತ್ರಗಳನ್ನು ಸಾಮಾಜಿಕ ವಿಜ್ಞಾನಗಳಿಗಿರುವ ಪರಿಕಲ್ಪನೆಗೆ ಸಮೀಕರಿಸುತ್ತಾರೆ.  ಧರ್ಮ-ತತ್ವಶಾಸ್ತ್ರಗಳು, ಸಾಮಾಜಿಕ ವಿಜ್ಞಾನಗಳಿಗಿರುವ ಸಂಬಂಧವನ್ನು ಹೇಳುತ್ತಾ, ವೀರಶೈವ ಧರ್ಮದ ಹಿನ್ನೆಲೆಯನ್ನು ಬುದ್ಧನ ಕ್ರಾಂತಿ ವಿಚಾರಗಳು, ಶಂಕರಾಚಾರ್ಯರ ವೇದಾಂತಗಳೊಡನೆ ವಿಶ್ಲೇಷಣೆ ಮಾಡಿರುವುದು ಕಂಡು ಬರುತ್ತದೆ.  ಕನ್ನಡನಾಡಿನ ಮಧ್ಯಕಾಲೀನ ಯುಗದಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಮುಂತಾದ ಕ್ಷೇತ್ರಗಳಲ್ಲಿ ವೀರಶೈವರ ಕೊಡುಗೆ ಏನೆಂಬುದನ್ನು ಚರ್ಚಿಸಿದ್ದಾರೆ.  ಪ್ಲೇಟೋನ ‘ಆದರ್ಶರಾಜ್ಯ’ ಮತ್ತು ಬಸವಣ್ಣನವರ ‘ಕಲ್ಯಾಣರಾಜ್ಯದ ವಚನ ಚಳುವಳಿಯನ್ನು ಕುರಿತಾದ ಅವರ ಆಲೋಚನೆಗಳಲ್ಲಿ ಕೆಲವು ಇಂದಿಗೂ ವಿಚಾರಣೀಯವಾಗಿವೆ. ಶ್ರೀಯುತರು ವೀರಶೈವ ಸಾಹಿತ್ಯದ ಸತತ ಆಧ್ಯಯನ ಪರಿಣಾಮದಿಂದ, ಮೌಲ್ಯಯುತವಾದ ಕೃತಿಯನ್ನು ರಚಿಸಿದ್ದು ಇದು, ವೀರಶೈವ ಸಾಹಿತ್ಯ, ಧಾರ್ಮಿಕ ತತ್ವಗಳು ಕೇವಲ ಕನ್ನಡ ಸಾಹಿತ್ಯಕ್ಕೆ ಮತ್ರ ಮೀಸಲಾಗಿರದೆ, ಜಾಗತಿಕ ಸಾಹಿತ್ಯಕ್ಕೆ ಸಂಬಂಧಪಟ್ಟುದ್ದು ಎಂಬುದನ್ನು ತೋರಿಸಿ ಕೊಡಲು ಸಹಕಾರಿಯಾಗಿದೆ.  ವೀರಶೈವ ಧಾರ್ಮಿಕ ತತ್ವಗಳ  ಆಳವಾದ ಮಹತ್ವವನ್ನು ಜಗತ್ತಿಗೆ ಸಾರಲು ಆಂಗ್ಲ ಭಾಷೆಯಲ್ಲಿ ತಮ್ಮ ಆಳವಾದ ಅಧ್ಯಯನದ ಮೂಲಕ ಆಗಿನ ಕಾಲಕ್ಕೆ ರಚಿಸಿರುವುದು ಅವರ ವೀರಶೈವ ಸಾಹಿತ್ಯ-ಸಂಸ್ಕೃತಿಯ ಪ್ರಸರಣ ಕಾರ್ಯದ ಹೆಗ್ಗುರುತುಗಳಾಗಿವೆ.  ಈ ಕೃತಿಯನ್ನು 2004ರಲ್ಲಿ ‘ಬಸವ ಸಮಿತಿ’ಯವರು ದ್ವಿತೀಯ ಮುದ್ರಣವಾಗಿ ಪ್ರಕಟಿಸಿರುವುದು ಅದರ ಮಹತ್ತರತೆಯನ್ನು ತೋರಿಸುತ್ತದೆ.
    ವೀರಶೈವ ಸಾಹಿತ್ಯ ಸಂಸ್ಕೃತಿಯನ್ನು ಕುರಿತ ಹಾಗೆ, ವಚನ ಸಾಹಿತ್ಯವನ್ನು ಮೊದಲು ವೀರಶೈವ ತತ್ವಶಾಸ್ತ್ರವೆಂದು, ಸಾಮಾಜಿಕ ಚಳುವಳಿ ಮಾಧ್ಯಮವೆಂದು, ಒಂದು ಸಾಹಿತ್ಯ ಪ್ರಕಾರವೆಂದು ಭಾವಿಸಿದಂತೆ ಅನಂತರದಲ್ಲಿ ಅದೊಂದು ಸಮಗ್ರ ಸಾಂಸ್ಕೃತಿಕ ಚಳುವಳಿ ಮಾಧ್ಯಮ ಸಾಹಿತ್ಯ ಎಂದೂ ಗುರುತಿಸಲಾಗಿದೆ ಎಂಬ ಆಶಯದ ಹಿನ್ನೆಲೆಯಲ್ಲಿ ಹುಣಶಾಳರ ವೀರಶೈವ ಸಾಹಿತ್ಯ-ಸಂಸ್ಕೃತಿಯ ಸಂಶೋಧನೆಯನ್ನು ಗ್ರಹಿಸಿ ಬಹುದಾಗಿದೆ.  ವಚನ ಸಾಹಿತ್ಯದಲ್ಲಿ ಅಡಗಿದ ಸಂಸ್ಕೃತಿಯನ್ನು ಶ್ರೀಯುತರು ಪರಿಶ್ರಮವಹಿಸಿ ಆಮೂಲಾಗ್ರವಾಗಿ ಶೋಧಿಸಿಕೊಟ್ಟು ಇದರ ಸ್ವರೂಪ ಮತ್ತು ವೈಶಿಷ್ಟ್ಯವನ್ನು, ಸಾಮಾಜಿಕ ವ್ಯವಸ್ಥೆ, ಆರ್ಥಿಕವ್ಯವಸ್ಥೆ, ರಾಜಕೀಯ ವ್ಯವಸ್ಥೆ ಮುಂತಾದ ವಿಚಾರಗಳನ್ನು ವೀರಶೈವ ಸಾಹಿತ್ಯ ಕೃತಿಗಳಲ್ಲಿ ಸಾಂಸ್ಕೃತಿಕ ಅಂಶಗಳನ್ನು ವಸ್ತು ನಿಷ್ಠವಾಗಿ ಹಾಗೂ ಕೆಲವೆಡೆ ವೈಚಾರಿಕವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿಯೂ ಕಟ್ಟಿಕೊಟ್ಟಿದ್ದಾರೆ. ಇವರ ವೀರಶೈವ ಸಾಹಿತ್ಯ-ಸಂಸ್ಕೃತಿಯನ್ನು ಕುರಿತಾದ ಆಂಗ್ಲಭಾಷೆಯಲ್ಲಿಯ ಮೌಲಿಕವಾದ ಕೃತಿಗಳು, ಕನ್ನಡ ಸಾಹಿತ್ಯದಲ್ಲಿಯ ಹನ್ನೆರಡನೆಯ ಶತಮಾನದ ವಚನಸಾಹಿತ್ಯದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಹಾಗೂ ತನ್ನದೇ ಆದ ಸ್ಥಾನವನ್ನು ಪಡೆಯಲು ನೆರವಾಗಿವೆ ಎಂದರೆ ತಪ್ಪಾಗಲಾರದು. 
      ಹನ್ನೆರಡನೆಯ ಶತಮಾನದ ವಚನಕಾರರ ವಚನಗಳ ಆಳವಾದ ಪ್ರಭಾವ, ಅಗಾಧವಾದ ಪಾಂಡಿತ್ಯ, ಪರಿಶ್ರಮ ಪ್ರವೃತ್ತಿ, ಸಂಶೋಧನೆ, ಸತತ ಪರಿಶ್ರಮದ ಫಲವಾಗಿ ಹಲವಾರು ಕೃತಿಗಳು ಹುಣಶಾಳರಿಂದ ಬೆಳಕಿಗೆ ಬರುವಂತಾಯಿತು.  ಹೈದರಾಬಾದ್ ಕರ್ನಾಟಕ ಪರಿಸರದಲ್ಲಿ ಆಕರಗಳು ಲಭ್ಯವಿಲ್ಲದ ಕಾಲದಲ್ಲಿಯೂ ‘ವಚನ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಎಲೆಮರೆ ಕಾಯಿಯಂತೆ ಇದ್ದುಕೊಂಡೆ ಸಾಧಿಸಿದ್ದಾರೆ.  ಇವರ ಸಂಪಾದನಾ ಕೃತಿಗಳು, ವಿವಿಧ ಮೂಲಗಳಿಂದ ಪ್ರತಿಯೊಬ್ಬ ಶರಣರ ವಚನಗಳನ್ನು ಆಯ್ದು, ಹಲವಾರು ಆಕರಗಳನ್ನು ಕಲೆಹಾಕಿ, ಶುದ್ಧಪಾಠವನ್ನು ಸಾಧ್ಯವಾದಷ್ಟು ಮಟ್ಟಿಗೆ ನಿರ್ಣಯಿಸಿ, ವಚನಕಾರರ ಸಂಕ್ಷಿಪ್ತ ಚರಿತ್ರೆ, ವಚನಗಳ ಆಶಯಗಳನ್ನು ಮೌಲ್ಯಮಾಪನಮಾಡಿ ಇತರೆ ಪೂರಕ ಸಾಮಗ್ರಿಗಳನ್ನು ನೀಡಿರುವುದು ಅವರ ಗ್ರಂಥಸಂಪಾದನಾ ಸಂಶೋಧನಾ ಕಾರ್ಯದಸ್ವರೂಪವನ್ನು ಪರಿಚಯಿಸುತ್ತವೆ.  ಅವರ ಸಂಶೋಧನಾ ಕಾರ್ಯ ಮುಂದಿನ ಸಂಶೋಧಕರು ಆ ವಿಷಯದಲ್ಲಿ ಮುನ್ನೆಡೆಯಲು ಸಾಮಗ್ರಿಯನ್ನು ಒದಗಿಸುವ ಆಕರ ಗ್ರಂಥಗಳಾಗಿವೆ. ಈ ಹಿನ್ನೆಲೆಯಲ್ಲಿ ಹುಣಶಾಳರವರ ಸಾಹಿತ್ಯ ಚಟುವಟಿಕೆಯು ಚಾರಿತ್ರಿಕ, ಸಂಶೋಧನಾತ್ಮಕ ವಾಗಿದ್ದು, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವೀರಶೈವ ಸಾಹಿತ್ಯ-ಸಂಸ್ಕೃತಿಯ ಕುರಿತಾದ ಸಂಶೋಧನೆಯಲ್ಲಿ ಅತ್ಯಂತ ಶ್ರೇಷ್ಠಮಟ್ಟದ್ದಾಗಿದೆ. ಆಗಿನ ಕಾಲಕ್ಕೆ ಅನೇಕ ಸಾಮಾನ್ಯ ವರ್ಗದ ಹೆಸರೇ ಕೇಳಿಲ್ಲದ ವಚನಕಾರರ ವಚನಗಳನ್ನು ಸಂಪಾದಿಸಿ, ಸಂಶೋಧಿಸಿ, ವಿಶ್ಲೇಷಿಸುವುದರ ಮೂಲಕ ಪರಿಚಯಿಸಿ ಶರಣಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದರು.    
      ಹನ್ನೆರಡನೆಯ ಶತಮಾನದ ವಚನಕಾರರ ವಚನಗಳ ಆಳವಾದ ಪ್ರಭಾವ, ಅಗಾಧವಾದ ಪಾಂಡಿತ್ಯ, ಪರಿಶ್ರಮ ಪ್ರವೃತ್ತಿ, ಸಂಶೋಧನೆ, ಸತತ ಪರಿಶ್ರಮದ ಫಲವಾಗಿ ಹಲವಾರು ಕೃತಿಗಳು ಸಂಪಾದನೆಗೊಂಡು ಹುಣಶಾಳರಿಂದ ಬೆಳಕಿಗೆ ಬರುವಂತಾಯಿತು.  ಇವರು ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಾಲ್ಕು ಕೃತಿಗಳನ್ನು ಸಂಪಾದಿಸಿದ್ದಾರೆ. ಅವುಗಳೆಂದರೆ 1. ‘ಪುರಾತನರ ವಚನ ಸಂಕಲನ’ 2. ಬಸವೇಶ್ವರ ದೇವರ ವಚನ ವ್ಯಾಖ್ಯಾನ ಭಾಗ-1   3 ಶ್ರೀ ಚೆನ್ನಂಜೆದೇವರು ಸಂಪಾದಿಸಿದ ``ಬಸವಸ್ತೋತ್ರದ ವಚನ' 4. `ಬಸವಾದಿ ಗಣಚರಿತ್ರೆ ಮತ್ತು ಗಣವಚನ ಮಂಜರಿ'
      ಇವರ ಸಂಪಾದಿತ ಕೃತಿಯಾದ ‘ಪುರಾತನರ ವಚನ ಸಂಕಲನ’ವು 1964ರಲ್ಲಿ ಶ್ರೀ.ಎಚ್.ಅನ್ನದಾನಯ್ಯನವರೊಂದಿಗೆ ಕೂಡಿ ಕೋರಿ ಕಾಗದದ ಕೈ ಬರೆಹದ ಪ್ರತಿಯನ್ನು  ಆಧರಿಸಿ ಪರಿಷ್ಕರಿಸಿ,ಸಂಸ್ಕರಿಸಿ ಸಂಪಾದಿಸಿದ ಕೃತಿಯಾಗಿದೆ. ಇಂಗಳೇಶ್ವರ ಬಸವತೀರ್ಥ ಮಠದ ಶ್ರೀ.ಮ.ನಿ.ಪ್ರ.ಶಿವಾನುಭವಚರವರ್ಯ ಚೆನ್ನಬಸವಮಹಾಸ್ವಾಮಿಗಳವರ ಆಶೀರ್ವಾದದೊಂದಿಗೆ ಈ ಕೃತಿಯು ಮುದ್ರಿತಗೊಂಡಿದೆ.  ಈ ಸಂಕಲನ ಕೃತಿಯಲ್ಲಿ 94 ಜನ ಶರಣರರ ಹಾಗೂ 30 ಜನ ಶರಣೆಯರ ವಚನಗಳನ್ನು ಸಂಕಲಿಸಿ ಕೊಟ್ಟಿದ್ದಾರೆ.  ಬಹುಮಟ್ಟಿಗೆ ನೀತಿ ಬೋಧಕವಾದ ಒಂದೊಂದು ವಚನಗಳನ್ನು ಸಂಪಾದಿಸಿದ್ದಾರೆ.  ವಿಸ್ತೃತವಾದ ಪ್ರಸ್ತಾವನೆಯಲ್ಲಿ ಶರಣ-ಶರಣೆಯರು ಯಾವ ರೀತಿ ಧರ್ಮ,ತತ್ವಜ್ಞಾನ ,ಸಮಾಜವಾದಗಳನ್ನೊಳಗೊಂಡ ಸಮತೋಲನದ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ ಎಂಬುದರ  ಬಗೆಗೆ ಹಾಗೂ ವಚನಗಳಲ್ಲಿ ಒಡಮೂಡಿರುವ ಧರ್ಮದೃಷ್ಟಿ, ತಾತ್ವಿಕ ತಳಹದಿ, ಸಾಮಾಜಿಕನೀತಿ ಮುಂತಾದವುಗಳನ್ನು ಚರ್ಚಿಸಿದ್ದಾರೆ.  ಪಂಚಾಚಾರದ ಬಗೆಗೆ ವಿನೂತನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.  ಈ ನೀತಿಯ ಆಚಾರದ ಬಗ್ಗೆ ಪಂಚಾಚಾರವೆಂಬ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ.’ಸದಾಚಾರ, ಶಿವಾಚಾರ,ಲಿಂಗಾಚಾರ, ಗಣಾಚಾರ’ ಎಂಬ ಐದು ಪಂಚಾಚಾರಗಳು ಮುಂದೆ ಸ್ವಾತಂತ್ರ್ಯಾನಂತರದ ಸರಕಾರದ ರಚನೆಯ ಸಂದರ್ಭದಲ್ಲಿ ಮಾನವತಾ ಶಿಲ್ಪಿಯಾದ ಪಂ.ಜವಾಹರಲಾಲನೆಹರು ಅವರು ಮಂಡಿಸಿರುವ ಪಂಚಶೀಲ ತತ್ತ್ವವನ್ನು ಹೋಲುತ್ತದೆ.  ಅಲ್ಲದೇ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ,ವಿಭೂತಿ,ರುದ್ರಾಕ್ಷಿ, ಮಂತ್ರ-ಎಂಬ ಅಷ್ಟಾವರಣಗಳನ್ನು ರೂಪಿಸುವುದರ ಮೂಲಕ ಧರ್ಮ ಮತ್ತು ಸಮಾಜಗಳನ್ನು ಭದ್ರಪಡಿಸಿದರು.  ಬೌದ್ಧರ ಅಷ್ಟಾಂಗ ಮಾರ್ಗ ವ್ಯಕ್ತಿಯ ವಿಕಾಸವನ್ನು ಬೋಧಿಸಿದರೆ, ವೀರಶೈವರ ಅಷ್ಟಾವರಣವು ವ್ಯಕ್ತಿಯ ಶರೀರವನ್ನು ಪುನೀತಮಾಡಿ, ವ್ಯಕ್ತಿ, ಸಮಾಜಗಳ ಸಹಕಾರವನ್ನು ಅವುಗಳ ವಿಕಾಸವನ್ನು ಧಾರ್ಮಿಕ ಕ್ರಿಯೆಯ ಮುಖಾಂತರ ಸಾಧಿಸುವುದು ಎಂಬುದಾಗಿ ಹೇಳುತ್ತಾ, ‘ಈ ವಿಚಾರಗಳನ್ನು ಶರಣರು ವೇದ, ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಗೀತೆ-ಮೊದಲಾದ ಗ್ರಂಥಗಳಿಂದ ಆಯ್ದುಕೊಂಡಿಲ್ಲ’ ಇದು ವೀರಶೈವ ಧರ್ಮದ ಸೊತ್ತು.  ಶರಣರು ತಮ್ಮದೇ ಆದ ಸಿದ್ಧಾಂತ, ಶಾಸ್ತ್ರ, ಸಮಾಜವಾದ ಮೊದಲಾದುವನ್ನು ರೂಪಿಸಿದರು.  ವಚನಸಾಹಿತ್ಯವನ್ನು ಕುರಿತು, ‘ಇದು ಶೋಕ ಸಾಹಿತ್ಯವಲ್ಲ! ಹಾಸ್ಯ ವಿಡಂಬನೆಯ ಸಾಹಿತ್ಯವಲ್ಲ! ಭೀಭತ್ಸ ಸಾಹಿತ್ಯವೂ ಅಲ್ಲ! ನಲಿದಾಡುವ, ನಟಿಸುವ ನಾಟ್ಯ ಜನ್ಯ ಸಾಹಿತ್ಯವಲ್ಲ, ತತ್ವ-ವಿಚಾರ ಮಂಥನದಿಂದ, ಅನುಭಾವದಿಂದ ಉದ್ಭೂತವಾದ ಆನಂದ, ಅತ್ಯಾನಂದ, ನಿತ್ಯಾನಂದ, ಆತ್ಮಾನಂದ, ಐಕ್ಯಾನಂದ ಸಾಹಿತ್ಯ’ ಎಂಬುದಾಗಿ ಪ್ರತಿಪಾದಿಸಿರುವ ವಿಷಯ ಮನನೀಯವಾಗಿದೆ.  ಇವರು ವೀರಶೈವ ಸಾಹಿತ್ಯದಲ್ಲಿ ಪಡೆದಿದ್ದ ಆಳವಾದ ಹರವು, ಸಂಕಲ್ಪವಾದ ತಿಳಿವು, ಅವರ ವಿಚಾರ ಸರಣಿ ಇತ್ಯಾದಿಗಳನ್ನು ಈ ಪ್ರಸ್ತಾವನೆಯು ಸಾಬೀತು ಪಡಿಸುತ್ತದೆ.  ಪ್ರೊ.ಸ.ಸ.ಮಾಳವಾಡರವರು ‘ಪುರಾತನರ ವಚನ ಸಂಕಲನ’ ಕೃತಿಯಲ್ಲಿಯ ಶ್ರೀಯುತರ ಸಂಶೋಧನಾ ಕಾರ್ಯ ವೈಖರಿಯನ್ನು ಕುರಿತು, ‘ಎಲ್ಲಾ ಪುರಾತನರ ಸಾವಿರಕ್ಕೆ ಮೇಲ್ಪಟ್ಟ ಬೃಹದ್ಗ್ರಂಥ ಪ್ರಕಟನಾ ಯೋಜನೆಯ ಪೂರ್ವ ಸೂಚನೆಯಾಗಿ ಈ ಚಿಕ್ಕ ಪುಸ್ತಕವನ್ನು ಈಗ ಪ್ರಕಟಿಸಲಾಗಿದೆ.  ಸಂಪಾದಕರು ಪ್ರಸ್ತಾವನೆಯಲ್ಲಿ ವಚನ ಸಾಹಿತ್ಯದ ಮಹತ್ವ, ವೀರಶೈವ ಧರ್ಮದ ವೈಶಾಲ್ಯ, ಪ್ರಗತಿಪರ ದೃಷ್ಟಿಗಳನ್ನು ಸಂಗ್ರಹವಾಗಿ ನಿರೂಪಿಸಿದ್ದಾರೆ.  ವೀರಶೈವ ಧರ್ಮದ ವೈಶಾಲ್ಯ, ಪ್ರಗತಿಪರ ದೃಷ್ಟಿಗಳನ್ನು ಸಂಗ್ರಹವಾಗಿ ನಿರೂಪಿಸಿದ್ದಾರೆ.  ವೀರಶೈವ ಧರ್ಮ ಪ್ರಜಾಕೋಟಿಯ ಧರ್ಮವೆಂಬುದನ್ನು ಇಲ್ಲಿ ಎತ್ತಿ ಹೇಳಲಾಗಿದೆ.  ಷಟ್‍ಸ್ಥಲ ಈ ಧರ್ಮದ ಸಂಘಟನೆಯಲ್ಲಿ ಸಂಪಾದಕರು ಧರ್ಮ, ಸಮಾಜ, ಮಾನವ, ನೀತಿ, ಅರ್ಥ, ಆತ್ಮಶಾಸ್ತ್ರಗಳು ಅಡಕವಾಗಿರುವುದನ್ನು ಸೂಚಿಸಿದ್ದಾರೆ.  ಅಂದರೆ, ಮಾನವನ ಸಮಾಜ ವಿಕಾಸಕ್ಕೆ ಅವಶ್ಯಕವಾಗಿರುವ ಆರು ಬಗೆಯ ಶಾಸ್ತ್ರಗಳನ್ನೊಳಗೊಂಡ ಸಂಘಟನೆಯನ್ನು ವೀರಶೈವ ಧರ್ಮದಲ್ಲಿ ಗುರುತಿಸಬಹುದು.  ಬೃಹದ್ಗ್ರಂಥದಲ್ಲಿ ಸಂಪಾದಕರು ಈ ವಿಷಯವನ್ನು ವಿಶದೀಕರಿಸುವರೆಂದು ನಂಬಬಹುದಾಗಿದೆ.  ಈ ಚಿಕ್ಕ ಪುಸ್ತಕದ ಪ್ರಕಟನೆಯು ಪುರಾತನರ ವಚನಗಳ ಬೃಹದ್ಗ್ರಂಥದ ಪ್ರಕಟನೆಗೆ ನಾಂದಿಯಾಗಬೇಕೆಂದು ಆಶಿಸಲಾಗಿದೆ’. ಎಂದು ಹೇಳಿರುವುದು ಇವರ ಸಂಪಾದಕತ್ವದ ಮನೋಭಾವನೆಯನ್ನು ಸೂಚಿಸುತ್ತದೆ.
   ಹನ್ನೆರಡನೆ ಶತಮಾನ ಧಾರ್ಮಿಕ ಸಿದ್ಧಾಂತಗಳ ತಿಕ್ಕಾಟ, ಆಚಾರ-ವಿಚಾರಗಳ ಆತಂಕ, ಅಂಧಃಕಾರಗಳ ಸರಮಾಲೆ, ಜಾತಿ-ಮತ-ಪಂಥಗಳೆಂಬ ಪರದಾಟ. ಇಂತಹ ಸಮಾಜದಲ್ಲಿ ಇರುವ ವಿವಿಧ ದೇವರುಗಳ ಪೂಜೆ ಖಂಡಿಸುತ್ತಾ, ನೀವು ಎಲ್ಲದರಲ್ಲಿ ಹೊರಳಾಡುತ್ತಿರುವಿರಿ ಎಂಬ ಪ್ರಶ್ನೆಗಳಿಗೆ ಕೊಟ್ಟಿರುವ ಪ್ರಶ್ನಾತೀತವಾದ ಉತ್ತರದಲ್ಲಿ, ನಾನು ಜಂಗಮ, ದಾಸೋಹಗಳಲ್ಲಿಯೇ, ಇಹಲೋಕದಲ್ಲಿಯೇ, ಆತ್ಮ ಸಾಕ್ಷಾತ್ಕಾರವನ್ನು, ದೇವರನ್ನು ಕಾಣುತ್ತೇನೆ ಎಂಬ ಅರ್ಥ ಸ್ಫುಟವಾಗುತ್ತದೆ. ಅಲ್ಲದೇ ಏಕದೇವೋಪಾಸನೆಯ ಬಗ್ಗೆ ಅರಿವು ಮೂಡಿಸುತ್ತದೆ. ಇಂತಹ ವಚನಗಳ ರಚನೆಯನ್ನು ಸಂಪಾದಿಸಿ, ಸಂಶೋಧಿಸಿ ಕೃತಿರೂಪದಲ್ಲಿ ಹಿಡಿದಿಟ್ಟ ಶ್ರೀಯುತರ ಕಾರ್ಯಸ್ತುತ್ಯಾರ್ಹವಾದುದು ಎನ್ನಬಹುದಾಗಿದೆ. 
    ಇವರ ಸಂಪಾದಿತ ಕೃತಿಗಳಲ್ಲಿರುವ ತತ್ವಗಳು, ಸಿದ್ಧಾಂತಗಳು ಆಸಕ್ತ ಓದುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿ, ಸಾತ್ವಿಕತೆಯ ಪರಮಾವಧಿಯ ಸ್ವರೂಪ ಪಡೆದುಕೊಳ್ಳಲುಯಾವ ರೀತಿ  ಶಕ್ಯವಾಗಿವೆ ಎಂಬುದು ತಿಳಿದುಕೊಳ್ಳಲು ಸಹಕಾರಿಯಾಗಿವೆ.
   ಬಸವೇಶ್ವರ ದೇವರ ವಚನ ವ್ಯಾಖ್ಯಾನ ಭಾಗ-1 ನ್ನು ಹುಣಶಾಳರು ಸಂಪಾದಿಸಿದ್ದು ಕೃತಿಯನ್ನು  ರಾಯಚೂರು ಜಿಲ್ಲೆಯ ಕವಿತಾಳದ ಕಲ್ಮಠದ ಶ್ರೀ..ನಿ.ಪ್ರ. ಸಿದ್ಧಲಿಂಗಸ್ವಾಮಿಗಳು ಶ್ರೀ ಬಸವಲಿಂಗ ಗ್ರಂಥಮಾಲೆಯ 2 ನೇ ಪಷ್ಪಮಾಲೆಯಾಗಿ 1971 ರಲ್ಲಿ ಪ್ರಕಟಿಸಿದ್ದಾರೆ. ಸಂಪಾದಿತ ಕೃತಿಯಲ್ಲಿ  ಮೊದಲ ಭಾಗವಾಗಿ ಬಸವಣ್ಣನವರ 524 ವಚನಗಳ ವ್ಯಾಖ್ಯಾನ ಸಹಿತ ವಚನಗಳನ್ನು ಇವರು ಸಂಪಾದಿಸಿ ಪ್ರಕಟಿಸಿದ್ದಾರೆ. ವ್ಯಾಖ್ಯಾನಕಾರ ಬಸವಣ್ಣನವರ ವಚನಗಳಿಗೆ ಸಹಜಾರ್ಥದ ಜೊತೆಗೆ ಯಾವ ರೀತಿ ಪಾರಮಾರ್ಥಿಕ ಅರ್ಥಗಳನ್ನು ಹೇಳಿದ್ದಾನೆಂಬುದನ್ನು ಕೃತಿಯಲ್ಲಿ ಇವರು ತೋರಿಸಿ ಕೊಟ್ಟಿದ್ದು ಬಸವಣ್ಣನವರ ವಚನಗಳನ್ನು ಓದಲಿಕ್ಕೆ, ಅರ್ಥೈಸಲಿಕ್ಕೆ ಕೈದೀವಿಗೆ ಯಂತಿದೆ. ಇವರು  ರಾಯಚೂರು ಜಿಲ್ಲೆಯ ಕೌತಾಳದ ಕಲ್ಲು ಮಠದಲ್ಲಿ ದೊರೆತ ಪ್ರತಿ, ರಾಯಚೂರಿನ ಸೋಮವಾರ ಪೇಟೆಯಲ್ಲಿ ಲಭ್ಯವಾದ ಪ್ರತಿ ಮತ್ತು ತುಂಗಭದ್ರಾನದಿ ಪರಿಸರದ  ಹಾಲ್ವಿ ಮತ್ತು ಯಾದಗಿರಿಯಲ್ಲಿ ಲಭ್ಯವಿರುವ ಹಸ್ತಪ್ರತಿಗಳ ಬಗೆಗೆ ಪ್ರಸ್ತಾಪಿಸಿದ್ದರೂ ಕೌತಾಳದ ಕಲುಮಠದ ಹಸ್ತಪ್ರತಿಯನ್ನೇ ಸಂಪಾದನೆಗೆ ಬಳಸಿದ್ದಾರೆ. ಕೃತಿಯಲ್ಲಿ ಯಾವುದೇ ಪಾಠಾಂತರಗಳನ್ನು ನೀಡಿರುವುದಿಲ್ಲ. ಶಿವಾನುಭವಿ ವ್ಯಾಖ್ಯಾನಕಾರನು ರಾಯಚೂರು ಪರಿಸರದಲ್ಲಿ ದೊರೆತಹಸ್ತಪ್ರತಿಗಳನ್ನು ಅನುಲಕ್ಷಿಸಿ  ರಾಯಚೂರು ಜಿಲ್ಲೆಯವನು ಎಂಬುದಾಗಿ ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಈ ವಿಷಯದ ಬಗೆಗೆ ಕೃತಿಯ ಎರಡನೇ ಭಾಗದಲ್ಲಿ ಸವಿವರವಾಗಿ ನೀಡುವುದಾಗಿ ತಿಳಿಸಿದ್ದರು. ಆದರೆ  ಬಸವಣ್ಣನವರ ವಚನಗಳಿಗೆ ವ್ಯಾಖ್ಯಾನವನ್ನು ಬರೆದ ವ್ಯಾಖ್ಯಾನಕಾರನು ಹುಮನಾಬಾದ್ ನಿರಂಜನಸ್ವಾಮಿ ಎಂಬುದಾಗಿ ನಂತರದ ಕಾಲದಲ್ಲಿ ಶ್ರೀ.ಎಸ್.ಶಿವಣ್ಣನವರು ಶೋಧಿಸಿದ್ದಾರೆ.  ಬಸವಣ್ಣನವರ ವಚನಗಳನ್ನು ಕುರಿತು ವ್ಯಾಖ್ಯಾನ ಮಾಡಿರುವವರಲ್ಲಿ ಪ್ರಮುಖನು ಹಾಗೂಎಲ್ಲಾ ವಚನಗಳಿಗೂ ವ್ಯಾಖ್ಯಾನವನ್ನು ಬರೆದವನಾಗಿದ್ದಾನೆ. ಉಳಿದ ವ್ಯಾಖ್ಯಾನಕಾರರು ತಮಗೆ ಸೂಕ್ತವೆನಿಸಿದ ವಚನಗಳಿಗೆ ಟೀಕೆಯನ್ನು ಬರೆದಿದ್ದರೆ ಈತನು ಬಸವಣ್ಣನವರ ಭಕ್ತಸ್ಥಲದ ವಚನಗಳಿಂದ ಹಿಡಿದು ಐಕ್ಯಸ್ಥಲದವರೆಗಿನ 958 ವಚನಗಳು ಮತ್ತು ರುದ್ರಾಕ್ಷಿ ಸ್ಥಲದ  ಮೂರು ವಚನಗಳನ್ನು ಸೇರಿಸಿ ಒಟ್ಟು 961 ವಚನಗಳಿಗೆ ಟೀಕೆಯನ್ನು ಬರೆದಿದ್ದಾನೆ. ಈಗಾಗಲೇ ತಿಳಿಸಿದಂತೆ ಹುಣಶ್ಯಾಳ ಅವರು ಸಂಪಾದಿತ ಕೃತಿಯಲ್ಲಿ 524 ವಚನಗಳ  ವ್ಯಾಖ್ಯಾನವನ್ನು ಬರೆದಿದ್ದು ವ್ಯಾಖ್ಯಾನ ಸಹಿತ ವಚನಗಳನ್ನು ಮೊದಲ ಭಾಗವಾಗಿ ಇವರು ಸಂಪಾದಿಸಿ ಪ್ರಕಟಿಸಿದ್ದಾರೆಈತ ಬಸವಣ್ಣನವರ ವಚನಗಳ ಜತೆಗೆ ತೋಂಟದ ಸಿದ್ಧಲಿಂಗಯತಿಗಳ ಷಟ್ಥ್ಸಲಜ್ಞಾನ ಸಾರಾಮೃತ ವಚನಗಳಿಗೂ ಟೀಕೆಯನ್ನು ಬರೆದಿದ್ದಾನೆ. ನಂತರದ ಕಾಲದಲ್ಲಿ   ಬಸವಣ್ಣನವರ ವಚನಗಳಿಗೆ ಬರೆದ ಐದು ಪ್ರಾಚೀನ ಟೀಕುಗಳನ್ನು ಎಂ.ಎಂ.ಕಲಬುರ್ಗಿಯವರು ಸಂಪಾದಿಸಿ ಪ್ರಕಟಿಸಿದ್ದಾರೆ.
      ಹನ್ನೆರಡು ಮತ್ತು ಹದಿಮೂರನೆ ಶತಮಾನದ ಸಂದರ್ಭದಲ್ಲಿ ವೀರಶೈವ ಸಾಹಿತ್ಯ ವಿಫುಲವಾಗಿ ಬೆಳೆಯಿತು. ಇಂತಹ ವಚನಗಳ ಸಂಗ್ರಹಕಾರ್ಯ ಹದಿನೈದನೆಯ ಶತಮಾನದಲ್ಲಿ ಪ್ರಾರಂಭವಾಯಿತು. ``ಆಗ ವಿಜಯನಗರದ ಸಂಗಮವಂಶದ ದೊರೆ ಪ್ರೌಢದೇವರಾಯನ ಆಳಿಕೆಯಲ್ಲಿ (ಕ್ರಿ.ಶ.1416-1444) ಸಂಪಾದನೆಯ ಕಾಲ ಸುರುವಾಯಿತು. ಈ ಸಂದರ್ಭದಲ್ಲಿ ಬಸವಣ್ಣನವರ ವ್ಯಕ್ತಿತ್ವವನ್ನು, ಅವರ ಘನತೆಯನ್ನು, ಅವರ ಚರಿತ್ರೆಯನ್ನು, ವಚನಕಾರರು ಹಾಗೂ ವೀರಶೈವ ಕವಿಗಳು ಬಹುವಿಧವಾಗಿ ಬಣ್ಣಿಸಿರುವುದನ್ನು `ಬಸವ ಸ್ತೋತ್ರದ ವಚನ' ಎಂಬ ಕೃತಿಯನ್ನು  ಕ್ರಿ.ಶ.1530ರಲ್ಲಿ ಶ್ರೀ ಚೆನ್ನಂಜೆದೇವರು ಸಂಕಲಿಸಿದ್ದು, ಚಾರಿತ್ರಿಕ, ತಾತ್ವಿಕ ದೃಷ್ಟಿಯಿಂದ ಮಹತ್ವವಾದುದು. ಬಸವಣ್ಣನವರ ವ್ಯಕ್ತಿತ್ವವನ್ನು, ಅವರ ಘನತೆಯನ್ನು, ಅವರ ಚರಿತ್ರೆಯನ್ನು, ವಚನಕಾರರು ಬಹುವಿಧವಾಗಿ ಬಣ್ಣಿಸಿದ್ದಾರೆ ಎಂಬುದಾಗಿ ಹೇಳುತ್ತಾ, ಚೆನ್ನಂಜೆದೇವರಿಂದ ಸಂಕಲಿಸಲ್ಪಟ್ಟ ಕೈ ಬರೆಹದ ಪ್ರತಿ ಆಧಾರವಾಗಿಟ್ಟುಕೊಂಡು ಇವರು ‘ಬಸವ ಸ್ತೋತ್ರದ ವಚನಕ್ಕೆ ಬಸವಸ್ತುತಿ ಮತ್ತು ಬಸವ ಪ್ರಶಸ್ತಿ’ ಎಂಬ ಎರಡು ಭಾಗಗಳನ್ನು ಸೇರಿಸಿ ‘ಬಸವ ಸ್ತೋತ್ರದ ವಚನ ಮತ್ತು ಬಸವಸ್ತುತಿ-ಪ್ರಶಸ್ತಿ’ ಎಂಬ ಸಂಕಲಿತ ಕೃತಿಯನ್ನು ಇವರು, ಸಿ.ಎಚ್.ಅನ್ನದಾನಯ್ಯರವರೊಂದಿಗೆ 1965ರಲ್ಲಿ ಸಂಪಾದಿಸಿ ರಾಯಚೂರಿನ ನಾರದಗಡ್ಡೆಮಠದ ಮೂಲಕ ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ಮುಖ್ಯವಾಗಿ ಬಸವಣ್ಣನೇ ಕೇಂದ್ರಬಿಂದುವಾಗಿಟ್ಟುಕೊಂಡು ಹಲವಾರು ಶರಣ-ಶರಣೆಯರು, ಕವಿಗಳು, ವಿದ್ವಾಂಸರು, ಚಿಂತಕರು ಸ್ತುತಿಸಿರುವುದು ವೇದ್ಯವಾಗುತ್ತದೆ. ಹುಣಶಾಳರೇ ಹೇಳುವಂತೆ ಶ್ರೀ ಚೆನ್ನಂಜೆದೇವರು ಸಂಪಾದಿಸಿದ ``ಬಸವಸ್ತೋತ್ರದ ವಚನ''ವೆಂಬ ಕೈಬರಹದ ಪ್ರತಿಯೊಂದು ನಮ್ಮ ದೃಷ್ಟಿಗೆ ಬಂದಿತು. ಅದನ್ನು ನೋಡಲಾಗಿ ಪ್ರಕಟನೆಗೆ ಶ್ರೇಷ್ಠ ಸಾಹಿತ್ಯವೆಂದು ಭಾವಿಸಿದೆವು. ಹಾಗೂ ಸಂಕಲಿಸಿದೆವು. ನಮ್ಮ ಸಂಕಲ್ಪಕ್ಕೆ ಸಹಕಾರಿಯಾಗಿ ಪಂ||ಸೂಗುವೀರ ಶರ್ಮರವರು ತಮ್ಮಲ್ಲಿಯ ಹಳೆಯ ಮುದ್ರಿತ ಪ್ರತಿಯನ್ನು ಕೊಟ್ಟು ಸಹಾಯ ಮಾಡಿದರು. ''ಚೆನ್ನಂಜೆದೇವರ ಬಸವಸ್ತೋತ್ರದ ವಚನ ಸಂಗ್ರಹದ ಜೊತೆಯಲ್ಲಿ ಬಸವಸ್ತುತಿ ಮತ್ತು ಬಸವ ಪ್ರಶಸ್ತಿಯನ್ನು ಸೇರಿಸಿ ಸಂಪಾದಿಸಿದ, ಈ ಕೃತಿಯ ಪ್ರಕಟನೆಗೆ ನೆರವು  ನೀಡಿದ ಬಸವತೀರ್ಥದ ಶ್ರೀ. ಮ.ನಿ.ಪ್ರ.ಸ್ವ.ಚನ್ನಬಸವಸ್ವಾಮಿಗಳವರನ್ನು ಸ್ಮರಿಸಿದ್ದಾರೆ.       
     ವೀರಶೈವ ಧರ್ಮದ ಅತ್ಯಂತ ಶ್ರೇಷ್ಠತಮವಾದ ಕೃತಿ.  ಈ ಕೃತಿಯಲ್ಲಿ ಮುಖ್ಯವಾಗಿ ಬಸವಣ್ಣನನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹಲವಾರು ಶರಣ-ಶರಣೆಯರು, ಕವಿಗಳು, ವಿದ್ವಾಂಸರು, ಚಿಂತಕರು ಸ್ತುತಿಸಿರುವುದು ವೇದ್ಯವಾಗುತ್ತದೆ.    ಶ್ರೀ ಬಸವೇಶ್ವರರನ್ನು ಸ್ತೋತ್ರ ಮಾಡಿದ ಹಿರಿಯ ವಚನಕಾರರು ರಚಿಸಿದ ವಚನಗಳೆಲ್ಲವೂ ಈ ಪುಸ್ತಕದಲ್ಲಿ ಅಡಕವಾಗಿರುವುದರ ಜೊತೆಗೆ ರಾಷ್ಟ್ರನಾಯಕರು, ಗುರುಪೀಠಾಧಿಕಾರಿಗಳು, ಹಿರಿಯ ಸಾಹಿತಿಗಳು ಮತ್ತು ವಿದ್ವಾಂಸರು ಶ್ರೀಬಸವಣ್ಣನವರ ಬಗೆಗೆ ಬರೆದ ಮಾತುಗಳೂ ಸಂಗ್ರಹಿಸಲ್ಪಟ್ಟಿವೆ.  ಸಂಪಾದಕರು ಬರೆದಿರುವ ವಿಚಾರ ಭರಿತ ಹಾಗೂ ವಿದ್ವತ್ ಪೂರ್ಣ ಮುನ್ನುಡಿ ಸೊಗಸಾಗಿದೆ.  ಬಸವಣ್ಣನವರನ್ನು ಮತ್ತು ಅವರ ವಿಚಾರಧಾರೆಗಳನ್ನು ಕನ್ನಡ ಜನ ಹೇಗೆ ಸ್ವೀಕರಿಸಿದ್ದಾರೆಂಬುದು ಈ ಸಂಕಲನದಿಂದ ವ್ಯಕ್ತವಾಗುತ್ತದೆ.
      ಎಸ್.ಎಂ.ಹುಣಶಾಳರು ಸಂಶೋಧಿಸಿ, ಸಂಪಾದಿಸಿದ, ಉನ್ನತ ಮೌಲ್ಯಾದರ್ಶಗಳಿಂದೊಡಗೂಡಿರುವ, ಅವರ ಶ್ರೇಷ್ಠ ಸಂಪಾದನಾ ಕೃತಿಯಾದ ‘ಬಸವ ಸ್ತೋತ್ರದ ವಚನ-ಬಸವ ಸ್ತುತಿ ಪ್ರಶಸ್ತಿ’ಯನ್ನು ಕುರಿತು ಹಲವಾರು ಆಧುನಿಕ ವಿದ್ವಾಂಸರು, ಚಿಂತಕರು, ತೂಕಬ್ಧವಾದ ಅಭಿಪ್ರಾಯಗಳನ್ನು, ಮೆಚ್ಚುಗೆಯನ್ನು ಅಭಿವ್ಯಕ್ತಿಸಿರುವುದು ಕಂಡು ಬರುತ್ತದೆ.  ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರಲ್ಲಿ ಡಾ.ಕೆ.ಕೃಷ್ಣಮೂರ್ತಿಯವರು ಪ್ರಮುಖರಾಗಿ ಕಂಡುಬರುತ್ತಾರೆ.  ‘ಹರಿಹರದೇವ, ಕಂಚಿ ಶಂಕರಾರಾಧ್ಯ, ಕೆಳದಿ ಬಸವರಾಜ, ರಾಘವಾಂಕ, ಚಾಮರಸ, ಷಡಕ್ಷರದೇವ, ಸುರಂಗ, ವಿರೂಪಾಕ್ಷ ಪಂಡಿತ, ಇತ್ಯಾದಿ ಪ್ರಾಚೀನ ಮಹಾಕವಿಗಳಿಂದ ನಡೆದು ಬಂದ ಬಸವ ಭಕ್ತಿ ಪರಂಪರೆ ಈಚಿನ ಬಸವಪ್ಪಶಾಸ್ತ್ರಿಗಳವರೆಗೂ ಹೇಗೆ ಅವಿಚ್ಛಿನ್ನವಾಗಿ ಅನುಸೂತವೂ ಆಗಿ ಬಂದಿದೆ ಎಂಬುದು, ಇಲ್ಲಿನ ನೂರಾರು ಉಲ್ಲೇಖಗಳಿಂದ ಎದ್ದು ಕಾಣುತ್ತದೆ.  ಎಲ್ಲಕ್ಕಿಂತ ಹೆಚ್ಚಾಗಿ ಸಂಪಾದಕರ ವಿಸ್ತೃತ ಪ್ರಸ್ತಾವನೆಯಲ್ಲಿ ಅನೇಕಾನೇಕ ಗ್ರಾಸ ವಿಷಯಗಳು ಹೊಸ ಆಧಾರಗಳಿಂದ ವಿವೇಚಿಸಲ್ಪಟ್ಟು ನಿರ್ಣಯಗಳ ದಿಗ್ದರ್ಶನವಿರುವುದು ಮಹತ್ವದ್ದೆನ್ನಬೇಕು.  ಈ ಪುಸ್ತಕ ಕನ್ನಡನಾಡು ನುಡಿಗಳ ಅಭಿಮಾನಿಗಳಲ್ಲಿ ಸಂಗ್ರಾಹ್ಯವಾಗಿದೆ ಎಂಬ ಅಭಿಪ್ರಾಯದ ಮೂಲಕ ಈ ಕೃತಿಯ ಮೌಲ್ಯವನ್ನು ಸೂಚಿಸಿದ್ದಾರೆ.   
   
   21ನೇ ಮಾರ್ಚ್ 1966 ರಲ್ಲಿ ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ ಈ ಪತ್ರಿಕೆಯು ಕೃತಿಯನ್ನು ಕುರಿತು ಹೇಳುತ್ತಾ ಶ್ರೀ ಚೆನ್ನಂಜೇದೇವರ ಕೃತಿಯನ್ನು ಎಸ್.ಎಂ.ಹುಣಶಾಳ ಮತ್ತು ಅನ್ನದಾನಯ್ಯನವರು ಪರಿಶೋಧಿಸಿ ಪ್ರಕಟಿಸಿದ್ದಾರೆ. ಶ್ರೀ ಬಸವೇಶ್ವರರನ್ನು ಸ್ತೋತ್ರ ಮಾಡಿ, ಹಿರಿಯ ವಚನಕಾರರು ರಚಿಸಿದ ವಚನಗಳೆಲ್ಲವೂ ಈ ಪುಸ್ತಕದಲ್ಲಿ ಅಡಕವಾಗಿರುವುದರ ಜೊತೆಗೆ ರಾಷ್ಟ್ರನಾಯಕರು, ಗುರುಪೀಠಾಧಿಕಾರಿಗಳು, ಹಿರಿಯ ಸಾಹಿತಿಗಳು ಮತ್ತು ವಿದ್ವಾಂಸರು ಶ್ರೀಬಸವಣ್ಣನವರ ಬಗೆಗೆ ಬರೆದ ಮಾತುಗಳೂ ಸಂಗ್ರಹಿಸಲ್ಪಟ್ಟಿವೆ. ಸಂಪಾದಕರು ಬರೆದಿರುವ ವಿಚಾರ ಭರಿತ ಹಾಗೂ ವಿದ್ವತ್ ಪೂರ್ಣ ಮುನ್ನುಡಿ ಸೊಗಸಾಗಿದೆ. ಸಂಗ್ರಹ ಯೋಗ್ಯವಾದ ಕೃತಿಗಳಲ್ಲಿ ಇದೂ ಒಂದು ಎಂಬುದಾಗಿ ತಿಳಿಸುತ್ತಾರೆ. ಜೂನ್ 1968ರಲ್ಲಿ ಮೈಸೂರಿನ `ಪುಸ್ತಕ ಪ್ರಪಂಚ' ಪತ್ರಿಕೆಯವರು ಅಭಿಪ್ರಾಯವು ``ವರ್ಣಾಶ್ರಮ ಧರ್ಮ ರಹಿತ ಸಮಾಜರಚನೆ" ಮೊದಲಾದವುಗಳನ್ನು ಏಕೀಕರಿಸಿ ಜನಾಂಗದ ಶ್ರೇಯಸ್ಸಿಗೆ ವೀರಶೈವ ಮತವೆಂಬ ಸುಂದರವಾದ ಮನೆಯನ್ನು ಕಟ್ಟಿ ಮತ ಸ್ಥಾಪಕರೆನಿಸಿಕೊಂಡರು. ಇಂಥಾ ಮಹಾಮಹಿಮನ, ಗುರುವಿನ, ಮತಸ್ಥಾಪಕನ, ಪೂಜ್ಯತೆ ಪವಿತ್ರತೆಗಳನ್ನು ಕುರಿತ ಸಾರ ಸಂಗ್ರಹವೇ ಈ ಪುಸ್ತಕ.    
      ಕ್ರಿ.ಶ.1968ರಲ್ಲಿ ವರಿಂದ ಸಂಪಾದನೆಗೊಂಡು ಪ್ರಕಟಗೊಂಡ ‘ಬಸವಾದಿ ಗಣಚರಿತ್ರೆ ಮತ್ತು ಗಣವಚನ ಮಂಜರಿ’ ಎಂಬ ಕೃತಿಯನ್ನು ಕುರಿತು ಕೃತಿಕಾರರೇ ಹೇಳುವಂತೆ ``ಶ್ರೀ ಮ.ನಿ.ಪ್ರ.ಸ್ವ. ಚೆನ್ನಬಸವಸ್ವಾಮಿಗಳು ಬಸವ ತೀರ್ಥ ಅವರು ದಯಪಾಲಿಸಿದ ಎಲ್ಲಾ ಪುರಾತನರ ವಚನ ಎಂಬ ತಾಡೋಲೆ ಗ್ರಂಥದಿಂದ ವಚನಗಳನ್ನು ಸಂಶೋಧಿಸಿ, ಈ ಗ್ರಂಥದಲ್ಲಿ ಶೇಖರಿಸಲಾಗಿದೆ. ಲಿಂ.ಡಾ.ಪಿ.ಜಿ.ಹಳಕಟ್ಟಿಯವರ ಶರಣರ ಚರಿತ್ರೆಗಳ ಸಹಾಯವನ್ನು ತೆಗೆದುಕೊಳ್ಳಲಾಗಿದೆ.'  ಎಂದು ಹೇಳಿದ್ದಾರೆ.    ಇವರ `ಬಸವಾದಿ ಗಣಚರಿತ್ರೆ ಮತ್ತು ಗಣವಚನ ಮಂಜರಿ'-ಎಂಬ ಸಂಪಾದಿತ ಕೃತಿಯಲ್ಲಿ ಸುಮಾರು 115 ಗಣಾಧೀಶ್ವರರ ವಚನಗಳನ್ನು ಸಂಗ್ರಹಿಸಿ, ಸಂಕಲ್ಪಿಸಿ, ಸಂಶೋಧಿಸಿದ ಕಾರ್ಯ ನಿಜವಾಗಲು ಸ್ತುತ್ಯಾರ್ಹವಾದುದು ಆಗಿದೆ ಎಂದು ಹೇಳಬಹುದು.  ಶಿವನ ಅನುಯಾಯಿಗಳಿಗೆ ಗಣಾಧೀಶ್ವರರೆಂದು ಸಂಬೋಧಿಸುತ್ತಾರೆ.  ಗಣಾಧೀಶ್ವರರನ್ನು ಕುರಿತು 13ನೇ ಶತಮಾನದಲ್ಲಿ ಪಾಲ್ಕುರಿಕೆ ಸೋಮನಾಥ ಕವಿ “ಗಣಸಹಸ್ರ ನಾಮಾವಳಿ” ಲಘು ಕೃತಿಯನ್ನು ರಚಿಸಿದರು.  ಪ್ರಸ್ತುತ ಗ್ರಂಥದಲ್ಲಿ ವಚನಕಾರರ, ಗಣಾಧೀಶ್ವರರ ಚರಿತ್ರೆಯನ್ನಷ್ಟೇ ಚಿತ್ರಿಸಲಾಗಿದೆ.  ಈ ಗಣಾಧೀಶ್ವರರು ಶರಣರು, ವೀರಶೈವ ಧರ್ಮದ ಪ್ರಚಾರ, ಪ್ರಸಾರ ಕಾರ್ಯವನ್ನು ಕೈಕೊಂಡರು.  ಇವರಲ್ಲಿ ಬಸವಣ್ಣನು ಗಣಚಕ್ರವರ್ತಿ.  ಕಲ್ಯಾಣದ ಅನುಭವ ಮಂಟಪದಲ್ಲಿ ವೀರಶೈವ ಧರ್ಮವನ್ನು ರೂಪಿಸಿ, ಅದರ ಪ್ರತಿಭೆಯನ್ನು ಪ್ರಕಟಿಸಿದರು.  ಅಲ್ಲಮಪ್ರಭು, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ ಮೊದಲಾದ ನೂರಾರು ಶರಣ-ಶರಣೆಯರು ವೀರಶೈವದ ಸಂವರ್ಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂಬುದಾಗಿ ಪ್ರಸ್ತಾಪಿಸುತ್ತಾ ವೀರಶೈವ ಧರ್ಮದ ವಿಶೇಷತೆಯನ್ನು ಎತ್ತಿ ತೋರಿಸಿದ್ದಾರೆ.  
     ಇವರ ಸಂಪಾದಿತ ಕೃತಿಗಳಲ್ಲಿ ಗ್ರಂಥ ಸಂಪಾದನೆಯ ಅಂತಿಮ ಘಟ್ಟವಾದ ಉನ್ನತ ವಿಮರ್ಶೆಯಡಿಯಲ್ಲಿ ಬರುವ  ಕೃತಿಯ ಕತೃತ್ವ, ಕವಿಯ ಕಾಲ, ದೇಶ, ಕೃತಿಯ ಆಕರಗಳನ್ನು  ನಾವು ಕಾಣಲು ಸಾಧ್ಯವಿಲ್ಲ. ಇವರು ಉತ್ತಮ ಸಂಪಾದಕರಾಗಿದ್ದುದಕ್ಕೆ ಅವರಲ್ಲಿದ್ದ ಪ್ರಧಾನ ಗುಣಗಳು ಅವರ ವಿದ್ವತ್ತು ತಾಳ್ಮೆ ಮತ್ತು ನಿಷ್ಪಕ್ಷಪಾತವಾದ ಮನೋಭಾವ, ಹೊಸ ಹೊಸ ಸಾಧನ ಸಾಮಗ್ರಿಗಳು ಸಿಕ್ಕಿದಂತೆಲ್ಲಾ ಅವು ಬದಲಾಯಿಸತಕ್ಕವು ಎಂಬುದು ಅವರಿಗೆ ಗೊತ್ತು. ಸಂಪಾದಕರು ತಮಗೆ ದೊರೆತ ಪ್ರತಿಗಳ ಸ್ವರೂಪ ಕಾಲ ಮತ್ತು ಸ್ಥಿತಿಗಳನ್ನಾಗಲಿ ಅವುಗಳ ನಡುವಣ ಪರಸ್ಪರ ಸಂಬಂಧ ಮತ್ತು ಪೀಳಿಗೆಯ ವಿಷಯವನ್ನಾಗಲಿ ಎಲ್ಲಿಯೂ ಇವರು ತಮ್ಮ ಸಂಪಾದನಾ ಕೃತಿಗಳಲ್ಲಿ ಸೂಚಿಸಿಲ್ಲ, ಆಧಾರ ಪ್ರತಿಯ ವಿಶೇಷತೆಯನ್ನು ವಿವರಿಸಿಲ್ಲ. ಮೂಲ ಕೃತಿಗೆ ಸಂಬಂಧಿಸಿದಂತೆ ಮೂಲಪ್ರತಿಯಲ್ಲೂ ಟೀಕೆಯಲ್ಲೂ ಅಲ್ಪಸ್ವಲ್ಪ ಗ್ರಂಥಪಾತವೂ ಲಿಪಿಕಾರರ  ಸ್ಕಾಲಿತ್ಯಾದಿಗಳು ಇದ್ದುದನ್ನುಸ್ವ ಲ್ಪ ಮಟ್ಟಿಗೆ ಸರಿಪಡಿಸಿದ್ದಾರೆ. ಇವರ ಸಂಪಾದಿತ ಕೃತಿಗಳು ಸಂಪಾದನೆಯ ಶಾಸ್ತ್ರೀಯ ಮಟ್ಟವನ್ನು ಮುಟ್ಟಲಾರದಾದರೂ ಗ್ರಂಥ ಸಂಪಾದನೆಯ ಆದರ್ಶಗಳನ್ನು ಸ್ವಲ್ಪ ಮಟ್ಟಿಗಾದರೂ ಒಳಗೊಂಡಿವೆ. ಇವರು ಸಂಪಾದಿಸಿದ ಕಾಲ, ಪ್ರದೇಶ, ಸಂಪಾದಿಸಿದ ಹಿನ್ನೆಲೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ಗಮನದಲ್ಲಿರಿಸಿಕೊಂಡು ನೋಡಿದರೆ ಅವರ ಸಾಧನೆ ತುಂಬಾ ಮಹತ್ವದ್ದು ಎನಿಸುತ್ತದೆ. ಇವರ ವಚನ ಸಂಪಾದನೆಗಳಲ್ಲಿ ವಿದ್ವತ್ಪೂರ್ಣ ಪ್ರಸ್ತಾವನೆಯನ್ನು ಗುರುತಿಸಲು ಸಾಧ್ಯವಿಲ್ಲ. ಪ್ರಸ್ತಾವನೆಯಲ್ಲಿ ಸಂಕ್ಷಿಪ್ತವಾಗಿ ಕರ್ತೃ ಮತ್ತು ವಚನಗಳ ವೈಶಿಷ್ಟ್ಯವನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ.
        ವೀರಶೈವ ಸಾಹಿತ್ಯದ ಶೋಧನಾ ಪರಿಷ್ಕರಣಾ ಸಂಪಾದನಾ ಪ್ರಕಟಣಾ ಮತ್ತು ಸಂಶೋಧನೆಯ ಮೂಲಕ ಕೃತಿಗಳನ್ನು ರಚಿಸಿದ ಎಸ್.ಎಂ.ಹುಣಶಾಳ ರವರು .ಗು.ಹಳಕಟ್ಟಿ. ಎಂ.ಎಸ್.ಸುಂಕಾಪುರ, ಶಿ.ಶಿ.ಬಸವನಾಳ ರಂತಹವರ ಕಾಲಾವಧಿಗೆ ಸೇರುವವರು. ಇವರು ಸಂಪಾದಿಸಿ ಪ್ರಕಟಿಸಿದ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ಕೆಲವು ಕೃತಿಗಳು ಟಿಪ್ಪಣಿ ತಾತ್ಪರ್ಯಾರ್ಥ ವಿಶೇಷ ಅರ್ಥಗಳನ್ನು ಒಳಗೊಂಡಿವೆ. ಇವರು ಗ್ರಂಥಸಂಪಾದನೆಗೆ ತೊಡಗಿದ ಕಾಲದಲ್ಲಿ ಗ್ರಂಥಸಂಪಾದನಾ ಶಾಸ್ತ್ರವು ಈಗಿನಷ್ಟು ವೈಜ್ಞಾನಿಕವಾಗಿ ಬೆಳೆದಿರಲಿಲ್ಲ. ಆದರೆ ಹಲವಾರು ನಿಟ್ಟುಗಳಿಂದ ಕಾವ್ಯವನ್ನು ನಿರೂಕಿಸಿ ಕವಿಯ ಮೂಲಕ್ಕೆ ಹತ್ತಿರವಾಗುವಂತೆ ಅವರ ಪಾಠಗಳನ್ನು ನಿರ್ಧರಿಸುತ್ತಿದ್ದ ರೀತಿ ತುಂಬಾ ಶ್ರಮದಾಯಕವಾದುದು. ಇವರಿಗೆ ಗ್ರಂಥ ಸಂಪಾದನೆಯ ಮೂಲ ತತ್ವಗಳು ಸಾಕಷ್ಟು ತಿಳಿದಿದ್ದವು.  ಆದರೆ ವೈಜ್ಞಾನಿಕವಾಗಿ ತತ್ವಗಳನ್ನು ತಮ್ಮ ಸಂಪಾದನೆಯಲ್ಲಿ ಅಳವಡಿಸಲು ಅವರಿಗೆ ತಮ್ಮ ಮಿತಿಯಲ್ಲಿ ಕೆಲವು ತೊಂದರೆಗಳಿದ್ದವುಸೀಮಿತವಾದ ಲಭ್ಯ ಸಾಮಗ್ರಿಗಳಿಂದಲೇ ನಿರ್ದಿಷ್ಟ ಕಾಲಮಿತಿಯಲ್ಲಿ ಅವರು ಗ್ರಂಥಗಳನ್ನು ಹೊರತರಬೇಕಾಗಿದ್ದಿತು. ಇವರಿಗೆ ಪಾಶ್ಚಾತ್ಯ ಗ್ರಂಥ ಸಂಪಾದನೆಯ ವೈಜ್ಞಾನಿಕ ವಿಧಾನಗಳು ಗೊತ್ತಿಲ್ಲದಿರಬಹುದು ಈಗ ವ್ಯವಸ್ಥಿತವಾಗಿ ಶಾಸ್ತ್ರಬದ್ಧವಾಗಿ ಗ್ರಂಥ ಸಂಪಾದನೆಯಾಗುತ್ತಿರುವಂತೆ ಹುಣಶಾಳ ರವರ ಸಂಪಾದನೆ ಇಲ್ಲದಿರಬಹುದು, ಆದರೆ ಕಾಲಕ್ಕೆ ಅವರು ಸಂಪಾದಿಸಿರುವುದು ವ್ಯವಸ್ಥಿತ ಕ್ರಮವೇ ಆಗಿದೆ. ಅವರ ಸಂಪಾದನೆಯನ್ನು ಯಾವ ರೀತಿಯಲ್ಲಿಯೂ ತಿರಸ್ಕರಿಸಲಾಗದು. ಅವರು ಕೊಟ್ಟಿರುವ ಪಾಠಗಳು ಉತ್ತಮವಾಗಿವೆ. ದೊರೆತದ್ದರಲ್ಲಿಯೇ ಮೂಲಕ್ಕೆ ಹತ್ತಿರವಾದ ಶುದ್ಧ ಪಾಠಗಳನ್ನು ಅವರು ಕೊಟ್ಟಿರುವರು. ಇವರ ಸಂಪಾದನೆಯಲ್ಲಿ ವಚನಗಳು ಜನಮನವನ್ನು ಮುಟ್ಟಬೇಕೆನ್ನುವ ಆಕಾಂಕ್ಷೆವುಳ್ಳವುಗಳು. ಸಂಪಾದಕರ ಶ್ರಮ ನಿಜಕ್ಕೂ ಅಭಿನಂದನೀಯ. ಇಂತಹ ಪುಸ್ತಕಗಳು ಕನ್ನಡದಲ್ಲಿ ಅತಿ ವಿರಳ. ಪ್ರಕಾಶಕರು ಈ ದಿಶೆಯಲ್ಲಿ ಇನ್ನೂ ಉತ್ತಮವಾದ ದಾರ್ಶನಿಕ ಸಾಹಿತ್ಯ ಸಂಪುಟಗಳನ್ನು ಬೆಳಕಿಗೆ ತರಲೆಂದು ಆಶಿಸೋಣ. ಎನ್ನುವಂತಹ ಪ್ರಶಂಸೆಗಳೇ ಈ ಕೃತಿಗಳಿಗೆ ಮೌಲ್ಯಾಧಾರ ಎಂಬುದು ತಿಳಿದು ಬರುತ್ತದೆ.   
ಬಸವೇಶ್ವರರ ಸಮಕಾಲೀನರು-ಎಂಬ ಕೃತಿಯ 1968ರಲ್ಲಿ ಬಸವ ಸಮಿತಿಯವರು ಪ್ರಕಟಿಸಿದುದಾಗಿದೆ.  ಈ ಸಮಿತಿಯ ಸಂಪಾದಕ ಮಂಡಲಿಯ ಸದಸ್ಯರಾಗಿ ಹುಣಶಾಳರು ಕಾರ್ಯನಿರ್ವಹಿಸಿದ್ದಾರೆ.  ಈ ಕೃತಿಯಲ್ಲಿ ಹುಣಶಾಳರ ಐದು ಲೇಖನಗಳು ಪ್ರಕಟವಾಗಿವೆ.
1.     ಒಕ್ಕಲಿಗರ ಮುದ್ದಯ್ಯ-ಕುರುಬರಗೊಲ್ಲಾಳ-ತೆಲುಗೇಶ-ಮಸಣಯ್ಯ (ಪುಟ587ರಿಂದ599ರವರೆಗೆ)
2.    ಮಂಚಣ್ಣತ್ರಯರು (ಪುಟ-601-614)
3.     ಉರಿಲಿಂಗಪೆದ್ದಿ (ಪುಟ-639-654)
4.    ನಿಜಲಿಂಗಚಿಕ್ಕಯ್ಯ (ಪುಟ-655-664)
5.     ವರದಾನಿ ಗುಡ್ಡವ್ವೆ (ಪುಟ-665-674) ಈ ಶರಣರು ಬಸವಯುಗದವರಾಗಿದ್ದು ಅಷ್ಟಾಗಿ ಬೆಳಕಿಗೆ ಬಾರದವರಾಗಿದ್ದರು.ಅಂತಹವರ ಕುರಿತು ಲಭ್ಯವಿರುವ ಆಕರಗಳನ್ನೆಲ್ಲಾ ಬಳಸಿಕೊಂಡು ವ್ಯವಸ್ಥಿತವಾಗಿ ಇತಿವೃತ್ತ ಹಾಗೂ ವಚನಗಳ ವಿಶ್ಲೇಷಣೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.ವೀರಶೈವ ಶರಣರು ಕಾಯಕಕ್ಕೆ ಹೆಚ್ಚು ಮಹತ್ವಕೊಟ್ಟು ಪ್ರಪಂಚ ಮತ್ತು ಪಾರಮಾರ್ಥಗಳೆರಡರಲ್ಲೂ ಸಾಧನೆ ಮಾಡಲು ಶ್ರಮಿಸಿದ್ದರು ಎಂಬುದನ್ನು ಈ ಲೇಖನಗಳ ಮೂಲಕ ಗುರುತಿಸಿದ್ದಾರೆ.
         ‘ಶರಣೆಯರ ವಚನಗಳು’ 1969ರಲ್ಲಿ ಪ್ರಕಟವಾದ ಕೃತಿ.  ಆಗಿನ ಕಾಲಕ್ಕೆ ಅನಾಮಧೇಯರಾಗಿಯೇ ಉಳಿದಿದ್ದು  ಎಷ್ಟೋ ಹಲವು ಮಂದಿ ಶರಣಶರಣೆಯರ  ಇತಿವೃತ್ತ ಹಾಗೂ ವಚನಗಳ ಬಗೆಗೆ ಬೆಳಕು ಚೆಲ್ಲಿದೆ.  ಶ್ರೀಯುತರೇ ಹೇಳುವಂತೆ ‘ಭಾರತ ದೇಶದ ಇತಿಹಾಸದಲ್ಲಿ ವೀರಶೈವ ಧರ್ಮದ ವೈಶಿಷ್ಟ್ಯ ಉನ್ನತವಾದುದು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ವೀರಶೈವ ಧರ್ಮದ ಆಂದೋಲನ ಅಪ್ರತಿಮವಾದುದು. ಈ ಆಂದೋಲನದಲ್ಲಿ ನೂರಾರು ಶರಣರಷ್ಟೇ ಅಲ್ಲ, ಅನೇಕ ಶರಣೆಯರು ಸಹ ಭಾಗವಹಿಸಿ ಭಾರತದ ಸುಪ್ತ ಜನತೆಯನ್ನು ಹೊಡೆದೆಬ್ಬಿಸಿದರು.  ಇಂತಹ ವಿಚಾರಪ್ರದವಾದ ವಿಪ್ಲವ ಇತಿಹಾಸದಲ್ಲಿ ಮೊದಲನೆಯದು.  ಸುಮಾರು ಐವತ್ತು ಶರಣೆಯರು ಒಂದೇ ಕಾಲಕ್ಕೆ ಹುಟ್ಟಿ ತಮ್ಮ ವಿಚಾರಗಳನ್ನು ವಚನಗಳಲ್ಲಿ ಹೆಣೆದು ಪ್ರಚಾರ ಗೊಳಿಸಿದ್ದು, ಪ್ರಪಂಚದ ಇತರೇ ಯಾವುದೇ ಧರ್ಮದ ಇತಿಹಾಸದಲ್ಲಿ ಕಂಡು ಬರುವುದಿಲ್ಲ ಎಂಬುದಾಗಿ ವಿಶ್ಲೇಷಿಸುತ್ತಾರೆ. ಕೃತಿಯ ಪ್ರಾರಂಭದಲ್ಲಿ ಶ್ರೀಯುತರು ಶರಣೆಯರ ವಚನಗಳ ರಚನೆಯಿಂದ ಪ್ರಭಾವಿತರಾಗಿ, ಸ್ಫೂರ್ತಿಹೊಂದಿ ಶರಣೆಯರ ಬಗೆಗೆ ಭಕ್ತಿಯಿಂದ ಅವರು ಕವನಗಳನ್ನು ರಚಿಸಿದ್ದಾರೆ. ಕೃತಿಯ ಪ್ರಾರಂಭದಲ್ಲಿ ಶ್ರೀಯುತರು ಶರಣೆಯರ ವಚನಗಳ ರಚನೆಯಿಂದ ಪ್ರಭಾವಿತರಾಗಿ, ಸ್ಫೂರ್ತಿಹೊಂದಿ ಶರಣೆಯರ ಬಗೆಗೆ ಭಕ್ತಿಯಿಂದ ಅವರು ಕವನಗಳನ್ನು ರಚಿಸಿರುವುದು ತಿಳಿದುಬರುತ್ತದೆ. ಅವರೇ ಹೇಳುವಂತೆ-  
ಅಕ್ಕ ಅಲ್ಲಮರ ಸಂವಾದ
ಅಕ್ಕರದಿ ಆಲಿಸಿ ಕಲ್ಯಾಣದಿ ಅಚ್ಚರಿದ ಶರಣ ಸಂದೋಹ
    ಕಲ್ಯಾಣದ ಅನುಭವ ಮಂಟಪದಲ್ಲಿ ತಮ್ಮ ಅಂತರಂಗದ ಅನುಭವದ ಅನುಭಾವಗಳನ್ನು ಸಂವಾದದ ಮೂಲಕ ಅಚ್ಚರಿ ಮೂಡಿಸಿ, ಭೂಲೋಕ ಕೈಲಾಸ ನಿರ್ಮಿತಿಯ ಕೇಂದ್ರವಾಗಿತ್ತು ಎಂಬುದಾಗಿ ಹೇಳುತ್ತಾರೆ.  
ಕಲ್ಯಾಣದ ಅನುಭವ ಮಂಟಪದಲ್ಲಿ ಕನ್ನಡಿಗರಲ್ಲದೇ ದೇಶದ ವಿವಿಧಭಾಗಗಳಾದ ಕಾಶ್ಮೀರ, ಕೇರಳ,ಕಂಚಿ, ಸೌರಾಷ್ಟ್ರ-ಮುಂತಾದ ಪ್ರದೇಶಗಳಿಂದ ರಾಜ-ಮಹಾರಾಜರ ಪತ್ನಿಯರು, ಶ್ರೀಸಾಮಾನ್ಯರ ಪತ್ನಿಯರು ಸೇರಿ ಶರಣಧರ್ಮದ ಕೀರ್ತಿ ಪತಾಕೆಯನ್ನು ಮುಗಿಲು ಮುಟ್ಟಿಸಿರುವುದು ವೇದ್ಯವಾಗುತ್ತದೆ.       ಇವರ`ಶರಣೆಯರ ವಚನಗಳು' ಎಂಬ ಸಂಪಾದಿತ ಕೃತಿಯಲ್ಲಿ ಸಂಪೂರ್ಣವಾಗಿ ಶರಣೆಯರು ಶಿವಶರಣರಂತೆ ತಮ್ಮ ಅಗಾಧವಾದ ಭಾವ-ಬುದ್ಧಿಗಳ ಸಂಗಮದ ಪಾಂಡಿತ್ಯ, ಅಂತರಂಗದ ಅನುಭವಗಳ ಸಾರ ಇದರಲ್ಲಿ ಸುಲಲಿತವಾಗಿ ಹೊರಹೊಮ್ಮಿರುವುದು ವಿದಿತವಾಗುತ್ತದೆ.
‘WOMAN SAINTS OF KARNATAKA’ (Biographical sketches)-ಎಂಬ ಕೃತಿಯು 1970ರಲ್ಲಿ ಪ್ರಕಟಿಸಲಾಯಿತು.  ಹನ್ನೆರಡನೆಯ ಶತಮಾನದಲ್ಲಿ ಶರಣರಷ್ಟೇ ಶರಣೆಯರು ಸಹ ವೀರಶೈವ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂಬುದನ್ನು ಶ್ರೀಯುತರು ಹೇಳುವಂತೆ ‘Woman saints in Twelth century-number being nearly sixty.  While the whole vedic and Upanishadic periods could produce only two to three female saints.  Such as Gargi and Maitreyi indeed it is a matter of great pride for karnatak.  Which produced scores of lady saints in the twelth century.  Many of these were the wives of saints.  Not only were the husbands saints but their wives also were saints.  This is the unigue feature of veerashaivism.  Which pleaded the cause of social equality and economic and economic equity not only between man and man but between man and woman also’ ಎಂದು ಶಿವಶರಣೆಯರ ಬಗೆಗೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.  ಅಲ್ಲದೇ ಈ ಕೃತಿಯಲ್ಲಿ ಅಲ್ಲಮಪ್ರಭು ಮತ್ತು ಮುಕ್ತಾಯಕ್ಕರ ಸಂವಾದವನ್ನು ಬಹಳ ಸಮರ್ಪಕವಾಗಿ ಶ್ರೀಯುತರು ಆಂಗ್ಲಭಾಷೆಗೆ ತರ್ಜುಮೆ ಗೊಳಿಸಿರುವುದು ಕಂಡು ಬರುತ್ತದೆ.  ಮೂಲ ವಚನಗಳಿಗೆ ಚ್ಯುತಿ ಬರದಹಾಗೆ ಅನುವಾದಿಸಿರುವುದು ಅವರ ಪಾಂಡಿತ್ಯ ಹಾಗೂ ಭಾಷಾಂತರದಲ್ಲಿ ಹೊಂದಿದ್ದ ಪ್ರಭುತ್ವವನ್ನು ಸೂಚಿಸುತ್ತದೆ.     
    ಒಟ್ಟಾರೆಯಾಗಿ ಹುಣಶಾಳರವರು ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಸಂಶೋಧನಾ ಕಾರ್ಯದಲ್ಲಿ ದೇಶಿ ಸಂಶೋಧಕರ ಸಾಲಿನಲ್ಲಿ ತಮ್ಮದೆ ಆದ ಸ್ಥಾನವನ್ನು ಪಡೆದುಕೊಂಡವರಾಗಿದ್ದಾರೆ.  ಇವರು ಇಂಗ್ಲೀಷಿನಲ್ಲಿ ಅನುವಾದಿಸಿದ ವಚನಗಳಲ್ಲಿ ವೀರಶೈವ ಸಾಹಿತ್ಯದ ವೈವಿಧ್ಯಮಯವಾದ ಅಂಶಗಳನ್ನು ಪ್ರತಿಪಾದಿಸಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ.  ಅಂತೆಯೇ ಅವರು ಎಲೆಮರೆಯ ಕಾಯಿಯಂತೆ ಇದ್ದುಕೊಂಡೇ ಶರಣಸಾಹಿತ್ಯ ಕುರಿತಾದ ಸಂಶೋಧನೆಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ವಿದ್ವತ್ತಿನಿಂದ ಅನೇಕ ಪ್ರಶಸ್ತಿಗಳಿಗೆ ಪಾತ್ರರಾದ ಹುಣಶಾಳರಿಗೆ ಕನ್ನಡದ ಜನತೆ ಬದುಕಿದ್ದಾಗ ಗೌರವ, ಸ್ಥಾನ-ಮಾನ ಕೊಡಲಿಲ್ಲ ಎನ್ನುವುದು ನಾವು ಅವರ ವಿದ್ವತ್ತಿಗೆ ಮಾಡಿದ ಅಪಮಾನವಾಗಿದೆ.  ಇಂದು ವೀರಶೈವ ಸಾಹಿತ್ಯದಲ್ಲಿ ಬಹಳಷ್ಟು ಕೃತಿಗಳು ಪ್ರಕಟಗೊಂಡಿವೆ.  ಸಂಶೋಧನೆ ಬಹಳಷ್ಟು ನಡೆದಿದೆ.  ಆದರೆ ಹುಣಶಾಳರು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲಾ ವಚನಗಳು ಪ್ರಕಟಗೊಂಡಿರಲಿಲ್ಲ.  ಇತರೆ ಕೃತಿಗಳು ಹಸ್ತಪ್ರತಿಗಳಲ್ಲಿಯೇ ಉಳಿದುಕೊಂಡಿದ್ದವು.   ಆಕರಗಳು ವ್ಯವಸ್ಥಿತವಾಗಿ ಲಭ್ಯವಿರಲಿಲ್ಲ.  ಅಂತಹ ಸಂದರ್ಭದಲ್ಲಿ ವಚನಸಾಹಿತ್ಯ ಕುರಿತಾದ ಹುಣಶಾಳರ ಸಂಶೋಧನೆಗೆ ತನ್ನದೆ ಆದ ಚಾರಿತ್ರಿಕ ಮಹತ್ವವಿದೆ ಎಂಬುದನ್ನು ಮರೆಯುವಂತಿಲ್ಲ.  ಇಂದು ಅವರ ಸಂಶೋಧನೆಯ ಕೆಲವು ವಿಚಾರಗಳು ಸಮರ್ಪಕವಾಗಿಲ್ಲ ವೆಂದೆನಿಸಿದ್ದರೂ ಸು.50 ವರ್ಷಗಳ ಹಿಂದೆ ಮೌಲ್ಯಯುತವಾಗಿದ್ದವು ಎಂಬುದನ್ನು ಗಮನಿಸಬೇಕು.    ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತು ಹುಣಶಾಳರವರ ಸಂಶೋಧನೆಯ ಸ್ವರೂಪದ ಬಗೆಗೆ ಹೇಳುವುದಾದರೆ, ಹುಣಶಾಳರ ಸಂಶೋಧನೆಯು ವೀರಶೈವ-ಶರಣೆಯರ ಬಗೆಗಿನ ಅಂದರೆ, ವಚನರಚನೆ, ಕಾಲ, ಹಿನ್ನೆಲೆಗೆ ಸಂಬಂಧಿಸಿದಂತೆ ಮತ್ತು ವಚನಕಾರರ ಬಗೆಗೆ ಮಾಹಿತಿಯನ್ನು ಕ್ರೋಢೀಕರಿಸುವ ಅಂಶಗಳನ್ನು ಒಳಗೊಂಡಿದೆ. ವಚನಕಾರರ ಜೀವನ ವಿವರ, ಕಾಲ, ದೇಶ ಮುಂತಾದ ವಿವರಗಳನ್ನು ಕೃತಿಯಿಂದ ಮತ್ತು ಅನ್ಯಮೂಲಗಳಿಂದ ಕಂಡುಕೊಂಡಿರುವ ಪ್ರಯತ್ನವನ್ನು ಕಾಣಬಹುದು. 
    ವಚನ ಸಾಹಿತ್ಯದಲ್ಲಿ ಅಡಗಿದ ಸಂಸ್ಕೃತಿಯನ್ನು ಶ್ರೀಯುತರು ಪರಿಶ್ರಮವಹಿಸಿ ಅಮೂಲಾಗ್ರವಾಗಿ ಶೋಧಿಸಿಕೊಟ್ಟು ಇದರ ಸ್ವರೂಪ ಮತ್ತು ವೈಶಿಷ್ಟ್ಯವನ್ನು, ಸಾಮಾಜಿಕ ವ್ಯವಸ್ಥೆ, ಆರ್ಥಿಕವ್ಯವಸ್ಥೆ, ರಾಜಕೀಯ ವ್ಯವಸ್ಥೆ ಮುಂತಾದ ವಿಚಾರಗಳನ್ನು ವೀರಶೈವ ಸಾಹಿತ್ಯ ಕೃತಿಗಳಲ್ಲಿ ಸಾಂಸ್ಕೃತಿಕ ಅಂಶಗಳನ್ನು ಚಿತ್ರವತ್ತಾಗಿ ಮನದಟ್ಟು ಮಾಡಿಕೊಟ್ಟಿದ್ದಾರೆ.   
     ಶರಣ ಸಾಹಿತ್ಯದ ಶೋಧನೆ, ಪ್ರಕಟಣೆಗಾಗಿ ತುಂಬಾ ಶ್ರಮಿಸಿದವರು.  ಇಂದಿನ ಸಂದರ್ಭದಲ್ಲಿ ನಿಂತು ಹುಣಶಾಳರ ಸಂಶೋಧನೆಯನ್ನು ಗಮನಿಸಿದರೆ ಅದು ಚಿಕ್ಕದೆನಿಸಬಹುದು.  ಆದರೆ ಇಪ್ಪತ್ತನೇ ಶತಮಾನದ ಮಧ್ಯದ ಸಂದರ್ಭದಲ್ಲಿ ಶ್ರೀಯುತರು ಕೂಡ ವಚನ ಸಾಹಿತ್ಯದ ಸಂಶೋಧಕ ಪಿತಾಮಹರಾದ ಡಾ.ಫ.ಗು.ಹಳಕಟ್ಟಿಯವರಂತೆ, ಅವರ ಕಾಲದ ಸಂದರ್ಭದಲ್ಲಿಯೇ, ಅವರಂತೆ ಇವರು ಕೂಡ ಕನ್ನಡದ ವಚನಗಳನ್ನು, ಶರಣರ ಸಂದೇಶಗಳನ್ನು, ವೀರಶೈವ ಸಾಹಿತ್ಯದ ತತ್ವಗಳನ್ನು ಕನ್ನಡದಲ್ಲಿ ಸಂಶೋಧಿಸಿ, ಇಂಗ್ಲೀಷಿಗೆ ತರ್ಜುಮೆಗೊಳಿಸಿ, ಜಾಗತಿಕ ಮಟ್ಟದಲ್ಲಿ ಆ ಸಾಹಿತ್ಯಕ್ಕೆ ಸ್ಥಾನವನ್ನು ಕಲ್ಪಿಸಿಕೊಡಬೇಕೆಂಬ ಅಚಲವಾದ ನಿಲುಮೆಯನ್ನು ಹೊಂದಿದ್ದರು.  ಹಲವಾರು ಅಡೆ-ತಡೆಗಳು ಬಂದರೂ ಯಾರಿಗೂ ಕಾಣದಂತೆ ತಮ್ಮನ್ನೇ ತಾವು ಅದರಲ್ಲಿ ತೊಡಗಿಸಿಕೊಂಡು  ರಚಿಸಿದ ಅನೇಕ ಕೃತಿಗಳು ಇಂದಿಗೂ ಸಂಶೋಧನಾಧ್ಯಯನ ಮಾಡುತ್ತಿರುವವರಿಗೆ ಆಕರಗಳಾಗಿವೆ.  ಜೊತೆಗೆ ಅವರು ಅಂದು ತುಂಬಾ ಅಸಹಾಯಕ ಸ್ಥಿತಿಯಲ್ಲಿದ್ದ ಸಾಂಸ್ಕೃತಿಕ ಚರಿತ್ರೆಗೆ ಸಮರ್ಪಕವಾಗಿ ಸತ್ವ, ಉತ್ಸಾಹಗಳನ್ನು ತುಂಬಿ ಆ ಪರಂಪರೆಯ ಸಮರ್ಥ ಹರಿಕಾರರಾದವರು.  ಅಲ್ಲದೇ ಈಗಾಗಲೇ ನೋಡಿರುವ ಹಾಗೆ ವಿದ್ವಾಂಸರ, ಚಿಂತಕರ, ಸಾಹಿತಿಗಳ ಹಾಗೂ ಹಲವಾರು ರಾಜ್ಯ, ರಾಷ್ಟ್ರೀಯ ಪತ್ರಿಕೆಗಳ ಸಂಪಾದಕರ ತೂಕಬದ್ಧವಾದ ಅಭಿಪ್ರಾಯಗಳು ಇವರ ಸಾಹಿತ್ಯ, ಸಂಶೋಧನೆ ಕಾರ್ಯದಿಂದ ಕನ್ನಡ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯ-ಸಂಸ್ಕೃತಿಯು ಸಂಪದ್ಭರಿತಗೊಂಡಿದೆ ಎಂಬುದನ್ನು ಸೂಚಿಸುತ್ತವೆ.
      ಒಟ್ಟಿನಲ್ಲಿ ಶ್ರೀಯುತರು ಹೈದ್ರಾಬಾದ್ ಕರ್ನಾಟಕದ ಶ್ರೇಷ್ಠ ಸಂಶೋಧಕರು, ಸಾಹಿತಿಗಳಲ್ಲಿ ಇವರು ಒಬ್ಬರು.  ಅವರು ಸೃಜನಾತ್ಮಕ, ಸಂಶೋಧನಾತ್ಮಕ, ಸಂಪಾದನಕಾರ, ಅನುವಾದಕರು.  ಇವರ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯ ಕ್ಷೇತ್ರಗಳ ಸಾಧನೆಯ ಕೃಷಿಯನ್ನು ಕಂಡು ಉಂಡು ಹಲವಾರು ವಿದ್ವಾಂಸರು, ವಿಮರ್ಶಕರು, ಚಿಂತಕರು, ಕವಿಗಳು-ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಬೆನ್ನು ತಟ್ಟಿ ಕೃತಕೃತ್ಯರಾಗಿರುವುದು ಎಸ್.ಎಂ.ಹುಣಶಾಳರ ಪ್ರತಿಭೆಗೆ ಸಂದ ಗೌರವವೇ ಆಗಿದೆ ಎನ್ನಬಹುದು.  ಇವರ ಸಂಶೋಧನಾಧ್ಯಯನ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎನ್ನಬಹುದು. ಇಂದು ಕನ್ನಡ ಗ್ರಂಥ ಸಂಪಾದನೆಯು  ವ್ಯವಸ್ಥಿತವಾಗಿ ಶಾಸ್ತ್ರ ಬದ್ಧವಾಗಿ ಬೆಳೆದಿರುವ  ಹಿನ್ನೆಲೆಯಲ್ಲಿ  ಹುಣಶಾಳ ಅವರ ಸಂಪಾದನೆಯು ವ್ಯವಸ್ಥಿತವಾಗಿಲ್ಲವೆಂಬ ಅನಿಸಿಕೆ ಕೆಲವರಲ್ಲಿ ವ್ಯಕ್ತವಾದರೂ ಆಗಿನ ಕಾಲಕ್ಕೆ ಅದು ವ್ಯವಸ್ಥಿತ ಕ್ರಮವೇ ಆಗಿದೆ. ಅವರು ಕೊಟ್ಟಿರುವ ಪಾಠಗಳು ಇಂದಿಗೂ ಉತ್ತಮವಾಗಿದ್ದು ಮಾನ್ಯತೆಯನ್ನು ಪಡೆದಿವೆ. ಲಭ್ಯವಿದ್ದ ಹಸ್ತಪ್ರತಿಗಳಲ್ಲಿಯೇ ಮೂಲಕ್ಕೆ ಹತ್ತಿರದ ಪಾಠಗಳನ್ನು ಕೊಟ್ಟಿದ್ದಾರೆ. ಇವರ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿಗಳ ಸಂಪಾದನೆಯ ಸ್ವರೂಪವು   ಅರ್ಥವಾಗುವ ಪ್ರಸಂಗದಲ್ಲಿ ಪ್ರತಿಕಾರನ ಪಾಠವನ್ನು ಉಳಿಸಿಕೊಳ್ಳುವ ರೀತಿಯದ್ದಾಗಿದೆ.
   ಇತ್ತೀಚಿನ ದಿನಮಾನಗಳಲ್ಲಿ ಶರಣ ಸಾಹಿತ್ಯ-ಸಂಸ್ಕೃತಿ ಕುರಿತಾದ ಸಂಶೋಧನೆಯಲ್ಲಿ ಮಹತ್ತರವಾದ ಬೆಳವಣಿಗೆ ಸಾಧಿಸಿದ್ದು, ಹುಣಶ್ಯಾಳ ಅವರ ಸಾಹಿತ್ಯ ಕೃಷಿ ಮಹತ್ತರವೆನಿಸದಿದ್ದರೂ ಇಂದಿನ ವಚನ ಸಾಹಿತ್ಯ ಸಂಶೋಧನೆಯ ಬೆಳವಣಿಗೆಗೆ  ಇವರಂತಹ ಆ ಕಾಲದ ಸಂಶೋಧನಾ ಚಟುವಟಿಕೆಗಳೇ ಬುನಾದಿ ಎಂದರೇ ತಪ್ಪಾಗಲಾರದು.
   ಹೈದ್ರಾಬಾದ್ ಕರ್ನಾಟಕದಲ್ಲಿ ಮೊಟ್ಟಮೊದಲನೆ ‘ಡಾಕ್ಟರೇಟ್’ ಪದವಿ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.  ಎಸ್.ಎಮ್.ಹುಣಶಾಳ ಅವರ ಸಾಹಿತ್ಯ ಕೃತಿಗಳನ್ನು ಕುರಿತು ಸರ್ವಪಲ್ಲಿ ರಾಧಾಕೃಷ್ಣನ್, ವಿ.ಕೃ.ಗೋಕಾಕ್, ಚೆನ್ನವೀರಕಣವಿ, ಪಿ.ಲಂಕೇಶ್, ಎಲ್.ಶೇಷಗಿರಿರಾವ್ ಮೊದಲಾದ ವಿದ್ವಾಂಸರು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ.   ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸಾಧನೆ ಎಸ್.ಎಮ್.ಹುಣಶಾಳ ಅವರದು.  ಆಗಿನ ಕಾಲಕ್ಕೆ ಹೈದರಾಬಾದ್ ಕರ್ನಾಟಕ ಪರಿಸರದಲ್ಲಿ ಎಲೆಮರೆಯ ಕಾಯಿಯಂತೆ ಇದ್ದಕೊಂಡೇ, ಸಂಶೋಧಕರಾಗಿ, ವಚನಸಾಹಿತ್ಯ ಕೃತಿಗಳಸಂಪಾದಕರಾಗಿ, ಸೃಜನಶೀಲ ಸಾಹಿತಿಗಳಾಗಿ ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲಿಯೂ ಪ್ರಭುತ್ವವನ್ನು ಪಡೆದುಕೊಂಡು ಕನ್ನಡ ಸಾಹಿತ್ಯವನ್ನು ಅದರಲ್ಲಿಯೂ ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಪ್ರಾಮಾಣಿಕ ಪ್ರಮಾಣಿಕ ಪ್ರಯತ್ನವನ್ನು ಮಾಡಿದ ಹುಣಶಾಳರು ಮೇಲ್ಪಂಕ್ತಿಯ ಸಾಹಿತಿಗಳು.  ಆದರೆ ದುರಾದೃಷ್ಟಕರ ಸಂಗತಿ ಎಂದರೆ ಇವರ ಸಾಹಿತ್ಯ ಕೃಷಿ ಅಷ್ಟಾಗಿ ಬೆಳಕಿಗೆ ಬಾರದೆ ಅನಾದರಣೆಯಾಗಿಯೇ ಉಳಿದಿದ್ದು ವಿದ್ವತ್ ವಲಯದಲ್ಲಿ ಸೂಕ್ತ ಸ್ಥಾನವನ್ನು ನೀಡದಿದ್ದುದು ನಾವು ಅವರಿಗೆ ಮಾಡಿದ ಅವಮಾನವಾಗಿದೆ.  ಈಗಲಾದರೂ ಅವರ ಕೃತಿಗಳ ವ್ಯವಸ್ಥಿತವಾದ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನವನ್ನು ಕಲ್ಪಿಸಿ ಕೊಡಬೇಕಾಗಿದೆ. ಆಧುನಿಕ ಸಂಶೋಧಕರ ಕುರಿತು ನಡೆದಿರುವ ಅಧ್ಯಯನದ ಹಾದಿಯನ್ನು ಗಮನದಲ್ಲಿಟ್ಟುಕೊಂಡು,  ಇಂದು ನಾವು ಹುಣಶಾಳರ ಸಾಹಿತ್ಯ ಕೃಷಿಯನ್ನು, ವೀರಶೈವ ಸಾಹಿತ್ಯ ಕೃತಿಗಳನ್ನು ಸಂಪಾದಿಸಿದ ಸಂಪಾದಕರಾಗಿ, ಸಾಹಿತ್ಯ-ಸಂಸ್ಕೃತಿಯ ಒಳನೋಟಗಳನ್ನು ಶೋಧಿಸಿದ ಸಂಶೋಧಕರಾಗಿ ಇಂದಿಗೂ ಪ್ರಸ್ತುತವಾಗಿರುವಂತಹ ವಿಚಾರ ಧಾರೆಗಳನ್ನು ಸೃಜಿಸಿದ ಸಾಹಿತಿಯಾಗಿ ವಿವಿಧ ನೆಲೆಗಟ್ಟುಗಳಲ್ಲಿ ಗುರುತಿಸ ಬೇಕಾಗಿದೆ.  ಆದರೆ ಆ ಕಾರ್ಯ ಇಲ್ಲಿಯವರೆಗೂ ನಡೆಯದಿರುವುದು ದುರದೃಷ್ಟಕರ ಸಂಗತಿಯಾಗಿದೆ.  ಇನ್ನು ಮುಂದಾದರೂ ಈ ಮಹತ್ತರ ಕಾರ್ಯ ನಡೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತೇನೆ.
    ಹುಣಶಾಳರ ಕೃತಿಸೂಚಿ
1.ವೀರಶೈವ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾ ಕೃತಿಗಳು
1.THE VIRASAIVA PHILOSOPHY (the doctorate thesis for ph.d in philosophy).  Philosophy Department, Lucknow University
LUCKNOW. 1954.
2.THE LINGAYAT MOVEMENT
A Social Revolution in Karnataka
Basava Samiti, Bangalore,2004 (Second impression)
3.THE VEERASHAIVA SOCIAL PHILOSOPHY
Amaravani Priniting press
Raichur. 1957
4.ಬಸವೇಶ್ವರರ ಸಮಕಾಲೀನರು (ಶರಣರ ಸಂಬಂಧಿಸಿದ ಲೇಖನಗಳು)
ಶ್ರೀ ಅನ್ನದಾನಯ್ಯ ಪುರಾಣಿಕ, ಬಸವ ಸಮಿತಿ, ಬಸವಸದನ,
ಮೋಹನ್ ಪ್ರೆಸ್, ಬೆಂಗಳೂರು. 1968
5.ಶರಣೆಯರ ವಚನಗಳು
ಜನತಾ ಪ್ರಿಂಟರ್, ರಾಯಚೂರು. 1969
10. WOMAN SAINTS OF KARNATAKA
(Biographical Sketches)
Shri Soma ramangoud
Taranatha prakashana, Raichur. 1970
ಸಂಪಾದಿತ ಕೃತಿಗಳು
1.ಪುರಾತನರ ವಚನ ಸಂಕಲನ
ಶ್ರೀ ಮ.ನಿ.ಪ್ರ.ಸಿದ್ಧಲಿಂಗೇಶ್ವರ ಶಿವಾನುಭವ ಗ್ರಂಥಮಾಲಾ-3
ವಿರಕ್ತಮಠ ಇಂಗಳೇಶ್ವರ,
ಬಸವತೀರ್ಥಮಠ. 1964
2.ಬಸವಸ್ತೋತ್ರದ ವಚನ ಮತ್ತು ಬಸವಸ್ತುತಿ ಪ್ರಶಸ್ತಿ
ಆನತಾ ಪ್ರಿಂಟರ್, ರಾಯಚೂರು.  1965
3.ಬಸವಾದಿ ಗಣಚರಿತ್ರೆ ಮತ್ತು ಗಣವಚನ ಮಂಜರಿ
ವಿಜಯ ಪ್ರಕಾಶನ, ಜನತಾ ಪ್ರಿಂಟರ್,
ರಾಯಚೂರು. 1968
4. ಬಸವೇಶ್ವರ ದೇವರ ವಚನ ವ್ಯಾಖ್ಯಾನ
   ಶ್ರೀ..ನಿ.ಪ್ರ. ಸಿದ್ಧಲಿಂಗಸ್ವಾಮಿಗಳು
   ಕಲ್ಮಠ, ಕವಿತಾಳ, ರಾಯಚೂರು ಜಿಲ್ಲೆ, 1971
ಅಲಭ್ಯ ಕೃತಿಗಳು
01.ಪುರಾತನರ ಶರಣೆಯರ ವಚನಗಳು
02.Philosophy of the Agamas and the Vachanas





  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...