ಭಾನುವಾರ, ಫೆಬ್ರವರಿ 5, 2023

 

ಸರ್ವಜ್ಞನ ತ್ರಿಪದಿಗಳು : ಕೆಲವು ಟಿಪ್ಪಣಿಗಳು

                ಡಾ.ಸಿ.ನಾಗಭೂಷಣ

 

         ಸರ್ವಜ್ಞ  ಎಂಬುದು ಒಬ್ಬ ವ್ಯಕ್ತಿಯ ಹೆಸರಲ್ಲ, ಅದೊಂದು ಕಾವ್ಯ ಪದ್ಧತಿಗೆ ಇಟ್ಟ ಹೆಸರು. ಎಂದರೆ ಸರ್ವಜ್ಞವೆಂದು ನಾವು ಒಪ್ಪಿಕೊಂಡಿರುವ ಈ ತ್ರಿಪದಿಗಳಲ್ಲಿ ಎಷ್ಟನ್ನೋ ವಾಸ್ತವಾಗಿ ರಚಿಸಿದ ಕವಿಯೊಬ್ಬ ಈ ಪದ್ಧತಿಯು ಮೂಲದಲ್ಲಿ ಇದ್ದಿರಲೆ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಖಂಡಿತ ಇದನ್ನು ಬರೆದ ವ್ಯಕ್ತಿಯೊಬ್ಬ ಇದ್ದಿರಬೇಕು. ಅವನ ಹೆಸರೇನೋ ತಿಳಿಯದು. ಸರ್ವಜ್ಞ ಎಂಬುದೇ ಈ ತ್ರಿಪದಿಗಳಲ್ಲಿ ಎಷ್ಟನ್ನೊ ಬರೆದ ಕವಿಯ ಹೆಸರಿದ್ದಿರಬೇಕು. ಪ್ರಭು ಪ್ರಭುದೇವ ಎಂಬ ಹೆಸರಿನಂತೆ, ಸರ್ವಜ್ಞ ಎಂಬುದೂ ಒಬ್ಬ ವ್ಯಕ್ತಿಯ ಹೆಸರಾಗಿದ್ದಿರಬೇಕು ಎಂಬ ಅನಿಸಿಕೆಯನ್ನು ಸರ್ವಜ್ಞನ ಬಗೆಗೆ ಸಂಶೋಧನೆ ಕೈಗೊಂಡ ವಿದ್ವಾಂಸರಲ್ಲಿ  ಕೆಲವರು ವ್ಯಕ್ತಪಡಿಸಿದ್ದಾರೆ. ಸರ್ವಜ್ಞ ಎಂಬುದು ಕವಿಯ ಹೆಸರೋ ಅಥವಾ ಅಂಕಿತವೋ ಅಥವಾ ಎರಡು ಆಗಿದೆಯೋ ಎಂಬುದು ಇಂದಿಗೂ ಸಮಸ್ಯೆಯಾಗಿ ಉಳಿದಿದೆ. ಕೆಲವು ವಿದ್ವಾಂಸರು ಸರ್ವಜ್ಞ ಎಂದು ಯಾರಾದರೂ ಹೆಸರಿಟ್ಟು ಕೊಂಡಾರೆಯೇ, ಬಹುತೇಕ ಅದು ಒಂದು ಬಿರುದು ಅಥವಾ ಆತನ ಇಷ್ಟದೈವದ ಅಂಕಿತವಾಗಿರ ಬೇಕು ಎನ್ನುವ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.  ತನ್ನ ಹೆಸರು ಇತ್ಯಾದಿಗಳ ಹಂಗನ್ನು ಹರಿದುಕೊಂಡು, ಅತ್ಯಂತ ವ್ಯಕ್ತಿನಿರಸನದ ಸಂತೋಷದಲ್ಲಿ ಬದುಕಿದಂತೆ ತೋರುವ ಈ ವ್ಯಕ್ತಿಗೆ ಕೊಟ್ಟುದ್ದೇ ಹೆಸರು! ಇಂಥ ಕವಿಯ ಕಾಲದೇಶಾದಿ ಸಂಗತಿಗಳನ್ನು ನಾವು ನಿರ್ದಿಷ್ಟವಾಗಿ ಚೌಕಟ್ಟಿಗೆ ಒಳಪಡಿಸಿ ಹೇಳಲು ಸಾಧ್ಯವಿಲ್ಲ. ಸರ್ವಜ್ಞನು ಹುಟ್ಟಿ ಇಂದಿಗೆ ನಾಲ್ಕು ನೂರು ವರ್ಷಗಳ ಮೇಲಾದುವೆಂಬುದೂ ನಮ್ಮ ಕಲ್ಪನೆಯೇ.  ಸರ್ವಜ್ಞ ಎಂಬುದು ತಂದೆ ತಾಯಿಗಳು ಇಟ್ಟ ಹೆಸರಲ್ಲ. ವಯಸ್ಸು ಬಂದ ಮೇಲೆ ಈ ಹೆಸರನ್ನು ತಾನೇ ಇಟ್ಟು ಕೊಂಡಿರ ಬಹುದು. ಇದು  ಬಹುಮಟ್ಟಿಗೆ ಸಂಭವನೀಯವು ಹೌದು.

  ಸರ್ವಜ್ಞ ನೆಂಬುವನು ಗರ್ವದಿಂದಾವನೆ?

  ಸರ್ವರೊಳೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ಇದು ಸಹ ಆತನಿಗೆ ಇತರರು ಕೊಟ್ಟ ಬಿರುದು ಎಂದು ಕೆಲವರು ಊಹಿಸುತ್ತಾರೆ. ಒಟ್ಟಾರೆ ಸಂಶೋಧಕರ ಪ್ರಕಾರ ಸರ್ವಜ್ಞ ಎಂಬುದು ಎಲ್ಲವನ್ನೂ ತಿಳಿದ ಜ್ಞಾನಸ್ವರೂಪನಾದ ಭಗವಂತನನ್ನು ಮನಸ್ಸಿನಲ್ಲಿಟ್ಟುಕೊಂಡು ಉಪಯೋಗಿಸಿರುವ ಅಂಕಿತವಾಗಿ ತೋರುತ್ತದೆ. ಒಬ್ಬ ಸರ್ವಜ್ಞಕರ್ತನು ಜಗಕ್ಕೆಲ್ಲಾ ಒಬ್ಬನೇ ದೈವ. ಏನಿದ್ದರೂ ಜನಮಾನಸದಲ್ಲಿ ಬಳಕೆಯಲ್ಲಿ ಸರ್ವಜ್ಞ ಎಂಬುದು ಕವಿನಾಮವಾಗಿಯೂ ಅಚ್ಚಳಿಯದೇ ಉಳಿದಿರುವುದನ್ನೂ ಅಲ್ಲಗೆಳೆಯುವಂತಿಲ್ಲ. ಆದರೆ ಇಷ್ಟು ಮಾತ್ರ ನಿಜ: ವಚನಕಾರರ ಕಾಲದಿಂದ ಈಚೆಗೆ ಹದಿನಾರನೆಯ ಶತಮಾದ ಒಳಗಿನ ಅವಧಿಯಲ್ಲಿ ಇದ್ದಂಥ ವ್ಯಕ್ತಿತ್ವ ಇದು. ಈ ವ್ಯಕ್ತಿತ್ವದ ಕೆಲವು ಗೆರೆಗಳನ್ನು ಸರ್ವಜ್ಞನವೆಂದು ಹೇಳಲಾದ ತ್ರಿಪದಿಗಳಲ್ಲಿ ಗುರುತಿಸುವುದು ಸಾಧ್ಯವಾಗಿದೆ.

    `ಪಂಡಿತರುಂ ವಿವಿಧಕಳಾಮಂಡಿತರುಂ ಕೇಳುತಕ್ಕ ಕೃತಿ’ಗಳ ಪರಂಪರೆಯು ಕನ್ನಡ ಸಾಹಿತ್ಯದಲ್ಲಿ ಪ್ರಾರಂಭದಲ್ಲಿ ಕಂಡು ಬರುತ್ತದೆ. ಅಂಥ ಪರಂಪರೆಯಲ್ಲಿಯೂ ಕನ್ನಡದ ದೇಸಿಯನ್ನು ಮರೆಯದೆ, ಮಾರ್ಗ ದೇಸಿಗಳ ಒಡಂಬಡಿಕೆಯನ್ನು ಪಂಪನಂಥ ಉದ್ಧಾಮ ಕವಿಗಳು ಮಾಡಿದರು. ಮುಂದೆ ವಚನಕಾರರು ಜನಸಾಮಾನ್ಯರನ್ನೇ ಹೆಚ್ಚಾಗಿ ಉದ್ದೇಶಿಸಿ ಬೋಧನೆ ಮಾಡಲು ನಿರತರಾದ್ದರಿಂದ ಕನ್ನಡ ಸಾಹಿತ್ಯದಲ್ಲಿ ದೇಸಿಗೆ ಆಗ ಅಗ್ರಪಟ್ಟ ದೊರೆಯಿತು. ಮುಂದೆ ಹರಿಹರ-ರಾಘವಾಂಕರಂಥ ಕವಿಗಳ ಮೇಲೆಯೂ ಇದರ ಪ್ರಭಾವವಾಗದೆ ಹೋಗಲಿಲ್ಲ. ನಂತರ ಉದಯಿಸಿದ ಸರ್ವಜ್ಞನು ಜನತೆಯ ಕವಿಯಾಗಿ, ದೇಸಿಕಾವ್ಯ ಪದ್ಧತಿಗೆ ಗೌರವವನ್ನು ತಂದು ಕೊಟ್ಟನು. `ಕನ್ನಡ ಸಾಹಿತ್ಯದ ದೇಸಿತತ್ವವು ಸರ್ವಜ್ಞನಲ್ಲಿ ಸಾರ್ಥಕ್ಯವನ್ನು ಪಡೆದಿದೆ’.

ಜನನ-ಕಾಲ: 

     ಜನತೆಯು ಸರ್ವಜ್ಞನನ್ನು ಮಹಾತ್ಮರ ಸಾಲಿಗೆ ಸೇರಿಸಿ ಬಿಟ್ಟ ಪರಿಣಾಮವಾಗಿ ಅವನು ಕೈಲಾಸದಲ್ಲಿ ಶಿವನ ಹತ್ತಿರ ಇದ್ದ ಪುಷ್ಪದತ್ತನೆಂಬ ಗಣನಾಥನ ಅವತಾರವೆಂಬ ಭಾವನೆಯು ಬೆಳೆದು ಬಂದಿದೆ. ಸರ್ವಜ್ಞನ ಜನನದ ಬಗೆಗೆ ಎರಡು ವದಂತಿಗಳು ಜೀವಂತವಾಗಿದೆ. ಮೊದಲನೆಯದು-ಸರ್ವಜ್ಞ ಆರಾಧ್ಯ ಬ್ರಾಹ್ಮಣನಿಗೆ ಹುಟ್ಟಿದವನೆಂಬುದು. ಮಾಸೂರು ಗ್ರಾಮದ ಬಸವರಸನೆಂಬ ಆರಾಧ್ಯ ಬ್ರಾಹ್ಮಣನು ತನ್ನ ಸತಿಯ ಬಯಕೆಯಂತೆ ಮಕ್ಕಳನ್ನು ಪಡೆಯಬೇಕೆಂಬ ಹಂಬಲದಿಂದ ಕಾಶಿಗೆ ಹೋಗಿ ವಿಶ್ವನಾಥನ ಪ್ರಸಾದ ಪಡೆದು, ಮರಳುವಾಗ ದಾರಿಯಲ್ಲಿ ಅಂಬಲೂರು ಗ್ರಾಮದ ಕುಂಬಾರಸಾಲೆಯಲ್ಲಿ ಉಳಿದನು. ಹೀಗೆ ಕುಂಬಾರ ಮಾಳಿ ಮತ್ತು ಬಸವರಸರ ಆಕಸ್ಮಿಕವಾದ ಮೋಹದ ಮಗುವಾಗಿ ಸರ್ವಜ್ಞ ಜನಿಸಿದನು. ಸರ್ವಜ್ಞನ ಒಂದು ವಚನವೇ ಈ ಮಾತಿಗೆ ಪುಷ್ಠಿಯನ್ನು ಕೊಡುತ್ತದೆ.

ಅಂಬಲೂರೊಳಗೆಸೆವ ಕುಂಬಾರಸಾಲೆಯಲಿ

ಇಂಬಿನಾಕಳೆಯ ಮಾಳಿಯೊಳು ಬಸವರಸ-

ನಿಂಬಿಟ್ಟನೆನ್ನ ಸರ್ವಜ್ಞ.

ಎರಡನೆಯದಾಗಿ, `ಸರ್ವಜ್ಞನು ಪುರಾತನ ಶಿವಶರಣ ಕುಂಬಾರ ಗುಂಡಯ್ಯನ ಕುಲದವನಾಗಿದ್ದಿರಬಹುದು ಎಂದು ಊಹಿಸಲು ಬರುವಂತಿದೆ. ಇದಕ್ಕೆ ಆಧಾರವಾಗಿ ಮೈಸೂರು ಪ್ರಾಚ್ಯ ವಿದ್ಯಾಸಂಶೋಧನಾಲಯದ ಕೈಬರಹದ ಹೊತ್ತಿಗೆಯೊಂದರಲ್ಲಿರುವ -

ತಂದೆ ಕುಂಬಾರಮಲ್ಲ, ತಾಯಿ ಮಳಲಾದೇವಿ

ಇಂದು ಶೇಖರನ ವರಪುತ್ರ ಧರಣಿಗೆ

ಬಂದು ಜನಿಸಿದ ಸರ್ವಜ್ಞ

ಎಂಬ ವಚನವನ್ನು ನೋಡಬಹುದಾಗಿದೆ. ಸರ್ವಜ್ಞನು ಉಳಿದೆಲ್ಲ ವೃತ್ತಿಯ ಗುಣ-ದೋಷಗಳನ್ನು ಹೇಳಿ, ಕುಂಬಾರರ ಬಗೆಗೆ ಮಾತ್ರ ವಿಶೇಷ ಅಭಿಮಾನವನ್ನು ವ್ಯಕ್ತಪಡಿಸಿದ್ದು ಮೇಲಿನ ಅಭಿಪ್ರಾಯಕ್ಕೆ ಪೋಷಕವಾಗಿದೆ. ಆದರೆ ಇಷ್ಟರಿಂದಲೇ ಸರ್ವಜ್ಞನ ಜನನದ ವಿಷಯವಾಗಿ ಖಚಿತವಾದ ನಿರ್ಣಯಕ್ಕೆ ಬರಲು ಯಾವ ಸಬಲ ಆಧಾರವೂ ದೊರೆಯುವುದಿಲ್ಲ. ಇಂಥ ಸಂದರ್ಭದಲ್ಲಿ ರಂ.ಶ್ರೀ.ಮುಗಳಿ-ಯವರು ಹೇಳಿದಂತೆ-ಅವನ ಜನನ  ಅಸಾಂಪ್ರದಾಯಿಕವಾಗಿರಬಹುದೆಂದು ತೋರುತ್ತದೆ ಎಂದು ಮಾತ್ರ ಸೂಚಿಸಬಹುದು.

  ಈ ವ್ಯಕ್ತಿತ್ವ ಅನಿಕೇತನವಾದದ್ದು. ನಿಂತಲ್ಲಿ ನಿಲ್ಲದೆ ಗಾಳಿಯಂತೆ ಅಲೆದವನು ಇವನು. ‘ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಸುತ್ತಿದವನು ಕೈಯಲ್ಲೊಂದು ಕಪ್ಪರವನ್ನು ಹಿಡಿದು, ಹಿರಿದಾದ ನಾಡು ಎದುರಿಗಿರುವಾಗ ಪರಮೇಶನೆಂಬ ನಾಮವನ್ನು ನೆಚ್ಚಿ, ತಿರಿಯುತ್ತಲೇ ಊರಾರು ಸುತ್ತಿದ ಚಾರಣ ಕವಿ ಈತ. ಅಲ್ಲಮಪ್ರಭುವನ್ನು ಬಹುಮಟ್ಟಿಗೆ ನೆನಪಿಗೆ ತರುವ ಈ ಜಂಗಮನಿಗೆ ನೆಲವೇ ಹಾಸಿಗೆ, ಆಕಾವೇ ಹೊದಿಕೆ. ತನ್ನ ಪೂರ್ವತ್ತೋರಗಳನ್ನು ಕಳಚಿ ಎಸೆದು ಬಹುಮಟ್ಟಗೆ ದಿಗಂಬರನಾದ ಇಂಥವನ ತಂದೆ-ತಾಯಿ ಹಾಗೂ ಹುಟ್ಟಿನ ಗುಟ್ಟುಗಳನ್ನು ಇವನ ಕೆಲವು ತ್ರಿಪದಿಗಳಲ್ಲಿ ಗುರುತಿಸಬಹುದು ಎನ್ನುತ್ತಾರೆ ಕೆಲವರು ವಿದ್ವಾಂಸರು. ವಾಸ್ತವವಾಗಿ ಅವನ ತಂದೆ ತಾಯಿ ಹಾಗೂ ಸರ್ವಜ್ಞ ಹುಟ್ಟದ್ದು ಹೇಗೆ ಎಂಬುದನ್ನು ಹೇಳುವ ತ್ರಿಪದಿಗಳೂ ಯಾರೋ ಕಟ್ಟಿ ಸೇರಿಸಿದವುಗಳೆಂದೇ ನಮ್ಮ ಅಭಿಪ್ರಾಯ. ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟಿದವನು ಸರ್ವಜ್ಞ ಎಂಬ ಕತೆಯಲ್ಲಿ, ಈ ದೇಶದ ಪ್ರತಿಭೆಯೆಲ್ಲವೂ ಪ್ರತಿಷ್ಠಿತ  ವರ್ಗದ ಬೀಜದ ಬೆಳೆಸು ಎಂಬ ಪರಂಪರಾಗತವಾದ  ವರ್ಣಪ್ರತಿಷ್ಠೆಯ ಪ್ರಕ್ಷೇಪ ಇದು ಯಾಕಾಗಿರಬಾರದು ಎಂಬ ಪ್ರಬಲವಾದ ಸಂದೇಹ ನಮಗೆ ಉಂಟಾಗದೇ ಇರದು. ಇನ್ನು ಒಂದೆರಡು ತ್ರಿಪದಿಗಳು ಆತನನ್ನು ಕೈಲಾಸದ ಪನ್ನಗಧರನ ಗಣಗಳಲ್ಲಿ ಒಬ್ಬನಾದ ಪುಷ್ಪದತ್ತನೇ ಈತ ಎಂದು ಅಲೌಕಿಕ ಸ್ತರದವರೆಗೂ ಈತನ ಭವವನ್ನು  ಎತ್ತಿ ಹಿಡಿದಿವೆ. ಈ ಪೀಠಿಕಾ ಪ್ರಕರಣಗಳನ್ನು, ಸರ್ವಜ್ಞನೆಂದು ನಾವು ಕರೆಯುವ ಕವಿ ಖಂಡಿತ ಬರೆದಿರಲಾರ, ಸರ್ವಜ್ಞನ ಬದುಕಿನ ಬಗೆಗೆ ಉಳಿದದ್ದೇನೂ ತಿಳಿಯದೆ ಹೋಗಿರುವಾಗ, ಅವನ ಜನನ, ತಂದೆ ತಾಯಂದಿರ ವಿಚಾರವನ್ನು ಕುರಿತ ತ್ರಿಪದಿಗಳು ಮಾತ್ರ ಸಾಚಾ ಎಂದು ನಂಬುವುದು ಕಷ್ಟ ಎಂದೆನಿಸುತ್ತದೆ.

   ಸರ್ವಜ್ಞ ಹುಟ್ಟಿದ ಊರು `ಅಂಬಲೂರು’ ಎಂದು ತ್ರಿಪದಿಗಳಿಂದ ತಿಳಿದು ಬರುತ್ತದೆ. ಅಬ್ಬಲೂರು ಎಂಬುದು ಈಗಿನ ಹಾವೇರಿ  ಜಿಲ್ಲೆಯ ಹಿರೇಕೆರೂರಿಗೆ ಸಮೀಪದಲ್ಲಿರುವ ಒಂದು ಗ್ರಾಮ. ಮಾಸೂರಿಗೂ ಅಬ್ಬಲೂರಿಗೂ ಸುಮಾರು ಆರು ಮೈಲುಗಳ ಅಂತರವಿದೆ. ಅಬ್ಬಲೂರು ಐತಿಹಾಸಿಕ ಸ್ಥಳ. ಪ್ರಾಚೀನ ಕಾಲದಲ್ಲಿ ಅದು ಜೈನರಿಗೂ, ಶೈವರಿಗೂ ಪ್ರಸಿದ್ಧ ಕ್ಷೇತ್ರವಾಗಿದ್ದಿತು. ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಅಗ್ರಗಣ್ಯನಾದ ಏಕಾಂತರಾಮಯ್ಯನು ಅಬ್ಬಲೂರಿನಲ್ಲಿ ಧಾರ್ಮಿಕ ಕ್ರಾಂತಿಯನ್ನು ಮಾಡಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಅಬ್ಬಲೂರು ಸಹಜ ಕವಿಗಳ, ವಾಗ್ಮಿಗಳ ಮತ್ತು ಸಿದ್ದತಪಸ್ವಿಗಳ ಬೀಡಾಗಿದ್ದುದರಿಂದ, ಅಲ್ಲಿಯೇ ಹುಟ್ಟಿಬೆಳೆದ ಈ ಸರ್ವಜ್ಞ ಕವಿಯಲ್ಲಿಯೂ ಮಣ್ಣಿನ ಗುಣಗಳು ತಾವಾಗಿಯೇ ಮೈತಳೆದಂತಿವೆ. ಸರ್ವಜ್ಞ ವಚನಗಳಲ್ಲಿ ಬರುವ ವರಸೆ, ಬಮ್ಮಿಗೆ, ದಾಯ, ಕಮ್ಮ, ಬೆರಣಿ, ಬಾಟೆ ಮೊದಲಾದ ಶಬ್ದಗಳು ಸರ್ವಜ್ಞನು ಈ ಪ್ರದೇಶದವನೇ ಎಂಬುದನ್ನು ಸೂಚಿಸುತ್ತವೆ. ಆದರೆ ಅವನು ಹುಟ್ಟಿಬೆಳೆದ ಊರು ಯಾವುದೇ ಇದ್ದರೂ, ಸಮಗ್ರ ಕನ್ನಡನಾಡನ್ನು ಪ್ರೀತಿಸುವ ವಿಶಾಲ ಹೃದಯ ಅವನದಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

      ಸರ್ವಜ್ಞನ ಕಾಲನಿರ್ಣಯವು ಒಂದು ಜಟಿಲ ಪ್ರಶ್ನೆಯೇ ಸರಿ. ಆದರೆ, ಅವನು ಬಸವಣ್ಣನವರನ್ನು ಸ್ಮರಿಸಿರುವನು; ಅಲ್ಲದೆ ಶಿವಶರಣರ ಆಳಾಗಿ ನುಡಿದಿರುವೆನೆಂದು ವಿನೀತವಾಗಿ ಹೇಳಿದ್ದಾನೆ. ಆದ್ದರಿಂದ ಅವನು 12ನೆಯ ಶತಮಾನಕ್ಕೆ ಈಚಿನವನೆಂದು ಊಹಿಸಬಹುದಾಗಿದೆ. ಸರ್ವಜ್ಞನು 16ನೆಯ ಶತಮಾನಕ್ಕೂ ಹಿಂದಿನವನು ಎಂಬ ಮಾತನ್ನು ಇ.ಪಿ.ರೈಸ್ ಅವರು ಒಪ್ಪಿರುವರಲ್ಲದೆ, ಉತ್ತಂಗಿ ಚೆನ್ನಪ್ಪನವರೂ ಸಮರ್ಥಿಸಿರುವರು. ಕೆಲವರು ಸರ್ವಜ್ಞನು ತೆಲುಗುಕವಿ ವೇಮನನ (ಕ್ರಿ.ಶ.1450) ಸಮಕಾಲೀನನೆಂದು ಹೇಳುತ್ತಾರೆ. ಬಿ.ಶಿವಮೂರ್ತಿಶಾಸ್ತ್ರಿಗಳು ನಾಲ್ಕು ಜನ ಸರ್ವಜ್ಞರಿರಬೇಕೆಂದು ಊಹಿಸಿ, ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಮೂರ್ತಿಯು ಸಂಪಾದನೆಯ ಸಿದ್ಧವೀರಣಾರ್ಯರಿಗೆ (ಸು.1600) ಹಿಂದಿನವನಾಗಿರಬೇಕೆಂಬ ವಾದಕ್ಕೆ ಮನ್ನಣೆ ನೀಡಿರುವರು. ಸರ್ವಜ್ಞನ ಹೆಸರಿನಲ್ಲಿ ಬಳಕೆಯಲ್ಲಿರುವ `ಕಾಲಜ್ಞಾನ’ದಲ್ಲಿ ವಿಜಯನಗರದ ನಾಶ (1565), ಶ್ರೀರಂಗಪಟ್ಟಣವು ಆಂಗ್ಲರ ಕೈಸೇರಿದುದು (ಕ್ರಿ.ಶ.1799) ಮೊದಲಾದ ಐತಿಹಾಸಿಕ ಸಂಗತಿಗಳ ಉಲ್ಲೇಖವಿರುವುದರಿಂದ ಎಫ್.ಕಿಟೆಲ್ ಅವರು ಸರ್ವಜ್ಞನ ಕಾಲವು ಕ್ರಿ.ಶ.1800 ಎಂದು ಹೇಳಿದ್ದಾರೆ. ಆದರೆ ಕಾಲಜ್ಞಾನದ ವಚನಗಳು ಪ್ರಕ್ಷಿಪ್ತವಾಗಿರುವ ಸಂಭವವೇ ಹೆಚ್ಚು ಎಂದು ಅನೇಕರ ಅಭಿಪ್ರಾಯವಾಗಿದೆ.  ಸರ್ವಜ್ಞನ ವಚನಗಳನ್ನು ಕುರಿತು ಪ್ರತಿ ಮಾಡಿದ್ದ    ವೆಂಕನ ಓಲೆಯ ಪ್ರತಿಯನ್ನು ಮಾತ್ರವೇ ಆಧರಿಸಿ ಪರಮಾರ್ಥ ಹೆಸರಿನಲ್ಲಿ ಸಂಪಾದಿಸಿದ ಎಲ್.ಬಸವರಾಜು ಅವರು ಸರ್ವಜ್ಞನ ಕಾಲದ ಬಗೆಗೆ ನೂತನ ಅಂಶವನ್ನು ಬೆಳಕಿಗೆ ತಂದಿದ್ದಾರೆ. ಸರ್ವಜ್ಞನ ತ್ರಿಪದಿಗಳ ಪ್ರಭಾವಕ್ಕೆ ಒಳಗಾಗಿರುವ ಮತ್ತು ಸರ್ವಜ್ಞನ ಏಕಮೇವ ಶಿಷ್ಯನಾಗಿರುವ ವಿರತ ಮಹಲಿಂಗ ತನ್ನ ಗುರು ಬೋಧಮೃತದಲ್ಲಿ ಪ್ರಸ್ತಾಪಿಸಿರುವ ಬಿಟ್ಟಮಂಡೆಯ ಪ್ರಭುವಿನ ಕಾಲ ಕ್ರಿ.ಶ.1530 ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.  ವಿರತ ಮಹಲಿಂಗನ ಕಾಲ ಕ್ರಿ.ಶ. 1504 ಎಂದು  ಸಂಶೋಧಕರು ಭಾವಿಸಿದ್ದಾರೆ. ಆದರೆ  ಇತ್ತೀಚಿನ ಸಂಶೋಧನೆಯ ಪ್ರಕಾರ, ಕ್ರಿ.ಶ. 1554 ಕಾಲಕ್ಕೆ ಸೇರಿದ  ಮೋಕ್ಷದರ್ಶನ ಮಹಾಸಂಗ್ರಹ ಸಂಕಲಿತ ಕೃತಿಯಲ್ಲಿ ಪರಮಾರ್ಥ ಅಂಕಿತದ ಸರ್ವಜ್ಞನ ತ್ರಿಪದಿ ಉಲ್ಲೇಖ ಕಂಡುಬಂದಿರುವುದನ್ನು ದಿ.ಎಸ್.ಶಿವಣ್ಣನವರು ಶೋಧಿಸಿದ್ದು ಈ ಉಲ್ಲೇಖ ಸರ್ವಜ್ಞನ ಕಾಲ ನಿರ್ಣಯಕ್ಕೆ ದಾಖಲೆಯಾಗಿದೆ. ಅದೇರೀತಿ ಪ್ಲವ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು   ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.1607ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿರುವ ವಿವರವು ಹಸ್ತಪ್ರತಿ ಪುಷ್ಪಿಕೆಯಿಂದ ತಿಳಿದು ಬರುತ್ತದೆ. ಪಾರಮಾರ್ಥಿಕದ ಪುಸ್ತಕ ಸರ್ವಜ್ಞನ ವಚನ ಸಂಕಲನ ವಾಗಿದ್ದು ಇದರಲ್ಲಿ 77ಪದ್ಧತಿಗಳಿದ್ದು 937 ತ್ರಿಪದಿಗಳಿವೆ. ಈ ಹಿನ್ನೆಲೆಯಲ್ಲಿ  ಹಸ್ತಪ್ರತಿ ತಜ್ಞರಾದ ದಿ. ಎಸ್.ಶಿವಣ್ಣನವರ ಪ್ರಕಾರ ಈ ಪುಷ್ಟಿಕೆಯಲ್ಲಿಯ ಉಲ್ಲೇಖವು ಕಾಲೋಲ್ಲೇಖವಿರುವ ಸರ್ವಜ್ಞನ ಕೃತಿಯ ಪ್ರತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕೃತಿಯಾಗಿದ್ದು, ಈ ಪ್ರತಿಯಲ್ಲಿಯ ಕಾಲದ ಉಲ್ಲೇಖವು ಸರ್ವಜ್ಞನ ಕಾಲನಿರ್ಣಯಕ್ಕೆ ಒಂದು ಮೈಲುಗಲ್ಲಾಗಿದೆ.

` ಎಲ್ಲಾ ಆಕರಗಳ ಹಿನ್ನೆಲೆಯಲ್ಲಿ, ಸರ್ವಜ್ಞನ ಕಾಲವನ್ನು ಈಗಿನ ಮಟ್ಟಿಗೆ ಕ್ರಿ,,1500ರ  ಎಂದು ಇಟ್ಟುಕೊಳ್ಳ ಬಹುದಾಗಿದೆ. ಆದರೆ ಇಷ್ಟು ಮಾತ್ರ ನಿಜ ಈ ತ್ರಿಪದಿಗಳನ್ನು ಬರೆದವನು ಅಚ್ಚ ಕನ್ನಡಿಗ. ಅವನು ಬದುಕಿದ್ದು ವಚನಕಾರರ ನಂತರ, ಬಹುಶಃ ಹದಿನಾರನೆಯ ಶತಮಾನದ ಒಳಗಿನ ಅವಧಿಯಲ್ಲಿ ಅವನೊಬ್ಬ ಚಾರಣ ಕವಿ.ಅತ್ಯಂತ ನಿರ್ಲಿಪ್ತನಾಗಿ ನಿಂತರೂ ಜೀವನ ಪ್ರೀತಿಯನ್ನು ಕಳೆದುಕೊಳ್ಳದ ವಿಲಕ್ಷಣ ಮನೋಧರ್ಮದವನು. ಯಾರ ಹಂಗಿಗೂ ಒಳಗಾಗದ, ವಿಮರ್ಶಕನ ಕಣ್ಣಿನಿಂದ ಲೋಕವನ್ನು ನೋಡಿದವನು. ಮನಸ್ಸಿನಲ್ಲಿ ಮಾತಿನಲ್ಲಿ ಅಂಬಿಗರ ಚೌಡಯ್ಯನ ತಮ್ಮನಾಗಿದ್ದಾನೆ.

ಸರ್ವಜ್ಞ ಹೆಸರಿನ ಜಿಜ್ಞಾಸೆ ಮತ್ತು ವ್ಯಕ್ತಿತ್ವ:

       ಸರ್ವಜ್ಞ ಎಂದು ಜನಜನಿತವಾಗಿರುವ ಈ ವ್ಯಕ್ತಿ ಒಬ್ಬ ಕವಿ. ಕಂಡದ್ದನ್ನು ಕಂಡೊಡನೆಯ ಪದ್ಯರೂಪದಲ್ಲಿ ಕಟ್ಟಿ ನಿಲ್ಲಿಸುವ ಕೌಶಲವಿರುವ ಕಾರಣ ಈತ ಒಬ್ಬ ಕವಿ ಎನ್ನಬಹುದು. ಈ ಕವಿಯ ಕಾವ್ಯ ವಚನ ರೂಪದ್ದು.  ವಚನ ಎಂದರೆ ಕೂತು ಬರೆದದ್ದು ಎನ್ನುವುದಕ್ಕಿಂತ, ಸುಮ್ಮನೆ ಹೇಳಿದ್ದು ಮಾತಾಡಿದ್ದು ಎಂದು ಅರ್ಥವಾಗುತ್ತದೆ. ‘ಸರ್ವಜ್ಞನ ತ್ರಿಪದಿಗಳಿಗೆ ‘ಸರ್ವಜ್ಞನ ವಚನ’  ಎಂದು ಹೆಸರಿಸುವುದು ಈ ಕಾರಣದಿಂದಲೇ ಇರಬೇಕು. ಇದು ವಚನ ಅಥವಾ ಅನಿಸಿದ್ದನ್ನು ಅಂದಂದೇ ಹೇಳಿದ್ದು. ಅದರ ಜತೆಗೆ ಇವುಗಳನ್ನು ವಿಂಗಡಿಸಿ ಪದ್ಧತಿ ಎಂದೂ ಕರೆಯಾಲಾಗಿದೆ. ‘ದಾನಪದ್ಧತಿ’ ‘ರಾಜನೀತಿ’ ‘ಪದ್ಧತಿ’ ಸ್ತ್ರೀ ಪದ್ಧತಿ ಹೀಗೆ ಈತನ ತ್ರಿಪದಿಗಳನ್ನು ವಿಷಯಾನುಸಾರಿಯಾಗಿ ವಿಂಗಡಿಸಿ ಪ್ರಕಟಿಸಿದ್ದಾರೆ ಉತ್ತಂಗಿಯವರು.  ಕ್ರಿ.ಶ.1636 ರಲ್ಲಿ ಪ್ರತಿಯಾದ ಸರ್ವಜ್ಞನ ಅತ್ಯಂತ ಪ್ರಾಚೀನತಮ ಪ್ರತಿಯಲ್ಲಿಯೂ ಹೀಗೆಯೇ ಇದೆ ಎಂಬುದು ಎಲ್.ಬಸವರಾಜು ರವರು ಸಂಪಾದಿಸಿರುವ ಪರಮಾರ್ಥ ಕೃತಿಯಲ್ಲಿಯೂ ಕಂಡು ಬರುತ್ತದೆ. ಸರ್ವಜ್ಞನು  ಜನಸಾಮಾನ್ಯರೂ ಬಹುಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗ ಬಹುದಾದ ಹಾಡಿನ ಮಟ್ಟು ತ್ರಿಪದಿಯನ್ನು ತನ್ನ ಅನಿಸಿಕೆಯ ಅಭಿವ್ಯಕ್ತಿಯನ್ನಾಗಿಸಿಕೊಂಡವನು. ನರಲ್ಲಿ ಇರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ತ್ರಿಪದಿಯೇ ಮಾಧ್ಯಮವೆಂದು ತಿಳಿದವನು. ತನ್ನ ಜನತಾ ಕಾವ್ಯಕ್ಕೆ ವಸ್ತುವನ್ನಾಗಿಸಿ  ಕೊಳ್ಳುವುದರಲ್ಲೂ ಹಿಂದಿನವರಿಗಿಂತ ಸರ್ವಜ್ಞ ಪ್ರತ್ಯೇಕವಾಗಿ ಉಳಿದಿದ್ದಾನೆ.  ಈತ ವ್ಯವಸ್ಥೆಯ ಮತ್ತು ಅಸಮಾನತೆಯ ವಿರುದ್ಧ ಪ್ರತಿಭಟಿಸುವ ಸಾಹಸಕ್ಕೂ ಧುಮುಕಿ ಬಂಡಾಯ ಮನೋಧರ್ಮದ ಕವಿ ಎನಿಸಿಕೊಂಡ.

        ಸರ್ವಜ್ಞನ ತ್ರಿಪದಿಗಳನ್ನು ಅಥವಾ ವಚನಗಳನ್ನು ಹೀಗೆ `ಪದ್ಧತಿ’ ಗಳೆಂದು ಕರೆದದ್ದು ಸ್ವಾರಸ್ಯವಾದ ಸಂಗತಿಯಾಗಿದೆ. ಸರ್ವಜ್ಞನ `ವಚನ’ವಾದ ಈ ಅಭಿವ್ಯಕ್ತಿ ವಾಸ್ತವವಾಗಿ ಒಂದು ಪದ್ಧತಿ ಅಥವಾ ಬರವಣಿಗೆಯ ಕ್ರಮವಾಯಿತೆಂಬುದು ಇದರಿಂದ ಸ್ಪಷ್ಟವಾಗಿದೆ. ಸರ್ವಜ್ಞನ ಈ  ಪದ್ಧತಿ ಇಂಥ ಎಷ್ಟೋ ರಚನೆಗೆ ಸಲೀಸಾದ ದಾರಿಯಾಗಿ ಅನೇಕರು ಈ ಪದ್ಧತಿಯೊಳಗೆ ತಮ್ಮ ಹೆಜ್ಜೆಯನ್ನೂರಿ, ನಿಜವಾದ ಕವಿಯ (ಪದಹತಿ)`ಪದ್ಧತಿ’ ಅಥವಾ ಹೆಜ್ಜೆ ಗುರುತುಗಳು ಯಾವುವು ಎಂಬುದು ತಿಳಿಯದಂತಾಗಿದೆ. ಆದ್ದರಿಂದಲೇ ನಾವು ಮೊದಲು ಹೇಳಿದ್ದು `ಸರ್ವಜ್ಞ’ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಕಾವ್ಯಪದ್ಧತಿಗೆ ಇಟ್ಟ ಹೆಸರು ಎಂಬ ಸಂಶೋಧಕರ ಅನಿಸಿಕೆ ಯೋಚಿಸುವಂತಹದ್ದಾಗಿದೆ.

      ಕೆಳಕಂಡ ತ್ರಿಪದಿಯಲ್ಲಿಯ

        ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು

        ಹಿಂಡನಗಲಿದ ಗಜದಂತೆ ಇಪ್ಪವನ

        ಕಂಡು ನಂಬುವುದು ಸರ್ವಜ್ಞ.

ಎಂಬ ಹೇಳಿಕೆಯಲ್ಲಿ ಕವಿ,ತನ್ನ ವ್ಯಕ್ತಿತ್ವವನ್ನು ಕುರಿತು ಹೇಳಿಕೊಂಡಿದ್ದಾನೆ. ಎಲ್ಲದರಿಂದ ಕಳಚಿಕೊಂಡು, ನಿರ್ಭಯ ಏಕಾಕಿತನವನ್ನು ಸಾಧಿಸಿದವನೊಬ್ಬನ ಚಿತ್ರವೊಂದು ಈ ಪದ್ಯದಲ್ಲಿದೆ. ಈ ಬಗೆಯ ಏಕಾಕಿತನವನ್ನು ಸಾಧಿಸಿಕೊಳ್ಳಲಾರದವ ಕವಿಯಾಗಲಾರ, ಇದರ ಜೊತೆಗೆ,

        ಕರದಿ ಕಪ್ಪರವುಂಟು, ಹಿರಿದೊಂದು ನಾಡುಂಟು

        ಹರನೆಂಬ  ದೈವ ನಮಗುಂಟು, ತಿರಿವರಿಂ

        ಸಿರಿವಂತರಾರು ಸರ್ವಜ್ಞ.

   ಎಂಬ ಸಾಲಿನಲ್ಲಿ ಈ ವಿಸ್ತಾರವಾದ ಜಗತ್ತು ಮತ್ತು ಅದರ ಉದಾರತೆಯ ಬಗ್ಗೆ ಭರವಸೆ ಈ ಎಲ್ಲವನ್ನೂ, ನಡೆಯಿಸುವ, ಯಾವುದೋ ಒಂದು ದೈವ, ಇವು ಸಾಕು ತನ್ನನ್ನು ನಡೆಸಲು ಎಂಬ ಧೈರ್ಯವೆ ಈ ವ್ಯಕ್ತಿತ್ವದ ಮೂಲದ್ರವ್ಯದಂಬಂತೆ ಹೇಳಿಕೊಳ್ಳಲಾಗಿದೆ. ಇಂಥ  ಕವಿ ತನ್ನ ಕಾವ್ಯ ಪ್ರೇರಣೆಯ ಬಗ್ಗೆ `ಎನ್ನ ಮನಸ್ಸಿಗೆ ನೆನಹು ಪನ್ನಗಧರ ಕೊಟ್ಟ ಕೊಟ್ಟ’ ಎಂದು ಹಿಂದಿನ ಎಲ್ಲ ಕವಿಗಳಂತೆಯೇ ಹೇಳಿಕೊಂಡಿದ್ದಾನೆ. ಈ ನೆನಹು ಅಥವಾ ಕಾವ್ಯ ನಿರ್ಮಾಣ ಶಕ್ತಿಯಾದ ಪ್ರತಿಭೆ, ಅನುಭವದ ಉಗ್ರಾಣದಿಂದ ನೆನಹುಗಳನ್ನು ಆಯ್ದು ಕಟ್ಟುವ ಕಲೆಗಾರಿಕೆ, ತನಗೆ ದೈವೀಕೃಪೆಯಿಂದ ಬಂದುದು ಎನ್ನುತ್ತಾನೆ. ಎಂದರೆ, ಅನಿಸಿದ್ದಕ್ಕೆ ಆಕಾರ ಕೊಡುವ ಈ ಪ್ರವೃತ್ತಿ ಸರ್ವಜ್ಞನಿಗೆ ಸಹಜವಾಗಿಯೇ ಬಂದಿತೆಂದು ಈ ಮಾತಿನ ಅರ್ಥ. ಜತೆಗೆ ಮುಚ್ಚಿ ಇನ್ನಷ್ಟು ಹೇಳು ಎಂದು ಕೇಳಿರಬೇಕು.ಆದ್ದರಿಂದಲೆ `ಹೇಳಲರಿಯೆನು ನಾನು, ಹೇಳೆನಲು’ ಎನ್ನುತ್ತಾನೆ. ಸರ್ವಜ್ಞನ ಪದಗಳು ಹುಟ್ಟಿಕೊಂಡಿದ್ದೆ ಹೀಗೆ, ಅವರಿವರು`ಹೇಳೆನೆಲು’ ಈತ ಹೇಳುತ್ತಾ ಹೋಗಿರಬೇಕು. ಈ ಹೇಳಿದ ಕಾವ್ಯ ಗಮನಿಸಬೇಕು. ಒಂದೆಡೆ ಕೂತು ಬರೆದ ಕಾವ್ಯ ಅಲ್ಲ ಸರ್ವಜ್ಞನದು. ಇವುಗಳಿಗೆ `ವಚನ’ ಅಥವಾ ಹೇಳಿದ್ದು ಎಂಬ ಹೆಸರು ಬಂದದ್ದು ತೀರ ಸಹಜವಾಗಿದೆ. ಇಂಥ ಕವಿ ಹೇಳಿದ್ದನ್ನು ಕೇಳಿದ ಜನ ಅವನ ಉಕ್ತಿಯ ವಿಷಯದ ಬಾಹುಳ್ಯವನ್ನು ಕಂಡು ಬೆರಗಾಗಿ ಅವನನ್ನು `ಸರ್ವಜ್ಞ’ ಎಂದು ಕರೆದಿದ್ದಿರಬಹುದು. ಆದರೆ ಈ ಕವಿ ಅದನ್ನು ನಿರಾಕರಿಸಿ `ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ’

            ಸರ್ವಜ್ಞ ನೆಂಬುವನು ಗರ್ವದಿಂದಾದವನೆ

            ಸರ್ವರೊಳಗೊದು ನುಡಿಗಲಿತು ವಿದ್ಯೆಯಾ

            ಪರ್ವತವೇ ಆದ ಸರ್ವಜ್ಞ.

ಎಂದು ಹೇಳುವುದರ ಮೂಲಕ ಉತ್ತರ ಕೊಟ್ಟು ತನ್ನ ವಿನಯವನ್ನು ಎತ್ತಿ ಹಿಡಿದಿದ್ದಾನೆ.   ಅನೇಕ ವಿಷಯಗಳಲ್ಲಿ ಅವನದು ಕ್ರಾಂತಿಕಾರಕ ದೃಷ್ಟಿ ಎಂಬುದು ನಿಜ. ಪೂರ್ವದಿಂದ ನಡೆದುಬಂದ ಅನೇಕ ರೂಢಿ ಸಂಪ್ರದಾಯಗಳನ್ನು ಅವನು ಪ್ರಶ್ನಿಸುತ್ತಾನೆ. ಸಮಾಜದ ಹಾಗೂ ವ್ಯಕ್ತಿಯ ಬೆಳವಣಿಗೆಗೆ ಉಪಯುಕ್ತವಾಗಿದ್ದರೆ ಅವುಗಳನ್ನು ಉಳಿಸಿಕೊಳ್ಳಲು ಅವನು ಹಿಂಜರಿಯುವುದಿಲ್ಲ; ಆದರೆ ಅವು ನಿರರ್ಥಕ ನಿಷ್ಪ್ರಯೋಜಕವಾಗಿದ್ದರೆ ಅವನ್ನು ಕಿತ್ತೆಸೆಯಲು ಅವನಿಗೆ ಯಾವ ಭಯವೂ ಇಲ್ಲ. ಅದರಂತೆ ಹೊಸ ವಿಚಾರಗಳನ್ನು ಅವನು ಸ್ವಾಗತಿಸುತ್ತಾನೆ. ಉದಾಹರಣೆಗೆ, ಗುರುವಿನ ಮಹತ್ವವನ್ನು ವಿವರಿಸುವಲ್ಲಿ ಅವನ ಸತ್‍ಸಂಪ್ರದಾಯದ ಪ್ರೀತಿಯೂ ಕೇವಲ ಅಂಧಶ್ರದ್ಧೆಯಿಂದ ಮಾಡುವ ಮೂರ್ತಿ ಪೂಜೆಯನ್ನು ತೆಗಳುವುದರಲ್ಲಿ ಅವನ ಸ್ವತಂತ್ರ ರೀತಿಯೂ ವ್ಯಕ್ತವಾಗಿದೆ.

     ಸರ್ವಜ್ಞನದು ಪೂರ್ವಗ್ರಹ ರಹಿತದೃಷ್ಟಿ. ಇಂಥದೊಂದು ಜಾತಿ-ವೃತ್ತಿಯ ಶ್ರೇಷ್ಠವೆಂದಾಗಲಿ, ಇದನೆಂದು ಕೀಳು ಎಂದಾಗಲಿ ಭಾವಿಸುವ ಸಂಕುಚಿತ ಪ್ರವೃತ್ತಿ ಅವನದಲ್ಲ. ಅವನ ದೃಷ್ಟಿಯಲ್ಲಿ ಎಲ್ಲ ವೃತ್ತಿಗಳೂ ಸಮಾನ, ಗೌರವಾರ್ಹ. ಆದರೆ ಎಲ್ಲ ವೃತ್ತಿಗಳಲ್ಲಿಯೂ ಹಲಕೆಲವು ಲೋಪದೋಷಗಳಿದ್ದೇ ಇವೆ. ವಿಶಾಲ ದೃಷ್ಟಿಯಿಂದ ಹಾಗೂ ನಿಷ್ಪಕ್ಷಪಾತ ರೀತಿಯಿಂದ ಅವುಗಳನ್ನು ತಿದ್ದುವುದೇ ಅವನ ಸ್ವಭಾವವಾಗಿತ್ತು. ಅಂತೆಯೇ `ಕಳ್ಳನೂ ಒಳ್ಳಿದನೂ ಎಲ್ಲ ಜಾತಿಯೊಳಿಹರು’ ಎಂದವನು ಸಾರಿದ್ದಾನೆ.

 ಕನ್ನಡ ಸಾಹಿತ್ಯ ಪರಂಪರೆ ಮತ್ತು ಸರ್ವಜ್ಞ:

   ಸಾಹಿತ್ಯ ಪರಂಪರೆಯ ದೃಷ್ಟಿಯಿಂದಲೂ ಸರ್ವಜ್ಞ ಏಕಾಂಗಿಯಾಗಿಯೇ ತೋರುತ್ತಾನೆ. ಯಾಕೆಂದರೆ ಅವನು ತನ್ನನ್ನು ತನಗಿಂತ ಹಿಂದಿನ ಕನ್ನಡ ಸಾಹಿತ್ಯದೊಂದಿಗೆ ಬೆಸೆದುಕೊಳ್ಳುವುದೇ ಇಲ್ಲ. ವಚನಕಾರರ ಮನೋಧರ್ಮದೊಂದಿಗೆ ಮಾತ್ರ ಬೆರತು ಕೊಂಡಿದ್ದಾನೆ. ತನಗಿಂತ ಒಂದು  ಸಾಹಿತ್ಯಿಕ ಪರಂಪರೆಯಿದೆ. ತಾನು ಅದರದೊಂದು ಭಾಗ, ತಾನು ಬರೆಯುತ್ತಿರುವುದೂ ಸಾಹಿತ್ಯವೇ ಎಂಬ ಯಾವ ಅರಿವಿನಿಂದಲೂ ಈತ ಬದ್ಧನಾದವನಲ್ಲ. ಹೀಗಾಗಿ ಸರ್ವಜ್ಞನೆಂದು ಹೇಳಲಾದ ಈ ತ್ರಿಪದಿಗಳು ಕಾವ್ಯ ಎನ್ನಲು ಏನೇನಿರಬೇಕು ಎಂದುಕೊಂಡಿದ್ದೇವೆಯೋ ಅದೆಲ್ಲವನ್ನೂ ಗಾಳಿಗೆ ತೂರುತ್ತವೆ. ಹೀಗಾಗಿ ಸರ್ವಜ್ಞನ ಕಾವ್ಯಕ್ಕೆ ಇಂಥದೇ ವಸ್ತು ಇಲ್ಲ. ಅದಕ್ಕೊಂದು ನಿಶ್ಚಿತವಾದ ಬೆಳವಣಿಗೆ ಆದಿ ಮಧ್ಯ ಅಂತ್ಯ ಇಲ್ಲ. ಇದನ್ನು ಇಂಲ್ಲಿಂದ ಓದಬೇಕೆಂಬ ಹಂಗಿಗೆ ಓದುಗರನ್ನು ಒಳಪಡಿಸುವುದಿಲ್ಲ. ಎಲ್ಲಿಂದಾದರೂ ಓದಬಹುದು, ಎಲ್ಲಿಬೇಕಾದರೂ ಓದಬಹುದು. ಎಲ್ಲಿ ಬೇಕಾದರೂ ನಿಲ್ಲಿಸಬಹುದು. ಇದು ಯಾವ ಪಂಡಿತ ಮಂಡಲಿಯ ಪ್ರೀತಿಗೆ ಬರೆದದ್ದಾಗಲೀ, ಯಾವನೊಬ್ಬನ ಕಥನವಾಗಲಿ ಅಲ್ಲ. ಹೀಗಾಗಿ ಇದನ್ನು ನಮಗೆ ಪರಿಚಯವಾದ `ಕಾವ್ಯ’ಗಳ ಮಾದರಿಯಿಂದ ನೋಡಲೂ ಬಾರದು. ಹಾಗಾದರೆ ಇದನ್ನು `ಕಾವ್ಯ’ವೆಂದೂ ಕರೆಯುವುದಾದರೂ ಹೇಗೆ? ಒಂದೊಂದು ಬಿಡಿ ಬಿಡಿ ಪದ್ಯಕ್ಕೂ ತನ್ನದೇ ಅಸ್ತಿತ್ವವಿದೆ. ಒಟ್ಟಾಗಿ ನೋಡಿದರೆ ಒಂದು ಧೋರಣೆಯಿದೆ. ಆ ಧೋರಣೆ ಮೂಲತಃ ಜೀವನ ಪರವಾಗಿದೆ. ಜೀವನ ವಿಮರ್ಶೆಯಾಗಿದೆ. `ಸಾಹಿತ್ಯ ಜೀವನದ ವಿಮರ್ಶೆ’ ಎಂಬ ಪಾಶ್ಚಾತ್ಯ ಚಿಂತಕರ ಮಾತು ಸರ್ವಜ್ಞನಿಗೆ ಅನ್ವಯಿಸುತ್ತದೆ. ಅಂದಂದು ಅನ್ನಿಸಿದ್ದಕ್ಕೆ ಅಂದಂದೇ ಮಾತು ಕೊಟ್ಟು ನಿಲ್ಲಿಸಿದ `ಪದ್ಧತಿ’ ಇದು. ಈ ಬಗೆಯ ಅಭಿವ್ಯಕ್ತಿಗೆ ಹಿಂದಿನ ಸಾಹಿತ್ಯದಲ್ಲಿ ನಿದರ್ಶನಗಳಿಲ್ಲದಿಲ್ಲ. ಸಂಸ್ಕೃತದಲ್ಲಿ ಸುಭಾಷಿತಗಳನ್ನು ಬಿಟ್ಟರೆ ಎಲ್ಲಾ ಕವಿಗಳಲ್ಲೂ ಈ ಬಗೆಯ ಲೋಕೋಕ್ತಿ, ಸೂಕ್ತಿ, ಚಾಟೂಕ್ತಿಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಹೇಳಿಕೆ ಎಂದು ಕರೆಯಬಹುದು. ಆದರೆ ಇಂಥ ಹೇಳಿಕೆಗಳು ಮಾರ್ಗಕವಿಗಳಲ್ಲಿ ಕಾವ್ಯದ ಸಂದರ್ಭದ ಒಳಗೆ ಬರುತ್ತಿದ್ದವು. `ಹರಿ ಕರಿಯನಲ್ಲದಿರಿವುದೆ ನರಿಯಂ? `ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ?’ `ನಿಡಿಯರ್ಗಂ ನಿಡಿಯರೊಳರ್’ ಸೆಟ್ಟಿಯ ಬಳ್ಳಂ ಕಿರಿದು’ `ಮಾನವ ಜಾತಿ ತಾನೊಂದೆವಲಂ; `ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ’, ಇಂಥ ಮಾತುಗಳು ಕಾವ್ಯದ ಸಂದರ್ಭದೊಳಗೆ ಯಥೋಚಿವಾಗಿ ಬರುತ್ತವೆ. ಹಾಗೆಯೇ ವಿವೇಕದ ತತ್ವದ, ನೀತಿಯ, ಧರ್ಮಕ್ಕೆ ಸಂಬಂಧಿಸಿದ ಹೇಳಿಕೆಗಳೂ ಕಾಣಿಸುತ್ತವೆ. ಆದರೆ ಸರ್ವಜ್ಞನಲ್ಲಿ ಇಂಥ ಹೇಳಿಕೆಗಳೇ ಪ್ರಧಾನವಾಗಿ, ಹಿಂದಿನ ಕವಿಗಳಿಗಿದ್ದಂಥ ಯಾವ ಕಥಾ ಸಂದರ್ಭದ ನೆರವನ್ನೂ ಕೋರದೆ ನೇರವಾಗಿ ಅಂದಂದಿನ ಅನುಭವದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದೇ ವಿಶೇಷವಾದ ಸಂಗತಿಯಾಗಿದೆ. ಗಾದೆಯ ಮಾತುಗಳು ಈತನಲ್ಲಿ ಹಾಸುಹೊಕ್ಕಾಗಿ ತುಂಬಿಕೊಂಡು ಅಭಿವ್ಯಕ್ತಿಗೆ ಒಂದು ಮಿಂಚನ್ನೂ ಮೊನಚನ್ನು ಒದಗಿಸಿವೆ.ಇವುಗಳಲ್ಲಿ ಜನವಾಣಿಯಿಂದ ನೇರವಾಗಿ ಎತ್ತಿಕೊಂಡು ಪರಿಷ್ಕೃತವಾದವು ಕೆಲವು ಇದ್ದಿರ ಬಹುದಾಗಿದ್ದು, ಅವು ಸ್ವತಂತ್ರವಾಗಿ ಸರ್ವಜ್ಞನಿಂದಲೇ ಟಂಕಿತವಾಗಿ ನಡೆವ ನಾಣ್ಯವಾದವುಗಳಲ್ಲಿ ಗುರುತಿಸಿಲು ಬಾರದಂತೆ ಬೆರತು ಹೋಗಿವೆ. ಈ ಅರ್ಥದಲ್ಲಿ ಸರ್ವಜ್ಞನ ಕವಿತೆ ಹೇಳಿಕೆಗಳ ಕಾವ್ಯ ಎನ್ನಬಹುದು. ನಿದರ್ಶನಕ್ಕೆ

         `ಊರಿಂಗೆ ದಾರಿಯನು ಆರು ತೋರಿದರೇನು?’

          ಹಂಗಿನ ಹಾಲಿನಿಂದಂಬಲಿಯ ತಿಳಿ ಲೇಸು

         ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು

         ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ.

         ಆಡದೆ ಕೊಡುವವನು ರೂಢಿಯೊಳಗೆ ಉತ್ತಮನು

         ಅಡಿಯ ಮುಂದಿಡೆ ಸ್ವರ್ಗ, ಅಡಿಯ ಹಿಂದಿಡೆ ನರಕ

         ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ

         ಹಂಗಿನರಮನೆಯಿಂದ ವಿಂಗಡದ ಗುಡಿಲೇಸು

         ಅನುಭವಿಯ ವೇದವೇ ವೇದ

          ಹೊಲಬನರಿಯದ ಮಾತು ತಲೆ ಬೇನೆಯಿದ್ದಂತೆ.

          ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ

          ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು

          ಆಳಾಗಬಲ್ಲವನು ಆಳುವನು ಅರಸನಾಗಿ

           ಜ್ವರ ಬಂದ ಮನುಜಂಗೆ ನೊರೆವಾಲು ಕಹಿಯಕ್ಕು

         ಅನ್ನ ದೇವರ ಮುಂದೆ ಇನ್ನು ದೇವರುಂಟೆ

         `ತುಪ್ಪವಾದಾಬಳಿಕ ಹೆಪ್ಪನೆರೆದವರುಂಟೆ?’

         `ಶ್ವಾನ ತೆಂಗಿನಕಾಯ ತಾನು ಮೆಲಬಲ್ಲುದೆ?’

         `ಬೆಟ್ಟ ಕರ್ಪುರ ಉರಿದು ಬೊಟ್ಟಿಡಲು ಬೂದಿಲ್ಲ’

         `ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’

         `ಕುರಿ ಕಬ್ಬಿನೊಳು ಹೊಕ್ಕು ಅರಿವುದೇ ತನಿರಸವ?’

         `ಆನೆ ನೀರಾಟದಲಿ ಮೀನ ಕಂಡಂಜುವುದೇ?’

         `ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲ’

         `ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೆ?’

ಈ ಹಲವು ಹೇಳಿಕೆಗಳನ್ನು ನೋಡಬಹುದು. ಇವು ಗಾದೆಯ ಮಾತಾಗಿ ಪರಿಣಮಿಸಿದ ಮಾತಾಗಿದ್ದು ಸರ್ವಜ್ಞನ ಶಕ್ತಿಯುತ ಭಾಷೆಯ ಸಂಪನ್ಮೂಲವಾಗಿವೆ. ಇವು ಆತನ ಅನುಭವದ ವೈವಿಧ್ಯ-ಶ್ರೀಮಂತಿಕೆಗೆ ಸಾಕ್ಷೀ ಭೂತವೂ ಆಗಿವೆ. ಈ ಹೇಳಿಕೆಗಳು, ಹಿಂದಿನ ಕಾವ್ಯಗಳಲ್ಲಾಗಿದ್ದರೆ, ಯಾವುದೋ ಒಂದು ಸಂದರ್ಭದ ಒಳಗೆ ಬಂದು, ಆ ಸಂದರ್ಭದ ಅರ್ಥವಂತಿಕೆಗೆ ಪೂರಕವಾಗಬಹುದಾದವು. ಆದರೆ ಇಲ್ಲಿ ಅಂಥ ಕಥಾಸಂದರ್ಭ ಇಲ್ಲ; ಆದರೆ ಇಂಥ ಮಾತಾಡಿದ ಅನುಭವದ ಸಂದರ್ಭ ಯಾವುದೆಂದು ಊಹಿಸಬಹುದು. ಈ ಹೇಳಿಕೆಗಳು, ಕೇವಲ ಶುಷ್ಕವಾಗದೆ, ದೃಷ್ಟಾಂತ ರೂಪವನ್ನು ತಾಳುತ್ತದೆ. ಆದರೆ ಈ ದೃಷ್ಟಾಂತಗಳ ಉದ್ದೇಶ ರಸಾನುಭವವಲ್ಲ; ಅಂದರೆ ಅವುಗಳಲ್ಲಿ ಅಂಥ `ರಸ’ ಇಲ್ಲವೆಂದು ಅರ್ಥವಲ್ಲ. ಒಂದೆರಡು ಕ್ಷಣ ಅವುಗಳು ಕಟ್ಟುವ ಚಿತ್ರ ಕೊಂಚ ರಸಾನುಭವವನ್ನು ಕೊಟ್ಟರೂ, ಅವುಗಳ ಮುಖ್ಯ ಉದ್ದೇಶ, ನೀತಿಯನ್ನು, ವಿವೇಕವನ್ನು, ಹೇಳುವುದು. ನಮ್ಮ ಅಲಂಕಾರಿಕರು  ವಾಙ್ಮಯವನ್ನು, ಪ್ರಭುಸಮ್ಮಿತ, ಮಿತ್ರಸಮ್ಮಿತ ಹಾಗೂ ಕಾಂತಾಸಮ್ಮಿತ ಎಂದು ವಿಭಾಗಿಸಿದರು. ಸರ್ವಜ್ಞನ ವಚನಗಳು ಬಹುಮಟ್ಟಿಗೆ ಮಿತ್ರಸಮ್ಮಿತವೆಂಬ ವರ್ಗಕ್ಕೆ ಸೇರುತ್ತವೆ. ಹಿತೈಷಿಯಾದ ಗೆಳೆಯನೊಬ್ಬನು, ಈ ಲೋಕದಲ್ಲಿ ನಡೆದುಕೊಳ್ಳಬೇಕಾದ ನಿರ್ದೇಶನವನ್ನು ನಯವಾಗಿ, ಆದರೆ ಕೆಲವು ಸಲ ಕಟುವಾಗಿ ಹೇಳಿದ ಹಾಗಿದೆ ಸರ್ವಜ್ಞನ ಈ ಧಾಟಿ. ಕಾವ್ಯ ಪ್ರಯೋಜನವನ್ನು ಹೇಳುವಲ್ಲಿ ನಮ್ಮ ಅಲಂಕಾರಿಕರು ಕಾವ್ಯ ವ್ಯವಹಾರವನ್ನು ಬೋಧಿಸುತ್ತದೆ ಎನ್ನುತ್ತಾರೆ. ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರಕಾವ್ಯವಾಗಿದೆ. ಮನುಷ್ಯ ಸ್ವಭಾವವನ್ನು ಲೋಕದ ನಡವಳಿಕೆಗಳನ್ನು ಚೆನ್ನಾಗಿ ಕಂಡ ಅನುಭವಿಯೊಬ್ಬನು, ಸುತ್ತಣ ಜನರನ್ನು ತಿದ್ದುವ, ಸುಧಾರಕತನದ ಕಳಕಳಿಯಿಂದ ನುಡಿದ ಅಭಿವ್ಯಕ್ತಿಗಳಿವು ಎಂಬ ವಿದ್ವಾಂಸರ ಮಾತು ಸ್ವೀಕಾರಾರ್ಹವಾಗಿದೆ. ಇವುಗಳಲ್ಲಿ ಶಸ್ತ್ರಚಿಕಿತ್ಸಕನ ದೃಷ್ಟಿ ಇದೆ. ಶಾಸ್ತ್ರದ ನಿಷ್ಕೃಷ್ಟತೆಯೂ ಇದೆ. ಕಾವ್ಯದ ಸ್ವಾರಸ್ಯವೂ ಇದೆ. ಹೀಗಿರುವುದರಿಂದಲೇ ಈ ಉಕ್ತಿಮಾರ್ಗ ಸಲೀಸಾಗಿ ಸುತ್ತಣ ಜನಮನವನ್ನು ಮುಟ್ಟಿರುವುದು ಮತ್ತು ತಟ್ಟಿರುವುದು.

     ಸರ್ವಜ್ಞನ ಈ ಉದ್ದೇಶವೇ, ಅವನನ್ನು ಇತರ ಕವಿಗಳಿಂದ ಬೇರ್ಪಡಿಸುತ್ತದೆ. ಅವನದು, ಮನಸ್ಸನ್ನು ರಂಜಿಸುವ, ಅಥವಾ ಅರ್ಥ ರಮ್ಯತೆಯನ್ನು ವ್ಯಂಜಿಸುವ ಉಕ್ತಿವಿಧಾನವಲ್ಲ. ಮನಸ್ಸನ್ನು ಕೆದಕುವ ಹೊಡೆದೆಬ್ಬಿಸುವ ಉಕ್ತಿ ವಿಧಾನ, ಪ್ರಶ್ನಿಸುವ ವಿಧಾನ-

   ದಂಡಿಸದೆ ದೇಹವನು, ಖಂಡಿಸದೆ ಕರಣವನು

  ಉಂಡುಂಡು ಸ್ವರ್ಗವೇರಲಿಕೆ ಅದನೇನು

  ರಂಡೆಯಾಳುವಳೆ ಸರ್ವಜ್ಞ

  ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ಬಚ್ಚಿಟ್ಟು

  ಚೆನ್ನಾಗಿ ನೆಲನ ಸಾರಿಸಿದವನ ಬಾಯೊಳಗೆ

  ಮಣ್ಣು ಕಾಣಯ್ಯ ಸರ್ವಜ್ಞ

 ಎಂಬಂಥ ಉಕ್ತಿಗಳನ್ನು ಗಮನಿಸಬಹುದು.

 ಸರ್ವಜ್ಞ ತ್ರಿಪದಿಯ ಸ್ವರೂಪ:

   ಸರ್ವಜ್ಞನ ಒಂದೊಂದೂ ತ್ರಿಪದಿಯೂ ಒಂದೊಂದು ಮುಕ್ತ ಪ್ರಪಂಚ. ಸರ್ವ ಸ್ವತಂತ್ರವಾಗಿ ಉಸಿರಾಡುತ್ತ ತನ್ನಕಾಲ ಮೇಲೆ ತಾನು ನಿಂತಿರುವ ಸಜೀವ ಕಲಾಕೃತಿ. ಕನ್ನಡ ಜಾನಪದ ಸಾಹಿತ್ಯದ ಜೀವನಾಡಿ ಎನಿಸಿಕೊಂಡಿರುವ ತ್ರಿಪದಿಗಳಲ್ಲಿ ಮುಕ್ತ ಸ್ವರೂಪದ ಅಸ್ತಿತ್ವವಿದೆ.  ಸರ್ವಜ್ಞನ ತ್ರಿಪದಿಯ ಕಾವ್ಯ ಸ್ವರೂಪವನ್ನು ಈ ರೀತಿಯಾಗಿ ಗುರುತಿಸ ಬಹುದಾಗಿದೆ. ಸರ್ವಜ್ಞನ ತ್ರಿಪದಿಯಲ್ಲಿ ಸರ್ವಸಾಮಾನ್ಯವಾಗಿ ಬೀಜ ಸ್ವರೂಪದ ಒಂದು ಮಾತು ಪ್ರಶ್ನೆಯಾಗಿಯೋ ಉದ್ಗಾರವಾಗಿಯೋ, ಉಪಮೆ ದೃಷ್ಟಾಂತವಾಗಿಯೋ ಮೊದಲ ಸಾಲಿನಲ್ಲಿ ಮೈದಾಳಿರುತ್ತದೆ. ಈ ಉಕ್ತಿಯಲ್ಲಿ ಕೇಳಿದವರ ಇಲ್ಲವೇ ಓದಿದವರ ಮನಸ್ಸನ್ನು ಗಕ್ಕನೆ ತನ್ನಡೆಗೆ ಸೆಳೆದುಕೊಂಡು, ಕೆರಳಿದ ಕುತೂಹಲದಿಂದ ಅದು ತನ್ನಲ್ಲಿ ಕೇಂದ್ರಿಕೃತವಾಗುವಂತೆ ಮಾಡಬಲ್ಲ ಗಾರುಡಿಗನ ಗತ್ತು ಇರುತ್ತದೆ. ಪದ್ಯದ ಕೇಂದ್ರಕೋಶವೂ ಜೀವಾಳ ಸ್ಥಾನವೂ ಆದ ಎರಡನೆ ಚರಣದಲ್ಲಿ ಆಶಯದ ಆವಿಷ್ಕಾರದ ಅಂಗಭೂತ ಬೆಳವಣಿಗೆ ಮಾತ್ರವಲ್ಲದೆ ಅಭಿವ್ಯಕ್ತಿಯ ಅರ್ಥಪೂರ್ಣ ಮುಕ್ತಾಯದೆಡೆಗೆ ಕೊಂಡೊಯ್ಯುವ ಒಂದು ತಿರುವು ಇರುತ್ತದೆ. ಕೊನೆಯ ಪಾದದಲ್ಲಿ ಅನಿರೀಕ್ಷಿತವೂ ತೃಪ್ತಿದಾಯಕವೂ ಆದ ಅಭಿವ್ಯಕ್ತಿಗೆ ಮಂಗಲ ಹಾಡುವ ಮುಕ್ತಾಯವಿರುತ್ತದೆ.

   ತ್ರಿಪದಿಯು ಸರ್ವಜ್ಞನ ಕೈಯಲ್ಲಿ ಸಾರ್ಥಕ್ಯವನ್ನು ಪಡೆಯಿತು. ತ್ರಿಪದಿ ಪ್ರಾಚೀನವಾದ ಅಚ್ಚಕನ್ನಡ ಛಂದಸ್ಸು  ಆರಿಸಿಕೊಂಡು ಸರ್ವಜ್ಞ, ದೇಸಿತತ್ವಕ್ಕೆ ಮನ್ನಣೆ ಕೊಟ್ಟಿದ್ದಾನೆ. ಜನಪದ ಸಾಹಿತ್ಯದಲ್ಲಿ ಮಾತ್ರವಲ್ಲದೆ ತ್ರಿಪದಿಯು ಬಾದಾಮಿಯ ಶಾಸನದಲ್ಲಿಯೂ ಕಂಡುಬರುತ್ತದೆ. ವಚನಕಾರರಲ್ಲಿಯೂ ಹಲವಾರು ಇದನ್ನು ಉಪಯೋಗಿಸಿಕೊಂಡದ್ದುಂಟು. ಆದರೆ ಸರ್ವಜ್ಞನು ತನ್ನ ಸ್ವಭಾವಕ್ಕೆ ತಕ್ಕಂಥ ಛಂದಸ್ಸನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಉಳಿದ ಕವಿಗಳಂತೆ ಅವನಲ್ಲಿ ಕಾವ್ಯ ಪ್ರವಾಹವು ಸತತವಾಗಿ ಹರಿಯುವುದಿಲ್ಲ. ಅವನಲ್ಲಿ ಕಾವ್ಯ ಶಕ್ತಿಯು ಕ್ಷಣ ಹೊತ್ತು ಮಿಂಚಿ ಮಾಯವಾಗುತ್ತದೆ. ಅಂಥ ಅಮೃತಗಳಿಗೆಯಲ್ಲಿ ಬಿಡಿ ಬಿಡಿಯಾದ ರತ್ನಗಳಂತೆ ತ್ರಿಪದಿಗಳು  ಉದಯಿಸುತ್ತವೆ. ಅವನ ತ್ರಿಪದಿ,  ತ್ರಿವಿಕ್ರಮನ ತ್ರಿಪಾದದಂತೆ ಇಡಿಯ ವಿಶ್ವವನ್ನೇ ವ್ಯಾಪಿಸುತ್ತದೆ. `ಕಿರಿದರೊಳ್ ಪಿರಿದರ್ಥಮಂ’ ಪೇಳುವ ಕೌಶಲ್ಯ ಸರ್ವಜ್ಞನಲ್ಲಿ ಅತಿಶಯವಾಗಿದೆ.

 ಸರ್ವಜ್ಞ ಮತ್ತು ವಚನಕಾರರು:

   ಸರ್ವಜ್ಞ ಮುಖ್ಯವಾಗಿ ವಚನಗಳನ್ನು ತ್ರಿಪದಿಗೆ ತಿರುಗಿಸಿ ಪ್ರಸಾರ ಮಾಡಿದವನು. ಆದರೆ ಒಂದು ವ್ಯತ್ಯಾಸ; ವಚನಕಾರರು ಒಂದು ಧಾರ್ಮಿಕ ಸಾಮಾಜಿಕ ಆಂದೋಳನದ ಸಂದರ್ಭದಲ್ಲಿ, ಸಾಂಘಿಕವಾಗಿ ಕೆಲಸ ಮಾಡಿದವರು; ಸರ್ವಜ್ಞ ಅಂಥ ಯಾವ ಉದ್ದೇಶದಿಂದಲೂ ಬದ್ಧವಾಗದೆ, ಏಕಾಂಗಿಯಾಗಿ ಊರೂರು ಅಲೆದವನು. ಆದರೆ ಒಂದು ಧಾರ್ಮಿಕ ಉದ್ದೇಶದಿಂದ ಬದ್ಧವಾದ ವಚನಕಾರರ, ಅದರಲ್ಲೂ ಪ್ರಮುಖ ವಚನಕಾರರ, ವಚನಗಳಲ್ಲಿರುವ ಕಾವ್ಯಗುಣ ಸರ್ವಜ್ಞನಲ್ಲಿಲ್ಲ. ವಚನಕಾರರಲ್ಲಿಲ್ಲದ ಒಂದು ಉದಾರ ಧೋರಣೆ ಸರ್ವಜ್ಞನಲ್ಲಿದೆ. ವಚನಕಾರರು ಮೂಲತಃ ಒಂದು ನೂತನ ಮತಧರ್ಮ ಪ್ರವರ್ತನೆಯ ಉದ್ದೇಶದಿಂದ ಬದ್ಧರಾಗಿದ್ದರೆ, ಸರ್ವಜ್ಞ ತಾನು ಅಂಥ ಯಾವ ಧರ್ಮಪ್ರಸಾರದ ಉದ್ದೇಶಕ್ಕೂ ಬದ್ಧನಾದವನಲ್ಲ. ಎಲ್ಲ ಬಗೆಯ ಹಂಗನ್ನೂ ಹರಿದುಕೊಂಡು ಹಿಂಡನಗಲಿದ ಗಜದಂತೆ ತಿರುಗಿದ ಈತ ಯಾವ ಒಂದು ಮತಧರ್ಮವನ್ನೂ ಎತ್ತಿಹಿಡಿಯುವ ಸ್ವಭಾವದವನಲ್ಲ. ಅವನ ತ್ರಿಪದಿಗಳಿಂದ ಆತ ವೀರಶೈವ ಧರ್ಮದವನೆಂದು ಊಹಿಸಲು ಸಾಧ್ಯವಿದ್ದರೂ, ಆತ ವಾಸ್ತವವಾಗಿ ಅದನ್ನೂ ಮೀರಿ ಸಂಚರಿಸಿದನು. ದೇವರು ಧರ್ಮ ಇತ್ಯಾದಿ ವಿಚಾರಗಳಲ್ಲಿ ಆತನ ಕಲ್ಪನೆ ತಕ್ಕಮಟ್ಟಿಗೆ ಜಾತ್ಯಾತೀತವಾದದ್ದು. ಹೀಗಾಗಿ ಸರ್ವಜ್ಞನ ತ್ರಿಪದಿಗಳು ಎಲ್ಲರಿಗೂ ಪ್ರಿಯವಾಗಿವೆ.

   ವಚನಕಾರರ ಪ್ರಭಾವ ಸರ್ವಜ್ಞನ ಮೇಲೆ ತುಂಬಾ ಆಗಿದೆ. ಈ ವಿಷಯವನ್ನು ಮಾರ್ಮಿಕವಾಗಿ ವಿವರಿಸುತ್ತ ಆರ್.ಸಿ.ಹಿರೇಮಠ ಅವರು ಹೀಗೆ ಹೇಳಿದ್ದಾರೆ. `ವಚನಕಾರರಂತೆ ಸರ್ವಜ್ಞ ವಿಚಾರವಾದಿ, ಅನುಭಾವಿ: ಸಮಾಜ-ವಿಮರ್ಶಕ ಮತ್ತು ಕ್ರಾಂತಿಕಾರಕ, ಜನಸಮಾನ್ಯರ ಜೀವನವನ್ನು ತಿದ್ದಿ ತೀಡುವುದೇ ಅವನ ಉದ್ದೇಶವಾಗಿದ್ದಿತು. ದಯೆ ಆತನ ಧರ್ಮವಾಯಿತು. ಕಾಯಕ ವೃತ್ತಿಯಾಯಿತು. ಸಮಾಜದಲ್ಲಿದ್ದ ಜಾತಿ-ಮತಗಳ ವೈಷಮ್ಯ ಕಿತ್ತು ಬಿಸುಟಲು ಆತನ ನಿರಂತರ ಹೋರಾಡಿದನು. ಸದಾಚಾರ ಸನ್ಮಾರ್ಗಗಳೇ ಜೀವನದ ಮೌಲ್ಯಗಳೆಂದು ಸ್ಪಷ್ಟಪಡಿಸಿದನು. ಶಿವಶರಣರ ಷಟ್‍ಸ್ಥಲ, ಅಷ್ಟಾವರಣ ಪಂಚಾಚಾರಗಳನ್ನು ಸರ್ವಜ್ಞನು ತನ್ನ ವಚನಗಳಲ್ಲಿ ಪ್ರತಿಪಾದಿಸಿದಂತೆ ಅವರ ಜೀವನ ಮೌಲ್ಯಗಳನ್ನು ಧಾರಾಳವಾಗಿ ಪ್ರತಿಪಾದಿಸಿದ್ದಾನೆ.

  ಸರ್ವಜ್ಞನ ತ್ರಿಪದಿಗಳಲ್ಲಿಯ ಸಮಾಜ ವಿಮರ್ಶೆ ಕಾವ್ಯ ತತ್ವ:

  ಅವನದು ಮುಖ್ಯವಾಗಿ ಜೀವನ ಪ್ರೀತಿಯಿಂದ ಹುಟ್ಟಿದ ಮಾನವ ಧರ್ಮ, ಸುತ್ತಣ ಬದುಕನ್ನು ಹಸನುಮಾಡುವ ಸುಧಾರಕತನ ಅವನ ಅಭಿವ್ಯಕ್ತಿಯ ಮೂಲ ಪ್ರೇರಣೆ. ಇದರಿಂದಾಗಿ ಅವನ ಅಭಿವ್ಯಕ್ತಿ, ದೃಷ್ಟಾಂತ ಹಾಗೂ ಹೇಳಿಕೆಗಳ ರೂಪದ್ದಾಗುತ್ತದೆ. ಕಾವ್ಯದ ರಮ್ಯತೆಗಿಂತ ತತ್ತ್ವದ ವಾಚ್ಯವೇ ಪ್ರಧಾನವಾಗುತ್ತದೆ. ನಿದರ್ಶನಕ್ಕೆ:

   ಆನೆ ನೀರಾಟದಲಿ ಮೀನಕಂಡಂಜುವುದೆ?

   ಹೀನ ಮಾನವರ ದುರ್ನಡಿಗೆ ತತ್ತ್ವದ

   ಜ್ಞಾನಿಯಂಜುವೆನೆ ಸರ್ವಜ್ಞ.

   ಎಂಬ ಈ ಪದ್ಯವನ್ನು ನಿದರ್ಶನವಾಗಿ ನೋಡಬಹುದಾಗಿದೆ. ಇದರಲ್ಲಿ ನೀತಿಕಾವ್ಯದ ಸಮಸ್ತ ಲಕ್ಷಣಗಳನ್ನೂ ಹಾಗೂ ದೌರ್ಬಲ್ಯಗಳನ್ನೂ ಗುರುತಿಸಬಹುದು. ಮೊದಲ ಪಂಕ್ತಿ, ಆನೆ ನೀರಾಟದಲಿ ಮೀನಕಂಡಂಜುವುದೆ ಎಂಬ ಪ್ರಶ್ನೆ, ಆಧುನಿಕ ಅರ್ಥದಲ್ಲಿ ನಿಜವಾಗಿಯೂ ಹರಳುಗೊಂಡು ಒಂದು ಕಾವ್ಯ ಪ್ರತಿಮೆಯಾಗಿದೆ. ಅದೊಂದು ಪಂಕ್ತಿ ಸಾಲು ಏನೆಲ್ಲವನ್ನು ಧ್ವನಿಸಲು ಆದರೆ ಮುಂದಿನ ಎರಡು ಸಾಲುಗಳು, ಮೊದಲ ಪಂಕ್ತಿ ಧ್ವನಿಸುತ್ತಿದ್ದ ಅರ್ಥ ಪರಂಪರೆಯನ್ನು ವಿವರಣಾತ್ಮಕವಾದ ಉಪದೇಶದ ಧಾಟಿಯಲ್ಲಿ ಒಂದು ಪರಿಮಿತಾರ್ಥಕ್ಕೆ ಇಳಿಸಿಬಿಡುತ್ತವೆ. ಇದಕ್ಕೆ ಕಾರಣ ಈ ಕವಿಯ ಕಾವ್ಯಧೋರಣೆಯೇ. ಸರ್ವಜ್ಞನ ಉಕ್ತಿಗಳಲ್ಲಿ ನೆನಪಿನ ನಾಲಗೆಯ ಮೇಲೆ ರಸವೊರಿಸುವ ಎಷ್ಟೋ ಪಂಕ್ತಿಗಳು ದೊರಕುತ್ತವೆಯೆಂಬುದು ಸಮಾಧಾನದ ಸಂಗತಿ. `ಬಳ್ಳಿಗುರುಡರು ಕೂಡಿ ಹಳ್ಳವನು ಬಿದ್ದಂತೆ’ ಎಂಬ ಪಂಕ್ತಿಯಲ್ಲಿ ಬಳ್ಳಿಗುರುಡ ಎಂಬ ಮಾತನ್ನು ಇಲ್ಲಿ ಗಮನಿಸಬೇಕು. `ಧನಕನಕ ಉಳ್ಳವನು ದಿವಸಕರನಂತಕ್ಕು, ಧನಕನಕ ಹೋದ ಮರುದಿವಸ ಹಾಳೂರ ಶುನಕನಂತಕ್ಕು’ ಎಂಬ ಎರಡು ಹೋಲಿಕೆಗಳ ವೈದೃಶ್ಯದ ಸ್ವಾರಸ್ಯ ಸೊಗಸಾದುದ್ದು. `ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ’ `ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು’ `ಊರಿಂಗೆ ದಾರಿಯನು ಯಾರು ತೋರಿದರೇನು’ `ಚಿತ್ತವಿಲ್ಲದೆ ಗುಡಿಯ ಸುತ್ತಿದರೆ ಫಲವೇನು?’ `ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’ ಇಂಥ ಎಷ್ಟೊಂದು ಹೇಳಿಕೆಗಳು ಸರ್ವಜ್ಞನ ತ್ರಿಪದಿಗಳ ತುಂಬ ಚದುರಿಕೊಂಡು ಮಿನುಗುತ್ತವೆ. ಈ ಸಂಕ್ಷಿಪ್ತಾಭಿವ್ಯಕ್ತಿ, ಅವುಗಳ ಹಿಂದಿರುವ ಲೋಕಾನುಭವ, ದಿನನಿತ್ಯದ ವ್ಯವಹಾರಕ್ಕೂ ಒದಗಿ ಬರುತ್ತವೆ. ಸುತ್ತಣ ಜನದ ಆಡುಮಾತಿಗೆ ಕಾವ್ಯಾಭಿವ್ಯಕ್ತಿಯ ತಿರುವುಕೊಟ್ಟು ವ್ಯಂಗ್ಯ, ಕಟಕಿ, ವಿನೋದ, ಸಹಾನುಭೂತಿ ಇತ್ಯಾದಿ ವೈವಿಧ್ಯಗಳಲ್ಲಿ, ಜನರ ಬದುಕನ್ನು ತಿದ್ದುತ್ತಾ, ನಿಜವಾದ ಅರ್ಥದಲ್ಲಿ ಜನತೆಯ ಕವಿಯಾದ ಸರ್ವಜ್ಞ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ಇಂದಿಗೂ  ಕನ್ನಡ ಜನಮಾನಸದಲ್ಲಿ ಚಿರಪರಿಚಿತನಾಗಿ ಉಳಿದಿರುವುದನ್ನು ಗಮನಿಸ ಬಹುದಾಗಿದೆ.

     ಸರ್ವಜ್ಞನ ಕಾವ್ಯಕ್ಕೆ ಇಂಥದೇ ವಸ್ತು ಇಲ್ಲ. ಅದಕ್ಕೊಂದು ನಿಶ್ಚಿತವಾದ ಬೆಳವಣಿಗೆ-ಆದಿ, ಮಧ್ಯ, ಅಂತ್ಯ ಇಲ್ಲ. ಇದನ್ನು ಇಂಥಲ್ಲಿಂದ ಓದಬೇಕೆಂಬ ಹಂಗಿಗೆ ಓದುಗರನ್ನು ಒಳಗುಪಡಿಸುವುದಿಲ್ಲ. ಎಲ್ಲಿಂದಾದರೂ ಓದಬಹುದು, ಎಲ್ಲಿ ಬೇಕಾದರೂ ನಿಲ್ಲಿಸಬಹುದು ಎಂ ಜಿ.ಎಸ್.ಶಿವರುದ್ರಪ್ಪನವರು ಹೇಳಿಕೆ ಅಕ್ಷರಸಹ ಸತ್ಯ. ಮುಂದುವರಿದು ಅವರು ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರ ಕಾವ್ಯ. ಅನುಭವಿಯೊಬ್ಬನು-ಮನುಷ್ಯ ಸ್ವಭಾವವನ್ನು, ಲೋಕದ ನಡವಳಿಕೆಯನ್ನು ಚೆನ್ನಾಗಿ ಕಂಡ ಅನುಭವಿಯೊಬ್ಬನು-ಸುತ್ತಣ ಜನರನ್ನು ತಿದ್ದುವ ಸುಧಾರಕತನದ ಕಳಕಳಿಯಿಂದ ನುಡಿದ ಅಭಿವ್ಯಕ್ತಿಗಳಿವು. ಇವುಗಳಲ್ಲಿ ಶಸ್ತ್ರ ಚಿಕಿತ್ಸಕನ ದೃಷ್ಟಿಯಿದೆ; ಶಾಸ್ತ್ರದ ನಿಷ್ಕೃಷ್ಟತೆಯೂ ಇದೆ. ಹೀಗಿರುವುದರಿಂದಲೇ ಈ ಉಕ್ತಿಮಾರ್ಗ ಸಲೀಸಾಗಿ ಸುತ್ತಣ ಜನ ಜೀವನವನ್ನು ಮುಟ್ಟುತ್ತದೆ, ತಟ್ಟುತ್ತದೆ ಎಂದು ನುಡಿದಿದ್ದಾರೆ. ಈ ಮಾತುಗಳು ಸ್ವೀಕಾರಾರ್ಹವಾಗಿವೆ.

     ಆಡು ಮುಟ್ಟದ ಗಿಡವಿಲ್ಲ-ಎಂದು ಹೇಳುವುದುಂಟು. ಅದರಂತೆ ಸರ್ವಜ್ಞ ಹೇಳದ ವಿಷಯವಿಲ್ಲ. ದಿನನಿತ್ಯವೂ ಪ್ರಪಂಚದಲ್ಲಿ ಎಲ್ಲೆಡೆಗೆ ಕಾಣಿಸುವ ವಿಷಯಗಳನ್ನು ಕುರಿತು ಅವನು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಚೆನ್ನಪ್ಪ ಉತ್ತಂಗಿಯವರು ಸರ್ವಜ್ಞನ ವಚನಗಳನ್ನು ಪಾರಮಾರ್ಥಿಕ ಪದ್ಯಗಳು, ನೈತಿಕ ಪದ್ಯಗಳು ಮತ್ತು ಲೌಕಿಕ ಪದ್ಯಗಳು ಎಂದು ಮೂರು ವಿಶಾಲ ವಿಭಾಗವಾಗಿ ವಿಂಗಡಿಸಿ ಒಟ್ಟು ಸುಮಾರು ಎರಡು ಸಾವಿರದಷ್ಟು ವಚನಗಳನ್ನು ಪ್ರಕಟಿಸಿದ್ದಾರೆ, ಪ್ರತಿಯೊಂದು ವಿಭಾಗದಲ್ಲಿ ಅಂದಂದು ಅನಿಸಿದ್ದಕ್ಕೆ ಅಂದಂದೇ ಮಾತುಕೊಟ್ಟು ನಿಲ್ಲಿಸಿದ `ಪದ್ಧತಿ’ಗಳಿವೆ. ಉದಾ: ಗುರುಪದ್ಧತಿ, ಲಿಂಗಪದ್ಧತಿ ಇತ್ಯಾದಿ. ಇದು ಒಂದು ಬಗೆಯ ವಿಷಚಿಂತನುಗುಣವಾದ ಸರ್ವಜ್ಞ ವಚನಗಳ ವಿಭಾಗಕ್ರಮ ಎನ್ನಬಹುದು. ಸೂಕ್ಷ್ಮವಾಗಿ ನಿರೀಕ್ಷಿಸಿರುವ ಅವನ ಕಣ್ಣಿಗೆ ಬಿದ್ದ ಯಾವುದೇ ವಸ್ತು, ವ್ಯಕ್ತಿ ಅಥವಾ ಸಮಾಜದ ಗುಣ-ದೋಷಗಳು ಅವನ ತ್ರಿಪದಿ ರಚನೆಗೆ ಕಾರಣವಾಗುತ್ತವೆ, ಆಗ ಅವನು ಒಳ್ಳೆಯದನ್ನು ಮೆಚ್ಚುತ್ತಾನೆ. ಕೆಡುಕನ್ನು ನಿರ್ಭೀತಿಯಿಂದ ಖಂಡಿಸುತ್ತಾನೆ. ಅನ್ಯಾಯ-ಅನಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾನೆ. ಅದರ ಜೊತೆಗೇ ವಿಧಾಯಕವಾಗಿ ಮಾರ್ಗದರ್ಶಕ ಮಾತುಗಳನ್ನು ಹೇಳುತ್ತಾನೆ.

     ಸರ್ವಜ್ಞನ ಕಾಲಕ್ಕೆ ದೇವರು, ಧರ್ಮ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ತಮ್ಮ ತಿರುಳನ್ನು ಕಳೆದುಕೊಂಡಿರಬೇಕು; ಅಲ್ಲದೆ ಅಧರ್ಮ, ಅನೀತಿ, ಬಾಹ್ಯಾಡಂಬರ, ಮೂಢನಂಬಿಗೆ, ಪಕ್ಷಪಾತ, ಬೂಟಾಟಿಕೆ, ಮೋಸಗಾರಿಕೆ, ದುರ್ವರ್ತನೆ ಮೊದಲಾದವು ಸಮಾಜದಲ್ಲಿ ತಾಂಡವವಾಡುತ್ತಿರಬೇಕು. ಇಂಥ ಪರಿಸ್ಥಿತಿಯಲ್ಲಿ `ಕಂಡುದನು ಆಡುವ’ ಸರ್ವಜ್ಞನ ಅಂತರಂಗದಿಂದ ವಚನಗಳು ಸಿಡಿದೆದ್ದವು.

     ಸರ್ವಜ್ಞನು ನಗೆಯ ಅಸ್ತ್ರದಿಂದಲೇ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾನೆ. ಅವನದು `ನಕ್ಕು ನಗಿಸುವ ನಗೆ’ ಅವನಲ್ಲಿ  ನಿಃಸ್ವಾರ್ಥ ಭಾವನೆಯೂ, ಪೂರ್ವಗ್ರಹರಹಿತದ ದೃಷ್ಟಿಯೂ ಇದ್ದುದರಿಂದ ಅವನ ವಿಡಂಬನೆಯು ಯಾವುದೇ ವ್ಯಕ್ತಿಯ ಮನ ನೋಯಿಸುವಂಥದಾಗುವುದಿಲ್ಲ. ವಿನೋದ ಪ್ರವೃತ್ತಿ ಅವನ ವ್ಯಕ್ತಿತ್ವದ ಒಂದು ಮಹತ್ವದ ಅಂಶವೇ ಆಗಿದೆ. ವಿಡಂಬನೆ, ಕಟಕಿ, ವಿನೋದ, ತಿಳಿಹಾಸ್ಯ ಮೊದಲಾದ ನಗೆಯ ವಿವಿಧ ಪ್ರಕಾರಗಳು ಸರ್ವಜ್ಞನಲ್ಲಿವೆ. ಸಮಾಜದ ಅಸಂಬದ್ಧತೆ,ಮೌಢ್ಯಗಳನ್ನು ಕಂಡು ಪುರಂದರದಾಸನು -`ನಗೆಯು ಬರುತಿದೆ ಎನಗೆ ನಗೆಯು ಬರುತಿದೆ’ ಎಂದು ನುಡಿದಂತೆ, ಸರ್ವಜ್ಞನೂ ನಕ್ಕಿದ್ದಾನೆ. ಸಮಾಜ-ವಿಮರ್ಶೆಯನ್ನು ಮಾಡುವಲ್ಲಿ ಈ ಅವನ ಹಾಸ್ಯವು ಅವನ ತ್ರಿಪದಿಗಳಿಗೆ ಒಂದು ವಿಶೇಷ ಸೊಬಗನ್ನು ತಂದು ಕೊಟ್ಟಿದೆ. ಒಂದೊಂದು ಸಲ ಕೇವಲ ತಿಳಿಹಾಸ್ಯವು ಅವನ ತ್ರಿಪದಿಯಲ್ಲಿ ಕಂಡುಬರುವುದು

ಹರಕು ಹೋಳಿಗೆ ಲೇಸು ಮುರುಕು ಹಪ್ಪಳಲೇಸು

ಕುರುಕುರು ಕಡಲೆ ಬಲುಲೇಸು, ಪಾಯಸದ

ಸುರುಕು ಲೇಸೆಂದ ಸರ್ವಜ್ಞ.  

 ಸರ್ವಜ್ಞನ ತ್ರಿಪದಿಗಳ ತಾತ್ವಿಕ ನೆಲೆಗಟ್ಟು:   

  `ಸರ್ವಜ್ಞನು ಸಂಸ್ಕೃತರ ಸಂಸ್ಕೃತ ಕವಿಯಲ್ಲ ಪ್ರಾಕೃತ ಕವಿ’ ಎಂದು ಸರ್ವಜ್ಞತಜ್ಞರೆಂದು ಪ್ರಸಿದ್ಧರಾದ ಚೆನ್ನಪ್ಪ ಉತ್ತಂಗಿಯವರು ಹೇಳಿದ ಮಾತು ಸರ್ವಜ್ಞನ ಭಾಷಾಶೈಲಿಗೂ ಅನ್ವಯಿಸುತ್ತದೆ. ಅವನದು ಪಂಡಿತ ಮಾನ್ಯವಾದ ಸಂಸ್ಕೃತ ಭೂಯಿಷ್ಠ, ದೀರ್ಘಸಮಾಸ ಘಟಿತ-ಶೈಲಿಯಲ್ಲ. ಸಹಜ ಸುಲಭ ಅಚ್ಚಕನ್ನಡ ಪದಗಳಲ್ಲಿಯೇ ತನ್ನ ಅಭಿಪ್ರಾಯಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಿದ್ದಾನೆ. ಭಾಷಾ ಶೈಲಿಯಲ್ಲಿಯೂ ಅವನು ದೇಸಿ ತತ್ವಕ್ಕೆ ಮನ್ನಣೆ ಕೊಟ್ಟಿದ್ದಾನೆ.ಈತನು ಕೆಲವೆಡೆ ಎಂತಹ ಗಹನ ಗೂಢ ತತ್ವವನ್ನು,ಆಶಯವನ್ನು ಸಂಸ್ಕೃತದ ಗಂಧಗಾಳಿಯ ಸೋಂಕು ಇಲ್ಲದಂತಹ ತಿಳಿಗನ್ನಡದಲ್ಲಿ ಭಟ್ಟಿ ಇಳಿಸ ಬಲ್ಲ ಕನ್ನಡ ನುಡಿಯ ಹಿಡಿತ ಪ್ರಭುತ್ವ ಆತನಿಗಿರುವುದನ್ನು ಕಾಣ ಬಹುದು. ನಿದರ್ಶನಕ್ಕೆ,

        ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ

        ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕೆ

        ದೇಗುಲವೆ ಇಲ್ಲ ಸರ್ವಜ್ಞ.

 ಈ ತ್ರಿಪದಿಯಲ್ಲಿ  ಸಂಸ್ಕೃತದ ಸುವಿಖ್ಯಾತವೂ ಜನಪ್ರಿಯವೂ ಆದ ಪರಮಾರ್ಥದ ಕುರಿತ ಪಾರಿಭಾಷಿಕ ವೆಂಬಂತಹ ಒಂದು ಪದವನ್ನು ಬಳಸದೇ ದಿನಬಳಕೆಯ ಮಾತಿನಲ್ಲಿ ಜಟಿಲವೂ ನಿಗೂಢವೂ ಆದ ಆಶಯವನ್ನು ಸಮರ್ಥವಾಗಿ ಬಿಂಬಿಸಿದ್ದಾನೆ. ಕನ್ನಡ ಭಾಷೆಯಲ್ಲಿ ಎಂತಹ ಕಸುವು ಇದೆ ಎಂಬುದನ್ನೂ ಇದು ಸೂಚಿಸುತ್ತದೆ.ಆಗಿಲ್ಲ ಹೋಗಿಲ್ಲ ಅಂದರೆ ಆಗು ಹೋಗುಗಳಿಲ್ಲದ ಅನಾದಿ ಅನಂತ ಸ್ವರೂಪ ಕಾಲಾತೀತ;  ಮೇಗಿಲ್ಲ ಕೆಳಗಿಲ್ಲ ವೆಂದರೆ ಸ್ಥಲಾತೀತ. ತಾಗಿಲ್ಲ ತಪ್ಪು ತಡೆಯಿಲ್ಲ ವೆಂದರೆ ಉಪಮಾತೀತ. ನಿರಂಜನ ನಿರಂಕುಶ ಸ್ವರೂಪ ನಿಗೂಢ ತತ್ವದ ತಿರುಳು ಇಲ್ಲಿ ತಿಳಿಗನ್ನಡದಲ್ಲಿ ಪರಿಪಾಕ ಗೊಂಡಿದೆ. ಪರಮಾತ್ಮನ ಅನಾದ್ಯನಂತ ಸ್ವರೂಪವನ್ನು ಆತನು ಸ್ವಯಂಭೂ ಎಂಬುದನ್ನೂ ಅವನ ನಿರ್ಗುಣ ನಿರ್ಮಲಸ್ವರೂಪವನ್ನೂ ವಿಶ್ವವ್ಯಾಪಕತೆಯನ್ನೂ ಸರ್ವಜ್ಞನು ಎಂಥ ಸುಲಭ ಅಚ್ಚಕನ್ನಡ ಶಬ್ದಗಳಲ್ಲಿ ಮೇಲಿನ ತ್ರಿಪದಿಯಲ್ಲಿ ಬಣ್ಣಿಸಿದ್ದಾನೆ. ಕವಿಯ ಕನ್ನಡ ಪ್ರಜ್ಞೆಗೆ- ಪ್ರಭುತ್ವಕ್ಕೆ ಇದು ನಿದರ್ಶನವಾಗಿದೆ.ಪಾಂಡಿತ್ಯ ಪ್ರದರ್ಶನಕ್ಕಾಗಿ ಅವನು ಅಲಂಕಾರಗಳನ್ನು ಬಳಸುವುದಿಲ್ಲ. ಆದರೆ ಹದವರಿತ ಔಚಿತ್ಯ ಪೂರಿತ ಅಲಂಕಾರಗಳು, ರೂಪಕಗಳು ಅವನ ತ್ರಿಪದಿಯಲ್ಲಿ ಧಾರಾಳವಾಗಿವೆ. ಉಪಮೆ, ರೂಪಕ, ದೃಷ್ಟಾಂತಗಳ, ನಿಧಿ ಅವನ ವಚನಗಳು. ವಿರಾಗಿಯಾಗಿ ಒಂಟಿಯಾಗಿ ನಿತ್ಯ ಸಂಚಾರಿಯಾಗಿ ಬದುಕಿರ ಬಹುದಾದ ಸರ್ವಜ್ಞ ಹಾಳೂರಿನಲ್ಲಿ ಹಾದು ಹೋಗ ಬಹುದಾದ, ಬೀಡು ಬಿಟ್ಟಿರ ಬಹುದಾದ ಸಂಭವವಿಲ್ಲದಿಲ್ಲ. ಅಂತಹ ಪ್ರಸಂಗಗಳಲ್ಲಿ ಹಲವಾರು ಸಂಗತಿಗಳ ಜ್ವಲಂತ ಸ್ಮೃತಿಯೇ ಅಲಂಕಾರಗಳ ಸೃಷ್ಟಿಗೆ ಕಾರಣವಾಗಿದೆ. ಉದಾಹರಣೆಗೆ ತತ್ವವನ್ನು ಅರಿಯದೆ ಕೇವಲ ರುದ್ರಾಕ್ಷಿಯನ್ನು ಹೊತ್ತವನು `ಅತ್ತಿಮರ  ತಾ ಕಾಯ ಹೊತ್ತಿರ್ದ ತೆರದಂತೆ’ ಎಂಬಲ್ಲಿಯ ಹೋಲಿಕೆಯ ಸೊಗಸನ್ನು ಗಮನಿಸಬಹುದು.  ಅದೇ ರೀತಿ ` ವಿದ್ಯೆಯಿಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂಬಲ್ಲಿ ಹದ್ದಿನ ಉಪಮೆ ಶಕ್ತಿಯುತವಾಗಿದೆ. ಪ್ರಾಣಿ ಪಕ್ಷಿಗೆ ಸಂಬಂಧಿಸಿದ ಮಾರ್ಮಿಕವಾದ ಉಪಮೆಗಳನ್ನು ಕಾಣ ಬಹುದಾಗಿದೆ.

 1. ವನಿತೆಯನಗೊಲಿದಳೆನಬೇಡ ಬೆಳ್ಳಕ್ಕಿ

 ದನವ ಕಾದಂತೆ ಸರ್ವಜ್ಞ. ಈ ಉಪಮೆಯಲ್ಲಿ ಹೆಣ್ಣಿನ ಪ್ರೀತಿ ತನಗೆ ದಕ್ಕಿತೆಂದು ನಂಬಿ ಕೆಡುವ ದುರ್ದೈವಿಗೆ ದನಕಾಯುವಂತೆ ಅದನ್ನನುಸರಿಸುವ ಬೆಳ್ಳಕ್ಕಿಗೆ ಹೋಲಿಸಿರುವುದನ್ನು ಕಾಣಬಹುದಾಗಿದೆ.

 2. ನಿಲುಕದ ಫಲಕೆ ನರಿ

 ಮಿಡುಕಿ ಸತ್ತಂತೆ

3.ಸತ್ವವಿಲ್ಲದವರ ಒಡನಾಟ ಬೇಲಿಯ

 ಒತ್ತಿಯಂತಿಹುದು ಇತ್ಯಾದಿ ಉಪಮೆಗಳಲ್ಲಿ ಒಂದಿಲ್ಲೊಂದು ಬಗೆಯ ಒಗರು-ಹೊಗರನ್ನು ಕಾಣಬಹುದಾಗಿದೆ.

 ತ್ರಿಪದಿಗಳ ಸಾರ :

 ಮಾನವ ಸಾಂಸಾರಿಕ ಜೀವನ, ದಿನದಿನದ ವಸ್ತು ಸಂಗತಿಗಳಿಂದ ಮೊಗೆ ಮೊಗೆದು ತೆಗೆದುಕೊಂಡ ಅನೇಕಾನೇಕ ಉಪಮೆಗಳು ಈತನ ಸಾಹಿತ್ಯಾಭಿವ್ಯಕ್ತಿಯ ಜೀವನಾಡಿಗಳಾಗಿವೆ. ನಿದರ್ಶನಕ್ಕೆ,

 ಸಾಣೆ ಕಲ್ಲೊಳು ಗಂಧ ಮಾಣದಲೆ ಎಸೆವಂತೆ

 ಕಳಹೋಗಿ ಕೆಮ್ಮಿ ಸತ್ತಂತೆ

 ಹಿಂಡನಗಲಿದ ಗಜದಂತೆ

 ಎಣ್ಣೆ ಕುಡಿಕೆಯೊಡೆದಂತೆ

 ಹಾಳೂರ ಕೊಟ್ಟಿಗೆ ಉರಿದಂತೆ

 ಕಿಲುಬಿಡಿದ ಕಂಚಿನಂತೆ

 ಕಣ್ಣೊಳಗೆ ಕಾರವಿಟ್ಟಂತೆ

 ಬೆರಣಿಯ ಹೊಗೆ ಕುಡಿದಂತೆ

 ತಿಗುಣಿಯ ಮಂಚದಂತೆ

 ಮಳಲೊಳಗೆ ಎಣ್ಣೆ ಹೊಯಿದಂತೆ

 ಈ ರೀತಿಯಾಗಿ ಬದುಕಿನ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ ಇಂತಹ ಜೀವಂತ ಹಾಗೂ ಜ್ವಲಂತ ಉಪಮೆಗಳು ಸರ್ವಜ್ಞನ ಅನುಭವದ ಕಾವು-ಕಸುವು ಕರಹುಗಳಿಗೆ ಕನ್ನಡಿ ಹಿಡಿಯುತ್ತವೆ. ಅದೇ ರೀತಿ ಪರಂಪರೆಯ ಜಾಡು,ಶಿಷ್ಟತೆಯ ಸೊಗಡು ಒಗೊಂಡಂತಹ ಕೆಲವು ಉಪಮೆಗಳು ಇಣುಕಿ ಹಾಕಿವೆ.

 ನಿದರ್ಶನಕ್ಕೆ, ವಜ್ರದಿಂ ಗಿರಿಯ ಹೊಯಿದಂತೆ

          ಭಾನು ಮೋಡದಲ್ಲಿ ಹೊಯಿದಂತೆ

          ಹುಣ್ಣಿಮೆಯು ಹೋದ ಶಶಿಯಂತೆ   ಈತನ ವಚನಗಳಲ್ಲಿಯ  ಉಪಮೆಗಳು ಹಳ್ಳಿಗಾಡಿನ ಬದುಕಿನ ಗಟ್ಟಿ ಮುಟ್ಟಾದ ಅನುಭವ ತನ್ನೆಲ್ಲಾ ಗಡುಸುತನದಿಂದ ಕೆನೆಗಟ್ಟಿ ನಿಂತಿದೆ. ವಿರಳವಾಗಿ ಕೆಲವು ರೂಪಕಗಳನ್ನು ಗುರುತಿಸ ಬಹುದಾಗಿದೆ. ಅದರಲ್ಲೂ ಈತನು ಸೃಷ್ಟಿಸಿರುವ ಅನ್ನದೇವರು, ತುತ್ತೆಂಬ ಶಿವ ರೂಪಕಗಳು ಅದ್ಭುತವಾಗಿವೆ.

 ಉಪ್ಪು ಕಾಮನ ಬಿಲ್ಲು| ತುಪ್ಪವಯ್ದಲರಂಬು

 ಬಪ್ಪ ಭೋಗಗಳು ರತಿಯಾಗಿ, ಕೂಳು ಕಂದರ್ಪ

 ಕಾಣಯ್ಯ ಸರ್ವಜ್ಞ ಎಂಬಲ್ಲಿಯ ಉಪ್ಪೇ ಬಿಲ್ಲು.ತುಪ್ಪವೇ ಹೂಬಾಣ,ಭೋಗಗಳೇ ರತಿ,ಕೂಳೆ ಕಂದರ್ಪ ವೆಂಬ ರೂಪಕ ಸೃಷ್ಟಿ ಪೂರ್ವದ ಸಾಹಿತ್ಯ ಪರಂಪರೆಯಿಂದ ನಿರ್ಮಿತವಾದುದಾಗಿದೆ.

        ‘ಧ್ಯಾನದಹೊಸ ಬತ್ತಿ ಮೌನದ ತಿಳಿದುಪ್ಪ ಸ್ವಾನುಭವವೆಂಬ ಬೆಳಗಿನ ಜ್ಯೋತಿಯ ಜ್ಞಾನವಂ ಸುಡುಗು ಸರ್ವಜ್ಞ’ಎಂಬ ವಚನದಲ್ಲಿ ಸುಂದರವಾದ ರೂಪಕವಿದೆ. ದೃಷ್ಟಾಂತಗಳು ಸರ್ವಜ್ಞನ ಉಸರಿದಂತೆ,ಅವು ಸಹಜವಿರುವಂತೆ ರಮ್ಯವೂ ಆಗಿವೆ. ‘ಕತ್ತೆ ಬೂದಿಲಿ ಹೊರಳಿ ಮತ್ತೆ ಯತಿಯಪ್ಪುದೆ?’ ಸೊಡೆರೆಣ್ಣೆ ತೀರಿದರೆ ಕೊಡನತ್ತಿ ಹೊಯ್ಯುವರೆ, ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆ ಹಾಲು ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ ಮಡಿಯುವುದೆ ? ಮೊದಲಾದ ಅಸಂಖ್ಯ ದೃಷ್ಟಾಂತಗಳು ಸರ್ವಜ್ಞನ ತ್ರಿಪದಿಯ ಸೊಗಸನ್ನು ಹೆಚ್ಚಿಸಿವೆ. ಅವನು ದೇಸಿಯ ಸೌಂದರ್ಯ ಸತ್ವಗಳನ್ನು ಅರಿತವನು. ಅವನ ಅನೇಕ ಮಾತುಗಳು ಜನತೆಯ ನಾಲಿಗೆಯ ಮೇಲೆ ನಲಿದು ಗಾದೆಯ ಮಾತುಗಳಾಗಿ ಹೋಗಿವೆ.

 ಸರ್ವಜ್ಞ ಮತ್ತು ದೇಸಿ:

       ಸರ್ವಜ್ಞನು ಖಂಡಿತವಾದಿಯಾದುದರಿಂದ ಸುಸಂಸ್ಕೃತರೆನ್ನುವವರು ಮೆಚ್ಚದ ಗ್ರಾಮ್ಯವನ್ನು ಅವನು ಬಳಸುತ್ತಾನೆ. ಅಂಥಲ್ಲಿ ದೇಸಿಯ ಸೊಬಗಿನೊಡನೆ ಗ್ರಾಮ್ಯದ ಒರಟುತನವನ್ನೂ ಕಾಣುತ್ತೇವೆ. ಸ್ವರ್ಗವನ್ನು ರಂಡೆಯಾಳುವಳೆ? ಕೈಲಾಸ ರಂಡೆಯ ಹೊರಸೆ ? ಎಂಬಂತಹ ಮಾತುಗಳಲ್ಲಿ ಗ್ರಾಮ್ಯವು ಕಂಡು ಬರುತ್ತದೆ. ಆದರೆ ಸರ್ವಜ್ಞನಿಗೆ ಭಾಷೆ ಮುಖ್ಯವಲ್ಲ; ಭಾವ ಅಥವಾ ಅಭಿಪ್ರಾಯ ಮುಖ್ಯ.ಅದು ಪರಿಣಾಮಕಾರಿಯಾಗಲು ಎಂತಹ ಭಾಷೆಯು ಅವನ ದೃಷ್ಟಿಯಲ್ಲಿ ಯೋಗ್ಯವೇ. ಅಲ್ಲದೆ ಸರ್ವಜ್ಞನು ವಿಪ್ಲವ ಮೂರ್ತಿ, ಸಿಡಿಲುಣಿ, ಅವನೊಂದು ಜ್ವಾಲಾಮುಖಿ ಆ ಮುಖದಿಂದ ಹೊರಬೀಳುವುದೆಲ್ಲ ವಚನಗಳಲ್ಲ, ರಚನೆಗಳು ವಿದ್ಯುತ್ಕಣಗಳು ಎಂಬ ವಿದ್ವಾಂಸರ ಮಾತುಗಳು ಮನನೀಯವಾಗಿವೆ.

      ಸರ್ವಜ್ಞನದು ತ್ರಿಪದಿ ಕಾವ್ಯವೇ, ಸರ್ವಜ್ಞನು ಕವಿಯೇ ಎಂಬ ಪ್ರಶ್ನೆಯು ಸಾಹಿತ್ಯ ವಲಯದಲ್ಲಿ ಅಲ್ಲಲ್ಲಿ ಕೇಳಿಬಂದರೂ ಅದು ಅಸಹಜ ಎಂದೆನಿಸುತ್ತದೆ. ಉತ್ತಂಗಿಯವರು ಸರ್ವಜ್ಞನ ಪದಗಳಲ್ಲಿ ಜೀವನವನ್ನೂ ಭಾವನಿರ್ಭರತೆಯನ್ನೂ ವಕ್ರೋಕ್ತಿ ಪ್ರಕಾರವನ್ನು ಕಂಡವರು, ಇವುಗಳಿಗೆ ಕಾವ್ಯ ಸ್ವರೂಪವಿದೆಯೆಂದೇ ಭಾವಿಸುವರಲ್ಲದೆ ನೀತಿಯ ರಗಳೆಯೆಂದು ಎಂದಿಗೂ ತಿಳಿಯರು ಎಂದಿದ್ದಾರೆ. ಜಿ.ಎಸ್ ಶಿವರುದ್ರಪ್ಪನವರು ಸರ್ವಜ್ಞನ ವಚನಗಳು ಬಹುಮಟ್ಟಿಗೆ ಮಿತ್ರ ಸಮ್ಮಿತ ಎಂಬ ವರ್ಗಕ್ಕೆ ಸೇರುತ್ತದೆ. ಹಿತೈಷಿಯಾದ ಗೆಳೆಯನೊಬ್ಬನು ಈ ಲೋಕದಲ್ಲಿ ನಡೆದುಕೊಳ್ಳಬೇಕಾವ ನಿರ್ದೇಶನವನ್ನು ನಯವಾಗಿ, ಆದರೆ ಕೆಲವು ಸಲ ಕಟುವಾಗಿ ಹೇಳಿದ ಹಾಗಿದೆ. ಈ ಸರ್ವಜ್ಞನ ಧಾಟಿ. ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರ ಕಾವ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸರ್ವಜ್ಞಾನಿಗೆ ಶ್ರೇಷ್ಠ ಕಾವ್ಯ ರಚನೆಯ ಬಗ್ಗೆ ಇರುವ ಕಳಿಕಳಿಗಿಂತ, ಸುತ್ತಲಿನ ಜನಜೀವನವನವನ್ನು ತಿದ್ದುವ ಉದ್ದೇಶವೇ ಪ್ರಧಾನವಾದುದ್ದರಿಂದ ಅನೇಕ ಸಲ ತಿದ್ದುವ ಉದ್ದೇಶವೇ ಪ್ರಧಾನವಾದುದ್ದದರಿಂದ, ಅನೇಕ ಸಲ ನೀತಿಯು ಪ್ರಧಾನವಾಗಿಬಿಟ್ಟು ಕಾವ್ಯಾಂಶವು ಹಿಂದುಳಿಯುತ್ತದೆ. ಅಂತೆಯೇ ಎ.ಆರ್. ಕೃಷ್ಣಶಾಸ್ತ್ರಿಗಳು, ಸರ್ವಜ್ಞನ ಕಾವ್ಯ ಒಟ್ಟಿನ ಮೇಲೆ ನೀತಿ ಕಾವ್ಯ. ರಸಿಕತೆಯೇ ಕವಿಯ ಜೀವ. ಅದು ಸರ್ವಜ್ಞನಲ್ಲಿ ಬೇಕಾದಷ್ಟಿದೆ. ಆದ್ದರಿಂದ ಅವನ ನೀತಿ ಕಾವ್ಯವು ಕಾವ್ಯವಾಗಿದೆ, ಉತ್ತಮ ಕಾವ್ಯವಾಗಿದೆ. ಎಂದು ತೀರ್ಮಾನಿಸಿದ್ದಾರೆ. ಜನಪದ ಸಾಹಿತ್ಯದ ತ್ರಿಪದಿಗಳಲ್ಲಿ ಕಂಡುಬರುವ ಕಾವ್ಯ ಸೌಂದರ್ಯವು ಸರ್ವಜ್ಞನ ಅನೇಕ ತ್ರಿಪದಿಗಳಲ್ಲಿ ಕಂಡು ಬರುವುದಿಲ್ಲ. ಅದರಂತೆ, ವಚನಕಾರರ ಅದರಲ್ಲೂ ಪ್ರಮುಖ ವಚನಕಾರರ ವಚನಗಳಲ್ಲಿರುವ ಕಾವ್ಯ ಗುಣ ಸರ್ವಜ್ಞನಲ್ಲಿಲ್ಲ ಎಂಬುದನ್ನು ಜಿ.ಎಸ್ ಶಿವರುದ್ರಪ್ಪನವರು ಎತ್ತಿ ತೋರಿಸಿದ್ದಾರೆ. ಒಮ್ಮೊಮ್ಮೆ ಸರ್ವಜ್ಞನು ಕೇವಲ ಪ್ರಾಸಕ್ಕೆ ಕಟ್ಟುಬಿದ್ದು, ಮಾತನ್ನು ಜೋಡಿಸಿ, ನೀರಸವಾದ ಪದ್ಯವನ್ನು ಹೊಸೆಯುತ್ತಾನೆ ಎಂದೆನಿಸುತ್ತದೆ.

      ಭಕ್ತಿಯಿಂದಲೆ ಯುಕ್ತಿ ಭಕ್ತಿಯಿಂದಲೆ ಶಕ್ತಿ

      ಭಕ್ತಿ ವಿರಕ್ತಿಯಳಿವರೀ ಜಗದಲ್ಲಿ

      ಮುಕ್ತಿಯಿಲ್ಲೆಂದ ಸರ್ವಜ್ಞ             

   ಆದರೆ ಇಂಥ ವಚನಗಳು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆಯ್ದುಕೊಳ್ಳುವಷ್ಟು ಅತಿ ವಿರಳವಾಗಿವೆ.

   ಬಹಳಷ್ಟು ತ್ರಿಪದಿಗಳು ಸಾಮಾಜಿ ಕಳಕಳಿಗೆ ನಿದರ್ಶನಗಳಾಗಿವೆ. ಸಮಾಜ ಜೀವನವನ್ನು ಸರ್ವಜ್ಞನು ಸೂಕ್ಷ್ಮವಾಗಿ ನಿರೀಕ್ಷಿಸಿ ಅದರ ವಿಮರ್ಶೆ ಮಾಡಿದುದಲ್ಲದೆ ತನ್ನ ತ್ರಿಪದಿಗಳಲ್ಲಿ ಸಮಾಜ ಬೋಧೆಯನ್ನು ನೀಡಿದ್ದಾನೆ. ಜೀವನ ಮೌಲ್ಯಗಳನ್ನು ಅವನು ತನ್ನ ಕೆಲವು ವಚನಗಳಲ್ಲಿ ವಿವರಿಸಿದ್ದಾನೆ. ಬಸವಣ್ಣನವರಿಗೆ `ಕಾಯಕವೇ ಕೈಲಾಸ’ವಾಗಿ ಕಂಡಂತೆ ಸರ್ವಜ್ಞನಿಗೆ ದುಡಿಮೆಯು ವ್ಯಕ್ತಿಯ ಹಾಗೂ ಸಮಾಜದ ಏಳಿಗೆಗೆ ಅವಶ್ಯಕವಾಗಿ ಕಂಡುಬಂದಿತು. ಅಂತೆಯೇ ಅವನು ಹೇಳಿದ್ದಾನೆ.

        ಕೇವಲ ಯಾಂತ್ರಿಕವಾಗಿ ದೇವಸ್ಥಾನಕ್ಕೆ ಹೋಗಿ, ವಿವೇಕವಿಲ್ಲದೆ ಮೂರ್ತಿ ಪೂಜೆ ಮಾಡಿ ಅಷ್ಟರಿಂದಲೇ  ಧನ್ಯರಾದೆವೆಂದು ಭಾವಿಸುವ ಜನರನ್ನು ಕುರಿತು ಸರ್ವಜ್ಞ ಹೀಗೆ ನುಡಿದಿದ್ದಾನೆ;

       ಕಲ್ಲುಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ

       ನಿಲ್ಲದೆ ಹಣೆಯ ಬಡಿವರ್ಗೆ ಬುಗುಟಿಲ್ಲ

       ದಿಲ್ಲ ಕಾಣಯ್ಯ ಸರ್ವಜ್ಞ               

  ಅಂತರಂಗದಲ್ಲಿ ಭಕ್ತಿಯಿಲ್ಲದೆ ಕೇವಲ ಪ್ರದರ್ಶನಕ್ಕಾಗಿ ಆಡಂಬರದ ಪೂಜೆ ಮಾಡುವವರನ್ನು ಕಂಡು ಅವನು  ಟೀಕಿಸಿದ್ದಾನೆ.

        ಒಸೆದೆಂಟುದಿಕ್ಕಿನಲ್ಲಿ ಮಿಸುನಿ ಗಿಣ್ಣುಲುಗಿಂಡಿ

        ಹುಸಿದು ಮಾಡುವವನ ಪೂಜೆಯದ ಬೋಗಾರ

        ಪಸರವಿಟ್ಟಂತೆ ಸರ್ವಜ್ಞ.

     ಬಸವಣ್ಣನವರು `ಉಂಬ ಜಂಗಮ ಬಂದರೆ ನಡೆ ಎಂಬರು: ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ’ ಎಂದು ಸಾರಿದಂತೆ ಸರ್ವಜ್ಞನೂ ಹೇಳಿದ್ದಾನೆ.

  ಉಣಬಂದ ಜಂಗಮಕೆ ಉಣಬಡಿಸ ಲೊಲ್ಲದೇ

  ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿವ

  ಬಣಗುಗಳ ನೋಡ ಸರ್ವಜ್ಞ.

 ಚಿತ್ತೈಕಾಗ್ರತೆಯೂ ಚಿತ್ತಶುದ್ಧಿಯೂ ಇಲ್ಲದ ನಿರರ್ಥಕವಾದ ಬಾಹ್ಯಾಚಾರಗಳಿಂದ ಎಳ್ಳಷ್ಟು ಪ್ರಯೋಜನವಿಲ್ಲ.

     ಚಿತ್ತ ವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು

     ಎತ್ತು ಗಾಣವನು ಹೊತ್ತುತ್ತಾ ನಿತ್ಯದಿ

     ಸುತ್ತಿ ಬಂದಂತೆ ಸರ್ವಜ್ಞ.

 ಅಂತಮುರ್ಖಿಯಾಗಿ ಮಾನಸ ಪೂಜೆ ಮಾಡುವವನು ಮನೆಯಲ್ಲಿಯೇ ಇದ್ದು ಮಠವಾಸಿಗಳಿಗಿಂತ ಹೆಚ್ಚಿನ ಫಲವನ್ನು ಪಡೆಯಬಹುದು. ಹಾಗಿಲ್ಲದವನು ದೇವಾಲಯದಲ್ಲಿದ್ದರೂ ಪ್ರಯೋಜನವೇನು?

  ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು

  ಮನದಲ್ಲಿ ನೆನೆಯದಿರುವನು ದೇಗುಲದ

  ಕೊನೆಯಲಿದ್ದೇನು ಸರ್ವಜ್ಞ.

 ಸರ್ವಜ್ಞ ಮಾಡಿಕೊಂಡ ಪರಮಾತ್ಮನ ಕಲ್ಪನೆಯು ವಿಶಾಲವಾದುದೂ, ಮತಾತೀತವಾದದೂ ಆಗಿದೆ.

 ದೇಹ ದೇವಾಲಯವು ಜೀವವೇ ಶಿವಲಿಂಗ

 ಬಾಹ್ಯಂಗಳಳಿದು ಭಜಿಪಂಗೆ ಮುಕ್ತಿಸಂ

 ದೇಹವಿಲ್ಲೆಂದ ಸರ್ವಜ್ಞ.

  ಭಾರತೀಯ ಪರಂಪರೆಯಂತೆ ಆಧ್ಯಾತ್ಮ ಮಾರ್ಗದಲ್ಲಿ ಗುರುವಿನ ಅವಶ್ಯಕತೆ ಮತ್ತು ಮಹತ್ವವನ್ನು ಸರ್ವಜ್ಞ ಅರಿತಿದ್ದಾನೆ.

    ಗುರುವಿನ ವಿಸ್ತರದ ಪರಿಯನಾನೇನೆಂಬೆ

    ಮೆರೆವ ಬ್ರಹ್ಮಾಂಡದೊಳಹೊರಗವ ಬೆಳಗಿ

    ಪರಿಪೂರ್ಣನಿಪ್ಪ ಸರ್ವಜ್ಞ.

 ಇಂಥ ಸದ್ಗುರುವಿನ ಬೋಧೆಯಿಂದಲೇ ಶಿಷ್ಯನು ಉದ್ಧಾರ ಹೊಂದುವುದು

  ಮತ್ತೆ ಸದ್ಗುರು ಮುಖದಿ ತತ್ವಮಸಿಯನೆ ತಿಳಿದು

  ಸತ್ಯನಿಂತೆಂದು  ಅರಿದಿಪ್ಪ ಜ್ಞಾನಿ ತಾ

  ಸತ್ತು ಹುಟ್ಟುವನೆ? ಸರ್ವಜ್ಞ.

  ಉದ್ಯೋಗವುಳ್ಳವನ ಹೊದ್ದುವದು ಸಿರಿಬಂದು

  ಉದ್ಯೋಗವಿಲ್ಲದಿರುವನಾ ಕರದೊಳ

  ಗಿದ್ದುದೂ ಪೋಕು ಸರ್ವಜ್ಞ.

ಇಂಥ ಉದ್ಯೋಗಶೀಲನ ಮನೆಯಲ್ಲಿ ನೆಮ್ಮದಿ ತಾನಾಗಿಯೇ ನೆಲೆಸುವದು ಆಗ:

    ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ

    ಇಚ್ಚೆಯನರಿವ ಸತಿಯಾಗಿ ಸ್ವರ್ಗಕೆ

    ಕಿಚ್ಚು ಹಚ್ಚೆಂದ ಸರ್ವಜ್ಞ.

  ಸುಖಸಂಸಾರದ ಚಕ್ರವನ್ನು ಅವನು ಕೆಲವು ತ್ರಿಪದಿಗಳಲ್ಲಿ ಇಟ್ಟಿದ್ದಾನೆ.

ಎತ್ತುಗಳು ಎರಡಾಗಿ ಬತ್ತದಿಹ ಹಯಿನಾಗಿ

ಮಿತ್ರರಯ್ದಾಗಿ ಸತಿ-ಯೊಬ್ಬಳಾದರೆ

ನಿತ್ಯದಲಿ ಸುಖವು ಸರ್ವಜ್ಞ.

ತದ್ವಿರುದ್ಧವಾಗಿ ವಿರಸ-ಸಂಸಾರದ ಚಿತ್ರವನ್ನೂ ಅವನು ಕೊಡದೆ ಇಲ್ಲ.

 ಬಂಡು ಹೆಂಡತಿಯಾಗಿ ತುಂಡೊಬ್ಬ ಸೊಸೆಯಾಗಿ

 ಕಂಡಲ್ಲಿ ಹರಿವ ಮಗನಾದರೂ ಮನೆಗೆ

 ದಂಡ ತಪ್ಪುವದೆ ಸರ್ವಜ್ಞ.

 ಕೌಟುಂಬಿಕ ಜೀವನದಲ್ಲಿ ಶಾಂತಿ ಸಮಾಧಾನಗಳನ್ನು ನೆಲೆ ಗೊಳಿಸುವವಳು ಸ್ತ್ರೀಯಲ್ಲದೆ ಮತ್ತಾರಲ್ಲ. ಸರ್ವಜ್ಞನ ದೃಷ್ಟಿಯಲ್ಲಿ ಸ್ತ್ರೀಯ ಮಹಿಮೆ ವಿಶೇಷವಾಗಿದೆ.

ಹೆಣ್ಣಿನಿಂದಲಿ ಇಹವು ಹೆಣ್ಣಿನಿಂದಲಿ ಪರವು

ಹೆಣ್ಣಿಂದ ಸಕಲ ಸಂಪದವು ಹೆಣ್ಣೊಲ್ಲ

ದಣ್ಣಗಳು ಎಲ್ಲಿ ಸರ್ವಜ್ಞ

ಸ್ತ್ರೀಯ ವ್ಯಕ್ತಿತ್ವದ ಸ್ಫುಟವಾದ ಎರಡು ಮುಖಗಳನ್ನು ಅವನು ಚಿತ್ರಿಸಿದ್ದಾನೆ.

ನಾರಿ ಪರರುಪಕಾರಿ ನಾರಿ ಸ್ವರ್ಗಕೆ ದಾರಿ

ನಾರಿ ಸಕಲರಿಗೆ ಹಿತಕಾರಿ ಮುನಿದರೆ

ನಾರಿಯೇ ಮಾರಿ ಸರ್ವಜ್ಞ.

 ಕೇವಲ ಗೃಹಿಣಿಯರನ್ನಲ್ಲದೆ, ಜಾರಸ್ತ್ರೀಯರನ್ನು ಮತ್ತು ವೇಶ್ಯೆಯರನ್ನು ಹಾಗೂ ಅವರ ಪ್ರಭಾವ ನಡೆ-ನುಡಿಗಳ ರೀತಿ ನೀತಿಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸಿ ಅವುಗಳನ್ನು  ತನ್ನ ವಚನಗಳಲ್ಲಿ ಚಿತ್ರಿಸಿದ್ದಾನೆ.

ಮಾನವನ ಗುಣಶೀಲಗಳು ನಿರ್ಧಾರವಾಗುವುದು ಅವನ ನಡೆನುಡಿಗಳಿಂದ ಅವನ ಉಳಿವು-ಅಳಿವುಗಳೂ ಅವುಗಳಿಂದಲೇ. ಅದನ್ನು ಈ ರೀತಿಯಾಗಿ ಪ್ರತಿಪಾದಿಸಿದ್ದಾನೆ.

ಕಣ್ಣುನಾಲಿಗೆ ಮನವು ತನ್ನದೆಂದೆನಬೇಡ

ಅನ್ಯರು ಕೊಂದರೆನಬೇಡ ಇವು ಮೂರು

ತನ್ನ ಕೊಲ್ಲುವವು ಸರ್ವಜ್ಞ. ಮನುಷ್ಯನ ಚಾರಿತ್ರ್ಯದಲ್ಲಿ ಸತ್ಯಕ್ಕೆ ತುಂಬಾ ಮಹತ್ವವನ್ನು ಕೊಟ್ಟಿದ್ದಾನೆ. ಸರ್ವಜ್ಞ `ಕಂಡುದನು ಆಡಿದರೆ ಭೂ ಮಂಡಲವು ಮುನಿಯುವದು’ ದಿಟವಾದರೂ ಸತ್ಯವಂತರೆಂಬುದು ಗೊತ್ತಾದರೆ ಕೊನೆಗೆ

ಸತ್ಯರಿಗೆ ಧರೆಯಲ್ಲ ಮಸ್ತಕದಿ ಎರಗುವದು

ಹೆತ್ತ ತಾಯ್ಮಗನ ಕರೆವಂತೆ ಶಿವನವರ

ನೆತ್ತಿಕೊಂಬುವನು ಸರ್ವಜ್ಞ.   

ಧಾರಾಳ ಹಣವಿದ್ದರೂ ಅದನ್ನು ವೆಚ್ಚ ಮಾಡಲು ಹಿಂಜರಿಯುವ ಲೋಭಿಗಳನ್ನು ಕುರಿತು ಸರ್ವಜ್ಞನು ಕಟುವಾಗಿ ಟೀಕಿಸಿದ್ದಾನೆ.

ಉಣ್ಣದೊಡವೆಯ ಗಳಿಸಿ ಮಣ್ಣಿನೊಲು ತಾನಿರಿಸಿ

ಸಣ್ಣಿಸಿಯೆ ನೆಲದ ಸಾರಿದನ ಬಾಯೊಳಗೆ

ಮಣ್ಣು ಕಾಣಯ್ಯ ಸರ್ವಜ್ಞ.

ದಾನದ ಹಿರಿಮೆಯನ್ನು ಸರ್ವಜ್ಞ ಕವಿ ತುಂಬಾ ವಿಸ್ತಾರವಾಗಿ ಬಣ್ಣಿಸಿದ್ದಾನೆ. ದಾನ ಮಾಡುವದು ಧಾರ್ಮಿಕನ ಕರ್ತವ್ಯಗಳಲ್ಲಿ ಒಂದು ಎಂಬುದು ಆಗಿನ ಸಮಾಜದಲ್ಲಿ ರೂಢವಾಗಿದ್ದರೂ, ದಾನ ಮಾಡಲು ಜನ ಹೇಗೆ ಹಿಂಜರಿಯುತ್ತಾರೆ ಎಂಬುದನ್ನು ಅವನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾನೆ.

ದಾನವೆಂದರೆ ತಲೆಯ ಚಾನದಲಿ ಕಡಿದಂತೆ

ತಾನೊಂದು ತಪ್ಪಮಾಡಿ ನೂರಾರನು

ಮೌನದಿಂ ಕೊಡುವ ಸರ್ವಜ್ಞ.

ಇನ್ನು ಕೆಲವರು ದಾನವನ್ನೇನೂ ಮಾಡುತ್ತಾರೆ. ಆದರೆ ಆಮೇಲೆ ಮರ ಮರ ಮರುಗುತ್ತಾರೆ. ಇಂಥವರನ್ನೂ ಸಂದರ್ಶಿಸಿದ ಸರ್ವಜ್ಞ ಹೇಳುತ್ತಾನೆ.

 ಕೊಟ್ಟು ಕುದಿಯಲು ಬೇಡ ಕೊಟ್ಟಾಡಿಕೊಳಬೇಡ

 ಕೊಟ್ಟು ನಾ ಕೆಟ್ಟೆ ನೆನೆಬೇಡ ಶಿವನಲ್ಲಿ

 ಕಟ್ಟಿಹುದು ಬುತ್ತಿ ಸರ್ವಜ್ಞ

 ದಾನವನ್ನು ಎಷ್ಟಾದರೂ ಕೊಡಲಿ ಕೊಟ್ಟದನ್ನು `ಆಡದೆ ಕೊಡುವವನು ರೂಢಿಯೊಳಗಗುತ್ತಮನು’ ಎಂದಿದ್ದಾನೆ. ದಾನಗಳಲ್ಲೆಲ್ಲ ಅನ್ನದಾನವೇ ಶ್ರೇಷ್ಠ

 ಅನ್ನ ದೇವರ ಮುಂದೆ ಇನ್ನು ದೇವರ ಉಂಟೆ?

  ಅನ್ನವಿರುವತನಕ ಪ್ರಾಣವು ಜಗದೊಲ

 ಗನ್ನವೇ ದೈವ ಸರ್ವಜ್ಞ.

 ಸರ್ವಜ್ಞ ಮತ್ತು ಕನ್ನಡ ಭಾಷೆ:

  ಸಾಹಿತಿಯಾದವನು ಸಾರ್ವತ್ರಿಕ ಆಸ್ತಿಯೆನಿಸಿದ ಸಾಮಾನ್ಯ ಭಾಷೆಯ ನುಡಿ-ನುಡಿಗಟ್ಟುಗಳನ್ನೇ ಆತ ತನ್ನ ಸಂಪನ್ಮೂಲವಾಗಿ ಸ್ವೀಕರಿಸಿದರೂ ಅದರಲ್ಲಿ ತನ್ನ ಅಭಿಜಾತ ಪ್ರತಿಭೆಯ ಪ್ರಭಾವ ಮುದ್ರೆಯನ್ನೊತ್ತಿ ತನ್ನ ಅಭಿವ್ಯಕ್ತಿಗೆ ಒಂದು ಒಪ್ಪ-ಓರಣ,ಶಕ್ತಿ-ಸಾರವನ್ನು ತಂದುಕೊಳ್ಳುತ್ತಾನೆ. ಈ ದೃಷ್ಟಿಯಿಂದ ಸರ್ವಜ್ಞನ ಭಾಷೆಯ ಬಳಕೆಯಲ್ಲಿ ಓತಪ್ರೋತವಾಗಿರುವ ಬೆಡಗು ಪರಿಶೀಲನಾರ್ಹವಾಗಿದೆ. ಈತನ ತ್ರಿಪದಿಗಳಲ್ಲಿ ತನ್ನ ಅಭಿಜಾತ ಪ್ರತಿಭೆಗೆ ಜ್ವಲಂತ ನಿದರ್ಶನಗಳಾದ ಅನೇಕ ಅರ್ಥೋಜ್ವಲ ನವೀನ ನುಡಿಗಟ್ಟುಗಳನ್ನು ಸರ್ವಜ್ಞ ಸೃಷ್ಟಿಸಿದ್ದಾನೆ.

ಹೊಟ್ಟೆದೇವ ( ಹೊಟ್ಟೆಗಾಗಿಯೇ ಬದುಕುವವ, ಕೂಳಿಗೆ ಆಳಾದವ ವ.78)

ಕವುದಿಯನು ಹೊದ್ದಾತ ( ಭಿಕ್ಷುಕ ವ.927)

 ಬಿದ್ದ ನಡು (ಅಲಸ್ಯ),

ಊರನರಿ (ಕುತಂತ್ರಿ, ಸ್ವಾರ್ಥಿ)

ಮೋಚಿದ ಹೆಣ್ಣು ( ವಿಧವೆ )

ಮುರವಾಳ ( ಮುರಿದ ಬಾಳುವೆಯವ, ವಿದುರ )

ಅಟ್ಟಿಕ್ಕುವಾಕೆ ( ಪತ್ನಿ)

ಸೋರುಗಣ್ಣಾಕೆ (ಸ್ವಲ್ಪ ಮಾತಿಗೆ ಅಳುವಾಕೆ )

ಬಣ್ಣವನು ಬರೆವ ಸತಿ ( ನಟನೆ ಮಾಡುವಾಕೆ)

ಸಜ್ಜನೆ ( ಪಾತಿವ್ರತ್ಯ)

ಬಿದ್ದು ಬರುವವ (ಫಟಿಂಗ)

ಹೇನನ್ನು ತಿಂಬ ಹೀನ ( ಜೀನ ಕೃಪಣ )

ಗಾಳಿದೂಳಿಯ ದಿನ ( ಬೇಸಿಗೆ ಕಾಲ )

ಅಂಬರದ ಕಲಹ (ಗುಡುಗು ಸಿಡಿಲು )

ತೊಪ್ಪಲ ನೀರು ( ಮಂಜಿನ ಹನಿ )

ಈ ಪದಪುಂಜಗಳಲ್ಲಿ ಒಂದೊಂದು ವಿಧವಾದ  ಭಾವದ ಒಗರು ಅಥವಾ ಬಣ್ಣದ ಒಗರು ತಾನೆತಾನಾಗಿ ವಿಜೃಂಭಿಸಿ ಅಭಿವ್ಯಕ್ತಿಗೆ ಅಪರೂಪದ ಶಕ್ತಿ-ಕಾಂತಿಯನ್ನು ಒದಗಿಸಿದೆ.

 ಸರ್ವಜ್ಞನ ಬಳಕೆಯ ಕನ್ನಡದ ಬನಿಯೂ ಗಮನಾರ್ಹವಾಗಿದೆ.ಕನ್ನಡಿಗರಲ್ಲಿ ಮನೆಮಾಡಿರುವ ಅನೇಕ ಹಿತನುಡಿ ಅಥವಾ ಪಡೆನುಡಿಗಳು ಈತನಲ್ಲಿ ಸದ್ದಿಲ್ಲದೆ ಕಾವ್ಯದ ಪಟ್ಟಕ್ಕೇರಿವೆ. ನಿದರ್ಶನಕ್ಕೆ, ಕುಟ್ಟಿ ಹೇಳು (ಒತ್ತಿ ಹೇಳು),ಗಿಳಿಯೋದು, ಹಿತ್ತಲದ ಗಿಡ, ಕೊಳ್ಳಗಾಣು ( ಹಾಳಾಗಿ ಹೋಗು) ಕರಿಗೈ ಮತ್ತು ಕರಿಬಾಯಿ ( ಕೆಟ್ಟಕೆಲಸ ಮಾಡುವಿಕೆ ಮತ್ತು ಕೆಟ್ಟ ಮಾತಾಡುವಿಕೆ.) ಹಂಚು ಹರಿಯಾಗು (ಹಾಳಾಗು), ಆಡ ಕಾಯು ( ದನಕಾಯು,ಬುದ್ದಿಗೇಡಿ) ಇಂತಹ ನಾಡಿನ ನಾಲಗೆಯ ಮೇಲೆ ನಲಿಯುವ ನೂರಾರು ನುಡಿಗಳು ಈತನಲ್ಲಿ ತುಂಬಿ ತುಳುಕಿವೆ. ಸರ್ವಜ್ಞನ ಭಾಷೆಯ ಬಳಕೆ ಸತ್ವಯುತವೂ ಸೋಪಜ್ಞತೆಯಿಂದ ಸಮನ್ವಿತವೂ ಆಗಿದ್ದೂ ಅಭಿವ್ಯಕ್ತಿಯನ್ನು ಸಾರಭೂತ ಗೊಳಿಸಲು,ಸಫಲಗೊಳಿಸಲು ಸಹಕಾರಿಯಾಗಿದೆ.

 ಸರ್ವಜ್ಞನು ದಿನನಿತ್ಯದ  ಬದುಕಿನ ವಿವಿಧ ಕ್ಷೇತ್ರಗಳಿಂದ  ವೈವಿಧ್ಯಪೂರ್ಣವಾದ ದೃಷ್ಟಾಂತಗಳನ್ನು ಹೆಕ್ಕಿ ತರುವುದರ ಮೂಲಕ ತನ್ನ ಅನುಭವದ ಸಮೃದ್ಧಿಚಿಂತನೆಯನ್ನು ಸಾಬೀತು ಪಡಿಸಿದ್ದಾನೆ.

 ನಿದರ್ಶನಕ್ಕೆ,

 ಜಾತಿ ಹೀನರ ಮನೆಯ ಜ್ಯೋತಿ ತಾ ಹೀನವೇ

 ಯಾತರದ ಹೂವೇನು ನಾತರೇನು ಸಾಲದೇ 

 ಬೆಣ್ಣೆ, ಬೆಂಕಿಯ ನಡುವೆ ತಣ್ಣಗಿರ ಬಹುದೇ

 ಕಲ್ಲಿನೊಳಗಣ ಕಪ್ಪೆಗೆಲ್ಲಿಹರು ತಾಯ್ತಂದೆ

 ಒಂದೊಂದು ಹನಿ ಬಿದ್ದು ನಿಂದಲ್ಲಿ ಮಡುವಕ್ಕು

 ಗುರಿಯ ತಾಗದ ಬಾಣ ನೂರಾರನೆಸೆದೇನು

 ಅದೇ ರೀತಿ ಕೆಲವೆಡೆ ಒಂದೊಂದು ಪದ್ಯದಲ್ಲಿ ನಿರೂಪಿಸಿರುವ ಒಂದೊಂದು ದೃಷ್ಟಾಂತವೂ   ಸಶಕ್ತವಾಗಿದೆ. ಉಪಮೆಗಳು ಮಾಲೆ ಮಾಲೆಗಳಾಗಿ ಬಂದಿವೆ.

 ಮುತ್ತು ನೀರೊಳು ಪುಟ್ಟಿ ಮತ್ತೆ ನೀರಪ್ಪುದೆ?

 ಸತ್ಯವನರಿದ ಜ್ಞಾನಿ ಸಂಸಾರವನು

 ಮತ್ತೆ ಒದ್ದುವನೇ? ಸರ್ವಜ್ಞ.

 ತಿಳಿಯ ಕಾಸಿದ ತುಪ್ಪ ವಳಿದು ಹಾಲಪ್ಪುದೆ?

 ಕಳೆಬೆಳಗನರಿದ ಶಿವಯೋಗಿ ಸಂಸಾರ

 ದೊಳಗೆ ಸಿಲುಕುವನೆ?ಸರ್ವಜ್ಞ

 ಗಗನಕ್ಕೆ ಹೊಗೆ ಹೋಗಿ| ಮಿಗೆ ಜಗಕೆ ಬಪ್ಪುದೇ?

 ಅಘಹರನ ಪದವ ಸವಿದವನು ಸಂಸಾರ

 ದಘವ ಹೊದ್ದುವನೇ ಸರ್ವಜ್ಞ.  ಇಂತಹ ತ್ರಿಪದಿಗಳಲ್ಲಿ ಹೋಲಿಕೆಗಳು ಕೇವಲ ಅಲಂಕಾರಕ್ಕಾಗಿ ಬಂದಿಲ್ಲ. ಆಶಯದ ಪ್ರಭಾವ ಪೂರ್ಣ ಆವಿಷ್ಕಾರಕ್ಕಾಗಿ ಅಭಿವ್ಯಕ್ತಿಯ ಅಭಿನ್ನ ಅಂಗವಾಗಿ ಬಂದಿವೆ.

   ಸರ್ವಜ್ಞನ ತ್ರಿಪದಿಗಳಲ್ಲಿ ನೀತಿ ಬೋಧೆಯ ಜೊತೆಗೆ ಒಂದಿಲ್ಲೊಂದು ಬಗೆಯ ಅರ್ಥ ಸ್ವಾರಸ್ಯವಿದ್ದೇ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸರ್ವಜ್ಞನ ಕೃತಿಗೆ ಬರಿಯ ನೀತಿ ಕಾವ್ಯ ಎನ್ನಲಾಗದು. ಅನುಭವ, ನೀತಿ,ತತ್ವ, ಭಕ್ತಿ ಎಲ್ಲವೂ ಇರುವ ಜೀವನ ಸತ್ಯದ ಕಾವ್ಯ ಎಂದರೆ ಹೆಚ್ಚು ಒಳಿತು ಎಂದು ರಂ. ಶ್ರೀ ಮುಗಳಿಯವರು ಮಾರ್ಮಿಕವಾಗಿ ನುಡಿದಿದ್ದಾರೆ. ತಮಿಳಿನ ತಿರುವಳ್ಳವರ್ ಮತ್ತು ತೆಲುಗಿನ ವೇಮನರೊಡನೆ ಕನ್ನಡದ ಸರ್ವಜ್ಞನನ್ನು ಹೋಲಿಸಲಾಗಿದೆ. ಸುತ್ತಣ ಜನದ ಆಡು ಮಾತಿಗೆ ಕಾವ್ಯಭಿವ್ಯಕ್ತಿಯ ತಿರುವು ಕೊಟ್ಟು, ವ್ಯಂಗ್ಯ, ಕಟಕಿ ವಿನೋದ, ಸಹಾನುಭೂತಿ ಇತ್ಯಾದಿ ವೈವಿಧ್ಯಗಳಲ್ಲಿ, ಜನದ ಬದುಕನ್ನು ತಿದ್ದುತ್ತ ನಿಜವಾದ ಅರ್ಥದಲ್ಲಿ ಜನತೆಯ ಕವಿಯಾದ ಸರ್ವಜ್ಞನು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ಕನ್ನಡ ಜನಮನದಲ್ಲಿ ಮನೆ ಮಾಡಿಕೊಂಡಿದ್ದಾನೆ.  ಐದು ಶತಮಾನಗಳಷ್ಟು ಹಿಂದಿನ ಸಾಮಾಜಿಕ ಸಂದರ್ಭದಲ್ಲಿ ಜ್ವಲಂತ ಪ್ರಜ್ಞೆಯಿಂದ ಸ್ಪಂದಿಸಿದ ಕವಿ ಸರ್ವಜ್ಞ ತನ್ನ ಸಮಾಜ ವಿಮರ್ಶೆ,ಜೀವನ ಜಿಜ್ಞಾಸೆ ಹಾಗೂ ಕಾವ್ಯದ ಧಾಟಿ-ಧೋರಣೆಗಳಿಂದಾಗಿ ಆಧುನಿಕ ಸಂದರ್ಭದಲ್ಲೂ ಪ್ರಸ್ತುತನಾಗಿದ್ದಾನೆ. ಆತ ತನ್ನ ತ್ರಿಪದಿಗಳಲ್ಲಿ ಎರಕ ಹೊಯ್ದ ಅನುಭವ ಒಗರು-ಹೊಗರುಗಳು ಸಾರ್ವಕಾಲೀನ ಸತ್ವವನ್ನು ಒಳಗೊಂಡವುಗಳಾಗಿವೆ. ಸರ್ವಜ್ಞನು ಕಾಲಮಾತ್ರದಿಂದ ಅಂದಿನವನಾಗಿದ್ದರೂ ಮನೋಧರ್ಮ ಯುಗಧರ್ಮಗಳ ದೃಷ್ಟಿಯಿಂದ ಇಂದಿಗೂ ಸಲ್ಲುವವನಾಗಿದ್ದಾನೆ. ಸಮಕಾಲೀನ ಸಾಮಾಜಿಕ ಸಂದರ್ಭ ಹಾಗೂ ಆಚಾರ ವಿಚಾರಗಳ ವಿಕೃತ-ವಿಘಾತಕ ನಿಲುಮೆಗಳ ವಿರುದ್ಧ ಬಂಡೇಳುವಿಕೆ ಮತ್ತು ಬದುಕನ್ನು ಬರಿಯ ರೋಮಾಂಚಕವೆಂದು ಭ್ರಮಿಸದೇ ಅದರ ಕಠೋರ ವಾಸ್ತವಿಕತೆಯನ್ನು ತೆರೆದ ಕಣ್ಣಿಂದ ನೋಡುವಿಕೆ ಇವುಗಳು ಆಧುನಿಕ ಮನೋಧರ್ಮದವುಗಳಾಗಿವೆ. ಇಂತಹ ಮನೋಧರ್ಮವೇ ಸರ್ವಜ್ಞನನದಾಗಿರುವುದರಿಂದ ಅವನ ಬೋಧೆಗಳು ಇಂದಿಗೂ ಪ್ರಸ್ತುತವಾಗಿವೆ. ಸರ್ವಜ್ಞನು ಸಂಕುಚಿತ ಪರಂಪರೆಯ ಜಾಡನ್ನು ಬಿಟ್ಟು ಹೊಸ  ಹಾದಿಯನ್ನು ತುಳಿದ ಹಿಂಡನಗಲಿದ ಗಜವಾಗಿ ಮೆರೆದು ಕ್ರಾಂತಿಕಾರಿ ಕವಿ ಎನಿಸಿಕೊಂಡಿದ್ದಾನೆ.  ಅನುಭವಿಯ ವೇದವೇ ವೇದದ ಸಾರವೆಂದು ಒಂದು ಸಂದರ್ಭದಲ್ಲಿ ಸಾರಿದ ಸರ್ವಜ್ಞನ ಸಾರೋಕ್ತಿ ಸಮಗ್ರ ಸಾಹಿತ್ಯದ ಮಾತ್ರವಲ್ಲ ಸರ್ವಜ್ಞ ಸಾಹಿತ್ಯದ ಜೀವಾಳವನ್ನೇ ತೋರಿಸುವಂತಹದ್ದಾಗಿದೆ. ತಾನು ಕಂಡುಂಡ ಅನುಭವ, ತನ್ನ ಹೃದಯ-ಮನದಲ್ಲೆದ್ದ ಭಾವನೆ, ಚಿಂತನೆಗಳಿಗೆಲ್ಲಾ ಆಕಾರ ನೀಡ ಬಲ್ಲ ಸರ್ವಜ್ಞನ ಸಾಹಿತ್ಯಕ ವಿಶೇಷತೆಯೇ ಇಂದಿಗೂ ಅವಶ್ಯಕವಾಗಿರುವುದು. ಈತ ಕುರುಡು ಸಾಂಪ್ರದಾಯಿಕತೆಗೆ ಶರಣಾಗದೇ ಭಾಷೆಯ ಬಳಕೆ, ಛಂಸ್ಸಿನ ಆಯ್ಕೆಯಲ್ಲಿ ಜಾನಪದ ಸತ್ವವನ್ನೇ ಹೆಕ್ಕಿ, ಹೆಕ್ಕಿ ಒಕ್ಕಿ ಕನ್ನಡದ ಕಣಜವನ್ನು  ಶ್ರೀಮಂತಗೊಳಿಸಿ ತ್ರಿಪದಿಯ ಸಾರ್ವಭೌಮ ಎಂದೆನಿಸಿದ್ದಾನೆ. ಯಾರೂ ಕಣ್ಣೆತ್ತಿ ನೋಡದಂತಹ ಅಲಕ್ಷಕ್ಕೆ ಒಳಗಾಗಿದ್ದ ಜಾನಪದ ಕಾವ್ಯ ರೂಪ ತ್ರಿಪದಿಯು ಸರ್ವಜ್ಞನ ಅಭಿಜಾತ  ಪ್ರತಿಭೆಯ ಪರುಷ ಸ್ಪರ್ಷದಿಂದ ಸುವರ್ಣಕಣವಾಗಿ ಪರಿವರ್ತಿತವಾಗಿ ಸಾಹಿತ್ಯ ರೂಪದ ತ್ರಿಪದಿಯಾಗಿ  ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ.                                 

 ಪರಾಮರ್ಶನ ಗ್ರಂಥಗಳು

1. ಸರ್ವಜ್ಞನ ವಚನಗಳು ಸಂ: ಉತ್ತಂಗಿ ಚೆನ್ನಪ್ಪ

  ಧಾರವಾಡ

2. ಎಸ್.ಶಿವಣ್ಣ: ಬಿಡುಮುತ್ತು

   ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 2004

3. ಪರಮಾರ್ಥ ಸಂ: ಎಲ್. ಬಸವರಾಜು

   ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 1972

4. ಸರ್ವಜ್ಞ ಒಂದು ಸಮೀಕ್ಷೆ: ಸಂ: ಜಿ.ಎಸ್.ಶಿವರುದ್ರಪ್ಪ

    ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 1975

೫. ಎ.ಆರ್.‌ ಕೃಷ್ಣಶಾಸ್ತ್ರಿ:  ಸರ್ವಜ್ಞ

   ಪ್ರಚಾರೋಪನ್ಯಾಸಮಾಲೆ,ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ

೬.ಎಂ.ಅಕಬರ ಅಲಿ: ಸರ್ವಜ್ಞನ ಸಮಾಜದರ್ಶನ ಮತ್ತು ಸಾಹಿತ್ಯ ತತ್ವ

       ಕನ್ನಡ ಸಾಹಿತ್ಯ ಪರಿಷತ್‌, ೧೯೭೮

೭.ರಂ.ಶ್ರೀ,ಮುಗುಳಿ, ಕನ್ನಡ ಸಾಹಿತ್ಯ ಚರಿತ್ರೆ

  ಉಷಾ ಸಾಹಿತ್ಯ ಮಾಲೆ, ಮೈಸೂರು, ೧೯೬೮

 

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...