ಶನಿವಾರ, ಡಿಸೆಂಬರ್ 2, 2023

 

ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ

                                   ಡಾ.ಸಿ.ನಾಗಭೂಷಣ

 

    ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಕುರಿತ ಸಂಶೋಧನಾ ಕ್ಷೇತ್ರದಲ್ಲಿ ಆದ ಸಾಧನೆಯು ಮಹತ್ತರತೆಯನ್ನು ಪಡೆದಿದೆ. ಆ ಕಾಲದ ಸಂಶೋಧನೆಯನ್ನು ಒಮ್ಮೆ ಅವಲೋಕಿಸಿದರೆ ಬೆರಗುಗೊಳ್ಳುವಷ್ಟು ಕೆಲಸ ನಡೆದಿದೆ. ಆರಂಭದ ಕಾಲಘಟ್ಟದಲ್ಲಿ ವಿದೇಶಿ ವಿದ್ವಾಂಸರಿಂದ ಆರಂಭವಾದ ಈ ಕ್ಷೇತ್ರದಲ್ಲಿ ನಂತರ ಕಾಣಿಸಿಕೊಂಡ ದೇಶೀಯ ವಿದ್ವಾಂಸರ ಸೇವೆ ಅನುಪಮವಾದುದು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳು ನಡೆದಿದ್ದು ಪ್ರಾಚೀನ ಮತ್ತು ನಡುಗನ್ನಡ ಸಾಹಿತ್ಯದ ಶೋಧ, ಗ್ರಂಥಸಂಪಾದನೆ, ಹಸ್ತಪ್ರತಿಗಳ ಸಂಗ್ರಹಣೆ, ಅಧ್ಯಯನ ಮುಂತಾದ ಮಹತ್ಕಾರ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದು, ಇಂತಹ ವಿದ್ವತ್ ಪೂರ್ಣ ವ್ಯಕ್ತಿಗಳ ಸಾಲಿನಲ್ಲಿ ಎಲ್.ಬಸವರಾಜುರವರು ಪ್ರಮುಖರಾಗಿದ್ದಾರೆ. ಇವರು ನಮ್ಮ ಪರಂಪರೆ ಹಾಗೂ ಸಂಪ್ರದಾಯದ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿರುವ ಜೊತೆಗೆ ಸಂಸ್ಕೃತಿ ಚಿಂತಕರಾಗಿಯೂ ವೈಚಾರಿಕತೆ ಉಳ್ಳವರಾಗಿಯೂ  ತಮ್ಮನ್ನು ತಾವು ಗುರುತಿಸಿಕೊಂಡಿದ್ದವರು. ಗತಕಾಲದ ಘಟನೆಗಳನ್ನು ಮೆಲುಕು ಹಾಕುತ್ತ ಸಮಕಾಲೀನ ಸಂದರ್ಭದ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕೆಂಬ ಹಂಬಲವುಳ್ಳವರೂ ಆಗಿದ್ದವರು. ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ವಿದ್ವಾಂಸ, ಕವಿ, ದಿಟ್ಟ ವಿಚಾರಶೀಲರು. ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರು ಅಪ್ಪಟ ಮಾನವತವಾದಿ. ಜಾತಿ, ಕಂದಾಚಾರ, ಪುರೋಹಿತಷಾಹಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಬಂದ ಬಸವಣ್ಣ ಮತ್ತು ಸಮಕಾಲೀನ ಶರಣರ ಚಿಂತನೆಗಳನ್ನು  ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು.  ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯ-ಸಿದ್ಧಾಂತಗಳ ಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ಕಳೆದವರು.ಕನ್ನಡ ಸಾಹಿತ್ಯದ ಸಾರಸ್ವತ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಎಲ್.ಬಸವರಾಜುರವರು ತಮ್ಮ ಸಾಹಿತ್ಯಕ ಸಾಧನೆಯ ಮೂಲಕ, ಮುಂದಿನ ಅಧ್ಯಯನಕಾರರಿಗೆ ಮಾದರಿಯಾಗಿದ್ದಾರೆ.

    ಕನ್ನಡ ಸಾಹಿತ್ಯ ವಿದ್ವತ್ ಪರಂಪರೆಯ ಸುಪ್ರಸಿದ್ದ ಸಂಶೋಧಕರೂ, ವಿದ್ವಾಂಸರು, ಅಧ್ಯಯನಶೀಲರೂ ಆದ ಎಲ್.ಬಸವರಾಜುರವರು ಹಳಗನ್ನಡ ಸಾಹಿತ್ಯದ ಬಗ್ಗೆ ಹಾಗೂ ಶಾಸ್ತ್ರ ಸಾಹಿತ್ಯದ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲರು. ಎಲ್.ಬಸವರಾಜು ಅವರು ತಮ್ಮ ಜೀವಿತದುದ್ದಕ್ಕೂ ಸಂಶೋಧನೆ-ಸಂಪಾದನೆ-ಅನುವಾದ-ವ್ಯಾಖ್ಯಾನ-ಸರಳಾನುವಾದ-ಸೃಜನಶೀಲಬರೆವಣಿಗೆಯಲ್ಲಿ ಸಕ್ರೀಯ ವಾಗಿ ತೊಡಗಿ ಕೊಂಡಿದ್ದವರು.ಆಧುನಿಕ ಪೂರ್ವ ಸಾಹಿತ್ಯ, ಶಾಸ್ತ್ರ ಸಾಹಿತ್ಯ, ವಚನಶಾಸ್ತ್ರ ಮತ್ತು ಸಂಪಾದನಾ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ವಿದ್ವತ್ ಲೋಕದ ಬಂಡಾಯಗಾರ ರಾದ ಇವರ ಸಂಶೋಧನೆಯಾಗಲಿ, ಸೃಜಲಶೀಲ ಬರವಣಿಗೆಯೇ ಆಗಲಿ ಕೇವಲ ಬರವಣಿಗೆಗಾಗಿ ಸಂಶೋಧನೆಯನ್ನು ಕೈಗೊಳ್ಳದೆ. ಸಂಶೋಧನೆಯಿಂದ ಹೊಮ್ಮುವ ವಿಚಾರಗಳು ಜನಸಾಮಾನ್ಯನ್ನು ತಲುಪಬೇಕು. ಮೂಲಕ ಭೂತ ಕಾರಣಕ್ಕಾಗಿ ಭವಿಷ್ಯದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ವರ್ತಮಾನದಲ್ಲಿ ಪರಿಹಾರವನ್ನು ಸೂಚಿವಂತಿರಬೇಕು. ಜನತೆಯ ಭಾವಸ್ತಂಭವನ್ನು ಕದಡೆದೆ ಸತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ದಿವಾಗಿ ನಂಬಿದ್ದರು. ಇದೇ ನಿಜವಾದ ಜನಮುಖಿ ವಿದ್ವಾಂಸನೊಬ್ಬನ ಸಾಮಾಜಿಕ ಕಳಕಳಿ. ಎಲ್.ಬಸವರಾಜು ರವರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯು ವೈಭವದ ಕಾಲಘಟ್ಟದ ಸಾಂಸ್ಥಿಕ ನೆಲೆಯಲ್ಲಿ ಸಾಹಿತ್ಯ ಚರಿತ್ರೆ, ಛಂದಸ್ಸಿನ ಚರಿತ್ರೆ, ಕನ್ನಡ ವಿಶ್ವಕೋಶ ಎಪಿಗ್ರಫಿಯ ಕರ್ನಾಟಕ, ಗ್ರಂಥ ಸಂಪಾದನೆ, ಭಾಷಾಂತರ ಹೀಗೆ ಹಲವು ಯೋಜನೆಗಳಲ್ಲಿ ಬಿಡುವಿಲ್ಲದಂತೆ  ಸಂಸ್ಥೆಯ ಅಧ್ಯಾಪಕ ವರ್ಗ, ಶೈಕ್ಷಣಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿತ್ತು. ಮೂಲತ: ಸ್ವತಂತ್ರ ಮನೋಧರ್ಮ ಉಳ್ಳವರಾಗಿದ್ದ ಎಲ್.ಬಸವರಾಜು ರವರು ಒಂಟಿ ಸಲಗದಂತೆ ತನ್ನ ಸ್ವ ಚ್ಛಾಶಕ್ತಿಯಂತೆ ಸಾಂಸ್ಥಿ ಯೋಜನೆಗೆ ಸಮಾನಾಂತರವಾದ  ಉನ್ನತ ಮಟ್ಟದ, ಸಂಶೋಧನೆಯನ್ನು ವಚನ ಸಾಹಿತ್ಯ, ಪ್ರಾಚೀನ ಸಾಹಿತ್ಯಪಠ್ಯಗಳ ಸಂಪಾದನೆ ಮತ್ತು ಸಂಶೋಧನೆಯ ಕಾರ್ಯಯೋಜನೆಯನ್ನು ವೈಯಕ್ತಿಕ ನೆಲೆಯಲ್ಲಿ ರೂಪಿಸಿ, ಅದರಲ್ಲಿ ತಮ್ಮನ್ನು ಶ್ರದ್ಧೆ ಮತ್ತು ಪರಿಶ್ರಮದಿಂದ ತೊಡಗಿಸಿಕೊಂಡು ಹೊಸ ದಾಖಲೆಗಳನ್ನು ಸೃಷ್ಟಿಸಿದ್ದು ಚಾರಿತ್ರಿಕವಾಗಿ ವಿಶೇಷ. ತಮ್ಮ ಅವಿರತ  ಶ್ರದ್ಧೆ ಮತ್ತು ಪರಿಶ್ರಮದಿಂದ, ಕನ್ನಡ ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ಚಾರಿತ್ರಿಕವಾಗಿ ಹುಟ್ಟು ಹಾಕಿದರು. ನೇರ ನಡೆ-ನುಡಿ, ಸ್ವತಂತ್ರ ಪ್ರವೃತ್ತಿ ಹಾಗೂ ಅವಿರತ ಪರಿಶ್ರಮ ಮೂರು ಎಲ್.ಬಸವರಾಜು ಇವರ ವಿಶೇಷವಾದ ಗುಣಗಳು. ಹಾಗಾಗಿ ಇವರ ಸಂಪಾದನೆ ಮತ್ತು ಸಂಶೋಧನೆಗಳು ಆಧುನಿಕ ಕನ್ನಡ ಗ್ರಂಥ ಸಂಪಾದನೆಯ ವೈಜ್ಞಾನಿಕ ವಿಧಿ-ವಿಧಾನಗಳ ಕ್ರಮವನ್ನು ಅನುಸರಿಸಿವೆ. ಕನ್ನಡ ಸಂಶೋಧನಾ ಸಾಹಿತ್ಯದಲ್ಲಿ ಎಲ್.ಬಸವರಾಜುರವರ ರೀತಿ ಶಾಸ್ತ್ರೀಯವಾಗಿ ಗ್ರಂಥ ಸಂಪಾದನೆಯನ್ನು ಕೈಗೊಂಡವರು ತೀರಾ ವಿರಳ ಎಂದು  ಹೇಳಬೇಕಾಗುತ್ತದೆ. ಇವರು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ವೈಜ್ಞಾನಿಕವಾದ ಪರಿಷ್ಕರಣೆ ಖಚಿತ ಮೂಲ ಪಾಠ ಸಂಗ್ರಹ ಹಾಗೂ ತಮ್ಮ ಸ್ಪಷ್ಟ ನಿಲುವುಗಳಿಂದ ಇತರರಿಗಿಂತ ತೀರಾ ಭಿನ್ನರಾಗಿ ಕಾಣಿಸುತ್ತಾರೆ. ಹಾಗಾಗಿಯೇ ಎಲ್. ಬಸವರಾಜುರವರನ್ನು ಸರಳ, ನೇರ, ನಿಷ್ಠುರವಾದಿ ಎಂದು ಕರೆಯುತ್ತಾರೆ. ಹತ್ತಾರು ಜನ ಸಂಶೋಧಕರು ಸೇರಿ ಸಾಂಸ್ಥಿಕವಾಗಿ ಸಂಪಾದಿಸಿ ಪ್ರಕಟಿಸುವಷ್ಟು ಕೃತಿಗಳನ್ನು ಒಬ್ಬರೆ ಏಕಾಂಗಿಯಾಗಿ ಪ್ರಕಟಿಸಿರುವುದನ್ನು ನೋಡಿದರೆ ಇವರ ವಿದ್ವತ್ತಿನ ಅಗಾಧತೆ ಎಂತಹದ್ದು ಎಂಬುದು ಎಲ್ಲರಿಗೂ ಮನವರಿಕೆ ಆಗುವಂತಹದ್ದು. ನಮ್ಮ ಕಾಲದ ಸಾಹಿತ್ಯ ಅಧ್ಯಯನಕಾರರು  ಎಲ್.ಬಸವರಾಜು ರಂತಹ ವಿದ್ವಾಂಸರು ಕೊಡ ಮಾಡಿದ ಹಳಗನ್ನಡ, ನಡುಗನ್ನಡ ಕಾಲದ ಸಾಹಿತ್ಯದ ಪ್ರಜ್ಞಾಪೂರ್ಣ ಕೊಡುಗೆಯನ್ನು ಇಂದಿನ ಬರವಣಿಗೆಯಲ್ಲಿ ಆಕರ ಮತ್ತು ಪರಾಮರ್ಶನವಾಗಿ ಅವೆಲ್ಲವುಗಳನ್ನು ಬಳಸಿಕೊಂಡು ಸಂಶೋಧನಾ ವ್ಯಾಸಂಗದ ತಳಹದಿಯಲ್ಲಿ ಸತ್ಯದ ಸಮೀಪಕ್ಕೆ ಬರುವಂತಾಗಲು ಸಹಕಾರಿಯಾಗಿದೆ. ಹೀಗಾಗಿ ಕವಿಚರಿತೆಕಾರರನ್ನು ಒಳಗೊಂಡಂತೆ ಸಾಹಿತ್ಯ-ಸಂಸ್ಕೃತಿಯ ಶೋಧದಲ್ಲಿ ಗಣನೀಯವಾದ ಕಾರ್ಯದಲ್ಲಿ ತೊಡಗಿದ್ದ ಮತ್ತು ಪ್ರಸ್ತುತ ಅದರಲ್ಲಿ ತಮ್ಮ ಜೀವನವನ್ನು ಸವೆಸಿದ ದೇಸಿಯ ವಿದ್ವಾಂಸರಲ್ಲಿ ಇವರು ಪ್ರಮುಖರು. ಹಳಗನ್ನಡ ನಡುಗನ್ನಡ ಸಾಹಿತ್ಯ ಕೃತಿಗಳನ್ನು ಕವಿ-ಕಾಲ ವಿಚಾರವನ್ನು ಗುಣಾತ್ಮಕವಾಗಿ ಶೋಧಿಸುವುದರೊಂದಿಗೆ ಇಂದು ನಾವೆಲ್ಲಾ ಹಳಗನ್ನಡ ಮತ್ತು ನಡುಗನ್ನಡದ ಕಾಲದ ಕವಿ-ಕೃತಿಗಳನ್ನು ಸುಲಭವಾಗಿ ಓದಲು ಅನುಕೂಲವಾಗುವಂತೆ ವ್ಯವಸ್ಥಿತವಾದ  ಕೃತಿಗಳನ್ನು ಸಂಪಾದಿಸಿ  ಒದಗಿಸಿಕೊಟ್ಟಿದ್ದಾರೆ. ಒಂದು ವೇಳೆ ಪ್ರಾಚೀನಕನ್ನಡ ಕಾವ್ಯಗಳ ಸಂಪಾದನೆ  ಆಗದಿದ್ದಲ್ಲಿ ಕಾವ್ಯಗಳ ಓದು, ವಿಮರ್ಶೆ, ಚರ್ಚೆಯೇ ಆಗುತ್ತಿರ ಲಿಲ್ಲವೇನೋ ಎಂದೆನಿಸುತ್ತದೆ. ಇವರು ಆಯ್ದುಕೊಂಡ ಸಂಶೋಧನಾ ಕ್ಷೇತ್ರವು ಯಾವುದೇ ರೀತಿಯ ಲಾಭವನ್ನು, ದಿಡೀರ್ ಕೀರ್ತಿಯನ್ನು ತಂದು ಕೊಡುವಂತಹದ್ದಲ್ಲ. ಇವತ್ತು ಎಲ್.ಬಸವರಾಜು ರಂತಹ ವಿದ್ವಾಂಸರ ಆಸ್ತಿ ಎಂದರೆ ಈಗಾಗಲೇ ಪಂಡಿತರು ಮತ್ತು ಸಾಮಾನ್ಯ ಓದುಗ ವರ್ಗಕ್ಕೆ ನೀಡಿರುವ ಹಳಗನ್ನಡ, ನಡುಗನ್ನಡ ಮತ್ತು ಶಾಸ್ತ್ರ ಕೃತಿಗಳು ಎಂದರೆ ತಪ್ಪಾಗಲಾರದು.

   ಎಲ್.ಬಸವರಾಜು ಅವರನ್ನು ಕಂಡರೆ ಆಗದವರು ಕೂಡ ಅವರ ಶೈಕ್ಷಣಿಕ ಸಾಧನೆಗಳಿಗೆ ಮೌನವಾಗಿ ಮನ್ನಣೆ ಕೊಡುತ್ತಿದ್ದರು. ಹೀಗಿದ್ದರೂ ಪ್ರೊ.ಎಲ್.ಬಸವರಾಜು ಅವರು ಎಂದೂ ತಮ್ಮ ಸಾಧನೆಯ ಬಗ್ಗೆ ಅಹಂಕಾರ ಪಟ್ಟುಕೊಳ್ಳಲಿಲ್ಲ.ʻನಾನೇನು ಮಾಡಿದೆ, ನೋಡಿ ಇದು ನನ್ನಿಂದಾದುದಲ್ಲ; ದೈವಕೃಪೆ ಎಂದು ವಿನೀತಭಾವದಿಂದ ನುಡಿಯುತ್ತಿದ್ದರು. ತರಗತಿಗಳಲ್ಲಿಯ ಅವರ ಉಪನ್ಯಾಸಗಳು ತಿಳಿಯಾದ ಹಾಸ್ಯ, ಏರಿಳಿತಗಳಿಂದ ಕೂಡಿದ ಮಾತಿನ ಶೈಲಿ, ವಿಷಯದ ಹೂರಣ, ನಿಷ್ಠುರ, ನೇರ, ನಿರ್ಭೀತ ಮಾತುಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊಳ್ಳುವಂತೆ ಇರುತ್ತಿದ್ದವು ಎಂಬುದರ ಬಗೆಗೆ ಅವರ ವಿದ್ಯಾರ್ಥಿಗಳ ಅನಿಸಿಕೆ. ಎಷ್ಟು ಶಾಂತವಾಗಿರುತ್ತಿದ್ದರೋ, ಸಂದರ್ಭ ಬಂದಾಗ ಅಷ್ಟೇ ಸಿಟ್ಟು, ಸೆಡವು, ಆಕ್ರೋಶಕ್ಕೆ ಒಳಗಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಸಣ್ಣವರು, ದೊಡ್ಡವರು, ವಿದ್ವಾಂಸರು, ಅಧಿಕಾರಿಗಳು, ಗಣ್ಯವ್ಯಕ್ತಿಗಳು, ಸ್ವಾಮಿಗಳು ಹೀಗೆ ಅವರಿವರೆನ್ನದೆ ಎಲ್ಲರ ಮೇಲು ಹರಿಹಾಯುತ್ತಿದ್ದರು. ಇದರಿಂದಾಗಿ ಅವರು ಎಷ್ಟೋ ಜನರಿಂದ ದೂರವಾಗಿದ್ದರು. ನಿಷ್ಠುರ ಕಟ್ಟಿಕೊಂಡಿದ್ದರು. ಎಂತಹ ಅವಕಾಶ ತಪ್ಪಬಹುದಾದರೂ ಅವರು ಅದಕ್ಕೆ ಲಕ್ಷಿಸುತ್ತಿರಲಿಲ್ಲ.

   ಅವರ ಪ್ರಕಾರ ವಿದ್ವತ್‌ ಪಾಂಡಿತ್ಯವೆಂದರೆ ಕೇವಲ ವಿಷಯ ರಾಶಿಯನ್ನು ಸಂಗ್ರಹಿಸುವುದು ಮಾತ್ರವಲ್ಲ. ಅದರ ಜೊತೆಗೆ ಆ ವಿವಿಧ ವಿಷಯಗಳಲ್ಲಿ ಮರೆಯಾಗಿರುವ ಸಂಬಂಧಗಳನ್ನು ಊಹಿಸಿ, ಗ್ರಹಿಸಿ, ಎಳೆಗಳ ತೊಡಕುಗಳನ್ನು ಬಿಡಿಸಿ ಕೂಡಿಸಿ ತತ್ವವನ್ನು ಬೆಳಗುವ ಸಂಯೋಜಕ ಪ್ರತಿಭೆಯನ್ನು ಪ್ರಮುಖವಾಗಿ ಉಳ್ಳವರಾಗಿರಬೇಕು. ಕನ್ನಡದ ಪ್ರತಿಮಾತಿನ ಜೀವ ಜೀವಾಳವನ್ನು ಹುಡುಕುವ ಮನೋಧರ್ಮ ದವರಾಗಿರಬೇಕು. ಒಬ್ಬ ಮನುಷ್ಯ ವಿಮರ್ಶಕನೂ ಶೋಧಕನೂ ಕವಿಚರಿತ್ರೆಕಾರನೂ ವ್ಯಾಕರಣ, ಛಂದಸ್ಸು ಇವುಗಳ ಅಧ್ಯಯನಕಾರನೂ ವೈಜ್ಞಾನಿಕ ಮನೋಭಾವವುಳ್ಳವನೂ ಆಗಬೇಕಾದರೆ ಮೊದಲಿಗೆ ಆತನು ಸಾಹಿತಿಯೂ ರಸಜ್ಞನೂ ಆಗಿರಬೇಕೆಂಬುದಕ್ಕೆ  ಎಲ್.ಬಸವರಾಜುರವರೇ ಒಳ್ಳೆಯ ನಿದರ್ಶನ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆಗಳ ಸಂವರ್ಧನೆಗಾಗಿಯೇ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಅವರ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥದು. ಇವರ ಸಂಶೋಧನೆಯು ಕವಿ ಕಾಲ ವಿಚಾರ, ಛಂದಸ್ಸು ಭಾಷೆ. ಸಂಸ್ಕೃತಿಗಳ ಹಿನ್ನಲೆಯಲ್ಲಿ ಹಾಗೂ ಕ್ಲಿಷ್ಟ ಪದಗಳ ಅರ್ಥ ನಿರ್ಣಯ ಹಾಗೂ ನಿಷ್ಪತ್ತಿ, ವ್ಯಾಖ್ಯಾನ, ಸರಳಾನುವಾದ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವುದನ್ನು ಇವರ ಸಂಶೋಧನಾ ಲೇಖನಗಳ ಮೂಲಕ ಮನಗಾಣಬಹುದಾಗಿದೆ.

     ಅವರ ಪಾಂಡಿತ್ಯದ ಕಠಿಣ ಪರಿಶ್ರಮ ಮತ್ತು ಆಧುನಿಕ ಸಂವೇದನೆಯ ಸೃಜನಶೀಲತೆ ಇವೆರಡನ್ನೂ ಒಟ್ಟಿಗೆ ಮೈಗೂಡಿಸಿಕೊಂಡವರು. ವಿಶಿಷ್ಟ ಗುಣದಿಂದಾಗಿ ಪ್ರಾಚೀನ ಕೃತಿಗಳನ್ನು ಆಧುನಿಕತೆಯ ಬೆಳಕಿನಲ್ಲಿ ಕಂಡಿರಿಸಿದವರು. ಪ್ರಾಚೀನ ಕೃತಿಗಳನ್ನು ನೋಡಬೇಕಾದ ಹೊಸ ದೃಷ್ಟಿಯೊಂದನ್ನು ರೂಪಿಸಿದವರು.  ಕನ್ನಡದಲ್ಲಿ ಸಂಶೋಧನೆ ಎಂಬ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡು ಅದರಲ್ಲಿ ಯಶಸ್ಸು ಕಂಡವರಲ್ಲಿ ಎಲ್.ಬಸವರಾಜುರವರು ಸಹ ಒಬ್ಬರು. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹಸ್ತಪ್ರತಿಗಳಲ್ಲಿ, ಹಳೆಯ ಕಡತಗಳಲ್ಲಿ ಅಧ್ಯಯನ ಶೀಲರಾಗಿದ್ದರು. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಅವರು ಹಳೆಯ ಪಂಡಿತರ ಮಧ್ಯೆ ಪ್ರಿಯರಾಗುವುದಿಕ್ಕಿಂತ ಹೆಚ್ಚಾಗಿ, ಹೊಸ ತಲೆಮಾರಿನ ಯುವಕರ ಮಧ್ಯೆ ಪ್ರಿಯರಾಗಿದ್ದರು. ಅವರು ಒಂದೊಂದು ಸಂಪಾದಿತ ಗ್ರಂಥಕ್ಕೂ ಬರೆದಿರುವ ಪ್ರಸ್ತಾವನೆಗಳು, ವಿಷಯಕ್ಕೆ ಸಂಬಂಧಿಸಿದ ಆಕರ ಸಂಗ್ರಹ, ನಿಖರವಾದ ಮತ್ತು ಹರಿತವಾದ ವಿಶ್ಲೇಷಣೆ, ವಿಮರ್ಶೆ, ಟಿಪ್ಪಣಿಗಳು, ಖಚಿತವಾದ ಅಭಿಪ್ರಾಯ, ಸ್ಪಷ್ಟ ನಿಲುವು, ಪ್ರಗತಿಪರ ಧೋರಣೆಗಳಿಂದಾಗಿ ಸಂಶೋಧನೆ ಎಂದರೆ ಹೀಗಿರಬೇಕು ಎಂಬ ಹೆದ್ದಾರಿಯೊಂದನ್ನು ತೆರೆದು ತೋರಿಸಿದವರು ಬಸವರಾಜುರವರೇ ಎಂದರೆ ತಪ್ಪಾಗಲಾರದು. ಪ್ರಾಚೀನ ಕೃತಿಗಳ ಸಂಪಾದನೆ, ಪರಿಷ್ಕರಣೆ, ಸರಳ ನಿರೂಪಣೆ, ಅನುವಾದ- ಹೀಗೆ ಅವರ ಪ್ರಬುದ್ಧ ವಿದ್ವತ್‌ ಕ್ರಿಯೆಗೆ ಕನ್ನಡ ಮನಸ್ಸು ಮಣಿದಿದೆ. ಅವರ ಬಹುಮುಖ್ಯ ಕಾಳಜಿ ಪ್ರಾಚೀನ ಕೃತಿಗಳ ವಿದ್ವತ್‌ ಪೂರ್ಣ ಗ್ರಂಥ ಸಂಪಾದನೆಯಷ್ಟೇ ಅಲ್ಲ, ಅವುಗಳ ಸಾರಸತ್ವವು ಸಾಮಾನ್ಯ ಓದುಗರಿಗೆ ತಲುಪಬೇಕೆಂಬುದಾಗಿತ್ತು. ಹೀಗಾಗಿ ಅವರು ಪ್ರಾಚೀನ ಕೃತಿಗಳನ್ನು ಬಹು ಆಯಾಮದ ನೆಲೆಗಳಲ್ಲಿ ರೂಪಿಸಿಕೊಟ್ಟಿದ್ದಾರೆ. ಇದಕ್ಕೆ ಒಂದು ಮುಖ್ಯ ಉದಾಹರಣೆಯೆಂದರೆ ಮಹಾಕವಿ ಪಂಪನ ಕೃತಿಗಳು. 'ಆದಿಪುರಾಣ'ದ ಸಂಪಾದನೆಯ ಜತೆಗೆ 'ಸರಳ ಆದಿಪುರಾಣ'ವನ್ನು ಕೊಟ್ಟಿದ್ದಾರೆ. ಪಂಪಭಾರತದ ವಿಷಯದಲ್ಲೂ ಹೀಗೇ ಕೆಲಸ ಮಾಡಿದ್ದಾರೆ. ಮೂಲ ಸಂಪಾದಿತ ಕೃತಿಯ ಜತೆಗೆ 'ಸರಳ ಪಂಪಭಾರತ'ವನ್ನು ರೂಪಿಸಿದ್ದಾರೆ. ಆದಿಪುರಾಣ ಮತ್ತು ಪಂಪಭಾರತಗಳನ್ನು ಕ್ರಮವಾಗಿ 'ಪೂರ್ವ ಪುರಾಣ' ಮತ್ತು 'ವ್ಯಾಸಭಾರತ'ಗಳ ಜತೆ ಹೋಲಿಸಿ, ತೌಲನಿಕ ನೋಟವನ್ನು ನೀಡಿದ್ದು ಸಹ ಇಲ್ಲಿ ಉಲ್ಲೇಖನೀಯ. ಹೀಗೆ ವಿದ್ವತ್‌ ವಲಯದ ಕ್ರಿಯಾ ವಿಸ್ತರಣೆ ಮಾಡುತ್ತಲೇ ಸಾಮಾನ್ಯ ಸಹೃದಯರ ಜತೆ ಸಂಬಂಧ ಸ್ಥಾಪಿಸುವ ಹಂಬಲಕ್ಕನುಗುಣವಾಗಿ ಸರಳ ಪಠ್ಯ ವಿನ್ಯಾಸಗಳನ್ನು ರೂಪಿಸುವಲ್ಲಿ ಬಸವರಾಜು ಅವರ ಜನಮುಖಿ ಆಶಯ ಅಭಿವ್ಯಕ್ತಗೊಂಡಿರುವುದನ್ನು ನಾವು ಕಾಣಬಹುದಾಗಿದೆ.

 ಎಲ್.ಬಸವರಾಜು ಅವರ ಸಂಶೋಧನಾ  ಬೆಳವಣಿಗೆಗಳನ್ನು ಗಮನಿಸಿದಾಗ ಎರಡು ಅಂಶಗಳು ಸ್ಪಷ್ಟವಾಗಿ ಕಂಡು ಬರುತ್ತವೆ.

೧. ಅವರ  ಸಂಶೋಧನಾ ಲೇಖನಗಳು ಯಾವುದೋ ಒಂದು  ಧರ್ಮಕ್ಕೆ ಸೀಮಿತವಾಗದೆ ಮುಕ್ತ ಅಭಿವ್ಯಕ್ತಿಯ ಪ್ರಜಾಸತ್ತಾತ್ಮಕ ಹಾಗು ಶಾಸ್ತ್ರೀಯ ಸ್ವರೂಪವನ್ನು ಹೊಂದಿರುವುದು.  ಇದಕ್ಕೆ ನಿದರ್ಶನವಾಗಿ ಬುದ್ಧನನ್ನು, ಪಂಪನನ್ನು, ವಚನ ಸಾಹಿತ್ಯವನ್ನು ಹಾಗೂ ಶಾಸ್ತ್ರಕೃತಿಗಳನ್ನು ಕುರಿತ ಅವರ ಸಂಶೋಧನಾ ಲೇಖನಗಳೇ ನಿದರ್ಶನ.

೨. ಅವರ ಸಂಶೋಧನಾ ವಿಷಯಗಳ ಹರವನ್ನು ಗಮನಿಸಿದರೆ ಯಾರಿಗಾದರೂ ದಿಗ್‌ಭ್ರಮೆ ಮೂಡಿಸುತ್ತದೆ. ಒಂದುಸಂಸ್ಥೆಯು ಸಾಂಸ್ಥಿಕವಾಗಿ  ಮಾಡಬಹುದಾದ ವ್ಯಾಪ್ತಿಯನ್ನು ಹೊಂದಿದೆ. ದ.ರಾ.ಬೇಂದ್ರೆ ಇವರ ಸಂಶೋಧನಾ ಬರವಣಿಗೆಯನ್ನು ಕುರಿತು ಹೇಳಿರುವ “ಬಸವರಾಜು ಅವರ ಸಂಪಾದನೆ ಸ್ವಾಗತಾರ್ಹ.ಏಕಾಂಗ ವೀರ ಏನು ಪರಿಶ್ರಮ ಪಡಬಲ್ಲ ಎಂಬುದರ ಸಂಕೇತ”,  ಎಂಬ ಮಾತುಗಳು  ಗಮನಾರ್ಹವಾಗಿವೆ. ಎಲ್.ಬಸವರಾಜು ಅವರು ನಮ್ಮನ್ನು ಅಗಲುವ ಮುನ್ನ ಅಂದರೆ, ಅವರು ಕನ್ನಡ ಜನತೆಗೆ ಹೇಳಿದ ಮೂರು ಮಾತುಗಳು ವಿಶಿಷ್ಟವಾಗಿವೆ ಮತ್ತು ಈಗಲೂ ಅವು ಪ್ರಸ್ತುತವಾಗಿವೆ.

೧. ಸರಸ್ವತಿ ಕಷ್ಟದಲ್ಲಿದ್ದಾಳೆ ಆಕೆಗೆ ತೊಂದರೆ ಕೊಡದಿರುವಂತೆ ಜನರಿಗೆ ತಿಳಿಸಿಹೇಳಿ.

೨. ವಿಶ್ವಕ್ಕೆ ಶಾಂತಿಯ ದಾನ ಮಾಡುವಂತೆ ಜನರಿಗೆ ಮನವಿ ಮಾಡಿಕೊಳ್ಳಿ.

೩. ನಿಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ, (ಸಂಶೋಧನಾ ಪಥ(ಸಂ.ನೀಲಗಿರಿತಳವಾರ ಮತ್ತು ದೇವರಾಜಹದ್ಲಿ) ಪ್ರಸ್ತಾವನೆ,ಪು.೯) ಹೀಗೆ ಬದುಕಿನ ಅಂತ್ಯಕಾಲದಲ್ಲಿಯೂ ಸ್ವಹಿತಕ್ಕಿಂತ ವಿಶ್ವಹಿತ ಕಲ್ಯಾಣಕ್ಕಾಗಿ ಹಂಬಲಿಸಿದ ಅವರ ಮನೋಧರ್ಮ ಉದಾತ್ತವಾದುದಾಗಿದೆ.     

    ಇಂಥ ಜನಮುಖಿ-ಸಮಾಜಮುಖಿ ವಿದ್ವಾಂಸರಾದ ಎಲ್.ಬಸವರಾಜು ಅವರು  ಬರೆದ ಸಂಶೋಧನಾ ಬರೆಹಗಳು ವಿವಿಧೆಡೆ ಚದುರಿಹೋಗಿದ್ದು ಅವರ ಬರಹಗಳನ್ನು ಕಾಲ-ವಿಷಯದ ದೃಷ್ಟಿಯಿಂದ ಸಂಶೋಧನ ಲೇಖನಗಳು, ವಿಶೇಷ ವ್ಯಾಖ್ಯಾನ ಮತ್ತು ವಿಶೇಷೋಪನ್ಯಾಸಗಳು, ಪ್ರಕೀರ್ಣಕ, ಸಂಕೀರ್ಣ, ಜನ್ಮಶತಮಾನೋತ್ಸವ-ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷೀಯ ಭಾಷಣಗಳು ಎಂದು ಐದುಭಾಗಗಳಲ್ಲಿ ವಿಂಗಡಿಸಿ ಸಂಯೋಜಿಸಿ ಸಂಶೋಧನಾ ಪಥ ಎಂಬ ಹೆಸರಿನಲ್ಲಿ ಪ್ರೊ.ನೀಲಗಿರಿ ತಳವಾರ, ದೇವರಡ್ಡಿ ಹದ್ಲಿ ಅವರು ೨೦೧೮ ರಲ್ಲಿ ಸಂಪಾದಿಸಿ ಸ್ವಪ್ನ ಪುಸ್ತಕಾಲಯದ ಮೂಲಕ ಪ್ರಕಟಿಸಿ ಒಂದೆಡೆ ದೊರೆಯುವಂತೆ ಮಾಡಿದ್ದಾರೆ.

   ಎಲ್.ಬಸವರಾಜು ಅವರ ಎಲ್ಲಾ ಲೇಖನಗಳಲ್ಲಿಯೂ ಸಂಶೋಧನೆಯ ಸ್ಪರ್ಶ ಇದೆ. ಜೊತೆಗೆ ಅವರ ಸಂಶೋಧನೆಯ ನೆಲೆಗಟ್ಟನ್ನು  ತಿಳಿಯಲು ಸಹಾಯಕವೂ ಪೂರಕವೂ ಪ್ರೇರಕವೂ ಪೋಷಕವೂ ಆಗಿವೆ. ಅವರ ಲೇಖನಗಳಲ್ಲಿ ವ್ಯಕ್ತವಾಗುವ ತಾರ್ಕಿಕ ನಿಲುವುಗಳಲ್ಲಿ, ದೀನ-ದಲಿತರ, ದಮನಿತರ-ಕೆಳಸ್ತರ ಸಮುದಾಯಗಳ ಅಂತರ್‌ ನಿವೇದನೆಯ ಒಳತುಡಿತವನ್ನು ಮುಖ್ಯವಾಹಿನಿಗೆ ತರುವ ಮತ್ತು ಸಾಮಾಜಿಕ ಅಸಮಾನತೆಯ ಹುಟ್ಟನ್ನು ಅಡಗಿಸುವ  ನಿಲುವುಗಳು ಪ್ರಮುಖವಾಗಿವೆ. ಎಲ್.ಬಸವರಾಜು ಅವರ ಸಾಹಿತ್ಯ ಸಂಶೋಧನೆಯ ವೈಧಾನಿಕತೆಯ ವಿಶೇಷತೆಗಳನ್ನು ಅವರ ಆಯ್ದ ಸಂಶೋಧನಾ ಕೃತಿಗಳು ಮತ್ತು ಲೇಖನಗಳ ಮೂಲಕ ಗುರುತಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಪಂಪ ಪೂರ್ವಯುಗ (ಕವಿರಾಜಮಾರ್ಗದ ಸುತ್ತಮುತ್ತ): ಪಂಪಪೂರ್ವಯುಗ ಹೆಸರೇ ಸೂಚಿಸುವಂತೆ ಪಂಪನ ಹಿಂದಿನ ಕಾಲದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನವಾಗಿದೆ. ಈ ಕಾಲಘಟ್ಟದ ಸಾಹಿತ್ಯಕ, ಚಾರಿತ್ರಿಕ, ಸಾಂಸ್ಕೃತಿಕ ಪರಿಸರವನ್ನು ದರ್ಶಿಸುವುದು ಮೂಲ ಉದ್ದೇಶವಾಗಿದೆ. ಕನ್ನಡದ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನದಿಂದ ಹಿಡಿದು, ಕನ್ನಡದ ಕೆಲವು ಪ್ರಮುಖ ಶಾಸನಗಳನ್ನು ಪರಿಚಯಿಸುವ ಮತ್ತು ಕನ್ನಡದ ಮೊದಲ ಉಪಲಬ್ಧ ಕೃತಿಯಾದ ಕವಿರಾಜ ಮಾರ್ಗವನ್ನು ಒಳಗೊಂಡಂತೆ, ಕೆಲವು ಚಂಪೂ ಕವಿಗಳ ಕಾವ್ಯದ ಉಲ್ಲೇಖವನ್ನು ಈ ಕೃತಿಯು ದರ್ಶಿಸುತ್ತದೆ. ಪಂಪ ಪೂರ್ವದ ವಿಚಾರಗಳು ಅಜ್ಞಾತವಾಗಿರುವುದಕ್ಕೆ ಎಲ್.ಬಸವರಾಜುರವರೇ ಪೀಠಿಕೆಯಲ್ಲಿ ‘ನಮ್ಮ ಮಹಾಕವಿಗಳು ಹಾಗೂ ಚಕ್ರವರ್ತಿಗಳು ಅನ್ಯರನ್ನು ಗಣನೆಗೆ ತಾರದ ಹಮ್ಮಿನವರಾಗಿದ್ದುದರಿಂದಲೇ ಕನ್ನಡ ಸಾಹಿತ್ಯ ಚರಿತ್ರೆಯ ಈ ಘಟ್ಟದಲ್ಲಿ ಕೆಲವು ಶೂನ್ಯಾವರ್ತಗಳು ಏರ್ಪಟ್ಟವು.’ (   ಎಲ್.ಬಸವರಾಜು, ಪಂಪ ಪೂರ್ವ ಯುಗ, ಪೀಠಿಕೆ, ಪುಟ.೧೧) ಎಂಬುದಾಗಿ  ಹೇಳಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮತ್ತು ಕನ್ನಡ ಭಾಷೆಗೆ ಆದಿಕವಿ ಪಂಪ. ಪಂಪನನ್ನು ಕುರಿತಂತೆ ಈವರೆಗಿನ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸುವಾಗ ನಮಗೆ ಸಾಕಷ್ಟು ವಿಚಾರಗಳು ತಿಳಿದು ಬರುತ್ತದೆ. ಅದರಲ್ಲೂ ಮುಖ್ಯವಾಗಿ ನಮಗೆ ಉಪಲಬ್ಧವಿರುವ ಆದಿಗ್ರಂಥವೆಂದರೆ ಕವಿರಾಜಮಾರ್ಗ ಅಚ್ಚಗನ್ನಡ ಸಾಹಿತ್ಯ ಗ್ರಂಥವಲ್ಲವಾದರೂ ಸಾಹಿತ್ಯವನ್ನೇ ಲಾಕ್ಷಣಿಕವಾಗಿ ಕುರಿತುದಾಗಿರುವುದು. ಕನ್ನಡ ಸಹೃದಯಿ ಮನಸ್ಸುಗಳಿಗೆ ಸುದೈವ ಕೂಡ. ಇವರು ಈ ಕೃತಿಯಲ್ಲಿ ಪಂಪ ಹಿಂದಿನ, ಪಂಪನ ಕಾಲ ಮತ್ತು ಪಂಪನ ಮುಂದಿದ್ದ ಕನ್ನಡ ಸಾಹಿತ್ಯವನ್ನು ಪರಿಷ್ಕರಿಸಿದ್ದಾರೆ. ಎಲ್.ಬಸವರಾಜುರವರು ಈ ಕೃತಿಯಲ್ಲಿ ಕನ್ನಡ ಜನರ ವೈಶಿಷ್ಠ್ಯವನ್ನು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಜಾಯಮಾನವನ್ನು ಕುರಿತು ಚರ್ಚಿಸಿದ್ದಾರೆ. ಇದರ ಜೊತೆಗೆ ಕರ್ನಾಟಕದ ಗಡಿಮೇರೆಗಳನ್ನು ಅದರ ಭಾಷೆಯಾಗಿ ತಿರುಳ್ಗನ್ನಡದ ಪ್ರದೇಶಗಳನ್ನು ತಿಳಿಸಿದ್ದಾರೆ. ಈ ಕೃತಿಯನ್ನು ಸಂಪೂರ್ಣವಾಗಿ ವಿವೇಚಿಸಿಸುವಂತಹ ಸಂದರ್ಭದಲ್ಲಿ ಕವಿರಾಜಮಾರ್ಗಕ್ಕಿಂತ ಹಿಂದೆಯೇ ಕನ್ನಡ ಸಾಹಿತ್ಯದಲ್ಲಿ ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ, ಮುಂತಾದ ಚಂಪೂವಿನಲ್ಲಿ ಬರೆದಿರುವ ಗದ್ಯಪದ್ಯ ಮಿಶ್ರಣವಾದ ಗದ್ಯಕಥಾ ಎಂಬ ಪ್ರಕಾರವನ್ನು ಉಲ್ಲೇಖಿಸಿದ್ದಾರೆ. ಅದು ಅಲ್ಲದೇ ಪೂರ್ವದ ಹಳಗನ್ನಡ ಭಾಷೆಯಲ್ಲಿ ಬಳಕೆಯಾಗಿರುವ ಚತ್ತಾಣ-ಬೆದಂಡೆ ಎಂಬ ಎರಡೂ ಪದ್ಯಕಾವ್ಯ ಪ್ರಕಾರಗಳನ್ನು ಕನ್ನಡ ನಾಡಿನಲ್ಲಿ ಜನಪ್ರಿಯವಾಗಿದ್ದವೆಂದೂ ತಿಳಿದುಬರುತ್ತದೆ. ಹೀಗೆ ಈ ಲಘುಕೃತಿಯಲ್ಲಿ ಪಂಪ ಪೂರ್ವ ಯುಗದ ವಿಚಾರಗಳನ್ನು ಕುರಿತು ವಿವರಿಸಿದ್ದಾರೆ.

 ಪಂಪಪೂರ್ವ ಯುಗದ ಹಲ್ಮಿಡಿ ಶಾಸನ (ಕ್ರಿ.ಶ.ಸು.೪೫೦) ತಮ್ಮಟಕಲ್ಲು ಶಾಸನ (ಕಾಲ ೫೦೦) ಬಾದಾಮಿ ಶಾಸನ (ಕ್ರಿ.ಶ. ೭೦೦) ಮಾವಳಿ ಶಾಸನ (ಕ್ರಿ.ಶ.೮೦೦) ಬೇಗೂರು ಶಾಸನ (ಕ್ರಿ.ಶ. ೮೯೦) ಗಳನ್ನು ಪಟ್ಟಿಮಾಡಿ ಅವುಗಳಿಗೆ ಮೂಲ ರೂಪವನ್ನು ನೀಡಿ ಅದಕ್ಕೆ ಅವುಗಳಿಗೆ ಅರ್ಥಕ್ಕೆ ಅನುಗುಣವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ವಿನ್ಯಾಸದಲ್ಲಿ ನಿರೂಪಿಸಿದ್ದಾರೆ. ಶಾಸನಗಳನ್ನು ಓದಲು ಸುಲಭವಾಗುವಂತೆ ಅವುಗಳ ಸಾರವನ್ನು ಹೊಸಗನ್ನಡದಲ್ಲಿ ನೀಡಿರುವುದು ಇಲ್ಲಿನ ವಿಶೇಷವಾಗಿದೆ.

   ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು  ಆಯೋಜಿಸಿದ್ದ 'ಪಂಪ: ಒಂದು ಅಧ್ಯಯನ: ವಿಚಾರ ಸಂಕಿರಣ'(೧೯೮೩) ಅಂತಿಮ ದಿನದ ಗೋಷ್ಠಿಯಲ್ಲಿ ಮಾಡಿದ ಅಧ್ಯಕ್ಷ ಭಾಷಣದ ಲೇಖನ ರೂಪದಲ್ಲಿಯ ಪಂಪನನ್ನು ಕುರಿತ  ಲೇಖನವು ಅವರು ಪಂಪನ್ನು ಯಾವ ರೀತಿ ಆಹ್ವಾನಿಸಿಕೊಂಡಿದ್ದಾರೆಂಬುದರ ಪ್ರತೀಕವಾಗಿದೆ. ಅವರ ಪ್ರಕಾರ ಪಂಪ ಮತ್ತು ಅರಿಕೇಸರಿಯ ನಡುವಿನ ನಿರ್ವ್ಯಾಜ ಸ್ನೇಹ, ಕೇವಲ ಲೌಕಿಕ ಪಾತಳಿಯದಲ್ಲ; ಅದು ಪ್ರಜ್ಞಾಪೂರ್ವಕ ಸುಪ್ತ ಮನಸ್ಸಿನ ಪ್ರತಿರೂಪ. ಇದಕ್ಕೆ ಕಾರಣ ನಿರಂಕುಶ ಪ್ರಭುತ್ವದ ಬಗೆಗಿನ ಅವರಿಗಿರುವ ಸಮಾನ ಮನೋಧೋರಣೆ, ಅಷ್ಟೇ ಅಲ್ಲ ಯುಗಧರ್ಮವನ್ನು ಪುರಸ್ಕರಿಸಿ; ಸರ್ವಾಧಿಕಾರತ್ವವನ್ನು ತೊರೆಯುವುದು. ಈ ಹಿನ್ನೆಲೆಯಲ್ಲಿಯೇ ಪಂಪನು ಭಾರತದ ಮತ್ತು ಆದಿನಾಥನ ಕಥಾವಸ್ತುಗಳನ್ನೇ ಎತ್ತಿಕೊಂಡಿರುವುದು ಕೇವಲ ಆಕಸ್ಮಿಕವೆನಿಸದೆ ಅವನು ತನ್ನ ಉದಾರವೀರ ಧೋರಣೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಲು ಚೆನ್ನಾಗಿ ಒಗ್ಗಿ ಬರುವುವೆಂದೇ; ವಿವೇಚನೆಯಿಂದ ಆಯ್ದುಕೊಂಡನೆನಿಸುವುದು. ಆದಿಪುರಾಣದಲ್ಲಿಯಾಗಲಿ ವಿಕ್ರಮಾರ್ಜುನ ವಿಜಯದಲ್ಲಿ ಯಾಗಲಿ ನಿರಂಕುಶಾಧಿಕಾರದಿಂದ ಉಂಟಾಗಬಹುದಾದ ತೊಳಸನ್ನು ಎಳೆಎಳೆಯಾಗಿ ಬಿಡಿಸಿ ತೋರಿಸಲು ಅವನಿಗೆ ಬನ್ನಿದೊರೆಯಿತು. ಮೊದಲನೆಯದರಲ್ಲಿ ಅಧಿಕಾರ ಮದೋನ್ಮತ್ತತೆಯಿಂದಾಗುವ ಅಣ್ಣ-ತಮ್ಮಂದಿರ ನಡುವಣ ದುಗುಡವನ್ನು ಚಿತ್ರಿಸಿದ್ದರೆ, ಎರಡನೆಯದರಲ್ಲಿ ಅಧಿಕಾರೋನ್ಮಾದದಿಂದ ತಲೆದೋರುವ ಇನ್ನೂ ವ್ಯಾಪಕವಾದ ರೀತಿಯ ಅಂದರೆ ರಾಷ್ಟ್ರ ಮಟ್ಟದ ವಿಪ್ಲವವನ್ನು ಚಿತ್ರಿಸಿ ಅದನ್ನು ಪರಿಹರಿಸಲು ಗಂಡು- ಛಲ-ಸಾಹಸ-ಅಭಿಮಾನ ಮುಂತಾದ ಉತ್ಕರ್ಷಗುಣಗಳನ್ನು ಜನತೆಯ ಹೃನ್ಮಂದಿರಕ್ಕೆ ಶೂರಪ್ರತಿಮೆಯ ರೂಪದಲ್ಲಿ ಆವಾಹಿಸಿದ.( ಸಂಶೋಧನಾ ಪಥ, ಪು.೭) ಆ ಮುಖೇನ ತನ್ನ ಕಾಲದ ಮನೋರಥವನ್ನು ಕಾವ್ಯಶಃ ಹಿಂಬದಿಯಿಂದ ತಳ್ಳಿ, ವ್ಯಕ್ತಿಶಃ ಅದರ ಜೀವ ತಂತುಗಳನ್ನು ಹಿಡಿದು ಮುಂದುಮುಂದಕ್ಕೆ ಎಳೆದವನು. ಈ ಕಾರಣದಿಂದಾಗಿಯೇ ಅವನು ನಮ್ಮ ಆದಿಕವಿಯೆಂಬ ಅಭಿದಾನಕ್ಕೆ ಪಾತ್ರನಾದ ಎಂಬ ಎಲ್.‌ ಬಸವರಾಜು ಅವರ ನಿಲುವು ವಿದ್ವಾಂಸರ ಗಮನವನ್ನು ಸೆಳೆದಿದೆ,

   ಪಂಪನನ್ನು ಕುರಿತಂತೆ ಎಲ್.ಬಸವರಾಜುರವರು ಹಲವು ಆಯಾಮಗಳಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಅದರಲ್ಲಿ ಮುಖ್ಯವಾಗಿ ರಾಜಕೀಯವಾಗಿ, ಸಾಮಾಜಿಕವಾಗಿ, ಲೌಕಿಕ ಮತ್ತು ಧಾರ್ಮಿಕವಾಗಿ ಸಂಶೋಧನೆಯನ್ನು ಮಾಡಿದ್ದಾರೆ. ಪಂಪನು ಭರತ ಪಾತ್ರವನ್ನು ಹಾಗೂ ಸಮರ ವೀರನಾದ ಕರ್ಣ ಪಾತ್ರ. ಹೀಗೆ ಹಲವಾರು ಸನ್ನಿವೇಶಗಳನ್ನು ತೆಗೆದುಕೊಂಡು ಎಲ್.ಬಸವರಾಜುರವರು ಸಂಶೋಧನಾ ಲೇಖನವನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ರಾಜಕೀಯ ಅಂಶಗಳಿಗೆ ಸಂಬಂಧಿಸಿದಂತೆ ಪಂಪನು ಬದುಕಿದ್ದ ರಾಜತ್ವದ ಕಾಲದಲ್ಲಿ ಆದರೂ ಅದೃಷ್ಟವಶದಿಂದ  ಅವನ ಪೋಷಕ ಅರಿಕೇಸರಿಯ ಆದರ್ಶನಾಗಿದ್ದ. ಆದರ್ಶ ಗುಣಗಳಿಂದ ಆದ್ದರಿಂದಲೇ ಗುಣಾರ್ಣವ ಎಂದು ಹೆಸರು ಬಂದಿತು ಎಂಬುದನ್ನು ಚರ್ಚಿಸಿದ್ದಾರೆ. ಪಂಪನು ಇಂಥ ಸಂದರ್ಭಗಳಲ್ಲಿ ಪಡೆದ ಮಹಾರಾಜಾಧಿರಾಜರ ನಿಕಟವೂ ಆತ್ಮೀಯವೂ ಆದ ಸಂಬಂಧದಿಂದಾಗಿ ನಿರಂಕುಶ ಪ್ರಭುತ್ಪದ ಬಗೆಗೆ ಅವನ ಧೋರಣೆ ಅನುರೋಧಿಯದಾಗಿತ್ತೆ ಅಥವಾ ವಿರೋಧಿಯದಾಗಿತ್ತೇ ಎಂದಾಗ ಅದು ವಿರೋಧಿಯದಾಗಿತ್ತೆಂದೇ ಭಾವಿಸಲು ಅವಕಾಶವಿದೆ ಎಂಬುದು ಬಸವರಾಜುರವರ ನಿಲುವಾಗಿದ್ದಿತು.

  ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿ ಭಾರತವನ್ನು ಪಂಪ ಬರೆದನೆಂಬಷ್ಟರಿಂದಲೇ ಅವನು ರಾಜತ್ವವನ್ನು ಒಂದು ನಿರ್ದಿಷ್ಟ ಸಂಸ್ಥೆಯೆಂದು ಬಗೆದಿದ್ದನೆಂದು ಗ್ರಹಿಸುವುದು ತಪ್ಪು. ಅಂದಿನ ಸಮಕಾಲೀನ ಸಂದರ್ಭದಲ್ಲಿ ರಾಜರನ್ನು ಕಥಾ ನಾಯಕರನ್ನಾಗಿ ಮಾಡಿಕೊಂಡು ಕಾವ್ಯ ರಚಿಸಿರುವುದನ್ನು ನಾವು ಕಾಣಬಹುದಾಗಿದೆ. ಹತ್ತನೇ  ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಹೊಸ ಮೌಲ್ಯಗಳ ಆಧಾರದ ಮೇಲೆ ಪರಿಷ್ಕರಿಸಿ ವ್ಯವಸ್ಥಿಸಲು ಅದು ಅವರು ತೆಗೆದ ಕ್ಯಾತೆ ಜಗಳವಲ್ಲವೆಂಬುದನ್ನು  ತಿಳಿಸಿ ಕೊಡುತ್ತದೆ. ದೃಷ್ಟಿಯಿಂದ ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜ ಸುಧಾರಣೆಯ ಮಹಾಸ್ಫೋಟಕ್ಕೆ ಹತ್ತನೇ ಶತಮಾನದ ಪಂಪನು ಒಂದು ವಿಧದಲ್ಲಿ ವೈಯಕ್ತಿಕ ಮಟ್ಟದಲ್ಲೇ ಆದರೂ ಪ್ರಬಲವಾದ ಚಾಲನೆಯನ್ನು ಕೊಟ್ಟನೆಂಬುದು ಸಂಶಯವಲ್ಲ ಎಂಬುದನ್ನು ಬಸವರಾಜು ರವರ  ಸಂಶೋಧನಾ ಲೇಖನದ ಮೂಲಕ ನಾವು ತಿಳಿಯಬಹುದಾಗಿದೆ.

  ಪಂಪ ಮತ್ತು ಭರತನ ಪಾತ್ರಗಳನ್ನು ವಿಶ್ಲೇಷಿಸುವುದರ ಜೊತೆಗೆ ಪಂಪನ ಚಿತ್ರಣ ಮತ್ತು ಮನಸ್ಥಿತಿಯನ್ನು ಸಹ ಎಲ್.ಬಸವರಾಜುರವರು ಅನಾವರಣಗೊಳಿಸಿದ್ದಾರೆ. ಆದಿಪುರಾಣದ ಹತ್ತನೇ ಆಶ್ವಾಸದವರೆಗೆ ಪ್ರತಿಯೊಂದು ಆಶ್ವಾಸದ ಮೊದಲಿಗೂ ಒಂದೊಂದು ಕಂದ ಪದ್ಯದಲ್ಲಿ ಸರಸ್ವತಿ ಮಣಿಹಾರಂ ಎಂಬ ಕೊನೆಯ ಎರಡೆರಡು ವೃತ್ತಗಳಲ್ಲಿ ಕ್ರಮವಾಗಿ ಸುಕವಿಜನ ಸುಜನೋತ್ತಂಸ ಮತ್ತು ಸಂಸಾರ ಸಾರೋದಯಂ ಎಂಬ ತನ್ನ ಬಿರುದುಗಳ ಮೂಲಕ ಅಲ್ಲಲ್ಲಿಗೆ ಬರುವ ಮಹಾಬಲ, ಲಲಿತಾಂಗ, ವಜ್ರ ಜಂಘ ಮುಂತಾದ ಪಾತ್ರಗಳೊಡನೆ  ಪಂಪನು ತನ್ನನ್ನು ಸಮೀಕರಿಸಿ ಕೊಂಡು ತನ್ನ ರೂಪ, ಶೈಶವ, ಯೌವನ, ಪುತ್ರ ಕಲತ್ರ, ಮಿತ್ರ-ಸಹಿತವಾದ ಸಂಸಾರ ಮತ್ತು ಭೋಗಜೀವನವನ್ನು ಆಮೇಲೆ ಅದೇ ಕ್ರಮದಲ್ಲಿ ಹನ್ನೊಂದನೇ ಆಶ್ವಾಸದಿಂದ ಹಿಡಿದು ಕೊನೆಯವರೆಗೂ ಭಾಗದಲ್ಲಿ ಬರುವ ಭರತನ ಪಾತ್ರದೊಡನೆ ಸಮೀಕರಿಸಿಕೊಂಡು  ತನ್ನ ಲೌಕಿಕ  ವೀರ ಜೀವನವನ್ನಷ್ಟೇ ಅಲ್ಲದೇ ಅದರ ಜೊತೆ ಜೊತೆಗೆ ಮುಖ್ಯವಾಗಿ  ಜೈನ ಧರ್ಮದ ಬಗ್ಗೆ ತನಗಿದ್ದ ಶ್ರದ್ದಾಭಕ್ತಿಯನ್ನು ಅದರ ಆಶ್ರಯದಲ್ಲಿ ತಾನೂ ಕಟ್ಟಿಸಿದ ಬಸದಿಗಳ ಮತ್ತು ಕೆತ್ತಿಸಿದ ಜಿನ ಬಿಂಬಗಳ ವೃತ್ತಾಂತವನ್ನು ಸೂಚಿಸುತ್ತಿರುವಂತೆ ಭಾಸವಾಗುವುದು. ಇದು ಭಾಸವೋ ಅಭಾಸವೋ  ಎಂಬುದನ್ನುಇಂದು ನಾವು ಬಸವರಾಜುರವರ ಸಂಶೋಧನಾ ಲೇಖನವನ್ನು ಆಧಾರವಾಗಿಟ್ಟುಕೊಂಡು ಪರಿಶೀಲಿಸ ಬಹುದಾಗಿದೆ.

  ಬಸವಣ್ಣನನವರನ್ನು ಕುರಿತ 'ಬಸವೇಶ್ವರನ ಜೀವಮಾನಾವಧಿ' ಮತ್ತು  'ಬಸವೇಶ್ವರನ ಜನ್ಮದಾತರು ಮತ್ತು ಜನ್ಮಭೂಮಿ 'ಎರಡು ಲೇಖನಗಳು  ಗುಣ ಹಾಗೂ ಗಾತ್ರ ಎರಡರಿಂದಲೂ ಅತ್ಯುತ್ತಮ ಸಂಶೋಧನಾ ಲೇಖನಗಳೆಂದು ವಿದ್ವತ್‌ ಮನ್ನಣೆ ಪಡೆದಿವೆ. ಮೊದಲನೆಯ ಲೇಖನದಲ್ಲಿ ಬಸವಣ್ಣನವರ ಸಮಕಾಲೀನ ಪರಿಸರದ  ಐತಿಹಾಸಿಕತೆಯನ್ನು  ತದಲಬಾಗಿ, ಇಂಗಳೇಶ್ವರ, ವಳಸಂಗ ಗ್ರಾಮಗಳಲ್ಲಿಯ ಶಾಸನಗಳ ಮೂಲಕ ನಿರೂಪಿಸಿದ್ದಾರೆ. ಬಸವಣ್ಣನವರ  ಕಾಲಮಾನದ ನಿಶ್ಚಯಕ್ಕಾಗಿ ಕ್ರಿ.ಶ.೧೨೬೦ ರ ಅರ್ಜುನವಾಡ ಶಾಸನವನ್ನು ಆಧರಿಸಿದ್ದಾರೆ. ಶಾಸನೋಕ್ತ ದಾನಿಯಾದ ಚೌಡರಸನು ೧೨-೪-೧೨೬೦ನೇಸೋಮವಾರ ಸೂರ್ಯಗ್ರಹಣದಂದು ಶ್ರೀ ಬಸವರಾಜನನ್ವಯದ ತಪ ಚಕ್ರವರ್ತಿವೀರಬ್ರತಿ ಹಾಲಬಸವನನ್ನು ಕುರಿತು ಕವಿಳಾಸತೀರ್ಥದ ಮಹಿಮೆಯನ್ನು ಕೇಳುವನು.ಅದಕ್ಕೆ ಉತ್ತರವಾಗಿ ಹಾಲಬಸವಿದೇವನು “ಕವಿಳಾಸತೀಥಂ ನಾಲ್ಕು ಯುಗದಪುರಾಣೋಕ್ತದಿಂ ಬಂದ ಕ್ಷೇತ್ರವೆಂದೂ ಅಲ್ಲಿಯ ದೇವರನ್ನು ಸಮಸ್ತಗಣೇಶ್ವರರೂಕೃತ-ತ್ರೇತ-ದ್ವಾಪರ-ಕಲಿಯುಗಗಳಲ್ಲಿ ಆರಾಧಿಸಿ, ಸಾಲೋಕ್ಯಾದಿ ದಿವ್ಯಪದವಿಗಳನ್ನು ಪಡೆದರೆಂದೂ, ಆ ಕವಿಳಾಸಪುರವು ಆ ದೇವರಿಗೆ ಮಾಂಧಾತನು ಬಿಟ್ಟ ಧರ್ಮವೆಂದೂ ಮುಂತಾಗಿ ಬಹಳ ಪುರಾತನ ವಿಚಾರಗಳನ್ನೆಲ್ಲಾ ಹೇಳುವನು. ಅದೇ ಶಾಸನದಲ್ಲಿ ಹಾಲಬಸವಿದೇವನನ್ನು ಪ್ರಶಂಸಿಸುತ್ತ “ಸಲೆ ಮೂಜಗದೊಳಗೆ ಮೆರೆವ ಮಾನವದೇವಂ ಗೆಲಿದಂ ಅಶನಬೆಸನವಂ, ಛಲರಧಿಕಂ ಹಾಲಬಸವಿದೇವ ಮುನೀಶಂ” ಎಂದುಕೊಂಡಾಡುವುದರಿಂದ ಆತನು ಕ್ರಿಶ. ೧೨೬೦ರ ವೇಳೆಗೆ ಮಹಾಮಾಹೇಶ್ವರನಷ್ಟೇಅಲ್ಲದೆ, ವೃದ್ಧಮಾಹೇಶ್ವರನೂ ಆಗಿದ್ದಂತೆ ತೋರುವುದು. ಶಾಸನ ಬರೆದ ೧೨೬೦ರಹೊತ್ತಿಗೆ ಹಾಲಬಸವಿದೇವನಿಗೆ ೬೫ವರ್ಷ ವಯಸ್ಸೆಂದಿಟ್ಟುಕೊಳ್ಳಬಹುದು. ಅಂದರೆ ಆತನು ಹುಟ್ಟಿದ್ದು ಕ್ರಿ.ಶ. ೧೧೯೫ರಲ್ಲಿ. ಈ ೧೧೯೫ರ ಹೊತ್ತಿಗೆ ಆತನ ತಂದೆಯಾದ ಕಲಿದೇವನಿಗೆ ಸುಮಾರು ೨೦ ವರ್ಷಗಳಾಗಿಬೇಕು. ಆದ್ದರಿಂದ ಕಲಿದೇವನು ಹುಟ್ಟಿದ್ದುಕ್ರಿ.ಶ.೧೧೭೫ರಲ್ಲಿ. ಈ ೧೧೭೫ರ ಹೊತ್ತಿಗೆ ಆ ಕಲಿದೇವನ ತಂದೆಯಾದ ಕಾವರಸನಿಗೆ೧೧೫೫ರಲ್ಲಿ. ಈ ೧೧೫೫ರ ಹೊತ್ತಿಗೆ ಕಾವರಸನ ತಂದೆಯಾದ ದೇವರಾಜನಿಗೆಸು ಮಾರು ೨೦ ವರ್ಷವಾಗಿರಬೇಕು. ಆದ್ದರಿಂದ ಕಾಮರಸನು ಹುಟ್ಟಿದ್ದು ಕ್ರಿ.ಶ. ಪ್ರಾಯಶಃ ೨೦ವರ್ಷ ವಯಸ್ಸಾಗಿರಬೇಕು. ಆದ್ದರಿಂದ ಆ ದೇವರಾಜನು ಹುಟ್ಟಿದ್ದು ಕ್ರಿ.ಶ. ೧೧೩೫ರಲ್ಲಿ. ಅರ್ಜುನವಾಡದ ಶಾಸನದ ಪ್ರಕಾರ ಈ ದೇವರಾಜನ ತಮ್ಮ  ಬಸವೇಶ್ವರನು ಕ್ರಿ.ಶ. ೧೧೩೫ ಆದ ಮೇಲಲ್ಲದೆ ಮೊದಲು ಹುಟ್ಟಿರಲಾರ. ಇದನ್ನು ಖಚಿತವಾಗಿ ಹೇಳಲು ನಮಗೆ ಲಕ್ಕಣ್ಣದಂಡೇಶನ ಶಿವತತ್ತ್ವ ಚಿಂತಾಮಣಿಯು ಬಸವನ ಜನನದ ಕಾಲವನ್ನು ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ ಸಹಿತವಾಗಿಕೊಟ್ಟು ಸಹಕರಿಸುವುದು. ಆ ಪ್ರಕಾರ ಕ್ರಿ.ಶ. ೨೭-೧೦-೧೧೪೦ಕ್ಕೆ ಸರಿಯಾಗುವುದು,ಆದ್ದರಿಂದ ಬಸವನ ಜನನದ ವರ್ಷ ನಿಸ್ಸಂಶಯವಾಗಿ ಕ್ರಿ.ಶ. ೧೧೪೦. ಬಸವನು ಕಲ್ಯಾಣಕ್ಕೆ ಬಂದಾಗ ಬಿಜ್ಜಳನು ಚಕ್ರವರ್ತಿ ಯಾಗಿದ್ದುದರಿಂದ, ಆತನು ಅಲ್ಲಿಗೆ ಬಂದುದು ಕ್ರಿ.ಶ. ೧೧೬೨ಕ್ಕಿಂತ ಹಿಂದೆಂಬುದು ಅಸಾಧ್ಯ. ಬಿಜ್ಜಳನು ಮಂಗಳವಾಡದಲ್ಲಿ ಆಳುತ್ತಿದ್ದಾಗ, ಕ್ರಿ.ಶ. ೧೧೫೬ರಲ್ಲೇ ಬಸವನು ಅವನ ಆಸ್ಥಾನಕ್ಕೆ ಬಂದು ಸೇರಿದನೆಂದು ಊಹಿಸಿದರೂ, ಆ ವೇಳೆಗಾಗಲೇ ಅವನಿಗೆ ೩೦ ವರ್ಷ ವಯಸ್ಸಾಗಿರಬೇಕು. ಆ ಅಪರ ವಯಸ್ಸಿನಲ್ಲಿ ಬಸವನು ಸಿದ್ಧರಸ ಅಥವಾ ಬಲದೇವನ ಮಗಳನ್ನು ಮದುವೆಯಾದನೆಂಬುದು ವಿಕೃತವಾಗಿ ಕಾಣುವುದು. ಮತ್ತು ಕ್ರಿ.ಶ. ೧೧೦೬ರಲ್ಲಿಹುಟ್ಟಿದ ಬಸವನಿಗೆ ಕ್ರಿ.ಶ.೧೧೧೪ರ ವೇಳೆಗೆ ನಡೆದ ಉಪನಯನಕ್ಕೆ ಬಿಜ್ಜಳನಮಂತ್ರಿಯಾದ ಬಲದೇವನು ಬಂದಿದ್ದನೆಂಬುದು ತೀರ ಅಸಂಭಾವ್ಯ ಏಕೆಂದರೆ,

ವೇಳೆಗೆ ಬಹುಶಃ ಬಿಜ್ಜಳನೇ ಹುಟ್ಟಿರುವುದಿಲ್ಲವಾಗಬಹುದು. ಆತನು ತನ್ನ ತಂದೆಯಿಂದ ರಾಜ್ಯಭಾರ ವಹಿಸಿಕೊಂಡುದೇ ಕ್ರಿ.ಶ.೧೧೪೦ರಷ್ಟು ಈಚೆಗೆ. ಆದುದರಿಂದ ಬಸವನು ಹುಟ್ಟಿದ ವರ್ಷವನ್ನು ಕ್ರಿ.ಶ. ೧೧೪೦ರ ಹಿಂದು ಹಿಂದಕ್ಕೆ ಒಯ್ದಂತೆಲ್ಲ ಸತ್ಯವೂ ದೂರವಾಗುತ್ತ ಹೋಗುವುದಲ್ಲದೆ, ಬಸವನ ಜೀವನದಲ್ಲಿ ನಡೆದಿರಬಹುದಾದ ವಾಸ್ತವಾಂಶಗಳೆಲ್ಲ ಮುಂದು ಹಿಂದಾಗುತ್ತವೆ”(ಸಂಶೋಧನಾ ಪಥ, ಪು.೪೬-೪೭) ಎಂಬ ೧೯೬೭ರಲ್ಲಿಯೇ ವ್ಯಕ್ತಪಡಿಸಿರುವ ಬಸವಣ್ಣನ ಜೀವಿತಾವಧಿ ವಿವರಗಳು  ಇಂದಿಗೂ ಗಮನಾರ್ಹತೆಯನ್ನು ಪಡೆದಿವೆ. ಕಾವ್ಯ-ಪುರಾಣಗಳಲ್ಲಿಯ ವಿವರಗಳಿಗಿಂತ ಶಾಸನ ಇತ್ಯಾದಿ ಆಕರಗಳ ಹಿನ್ನೆಲೆಯಲ್ಲಿ ಐತಿಹಾಸಿಕ ನೆಲೆಯಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ಅವರ ಎರಡನೇ ಲೇಖನವಾದ ಬಸವಣ್ಣನವರ ಜನ್ಮಭೂಮಿ ಮತ್ತು ಜನ್ಮದಾತರುವಿನಲ್ಲಿ,  ಹಿಂದಿನ ವಿದ್ವಾಂಸರಾದ ಜೆ.ಎಫ್.‌ ಪ್ಲೀಟ್‌ ಮತ್ತು ಚೆನ್ನ ಮಲ್ಲಿಕಾರ್ಜುನರು ಊಹಿಸಿದ್ದ ಮಣಿಗವಳ್ಳಿ ಎಂಬುದಕ್ಕೆ ಪ್ರತ್ಯುತ್ತರವಾಗಿ ಎಲ್.ಬಿ ಅವರು ಇಂಗಳೇಶ್ವರ ಬಾಗೇವಾಡಿಯ ವಾಯವ್ಯಕ್ಕೆ ಕೇವಲ ಹನ್ನೊಂದು ಮೈಲಿದೂರದಲ್ಲಿರುವ ಆ ಮಣಿಗವಳ್ಳಿಯ ಕಲಿದೇವೇಶ್ವರ ದೇವಾಲಯದ ಮಾತೆತ್ತಿ, ಯಾರೋ ಅಭಿಮಾನಿಗಳು,ಕಲ್ಯಾಣದ ಬಸವನನ್ನೂ ಒಂದು ದೇವಾಲಯವನ್ನು ಕಟ್ಟಿಸುವಂತೆ ಪ್ರೇರೇಪಿಸಿರಬಹುದು.

ಸ್ಥಾವರಲಿಂಗಕ್ಕಿಂತ ಜಂಗಮಲಿಂಗಕ್ಕೆ ಹೆಚ್ಚು ಮಹತ್ತ್ವವನ್ನು ಕೊಟ್ಟಿದ್ದ, ಕಲ್ಯಾಣದ ಬಸವನು ಆಗ ಭಾವಪರವಶನಾಗಿ“ಉಳ್ಳವರು ಶಿವಾಲಯವ ಮಾಡುವರು

ನಾನೇನ ಮಾಡುವೆ ಬಡವನಯ್ಯ!

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಸಿರ ಹೊನ್ನ ಕಳಶವಯ್ಯ!

ಕೂಡಲಸಂಗಮ ದೇವ, ಕೇಳಯ್ಯ,

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.'( ಬಸವಣ್ಣನವರ ಷಟ್ಸ್ಥಲ ವಚನಗಳು, ವಚನ ಸಂಖ್ಯೆ,೮೨೦)

ಎಂದು ಹಾಡಿರಬಹುದು. ಈ ಒಂದು ಸಾಕ್ಷಿಯೇ ಕಲ್ಯಾಣದ ಬಸವನನ್ನು ಮಣಿಗವಳ್ಳಿಯ ಬಸವನಿಂದ ಪ್ರತ್ಯೇಕಿಸಲು ಸಾಕಷ್ಟು ಪ್ರಬಲವಾದ ಸಾಕ್ಷಿಯೇ ಆಗಿದೆ. ಈ ಎಲ್ಲ ವಿಚಾರದ ಮುಂಬೆಳಕಿನಲ್ಲಿ, ಮಣಿಗವಳ್ಳಿಯ ಬಸವನನ್ನು ಕಲ್ಯಾಣ ಬಸವನಿಂದ ಬೇರ್ಪಡಿಸಲಾಗುವುದಷ್ಟೇ ಅಲ್ಲದೆ, ಬಾಗೇವಾಡಿಯೇ ಕಲ್ಯಾಣದ ಬಸವನ ಜನ್ಮಸ್ಥಳವೆಂದೂ ನಿರ್ಧರಿಸ ಬಹುದು. ( ಸಂಶೋಧನಾ ಪಥ, ಪು.೫೫-೫೬)ಮುಂದುವರಿದು ಜನ್ಮದಾತರ ವಿಚಾರವಾಗಿ ಡಾ. ಎಸ್. ಶ್ರೀಕಂಠಶಾಸ್ತ್ರಿಗಳು ಅರ್ಜುನವಾಡದ ಶಾಸನವನ್ನು ಆಧಾರವಾಗಿಟ್ಟುಕೊಂಡು ಬಸವೇಶ್ವರನಿಗೆ ದೇವರಾಜಮುನಿಪನೆಂಬ ಅಗ್ರಜ (=ಅಣ್ಣ) ನಿದ್ದಂತೆ ಅಭಿಪ್ರಾಯ ಪಡುತ್ತಾರೆ. ಹೀಗೆ ಮಾದಿರಾಜನಿಗೆ ದೇವರಾಜನೆಂಬ ಜೇಷ್ಠ ಪುತ್ರನೊಬ್ಬನಿದ್ದಾಗ ಸಂಗನಬಸವನನ್ನು ಅವನು ದತ್ತುತೆಗೆದುಕೊಳ್ಳುವ ಆವಶ್ಯಕತೆ ಎಲ್ಲಿತ್ತು? ಆದ್ದರಿಂದ ಮಣಿಗವಳ್ಳಿ ಮತ್ತು ಅರ್ಜುನವಾಡದಶಾಸನಗಳಲ್ಲಿ ಹೇಳಿರುವ ಇಬ್ಬರು ಬಸವರೂ ಭಿನ್ನ ಭಿನ್ನ ವ್ಯಕ್ತಿಗಳಷ್ಟೇ ಅಲ್ಲದೆ, ಆ ಇಬ್ಬರು ಮಾದಿರಾಜರೂ ಬೇರೆ ಬೇರೆ; ಮತ್ತು ಕಲ್ಯಾಣದ ಬಸವೇಶ್ವರನು ಬಾಗೆವಾಡಿಯಮಾದಿರಾಜನ ಸ್ವಂತಮಗನೇ ಹೊರತು, ಮಣಿಗವಳ್ಳಿಯ ಚಂದಿರಾಜನ ಮಗನಾಗಿ ಹುಟ್ಟಿ, ಮಾದಿರಾಜನ ದತ್ತಪುತ್ರನಾಗಿ ಬಂದವನಲ್ಲ. ಆದ್ದರಿಂದ ಮಣಿಗವಳ್ಳಿಯ ಬಸವರಸಯ್ಯನು ಅದೇ ಮಣಿಗವಳ್ಳಿಯ ಮಾದರಸನಿಗಾಗಲೀ ಅಥವಾ ಬಾಗವಾಡಿಯ ಮಾದರಸನಿಗಾಗಲೀ ಯಾವ ರೀತಿಯ ಪುತ್ರನು ಅಲ್ಲ. ಕಲ್ಯಾಣದ ಬಸವನೂ ಮಣಿಗವಳ್ಳಿಯ ಬಸವನೂ ಒಬ್ಬನೇ ಎಂಬ ಮಾತು ಹಾಗಿರಲಿ ಅವರಿಬ್ಬರೂ ಸಮಕಾಲೀನರೇ ಅಲ್ಲ. ಮೊದನೆಯವನು ಹುಟ್ಟುವ ವೇಳೆಗೆ ಎರಡನೇಯವನು ಜೀವಂತನಾಗಿರಲಿಲ್ಲ. ಮಣಿಗವಳ್ಳಿಯ ಮಾದರಸ ಮತ್ತು ಬಾಗೆವಾಡಿಯ ಮಾದರಸ ಇವರಿಬ್ಬರಲ್ಲಿ ಯಾರೊಬ್ಬರಾಗಲಿ ಮಣಿಗವಳ್ಳಿಯ ಬಸವನನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಿದ್ದರೆಂಬುದಕ್ಕೆ ಆಧಾರವೇ ಇಲ್ಲ. ಈ ಇಬ್ಬರು ಮಾದರಸರು ಬೇರೆ ಬೇರೆ ಎಂಬುದು ಸ್ಪಷ್ಟ. ಕಲ್ಯಾಣದ ಬಸವನು ಬಾಗೇವಾಡಿಯ ಮಾದರಸನ ಔರಸ ಪುತ್ರನೆಂಬುದೂ ಖಚಿತ ಎಂದು ಎಲ್.ಬಿ ಸಮರ್ಥವಾಗಿ ಮಂಡಿಸಿರುವ ಸಂಶೋಧನೆಯು ವಿದ್ವಾಂಸರಲ್ಲಿ ಜಿಜ್ಞಾಸೆಯನ್ನು ಹುಟ್ಟಿಸಿದೆ. (ಸಂಶೋಧನಾ ಪಥ, ಪು.೫೯-೬೦)  ಅದೇ ರೀತಿ ಅವರ 'ಚೆನ್ನಬಸವಣ್ಣನವರ ಜನನ: ಒಂದುವಿವೇಚನೆ' ಎಂಬ ಲೇಖನದಲ್ಲಿ 'ಷಟ್ಸ್ಥಲ ಸಿದ್ಧಾಂತ ಪ್ರತಿಪಾದಕ ಶ್ರೀ ಚೆನ್ನಬಸವಣ್ಣನವರ ಜನನದ ಬಗೆಗಿನ; ಎಂ.ಎಂ.ಕಲಬುರ್ಗಿ ಅವರ ವಿಚಾರಗಳಿಗೆ ಪ್ರೊ. ಎಲ್.ಬಿಅವರು ನೀಡಿರುವ ಪ್ರತಿಕ್ರಿಯೆಯ ರೂಪದಲ್ಲಿದೆ. ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ . “ಅಕ್ಕನಾಗಮ್ಮಳಿಗೆ ಡೋಹರ ಕಕ್ಕಯ್ಯನವರ ವರಪ್ರಸಾದದಿಂದ ಚೆನ್ನಬಸವಣ್ಣನವರು ಹುಟ್ಟಿದರು ಎಂಬುದು ವಿಷಯ ಈ ಕಕ್ಕಯ್ಯನವರ ಪ್ರಸಾದಕ್ಕೂ ಚೆನ್ನಬಸವಣ್ಣನವರ ಜನನಕ್ಕೂ ಗಂಟುಹಾಕಿದ ಮೊಟ್ಟಮೊದಲಿಗನೆಂದರೆ (ಎರಡನೇ ಶೂನ್ಯ ಸಂಪಾದನೆಯ ಕುಖ್ಯಾತಿಯ)ಹಲಗೆಯಾರ್ಯ, ಇವನ ಈ ಪ್ರಸಾದಾಲಾಪವನ್ನು ಅವನಾದ ಮೇಲೆ ಬಂದ ಎಲ್ಲ ಶೂನ್ಯಸಂಪಾದನಾಕಾರರೂ ಪ್ರಭುಲಿಂಗಲೀಲೆಯ ಚಾಮರಸನೂ ಕೈಬಿಟ್ಟರು. ಆ ಬಗ್ಗೆ ಅವರಿಗಿದ್ದ ನಿರಾಕರಣೆಯ ನಿಲುವನ್ನೂ ಸೂಚಿಸಿದರು. ತತ್ತೂರ್ವದಲ್ಲಿದ್ದ ಸಿಂಗಿರಾಜನು ತನ್ನ ಅಮಲಬಸವಚಾರಿತ್ರದಲ್ಲಿ ಅಕ್ಕನಾಗಮ್ಮನಿಗೆ ಶಿವಸ್ವಾಮಿಯೆಂಬ ಪತಿಯಿದ್ದನೆಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ದುರ್ಬಲ ವಿಕಲ್ಪನೆಗಳನ್ನೇ ಆಧಾರಮಾಡಿಕೊಂಡು ಡೋಹರ ಕಕ್ಕಯ್ಯನವರಿಗೆ ಮತ್ತು ಅಕ್ಕನಾಗಲೆಗೆ ಸತಿಪತಿ ಸಂಬಂಧವನ್ನುಆರೋಪಿಸುವುದು, ಅವಿವೇಕದ ಪರಮಾವಧಿ” ಎಂದಿರುವುದು  ಅವರ ವಿದ್ವತ್ತಿನ ಒಳನೋಟದ ಪ್ರತೀಕವಾಗಿದೆ.

    ಸಿದ್ಧರಾಮನ ದೀಕ್ಷೆ (ಕಲ್ಲುಮಠದ ಪ್ರಭುದೇವನ ಕಾಲನಿರ್ಣಯ') ಮತ್ತು'ಸಿದ್ಧರಾಮ-ಶೈವ-ವೀರಶೈವ' ಎಂಬೆರಡು ಲೇಖನಗಳಲ್ಲಿ ಕ್ರಮವಾಗಿ, ಸಿದ್ಧರಾಮಶಿವಯೋಗಿಗಳ ದೀಕ್ಷಾ ಪ್ರಸಂಗ ಮತ್ತು ಕಲ್ಲುಮಠದಪ್ರಭುದೇವನ ಕಾಲವನ್ನು “ಶೂನ್ಯಸಂಪಾದನಕಾರನಾದ ಗೂಳೂರು ಸಿದ್ಧವೀರಣ್ಣೊಡೆಯನ ಮಾತನ್ನು ಲಿಂಗಲೀಲಾವಿಲಾಸಕಾರನು ತೆಗೆದುಕೊಂಡಿರುವುದನ್ನು ಸಾಧಾರವಾಗಿ ತೋರಿಸುವ ಅವಕಾಶವಿರುವುದರಿಂದ ಆ ಕಲ್ಲುಮಠದ ಪ್ರಭುದೇವನು ಗುಳೂರುಸಿದ್ಧವೀರನಿಗಿಂತ ಈಚಿನವನೆಂದು ಎಂದು ಸಮರ್ಥಿಸುವ ಪ್ರಯತ್ನವನ್ನು ಮಾಡಿದ್ದಾರೆ. ಗೂಳೂರು ಸಿದ್ಧವೀರನು ತೋಂಟದಸಿದ್ಧಲಿಂಗ (೧೪೭೫)ನ ಶಿಷ್ಯನಾದ ಬೋಳಬಸವೇಶ್ವರನ ಶಿಷ್ಯನಾದುದರಿಂದ ಆ ಗೂಳೂರು ಸಿದ್ಧವೀರನು ಸುಮಾರು ೧೫೦೦ ರವನು. ಇವನನ್ನು ಅನುಕರಿಸಿರುವ ಕಲ್ಲುಮಠದಪ್ರಭುದೇವನು ಅಂದರೆ ಲಿಂಗಲೀಲಾವಿಲಾಸ ಚಾರಿತ್ರದ ಕರ್ತೃವು ೧೫೦೦ಕ್ಕಿಂತ ಇತ್ತೀಚಿನವನು. ಇವನನ್ನು ಮೊದಲಿಗೆ ಸ್ಮರಿಸುವವನೆಂದರೆ ಸು. ೧೫೮೦ ರ ಅದೃಶ್ಯಕವಿ. ಆದ್ದರಿಂದ ಕಲ್ಲುಮಠದ ಪ್ರಭುದೇವರ ಕಾಲವನ್ನು ೧೫೦೦-೧೫೮೦ರೊಳಗೆ  ನಿರ್ಧರಿಸಬೇಕಾಗುವುದು.” ಎಂದಿದ್ದಾರೆ. ಆದರೇ ತೋಂಟದ ಸಿದ್ಧಲಿಂಗರ ಕಾಲವು ಇತ್ತೀಚಿನ ಸಂಶೋಧನೆಗಳ ಪ್ರಕಾರ ಕ್ರಿ.ಶ.೧೫೮೧ ಆಗಿರುವುದರಿಂದ ಇವರ ಅನಿಸಿಕೆಗಳನ್ನು ಇಂದು ಪುನರ್‌ ವಿಮರ್ಶೆಗೆ ಒಳಪಡಿಸ ಬೇಕಾಗಿದೆ. ತರುವಾಯದ ಲೇಖನದಲ್ಲಿ “ಸಿದ್ಧರಾಮನುಹುಟ್ಟುವಾಗ ಕೇವಲ ಶೈವನೆಂಬುದು ಖಚಿತ ಆದರೆ ಅವನು ಶೈವನಾಗಿಯೇ ಉಳಿದನೇ ಅಥವಾ ವೀರಶೈವನಾದನೇ ಎಂಬಲ್ಲಿ ಶಿವಗಣಪ್ರಸಾದಿ ಮಹದೇವಯ್ಯನ ವಿಕಲ್ಪ ಒಂದಿಲ್ಲದೇ ಹೋಗಿದ್ದಿದ್ದರೆ - ಅವನು ವೀರಶೈವನಾದನೆಂಬುದಕ್ಕೆ ಭಿನ್ನಾಭಿಪ್ರಾಯವೇ ಇಲ್ಲ ಇಡೀ ವೀರಶೈವ ಸಾರಸ್ವತ ಪ್ರಪಂಚದಲ್ಲಿ.” ಎಂದು ಉಲ್ಲೇಖಿಸಿದ್ದಾರೆ.  ಕಪಿಲ ಎಂದರೆ ಕಂದುಬಣ್ಣ-ಹಳದಿ ಛಾಯೆ-ಕೆಂಪು ಛಾಯೆ-ಹಳದಿ ಮಿಶ್ರವಾದ ಕಂದುಬಣ್ಣ-ಕೆಂಪು ಛಾಯೆಯ ಕೂದಲಿನವನು ಎಂದು ಮುಂತಾದ ಹಲವು ಅರ್ಥಗಳಿವೆ. ಕಪಿಲದ್ಯುತಿ ಎಂದರಂತೂ ಸೂರ್ಯನೆಂಬ ಅರ್ಥವೂ ಇದೆ. ಆದ್ದರಿಂದ ಕಪಿಲಸಿದ್ಧನೆಂದರೆ ಕೆಂಚು ಬಣ್ಣದ (ತಲೆಗೂದಲಿನ) ಯೋಗಿ ಎಂದೂ ಆದೀತು. ಸಿದ್ಧರಾಮ ಹೇಗಿದ್ದನೋ? ಮತ್ತು ಪ್ರತಿಷ್ಠೆ ಮಾಡಿದ ಲಿಂಗವನ್ನು ಮಾಡಿಸಿದವನ ಹೆಸರಿನ ಪೂರ್ವೋಪಾಧಿಯೊಡನೆ ಕರೆದುದೂ ಪ್ರಸಿದ್ಧವೇ ಇದೆ. ಹಿನ್ನೆಲೆಯಲ್ಲಿ ಕಪಿಲಸಿದ್ಧನು ಸ್ಥಾಪಿಸಿದ ಮಲ್ಲಿಕಾರ್ಜುನ ಎನ್ನಲೂ ಬಂದೀತು ಎಂದೂ ತಮ್ಮ ನಿಲುವನ್ನು ಇವರು ಈ ಲೇಖನದಲ್ಲಿ(ಸಂಶೋಧನಾ ಪಥ, ಪು. ೮೯) ವ್ಯಕ್ತಪಡಿಸಿದ್ದಾರೆ.

   ವಚನ ಸಾಹಿತ್ಯದಲ್ಲಿ  ಕೆಳವರ್ಗದ ವಚನಕಾರರ ಆಶಯ ಮತ್ತು ಅಭಿವ್ಯಕ್ತಿ ಲೇಖನದಲ್ಲಿ ವ್ಯಕ್ತಪಡಿಸಿರುವ ಜಾತಿಭೇದವೆಂಬುದೇ ಇಲ್ಲದ ಶರಣಪಂಥದಲ್ಲಿ ವಚನಕಾರರನ್ನು ಜಾತಿಯ ಉಪಾಧಿಯಿಂದ ಮಾದಾರಚೆನ್ನಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ ಮಡಿವಾಳ ಮಾಚಯ್ಯ ಎಂದು ಮುಂತಾಗಿ ಹೆಸರಿಸುತ್ತಿರುವುದರಿಂದ ಆ ಶರಣರ ಜಾತ್ಯಾತೀತ ನಿಲುವನ್ನೇ ಸಂಶಯಿಸುವಂತಾಗಿದೆಯೆಂಬುದು ನಿಜವೇ ಆದರೂ ಈ ಪಂಥದಲ್ಲಿ ಜಾತಿಯಿದ್ದು ಜಾತಿ ಭೇದವಿರಲಿಲ್ಲವೆನ್ನುವುದೂ ನಿಜವೇ ಆಗಿದೆ ಮತ್ತು ವಚನಕಾರರ ಚಳವಳಿಯ ಪರಮಸಿದ್ಧಿಯೂ ಅದೇ ಆಗಿದೆ. ಶರಣರಾದರೊ ಹೀಗೆ ಯಾರನ್ನೂ ಠಕ್ಕಿಸಿ ಬದುಕುವ ಮಾರ್ಗವನ್ನು ಹಿಡಿಯಲಿಲ್ಲ. ಅವರು ದುಡಿಮೆಯಲ್ಲಿ ಧರ್ಮವನ್ನು ಪ್ರತಿಷ್ಠಿಸಿದರು. ದಾಸೋಹದಲ್ಲಿ ಜೀವದೇವರನ್ನು ಪೂಜಿಸಿದರು. ಮತ್ತು ಅವರದು ಮೇಲು ಕೀಳಿಲ್ಲದ ಎಲ್ಲರೂ ಕೂಡಿ ಬದುಕುವ ಮುಕ್ತ ಸಮಾಜ. ಅದೇಮುಕ್ತಿ ಅವರ ಪ್ರಕಾರ, ಅದೇ ಅವರ ಆಶಯ ಮತ್ತು ಅಭಿವ್ಯಕ್ತಿ ಎಂಬ ವಿಚಾರ ಧಾರೆಗಳು ವಚನ ಸಾಹಿತ್ಯವನ್ನು ಕುರಿತ  ಹೊಸ ದೃಷ್ಟಿಕೋನವನ್ನು ಹೊಂದಿವೆ.

ʻಕಾಯಕ ಮತ್ತು ದಾಸೋಹ' ಎಂಬ ಲೇಖನದಲ್ಲಿ ಕಾಯಕ ಜೀವಿಗಳ ಆತ್ಮಸಾಕ್ಷಾತ್ಕಾರದ ಸಾಧನೆ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯದಂಪತಿಗಳ ಕಾಯಕ ನಿಷ್ಠೆ, ಯಾವ ರೀತಿ ಬಸವಣ್ಣನವರನ್ನೂ ಮೂಕ ವಿಸ್ಮಿತರನ್ನಾಗಿ ಮಾಡಿದೆ.“ಕಾಯಕ ನಿರತನಾದೊಡೆ ಗುರುದರ್ಶನವಾದರೂ ಮರೆಯ ಬೇಕು” ಎಂಬಂತೆ ಕಾಯಕಕ್ಕೆಅಡ್ಡಿಪಡಿಸಿದ ಶಿವಲಿಂಗವನ್ನು ಮರೆಯುವಷ್ಟು ಸ್ಥಿತಪ್ರಜ್ಞೆಯನ್ನು ಮೆರೆದ ಕಾಯಕದ ಮಹತ್ತ್ವವನ್ನು ಸಾರಿದ-ಜೀವಿಸಿದ ಕಾಯಕಜೀವಿಗಳ ಕುರಿತ ಹೊಸ ಆಲೋಚನೆಯನ್ನು ಒಳಗೊಂಡಿದೆ. ಇವರ ಮಹತ್ವದ ಸಂಶೋಧನಾ ಲೇಖನವಾದ ತೋಂಟದ ಸಿದ್ಧಲಿಂಗ ಯತಿಗಳ ಜೀವನ: ಇತಿಹಾಸ ಮತ್ತು ದಂತಕತೆ ಯು ತೋಂಟದ ಸಿದ್ಧಲಿಂಗ ಯತಿಗಳ ಕಾಲ ಮತ್ತು ಜೀವನದ ಬಗೆಗೆ ಬೆಳಕು ಚೆಲ್ಲುವಂತಹದ್ದಾಗಿದೆ. ಸಿದ್ಧಲಿಂಗರ ಕಾಲದ ಬಗೆಗೆ ಅವರು ತಾಳಿರುವ ನಿಲುವುಗಳು ಇಂದಿಗೂ ನಂತರದ ವಿದ್ವಾಂಸರ ಗಮನ ಸೆಳೆದಿವೆ.

ಜನತಾಕವಿ ಸರ್ವಜ್ಞನಿಗೆ  ವಿರತ ಮಹಲಿಂಗನೆಂಬ ಕವಿಶಿಷ್ಯನಿದ್ದನೆಂಬ ವಿಚಾರವನ್ನು ಪ್ರೊ.ಎಲ್.ಬಿಅವರು 'ಗುರು ಬೋಧಾಮೃತ'ವೆಂಬ ಒಂದು ತ್ರಿಪದಿಯ ಕಾವ್ಯದ ಆಂತರಿಕ ಆಧಾರದಿಂದಲೇ ಗುರುತಿಸಿದ್ದಾರೆ. ಆದಾಗ್ಯೂ ಇವನ(ಮಹಾಲಿಂಗ) ವಿಚಾರವಾಗಿ “ಸರ್ವಜ್ಞನಿಗೆ ಸರಿತೂಕದ ಶಿಷ್ಯನಲ್ಲವೆಂಬುದನ್ನು ನೆನಪಿಡುವು ದೊಳ್ಳೆಯದು”. ಎಂಬ ಅರ್ಥಪೂರ್ಣವಿಮರ್ಶೆಯನ್ನೂ ಮಾಡಿದ್ದಾರೆ.

      ಪ್ರಭುಲಿಂಗ ಲೀಲೆಯ ಆಧಾರದಿಂದ ಮಾಡಿದ 'ಅಲ್ಲಮನ ಲಿಂಗಾಂಗ ಸಂವಾದ' ಎಂಬ ವಿಶೇಷ ಉಪನ್ಯಾಸವು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ  ನೀಡಿದ್ದಾಗಿದ್ದು, ಏರ್ಪಾಡಾಗಿತ್ತು. ಆ ಉಪನ್ಯಾಸದ ಬರೆವಣಿಗೆ ಅದೇ ಹೆಸರಿನ ಪುಸ್ತಿಕೆಯಾಗಿ ಕ.ವಿ.ವಿ. ಪ್ರಸಾರಾಂಗದಿಂದ ಪ್ರಕಟವಾಗಿದೆ. ಆಧ್ಯಾತ್ಮದಲ್ಲಿ ಸಾಧನವೂ ಆಗಿ ಸಿದ್ಧಿಯೂ ಆಗಿಬರುವ ದೇಹ ಹಾಗೂ ಪ್ರಾಣವಾಯುವಿನ ಜಿಜ್ಞಾಸೆಯಲ್ಲಿ ಇಲ್ಲಿಯ ಸಂವಾದ ಬೆಳೆದಿದೆ. ಈ ಸಂವಾದದಲ್ಲಿ ಬಸವಣ್ಣ ಸಿದ್ಧರಾಮ ಶಿವಯೋಗಿ ಹಾಗು ಅಲ್ಲಮಪ್ರಭು ಸಾಕ್ಷಿಯಾಗಿ ತೋರುಗಾಣಿಕೆಯಲ್ಲದ ಆಧ್ಯಾತ್ಮದ ನಿಜದ ನೆಲೆಯನ್ನು ತೋರುತ್ತಾರೆ ಎಂಬ ವಿವರಗಳಲ್ಲಿ ಅವರ ಆಧ್ಯಾತ್ಮ ಮೀಮಾಂಸೆ ಪ್ರವಾದಿಯೊಬ್ಬರ ಚಿಂತನೆಗಳನ್ನು ಹೋಲುತ್ತವೆ.

  ಇವರ  ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು ಪುಸ್ತಕವು ಮೈಸೂರು ಒಡೆಯರ ಕಾಲದ ಬಗೆಗೆ ಹೊಸ ಸುಳುಹುಗಳನ್ನು ದಾಖಲಿಸಿರುವುದಾಗಿದೆ. ಇದು ಕೂಡಾ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡಅಧ್ಯಯನಪೀಠದಲ್ಲಿ1972ರಲ್ಲಿಮಾಡಿದ ವಿಶೇಷೋಪನ್ಯಾಸವಾಗಿದೆ.  ಇದರಲ್ಲಿ ತಿರುಮಲಾರ್ಯ ಮತ್ತು ಚಿಕ್ಕದೇವರಾಜರ ನಡುವಿನ ಪರಸ್ಪರ ಆತ್ಮೀಯ ಸಂಬಂಧವನ್ನು ಮತ್ತು ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ರಚಿತವಾದ ಕೃತಿಗಳ ವಿಶೇಷತೆಯನ್ನು ಗುರುತಿಸಿದ್ದಾರೆ. ಇವರೀರ್ವರಲ್ಲಿ ಸ್ನೇಹಸದ್ಭಾವನೆಗಳನ್ನು ಇನ್ನಿಲ್ಲವೆಂಬಂತೆ ಸೂರೆಗೊಂಡುದಕ್ಕೆ ಕಾರಣ ಅವರಿಬ್ಬರ ತಂದೆಗಳಿಗೆ ಇದ್ದ ಅನ್ಯೋನ್ಯ ಗೌರವ ಬಹಳ ಮುಖ್ಯವಾದುದು. ಅಂದರೆ ತಿರುಮಲಾರ್ಯ ಚಿಕ್ಕದೇವರಾಜರಲ್ಲಿ ನಾವು ಯಾವʻಸಂಬಂಧ'ವನ್ನು ಕಾಣುವೆವೋ ಅದು ಅವರ ತಂದೆಗಳ̈ (ಅಳಹಿ ಸಿಂಗರಾರ್ಯ ಮತ್ತು ದೊಡ್ಡ ದೇವರಾಜ ಒಡೆಯರು) ಕಾಲದಿಂದಲೂ ಉಳಿದುಬಂದು- ಅವರಲ್ಲಿ ಬಿತ್ತನೆಗೊಂಡು ಎಸಳೊಡೆದು ಹೂವು ಹಣ್ಣಿನ -ಶಾಖೋಪಶಾಖೆಯಾಯಿತು”. ಮುಖ್ಯವಾಗಿ ಮನುಷ್ಯರ ಹಾಡು-ಪಾಡು ಆ ಯುಗದರಾಜರ ಕಾಲದ ವಸ್ತು ವೈವಿಧ್ಯತೆ, ಜನಜೀವನ, ಉಡುಗೆ ಮತ್ತು ಕನ್ನಡ ಹಾಗೂ ಇತರ ಭಾಷೆಗಳ ಪರಸ್ಪರ ಕೊಳು ಕೊಗೆಯನ್ನು ತಿಳಿಸುತ್ತದೆ. ಹಲವು ಕಡೆ ಮನುಷ್ಯರ ಬದುಕನ್ನು ಒಳಹೊಕ್ಕು ನೋಡುವ ಶಕ್ತಿಯನ್ನು ಯಾವ ರೀತಿ ಹೊಂದಿದೆ ಎಂಬುದನ್ನು ವಿಸ್ತೃತವಾಗಿ ಕೊಡಮಾಡಿದ್ದಾರೆ.

 “ವಿದ್ವಾಂಸನೊಬ್ಬನು ಮತ್ತು ವೀರನೊಬ್ಬನು ಇಷ್ಟು ಗಾಢವಾಗಿ ಒಬ್ಬರನ್ನೊಬ್ಬರು ಸಂಭಾವಿಸಿದ್ದು ಅಂದಿನ ಕಾಲ ನಿರಂಕುಶ ಪ್ರಭುತ್ವದ್ದೆಂಬುದನ್ನು ನೆನೆದಾಗಲಂತೂ ಅತ್ಯಂತ ರೋಮಾಂಚನವೆನಿಸುತ್ತದೆ.ಚಿಕ್ಕ ದೇವರಾಜನು ತಿರುಮಲಾರ್ಯ ಮುಂತಾದ ಅಂದಿನ ಕವಿಗಳ ಅಭಿಪ್ರಾಯದಲ್ಲಿ ಶ್ರೀ ವಿಷ್ಣುವಿನ ಅವತಾರವಾದರೂ ಅವರ ಕೃತಿಗಳು ಬದುಕನ್ನು ತೋರುವ ಕನ್ನಡಿತ ಕೈದೀವಿಗೆಯಾಗಿದೆ. ಕಥನವಾಗಿ-ನಾಟಕೀಯವಾಗಿ ಚಿತ್ರದ ಚಹರೆಗಳನ್ನು ಹೊಂದಿರುವ ಈ ಕೃತಿಗಳಲ್ಲಿ ರಾಜರ ನೇಮ-ಮಾನವ ಪ್ರೇಮ ಸಮಸ್ತರನ್ನೂ ಒಳಗೊಳ್ಳುತ್ತಿದ್ದ ಕಾವ್ಯಮೀಮಾಂಸೆಯೂ ಇಲ್ಲಿ ಜಿಜ್ಞಾಸೆಗೆ ಒಳಗಾಗಿದೆ. ಕಾವ್ಯಮೀಮಾಂಸೆಯ ಅವನತಿಯ ಕಾಲವನ್ನು ಈ ಕೃತಿಯಲ್ಲಿಯ ಕಾಲಮಾನಗಳು ಸೂಚಿಸುತ್ತವೆ (ಸಂಶೋಧನಾ ಪಥ, ಪು.೨೮೭)ಎಂಬ ಎಲ್.‌ ಬಸವರಾಜು ಅವರ ಅನಿಸಿಕೆಗಳು ತಿರುಮಲಾರ್ಯನ ಕೃತಿಗಳಿಗೆ ಹಿಡಿದ ಕನ್ನಡಿಯಾಗಿದೆ. ಚಿಕ್ಕದೇವರಾಜ ವಿಜಯವು ರಸದೃಷ್ಟಿಯಿಂದ ಹಲವಾರು ರಸಗಳ ರಸಾಯನ. ಇದರಲ್ಲಿ ವೀರ ಮತ್ತು ಶೃಂಗಾರಗಳಿಗೆ ಸಮಸಮ ಪಾಲಿರುವುದು ನಿಜವಾದರೂ, ವೀರಕ್ಕೆ ಭೂಷಣವಾಗಿ ಭಕ್ತಿಯೂ, ಶೃಂಗಾರಕ್ಕೆ ಪೋಷಕವಾಗಿ ಹಾಸ್ಯವೂ ಸೇರಿ ರುಚಿಕಟ್ಟಾಗಿದೆ. ವೇಶ್ಯಾವಾಟಿಕೆಯಲ್ಲಿ ವಾಡಿಕೆಯಂತೆ ಶೃಂಗಾರವನ್ನೇ ಹುಚ್ಚು ಹೊಳೆಯಾಗಿ ಹರಿಸದೆ, ವಾಸ್ತವಿಕತೆಯನ್ನು ಸಾರಿಸಿ ಮುಚ್ಚದೆ ವೇಶ್ಯಾ ಜೀವನದಿಯಿಂದ ಶೋಕದನಾಲೆಯನ್ನು ತೆಗೆಯಲಾಗಿದೆ. ಅದರ ಅಂಚಿನುದ್ದಕ್ಕೂ ಪೊದೆಯಾಗಿ ಬೆಳೆದಿರುವ ಮುಳ್ಳುಕಳ್ಳಿಯ ಬೀಭತ್ಸವು ವಿಷಮಿಶ್ರ ಹರಿತವಾಗಿದೆ. ತಿರುಮಲಾರ್ಯನು ಜೀವನವೆನ್ನುವುದು ಅತ್ಯಂತ ಸಂಕೀರ್ಣವಾದುದೆಂಬುದನ್ನು ಈ ಮೂಲಕ ಅಂದಿಗೇ ತೋರಿಸಿದ್ದಾನೆ. ತಾನು ಮತ್ತು ತನ್ನ ಒಡೆಯನಾದ ಚಿಕ್ಕದೇವರಾಜ ಒಡೆಯನು ವೇಶ್ಯಾವಾಟಿಕೆಯಲ್ಲಿನ ಹೆಂಗಳೆಯರೊಡನೆ ರಮಿಸಿದುದನ್ನು ಸ್ವಲ್ಪ ಸುತ್ತಿ ಹೇಳಿದರೂ ಸತ್ಯವನ್ನೇ ಹೇಳಿ ಕಾಮದ ಮುಂದೆ ಯಾರ ಮಡಿಯೂ ನಿಲ್ಲದೆಂಬಂಥ ಕಠೋರವಾರ್ತೆಯನ್ನು ನವ್ಯಧೋರಣೆಯಿಂದ ತನ್ನ ಕಾವ್ಯದಲ್ಲಿ ಧ್ವನಿಸಿದ್ದಾನೆ.ಈ ದೃಷ್ಟಿಯಿಂದಲೂ, ಅದು ಚಿಕ್ಕದೇವರಾಜನ ಜೀವನ ಚರಿತ್ರೆಯೆಂಬ ದೃಷ್ಟಿಯಿಂದಲೂ ಅದೆಲ್ಲಕ್ಕಿಂತ ಹೆಚ್ಚಾಗಿ ಅಂದಿನ ಜನಜೀವನವನ್ನೆಲ್ಲ ತನ್ನ ಶಬ್ದಶರೀರದಲ್ಲಿ ಅಮರವಾಗಿ, ನಿಚ್ಚಳವಾಗಿ, ಬಣ್ಣ ಬಣ್ಣವಾಗಿ ಸಜೀವವೆಂಬಂತೆ ಅಚ್ಚೊತ್ತಿದೆಯೆಂಬುದರಿಂದಲೂ ಈ ಚಂಪೂಕಾವ್ಯ-ನಮ್ಮ ಸಾಹಿತ್ಯದಲ್ಲಿ ಒಂದು ಗಮನಾರ್ಹಕೃತಿಯಾಗಿದೆ ಎಂಬ ಅವರ ಅರ್ಥಪೂರ್ಣ ಅನಿಸಿಕೆ ಹೊಸತನದಿಂದ ಕೂಡಿದೆ.  ಚಿಕ್ಕದೇವರಾಜನ ವಿಜಯವನ್ನು ಸಮರ್ಥವಾಗಿ ಅಭಿವ್ಯಕ್ತಿಸಿರುವ ತಿರುಮಲಾರ್ಯನ ವಿಜಯ ಕೃತಿಯನ್ನು ಇಡಿಯಾಗಿ ಸಂರಕ್ಷಿಸಿಕೊಂಡು ಬರಲಾರದೆ ಹೋದದ್ದು ನಮ್ಮ ಅಪಜಯ. ಇಂಥ ಕಾವ್ಯ ನಮಗೆ ಸಮಗ್ರವಾಗಿ ಉಳಿದು ಬರದೇ ಹೋದುದು ಒಂದು ದೌರ್ಭಾಗ್ಯ .ಇದರಲ್ಲಿ ಈಗ ನಮಗೆ ಸಿಕ್ಕಿರುವುದು ಅರೇ ಆಶ್ವಾಸದಷ್ಟು ಮಾತ್ರ. ಆರನೇ ಆಶ್ವಾಸವೂ ಪೂರೈಸಿಯಿಲ್ಲ. ಬಹುಶಃ ಈ ಕಾವ್ಯದಲ್ಲಿ ಇನ್ನೂ ೮-೧೦ ಆಶ್ವಾಸಗಳು ಇದ್ದಿರಬೇಕು ಎಂದು ಲಭ್ಯವಿರುವ ಅಸಮಗ್ರ ಕೃತಿಯ ಬಗೆಗೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.  ಚಿಕ್ಕದೇವರಾಜ ವಂಶಾವಳಿಯು ಗದ್ಯ ಪ್ರಕಾರದಲ್ಲಿದ್ದರೂ ಕೃತಿಯ ಒಳಗಿರುವುದೆಲ್ಲ ವಿಜಯದಲ್ಲಿರುವ ಹೂರಣವೇ. ಅದರಂತೆಯೇ ಇದೂ ಅಸಮಗ್ರ ಆದರೂ ಇದು ಮೈಸೂರರಸರ ಚರಿತ್ರೆಯ ದೃಷ್ಟಿಯಿಂದ ಹೆಚ್ಚು ವಿವರಗಳನ್ನು ಒಳಗೊಂಡಿರುವ ಕೃತಿ. ಅದರ ಹೆಸರೇಹೇಳುವಂತೆ ಇದರ ವಸ್ತು. ಚಿಕ್ಕದೇವರಾಜನೊಬ್ಬನ ಕಥೆಯೇ ಅಲ್ಲ-ಅವನವಂಶಪರಂಪರೆಯಲ್ಲಿ ಬಂದ ಹಲವರ ಕಥಾನಕ. ಈ ಕಾವ್ಯ ರಾಜ ಒಡೆಯನ ವೃತ್ತಾಂತದಿಂದ ಪ್ರಾರಂಭವಾಗಿ ಚಾಮರಾಜರಸ, ಇಮ್ಮಡಿ ರಾಜರಸ, ಕಂಠೀರವ ನರಸರಾಜ, ದೊಡ್ಡದೇವರಾಜ ಇವರ ರಾಜಕೀಯ ಚಟುವಟಿಕೆಗಳನ್ನು ಆದಷ್ಟು ವಾಸ್ತವಾಂಶಗಳನ್ನೇ ಅವಲಂಬಿಸಿ ವರ್ಣಿಸಿ-ದೊಡ್ಡದೇವರಾಜನು ತನ್ನ ತಮ್ಮನಾದ ದೇವರಾಜನನ್ನು ಹಿರಿಯರಸುತನದಲ್ಲಿ ನೇಮಿಸಿ ಇನ್ನೂ ಚಿಕ್ಕವನಾಗಿದ್ದ ತನ್ನ ಮಗನಾದ ಚಿಕ್ಕದೇವರಾಜ ಒಡೆಯನಿಗೆ ಯುವರಾಜಪಟ್ಟವನ್ನುಕಟ್ಟಿ ತೀರ್ಥಯಾತ್ರೆಗೆ ಹೋದನೆಂದು ಹೇಳಿ ಮುಂದಿನ ಕಥೆಯನ್ನುಕೈಗೆತ್ತಿಕೊಳ್ಳುತ್ತಿದ್ದಂತೆಯೇ ಹಠಾತ್ತಾಗಿ ನಿಂತು ಹೋಗುವುದು. ಸಿಕ್ಕಿರುವಷ್ಟು ಕಾವ್ಯಭಾಗದ ಆಧಾರದಿಂದಲೇ ಹೇಳುವುದಾದರೆ-ವೀರ ಮತ್ತುಭಕ್ತಿ ರಸಗಳದೇ ಹರಹು ಇಲ್ಲಿ. ಶೃಂಗಾರಕ್ಕಾಗಲಿ, ಹಾಸ್ಯಕ್ಕಾಗಲಿ ಕಿಂಚಿತ್ತಾದರೂ ಪ್ರವೇಶವಿಲ್ಲ. ಆದರೂ ತಿರುಮಲಾರ್ಯನ ಓಜಃಪೂರ್ಣವಾದ ಗದ್ಯ ಹುರುಪಿನಿಂದ ಓದಿಸಿಕೊಂಡು ಹೋಗುತ್ತದೆ. ವೀರಕ್ಕೆ ಅಥವಾ ಭಕ್ತಿಗೆ ಉತ್ತೇಜನ ಕೊಡುವ ಹಿನ್ನೆಲೆಯನ್ನಾಗಲಿ ಕುಶಲಕರ್ಮಿಯಂತೆ ಬಳ್ಳಿದೆಗೆದು ಬಣ್ಣಿಸಿ ಓದುಗನ ಮನಸ್ಸು ಯಾವುದಾದರೂ ಭಾವವನ್ನಾಗಲಿ, ಸ್ಪುಟತೆಯನ್ನು ಒದಗಿಸುವ ಭಾವನೀಯವಾದ ಪ್ರಫುಲ್ಲವಾಗುವಂತೆ ಮಾಡುತ್ತಾನೆ ತಿರುಮಲಾರ್ಯ.  ಹಳಗನ್ನಡ ಗದ್ಯ ಸರಸ್ವತಿಯು ತಿರುಮಲಾರ್ಯನ ಕೈಯಲ್ಲಲ್ಲದೆ ಮತ್ತೆಲ್ಲಿಯೂ ಇಷ್ಟು ಹಾಸು ಬೀಸಿನಲ್ಲಿ ಆನಂದವಾಗಿ ತಾಂಡವವಾಗಿ ತನ್ನ ವಿಶ್ವರೂಪವನ್ನು ಕಾಣಿಸಿರಲಿಲ್ಲ. ಅವಳು, ಅವನ ಬೆರಳ ತಂತಿಯಾದಳು. ತುಟಿಯ ಕೊಳಲಾದಳು. ಕೊರಳ ಇನಿದನಿಯಾದಳು. ಕೈಯ ತಾಳವಾಗಿ, ಕಾಲ ಗೆಜ್ಜೆಯಾದಳು, ಕನ್ನಡ ತ್ರಿವಿಕ್ರಮ ಹೆಜ್ಜೆಯಾದಳು. ಚಾಟೂಕ್ತಿಗೋ, ಶ್ಲೇಷೋಕ್ತಿಗೋ, ಹಿಂದೇನಾಯಿತು ಎಂಬುದನ್ನು ಸ್ಮರಣೆಗೆ ತರುವ ಸಂಗ್ರಹೋಕ್ತಿಗೋ, ಮುಂದೇನಾಗುವುದೆಂಬುದನ್ನು ಸೂಚಿಸುವ ನಿರ್ದೇಶಕ್ತಿಗೋ ಬಳಕೆಯಾಗುತ್ತಿದ್ದು ಒಟ್ಟಿನಲ್ಲಿ ಪದ್ಯಭಾಗಕ್ಕೆ ಪರಿಚರ್ಯೆಯನ್ನು ಎಸಗುತ್ತಿದ್ದು ಚಂಪೂವಿನಲ್ಲಿ ವಚನವೆಂದು ಕರೆಸಿಕೊಳ್ಳುತ್ತಿದ್ದ ಗದ್ಯವು ಚಿಕ್ಕದೇವರಾಜ ವಂಶಾವಳಿಯಂಥ ಗದ್ಯಕಾವ್ಯಗಳಲ್ಲಿ- ಪದ್ಯ ನಿರಂಕುಶಾಧಿಪತಿಯ ಸಾರ್ವಭೌಮತ್ವವನ್ನು ಕಿತ್ತೆಸೆದು, ತಾನೇ ತಾನಾಗಿ ವಿರಾಜಿಸಿತು ಮತ್ತು ಆ ಪದ್ಯದ ಬೆಡಗು ಬಿನ್ನಾಣವನ್ನು ಉಳಿಸಿಕೊಂಡು ಅದಕ್ಕಿಂತ ಹೆಚ್ಚಾಗಿ, ಆ ಬಂಧದಲ್ಲಿ ಅಭಿವ್ಯಕ್ತಿಸಲು ಗಣಪ್ರಾಸ ಯತಿಯೆಂದು ವೃಥಾಕ್ಷೇಶವನ್ನು ಎದಿರಿಸುತ್ತಿದ್ದ ವೈಚಾರಿಕ ವಿವರವನ್ನೂ ಓಘವನ್ನೂ ಒಳಗೊಂಡು ಗದ್ಯವು ವಿವಿಧಭಾವಕ್ಕೆ ರಸಕ್ಕೆ-ವಾಸ್ತವಿಕೆಯ ದೃಷ್ಟಿಯಿಂದ ಮುಕ್ತದ್ವಾರವಾಯಿತು( ಅದೇ, ಪು.೩೮೩-೩೮೪) ಎಂದು ಚಿಕ್ಕದೇವರಾಜ ವಂಶಾವಳಿಯ ಗದ್ಯದ ವೈಶಿಷ್ಟ್ಯವನ್ನು ಕುರಿತು ವ್ಯಕ್ತಪಡಿಸಿರುವ ಅನಿಸಿಕೆಗಳು ಬಸವರಾಜು ಅವರು ಕನ್ನಡ ಗದ್ಯ ಸಾಹಿತ್ಯವನ್ನು ಕುರಿತು ಗ್ರಹಿಸಿರುವ ನಿಲುವುಗಳ ಪ್ರತೀಕವಾಗಿವೆ. ಚಿಕ್ಕದೇವರಾಯ ಸಪ್ತಪದಿ, ಗೀತಗೋಪಾಲ, ಚಿಕ್ಕದೇವರಾಜ ಬಿನ್ನಪ ಮತ್ತು ಬಿಡಿಪದಗಳು ಈ ನಾಲ್ಕು ಕೃತಿಗಳ ಕರ್ತೃತ್ವದ ಸಂಬಂಧವಾಗಿ ಹೊಸ ಸುಳುಹನ್ನು ನೀಡಿರುವುದು ವಿಶೇಷವಾಗಿದೆ. ಮೊದಲನೆಯ ಮತ್ತು ಕೊನೆಯ ಕೃತಿ ಯಾರದೆಂಬುದು ಸ್ಪಷ್ಟವಿಲ್ಲ. ನಡುವಿನವೆರಡೂ ಚಿಕ್ಕದೇವರಾಜನ ಹೆಸರಿನಲ್ಲಿವೆ. ಆದರೆ ಈ ಕೃತಿಗಳನ್ನು ರಚಿಸಿದವನು ತಿರುಮಲಾರ್ಯನೆಂಬುದಕ್ಕೆ ಕೆಲವು ಆಧಾರಗಳಿವೆ. ಒಂದನೆಯದಾಗಿ ಮೊದಲ ಮೂರೂ ಕೃತಿಗಳ ಪೀಠಿಕಾಭಾಗದಲ್ಲಿ ತಿರುಮಲಾರ್ಯನ ಚಿಕ್ಕದೇವರಾಜ ವಿಜಯದಲ್ಲಿನ ಹಲವಾರು ಪದ್ಯಗಳು ಪುನರಾವೃತ್ತವಾಗುತ್ತವೆ. ಎರಡನೆಯದಾಗಿ ಈ ಎಲ್ಲದರಲ್ಲಿರುವ ಶೈಲಿ ತಿರುಮಲಾರ್ಯನದೇ ಆಗಿರಬೇಕೆನಿಸುತ್ತದೆ. ಶೃಂಗಾರರಸವನ್ನು ಚಿಕ್ಕದೇವರಾಯ ಸಪ್ತಪದಿ ನಿದರ್ಶನ ಪೂರ್ವಕವಾಗಿ ನಿರೂಪಿಸುವ ಒಂದು ಪ್ರಯತ್ನ. ಗಂಡುಗುಣದ ಚಿಕ್ಕದೇವರಾಯ ಸಪ್ತಪದಿ, ನಿದರ್ಶನಕೊಡುವಲ್ಲಿ ಪಾತ್ರ ದೃಷ್ಟಿಯಿಂದ ಏಕಸೂತ್ರತೆಯಿದ್ದು-ಚಿಕ್ಕದೇವರಾಯನ ಆತ್ಮೀಯವಾದ ಶೃಂಗಾರ ಜೀವನವನ್ನು- ವ್ಯಾಪಾಂತರದಿಂದಲಾದರೂ ನೈಜವಾಗಿಯೇ ವರ್ಣಿಸುವುದು. ಅವನನ್ನು ಕುರಿತ ರಾಜಕೀಯ ವಿವರಗಳು ದೊರೆಯುವ ಹಲವಾರು ಗ್ರಂಥಗಳಿಂದ ಕಟ್ಟಿಬಂದ ಅವನ ಆಕರ್ಷಕತೆಯನ್ನೆಲ್ಲ ಪ್ರಸ್ತುತ ಗ್ರಂಥದ ಮೊದಲನೇ ಸಪ್ತಪದಿಯಲ್ಲಿ ನಮ್ಮ ನೆನಪಿಗೆ ತಂದು - ಆ ಪ್ರಶಸ್ತವಾದ ವೀರದ ಹಿನ್ನೆಲೆಯಲ್ಲಿ ಅವನ ಜೀವನದ ಲಲಿತ ಪಾರ್ಶ್ವವೆನಿಸುವ ಪ್ರೇಮ ಜೀವನವನ್ನು ಪರಿಚಯಿಸಿಕೊಡುವುದು. ಇದು ಹೀಗೆ ರಾಜನೊಬ್ಬನ ಅಂತಃಪುರದ ಅಥವಾ ಅಂತರಂಗದ ವಾರ್ತೆಯನ್ನು ವಸ್ತುವಾಗಿ ಎತ್ತಿಕೊಂಡು-ಶೃಂಗಾರರಸದ ಪ್ರಕ್ರಿಯೆಗಳನ್ನೂ ಅವನ್ನು ಕಾವ್ಯದಲ್ಲಿ ಚಿತ್ರಿಸುವ ಬಗೆಯನ್ನೂ ಮೇಲೈಸಿ ಶಾಸ್ತ್ರ ಮತ್ತು ಕಾವ್ಯ ಈ-ದ್ವಿಮುಖಧಾರೆಯಲ್ಲಿ ಎರಕಹೊಯ್ದಿರುವುದನ್ನು ಎಲ್.‌ಬಸವರಾಜು ಅವರು ತಮ್ಮ ಕುಶಲಗ್ರ ಮತಿಯಿಂದ ಗಮನಿಸಿದ್ದು, ಮುಂದುವರೆದು  ಇಂಥ ಕೃತಿಗಳು ಕನ್ನಡದಲ್ಲಿ ತಿರುಮಲಾರ್ಯನ ಕಾಲದವರೆಗೂ ಕಣ್ಣಿಗೆ ಬೀಳುವುದಿಲ್ಲ. ಎಂಬ ಅವರ ನಿಲುವು ಹೊಸತನವನ್ನು ಒಳಗೊಂಡಿದೆ. ಪ್ರಕಾರದ ದೃಷ್ಟಿಯಿಂದ ಇದು ಒಂದು ಗೀತಾ ಪ್ರಬಂಧ, ಬಂಧ ದೃಷ್ಟಿಯಿಂದ ಏಳೇಳು ಪದ (ಹಾಡು)ಗಳಿರುವ ಆರು ಗೀತಾಗುಚ್ಛ (ಸಪ್ತಪದಿ)ಗಳೂ ಜೊತೆಗೆ ಹತ್ತುಪದ (ಹಾಡು)ಗಳಿರುವ ಒಂದು ದಶಪದಿಯೂ ಇದರಲ್ಲಿದ್ದು ಸಪ್ತಪದಿಗಳೇತುಂಬಿರುವುದರಿಂದ ಮತ್ತು ಅದೆಲ್ಲವೂ ಚಿಕ್ಕದೇವರಾಯನಿಗೇ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಂಬಂಧಿಸಿರುವುದರಿಂದ ಇದು “ಚಿಕ್ಕದೇವರಾಯ ಸಪ್ತಪದಿಎಂದು ಹೆಸರಾಗಿದೆ. ಪದಿ ಎಂದರೆ ಪದಗಳ ಗುಚ್ಛ, ಅಂಥ ಏಳು ಪದಗುಚ್ಛಗಳಿರುವುದರಿಂದಲೂ ಈ ಕೃತಿ “ಸಪ್ತಪದಿ”ಯಾಗಿದೆ. ಆರನೇ ಪದಗುಚ್ಛದಲ್ಲಿ ಮಾತ್ರ ಹತ್ತು ಹಾಡುಗಳಿದ್ದು ಮಿಕ್ಕಿದುದರಲ್ಲೆಲ್ಲಾ ಏಳೇಳು ಹಾಡುಗಳಿವೆ. ಕೊನೆಗೊಂದು ಮಂಗಳದ ಹಾಡಿದೆ. ಹೀಗಾಗಿ ಇದರಲ್ಲಿ ಒಟ್ಟು (೧೦+೪೨+೧೫೩ ಹಾಡುಗಳಿವೆ. ಅವಕ್ಕೆಲ್ಲ ರಾಗ-ತಾಳಗಳ ನಿರ್ದೇಶನವಿದೆ, ಪಲ್ಲವಿಯಿದೆ. ಸಾಮಾನ್ಯವಾಗಿ ಪ್ರತಿಯೊಂದು ಹಾಡಿನಲ್ಲೂ ಮೂರೋ, ಐದೋ, ಏಳೋ, ಒಂಭತ್ತೋ ನುಡಿಗಳಿವೆ. ಅಪರೂಪವಾಗಿ ಒಂದು ಅಥವಾ ಎರಡೇ ನುಡಿಯಿರುವುದೂ ಉಂಟು, ಜೊತೆಗೆ ಏಳೂ ವಿಭಾಗದ ಮೊದಲಿಗೂ ಪ್ರತಿಯೊಂದು ಹಾಡಿನ ಮೊದಲಿಗೂ ಮತ್ತೆ ಕೆಲವು ಹಾಡುಗಳ ಕೊನೆಗೂ “ಶೃಂಗಾರ"ದ ಪ್ರಕ್ರಿಯೆಗಳನ್ನು ಪರಿಚಯಿಸುವ ಅವನ್ನು ಅನ್ವಯಿಸುವ ಕೆಲವು ವಿವರಣಾತ್ಮಕ ಟಿಪ್ಪಣಿಗಳುಂಟು.  ಎಂದು ಕೃತಿಗೆ ಕೊಡ ಮಾಡಿರುವ ಸಪ್ತಪದಿಯ ಓಚಿತ್ಯವನ್ನು ಪ್ರಸ್ತಾಪಿಸಿದ್ದಾರೆ.ಚಿಕ್ಕದೇವರಾಯನ ಪೌರುಷ ವೀರವನ್ನು ಕುರಿತದ್ದು. ಈ ಗೇಯಕೃತಿ. ಶೃಂಗಾರಗಳನ್ನು ಕುರಿತ ಎಂಥದೋ ಒಂದು ವಿಧವಾದ ಶಾಸ್ತ್ರ ಗ್ರಂಥವಾಗಬಹುದಾಗಿದ್ದ ಈ ಪ್ರಬಂಧವನ್ನು ತಿರುಮಲಾರ್ಯನು ಚಿಕ್ಕದೇವರಾಜನನ್ನು ಅದಕ್ಕೆ ನಾಯಕನನ್ನಾಗಿ ಮಾಡಿ ಅವನನ್ನು ಪ್ರೀತಿಸಿದ ಹೆಂಗಳೆಯರ ನೋವು-ನಲಿವುಗಳನ್ನೂ ಅದಕ್ಕೆಲ್ಲ ಪೌರುಷೋಚಿತವೆಂಬಂತೆ ಸೂಚಿಸಿದ ಅವನ ಸಹೃದಯ ಪ್ರತಿಕ್ರಿಯೆಗಳನ್ನೂ ಚಮತ್ಕಾರದಿಂದ ನುಡಿಗಳಲ್ಲಿ ಹರಣ ಪಲ್ಲವಿಗಳಲ್ಲಿ ಕೆನೆಕಟ್ಟಿ ಕೃತಾರ್ಥನಾಗಿದ್ದಾನೆ. ಈ ಅರ್ಥದಲ್ಲಿ ಈ ಗ್ರಂಥದ ಕೊನೆಗೆ ತಾನು ಹೇಳಿಕೊಂಡಿರುವಂತೆ-ಶೃಂಗಾರರಸವನ್ನು ಸಾಂಗವಾಗಿ ನಿರೂಪಿಸಿದ್ದಾನೆ. ಅವನು ಶಾಸ್ತ್ರಿಯಾದರೂ ಕಲೆಯನ್ನು ಬಲ್ಲ ಕಸುಬುದಾರ ಎಂದು(ಸಂಶೋಧನಾ ಪಥ, ಪು.೩೯೨) ತಿರುಮಲಾರ್ಯನ ಕಾವ್ಯ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ. ಅದೇ ರೀತಿ ತಿರುಮಲಾರ್ಯನ ಗೀತಗೋಪಾಲವು ಯಾವ ರೀತಿ  ಸಂಸ್ಕೃತದ ಗೀತಗೋವಿಂದವನ್ನು ಸಂಸ್ಕರಿಸಿ, ಸೋಸಿ ಕನ್ನಡ ಜನಕ್ಕೆ ಕಾಣಿಕೆ ಕೊಟ್ಟಂತಿದೆ ಎಂಬುದಾಗಿ ವಿವರಿಸಿದ್ದಾರೆ.

   ಚಿಕ್ಕದೇವರಾಯ ಭಿನ್ನಪವು  ಶರಣರ ವಚನಗಳ ಮತ್ತು ದಾಸರ ಉಗಾಭೋಗಗಳ ಹಲವು ಸಲ್ಲಕ್ಷಣಗಳನ್ನು ಅರಗಿಸಿಕೊಂಡು ತನ್ನದೇ ಆದ ಒಂದು ವೈಶಿಷ್ಟ್ಯವನ್ನು ಮೆರೆದಿದೆ.ಇಷ್ಟೆಲ್ಲ ರೀತಿಯಲ್ಲಿ ವಿಶೇಷವಾದೊಂದು ಕೃತಿ ಜನಸಾಮಾನ್ಯರ ಆಧ್ಯಾತ್ಮಿಕ ಉದ್ಧಾರಕ್ಕಾಗಿ ಚಿಕ್ಕದೇವರಾಜನ ಹೆಸರಿನಲ್ಲಿ ಪ್ರಕಟವಾಯಿತೆಂಬುದು ಹೆಮ್ಮೆಯ ಮಾತು. ಇದು ಒಣವೇದಾಂತವಾಗಿ ಕಾಲದೇಶವನ್ನರಿಯದೆ ಬಡಿದ ಬರಸಿಡಿಲಿನಂತಹ ಕೃತಿಯಲ್ಲ. ತನ್ನಿಂದಾದಷ್ಟು ಸಾಮಾಜಿಕ ಸುವ್ಯವಸ್ಥೆಯನ್ನು ಅಂದಿನ ಮೈಸೂರು ಪ್ರಾಂತದಲ್ಲಿ ರೂಢಮೂಲಗೊಳಿಸಿ ಪ್ರಜೆಗಳಿಗೆ ರಾಜಕೀಯ ಭಯ ಭ್ರಮಣೆಗಳಿಲ್ಲದಂತೆ ಏರ್ಪಡಿಸಿ ಮಳೆ ಬೆಳೆಯಿಂದ ಬಡತನ ಬವಣೆಗಳು ಇಲ್ಲದ ಸದೃಢ ಸುಭಿಕ್ಷ ಪರಿಸರದಲ್ಲಿ ಜನ ಆಧ್ಯಾತ್ಮಿಕವಾಗಿ ಮುನ್ನಡೆಯಬೇಕೆಂಬ ಸಂಕಲ್ಪದಿಂದ“ ಅಕ್ಕರಮ ನಡೆಯದೊಕ್ಕಲಿಗರ್ಗಂ ಪೆಣ್ಗಳ್ಗಂ ಸಕ್ಕದದಿಂ ತತ್ವಜ್ಞಾನಪ್ಪುದರಿದು-ಎಂದು ಎಲ್ಲರುಮರಿವಂತೆ ಕನ್ನಡ ವಾತಿನೊಳಂ ಮೆಲ್ನುಡಿಗಳಿಂದ ಅಖಿಲತತ್ವಾರ್ಥಂಗಳಂ ಸಂಗತಿಗೊಳಿಸಿ" ಮೈತಳೆದು ಬಂದ ದಯಾಮಯ ಸಕಾಲ ಸಮರ್ಥ ಕೃತಿಯಿದು.

   ಅಪ್ರತಿಮವೀರಚರಿತೆಯು ಆಧುನಿಕರಿಗೆ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಪ್ರಯೋಜನ ಕಾರಿಯಾಗದಿದ್ರೂ ಅದರಲ್ಲಿ ಲಕ್ಷವಾಗಿ ಕೊಟ್ಟಿರುವ ಕನ್ನಡ ಪದ್ಯಗಳಲ್ಲೂ ಆ ಪದ್ಯಗಳಿಗೆ ಬರೆದಿರುವ ತಿರುಮಲಾರ್ಯನ ಆನ್ವಯಿಕ ಟಿಪ್ಪಣಿಗಳಲ್ಲೂ ಮೈಸೂರಿನ ಚರಿತ್ರೆಗೆ ಅದಕ್ಕಿಂತ ಹೆಚ್ಚಾಗಿ ಚಿಕ್ಕದೇವರಾಜನ ಜೀವನಕ್ಕೆ ಮತ್ತು ಅವನ ಸಮಸಾಮಯಿಕ ಜನಜೀವನಕ್ಕೆ ಸಂಬಂಧಿಸಿದ ಹಲವು ಅನರ್ಘವಾದ ಇತಿ ವೃತ್ತಗಳು ಹುದುಗಿವೆ.ಅವನ್ನು ಕನ್ನಡನಾಡಿನ ಚರಿತ್ರಕಾರರು ಇದುವರೆಗೂ ಗುರುತಿಸಿ ಬಳಸಿಕೊಳ್ಳದಿರುವುದು ಒಂದು ಸೋಜಿಗದ ಸಂಗತಿ. (ಸಂಶೋಧನಾ ಪಥ, ಪು.೪೧೭)

      ಅಪ್ರತಿಮ ವೀರಚರಿತದಲ್ಲಿ ತಿರುಮಲಾರ್ಯನು ತಾನು ಬಳಸಿರುವ ಕನ್ನಡಭಾಷೆಯಿಂದ ಅದು ಶಾಸ್ತ್ರೋಪಯೋಗಿಯಾಗುವ ಸಾಮರ್ಥ್ಯವನ್ನು ಪಡೆದಿದೆಯೆಂಬುದನ್ನು-ಹದಿನೇಳನೇ ಶತಮಾನದ ವೇಳೆಗೆ ತೋರಿಸಿಕೊಟ್ಟಿರುವನು. ಮತ್ತು ಅವನು ಅಲಂಕಾರಕ್ಕೆ ಸಂಬಂಧಿಸಿದ ಕೆಲವು ಪಾರಿಭಾಷಿಕ ಪದಗಳನ್ನು(ಸಂಸ್ಕೃತದಿಂದ) ಕನ್ನಡಿಸುವಲ್ಲಿ ಅತ್ಯಂತ ಉತ್ಸಾಹವನ್ನು ತೋರಿಸಿರುವನು. ಸಂಸ್ಕೃತಪರಿಭಾಷೆಯನ್ನು ಅದರ ಅರ್ಥಾನುಸಾರಿಯಾಗಿ-ಅಚ್ಚ ಕನ್ನಡಕ್ಕೆ ತರ್ಜುಮೆ ಮಾಡಿಕೊಳ್ಳುವ ಪ್ರವೃತ್ತಿ ಅವನದು. ಒಟ್ಟಾರೆ ಚಿಕ್ಕದೇವರಾಯನನ್ನು ಕುರಿತ  ತಿರುಮಲಾರ್ಯನು ರಚಿಸಿರುವ ಕೃತಿಗಳ ಕುರಿತ ಎಲ್.ಬಸವರಾಜು ಅವರ ಈ ವಿದ್ವತ್ಪೂರ್ಣ ಕೃತಿಯು ಅನೇಕ ನೂತನ ಸುಳುಹುಗಳಿಂದ ಕೂಡಿದ್ದು ಮೈಸೂರು ಒಡೆಯರ ಕಾಲದ ಚರಿತ್ರೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡುವ ಆಸಕ್ತರಿಗೆ ಆಕರವಾಗಿದೆ.

ವೀರಶೈವ ತತ್ವ ಮತ್ತು ಆಚರಣೆ ಕೃತಿಯಲ್ಲಿ ವೀರಶೈವ ತತ್ವ ಜ್ಞಾನದ ಹರವನ್ನು ವಿಸ್ತರಿಸಿರುವುದನ್ನು ಕಾಣಬಹುದಾಗಿದೆ.ಶರಣರ ವಚನಗಳಿಗೆಲ್ಲ ನವೀನ ರೀತಿಯ ವ್ಯಾಖ್ಯಾನವನ್ನು ಬರೆಯಬೇಕೆಂಬ ದಿಶೆಯಲ್ಲಿ  ಪ್ರವೃತ್ತರಾದ ಎಲ್.ಬಸವರಾಜುರವರಿಗೆ ವೀರಶೈವ ತತ್ವಜ್ಞಾನದ ಬಗೆಗೆ ಕೊರತೆಯಿರುವುದು ಅರಿವಿಗೆ ಬಂದಿತು. ಅಂಥ ತತ್ವಜ್ಞಾನವನ್ನು ಹೃದ್ಗತ ಮಾಡಿಕೊಳ್ಳಲು ಯಾವ ಗ್ರಂಥವನ್ನು ಓದಬೇಕೆಂದು ಜಿಜ್ಞಾಸೆಯುಂಟಾಯಿತು. ಚಿಕ್ಕರಾಗಿದ್ದಾಗ ಅಭ್ಯಾಸ ಮಾಡಿದ್ದ ಎಸ್.ಸಿ. ನಂದಿಮಠದ ಮತ್ತು ಎಂ.ಆರ್.ಸಾಖರೇ ಅವರ ಪ್ರಖ್ಯಾತವಾದ Hand Book of Veerasaivism ಮತ್ತು History and Philosophy of Lingayat Religion ಎಂಬ ಉದ್ಗ್ರಂಥಗಳನ್ನು ಮರಳಿ ಅವಲೋಕಿಸಿದಾಗ ಬಸವರಾಜುರವರಿಗೆ ಅವುಗಳಿಂದ ವೀರಶೈವ ತತ್ವದ ಪರಿಸರದ ಸ್ಥೂಲ ಪರಿಚಯವಾಯಿತೆ ಹೊರತು ಅದರ ಆಳ ಅಂತರಾಳ ಮನದಪ್ಪಾಗಲಿಲ್ಲ. ತಿಳಿಯಬೇಕೆಂಬ ಕಳಕಳಿ ತಗ್ಗಲಿಲ್ಲ. ಅದನ್ನು ಅವರ ಮಾತುಗಳ ಮೂಲಕವೇ ತಿಳಿಯ ಬಹುದಾದರೇ ನನಗೆ ನಾನೇ ಯಾವುದಾದರೊಂದು ­ಜಾಡು ಹಿಡಿದು ಆ ತತ್ವದರ್ಶನವನ್ನು ಪಡೆಯಬೇಕೆಂದು ಸಂಕಲ್ಪಿಸಿಕೊಂಡೆ ಮೊದಲು ಲಕ್ಕಣ್ಣದಂಡೇಶನ ಶಿವತತ್ವ ಚಿಂತಾಮಣಿ ಮುಂತಾದ ಕನ್ನಡ ಪುರಾಣ ಗ್ರಂಥಗಳನ್ನು ಆಮೇಲೆ ಕೆಳದಿಯ ಬಸವರಾಜನ ಶಿವತತ್ವರತ್ನಾಕರ, ನೀಲಕಂಠ ಶಿವಾಚಾರ್ಯನ ಕ್ರಿಯಾಸಾರ, ಕಲ್ಯಾಣದ ಮಾಯಿದೇವನ ಶಿವಾನುಭವಸೂತ್ರ ಮುಂತಾದ ಸಂಸ್ಕೃತ ಸಂದರ್ಭ ಗ್ರಂಥಗಳನ್ನು ಅಧ್ಯಯನ ಮಾಡಿದೆ. ಡಾ.ಟಿ.ಜಿ ಸಿದ್ದಪ್ಪಾರಾಧ್ಯರ ಮತ್ತು ವೈ.ನಾಗೇಶ ಶಾಸ್ತ್ರಿಗಳ ಕೃತಿಗಳನ್ನು ಓದಿದೆ. ಆದರೂ ನನಗೆ ವೀರಶೈವತತ್ವದ ಬಗ್ಗೆ ಒಂದು ಯಥಾವತ್ತಾದ ಸಮಗ್ರ ಕಲ್ಪನೆ  ಮೂಡಲಿಲ್ಲ. ಹತಾಶನಾದೆನಾದರೂ ಮತ್ತೆಯೂ ಜಿಜ್ಞಾಸೆ ತಗ್ಗಲಿಲ್ಲ. ಎಂದು ಆ ವಿಷಯದ ಬಗೆಗಿನ ಜ್ಞಾನದ ಹಸಿವು ಉಂಟಾದ ಬಗೆಗೆ ಹೇಳಿಕೊಂಡಿದ್ದಾರೆ.  ನಂತರದದಲ್ಲಿ, ಎಲ್. ಬಸವರಾಜುರವರಿಗೆ ಮೈಸೂರಿನ ಮರಿಮಲ್ಲಪ್ಪನವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಎಲ್.ಬಸವರಾಜುರವರ ಕಿರಿಯ ಮಿತ್ರ ಜಿ.ಎ.ಶಿವಲಿಂಗಯ್ಯನವರನ್ನು ಹೀಗೆ ಒಂದು ಸಲ ಕಂಡಾಗ ಅವರಲ್ಲಿ ನನ್ನ ತಳಮಳವನ್ನು ತೋಡಿಕೊಂಡೆ. ಆಗ ಅವರು ತಮ್ಮಲ್ಲಿದ್ದ ಒಂದು ಓಲೆಯ ಗ್ರಂಥವನ್ನು ಬಸವರಾಜುರವರ ಕೈಯಲ್ಲಿಟ್ಟರು. ಅದರ ಹೆಸರು “ವೀರಶೈವ ತತ್ವ ಪ್ರಕಾಶ ಎಂದು ಅಲ್ಲಿಗೇನಾದರೂ ಇವರಿಗೆ ಬೆಳಕು ಬರಬಹುದೆಂದು ಬಿಚ್ಚಿ ಓದಲಾರಂಭಿಸಿದರು. ದಿನಗಳು ಉರುಳಿದಂತೆಲ್ಲ ಆ ಓಲೆಯ ಗ್ರಂಥ ವೀರಶೈವತತ್ವ ಜ್ಞಾನವನ್ನು ಯಥವತ್ತಾಗಿ ಮತ್ತು ಸವಿವರವಾಗಿ ನಿರೂಪಿಸುವ ಅತ್ಯುತ್ತಮವಾದ ಆಕರಗ್ರಂಥವಾಗುವುದೆಂಬುದು ಖಚಿತವಾಯಿತು. ಆ ಓಲೆಯ ಗ್ರಂಥವನ್ನು ಪರಿಷ್ಕರಿಸಿ ಅಚ್ಚು ಹಾಕಿಸಿದರೆ ಸಾಕು ವೀರಶೈವತತ್ವ ಜಿಜ್ಞಾಸುಗಳಿಗೊಂದು ಕೈದೀವಿಗೆಯ ದೊರೆತಂತಾಗುವುದೆಂದು ಆ ಪರಿಷ್ಕರಿಸುವ ಕೆಲಸದಲ್ಲಿ ತೊಡಗಿದೆ. ಎಂದು ಹೇಳಿಕೊಂಡಿರುವಲ್ಲಿ ಅವರ ವೀರಶೈವ ತತ್ವ ಮತ್ತು ಜ್ಞಾನದ ಹಸಿವಿನ ಬಗೆಗೆ ಮನದಟ್ಟಾಗುತ್ತದೆ. ವೀರಶೈವ ತತ್ವ ಮತ್ತು ಆಚರಣೆಯನ್ನು ಕುರಿತು ಉಲ್ಲೇಖಗಳನ್ನು, ಶಿವತತ್ವ ಚಿಂತಾಮಣಿಯಿಂದ, ಶಿವತತ್ವ ರತ್ನಾಕರದಿಂದ ವಿವೇಕ ಚಿಂತಾಮಣಿಯಿಂದ, ಶಂಕರದಾಸಿಮಯ್ಯನ ಪುರಾಣದಿಂದ, ರಾಘವಾಂಕ ಚಾರಿತ್ರದಿಂದ, ಸಿದ್ಧರಾಮ ಚಾರಿತ್ರ, ಪ್ರಭುಲಿಂಗಲೀಲೆ-ಚೆನ್ನಬಸವ ಪುರಾಣ- ಮಹಾದೇವಿ ಯಕ್ಕನ ಪುರಾಣಗಳಿಂದ ಆರಾಧ್ಯ ಚಾರಿತ್ರದಿಂದ ಮಿಶ್ರಾರ್ಪಣ ಮತ್ತು ದಶವಿಧ ಪಾದೋದಕ-ಏಕಾದಶ ವಿಧ ಪ್ರಸಾದ ಮುಂತಾದ ಮೂಲಗಳಿಂದ ಎತ್ತಿಕೊಂಡು ವೀರಶೈವ ತತ್ವವನ್ನೇ ಅಲ್ಲದೇ ಲಿಂಗಧಾರಣೆ ಲಿಂಗದೀಕ್ಷೆ ಲಿಂಗಪೂಜೆ ಪಾದಪೂಜೆ ಪ್ರಸಾದ ಸ್ವೀಕಾರ ಸಮಾಧಿಯೆಂಬ ಅಂತ್ಯಕ್ರಿಯೆ ಈ ಮುಂತಾದ ಎಲ್ಲಾ ವೀರಶೈವರ ಮುಖ್ಯ ಆಚರಣೆಗಳ ಸ್ವರೂಪವನ್ನು ತಿಳಿಯಲು ಅನುಕೂಲವಾಗುವಂತೆ ಅವಶ್ಯಕವಾದ ಸಾಮಗ್ರಿಯನ್ನು ಒಂಭತ್ತು ಅನುಬಂಧಗಳಲ್ಲಿ ವಿಂಗಡಿಸಿಕೊಟ್ಟಿದ್ದಾರೆ. ಈ ಅಚ್ಚುಕಟ್ಟಿನಲ್ಲಿ ಪ್ರಸ್ತುತ ಪುಸ್ತಕವನ್ನು ವೀರಶೈವ ತತ್ವ ಪ್ರಕಾಶವೆಂದು ಕರೆಯದೆ ವೀರಶೈವತತ್ವ ಮತ್ತು ಆಚರಣೆ ಎಂದು ಕರೆಯುವುದೇ ಸೂಕ್ತವೆಂದು ಭಾವಿಸಿದ ಎಲ್.ಬಸವರಾಜುರವರು ರಕ್ಷಾಪುಟದ ಮೇಲೆ ಮತ್ತು ಮುಖಪುಟದಲ್ಲಿ ಅಚ್ಚು ಹಾಕಿಸಿದ್ದಾರೆ. ಇದು ಒಂದು ರೀತಿಯಲ್ಲಿ ಸಮಗ್ರ ವೀರಶೈವ ತತ್ವದ ತಿಳಿವಳಿಕೆಯ ಸಂಶೋಧನಾ ಸಂಪಾದಿತ ಕೃತಿಯಾಗಿದೆ.

   ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚಾರಿತ್ರ್ಯದ ವಾದಕಾಂಡದಲ್ಲಿ ಬರುವ ಚಾರ್ವಾಕಾದಿ ನಾನಾ ಸಿದ್ಧಾಂತಗಳ ಖಂಡನೆಯನ್ನು ಅದೇ ಪಂಡಿತಾರಾಧ್ಯ ಚಾರಿತ್ರದ ಕನ್ನಡ ಭಾಷಾಂತರವೆನ್ನಬಹುದಾದ ನೀಲ ಕಂಠಾಚಾರ್ಯದ ಆರಾಧ್ಯ ಚಾರಿತ್ರದಿಂದ ಸರಳ (ಗದ್ಯ) ಅನುವಾದ ಮಾಡಿಕೊಟ್ಟಿದ್ದಾರೆ. ಈ ವಿಭಾಗವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದೇ ಆದರೆ ಆ ಚಾರ್ವಾಕಾದಿ ಸಿದ್ದಾಂತಗಳಲ್ಲಿ ವೀರಶೈವ ದೃಷ್ಟಿಯಿಂದ ಏನೇನು ಕುಂದುಕೊರತೆಗಳಿವೆಯೆಂಬುದು ಮನದಟ್ಟಾಗುವುದಲ್ಲದೆ ಇದುವರೆಗೆ ವಿದ್ವಜ್ಜನರು ತಿಳಿದಿರುವಂತೆ ವೀರಶೈವ ಸಿದ್ಧಾಂತವು ಯಾವೊಂದು ವಿಧವಾದ ಅದ್ವೈತವೂ ಆಗಿರದೆ ಅದು ವಾಸ್ತವವಾಗಿ ಒಂದು ವಿಧವಾದ ದ್ವೈತವೇ ಆಗಿದೆಯೆಂಬ ನಿಲುವಿಗೆ ಪಾಲ್ಕುರಿಕೆ ಸೋಮನಾಥನು ಬಂದಿರುವನೆನಿಸುವುದು  ಎಂಬ ಅನಿಸಿಕೆಯನ್ನು ಇವರು ವ್ಯಕ್ತ ಪಡಿಸಿದ್ದಾರೆ. (ವೇದಾಂತನಿರಸನ ಭಾಗವನ್ನು ನೋಡಿ ಪುಟ 220) ವೀರಶೈವ ತತ್ವ ಮತ್ತು ಸಿದ್ಧಾಂತವನ್ನು ನಿರೂಪಿಸುವಲ್ಲಿ ಅವರ ಶ್ರಮ ಮತ್ತು ಪಾಂಡಿತ್ಯ ಜ್ಞಾನ ಎದ್ದು ಕಾಣುತ್ತದೆ.

  ಎಲ್.ಬಸವರಾಜುರವರು ಸಂಗ್ರಹಿಸಿರುವ ನೂರಾರು ಶರಣರ ಸಾವಿರ ವಚನಗಳು ಕೃತಿ ೧೦೬ ಶರಣರ ವಚನಗಳನ್ನು ಒಳಗೊಂಡಿದೆ. ವಚನ ಸಾಹಿತ್ಯದ ಕುರಿತು ಆಳವಾಗಿ ಅಧ್ಯಯನ ಮಾಡಿದ ಎಲ್.ಬಸವರಾಜು ಅವರು ಬಸವಾದಿ ಪ್ರಮಥರ ಹಾಗೂ ಹಲವಾರು ಅಲಕ್ಷಿತ ವಚನಕಾರರನ್ನು ಮತ್ತು ಅವರ ಪ್ರಾತಿನಿಧಿಕ ವಚನಗಳನ್ನು ಸಂಗ್ರಹಿಸಿ ಅವುಗಳನ್ನು ಒಂದೆಡೆ ಜೋಡಿಸಿರುವ ವಚನಮಾಲೆಯೇನೂರಾರು ಶರಣರ ಸಾವಿರ ವಚನಗಳು” “ವಚನಕಾರರಲ್ಲಿ ಪ್ರಭುದೇವ, ಘನಲಿಂಗಿಯಂತಹ ತತ್ತ್ವಜ್ಞಾನಿಗಳಿದ್ದಾರೆ. ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮರಂತಹ ಆಚಾರ್ಯ ಪುರುಷರಿದ್ದಾರೆ. ಅಜಗಣ್ಣ, ದಾಸಿಮಯ್ಯ, ಅಕ್ಕನಂತಹ ಅನುಭಾವಿಗಳಿದ್ದಾರೆ. ರೇಮವ್ವೆ, ರೇಚವ್ವೆ, ಮಹದೇವಯ್ಯ ಮುಂತಾದ ಗೃಹಿಣಿಯರಿದ್ದಾರೆ. ತುರುಗಾಹಿ ರಾಮಣ್ಣ, ಕಕ್ಕಯ್ಯ, ಮಾಚಯ್ಯಾದಿ ಕಾಯಕ ನಿಷ್ಠರಿದ್ದಾರೆ. ಸಮಾಜದ ಬಹುವರ್ಗ ಈ ಯಜ್ಞದಲ್ಲಿ ತೊಡಗಿ ತಮ್ಮ ಅನುಭವಗಳನ್ನು ಬಿತ್ತರಿಸುವಾಗ ಅವರವರ ಇತಿಮಿತಿಗಳಲ್ಲಿ ವಚನ ರಚಿಸಿಕೊಟ್ಟಿದ್ದಾರೆ. ಸಾಂಸ್ಕೃತಿಕ, ಸಾಹಿತ್ಯದ ದೃಷ್ಟಿಯಿಂದ ಈ ಎಲ್ಲ ವಚನಗಳೂ ಅಧ್ಯಯನಾಕಾಂಕ್ಷಿಯಾಗಿವೆ. ಭಕ್ತಿ, ವೈಚಾರಿಕತೆಗೆ ಬಸವಣ್ಣ, ಜ್ಞಾನದ ನೆಲೆಯಲ್ಲಿ ಚೆನ್ನಬಸವಣ್ಣ ವೈರಾಗ್ಯಕ್ಕೆ ಪ್ರಭುದೇವ, ಶಿವಯೋಗಕ್ಕೆ ಸಿದ್ದರಾಮ, ವೀರನಿಷ್ಠೆಗೆ ಮಾಚಯ್ಯ, ರೂಪದಲ್ಲಿ ಹೆಣ್ಣಾಗಿ ಭಾವದಲ್ಲಿ ಗಂಡಾಗಿ ದಿಟ್ಟತನ ಮೆರೆದ ಅಕ್ಕನ ಆದರ್ಶ-ಹೀಗೆ  ವಚನಕಾರರ ವಿವಿಧ ಆಯಾಮಗಳನ್ನು ಅನೇಕ ಅಧ್ಯಯನಕಾರರು ತಿಳಿಹೇಳಿದ್ದರೂ ನಿರ್ದಿಷ್ಟ  ಪಂಥವೊಂದಕ್ಕೆ ತಮ್ಮನ್ನು ಬಂಧಿಸಿಕೊಳ್ಳದೆ ಮಾನವ ಸಮುದಾಯದ ಎಲ್ಲ ನೆಲೆಗಳಲ್ಲಿಯೂ ವಚನಕಾರರು ಹಾಗೂ ಅವರ ಸಾಹಿತ್ಯ ಪ್ರಕಾರವನ್ನು ಅಭ್ಯಾಸಿಸಬೇಕಿದೆ ಎಂಬ ಎಲ್.ಬಸವರಾಜುರವರ ಸಂಶೋಧನಾ ನಿಲುವು ಯೋಚಿಸತಕ್ಕದ್ದಾಗಿದೆ.  ಇಲ್ಲಿ ವಿವಿಧ ವಚನಕಾರರ ಪ್ರಾತಿನಿಧಿಕ ವಚನಗಳನ್ನು ಒಂದು ನಿರ್ದಿಷ್ಟ ಭಾವಬಂಧಕ್ಕೆ ಒಳಪಡಿಸಿ ಅದನ್ನು ಇಡಿಯಾಗಿ ಒಂದು ಕೃತಿಯಾಗಿ  ಕೊಡ ಮಾಡಿದ್ದಾರೆ. ಅವರು ತಮ್ಮ ಕೃತಿಯ ಆರಂಭದಲ್ಲಿ ಶೈವಪಂಥದ ಮೂಲವನ್ನು ಮಹತ್ವವನ್ನು ಅದು ಪಸರಿಸಿದ ಬಗೆಯನ್ನು ಹಾಗೂ ಅದು ಹೊಂದಿದ ಮಾರ್ಪಾಡುಗಳನ್ನು ಸಾಕಷ್ಟು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ವಚನ ಸಾಹಿತ್ಯದ ಮೂಲಕ ನಡೆದ ಚಳುವಳಿಯು ಬಲು ವಿಶಿಷ್ಟವಾದುದು. ಈ ಕೃತಿಯಲ್ಲಿ ನೂರಾರು ಶರಣರನ್ನು ಅವರ ಹೆಸರನ್ನು ಅಕಾರಾದಿಯಾಗಿಯೇ ಜೋಡಿಸಿ, ಆಯಾ ವಚನಕಾರರ ಕೆಲವು ಪ್ರಾತಿನಿಧಿಕ ವಚನಗಳನ್ನು ಪಟ್ಟಿ ಹಾಕಿದ್ದಾರೆ. ಅಕ್ಕಮ್ಮ ಅಲ್ಲ-ಏಲೇಶ್ವರದ ಕೇತಯ್ಯ ಎಂಬ ಹೆಸರಿನಿಂದ ಪ್ರಾರಂಭಗೊಂಡ ವಚನಕಾರರ ಪಟ್ಟಿ ಷಣ್ಮುಖ ಸ್ವಾಮಿ ಎಂಬ ನೂರ ಆರನೆಯ ವಚನಕಾರನ ಹೆಸರಿನೊಂದಿಗೆ ಮುಕ್ತಾಯವಾಗುತ್ತದೆ ಶರಣ-ಶರಣೆಯರ ವಚನಗಳಲ್ಲಿ ಎಲ್.ಬಸವರಾಜು ಅವರು ಸಾಹಿತ್ಯಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮಹತ್ವವೆನಿಸಿದ ಪ್ರಾತಿನಿಧಿಕ ವಚನಗಳನ್ನು ಆಯ್ದುಕೊಂಡು ಪಟ್ಟಿ ಮಾಡಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಈ ಶರಣಶರಣೆಯರ ವಚನಗಳನ್ನು ಓದುತ್ತಾ ಹೋದಂತೆ 12ನೇಯ ಶತಮಾನದ ಸಾಮಾಜಿಕ, ಧಾರ್ಮಿಕ ಪರಿಸರ ನಮ್ಮ ಕಣ್ಮುಂದೆ ಕಟ್ಟಿಕೊಡುವಂತಿದೆ. ಅನಾಮಧೇಯ ವಚನಕಾರರ 55 ವಚನಗಳನ್ನು ಎಲ್.ಬಸವರಾಜು ಅವರು ಮಿಶ್ರ ವಚನಗಳೆಂದು ಪಟ್ಟಿ ಮಾಡಿದ್ದಾರೆ. ಇವುಗಳಿಂದ ವಚನಕಾರರ ಸಂಖ್ಯೆ ನೂರ ಆರು ಆಗಿದ್ದು, ವಚನಗಳ ಸಂಖ್ಯೆ ಸಾವಿರಕ್ಕೆ ಮುಟ್ಟುತ್ತದೆ. ಎಲ್.ಬಸವರಾಜು ಅವರನೂರಾರು ಶರಣರ ಸಾವಿರ ವಚನಗಳುಕೃತಿಹನ್ನೆರಡನೆ ಶತಮಾನದ ವಚನಾಂದೋಲದ ಸಮಗ್ರ ಸ್ವರೂಪವನ್ನು ಅರಿಯುವಲ್ಲಿ ಮುಖ್ಯ ಆಕರವಾಗಿದೆ. ಅಂದಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ ಬದುಕನ್ನು ಇಡಿಯಾಗಿ ಅರಿಯುವಲ್ಲಿ ಈ ಕೃತಿ ಒಂದು ಪ್ರಮುಖ ಆಕರವಾಗಿ ಮಾನ್ಯತೆ ಪಡೆಯುತ್ತದೆಂದು ಹೇಳಬಹುದು. ಸಮಾಜೋ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ನೇತಾರರಾದ ವಚನಕಾರರ ವಚನಗಳು, ಅಲಕ್ಷಿತ ವಚನಕಾರರ ವಚನಗಳು ಮತ್ತು ಅವುಗಳ ಸಾರವನ್ನು ಸಮಗ್ರವಾಗಿ ಹಿಡಿದಿಟ್ಟಿರುವ ಈ ಕೃತಿ ಅಂದಿನ ಸಾಮಾಜಿಕ ಧಾರ್ಮಿಕ ಪರಿಸರವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ವಚನಕಾರರು ಜಾತ್ಯಾತೀತ ರಾಷ್ಟ್ರದ ಕನಸು ಕಂಡು, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಎತ್ತಿ ಹಿಡಿದು ವಿಶ್ವಪ್ರಜ್ಞೆಯನ್ನು ಮೂಡಿಸಿದ ಮಹಾ ಮಾನವರು ಎಂಬ ಬಸವರಾಜು ಅವರ  ವಚನಕಾರರ ಬಗೆಗಿನ ನಿಲುವುಗಳನ್ನು ಒಪ್ಪ ಬಹುದಾಗಿದೆ. (ನೂರಾರು ಶರಣರ ಸಾವಿರ ವಚನಗಳು, ಪುಟ-xii)

     ಅಲ್ಲಮನು ಮೈಮೇಲೆ ಬಂದಾಗ ಎಂಬ ವಚನಗಳಿಗೆ ಕಾವ್ಯ ರೂಪದ ವ್ಯಾಖ್ಯಾನಗಳನ್ನು ಬರೆದಿರುವ ಈ ಕೃತಿಯು ೨೦೦೪ ರಲ್ಲಿ ಬೆಂಗಳೂರಿನ ಸಿ.ವಿ.ಜಿ ಪಬ್ಲಿಕೇಷನ್ಸ್ ನಿಂದ ಪ್ರಕಟವಾಯಿತು. ಅಲ್ಲಮನ ವಚನಗಳನ್ನು ಷಟ್ಥ್ಸಲಕ್ಕೆ ಅನುಗುಣವಾಗಿ ಸಂಗ್ರಹಿಸಿ ಅವುಗಳಿಗೆ ಸಹಸ್ಪಂದನ ಎಂಬ ಹೆಸರಿನ ಅಡಿಯಲ್ಲಿ ಎಲ್.ಬಸವರಾಜುರವರು ಅವುಗಳಿಗೆ ಕಾವ್ಯ ರೂಪದ ವ್ಯಾಖ್ಯಾನವನ್ನು ಬರೆದಿದ್ದಾರೆ. ಅಲ್ಲದೇ ಈ ಹಿಂದೆ ಬಸವರಾಜುರವರೇ ಸಂಪಾದಿಸಿದ್ದ ಅಲ್ಲಮನ ವಚನ ಚಂದ್ರಿಕೆ ಗ್ರಂಥದಲ್ಲಿನ ಕೆಲವು ಮುಖ್ಯ ವಚನಗಳಿಗೆ ಅಲ್ಲಿನ ಕ್ರಮ ಸಂಖ್ಯೆಗೆ ಅನುಗುಣವಾಗಿ ಕಾವ್ಯರೂಪದ ವ್ಯಾಖ್ಯಾನ ಬರೆದಿದ್ದಾರೆ.  ಅಲ್ಲದೆ ಅಲ್ಲಮಪ್ರಭು ಎಂಬ ಮಹಾಜ್ಞಾನಿಯ ವಚನಗಳಿಗೆ ವ್ಯಾಖ್ಯಾನ ಬರೆಯುವುದು ತುಂಬ ಕಷ್ಟಕರ ಕೆಲಸ. ಮಾನವನ ಜೀವನದ ರಹಸ್ಯವನ್ನು ಸೂತ್ರ ರೂಪದಲ್ಲಿ ಸಾಂಕೇತಿಕವಾಗಿ ತಿಳಿಸಿದ್ದಾರೆ. ಬೆಡಗಿನ ವಚನಗಳನ್ನು ಒಮ್ಮೆ ಓದಿ ಸುಲಭವಾಗಿ ಅರ್ಥಮಾಡಿಕೊಂಡು ಬರೆಯುವುದು ಕಷ್ಟರ ಕೆಲಸ ಜೊತೆಗೆ ಶಿವಶಣರ ತತ್ವಗಳ ಮೂಲ ನೆಲೆಯನ್ನು ಚೆನ್ನಾಗಿ ಅರಿತಿರುವ ಎಲ್.ಬಸವರಾಜುರವರಿಗೆ ಮಾತ್ರ ಈ ಅಧ್ಯಯನ ಕ್ರಮ ಸಾಧ್ಯವಾಗುತ್ತದೆ.

ಎಲ್.ಬಸವರಾಜುರವರ ಈ ಕೃತಿಯ ಬಗ್ಗೆ ಸಿ.ಪಿ.ಸಿದ್ದಾಶ್ರಮರವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ಅಲ್ಲಮನಂತ ಬೆಡಗಿನ ವಚನಕಾರನ ವಚನಗಳಿಗೆ ವ್ಯಾಖ್ಯಾನ ಬರೆಯುವುದು ಕಷ್ಟದ ಕೆಲಸ ಅನುಭಾವಿ ಅಲ್ಲಮನ ಅನುಭಾವದ ಎತ್ತರಕ್ಕೆ ಏರಿದೆ. ಆತ ಕಂಡುಕೊಂಡ ವೈಜ್ಞಾನಿಕ ಅರಿವು ಮತ್ತು ಆಧ್ಯಾತ್ಮಿಕ ನಿಲುವನ್ನು  ತಿಳಿಯದೆ. ಆತನ ವಚನಗಳಿಗೆ ವ್ಯಾಖ್ಯಾನ ಬರೆಯುವುದು. ಅಸಾಧ್ಯದ ಮಾತು. ವಚನ ಸಾಹಿತ್ಯವನ್ನು ಅದರ ಆಳ ಅಗಲವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ಬಸವರಾಜು ಅವರು ತುಂಬ ಸಮರ್ಥವಾಗಿಯೇ ಇಲ್ಲಿ ಅಲ್ಲಮನ ವಚನಗಳಿಗೆ ಅರ್ಥಪೂರ್ಣ ವ್ಯಾಖ್ಯಾನ ಕಾವ್ಯರೂಪದಲ್ಲಿ ಬರೆದಿದ್ದಾರೆ. ಅಲ್ಲಮ ಅವರ ಮೈಮೇಲೆ ಬರದೆ ಹೋಗಿದ್ದಾರೆ ಇಂಥ ವ್ಯಾಖ್ಯಾನ ಅವರಿಂದ ಸಾಧ್ಯವಾಗುತ್ತಿರಲಿಲ್ಲ.  ಈ ಕೃತಿಯಲ್ಲಿ ಅಲ್ಲಮನ ವಚನಗಳಿಗೆ ಕಾವ್ಯ ರೂಪದಲ್ಲಿ ಅರ್ಥಪೂರ್ಣ ವ್ಯಾಖ್ಯಾನ ಬರೆದು ಸಾಹಿತ್ಯ ಲೋಕದಲ್ಲಿ ಹೊಸಹಾದಿ ನಿರ್ಮಿಸಿದ್ದಾರೆ. ಇಂತಹ ವಚನ-ಕವನಗಳಲ್ಲಿನ ವ್ಯಾಖ್ಯಾನದಿಂದ ಕೃತಿಯ ಸ್ವರೂಪವನ್ನು ಚೆನ್ನಾಗಿ ಅರಿಯಬಹುದು. ಅಲ್ಲಮನ ಮೈಮೇಲೆ ಬಂದಾಗ ಕೃತಿಯಲ್ಲಿ ಹೊಸ ಹೊಸ ನಿಲುವುಗಳನ್ನು ಕಾಣಲು ಸಾಧ್ಯವಾಗದೇ ಅಲ್ಲಮನ ಭಾವಾಂತರಂಗ ಅರಿಯುವಂತೆ ಮಾಡಿದೆ.

ಕಲ್ಯಾಣದ ಮಾಯಿದೇವನ ಶಿವಾನುಭವ ಸೂತ್ರ:

 ಕನ್ನಡ ಸಾಹಿತ್ಯದಲ್ಲಿ ಧರ್ಮ ಸಂಬಂಧಿತವಾದ ಕೃತಿಗಳು ಸಾಕಷ್ಟಿವೆ. ಆದರೆ ಧಾರ್ಮಿಕ ತತ್ತ್ವ ಸಿದ್ದಾಂತಗಳನ್ನು ಕುರಿತ ಕೃತಿಗಳು ದೊರೆಯುವುದು ಅತ್ಯಲ್ಪ ಮಾತ್ರ. ವೀರಶೈವ ಧರ್ಮಕ್ಕೆ ಸಂಬಂಧಿಸಿದ ಶಿವಶರಣರ ಸಿದ್ಧಾಂತವನ್ನು ಶಿವಾನುಭವ ಸೂತ್ರವನ್ನು ಸಂಸ್ಕೃತದಲ್ಲಿ ರಚಿಸಿದವನು ಕಲ್ಯಾಣದ ಮಾಯಿದೇವ. ಈತ ಬಿಜಾಪುರ ಜಿಲ್ಲೆಯ ಹುನಗುಂದ ತಾಲ್ಲೂಕಿನ ಐಪುರ(ಐಹೊಳೆ)ಯವನು.  8 ಪ್ರಕರಣಗಳಿಂದ ಕೂಡಿರುವ ಕಲ್ಯಾಣ ಮಾಯಿದೇವನಶಿವಾನುಭವ ಸೂತ್ರವನ್ನು ಮೂಲಕ್ಕೆ ಎಲ್ಲಿಯೂ ಚ್ಯುತಿಬಾರದ ರೀತಿಯಲ್ಲಿ ಗದ್ಯಾನುವಾದ ಮಾಡಿದ್ದಾರೆ. ಮೊದಲು ಮೂಲ ಸಂಸ್ಕೃತ ಶ್ಲೋಕವನ್ನು ನೀಡಿ, ಕೆಳಗಡೆ ಸರಳಗನ್ನಡದಲ್ಲಿ ಗದ್ಯವ್ಯಾಖ್ಯಾನ ಬರೆದಿದ್ದಾರೆ. ಆರಂಭದ ಮೂರು ಶ್ಲೋಕಗಳಿಗೆ ಗಿರೀಂದ್ರನ ಟೀಕನ್ನು ನೀಡಿ, ತದನಂತರ ತಮ್ಮ ಸರಳ ಗದ್ಯಾನುವಾದ ನೀಡಿರುವುದು ಪ್ರಸ್ತುತ ಕೃತಿರಚನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ವೀರಶೈವ ಧರ್ಮದ ಸಿದ್ಧಾಂತಗಳನ್ನು ಕುರಿತ ಎಲ್.ಬಸವರಾಜುರವರ ಸರಳ ಗದ್ಯಾನುವಾದ ಮಾಡಿ ವೀರಶೈವ ಸಿದ್ಧಾಂತಗಳನ್ನು ಕನ್ನಡದಲ್ಲಿ ಸರಳವಾಗಿ ಸುಲಭವಾಗಿ ತಿಳಿಯುವಂತೆ ಮಾಡಿದ್ದಾರೆ. ವೀರಶೈವ ಧರ್ಮದ ಆಳ ಅಧ್ಯಯನ ಹಾಗೂ ಎಲ್.ಬಸವರಾಜುರವರ ಜನಪರ ಕಾಳಜಿಗೆ ಕಲ್ಯಾಣದ ಮಾಯಿದೇವನ ಶಿವಾನುಭವ ಸೂತ್ರ ಕೃತಿಯು ಮತ್ತೊಂದು ನಿದರ್ಶನವಾಗಿದೆ.

ಶಿವದಾಸ ಗೀತಾಂಜಲಿ

     ಶಿವ ಶರಣರು ವಚನಗಳ ಹಾಗೆಯೇ ಹಾಡುಗಳನ್ನು ಬರೆದಿದ್ದಾರೆಂದು ಕಂಡುಕೊಂಡ ಎಲ್. ಬಸವರಾಜುರವರು ಶೋಧನೆಯ ಪಥವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಿಂದ ಶಿವದಾಸ ಗೀತಾಂಜಲಿ ಕೃತಿಯನ್ನು ಸಿದ್ಧಪಡಿಸಿದ್ದಾರೆ.  ಈ ಕೃತಿಯಲ್ಲಿಯ ವಿದ್ವತ್ಪೂರ್ಣ ಪ್ರಸ್ತಾವನೆಯಲ್ಲಿ, ಶೈವ, ವೀರಶೈವ ಪರಂಪರೆಯನ್ನು ಮೂಲ ನೆಲೆಯಾಗಿಸಿಕೊಂಡು ಅದರ ಹಿನ್ನಲೆ ಬೆಳವಣಿಗೆ, ಸಂಕಲನ ಸಾಹಿತ್ಯ, ವ್ಯಾಖ್ಯಾನ ಸಾಹಿತ್ಯ, ಶಿವ ಶರಣರು ರಚಿಸಿದ ವಚನೇತರ ಕೃತಿ ಪ್ರಕಾರಗಳನ್ನು ಅವುಗಳ ಸಾಹಿತ್ಯ ಚರಿತ್ರೆ, ಕೆಲವು ವಾಗ್ಗೇಯಕಾರರ ವೃತ್ತಾಂತ, ಶರಣರ ಹಾಡುಗಳ ಛಂದಸ್ಸು ಮೊದಲಾದ ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ಬಸವರಾಜುರವರ ಗುರುಗಳಾದ ಡಿ.ಎಲ್. ನರಸಿಂಹಾಚಾರ್ಯರು, ಶಿವದಾಸ ಗೀತಾಂಜಲಿ ಕೃತಿಗೆ ವಿದ್ವತ್‍ಪೂರ್ಣ ಪೀಠಿಕೆಯನ್ನು ಬರೆದಿದ್ದಾರೆ. ಎಲ್.ಬಸವರಾಜುರವರು ಬಸವಾದಿ ಪ್ರಮಥರ ನೂರ ಎಂಬತ್ತೆಂಟು ಹಾಡುಗಳನ್ನು ಪರಿಷ್ಕರಿಸಲು ಹಲವಾರು ಪ್ರಕಟಿತ ಹಾಗೂ ಅಪ್ರಕಟಿತ ಹಸ್ತಪ್ರತಿಗಳನ್ನು ಹಾಗೂ ಮುದ್ರಿತ ಕೃತಿಗಳನ್ನು ಒಳಗೊಂಡಂತೆ ವೈಜ್ಞಾನಿಕ ಹಾಗೂ ಶಾಸ್ತ್ರೀಯ ನೆಲೆಯಲ್ಲಿ ಸಂಪಾದಿಸಿ ಕನ್ನಡ ಸ್ವರ ವಚನಗಳನ್ನು ಹೊರತಂದಿದ್ದಾರೆ. ‘ಇದು ಕೇವಲ ಶ್ರದ್ಧೆಯಲ್ಲ, ಇಲ್ಲಿ ತಪಸ್ಸಿನ ತೆಯ್ದಾಟವಿದೆ, ಬುದ್ದಿಯ ಗುದ್ದಾಟವೂ ಇದೆ.” ಎಂದು ಹೊಗಳಿದ್ದಾರೆ. ಶಿವಶರಣರೂ ಗೀತೆಗಳನ್ನು ರಚಿಸಿ ಹರಿದಾಸರಂತೆ ಹಾಡುತ್ತಿದ್ದರೆಂಬುದನ್ನು ಸಾಧಾರಪೂರ್ವಕವಾಗಿ ನಿರೂಪಿಸುವ ಗ್ರಂಥ ‘ಶಿವದಾಸ ಗೀತಾಂಜಲಿ’.

 ಇಡೀ ಭಾರತೀಯ ಸಾಹಿತ್ಯಕ್ಕೆ ವಚನವೆಂಬ ಅಭೂತಪೂರ್ವ ಕಾಣಿಕೆಯನ್ನು ಕೊಟ್ಟ ಶಿವದಾಸರು ತಮ್ಮ ಕಾಲಕ್ಕೆ ಅಥವಾ ತತ್ಪೂರ್ವಕ್ಕೆ ಕನ್ನಡದಲ್ಲಿಲ್ಲದಿದ್ದ ಹಾಡುಗಳನ್ನು ಬರೆಯಲೂ ಮೊದಲಿಗರಾದರು. ಶಿವಶರಣರು ಬರೆದ ಈ ಹಾಡುಗಳು ಪಲ್ಲವಿಯಿಂದ ಕೂಡಿ ಬೇರೆ-ಬೇರೆ ರಾಗಗಳಲ್ಲಿ ಹಾಡಲು ಅನುವರಿತು ರಚಿತವಾದ ಗೇಯಕೃತಿಯಾಗಿ ಕಾಣಬಹುದು.

      ಈ ಕೃತಿಯು ಬಸವಾದಿ ಪ್ರಮಥರ ೧೮೮ ಹಾಡುಗಳನ್ನು ಒಳಗೊಂಡಿದೆ. ಈ ಕೃತಿಸಂಪಾದನೆಗೆ ಅವರು ಮಹಲಿಂಗನ ಏಕೋತ್ತರಶತಸ್ಥಲದ ಎರಡು ಹಸ್ತಪ್ರತಿಗಳನ್ನು, ಜಕ್ಕಣ್ಣನ ಏಕೋತ್ತರ ಶತಸ್ಥಲದ ಏಳು ಹಸ್ತಪ್ರತಿಗಳನ್ನು ಹಾಗೂ ಶರಣರವಚನ-ಹಾಡುಗಳು, ಶಿವಯೋಗ ಪ್ರದೀಪಿಕೆಯ ಹಸ್ತಪ್ರತಿಗಳು ಹೀಗೆ ಒಟ್ಟು ಹನ್ನೊಂದು ಹಸ್ತಪ್ರತಿಗಳನ್ನು ಮೂಲ ಆಕರಗಳಾಗಿ ಬಳಸಿಕೊಂಡಿದ್ದಾರೆ.  ಈ ಶಿವದಾಸ ಗೀತಾಂಜಲಿಯಲ್ಲಿ ಸುಮಾರು ಇಪ್ಪತ್ತೇಳು ಜನ ಶಿವದಾಸರ ಹಾಡುಗಳು ಸಂಕಲನವಾಗಿವೆ. ಈ ಇಪ್ಪತ್ತೇಳು ಜನರಲ್ಲಿ 1. ಬಸವ, 2. ಅಲ್ಲಮಪ್ರಭು, 3. ಚೆನ್ನಬಸವ, 4. ಸಿದ್ಧರಾಮ, 5. ಅಕ್ಕಮಹಾದೇವಿ, 6. ಬಸವನ ಅರ್ಧಾಂಗಿಯಾದ ನೀಲಲೋಚನೆಯಮ್ಮ, 7.ಸೊಡ್ಡಳ ಬಾಚರಸ, 8.ಹಾವಿನಹಾಳ ಕಲ್ಲಯ್ಯ, 9.ಸಕಲೇಶ ಮಾದರಸ, 10.ನಿಜಗುಣ1, 11.ನಿಜಗುಣ ಚಿಕ್ಕಯ್ಯ, 12.ಆಮುಗಿದೇವಯ್ಯ, 13.ಗುರುಪುರದ ಮಲ್ಲಯ್ಯ, 14.ಆದಯ್ಯ, 15,ಬಹುರೂಪಿ ಚೌಡಯ್ಯ 16.ಅಗ್ಘಣಿ ಹೊನ್ನಯ್ಯ, ಮುಂತಾದವರು ಇವರೆಲ್ಲರೂ ಬಸವಣ್ಣನ ಸಮಕಾಲೀನರು.೧೫ ಈ ಕೃತಿಗೆ ತುಂಬ ಅಭ್ಯಾಸಪೂರ್ಣವಾದ ೧೪೩ ಪುಟಗಳ ಪ್ರಸ್ತಾವನೆ ಇದ್ದು ತುಂಬ ಮೌಲಿಕತೆಯನ್ನು ಪಡೆದಿದೆ. ಶಿವಶರಣರು ವಚನಗಳನ್ನು ಬರೆದಂತೆ ಹಾಡು (ಸ್ವರವಚನಗಳನ್ನು ಬರೆದದ್ದು ಹೆಚ್ಚು ಜನರಿಗೆ ತಿಳಿದಿರಲಿಲ್ಲ. ಬಹುಶಃಇದಕ್ಕೆ ಕಾರಣ ಅವರ ವಚನಗಳು ಪ್ರಚಾರಗೊಂಡಷ್ಟು ಅವರ ಹಾಡುಗಳು ಪ್ರಚಾರ ಪಡೆಯದೇ ಹೋದುದೇ ಆಗಿದೆ. ಇದನ್ನುಗುರುತಿಸಿ ಎಲ್. ಬಸವರಾಜು ಅವರು ಶರಣರ ಹಾಡುಗಳನ್ನು ಸಂಗ್ರಹಿಸಿ, ಅದನ್ನು ಶಾಸ್ತ್ರೀಯವಾಗಿ ಸಂಪಾದಿಸಿದುದಲ್ಲದೆ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಇಲ್ಲಿ ಮೊದಲ ಬಾರಿಗೆ ಗುರುತಿಸಿದ್ದಾರೆ, ಹರಿದಾಸರಿಗೆ ಆದರ್ಶವಾಗಬಲ್ಲ,ಮಾದರಿಯಾಗಬಲ್ಲ ಸಂಗೀತ ಶರಣರದಾಗಿದೆ, ಕರ್ನಾಟಕ ಸಂಗೀತಕ್ಕೆ ಶಿವಶರಣರೇ ಮೊದಲಿಗರು, ಅವರ ಹಾಡುಗಳು ಭಾಗ-ತಾಳ-ಲಯ ಬದ್ಧವಾಗಿದ್ದು, ಹಾಡಲು ಯೋಗ್ಯವಾಗಿವೆಯೆಂಬುದನ್ನು ಈ ಗ್ರಂಥದಲ್ಲಿ ಸೋದಾಹರಣವಾಗಿ ವಿವರಿಸಿದ್ದಾರೆ.

ಶಿವದಾಸ ಗೀತಾಂಜಲಿಯ ಹಾಡುಗಳ ಛಂದಸ್ಸು

    ಶಿವದಾಸ ಗೀತಾಂಜಲಿಯಲ್ಲಿ ಶಿವಶರಣರ ಹಾಡುಗಳಲ್ಲಿ ಪಲ್ಲವಿಯಿರುವುದೇ ಹೊರತು, ಅನುಪಲ್ಲವಿಯಿರುವುದಿಲ್ಲ. ಹಾಡುಗಳಲ್ಲಿ ಛಂದಸ್ಸು ಒಂದು ಖಚಿತವಾದ ಚೌಕಟ್ಟಿನಲ್ಲಿ ಸಿಗುವುದಿಲ್ಲವೆಂದಲ್ಲ, ಆದರೆ ಅಪರೂಪ. ಇವುಗಳಲ್ಲಿ ಯಾವುದೋ ವಿಧವಾದ ನಿರ್ದಿಷ್ಟಲಯವನ್ನು ನಿರೀಕ್ಷಿಸಬಹುದೇ ಹೊರತು, ಅವರ್ತ ಗಣಸಂಖ್ಯಾ ನಿಯಮವನ್ನಲ್ಲ. ಹಾಡುವಾಗ ಒಂದು ಗಣ ಕಡಿಮೆಯಾಗಲಿ ಅಥವಾ ಅಧಿಕವಾಗಲಿ, ಆಲಾಪನೆಯಲ್ಲಿ ಅದು ಸರಿದೂಗುವುದು. ಆಧುನಿಕ ಸಾಹಿತಿಗಳು ಯಾವ ಲಯ ವಿನ್ಯಾಸವನ್ನು ಸ್ವಚ್ಛಂದವೆನ್ನುವರೋ, ಅದರ ಮೂಲ ರೂಪರೇಖೆಗಳನ್ನು ಶರಣರ ಗೀತೆಗಳ ಛಂದಸ್ಸಿನಲ್ಲಿ ಹಲವು ಕಡೆಗಳಲ್ಲಿ ಗುರುತಿಸಬಹುದು. ಶಿವದಾಸ ಗೀತಾಂಜಲಿಯಲ್ಲಿನ ಹಾಡುಗಳಿಗೆ ಶಿವಶರಣರು ಅಂಶಗಣದ “ಕರ್ಣಾಟಕ ವಿಷಯಜಾತಿ”ಯ ಛಂದಃಪ್ರಕಾರಗಳಲ್ಲಿ ಹಲವುಗಳನ್ನು ಬಳಸಿರುವರಲ್ಲದೆ, ಮಾತ್ರಾ ಗಣಘಟತವಾದ ಷಟ್ಪದಿಗಳನ್ನೂ ಅವುಗಳಿಂದ ನಿಷ್ಪನ್ನವಾದ ಮತ್ತಿತರ ಪ್ರಕಾರಗಳನ್ನೂ ಯಥೇಚ್ಛವಾಗಿ ಬಳಸಿದ್ದಾರೆ.

 ಛಂದೋವಸಂತ ಮತ್ತು ಕಿರಿಯಕ್ಕರಕ್ಕೆ ಉತ್ತಮ ಉದಾಹರಣೆ

ಛಂದೋವಸಂತ

   ವಿ       ವಿ         ವಿ      ಬ್ರ

ಗುರುಕರು : ಣದಿ ಶುದ್ಧ : ಶರಿರಿಯಾ : ಗಿಸ್ವೀ

  ಬ್ರ     ಬ್ರ       ವಿ      ಬ್ರ

ಕರಿಸಿ : ದ ಶಿವ : ಲಿಂಗಾರ್ಚ : ನೆಯಾ

  ಬ್ರ       ವಿ       ವಿ       ಬ್ರ

ಹೊರಗೆ : ಮಾಡುವ : ಮಾರುಗ : ಕ್ರಿಯಾ

   ವಿ       ವಿ      ವಿ      ಬ್ರ

ಪರಮಸಂ : ಪತ್ತಿನೊ : ಳಾದ ಶ : ರಣ೧೭

 

ಕಿರಿಯಕ್ಕರ

 

   ವಿ       ವಿ        ರು

ಐದು ಬ : ಣ್ಣದ ಪಕ್ಷಿ : ಮೈದಳೆವುದು 1 ಒಂದು ಚಂದಮಾಮ

  ವಿ         ವಿ         ರು

ನೆಯ್ದಿ ಲು : ಕುಮುದವು : ನೆರವಾದುದು 1 ಒಂದು ಚಂದಮಾಮ

  ವಿ     ಬ್ರ         ರು

ಹೊದ್ದಲೆ : ಚಿಗಿತು : ಹೊಸತಾದುದು 1 ಒಂದು ಚಂದಮಾಮ

  ವಿ       ವಿ          ವಿ

ಐದಲೆ : ನೂರೊಂದು : ತಲೆಯಾದುದು 1 ಒಂದು ಚಂದಮಾಮ   (ನುಡಿ 970)

 “ಚಂದಮಾಮ” ಎಂಬ ಹಾಡು ಸಂಪೂರ್ಣವಾಗಿ (ನುಡಿ 970) ಕಿರಿಯಕ್ಕರವನ್ನು ಹೋಲುವುದು. ಆದರೆ ಮೂರನೇ ಪಾದದ ಎರಡನೇ ಗಣವು ವಿಷ್ಣುವಿಗೆ ಬದಲಾಗಿ ಬ್ರಹ್ಮಗಣವಾಗಿದೆ. ಮೇಲಣ ಹಾಡಿನ ಛಂದೋವಿನ್ಯಾಸದ ವಿಶೇಷಾಂಶವೇನೆಂದರೆ ಅದರ ಪ್ರತಿಯೊಂದು ನುಡಿಯ ಪ್ರತಿಯೊಂದು ಪಾದದ ಕೊನೆಗೂ ಒಂದು ಚಂದಮಾಮ ಎಂಬ ಮಾತು ಪಲ್ಲವಿಯಾಗಿ ಪುನರಾವೃತ್ತವಾಗಿ ಸೇರಿ ಬಂದಿದೆ.

ಎಲ್. ಬಸವರಾಜುರವರು ಹಲವು ಬಸವಾದಿ ಪ್ರಮಥರ ಅಲ್ಲಲ್ಲಿ ಹರಡಿದ್ದ ಸ್ವರ ವಚನಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಫಲಕಾರಿಯಾಗಿದೆ. ಎಲ್. ಬಸವರಾಜುರವರು ಮಾಡಿರುವ ಇಂತಹ ಕಾರ್ಯವು ಹಲವು ವಿದ್ವಾಂಸರ ಪ್ರೀತಿ ಪಾತ್ರಕ್ಕೆ ಭಾಜನವಾಗಿದೆ.

    ಶರಣರ ಹಾಡುಗಳನ್ನು ಒಳಗೊಂಡ ಇದು ಶ್ರೇಷ್ಠ ಸಂಶೋಧನಾ ಕೃತಿ. ಶರಣಸಾಹಿತ್ಯದ ಮೇಲೆ ಹೊಸ ಬೆಳಕು ಬೀರುವ ಗಮನಾರ್ಹವಾದ ಕೃತಿಯೂ ಆಗಿದೆ. ಈ ಕೃತಿಯನ್ನು ಕುರಿತು ವರಕವಿ ಬೇಂದ್ರಯವರು “ಎಲ್. ಬಸವರಾಜು ಅವರು ಶಿವದಾಸ ಗೀತಾಂಜಲಿಯನ್ನುಸಾಹಿತ್ಯ ಲೋಕಕ್ಕರ್ಪಿಸಿ ಹೊಸ ವಿಕ್ರಮವನ್ನು ಸ್ಥಾಪಿಸಿದ್ದಾರೆ ಸಂಶೋಧಕರಿಗೂ ಸಂಶೋಧನೆಯ ಗಣಿ, ಕನ್ನಡ ಗೀತ ಸಾಹಿತ್ಯದಲ್ಲಿ ಹುದುಗಿದ ಮಹಾಶಿಲ್ಪ ಬಯಲಿಗೆ ಬಂದಿತು, ಹನ್ನೆರಡನೆಯ ಶತಮಾನದ ಹಿಂದಿನ ಮುಂದಿನ ಭಾವಬುದ್ಧಿ ವೈಭವವು ನವೀನ ಕ್ಷಿತಿಜವನ್ನು ವಿವೇಕಿಗಳಿಗೆ ತೆರೆದಿತು. ಏಕಾಂಗವೀರ ಏನು ಪರಿಶ್ರಮಪಡಬಲ್ಲ ಎಂಬುದರ ಸಂಕೇತ' ಎಂದುದನ್ನು ಇಲ್ಲಿ ಉಲ್ಲೇಖಿಸ ಬಹುದಾಗಿದೆ. ಎಲ್.ಬಸವರಾಜು ಅವರ ಗುರುಗಳಾದ ಪ್ರೊ.ಡಿ.ಎಲ್. ನರಸಿಂಹಾಚಾರ್ಯರು ಈ ಕೃತಿಗೆ ಮುನ್ನುಡಿಯನ್ನು ಬರೆಯುತ್ತ ಇದೊಂದು ಶ್ರೇಷ್ಠ ಸಂಪಾದನಾಕೃತಿ. ಶರಣರ ಹಾಡುಗಳನ್ನು ವಿಶೇಷ ಪರಿಶ್ರಮವಹಿಸಿ ಸಂಗ್ರಹಿಸಿ ಕೊಟ್ಟುದಲ್ಲದೆ, ಎಲ್ಲ ಹಾಡುಗಳಿಗೆ ರಾಗ-ತಾಳಗಳ ನಿರ್ದೇಶನ ನೀಡಿದ್ದು ವಿಶೇಷವಾಗಿದೆ. ಈ ಗ್ರಂಥದ ಪೀಠಿಕಾ ಬರಹವು ಶರಣಸಾಹಿತ್ಯಕ್ಕೆ ಸಂಬಂಧಿಸಿದ ಮೌಲಿಕವಾದ ಹಾಗೂ ಅಧಿಕೃತವಾದ ಸಂಗತಿಗಳನ್ನು ಒಳಗೊಂಡಿದೆ'' ಎಂದು ಹೇಳಿರುವ ನುಡಿಮುತ್ತುಗಳು  ಅವರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಶರಣ ಸಾಹಿತ್ಯವೆಂದರೆ ವಚನಗಳೆಂದಷ್ಟೇ ತಿಳಿದ ನಾವು ಈ ಕೃತಿಯಿಂದ ಶರಣಸಾಹಿತ್ಯದ ವೈವಿಧ್ಯಮಯ ಪ್ರಕಾರಗಳನ್ನು,ಅದರ ವೈಶಿಷ್ಟ್ಯಗಳನ್ನು ಅರಿಯುವವು. ಶರಣರು ವಚನಗಳ ಜೊತೆಗೆ ತಾರಾವಳಿ, ಕಾಲಜ್ಞಾನ, ಸ್ವರವಚನ, ನಾಂದ್ಯ,ಉದ್ಧರಣೆ, ವಾಚ್ಯ, ಬೊಲ್ಲಿ ಮುಂತಾದ ಕಾವ್ಯ ಪ್ರಕಾರಗಳಲ್ಲೂ ಕೃಷಿಗೈದು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಶರಣಸಾಹಿತ್ಯದ ವಿವರವಾದ ಅಧ್ಯಯನವಿನ್ನೂ ನಡೆಯಬೇಕಾಗಿದೆ. ಈ ದಿಸೆಯಲ್ಲಿ ಈ ಕೃತಿ ಮಾರ್ಗದರ್ಶಿಯಾಗಬಲ್ಲುದು. ಈಕೃತಿಯಲ್ಲಿ ಶರಣರ ಹಾಡುಗಳನ್ನು ರಾಗ-ತಾಳಗಳ ನಿರ್ದೇಶನದೊಂದಿಗೆ ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟುದಲ್ಲದೆ ಅನುಬಂಧದಲ್ಲಿ ಪಲ್ಲವಿಗಳ ಅಕಾರಾದಿ, ಗಮನಾರ್ಹ ಪದಸೂಚಿ, ಗೀತೆಗಳ ಕರ್ತೃಗಳು, ಗೀತೆಗಳ ಅಂಕಿತ, ರಾಗ ತಾಳಗಳ ಆಕಾರಾದಿ, ರಾಗ ಲಕ್ಷಣಗಳು, ಎಲ್ಲ ವಚನಕಾರರು ಹಾಗೂ ಅವರ ವಚನಾಂಕಿತಗಳು ಈ ಮುಂತಾದ ವಿವರಗಳನ್ನು ಸಮಗ್ರವಾಗಿ ಒದಗಿಸಿದ್ದು ಶರಣಸಾಹಿತ್ಯಾಭ್ಯಾಸಿಗಳಿಗೆ ತುಂಬ ಪ್ರಯೋಜನಕಾರಿಯಾಗಿದೆ.  ಇವೆಲ್ಲವೂ ಎಲ್.ಬಸವರಾಜುರವರ ವಚನ ಸಾಹಿತ್ಯದ ಒಳನೋಟಗಳನ್ನು ಬಿಂಬಿಸುವ  ಗಮನಾರ್ಹವಾದ ಸಂಶೋಧನೆಗಳ ಕುರಿತ ಪ್ರತಿಕ್ರಿಯೆಗಳಾಗಿವೆ.

   'ಶಿವದಾಸ ಗೀತೆಗಳು ಮತ್ತು 'ಸಂಗೀತ-ಸಾಹಿತ್ಯ-ಶರಣರ ಕೊಡುಗೆ' ಎಂಬ ಲೇಖನಗಳು-ಶಿವಶರಣರ ಸಂಗೀತಪ್ರಜ್ಞೆ ಸಾಹಿತ್ಯದಲ್ಲಿ ಮೇಳವಿಸಿ; ಜನಮಾನಸದಲ್ಲಿ ಅನುರಣ ಗೊಂಡಿರುವುದನ್ನು ಸಮರ್ಥವಾಗಿ ಪ್ರತಿಪಾದಿಸಿವೆ. ಇಲ್ಲಿಯ ಶ್ರುತಿ-ನಾದ-ಲಯ ಎಲ್ಲವೂ ಅನುಭವ ಜನ್ಯವೇ ಆದರೂ ಪರಿಪೂರ್ಣ ಪರಿಪಕ್ವವಾದ ಹದವನ್ನು ನೀಡಬಲ್ಲವು. ಇಲ್ಲಿ ಕರ್ಣರಸಾಯನವಿಲ್ಲ- ಹೃದಯಕ್ಕೆ ತಂಪೆರೆಯುವ ಮಾತೃ ಕ್ಷೀರಾಮೃತವಿದೆ. ಎಂಬ ಅವರ ಮಾತುಗಳು ಯೋಚಿಸತಕ್ಕದ್ದವುಗಳಾಗಿವೆ. ಎಲ್. ಬಸವರಾಜುರವರ ಶಿವದಾಸ ಗೀತಾಂಜಲಿ ಮತ್ತು ಅಲ್ಲಮನ ವಚನ ಚಂದ್ರಿಕೆ ಕೃತಿಗಳಿಗೆ ಡಿ.ಲಿಟ್ ನೀಡಿ ಪುರಸ್ಕರಿಸಿರುವುದು ಹೆಮ್ಮೆಯ ವಿಚಾರವಾಗಿದೆ.

   “ಬೆಡಗಿನ ವಚನಗಳು' ಎಂಬ ಕಿರುಹೊತ್ತಗೆಯನ್ನು ಕುವೆಂಪು ವಿಶ್ವವಿದ್ಯಾಲಯದ ಅರಿವು-ವಿಸ್ತರಣ ಮಾಲಿಕೆಗಾಗಿ ರಚಿಸಿದ್ದು, ವಚನಗಳ ಮಾತು ಬಂದಾಗಲೆಲ್ಲ ಸಾಮಾನ್ಯವಾಗಿ, ಜನಸಮುದಾಯದಲ್ಲಿ, ನೆಲೆಸಿರುವ ಜನಬದುಕಿಗೆ ಹತ್ತಿರವು ಸರಳವೂ ಆಗಿರುವ ವಚನಗಳನ್ನು ಕುರಿತು ನಾವು ಮಾತನಾಡುವುದುಂಟು. ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳು ಇವೆಯಾದರೂ ಅವುಗಳ ಎಲ್ಲ ಘನಾರ್ಥಗಳೊಡನೆ ಬೆಡಗಿನ ವಚನಗಳು ಹೇಳುವುದು ಏನನ್ನು? ಎಂಬುದನ್ನು ಇನ್ನೂ ಪರಿಪೂರ್ಣವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಎಲ್.ಬಸವರಾಜು ಅವರು  ಆಯ್ಕೆ ಮಾಡಿಕೊಂಡು ವಿಶ್ಲೇಷಿಸಿರುವ ಬೆಡಗಿನವಚನಗಳು ಬಹುಮಟ್ಟಿಗೆ ಆಂತರ್ಯವನ್ನು ತೋರಿವೆ. ಬೆಡಗಿನ ವಚನಗಳನ್ನು ಕುರಿತು ಅವರು ಹೇಳುವ ಮಾತುಗಳಾದʻ ಈ ಬೆಡಗಿನ ಮಾರ್ಗ ಅನಕ್ಷರಸ್ತರಿಗೆ ಕಣ್ಣಿಗೆ ಕಟ್ಟುವ ಒಂದು ವರ್ಣ ಚಿತ್ರದಂತಾದರೆ ವಿದ್ವಾಂಸರಿಗೆ ಒಳಒಳಕ್ಕೆ ಅನುರಣನಗೊಳ್ಳುವ ಒಂದು ನಾದಲೀಲೆಯಾಗುತ್ತದೆʼ ಎಂಬ ಅನಿಸಿಕೆಗಳು ಚಾರಿತ್ರಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿವೆ. ಅವರು ಬೆಡಗಿನ ವಚನ ಕುರಿತು ವಿಶ್ಲೇಷಣೆ ಮಾಡುವಾಗ ಶಿಷ್ಟವಚನಕಾರರ ಬೆಡಗಿನ ವಚನಗಳು ಹಾಗೂ ಕಸುಬುಗಾರರ ಕಸುಬಿನ ಬೆಡಗಿನ ವಚನಗಳೆಂದು ವಿಂಗಡಿಸಿ ಕಲ್ಪಿಸಿ ಕೊಟ್ಟಿರುವುದು ವಚನಗಳ ಅಧ್ಯಯನಕ್ಕೆ ಹೊಸಆಯಾಮವನ್ನು ಅಧ್ಯಯನಕಾರರಿಗೆ ಕಲ್ಪಿಸಿ ಕೊಟ್ಟಿದೆ.          

    ಇದುವರೆಗೂ ಕನ್ನಡದವಿದ್ವತ್‌ವಲಯ ಸಂಪಾದಿಸಿ ಪ್ರಕಟಿಸಿದ ವಚನವಾಜ್ಞಯವನ್ನು ಕುರಿತು  ಪ್ರೊ.ಎಲ್.ಬಸವರಾಜು ಅವರು ಹೇಳಿರುವ “ಎಲ್ಲ ಶರಣರ ಜೀವನದರ್ಶನ ವಿವರಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಸಂಕಲನ ಮಾಡುವಾಗ ಪಾಲ್ಕುರಿಕೆ ಸೋಮನಾಥನ ಸಂಪ್ರದಾಯ, ಹರಿಹರನ ಸಂಪ್ರದಾಯ, ಸಿಂಗಿರಾಜನ ಸಂಪ್ರದಾಯಗಳನುಸಾರವಾಗಿ ಸಂಯೋಜಿಸಿಕೊಳ್ಳಬೇಕು. ಹೀಗೆಯೇ ವಚನಗಳು ಮತ್ತು ಶಾಸನಗಳ ಆಧಾರಗಳಿಂದಲೂ ಇಡಿಯಾಗಿ ಬಸವಾದಿ ಪ್ರಮಥರ ಮತ್ತು ಇತರ ಶರಣರ ಚರಿತ್ರೆಯನ್ನು ಸಿದ್ಧಪಡಿಸಬೇಕು. ಆಮೇಲೆ ಇವರೆಲ್ಲರ ವಚನಗಳನ್ನು ಪರಿಷ್ಕರಿಸಬೇಕು. ಈ ಎಲ್ಲಾ ಆಧಾರದ ಮೇಲಿಂದಲೇ ಶರಣರ ಸಾಮಾಜಿಕ, ಧಾರ್ಮಿಕ ತಾತ್ವಿಕ ವಿವೇಚನೆಗಳನ್ನು ಮಾಡಿ ಪ್ರಕಟಿಸಬೇಕು. ಅವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು”. ಎಂಬ ಮಾತುಗಳು ನಂತರದ ವಚನ ಸಾಹಿತ್ಯ ಕುರಿತ ಸಂಶೋಧಕರು ಮತ್ತು ಅಧ್ಯಯನಕಾರರು ಗಮನಿಸಲೇ ಬೇಕಾದ ಸಂಗತಿಗಳಾಗಿವೆ.     

   ʻಪರಮಾರ್ಥ' ಅಂಕಿತವುಳ್ಳ ಹಸ್ತಪ್ರತಿಯೊಂದು ಎಲ್.ಬಸವರಾಜು ಅವರಿಗೆ ಲಭ್ಯವಾದುದರಿಂದ ಅದೇ ಶೀರ್ಷಿಕೆಯಲ್ಲಿ ಸರ್ವಜ್ಞನವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಈ ಕೃತಿಯಲ್ಲಿ ಸರ್ವಜ್ಞನ ವಚನಗಳು ಎಂದು ನಿರ್ಧರಿಸಿ ಉಳಿದ ಒಂದು ಸಾವಿರಕ್ಕೂಮಿಗಿಲಾದ ವಚನಗಳು ಸರ್ವಜ್ಞ ಕೃತವಲ್ಲ ಎಂದು ತೀರ್ಮಾನಿಸಿದ್ದು ಪ್ರೊ. ಎಲ್. ಬಸವರಾಜು ಅವರ ಸಂಶೋಧನಾ ದೃಷ್ಟಿಯ ಸ್ವಂತಿಕೆಗೆ ನಿದರ್ಶನವಾಗಿದೆ. ಉತ್ತಂಗಿ ಚೆನ್ನಪ್ಪ ಅವರು ಸಂಪಾದಿಸಿ ಪ್ರಕಟಿಸಿದ ಸರ್ವಜ್ಞನ ವಚನಗಳಲ್ಲಿ ಎಷ್ಟೋ ಪ್ರಕ್ಷಿಪ್ತವಿವೆಯೆಂಬುದನ್ನು ಮೊದಲ ಬಾರಿಗೆ ಸಾಧಾರವಾಗಿ ಎತ್ತಿ ತೋರಿಸುವ ಮೂಲಕ ಸರ್ವಜ್ಞನ ವಚನಗಳ ಶಾಸ್ತ್ರೀಯ ಅಧ್ಯಯನಕ್ಕೆ ಪೀಠಿಕೆ ಹಾಕಿದ್ದಾರೆ.

 `ಆನೆ ನಡೆದುದೇ ಮಾರ್ಗ' ಎನ್ನುವಂತೆ ಇವರು ಏಕಾಂಗವೀರರಾಗಿ ಒಂದು ಸಂಸ್ಥೆ ಮಾಡುವಷ್ಟು ಕೆಲಸವನ್ನುಈ ಕ್ಷೇತ್ರದಲ್ಲಿ ಮಾಡಿದ್ದಾರೆ. ಕನ್ನಡದ ಸಂಶೋಧನಾ ಕ್ಷೇತ್ರಕ್ಕೆ ಇವರ ಕೊಡುಗೆ ಇಂಥ ಕೃತಿಗಳಿಂದ ಅಮೂಲ್ಯವೆನ್ನಿಸಿದೆ. ಸರ್ವಜ್ಞನವಚನಗಳು 'ಸರ್ವಜ್ಞ' ಅಂಕಿತದೊಂದಿಗೆ ಹೆಚ್ಚು ಪ್ರಚಾರ ಪಡೆದುದರಿಂದ ಮತ್ತು 'ಪರಮಾರ್ಥ' ಅಂಕಿತಕ್ಕೆ ಬೇರೆ ವಿದ್ವಾಂಸರ ಸಮ್ಮತಿ ದೊರೆಯದ್ದರಿಂದ ಹಾಗೂ ಹೆಚ್ಚಿನ ಹಸ್ತಪ್ರತಿಗಳಲ್ಲಿ 'ಸರ್ವಜ್ಞ' ಅಂಕಿತವೇ ಇರುವುದರಿಂದ ಅವರು 'ಪರಮಾರ್ಥ'ಶೀರ್ಷಿಕೆಯನ್ನು ಮುಂದಿನ ಆವೃತ್ತಿಯಲ್ಲಿ

ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾದುದು, ಅವರು ಸಂಪಾದಿಸಿದ ವಚನ ಸಂಕಲನಗಳು ತುಂಬ ಶಾಸ್ತ್ರೀಯವೂ ಮೌಲಿಕವಾದುವೂ ಆಗಿವೆ. ಶರಣಸಾಹಿತ್ಯದಲ್ಲಿ ಅವರು ಗಳಿಸಿದ ಪ್ರಭುತ್ವ ಅದ್ವಿತೀಯವಾದುದು, ವೀರಶೈವ ಸಾಹಿತ್ಯ ವಚನಸಾಹಿತ್ಯದಲ್ಲಿ ಸಂಶೋಧನೆ ಮಾಡುವವರಿಗೆ ಅವರು ತಮ್ಮ ಸಂಪಾದಿತ ಕೃತಿಗಳ ಮೂಲಕ, ಪೀಠಿಕಾ ಬರಹಗಳ ಮೂಲಕ ಅಮೂಲ್ಯವಾದ ಆಕರಗಳನ್ನು ಒದಗಿಸಿದ್ದಾರೆ. ಕನ್ನಡ ಗ್ರಂಥಸಂಪಾದನೆ-ಸಂಶೋಧನಾ ಕ್ಷೇತ್ರದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ನಿಲ್ಲುವಂಥದಾಗಿದೆ. ಅವರ ಪಾಂಡಿತ್ಯಕ್ಕೆ ಪರಿಶ್ರಮಕ್ಕೆ ಯಾವುದೇ ಗಡಿರೇಖೆಗಳಿಲ್ಲ. ಪ್ರಾಚೀನ ಕಾವ್ಯಗಳನ್ನು ಸಂಶೋಧನೆಯನ್ನು ಪ್ರೀತಿಯಿಂದ ಮಾಡಿದಷ್ಟೇ, ಅವರು ಶಾಸ್ತ್ರ ಕೃತಿಗಳನ್ನು ಸಂಪಾದಿಸಿದ್ದಾರೆ. ನಾಗವರ್ಮನ ಛಂದೋಂಬುದಿ, ಈಶ್ವರ ಕವಿಯ. ಕವಿ ಜಿಹ್ವಾಬಂಧನ, ಗುಣಚಂದ್ರನ ಛಂದಸ್ಸಾರ, ವೀರಭದ್ರನ ನಂದಿಛಂದೋರ್ಣವ, ಕನ್ನಡ ಛಂದಸ್ಸಿನ ಈ ಪ್ರಮಾಣ ಗ್ರಂಥಗಳನ್ನು ವಿವರವಾಗಿ ಪರಿಶೀಲಿಸಿ ಮತ್ತು ಪರಿಷ್ಕರಿಸಿ ಎಲ್ಲವನ್ನು ಒಂದೆಡೆ ಸೇರಿಸಿ ಎಚ್.ಡಿ ವೇಲಂಕರ ಅವರ ಜಯದಾಮನ್ ಮಾದರಿಯಲ್ಲಿ ಸಂಪಾದಿಸಿದ್ದು ಅವರ ವಿದ್ವತ್ ಗೆ ಸಾಕ್ಷಿಯಾಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಪ್ರಕಟಿತ ಮತ್ತು ಅಪ್ರಕಟಿತ ಹಸ್ತಪ್ರತಿಗಳ ಸಹಾಯದಿಂದ ಕೇಶಿರಾಜನ ಶಬ್ದಮಣಿದರ್ಪಣವನ್ನು ಸುಲಭ ಗ್ರಾಹ್ಯವಾಗುವಂತೆ ವ್ಯಾಖ್ಯಾನ ಸಹಿತವಾಗಿ, ಶಾಸ್ತ್ರೀಯವಾಗಿ ಸಂಪಾದಿಸಿರುವುದು ಸಹ ವಿದ್ವತ್ತಿನ ಮೈಲಿಗಲ್ಲು ಎನ್ನಬಹುದು.

     ಅವರ ಉಪಾಧ್ಯಾಯರ ಗುರುಗಳಾದ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರಗ್ರಂಥಸಂಪಾದನ ಕ್ಷೇತ್ರದ ಅವರ ಸಾಧನೆಯನ್ನು ಕುರಿತು ಬಸವರಾಜು ಅವರು ತಾಳಿರುವ ನಿಲುವುಗಳು ಒಪ್ಪತಕ್ಕದ್ದಾಗಿವೆ.. ಅವರ ಸಮಕಾಲೀನ ಸಂದರ್ಭದಲ್ಲಿಯ ಅವರ ಮಿತ್ರರಾಗಲಿ,ಶಿಷ್ಯರಾಗಲಿ ಅವರ ಸಲಹೆಯನ್ನು ಪಡೆಯದೇ ಇರುತ್ತಿರಲಿಲ್ಲ. “ಬಿ.ಎಂ. ಶ್ರೀಯವರು ಗ್ರಂಥಸಂಪಾದನ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿದ್ವತೂರ್ಣವಾದ ಪಾತ್ರವನ್ನು ನಿರ್ವಹಿಸಿ - ತಮ್ಮ ಹೆಸರನ್ನು ಸಂಪಾದಕರೆಂದು ನಮೂದಿಸಿಕೊಳ್ಳದೆ - ತಮ್ಮ ಗೆಳೆಯರ ಶಿಷ್ಯರ ಸ್ನೇಹವಾತ್ಸಲ್ಯಗಳ ನಿರಾಕಾರ ಸಂಕೇತವಾಗಿ ನಿಂತಿದ್ದಾರೆ. ಎಂಬ ಎಲ್.ಬಸವರಾಜು ಅವರ ಮಾತು ಅವರ ಅಕ್ಷರ ಸಹ ಸತ್ಯವಾಗಿದೆ. ಯಾಕೆಂದರೆ ಅವರ ನೇತೃತ್ವದಲ್ಲಿ  ವಿದ್ವತ್ಪೂರ್ಣ ಹಳಗನ್ನಡ ಕಾವ್ಯಗಳ ಸಂಗ್ರಹ ಆವೃತ್ತಿಗಳು ಸಿದ್ಧಗೊಂಡಿದ್ದು.

    ಎಲ್.ಬಸವರಾಜು ಅವರದ್ದು ಅಪೂರ್ವ ಶಕ್ತಿಗಳ ಸಂಗಮ ಎಂದರೂ ತಪ್ಪಾಗಲಾರದು. ಏಕೆಂದರೆ ಅದ್ಭುತವಾದ ಪಾಂಡಿತ್ಯ ಒಂದು ಕಡೆಯಾದರೆ, ಕವಿ ಪ್ರತಿಭಾ ನಿರ್ಮಿತವಾದ ರಸ ಸನ್ನಿವೇಶಗಳ ರಹಸ್ಯವನ್ನು ಕಾಣುವ `ರಸದೃಷ್ಟಿ' ಇನ್ನೊಂದು ಕಡೆ. ಇವೆರಡನ್ನು ಒಟ್ಟಿಗೇ ಅವರಲ್ಲಿ ಕಾಣಬಹುದಾಗಿದೆ. ಆದುದರಿಂದಲೇ ಅವರ ಸಂಶೋಧನೆ ಮತ್ತು ವಿಮರ್ಶೆ ಕೇವಲ ಭಾವಾವೇಶದಿಂದ ಕೂಡಿರದೆ ಸಮತೋಲನಾತ್ಮಕವಾದ ಮತ್ತು ತುಲನಾತ್ಮಕವಾದ ಬುದ್ಧಿಯ ಅಳತೆಗೋಲಿನಿಂದ ಮೂಡಿಬರುತ್ತದೆ. ಅವರ ಪಾಂಡಿತ್ಯ ಆಳವಾದುದು ವಿಸ್ತಾರವಾದುದು. ಬಹು ವಿಷಯ ವ್ಯಾಪಕವಾದುದು. ಮುಕ್ತಮನಸ್ಸಿನಿಂದ ಹೊಸದನ್ನು ಬರಮಾಡಿಕೊಳ್ಳುವಂತಹ ನಿತ್ಯನೂತನವಾದುದು. ಅವರ ವಿದ್ವತ್ತಿನ ವಿರಾಟ್‌ ಸ್ವರೂಪವನ್ನು ಕಂಡು ಅವರ ಸಮಕಾಲೀನರು ಮತ್ತು  ವಿದ್ಯಾರ್ಥಿಗಳು ಮೂಕವಿಸ್ಮಿತರಾಗಿದ್ದಾರೆ. ಇವರಲ್ಲಿಯ ಪಾಂಡಿತ್ಯದ ಪೂರ್ಣ ಪ್ರಯೋಜನವನ್ನು ಕನ್ನಡ ಲೋಕ ಪಡೆಯುತ್ತಿಲ್ಲವಲ್ಲಾ ಎಂಬ ಕೊರಗು ಕೆಲವರಿಗಿದೆ. ಅವರಿಗಿರುವ ವಿದ್ವತ್ತಿನ ನೆಲೆಯಿಂದ ನೋಡಿದಾಗ ಅವರು ವಿದ್ವತ್ಪೂರ್ಣ ಬರೆಹಗಳು ವ್ಯಾಪಕತ್ವವನ್ನು ಪಡೆದಿವೆ ಎಂದು ಅನಿಸದೇ ಇರಲಾರದು. ಅದು ಗಾತ್ರದ ದೃಷ್ಟಿಯಿಂದ ಮಹತ್ವದವುಗಳೇ ಆಗಿವೆ.  ಪ್ರತಿಯೊಂದು ಸಂಶೋಧನಾ ಲೇಖನವೂ ಪರಿಪೂರ್ಣತೆಯನ್ನು ಪಡೆದಿದ್ದು ಇಂದಿಗೂ ಮಾನ್ಯತೆಯನ್ನು ಪಡೆದಿವೆ. ತಮ್ಮ ಆತ್ಮೀಯರು ಮತ್ತು ವಿದ್ಯಾರ್ಥಿಗಳಿಗೆ ಹತ್ತು ವರ್ಷಗಳ ಕಾಲ ಸಾಹಿತ್ಯವನ್ನು ಚೆನ್ನಾಗಿ ಜಾಲಾಡಿರಿ ಆತುರ ಪಡಬೇಡಿ. ಏನನ್ನಾದರೂ ಗಟ್ಟಿ ಕೆಲಸವನ್ನು ಮಾಡಿ, ಎನ್ನುತ್ತಿದ್ದರು ಹತ್ತು ಕಟ್ಟುವ ಕಡೆ ಒಂದು ಮುತ್ತುಕಟ್ಟು ಎನ್ನುವ ಸ್ವಭಾವಕ್ಕೆ ಬದ್ಧರಾದವರು. ಅವರು  ಸಂಪಾದಿಸಿರುವ  ಅಲ್ಲಮನ ವಚನ ಚಂದ್ರಿಕೆ ಮತ್ತು ಶಿವದಾಸ ಗೀತಾಂಜಲಿಗಳತಹ ಗ್ರಂಥಗಳನ್ನು ಹೊರತರುವುದು ಸುಲಭವಾದ ಕೆಲಸವೇನಲ್ಲ. ಹೀಗಾಗಲೇ ಹೇಳಿರುವಂತೆ ಆ ಕೃತಿಗಳನ್ನು  ಎಷ್ಟೊಂದು ದಕ್ಷತೆಯಿಂದ ಸಿದ್ಧಪಡಿಸಿದ್ದರೆಂಬುದನ್ನು ಮನಗಾಣಬೇಕಾದರೆ ಆ ಕೃತಿಗಳ ಪ್ರಸ್ತಾವನೆಯನ್ನು ನಾವು ನೋಡಬೇಕು.

   ಎಲ್.ಬಸವರಾಜು ಸಾಹಿತ್ಯ ಕ್ಷೇತ್ರದಲ್ಲಿ ದುಡಿಮೆಗಾರರಾಗಿ ರೂಪಗೊಂಡವರು. ಇವರು ಯಾರ ಮನಸ್ಸನ್ನು ನೋಯಿಸಿದವರಲ್ಲ. ಎಲ್ಲರಿಗೂ ಒಳ್ಳೆಯದನ್ನು ಬಯಸುವವರು. ಬಹುಭಾಷಾ ಬಲ್ಲಿದರಾದ ಇವರು ಮಾಡಿದ ಸಾಹಿತ್ಯ ಕ್ಷೇತ್ರದಲ್ಲಿನ ಹಳೆಯ ಕೃತಿಗಳ ಗದ್ಯಾನುವಾದದೊಂದಿಗಿನ  ಸಂಪಾದನೆ ಹಾಗೂ ವಚನಗಳ ವಿದ್ವದಾ ವೃತ್ತಿಯ ಕೆಲಸವು ಸದಾಕಾಲ ಜನರಮನದಲ್ಲಿ ಬೇರೂರಿ ಯಾರು ಮರೆಯುವಂತಿಲ್ಲ. ಇವರ ಕೆಲಸ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಕಾಳಿನಂತೆ ಸರ್ವಕಾಲಕ್ಕೂ ಉಳಿಯುವಂಥವು ಅಳಿಯುವಂಥವಲ್ಲ. ಇವರ ಸಂಪಾದನೆಯ ಕೆಲಸ ಸೃಜನಶೀಲ ಸಾಹಿತ್ಯ ರಚನೆಗೇನೂ ಕಡಿಮೆಯಿಲ್ಲ. ಇತ್ತೀಚೆಗಂತೂ ಹಳಗನ್ನಡ ಪದ್ಯಕೃತಿಗಳನ್ನು ಅರ್ಥಮಾಡಿಕೊಂಡು ಪಾಠಹೇಳುವ ಉಪಾಧ್ಯಾಯರು ಕಡಿಮೆಯಾಗಿದ್ದಾರೆ. ಹಳಗನ್ನಡ ಸಾಹಿತ್ಯ ಸಂಗ್ರಹ-ಸಂಪಾದನೆ ಕೆಲಸ ಕೈಗೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಆದರೆ ಎಲ್.ಬಸವರಾಜುರವರು   ತಮ್ಮ ಜೀವನದ ಬಹುಭಾಗವನ್ನು ಈ ಕೆಲಸದಲ್ಲೇ ತೊಡಗಿಸಿಕೊಂಡು ತಮ್ಮ ಪಾಂಡಿತ್ಯ-ಪ್ರತಿಭೆಯನ್ನು ಮೆರೆದಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಂಶೋಧನಾಸೇವೆ ಮಾಡಿದ್ದಾರೆ. ದಾರಿಯನ್ನು ಮೊದಲು ನಿರ್ಮಿಸುವುದು ಮುಖ್ಯ. ಆನಂತರ ಆ ದಾರಿಯಲ್ಲಿ ಎಷ್ಟೋ ಜನ ಹಾಯ್ದು ಹೋಗಬಹುದು. ಆದರೆ ಮೊದಲು ದಾರಿಯನ್ನು ಕಂಡು ಹಿಡಿದವನಿಗೆ, ನಿರ್ಮಿಸಿದವನಿಗೆ ಮಹತ್ವ ಇದ್ದೇ ಇರುತ್ತದೆ. ಹೀಗಾಗಿ ಎಲ್.ಬಸವರಾಜು ಅವರ ಸಾಹಿತ್ಯವು ದಾರಿಯನ್ನು ಮೊದಲು ನಿರ್ಮಿಸಿದ ಹೆಗ್ಗಳಿಕೆಗೆ ಒಳಗಾಗಿದೆ.  

    ಕನ್ನಡ ಚಿಂತನೆಯ ಅರ್ಥಪೂರ್ಣ ವಿಶ್ಲೇಷಣೆಯ ಬೆಳವಣಿಗೆಗಾಗಿಯೇ ನಂತರದ ತಲೆಮಾರಿನ ವಿದ್ವಾಂಸರಲ್ಲಿ  ಎಲ್.ಬಸವರಾಜು ಅವರ ಅಧ್ಯಯನ ಮಹತ್ವ ಪಡೆದು ಕೊಂಡಿದೆ. ಇವರು ಹಳಗನ್ನಡ ಕಾವ್ಯ, ನಡುಗನ್ನಡ ಕಾವ್ಯ  ಪರಂಪರೆಯೊಂದಿಗೆ ಮುಖಾಮುಖಿಯಾಗಿ ಸಂವಾದ ನಡೆಸುತ್ತಾರೆ. ಪಂಪ ರನ್ನ, ವಚನಕಾರರು, ಶೂನ್ಯಸಂಪಾದನೆಯ ಸಂಕಲನಕಾರರು, ಕೇಶಿರಾಜ ನಾಗವರ್ಮರಂತಹ ಶಾಸ್ತ್ರಕಾರರು ಹೀಗೆ ಯಾವುದೇ ಕವಿ-ಕಾವ್ಯ ಕುರಿತು ವಿವೇಚಿಸಿದರೂ ಪರಂಪರೆ ಜತೆ ಆ ಕವಿ ಪ್ರತಿಕ್ರಿಯಿಸಿದ ರೀತಿಯನ್ನು ಇವರು ಅತ್ಯಂತ ಸಮರ್ಪಕವಾಗಿ ಗುರುತಿಸಿರುವುದು ಅವರ ಹಳಗನ್ನಡ, ನಡುಗನ್ನಡ ಮತ್ತು ಶಾಸ್ತ್ರಸಾಹಿತ್ಯ ಕುರಿತ ಸಂಪಾದಿತ ಕೃತಿಗಳ ಪ್ರಸ್ತಾವನೆಗಳು ಮತ್ತು ಸ್ವತಂತ್ರ ಲೇಖನಗಳ ಆಶಯವಾಗಿದೆ. ಜೊತೆಗೆ ಅವುಗಳು ಕೇವಲ ಒಬ್ಬ ಕವಿಯನ್ನು ಕುರಿತ ವಿಶ್ಲೇಷಣೆಯ ಮಾತ್ರವಾಗಿರದೆ, ಪರಂಪರೆಯನ್ನು ವ್ಯಾಖ್ಯಾನಿಸುವ ಅರ್ಥೈಸುವ ವ್ಯಾಪ್ತಿಯನ್ನು ಪಡೆದುಕೊಂಡಿವೆ. ಇವರು ಆಧುನಿಕ ಪೂರ್ವದ ಕವಿ-ಕೃತಿಗಳ  ಇತಿವೃತ್ತ ಶೋಧದ ಮೂಲಕ ಕನ್ನಡ ವಿದ್ವತ್ ಗೆ ಕಾಲಾನುಕ್ರಮಣಿಕೆಯ ಗಟ್ಟಿಯಾದ ಬುನಾದಿ  ಹಾಕಿದವರು. ಎಲ್.ಬಸವರಾಜು ಅವರು ತಾವೇ ಒಂದು ಮಾದರಿಯಾಗಿದ್ದು, ಹಲವು ಮಾದರಿಗಳನ್ನು ಸೃಷ್ಟಿಸಿರುವ ಕೀರ್ತಿಗೆ  ಭಾಜನರಾಗಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳೆಲ್ಲರೂ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ-ಸಂಸ್ಕೃತಿಯ ಕುರಿತಾದ ಸಂಶೋಧನೆ ಮತ್ತು ವಿಮರ್ಶಾಕ್ಷೇತ್ರದಲ್ಲಿ ಎಲ್.ಬಸವರಾಜು ಎಂಬ ವಿದ್ವತ್ಮಣಿಯ ಹೆಸರಿನ ಮಹತ್ವವನ್ನು ಬಲ್ಲವರಾಗಿದ್ದಾರೆ. ಗ್ರಂಥಸಂಪಾದನೆ, ವಚನ ಸಾಹಿತ್ಯ, ಸಂಶೋಧನೆ, ಅನುವಾದ, ಶೂನ್ಯಸಂಪಾದನೆ, ಕಾವ್ಯರಚನೆಯಂತಹ ವಿದ್ವತ್ತಿನ ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಎಲ್.ಬಸವರಾಜುರವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ದಿಗ್ಗಜರಾಗಿ ಕಂಡುಬರುತ್ತಾರೆ.

ಇಂದಿಗೂ ಇವರು ಶೋಧಿಸಿ ಕೊಟ್ಟಿರುವ ಸಂಶೋಧನಾ ವಿವರಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ. ಜೊತೆಗೆ  ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸಬೇಕಾಗಿದೆ.

    ಒಟ್ಟಾರೆ ಎಲ್.ಬಸವರಾಜು ಅವರ ಒಟ್ಟು ಸಂಶೋಧನೆಯನ್ನು ಮೂರು ನೆಲೆಗಳಲ್ಲಿ ನಾವು ಗುರುತಿಸ ಬಹುದಾಗಿದೆ. ಮೊದಲನೆಯದು ಪ್ರಾಚೀನಕವಿ-ಕಾವ್ಯಗಳು ಹೇಗೆ ವರ್ತಮಾನಕ್ಕೆ ಮುಖಾಮುಖಿಯಾಗುತ್ತವೆ, ಸದ್ಯದಲ್ಲಿ ಅವುಗಳ ಪ್ರಾಮುಖ್ಯತೆ ಏನು? ಹೇಗೆ ಸ್ಪಂದಿಸುತ್ತವೆ, ಅಂತಹ ಕವಿಪಠ್ಯಗಳನ್ನೇ ಆಯ್ದ ಅವು ಪ್ರತಿಪಾದಿಸುವ ಅಂಶಗಳ ಮುಖೇನ ಅವುಗಳಿಗೆ ಸಾರ್ವತ್ರಿಕ ಮೌಲ್ಯಗಳನ್ನು ತಂದುಕೊಡುವುದಾಗಿರುವುದು. ಎರಡನೆಯದು ಜೀವಪರ-ಜನಪರ ಕಾಳಜಿಯುಳ್ಳ ಕೆಳವರ್ಗದ ವಚನಕಾರರು ಕಾರ್ಯರೂಪಕ್ಕೆ ತಂದ ಕಾಯಕನಿಷ್ಠೆಯ ಮಹತ್ತ್ವವನ್ನು ಸಮಕಾಲೀನ ಸಮಾಜ-ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾಗಿದೆ. ಮೂರನೆಯದು ಅಲಕ್ಷಿತ ಕವಿ-ಕಾವ್ಯಗಳನ್ನು ಮುಖ್ಯವಾಹಿನಿಗೆ ತರುವುದಾಗಿದೆ.  ಎಲ್.ಬಸವರಾಜು ಅವರ ಈ ಮೂರು ಆಯಾಮಗಳನ್ನು ಕನ್ನಡ ಸಾಹಿತ್ಯ-ಸಂಸ್ಕೃತಿ ಕುರಿತ ಸಂಶೋಧನಾ ಕ್ಷೇತ್ರವು ನಿಜಕ್ಕೂ ಅನುಷ್ಠಾನಗೊಳಿಸಿದಲ್ಲಿ ಮಾತ್ರ  ಈ ಕ್ಷೇತ್ರಗಳಲ್ಲಿ  ಜರುಗಿರುವ ಮತ್ತು ಜರುಗುವ ಸಂಶೋಧನೆಗಳು ಶ್ರೀಸಾಮಾನ್ಯನಿಗೆ ತಲುಪಲು ಸಾಧ್ಯವಾಗುತ್ತವೆ ಮತ್ತು ʻತಳಸಮುದಾಯಗಳ ಅಭ್ಯುದಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಇಂತಹ ಇವರ ವೈಚಾರಿಕ ಸಂಶೋಧನಾ ನಿಲುವುಗಳು ವಚನಕಾರರ ವಿಚಾರ ಗಳೊಂದಿಗೆ ಅವರು ನಿರಂತರ ನಡೆಸಿರುವ ಉತ್ಖನನದಿಂದ ಸಾಧ್ಯವಾಗಿದೆ. ಅವರ ಸಂಶೋಧನೆ ಕುರಿತು, ವಿ.ಚಂದ್ರಶೇಖರ ನಂಗಲಿ ಅವರು ಹೇಳಿರುವ 'ಕವಿರಾಜಮಾರ್ಗ'ವನ್ನು ಸಹೃದಯ ಸಮುದಾಯದ ಕನ್ನಡಿಯೆಂದೂ ಕೈದೀವಿಗೆಯೆಂದೂ ಪರಿಗಣಿಸಲಾಗಿದೆ. ಇದಾದ ಮೇಲೆ ಒಂದು ಸಾವಿರ ವರ್ಷಗಳ ಅನಂತರ ಡಾ.ಎಲ್.ಬಸವರಾಜು ಅವರು ಒಬ್ಬಂಟಿಯಾಗಿ ನಿಃಶಬ್ದವಾಗಿ ನಡೆದ ಮೇಕೆ ಹಾದಿಯು ಇದೀಗ ತೇರೆಳೆವ ಹೆದ್ದಾರಿಯಾಗಿ ಪರಿಣಮಿಸಿದೆ. ಎಂಬ ನುಡಿಗಳು ಅಕ್ಷರ ಸಹ ಸತ್ಯ. “ಅಂದುಕವಿರಾಜಮಾರ್ಗ ಇಂದು ಬಸವರಾಜಮಾರ್ಗ- ಎಂಬ ಅವರ ಮಾತು ಉಲ್ಲೇಖಾರ್ಹವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧಕರೆನಿಸಿ ಕೊಂಡ ಎಲ್.ಬಸವರಾಜು ಅವರು ಜೈನ ಸಾಹಿತ್ಯ, ಶೈವ ಸಾಹಿತ್ಯ, ವೀರಶೈವ ಸಾಹಿತ್ಯ, ವೈದಿಕ ಸಾಹಿತ್ಯ, ಬೌದ್ಧ ಸಾಹಿತ್ಯವೆಂಬ ಸಂಕುಚಿತ ಸ್ಥಾವರಗಳಿಗೆ ಸಿಲುಕಿಕೊಳ್ಳದೆ, ಆ ಸ್ಥಾವರಗಳನ್ನು ತಮ್ಮ ಸತ್ಯಶುದ್ಧ ಕಾಯಕದಿಂದ ಜಂಗಮಗೊಳಿಸಿದ್ದಾರೆ ಎಂಬ ನಿಲುವು ಒಪ್ಪತಕ್ಕದ್ದಾಗಿದೆ. ಬರಗೂರು ರಾಮಚಂದ್ರಪ್ಪನವರು ಎಲ್.ಬಸವರಾಜು ಅವರ ವಿದ್ವತ್‌ ನಿಲುವನ್ನು ಕುರಿತು ಹೇಳಿರುವ,ʻ ಪ್ರಾಚೀನಕೃತಿಗಳ ಶಾಸ್ತ್ರೀಯ ಸಂಪಾದನಾ ಕಾರ್ಯಕ್ಕೆ ಬದ್ಧರಾದ ಬಸವರಾಜು ಅವರು ಅವುಗಳನ್ನು ವಿದ್ವತ್‌ ವಲಯಕ್ಕೆ ಸೇರದ ಸಾಮಾನ್ಯರಿಗೆ ತಲುಪಿಸಲು ಸದಾ ಸಿದ್ಧರು. ಅಂದರೆ ಬಸವರಾಜು ಅವರು ತಮ್ಮ ವಿದ್ವತ್ತೊಂದೇ ಶ್ರೇಷ್ಠ ಎಂದು ತಿಳಿಯಲಿಲ್ಲ. ವಿದ್ವಾಂಸರು 'ಗ್ರಂಥಗೋಪುರ'ದ ಬಂಧಿಗಳಾಗದೆ ಸಾಮಾನ್ಯರ ಸಂಬಂಧದಲ್ಲಿ ಸಾರ್ಥಕತೆ ಪಡೆಯಬೇಕು. ವಿದ್ವತ್‌ ಕೆಲಸಗಳು ಕಪಾಟಿನ ಅಲಂಕಾರ ಸಾಮಗ್ರಿಯಾಗದೆ ಒಂದು ಹಂತದಲ್ಲಾದರೂ ಸಾಮಾನ್ಯ ಓದುಗರಲ್ಲಿ ಆಸಕ್ತಿ ಮೂಡಿಸಬೇಕು.ʼ ಎಂಬ ಮಾತುಗಳು ಒಪ್ಪತಕ್ಕದ್ದಾಗಿವೆ.  ಬಸವರಾಜು ಅವರು ವಿದ್ವತ್‌ ವ್ಯಕ್ತಿತ್ವಕ್ಕೊಂದು ಸಾಮಾಜಿಕ ಆಯಾಮವನ್ನು ತಂದುಕೊಂಡು . ಸಂದರ್ಭಾನುಸಾರ ತಮ್ಮ ವಿಚಾರಗಳನ್ನು ಹಂಚಿದವರು. ಇವರದ್ದು ಒಂದು ರೀತಿಯಲ್ಲಿ ಜಾತ್ಯತೀತ ಸಂಶೋಧನೆ ಎಂದರೂ ತಪ್ಪಾಗಲಾರದು. ಸಂಶೋಧನೆಯಷ್ಟೇ ಏಕೆ, ಅವರ ವ್ಯಕ್ತಿತ್ವವೇ ಜಾತ್ಯತೀತವಾದುದು. ಯಾವತ್ತೂ ಜಾತಿವಾದದ ಸೋಂಕು ತಗಲಿಸಿಕೊಳ್ಳದ ಅವರ ವಿಚಾರಧಾರೆಯನ್ನಾಧರಿಸಿ ಅವರನ್ನು 'ಸಾಮಾಜಿಕ ನ್ಯಾಯಬದ್ಧ ಸಂಶೋಧಕ' ಎಂದು ಕರೆಯಬಹುದು.  ಪಾಚೀನ ಕಾಲದಲ್ಲಿ ರಚಿತವಾದ ಕಾವ್ಯಗಳ ಸಂಪಾದನೆ, ಸರಳ ಗದ್ಯಾನುವಾದ ಜೊತೆಗೆ ಸೃಜನಶೀಲ ಮತ್ತು ಅನುವಾದ ಸಾಹಿತ್ಯದ ಮೂಲಕ ಆಧುನಿಕ ಸಮಾಜದಲ್ಲಿ ಸಾಹಿತ್ಯ ಸಹೃದಯರಿಗೆ ಆಧುನಿಕತೆಗೆ ಮುಖಾ_ಮುಖಿಯಾಗಿಸುವ ಪ್ರಯತ್ನವನ್ನು ಎಲ್ ಬಸವರಾಜುರವರು ಮಾಡಿದ್ದಾರೆ.

    ಆಧುನಿಕ ಸಮಾಜಕ್ಕೆ ಕಬ್ಬಿಣದ ಕಡಲೆಯಂತಿದ್ದ ಹಳಗನ್ನಡ ಸಾಹಿತ್ಯ ಕೃತಿಗಳ ಸಂಪಾದನಾ ಕಾರ್ಯ ಮಾಡಿ ಇಂದು ಸಾಹಿತ್ಯ ಓದುಗರಿಗೆ ಸುಲಿದ ಬಾಳೆಹಣ್ಣಿನಂತೆ ಸುಗಮವಾದ ಹಾದಿಯನ್ನು ತೋರಿಸಿಕೊಟ್ಟವರು ಬಸವರಾಜುರವರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಕೃಷಿ ಮಾಡಿದ್ದಾರೆ. ಸಾಹಿತ್ಯವನ್ನು ಎಲ್ಲರೂ ಜೀರ್ಣಿಸಿಕೊಳ್ಳುವ ಮತ್ತು ಜ್ಞಾನ ಶಾಖೆಗಳನ್ನು ಸಮೃದ್ಧಿ ಹೊಂದುವ ಕೆಲಸವನ್ನು ಮಾಡಿದ್ದಾರೆ. ಇದು ಕನ್ನಡ ಸಾಹಿತ್ಯದ ಮಹತ್ ಸಾಧನೆಯೇ ಆಗಿದೆ. ಅದರಲ್ಲೂ ಅವರು ತಮಗೆ ಮೂಲಭೂತ ಸೌಕರ್ಯಗಳಿಲ್ಲದ ಸಮಯದಲ್ಲೂ ಹಸ್ತಪ್ರತಿಗಳಲ್ಲಿ ಅಡಗಿದ್ದ ಪ್ರಾಚೀನ ಹಾಗೂ ಮಧ್ಯಕಾಲೀನ ಕೃತಿಗಳನ್ನು ಶಾಸ್ತ್ರೀಯ ಗ್ರಂಥ ಸಂಪಾದನೆಯ ಚೌಕಟ್ಟಿನಡಿಯಲ್ಲಿ ಹೊರ ತರುವ ಕಾರ್ಯದಲ್ಲಿ ಇಡೀ ತಮ್ಮ ಜೀವನವನ್ನೇ ಕನ್ನಡ ಸಾಹಿತ್ಯ ಸೇವೆಗೆ ಮೀಸಲಾಗಿಟ್ಟವರು. ಹೀಗಾಗಿ ಅವರನ್ನು ಕನ್ನಡ ವಿದ್ವತ್‌ ಪರಂಪರೆಯ ಒಂಟಿ ಸಲಗ ಎಂದರೂ ತಪ್ಪಾಗಲಾರದು.

 ಪರಾಮರ್ಶನ  ಗ್ರಂಥಗಳು:

. ಶಿವದಾಸ ಗೀತಾಂಜಲಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥ ಮಾಲೆ, ಮೈಸೂರು. ೧೯೬೩.

. ಶೃಂಗಾರ ನಿದರ್ಶನ (ಚಿಕ್ಕದೇವರಾಯ ಸಪ್ತಪದಿ), ಗೀತಾ ಬುಕ್ ಹೌಸ್, ಮೈಸೂರು. ೧೯೭೧.

. ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು, ವ್ಯಾಸಂಗ ವಿಸ್ತರಣ ಮತ್ತು ಪ್ರಕಟಣ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ೧೯೭೨

. ಪರಮಾರ್ಥ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು. ೧೯೮೦.

೫.. ವೀರಶೈವ ತತ್ವ ಮತ್ತು ಆಚರಣೆ, ಶ್ರೀ ಚಿನ್ಮೂಲಾದ್ರಿ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ. ೧೯೮೨.

. ಅಲ್ಲಮನ ಲಿಂಗಾಂಗ ಸಂವಾದ (ಪ್ರಭುಲಿಂಗಲೀಲೆಯ ಆಧಾರದಿಂದ), ಪ್ರಸರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ೧೯೭೬.

. ನಿಜಗುಣ ಶಿವಯೋಗಿಯ ತತ್ತ್ವದರ್ಶನ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.

. ಪಂಪಪೂರ್ವಯುಗ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೧೯೯೬.

. ಬೆಡಗಿನ ವಚನಗಳು, ಪ್ರಸರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ. ೧೯೯೮.

೧೦. ಕಲ್ಯಾಣದ ಮಾಯಿದೇವನ ಶಿವಾನುಭವ ಸೂತ್ರ, ಶ್ರೀ ಚಿನ್ಮೂಲಾದ್ರಿ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ. ೧೯೯೮.

೧೧. ಅಲ್ಲಮನು ಮೈಮೇಲೆ ಬಂದಾಗ, ಸಿವಿಜಿ ಪಬ್ಲಿಕೇಷನ್, ಬೆಂಗಳೂರು. ೨೦೦೪.

೧೨. ನೂರಾರು ಶರಣ ಸಾವಿರ ವಚನಗಳು, ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು. ೨೦೦೮.

೧೩. ಸಿದ್ಧಾಶ್ರಮ.ಸಿ.ಪಿ, ಶೋಧಸಂಪದ (ಡಾ.ಎಲ್.ಬಸವರಾಜು ಅವರ ಜೀವನ ಮತ್ತು ಸಾಹಿತ್ಯ ಸಾಧನೆ), ಸಂವಹನ ಪ್ರಕಾಶನ, ಮೈಸೂರು. ೨೦೦೫

೧೪. ಸೌಭಾಗ್ಯ.ಕೆ, ಬೆಳಕಿನ ಹಾದಿ (ಡಾ.ಎಲ್.ಬಸವರಾಜು ಸಾಧನ ಸಂಪುಟ), ಜ್ಯೋತಿ ಪ್ರಕಾಶನ, ಮೈಸೂರು.೨೦೧೨

೧೫.  ನೀಲಗಿರಿ ತಳವಾರ ಮತ್ತು ದೇವರಡ್ಡಿ ಹದ್ಲಿ, ಡಾ.ಎಲ್.ಬಸವರಾಜು ಸಂಶೋಧನ ಪಥ, ಸಪ್ನ ಬುಕ್ ಹೌಸ್, ಬೆಂಗಳೂರು. ೨೦೧೮.

೧೬. ಸಿ.ನಾಗಭೂಷಣ, ಕನ್ನಡ ಸಂಶೋಧನೆ ಸಮೀಕ್ಷೆ, ಶ್ರೀ.ಸಿದ್ಧಲಿಂಗೇಶ್ವರ ಪ್ರಕಾಶನ, ಗುಲಬರ್ಗಾ 2006

೧೭. ಸಿ.ನಾಗಭೂಷಣ, ಕನ್ನಡ ಹಸ್ತಪ್ರತಿಗಳು ಮತ್ತು ಗ್ರಂಥಸಂಪಾದನೆ ಸಾಂಸ್ಕೃತಿಕ -ಪಠ್ಯಕೇಂದ್ರಿತ ಅಧ್ಯಯನಗಳು, ಸ್ನೇಹಾ ಪಬ್ಲಿಷಿಂಗ್‌ ಹೌಸ್‌, ಬೆಂಗಳೂರು ೨೦೨೨

೧೮. ಮಹಾಮಾರ್ಗ ಸಂ: ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ, 

                ವೀರಶೈವ ಅಧ್ಯಯನ ಸಂಸ್ಥೆ   ಗದಗ,೧೯೯೮

                 

 

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...