ಕನ್ನಡ ನಾಡಿನ ಶಾಸನಗಳ ಅಧ್ಯಯನ : ಕೆಲವು ಗ್ರಹಿಕೆಗಳು
ಡಾ.ಸಿ.ನಾಗಭೂಷಣ
ಪರಿವಿಡಿ
೧. ಪ್ರವೇಶಕ್ಕೆ ಮೊದಲು
೨. ಶಾಸನಗಳನ್ನು ಕುರಿತಾದ ಸಂಶೋಧನಾಧ್ಯಯನದ ಸ್ವರೂಪ
೩. ಕನ್ನಡ ನಾಡಿನಲ್ಲಿ ನಡೆದಿರುವ ಶಾಸನಗಳ ಅಧ್ಯಯನದ ಸಾಧ್ಯತೆಗಳ ಗ್ರಹಿಕೆ.
ಅ. ಮೂಲ ಆಕರಗಳಾದ ಶಾಸನಗಳ ಪರಿವೀಕ್ಷಣೆ, ಸಂಗ್ರಹಣೆ, ಸಂಪಾದನೆ ಮತ್ತು ಪ್ರಕಟಣೆ.
ಬ. ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಪ್ರಕಟಗೊಂಡ ಶಾಸನಗಳಲ್ಲಿಯ ಮತ್ತು ವಿಷಯದ ವೈವಿಧ್ಯತೆಗನುಗುಣವಾಗಿ ಕನ್ನಡ ನಾಡಿನ ಸಂಸ್ಕೃತಿಗೆ ಸಂಬಂಧಿಸಿದ ಹಾಗೂ ಇತರೆ ಅಧ್ಯಯನವನ್ನು ನಡೆಸಿರುವುದು.)
೪. ಶಾಸನಗಳ ಸಾಂಸ್ಕೃತಿಕ ಸಂಶೋಧನೆಯ ತಾತ್ವಿಕ ಗ್ರಹಿಕೆಯ ವೈಶಿಷ್ಟ್ಯಗಳು:
೫. ಶಾಸನಗಳ ಸಾಹಿತ್ಯಕ ಅಧ್ಯಯನದ ತಾತ್ವಿಕ ದೃಷ್ಟಿಕೋನ:
೬. ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಕೆಲವು ಇತಿಮಿತಿಗಳು
೭. ಶಾಸನಾಧ್ಯಯನದ ಸಾಧ್ಯತೆಗಳು
೧. ಪ್ರವೇಶಕ್ಕೆ ಮೊದಲು
ಇಂದು ಸಂಶೋಧನೆಯ ಪರಿಕಲ್ಪನೆ ವ್ಯಾಪಕವಾಗಿದೆ.
ಸಾಂಸ್ಕೃತಿಕ ಸಂಶೋಧನೆಯು ಆಧುನಿಕ ಕಾಲಘಟ್ಟದ ಕೊಡುಗೆಯಾಗಿದೆ. ಸಾಂಸ್ಕೃತಿಕ ಸಂಶೋಧನೆಯ ಮುಖ್ಯ
ಉದ್ದೇಶ್ಯ ಗತಕಾಲವನ್ನು ವರ್ತಮಾನಕಾಲದ ಅಗತ್ಯಕ್ಕೆ ತಕ್ಕಂತೆ ಮರುಚಿಂತನೆ ಮಾಡಿಕೊಳ್ಳುವುದು.
ಸಂಸ್ಕೃತಿ ಎನ್ನುವುದು ಅರ್ಥಪೂರ್ಣ ಕ್ರಿಯೆಗಳ ವ್ಯವಸ್ಥೆ. ರಾಜಕೀಯ ಹಾಗೂ ಆರ್ಥಿಕ ಶಕ್ತಿಗಳ
ಕಾರಣದಿಂದ ಮೂಡುತ್ತದೆ. ಸಂಸ್ಕೃತಿಯನ್ನು ಕುರಿತು ಕನ್ನಡ ನಾಡಿನಲ್ಲಿ ನಡೆದಿರುವ ಅಧ್ಯಯನವು ಎರಡು
ನೆಲೆಗಟ್ಟುಗಳಲ್ಲಿ ನಡೆದಿದೆ.
೧.
ಸಂಸ್ಕೃತಿ ಶೋಧ, ೨.ಸಂಸ್ಕೃತಿ ಚಿಂತನೆಸಂಸ್ಕೃತಿ ಶೋಧವು ಸಾಂಸ್ಕೃತಿಕ ಚಿಂತನೆಯ ನೆಲೆಗಳನ್ನು
ಆಶ್ರಯಿಸುತ್ತದೆ ಮತ್ತು ರೂಪಿಸುತ್ತದೆ. ಸಂಸ್ಕೃತಿ ಚಿಂತನೆಯ ನೆಲೆಯು ಸಾಂಸ್ಕೃತಿಕ ಶೋಧಗಳ
ಫಲಿತಾಂಶಗಳನ್ನು ಒಳಗೊಂಡಿರುತ್ತದೆ. ಚರಿತ್ರೆ, ಧರ್ಮ, ಜನಾಂಗಿಕ, ಕಲಾತ್ಮಕ ವಿಷಯಗಳು ಸಾಹಿತ್ಯ ಮುಂತಾದವು ಕನ್ನಡ
ಸಂಸ್ಕೃತಿಯ ಚಿಂತನೆಯ ಹಲವು ಮುಖ್ಯ ಕೇಂದ್ರಗಳಾಗಿವೆ. ಸಂಸ್ಕೃತಿ ವಿಶ್ಲೇಷಣೆ ಮತ್ತು
ವ್ಯಾಖ್ಯಾನಗಳು ಕೆಲವು ನಿರ್ದಿಷ್ಟ ಆಸಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ಬೆಳೆದಿವೆ.
ಸಂಸ್ಕೃತಿಯ ಶೋಧವು ಪ್ರಮುಖವಾಗಿ ಶಾಸನಗಳನ್ನು ಮುಖ್ಯ ಆಕರಗಳೆಂದು, ಸಾಹಿತ್ಯ
ಕೃತಿಗಳು, ಐತಿಹ್ಯಗಳು, ಇತರೆ ಕಲೆಗಳನ್ನು
ಅನುಷಂಗಿಕ ಆಕರಗಳೆಂದು ಪರಿಗಣಿಸಿವೆ.
ಸಂಶೋಧನೆಯಲ್ಲಿ ಅಂತರಶಿಸ್ತೀಯ ಅಧ್ಯಯನ ಪ್ರಾಮುಖ್ಯತೆ ಪಡೆದಿದೆ. ಸಂಶೋಧಕರು ಆಯ್ಕೆ ಮಾಡಿಕೊಂಡ
ವಸ್ತುವನ್ನು ಪೂರಕ ಆಕರಗಳೊಡನೆ ಅಧ್ಯಯನಕ್ಕೊಳಪಡಿಸಿ ಅಧ್ಯಯನ ನಡೆಸಿರುವುದುಂಟು.
ಸಾಂಸ್ಕೃತಿಕ ಸಂಶೋಧನೆಯು ಆರಂಭದಲ್ಲಿ ಸಂಸ್ಕೃತಿಯನ್ನು ಚರಿತ್ರೆಯ ಒಂದು ಭಾಗವಾಗಿ ಪರಿಗಣಿಸಿ ಸಾಂಸ್ಕೃತಿಕ ಕಥನವನ್ನು ರೂಪಿಸುವ ಮಾದರಿಯಾಗಿತ್ತು. ಜೊತೆಗೆ ಗತಕಾಲವನ್ನು ಕಾಲಾನುಕ್ರಮದಲ್ಲಿ ಹೊಂದಿಸುವುದಾಗಿತ್ತು. ಕನ್ನಡ ಸಂಸ್ಕೃತಿ ಚರಿತ್ರೆಯ ಹಳಮೆಯನ್ನು ಸಾಧಿಸುವುದು ಆ ಮೂಲಕ ಅಭಿಮಾನವನ್ನು ಮಾಡಿಸುವುದಾಗಿತ್ತು. ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನಗಳು ಶುದ್ಧ ವೈಜ್ಞಾನಿಕ ನೆಲೆಗಟ್ಟಿಗೆ ಸೇರಲು ಸಾಧ್ಯವಿಲ್ಲ.
೨.
ಶಾಸನಗಳನ್ನು ಕುರಿತಾದ ಸಂಶೋಧನಾಧ್ಯಯನದ ಸ್ವರೂಪ:
ಕನ್ನಡ ಸಂಶೋಧನೆಯು ಪ್ರವೇಶಿಸಿರುವ ಅನೇಕ ಮಹತ್ವದ
ನೆಲೆಗಳಲ್ಲಿ ಶಾಸನ ಶಾಸ್ತ್ರವು ಒಂದು. ಶಾಸನಗಳನ್ನು ಕುರಿತಾದ ಅಧ್ಯಯನವು ಪುರಾತತ್ವ ಇಲಾಖೆಯ
ಅಡಿಯಲ್ಲಿ ಪ್ರಾರಂಭ ಕಾಲದಲ್ಲಿ ನಡೆದಿರುವುದನ್ನು ಗಮನಿಸಬಹುದು. ಭಾರತೀಯರಿಗೆ ಚಾರಿತ್ರಿಕ
ಪ್ರಜ್ಞೆ ಇಲ್ಲ ಎನ್ನುವ ಭಾವನೆ ಪಾಶ್ಚಾತ್ಯ ವಿದ್ವಾಂಸರಲ್ಲಿ ಪ್ರಕಟವಾದ ಸಂದರ್ಭದಲ್ಲಿ, ಇತಿಹಾಸದ ಅಧಿಕೃತ
ದಾಖಲೆಗಳಿಲ್ಲ ಎಂದು ಆಪಾದಿಸುತ್ತಿದ್ದ ಸಂದರ್ಭದಲ್ಲಿ ಶಾಸನಗಳು ಪ್ರಮುಖ ದಾಖಲೆಗಳಾಗಿ ಅವರಿಗೆ
ಕಂಡು ಬಂದವು. ಆರಂಭ ಕಾಲದ ಪಾಶ್ಚಾತ್ಯ ವಿದ್ವಾಂಸರಿಗೆ ರಾಜಕೀಯ ಹಾಗೂ ಸಾಮಾಜಿಕ ಚರಿತ್ರೆಯನ್ನು
ಪುರ‍್ರಚಿಸುವಲ್ಲಿ ಉಳಿದೆಲ್ಲವುಗಳಿಗಿಂತ ಶಾಸನಗಳು ಮಹತ್ತರವಾದವುಗಳು ಎನಿಸಲು ಮುಖ್ಯ
ಕಾರಣಗಳೆಂದರೆ ೧.ಬಹುತೇಕ ಶಾಸನಗಳು ತಾನು ಹುಟ್ಟಿದ ಕಾಲಕ್ಕೆ, ಸ್ಥಾನಕ್ಕೆ,
ಪರಿಸರಕ್ಕೆ ಸಂಬಂಧಪಟ್ಟವುಗಳಾಗಿರುವುದು. ೨.ಶಾಸನಗಳ ಪಾಠಗಳನ್ನು ಬರೆಯಲು
ಆರಿಸಿಕೊಂಡ ಶಿಲೆಗಳು ಅಥವಾ ತಾಮ್ರಪಟಗಳ ಸ್ಥಳಗಳು ಸೀಮಿತವಾಗಿರುವುದು. ೩.ಯಾವ ವಿಷಯವನ್ನು ದಾಖಲು
ಮಾಡಲು ಶಾಸನಗಳನ್ನು ಬರೆಯ ಬೇಕಿತ್ತೋ ಆ ವಿಷಯದ ನಿರೂಪಣೆಗೆ ಲಭ್ಯವಿದ್ದ ಜಾಗದಲ್ಲಿ ನಿರ್ದಿಷ್ಟ
ಜಾಗವನ್ನು ಮಿಸಲಾಗಿಡಬೇಕಿದ್ದಿತು. ಅಂದರೆ ಶಾಸನ ರಚನೆ ಸಾಂದರ್ಭಿಕವಾದುದು, ನಿರ್ದೇಶಿತವಾದುದು, ತನ್ನ ಅಭಿವ್ಯಕ್ತಿಗೆ ಆಶ್ರಯಿಸಬೇಕಾದ
ಪರಿಮಿತಿಯಿಂದ ನಿರ್ಬಂಧಿತವಾದುದಾಗಿತ್ತು. ಈ ಹಿನ್ನಲೆಯಲ್ಲಿ ಶಾಸನಗಳಲ್ಲಿರುವ ಮಾಹಿತಿಯು ವಾಸ್ತವ
ಸಂಗತಿಯಿಂದ ಕೂಡಿದ್ದು ಸತ್ಯದ ಸಂಗತಿಯತ್ತ ಸಾಗುವುದೆಂಬ ಆಶಯವನ್ನು ಕಲ್ಪಿಸಿಕೊಂಡ ಪಾಶ್ಚಾತ್ಯ
ಹಾಗೂ ದೇಶೀಯ ವಿದ್ವಾಂಸರಿಗೆ ಶಾಸನಗಳು ಮೊದಲವರ್ಗದ ಆಕರಗಳಾಗಿ ಕಂಡುಬಂದವು.
ಕನ್ನಡ ನಾಡಿನ ವಿವಿಧ ಅರಸು ಮನೆತನಗಳ, ಸಾಮಂತರ
ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳು ನಾಡಿನ ಜನಾಂಗದ ಬದುಕಿನ ವಿಶ್ವಕೋಶಗಳೆನಿಸಿವೆ. ಕನ್ನಡ
ನಾಡಿನಲ್ಲಿ ಪ್ರಕಟವಾಗಿರುವ ಹಾಗೂ ಪ್ರಕಟವಾಗದೆ ಉಳಿದಿರುವ ಒಟ್ಟು ಶಾಸನಗಳ ಸಂಖ್ಯೆ ಸುಮಾರು
ಮೂವತ್ತು ಸಾವಿರಗಳಷ್ಟಿದೆ. ತಮಿಳುನಾಡನ್ನು ಬಿಟ್ಟರೆ ಅತಿಹೆಚ್ಚು ಶಾಸನಗಳನ್ನು ಹೊಂದಿದ ರಾಜ್ಯ
ಕರ್ನಾಟಕವೇ ಆಗಿದೆ. ಕನ್ನಡ ನಾಡಿನ ಒಳಗೆ-ಹೊರಗೆ ಹಂಚಿ ಹೋಗಿರುವ ಶಾಸನಗಳ ಪರಿವೀಕ್ಷಣೆ, ಸಂಗ್ರಹಣೆ, ಸಂಪಾದನೆ, ಪ್ರಕಟನೆಯ
ಸುವ್ಯವಸ್ಥಿತವಾದ ಕಾರ್ಯ ಪ್ರಾರಂಭವಾಗಿದ್ದು ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗ ಮತ್ತು
ಇಪ್ಪತ್ತನೇ ಶತಮಾನದಲ್ಲಿ ಎಂದು ಹೇಳಬಹುದು. ಶಾಸನಗಳನ್ನು ಕುರಿತಾದ ಸಂಶೋಧನೆ ಎರಡು
ನೆಲೆಗಟ್ಟುಗಳಲ್ಲಿ ನಡೆದಿದೆ. ಸುಮಾರು ಇನ್ನೂರು ವರ್ಷಗಳಿಗೂ ಅಧಿಕ ಕಾಲದ ಶಾಸನಕ್ಷೇತ್ರದ
ಅಧ್ಯಯನದ ಚಟುವಟಿಕೆಯನ್ನು ಗಮನಿಸಿದರೆ ಸಾಧನೆಯ ಹೆಮ್ಮೆಯೊಂದಿಗೆ ಕೆಲವು ಕೊರತೆಗಳ ಪಟ್ಟಿ ನಮ್ಮ
ಕಣ್ಮುಂದೆ ನಿಲ್ಲುತ್ತದೆ. ನಾವು ಇಂದಿನ ಮನಸ್ಥಿತಿಯಲ್ಲಿ ಯೋಚಿಸಿ ಇನ್ನೂರು ವರ್ಷದ ಹಿಂದೆಯೂ
ಹೀಗೆ ಇರಬೇಕಾಗಿತ್ತು ಎಂಬ ಅಭಿಪ್ರಾಯ ತಳೆಯುವುದು ತಪ್ಪಾದರೂ ಸಹ ಇತರೆ ಮಾನವಿಕ ಅಧ್ಯಯನ
ಶಿಸ್ತುಗಳ ಬೆಳವಣಿಗೆಯನ್ನು ಕಂಡಾಗ ಶಾಸನಶಾಸ್ತ್ರವು ನಿರೀಕ್ಷಿತ ಬೆಳವಣಿಗೆ ಆಗಲಿಲ್ಲವೆಂಬುದು
ಸತ್ಯವೇ ಆಗುತ್ತದೆ. ಹಾಗೆ ನೋಡಿದರೆ ಕೆಲಸದ ದೃಷ್ಟಿಯಿಂದ ಶಾಸನ ಕ್ಷೇತ್ರದಲ್ಲಿ ಬೇರೆ ಮಾನವಿಕ
ಕ್ಷೇತ್ರಗಳಿಗಿಂತಲೂ ಹೆಚ್ಚು ಕೆಲಸ ನಡೆದಿದೆ. ಆದರೆ ಹಾಗೆ ನಡೆದಿರುವ ಅಪಾರವಾದ ಕೆಲಸವು
ಕಾಲಮಾನಕ್ಕೆ ತಕ್ಕಂತೆ ಅನ್ವಯ ರೂಪದಲ್ಲಿ ಕಂಡುಕೊಳ್ಳಲಿಲ್ಲವೆಂಬ ಅನಿಸಿಕೆ ವಿದ್ವಾಂಸರಲ್ಲಿ
ಉಂಟಾಗಿದೆ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಗಳ
ಕುರಿತ ಪಾಶ್ಚಾತ್ಯರ ವಿಭಿನ್ನ ಅಧ್ಯಯನ ನೆಲೆಗಳು ಕಂಡುಕೊಂಡ ನೂತನ ತತ್ವಗಳನ್ನು
ದೃಷ್ಟಿಕೋನಗಳು ಶಾಸನ ಕ್ಷೇತ್ರಕ್ಕೆ ಒದಗಿ
ಬರಲಿಲ್ಲವೆಂಬ ಕೊರಗು ಇದೆ.ಇದಕ್ಕೆ ಹಲವು ಕಾರಣಗಳನ್ನು ನೀಡಬಹುದು. ಮೊದಲನೆಯದಾಗಿ ಶಾಸನಗಳು ಆಯಾ
ಪ್ರದೇಶದ ಭಾಷೆಯಲ್ಲಿ ಇರುವುದು ಮತ್ತು ಹಳಗನ್ನಡ ಲಿಪಿಯಲ್ಲಿರುವುದು. ಈ ಕಾರಣದಿಂದಾಗಿ ಶಾಸನಗಳ
ವಿಷಯ ಮತ್ತು ಮಹತ್ವ ಸಾರ್ವತ್ರಿಕವಾಗಿ ಚರ್ಚೆಗೆ ಒಳಗಾಗಲಿಲ್ಲ. ಎರಡೆನೆಯದಾಗಿ ಶಾಸನ ಕ್ಷೇತ್ರದ
ಅಧ್ಯಯನಕಾರರಿಗೆ ವ್ಯತ್ಪತ್ತಿ ಜ್ಞಾನವು ಅಗತ್ಯ. ಅಂದರೆ ಭಾಷೆ, ಛಂದಸ್ಸು,
ವ್ಯಾಕರಣ, ಪ್ರಾಚೀನ ಲಿಪಿಜ್ಞಾನ ಮತ್ತು ಪ್ರಾಚೀನ
ಇತಿಹಾಸ ಮತ್ತು ಸಂಸ್ಕೃತಿ- ಆಚರಣೆ ಮುಂತಾದ ಶಿಸ್ತುಗಳ ಜ್ಞಾನವಿರಬೇಕು. ಈ ಜ್ಞಾನಗಳನ್ನು ಒಳಗೊಂಡ
ಆಧುನಿಕ ಚಿಂತನೆಯ ವಿದ್ವಾಂಸರ ಕೊರತೆ
ಸ್ವಲ್ಪಮಟ್ಟಿಗೆ ಈ ಕ್ಷೇತ್ರಕ್ಕಿದೆ. ಬಹುಮಟ್ಟಿಗೆ
ಶಾಸನ ಅಧ್ಯಯನವು ಶಾಸ್ತ್ರೀಯ ನೆಲೆಗಟ್ಟಿನ ಚೌಕಟ್ಟಿನಲಿಯೇ ನಡೆದುಬಂದಿದೆ.
ಆರಂಭದಲ್ಲಿ ಶಾಸನ ಮತ್ತು ಇದರಲ್ಲಿ ಏನಿದೆಯೆಂಬ
ಕುತೂಹಲದ ಫಲವಾಗಿ ಅಧ್ಯಯನಕ್ಕೊಳಗಾದ ಶಾಸನ ಕ್ಷೇತ್ರವು ನಂತರದ ಕಾಲದಲ್ಲಿ ಇತಿಹಾಸ-ಸಂಸ್ಕೃತಿಯ
ಆಕರ ಕ್ಷೇತ್ರವಾಗಿ ಕಂಡುಬಂದಿತು. ಆದರೆ ಕೆಲವೊಂದು ಸಣ್ಣಪುಟ್ಟ ಉದಾಹರಣೆಗಳು ಬಿಟ್ಟು ಮಿಕ್ಕ
ಬಹುತೇಕ ಅಧ್ಯಯನಗಳು ಶಾಸನಗಳ ವೈಭವೀಕರಣ ಅಥವಾ ವರ್ಣನಾ ಪ್ರಧಾನ ಅಧ್ಯಯನಗಳೇ ಆಗಿವೆ. ಇಂದಿಗೂ
ಬಹುತೇಕ ಅಧ್ಯಯನಗಳು ಶಾಸನಗಳ ವೈಭವಿಕರಣ ಅಥವಾ ವರ್ಣನಾ ಪ್ರಧಾನ ಅಧ್ಯಯನಗಳೇ ಆಗಿವೆ. ಇಂದಿಗೂ
ಬಹುತೇಕ ಅಧ್ಯಯನಗಳು ಇದೇ ಮಾದರಿಯಲ್ಲೇ ಸಾಗಿವೆ. ಈವರೆಗಿನ ಶಾಸನಗಳ ಅಧ್ಯಯನವನ್ನು ಪ್ರಮುಖವಾಗಿ
ನಾಲ್ಕು ಭಾಗಗಳಾಗಿ ವಿಂಗಡಿಬಹುದು. ಪಠ್ಯ ಪ್ರಕಟನ ಕಾಲ, ಪಠ್ಯ ವೈಭವ ಕಾಲ, ಪಠ್ಯ
ಅಧ್ಯಯನ ಕಾಲ, ಮತ್ತು ಪಠ್ಯ ವಿಮರ್ಶನ ಕಾಲವೆಂದು ನಾಲ್ಕು ಭಾಗಗಳಾಗಿಯೂ
ಗುರುತಿಸಲಾಗಿದೆ. ಬಿ.ಎಲ್,ರೈಸ್,ಆರ್.ನರಸಿಂಹಾಚಾರ್
ಮುಂತಾದ ವಿದ್ವಾಂಸರು ಶಾಸನಗಳ ಪಠ್ಯದ ಪ್ರಕಟನೆಗೆ ಹೆಚ್ಚಿನ ಒಲವು ತೋರಿದರು. ಈ ವಿದ್ವಾಂಸರ
ಪ್ರಯತ್ನದ ಫಲವಾಗಿ ಸಾವಿರಾರು ಶಾಸನಗಳು ಹಲವಾರು ಶಾಸನ ಸಂಪುಟಗಳು ಪ್ರಕಟವಾದವು. ಇದು ಬಹಳ ಮಹತ್ತರವಾದಕಾರ್ಯ ಇದಕ್ಕೆ ದೈಹಿಕ ಶ್ರಮ ಹೆಚ್ಚು,
ಇದ್ದ ಅನುಕೂಲದಲ್ಲೇ ಕಷ್ಟಪಟ್ಟು ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸಿ ಶಾಸನಗಳನ್ನು
ಸಂಗ್ರಹಿಸಿದರು. ಕೆಲವರು ಸರಕಾರಿ ಇಲಾಖೆಯ ಪರವಾಗಿ ಕೆಲಸಮಾಡಿದರೆ ಮತ್ತೆ ಕೆಲವರು ಸ್ವಂತ
ಆಸಕ್ತಿಯಿಂದ ಈ ಕೆಲಸ ಮಾಡಿದರು. ಈ ಅವಧಿಯಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದಷ್ಟು
ವ್ಯವಸ್ಥಿತ ಕೆಲಸ ಉತ್ತರ ಕರ್ನಾಟಕದಲ್ಲಿ ನಡೆಯಲಿಲ್ಲ. ಇದಕ್ಕೆ ಕಾರಣ ಉತ್ತರ ಕರ್ನಾಟಕವು ಮುಂಬಯಿ
ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕವೆಂದು ಆಡಳಿತ್ಮಾಕವಾಗಿ ಹಂಚಿ ಹೋಗಿತ್ತು. ಇವರ ನಂತರ
ಪ್ರಕಟಿತ ಶಾಸನಗಳನ್ನು ವೈಭವೀಕರಿಸುವ ಅದೇ ಶ್ರೇಷ್ಠ ಆಕರಗಳು ಎಂಬ ಅತಿ ಉತ್ಸಾಹದ ಅಧ್ಯಯನಗಳು
ಹೆಚ್ಚಾಗಿ ನಡೆದವು. ಇದರಲ್ಲಿ ಆರ್.ನರಸಿಂಹಾಚಾರ್, ಎಂ.ಎಚ್.ಕೃಷ್ಣ,
ಎನ್,ಲಕ್ಷ್ಮೀ ನಾರಾಯಣರಾವ್, ಆರ್, ಎಸ್, ಪಂಚಮುಖಿ, ಪಿ,ಬಿ.ದೇಸಾಯಿ, ಬಾ.ರಾ.ಗೋಪಾಲ್,ಶೇಷಾದ್ರಿ, ಜಿ.ಎಸ್‌ಗಾಯಿ, ಶ್ರೀನಿವಾಸ
ರಿತ್ತಿ, ಎಸ್.ಸಿ.ನಂದೀಮಠ, ಕೆ.ಜಿ.ಕುಂದಣಕಾರ,
ಮಧುರಚೆನ್ನ ಮುಂತಾದವರು ಮುಖ್ಯರಾಗುತ್ತಾರೆ. ಮೇಲ್ಕಂಡವರಲ್ಲಿ ವಿಮಶ್ಮಾರ್ತಕ
ಅಧ್ಯಯನ ಗುಣವಿರಲಿಲ್ಲವೆಂದು ಅರ್ಥವಲ್ಲ. ಎಲ್ಲರೂ ಮಹಾ ವಿದ್ವಾಂಸರೇ ಆದರೆ ಹೊಸ ಅಧ್ಯಯನ
ಸಾಧ್ಯತೆಗಳು ಅವರಿಗೆ ಗೋಚರವಾಗಲಿಲ್ಲ. ಗೋಚರವಾಗಲಿಲ್ಲ ಎಂಬುದಕ್ಕಿಂತ ಅವರಿಗೆ ಅದರ
ಅಗತ್ಯವಿರಲಿಲ್ಲ ವೆಂದರೆ ಸರಿಯಾಗುತ್ತದೆ. ಶಾಸನ ಕವಿಗಳು, ಶಾಸನ
ಸಾಹಿತ್ಯ ಸಂಚಯ, ಶಾಸನ ಪದ್ಯ ಮಂಜರಿ, ಕರ್ನಾಟಕದ
ಅರಸು ಮನೆತನಗಳು ಹೀಗೆ ಇನ್ನೂ ಈ ರೀತಿಯ ಅಧ್ಯಯನಗಳು ಈ ಮಾದರಿಗೆ ಸೇರಿಸಬಹುದು. ಇಲ್ಲಿ ಶಾಸನಗಳಲ್ಲಿ ಕಂಡುಬಂದ ಇತಿಹಾಸದ ಅಂಶಗಳು.
ಘಟನೆಗಳು ಆಡಳಿತಾಧಿಕಾರಿಗಳು, ಅವುಗಳ ಸಾಹಿತ್ಯದ ಸೊಬಗು, ಅವುಗಳಲ್ಲಿನ ವೀರರು ಮಹಾಸತಿಯರು ಮತ್ತು ದಾನಿಗಳ ವಿಷಯ, ದಾನದ
ವಸ್ತುಗಳು ಮೊದಲಾದವನ್ನು ಬೆರಗಿನಿಂದ ವರ್ಣಿಸುವುದು ಈ ಹಂತದಲ್ಲಿ ಅಷ್ಟಾಗಿ ನಡೆಯಿತು. ಮೂರನೆಯ
ಹಂತವಾದ ಪಠ್ಯ ಅಧ್ಯಯನ ಹಂತದಲ್ಲಿ ಶಾಸನಗಳಲ್ಲಿನ ವಿಷಯಗಳನ್ನು ಗಂಭೀರವಾಗಿ ಅಧ್ಯಯನಕ್ಕೊಳಪಡಿಸಿ
ಫಲಿತಾಂಶವನ್ನು ಪ್ರಕಟಿಸುವ ಕೆಲಸ ಪ್ರಾರಂಭವಾಯಿತು. ರೈಸ್, ಫ್ಲೀಟ್
ಎಂ.ಎಚ್.ಕೃಷ್ಣ ಮೊದಲಾದವರು ಕೂಡ ಗಾಂರ್ಭೀಯದ ಅಧ್ಯಯನ ನಡೆಸಿದ್ದರೂ ಕೂಡ ಅವರಲ್ಲಿ ಕಂಡುಬರದ ಆಕರ
ಬಳಕೆಯ ರೀತಿ ಈ ಹಂತದ ವಿದ್ವಾಂಸರಲ್ಲಿ ಕಾಣಲಾರಂಭಿಸಿತು.
ಇದರ ಪರಿಣಾಮವಾಗಿ ಹಿಂದಿನ ಅವಧಿಯ ಅನೇಕ ಅಧ್ಯಯನಗಳು ತೀರ್ಮಾನಗಳು ಈ ಅವಧಿಯಲ್ಲಿ
ಪರಿಷ್ಕರಣೆಗೊಂಡವು ಮತ್ತು ಹೊಸತನದಲ್ಲಿ ಕಂಡುಬಂದವು,
೩. ಕನ್ನಡ ನಾಡಿನಲ್ಲಿ ನಡೆದಿರುವ ಶಾಸನಗಳ ಅಧ್ಯಯನದ ಸಾಧ್ಯತೆಗಳ ಗ್ರಹಿಕೆ.
ಅ. ಮೂಲ
ಆಕರಗಳಾದ ಶಾಸನಗಳ ಪರಿವೀಕ್ಷಣೆ,
ಸಂಗ್ರಹಣೆ, ಸಂಪಾದನೆ ಮತ್ತು ಪ್ರಕಟನೆ.
ಬ.ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಪ್ರಕಟಗೊಂಡ ಶಾಸನಗಳಲ್ಲಿಯ ಮತ್ತು ವಿಷಯದ ವೈವಿಧ್ಯತೆಗನುಗುಣವಾಗಿ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದ ಹಾಗೂ ಇತರೆ ಅಧ್ಯಯನವನ್ನು ನಡೆಸಿರುವುದು.)
ಅ. ಶಾಸನಗಳ
ಪರಿವೀಕ್ಷಣೆ, ಸಂಗ್ರಹಣೆ, ಸಂಪಾದನೆ ಮತ್ತು ಪ್ರಕಟನೆ: ಶಾಸನಗಳ ಸಂಗ್ರಹ,
ಸಂಪಾದನೆ ಹಾಗೂ ಪ್ರಕಟನೆಯ ಕಾರ್ಯ ಸಾಂಸ್ಥಿಕ ಹಾಗೂ ವೈಯಕ್ತಿಕ
ಮಟ್ಟಗಳೆರಡರಲ್ಲಿಯೂ ನಡೆದಿದೆ. ಶಾಸನಗಳ ಸಂಗ್ರಹ ಕಾರ್ಯವನ್ನು ೧,ಕರ್ನಲ್
ಮೆಕೆಂಝಿ ಯುಗ ೨. ಸರ್ ವಾಲ್ಟೇರ್ ಇಲಿಯಟ್ ಯುಗ ೩. ಜೆ.ಎಫ್.ಪ್ಲೀಟ್ ಮತ್ತು ರೈಸ್ ಯುಗ ೪. ಸ್ವದೇಶಿ ವಿದ್ವಾಂಸರ ಯುಗ ಎಂದು ಗುರುತಿಸ
ಬಹುದಾಗಿದೆ.
ಕನ್ನಡ ನಾಡಿನಲ್ಲಿ ಪ್ರಕಟಿತ ಮತ್ತು ಅಪ್ರಕಟಿತ
ರೂಪದ ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಶಾಸನಗಳು ಇವೆ. ಭಾರತದಲ್ಲಿ ಅತಿ ಹೆಚ್ಚು ಶಾಸನಗಳನ್ನು
ಹೊಂದಿರುವ ರಾಜ್ಯ ತಮಿಳುನಾಡು. ಅನಂತರದ ಸ್ಥಾನ ಕರ್ನಾಟಕಕ್ಕೆ ಸಲ್ಲುತ್ತದೆ. ಕನ್ನಡ ನಾಡಿನ ಬಹಳಷ್ಟು ಅಪ್ರಕಟಿತ ಶಾಸನಗಳನ್ನು
ಪಾಶ್ಚಾತ್ಯ ಮತ್ತು ಪೌರಾತ್ಯ ಪಂಡಿತರು ಕಷ್ಟಪಟ್ಟು ಸಂಗ್ರಹಿಸಿದ್ದಾರೆ. ಪ್ರಯತ್ನದಿಂದ
ಓದಿದ್ದಾರೆ. ಪ್ರಾಮಾಣಿಕತೆಯಿಂದ ಅರ್ಥೈಸಿದ್ದಾರೆ. ೨೦ನೇ ಶತಮಾನದ ಪೂರ್ವದಲ್ಲಿ ಪಾಶ್ಚಾತ್ಯ
ವಿದ್ವಾಂಸರೇ ಶಾಸನಗಳ ಅಧ್ಯಯನಕ್ಕೆ ಅಡಿಗಲ್ಲು ಹಾಕಿದವರಾಗಿದ್ದಾರೆ. ಸರ್ ವಿಲಿಯಂ ಜೋನ್ಸ್
ಏಷಿಯಾಟಿಕ್ ಸೊಸೈಟಿಯನ್ನು ಕ್ರಿ.ಶ.೧೭೮೩ರಲ್ಲಿ ಸ್ಥಾಪಿಸಿದ ಮೇಲೆ ಭಾರತದಲ್ಲಿ ಪುರಾತತ್ವ ಕುರಿತು
ನಡೆದ ಸಂಶೋಧನೆಯ ವಿವರಗಳನ್ನು ಪ್ರಕಟಿಸಲು ಏಷಿಯಾಟಿಕ್ ರೀಸರ್ಚ್ಸ್ ಪತ್ರಿಕೆಯನ್ನು
ಪ್ರಾರಂಭಿಸಿದರು. ಈ ಪತ್ರಿಕೆಯ ಮೂರನೆಯ ಸಂಪುಟದಲ್ಲಿ ಸರ್ ವಿಲಿಯಂ ಜೋನ್ಸ್ನಿಂದ ಒಂದು ತಾಮ್ರ
ಶಾಸನ A Royal Grant of Land in Carnata ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು.
ಸಂಸ್ಕೃತ ಭಾಷೆಯಲ್ಲಿಯ ಈ ಶಾಸನದ ವಸ್ತು ವಿಜಯನಗರದ ಅರಸರು ತಮಿಳುನಾಡಿನ ಕಂಚಿ ದೇವಾಲಯಕ್ಕೆ
ದತ್ತಿ ಕೊಟ್ಟ ವಿಷಯವನ್ನು ಒಳಗೊಂಡಿತ್ತು. ಕರ್ನಾಟಕದ ಅರಸರಿಗೆ ಸಂಬಂಧಿಸಿದ್ದರಿಂದ ಈ ಶಾಸನವು
ಕರ್ನಾಟಕದ ಪ್ರಥಮ ಪ್ರಕಟಿತ ಶಾಸನ ಎನ್ನುವ ಖ್ಯಾತಿಗೆ ಒಳಗಾಗಿದೆ.
ಕರ್ನಲ್ ಮಕೆಂಝಿಯು ಟಿಪ್ಪುವಿನ ಮರಣ ನಂತರ, ಮೈಸೂರು ಪ್ರದೇಶದ
ಭೌಗೋಳಿಕ ಪರಿವೀಕ್ಷಣಾಧಿಕಾರಿಯಾಗಿ ನೇಮಕಗೊಂಡ ನಂತರ ಪ್ರಾಚೀನ ಶಿಲ್ಪ, ಶಾಸನ
ಮತ್ತು ಹಳೆಯ ಗ್ರಂಥಗಳ ಸಂಗ್ರಹಗಳತ್ತ ಆಸಕ್ತಿಯನ್ನು ದೇಶಿ ವಿದ್ವಾಂಸರ ಸಹಾಯದಿಂದ ವಹಿಸಿದನು.
ಇವನಿಗೆ ನೆರವಾದ ದೇಶಿಯ ವ್ಯಕ್ತಿ ಪಂ.ಕವೆಲ್ಲಿ ಬೋರಯ್ಯ. ಬಹು ಭಾಷಾ ಬಲ್ಲಿದ ತೀಕ್ಷ್ಣಮತಿ ಆಶು
ಕವಿಯಾಗಿದ್ದ ಪಂ.ಬೋರಯ್ಯನ ನೆರವಿಲ್ಲದಿದ್ದರೆ ಮೆಕೆಂಝಿಯು ಈ ಕಾರ್ಯದಲ್ಲಿ ಯಶಸ್ಸನ್ನು
ಗಳಿಸುತ್ತಿರಲಿಲ್ಲವೆಂದು ತಾನೇ ಹೇಳಿಕೊಂಡಿದ್ದಾನೆ. ಕನ್ನಡ ಭಾಷೆಯ ಶಾಸನವನ್ನು ಮೊದಲು ಓದಿದ
ಕೀರ್ತಿ ಬೋರಯ್ಯನಿಗೆ ಸಲ್ಲುತ್ತದೆ. ಏಷಿಯಾಟಿಕ್ ರೀಸರ್ಚ್ ಪತ್ರಿಕೆಯ ಒಂಬತ್ತನೆಯ ಸಂಪುಟದಲ್ಲಿ
ಶ್ರವಣಬೆಳಗೊಳಕ್ಕೆ ಸಂಬಂಧಿಸಿದ ಕ್ರಿ.ಶ. ೧೩೬೮ರ ಬುಕ್ಕರಾಯನ ಧರ್ಮಶಾಸನವನ್ನು ಪ್ರಕಟಿಸಿದರು,
ಬಹುಶಃ ಇದು ಕನ್ನಡ ಭಾಷೆಯ ಪ್ರಥಮ ಪ್ರಕಟಿತ ಶಾಸನ ಎಂದು ವಿದ್ವಾಂಸರ
ಅನಿಸಿಕೆಯಾಗಿದೆ. ಮೆಕೆಂಝಿಯ ಜೊತೆಗೆ ಸಿ.ಪಿ.ಬ್ರೌನ್, ಕೋಲ್‌ಬ್ರುಕ್,
ಹೆನ್ರಿ ವಥೆನ್, ವಿಲ್ಸನ್, ಜೇಮ್ಸ್
ಪ್ರಿನ್ಸೆಪ್ ಮುಂತಾದವರು ಕನ್ನಡ ಶಾಸನಗಳ ಪ್ರಕಟಣೆಯಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ವಹಿಸಿದರು.
ಕ್ರಿ.ಶ.೧೭೯೧ರಿಂದ ೧೮೩೭ರ ವರೆಗೆ ಸುಮಾರು ಆರುನೂರು ಶಾಸನಗಳ ಸಂಗ್ರಹ ಮೇಲ್ಕಂಡ ಪಾಶ್ಚಾತ್ಯ
ವಿದ್ವಾಂಸರಿಂದ ನಡೆಯಿತು.
ಮದ್ರಾಸ್ ಪ್ರಾಂತ್ಯದಲ್ಲಿ ಸಿವಿಲ್ ಸರ್ವಿಸ್‌ನಲ್ಲಿ
ಅಧಿಕಾರಿಯಾಗಿದ್ದ ಸರ್ ವಾಲ್ಟರ್ ಇಲಿಯಟ್‌ನಿಂದ ಕನ್ನಡ ಶಾಸನಗಳ ವ್ಯವಸ್ಥಿತ ಅಧ್ಯಯನ
ಆರಂಭವಾಯಿತೆನ್ನಬಹುದು. ಈತನು ಮುಂಬೈ ಕರ್ನಾಟಕ, ನಿಜಾಂ ಕರ್ನಾಟಕದ ಪಶ್ಚಿಮ ಭಾಗ, ಹಳೆ ಮೈಸೂರು ಪ್ರಾಂತದ ಉತ್ತರ ಭಾಗಗಳಿಂದ ೧೩೦೦ ಶಾಸನಗಳನ್ನು ಸಂಗ್ರಹಿಸಿ ಇವುಗಳಲ್ಲಿ
೫೯೫ ಶಾಸನಗಳನ್ನು ಆರಿಸಿಕೊಂಡು Carnataka Desh Inscriptions ಹೆಸರಿನಲ್ಲಿ ಕೈ ಬರಹದ
ನಾಲ್ಕು ಪ್ರತಿಗಳನ್ನು ಸಿದ್ಧಪಡಿಸಿದರು. ಕೈ ಬರಹದ ಈ ಸಂಪುಟವು ಉತ್ತರ ಕರ್ನಾಟಕದ ಚರಿತ್ರೆಯ
ಅಧ್ಯಯನಕ್ಕೆ ಅಗತ್ಯವಾದ ಶಾಸನ ಸಂಪುಟವಾಗಿದೆ. ತಮ್ಮ ಶಾಸನಾಧ್ಯಯನದ ವಿವರವನ್ನು ಲಂಡನ್ನಿನ ರಾಯಲ್
ಏಷ್ಯಾಟಿಕ್ ಸೊಸೈಟಿಯ ಪತ್ರಿಕೆಯಲ್ಲಿ Hindu
Inscriptionಎಂಬ
ಲೇಖನದಲ್ಲಿ ದಾಖಲಿಸಿದ್ದಾರೆ. ಈ ಲೇಖನದ ಮೂಲಕ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸಗಳ
ಅಧ್ಯಯನದಲ್ಲಿ ಹೊಸ ಅಧ್ಯಾಯವೇ ಪ್ರಾರಂಭವಾಯಿತೆನ್ನಬಹುದು. ಈ ಸಂಗ್ರಹವು ಮುಂದೆ ಕರ್ನಾಟಕ್ ದೇಶ್
ಇನ್‌ಸ್ಕ್ರಿಪ್ಷನ್ ಎಂಬ ಹೆಸರಿನಿಂದ ಎರಡು ಸಂಪುಟಗಳಲ್ಲಿ ದೇಶೀಯ ವಿದ್ವಾಂಸರಿಂದ ಪ್ರಕಟವಾಯಿತು.
ಶಾಸನಗಳು ಇರುವ ಊರೂರುಗಳನ್ನು ಅಡ್ಡಾಡಿ ಶಾಸನಗಳನ್ನು ಶೋಧಿಸುವ ಹಾಗೂ ಸಂಗ್ರಹಿಸುವ ಕಾರ್ಯ
ಮಹತ್ತರವಾದುದಾಗಿದೆ.
ಮೂಲ ಆಕರಗಳಾದ ಶಾಸನಗಳ ಸಂಗ್ರಹದ ಇಪ್ಪತ್ತನೇ
ಶತಮಾನದಲ್ಲಿ ಪ್ರಾಂತ್ಯವಾರು ಮಟ್ಟದಲ್ಲಿ ನಡೆದಿರುವುದನ್ನು ಗುರುತಿಸಬಹುದು. ಅವು ಯಾವುವೆಂದರೆ
೧.ಹಳೇ ಮೈಸೂರು ಅಧಿಪತ್ಯ. ೨.ಮದ್ರಾಸ್ ಅಧಿಪತ್ಯ. ೩.ಮುಂಬೈ ಕರ್ನಾಟಕ. ೪.ಹೈದರಾಬಾದ್ ಕರ್ನಾಟಕ
(ನಿಜಾಂ ಕರ್ನಾಟಕ).
೧.ಹಳೇ
ಮೈಸೂರು ಅಧಿಪತ್ಯ= ಹಳೇ ಮೈಸೂರು ಪ್ರದೇಶದಲ್ಲಿ ಶಾಸನಗಳ ಕುರಿತಾದ ವ್ಯವಸ್ಥಿತವಾದ ಅಧ್ಯಯನ
ಬಿ.ಎಲ್.ರೈಸ್‌ರಿಂದ ಪ್ರಾರಂಭವಾಯಿತೆನ್ನಬಹುದು. ಶಾಸನಗಳನ್ನು ಓದುವ ಕಾರ್ಯ ಪರಿಪೂರ್ಣತೆಯನ್ನು
ಮುಟ್ಟಿದ್ದು ಇವರ ಕಾಲದಲ್ಲಿಯೇ. ಈ ಕೆಲಸದಲ್ಲಿ ದೇಶೀಯ ವಿದ್ವಾಂಸರೂ ಭಾಷೆಯ ವಿಷಯದಲ್ಲಿ
ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಲಿಪಿಯನ್ನು ಓದಿ ಅರ್ಥೈಸುವಲ್ಲಿ ಪಾಶ್ಚಾತ್ಯ ವಿದ್ವಾಂಸರ
ಪ್ರಯತ್ನವೇ ಮುಖ್ಯ. ಕನ್ನಡ ನಾಡಿನ ಶಾಸನಗಳ ಸಂಗ್ರಹದಲ್ಲಿ ರೈಸ್‌ರ ಹೆಸರು ಗಮನಾರ್ಹವಾದುದು.
ಅವರು ಕ್ರಿ.ಶ.೧೮೮೫ ರಿಂದ ೧೯೦೬ರ ವರೆಗೆ ಪ್ರಾಚ್ಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಹೊರತಂದ
‘ಎಪಿಗ್ರಫಿಯಾ ಕರ್ನಾಟಿಕಾ’ ಸಂಪುಟಗಳು ಶಾಸನಗಳ ಪ್ರಕಟನೆಯಲ್ಲಿ ಎದ್ದು ಕಾಣುವಂತಹದ್ದಾಗಿವೆ. ಹಳೇ
ಮೈಸೂರು ಭಾಗದ ಸುಮಾರು ೯೦೦೦ ಶಾಸನಗಳು ಹನ್ನೆರಡು ಸಂಪುಟಗಳಲ್ಲಿ ಪ್ರಕಟಗೊಂಡಿವೆ.
‘ಎಫಿಗ್ರಫಿಯಾ ಕರ್ನಾಟಿಕಾ’ದ
ಸ್ವರೂಪ ಎಂದರೆ ಪ್ರತಿಯೊಂದು ಸಂಪುಟವೂ ಸುದೀರ್ಘವಾದ ಪ್ರಸ್ತಾವನೆಯನ್ನು ಹೊಂದಿದ್ದು, ಶಾಸನಗಳ ರೋಮನ್ ಲಿಪ್ಯಂತರ, ಇಂಗ್ಲೀಷ್ ಭಾಷಾಂತರ ಹಾಗೂ ಮೂಲ
ಪಾಠಗಳೊಂದಿಗೆ ಪ್ರಕಟವಾಗಿವೆ. ಈ ಕಾರ್ಯ ಬಿ.ಎಲ್.ರೈಸ್ ಅವರ ಅತ್ಯದ್ಭುತವಾದ ಸಾಧನೆಯೆಂದೇ
ಗುರುತಿಸಬೇಕು. ರೈಸ್ ನಂತರ ಬಂದ ಆರ್.ನರಸಿಂಹಾಚಾರ್, ಎಂ.ಎಚ್.ಕೃಷ್ಣ,
ಕೆ.ಎ.ನೀಲಕಂಠಶಾಸ್ತ್ರಿಗಳ ಅವಧಿಯಲ್ಲಿ ಕೋಲಾರ, ಶಿವಮೊಗ್ಗ,
ಹಾಸನ, ತುಮಕೂರು, ಮೈಸೂರು
ಜಿಲ್ಲೆಯ ಹೆಚ್ಚಿನ ಶಾಸನಗಳು ಆರು ಸಂಪುಟಗಳಲ್ಲಿ ‘ಎಪಿಗ್ರಫಿಯಾ ಕರ್ನಾಟಿಕಾ’ದ ಪುರವಣಿಗಳಾಗಿ
ಪ್ರಕಟಗೊಂಡವು. ಹೀಗೆ ರೈಸ್‌ರಿಂದ ಪ್ರಕಟವಾದ ಇ.ಅ. ಸಂಪುಟಗಳು ಹಾಗೂ ಆರ್.ನರಸಿಂಹಾಚಾರ್,
ಎಂ.ಎಚ್.ಕೃಷ್ಣ ಮೊದಲಾದ ನಾಡಿನ ಶಾಸನತಜ್ಞರಿಂದ ಪ್ರಕಟವಾದ ಇ.ಅ. ಪುರವಣಿಗಳು
ಹಾಗೂ ಪುರಾತತ್ವ ಇಲಾಖೆಯ ವಾರ್ಷಿಕ ವರದಿ (M.A.R)ಗಳಲ್ಲಿ ಸುಮಾರು ೧೩೫೦೦
(೧೩.೨೯೬) ಶಾಸನಗಳು ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಕಟವಾದವು.
ಬಿ.ಎಲ್.ರೈಸ್‌ರವರು ಸಂಪಾದಿಸಿ ಪ್ರಕಟಿಸಿದ್ದ
ಇ.ಅ.ಯ ಸಂಪುಟಗಳು ಸಂಶೋಧಕರಿಗೆ ದುರ್ಲಭವಾಗಿದ್ದ ಸಂದರ್ಭದಲ್ಲಿ ಅವುಗಳನ್ನು ಪರಿಷ್ಕರಿಸಿ
ಪ್ರಕಟಿಸುವಂತಹ ಮಹತ್ವ ಪೂರ್ಣ ಕಾರ್ಯಯೋಜನೆಯನ್ನು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ
ಸಂಸ್ಥೆಯು ಹಾ.ಮಾ.ನಾಯಕರು ನಿರ್ದೇಶಕರಾಗಿದ್ದ ಕಾಲದಲ್ಲಿ ಹಮ್ಮಿಕೊಂಡು ಅದರನ್ವಯ ಕೊಡಗು, ಶ್ರವಣಬೆಳಗೊಳ,
ಮೈಸೂರು, ಮಂಡ್ಯ, ಹಾಸನ
ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸನಗಳನ್ನೊಳಗೊಂಡ ಹನ್ನೆರಡು ಬೃಹತ್ ಪರಿಷ್ಕೃತ ಶಾಸನ ಸಂಪುಟಗಳು ಹೊರ
ಬಂದಿವೆ. ಮೈಸೂರು ಪ್ರಾಂತ್ಯದ ಉಳಿದ ಜಿಲ್ಲೆಗಳ ಪರಿಷ್ಕೃತ ಶಾಸನ ಸಂಪುಟಗಳ ಕಾರ್ಯ ಮಂದಗತಿಯಲ್ಲಿ
ನಡೆದಿದ್ದು ಪ್ರಕಟನೆಯ ಕಾರ್ಯ ವಿಳಂಬಗೊಂಡಿದೆ. ಪರಿಷ್ಕೃತ ಎಪಿಗ್ರಫಿಯಾ ಕರ್ನಾಟಿಕಗಳ ಸ್ವರೂಪ
ರೈಸ್ ಸಂಪುಟಗಳಿಗಿಂತ ಸ್ವಲ್ಪ ವಿಭಿನ್ನವಾಗಿವೆ.
೧.ಕನ್ನಡ
ವಲ್ಲದ ಶಾಸನಗಳಿಗೆ ಕನ್ನಡ ಲಿಪ್ಯಂತರದ ಜೊತೆಗೆ ರೋಮನ್ ಲಿಪ್ಯಂತರದೊಡನೆ ಕೊಡಲಾಗಿದೆ.
೨.ಬೇರೆ
ಬೇರೆ ಮೂಲಗಳಲ್ಲಿ ಪ್ರಕಟವಾಗಿರುವ ಶಾಸನಗಳನ್ನು ಒಂದೆಡೆ ತರಲಾಗಿದೆ.
೩.ಪ್ರತಿಯೊಂದು
ಶಾಸನವೂ ಚಿಕ್ಕ ಪರಿಚಯವನ್ನು ಆಂಗ್ಲಭಾಷೆಯಲ್ಲಿ ಹೊಂದಿದೆ.
೪.ಉಪಯುಕ್ತವಾದ
ಅನುಬಂಧಗಳನ್ನು ಒಳಗೊಂಡಿದೆ. ೧)ಶಾಸನಗಳು ದೊರೆತಿರುವ ಊರುಗಳ ಅಕಾರಾದಿ. ೨)ವಂಶಾನುಕ್ರಮದಲ್ಲಿ
ಶಾಸನಗಳ ಸೂಚಿ. ೩)ಶಬ್ದಸೂಚಿ.
೫.ಪ್ರತಿಯೊಂದು
ಸಂಪುಟವು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಸುದೀರ್ಘವಾದ ಪ್ರಸ್ತಾವನೆಯನ್ನು ಒಳಗೊಂಡಿದೆ.
ಪ್ರಸ್ತಾವನೆಯಲ್ಲಿ ಆ ಸಂಪುಟಗಳ ಶಾಸನಗಳಲ್ಲಿ ಹುದುಗಿರುವ ರಾಜಕೀಯ ಇತಿಹಾಸ, ಸಾಮಾಜಿಕ-ಆರ್ಥಿಕ
ಪರಿಸ್ಥಿತಿಗಳು, ಶಾಸನಗಳ ಸಾಹಿತ್ಯಕ ಮೌಲ್ಯ, ಛಂದಸ್ಸು
ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಇದೆ. ಈ ಸಂಪುಟಗಳು ಶಾಸನಗಳನ್ನಾಧರಿಸಿ
ಸಂಶೋಧನೆಯನ್ನು ಕೈಗೊಳ್ಳುವ ಸಂಶೋಧಕರಿಗೆ ಸಮಯ ಹಾಗೂ ಶ್ರಮದ ಉಳಿತಾಯವನ್ನು ಮಾಡಿವೆ. ಉಳಿದ
ಸಂಪುಟಗಳು ನಿರೀಕ್ಷಿಸಿದ ಮಟ್ಟದಲ್ಲಿ ಪ್ರಕಟಗೊಳ್ಳದೆ ಇರುವುದು ಈ ವಿಷಯದ ಆಸಕ್ತರಿಗೆ
ಆತಂಕವನ್ನುಂಟು ಮಾಡಿದೆ.
ಇತ್ತೀಚೆಗೆ ರೈಸ್‌ರ ಕಾಲದಲ್ಲಿ ಪ್ರಕಟವಾದ ಇ.ಅ.ಯ
ಸಂಪುಟಗಳು ಹಾಗೂ ನಂತರದ ಕಾಲದಲ್ಲಿ ಪ್ರಕಟವಾದ
ಇ.ಅ.ಯ ಪುರವಣಿಗಳನ್ನು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ (I
C H R)ಗಣಕಯಂತ್ರಗಳಲ್ಲಿ
ಅಳವಡಿಸಿ ಸಿ.ಡಿ.ರೋಮ್‌ಗಳ ಮೂಲಕ ಹೊರ ತಂದಿರುವುದು ಮಹತ್ತರ ಸಂಗತಿ. ಈ ಪ್ರಯೋಗ ಕರ್ನಾಟಕ್ಕೆ
ಮಾತ್ರವಲ್ಲ ಇಡೀ ಇಂಡಿಯಾದಲ್ಲಿಯೇ ಪ್ರಥಮ ಎನಿಸಿದೆ. ಇದರಿಂದಾಗಿ ಸಂಶೋಧಕರಿಗೆ ವಿವಿಧ
ರೀತಿಯಲ್ಲಿ ಇ.ಅ.ಯಲ್ಲಿಯ ಮಾಹಿತಿಗಳು ಅತಿ ಕಡಿಮೆ
ವೇಳೆಯಲ್ಲಿ ಲಭ್ಯವಾಗುತ್ತವೆ. ಮೂಲ, ಲಿಪ್ಯಂತರ, ಅನುವಾದ ಮೂರು
ರೀತಿಗಳಲ್ಲಿ ಶಾಸನಗಳ ಪಠ್ಯವನ್ನು ಅಳವಡಿಸಲಾಗಿದೆ. ರಾಜನ ಹೆಸರನ್ನು ಸೂಚಿಸಿದರೆ ಆ ರಾಜನ
ಹೆಸರಿನಲ್ಲಿ ದೊರೆಯುವ ಶಾಸನಗಳ ಸಂಖ್ಯೆ ಹಾಗೂ ಶಾಸನಗಳ ಪಠ್ಯ ಪಟ್ಟಿಗೆ ಒಂದೆಡೆ ದೊರೆಯಲಿರುವುದು
ಇದರ ವಿಶೇಷ. ಒಂದು ಊರಿನಲ್ಲಿರುವ ಶಾಸನಗಳ ಪಟ್ಟಿ ಹಾಗೂ ಪಠ್ಯ ದೊರೆಯುವುದು ಇವೆಲ್ಲ ಬಹಳ
ಉಪಯುಕ್ತವಾಗಿದೆ. ನಾಡಿನ ಶಾಸನಗಳನ್ನು ಕುರಿತು ಪಾಶ್ಚಾತ್ಯ ಸಂಶೋಧಕರು ತಾವು ಇರುವ ಸ್ಥಳದಲ್ಲಿಯೇ
ಸಂಶೋಧನೆಯನ್ನು ಕೈಗೊಳ್ಳಲು ಅವಕಾಶ ಕಲ್ಪಿತವಾಗುತ್ತದೆನ್ನಬಹುದು. ಈ ಮಹತ್ತರವಾದ ಕಾರ್ಯದಲ್ಲಿ
ಎಸ್.ಶೆಟ್ಟರ್ ಹಾಗೂ ಎಸ್.ಕೆ ಅರುಣಿಯವರ ಕಾರ್ಯ ಸ್ತುತ್ಯಾರ್ಹವಾದುದು. ಇದೇ ಮಾದರಿಯಲ್ಲಿಯೇ
ಕನ್ನಡ ನಾಡಿನ ಎಲ್ಲಾ ಶಾಸನಗಳನ್ನು ಡಿಜಿಟಲ್
ರೂಪದಲ್ಲಿ ತರಬೇಕಾಗಿದೆ.
೨.ಮದ್ರಾಸ್ ಅಧಿಪತ್ಯ: ಭಾರತ ಸರ್ಕಾರದ
ಪುರಾತತ್ವ ಇಲಾಖೆಯ ಶಾಸನ ವಿಭಾಗವು ದಕ್ಷಿಣ ಭಾರತದ ಶಾಸನಗಳನ್ನು South Indian Inscriptions ಹೆಸರಿನಲ್ಲಿ
ಹಲವಾರು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಸಂಪುಟಗಳಲ್ಲಿ ಕೆಲವು ಸಂಪುಟಗಳು ಮದ್ರಾಸ್ ಅಧಿಪತ್ಯಕ್ಕೆ
ಒಳಪಟ್ಟ ಕನ್ನಡ ಪ್ರದೇಶದ ಕೆಲವು ಶಾಸನಗಳನ್ನು ಒಳಗೊಂಡಿದೆ. ಅವುಗಳೆಂದರೆ S.I.I. ಸಂಪುಟ ೪, ೫, ೬, ೮, ೯ ಭಾಗ ೧ ಮತ್ತು ೨, ೧೭,
೨೪. ಈ ಸಂಪುಟಗಳಲ್ಲಿ ಎನ್.ಲಕ್ಷ್ಮೀನಾರಾಯಣರಾಯರು, ಆರ್.ಶ್ಯಾಮಾಶಾಸ್ತ್ರೀ
ಮುಂತಾದ ಶಾಸನ ತಜ್ಞರ ಫಲವಾಗಿ ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳ ಸುಮಾರು ೯೦೦ ಶಾಸನಗಳು ಪ್ರಕಟವಾಗಿವೆ ಎನ್ನಬಹುದು. ಇ.ಅ.
ಸಂಪುಟಗಳಲ್ಲಿ ಈಗಾಗಲೇ ನೋಡಿರುವಂತೆ ಪ್ರಾದೇಶಿಕ ವರ್ಗೀಕರಣ ಇದ್ದರೆ S.I.I. ಸಂಪುಟಗಳಲ್ಲಿ ವಂಶಾನುಕ್ರಮಾಧಾರಿತ ಹಾಗೂ ನೋಡಿರುವಂತೆ ಪ್ರಾದೇಶಿಕ ವರ್ಗೀಕರಣವನ್ನು
ಗುರುತಿಸಬಹುದು.
೩.ಮುಂಬೈ
ಕರ್ನಾಟಕ: ಉತ್ತರ ಕರ್ನಾಟಕದ ಶಾಸನಗಳನ್ನು
ಸಂಗ್ರಹಿಸುವ ಕಾರ್ಯ ಜೆ.ಎಫ್.ಪ್ಲೀಟ್‌ರವರಿಂದ ಪ್ರಾರಂಭವಾಯಿತು. ಇವರು ಈ ಭಾಗದ ೨೦೦ಕ್ಕೂ
ಮೇಲ್ಪಟ್ಟ ಶಾಸನಗಳನ್ನು ಪ್ರಕಟಿಸಿದ್ದಾರೆ. ಫ್ಲೀಟ್‌ರವರು ಜೆ.ಬಿ.ಬಿ.ಆರ್.ಎ.ಎಸ್. ಪತ್ರಿಕೆ
ಹಾಗೂ ಇಂಡಿಯನ್ ಆಂಟಿಕ್ವರಿ ಪತ್ರಿಕೆಗಳಲ್ಲಿ ಈ ಭಾಗದ ಸಂಸ್ಕೃತ ಮತ್ತು ಹಳಗನ್ನಡ ಶಾಸನಗಳನ್ನು
ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿಯವರೆಗೂ ಇತರೆ ಪಾಶ್ಚಾತ್ಯ ವಿದ್ವಾಂಸರು
ಸಂಗ್ರಹಿಸಿದ್ದ ಶಾಸನಗಳನ್ನು ಕ್ರಮವಾಗಿ ಜೋಡಿಸಿ‘Pali Sanskrit Old Canarese
Inscriptions from the Bombay Presidency and Parts of Madras Presidency
and Mysore’
ಶೀರ್ಷಿಕೆಯಡಿಯಲ್ಲಿ ಸಂಪುಟವನ್ನು ಪ್ರಕಟಿಸಿದ್ದಾರೆ. ಇವರು ಈ ಭಾಗದ ಶಾಸನಗಳನ್ನು ಸಂಪಾದಿಸಿ
ಪ್ರಕಟಿಸಿರುವಲ್ಲಿ ಅಧ್ಯಯನದ ವ್ಯಾಪ್ತಿಯ ವಿಶಾಲತ್ವವನ್ನು ಗುರುತಿಸಬಹುದು. ಒಂದೊಂದು ಶಾಸನವನ್ನು ಟೀಕೆಯ ಸಹಿತ ಪ್ರಕಟಿಸಿದ್ದಾರೆ.
ಶಾಸನ ದೊರೆತ ಸ್ಥಳ, ಶಾಸನದ ಗಾತ್ರ, ಅದು ಈಗ ಇರುವ ಸ್ಥಿತಿ, ಅದರ ಲಿಪಿ, ಲಿಪಿಯ ವೈಶಿಷ್ಟ್ಯ ಆ ಶಾಸನಗಳ ಭಾಷೆ ಇತ್ಯಾದಿಗಳ
ವಿವರ ಇದೆ.
ಮುಂಬೈ ಕರ್ನಾಟಕ ಪ್ರದೇಶದ ಶಾಸನಗಳಲ್ಲಿ ಸುಮಾರು
೨೦೦೦ (೧೯೨೫) ಶಾಸನಗಳು South
Indian Inscriptions
ಸಂಪುಟ ೧೧, ೧೫, ೧೮, ೨೦ ಸಂಪುಟಗಳಲ್ಲಿ ಆರ್.ಎಸ್.ಪಂಚಮುಖಿ, ಎನ್.ಲಕ್ಷ್ಮೀನಾರಾಯಣರಾಯರು, ಪಿ.ಬಿ.ದೇಸಾಯಿ. ಜಿ.ಎಸ್.ಗಾಯಿ,
ಶ್ರೀನಿವಾಸ ರಿತ್ತಿ, ಬಿ.ಆರ್.ಗೋಪಾಲ ಇವರ
ಪರಿಶ್ರಮದಿಂದ ಪ್ರಕಟವಾಗಿವೆ. ಈ ಸಂಪುಟಗಳನ್ನು Bombay Karnataka Inscriptions
Vol No1, 2, 3, 4.
ಎಂದು
ಕರೆಯುತ್ತಾರೆ.
ಮುಂಬೈ ಸರ್ಕಾರದ ವತಿಯಿಂದ ಮುಂಬೈ ಕರ್ನಾಟಕ
ಪ್ರದೇಶದಲ್ಲಿ ಶಾಸನ, ಹಸ್ತಪ್ರತಿ, ನಾಣ್ಯಗಳ ಸಂಗ್ರಹ ಇತ್ಯಾದಿಗಳನ್ನು ಸಂಗ್ರಹಿಸುವ
ಸಲುವಾಗಿ ಕನ್ನಡ ಸಂಶೋಧನಾ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯ ಮೂಲಕ ೧೫೦೦
ಶಾಸನಗಳನ್ನು ಪರಿವೀಕ್ಷಿಸಿ ಸಂಪಾದಿಸಿ Karnataka Inscriptions ಹೆಸರಿನ ಆರು ಸಂಪುಟಗಳಲ್ಲಿ
ಆರ್.ಎಸ್.ಪಂಚಮುಖಿ, ಎ.ಎಂ.ಅಣ್ಣಿಗೇರಿ, ಬಿ.ಆರ್.ಗೋಪಾಲ್ ಅವರು ಪ್ರಕಟಿಸಿದ್ದಾರೆ.
ಈ ಸಂಪುಟಗಳಲ್ಲಿ ವಿಸ್ತಾರವಾದ ಪ್ರಸ್ತಾವನೆ, ಹಾಗೂ ಟಿಪ್ಪಣಿ ಇಂಗ್ಲೀಷ್‌ನಲ್ಲಿರುವುದನ್ನು
ಗುರುತಿಸಬಹುದು. ಹಾಗೆಯೇ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಉತ್ತರ ಕರ್ನಾಟಕದ
ಶಾಸನಗಳ ಪರಿವೀಕ್ಷಣೆ, ಪ್ರಕಟನೆಯಂತಹ ಸಾಂಸ್ಥಿಕ ಸಂಯೋಜನೆಯನ್ನು
ಹಮ್ಮಿಕೊಂಡು ಅದರನ್ವಯ ಶಾಸನಗಳ ಸೂಚಿಯ ರಚನೆಯಡಿಯಲ್ಲಿ ಧಾರವಾಡ ಹಾಗೂ ವಿಜಾಪುರ ಜಿಲ್ಲಾ ಶಾಸನ
ಸೂಚಿ ಹಾಗೂ ಶಾಸನ ಪ್ರಕಟನೆಯ ಮಾಲಿಕೆಯಲ್ಲಿ ಧಾರವಾಡ ತಾಲ್ಲೋಕಿನ ಶಾಸನಗಳು ಮಾತ್ರ ಪ್ರಕಟವಾಗಿವೆ.
ಈ ಮಹತ್ವ ಪೂರ್ವವಾದ ಕಾರ್ಯ ಸ್ಥಗಿತಗೊಂಡಿದೆ.
೪.ನಿಜಾಂ
ಕರ್ನಾಟಕ: ಉಳಿದ ಮೂರು ಪ್ರಾತಗಳಿಗೆ
ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಾಸನಗಳ ಸಂಗ್ರಹ-ಪ್ರಕಟನೆಯ ಕಾರ್ಯ ಅಷ್ಟಾಗಿ
ನಡೆದಿಲ್ಲ ಎನ್ನಬಹುದು. ಹಾಗೆ ನೋಡಿದರೆ ಕನ್ನಡ ನಾಡಿನಲ್ಲಿ ಶಾಸನಗಳ ಸರ್ವೇಕ್ಷಣೆ, ಪ್ರಕಟನೆಯ ಕಾರ್ಯ
ಮೊದಲಿಗೆ ಪ್ರಾರಂಭವಾದದ್ದು ಕರ್ನಲ್ ಮೆಕೆಂಝಿ ಹಾಗೂ ಸರ್.ವಾಲ್ಟೇರ್ ಇಲಿಯಟ್‌ನ ಮೂಲಕ ಈ
ಭಾಗದಲ್ಲಿಯೇ. ನಿಜಾಂ ಕರ್ನಾಟಕ ಭಾಗದ ಸುಮಾರು ೫೦೦ ಶಾಸನಗಳು ಇವರ ಕಾಲದಲ್ಲಿ
ಸಂಗ್ರಹಿಸಲ್ಪಟ್ಟಿದ್ದವು. ನಂತರದ ಕಾಲದಲ್ಲಿ ಉಳಿದ ಭಾಗಗಳಿಗೆ ಹೋಲಿಸಿದರೆ ಈ ಭಾಗದಲ್ಲಿ
ಹೇಳಿಕೊಳ್ಳುವಂತಹ ಕೆಲಸ ನಡೆದಿಲ್ಲ ಎನ್ನಬಹುದು.
ಆಂಧ್ರಪ್ರದೇಶ ಸರ್ಕಾರದ Govt Archeological Series ಮಾಲಿಕೆಯಲ್ಲಿ ಹಾಗೂ ತೆಲಂಗಾಣ
ಶಾಸನಮುಲು ಎರಡು ಸಂಪುಟಗಳಲ್ಲಿ ನಿಜಾಂ ಕರ್ನಾಟಕದ ಹಾಗೂ ಆಂಧ್ರಪ್ರದೇಶದಲ್ಲಿಯ ಕೆಲವು ಕನ್ನಡ
ಶಾಸನಗಳು ಪ್ರಕಟವಾಗಿವೆ. ದೇಶೀಯ ವಿದ್ವಾಂಸರು ವಿರಳವಾಗಿ ಈ ಭಾಗದಲ್ಲಿ ಶಾಸನಗಳ
ಸಂಗ್ರಹ-ಪ್ರಕಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಪಿ.ಬಿ.ದೇಸಾಯಿ ಅವರ Jainism in South
India and some Jaina Epigraphs ಪುಸ್ತಕದ ಅನುಬಂಧದಲ್ಲಿ ಈ ಭಾಗದ ೫೩ ಶಾಸನಗಳನ್ನು
ಟಿಪ್ಪಣಿಗಳೊಂದಿಗೆ ಪ್ರಕಟಿಸಿದ್ದಾರೆ. ವಿ.ಎಸ್.ಕುಲಕರ್ಣಿ ಅವರ Historical and cultural
atudies of the region around Basava kalyana ನಿಬಂಧದಲ್ಲಿ ಬೀದರ್ ಜಿಲ್ಲೆಯ ೬೮ ಶಾಸನಗಳ ಪಠ್ಯ ಕೊಟ್ಟಿದ್ದಾರೆ.
ವಿ.ಶಿವಾನಂದ ಅವರು ಮೆಕೆಂಝಿ ಸಂಗ್ರಹದಲ್ಲಿದ್ದ ಹಾಗೂ ತಾವು ಸಂಗ್ರಹಿಸಿದ್ದ ಸ್ವಂತದ ಶಾಸನಗಳನ್ನು
ಸೇರಿಸಿ ‘ಹೈದರಾಬಾದ್’ ಕರ್ನಾಟಕ ಭಾಗದ ಕನ್ನಡ ಶಿಲಾಶಾಸನಗಳು ಎಂಬ ಸಂಪುಟವನ್ನು ಬನಾರಸ್
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮೂಲಕ ಪ್ರಕಟಿಸಿದ್ದಾರೆ. ಹನುಮಾಕ್ಷಿಗೋಗಿ ಹಾಗೂ
ಬಿ.ಆರ್.ಹಿರೇಮಠ ಅವರು ಮುದೆನೂರು ಹಾಗೂ ಯಡ್ರಾಮಿ ಶಾಸನಗಳನ್ನು ಪ್ರಕಟಿಸಿದ್ದಾರೆ.
ಹನುಮಾಕ್ಷಿಗೋಗಿ ಅವರ ಸುರಪುರ ತಾಲ್ಲೋಕಿನ ಶಾಸನಗಳು ಹಾಗೂ ಕಲಬುರ್ಗಿ ಜಿಲ್ಲೆಯ ಶಾಸನಗಳನ್ನು
ಉಲ್ಲೇಖಿಸಬಹುದು. ಈ ಭಾಗದ ಶಾಸನಗಳ ವ್ಯವಸ್ಥಿತ ಅಧ್ಯಯನ ತೀರ ವಿರಳ ಎಂದೇ ಹೇಳಬೇಕು.
ಶಾಸನಗಳ ಸರ್ವೇಕ್ಷಣೆ, ಸಂಗ್ರಹಣೆ,
ವಾಚನ, ಅಧ್ಯಯನ, ಪ್ರಕಟನ
ಕಾರ್ಯ ಶ್ರಮದಾಯಕವಾದುದು. ಆರ್ಥಿಕ ಸಹಾಯ, ತಾಳ್ಮೆ, ಅವಿರತ ಅಧ್ಯಯನ, ಪ್ರಮುಖ ಇಂತಹ ಸಂದರ್ಭದಲ್ಲಿ ಯಾವುದೇ
ಸರ್ಕಾರದ ಸಹಾಯವಿಲ್ಲದೆ ವೈಯಕ್ತಿಕವಾಗಿ ಶಾಸನಗಳ ಸಂಗ್ರಹ, ಪ್ರಕಟನೆಯ
ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರೂ ಕಂಡು ಬರುತ್ತಾರೆ. ಅಂತಹವರಲ್ಲಿ
ಪ್ರಮುಖರೆಂದರೆ ಕೆ.ಜಿ.ಕುಂದಣಗಾರ, ಪಿ.ಬಿ.ದೇಸಾಯಿ, ಎಸ್.ಶೆಟ್ಟರ್, ಶ್ರೀನಿವಾಸರಿತ್ತಿ, ಹಂಪನಾ ಮೊದಲಾದವರು. ಕುಂದಣಗಾರರ ದೇಸಾಯಿಅವರ Inscription in Northern
Karnataka and kolhapura state ಸಂಪುಟದಲ್ಲಿ ಒಟ್ಟು ೪೩ ಶಾಸನಗಳು ವಿಸ್ತೃತವಾದ
ಪ್ರಸ್ತಾವನೆ, ಪಠ್ಯ ಹಾಗೂ ಅನುವಾದದೊಂದಿಗೆ ಪ್ರಕಟವಾಗಿದೆ. ಪಿ.ಬಿ.ದೇಸಾಯಿ Studies Epigraphy ಅಥವಾ ಶಾಸನ ಪರಿಚಯದಲ್ಲಿ ೫೩ ಶಾಸನಗಳು
ಪ್ರಕಟವಾಗಿವೆ. ಹಂಪನಾರವರು ಸಂಪಾದಿಸಿ ಪ್ರಕಟಿಸಿರುವ ಹೊಂಬುಜದ ಶಾಸನಗಳು ಗಮನೀಯವಾದವುಗಳಾಗಿವೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಶಾಸನ ವಿಭಾಗದ ಕಾರ್ಯವನ್ನು ಪ್ರತ್ಯೇಕವಾಗಿಯೇ ಉಲ್ಲೇಖಿಸಬೇಕು. Epigraphia CarnaticazÀ
ಮಾದರಿಯಲ್ಲಿಯೇ
ಕನ್ನಡ ವಿಶ್ವವಿದ್ಯಾಲಯದ ಶಾಸನಗಳ ಸಂಪುಟಗಳು ಮಾಲಿಕೆಯಡಿಯಲ್ಲಿ ಜಿಲ್ಲಾವಾರು ಮಟ್ಟದಲ್ಲಿ ದೇವರ
ಕೊಂಡಾರೆಡ್ಡಿ ಅವರ ಸಂಪಾದಕತ್ವದಲ್ಲಿ ಡಿ.ವಿ. ಪರಮಶಿವಮೂರ್ತಿ, ಕೆ.ಜಿ.ಭಟ್ಟಸೂರಿ,
ಕಲವೀರ ಮನ್ವಾಚಾರ್ ಅವರ ನೆರವಿನೊಂದಿಗೆ ಬಳ್ಳಾರಿ, ಕೊಪ್ಪಳ,
ಹಂಪೆ ಹಾಗೂ ರಾಯಚೂರು ಹಾಗೂ ಬೀದರ ಜಿಲ್ಲೆಯ ಶಾಸನಗಳು ಪ್ರಕಟವಾಗಿವೆ.ಗದಗ ಹಾಗೂ
ಬಾಗಲಕೋಟೆ ಜಿಲ್ಲೆಯ ಶಾಸನ ಸಂಪುಟಗಳು ಸಿದ್ಧಗೊಂಡಿದ್ದು ಪ್ರಕಟನೆಯ ಹಂತದಲ್ಲಿವೆ.ಕೃಷ್ಣ
ಮೇಲ್ದಂಡೆ ಯೋಜನೆಯ ಮುಳುಗಡೆ ಗ್ರಾಮಗಳಲ್ಲಿಯ ಶಾಸನಗಳನ್ನು ಅಧ್ಯಯನ ಮಾಡಿ ಪುಸ್ತಕ ರೂಪದಲ್ಲಿ
ಪ್ರಕಟಿಸಿದ್ದಾರೆ. ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ದೊರೆತಿರುವ ಕನ್ನಡ ಶಾಸನಗಳ
ಪ್ರಕಟನೆಯಲ್ಲಿ ಆಸಕ್ತಿ ತೋರಿರುವ ಕೆ.ಆರ್.ಗಣೇಶ್,ಎಚ್.ಎಸ್.ಗೋಪಾಲರಾವ್
ಹಾಗೂ ಪಿ.ವಿ.ಕೃಷ್ಣಮೂರ್ತಿಯವರ ಕಾರ್ಯವೂ ಉಲ್ಲೇಖಾರ್ಹವಾಗಿದೆ. ಕರ್ನಾಟಕ ಇತಿಹಾಸ ಅಕಾಡೆಮಿಯು
ಪ್ರತಿವರ್ಷವೂ ನಡೆಸುವ ಕರ್ನಾಟಕ ಇತಿಹಾಸ ಅಧಿವೇಶನದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು ಇತಿಹಾಸ
ದರ್ಶನ ಹೆಸರಿನಲ್ಲಿ ಸಂಪುಟರೂಪದಲ್ಲಿ ಪ್ರಕಟಿಸುತ್ತಿದ್ದು ಇಲ್ಲಿಯವರೆಗೂ ೨೩ ಸಂಪುಟಗಳು
ಹೊರಬಂದಿದ್ದು ಸುಮಾರು ಮುನ್ನೂರಕ್ಕೂ ಮೇಲ್ಪಟ್ಟು ಅಪ್ರಕಟಿತ ಶಾಸನಗಳು ಬೆಳಕು ಕಂಡಿವೆ. ಇತರೆ
ಕೆಲವು ನಿಯತ ಕಾಲಿಕೆಗಳು ಮತ್ತು ಮಾನವಿಕಗಳಲ್ಲಿ ಕೆಲವು ಅಪ್ರಕಟಿತ ಶಾಸನಗಳು
ಪ್ರಕಟಗೊಂಡಿವೆ.ಅದರಲ್ಲಿಯೂ ಕ.ವಿ.ವಿ.ಯ ಶಾಸನಶಾಸ್ತ್ರ ವಿಭಾಗದ ಶಾಸನ ಅಧ್ಯಯನ ನಿಯತಕಾಲಿಕವನ್ನು
ಪ್ರತ್ಯೇಕವಾಗಿಯೇ ಉಲ್ಲೇಖಿಸ ಬೇಕು.
ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ
ಪ್ರದೇಶದಲ್ಲಿ ಶಾಸನಗಳ ಪರಿವೀಕ್ಷಣೆ ಹಾಗೂ ಪ್ರಕಟನೆಯ ಕಾರ್ಯ ಇತ್ತೀಚಿನ ದಿನಮಾನಗಳಲ್ಲಿ
ನಡೆದಿದ್ದರೂ ಯಾವ ಯಾವ ಶಾಸನಗಳು ಎಲ್ಲಿ ಎಲ್ಲಿ ಪ್ರಕಟವಾಗಿವೆ? ಎಷ್ಟು ಪ್ರಕಟಿತ?
ಎಷ್ಟು ಅಪ್ರಕಟಿತ? ಪುನರಾವರ್ತನೆ ಎಲ್ಲೆಲ್ಲಿ
ತಲೆದೋರಿದೆ ಎಂಬ ವಿಷಯದಲ್ಲಿ ಅಧ್ಯಯನಾಸಕ್ತರಿಗೆ ಸಂದೇಹಗಳು ತಲೆದೋರಿವೆ. ಶಾಸನಗಳು
ಪ್ರಕಟವಾಗಿರುವ ಸಂಪುಟಗಳು ಹಾಗೂ ನಿಯತಕಾಲಿಕೆಗಳು ಸರಿಯಾಗಿ ಲಭ್ಯವಿಲ್ಲದ ಕಾರಣ ಪ್ರಕಟವಾಗಿರುವ
ಶಾಸನಗಳನ್ನು ಹುಡುಕುವುದು ಮೂಲ ಶಾಸನದ ಹತ್ತಿರ ಹೋಗಿ ಪಡಿಯಚ್ಚು ತೆಗೆದುಕೊಂಡು ಅಭ್ಯಸಿಸುವಷ್ಟೇ
ತ್ರಾಸದಾಯಕವಾಗಿದೆ. ಶಾಸನಗಳ ಸಂಗ್ರಹದ ಕಾರ್ಯವನ್ನು ಯಾರು ಯಾವ ಪ್ರದೇಶದಲ್ಲಿ ಕೈಕೊಂಡಿದ್ದಾರೆ
ಎಂಬುದರ ಪೂರ್ಣ ಮಾಹಿತಿ ದೊರೆಯದೆ ಇರುವ ಕಾರಣವೋ, ಮತ್ತಾವ ಕಾರಣವೋ
ಶಾಸನಗಳ ಪ್ರಕಟನಾ ಕಾರ್ಯದಲ್ಲಿ ಪುನರುಕ್ತತೆ ತಲೆದೋರಿದೆ.
ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಗ್ರಹಿಕೆ:
ಬ.
ಪ್ರಕಟಗೊಂಡ ಶಾಸನಗಳಲ್ಲಿಯ ಮತ್ತು ವಿಷಯದ ವೈವಿಧ್ಯತೆಗನುಗುಣವಾಗಿ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿಗೆ
ಸಂಬಂಧಿಸಿದ ಹಾಗೂ ಇತರೆ ಅಧ್ಯಯನವನ್ನು ನಡೆಸಿರುವುದು: ಪ್ರಕಟಗೊಂಡ ಶಾಸನಗಳಲ್ಲಿಯ
ವಸ್ತುವಿಷಯಕ್ಕನುಗುಣವಾಗಿ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಇನ್ನಿತರ
ಅಧ್ಯಯನವನ್ನು ನಡೆಸಿರುವುದು. ಶಾಸನಗಳನ್ನು ಶೋಧಿಸಿ ಪ್ರಕಟಿಸಿದ ತಜ್ಞರಲ್ಲಿ ಕೆಲವರು
ಶಾಸನಗಳನ್ನಾಧರಿಸಿ ಇತಿಹಾಸವನ್ನು ರೂಪಿಸಲು ಪ್ರಯತ್ನಿಸಿರುವುದು ಕಂಡು ಬರುತ್ತದೆ. ಕನ್ನಡ
ನಾಡಿನಲ್ಲಿ ಪ್ರಕಟಗೊಂಡ ಶಾಸನಗಳನ್ನು ವಸ್ತು ವಿಷಯಕ್ಕನುಗುಣವಾಗಿ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಅಧ್ಯಯನಗಳನ್ನು ನಡೆಸಿದ್ದಾರೆ. ಆರಂಭಕಾಲದಲ್ಲಿ
ಶಾಸನಗಳನ್ನು ಸರ್ವೇಕ್ಷಣೆ ಮಾಡಿ ಸಂಪಾದಿಸಿ ಪ್ರಕಟಿಸಿದ ವಿದ್ವಾಂಸರಲ್ಲಿ ಕೆಲವರಾದರೂ
ಶಾಸನಗಳನ್ನು ಆಧರಿಸಿ ಇತಿಹಾಸವನ್ನು ರೂಪಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ. ಈ
ನಿಟ್ಟಿನಲ್ಲಿ ಬಿ.ಎಲ್.ರೈಸ್‌ರ Mysore and coorg from
Inscriptions, mysore gazatter. ಜೆ.ಎಫ್.ಪ್ಲೀಟ್‌ರ Dynasties of the canerese
Inscriptions,
ಮೊರೆಸ್ ಅವರ ಕದಂಬಕುಲಗಳನ್ನು ಹೆಸರಿಸಬಹುದು. ಆರಂಭದಲ್ಲಿ ಶಾಸನಗಳನ್ನು
ಕುರಿತಾದ ಅಧ್ಯಯನ ಕೇವಲ ಇತಿಹಾಸಕ್ಕೆ ಮಾತ್ರ ಸೀಮಿತವಾಗಿತ್ತು. ಇತಿಹಾಸ ಅಧ್ಯಯನ ಕೇವಲ ರಾಜರ
ಮತ್ತು ರಾಜಮನೆತನದ ಘಟನೆಗಳಿಗೆ ಸಂಬಂಧ ಪಟ್ಟ ದಾಖಲೆಗಳೆಂದು ಗ್ರಹಿಸಲಾಯಿತು. ಚರಿತ್ರೆಯ ವಿಷಯವು
ರಾಜರ ಹೋರಾಟ, ಗೆಲುವು ಸೋಲುಗಳನ್ನು ವಿವರಿಸುವ ಕೆಲಸಕ್ಕೆ ಮಾತ್ರ
ಸೀಮಿತವಾಯಿತು. ಹಿಂದಿನ ರಾಜರು ಆರ್ಥಿಕ, ಸಾಮಾಜಿಕ, ಜೀವನವನ್ನು ರೂಪಿಸುವ ಶಕ್ತಿಯಾಗಿದ್ದರು ಎನ್ನುವ ಪರಿಕಲ್ಪನೆಯಿಂದ ಚರಿತ್ರೆಯನ್ನು
ರೂಪಿಸಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಚರಿತ್ರೆಯ ಅಧ್ಯಯನದಲ್ಲಿ ಶಾಸನಗಳನ್ನು ಮೂಲ
ಸಾಮಗ್ರಿಯಾಗಿ ಗ್ರಹಿಸಿದ ಚರಿತ್ರೆಕಾರರು ಅವುಗಳನ್ನು ಪ್ರತಿಯೊಂದು ರಾಜ ಅಥವಾ ರಾಜಮನೆತನದ
ವ್ಯಕ್ತಿಗಳ ವೈಯಕ್ತಿಕ ವಿವರವನ್ನು ಮುಖ್ಯವಾಗಿ ವಿವರಿಸುವಲ್ಲಿ ತದನಂತರ ಅನುಬಂಧದೋಪಾದಿಯಲ್ಲಿ
ರಾಜ ತಾನು ಕಟ್ಟಿಸಿದ ದೇವಾಲಯ, ಬಿಟ್ಟ ದತ್ತಿ, ಕವಿಗಳಿಗೆ ಕೊಟ್ಟ ಆಶ್ರಯ ಇತ್ಯಾದಿ ಬಿಡಿ ಸಂಗತಿಗಳನ್ನು ಆ ಕಾಲದ ಪ್ರಮುಖ ಆರ್ಥಿಕ,
ಸಾಮಾಜಿಕ ಕಾರ್ಯಗಳೆಂಬಂತೆ ಗುರುತಿಸುವಷ್ಟಕ್ಕೆ ಸೀಮಿತವಾಗಿ
ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಲ್ಲೆಲ್ಲಾ ಶಾಸನಗಳ ವಿಷಯಗಳನ್ನು ಇತಿಹಾಸದ ವರದಿಯಂತೆ
ಬಳಸಿಕೊಳ್ಳಲಾಗಿದೆ. ಶಾಸನಗಳಲ್ಲಿ ವ್ಯಕ್ತಗೊಂಡ ಅರಸ ಅಥವಾ ಇನ್ನಿತರ ಕಾರ್ಯಗಳೇ ಪ್ರಮುಖ ಎನ್ನುವ
ಭಾವನೆಯನ್ನು ತಾಳಿದ ಹಾಗೆ ಕಂಡುಬರುತ್ತದೆ. ಆರಂಭಕಾಲದ ಚರಿತ್ರೆಕಾರರು ಶಾಸನಗಳನ್ನು ಮೊದಲ ವರ್ಗದ
ಆಕರಗಳ ನಿಖರವಾದ ದಾಖಲೆಗಳು ಎಂದು ಪರಿಭಾವಿಸಿದ್ದರಿಂದ ಶಾಸನಗಳು ಕೊಡುವ ಎಲ್ಲಾ ಮಾಹಿತಿಯು
ಇವರಿಗೆ ಅತಿಮುಖ್ಯ ಎನಿಸಿಬಿಟ್ಟಿತು. ಶಾಸನಗಳು ವೈಭವೀಕರಿಸುವ ಸಂಗತಿಗಳನ್ನು ಸಂದೇಹಾಸ್ಪದವಾಗಿ
ಪರಿಶೀಲಿಸದೆ ಅಧಿಕೃತ ದಾಖಲೆಗಳೆಂದು ಕಣ್ಣುಮುಚ್ಚಿಕೊಂಡು ಸ್ವೀಕರಿಸಿದರು. ಈ ಅಂಶವನ್ನು ಬಿ.ಎಲ್.ರೈಸ್‌ರ
Mysore and
coorg from Inscriptions ಪುಸ್ತಕದಲ್ಲಿ ಗ್ರಹಿಸಬಹುದು. ಪೌರಾಣಿಕ, ಧಾರ್ಮಿಕ,
ಪರಿಭಾಷೆಯ ಶಾಸನದ ವಿಷಯವನ್ನು ಅಧಿಕೃತ ಎಂದು ಪರಿಭಾವಿಸಿದರು. ಶಾಸನವಲ್ಲದ ಉಳಿದ
ಆಕರಗಳನ್ನು ಕಲ್ಪಿತ, ಅಲೌಕಿಕ ಎಂದು ಪರಿಭಾವಿಸಿ ಗಣನೆಗೆ
ತೆಗೆದುಕೊಳ್ಳದ ಕಾರಣ ಈ ವಿಷಯದಲ್ಲಿ ಅವುಗಳನ್ನು ಪೂರಕ ಆಕರಗಳಾಗಿ ಬಳಸುವ ಪ್ರಯತ್ನ ಮಾಡಲಿಲ್ಲ.
ಶಾಸನಗಳಂತಹ ಆಕರಗಳ ಸಾಂದರ್ಭಿಕ ನೆಲೆಗಳಿಂದ ಅಭಿವ್ಯಕ್ತವಾಗುವ ಊಹಾಸಾಧ್ಯತೆಗಳನ್ನು ಪೂರಕ
ಆಕರಗಳೊಂದಿಗೆ ಹೋಲಿಸುವ ಪ್ರಯತ್ನ ಶಾಸನಗಳನ್ನಾಧರಿಸಿದ ಚರಿತ್ರೆಯ ಅಧ್ಯಯನದಲ್ಲಿ ಗುರುತಿಸಲು
ಸಾಧ್ಯವಿಲ್ಲ.
ಗಂಗರ ತಾಮ್ರಪಟಗಳ ನೈಜತೆಯ ಬಗೆಗೆ ಪ್ಲೀಟ್ ಮತ್ತು
ರೈಸ್‌ರಲ್ಲಿ ನಡೆದ ವಾದ ವಿವಾದವನ್ನು ಇಲ್ಲಿ ಪ್ರಮುಖ ಅಂಶವಾಗಿ ಉಲ್ಲೇಖಿಸಬಹುದಾಗಿದೆ. ಏಕೆಂದರೆ
ಕೂಟ ಶಾಸನಗಳು ಚರಿತ್ರೆಯ ರಚನೆಯಲ್ಲಿ ದಾಖಲಾಗಿ ಹೋಗಿಬಿಟ್ಟಿದ್ದು ಪ್ರಮುಖ ಅಂಶವಾಗಿದೆ. ಕೃತಕ
ತಾಮ್ರಶಾಸನಗಳನ್ನು ಮೂಲಸಾಮಗ್ರಿಯನ್ನಾಗಿ ಸ್ವೀಕರಿಸುವಲ್ಲಿ ಇವರೀರ್ವರೂ ವಿಭಿನ್ನ ಧೋರಣೆಯನ್ನು
ಅನುಸರಿಸಿದ್ದರು. ರೈಸ್‌ರು ಕೃತಕ ತಾಮ್ರಶಾಸನಗಳನ್ನಾಧರಿಸಿ ಬರೆದ ಗಂಗರ ಚರಿತ್ರೆಯನ್ನು
ತಿರಸ್ಕರಿಸುವಂತಹ ಪ್ರಯತ್ನ ನಡೆದಿದ್ದು ಮಹತ್ತರವಾದುದು. ತಾಮ್ರ ಶಾಸನಗಳ ನೈಜತ್ವವನ್ನು ಪೂರಕ
ಆಕರಗಳ ಹಿನ್ನಲೆಯಲ್ಲಿ ಓರೆಗಲ್ಲಿಗೆ ತಿಕ್ಕಿ ಅವುಗಳ ಅಸ್ತಿತ್ವವನ್ನು ಪ್ರಶ್ನಿಸಿದ್ದನ್ನು
ಗಮನಿಸಬಹುದಾಗಿದೆ. ಶಾಸನ ಅಧ್ಯಯನದ ಮೊದಲ ಘಟ್ಟಗಳಲ್ಲಿ ರಾಜಕೀಯ ಅಧ್ಯಯನಕ್ಕೆ ಬಳಕೆಯಾಗಿದ್ದೇ
ಹೆಚ್ಚು. ಕರ್ನಾಟಕದ ರಾಜಮನೆತನಗಳ ಅಧ್ಯಯನಕ್ಕೆ ಶಾಸನಗಳು ಮುಖ್ಯ ಆಕರಗಳಾದವು. ದಾನದ ವ್ಯವಸ್ಥೆ, ಅಗ್ರಹಾರಗಳ
ವ್ಯವಸ್ಥೆ, ದೇವಾಲಯಗಳ ಅಧ್ಯಯನಗಳು ಈ ಹಂತದಲ್ಲಿ ಹೆಚ್ಚು ನಡೆದವು.
ಒಂದು ರೀತಿಯಲ್ಲಿ ಹಿಂದಿನ ಅಧ್ಯಯನಗಳಿಗೆ ಪೂರಕವಾಗಿ ಮತ್ತು ಅಧ್ಯಯನಗಳ ಮುಂದುವರಿಕೆಯ
ಭಾಗಗಳಾದಂತೆ ಕಂಡುಬರುತ್ತದೆ.ಈಗಲೂ ಅನೇಕರು ಹೀಗೆಯೇ ಅಧ್ಯಯನ ನಡೆಸುತ್ತಿದ್ದಾರೆ. ಶಾಸನಗಳನ್ನು
ನಮ್ಮ ಪರಂಪರೆಯ ಚೌಕಟ್ಟಿನ ಹೊರಗಿಟ್ಟು ನೋಡುವ ಅಗತ್ಯವೇ ಇನ್ನೂ ಅನೇಕರಿಗೆ ಮನಗಂಡಿಲ್ಲ.
ಶಾಸನಗಳ ಸಾಂಸ್ಕೃತಿಕ ಸಂಶೋಧನೆ ೨೦ನೇ ಶತಮಾನದ
ಮಧ್ಯಭಾಗದಲ್ಲಿ ಕನ್ನಡ ನಾಡಿನಲ್ಲಿ ವ್ಯವಸ್ಥಿತವಾಗಿ ಕಾಣಿಸಿಕೊಂಡ ಶೈಕ್ಷಣಿಕಶಿಸ್ತು. ನಾಡಿನ
ಸಾಂಸ್ಕೃತಿಕ ಚರಿತ್ರೆ ಕುರಿತು ಶಾಸನ ಮತ್ತು ಪೂರಕ ಆಕರಗಳ ಮೂಲಕ ನಡೆದಿರುವ ಅಧ್ಯಯನವು ಸಂಶೋಧನಾ
ಕ್ಷೇತ್ರದ ಬೇರೆ ಬೇರೆ ಆಯಾಮಗಳನ್ನು ಗುರುತಿಸಲು ನೆರವಾಗಿದೆ. ಸಾಹಿತ್ಯದ ಅಧ್ಯಾಪಕರು ಹಾಗೂ
ವಿದ್ಯಾರ್ಥಿಗಳು ಶಾಸನಗಳನ್ನು ಕುರಿತು ಅಧ್ಯಯನ ಕೈಗೊಂಡ ಮೇಲೆ ಶಾಸನಗಳನ್ನು ನೋಡುವ
ದೃಷ್ಟಿಕೋನದಲ್ಲಿ ಬದಲಾವಣೆ ಉಂಟಾಯಿತು. . ಶಾಸನ ಕ್ಷೇತ್ರವು ಹೊಸತನವನ್ನು ರಾಜಕೀಯ ಅಧ್ಯಯನದಿಂದ
ಬಿಡಿಸಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಧ್ಯಯನಗಳತ್ತ ತರುವಲ್ಲಿ ಕನ್ನಡ ವಿಧ್ವಾಂಸರ ಶ್ರಮ
ಅಪಾರವಾದುದು. ಶಾಸನಗಳ ಆಕರಗಳನ್ನು ಬಹುರೂಪದಲ್ಲಿ ಬಳಸಿಕೊಂಡರು. ಪೂರ್ವಜರ ಜೀವನ ಕ್ರಮ ಅರಿಯಲು, ಜನಸಾಮಾನ್ಯರಲ್ಲಿ
ಬಳಕೆಯಲ್ಲಿದ್ದ ರೀತಿ ನೀತಿಗಳು ಮತ್ತು ಆಚರಣೆಗಳನ್ನು ಅರಿಯಲು ಶಾಸನಗಳು ಮುಖ್ಯ ಆಕರಗಳೆಂಬ
ಅಭಿಪ್ರಾಯ ಹೆಚ್ಚಾಯಿತು. ಈ ಕಾರಣಗಳಿಂದಾಗಿ ಈ ಅವಧಿಯನ್ನು ಪಠ್ಯವಿಮರ್ಶನ ಯುಗವೆಂದು
ಕರೆಯಬಹುದು.ಅಲ್ಲಿಯವರೆಗೂ ಐತಿಹಾಸಿಕ ದಾಖಲೆಗಳ ಆಕರಗಳು ಎಂದು ಭಾವಿಸಿದ್ದ ಶಾಸನಗಳನ್ನು
ಸಾಂಸ್ಕೃತಿಕ ಹಿನ್ನಲೆಯಲ್ಲಿ ನೋಡುವ ಪರಿಕಲ್ಪನೆ ಉಂಟಾಯಿತು. ಶಾಸನಗಳಂತಹ ಆಕರಗಳಿಂದ ಗ್ರಹಿಸಿದ
ಸಾಂದರ್ಭಿಕ ನೆಲೆಗಳು ಅಭಿವ್ಯಕ್ತವಾಗುವ ಊಹಾ ಸಾಧ್ಯತೆಗಳನ್ನು ವಿಭಿನ್ನ ನೆಲೆಗಟ್ಟಿನಲ್ಲಿ ಪೂರಕ
ಶಿಸ್ತುಗಳೊಂದಿಗೆ ಅಧ್ಯಯನ ಮಾಡಲು ಪ್ರಯತ್ನಿಸಿದರು. ರಾಜಮನೆತನಗಳ ಇತಿಹಾಸವು ನಾಡಿನ ಇತಿಹಾಸ
ರಚನೆಗೆ ಅಸ್ತಿಪಂಜರದಂತೆ ಎಂದು ಭಾವಿಸಿ, ಈ ಅಸ್ತಿಪಂಜರಕ್ಕೆ ರಕ್ತ
ಮಾಂಸಗಳನ್ನು ತುಂಬುವುದು ನಾಡಿನ ಜನತೆಯ ಕುರಿತಾದ ಸಾಂಸ್ಕೃತಿಕ ಅಧ್ಯಯನ ಎಂದು ಗ್ರಹಿಸಿದರು.
ಶಾಸನಗಳ ಸಾಂಸ್ಕೃತಿಕ ಅಧ್ಯಯನವು ಅನ್ವೇಷಣೆ ಮತ್ತು
ಪ್ರಕಟನೆಯನ್ನು ಮೀರಿದ್ದು. ಶಾಸನಗಳಲ್ಲಿ ಹುದುಗಿರುವ ಸಂಗತಿಯನ್ನು ಅದುವರೆವಿಗೂ ನಡೆದಿರುವ
ಅಧ್ಯಯನದ ಬೆಳಕಿನಲ್ಲಿ ಪೂರಕ ಆಕರಗಳೊಂದಿಗೆ ವಿಶ್ಲೇಷಿಸುವುದು, ಜ್ಞಾನದಿಗಂತವನ್ನು
ವಿಸ್ತರಿಸುವಲ್ಲಿ ಸಾಂಸ್ಕೃತಿಕ ಅಧ್ಯಯನ ಮಹತ್ತರ ಪಾತ್ರ ಪಡೆದಿದೆ. ಶಾಸನಗಳನ್ನಾಧರಿಸಿದ
ಸಾಂಸ್ಕೃತಿಕ ಸಂಶೋಧನಾ ಬರಹಗಳಲ್ಲಿ ಶಾಸನಗಳು ಹೇಳುವ ಬಿಡಿ ಘಟನೆಗಳೇ ಇತಿಹಾಸವೆನ್ನುವ ಹಳೆಯ
ವಿಧಾನಕ್ಕಿಂತ ಮೂಲ ಆಕರಗಳು ತಮ್ಮ ಆಂತರಿಕ ಪ್ರಮಾಣಗಳ ಮೂಲಕ ಬಾಹ್ಯವಾತಾವರಣವೊಂದರ ಗ್ರಹಿಕೆಗೆ
ಅವಕಾಶ ಕಲ್ಪಿಸಿಕೊಡುವ ಸಂಸ್ಕೃತಿಯ ವಿನ್ಯಾಸಗಳು ಎಂಬ ನಿಲುವು ಗ್ರಹಿತವಾಗಿದೆ. ಸಾಂಸ್ಕೃತಿಕ
ಸಂಶೋಧನಾ ಅಧ್ಯಯನದಲ್ಲಿ ಶಾಸನಗಳು ಒದಗಿಸುವ ಮಾಹಿತಿಯನ್ನು ವಿಶ್ಲೇಷಿಸುವಾಗ ಆ ವಿಷಯದಲ್ಲಿ
ಇದುವರೆಗೂ ಬೇರೆ ಬೇರೆ ಶಿಸ್ತುಗಳಲ್ಲಿ ದೊರಕುವ ಸಂಗತಿಯನ್ನು ಪರೀಕ್ಷಿಸಿ ಅವುಗಳು ತಮ್ಮ ಅಧ್ಯಯನದ
ಸಂದರ್ಭದಲ್ಲಿ ನೀಡುವ ಆಧಾರಗಳ ಮೇಲೆ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಈ ಅಧ್ಯಯನದಲ್ಲಿ
ವ್ಯಕ್ತವಾಗುವ ಸಂಗತಿಗಳನ್ನು ಖಚಿತವಾಗಿ ಮತ್ತು ಸ್ವಲ್ಪ ವಿವರಣಾತ್ಮಕವಾಗಿಯೂ ದಾಖಲಿಸುವುದು.
ಶಾಸನಗಳ ಸಾಂಸ್ಕೃತಿಕ ಅಧ್ಯಯನದ ವಸ್ತು ಕ್ಷೇತ್ರಕಾರ್ಯವನ್ನು ಕೆಲವೊಮ್ಮೆ ಅಪೇಕ್ಷಿಸಿರುವುದನ್ನು
ಕಾಣಬಹುದಾಗಿದೆ. ಶಾಸನ ಆಕರಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಮತ್ತು ತೌಲನಿಕವಾಗಿ ಅಧ್ಯಯನ
ಮಾಡುವ ಕ್ರಮ ಪ್ರಾರಂಭವಾಯಿತು. ರೈಸ್ ಮತ್ತು ಫ್ಲೀಟ್‌ರು ಈ ರೀತಿಯ ಅಧ್ಯಯನ ನಡೆಸಿದ್ದರೂ ಸಹ ಅದು
ಕೇವಲ ರಾಜಕೀಯ ಚರಿತ್ರೆಗೆ ಮಾತ್ರ ಸೀಮಿತವಾಗಿತ್ತು ಈ ಹಂತದಲ್ಲಿ ಸಾಮಾಜಿಕ ಮತ್ತು ಆರ್ಥಿಕ
ಅಧ್ಯಯನಕ್ಕೂ ಶಾಸನ ಆಕರಗಳನ್ನು ಬಳಸಿಕೊಳ್ಳಬಹುದೆಂದು ಕಂಡುಕೊಂಡರು, ಶಾಸನ
ಅಧ್ಯಯನವನ್ನು ಶಾಸ್ತ್ರದ ರೀತಿ ಆಂದರೆ ಲಿಪಿ, ಅಧ್ಯಯನ ಪಾಠಾಂತರಗಳ
ಸಂಪಾದನೆ, ಪಾಠ ನಿಷ್ಕರ್ಷೆ ಮೊದಲಾದ ಸೂತ್ರಗಳ ಮೂಲಕ ನೋಡಲಾರಂಭಿಸಿದರು.
ಈ ರೀತಿಯ ಅಧ್ಯಯನದಲ್ಲಿ ಮೊದಲಿಗೆ ಕೇಳಿಬರುವ ಹೆಸರು ಡಾ.ಚಿದಾನಂದಮೂರ್ತಿ ಮತ್ತು ಡಾ.ಕಲಬುರ್ಗಿ
ಅವರುಗಳದ್ದು. ಈ ಇಬ್ಬರೂ ಶಾಸನ ಅಧ್ಯಯನ ಕ್ಷೇತ್ರವನ್ನು ಹಿಗ್ಗಿಸಿದರು. ಕೆಲವು ಮಾದರಿ ಅಧ್ಯಯನಗಳ
ಮೂಲಕ ಶಾಸನಕ್ಷೇತ್ರದ ತರುಣರಿಗೆ ಮಾರ್ಗ ದರ್ಶಕರಾದರು.
ಶಾಸನಗಳ ಕುರಿತ ವೈವಿಧ್ಯಮಯ ಅಧ್ಯಯನ ಪ್ರಾರಂಭವಾಯಿತು.
ಸಂಸ್ಕೃತಿ ಶೋಧ ಸಹಜವಾಗಿಯೇ ಮೌಲ್ಯ ಶೋಧವಾಗಿದೆ.
ಶಾಸನಗಳ ಸಾಂಸ್ಕೃತಿಕ ಅಧ್ಯಯನವು ರಾಜಕೀಯೇತರ ವಿಷಯಗಳನ್ನು ಶೋಧಿಸುವ, ವಿಶ್ಲೇಷಿಸುವ
ಅಂಶಗಳನ್ನು ಒಳಗೊಂಡಿದೆ. ಈ ಸಂಶೋಧನೆಯು ಇಲ್ಲಿಯವರೆಗೂ ಇದ್ದ ಇತಿಹಾಸದ ಸಂಶೋಧನೆಗಿಂತ ಭಿನ್ನವಾದ
ಆಯಾಮವನ್ನು ಶಾಸನ ಕ್ಷೇತ್ರಕ್ಕೆ ದೊರೆಕಿಸಿ ಕೊಟ್ಟಿತು. ಅನೇಕ ಹೊಸ ಅಂಶಗಳು ಇದರಿಂದಾಗಿ ಬೆಳಕಿಗೆ
ಬಂದವು. ಈ ರೀತಿಯ ಅಧ್ಯಯನವು ಎಂ.ಚಿದಾನಂದಮೂರ್ತಿ ಅವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ದ
ಮೂಲಕ ಪ್ರಾರಂಭವಾಯಿತೆನ್ನಬಹುದು. ಇದರಲ್ಲಿ ಕ್ರಿ.ಶ.೪೫೦ ರಿಂದ ೧೧೫೦ರ ವರೆಗಿನ ಶಾಸನಗಳನ್ನು
ಇಟ್ಟುಕೊಂಡು ಸಾಂಸ್ಕೃತಿಕ ಅಧ್ಯಯನ ಮಾಡಿರುವುದನ್ನು ಗುರುತಿಸಬಹುದಾಗಿದೆ. ಸಂಸ್ಕೃತಿಯ ವಿವಿಧ
ಮಜಲುಗಳಾದ ಧಾರ್ಮಿಕ ವಿವರ, ದೇವಾಲಯ, ವಿದ್ಯಾಭ್ಯಾಸ,
ಯುದ್ಧಪದ್ಧತಿ, ವೀರಜೀವನ, ಆಡಳಿತ
ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಾಮಾಜಿಕ
ವ್ಯವಸ್ಥೆ ಇತ್ಯಾದಿಗಳ ಕುರಿತ ವಿಶ್ಲೇಷಣೆಯನ್ನು ಶಾಸನಗಳನ್ನಾಧರಿಸಿ ಪೂರಕ ಆಕರಗಳೊಂದಿಗೆ ಅಧ್ಯಯನ
ಮಾಡಲಾಗಿದೆ. ಇವರ ಶಾಸನಗಳನ್ನು ಕುರಿತ ವಿಭಿನ್ನ ನೋಟದ ಸಂಶೋಧನೆಯು ನಂತರ ಕಾಲದ ಸಂಶೋಧಕರಿಗೆ
ಸಂಸ್ಕೃತಿಯ ವಿವಿಧ ಅಂಗಗಳನ್ನು ಪ್ರತ್ಯೇಕವಾಗಿ ಅನುಕರಣಿಯವಾಗಿರುವುದನ್ನು ಗಮನಿಸಬಹುದು.
ಶಾಸನಗಳನ್ನು ಹೊಸನಿಟ್ಟಿನಲ್ಲಿ ನೊಡಲು ಆ ಕ್ಷೇತ್ರದ ಆಸಕ್ತರಿಗೆ ಇದು ಪ್ರೇರಣೆ ಪ್ರಚೋದನೆಯನ್ನು
ಒದಗಿಸಿತು. ಅನೇಕ ಹೊಸ ಅಂಶಗಳು ಇದರಿಂದಾಗಿ ಬೆಳಕಿಗೆ ಬಂದವು. ಇವರ ಪರಿಶ್ರಮದಿಂದ ಕನ್ನಡ ಶಾಸನಗಳ
ಸಾಂಸ್ಕೃತಿಕ ಅಧ್ಯಯನ, ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ,
ಗ್ರಂಥಗಳು ಬೆಳಕು ಕಂಡಂತೆ ನಾಡಿನ ಬೇರೆ ಬೇರೆ ವಿದ್ವಾಂಸರುಗಳಿಂದ ಕರ್ನಾಟಕದ ವೀರಗಲ್ಲುಗಳು, ಕರ್ನಾಟಕದ ವರ್ತಕರು, ಕರ್ನಾಟಕದಲ್ಲಿ ಸತಿಪದ್ಧತಿ, ಶಾಸನಗಳಲ್ಲಿ ಸ್ತ್ರೀ ಸಮಾಜ, ಮಹಾಸತಿ ಆಚರಣೆ ಒಂದು ಅಧ್ಯಯನ,
ಕಲ್ಯಾಣ ಚಾಳುಕ್ಯರ ದೇವಾಲಯಗಳ ಸಾಂಸ್ಕೃತಿಕ ಅಧ್ಯಯನ, ಕರ್ನಾಟಕದ
ನಿಸಿಧಿ ಪರಂಪರೆ, ತ್ಯಾಗ, ಬಲಿದಾನ ವೀರಮರಣ
ಸ್ಮಾರಕಗಳು, ಕನ್ನಡ ಶಾಸನ ಶಿಲ್ಪ, ಪ್ರಾಚೀನ
ಕರ್ನಾಟಕದ ವಿದ್ಯಾಭ್ಯಾಸ ಕ್ರಮ, ತುಳುನಾಡಿನ ಶಾಸನಗಳ ಅಧ್ಯಯನ,
ಹೊಸಪೇಟೆ ತಾಲೂಕು ಕೆರೆಗಳು, ಕೋಲಾರ ಜಿಲ್ಲಾ
ಸ್ಥಳನಾಮಗಳು, ಶಾಸನಶಿಲ್ಪ, ಶಾಸÀನ ಸಂಸ್ಕೃತಿ, ಶಾಸನಗಳ
ಪಾರಿಭಾಷಿಕ ಪದಗಳು, ಕರ್ನಾಟಕದ ಪಾಚೀನ ಅಳತೆ ಪದ್ಧತಿಗಳು, ಪ್ರಾಚೀನ ಕರ್ನಾಟಕದ ಶೈವಧರ್ಮ, ಶಾಸನಗಳಲ್ಲಿ ಶಿವ ಶರಣರು,
ಕರ್ನಾಟಕದ ಶಾಸನ ಸಮೀಕ್ಷೆ, ಶಾಸನಗಳಲ್ಲಿ ಗಿಡ ಮರಗಳು,
ಶಾಸನಗಳು:ಪ್ರಭುತ್ವ ಜನತೆ, ಯಾಪನೀಯ ಪಂಥ, ಬಂಕಾಪುರ ಶೋಧನೆ, ಚಂದ್ರ ಕೊಡೆ, ಅನುಶಾಸನ,
ಶಾಸನ ಸಂಜೀವಿನಿ, ನಾಗರಕಂಡ ಎಪ್ಪತ್ತು ಒಂದು ಅಧ್ಯಯನ,
ಕನ್ನಡ ಶಾಸನಗಳ ಭಾಷಿಕ ಅಧ್ಯಯನ,ಮುಳುಗುಂದ ನಾಡು,ಬೆಳವೊಲು ಮುನ್ನೂರು, ಪುಲಿಗೆರೆ ನಾಡು, ತರ್ದವಾಡಿನಾಡು, ಶ್ರವಣಬೆಳಗೊಳ ಒಂದು ಅಧ್ಯಯನ ,ಶಾಸನಗಳಲ್ಲಿ ಶಿಲ್ಪಾಚಾರಿಯರು, ನಿಡುಗಲ್ಲು ಒಂದು ಅಧ್ಯಯನ,
ಸಾವಿಗೆ ಆಹ್ವಾನ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ
ಶಾಸನಗಳ ಸಮಗ್ರ ಅಧ್ಯಯನ, ಇನ್ನೂ ಹತ್ತು ಹಲವು ಉತ್ತಮ ಅಧ್ಯಯನಗಳನ್ನು
ಹೆಸರಿಸಬಹುದು. ಈ ಹಂತದಲ್ಲಿ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಕ್ಕೆ ಶಾಸನಗಳು ಅನಿವಾರ್ಯ
ಆಕರಗಳಾಗಿ ಕಂಡುಬಂದವು.
ಶಾಸನಗಳ ಸಾಂಸ್ಕೃತಿಕ ಅಧ್ಯಯನವು ವ್ಯಾಖ್ಯಾನನಿಷ್ಠ
ಶೋಧಕ್ಕೆ ಮಾದರಿಯಾಗಿದೆ. ಘಟನಾ ನಿಷ್ಠ ಶೋಧದಲ್ಲಿ ಹೊಸ ಆಕರ ಸಾಮಗ್ರಿಗಳು ಪ್ರಮುಖ ಎಂದೆನಿಸಿದರೆ
ಈ ಶೋಧದಲ್ಲಿ ಶಾಸನಗಳು ಒದಗಿಸುವ ಮಾಹಿತಿಯನ್ನು ಬೇರೆ ಬೇರೆ ನಿಟ್ಟುಗಳಿಂದ ನೋಡಿ ಈ ವರೆಗಿನ ಶೋಧ
ಮತ್ತು ಆಶಯಕ್ಕಿಂತ ವಿಭಿನ್ನವಾದ ಫಲಿತಾಂಶಗಳನ್ನು ನೀಡುವುದಾಗಿದೆ. ಈ ಅಧ್ಯಯನ ಕ್ರಮದಲ್ಲಿ
ಶಾಸನಗಳೆಂಬ ವೈವಿಧ್ಯಪೂರ್ಣ ಸಾಮಗ್ರಿಯನ್ನು ಸಂಸ್ಕೃತಿಯ ಅನ್ವೇಷಣೆಗಾಗಿ ಸಂಯೋಜಿಸುವುದು. ತದನಂತರ
ಅಲ್ಲಿ ವ್ಯಕ್ತವಾಗಿರುವ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಗ್ರಹಿಸುವುದು. ಈ
ಸಂಶೋಧನೆಯಲ್ಲಿ ಏಕಕಾಲಕ್ಕೆ ಘಟನೆಗಳ ಶೋಧ ಹಾಗೂ ಅವುಗಳ ಹಿಂದಿರುವ ಸಾಂಸ್ಕೃತಿಕ ಶೋಧ ಎರಡು
ಸಾಧ್ಯವಾಗುತ್ತದೆ.
ಈ ಅಧ್ಯಯನದಲ್ಲಿ ದಾಖಲೆಯಾಧಾರಿತ ಸಂಶೋಧನೆ
ಹಾಗೂ ಕ್ಷೇತ್ರಕಾರ್ಯ ಸಂಶೋಧನೆ ಎರಡು ವಿಧಾನಗಳನ್ನು ಅನುಸರಿಸಲಾಗುತ್ತದೆ. ಶಾಸನಗಳ ಸಾಂಸ್ಕೃತಿಕ
ಅಧ್ಯಯನ ಪದ್ಧತಿಯಲ್ಲಿ ಸಂಸ್ಕೃತಿ ಶೋಧನೆ ಮತ್ತು ಸಮಾಜ ಮುಖ್ಯವಾಗುತ್ತದೆ. ಜೊತೆಗೆ
ಸಮಾಜೋಧಾರ್ಮಿಕ ಅಂಶಗಳು ಮುಖ್ಯವಾಗುತ್ತವೆ. ಸಾಂಸ್ಕೃತಿಕ ಅಧ್ಯಯನ ಹುಟ್ಟುಹಾಕಿದ ಹೊಸ
ಮಾರ್ಗದಿಂದಾಗಿ ಶಾಸನಗಳ ಅಧ್ಯಯನದಲ್ಲಿ ವಿಭಿನ್ನ ನೆಲೆಯ ಅಧ್ಯಯನ ಪ್ರಾರಂಭವಾದ ಹಾಗೆ ಸಾಹಿತ್ಯ
ಕೃತಿಗಳ ಸಾಹಿತ್ಯೇತರ ಅಧ್ಯಯನದ ಕಡೆಗೂ ಹೊರಳಿತು. ಯಾವುದೇ ಕೃತಿ ಸಾಹಿತ್ಯದೊಂದಿಗೆ
ಸಾಂಸ್ಕೃತಿಕವಾಗಿಯೂ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು. ಸಾಂಸ್ಕೃತಿಕ ಅಧ್ಯಯನದಲ್ಲಿ
ಗಮನಿಸಬೇಕಾದ್ದುದು ಅಂತರ್ ಶಿಸ್ತೀಯತೆ, ಒಂದಕ್ಕಿಂತ ಹೆಚ್ಚು ವಿಷಯಗಳ ವಿಷಯಶಾಖೆಗಳ ವ್ಯಾಸಂಗವನ್ನು
ಪರಸ್ಪರ ಪೂರಕವಾಗಿ ಬಳಸಿಕೊಂಡು ನಡೆಸುವ ಅಭ್ಯಾಸವೇ ಅಂತರ್ ಶಿಸ್ತೀಯ ಅಧ್ಯಯನ. ಅಂತರ್ ಶಿಸ್ತೀಯ
ಅಧ್ಯಯನ ಕನ್ನಡ ಶಾಸನಗಳ ಅಧ್ಯಯನದಲ್ಲಿಯೇ ಮೊದಲಿಗೆ ನಡೆದಿರುವುದು. ಆರಂಭದಲ್ಲಿ
ಆರ್.ನರಸಿಂಹಾಚಾರ್ಯರು ಶಾಸನಗಳ ಅಧ್ಯಯನದಲ್ಲಿ ಘಟನಾ ಶೋಧಕ್ಕೆ ಈ ಪದ್ಧತಿಯನ್ನು
ಬಳಸಿಕೊಂಡಿದ್ದರು. ನಂತರ ಚಿದಾನಂದಮೂರ್ತಿ ಅವರು ಈ ಪದ್ಧತಿಯನ್ನು ಸಮರ್ಪಕವಾಗಿ ಶಾಸನಗಳ
ಅಧ್ಯಯನದಲ್ಲಿ ಬಳಸಿಕೊಂಡರು. ಶಾಸನೇತರ ಕ್ಷೇತ್ರಗಳನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಸಂಶೋಧನೆಗೆ
ವೈವಿದ್ಯ ಲಕ್ಷಣವನ್ನು ಒದಗಿಸುವ ಕೆಲಸ ಮಾಡಿದರು. ಯಾವುದೇ ವಿಷಯ ಯಾವುದೇ ಅಧ್ಯಯನಕ್ಕೆ
ಅಪ್ರಯೋಜಕವಲ್ಲವೆಂಬಂಥ ದೃಷ್ಟಿ ಸಂಶೋಧನಾ ಕ್ಷೇತ್ರದಲ್ಲಿ ಮೂಡಿತು. ಶಾಸನಗಳಲ್ಲಿಯೇ
ಉಪೇಕ್ಷಿತವಾಗಿದ್ದ ಅನೇಕ ವಿಷಯಗಳಿಗೆ ಪ್ರಾಮುಖ್ಯತೆ ಬಂದಿತು. ಕನ್ನಡ ಶಾಸನಗಳ ಸಾಂಸ್ಕೃತಿಕ
ಅಧ್ಯಯನವು ಶಾಸನವನ್ನು ಸಾಹಿತ್ಯದಿಂದ, ಸಾಹಿತ್ಯವನ್ನು ಶಾಸನದಿಂದ
ಸಮರ್ಥಿಸಿಕೊಳ್ಳುತ್ತ ನಡೆದಿದೆ.
ಚಿದಾನಂದಮೂರ್ತಿ ಅವರ ಪಂಪ ಕವಿ ಮತ್ತು ಮೌಲ್ಯ
ಪ್ರಸಾರ ಲೇಖನದಲ್ಲಿ ಶಾಸನಗಳನ್ನು ಆಧರಿಸಿ ಪಂಪಭಾರತ ಹಾಗೂ ಪಂಪನ ಕಾಲದ ಮೌಲ್ಯಗಳನ್ನು ವಿವೇಚಿಸಿದ್ದಾರೆ. ಪಂಪಕವಿಯು
ಹೇಳುವ ನನ್ನಿ, ಬೀರ, ಚಾಗ, ಶೌಚ ಮುಂತಾದ ಮೌಲ್ಯಗಳು
ಆತನ ಕಾಲದ ಜನಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿದ್ದವು ಎಂಬುದನ್ನು ಆತನ ಕಾಲ ಹಾಗೂ ನಂತರ ಕಾಲದ
ಶಾಸನಗಳನ್ನಾಧರಿಸಿ ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಪ್ರಾಚೀನಕಾಲದ ಸಾಂಸ್ಕೃತಿಕ ವಿಚಾರಗಳ
ವಿಶ್ಲೇಷಣೆ ಇದೆ. ಈ ವಿಧಾನ ಒಂದು ರೀತಿಯಲ್ಲಿ ಸಾಹಿತ್ಯದ ಶಿಸ್ತಿಗೆ ಇತಿಹಾಸದ ಶಿಸ್ತನ್ನು
ಅಳವಡಿಸಿ ಪರಿಶೀಲಿಸುವ ಪ್ರಯತ್ನವಾಗಿದೆ. ಇಲ್ಲಿ ಅಪಾರವಾದ ಮಾಹಿತಿಯನ್ನು ಕಾವ್ಯ ಮತ್ತು
ಶಾಸನಗಳಿಂದ ಸಂಗ್ರಹಿಸಲಾಗಿದೆ. ದಾಖಲೆಗಳನ್ನು ಕಾಲಾನುಕ್ರಮದಲ್ಲಿ ಸಂಕಲಿಸಿ, ವಿಷಯಾನುಗುಣವಾಗಿ ಸಂಯೋಜಿಸಿ ಪ್ರತಿಭಾ ಬಲದಿಂದ ವಿಶ್ಲೇಷಿಸಿ ಸಂಶೋಧನಾ ಫಲಿತಗಳನ್ನು ಈ
ವಿಧಾನದ ಮೂಲಕ ಪ್ರಕಟಿಸಿರುವುದನ್ನು ಕಾಣಬಹುದು. ಈ ವಿಧಾನದಲ್ಲಿ ಕ್ಷೇತ್ರಕಾರ್ಯವೂ ಕೆಲವೊಮ್ಮೆ
ಮುಖ್ಯ ಎನಿಸುತ್ತದೆ. ಕ್ಷೇತ್ರಕಾರ್ಯದಿಂದ ವ್ಯಕ್ತಗೊಳ್ಳುವ ಮಾಹಿತಿಗಳು ಶಾಸನಗಳಲ್ಲಿಯ
ವಿಷಯವನ್ನು ಸ್ಥಿರೀಕರಿಸುತ್ತದೆ. ಜಿನವಲ್ಲಭನ ಕುರಿಕ್ಯಾಲ ಶಾಸನದಲ್ಲಿ ಪ್ರಸ್ತಾಪಿತವಾದ ಪಂಪ
ಕವಿಗೆ ಸಂಬಂಧಿಸಿದ ವಿಷಯದಲ್ಲಿ, ಅಂದರೆ ಅರಿಕೇಸರಿಯು ಪಂಪ ಕವಿಗೆ
ನೀಡಿದ ಧರ್ಮಪುರದ ಅಗ್ರಹಾರದ ಕುರುಹುಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಶೋಧಕರು
ಗುರುತಿಸಿದ್ದನ್ನು ಇಲ್ಲಿ ಉದಾಹರಿಸಬಹುದು.
ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ವರ್ತಕರ
ಚಟುವಟಿಕೆಗಳನ್ನು ಕುರಿತಾದ ಅಧ್ಯಯನ ಬಿ.ಆರ್.ಹಿರೇಮಠರ ‘ಶಾಸನಗಳಲ್ಲಿ ಕರ್ನಾಟಕದ ವರ್ತಕರು’ ಎಂಬ
ನಿಬಂಧದಲ್ಲಿ ಗುರುತಿಸಬಹುದು. ಇದರಲ್ಲಿ ವರ್ತಕರು ವರ್ತಕ ಸಂಘಗಳು, ಅವರ ವ್ಯಾಪಾರದ
ಸ್ವರೂಪ, ಸಾಮಾಜಿಕ ಧಾರ್ಮಿಕ ಜೀವನ ಮುಂತಾದ ವಿಷಯಗಳ ಬಗೆಗೆ ವಿವರಣೆ
ಇದೆ. ವರ್ತಕರು ತಮ್ಮ ವಾಣಿಜ್ಯಕ್ಕೆ ಸೀಮಿತವಾಗಿರದೆ ಸಮಾಜದ ಘಟಕವಾಗಿದ್ದು ಆ ಕಾಲದ ಸಾಮಾಜಿಕ
ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರ ವಿಶ್ಲೇಷಣೆ ಶಾಸನಗಳನ್ನಾಧರಿಸಿ ನಡೆದಿದೆ.
ಶಾಸನಗಳಲ್ಲಿ ಹುದುಗಿರುವ ಮಾಹಿತಿಗಳ ಹಿನ್ನಲೆಯಲ್ಲಿ ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ಮಹಿಳಾ
ಜೀವನಕ್ಕೆ ಸಂಬಂಧಪಟ್ಟ ಅಧ್ಯಯನ ಕೂಡ ನಡೆದಿದೆ. ಸ್ತ್ರೀಯರ ವಿದ್ಯಾಭ್ಯಾಸ, ಕಲೆ, ಧಾರ್ಮಿಕ ಕಲಾಪ, ಆಡಳಿತ,
ಯುದ್ಧಗಳಲ್ಲಿ ಭಾಗವಹಿಸಿದ್ದರ ಚಿತ್ರಣ, ಲೋಕೋಪಯೋಗಿ
ಕಾರ್ಯಗಳ ವಿವರಗಳನ್ನು ಕುರಿತ ಅಧ್ಯಯನ ಶಾಸನಗಳನ್ನಾಧರಿಸಿ ನಡೆದಿದೆ. ನಿದರ್ಶನಕ್ಕೆ ಚೆನ್ನಕ್ಕ
ಎಲಿಗಾರ ಅವರ ‘ಶಾಸನಗಳಲ್ಲಿ ಸ್ತ್ರೀ ಸಮಾಜ’.ಸಾಮುದಾಯಿಕ ಬದುಕಿನಲ್ಲಿ ಎಷ್ಟರ ಮಟ್ಟಿಗೆ ದೇವಾಲಯಗಳ
ಅವಶ್ಯಕತೆ ಇದ್ದಿತು, ಅವುಗಳ ನಡುವೆ ಪರಸ್ಪರ ಕೋಳು-ಕೊಡಿಗೆಗಳೆಂತಹವು,
ಸಮುದಾಯವನ್ನು ದೇವಾಲಯಗಳು ಎಷ್ಟರ ಮಟ್ಟಿಗೆ ನಿಯಂತ್ರಿಸಿದ್ದವು. ಸಾಮಾಜಿಕ,
ಆರ್ಥಿಕ, ಧಾರ್ಮಿಕ ಬದುಕಿನಲ್ಲಿ ದೇವಾಲಯಗಳ
ಪಾತ್ರವೆಂತಹುದ್ದು ಎಂಬಂತಹ ಅಧ್ಯಯನಗಳು ಶಾಸನಗಳನ್ನಾಧರಿಸಿ ನಡೆದಿವೆ. ಉದಾಹರಣೆಗೆ
ಎಚ್.ಎಸ್.ಗೋಪಾಲರಾವ್ ಅವರ ಶಾಸನಗಳ ಹಿನ್ನಲೆಯಲ್ಲಿ ಕಲ್ಯಾಣ ಚಾಲುಕ್ಯರ ದೇವಾಲಯಗಳ ಸಾಂಸ್ಕೃತಿಕ
ಅಧ್ಯಯನ, ದೇವರ ಕೊಂಡಾರೆಡ್ಡಿ ಅವರ ತಲಕಾಡಿನ ಗಂಗರ ದೇವಾಲಯಗಳ
ಸಾಂಸ್ಕೃತಿಕ ಅಧ್ಯಯನ ಮೊದಲಾದುವನ್ನು ಗಮನಿಸಬಹುದು.
ಯುದ್ಧದ ಚರಿತ್ರೆ, ಪ್ರಾಚೀನ
ಕರ್ನಾಟಕದ ವೀರರ ವೇಷಭೂಷಣಗಳು, ಒಡವೆಗಳು, ಆಯುಧಗಳ
ಪ್ರಕಾರಗಳು, ಕನ್ನಡ ನಾಡಿನ ಕ್ಷಾತ್ರದ ಹಿನ್ನಲೆಯನ್ನು ಕುರಿತಾದ
ಅಧ್ಯಯನ ಇತ್ಯಾದಿಗಳು ಶಾಸನಗಳ ಪಠ್ಯ ಹಾಗೂ ಶಿಲ್ಪಗಳನ್ನಾಧರಿಸಿ ನಡೆದಿರುವುದನ್ನು ಕರ್ನಾಟಕದ
ವೀರಗಲ್ಲುಗಳು, ಕನ್ನಡ ಶಾಸನ ಶಿಲ್ಪ ಇತ್ಯಾದಿ ನಿಬಂಧಗಳಲ್ಲಿ
ಗುರುತಿಸಬಹುದು. ಮಹಾಸತಿಗೆ ಸಂಬಂಧಿಸಿದ ವಿವರಗಳನ್ನು ಶಾಸನಗಳು ಹಾಗೂ ಪೂರಕ ಆಕರಗಳೊಂದಿಗೆ
ವಿಶ್ಲೇಷಣಾತ್ಮಕವಾಗಿ ನಡೆಸಿರುವುದನ್ನು ಬಸವರಾಜು ಕಲ್ಗುಡಿ ಅವರ ಮಹಾಸತಿ ಆಚರಣೆ ಒಂದು ಅಧ್ಯಯನ
ಪುಸ್ತಕದಲ್ಲಿ ಗುರುತಿಸಬಹುದು. ಹಾಗೆಯೇ ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರಗಳಾದ ಶ್ರವಣಬೊಳ್ಗೊಳ,
ಬಳ್ಳಿಗಾವೆ, ಬನವಾಸಿ, ಪುಲಿಗೆರೆ,
ಕುಕನೂರು, ಹಂಪೆ, ಹೊಂಬುಜ
ಮುಂತಾದವುಗಳನ್ನು ಕುರಿತು ಶಾಸನಗಳನ್ನಾಧರಿಸಿ ಪೂರಕ ಆಕರಗಳೊಂದಿಗೆ ವ್ಯಾಪಕವಾದ ಅಧ್ಯಯನ
ನಡೆದಿದೆ. ಸಿ.ನಾಗಭೂಷಣ ಅವರು ಶಾಸನಗಳನ್ನು ಪೂರಕ ಆಕರಗಳೊಂದಿಗೆ ಅಧ್ಯಯನ ಮಾಡುವುದರ ಮೂಲಕ
ಸಾಹಿತ್ಯ-ಸಂಸ್ಕೃತಿಯ ವಿವಿಧ ಮಗ್ಗಲುಗಳನ್ನು ಶೋಧಿಸಲು ‘ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ’,ಸಾಹಿತ್ಯ-ಸಂಸ್ಕೃತಿ ಹುಡುಕಾಟ, ಶಾಸನಗಳು ಮತ್ತು ಕನ್ನಡ
ಸಾಹಿತ್ಯ ಪುಸ್ತಕಗಳಲ್ಲಿ ಪ್ರಯತ್ನಿಸಿದ್ದಾರೆ. ಪ್ರಾಚೀನ ಕರ್ನಾಟಕದ ಭೌಗೋಲಿಕ ವಿಭಾಗಗಳನ್ನು
ಕುರಿತಾದ ಸಾಂಸ್ಕೃತಿಕ ಅಧ್ಯಯನ ನಡೆದಿದೆ. ತರ್ದವಾಡಿ ಒಂದು ಅಧ್ಯಯನ, ನಾಗರಖಂಡ
ಎಪ್ಪತ್ತು, ಬೆಳ್ವೊಲ ೩೦೦, ಕೋಗಳಿನಾಡು ೩೦
ಇತ್ಯಾದಿ ಭೌಗೋಲಿಕ ಪ್ರದೇಶಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನವು ಶಾಸನಗಳನ್ನಾಧರಿಸಿ
ನಡೆದಿದೆ.
ಶಾಸನಗಳು ಜನಜೀವನದಿಂದ ಮೂಡಿ ಬಂದಿವೆಯಾದ್ದರಿಂದ
ಅನೇಕ ಸಾಮಾಜಿಕ ಅಂಶಗಳು ಶಾಸನಗಳಲ್ಲಿ ದೊರೆಯುತ್ತವೆ. ಸಾಂಸ್ಕೃತಿಕ ಅಧ್ಯಯನದಿಂದಾಗಿಯೇ ಶಾಸನಗಳು
ಇಂದು ಗಣ್ಯಶಿಸ್ತಿನ ವಿಷಯವಾಗಿವೆ. ಸಾಂಸ್ಕೃತಿಕ ಅಧ್ಯಯನ ಇಂದು ಸ್ನಾತಕೋತ್ತರ ಪದವಿಗಳ
ತರಗತಿಗಳಲ್ಲಿ ಪಠ್ಯಕ್ರಮದಲ್ಲಿ ಸೇರಿದೆ. ಇದು ಆ ಕ್ಷೇತ್ರದ ಬೆಳವಣಿಗೆಯನ್ನು ಸೂಚಿಸುತ್ತದೆ. ಈ
ಅಧ್ಯಯನದಲ್ಲಿ ತಾರ್ಕಿಕತೆ,
ಪ್ರಾಮಾಣಿಕತೆ, ಅಧ್ಯಯನದ ಶಿಸ್ತು, ಅರ್ಥೈಸುವಲ್ಲಿನ ವಾಸ್ತವಿಕ ಹಾಗೂ ವೈಜ್ಞಾನಿಕ ಮನೋಭಾವ, ಕಾಲಾನುಕ್ರಮದಲ್ಲಿ
ಬದಲಾದ ಮೌಲ್ಯಗಳನ್ನು ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವ ಬಗೆ ಇವು ಪ್ರಾಮುಖ್ಯತೆಯನ್ನು
ಪಡೆದುಕೊಂಡಿವೆ.
೪. ಶಾಸನಗಳ ಸಾಂಸ್ಕೃತಿಕ ಸಂಶೋಧನೆಯ
ತಾತ್ವಿಕ ಗ್ರಹಿಕೆಯ ವೈಶಿಷ್ಟ್ಯಗಳು:
ಶಾಸನಗಳಂತ ಮೂಲ ಆಕರಗಳನ್ನು ಆಧರಿಸಿ ನಡೆಸಿರುವ
ಸಾಂಸ್ಕೃತಿಯ ಅಧ್ಯಯನ ಚೌಕಟ್ಟಿನಲ್ಲಿ ರಚಿತವಾಗಿರುವ ಸಂಶೋಧಕರ ಕೃತಿಗಳು ಹಾಗೂ ಲೇಖನಗಳಲ್ಲಿ
ಕೆಲವೊಂದು ವಿಧಾನಗಳನ್ನು ಅನುಸರಿಸಿರುವುದು ಕಂಡು ಬರುತ್ತದೆ. ಶಾಸನಗಳು ತಮ್ಮ ಆಂತರಿಕ
ಪ್ರಮಾಣಗಳಿಂದ ಹೊರಡುವ ಮಾಹಿತಿಗಳ ಹಿನ್ನಲೆಯಲ್ಲಿ ಬಾಹ್ಯವಾತಾವರಣವೊಂದರ ಗ್ರಹಿಕೆಗೆ ಯಾವರೀತಿ
ಅವಕಾಶ ಕಲ್ಪಿಸಿಕೊಡುತ್ತವೆಂಬ ನಿಲುವನ್ನು ಗುರುತಿಸಬಹುದಾಗಿದೆ.
ಬಿ.ಆರ್.ಗೋಪಾಲರ ಕರ್ನಾಟಕದಲ್ಲಿ
ಶ್ರೀರಾಮಾನುಜಾಚಾರ್ಯರು ಕೃತಿಯು ಸಂಪೂರ್ಣವಾಗಿ ಶಾಸನಗಳನ್ನಾಧರಿಸಿ ರಚಿತವಾಗಿದೆ. ಈ ಕೃತಿಯಲ್ಲಿ
ಶ್ರೀರಾಮಾನುಜರು ಶೈವದೊರೆಗಳಾದ ಚೋಳರಸರ ಉಪಟಳವನ್ನು ತಡೆಯಲಾರದೆ ತಮಿಳುನಾಡಿನಿಂದ ಕರ್ನಾಟಕಕ್ಕೆ
ಬಂದರು ಎಂಬ ಸಾಂಪ್ರದಾಯಿಕ ನಂಬುಗೆಗಳಿಗಿಂತ ಭಿನ್ನವಾಗಿ ಇವರು ಕ್ರಿ.ಶ.೧೧೩೮ ರಿಂದ ೧೧೫೦ರ ವರೆಗೆ
ಕರ್ನಾಟಕದಲ್ಲಿದ್ದರೆಂದು ತೋರಿಸಿದ್ದಾರೆ. ಶಾಸನಗಳು ಒದಗಿಸುವ ಮಾಹಿತಿಯ ಹಿನ್ನೆಲೆಯಲ್ಲಿ ಮೂಲತ:
ಜೈನನಾದ ಬಿಟ್ಟಿದೇವನನ್ನು ವಿಷ್ಣುವರ್ಧನನಾಗಿ ಶ್ರೀವೈಷ್ಣವ ಧರ್ಮಕ್ಕೆ ಮತಾಂತರಗೊಳಿಸಿದರು ಎಂಬುದು ಸಾಧಾರವಲ್ಲ. ಆದರೆ
ಹೊಯ್ಸಳದೊರೆ ವಿಷ್ಣುವರ್ಧನನ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಬಹಳವಾಗಿದೆ ಎಂಬ ನಿಲುವನ್ನು
ವ್ಯಕ್ತಪಡಿಸಿದ್ದಾರೆ. ಬೇಲೂರಿನ ಚೆನ್ನಕೇಶವ ದೇವಾಲಯದ ಸ್ಥಾಪನೆಯಲ್ಲಿ ಅವರ
ಪಾತ್ರವಿಲ್ಲದಿರುವುದನ್ನು,
ಮೇಲುಕೋಟೆಗೆ ದೆಹಲಿಯಿಂದ ಶಿಲ್ಪ ಪಿಳ್ಳೆೈ ವಿಗ್ರಹವನ್ನು ತಂದುದು ಇವೆಲ್ಲವು
ಸರಿಯಲ್ಲವೆಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ಕೃತಿಯಲ್ಲಿ ಸಾಂಪ್ರದಾಯಿಕ ನಂಬುಗೆಗಳಲ್ಲಿಯ
ದೋಷಗಳನ್ನು ಶಾಸನಗಳಂತಹ ಮೂಲ ದಾಖಲೆಗಳೊಂದಿಗೆ
ಹೋಲಿಸಿ ನೋಡಿ ಆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಶೀಲಿಸಿ
ವಸ್ತುಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ಸಂಪ್ರದಾಯ ನಿಷ್ಠರಿಂದ ಬಹಿಷ್ಕಾರದ
ಅವಕೃಪೆಗೆ ಅವರು ಒಳಗಾಗಬೇಕಾದ ಸ್ಥಿತಿಯು ಒದಗಿತ್ತು.
ಎಸ್.ಶೆಟ್ಟರ್ ಅವರ ಸಮಗ್ರ ಕನ್ನಡ ಸಾಹಿತ್ಯ
ಚರಿತ್ರೆ ಸಂ.೩ರಲ್ಲಿಯ ಕ್ರಿ.ಶ.೧೧೫೦ ರಿಂದ ೧೩೫೦ರ ವರೆಗಿನ ಭಾರತೀಯ ಹಿನ್ನಲೆಯಲ್ಲಿ ಕರ್ನಾಟಕ
ಧಾರ್ಮಿಕ ಸಾಮಾಜಿಕ ಜೀವನ ಎಂಬ ಲೇಖನದಲ್ಲಿ ಮೂಲಗಳ ಆಂತರಿಕ ಪ್ರಮಾಣಗಳಿಂದ ಹೊರಡುವ ಸಂಗತಿಗಳನ್ನು
ವಿಶ್ಲೇಷಿಸುವುದರ ಮೂಲಕ ಸಾಂಸ್ಕೃತಿಕ ಚರಿತ್ರೆಯ ಅಂಶಗಳನ್ನು ಗುರುತಿಸಿರುವುದನ್ನು ಗಮನಿಸಬಹುದು.
ಎಸ್.ಶೆಟ್ಟರ್ ಅವರು ಜೈನಧರ್ಮದ ಅವನತಿಯನ್ನು ಶಾಸನಗಳ ಮೂಲಕ ತಿಳಿದುಕೊಂಡಿದ್ದು ಹೀಗೆ.
ಕ್ರಿ.ಶ.೧೨೨೦-೧೩೩೬ರ ವರೆಗೆ ಸಿಗುವ ಎಲ್ಲಾ ಹೊಯ್ಸಳ ಶಾಸನಗಳನ್ನು ಅಭ್ಯಾಸ ಮಾಡಿದಾಗ ನಮಗೆ ದೊರೆತ
ಚಿತ್ರ ಹೀಗಿದೆ. ಇಮ್ಮಡಿ ನಾರಸಿಂಹನು ಸ್ವತಃ ಯಾವ ಬಸದಿಯನ್ನು ಕಟ್ಟಿಸಲಿಲ್ಲ. ದೋರ ಸಮುದ್ರದ
ವಿಜಯ ಪಾರ್ಶ್ವ ಬಸದಿಗೆ ಈ ಅರಸನು ದತ್ತಿ ಕೊಟ್ಟನೇನೋ ನಿಜ. ಆದರೆ ಈ ಬಸದಿಯು ೧೨೫೪ರಲ್ಲಿ ಪುನಃ
ದುಸ್ಥಿತಿಗಳೊಳಗಾಗಿ ಅಂದಿನ ಅರಸನಾದ ಸೋಮೇಶ್ವರನಿಂದ ಜೀರ್ಣೋದ್ಧಾರಗೊಂಡಿತು. ಅಂದರೆ ಎಲ್ಲಿಯೂ
ಹೊಯ್ಸಳ ರಾಜರು ಹೊಸ ದೇವಾಲಯಗಳನ್ನು ಕಟ್ಟಿಸಿದ್ದು ಕಾಣಿಸುವುದಿಲ್ಲ. ಹಳೆಯ ಬಸದಿಗಳಿಗೆ ದತ್ತಿ
ಅಥವಾ ಜೀರ್ಣೋದ್ಧಾರಗಳ ಮಾಡಿಸಿದ ಉಲ್ಲೇಖಗಳು ಕಂಡು ಬರುತ್ತವೆ. ವೈಷ್ಣವ ದೇವಾಲಯಗಳ ಹೊಸ ನಿರ್ಮಾಣ
ಈ ಕಾಲದಲ್ಲಿ ಹೆಚ್ಚು ಆಗಿದೆ. ಈ ವಿವರದಲ್ಲಿ ಘಟನೆಗಳೇ ಇತಿಹಾಸವೆಂದು ತಿಳಿದರೆ ದತ್ತಿ ಮತ್ತು
ಜೀರ್ಣೋದ್ಧಾರಗಳ ರಾಜನು ಮಾಡಿದ ಸಾಮಾಜಿಕ ಕಾರ್ಯಗಳಾಗಿ ಪರಿವರ್ತನೆ ಹೊಂದುತ್ತವೆ. ಆದರೆ ಮೂಲತಃ ಈ
ಸಂಗತಿಗಳು ಅಂದರೆ ಜಿನಾಲಯಗಳಿಗೆ ಸಂಬಂಧಿಸಿದ ಆ ವಿವರಗಳು ಅಂದು ಹಾಳು ಬೀಳುತ್ತಿದ್ದ ಜಿನಾಲಯಗಳ
ಚಿತ್ರಣ ತಿಳಿಸುತ್ತವೆ ಎಂದು ನಿರೂಪಿಸುತ್ತ ಕ್ರಿ.ಶ.೧೧೫೦ಕ್ಕಿಂತ ಹಿಂದೆ ಜೈನರಿಗಿದ್ದ
ಪ್ರತಿಷ್ಠಿತಸ್ಥಾನ ಈ ಅವಧಿಯಲ್ಲಿ ಕಳೆದು ಕೊಂಡಿದ್ದರೂ ರಾಜ್ಯದ ಹಲವು ಹಿರಿಯ ಅಧಿಕಾರಿಗಳ ವಣಿಕರ
ಹಾಗೂ ಸಣ್ಣ ಪುಟ್ಟ ಅಧಿಕಾರಿಗಳ ಪ್ರೋತ್ಸಾಹದಿಂದ ಮುಂದುವರಿಯಲು ಪ್ರಯತ್ನಿಸುತ್ತಿತ್ತು ಎಂಬ ಅಂಶವನ್ನು
ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಮಧ್ಯಕಾಲೀನ ಧಾರ್ಮಿಕ ಪರಿಸರದಲ್ಲಿ ಜೈನಧರ್ಮದ ಸ್ಥಿತಿಗತಿಯ
ಚಿತ್ರಣ ಯಾವ ರೀತಿ ಶಾಸನಗಳ ಆಧಾರಗಳ ಮೂಲಕ ಗ್ರಹಿತವಾಗಿದೆ ಎಂಬುದನ್ನು ನೋಡಬಹುದಾಗಿದೆ.
ಜೈನಧರ್ಮದ ಶಾಖೆಯಾದ ಯಾಪನೀಯ ಪಂಥದ ಬಗೆಗೆ ಅಧಿಕೃತವಾಗಿ ಮಾಹಿತಿಗಳೇ ಇಲ್ಲವೆನ್ನುವ
ಪರಿಸ್ಥಿತಿಯಲ್ಲಿ ಹಂಪನಾ ಅವರು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ದೊರಕುವ ಈ
ಪಂಥಕ್ಕೆ ಸಂಬಂಧಿಸಿದ ಶಾಸನಗಳ ಹಿನ್ನಲೆಯಲ್ಲಿ ಕನ್ನಡ ನಾಡಿನಲ್ಲಿ ಆ ಪಂಥದ ಅಸ್ತಿತ್ವ ಹಾಗೂ
ಯಾಪನೀಯ ಪಂಥದ ಒಟ್ಟು ಚಿತ್ರಣವನ್ನು ಗುರುತಿಸಿದ್ದು ಬಹು ಮುಖ್ಯವಾದ ಸಂಗತಿ. ಶಾಸನಗಳಲ್ಲಿ
ವ್ಯಕ್ತಗೊಂಡಿರುವ ಸಂಗತಿಗಳನ್ನು ಜನಸಮುದಾಯಗಳ ಸಾಂಸ್ಕೃತಿಕ ಲಕ್ಷಣಗಳ ಹಿನ್ನಲೆಯಲ್ಲಿ ಅಧ್ಯಯನ
ಮಾಡಬೇಕಾಗಿದೆ. ಈ ವಿಧಾನದಲ್ಲಿ ಮೂಲ ಆಕರಗಳೊಂದಿಗೆ ಅಲಕ್ಷಿಸಲ್ಪಟ್ಟ ಹಾಗೂ ಅನುಷಂಗಿಕ ಆಕರಗಳು
ಹಲವೆಡೆ ಬಳಸಲ್ಪಡುತ್ತವೆ. ಮಾಹಿತಿ ಸಂಗ್ರಹಣೆ, ವರ್ಗೀಕರಣ ವಿಶ್ಲೇಷಣೆ, ನಿರೂಪಣೆ ಮೊದಲಾದ ಸಂಶೋಧನಾ ಸಂಗತಿಗಳ ಅಳವಡಿಕೆ ಪ್ರಮುಖವಾಗಿರುತ್ತದೆ. ವಿವಿಧ
ಚಾರಿತ್ರಿಕ ಕಾಲಘಟ್ಟಗಳಂತೆ ಸಾಂಸ್ಕೃತಿಕ ವಿವರಗಳು ಅನೇಕ ಕಾಲ-ಮಿತಿಯ
ವ್ಯಾಪ್ತಿಗೊಳಪಟ್ಟಿರುತ್ತವೆ. ಶಾಸನಗಳು ನೀಡುವ ಮಾಹಿತಿಯು ಸಾಂಸ್ಕೃತಿಕ ಚರಿತ್ರೆಯನ್ನು
ಮರುಜೋಡಣೆ ಮಾಡುವ ಕಾರ್ಯವಾಗಿದೆ. ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ತೊಡಗುವವರಿಗೆ ಆಯಾ ಭಾಷೆಯ
ಸಾಹಿತ್ಯದ ಪರಿಚಯವಿರಬೇಕು. ಸಾಂಸ್ಕೃತಿಕ ಇತಿಹಾಸದ ಸಂಶೋಧಕರಿಗೆ ಸಮಕಾಲೀನ ಸಾಹಿತ್ಯ ಕೃತಿಗಳು
ನೀಡುವ ಮಾಹಿತಿಗಳು ಉಪಯುಕ್ತವಾಗಿರುತ್ತವೆ.
ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಸಂಖ್ಯಾನಿಷ್ಠ
ಸಂಶೋಧನಾ ವಿಧಾನವು ಬಹಳ ಪ್ರಮುಖ ಪಾತ್ರವಹಿಸಿದೆ. ಸಂಖ್ಯಾನಿಷ್ಠ ಶೋಧನೆ ಎನ್ನುವುದು
ಎಂ.ಎಂ.ಕಲಬುರ್ಗಿ ಅವರ ಮಾತಿನಲ್ಲಿ ಹೇಳುವುದಾದರೆ ಅಧ್ಯಯನಕ್ಕೆ ಆಯ್ದುಕೊಂಡ ಘಟಕವೊಂದರ ಪ್ರಸಾರದ
ವಿರಳತೆ ಸಾಂದ್ರತೆ ಐತಿಹಾಸಿಕ ಬೆಳವಣಿಗೆಯ ವಿರಳತೆ ಸಾಂದ್ರತೆಗಳನ್ನು ನಿರ್ದಿಷ್ಟವಾಗಿ ತಿಳಿದು
ಕೊಳ್ಳುವುದು ಸ್ವರೂಪದ ಸ್ಥಿರತೆ-ಬದಲಾವಣೆಗಳನ್ನು ಗುರುತಿಸುವುದು ಮತ್ತು ಅವುಗಳ ಹಿಂದಿರುವ
ಕಾರಣಗಳನ್ನು ಕಂಡು ಹಿಡಿಯುವುದಾಗಿದೆ. ಶಾಸನಗಳ ಕುರಿತು ಅಧ್ಯಯನದಲ್ಲಿ ಈ ವಿಧಾನ ಕೆಲವೊಮ್ಮೆ
ವೈಜ್ಞಾನಿಕ ರೀತಿಯ ಫಲಿತಾಂಶವನ್ನು ನೀಡುತ್ತದೆ.
ಉದಾ:ಚನ್ನಕ್ಕ
ಪಾವಟೆ ಅವರ ಶಾಸನಗಳಲ್ಲಿ ಕರ್ನಾಟಕ ಸ್ತ್ರೀ ಸಮಾಜ ಕೃತಿಯಲ್ಲಿ ಸೌರಪಂಥ ಸಂಪ್ರದಾಯದ ನೆಲೆಯನ್ನು
ಸಂಖ್ಯಾ ನಿಷ್ಠ ಸಂಶೋಧನೆಯ ಮೂಲಕ ಕಂಡು ಕೊಂಡಿರುವುದನ್ನು ಗುರುತಿಸಬಹುದಾಗಿದೆ. ಪ್ರಾಚೀನ
ತಾಂತ್ರಿಕ ಪಂಥಗಳಲ್ಲಿ ಸೌರವು ಒಂದು. ಸೂರ್ಯ ವಿಗ್ರಹಗಳೂ ಸೂರ್ಯಗ್ರಹಣ ಸಂದರ್ಭದಲ್ಲಿ
ಚಿತಾಪ್ರವೇಶ ಮಾಡಿದ ಉಲ್ಲೇಖವುಳ್ಳ ಶಾಸನಗಳು ಅಲ್ಲಲ್ಲಿ ಸಿಗುವುದರಿಂದ ಈ ಪಂಥ ಕರ್ನಾಟಕದಲ್ಲಿ
ಅಸ್ತಿತ್ವದಲ್ಲಿದ್ದಿತೆಂಬುದು ತಿಳಿದು ಬರುತ್ತದೆ. ಅಂದರೆ ಯಾವು ಯಾವ ಪ್ರದೇಶದಲ್ಲಿ? ಯಾವ ಯಾವ
ಶತಮಾನಗಳಲ್ಲಿ ?ಎಷ್ಟು ಸಂಖ್ಯೆಯಲ್ಲಿ ಸೂರ್ಯ ವಿಗ್ರಹಗಳಿವೆ? ಎಷ್ಟು ಚಿತಾಪ್ರವೇಶ ಘಟನೆಗಳು ಜರುಗಿವೆ? ಎಂಬ ಕೋಷ್ಟಕ
ಸಿದ್ಧಪಡಿಸಿ ಅದರಿಂದ ಈ ಉಪಾಸನೆಯ ಭೌಗೋಲಿಕ ಪ್ರಸಾರ, ಐತಿಹಾಸಿಕ
ಬೆಳವಣಿಗೆಯನ್ನು ಗುರುತಿಸುವುದು, ರೂಪ-ವ್ಯತ್ಯಾಸವನ್ನು ಕಂಡು
ಹಿಡಿಯುವುದು, ಅದರ ಹಿಂದಿರುವ ಕಾರಣಗಳನ್ನು ಶೋಧಿಸುವುದು ಇತ್ಯಾದಿ
ವಿವರಗಳನ್ನು ಸಂಖ್ಯಾ ನಿಷ್ಠಸಂಶೋಧನ ವಿಧಾನದ ಮೂಲಕ ಕಂಡು ಕೊಳ್ಳಲು ಪ್ರಯತ್ನಿಸಿದ್ದಾರೆ.
ಸೂರ್ಯಗ್ರಹಣ ಸಮಯದ ಚಿತಾಪ್ರವೇಶವನ್ನು
ಹಿನ್ನಲೆಯಾಗಿಟ್ಟು ಕೊಂಡು ಸಂಶೋಧನೆ ಕೈಗೊಂಡ ಸಂಶೋಧಕರು ಆ ವಿಷಯಕ್ಕೆ ಸಂಬಂಧಿಸಿದ ಒಟ್ಟು
೧೦ಶಾಸನಗಳಲ್ಲಿ ೫ಶಾಸನಗಳು ಹಾನಗಲ್ಲು ತಾಲ್ಲೋಕಿನ ನೆರೆ ಹೊರೆಯಲ್ಲಿಯೇ ಸಿಗುವುದರಿಂದ ಈ
ಪ್ರದೇಶದಲ್ಲಿಯೇ ಸೌರಪಂಥದ ಸಂಪ್ರದಾಯ ಸಾಂದ್ರವಾಗಿದ್ದಿತೆಂಬ ಅಂಶ ವ್ಯಕ್ತವಾಗುತ್ತದೆ.
ಅದರಲ್ಲಿಯೂ ೧೨ನೇ ಶತಮಾನದಲ್ಲಿಯೇ ಈ ದಾಖಲೆಗಳು ಕಾಣಿಸಿಕೊಳ್ಳವುದರಿಂದ ಈ ಕಾಲದಲ್ಲಿ ಈ ಆಚರಣೆ
ಅಸ್ತಿತ್ವದಲ್ಲಿತ್ತೆಂಬ ಗ್ರಹಿಕೆಗೆ ಖಚಿತತೆ ಒದಗಿಸುತ್ತದೆ.
ಹಾಗೆಯೇ ಎಸ್. ಶೆಟ್ಟರ್ ರವರೂ Memorial stones in south
India memorial stones. ಕೃತಿಯಲ್ಲಿ ಸಂಖ್ಯಾ ನಿಷ್ಠ ಸಂಶೋಧನ ವಿಧಾನದ ಮೂಲಕ ಕನ್ನಡ ನಾಡಿನ ನಿಷದಿಗಲ್ಲು, ವಿರಗಲ್ಲು,
ಮಾಸ್ತಿಗಲ್ಲು, ಮೊದಲಾದ ಸ್ಮಾರಕ ಶಿಲೆಗಳ ಭೌಗೋಲಿಕ
ಪ್ರಸರಣ,ಐತಿಹಾಸಿಕ ಬೆಳವಣಿಗೆಗಳನ್ನು ಅಂಕಿ ಅಂಶಗಳಿಂದ ಅರಿತು ಅಲ್ಲಿ
ತೋರುವ ಸಂಖ್ಯಾ ವ್ಯತ್ಯಾಸದ ಹಿಂದಿರುವ ಕಾರಣಗಳನ್ನು ಸಾಮಾಜಿಕ ಒತ್ತಡಗಳನ್ನು ಅಧ್ಯಯನ
ಮಾಡಿರುವುದನ್ನು ಗುರುತಿಸಬಹುದಾಗಿದೆ. ಸಂಶೋಧನೆಯ ವಿವರವನ್ನು ಅವರ ಹೇಳಿಕೆಯಲ್ಲಿಯೇ
ಉಲ್ಲೇಖಿಸುವುದಾದರೆ, ಕರ್ನಾಟಕದಲ್ಲಿ ಲಭ್ಯವಿರುವ ೨೬೫೦ ಲಿಖಿತ ಸ್ಮಾರಕ
ಶಿಲೆಗಳಲ್ಲಿ ವೀರಗಲ್ಲು ೨೨೦೦, ನಿಷದಿಗಲ್ಲು ೩೦೦, ಸತಿಗಲ್ಲು ೧೫೦, ಉಳಿದವು ಸಿಡಿತಲೆ, ಗರುಡಗಲ್ಲು ಇತ್ಯಾದಿ. ಈಸ್ಮಾರಕ ಶಿಲೆಗಳು ಕದಂಬರ ಕಾಲವಾದ ೫ನೇ ಶತಮಾನದಿಂದ ಹಿಡಿದು
ಒಡೆಯರ ಕಾಲವಾದ ೧೯ನೇ ಶತಮಾನದವರೆವಿಗೂ ಬೆಳೆದು ಬಂದಿದೆ. ಹತ್ತರಿಂದ ೧೩ನೇ ಶತಮಾನದಲ್ಲಿ ಈ
ಸಂಖ್ಯೆ ೧೧೦೦ನ್ನು ತಲುಪಿದ್ದು ಇವುಗಳಲ್ಲಿ ಹೊಯ್ಸಳರಿಗೆ ಸಂಬಂಧಿಸಿದವು ೩೭೫. ಬಾದಾಮಿ ಚಾಲುಕ್ಯರ
ಕಾಲದಲ್ಲಿ ಒಂದೇ ಒಂದು ಲಿಖಿತ ಸ್ಮಾರಕ ಶಿಲೆ ಸಿಕ್ಕಿದೆ. ಕದಂಬ ರಾಷ್ಟ್ರಕೂಟ, ಗಂಗ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕ್ರಮವಾಗಿ ೯೫.೩೫.೧೫೦ಮತ್ತು ೧೨೫
ಸಿಕ್ಕಿವೆ. ಈ ಲಿಖಿತ ಸ್ಮಾರಕ ಶಿಲೆಗಳನ್ನು ಪ್ರಾದೇಶಿಕ ದೃಷ್ಟಿಯಿಂದ ನೋಡಿದರೆ ಕುತೂಹಲಕಾರಿ
ಅಂಶಗಳು ವ್ಯಕ್ಯವಾಗುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿ ೭೫೦, ಹಾಸನ
ಜಿಲ್ಲೆಯಲ್ಲಿ ೪೭೦, ಮಂಡ್ಯ ಮೈಸೂರು ಜಿಲ್ಲೆ ಸೇರಿ ೩೨೫, ತುಮಕೂರು ಜಿಲ್ಲೆಯಲ್ಲಿ ೨೪೦, ಧಾರವಾಡ ಜಿಲ್ಲೆಯಲ್ಲಿ ೧೮೦,
ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೫೦ ಸಿಗುತ್ತವೆ. ಇಲ್ಲಿ ಶಿವಮೊಗ್ಗ
ಜಿಲ್ಲೆಯಲ್ಲಿಯೇ ಹೆಚ್ಚು ಸಂಖ್ಯೆಯ ಸ್ಮಾರಕಗಳಿರುವುದಕ್ಕೆ ಈ ಪ್ರದೇಶ ಕದಂಬ, ಗಂಗ, ಚಾಲುಕ್ಯ- ಹೊಯ್ಸಳ, ಹೊಯ್ಸಳ-ಕಲಚೂರಿ
, ಹೊಯ್ಸಳ-ಸೇವುಣರ ಸೀಮಾ ಪ್ರದೇಶವಾಗಿದ್ದು ಇಲ್ಲಿ ಸಹಜವಾಗಿಯೇ
ಯುದ್ಧಗಳು ಪದೇ ಪದೇ ಸಂಭವಿಸಿರಬಹುದು. ಈ ವಿವರಗಳು ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ
ಸಂಖ್ಯಾನಿಷ್ಠ ಸಂಶೋಧನೆಯ ಸ್ವರೂಪ ಮತ್ತು ಮಹತ್ವವನ್ನು ತೋರಿಸುತ್ತದೆ.
ಕವಿರಾಜ ಮಾರ್ಗದಲ್ಲಿ ವ್ಯಕ್ತವಾಗುವ ಆ ಕಾಲದ
ಕನ್ನಡ ನಾಡಿನ ಭೌಗೊಳಿಕ ವಿಸ್ತಾರತೆಯನ್ನು ಕುರಿತಾದ `ಕಾವೇರಿಯಿಂದಮಾ ಗೋದವರಿವರ ಮಿರ್ಪ ನಾಡದಾ ಕನ್ನಡ
ದೊಳ್’ ಎಂಬ ಹೇಳಿಕೆಯಲ್ಲಿಯ ಪ್ರಾಚೀನ ಕರ್ನಾಟಕದ ಭೌಗೋಲಿಕ ವಿಸ್ತಾರದ ವ್ಯಾಪಕತ್ವವನ್ನು
ಮಹಾರಾಷ್ಟ್ರದ ಕನ್ನಡ ಶಾಸನಗಳು ಪುಷ್ಠೀಕರಿಸುತ್ತವೆ. ಈ ವಿವರವನ್ನು ಮಹಾರಾಷ್ಟ್ರದಲ್ಲಿ ದೊರೆಯುವ
ಕನ್ನಡ ಶಾಸನಗಳನ್ನು ಭೌಗೋಲಿಕವಾಗಿ ಹಾಗೂ ಐತಿಹಾಸಿಕವಾಗಿ ಸಮೀಕ್ಷೆ ಮಾಡಿ ಸಂಖ್ಯಾ ನಿಷ್ಠ
ಸಂಶೋಧನಾ ವಿಧಾನದ ಮೂಲಕ ಎಂ.ಎಂ. ಕಲಬುರ್ಗಿಯವರು ಗುರುತಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕನ್ನಡ ನಾಡಿನಲ್ಲಿ ದೊರೆತಂತೆ
ಹೆಚ್ಚಿನ ಸಂಖ್ಯೆಯ ಶಾಸನಗಳು ದೊರೆತಿಲ್ಲ. ಕೇವಲ ೧೦೦೦ ಶಾಸನಗಳು ದೊರೆತಿವೆ. ಇವುಗಳಲ್ಲಿ
ಪ್ರಾಚೀನ ಶಾಸನಗಳೆಲ್ಲ ಸಂಸ್ಕೃತ ಭಾಷೆಯ ತಾಮ್ರಪಟಗಳು ನಂತರದವು ಕನ್ನಡ ಭಾಷೆಯ ಶಿಲಾಶಾಸನಗಳು.
ಒಟ್ಟು ೧ ಸಾವಿರ ಶಾಸನಗಳಲ್ಲಿ ಪ್ರಾಕೃತ ೩೦೦, ಸಂಸ್ಕೃತ ೩೦೦, ಕನ್ನಡ೩೦೦,
ಮರಾಠಿಭಾಷೆಯವು ೧೦೦, ಪ್ರಾಕೃತ ಶಾಸನಗಳಾದರೊ
ಅಗ್ರಹಾರದ ದತ್ತಿ ದಾಖಲೆಗಳು. ಕನ್ನಡ ಭಾಷೆಯ ಶಾಸನಗಳು ಮಾತ್ರ ದೇವಾಲಯದ ದತ್ತಿ
ದಾಖಲೆಗಳಾಗಿದ್ದರೂ ಸಾಹಿತ್ಯಾತ್ಮಕವಾಗಿ ಕೂಡಿವೆ. ಈ ಕನ್ನಡ ಶಾಸನಗಳು ಕರ್ನಾಟಕದ ಹೊರೆಗೆ
ಸುತ್ತಲೂ ಅಂಟಿಕೊಂಡಿರುವ ಕೊಲ್ಲಾಪುರ, ಸಾಂಗಲಿ, ನಾಂದೇಡ ಸೊಲ್ಲಾಪುರ, ಉಸ್ಮನಾಬಾದ್ ಜಿಲ್ಲೆಗಳಲ್ಲಿ ದಟ್ಟವಾಗಿ
ಕಂಡು ಹರಡಿದ್ದು ಮರಾಠಿ ಭಾಷೆಯ ಶಾಸನಗಳು ಅಲ್ಲಲ್ಲಿ ವಿರಳವಾಗಿ ಮಾತ್ರ ಕಂಡು ಬರುತ್ತವೆ.
ಇದರಿಂದಾಗಿ ಈ ಜಿಲ್ಲೆಗಳ ಪ್ರದೇಶ ಮೂಲತಃ ಕನ್ನಡವೆಂದು ಸ್ಷಷ್ಟವಾಗುತ್ತದೆ. ಕನ್ನಡ ಭಾಷೆಯ
ಶಾಸನಗಳು ಪುಷ್ಠೀಕರಿಸುತ್ತವೆ. ಈ ವಿಧಾನವು ಮೌಲ್ಯಯುತವಾಗಿದೆ.ಈ ಸಂಶೋಧನೆಯ ವಿಧಾನದಿಂದ ಹೊರಡುವ
ನಿಲುವುಗಳಿಗೆ ಖಚಿತತೆ ಇದೆ.
ಒಂದು ಶಾಸನದಲ್ಲಿ ವ್ಯಕ್ತವಾಗುವ ಸಂಗತಿಯ
ಸಂಧಿಗ್ದತೆಯಿಂದ ಕೂಡಿದ್ದರೆ ಅ ಪದದ ಅರ್ಥ ಸ್ಷಷ್ಟತೆಗಾಗಿ ಬೇರೆ ಶಾಸನಗಳಲ್ಲಿಯ ಮಾಹಿತಿಗಳನ್ನು
ಆಧರಿಸಿ ಖಚಿತವಾಗಿ ಗ್ರಹಿಸಲು ಪ್ರಯತ್ನಿಸಿರುವುದಕ್ಕೆ ನಿದರ್ಶನವಾಗಿ ಕಪ್ಪೆ ಅರಭಟನ ಶಾಸನವನ್ನು
ಉದಾಹರಿಸಬಹುದಾಗಿದೆ.
ಪ್ರಾಚೀನ ಕನ್ನಡ ಸಂಸ್ಕ್ರತಿಯ ಒಂದಂಶವನ್ನು ಶಾಸನ
ರೂಪದಲ್ಲಿ ಸಾಮಾನ್ಯ ಜನತೆಗೆ ಮನದಟ್ಟು ಮಾಡಿ ಕೊಡುವ ಬಾದಾಮಿ ಶಾಸನದಲ್ಲಿ ಬರುವ `ಕಪ್ಪೆ ಅರಭಟ’
ಎನ್ನುವ ವೀರನ ಹೆಸರಿನ ಹಿಂದೆ ಇರುವ ಕಪ್ಪೆ ಎಂಬುದು ಏನನ್ನು ಸೂಚಿಸಿರುತ್ತದೆಂಬುದು.
ಕ್ರಿ.ಶ. ೧೧೫೬ರ ಮಲ್ಲಾಪುರ ಶಾಸನದಲ್ಲಿ ಬರುವ ಸೇನಭೋವ
ಕಪ್ಪೆಯರ ಚಾವುಣಯ್ಯನ ಸ್ವಹಸ್ತ ಲಿಖಿತ ಎಂಬ ವಾಕ್ಯದ ಹಿನ್ನಲೆಯಲ್ಲಿ ನೋಡಿದರೆ ಕಪ್ಪೆ ಅರಭಟ
ಹೆಸರಿನಲ್ಲಿಯ ಕಪ್ಪೆ ಎಂಬುದು ಮನೆತನದ ಅಥವಾ ವರ್ಗವನ್ನು ಸೂಚಿಸುತ್ತದೆ. ಈ ಹಿನ್ನಲೆಯಲ್ಲಿ
ಸಂಶೋಧಕರು ಕಪ್ಪೆ ಎಂಬುದು ಮನೆತನದ ಹೆಸರಾಗಿದ್ದು ಅರಭಟ ಎಂಬ ವ್ಯಕ್ತಿಯು ಈ ಕಪ್ಪೆ ಮನೆತನಕ್ಕೆ
ಸೇರಿದ ಒಬ್ಬ ಭಟ್ಟನೋ ಅಥವಾ ಭಟನೋ ಆಗಿರಬೇಕು ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.
ಈ ಶಾಸನದಲ್ಲಿಯೇ ಬರುವ ಮಾಧುರ್ಯಂಗೆ ಮಾಧುರ್ಯನ್ ಎಂಬ
ವಾಕ್ಯದಲ್ಲಿಯ ಮಾಧುರ್ಯನ ಶಬ್ದದ ಅರ್ಥ ಮಧುರತೆಯ ಗುಣವಾಗಿ ಉಳ್ಳವನು ಎಂದು ಪರಿಭಾಷಿಸುವುದು
ಎಷ್ಟರ ಮಟ್ಟಿಗೆ ಸರಿ. ಮಧುರ ಗುಣವಿರುವವನು ಮಾಧುರ್ಯನ್ ಅಲ್ಲ ಮಧುರನ್ ಆಗುತ್ತಾನೆ. ಈ
ಹಿನ್ನಲೆಯಲ್ಲಿ ಈ ಅರ್ಥ ಕಪ್ಪೆ ಅರಭಟನ ವೀರತನವನ್ನು ಪ್ರತಿಪಾದಿಸುತ್ತಿರುವ ಸಂದರ್ಭದಲ್ಲಿ
ಸರಿಹೊಂದಲಾರದು. ಈ ನಿಟ್ಟಿನಲ್ಲಿ ಮಾಧುರ್ಯನ್ ಶಬ್ದವನ್ನು ಅರ್ಥೈಸಲು ಬೇರೆಬೇರೆ ಆಕರಗಳ
ನೆರವನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಟಿ.ವಿ.ವೆಂಕಟಚಲಶಾಸ್ತ್ರಿ ಅವರು ಅನುಸರಿಸಿರುವ
ವಿಧಾನವನ್ನು ಇಲ್ಲಿ ಪ್ರಸ್ತಾಪಿಸಬಹುದು.
ಮಹಾ+ದುರ್ಯನ್> ಮಾಧುರ್ಯನ್ ಇವೆರಡು ಪದಗಳು ಪರಿಚಿತ
ಸಂಸ್ಕೃತ ಪದಗಳು. ಈ ಶಾಸನದಲ್ಲಿ ಬಳಕೆಯಾಗಿರುವ ಮಾಧುರ್ಯನ್ ಪದವು ಕನ್ನಡದ ಜಾಯಮಾನವನ್ನು
ಅನುಸರಿಸಿ ಒಂದು ಸಂಸ್ಕೃತ ಸಮಾಸ ಪದವಾಗಿದೆ. ಉದಾ:ಮಹಾ+ದೇವಂ>ಮಾದೇವ
ಆದ ಹಾಗೆ. ದುರ್ಯ ಶಬ್ದಕ್ಕೆ ಅರ್ಥ ಮುಖ್ಯವಾದ ಕಾರ್ಯಗಳನ್ನು ವಹಿಸಿಕೊಳ್ಳಲು ಸಮರ್ಥನಾದವನು.
ಮುಂಚೂಣಿಯಲ್ಲಿರತಕ್ಕವನು, ಅಗ್ರಗಣ್ಯ ನಾಯಕ ಇತ್ಯಾದಿ ಅರ್ಥಗಳಿವೆ.
ಇವುಗಳಲ್ಲಿ ಯಾವುದಾದರೊಂದು ಅರ್ಥವನ್ನು ಕಪ್ಪೆ ಅರಭಟನಿಗೆ ಅರ್ಥೈಸಿದರೆ, ಈತನು ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನ ವಿಷಯದಲ್ಲಿ ತಾನೂ ಕಾರ್ಯ
ನಿರ್ವಹಿಸುವ ಸಾಮರ್ಥ್ಯವನ್ನುಳ್ಳ ಅಧಿಕನು ಅಂತಲೋ ಪ್ರಮುಖರ ನಡುವೆ ತಾನೂ ಪ್ರಮುಖ ಎಂದು
ಅರ್ಥ್ಯೆಸಬಹುದು.ಶಾಸನಗಳನ್ನು ಕುರಿತ ಸಂಶೋಧನಾ ಅಧ್ಯಯನ ವಿಧಾನದ ಪ್ರಾರಂಭಿಕ ಘಟ್ಟದಲ್ಲಿ
ಶಾಸನಗಳಂತಹ ಆಕರಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಚರಿತ್ರೆಯನ್ನು ಭಾಗಶಃ ಅಥವಾ ಬಿಡಿಯಾಗಿ
ಕಟ್ಟುವ ಘಟನಾ ಶೋಧನಿಷ್ಠ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಿದ್ದರು.ಉದಾ: ಕ್ರಿ.ಶ.೧೩೬೮ರ
ಬುಕ್ಕರಾಯನ ಶ್ರವಣಬೆಳಗೊಳದ ಶಾಸನವನ್ನು ಶೋಧಿಸಿದ ಬಿ.ಎಲ್.ರೈಸ್ ಮತ್ತು ಆರ್.ನರಸಿಂಹಾಚಾರ್ಯರು ಆ
ಶಾಸನದಲ್ಲಿ ವ್ಯಕ್ತವಾಗಿರುವ ಮಾಹಿತಿಯನ್ನು ಧರ್ಮಸಮನ್ವಯದ ದ್ಯೋತಕವೆಂಬ ರೀತಿಯಲ್ಲಿ
ಗ್ರಹಿಸಿದ್ದರು. ಮತೀಯ ಒಪ್ಪಂದದ ಹಿಂದೆ ಮತೀಯ ಕಲಹ ಇದೆ ಎಂಬ ಅಂಶವನ್ನು ಒತ್ತುಕೊಟ್ಟು
ಹೇಳಿರಲಿಲ್ಲ. ಇದು ಧರ್ಮ ಸಮನ್ವಯದ ಶಾಸನವೆಂಬಂತೆ ತೋರಿದ್ದರೂ ಧರ್ಮ ಕಲಹದ ಶಾಸನವಾಗಿಯೂ
ಕಂಡುಬರುತ್ತದೆಂಬ ಘಟನೆಯ ಇನ್ನೊಂದು ಮುಖವನ್ನು ಶೋಧಿಸಿ ವ್ಯಕ್ತಪಡಿಸಿದ್ದು ನಂತರದ ಕಾಲದಲ್ಲಿ,
೧೪ನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳುಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ,
ಭೀತಿಯ ನೆರಳಲ್ಲಿ ಅವರು ಬದುಕ ಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥಮಾಡಿಕೊಂಡ
ದೊರೆ ಬುಕ್ಕರಾಯನು ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ ಎರಡೂ ಪಂಗಡಗಳ
ಮಧ್ಯೆ ವಿರಸ ಹೆಚ್ಚಾಗದ ರೀತಿಯಲ್ಲಿ ತೀರ್ಪನ್ನು ನೀಡಿದ. ಬುಕ್ಕನ ತೀರ್ಪು ಜೈನ ಮತ್ತು
ಶ್ರೀವೈಷ್ಣವ ಮತಗಳ ನಡುವಿನ ಘರ್ಷಣೆಯ ತೀವ್ರತೆಯನ್ನು ಕಡಿಮೆ ಮಾಡಿತೇ ಹೊರತು ಘರ್ಷಣೆಗಳನ್ನು
ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದವಾಗಿದೆ. ಈ ಶಾಸನದಲ್ಲಿಯ ವೈಷ್ಣವ ಮತ್ತು
ಜೈನಧರ್ಮಗಳ ನಡುವಿನ ಈ ತಿಕ್ಕಾಟದಲ್ಲಿ ವೈಷ್ಣವ ಧರ್ಮದ ಆಕ್ರಮಣ ಶೀಲತೆಯು ಎದ್ದು ಕಾಣುವುದನ್ನು
ಗುರುತಿಸಬಹುದಾಗಿದೆ.
೫. ಶಾಸನಗಳ ಸಾಹಿತ್ಯಕ ಅಧ್ಯಯನದ
ತಾತ್ವಿಕ ದೃಷ್ಟಿಕೋನ:
ಸಾಹಿತ್ಯದ ಅಧ್ಯಾಪಕರು ಶಾಸನಗಳ ಬಹುಮುಖ
ಅಧ್ಯಯನದತ್ತ ತೊಡಗಿದ ಮೇಲೆ ಸಾಂಸ್ಕೃತಿಕ ವಿಷಯಗಳ ಅಧ್ಯಯನಕಷ್ಟೇ ಸೀಮಿತರಾಗದೆ ಸಾಹಿತ್ಯಕ ಅಧ್ಯಯನ, ಭಾಷಿಕ ಅಧ್ಯಯನ,
ಛಂದಸ್ಸಿನ ಅಧ್ಯಯನದಲ್ಲಿಯೂ ಶಾಸನಗಳನ್ನು ಆಕರಗಳಾಗಿ ಬಳಸಿಕೊಳ್ಳುವುದು
ಎಂಬುದನ್ನು ಕೆಲವೊಂದು ಅಧ್ಯಯನಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ಪಂಪ ಪೂರ್ವಯುಗದ ಸಾಹಿತ್ಯದ
ಸ್ವರೂಪವನ್ನು ಗುರುತಿಸಲಿಕ್ಕೆ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕನ್ನಡ ಸಾಹಿತ್ಯದ ಪ್ರಥಮ
ಘಟ್ಟದ ಅವಶೇಷಗಳು ಎಂದರೆ ಶಾಸನಗಳು. ಪಂಪಪೂರ್ವಯುಗದಲ್ಲಿ ಕಾವ್ಯಗುಣವುಳ್ಳ ಬಿಡಿ ಬಿಡಿ
ಮುಕ್ತಕಗಳು, ಚಿತ್ರದುರ್ಗದ ತಮ್ಮಟಕಲ್ಲಿನ ಶಾಸನ, ಶ್ರವಣಬೆಳ್ಗೊಳದ ನಿಷಧಿ ಶಾಸನಗಳಲ್ಲಿ ಕಂಡು ಬಂದಿರುವುದನ್ನು ಗುರುತಿಸಿದ್ದಾರೆ. ನಿಷಧಿ
ಶಾಸನಗಳು ಕನ್ನಡ ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ಕರೆಯಲ್ಪಟ್ಟಿವೆ. ಹಾಗೆಯೇ ಸಾಹಿತ್ಯ
ಕೃತಿಗಳ ರಚನೆಯ ಕಾಲ, ಕವಿಯ ಕಾಲ, ಜನ್ಮಸ್ಥಳ
ಇತ್ಯಾದಿಗಳನ್ನು ಅರಿಯುವಲ್ಲಿ ಶಾಸನಗಳು ಎಷ್ಟರ ಮಟ್ಟಿಗೆ ನೆರವನ್ನು ನೀಡಿವೆ ಎಂಬುದನ್ನು
ಎ.ವೆಂಕಟಸುಬ್ಬಯ್ಯನವರ ಕೆಲವು ಕನ್ನಡ ಕವಿಗಳ ಜೀವನ ಕಾಲ, ವಿಚಾರ,
ಕವಿಚರಿತೆಯ ಮೂರು ಸಂಪುಟಗಳು, ಗೋವಿಂದ ಪೈ ಅವರ
ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳು, ಮೈಸೂರು ವಿಶ್ವವಿದ್ಯಾಲಯ
ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಸಂಸ್ಥೆಗಳ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ
ಸಂಪುಟಗಳು ಹಾಗೂ ಕೆಲವು ನಿಯತ ಕಾಲಿಕೆಗಳಲ್ಲಿಯ ಲೇಖನಗಳಲ್ಲಿ ಗುರುತಿಸಲಾಗಿದೆ.
ಯಾವುದೇ ಶತಮಾನದ ಸಾಹಿತ್ಯದ ಅಧ್ಯಯನಕ್ಕೆ
ಹಿನ್ನಲೆಯಾದ ಸಾಮಾಜಿಕ ಜೀವನವನ್ನು ಅರಿಯಲು ಶಾಸನಗಳ ನೆರವು ಅಗತ್ಯ ಎಂಬುದನ್ನು ಚಿದಾನಂದಮೂರ್ತಿ
ಅವರ ಪಂಪಕವಿ ಹಾಗೂ ಮೌಲ್ಯಪ್ರಸಾರ ಇತ್ಯಾದಿ ಲೇಖನಗಳಲ್ಲಿ ಗುರುತಿಸಬಹುದು. ಹತ್ತನೇ ಶತಮಾನದ ಪಂಪ
ರನ್ನರ ಕಾವ್ಯಗಳನ್ನು ಅರ್ಥೈಸಲು ಶಾಸನಗಳ ನೆರವು ಅಗತ್ಯ ಎಂಬುದನ್ನು ಗುರುತಿಸಲಾಗಿದೆ. ಕನ್ನಡ
ಸಾಹಿತ್ಯದ ಇಬ್ಬರು ಕವಿಗಳಾದ ಪಂಪ ಹಾಗೂ ಬಸವಣ್ಣನವರಿಗೆ ಸಂಬಂಧಿಸಿದ ಹಾಗೆ ಜಿನವಲ್ಲಭನ
ಕುರಿಕ್ಯಾಲ ಶಾಸನ ಹಾಗೂ ಅರ್ಜುನವಾಡ ಶಿಲಾಶಾಸನಗಳನ್ನು ಕುರಿತ ಸಂಶೋಧನಾ ಲೇಖನಗಳು
ಮಹತ್ವದವುಗಳಾಗಿವೆ. ಶಾಸನಗಳು ಸಾಹಿತ್ಯದ ದೃಷ್ಟಿಯಿಂದಲೂ ಬಹಳ ಗಮನಾರ್ಹ ಎಂಬುದನ್ನು
ಜನಸಾಮಾನ್ಯರಲ್ಲಿ ಮನಗಾಣಿಸುವಂತಹ ಪ್ರಯತ್ನಗಳು ನಡೆದಿವೆ. ೧೯೨೩ರ ಸುಮಾರಿಗೆಯೆ
ಆರ್.ನರಸಿಂಹಾಚಾರ್ಯರು ಶಾಸನಗಳ ಕಾವ್ಯ ಸೌಂದರ್ಯವನ್ನು ಕಂಡುಕೊಂಡು ಅವುಗಳ ಸಂಗ್ರಹವನ್ನು ತರುವ
ಪ್ರಯತ್ನವನ್ನು ಶಾಸನ ಪದ್ಯ ಮಂಜರಿ ಪುಸ್ತಕದ ಮೂಲಕ ಮಾಡಿದ್ದಾರೆ. ಶಾಸನ ಸಾಹಿತ್ಯ ಶೈಲಿಯ ಮತ್ತು
ಸೊಬಗಿನ ರಸವನ್ನು ಸ್ವಲ್ಪಮಟ್ಟಿಗಾದರೂ ಆಸ್ವಾದನ ಮಾಡಲು ಇಲ್ಲಿ ಅವಕಾಶ ಕಲ್ಪಿತವಾಗಿದೆ. ಮೇವುಂಡಿ
ಮಲ್ಲಾರಿ ಮತ್ತು ಎ.ಎಂ.ಅಣ್ಣಿಗೇರಿ ಅವರ ಶಾಸನ ಸಾಹಿತ್ಯ ಸಂಚಯ, ಆರ್.ಸಿ.ಹಿರೇಮಠ
ಮತ್ತು ಎಂ.ಎಂ.ಕಲಬುರ್ಗಿ ಅವರ ಶಾಸನ ಸಂಪದ, ಎ.ಎಂ.ಅಣ್ಣಿಗೇರಿ ಮತ್ತು
ಆರ್.ಶೇಷಶಾಸ್ತ್ರಿ ಅವರ ಶಾಸನ ಸಂಗ್ರಹಗಳು ಶಾಸನಗಳಲ್ಲಿ ಆಸಕ್ತಿಯುಳ್ಳ ಜನರ ಸಲುವಾಗಿ
ರೂಪುಗೊಂಡಿದ್ದು, ಶಾಸನಗಳ ಹಿರಿಮೆಯನ್ನು ಪ್ರಾತಿನಿಧಿಕ ಶಾಸನಗಳ ಮೂಲಕ
ಮನಗಾಣಲು ಪ್ರಯತ್ನಿಸಿದೆ.
ಕನ್ನಡ ಭಾಷೆಯ ಚರಿತ್ರೆಯನ್ನು ಅಧ್ಯಯನ ಮಾಡುವಲ್ಲಿ, ಅದರಲ್ಲೂ ಕನ್ನಡ
ಸಾಹಿತ್ಯದ ಆರಂಭಕಾಲದಿಂದ ಪಂಪನವರೆಗೆ ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ಅರಿಯುವಲ್ಲಿ ಶಾಸನಗಳ
ನೆರವು ಅತ್ಯಗತ್ಯ ಎಂಬುದನ್ನು ಈವರೆವಿಗೂ ನಡೆದಿರುವ ಅಧ್ಯಯನದಿಂದ ತಿಳಿಯಬಹುದಾಗಿದೆ. ಕನ್ನಡ
ಭಾಷಾ ಅವಸ್ಥಾ ಭೇದಗಳಲ್ಲಿ ಒಂದಾದ ಪೂರ್ವದ ಹಳಗನ್ನಡದ ಸ್ವರೂಪವನ್ನು ತಿಳಿಯಲು ಸಂಬಂಧಿಸಿದ
ಪ್ರಯೋಗಗಳನ್ನು ಶಾಸನಗಳಲ್ಲಿಯೇ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಎ.ಎನ್.ನರಸಿಂಹಯ್ಯ, ಜಿಎಸ್.ಗಾಯ್, ಕೆ.ಕುಶಾಲಪ್ಪ ಗೌಡ, ಎಂ.ಬಿ.ನೇಗಿನಹಾಳ
ಅವರ ಅಧ್ಯಯನಗಳನ್ನು ಹೆಸರಿಸಬಹುದು.
ಛಂದಸ್ಸಿನ ಅಧ್ಯಯನದಲ್ಲಿಯೂ ಶಾಸನಗಳನ್ನು ಆಕರಗಳಾಗಿ
ಬಳಸಿಕೊಂಡಿರುವ ಪ್ರಯತ್ನವನ್ನು ಗುರುತಿಸಬಹುದಾಗಿದೆ. ಆರಂಭ ಕಾಲದ ಚಂಪೂವಿನ ಛಂದೋ
ವೈವಿಧ್ಯತೆಯನ್ನು ತಿಳಿಯುವಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಹೊಸದಾಗಿ ಅಕ್ಷರ ವೃತ್ತಗಳನ್ನು
ಸ್ವೀಕರಿಸಿದಾಗ ಇದ್ದ ಪರಿಸ್ಥಿತಿಯ ಚಿತ್ರಣವನ್ನು ಶಾಸನಗಳಲ್ಲಿ ಗುರುತಿಸಿರುವುದನ್ನು
ಉಲ್ಲೇಖಿಸಬಹುದು. ಹಾಗೆಯೇ ಕಂದ,
ತ್ರಿಪದಿ, ಛಂದೋ ಪ್ರಕಾರಗಳ ರೂಪಗಳ ಪ್ರಾಚೀನ
ಪ್ರಯೋಗಗಳು ಶಾಸನಗಳಲ್ಲಿಯೇ ದೊರೆತಿರುವುದನ್ನು ಗುರುತಿಸಲಾಗಿದೆ. ಅಂಶ ಷಟ್ಪದ ಪ್ರಯೋಗಗಳು ಹಾಗೂ
ಅಂಶ ಷಟ್ಪದದಲ್ಲಿ ರಚನೆಗೊಂಡ ಏಕೈಕ ಕಾವ್ಯ ಎಂದು ಪರಿಗಣಿತವಾಗಿರುವ ‘ವಿವಾಹ ಪುರಾಣ’ ಎನ್ನುವ
ಕಾವ್ಯ ಶಾಸನಗಳಲ್ಲಿಯೇ ಕಂಡು ಬಂದಿರುವುದನ್ನು ಗುರುತಿಸಲಾಗಿದೆ. ಹರಿಹರನಿಗಿಂತ ಎರಡು ಶತಮಾನಗಳ
ಪೂರ್ವದಲ್ಲಿಯೇ ಲಲಿತ ರಗಳೆಯ ಲಕ್ಷಣಗಳನ್ನು ಹೋಲುವ ತೋಮರ ರಗಳೆ ಎಂಬ ವಿಶಿಷ್ಟ ಪ್ರಯೋಗ ಕೋಗಳಿ
ಶಾಸನದಲ್ಲಿ ಬಳಕೆಯಾಗಿರುವುದನ್ನು ಗುರುತಿಸಲಾಗಿದೆ. ಭಾಷಿಕ ಹಾಗೂ ಛಂದಸ್ಸು ಇತ್ಯಾದಿಗಳ ಸಮಗ್ರ
ಅಧ್ಯಯನದಲ್ಲಿ ಶಾಸನಗಳು ಪ್ರಮುಖ ಆಕರಗಳು ಎಂಬ ನೆಲೆಗಟ್ಟಿನಲ್ಲಿ ಕೆಲಮಟ್ಟಿಗೆ ನಡೆದಿರುವುದನ್ನು
ಗುರುತಿಸಬಹುದು.
ಕನ್ನಡ ಶಾಸನಗಳ ಸಾಮಾನ್ಯ ಸ್ವರೂಪ, ಅವುಗಳಲ್ಲಿ
ದಾಖಲೆಯಾದ ಇತಿಹಾಸ ಸಮಾಜ ಮೊದಲಾದವುಗಳ ಜೊತೆಗೆ ಅವುಗಳ ಭಾಷೆ, ಛಂದಸ್ಸು
ಮೊದಲಾದವು ನಾಡು ನುಡಿಗಳ ಪರಂಪರೆಯನ್ನು ತಿಳಿಯಲು ನಮಗೆ ಅಧಿಕೃತ ಆಕರಗಳಾಗಿವೆ. ಭಾಷೆ
ಸಾಹಿತ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಇವುಗಳಿಂದ ನಮ್ಮ ಭಾಷೆ ಬೆಳೆದು ಬಂದಿರುವ ರೀತಿ
ಗೊತ್ತಾಗಿದೆ; ಸಾಹಿತ್ಯದ ಪ್ರಾಚೀನತೆ, ಬೆಳವಣಿಗೆ,
ಸತ್ವ ಸೌಂದರ್ಯಗಳು ಮನವರಿಕೆಯಾಗಿವೆ; ಗ್ರಂಥಸ್ಥ
ಸಾಹಿತ್ಯದ ಸಂಶೋಧನೆಗೆ ಪೂರಕಸಾಮಗ್ರಿ ದೊರೆತಿದೆ; ಹೊಸ ಸಂಗತಿಗಳ
ತಿಳುವಳಿಕೆಯು ಹಳೆಯ ಸಮಸ್ಯೆಗಳ ಪರಿಹಾರವೂ ಸಾಧ್ಯವಾಗಿವೆ. ಶಾಸನಗಳ ಪ್ರಕಟನೆಯೂ ಅಭ್ಯಾಸವೂ
ಪೂರ್ಣಗೊಂಡಿಲ್ಲ. ಶಾಸನಗಳ ಭಾಷೆಯ, ಸಾಹಿತ್ಯಗಳ ಬಹುಮುಖ
ಅಧ್ಯಯನವು ವ್ಯವಸ್ಥಿತ ಕ್ರಮಗಳಲ್ಲಿ ಇನ್ನು
ನಡೆಯಬೇಕಾಗಿದೆ. ವಾಸ್ತವವಾಗಿ ಸಂಸ್ಕೃತ ಪ್ರಾಕೃತ ಶಾಸನಗಳ ವಿಷಯದಲ್ಲಿ ನಡೆದಿರುವಷ್ಟು
ವ್ಯಾಪಕವಾದ ಅಭ್ಯಾಸ ಕನ್ನಡ ಶಾಸನಗಳ ವಿಷಯದಲ್ಲಿ ಆಗಿಲ್ಲ. ಶಾಸನಗಳ ಭಾಷೆ ಛಂದಸ್ಸು ಕವಿಗಳು
ಶಬ್ದಗಳ ಮತ್ತು ಸಂದರ್ಭಗಳ ಅಕಾರಾದಿ, ಸಂಕಲನ ಗ್ರಂಥಗಳು, ಸಾಹಿತ್ಯ ವಿವೇಚನೆ, ವಿಶಿಷ್ಟ ಶಬ್ದಗಳ ಮತ್ತು ಸಂದರ್ಭಗಳ
ಕೋಶಗಳು ಹೀಗೆ ವಿವಿಧ ಮುಖಗಳಲ್ಲಿ ಕೆಲಸಗಳು ನಡೆಯಬೇಕಾಗಿವೆ.
೬.ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಕೆಲವು ಇತಿಮಿತಿಗಳು
ಸಾಂಸ್ಕೃತಿಕ ಅಧ್ಯಯನದ ಕ್ರಮಪದ್ಧತಿಯಲ್ಲಿ
ಇಲ್ಲಿಯವರೆಗೂ ಬಹುಪಾಲು ಆಕರ ಸಾಮಗ್ರಿಯನ್ನು ವಿಶ್ಲೇಷಣಾತ್ಮಕವಾಗಿ ಅಭ್ಯಸಿಸಿ ಒಂದು ವಿಷಯದ ಅಥವಾ
ಸಮಗ್ರ ಬದುಕಿನ ರೂಪನಿಷ್ಠಶೋಧವನ್ನು ಮಾತ್ರ ನಡೆಸಲಾಗಿದೆ. ಅವುಗಳನ್ನು ಇನ್ನು ವ್ಯಾಪಕವಾಗಿ
ಅಂದರೆ ವ್ಯಾಖ್ಯಾನಾತ್ಮಕವಾಗಿ ಅಧ್ಯಯನ ಮಾಡಿ ಬದುಕಿನ ಗುಣನಿಷ್ಠ ಶೋಧವಾಗಿ ಮಾಡಬೇಕಾಗಿದೆ ಎಂಬ
ನಿಲುವು ಇತ್ತೀಚಿನ ಕೆಲವು ಸಂಶೋಧಕರಲ್ಲಿ ವ್ಯಕ್ತವಾಗಿದೆ.
ವೀರಜೀವನ ಹಾಗೂ ಆತ್ಮಬಲಿ ಕುರಿತ ಸಾಂಸ್ಕೃತಿಕ
ಅಧ್ಯಯನದಲ್ಲಿ ಶಾಸನಗಳು ಹಾಗೂ ಇನ್ನಿತರ ಅನುಷಂಗಿಕ ಆಕರಗಳು ನೀಡುವ ಮಾಹಿತಿಗಳು ಪ್ರಾಚೀನ
ಕಾಲದಲ್ಲಿ ಸತಿಪದ್ಧತಿ,
ವೀರಮರಣ ಪ್ರಕಾರಗಳು ಪ್ರಚಲಿತವಿದ್ದವು ಎಂಬುದನ್ನು ತೋರಿಸಿಕೊಟ್ಟಿವೆ. ಜೊತೆಗೆ
ಅವುಗಳ ಆಚರಣೆಯ ವಿಧಾನ ಐತಿಹಾಸಿಕ ಬೆಳವಣಿಗೆ, ಪ್ರಾದೇಶಿಕ
ಪ್ರಸಾರಗಳನ್ನು ಗ್ರಹಿಸುವ ಅಧ್ಯಯನವು ನಡೆದಿದೆ. ಆದರೆ ಇನ್ನೊಂದು ನಿಟ್ಟಿನಿಂದಲೂ ಇವುಗಳನ್ನು
ಅಭ್ಯಸಿಸಬೇಕಾಗಿದೆ. ಈ ಪದ್ಧತಿಗಳು ಅಸ್ತಿತ್ವಕ್ಕೆ ಬರಲು ಇದ್ದ ಒತ್ತಡಗಳು, ಜನರು ಅವುಗಳಿಗೆ ತೋರಿಸುತ್ತಲಿದ್ದ ನಿಜವಾದ ಪ್ರತಿಕ್ರಿಯೆಗಳು, ಅವುಗಳ ಒಳಿತು-ಕೆಡುಕುಗಳು ಇತ್ಯಾದಿ ಅಂಶಗಳನ್ನು ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ
ವ್ಯಾಖ್ಯಾನಿಸಬೇಕಾಗುತ್ತದೆ. ಆತ್ಮಬಲಿಯ ಕುರಿತಾದ ಶಾಸನಗಳು ಹಾಗೂ ಶಿಲ್ಪಗಳಲ್ಲಿಯ ವಿವರಗಳು ಆತ್ಮ
ಬಲಿಯ ಬಗೆಗೆ ಗೌರವ ಮೂಡಿಸುತ್ತವೆಯೇ ಹೊರತು ಅವುಗಳ ಹಿಂದೆ ಇದ್ದ ಒತ್ತಡಗಳೇನು ಎಂಬುದನ್ನು
ಗ್ರಹಿಸಬೇಕಾಗಿದೆ. ರಾಜತ್ವವು ಜನ ಸಾಮಾನ್ಯರಿಗೆ ವೀರಮರಣದ ಸ್ವರ್ಗ ಪ್ರಾಪ್ತಿ ಎನ್ನುವ
ನಂಬಿಕೆಯನ್ನು ಹೇಳುವುದರ ಮೂಲಕ ರಾಜನಿಗೆ ಮನಪೂರ್ವಕವಾಗಿ ದುಡಿಯುವ ತ್ಯಾಗ ಮಾಡುವ ರೀತಿಯಲ್ಲಿ
ಯಾವ ರೀತಿ ಪ್ರಚೋದಿಸಲಾಗಿತ್ತು ಎಂಬ ಅಂಶಗಳ ಕಡೆಗೂ ಅಧ್ಯಯನ ಮಾಡಬೇಕಾಗಿದೆ. ರಾಜನಿಗಾಗಿ ಮಡಿದ
ವೀರರ ತ್ಯಾಗ, ಬಲಿದಾನಗಳ ವರ್ಣನೆ ಸ್ಮಾರಕಗಳ ಸ್ಥಾಪನೆ ಒಂದು
ದೃಷ್ಟಿಯಿಂದ ರಾಜತ್ವದ ಆರಾಧನೆ ಮತ್ತು ವೈಭವೀಕರಣದ ಸಂಕೇತ ಎಂಬ ಗ್ರಹಿಕೆ ಇಂದು ಕೆಲವರಲ್ಲಿ
ಉಂಟಾಗಿದೆ. ರಾಜತ್ವದ ಶ್ರೇಷ್ಠತೆಗಾಗಿ, ರಾಜ ತೋರಿದ ಪ್ರೀತಿಗಾಗಿ
ವೇಳೆವಾಳಿಗಳು ತಮ್ಮನ್ನು ತಾವು ಕೊಂದುಕೊಳ್ಳುವುದು ನ್ಯಾಯಯುತವಾಗಿದ್ದಿತೇ? ಎಂಬ ಅನುಮಾನವೂ ಕೆಲವು ಸಂಶೋಧಕರನ್ನು ಕಾಡಿದೆ. ರಾಜತ್ವದ ಮೌಲ್ಯಗಳನ್ನೇ ಸಾಂಸ್ಕೃತಿಕ
ಮೌಲ್ಯಗಳೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಸ್ಕೃತಿಯನ್ನು
ಚರಿತ್ರೆಯ ಒಂದು ಭಾಗವೆಂದು ಪರಿಗಣಿಸಿದರೆ ಅದು ಕೇವಲ ರಾಜರ ಚರಿತ್ರೆಯಷ್ಟೇ ಅಲ್ಲವೇ. ಇದರಿಂದಾಗಿ
ಸಂಸ್ಕೃತಿಯ ಪರಿಪೂರ್ಣ ಅಧ್ಯಯನ ಆಯಿತೇ? ಎಂಬ ಪ್ರಶ್ನೆಯು ನಮ್ಮ
ಮುಂದಿದೆ.
ಶಾಸನಗಳ ಸಾಂಸ್ಕೃತಿಕ ಅಧ್ಯಯನ ಇಂದು
ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿದೆ. ಕೆಲವು ಅರೆಕೊರೆಗಳಿದ್ದರೂ ಇಂದು ಈ ಅಧ್ಯಯನದಲ್ಲಿ
ಸಮಾಜ ಸಮ್ಮತ ಆಚಾರ-ವಿಚಾರಗಳ ಅಧ್ಯಯನ ಬಲಗೊಳ್ಳುತ್ತಿರುವುದು ಆಶಾದಾಯಕವಾಗಿದೆ. ಇತ್ತೀಚೆಗೆ
ಹಲವಾರು ಸಂಶೋಧಕರು ಎಡಪಂಥೀಯ ಗುಣನಿಷ್ಠ ಪ್ರಕಾರದ ಸಂಶೋಧನಾ ಚಟುವಟಿಕೆಗಳಲ್ಲಿ ಆಸಕ್ತಿ
ವಹಿಸಿದ್ದಾರೆ. ಇವರು ಶಾಸನಗಳಂತಹ ಆಕರಗಳನ್ನು ಕುರಿತ ಸಾಂಸ್ಕೃತಿಕ ಅಧ್ಯಯನದಲ್ಲಿ ಮಾಹಿತಿಗಳನ್ನು
ಯಜಮಾನ್ಯ ದೃಷ್ಟಿಯಿಂದ ಪರಿಗಣಿಸದೆ ಜನಪರ ದೃಷ್ಟಿಯಿಂದ ಗ್ರಹಿಸುವ, ಆ ಘಟನೆಗಳ ಹಿಂದೆ
ಅಡಗಿರುವ ನೋವಿನ ನೆಲೆಗಳನ್ನು ಅರಸುವ ಇತ್ಯಾದಿ ಹೊಸ ದೃಷ್ಟಿಕೋನಗಳತ್ತ ಕೇಂದ್ರೀಕರಿಸಿದ್ದಾರೆ.
ಹೀಗಾಗಿ ಇವರ ಸಂಶೋಧನೆಯಲ್ಲಿ ಇಲ್ಲಿಯವರೆಗಿನ ಶಾಸನಗಳು ನೀಡಿರುವ ಸಂಗತಿಗಳ ಕುರಿತ ಮರು
ವ್ಯಾಖ್ಯಾನವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ವೈಚಾರಿಕ ಶೋಧ ಎನಿಸಿದೆ. ಆಕರಗಳ ಕುರಿತ
ಇವರ ವೈಚಾರಿಕ ಶೋಧವು ವಿಮರ್ಶೆಯ ಬರವಣಿಗೆಯನ್ನು ಸಮೀಪಿಸುತ್ತಿದೆ ಎಂದೇಳಬಹುದಾಗಿದೆ. ಭಾಷಾ
ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಷರು ಮತ್ತು ಆರ್ಥಿಕ ತಜ್ಷರುಗಳಿಗೆ
ಶಾಸನ ಕ್ಷೇತ್ರವು ಮುಕ್ತವಾಗಿ ತೆರೆದುಕೊಂಡಿತು. ಶಾಸನಗಳ ಅಧ್ಯಯನಕಾರರೂ ಕೂಡ ಬಹು ಆಕರಗಳ ಬಳಕೆಗೆ
ಮುಂದಾಗಿ ಕೊಳ್ಳುವ ಕೊಡುವ ಪ್ರಕ್ರಿಯೆ ಬೆಳೆದು ಆರೋಗ್ಯ ಪೂರ್ಣ ಚರ್ಚೆ ಸಾಧ್ಯವಾಗಿದೆ. ಇತ್ತೀಚಿನ
ದಿನಗಳಲ್ಲಿ ಶಾಸನ ಆಕರಗಳಿಗೆ ಅಂಟಿದ್ದ ಮಡಿವಂತಿಕೆ ದೂರವಾಯಿತು. ಈ ಹಂತದಲ್ಲೂ ಹಿಂದಿನಂತೆಯೇ ಹೊಸ
ಶಾಸನಗಳ ಪಾಠ ಪ್ರಕಟಣೆ, ವರ್ಗೀಕೃತ ವಿಂಗಡನೆಗಳು ನಡೆಯುತ್ತಲೇ ಬಂದಿವೆ.
ಪ್ರತಿನಿತ್ಯ ಹಲವು ಹೊಸ ಶಾಸನಗಳು ಬೇರೆ ಬೇರೆ ಮೂಲಗಳಲ್ಲಿ ಪ್ರಕಟವಾಗುತ್ತವೆ. ಇವುಗಳನ್ನು
ಬಳಸಿಕೊಂಡು ವಿಮರ್ಶಾತ್ಮಕವಾಗಿ ಅಧ್ಯಯನ ನಡೆಸುವವರೂ ಹೆಚ್ಚುತ್ತಿದ್ದಾರೆ. ಈ ವಿಷಯದಲ್ಲಿ
ಕರ್ನಾಟಕದ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ.
೭. ಶಾಸನಾಧ್ಯಯನದ ಸಾಧ್ಯತೆಗಳು
ಅನೇಕ ಹೊಸ ರೀತಿಯ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ ಎಂಬ
ತೃಪ್ತಿಯ ನಡುವೆಯೂ ಇನ್ನೂ ಸಾಧಿಸುವುದು ಬಹಳವಿದೆಂಬುದೂ ಮನವರಿಕೆಯಾಗುತ್ತಿದೆ.
ಅಧ್ಯಯನಕ್ಕೊಳಗಾಗಬೇಕಾದ ಹಲವಾರು ವಿಷಯಗಳು ಶಾಸನಗಳಲ್ಲಿ ಹುದುಗಿ ಕುಳಿತಿವೆ. ಅವುಗಳ ಬಗ್ಗೆ
ಒಂದಿಷ್ಟು ಗಮನ ಹರಿಸಬಹುದು. ಶಾಸನಗಳು ಯಾವುದೋ ಒಂದು ಕಾಲದ ರಾಜಕೀಯ ವಿಷಯವನ್ನೋ ಒಂದು
ಘಟನೆಯನ್ನೋ ಅಥವಾ ಯಾರದೋ ಬಲಿದಾನವನ್ನು ಕುರಿತೋ ಹೇಳುತ್ತಿದ್ದಿರಬಹುದು. ಆದರೆ ಅವು ಇಂದಿಗೂ
ನಮ್ಮ ಗ್ರಾಮ್ಯ ಸಮಾಜದಲ್ಲಿ ಜನರೊಡನೆ ಇವೆ. ಅವುಗಳಲ್ಲಿ ಏನಿದೆಯೆಂಬ ತಿಳುವಳಿಕೆಯಿಲ್ಲದ್ದಿದ್ದರೂ,
ಅವುಗಳ ಬಗೆಗೆ ತಮ್ಮದೇ ಆದ ಕಥೆಗಳು,ವಾದಗಳನ್ನು ಮತ್ತು
ಅನೇಕ ಕಲ್ಪನೆಯನ್ನು ಹೊಂದಿರುತ್ತಾರೆ. ಎಷ್ಟೋ ಶಾಸನಗಳು, ವೀರಗಲ್ಲು
ಮಾಸ್ತಿಕಲ್ಲುಗಳು ಗ್ರಾಮದೇವತೆಗಳಾಗಿ ಕುಲದೈವಗಳಾಗಿ ಮಾರ್ಪಾಟಾಗಿವೆ. ಅವುಗಳ ಬಗ್ಗೆ ಜನರಿಗೆ
ಭಯಭಕ್ತಿ ಇವೆ.ಆಯಾ ಜನಗಳ ತಿಳಿವಳಿಕೆಗಳಿಗನುಗುಣವಾಗಿ ಅವುಗಳೊಡನೆ ವ್ಯವಹರಿಸುತ್ತಾರೆ. ಒಬ್ಬ
ಇತಿಹಾಸಕಾರನಿಗೆ ಅಥವಾ ಅದರ ಬಗ್ಗೆ ಜ್ಞಾನವಿರುವವನಿಗೆ ಅವು ಕೇವಲ ಒಂದು ಬರಹದ ಕಲ್ಲು ಅಥವಾ ಅವರ
ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ. ಅವುಗಳೊಂದಿಗೆ ತಲೆ ತಲಾಂತರದಿಂದ ಅವಿನಾಭಾವ ಸಂಬಂಧ
ಹೊಂದಿರುತ್ತಾನೆ. ಈ ಪರಿಣಾಮವಾಗಿ ಪ್ರತಿಯೊಬ್ಬರೂ ಶಾಸನಗಳನ್ನು ಕುರಿತು ತಮ್ಮದೇ ಆದ
ಭಾವನೆಗಳನ್ನು ಬೆಳೆಸಿಕೊಂಡಿರುತ್ತಾರೆ. ಈ ಭಾವನೆಗಳ ಅಧ್ಯಯನ ನಡೆಸಿದರೆ ಗ್ರಾಮ್ಯ ಸಮಾಜದ ಕಲ್ಪನಾ
ಜಗತ್ತನ್ನು ಪ್ರವೇಶಿಸಬಹುದಾಗಿದೆ. ಪೂರ್ವಿಕರ ನಿರ್ಮಾಣಗಳು ಈಗಿನವರಲ್ಲಿ ಹೇಗೆ
ಪ್ರಸ್ತುತ-ಅಪ್ರಸ್ತುತವಾಗಿದೆಯೆಂಬ ವಿವರಗಳು ದೊರಕುತ್ತವೆ. ಗ್ರಾಮೀಣರ ಅನಕ್ಷರಸ್ಥರ ಮುಗ್ಧಲೋಕದ
ಪರಿಚಯವಾಗುತ್ತದೆ. ಈ ಮೂಲಕ ಐತಿಹಾಸಿಕ ಸ್ಮಾರಕಗಳು ಮತ್ತು ಸ್ಥಳೀಯರ ನಡುವಿನ ಸಂಬಂಧಗಳನ್ನು
ಅಧ್ಯಯನ ಮಾಡಬಹುದು.
ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿರುವ
ದಾನ ಶಾಸನಗಳ ಬಗ್ಗೆಯೂ ಇನ್ನೂ ವಿಪುಲವಾದ ಅಧ್ಯಯನಗಳಿಗೆ ಅವಕಾಶವಿದೆ. ದಾನಶಾಸನಗಳ ಪ್ರಯೋಜನದ
ಮುಖ್ಯ ವರ್ಗ ಪುರೋಹಿತವರ್ಗ ದಾನ ಪ್ರಕ್ರಿಯೆಯಲ್ಲಿ, ಇವರ ಪ್ರಾಬಲ್ಯಕ್ಕೆ ಕಾರಣಗಳೇನು? ಇದರ ಪರಿಣಾಮ ಸಮಾಜದ ಮೇಲೆ ಯಾವ ರೀತಿ ಆಯಿತು? ಎಂಬ ಅಧ್ಯಯನ
ನಡೆಸಬೇಕಾಗಿದೆ.
ವಲಸೆ ಅಥವಾ ಗುಳೇ ಹೋಗುವುದು ಮಾನವನ ಸಹಜ
ಪ್ರಕ್ರಿಯೆ. ಅವನು ಸುಲಭ ಬದುಕಿನ ನಿರ್ವಹಣೆಗೆ ಸೂಕ್ತ ಸ್ಥಳಗಳಿಗೆ ವಲಸೆ ಹೋಗುವುದು ಅನಾದಿ
ಕಾಲದಿಂದಲೂ ನಡೆದಿದೆ. ಈ ರೀತಿಯ ವಲಸೆಗೆ ಕಾರಣಗಳು ಹಾಗೂ ಅದರಿಂದ ಉಂಟಾದ ಪರಿಣಾಮಗಳ ವಿವರ
ಶಾಸನಗಳಲ್ಲಿ ಕೆಲವೆಡೆ ದೊರೆಯುತ್ತದೆ. ಇಂತಹ ವಿವರಗಳನ್ನುಳ್ಳ ಶಾಸನಗಳನ್ನು ವ್ಯವಸ್ಥಿತವಾಗಿ
ಅಧ್ಯಯನ ಮಾಡಬಹುದಾಗಿದೆ. ಶಾಸನಗಳಲ್ಲಿ ಹಲವಾರು ಕುಲಕಸುಬುಗಳ ವಿವರಗಳು ದೊರೆಯುತ್ತವೆ. ನಾಯಿಂದರು,ಕುಂಬಾರರು,
ಪಾತರದವರು, ಅಡ್ಡರು, ಬೋವಿಗಳು,
ಅಗಸರು, ಆಚಾರಿಗಳು, ಗಾಣಿಗರು,
ತೋಟಿಗರು, ತಳವಾರರು, ಇನ್ನೂ
ಮುಂತಾದವರ ಬಗ್ಗೆ ಶಾಸನಗಳಲ್ಲಿ ದೊರಕುವ ಮಾಹಿತಿಗಳನ್ನಾಧರಿಸಿ ಅಧ್ಯಯನ ನಡೆಸಬೇಕಾಗಿದೆ
ಪಶುಗಳು ನಮ್ಮ ಪೂರ್ವಿಕರ ಮುಖ್ಯ ಸಂಪತ್ತು. ಪಶುಗಳನ್ನು
ಹೊರತುಪಡಿಸಿದ ಗ್ರಾಮೀಣ ಸಮಾಜದ ಊಹೆ ಅಸಾಧ್ಯ. ಅವುಗಳ ರಕ್ಷಣೆಗಾಗಿ ಹೋರಾಡಿ ಮಡಿದ ನೂರಾರು ಜನರ
ಸ್ಮಾರಕಗಳು (ಗೋಗ್ರಹಣ),
ಶಾಸನಗಳು ದೊರಕಿವೆ. ಇವುಗಳನ್ನು ಆಧರಿಸಿ ಪೂರ್ವಿಕರ ಮತ್ತು ಪಶುಗಳ ಗಾಢ ಸಂಬಂಧದ
ಬಗ್ಗೆ ವ್ಯಾಪಕ ಅಧ್ಯಯನ ನಡೆಸಬಹುದಾಗಿದೆ.
ಕೊಡಗು ಪ್ರದೇಶದಲ್ಲಿ ಮತ್ತು ಬಾಗಲಕೋಟೆ ಜಿಲ್ಲೆಯ
ಕಲಾದಗಿಯಲ್ಲಿ ದೊರೆಯುವ ಬ್ರಿಟಿಷರ ಶಾಸನಗಳನ್ನು ಆಧರಿಸಿ ವಸಾಹತುಶಾಹಿ ಪರಿಣಾಮಗಳನ್ನು
ಅಭ್ಯಸಿಸಬಹುದಾಗಿದೆ. ಇವುಗಳ ಬಗ್ಗೆ ಯಾರೂ ಗಮನ ಹರಿಸಿಲ್ಲ. ನೂರಾರು ಶಾಸನಗಳಲ್ಲಿ ಮುಸಲ್ಮಾನರ
ಚಿತ್ರಣ ಕಂಡುಬರುತ್ತದೆ. ಆ ವಿವರಗಳಲ್ಲಿ ಸೈನಿಕರಾಗಿ, ಅಧಿಕಾರಿಗಳಾಗಿ ಊರಿನ ಮುಖಂಡರಾಗಿ, ಪರೋಪಕಾರಿಗಳಾಗಿ ಕಂಡುಬರುವವರ ಚಿತ್ರಣವು ಇದೆ. ಕೊಡಗಿನ ಕುಂದ ಗ್ರಾಮದ ಜಹಗೀರನಾದ ಹಯತ್
ಖಾನ್ ಸಾಬಿಯು ಬೆಟ್ಟ÷ ಮಹಾದೇವ ದೇವಾಲಯಕ್ಕೆ ನಂದಿಯ ವಿಗ್ರಹವನ್ನು ಮಾಡಿಸಿದ ವಿಷಯ
ತಿಳಿಸುವ ಶಾಸನವೊಂದಿದೆ. ಇಂತಹ ವಿವರಗಳ ಅಧ್ಯಯನಗಳು ಆಗಿ ಕಾಲದ ಕೋಮುಸೌಹಾದ್ರತೆಯ
ಪ್ರತೀಕಗಳಾಗಿವೆ.ಇಂತಹವುಗಳ ಅಧ್ಯಯನ ಆಧುನಿಕ
ಕಾಲಕ್ಕೆ ಹೆಚ್ಚು ಪ್ರಸ್ತುತವಾದವುಗಳಾಗಿವೆ.
ಯುದ್ಧದ ಸ್ಥಳದಲ್ಲಿದ್ದ ಸ್ತ್ರೀಯರ ಮಾನ-ಪ್ರಾಣ ಎರಡೂ
ಹರಣವಾಗುತ್ತಿದ್ದವೆಂಬುದಕ್ಕೆ ಪೆಣ್ಬುಯ್ಯಲ್ ಶಾಸನಗಳು ಸಾಕ್ಷಿಯಾಗಿವೆ. ಪೆಣ್ಬುಯ್ಯಲ್ ಶಾಸನಗಳ
ಅಧ್ಯಯನದಿಂದ ಸಾಮಾನ್ಯರ ಜನ ಜೀವನದ ಮೇಲೆ ಅದರಲ್ಲೂ ಸ್ತ್ರೀಯರ ಬದುಕಿನ ಮೇಲೆ ಯಾವ ರೀತಿಯ
ಪರಿಣಾಮಗಳಾಗುತ್ತಿದ್ದವೆಂಬುದನ್ನು ತಿಳಿಯಬಹುದಾಗಿದೆ.
ಪುರಾತತ್ವ
ಶೋಧನೆಯಲ್ಲಿ ಪ್ರಾಚೀನ ಸ್ಥಳಗಳು, ಭೂಗತ ದೇವಾಲಯಗಳ ಉತ್ಖನನಕ್ಕೆ ಶಾಸನಗಳಿಂದ ಅಪಾರ
ಮಾಹಿತಿ ಲಭ್ಯವಾಗಿದೆ. ಒಂದು ಸ್ಥಳದ ಪ್ರಾಚೀನತೆಯನ್ನರಿಯಲು ಶಾಸನಗಳು ಇಂದಿಗೂ ಪ್ರಮುಖ
ಆಕರವಾಗಿವೆ. ಸನ್ನತಿ, ಚಂದ್ರವಳ್ಳಿ, ಗುಡ್ನಾಪುರ
ತಾಳಗುಂದ, ಬಳ್ಳಿಗಾವೆ, ಹಂಪಿಯ ಉತ್ಖನನಗಳಿಗೆ
ಶಾಸನಗಳೇ ಪ್ರೇರಣೆಗಳಾಗಿವೆ. ಪ್ರಾಚ್ಯಸ್ಥಳಗಳ ಬಗೆಗೆ ಮಾಹಿತಿ ನೀಡುವ ನೂರಾರು ಶಾಸನಗಳಿವೆ.
ಇವುಗಳ ಸೂಕ್ಷ್ಮ ಅಧ್ಯಯನದಿಂದ ಪುರಾತತ್ವ ಶೋಧನೆಗಳನ್ನು ನಡೆಸಬಹುದು.
ಶಾಸನಗಳ ಸಾಂಸ್ಕೃತಿಕ ಅಧ್ಯಯನ ಇಂದು ಬಹುಶಿಸ್ತೀಯ
ಅಧ್ಯಯನವಾಗಿ ಬೆಳೆಯುತ್ತಿದೆ. ಕೆಲವು ಅರೆಕೊರೆಗಳಿದ್ದರೂ ಇಂದು ಈ ಅಧ್ಯಯನದಲ್ಲಿ ಸಮಾಜ ಸಮ್ಮತ
ಆಚಾರ-ವಿಚಾರಗಳ ಅಧ್ಯಯನ ಬಲಗೊಳ್ಳುತ್ತಿರುವುದು ಆಶಾದಾಯಕವಾಗಿದೆ. ಇತ್ತೀಚೆಗೆ ಹಲವಾರು ಸಂಶೋಧಕರು
ಎಡಪಂಥೀಯ ಗುಣನಿಷ್ಠ ಪ್ರಕಾರದ ಸಂಶೋಧನಾ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಾರೆ. ಇವರು
ಶಾಸನಗಳಂತಹ ಆಕರಗಳನ್ನು ಕುರಿತ ಸಾಂಸ್ಕೃತಿಕ ಅಧ್ಯಯನದಲ್ಲಿ ಮಾಹಿತಿಗಳನ್ನು ಯಜಮಾನ್ಯ
ದೃಷ್ಟಿಯಿಂದ ಪರಿಗಣಿಸದೆ ಜನಪರ ದೃಷ್ಟಿಯಿಂದ ಗ್ರಹಿಸುವ, ಆ ಘಟನೆಗಳ ಹಿಂದೆ ಅಡಗಿರುವ ನೋವಿನ
ನೆಲೆಗಳನ್ನು ಅರಸುವ ಇತ್ಯಾದಿ ಹೊಸ ದೃಷ್ಟಿಕೋನಗಳತ್ತ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಇವರ
ಸಂಶೋಧನೆಯಲ್ಲಿ ಇಲ್ಲಿಯವರೆಗಿನ ಶಾಸನಗಳು ನೀಡಿರುವ ಸಂಗತಿಗಳ ಕುರಿತ ಮರು ವ್ಯಾಖ್ಯಾನವು
ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ವೈಚಾರಿಕ ಶೋಧ ಎನಿಸಿದೆ. ಆಕರಗಳ ಕುರಿತ ಇವರ ವೈಚಾರಿಕ ಶೋಧವು
ವಿಮರ್ಶೆಯ ಬರವಣಿಗೆಯನ್ನು ಸಮೀಪಿಸುತ್ತಿದೆ ಎಂದೇಳಬಹುದಾಗಿದೆ.
ಇತ್ತೀಚಿನ ದಿವಸಗಳಲ್ಲಿಯ ಶಾಸನಗಳ ಅಧ್ಯಯನದ ಮುಖ್ಯ
ಕೊರತೆಯೆಂದರೆ, ನಡೆದಿರುವ ಬಹುತೇಕ ಅಧ್ಯಯನಗಳು ಇನ್ನೂ ಪುಸ್ತಕ ರೂಪದಲ್ಲಿ ಪ್ರಕಟವಾಗದೇ ಇರುವುದರಿಂದ
ಹೊಸ ರೀತಿಯಲ್ಲಿ ನಡೆದ ಅಧ್ಯಯನಗಳು ಓದುಗರಿಗೆ ತಲುಪಿಯೇ ಇಲ್ಲ. ಶಾಸನಗಳನ್ನು ಸಾಂದರ್ಭಿಕವಾಗಿ
ಬಳಸಿಕೊಂಡು ನಡೆಸಿರುವ ನೂರಾರು ಅಧ್ಯಯನಗಳು ಇನ್ನೂ ಪ್ರಕಟವಾಗಿಲ್ಲದ ಕಾರಣದಿಂದಾಗಿ ಅನೇಕ
ಅಧ್ಯಯನಗಳು ವಿಶ್ವವಿದ್ಯಾಲಯಗಳಲ್ಲಿಯ ಎಂ.ಫಿಲ್.
ಹಾಗೂ ಪಿಎಚ್.ಡಿ. ಪದವಿಯ ನಿಮಿತ್ತದ ಸಂಶೋಧನೆಗಳು ಪುನರಾವರ್ತನೆಯಾಗುತ್ತಿವೆ. ಆದರೂ ಈ
ಅವಧಿಯಲ್ಲಿ ಹೆಚ್ಚು ಉತ್ಸಾಹದಾಯಕವಾಗಿಯೇ
ಫಲಿತಾಂಶಗಳು ಬಂದಿವೆ.
ಪರಾಮರ್ಶನ
ಗ್ರಂಥಗಳು
೧.ಎಂ.ಎಂ.ಕಲಬುರ್ಗಿ,
ಅ. ಕನ್ನಡ
ಸಂಶೋಧನಾ ಶಾಸ್ತ್ರ, ಸೌಜನ್ಯ ಪ್ರಕಾಶನ
ಧಾರವಾಡ, ೧೯೯೨
ಬ.ಮಾರ್ಗ ಸಂ.೨, ನರೇಶ್ ಬುಕ್ ಆಂಡ್ ಕಂಪನಿ
ಬೆಂಗಳೂರು,೧೯೮೮
೨..
ಶ್ರೀಮುಖ ( ಟಿ.ವಿ.ವೆಂಕಟಾಚಲಶಾಸ್ತ್ರಿ ಅವರ
ಅಭಿನಂದನ ಗ್ರಂಥ )
ಸಂ:ಪ್ರಧಾನ ಗುರುದತ್ತ ಮತ್ತು ಇತರರು
ಮೈಸೂರು, ೧೯೯೭
೩.
ಮಹಾಮಾರ್ಗ ( ಎಂ.ಎಂ.ಕಲಬುರ್ಗಿ ಅವರ ಅಭಿನಂದನಾ ಗ್ರಂಥ)
ಸಂ: ಸದಾನಂದ ಕನವಳ್ಳಿ ಮತ್ತುವೀರಣ್ಣ
ರಾಜೂರ
ಗದಗ, ೧೯೯೮
೪.
ಸಿ.ನಾಗಭೂಷಣ:
ಅ.ಕನ್ನಡ ಸಾಹಿತ್ಯ- ಸಂಸ್ಕೃತಿ ಶೋಧನೆ ಅಮೃತ ವರ್ಷಿಣಿ ಪ್ರಕಾಶನ
ನಂದಿಹಳ್ಳಿ -
ಸೊಂಡೂರು, ೧೯೯೯
ಬ.ಸಾಹಿತ್ಯ-ಸಂಸ್ಕೃತಿ ಹುಡುಕಾಟ ಅಮೃತ ವರ್ಷಿಣಿ ಪ್ರಕಾಶನ
ಯರಗೇರ -
ರಾಯಚೂರು, ೨೦೦೨
ಕ. ಶಾಸನಗಳು ಮತ್ತು ಕನ್ನಡ ಸಾಹಿತ್ಯ ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ-೨೦೦೫
ಡ. ಕನ್ನಡದಲ್ಲಿ ಸಂಶೋಧನೆ: ಸಮೀಕ್ಷೆ, ಶ್ರೀ. ಸಿದ್ಧಲಿಂಗೇಶ್ವರ ಪ್ರಕಾಶನ
ಸರಸ್ವತಿ ಗೋದಾಮ ಗುಲಬರ್ಗಾ- ೨೦೦೬
ಮ. ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ, ಸಿ.ವಿ.ಜಿ.
ಪಬ್ಲಿಕೇಶನ್ಸ್, ಬೆಂಗಳೂರು-೨೦೦೭,
೫.
ಡಿ.ವಿ.ಪರಮಶಿವಮೂರ್ತಿ:ಶಾಸನಾಧ್ಯಯನದ ಸಾಧ್ಯತೆಗಳು(ಲೇಖನ)
ಕರ್ನಾಟಕ ಪ್ರಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳ
ಮರುಚಿಂತನೆ
ಸಂ: ರಮೇಶ ನಾಯಕ,ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ,
ಹಂಪಿ. ೨೦೦೭
೬.ಶಾಸನ
ಅಧ್ಯಯನ ಸಂ:ಕೆ.ಜಿ.ಭಟ್ಟಸೂರಿ
ಸಂ.೩.ಸಂ.೪, ,ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.ಡಿಸೆಂಬರ್ ೨೦೦೬