ಸೋಮವಾರ, ಡಿಸೆಂಬರ್ 15, 2025

 ಡಾ.ಸಿ.ವೀರಣ್ಣ ಅವರ  ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಮಧ್ಯಕಾಲೀನ ಸಾಹಿತ್ಯ ರಾಜಸತ್ತೆಯ ಪುನಶ್ಚೇತನ ಕಾಲ ಸಂಪುಟದ ಸ್ವರೂಪ ಮತ್ತು ಅಧ್ಯಯನ ವಿಧಾನದ ಇತಿಹಾಸದ ತಾತ್ವಿಕ ನಿಲುವುಗಳು

                                      ಡಾ.ಸಿ.ನಾಗಭೂಷಣ

   ಕನ್ನಡನಾಡಿನ  ಸಾಹಿತ್ಯ ಚರಿತ್ರೆಗೆ ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗಿರುವ ಸಾಮಾನ್ಯ ಸ್ವರೂಪವಿದೆ. ತನ್ನದೇ ಆದ ವಿಶಿಷ್ಟ ಸ್ವರೂಪವೂ ಇದೆ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘವಾದ ಪರಂಪರೆಯಿದೆ, ಸಾವಿರಾರು ಕವಿಗಳ ವೈವಿಧ್ಯಪೂರ್ಣವಾದ ಕೊಡುಗೆ ಇದೆ.  ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ  ಪೂರ್ಣ ದರ್ಶನವಾಗಬೇಕಾದರೆ ಈ ಎಲ್ಲ ಮಗ್ಗುಲಿನತ್ತ ಕ್ಷ-ಕಿರಣವನ್ನು ಬೀರಿ ಬಿಡಿಯಾಗಿ ಇಡಿಯಾಗಿ ಮಾತಿನಲ್ಲಿ ಮೂಡಿಸಬೇಕಾಗುತ್ತದೆ.  ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪವು  ಉಪಲಬ್ಧವಾದ ಎಲ್ಲ ಸಾಮಗ್ರಿಯನ್ನು ಬಳಸಿಕೊಂಡು ಚಾರಿತ್ರಿಕವಾಗಿ ಅದರ ಕೂಲಂಕಷವಾದ ವಿವೇಚನೆಮಾಡಿ ವಿಮರ್ಶಾತ್ಮಕ ದೃಷ್ಟಿಯಿಂದ ಅದನ್ನು ತೂಗಿ ಬೆಲೆ ಕಟ್ಟುವುದಾಗಿರುವುದು ಎಲ್ಲರೂ ತಿಳಿದಿರತಕ್ಕ ಸಂಗತಿಯಾಗಿದೆ.  ಕನ್ನಡ ಸಾಹಿತ್ಯದ ಪ್ರೇರಣೆ, ಪ್ರಭಾವ-ಪ್ರವೃತ್ತಿಗಳನ್ನು ಗುರುತಿಸುವಾಗ, ಕವಿಗಳ ಕಾವ್ಯಗಳ ನೆಲೆಬೆಲೆಗಳನ್ನು ವಿವರಿಸುವಾಗ ಸಹಜವಾಗಿ ಸಾಹಿತ್ಯ ಚರಿತ್ರೆಯಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವು ಪ್ರಮುಖ ಎಂದೆನಿಸುತ್ತದೆ.  ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಿಂದಿನಿಂದ ಇಂದಿನವರೆಗೆ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯಗಳ ಸಮಗ್ರ ನಿರೂಪಣೆಯ ವಿಶ್ಲೇಷಣೆಯ ಸಂಕ್ಷಿಪ್ತವಾಗಿ ಮತ್ತು ಕೆಲವಡೆ ಸಾಂಸ್ಥಿಕ ಮಟ್ಟದಲ್ಲಿ ವಿಸ್ತೃತವಾಗಿ ವಿವರಿಸಿರುವುದನ್ನು ಕಾಣಬಹುದು.  ಆಧುನಿಕ ಕಾಲದ ಆರಂಭದಲ್ಲಿ ಕ್ರೆೈಸ್ತಮಿಶನರಿ ವಿದ್ವಾಂಸರು ಅಂದು ಅವರಿಗೆ ದೊರೆತ ಸಾಮಗ್ರಿಯನ್ನು ಉಪಯೋಗಿಸಿ ಕನ್ನಡ ಸಾಹಿತ್ಯದ ಪರಿಚಯವನ್ನು ಇಂಗ್ಲಿಷಿನಲ್ಲಿ ಸಂಕ್ಷಿಪ್ತವಾಗಿ ಮಾಡಿಕೊಟ್ಟರು.  ಅವುಗಳನ್ನು ಚರಿತ್ರೆಯೆಂದಾಗಲಿ ಸಮಿಕ್ಷೆಯೆಂದಾಗಲಿ ಕರೆಯುವುದು ಸೂಕ್ತವಾಗದು.  ಆ ಅವಧಿಯಲ್ಲಿ ಕ್ರೆೈಸ್ತ ಮಿಷನರಿಗಳಿಗೆ ಲಭ್ಯವಿದ್ದ  ಸಾಮಗ್ರಿಯೂ ತೀರ ಸ್ವಲ್ಪವಾಗಿತ್ತು.  ಆರಂಭಕಾಲದಲ್ಲಿ ಸಾಹಿತ್ಯ ಚರಿತ್ರೆಯನ್ನು ಬರೆಯಲು  ಹೊರಟ ದೇಸಿ ವಿದ್ವಾಂಸರಿಗೆ, ಕವಿಕೃತಿಗಳ ಹಸ್ತಪ್ರತಿಗಳು, ಪೋಷಕವಾಗಿ ಶಿಲಾಶಾಸನಗಳು ಮತ್ತು ಅನ್ಯಭಾಷೆಯ ಕೃತಿಗಳು ತೀರ ಸ್ವಲ್ಪವಾಗಿ ಲಭ್ಯವಿದ್ದವು. ಆದಾಗ್ಯೂ ಕನ್ನಡ ಸಾಹಿತ್ಯ ಚರಿತ್ರೆಯನ್ನು ತಿಳಿದುಕೊಳ್ಳ ಬೇಕು, ಬರೆದಿಡಬೇಕು ಎನ್ನುವ ಆಕಾಂಕ್ಷೆಯಿಂದ ಅಲ್ಪವಾಗಿ ದೊರೆತಿದ್ದ ಕವಿಕೃತಿಗಳ ಹಸ್ತಪ್ರತಿಗಳನ್ನು ಅವು ಅಶುದ್ಧವಾಗಿದ್ದರೂ, ಅಪೂರ್ಣವಾಗಿದ್ದರೂ ನಿಷ್ಠೆ ಮತ್ತು ಪರಿಶ್ರಮದಿಂದ ಅವುಗಳನ್ನು ಬಳಸಿಕೊಂಡು ವಿಷಯ ಸಂಗ್ರಹ ಮಾಡಿ  ಜೋಡಿಸಿ ಕೊಡುವ ಪ್ರಯತ್ನ ಮಾಡಿದರು. ಈ ನಿಟ್ಟಿನಲ್ಲಿ ಆರ್. ನರಸಿಂಹಾಚಾರ್ ಅವರ ‘ಕರ್ಣಾಟಕ ಕವಿಚರಿತೆ’ ಪ್ರಥಮ ಸಂಪುಟ ೧೯೦೭ರಲ್ಲಿ ಪ್ರಕಟವಾಯಿತು.  ದ್ವಿತೀಯ, ತೃತೀಯ ಸಂಪುಟಗಳು ೧೯೧೯, ೧೯೨೯ರಲ್ಲಿ ಪ್ರಕಟವಾದುವು.  ಬಹು ದೊಡ್ಡ ಪ್ರಮಾಣದ ಮೇಲೆ ‘ಕವಿಚರಿತೆ’ ಎಂಬುದು ಈ ಮೂರು ಸಂಪುಟಗಳಲ್ಲಿ ಸಂಕಲನಗೊಂಡು  ಕನ್ನಡಿಗರಿಗೆ ಉಪಯುಕ್ತತೆಯನ್ನು ಮಾಡಿತು.  ಇದರಲ್ಲಿ ಕಾಲಾನುಕ್ರಮದಲ್ಲಿ ಕನ್ನಡ ಕವಿಗಳ ಬಗ್ಗೆ ಅಂದಿನವರೆಗೆ ತಿಳಿದೆಲ್ಲ ವಿಷಯಗಳು ಅಡಕವಾಗಿವೆ.  ಆದರೆ ಈ ಕವಿಚರಿತೆಯು ಪೂರ್ಣ ಅರ್ಥದಲ್ಲಿ ಸಾಹಿತ್ಯ ಸಮಿಕ್ಷೆಯೂ ಆಗಲಿಲ್ಲ, ಸಾಹಿತ್ಯ ಚರಿತ್ರೆಯ ಉದೇಶವೂ ಆಗಿರಲಿಲ್ಲ. ಆದರೆ ನಂತರದ ವೈಯಕ್ತಿಕ ಹಾಗೂ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ನಿರ್ಮಾಣಕ್ಕೆ ಸೂಕ್ತವಾದ ವೇದಿಕೆಯನ್ನು ಒದಗಿಸಿತು. ಅದರಲ್ಲಿ ಬಂದಿರುವ ಮತ್ತು ಆಮೇಲೆ ದೊರಕಿದ ಸಾಮಗ್ರಿಯನ್ನು ಉಪಯೋಗಿಸಿ ಸಂಕ್ಷಿಪ್ತ ವಿಸ್ತೃತ, ಜನಪ್ರಿಯ - ಪ್ರೌಢ ಹೀಗೆ ಸಾಹಿತ್ಯ ಚರಿತ್ರೆಗಳು ಕನ್ನಡದಲ್ಲಿ ಇಲ್ಲಿಯವರೆಗೂ ಪ್ರಕಟವಾಗಿವೆ.  ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಕುರಿತು ಕೆಲವು ಲೇಖನಗಳೂ ಪ್ರಕಟವಾಗಿವೆ. ಇಷ್ಟಾದರೂ ಉಪಲಬ್ಧ ಎಲ್ಲಾ ಸಾಮಗ್ರಿಯನ್ನು ಎತ್ತಿಕೊಂಡು ಅದನ್ನು ಸಾದ್ಯಂತವಾಗಿ ವಿಶ್ಲೇಷಿಸಿ ವಿಮರ್ಶಾತ್ಮಕ ದೃಷ್ಟಿಯಿಂದ ಪರೀಕ್ಷಿಸಿ ಅವಶ್ಯವಿದ್ದ ವಿಸ್ತಾರವನ್ನು ಪಡೆದ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಅಗತ್ಯವು ಇಂದಿಗೂ ಉಳಿದುಕೊಂಡು ಬಂದಿದೆ. ಹಾಗಾಗಿ ಇನ್ನೂ ಸಾಹಿತ್ಯ ಚರಿತ್ರೆಯ ರಚನೆ ಮುಂದುವರೆದುಕೊಂಡು ಬಂದಿದ್ದು ಅದಕ್ಕೆ ಸಿ.ವೀರಣ್ಣ ಅವರ ಈ ಸಾಹಿತ್ಯ ಚರಿತ್ರೆ ೩ ನೇ ಸಂಪುಟವು ನಿದರ್ಶನವಾಗಿದೆ.

    ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕುರಿತು ಕೆಲಮಟ್ಟಿನ ಚಿಂತನೆ ಈವರೆಗೆ ನಡೆದಿದೆ.  ಸಾಹಿತ್ಯವನ್ನು ಸೃಷ್ಟಿಸಿರುವ ಕವಿಗಳ ಕಾಲ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ಸಂಗತಿಗಳು, ಅವರಿಂದ ನಿರ್ಮಿತವಾಗಿರುವ ಗ್ರಂಥಗಳ ಕಾಲ ಮತ್ತು ಅವು ರಚಿತವಾದ ಸಂದರ್ಭ ಸನ್ನಿವೇಶಗಳು ಇವುಗಳ ಪರಿಜ್ಞಾನ ಸಾಹಿತ್ಯ ಚರಿತ್ರೆಗೆ ಮೂಲಾಧಾರ.  ಇವು ಎಷ್ಟೆಷ್ಟು ಖಚಿತವಾಗಿ ತಿಳಿದು ಬರುತ್ತವೆಯೋ ಅಷ್ಟಷ್ಟು ಸಮರ್ಪಕವಾಗಿ ಸಾಹಿತ್ಯದ ಚರಿತ್ರೆಯನ್ನು ಬರೆಯಲು ಸಾಧ್ಯವಾಗುತ್ತದೆ.’

  ಕವಿಗಳು ತಮ್ಮ ಸುತ್ತಲಿನವರಿಗೆ ಬೇಕಾದ ವಿಚಾರಗಳನ್ನು ಮಾತ್ರ ಹೇಳದೆ, ತಾವು ಕಂಡ ಬದುಕನ್ನೂ ಹೇಳಿದ ಸಂದರ್ಭದಲ್ಲಿ ಕೃತಿ, ಧರ್ಮ ರಾಜಾಶ್ರಯಗಳ ಮಿತಿಯನ್ನು ದಾಟಿ ಬೆಳೆಯುತ್ತದೆ. ಕವಿ ಆರಿಸಿಕೊಂಡ ವಸ್ತು, ವಿಧಾನಗಳೆರಡರ ಹಿಂದೆಯೂ ಸಮಕಾಲೀನ ಸಂದರ್ಭದ ಒತ್ತಡಗಳು ಇರುತ್ತವೆ ಎಂಬುದನ್ನು ಶೋಧಿಸುವುದು ಸಾಹಿತ್ಯ ಚರಿತ್ರೆಯ ಕೆಲಸವಾಗುತ್ತದೆ. ಸಾಹಿತ್ಯ ಚರಿತ್ರೆಕಾರರು ಸಾಹಿತ್ಯದ ಬೆಳವಣಿಗೆಯ ಹಿಂದೆ ಕೆಲಸಮಾಡಿರುವ ಸಮಾಜದ ತುಡಿತಗಳನ್ನೂ ತರತಮಗಳ ಸಂಘರ್ಷವನ್ನೂ ಅರ್ಥಮಾಡಿಕೊಂಡಾಗ ಆಯಾ ಕಾಲದ ಕೃತಿಗಳ ಅಂತರಂಗದ ದರ್ಶನ ಸಾಧ್ಯವಾಗುತ್ತದೆ. ಕವಿ ಆರಿಸಿಕೊಂಡ ವಸ್ತು, ವಿಧಾನಗಳೆರಡರ ಹಿಂದೆಯೂ ಸಮಕಾಲೀನ ಸಂದರ್ಭದ ಒತ್ತಡಗಳು ಇರುತ್ತವೆ, ಎಂಬುದನ್ನು ಶೋಧಿಸುವುದು ಸಾಹಿತ್ಯ ಚರಿತ್ರೆಯ ಕೆಲಸವಾಗುತ್ತದೆ. ಕಾವ್ಯಕಟ್ಟುವ ಕೆಲಸ ಮಾಡುವಾಗ ಅವನು ತನ್ನ ಕಾಲದ ಜೀವನದ ಸಂಘರ್ಷವನ್ನು ಕಣ್ಣುಬಿಟ್ಟು ನೋಡಿದ್ದಾನೆಯೇ, ಇಲ್ಲವೆ ಕೇವಲ ಶಬ್ದಗಳ ನಡುವೆ ಹಳೆಯ ಸಾಮಗ್ರಿಯೊಂದಿಗೆ ಕಸರತ್ತು ಮಾಡಿದ್ದಾನೆಯೇ ಎಂಬುದರ ಪರಿಶೀಲನೆ ಸಾಹಿತ್ಯ ಚರಿತ್ರೆಯ ಮೌಲ್ಯವನ್ನು ಹೆಚ್ಚಿಸುತ್ತದೆನ್ನಬಹುದು. ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಯಲ್ಲಿ ಈ ಬಗೆಯ ವಸ್ತುನಿಷ್ಠ ಶೋಧನೆಗೆ ತೊಡಗಬೇಕೆನ್ನುವ ಆಶಯದಿಂದಲೇ ವೀರಣ್ಣ ಅವರು ಹೆಜ್ಜೆಯಿಟ್ಟಿರುವುದನ್ನು ಅವರ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಕಾಣಬಹುದು. ಸಾಹಿತ್ಯದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳಿಗೆ ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು ಮೀರಿದ, ಸಾಮಾಜಿಕ ಪರಿಸರದ ಪ್ರಭಾವವೇ ಕಾರಣ ವೆಂಬುದನ್ನು ಕೃತಿಗಳು ಮತ್ತು ಇತಿಹಾಸದ ಪರಸ್ಪರ ಸಂಬಂಧದ ಮೂಲಕವೇ ಗುರುತಿಸುವ ನಂಬಿಕೆ ಈ ಪ್ರಯತ್ನದ ಹಿನ್ನೆಲೆಯಲ್ಲಿದೆ. ಚರಿತ್ರಕಾರ ತನಗೆ ದೊರೆತ ಮಾಹಿತಿಗಳಿಂದ ಇತಿಹಾಸವನ್ನು ರಚಿಸುವಂತೆ ಸಾಹಿತ್ಯ ಚರಿತ್ರಕಾರನೂ ಸಾಹಿತ್ಯ ಚರಿತ್ರೆಯ ರಚನೆಗೆ ಕಾವ್ಯದ ಅಂತರಂಗವನ್ನು ಕರೆದು ಅನಾವರಣಗೊಳಿಸುವುದು ಅವಶ್ಯಕ. ಇದಕ್ಕೆ ಯಾವುದೇ ಬಗೆಯ ಮುಜುಗರ ಪಡದೆ ಚರಿತ್ರೆಯ ಕಟು ಸತ್ಯದ ನೆರವೊಂದನ್ನೇ ಕೇಳಬೇಕಾಗುತ್ತದೆ ಎಂಬ ನಿಲುವನ್ನು  ಸಿ.ವೀರಣ್ಣ, ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟ ೧ ರಲ್ಲಿಯ ಪ್ರವೇಶದಲ್ಲಿ ವ್ಯಕ್ತ ಪಡಿಸಿರುವುದನ್ನು  ಈ ಸಂದರ್ಭದಲ್ಲಿ  ಪ್ರಸ್ತಾಪಿಸ ಬಹುದಾಗಿದೆ. ಇತ್ತೀಚಿಗೆ  ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಯಲ್ಲಿ ವಸ್ತುನಿಷ್ಠ ಶೋಧನೆಗೆ ತೊಡಗಬೇಕೆನ್ನುವ ಆಶಯದಿಂದಲೇ ಸಾಹಿತ್ಯದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳಿಗೆ ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು ಮೀರಿದ, ಸಾಮಾಜಿಕ ಪರಿಸರದ ಪ್ರಭಾವವೇ ಕಾರಣವೆಂಬುದನ್ನು ಕೃತಿಗಳು ಮತ್ತು ಇತಿಹಾಸದ ಪರಸ್ಪರ ಸಂಬಂಧದ ಮೂಲಕವೇ ಗುರುತಿಸುವ ಹೊಸನೆಲೆಗಟ್ಟಿನ ಆಲೋಚನೆಗಳು ವ್ಯಕ್ತ ಗೊಂಡಿರುವುದು ಹೊಸತನದ ಪ್ರತೀಕವಾಗಿವೆ

    ಒಂದು ಸಾವಿರ ವರ್ಷದ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅಧ್ಯಯನದ ಸೌಕರ್ಯಕ್ಕಾಗಿ   ಹಲವು ವಿಭಾಗಗಳನ್ನಾಗಿ ಮಾಡಿ ಕೊಂಡಿರುವುದುಂಟು. ಆದರೆ ವಿಭಾಗೀಯ ಕ್ರಮದಲ್ಲಿ  ಏಕರೂಪತೆ ಇಲ್ಲದಿರುವುದು ಪ್ರಮುಖವಾದ ಸಂಗತಿ. ವಿಭಾಗಗಳು ಯಾವುವು ಇರಬೇಕು? ವಿಭಾಗ ಮಾಡುವಾಗ ಅನುಸರಿಸ ಬೇಕಾದ ಕ್ರಮಗಳು ಯಾವುವು? ಅವುಗಳಿಗೆ ಯಾವ ಮಾನದಂಡವನ್ನು ಅನುಸರಿಸಬೇಕು ಇತ್ಯಾದಿ  ಅಂಶಗಳಲ್ಲಿ ಏಕರೂಪತೆ ಇಲ್ಲದಿದ್ದರೂ ಸಾಹಿತ್ಯ ಚರಿತ್ರೆಗಳನ್ನು ರಚಿಸಿರುವ ವಿದ್ಯಾಂಸರು ತಮ್ಮದೇ ಆದ ನಿಲುವುಗಳಲ್ಲಿ ವಿಭಾಗೀಯ ಕ್ರಮಗಳನ್ನು ಅನುಸರಿಸಿರುವುದನ್ನು ಕಾಣಬಹುದು. 

         ಆರ್.ಎಫ್.ಕಿಟ್ಟಲ್, ಬಿ.ಎಲ್.ರೈಸ್, ಆರ್.ನರಸಿಂಹಾಚಾರ್ಯ: ಇ.ಪಿ.ರೈಸ್,ಬಿ.ಎಂ.ಶ್ರೀಕಂಠಯ್ಯ,

 ಎಂ.ಎ.ದೊರೆಸ್ವಾಮಿಅಯ್ಯಂಗಾರ್, ತಿ.ತಾ.ಶರ್ಮ, ಕೆ.ವೆಂಕಟರಾಮಪ್ಪ, ರಂ.ಶ್ರೀ.ಮುಗಳಿ, ಎಂ.ಮರಿಯಪ್ಪ ಭಟ್ಟ ಇವರುಗಳು ತಮ್ಮ  ಕವಿ ಚರಿತೆ ಮತ್ತು ಸಾಹಿತ್ಯ ಚರಿತ್ರೆಗಳಲ್ಲಿ  ವಿಭಾಗೀಯ ಕ್ರಮಗಳಲ್ಲಿ ನಾಲ್ಕು ವಿಭಾಗಗಳಿಂದ ಏಳು ವಿಭಾಗಗಳ ವರೆಗೆ ಸಾಹಿತ್ಯ ಚರಿತ್ರೆಯನ್ನು ವಿಂಗಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ವೈಯಕ್ತಿಕವಾಗಿ ಸಾಹಿತ್ಯ ಚರಿತ್ರೆಯನ್ನು ರಚಿಸಿದ ವಿದ್ವಾಂಸರುಗಳಲ್ಲಿ ಒಬ್ಬೊಬ್ಬರು ತಮ್ಮ ವೈಯಕ್ತಿಕ ದೃಷ್ಟಿಕೋನದ ನೆಲೆಗಟ್ಟಿನಲ್ಲಿ  ಸಾಹಿತ್ಯದ ಚರಿತ್ರೆಯ ವರ್ಗೀಕರಣದ ವಿಭಾಗದಲ್ಲಿಯ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ.  ಆದರೇ ಈ ನಿಲುವುಗಳು ಎಲ್ಲರೂ ಮಾನ್ಯ ಮಾಡುವ ರೀತಿಯಲ್ಲಿ ಇಲ್ಲದಿರುವುದು. ಕಿಟೆಲ್ ಅವರು ತಾವು ಸಂಪಾದಿಸಿದ ಛಂದೋಂಬುಧಿಯ ಪ್ರಸ್ತಾವನೆಯಲ್ಲಿ ಕನ್ನಡ ಸಾಹಿತ್ಯವನ್ನು ಮತಪರವಾದ ಚೌಕಟ್ಟಿನಲ್ಲಿ ಆಗಿನ ಕಾಲಕ್ಕೆ ಲಭ್ಯವಿದ್ದ ಸೀಮಿತ ಸಾಮಗ್ರಿಯನ್ನೇ ಆಧಾರವಾಗಿಟ್ಟು ಕೊಂಡು ಸಾಹಿತ್ಯ ಚರಿತ್ರೆಯ  ಸಮೀಕ್ಷೆ ಮಾಡಿದ್ದು, ನಂತರದ ತಮ್ಮ  ನಿಘಂಟುವಿನ ಉಪೋದ್ಘಾತದಲ್ಲಿ ಭಾಷಿಕ ನೆಲೆಗಟ್ಟಿನಲ್ಲಿ ಅಂದರೆ, ಜೈನಯುಗದಲ್ಲಿ ಹಳಗನ್ನಡ, ವೀರಶೈವಯುಗದಲ್ಲಿ ನಡುಗನ್ನಡ, ಬ್ರಾಹ್ಮಣ ಯುಗದಲ್ಲಿ ಹೊಸಗನ್ನಡ ಪ್ರಮುಖವಾಗಿತ್ತೆಂಬ ನಿಲುವನ್ನು ವ್ಯಕ್ತ ಪಡಿಸಿದ್ದರು. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮತಾನುಸಾರಿಯಾಗಿ ವಿಭಾಗಿಸಿದ್ದನ್ನು  ತಿ.ತಾ.ಶರ್ಮ ಅವರು, ಈ ವಿಭಾಗ ಕ್ರಮವು  ಶುದ್ಧ ಸಾಹಿತ್ಯ ದೃಷ್ಟಿಯಿಂದ ಸರಿಯಾದುದಲ್ಲವೆಂದು  ವಿರೋಧಿಸಿದ್ದಲ್ಲದೆ  ಕನ್ನಡ ವಾಙ್ಮಯದ ಇತಿಹಾಸವನ್ನು   ಕ್ಷಾತ್ರಯುಗ, ಮತಪ್ರಚಾರಕ ಯುಗ, ಸಾರ್ವಜನಿಕ ಯುಗ ಮತ್ತು ಆಧುನಿಕ ಯುಗವೆಂದು ನಾಲ್ಕು ವಿಭಾಗಗಳಲ್ಲಿ ವಿಭಾಗಿಸಿದರು. ಸಾಹಿತ್ಯೇತಿಹಾಸವನ್ನು ವಿಭಾಗಿಸುವಾಗ ಸಾಹಿತ್ಯೇತರ-ಮಾನದಂಡಗಳನ್ನು ತ್ಯಜಿಸಿ ಸಾಹಿತ್ಯ ದೃಷ್ಟಿಯನ್ನು ಅನ್ವಯಗೊಳಿಸುವಲ್ಲಿ ತೀ.ತಾ.ಶರ್ಮರದ್ದು ಈ ನಿಟ್ಟಿನಲ್ಲಿ ಮೊದಲನೆಯ ಪ್ರಯತ್ನ.  ಇದು ಮುಂದಿನ ಕೆಲವು ಪ್ರಯತ್ನಗಳಿಗೆ ಪ್ರೇರಕವಾಯಿತು.  ಈ ನಿಟ್ಟಿನಲ್ಲಿ ಮುಂದುವರೆದ ಕೆ.ವೆಂಕಟರಾಮಪ್ಪನವರು   ಸಾಹಿತ್ಯ ಚರಿತ್ರೆಯನ್ನು, ಆರಂಭಕಾಲ, ಪಂಪನ ಯುಗ, ಸ್ವಾತಂತ್ರ‍್ಯ ಯುಗ, ಚಿಕ್ಕದೇವರಾಯರ ಕಾಲ, ಸಂಧಿ ಕಾಲ ಎಂಬುದಾಗಿ ವರ್ಗೀಕರಿಸಿದರು. (ಕನ್ನಡ ಸಾಹಿತ್ಯ, ಮೈ.ವಿ.ವಿ. ಪು.೧೨) ಈ ವರ್ಗೀಕರಣದಲ್ಲಿ ಆಯಾ ಕಾಲಕ್ಕೆ ಪ್ರಧಾನರಾದ ಕವಿ ಅಥವಾ ಕಾವ್ಯಗಳ ವೈಶಿಷ್ಟ್ಯವು ಪ್ರಮುಖವಾದುದ್ದಾಗಿದೆ. ಈ ವಿಭಾಗ ಕ್ರಮದಲ್ಲಿ ಒಂದಕ್ಕಿಂತ ಹೆಚ್ಚು ಆಧಾರ ತತ್ವಗಳು ಬಂದಿರುವುದು ಏಕರೂಪತೆಯಿಂದ ವಿಮುಖವಾಗಿರುವುದನ್ನು ಸೂಚಿಸುತ್ತದೆ. ಬಿ.ಎಂ. ಶ್ರೀಕಂಠಯ್ಯನವರು ತಮ್ಮ ಸಾಹಿತ್ಯ ಚರಿತ್ರೆಯ ಕೃತಿಯಲ್ಲಿ, ಕನ್ನಡ ಸಾಹಿತ್ಯವನ್ನು ಕಾಲ ಮತ್ತು ಮತವನ್ನು ಅನುಸರಿಸಿ ಎರಡು ಬಗೆಯಾಗಿ ವಿಭಾಗ ಮಾಡಿದ್ದಾರೆ. 

 ಆದರೆ  ಸಿ.ವೀರಣ್ಣ ಅವರು ತಮ್ಮ  ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟಗಳುವಿನಲ್ಲಿ  ಬೇರೆ ನೆಲೆಯಲ್ಲಿ ಸಾಹಿತ್ಯ ಚರಿತ್ರೆಯ ವಿಭಾಗೀಯ ಕ್ರಮವನ್ನು ಮಾಡಿದ್ದಾರೆ. ಇವರು  ವಿಭಿನ್ನ ರೀತಿಯ ಒಳನೋಟಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸುವ ಪ್ರಯತ್ನದಲ್ಲಿ ಭಾಗಿಯಾದರು. ಸಾಹಿತ್ಯ ಚರಿತ್ರೆಯ ಮೂಲಕ ಕನ್ನಡ ನಾಡಿನ ಜನ ಜೀವನವನ್ನು ಒಳಹೊಕ್ಕು ನೋಡುವ, ಅದರ ಜೀವನಾಡಿಯ ಮಿಡಿತವನ್ನು ಗುರುತಿಸಬೇಕೆನ್ನುವ ಅಭಿಲಾಷೆಯಿಂದ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಎಂಬ ಯೋಜನೆಯಡಿಯಲ್ಲಿ ಸಾಹಿತ್ಯ ಕೃತಿಗಳ ಬಲದಿಂದ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿರುವುದನ್ನು ಕಾಣಬಹುದು.  ಸಿ.ವೀರಣ್ಣ ಅವರು ಸಮಾಜ ಮತ್ತು ಅದರ ಉತ್ಪನ್ನಗಳಲ್ಲಿ ಒಂದಾದ ಸಾಹಿತ್ಯವನ್ನು, ಸಮಾಜೋ-ವೈಜ್ಞಾನಿಕ ಮನೋಭೂಮಿಕೆಯಲ್ಲೇ ವಿಶ್ಲೇಷಿಸುವಂತಹ ಸಾಹಿತ್ಯ ಚರಿತ್ರೆಯನ್ನು ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಶೀರ್ಷಿಕೆಯಡಿಯಲ್ಲಿ ಐದು ಸಂಪುಟಗಳಲ್ಲಿಸಿದ್ಧಪಡಿಸಿದ್ದು. ಸಾಹಿತ್ಯ ಚರಿತ್ರೆಯ ವರ್ಗೀಕರಣವನ್ನು ಅವರು ೧. ಪ್ರಾಚೀನ ಸಾಹಿತ್ಯ ( ರಾಜಸತ್ತೆಯ ವೈಭವದ ಕಾಲ ಕ್ರಿ.ಶ.೮೫೦ ರಿಂದ ೧೧೦೦), ೨. ಮಧ್ಯಕಾಲೀನ ಸಾಹಿತ್ಯ ( ರಾಜಸತ್ತೆಯ ವಿಘಟನೆಯ ಕಾಲ ಕ್ರಿ.ಶ.೧೧೦೦ ರಿಂದ ೧೫೦೦) ರಾಜಸತ್ತೆಯ ನಿಸ್ತೇಜದ ಕಾಲ ಕ್ರಿ.ಶ. ೧೫೦೦ ರಿಂದ ೧೮೫೦), ವಸಾಹತು ಶಾಹಿಯ ಕಾಲ (ಕ್ರಿ.ಶ.೧೮೫೦ ರಿಂದ ೧೯೫೦), ಬಂಡವಾಳ ಶಾಹಿಯ ಯುಗ ( ಪ್ರತಿಭಟನೆಯ ದನಿಗಳುಳ್ಳ ಆಧುನಿಕ ಸಾಹಿತ್ಯ, ಕ್ರಿ.ಶ. ೧೯೫೦ ರಿಂದ ಈಚೆಗೆ)  ಕೊನೆಯ ಮೂರು ವರ್ಗೀಕರಣದ ಸಂಪುಟಗಳು ಸಿದ್ಧತೆಗೊಂಡು ಪ್ರಕಟನೆಯ ಹಂತದಲ್ಲಿವೆ.  ಸಮಾಜ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಆಯಾ ಕಾಲದ ದಾಖಲೆಯ ಕುರುಹುಗಳಾಗಿ ಇವರ ಸಾಹಿತ್ಯ ಚರಿತ್ರೆಯ ಸಂಪುಟಗಳು ರೂಪುಗೊಂಡಿವೆ. ಮೊದಲ ಎರಡು ಸಂಪುಟಗಳು ಬಹಳ ಹಿಂದೆ ಪ್ರಕಟಗೊಂಡಿದ್ದು, ಪುನರ್ ಮುದ್ರಣಗಳನ್ನು ಕಂಡಿರುವುದು ಜನಾನುರಾಗದ ಪ್ರತೀಕವಾಗಿವೆ.  

    ಇವರ ʻಕನ್ನಡ ಸಾಹಿತ್ಯ-ಚಾರಿತ್ರಿಕ ಬೆಳವಣಿಗೆ'ಯ ಮೊದಲ ಸಂಪುಟ ಪ್ರಕಟವಾದ ನಂತರ ಒಂದು ರೀತಿಯಲ್ಲಿ 'ಸಾಹಿತ್ಯ ಚರಿತ್ರೆಯನ್ನು ಅಭ್ಯಾಸ ಮಾಡುವ ಕ್ರಮವೇ ಬದಲಾಯಿತು', 'ಸಾಹಿತ್ಯ ಚರಿತ್ರೆ ಕುರಿತ ತಮ್ಮ ಆಲೋಚನೆಯ ದಿಕ್ಕನ್ನೇ' ಓದುಗರು  ಬದಲಾಯಿಸಿಕೊಂಡರು.  ಸಾಹಿತ್ಯ ಚರಿತ್ರೆ ಪಾಠ ಮಾಡುವ ಅಧ್ಯಾಪಕರುಗಳು  ಪಾಠಕ್ಕೊಂದು ನೋಟ ಒದಗಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇವರ ಸಾಹಿತ್ಯ ಚರಿತ್ರೆಯ ಸಂಪುಟಗಳು 'ರಾಜಕೀಯ ಸಾಮಾಜಿಕ ಚೌಕಟ್ಟಿನಲ್ಲಿ ಸಾಹಿತ್ಯ ಚರಿತ್ರೆಯ ನಿರೂಪಣೆ ಮತ್ತು ವಿಶ್ಲೇಷಣೆ ಮಾಡುವ ನೆಲೆಗಟ್ಟನ್ನು ಹೊಂದಿದ್ದು, ಕನ್ನಡದಲ್ಲಿ ಅಂಥ ಅಧ್ಯಯನ ಕ್ರಮವನ್ನು ಗಟ್ಟಿಗೊಳಿಸಿತು ಎಂದು ಅಧ್ಯಯನ ಕಾರರು ಈಗಾಗಲೇ  ಗುರುತಿಸಿದ್ದಾರೆ. ಡಾ. ಹಾ.ಮಾ. ನಾಯಕ ಅವರು 'ಹೊಸ ಹಾದಿ, ಹೊಸ ಹೊರಡುವಿಕೆʼ ಎಂದೂ, ರಂ.ಶ್ರೀ. ಮುಗಳಿ ಅವರು 'ಇದು ಎಷ್ಟೋ ವಿಚಾರಗಳಲ್ಲಿ ನನಗಿಂತ ಮುಂದಿದೆ' ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು  ಈ ಸಂಪುಟಗಳು ಸಾಹಿತ್ಯ ಚರಿತ್ರೆಯನ್ನು ನೋಡುವ ದೃಷ್ಟಿಕೋನದಲ್ಲಿ  ವಿಭಿನ್ನತೆಯನ್ನು ಹುಟ್ಟಿ ಹಾಕಿತು.  ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ, ʻ ಕಿಟ್ಟೆಲ್ ಅವರದು ಕನ್ನೆ ಪ್ರಯತ್ನ, ಚರಿತ್ರೆಯನ್ನು ಒಂದು ರೂಪಕ್ಕೆ ತರುವುದೇ ಅಲ್ಲಿನ ಕೆಲಸ. ನರಸಿಂಹಾಚಾರ್ಯರದು ಕಣಜ ಪ್ರಯತ್ನ. ಸಾಮಗ್ರಿಯ ಸಂಗ್ರಹಣೆಯೇ ಅವರ ಗುರಿ. ಮುಗಳಿಯವರದು ಕಟ್ಟುವ ಪ್ರಯತ್ನ, ಚಾರಿತ್ರಿಕ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡುತ್ತ ಇತಿಹಾಸವನ್ನು ನಿರೂಪಿಸುವುದು ಅದರ ಸ್ವರೂಪ, ವೀರಣ್ಣನವರದು ಕೆದಕುವ ಪ್ರಯತ್ನ, ಒಂದು ವಿಶಿಷ್ಟ ದೃಷ್ಟಿಕೋನದಿಂದ ಚರಿತ್ರೆಯನ್ನು ವಿಶ್ಲೇಷಿಸುವುದು ಅದರ ಉದ್ದೇಶ. ಈ ನಾಲ್ಕು ಪ್ರಯತ್ನಗಳಿಂದ ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ವಿಶಿಷ್ಟವಾದ ರೂಪ ದೊರೆಯುವುದು ಸಾಧ್ಯವಾಗಿದೆ. ಬೇರೆ ಬೇರೆ ದೃಷ್ಟಿಕೋನಗಳಿಂದ ಸಾಹಿತ್ಯವನ್ನು ನೋಡುವುದು ವಿವಿಧ ಉದ್ದೇಶಗಳಿಂದ ಚರಿತ್ರೆಯನ್ನು ನಿರೂಪಿಸುವುದು ಸಹಜವಾದುದು. ವೀರಣ್ಣನವರ ಕೆಲಸ ಈ ದೃಷ್ಟಿಯಿಂದ ಮಹತ್ತರವಾದುದಾಗಿದೆ.

     ಡಾ.ಸಿ.ವೀರಣ್ಣ ಅವರು ಅವರು ಸಾಹಿತ್ಯ ಚರಿತ್ರೆ ಕುರಿತ  ಕ್ರಿಯಾತ್ಮಕ ಸಂಶೋಧನಾ ವಿಮರ್ಶಕರಲ್ಲಿ  ಅಗ್ರಗಣ್ಯರು. ಉತ್ತಮ ಸಂಶೋಧಕರಲ್ಲಿ ಇರಬಹುದಾದ ಕುತೂಹಲ, ಪ್ರಾಮಾಣಿಕತೆ, ಕ್ರಿಯಾ ಶೀಲತೆ, ತಾಳ್ಮೆ-ಸಂಯಮ, ವೈಜ್ಞಾನಿಕ ಮನೋಭಾವ, ಚಿಕಿತ್ಸಕ ಬುದ್ಧಿ, ನಿರ್ಬೀಡತ್ವ, ಬಿಚ್ಚು ಮನಸ್ಸಿನಿಂದ ಹೇಳುವಿಕೆ ಈ ಗುಣಗಳ ಪ್ರತೀಕರಾಗಿದ್ದಾರೆ. ಇವರ ಆಧುನಿಕ ಪೂರ್ವ ಕನ್ನಡ ಸಾಹಿತ್ಯ  ಚರಿತ್ರೆಯ ಸೂಕ್ಷ್ಮಸ್ತರವಾದ ಅಧ್ಯಯನದಿಂದಾಗಿ ಅನೇಕ ಹೊಸ ನೋಟಗಳು ಮತ್ತು ಮಾರ್ಪಾಟುಗಳಿಗೆ ಕಾರಣವಾಗಿದೆಸಾಂಸ್ಥಿಕ ಅಥವಾ ಸಾಮೂಹಿಕ ಪ್ರಯತ್ನದಲ್ಲಿ  ಯೋಜನೆಯ ರೂಪದಲ್ಲಿ ಹಮ್ಮಿಕೊಳ್ಳ ಬಹುದಾದ ಪ್ರಯತ್ನವಾದ ಬೃಹತ್ ಕನ್ನಡಸಾಹಿತ್ಯ ಚರಿತ್ರೆಯ ಸಂಪುಟಗಳ ನಿರ್ಮಾಣವನ್ನು ಏಕಾಂಗಿಯಾಗಿ ಸಿದ್ಧ ಪಡಿಸಿ ನೀಡಿರುವುದು ಅವರ ಪಾಂಡಿತ್ಯ, ಆಳವೂ ವಿಸ್ತಾರವೂ ಆದ ಅಧ್ಯಯನ, ಶ್ರಮ, ಉತ್ಸಾಹದ ಪ್ರತೀಕವಾಗಿದೆ. ಜೊತೆಗೆ ನಮ್ಮೆಲ್ಲರಿಗೂ ಆಶ್ಚರ್ಯ ಹಾಗೂ ದಿಗ್ ಭ್ರಮೆಯನ್ನು ಉಂಟುಮಾಡುತ್ತದೆ.  ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳ ರಚನೆಯಲ್ಲಿ  ಸಿ.ವೀರಣ್ಣ ಅವರು ಕನ್ನಡ ಸಾಹಿತ್ಯದ ಇತಿಹಾಸವನ್ನು ಕೆಲವು ಕಾಲಘಟ್ಟಗಳಾಗಿ ವಿಭಾಗಿಸಿಕೊಂಡು ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಅಳವಡಿಸಿ ಕೊಂಡು ಪೂರ್ವಾಗ್ರಹದಿಂದ ದೂರವಾಗಿ ವಸ್ತು ನಿಷ್ಠ ಬದ್ಧತೆಯನ್ನು ಅಳವಡಿಸಿ ಕೊಂಡಿರುವುದನ್ನು ಕಾಣಬಹುದಾಗಿದೆ. ಈ ಸಂಪುಟಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯ ಆಸಕ್ತ ಅಧ್ಯಯನಕಾರರಿಗೆಲ್ಲರಿಗೂ ಹೊಸನೆಲೆಗಟ್ಟಿನಲ್ಲಿ ಸಂಪೂರ್ಣವಾಗಿಯೇ  ಆಗುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

    ಇವರ ಈ ಮಹತ್ವದ ಕಾರ್ಯಸಿದ್ಧಿಗೆ ನಾವೆಲ್ಲರೂ ಚಿರ ಋಣಿಯಾಗ ಬೇಕಾಗಿದೆ. ಮೂರನೆಯ  ಸಂಪುಟದಲ್ಲಿ  ಇಲ್ಲಿಯವರೆಗೂ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಬೆಳಕಿಗೆ ಬಂದ ಈ ಅವಧಿಯ ಎಲ್ಲಾ ಕವಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚಿ ಸಂಶೋಧನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ  ಕೊಡ ಮಾಡಿದ್ದಾರೆ.

     ಈಗಾಗಲೇ ನೋಡಿರುವ ಹಾಗೆ, ಅವರ ಕನ್ನಡಸಾಹಿತ್ಯ ಚರಿತ್ರೆಯ ಮೊದಲನೆಯ ಸಂಪುಟದ ಪ್ರಸ್ತಾವನೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ರೂಪರೇಷೆಯನ್ನು  ಕುರಿತಾದ ಅವರ ನಿಲುವಿನ ಸ್ಪಷ್ಟನೆಯನ್ನು ಕಾಣಬಹುದಾಗಿದೆ. ಕೃತಿಸ್ವರೂಪ, ಕವಿಜೀವನ ಮತ್ತು ಯುಗಧರ್ಮಗಳ ಬಗೆಗೆ ಸಂಶೋಧನೆ ನಡೆಸುತ್ತ ಕೊನೆಗೆ ಕವಿದರ್ಶನವನ್ನು ಎತ್ತಿಹೇಳುವಲ್ಲಿ ಸಾಹಿತ್ಯ ಚರಿತ್ರೆ  ಸಾರ್ಥಕತೆ ಪಡೆಯುತ್ತದೆ. ಸಂಶೋಧನ ವಿಮರ್ಶನ - ಸಂತುಲನ ಕ್ರಿಯೆಗಳು ಮುಪ್ಪರಿಗೊಂಡು ಒಂದು ವಿಶಿಷ್ಟ ಪಾಕವಾಗಿ ಅವರ  ಕನ್ನಡ ಸಾಹಿತ್ಯ ಚರಿತ್ರೆಯು ಸಂಪುಟಗಳಲ್ಲಿ ಬೃಹತ್ ಗಾತ್ರದಲ್ಲಿ ರೂಪಗೊಂಡಿದೆ. ಈ ಸಂಪುಟದಲ್ಲಿ ಕವಿಗಳ ಬಗೆಗಿನ ಬರೆಹಗಳಲ್ಲಿ ಆಳವಾದ ಅಧ್ಯಯನ,  ವಸ್ತುನಿಷ್ಟ ಕ್ರಮಬದ್ಧ ಚಿಂತನವಿದೆ. ಈ ಕಾಲಘಟ್ಟದ ಕವಿಗಳ ಕುರಿತ ವಿಸ್ತೃತವಾದ ಅಧ್ಯಯನದಲ್ಲಿ ಆಕರ ಶೋಧಕ್ಕಿಂತ  ಹೆಚ್ಚಾಗಿ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಕ್ರಿಯಾ ಶೋಧದ ನೆಲೆಗಳನ್ನು ಗುರುತಿಸ ಬಹುದು.    

         ನಮ್ಮ ಸಾಹಿತ್ಯೇತಿಹಾಸದ ಹಾಗೂ ನಮ್ಮ ಸಾಂಸ್ಕೃತಿಕ ಇತಿಹಾಸದ ಪುನರವಲೋಕನಕ್ಕೆ ಸಾಹಿತ್ಯಕೃತಿಗಳ ಓದು, ಮರು ಓದು ತೀರಾ ಅವಶ್ಯಕ. ಇತಿಹಾಸದಲ್ಲಿ ನಾವು ಅಲಕ್ಷಿಸಬೇಕಾದ ವಿಷಯಗಳಿವೆಯೊ ಹಾಗೆ ಸಾಹಿತ್ಯದಲ್ಲೂ ಅಲಕ್ಷಿಸಬಹುದಾದ ಸಾಮಾನ್ಯ ವಿಷಯಗಳಿವೆ ಎಂಬುದರ ಬಗೆಗೆ ಈ ಸಂಪುಟದಲ್ಲಿ ಕೆಲವೆಡೆ ಕಾಣಬಹುದಾಗಿದೆ. ಸಾಹಿತ್ಯ ಚರಿತ್ರೆಯು ಕೇವಲ ಕವಿ ಚರಿತ್ರೆಯಾಗಬಾರದು ಸಹೃದಯಿಯೊಬ್ಬನು ಕೃತಿಯೊಂದರ ಅನುಸಂಧಾನದಿಂದ ಪಡೆಯುವ ಆನಂದ ರಸಾನುಭೂತಿ ಸಾಹಿತ್ಯ ಚರಿತ್ರಕಾರನಲ್ಲಿ ಪರಕಾಯ ಪ್ರವೇಶ ಪಡೆಯಬೇಕು ಎಂಬ ಆಶಯವನ್ನು  ಹೊಂದಿ ಅದೇ ರೀತಿ ಪರಿಪೂರ್ಣ ಸಹೃದಯಿಯಾಗಿ ಕನ್ನಡಸಾಹಿತ್ಯ ಚರಿತ್ರೆಯ ನೇ ಸಂಪುಟದಲ್ಲಿ ಕವಿಗಳು ಮತ್ತು ಅವರ ಕೃತಿಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಿತಿಯು  ಯಾವುದೇ ಬಗೆಯ ಅತಿರಿಕ್ತ ಅಭಿಮಾನ-ಅಂಧಾನುಕರಣೆಯ ಬರೆವಣಿಗೆಯಿಂದ ದೂರ ಉಳಿಯುವುದು ಬಹುಮುಖ್ಯ. ಅದು ಈ ಸಂಪುಟದಲ್ಲಿ ಎದ್ದು ಕಾಣುತ್ತದೆ. ಒಂದು ಕೃತಿಯನ್ನು ಎಲ್ಲ ಮಗ್ಗಲುಗಳಿಂದಲೂ ನೋಡಿ ನಿಜವಾಗಿ ಅದರ ಬೆಲೆಗಟ್ಟುವ ಕಾರ್ಯ ಅವನಿಂದಾಗಬೇಕು. ಈ ಹಿನ್ನೆಲೆಯಲ್ಲಿ ಸಣ್ಣ ಪುಟ್ಟಕವಿಗಳ ಕೃತಿಗಳಿಗಿಂತ ಪ್ರತಿಭಾಶಾಲಿ ಕವಿಗಳ ಕೃತಿಗಳ ಅಂತರಂಗ ಪ್ರವೇಶ ಮಾಡುವ ಕೆಲಸ ಆಗಬೇಕಾಗಿದೆ. ಹೀಗೆಂದಾಗ ಸಣ್ಣ ಪುಟ್ಟ ಕವಿಗಳು ಅಧ್ಯಯನ ಯೋಗ್ಯರಲ್ಲವೆನ್ನುವ ಅಭಿಪ್ರಾಯವಲ್ಲ. ಅವರು ಕೊಡುವ ಮಹತ್ವದ ಮಾಹಿತಿಯ ದೃಷ್ಟಿಯಿಂದ ಅವೂ ಅಧ್ಯಯನ ಯೋಗ್ಯವೇ. ಕಥಾವಸ್ತು ದೊಡ್ಡದಲ್ಲವೆನ್ನುವ ಕಾರಣಕ್ಕಾಗಿ ಅವುಗಳನ್ನು ಅನಾದಾರಣೆ ಮಾಡುವ ಪ್ರವೃತ್ತಿಯೂ ಸಲ್ಲದು. ಸಾಹಿತ್ಯ ಚರಿತ್ರೆ ರಚನೆಯ ಸಂದರ್ಭದಲ್ಲಿ ದೊಡ್ಡಕವಿಗಳ ಕೃತಿಗಳಿಗಷ್ಟೇ ಅಧ್ಯಯನಕ್ಕೆ ಅವಕಾಶ ಒದಗಿಸಿ  ಚಿಕ್ಕ ಕವಿಗಳನ್ನು ಅವಗಣನೆ ಮಾಡುವನು ಸರಿಯಲ್ಲ, ಈ ಸಂಪುಟದಲ್ಲಿ ಪ್ರತಿಭಾಶಾಲೀ  ದೊಡ್ಡಕವಿಗಳ ಜೊತೆಗೆ ಚಿಕ್ಕಪುಟ್ಟ ಕವಿಗಳಿಗೂ ಅವಕಾಶ ಸಿಕ್ಕಿದೆ. ಆದರೆ ಹೆಚ್ಚಿನ ಅಲಕ್ಷಿತ ಕವಿಗಳ ಬಗೆಗೆ ಹಾಗೂ ಇಲ್ಲಿಯವರೆಗೂ ಬೆಳಕಿಗೆ ಬಾರದ ಅಜ್ಞಾತ ಕವಿಗಳ ಬಗೆಗಿನ ವಿವರಗಳು ಇವರ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟ  ನಾಲ್ಕರಲ್ಲಿ ಕಂಡು ಬರುತ್ತವೆ.  ಈ ಸಂಪುಟದ ಕಾರ್ಯವ್ಯಾಪ್ತಿಯನ್ನು ಕ್ರಿ.. ೪೦೦ ರಿಂದ ೧೦೦ ರವರೆವಿಗೂ ಎಂದು ನಿಗದಿಪಡಿಸಿದ್ದಾರೆ.   ಇಂದು  ಬಿಡುಗಡೆಗೊಂಡಿರುವ ಸಾಹಿತ್ಯ ಚರಿತ್ರೆಯ ಸಂಪುಟ ೩ ಇದು, ಮಧ್ಯಕಾಲೀನ ರಾಜಸತ್ತೆಯ ಪುನಶ್ಚೇತನ ಕಾಲ ಎಂದು ಮಧ್ಯಕಾಲೀನ ಸಾಹಿತ್ಯದ ಹೆಚ್ಚುವರಿ ಸಂಪುಟವಾಗಿದೆ. ಈ ಕಾಲಘಟ್ಟವನ್ನು  ಮಧ್ಯಕಾಲೀನ ಸಾಹಿತ್ಯ ರಾಜಸತ್ತೆಯ ಪುನಶ್ಚೇತನದ ಕಾಲ ಎಂದು ಗುರುತಿಸಿದ್ದಾರೆ. ಈ ಕಾಲಘಟ್ಟದ ೧೦ ವರ್ಷಗಳ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತೃತವಾಗಿ, ಕೆಲವೆಡೆ ಸಂಕ್ಷಿಪ್ತವಾಗಿ ಈ ಸಂಪುಟದಲ್ಲಿ ಕೊಟ್ಟಿದ್ದಾರೆ. ಈ ಅವಧಿಯಲ್ಲಿಯ ಪ್ರಧಾನ ಕವಿಗಳಾದ ಮಧುರ, ಪದ್ಮಣಾಂಕ, ಶಿವಗಣ ಪ್ರಸಾದಿ ಮಹಾದೇವಯ್ಯ, ಕುಮಾರವ್ಯಾಸ, ಚಾಮರಸ, ಗುಬ್ಬಿಯ ಮಲ್ಲಣ್ಣ, ಲಕ್ಕಣ್ಣ ದಂಡೇಶ, ಕಲ್ಲಮಠದ ಪ್ರಭುದೇವ, ವಿಜಯಣ್ಣ, ಶಿಶುಮಾಯಣ, ಶ್ರೀಪಾದರಾಯ, ತೆರಕಣಾಂಬಿ ಬೊಮ್ಮರಸ, ಸಿಂಗಿರಾಜ, ಹಲಗೆಯಾರ್ಯ,  ಕುಮಾರ ವಾಲ್ಮೀಕಿ ಯಂತಹ ಪ್ರಮುಖ ಕವಿಗಳ ಜೊತೆಗೆಇಲ್ಲಿಯವರೆಗೂ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖವಾಗದೇ ಇರುವ ಗಣಜಿಲೆಯ ಚೆನ್ನವೀರಾಂಕ, ಶಾಂತಣವರ್ಣಿ, ಗುರು ಬಸವ, ಪಾಯಣ್ಣ, ಕಲ್ಲರಸ, ಪರಂಜ್ಯೋತಿ, ಚಿಕ್ಕಮಲ್ಲಿಕಾರ್ಜುನ, ನೀಲಕಂಠಾಚಾರ್ಯ, ಬಸವಲಿಂಗೇಶ, ಅಜ್ಞಾತಕವಿ, ವೆಂಕ, ಮಾಯಣಸುತ ಬೊಮ್ಮರಸ ಇತ್ಯಾದಿ ಅಜ್ಞಾತ ಕವಿಗಳ ಬಗೆಗಿನ ವಿವರಗಳನ್ನು ಕಾಣಬಹುದಾಗಿದೆ. ಈ ಸಂಪುಟದಲ್ಲಿ, ಕುಮಾರವ್ಯಾಸ, ಕುಮಾರ ವಾಲ್ಮೀಕಿ, ಚಾಮರಸ, ಶಿವಗಣ ಪ್ರಸಾದಿ ಮಹಾದೇವಯ್ಯ, ಶಿಶುಮಾಯಣ, ಭಾಸ್ಕರ, ಸಿಂಗಿರಾಜ, ಹಲಗೆಯಾರ್ಯರ ಕಾವ್ಯಗಳ ಬಗೆಗೆ ವಿಸ್ತೃತವಾದದ ಅಧ್ಯಯನವನ್ನು ಕಾಣಬಹುದಾಗಿದೆ.  ಈ ಸಂಪುಟದಲ್ಲಿ ಚರ್ಚಿತರಾಗಿರುವ  ಗಣಜಿಲೆಯ ಚೆನ್ನವೀರಾಂಕ, ಶಾಂತಣ ವರ್ಣಿ, ಪರಂಜ್ಯೋತಿ, ಚಿಕ್ಕಮಲ್ಲಿಕಾರ್ಜುನ, ತೆರಕಣಾಂಬಿ ಬೊಮ್ಮರಸ, ಬಸವಲಿಂಗೇಶ, ಅಜ್ಞಾತ ಕವಿ, ವೆಂಕ, ಮಾಯಣಸುತ ಬೊಮ್ಮರಸ ಈ  ಕವಿಗಳು  ಇಲ್ಲಿಯವರೆಗೆ ಸಿದ್ಧಗೊಂಡಿರುವ ವೈಯಕ್ತಿಕ ಹಾಗೂ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ  ಉಲ್ಲೇಖಿತರಾಗಿಲ್ಲ. ಪ್ರಥಮ ಬಾರಿಗೆ ಈ ವೀರಣ್ಣ ಅವರ ಸಾಹಿತ್ಯ ಚರಿತ್ರೆಯ ಈ ಮೂರನೆಯ ಸಂಪುಟದಲ್ಲಿ  ಅವಕಾಶ ಪಡೆದಿದ್ದಾರೆ.

        ಕೃತಿಗಳ ಹೇಳಿಕೆಗಳಲ್ಲಿ ಧ್ವನಿಸುವ ಮಾತುಗಳನ್ನು ಸಮಾಜೋ-ಸಾಂಸ್ಕೃತಿಕ ನೆಲೆಯಲ್ಲಿ ಗ್ರಹಿಸಿ ವಿವೇಚಿಸಿರುವುದನ್ನು ಈ ಸಂಪುಟದಲ್ಲಿ ಕಾಣಬಹುದಾಗಿದೆ. ಈ ಸಂಪುಟದಲ್ಲಿ ಕವಿಗಳ ಬಗೆಗೆ ತಮ್ಮ ಸ್ವತಂತ್ರವಾದ  ನಿಲುವುಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ.  ನಿದರ್ಶನಕ್ಕೆ ಈ ಸಂಪುಟದಲ್ಲಿಯ ಕೆಲವು ಕವಿಗಳ ಬಗೆಗೆ ಅವರು ತಾಳಿರುವ ನಿಲುವುಗಳನ್ನು ಪ್ರಸ್ತಾಪಿಸ ಬಹುದು. ಮೊದಲನೇ ಶೂನ್ಯಸಂಪಾದನಾಕಾರನಾದ ಶಿವಗಣಪ್ರಸಾದಿ ಮಹಾದೇವಯ್ಯನನ್ನು ಕುರಿತು ಇವರ ಹೇಳಿಕೆಯನ್ನು ಗಮನಿಸಬಹುದು. ಮುಂದೆ ಪ್ರಾಧಾನ್ಯಕ್ಕೆ ಬಂದ ಪುರೋಹಿತ ಪರಂಪರೆಯ ಆಶೋತ್ತರವನ್ನು ಹೊತ್ತ ಮುಂಗೋಳಿಯಾಗಿ ಕಾಣಿಸುತ್ತಾನೆ.  ಇದು  ಮೊದಲ ಶೂನ್ಯಸಂಪಾದನ ಕಾರನ ಕುರಿತ ಇವರ ನಿಲುವಾಗಿದೆ.

         ಕುಮಾರವ್ಯಾಸನನ್ನು ಕುರಿತು ಈ ಸಂಪುಟದಲ್ಲಿ ೧೩೩ ಪುಟಗಳಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ ಬಹುಶಃ ಅತಿ ಹೆಚ್ಚು ಪುಟಗಳಲ್ಲಿ ಕುಮಾರವ್ಯಾಸನನ್ನು ಕುರಿತು ವಿವರಿಸಿರುವುದು ಇವರ ಈ ಸಾಹಿತ್ಯ ಚರಿತ್ರೆ ಸಂಪುಟ ಎನ್ನುವುದು ವಿಶೇಷವಾಗಿದೆ. ಕುಮಾರವ್ಯಾಸ ಮಹಾಭಾರತದ ಕಥೆಯನ್ನು ತೆಗೆದುಕೊಂಡು 'ತಿಳಿಯ ಹೇಳುವೆ ಕೃಷ್ಣಕಥೆ' ಯನು ಎಂದು 'ಕೃಷ್ಣ ಚರಿತಾಮೃತ' ಎಂದು ಭಕ್ತಿಪಂಥವಾಗಿ ಒಡಮೂಡುತ್ತಿದ್ದ ವೈಷ್ಣವ ಚಳವಳಿಗೆ, ದಾರಿಯನ್ನು ಮಾಡಿಕೊಟ್ಟನು. ಕೃಷ್ಣನನ್ನು ಕಥಾನಾಯಕನನ್ನಾಗಿ ಮಾಡಿಕೊಂಡು, ಎಲ್ಲವೂ ಅವನ ನಿರ್ದೇಶನದಂತೆ ನಡೆಯುತ್ತದೆ ಎನ್ನುವಂತೆ ಕಥೆಯನ್ನು ನಿರೂಪಿಸಿದ್ದರೂ ಕುಮಾರವ್ಯಾಸನ ಮಾನವ ಸಂಬಂಧಗಳ ಗ್ರಹಿಕೆ ಅನನ್ಯವಾದ್ದರಿಂದ ಅದನ್ನು ಯಾರೂ ಗಮನಿಸಿದಂತೆ, ಕಾವ್ಯ ಸ್ಥಾಪಿತವಾಯಿತು. ಇದಕ್ಕಿಂತ ಕುಮಾರವ್ಯಾಸನ ಶಬ್ದ ಭಂಡಾರ ಕೇಳಿದವರ ಮನಸೂರೆಗೊಳ್ಳುವಷ್ಟು ಜನದನಿಯಾದದ್ದು ಕೂಡ ಗಮನಾರ್ಹವಾಯಿತು. ಅವನ ತಾತ್ವಿಕ ನೆಲೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಜನತೆಯ ಮಾತೇ ಅವನ ಕಾವ್ಯದ ಮಾತಾಗಿ, ಹೊಸರೀತಿಯಲ್ಲಿ ತಲುಪಿದಾಗ ಜನ ತಮ್ಮದೆನ್ನುವಂತೆ ಕಾವ್ಯವನ್ನು ಅಪ್ಪಿಕೊಂಡರು. ಯಾವ ರಾಜಾಶ್ರಯ, ಪಂಡಿತಮಂಡಳಿಗಳ ಕೃಪೆಯೂ ಇಲ್ಲದೆ, ಕವಿ ನೇರವಾಗಿ ಜನಮನವನ್ನು ಮುಟ್ಟಿ, ನೀನು ನಮ್ಮವನು ಎಂದು ಹೇಳುವಂತೆ ಮಾಡಿದ ಶ್ರೇಯಸ್ಸು ಕುಮಾರವ್ಯಾಸನದು. ʻ ಅವನು ಜನತೆಯ ನಡುವೆ ತನ್ನ ಕಾವ್ಯದ ಕಸುವನ್ನು ಕಂಡುಕೊಂಡ ಜನತೆಯ ಕವಿ, ಜನಮನದ ಕವಿಯಾಗಿ ನಿರಕ್ಷರಿಗಳೂ ಕವಿಯನ್ನು ತಮ್ಮವನನ್ನಾಗಿ ಮಾಡಿಕೊಂಡು ಆರಾಧಿಸಿದ್ದಾರೆ. ಕವಿಯ ಧಾರ್ಮಿಕ ನಂಬಿಕೆಗಳೇನಾದರೂ ಇರಲಿ, ಅವನು ಕಂಡ ಮನುಷ್ಯ ಜಗತ್ತು ಸಾಮಾನ್ಯರ ಜಗತ್ತಾಗಿದ್ದು ಅವನ ಕಾವ್ಯದಲ್ಲಿ ಅಸಾಮಾನ್ಯವಾಗಿ ಮೂಡಿಬಂತು, ಕನ್ನಡದ ಮರೆಯಬಾರದ ಮರೆಯಲಾಗದ ಕವಿʼಈ ಅನಿಸಿಕೆಗಳು  ವೀರಣ್ಣ ಅವರು ಕುಮಾರವ್ಯಾಸನನ್ನು ಅರ್ಥೈಸಿರುವ ಪರಿಯನ್ನು ಸೂಚಿಸುತ್ತದೆ.  

    ಅದೇ ರೀತಿ ಇಲ್ಲಿಯವರೆಗೂ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿತರಾಗದ ಶಾಂತಣವರ್ಣಿಯ ಅನಂತ ಕುಮಾರಿ ಚರಿತೆಯ ಬಗೆಗೆ  ಪ್ರಥಮ ಬಾರಿಗೆ ಈ ಸಂಪುಟದಲ್ಲಿ ವಿವೇಚಿಸಲ್ಪಟ್ಟಿದ್ದು, ಅದರಲ್ಲಿ  ಎಷ್ಟೇ ಕಷ್ಟಗಳು ಬಂದರೂ ತನ್ನ ಧರ್ಮ ನಿಷ್ಠೆಯನ್ನು ಹೆಣ್ಣಾದ ಅನಂತ ಮತಿ ಹೇಗೆ ಕಾಪಾಡಿಕೊಂಡಳೋ ಹಾಗೆ ಎಲ್ಲಾ ಜೈನಧರ್ಮಿಯರೂ ಕಾಪಾಡಿಕೊಂಡು ಧರ್ಮವನ್ನು ಉಳಿಸ ಬೇಕು ಎನ್ನುವುದು ಕಾವ್ಯದ ಆಶಯವಾಗಿದೆ ಎನ್ನುವ ಇವನ ಅನಿಸಿಕೆಯಲ್ಲಿ ಜೈನಧರ್ಮಿಯರ ಧರ್ಮ ರಕ್ಷಣೆಯ ಇಂಗಿತವನ್ನು ಕಾಣಬಹುದಾಗಿದೆ.

   ಏಕೋತ್ತರ ಶತಸ್ಥಲದ ಸಂಕಲನಕಾರ ಮಹಾಲಿಂಗದೇವನನ್ನು ಕುರಿತ ಕಾಯಕ ಜೀವಿಗಳ ವಚನ ಸಾಹಿತ್ಯವನ್ನು ಹಲವು ಹತ್ತು ಕಡೆಗಳಿಂದ ಸಂಗ್ರಹಿಸಿ ಸಂಪಾದಿಸಿ ಮರಳಿ ಕನ್ನಡ ನಾಡಿಗೆ ನೀಡುವ ಮಹತ್ತರ ಕಾಯಕದ ವ್ಯಕ್ತಿಗಳಲ್ಲಿ ಈತನು ಪ್ರಮುಖ, ಈತನು ಅನೇಕ ವೈಚಾರಿಕ ವಚನಗಳನ್ನು ಸಮಯ ಸಂದರ್ಭಗಳಲ್ಲಿ ಉಲ್ಲೇಖಿಸಿದ್ದನಾದರೂ ಮುಂದಿನ ಶೂನ್ಯಸಂಪಾದನಾಕಾರರು ಮತ್ತು ಸಂಕಲನಕಾರರು ಅವುಗಳನ್ನು ದೂರ ಮಾಡಿದರು, ಇವನು ಸಂಗ್ರಹಿಸಿರುವ ವಚನಗಳು ಬಹುಮಟ್ಟಿಗೆ ಜಾತಿ, ಗುಂಪಿನಾಚೆಯ ಮಾತುಗಳಾಗಿ ಜೀವನಧರ್ಮವನ್ನು ಹೇಳುವ ಸಾರ್ವಕಾಲಿಕ ಸರ್ವಜೀವಕ್ಕೆ ಅನ್ವಯಿಸುವ ಮಾತುಗಳಾಗಿವೆ ಎಂಬುದಾಗಿ ಗಮನಿಸಿರುವುದು ತಾತ್ವಿಕ ಸಿದ್ಧಾಂತ ಪ್ರತಿಪಾದನೆಯ ಸಂಕಲಿತ ಕೃತಿಯಲ್ಲಿಯೂ ಈ ರೀತಿಯ ಆಶಯದ ವಚನಗಳು ಇರುವುದನ್ನು ಗಮನಿಸಿರುವುದು ಇವರ ಆಲೋಚನೆಗಳ ಪ್ರತೀಕವಾಗಿವೆ.

     ೧೫ ನೇ ಶತಮಾನದ ಸಂಕಲನಕಾರರ ಕುರಿತ ಇವರ  ಅನಿಸಿಕೆಯಾದ, ೧೫ ನೇ ಶತಮಾನದ ವಚನ ಸಂಕಲನಕಾರರು ವಿಶಾಲ ತಳಹದಿಯ ವಚನ ಸಾಹಿತ್ಯದ ಪ್ರಭಾವಲಯಕ್ಕೆ ಒಂದು ಪೌಳಿಯನ್ನು ಹಾಕಿ ಅದಕ್ಕೊಂದು ಪರಂಪರಾಗತ ಹೆಸರಾದ ವೀರಶೈವಧರ್ಮ ಎಂಬ ಹೆಸರನ್ನು ಅಂಟಿಸಿ, ಬೇರೊಬ್ಬರು ಅದನ್ನುಮುಟ್ಟಿ ಸ್ವೀಕರಿಸಲಾಗದ ಆಗಮೋಕ್ತ ನಿರ್ಬಂಧಗಳನ್ನು ಸೇರಿಸಿ, ವಚನಕಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲರಾದರೂ, ಈ ಕೆಲಸ ವಚನಕಾರರ ನಂತರ ಸುಮಾರು ೧೫೦ ವರ್ಷಗಳ ಕಾಲ ಗುಪ್ತಗಾಮಿನಿಯಾಗಿಯೇ ಹರಿದಿದ್ದು ಮಹಾಲಿಂಗದೇವ, ಶಿವಗಣ ಪ್ರಸಾದಿ ಮಹಾದೇವಯ್ಯ ಮೊದಲಾದವರ ಮೂಲಕ ಬೆಳಕಿಗೆ ಬಂತು. ಸಂಪಾದನಕಾರರ ಕಾಲವನ್ನು'ವೀರಶೈವ ಪುನರುಜ್ಜೀವನ ಯುಗ' ಎಂದು ಕರೆಯುವುದಕ್ಕಿಂತ, ಇಲ್ಲದೆ ಇದ್ದುದನ್ನು ಪುನರುಜ್ಜೀವನ ಎಂದು ಕರೆಯುವುದು ಹೇಗೆ? ಆದ್ದರಿಂದ ಹದಿನೈದನೇ ಶತಮಾನದಲ್ಲಿ ಕನ್ನಡದ ನೆಲಕ್ಕೆ ಬಂದ 'ವೀರಶೈವ' ಅಲ್ಲಿಯವರೆಗೆ ಬೆಳೆದಿದ್ದ ಶರಣ ಚಳವಳಿಯನ್ನು ನುಂಗಿ ಜೀರ್ಣಿಸಿಕೊಂಡು, ಅದೂ ವೀರಶೈವವೇ ಎನ್ನುವಂತೆ ರೂಪಾಂತರ ಮಾಡಿ ಸಂಭ್ರಮಿಸಿದ ಯುಗ ಇದೆಂದು ಹೇಳಬಹುದು. ಹಾಗಿದ್ದು ಹರಿದು ಹಂಚಿಹೋಗಿದ್ದ ವಚನ ಸಾಹಿತ್ಯ ಇವರಿಂದ ಮತ್ತೊಮ್ಮೆ ಜಗತ್ತಿಗೆ ಪರಿಚಯವಾಯಿತು ಎಂಬುದನ್ನು ಮರೆಯುವಂತಿಲ್ಲ ಎನ್ನುವಲ್ಲಿ ವಚನ ಸಂಕಲನಕಾರರನ್ನು ಕುರಿತು ಇವರು ಅರ್ಥೈಸಿರುವ ಪರಿ ಕಾಣುತ್ತದೆ.

      ಚಾಮರಸನನ್ನು ಕುರಿತು ಅವರು ಹೇಳಿರುವ  ವಚನ ಚಳುವಳಿಯ ಪ್ರಮುಖರಿಗೆ ಅವತಾರದ, ಅಲೌಕಿಕತೆಯ ಸ್ಪರ್ಶ ನೀಡುವಂತಹ ಕೆಲಸ ಮಾಡುವುದರಲ್ಲಿ ಈತನ ಕೊಡುಗೆ ಗಮನಾರ್ಹವಾಗಿದೆ ಎಂಬ ಮಾತು ಚಿಂತನೆಗೆ ಒಳಗು ಮಾಡಿದೆ. ಅದೇ ರೀತಿ ಕಲ್ಲಮಠದ ಪ್ರಭುದೇವನಿಗೆ ಸಂಬಂಧಿಸಿದಂತೆ ವಚನಕಾರರು ರಚಿಸಿದ ಸರಳವಾಗಿ ಸಾಮಾನ್ಯ ನೆಲೆಯಲ್ಲಿ ಅರ್ಥವಾಗಬಹುದಾಗಿದ್ದ ವಚನಗಳನ್ನು ಆಗಮಗಳೊಂದಿಗೆ ಬೆಸೆಯುವ ಪ್ರಯತ್ನ ಮತ್ತು ಹಠದಿಂದಾಗಿ ಅವುಗಳ ಉದ್ದೇಶ ದೂರವಾಗಿ ಅವುಗಳೆಲ್ಲ  ಧರ್ಮಪಾಲಕರ ವಶದಲ್ಲಿ ಬದುಕುವಂತೆ ಮಾಡಿದವರಲ್ಲಿ ಈತನ ಕಾಣಿಕೆಯೂ ಇದೆ. ಎಂಬ ಮಾತಿನಲ್ಲಿ ೧೫ ನೇ ಶತಮಾನದ ವೀರಶೈವ ಸಂಕಲನಕಾರರ ಆಶಯ ಏನಾಗಿದ್ದಿತು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

    ಕಲ್ಯಾಣ ಕೀರ್ತಿಯಂತಹ ಜೈನ ಕವಿಗಳ ಕೃತಿಗಳ ವಿವೇಚನೆಯಲ್ಲಿ ಕವಿಗೆ ಧರ್ಮವನ್ನು ಉದ್ಧಾರ ಮಾಡುವ ಉದ್ದೇಶ ಮಾತ್ರ ಇದ್ದು, ಕಾವ್ಯ ವರ್ಣನೆ ಮತ್ತಾವುದೂ ಅವನ ಗಮನದಲ್ಲಿ ಇಲ್ಲ. ಕಥೆಯನ್ನು ಹೇಳಿ ಜನಗಳ ಮನಸ್ಸನ್ನು ಧರ್ಮದತ್ತ ತಿರುಗಿಸುವುದು ಮುಖ್ಯ ಉದ್ದೇಶವಾದ್ದರಿಂದ ಬೇರೆ ಕಡೆ ಗಮನ ಹರಿಯುವುದಿಲ್ಲ. ಕವಿ ಭವಾವಳಿಗಳ ಗೊಂದಲವನ್ನು ಕಡಿಮೆ ಮಾಡಿಕೊಂಡು ತನ್ನ ಕಾವ್ಯದ ಕಥೆಯನ್ನು ಸರಳ ಗೊಳಿಸಿಕೊಳ್ಳಲು ಮನಸ್ಸು ಮಾಡ ಬೇಕಾಗಿದ್ದಿತು ಎಂದು ಹೇಳುವುದರ ಮೂಲಕ ಆ ಕಾಲದ ಜೈನಧರ್ಮದ ಸ್ಥಿತಿಗತಿ ಮತ್ತು ಅದಕ್ಕೆ ಕವಿ ಸ್ಪಂದಿಸಿದ ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ.

    ಪಾಯಣ್ಣ ಕವಿಯ ಅಹಿಂಸಾ ಚರಿತೆಯಲ್ಲಿ ಚಂದ್ರಹಾಸನ ಕಥೆಯನ್ನು ಜೈನ ಕವಿಗಳು ತಮ್ಮ ತೆಕ್ಕೆಗೆ ತೆಗೆದುಕೊಂಡು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಜೈನಧರ್ಮದ ಪ್ರತಿಪಾದನೆಗಾಗಿ ಬಳಸಿಕೊಂಡಿರುವುದನ್ನು ಗಮನಿಸಿದ್ದಾರೆ. ವಿಜಯಣ್ಣ ದ್ವಾದಶಾನುಪ್ರೇಕ್ಷೆಯಲ್ಲಿ ಪೂರ್ಣ ಧಾರ್ಮಿಕ ವಿಚಾರಗಳನ್ನೇ ತುಂಬಿಕೊಂಡಿರುವ ಈ ಕಾವ್ಯವನ್ನು ಸರಳವಾಗಿ ನೇರವಾಗಿ ಅರ್ಥವಾಗುವಂತೆ ಸುಲಭಗ್ರಾಹ್ಯವಾಗುವಂತೆ ಮಾಡಿದ್ದಾನೆ.

     ಕಲ್ಲರಸನ ಜನವಶ್ಯ ಕುರಿತು ವೀರಣ್ಣನವರು ತಾಳಿರುವ ನಿಲುವಾದ  ಆಧುನಿಕ ಕಾಲದಲ್ಲಿಯೇ ಮನುಷ್ಯ ಸಂಬಂಧಗಳನ್ನು ಕುರಿತ ವೈಜ್ಞಾನಿಕ ತಿಳಿವಳಿಕೆಯ ಕಾಮಶಾಸ್ತ್ರ, ಅದರ ಸಮಗ್ರ ಅಧ್ಯಯನದ ಬಗೆಗೆ, ಸಮಾಜದ ಸ್ವಾಸ್ಥ್ಯಕ್ಕೆ ಅದರ ಅಗತ್ಯ ಇತ್ಯಾದಿಗಳ ಬಗೆಗೆ ಇನ್ನೂ ಮಡಿವಂತಿಕೆಯ ಮನೋಭಾವ ಇರುವಾಗ ಅಷ್ಟು ಪ್ರಾಚೀನ ಕಾಲದಲ್ಲಿಯೇ ಇಂತಹ ಪ್ರಯತ್ನಗಳು ಕನ್ನಡದಲ್ಲಿ ನಡೆದಿರುವುದು  ಗಮನಾರ್ಹ ಎಂಬುದು ಗಮನಿಸುವ ಸಂಗತಿಯಾಗಿದೆ. ಪರಂಜ್ಯೋತಿಯ ಅನುಭವ ಮುಕುರವು ಅಧ್ವೈತ ಸಿದ್ಧಾಂತದ ಪ್ರಮುಖ ವಿಚಾರಗಳನ್ನು ತಿಳಿಯಾದ ಕನ್ನಡದಲ್ಲಿ ನಿರೂಪಿಸುವಂತಿದ್ದು  ವಚನ ಸಾಹಿತ್ಯದ ಸಂಪಾದನೆಗಳ ಭರಾಟೆಯಲ್ಲಿದ್ದವರಿಗೆ ಸಹಾಯಕ ಸಾಮಗ್ರಿ ಎನ್ನುವಂತೆ ರಚಿತವಾಗಿದೆ. ಧರ್ಮ ಸಂಪಾದನೆಯ ಕರ್ತೃ  ಚಿಕ್ಕ ಮಲ್ಲಿ ಕಾರ್ಜುನ ಕವಿಗೆ ವಚನ ಸಂಪಾದಕರ ಸಂಪರ್ಕವಿಲ್ಲ ಎಂಬ ನಿಲುವನ್ನು ತಾಳಿದ್ದಾರೆ.

   ಶಿಶುಮಾಯಣ ಕವಿಯನ್ನು ಇವರು ಗ್ರಹಿಸಿದ್ದ ಹೀಗೆ: ಶಿಶುಮಾಯಣ ಕವಿಯನ್ನು ಕುರಿತು ಈತನು  ಪಂಪ ರನ್ನರ ಪರಂಪರೆಗೆ ಸೇರಬಹುದಾದಷ್ಟು ಉತ್ತಮ ಕವಿ. ಆದರೆ ಕಥೆಯನ್ನು ಗೋಜಲು ಗೋಜಲು ಮಾಡಿಕೊಂಡ ಕಾರಣದಿಂದ ಮತ್ತು ರಾಮಾಯಣದ ಪ್ರಮುಖಾಂಶಗಳನ್ನು ಬದಲಾಯಿಸುವಾಗ ಅಷ್ಟೇ ಸಶಕ್ತವಾಗಿ ಚಿತ್ರಿಸಲಾಗದೆ ಇರುವುದರಿಂದ, ಪರಿಣಾಮ ಬೀರುವುದರಲ್ಲಿ ಹಿಂದೆ ಬೀಳುತ್ತದೆ. ಆದರೂ ಒಟ್ಟಾರೆಯಾಗಿ ಬರವಣಿಗೆಯ ಸೌಂದರ್ಯ ಮತ್ತು ಕವಿಯ ಕಲ್ಪನಾಚಾತುರ್ಯ ನಿಜವಾಗಿಯೂ ಗಮನ ಸೆಳೆಯುವಷ್ಟು ಚೆನ್ನಾಗಿವೆ ಎಂಬ ಇವರ ನಿಲುವು ಶಿಶುಮಾಯಣ ಕವಿಯನ್ನು ಅರ್ಥೈಸಿರುವ ರೀತಿಯನ್ನು ಸೂಚಿಸುತ್ತದೆ.  

   ದೇಪರಾಜನ 'ಸೊಬಗಿನ ಸೋನೆ' ಯನ್ನು ಕುರಿತ ʻಹೆಸರಿಗೆ ತಕ್ಕಂತೆ ಸೊಬಗಿನ ನಾನಾ ಮಗ್ಗುಲುಗಳನ್ನು ಕಾವ್ಯದ ಬಂಧದಲ್ಲಿ ಇರಿಸುವುದರಲ್ಲಿ ಯಶ ಕಂಡಿದೆ. ಕಾವ್ಯದ ಕಥೆ ಸಂಘರ್ಷಕ್ಕಿಂತ ಒಲುಮೆಯ ಕಥಾನಕದತ್ತಲೇ ಗಮನ ಹರಿಸಿದ್ದು, ಕಾವ್ಯದ ಉದ್ದೇಶ ಅಷ್ಟರಮಟ್ಟಿಗೆ ಸಾರ್ಥಕವಾಗಿದೆ. ಕವಿಗೆ ವಿಸ್ತೃತ ವಿವರಣೆಯೊಂದಿಗೆ ಕಾವ್ಯರಚನೆಯ ಚಾತುರ್ಯ ಕರಗತವಾಗಿದೆ ಎನ್ನುವುದು ಕಾವ್ಯದ ಉದ್ದಕ್ಕೂ ಮನನವಾಗುತ್ತದೆ. ಕಾವ್ಯದ ಕಥೆಗೆ ಸಂಕೀರ್ಣವಾದ, ಹಲವು ಆಯಾಮಗಳಿರುವ ಕಥಾವಸ್ತುವಿನ ಗಂಭೀರ ವಿಸ್ತೃತ ಹಂದರವಿಲ್ಲ. ಆದರೆ ಇರುವಷ್ಟರಲ್ಲೇ ಮನುಷ್ಯ ಸ್ವಭಾವದ ವೈಚಿತ್ರ್ಯಗಳನ್ನು ದೇಪರಾಜ ನಾಟಕೀಯವಾಗಿ ಪರಿಚಯಿಸುವುದು ವಿಶೇಷವಾಗಿ ಗಮನ ಸೆಳೆಯುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ತೆರಕಣಾಂಬಿ ಬೊಮ್ಮರಸನ ಸನತ್ಕುಮಾರ  ಚರಿತೆಯನ್ನು ಕುರಿತು, ಜೈನ ಕವಿಗಳು ಜೀವನದ ಎಲ್ಲಾ ಸುಖಗಳನ್ನು ಅನುಭವಿಸಿಕೊಂಡುಬಂದು, ಅವುಗಳಿಗೆ ಯಾವುದೇ ಅಭ್ಯಂತರವಿಲ್ಲ ಎನ್ನುವಂತೆ ವರ್ಣಿಸಿ,
ಕೊನೆಗಾದರೂ ಜೈನ ದೀಕ್ಷೆಯನ್ನು ತೆಗೆದುಕೊಂಡು ಮುಕ್ತರಾಗಿ ಎಂದಾದರೂ ಜನ ಇತ್ತ  ಲಿಯ ಬಹುದೆಂಬ ಆಸೆಯಿಂದ ಈ ಬಗೆಯ ವೈವಿಧ್ಯಮಯ ಘಟನೆಗಳಿಂದ ಕೂಡಿದ ಕಥೆಗಳನ್ನು ರಚಿಸಿದರು. ಕಥೆ ಹೇಳುವುದೇ ಮೂಲ ಆಶಯವಾದ್ದರಿಂದ ಕಾವ್ಯದ ಕಸುಬುದಾರಿಕೆಯ ಕಡೆ ಕೆಲವರು ಹೆಚ್ಚು ಗಮನ ಹರಿಸಲಿಲ್ಲ. ಇಲ್ಲವೇ ಅವರ ಕಾವ್ಯ ಕಟ್ಟುವ ಕ್ರಿಯಾಶಕ್ತಿಯ ಮಟ್ಟವೂ ಅದಕ್ಕೆ ಕಾರಣವಾಗಿರಬಹುದು. ಎಲ್ಲೆಲ್ಲಿ ಗಮನಿಸಬಹುದಾದ ಹೊಳಪುಂಟೋ ಅವುಗಳನ್ನು ಎತ್ತಿ ತೋರಿಸಿ' ಅಷ್ಟರಮಟ್ಟಿಗೆ ಈ
ಕವಿಗಳ ಪ್ರಯತ್ನವನ್ನು ಗುರುತಿಸಬಹುದಷ್ಟೆ, ಎಂಬುದು ಅವರ ನಿಲುವು.

    ಸಾಳ್ವ ಕವಿಯ ಸಾಳ್ವ ಭಾರತವನ್ನು ಕುರಿತು ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನು ಹೊಡೆದಂತೆ ಭಾಗವತ ಭಾರತಗಳನ್ನು ಸೇರಿಸಿ, ಆ ಮಧ್ಯೆ ಮಧ್ಯೆ ಜಿನನನ್ನು ತಂದು ಸೇರಿಸಿ ಏನೆಲ್ಲಾ ತಂತ್ರಗಳನ್ನು ಹೆಣೆದಿದ್ದರೂ ಭಾರತದ ಕಥೆಯನ್ನು ಜೀರ್ಣಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಕವಿಯಾಗಿ ಸಾಳ್ವನಿಗೆ ಸಾಮರ್ಥ್ಯವಿದೆ ಎನ್ನುವುದು ಅನೇಕ ಹೊಸಹೊಳಹಿನ ಮಾತುಗಳಿಂದ ಕಟ್ಟಿರುವ ಅವನ ಕಾವ್ಯದಲ್ಲಿ ಗೊತ್ತಾದರೂ ಜೈನಪರಂಪರೆಯ ಕೃತಿ ಎಂದು ಭಾವಿಸಿಕೊಂಡೇ ಮುಂದೆ ಹೋಗಲಾಗಿದೆ. ಈ ಅನಿಸಿಕೆಯಲ್ಲಿ ಸಾಳ್ವ ಕವಿಯನ್ನು ಗ್ರಹಿಸಿರುವ ರೀತಿ ವ್ಯಕ್ತವಾಗುತ್ತದ.

    ನೀಲಕಂಠಾಚಾರ್ಯನ  ಆರಾಧ್ಯ ಚಾರಿತ್ರವನ್ನು ಕುರಿತು,  ಕವಿಯು ಇಷ್ಟೊಂದು ಬೃಹತ್ ಕಾವ್ಯವನ್ನು ರಚಿಸಿದ ಕವಿ ಕಾವ್ಯ ಗುಣ ಇತ್ಯಾದಿಗಳ ಬಗೆಗೆ ತಲೆಕಡಿಸಿಕೊಂಡಿಲ್ಲ, ಭಕ್ತಿಯ ಕಥೆಯನ್ನು ಹೇಳುತ್ತಾ ಹೋದರೆ ಸಾಕು, ಮತ್ತೆ ಬೇರೇನೂ ಅಗತ್ಯವಿಲ್ಲವೆಂಬುದು ಅವನ ದೃಷ್ಟಿ,  ಹರಿಹರ, ರಾಘವಾಕ ನಂತದ್ದಾ 

ಕವಿಗಳು ಅವನ ಕಣ್ಣೆದುರಿಗಿದ್ದರೂ ಅವರನ್ನು ಬಿಟ್ಟು ಕಬಂಧವಿಲ್ಲದ, ಜಾಳುಜಾಳಾದ ಕಥೆಗಳನ್ನುಜೋಡಿಸಿ ಬೃಹತ್ತಾದ ಕೃತಿಯನ್ನು ಧರ್ಮವನ್ನು ಸ್ತಾಪಿಸುತ್ತಿದ್ದವೆಂಬ ಹೆಗ್ಗಳಿಕೆಯಲ್ಲಿ ರಚಿಸಿದನು. ಇಷ್ಟಾದರೂ ಕಾಲ ಮತ್ತು ಬದುಕನ್ನು ಕುರಿತ ಅವನು ಹೇಳುವ ಎಷ್ಟೋವಿಚಾರಗಳು ಮನುಷ್ಯ ಇತಿಹಾಸವನ್ನು ಕುರಿತ ಮಾತುಗಳಾದ್ದರಿಂದ ಇವುಗಳನ್ನು ಅಧ್ಯಯನ ಮಾಡುವ ಅಗತ್ಯತೆ ಇದ್ದೇ ಇರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

   ಸಂಗಮೇಶ್ವರನ ಪುರಾಣವನ್ನು ಕುರಿತು, ಭಾಮಿನಿಷಟ್ಟದಿಯಲ್ಲಿ ಹೇಳಿದ್ದಾನೆ. ಕವಿ ಇಷ್ಟೊಂದು ದೊಡ್ಡದಾದ ಕಾವ್ಯವನ್ನು ಬರೆಯಲು ಹಲವಾರು ಮೂಲಗಳಿಂದ ಸಂಗ್ರಹಿಸಿದ ಕಥೆಗಳೆಲ್ಲವನ್ನೂ ಸಂಗಮೇಶ್ವರನ ಮಹಿಮೆಯೊಳಗೆ ತಂದು ತುಂಬಿದ್ದಾನೆ. ಕಥೆ ಹೇಳುವ ಏಕೈಕ ಉದ್ದೇಶವನ್ನು ಹೊಂದಿರುವ ಕವಿಗೆ ಕಾವ್ಯದ ಉಳಿದ ಯಾವ ವಿಚಾರಗಳಿಗೂ ಪುರಸೊತ್ತಿಲ್ಲವಾದ್ದರಿಂದ, ಅವನು ನಿರೂಪಿಸಿರುವುದರಲ್ಲೇ ಕಥೆಯ ಜಾಡನ್ನು ಸವೆಸುತ್ತಾನೆ. ಬಸವಲಿಂಗೇಶ ಹದಿನೈದನೇ ಶತಮಾನದ ಕೊನೆಯ ಕಾಲಘಟ್ಟದವನಾಗಿದ್ದರೂ ತನ್ನ ಕಾಲದ ಇತರರೊಂದಿಗೆ ಅವನಿಗೆ ಸಂಪರ್ಕ ಇರಲಿಲ್ಲವೆಂದೇ ಹೇಳಬೇಕಾಗುತ್ತದೆ ಎಂಬುದಾಗಿ ವ್ಯಕ್ತಪಡಿಸಿದ್ದಾರೆ.

    ಸಿಂಗಿರಾಜ ಪುರಾಣವನ್ನು ಕುರಿತು ಇದು ಪವಾಡಗಳನ್ನು ಮಾತ್ರ ತಿಳಿಸಬೇಕೆಂಬ ಉದ್ದೇಶದಿಂದಲೇ ಸಿಂಗಿರಾಜ ಕವಿ ರಚಿಸಿದ ಕಾವ್ಯವಾಗಿರುವುದರಿಂದ, ಬಸವನ ವ್ಯಕ್ತಿತ್ವದ ಯಾವ ವಿಚಾರಗಳೂ ಇಲ್ಲಿಬಂದಿಲ್ಲ. ಆದರೂ ಅವನು ಹೇಳುವುದರಲ್ಲಿರುವ ವಾಸ್ತವ ಅಂಶಗಳನ್ನು ಗುರುತಿಸಲುಪ್ರಯತ್ನಿಸಬಹುದು. ಬಸವನಿಗೆ ತುಂಬಾ ಹತ್ತಿರವಿದ್ದವರೇ 'ಸತ್ಯಕ್ಕೆ' ಮುಖ ತಿರುಗಿಸಿ,ಕಲ್ಪನೆಯ ಕಡೆಗೆ ಸಾಗಿದ್ದರಿಂದ ಕ್ರಿ.ಶ. 1500ರ ಕವಿಯೊಬ್ಬ ಅದರಲ್ಲೂ ಪವಾಡಹೇಳ ಹೊರಟವನಿಂದ ಇತಿಹಾಸದ ವೈಶಿಷ್ಟ್ಯವನ್ನು ಹುಡುಕಲು ಹೊರಡುವುದುಸಾಹಸದ ಮಾತು ಈ ಅನಿಸಿಕೆಗಳು ಅವರ ನಿರ್ಬಿಡತ್ವದ ಮಾತುಗಳಾಗಿವೆ.

   ಶೂನ್ಯಸಂಪಾದನಾಕಾರ ಹಲಗೆಯಾರ್ಯನನ್ನು ಕುರಿತು, ಬಸವನಪ್ರಸಂಗದಲ್ಲಿ ಬಸವ ಅಹಂಕಾರಿಯಾಗಿದ್ದ, ಅವನನ್ನು ಮೆತ್ತಗೆ ಮಾಡಿದ ಅಲ್ಲಮ, ನಂತರ ಬಸವನನ್ನು ಯಥೇಚ್ಛವಾಗಿ ಹೊಗಳಿದ. ಇಷ್ಟು ಬಿಟ್ಟರೆ ವಚನಕಾರರ ಸಾಮಾಜಿಕ, ವೈಚಾರಿಕ ವಿಚಾರಗಳನ್ನು ಸಂಪೂರ್ಣವಾಗಿ ಬದಿಗೊತ್ತಿ ವಚನಚಳುವಳಿಯ ವಿಶ್ವವ್ಯಾಪಕತ್ವವನ್ನು ʻವೀರಶೈವ'ದ ಚೌಕಟ್ಟಿನಲ್ಲಿ ಅಡಗಿಸಿದ ದೊಡ್ಡಸಾಹಸವನ್ನು ಈ ಸಂಪಾದನೆಕಾರರು ಮಾಡಿದರೆಂಬುದು ಇಲ್ಲಿ ತಿಳಿಯಬೇಕಾದವಿಚಾರವಾಗಿದೆ. ಇದನ್ನು ನಾನು ಆರೋಪಿಸಿದ್ದೇನೆಂದು ಭಾವಿಸಬೇಕಾಗಿಲ್ಲ,  ಎನ್ನುವ ಇವರ ದಿಟ್ಟತನದ  ಮಾತುಗಳು ಆಲೋಚನೆಗೆ ಒಳಗು ಮಾಡುವಂತಹವುಗಳಾಗಿವೆ.

    ಕುಮಾರವಾಲ್ಮೀಕಿ ರಚಿಸಿದ ತೊರವೆ ರಾಮಾಯಣವನ್ನು ʻಸಾರವತ್ತಾದ ರಾಮಾಯಣವನ್ನು' ಎಂದು ಹೇಳುವುದರಲ್ಲಿ ಉತ್ಪ್ರೇಕ್ಷೆಯ ಮಾತೇನಿಲ್ಲ. ಇದು ಸಾರವತ್ತಾದ ಕಾವ್ಯ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಅವನೇ ಹೇಳುವಂತೆ`ಸರಸ ವರ್ಣಕ ಕವಿಗಳೊಳು ಭಾಸುರ ಕುಮಾರವ್ಯಾಸನೊಬ್ಬನು ಪರಿಕಿಸುವೊಡಾನೊಬ್ಬ ಎನ್ನುವ ಮಾತು ಕೂಡ ಹೆಚ್ಚಾದುದೇನಲ್ಲ. ಅದನ್ನು ಇನ್ನಷ್ಟು ಸರಿಯಾಗಿ
ಹೇಳುವುದಾದರೆ ಪಂಪ, ರನ್ನ, ಹರಿದೇವ, ರಾಘವಾಂಕ, ಕುಮಾರವ್ಯಾಸ,ಕುಮಾರವಾಲ್ಮೀಕಿಯೆಂದು ಈತನಿಗೂ ಸ್ಥಾನವನ್ನು ಕೊಡುವುದು ನ್ಯಾಯವಾದುದು. ಕುಮಾರವಾಲ್ಮೀಕಿ ಕುಮಾರವ್ಯಾಸನನ್ನು ಅನೇಕ ಕಡೆ ಅನುಸರಿಸಿದಂತೆ ಕಂಡರೂ ಸ್ವತಂತ್ರವಾದ ಕಾವ್ಯ ಶಕ್ತಿಯ ಅಭಿವ್ಯಕ್ತಿ ಅನೇಕ ಕಡೆಗಳಲ್ಲಿ ಎದ್ದು ಕಾಣುತ್ತದೆ. ಕುಮಾರವಾಲ್ಮೀಕಿ ಕನ್ನಡದ ಉತ್ತಮ ಕವಿಗಳ ಸಾಲಿನಲ್ಲಿರಬೇಕಾದ ಕವಿ ಎಂಬುದುಅವನಿಗೆ ಸಲ್ಲಬೇಕಾದ ಮರ್ಯಾದೆಯಾಗಿದೆ. ಕುಮಾರವಾಲ್ಮೀಕಿಯ ಬಗೆಗೆ ಈವರೆಗೆ ನಮ್ಮ ಗಮನ ಕಡಿಮೆಯಾಗಿದೆ ಎಂದೇ ಹೇಳಬೇಕು. ಇವನ ಇನ್ನೊಂದು ವಿಶೇಷವೆಂದರೆ, ಯಕ್ಷಗಾನದ ಪರಿಶ್ರಮವಿದ್ದು, ನಾಟಕೀಯ ಗುಣಗಳು, ಸಂಭಾಷಣ ಜಾಣ್ಮೆಯೂ ಕೂಡ ಅಲ್ಲಲ್ಲಿ ಎದ್ದು ಕಾಣುತ್ತದೆ. ಗಮನಿಸಲೇಬೇಕಾದ ಕವಿಗಳಲ್ಲಿ ಕುಮಾರವಾಲ್ಮೀಕಿಯೂ ಒಬ್ಬನಾಗಿದ್ದಾನೆ ಎಂದು ತಿಳಿಯುವ ಅಗತ್ಯವಿದೆ.

   ವೆಂಕ ಕವಿಯ ಕಾವ್ಯ ಸಾರ ಸಂಕಲನದ  ಬಗೆಗೆ ಮೊದಲ ಬಾರಿಗೆ ಈ ಸಂಪುಟದಲ್ಲಿ  ಪ್ರಸ್ತಾಪಿಸಲ್ಪಟ್ಟಿದೆ. ಇಲ್ಲಿ ಪ್ರಸ್ತಾಪಿಸಿರುವ ವೆಂಕನ ಕಾವ್ಯಸಂಕಲನದಲ್ಲಿಯ ಪಾನದಿಂದೆಡೆಗೊಂಡುಕ್ಕಿ ವಿಕಾರಮಾಸುಗಮದಂ', 'ತೂಗುತ್ತೆ ತೊದಳಿಸುತ್ತಂಜೋಗುಂ ಜೋಗುತ್ತೆ ಸೊಕ್ಕಿದಬಲೆಯರ್', 'ನಿಜಾಂಗಭಂಗಿಚೆಲ್ವಡರ್ರೊದೊಡೆದಾಡೆ ತಾಂಬಿಡದಾಡಿದಳಾ ಮಧುಪಾನ ಗೋಷ್ಠಿಯೊಳ್'- ಈ ಪದ್ಯಗಳ ಮೂಲ ಕಾವ್ಯಗಳು ದೊರೆತರೆ ವೆಂಕನ ಕಾಣಿಕೆಗೆ ಅರ್ಥ ಬಂದಂತಾಗುತ್ತದೆ. 'ಆತ್ಮಾಸ್ಯದೊಳ್ಪಾಂಚಜನ್ಯಂ ಬಿಸಜಾಕ್ಷಂ ಶಂಖಮಂ ಪೂರಿಸಿ' ಎನ್ನುವುದು ಕೃಷ್ಣನಕಥೆಯ ಪದ್ಯವಾಗಿದೆ. ಕೊನೆಯ ಹಿಮದೃತು ವರ್ಣನೆಯಲ್ಲಿತನುವಂತಾಬಿಗಿದಪ್ಪಿರ್ದ ರ್ಧನಾರಿಯನಾದನುಮೇಶಂ' ಇಂತಹ ಪದ್ಯಗಳನೇಕವನ್ನು ಕನ್ನಡಿಗರಿಗೆ ಪರಿಚಯಿಸಿ, ನಿಮ್ಮ ಸಾಹಿತ್ಯದ ಗುಪ್ತನಿಧಿಯ ಶೋಧನೆಗೆ ತೊಡಗಿ ಎಂಬ ಸಂದೇಶವನ್ನು ವೆಂಕ ಈ ಕೃತಿಯ ಮೂಲಕ ತಲುಪಿಸಿದ್ದಾನೆ.   

     ಈ ಸಂಪುಟದಲ್ಲಿ ಕವಿಗಳು ಇತ್ತಿವೃತ್ತ ಮತ್ತು ಅವರ ಕೃತಿಗಳನ್ನು ವಿಮರ್ಶಿಸುವಾಗ ಆಯಾ ಕಾಲದ ಸಾಮಾಜಿಕ ಸಂಗತಿಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದಾರೆ. ಇವರು ತಮ್ಮ ಸಾಹಿತ್ಯ ಚರಿತ್ರೆಯ ಈ ಸಂಪುಟದಲ್ಲಿ ಕವಿಗಳು ಮತ್ತು ಅವರ ಕೃತಿಗಳನ್ನು ವಿಮರ್ಶೆ ಮಾಡುವಾಗ ಲಭ್ಯ, ಅಲಭ್ಯ ಎಲ್ಲಾ ಮೂಲಕೃತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಅವುಗಳನ್ನು ಪರಿಶೀಲಿಸಿ ಅವುಗಳಿಂದಲೇ ಪದ್ಯಗಳನ್ನು ಉದಾಹರಿಸಿದ್ದಾರೆ. ಯಾವುದೇ  ಆನುಷಂಗಿಕ ಆಕರಗಳನ್ನು ಬಳಸಿಲ್ಲದಿರುವುದು ಅವರ ಶ್ರಮದ ದ್ಯೋತಕವಾಗಿದೆ. ಸಂಪುಟವು ಅಡಿಟಿಪ್ಪಣಿಗಳ ಬಾರದಿಂದ ಬಳಲಬಾರದೆಂಬ ಉದ್ದೇಶದಿಂದ ಅಡಿಟಿಪ್ಪಣಿಗಳನ್ನು ಇಲ್ಲಿ ಕೊಡ ಮಾಡಿರುವುದಿಲ್ಲ.

    ಈ ಸಂಪುಟದಲ್ಲಿ ಈಗಾಗಲೇ ಬಂದಿರುವ ಸಾಹಿತ್ಯ ಚರಿತ್ರೆಗಳಲ್ಲಿಯ  ಕವಿ-ಕವಿಕಾವ್ಯಗಳ ಕುರಿತ ಅನಿಸಿಕೆ, ಅಭಿಪ್ರಾಯಗಳಲ್ಲಿ ಯಾವುದನ್ನು ಉಲ್ಲೇಖಿಸದಿರುವುದು ವಿಶೇಷವಾಗಿದೆ. ಕವಿಯ ಕಾಲ ಇತಿವೃತ್ತದ ಬಗೆಗೆ ಇತ್ತೀಚಿನ ನಿಲುವುಗಳನ್ನು ಸ್ವೀಕರಿಸಿಕೊಂಡು ಚರ್ಚೆಗೆ ಅವಕಾಶವನ್ನು ನೀಡದಿರುವುದು ವಿಶೇಷವಾಗಿದೆ. ಈ ಸಂಪುಟದಲ್ಲಿ ಪ್ರತಿ ಕವಿಯ ಬಗೆಗಿನ ವಿವರ ಕೊನೆಯಲ್ಲಿ ಆ ಕವಿಯ ಬಗೆಗೆ  ಮುಕ್ತ ಮತ್ತು ಬಿಚ್ಚು ಮನಸ್ಸಿನಿಂದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವುದುದು ವಿಶೇಷವಾಗಿದೆ. ಇವರ ಕೆಲವು ಕವಿಗಳ ಕಾವ್ಯಗಳ ಪಾತ್ರಗಳಲ್ಲಿ ಕಂಡು ಬರುವ ಸಂಗತಿ ಹಾಗೂ ಘಟನೆಗಳನ್ನು ಸಮಕಾಲೀನ ಜಗತ್ತಿನ ಘಟನೆಗಳಿಗೆ ಸಮೀಕರಿಸಿ ನಿರೂಪಿಸಿದ್ದಾರೆ. ಈ ಸಂಪುಟದಲ್ಲಿ ವೀರಣ್ಣ ಅವರವು ಎನ್ನುವಂತಹ ಸೋಪಜ್ಞ ಮಾಹಿತಿಗಳನ್ನು ವ್ಯಾಖ್ಯಾನನಿಷ್ಠದಲ್ಲಿ ಗುರುತಿಸ ಬಹುದಾಗಿದೆ. ಕವಿಗಳನ್ನು ಕುರಿತ ಹಾಗೆ ವಸ್ತು ನಿಷ್ಠ ಪ್ರತಿಕ್ರಿಯೆ, ಚಾರಿತ್ರಿಕ ದೃಷ್ಟಿಕೋನ ಹಾಗೂ ಪ್ರಮಾಣ ಬದ್ದ ಅಭಿಪ್ರಾಯಗಳನ್ನು ಇಲ್ಲಿ ಕೆಲವೆಡೆ ಕಾಣ ಬಹುದಾಗಿದೆ. ಈ ಸಂಪುಟದಲ್ಲಿ ನಡುಗನ್ನಡದ ಕವಿಗಳ ಕಾವ್ಯಗಳನ್ನು ಓದು ಮತ್ತು ಗ್ರಹಿಕೆಯ ಹಿನ್ನೆಲೆಯಲ್ಲಿ ಅನು ಸಂಧಾನ ಮಾಡುವುದರ ಮೂಲಕ ಕಾವ್ಯಗಳ ಅನೇಕ ಮಗ್ಗುಲುಗಳನ್ನು ತೆರೆದು ತೋರಿಸಿದ್ದಾರೆ. ಸತ್ವದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಈ ಸಂಪುಟದಲ್ಲಿಯ  ಅವರ ಬರಹಗಳೆಲ್ಲ ಗಟ್ಟಿಕಾಳು ಮತ್ತು ಹೊಸತನದಿಂದ ಕೂಡಿವೆ. ಈ ಸಂಪುಟವು ಕನ್ನಡ ಸಾಹಿತ್ಯ ಚರಿತ್ರೆಯಪರಂಪರೆಯಲ್ಲಿ ಶಾಶ್ವತವಾಗಿ ನಿಲ್ಲಬಲ್ಲ ಸಂಪುಟವಾಗಿದೆ.  ಒಟ್ಟಾರೆ ಇವರ ಕೆದಕುವ ಪ್ರಕ್ರಿಯೆಯಿಂದಾಗಿ ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ವಿಶಿಷ್ಟವಾದ ರೂಪ ದೊರೆಯುವುದು ಸಾಧ್ಯವಾಗಿದೆ. ಬೇರೆ ಬೇರೆ ದೃಷ್ಟಿಕೋನ ಮತ್ತು ಉದ್ದೇಶಗಳಿಂದ ಸಾಹಿತ್ಯದ ನೋಟ ಮತ್ತು  ವಿಶ್ಲೇಷಣೆಯ ಮೂಲಕ ಸಾಹಿತ್ಯ ಚರಿತ್ರೆಯನ್ನು ನಿರೂಪಿಸಿರುವ ಹಿನ್ನೆಲೆಯಲ್ಲಿ ಸಿ.ವೀರಣ್ಣನವರ ಈ ಮಹತ್ತರವಾದ ಕೆಲಸ  ಕನ್ನಡ ಸಾಹಿತ್ಯ ಚರಿತ್ರೆಯ ಪರಂಪರೆಯಲ್ಲಿ  ವೈಶಿಷ್ಟ್ಯಪೂರ್ಣ ಮತ್ತು ಗುರುತರತೆಯನದನ್ನು ಪಡೆದುಕೊಂಡಿದೆ ಎಂದು ಈ ಸಂದರ್ಭದಲ್ಲಿ ಹೇಳಲು ಇಷ್ಟಪಡುತ್ತೇನೆ.

 

ಪರಾಮರ್ಶನ ಗ್ರಂಥಗಳು:

೧. ಸಿ.ವೀರಣ್ಣ: ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟ.೧. ಪ್ರಾಚೀನ ಸಾಹಿತ್ಯ

  ನವಕರ್ನಾಟಕ ಪ್ರಕಾಶನ .  ಬೆಂಗಳೂರು,೭ ನೇ ಮುದ್ರಣ೨೦೨೧

೨. ಸಿ.ವೀರಣ್ಣ: ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟ ೩. ಮಧ್ಯಕಾಲೀನ ಸಾಹಿತ್ಯ

  ನವಕರ್ನಾಟಕ ಪ್ರಕಾಶನ .  ಬೆಂಗಳೂರು,೨೦೨೫

೩. ಸಿ.ನಾಗಭೂಷಣ: ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಅಧ್ಯಯನ ವಿಧಾನದ ತಾತ್ವಿಕ ನಿಲುವುಗಳು,

  ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನ ಸಂ: ಮಹೇಶ.ಬಿ ಮತ್ತು ನಾಗವೇಂದ್ರ ಚಿದರವಳ್ಳಿ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೨೧,

 

 

 

  ಡಾ.ಸಿ.ವೀರಣ್ಣ ಅವರ  ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಮಧ್ಯಕಾಲೀನ ಸಾಹಿತ್ಯ ರಾಜಸತ್ತೆಯ ಪುನಶ್ಚೇತನ ಕಾಲ ಸಂಪುಟದ ಸ್ವರೂಪ ಮತ್ತು ಅಧ್ಯಯನ ವಿಧಾನದ ಇತಿಹಾಸದ ತಾತ...