ಗುರುವಾರ, ಡಿಸೆಂಬರ್ 28, 2017

ಅಪೂರ್ವ ನವ ವರ್ಣ-ಮಾತ್ರಾವೃತ್ತಗಳ ಅನ್ವೇಷಣಕಾರ ಛಂದೋನಿಜಗುಣಿ ಡಾ.ಸಿ.ನಾಗಭೂಷಣ

ಅಪೂರ್ವ ನವ ವರ್ಣ-ಮಾತ್ರಾವೃತ್ತಗಳ ಅನ್ವೇಷಣಕಾರ ಛಂದೋನಿಜಗುಣಿ                                                                            ಡಾ.ಸಿ.ನಾಗಭೂಷಣ
  ನಿಜಗುಣ ಶಿವಯೋಗಿಗಳ ಮಾನಸ ಪುತ್ರ ಎಂದೇ ಗುರುತಿಸಲ್ಪಡುವ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರು( ಪೂರ್ವಾಶ್ರಮದ ಹೆಸರು ಪಿ.ಬಸವಣ್ಣ)1933 ಜೂನ್ 15 ರಂದು  ಕೊಳ್ಳೆಗಾಲದ ಮುಳ್ಳೂರು ಗ್ರಾಮದ ಪರುವಪ್ಪ ಮತ್ತು ಪುಟ್ಟಮಲ್ಲಮ್ಮ ದಂಪತಿಗಳಿಗೆ ಕಿರಿಯ ಪುತ್ರರಾಗಿ ಜನಿಸಿದರು. ಇವರು ತಮ್ಮ ಸಾಂಸಾರಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ-ಅನುಭವಗಳ ನಂತರ 1981 ರಲ್ಲಿ ಸನ್ಯಾಸ ದೀಕ್ಷೆ  ಸ್ವೀಕರಿಸಿದರು. ನಿಜಗುಣರ ಕೃಪೆಯಾಗಿ ಅವರ ಷಟ್ ಶಾಸ್ತ್ರಗಳನ್ನು ಮನನಮಾಡಿಕೊಂಡು ಹಾನಗಲ್ಲ ಅಪ್ಪಗಳಿಗೆ ಬೋಧಿಸಿದರು. ಕುಮಾರಸ್ವಾಮಿಗಳವರು ಗುರುಗಳ ಅಪ್ಪಣೆಯಂತೆ ಸಮಾಜಸೇವೆಗೆ ತಮ್ಮನ್ನೇ ಅಪರ್ಪಿಸಿಕೊಂಡರು. ಸುಮಾರು ಎಂಟುದಶಕಗಳ ತರುವಾಯ ನಿಜಗುಣ ಕ್ಷೇತ್ರಕ್ಕೆ ಕಳೆ ತಂದವರು ಪಿ.ಬಸವಣ್ಣನವರು ವೃತ್ತಿಯಿಂದ ವಕೀಲರಾಗಿ, ಸಂಸಾರಿಯಾಗಿ ಸಂಸಾರದಿಂದ  ಸದ್ಗತಿಕಾಣಲು ಹಂಬಲಿಸಿ ಪೂರ್ವಾಶ್ರಮವನ್ನು ನಿರಸನಮಾಡಿ ನಿಜಗುಣರ ನಿಜದನುವನ್ನು ಹೊಂದಿಕೊಂಡರು.
ತಮ್ಮ ನೆಚ್ಚಿನ ನಿಜಗುಣ ಶಿವಯೋಗಿಗಳ ಸನ್ನಿಧಾನವಾದ ಶಂಭುಲಿಂಗನ ಬೆಟ್ಟವನ್ನು ತಮ್ಮ ಕಾಯಕ ಭೂಮಿಯಾಗಿರಿಸಿಕೊಂಡು ತಮ್ಮ ಇಷ್ಟಲಿಂಗಾನುಸಂಧಾನ, ತಪಃಸಾಧನೆಗಳ ಜೊತೆಗೆ ಜನಸೇವೆ ಮತ್ತು ಸಾಹಿತ್ಯ ಸೇವೆ ಮುಂದುವರೆಸಿಕೊಂಡು ಬರುತ್ತಿದ್ದಾರೆ ನಿಜಗುಣರ ಕಾರ್ಯಕ್ಷೇತ್ರವಾದ ಚಿಲುಕವಾಡಿಯಲ್ಲಿ ಅರ್ಥಾತ್ ಶಂಭುಲಿಂಗನ ಕ್ಷೇತ್ರದಲ್ಲಿ ಅದ್ಭುತಸಾಧನೆಗೈದರು. ಶ್ರೀನಿಜಗುಣಾನುಭವಮಂಟಪವನ್ನು ನಿಮರ್ಮಿಸುವದರೊಂದಿಗೆ ನಿಜಗುಣರ ಚಿರಂರತ ಸ್ಮಾರಕವೆಂಬಂತೆ ಕೈವಲ್ಯ ಕೌಸ್ತುಭವನ್ನು  ಹೊರತಂದರು. ಫೂಜ್ಯರು ಶ್ರೀ ಶಂಭಲಿಂಗನ ಕ್ಷೇತ್ರದಲ್ಲಿರುವ ಶ್ರೀಮನ್ನಿಜಗುಣರ ತಪೋಸ್ಧಾನವಾದ ಗವಿಯನ್ನು ಹಾಗೂ ಮುಪ್ಪಿನ ಷಡಕ್ಷರಿಗಳ ಗವಿಯನ್ನು ಜೀಣೋದ್ಧಾರೆ ಮಾಡಿ ಸಾಧಕರಿಗೆ ವಾಸಿಸಲು ಅನುವಾಗುವಂತೆ ವ್ಯವಸ್ಥೆಮಾಡಿದ್ದಾರೆ. ಜೊತೆಗೆ  ಬಸವಾದಿ ಪ್ರಮಥರ ದಾಸೋಹಪರಂಪರೆಯನ್ನು ಎತ್ತಿಹಿಡಿಯುವಂತೆ ಶ್ರೀಕ್ಷೇತ್ರದಲ್ಲಿರುವ ಭಿಕ್ಷದ ಮಠದಲ್ಲಿ ಸದಾಕಾಲ ದಾಸೋಹ ಏರ್ಪಡಿಸಿದ್ದಾರೆ. ಪ್ರತೀಪೌರ್ಣಿಮೆಗೆ ನಡೆಯುವ ಪೌರ್ಣಿಮೆಯ ಕಾರ್ಯಕ್ರಮಗಳನ್ನು  ಭಾಗದಲ್ಲಿ ನಡೆಯುವ ಸಮಕಾಲೀನಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಎದ್ದು ಕಾಣುವಂತಿವೆ. ಪೂಜ್ಯರ ಜೀವನಸಾಧನೆಯನ್ನು ಅವರು ಗೈದ ಮಹತ್ತರವಾದ ಶ್ರಮನಿಷ್ಠತೆಯನ್ನು ಅವರ ತಪಸ್ಸುಸಾಧನೆಯನ್ನು ಅವರು ಲಿಂಗಪೂಜಾನಿಷ್ಠಯನ್ನು ಸಾಹಿತ್ಯದ  ಸೃಷ್ಟಿಯ  ಸೃಜನಶೀಲತೆಯನ್ನು ಸಂಘಟನಾಕೌಶಲ್ಯವನ್ನು ಮಾತಿಗೆ ಮೀರಿದ ಅವರ ವ್ಯಕ್ತಿತ್ವ ಮತ್ತು  ಸಾಧನೆಯನ್ನು ಹೇಳಲು ಭಾಷೆಯ ಅಸಮರ್ಥವಾಗುತ್ತದೆ.
 ಪಿ.ಬಸವಣ್ಣನವರು ಕುಮಾರನಿಜಗುಣರಾಗಿ ಮರುಹುಟ್ಟು  ಪಡೆದ ಪ್ರಕ್ರಿಯೆಯೇ ಒಂದು ಪವಾಡ ಛಂದಸ್ಸಿನ ಅನಂತಸಾಧ್ಯತೆಗಳ ಅನ್ವೇಷಣೆ ಅವರ ಕುತೂಹಲದ  ಲೋಕವಾದರೆ ಆತ್ಮೋನ್ನತಿಯ ಎತ್ತರಬಿತ್ತರಗಳ ಅನೂಹ್ಯಸ್ಥಿತಿಗಳಲ್ಲಿ ನಿಸ್ತರಂಗಿತಮಸ್ಕರಾಗಿ ಬದುಕುವುದು ಅವರ ಮನೋಲೋಕದ ಮತ್ತೋಂದುಜಲು ಕಾವ್ಯಸೃಷ್ಟಿ ಅವರಿಗೆ ಕೇವಲ ಕಾಲಹರಣದ ರಂಜನೆಯ ಕ್ರಿಯೆಯಲ್ಲ: ಶಿವಪಥದ ಅನ್ವೇಷಣೆ ಬ್ರಹ್ಮಾನಂದಕ್ಕೆ  ಕೀಲಿಕೈ. ನಡುವೆ ಇಂತಹ  ಒಂದು  ಚೇತನ ಇರುವುದೇ ಪುಣ್ಯ ಪ್ರದವಾದದ್ದು.ಕನ್ನಡ, ಸಂಸ್ಕೃತ, ಇಂಗ್ಲೀಷ್ ಹಾಗೂ ತಮಿಳು ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಇವರು ಶಾಸ್ತ್ರ ವಿಷಯಗಳಲ್ಲಿ ಅದರಲ್ಲಿಯೂ ಛಂದಸ್ಸಿನ ವಿಷಯದಲ್ಲಿ ಆಳವಾದ ಅಧ್ಯಯನಮಾಡಿ ತಮ್ಮ  ಮಹೋನ್ನತ ಪ್ರತಿಭೆಯ ಮೂಲಕ ಇಲ್ಲಿಯವರೆಗೂ ಸಂಸ್ಕೃತ ಮತ್ತು ಕನ್ನಡದ ಪ್ರಾಚೀನ ಹಾಗೂ ಆರ್ವಾಚೀನ ಲಾಕ್ಷಣೀಕರಾರು ಕೈಗೊಳ್ಳದ ನೂತನ ಛಂದೋ ಆವಿಷ್ಕಾರಗಳನ್ನು ಆವಿಷ್ಕರಿಸಿ ಛಂಧೋವಾಙ್ಮಯ ಪ್ರಪಂಚದಲ್ಲಿ ಮಹಾನ್  ಸಾಧನೆಯನ್ನು ಮಾಡಿದ್ದಾರೆ.ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಕುವೆಂಪು, ಬೇಂದ್ರೆ, ಡಿ.ವಿ.ಜಿ. ವಿ.ಕೃ.ಗೋಕಾಕ್, ಪು.ತಿ. ಅವರೊಂದಿಗೆ ಗಾಢವಾದ ವಿದ್ವತ್ ಸಂಬಂಧವನ್ನು  ಪಡೆದಿದ್ದುದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಶ್ರೀ ಕುಮಾರನಿಜಗುಣರ ಇನ್ನೊಂದು ಮಹತ್ ಸಾಧನೆ ಎಂದರೆ .ಪೂ.ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳನ್ನು ಉತ್ತರಕರ್ನಾಟಕಭಾಗದಿಂದ  ಮೈಸೂರಿಗೆ ಕರೆತಂದು ಪರಿಚಯಸಿದುದು. ಇಲ್ಲಿಯ ಜಿಜ್ಞಾಸುಗಳಿಗೆ ಜ್ಞಾನಯೋಗಿಯ ಪ್ರವಚನಸುಧೆಯನ್ನು ಉಣಬಡಿಸಿದುದು. ಇಂತಹ  ಮಹಾಸೌಭಾಗ್ಯಕ್ಕಾಗಿ ಇಲ್ಲಿಯ ಜನತೆ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ ಎನಿಸುತ್ತದೆ.ಇದಕ್ಕೂ  ಮಿಗಿಲಾಗಿ ವಿಸ್ಮಯದ್ಯೋತಕವೋ ಎಂಬಂತೆ ನಿಜಗುಣರಿಗೆ  ಮತ್ತು ಮುಪ್ಪಿನಾರ್ಯರಿಗೆ ರಸಕಾವ್ಯ ಕನ್ನಿಕೆಯನ್ನು ಧಾರೆಯೆರದು ಕೊಟ್ಟಂತೆ ಶಂಭುಲಿಂಗನು ಕೃಪೆದೋರಿ  ಕುಮಾರನಿಜಗುಣರಿಗೆ ಕವಿತಾಸಾಮರ್ಥ್ಯವನ್ನು ಕೊಟ್ಟನು. ಕಾವ್ಯದೇವಿ ಒಲಿದು ಕೈಹಿಡಿದಳು. ಹಿಎಇದ ಲೆಕ್ಕಣಿಕೆಗೆ ಬಿಡುವಿಲ್ಲದಂತೆ ಲೆಕ್ಕಕ್ಕೆ ಸಿಗದಷ್ಟು ಛಂದೋವೃತ್ತಗಳನ್ನು ಲಕ್ಷಣ- ಲಕ್ಷ್ಯಗಳಿಂದ ಕೂಡಿ ಹೊರತರುತ್ತಾ ಸಾಮಾನ್ಯ ಓದುಗರನ್ನಷ್ಟೇ ಅಲ್ಲ. ಪಂಡಿತವರೇಣ್ಯರನ್ನೂ ಬೆರಗುಗೊಳಿಸುವಂತಹ ಪ್ರೌಢಕಾವ್ಯಗಳನ್ನು ರಚಿಸಿದರು. ಹಿಂದೆ ಕಾನೂನುಶಾಸ್ತ್ರದಲ್ಲಿ  ಬಲ್ಲಿದರೆನಿಸಿದ್ದವನು ಈಗ  ಕಾವ್ಯಶಾಸ್ತ್ರ , ಛಂದೋಶ್ಯಾಸ್ತ್ರಗಳಲ್ಲಿ ಕೋವಿದರೆನಿಸಿದುದು ಒಂದು ಸೋಜಿಗ!
 ಬೋಳು ಬಸವನ ಬೊಂತೆ,ಪಾರ್ವತಿ ಪ್ರಣಯ ಕಲಹ,ತ್ರಿಷಷ್ಠೀ ಪುರಾತನ ಸ್ತೋತ್ರ, ಶ್ರೀಶಿವಕುಮಾರ ಚರಿತಂ,ನಿರೀಕ್ಷೆ ಮುಂತಾದ ವಿದ್ವತಪ್ರೌಢಿಮೆಯುಳ್ಳ ಕೃತಿಗಳನ್ನು ರಚಿಸಿದ್ದಾರೆ. ನಾಗವರ್ಮನು  ಛಂದೋಂಬುಧಿ ಗ್ರಂಥವನ್ನು ರಚಿಸಿರುವನು ಮಹಾಕವಿಗಳ ತಮ್ಮ ವಸ್ತುವಿಗೆ  ಒಪ್ಪುವ ಛಂದಸ್ಸನ್ನು  ತಾವೇ ರೂಪಿಸಿಕೊಳ್ಳುವರು ಚಂಪೂ-ಷಟ್ಟದಿ-ರಗಳೆ-ಸಾಂಗತ್ಯ ಇವೆಲ್ಲ ಕವಿಗಳ ಮನಸ್ಸಿನಿಂದ ಲಯಬದ್ದವಾಗಿ ಪ್ರವಹಿಸಿ ಓದುಗರನ್ನು  ಮಂತ್ರಮುಗ್ಧಗೊಳಿಸುವವು. ಪೂಜ್ಯ ಕುವೆಂಪುರವರು  ರಾಮಾಯಣದರ್ಶನಕ್ಕೆ  ತಾವು  ಬಳಸಿದ  ಛಂದಸ್ಸುನ್ನು ಮಹಾಛಂದಸ್ಸು ಎಂದು ಕರೆದರು, ಪ್ರಮುಖಕವಿಗಳ ಬಳಸಿರುವ ಛಂದಸ್ಸು  ಹಲವಾರುಮಂದಿಗೆ ಮಹಾಛಂದಸ್ಸ್ಸೇ ಸರಿ! ಇವರು ಮಾತ್ರೆಗಳನ್ನು ಎಣಿಸಿ ಲೆಕ್ಕಾಚಾರವಾಗಿ  ಪದ್ಯಗಳನ್ನು ಕಟ್ಟಿಲ್ಲ. ಇವರ ಭಾವವೇ  ವಸ್ತುವಿನ್ಯಾಸವನ್ನು ಛಂದೋಬದ್ದವಾಗಿ ನಡೆಸಿದೆ.
      ದಿ.ಬಸವಣ್ಣನವರು ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು ಕ್ಲಿಷ್ಟವಾದ ವೃತ್ತಗಳನ್ನು ಇವರು ಲೀಲಾಜಾಲವಾಗಿ ರಚಿಸಿಬಿಡುವರು ಕೆಲವು ಖಂಡಕಾವ್ಯಗಳನ್ನು  ರಚಿಸಿ ತ್ರಿಕರಣಗಳನ್ನು ಹದಗೊಳಿಸಿಕೊಂಡಿರುವರು. ಪಿ.ಬಸವಣ್ಣನವರಲ್ಲಿ ನಾನು ಕಂಡ ನನಗೆ ಅಚ್ಚರಿಮೂಡಿಸಿದ ಸಂಗತಿ ಎಂದರೆ ಅವರ ಕವಿತಾಪ್ರೇಮ ಕಾವ್ಯಸಾಧನೆ ಛಂದೋಪರಿಣಿತ  ಇದು ಹೇಗೆ ಅವರಲ್ಲಿ ಬಂದಿತು ಎಂಬುದು ನನಗಿನ್ನೂ ರಹಸ್ಯದ ಸಂಗತಿಯೇ ಆಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಉನ್ನತವ್ಯಾಸಂಗಮಾಡಿ ವಿಶೇಷಸಂಶೊಧನೆಮಾಡಿದ ಅನೇಕಪ್ರಾಧ್ಯಾಪಕರಿಗೆ ವಿದ್ವಾಂಸರಿಗೆ ಸಿದ್ಧಸಲಾಗದ  ಛಂದಶ್ಯಾಸ್ತ್ರಪರಿಣಿತ ಇವರಲ್ಲಿರುವುದು ಕಾವ್ಯಕೃತಿಗಳು ಛಂದೋಪ್ರಯೋಗಗಳನ್ನು ಕುರಿತು ಕೃತಿಗಳು ಎಂದರೆ ತಪ್ಪಾಗದು.
      ೧೯೯೧ರಲ್ಲಿ ಪ್ರಕಟಗೊಂಡ ಶ್ರೀ ಶಿವಕುಮಾರಚರಿತಂ (೧೪೫ ಷಟ್ಟದಿಗಳಲ್ಲಿ ಶ್ರೀ ಶಿವಕುಮಾರಸ್ವಾಮಿಗಳನ್ನು ಕುರಿತು ಜೀವನಚರಿತ್ರೆ) ೧೯೯೫ರಲ್ಲಿ ಪ್ರಕಟಗೊಂಡ ವೃತ್ತವಿಲಾಸವೈಭವ  (೨೭೦ನವೋತ್ಪಾದ್ಯವೃತ್ತಗಳು ಲಕ್ಷ್ಯ-ಲಕ್ಷಣಗ್ರಂಥ) ೨೦೦೨ ರಲ್ಲಿ ಪ್ರಕಟವಾದ ಗಣಾಕ್ಷರವೃತ್ತಶತಕ (ವೃತ್ತನಾಮಗಳಲ್ಲಿಯೇ ಲಕ್ಷಣಗಳನ್ನೊಳಗೊಂಡ ೧೦೦ ವೃತ್ತಗಳ ಆವಿಷ್ಕರಣದ ಗ್ರಂಥ) ಛಂದೋಗ್ರಂಥಗಳು ಕನ್ನಡಸಾಹಿತ್ಯಕ್ಕೆ ಅಷ್ಟೇ ಅಲ್ಲ. ಭಾರತೀಯಛಂದೋಶಾಸ್ತ್ರಕ್ಕೆ ಅನುಪಮಕೊಡುಗೆಗಳಾಗಿವೆ. ಇವು ಸಂಸ್ಕೃತ-ಹಿಂದಿಗೆ ಅನುವಾದವಾಗಬೇಕಾದ ಅಗತ್ಯವಿದೆ.
      ಪಿ.ಬಸವಣ್ಣನವರು  ಕೇವಲ ಶುಷ್ಕಶಾಸ್ತ್ರಕಾರರಾದ ವಿದ್ವಾಸರಲ್ಲ ಸಹೃದಯಾನುಭವ ರಸಪೂರ್ಣಕವಿಗಳು ಸಂಪ್ರದಾಯಶೀಲಛಂದೋರಚನೆಗಳಲ್ಲಿ ಆಧುನಿಕತೆ ತರಲೆತ್ನಿಸುವ ಕವಿಗಳು ಧಾರ್ಮಿಕ ಪೌರಾಣಿಕಕಾವ್ಯವಸ್ತುಗಳಲ್ಲಿ ಒಲವಿರುವ ಕವಿಗಳು ಅವರ ಶಿವನ  ಪಂಚವಿಂಶತಿಲೀಲೆಗಳು (೧೯೭೦) ಪಾರ್ವತೀಪ್ರಣಯಕಲಹಂ (೧೯೭೧) ಅನುವಾದಗಳಲ್ಲಿ  ಧಾರ್ಮಿಕ ಪೌರಾಣಿಕ ಸಂಗತಿಗಳಿದ್ದರೆ ಭಿಕ್ಷ (೧೯೫೧) ದಲ್ಲಿ ಪ್ರೇಮ ಕಂಡರೆ  ಸಂಗಮೇಶ್ವರಶತಕದಲ್ಲಿ ನವೀನಾಂಶಗಳನ್ನು ಕಾಣುತ್ತೇವೆ. ಸರಳವಾಗಿ ವಿಶಿಷ್ಟವಚನಾಸಾಹಿತ್ಯವಾಗಿರುವ ಬಸವಣ್ಣನವರು ವಚನಗಳನ್ನು ಅದರಲ್ಲಿ ವಾರ್ಧಕಷಟ್ಟದಿಗಳಲ್ಲಿ  ಅನುವಾದಿಸಿದ್ದರಿಂದ ಗಮಕಿಗಳು ಹಾಡಲು ಅನುಕೂಲವಾಯಿತು. ಕೇವಲ ಮಲ್ಲಿಕಾರ್ಜುನಮನ್ಸೂರ ಬಸವರಾಜರಾಜಗುರು ಶೇಷಾದ್ರಿಗವಾಯಿತು. ಜಂಜಲದಿನ್ನಿ  ಹಾಡಿ ಪ್ರಸಿದ್ದಗೊಳಿಸಿ ಕೇವಲಶಾಸ್ತ್ರೀಯಸಂಗೀತಮಾಧ್ಯಮಕ್ಕೆ ಮೀಸಲಾದ ವಚನಗಳು ಹಾಡುಗಾರಿಕೆಯನ್ನು ಗಮಕವಲಯಕ್ಕೆ ತಂದ ಹಿರಿಮೆ ಪಿ.ಬಸವಣ್ಣನವರದು ನಮ್ಮ ಗಮಕಿಗಳು ಕಡೆ ವಿಶೇಷ ಗಮನವೀಯಬೇಕಾಗಿದೆ. ಇವರು ಕನ್ನಡಕಾವ್ಯಕ್ಕೆ ನೀಡಿದ  ಕೊಡುಗೆಗಳಲ್ಲಿ ಷಟ್ಟದಿ ವೃತ್ತಗಳು ರಚನೆಯ ಜತೆಗೆ ಚಿತ್ರಕವಿತ್ವವೂ ಸೇರಿದೆ ಮತ್ತು ನಿಜಗುಣರ ಪ್ರಭಾವದಿಂದ ಉತ್ತಮಕೀರ್ತನೆಗಳನ್ನೂ ರಚಿಸಬಲ್ಲರು ಎಂಬುದಕ್ಕೆ ಭಿಕ್ಷ ಕವನಸಂಕಲದಲ್ಲಿ ಸಾಕಷ್ಟು ನಿದರ್ಶನೆಗಳನ್ನು ಕಾಣಬಹುದು.ಬಸವಣ್ಣ ಅಂಕಿತವನ್ನು ಬಳಸಿದ್ದರೂ ಎಲ್ಲ ಕೀರ್ತನೆಗಳಲ್ಲೂ ಬಳಸಿಲ್ಲಿ ಪಲ್ಲವಿಗಳಿದ್ದರೂ ಅನುಪಲ್ಲವಿಗಳು ಕಾಣುವುದಿಲ್ಲ ಕೀರ್ತನೆಗಳಲ್ಲಿ ಪಿ,ಬಸವಣ್ಣನವರು ಕೇವಲ ಭಾವುಕಕವಿಗಳು ಕೀರ್ತನಕಾರರು ಅಷ್ಟೆ ಅಲ್ಲದೆ ಪಾಂಡಿತ್ಯದ  ಕವಿಗಳು ಹೌದು. ಅಕ್ಷರಮಾಲಿಕೆಯ ಶಬ್ದಸಂಪತ್ತು ಅಚ್ಚರಿಗೊಳಿಸುತ್ತದೆ. ಶಿವರಾತ್ರಿರಾಜೇಂದ್ರ ರಕ್ಷಿಸುಶ್ರೀ ಶಿವಕುಮಾರಸ್ವಾಮಿ ಅಷ್ಟಕಂಮೊದಲಾದ ಕವಿಯ ರಚನಾಚಾತುರ್ಯಕ್ಕೆ ನಿದರ್ಶನವಾಗಿದೆ. ನಿರೀಕ್ಷೆ ಕವನಸಂಕಲನ ಕವಿಯ ಪ್ರಾರಂಭದ ಹಂತಕ್ಕೆ ಸಾಕ್ಷಿ.
       ಇಂದು ನಿರ್ಲಕ್ಷಕ್ಕೆ ಒಳಗಾಗಿರುವ ಛಂದಸ್ಸು ಶಾಸ್ತ್ರ ವಿಷಯದಲ್ಲಿ ಇವರು ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಛಂದೋ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಯಾರು ಮಾಡಿರದ ನೂತನ ಛಂದೋವೃತ್ತಗಳನ್ನು ಆವಿಷ್ಕರಿಸಿ ಛಂದೋವಾಙ್ಮಯ ಕ್ಷೇತ್ರದಲ್ಲಿ ಅದ್ವಿತೀಯ ವಿದ್ವನ್ಮಣಿಗಳಾಗಿದ್ದರೂ ಇವರ ಈವಿದ್ವತ್ ಸಾಧನೆಯನ್ನು ಯಾರೂ ಗುರುತಿಸದಿರುವುದು ದುರಂತವೇ ಸರಿ. ಸ್ವತಃ ಕವಿಗಳಾದ ಕುಮಾರನಿಜಗುಣರು   ನೂತನ ಛಂದೋ ಆವಿಷ್ಕಾರ ಕೃತಿಗಳನ್ನು ಸಾಹಿತ್ಯಲೋಕಕ್ಕೆ  ಅರ್ಪಿಸುವ ಮೂಲಕ ಕನ್ನಡನಾಡಿನ ಸಾಹಿತ್ಯ ಸಾರಸ್ವತಖಜಾನೆಯನ್ನು ಇನ್ನಷ್ಟು ಮತ್ತಷ್ಟು ಸಮೃದ್ಧಗೊಳಿಸಿದ್ದಾರೆ ಮತ್ತು ಸಂಪದ್ಭರಿತಗೊಳಿಸಿದ್ದಾರೆ. ಹಳೆಗನ್ನಡ ಮತ್ತು ಛಂದಶ್ಯಾಸ್ತ್ರದ ಮೇಲೆ ಅವರಿಗಿರುವ ಪ್ರಭುತ್ವ ಅಪರಿಮಿತ ಮತ್ತು ಅನುಪಮಛಂದೋಸರಸ್ವತಿ ಸಂಪೂರ್ಣ ಅನುಗ್ರಹಕ್ಕೆ ಅವರು ಪಾತ್ರರಾಗಿದ್ದಾರೆ. ಛಂದೋಬದ್ಧತೆ ಅವರ ಕಾವ್ಯಗಳ ವೈಶಿಷ್ಟ್ಯ. ಸ್ವತಃ ಕವಿಗಳಷ್ಟೇ ಅಲ್ಲ ಛಂದಶ್ಯಾಸ್ತ್ರನಿಪುಣರು. ಅಗಣಿತಛಂದೋರೂಪಗಳನ್ನು ಸೃಷ್ಟಿಸಬಲ್ಲಂತಹ ಕೋವಿದರು.
     ವರ್ಣ ಛಂದಸ್ಸು ಸಂಸ್ಕೃತ ಛಂದೋ ಗ್ರಂಥಗಳಲ್ಲಿ ಪ್ರತಿಪಾದಕ್ಕೆ ಒಂದು ಅಕ್ಷರವುಳ್ಳ ಉಕ್ತಾ ಹೆಸರಿನ ವೃತ್ತದಿಂದ ತೊಡಗಿ ಇಪ್ಪತ್ತಾರು ಅಕ್ಷರಗಳಿರುವ ಉತ್ಕೃತಿಯವರೆಗೆ ಬೇರೆ ಬೇರೆ ಛಂದೋ ಹೆಸರುಗಳನ್ನು ಒಳಗೊಂಡಿದೆ. 1 ರಿಂದ 26 ಅಕ್ಷರಗಳನ್ನು ಹೊರತು ಪಡಿಸಿ 27 ರಿಂದ 54 ಅಕ್ಷರಗಳುಳ್ಳ ವೃತ್ತಗಳೂ ಇದ್ದು ದಂಡಕಗಳು ಎಂಬ ಹೆಸರಿನಿಂದ ಸೂಚಿಸಲ್ಪಟ್ಟಿವೆ. ಈ ದಂಡಕದಲ್ಲಿ ಪ್ರತಿಪಾದದಲ್ಲಿ ಇಪ್ಪತ್ತಾರಕ್ಕಿಂತ ಹೆಚ್ಚುಅಕ್ಷರಗಳಿರಬೇಕೆಂದಿದೆಯೇ ಹೊರತು ಗರಿಷ್ಟವಾಗಿ ಎಷ್ಟಿರಬೇಕೆಂದು ತಿಳಿದುಬಂದಿಲ್ಲ.
     ಈ ದಂಡಕ ಅಥವಾ ಮಾಲಾವೃತ್ತಗಳನ್ನು ಹೊರತುಪಡಿಸಿ 26ರ ವರೆಗಿನ ಅಕ್ಷರಗಳನ್ನು ಬೇರೆ ಬೇರೆ ಗಣವಿನ್ಯಾಸಕ್ಕನುಗುಣವಾಗಿ 134217726 ಸಮವೃತ್ತಗಳಾಗಿ ರಚಿಸಬಹುದು ಎಂಬುದು ಛಂದೋ ಲಾಕ್ಷಣಿಕರ ಅಭಿಪ್ರಾಯ. ಈ ಸಮವೃತ್ತಗಳು ಅಸಂಖ್ಯಾತ ಸಂಖ್ಯೆಯಲ್ಲಿದ್ದರೂ ಎಲ್ಲಾ ವೃತ್ತಗಳ ಲಕ್ಷಣ ಉದಾಹರಣೆಗಳನ್ನು ಯಾವ ಛಂದೋಗ್ರಂಥಗಳು ನಿರೂಪಿಸುವ ಗೋಜಿಗೆ ಹೋಗಿಲ್ಲ. ಅಲ್ಲಲ್ಲಿ ಸಂಸ್ಕೃತ ಕವಿಗಳು ಪ್ರಯತ್ನಪಟ್ಟರೂ ಸಾರ್ವತ್ರ್ರಿಕವಾಗಿಲ್ಲ.
     ಕನ್ನಡ ಸಾಹಿತ್ಯದಲ್ಲಿ ಈ ರೀತಿಯ ಸಮವೃತ್ತಗಳಲ್ಲಿ ಯಾವ ಯಾವ ವೃತ್ತಗಳು ಪ್ರಯೋಗಗೊಂಡಿವೆ ಎಂಬುದನ್ನು ಕನ್ನಡ ಕೈಪಿಡಿಯಲ್ಲಿ ಕಾಣಬಹುದಾಗಿದೆ. ಕೈಪಿಡಿಯಲ್ಲಿನ ವಿವರದ ಪ್ರಕಾರ ಪಾದವೊಂದಕ್ಕೆ ಎರಡಕ್ಷರಗಳಿರುವ ಗೇಯ ವೃತ್ತದಿಂದ ತೊಡಗಿ ಪಾದವೊಂದಕ್ಕೆ ಇಪ್ಪತ್ತಾರು ಅಕ್ಷರಗಳಿರುವ ಶಂಭುನಟನ ವೃತ್ತದವರೆಗಿನ ಲಕ್ಷಣಗಳನ್ನು, ಅವುಗಳಿಗೆ ಕನ್ನಡದ ಉದಾಹರಣೆಗಳನ್ನು ಕಾಣಬಹುದಾಗಿದೆ. ದಂಡಕ ಅಥವಾ ಮಾಲಾವೃತ್ತ ವರ್ಗಕ್ಕೆ ಸೇರುವ ಲಯಗ್ರಾಹಿ ವೃತ್ತ ಇದೆ. ಅರ್ಧ ಸಮವೃತ್ತಗಳಲ್ಲಿ ನಾಲ್ಕರ ಲಕ್ಷಣ, ಉದಾಹರಣೆಗಳಿವೆ. ಇವೆಲ್ಲವನ್ನು ಮನಗಂಡರೆ ಒಟ್ಟು ಎಪ್ಪತ್ತಕ್ಕಿಂತ ಹೆಚ್ಚಿನ ವೃತ್ತಗಳನ್ನು ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿಲ್ಲವೆಂದು ಕಾಣುತ್ತದೆ. ಆದರೆ ಮೊಟ್ಟ ಮೊದಲ ಬಾರಿಗೆ ಕುಮಾರ ನಿಜಗುಣರು ತಮ್ಮ ಕೃತಿಯಲ್ಲಿ ನೂತನ ವೃತ್ತಗಳನ್ನು ಪ್ರಯೋಗಿಸುವುದರ ಮೂಲಕ ಪೂರ್ವ ಸಂಸ್ಕೃತ ಕವಿಗಳ ದಾಖಲೆಗಳನ್ನು ಮುರಿಯುವುದರೊಂದಿಗೆ ಕನ್ನಡದಲ್ಲಿಯೂ ಸಾಧ್ಯ ಎಂಬುದನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದು ಎಂತಹವರಿಗೂ ದಿಗ್‍ಭ್ರಮೆ ಹುಟ್ಟಿಸುವ ಅಚ್ಚರಿ ಹುಟ್ಟಿಸುವ ಸಂಗತಿಯಾಗಿದೆ. ಕುಮಾರ ನಿಜಗುಣರು ನೂತನ ವೃತ್ತಗಳ ಪ್ರಯೋಗದಲ್ಲಿ ಕನ್ನಡ ಕೈಪಿಡಿಕಾರರ ವಿಧಾನ ಮಾರ್ಗವನ್ನೇ ಅನುಸರಿಸಿದ್ದಾರೆ. ಪ್ರಯೋಗಿಸಿದ ನೂತನ ವೃತ್ತಗಳಿಗೆ ಹೆಸರನ್ನು ಸೂಚಿಸುವಾಗ ಸಮಯಸ್ಪೂರ್ತಿಗೆ ತಕ್ಕಂತೆ ಭಾವಕ್ಕೆ ತೋರುವ ಹೆಸರನ್ನೇ ಸೂಚಿಸಿದ್ದಾರೆ. ಪ್ರತಿಯೊಂದು ವೃತ್ತವೂ ಯಾವ ಛಂದಸ್ಸಿನ ಎಷ್ಟನೇ ವೃತ್ತವೆಂಬುದನ್ನು ಉದ್ದಿಷ್ಟ ಪ್ರತ್ಯಯದ ಪ್ರಕಾರ ಲೆಕ್ಕ ಹಾಕಿ ತಾವು ಪ್ರಯೋಗಿಸಿದ ಎಲ್ಲಾ ನೂತನ ವೃತ್ತಗಳಿಗೂ ಕೊಟ್ಟಿದ್ದಾರೆ. ನಮ್ಮ ಪ್ರಾಚೀನ ಕವಿಗಳೇ ತಮ್ಮ ಚಂಪೂ ಕಾವ್ಯಗಳಲ್ಲಿ ಸಂಸ್ಕೃತದಿಂದ ಎರವಲು ಪಡೆದ ಅಕ್ಷರ ವೃತ್ತಗಳ (ಖ್ಯಾತ ಕರ್ನಾಟಕಗಳಂ ಹೊರತುಪಡಿಸಿ) ಛಂದೋವೈವಿಧ್ಯವನ್ನು ಕ್ವಚಿತ್ತಾಗಿ ಬಳಸಿರುವುದನ್ನು ಕಾಣಬಹುದು. ಅರ್ವಾಚೀನರಲ್ಲಿಯಂತೂ ಈ ವಿಷಯದ ಬಗೆಗೆ ‘ಇದು ನಮಗಲ್ಲ ಪಂಡಿತರಿಗೆ ಮಾತ್ರ’ ಎಂಬ ಪ್ರತ್ಯೇಕತಾಭಾವನೆ ಮತ್ತು ಅಸಡ್ಡೆಯನ್ನು ತೋರಿಸುವಂತಹ ಸಂದರ್ಭದಲ್ಲಿ ಕುಮಾರ ನಿಜಗುಣರು ಛಂದೋಲಾಕ್ಷಣಿಕರ ಮಾರ್ಗದಲ್ಲಿ ನಡೆದು ಹೊಸ ಬಗೆಯ ವೃತ್ತಗಳನ್ನು ಅರ್ವಾಚೀನ ಕಾಲದಲ್ಲಿಯೂ ಪ್ರಯೋಗಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರು ತೋರಿಸಿಕೊಟ್ಟಿರುವ ಈ ನೂತನ ಮಾರ್ಗದಲ್ಲಿ ಛಂದೋ ಆಸಕ್ತರು ಕಾವ್ಯ ಕೃಷಿ ನಡೆಸಿದರೆ ಈಗಿರುವ ಅಕ್ಷರ ಛಂದಸ್ಸಿನ ಚರಿತ್ರೆಯನ್ನು ಬದಲಾಯಿಸಬೇಕಾಗುತ್ತದೆ. ಅಂತಹ ಕಾರ್ಯ ತತ್ಪರ ವಿದ್ವತ್ ಮಣಿಗಳು ಇದ್ದಾರೆಯೇ ಎಂಬುದು ಯೋಚಿಸತಕ್ಕ ಮಾತಾಗಿದೆ. ಗಣಾಕ್ಷರವೃತ್ತಶತಕವು ಛಂದೋಸಕ್ತರಿಗೆ ಕುತೂಹಲಕಾರಿಯಾದ ವೃತ್ತಜಾತಿಗಳ ಹೊಸ ಲಕ್ಷಣ, ವೃತ್ತಗಳ ನೂತನ ಬಗೆಯ ಹೆಸರು, ನಿದರ್ಶನಗಳನ್ನು ಒಳಗೊಂಡಿದೆ. ಸಂಸ್ಕೃತದ ವರ್ಣ ವೃತ್ತಗಳಲ್ಲಿ ಅನಂತ ಸಂಖ್ಯೆಯ ಪ್ರಕಾರಗಳಿಗೆ ಅವಕಾಶವಿದ್ದರೂ ಮಹಾಕವಿಗಳು ಅವುಗಳ ಲಕ್ಷಣಗಳನ್ನು ನಿರೂಪಿಸುವಾಗ 26 ಅಕ್ಷರಗಳ ಸಂಖ್ಯೆಗೆ ತಮ್ಮ ಶಾಸ್ತ್ರವನ್ನು ಕಾವ್ಯತ್ವವನ್ನು ಸೀಮಿತಗೊಳಿಸಿದ್ದರು. ಉಳಿದ ಲಾಕ್ಷಣಿಕರಾರು ಈ ನಿಟ್ಟಿನಲ್ಲಿ ಅನಂತ ಸಂಖ್ಯೆಯ ವೃತ್ತಪ್ರಕಾರಗಳಿಗೆ ಲಕ್ಷ್ಯ ಹಾಗೂ ಲಕ್ಷಣವನ್ನು ಹೇಳುವ ಪ್ರಯತ್ನವನ್ನು ಮಾಡಲಿಲ್ಲ. ಹಾಗೆಯೇ ಹಳಗನ್ನಡ ಪ್ರಕಾರದಲ್ಲಿ ಕಾವ್ಯ ರಚಿಸಿರುವ ಚಂಪೂ ಕವಿಗಳು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರಲಿಲ್ಲ. ಆದರೆ ಈ ಪ್ರಯತ್ನದಲ್ಲಿ ಪ್ರಾಚೀನರಿಂದ ಹಿಡಿದು ಅರ್ವಾಚೀನರಲ್ಲಿ ಯಶಸ್ವಿ ಪ್ರಯೋಗ ನಡೆಸಿದವರು ಪೂಜ್ಯ ಶ್ರೀಕುಮಾರ ನಿಜಗುಣರು. ತಮ್ಮ ವೃತ್ತವಿಲಾಸ ವೈಭವ, ಗಣಾಕ್ಷರ ವೃತ್ತ ಶತಕ, ತ್ರಿಷಷ್ಠಿ ಪುರಾತನಸ್ತೋತ್ರ, ನಿಜಗುಣೀಯಂ ಮಹಾಕಾವ್ಯದ ಪೀಠಿಕಾ ಪ್ರಕರಣ ಇತ್ಯಾದಿ ಕೃತಿಗಳಲ್ಲಿ 26 ಅಕ್ಷರಗಳಲ್ಲೂ ಅವುಗಳ ಎಲ್ಲಾ ಬಗೆಗಳಲ್ಲಿಯೂ ಹೊಸ ಬಗೆಯ ವೃತ್ತಗಳನ್ನು ಯಾವ ರೀತಿ ಅವಿಷ್ಕರಿಸಬಹುದು ಎಂಬುದನ್ನು ಮತ್ತು 27 ಮತ್ತು 28 ನೇ ಅಕ್ಷರಗಳಲ್ಲೂ ಅವುಗಳ ಎಲ್ಲಾ ಪ್ರಕಾರಗಳಲ್ಲಿಯೂ ನೂತನ ವೃತ್ತಗಳ ಪ್ರಯೋಗವನ್ನು ಕನ್ನಡದಲ್ಲಿಯೇ ರಚಿಸಬಹುದು ಎಂಬುದನ್ನು ಪ್ರಪ್ರಥಮ ಬಾರಿಗೆ ನಿದರ್ಶನ ಸಹಿತವಾಗಿ ನಿರೂಪಿಸಿದ್ದಾರೆ. ಕುಮಾರ ನಿಜಗುಣರ ಈ ಪ್ರಯೋಗ ಇಡೀ ಕನ್ನಡ ಛಂದೋ ವಾಙ್ಮಯದಲ್ಲಿ ಅತ್ಯಂತ ಮಹತ್ತರತೆಯನ್ನು ಪಡೆದಿದ್ದು ವಿದ್ವನ್ಮಣಿಗಳಲ್ಲಿ ಅಚ್ಚರಿ ಹಾಗೂ ಕುತೂಹಲವನ್ನುಂಟು ಮಾಡಿದೆ.
ಗಣಾಕ್ಷರ ವೃತ್ತ ಶತಕವು ನೂರು ವೃತ್ತಗಳನ್ನು ಒಳಗೊಂಡಿದೆ. ಇಲ್ಲಿಯ ನೂರು ವೃತ್ತಗಳು ಎಲ್ಲವು ಹೊಸದಾಗಿವೆ. ಪೂರ್ವೋಕ್ತ ಪ್ರಾಚೀನ ಹಾಗೂ ಆಧುನಿಕ ಚಂಪೂಕಾವ್ಯಗಳೆರಡರಲ್ಲಿಯೂ ಹಿಂದೆಂದೂ ರಚನೆಗೊಳ್ಳದವುಗಳಾಗಿವೆ. ಪ್ರತಿಯೊಂದು ವೃತ್ತದ ಲಕ್ಷಣದ ಉಲ್ಲೇಖದೊಂದಿಗೆ ಅದಕ್ಕೊಪ್ಪುವ ಶೀರ್ಷಿಕೆಗಳನ್ನು ಒಳಗೊಂಡಿರುವುದು ವಿಶೇಷ.
     ನೂರು ವೃತ್ತಗಳು ನೂರು ವಿಷಯಗಳನ್ನು ಒಳಗೊಂಡಿವೆ. ಗತ ಕಾಲದ ವಿವರಗಳೊಂದಿಗೆ ಆಧುನಿಕ ಕಾಲದ ಸ್ಥಿತಿಗತಿಗಳ ವಿವರದ ವರ್ಣನೆಗಳಿಂದ ಕೂಡಿರುವುದು ಗಮನ ಸೆಳೆಯುವಂತಿದೆ.     ಗಣಾಕ್ಷರ ವೃತ್ತ ಶತಕವು ಪ್ರತಿಯೊಂದು ಪದ್ಯಗಳಲ್ಲಿಯೂ ಹೊಸ ಹೊಳಹನ್ನು ಹೊಂದಿದ್ದು ಲಕ್ಷಣ ಗರ್ಭಿತವಾದ ವೃತ್ತಕ್ಕೆ ಲಕ್ಷ್ಯವಾದ ಪದ್ಯವು ಅದರ ಹೆಸರೆಂಬ ಸೂತ್ರವನ್ನೇ ವಿಶದೀಕರಿಸಿ ವ್ಯಾಖ್ಯಾನಿಸುವ ಭಾಷ್ಯವಾಗಿ ವ್ಯಕ್ತಗೊಂಡಿರುವುದು ಅರ್ಥಗರ್ಭಿತವಾಗಿದೆ.       ಕುಮಾರ ನಿಜಗುಣರು ಶಾಸ್ತ್ರ ಗ್ರಂಥಗಳ ರಾಶಿಯನ್ನು ಕೆದಕಿ ಬೆದಕಿ ಛಂದೋವೃತ್ತಗಳನ್ನು ನಿರ್ಮಿಸಿದ ಪಂಡಿತ ಕವಿಗಳಲ್ಲ. ಅದು ತಾನಾಗಿಯೇ ಅವರಿಗೆ ಒಲಿದು ಅವರಿಗೆ ಸಿದ್ಧಿಸಿದೆ. ಛಂದೋ ವಾಙ್ಮಯದಲ್ಲಿ ಕೋಟಿಗಟ್ಟಲೇ ಛಂದಸ್ಸುಗಳು ಪ್ರಸ್ತಾರ ಕ್ರಮದಿಂದ ದೊರೆಯುತ್ತವೆಯಾದರೂ ಸಂಶೋಧಕರ ಪ್ರಕಾರ ಭಾರತೀಯ ಭಾಷೆಗಳಲ್ಲಿ ಇದುವರೆಗೂ ಕಂಡು ಬಂದಿರುವುದು ಸುಮಾರು ಏಳುನೂರು ವೃತ್ತಗಳಾಗಿವೆ. ಆದರೆ ಕುಮಾರ ನಿಜಗುಣ ರೊಬ್ಬರೇ ವರ್ಣಛಂದಸ್ಸಿನಲ್ಲಿ ಸುಮಾರು 700 ಅಧಿಕ ನೂತನ ಸೃಷ್ಟಿಯ ವೃತ್ತಗಳನ್ನು ರಚಿಸಿ ವರ್ಣವೃತ್ತಗಳ ಸಂಖ್ಯೆಯನ್ನು ಇಮ್ಮಡಿಗೊಳಿಸಿದ್ದಾರೆ.
ಛಂದಸ್ಸಿನ ಹೊಸ ದೃಷ್ಟಿಯು ಶಾಸ್ತ್ರ ವಾಹಿನಿಯ ಸುಭದ್ರ ತೀರಗಳ ನಡುವೆ ಸಂಯಮದಿಂದ ಹರಿಯುತ್ತ ಛಂದೋ ಸಾಧ್ಯತೆಗಳನ್ನು ವಾಸ್ತವವಾಗಿಸುತ್ತ ಸಾಹಿತ್ಯ ಚಮತ್ಕೃತಿಗಳ ದೊಂಬರಾಟ ಮಾತ್ರವಾಗದೆ ಜೀವನಾನುಭವಗಳ ರಸವನ್ನು ರೂಢಿಸುತ್ತಾ ಭೂತಭವಿಷ್ಯತ್ ವರ್ತಮಾನಗಳ ಛಂದೋಪ್ರಕಾರಗಳನ್ನು ಸಂಗಮಿಸುತ್ತ ಹರಿಯುತ್ತಿರುವುದನ್ನು ಇಲ್ಲಿ ಕಾಣಬಹುದು. ಹೊಸ ಛಂದಸ್ಸುಗಳಿಗೆ ಅದಕ್ಕೊಪ್ಪುವ ಭಾವಪೂರ್ಣವಾದ ಹೊಸ ಹೆಸರುಗಳು, ಕಟ್ಟುನಿಟ್ಟಿನ ಪರಿಪಾಲನೆ, ವರ್ಣನೆಯಲ್ಲಿ ವಿಷಯ ವೈವಿದ್ಯದ ವಸ್ತುವಿನ ಪರಿಚಯ, ಚಿತ್ರ ಬಂಧದ ಬಂಧುರ ನಿದರ್ಶನ ಆಧ್ಯಾತ್ಮಿಕ ಭಾವದಲ್ಲಿ ಲೋಕ ಜ್ಞಾನದ ಸಮರ್ಪಣೆ, ವೃತ್ತಗಳಲ್ಲಿ ಏಕಪ್ರಾಸ, ಬಹುಪ್ರಾಸ, ಅನುಪ್ರಾಸ, ಒಳಪ್ರಾಸಗಳ ಬಳಕೆ ಇತ್ಯಾದಿಗಳನ್ನು ಇಲ್ಲಿ ಗುರುತಿಸಬಹುದಾಗಿದೆ.
     ಗಣಾಕ್ಷರ ವೃತ್ತ ಶತಕದಲ್ಲಿ ನವನವೋನ್ಮೇಷವೂ ನವನವೋಲ್ಲೇಖವೂ ಆದ ಕವಿ ಪ್ರತಿಭೆ ಕೆಲಸಮಾಡಿದೆ. ಕಾವ್ಯಕ್ಕೆ ಕಾವ್ಯವಾಗಿ, ಶಾಸ್ತ್ರಕ್ಕೆ ಶಾಸ್ತ್ರವಾಗಿ ಶೋಭಿಸುವ ಈ ಕೃತಿ ಕಾವ್ಯ-ಶಾಸ್ತ್ರ, ಸಂಗೀತಗಳ ತ್ರಿವೇಣಿ ಸಂಗಮವಾಗಿದೆ. ವೈವಿಧ್ಯಮಯವಾದ ಪದ್ಯ ಜಾತಿಗಳ ಸಮ್ಮಿಲನವಾಗಿದೆ. ಕನ್ನಡ ಶಾಸ್ತ್ರ ವಾಙ್ಮಯದಲ್ಲಿ ಈ ಕೃತಿಯು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಛಂದಸ್ಸಿನ ವಿಷಯದಲ್ಲಿ ಕುಮಾರ ನಿಜಗುಣರಿಗಿರುವ ಪ್ರಭುತ್ವ ಹಾಗೂ ಸೃಜನಶೀಲತೆಯ ಸಮರ್ಥನೆಯನ್ನು ಈ ಕೃತಿಯು ಸಾಬೀತು ಪಡಿಸುತ್ತದೆ. ಪಾಂಡಿತ್ಯದ ಜೊತೆಗೆ ಪ್ರತಿಭೆಯು ಸೇರಿದೆ. ಛಂದೋ ವೈಚಿತ್ರ್ಯ ಹಾಗೂ ಕಾವ್ಯ ವಿಲಾಸಗಳು ಒಟ್ಟಿಗೆ ಇಲ್ಲಿ ಮೇಳೈಸಿವೆ. ಪ್ರಯೋಗಶೀಲರಾದ ಇವರು ಛಂದಸ್ಸಿನ ಶಿಸ್ತಿನೊಳಗೆ ಕಸರತ್ತು ಮಾಡಿ ವಿವಿಧ ನೂತನ ವೃತ್ತಗಳನ್ನು ರಚಿಸಿರುವ ಛಂದಸ್ಸಾಧಕರು.
     ಈ ಕೃತಿಯಲ್ಲಿಯ ಪ್ರಯೋಗಗಳು ಅಸಾಧ್ಯವೆನಿಸಿದ್ದನ್ನು ಸಾಧ್ಯ ಮಾಡಿ ತೋರಿರುವ, ಅವಜ್ಞೆಗೊಳಗಾದುದನ್ನು ಬೆಳಕಿಗೆ ತರುವ ಪ್ರಯತ್ನದ ಕುರುಹುಗಳಾಗಿವೆ. ವಿಫುಲವಾದ ಛಂದೋ ಪ್ರಯೋಗಗಳು ಹಾಗೂ ವೈವಿಧ್ಯಮಯದಿಂದಾಗಿ ಈ ಕೃತಿಗೆ ಕನ್ನಡ ಛಂದ: ಪ್ರಯೋಗ ಪ್ರಪಂಚದಲ್ಲಿ ಮಹತ್ತರವಾದ ಸ್ಥಾನ ಇದೆ. ವರ್ಣ ಛಂದಸ್ ಕ್ಷೇತ್ರದಲ್ಲಿ ಬಳಕೆಯಾಗದ ಬಂಧಗಳನ್ನು ಗುರುತಿಸಿ ಅವುಗಳಲ್ಲಿಯೇ ಏಕೆ ರಚಿಸಬಾರದು ಎಂದು ಪ್ರಯೋಗಶೀಲತೆಯ ಹಿನ್ನಲೆಯಲ್ಲಿ ರಚಿತವಾಗಿರುವ ಈ ನೂತನ ಪ್ರಯೋಗಗಳು ಪ್ರಯೋಗಶೀಲರಿಗೆ, ಆಸಕ್ತರಿಗೆ ಮಾರ್ಗದರ್ಶಕವಾಗಿವೆ. ಈ ಕೃತಿಗಳಲ್ಲಿಯ ಪ್ರಯೋಗಗಳು ಇದುವರೆವಿಗೂ ಯಾರು ಮಾಡದ, ಮಾಡಲಾಗದ ಅಸಾಧ್ಯವಾದುದನ್ನು ಸಾಧ್ಯಗೊಳಿಸಿರುವ ಕೀರ್ತಿಗೆ ಭಾಜನವಾಗಿವೆ.
     ಪ್ರಾಚೀನರು ಅವಗಣಿಸಿರುವ ಅನೇಕ ಛಂದೋಬಂಧಗಳಿಗೆ ಇಲ್ಲಿ ಎಡೆದೊರೆತಿದೆ. ಮುಂದಿನ ಕವಿಗಳಿಗೆ ಇದು ಮಾರ್ಗದರ್ಶಿಯಾಗಬಲ್ಲುದು. ಇವು ಹೊಸ ವೃತ್ತಗಳಾದರೂ ಪೂರ್ವೋಕ್ತವಾದ ಹಳೆಯ ವೃತ್ತಗಳಿಗಿಂತ ಅತ್ಯಂತ ಆಪ್ತವಾಗಿವೆ.
     ಒಟ್ಟಾರೆ ಗಣಾಕ್ಷರ ವೃತ್ತ ಶತಕವು ಛಂದೋಕ್ಷೇತ್ರದಲ್ಲಿ ನೂತನ ರೂಪಗಳಲ್ಲಿ ಕೃತಿ ರಚಿಸುವವರಿಗೆ, ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಿಕೊಳ್ಳುವವರಿಗೆ ಪ್ರೇರಣೆ-ಪ್ರಚೋದನೆಯನ್ನು ನೀಡುತ್ತದೆ. ಇಲ್ಲಿಯ ನೂತನಾವಿಷ್ಕರಣ ವೃತ್ತಗಳು ಛಂದೋ ಪ್ರಪಂಚದಲ್ಲಿ  ಅವರಿಗಿರುವ ಆಳವಾದ ಪಾಂಡಿತ್ಯ, ವ್ಯುತ್ಪತ್ತಿ ಕಾವ್ಯಪ್ರಜ್ಞೆ ಹಾಗೂ ಭಾಷಾ ಪ್ರೌಢಿಮೆಯ ಸಂಕೇತವಾಗಿದೆ. ಆಧುನಿಕ ಕಾಲದಲ್ಲಿ ‘ವರ್ಣ ಛಂದಸ್ಸಿನ ನೂತನ ಪ್ರಯೋಗಗಳ ಆವಿಷ್ಕಾರಿ’ ಎಂಬ ಹೆಗ್ಗಳಿಕೆಗೆ ಕುಮಾರ ನಿಜಗುಣರು ಪಾತ್ರರಾಗಿದ್ದಾರೆ. ಯಾರ ಹಂಗಿಲ್ಲದೆ ಕನ್ನಡ ಸಾಹಿತ್ಯಕ್ಕೆ ಬೆಳ್ಳಿ ಬಂಗಾರದ ಆಭರಣ ತೊಡೊಸೊದರು. ಗುರು-ಲಘು ಲಯ, ವಿನ್ಯಾಸದೊಳಗೆ ಸಿರಿಸೊಬಗ ಹೆಚ್ಚಿಸಿದರು. ಛಂದೋಲೋಕದೊಳು ಕಾವ್ಯವನ್ನು  ಅಂದಗೊಳಿಸಿದರು. ಕನ್ನಡ ಇತಿಹಾಸದಲ್ಲಿಯೇ ಯಾರೂ ಮಾಡದ ಸಾಧನೆ ಮಾಡಿ, ಹೊಸಹೆಜ್ಜೆ ಮೂಡಿಸಿದರು. ಕನ್ನಡ  ಕಾವ್ಯಪ್ರಪಂಚದಲ್ಲಿಯೇ ಒಟ್ಟು ಪ್ರಯೋಗಿಸಲ್ಪಟ್ಟ ಷಟ್ಟದಿಗಳು ಎಂಟು ಅವುಗಳಲ್ಲಿ ಎಲ್ಲ  ಕವಿಗಳು ಹೆಚ್ಚಾಗಿ ಶರ, ಕುಸುಮ ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕಷಟ್ಟದಿಗಳನ್ನೇ ಪ್ರಯೋಗಿಸಿದ್ದಾರೆ. ಕನ್ನಡಕಾವ್ಯರಂಗದಲ್ಲಿ ಇವೇ ಹೆಚ್ಚು ಪರಿಚಿತ ರಾಘವಾಂಕನು ಉದ್ದಂಡಷಟ್ಟದಿಯೊಂದನ್ನು ಕಂಡುಹಿಡಿದ  ಅನಂತರ ಪ್ರೌಢಷಟ್ಟದಿ ಇತ್ತೀಚೆಗೆ  ಜನ್ಮ ತಾಳಿತು.
      ಇಂದು ಕುಮಾರನಿಜಗುಣರೊಬ್ಬರೇ ೧೩೭ ಹೊಸಷಟ್ಟದಿಗಳನ್ನು ಸೃಷ್ಟಿಸಿ ಕಾವ್ಯದಲ್ಲಿ ಪ್ರಯೋಗಿಸಿ ಸಾಬೀತುಪಡಿಸಿದ್ದಾರೆ. ಇದು ಕನ್ನಡಕಾವ್ಯರಂಗದಲ್ಲಿಯೇ ದೊಡ್ಡದಾಖಲೆ ಅವರು ಬರೆದ ಶ್ರೀ ಶಿವಕುಮಾರಚರಿತಂ ಇದಕ್ಕೆ ಸಾಕ್ಷಿಯಾಗಿದೆ. ಕುಮಾರನಿಜಗುಣರ ಸಾಹಿತ್ಯಸೇವೆ ಅನುಪಮವಾದುದು ಅವರು ನಿರೀಕ್ಷೆ ಪಾರ್ವತೀಪ್ರಣಕಲಹಂ ಬೋಳುಬಸವನ ಬೊಂತೆ ತ್ರಿಪಷ್ಠಿಪುರಾತನ ಸ್ತೋತ್ರ  ಶ್ರೀ ಶಿವಕುಮಾರಚರಿತಂ ಮೊದಲಾದ ಕಾವ್ಯಗಳನ್ನು ರಚಿಸಿದ್ದಾರೆ. ಛಂದಃಶಾಸ್ತ್ರಕ್ಕೆ ಕುಮಾರನಿಜಗುಣರು ಅಪೂರ್ವಕಾಣಿಕೆಯನ್ನು ನೀಡಿದ್ದಾರೆ. ಅವರದು ಅಸಾಧ್ಯವೆನಿಸಿದ್ದನ್ನು ಸಾಧ್ಯಮಾಡಿತೋರಿಸುವ  ಅವಜ್ಞೆಗೊಳಗಾದುವನ್ನು ಬೆಳಕಿಗೆತರುವ ಸಾರ್ಥಕಪ್ರಯತ್ನ ಇವರ ಪ್ರಯತ್ನ ಕನ್ನಡಛಂದೋಲೋಕದಲ್ಲಿ ಸಾಗುವವರಿಗೆ ದಾರಿಗಂಬ, ಕೈದೀವಿಗೆ! ಅವರ  ಛಂದೋಪ್ರಯೋಗ ಅದ್ಭುತ ವಿದ್ವತ್ ಪ್ರಪಂಚದ ಅವರ ಪ್ರಯೋಗಶೀಲತೆಯನ್ನು ಕೊಂಡಾಡಿದೆ. ಛಂದಸ್ಸಿನ ಶಾಸ್ತ್ರಕಾರರು ನಿರ್ಣಯಿಸದೇ ಇರುವ ವೃತ್ತ ಷಟ್ಟದಿಗಳ ಸಾಧ್ಯತೆಯನ್ನು  ಪ್ರತಿಭಾಸಂಪನ್ನರೂ ಶಾಸ್ತ್ರಕೋವಿದರೂ ಅದ ಕುಮಾರನಿಜಗುಣರು ಕಂಡುಕೊಂಡರು. ತಮ್ಮ ಕೃತಿಗಳ ಮೂಲಕ ಅದನ್ನು ಲಕ್ಷ್ಯ-ಲಕ್ಷಣಸಮನ್ವಿತವಾಗಿ ತೋರಿದರು. ಹೀಗಾಗಿ ಅವರ ಕೃತಿಗಳೆಂದರೆ ಪ್ರತಿಭೆ ಮತ್ತು ವಿದ್ವತ್ತುಗಳ ಅಪೂರ್ವಸಂಗಮ ಯಾವುದೇ ಭಾರತೀಯಭಾಷೆಗಳಲ್ಲಿ ಇದುವರೆಗೆ ಕಂಡು ಬರುವುದು ಸುಮಾರು ೭೦೦ ವೃತ್ತಗಳು ಕುಮಾರನಿಜಗುಣರೊಬ್ಬರೇ ೬೦೦ಕ್ಕೂ ಹೆಚ್ಚು ಹೊಸವೃತ್ತಗಳುನ್ನುಸೇರಿಸಿದ್ದಾರೆ. ಇಲ್ಲಿವರೆಗೆ ಯಾರೂ ಊಹಿಸಿದ ೧೩೬ ಷಟ್ಟದಿ ಪ್ರಕಾರಗಳನ್ನು ಅವರು ಸೃಷ್ಟಿಸಿದ್ದಾರೆ. ಶ್ರೀ ಶಿವಕುಮಾರಚರಿತಂ ಕೃತಿಯಲ್ಲಿ ಅವರು ನೂರಾರು ಹೊಸಹೊಸಷಟ್ಟದಿಪದ್ಯಗಳನ್ನು ರಚಿಸಿದ್ದಾರೆ. ಈಗ ಅವರುನಿಜಗುಣೀಯಂಎಂಬ ಮಹಾಕಾವ್ಯವನ್ನು ರಚಿಸುತ್ತಿದ್ದು ಹೊಸಹೊಸ ಛಂದಸ್ಸಿನ ಪದ್ಯಗಳು ಜಗತ್ತಿನ ಯಾವುದೇ ಭಾಷೆಯ ಗ್ರಂಥಗಳಲ್ಲಿ ಇಲ್ಲವೆಂಬ ಹೆಗ್ಗಳಿಕೆಗೆ ಅದಕ್ಕೆ ಪ್ರಾಪ್ತವಾಗಿದೆ. ಅವರ ಛಂದೋವಿಲಾಸವೈಭವ ಕೃತಿ ಪವಾಡಸದೃಶವಾದ ವಿದ್ವತ್ ಸಾಹಸ ಎಂಬ ಹಿರಿಮೆ ಪಡೆದಿದೆ.

      ಇಷ್ಟೆ ಅಲ್ಲ ೧೫೦೦ ವರ್ಷಗಳ ಇತಿಹಾಸದ  ಹೊಂದಿರುವ ಭಾರತೀಯಭಾಷೆಗಳಲ್ಲಿ ಎಲ್ಲ  ಕವಿಗಳು ಸೇರಿ ಒಟ್ಟು ೭೦೬ ಅಕ್ಷರವೃತ್ತಗಳನ್ನು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ. ಆದರೆ ಇಂದು ಕುಮಾರನಿಜಗುಣರೊಬ್ಬರೇ ಏಕಾಂಗಿಯಾಗಿ ಅಕ್ಷರಗಣಗಳ ೬೫೭ ಹೊಸ  ಪದ್ಯಜಾತಿಗಳನ್ನು (ವೃತ್ತಗಳನ್ನು) ಸೃಷ್ಟಿಸಿ ಮತ್ತೊಂದು ದಾಖಲೆ ಮಾಡಿದ್ದಾರೆ. ಎಂದೂ ಯಾರೂ ಮಾಡದ ಸಾಧನೆಯನನ್ಉ ಕುಮಾರನಿಜಗುಣರು ತಮ್ಮ ಕಣ್ಣುಂದೆಯೆ ಮಾಡಿದ್ದಾರೆ! ಇದು ನಿಗೂಢಶಕ್ತಿಯ ಆಟ.
      ಇವರ ಕಾವ್ಯ ಸೃಷ್ಟಿ ಓದಿಕಲಿತದ್ದಲ್ಲ, ಕಲಿತುಬಂದ್ದಲ್ಲ ತಲೆಯೊಳಗೆ ಇಳಿದು  ಬಂದದ್ದು ವಿಚಾರದಂಗಳದಲ್ಲಿ ಊರ್ಜಿತಗೊಂಡದ್ದು ನಾದತರಂಗದಲ್ಲಿ ತೇಲಿಬಂದದ್ದು. ಇಂದು ನಿಜಗುಣಿಯಂ ಮಹಾಕಾವ್ಯದ ರಚನೆಗೆ ತೊಡಗಿದ್ದಾರೆ. ಇಂಥ ಅದ್ವಿತೀಯಕವಿಪುಂಗವ ಕಣ್ಮುಂದೆ ಸುಳಿದಾಗ ಕಾಡುವ ಪ್ರಶ್ನೆಗಳು ಹಲವು:
). ಭಾಷಾವಿದ್ವಾಂಸರನ್ನೇ ಬೆರಗುಗೊಳಿಸುವ ಇವರ ಕಾವ್ಯಗಳು ಪದವಿಗೆ ಏಕ ಪಠ್ಯವಾಗಿಲ್ಲ?
). ನೂರಾರು ಪುಸ್ತಕಗಳನ್ನು ಕೆದರಿ ೧೦೦ ಪುಟ ಬರೆದದ್ದಕ್ಕೆ ಪಿಎಚ್.ಡಿ ಪದವಿ ಕೊಡುವ
    ವಿಶ್ವವಿದ್ಯಾಲಯಗಳಿಗೆ ಇವರ ಸಾಧನೆ ಏಕೆ ಕಂಡಿಲ್ಲ?
). ರನ್ನ, ಪಂಪ, ರಾಘವಾಂಕನ, ಲೋಕನಿರ್ಮಿಸಿದ, ಕನ್ನಡಭಾಷೆಯನ್ನೇ ಶ್ರೀಮಂತಗೊಳಿಸಿದ
    ಕವಿಯನ್ನು ಕರ್ನಾಟಕಸರ್ಕಾರ ಏಕೆ ಗುರುತಿಸಿಲ್ಲ?
). ಭಾರತೀಯಕಾವ್ಯ ಲೋಕದಲ್ಲಿ ಏಕಾಂಗಿಯಾಗಿ ದಾಖಲೆಮಾಡಿದ ನವ್ಯ ಷಟ್ಟದೀ ಜನಕನಿಗೆ
     ಪ್ರಶಸ್ತಿಗಳೇಕೆ ಇಲ್ಲ?
   ಒಟ್ಟಿನಲ್ಲಿ ವಕೀಲವೃತ್ತಿಯಲ್ಲಿಯೇ ಕೊನೆಯತನಸ ಮುಂದುವರಿದಿದ್ದ ಪಕ್ಷದಲ್ಲಿ ಮುಂದಿನ  ದಿನಮಾನಗಳಲ್ಲಿ ಲೋಕದ ದೃಷ್ಟಿಯಿಂದ ಮರೆಯಾಗಲಿದ್ದ ಅವರು ಕುಮಾರನಿಜಗುಣರಾಗಿ ಸಾಹಿತ್ಯಸೃಷ್ಟಿಯ ಕಡೆಗೆ-ಅದರಲ್ಲಿಯೂ ಅಸಂಖ್ಯಸಂಖ್ಯೆಯ ನೂತನಛಂದೋಬಂಧಗಳ ಹೊಸಹೊಸ ಅವಿಷ್ಕಾರಗಳ ಕೃತಿರಚನೆಗಳಲ್ಲಿ ತೊಡಗಿದುದರಿಂದ ಕನ್ನಡಕಾವ್ಯಲೋಕದಲ್ಲಿ ಅಜರಾಮರಕೀರ್ತಿಗೆ ಪಾತ್ರರಾಗಿ ಸಾಂಸ್ಕೃತಿಕ ಇತಿಹಾಸದಲ್ಲಿ ಚಿರಂಜೀವಿಯಾಗಿ ಉಳಿಯಲಿದ್ದಾರೆಂಬುದು ಅಭಿನಂದನೀಯಸಂಗತಿ.  ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಕಂಡು ಬರುತ್ತಿರುವ  ಸೋಜಿಗದ ಸಂಗತಿಯಾದ ಕುಮಾರಪರಂಪರೆಯಲ್ಲಿ ಅಂದರೆ  ವ್ಯಾಸ-ಕುಮಾರವ್ಯಾಸ, ವಾಲ್ಮೀಕಿ-ಕುಮಾರವಾಲ್ಮೀಕಿ, ಪದ್ಮರಸ-ಕುಮಾರಪದ್ಮರಸ, ಇದ್ದಂತೆ ನಿಜಗುಣ ಕುಮಾರ ನಿಜಗುಣರ ಪರಂಪರೆ ಮಹತ್ತರತೆಯನ್ನು ಪಡೆದಿದೆ. ಕುಮಾರನಿಜಗುಣರು ಭಾರತೀಯಭಾಷಾ ಇತಿಹಾಸದಲ್ಲಿಯೇ ಹೊಸದಾಖಲೆ ಸೃಷ್ಟಿಸಿ ವಿದ್ವಾಂಸರೆಲ್ಲ ಬೆರಗಾಗುವಂತೆ ಮಾಡಿದ್ದಾರೆ. ಕಲಿಯುವವರಿಗೆಲ್ಲಾ ಚೈತನ್ಯದ ಹಾದಿಯನ್ನು ನಿರ್ಮಿಸಿದ್ದಾರೆ. ಮಧ್ಯವಯಸ್ಸಿನ ಬಾಳಿನ ಸೆಳೆತದ ಸಂಸಾರವನ್ನು ಕಡೆಗಣಿಸಿ ವಿರಕ್ತಿಯಿಂದ ಶಂಭುಲಿಂಗನ ಬೆಟ್ಟದ ಗವಿಯೊಳಗೆ ಬರಹವೆಂಬ ತಪಸ್ಸನ್ನಾಚರಿಸಿ ಶಿವಶರಣರ ಸಂದೇಶವನ್ನು ಲೋಕದ ಜನಗಳ  ಮಡಿಲಿಗೆ ಹಾಕುವ ಜ್ಞಾನಿಯಾಗಿ ನಿಜವಾದ ಅರ್ಥದಲ್ಲಿ ನಿಜಗುಣಶಿವಯೋಗಿಗಳ ಕುಮಾರರಾದರು.







ಗುಣಮಧುರನ ತಮಟಕಲ್ಲು ಶಾಸನದ ಮಹತ್ವ

ಗುಣಮಧುರನ ತಮಟಕಲ್ಲು ಶಾಸನದ ಮಹತ್ವ

                        ಡಾ.ಸಿ.ನಾಗಭೂಷಣ

   ಕನ್ನಡ ಸಾಹಿತ್ಯ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಅಥವ ಕಾವ್ಯಗುಣಗಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ ತಮಟ ಕಲ್ಲಿನ ಶಾಸನ ಮತ್ತು ಶ್ರವಣ ಬೆಳಗೊಳದ ನಿಷದಿ ಶಾಸನಗಳು. ನಿಷಿಧಿ ಶಾಸನಗಳನ್ನು ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ಈಗಾಗಲೇ ವಿದ್ವಾಂಸರು ಗುರುತಿಸಿರುವುದು ಪರಿಶೀಲ ನಾರ್ಹವಾಗಿದೆ. ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಗ್ರಾಮದ ಪೂರ್ವಕ್ಕಿರುವ ಹೊಲದಲ್ಲಿ ಪೂರ್ವಾಭಿಮುಖವಾಗಿ ನೆಲದಲ್ಲಿ ಹೂಳಲ್ಪಟ್ಟಿರುವ  ಗುಣಮಧುರನಿಗೆ ಸಂಬಂಧಿಸಿದ ಶಾಸನ. ಚಿತ್ರದುರ್ಗ ನಗರದ ಸಮೀಪವಿರುವ ತಮಟಕಲ್ಲು ಗ್ರಾಮದ ಪ್ರಾಚೀನ ಹೆಸರನ್ನು 'ಮಾಸಿಕಪುರ' ಎಂದು ಉಲ್ಲೇಖಿಸಲಾಗಿದೆ. ಒಂದು ಸಂಸ್ಕೃತ ಭಾಷೆಯ ಗದ್ಯಶಾಸನವಾದರೆ ಮತ್ತೊಂದು ಕನ್ನಡ ಭಾಷೆಯಲ್ಲಿಯ ಪದ್ಯಶಾಸನ. (E.C.XI. ಚಿತ್ರದುರ್ಗ 43).  ಬಿ.ಎಲ್.ರೈಸ್‌ ಅವರು ಈ ಶಾಸನವನ್ನು ಶೋಧಿಸಿ ಮೊದಲಿಗೆ ಸಂಪಾದಿಸಿ ಪ್ರಕಟಿಸಿದರು. ಈ ಶಾಸನವು  ಎಪಿಗ್ರಫಿಯಾ ಕರ್ನಾಟಿಕಾ ಸಂಪಟ XI ರಲ್ಲಿ ( ಚಿತ್ರದುರ್ಗ-೪೩) ಪ್ರಕಟವಾಗಿದ್ದು ನಂತರದಲ್ಲಿ ಪ್ರಾಚೀನ ಕನ್ನಡ ಭಾಷೆ ಸಾಹಿತ್ಯ ಮತ್ತು ಛಂದಸ್ಸನ್ನು ಕುರಿತು ಅಧ್ಯಯನ ಮಾಡುವ ಎಲ್ಲಾ ವಿದ್ವಾಂಸರು ಈ ಶಾಸನವನ್ನು ಒಂದಿಲ್ಲೊಂದು ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ.  ಈ ಶಾಸನವು ಕ್ರಿ.ಶ. ೫೦೦ರ (೫ನೇ ಶತಮಾನದ ಅಂತ್ಯ ಅಥವಾ ೬ನೇ ಶತಮಾನದ ಆರಂಭ) ಕಾಲಘಟ್ಟಕ್ಕೆ ಸೇರಿದ್ದಾಗಿದೆ ಎಂಬುದು ಚರ್ಚೆಯಿಂದ ವಿದಿತವಾದರೂ ಸುಮಾರು ಐದನೆಯ ಶತಮಾನದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ.  ಚಿತ್ರದುರ್ಗ ಜಿಲ್ಲೆಯ ತಮಟಕಲ್ಲು ಗ್ರಾಮದಲ್ಲಿ ದೊರೆತಿರುವ 'ಗುಣಮಧುರನ ಶಾಸನ'ವು ವೀರಗಲ್ಲು ಶಾಸನವಾಗಿದ್ದು, ಕೇವಲ ಇತಿಹಾಸದ ದೃಷ್ಟಿಯಿಂದಷ್ಟೇ ಅಲ್ಲದೆ, ಕನ್ನಡ ಭಾಷೆ, ಛಂದಸ್ಸು ಮತ್ತು ಸಾಹಿತ್ಯದ ಪ್ರಾಚೀನತೆಯನ್ನು ಅರಿಯುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ದಾಖಲೆಯಾಗಿದೆ. ಗುಣಮಧುರನಿಗೆ ಸಂಬಂಧಿಸಿದ ಶಾಸನಗಳ ವಿವರಗಳನ್ನು ನೋಡುವುದಾದರೆ ʻಸಂಸ್ಕೃತ ಭಾಷೆಯ ಶಾಸನವಿರುವ ಶಿಲೆಯ ವಿವರಗಳು ಈ ರೀತಿ ಇವೆ. ಈ ಶಿಲೆ ನೆಲದಲ್ಲಿ ಎಷ್ಟು ಹೂತು ಹೋಗಿದೆಯೋ ತಿಳಿಯದು. ಈಗಿರುವಂತೆ ಭೂಮಿಯಿಂದ ಮೂರು ಅಡಿ ಎತ್ತರ ಹಾಗೂ ಐದು ಅಡಿ ಅಗಲವಿದೆ. ಈ ಕಲ್ಲಿನಲ್ಲಿ ಮೇಲಿನಿಂದ ಅರ್ಧ ಅಡಿ ಸ್ಥಳ ಬಿಟ್ಟು ಒಂದೂವರೆ ಅಡಿ ಅಗಲ ಮತ್ತು ಎರಡೂವರೆ ಅಡಿ ಉದ್ದದ ಚೌಕದಲ್ಲಿ ಶಿಲ್ಪವನ್ನು ಬಿಡಿಸಲಾಗಿದೆ. ಇದೊಂದು ವಿಶಿಷ್ಟವಾದ ವೀರಗಲ್ಲು ಶಿಲ್ಪವನ್ನು ಹೊಂದಿದೆ. ಒಂದೇ ಫಲಕದಲ್ಲಿ ಮೂವರು ವೀರರು ಒಂದೇ ಸಾಲಿನಲ್ಲಿ ನಿಂತಿರುವ ದೃಶ್ಯವನ್ನು ಇಲ್ಲಿ ಕೆತ್ತಲಾಗಿದೆ. ಅವರು ಎಡಗೈಯಲ್ಲಿ ಬಿಲ್ಲು ಹಾಗೂ ಬಲಗೈಯಲ್ಲಿ ಕತ್ತಿಯನ್ನು ಹಿಡಿದಿದ್ದಾರೆ. ಅವರ ಕಾಲಿನ ಬಳಿ ಬಾಣಗಳು ಬಿದ್ದಿರುವ ಚಿತ್ರಣವಿದೆ. ಇದು ಯುದ್ಧ ಅಥವಾ ಕಾದಾಟದ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ. ಮೂವರು ವೀರರು ಬಿಲ್ಲು ಬಾಣಗಳನ್ನು ಹಿಡಿದು ವೀರಗಲ್ಲಿನ ಎಡಭಾಗದಿಂದ ಬಲಭಾಗಕ್ಕೆ ಬರುವಂತೆಯೂ ಈ ವೀರರ ಪಾದಗಳಿಗೆ ಶತ್ರುಗಳು ಬಿಟ್ಟ ಬಾಣಗಳು ನಾಟಿರುವಂತೆಯೂ ಬಿಡಿಸಲಾಗಿದೆ. ಕರ್ನಾಟಕದ ಎಲ್ಲಾ ವೀರಗಲ್ಲುಗಳಲ್ಲಿಯೂ ವೀರನು ಮುಡಿ ಕಟ್ಟಿರುವಂತೆ ಬಿಡಿಸಲಾಗಿರುತ್ತದೆ. ಶರಣಾಗತನಾದವನ ಮುಡಿ ಮಾತ್ರ ಕೆಲವೊಮ್ಮೆ ಕೆದರಿರುವಂತೆ ಬಿಡಿಸಲಾಗಿರುತ್ತದೆ.ʼ(ತಮಟಕಲ್ಲಿನ ಗುಣಮಧುರನ ಶಾಸನಗಳು ಪುನ‌ರ್ ಪರಿಶೀಲನೆ, ದೇವರ ಕೊಂಡಾರೆಡ್ಡಿ ಮತ್ತು ಆರ್. ಶೇಷಶಾಸ್ತ್ರಿ, ಸಾಧನೆ ಸಂ.೧೦.ಸಂ.೩, ಪು.೭೦), ಈ ಶಾಸನದ ಸ್ವರೂಪದ ಬಗೆಗೆ ನೋಡುವುದಾದರೆ ಶಾಸನ ಕೆತ್ತಲಾಗಿರುವ ಸ್ಥಳದಲ್ಲಿ ಶಿಲೆಯನ್ನು ನುಣ್ಣಗೆ ಮಾಡಲಾಗಿದ್ದು ಅಕ್ಷರಗಳನ್ನು ಆಳಕ್ಕೆ ಕೆತ್ತಲಾಗಿಲ್ಲ. ಮತ್ತೊಂದು ಶಾಸನಕಲ್ಲಿನ ಮೇಲೆ ವೀರಗಲ್ಲಿನ ವೀರನಾದ ಗುಣಮಧುರನ ಸ್ತುತಿಯನ್ನು ಕೆತ್ತಲ್ಪಟ್ಟಿದ್ದು, ಬಹುಶಃ ಶಿಲ್ಪವಿರುವ ಶಾಸನ ಕಲ್ಲಿನ ಮೇಲೆ ಈ ಪಾಠವನ್ನು ಕೊರೆಯಲು ಸ್ಥಳ ಸಾಲದೆ  ಮತ್ತೊಂದು ಕಲ್ಲಿನ ಮೇಲೆ ಕೆತ್ತಿರಬಹುದೆಂದು ಊಹಿಸ ಬಹುದಾಗಿದೆ.  ಈ ಶಾಸನಗಳ ಲಿಪಿಯ ಬಗೆಗೆ ಹೇಳುವುದಾದರೆ ಸಂಸ್ಕೃತದ ಶಾಸನದ ಕನ್ನಡ ಲಿಪಿಯು ತನ್ನ ಕಾಲಘಟ್ಟದ ಇತರೆ ಶಾಸನಗಳ  ಹಾಗೆ  ಸಾರ್ವತ್ರಿಕ ಲಕ್ಷಣಗಳಿಂದ ಕೂಡಿದ್ದರೆ, ಕನ್ನಡ ಪದ್ಯ ಶಾಸನದ ಲಿಪಿಯು ಕನ್ನಡದ ಆರಂಭಕಾಲದ ವೈಲಕ್ಷಣ್ಯಗಳೊಂದಿಗೆ ವ್ಯಕ್ತಿ ಚಿತ್ರಣದ ವಿಶೇಷತೆಯನ್ನು ಒಳಗೊಂಡಿದೆ. ತಮಟಕಲ್ಲಿನ ಶಾಸನದ ಲಿಪಿಗಳ ಬಗೆಗೆ ಹೇಳುವುದಾದರೆ, ಲಿಪಿ ಶಾಸ್ತ್ರಜ್ಞರ ಪ್ರಕಾರ ಈ ಶಾಸನದಲ್ಲಿಯೂ ತ್ರಿಕೋಣಾಕಾರದ ಛಾಯೆಯನ್ನು 'ಪ, ರ, ವ, ಭ' ಮುಂತಾದ ಅಕ್ಷರಗಳಲ್ಲಿ ಕಾಣಬಹುದಾಗಿದೆ. ತಮಟಕಲ್ಲಿನ ಸಂಸ್ಕೃತ ಶಾಸನದ ಲಿಪಿಯಲ್ಲಿಯ 'ಆ' ದೀರ್ಘವಾಗಿ ಹತ್ತಿದಾಗ ಬಲಕ್ಕೆ ಹೆಚ್ಚಾಗಿ ಬಾಗಿರುವುದು, 'ಏ' ಕಾರದ ದೀರ್ಘ ಎಡಕ್ಕೆ ಹೆಚ್ಚಾಗಿ ಅಷ್ಟಾಗಿ ಬಾಗದಿರುವುದು ಮತ್ತು ರ, ಅ, ಕ, ಮತ್ತು ಉ ಕಾರದ ಗೆರೆಗಳು ಮೇಲ್ಮುಖವಾಗಿ ಹರಿದು ಇರುವುದರಿಂದ ಈ ಶಾಸನ ಲಿಪಿಯು ಸ್ವಲ್ಪಮಟ್ಟಿಗೆ ಚಿತ್ರದುರ್ಗ ಜಿಲ್ಲೆಯ ಇನ್ನೊಂದು ಸಮಕಾಲೀನ ಶಾಸನವಾದ  ಅಣಜಿ ( ಈಗ ದಾವಣಗೆರೆ ಜಿಲ್ಲೆ) ಶಾಸನದ ಕಾಲಕ್ಕಿಂತ ತುಸು ನಂತರದ್ದು ಎಂಬ ಅಭಿಪ್ರಾಯವನ್ನು ತಾಳಿದ್ದಾರೆ. ಅದೇ ರೀತಿ ಕನ್ನಡ ಪದ್ಯ ಶಾಸನದಲ್ಲಿಯ ಲಿಪಿಯಲ್ಲಿ ಇದಕ್ಕಿಂತಲೂ ಸ್ವಲ್ಪ ಭಿನ್ನವಾದ ಶೈಲಿ ಯನ್ನು ಕಾಣಬಹುದು. ಈ ಪದ್ಯಶಾಸನದ ಲಿಪಿಯ ಸ್ವರೂಪವು ವ್ಯಕ್ತಿ ಪ್ರಶಂಸೆಯ ರೀತಿಯ ಬರವಣಿಗೆಯಾಗಿದೆ. ಲಿಪಿಕಾರನು ತಲೆಕಟ್ಟನ್ನು ಕೊಡುವಲ್ಲಿ ತನ್ನದೇ ಆದ ರೀತಿಯನ್ನು ಅನುಸರಿಸಿದ್ದಾನೆ. ಈ ನಾಲ್ಕು ಸಾಲಿನ ಪುಟ್ಟ ಶಾಸನದಲ್ಲಿ, ಒಂದೇ ಅಕ್ಷರವನ್ನು ಹಲವಾರು ಶೈಲಿಗಳಲ್ಲಿ ಬರೆದಿರುವುದನ್ನು ಈಗಾಗಲೇ ಲಿಪಿಶಾಸ್ತ್ರಜ್ಞರು ಗುರುತಿಸಿದ್ದಾರೆ. ʻಣ'ಕಾರ ನಾಲ್ಕು ಸಾಲುಗಳಲ್ಲಿ ಒಂಭತ್ತು ಸಾರಿ ಬರೆದಿದ್ದರೂ ಒಂದು ಇದ್ದಂತೆ ಇನ್ನೊಂದು ಇಲ್ಲ. ಹಾಗೆಯೇ 'ಲ' ಕಾರವನ್ನು ಮೂರು ರೀತಿಯಲ್ಲಿ ಕೆತ್ತಿದ್ದಾನೆ. ಒಂದೇ ಅಕ್ಷರವನ್ನು ಹಲವಾರು ರೀತಿಯಲ್ಲಿ ಕೆತ್ತಿದ್ದರೂ ಅದರ ಮೂಲರೂಪದಿಂದ ತೀರಾ ಭಿನ್ನರೀತಿಯಲ್ಲಿ ಕಂಡು ಬಂದಿಲ್ಲದಿರುವುದು ಗಮನಾರ್ಹವಾಗಿದೆ. ಈ ಶಾಸನದಲ್ಲಿ ಕೆಲವೊಮ್ಮೆ ಅಕ್ಷರವನ್ನೇ ಕೂಡಿಸಿ ಬರೆದಿರುವ ರೀತಿಯನ್ನು ಮೊದಲ ಸಾಲಿನ 'ಅನು' ಎಂಬಲ್ಲಿ ಗಮನಿಸಬಹುದು. ಈ ತರದ ಲಿಪಿಗೆ ಸಂಬಂಧಿಸಿದ ಹಲವಾರು ಸೂಚನೆಗಳನ್ನು ಗ್ರಹಿಸದ ಕಾರಣದಿಂದಾಗಿ ಈ ಶಾಸನದ ಪಾಠವನ್ನು ಪ್ರಥಮವಾಗಿ ಓದಿ ಪ್ರಕಟಿಸಿದ ಈ ಶಾಸನ ಪದ್ಯದ ಸಾಲುಗಳಲ್ಲಿಯ ಪದಗಳನ್ನು ಓದುವಲ್ಲಿ ತೊಡಕಾಗಿ ಪರಿಣಮಿಸಿರುವುದನ್ನು ನಂತರದ ವಿದ್ವಾಂಸರು ಗುರುತಿಸಿದ್ದಾರೆ.

ರೈಸ್ ಅವರು ಸಂಪಾದಿಸಿ ಪ್ರಕಟಿಸಿರುವ ಕನ್ನಡ ಲಿಪಿಯಲ್ಲಿ ಶಾಸನದ ಪಾಠ ಈ ಕೆಳಕಂಡಂತೆ ಇದೆ.

 ಬಿಣಮಣಿ ಅನ್ತು ಭೋಗಿ ಬಿಣದುಳ್ಮಣಿ ವಿಲ್ಮನದೋನ್

 ರಣಮುಖದುಳ್ಳ ಕೋಲನೆರಿಯರ್ಕ್ಕು ಮನಿನ್ದ್ಯಗುಣನ್.

 ಪ್ರಣಯಿ ಜನಕ್ಕೆ ಕಾಮನಸಿತೋತ್ಪಲ ವರ್ಣನವನ್

 ಗುಣಮದುರಾಂಕ್ಕ ದಿವ್ಯ ಪುರುಷನ್ಪುರುಷ ಪ್ರವರನ್

ಇದೇ ಶಾಸನದ ಪಾಠವನ್ನು ರೋಮನ್ ಲಿಪಿಯಲ್ಲಿಯ ಕೊಟ್ಟಿದ್ದಾರೆ. ಕನ್ನಡ ಲಿಪಿಯಲ್ಲಿರುವ ಈ ಪಾಠವನ್ನು ರೋಮನ್ ಲಿಪಿಯಲ್ಲಿರುವ ಪಾಠದೊಂದಿಗೆ ಹೋಲಿಸಿ ನೋಡಿದಾಗ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ.

1 ಮೊದಲ ಸಾಲಿನಲ್ಲಿ 'ಬಿಣಮಣಿ' ಎಂಬುದಕ್ಕೆ ಬದಲಾಗಿ 'ಫಣಿಮಣಿ'-ಎಂದಿದೆ.

2 ಹಾಗೆಯೇ 'ಬಿಣದುಳ್ಮಣಿ'- ಎಂಬುದಕ್ಕೆ ಬದಲಾಗಿ 'ಫಣದುಳ್ಮಣಿ'-ಎಂದಿದೆ.

3 ಎರಡನೆಯ ಸಾಲಿನಲ್ಲಿ 'ರಣಮುಖದುಳ್ಳ'- ಎಂಬುದಕ್ಕೆ ಬದಲಾಗಿ 'ರಣಮುಖದುಳ್ಳೆ'- ಎಂದಿದೆ.

 ಈ ಶಾಸನ ವಿರುವ ಸ್ಥಳಕ್ಕೆ ಭೇಟಿಕೊಟ್ಟು ಶಾಸನದ ಪಡಿಯಚ್ಚನ್ನು ತೆಗೆದು  ಪರಿಶೀಲಿಸಿದ ಶಾಸನತಜ್ಞರಾದ ದೇವರಕೊಂಡಾರೆಡ್ಡಿ ಮತ್ತು ಆರ್.‌ ಶೇಷಶಾಸ್ತ್ರೀ ಯವರು ಶಾಸನದಲ್ಲಿ ಪದಗಳ ಸರಿಯಾದ ರೂಪವನ್ನು ಗುರುತಿಸಿದ್ದಾರೆ. ಅವರ ಪ್ರಕಾರ  ಶಾಸನದಲ್ಲಿ 'ಫಣಮಣಿ' ಎಂದಿದೆ. 'ಫಣಿಮಣಿ' ಅಲ್ಲ, 'ಫಣದುಳ್ಮಣಿ' ಎಂಬುದೇ ಸರಿಯಾದ ಪಾಠ. ಎರಡನೇ ಸಾಲಿನಲ್ಲಿ ರಣಮುಖದುಳ್ಳೆ ಎಂಬುದೇ ಸರಿಯಾದ ಪಾಠ. ಇಲ್ಲಿ 'ಳ' ಕಾರಕ್ಕೆ 'ಎ' ಕಾರ ಕೊಟ್ಟಿರುವುದು ಸ್ಪಷ್ಟವಾಗಿದೆ. ಈ ದೃಷ್ಟಿಯಿಂದ ಕನ್ನಡ ಲಿಪಿಯ ಪಾಠ ಕ್ಕಿಂತಲೂ, ರೋಮನ್ ಲಿಪಿಯ ಪಾಠವೇ ಮೂಲ ಶಾಸನದ ಪಾಠಕ್ಕೆ ತೀರಾ ಹತ್ತಿರವಾಗಿದೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಎರಡನೆಯ ಸಾಲಿನಲ್ಲಿ 'ಬರುವ ಕೋಲನೆರಿಯರ್ಕು' ಎಂಬುದಾಗಿ ಓದಿರುವ ಪಾಠವು ಸಮರ್ಪಕವಾಗಿರುವಂತೆ ತೋರುವುದಿಲ್ಲ. ಅವರು ಆ ರೀತಿ ಓದುವುದಕ್ಕೆ ಕಾರಣವು ಇಲ್ಲದಿಲ್ಲ. ಶಾಸನದ ಲಿಪಿಯನ್ನು ಗಮನಿಸಿದಾಗ 'ಕ'ಕಾರಕ್ಕೆ ದೀರ್ಘ ವನ್ನು ನೀಡುವಾಗ ಬಲಗಡೆಯಿಂದ ಎಡಗಡೆಗೆ ಮೇಲ್ಮುಖವಾಗಿ ಬಾಗಿಸಿ ಮತ್ತೆ ಬಲಕ್ಕೆ ಸ್ವಲ್ಪ ಡೊಂಕಾಗಿ ತಿರುಗಿಸಿ ಬಾಗಿಸಿರುವುದನ್ನು ಕಾಣಬಹುದು. ಮುಂದಿನ ಶತಮಾನಗಳಲ್ಲಿ 'ಕೋ' ಅಕ್ಷರವನ್ನು ಇದೇರೀತಿ ಬರೆದಿರುತ್ತಾರೆ. ಆ ವೊಂದು ಹಿನ್ನೆಲೆಯಲ್ಲಿ ಈ ಅಕ್ಷರವನ್ನು 'ಕೋ' ಎಂದೇ ಓದಿರುತ್ತಾರೆ. ಇದೇ ಶಾಸನದಲ್ಲಿ 'ಎ' ಕಾರ ಮತ್ತು 'ಓ' ಕಾರಗಳನ್ನು ಬಳಸಿರುವುದನ್ನು ('ಮನದೋನ್', 'ತೋತ್ಪಲ) ಗಮನಿಸಿದರೆ ಅವುಗಳಿಗಿಂತಲೂ ಈ 'ಎ' ಕಾರ ಭಿನ್ನವಾಗಿರುವುದನ್ನು ಕಾಣಬಹುದು. ಆದ್ದರಿಂದ ಇದು 'ಕಾ' ಅಲ್ಲ 'ಕಾ'. ಹಾಗೆಯೇ ಇದೇ ಸಾಲಿನಲ್ಲಿ ಅವರು ಓದಿರುವ “ನೆರಿಯರ್ಕು' ಎಂಬುದು ಸಹ ಇದೇ ತೆರನ ಕಪ್ಪಿನ ದೋಷದಿಂದ ಸಿದ್ಧವಾದ ಪಾಠವಾಗಿದೆ. 'ನೆ' ಎಂಬ ಅಕ್ಷರವನ್ನು ಗಮನಿಸಿದಾಗ ಅಲ್ಲಿ ಇದಕ್ಕೆ ಕೊಟ್ಟಿರುವ 'ಎ' ಕಾರದ ಗುಡಿಸೆಂದು ಓದಿದರೆ, ಇದೇ ರೀತಿ ತಲೆಕಟ್ಟು ಪಡೆದಿರುವ ಇದೇ ಅಕ್ಷರದ ಹಿಂದಿನ ಅಕ್ಷರವಾದ 'ದು' ಅನ್ನು ಮೊದಲ ಸಾಲಿನ 'ಫಣದುಳ್ಳಣಿ' ಎಂಬ ಪದದ ʻಳ' ಕಾರಕ್ಕೆ ಕೊಟ್ಟಿರುವ ತಲೆಕಟ್ಟನ್ನೂ, ಕೊನೆಯ ಸಾಲಿನಲ್ಲಿ ಬರುವ 'ಪುರುಷ' ಎಂಬ ಪದದʻಷ' ಕಾರಕ್ಕೆ ನೀಡಿರುವ ತಲೆಕಟ್ಟನ ʻಎ' ಕಾರದ ಬೆಲೆಯೊಂದಿಗೇ ಓದಬೇಕಾಗುತ್ತದೆ. ಆದರೆ 'ಎ' ಕಾರದ ಗುಡಿಸು ಕೊಡಲು ಲಿಪಿಕಾರ ಬಳಸಿರುವ ರೀತಿಯನ್ನು 'ರಣಮುಖದುಳ್ಳೆ' ಎಂಬಲ್ಲಿಯಜನಕ್ಕೆ' ಎಂಬಲ್ಲಿಯೂ ಗುರುತಿಸಬಹುದು. ಆದ್ದರಿಂದ ಇದು ನಿಃಸಂಶಯವಾಗಿ ʻನ' ಹೊರತು 'ನೆ' ಅಲ್ಲ. ಅಂದರೆ ಈ ಸಾಲನ್ನು ಈ ರೀತಿ ಓದಬೇಕು.

'ರಣಮುಖದುಳ್ಳೆ ಕಾಲನರಿಯರ್ಕು ಮನಿನ್ದ್ಯಗುಣನ್'-ಎಂದು ಶಾಸನದ ಲಿಪಿಕಾರ ʻನ'ಕಾರಕ್ಕೆ 'ಆ' ಕಾರದ ಲೆಕಟ್ಟು ಕೂಡುವಾಗ ಈ ರೀತಿ ಬರೆದಿದ್ದಾರೆ.

ನಾಲ್ಕನೆಯ ಸಾಲಿನಲ್ಲಿ ಬರುವ 'ಮಧುರಾಂಕ್ಕ' ಎಂಬ ಪದದಲ್ಲಿ 'ಅನುಸ್ವಾರ' ಪ್ರಯೋಗವಾಗಿರುವಂತೆ ಕನ್ನಡ ಲಿಪಿಯಲ್ಲಿ ಪಾಠವನ್ನು ಕೊಡಲಾಗಿದೆ. ಆದರೆ ವಾಸ್ತವವಾಗಿ ಅನಂಸ್ಕಾರದ ಪ್ರಯೋಗ ಪ್ರಸ್ತುತ ಶಾಸನದಲ್ಲಿ ಇಲ್ಲ. ಅನು ಸ್ವಾರಕ್ಕೆ ಅನುನಾಸಿಕವಾದ 'ನ' ಕಾರವನ್ನು ಬಳಸಿರುವುದನ್ನು ಕಾಣಬಹುದು. ಆದ್ದರಿಂದ ಇದರ ಸರಿಯಾದ ಪಾಠ 'ಗುಣಮಧುರಾನ್ಕ' ಎಂಬುದಾಗಿ ಗುರುತಿಸಿದ್ದಾರೆ. ((ತಮಟಕಲ್ಲಿನ ಗುಣಮಧುರನ ಶಾಸನಗಳು ಪುನ‌ರ್ ಪರಿಶೀಲನೆ, ದೇವರ ಕೊಂಡಾರೆಡ್ಡಿ ಮತ್ತು ಆರ್. ಶೇಷಶಾಸ್ತ್ರಿ, ಸಾಧನೆ ಸಂ.೧೦.ಸಂ.೩, ಪು.೭೫)

 ಶಾಸನದಲ್ಲಿ  ಬರುವ  ಪದ್ಯ ಸಾಲುಗಳು ಕದಂಬರು ಮತ್ತು ಬದಾಮಿ ಚಾಲುಕ್ಯರ ಕಾಲದಲ್ಲಿಯೇ ಕನ್ನಡವು ಸಾಹಿತ್ಯದ ಅಥವಾ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದಿತ್ತು ಎಂಬುದನ್ನು ಸೂಚಿಸುತ್ತದೆ. ಕನ್ನಡ ನಾಡಿನ ಯಾವುದೇ ಪ್ರಮುಖ ರಾಜ ಮನೆತನಕ್ಕೆ ಸೇರಿರದ ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತ ಈ ಕಾವ್ಯಸ್ವರೂಪದ ದಾಖಲೆಯ ಲಿಪಿಯೂ ಕನ್ನಡವೇ ಆಗಿದೆ. ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ಇರುವ ಎರಡು ಪ್ರತ್ಯೇಕ ವೀರ ಅಥವಾ ಪ್ರಶಸ್ತಿ ಶಾಸನಗಳ ಪೈಕಿ ಒಂದು ಕನ್ನಡ ಭಾಷೆ ಮತ್ತು ಲಿಪಿಯಲ್ಲೂ, ಮತ್ತೊಂದು ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲೂ ಇವೆ. ಒಬ್ಬನೇ ವೀರನ ಎರಡು ಪ್ರಶಸ್ತಿ ಶಾಸನಗಳು ಒಂದೆಡೆಯೇ ಇರುವುದು ಒಂದು ಅಪರೂಪ ಎಂದೇ ಹೇಳಬೇಕು. ಈ ಶಾಸನದಲ್ಲಿ ದಾನ ಅಥವಾ ವೀರನ ಸಾವಿನ ಪ್ರಸ್ತಾಪ ಇಲ್ಲ. ಅಪ್ಪಟ ಗುಣ ವರ್ಣನೆ ಇದೆ.  ಶಾಸನವು ಸಂಸ್ಕೃತ ಮತ್ತು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.  

ಗುಣಮಧುರನ  ಸಂಸ್ಕೃತ ಮತ್ತು ಕನ್ನಡ ಭಾಷೆಯ ಶಾಸನದ ಪಾಠ:

ಸಂಸ್ಕೃತ ಶಾಸನ:

1. ಸ್ವಸ್ತಿಶ್ರೀಮತ್ಮಾಸಿಕ್ಕಾಪುರಾಧಿಪತಿ : ಅಥ ಭಾರದ್ವಾಜ ವಂ [ಶೇ]1 ಧನಾಗಮ ಸ್ಯ ಪುತ್ರೋ ಮನಾ

2. ಗಮಃತ ಸ್ಕೈವ ಸೂನುಃ ಗುಣಮಧುರೋ ನಾಮ ಸತಾಂತ್ಯಾಗ ವಾನಿತಿ ಪ್ರಶಸ್ತ್ರ:

 ಕನ್ನಡ ಪದ್ಯ ಶಾಸನ:

ಬಿಣಮಣಿ (ಫಣಮಣಿ) ಅನ್ತುಭೋಗಿ ಬಿಣ(ಫಣ)ದುಳ್ಮಣಿ ವಿಲ್ಮನದೋನ್

ರಣಮುಖದುಳ್ಳೆ ಕೋಲಂ ನೆರಿಯರ್ಕುಮನಿದ್ದ್ಯ ಗುಣನ್

ಪ್ರಣಯಿಜನಕ್ಕೆ ಕಾಮನಸಿತೋತ್ಪಲ ವರ್ಣನವನ್

ಗುಣಮಧುರಾನ್ಕ ದಿವ್ಯಪುರುಷ ನ್ಪುರುಷ ಪ್ರವರನ್

  ಸಂಸ್ಕೃತ ಭಾಷೆಯ ಶಾಸನದ ಪಠ್ಯದಲ್ಲಿ, ಮಾಸಿಕ್ಕಾಪುರಾಧಿಪತಿಯಾದ ಭಾರದ್ವಾಜ ವಂಶದ ಧನಾಗಮನ ಮಗ ಗುಣಮಧುರನು ತ್ಯಾಗವಂತನೆಂದು ಹೆಸರಾದವನು ಎಂಬ ವಿಶೇಷ ಗುಣವನ್ನು ಪ್ರಸ್ತಾಪಿಸುವ ಶಾಸನದ ಭಾಷೆ ಸಂಸ್ಕೃತ ಮತ್ತು ಲಿಪಿ ಕನ್ನಡ.  ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ, ಈ ವೃತ್ತದ ಛಂದಸ್ಸು ಅತ್ಯಂತ ಅಪೂರ್ವವಾದುದು ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ. ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಠಿ ನಡೆದಿರಬಹುದು ಎಂದು ಊಹಿಸಲು ಅವಕಾಶವಿದೆ. ಶಾಸನದ ಪಕ್ಕದಲ್ಲೇ ಇರುವ ಗುಣಮಧುರನನ್ನೇ ಕುರಿತ ಕನ್ನಡ ಶಾಸನವೂ ಕಾವ್ಯಾತ್ಮಕವಾಗಿದೆ.

 ಪದಶಃ ಮತ್ತು ವಾಕ್ಯಶಃ ಅರ್ಥ (ಅನ್ವಯ)

ಬಿಣಮಣಿ(ಫಣಮಣಿ) ಅನ್ತುಭೋಗಿ ಬಿಣ(ಫಣ)ದುಳ್ಮಣಿ ವಿಲ್ಮನದೋನ್: ಹಾವು (ಭೋಗಿ) ತನ್ನ ಹೆಡೆಯ (ಫಣಿ/ಬಿಣ) ಮೇಲಿರುವ ಮಣಿಯನ್ನು ಕಾಪಾಡಿಕೊಳ್ಳುವಂತೆ, ತನ್ನವರನ್ನು ಕಾಯುವವನು ಮತ್ತು ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು.

ರಣಮುಖದುಳ್ಳೆ ಕೋಲಂ ನೆರಿಯರ್ಕುಮನಿನ್ದ್ಯಗುಣನ್: ರಣರಂಗದಲ್ಲಿ (ರಣಮುಖ) ತನ್ನಲ್ಲಿರುವ ಬಾಣಗಳಿಂದ (ಕೋಲಂ) ಶತ್ರುಗಳನ್ನು ಸೀಳುವವನು (ನೆರಿಯರ್ಕುಮ್) ಹಾಗೂ ನಿಂದೆಗೆ ಒಳಗಾಗದ ಅಥವಾ ಕಳಂಕವಿಲ್ಲದ (ಅನಿಂದ್ಯ) ಗುಣವುಳ್ಳವನು.

ಪ್ರಣಯಿ ಜನಕ್ಕೆ ಕಾಮನಸಿತೋತ್ಪಲ ವರ್ಣನವನ್: ಒಲಿದುಬಂದ ಪ್ರಣಯಿಗಳಿಗೆ ಮನ್ಮಥನಂತಿರುವವನು (ಕಾಮನ್) ಮತ್ತು ನೈದಿಲೆಯಂತೆ (ಅಸಿತೋತ್ಪಲ) ಕಪ್ಪು ವರ್ಣದವನು.

ಗುಣಮಧುರಾನ್ಕ ದಿವ್ಯಪುರುಷನ್ ಪುರುಷ ಪ್ರವರನ್: ಇಂತಹ 'ಗುಣಮಧುರ' ಎಂಬ ಅಂಕಿತವುಳ್ಳವನೇ ದಿವ್ಯಪುರುಷ ಹಾಗೂ ಪುರುಷರಲ್ಲಿ ಶ್ರೇಷ್ಠ (ಪ್ರವರನ್).   

   ಕನ್ನಡ ಭಾಷೆಯ ಶಾಸನ ಪದ್ಯದಲ್ಲಿ, ಗುಣಮಧುರನು  ಹಣೆ(ಹೆಡೆ)ಯಲ್ಲಿ ರತ್ನವುಳ್ಳ ನಾಗನಂತೆ ಭೋಗಿಯೂ(ಸುಖಿ: ಹೆಡೆಯುಳ್ಳುದು) ಹಣೆಯಲ್ಲಿ ಮಣಿಯನ್ನು ಧರಿಸಿಯೂ (ಕಿರೀಟಧಾರಿಯಾಗಿಯೂ) ಬಿಲ್ಲಿನಂಥ ಮನಸ್ಸುಳ್ಳವನೂ ಯುದ್ಧ ರಂಗದಲ್ಲಿ ಮಾತ್ರ (ಶತ್ರುಗಳಿಗೆ) ಯಮಸ್ವರೂಪನೂ (ಆದರೆ) ಶತ್ರುಗಳೂ ಇವನನ್ನು ನಿಂದಿಸಲಾಗದಷ್ಟು ಶುದ್ಧ ಚಾರಿತ್ರ್ಯವುಳ್ಳವನೂ,  ಅರ್ಥಾತ್ ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು. ನಿಂದಿಸಲಾಗದಷ್ಟು ಶುದ್ಧ ಚಾರಿತ್ರ್ಯವುಳ್ಳವನೂ, ಅಸಿತೋತ್ಪಲ ವರ್ಣದವನು (ಆದರೂ) ಪ್ರಣಯಿಜನಕ್ಕೆ ಕಾಮನಂತಿದ್ದವನೂ ಆದ ಈ ಗುಣಮಧುರನು ದಿವ್ಯ ಪುರುಷನಷ್ಟೇ ಅಲ್ಲ ಪೌರುಷವುಳ್ಳವರಲ್ಲಿ ಶ್ರೇಷ್ಠನು. ಈ ರೀತಿಯಾಗಿ ಮೇಲಿನ ಪದ್ಯದಲ್ಲಿ ಪರಸ್ಪರ ವಿರುದ್ಧ ಗುಣಗಳನ್ನು ಹೇಳಿ ಆ ಗುಣಗಳನ್ನು ಗುಣಮಧುರನು ಹೊಂದಿರುವುದರಿಂದ ಇವನನ್ನು ಪುರುಷ ಶ್ರೇಷ್ಠನೆಂದು ಬಣ್ಣಿಸಿದ್ದಾನೆ. ಶಾಸನವು 'ಗುಣಮಧುರ' ಎಂಬ ನಾಯಕನ ಅಥವಾ ವೀರನ ಗುಣಸ್ವಭಾವಗಳನ್ನು ಮತ್ತು ಶೌರ್ಯವನ್ನು ವರ್ಣಿಸುತ್ತದೆ. ಗುಣಮಧುರನು ಯಾವುದೇ ಪ್ರಸಿದ್ಧ ದೊಡ್ಡ ರಾಜಮನೆತನಕ್ಕೆ ಸೇರಿದವನಲ್ಲ; ಆತ 'ಮಾಸಿಕಪುರ' (ಇಂದಿನ ತಮಟಕಲ್ಲು) ಎನ್ನುವ ಒಂದು ಸಣ್ಣ ಪಾಳೆಯದ ನಾಯಕ ಅಥವಾ ಊರೊಡೆಯ. ೫-೬ನೇ ಶತಮಾನವು ಕದಂಬರ ಅವನತಿ ಮತ್ತು ಚಾಲುಕ್ಯರ ಉದಯದ ಸಂಕ್ರಮಣ ಕಾಲವಾಗಿತ್ತು. ಇಂತಹ ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಸೈನ್ಯ ಬಂದು ಊರನ್ನು ಕಾಯುವುದು ಕಷ್ಟವಿತ್ತು. ಆಗ ಸ್ಥಳೀಯ ಯುವಕರು ಊರಿನ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದರು ಅಂತಹವರಲ್ಲಿ ಗುಣಮಧುರನಂತವರು ಇರುತ್ತಿದ್ದರು.

  ಶಾಸನವು ಆತನನ್ನು ಅತ್ಯಂತ ಉದಾರ, ದಯಾಮಯಿ ಹಾಗೂ ಶೂರ ಎಂದು ಬಣ್ಣಿಸುತ್ತದೆ. ಆತ ಮೈಬಣ್ಣದಲ್ಲಿ ಕಪ್ಪಗಿದ್ದರೂ, ತನ್ನ ಮಧುರವಾದ ಗುಣಸ್ವಭಾವಗಳಿಂದಾಗಿ ಆಕರ್ಷಕನಾಗಿದ್ದನು ಮತ್ತು ಮಹಿಳೆಯರ ಅಚ್ಚುಮೆಚ್ಚಿನವನಾಗಿದ್ದನು ಎನ್ನುವ ಸ್ವಭಾವಚಿತ್ರವನ್ನು ಶಾಸನವು ಬಹಳ ಆಸಕ್ತಿದಾಯಕವಾಗಿ ಕಟ್ಟಿಕೊಡುತ್ತದೆ. ಸಾಮಾನ್ಯವಾಗಿ ವೀರಗಲ್ಲು ಅಥವಾ ರಾಜಪ್ರಶಸ್ತಿ ಶಾಸನಗಳಲ್ಲಿ ನಾಯಕನ ಪರಾಕ್ರಮ, ಕೊಂದ ಶತ್ರುಗಳ ಸಂಖ್ಯೆ ಅಥವಾ ವಂಶಾವಳಿಯ ವೈಭವೀಕರಣ ಇರುತ್ತದೆ. ಆದರೆ, ಇಲ್ಲಿನ ದೃಷ್ಟಿಕೋನ ಅತ್ಯಂತ ಭಿನ್ನವಾಗಿದೆ. ಶಾಸನಕವಿ ಗುಣಮಧುರನನ್ನು "ಅಸಿತೋತ್ಪಲ ವರ್ಣನವನ್" (ಕಪ್ಪು ಬಣ್ಣದವನು) ಎಂದು ಬಣ್ಣಿಸುತ್ತಾನೆ. ಪ್ರಾಚೀನ ಪರಂಪರೆಯಲ್ಲಿ ಬಿಳಿ ಅಥವಾ ಹೊಂಬಣ್ಣವನ್ನು ಸೌಂದರ್ಯದ ಸಂಕೇತವಾಗಿ ವರ್ಣಿಸುವ ರೂಢಿಯ ನಡುವೆ, ಕಪ್ಪು ಬಣ್ಣವನ್ನೇ ಕಮಲ/ನೈದಿಲೆಗೆ ಹೋಲಿಸಿ, ಅವನು "ಪ್ರಣಯಿ ಜನಕ್ಕೆ ಕಾಮ"ನಾಗಿದ್ದ ಎಂದು ಹೇಳಿರುವುದು ಅಂದಿನ ಶಾಸನ ಕವಿಯ ದೇಶಿ ಸೌಂದರ್ಯ ಪ್ರಜ್ಞೆಯನ್ನು ಎತ್ತಿತೋರಿಸುತ್ತದೆ. ಶಾಸನ ಕವಿಯು ಬಳಸಿರುವ 'ಹಾವಿನ ಹೆಡೆಯ ಮೇಲಿನ ಮಣಿ'ಯ ರೂಪಕವು ಅದ್ಭುತವಾದ ದೃಶ್ಯಕಾವ್ಯವನ್ನು ಕಟ್ಟಿಕೊಡುತ್ತದೆ. ಇದು ಕೇವಲ ಶೌರ್ಯದ ಸಂಕೇತವಲ್ಲ; ಹಾವು ತನ್ನ ಮಣಿಯನ್ನು ಎಷ್ಟು ಎಚ್ಚರಿಕೆಯಿಂದ ಕಾಯುತ್ತದೋ, ಗುಣಮಧುರ ತನ್ನ ಊರನ್ನು (ಮಾಸಿಕಪುರ) ಅಷ್ಟೇ ಎಚ್ಚರಿಕೆಯಿಂದ ಕಾಯುತ್ತಿದ್ದ ಎಂಬ ಜವಾಬ್ದಾರಿಯ ಸಂಕೇತವನ್ನು ಸಾಂಕೇತಿಕವಾಗಿ ತಿಳಿಸಿದೆ.

   ಸಂಸ್ಕೃತ ಶಾಸನದಲ್ಲಿ ಪರಿಚಯಗೊಂಡ ಗುಣಮಧುರನ ಗುಣಸ್ವಭಾವಗಳನ್ನು ಕನ್ನಡ ವೃತ್ತದಲ್ಲಿ ವಿವರಿಸಲಾಗಿದೆ. ಈ ಗುಣಮಧುರ ಯಾವುದೇ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ ವ್ಯಕ್ತಿಯಲ್ಲ. ಒಂದು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶದ ಅಧಿಪತಿ ಅಷ್ಟೇ. ಇಂತಹ ವ್ಯಕ್ತಿಯ ಪ್ರಶಸ್ತಿಗೆ  ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರ  ಬಳಕೆ ಆಗಿರುವುದು ಗಮನಿಸ ಬಹುದು. ಇನ್ನೊಂದು ಸಂಗತಿ ಎಂದರೆ ಸಂಸ್ಕೃತ ಭಾಷೆಯಲ್ಲಿ ಕೇವಲ ಪರಿಚಯವಿದೆ. ಗುಣ ವಿಶೇಷಣಗಳು ಕನ್ನಡದಲ್ಲಿವೆ. ಈ ವಿಷಯವನ್ನು ಗಮನಿಸಿದಾಗ ಪ್ರಬಲವಾಗುತ್ತಿದ್ದ ಕನ್ನಡ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಬಳಕೆಯಾಗುತ್ತಿದ್ದ ಸಂಸ್ಕೃತದ ಸ್ಥಿತಿಯನ್ನು ಗಮನಿಸಬಹುದು. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳನ್ನು ಶಾಸನಗಳಲ್ಲಿ ಬಳಸುವ ಕ್ರಮವು ಕ್ರಿ.ಶ. ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಕಾಣಿಸಿ ಕೊಂಡಿದೆ. ಸಾಮಾನ್ಯವಾಗಿ ವೀರಗಲ್ಲುಗಳು ನಾಯಕನ ರೌದ್ರಾವತಾರವನ್ನು, ರಣಾಂಗಣದಲ್ಲಿ ಆತ ಕತ್ತರಿಸಿದ ತಲೆಗಳನ್ನು ವೈಭವೀಕರಿಸುತ್ತವೆ. ಆದರೆ ಇಲ್ಲಿ, ವೀರನಿಗೆ ಸಂಬಂಧಿಸಿದ  "ಪ್ರಣಯಿ ಜನಕ್ಕೆ ಕಾಮನ್" (ಪ್ರೀತಿಸುವ ಮಹಿಳೆಯರಿಗೆ ಆತ ಮನ್ಮಥ) ಎನ್ನುವ ಸಾಲು ಬಹಳ ವಿಶಿಷ್ಟವಾಗಿದ್ದು ಇದು ಸ್ತ್ರೀ ಸಂವೇದನೆ ಮತ್ತು ನಾಯಕನ ಕಲ್ಪನೆಯ ಪ್ರತೀಕವಾಗಿದೆ.

  ಭಾಷಿಕ ಮಹತ್ವ: ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಾಗ ನಾವು ಸಾಮಾನ್ಯವಾಗಿ ಹಲ್ಮಿಡಿ ಶಾಸನ (ಕ್ರಿ.ಶ. ೪೫೦) ಮತ್ತು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ (ಕ್ರಿ.ಶ. ೭೦೦) ಗಳನ್ನು ಉಲ್ಲೇಖಿಸುತ್ತೇವೆ. ಆದರೆ ತಮಟಕಲ್ಲು ಶಾಸನವು ಈ ಎರಡರ ನಡುವಿನ ಅತಿಮುಖ್ಯವಾದ ʻಸಂಪರ್ಕ ಕೊಂಡಿ'ಯಾಗಿದೆ.ಹಲ್ಮಿಡಿ ಶಾಸನವು ಸಂಪೂರ್ಣವಾಗಿ ʻಗದ್ಯ' ರೂಪದಲ್ಲಿದೆ ಮತ್ತು ಸಂಸ್ಕೃತ ಭೂಯಿಷ್ಠವಾಗಿದೆ. ಆದರೆ, ಕೇವಲ ೫೦ ವರ್ಷಗಳ ಅಂತರದಲ್ಲಿ ಹುಟ್ಟಿದ ತಮಟಕಲ್ಲು ಶಾಸನವು (ಕ್ರಿ.ಶ. ೫೦೦) 'ಪದ್ಯ' ರೂಪದಲ್ಲಿದೆ. ಅಂದರೆ ಕನ್ನಡಿಗರು ಕನ್ನಡ ಭಾಷೆಯನ್ನು ಕೇವಲ ಆಡಳಿತಕ್ಕಾಗಿ ಮಾತ್ರವಲ್ಲದೆ, ಕಾವ್ಯ ರಚನೆಗಾಗಿಯೂ ಪ್ರಬುದ್ಧವಾಗಿ ಬೆಳೆಸಿದ್ದರು ಎಂಬುದಕ್ಕೆ ತಮಟಕಲ್ಲು ಶಾಸನ ನಿದರ್ಶನವಾಗಿದೆ. ಶಾಸನದಲ್ಲಿ ಬಳಕೆಯಾಗಿರುವ ಪ್ರಾಚೀನ ಪದಗಳು ಭಾಷಾವಿಜ್ಞಾನದ ದೃಷ್ಟಿಯಿಂದ ಗಮನಿಸುವಂತಹವುಗಳಾಗಿವೆ. ಈ ಶಾಸನದಲ್ಲಿಯ ನೆರೆಯರ್ಕುಮ್ ಪದವು ಶತ್ರುಗಳನ್ನು ಸೀಳುವವನು ಅಥವಾ ನಾಶಮಾಡುವವನು ಎಂಬುದನ್ನು ಧ್ವನಿಸುತ್ತದೆ.  ಇದು ಪೂರ್ವದ ಹಳಗನ್ನಡದ ಕ್ರಿಯಾಪದದ ರೂಪ. ಅದೇ ರೀತಿ ಕೋಲಂ: ಕೋಲು ಎಂದರೆ ಕೇವಲ ದೊಣ್ಣೆ ಅಲ್ಲ; ಹಳಗನ್ನಡದಲ್ಲಿ ಇದರ ಅರ್ಥ 'ಬಾಣ'. ಬಾಣಗಳಿಂದ ಶತ್ರುಗಳನ್ನು ಸದೆಬಡಿಯುತ್ತಿದ್ದ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಈ ಶಾಸನದ ಛಂದಸ್ಸು ಸಂಸ್ಕೃತದ್ದಾದರೂ, ಅದರೊಳಗೆ ತುಂಬಿರುವ ಜೀವ ಮತ್ತು ಭಾಷೆ ಅಚ್ಚ ಕನ್ನಡದ್ದಾಗಿದೆ (ಉದಾ: ಬಿಣ, ಕೋಲಂ, ನೆರೆಯರ್ಕುಮ್). ಕವಿರಾಜಮಾರ್ಗಕಾರನು ಹೇಳುವ 'ಕನ್ನಡದೊಳ್ ಮಾರ್ಗಮ್' (ಸಂಸ್ಕೃತ-ಕನ್ನಡಗಳಮಿಶ್ರ ) ಎನ್ನುವ ಪರಿಕಲ್ಪನೆ ೫ನೇ ಶತಮಾನದಲ್ಲೇ ಪ್ರಾಯೋಗಿಕವಾಗಿ ಜಾರಿಯಲ್ಲಿತ್ತು ಎಂಬುದನ್ನು ತಮಟಕಲ್ಲು ಶಾಸನ ಸಾಬೀತುಪಡಿಸುತ್ತದೆ. ತಮಟಕಲ್ಲು ಶಾಸನವು ಕೇವಲ ದ್ಯದ ದಾಖಲೆಯಲ್ಲ; ಇದು ಪೂರ್ವದ ಹಳಗನ್ನಡದ ಕಾವ್ಯ ಪ್ರಬುದ್ಧತೆಗೆ ಜೀವಂತ ಸಾಕ್ಷಿ. ಕವಿರಾಜಮಾರ್ಗ (ಕ್ರಿ.ಶ. ೮೫೦) ರಚನೆಯಾಗುವುದಕ್ಕೂ ಮೂರುವರೆ ಶತಮಾನಗಳಿಗೂ ಮುನ್ನವೇ ಕನ್ನಡ ಭಾಷೆ ದೇಶಿ ಮತ್ತು ಮಾರ್ಗ ಪರಂಪರೆಗಳನ್ನು ಅರಗಿಸಿಕೊಂಡು ಛಂದೋಬದ್ಧ ಕಾವ್ಯಭಾಷೆಯಾಗಿ ವಿಕಸನಗೊಂಡಿತ್ತು ಎಂಬುದಕ್ಕೆ ಈ ಶಾಸನವು ಪ್ರಮುಖ ಆಕರ ಎನಿಸಿದೆ.

  ತಮಟಕಲ್ಲು ಶಾಸನದ ಛಂದಸ್ಸು: ಕನ್ನಡ ಸಾಹಿತ್ಯದ (ಹಾಗೂ ಶಾಸನ ಸಾಹಿತ್ಯದ) ಮೊಟ್ಟಮೊದಲ ಉಪಲಬ್ಧ ಪದ್ಯವಾಗಿದೆ. ಈ ಶಾಸನದ ಮೂಲಕ ಕನ್ನಡದಲ್ಲಿ ಆರನೆಯ ಶತಮಾನದ  ಹೊತ್ತಿಗಾಗಲೇ  ಕಾವ್ಯ ಮೌಲ್ಯವುಳ್ಳ ಪದ್ಯರಚನೆ ಪ್ರಾರಂಭವಾಗಿದ್ದರ ಜೊತೆಗೆ ಸಂಸ್ಕೃತ ವರ್ಣ ವೃತ್ತಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಶಾಸನ ಪದ್ಯವು ಪ್ರತಿ ಸಾಲಿಗೆ ೧೭ ಅಕ್ಷರಗಳನ್ನು ಒಳಗೊಂಡಿರುವ 'ಅತ್ಯಷ್ಟಿ' ಛಂದಸ್ಸಿನ 'ಸುಮಂಗಲಿ' ಎಂಬ ಸಂಸ್ಕೃತದ ವರ್ಣವೃತ್ತದಲ್ಲಿದೆ. ಗೋವಿಂದ ಪೈ ಅವರು ಇದಕ್ಕೆ ಕನಕಾಬ್ಜಿನಿ, ನರ್ಕುಟ ಎಂದು ಕರೆದಿದ್ದಾರೆ. ಛಂದೋಂಬುಧಿಯ ಸಂಪಾದನಾ ಸಮಯದಲ್ಲಿ ಕಿಟೆಲರು ನರ್ಕುಟುಕ ವೃತ್ತವು ಮತ್ತು ಕನಕಾಬ್ಜಿನಿಯು ಒಂದೇ ಎಂದು ಹೇಳಿರುವರು.  ಇದನ್ನು ಸುಮಂಗಲಿ ಅಥವಾ ನರ್ಕುಟಕ ಎಂದು ಬಿ.ಎಂ.ಶ್ರೀಯವರು ಕನ್ನಡ ಕೈಪಿಡಿಯಲ್ಲಿ ಹೆಸರಿಸಿದ್ದಾರೆ. ಇದು ಸಂಸ್ಕೃತ ವೃತ್ತವೇ ಆದರೂ ಸಂಸ್ಕೃತ ಸಾಹಿತ್ಯದಲ್ಲಿ ಎಲ್ಲಿಯೂ ಕಾಣಸಿಗದು. ಕನ್ನಡದಲ್ಲಿ ಸಂಸ್ಕೃತ ವೃತ್ತವನ್ನು ಬಳಸುವಾಗ ಹೊಸತನವಿರ ಬೇಕೆಂಬ ಹಿನ್ನೆಲೆಯಲ್ಲಿ ಶಾಸನ ಕವಿಯು ಇದನ್ನು ಬಳಸಿರ ಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಕನ್ನಡದ ವರ್ಣಛಂದಸ್ಸಿನ ಮೊದಲ ದಾಖಲೆಯನ್ನು ಶಾಸನದಲ್ಲಿ ಮಾತ್ರವೇ ಗುರುತಿಸಬಹುದು. ಕ್ರಿ.ಶ ೫೦೦ರ ಚಿತ್ರದುರ್ಗದ ತಮಟಕಲ್ಲು ಶಾಸನದಲ್ಲಿನ ವೃತ್ತವು ಕನ್ನಡದ ಮೊದಲ ವರ್ಣ ವೃತ್ತವೆಂದು ಹೇಳಬಹುದು. ಇದು ಸಾಹಿತ್ಯಪರವಾಗಿಯೂ ಕನ್ನಡದ ಮೊದಲ ಪದ್ಯವಾಗಿದೆ.

   ೧೭ ಅಕ್ಷರಗಳುಳ್ಳ ಇದು ವರ್ಣ ಛಂದಸ್ಸಿನ ಸಮವೃತ್ತದ ೧೭ನೇ ಅಕ್ಷರವೃತ್ತವಾದ ಅತ್ಯಷ್ಟಿಯಲ್ಲಿನ ʻಕನಕಾಬ್ಜಿನಿ ವೃತ್ತʼದಲ್ಲಿ ಮೂಡಿದೆ. ʻನಜಭಜಜಂಲಗಂʼ ಗಣವಿನ್ಯಾಸ ಕ್ರಮವನ್ನು ನಾಗವರ್ಮನು ʻಕನಕಾಬ್ಜನೀಯಂʼ ಎಂದು ಹೆಸರಿಸಿರುವನು. “ನಜಭಜಜಂಲಗಂ ಬರೆ ಸುಮಂಗಲಿಯೆಂಬರದಂ,ಇದಕ್ಕೆ ನರ್ಕುಟಕ ಎಂದು ಮತ್ತೊಂದು ಹೆಸರು”ಇಲ್ಲಿ ಈ ವೃತ್ತದ ಗಣ ವಿಂಗಡಣಾ ಸೂತ್ರವು ಸಹ ಬಂದಿರುವುದು ಕಾಣಬಹುದು.  ಈ ಲಕ್ಷಣದ ಪ್ರಕಾರ ಪ್ರತಿಪಾದದಲ್ಲಿ ನಗಣ, ಜಗಣ, ಭಗಣ, ಜಗಣ, ಜಗಣ, ಒಂದು ಲಘು ಮತ್ತು ಒಂದು ಗುರು ಬರುವುದು. ಇದೇ ನಿಯಮಕ್ಕೆ ಸಾಮಿಪ್ಯವಿರುವ ಮತ್ತೊಂದು ಅಕ್ಷರ ವೃತ್ತದ ಕುರಿತು ಪಿಂಗಲನು ಚರ್ಚಿಸಿರುವುದನ್ನು ಕಾಣಬಹುದು. ಆದರೆ ಎರಡಕ್ಕೂ ಇರುವ ವ್ಯತ್ಯಾಸವಿರುವುದು ಯತಿ ಪ್ರಯೋಗದಲ್ಲಿ. ಇಲ್ಲಿ ಪಾದದ ಕೊನೆಯಲ್ಲಿ ಯತಿಯನ್ನು ಪಾಲಿಸಲಾಗಿದೆ. “ಇದೇ ಗಣವಿನ್ಯಾಸದ ವೃತ್ತವು ನಿರ್ದಿಷ್ಟ ಸ್ಥಳದಲ್ಲಿ ಪಾಲಿತವಾಗಿದ್ದರೆ ʻಕೋಕಿಲಕʼವೆನ್ನಿಸುವುದೆಂದು ಪಿಂಗಲಾದ್ಯರೇ ಇನ್ನೊಂದು ಪ್ರಭೇದವನ್ನು ಗುರುತಿಸಿದ್ದಾರೆ.” 

   ಇಲ್ಲಿನ ಆದಿಪ್ರಾಸ ಮತ್ತು ಅಂತ್ಯಪ್ರಾಸದ ಪ್ರಯೋಗವು ಸಹ ಆರಂಭಕಾಲದ ಶಾಸನ ಸಾಹಿತ್ಯವನ್ನು, ಕಟ್ಟುವಿಕೆಯ ಪಾಂಡಿತ್ಯತೆಯನ್ನು ಬಿಂಬಿಸುತ್ತದೆ. ಗುಣಮಧುರನ ವ್ಯಕ್ತಿತ್ವವನ್ನು ಚಿತ್ರಿಸಲು ಬಳಸಿದ ಈ ಕನಕಾಬ್ಜಿನಿ ವೃತ್ತವು ಕನ್ನಡದ ಮೊದಲ ಛಂದೋಬಂಧವಾದರೂ, ಆ ನಂತರದ ಕನ್ನಡದ ಶಾಸನಗಳಲ್ಲಿ ಎಲ್ಲಿಯೂ ಹೆಚ್ಚಾಗಿ ಸಿಕ್ಕಿರುವುದಿಲ್ಲ. ಹಳಗನ್ನಡ ಗ್ರಂಥಗಳಲ್ಲಿ ಗಮನಿಸಿದಾಗ ನಾಗವರ್ಮ, ನೇಮಿಚಂದ್ರ ಮುಂತಾದ ಚಂಪೂ ಕವಿಗಳ ಕೃತಿಗಳಲ್ಲಿ ಅಲ್ಲಲ್ಲಿ ಗೋಚರವಾಗಿರುವುದನ್ನು ನೋಡಬಹುದಷ್ಟೆ. ಈ ಕಾರಣಕ್ಕೆ ಇದೊಂದು ಅಪರೂಪದ ವರ್ಣವೃತ್ತವಾಗಿದೆ. ಕನ್ನಡದಲ್ಲಿ ಸಿಗುವ ಪ್ರಥಮ ಸಾಹಿತ್ಯಾತ್ಮಕ ಶಾಸನದಲ್ಲಿಯೇ ಇಷ್ಟು ಪ್ರೌಢಿಮೆಯುಳ್ಳ ವೃತ್ತವನ್ನು ಅಳವಡಿಸಿರುವುದನ್ನು ಗಮನಿಸಿದಾಗ ಅದಕ್ಕೂ ಹಿಂದಿನ ಕನ್ನಡ ಕವಿಗಳು ಮತ್ತು ಲಾಕ್ಷಣಿಕರಲ್ಲಿ ಇದ್ದಂತಹ ವೃತ್ತಗಳ ಛಂದೋಬಂಧದ ಬಳಕೆ ಮತ್ತು ಪಾಂಡಿತ್ಯತೆಯನ್ನು ತಿಳಿಯಬಹುದು. ಇದು ಕನ್ನಡದಲ್ಲಿ ೫ನೇ ಶತಮಾನಕ್ಕೂ ಪೂರ್ವದ ವರ್ಣವೃತ್ತಗಳ ಸ್ಥಿತಿಗತಿಗಳ ಸ್ವರೂಪವನ್ನು ತಿಳಿಯಲು ಸಹಾಯಕವಾಗಿದೆ. ಪೂರ್ವದ ಹಳಗನ್ನಡದಲ್ಲಿರುವ ಈ ಶಾಸನವು, 'ಕವಿರಾಜಮಾರ್ಗ' (ಕ್ರಿ.ಶ. ೮೫೦) ರಚನೆಯಾಗುವ ಮುನ್ನವೇ, ಅಂದರೆ ಬಾದಾಮಿ ಚಾಲುಕ್ಯರ ಕಾಲದ ಹೊತ್ತಿಗಾಗಲೇ ಕನ್ನಡವು ಒಂದು ಪ್ರಬುದ್ಧ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದಿತು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.  

     ಈ ಶಾಸನವು ಕೇವಲ ಯುದ್ಧದ ವರ್ಣನೆಯಾಗಿ ಉಳಿಯುವುದಿಲ್ಲ. ಗುಣಮಧುರನನ್ನು 'ಅನಿಂದ್ಯ ಗುಣನ್' (ಕಳಂಕವಿಲ್ಲದವನು) ಎಂದು ಕರೆದಿರುವುದು ಆ ಕಾಲದ ನೈತಿಕ ಮೌಲ್ಯಗಳನ್ನು ಬಿಂಬಿಸುತ್ತದೆ. ಐದನೆಯ ಶತಮಾನದ ವೀರಗಲ್ಲುಗಳಲ್ಲಿ ಕಂಡುಬರುವ ಇಂತಹ ಶೌರ್ಯ, ನೈತಿಕತೆ ಮತ್ತು ತ್ಯಾಗದ ಆದರ್ಶಗಳೇ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬೆಳೆದುಬಂದ ವಚನ-ಶರಣ ಸಾಹಿತ್ಯ ಮತ್ತು ಭಕ್ತಿಪರಂಪರೆಯ ಮಾನವತಾವಾದಿ ಮೌಲ್ಯಗಳಿಗೆ ಒಂದು ಭದ್ರವಾದ ಸಾಂಸ್ಕೃತಿಕ ಭಿತ್ತಿಯನ್ನು ನಿರ್ಮಿಸಿದವು ಎನ್ನಬಹುದು. ಒಟ್ಟಾರೆಯಾಗಿ, ಗುಣಮಧುರನ ತಮಟಕಲ್ಲು ಶಾಸನವು ಕೇವಲ ಒಬ್ಬ ವೀರನ ಸ್ಮಾರಕವಲ್ಲ; ಅದು ಕನ್ನಡದ ಕಾವ್ಯ ಪರಂಪರೆ, ಛಂದಸ್ಸು ಮತ್ತು ಭಾಷಿಕ ಶ್ರೀಮಂತಿಕೆಯ ಬೇರುಗಳನ್ನು ಐದನೆಯ ಶತಮಾನದಷ್ಟು ಪೂರ್ವಕ್ಕೆ ಕೊಂಡೊಯ್ಯುವ ಕನ್ನಡನಾಡಿನ ಅತಿಮುಖ್ಯ ಐತಿಹಾಸಿಕ ಆಕರವಾಗಿದೆ. ಗುಣಮಧುರನ ತಮಟಕಲ್ಲು ಶಾಸನವು ಕೇವಲ ಮೇಲ್ನೋಟದ ಅಧ್ಯಯನಕ್ಕೆ ಸೀಮಿತವಾಗಿರದೆ, ಶಾಸನಶಾಸ್ತ್ರ, ಭಾಷಾವಿಜ್ಞಾನ, ಸೌಂದರ್ಯ ಮೀಮಾಂಸೆ ಮತ್ತು ಸಾಮಾಜಿಕ ಇತಿಹಾಸದ ಸೂಕ್ಷ್ಮ ಕನ್ನಡಿಯ ಮೂಲಕ ನೋಡಿದಾಗ ಈ ಶಾಸನದ ಮಹತ್ವ ಎಂತಹದ್ದು ಎಂಬುದು ಗೊತ್ತಾಗುತ್ತದೆ. ತಮಟಕಲ್ಲು ಶಾಸನವು ಕೇವಲ ʻಕನ್ನಡದ ಮೊದಲ ಪದ್ಯಶಾಸನ' ಎನ್ನುವ ಹೆಗ್ಗಳಿಕೆಗೆ ಮಾತ್ರ ಸೀಮಿತವಲ್ಲ. ಇದು ಪ್ರಾಚೀನ ಕರ್ನಾಟಕದ ಸ್ಥಳೀಯ ರಾಜಕೀಯ ವ್ಯವಸ್ಥೆ, ದ್ರಾವಿಡ ಸೌಂದರ್ಯ ಪ್ರಜ್ಞೆ, ಕಾವ್ಯ ಮೀಮಾಂಸೆ ಮತ್ತು ನೈತಿಕ ಆದರ್ಶ ಮತ್ತು ಮೌಲ್ಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಟ್ಟುಕೊಂಡಿರುವ ಒಂದು ಸಾಂಸ್ಕೃತಿಕ ಕಿರುಕಾವ್ಯವಾಗಿದೆ.

  

 ಪರಾಮರ್ಶನ ಗ್ರಂಥಗಳು

೧. ಶಾಸನ ಸಂಗ್ರಹ  ಸಂ. ಎ.ಎಂ.ಅಣ್ಣಿಗೇರಿ ಮತ್ತು ಆರ್‌ ಶೇಷಶಾಸ್ತ್ರಿ

   ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೧೩

೨. ಎಪಿಗ್ರಫಿಯಾ ಕರ್ನಾಟಿಕಾ ಶಾಸನ ಸಂಪುಟ.XI, ಚಿತ್ರದುರ್ಗ, ಸಂಖ್ಯೆ.೪೩

೩. ಎಂ.ಚಿದಾನಂದಮೂರ್ತಿ, ಹೊಸತು ಹೊಸತು

   ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩

೪. ಸಿ.ನಾಗಭೂಷಣ, ಕನ್ನಡ ಸಾಹಿತ್ಯ ಸಂಸ್ಕೃತಿ ಬಾಗಿನ

   ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೨೦

೫. ಎಂ.ಬಿ.ನೇಗಿನಹಾಳ: ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ

 ಪ್ರಸಾರಾಂಗ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1994

೬. ತಮಟಕಲ್ಲಿನ ಗುಣಮಧುರನ ಶಾಸನಗಳು ಪುನ‌ರ್ ಪರಿಶೀಲನೆ

  ದೇವರ ಕೊಂಡಾರೆಡ್ಡಿ ಮತ್ತು ಆರ್.ಶೇಷಶಾಸ್ತ್ರಿ, ಸಾಧನೆ, ಸಂ.೧೦.ಸಂ.೩,ಪ್ರಸಾರಾಂಗ

  ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. ಜುಲೈ-ಸೆಪ್ಟಂಬರ್, ೧೯೮೧

 

                                                

 

                 ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ                 ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು                 ...