ಗುರುವಾರ, ಅಕ್ಟೋಬರ್ 17, 2024

 

ಪುರಾತನ ಶರಣ ಕುಂಬಾರ ಗುಂಡಯ್ಯ

                    ಡಾ.ಸಿ.ನಾಗಭೂಷಣ

     ಕುಂಬಾರ ಗುಂಡಯ್ಯ ಸಾಮಾನ್ಯ ಶಿವಭಕ್ತ. ಮಡಕೆ ಮಾಡುವುದೇ ಅವನ ಕಾಯಕ ವೃತ್ತಿ. ನಿಷ್ಠೆಯಿಂದ ಕಾಯಕ ಮಾಡುವುದು, ಅದರ ಮೂಲಕ ಶಿವಾರ್ಚನೆ ಸಲ್ಲಿಸುವುದು ಅವನ ದಿನಚರಿ, ಆ ಕಾಯಕ ವೃತ್ತಿಯನ್ನೇ ತನ್ನ ಅಧ್ಯಾತ್ಮಕ್ಕೂ ಅಳವಡಿಸಿಕೊಂಡಿದ್ದವನು. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣವೇ  ಶಿವಭಕ್ತ ಕುಂಬಾರ ಗುಂಡಯ್ಯನ ಜನ್ಮಸ್ಥಳ ಎಂಬುದು ವಿದ್ವಾಂಸರ ಅಭಿಮತ. ಹರಿಹರ ರಗಳೆಯಲ್ಲಿ ಬಲ್ಲುಪುರ ಎಂದಿದೆ. ಶಾಸನಗಳ ಪ್ರಕಾರ ಈ ಪಟ್ಟಣವು  ಭಲ್ಲೂ ನಗರ, ಭಲ್ಲುಂಕ, ಭಾಲಿಕ, ಭಾಲಕ ಎಂದು ಕರೆಯಲ್ಪಟ್ಟಿದೆ. ಕುಂಬಾರ ಗುಂಡಯ್ಯನ ಬಗೆಗೆ ಶಾಸನಗಳು, ವಚನಕಾರರ ವಚನಗಳು, ವೀರಶೈವ ಕೃತಿಗಳು ಜನಪದ ಸಾಹಿತ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಲ್ಲೇಖಗಳು ದೊರೆಯುತ್ತವೆ.

       ಕುಂಬಾರ ಗುಂಡಯ್ಯನ ಬಗೆಗೆ ಐತಿಹಾಸಿಕ ಸಂಗತಿಗಳು ಅಷ್ಟಾಗಿ ಲಭ್ಯವಿಲ್ಲ. ಬಸವ ಯುಗದವನೋ ಬಸವಪೂರ್ವ ಕಾಲದವನೋ ಎಂಬುದರ ಬಗೆಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳಿಲ್ಲ. ಈತನು ಆದ್ಯವಚನಕಾರನಾಗಿದ್ದು, ವಚನಗಳನ್ನು ರಚಿಸಿರುವುದರ ಬಗೆಗೆ ಯಾವುದೇ ಆಕರಗಳು ಉಪಲಬ್ಧವಿಲ್ಲ.  ಮಂಡ್ಯ ತಾಲೋಕಿನ ಕ್ರಿ.ಶ.೧೩೦೫ರ ಮರಡಿಪುರ ಶಾಸನದಲ್ಲಿಯ ಮರ್ತಲೋಕದ ಗಣಂಗಳ ಸಿರಿಯಾಳುವ ದಾಸ ದಸವರಂ ಓಹಿಲ, ನಂಬಿ, ಕುಂಬಾರಗುಂಡ, ಕರಿಕಾಲ ಚೋಳ, ಬಾಣ ಮಯೂರ ಕಾಳಿದಾಸ ಕೇಶಿರಾಜ, ಸುರಿಗೆಯ ಚಲ್ವಡರಾಯ ಸಂಗನಬಸವಯ್ಯ..ಏಕಾನ್ತದ ರಾಮಯ್ಯ ನೆಲುವಿಗೆಯ ಸಾಂತಯ್ಯ ಸಕಲಗಣಪರಿವೇಷ್ಠಿತ ಶ್ರೀಕಲದೇವ ಪ್ರಸಸ್ತಿ ಮಂಗಳಂ. ವೀರಮ್ಮಯ್ಯನ ಮಗ ಭಕ್ತರ ಕರುಣದ ಕಾರುಣ್ಯದ ಮಗ ಶರಣರ ದಾಸಶೋವನಶಿಂಗನ ಮಾರೆಯನಾಯಕ ಇತ್ಯಾದಿ ಹೆಸರುಹೇಳಿ ಕೇತನಹಟ್ಟಿಯನ್ನು ಶಿವಪುರವನ್ನಾಗಿ ಮಾಡಿ ಭಕ್ತರಿಗೆ ಕೊಟ್ಟ ಧರ್ಮದ ವಿವರಗಳನ್ನು ಒಳಗೊಂಡಿದೆ.( ಸಿ.ನಾಗಭೂಷಣ: ಶರಣ ಸಾಹಿತ್ಯ-ಸಂಸ್ಕೃತಿ ಕವಳಿಗೆ, ಪು.೫೧-೫೨) ಈ ಶಾಸನದಲ್ಲಿ ನೂತನ ಮತ್ತು ಪುರಾತನ ಶರಣರ ಉಲ್ಲೇಖದಲ್ಲಿ ಕುಂಬಾರ ಗುಂಡಯ್ಯನ ಬಗ್ಗೆ ಉಲ್ಲೇಖವಿದೆ. ಅಬ್ಬಲೂರಿನ  ಸೋಮೇಶ್ವರ ದೇವಾಲಯದ ಗೋಡೆಗಳಲ್ಲಿ ಜೇಡರ ದಾಸಿಮಯ್ಯ, ಸಿರಿಯಾಳ ಶೆಟ್ಟಿ ಮುಂತಾದ ಶರಣರ ಜೊತೆಗೆ  ಕುಂಬಾರ ಗುಂಡಯ್ಯನ  ಕುರಿತ ಚಿಕ್ಕ ಬರೆಹ ಮತ್ತು ಶಿಲ್ಪದ ಉಲ್ಲೇಖ ಇದೆ. ಇದರ ಕಾಲ ೧೨ ನೇ ಶತಮಾನ.  ಶಿಲ್ಪವು  ಶಿವನು ಕುಂಬಾರ ಗುಂಡಯ್ಯನ ಮುಂದೆ ನಾಟ್ಯ ಮಾಡಿದ ಚಿತ್ರವನ್ನು ಒಳಗೊಂಡಿದೆ. ನನಗೆ ತಿಳಿದ ಮಟ್ಟಿಗೆ ಈ ಶಿಲ್ಪವು ಗುಂಡಯ್ಯನಿಗೆ ಸಂಬಂಧಿಸಿದ ಪ್ರಾಚೀನ ಶಿಲ್ಪವಾಗಿದೆ. ಶಿಲ್ಪದ ಕೆಳಗೆ ʻಕುಂಬಾರ ಗುಂಡನ ಮುಂದೆ ಬಂದಾಡಿದ ನಮ್ಮ ಶಿವನುʼ ಎಂಬ ಬರೆಹವಿದೆ.

   ಕುಂಬಾರ ಗುಂಡಯ್ಯನು  ಬಸವಪೂರ್ವ ಯುಗದ ಶರಣ. ಇದಕ್ಕೆ ಆಧಾರ ಆದ್ಯ ವಚನಕಾರನಾದ ಜೇಡರ ದಾಸಿಮಯ್ಯನು ಗುಂಡಯ್ಯನನ್ನು ತನ್ನ ವಚನವೊಂದರಲ್ಲಿ ಪ್ರಸ್ತಾಪಿಸಿರುವುದು. ಈತನ ಬಗೆಗೆ ಜೇಡರ ದಾಸಿಮಯ್ಯ, ಶಿವಯೋಗಿ ಸಿದ್ಧರಾಮ ಮತ್ತು ಅಂಬಿಗರ ಚೌಡಯ್ಯರ ವಚನಗಳಲ್ಲಿ ಉಲ್ಲೇಖ ಇದೆ. ಜೇಡರ ದಾಸಿಮಯ್ಯನವರು ತಮ್ಮ ಒಂದು ವಚನದಲ್ಲಿ ಕುಂಬಾರ ಗುಂಡಯ್ಯನನ್ನು ನೆನೆಸಿಕೊಂಡಿದ್ದಾರೆ.

ನಂಬಿದ ಚೆನ್ನನ | ಅಂಬಲಿಯನುಂಡ ||

ಕೆಂಬಾವಿ ಭೋಗಯ್ಯನ ಹಿಂದಾಡಿ ಹೋದ ||

ಕುಂಭದ ಗತಿಗೆ | ಕುಕಿಲಿರಿದು ಕುಣಿದ ||(ಸಂಕೀರ್ಣ ವಚನ ಸಂಪುಟ ೨ ಸಂ:ಎಸ್.ವಿದ್ಯಾಶಂಕರ,ವಚನ ಸಂ.೧೦೧)

ನಂಬದೇ ಕರೆದವರ | ಹಂಬಲನೊಲನವು ರಾಮನಾಥ ||

ಶಿವಯೋಗಿ ಸಿದ್ಧರಾಮರು, ಕುಂಬಾರ ಗುಂಡಯ್ಯನ ಘನ ವ್ಯಕ್ತಿತ್ವದ ಬಗೆಗೆ ಇತರೆ ಶರಣರ ಉಲ್ಲೇಖದೊಂದಿಗೆ ಈ ಕೆಳ ಕಂಡಂತೆ ಪ್ರಸ್ತಾಪಿಸಿದ್ದಾರೆ.

ಕುಂಬಾರರೆಲ್ಲರು | ಗುಂಡಯ್ಯನಾಗಬಲ್ಲರೆ ||

ಮಡಿವಾಳರೆಲ್ಲರು | ಮಾಚಯ್ಯನಾಗಬಲ್ಲರೆ ||

ಜೇಡರೆಲ್ಲರು | ದಾಸಿಮಯ್ಯನಾಗಬಲ್ಲರೆ ||

ಎನ್ನ ಗುರು | ಕಪಿಲಸಿದ್ಧಮಲ್ಲೇಶ್ವರಯ್ಯಾ ||

ಪ್ರಾಣಿಗಳ ಕೊಂದು | ಪರಿಹರಿಸಬಲ್ಲಡೆ ||

ತೆಲುಗ | ಜೊಮ್ಮಯ್ಯನಾಗಬಲ್ಲರೆ (ಸಿದ್ಧರಾಮೇಶ್ವರ ವಚನ ಸಂಪುಟ ಸಂ: ಎಸ್. ವಿದ್ಯಾಶಂಕರ, ವ.ಸಂ.೧೪೫೫)

ಅಂಬಿಗರ ಚೌಡಯ್ಯನವರ ವಚನದಲ್ಲಿ ಕುಂಬಾರ ಗುಂಡಯ್ಯನ ವರ್ಣನೆಯಿದೆ :

[ನಂಬಿಯಣ್ಣ] ಮಾಡುವ ಭಕ್ತಿ | ನಾಡೆಲ್ಲ ಮಾಡಬಹುದಯ್ಯಾ ||

ಕುಂಬಾರ ಗುಂಡಯ್ಯ ಮಾಡುವ ಭಕ್ತಿ | ಊರೆಲ್ಲಾ ಮಾಡಬಹುದಯ್ಯಾ ||

ಬಸವಣ್ಣ ಮಾಡುವ ಭಕ್ತಿ | ಶಿಶುವೆಲ್ಲ ಮಾಡಬಹುದಯ್ಯಾ ||

ಈ ವಸುಧೆಯೊಳಗೆ | ಶುದ್ಧಭಕ್ತಿಯನರಿತು ||

ನಡೆದುದು ಬಟ್ಟೆಯಾಗದೆ? | ನುಡಿದುದು ಸಿದ್ದಿಯಾಗದೆ ?

ದೊಡ್ಡ ಭಕ್ತನೆಂದಾತ ನಮ್ಮ | ಅಂಬಿಗರ ಚೌಡಯ್ಯ ||(ಸಂಕೀರ್ಣ ವಚನ ಸಂಪುಟ ೧ ಸಂ:ವೀರಣ್ಣರಾಜೂರ, ವಚನ ಸಂ.೧೬೬)

    ಕಾಯಕನಿಷ್ಠ ಕುಂಬಾರ ಗುಂಡಯ್ಯ, ಕನ್ನಡ ನಾಡಿನ  ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಪದರ ಭಾಗವಾಗಿರುವುದು ಕಂಡು ಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿಯ  ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ರಕ್ಷಣೆಗಾಗಿ ಒಂದು ಕೋಲಿಗೆ ಗಡಿಗೆ ಮಗುಚಿ ಹಾಕಿ, ಸುಣ್ಣ ಬಳಿದು, 'ಬೆದರು ಬೊಂಬೆ'ಯನ್ನು ಮಾಡಿ ನಿಲ್ಲಿಸುತ್ತಾರೆ. ಆ ಗಡಿಗೆಯನ್ನು ಅವರು “ಗುಂಡನೆಂದು ಕರೆದು, ಕುಂಬಾರ ಗುಂಡಯ್ಯನು ತಮ್ಮ ಹೊಲದ ಬೆಳೆಗಳನ್ನು ರಕ್ಷಣೆ ಮಾಡುತ್ತಾನೆಂಬ ನಂಬಿಗೆಯನ್ನು ಇಟ್ಟುಕೊಂಡಿದ್ದಾರೆ. ಜನಪದ ಹಾಡುಗಳಲ್ಲಿಯೂ ಗುಂಡಯ್ಯನ ಕಾಯಕದ ಬಗೆಗೆ ಪ್ರಸ್ತಾಪ ಇದೆ. ಶರಣ ಕುಂಬಾರ ಗುಂಡಯ್ಯನ ಕುರಿತು ಜನಪದರಲ್ಲಿ,

ಮೂರುಲಿಂಗದ ಕಳೆಯ, ಬೀರುತಲಿ ಗುಂಡಯ್ಯ

ತೋರಿ ಆ ಕಳೆಯು ತನ್ನೊಳಗೆ | ಒಡಮೂಡಿ

ಸೂರಿ ಕಾಯಕವೆ ಜನಕಾಯ್ತು

ಕಾಯಕವೆ ಶಿವಭಕ್ತಿ, ಕಾಯಕವ ಶಿವಭಜನೆ

ಕಾಯಕವೆ ಲಿಂಗ ಶಿವಪೂಜೆ | ಶಿವಯೋಗ

ಕಾಯಕವೆ ಕಾಯ್ತ ಕೈಲಾಸ

ಬೇಡೆನಗೆ ಕೈಲಾಸ, ಬಾಡುವುದು ಕಾಯಕವು

ನೀಡೆನಗೆ ಕಾಯಕವ ಕುಣಿದಾಡಿ

ನಾಡ ಹಂದರಕೆ ಹಬ್ಬಿಸುವೆ! ಎಂಬ ವಿವರವಿದ್ದು, (ಬಿ.ಎಸ್.ಗದ್ದಗಿಮಠ, ಕನ್ನಡ ಜಾನಪದ ಗೀತೆಗಳು,ಪು.೧೦೫)  ಶರಣ ಕುಂಬಾರ ಗುಂಡಯ್ಯ ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎಂದು ಬೇಡುತ್ತಾನೆ. ಕೈಲಾಸಕ್ಕಿಂತಲೂ ಕಾಯಕಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದನ್ನು ಜನಪದ ಹಾಡುಗಳಲ್ಲಿ ಕಾಣಬಹುದಾಗಿದೆ.

 ಅದೇ ರೀತಿ,

 ಬೆಚ್ಚುಹಾಕಿದ ಗಡಿಗಿ ಮುಚ್ಚಿಟ್ಟ ಹೊಲ ಹುಲುಸು

 ಬಚ್ಚಾದ ಬೆಳೆಯ ಕಣವುಕ್ಕಿ ಗುಂಡಯ್ಯ

 ಹೆಚ್ಚಾಯ್ತು ನಿನ್ನ ಶಿವಭಕ್ತಿ

  ಎಂದು ಹಾಡುವ ಜನಪದರು, “ಗುಂಡಯ್ಯನ ಗಡಿಗೆ ಹೊಲವನ್ನು ಕಾಯುವುದು ಮಾತ್ರವಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ಬೀಸಿ ತರುತ್ತಾನೆ ಎಂದೂ ನಂಬುತ್ತಾರೆ. ಆ ಚಳಿಗಾಲದ ಗಾಳಿಯನ್ನು “ಕುಂಬಾರನ ಗಾಳಿಯೆಂದೇ ಕರೆಯುತ್ತಾರೆ. ಇಂತಹ ಶರಣ ಕುಂಬಾರ ಗುಂಡಯ್ಯ ನಮ್ಮ ಜನಪದದ ಬೇರುಗಳಲ್ಲಿ ಭದ್ರವಾಗಿ ನೆಲೆಯೂರಿದ್ದಾನೆ.

    ಈತನ ವೈಯಕ್ತಿಕ ವಿವರದ ಬಗೆಗೆ ಕಾವ್ಯ-ಪುರಾಣಗಳಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಒಂದು ಹೇಳಿಕೆಯ ಪ್ರಕಾರ, ಗುಂಡಯ್ಯನ ತಂದೆ ಸತ್ಯಣ್ಣ, ತಾಯಿ ಸಂಗಮ್ಮ, ಆತನಿಗೊಬ್ಬಳು ಸಹೋದರಿ ಇದ್ದಳು. ಆಕೆಯೇ ನೀಲಲೋಚನೆ, ಕುಂಬಾರ ಗುಂಡಯ್ಯನ ಮಡದಿ ಶರಣೆ ಕೇತಲದೇವಿ. ಏಕ ಬ್ರಹ್ಮಯ್ಯನ ತಂಗಿ, ಬ್ರಹ್ಮಯ್ಯ ಗುಂಡಯ್ಯ ನೆಂಟರು, ಬ್ರಹ್ಮಯ್ಯನ ತಂಗಿಯನ್ನು ಗುಂಡಯ್ಯ ಹಾಗು ಗುಂಡಯ್ಯನ ತಂಗಿಯನ್ನು ಬ್ರಹ್ಮಯ್ಯನು ಮದುವೆಯಾಗಿದ್ದನು ಎಂಬ ಐತಿಹ್ಯಗಳಿದ್ದರೂ ಆತನ ಪತ್ನಿ ಕೇತಲದೇವಿಯ ವಿವರವನ್ನು ಹೊರತು ಪಡಿಸಿ ಉಳಿದ ವಿವರಗಳ ಬಗೆಗೆ ಕಾವ್ಯ ಮತ್ತು ಪುರಾಣಗಳಲ್ಲಿ ಯಾವುದೇ ಉಲ್ಲೇಖಗಳು ಇಲ್ಲ. 

    ಬೇರೆಲ್ಲೂ ದೊರೆಯದ  ಗುಂಡಯ್ಯನ ಕಾಯಕವೃತ್ತಿ, ಶಿವಭಕ್ತಿಯ ಪರಾಕಾಷ್ಠೆಯ ವಿವರಗಳು ಹರಿಹರನ ಕುಂಬಾರ ಗುಂಡಯ್ಯನ ರಗಳೆಯಲ್ಲಿ ಲಭ್ಯವಿವೆ. ಹರಿಹರ ಕವಿಯು ತನ್ನ ಕುಂಬಾರ ಗುಂಡಯ್ಯನ ರಗಳೆಯಲ್ಲಿ ಒಂದು ಸ್ಥಲದಲ್ಲಿಯೇ ವಿವರಿಸಿದ್ದಾನೆ. ಕುಂಬಾರ ಗುಂಡಯ್ಯನ ರಗಳೆಯು ಹಂಪೆಯ ವಿರೂಪಾಕ್ಷನ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ, ಉತ್ತರ ಭಾಗದಲ್ಲಿ ಹೆಸರಾದ ಬಲ್ಲುಕೆ ಪುರದಲ್ಲಿ ಒಬ್ಬ ಶಿವ ಶರಣನಿದ್ದ ಕುಂಬಾರ ವೃತ್ತಿ (ಘಟಕಾಯಕ) ಅವನ ಕಾಯಕ, ಅವನು ಅತ್ಯಂತ ನೇಮಸ್ಕ, ಅವನ ಚಕ್ರದ ಆಧಾರವೇ ಆಧಾರವಾಗಿ, ಚಕ್ರವೇ ಷಟ್ಚಕ್ರವಾಗಿ ದೇಹವೇ ಮಣ್ಣಾಗಿ, ನಿಷ್ಠೆಯೇ ದಂಡವಾಗಿ, ಭಕ್ತಿಯೇ ಮಡಕೆಯಾಗಿ ಕಾಯಕವನ್ನು ಮಾಡುತ್ತಿದ್ದ.

ವೇಧೆಯೆ ಚಕ್ರದ ಮೊಳೆ ತಾನಾಗಿರೆ

ಮಿಗೆ ಪಟ್ಟಕ್ರಮೆ ಚಕ್ರಮದಾಗಿರೆ

ಸೊಗಯಿಪ ನಾಭಿಯೇ ನಾಭಿಯದಾಗಿರೆ

ಕನಸಿನ ಕಾಯಂ ಮೃತ್ತಿಕೆಯಾಗಿರೆ

ನೆನಹಂ ಚಟೆದಾರಂಗಳವಾಗಿರೆ

ನಿಷ್ಠೆಯೇ ಪಿಡಿವುರು ದಂಡಮದಾಗಿರೆ

ಮುಟ್ಟಿ ತಿರುಗುವುದು  ಜೀವನಮಾಗಿರೆ

ಮಾಡುವ ಭಕ್ತಿ ಕಟಾಹಮದಾಗಲು

ಕೂಡಿದ ಕರಣದೆ ಮರ್ದಿಸುತಾಗಲು

ಮಿಗೆ ಶೋಷಣದಾತಪದಿಂದಾರಿಸಿ

ಬಗೆ ಮಿಗಲುದರಾಗ್ನಿಗಳಿಂದಹಿಸಿ

ಇಂತೊಳಗಣ ಘಟಕಾಕಮೊಪ್ಪಲು

ಸಂತತ ಹೊರಗಣ ಮಾಟಮದೊಪ್ಪಲು ಕುಂಬರ ನೆನಿಸಿರ್ಪಂ ಗುಂಡಯ್ಯಂ(ಗುಂಡಯ್ಯನ ರಗಳೆ, ಹರಿಹರನ ರಗಳೆಗಳು:ಸಂ: ಎಂ.ಎಂ.ಕಲಬುರಗಿ, ಪು.ಸಂ.೨೬೯) ಅವನ ವೃತ್ತಿ ಆಧ್ಯಾತ್ಮಮಯವಾಗಿತ್ತು. ಬಾಹ್ಯದಲ್ಲಿ ಮಡಕೆ ಸಿದ್ಧಗೊಳಿಸುವ ಕಾಯಕ ಕೈಗೊಂಡು, ಅದನ್ನು ಅಂತರಂಗದ ವಿಕಾಸಕ್ಕಾಗಿ ಅಳವಡಿಸಿಕೊಂಡಿದ್ದ. ಹೊರಗೆ ಚಕ್ರಕ್ಕೆ ಆಧಾರವಾಗಿ ಹುಗಿದ ಮರದ ತುಂಡೇ ಅವನಿಗೆ ಆಧಾರ ಚಕ್ರ; ಅದರ ಮೇಲಿನ ತಿಗರಿಯೇ ಅವನ ಷಟ್ಚಕ್ರ; ತಿಗರಿಯಲ್ಲಿಯ ಮೂಳೆ ನೆಡುವ ರಂಧ್ರವೇ ಅವನ ನಾಭಿ (ಮಣಿಪೂರಕ ಚಕ್ರ); ಶರೀರವೇ ಮಡಕೆ ಮಾಡುವ ಮಣ್ಣು; ನಿಷ್ಠೆಯೇ ದಂಡ; ಅದರಿಂದ ತಿರುಗಿಸಿ ಮಾಡಿದ ಮಡಕೆಗಳನ್ನು ನೆನಹೆಂಬ ಚಟಿದಾರಗಳಿಂದ ಕೊಯ್ದು, ಕರಣಗಳಿಂದ ತಿದ್ದಿ ಬಡಿದು, ಆರಿಸಿ, ಭಕ್ತಿಯೆಂಬ ಆವಿಗೆಯಲ್ಲಿ ಹಾಕಿ, ಉದರಾಗ್ನಿಗಳಿಂದ ಸುಟ್ಟು ಗಟ್ಟಿ ಮಾಡಿಡುತ್ತಿದ್ದ. ಇಂತಹ ಅಂತರಂಗದ ಶುದ್ಧಿ ವಿಕಾಸಗಳಿಂದಲೇ ದೈವ ಕೃಪೆ ಉಂಟಾಗುತ್ತದೆ ಎಂಬುದು  ಗುಂಡಯ್ಯನ ನಂಬುಗೆಯಾಗಿದ್ದಿತು.   ಈ ತೆರನಾಗಿ ಒಳಗಣ ಕಾಯಕ ಮತ್ತು ಹೊರಗಣ ಕಾಯಕಗಳೆರಡರನ್ನೂ ಸಮನಾಗಿ, ಜೊತೆಜೊತೆಯಾಗಿ ನಿರ್ವಹಿಸುತ್ತಿದ್ದ ಬಗೆಯನ್ನು ಹರಿಹರ ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಶಿವಪೂಜೆಯಲ್ಲಿ ನಿರತನಾದರೆ ಕಣ್ಣುರಪ್ಪೆ ಬಡಿಯುವುದನ್ನೇ ಮರೆಯುತ್ತಿದ್ದ. ಮನದತುಂಬ ಪೂಜಾಭಾವ ತುಂಬಿಕೊಂಡು, ಊಟ-ನಿದ್ರೆಯನ್ನು ಮರೆಯುತ್ತಿದ್ದ. ಶಿವನಲ್ಲದೆ ಅನ್ಯವಸ್ತುಗಳನ್ನು ನೋಡುತ್ತಲೂ ಇರಲಿಲ್ಲ. ಅದರ ಬಗೆಗೆ ಮಾತನಾಡುತ್ತಿರಲಿಲ್ಲ. ಆತನ ಮನವೆಲ್ಲಾ ದೇವರಲ್ಲಿ ತಲ್ಲೀನವಾಗುತ್ತಿತ್ತು. ಆತನ ಶಿವಪೂಜಾ ವೈಖರಿಯನ್ನು ಹರಿಹರನು 'ಶಿವಪೂಜೆಯ ಕರಡಿಗೆಯಂತಿರ್ದಂ ಶಿವಪೂಜೆಯ ಗವಸಣಿಗೆಯೊಳಿರ್ದಂ" (ಅದೇ, ಪು.ಸಂ.೨೭೦)ಎಂದು ವರ್ಣಿಸುತ್ತಾನೆ. ಇಷ್ಟಾದರೂ ಆತ ತೃಪ್ತನಾಗುತ್ತಿರಲಿಲ್ಲ. ಮತ್ತೆ ಮನೆಯಲ್ಲಿಯೂ ಅವನ ಮಾನಸ ಪೂಜೆ ಮುಂದುವರೆಯುತ್ತಿತ್ತು. ಆತ ಮಡಕೆಗಳನ್ನೇ ಬಾರಿಸುತ್ತ ಕುಣಿದಾಡುತ್ತಿದ್ದ. ಅಂದರೆ

ಸಂದೊಪ್ಪುವ ಘಟಕಾಯದಿಂದಿರೆ

ನೇಮದ ಪೂಜೆಗಳೊಳಗಳವಡುತಿರೆ

ಕಾಮಹರಂ ನಲಿ ನಲಿದಾಡುತ್ತಿರ

ತಟಪಟ ತಂದಣ ದಿಂಧಿಮಿಕೆನಿಸುವ

ತಟಕಂ ದಟ ಧಿಕ್ಕಟ ತಟಕೆನಿಸುವ

ಹಲಗೆಯ ಶಬ್ದ ಕರಡೆಯ ಶಬ್ದ

ಹಲಗೆಯ ಶಬ್ದಂ ಮುರಜದ ಶಬ್ದಂ

ಮಡಕೆಯ ದನಿಯಾವುಜದ ಸುನಾದ

ಮಡಕೆಯ ದನಿ ಪೊಸ ಕಹಳೆಯ ನಾದು

ತಾಳಂ ಕೌಸಾಳದ ಹೊಸನಾದಂ

ಶೂಲಿಗೆ ಮೇಳವಣೆಯ ಮೃದುನಾದಂ

ತಾನಾಗಿರೆ ಮಧುರತೆಯಂ ಬೀರುತ

ನಾನಾವಿಧ ನವಗತಿಯಂ ತೋರುತ

ಹೊರಗಲ್ಲಾಡಲು ಶಿವನೊಳಗಾಡಲು

ತೆರಹಿಲ್ಲದ ಪುಳಕಂಗಳೊಡಲು

ಬಂದರನರಿಯದೆ ಹೋದರನರಿಯದೆ

ನಿಂದರನರಿಯದ ನೆರೆದರನರಿಯದೆ

ಊಟವನರಿಯದೆ ನಿದ್ರೆಯನರಿಯದೆ

ತೂಗಾಡುತ ಮಡಕೆಗಳಂ ಬಾರಿಸಿ

ಜೋಗಂಬೋಗುತ್ತಂ ನೆರೆ ಬಾರಿಸಿ

ಅಡ್ಡಂ ತಿಗಟಂಬರಿವುತೆ ಬಾರಿಸಿ

ಅಡ್ಡಂ ಬಿತ್ತರಿಸುತ್ತಂ ಬಾರಿಸಿ

ಕುಣಿವುತೆ ಕೂಗುತೆ ನಲವಿಂ ಬಾರಿಸಿ

ಮಣಿವುತೆ ತಣಿವುತೆ ಮುದದಿಂ ಬಾರಿಸಿ

ಒಳಗಣ ಶಿವನಂ ನೆರೆ ಸಾಗಿಸುತಂ

ಬೆಳಗುವ ಬೆಳಗಂ ನೆರೆ ಜೋಗಿಸುತಂ

ನೃತ್ಯದ ನೆಲೆಯೊಳ್ಮನವೆರಗುತ್ತಂ

ಸತ್ಯದ ಸುಖದೊಳ್ಮುಳುಗಾಡುತ್ತಂ

ಬಾರಿಸಿ ಬಾರಿಸಿ ನಿಲುತಂ ನಿಲುತಂ

ಸೇರಿದ ಸುಖದೊಳ್ಸಲುತಂ ಸಲುತಂ

ಪಲವು ದಿವಸಂ ಸಲೆ ಬಾರಿಸುತ್ತಿರ

ಒಲವಿಂ ಸರ್ವೆಶನನಾಡಿಸುತಿರೆ

ನಂಬಿದ ಭಕ್ತನನರಿಯದುದೆಲ್ಲಂ

ಕುಂಬರನೆಂದಿಪ್ಪುದು ಜಗವೆಲ್ಲಂ

ಇರುತೊಂದೆವಸಂ ಘಟಕಾಯಕದೊಳು

ಪರಮನನಾಡಿಸುತಿರ್ಪವಸರದೊಳು    (ಅದೇ, ಪು.ಸಂ.೨೭೧)

ತನ್ನಂ ಮರೆದೊಲವಿಂ ಬಾರಿಸುತಿರೆ ಇಡೀ ದಿನ ರಾತ್ರಿ ನಿರಂತರವಾಗಿ ಮಡಕೆ ಬಾರಿಸುತ್ತಾ ಹರ್ಷಚಿತ್ತನಾಗಿ ಕುಣಿದಾಡುತ್ತಾ ಬ್ರಹ್ಮಾನಂದದಲ್ಲಿ ಓಲಾಡುತ್ತಾನೆ. ಮಡಕೆ ಬಾರಿಸುವುದನ್ನೇ ತನ್ನ ನೇಮವಾಗಿ ಕೈಗೊಳ್ಳುತ್ತಾನೆ. ಕುಂಬಾರ ಗುಂಡಯ್ಯ ನಿಷ್ಠೆಯಿಂದ ಕಾಯಕ ಮಾಡುತ್ತಾ ಅದರ ಮೂಲಕ ಶಿವಾರ್ಚನೆ ಸಲ್ಲಿಸುವುದು ಅತನ ದಿನಚರಿಯಾಗಿತ್ತು.  ಹೊರಗೆ ಘಟಕಾಯಕ, ಒಳಗೆ ಶಿವ ಸೇವಾ ಕಾಯಕ ಎರಡನ್ನೂ ಏಕಕಾಲಕ್ಕೆ ನಡೆಸಿಕೊಂಡು ಬಂದಿದ್ದ.

   ಒಂದು ದಿನ ಶಿವ ಕೈಲಾಸದಲ್ಲಿ ಪಾರ್ವತಿ ಸಮೇತವಾಗಿ ಕುಳಿತಾಗ ಗುಂಡಯ್ಯ ಶಿವ ಪ್ರೇರಣೆಯಿಂದ ಶಿವಾಲಯಕ್ಕೆ ಬಂದು ಪೂಜಾಲಂಕೃತವಾದ ಶಿವನನ್ನು ಕಂಡು ಮೈಮರೆತು ಪುಳಕ ತುಂಬಿದ ಕೈಗಳಿಂದ ಪಾದೋದಕ ಸ್ವೀಕರಿಸಿ ದೀರ್ಘದಂಡ ಪ್ರಣಾಮಗೈದು, ಮನದಲ್ಲಿ ಶಿವನ ನೆನಹನ್ನು ಕಣ್ಣಲ್ಲಿ ಶಿವನ ಮೂರ್ತಿಯನ್ನು ತುಂಬಿಕೊಂಡು ಮನೆಗೆ ಬಂದು ಶಿವಭಾವದಲ್ಲಿ ಲೀನನಾದ ಅವನಿಗೆ ಊಟ ನಿದ್ರೆಗಳ ಪರಿವೇ ಇರಲಿಲ್ಲ. ಕಾಯಕದಲ್ಲಿ ನಿರತವಾಗಿ ಹೊಸ ಹೊಸ ಪರಿಯ ಗಡಿಗೆಳನ್ನು ಸಿದ್ಧಗೊಳಿಸಿದ ಶಿವನಾಮ ಸ್ತುತಿಸುತ್ತ ಗಡಿಗೆ ಬಾರಿಸುತ್ತ ಕುಣಿಯತೊಡಗಿದ. ಹೊರಗೆ ಆತನ ತನು ಅಲ್ಲಾಡಿದರೆ, ಒಳಗೆ ಶಿವಲಿಂಗ ಅಲ್ಲಾಡುತ್ತಿತ್ತು. ಅಂತರಂಗದಲ್ಲಿ ಶಿವ ನಲಿಯುವುದನ್ನು ಕಂಡು ಅವನ ಸಂತೋಷ ಮೇರೆ ಮೀರಿತು. ಉತ್ಸಾಹ ಹೆಚ್ಚಿತು. ಸುತ್ತುತ್ತ, ತುಳಿಯುತ್ತ, ಉಬ್ಬುತ್ತ ಕೊಬ್ಬುತ್ತ ಪುಳಕಗೊಳ್ಳುತ್ತ ಇಡೀ ರಾತ್ರಿ ಗಡಿಗೆ ಬಾರಿಸ ತೊಡಗಿದ. ಅವನ ಕರುನದೊಳಗೆ ಹರನು ಅಡತೊಡಗಿದೆ. ಮನದಣಿಯೇ ಬಾರಿಸುವ ಒಳಗಣ ಶಿವನಾಟಕ್ಕೆ ಎಡೆ ಮಾಡುತ್ತಾ ಇದೆ ನೇಮವೆಂದು ಗುಂಡಯ್ಯನು ಮುನ್ನಡೆದ.  ಶಿವನು ಅದರ ನಾದಕ್ಕೆ ಮೈಮರೆತು ಬಳಿಯಿದ್ದ ಗಿರಿಜೆಯನ್ನು ಗುಂಡಯ್ಯನೆಂದು ಭಾವಿಸಿ ಓಲಗದಲ್ಲಿದ್ದೇನೆ ಎನ್ನುವುದನ್ನು ಬಿಟ್ಟು ನರ್ತಿಸತೊಡಗಿದ. ಅದನ್ನು ಕಂಡು ಗಿರಿಜೆ  'ಹೀಗೇಕೆ ? ಇಂದಿನ ನಿಮ್ಮ ರೀತಿ ಹೊಸಪರಿಯಾಗಿದೆ?' ಎಂದು ಕೇಳುವಳು. ಭೋಂಕನೆ ಶಿವನೆಚ್ಚತ್ತೆಂದಂ

ಹರುಷಂ ಮಿಗೆ ಗಿರಿಜೆಗೆ ತಾನೆಂದಂ

ಗುಂಡನ ಹೃದಯದೊಳಾಡುತ್ತಿರ್ದೆಂ (ಅದೇ, ಪು.ಸಂ.೨೭೧) ಎಚ್ಚರಗೊಂಡ ಶಿವನು ತನ್ನ ಭಕ್ತ ಗುಂಡಯ್ಯನು ಘಟವನ್ನು ಧುರವಾಗಿ ನುಡಿಸುತ್ತಿರಲು ಅವನ ಹೃದಯದಲ್ಲಿ ನಾನು ಆಡುತ್ತಿದ್ದೆ. ಆ ಸುಖದಲ್ಲಿ ಮುಳುಗೇಳುತ್ತಿದ್ದ ನನಗೆ ಸ್ಥಾನಭೇದದ ಅರಿವಾಗದೆ, ಲೀಲೆಯಲ್ಲಿ ನನ್ನನ್ನು ನಾನು ಮರೆತಿದ್ದು, ಅಲ್ಲಿಯೂ ಇಲ್ಲಿಯೂ ಆಡುತ್ತಿದ್ದೆ ಎಂದನು. ಅದನ್ನು ಕೇಳಿ ಕೌತುಕಗೊಂಡ ಗಿರಿಜೆಯು

ದೇವಾ ಎನಗಿದು ಕೌತುಕವೆಂದೆನೆ

ದೇವಾ ಮರ್ತ್ಯದೊಳಿಂತಿದು ಪೊಸತೆನೆ

ನಡೆ ತೋರಿದಪೆಂ ಭಕ್ತನ ನಿಲವಂ

ಎಡೆಗೊಂಡೆನ್ನಯ ನಾಟ್ಯದ ಫಲವಂ (ಅದೇ, ಪು.ಸಂ.೨೭೧)

ಎಂದು ಹೇಳುತ್ತಾ ನಿಮ್ಮನ್ನು ಆಡಿಸಿದ ಆ ಶಿವ ಭಕ್ತನನ್ನು ತಾನು ನೋಡಬೇಕೆಂಬ ಬಯಕೆ ವ್ಯಕ್ತಪಡಿಸಿದಳು.  ನನ್ನ ಪ್ರಿಯ ಭಕ್ತನ ನಿಲುವನ್ನು ನಿನಗೆ ಪರಿಚಯ ಮಾಡಿಸಿಕೊಡುತ್ತೇನೆ ನಡೆ ಎಂದು ಶಿವ ಅವಳನ್ನು ಕರೆದುತಂದು ಗಗನಮಧ್ಯದಲ್ಲಿ ಅವಳನ್ನು ಇರಿಸಿ ಗುಂಡಯ್ಯನ ಮನೆಯ ಮುಂದೆ ಇಳಿಯುವನು. ಗುಂಡಯ್ಯನು ಘಟವನ್ನು ಸಂತೋಷದಿಂದ ಬಾರಿಸುತ್ತಿರಲು ಅವನನ್ನು ಎಚ್ಚರಿಸಬಯಸಿದ ಶಿವನು ಒಳಗಾಡುವ ಲಿಂಗವನ್ನು ಆಕರ್ಷಿಸಿ ತನ್ನಲ್ಲಿ ಅಂತರ್ಗತಗೊಳಿಸಲು ಆಗ ಗುಂಡಯ್ಯನನ್ನು ಕರೆದನು. ಶಿವನನ್ನು ಕಂಡು ಕೊಬ್ಬಿ ಉಬ್ಬಿ ಕುಣಿಕುಣಿದಾಡುತ್ತ ಮಡಿಕೆ ಕುಡಿಕೆಗಳನ್ನು ಬಾರಿಸುತ್ತ ಶಿವನನ್ನು ಪ್ರದಕ್ಷಿಣೆ ಮಾಡಿದನು. ಗುಂಡಯ್ಯನು ನರ್ತಿಸಿದ ಪರಿಯನ್ನು ಚಿತ್ರಿಸುವಲ್ಲಿ ಹರಿಹರ ತರುವ ವೇಗ ವಿಶೇಷವಾದದ್ದು. ಇದಕೆ ನಿದರ್ಶನವಾಗಿ ಈ  ಕೆಳಕಂಡ ಪದ್ಯದ ಸಾಲುಗಳನ್ನು  ನೋಡ ಬಹುದಾಗಿದೆ.

 ಕುಣಿದಾಡುತೆ ಮಡಕೆಗಳಂ ಬಾರಿಸಿ

ಕುಣಿದಾಡುತ ಕುಡಿಕೆಗಳಂ ಬಾರಿಸಿ

ಶಿವನಂ ಸುತ್ತಿ ಬರುತ್ತುಂ ಬಾರಿಸಿ

ಕುಣಿವುತ ಕೊರಲೆತ್ತುತ ನೆರೆಕೂಗುತ

ತೊನೆವುತೆ ತೂಗಾಡುತ ಸುಖಿಯಾಗುತ

ಆಡುವ ಗುಂಡಯ್ಯನ ಹೊಸ ನೃತ್ಯಂ

ನೋಡುವ ಶಿವನಂ ಮುಟ್ಟಿತು ಸತ್ಯಂ (ಅದೇ, ಪು.ಸಂ.೨೭೧)

ಈ ಬರವಣಿಗೆಯಲ್ಲಿ ʻಕುಂಬಾರಗುಂಡಯ್ಯನು ಕುಣಿದಾಡಿದ ಕ್ರಿಯೆ ಭಾಷೆಯಲ್ಲಿ ಅಭಿನಯಿತವಾಗಿದೆ; ಪಂಕ್ತಿಯಿಂದ ಪಂಕ್ತಿಗೆ ಕ್ರಿಯೆಯ ಭಾವ-ಭಂಗಿಗಳು ಸಮರ್ಥವಾಗಿ ಮೂಡುತ್ತಾ ಹೋಗುತ್ತವೆ. ಭಕ್ತಿಯ ಆವೇಶದಿಂದ ತುಂಬಿದ ವ್ಯಕ್ತಿತ್ವವೊಂದರ ಚರ್ಯೆಯನ್ನು ಅತ್ಯಂತ ಲವಲವಿಕೆಯಿಂದ ಈ ಬರವಣೆಗೆ ವರ್ಣಿಸುತ್ತದೆ. ಆವೇಶ, ಉತ್ಸಾಹ, ಮತ್ತು ಕ್ರಿಯೆಗಳನ್ನು ಹಿಡಿದಿಡಲು ಈ ರಗಳೆಯ ಶೈಲಿ ಎಷ್ಟೊಂದು ಉಚಿತವಾಗಿದೆ ಎಂಬುದನ್ನು ಹೇಳಬೇಕಾಗಿಲ್ಲ. ಬಳಸಿದ ಭಾಷೆ ಯಾರಿಗೂ ಅರ್ಥವಾಗುವಂಥದು; ಸುಮ್ಮನೆ ಓದಿದರೇ, ಕಿವಿಗೆ ಬೀಳುವ ಅದರನಾದಾಂಶ, ನರ್ತನವೊಂದನ್ನು ಚಿತ್ರಿಸುವ ವರ್ಣನೆ ಇದು ಎನ್ನುವುದನ್ನು ಹೇಳುತ್ತದೆ. ಪದಗಳ ಪುನರುಕ್ತಿಯಿಂದ ಪರಿಣಾಮದ ತೀವ್ರತೆ ಸಾಧಿತ ವಾಗುತ್ತದೆʼ(ಜಿ.ಎಸ್.ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ, ಪು.ಸಂ.೨೩) ಹರಿಹರನ ರಗಳೆಗಳೆಲ್ಲ ಇಂಥ ಭಕ್ತ ಮನೋಧರ್ಮದ ವಿವಿಧ ಭಾವಲಹರಿಗಳಂತಿವೆ. ಘಟವನ್ನು ಬಾರಿಸುತ್ತ, ಕುಣಿವುತ್ತ, ತೂಗುತ್ತ, ಕೊಂಕುತ್ತ ಬಾಗುತ್ತ, ಕುಣಿವುತ, ಕೊರಲೆತ್ತುತ ತೂಗಾಡುತ್ತ ಆಡುತ್ತ ನಾಟ್ಯವಾಡುವ ಗುಂಡಯ್ಯನ ಹೊಸ ನೃತ್ಯವು ನೋಡುತ್ತಿದ್ದ ಶಿವನನ್ನು ಮುಟ್ಟಿತು. ಆ ಸುಖದಾಟವು ತನ್ನನ್ನು ಆವರಿಸಲು, ಮನವನ್ನು ಸುತ್ತಲು ಇಂದಿನವರೆವಿಗೂ ನನ್ನ ಭಕ್ತನ ಮನದ ಒಳಗೆ ಆಡಿದನು. ಇನ್ನು ಲೋಕವೆಲ್ಲವೂ ತಿಳಿಯುವಂತೆ ಹೊರಗೆ ಆಡುವೆನು' ಎಂದು ದಶಭುಜಗಳನ್ನು ದಿಗಂತದಲ್ಲಿ ಹರಡಿ,ಕೈಗಳನ್ನೆತ್ತಿ, ಒಂದು ಪದ ಪಾತಾಳವನ್ನು ಒತ್ತಿ, ಮತ್ತೊಂದು ಪದ ಬ್ರಹ್ಮಾಂಡವನ್ನು ಎತ್ತಿದನು. ಶಿವನ ಈ ವಿರಾಟ್ ರೂಪದ ಕುಣಿತದಲ್ಲಿ ಶಿರದಲ್ಲಿನ ದೇವಗಂಗೆ ತುಳುಕಾಡಿತು. ತಡಿಯೊಳಿದ್ದ ಶಶಿಕಳಡಿತು. ಮನೋಹರವಾದ ಮುಂಗುರುಗಳು ಕುಣಿದಾಡಿದವು. ಕೈಯಲ್ಲಿ ಹಿಡಿದ ಡಮರುಗವು ಢಂ ಢಂ ಢಂಢಣಲೆಂದಿತು. ತ್ರಿಶೂಲಿಯು ತಿರನೆ ತಿರುಗಲು ಶಿವನು ಧರಿಸಿದ ಸರ್ಪಗಳು ಹೆಡೆಯೆತ್ತಿದವು. ಧರಿಸಿದ ಕರಿಯ ಚರ್ಮವು ಆಗಸವನ್ನು ಸ್ವಚ್ಛಮಾಡಿತು. ಬ್ರಹ್ಮನಶಿರವು ಬೊಬ್ಬಿಟ್ಟಿತು. ಸುರರ ಶಿರೋಮಾಲೆಗಳು ಚೀರಾಡುತ್ತಿದ್ದವು. ಕಾಲಿನ ಚಿನ್ನದಗೆಜ್ಜೆಗಳು ಘಲಘಲಕೆಂದೂ, ಕುಚ್ಚಿನ ಗಂಟೆಯು ಢಣಂ ಢಂ ಢಣಲೆಂದೂ ಧ್ವನಿಮಾಡುತ್ತಿರಲು ಗುಂಡಯ್ಯನ ಮುಂದೆ ಶಿವನು ನಾಟ್ಯವಾಡಿದನು.(ಹರಿಹರನ ರಗಳೆಗಳು ಸಂ: ಎಂ.ಎಂ.ಕಲಬುರಗಿ, ಪು.ಸಂ.೨೭೨) ಆಗ ಸುರಲೋಕದವಾದ್ಯಗಳು ಬರಲು, ತ್ವರಿತದಿಂದ ತುಂಬುರರು ಹೊಗಳತೊಡಗಲು ಶಿವನು ಅವಾವೂ ಬೇಡ ಮಡಿಕೆಯ ವಾದ್ಯವೇ ಸಾಕು ಎಂದನು. ಶಿವ ಪರವಶನಾಗಿ,' ಇಷ್ಟು ದಿನ ಗುಂಡಯ್ಯನ ಮನಸ್ಸಿನೊಳಗೆ ನಾಟ್ಯವಾಡಿದ ನಾನು ಇಂದುಜಗತ್ತೆ ಅರಿಯುವಂತೆ ಹೊರಗೆ ನರ್ತಿಸುತ್ತೇನೆ ಎಂದು ಕೊಂಡು ಮೋಹಕವಾಗಿ ನಾಟ್ಯ ಮಾಡತೊಡಗಿದ. ಕುಂಬಾರ ಗುಂಡಯ್ಯನ ರಗಳೆಯಲ್ಲಿ ಗುಂಡಯ್ಯನು ತನ್ನ ಮಡಿಕೆಯಿಂದ ನುಡಿಸಿದ ಆ ನಾದಕ್ಕೆ ಶಿವ ತಾನೇ ಮನಸೋಲುತ್ತಾನೆ. ಅಲ್ಲಿಯವರೆಗೆ ದೇವಲೋಕದ ವಾದ್ಯಗಳು ಅದರಲ್ಲೂ ಪಂಚಮಹಾವಾದ್ಯಗಳನ್ನು ಕೇಳಿ ಆನಂದಿಸಿದ ಶಿವನಿಗೆ ಮಡಿಕೆಯ ನಾದ ಸುನಾದವಾಗಿ ಪರಿಣಮಿಸುತ್ತದೆ. ಅದನ್ನು ಕೇಳುವ ಸಲುವಾಗಿ ದೇವಲೋಕದಿಂದ ಭೂಲೋಕಕ್ಕೆ ಬಂದು ಗುಂಡಯ್ಯನು ಬಾರಿಸುವ ಆ ತಾಳಕ್ಕೆ ಮನಸೋತು ಮೆಚ್ಚಿ ತಾನೂ ಅವನೊಂದಿಗೆ ಕುಣಿಯಲಾರಂಭಿಸುತ್ತಾನೆ. ಕಾಯಕ ಜೀವಿಯಾದ ಕುಂಬಾರ ಗುಂಡಯ್ಯ ತಾ ಮಾಡಿದ ಮಡಿಕೆಗಳನ್ನು ನುಡಿಸಿ ಭಕ್ತಿಯಿಂದ ಕುಣಿಯುತ್ತಿದ್ದ. ಈತನ ಭಕ್ತಿಗೆ ಮತ್ತು ವಾದನಕ್ಕೆ ಶಿವನು ಸಹ ಕುಣಿದ. ಶಿವ ಕುಣಿಯುವುದನ್ನು ಕಂಡು ಸಕಲ ದೇವತೆಗಳೇ ಕುಣಿದರು ಎಂದು ಹರಿಹರನ ರಗಳೆಯಲ್ಲಿ ಹೇಳಲಾಗಿದೆ:

ಶಿವನ ಕಂಡಾ ಭಕ್ತಂ ಕುಣಿಯಲು

ಶಿವಭಕ್ತನ ಕೊಡಭವಂ ಕುಣಿಯಲು

ಈರ್ವರನೀಕ್ಷಿಸಿ ಗಣಪತಿ ಕುಣಿಯಲು

ಸರ್ವ ಸ್ಥಾವರ ಜಂಗಮವಾಡಲು

ಮಡಕೆಯ ಶಬ್ದಕ್ಕಾಡುತ್ತಿರ್ದಂ.̈ (ಅದೇ, ಪು.೨೭೨) ಶಿವನನ್ನು ಕಂಡು ಭಕ್ತ ಕುಣಿದ, ಭಕ್ತನನ್ನು ಕಂಡು ಶಿವ ಕುಣಿದ ಇವರಿಬ್ಬರೂ ಕುಣಿಯುವುದನ್ನು ಕಂಡು ಗಣ ಸಮೂಹ ಕುಣಿಯಿತ್ತು. ಇದನ್ನು ನೋಡಿ ಚೋದ್ಯವೆನ್ನುತ್ತ ಶಿವನ ಈ ತಾಂಡವ ನೃತ್ಯದಿಂದ ನರಲೋಕಕ್ಕೆ ಕೇಡಾಗಬಾರದೆಂದು ಆಲೋಚಿಸಿ, ಶಿವನ ನೃತ್ಯ ಮೇರೆ ಮೀರುವ ಮೊದಲೆ ತಡೆಯಬೇಕೆಂದು ಯೋಚಿಸಿದ ಗಿರಿಜೆ ಶಿವನನ್ನು ಸ್ತುತಿ ಮಾಡಿದಳು, ಗಿರಿಸುತೆ ಶಿವನನ್ನು ಶಾಂತಗೊಳಿಸುವ ಸಲುವಾಗಿ ಅವನನ್ನು ಸ್ತುತಿಸುತ್ತ ಆಗಸದಿಂದ ಇಳಿದುಬರುವ ಗಿರಿಸುತೆಯ ಕರುಣಾರವವನ್ನು ಕೇಳಿದ ಶಿವನು ನಾಟ್ಯವನ್ನು ನಿಲ್ಲಿಸಿ, ಶೈಲಜೆಯ ಇಚ್ಛೆಯಂತೆ ಸಮಸ್ಥಿತಿಗೆ ಬಂದನು, ಶಿವನು ತನ್ನ ವಿರಾಟ ಸ್ವರೂಪವನ್ನು ಶಮನಗೊಳಿಸಿ, ಮುಂದೆ ಕುಣಿಯುತ್ತಾ ನಿಂತ ಕುಣಿದಾಡುವ ಗುಂಡಯ್ಯನನ್ನು ಶಿವನು ಆನಂದದಿಂದ ಆಲಂಗಿಸಿ ಮುಂದಲೆಯನ್ನು ಚುಂಬಿಸಿ ಆನಂದದಿಂದ ಮುದ್ದಾಡಿದ. ಕೈಲಾಸದಿಂದ ಬಂದ ಪುಷ್ಪಕವಿಮಾನಕ್ಕೆ ಅವನನ್ನು ಏರಿಸಲು ಅನುಗ್ರಹಿಸಿದನು. ಹೂಮಳೆ ಕರೆಯಿತು. ಅವನ ಭಕ್ತಿಯನ್ನು ಜಗತ್ತಿಗೆಲ್ಲ ತೋರ್ಪಡಿಸಿ ಕೈಲಾಸಕ್ಕೆ ಕರೆದೊಯ್ದು ಗಣ ಪದವಿಯನ್ನಿತ್ತು ಕಾಪಾಡಿದನು.

      “ಜಗವೆಲ್ಲವ ಆಡಿಸುವ ಶಿವನನ್ನ ಗುಂಡಯ್ಯ ಮಡಿಕೆಯ ದನಿಯಿಂದ ಆಡಿಸಿದ'' ಎನ್ನುವ ಹರಿಹರನ ನುಡಿಯು, ಗುಂಡಯ್ಯನಿಗೆ ಕಾಯಕದ ಮೇಲಿದ್ದ ನಿಷ್ಠೆ, ಶಿವನ ಮೇಲಿದ್ದ ಭಕ್ತಿಯನ್ನು ತೋರಿಸುವುದರ ಪ್ರತೀಕವಾಗಿದೆ. ತನ್ನ ಗಡಿಗೆಯ ಸುನಾದದಿಂದ ನಾದಪ್ರಿಯ ಹಾಗೂ ಭಕ್ತಿಪ್ರಿಯನಾದ ಶಿವನನ್ನು ಒಲಿಸಿಕೊಂಡು, ಶಿವನಿಂದ ತಾಂಡವ ನಾಟ್ಯವಾಡಿಸಿದ ಗುಂಡಯ್ಯನ ವ್ಯಕ್ತಿಚಿತ್ರವನ್ನು ನಿರೂಪಿಸುವಲ್ಲಿ ಹರಿಹರ ಕವಿಯು ಸಾರ್ಥಕ್ಯವನ್ನು ಪಡೆದಿದ್ದಾನೆ. ಶಿವನ ನರ್ತನ ವೈಭವವನ್ನು ಹರಿಹರ ವರ್ಣಿಸಿರುವ ರೀತಿ ಚೇತೋಹಾರಿಯಾಗಿದೆ. ಗುಂಡಯ್ಯನ ಜೊತೆಗೆ ಶಿವನೂ ಆಡುವ ನೃತ್ಯ ಅತ್ಯದ್ಭುತವಾಗಿದೆ. ಹರಿಹರನು ವರ್ಣಿಸುವ ಆ ನಾಟ್ಯದ ಸೊಗಸನ್ನು ಸವಿದಾಗಲೇ ಅದರ ಮಹತ್ವ ಓದುಗರಿಗಾಗುವುದು.

     ಹರಿಹರ ಕವಿಯು ತನ್ನ ರಗಳೆಯಲ್ಲಿ ಚಿತ್ರಿಸಿರುವ ಕುಂಬಾರ ಗುಂಡಯ್ಯನ ರಗಳೆಯಲ್ಲಿಯ ವಿವರಗಳನ್ನೇ ಶಾಂತಲಿಂಗದೇಶಿಕನು ತನ್ನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರದಲ್ಲಿ ಸಂಕ್ಷಿಪ್ತವಾಗಿ ಗದ್ಯರೂಪದಲ್ಲಿ ಕೊಡ ಮಾಡಿದ್ದಾನೆ. ಆ ವಿವರ ಕೆಳಕಂಡಂತಿದೆ. “ಕಾಯಕವ ಮಾಡುವಲ್ಲಿ ಷಟ್‌ಚಕ್ರಂಗಳನೆ ತಿಗುರಿಯಂ ಮಾಡಿ ಜ್ಞಾನವೆಂಬ ಸೂತ್ರವ ಸುತ್ತಿ, ಸ್ವಪ್ನದ ತೋರಿಕೆಯಂಬ ಕೆಸರ ತಿಗುರಿಯ ಮೇಲಿಟ್ಟು ನಿಷ್ಠೆಯೆಂಬ ಕೋಲಿನಲ್ಲಿ ತಿರುಗಿಸಿ, ಭಕ್ತಿಯೆಂಬ ಮಡಕೆಯಂ ಮಾಡಿ, ಸುಜ್ಞಾನವೆಂಬ ಕೊಡತೆಯಿಂದ ತಟ್ಟುವಾಗ ಆ ಧ್ವನಿಯು ಕರಡೆ, ಕೌಸಾಳೆ, ಢಕ್ಕೆ, ಡಮರುಗ, ಮುರಜೆ, ಮೃದಂಗ, ಮುಡುಕು, ಕಹಳೆಯಂತೆ ಕೇಳಿಬರುತ್ತಿತ್ತು. ಗುಂಡಯ್ಯನಾದರೋ ತನ್ನ ಕಾಯಕದಲ್ಲಿ ಸಂಪೂರ್ಣ ಪರವಶವಾಗಿರಲು ಕೈಲಾಸದಲ್ಲಿದ್ದ ಶಿವನು, ಇವನ ತಾಳದ ಲಯಕ್ಕೆ ತಲೆದೂಗಿ ಕುಣಿದು ಸಂತೋಷಿಸುತ್ತಿರಲು, ಗಿರಿಜೆಯು ತಾನು ಗುಂಡಯ್ಯನನ್ನು ನೋಡಬೇಕೆಂದು ಶಿವನಲ್ಲಿ ಪ್ರಾರ್ಥಿಸಿದಳು. ಶಿವನು ಗಿರಿಜೆಗೆ “ನೀನು ಆಕಾಶದಲ್ಲಿಯೇ ಇದ್ದು ನೋಡುತ್ತಿರು' ಎಂದು ಹೇಳಿ ಭೂಲೋಕಕ್ಕೆ ಬಂದು ಕುಂಬಾರ ಗುಂಡಯ್ಯನ ಕುಂಭದ ಧ್ವನಿಗೆ, ತಾಳದ ಗತಿಗೆ ಕುಣಿಯುತ್ತಿರಲು, ಡಮರುಗ ಢಣಢಣವೆನ್ನುತ್ತಿರಲು, ಜಡೆಯೊಳಗಿನ ಗಂಗೆ ತುಳುಕಾಡುತ್ತಿರಲು, ರುಂಡಮಾಲೆಗಳು ಕುಬುಬು ಎಂದು ಸದ್ದು ಮಾಡುತ್ತಿರಲು, ಗೆಜ್ಜೆಗಳು ಝಣಝಣರು - ಫಲಿಘಲಿರು ಎಂದೂ, ಘಂಟೆಯು ಠಣಠಣ ಎಂದೆನ್ನುತಿರಲು ಗಿರಿಜೆಯು ನಾಟ್ಯದ ಸೊಬಗನ್ನು ನೋಡಿ ಹರ್ಷಿಸಿದಳು. ಮುಂದೆ ಗುಂಡಯ್ಯನಿಗೆ ಶಿವ ದರುಶನವಾಯಿತು.

       ಗುಂಡಯ್ಯನ ಕುಂಭದ ಅಥವಾ ಮಡಿಕೆಯ ನುಡಿಸುವಿಕೆಯು ಇಂದಿನ ಕರ್ನಾಟಕ ಸಂಗೀತ ಪದ್ಧತಿಯ ಸಂಗೀತ ಕಛೇರಿಗಳಲ್ಲಿ ಪಕ್ಕವಾದ್ಯವಾಗಿ ಬಳಸುವ ಘಟವಾದ್ಯವನ್ನು ನೆನಪಿಸುತ್ತದೆ. ಕುಂಬಾರ ಗುಂಡಯ್ಯನಿಂದಲೇ ಈ ವಾದ್ಯ ಪ್ರಾರಂಭಗೊಂಡಿರಬಹುದೆಂಬ ಅನಿಸಿಕೆ ವಿದ್ವಾಂಸರಲ್ಲಿ ವ್ಯಕ್ತಗೊಂಡಿದೆ. ಇದು ಅಧಿಕೃತಗೊಂಡರೆ ಹೊಸ ಬಗೆಯ ಒಂದು ವಾದ್ಯವೊಂದು ಗುಂಡಯ್ಯನಿಂದ ಚಾಲನೆಗೊಂಡಿರುವುದು ಮುಖ್ಯ ಸಂಗತಿಯಾಗಿದೆ. ಕನ್ನಡ ನಾಡಿನ ಇಂತಹ ಶಿವಭಕ್ತರಿಂದಲೆ `ಘಟಂ' ಒಂದು ವಾದ್ಯವಾಗಿ ಕರ್ನಾಟಕ ಸಂಗೀತದಲ್ಲಿ ಪರಿಣಮಿಸಿದಂತೆ ಕಂಡುಬರುತ್ತದೆ ಎಂಬ ಸಂಗೀತ ಪಂಡಿತರ ಮಾತು  ಆಲೋಚಿಸತಕ್ಕದ್ದಾಗಿದೆ.

    ಒಂದು ಸಾಮಾನ್ಯ ಮಡಕೆಯ ಸಣ್ಣ ನಾದ ದೇವಲೋಕದ ಚಿತ್ತವನ್ನು ಕೆಣಕುವಂತೆ ಮಾಡುವ ಹರಿಹರನ ಕಾವ್ಯಶಕ್ತಿಯು ಮಹತ್ತರತೆಯನ್ನು ಪಡೆದಿದೆ. ಇಂಥಹ ಕಥೆಗಳನ್ನು ಚಿತ್ರಿಸುವುದರ ಮೂಲಕ ಶಿವಭಕ್ತಿಯ ಶ್ರೇಷ್ಠತೆಯನ್ನು ಹರಿಹರನು ತನ್ನ ರಗಳೆಗಳಲ್ಲಿ ಪಡಿ ಮೂಡಿಸಿದ್ದಾನೆ.. ಹರಿಹರ ತನ್ನ ರಗಳೆ ಮೂಲಕ ಗುಂಡಯ್ಯನ ಶಿವಭಕ್ತಿಯನ್ನು ಜಗತ್ತಿಗೆ ಸಾರಿದ. ಗುಂಡಯ್ಯನ ರಗಳೆ ಚಿಕ್ಕದಾದರೂ ಅದರಲ್ಲಿಯ ರುದ್ರ ನಾಟ್ಯದ ವರ್ಣನೆ ಭವ್ಯ ಸೌಂದರ್ಯವನ್ನು ತಾಳಿದೆ. ಹರಿಹರ ಭಾವಪೂರ್ಣವಾದ ವರ್ಣನೆಯಿಂದ ಈ ರಗಳೆಯನ್ನು ಸೊಗಸಾದ ಕಾವ್ಯವನ್ನಾಗಿ ಮಾಡಿದ್ದಾನೆ. ಈ ಚಿಕ್ಕ ರಗಳೆ ಭಾವದ ಮಹೋನ್ನತಿ, ನಾಟಕೀಯತೆ, ನಿರೂಪಣೆಯ ಅನನ್ಯತೆಯಿಂದಾಗಿ ಅದ್ಭುತಪರಿಣಾಮವನ್ನುಂಟು ಮಾಡುತ್ತದೆ, ಸಂಗೀತದ ತಾಳಗತಿ, ನೃತ್ಯದ ಪದಗತಿಯನ್ನು ಓದುಗರ ಅನುಭವಕ್ಕೆ ತರುವ ಕವಿಯ ಪದ ಜೋಡಣೆ ವಿಶೇಷವಾಗಿದೆ. 

     ಜೇಡರ ದಾಸಿಮಯ್ಯನ ವಚನವೊಂದರಲ್ಲಿ ಉಕ್ತನಾಗಿರುವ  ಕುಂಬಾರ ಗುಂಡಯ್ಯನು ರಚಿಸಿರುವ ವಚನಗಳು ಸದ್ಯಕ್ಕೆ ಉಪಲಬ್ಧವಿಲ್ಲ. ಒಂದು ವೇಳೆ ಉಪಲಬ್ಧಗೊಂಡರೆ ಈತನೇ ಆದ್ಯ ವಚನಕಾರನಾಗುತ್ತಾನೆ.  ಆದರೆ  ಕುಂಬಾರ ಗುಂಡಯ್ಯನ ಧರ್ಮಪತ್ನಿ ಕೇತಲದೇವಿಯು ವಚನಕಾರ್ತಿಯಾಗಿದ್ದು, ಕುಂಭೇಶ್ವರ ಎಂಬ ಅಂಕಿತದಲ್ಲಿ ಸದ್ಯಕ್ಕೆ ಎರಡು ವಚನಗಳು ಲಭ್ಯವಿವೆ. ಎರಡು ವಚನಗಳೂ ವ್ರತಾಚಾರವನ್ನು ಕುರಿತು ಹೇಳುತ್ತವೆ. ಒಂದು ವಚನದಲ್ಲಿ ತನ್ನ ವೃತ್ತಿಪರಿಭಾಷೆಯನ್ನು ಬಳಸಿ ವ್ರತಭ್ರಷ್ಟರನ್ನು ಬೆರೆಯಬಾರದೆಂದು ತಿಳಿಸಿದರೆ, ಇನ್ನೊಂದರಲ್ಲಿ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತ ಮಾಡುವಲ್ಲಿ ಸಂದೇಹವಿಲ್ಲದಿರಬೇಕೆಂದು ತಿಳಿಸುತ್ತಾಳೆ.

ಹದ ಮಣ್ಣಲ್ಲದೆ ಮಡಕೆಯಾಗಲಾರದು

ವ್ರತಹೀನನ ಬೆರೆಯಲಾಗದು

ಬೆರೆದಡೆ ನರಕ ತಪ್ಪದು

ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ! (ಶಿವಶರಣೆಯರ ವಚನ ಸಂಪುಟ(ಸಂ: ವೀರಣ್ಣ ರಾಜೂರ) ವ.ಸಂ.೭೭೨)

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ ವ್ರತಾಚಾರವನ್ನು ಕುರಿತು ವೃತ್ತಿ ಪರಿಭಾಷೆಯಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾಳೆ. 'ಕಾಣದುದನೆ ಚರಿಸದೆ, ಕಂಡುದನು ನುಡಿಯದೆ ಕಾಣದುದನು, ಕಂಡುದನು ಒಂದೆ ಸಮವೆಂದು ಅರಿಯಬೇಕೆಂದು ಹೇಳುತ್ತಾಳೆ.(ಅದೇ,ವ.ಸಂ.೭೭೩) ಈ ವಚನದಲ್ಲಿ ಸಂಸ್ಕೃತ ಶ್ಲೋಕವನ್ನು ಸಾಕ್ಷಿಯಾಗಿ ಬಳಸಿರುವುದು ಈಕೆ ಸುಶಿಕ್ಷಿತಳಾಗಿದ್ದಳೆಂಬುದನ್ನು ಸೂಚಿಸುತ್ತದೆ. ಕಾಯಕ ದೃಷ್ಟಾಂತದೊಂದಿಗೆ ವ್ರತಾಚರಣೆಯ ಮಹತ್ವವನ್ನು ಸೌಮ್ಯವಾಗಿ ತನ್ನ ಎರಡು ವಚನಗಳಲ್ಲಿ  ಪ್ರತಿಪಾದಿಸಿದ್ದಾಳೆ.  ಕುಂಬಾರ ಗುಂಡಯ್ಯ ಮತ್ತು ಕೇತಲದೇವಿ ದಂಪತಿಗಳಿಬ್ಬರೂ ಕಾಯಕದಲ್ಲೇ ಕೈಲಾಸ ಕಂಡವರು.

    ಒಟ್ಟಾರೆ ಜೀವ ಮತ್ತು ದೇವರ ನಡುವಿನ ಸಂಬಂಧವನ್ನು ಹರಿಹರನು ಕುಂಬಾರ ಗುಂಡಯ್ಯನ ರಗಳೆಯ ಮೂಲಕ ಚಿತ್ರಿಸುತ್ತಾನೆ. ಗುಂಡಯ್ಯನಂತಹ ಶರಣನ ಶಿವಭಕ್ತಿಯ ಮೂಲಕ, ಶಿವನೇ ಕುಣಿಯಲು ತೊಡಗಿದಾಗ ಎಲ್ಲವೂ ಕುಣಿಯತೊಡಗುವುದು ಸಹಜ. ಕುಂಬಾರ ಗುಂಡಯ್ಯನು ತನ್ನ ಗಡಿಗೆಯ ಸುನಾದದಿಂದ ನಾದಪ್ರಿಯ ಹಾಗೂ ಭಕ್ತಿಪ್ರಿಯನಾದ ಶಿವನನ್ನು ಒಲಿಸಿಕೊಂಡು, ಶಿವನಿಂದ ತಾಂಡವ ನಾಟ್ಯವಾಡಿಸಿದವನು. ಜಗವಲ್ಲವ ಆಡಿಸುವ ಶಿವನನ್ನು ಗುಂಡಯ್ಯ ಮಡಿಕೆಯ ದನಿಯಿಂದ ಆಡಿಸಿದವನಾಗಿದ್ದು ಶರಣ ಪರಂಪರೆಯಲ್ಲಿ ಇಂದಿಗೂ ಗಮನ ಸೆಳೆದ ಶಿವಭಕ್ತನೆಂದೆನಿಸಿದ್ದಾನೆ.

 

ಗ್ರಂಥ ಋಣ:

 ೧. ಹರಿಹರನ ರಗಳೆಗಳು ಸಂ. ಎಂ.ಎಂ, ಕಲಬುರ್ಗಿ

  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

೨. ಎಂ.ಚಿದಾನಂದ ಮೂರ್ತಿ,  ಬಸವಣ್ಣ: ಕರ್ನಾಟಕ : ಭಾರತ

   ಚಿದಾನಂದ ಸಮಗ್ರ ಸಂಪುಟ ೫, ಸ್ವಪ್ನ ಬುಕ್ ಹೌಸ್, ಬೆಂಗಳೂರು, ೨೦೦೩,

೩. ಎಸ್. ವಿದ್ಯಾಶಂಕರ, ವೀರಶೈವ ಸಾಹಿತ್ಯ ಚರಿತ್ರೆ, ಸಂ.೨,  ಹರಿಹರದೇವ ಯುಗ

  ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೧೩

೪. ಬಿ.ಎಸ್. ಗದ್ದಗಿಮಠ: ಕನ್ನಡ ಜಾನಪದ ಗೀತೆಗಳು, ಸರ್ಪನ್ ಪ್ರಕಾಶನ, ಧಾರವಾಡ,೨೦೧೭.

೫. ಸಿ.ನಾಗಭೂಷಣ; ಶರಣ-ಸಾಹಿತ್ಯ ಸಂಸ್ಕೃತಿ ಕವಳಿಗೆ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು,೨೦೧೮

೬. ಶಿವಶರಣೆಯರ ವಚನ ಸಂಪುಟ (ಸಂ) ವೀರಣ್ಣ ರಾಜೂರ

 ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೯೩

 

 

ಬಸವಪೂರ್ವಯುಗದ ವರ್ಣ-ಧರ್ಮ ಸಂಘರ್ಷ ಮತ್ತು ಕೆಂಬಾವಿ ಭೋಗಣ್ಣನ ನಿಲುವುಗಳು

                                       ಡಾ.ಸಿ.ನಾಗಭೂಷಣ 

   ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವೆನಿಸದೆ ಚಳುವಳಿಯ ರೂಪದಲ್ಲಿ ರೂಪುಗೊಂಡಿದೆ. ಸಾಮಾನ್ಯ ಜನತೆಯನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳಬೇಕು ಎಂಬುದು ಭಕ್ತಿಪಂಥದ ಮೂಲ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನಕಾರರು ಏಕಕಾಲದಲ್ಲಿ ಶಿವಭಕ್ತರೂ ಹೌದು, ಸಮಾಜ ಚಿಂತಕರೂ ಹೌದು. ಏಕೆಂದರೆ ವಚನಕಾರರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಬಹಳಷ್ಟು ಘಟನೆಗಳು ಆ ಕಾಲಘಟ್ಟದ ಸಾಮಾಜಿಕ ದಾಖಲೆಗಳಾಗಿಯೂ ಕಂಡು ಬಂದಿವೆ. ಭಾರತೀಯ ಭಕ್ತಿಪಂಥದ ಒಂದಂಗವಾದ ವಚನ ಚಳುವಳಿಯಲ್ಲಿ ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದೆ(ಎಂ.ಚಿದಾನಂದ ಮೂರ್ತಿ, ಸ್ಥಾವರ-ಜಂಗಮ, ಪು.೬೯೫) ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತ ಶಾಹಿಯ ಭೌತಿಕ ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ ಹಂತವನ್ನು ಶರಣ ಚಳುವಳಿ ತಲುಪಿದ್ದನ್ನು ಗುರುತಿಸಬಹುದಾಗಿದೆ. ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ವಚನ ಚಳುವಳಿಯು ಪಟ್ಟಭದ್ರ ಹಿತಾಸಕ್ತಿಯ ಮೂಲ ಅಂಶಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ಸೂಚನೆಯೊಂದಿಗೆ ಭಾಷೆಯ ಬಳಕೆಯಲ್ಲಿ ದೇಸಿ ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ವಚನ ಚಳುವಳಿಯ ಮುಖ್ಯ ಲಕ್ಷಣವು ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಲುಪಿದ್ದಾಗಿದೆ. ಶರಣರು ವೈದಿಕ ವ್ಯವಸ್ಥೆಯ ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ನಡೆದು ತನ್ನದೇ ಆದ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು. ಶರಣರಿಂದ ಪ್ರವರ್ತನಗೊಂಡ ಧಾರ್ಮಿಕ ನಿಲುವುಗಳು ಹಿಂದೂ ಧರ್ಮದ ಸಾಮಾಜಿಕ ಕಲ್ಪನೆಗೆ ಹಾಗೂ ವಾಸ್ತವತೆಗಳಿಗೆ ತೋರಿದ ಪ್ರತಿಕ್ರಿಯೆ ಮತ್ತು ಪ್ರತಿಭಟನೆಯ ಅಂಶಗಳಾಗಿ ಕಂಡುಬಂದಿವೆ. ಶಿವಶರಣರ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯೇ ಹೊರತು ರಾಜಕೀಯ, ಆರ್ಥಿಕ ಚಳುವಳಿಯಲ್ಲ. ಧಾರ್ಮಿಕ, ಸಾಮಾಜಿಕ ಅಸಮಾನತೆಯನ್ನು ಮತ್ತು ಧಾರ್ಮಿಕವಾಗಿ ಎಲ್ಲಾ ಸವಲತ್ತುಗಳನ್ನು ಪಡೆದವರನ್ನು ಶರಣರು ವಿರೋಧಿಸಿದರು. ಶಿವಶರಣರ ಚಳುವಳಿಗೆ ತುತ್ತಾದವರು ವೈದಿಕರೇ ಹೊರತು ಅರಸರುಗಳಲ್ಲ  ಎಂಬುದು ಗಮನಿಸತಕ್ಕ ಸಂಗತಿಯಾಗಿದೆ. ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ; ಎಲ್ಲಿ ವ್ಯಕ್ತಿಯ ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ ಪರಸ್ಪರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಶರಣ ಧರ್ಮವು ವಹಿಸಿ ಕೊಂಡಿದೆ. ಶರಣ ಚಳುವಳಿಯು ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಬಯಸಿತು. ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜವನ್ನು ನಿರ್ಮಿಸುವ ಉದ್ದೇಶ್ಯವನ್ನು ಹೊಂದಿತ್ತು. ಪುರುಷಾರ್ಥಗಳನ್ನು ವರ್ಣವ್ಯವಸ್ಥೆಯ ಹಿನ್ನೆಲೆಯಲ್ಲಿ ಆರ್ಥೈಸದೆ ಸಮಾನತೆಯ ಹಿನ್ನೆಲೆಯಲ್ಲಿ ಅರ್ಥೈಸಿತು. ಲಿಂಗ-ವರ್ಣ-ವರ್ಗಗಳ ಭೇದವನ್ನಳಿಸಿ, ಸ್ವಾತಂತ್ರತೆ-ಸಮಾನತೆ-ಮಾನವೀಯತೆಯನ್ನು ಅರಳಿಸುವಲ್ಲಿ, ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಸುವಲ್ಲಿ ಬಸವ ಪೂರ್ವ ಮತ್ತು ಬಸವ ಯುಗದ ಶರಣಚಳುವಳಿಯು ಗಮನೀಯ ಪಾತ್ರ ವಹಿಸಿದೆ. 

    ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯ ಅತ್ಯಂತ ಪ್ರಮುಖವಾದುದಾಗಿದೆ. ಏಕೆಂದರೆ, ಪ್ರಾಚೀನ ಕಾಲದಿಂದಲೂ ನಂಬಿಕೊಂಡು ಬಂದಿದ್ದ ಸಂಪ್ರದಾಯಗಳನ್ನು ಶಿವಶರಣರು ಪ್ರಶ್ನಿಸಿ ಸಮಾಜವನ್ನು ಹೊಸದಿಕ್ಕಿಗೆ ತಿರುಗಿಸಿದ್ದರು. ಜೀವನದಲ್ಲಿ ಪ್ರಗತಿ ಮತ್ತು ಸಮಾನತೆ ಕಾಣಲು ಪ್ರಯತ್ನಿಸಿದರು.  ಈ ಸಂದರ್ಭದಲ್ಲಿ ಉಂಟಾದ ಗಮನಾರ್ಹ ಕಾರ್ಯ ಸಾಧನೆಗೆ ಬಸವ ಪೂರ್ವಯುಗದ ಶರಣರ ಪ್ರೇರಣೆ-ಸ್ಫೂರ್ತಿ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.  ಬಸವ ಪೂರ್ವ ಯುಗದ ಶಿವಶರಣರ ಆಂದೋಲನಕ್ಕೆ ಹಿನ್ನೆಲೆಯಾಗಿ ರಾಜಕೀಯ ಕಾಲವೆಂದರೆ, ಕಲ್ಯಾಣ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಕಾಲ. ಶಿವಪಾರಮ್ಯವನ್ನು ಮೆರೆದು ವೀರಮಾಹೇಶ್ವರ ನಿಷ್ಠೆಯನ್ನು ತಾಳಿ ಹನ್ನೆರಡನೆಯ ಶತಮಾನದ ಉತ್ತರಾರ್ಧದಲ್ಲಿ ಬಸವಣ್ಣನವರ ನೇತೃತ್ವದಲ್ಲಿಯ ಸಮಾಜೋಧಾರ್ಮಿಕ ಚಳುವಳಿಗೆ ಪ್ರೇರಣೆ ಪ್ರಚೋದನೆಯನ್ನು ನೀಡಿದ ಶಿವಶರಣರುಗಳು ಬಸವಪೂರ್ವ ಯುಗದಲ್ಲಿಯೇ ಕಂಡು ಬರುತ್ತಾರೆ. ಬಸವ ಪೂರ್ವದ ಶಿವಶರಣರು ಏಕ ಕಾಲಕ್ಕೆ ರಾಜತ್ವ ಮತ್ತು ವೈದಿಕತ್ವಗಳೆರಡನ್ನು ಪ್ರತಿಭಟಿಸಿದ್ದು ಅಲ್ಲದೆ ವರ್ಣ, ಜಾತಿ, ವರ್ಗಗಳ ನಿರಾಕರಣೆ ಇವರ  ಮುಖ್ಯ ಗುರಿಯಾಗಿತ್ತು.  ಯಾವ ಕುಲ ಜಾತಿಯವನೆ ಇರಲಿ ಶಿವಲಿಂಗವ ಧರಿಸಿದಾತ ಜಂಗಮನೆಂದು ಪರಿಗಣಿಸಿ ಅಸ್ಪಶ್ಯರನ್ನು ಶಿವಭಕ್ತರನ್ನಾಗಿಸಿದ್ದರು.  ರಾಜರನ್ನೇ ಶಿವನಿಷ್ಠೆಯ ಮೂಲಕ ತಮ್ಮಲ್ಲಿಗೆ ಬರಮಾಡಿಕೊಂಡಿದ್ದರು, ಅಂತೆಯೇ ಮತ ಸಂಘರ್ಷ, ವರ್ಣ ಸಂಘರ್ಷ ಮತ್ತು ಧರ್ಮ ಸಂಘರ್ಷಗಳ ಮೂಲಕ ವೀರಮಾಹೇಶ್ವರ ನಿಷ್ಠೆ ಹಾಗೂ ಶಿವ ಸಂಸ್ಕೃತಿಯ ಪಾರಮ್ಯವನ್ನು ಸ್ಥಾಪಿಸಿದ್ದಾರೆ. ಬಸವ ಪೂರ್ವ ಯುಗದ ಶರಣರು ಜೀವಿಸಿದ್ದ ಯುಗಧರ್ಮದಲ್ಲಿ ಘರ್ಷಣೆಯ ಮೂಲಕ ಮತ ಪ್ರಸಾರ ಕ್ರಿಯೆಯ ಜೊತೆಗೆ ಸಮಾಜೋ ಧಾರ್ಮಿಕ ಆಂದೋಲನದ ಕುರುಹುಗಳು, ರಾಜತ್ವದ ಪ್ರತಿಭಟನೆ ಇತ್ಯಾದಿ ಚಟುವಟಿಕೆಗಳು ಆರಂಭವಾಗಿದ್ದವು ಎಂಬುದು ಅವರನ್ನು ಕುರಿತ ಕಾವ್ಯ ಪುರಾಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದು ಬರುತ್ತವೆ. ಈ ಚಟುವಟಿಕೆಗಳನ್ನು ಕುರಿತ ವಿವರಗಳು ನಮಗೆ ದೊರೆಯುವುದು, ಹರಿಹರನ ರಗಳೆಗಳು ಮತ್ತು ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣದಂತಹ ಕಾವ್ಯ ಪುರಾಣಗಳಲ್ಲಿ ಮಾತ್ರ. ಶಾಸನಗಳಲ್ಲಿ ಕೆಲವೊಂದು ಶರಣರ ಚಟುವಟಿಕೆಗಳು ಪ್ರಾಸಂಗಿಕವಾಗಿ ನಿರೂಪಿತವಾಗಿದೆ. ಹೀಗಾಗಿ ಹರಿಹರನ ರಗಳೆಗಳಲ್ಲಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣಗಳಲ್ಲಿ ಒಡಮೂಡಿರುವ ಶರಣರ ಚರಿತ್ರೆಗಳು ಯುಗಧರ್ಮದ ಇಡೀ ಇತಿಹಾಸವನ್ನು ಬಿಂಬಿಸದಿದ್ದರೂ ಸಾಂಕೇತಿಕವಾಗಿಯಾದರೂ ಸೂಚಿಸಿವೆ. ಶರಣರು ಬಹುಮಟ್ಟಿಗೆ ವೈದಿಕೇತರ ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರನ್ನು ಕುರಿತ ಕಾವ್ಯ ಪುರಾಣಗಳಲ್ಲಿ ಮತ್ತು ಸ್ವತಃ ರಚಿಸಿರುವ ವಚನಗಳಲ್ಲಿ ಕರ್ಮ ಪ್ರಧಾನವಾದ ವೈದಿಕದ ಬಗೆಗೆ ತಿರಸ್ಕಾರವಿರುವುದನ್ನು ಕಾಣಬಹುದು. ಜೊತೆಗೆ ವೀರಶೈವ ಮತವು ಕರ್ನಾಟಕದಲ್ಲಿ ಆ ಕಾಲದಲ್ಲಿ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವಾಗಿನ ಪರಿಸ್ಥಿತಿಯನ್ನು ಗುರುತಿಸಬಹುದಾಗಿದೆ. ಬಸವಪೂರ್ವ ಯುಗದ ಶಿವಶರಣರ ಚಳುವಳಿಯ ಪ್ರಧಾನ ಅಂಶ ಎಂದರೆ ಶಿವಭಕ್ತರು ಹಾಗೂ ಪುರೋಹಿತಶಾಹಿ ನಡುವೆ ನಡೆಯುವ ಸಂಘರ್ಷವು, ಸಂಘರ್ಷವಾಗಿ ಉಳಿಯದೆ ಕೆಳವರ್ಗದ ಜನರು ತಮ್ಮ ಜೀವನ ವಿಧಾನದಿಂದ ಮಾರ್ಗಾಂತರಗೊಂಡು ಶಿವಭಕ್ತರೆಂಬ ಚೌಕಟ್ಟಿನಲ್ಲಿ ಜಡಮೌಲ್ಯಗಳಿಗೆ ಚಾಲನೆ ಕೊಡುವಂತಹವರಾಗುತ್ತಾರೆ. ಶರಣರ ಚಳುವಳಿಯಲ್ಲಿ ಸಂಘರ್ಷ ಮತ್ತು ಪರಿವರ್ತನೆಯ ತುಡಿತ ಇರುವುದನ್ನು ಗುರುತಿಸಬಹುದಾಗಿದೆ. ಹೀಗಾಗಿ ಬಸವಪೂರ್ವಯುಗದ  ಶರಣರು  ಜನಪರ  ಹಾಗೂ  ಜೀವನಪರ  ಧೋರಣೆ  ಹೊಂದಿದವ ರಾಗಿದ್ದು, ಪರಂಪರಾನುಗತವಾದ ಆಚರಣೆಗಳ ನಿರಾಕರಣೆ ಮಾಡಿದ್ದನ್ನು ಅನೇಕ ಶಾಸನ-ಕಾವ್ಯಪುರಾಣಗಳ ಮೂಲಕ ತಿಳಿಯಬಹುದಾಗಿದೆ. ಈ ಶರಣರ ಚಟುವಟಿಕೆಗಳು ಆ ಯುಗಧರ್ಮದ ಸಮಾಜೋಧಾರ್ಮಿಕ ಆಂದೋಲನದ ಪ್ರತೀಕಗಳಾಗಿರುವುದರ ಜೊತೆಗೆ ಭಕ್ತಿಪಾರಮ್ಯದ ಚಟುವಟಿಕೆಗಳು ಆಗಿವೆ. ಇಂತಹ ಶರಣರಲ್ಲಿ ಕೆಂಬಾವಿ ಭೋಗಣ್ಣನು ಒಬ್ಬ. ಈತನು ಬಸವಪೂರ್ವ ಯುಗದಲ್ಲಿಯೇ ಸಮಸಮಾಜದ ಕನಸು ಕಂಡು ಜಾತೀಯತೆಯ ವಿರುದ್ಧ ಬಂಡೆದ್ದು ಸಾಮರಸ್ಯದ ಬದುಕಿಗಾಗಿ ಹೋರಾಟ ಮಾಡಿದ ಧೀಮಂತ ಶರಣನಾಗಿದ್ದಾನೆ.

   ಕೆಂಬಾವಿ ಭೋಗಣ್ಣನು ಬಸವ ಪೂರ್ವ ಯುಗದ ವೀರಮಾಹೇಶ್ವರ ನಿಷ್ಠೆ ಮತ್ತು ಜಂಗಮ ನಿಷ್ಠೆಯುಳ್ಳ ಶರಣ. ಬಸವ ಪೂರ್ವ ಯುಗದ ಶಿವಶರಣರ ಆಂದೋಲನದಲ್ಲಿ ಕೆಂಬಾವಿ ಭೋಗಣ್ಣನು ಪ್ರಮುಖ ಪಾತ್ರ ವಹಿಸಿದ್ದಾನೆ. ಕೆಂಬಾವಿ ಭೋಗಣ್ಣನ ಚರಿತ್ರೆಯಲ್ಲಿ ವ್ಯಕ್ತವಾಗುವ ಅಂಶಗಳು ಶಿವಶರಣರ ಚಳುವಳಿಯು ಪ್ರತಿಪಾದಿಸಿದ ನಿಲುವುಗಳೇ ಆಗಿವೆ. ಜಾತೀಯತೆಯನ್ನು ವಿರೋಧಿಸಿದ ರಾಜತ್ವವನ್ನು ಪ್ರತಿಭಟಿಸಿದ ಅಪ್ರತಿಮ ಶಿವಭಕ್ತ. ಈತನ ಭಕ್ತಿ ಮತ್ತು ಜಂಗಮ ನಿಷ್ಠೆಯನ್ನು ಕುರಿತು ಬಸವಾದಿ ಪ್ರಮಥರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಅಪ್ರತಿಮ ನಿಷ್ಠೆ ಮತ್ತು ಭಕ್ತಿಯಿಂದ ಶಿವನನ್ನೇ ಕರೆಯಿಸಿಕೊಂಡ ಶರಣ.  ಈ ಶಿವಶರಣನನ್ನು ಕುರಿತು ಕಾವ್ಯ ರಚಿಸಿದ ಕವಿಗಳಲ್ಲಿ ಹರಿಹರ ಹಾಗೂ ಪಾಲ್ಕುರಿಕೆಯ ಸೋಮನಾಥರೇ ಮೊದಲಿಗರಾಗಿದ್ದಾರೆ. ಶರಣರ ಜೀವನಚರಿತ್ರೆ ಹಾಗೂ ಪವಾಡಗಳ ಬಗ್ಗೆ ಹೇಳುವಾಗ ಇವರಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಉದ್ದೇಶ ಮಾತ್ರ ಒಂದೆ ಇದೆ. ಕೆಂಬಾವಿ ಭೋಗಣ್ಣನ ಹೆಸರು-ಕಾಲ-ಜನ್ಮಸ್ಥಳ ಇವುಗಳ ಬಗ್ಗೆ ಅಧ್ಯಯನ ಕೈಕೊಳ್ಳಲು ಶಾಸನಗಳು, ವಚನಗಳು, ಕಾವ್ಯ-ಪುರಾಣ, ವಕ್ತೃಗಳ ಆಭಿಪ್ರಾಯ, ಸ್ಮಾರಕಗಳು, ಸಮಕಾಲೀನರ ಜೀವನ ಹಾಗೂ ಅವರ ಹೇಳಿಕೆ ಈ ಇತ್ಯಾದಿ ಅಂಶಗಳು ಸಹಕಾರಿಯಾಗುತ್ತವೆ.

      ಬಸವ ಪೂರ್ವ ಯುಗದಲ್ಲಿ ‘ಭೋಗಣ್ಣಎಂಬ ಹೆಸರಿನ ಶರಣರು ಮೂರು ಜನರಿದ್ದಂತೆ ಕಂಡುಬರುತ್ತದೆ.  ಭೋಗಣ್ಣ, ಪ್ರಸಾದಿ ಭೋಗಣ್ಣ ಹಾಗೂ ಕೆಂಬಾವಿ ಭೋಗಣ್ಣ. ಇವರಲ್ಲಿ ಕೆಂಬಾವಿ ಭೋಗಣ್ಣ ವಚನ ರಚಿಸಿದಂತೆ ಕಂಡು ಬರುವುದಿಲ್ಲ. ಪ್ರಸ್ತುತವಾಗಿ ಭೋಗಣ್ಣನಿಗೆ ಈ ಹೆಸರು ಹೇಗೆ ಬಂತು ಎಂದು ವಿವೇಚಿಸುವುದು ಸೂಕ್ತವೆನಿಸುತ್ತದೆ. ಕೆಂಬಾವಿಯ ಊರ ಮುಂದೆ ಚಿಕ್ಕದೊಂದು ಕೆರೆ ಇದೆ. ಆ ಕೆರೆಯ ಪಕ್ಕದಲ್ಲಿಯೇ ತೀರ್ಥ ಕ್ಷೇತ್ರ ಮತ್ತು ದೇವಾಲಯವಿದೆ. ಅದುವೇ ‘ಭೋಗೇಶ್ವರ ದೇವಾಲಯʼ. ಈ ದೇವಾಲಯ ಊರಿನ ಜನರಿಗೆ ದೇವತಾ ತೀರ್ಥ ಕ್ಷೇತ್ರವಾಗಿದೆ.  ಹೀಗಾಗಿ ಈ ಶರಣನ ಹೆಸರಿನ ಬಗ್ಗೆ ಹೆಣೆದಿರುವ ಪುರಾಣ ಕಥೆಗಳ ಪ್ರಕಾರ    ಶರಣನ  ಮನೆಯ  ಆರಾಧ್ಯ  ದೈವ  ‘ಭೋಗನಾಥʼ ಆಗಿರುವುದರಿಂದ ತಾಯಿ-ತಂದೆ ಹಾಗೂ ಹಿರಿಯರು ಈತನಿಗೆ ಭೋಗಣ್ಣನೆಂದು ಹೆಸರಿಟ್ಟಂತೆ ಕಂಡುಬರುತ್ತದೆ.

   ಈ ಶರಣ ತನ್ನ ಜೀವನದ ಹಾಗೂ ಕಾಲದ ಬಗ್ಗೆ ತನ್ನ ವಚನಗಳಲ್ಲಿ ಎಲ್ಲೂ ಹೇಳಿಕೊಂಡಿಲ್ಲ.  ಆದರೆ ಬಸವ ಪೂರ್ವ ಹಾಗೂ ಬಸವ ಯುಗದ ಶರಣರು ತಮ್ಮ ವಚನಗಳಲ್ಲಿ ಈತನನ್ನು ಸ್ಮರಿಸಿದ್ದಾರೆ.  ಅವರ ಈ ಸ್ಮರಣೆಯಿಂದ ಈತನ ಕಾಲ ನಿರ್ಧರಿಸಲು ಸಾಧ್ಯವಿದೆ. ಈ ಶರಣ ಆದ್ಯ ವಚನಕಾರ ಜೇಡರದಾಸಿಮಯ್ಯನ ಸಮಕಾಲೀನನೆಂದು ‘ತೆಲಗು ಬಸವ ಪುರಾಣʼದಿಂದ ತಿಳಿದು ಬರುತ್ತದೆ. ಕೆಂಬಾವಿ ಭೋಗಣ್ಣನನ್ನು ಪರೋಕ್ಷವಾಗಿ  ಉಲ್ಲೇಖಿಸಿರುವ  ಶಾಸನವು  ಇರುವ  ತಾಳಿಕೋಟೆಯು ಕೆಂಬಾವಿಯಿಂದ  ಹದಿನಾರು  ಮೈಲು  ದೂರದಲ್ಲಿದೆ. ಜೇಡರ ದಾಸಿಮಯ್ಯನ ಜನ್ಮಸ್ಥಳವಾದಮುದೇನೂರು, ಕೇಶಿರಾಜನ  ಜನ್ಮಸ್ಥಳವಾದ  ‘ಕೊಂಡಗುಳಿ ಗೊಲ್ಲಾಳನ ಜನ್ಮಸ್ಥಳವಾದ ಗೊಲಗೇರಿ, ಇವೆಲ್ಲವು ಕೆಂಬಾವಿಯ ಸುತ್ತ-ಮುತ್ತಲಿನಲ್ಲಿವೆ. ಹೀಗಾಗಿ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಡೆದಂತಹ ಆಂದೋಲನವು ಈ ಪರಿಸರದಲ್ಲಿದ್ದ ಬಸವ ಪೂರ್ವ ಯುಗದ ಈ ಶಿವಶರಣರಿಂದಲೇ ಎಂದು ಹೇಳಲು ಅವಕಾಶವಿದೆ. ಈ ಮೇಲಿನ ವಿವರವನ್ನು ನೋಡಿದಾಗ ಈ ಶರಣ ಬಸವಪೂರ್ವ ಯುಗದಲ್ಲಿ ಅತ್ಯಂತ ಶ್ರೇಷ್ಠ ಶರಣನಾಗಿ, ಶಿವಭಕ್ತನಾಗಿ ಜನಪ್ರಿಯ ವ್ಯಕ್ತಿಯಾಗಿದ್ದನೆಂದು ತಿಳಿದು ಬರುತ್ತದೆ. ಅದರಂತೆ, ಶಾಸನ, ಬಸವಾದಿ ಪ್ರಮಥರ ವಚನಗಳಲ್ಲಿಯೂ ಈತನ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಜೇಡರ ದಾಸಿಮಯ್ಯನ ವಚನಗಳಲ್ಲಿ  ಕೆಂಬಾವಿ  ಭೋಗಯ್ಯನ  ಹಿಂದೋಡಿ  ಹೋದ, (ಜೇಡರ ದಾಸಿಮಯ್ಯ ದೇವರ ಷಟಸ್ಠಲ ವಚನಾಗಮ (ಸಂ) ಪಿ.ಎಂ.ಗಿರಿರಾಜು: ವ.ಸಂ: ೫೪ ಪು.ಸಂ.೪೩) ಎಂದೂ,

ಬಸವಣ್ಣನವರ ವಚನದಲ್ಲಿ,

ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ

ಕೂಡಲ ಸಂಗಮ ದೇವಯ್ಯ ನಿಮಗೆಂದಟ್ಟಡಿಗೆಯ

ನೀಡ ಕಲಿಸಿದಾತ ಕೆಂಬಾವಿಯ ಭೋಗಯ್ಯ (ಗಣಭಾಷಿತ ರತ್ನ ಮಾಲೆ: (ಸಂ) ಪ್ರಭು ಸ್ವಾಮಿಗಳು): ವ.ಸಂ. ೨: ಪು. ಸಂ.೩೭೮.)ಎಂದೂ, ಚನ್ನಬಸವಣ್ಣನವರ ವಚನದಲ್ಲಿ.

ನೆರೆನಂಬೇ ನೆರೆನಂಬೋ ಗುರುಲಿಂಗ ಜಂಗಮನ

ದರಮರವಿಲ್ಲದೆ ಸಾಮವೇದಿಗಳಂತೆ

ನೆರೆನಂಬೋ ನೆರೆನಂಬೋ ಕೆಂಬಾವಿ ಭೋಗಣ್ಣನಂತೆ

(ಚನ್ನಬಸವಣ್ಣನವರ ವಚನಗಳು: (ಸಂ) ಅರ್.ಸಿ.ಹಿರೇಮಠ: ವ.ಸಂ ೪೦೩: ಪು.ಸಂ.೧೮೨) ಎಂದೂ,

ಉರಿಲಿಂಗಪೆದ್ದಿ ವಚನದಲ್ಲಿ

ಸಟೆಯ ದಿಟವ ಮಾಡಿ

ಸತ್ತಕರುವ ಹೊತ್ತು ಮಾದಾರನಾಗಿಬಹುದು ಜಂಗಮಸ್ಥಲವ ಅಲ್ಲ, ಅದು ಸಟೆ, ಸದ್ಭಾವದಿಂ ಭಾವಿಸಿ ಜಂಗಮಲಿಂಗವಾಯ್ತು ಕೆಂಬಾವಿ ಭೋಗಣ್ಣಂಗೆ (ಉರಿಲಿಂಗ ಪೆದ್ದಿಯ ವಚನಗಳು: (ಸಂ)ಫ.ಗು. ಹಳಕಟ್ಟಿ: ಪು.ಸಂ. ೩೬) ಎಂದೂ

ಸೊಡ್ಡಳ ಬಾಚರಸನ ವಚನದಲ್ಲಿ

ವೇದಗಳು ನಿಜವ ಬಲ್ಲಡೆ

ಆಗಮವೇ ಆಚಾರವರಿದಡೆ ಆಗಮವರಿಯರಿಕೆ ಕೆಂಬಾವಿಯ ಭೋಗಣ್ಣನ ಬೆನ್ನಲುರುಳುತ್ತ

ಹೋಗಲೇಕೆ (ಗಣ ಭಾಷಿತ ರತ್ನಮಾಲೆ: (ಸಂ) ಪ್ರಭು ಸ್ವಾಮಿಗಳು): ವ.ಸಂ. ೫: ಪು.ಸಂ: ೪೧೧)

ಎಂದು ಬಸವಾದಿ ಪ್ರಮಥರ ವಚನಗಳಲ್ಲಿ ಭೋಗಣ್ಣನ ಉಲ್ಲೇಖದ ಜೊತೆಗೆ ಜೀವನದಲ್ಲಿ ನಡೆದ ಘಟನೆಯ ಕುರುಹುಗಳನ್ನು ಕಾಣಬಹುದಾಗಿದೆ.

ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣದಲ್ಲಿಯ ಕೆಳಕಂಡ ಪ್ರಸಂಗಗಳಲ್ಲಿಯ ಶಿವನು ಕೀಳುಕುಲಜನಂತೆ ವೇಷ ಮರೆಯಿಸಿಕೊಂಡು ಸತ್ತ ಕರುವನ್ನು ಹೊತ್ತುಕೊಂಡು ಕೆಂಬಾವಿ ಭೋಗಣ್ಣನಲ್ಲಿಗೆ

ಬಂದು,

ಸತ್ತ ಮಾಂಸವ ನಾರೋಗಿಪುದು

ನಿತ್ಯ ನೇಮವನೊಂದಿ ನಿನ್ನೆ ನಾ ಹೋಗಿ

ಧೀಯುತ ಕೇಳು ದೇಡರ ದಾಸಿಯನ್ನು

ಕರುವ ಪಾಕವ ಮಾಡಿ ಹಾಕೆಯೆನಲು ಕೇಳಿ ಬರುವೆ ದುಗ್ಗಳಿಯನು ತಾನೆನುತ ತಡಗೈದ ಹಸಿದೆನು ನೀನಾದರಿನ್ನು ಅಟ್ಟಿ ಬಡಿಸಿಯೆ ಕರುವನೆನಗೆನಲು (ಪಾಲ್ಕುರಿಕೆ ಸೋಮನಾಥನ ಬಸವಪುರಾಣಮು: (ಅನುವಾದ) ಪಿ.ವಿ.ನಾರಾಯಣ: ಪು.ಸಂ ೩೬೩-೩೬೪) ಈ ವಿವರದ ಪ್ರಕಾರ ಕೆಂಬಾವಿ ಭೋಗಣ್ಣನು ಜೇಡರ ದಾಸಿಮಯ್ಯನ ಹಿರಿಯ ಸಮಕಾಲೀನ ಎಂಬುದಾಗಿ ವ್ಯಕ್ತವಾಗುತ್ತದೆ.

   ಹದಿಮೂರನೆಯ ಶತಮಾನದ ಆರಂಭದಲ್ಲಿದ್ದ ಹಂಪೆಯ ಹರಿಹರನ ಏಕಾಂತ ರಾಮಿ ತಂದೆ ರಗಳೆಯೊಂದರಲ್ಲಿ ಶಿವ ನಿಷ್ಠೆಯೊಂದಿಗೆ ಮೆರೆದಾಡಿದ ಏಕಾಂತ ರಾಮಯ್ಯನ ಕಥೆ ವ್ಯಕ್ತವಾಗುತ್ತದೆ. ಈ ಕೃತಿಯಲ್ಲಿ ಜೈನರೊಂದಿಗೆ ರಾಮಯ್ಯನೊಡ್ಡಿದ್ದ ಸವಾಲನ್ನು ಸಾಧಿಸುವುದಕ್ಕಾಗಿ ರಾಮಯ್ಯ ತನ್ನ ರುಂಡವನ್ನು ತಾನೇ ಹರಿದುಕೊಂಡಾಗ, ಆ ಹರಿದ ರುಂಡವನ್ನು ಹೊನ್ನ ಹರಿವಾಣದಲ್ಲಿಟುಕೊಂಡು ಅಗ್ಗಣಿ ಹೊನ್ನಯ್ಯ ಹಾಗೂ ಇತರ ಶರಣರು ಏಳು ಶೈವ ಕ್ಷೇತ್ರಗಳಲ್ಲಿ ಮೆರೆಸಿ ತಂದರು ಎಂಬ ವಿವರವಿದೆ. ಈ ಏಳು ಕ್ಷೇತ್ರಗಳಲ್ಲಿ ಕೆಂಬಾವಿಯು ಒಂದಾಗಿದೆ. ಏಕಾಂತ ರಾಮಯ್ಯನ ರುಂಡವು ಕೆಂಬಾವಿಯಳ್ಭೋಗನಾಥನಲ್ಲಿಗೆ ಬಂದು ಬೆಂಬಳಿಯೊಳುಕುಳ್ದಾತನೆಶರಣೆಂದು ಕಪ್ಪಡಿ ಸಂಗಮಕ್ಕೆ ಹೋಗುತ್ತದೆ ಎಂಬ ಉಲ್ಲೇಖವಿದೆ. ಈ ಉಲ್ಲೇಖದಿಂದ ಭೋಗಣ್ಣನು ಏಕಾಂತ  ರಾಮಯ್ಯನಿಗಿಂತ  ಪೂರ್ವದವನೆಂಬುದು  ವಿದಿತವಾಗುತ್ತದೆ.  ಅದರೊಂದಿಗೆ  ಜೇಡರ ದಾಸಿಮಯ್ಯನು ತನ್ನ ವಚನವೊಂದರಲ್ಲಿ ಸ್ತುತಿಸಿರುವುದರಿಂದ ಹಾಗೂ ‘ತೆಲಗು ಬಸವಪುರಾಣಮುಈ ಕೃತಿಯಿಂದ ಈ ಶರಣ ಜೇಡರ ದಾಸಿಮಯ್ಯನ ಸಮಕಾಲೀನ ಆಥವಾ ಹಿರಿಯ ಸಮಕಾಲೀನನೆನಿಸುತ್ತಾನೆ. ಅಲ್ಲದೆ, ತಾಳಿಕೋಟೆ, ಮರಡಿಪುರ, ಹಿರಿಯೂರು ಈ ಇತ್ಯಾದಿ ಶಾಸನಗಳಲ್ಲಿ ಈ ಶರಣನ ಬಗೆಗೆ ಪರೋಕ್ಷವಾದ ಉಲ್ಲೇಖಗಳಿವೆ. ತೇರಸರು, ಷೋಡಶರು ಹಾಗೂ ದಶಗಣಗಳ ಜೊತೆಗೆ ಪ್ರಾಚೀನರಾದ ಬಾಣ,  ಕರಿಕಾಲಚೋಳ,  ಮಯೂರ,  ಉದ್ಭಟ    ಮುಂತಾದವರ  ನಡುವೆ    ಶರಣ ಉಲ್ಲೇಖಿತನಾಗಿರುವುದರಿಂದ ಈತ ಬಸವ ಪೂರ್ವಯುಗದವನಾಗಿದ್ದು ಕ್ರಿ.ಶ. ೧೧೦೦-೧೧೪೦ ರ ನಡುವೆ ಜೀವಿಸಿರಬೇಕೆಂದು ಸಧ್ಯಕ್ಕೆ ಊಹಿಸಬಹುದಾಗಿದೆ.

   ಕೆಂಬಾವಿ ಭೋಗಣ್ಣನ ಬಗೆಗೆ ಶಾಸನಗಳಲ್ಲಿ, ಬಸವಾದಿ ಪ್ರಮಥರ ವಚನಗಳಲ್ಲಿ, ವೀರಶೈವ ಸಾಹಿತ್ಯಕೃತಿಗಳಲ್ಲಿ ಉಲ್ಲೇಖ ಇದೆ. ಕ್ರಿ.ಶ.೧೧೮೪ರ ತಾಳಿಕೋಟೆ ಶಾಸನದಲ್ಲಿ ಪರಿಯಗಳಿಗೆ, ಅಣಿಲೆವಾಡ, ಉಣುಕಲ್ಲು,ಸಂಪಗಾವಿ, ಅಬ್ಬಲೂರು, ಮಾರುಡಿಗೆ, ಅಣಂಪೂರು, ಕರಹಾಡ, ಕೆಂಬಾವಿ, ಬಮ್ಮಕೂರು ಮೊದಲಾದ ಅನನ್ತ ದೇಶದೇಶಾನ್ತರದಲಿದಿರಾದ ಪರಸಮಯಿಗಳು ಪಡಲ್ಪಡ್ಸಿ ಲೋಕಮನಾಕಂಪಗೊಳ್ಸಿ ಬಸದಿಗಳನ್ನು ಹೊಸದು ಮುಕ್ಕಿ ಶಿವಲಿಂಗ ಸಿಂಹಾಸನಮುಂಕಣ್ಗೊಳ್ಸಿ ಚಲಮಂ ಮೆರೆದು ಧೀರರೊಳ ನರೆದು.... ತೋರಿದ ಪುರಾತನ ನೂತನರೆನಿಸಿದ ಅಸಂಖ್ಯಾತ ಗಣಂಗಳ... ಇತ್ಯಾದಿ ಉಲ್ಲೇಖ ಇದೆ. (ಎಂ.ಎಂ.ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು: ಪು.ಸಂ.೩) ಈ ಶಾಸನದಲ್ಲಿ ಪುರಾತನ ನೂತನರೆನಿಸಿದ ಅಸಂಖ್ಯಾತ ಗಣಂಗಳ ಹೆಸರನ್ನು ಉಲ್ಲೇಖಿಸದೆ, ಅವರು ಎಸಗಿದ ಕಾರ್ಯ ಅಥವಾ ಅವರಿದ್ದ ಸ್ಥಳಗಳ ಮೂಲಕ ಉಲ್ಲೇಖಿಸಿದೆ. ಈ ಶಾಸನದ ವಿವರದಲ್ಲಿ ಕೆಂಬಾವಿಯ ಉಲ್ಲೇಖ ಬರುವುದರಿಂದ ಭೋಗಣ್ಣನನ್ನು ಪರೋಕ್ಷವಾಗಿ ಉಲ್ಲೇಖಿಸಿದೆ. ಕ್ರಿ.ಶ.೧೨೫೯ರ ಕಾಲದ ಹಿರಿಯೂರು ಶಾಸನದಲ್ಲಿಯ “... ಬಾಣನುಂದಕ ಭೋಗಂ ಸತಿ ಚೋಳನುದ್ಭಟ ಎಂಬ ವಿವರದಲ್ಲಿ ಮತ್ತು ಕ್ರಿ.ಶ.೧೨೮೦ರ ಕಾಲದ ಮರಡಿಪುರ ಶಾಸನದಲ್ಲಿಯ “ಕಲಿಗಾಲ ಚೋಳ ಭೋಗದೇವ ಬಾಣ ಮಯೂರ ಎಂಬ (ಎ.ಕ. ೩-೧.ಮಂಡ್ಯ ೮೩ ಮರಡಿಪುರ ಪುಟ. ೨೬) ವಿವರದಲ್ಲಿ ಪುರಾತನ ಶರಣರ ಉಲ್ಲೇಖಗಳ ನಡುವೆ ಭೋಗಣ್ಣನ ಹೆಸರು ಕಂಡು ಬರುತ್ತದೆ. ಈ ಶರಣ ಈಗಿನ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕೆಂಬಾವಿಯೆಂಬ ಗ್ರಾಮದಾತ. ಈ ಗ್ರಾಮ ಚಿಕ್ಕದಾದರೂ ಚೊಕ್ಕದಾಗಿದೆ.  ಈ ಶರಣನ ಗ್ರಾಮವಾದ ‘ಕೆಂಬಾವಿ ಸುರಪುರದಿಂದ ಇಪ್ಪತೈದು ಮೈಲುಗಳ ಅಂತರದಲ್ಲಿದೆ.  ಈ ಗ್ರಾಮಕ್ಕೆ ‘ಕೆಂಬಾವಿ ಎಂಬ ಹೆಸರು ಹೇಗೆ ಬಂತು ಎಂದು ಆಲೋಚಿಸುವುದಾದರೆ, ಈ ಶರಣನ ಊರ ಮುಂದೆ ಚಿಕ್ಕದೊಂದು ಕೆರೆ ಇದ್ದು, ಈ ಕೆರೆಯಲ್ಲಿ ನೀರು ಕೆಂಪಾಗಿ ಇವೆ. ಈ ಕೆರೆಯಲ್ಲಿ ನೀರು ಕೆಂಪಾಗಿ ಇರುವುದರಿಂದ ಕೆಂಗೆರೆ ಆಗಿದ್ದು, ಕೆಮ್ಮಣಿನಂತೆ ನೀರು ಕೆಂಪಾಗಿವೆ. ಹೀಗೆ ಕೆಂಪು+ಭಾವಿ= ಕೆಂಬಾವಿ ಎಂದುಕೆಂಬಾವಿ ಹೆಸರು ಬಂದಿದೆ. ಅಂದರೆ ಈ ದೇವಾಲಯದ ಪಕ್ಕದಲ್ಲಿ ಕೆಂಪು ನೀರಿನ ಭಾವಿ ಇದ್ದು, ಈ ಎರಡು ಕಾರಣಗಳಿಂದ ಈ ಗ್ರಾಮ ಕೆಂಬಾವಿ ಆಗಿದೆ ಎಂಬ ಆ ಗ್ರಾಮದ ಜನರ ಅಭಿಪ್ರಾಯವು  ನಂಬಲು  ಸೂಕ್ತವೆನಿಸುತ್ತದೆ.  ಹೀಗಾಗಿ ಈ  ಗ್ರಾಮವು  ಧಾರ್ಮಿಕ  ಕ್ಷೇತ್ರಕ್ಕೆ ನಿದರ್ಶನವಾಗಿದೆ. ಈ ಗ್ರಾಮ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಗ್ರಹಾರವಾಗಿತ್ತು. ಕಲ್ಯಾಣ ರಾಜ್ಯವನ್ನು ಆಳುತ್ತಿದ್ದ ಒಂದನೆಯ ಸೋಮೇಶ್ವರನ ಅಧಿಪತ್ಯದಲ್ಲಿದ್ದ ಮಹಾಮಂಡಳೇಶ್ವರ ರೇವರಸನ ಪತ್ನಿಯಾದ ಮಾಳಿಯಬ್ಬಳರಸಿಯು ಶ್ರೀಶಕೆ ೯೭೬ ಜನ ಸಂವತ್ಸರ ಪುಷ್ಯ ಮಾಸ ಸಂಕ್ರಾಂತಿ ದಿವಸಶ್ರೀ ರೇವಣಸಿದ್ಧೇಶ್ವರ ದೇವಸ್ಥಾನವನ್ನು ನಿರ್ಮಾಣಗೊಳಿಸಿದಳೆಂದು ಪಂಚಲಿಂಗಗಳುಳ್ಳ ಈ ದೇವಸ್ಥಾನದಲ್ಲಿರುವ ಶಿಲಾಶಾಸನದಿಂದ ತಿಳಿದು ಬರುತ್ತದೆ. ಅದೇ  ಶಾಸನದಲ್ಲಿಯ ಉಲ್ಲೇಖದಂತೆ ರೇವರಸನು ಕೆಂಬಾವಿಯ ಮಂಡಳೇಶ್ವರನಿರಬಹುದು. ಕೆಂಬಾವಿಯ ಚಾಲುಕ್ಯ ಅರಸರ ಕಾಲದಲ್ಲಿ ಇದೊಂದು ಸುಪ್ರಸಿದ್ಧ ಅಗ್ರಹಾರವಾಗಿತ್ತೆಂದೂ ಹಾಗೂ ಇಲ್ಲಿ ಚಾಲುಕ್ಯ ಮತ್ತು ಕಳಚೂರಿ ಅರಸರ ಮಧ್ಯೆ ದೊಡ್ಡ ಯುದ್ಧ ನಡೆಯಿತೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

   ಕೆಂಬಾವಿ ಭೋಗಣ್ಣನ ಇತಿವೃತ್ತವನ್ನು ತಿಳಿಯಲು ಕ್ರಿ.ಶ. ೧೧೮೪ರ ತಾಳಿಕೋಟೆ ಶಾಸನ, ಕ್ರಿ.ಶ. ೧೨೫೯ರ ಹಿರಿಯೂರು  ಶಾಸನ  ಹಾಗೂ  ಕ್ರಿ.ಶ.  ೧೨೮೦ ಮರಡಿಪುರದ ಶಾಸನಗಳು ಸಹಕಾರಿಯಾಗುತ್ತವೆ. ಅದರೊಂದಿಗೆ ಪೂರ್ಣ ಪ್ರಮಾಣದಲ್ಲಿ ಹರಿಹರನ ಕೆಂಬಾವಿ ಭೋಗಣ್ಣನ ರಗಳೆ, ಚೆನ್ನಕವಿಯ ಕೆಂಬಾವಿ ಭೋಗಣ್ಣನ ಸಾಂಗತ್ಯ ಹಾಗೂ ಪಾಲ್ಕುರಿಕೆಯ ಸೋಮನಾಥನ ‘ತೆಲುಗು ಬಸವ ಪುರಾಣವನ್ನು ಅನುಸರಿಸಿ ರಚಿತವಾದ ವೀರಶೈವ ಕಾವ್ಯ-ಪುರಾಣಗಳಲ್ಲಿ (ಭೀಮಕವಿ, ವಿರುಪಾಕ್ಷ ಪಂಡಿತ, ಗರುಣಿಯ ಬಸವಲಿಂಗ, ಷಡಕ್ಷರದೇವ, ಶಾಂತಲಿಂಗದೇಶಿಕ,   ಉತ್ತರದೇಶದ   ಬಸವಲಿಂಗ)ಯ   ಆನುಷಂಗಿಕ   ಸಂಗತಿಗಳು ನೆರವಾಗಿವೆ. ಇವರ ಕಾವ್ಯಗಳಲ್ಲಿ ಮೂಡಿ ಬಂದಿರುವ ಭೋಗಣ್ಣನ ಕಥೆಯು ಹರವಿನ ದೃಷ್ಟಿಯಿಂದ ಬೇರೆಬೇರೆಯಾಗಿ ಮೂಡಿ ಬಂದಿದ್ದರೂ ಉದ್ದೇಶ ಮಾತ್ರ ಒಂದೆಯಾಗಿದೆ.

    ಕನ್ನಡ ನಾಡಿನ  ಸಮಾಜೋಧಾರ್ಮಿಕ  ಚಳುವಳಿಯಲ್ಲಿ  ಬಸವಪೂರ್ವ  ಯುಗದ  ಶಿವಶರಣ ಆಂದೋಲನವು  ಗಮನಾರ್ಹವಾದುದಾಗಿದೆ. ಈ ಆಂದೋಲನಕ್ಕೆ ಕಾರಣವೆಂದರೆ, ರಾಜರು ಹಾಗೂ ವಿಪ್ರರೆಂದೇ ಹೇಳಬೇಕಾಗುತ್ತದೆ.  ಮತ ಸಂಘರ್ಷ, ವರ್ಣ ಸಂಘರ್ಷ ಮತ್ತು ಧರ್ಮಸಂಘರ್ಷಗಳ ಮೂಲಕ ವೀರಮಾಹೇಶ್ವರ ನಿಷ್ಠೆ ಹಾಗೂ ಶಿವ ಸಂಸ್ಕೃತಿಯ ಪಾರಮ್ಯವನ್ನು ಸ್ಥಾಪಿಸಿದ್ದಾರೆ. ಹೀಗಾಗಿ ಈ ಶರಣರು  ಜನಪರ  ಹಾಗೂ  ಜೀವನ  ಪರ  ಧೋರಣೆ  ಹೊಂದಿದವರಾಗಿದ್ದು, ಪರಂಪರಾನುಗತವಾದ ಆಚರಣೆಗಳ ನಿರಾಕರಣೆ ಮಾಡಿದ್ದನ್ನು ಅನೇಕ ಶಾಸನ-ಕಾವ್ಯಪುರಾಣಗಳ ಮೂಲಕ ತಿಳಿಯಬಹುದಾಗಿದೆ.

     ಕೆಂಬಾವಿ ಭೋಗಣ್ಣನನ್ನು ಕುರಿತ ಕಾವ್ಯ ಪುರಾಣಗಳಲ್ಲಿಯ ವಿವರಗಳಿಂದ ತಿಳಿದು ಬರುವ ಸಂಗತಿಗಳನ್ನು ಈ ಕೆಳಕಂಡಂತೆ ನಿರೂಪಿಸಬಹುದು. ಕೆಂಬಾವಿ ಪುರದಲ್ಲಿ ಭೋಗಣ್ಣನೆಂಬ ಜಂಗಮ ಭಕ್ತನು ಶಿವಭಕ್ತರಲ್ಲಿ ಜಾತಿ ಭೇದವ ಕಲ್ಪಿಸದೆ ಇರುತ್ತಿರಲು, ಇವನ ಮಹಿಮೆಯನ್ನು ಲೋಕಕ್ಕೆ ತಿಳಿಸ ಬೇಕೆಂದು ಪರಶಿವನು ಒಂದು ದಿವಸ ಹೊಲೆಯ ವೇಷದಲ್ಲಿ ಕರುವಿನ ಶವವನ್ನು ಹೊತ್ತು ಹೆಗಲಲ್ಲಿ ಮಿಣಿ,  ಕೈಯಲ್ಲಿ ಸಂಬಳಿಗೋಲು, ಜಂಗಮನಂತೆ ಹಣೆಯಲ್ಲಿ ಸೊಗಯಿಪ ವಿಭೂತಿ, ಕೊರಳಲ್ಲಿ ರುದ್ರಾಕ್ಷಿಯ ಕೃಪಾಕರಂ, ಪಿರಿಯ ವೇಷಗೊಂಡು ಮನೆಯ ಮುಂದೆ  ಸುಳಿಯುತ್ತಾನೆ.   ಭೋಗಣ್ಣನು   ಜಂಗಮ ಸ್ವರೂಪಿಯಾದ ಇವನನ್ನು ನೋಡಿ ಕೊರಳಲ್ಲಿದ್ದ ಲಿಂಗವ ಕಂಡು ಈ ಶರಣನನ್ನು ಮನೆಯ ಒಳಗೆ ಕರದುಕೊಂಡು ಹೋಗಿ ಭಯಭಕ್ತಿಯಿಂದ ಉನ್ನತಾಸನದಲ್ಲಿ ಕುಳ್ಳಿರಿಸಿ ಪನ್ನಾಗಾಭರಣನ ಪದದ್ವಯಮುಮಾ ತೊಳೆದು ಪಾದೋದಕಪ್ರಸಾದಮಂ ಸಲ್ಲಿಸುತ್ತಾನೆ. ಈ ವಿಷಯ ತಿಳಿದ ಅಕ್ಕಪಕ್ಕದ ಬ್ರಾಹ್ಮಣರು, ವೈದಿಕಾಚಾರವೆಲ್ಲವು ಕೆಟ್ಟುಹೋಯಿತೆಂದು ಕುಪಿತರಾಗಿ ಕೆಂಬಾವಿಯ ಅರಸನಾದ ಚಂದಿಮರಸನಲ್ಲಿಗೆ ದೂರು ಹೋಗುತ್ತಾರೆ. ಎಲೆ ಅರಸ ನಿಮ್ಮೂರ ಭೋಗಣ್ಣ ಮುಂಡೆಯ ಮಗ, ಚಂಡಾಲನಿಲ್ಲಿ ಮಿಣಿಯ ಮಾರುತ್ತಿರೆ ಕರಕೊಂಡು ಹೋದನು ತನ್ನ ಮನೆಗೆ. ಕಾಲ ತೊಳೆದು ನೀರ ಕುಡಿದನು, ವಿಪ್ರ ಜಾತಿಯನೆಲ್ಲವನು ನೀರಿಲಿ ನೆರಹಿದನು, ಹೊಲಗೇರಿಯಾದವು ನಮ್ಮ ಮನೆಗಳೆಲ್ಲ ತೊಲಗುವೇವೀ  ಗ್ರಾಮದಿಂದ  ಎನ್ನುತ್ತಾರೆ.    ರೀತಿಯಲ್ಲಿ ಆರ್ಭಟಿಸಿದ ವಿಪ್ರರ ಮಾತು ಕೇಳಿ ಚಂದಿಮರಸನು ಕುಪಿತನಾಗಿ ಭೋಗಣ್ಣನನ್ನು ಕರೆಯಿಸಿ ಅವನನ್ನು ಕುರಿತು ` ಏನಯ್ಯಾ ಪುರದೊಳಗೆ ಕೃತ್ಯಮಂ ಮಾಳ್ಪರೆ? ಏನಾದೊಡಂ ಪೊಲೆಯರ ಪುಗಿಸಿ ಬಾಳವರೇ? ಮನೆಯೊಳಗನಾಮಿಕರ ಪುಗಿಸುವರೆ ಭೋಗಯ್ಯಾ? ಮನೆವಾರೆ  ನಿಮ್ಮದಾಚಾರವೇ  ಭೋಗಯ್ಯಾ? ಎಂಬುದಾಗಿ ಪ್ರಶ್ನಿಸಿದನು.

ನಿನಗೆ ತಿಳಿವಿಲ್ಲ, ತಿಳಿವಿಲ್ಲ ದೊರೆ ಕೇಳರಸ

ನಾರಾಯಣ ಕ್ರಮಿಕರಂ ಪುಗಿಸಿದೆನೆ ಮನೆಗೆ

ಸೂರಿ ಭಟ್ಟರ ನೈದೆ ಪುಗಿಸಿದೆನೆ ಮನೆಯೊಳಗೆ ಕೃಷ್ಣ ಪೆದ್ದಿಗಳನೊಮ್ಮೆಯು ಕರೆದು ಬಲ್ಲೆನೇ

ಪೊಲೆಯನಂ ಪುಗಿಸಲಿಲ್ಲ

ಮನೆಯೊಳಗರಸ ನಿನಗೆ ತಿಳಿವಿಲ್ಲ ತಿಳಿವಿಲ್ಲದೊಡೆ ಕೇಳರಸ

ಶಿವನನರಿಯದ ಹೊಲೆಯರಂ ಹೊಗಿದೆ ನಾನರಸ

ಶಿವಭಕ್ತನಂ ಪುಗಿಸಿದೇಂ ತಪ್ಪೆ ಹೇಳರಸ ಎಂದು ಉತ್ತರಿಸಿ ಈ ಆಚರಣೆಯಲ್ಲಿ ನನ್ನ ತಪ್ಪೇನಿದೆ ಎಂದು ರಾಜನಿಗೆ ಮರು ಪ್ರಶ್ನೆ ಹಾಕುತ್ತಾನೆ. ಶಿವನನರಿಯದ ವಿಪ್ರನೇ ಹೊಲೆಯನು ಎಂಬ ಭೋಗಣ್ಣನ ವಾದವನ್ನು ಕೇಳಿ ವಿಪ್ರರು ಕುಪಿತರಾಗಿ, ಚಂದಿಮರಸರಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟರು. ಚಂದಿಮರಸನು ವಿಪ್ರರ ಪಕ್ಷವನ್ನು ವಹಿಸಿ ಕೆಂಬಾವಿಯ ಭೋಗಣ್ಣನ ಮೇಲೆ ಕುಪಿತರಾಗಿ ಇನ್ನು ಮೇಲೇ ನೀನು ನಮ್ಮ ಊರಲ್ಲಿ ಇರಬೇಡ, ಹೊರಟುಹೋಗು ಎಂದು ಭೋಗಣ್ಣನಿಗೆ ಅಪ್ಪಣೆ ಮಾಡಿದನು. ಈ ಸಂದರ್ಭದಲ್ಲಿ ಭೋಗಣ್ಣ ರಾಜ-ರಾಜತ್ವ, ಬ್ರಾಹ್ಮಣ-ಬ್ರಾಹ್ಮಣತ್ವವನ್ನು ಪ್ರತಿಭಟಿಸಿದ್ದು ಆತನನ್ನು ಕುರಿತ ಕಾವ್ಯಗಳಿಂದ ತಿಳಿದು ಬರುತ್ತದೆ. ಈ ಘಟನೆಯಿಂದ ತಿಳಿದು ಬರುವುದೇನೆಂದರೆ, ಅನ್ಯಮತಿಯರೊಂದಿಗೆ ತಾನು ನಡೆಸಿದ ವಾದ-ವಿವಾದಗಳು ಅಷ್ಟಿಷ್ಟಲ್ಲ.   ತನ್ನ ಪ್ರಾಣದಾಸೆಯಿಲ್ಲದೆ ಪ್ರತಿಭಟಿಸಿದ ಪ್ರಸಂಗ ಈ ಶರಣನ ಚರಿತ್ರೆಯಿಂದ ತಿಳಿದು ಬರುತ್ತದೆ.  ಈ ಮೇಲಿನ ವಿವರದಲ್ಲಿ ಬ್ರಾಹ್ಮಣ್ಯದ ಅಪಮೌಲ್ಯ ಹಾಗೂ ಕೆಳವರ್ಗದ ಮೌಲ್ಯೀಕರಣ ಕಾರ್ಯ ನಡೆದಿರುವುದು ಗುರುತಿಸಬಹುದಾಗಿದೆ.   ಯಾವ ಜಾತಿಯವನೇ ಆಗಿರಲಿ ಶಿವಭಕ್ತರನ್ನಾಗಿಸಿ ಸತ್ಕರಿಸಿದ ಪ್ರಸಂಗ ಈ ಶರಣನ ಚರಿತ್ರೆಯಿಂದ ಕಂಡು ಬರುತ್ತದೆ. ಶಿವಭಕ್ತರು ಜಡ ವ್ಯವಸ್ಥೆಯಿಂದ ಮುಕ್ತರಾಗಲು ಪ್ರಯತ್ನಿಸಿ, ಸಮಾನತೆಯ ಚೌಕಟ್ಟಿನಲ್ಲಿ ಒಂದಾಗಲು ಪ್ರಯತ್ನಿಸಿದಾಗ ಸಂಪ್ರದಾಯ ವರ್ಗದವರ ವಿರೋಧಕ್ಕೆ ಪ್ರತಿರೋಧ ವ್ಯಕ್ತವಾಗಿರುವುದು ಕಂಡು ಬರುತ್ತದೆ.  ಇಲ್ಲಿ ಒಂದು ರೀತಿಯ ಮಾನಸಿಕ ಮತ್ತು ಸಾಮಾಜಿಕ ಸಂಘರ್ಷ ಈ ಎರಡು ವರ್ಗಗಳ ನಡುವೆ ನಡೆದಿರುವದು ಕಂಡುಬರುತ್ತದೆ.  ಹೀಗಾಗಿ ಅನ್ಯ ಮತಿಯರು ಉನ್ನತ ಮೌಲ್ಯಗಳೆಂದು ಪ್ರಚಾರ ಮಾಡುತ್ತ, ಕೆಳ ವರ್ಗದವರ ಶೋಷಣೆ ಮಾಡುತ್ತಿರುವವರ ಮೌಲ್ಯ, ನಂಬಿಕೆ ಹಾಗೂ ಆದರ್ಶಗಳಿಗೆ ಈ ಶರಣ ಕೊಡಲಿ ಪೆಟ್ಟುಹಾಕಿರುವುದು ಈತನ ಚರಿತ್ರೆಯಿಂದ ತಿಳಿದು ಬರುತ್ತದೆ. ಈ ರೀತಿಯಲ್ಲಿ ಭೋಗಣ್ಣ ಅನ್ಯ ಮತೀಯರೊಡನೆ ವಾದ-ವಿವಾದ ನಡೆಸಿ ರಾಜ ಮತ್ತು ಬ್ರಾಹ್ಮಣ ವರ್ಗದೊಂದಿಗೆ ಪ್ರತಿಭಟಿಸಿ, ಅಸ್ಪೃಶ್ಯರನ್ನು ಶಿವಭಕ್ತರನ್ನಾಗಿ ಪರಿವರ್ತಿಸಿದ್ದಾನೆ. ಅವರಿಗೆ ಸಾಮಾಜಿಕ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾನೆಂದು ಹೇಳಬಹುದು. ಭೋಗಣ್ಣನು ರಾಜನಾಜ್ಞೆಯಂತೆ  ಊರ  ಬಿಟ್ಟು  ಹೊರಟನು.  ಆಗ  ಕೆಂಬಾವಿಯಲ್ಲಿ  ವಿಲಕ್ಷಣವಾದ ಘಟನೆಗಳು ನಡೆದವು. ಅಷ್ಟೊತ್ತಿಗೆ  ಕೆಂಬಾವಿಯ ಶಿವಾಲಯಗಳಲ್ಲಿಯ ಎಲ್ಲ ಲಿಂಗಗಳು ಭೋಗಣ್ಣನ ಕಡೆಗೆ ತಿರುಗಿ ನೋಡುತ್ತಾ ತಮ್ಮ ಪೀಠಗಳನ್ನು ತ್ಯಜಿಸಿ ಭೋಗಣ್ಣನ ಬೆನ್ನು ಹತ್ತಿ ಹೊರಟವು.  ಈ ರೀತಿ ತನ್ನನ್ನುಹಿಂಬಾಲಿಸಿ ಬಂದ ಲಿಂಗಗಳನ್ನು ಭೋಗಣ್ಣನು ನೋಡಿ ಪರವಶನಾಗಿ ` ಬಲದ ಲಿಂಗಗಳ ಬಲದ ಕರದೊಳಗಪ್ಪಿ, ಕೆಲದ ಲಿಂಗಂಗಳನ್ನು ಕೆಲದ  ಕೈಯೊಳಗಪ್ಪಿ, ಮುಂದಿರ್ದಲಿಂಗಂ ಗಳನುರ ಸ್ಥಳದೊಳೊಲಿದಪ್ಪಿ, ಪಿಂದಿರ್ದ ಲಿಂಗಗಳಂ ಬೆನ್ನೊಳೊಲಿದಪ್ಪಿ, ಆಲೋಕನದೊಳಿರ್ದವಂ ಕಂಗಳಿಂದಪ್ಪಿ, ಮೇಲಿರ್ದ ಲಿಂಗಂಗಳುತ್ತಮಾಂಗದೊಳಪ್ಪಿ, ಸುತ್ತಿರ್ದ ಲಿಂಗಂಗಳಂ ಸುಳಿಸುಳಿದು ತಳ್ಕೈಸಿ,ಮುತ್ತಿರ್ದ ಲಿಂಗಂಗಳಂ ಮುರಿಮುರಿದು ಮೇಳೈಸಿ ಸುಜನಜನವಂದ್ಯನಾದ ಭೋಗಣ್ಣನು ಅತಿ ಹರುಷದಿಂದ ತ್ರಿಜಗದ ಏಕೈಕ ಲಿಂಗಗಳನ್ನು ಪೂಜೆ ಮಾಡುತ್ತ ಹೊರಟನು.

      ಇತ್ತ  ಕೆಂಬಾವಿಯಲ್ಲಿ  ವಿಪ್ರರು  ತಮ್ಮ  ನಿತ್ಯ  ನೇಮಗಳನ್ನು  ಮಾಡಬೇಕೆಂದು  ದೇವಾಲಯಗಳ ಬಾಗಿಲುಗಳನ್ನು ತೆರೆದು ನೋಡಲು ಒಳಗೆ ಲಿಂಗಗಳಿಲ್ಲದೆ ಬರಿ ಪೀಠಗಳಿರುವುದನ್ನು ಕಂಡು ` ಶಿವಾ ಶಿವಾ ಎನುತೆ ಮನದೊಳ್    ಕೌತುಕಗೊಂಡು     ಭೋಗಣ್ಣನೊಡನೆ  ಪೋದುವು ಲಿಂಗತತಿಯೆಲ್ಲ, ರಾಗದಿಂದೊಡನೊಕ್ಕಲಾದವಳ್ತಿಯೊಳೆಲ್ಲ’ ಎಂದು ಭಯಪಟ್ಟು ಕೂಡಲೇ ಚಂದಿಮರಸನೆಡೆಗೆ ಓಡಿ ಬಂದು ನಡೆದ ಸಂಗತಿಗಳನ್ನು ಅರಸನಿಗೆ ತಿಳಿಸಿ` ಕರೆದು ಬಿಜಯಂಗೈಸಿ ತರ್ಪುದಾ ಭಕ್ತನಾಂ, ಹರನಪುರಹರನ ಘನಸಾಮರ್ಥ್ಯಯುಕ್ತನಂ, ಧರೆಯೊಳಗೆ ಕಟ್ಟಧಿಕ ಶಿವಲಿಂಗವಂತನಂ, ಹರಿಯಜರ್ಗರಿದೆನಿಪ ಘನಲಿಂಗವಂತನಂ, ಸಕಲ ಋಷಿಗಳ್ ಬೇಳ್ಪ ಪುಣ್ಯಾಗ್ರಗಣ್ಯನಂ,ಸಕಲ ಲಿಂಗದ ನಡುವೆ ಬಾಳ್ವ ಭೋಗಣ್ಣನಂ ಎಂದು ನುಡಿಯುತ್ತೆ ಭೋಗಣ್ಣನು ಮಹಾಮಹಿಮನಾಗಿದ್ದಾನೆ ಅವನನ್ನು ಮತ್ತೆ ಕೆಂಬಾವಿಗೆ ಕರೆಸಬೇಕುಎಂದು ಕೇಳಿಕೊಂಡರು. ಈ ವಿಷಯ ತಿಳಿದ ಅರಸನು ಮಂದಮತಿಯಾದೆನೆನುತ್ತ ಚಿಂತೆಯಂ ತಾಳ್ದು, ಪುರಜನಂ,ಪರಿಜನಂ,  ಶರಣ ಸಂತತಿವೆರಸಿ  ಭೋಗಣ್ಣನಲ್ಲಿಗೆ  ಬಂದು  ಕ್ಷಮೆಯಾಚಿಸಿ,  ಮೊರೆಯಿಟ್ಟು` ಶಿವನನರಿಯದ    ಪಾತಕರ್ಗೆ    ಕರುಣಿಪುದಯ್ಯ! ಭವವವರಿಯದ    ಭಾಗ್ಯಹೀನರ್ಗೆ    ದಮ್ಮಯ್ಯ! ಕರುಣಿಸುವುದೆಮಗೆ   ಕಾರುಣ್ಯನಿಧಿ   ಭೋಗಣ್ಣ!   ನರಕದೊಳ್   ಬಿದ್ದವರನೆತ್ತುವುದು   ಭೋಗಣ್ಣ ಮುಂದರಿಯದಜ್ಞರಿಗೆ  ಬುದ್ಧಿ   ಕೊಡು   ಭೋಗಣ್ಣ!   ಸಂದಣಿಸಿದೆಮ್ಮಮ್ಮ   ಮಾಯವಂ ನೀಗಣ್ಣ ಅನುಪಮೈಶ್ವರ್ಯ ಶಿವಲಿಂಗನಿಧಿ ಭೋಗಣ್ಣ! ಎಂದು ವಿನೀತರಾಗಿ ಭೋಗಣ್ಣನನ್ನು ಸ್ತುತಿಸಿ ಕೆಂಬಾವಿಗೆ ಹಿಂತಿರುಗಬೇಕೆಂದು ಕೇಳಿಕೊಂಡರು. ಭೋಗಣ್ಣನು ದಯಾಹೃದಯನಾಗಿ ಹಾಗೆಯೇ ಆಗಲೆಂದು ನುಡಿದು ಅರಸ ಮತ್ತು ವಿಪ್ರರೊಡನೆ ಕೆಂಬಾವಿಗೆ ಬರುತ್ತಾನೆ.  ಈ ಶರಣನ ಬೆನ್ನು ಹತ್ತಿದ ಲಿಂಗಗಳೆಲ್ಲವು ಹಿಂದಕ್ಕೆ ಭೋಗಣ್ಣನೊಂದಿಗೆ ಬಂದು ದೊಡ್ಡ ಪೀಠದಲ್ಲಿ ಸಣ್ಣ ಲಿಂಗ, ಸಣ್ಣ ಪೀಠದಲ್ಲಿ ದೊಡ್ಡಲಿಂಗಗಳು ಕುಳಿತವು. ಈಗಲೂ ಭೋಗಣ್ಣನ ಜೀವನದಲ್ಲಿ ನಡೆಯಿತೆನ್ನಲಾದ ಘಟನೆಯನ್ನು ಸಾರುವಂತೆ ಕೆಂಬಾವಿಯಲ್ಲಿಯ ಭೋಗೇಶ್ವರ ದೇವಾಲಯದಲ್ಲಿ ಹಾಗೂ ರೇವಣ ಸಿದ್ಧೇಶ್ವರ ದೇವಾಲಯದಲ್ಲಿ ಈಗಲೂ ನೋಡಬಹುದು. ಭೋಗಣ್ಣನು ಲಿಂಗದ ಮತ್ತು ಜಂಗಮದ ಮಹಾತ್ಮೆಯನ್ನು ಸಾರುತ್ತಾ ತನ್ನ ಮಣಿಹವು ಮುಗಿಯಲು ಕೆಂಬಾವಿಯಲ್ಲಿಯೇ ಐಕ್ಯನಾಗುತ್ತಾನೆ.

     ಹನ್ನೆರಡನೆಯ ಶತಮಾನದವರೆಗಿನ ವೀರಶೈವ ಸಾಹಿತ್ಯದಲ್ಲಿ ಭೋಗಣ್ಣ ಕಥೆ ಹಲವಾರು ಮಾರ್ಪಾಡುಗಳೊಡನೆ ಮೈದಾಳಿದೆ. ಹೀಗಾಗಿ ಈ ಶರಣನ ಜೀವಿತದ ಕೊನೆಯ ಘಟ್ಟ ಕುರಿತು ವಿವೇಚಿಸುವಾಗ ಹರಿಹರನ ರಗಳೆಯಲ್ಲಿ ಆತನ ಜೀವಿತದಲ್ಲಿ ನಡೆದ ಕೊನೆಯ ಘಟನೆಯನಂತರ ಕೆಂಬಾವಿಯಲ್ಲಿಯ ಅರಸ ಹಾಗೂ ವಿಪ್ರರಿಗೆ ಈತನ ಶಿವಭಕ್ತಿಯ ಶ್ರೇಷ್ಠತೆಯನ್ನು ಗೊತ್ತುಪಡಿಸಿ ಶಿವ ಕೈಲಾಸಕ್ಕೆ ಕರೆದೊಯ್ದ ಎಂಬ ವಿವರವನ್ನು ಗಮನಿಸಬಹುದಾಗಿದೆ.

     ಭೋಗಣ್ಣನು ನಡೆಸಿದ ಪವಾಡಮಯ ಘಟನೆಯಿಂದ ಊರಿನ ಅರಸ ಮತ್ತು ವಿಪ್ರರೆಲ್ಲರೂ ವೈದಿಕ ಧರ್ಮವ ತ್ಯಜಿಸಿ ಭೋಗಣ್ಣನಿಂದ ಶಿವದೀಕ್ಷೆ ಪಡೆದು ವೀರಶೈವಮತವ ಸ್ವೀಕರಿಸಿದರು ಎಂಬ ವಿವರವು ಈತನನ್ನು ಕುರಿತ ಸಾಂಗತ್ಯ ಕೃತಿಯಿಂದ ತಿಳಿದು ಬರುತ್ತದೆ.   ಕೆಂಬಾವಿ ಭೋಗಣ್ಣನ ಪವಾಡಮಯ ಘಟನೆ ಅಂದರೆ  ಲಿಂಗ  ಪಲ್ಲಟದ  ಬಗೆಗೆ  ಉತ್ಪ್ರೇಕ್ಷೆ  ಇದ್ದರೂ  ಕೆಂಬಾವಿ  ಮತ್ತು  ಸುತ್ತಮುತ್ತಲ  ಗ್ರಾಮಗಳಲ್ಲಿ ಈ ಘಟನೆಯ  ಪ್ರತೀಕವಾಗಿ  ಅಂದರೆ  ಕೆಂಬಾವಿಯಲ್ಲಿರುವ  ಶ್ರೀ  ರೇವಣಸಿದ್ಧೇಶ್ವರ  ದೇವಾಲಯದಲ್ಲಿ ಚಿಕ್ಕಲಿಂಗವು ದೊಡ್ಡ ಪೀಠದಲ್ಲಿಯೂ, ದೊಡ್ಡಲಿಂಗವು ಚಿಕ್ಕಪೀಠದಲ್ಲಿಯೂ ಇರುವುದನ್ನು ಈಗಲೂ ಕಾಣಬಹುದಾಗಿದೆ. ಕೆಂಬಾವಿ ಗ್ರಾಮದ ಲಿಂಗಗಳಾದ ಸೋಮನಾಥ ಲಿಂಗವು ಗೊಡ್ರಿಹಾಳ ಚಿನ್ನದ ಗಣಿಯ ಹತ್ತಿರ ನೆಲೆಸಿದೆ ಹಾಗೂ ರಾಮಲಿಂಗವು ಕೆಂಬಾವಿ ಸೀಮೆಯಲ್ಲಿದೆ. ಪ್ರತೀ ವರ್ಷವೂ ಕೆಂಬಾವಿ ಜನರು ದೇವರುಗಳನ್ನು ಕರೆದುಕೊಂಡು ಬರುವಾಗ ಭೋಗಣ್ಣನನ್ನು ಬರಮಾಡಿಕೊಳ್ಳುತ್ತಾರೆ. ಒಂದು ವೇಳೆ ದೊಡ್ಡಪೀಠದಲ್ಲಿ ಸಣ್ಣಲಿಂಗ, ಚಿಕ್ಕಪೀಠದಲ್ಲಿ ದೊಡ್ಡಲಿಂಗ ಇರುವುದನ್ನು ಕಂಡು ಅನಂತರ ಸಂಬಂಧಿಸಿದ ಕತೆಯನ್ನು ಎಣೆದಿದ್ದಾರೆಯೇ ಎನಿಸಿದರೂ ವೀರಶೈವ ಕಾವ್ಯ-ಪುರಾಣಗಳಲ್ಲಿಯ ಉಲ್ಲೇಖ ಮತ್ತು ಈಗಲೂ ಇರುವ ಕೆಲವೊಂದು  ಐತಿಹಾಸಿಕ ಸ್ಮಾರಕಗಳಿಂದಾಗಿ ಭೋಗಣ್ಣನ ಘಟನೆಗೆ ಸ್ವಲ್ಪಮಟ್ಟಿಗಾದರೂ ಐತಿಹಾಸಿಕತೆ ಇದೆ ಎಂದೆನಿಸುತ್ತದೆ.  ಕೆಂಬಾವಿ ಭೋಗಣ್ಣ ತನ್ನ ಜೀವನದುದ್ದಕ್ಕೂ ಅನ್ಯ ಧರ್ಮಿಯರೊಂದಿಗೆ ಸೆಣಸುತ್ತ ಬಂದಿರುವುದು ಹಲವಾರು ವೀರಶೈವ ಕಾವ್ಯ-ಪುರಾಣಗಳಿಂದ ತಿಳಿದು ಬರುತ್ತದೆ.  ವಿಪ್ರರು ಅನೇಕ ಸಂದರ್ಭಗಳಲ್ಲಿ ಭೋಗಣ್ಣನನ್ನು ಹಿಂಸಿಸಲು ಕೊಲ್ಲಲು ಮುಂದಾಗಿ ವಿಫಲರಾದುದು ಕಂಡು ಬರುತ್ತದೆ. ಈತ  ವೀರಮಾಹೇಶ್ವರ  ಹಾಗೂ  ಜಂಗಮ  ನಿಷ್ಠೆಯುಳ್ಳ  ಶರಣನಾದುದರಿಂದ    ಶಿವನೇ  ಈತನಲ್ಲಿಗೆ ಬಂದಿದ್ದಾನೆಂಬುದು ಈತನನ್ನು ಕುರಿತು ಮೂಡಿ ಬಂದ ಕಾವ್ಯ-ಪುರಾಣಗಳಿಂದ ತಿಳಿದು ಬರುತ್ತದೆ.  ಈತ ಅಪ್ರತಿಮ ನಿಷ್ಠೆಯುಳ್ಳ ಶರಣನಾಗಿದ್ದುದ್ದೆ ಇದಕ್ಕೆ ಕಾರಣವಾಗಿದೆ.

    ಭೋಗಣ್ಣನ  ಮಹಿಮೆಗೆ  ಮೆಚ್ಚಿ  ಚಂದಿಮರಸ  ರಾಜನು  ಅವನ  ಶಿಷ್ಯನಾಗಿ  ಲಿಂಗ  ದೀಕ್ಷೆ  ಪಡೆದು “ಸಿಮ್ಮಲಿಗೆಯ ಚೆನ್ನರಾಮ ಎಂಬ ಹೆಸರಿನ ಅಂಕಿತವನ್ನು ಪಡೆದು ವಚನಗಳನ್ನು ರಚಿಸಿರುತ್ತಾನೆ. ಈರ್ವರೂ ಕೂಡಿ ದೇಶಪರ್ಯಟನ ಮಾಡಿ ಅಲ್ಲಲ್ಲಿ ಪವಾಡಗಳನ್ನು ಮಾಡಿದ್ದಾರೆ. ಭೋಗೇಶ್ವರ ದೇವಸ್ಥಾನಗಳು ಆಳಂದ ತಾಲೂಕಿನ “ಝಳಕಿ ಮತ್ತು ಕಲಬುರ್ಗಿ ತಾಲೂಕಿನ ‘ಬೋಳೆವಾಡ ಮುಂತಾದ ಗ್ರಾಮಗಳಲ್ಲಿ ಈಗಲೂ ಕಾಣುತ್ತೇವೆ. ಈ   ಶರಣ   ಕೆಂಬಾವಿಯಲ್ಲಿಯೇ   ಐಕ್ಯನಾಗಿರಬೇಕೆಂಬುದಕ್ಕೆ   ಈಗಲೂ   ಕೆಂಬಾವಿಯಲ್ಲಿ ‘ಭೋಗೇಶ್ವರತೀರ್ಥವಿದ್ದು, ಅದರ ಮಧ್ಯದಲ್ಲಿ ಪೂರ್ವ-ಪಶ್ಚಿಮ ದಿಕ್ಕುಗಳೆರಡಕ್ಕ್ಕೂ ಒಂದೊಂದು ಲಿಂಗಗಳ್ಳುಳ್ಳ ಗುಡಿ (ದೇವಾಲಯ)ಗಳಿವೆ.   ಈ ಗುಡಿಗೆ ಹೋಗಲು ಸೊಲ್ಲಾಪುರ ಸಿದ್ಧರಾಮೇಶ್ವರ ಕೆರೆಗೆ ಸೇತುವೆ ಕಟ್ಟಿದಂತೆ ಸೇತುವೆ ಕಟ್ಟಿದ್ದಾರೆ.   ಈ ದೇವಾಲಯವನ್ನು ಸ್ಥಳೀಯ ಜನರು ‘ಭೋಗಣ್ಣನಗುಡಿ ಎಂದು ಕರೆಯುತ್ತಾರೆ.  ಈ ಶರಣ ಕೆಂಬಾವಿಯಲ್ಲಿಯೇ ಐಕ್ಯನಾದ ಎಂಬ ವಿವರ ಯಾವ ಕಾವ್ಯ-ಪುರಾಣಗಳಲ್ಲಿಲ್ಲ. ಆದರೆ, “ಸ್ಥಳಿಯ ಹಿರಿಯ ಜನರ ಅಭಿಪ್ರಾಯದಂತೆ ಈ ಊರಿನ ಮುಂದಿದ್ದ ಕೆಂಪು ಬಣ್ಣದ ನೀರಿನ ಬಾವಿ ಮತ್ತು ಇದರ ಪಕ್ಕದಲ್ಲಿ ಚಂದಿಮರಸ ಕಟ್ಟಿಸಿದ್ದಾನೆನ್ನಲಾದ ‘ಭೋಗಣ್ಣನ ಸಮಾಧಿ ಇದೆ. ಇದು ಶಿವಶರಣ ಭೋಗಣ್ಣನ ಸಮಾಧಿಯಾಗಿರಬೇಕು. ಒಂದು ವೇಳೆ ಭೋಗಣ್ಣನು ಮೊದಲೇ ದೇಹ ಬಿಟ್ಟಿದ್ದರೆ ಅವನ ಸಮಾಧಿಯನ್ನು ಗ್ರಾಮದ ಮುಂದಿದ್ದ ಕೆಂಪು ಬಣ್ಣದ ನೀರಿನ ಭಾವಿಯ ಪಕ್ಕದಲ್ಲಿ ಮಾಡಿ ದೇವಸ್ಥಾನ ಕಟ್ಟಿಸಿ ಭಾವಿಯನ್ನು ವಿಸ್ತರಿಸಿ ತೀರ್ಥದೋಪಾದಿಯಲ್ಲಿ ಚಂದಿಮರಸನೇ ನಿರ್ಮಿಸಿರಬೇಕು. ಮುಂದೆ ಚಂದಿಮರಸನು ದೇಹ ಬಿಟ್ಟನಂತರ ಭೋಗಣ್ಣನ ಗುಡಿಯ ಮುಂದೆ ಇವರ ಸಮಾಧಿಯನ್ನು ಗುಡಿಕಟ್ಟಿ ಮಾಡಿರಬೇಕೆಂದು ತಿಳಿಯುತ್ತದೆ.  ಇದಲ್ಲದೆ ಭೋಗಣ್ಣನ ಹೆಸರಿನ ಅನೇಕ ದೇವಾಲಯಗಳು ಬೇರೆ ಬೇರೆ ಕಡೆಗಳಿದ್ದು, ಅವು ಯವನರ ದಾಳಿಗೆ ತುತ್ತಾಗಿ ಅವುಗಳ ಅವಶೇಷಗಳು ಗ್ರಾಮದ ಕೋಟೆ ಕೊತ್ತಲುಗಳಲ್ಲಿ ಈಗಲೂ ಲಭಿಸುತ್ತವೆ. ಭೋಗಣ್ಣನ ಶಿವಭಕ್ತಿಗೆ ಶಿವನು ಕೆಂಬಾವಿಗೆ ಇಳಿದು ಬಂದಿರುವುದರಿಂದ “ಭೂಕೈಲಾಸವಾಸ ಭೋಗೇಶಂ ಪ್ರಭೋ ಹರಿಹರ  ಮಹಾದೇವ  ಎಂದು  ಉಗ್ಘಡಿಸುತ್ತಾರೆ.  ಹಾಗೂ “ಕೆಂಬಾವಿಯಂತಹ  ಊರಿಲ್ಲ. ನಂಬಿಯಣ್ಣನಂತಹ  ದೇವರಿಲ್ಲ,  ಭೋಗಣ್ಣನಂತಹ  ಶರಣನಿಲ್ಲ  ಎಂದು  ಜನರು  ಜಾಣ್ಣುಡಿಯನ್ನು ರಚಿಸಿರುತ್ತಾರೆ. ಈಗಲೂ ಸಹ ಭೋಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಕೊನೆಯಲ್ಲಿ ಸಹಸ್ರ ಕುಂಭಾಭಿಷೇಕ ಉತ್ಸವ ನಡೆಯುತ್ತವೆ.

     ಈ ಶರಣನ ಜೀವಿತದ ನಂತರದ ಕಾಲದಲ್ಲಿ ಈ ಭಾಗದ ಸುತ್ತ-ಮುತ್ತಲ ಪರಿಸರದಲ್ಲಿ ಭೋಗಣ್ಣನ ಹೆಸರಿನಲ್ಲಿಯೇ ಕುರುಹಾಗಿ ದೇವಾಲಯಗಳನ್ನು ಸ್ಥಾಪಿಸಲ್ಪಟಿರುವುದು ಕಂಡು ಬರುತ್ತದೆ. ಅಂತೆಯೇ ಕೆಂಬಾವಿಯಲ್ಲಿ ಭೋಗಣ್ಣನ ಸಮಾಧಿ ಇದೆ.   ಅದರಂತೆ ಗುಲಬರ್ಗ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಕೊಡ್ಲಿ ಗ್ರಾಮದಲ್ಲಿ, ರಾಜಾಪುರ ಗ್ರಾಮದಲ್ಲಿ ಹಾಗೂ ಬೀದರ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿ ಭೋಗೇಶ್ವರ ದೇವಾಲಯಗಳಿವೆ.  ಈ ಶರಣನ ಹೆಸರಿನಲ್ಲಿ (ಚಿಂಚೊಳ್ಳಿ ತಾಲೂಕಿನಲ್ಲಿ) ದೊಡ್ಡಲಿಂಗದಳ್ಳಿ, ಸಣ್ಣಲಿಂಗದಳ್ಳಿ ಎಂಬ ಗ್ರಾಮಗಳಿದ್ದು, ಈ ಹೆಸರಿನ ಜನರಿರುವುದು ಕಂಡು ಬರುತ್ತದೆ.  ಹೀಗಾಗಿ ಈ ಕೆಂಬಾವಿಯ ಸುತ್ತಮುತ್ತಲು ಶ್ರೇಷ್ಠ ಶಿವಶರಣರು ಜನಿಸಿ, ಜೀವಿಸಿದ ಗ್ರಾಮಗಳಿರುವುದು ಕಂಡುಬರುತ್ತದೆ.

ಕೆಂಬಾವಿ ಭೋಗಣ್ಣನು ವಚನಕಾರನೇ?: ಕೆಂಬಾವಿ  ಭೋಗಣ್ಣನು  ವಚನಗಳನ್ನು  ರಚಿಸಿದ್ದಾನೆಯೇ?    ಪ್ರಶ್ನೆ  ಇಂದು  ಬಿಡಿಸಲಾಗದ ಕಗ್ಗಂಟಾಗಿದೆ. ಕವಿಚರಿತೆಕಾರರು ಮತ್ತು ಹಳಕಟ್ಟಿಯವರು ಭೋಗಯ್ಯನೆಂಬ ವಚನಕಾರರನ್ನು ಹೆಸರಿಸಿ ಅವನ ವಚನಗಳ ಅಂಕಿತ ನಿಜಗುರುಭೋಗಸಂಗ ಎಂದಿರುವರು. ಎಲ್.ಬಸವರಾಜು, ಹಳಕಟ್ಟಿ ಮತ್ತು ಕವಿಚರಿತೆಕಾರರು  ಹೇಳುವ  `ನಿಜಗುಭೋಗಸಂಗ  ಎಂಬ  ಅಂಕಿತದಲ್ಲಿ  ವಚನಗಳನ್ನು  ರಚಿಸಿರುವ ಭೋಗಣ್ಣನು ಹರಿಹರನ ರಗಳೆಯಲ್ಲಿ ಬರುವ ಕೆಂಬಾವಿ ಭೋಗಣ್ಣನೇ ಇರಬೇಕೆಂದು ಸಂದೇಹಿಸಿರುವರು.

   ಹರಿಹರನ ಭೋಗಣ್ಣನನ್ನು ಕುರಿತ ರಗಳೆಯಲ್ಲಿ ಕೆಂಬಾವಿಯಲ್ಲಿ ಭೋಗನಾಥ ಎಂಬ ದೇವರು ಇರುವುದರ ಬಗೆಗೆ ಉಲ್ಲೇಖ ಇದೆ. ಭೋಗಣ್ಣನೆಂಬ ವಚನಕಾರನು ನಿಜಗುರುಭೋಗೇಶ್ವರ ಎಂಬ ಅಂಕಿತದಲ್ಲಿ ೨೨ವಚನಗಳನ್ನು ರಚಿಸಿದ್ದಾನೆ. ಈ ವಚನಗಳಲ್ಲಿಯ ಆಂತರಿಕ ಮಾಹಿತಿಗಳ ಪ್ರಕಾರ ಈ ಭೋಗಣ್ಣನುಬಸವಯುಗದ    ಕೊನೆಯವನಾಗಿ  ಕಂಡುಬರುತ್ತಾನೆ.    ಕೆಂಬಾವಿ      ಭೋಗಣ್ಣನು ಬಸವಪೂರ್ವಯುಗದವನಾಗಿದ್ದು  ಜೇಡರದಾಸಿಮಯ್ಯನ  ಸಮಕಾಲೀನ  ಮತ್ತು  ಬಸವಾದಿ  ಪ್ರಮಥರವಚನಗಳಲ್ಲಿ ಸ್ತುತಿಸಲ್ಪಟ್ಟವನಾಗಿದ್ದಾನೆ. ಕೆಂಬಾವಿ ಭೋಗಣ್ಣ ವಚನಗಳನ್ನು ಬರೆದಿರುವುದಿಲ್ಲ ಎಂಬುದಕ್ಕೆ ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ಸುಳುಹು ಸಿಗುತ್ತದೆ. ಈ ಕಾವ್ಯದಲ್ಲಿ ಎಲ್ಲಾ ಶರಣರ ಚರಿತ್ರೆಯನ್ನು ನಿರೂಪಿಸಿ ಕೊನೆಯಲ್ಲಿ ಅವರ ಇಷ್ಟದೈವವನ್ನು (ವಚನಗಳ ಅಂಕಿತ) ಕೊಡಲ್ಪಟ್ಟಿದೆ. ಆದರೆ ಕೆಂಬಾವಿ ಭೋಗಣ್ಣನನ್ನು ಕುರಿತು ಜೀವನ ಚರಿತ್ರೆ ಇದ್ದರೂ ಇಷ್ಟದೈವ(ವಚನಗಳ ಅಂಕಿತ)ದ ಉಲ್ಲೇಖ ಕಂಡು ಬರುವುದಿಲ್ಲ. ಕೃತಿಯಲ್ಲಿ ಭೋಗಣ್ಣನನ್ನು ಕುರಿತ ಕೊನೆಯ ಭಾಗದಲ್ಲಿ `ಪುರವ ಮುನ್ನಿನಂತೆ ರಚಿಸಿವಿಪ್ರರಿಗೆ ಅಭಯವಂಕೊಟ್ಟು ಶಿವಭಕ್ತಿಯ ಮಾಡಿ ಭೋಗಣ್ಣನು ಲಿಂಗದೊಳಡಗಿದನು ‘ ಎಂಬ ವಿವರ ಇದೆಯೇ  ಹೊರತು  ʻಶಿವಭಕ್ತಿಯಾಚಾರವನಾಚರಿಸಿ  ಗುರುಕೃಪೆಯಿಂದ  ನಿಜವನರಿದು  ನಿಜಗುರುಭೋಗಸಂಗನೆಂಬ ತಮ್ಮಿಷ್ಟಲಿಂಗದಲ್ಲಿ ಚರಿಸಾಡುತ್ತಿರ್ದು ಎಂಬ ವಿವರ ಇಲ್ಲ. ಹೀಗಾಗಿ ಸದ್ಯಕ್ಕೆ ಕೆಂಬಾವಿಭೋಗಣ್ಣನು  `ನಿಜಗುರುಭೋಗಸಂಗ  ಅಂಕಿತದಲ್ಲಿ  ವಚನಗಳನ್ನು  ರಚಿಸಿರುವ  ಭೋಗಣ್ಣನಿಗಿಂತ ಬೇರೆಯವನು ಎಂದು ಹೇಳಬಹುದಾಗಿದೆ. ಈತನು ವಚನಗಳನ್ನು ರಚಿಸಿದ್ದಾನೆಯೇ ಎಂಬುದಕ್ಕೆ ಖಚಿತ ಆಧಾರಗಳು ದೊರೆಯುವವರೆಗೂ ಏನನ್ನೂ ಹೇಳುವಂತಿಲ್ಲ.

 ಶಿವಶರಣರ ಭಕ್ತಿ ಚಳುವಳಿಯ ಆಂದೋಲನದಲ್ಲಿ ಕೆಂಬಾವಿ ಭೋಗಣ್ಣನ ಸ್ಥಾನ:

       ಕನ್ನಡನಾಡಿನ ಹನ್ನೆರಡನೇ ಶತಮಾನದ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಕನ್ನಡ ನಾಡಿನ ಸಮಾಜೋಧಾರ್ಮಿಕ ಚಳುವಳಿಯಲ್ಲಿ ಶಿವಶರಣರ ಆಂದೋಲನವು ಗಮನಾರ್ಹವಾದುದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಸಾಮಾನ್ಯ  ಜನಸ್ತರವನ್ನು  ಧಾರ್ಮಿಕ  ಪ್ರಜ್ಞೆಯ  ಪರಿಧಿಯೊಳಗೆ  ಒಳಪಡಿಸಿಕೊಳ್ಳಬೇಕು  ಎಂಬುದು ಈ ಭಕ್ತಿಪಂಥದ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನ ಚಳುವಳಿಯು ಧಾರ್ಮಿಕ ವ್ಯಕ್ತಿಗಳ ನೂತನ ಪರಂಪರೆಯನ್ನು ಹುಟ್ಟು ಹಾಕಿದ್ದಲ್ಲದೆ ಧಾರ್ಮಿಕ ವ್ಯಕ್ತಿ ಹೇಳುವ ಬದುಕುವ ಮಾರ್ಗವು ವೈಯಕ್ತಿಕವಾಗಿರುವುದರ ಜೊತೆಗೆ ಭಕ್ತಿ ಚಳುವಳಿಯ ಅನುಭಾವಿಕ ಮನಃಸ್ಥಿತಿಯ ಆಶಯದ ಪ್ರಾತಿನಿಧಿಕವೂ ಆಗಿದೆ. ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತಶಾಹಿಯ ಭೌತಿಕ ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ ಹಂತವನ್ನು ತಲುಪಿದ್ದನ್ನು ಗುರುತಿಸ ಬಹುದಾಗಿದೆ. ಬದುಕಿನ ಬಗೆಗಿನವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರಹೊಮ್ಮಿದವುಗಳಾಗಿವೆ.  ಶಿವಪಾರಮ್ಯವನ್ನು   ಮೆರೆದು   ಶಿವ   ಸಂಸ್ಕೃತಿಯ   ಪರವಾಗಿ   ಹೋರಾಡಿ ವೀರಮಾಹೇಶ್ವರ ನಿಷ್ಠೆಯನ್ನು ತಾಳಿದ ಹಾಗೂ ಹನ್ನೆರಡನೆಯ ಶತಮಾನದ ಉತ್ತರಾರ್ಧದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಚಳುವಳಿಗೆ ಪ್ರೇರಣೆ-ಪ್ರಚೋದನೆಗಳನ್ನು ನೀಡಿದ ಶಿವಶರಣರುಗಳು ಬಸವ ಪೂರ್ವಯುಗದಲ್ಲಿಯೇ ಕಂಡು ಬರುತ್ತಾರೆ. ಬಸವ ಪೂರ್ವಯುಗದಲ್ಲಿ ವರ್ಣ ಜಾತಿ ಕುಲಗಳನಿರಾಕರಿಸಿ  ಯಾವುದೇ  ಕುಲಜಾತಿಯವನಾಗಲಿ  ಶಿವಲಿಂಗವ  ಧರಿಸಿದ  ವ್ಯಕ್ತಿಯನ್ನು  ಜಂಗಮನೆಂದು ಸತ್ಕರಿಸಿದ. ರಾಜನನ್ನೇ ಶಿವನಿಷ್ಠೆಯ  ಮೂಲಕ  ತಮ್ಮಲ್ಲಿಗೆ  ಬರಮಾಡಿಕೊಂಡಂತಹ  ಚಟುವಟಿಕೆಗಳನ್ನು ನಡೆಸಿದ ವ್ಯಕ್ತಿಗಳು ಆಗಿರುತ್ತಾರೆ. ಈ ಶರಣರ ಚಟುವಟಿಕೆಗಳು ಆ ಯುಗಧರ್ಮದ ಸಮಾಜೋಧಾರ್ಮಿಕ ಆಂದೋಲನದ ಪ್ರತೀಕಗಳಾಗಿರುವುದರ ಜೊತೆಗೆ ಭಕ್ತಿ ಪಾರಮ್ಯದ ಚಟುವಟಿಕೆಗಳು ಆಗಿವೆ. ಈ ಯುಗದಶರಣರು  ವ್ಯಕ್ತಪಡಿಸಿರುವ  ವೀರಮಾಹೇಶ್ವರ  ನಿಷ್ಠೆಯು  ಧಾರ್ಮಿಕ  ನೆಲೆಗಟ್ಟಿನ  ದೃಷ್ಟಿಯಿಂದ  ‘ಮತಸಂಘರ್ಷದ   ಪ್ರತೀಕಗಳಾಗಿರುವುದರ   ಜೊತೆಗೆ   ಸಾಮಾಜಿಕ   ನೆಲೆಯಲಿ   ವರ್ಣ   ಸಂಘರ್ಷದ ಪ್ರತೀಕಗಳಾಗಿರುವುದು ಮಹತ್ತರ ಸಂಗತಿಯಾಗಿದೆ. ಈ ರೀತಿಯ ವೀರಮಾಹೇಶ್ವರ ನಿಷ್ಠೆಯು ಬಸವಪೂರ್ವ ಯುಗದ ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ತೆಲಗು ಜೊಮ್ಮಯ್ಯ, ಕೋವೂರಬ್ರಹ್ಮಯ್ಯರನ್ನು ಕುರಿತ ಕಾವ್ಯ ಪುರಾಣ ಶಾಸನಗಳಿಂದ ತಿಳಿದು ಬರುತ್ತದೆ. ಕೆಂಬಾವಿಭೊಗಣ್ಣನು  ಹೊಲೆಯ ವೇಷದ ಶಿವನನ್ನು ತನ್ನ ಮನೆಗೆ ಆದರಿಸಿದ ಪರಿಣಾಮ ವಿಪ್ರಜನ ಮತ್ತು ರಾಜರ ಕೋಪಕ್ಕೆ ತುತ್ತಾದ ವಿವರ ಕಂಡುಬರುತ್ತದೆ. ಭೋಗಣ್ಣನ ಈ ಚರಿತ್ರೆಯಲ್ಲಿ ರಾಜ-ಪ್ರಜೆ, ಮೇಲ್ಜಾತಿ-ಕೆಳಜಾತಿ, ಬ್ರಾಹ್ಮಣ-ಹೊಲೆಯ,  ಸ್ಪೃಶ್ಯ-ಅಸ್ಪೃಶ್ಯ,  ಮಡಿ-ಮೈಲಿಗೆಗಳನ್ನು  ಭಕ್ತಿಯ  ನೆಪದಲ್ಲಿ ಪ್ರತಿಭಟಿಸಿದ ಆಶಯವನ್ನು ಕಾಣಬಹುದಾಗಿದೆ. ವೀರಶೈವ ಚಳುವಳಿಗೆ ಪ್ರಚೋದನೆ ನೀಡಿದ ಕೆಂಬಾವಿಭೋಗಣ್ಣನ ಕಾಲದಲ್ಲಿ ನಡೆದ ಚಟುವಟಿಕೆಗಳಲ್ಲಿ ಕಂಡುಬರುವ ಪ್ರಮುಖ ಅಂಶ ಎಂದರೆ ಅಸ್ಪೃಶ್ಯರ ಪರವಾಗಿ ಹೋರಾಡಿದ್ದು, ರಾಜತ್ವ ಮತ್ತು ಸ್ಪೃಶ್ಯರನ್ನು ಪ್ರತಿಭಟಿಸಿದ್ದು, ಜಾತಿಗಳಲ್ಲಿ ಶ್ರೇಷ್ಠ ಎನಿಸಿದ್ದ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಅಪಮೌಲ್ಯೀಕರಿಸಿದ್ದು, ಜಾತಿಶ್ರೇಣಿಯಲ್ಲಿ ಅತ್ಯಂತ ಕೆಳಸ್ಥಿತಿಯಲ್ಲಿದ್ದ ಅಸ್ಪೃಶ್ಯನು ಸ್ಪೃಶ್ಯನಿಗಿಂತ ಕೀಳಿಲ್ಲ ಎಂಬುದನ್ನು ಸಾರಿದುದರ ಆಶಯವನ್ನು ಗುರುತಿಸಬಹುದಾಗಿದೆ. ಕೆಂಬಾವಿ ಭೋಗಣ್ಣನ ಚರಿತ್ರೆಯಲ್ಲಿ ಕಂಡು ಬರುವ ಘಟನೆ ಆ ಕಾಲದ ಪರಿಸ್ಥಿತಿಗೆ ರನ್ನದ ಕನ್ನಡಿಯಾಗಿದೆ. ಭೋಗಣ್ಣನ ಚರಿತ್ರೆಯು ಸೂಚ್ಯವಾಗಿ ಜಾತಿ ಸಮಸ್ಯೆಯನ್ನು ಪ್ರಸ್ತಾಪಿಸಿದೆ. ಭೋಗಣ್ಣನ ಕಥೆಯಲ್ಲಿ ಜಂಗಮನಿಷ್ಠೆಯೇ ಪ್ರಮುಖ ಎಂದೆನಿಸಿದರೂ “ಹೊಲೆಯ ವೇಷದಿಂದ ಬಂದ ಶಿವನನ್ನು ಈತನು ಮನೆಗೆ ಕರೆದೊಯ್ದು ಉಪಚರಿಸಿದ ಪ್ರಸಂಗದಿಂದ ಉದ್ಭವಿಸಿದ ವಿಪ್ರಕುಲದ ಪ್ರತಿಭಟನೆ ಮತ್ತು ಘರ್ಷಣೆಗಳು ಅದಕ್ಕೆ ವಿರುದ್ಧವಾಗಿ ವ್ಯಕ್ತವಾಗುವ ಭೋಗಣ್ಣನ ನಿಲುವುಗಳು ಆ ಯುಗ ಧರ್ಮದ ವರ್ಣ ಸಂಘರ್ಷದ ದಾಖಲೆಗಳಾಗಿವೆ. ಬಸವಾದಿ ವಚನಕಾರರು ಎತ್ತಿಹಿಡಿದ ಕುಲದ ಸಂಗತಿಯು ಭೋಗಣ್ಣನ ಚರಿತ್ರೆಯಲ್ಲಿ ಪ್ರಮುಖ ವಿಷಯವಾಗಿರುವುದು ಮಹತ್ತರವಾದ ಸಂಗತಿಯಾಗಿದೆ. ಶ್ವಪಚರ ಅಥವಾ ಅಸ್ಪೃಶ್ಯರೆಂಬ ವರ್ಗವೊಂದರ ಬಗೆಗೆ ಶರಣಧರ್ಮ ತಾಳಿದ ನಿಲುವಿಗೂ ಪರಂಪರಾಗತವಾಗಿ ಅಸ್ಪೃಶ್ಯರನ್ನು ಕೀಳೆಂದು ಕಂಡ ಉಚ್ಛವರ್ಣದವರ ನಿಲುವಿಗೂ ಒದಗಿದ ಘರ್ಷಣೆಯೇ ಕೆಂಬಾವಿ ಭೋಗಣ್ಣನ ಕಥೆಯ ಮೂಲ ಸೂತ್ರವಾಗಿದೆ. ಕೆಂಬಾವಿ ಭೋಗಣ್ಣನ ಚರಿತ್ರೆಯಲ್ಲಿ ಕಂಡುಬರುವ ಪ್ರಮುಖ ಅಂಶವಾದ ಘರ್ಷಣೆಯು ಆ ಯುಗ ಧರ್ಮದಲ್ಲಿಯ ಸಾಮಾಜಿಕ ನೆಲೆಯಲ್ಲಿ ಸಂಭವಿಸಿದ ಘರ್ಷಣೆಯಾಗಿದ್ದು ಅದು ವರ್ಣ ಸಂಘರ್ಷದ ದಾಖಲೆಯಾಗಿರುವುದರ ಜೊತೆಗೆ ಶಿವಭಕ್ತಿಯ ಮೌಲ್ಯವನ್ನು ಎತ್ತಿಹಿಡಿದಿದೆ. ಅಲ್ಲದೆ ಭೋಗಣ್ಣನ ಕಥೆಯಲ್ಲಿ ಒಂದು ಕಡೆ ರಾಜ ಮತ್ತು ಅವನ ಸುತ್ತಮುತ್ತಲಿನ ಬ್ರಾಹ್ಮಣವರ್ಗ, ಇನ್ನೊಂದು ಕಡೆ ಶಿವಭಕ್ತಿ ಹಾಗೂ ಅವನ ಸುತ್ತಮುತ್ತಲಿನ ಅಸ್ಪೃಶ್ಯ ವರ್ಗಗಳನ್ನು ಕಾಣಬಹುದಾಗಿದೆ. ಈ  ಎರಡು  ಪಕ್ಷಗಳ  ನಡುವೆ  ನಡೆಯುವ  ಹೋರಾಟವು  ಹನ್ನೆರಡನೇ  ಶತಮಾನದ  ಕರ್ನಾಟಕದ ಜನಜೀವನದ ವೈಲಕ್ಷಣ, ಜಡ ಸಂಪ್ರದಾಯ ಮತ್ತು ಮನುಷ್ಯತ್ವಗಳಿಗೆ ಸಂಕೇತವಾಗಿದೆ. ಶಿವನಿಷ್ಠೆಯುಳ್ಳ  ಶಿವಭಕ್ತನಾದ    ಶರಣನು  ತನ್ನ  ಜೀವನದುದ್ದಕ್ಕೂ  ರಾಜ  ಮತ್ತು  ಆತನ ಸುತ್ತಮುತ್ತಲಿರುವ   ಬ್ರಾಹ್ಮಣ ವರ್ಗಕ್ಕೂ   ಪ್ರಶ್ನಿಸುತ್ತ   ಅಸ್ಪೃಶ್ಯ   ವರ್ಗ   ಹಾಗೂ   ಲಿಂಗವಂತರನ್ನು ಶಿವಭಕ್ತರನ್ನಾಗಿಸುತ್ತ   ಶ್ರಮಿಸಿದ್ದಾನೆ.   ಈ ಶರಣನ ದೃಷ್ಠಿಯಲ್ಲಿ ಯಾವ ಜಾತಿಗಳಿಲ್ಲ.   ಶಿವಲಿಂಗ ಧರಿಸದವರು ಶೂದ್ರರು. ಶಿವಲಿಂಗವ ಧರಿಸಿದವರು ಶಿವಭಕ್ತರು ಎನ್ನುವ ತಾತ್ವಿಕತೆ ಈತನದಾಗಿದೆ. ಹೀಗಾಗಿ ಈ ಶರಣ ರಾಜ-ಪ್ರಜೆ, ಮೇಲ್ಜಾತಿ-ಕೀಳಜಾತಿ, ಬ್ರಾಹ್ಮಣ-ಹೊಲೆಯ, ಸ್ಪೃಶ್ಯ-ಅಸ್ಪೃಶ್ಯ, ಮಡಿ-ಮೈಲಿಗೆ ಈ ದ್ವಂದ್ವಗಳಿಗೆ ಕೊಡಲು ಪೆಟ್ಟು ಹಾಕಿ ಸರ್ವರು ಸಮಾನರು ಎಂಬ ಏಕತಾ ಮನೋಭಾವನೆ  ಸರ್ವರಲ್ಲೂ ಬರಲು ಪವಾಡಗಳನ್ನು ಮೆರೆದಿದ್ದಾನೆ. ಹೀಗಾಗಿ ಈ ಶರಣ ಶಿವಭಕ್ತನಾಗಿದ್ದಂತೆ ಸಮಾಜ ಚಿಂತಕನೂ ಆಗಿದ್ದಾನೆಂದು ಹೇಳಲು ಆತನ ಬದುಕಿನಲ್ಲಿ ಘಟಿಸಿರುವ ಪವಾಡಗಳೇ ಸಾಕ್ಷಿಯಾಗಿವೆ.

       ಒಟ್ಟಾರೆ ಕೆಂಬಾವಿಭೋಗಣ್ಣನ ಕಥೆಯಿಂದ ವ್ಯಕ್ತವಾಗುವ ಅಂಶವೆಂದರೆ ಶಿವಭಕ್ತಿಗೆ ಮೇಲು-ಕೀಳು,ಉಚ್ಚ-ನೀಚಗಳೆಂಬ ಜಾತಿಭೇದಗಳು ಇಲ್ಲದೆ ಇರುವುದು. ಯಾವ ಕುಲದವನಾಗಿದ್ದರೂ ಶಿವನ ಅನುಗ್ರಹಕ್ಕೆಪಾತ್ರನಾದರೆ ಅವನೆ ನಿಜವಾದ ಕುಲೀನ ಆಗಿರುವುದು. ಈ ಪ್ರತಿಪಾದನೆಯು ಭಕ್ತಿ ಪಂಥದ ಪ್ರಮುಖ ಅಶಯವಾಗಿದೆ.  ಕೆಂಬಾವಿ ಭೋಗಣ್ಣನಂತಹ ಶರಣರ ಕಾಲದಲ್ಲಿ ನಡೆದ ಸಮಾಜೋಧಾರ್ಮಿಕ ಆಂದೋಲನವು ಅಸ್ಪೃಶ್ಯರನ್ನು ಶಿವಭಕ್ತರನ್ನಾಗಿ ಪರಿವರ್ತಿಸಿದ್ದಲ್ಲದೆ ಅವರಲ್ಲಿ ಸಾಮಾಜಿಕ ಸ್ಥಾನವನ್ನು ಕಲ್ಪಿಸಿಕೊಟ್ಟಿತು. ಭೋಗಣ್ಣನು ತಾನು ಶಿವಪಾರಮ್ಯವನ್ನು ಸಾಧಿಸಿದ ಸ್ಥಳದ ಮೂಲಕ ವೀರಶೈವ ಕಾವ್ಯ-ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದಾನೆ. ಈ ಶರಣನ ಮತಪ್ರಸಾರ ಕ್ರಿಯೆಗಳು ವೀರಶೈವಧರ್ಮ ಪ್ರಾದುರ್ಭಾವಗೊಳ್ಳುವ ಕಾಲಕ್ಕಿಂತ ತುಸು ಪೂರ್ವದಲ್ಲಿ ನಡೆದವುಗಳಾಗಿವೆ. ಈತನು ಹನ್ನೆರಡನೇ ಶತಮಾನದ ಪ್ರಾರಂಭ ಕಾಲದಲ್ಲಿಯೇ ದಲಿತರಿಗಾಗಿ ಹೋರಾಟ ಮಾಡಿ, ಇಡೀ ಪ್ರಭುತ್ವವನ್ನೇ ಎದುರು ಹಾಕಿಕೊಂಡು, ದಲಿತೋದ್ಧಾರಕರಾಗಿ ಮೆರೆದಂತಹ ಮಹಾನ್ ಶರಣ ಎಂದರೂ ತಪ್ಪಾಗಲಾರದು.

 

ಗ್ರಂಥ ಋಣ

೧.ಕೆಂಬಾವಿ ಭೋಗಣ್ಣನ ಸಾಂಗತ್ಯ (ಸಂ: ಎಸ್.ವಿದ್ಯಾಶಂಕರ ಮತ್ತು ಎಸ್.ಶಿವಣ್ಣ)

 ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೮

೧.ಬಸವೇಶ್ವರ ಸಮಕಾಲೀನರು

ಬಸವ ಸಮಿತಿ, ಬೆಂಗಳೂರು. ೦೧

ನಾಲ್ಕನೆಯ ಮುದ್ರಣ, ೨೦೦೭

೨. ಸಿ.ನಾಗಭೂಷಣ: ಕೆಂಬಾವಿ ಭೋಗಣ್ಣ

ಪ್ರಚಾರೋಪನ್ಯಾಸಮಾಲೆ, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ ೧೯೯೬

೩. ಸಿ.ನಾಗಭೂಷಣ: ಶಿವಶರಣರ ಕ್ಷೇತ್ರಗಳು

(ಬಸವಪೂರ್ವ ಹಾಗೂ ಬಸವ ಸಮಕಾಲೀನ, ಬಸವೋತ್ತರ ಕಾಲದ ಶರಣರು)

ಶ್ರೀ.ಸಿದ್ಧಗಂಗಾ ಪ್ರಕಾಶನ, ತುಮಕೂರು.೨೦೦೮

೪.ಎಸ್.ವಿದ್ಯಾಶಂಕರ, ವೀರಶೈವ ಸಾಹಿತ್ಯ ಚರಿತ್ರೆ ಸಂ.೧

 (ವಚನ ಸಾಹಿತ್ಯ) ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೧೩

೫.   ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ

     ( ಪ್ರ.ಸಂ. ಹಾ.ಮಾ.ನಾಯಕ) ಸಂ.೪

    ಪ್ರಸಾರಾಂಗ, ಮೈಸೂರುವಿಶ್ವವಿದ್ಯಾಲಯ, ಮೈಸೂರು.೧೯೭೭) 

                                       

 

 

              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು                                                          ಡಾ. ಸಿ.ನಾಗಭೂಷಣ    ...