ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಆಗಸ್ಟ್ 18, 2025

           

                                               ಅಲಕ್ಷಿತ ವಚನಕಾರ  ಕೀಲಾರದ ಭೀಮಣ್ಣ 

                                    ಡಾ.ಸಿ.ನಾಗಭೂಷಣ                           ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು. ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ.  ಸಾಹಿತಿ ಅಥವಾ ಕವಿಯಾಗಬೇಕಾದರೆ ವಿದ್ವಾಂಸನಾಗಿರಬೇಕಾಗಿಲ್ಲ. ಅರ್ಥವಾಗದ ಆಡಂಬರ ಭಾಷೆಯಲ್ಲಿ ಬರೆಯ ಬೇಕಾಗಿಲ್ಲ. ಅಂತರಂಗದನುಭವಗಳನ್ನು ತುಮುಲಗಳನ್ನು ನೇರವಾಗಿ ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲುದು ಎಂಬುದನ್ನು ತೋರಿಸಿ ಕೊಟ್ಟರು. ಜನಸಾಮಾನ್ಯರ ಆಡುಮಾತನ್ನೇ ಅಂತರಂಗದ ಸೂಕ್ಷ್ಮವಾದ,ನವುರಾದ ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಲ್ಲದೆ, ಗಹನವಾದ ಶಾಸ್ತ್ರವಿಚಾರಗಳಿಗೂ ನಿಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ ಮಾಧ್ಯಮವಾಗಿಸಿದರು. ಸ್ತ್ರೀ-ಪುರುಷರ ನಡುವಿನ ಅಂತರವನ್ನು ನಿರಾಕರಿಸಿ ವರ್ಣಭೇದ, ವರ್ಗ ಭೇದಗಳನ್ನು ಪ್ರತಿಭಟಿಸಿ ವಿಪ್ರ ಹಾಗೂ ಅಂತ್ಯಜರನ್ನು ಒಂದೇ ಎನ್ನುವ  ಸಮಾನತೆಯ ಚೌಕಟ್ಟಿನಲ್ಲಿರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಚನ ಚಳುವಳಿಯು ಒದಗಿಸಿ ಕೊಟ್ಟಿತು.  ಕನ್ನಡನಾಡಿನ ಹನ್ನೆರಡನೇ ಶತಮಾನದ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಶಿವಶರಣರ ಆಂದೋಲನದ ನಿಮಿತ್ತವಾಗಿ ರೂಪುಗೊಂಡ ವಚನ ಸಾಹಿತ್ಯವು ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಚಿಂತನೆಯ ಪ್ರತಿಪಾದನೆಯೂ ಆಗಿದೆ. ವಚನಕಾರರು  ಶಿವಭಕ್ತರೂ ಹೌದು, ಸಮಾಜಚಿಂತಕರೂ ಹೌದು. ಏಕೆಂದರೆ ವಚನಕಾರರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಕೆಲವು ಘಟನೆಗಳು ಆ ಕಾಲದ ಸಾಮಾಜಿಕ ದಾಖಲೆಗಳಾಗಿಯೂ ಕಂಡು ಬರುತ್ತವೆ. ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದ್ದು ಭಾರತೀಯ ಭಕ್ತಿಪಂಥದ ಒಂದಂಗವಾದ ವಚನಚಳುವಳಿಯಲ್ಲೇ ಎಂಬುದು ಗಮನಾರ್ಹ ಅಂಶವಾಗಿದೆ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟಗೊಂಡಿದೆ. ಸಾಮಾನ್ಯ ಜನಸ್ತರವನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳ ಬೇಕು ಎಂಬುದು ಭಕ್ತಿಪಂಥದ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನ ಚಳುವಳಿಯು ಧಾರ್ಮಿಕ ವ್ಯಕ್ತಿಗಳ ನೂತನ ಪರಂಪರೆಯನ್ನು ಹುಟ್ಟು ಹಾಕಿದ್ದಲ್ಲದೆ ಧಾರ್ಮಿಕ ವ್ಯಕ್ತಿ ಹೇಳುವ ಬದುಕುವ ಮಾರ್ಗವು ವೈಯಕ್ತಿಕವಾಗಿರುವುದರ ಜೊತೆಗೆ ಭಕ್ತಿಚಳುವಳಿಯ ಅನುಭಾವಿಕ ಮನಃಸ್ತಿತಿಯ ಆಶಯದ ಪ್ರಾತಿನಿಧಕವೂ ಆಗಿದೆ. ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ವಚನ ಚಳುವಳಿಯು ಪಟ್ಟಭದ್ರ ಹಿತಾಸಕ್ತಿಯ ಮೂಲ ಅಂಶಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ಸೂಚನೆಯೊಂದಿಗೆ ಭಾಷೆಯ ಬಳಕೆಯಲ್ಲಿ ದೇಸಿ ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ವಚನ ಚಳುವಳಿಯ ಮುಖ್ಯ ಲಕ್ಷಣ ಎಂದರೆ ಅದರ ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಟ್ಟಿದ್ದು.

    ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಉತ್ಪ್ರೇಕ್ಷೆ ಇಲ್ಲ. ಬಸವಾದಿ ಪ್ರಮಥರ ವಚನಗಳ ರಚನೆಯು ಅವರಲ್ಲಿ ಮೂಡಿದ ಸಾಮಾಜಿಕ ಅರಿವಿನ ಸಂಕೇತ ಎನ್ನುವ ಕಾರಣದಿಂದ ಮಹತ್ವವನ್ನು ಪಡೆಯುತ್ತವೆ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಬಸವಣ್ಣನ ನೇತೃತ್ವದಲ್ಲಿ ಎಲ್ಲಾ ಶರಣರೂ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು ಅಭಿವ್ಯಕ್ತ ಪಡಿಸುವ ಧೈರ್ಯ ತೋರಿದ್ದು ಮುಖ್ಯ ಎನಿಸುತ್ತದೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು.         

   ವಚನ ಚಳುವಳಿಯು ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಬಯಸಿತು. ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜವನ್ನು ನಿರ್ಮಿಸುವ ಉದ್ದೇಶ್ಯವನ್ನು ಹೊಂದಿತ್ತು. ಪುರುಷಾರ್ಥಗಳನ್ನು ಬಸವಣ್ಣನವರು ವರ್ಣವ್ಯವಸ್ಥೆಯ ಹಿನ್ನೆಲೆಯಲ್ಲಿ ಆರ್ಥೈಸದೆ ಸಮಾನತೆಯ ಹಿನ್ನೆಲೆಯಲ್ಲಿ ಅರ್ಥೈಸಿದರು. ಆ ಮೌಲ್ಯಗಳ ಮಹತ್ವವನ್ನು ಸಾರ್ವತ್ರಿಕಗೊಳಿಸಿದರು. ಲಿಂಗ-ವರ್ಣ-ವರ್ಗಗಳ ಭೇದವನ್ನಳಿಸಿ, ಸ್ವಾತಂತ್ರತೆ-ಸಮಾನತೆ-ಮಾನವೀಯತೆಯನ್ನು ಅರಳಿಸುವಲ್ಲಿ, ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಸುವಲ್ಲಿ ವಚನ ಚಳುವಳಿ ಗಮನೀಯ ಪಾತ್ರ ವಹಿಸಿದೆ. ವೃತ್ತಿಸಂಬಂಧಿ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯುವ ಪ್ರಯತ್ನವನ್ನು ಮಾಡಿದರು.ಕೆಳವರ್ಗದವರಿಗೆ ನೈತಿಕ ಬೆಂಬಲವನ್ನು ನೀಡುವುದರ ಮೂಲಕ  ಮೇಲ್ಮುಖ ಚಲನೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟರು. ಸಾಮಾಜಿಕ ನೆಲೆಯ ಬೇರೆ ಬೇರೆ ಸ್ತರಗಳಿಂದ ಬಂದ ಶರಣರೆಲ್ಲರೂ ವೀರಶೈವಮತವನ್ನು ಸ್ವೀಕರಿಸಿ ಶಿವನನ್ನು ತಮ್ಮ ಇಷ್ಟದೈವವೆಂದು ಸ್ವೀಕರಿಸಿದವರಾಗಿದ್ದಾರೆ. ವೀರಶೈವಧರ್ಮದ ಚೌಕಟ್ಟಿಗೆ ಇವರು ಬಂದದ್ದರಿಂದ ಹುಟ್ಟಿನಿಂದ ಬಂದ ಅಸ್ಪøಶ್ಯತೆಯನ್ನು ನೀಗಿಕೊಂಡು  ಕಾಯಕ ತತ್ವದ ಹಿನ್ನೆಲೆಯಲ್ಲಿ ಸಮಾನತೆಯ ಗೌರವ ಪಡೆದರು. ಬಸವಾದಿ ಪ್ರಮಥರು ನಡೆಸಿದ ಭಕ್ತಿಚಳುವಳಿಯು ಹರಿದು ಹಂಚಿಹೋಗಿದ್ದ ಸಮಾಜವನ್ನು ಸಮಾನತೆಯ ಆಧಾರದ ಮೇಲೆ ಒಂದುಗೂಡಿಸಿತು. ಭಿನ್ನ ಭಿನ್ನಕಾಯಕದ ಮನೋಧರ್ಮದ ವ್ಯಕ್ತಿಗಳು ಒಂದೆಡೆ ಸಂಘಟಿತರಾಗಿ ವಿಚಾರ ವಿಚಾರವಿನಿಮಯ ನಡೆಸಿದುದು, ತಮ್ಮ ಅಂದಂದಿನ  ಅನುಭವ ಅನುಭಾವಗಳಿಗೆ ವಚನಗಳ ಮೂಲಕ ಅಭಿವ್ಯಕ್ತಿಸಿದುದು ಮಹತ್ತರವಾದ ವಿಷಯವಾಗಿದೆ. ಕೆಳವರ್ಗದವರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೆತ್ತುವ ಕ್ರಿಯೆ ಒಂದು ಚಳುವಳಿಯ ರೂಪದಲ್ಲಿ ವ್ಯಕ್ತವಾದಾಗ ಶತಶತಮಾನಗಳಿಂದ ದಾಸ್ಯಭಾವವನ್ನು ಬೆಳೆಸಿಕೊಂಡಿದ್ದ ಜನತೆ ತಮ್ಮ ಜಡತ್ವವನ್ನು ಕೊಡವಿಕೊಂಡು ಮೇಲೆದ್ದಿತು. ಹಲವು ಮತಗಳಿಗೆ ಸೇರಿದ್ದ ಭಿನ್ನ ಭಿನ್ನ ವೃತ್ತಿಗಳಲ್ಲಿ ತೊಡಗಿದ್ದ, ಒಂದೇಮನೋಧರ್ಮವಲ್ಲದ ಜನರೆಲ್ಲರೂ ಲಿಂಗಭೇದವಿಲ್ಲದೆ ಒಂದೆಡೆ ಸೇರಿ ವಚನ ರಚನೆಯ ಸಾಮೂಹಿಕ ಕ್ರಿಯೆಯಲ್ಲಿ ಭಾಗಿಯಾದುದು ಗಮನಾರ್ಹವಾದುದಾಗಿದೆ. ವಚನ ಚಳುವಳಿ ನಡೆಸ ಹೊರಟ ಸಾಮಾಜಿಕ ಹಾಗೂ ಧಾರ್ಮಿಕ ಚಳುವಳಿಯು ವಿವಿಧ ಸ್ತರದ ಜನತೆಯಲ್ಲಿ ಧೈರ್ಯ ತುಂಬಿ, ಅಚಲವಾದ ಆತ್ಮವಿಶ್ವಾಸವನ್ನು ಮೂಡಿಸಿತು. ತಮಗೆ ತಿಳಿದ ಅಥವಾ ತಾವು ಕೇಳಿದ ಆಧ್ಯಾತ್ಮವನ್ನು ಸರಳವಾದ ಆಡುಭಾಷೆಯಲ್ಲಿ ಹೇಳ ಬಹುದೆಂದು ಒಳಗಿನ ಪ್ರೇರಣೆಯಾಗಿ ಅವರು ವಚನ ರಚನೆಗೆ ತೊಡಗಿದರು. ಅನುಭವ ಇಲ್ಲವೆ ಅನುಭಾವ ಮಾತಿನ ಮೂಲಕ  ಅಭಿವ್ಯಕ್ತಿ ಕಂಡುಕೊಳ್ಳ ಹೊರಟಾಗ ಗಾದೆ,ಲೋಕೋಕ್ತಿ, ದೃಷ್ಟಾಂತ, ಜನಬಳಕೆಯ ಅರ್ಥಪೂರ್ಣ ನುಡಿಗಟ್ಟುಗಳು ಅವರ ಆಡುಭಾಷೆಗೆ ಮೆರುಗನ್ನು ಕಳೆಯನ್ನು ಜೀವಂತಿಕೆಯನ್ನು ತಂದುಕೊಟ್ಟವು. ವಚನ ರಚನೆಯ ಮೂಲಕ ತಮ್ಮ ಅನುಭವಗಳನ್ನು ವ್ಯಂಜಿಸಲು ಸಾಧ್ಯವೆಂಬ ಭಾವ ಸ್ಫುರಿಸಿ ಕ್ಷಣವೇ ಭಿನ್ನ ಭಿನ್ನ ಮನೋಭಾವದ ಜನ ಒಬ್ಬರು ಮತ್ತೊಬ್ಬರಿಂದ ಸ್ಫೂರ್ತಿ ಪಡೆದು ಬರೆಯಲು ತೊಡಗಿದರು. ಸಾಮಾನ್ಯ ಜನ ತಮಗೆ ತಿಳಿದ ಆಧ್ಯಾತ್ಮದ ಅನುಭವವನ್ನು ತಮ್ಮ ತಮ್ಮ ವೃತ್ತಿಧರ್ಮಕ್ಕೆ ಹೊಂದಿಸಿ ಗೂಢವಾಗಿ ಬೆಡಗಿನ ವಚನಗಳ ಮೂಲಕ ಹೇಳಹೊರಟಿದ್ದು ವಚನ ಚಳುವಳಿಯ ಮೈಲುಗಲ್ಲು.  ಇಂತಹವರಲ್ಲಿ ಕೀಲಾರದ ಭೀಮಣ್ಣನು ಒಬ್ಬ.

         ಕೀಲಾರದ ಭೀಮಣ್ಣ ಬಸವಣ್ಣನ ಸಮಕಾಲೀನನಾಗಿದ್ದಾನೆ. ಈತನ ಇತಿವೃತ್ತದ ಬಗೆಗೆ ವೀರಶೈವಕಾವ್ಯ-ಪುರಾಣಗಳಲ್ಲಿ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ. ಹೀಗಾಗಿ ಈತನ ಬಗೆಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈತನ ಕಾಲವು ಇತರ ಶರಣರ ಹಾಗೆ ಕ್ರಿ.ಶ.1160. ಈತನ ಹೆಸರಿನ ಹಿಂದೆ ಇರುವ ಕೀಲಾರ ವಿಶೇಷಣವು  ಹಾಲು ಕರೆಯುವ ಸ್ಥಳವನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಶರಣನು ಹಾಲು ಹಿಂಡಿ ಮಾರುವ ಕಾಯಕದವನಾಗಿದ್ದನು ಎಂದು ಭಾವಿಸಬಹುದಾಗಿದೆ. ಈತನು ಕಲ್ಯಾಣದಲ್ಲಿ ಗೋವೃತ್ತಿಯಲ್ಲಿ ತೊಡಗಿದ್ದನೆಂಬುದಾಗಿ ತಿಳಿದು ಬರುತ್ತದೆ. ದನಗಳನ್ನು ಅಕ್ಕರೆಯಿಂದ ಸಾಕುತ್ತಿದ್ದರಿಂದಲೋ ಎನೋ ಈತನು ತನ್ನ ಬಹುಪಾಲು ವಚನಗಳಲ್ಲಿ ಪ್ರಾಣಿ ರೂಪಕಗಳನ್ನೇ ಹೆಚ್ಚಾಗಿ ಬಳಸಿದ್ದಾನೆ. ಈತನ ವಚನಗಳಲ್ಲಿಮೂಡಿರುವ ಪಶುಸಂಗೋಪನೆಗೆ ಸಂಬಂಧಿಸಿದ ಮಾಹಿತಿಗಳ ಹಿನ್ನೆಲೆಯಲ್ಲಿ ಕಲ್ಯಾಣದಲ್ಲಿ ವ್ಯವಸಾಯವನ್ನು ಮಾಡಿಕೊಂಡು ದನಗಳನ್ನು ಸಾಕುತ್ತಿದ್ದನು ಎಂದು ಊಹಿಸ ಬಹುದಾಗಿದೆ.

  ಈತನ ಹತ್ತು ವಚನಗಳು ಸದ್ಯಕ್ಕೆ ಉಪಲಬ್ಧವಿವೆ. ಈತನು ಒಬ್ಬ ಸಾಮಾನ್ಯ ವಚನಕಾರನಾಗಿಯೇ ಕಂಡು ಬರುತ್ತಾನೆ.  ಕಾಲಕರ್ಮವಿರಹಿತ ತ್ರ್ರಿಪುರಾಂತಕ ಲಿಂಗ ಎಂಬುದು ಈತನ ವಚನಗಳ ಅಂಕಿತವಾಗಿದೆ. ತ್ರಿಪುರಾಂತಕ ದೇವಾಲಯವು ಕಲ್ಯಾಣದಲ್ಲಿ ಇರುವುದರಿಂದ, ತ್ರಿಪುರಾಂತಕ ಲಿಂಗವನ್ನೆ ತನ್ನ ವಚನಗಳ ಅಂಕಿತವನ್ನಾಗಿ ಇಟ್ಟುಕೊಂಡಿರುವುದರಿಂದ ಈತನು ಕಲ್ಯಾಣದಲ್ಲಿ ಇದ್ದನೆಂದು ಹೇಳ ಬಹುದಾಗಿದೆ. ಕಲ್ಯಾಣದ ತ್ರಿಪುರಾಂತಕ ಕೆರೆಯ ಬದಿಯಲ್ಲಿ ಈತ ದನಗಳನ್ನು ಸಾಕಿ ಪಶುಸಂಗೋಪನೆಯ ಕಾಯಕದಲ್ಲಿ ನಿರತನಾಗಿದ್ದನೆಂದು ಊಹಿಸಬಹುದಾಗಿದೆ. ಹಲವು ಗಿರಿಗಳ ತಪ್ಪಲಲ್ಲಿ, ಮಲೆಯ ಮಂದಿರಗಳಲ್ಲಿ ಗೋವುಗಳು ಮೇದು ತಮ್ಮ ಮೂಲಸ್ಥಾನಕ್ಕೆ ತಪ್ಪದೇ ಬರುವುದನ್ನೂ,ಎರಡು ಮಾನ ಹತ್ತಿಯ ಕಾಳನ್ನು ಮೇಯಲಿಕ್ಕೆ ಹಾಕಿ ಅಂಡೆಯಲ್ಲಿ ಹಾಲು ಕರೆಯುವುದನ್ನು ತನ್ನ ವಚನಗಳಲ್ಲಿ ಮಾರ್ಮಿಕವಾಗಿ ಪ್ರಸ್ತಾಪಿಸಿದ್ದಾನೆ.

    ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ

    ಒಂದೇ ಹೊಲದಲ್ಲಿ ಮೇದು

    ಆರು ಕೆರೆಯ ನೀರ ಕುಡಿದು

     ಒಂದೇ ದಾರಿಯಲ್ಲಿ ಬಂದು

    ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು

    ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು

    ಹಾಲಿಗೆ ಏಕವರ್ಣ..

ಈ ವಚನದಲ್ಲಿ ಭೀಮಣ್ಣ ಬಹುಮುಖ್ಯವಾದ ಸಂಗತಿಯನ್ನು ವಿವರಿಸಿದ್ದಾನೆ. ಗೋವುಗಳಿಗೆ ಅನೇಕ ವರ್ಣ,ಆದರೆ ಹಾಲಿಗೆ ಮಾತ್ರ ಏಕವರ್ಣ. ನಾನಾ ವರ್ಣದ ಗೋವುಗಳೆಲ್ಲಾ ಕೂಡುತ್ತವೆ. ಅವುಗಳಿಗೆ ವರ್ಣ ಅಡ್ಡ ಬರುವುದಿಲ್ಲ. ಅವೆಲ್ಲ ಕೂಡಿ ಒಂದೇ ಹೊಲದಲ್ಲಿ ಮೇಯುತ್ತವೆ. ಒಂದೇ ದಾರಿಯಲ್ಲಿ ಸಾಗುತ್ತವೆ. ಹಾಲು ಕರೆದಾಗ ಒಂದೇ ಬಣ್ಣದ ಹಾಲು ಕೊಡುತ್ತವೆ. ಆದರೆ ಮನುಷ್ಯನಲ್ಲಿರುವ ಭೇದಗಳು ಅಸಂಖ್ಯ. ಪ್ರಾಣಿಗಳನ್ನು ನೋಡಿಯಾದರೂ ಮನುಷ್ಯ ಕಲಿತುಕೊಳ್ಳುವುದು ಸಾಕಷ್ಟಿದೆಯೆಂಬ ಸತ್ಯವನ್ನು ಭೀಮಣ್ಣ ತನ್ನ ವಚನಗಳಲ್ಲಿ ಸಮರ್ಥವಾಗಿ ರೂಪಿಸಿದ್ದಾನೆ. ಅಂದರೆ ನಾನಾ ವರ್ಣದ ಗೋವುಗಳು, ಆದರೆ ಅವು ಕರೆಯುವ ಹಾಲಿಗೆ ಮಾತ್ರ ಏಕವರ್ಣ ಎನ್ನುವಲ್ಲಿಯ ಆಶ್ಚರ್ಯಭಾವ ಮೆಚ್ಚುವಂತಹದ್ದು. ಕಾಯವಿಕಾರವಳಿದಲ್ಲದೆ ಗುರುಸ್ಥಲಕ್ಕೆ ಸಲ್ಲ, ಮನೋವಿಕಾರವಳಿದಲ್ಲದೆ ಲಿಂಗಪೂಜಕನಲ್ಲವೆಂದು ಇನ್ನೊಂದು ವಚನದಲ್ಲಿ ಹೇಳಿದ್ದಾನೆ. ಕರೆದು ತಂದ ಹಾಲನ್ನು ಚಟ್ಟಿ ಹತ್ತದೆ, ಹಸುಕುನಾರದೆ ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ ಕಾಸಬೇಕು. ಹಾಗೆ ಕಾಸಿ ಉಣಬಲ್ಲಡೆ ಆತನೇ ಭೋಗಿ ಎಂದು ಹೇಳಿರುವುದು ಮೆಚ್ಚುವಂತಹದ್ದಾಗಿದೆ.

ಈತನ ಲಭ್ಯವಿರುವ ವಚನಗಳಲ್ಲಿ ಕೆಲವು ಸರಳತೆಯಿಂದ ಕೂಡಿದ್ದರೆ ಕೆಲವು ಬೆಡಗಿನ ಛಾಯೆಯಿಂದ ಕೂಡಿವೆ. ಈ ಕೆಳಕಂಡ ವಚನದಲ್ಲಿ

ವ್ಯಾಧನಂತೆ ,ಜಾಲಗಾರನಂತೆ, ಹೇಮಚೋರನಂತೆ

ಇಂತಿ ಗಾಹುಗಳ್ಳರಂತೆ ಮಾತಿನಲ್ಲಿ ಬ್ರಹ್ಮವ ನುಡಿದು

ಸರ್ವಸಂಸಾರದಲ್ಲಿ ಏಳುತ್ತ ಮುಳುಗುತ್ತ

ಬೇವುತ್ತ ನೋವುತ್ತ ಮತ್ತೆ

ಬ್ರಹ್ಮದ ಸುಮ್ಮಾನದ  ಸುಖಿಗಳೆಂತಪ್ಪರೋ?

 ಇಂತು ನುಡಿಯ ಬಾರದು ಸಮಯವ ಬಿಡಬಾರದು

ಕ್ರಿಯೆಯಱಿದು ಮಱೆಯಬಾರದು ಜ್ಞಾನವ,

ಇಂತೀ ಭೇದವನಱಿದು ಹರಿದವಗಲ್ಲದೆ

ಕಾಲಕರ್ಮರಹಿತ ತ್ರಿಪುರಾಂತಕಲಿಂಗವು ಸಾಧ್ಯವಿಲ್ಲ. ಎಂದು ಸಂಸಾರದ ಭವಬಂಧನದಲ್ಲಿ ತೇಲಿ ಮುಳುಗಿ ಏಳುತ್ತಿರುವವರಿಗೆ ಲಿಂಗವು ದೊರೆಯದು ಎಂದು ಹೇಳಿದ್ದಾನೆ. 

ಹಲವು ಗಿರಿಗಳ ತಪ್ಪಲಲ್ಲಿ

ಮಲೆಯ ಮಂದಿರಗಳಲ್ಲಿ

ಬಳಸಿ ಬಳಸಿ ಮೇದು

ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ

ಆ ಪಶುವಿಂಗೆ ಕಟ್ಟು ಗೊತ್ತಿಲ್ಲ

ಕಾವ ಕಟ್ಟಿಗೆ ಒಳಗಲ್ಲ

ತಮ್ಮ ಠಾವಿಂಗೆ ಬಂದು ಹಾಲಕೊಟ್ಟು

ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ ಕಾವಲು ತಪ್ಪಿಲ್ಲ

ಕಾಲಕರ್ಮವಿರಹಿತ ತ್ರಿಪುರಾಂತಕ ಲಿಂಗದೊಳಗಾದವಂಗೆ

    ಈವಚನದಲ್ಲಿ  ಗೋವುಗಳು ಯಾವ ರೀತಿಬೆಟ್ಟಗುಡ್ಡಗಳಲ್ಲಿ, ಕಾಡುಮೇಡುಗಳಲ್ಲಿ ಮೇಯಲು ಹೋಗಿ ಮತ್ತೆ ತಮ್ಮ ನೆಲೆಗೆ ಯಾರ ನೆರವೂ ಇಲ್ಲದೆ  ಹಿಂದಿರುಗಿ ಬಂದು ಹಾಲು ಕೊಟ್ಟು  ಮತ್ತೆ ತಮ್ಮನೆಲೆಗೆ ಹೋಗುತ್ತವೆಂಬುದನ್ನು  ಸರಳ ಹಾಗೂ ಸ್ಪಷ್ಟತೆಯಿಂದ ನಿರೂಪಿಸಿದ್ದಾನೆ.

  ಒಂದು ವಚನದಲ್ಲಿ ವೀರಶೈವ ಧರ್ಮದ ತತ್ವದ ವಿವರಣೆ ಇದೆ.

  ಕಾಯವಿಕಾರವಳಿದಲ್ಲದೆ ಗುರುಸ್ಥಲಕ್ಕೆ ಸಲ್ಲ

  ಮನೋವಿಕಾರವಳಿದಲ್ಲದೆ ಲಿಂಗಪೂಜಕನಲ್ಲ.

   ತ್ರಿವಿಧಮಲ ದೂರಸ್ಥನಲ್ಲದೆ ವಿರಕ್ತಭಾವಿಯಲ್ಲ.

  ಇಂತೀ ಒಂದರಲ್ಲಿ ಒಂದು ಕಲೆಯಿದ್ದು ಮತ್ತೆ

  ಲಿಂಗದಲ್ಲಿ ನಿಂದಲ್ಲಿ ಸನ್ಮುಕ್ತನಲ್ಲ

  ಇಂತೀ ಬಂಧ ಮೋಕ್ಷ ಕರ್ಮಂಗಳ ಬಿಟ್ಟು

  ನಿಜ ಸಂದು ಸುಖಿಯಾಗಬಲ್ಲಡೆ

   ಈ ವಚನದಲ್ಲಿ  ಬಂಧಮೋಕ್ಷ ಕರ್ಮಂಗಳ ಬಿಟ್ಟು ಲಿಂಗದಲ್ಲಿ ನೆಲೆ ನಿಂತವನೇ ನಿಜವಾದ ಸನ್ಮುಕ್ತನೆಂದು ಹೇಳಿದ್ದಾನೆ.

    ಮತ್ತೊಂದು ವಚನದಲ್ಲಿ ಸದ್ಭಕ್ತನ ಇರವನ್ನು ಕುರಿತು, ಕಂಟಕ ಬಂದಲ್ಲಿ ಸಂತೈಸಿಕೊಂಡು ಆತ್ಮನ ಸಂಚರಿಸದೆ ನಿಷ್ಠೆಯಿಂದ ದೃಷ್ಟವ ಕಾಣುವುದೇ ಸದ್ಭಕ್ತನ ಶ್ರದ್ಧೆ ಎಂಬುದಾಗಿಯೂ  ವೃಥಾಳಾಪದಿಂದ ನಿಂದ, ದುರ್ಜನ ಬಂದಲ್ಲಿ ಸಂದು ಸಂಶಯವಿಲ್ಲದೆ ಅಂಗವ ಬಂಧಿಸದೆ ನಿಜಾತ್ಮನ ಸಂದೇಹಕಿಕ್ಕದೆ ಪರಮಾನಂದಸ್ವರೂಪನಾಗಿ ಬಂಧ ಮೋಕ್ಷಕರ್ಮಂಗಳ ಹರಿದಿಪ್ಪುದು ಸರ್ವಾಂಗಲಿಂಗಿಯ ಅರಿವು ಎಂದು ಹೇಳಿದ್ದಾನೆ.

  ಈತನ ಮೂರು ವಚನಗಳು ಸರಳವೂ ಸ್ಪಷ್ಟವೂ ಆಗಿವೆ. ಈ ವಚನಗಳಲ್ಲಿ  ಬರುವ

 ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹ ಬಹುದೆ?

 ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತೆಂದು

 ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ?

 ಎಲ್ಲಿ ಬಿಟ್ಟಲ್ಲಿ ತೊಟ್ಟು ಬಿಟ್ಟ ಹಣ್ಣಿನಂತೆ

 ಎಲ್ಲಿ ಮುಟ್ಟಿದಲ್ಲಿ ಕರ್ಪುರದ ಪಂಜರದಲ್ಲಿ

 ಉರಿಯ ಗಿಳಿ ಮಾತಾಡಿದಂತೆ

 ಉತ್ತರ ಮಾತಿಂಗೆ ಪ್ರತ್ಯುತ್ತರ ನಷ್ಟವಾದಂತೆ

 ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು

 ಅಲಗಿನ ಕ್ರೂರ ಸುಲಲಿತ ವೆನ್ನಬಹುದೆ?

 ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ

 ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ

 ಅಂಗೈಯಲ್ಲಿ ಹಿಡಿದು ಕೈದ ನೋಡದೆ

 ಅಲಗು ಕೆಟ್ಟಿತ್ತೆಂದು ಹಲುಬುವನಂತಾಗದೆ

 ತನ್ನ ತಾ ಮರದು ಅನ್ಯರ ದೆಸೆಯಿಂದ ತನ್ನ ಕೇಳುವನಂತಾಗದೆ ಇತ್ಯಾದಿ

 ಉಪಮೆ ರೂಪಕಗಳಲ್ಲಿ ನಾವೀನ್ಯವಿಲ್ಲದಿದ್ದರೂ ಕಾವ್ಯಶಕ್ತಿ ಇದೆ. ಸೊಗಸು ಇದೆ. ಇವು ಸರಳತೆ ಮತ್ತು ಸಂಕ್ಷಿಪ್ತತೆಗಳಿಂದ ಸುಲಭ ಗ್ರಾಹ್ಯವಾಗಿವೆ.

  ತೊಗಟೆಯೊಳಗಣ ಬೀಜ

 ಬೀಜದೊಳಗಣ ಅಂಕುರ,

 ಸಾರ ಸಸಿರೂಪುದೋರದೆ ವೇಧಿಸಿಕೊಂಡಿಪ್ಪಂತೆ

 ಇಂತೀ ಕ್ರೀಯೊಳಗಣ ಭಾವ

 ಭಾವದೊಳಗಣ ಜ್ಞಾನ

 ಜ್ಞಾನದೊಳಗಣ ಅರಿವು

 ಅರಿವಿನೊಳಗಣ ನಿಜದ ಬೆಳಗಿನ ಮಹಾಕಲೆಯನೊಳಗೊಂಡು

 ಘನಮಹಿಮಂಗೆ ಹಿಡಿದಿಹೆನೆಂಬ ಭಾವದ ಭ್ರಮೆಯಿಲ್ಲ

 ಎಂಬ  ಈ ವಚನದ ಸಾಲುಗಳು  ಅಲ್ಲಮನ ವಚನಗಳ ಸಾಲುಗಳ ಪ್ರಭಾವದಿಂದ ಹೊರಹೊಮ್ಮಿದಂತೆ ತೋರುತ್ತದೆ.  ಈತನ ಮೂರು ವಚನಗಳು ತನ್ನ ವೃತ್ತಿ ಸಂಬಂಧಿತ ಸೂಚನೆಗಳಿಂದ ಕೂಡಿದ್ದು  ಬೆಡಗಿನ ಛಾಯೆಯನ್ನು ಪಡೆದಿವೆ. ಎರಡು ಮೊಲೆಯ ಪಶುವಿಂಗೆ ಕೊಂಬು ಮೂರು,ಕಿವಿ ನಾಲ್ಕು ಎಂದು ಹೇಳುವಲ್ಲಿ ಬೆಡಗಿನ ಪರಿಭಾಷೆಯನ್ನು ಹಾಗೂ ತಾತ್ವಿಕ ವಿವೇಚನೆಯನ್ನು ಇಲ್ಲಿ ಕಾಣಬಹುದು. ಈತನು ತನ್ನ ವೃತ್ತಿಪರಿಭಾಷೆಯಲ್ಲಿ ಆಧ್ಯಾತ್ಮವನ್ನು ಸ್ವಲ್ಪಮಟ್ಟಿಗೆ ತಿಳಿಯ ಹೇಳುವ ಪ್ರಯತ್ನವು ಮೆಚ್ಚುವಂತಹದ್ದು. ಒಟ್ಟಾರೆ ಕೀಲಾರದ ಬೊಮ್ಮಣ್ಣನು  ಬಸವ ಯುಗದ ಒಬ್ಬ ಸಾಮಾನ್ಯ ವಚನಕಾರನಾಗಿದ್ದು ತನ್ನ ಲಭ್ಯವಿರುವ ಹತ್ತು ವಚನಗಳ ಮೂಲಕ  ಸ್ವಲ್ಪಮಟ್ಟಿಗೆ ಗೋವೃತ್ತಿಗೆ ಸಂಬಂಧಿಸಿದ ಪರಿಭಾಷೆಯ ಮೂಲಕವೇ ವೀರಶೈವ ತತ್ವ - ಸಿದ್ಧಾಂತಗಳನ್ನು  ನಿರೂಪಿಸಿದ್ದಾನೆ.

  

                ಗ್ರಂಥ ಋಣ

1.ಬಸವೇಶ್ವರ ಸಮಕಾಲೀನರು

  ಬಸವ ಸಮಿತಿ, ಬೆಂಗಳೂರು. 01

 ನಾಲ್ಕನೆಯ ಮುದ್ರಣ, 2007

2. ಸಂಕೀರ್ಣ ವಚನ ಸಂಪುಟ 2

 ಸಂ:  ಎಸ್.ವಿದ್ಯಾಶಂಕರ

ಕನ್ನಡ ಪುಸ್ತಕ ಪ್ರಾಧಿಕಾರ

 ಬೆಂಗಳೂರು. 2001

3.ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ ಸಂ.04

 ಸಂ: ಟಿ.ವಿ.ವೆಂಕಟಾಚಲ ಶಾಸ್ತ್ರೀ

 ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು 1980

4.  ಎಂ. ಚಿದಾನಂದಮೂರ್ತಿ,ವಚನ ಸಾಹಿತ್ಯ

    ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ,

    ಬೆಂಗಳೂರು. 2000 ( ದ್ವಿ.ಮು)

5. ಸಿ.ನಾಗಭೂಷಣ: ವೀರಶೈವ ಸಾಹಿತ್ಯ ಕೆಲವು ಒಳನೋಟಗಳು

          ವಿಜೇತ ಪ್ರಕಾಶನ, ಗದಗ.2008

                                      


                ವಚನಕಾರರ ನಡೆ-ನುಡಿ ಸಿದ್ಧಾಂತ                                                   ಡಾ.ಸಿ.ನಾಗಭೂಷಣ                                                            

    ಕನ್ನಡ ನಾಡಿನ ಮಧ್ಯಕಾಲೀನ ರಾಜಕೀಯ ಹಿನ್ನಲೆಯಲ್ಲಿ ನಾಡಿನಾದ್ಯಂತ ವ್ಯಾಪಿಸಿದ ಶಿವಶರಣರ ಸಮಾಜೋ ಧಾರ್ಮಿಕ ಆಂದೋಲನವು ಮಹತ್ತರವಾದುದು. ವಚನಕಾರರ ಯುಗ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶಿಷ್ಟಯುಗವಾಗಿದೆ. ಧಾರ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕವಾಗಿ ಕ್ರಾಂತಿಕಾರಿಯುಗ. ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗ ಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ. ಅಂತರಂಗದ ಅನುಭವಗಳನ್ನು ತುಮುಲಗಳನ್ನು ನೇರವಾಗಿ, ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿತು. ಪೂರ್ವ ಆಕರಗಳನ್ನು ಅವಲಂಬಿಸದೆ ಅಂತರಂಗದ ಅನಿಸಿಕೆಗಳನ್ನು, ಘರ್ಷಣೆಗಳನ್ನು, ಪ್ರತಿಕ್ರಿಯೆಗಳನ್ನು ವಸ್ತುವನ್ನಾಗಿ ಮಾಡಿಕೊಂಡ ವಸ್ತುನಿಷ್ಠ ಕಾವ್ಯದ ಅಭಿವ್ಯಕ್ತಿಯನ್ನು ವಚನ ಚಳುವಳಿ ಸಾಧಿಸಿ ತೋರಿಸಿದೆ. ಭಾರತೀಯ ಭಕ್ತಿ ಸಾಹಿತ್ಯದಲ್ಲಿಯೇ ನಿಜವಾಗಿಯೂ ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆ ಕಾಣಿಸಿಕೊಂಡಿದ್ದು ಶರಣ ಸಾಹಿತ್ಯದಲ್ಲಿಯೇ ಆಗಿದೆ. ಶಿವಶರಣರ ಭಕ್ತಿ ಚಳುವಳಿಯ ಕೇಂದ್ರ ಲಕ್ಷಣ ಎಂದರೆ ಮುಕ್ತ ವಾತಾವರಣ ಜಾತಿಭೇದವಿಲ್ಲದೆ ಎಲ್ಲರನ್ನು ತಟ್ಟಿದ್ದು.   

      ಸಂಕೀರ್ಣ ಆಚಾರ ವಿಚಾರಗಳಿಂದ ಕೂಡಿದ ಜನಸಾಮಾನ್ಯರಲ್ಲಿ, ಸರ್ವಕಾಲ, ಸರ್ವದೇಶ ಮಾನಿತವಾದ ಆದರ್ಶಗಳನ್ನು ಹಾಗೂ ಒಂದು ದೇಶ, ಒಂದು ಕಾಲದ ಆದರ್ಶಗಳೆನಿಸುವ ಮೌಲ್ಯಗಳನ್ನು ಕಾಣಬಹುದಾಗಿದೆ. ಯಾವುದೇ ಕಾಲದ ವ್ಯಕ್ತಿ ಹಾಗೂ ಸಮಾಜಗಳ ವರ್ತನೆಯನ್ನು ನಿಯಂತ್ರಿಸುವಲ್ಲಿ, ಬದುಕನ್ನು ರೂಪಿಸುವಲ್ಲಿ ಮೌಲ್ಯಗಳು ಪ್ರಮುಖವಾದವುಗಳು. ಮೌಲ್ಯಗಳು ಒಂದು ಕಾಲ ದೇಶ, ಒಂದು ಜನಾಂಗಕ್ಕೆ ಅನ್ವಯಿಸುವ ಜೀವನ ಸತ್ವಗಳಾಗಿರುವುದರ ಜೊತೆಗೆ ಪರಿವರ್ತನ ಶೀಲವಾಗಿವೆ. ಸಾಹಿತ್ಯವು ಸಮಕಾಲೀನ ಜೀವನ ಮೌಲ್ಯವನ್ನು ಪ್ರತಿಪಾದಿಸುವುದರ ಮೂಲಕ ಜನತೆಗೆ ಹತ್ತಿರವಾಗುತ್ತದೆ ಎಂಬುದಕ್ಕೆ ಶರಣ ಸಾಹಿತ್ಯವನ್ನು ಅತ್ಯುತ್ತಮ ನಿದರ್ಶನವಾಗಿ ಕೊಡಬಹುದು. ಶರಣ ಸಾಹಿತ್ಯದಲ್ಲಿ ವೀರಶೈವ ಮೌಲ್ಯಗಳ ಪ್ರತಿಪಾದನೆಯೆ ಪ್ರಮುಖವಾಗಿದ್ದರೂ ಅದರ ಜೊತೆ ಜೊತೆಯಲ್ಲಿಯೇ ಸರ್ವಕಾಲೀನ ಆದರ್ಶ, ಸಮಕಾಲೀನ ಜೀವನ ಮೌಲ್ಯಗಳನ್ನು ಗುರುತಿಸಬಹುದಾಗಿದೆ. ಶರಣಸಾಹಿತ್ಯ ಮೌಲ್ಯಗಳ ಸಂಕೀರ್ಣ ಹಲವಾರು ಶ್ರೇಯಸ್ಕರ ಮೌಲ್ಯಗಳನ್ನು ಗರ್ಭೀಕರಿಸಿಕೊಂಡಿದೆ. ಶರಣ ಸಾಹಿತ್ಯದಲ್ಲಿ ವ್ಯಕ್ತವಾಗಿರುವ ಮೌಲ್ಯ ಸಮುಚ್ಛಯದ ಅನುಸಂಧಾನ ಇಂದಿಗೂ ಪ್ರಸ್ತುತವಾಗಿದೆ. ಶರಣ ಸಾಹಿತ್ಯದಲ್ಲಿ ವ್ಯಕ್ತವಾಗುವ ಅಂಶಗಳು ಶಬ್ದಾರ್ಥವನ್ನು ಮೀರುತ್ತಾ ಬಂದು ನಂಬಿಕೆಗಳ ಒಂದು ಮೌಲ್ಯಕ್ಕೆ ಸಂಕೇತವಾಗಿರುವುದನ್ನು ಗುರುತಿಸಬಹುದಾಗಿದೆ. ಬಸವಣ್ಣ ಅಲ್ಲಮರಂತಹ ಶ್ರೇಷ್ಠ ಮಾರ್ಗದರ್ಶನ ದೊರೆತಿದ್ದ ಅಂದಿನ ಶರಣರ ಸಮೂಹದಲ್ಲಿ ಮಾನವೀಯ ಮೌಲ್ಯಗಳು ವ್ಯಕ್ತವಾದವು.

      ಜನಸಾಮಾನ್ಯರ ಭಾಷೆಯನ್ನೇ ವಚನಕಾರರು ಬಳಸಿದ್ದರಿಂದ ಭಾಷೆಯ ಅಭಿವ್ಯಕ್ತಿ ಸಾಧ್ಯತೆ ಬಹುಗುಣಿತವಾಯಿತು. ಜನತೆಯ ಸಾಮಿಪ್ಯ ಒದಗಿತು. ಹೀಗಾಗಿ ಜನತೆಯ ಭಾಷೆಯ ಹಿಂದೆ ಜನಾಂಗದ ಬದುಕನ್ನು ಉತ್ತಮೀಕರಿಸುವ ಒಂದು ಮಹತ್ತರ ಕ್ರಿಯೆ ಜರುಗಿತು. ಕರ್ನಾಟಕ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಒಟ್ಟು ಮಾನವ ಸಂಸ್ಕೃತಿಯ ನೆಲೆಯಲ್ಲಿ ತಮ್ಮ ವೈಚಾರಿಕ ಹೆಜ್ಜೆಯ ಗುರುತುಗಳನ್ನು ದೃಢವಾಗಿ ಬಿಟ್ಟು ಹೋದ ಪರಿಕಲ್ಪನೆಗಳನ್ನು ಪರಿವರ್ತಿಸಿದರು. ಕೆಲವನ್ನು ಸ್ವೀಕರಿಸಿದರು. ಹಲವನ್ನು ತಿರಸ್ಕರಿಸಿದರು. ತಮ್ಮ ಪರಿಕಲ್ಪನೆಗಳನ್ನು ಹೊಸ-ಹೊಸ ಪರಿಭಾಷೆಯಲ್ಲಿ ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದರು. ಈವರೆವಿಗೂ ಬಳಕೆಯಲ್ಲಿದ್ದ ಅರಿವು, ಮರೆವು, ಬಯಲು, ನಡೆ ಮುಂತಾದ ದೇಶ್ತ ಶಬ್ದಗಳಿಗೆ ವಿಶೇಷ ಅರ್ಥ ಪ್ರಾಪ್ತಿಯಾದವು. ಶರಣರು ಹೊಂದಿದ್ದ ಅನುಭಾವ, ಇಹ-ಪರ, ಪ್ರಸಾದ, ಗುರು, ಪಾಪ-ಪುಣ್ಯ, ಶಿವಯೋಗ, ವಿಧಿ-ಕರ್ಮ, ಶರಣಸತಿ-ಲಿಂಗಪತಿ, ಶೂನ್ಯ, ಸಂಸಾರ, ಕಾಯಕ-ದಾಸೋಹ ಮುಂತಾದ ಪರಿಕಲ್ಪನೆಗಳನ್ನು ವಚನ ಸಾಹಿತ್ಯದ ಆಧಾರದಿಂದ ಕಟ್ಟಿಕೊಡಬಹುದಾಗಿದೆ. ಹಲವಾರು ಪರಿಕಲ್ಪನೆಗಳಿಗೆ ವಿಶೇಷ ಅರ್ಥವು ಲಭಿಸಿದ್ದು ಕೇವಲ ಒಬ್ಬ ವಚಕಾರನಿಂದಲ್ಲ. ವಚನಕಾರರ ಸಮುದಾಯದ ಚಿಂತನೆಯ ಕಾರಣದಿಂದ ಎಂಬುದು ಗಮನಾರ್ಹ ಸಂಗತಿ.

      ವಚನಕಾರರು ಇಟ್ಟುಕೊಂಡಿದ್ದ ಪರಿಕಲ್ಪನೆಗಳಲ್ಲಿ ನಡೆ-ನುಡಿಯೂ ಒಂದಾಗಿದ್ದು ಇಂದಿಗೂ ವಿಶೇಷ ಮಹತ್ತ್ವವನ್ನು ಪಡೆದುಕೊಂಡಿದೆ. ನಡೆ-ನುಡಿಯಂತಹ ಪರಿಭಾಷೆಯನ್ನು ಪರಿಶೀಲಿಸುವಾಗ ಹಲವಾರು ವಚನಕಾರರ ವಚನಗಳನ್ನು ಗಮನಿಸಬೇಕಾಗಿದೆ. ವಚನಕಾರರು ತಮ್ಮ ಅಪಾರ ಲೋಕಾನುಭವದಲ್ಲಿ ಕಂಡುಕೊಂಡ ಬಹು ಮುಖ ಪರಿಕಲ್ಪನೆಗಳಲ್ಲಿ ನುಡಿ, ಅಂದರೆ ಮನುಷ್ಯನ ಮಾತುಒಂದು. ಮನುಷ್ಯ ತನ್ನ ನಡೆ-ನುಡಿಯಿಂದಲೇ ಸಮಾಜದಲ್ಲಿ ಪರಿಸರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡು ಸುಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿರುವುದನ್ನು ಎಲ್ಲರೂ ಬಲ್ಲರು. ನಡೆ-ನುಡಿಗಳೆ ಮಾನವನ ಸಂಸ್ಕೃತಿಯನ್ನು ಸಜ್ಜನಿಕೆಯನ್ನು ತೋರ್ಪಡಿಸುವಂತೆ ಅವನ ಅಸಂಸ್ಕೃತಿ ದುರ್ನಡತೆಯನ್ನು ತೋರುತ್ತವೆ. ಸುಸಂಸ್ಕೃತ ಸಮಾಜವನ್ನು ಕಟ್ಟ ಬಯಸಿದ ವಚನಕಾರರು ನಡೆಗೆ-ನುಡಿಗೆ ಹೆಚ್ಚಿನ ಮಹತ್ತ್ವ ನೀಡಿದ್ದಾರೆ.

      ಶರಣರ ನಡೆ-ನುಡಿ ಪರಿಕಲ್ಪನೆಗಳು ಅಭಿನ್ನ ಸ್ವರೂಪದವು. ಒಂದರೊಡನೊಂದು ಸೇರಿಕೊಂಡಿರುವಂತಹವು. ಬದುಕೆಂಬ ಬಳ್ಳಿಗೆ ನಡೆ ಬೇರಾದರೆ ನುಡಿ ಹೂವಾಗುತ್ತದೆ. ಇವೆರಡರ ಸಂಬಂಧ ಅವಿರಳ ಅನನ್ಯ. ನಡೆ ಶಬ್ದಕ್ಕೆ ಇಂದು ಕ್ರಿಯಾಪದ ನಾಮಪದದ ಹಿನ್ನಲೆಯಲ್ಲಿ ನಾನಾರ್ಥಗಳಿವೆ. ವಚನಕಾರರ ಚಿಂತನೆಯ ಹಿನ್ನಲೆಯಲ್ಲಿ `ನಡೆ' ಶಬ್ದವನ್ನು ನಡತೆ, ಶೈಲಿ, ಸ್ವಭಾವ, ಶೀಲ, ಗೌರವ ಇತ್ಯಾದಿ ರೀತಿಯಲ್ಲಿ ಅರ್ಥೈಸಬಹುದು. ಹಾಗೆಯೇ ನುಡಿ ಶಬ್ದವು ಕ್ರಿಯಾಪದದ ಹಿನ್ನಲೆಯಲ್ಲಿ ಮಾತನಾಡು, ಧ್ವನಿ ಹೊಡಿಸು, ಹೇಳು, ವ್ಯಕ್ತಪಡಿಸು ಎಂಬರ್ಥಗಳಿದ್ದರೆ ನಾಮಪದದ ಹಿನ್ನಲೆಯಲ್ಲಿ ಮಾತು, ಭಾಷೆ, ವಚನ, ಪ್ರತಿಜ್ಞೆ ಇತ್ಯಾದಿ ಅರ್ಥಗಳಿವೆ. ನಡೆ ಅಭಿನಯವಾದರೆ ನುಡಿ ಅಭಿವ್ಯಕ್ತಿ. ನಡೆಯ ಹಿಂದೆ ನುಡಿ ಇದೆ. ನುಡಿಗೂ ಒಂದು ನಡೆಯಿದೆ. ಅಂದರೆ ರೀತಿಯಿದೆ, ನೀತಿಯಿದೆ. ನುಡಿ ಬರಿಯ ವರ್ಣಗಳ ಗುಂಪಲ್ಲ. ಅದಕ್ಕೊಂದು ಅರ್ಥವಿರುತ್ತದೆ. ಆಶಯವಿರುತ್ತದೆ. ಹಾಗೆಯೇ ನಡೆ ಕೇವಲ ಚಲನೆಯಲ್ಲ. ಅದಕ್ಕೊಂದು ದಾರಿ ಇರುತ್ತದೆ ಗುರಿ ಇರುತ್ತದೆ. ನಡೆ-ನುಡಿಗಳ ನೆಲೆಗಟ್ಟಿನ ಮೇಲೆಯೆ ಜನತೆಯ ಬದುಕು ನಿಂತಿರುವುದು.

      ಕನ್ನಡ ಸಾಹಿತ್ಯದಲ್ಲಿ ನಡೆ-ನುಡಿಗಳ ಬಗೆಗೆ ಹೆಚ್ಚು ಚರ್ಚೆ ಮಾಡಿದವರು ಶರಣರೇ ಆಗಿದ್ದಾರೆ. ನಡೆನುಡಿ ಒಂದಾದವನು ಮಾತ್ರ ಶರಣ ಎನ್ನುವುದು ಅವರ ಭಾವನೆ. ಭಕ್ತಿ ಸುಭಾಷೆಯ ನುಡಿವೆ ನುಡಿದಂತೆ ನಡೆವೆ ಎಂದು ಬಸವಣ್ಣ ಮೊದಲಾಗಿ ಎಲ್ಲಾ ಶರಣರು ಹೇಳಿರುವರು. ನಡೆ-ನುಡಿಗಳ ಸಮನ್ವಯಕ್ಕೆ ಶರಣರು ಹೆಚ್ಚಿನ ಮಹತ್ತ್ವ ಕೊಟ್ಟಿದ್ದಾರೆ. ಶರಣರ ಭಕ್ತಿ ಸುಭಾಷೆ ಎಂದರೆ ಅದು ಪರಿಶುದ್ಧ ನಡೆ, ಪರಿಶುದ್ಧ ನುಡಿ ಎಂದೆನಿಸಿದೆ. ದಿಟವ ನುಡಿವುದು, ನುಡಿದಂತೆ ನಡೆವುದು ಶರಣರ ಸದ್ಭಕ್ತಿಯ ಆಶಯವಾಗಿದೆ. ಹೊರಗಿನ ಆಚಾರಕ್ಕೆ ಮಹತ್ತ್ವ ಬರುವುದು ಒಳಗಿನ ಅರಿವಿನ ಆಚರಣೆಯಿಂದ. ಈ ಆಚರಣೆಗೆ ಒಳಗಿನ ಮನಸ್ಸು, ಹೊರಗಿನ ಮಾತುಗಳ ಸಮರಸತೆ ಇಲ್ಲದೆ ಹೋದರೆ ಅದೊಂದು ಅರ್ಥರಹಿತ ವ್ಯರ್ಥ ಸಾಹಸ.

      ಮನುಷ್ಯ ಮನಸ್ಸಿನಲ್ಲಿ, ಭಾವದಲ್ಲಿ ನಡೆಯುವ ಏನೆಲ್ಲವನ್ನು ತನ್ನ ನುಡಿಯ ಮೂಲಕವೇ ಅಭಿವ್ಯಕ್ತಿ ತೋರಿಸುತ್ತಾನೆ. ತನ್ನ ಬದುಕಿನ ಸಾರ್ಥಕತೆಯ ವೈಶಿಷ್ಟö್ಯದ ತಿಳಿವಳಿಕೆ ನುಡಿಯ ಮೂಲಕವೇ ಇತರರಿಗೆ ಆಗುವುದು. ಅನುಭವ-ಅನುಭಾವಗಳೆರಡೂ ನುಡಿಯಲ್ಲಿಯೇ ವ್ಯಕ್ತಗೊಂಡಿರುವುದು.

      ಬಸವಣ್ಣನವರು ಹಲವಾರು ವಚನಗಳಲ್ಲಿ ನಡೆ-ನುಡಿಯ ಕುರಿತು ಚಿಂತನೆ ಮಾಡಿದ್ದಾರೆ. 

ನುಡಿದರೆ ಮುತ್ತಿನ ಹಾರದಂತಿರಬೇಕು

……………………………………………………………

ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು

ನುಡಿಯೊಳಗಾಗಿ ನಡೆಯದಿದ್ದರೆ

ಕೂಡಲಸಂಗಮದೇವ ನೆಂತೊಲಿವನಯ್ಯ (ವ.ಸಂ.೮೦೩)

 ಎನ್ನುವ ಈ ಜನಪ್ರಿಯ ವಚನವು ನುಡಿಗೆ ಬರೆದ ಭಾಷ್ಯವಾಗಿದೆ. ವಿದ್ವಾಂಸರು ಈ ವಚನವನ್ನು ನುಡಿ ಸ್ವರೂಪವನ್ನು ಕುರಿತ ಮಿಮಾಂಸೆ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಈ ವಚನ ನುಡಿಗೆ ಲಕ್ಷಣವು ಆಗಿರುವುದರ ಜೊತೆಗೆ ನುಡಿಗೆ ಲಕ್ಷ್ಯವೂ ಆಗಿದೆ. ನುಡಿಯೊಳಗಾಗಿ ನಡೆಯದಿದ್ದರೆ ಎಂಬ ಸಾಲಿನಲ್ಲಿ ನುಡಿಗೆ ತಕ್ಕಂತೆ ನಡೆಯಬೇಕು ಎಂಬ ಅರ್ಥಕ್ಕಿಂತ ನುಡಿಯ ಮೊದಲಿಗೆ (ಒಳಗಾಗಿ) ನಡೆದು ತೋರಿಸಬೇಕು ಎಂಬ ಅರ್ಥವು ಹೆಚ್ಚು ಸೂಕ್ತ ಎಂದೆನಿಸುತ್ತದೆ. ಆವಾಗ ನಡೆ ಮೊದಲು ನುಡಿ ತರುವಾಯ ಎಂಬ ವಿಶಾಲಾರ್ಥ ಉಂಟಾಗುತ್ತದೆ.

ಭಕ್ತಿಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ

ನಡೆಯೊಳಗೆ ನುಡಿಯ ಪೂರೈಸುವೆ

ಎನ್ನನಡೆ-ನುಡಿಯೊಳಗೆ ಒಂದು ಜವೆ ಕೊರತೆಯಾದರೆ

ಎನ್ನನ್ನದ್ದಿ ನೀನೆದ್ದು ಹೋಗು ಕೂಡಲಸಂಗಮದೇವಾ

ಎಂಬ ವಚನಸಾಲು ಹಾಗೂ

ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ

ಹಲುದೋರೆ ಮೂಗಕೊಯಿ ಕೂಡಲಸಂಗಮದೇವ (ವ.ಸಂ.೭೧೧)

ಎಂಬಲ್ಲಿ ನುಡಿಯ ಬಗೆಗೆ ಕಡುನಿಷ್ಠೆಯನ್ನು ತಾಳಿರುವುದು ಕಂಡು ಬರುತ್ತದೆ. ನಡೆ ನುಡಿ ಏಕವಾಗಿದೆ. ನಡೆ ನುಡಿ ಏಕವಾದಲ್ಲಿ ಪರಮಾತ್ಮನು ಆ ನುಡಿಯೊಳಗಿರುವನು. ಭಕಿಯನ್ನು ಪ್ರಕಟಿಸುವಾಗ ತಾವು ಸುಭಾಷೆಯನ್ನು ಸ್ವೀಕರಿಸಿ ನುಡಿಯುವುದಾಗಿ ಬಸವಣ್ನನನವರು ಇಲ್ಲಿ ಹೇಳಿದ್ದಾರೆ.ಅಲ್ಲದೆ ತಾವು ಒಳ್ಳೆಯ ಪ್ರತಿಜ್ಞೆಯನ್ನು ಸ್ವೀಕರಿಸುವುದಷ್ಟೇ ಅಲ್ಲ ಅದನ್ನು ಕಾರ್ಯ ರೂಪಕ್ಕೆ ತರುವುದಾಗಿಯೂ ಹೇಳಿದ್ದಾರೆ.ಅಂದರೆ ಇದು ಆಚರಣೆಯಲ್ಲಿ ಕೊಟ್ಟ ಮಾತನ್ನು ಪೂರೈಸುವುದಾಗಿದೆ. ಬಸವಣ್ಣನವರ ಈ ವಚನ ನಡೆ-ನುಡಿಗಳಿಗೆ ಬರೆದ ನೀತಿ ಸಂಹಿತೆಯಂತಿದೆ. `ದಿಟವ ನುಡಿವುದು, ನುಡಿದಂತೆ ನಡೆವುದು, ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲಸಂಗಮದೇವಾ' ಎಂಬ ವಚನವು ನಡೆದು ತಪ್ಪುವ ಜನರನ್ನು ಯಾರೂ ಮನ್ನಿಸಬಾರದು. ಮನ್ನಣೆ ಕೊಡಬಾರದು ಎಂಬುದನ್ನು ಧ್ವನಿಸುತ್ತದೆ.

`ನುಡಿದ ನುಡಿಯೊಳಗೆ ನಡೆ ಸಮನಿಸದಿದ್ದರೆ

ಸುಡುವೆನೀ ತನುವ' ಎನ್ನುವಲ್ಲಿ ಮನಸ್ಸಿನಂತೆ ತನ್ನ ದೇಹ ನಡೆಯದಿದ್ದರೆ ತನು ತನ್ನದಾದರೂ ಸುಡುವ ಪ್ರತಿಜ್ಞೆ ಮಾಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಬಸವಣ್ಣನವರ

ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ    

ಹಿಡಿದಿರ್ದ ಲಿಂಗವು ಘಟಸರ್ಪದಂತೆ ಎಂಬ ಕಟುವಾದ ಎಚ್ಚರಿಕೆ ಸಾಮಾಜಿಕ ಧಾರ್ಮಿಕ ಪ್ರಕ್ರಿಯೆಗಳಿಗೆ ಅರ್ಥವಾಗಿ ಹೊಂದಿಕೆಯಾಗುತ್ತದೆ. ನುಡಿಯಲ್ಲಿ ಎಚ್ಚರಿಕೆಯಿಂದ ಇದ್ದು ನಡೆಯಲ್ಲಿ ತಪ್ಪಿದರೆ ಎಷ್ಟೇ ಎಚ್ಚರದಿಂದ ನುಡಿದಿದ್ದರೂ ಆತ ನಂಬಿಕೆಗೆ ಅರ್ಹನಾಗುವುದಿಲ್ಲ. ನಡೆ-ನುಡಿಗಳು ಹೊಂದಾಣಿಕೆಯಿಂದ ಇರಬೇಕು ಎನ್ನುವ ತತ್ವ ಇಲ್ಲಿ ಅಡಗಿದೆ.

      `ನುಡಿಯ' ಮಹತ್ವವನ್ನು ವಿವರಿಸುವಾಗ ಅಲ್ಲಮಪ್ರಭುವು ಬಸವಣ್ಣನವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನುಡಿ ಅಥವಾ ಮಾತು ಜ್ಯೋತಿರ್ಲಿಂಗ ಎಂದು ಹೇಳಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ.

 

ಮಾತೆಂಬುದು ಜ್ಯೋತಿರ್ಲಿಂಗ

ಸ್ವರವೆಂಬುದು ಪರತತ್ವ

ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ

ಗುಹೇಶ್ವರನ ಶರಣರು

ನುಡಿದು ಸೂತಕಿಗಳಲ್ಲ ಕೇಳಾ ಮರುಳೆ 

ಈ ಪ್ರಸಿದ್ಧ ವಚನದಲ್ಲಿ ನುಡಿ ಅಥವಾ ಮಾತು ಕುರಿತ ನಿರ್ವಚನ ವಿಶಾಲಾರ್ಥದಲ್ಲಿ ಅಡಗಿದೆ. ಶರಣರು ನುಡಿದಂತೆ ನಡೆಯುತ್ತಾರೆ, ನಡೆದಂತೆ ನುಡಿಯುತ್ತಾರೆಯೇ ಹೊರತು ನುಡಿದು ಸೂತಕಿ ಅಥವಾ ಮೈಲಿಗೆಯವರು ಆಗುವುದಿಲ್ಲ ಎಂಬ ನಿಲುವಿನಲ್ಲಿ ಶರಣರ ನಡೆ-ನುಡಿಯ ಶ್ರೇಷ್ಠತೆ ಅಡಗಿದೆ. 

ನಡೆ-ನುಡಿ ಸಿದ್ಧಾಂತ ಹಾಗೂ ತಾತ್ವಿಕ ನಿಲುವು:

      ವಚನಕಾರರ ಪರಿಕಲ್ಪನೆಯಲ್ಲಿ ನಡೆ-ನುಡಿ ಕೇವಲ ನಿಘಂಟಿನ ಅರ್ಥವಲ್ಲ. ಅದು ಜ್ಞಾನ-ಕ್ರಿಯೆಗಳ ಸಂಬಂಧ-ಸಮನ್ವಯವಾಗಿದೆ. ವಚನಕಾರರಲ್ಲಿ ಹಲವಾರು ನಡೆ-ನುಡಿ ಪರಿಕಲ್ಪನೆಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಚರ್ಚಿಸಿದ್ದಾರೆ.

 

ಮೋಳಿಗೆಯ ಮಹಾದೇವಿಯಕ್ಕಳ,

ನೀರು ನೆಲವಿಲ್ಲದೆ ಇರಬಹುದೆ?

ಬೀಜ ನೆಲೆಯಿಲ್ಲದೆ ಹುಟ್ಟಬಹುದೆ?

ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ?

ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ?

ಇಂತೀ ಕ್ರೀ-ಜ್ಞಾನ ಸಂಬಂಧ ಸ್ಥಲಭಾವ 

ಎಂಬ ವಚನದಲ್ಲಿ ಕ್ರಿಯೆ ನಡೆಯ ಸಂಕೇತವಾದರೆ, ಜ್ಞಾನ ನುಡಿಯ ಸಂಕೇತವಾಗುತ್ತದೆ. ಈ ಹಿನ್ನಲೆಯಲ್ಲಿ ಅರಿವು-ಆಚರಣೆಗಳ ಸಮನ್ವಯ ಸಂಬಂಧವೇ ವಚನಕಾರರ ಪರಿಕಲ್ಪನೆಯ ನಡೆ-ನುಡಿಯಾಗಿದೆ.

      ಅನುಭವ ಮಂಟಪದಲ್ಲಿ ಶರಣರ ಚಿಂತನೆ-ಜಿಜ್ಞಾಸೆಯಿಂದ ಮುಡಿ ಬಂದ ಸತ್ಯದ ಆಚರಣೆಗಳು ಶಿವಪಥವಾಗಿ, ಗುರುಪಥವಾಗಿ, ಲಿಂಗಪಥ, ಜಂಗಮಪಥವಾಗಿ ಲೋಕದ ಜನರು ನಿರಾಯಾಸವಾಗಿ ಸತ್ಪಥದಲ್ಲಿ ನಡೆದು ತಮ್ಮ ತಮ್ಮ ಲೇಸನ್ನು ಕಂಡುಕೊಳ್ಳಲು ನೆರವಾಗಿವೆ. 

ಅರಿವಿನ ನಡೆ ಅರಿವಿನ ನುಡಿ

ಅರಿವಿನ ಮೂಲವನರಿತ ಶರಣರ ಚರಣದೊಳೆನ್ನನಿಟ್ಟು

ಸಲಹಯ್ಯಾ ಎಂದು ಜ್ಞಾನಪಥದಲ್ಲಿ ನಡೆದಿರುವವರನ್ನು ಸ್ಮರಿಸಿದ್ದಾರೆ.

ಬಸವಣ್ಣನವರು

 ಅವರ ನಡೆಯೊಂದು ನುಡಿಯೊಂದಾಡೆ

 ಶಿವಾಚಾರಕ್ಕೆವರು ಸಲ್ಲರಯ್ಯಾ

 ಬಲ್ಲನು ಸಾತ್ವಿಕರಲ್ಲದವರನೊಲ್ಲನು

 ಶಿವಾಚಾರವ ಬಲ್ಲನು ಅಲ್ಲಿ ನಿಲ್ಲನು

 ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು ಎಂಬ ವಚನದಲ್ಲಿ ನಡೆ-ನುಡಿ ಏಕವಾಗಿರುವುದೇ ಶಿವಾಚಾರದ ಲಕ್ಷಣ, ಅಂತವರು ಶಿವಾಚಾರಕ್ಕೆ ಸಲ್ಲುವರು. ನಡೆ-ನುಡಿ ಒಂದಾಗದವರ ಡಾಂಬಿಕತನವನ್ನು ಶಿವನು ಬಲ್ಲನು. ಅಂಥವರು ಸಾತ್ವಿಕ ವ್ಯಕ್ತಿಗಳಲ್ಲ.ವಂಚಕರು. ಅಂತವರನ್ನು ಶಿವನು ಬಲ್ಲನು ಎಂಬ ಆಶಯವನ್ನು ಕಾಣಬಹುದಾಗಿದೆ. 

ಅಕ್ಕಮಹಾದೇವಿಯ ವಚನದಲ್ಲಿಯ,

ಹೆದರಿದಮನಕ್ಕೆ ಬೆದರಿದತನುವಿಗೆ

ನಿಜವನರಿತು ನಿಶ್ಚಿಂತನಾಗಿರಲು

ಶರಣರ ನುಡಿಯೇ ಸೋಪಾನ

 ಎಂಬ ಮಾತು ನುಡಿಯ ಹಿರಿಮೆಯನ್ನು ಸೂಚಿಸುತ್ತದೆ.

ಶರಣರು ಪ್ರತಿಪಾದಿಸುವ ಶಿವಬಟ್ಟೆ ಅಂದರೆ ದಿಟವ ನುಡಿವುದು ನುಡಿದಂತೆ ನಡೆವುದಾಗಿದೆ. ಸತ್ಯಂವದ ಧರ್ಮಂಚರ ಎಂಬುದಕ್ಕೆ ಬದಲಾಗಿ ಶರಣರು ನುಡಿದಂತೆ ನಡೆವುದು ಎಂದು ನುಡಿದುದಲ್ಲದೆ ನಡೆದು ತೋರಿದರು.

      ಅಲ್ಲಮಪ್ರಭು ಹಾಗೂ ಮುಕ್ತಾಯಕ್ಕರ ನಡುವಿನ ಸಂಭಾಷಣೆಗೆ ಸಂಬಂಧಿಸಿದ ಒಂದು ವಚನದಲ್ಲಿ ನಡೆ-ನುಡಿ ಸಿದ್ಧಾಂತದ ತಾತ್ವಿಕ ನಿಲುವು ಅರ್ಥಗರ್ಭಿತವಾಗಿದೆ. 

ನಡೆದು ನಡೆದು ಕಡೆಯ ಕಂಡವರು ನುಡಿದು ನುಡಿದು ಹೇಳುತ್ತಿರೆ

ನುಡಿದು ನುಡಿದು ಹೇಳುವನ್ನಕ್ಕರ ನಡೆದುದೆಲ್ಲ ಹುಸಿಯೆಂಬೆನು

ಮಾತಿನ ಮಥನದಿಂದಾದ ಅರಿವು ಕರಣ ಮಥನದಿಂದಾದುದಲ್ಲದೆ

ಅನುಪಮ ಸ್ವರಭೇದವಾದ ಪರಿಎಂತು ಹೇಳಾ !

ಇದಿರಗೆಲಬೇಕೆಂದು ನುಡಿದು ಕೊಂಡಡೇನು

ಮನಕ್ಕೆ ಮನ ಸಾಕ್ಷಿಯಾಗಿ ನಿಃಪತಿಯಿಲ್ಲ ನೋಡಾ

ಬರಿಯ ಮಾತನಾಡಿದರೇನು ಬಂತು? ಉಪಯೋಗವಿಲ್ಲ.ಮಾತು ಮನಕ್ಕೆ ಮನ ಸಾಕ್ಷಿಯಾಗುವಂತಿರಬೇಕು. ಅಂದರೆ ನಡೆಗೆ ನುಡಿ ಸಾಕ್ಷಿಯಾಗಬೇಕು. ನುಡಿಗೆ ನಡೆ ಸಾಕ್ಷಿಯಾಗಬೇಕು. ಈ ಪರಸ್ಪರ ಸಾಕ್ಷಿಯಿಂದ ಅರಿವು-ಮರೆವುಗಳೆರಡೂ ಲಯವಾದ ಒಂದು ಅನಿರ್ವಚನೀಯ ಸ್ಥಿತಿಯ ಅನುಭವ ಆಗುತ್ತದೆ. ನಡೆ-ನುಡಿಗಳೆರಡೂ ಬೆರತು ಬೇರಾಗದ ಸ್ಥಿತಿಯನ್ನು ಹೊಂದಿವೆ.

      ಉರಿಲಿಂಗಪೆದ್ದಿಗಳ ನಡೆ-ನುಡಿಯನ್ನು ಕುರಿತಾದ ಸೈದ್ಧಾಂತಿಕ ನಿಲುವು ವ್ಯಾಪಕತ್ವವನ್ನು ಪಡೆದುಕೊಂಡಿದೆ.

ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗ ಮೂರ್ತಿ

ಆತನ ನುಡಿಯೇ ವೇದ ಆತನ ನಡೆಯೇ ಶಾಸ್ತ್ರ ಪುರಾಣ ಆಗಮ ಚರಿತ್ರವು

ಆಮಹಾಮಹಿಮನ ನುಡಿಯಲ್ಲಿ ತರ್ಕವಮಾಡಲಾಗದು

ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ

ಲಿಂಗವನರಿದ ಮಹಾಮಹಿಮಂಗೆ ನಮೋ ನಮೋ ಎಂಬೆನು (ವ.ಸಂ.೧೫೧೯)

ಈ ವಚನದಲ್ಲಿ ಲಿಂಗದ ಅರಿವು, ಜ್ಞಾನ ಯಾರಲ್ಲಿ ಪರಿಪೂರ್ಣವಾಗಿ ಜಾಗೃತವಾಗಿರುತ್ತದೆಯೋ ಅಂತಹವನು ಸರ್ವಾಂಗಲಿಂಗಮೂರ್ತಿಯಾದ ಲಿಂಗವಂತನಾಗಿರುತ್ತಾನೆ. ಅವನ ನುಡಿ ವೇದವಾಗಿ ನಡೆ ಶಾಸ್ತ್ರ ಪುರಾಣವಾಗಿ ಚರಿತ್ರೆ ಆಗಮವಾಗಿ ಕಂಡಿದೆ. ಇಂತಹ ಶರಣರ ನಡೆ-ನುಡಿ ಚರಿತ್ರೆಯಲ್ಲೇನಾದರೂ ಶಂಕೆಯನ್ನು ವ್ಯಕ್ತಪಡಿಸಿದರೆ ಅಂತಹವರಿಗೆ ನರಕ ಪ್ರಾಪ್ತಿ ಎನ್ನುವ ನಿಲುವು ಮಹತ್ತರವಾದುದು. ಸ್ವರ್ಗ-ನರಕ ಎಂಬಿವು ಬೇರೆಲ್ಲಿಯೂ ಇಲ್ಲ. ನಮ್ಮ ನಡೆ-ನುಡಿ ಬದುಕಿನಿಂದ ಇವು ವ್ಯಕ್ತವಾಗುತ್ತವೆ ಎನ್ನುವ ಆಶಯ ಇಲ್ಲಿ ಎದ್ದು ಕಾಣುತ್ತದೆ.

      ಲಿಂಗವಂತರು ಈ ಲೋಕದ ಮಾರ್ಗವ ನಡೆಯರು ಲೋಕದ ಮಾರ್ಗವ ನುಡಿಯರು. ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಎನ್ನುವ ಉರಿಲಿಂಗಪೆದ್ದಿಗಳ ವಿಚಾರಧಾರೆಯಲ್ಲಿ ಲಿಂಗವಂತರಿಗೆ ಲಿಂಗವನ್ನುಳಿದು ಯಾರ ಪರಿವೆಯೇ ಇಲ್ಲವೆಂಬುದು ಗಮನಾರ್ಹವಾಗಿದೆ. ಶರಣರು ಕೆಡಿಸುವಂತ ಮಾತನ್ನು ಎಂದಿಗೂ ಆಡರು. ಅವರ ನುಡಿ ಲಿಂಗ ಮೆಚ್ಚಿ ಅಹುದಹುದೆನ್ನುವಂತಹದ್ದು.

      ಸಮಗ್ರ ಬದುಕಿನ ಶುದ್ಧತೆ ಮತ್ತು ಆ ಮೂಲಕ ಶುದ್ಧ ಸಮಾಜವೊಂದನ್ನು ಕಟ್ಟುವ ಗುರಿ ಹೊಂದಿದ್ದ ಶರಣರು ಭಕ್ತನ ಲಕ್ಷಣಗಳು ಆದರ್ಶವಾದವುಗಳು ಎಂದು ಹೇಳುವಲ್ಲಿ ನಡೆ-ನುಡಿಗಳನ್ನು ಭಕ್ತನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿ ಪರಿಗಣಿಸಿರುವುದು ಕಂಡು ಬರುತ್ತದೆ.

ಭಕ್ತನ ನಡೆ ಶುದ್ಧ ಭಕ್ತನ ನುಡಿ ಶುದ್ಧ ಭಕ್ತನ ತನುಶುದ್ಧ

ಭಕ್ತನ ಮನಶುದ್ಧ ಭಕ್ತನ ಭಾವಶುದ್ಧ

ಭಕ್ತನ ಸರ್ವ ಕ್ರಿಯೆಯಲ್ಲಾ ಶುದ್ಧ

ಅಖಂಡೇಶ್ವರ ನೀ ಒಲಿದ ಸದ್‌ಭಕ್ತನ ಕಾಯವೇ ಕೈಲಾಸವಯ್ಯಾ ಎಂದಿದ್ದಾರೆ. 

ಶರಣ(ಲಿಂಗವಂತ) ಹಾಗೂ ನಡೆ-ನುಡಿ ಸಿದ್ಧಾಂತ

ವಚನಕಾರರು ನಡೆ-ನುಡಿ ತತ್ತ್ವವನ್ನು ತಮ್ಮ ಬದುಕಿನಲ್ಲಿ ಸಾರ್ಥಕವಾಗಿ ರೂಢಿಸಿಕೊಂಡವರಾಗಿದ್ದಾರೆ. ಪ್ರತಿಯೊಬ್ಬ ಲಿಂಗವಂತ ಅಥವಾ ಶರಣರ ನಡೆನುಡಿಗಳು ಹೇಗಿರಬೇಕು ಎಂಬುದನ್ನು ಬಸವಣ್ಣ ಈ ರೀತಿ ಹೇಳಿದ್ದಾರೆ.

ಲಿಂಗವಶದಿಂದ ಬಂದ ನಡೆಗಳು

ಲಿಂಗವಶದಿಂದ ಬಂದ ನುಡಿಗಳು

ಲಿಂಗವಂತರು ತಾವು ಅಂಜಲೇಕೆ

ಲಿಂಗವಿರಿಸಿದಂತಿಪ್ಪುದಲ್ಲದೆ

ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ (ವ.ಸಂ.೬೭೮)

ಪ್ರತಿಯೊಬ್ಬ ಶರಣನ ನಡೆ-ನುಡಿಗಳೆಲ್ಲ ಲಿಂಗವಶದಿಂದ ಬಂದವುಗಳೇಹೊರತು ಬೇರೆ ಎಲ್ಲಿಂದಲೋ ಎರವು ತಂದವುಗಳಲ್ಲ. ಲಿಂಗಯ್ಯನೇ ಕರುಣಿಸಿದ ಮಾರ್ಗದಲ್ಲಿ ಶರಣರು ನಡೆಯಲು ನುಡಿಯಲು ಕಾರಣವಿಲ್ಲ. ಲಿಂಗಯ್ಯನು ಎಂದಿಗೂ ಆ ರೀತಿ ನಡೆಯುವವರನ್ನು ತಪ್ಪುದಾರಿಗೆ ತಳ್ಳಲಾರ ಎಂಬುದು ಗಮನಾರ್ಹ.

      ಲಿಂಗದ ನಡೆ-ನುಡಿಗೆ ಅರ್ಹರಾಗದೇ ಕೇವಲ ಸಮಾಜದಲ್ಲಿ ತನ್ನ ವರ್ಚಸ್ಸು, ಹೆಗ್ಗಳಿಕೆ ಹೆಚ್ಚಲಿ ಎಂಬ ಆಸೆಯಿಂದ ತೋರಿಕೆಗೆ ಲಿಂಗವನ್ನು ಕಟ್ಟಿಕೊಂಡು ಆಡಂಬರ ಜೀವನ ನಡೆಸುವವರಿಗೆ ಲಿಂಗಧಾರಣೆಯ ಮಹತ್ವವಾಗಲೀ, ಆ ದಿಸೆಯಲ್ಲಿ ತಾನು ಮುಟ್ಟಬಹುದಾದ ಗುರಿಯ ಕಡೆಯಾಗಲೀ ಗಮನ ಇರುವುದಿಲ್ಲ. ಈ ವೇಷತೊಟ್ಟು ತೊಡಕಾಗಿ ಕಾಣುವವರಿಂದ ದೂರವಿರಬೇಕು. ಲಿಂಗವೆ ತಾನು ತಾನೇ ಲಿಂಗ ಲಿಂಗದ ನಡೆ-ನುಡಿಯೆ ತನ್ನ ನಡೆ-ನುಡಿಯೆಂಬ ಶುದ್ಧತೆಯನ್ನು ಹೊಂದಿ ಆ ಅನುಭಾವದೆತ್ತರಕ್ಕೆ ಹೋಗಿ ನಿಲ್ಲುವನ ಮಾತ್ರ ಲಿಂಗವಂತರಾಗುತ್ತಾರೆ ಎನ್ನುವ ಸಿದ್ಧರಾಮರ ವಚನದಲ್ಲಿ ಲಿಂಗವಂತರಿಗೆ ನಡೆ-ನುಡಿಯ ಅಗ್ಯತೆ ಪ್ರಮುಖ ಎನ್ನುವುದು ಎದ್ದುಕಾಣುವಂಹದ್ದಾಗಿದೆ.

      ಶರಣರ ಮಹತ್ತ್ವವನ್ನು ಅರಿಯಬೇಕಾದರೆ ಅವರಲ್ಲಿ ನಡೆ-ನುಡಿ ಎಂತಹ ಪಾತ್ರವಹಿಸುತ್ತದೆ ಎಂಬುದನ್ನು ಮರುಳಶಂಕರದೇವರು. ಕೆಳಕಂಡ ವಚನದಲ್ಲಿ ಈ ರೀತಿ ಹೇಳಿದ್ದಾರೆ.

 

ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ

ಲಿಂಗದನಚ್ಚು ಲಿಂಗದ ಮುಚ್ಚು ಲಿಂಗವೇ ಪ್ರಾಣವಾಗಿರಬೇಕಲ್ಲದೆ

ಮತ್ತೆ ತಪ್ಪಿ ನಡೆದು ತಪ್ಪಿ ನುಡಿದು ಪರಧನ ಪರಸ್ತ್ರೀಯರ ಸಂಗಮಾಡಿ

ದುರ್ಗುಣ ದುರಾಚಾರದಲ್ಲಿ ನಡೆದು

ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ

ಇದು ಲಿಂಗದ ನಡೆಯಲ್ಲ ಲಿಂಗದ ನುಡಿಯಲ್ಲ

ಇದ ನಮ್ಮ ಶಿವಶರಣರು ಮೆಚ್ಚರು (ಸ.ಪು.ವ.ಸಂ.೩. ವ.ಸಂ.೧೨) 

ಶರಣರು ನಡೆ-ನುಡಿ ಶುದ್ಧವಾಗಿರುವುದರ ಮೂಲಕ ಲಿಂಗಧಾರಿಗಳಾಗಿ ಸಮಾಜ ಒಪ್ಪುವಂತಹ ಕೆಲಸ ಮಾಡುವ ಲಿಂಗವಂತನಾಗಿರಬೇಕು ಎಂಬ ಮರುಳ ಶಂಕರದೇವರ ಚಿಂತನೆ ಸ್ವೀಕಾರಾರ್ಹ ಎನಿಸಿದೆ.

ವಚನಕಾರರು ಲಿಂಗದ ನಡೆ-ನುಡಿಯಿಂದ ದೂರಾದವರನ್ನು ಶರಣರೆಂದು, ಲಿಂಗವಂತರೆಂದು ಆದರಿಸಲಿಲ್ಲ. ವಚನಕಾರರಲ್ಲಿ ಈ ರೀತಿಯ ವಚನಗಳು ಬಹಳಷ್ಟು ಕಂಡು ಬರುತ್ತಿದ್ದು ಅವು ವೃಥಾವಿಷಯಗಳನ್ನು ಮುಂದೆ ಮಾಡಿಕೊಂಡು ನಡೆ-ನುಡಿ ತಪ್ಪಿ ನಡೆಯುವವರನ್ನು ತಿದ್ದುವಂತಿವೆ.

      ಶರಣರ ನಡೆ-ನುಡಿ ಶುದ್ಧತೆಯನ್ನು ಕುರಿತು ಉರಿಲಿಂಗಪೆದ್ದಿಗಳು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳತೆಯಿಂದ ವಿವರಿಸಿದ್ದಾರೆ.

 ಲಿಂಗವಂತನು ಲಿಂಗವಂತರೊಡನೆ ಸತ್ಯವ ನುಡಿವುದು

ಸಹಜದಲ್ಲಿ ನಡೆವುದು, ಪ್ರೇಮದಲ್ಲಿ ಸಂಗವ ಮಾಡುವುದು

………………………………………………………………………………………………

ಲಿಂಗವಂತನು ಲಿಂಗವಂತರೊಡನೆ

ಹೇಮದಾಸೆಗೆ ಪ್ರೇಮಗುಂದಿ ನಡೆಯಲಾಗದು

ಅಸತ್ಯವ ನುಡಿಯಲಾಗದು

ಕ್ರೋಧಿಸಿ ನುಡಿಯಲಾಗದು, ವಂಚಿಸಿ ನುಡಿಯಲಾಗದು

ತರ್ಕಿಸಿ ನುಡಿಯಲಾಗದು, ದುಶ್ಚರಿತ್ರದಲ್ಲಿ ನಡೆಯಲಾಗದು

ಅಜ್ಞಾನ ಕ್ರೀಯಲ್ಲಿ ವರ್ತಿಸಿ ನಡೆಯಲು (ವ.ಸಂ.೧೫೧೧)

ಇಹಪರವಿಲ್ಲ, ಲಿಂಗವನರಿಯಬಾರದು

ಅರಿಯವವಂಗೆ ಪೂಜಿಸಲೆಂತಹದು

ಪೂಜೆ ಇಲ್ಲದವನಿಗೆ ಭಕ್ತಿ ಎಂತಹದ್ದು

ಭಕ್ತಿ ಇಲ್ಲದವನಿಗೆ ಪ್ರಸಾದವೆಂತಹದು?

ಇದನರಿದು ಲಿಂಗವಂತನು ಲಿಂಗವಂತರಲ್ಲಿ

ಸತ್ಯ ಸಂಭಾಷಣೆ ಯೋಗವಾದಡೆ ಕೇವಲಮುಕ್ತಿ

 ಇಹ-ಪರಗಳೆರಡರಲ್ಲಿಯೂ ಸಲ್ಲುವಂತಾಗಬೇಕಾದರೆ ಲಿಂಗವಂತನ ನಡೆ-ನುಡಿ ಹೇಗಿರಬೇಕೆನ್ನುವುದನ್ನು ಈ ಮೇಲ್ಕಂಡ ವಚನದಲ್ಲಿ ಕಾಣಬಹುದಾಗಿದೆ.

      ಶರಣರು ತಮ್ಮ ವಚನಗಳಲ್ಲಿ ಹಲವೆಡೆ ನುಡಿಗೆ ಪ್ರಾಶಸ್ತ್ಯ ನೀಡಿದ್ದರೆ, ಕೆಲವೆಡೆ ನಡೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

      `ನುಡಿಗೆ' ಹೆಚ್ಚಿನ ಪ್ರಾಶಸ್ತ್ಯ ನೀಡಿರುವೆಡೆಯಲ್ಲಿ ವಚನಕಾರರಿಗೆ ನುಡಿ ಬರಿಯ ಆಡುವ ಮಾತಾಗಿ ಕಂಡು ಬಂದಿಲ್ಲ. ಅದು ಕೊಟ್ಟ ಭಾಷೆ ವಚನ ಎಂದೆನಿಸಿದೆ. `ಭಕ್ತರ ಮನದ ಮೈಲಿಗೆಯ ಕಳೆಯಲೆಂದು ಗೀತ ಮಾತೆಂಬ ಜ್ಯೋತಿಯ ಬೆಳಗಿಟ್ಟರು' ಎನ್ನುವ ಶರಣರ ವಚನವು `ನುಡಿಯ' ಫಲಪ್ರದದ ಪ್ರತೀಕವಾಗಿದೆ.

ನುಡಿಯ ಮಹತ್ತರತೆಯನ್ನು ಕುರಿತು ಸಿದ್ಧರಾಮರು

ನಮ್ಮ ನಡಾವಳಿಗೆ ನಮ್ಮ ಪುರಾತನರ ನುಡಿಯೆ ಇಷ್ಟವಯ್ಯಾ

ಸ್ಮೃತಿಗಳು ಸಮುದ್ರದ ಪಾಲಾಗಲಿ

ಕೃತಿಗಳು ವೈಕುಂಠವ ಸೇರಲಿ

ಪುರಾಣಗಳು ಅಗ್ನಿಯ ಕೂಡಲಿ

ಆಗಮಗಳು ವಾಯುವ ಹೊಂದಲಿ

ಎಮ್ಮ ನುಡಿ ಕಪಿಲಸಿದ್ಧಮಲ್ಲಿಕಾರ್ಜುನನ

ಮಹಾಲಿಂಗದ ಹೃದಯದೊಳು ಗ್ರಂಥಿಯಾಗಿರಲಿ

ಎಂದು ಹೇಳಿದ್ದಾರೆ.

ಈ ವಚನದಲ್ಲಿ ನುಡಿಯನ್ನು ಲಿಂಗದ ಗುಡಿ ಸೇರಿಸಿರುವ ದಿವ್ಯತೆ ಮನನೀಯ.

ಸ್ಮೃತಿ, ಆಗಮ-ಪುರಾಣಗಳು ಅನುಭವವಿಲ್ಲದ ಆದರ್ಶಗಳು ಆದರೆ ಶರಣರ ನುಡಿ ಅನುಭವದ ಅಮೃತ. ಲೌಕಿಕದ ನಡೆ-ನುಡಿಗಳಿಗೆ ಶರಣರು ಅಲೌಕಿಕ ಅಂತಃಸತ್ವವನ್ನು ತುಂಬಿದ್ದಾರೆ. ದಿವ್ಯತೆಯ ತೊಡಿಗೆಯನ್ನು ತೊಡಿಸಿದ್ದಾರೆ. ಪಾವಿತ್ರ್ಯದ ಸಂಸ್ಕಾರ ನೀಡಿದ್ದಾರೆ. 

ಆದ್ಯ ವಚನಕಾರ ಜೇಡರದಾಸಿಮಯ್ಯರು

ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ

ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ

ನಿಮ್ಮ ಶರಣರ ಸೂಳ್ನಡಿಯ ನೊಂದರೆಗಳಿಗೆಯಿತ್ತಡೆ (ವ.ಸಂ.೭೭೨)

ನಿಮ್ಮನಿತ್ತೆ ಕಾಣಾ ರಾಮನಾಥಾ 

 ಎಂದು ಶರಣರ ಸೂಳ್ನುಡಿಗಳಿಗೆ ಹೆಚ್ಚಿನ ಗೌರವವನ್ನು ಕೊಟ್ಟಿದ್ದಾರೆ. ವಚನಕಾರರು ಸಾಮಾಜಿಕ ಪ್ರಜ್ಞೆಯುಳ್ಳ ನೀತಿ ಬೋಧಕರು ಆಗಿದ್ದವರು. ಒಂದು ನೀತಿಯನ್ನೋ, ಅನಿಸಿಕೆಯನ್ನು ಪರಿಣಾಮಕಾರಿಯಾಗಿಸಲು, ಜನಸಾಮಾನ್ಯರ ಮನಸ್ಸನ್ನು ಮುಟ್ಟುವಂತಾಗಿ ಅಲ್ಲಿಯೇ ಉಳಿಯುವಂತೆ ಮಾಡಲು ಸಂಭಾಷಣೆ ಮಾತುಗಳ ಮೂಲಕ ತಮ್ಮ ಅನುಭವಗಳನ್ನು ವಿಮರ್ಶಿಸುತ್ತಿದ್ದರು. ಆತ್ಮಶೋಧನೆ ಮಾಡಿಕೊಳ್ಳುತ್ತಿದ್ದರು. ಈ ಮಾತುಗಳನ್ನು `ಸೂಳ್ನುಡಿ' ಎಂಬ ಪರಿಭಾಷೆಯಲ್ಲಿ ಗುರುತಿಸಿದ್ದು ಅವುಗಳು ಸಕಲ ಸಿರಿಸಂಪತ್ತಿಗಿಂತಲೂ ಉನ್ನತವಾದವುಗಳು ಎಂಬ ನಿಲುವನ್ನು ಶರಣರು ತಾಳಿದ್ದರು. ನುಡಿಯ ಪಾವಿತ್ಯತೆ ಮಹತ್ತರತೆಯನ್ನು ಕುರಿತು ಅಲ್ಲಮಪ್ರಭುಗಳು ಒಂದೆಡೆ ಈ ರೀತಿ ಹೇಳಿದ್ದಾರೆ. 

ಶರಣರು ನುಡಿಯುವುದಾದರೂ ಯಾರೊಡನೆ?

ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು

ಲಕ್ಷಕ್ಕೊಮ್ಮೆ ನುಡಿಯಲಾಗದು, ಕೋಟಿಗೊಮ್ಮೆ ನುಡಿಯಲಾಗದು

ಸುಡಲಿ ಆವಂದಿರ ಕೂಟ ಮಾರಿ ಹೋಗಲಿ

ಗುಹೇಶ್ವರ ನಿಮ್ಮ ಶರಣರಲ್ಲದವರೊಡನೆ ಬಾಯಿದೆರೆಯಲಾರದು. 

ಈ ವಚನವು ನುಡಿಯ ಪಾವಿತ್ರ್ಯತೆಯ ರಕ್ಷಣೆಯ ಅಗತ್ಯತೆಯನ್ನು ತಿಳಿಸುತ್ತದೆ.

ಶರಣರು ಕೆಲವೆಡೆ ನುಡಿಗಿಂತ ನಡೆಗೆ ಹೆಚ್ಚಿನ ಮಹತ್ತ್ವ ಕೊಟ್ಟಿದ್ದಾರೆ.

 ನಿದರ್ಶನಕ್ಕೆ ಆಯ್ದಕ್ಕಿ ಲಕ್ಕಮ್ಮರ ಈ ವಚನವನ್ನು ಪರಿಶೀಲಿಸಬಹುದು.

ಗರ್ವದಿಂದ ಮಾಡುವ ಭಕ್ತಿ ದ್ರವ್ಯದಕೇಡು

ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ

ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ

ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ 

ಈ ವಚನವು ನಡೆಯ ಮಹತ್ವದವನ್ನು ಪ್ರತಿಪಾದಿಸಿದೆ. ನಡೆಯಬಲ್ಲಡೆ ನುಡಿಯಡಗಬೇಕು ಎನ್ನುವುದು ಶರಣರ ನಿಲುವು.

ನಡೆ-ನುಡಿ ಎಂದರೆ ಅಂತರಂಗ-ಬಹಿರಂಗ ಶುದ್ಧಿ

ತನುವ ಕೊಟ್ಟೆನೆಂದು ನುಡಿದು ಗುರು ವಚನಕ್ಕೆ ದೂರವಾದೆ

ಮನವಕೊಟ್ಟೆನೆಂದು ನುಡಿದು ಲಿಂಗಕ್ಕೆ ದೂರವಾದೆ

ಧನವ ಕೊಟ್ಟೆನೆಂದು ನುಡಿದು ಜಂಗಮಕ್ಕೆ ದೂರವಾದೆ

ಕೂಡಲ ಸಂಗಮದೇವಯ್ಯ ನಿಮಗೆ ಮಾಡಿದನೆಂದು

ನುಡಿದು ಕೆಟ್ಟ ಕೇಡಿಗೆ ಕೊನೆಯಿಲ್ಲ

ಎನ್ನುವ ವಚನದಲ್ಲಿ ಮಾಡಿದ್ದನ್ನು ಆಡಬಾರದೆನ್ನುವ ನಿಲುವು ವ್ಯಕ್ತಗೊಂಡಿದೆ. ಮಾಡಿದನೆಂಬುದು ಅಹಂಕಾರವಾಗುತ್ತದೆ. ಕಡೆಯಿಲ್ಲದ ಕೇಡಿಗೆ ಈಡಾಗಬೇಕಾಗುತ್ತದೆ. ಹೀಗಾಗಿ ನುಡಿವ ನಾಲಗೆಯಲ್ಲಿ ನಡೆಯ ಕಾಲಲ್ಲಿ ಲಿಂಗದ ಅನುಭವವಾಗಬೇಕು. ನುಡಿಯ ಬಗೆಗೆ ವಚನಕಾರ್ತಿ ಲಿಂಗಮ್ಮ ತುಸು ಬಿರುಸಾಗಿಯೇ ಈ ಕೆಳಕಂಡ ವಚನದಲ್ಲಿ ಹೇಳಿದ್ದಾಳೆ. 

ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು

ಸಂತೆಯ ಸೂಳೆಯರಂತೆ

ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ

ಅಂತರಂಗವೆಲ್ಲ ಅರಿಮಾಯಿತ್ತು ಬಹಿರಂಗವೆಲ್ಲಾ ಲಿಂಗವಾಯಿತ್ತು

ಆ ಲಿಂಗದಲ್ಲಿ ನುಡಿದು ಲಿಂಗದಲ್ಲಿ ನಡೆದು

ಲಿಂಗದಲ್ಲಿ ಮುಟ್ಟಿ ಲಿಂಗದಲ್ಲಿ ವಾಸಿಸಿ

ಲಿಂಗದಲ್ಲಿ ಕೇಳಿ ಲಿಂಗವಾಗಿ ನೋಡಿ

ಸರ್ವಾಂಗವು ಲಿಂಗವಾಗಿ ಆ ಲಿಂಗವ ನೋಡುವ

ಕಂಗಳಲ್ಲಿ ಐಕ್ಯ ಕಂಡಯ್ಯ ಅಪ್ಪಣ್ಣ ಪ್ರಿಯ (ವ.ಸಂ.೧೦೮) 

ನುಡಿಗೆ ಬೇಕಾದುದು ಅಂತರಂಗ ಬಹಿರಂಗಶುದ್ಧಿ ಎಂಬ ಆಶಯ ಮೇಲಿನ ವಚನದಿಂದ ವಿದಿತವಾಗುತ್ತದೆ.

      ಮಾದಾರಚನ್ನಯ್ಯರು ಕುಲದ ಬಗೆಗೆ ಹೇಳುವ ವಚನದಲ್ಲಿ ನಡೆ-ನುಡಿಯ ಸಾರ್ಥಕತೆಯ ಅರಿವನ್ನು ಗುರುತಿಸಬಹುದು. 

ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ

ನುಡಿಲೇಸು ನಡೆ ಅಧಮವಾದಲ್ಲಿ

ಅದೇ ಬಿಡುಗಡೆಯಿಲ್ಲದೆ ಹೊಲೆ

ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ

ಕೆಟ್ಟು ನಡೆಯುತ್ತ ಮತ್ತೆ ಕುಲಜರೆಂಬ ಒಡಲವರುಂಟೆ

ಆಚಾರವೆ ಕುಲ ಅನಾಚಾರವೆ ಹೊಲೆ

ಇಂತೀ ಉಭಯವನರಿದು ಆಚರಿಸಬೇಕು 

      ನಡೆ-ನುಡಿಗಳಲ್ಲಿ ತತ್ತ್ವವಿರಬೇಕು. ಹಾಗಿದ್ದಾಗ ಯಾವ ಹೊಲೆತನ ಸೂತಕ ಇಲ್ಲ. ಅದನ್ನು ಹೊರತು ಪಡಿಸಿ ಚೆನ್ನಾಗಿ ಮಾತನಾಡಿ ನಡೆಯಲ್ಲಿ ಕೀಳು ಆದರೆ ಅದುವೆ ಹೊಲೆತನ. ನಡೆನುಡಿ ಒಂದಾದಾಗ ಮಾತ್ರ ಕುಲ-ಹೊಲೆ ಎಂಬುದಿಲ್ಲ. ನಡೆ-ನುಡಿ ಒಂದಾದವರೆಲ್ಲರೂ ಸಮಾನರು. ಅವರೇ ಆಚಾರವಂತರು. ಉಳಿದವರು ಅನಾಚಾರವಂತಹವರು. ಕಳವು ವ್ಯಾಪಾರ ಮುಂತಾದವುಗಳಲ್ಲಿ ಕೆಟ್ಟು ನಡೆಯುವವರನ್ನು ಕುಲಜ ಎನ್ನಲು ಆದಿತೆ? ಆಚಾರವೇ ಕುಲ ಅನಾಚಾರವೇ ಹೊಲೆ ಎಂದು ಚೆನ್ನಯ್ಯ ಒತ್ತಿ ಹೇಳಿದ್ದಾನೆ. ಮಾದಾರ ಚೆನ್ನಯ್ಯರ ನಡೆ-ನುಡಿಯನ್ನು ಕುರಿತಾದ ಮೇಲ್ಕಂಡ ವಚನವು ಓದುಗರನ್ನು ಆಲೋಚಿಸುವಂತೆ ಮಾಡಿದೆ.

      ಶರಣರು ಪ್ರತಿಪಾದಿಸಿರುವ ಕಾಯಕ ತತ್ವದಲ್ಲಿಯೂ ನಡೆಯ ಮಹತ್ವ ಅಡಗಿರುವುದನ್ನು ಕಾಣಬಹುದು. ಸತ್ಯಶುದ್ಧ ಕಾಯಕದಿಂದ ಹಣ ಸಂಪಾದನೆ ಮಾಡುವುದು ಕಾಯಕದ ಮೊದಲನೆ ಉದ್ದೇಶ್ಯವಾದರೆ ಎರಡನೆಯದು ತನಗೆ ಬೇಕಾದಷ್ಟನ್ನು ಇರಿಸಿಕೊಂಡು ಹೆಚ್ಚಿನದನ್ನು ಸತ್ಪಾತ್ರರಿಗೆ ದಾನಮಾಡಬೇಕು.

ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಲಿಂಗಾರ್ಪಿತ

ದುರಾಸೆಯಿಂದ ಬಂದುದು ಅನರ್ಪಿತ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ

ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ

ಎಂಬುದು ಶರಣರ ದೃಢ ನಿರ್ಧಾರ. ವಚನಸಾಹಿತ್ಯದಲ್ಲಿ ಕಾಯಕದ ಬಗೆಗೆ ಒಮ್ಮತ ಹಾಗೂ ಸಮ್ಮತದ ಮಾತುಗಳನ್ನೇ ಆಡಿದ್ದಾರೆ. ಬರೀ ನುಡಿದವರು ಮಾತ್ರವಲ್ಲ ಅದರಂತೆ ನಡೆದುಕೊಂಡ ಸತ್ಯಶುದ್ಧಕಾಯಕ ಜೀವಿಗಳು ಆಗಿದ್ದಾರೆ. ಕಾಯಕ ಕುರಿತಾದ ವಚನಕಾರರ ಮಾತುಗಳು ಕೇವಲ ಅರ್ಥಶಾಸ್ತ್ರ ಸಿದ್ಧಾಂತದ ಮಾತುಗಳಲ್ಲ. ಪ್ರಯೋಗಶೀಲ ನುಡಿಗಳು. ಈ ನುಡಿಗಳ ಹಿಂದೆ ದುಡಿಮೆಯ ದನಿ ಇರುವುದು ಗಮನಿಸಬೇಕಾದ ಸಂಗತಿ.

      ನುಡಿ ಮತ್ತು ನಡೆಯಲ್ಲಿ ಒಂದಾಗಿ ಬಾಳಿ ತೋರಿದ ಶರಣರ ಮಾತು ಮೌಲ್ಯಯುಕ್ತವಾದವುಗಳಾಗಿವೆ.

ಕೆರೆಹಳ್ಳ ಬಾವಿಗಳು ಮೈದೆಗೆದರೆ

ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು

ವಾರಿಧಿ ಮೈದೆಗೆದರೆ ರತ್ನಂಗಳ ಕಾಣಬಹುದು

ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ

ಲಿಂಗವನೆ ಕಾಣಬಹುದು (ವ.ಸಂ.೮೬೨)

ನುಡಿದಂತೆ ನಡೆ, ನಡೆದಂತೆ ನುಡಿ ಆದಾಗ ಪರಂಜ್ಯೋತಿಯನ್ನು ಕಾಣಬಹುದು ಎಂಬ ಶರಣರ ನಿಲುವು. `ಮಾತೆಂಬುದು ಜ್ಯೋತಿರ್ಲಿಂಗ ಮಾತೆಂಬುದು ಮಾಣಿಕ್ಯ' ಎಂಬುದನ್ನು ಸಾರ್ಥಕಗೊಳಿಸಿದೆ.

      ಒಟ್ಟಾರೆ ನಡೆ-ನುಡಿಗಳು ಪರಿಶುದ್ಧವಾಗಿರಬೇಕೆಂಬುದು ವಚನಕಾರರ ಸದಾಶಯ. ಈ ಪರಿಶುದ್ಧತೆಗೆ ವ್ಯಕ್ತಿಯ ಜೀವನ ಶ್ರದ್ಧೆಯನ್ನು ಬೆಳಸಿಕೊಳ್ಳಬೇಕು. ಅದು ಅನಿವಾರ್ಯ ಇಲ್ಲವಾದರೆ ವ್ಯರ್ಥ ಎಂಬ ಭಾವನೆಯನ್ನು ವಚನಕಾರರು ತಾಳಿದವರಾಗಿದ್ದರು. ಅಂದಿನ ವಚನಕಾರರ ನಡೆ-ನುಡಿಗಳ ಕುರಿತ ಜಿಜ್ಞಾಸೆ ಇಂದಿಗೂ ವಿಚಾರಾರ್ಹವಾಗಿದೆ. ಅವುಗಳ ಕುರಿತು ಇಂದು ನಾವು ಕ್ರಮಬದ್ಧವಾಗಿ ವಿಚಾರ ಮಾಡಬೇಕಾಗಿದೆ. ಅದರ ಮೂಲಕ ನಮ್ಮ ವಿಚಾರಪರತೆ ಬೆಳೆಯಬೇಕಾಗಿದೆ. ಅಂತಹ ವೈಚಾರಿಕತೆಯನ್ನು ಬಿಂಬಿಸುವ ನಡೆನುಡಿಗಳನ್ನು ಆಧುನಿಕ ಕಾಲದಲ್ಲಿಯೂ ಅಳವಡಿಸಿಕೊಂಡರೆ ನಮ್ಮ ಜೀವನ ಪಥ ಸುಗಮವಾಗುತ್ತದೆ. ಜೊತೆಗೆ ಇಂದು ಆಧುನಿಕ ಜಗತ್ತು ಎದುರಿಸುತ್ತಿರುವ ಕೆಲವು ಬಲಿಷ್ಟ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅವು ಸಹಾಯಕವಾಗಿವೆ.

 

              ಪರಾಮರ್ಶನ ಗ್ರಂಥಗಳು

 

೧.     ಬಸವಣ್ಣನವರ ವಚನ ಸಂಪುಟ (ಸಂ: ಎಂ.ಎಂ.ಕಲಬುರ್ಗಿ)

 ಸ.ವ.ಸಂ.೧.ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) ೨೦೦೧

 ೨.ಸಂಕೀರ್ಣ ವಚನ ಸಂಪುಟ ೨ ( ಸಂ.ಎಸ್.ವಿದ್ಯಾಶಂಕರ)

 ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) ೨೦೦೧

 ೩. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-೩

  ಸ್ವಪ್ನ ಪುಸ್ತಕಾಲಯ, ಬೆಂಗಳೂರು, ೧೯೯೭

 ೪.ಸಿ.ನಾಗಭೂಷಣ,  ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

               ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦

                ವೀರಶೈವಸಾಹಿತ್ಯ : ಕೆಲವು ಒಳನೋಟಗಳು

                ವಿಜೇತ ಪ್ರಕಾಶನ, ಗದಗ,೨೦೦೮

 ೫.ವಚನಕಾರರ ಪ್ರಮುಖ ಪರಿಕಲ್ಪನೆಗಳು (ಸಂ:ಷಣ್ಮುಖಯ್ಯ ಅಕ್ಕೂರ ಮಠ)

 ಶ್ರೀ.ಸರ್ಪಭೂಷಣ ಶಿವಯೋಗೀಶ್ವರ ಮಠ, ಬೆಂಗಳೂರು,೧೯೯೪

                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...