ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಆಗಸ್ಟ್ 18, 2025

                                                               ಅಂಬಳೆ ವೆಂಕಟಸುಬ್ಬಯ್ಯ

ಡಾ.ಸಿ.ನಾಗಭೂಷಣ

 

ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿಂಹಾಚಾರ್ಯರ ಸಮಕಾಲೀನರು. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿವೆತ್ತ ಕೆಲವೇ ರಾಷ್ಟ್ರೀಯ ಸಂಶೋಧಕರಲ್ಲಿ ಒಬ್ಬರು. ದೇಶವಿದೇಶಗಳ ಸಂಸ್ಕೃತ ಭಾಷೆ ಸಾಹಿತ್ಯಾಸಕ್ತ ವಿದ್ವಜ್ಜನರ ಪ್ರೀತಿ ಗೌರವಗಳನ್ನು ಗಳಿಸಿಕೊಂಡಿದ್ದರು. ವೇದವನ್ನು ಕುರಿತು ಅಧಿಕೃತವಾಗಿ

ಮಾತನಾಡಬಲ್ಲ ಭಾರತದ ಹತ್ತು ಜನ ಪ್ರಮುಖರಲ್ಲಿ ಅಯ್ಯನವರು ಒಬ್ಬರು. ಪಂಚತಂತ್ರದ ವಿಷಯದಲ್ಲಿ ಇಡೀ ಪ್ರಪಂಚದಲ್ಲಿ ಅಧಿಕೃತವಾಗಿ ಮಾತನಾಡುವ ವಿದ್ವಾಂಸರಲ್ಲಿ ಮೊದಲಿಗರಾಗಿದ್ದರು. ಆದರೆ ದುರಾದೃಷ್ಟವಶಾತ್ ಇಂತಹ ಖ್ಯಾತಿಯ ಸಂಶೋಧಕರ ಬಗೆಗೆ ವಿಶ್ವಕೋಶದಂತಹ ಸಂಪುಟದಲ್ಲಾಗಲೀ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ `ಸಾಲು ದೀಪಗಳು' ಸಂಪುಟದಲ್ಲಾಗಲೀ, ನಾಡಿನ ಸಾಹಿತಿಗಳನ್ನು ವಿದ್ವಾಂಸರನ್ನು ಪರಿಚಯಿಸುವ ಪುಸ್ತಕಗಳಲ್ಲಾಗಲೀ ದಾಖಲುಗೊಳಿಸದೇ ಇರುವುದು ಅಂತಹ ಸಂಶೋಧಕರಿಗೆ ನಾವು ತೋರಿಸುತ್ತಿರುವ ಅಗೌರವದ ಪ್ರತೀಕವಾಗಿದೆ. ಇಂತಹ ವಿಷಯಗಳಲ್ಲಿ ನಾವು ತಾಳಿರುವ ಉದಾಸೀನತೆಯನ್ನು ಮತ್ತಾರು ತಾಳಿಲ್ಲ ಎನ್ನಬಹುದು.

ಎ. ವೆಂಕಟಸುಬ್ಬಯ್ಯನವರ ಪೂರ್ವಿಕರು ಮದರಾಸು ಪ್ರಾಂತದಿಂದ ಮೈಸೂರು ಪ್ರಾಂತದ ಈಗಿನ ಯಳಂದೂರು ತಾಲ್ಲೋಕಿನ, ಅಂಬಳೆ ಗ್ರಾಮಕ್ಕೆ ಬಂದು ಸ್ಥಿರವಾಗಿ ನೆಲೆನಿಂತರು. ಇವರು ಬೃಹಚ್ಫರಣರೆಂಬಸ್ಮಾರ್ತ ಬ್ರಾಹ್ಮಣ ಪಂಗಡದ ಕಂಡ್ರ ಮಾಣಿಕ್ಯಂ ಶಾಖೆಗೆ ಸೇರಿದವರು. ಅಯ್ಯನವರ ವಂಶದವರು ಥಿಯಾಸಫಿಪಂಥದ ಪ್ರಭಾವಕ್ಕೆ ಒಳಗಾಗಿ ಬ್ರಹ್ಮ ವಿದ್ಯಾಸಮಾಜ ಎಂಬ ಹೆಸರಿನ ಸಂಸ್ಥೆಯನ್ನು ಬೆಳೆಸಲು ಶ್ರಮಿಸಿದರು. ಅಯ್ಯನವರ ತಂದೆಯವರಾದ ಅಂಬಳೆ ವೆಂಕಟೇಶಯ್ಯನವರು (1866-1946) ಆ ಕಾಲಕ್ಕೆ ದೊಡ್ಡ ವಿದ್ವಾಂಸರಾಗಿದ್ದು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಮೈಸೂರಿನಲ್ಲಿ ನೆಲಸಿ ಬ್ರಹ್ಮವಿದ್ಯಾ ಸಮಾಜಕ್ಕೆ ತುಂಬಸೇವೆ ಸಲ್ಲಿಸಿದ್ದಾರೆ. ಅಯ್ಯನವರಿಗೆ ಇಂತಹ ಅತ್ಯುತ್ತಮವಾದ ಮನೆತನದ ಚಾರಿತ್ರಿಕ ಹಿನ್ನಲೆ ಇದ್ದುದರಿಂದಲೇಏನೋ ವಿದ್ವತ್ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಯಿತು. ಅಯ್ಯನವರು 26-5-1886 ರಂದು ಮೈಸೂರಿನಲ್ಲಿ ಜನಿಸಿದರು. ಅವರ ಬಾಲ್ಯ, ವಿದ್ಯಾಭ್ಯಾಸ ಇತ್ಯಾದಿ ವಿಷಯಗಳ ಬಗೆಗೆ ಹೆಚ್ಚು ವಿವರಗಳು ದೊರಕುವುದಿಲ್ಲ. ಮೈಸೂರಿನಲ್ಲಿ ಬಿ.ಎ. ಪದವಿಯನ್ನು, ಮದರಾಸು ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ.ಎ. ಪದವಿಯನ್ನು, ಮುಂಬೈ ವಿಶ್ವವಿದ್ಯಾಲಯದಿಂದ ಎಲ್‍ಎಲ್.ಬಿ. ಪದವಿಯನ್ನು ಪಡೆದರು. ಅಯ್ಯನವರು ಕನ್ನಡ, ಇಂಗ್ಲಿಷ್, ಜರ್ಮನ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬಲ್ಲಿದರಾಗಿದ್ದರು. ಇವರ ಕಾಲದಲ್ಲಿ ಬ್ರಾಹ್ಮಣರು ವಿದೇಶಕ್ಕೆ ಹೋಗಿಬರಲು ನಿಷೇಧವಿದ್ದಂತಹ ಸಂದರ್ಭದಲ್ಲಿಯೂ ಪಿಎಚ್.ಡಿ. ಪದವಿಗಾಗಿ ಸಂಶೋಧನೆಯನ್ನು ಕೈಗೊಳ್ಳಲು ಜರ್ಮನಿಗೆ ಹೋದರು. ಅಲ್ಲಿ ಅಯ್ಯನವರಿಗೆ ಎರಡು ವರ್ಷಗಳ ಫೆಲೋಶಿಫ್ ದೊರೆತಿದ್ದಿತು. ಬರ್ನ್ ವಿಶ್ವವಿದ್ಯಾಲಯದಲ್ಲಿ ಪ್ರೊ. ಮುಲ್ಲರ್ ಹೆಸ್ ಅವರ ಮಾರ್ಗದರ್ಶನದಲ್ಲಿ 64 ಕಲೆಗಳ ವಿಷಯದಲ್ಲಿ ಸಂಶೋಧನೆ ನಡೆಸಿದರು. ಶಾಖಾಹಾರಿಗಳಾಗಿದ್ದ ಅವರಿಗೆ ಅಲ್ಲಿಯ ಆಹಾರದ ಕಟ್ಟುಪಾಡುಗಳಿಂದಾಗಿ ಆರೋಗ್ಯದ ಮೇಲೆ ಪ್ರತಿಕೂಲ ಬೀರಿತು. ಎರಡು ವರ್ಷಗಳವರೆಗೆ ಇರಬೇಕಾಗಿದ್ದ ಅವಧಿಯನ್ನು ಮೊಟಕುಗೊಳಿಸಿ ಆರು ತಿಂಗಳಲ್ಲಿಯೇ ಸಂಶೋಧನೆಯನ್ನು ಮುಗಿಸಿ ತಾಯ್ನಾಡಿಗೆ ಮರಳಿದರು. ಆರು ತಿಂಗಳಲ್ಲಿಯೇ ತಾವು ಕೈಗೊಂಡ ವಿಷಯದಲ್ಲಿ ಸಂಶೋಧನೆಯನ್ನು ಮುಗಿಸಿದರೆಂದರೆ ಆ ವಿಷಯದಲ್ಲಿ ಅವರಿಗಿದ್ದ ಪ್ರಭುತ್ವದ ಹರವು ವ್ಯಕ್ತವಾಗುತ್ತದೆ. ಬರ್ನ್ ವಿಶ್ವವಿದ್ಯಾಲಯದ ಫಿಲಾಸಫಿ ವಿಭಾಗಕ್ಕೆ ಈ ವಿಷಯದ ಸಲುವಾಗಿ 191ರಲ್ಲಿ ಸಲ್ಲಿಸಿದ ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿದ The Kalās' ವಿದ್ವತ್ ನಿಬಂಧಕ್ಕೆ ಪಿಎಚ್.ಡಿ. ಪದವಿಯು ಪ್ರಾಪ್ತವಾಯಿತು. ಈ ಕೃತಿಯು 1911ರಲ್ಲಿ ಮದರಾಸಿನಿಂದ ಪ್ರಕಟವಾಯಿತು.

ಅಯ್ಯನವರು ಭಾರತಕ್ಕೆ ಹಿಂದಿರುಗಿದ ಮೇಲೆ ಕಾಶಿಯ ಸೆಂಟ್ರಲ್ ಹಿಂದೂ ಕಾಲೇಜಿನಲ್ಲಿ ಸ್ವಲ್ಪಕಾಲಅಧ್ಯಾಪಕರಾಗಿ ಕೆಲಸ ಮಾಡಿದರು. ಅಲ್ಲಿಯ ಆಡಳಿತ ವರ್ಗದವರೊಂದಿಗೆ ಭಿನ್ನಾಭಿಪ್ರಾಯ ಬಂದು ಕೆಲಸಕ್ಕೆರಾಜಿನಾಮೆ ಕೊಟ್ಟು ಮೈಸೂರಿಗೆ ಬಂದರು. ಮೈಸೂರಿನಲ್ಲಿಯ ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು.ಆ ಅವಧಿಯಲ್ಲಿ ಆರ್. ನರಸಿಂಹಾಚಾರ್ಯರು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದರು. ಆಗ ಶಾಸನಗಳ ಕುರಿತ ಸತತವಾದ, ಆಳವಾದ ಅಧ್ಯಯನ ಮಾಡಿದರು. ಈ ಅವಧಿಯಲ್ಲಿಯೇ ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರವನ್ನು ಕುರಿತಾದ ವಿದ್ವತ್ಪೂರ್ಣವಾದ ಲೇಖನಗಳನ್ನು ಬರೆದರು. ಈ ಸಂದರ್ಭದಲ್ಲಿ ಆರ್. ನರಸಿಂಹಾಚಾರ್ಯರಿಗೂ ಇವರಿಗೂ ಕೆಲವು ವಿಷಯಗಳಲ್ಲಿ ಮನಸ್ತಾಪ ಉಂಟಾಗಿ ಕೆಲಸವನ್ನು ಬಿಟ್ಟರು. ಅನಂತರದಲ್ಲಿ ಅವರು ಯಾವುದೇ ಉದ್ಯೋಗವನ್ನು ಹುಡುಕಿಕೊಂಡು ಹೋಗಲಿಲ್ಲ. ಅಧ್ಯಯನ, ಸಂಶೋಧನೆಗಳೇ ಅವರ ಪೂರ್ಣ ಕಾಲದ ಉದ್ಯೋಗವಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಹೆಂಡತಿಯು ತೀರಿಕೊಂಡಳು. ಎಂದಿನಂತೆ ಅವರು ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದುಬಿಟ್ಟರು. ಇವರಿಗೆ ನಂಜನಗೂಡಿನಲ್ಲಿ ಸ್ವಲ್ಪ ಭೂಮಿ ಇದ್ದು ಅಲ್ಲಿಂದ ಸ್ವಲ್ಪ ಭಾಗ ಆದಾಯ ಬರುತ್ತಿದ್ದು ಜೀವನೋಪಾಯ ನಡೆಯುತ್ತಿತ್ತು. ಸೋದರ ವಾಸುದೇವಯ್ಯನವರು ಅವರನ್ನು ನೋಡಿಕೊಳ್ಳುತ್ತಿದ್ದರು. ಮನೆಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ. ಕಾಲವನ್ನೆಲ್ಲ ಸತತವಾಗಿ ಅಧ್ಯಯನದಲ್ಲಿಯೇ ಕಳೆಯುತ್ತಿದ್ದರು. ಇವರಿಗೆ ಜನತೆಯ ಜೊತೆ ನಿಕಟವಾದ ಸಂಪರ್ಕ ಏರ್ಪಡಲಿಲ್ಲ. ಉಳಿದ ಸಾಹಿತಿಗಳಿಗೆ, ಸಂಶೋಧಕರಿಗೆ ಇದ್ದ ಮಿತ್ರ ವೃಂದವಾಗಲೀ, ಶಿಷ್ಯ ವೃಂದವಾಗಲೀ ಇವರಿಗೆ ಇರದೆ ಹೋದದ್ದರಿಂದಲೋ ಏನೋ ಕನ್ನಡ ನಾಡಿನ ಸಂಶೋಧಕರ ಚರಿತ್ರೆಯಲ್ಲಿ ದಾಖಲಾಗದೆ ಹೋಯಿತು. ಅಯ್ಯನವರು ಸೃಷ್ಟಿಸಿದ ಸಂಶೋಧನಾ ಸಾಮಗ್ರಿ ವ್ಯವಸ್ಥಿತವಾಗಿ ದೊರಕದೆ ಹೋಗಿರುವುದು ಸಹ ವಿಶ್ವಕೋಶ ಹಾಗೂ ಇನ್ನಿತರ ಸಂಪುಟಗಳಲ್ಲಿ ಉಲ್ಲೇಖವಾಗದೇ ಇರಲು ಕಾರಣವಾಗಿದೆ.

ಅಯ್ಯನವರು ಮೈಸೂರಿನಲ್ಲಿಯೇ ಇದ್ದರೂ ತಮ್ಮ ಸ್ವಭಾವ ವೈಲಕ್ಷಣ್ಯ ಕಾರಣವಾಗಿ ಮೈಸೂರು ವಿಶ್ವವಿದ್ಯಾಲಯದ ಜೊತೆ ನಿಕಟ ಸಂಪರ್ಕ ಏರ್ಪಟ್ಟಿರಲಿಲ್ಲ. ಮೈಸೂರಿನ ಓರಿಯಂಟಲ್ ಲೈಬ್ರರಿ ಹಾಗೂ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹೋಗಿ ಬರುತ್ತಿದ್ದರಾದರೂ ಇತರ ಸಾಹಿತಿ ಸಂಶೋಧಕರ, ಶಿಷ್ಯ ಮಿತ್ರರಒಡನಾಟ ಲಭಿಸಲಿಲ್ಲ. ಅಯ್ಯನವರ ಸಂಬಂಧಿತರಾದ (ತಮ್ಮನ ಮಗ) ವೆಂಕಟರಾಮು, ಪ್ರಭುಶಂಕರ ಹಾಗೂ ಎಂ. ಚಿದಾನಂದಮೂರ್ತಿ ಅವರ ಒತ್ತಾಯದ ಮೇರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ `ವೇದಾರ್ಥ ಮೀಮಾಂಸೆ' ಕುರಿತು ಮೂರು ವಿಶೇಷ ಉಪನ್ಯಾಸ ನೀಡಿದರು. ಬಹುಶಃ ಇದೊಂದೇ ಅಯ್ಯನವರು ನೀಡಿದ ವಿಶೇಷ ಉಪನ್ಯಾಸ ಎಂದೆನಿಸುತ್ತದೆ. ಋಗ್ವೇದದ ಆಖ್ಯಾಯಿಕೆಗಳ 7.7.78 ರಲ್ಲಿ ಬರುವ ಹತ್ತು ಪದಗಳ ಕುರಿತು ಸುದೀರ್ಘವಾದ ವಿವರಣೆಯನ್ನು ನೀಡಿದರು. ಈ ಉಪನ್ಯಾಸದಲ್ಲಿ ಈಗಾಗಲೇ ಇವುಗಳನ್ನು ಕುರಿತು ಕೆಲವರು ತಾಳಿರುವ ನಿಲುವನ್ನು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಚರ್ಚಿಸಿ ನಂತರ ಅವುಗಳ ಬಗೆಗೆ ಸ್ವತಃ ಕೋಶ, ವ್ಯಾಕರಣಾದಿಗಳ ಬಲದಿಂದ ತಮಗೆ ತೃಪ್ತಿಕರವೆಂದು ತೋರಿದ ವಿವರಣೆಯನ್ನು ವ್ಯಕ್ತಪಡಿಸಿದ್ದಾರೆ. ಒಂದು ಪದವು ಎಲ್ಲಾ ಸಂದರ್ಭಗಳಿಗೂ ಯಾವ ರೀತಿ ಅನ್ವಯವಾಗುತ್ತದೆಂಬುದನ್ನು ವಿವರಿಸಿದ್ದಾರೆ. ಇದು ವೇದಗಳನ್ನು ಕುರಿತು ಇವರಿಗಿದ್ದ ಆಳವಾದ ವಿದ್ವತ್ತಿನ ಪ್ರತೀಕವಾಗಿದೆ. ಈ ಉಪನ್ಯಾಸವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು 1967ರಲ್ಲಿ ಪುಸ್ತಕ ರೂಪದಲ್ಲಿ ʻContribution to the Interpretation of the Rgveda' ಹೆಸರಿನಲ್ಲಿ ಪ್ರಕಟಿಸಿತು. ಈ ಪದಗಳ ಕುರಿತು ವ್ಯಕ್ತಪಡಿಸಿರುವ ವಿವರಣೆಯನ್ನು ಬಹುತೇಕ ದೇಶವಿದೇಶದ ವಿದ್ವಾಂಸರು ಅಂಗೀಕರಿಸಿರುವುದು ಅಯ್ಯನವರ ವೇದಗಳ ಮೇಲಿನ ಪ್ರಭುತ್ವವನ್ನು ತೋರಿಸುತ್ತದೆ. Vedic studies Vol. 1 ಪುಸ್ತಕ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಆಂಗ್ಲ ಮತ್ತು ಜರ್ಮನ್ ಭಾಷೆಗಳಲ್ಲಿ ಪ್ರಕಟವಾದ ವೇದಾರ್ಥ ವಿವರಣೆಗೆ ಸಂಬಂಧಿಸಿದ ಮಹತ್ತರವಾದ ಲೇಖನಗಳು ಅಯ್ಯನವರು ವೇದ ವಿದ್ವಾಂಸರಲ್ಲೂ ಉನ್ನತ ಮಟ್ಟಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸಿವೆ. ವೇದಗಳ ಕುರಿತಾದ ಅಧ್ಯಯನದಲ್ಲಿ ತಮ್ಮದೇ ಆದ ಅಧ್ಯಯನ ವಿಧಾನವನ್ನು ಅನುಸರಿಸಿದ್ದಾರೆ. ಋಗ್ವೇದದಲ್ಲಿ ಸಂಶೋಧನೆಗೆ ವಿಷಯವಾದ ವೈದಿಕ ಶಬ್ದ ಎಷ್ಟು ಸಲ, ಎಲ್ಲೆಲ್ಲಿ ಬರುತ್ತದೆ. ಅದರ ಅರ್ಥ ವಿವರಣೆಯಲ್ಲಿ ಭಾರತೀಯ ನಿಘಂಟುಕಾರರು ಮತ್ತು ವ್ಯಾಖ್ಯಾನಕಾರರ ಅನಿಸಿಕೆಗಳು, ಅವುಗಳ ಸಾಧ್ಯಾಸಾಧ್ಯತೆಗಳು, ಪಾಶ್ಚಾತ್ಯ ಅನುವಾದಕರು ಹಾಗೂ ಆಧುನಿಕ ನಿಘಂಟುಕಾರರ ವಿವರಣೆಗಳು, ತಾವು ಬಳಸುವ ಕೋಶಗಳು, ವ್ಯಾಕರಣ, ಸಿದ್ಧಪದ ಇತ್ಯಾದಿ ಸಾಧನ ಸಾಮಗ್ರಿಯಿಂದ ಋಗ್ವೇದದಲ್ಲಿಯೇ ಸದೃಶ ಸಂದರ್ಭಗಳಲ್ಲಿ ದೊರೆಯುವ ಆ ವೈದಿಕ ಶಬ್ದ ಹಾಗೂ ಅದರ ರೂಪಭೇದಗಳ ಬಲದಿಂದ, ಅಲ್ಲಿ ಕೊಡಬಹುದಾದ ಅರ್ಥ, ಆಶಯಗಳನ್ನು ಪರಾಮರ್ಶಿಸಿ ನಂತರ ತೌಲನಿಕವಾಗಿ ವಿಮರ್ಶಿಸಿ, ತಾವು ಬೇರೆಯಾಗಿ ಗೊತ್ತುಪಡಿಸುವ ಅರ್ಥವಿವರಣೆ ಯಾವುದು, ಈ ಅರ್ಥವಿವರಣೆ ಆ ವೈದಿಕ ಶಬ್ದ ಕಾಣಿಸಿಕೊಳ್ಳುವ ವೇದಭಾಗಗಳಿಗೆ ಅನ್ವಯಿಸುವುದು ಸಾಧ್ಯವೇ ಇತ್ಯಾದಿಯಾಗಿ ಕ್ರಮಬದ್ಧವಾಗಿ ನಿರೂಪಿಸಿದ್ದಾರೆ. ಹೀಗೆ ವೇದಗಳಲ್ಲಿ ಕಾಣುವ ಅಪೂರ್ವವೂ, ಅಜ್ಞಾತಾರ್ಥವುಳ್ಳವೂ ಆದ ಅನೇಕ ಶಬ್ದಗಳಿಗೆ ಆಳವಾದ ಅಧ್ಯಯನ ನಡೆಸಿ ಟಿಪ್ಪಣಿ ರಚಿಸಿರುವುದು ಅಯ್ಯನವರ ವಿದ್ವತ್ತಿನ ಕುರುಹಾಗಿದೆ.

ವೇದಗಳು, ಪಂಚತಂತ್ರ, ಇಂಡಾಲಜಿ ಹಾಗೂ ಹಳಗನ್ನಡ ಕವಿಗಳ ಕುರಿತ ಸಂಶೋಧನೆಯು ಅಯ್ಯನವರ ಪ್ರಮುಖ ಆಸಕ್ತಿಯಾಗಿತ್ತು. ಈ ವಿಷಯಗಳ ಸಂಶೋಧನೆಗಾಗಿಯೇ ತಮ್ಮ ಜೀವಮಾನವನ್ನೆಲ್ಲಾ ಮೀಸಲಾಗಿಟ್ಟವರು. ವೇದಗಳ ಕುರಿತ ಹಾಗೂ ಪಂಚತಂತ್ರಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದರು. ಈ ವಿಷಯಗಳಲ್ಲಿಯ ಅವರ ಸಂಶೋಧನೆಯು ಪ್ರಮಾಣಭೂತವಾಗಿದ್ದು ಬಹುಸಂಖ್ಯೆಯಲ್ಲಿ ಅಂಗೀಕೃತವಾಗಿದೆ. ಡಾ. ವಿಂಟರ್ ನಿಟ್ಜ್ ಮುಂತಾದ ವಿದ್ವಾಂಸರು ಆಗಾಗ ಅಯ್ಯನವರ ಸಂಶೋಧನಾ ಲೇಖನಗಳನ್ನು ಆಧಾರವಾಗಿ ಪರಿಗ್ರಹಿಸಿರುವುದು ಕಂಡುಬರುತ್ತದೆ.

ಅಯ್ಯನವರು 6-5-1969ರಲ್ಲಿ ನಿಧನ ಹೊಂದಿದಾಗ ಆ ವರ್ಷದ ಪ್ರಬುದ್ಧ ಕರ್ಣಾಟಕದಲ್ಲಿ ಅಯ್ಯನವರ ವಿದ್ವತ್ ಕುರಿತು ನಾಲ್ಕು ವಾಕ್ಯಗಳಲ್ಲಿ ಪ್ರಸ್ತಾಪಿಸಿರುವುದನ್ನು ಬಿಟ್ಟರೆ ಮತ್ತೆಲ್ಲಿಯೂ ಅಯ್ಯನವರ ವೈದಿಕ ಸಾಹಿತ್ಯ, ಪಂಚತಂತ್ರ, ಕನ್ನಡ ಸಾಹಿತ್ಯ ಚರಿತ್ರೆ ಹಾಗೂ ಇಂಡಾಲಜಿಯ ಮೇಲೆ ನಿರೂಪಿಸಿರುವ ವಿದ್ವತ್ಪೂರ್ಣ ಬರೆಹಗಳನ್ನು ಸ್ಮರಿಸುವ, ಚಿಂತಿಸುವ, ಗೌರವ ಸೂಚಿಸುವಂತಹ ಕಾರ್ಯ ನಡೆದಿಲ್ಲವೆಂದೇ ಹೇಳಬೇಕು. ಎಂ. ಚಿದಾನಂದ ಮೂರ್ತಿಯವರು ತಮ್ಮ ʻಸಂಶೋಧನಾ ತರಂಗ ಸಂಪುಟ-2'ನ್ನು ಅಯ್ಯನವರಿಗೆ ಅರ್ಪಿಸಿ ಗುರುಋಣವನ್ನು ತೀರಿಸಿರುವುದಲ್ಲದೆ ಅವರ ಹೆಸರನ್ನು ತಕ್ಕಮಟ್ಟಿಗೆ ನಾಡಿನ ನೆನಪಿನಲ್ಲಿ ನಿಲ್ಲಿಸಿದ್ದಾರೆ. ಚಿದಾನಂದ ಮೂರ್ತಿಗಳು ವೆಂಕಟಸುಬ್ಬಯ್ಯನವರ ನಿಧನದ ತರುವಾಯ ಅವರ ಸಂಶೋಧನಾ ಕೃತಿಗಳ ಹಾಗೂ ಲೇಖನಗಳ ಸಂಗ್ರಹವನ್ನು ಉಳಿಸಿಕೊಳ್ಳಬೇಕೆಂಬ ಆಸಕ್ತಿಯಿಂದ ಶ್ರಮವಹಿಸಿ ತೆಗೆದುಕೊಂಡು ಬಂದರು. ಅವರ ಪುಸ್ತಕಗಳನ್ನು ಪರಿಶೀಲಿಸುತ್ತಿರುವಾಗ ಪುಸ್ತಕಗಳ ನಡುವೆ ಮೂರು ನೂರು ರೂಪಾಯಿಗಳು ಸಿಕ್ಕಿದವೆಂದೂ ಆ ಹಣದ ಜೊತೆಗೆ ಇನ್ನಷ್ಟು ಸಂಗ್ರಹಿಸಿ ಆ ಹಣದ ಮೂಲಕ ಅಯ್ಯನವರ ಕೃತಿಗಳನ್ನು ಹಾಗೂ ಲೇಖನಗಳನ್ನು ಒಂದೆಡೆ ಸೇರಿಸಿ ಸಮಗ್ರವಾಗಿ ಪ್ರಕಟಿಸಬೇಕೆಂಬ ಯೋಜನೆಯನ್ನು ಪ್ರಭುಶಂಕರ, ಪ್ರಭುಪ್ರಸಾದ ಮುಂತಾದವರೊಡಗೂಡಿ ಹಮ್ಮಿಕೊಂಡರೂ ಪ್ರಕಟಿಸಬೇಕೆಂಬ ಯೋಜನೆ ಫಲಪ್ರದವಾಗಲಿಲ್ಲ. ಅಯ್ಯನವರ ವೈಯಕ್ತಿಕ ಸಂಗ್ರಹದ ಕೆಲವು ಭಾಗ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿದೆ.

ಅಯ್ಯನವರ ಪಿಎಚ್.ಡಿ. ನಿಬಂಧದಲ್ಲಿ ಕಲೆ>ಕಲಾ ಶಬ್ದದ ಅತ್ಯಪೂರ್ವವಾದ ವಿವರಣೆಯನ್ನು ಕಾಣಬಹುದು. ಕಲೆಗಳನ್ನು ಕ್ರಮಬದ್ಧವಾಗಿ ಸಂಯೋಜಿಸಿ ಅವುಗಳನ್ನು ಅರ್ಥವಿವರಣೆಯೊಂದಿಗೆ ನಿರೂಪಿಸಲಾಗಿದೆ. `ಕಲಾ' ಶಬ್ದದ ಉಲ್ಲೇಖವನ್ನು ಒಳಗೊಂಡಿರುವ ವಾಕ್ಯಗಳನ್ನು ಮೊದಲು ಸಂಗ್ರಹಿಸಿ, ಬಳಿಕ ವೈದಿಕ ಸಂಪ್ರದಾಯದಂತೆ ಚತುಷ್ಟಷ್ಠಿ ಕಲೆಗಳನ್ನೂ, ಜೈನ ಸಂಪ್ರದಾಯದಂತೆ ದ್ವಾಸಪ್ತತಿ ಕಲೆಗಳನ್ನು ತಿಳಿಸುವ ಹತ್ತು ಪಟ್ಟಿಗಳನ್ನು ಅವುಗಳ ಪಾಠ ಭೇದ ಸಹಿತವಾಗಿ ನಿರೂಪಿಸಿದೆ. ದೇವನಾಗರಿ ಲಿಪಿಯಲ್ಲಿ ಕಲೆಯ ಹೆಸರು ಹೇಳಿ ಅದರ ಅರ್ಥವಿವರಣೆಯನ್ನು ಇಂಗ್ಲೀಷ್ ಭಾಷೆಯಲ್ಲಿ ತಿಳಿಸಿರುವುದರಲ್ಲದೆ ಆಶ್ವಾಸ,ಪದ್ಯಾದಿಗಳ ಆಕರಗಳ ಸೂಚನೆ ಹಾಗೂ ಸ್ಪಷ್ಟತೆಗಾಗಿ ಸಂಕ್ಷಿಪ್ತವಾದ ಟಿಪ್ಪಣಿಯನ್ನು ಒಳಗೊಂಡಿದೆ. ಸುಮಾರು7೦೦ ಕಲೆಗಳ ವಿವರಣೆ 7 ಪುಟಗಳ ಮಿತಿಗಳಲ್ಲಿ ಅಡಗಿದ್ದರೂ ಸಾಂದ್ರವಾದ ವಿಷಯ ಸಂಗ್ರಹವೂ ಅದರವಿವಿಧಾರ್ಥ ನಿರೂಪಣೆಯು ಆಸಕ್ತ ವಿದ್ವಾಂಸರು ಅರಿಯಲು ಸಾಧ್ಯವಾಗಿದೆ. ಕೃತಿಯಲ್ಲಿ ಸಂಗ್ರಹ ಗುಣ ಸ್ಪಷ್ಟವಾಗಿದ್ದರೂ ಪಂಡಿತರನ್ನು ಆಯಾ ಆಕರಗಳ ಅಭ್ಯಾಸಕ್ಕೆ ತೊಡಗಿಸುವ ಪ್ರೇರಣಾಶಕ್ತಿ ಆ ವಿದ್ವತ್ಪೂರ್ಣ ಬರೆಹಕ್ಕೆ ಇದೆ.

ಅಯ್ಯನವರು ಪಂಚತಂತ್ರ ಸಾಹಿತ್ಯವನ್ನು ಕುರಿತು ಜರ್ಮನ್, ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ಬರೆದ 14 ಸಂಶೋಧನಾ ಲೇಖನಗಳು ಜಗತ್‍ಪ್ರಸಿದ್ಧವಾಗಿವೆ. ಪಂಚತಂತ್ರ ವಿಷಯದಲ್ಲಿ ಇಡೀ ಪ್ರಪಂಚದಲ್ಲಿ

ಅಧಿಕಾರವಾಣಿಯಿಂದ ಮಾತನಾಡುವ ಕೆಲವೇ ವಿದ್ವಾಂಸರಲ್ಲಿ ಮೊದಲಿಗರಾಗಿದ್ದರು. ವಸುಭಾಗ ಭಟ್ಟನ ಪಂಚತಂತ್ರದಲ್ಲಿಯ ಕತೆಗಳ ಕ್ರಮ ಮತ್ತು ಸಂಖ್ಯೆಗಳು ವಿವಿಧ ಪಂಚತಂತ್ರಗಳಲ್ಲಿ ವಿವಿಧ ರೀತಿಯಲ್ಲಿರುತ್ತವೆಎಂಬ ವಿಷಯವನ್ನು ಫ್ರ್ಯಾಂಕಲೆ ಎಡ್ಗರ್ಟನ್ ಅವರು ʻPanchatantra Reconstructedʼ ಎಂಬ ಗ್ರಂಥದಲ್ಲಿ ನಿರೂಪಿಸಿದ್ದರು. ಇದರ ಆಧಾರದ ಮೇಲೆ ವಸುಭಾಗ ಭಟ್ಟನ ಪಂಚತಂತ್ರ ಶಾಖೆಯ ಮೇಲೆ ವಿಶೇಷ ಸಂಶೋಧನೆಯನ್ನು ನಡೆಸಿದ ಅಯ್ಯನವರು ವಸುಭಾಗ ಭಟ್ಟನ ಪಂಚತಂತ್ರ ಹಾಗೂ ತಂತ್ರೋಪಖ್ಯಾನ ಎಂಬ ಎರಡು ವಿದ್ವತ್ಪೂರ್ಣ ಲೇಖನಗಳಲ್ಲಿ ಪ್ರಪಂಚದಾದ್ಯಂತ ಇರುವ ಪಂಚತಂತ್ರದ ಕತೆಗಳ ಎರಡು ಪಟ್ಟಿಯನ್ನು ಕೊಟ್ಟಿದ್ದಾರೆ. ಮೊದಲನೆ ಪಟ್ಟಿಯಲ್ಲಿ ಕನ್ನಡದ ದುರ್ಗಸಿಂಹನ ಪಂಚತಂತ್ರದ ಕತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅದರ ಕತೆಗಳು ಇತರ ಕಡೆಗಳಲ್ಲಿ ಹೇಗೆ, ಎಷ್ಟರಮಟ್ಟಿಗೆ ಉಪಯೋಗವಾಗಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎರಡನೆ ಪಟ್ಟಿಯಲ್ಲಿ ತಂತ್ರೋಪಖ್ಯಾನದ ಕತೆಗಳನ್ನು ಪ್ರಧಾನವಾಗಿಟ್ಟುಕೊಂಡು ಇತರ ಗ್ರಂಥಗಳಲ್ಲಿ ಬರುವ ಕತೆಗಳ ಕ್ರಮ ಹಾಗೂ ಆಕರಗಳನ್ನು ತಿಳಿಸಿದ್ದಾರೆ. ಮೊದಲನೆ ಪಟ್ಟಿಯು ಪಂಚತಂತ್ರದ ಪಾಠಗಳ ತೌಲನಿಕಕ್ಕೆ ಸಂಬಂಧಿಸಿದ್ದರೆ, ಎರಡನೇ ಪಟ್ಟಿಯಲ್ಲಿ 12 ಗ್ರಂಥಗಳ ಪರಾಮರ್ಶೆ ಇದೆ. ಅಯ್ಯನವರು ಪಂಚತಂತ್ರದ ರೂಪಾಂತರಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಇಂಡೋನೇಶಿಯಾದ ತಂತ್ರಾಖ್ಯಾಯಿಕಾ, ಲಾಓಸ್ ದೇಶದ ತಂತ್ರೋಪಖ್ಯಾನ ಮತ್ತು ಕನ್ನಡದ ದುರ್ಗಸಿಂಹನ ಪಂಚತಂತ್ರ ಇವು ಕಥನ ಕ್ರಮ ಮತ್ತು ಇತರೆ ವಿಷಯಗಳಲ್ಲಿ ಹೇಗೆ ಇತರೆ ಪಂಚತಂತ್ರಗಳಿಗಿಂತಲೂ ಹೆಚ್ಚು ಹತ್ತಿರವಾಗಿವೆ ಎಂಬುದನ್ನು ಸಾಧಾರಣವಾಗಿ ತೋರಿಸಿದ್ದಾರೆ. ಕನ್ನಡ ನಾಡಿನಲ್ಲಿ ಪಂಚತಂತ್ರವನ್ನು ಕುರಿತು ತಲಸ್ಪರ್ಶಿಯಾಗಿ ಆಳವಾಗಿ ಅಧ್ಯಯನ ಮಾಡಲು ಅಯ್ಯನವರು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು. ಪಂಚತಂತ್ರದ ಬಗ್ಗೆ ಸಂಶೋಧನೆ ನಡೆಸಿ ತಾಳಿದ ನಿಲುವಿನ ಪ್ರಕಾರ ಪಂಚತಂತ್ರದ ಕಥಾಮುಖದಲ್ಲಿ ಪ್ರಧಾನ ಕತೆಗಳು ಸೇರಿಕೊಂಡಂತೆ 65 ಕತೆಗಳಿವೆ ಎಂದು ನಿಷ್ಕರ್ಷ ಮಾಡಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ. 1. ದುರ್ಗಸಿಂಹನ ಪಂಚತಂತ್ರದಲ್ಲಿ ಮಾತ್ರ ಸಿಕ್ಕುವ 11 ಕತೆಗಳು, ಇತರೆ ಯಾವ ಪಂಚತಂತ್ರದ ಪಾಠಗಳಲ್ಲಿಯೂ ಸಿಕ್ಕದಿರುವವು. 2. ದುರ್ಗಸಿಂಹನ ಪಂಚತಂತ್ರದಲ್ಲಿಯೂ ಮತ್ತು ವಿಷ್ಣುಶರ್ಮನ ಹೆಸರು ಹೇಳುವ ಇತರೆ ಪಾಠಗಳಲ್ಲಿ ಒಂದರಲ್ಲಿಯಾದರೂ ದೊರೆಯುವ ಕತೆಗಳು. 3. ದುರ್ಗಸಿಂಹನ ಪಂಚತಂತ್ರದಲ್ಲಿಯೂ, ತಂತ್ರಿ ಮತ್ತು ತಂತ್ರೈ ಸಂಪ್ರದಾಯದಲ್ಲಿ ದೊರೆಯುವ 8 ಕತೆಗಳು ಎಂದು ಸಾಧಾರವಾಗಿ ತೋರಿಸಿಕೊಟ್ಟಿರುವುದು ಪಂಚತಂತ್ರದ ಬಗೆಗೆ ಅವರು ನಡೆಸಿದ ಆಳವಾದ ಸಂಶೋಧನೆಗೆ ಹಿಡಿದ ಕನ್ನಡಿಯಾಗಿದೆ. ಪಂಚತಂತ್ರದ ಹೆಸರಿಗೆ ಸಂಬಂಧಿಸಿದ ಲೇಖನದಲ್ಲಿ ಈ ಕಥಾಸಾಹಿತ್ಯಕ್ಕೆ ಹೇಗೆ ಪಂಚತಂತ್ರ ಎಂಬ ಹೆಸರು ಬಂದಿತೆನ್ನುವುದನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ.

ಇಂಡಾಲಜಿ ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನೆಗಳು ಇಂದಿಗೂ ಪ್ರಮಾಣಭೂತವಾಗಿವೆ. ಅಯ್ಯನವರ 'Some Saka Dates in Inscriptions.' A contribution to Indian chronology ಉದ್ಗ್ರಂಥವು ಶಾಸನಗಳ ರಚನಾಕಾಲ ನಿರ್ಣಯದಲ್ಲಿ ಆಧಾರ ಗ್ರಂಥವಾಗಿ ಪರಿಣಮಿಸಿದೆ. ಕನ್ನಡ ಶಾಸನಗಳಲ್ಲಿ ಬರುವ ಕಾಲ ನಿರೂಪಣೆಯ ಭಾಗದಲ್ಲಿ ಬೇರೆ ಬೇರೆ ಶಕಗಳ ಹೆಸರುಗಳೂ, ಪಂಚಾಂಗದ ತೇದಿವಾರಗಳ ದಾಖಲೆಗಳು ಎಷ್ಟೋ ವೇಳೆ ಸ್ಪಷ್ಟವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಅಯ್ಯನವರು ರಾಜವಂಶಾವಳಿಯಲ್ಲಿ ಕಾಣಬರುವ ರಾಜರ, ಸಾಮಂತರ, ಆಡಳಿತದ ಆದಿ ಅಂತ್ಯಗಳ ನಿರ್ಧಾರಕ್ಕೆ ಶಾಸನಗಳ ಹೇಳಿಕೆಗಳನ್ನು ಹೇಗೆ ವಿಧವಿಧವಾಗಿ ಅರ್ಥಮಾಡಿಕೊಳ್ಳಬಹುದು ಎಂಬುದರ ಬಗೆಗೆ ತಮ್ಮದೇ ಆದ ಮಾರ್ಗವನ್ನು ಈ ಕೃತಿಯಲ್ಲಿ ಕಂಡುಕೊಂಡಿದ್ದಲ್ಲದೆ ಇತರ ಪ್ರಯೋಜನವೇನು ಎಂಬುದನ್ನು ನಿದರ್ಶನ ಪೂರ್ವಕವಾಗಿ ವಿವರಿಸಿದ್ದಾರೆ. Indian Antiquary ಯಲ್ಲಿ ಪ್ರಕಟವಾದ ʻThe chronology of the western Chalukyas of Kalyani' ಎಂಬ ವಿದ್ವತ್ಪೂರ್ಣ ಲೇಖನವು ಕಲ್ಯಾಣಿ ಚಾಲುಕ್ಯರ ಚರಿತ್ರೆಗೆ ಸಂಬಂಧಿಸಿದ ಹಾಗೆ ಇಂದಿಗೂ ಆಧಾರದ ಪ್ರಮಾಣಭೂತವಾಗಿದೆ. ಪ್ರತ್ಯೇಕವಾಗಿಯೇ ಕಾಲಗಣನೆಯನ್ನು ಆಧರಿಸಿ ವಂಶಾವಳಿಯನ್ನು ಬೇರೆಯಾಗಿಯೇ ನಿರೂಪಿಸಿದ್ದಾರೆ. ಗೊಮ್ಮಟ ಶಬ್ದದ ನಿಷ್ಪತ್ತಿ ಮತ್ತು ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನ ಕಾಲಕ್ಕೆ ಸಂಬಂಧಿಸಿದ ಲೇಖನದಲ್ಲಿ ಅಯ್ಯನವರು ಆರ್. ನರಸಿಂಹಾಚಾರ್, ಶಾಮಾಶಾಸ್ತ್ರಿ ಇತ್ಯಾದಿ ವಿದ್ವಾಂಸರ ವಾದಗಳನ್ನು ಪರಿಶೀಲಿಸಿ, ಚಾವುಂಡರಾಯನ ವಿಷಯಕವಾದ ತಿಹಾಸಿಕ ಸಾಮಗ್ರಿಗಳನ್ನೆಲ್ಲ ಕ್ರೋಢೀಕರಿಸಿ ಅತ್ತಿಮಬ್ಬೆ ಬೆಟ್ಟವೇರಿ ಗೊಮ್ಮಟನನ್ನು ದರ್ಶಿಸಿದ ಉಲ್ಲೇಖ ಬರುವ ರನ್ನನ ಅಜಿತ ಪುರಾಣದ (993) ಹಾಗೂ ಚಾವುಂಡರಾಯನ ಪುರಾಣದ (ಕ್ರಿ.ಶ. 977) ರಚನಾ ಕಾಲಗಳ ನಡುವೆ ಸು. 98ರಲ್ಲಿ ಮೂರ್ತಿ ಪ್ರತಿಷ್ಠೆ ನಡೆದಿರಬೇಕೆಂದು ಆಧಾರಸಹಿತವಾಗಿ ನಿರೂಪಿಸಿದ್ದಾರೆ. ಗಂಗರ ಕಾಲಕ್ಕೆ ಸಂಬಂಧಿಸಿದ ಲೇಖನದಲ್ಲಿ ಇಮ್ಮಡಿ ಮಾರಸಿಂಹನು ಚೋಳರಾಜ ಪ್ರತಿಷ್ಠಾಚಾರ್ಯ ಎಂಬ ಬಿರುದನ್ನು ಹೇಗೆ ಪಡೆದನು, ಅದಕ್ಕೆ ಪಾತ್ರವಾಗುವಂಥ ಕಾರ್ಯವನ್ನು ಎಷ್ಟು ಸಲ ಬೇರೆ ಬೇರೆ ಸಂದರ್ಭಗಳಲ್ಲಿ ಕೈಗೊಂಡನು ಎಂಬುದನ್ನು ಶಾಸನ ಮತ್ತು ಸಾಹಿತ್ಯ ಕೃತಿಗಳ ಸಾಕ್ಷ್ಯಗಳನ್ನು ಆಧರಿಸಿ ಚರ್ಚಿಸಿದ್ದಾರೆ. ಅಯ್ಯನವರ A Twelfth century university in mysore ಎಂಬ ಶಾಸನಗಳಾಧಾರಿತ ಲೇಖನವು ಬಳ್ಳಿಗಾವೆಯಲ್ಲಿ ಆ ಕಾಲದಲ್ಲಿ ನಡೆಯುತ್ತಿದ್ದ ವಿದ್ಯಾಚಟುವಟಿಕೆಗಳ ಬಗ್ಗೆ ಕ್ರಮಬದ್ಧವಾಗಿ ಹಾಗೂ ವಿಸ್ತೃತವಾಗಿ ಬೆಳಕು ಚೆಲ್ಲುವ ಪ್ರಥಮ ಸಂಶೋಧನಾ ಬರೆಹವಾಗಿದೆ. ಪ್ರಾಚೀನ ವಿದ್ಯಾಭ್ಯಾಸವನ್ನು ಪುನರ್ರಚಿಸುವ ಆಕರಗಳಾದ ಅಗ್ರಹಾರ, ಬ್ರಹ್ಮಪುರಿ, ಮಠಗಳ ಬಗ್ಗೆ ಸವಿವರವಾದ ಮಾಹಿತಿ ಇದೆ. ಶೈವಶಾಖೆಗಳು ಮತ್ತು ಅವುಗಳ ಆಚಾರ್ಯರ ವಿಷಯಗಳ ಬಗ್ಗೆಯೂ ಪ್ರಸ್ತಾಪಿಸಲ್ಪಟ್ಟಿದೆ. ಅಯ್ಯನವರು ಬಳ್ಳಿಗಾವೆಯನ್ನು ಮೈಸೂರು ದೇಶದಲ್ಲಿಯ ಹನ್ನೆರಡನೆ ಶತಮಾನದ ಒಂದು ವಿಶ್ವವಿದ್ಯಾಲಯ ಎಂದು ಗುರುತಿಸಿರುವುದು ಗಮನ ಪ್ರಾಯವಾದುದು. ಅಯ್ಯನವರ ಪ್ರಬುದ್ಧ ಕರ್ನಾಟಕದ ಸಂ. 15, ಸಂ. 7ರಲ್ಲಿ ಪ್ರಕಟವಾದ ʻಸಿದ್ಧಿಯೋಗದಲ್ಲಿ ಗ್ರಂಥ ರಚನೆ' ಎಂಬ ವಿದ್ವತ್ಪೂರ್ಣ ಲೇಖನದಲ್ಲಿ ಹಳಗನ್ನಡ ಕವಿಗಳು ವಿಶೇಷವಾಗಿ ಜೈನಕವಿಗಳು ಸಿದ್ಧಿಯೋಗದಲ್ಲಿ ಕಾವ್ಯ ರಚನೆ ಮಾಡಿದರೆ ಸರ್ವಾರ್ಥ ಸಿದ್ಧಿಪ್ರದವಾಗುತ್ತದೆಂದು ಭಾವಿಸಿ ಪಂಪ, ಚಾವುಂಡರಾಯ ಜನ್ನ, ನಯಸೇನ ಇತ್ಯಾದಿ ಕವಿಗಳು ಸಿದ್ಧಿಯೋಗದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆಂಬುದನ್ನು ನಿದರ್ಶನ ಸಹಿತವಾಗಿ ಪ್ರಥಮ ಬಾರಿಗೆ ತೋರಿಸಿಕೊಟ್ಟಿರುವುದು ಗಮನಾರ್ಹವಾದುದು. ಸಿದ್ಧಿಯೋಗವು ವಿಶೇಷವಾಗಿ ಜೈನರಲ್ಲಿ ಪ್ರಾಶಸ್ತ್ಯ ಹೊಂದಿತ್ತೆಂಬುದನ್ನು ಆಧಾರಸಹಿತ ಸಾಬೀತು ಪಡಿಸಿದ್ದಾರೆ.

ಅಯ್ಯನವರ `ಕೆಲವು ಕನ್ನಡ ಕವಿಗಳ ಜೀವನ ಕಾಲವಿಚಾರ' ಕೃತಿಯು ಕನ್ನಡ ಸಂಶೋಧನೆಯಲ್ಲಿ ನೂತನ ಮಾರ್ಗವನ್ನೇ ಸೃಷ್ಟಿಸಿದೆ. ಕವಿಯ ಕಾವ್ಯಶಕ್ತಿಯ ಸತ್ವ ಹಾಗೂ ದೌರ್ಬಲ್ಯಗಳು, ಕೃತಿ ವಸ್ತುವಿನ ಮಹತ್ವ ಪ್ರಯೋಜನಗಳನ್ನು ಅರ್ಥೈಸಬೇಕಾದರೆ ಕವಿಯ ಹಾಗೂ ಕವಿಕೃತಿಯ ಕಾಲದ ಪರಿಜ್ಞಾನ ಅನಿವಾರ್ಯ ಮತ್ತು ಅಗತ್ಯ. ಕವಿಯ ಮನಸ್ಸಿನ ಮೇಲೆ ಆಯಾ ಕಾಲದ ಸಂದರ್ಭ ಸನ್ನಿವೇಶಗಳ ಹಿನ್ನೆಲೆಯಲ್ಲಿ, ರಾಜಕೀಯ ಹಾಗೂ ಸಾಂಸ್ಕೃತಿಕ ಅಂಶಗಳು ವಿಪುಲವಾಗಿ ತಿಳಿದು ಬಂದ ಹಾಗೆಲ್ಲಾ ಕವಿಕೃತಿಯ ಮೌಲ್ಯಮಾಪನವನ್ನು ಮಾಡಬಹುದಾಗಿದೆ. ಒಂದೊಂದು ಕಾಲದ ಜನಜೀವನದಲ್ಲಿ ಒಂದೊಂದು ಬಗೆಯ ಒಲವು, ಒತ್ತಡಗಳು ಪ್ರಧಾನವಾಗಿದ್ದು ಅವು ಸಮಾಜವನ್ನು, ಸಾಮಾಜಿಕ ವರ್ತುಲದ ಒಳಗೆ ಬರುವ ಕವಿ ವ್ಯಕ್ತಿಯನ್ನು ಒಳಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕವಿಯನ್ನು, ಕವಿಕೃತಿಯನ್ನು ಇರಿಸಿ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿದೆ. ಈ ಕಾರಣಕ್ಕಾಗಿಯೇ ಕವಿಗಳ ಮತ್ತು ಅವರ ಕೃತಿಗಳ ಕಾಲನಿರ್ಣಯವು ಕೃತಿಯ ಸಮಗ್ರ ಅಧ್ಯಯನಕ್ಕೆ ಅನಿವಾರ್ಯವಾಗಿದೆ. ಸಾಹಿತ್ಯ ಚರಿತ್ರೆಯ ರೂಪುರೇಷೆಗಳನ್ನು ಚಿತ್ರಿಸಲು ಕವಿಕಾಲ ನಿರ್ಣಯವೇ ಅಡಿಪಾಯ. ಈ ನಿಟ್ಟಿನಲ್ಲಿಯೇ ಅಯ್ಯನವರ ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರ ಕೃತಿಯು ಪ್ರಾಚೀನ ಸಾಹಿತ್ಯವನ್ನು ಅರ್ಥೈಸಲು ಪ್ರಮಾಣ ಗ್ರಂಥವಾಗಿದೆ. ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತೊಡಕುಗಳೇ ಅಧಿಕ. ಒಂದೇ ಹೆಸರಿನ ಹಲವಾರು ಕವಿಗಳು, ಒಂದೇ ಹೆಸರಿನ ಹಲವಾರು ರಾಜರು, ತೇದಿಗಳಿಲ್ಲದ ಶಾಸನಗಳು, ಕೂಟಶಾಸನಗಳು, ಕವಿಗಳ ಹಾಗೂ ಕೃತಿಗಳ ವಿಷಯದಲ್ಲಿ ಬೆಳೆದು ಬಂದಿರುವ ದಂತಕತೆಗಳು ಇತ್ಯಾದಿ ಸಂಗತಿಗಳು, ಕವಿಕೃತಿಗಳ ವಿಷಯದಲ್ಲಿ ಸತ್ಯ ಸಂಗತಿಯನ್ನು ತಿಳಿಯಲು ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹೀಗಾಗಿ ಸಂಶೋಧಕರ ಸಂಶೋಧನೆಗಳು ಭಿನ್ನಮತಗಳಿಗೆ ಆಸ್ಪದವನ್ನುಂಟುಮಾಡಿ ಸರ್ವರಿಗೂ ಮಾನ್ಯವಾದ ಸಂಗತಿಯ ಗ್ರಹಿಕೆಯು ಕಠಿಣವಾಗುವುದು. ಇದರಿಂದಾಗಿ ಕೃತಿಯ ಮೌಲ್ಯ ಮಾಪನದಲ್ಲಿ ಏರುಪೇರಾಗುವುದು ಸಹಜ. ಕವಿಗಳ ಕಾಲ ನಿರ್ದೇಶನದ ಸಂಬಂಧವಾದ ಆಧಾರಗಳ ನಿರ್ಣಯದಲ್ಲಿ ವಿಭಿನ್ನವಾದ ನಿಲುವುಗಳು ವ್ಯಕ್ತವಾಗಿರುವುದು ಆರಂಭ ಕಾಲದ ದೇಶೀಯ ಸಂಶೋಧಕರಾದ ಆರ್. ನರಸಿಂಹಾಚಾರ್ಯರು, ಎ. ವೆಂಕಟ ಸುಬ್ಬಯ್ಯ, ಎಂ. ಗೋವಿಂದ ಪೈ, ಎಚ್. ಶೇಷ ಅಯ್ಯಂಗಾರ್, ಟಿ.ಎಸ್. ವೆಂಕಣ್ಣಯ್ಯ, ಎಚ್. ದೇವೀರಪ್ಪ, ಡಿ.ಎಲ್. ನರಸಿಂಹಾಚಾರ್ ಮುಂತಾದವರ ಸಂಶೋಧನಾಧ್ಯಯನದಲ್ಲಿ ಗುರುತಿಸಬಹುದು.

ಆರ್. ನರಸಿಂಹಾಚಾರ್ಯರು ಬಹುತೇಕ ಹಸ್ತಪ್ರತಿಗಳನ್ನಾಧರಿಸಿ ಕವಿಚರಿತೆಯ ಮೂರು ಸಂಪುಟಗಳನ್ನು ಸಿದ್ಧಪಡಿಸಿದರು. ಈ ಬೃಹತ್ ಸಂಪುಟಗಳಲ್ಲಿ ವಿವಿಧ ಪ್ರಮಾಣಗಳನ್ನು ಅವಲಂಬಿಸಿ ಕವಿಗಳ ಕಾಲನಿರ್ಣಯವನ್ನು ಸಾಧ್ಯವಾದ ಕಡೆಯೆಲ್ಲಾ ಸಮರ್ಪಕವಾಗಿ ಮಾಡಿದರು. ಆಧಾರಗಳ ಕೊರತೆಯಿದ್ದ ಕಡೆಸ್ಥೂಲವಾಗಿ ಕಾಲಮಿತಿಯನ್ನು ತಾತ್ಕಾಲಿಕವಾಗಿ ಸೂಚಿಸಿದರು. ಕವಿಚರಿತೆಯ ಸಂಪುಟಗಳು ಪ್ರಕಟವಾಗುತ್ತಿದ್ದಂತೆಯೇ ವಸ್ತುಸ್ಥಿತಿಯನ್ನು ತಿಳಿಯುವ ದೃಷ್ಟಿಯಿಂದ ಕವಿಗಳು, ಕೃತಿಗಳ ಕಾಲದ ಬಗೆಗೆ ಕವಿಚರಿತೆಕಾರರು ತಾಳಿದ ನಿಲುವುಗಳು ಮರುಪರಿಶೀಲನೆಗೆ ಒಳಪಟ್ಟವು. ಈ ಸಂದರ್ಭದಲ್ಲಿ ಅಯ್ಯನವರು ಪ್ರಮುಖ ಪಾತ್ರವಹಿಸಿ, ಕನ್ನಡ ಕವಿಗಳು ಮತ್ತು ಕೃತಿಗಳ ವಿಷಯವನ್ನು ಸುಮಾರಾಗಿ ಸಾಕಲ್ಯದಿಂದ ಪ್ರತಿಪಾದಿಸಿರುವ ಗ್ರಂಥಗಳಲ್ಲಿ ಕರ್ಣಾಟಕ ಕವಿಚರಿತೆಯು ಪ್ರಧಾನವಾಗಿದ್ದು ಸರ್ವ ವಿದ್ವಜ್ಜನಗಳಿಂದಲೂ ಪ್ರಮಾಣಭೂತವೆಂದು ಅಂಗೀಕರಿಸಲ್ಪಟ್ಟಿರುವುದಷ್ಟೇ. ಈ ಕವಿಚರಿತೆಯಲ್ಲಿ ಕೆಲವು ಕನ್ನಡ ಕವಿಗಳ ಜೀವನ ಕಾಲದ ವಿಷಯವಾಗಿ ಪ್ರಕಟಿಸಲ್ಪಟ್ಟಿರುವ ಅಭಿಪ್ರಾಯಗಳು ಅಸಮರ್ಪಕವಾಗಿರುವುದರಿಂದ ಅವುಗಳನ್ನು ಮಾರ್ಪಡಿಸಿ ಆ ಕವಿಗಳು ವಾಸ್ತವವಾಗಿ ಯಾವ ಕಾಲದಲ್ಲಿ ಜೀವಿಸುತ್ತಿದ್ದರು ಎಂಬುದನ್ನು ನಿರ್ಣಯಿಸಬೇಕೆಂದು ಉದ್ದೇಶ್ಯದಿಂದ ಅಯ್ಯನವರು ಕೆಲವು ಕನ್ನಡ ಕವಿಗಳ ಜೀವನ ಕಾಲವಿಚಾರ ಹಾಗೂ ಆಕ್ಷೇಪಗಳಿಗೆ ಪ್ರತ್ಯುಕ್ತಿ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಹಾಗೂ ಕೆಲವು ಲೇಖನಗಳ ಮೂಲಕ ತಮ್ಮ ಆಳವಾದ ಅಧ್ಯಯನ ಹಾಗೂ ಆಕರಗಳ ನೆರವಿನಿಂದ ಕವಿಗಳ ಹಾಗೂ ಕೃತಿಗಳ ಕಾಲನಿರ್ಣಯದಲ್ಲಿ ವಿಚರಿತೆಕಾರರು ತಾಳಿದ ನಿಲುವಿಗಿಂತ ವಿಭಿನ್ನವಾದ ನಿಲುವುಗಳನ್ನು ವ್ಯಕ್ತಪಡಿಸಿದರು. ಈ ಕೃತಿಗಳಲ್ಲಿ ಕವಿಕೃತಿಗಳಲ್ಲಿಯ ಸ್ವಕೀಯ ವಿವರಗಳು, ಪೂರ್ವ ಕವಿಗಳ ಉಲ್ಲೇಖ, ಲಕ್ಷಣ ಗ್ರಂಥ ಮತ್ತು ಸಂಕಲಿತ ಗ್ರಂಥಗಳ ಸಾಕ್ಷ್ಯ, ಕವಿಗಳ ಹೇಳಿಕೆ, ಶಾಸನಾಧಾರಗಳು, ಆಶ್ರಯದಾತನ ಕಾಲ, ಗುರುಪರಂಪರೆ ಇತ್ಯಾದಿಗಳಮೂಲಕ ಕವಿಗಳ ಕಾಲನಿರ್ಣಯವನ್ನು ಪುನರ್‌ ಮೌಲ್ಯೀಕರಿಸಿರುವುದು ಕಂಡುಬರುತ್ತದೆ.

ಕವಿಗಳ ಕಾಲನಿರ್ಣಯದಲ್ಲಿ ಅಯ್ಯನವರು ತಾಳಿರುವ ನಿಲುವುಗಳಲ್ಲಿ ಕೆಲವು ಇಂದಿಗೂ ಮಾನ್ಯವಾಗಿರುವುದನ್ನು ಕಾಣಬಹುದು. ಕೆಲವು ಉದಾಹರಣೆಗಳನ್ನು ಉಲ್ಲೇಖಿಸಬಹುದು. ಕನ್ನಡ ಸಾಹಿತ್ಯ ಉದಯ ಕಾಲದ ಬಗ್ಗೆ ಪಂಪಪೂರ್ವಯುಗ ಮತ್ತು ಪಂಪಯುಗದ ಕವಿಗಳ ಕಾಲನಿರ್ಣಯ ಮತ್ತು ಕೃತಿವಿಚಾರದಲ್ಲಿ ಅಯ್ಯನವರ ವಿಚಾರಗಳು ಸಾರ್ವಕಾಲಿಕವಾಗಿವೆ. ಶ್ರೀವರ್ಧದೇವ ಹಾಗೂ ತುಂಬಲೂರಾಚಾರ್ಯರು ಅಭಿನ್ನರೆಂದು ಕವಿಚರಿತೆಕಾರರು ಗ್ರಹಿಸಿದ್ದನ್ನು ಮರುಪರಿಶೀಲನೆಗೊಳಪಡಿಸಿ ಅವರು ಅನ್ಯಾನ್ಯರೆಂದು ಅಯ್ಯನವರು ಸಾಕ್ಷ್ಯಾಧಾರಗಳ ಮೂಲಕ ಗುರುತಿಸಿದ್ದು ಮಹತ್ತರವಾದ ಸಂಶೋಧನೆಗಳಲ್ಲಿ ಒಂದು.

ಶ್ರವಣ ಬೆಳ್ಗೊಳದ ಶಾಸನಗಳಲ್ಲಿ ಉಕ್ತವಾದ ಗ್ರಂಥಗಳೆಲ್ಲವೂ ಸಂಸ್ಕೃತ ಭಾಷೆಯವುಗಳಾಗಿರುವುದರಿಂದ ಶ್ರೀವರ್ಧಕೃತ ಚೂಡಾಮಣಿ ಕೂಡ ಸಂಸ್ಕೃತ ಭಾಷೆಯದಾಗಿರ-ಬಹುದೆಂದೂ ಅದು ಒಂದು ಕಾವ್ಯವಾಗಿತ್ತೆಂದೂ ಅದರ ಕರ್ತೃ ಶ್ರೀವರ್ಧದೇವ ಸು. ಕ್ರಿ.ಶ. 71ರಲ್ಲಿ ಜೀವಿಸಿದ್ದಿರಬಹುದೆಂದು ಹೇಳುವುದರ ಮೂಲಕ ವರ್ಧದೇವನೇ ಬೇರೆ, ತುಂಬಲೂರಾಚಾರ್ಯರೇ ಬೇರೆ ಎಂದು ತೋರಿಸಿದರು. ಶಾಸನದಲ್ಲಿ ಹೇಳಿರುವ ಚೂಡಾಮಣಿ ಎಂಬ ಗ್ರಂಥ ಒಂದು ಸಂಸ್ಕೃತ ಕಾವ್ಯ. ಅದರ ಕರ್ತೃ ಶ್ರೀವರ್ಧದೇವ. ಇಂದ್ರನಂದಿ ದೇವಚಂದ್ರರು ಹೇಳುವ ಚೂಡಾಮಣಿ ಎಂಬ ಗ್ರಂಥ ಒಂದು ಕನ್ನಡ ವ್ಯಾಖ್ಯಾನ. ಅದರ ಕರ್ತೃ ತುಂಬಲೂರಾಚಾರ್ಯ ಎಂದೂ, ಇವರೀರ್ವರೂ ಅನ್ಯಾನ್ಯರೆಂದೂ, ಶ್ರೀವರ್ಧದೇವನ ಕಾಲವನ್ನು ಚಾರಿತ್ರಿಕ ಆಧಾರಗಳ ಮೂಲಕ ಕ್ರಿ.ಶ. 71 ಎಂದು ಸೂಚಿಸಿದರು. ವಿದ್ವಾಂಸರಿಗೆ ಶ್ರೀವರ್ಧದೇವ, ತುಂಬಲೂರಾಚಾರ್ಯರ ವಿಷಯದಲ್ಲಿದ್ದ ತೊಡಕನ್ನು ಅಯ್ಯನವರು ಸಾಕ್ಷ್ಯಾಧಾರ ಸಹಿತ ಸರ್ವರೂ ಮಾನ್ಯ ಮಾಡುವಂತೆ ಬಿಡಿಸಿದ್ದು ಮಹತ್ತರವಾದದ್ದು. ಕವಿಚರಿತೆಕಾರರು ತಮ್ಮ ಮೊದಲನೆ ಸಂಪುಟದಲ್ಲಿ ವ್ಯಕ್ತಪಡಿಸಿದ್ದ ಇವರೀರ್ವರೂ ಅಭಿನ್ನರು ಎಂಬ ಅಭಿಪ್ರಾಯವು ಸರಿಯಲ್ಲವೆಂಬುದನ್ನು ತಮ್ಮ ಮೂರನೇ ಸಂಪುಟದ ಗ್ರಂಥ ಶುದ್ಧಿ ಭಾಗದಲ್ಲಿ ಸರಿಪಡಿಸಿಕೊಂಡರು.

ರುದ್ರಭಟ್ಟನ ಕಾಲದ ವಿಚಾರವಾಗಿ ಅಯ್ಯನವರು ಸುದೀರ್ಘವಾದ ಸಾಧಾರಪೂರ್ವಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರುದ್ರಭಟ್ಟನು ಕ್ರಿ.ಶ. 118ರಲ್ಲಿ ಜೀವಿಸಿದ್ದಿರಬೇಕು ಎಂಬುದನ್ನು ಅಯ್ಯನವರು ಕಾವ್ಯಗಳಲ್ಲಿಯ ಆಂತರಿಕ ಸಾಕ್ಷ್ಯಾಧಾರಗಳು ಹಾಗೂ ಶಾಸನಗಳ ಮಾಹಿತಿಯಿಂದ ನಿರೂಪಿಸಿದ್ದಲ್ಲದೆ ಕ್ರಿ.ಶ. 12೦೦ ರಿಂದ ಕ್ರಿ.ಶ. 122ರ ನಡುವೆ ಅದರಲ್ಲಿಯೂ 1218ರಲ್ಲಿ ಜಗನ್ನಾಥ ವಿಜಯವನ್ನು ರಚಿಸಿದ್ದಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದರು. ಇದನ್ನು ಕವಿಚರಿತೆಕಾರರು ಒಪ್ಪದಿದ್ದರೂಅಯ್ಯನವರ ವಿವರಣೆಯಿಂದ ರುದ್ರಭಟ್ಟನ ಬಗ್ಗೆ ಮೊದಲು ತಾಳಿದ್ದ ನಿಲುವಿನಲ್ಲಿ ಕೆಲವು ತಿದ್ದುಪಡಿ ಮಾಡಿಕೊಂಡಿದ್ದು ತಿಳಿದುಬರುತ್ತದೆ. ರುದ್ರಭಟ್ಟನ ಕಾಲದ ಬಗ್ಗೆ ಅಯ್ಯನವರು ತಾಳಿದ ನಿಲುವನ್ನೇ ನಂತರದ ಸಂಶೋಧಕರು ಉಲ್ಲೇಖಿಸಿ ಅಯ್ಯನವರು ಸೂಚಿಸಿದ ತೇದಿಯನ್ನು ಆಧಾರವಾಗಿಟ್ಟುಕೊಂಡು ಕ್ರಿ.ಶ. 1185ಕ್ಕಿಂತನಂತರ 12೦೦ರ ಒಳಗೆ ಕೃತಿ ರಚಿಸಿದ್ದರಬೇಕು ಎಂಬ ನಿಲುವಿಗೆ ಬಂದಿದ್ದಾರೆ. ಇದರಿಂದ ಅಯ್ಯನವರ ಸಂಶೋಧನೆಯು ಇಂದಿಗೂ ಮುಂದಿಗೂ ಪ್ರಸ್ತುತವಾಗಿರುವುದನ್ನು ಕಾಣಬಹುದು.

ಅಯ್ಯನವರು ಸೋಮರಾಜನು ಉದ್ಭಟ ಕಾವ್ಯವನ್ನು ರಚಿಸಿದ್ದ ಕಾಲದ ಬಗೆಗೆ ಆಧಾರಸಹಿತವಾಗಿ ಸೂಚಿಸಿದ ವಿವರವು ಸಾಧಾರವೂ ವಾಸ್ತವ ಸಂಗತಿಗೆ ಅವಿರೋಧವೂ ಆಗಿದೆ. ಕವಿಚರಿತೆಕಾರರು, ಸೋಮರಾಜನು ಉದ್ಭಟ ಕಾವ್ಯವನ್ನು ಸಾಸಿರದ ನೂಱಿಂಸಂದ ನಾಲ್ವತ್ತು ನಾಲ್ಕನೆಯ ಚಿತ್ರಭಾನು ಸಂವತ್ಸರದಲ್ಲಿ ಬರೆದು ಮುಗಿಸಿದನೆಂದು ನಿರ್ಧರಿಸಿದ್ದರು. ಆದರೆ ಅಯ್ಯನವರು ಉದ್ಭಟ ಕಾವ್ಯದಲ್ಲಿಯ ಕಾಲಸೂಚಕ ಪದ್ಯವು ದೋಷಯುಕ್ತವಾಗಿರುವುದನ್ನು ತೋರಿಸಿ ಇತರೆ ಆಧಾರಗಳನ್ನು ಅವಲಂಬಿಸಿ ಆ ಪದ್ಯದ ಸರಿಯಾದ ಪಾಠವು `ಸಾಸಿರದ ನಾನೂರ್ಸಂದ ನಾಲ್ವತ್ತು ನಾಲ್ಕನೆಯ' ಎಂದಿರಬೇಕೆಂದು ತೋರಿಸಿಕೊಟ್ಟರು. ಅಯ್ಯನವರು ಹೇಳುವಂತೆ ಸೋಮರಾಜನ ಕಾಲ ಕ್ರಿ.ಶ. 1522ನೆಯ ಚಿತ್ರಭಾನು ಸಂವತ್ಸರ. ಉದ್ಭಟ ಕಾವ್ಯದ `ಶಿವನೆಂದುತ್ತಮ ಶೈವರ್' ಎಂದು ಪ್ರಾರಂಭವಾಗುವ ಪದ್ಯವು ಕ್ರಿ.ಶ. 134ರ ಬೇಲೂರು ಶಾಸನದ `ಯಂ ಶೈವಾಸ್ಸಮುಪಾಸತೆ' ಎಂಬ ಸಂಸ್ಕೃತ ವೃತ್ತದ ಅಭಿಪ್ರಾಯವನ್ನೇ ಹೆಚ್ಚು ಕಡಿಮೆ ಒಳಗೊಂಡಿದೆ. ಸೋಮರಾಜನು ಆ ಶಾಸನ ಪದ್ಯಕ್ಕೆ ಮಾರುಹೋಗಿ ಅದೇ ಅಭಿಪ್ರಾಯವನ್ನು ತನ್ನ ಕಾವ್ಯದಲ್ಲಿವ್ಯಕ್ತಪಡಿಸಿದ್ದಾನೆ. ಹೀಗಾಗಿ ಸೋಮರಾಜನು ಕ್ರಿ.ಶ. 134ಕ್ಕಿಂತ ಈಚಿನ ಚಿತ್ರಭಾನು ಸಂವತ್ಸರದಲ್ಲಿ ಉದ್ಭಟಕಾವ್ಯವನ್ನು ರಚಿಸಿದ್ದಾನೆ ಎಂಬ ಇವರ ನಿಲುವು ಇಂದಿಗೂ ಸ್ವೀಕಾರಾರ್ಹವಾಗಿದೆ.

ಮಾಳವೀ ಮಾಧವ ಕರ್ತೃವಾದ ಕರ್ಣಪಾರ್ಯನು (ಕನ್ನಮಯ್ಯ) ನೇಮಿನಾಥ ಪುರಾಣದ ಕರ್ತೃವಾದ ಕರ್ಣಪಾರ್ಯನಿಗಿಂತ ಭಿನ್ನನೆಂದೂ, ಕ್ರಿ.ಶ. 142 ಕ್ಕಿಂತ ಹಿಂದೆ ಬರೆಯಲ್ಪಟ್ಟ ದುರ್ಗಸಿಂಹನ ಪಂಚತಂತ್ರದಲ್ಲಿ ಅವನು ಸ್ತುತನಾಗಿರುವುದರಿಂದ ಆ ಪೂರ್ವದಲ್ಲಿ ಅವನು ಇದ್ದಿರಬೇಕೆಂದು ತಾನಾಗಿಯೇ ತಿಳಿಯುವುದೆಂದು ಅಯ್ಯನವರು ಸೂಚಿಸಿದ ಕಾಲವನ್ನೇ ಕವಿಚರಿತೆಕಾರರು ಒಪ್ಪಿಕೊಂಡು ಕರ್ಣಪಾರ್ಯ (ಕನ್ನಮಯ್ಯ)ನ ಬಗ್ಗೆ ತಾವು ತಾಳಿದ ನಿಲುವನ್ನು ಬದಲಾಯಿಸಿಕೊಂಡರು. ಅನುಪಲಬ್ಧ ಚಂಪೂಕೃತಿಗಳ ಕರ್ತೃಗಳ ಕಾಲ ನಿರ್ಣಯದ ಬಗ್ಗೆ ಸಾಹಿತ್ಯ ಚರಿತ್ರೆಕಾರರು ಹಾಗೂ ಇತರರು ಉಲ್ಲೇಖಿಸುವಾಗ ಅಯ್ಯನವರು ಸೂಚಿಸಿರುವ ಕಾಲನಿರ್ಣಯದ ವಿವರಗಳನ್ನೇ ಪ್ರಸ್ತಾಪಿಸಿ ಪರಿಗಣಿಸಿರುವುದುಂಟು. ಹಂಸರಾಜನೆಂಬ ಅನಾಮಧೇಯ ಕವಿಯ ಕಾಲವನ್ನು ಶಾಸನ ಇತ್ಯಾದಿ ಪೂರಕ ಆಧಾರಗಳಿಂದ ದನೆಯ ವಿಕ್ರಮಾದಿತ್ಯನ ಕಾಲದಲ್ಲಿ ಸು. ಕ್ರಿ.ಶ. 1೦೦೦ದಲ್ಲಿ ಇದ್ದಿರಬೇಕೆಂಬ ಅಯ್ಯನವರ ಅಭಿಪ್ರಾಯವೇ ಮೈಸೂರು ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಹಿತ್ಯ ಚರಿತ್ರೆಯಲ್ಲಿ ಸ್ವೀಕೃತವಾಗಿದೆ.

ಇಮ್ಮಡಿ ನಾಗವರ್ಮನ ಕಾಲವನ್ನು ವರ್ಧಮಾನ ಪುರಾಣ ದೊರೆಯುವುದಕ್ಕಿಂತ ಮೊದಲೇ ಆಧಾರ ಸಹಿತ ಅಯ್ಯನವರು ಕ್ರಿ.ಶ. 142 ಎಂದು ಗುರುತಿಸಿದ್ದರೋ ಆ ಕಾಲವೇ ವರ್ಧಮಾನ ಪುರಾಣದ ಕಾಲಸೂಚಕ ಪದ್ಯದಿಂದ ವ್ಯಕ್ತವಾಗುವ ಕಾಲಕ್ಕೆ ಸರಿ ಹೊಂದುತ್ತಿದ್ದು ನಾಗವರ್ಮನ ಕಾಲದ ಬಗೆಗೆ ಅಯ್ಯನವರು ತಾಳಿರುವ ನಿಲುವೇ ಮಾನ್ಯತೆ ಪಡೆದಿದೆ. ಹಳಗನ್ನಡ ಸಾಹಿತ್ಯದ ಅಧ್ಯಯನದಲ್ಲಿ ಅಯ್ಯನವರ ಸಂಶೋಧನಾ ಲೇಖನಗಳಿಗೆ ಪ್ರಮುಖ ಸ್ಥಾನ ಇದೆ. ಚಂಪೂಕವಿಗಳ ಕುರಿತು ಅಧ್ಯಯನ ನಡೆಸುವವರು ಅಯ್ಯನವರ ಸಂಶೋಧನಾ ಸಂಗತಿಗಳನ್ನು ಪ್ರಸ್ತಾಪ ಮಾಡದೆ ಎಂದಿಗೂ ಮುಂದುವರಿಯುವಂತಿಲ್ಲ. ವೈಯಕ್ತಿಕ ಸಾಹಿತ್ಯ ಚರಿತ್ರೆಯ ಕೃತಿಗಳಲ್ಲಾಗಲೀ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಾಗಲೀ ಕವಿಗಳ ಕಾಲ ನಿರ್ಣಯದ ಬಗೆಗೆ ಉಲ್ಲೇಖಿಸುವಾಗ ಅಯ್ಯನವರ ಸಂಶೋಧನಾ ಸಂಗತಿಗಳನ್ನು ಪ್ರಸ್ತಾಪಿಸಿರುವುದು ಅವರ ಸಂಶೋಧನಾ ವಿಷಯಗಳ ಮಹತ್ವವನ್ನು ಸೂಚಿಸುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಲ್ಲಿ ಕಳಚಿಕೊಂಡಿರುವ ಕೊಂಡಿಗಳನ್ನು ಸೇರಿಸುವ ಮಹತ್ತರವಾದ ಕಾರ್ಯವನ್ನು ಇವರು ಮಾಡಿದ್ದಾರೆ.

ಆರ್. ನರಸಿಂಹಾಚಾರ್ಯರು ಮಾದಿರಾಜಮುನಿ, ಕೇಶಿ ದಂಡನಾಯಕ ಮೊದಲಾದವರು ಕಾವ್ಯ ಕರ್ತೃಗಳೆಂದು ನಿಶ್ಚಯಿಸಿರುವುದಕ್ಕೆ ನಾನು ಸಾಕಾದ ಆಧಾರವಿಲ್ಲದೆ ಕೆಲವರನ್ನು ಕವಿಗಳು ಅಥವಾ ಗ್ರಂಥಕರ್ತೃಗಳು'' ಎಂದು ಕರೆದಿದ್ದೇನೆ ಎಂದು ಅಯ್ಯನವರು ಆಕ್ಷೇಪಿಸುತ್ತಾರೆ. ಈ ವಿಷಯದಲ್ಲಿ ನಾನು ಆಯಾವ್ಯಕ್ತಿಗಳ ವಿಶೇಷಗಳು, ವರ್ಣನೆ ಇವುಗಳನ್ನು ಪರಿಶೀಲಿಸಿ ಅರ್ಹತೆಯನ್ನು ಊಹಿಸಿ ಬಳಿಕ ಕವಿ ಅಥವಾ ಗ್ರಂಥ ಕರ್ತೃ ಎಂಬ ಹೆಸರನ್ನು ಹೇಳಿದ್ದೆನೆಂಬ ಆಶಯವನ್ನು ಆಕ್ಷೇಪಗಳಿಗೆ ಪ್ರತ್ಯುಕ್ತಿಯಾಗಿ ವ್ಯಕ್ತಪಡಿಸಿದಾಗಈ ವಿಷಯದಲ್ಲಿ ಕವಿಚರಿತೆಕಾರರ ಅಭಿಪ್ರಾಯಗಳನ್ನು ಅಯ್ಯನವರು ಸ್ವಲ್ಪಮಟ್ಟಿಗೆ ಒಪ್ಪಿಕೊಂಡಿದ್ದು ಕಂಡುಬರುತ್ತದೆ. ಆಧಾರಸಹಿತ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟರೆ ಆ ವಿಷಯಗಳನ್ನು ಅಯ್ಯನವರುಸ್ವೀಕರಿಸುತ್ತಿದ್ದರು ಎಂಬುದಕ್ಕೆ ಮೇಲಿನ ಸಂಗತಿ ನಿದರ್ಶನ.

ಬೂಚಿರಾಜನನ್ನು ಹಾಸನದ 119 ರ ಶಾಸನದಲ್ಲಿ ಕನ್ನಡ ಸಂಸ್ಕೃತ ಎರಡರಲ್ಲಿಯೂ ಪೊನ್ನನಿಗೆ ಸಮಾನವಾದ ಕವಿ ಎಂದು ಕರೆದಿರುವುದರಿಂದ ಹಾಗೂ ಹಾಸನದ 119 ರ ಸಂಖ್ಯೆಯ ಶಾಸನದಲ್ಲಿಯೇ ಬೂಚಿರಾಜನು ತತ್ವಾರ್ಥ ಸೂತ್ರಕ್ಕೆ ಒಂದು ವ್ಯಾಖ್ಯಾನವನ್ನು ಬರೆದನೆಂದು ಸೂಚಿಸಲ್ಪಟ್ಟಿರುವುದರಿಂದ ಅವನು ಗ್ರಂಥವನ್ನು ಬರೆದನೆಂದು ಆತನನ್ನು ಕವಿಚರಿತೆಯಲ್ಲಿ ಸೇರಿಸಿರುವುದು ನ್ಯಾಯವೆಂಬುದನ್ನು ಕವಿಚರಿತೆಕಾರರು ಸಮರ್ಥಿಸಿಕೊಂಡಾಗ ಅಯ್ಯನವರು ಪ್ರತಿಕ್ರಿಯಿಸುತ್ತ ಪ್ರಾಸಂಗಿಕವಾಗಿ `ನಾನು ಹೇಳಿರುವ ಕೆಲವು ವಿಷಯಗಳನ್ನು ಕುರಿತು ಆಚಾರ್ಯರು ಮಾಡಿರುವ ಆಕ್ಷೇಪಗಳಾದರೋ ನ್ಯಾಯವಾಗಿದೆಯೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂಬಲ್ಲಿ, ಕೆಲವೊಂದು ಆಧಾರಗಳಿಂದ ಸಂಶೋಧನೆಯಲ್ಲಿಯ ಅಂಶಗಳಲ್ಲಿ ದೋಷಗಳುಂಟಾದರೆ ಅದನ್ನು ಬೇರೆಯವರು ತೋರಿಸಿಕೊಟ್ಟರೆ ಅಯ್ಯನವರು ಸ್ವೀಕರಿಸುತ್ತಿದ್ದರು' ಎಂಬುದು ವಿದಿತವಾಗುತ್ತದೆ. ಇದು ಅಯ್ಯನವರ ಸಂಶೋಧನೆಯ ಪ್ರಾಮಾಣಿಕತೆಗೆ ನಿದರ್ಶನವಾಗಿದೆ. ಅಯ್ಯನವರ ಇನ್ನೊಂದು ಸ್ವಭಾವವೆಂದರೆ ತಮ್ಮ ಸಂಶೋಧನಾ ಲೇಖನಗಳಲ್ಲಿ ಕವಿಕಾಲದ ಬಗೆಗೆ ವ್ಯಕ್ತಪಡಿಸಿರುವ ಅಂಶಗಳು ಬೇರೆಯವರು ಒಪ್ಪಲಿ, ಬಿಡಲಿ ತಮಗೆ ಖಚಿತ ಎಂದೆನಿಸಿದರೆ ಅವನ್ನೇ ಆಧಾರಸಹಿತ ಪುನರುಚ್ಫರಿಸುತ್ತಿದ್ದರು. 193 ರಲ್ಲಿ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದ ʻಆಕ್ಷೇಪಗಳಿಗೆ ಪ್ರತ್ಯುಕ್ತಿ ಲೇಖನ'ವನ್ನು ಇದಕ್ಕೆ ನಿದರ್ಶನವಾಗಿ ಉದಾಹರಿಸಬಹುದು.

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕುರಿತ ಅಯ್ಯನವರ ಸಂಶೋಧನೆಯ ಸ್ವರೂಪದ ಬಗೆಗೆ ಹೇಳುವುದಾದರೆ, ಅಯ್ಯನವರ ಸಂಶೋಧನೆಯು ಹಳಗನ್ನಡ ಕವಿಗಳ ಬಗೆಗಿನ ಅಂದರೆ ಕವಿಕೃತಿ ಹಿನ್ನಲೆಗೆ ಸಂಬಂಧಿಸಿದ ಹಾಗೆ ಕೃತಿಕಾರರ ಬಗೆಗೆ ಮಾಹಿತಿಯನ್ನು ಕ್ರೋಢೀಕರಿಸುವ ಅಂಶಗಳನ್ನು ಒಳಗೊಂಡಿದೆ. ಕವಿಯ ಜೀವನ ವಿವರ, ಕಾಲದೇಶ ಇತ್ಯಾದಿ ವಿವರಗಳನ್ನು ಕೃತಿಯಿಂದ ಹಾಗೂ ಅನ್ಯಮೂಲಗಳಿಂದ ಕಂಡುಕೊಂಡಿರುವ ಪ್ರಯತ್ನವನ್ನು ಗುರುತಿಸಬಹುದು. ಕವಿಕೃತಿಗಳ ಕಾಲ ನಿರ್ಧಾರದ ಚರ್ಚೆಯನ್ನು ಪ್ರಮುಖವಾಗಿಟ್ಟುಕೊಂಡು ರಚಿತವಾಗಿರುವ ಅಯ್ಯನವರ ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರ ಕೃತಿಯಲ್ಲಿಯ ಕೆಲವು ವಿದ್ವತ್ಪೂರ್ಣ ಲೇಖನಗಳಲ್ಲಿ ಕವಿಕೃತಿಗಳ ಕಾಲನಿರ್ಧಾರದ ಬಗೆಗೆ ಅಚಲವೆಂಬಂತೆ ಕಂಡುಬಂದರೆ, ಇನ್ನೂ ಕೆಲವು ಲೇಖನಗಳಲ್ಲಿ ಅನಿಶ್ಚಿತತೆ ಮುಂದುವರೆದಿರುವುದನ್ನು ಗುರುತಿಸಬಹುದು. ಕವಿಕೃತಿಗಳ ಕಾಲನಿರ್ಧಾರದ ಸಂದರ್ಭದಲ್ಲಿ ಅಯ್ಯನವರು ಲಭ್ಯವಿರುವ ಎಲ್ಲಾ ಲಿಖಿತ ಆಧಾರಗಳ ನೆರವನ್ನು ಪಡೆದುಕೊಂಡಿರುವುದು ತಿಳಿದುಬರುತ್ತದೆ. ಕಾವ್ಯಗಳ ಆಂತರಿಕ ಸಾಕ್ಷ್ಯಾಧಾರಗಳಿಂದ ವ್ಯಕ್ತವಾಗುವ ಅನಿಸಿಕೆಯನ್ನು ಸಮರ್ಥಿಸಲು ಶಾಸನಗಳಿಂದಲೂ ಪುರಾವೆಗಳನ್ನು ಪಡೆದುಕೊಂಡಿದ್ದಾರೆ. ಕಾವ್ಯ ಒದಗಿಸುವ

ಮಾಹಿತಿಗಳನ್ನು ಪರಸ್ಪರ ಹೋಲಿಸಿ ಹೊಂದಿಸಿಕೊಳ್ಳುವ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿರುವುದನ್ನುಕಾಣಬಹುದು. ಕವಿಗಳ ಕಾವ್ಯರಚನೆಯ ಕಾಲ ನಿರ್ಣಯಗಳನ್ನು ಕನ್ನಡ ನಾಡಿನ ಅರಸುಮನೆತನಗಳ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿಯೂ ಮಾಡಿರುವುದನ್ನು ಗುರುತಿಸಬಹುದು. ಉದಾ. ರುದ್ರಭಟ್ಟನ ಜಗನ್ನಾಥ ವಿಜಯ ಕೃತಿಯ ರಚನೆಯ ಕಾಲವನ್ನು ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳನ ಕಾಲವನ್ನು ಆಧಾರವಾಗಿಟ್ಟುಕೊಂಡು ಗುರುತಿಸಿರುವುದು.

ಅಯ್ಯನವರ ಕವಿಕೃತಿಗಳ ಕಾಲನಿರ್ಣಯದ ಬಗೆಗಿನ ಸಂಶೋಧನೆಯು ಕೇವಲ ಸಂಗತಿಗಳ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿರದೆ ಕವಿಕೃತಿಗಳ ಅನುಕ್ರಮ ಹಾಗೂ ಪ್ರಭಾವಗಳನ್ನು ಕುರಿತು ನಡೆಸಲು ಖಚಿತ ಕಾಲ ನಿರ್ಧಾರ ಅತ್ಯವಶ್ಯವೆಂಬ ನೆಲೆಯಲ್ಲಿ ಸಾಗಿರುವುದನ್ನು ಗುರುತಿಸಬಹುದು. ಕೃತಿಯ ಖಚಿತ ಕಾಲನಿರ್ಣಯದ ಮೂಲಕವೇ ಕೃತಿರಚನೆಯ ಸಂದರ್ಭದ ಸ್ವರೂಪದ ಚರ್ಚೆಗೆ ಒಂದು ಸೂಕ್ತತೆ ಒದಗುವುದನ್ನು ಅಯ್ಯನವರ ಈ ಸಂಶೋಧನೆಯಿಂದ ಗುರುತಿಸಬಹುದಾಗಿದೆ. ಕವಿಗಳಿಗೆ ಆಶ್ರಯ ಕಲ್ಪಿಸಿದ ಅರಸುಮನೆತನಗಳು ಹಾಗೂ ಅವುಗಳಿಗೆ ಸಂಬಂಧಿಸಿದ ರಾಜಕೀಯ ಸಂಗತಿಗಳು ಶಾಸನಗಳಲ್ಲಿ ವ್ಯಕ್ತಗೊಳ್ಳುವುದರಿಂದ ಕವಿಯ ಕಾಲದೇಶಗಳಿಗೆ ಸಂಬಂಧಿಸಿದ ವಿವರಗಳನ್ನು ಶಾಸನಗಳ ಮೂಲಕ ಖಚಿತಪಡಿಸಿರುವುದು ಅಯ್ಯನವರ ಸಂಶೋಧನೆಯಲ್ಲಿ ಎದ್ದು ಕಾಣುವ ಅಂಶವಾಗಿದೆ. ಹಳಗನ್ನಡ ಕವಿಗಳ ಕಾಲದೇಶ ನಿರ್ಣಯದಲ್ಲಿ ಶಾಸನಗಳು ಪೂರಕ ಆಕರ ಸಾಮಗ್ರಿಗಳಾಗಿ ಯಾವ ರೀತಿ ಬಳಸಲ್ಪಡುತ್ತವೆ ಎಂಬುದಕ್ಕೆ ಅಯ್ಯನವರ ಲೇಖನಗಳು ನಿದರ್ಶನವಾಗಿವೆ. ಹಳಗನ್ನಡ ಸಾಹಿತ್ಯ ಅಧ್ಯಯನದ ಸಂದರ್ಭದಲ್ಲಿ ಅದರಲ್ಲಿಯೂ ಕವಿಕೇಂದ್ರಿತ ಅಧ್ಯಯನದಲ್ಲಿ ಶಾಸನಗಳ ಅಭ್ಯಾಸ ಅವಶ್ಯಕ ಮಾಹಿತಿಯನ್ನು ಒದಗಿಸಬಲ್ಲದು ಎಂಬ ಸಂಗತಿ ಇವರ ಸಂಶೋಧನೆಯಿಂದ ವ್ಯಕ್ತಗೊಳ್ಳುತ್ತದೆ.

ಅಯ್ಯನವರ ಛಂದಸ್ಸಿಗೆ ಸಂಬಂಧಿಸಿದ ಲೇಖನಗಳನ್ನು ಪರಿಶೀಲಿಸಿದರೆ ಶಾಸ್ತ್ರ ವಿಷಯಗಳಲ್ಲಿಯ ಆಸಕ್ತಿಗೆ ಬಹುಮುಖತೆ ಉಂಟು ಎಂಬುದು ತಿಳಿದುಬರುತ್ತದೆ. ಕರ್ಣಾಟಕ ವಿಷಯ ಭಾಷಾ ಜಾತಿ ಛಂದಸ್ಸುಗಳಲ್ಲಿ ಒಂದಾದ ಗೀತಿಕೆಯ ಬಗೆಗೆ ಛಂದೋಂಬಧಿಯ ಲಕ್ಷಣ ಪದ್ಯದ ಪಾಠಶೋಧನೆ ಮಾಡಿದ ಮೇಲೆ ಸಂಸ್ಕೃತ ಸಾಹಿತ್ಯದಲ್ಲಿ ಈ ಛಂದಸ್ಸಿನ ಲಕ್ಷ್ಯ ಪದ್ಯಗಳಿವೆಯೆಂದು ಕೆಲವು ನಿದರ್ಶನಗಳ ಮೂಲಕ ತೋರಿಸಲು ಮಾಡಿರುವ ಪ್ರಯತ್ನ ಗಮನಾರ್ಹವಾದುದು.

ಒಟ್ಟಾರೆ ಅಯ್ಯನವರು ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾಧ್ಯಯನದ ಪ್ರಾರಂಭಿಕ ಘಟ್ಟದ ದೇಶೀಯ ಸಂಶೋಧಕರ ಸಾಲಿನಲ್ಲಿ ಉನ್ನತವಾದ ಸ್ಥಾನವನ್ನು ಪಡೆದವರು. ಎಲೆಮರೆಯ ಕಾಯಿಯಂತೆ ಇದ್ದುಕೊಂಡೆ ವೈದಿಕ ಸಾಹಿತ್ಯ, ಪಂಚತಂತ್ರದ ಪಾಠ ಸಂಪ್ರದಾಯಗಳ ಶೋಧನೆ, ಇಂಡಾಲಜಿ, ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಸಾಹಿತ್ಯಗಳ ಪುನಾರಚನೆ ಮತ್ತು ವ್ಯಾಖ್ಯಾನ ಇತ್ಯಾದಿ ಸಂಶೋಧನೆಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ವಿದ್ವತ್ತಿನಿಂದ ಅಂತರಾಷ್ಟ್ರೀಯ ಮನ್ನಣೆ ಪಡೆದಂಥ ಅಯ್ಯನವರಿಗೆ ಕನ್ನಡ ಜನತೆ ಬದುಕಿದ್ದಾಗ ಯಾವ ಗೌರವವನ್ನು ಸೂಚಿಸಲಿಲ್ಲ. ಈಗಲಾದರೂ ಚದುರಿ ಹೋಗಿರುವ ಅಮೂಲ್ಯವಾದ ಅವರ ಸಾಹಿತ್ಯ ಕೃಷಿಯನ್ನು ಒಂದೆಡೆ ಪ್ರಕಟಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಟಿ.ವಿ. ವೆಂಕಟಾಚಲ ಶಾಸ್ತ್ರೀಗಳು, ಅಯ್ಯನವರ ಪ್ರಾಚೀನ ಕನ್ನಡ ಸಾಹಿತ್ಯ, ಸಂಸ್ಕೃತಿ, ಪಂಚತಂತ್ರಕ್ಕೆ ಸಂಬಂಧಿಸಿದ ಕನ್ನಡ ಸಂಶೋಧನಾ ಲೇಖನಗಳನ್ನು ಸಂಪಾದಿಸಿದ್ದು ಅದನ್ನು ಡಾ. ಎ. ವೆಂಕಟಸುಬ್ಬಯ್ಯನವರ ಸಂಶೋಧನಾ ಲೇಖನಗಳು ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದೆ. ಅದೇ ರೀತಿ ಅಯ್ಯನವರ ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರಕಟವಾಗಿರುವ ಇತರೆ ವಿದ್ವತ್ಪೂರ್ಣ ಬರೆಹಗಳು ಪ್ರಕಟಗೊಂಡರೆ ಅವರ ವಿದ್ವತ್ತಿಗೆ ಜನತೆ ತಡವಾಗಿಯಾದರೂ ಗೌರವ ಸೂಚಿಸಿದಂತಾಗುತ್ತದೆ.

 

ಅನುಬಂಧ

ಡಾ. ಎ. ವೆಂಕಟಸುಬ್ಬಯ್ಯನವರ ಕೃತಿಗಳು ಹಾಗೂ ಲೇಖನಗಳು

ಇವರು ಕೃತಿಗಳಿಗಿಂತ ಸಂಶೋಧನಾ ಲೇಖನಗಳನ್ನೇ ಅತ್ಯಧಿಕವಾಗಿ ರಚಿಸಿದ್ದಾರೆ. ಇವರ ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುವುದು ಅವರ ವಿದ್ವತ್ತಿನ ಹಿರಿಮೆಗೆ ಸಾಕ್ಷಿಯಾಗಿದೆ. ಬಹುತೇಕ ಸಂಶೋಧನಾ ಲೇಖನಗಳು ಪಂಚತಂತ್ರಕ್ಕೆ, ವೇದಾರ್ಥ ವಿಚಾರಕ್ಕೆ ಸಂಬಂಧಪಟ್ಟವುಗಳಾಗಿವೆ. ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರಕಟವಾಗಿದ್ದ ದುರ್ಲಭವಾಗಿರುವ ಸಂಶೋಧನಾ ಲೇಖನಗಳನ್ನು ಹಲವಾರು ಕಡೆ ಹುಡುಕಾಟ ನಡೆಸಿ ವಿವಿಧ ಮೂಲಗಳಿಂದ ಕಲೆಹಾಕಿ ಒಂದೆಡೆ ಲೇಖನ ಸೂಚಿಯನ್ನು ಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಕೆಲಸದಲ್ಲಿ ಹಿರಿಯ ವಿದ್ವಾಂಸರಾದ ಎಸ್. ಶಿವಣ್ಣನವರ ಸಹಾಯವನ್ನು ಪಡೆದಿದ್ದೇನೆ. ಕೆಲವು ವಿದ್ವತ್‍ಪೂರ್ಣ ಲೇಖನಗಳ ವಿವರ ನನಗೆ ದೊರೆಯದೇ ಇದ್ದುದರಿಂದ ವೆಂಕಟಸುಬ್ಬಯ್ಯನವರ ಸಮಗ್ರ ಸಾಹಿತ್ಯ ಕೃಷಿಯ ಸೂಚಿಯನ್ನು ಒಂದೆಡೆ ತರಲು ಸಾಧ್ಯವಾಗಿಲ್ಲವಾದರೂ ಬಹುತೇಕ ಲೇಖನಗಳ ಸೂಚಿಯನ್ನು ಇಲ್ಲಿ ಕೊಡಲಾಗಿದೆ.


I. ಕೃತಿಗಳು

1.The Kalas [Ph.D. Thesis], The Vasanta Press, Adyar, Madras, 1911.

2.Some Saka Dates In Inscriptions [A contribution to Indian chronology], N. Subramaniam and Co., Mysore, 1918.

3ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರ, ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ, ಬೆಂಗಳೂರು, ೧೯೨೭.

4.Vedic Studies, Vol. No. 1, Surabhi and Company, Mysore, 1932.

5.ಮನುಧರ್ಮಸಾರ (ಅನುವಾದ), ಕರ್ನಾಟಕ ಥಿಯಾಸಾಫಿಕಲ್ ಫೆಡರೇಷನ್, ಥಿಯಾಸಾಫಿಕಲ್ ಸೊಸೈಟಿ, ಬೆಂಗಳೂರು, ೧೯೪೩.

6.ವೇದಾರ್ಥ ಮೀಮಾಂಸೆ (ವಿಶೇಷೋಪನ್ಯಾಸ ಪುಸ್ತಕ ಮಾಲೆ), ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೬೨.

7.Contributions to the Interpretation of the Rgveda, Prasaranga, University of Mysore, Mysore, 1967.

8.ಪಂಚತಂತ್ರದ ಟೀಕೆ, (ಇದು ವೆಂಕಟ ಸುಬ್ಬಯ್ಯನವರೇ ಬರೆದಿದ್ದಿರಬೇಕೆಂಬ ಅಭಿಪ್ರಾಯ ಇದೆ), ಮದರಾಸ್‌, ೧೯೧೦.

ಸಂಶೋಧನಾ ಲೇಖನಗಳು

I. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದವುಗಳು:

1.ಸಮುದಾಯದ ಮಾಘಣ ನಂದಿ, ಪ್ರಬುದ್ಧ ಕರ್ಣಾಟಕ, ಸಂ. ೭, ಸಂ.೧, ಪು. ೫೩-೬೩. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೨೬.

2.ಕುಮದೇಂದು, ಪ್ರಬುದ್ಧ ಕರ್ಣಾಟಕ, ಸಂ.೭, ಸಂ.೨, ಪು. ೬೫-೭೦. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜು, ಬೆಂಗಳೂರು, ೧೯೨೬.

3ನಾಗಚಂದ್ರ, ಪ್ರಬುದ್ಧ ಕರ್ಣಾಟಕ, ಸಂ.೭, ಸಂ.೩, ಪು. ೩೩-೫೬. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜು, ಬೆಂಗಳೂರು, ೧೯೨೬.

4.ಕರ್ಣಪಾರ್ಯ, ಪ್ರಬುದ್ಧ ಕರ್ಣಾಟಕ ಸಂ.೮, ಸಂ.೧, ಪು. ೭೧-೮೬. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜು, ಬೆಂಗಳೂರು, ೧೯೨೬.

4.ನೇಮಿಚಂದ್ರ, ಪ್ರಬುದ್ಧ ಕರ್ಣಾಟಕ, ಸಂ. ೮, ಸಂ. ೨, ಪು. ೮೭-೯೨. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೨೬.

5.ರುದ್ರಭಟ್ಟ, ಪ್ರಬುದ್ಧ ಕರ್ನಾಟಕ, ಸಂ. ೮, ಸಂ. ೪, ಪು. ೮೭-೯೨. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೨೬.

6.ಕಮಲಭವ-ಸುಮನೋಬಾಣ, ಪ್ರಬುದ್ಧ ಕರ್ಣಾಟಕ, ಸಂ. ೯, ಸಂ. ೨, ಪು. ೧೧೬-೧೫೧. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೨೭.

7.ನಾಗವರ್ಮ, ಪ್ರಬುದ್ಧ ಕರ್ಣಾಟಕ, ಸಂ. ೯, ಸಂ. ೪, ಪು. ೧೫೩-೧೮೨. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೨೮.

8.ಅರಿಕಾಮಧ್ವಂಸಿ, ಪ್ರಬುದ್ಧ ಕರ್ಣಾಟಕ, ಸಂ. ೧೧, ಸಂ. ೩, ಪು. ೧-೧೧. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೩೦.

9.ಆಕ್ಷೇಪಗಳಿಗೆ ಪ್ರತ್ಯುಕ್ತಿ, ಪ್ರಬುದ್ಧ ಕರ್ಣಾಟಕ, ಸಂ. ೧೨, ಸಂ. ೭, ಪು. ೧-೪೮. ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು, ೧೯೩೦.

10.ಸಿದ್ಧಿಯೋಗದಲ್ಲಿ ಗ್ರಂಥ ರಚನೆ, ಪ್ರಬುದ್ಧ ಕರ್ಣಾಟಕ, ಸಂ. ೧೫, ಸಂ.೨, ಪು. ೪೧-೫೦. ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೩೩.

11.ನಾಗವರ್ಮನ ಕೃತಿಗಳು, ಪ್ರಬುದ್ಧ ಕರ್ಣಾಟಕ, ಸಂ. ೧೫, ಸಂ. ೨, ಪು. ೪೮-೬೧. ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೩೪.

12.ಸೂಕ್ತಿ ಸುಧಾರ್ಣವದ ಗ್ರಥನ ಕಾಲ, ಪ್ರಬುದ್ಧ ಕರ್ಣಾಟಕ, ಸಂ. ೧೮, ಸಂ. ೧, ಪು. ೩೧-೪೧. ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೩೬.

13.ರಾಜಾದಿತ್ಯ, ದುರ್ಗಸಿಂಹಾದಿ ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರ, ಪ್ರಬುದ್ಧ ಕರ್ಣಾಟಕ, ಸಂ. ೬, ಸಂ. ೧.

14.ಪುಷ್ಪದಂತ ಪುರಾಣ ರಚನಾಕಾಲ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂ. ೧೯, ಸಂ. ೧, ಪು. ೧೦-೩೦. ಬೆಂಗಳೂರು, ೧೯೩೫.

15.ಕರ್ಣಾಟಕ ವಿಷಯ ಜಾತಿ ಛಂದಸ್ಸು, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂ. ೨೦, ಸಂ. ೩, ಪು. ೨೨೮-೨೪೨, ಬೆಂಗಳೂರು, ೧೯೩೫.

16.Religious catholicism in medieval karnataka, S. Krishna swamy Ayyangar commemoration volum, Madras, 1936.

17.Writing of books Siddiyoga, The Journal of oriental research, Madras, pp. 57-56.

18.Rajaguru Kriyashakti, The quarterly journal of the mythic society, Vol. 8-2, pp. 118-136, Bangalore, 1918.

19A Twelfth century university in Mysore, The quarterly Journal of the mythic society, Vol. VII, No. 3, pp. 157-196, Bangalore, 1917.

20.When was the Gommata image at Sravana-Belgola setup, Indian historical quarterly, Vol. VI, No.2, pp. 290-309. Calcutta, 1930.

21.The chronology of the western Chalukyas of Kalyani, Indian Antiquary, Vols, XLVII, 1918, pp. 285-290, XLVIII, 1919, pp. 1-7, Bombay.

22.Regnal period of Hoysala Someswara, Indian culture, Vol. IV, No. 2, pp. 233-40.

23.The Ratta queen Sridevi, Journal of Indian History, Vol.XV, part-1.

24.Gunavishnu and Sayana, The Journal of oriental research, Mysore, Vol.IX, IV. pp. 335-61.

25.The Ganga king and the title Gurjaradhiraja, G.S. Sardesai commemoration, Volume. pp. 167-171, Bombay, 1938.

26. Battle of Soratur, Indian Historical quarterly, Vol. IV, 1928. pp. 124-35.

27. Kadamba prakrit Inscription of Malavalli, Indian Antiquary. Vol. 5, no. 46, 1917, pp. 154-57.

28. Ballappa Dannayaka, Journal of Indian History, Vol. 15, No.2, 1936, Trivandrum, pp. 149-60.

29.The Hoysala's Establishment of the chola king, journal of Indian History, Vol. VI, No. 2, 1927, Trivandrum, pp. 198-206.

II. ಇಂಡಾಲಜಿಗೆ ಸಂಬಂಧಿಸಿದ ಲೇಖನಗಳು

1. Some Rare metres in Sanskrit, The Journal of oriental research, Vol. IX, No.1, Madras, 1036. pp. 46-58.

2, Quatation from the Kamasutra, Indian Historical Quarterly, Vol. 9, No. 2, pp. 597, Calcutta, 1933.

3. A-Buddhist parallel to the Avimaraka story, Indian Antiquary.

4. On the Grammatical works, SI-Tan-Chang, The Journal of oriental research, pp. 11-26, Madras.

5. Adipurana and Brhatkatha, Indian historical quarterly, Vol.V, Calcutta, 1929, pp. 31-35.

6. Are the Gaudapada-Karikas Sruti, Poona orientalist, Vol. I & II, July, 1936. pp. 2-12.

7. The Gitika Metre in Sanskrit, The Journal oriental research, Vol. IX, No. 3, pp. 179-187. Madras.

8. Political Conditions at the Time of Kalidasa, Sanskrit Research October, 1916. Bangalore. [An Anglo-Sanskrit Quarterly], pp. 116-126.

9. A note on Mayura as a writer on prosody, Journal of oriental research, Vol. IX, No. 1, Madras, 1935, pp. 81-82.

10. Yagesvar, The Indian Historical quarterly, Vol. 5, Calcutta, 1929, pp. 236-243.

11. Athabagiye, Indian Antiquary, Vol. LX, Bombay, 1935, pp. 168-70, 204-07.

12. Gauli, Indian Historical Quarterly, Vo. XI, Calcutta, 1935, pp. 791-94.

13. Pratiharas in Southern India, Indian Antiquary, Vol. 48, Bombay, 1919, pp. 132.

14. The Cintamani and Cudamani Kavyas, The Indian Historical Quarterly, Vol. VI, No.3, Calcutta, 1930, pp. 573-575.

15. Five Similes in the Rgveda, Siddha Bharati [The Rosary of Indology], Hoshiapur, 1950, pp. 1-11.

16. On the Data of Skandasvamin, Maheswara and Madhava, The Journal of oriental research, Madras, pp. 200-230

17.Sayana, Madha Bhatta and Venkata Madhava, Journal of oriental research, Vol. X, No. II, Madras, 1936. pp. 115-40,

18.The Mandukyopanishad and Gaudapada, The Indian Antiquary, Vol. LXII, Bombay, 1933, pp. 181-83.

19.On Gaudapadas Agamasurta, The Indian Historical Quaterly, Vol. XI, No. IV, Calcutta, 1935, pp. 783-90.

20.Mean Samskrantis, Indian Antiquary, Vol. IX-II, Bombay, 1918, pp. 118-36.

21.The Authors of the Ragava Pandaviya and Gadyacintamani, J.B.B.R.A.S., Vol. III, Bombay, 1928, pp. 134-60.

22.Kalidasa's Sociological Ideals, quarterly journal of mythic society, Vol. 9, No. 2, Bangalore, 1919, pp. 95-97.

23.The Gitika metre in Sanskrit, Journal of oriental research, Vol. IX, No. 111, Madras, 1935. pp. 179-87.

24..(a) ಸತ್ಯಕ್ರಿಯಾ, ಪ್ರಬುದ್ಧ ಕರ್ಣಾಟಕ, ಸಂ. ೩೭, ಸಂ.೧, ಮೈಸೂರು, ೧೯೫೫, 5. 02-52.

25.Some observations on the Figures of Speach in the Rgveda [Translated from French to English], Annuals of the Bhandarkar oriental research institute, Vol. XVII, I. Poona, 1935, pp. 61-83, Vol. XVII, No. III, pp. 259-88.

26.Devamarga, Zeitschrift fur indologie Und Iranistick, Leipzig, 1931.

27.Vadiraja's yashodhara charita, Z.I.I, Vol. VII, No. 11, Leipzig, 1929, pp. 179-83.

III. ವೇದಗಳಿಗೆ ಸಂಬಂಧಿಸಿದ ವಿದ್ವತ್ತೂರ್ಣ ಲೇಖನಗಳು

28.Vedic Studies: Susma, Journal of oriental research, Madras, 1952. Vol. XVI, P. 177, XVII, pp. 189-204, XVIII, p. 1-15.

29.Vedic Studies: The Root svas, sus, Journal of oriental research, Madras, 1948, Vol. XIV, pp. 294, XV-II, pp. 48-63.

30.Vedic Studies: Urva, Journal of oriental research, Madras, Vol. XVIII, pp. 15.

31.Vedic Studies: The journal of oriental research, Vol. XIX. Part II, Madras, 1952. pp. 101-123.

32.Vedic Studies: The act of Truth in the Rgveda, Journal of oriental research, Madras, Vol. XIV-No.11, pp. 133-65, XIV-III, pp. 210-36.

33.Vedic Studies: Gotram, Journal of oriental research, Madras, Vol. XV, pp. 63, XVI-IV, pp. 165-77.

34.Vedic Studies Phaliga, Arati, Indian Antiquary, Vol.LVI, Bombay, 1936.

35.Vedic Studies: Indian Antiquary, Vol. LV, pp. 1-24, Bombay, 1936.

36.Vrjana, The Adhyar library Bulletin, Madras, pp. 44-104.

37.On Rgveda, 1-6, The Adhyar library Bulletin, Madras, pp: 55-111.

38.On Rgveda 2.11.20 and 4.45.2. Vishveshwarananda Indological Journal, Vol. VI, Hoshiapur, 1968.

39.Rgveda 3.45.3 and 5.1.1. Vishveshvarananda Indological Journal, Vol. IV, Hoshiapur, 1966.

40.On Rgveda 4.30.19, The Journal of oriental research, Madras, Vol. XI, part-II, pp. 155-59.

41.On Rgveda 10.55.5, Vishveshvarananda Indological Journal, Vol. II, Part-II, Hoshiapur, 1964.

42.On Rgveda 10.111.4. Vishveshvarananda Indological Journal, Vol. IV, Part-II, Hoshiapur, 1966.

43.On Udgithas Commentary on Rgveda, X. 15.12. The Journal of oriental research, Madras, Vol. XI, 40. pp. 313-14.

44.On Rgveda 5.45.1 and 2.24.14, Vishveshvarananda Indological Journal, Vol. V, Part-II, Hoshiapur, 1967, pp. 1-8.

45.Agni Angirasa, Vishveshvarananda Indological Journal, Vol.III, Part-1, Hoshiapur, 1965.

46.Sumeka Root Mi, The Adhyar library Bulletin, Madras, pp. 18-44.

47.Vedic miscellanies : On the meaning of Svasara, Vishveshvarananda Indological Journal, Vol. II, Part-1. Hoshiapur, 1964.

48.Syntax of Vedic comparisons [Translated from French to English), Annuals of Bhandarkar oriental research Institute, Vol. XVI, Part-III-IV, Poona, 1935. pp. 232-261.

49.Vedic Studies: Indian Antiquary Vol. 4, Bombay, pp. 147-156.

50.ಋಕ್ಸಂಹಿತಾ ೫.೭೮.೮, ಪ್ರಬುದ್ಧ ಕರ್ಣಾಟಕ, ಸಂ. ೩೯, ಸಂ. ೪, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೫೭.

51.Indrasena, Indian Antiquary, Vol. 47, Bombay, 1918, pp.280-84.

52.On Indra's winning of cows and waters, Z.D.M.G. 115-1, Wiesbaden, 1965, pp. 120-33.

 

IV. ಪಂಚತಂತ್ರಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನಗಳು

1. Panchatantra Studies: Journal of the Bombay branch Royal Asiatic Society, Vo. 4, No. 1-2, Bombay, 1928.

2. Panchatantra Studies: J.B.B.R.A.S., Vol. 5, No. 1-2, Bombay, 1929, pp. 1-10.

3. Purnabhadra and his Panchatantra, The Journal of oriental research, Vol. VIII-II, Madras, 1934. pp. 104-122.

4. Panchantantra Studies: Bhandarkar oriental research Institute, Vol. XV, Parts. 1-11, Poona, 1934, pp. 39-66.

5. A Tamil Version of the Panchatantra, The Adyar library Bulletin, Vol. XXIX, Madras, 1965, pp. 74-174.

6. An Amplified version of the Southern Panchatantra, zeitschrift fur Indologie und Iranistic, Vol. 10-1, Leipzig, 1935, pp.62-95.

7. A Javanese version of the Panchatantra, Annuals of the Bhandarkar oriental research Institute, Vol. XLVII, Poona, 1967, pp. 60-80.

8. Two Tantri Stories, Indian Historical Quaterly, Vol. VII, Calcutta, 1931, pp. 516-22.

9. Panchatantra of Vasubhaga, Indian Historical quarterly, Vol.X, Calcutta, 1934, pp. 104-111.

10. Canakya Nitisastra and Tantri, Indian Historical quarterly, Vol.XIII, Calcutta, XIII, pp. 506-13.

11. On the reconstruction of the Panchatantra, Zeitschrift fur Indologie and Inranistic, Vol. 8-2, Leipzig, 1931, pp. 228-40.

12. On the reconstruction of Vasubhaga's Panchantra, Zeitschrift fur Indologie and Iranistic, Vol. V-VI, Leipzig

13. On the Titles of Panchatantra Tantrakhyaika, Indian historical quarterly, Vol. XIII, Calcutta, 1937, pp. 668-89.

14. Some Sanskrit Stanzas in the Javanese Tantri Kamandaka, Bijdragen, Vol. 121, Kenkunde, 1965, pp. 350-59.

15. I. The Panchatantra of Durgasimha, ZIMG, Vol. VI, 1928, pp. 255-318.

 

II. The Panchatantra of Durgasimha, Zeitschrift fur Indologie and Iranistic, Vol. II, Leipzig, 1930.

16. The Yasastilaka and the panchatantra, Annuals of the Bhandarkar oriental research Institute, Vol. II, Part-III, Poona, 1937.

17. ಲೇಯಾಸ್ ದೇಶದ ಪಂಚತಂತ್ರ, ಪ್ರಬುದ್ಧ ಕರ್ಣಾಟಕ, ಸಂ. ೪೧.೧, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೬೦, ಪು. ೩-೩೦.

18. ಲೇಯಾಸ್ ದೇಶದ ಪಂಚತಂತ್ರ, ಪ್ರಬುದ್ಧ ಕರ್ಣಾಟಕ, ಸಂ. ೪೨, ಸಂ. ೧, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೬೧, ಪು. ೩-೨೪.

19.ತಂತ್ರೋಪಖ್ಯಾನ, ಪ್ರಬುದ್ಧ ಕರ್ಣಾಟಕ, ಸಂ. ೩೯, ಸಂ. ೧, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೫೮.

21.ವಸುಭಾಗನ ಪಂಚತಂತ್ರ, ಅಭಿವಂದನೆ, ಎ.ಆರ್. ಕೃಷ್ಣಶಾಸ್ತ್ರಿಗಳ ಸಂಭಾವನ ಸಂಪುಟ, ಮೈಸೂರು, ೧೯೫೬, ಪು. ೫೧೩-೫೨೩.

22.ತಂತ್ರಿಚರಿತದ ಎರಡು ಕಥೆಗಳು, ಕರ್ಣಾಟಕ ಸಾಹಿತ್ಯ ಪರಿಷತ್‌ಪತ್ರಿಕೆ, ಸಂ.೧೬, ಸಂ. ೧, ಬೆಂಗಳೂರು, ೧೯೩೧, ಪು. ೭-೩೦.

23.ಶಂಕರ ಕವಿಯ ಪಂಚತಂತ್ರ (ಎಂ. ಚಿದಾನಂದ ಮೂರ್ತಿ ಅವರೊಡನೆ) ಉಪಾಯನ, ಡಿ.ಎಲ್.ಎನ್. ಸಂಭಾವನ ಕೃತಿ, ಬೆಂಗಳೂರು, ೧೯೬೭, ಪು. ೩೩೬-೩೪೫.

VI. ಅಂತರಾಷ್ಟ್ರೀಯ ವಿದ್ವಾಂಸರು ಬರೆದಿರುವ ಕೆಲವು ವಿದ್ವತ್ತೂರ್ಣ ಪುಸ್ತಕಗಳನ್ನು ರಿವ್ಯೂ ಮಾಡಿದ್ದಾರೆ.

1.Kunhan Raja C. Rgvedavyakhya Madhavakrata, oriental library digest, Vol. III, No. 6, December, 1939, pp 105-106.

2.Dandekar R.N.: Dervedischemench, oriental library digest, Vol. II, No. I, 1938, pp. 4-6.

3.ಗ್ರಂಥ ವಿಮರ್ಶೆ :       ೧. 'ಅಭಿನವ ಪಂಪ', ಕರ್ಣಾಟಕ ಸಂಘ, ಧಾರವಾಡ, 1934.

      ೨. ಕಣ್ಮರೆಯಾದ ಕನ್ನಡ 'ಶಂಬಾಜೋಶಿ', ಧಾರವಾಡ, 1933.

ಕರ್ನಾಟಕ ಸಾಹಿತ್ಯ ಪರಿಷತ್‌ ಪತ್ರಿಕೆ, ಸಂ. ೧೯, ಸಂ. ೩, ಬೆಂಗಳೂರು, 1934, ಪು. ೨೯೬-೩೧೩.

VII. ಮುನ್ನುಡಿ

4.ಕನ್ನಡದ ಕನ್ನಡಿ ಅಥವಾ ಕರುಣಾಟಕ ಮೂಲಾದರ್ಶ (ಕನ್ನಡವು ಸಂಸ್ಕೃತಜನ್ಯ), ಟಿ. ಶ್ರೀನಿವಾಸ ರಂಗಾಚಾರ್ಯರು, ೧೯೩೬.

                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...