ಒಟ್ಟು ಪುಟವೀಕ್ಷಣೆಗಳು

ಶನಿವಾರ, ಅಕ್ಟೋಬರ್ 4, 2025

  ಹರಿಹರ ಕವಿಯು ಚಿತ್ರಿಸಿರುವ ನೂತನ ಮತ್ತು ಪುರಾತನ ಶರಣರ   

         ಸಮಾಜೋ ಸಾಂಸ್ಕೃತಿಕ ಮತ್ತು ವಚನ ಧರ್ಮ ನಿಲುವುಗಳು                                                 ಡಾ.ಸಿ.ನಾಗಭೂಷಣ                                            

  ಹರಿಹರನು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರ ತರುವಾಯದ ಅತ್ಯಂತ ಪ್ರಮುಖ ಹಾಗೂ ಕ್ರಾಂತಿಕಾರಕ ಕವಿ. ವಚನಕಾರರ ಹೊಸ ಮೌಲ್ಯಗಳಿಂದ ಪ್ರಭಾವಿತನಾಗಿ ಸ್ವಂತಿಕೆಯನ್ನು ಮೈಗೂಡಿಸಿಕೊಂಡು ಕಾವ್ಯಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಹೊಸ ಸಾಹಿತ್ಯ ಪ್ರಕಾರ ವೊಂದನ್ನು ಹುಟ್ಟು ಹಾಕಿದವನು. ಭಾಷೆಯ ದೃಷ್ಟಿಯಿಂದ ಕ್ರಾಂತಿಕಾರಕ ಬದಲಾವಣೆಯನ್ನು ಮೊದಲಿಗೆ ತಂದವನು. ರಳ ಮತ್ತು ಕುಳ, ಕ್ಷಳ ಗಳ ಬಳಕೆಯ ವ್ಯಾಕರಣ ನಿಯಮವನ್ನು ಅನುಸರಿಸದ ಸ್ವಾತಂತ್ರ್ಯವನ್ನು ಪ್ರಥಮವಾಗಿ ಪ್ರಾರಂಭಿಸಿದವನು. ಅಂದರೆ ಹಳಗನ್ನಡ ಭಾಷೆಯಲ್ಲಿ ಪ್ರಾಸದ ಬಗೆಗಿದ್ದ ಮೂರು ಬಗೆಯ ‘ಳ’ಕಾರಗಳಿಗೆ ಪ್ರತಿಯಾಗಿ ಒಂದನ್ನೇ ರೂಢಿಸುವ ದಿಟ್ಟತನವನ್ನೂ ಈತ ತೋರಿದ್ದಲ್ಲದೆ ರಗಳೆ ಎಂಬ ನೂತನ ಛಂದೋ ಸಾಹಿತ್ಯ ಪ್ರಕಾರವನ್ನು ಮೊದಲಿಗೆ ಕನ್ನಡ ಸಾಹಿತ್ಯದಲ್ಲಿ ಹುಟ್ಟುಹಾಕಿದವನು. ದೀರ್ಘವಾದ ಕತೆಗಳ ಬದಲು ಶಿವಭಕ್ತರ ಕತೆಗಳನ್ನು ಚಿಕ್ಕದಾಗಿ ಬರೆದು ಕಾವ್ಯದ ಗಾತ್ರ ಮತ್ತು ವಸ್ತುಗಳಲ್ಲಿ ಆವರೆವಿಗೆ ಇಲ್ಲದ ನೂತನ ಮಾರ್ಗವನ್ನು ರಚಿಸಿದವನು. ತನ್ನ ಕಾವ್ಯಗಳಲ್ಲಿ ನಸಾಮಾನ್ಯರ ಭಾಷೆಗೆ ಹತ್ತಿವಿದ್ದ ಭಾಷೆಯನ್ನು ಬಳಸಿದವನು. ವಚನಕಾರರ ಜೀವನ ಚರಿತ್ರೆಗಳನ್ನು ಹಾಗೂ ಸಾಮಾನ್ಯ ಜೀವನ ಸ್ತರದಿಂದ ಬಂದ ಶರಣರನ್ನು ತನ್ನ ರಗಳೆಗಳಿಗೆ ವಸ್ತುವಾಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಸ್ತುವಿನ ಬದಲಾವಣೆಗೆ ಕಾರಣಕರ್ತನಾದವನು. 

        ಬಸವಾದಿ ಪ್ರಮಥರ ವಚನಸಾಹಿತ್ಯದ ಆಶಯ ಹಾಗೂ ಶರಣರ ಜೀವನ ಇವುಗಳಿಂದ ಸ್ಫೂರ್ತಿಹೊಂದಿ ಸಾಹಿತ್ಯ ನಿರ್ಮಾಣ ಮಾಡಿದ  ಕವಿಗಳಲ್ಲಿ ಹರಿಹರನು ಪ್ರಮುಖನಾಗಿ ಕಂಡು ಬರುತ್ತಾನೆ. ವಚನಸಾಹಿತ್ಯದಿಂದ ಪ್ರಭಾವಿತನಾಗಿ ಭಾಷೆ ಮತ್ತು ಧೋರಣೆಗಳ ದೃಷ್ಟಿಯಿಂದ ಪೂರ್ವದ ಪರಂಪರೆಯ ಕವಿಗಳಿಗಿಂತ ಭಿನ್ನವಾದ ನಿಲುವನ್ನು ಹೊಂದಿದವನು. ವಚನಕಾರರ ಚರಿತ್ರೆಯನ್ನು ಹರಿಹರ  ಕಥನಕಾವ್ಯವನ್ನಾಗಿಸಿದ. ಮನುಜರ ಮೇಲೇ ಸಾವವರ ಮೇಲೆ ಕಾವ್ಯವನ್ನು ಬರೆಯ ಬಾರದೆಂಬ ಪ್ರತಿಜ್ಞೆಯನ್ನು ಹರಿಹರ ಕೈಗೊಳ್ಳಲು ಹಾಗೂ ಪೌರಾಣಿಕ ವಸ್ತುಗಳನ್ನು ಬಿಟ್ಟು ತಮ್ಮಂತೆಯೇ ನಿನ್ನೆ ಮೊನ್ನೆ ಇದೇ ಮಣ್ಣಿನ ಮೇಲೆ ಬದುಕಿದವರ ಕತೆಗಳನ್ನು ಆರಿಸಿ ಕೊಳ್ಳಲು ವಚನಕಾರರೇ ಕಾರಣರಾಗಿದ್ದಾರೆ. ಕನ್ನಡ ಕಾವ್ಯಕ್ಷೇತ್ರಕ್ಕೆ ವ್ಯಕ್ತಿಯ ಅಂತರಂಗ ಮತ್ತು ಅವನ ಸುತ್ತಣ ಸಮಾಜ ಪ್ರವೇಶ ಪಡೆದಿದ್ದು ವಚನಕಾರರ ಮೂಲಕ. ಕನಸಿನಿಂದ ವಾಸ್ತವತೆಗೆ, ಕಲ್ಪನಾಲೋಕದಿಂದ ಈ ಜಗತ್ತಿಗೆ ಕಾವ್ಯದ ವಸ್ತು  ಅವತರಿಸಿತು. ಅಂತಹ ಶರಣರ ಬದುಕನ್ನು ಕಾವ್ಯವನ್ನಾಗಿಸುವುದರ ಮೂಲಕ ಹರಿಹರ ಕವಿಯು ಮೊದಲಿಗನಾಗಿ ಕಂಡು ಬರುತ್ತಾನೆ. ಹರಿಹರನ ಕಾವ್ಯದ ವಸ್ತು ಮಾತ್ರವಲ್ಲದೇ ಧೋರಣೆಯಲ್ಲಿಯೂ  ವಚನಕಾರರ ಪ್ರಭಾವವನ್ನು ಕಾಣಬಹುದು. ಹರಿಹರನ ರಗಳೆಗಳಲ್ಲಿ ಶಿವಶರಣರ ಚರಿತ್ರೆಯೇ ಪ್ರಮುಖವಾಗಿದ್ದು, ಇವರು ಸಾಮಾನ್ಯ ನೆಲೆಯಿಂದ ಅಸಾಮಾನ್ಯ ನೆಲೆಗೆ ಏರಿದವರಾಗಿದ್ದಾರೆ. ಹರಿಹರನು ಶಿವಶರಣರ ಕಥೆಯನ್ನು ವಿವರಿಸುವ ರಗಳೆಗಳಲ್ಲಿ ಶಿವನ ಕೈಲಾಸದ ಒಡ್ಡೋಲಗದ ಚಿತ್ರಣವು ಕಥೆಗೊಂಡು ಪೌರಾಣಿಕ ಚೌಕಟ್ಟನ್ನು ಒದಗಿಸುತ್ತದೆ. ರಗಳೆಯ ಕಥಾನಾಯಕರು ಭೂಲೋಕಕ್ಕೆ ಬಂದು ಮಾಡುವ ಕೆಲಸಗಳೆಲ್ಲವೂ ವಚನಕಾರರು ಕಟ್ಟಿಗೊಂಡಿದ್ದ ಸಾಮಾಜಿಕ ಆದರ್ಶಗಳ ಸಾಂಕೇತಿಕ ಅಭಿವ್ಯಕ್ತಿಗಳೇ ಆಗಿವೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಕಾರ್ಯಚಟುವಟಿಕೆಗಳು ಕೇವಲ ಕಟ್ಟುಕತೆಯ ಪವಾಡಗಳಲ್ಲ. ಅವುಗಳಿಗೆ ಸಾಮಾಜಿಕ ಆಯಾಮವಿದೆ. ವಚನಕಾರರ ಸಾಂಸ್ಕೃತಿಕ ಕಾಳಜಿಯನ್ನು ಹರಿಹರನು ರಗಳೆಗಳ ಕಥನಕ್ರಮದಲ್ಲಿ ಪುನರ್ ಸೃಷ್ಟಿಸಿದ್ದಾನೆ. ಸ್ವಂತಿಕೆಯ ಪ್ರಜ್ಞೆಯಿದ್ದ ಹರಿಹರ ಕವಿಯು ತನ್ನ ಕಾವ್ಯ ಪ್ರಕಾರಕ್ಕೆ ರಗಳೆಯನ್ನು ಆರಿಸಿಕೊಂಡು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಹೊಸ ಮಾರ್ಗವೊಂದನ್ನು ತೆರೆದು ತೋರಿಸಿದಂತೆ ತಾನೂ ಹೊಸ ಮಾರ್ಗವೊಂದರ ಪ್ರವರ್ತಕನೆಂದು ಪರಿಗಣಿಸಲ್ಪಟ್ಟವನಾಗಿದ್ದಾನೆ.  ಹರಿಹರನ ಜೀವನದೃಷ್ಟಿ ಪ್ರಧಾನವಾಗಿ ವಚನಕಾರರದು.  ಆತನು ಬದುಕನ್ನು ಕಂಡು ಅನುಭವಿಸಿ ರೀತಿ ಇವು ಇಲ್ಲ ಕಡೆಯಲ್ಲೂ ಕಾಣುವ ಆತನ ತಾತ್ವಿಕ ಚೌಕಟ್ಟುಗಳು ವಚನಕಾರರಿಂದ ರೂಪಿತವಾಗಿದ್ದಿತೆಂಬುದನ್ನು ಈಗಾಗಲೇ ವಿದ್ವಾಂಸರು ಗುರುತಿಸಿದ್ದಾರೆ. ಹರಿಹರನು ತನ್ನ ಕಾವ್ಯ-ಕೃತಿಗಳಲ್ಲಿನ ಕಥಾವಸ್ತುವಿನ ಆಯ್ಕೆಯಲ್ಲಿ, ಭಾಷೆಯ ಬಳಕೆಯಲ್ಲಿ, ದೃಷ್ಟಿಧೋರಣೆಗಳಲ್ಲಿ, ಛಂದಸ್ಸಿನ ಬಳಕೆಯಲ್ಲಿ ವಚನಕಾರರಿಂದ ಪ್ರಭಾವಿತಗೊಂಡಿದ್ದಾನೆ. ಅದರ ಪ್ರತಿಫಲವೆ ‘ನೂತನ ಪುರಾತನರ ರಗಳೆಗಳು’ ಎಂಬುದಾಗಿ ಹೇಳಬಹುದು.

        ಹರಿಹರನ ರಗಳೆಗಳು ನಡುಗನ್ನಡ ಅಥವಾ ಮಧ್ಯಕಾಲೀನ ಕಾಲ ಘಟ್ಟದಲ್ಲಿ ಪರಿಣಾಮಕಾರಿಯಾಗಿ ರಚಿತವಾಗಿವೆ. ಈ ರಗಳೆಗಳಲ್ಲಿ, ಪ್ರಾಯಶಃ ಕನ್ನಡ ಸಾಹಿತ್ಯದಲ್ಲಿಯೇ ಮೊದಲ ಬಾರಿಗೆ, ಜನ ಸಾಮಾನ್ಯನ ಬದುಕು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಕುಂಬಾರ, ಕೃಷಿಕ, ಬೇಟೆಗಾರ, ಚಮ್ಮಾರ, ಅಗಸ ನೆಯ್ಗೆಯವರು ಮತ್ತು ಬೆಸ್ತರು, ಮೇವು ತರುವ ಕಾಯಕದವರು ಹರಿಹರನ ಕೆಲವು ರಗಳೆಗಳ ಪ್ರಮುಖ ಪಾತ್ರಗಳು. ಈತನ  ನೂತನರನ್ನು ಕುರಿತ  ರಗಳೆಗಳು ಮಧ್ಯಕಾಲೀನ ಕನ್ನಡ ನಾಡಿನ ಜೀವನ ಕ್ರಮಕ್ಕೆ ಕನ್ನಡಿ ಹಿಡಿದಿವೆ. ಆ ಕಾಲಘಟ್ಟದ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸಿ, ಸಂವೇದನಶೀಲವಾಗಿ ಚಿತ್ರಿಸಿದ್ದಾನೆ. ಇವುಗಳು ಶರಣರ ಬದುಕನ್ನು ಪರಿಚಯಿಸುವ ಜೀವನ ಚರಿತ್ರೆಗಳಾಗಿವೆ.

      ವಚನಕಾರರು ಸಾಮಾಜಿಕವಾಗಿ ಆಧ್ಯಾತ್ಮಿಕವಾಗಿ ತಮ್ಮ ಚಿಂತನೆಗಳನ್ನು, ವಚನಗಳ ಮೂಲಕ ಕೊಟ್ಟ ಬಳಿಕ ಅವುಗಳನ್ನು ಅದೇ ರೀತಿಯಲ್ಲೇ ಹೇಳುವ ಅಗತ್ಯವಿರಲಿಲ್ಲ. ಆದರೆ ವಚನಕಾರರನ್ನೂ ಅವರ ಚಿಂತನೆಗಳನ್ನೂ ಕಥನ ರೂಪವಾಗಿ ವ್ಯಾಖ್ಯಾನಿಸಿ ಜನಕ್ಕೆ ಕೊಡುವ ಅಗತ್ಯವಿದ್ದಿತು. ಹರಿಹರನನ್ನು ವಚನಕಾರರ ಕಥನರೂಪದ ವ್ಯಾಖ್ಯಾನಕಾರನೆಂಬ ಎಂ.ಚಿದಾನಂದಮೂರ್ತಿಯವರ ಅನಿಸಿಕೆ ಒಂದು ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿದೆ. ಇದು ಅವನ ಸ್ವಂತಿಕೆಯನ್ನು ಇಲ್ಲವಾಗಿಸುವುದಿಲ್ಲವಾದರೂ ಅವನು ಮಾಡಿದ ಕೆಲಸದ ಸ್ವರೂಪವನ್ನು ಸಂಕೇತಿಸುತ್ತದೆ. ಶಿವಕಥೆ, ಶಿವಭಕ್ತರ ಕಥೆಗಳನ್ನಲ್ಲದೆ ಉಳಿದವರ ಕಥೆ ಹೇಳುವುದಿಲ್ಲವೆಂದು ಹರಿಹರನ ಪ್ರತಿಜ್ಞೆ. ತನ್ನ ಪ್ರತಿಜ್ಞೆಯನ್ನು ಸಾಧಿಸಿ ಈತ ಧನ್ಯನಾಗಿದ್ದಾನೆ. ಇವನ ಸಮಕಾಲೀನರೂ ಆಮೇಲಿನವರೂ ಆದ ಅನೇಕ ಕವಿಗಳು ಈತನಿಂದ ಸ್ಫೂರ್ತಿ ಪಡೆದು ಇವನನ್ನು ಆದರ್ಶವಾಗಿಟ್ಟುಕೊಂಡು ಕೃತಿರಚನೆ ಮಾಡಿ ಇವನನ್ನು ಕೊಂಡಾಡಿದ್ದಾರೆ. ಹರಿಹರನ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ತ್ವದ ಸ್ಥಾನಗಳಿಸಿರುವುದು ಈತ ರಚಿಸಿರುವ ರಗಳೆ ಕಾವ್ಯಗಳ ಮೂಲಕ.  ಶಿವನನ್ನು, ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಮಾನವರನ್ನು ಹೊಗಳಲು ಅಲ್ಲವೆಂಬ ಸಂಪ್ರದಾಯವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ.

     ಬಸವಾದಿ ಪ್ರಮಥರ ಜೀವನ ಸಾಧನೆ ಬೋಧನೆಗಳಿಂದ ಪ್ರಭಾವಿತನಾಗಿ ಅವರಿಂದ ಮಾರ್ಗದರ್ಶನ ಸ್ಫೂರ್ತಿಗಳನ್ನು ಪಡೆದ ಕವಿಗಳಲ್ಲಿ ಹರಿಹರ ಕವಿಯೇ ಮೊಟ್ಟಮೊದಲನೆಯವನಾಗಿ ಕಂಡುಬರುತ್ತಾನೆ. ವಚನಕಾರರರ ವಚನಗಳಿಂದ ಪ್ರೇರಿತನಾಗಿಯೇ ಅವರ ಜೀವನ ಚರಿತ್ರೆಯನ್ನು ರಗಳೆಗಳ ಮೂಲಕ ಕಟ್ಟಿಕೊಟ್ಟಿದ್ದಾನೆ.  ಶರಣರ ವಚನಗಳ ಪ್ರಭಾವವನ್ನು ಹರಿಹರನ ರಗಳೆಗಳಲ್ಲಿ ಕಾಣಬಹುದಾಗಿದೆ. ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ.  ವಚನಕಾರರ ಸಾಂಸ್ಕೃತಿಕ ಕಾಳಜಿಗಳು ಹರಿಹರನ ರಗಳೆಗಳಲ್ಲಿ ಮತ್ತೊಮ್ಮೆ ಅಭಿವ್ಯಕ್ತಗೊಂಡಿವೆ. ತಮಿಳು ದೇಶದ ಅರವತ್ತು ಮೂವರು ಪುರಾತನರು, ಕೊಂಡಗುಳಿ ಕೇಶಿರಾಜ, ಬಸವಣ್ಣ, ಜೇಡರದಾಸಿಮಯ್ಯ, ಪ್ರಭುದೇವ, ಅಕ್ಕಮಹಾದೇವಿ  ತೆಲುಗ ಜೊಮ್ಮಯ್ಯ, ಆದಯ್ಯ ಮುಂತಾದ ಶಿವಶರಣರ, ಅಲ್ಲದೆ ಸ್ತೋತ್ರ, ಆತ್ಮನಿವೇದನ ರೂಪವಾದ ನೂರಾರು ರಗಳೆಗಳನ್ನು ಈತ ರಚಿಸಿದ್ದಾನೆ. ಹಸ್ತಪ್ರತಿ ಪುಷ್ಪಿಕೆಯ ಉಲ್ಲೇಖದಲ್ಲಿಯ ಸ್ವಸ್ತಿಶ್ರೀ ವಿಜಯಾಭ್ಯುದಯ ಸಾಲಿವಾಹನ ಶಕ ವರುಷಂಗಳು ನೆಯ ಕ್ರೋಧ ಸಂವತ್ಸರ ಭಾದ್ರಪದ ಶುದ್ಧ 12ರಲ್ಲು ಮುದಿಯಪ್ಪ ನಾಯಕರ ಬಂಟನಾದಂಥ ಗಡೆಯ ಪಾಪಯ್ಯನ ಸುಪುತ್ರ ಕೃಷ್ಣಯ್ಯನು ಬರೆದು ಸಮರ್ಪಸಿದ ಪುಣ್ಯ ಪುರಾತನರ ಶಾಸ್ತ್ರ ಪುಸ್ತಕ, ಹಂಪೆಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಮಂಗಳಾಮಹಾ ಶ್ರೀ ಶ್ರೀ ಶ್ರೀ. ಈ ವಿವರವು ಇಮ್ಮಡಿ ಮುದಿಯಪ್ಪ ನಾಯಕನು ಕೃಷ್ಣಯ್ಯ ಎಂಬ ಪ್ರತಿಕಾರನಿಂದ ಪುರಾತನರನ್ನು ಕುರಿತ ಕೃತಿಯನ್ನು ಪ್ರತಿ ಮಾಡಿಸಿದ್ದಾನೆಕುತೂಹಲಕರ ಸಂಗತಿ ಎಂದರೆ ಇಲ್ಲಿಯ ಹೇಳಿಕೆಯಲ್ಲಿಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಎಂಬುದು ಹರಿಹರ ಕವಿಯು ರಚಿಸಿರುವ ರಗಳೆಗಳ ಸಂಖ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ಹರಿಹರನ ರಗಳೆಗಳಲ್ಲೆಲ್ಲ ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣ ರಗಳೆಗಳು ಮಹತ್ವದ  ಮತ್ತು ಘನಕೃತಿಗಳೆಂಬ ಹಿರಿಮೆ ಹೊಂದಿವೆ. ಹರಿಹರಕವಿ ತನ್ನ ಕಾವ್ಯ ಪ್ರಕಾರಕ್ಕೆ ರಗಳೆಯನ್ನು ಆರಿಸಿಕೊಂಡು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಹೊಸ ಮಾರ್ಗವೊಂದನ್ನು ತೆರೆದು ತೋರಿಸಿದಂತೆ ತಾನೂ ಹೊಸ ಮಾರ್ಗವೊಂದರ ಪ್ರವರ್ತಕನಾದ.

      ಕೊಂಡಗುಳಿ ಕೇಶಿರಾಜನು ಬಸವ ಪೂರ್ವಯುಗದ ಶರಣನಾಗಿದ್ದು, ಅವನ ಕೃತಿಗಳ ಮೂಲಕ ಅವನ ಕಾಲದ ವೀರಶೈವ ಧರ್ಮದ ಸ್ಥಿತಿಗತಿಗಳನ್ನು ತಿಳಿಯಬಹುದಾಗಿದೆ. ಸಾಮಾಜಿಕ ಪರಿಸರದಲ್ಲಿ ತನ್ನ ಆಚಾರ ಸಂಹಿತೆಯನ್ನು ಒಂದು ಸ್ಪಷ್ಟ ಆಕಾರಕ್ಕೆ ಹೊಂದಿಸುತ್ತಿದ್ದ ಶರಣಧರ್ಮವನ್ನು ವ್ಯಾಪಕವಾಗಿ ಹರಡಲು, ಜನ ಸಾಮಾನ್ಯರ ಬಳಿಗೆ ಅದನ್ನು ಕೊಂಡೊಯ್ಯಲು ತನ್ನ ಕೃತಿಗಳನ್ನು ಕೇಶಿರಾಜ ಮಾಧ್ಯಮವನ್ನಾಗಿ ಬಳಸಿದ್ದಾನೆಂದೆನಿಸುತ್ತದೆ.    

   ಪ್ರಧಾನವಾಗಿ ಕೇಶಿರಾಜನು ಭಕ್ತ ಕವಿ. ಧಾರ್ಮಿಕ ವಲಯಲ್ಲೇ ಸದಾ ವಿಹರಿಸುವ ಅವನ ಮನಸ್ಸು ತನ್ನ ಧರ್ಮದ ಪ್ರಚಲಿತ ತತ್ತ್ವಗಳ ಬಗೆಗೆ ವಿಚಾರ ಮಾಡಿದೆ. ತನ್ನ ಮುಂದಣ ವಚನಕಾರರ-ಕವಿಗಳ ಮೇಲೆ ತನ್ನ ಪ್ರಭಾವ ಮುದ್ರೆಯನ್ನು ಸ್ಪಷ್ಟವಾಗಿ ಒತ್ತಿರುವನು. ಬಸವಾದಿ ಶರಣರು ನಡೆಸಿದ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯ ಪೂರ್ವ ಚಿಹ್ನೆಯನ್ನು ಕೊಂಡಗುಳಿ ಕೇಶಿರಾಜನ ಜೀವನ-ಕೃತಿಗಳಲ್ಲಿ ಸ್ಪಷ್ಟವಾಗಿ ನಾವು ಕಾಣುತ್ತೇವೆ. ಹರಿಹರನು ಕೊಂಡಗುಳಿ ಕೇಶಿರಾಜ ದಣ್ಣಾಯಕರ ರಗಳೆಯಲ್ಲಿ ಕೊಂಡಗುಳಿ ಕೇಶಿರಾಜನ ಜೀವನದ ಪರಿಪೂರ್ಣ ಚಿತ್ರವನ್ನು ನೀಡಿರುವುದನ್ನು ಗ್ರಹಿಸ ಬಹುದಾಗಿದೆ. ಹರಿಹರನ ಈ  ರಗಳೆಯಲ್ಲಿ ಶರಣ ಧರ್ಮದ ಬಸವಪೂರ್ವ ಯುಗದ ಸ್ಥಿತಿಗತಿಯನ್ನು ತಿಳಿಯಲು ಅಗತ್ಯವಾದ ಸಾಮಗ್ರಿಯನ್ನು ಒದಗಿಸಿದೆ.    ಈತನನ್ನು ಕುರಿತ ಹರಿಹರನ ರಗಳೆಯಲ್ಲಿ ಬಸವಪೂರ್ವ ಯುಗದ ಸಮಾಜೋ-ಧಾರ್ಮಿಕ ಚಟುವಟಿಕೆಗಳ ಅಶಯವನ್ನು ಕಾಣಬಹುದಾಗಿದೆ.

   ಕೇಶಿರಾಜನ ಮೂಲಸ್ಥಳ ಕೊಂಡಗುಳಿ. ಸಂಗಮನಾಥ ಇಷ್ಟದೈವ, ಹೆಂಡತಿಗಂಗಾದೇವಿ. ಲ್ಯಾಣದ ಪೆರ್ಮಾಡಿರಾಯನು ಬುದ್ಧಿವಂತನಾದ ಮಂತ್ರಿಯೊಬ್ಬನನ್ನು ಶೋಧಿಸುತ್ತಲಿದ್ದಾಗ ಕೊಂಡಗುಳಿಯ ಮಹಾಜನರು ಕೇಶಿರಾಜನ ಗುಣಶೀಲಗಳನ್ನು ಅವನೆದುರು ಬಣ್ಣಿಸಿ ಹೇಳುವರು. ಕಲ್ಯಾಣದ ಅರಸು ಪೆರ್ಮಾಡಿರಾಯನು “ಭಾವಜ್ಞರ್ ಅತಿನಿಯತರ್ ಅನುಪಮಾಸ್ಪದರ್” ಆದ ಕೊಂಡಗುಳಿ ಕೇಶಿರಾಜನ ಬಳಿಗೆ “ಚಾರರಂ ಕಳಿಪಿಯವರಂ ಕರೆಸಿ ಮನಮೊಲ್ದು .. .. ಹಿರಿಯ ಪ್ರಧಾನಿಕೆಯನೊಲ್ಮೆಯಿಂದಂ” ಕೊಡುತ್ತಾನೆ:

ಕೇಶಿರಾಜನು ಅರಸನ ಊಳಿಗದಲ್ಲಿದ್ದರೂ ತನ್ನಧರ್ಮ ನಿಷ್ಠೆಯನ್ನು ಮೊದಲಿನಷ್ಟೇ ಉತ್ಸಾಹದಿಂದ ನಡೆಯಿಸಿಕೊಂಡು ಬರುವನು. ಆತನಿಗೆ ರಾಜಕೀಯ ಜೀವನಕ್ಕಿಂತ ಶರಣ ಸಂಗೋಷ್ಠಿಯಲ್ಲಿ ಕಾಲಕಳೆಯುವುದೇ ಹೆಚ್ಚು ಇಷ್ಟವಾಗಿದ್ದಿತು. ಶರಣರ ಮಧ್ಯದಲ್ಲಿ ಶಿವಾನುಭವ ಗೋಷ್ಠಿಸುಖವನ್ನು ಅನುಭವಿಸುತ್ತಿದ್ದಾಗ ರಾಯನ ಊಳಿಗ ನೆನಪಾಗಿ ಆತನಿಗೆ ಅತೀವ ಕಳವಳವಾಗುತ್ತಿದ್ದಿತು. ಪೆರ್ಮಾಡಿರಾಜ ಕೇಶಿರಾಜನಿಗೆ ಭಂಡಾರದ ಬೀಗದ ಕೀಲಿಯನ್ನೇ ಒಪ್ಪಿಸಿದ. ಇದನ್ನು ಸಹಿಸಲಾರದ ಕೆಲವು ಕುಹಕಿಗಳು ಒಳಗೊಳಗೆ ಶಪಿಸಿಕೊಳ್ಳುತ್ತಿದ್ದರು.  ಹೇಗಾದರೂ ಮಾಡಿ ಈತನ ಮೇಲೆ ತಪ್ಪೊರಿಸಿ ಈತನ ಪದವಿ ಕಿತ್ತೆಸೆಯಬೇಕೆಂಬ ಸಂಚನ್ನು ಮಾಡುತ್ತಿದ್ದರು.  ಒಂದು ದಿನ ಕೇಶಿರಾಜನು ತನ್ನ ರಾಜ್ಯ ಕಾರ್ಯವನ್ನು ಪೂರೈಸಿ ಬಂದು ಎಂದಿನಂತೆ ಶಿವಭಕ್ತರೊಡಗೂಡಿ ಶಿವಗೋಷ್ಠಿಯಲ್ಲಿ ಒಂದಾಗಿ, ಮುಳುಗಿ ಹೋಗಿದ್ದನು.  ಆಗ ಚಕ್ರವರ್ತಿಯಿಂದ ಕರೆ ಬಂತು ‘ಕೂಡಲೇ ಬರಬೇಕೆಂದು. ಆದರೂ ಶರಣ ಸಂಗದಲ್ಲಿರುವಾಗ ರಾಜ ಹೇಳಿ ಕಳಿಸಲು ಅವನು ಸಿಡಿಮಿಡಿಗೊಳ್ಳುತ್ತಾನೆ,

      `ಸಿರಿಯಸಂಗಂ ಶರಣಸಂಗಕ್ಕೆ ಪಗೆಯಾಯ್ತು

      ನರಲೋಲಗಾಪರಾಧವು ಮರುಳು ಮಾಡಿತ್ತು

      ಅಯ್ಯಯ್ಯ ಸಂಗಮನಾಥಯ್ಯ ನೀ ಕರುಣಿಪುದು

      ಅಯ್ಯಲಾ ಶರಣ ಸದ್ಘೋಷ್ಠಿಯಂ ಕರುಣಿಪುದು

      ಸಿರಿ ಹಾರಿಹೋಗೆ ನಿಮಗರ್ಚನೆಯ ಮಾಡುವೆಂ

      ಶರಣತತಿ ಪುರಜನಂ ಮೆಚ್ಚೆ ಕೊಂಡಾಡುವೆಂ’(ಹರಿಹರನ ರಗಳೆಗಳು ಸಂ.ಎಂ.ಎಂ.ಕಲಬುರಗಿ, ಪು.೨೪೦) ಎಂದು ಕೇಶಿರಾಜ ಶಿವಾನುಭವ ಗೋಷ್ಠಿ ಮುಗಿದಾದ ಮೇಲೆ ಅರಸನಲ್ಲಿಗೆ ಹೋಗುತ್ತಾನೆ.  ಈ ಸುಸಂದರ್ಭವನ್ನು ಬಳಸಿಕೊಂಡು ಕುಹಕಿಗಳು ಚಾಡಿ ಹೇಳುತ್ತಾರೆ. ಅರಸನನ್ನು ಕುರಿತು ದೇವ. ಕೇಶಿರಾಜನಿಗೆ ನಿಮ್ಮ ಮೇಲೆ ಸ್ವಲ್ಪವೂ ನಿಷ್ಠೆ ಮತ್ತು ಗೌರವವಿಲ್ಲ. ಅವನು ದಿನ ನಿತ್ಯ ನಮಸ್ಕರಿಸುವುದು ನಿಮಗಲ್ಲ. ಅವನ ಬೆರಳಿನಲ್ಲಿದ್ದ ಗುರುವಿನ ಶೈವಮುದ್ರಿಕೆಯುಳ್ಳ ಉಂಗುರಕ್ಕೆ, ಬೇಕಾದರೆ ನೀವೇ ಪರೀಕ್ಷಿಸಿಕೊಳ್ಳಿರೆನ್ನುತ್ತಾರೆ. ಆ ದಿನದ ಕಾರ್ಯ ಕಲಾಪಗಳು ಮುಗಿದಾದ ಮೇಲೆ ಅರಸ ಉಂಗುರ ನೋಡುವ ನೆಪದಲ್ಲಿ ಕೇಶಿರಾಜನಿಂದ ಉಂಗುರು ತೆಗೆದುಕೊಂಡು ತನ್ನ ಬೆರಳಿಗೆ ಹಾಕಿಕೊಳ್ಳುತ್ತಾನೆ. ಕೇಶಿರಾಜನು ತನ್ನ ದಿನನಿತ್ಯದ ಕಾರ್ಯ ಕಲಾಪ ಮುಗಿದಾದ ಮೇಲೆ ಹೊರಡಲು ಉದ್ಯುಕ್ತನಾದ. ಆದರೆ, ಅರಸ ಉಂಗುರ ಮರಳಿಸಲಿಲ್ಲ ಕೇಶಿರಾಜ ಸುಮ್ಮನೆ ಮನೆಗೆ ಮರಳಿದ ‘ತಾನು ಕಂಡುಕೊಂಡದ್ದು ಸರಿ’ಯೆಂದು ಕಾಣುತ್ತದೆ.   ಏಕೆಂದರೆ, ಕೇಶಿರಾಜ ಅರಸನಿಗೆ ವಂದಿಸದೆ ಹೊರಡುತ್ತಾನೆ. ಕೇಶಿರಾಜ ನೀನು ಮಹಾರಾಜರಿಗೆ ನಮಸ್ಕರಿಸುವ ಪರಿಪಾಠವಿಟ್ಟು ಕೊಂಡಿಲ್ಲವೆನಿಸುತ್ತದೆ.  ಇದು ರಾಜನಿಗೆ ಅಪಮಾನಿಸಿದಂತೆ ಎಂದು ಜನರು ಹೇಳುತ್ತಿದ್ದರು.  ಅದು ನಿಜವಾಯಿತು. ನ್ನಿಂದ ಇಷ್ಟೆಲ್ಲ ಸಂಪತ್ತನ್ನು ಪಡೆದು ದಾರಿದ್ರ‍್ಯವನ್ನು ನೀಗಿಕೊಂಡ ನೀವು ನನಗೆ ವಂದಿಸದಿರುವುದು ಯಾವ ನ್ಯಾಯ? ನೀವು ಮಂತ್ರಿ ಪದವಿ ಬಿಟ್ಟು ಹೋಗಿರೆಂದ ಅರಸ”   ಅದಕ್ಕೆ ಪ್ರತಿಯಾಗಿ ಕೇಶಿರಾಜನು `ಕೇಳರಸ ನಿನ್ನಸಿರಿ ನಿನಗಿಕ್ಕೆ, ನಿನಗಿಕ್ಕೆ, ಕೂಲಿಯಣುಗರ ಸಂಗಸಂಪದವದೆನಗಿಕ್ಕೆ ಎಂದುಹೇಳಿ ತನಗೆ ಕೊಟ್ಟ ಕಿರೀ, ಮುತ್ತಿನ ಹಾರ, ಖಡ್ಗ ಮತ್ತು ರಾಜ ಮುದ್ರಿಕೆ ಮುಂತಾದವುಗಳೆಲ್ಲ ತೊರೆಯುತ್ತ “ಶರಣರ ಸಂಪತ್ತಿಗಿಂತ ಈ ರಾಜ ಸಂಪತ್ತು ನನ್ನ ಭಾಗಕ್ಕೆ ತೃಣದ ಸಮಾನ”  ಎಂದು ಅಂಗೈಯಲ್ಲಿ ಸಂಗಮನಾಥನನ್ನಿರಿಸಿಕೊಂಡು ವೈರಾಗ್ಯಸಂಪದವನ್ನೇ ಅಶ್ರಯಿಸಿ ಹೊಗೆ ಹೊರಡುವನು. ಮನೆಗೆ ಬಂದು ಪತ್ನಿ ಗಂಗಾ ದೇವಿಗೆ ಮಂತ್ರಿ ಪದವಿ ತ್ಯಜಿಸಿದ ಬಗ್ಗೆ ಹೇಳಿದಾಗ ಒಳ್ಳೆ ಕೆಲಸ ಮಾಡಿದ್ದಿರಿ. ಆ ಮಂತ್ರಿ ಪದವಿ ಯಾರಿಗೆ ಬೇಕು ಬಿಡಿ ಎಂದಳು.  ಮರು ದಿವಸ ದಂಪತಿಗಳು ದೇಶ ಸಂಚಾರ ಕಾರ್ಯದಲ್ಲಿ ತೊಡಗಿ ಕಲ್ಯಾಣಪಟ್ಟಣದಿಂದ ಒಂದುಯೋಜನಾಂತರದ ಮೇಲಿದ್ದ ಬಿದಿರು ಕಾಯಕದ ಮೇದಾರನಾದ ವಂಶವರ್ಧನ ಹಾಗೂ ಬೇಟೆ ಕಾಯಕದ ತೆಲುಗು ಜೊಮ್ಮಯ್ಯನೆಂಬ ಶಿವಭಕ್ತರಿದ್ದ ಶಿವಪುರಕ್ಕೆ ಬರುತ್ತಾರೆ. ಅಲ್ಲಿಯೇ ನಿಶ್ಚಿಂತಮನರಾಗಿ ಶಿವಪೂಜೆ, ಶಿವಗೋಷ್ಠಿಯಲ್ಲಿ ಏಳು ದಿವಸ ಸಂತೋಷದಿಂದ ಕಳೆಯುವರು. ಕೇಶಿರಾಜನು ಕಲ್ಯಾಣವನ್ನು ತ್ಯಜಿಸಿ ಭವವನ್ನು ಧಿಕ್ಕರಿಸಿ ಬಂದರೂ ಆತ ನೆಲಸಿದ ಗ್ರಾಮವೇ ಸುಕ್ಷೇತ್ರವಾಗಿ ಸಂಪದದ ಬೀಡಾಗಿ ಪರಿಣಮಿಸುವುದು.

      ಹರಿಹರನ ಈ ರಗಳೆಯಲ್ಲಿ ನಾವು ಗಮನಿಸಬೇಕಾಗಿರುವುದು ಕೇಶಿರಾಜನಂತಹ ಶರಣನಿಗೆ ಪ್ರಭುತ್ವಕ್ಕಿಂತ ಶಿವ ಮತ್ತು ಶಿವಭಕ್ತರ ಗೋಷ್ಠಿ ಮುಖ್ಯವಾಗಿದೆ. ಈತನೇ ರಾಜತ್ವದ ವಿರುದ್ಧ ಮೊದಲಿಗೆ ಪ್ರತಿಭಟಿಸಿದವನು.  ಕೇಶಿರಾಜ ಮನಸ್ಸಿಲ್ಲದ ಮನಸ್ಸಿನಿಂದ ರಾಜನ ಆಸ್ಥಾನಕ್ಕೆ ಹೋದ. ಅಲ್ಲಿ ರಾಜನಿಗೆ ನಮಸ್ಕರಿಸುತ್ತಿಲ್ಲ. ಕಥೆ ಮುಗಿದಾಗ ವಾಸ್ತವವಾಗಿ ತನ್ನ ಬೆರಳಲ್ಲಿನ ಗುರು ಪಾದಗಳ ಚಿಹ್ನೆ ಇರುವ ಉಂಗುರಕ್ಕೆ ನಮಸ್ಕರಿಸುತ್ತಾನೆ ಎಂಬ ಸಂಗತಿ ತಿಳಿದು ರಾಜನಿಗೆ ಕೋಪ ಬರುತ್ತದೆ. ಕೇಶಿರಾಜ ಆ ಕ್ಷಣ ತನ್ನ ಪದವಿಗೆ ರಾಜೀನಾಮೆ ಕೊಟ್ಟು ತನ್ನ ಅಧಿಕಾರ ಸೂಚಕ ಚಿಹ್ನೆಗಳನ್ನು ತೆಗೆದು ಹಾಕಿ ದಿವ್ಯವಸ್ತ್ರವನ್ನು ಕಳಚಿ ಕೇಶಾಂಬರವನ್ನುಟ್ಟು ರಾಜಧಾನಿಯನ್ನು ತ್ಯಜಿಸುತ್ತಾನೆ. ರಾಜಧಾನಿಯಿಂದ ಹೊರಬಂದು ಶಿವಪುರಕ್ಕೆ ಬಂದಾಗ ಅಲ್ಲಿದ್ದಂತಹ ಮೇದರ ಕೇರಿಯ ವಂಶವರ್ಧನ ಎಂಬ ಬುಟ್ಟಿ ಹೆಣೆಯುವ ವ್ಯಕ್ತಿ ಈತನನ್ನು ಸ್ವಾಗತಿಸುತ್ತಾನೆ. ವಂಶವರ್ಧನನ ಹೆಸರು ಮಹತ್ತರವಾಗಿದೆ. ಆಸ್ಥಾನವನ್ನು ಬಿಟ್ಟು ಹೊರ ಬಂದ ಶರಣ ಧರ್ಮದ ಮೊದಲ ಪೋಷಕನಾಗಿ ಈತ ಕಂಡು ಬರುತ್ತಾನೆ. ಕೇಶಿರಾಜನ ದಿಟ್ಟತನಗಿಂತ ರಾಜತ್ವವನ್ನು ಧಿಕ್ಕರಿಸಿ ಬಂದ ವ್ಯಕ್ತಿಯೊಬ್ಬನಿಗೆ ಬೆಂಬಲ ಕೊಡಲು ಸಿದ್ಧನಾದ ಮೇದರ ವ್ಯಕ್ತಿಯ ದಿಟ್ಟತ ದೊಡ್ಡದು ಎನಿಸುತ್ತದೆ. ಮುಂದೆ ಶರಣ ಧರ್ಮ ಯಾವ ಹಾದಿಯನ್ನು ಹಿಡಿಯಲು ಈ ಘಟನೆ ಯಾವ ರೀತಿ ಕಾರಣವಾಗಿದೆಯೆಂಬುದನ್ನು ಸೂಚಿಸುತ್ತದೆ. ಕೇಶಿರಾಜನು ರಾಜತ್ವವನ್ನು ತಿರಸ್ಕರಿಸಿ ಬಂದ ಧೋರಣೆಯು  ಒಂದು ರೀತಿಯಲ್ಲಿ ಹರಿಹರನ ಧೋರಣೆಯು ಆಗಿದೆ. ಬಸವಾದಿಗಳಿಗೆ ಪೂರ್ವದಲ್ಲಿದ್ದ ಕೊಂಡಗುಳಿ ಕೇಶಿರಾಜನ ಕಾಲದಲ್ಲಿಯೇ ವೈದಿಕ ವಿರೋಧಿ ಚಿಂತನೆಗಳುಒಂದೆಡೆ ರಾಜತ್ವವನ್ನು ಧಿಕ್ಕರಿಸುವ, ಮತ್ತೊಂದೆಡೆ ರಾಜನನ್ನು ಬಿಟ್ಟು ಬಿದಿರಕಾಯಕದ ವಂಶವರ್ಧನನ ಬಳಿ ಬರುವ ಸನ್ನಿವೇಶಗಳಲ್ಲಿ ಇರುವಂತೆ - ಮಡುಗಟ್ಟಿ ಚಳವಳಿಯ ಬೀಜಗಳು ಮೊಳೆತದ್ದು, ಇಲ್ಲಿನ ಅರಸತ್ವದ ಮಣಿಯುವಿಕೆಯನ್ನು ಅಂತಹ ಸನ್ನಿವೇಶದ ಸಾಂಕೇತಿಕ ಚಿತ್ರಣವಾಗಿ ಪರಿಗಣಿಸ ಬಹುದಾಗಿದೆ.

     ಕೆಂಬಾವಿ ಪುರದಲ್ಲಿ ಭೋಗಣ್ಣನೆಂಬ ಜಂಗಮ ಭಕ್ತನು ಶಿವಭಕ್ತರಲ್ಲಿ ಜಾತಿ ಭೇದವ ಕಲ್ಪಿಸದೆ ಇರುತ್ತಿರಲು, ಇವನ ಮಹಿಮೆಯನ್ನು ಲೋಕಕ್ಕೆ ತಿಳಿಸ ಬೇಕೆಂದು ಪರಶಿವನು ಒಂದು ದಿವಸ ಹೊಲೆಯ ವೇಷದಲ್ಲಿ ಕರುವಿನ ಶವವನ್ನು ಹೊತ್ತು ಹೆಗಲಲ್ಲಿ ಮಿಣಿ,  ಕೈಯಲ್ಲಿ ಸಂಬಳಿಗೋಲು, ಜಂಗಮನಂತೆ ಹಣೆಯಲ್ಲಿ ಸೊಗಯಿಪ ವಿಭೂತಿ, ಕೊರಳಲ್ಲಿ ರುದ್ರಾಕ್ಷಿಯ ಕೃಪಾಕರಂ, ಪಿರಿಯ ವೇಷಗೊಂಡು ಮನೆಯ ಮುಂದೆ  ಸುಳಿಯುತ್ತಾನೆ. (ಹರಿಹರನ ರಗಳೆಗಳು ಸಂ.ಎಂ.ಎಂ.ಕಲಬುರಗಿ, ಪು.೨೭೩)

   ಭೋಗಣ್ಣನು   ಜಂಗಮ ಸ್ವರೂಪಿಯಾದ ಇವನನ್ನು ನೋಡಿ ಕೊರಳಲ್ಲಿದ್ದ ಲಿಂಗವ ಕಂಡು ಈ ಶರಣನನ್ನು ಮನೆಯ ಒಳಗೆ ಕರದುಕೊಂಡು ಹೋಗಿ ಭಯಭಕ್ತಿಯಿಂದ ಉನ್ನತಾಸನದಲ್ಲಿ ಕುಳ್ಳಿರಿಸಿ ಪನ್ನಾಗಾಭರಣನ ಪದದ್ವಯಮುಮಾ ತೊಳೆದು ಪಾದೋದಕ ಪ್ರಸಾದಮಂ ಸಲ್ಲಿಸುತ್ತಾನೆ.   ಈ ವಿಷಯ ತಿಳಿದ   ಅಕ್ಕಪಕ್ಕದ ಬ್ರಾಹ್ಮಣರು, ವೈದಿಕಾಚಾರವೆಲ್ಲವು ಕೆಟ್ಟುಹೋಯಿತೆಂದು ಕುಪಿತರಾಗಿ ಕೆಂಬಾವಿಯ ಅರಸನಾದ ಚಂದಿಮರಸನಲ್ಲಿಗೆ ದೂರು ಹೋಗುತ್ತಾರೆ. ವಿಪ್ರರ ಮಾತು ಕೇಳಿ ಚಂದಿಮರಸನು ಕುಪಿತನಾಗಿ ಭೋಗಣ್ಣನನ್ನು ಕರೆಯಿಸಿ ಅವನನ್ನು ಕುರಿತು ` ಏನಯ್ಯಾ ಪುರದೊಳಗೆ ಕೃತ್ಯಮಂ ಮಾಳ್ಪರೆ? ಏನಾದೊಡಂ ಪೊಲೆಯರ ಪುಗಿಸಿ ಬಾಳವರೇ? ಮನೆಯೊಳಗನಾಮಿಕರ ಪುಗಿಸುವರೆ  ಭೋಗಯ್ಯಾ?  ಮನೆವಾರೆ  ನಿಮ್ಮದಾಚಾರವೇ  ಭೋಗಯ್ಯಾ? ಎಂಬುದಾಗಿ ಪ್ರಶ್ನಿಸಿದನು.

ಮನೆಯೊಳಗರಸ ನಿನಗೆ ತಿಳಿವಿಲ್ಲ ತಿಳಿವಿಲ್ಲದೊಡೆ ಕೇಳರಸ

ಶಿವನನರಿಯದ ಹೊಲೆಯರಂ ಹೊಗಿದೆ ನಾನರಸ

ಶಿವಭಕ್ತನಂ ಪುಗಿಸಿದೇಂ ತಪ್ಪೆ ಹೇಳರಸ( ಅದೇ, ಪು.೨೪೭) ಎಂದು ಉತ್ತರಿಸಿ ಈ ಆಚರಣೆಯಲ್ಲಿ ನನ್ನ ತಪ್ಪೇನಿದೆ ಎಂದು ರಾಜನಿಗೆ ಮರು ಪ್ರಶ್ನೆ ಹಾಕುತ್ತಾನೆ. ಶಿವನನರಿಯದ ವಿಪ್ರನೇ ಹೊಲೆಯನು ಎಂಬ ಭೋಗಣ್ಣನ ವಾದವನ್ನು ಕೇಳಿ ವಿಪ್ರರು ಕುಪಿತರಾಗಿ, ಚಂದಿಮರಸರಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟರು. ಚಂದಿಮರಸನು ವಿಪ್ರರ ಪಕ್ಷವನ್ನು ವಹಿಸಿ ಕೆಂಬಾವಿಯ ಭೋಗಣ್ಣನ ಮೇಲೆ ಕುಪಿತರಾಗಿ ಇನ್ನು ಮೇಲೇ ನೀನು ನಮ್ಮ ಊರಲ್ಲಿ ಇರಬೇಡ, ಹೊರಟುಹೋಗು ಎಂದು ಭೋಗಣ್ಣನಿಗೆ ಅಪ್ಪಣೆ ಮಾಡಿದನು. ಈ ಸಂದರ್ಭದಲ್ಲಿ ಭೋಗಣ್ಣ ರಾಜ-ರಾಜತ್ವ, ಬ್ರಾಹ್ಮಣ-ಬ್ರಾಹ್ಮಣತ್ವವನ್ನು ಪ್ರತಿಭಟಿಸಿರುವುದು ಆತನನ್ನು ಕುರಿತ ಹರಿಹರನ ರಗಳೆಯಿಂದ ತಿಳಿದು ಬರುತ್ತದೆ. ಈ ಮೇಲಿನ ವಿವರದಲ್ಲಿ ಬ್ರಾಹ್ಮಣ್ಯದ ಅಪಮೌಲ್ಯ ಹಾಗೂ ಕೆಳವರ್ಗದ ಮೌಲೀಕರಣ ಕಾರ್ಯ ನಡೆದಿರುವುದು ಗುರುತಿಸಬಹುದಾಗಿದೆ.   ಯಾವ ಜಾತಿಯವನೇ ಆಗಿರಲಿ ಶಿವಭಕ್ತರನ್ನಾಗಿಸಿ ಸತ್ಕರಿಸಿದ ಪ್ರಸಂಗ ಈ ಶರಣನ ಚರಿತ್ರೆಯಿಂದ ಕಂಡು ಬರುತ್ತದೆ.  ಅನ್ಯ ಮತಿಯರು ಉನ್ನತ ಮೌಲ್ಯಗಳೆಂದು ಪ್ರಚಾರ ಮಾಡುತ್ತ, ಕೆಳ ವರ್ಗದವರ ಶೋಷಣೆ ಮಾಡುತ್ತಿರುವವರ ಮೌಲ್ಯ, ನಂಬಿಕೆ ಹಾಗೂ ಆದರ್ಶಗಳಿಗೆ ಕೆಂಬಾವಿ ಭೋಗಣ್ಣ ಕೊಡಲಿ ಪೆಟ್ಟುಹಾಕಿರುವುದು ಹರಿಹರನ ಈ ರಗಳೆಯಿಂದ ತಿಳಿದು ಬರುತ್ತದೆ.        

         ಹರಿಹರನ ಕೆಂಬಾವಿ ಭೋಗಣ್ಣನ ರಗಳೆಯಲ್ಲಿ ಕಂಡು ಬರುವ ಘಟನೆ ಆ ಕಾಲದ ಪರಿಸ್ಥಿತಿಗೆ ರನ್ನದ ಕನ್ನಡಿಯಾಗಿದೆ. ಭೋಗಣ್ಣನ ಚರಿತ್ರೆಯು ಸೂಚ್ಯವಾಗಿ ಜಾತಿ ಸಮಸ್ಯೆಯನ್ನು ಪ್ರಸ್ತಾಪಿಸಿದೆ. ಭೋಗಣ್ಣನ ಕಥೆಯಲ್ಲಿ ಜಂಗಮನಿಷ್ಠೆಯೇ ಪ್ರಮುಖ ಎಂದೆನಿಸಿದರೂ “ಹೊಲೆಯ ವೇಷದಿಂದ” ಬಂದ ಶಿವನನ್ನು ಈತನು ಮನೆಗೆ ಕರೆದೊಯ್ದು ಉಪಚರಿಸಿದ ಪ್ರಸಂಗದಿಂದ ಉದ್ಭವಿಸಿದ ವಿಪ್ರಕುಲದ ಪ್ರತಿಭಟನೆ ಮತ್ತು ಘರ್ಷಣೆಗಳು ಅದಕ್ಕೆ ವಿರುದ್ಧವಾಗಿ ವ್ಯಕ್ತವಾಗುವ ಭೋಗಣ್ಣನ ನಿಲುವುಗಳು ಆ ಯುಗ ಧರ್ಮದ ವರ್ಣ ಸಂಘರ್ಷದ ದಾಖಲೆಗಳಾಗಿವೆ. ಭೋಗಣ್ಣನ ಚರಿತ್ರೆಯಲ್ಲಿ ಬಸವಾದಿ ವಚನಕಾರರು ಎತ್ತಿ ಹಿಡಿದ ಕುಲದ ಸಂಗತಿಯು ಪ್ರಮುಖ ವಿಷಯವಾಗಿದೆ.

   ಹರಿಹರದೇವನು ಮಾದಾರಚನ್ನಯ್ಯನ ದಿವ್ಯ ಚಾರಿತ್ರವನ್ನು ಸಹಜ ಸುಂದರ ಹಾಗೂ ಸರಸ ಶೈಲಿಯಲ್ಲಿ ನಿರೂಪಿಸಿದ್ದಾನೆ.  ಈತನು ಚಿತ್ರಿಸಿರುವ ಮಾದಾರ ಚೆನ್ನಯ್ಯನ ರಗಳೆಯಲ್ಲಿ, ಕರಿಕಾಲ ಚೋಳನ ಬಳಿ ಲಾಯಕ್ಕೆ ಹುಲ್ಲನ್ನು ಹೊತ್ತು ಹಾಕುವ ಕೆಲಸಕ್ಕಿದ್ದ ಚೆನ್ನಯ್ಯನು (ಜಾತಿ ಮಾದರ, ಚೆನ್ನನೆಂಬ ನಾಮಂ) ಅರವತ್ತು ವರ್ಷಗಳವರೆಗೆ ತನ್ನ ಶಿವಭಕ್ತಿಯನ್ನು ಗುಪ್ತವಾಗಿ ಉಳಿಸಿಕೊಂಡಿದ್ದವನು.

     ಮಾದಾರ ಚನ್ನಯ್ಯನ ರಗಳೆಯಲ್ಲಿ ʻಹಸಿದಯ್ಯಾ ಎನ್ನ ಜೀವದ ಜೀವವೇ ಎಂದು ಉಸುರ ಸಂತೈಸುತೋವುತ್ತೆ ಹತ್ತಿರ ಬಂದು ಜಂಬೂಫಳಂ ಚೂತಫವನೊಲವಿಂ ಕರಂ ಇಂಬಿನಿಂದಾರೋಗಿಸಿ ಲ್ಕೊಟ್ಟನಂತರಂ ತೂಪಿರಿದು ಕಾಪಿರಿದು ಕಣ್ಣಳೊಳಗೊತ್ತುತಂ  ಪೆರ್ಚುತಂ ಕರುಣ ಪ್ರಸಾದಮಂ ಪ್ರೇಮದಿಂ ಕೈಗೊಂಡು,ʼ( ಹರಿಹರನ ರಗಳೆಗಳು ಸಂ: ಎಂ.ಎಂ.ಕಲಬುರಗಿ, ಪು.೪೭೦) ಎಂಬ ವಿವರದಲ್ಲಿ ಶಿವ ಬೇರೆ ತಾನು ಬೇರೆ ಎಂದು ಅನ್ಯ ಭಾವಿಸದೆ ತನ್ನ ಜೀವದ ಜೀವವೇ ಎಂಬ ಮಾತು ಸ್ವಾರಸ್ಯವಾಗಿದೆ ತಾನು ಊಟ ಮಾಡಿದರೆ ಶಿವಊಟ ಮಾಡುತ್ತಾನೆ ತಾನು ಉಣ್ಣದಿದ್ದರೆ ಶಿವ ಉಣ್ಣಲಾರ ಎನ್ನುವಂತೆ ನಿರ್ಜಿವ ವಸ್ತುವನ್ನು ಸಜೀವ ವಸ್ತುವನ್ನಾಗಿಸುವ ಕಲೆ ಹರಿಹರನಿಗೆ ಸಿದ್ಧಿಸಿದೆ. ಇದೇ ರಗಳೆಯಲ್ಲಿ ಕರಿಕಾಲ ಚೋಳನ ಮೃಷ್ಟಾನ್ನ ಭೋಜನದೊಂದಿಗೆ ಚನ್ನಯ್ಯನ ಅಂಬಲಿಯನ್ನು ಪರಿಚಯಿಸಿರುವ ರೀತಿ ನೂತನವಾದುದಾಗಿದೆ. ರನ್ನದ ಅಟ್ಟಣಿಗೆಗಳ ಮೇಲೆ ಬೆಳಕು ಚೆಲ್ಲುವ ಮುನ್ನೂರು ಹೊನ್ನ ಹರಿಯಾಣಗಳಲ್ಲಿ ಪಡವರಿಸಲ್ಪಟ್ಟಿದ್ದ ಕರಿಕಾಲ ಚೋಳನ ಮೃಷ್ಟಾನ್ನದ ವಿವಿಧ ಬಗೆಯ ಅಡಿಗೆಗಳನ್ನು ಒಂದೊಂದಾಗಿ ಪರಿಚಯಿಸುತ್ತಾನೆ. ಸಾಮಾನ್ಯವಾಗಿ ಅಡಿಗೆ ಪದಾರ್ಥಗಳನ್ನು ಸರಳ ಭಾಷೆಯಲ್ಲಿ ಪರಿಚಯಿಸುವ ರೀತಿಯನ್ನು ನೋಡಬಹುದು. ಹಪ್ಪಳ, ಹಾಲುಕೆನೆ, ತುಪ್ಪ, ಕೆನೆ ಮೊಸರು, ಸಕ್ಕರೆಯನ್ನು ಎಡೆ ಮಾಡಿದನು ಎಂದು ಹೇಳಿ ಶಿವನು ಸವಿಯುವ ದನಿಯನ್ನು ಕೇಳಲು ಮೈಯಲ್ಲಾ ಕಿವಿಯಾಗಿ ಕಾಯುತ್ತಿದ್ದನಂತೆ. ಅಚ್ಚರಿಗೊಂಡು ಶಿವನನ್ನು ಕೇಳಲು ಇಂದು ನಾನು ಚೆನ್ನಯ್ಯನೊಡನೆ ಉಂಡೆನು ಎಂದು ಹೇಳುತ್ತಾನೆ ಶಿವ. ಅರಸನೇ ಕೇಳು ಚೆನ್ನನ ಆ ಅಡುಗೆಯನ್ನು ತಿಳಿಸುತ್ತೇನೆ ಎಂದು ಮುಂದುವರಿದು ಅಂಬಕಳದ ಸವಿ (ಅಂಬಲಿ ಸವಿ) ಆ ಸವಿ ಏನು ಹೇಳಲಿ! ಚೋಳಾದಿಗಳು ಅದನ್ನು ಪಡೆಯಲಿಲ್ಲ ಯಾವ ಅಡುಗೆಯೂ ಅದಕ್ಕೆ ಸಮನಲ್ಲ ಅದಕ್ಕೆ ಸಮನಾದುದು ಲೋಕದಲ್ಲಿಯೇ ಇಲ್ಲ, ಕ್ಷೀರ, ಮಧು, ತವರಾಜ, ಮಾವು, ಜಂಬು, ದ್ರಾಕ್ಷಿ - ಊಹೂಂ- ಎಂದು ಹೇಳುವ ರೀತಿ ತೀರ ಹೊಸದಾಗಿ ಕಾಣುತ್ತದೆ.

   ವಚನ ಚಳುವಳಿಯ ಮೂಲಕ ಬಿತ್ತಿದ ಮೌಲ್ಯಗಳೂ ಅವನ ಮೇಲೆ ಮಾಡಿದ್ದ ಪ್ರಭಾವದಿಂದಾಗಿ ಹರಿಹರ ತನ್ನ ಜೀವಿತದ ಎಲ್ಲ ಮಗ್ಗುಲುಗಳಲ್ಲೂ ಸ್ವತಂತ್ರ ಮನೋಭಾವವನ್ನು ತೋರಿಸಲು  ಸಾಧ್ಯವಾಗಿದೆ. ಅಲ್ಲದೆ ತಾನು ಕನ್ನಡ ನಾಡಿನ ಶರಣರ ಬಗ್ಗೆ ಹಾಗೂ ತಮಿಳುನಾಡಿನ ಶೈವ ಪುರಾತನರ ಬಗ್ಗೆ ಕೇಳಿದ್ದ ಕತೆಗಳಲ್ಲಿ ರಾಜತ್ವ ಶ್ರೇಷ್ಠತೆಯನ್ನು ನಿರಾಕರಿಸುವ ಪ್ರಸಂಗಗಳು ಅವನ ಮನಸ್ಸನ್ನು ಸೆಳೆದಿರುವುದು ಪ್ರಮುಖವಾಗಿದೆ.  ಹರಿಹರನ ರಗಳೆಗಳಲ್ಲಿ ಅರಸನ ಪ್ರಸ್ತಾಪ ಬಂದರೂ ಅವನು ಶಿವಭಕ್ತನಾಗಿ ಕಾಣಿಸಿಕೊಳ್ಳುತ್ತಾನೆಯೇ ಹೊರತು ಅಧಿಕಾರ ಸಂಕೇತವಾಗಿ ಅಲ್ಲ. ‘ಮಾದಾರ ಚೆನ್ನಯ್ಯನ ರಗಳೆ’ಯಲ್ಲಿಯ ಚೋಳರಾಜನು ನಿತ್ಯನೇಮಕ್ಕೆ ಹರನಾಲಯಕ್ಕೆ ಬಂದು ಶಿವನಿಗೆ “ದೇವಾನ್ನ ದಿವ್ಯಾನ್ನವಮೃತಾನ್ನಮಂ ಬಡಿಸಿ ಓವಿ ಸವಿ ಸಾಲಿಡುವ ಶಾಕಂಗಳಂ ಬಡಿಸಿ” “ಮೃಡನೆ ಆರಯ್” ಎಂದು ಬೇಡಿಕೊಳ್ಳುತ್ತಾನೆ. ದೇವನು ತಾನಿಟ್ಟ ಬೋನವನ್ನು ಸ್ವೀಕರಿಸುವ ದನಿಕೇಳಲು ಜವನಿಕೆಗೆ ಕಿವಿಯೊಡ್ಡುತ್ತಾನೆ. ಆದರೆ ಹರ ಏನನ್ನೂ ಸ್ವೀಕರಿಸುತ್ತಿಲ್ಲ. ಹತಾಶನಾದ ಅವನು ಕಿತ್ತಲಗನ್ನೆತ್ತಿಕೊಂಡು ಕೊರಳಲ್ಲಿ ಒತ್ತಿಕೊಂಡಾಗ ಹರ ಕಾಣಿಸಿಕೊಂಡು ಮಾದರ ಚೆನ್ನಯ್ಯನೊಡನೆ ಉಂಡು ತೃಪ್ತನಾದ ಶಿವ ಚೋಳನೊಡನೆ ನುಡಿವುದು ಇನಿದು ಕನ್ನಡದಲ್ಲಿ -

ಕಂಡಯ್ಯ ಚೋಳ ನಿನಗಿನಿತು ಸೈರಣೆಯಿಲ್ಲ

ಉಂಡೆವಾ ಚೆನ್ನನೊಡನೆಮಗಿಂದು ಹಸಿವಿಲ್ಲ

ಓತು ಮಾದರ ಚೆನ್ನನೊಡನುಂಡೆವೆಲೆ ಚೋಳ

ಕೂತು ಮಾದರ ಚೆನ್ನನೊಡನುಂಡೆವೆಲೆ ಚೋಳ

ಕೇಳಂಬಕಳದ ಸವಿಯನದನೇನನೆಂದಪೆಂ ( ಅದೇ, ಪು.೪೭೧)

 ತಾನು ಈಗಾಗಲೇ ಮಾದರ ಚೆನ್ನಯ್ಯನ ಮನೆಯಲ್ಲಿ “ಓತು ಮಾದರ ಚೆನ್ನನೊಡನುಂಡೆವೆಲೆ ಚೋಳ” ಎಂದು ಹೇಳುತ್ತಾನೆ. ಅದನ್ನು ಕೇಳಿದ ಚೋಳ “ಪರಮಂಗೆ ಉಣಲಿತ್ತ ಶರಣನಂ ನೋಡುವೆಂ” ಎಂದು ಚೆನ್ನಯ್ಯನ ಗುಡಿಸಿಲನ್ನು ಹುಡುಕಿಕೊಂಡು ಹೋಗುತ್ತಾನೆ; . ಆ ಭಕ್ತ ತನ್ನ ರಾಜಧಾನಿಯಲ್ಲಿರುವ ಸಂಗತಿ ತಿಳಿದು ಅವನ ದರ್ಶನಕ್ಕೆ 'ಹಿರಿಯ ಕೇರಿ'ಗೆ (ಹೊಲೆಗೇರಿ) ರಾಜ ಬರುತ್ತಾನೆ. ರಾಜ ಕೊನೆಗೂ ಚೆನ್ನಯ್ಯನ ಗುಡಿಸಿಲಿಗೆ ಬಂದು ಅವನನ್ನು ಕಂಡಾಕ್ಷಣವೇ ಗಾಬರಿಗೊಂಡಿದ್ದ ಚೆನ್ನಯ್ಯನ ಪಾದಗಳಿಗೆ ತನ್ನ ಹಣೆಯನ್ನು ಚಾಚುತ್ತಾನೆ, ದೀರ್ಘದಂಡ ನಮಸ್ಕಾರವನ್ನು ಮಾಡುತ್ತಾನೆ. (“ಇಳಿಪಿದಂ ಸರ್ವಾಂಗಮಂ ಚೆನ್ನನಂಘ್ರಿಯೊಳು.”) ಗಾಬರಿಗೊಂಡ ಮಾದರ ಚೆನ್ನಯ್ಯನು “ಎನ್ನ ಕುಲಮಂ ನೋಡದೆಯ್ತಪ್ಪರೇ ದೇವ” ಎಂದು ಕೇಳಿದಾಗ ಚೋಳನು “ದೇವದೇವನೊಲಿದ ಜಾತಿಯೆ ಜಾತಿ ಸತ್ಕುಲಂ, ಘನಮಹಿಮನೊಲಿದ ಜಾತಿಯೆ ಜಾತಿ ನಿರ್ಮಲಂ” ಎಂದು ಉತ್ತರಿಸುತ್ತಾನೆ.( ಅದೇ, ಪು.೪೭೧-೭೩) ತಾನು ಹೊಲೆಯನೆಂದು ಚೆನ್ನಯ್ಯ ಹೇಳಿ, ಶಿವ ಒಲಿದವನ ಕುಲವೇ ಸತ್ಕುಲವೆಂದೂ, ಆ ಶಿವಭಕ್ತನ ಪಾದರಕ್ಷೆಗೆ ತನ್ನ ಶಿರಸ್ಸುಕೊಂಡದ್ದಕ್ಕೆ, ಸಮ ಅಲ್ಲವೆಂದೂ ರಾಜ ಹೇಳುತ್ತಾನೆ. ('ದೇವದೇವನೊಲ್ಲನ ಕುಲಂ ಸತ್ಕುಲಂ: .ನಿಮ್ಮ ಕರವಿಂಗೆನ್ನ ಶಿರ ಸರಿಯ), ತನ್ನ ಭಕ್ತಿ ಬಯಲಾದುದಕ್ಕೆ ಚಿನ್ನಯ್ಯ ಬಹಳವಾಗಿಚಡಪಡಿಸಿದರೂ ಅಂತ್ಯದಲ್ಲಿ ಚೆನ್ನಯ್ಯನಿಗೆ ಶಿವಸಾನ್ನಿಧ್ಯ ದೊರೆಯುತ್ತದೆ. 'ಕುಲಹೀನ'ನು ಶಿವನನ್ನು ಸೇರುತ್ತಾನೆ. ಶಿವ ತನ್ನನ್ನು ಮೈಲಿಗೆ ಮಾಡಿಕೊಂಡು ಅಸ್ಪೃಶ್ಯ ಭಕ್ತರಲ್ಲಿ ನೆಲಸಿದ ಎಂದು ಕವಿವರ್ಣಿಸುತ್ತಾನೆ.

ಪರಮನೊಪ್ಪಿದನತುಳವರಹಸ್ತನೊಪ್ಪಿದಂ

ಕುಲತಿಲಕನೊಪ್ಪಿದು ಕುಲಹೀನನೊಪ್ಪಿದ

ಹೊಲೆಗಲಸಿ ಭಕ್ತರೊಳ್ ನೆಲಸಿರ್ಪನೊಪ್ಪಿದಂ

ಹರಿಹರನು ಚೆನ್ನಯ್ಯನಂತೆಯೇ ಶಿವನನ್ನೂ ಕುಲಹೀನನೆಂದು ಕರೆದಿರುವುದು ಗಮನಾರ್ಹ.  ಈ ಬಗೆಯಲ್ಲಿ ರಾಜತ್ವವು  ಜನಸಾಮಾನ್ಯತ್ವದ ನಿರ್ಮಲತೆಯ ಮುಂದೆ ಮಣಿದಿರುವುದು ವ್ಯಕ್ಯವಾಗುತ್ತದೆ. ಹೊಲೆಯನಾದ ಚೆನ್ನನ ಮನೆಯಲ್ಲಿ ಅವನ ಎಂಜಲನ್ನು ಶಿವ ಉಂಡುದರಿಂದ ಆಗಮಗಳು ನಡುಗಿಹೋದುವು; ವೇದ ಪುರಾಣ ಶಾಸ್ತ್ರಜಪ ತಪ ಸಂಧ್ಯಾವಂದನೆ ಸಮಾಧಿ ಇವೆಲ್ಲ ಸಾವಿರಾರು ವರ್ಷಗಳಿಂದ ಯಾವ ನಿಯಮಗಳನ್ನು ಕಟ್ಟಿಕೊಂಡಿದ್ದುವೋ, ಕಟ್ಟಿದ್ದ ಅವು ಗಟ್ಟಿಯೆಂದುಭಾವಿಸಿದ್ದುವೋ ಅವೆಲ್ಲ ನಿಮಿಷಾರ್ಧದಲ್ಲಿ ಸಿಡಿದು ಗಾಳಿಗೆ ತೂರಿ ಹೋದುವು. ಒಂದು ದಿನ ಎಂದಿನಂತೆ ಕರಿಕಾಲ ಚೋಳನು ಶಿವನಿಗೆಭೋಜನವನ್ನು ಒಪ್ಪಿಸಿದಾಗ, ತನಗೆ ಹಸಿವಿಲ್ಲವೆಂದೂ ಚೆನ್ನಯ್ಯನ ಮನೆಯ ಅಂಬಲಿ ಕುಡಿದುತೃಪ್ತಿಯಾಗಿದೆಯೆಂದೂ ಶಿವ ಹೇಳಿಬಿಡುತ್ತಾನೆ ಅವನು ಕುಲಹೀನನಾದುದರಿಂದಲೇ ಕುಲಹೀನನ ಪಕ್ಷವನ್ನು ಹಿಡಿದ. ಹೊಲೆಮಾಡಿಕೊಂಡಾದರೂ ತನ್ನ ಭಕ್ತರಲ್ಲಿಯೇ ಶಿವನು ನೆಲಸಿರುತ್ತಾನೆ. ಈ ರಗಳೆಯಲ್ಲಿ ರಾಜನು ಪ್ರತಿಪಕ್ಷದಲ್ಲಿ ನಿಂತಿಲ್ಲ, ಭಕ್ತ ಪಕ್ಷದಲ್ಲಿಯೇ ಇದ್ದಾನೆ. ಅವನು ಚಕ್ರವರ್ತಿ, ಭಕ್ತಿಯಲ್ಲಿ ಏನೂ ಕಡಮೆಯಿಲ್ಲ, ಶಿವನಿಗೆ ಅವನು ಮಾಡುವ ಭಕ್ತಿಯಲ್ಲಿ ಕುಂದುಕೊರತೆಯಿಲ್ಲ. ಆದರೂ ಶಿವ ನೀಚಕುಲದ ದರಿದ್ರನನ್ನು ಒಲಿದ. ಇಲ್ಲಿ ಇಬ್ಬರದೂ ಸಮಾನ ಭಕ್ತಿಯಾದರೂ, ಮಾದಾರ ಚೆನ್ನಯ್ಯನಿಗೆ ಶಿವನನ್ನು ತನ್ನತ್ತ ಸೆಳೆಯಲು ಇದ್ದ ವಿಶೇಷ ಶಕ್ತಿ- ಕರಿಕಾಲ ಚೋಳನಲ್ಲಿ ಇಲ್ಲದ್ದು ಅವನ ಹೀನಕುಲ, ದಾರಿದ್ರ, ಗುಪ್ತಭಕ್ತಿ, ಶಿವವೈಭವಾಡಂಬರಗಳಿಗಿಂತ ಹೃದಯ ಶುದ್ಧಿಯನ್ನು, ಸಿರಿವಂತಿಕೆಗಿಂತ ಬಡತನವನ್ನು, ಶ್ರೇಷ್ಠ ಕುಲಕ್ಕಿಂತ ಹೀನಕುಲವನ್ನು ಬೆಂಬಲಿಸುತ್ತಾನೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಹರಿಹರ ಚಿತ್ರಿಸುತ್ತಾನೆ. ʻಚಕ್ರವರ್ತಿಯೊಬ್ಬ ಎಲ್ಲರ ಎದುರಿಗೆ ತನ್ನ ತಲೆಯನ್ನು ಹೊಲೆಯನ ಪಾದಗಳತ್ತ ಚಾಚುವ ಘಟನೆ ಭಾರತೀಯ ಸಾಹಿತ್ಯದಲ್ಲೇ ಅತ್ಯಂತ ಸ್ಮರಣೀಯ , ಭಕ್ತಿಯ ಮುಂದೆ ರಾಜತ್ವವು ಕ್ಷುದ್ರವಾಗಿ ಕಾಣುವಂತೆ ಕವಿ ಮಾಡಿದ್ದಾನೆʼ ಎಂಬ ಚಿದಾನಂದ ಮೂರ್ತಿಯವರ ನಿಲುವು ಒಪ್ಪತಕ್ಕದ್ದಾಗಿದೆ. (ಎಂ.ಚಿದಾನಂದ ಮೂರ್ತಿ, ಬಸವಣ್ಣ: ಕರ್ನಾಟಕ: ಭಾರತ,ಪು.೨೭೦) ಇಡೀ ಕನ್ನಡಸಾಹಿತ್ಯದಲ್ಲಿ ಇದಕ್ಕಿಂತ ಧೀರವಾದ ಬರವಣಿಗೆ ಮತ್ತೊಂದು ದೊರಕಲಾರದು. ಹೊಲೆಯರ ಮನೆಯಲ್ಲಿ ಉಣ್ಣಬಾರದು ಅದು ಒಂದು ನಿಯಮ. ಹರಿಹರನ ಪ್ರಕಾರ ಈ ನಿಯಮ ದೈವ ಸೃಷ್ಟಿಯಲ್ಲ; ಅದು ಹಿತಾಸಕ್ತಿಗಳು ಮಾಡಿಕೊಂಡದ್ದು, ಮನುಷ್ಯನ ಕೃತಕ ನಿರ್ಮಾಣ. ಅದನ್ನು ವೇದ ಶಾಸ್ತ್ರ ಆಗಮ ಗ್ರಂಥಗಳು, ಜಪ ತಪ ಸಂಧ್ಯಾವಂದನೆ ಇತ್ಯಾದಿ ಆಚರಣೆಗಳು ಅನಾದಿ ಕಾಲದಿಂದ ಘೋಷಿಸಿ ಬೆಳಸಿ ಒಂದು ನಿಜವನ್ನಾಗಿ ಮಾಡಿಬಿಟ್ಟಿದ್ದುವು .ಈ ಭ್ರಾಂತಿಯನ್ನು ಒಂದೇ ಒಂದು ನಿಮಿಷದಲ್ಲಿ, ತನ್ನ ಒಂದೇ ಒಂದು ಕಾರ್ಯದಿಂದ ಶಿವನು ಬಯಲು ಮಾಡುತ್ತಾನೆ. ಜಾತಿಯ ಕಟ್ಟುಪಾಡುಗಳು ಶಿವನಿಗೆ ಒಪ್ಪಿತವಲ್ಲ. ಹರಿಹರನ ರಗಳೆಗಳಲ್ಲಿ ಚಿತ್ರಿತರಾಗಿರುವ ರಾಜರುಗಳು ಪದವಿಯಿಂದ ರಾಜರೇ ಹೊರತು ದರ್ಪದಿಂದಲ್ಲ. ಹರಿಹರನ ನಾಯಕರು ಸಾಮಾನ್ಯತೆಯಲ್ಲಿ ಅಸಾಮಾನ್ಯತೆಯನ್ನು ಮೆರೆದವರಾಗಿದ್ದು ಓದುಗರಲ್ಲಿ ಸಾಮಾನ್ಯರ ಬಗ್ಗೆ ಗೌರವ ಭಾವನೆ ಮೂಡುವಂತಹದು.

    ಕುಂಬಾರ ಗುಂಡಯ್ಯನ ರಗಳೆಯಲ್ಲಿ ಗುಂಡಯ್ಯನು ತನ್ನ ಮಡಿಕೆಯಿಂದ ನುಡಿಸಿದ ಆ ನಾದಕ್ಕೆ ಶಿವ ತಾನೇ ಮನಸೋಲುತ್ತಾನೆ. ಅಲ್ಲಿಯವರೆಗೆ ದೇವಲೋಕದ ವಾದ್ಯಗಳು ಅದರಲ್ಲೂ ಪಂಚಮಹಾವಾದ್ಯಗಳನ್ನು ಕೇಳಿ ಆನಂದಿಸಿದ ಶಿವನಿಗೆ ಮಡಿಕೆಯನಾದ ಸುನಾದವಾಗಿ ಪರಿಣಮಿಸುತ್ತದೆ. ಅದನ್ನು ಕೇಳುವ ಸಲುವಾಗಿ ದೇವಲೋಕದಿಂದ ಭೂಲೋಕಕ್ಕೆ ಬಂದು ಗುಂಡಯ್ಯನು ಬಾರಿಸುವ ಆ ತಾಳಕ್ಕೆ ಮನಸೋತು ಮೆಚ್ಚಿ ತಾನೂ ಅವನೊಂದಿಗೆ ಕುಣಿಯಲಾರಂಭಿಸುತ್ತಾನೆ. ಶಿವನ ಆ ಕುಣಿತ ತನ್ನ ಕೊರಳಲ್ಲಿರುವ ರುಂಡಮಾಲೆ ಆಕಡೆಗೊಮ್ಮೆ ಈ ಕಡೆಗೊಮ್ಮೆ ಓಲಾಡುತ್ತಿರುತ್ತದೆ ಆತನ ಜಡೆಯಲ್ಲಿರುವ ದೇವಗಂಗೆ ತುಳುಕಾಡುತ್ತಾಳೆ. ಈ ಚೊದ್ಯವನ್ನು ನೋಡಲು ಪಾರ್ವತಿ ಬರುವುದು ನಂತರ ಗಣಸಮೂಹವೇ ಅಲ್ಲಿ ನೆರೆಯುವಂತಾಗುತ್ತದೆ. ( ಹರಿಹರನ ರಗಳೆಗಳು ಸಂ: ಎಂ.ಎಂ.ಕಲಬುರಗಿ, ಪು.೨೭೨) ಒಂದು ಸಾಮಾನ್ಯ ಮಡಕೆಯ ಸಣ್ಣ ನಾದ ದೇವಲೋಕದ ಚಿತ್ತವನ್ನು ಕೆಣಕುವಂತೆ ಮಾಡುವ ಹರಿಹರನ ಕಾವ್ಯಶಕ್ತಿಯು ಮಹತ್ತರತೆಯನ್ನು ಪಡೆದಿದೆ. ಇಂಥಹ ಕಥೆಗಳನ್ನು ಚಿತ್ರಿಸುವುದರ ಮೂಲಕ ಶಿವಭಕ್ತಿಯ ಶ್ರೇಷ್ಠತೆಯನ್ನು ಹರಿಹರನು ತನ್ನ ರಗಳೆಗಳಲ್ಲಿ ಪಡಿ ಮೂಡಿಸಿದ್ದಾನೆ.

      ಬಸವರಾಜದೇವರ ರಗಳೆಯಲ್ಲಿ ಸಂಬೋಳಿ ನಾಗಿದೇವ ಒಬ್ಬ ಅಸ್ಪೃಶ್ಯ ಹೊಲೆಯನಾದರೂ, ಹಿರಿಯ ಮಾಹೇಶ್ವರನೆಂದು ಗೌರವಾನ್ವಿತನಾಗುತ್ತಾನೆ. ಈ ಉದಾತ್ತ ದೃಷ್ಟಿಗೆ ವಚನಕಾರರು ಕಾರಣವೆಂಬುದು ಎಲ್ಲರೂ ತಿಳಿದಿರತಕ್ಕ ವಿಷಯವಾಗಿದೆ. ನಂಬಿಯಣ್ಣನ ಭೋಗವನ್ನು ವರ್ಣಿಸುವ ಕವಿ ಅದು ನಶ್ವರವೆಂಬುದನ್ನು ಸೂಚಿಸುವುದಿಲ್ಲ. ಅವನು ಲೋಕದಲ್ಲಿ ಐಂದ್ರಿಯಕವಾದ ಸುಖವನ್ನನುಭವಿಸಲು ಶಿವನೇ ಸಹಾಯಕನಾಗಿ ನಿಂತಿದ್ದಾನೆ.

    ಭಕ್ತಿ ಚಳುವಳಿಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಅವುಗಳಲ್ಲಿ ಹಲವು ರಾಜಪ್ರಭುತ್ವದ ವಿರುದ್ಧವಾಗಿ ನಿಂತುದು. ತಮ್ಮ ಯಜಮಾನನು ದೇವರೇ ಹೊರತು ರಾಜ ಅಲ್ಲವೆಂದು ಅನೇಕ ಭಕ್ತರು ಬಹಿರಂಗವಾಗಿ ಹೇಳಿದರು. ಕೊಂಡಗುಳಿ ಕೇಶಿರಾಜ ಮತ್ತು ಬಸವಣ್ಣರು ಆರನೆಯ ವಿಕ್ರಮಾದಿತ್ಯ  ಹಾಗೂ ಬಿಜ್ಜಳನ ಹತ್ತಿರ ಮಂತ್ರಿಯಾಗಿದ್ದರೂ ಕೇವಲ ಹೊಟ್ಟೆ ಪಾಡಿಗೆ ಮಾತ್ರ ತಾನು ಅವರು ಮಂತ್ರಿಯೇ ಹೊರತು ತನ್ನ ನಿಜವಾದ ಒಡೆಯ ಶಿವ ಎಂದೇ ಅರಿಕೆ ಮಾಡಿಕೊಂಡಿದ್ದಾರೆ. ಹರಿಹರ ಕವಿಯು ದೇವರನ್ನು ಬಿಟ್ಟು ಮನುಜರ ಮೇಲೆ ಕಾವ್ಯ ಬರೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದನು. ರಾಜಾಸ್ಥಾನವೆಂಬುದು ಮೇಲುಕೀಳು ಎಂಬ ಅಧಿಕಾರಿಗಳ ಒಂದು ಪ್ರದೇಶ; ಭಗವಂತನ ಸಾಮ್ರಾಜ್ಯದಲ್ಲಿ ಮಾತ್ರ ಅವನ ಮಕ್ಕಳೆಲ್ಲರೂ ಸಮಾನರು ಎಂಬುದನ್ನು ಹರಿಹರ ಕವಿಯು ಕೊಂಡಗುಳಿ ಕೇಶಿರಾಜ ಮತ್ತು ಬಸವಣ್ಣನವರನ್ನು ಕುರಿತ ರಗಳೆಗಳಲ್ಲಿ ಪ್ರತಿಪಾದಿಸಿದ್ದಾನೆ.

      ಹರಿಹರ ಕವಿ ತನ್ನ ಅನೇಕ ರಗಳೆಗಳಲ್ಲಿ  ಮೇಲ್ಕಂಡ ವಿವಿಧ ವೃತ್ತಿಗಳನ್ನವಲಂಬಿಸಿದ್ದ ವಚನಕಾರರ ಕಾಯಕವೂ ಭಕ್ತಿ ಸಾಧನೆಯೂ ಹೇಗೆ ಅಭಿನ್ನವಾಗಿದ್ದುವೆಂಬುದನ್ನು ಸೊಗಸಾದ ರೂಪಕಗಳಲ್ಲಿ ನಿರೂಪಿಸಿದ್ದಾನೆ. ಬಸವರಾಜ ದೇವರ ರಗಳೆಯಲ್ಲಿಯ ಕಿನ್ನರಿ ಬೊಮ್ಮಯ್ಯನ ಈರುಳ್ಳಿ ಪ್ರಸಂಗ, ಅಸ್ಪೃಶ್ಯನ ಮೈಯಲ್ಲಿ ಹಾಲು ಹರಿದ ಪ್ರಸಂಗ ಮೊದಲಾದ  ಪವಾಡಮಯ ಘಟನೆಗಳು ಸಾಮಾಜಿಕ ಅರ್ಥವುಳ್ಳ ರೂಪಕಗಳಾಗಿ ಕಂಡು ಬರುತ್ತವೆ. ʻಬಸವರಾಜದೇವರ ರಗಳೆಯಲ್ಲಿ ಈ ಚಿತ್ರ ಇನ್ನಷ್ಟು ವಾಸ್ತವನೆಲೆಯಲ್ಲಿ ಚಿತ್ರಿತವಾಗಿದೆ ಹಾಗೂ ಹೆಚ್ಚು ಸ್ಫುಟವಾಗಿದೆ. ಕತೆಯ ನಿರೂಪಣೆಯ ಮೂಲಕವೇ ಬಸವಣ್ಣನ ಅಂತರಂಗದ ವಿಕಾಸಕ್ರಮ ಅಲ್ಲಿ ತೆರೆದುಕೊಳ್ಳುತ್ತದೆ. ಹಾಗೆ ನೋಡಿದರೆ ಬಸವಣ್ಣನ ಬಾಹ್ಯಚರಿತೆಗಿಂತಲೂ ಅಂತರಂಗದ ಬೆಳವಣಿಗೆಯಲ್ಲಿ ಅವನ ಅಂತರಂಗತುಮುಲ ಹೆಣೆದುಕೊಂಡಿದೆʼ ಎಂಬ ಎಂ. ಚಿದಾನಂದ ಮೂರ್ತಿಯವರ ಮಾತು ಹೆಚ್ಚು ಸಮಂಜಸವಾದುದು. ‘ಬಸವರಾಜದೇವರ ರಗಳೆ’ಯ ನಿರೂಪಣೆಯಂತೆ “ಕರ್ಮಲತೆಯಂತಿರ್ದ ಜನ್ನಿವರಮಂ ಕಳೆದು ಬಿಸುಟ್ಟು, ಹೋತಿನ ಗಂಟಲಂ ಬಿಗಿದಂತಿರ್ದ ಮೌಂಜಿಯಂ ಪಱಿದು ಬಿಸುಟ್ಟು” ಬಾಗೇವಾಡಿಯಿಂದ ಕೂಡಲಸಂಗಮದತ್ತ ಹೊರಟ ಬಸವಣ್ಣ, ಅಲ್ಲಿಂದ ಶಿವನಾಜ್ಞೆಯನ್ನು ಹೊತ್ತು ಮಂಗಳವಾಡಕ್ಕೆ ಹೊರಟವನು ಬಿಜ್ಜಳನ ಬಳಿ ಬಂದು ಕರಣಿಕನಾಗಿ ಸೇರಿ ಮುಂದೆ ಸಂಪ್ರದಾಯನಿಷ್ಠರ ಮಾತು ಕೇಳುತ್ತಿದ್ದ ಅವನೊಡನೆ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಹಣ ದುರುಪಯೋಗದ ಆಪಾದನೆ ಬಂದುದು, ಕೇದಗೆಯ ಪ್ರಸಂಗ, ಸಂಬೋಳಿ ನಾಗಿದೇವನ ಪ್ರಸಂಗ ಮುಂತಾದೆಡೆಗಳಲ್ಲಿ ವೈದಿಕತೆಯೊಡನೆ ಘರ್ಷಣೆಗೆಗಿಳಿದುದು ಆ ಕಾಲದ ಚಳವಳಿಯ ಸತ್ವವನ್ನು ಒಳಗೊಂಡ ಸನ್ನಿವೇಶಗಳೇ ಆಗಿವೆ. ಬಸವಣ್ಣನ ಜೀವನಚರಿತ್ರೆಯನ್ನರಿಯುವವರಿಗೆ ಮೊದಲ ಬಹು ಮುಖ್ಯ ಆಕರವಾಗಿ ಹರಿಹರನ ಬಸವರಾಜದೇವರ ರಗಳೆಯು ಪರಿಣಮಿಸಿದೆ. ಬಸವಣ್ಣ ಬಿಜ್ಜಳರಾಯನ ಮಂಗಳವಾಡಕ್ಕೆ ಹೋಗಲು ಶಿವ ಕನಸಿನಲ್ಲಿ ಸೂಚನೆ ಮಾಡುವಾಗಲೇ ಭಕ್ತರ ಬಂಧವಾಗು, “ಲೌಕಿಕ ಧರ್ಮಮಂ ಮೀಟು ಎಂದು' ಅಪ್ಪಣೆ ಮಾಡುತ್ತಾನೆ. “ಜಂಗಮದಲ್ಲಿ ಜಾತಿಯನ್ನು ಹುಡುಕ ಕೂಡದೆನ್ನುವುದು ಬಸವನಸಂಕಲ್ಪ. ಒಂದು ದಿನ ಬಸವ ಮಂಗಳವಾಡದ ಪಟ್ಟಣವನ್ನು ಬಿಟ್ಟು ಹೊರಗೆ ಬರುತ್ತಿರುವಾಗ ಹೊಲೆಯ ಶಿವಭಕ್ತರ ಕೇರಿಯಲ್ಲಿ (“ಹಿರಿಯ ಮಾಹೇಶ್ವರರ ಕೇರಿ) ಭಕ್ತಿಯ ಘೋಷಣೆ ಕೇಳಿಸಿ, ಸಂಭೋಳಿ ನಾಗಿದೇವನೆಂಬ ಭಕ್ತನ ಮನೆಗೆ ಹೋಗಿ ಅಲ್ಲಿ ಈಶ್ವರ ಪ್ರಸಾದವನ್ನು ಭಕ್ತನಪ್ರಸಾದದೊಡನೆ ಸ್ವೀಕರಿಸಿದ. ಅದನ್ನೇ ಕಾಯುತ್ತಿದ್ದ ವೈಷ್ಣವರು ಬಿಜ್ಜಳನಿಗೆ, ಬಸವನ ನಡೆವಳಿದಿನದಿನಕ್ಕೆ ವಿಪರೀತವಾಗುತ್ತಿದೆ, ಹೊಲೆಯನ ಮನೆಯಲ್ಲಿ-ಹೊಲೆಯ ಎಂದರೆ ಬಸವನಿಗೆ ಕೋಪ,ಹಿರಿಯ ಮಾಹೇಶ್ವರ ಎನ್ನಬೇಕಂತೆ ಉಂಡುದಲ್ಲದೆ ನಿನ್ನ ಆಸ್ಥಾನಕ್ಕೂ ಬಂದು ಮೈಲಿಗೆಮಾಡುತ್ತಾನೆ ಎಂದಾಗ ಬಿಜ್ಜಳ ಆಸ್ಥಾನದ ಹೊರಗೆ ಪೀಠ ಹಾಕಿಸಿಕೊಂಡು ಅಲ್ಲಿಗೆ ಬಸವನನ್ನು ಕರೆಸುತ್ತಾನೆ. ನೀನು ವಿಪ್ರಕುಲದವನಾಗಿ ಹುಟ್ಟಿ ಭಕ್ತನಾಗಿರುವುದು ಚಿನ್ನಕ್ಕೆ ಸುವಾಸನೆ ಬಂದಂತೆ;ನೀನು ಸುಖವಾಗಿರುವುದು ಬಿಟ್ಟು ಹೊಲೆಯರ ಮನೆಗೆ ನೀನೂ ಹೋಗಿ ಆಸ್ಥಾನವನ್ನೂ ಹೊಲೆಗೆಡಿಸುವೆಯಲ್ಲ ಎಂದು ಜಂಕಿಸುತ್ತಾನೆ. ವಿಪ್ರನಾಗಿರುವುದು ಎಲ್ಲ ಬಗೆಯ ಅನುಕೂಲಗಳನ್ನೂ ಅನುಭವಿಸಲು ಎಂಬುದು ಇಲ್ಲಿಯ ಧ್ವನಿತಾರ್ಥ. ಆಗ ಬಸವ, ಹರನನರಿಯದ ಹೊಲೆಯರಮನೆಯನ್ನು ಹೊಕ್ಕುದಿಲ್ಲ ಎಂದು ಪ್ರತಿಭಟಿಸಿ ಬ್ರಾಹ್ಮಣನ ಮೈಯಲ್ಲಿ ಕೀವೂ ರಕ್ತವೂ ನಾಗಿಮಯ್ಯನ ಮೈಯಲ್ಲಿ ಹಾಲೂ ಇರುವುದನ್ನು ಪವಾಡದ ಮೂಲಕ ತೋರಿಸುತ್ತಾನೆ. ( ಹರಿಹರನ ರಗಳೆಗಳು ಸಂ: ಎಂ.ಎಂ.ಕಲಬುರಗಿ, ಪು.೩೨೮)  ರಕ್ತ, ಕೀವು ಮತ್ತು ಹಾಲುಗಳು ಅಂತರಂಗದ ಸ್ವರೂಪಕ್ಕೆ ಸಂಕೇತಗಳು. 'ವೇದಜಡ' ಎಂಬ ಮಾತಿನ ಮೂಲಕ ಬ್ರಾಹ್ಮಣರ ವೇದಾಧ್ಯಯನ ಅವರನ್ನು ಕರ್ಮಠರನ್ನಾಗಿ ಮಾಡಿತ್ತೇ ಹೊರತು ಭಕ್ತರನ್ನಾಗಿಮಾಡಿರಲಿಲ್ಲ. ಎಂದರೆ ಎಲ್ಲರನ್ನೂ ಶಿವಭಕ್ತಿಯಲ್ಲಿ ಒಂದಾಗಿ ನೋಡುವ ಮನುಷ್ಯರನ್ನಾಗಿ ಮಾಡಿರಲಿಲ್ಲವೆಂದು ಹರಿಹರ ಸೂಚಿಸುತ್ತಾನೆ.

     ರಾಜತ್ವ ಧಿಕ್ಕಾರದ ಜೊತೆಗೆ ಸಂಬೋಳಿ ನಾಗಿದೇವನ ಪ್ರಸಂಗದಂತಹ ಕಡೆಗಳಲ್ಲಿ ಜಾತಿವ್ಯವಸ್ಥೆಯ ವಿರುದ್ಧದ ನಿಲುವೂ ಆ ಕಾಲದ ಚಿತ್ರಣವೇ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಹಣ ದುರುಪಯೋಗದ ಆಪಾದನೆಯ ಸನ್ನಿವೇಶದಲ್ಲಿ ಭಂಡಾರದಲ್ಲಿರ ಬೇಕಾದುದಕ್ಕಿಂತ ಹೆಚ್ಚು ಹಣ ಇದ್ದುದನ್ನು ಕಂಡಾಗ ಬಿಜ್ಜಳನು “ಜೀವನಾತ್ಮಕನಾಗಿ ಬಸವನ ಚರಣದೊಳ್ ತೊಪ್ಪನೆ ಬಿದ್ದು ಮುಂದಱಿಯದ ಮೂರ್ಖಂಗೆ ಶರಣರನಱಿಯದ ಸರ್ವಾಪರಾಧಿಗೆ ಕರುಣಿಸುವುದೆಂದು ಪನ್ನಿಚ್ಛಾಸಿರ ಲಕ್ಷ ವಸ್ತುವಂ ಚರಣದ ಮೇಲೆ ಸುರಿದು ದಣ್ಣಾಯಕರಿಂದ ಮನ್ನಣೆ ಪಡೆದವರಂ ಮಹಾಮನೆಗೆ ಬಿಜಯಂಗೆಯ್ಯು( ಅದೇ, ಪು.೩೨೩) ಪ್ರಸಂಗದಲ್ಲಿ ದರ್ಪಿಷ್ಟ ಪ್ರಭುತ್ವವು ಪ್ರಾಮಾಣಿಕತೆಗೆ ಮಣಿದ ಅದ್ಭುತ ಚಿತ್ರವಿದೆ.

   ನೂತನ ರಗಳೆಗಳಲ್ಲಿ ಪ್ರಭುದೇವ, ಬಸವಣ್ಣ, ಅಕ್ಕಮಹಾದೇವಿಯರಂತಹ ವಚನಕಾರರನ್ನು ಕುರಿತು ಅವನು ಬರೆದಿರುವ ಮೂರು ರಗಳೆಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಪ್ರಭುದೇವರ ರಗಳೆಯಲ್ಲಿ ಹರಿಹರನು ಅಲ್ಲಮನನ್ನು ಒಬ್ಬ ಸಾಮಾನ್ಯ ವ್ಯಕ್ತಿಯನ್ನಾಗಿ ಮತ್ತು ಸಾಧಕನನ್ನಾಗಿ ಚಿತ್ರಿಸಿದ್ದಾನೆ. ಅವನು, ಕವಿಗೆ ಮುಖ್ಯವಾಗಿ ಒಬ್ಬ ಮನುಷ್ಯ; ಶೂದ್ರವರ್ಗದವನು. ಅವನ ಬದುಕಿನಲ್ಲಿ ಉಂಟಾದ ಆಘಾತ, ಕಾಮಲತೆಯ ಸಾವು, ಅದರಿಂದ ಆದ ನಿರಾಸೆ, ಕವಿದ ಕತ್ತಲು, ಆಗ ಅವನಿಗೆ ಅನಿಮಿಷನ ಮೂಲಕ ದೊರೆತ ಇಷ್ಟಲಿಂಗವು ಅವನಿಗೆ ತನ್ನ ಮುಂದಿನ ಜೀವನ ಪಥವನ್ನು ಮಿಂಚಿಸಿದ್ದು; ವ್ಯಾಮೋಹವನ್ನು ಭಕ್ತಿಯಾಗಿ ಪರಿವರ್ತಿಸಿದ್ದು; ಈ ಸಂಗತಿಗಳನ್ನು ಹೇಳುವುದರ ಮೂಲಕ ಅಲ್ಲಮನ ಬದುಕಿನ ಪೂರ್ವಾರ್ಧವನ್ನು ಪುನರ‍್ರಚಿಸಲು  ಮುಖ್ಯವಾದ ಆಕರಗಳನ್ನು  ಒದಗಿಸುತ್ತಾನೆ. ಅಲ್ಲಮ ಇಲ್ಲಿ ವಚನಕಾರನಾಗಿ ಕಾಣಿಸುವುದಿಲ್ಲ. ಸಾಮಾನ್ಯ ಸ್ಥಿತಿಯಿಂದ ಮೇಲೇರಿದ ಜ್ಞಾನಿಯಾಗಿ ಕಾಣಿಸಿಕೊಳ್ಳುತ್ತಾನೆ. ಅಲ್ಲಮನ ವಚನಗಳನ್ನು ತಿಳಿಯಲು ಅಲ್ಲಮನನ್ನು ತಿಳಿಯಬೇಕು, ಅವನನ್ನು ತಿಳಿಯಲು ಮತ್ತು ಅವನ ಜೀವನ ಚರಿತ್ರೆಯನ್ನು ಪುರ‍್ರಚಿಸಲು ಹರಿಹರನ  ರಗಳೆಯ  ನೆರವುಬೇಕು. ಕೊಂಡಗುಳಿ ಕೇಶಿರಾಜ, ಬಸವಣ್ಣ, ಅಕ್ಕಮಹಾದೇವಿಯರ ರಗಳೆಗಳಲ್ಲಿ ವ್ಯಕ್ತಿಗಳಾಗಿ ಮತ್ತು ವಚನಕಾರರಾಗಿ ಅವರನ್ನು ಕವಿ ಚಿತ್ರಿಸುತ್ತಾ ಹೋಗುತ್ತಾನೆ. ಮಹಾದೇವಿಯಕ್ಕನನ್ನು ಕುರಿತ ರಗಳೆಯು ಮುಖ್ಯವಾಗಿ ವ್ಯಕ್ತಿನಿಷ್ಠ ಕಾವ್ಯ. ಬಸವಣ್ಣನನ್ನು ಕುರಿತ ರಗಳೆಯಲ್ಲಿ  ವ್ಯಕ್ತಿನಿಷ್ಠ ಕಾವ್ಯವಿರುವುದಾದರೂ ಅವನಲ್ಲಿ ಸಮಾಜನಿಷ್ಠ ಕಾವ್ಯ, ಸಾಮಾಜಿಕ ಚಿಂತನೆ ಸಾಕಷ್ಟು ಪ್ರಮಾಣದಲ್ಲಿವೆ. ಇದಕ್ಕೆ ಕಾರಣಗಳನ್ನು ಅವರವರ ಬದುಕಿನಲ್ಲೇ ಹುಡುಕಬೇಕು. ಮಹಾದೇವಿಯಕ್ಕನಿಗೆ ಒದಗಿ ಬಂದ ಸಮಸ್ಯೆ ವೈಯಕ್ತಿಕವಾದುದು ಮತ್ತು ಅದನ್ನು ಹರಿಹರ ಅನನ್ಯವಾಗಿ ಚಿತ್ರಿಸಿದ್ದಾನೆ. ತನ್ನ ಮೆಚ್ಚುಗೆಯ ಗಂಡ ಬೇರೆ, ಆದರೆ ಕೈಹಿಡಿಯಬೇಕಾದ ವ್ಯಕ್ತಿ ಬೇರೆ. ಇಂತಹ ಇತ್ತಂಡದಲ್ಲಿ, ವಿಷಮ ಸಂಸಾರದಲ್ಲಿ ತೊಳಲಾಡಿದ ಮಹಾದೇವಿ ತಾನು ಒಲ್ಲದ ವ್ಯಕ್ತಿಯಿಂದ ಬಿಡಿಸಿಕೊಂಡು ಹೊರಟರೂ, ತನ್ನ ಚಟುವಟಿಕೆಯಿಂದಾಗಿ ಲೋಕವನ್ನು ಎದುರು ಹಾಕಿಕೊಳ್ಳಬೇಕಾದ ಪ್ರಸಂಗಕ್ಕೆ ಒಳಗಾಗ ಬೇಕಾಯಿತು. ಬಸವಣ್ಣನ ಸಮಸ್ಯೆಗಳು ವೈಯಕ್ತಿಕವಲ್ಲ, ಸಮಾಜದವು ಮತ್ತು ಸಮಾಜವನ್ನು ಕಟ್ಟಿಕೊಂಡಿದ್ದರಿಂದ ಬಂದಂತವು. ಈ ಎರಡು ಚಿತ್ರಗಳನ್ನೂ ಹರಿಹರ ಅವರಿಬ್ಬರನ್ನು ಕುರಿತ ರಗಳೆಗಳಲ್ಲಿ ಕೊಡುತ್ತಾನೆ.

   ಮಹಾದೇವಿಯಕ್ಕಳಿಗೆ ತುಸು ಸಮೀಪದವನಾದ ಹರಿಹರನ ಉಡುತಡಿಯ ಮಹಾದೇವಿಯಕ್ಕನ ರಗಳೆಯ ಮೂಲಕ ಅಕ್ಕಮಹಾದೇವಿಯ ವೈರಾಗ್ಯ ನಿಧಿ’ಯಾಗಿ ಬಾಳಿ, ಮಣಿಹ ಪೂರೈಸಿ ಹೋದ ಭವ್ಯವ್ಯಕ್ತಿತ್ವದ ಬಗೆಗೆ ತಿಳಿಯಲು ಸಾಮಗ್ರಿ ಲಭ್ಯವಾಗುತ್ತದೆ. ಹರಿಹರನ ‘ಮಹಾದೇವಿಯಕ್ಕನ ರಗಳೆ’ಯು ಉತ್ಸಾಹ ಹಾಗೂ ಭಕ್ತಿಯ ಉತ್ಕರ್ಷಗಳೇ ಪ್ರಧಾನವಾಗಿ, ಚಾರಿತ್ರಿಕಾಂಶಗಳು ಸ್ವಲ್ಪಮಟ್ಟಿಗೆ ಗೌಣವಾಗಿರುವ ಕೃತಿಯಾಗಿದೆ. ಹರಿಹರ ಕವಿಯ ಉಡುತಡಿಯ ಮಹಾದೇವಿಯಕ್ಕನ ರಗಳೆ, ಏಳು ಸ್ಥಲಗಳ ಕಿರುಕೃತಿ. ಒಂದು ಸ್ಥಲ ಪೂರ್ತಿ ರಗಳೆಯಾದರೆ, ಅನಂತರ ಒಂದು ಸ್ಥಲ ಪೂರ ವಚನಗದ್ಯ-ಈ ಕ್ರಮಾನುಸಾರಿಯಾದ ಏಳು ಸ್ಥಲಗಳಲ್ಲಿ ಮಹಾದೇವಿಯಕ್ಕನ ಚರಿತ್ರೆ ಹಬ್ಬಿ ಹರಡಿದೆ. ಹರಿಹರ, ಜನತೆಯ ಬಾಯಲ್ಲಿ ಅನುರಣಿತವಾಗಿದ್ದ ಮಹಾದೇವಿಯಕ್ಕನ ಬಗೆಗಿನ ಸಂಗತಿಗಳನ್ನು ಹಾಗೂ ಜನತೆಯ ನಾಲಗೆಯ ಮೇಲೆ ನಲಿದಾಡುತ್ತಿದ್ದ ಆಕೆಯ ವಚನಗಳನ್ನು ಕೇಳಿ  ಪ್ರಥಮ ಬಾರಿಗೆ ಆಕೆಯ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾನೆ. ಅಕ್ಕಮಹಾದೇವಿಯ ರಗಳೆಯಲ್ಲಿ  ಆಕೆಯನ್ನು ವ್ಯಕ್ತಿಯಾಗಿಯೂ  ಮತ್ತು ವಚನಕಾರ್ತಿಯನ್ನಾಗಿಯೂ  ಕವಿ ಚಿತ್ರಿಸುತ್ತಾ ಹೋಗುತ್ತಾನೆ. ಮಹಾದೇವಿಯಕ್ಕನಿಗೆ ಒದಗಿ ಬಂದ ಸಮಸ್ಯೆ ವೈಯಕ್ತಿಕವಾದುದು ಮತ್ತು ಅದನ್ನು ಹರಿಹರ ಅನನ್ಯವಾಗಿ ಚಿತ್ರಿಸಿದ್ದಾನೆ. ತನ್ನ ಮೆಚ್ಚುಗೆಯ ಗಂಡ ಬೇರೆ, ಆದರೆ ಕೈಹಿಡಿಯಬೇಕಾದ ವ್ಯಕ್ತಿ ಬೇರೆ. ಇಂತಹ ಇತ್ತಂಡದಲ್ಲಿ, ವಿಷಮ ಸಂಸಾರದಲ್ಲಿ ತೊಳಲಾಡಿದ ಮಹಾದೇವಿ ತಾನು ಒಲ್ಲದ ವ್ಯಕ್ತಿಯಿಂದ ಬಿಡಿಸಿಕೊಂಡು ಹೊರಟರೂ, ತನ್ನ ಚಟುವಟಿಕೆಯಿಂದಾಗಿ ಲೋಕವನ್ನು ಎದುರು ಹಾಕಿಕೊಳ್ಳಬೇಕಾದ ಪ್ರಸಂಗಕ್ಕೆ ಒಳಗಾಗ ಬೇಕಾಯಿತು. ಈ ಚಿತ್ರವನ್ನೂ ಹರಿಹರ ತನ್ನ ಅಕ್ಕ ಮಹಾದೇವಿಯನ್ನು ಕುರಿತ ರಗಳೆಗಳಲ್ಲಿ ಕೊಡುತ್ತಾನೆ.  

       ವಚನಕಾರರ ಚರಿತ್ರೆಯನ್ನು ಹರಿಹರ  ಕಥನಕಾವ್ಯವನ್ನಾಗಿಸಿದ. ಶರಣರ ಬದುಕನ್ನು ಕಾವ್ಯವನ್ನಾಗಿಸುವುದರ ಮೂಲಕ ಹರಿಹರ   ಮೊದಲಿಗನಾಗಿ ಕಂಡು ಬರುತ್ತಾನೆ. ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ. ವಚನಕಾರರರ ವಚನಗಳಿಂದ ಪ್ರೇರಿತನಾಗಿಯೇ ಅವರ ಜೀವನ ಚರಿತ್ರೆಯನ್ನು ರಗಳೆಗಳ ಮೂಲಕ ಕಟ್ಟಿಕೊಟ್ಟಿದ್ದಾನೆ. ವಚನಕಾರರ ಸಾಂಸ್ಕೃತಿಕ ಕಾಳಜಿಗಳು ಹರಿಹರನ ರಗಳೆಗಳಲ್ಲಿ ಮತ್ತೊಮ್ಮೆ ಅಭಿವ್ಯಕ್ತಗೊಂಡಿವೆ.

    ಶರಣರ ಜೀವನಗಳನ್ನು ಚಿತ್ರಿಸುವಾಗ ಅವರೇ ವಾಸ್ತವವಾಗಿ ನುಡಿದ ವಚನಗಳನ್ನು ತನ್ನ ರಗಳೆಗಳೊಳಕ್ಕೆ ನೇಯ್ದುಕೊಂಡಿರುವುದು ಗಮನಿಸಬೇಕಾದ ಮಹತ್ತರ ಸಂಗತಿ. ಅಂತಹ ಅನೇಕ ಸಂದರ್ಭಗಳಲ್ಲಿ ವಚನಗಳು ಅಲ್ಪ ವ್ಯತ್ಯಾಸಗಳೊಂದಿಗೊ  ಸಂಕ್ಷಿಪ್ತರೂಪವಾಗಿಯೋ ಕಾಣಿಸಿಕೊಳ್ಳುತ್ತವೆ. ನಿದರ್ಶನಕ್ಕೆ ಬಸವಣ್ಣ ಮತ್ತು ಅಕ್ಕ ಮಹಾದೇವಿಯನ್ನು ಕುರಿತ ರಗಳೆಗಳಲ್ಲಿ ಕೆಲವು ನಿದರ್ಶನಗಳನ್ನು ಉದಾಹರಿಸ ಬಹುದು. ಆಕಳುಗಳನ್ನು ಭಕ್ತವೇಷದ ಕಳ್ಳರು ಕದ್ದೊಯ್ದರೆಂದು ಸೇವಕರು ಬಂದು ಹೇಳಿದಾಗ ಬಸವಣ್ಣ ಕರುಗಳನ್ನು ಬಿಡಿಸಿ ಕಳಿಸಿದನೆಂದೂ, ಕಳ್ಳತನವೂ ಶಿವವೇಷವೂ ಒಂದು ಕಡೆಯಿರಲು ಸಾಧ್ಯವಿಲ್ಲವಾದ್ದರಿಂದ ಅವರು ಕಳ್ಳರಲ್ಲವೆಂದು ಹೇಳುತ್ತಾನೆ (ಬ.ರಾ.ದೇವರ ರಗಳೆ, ಸ್ಥಲ-೯, ಸಾಲು-೧೦೯ ರಿಂದ ೧೨೦, ಪು.೩೨೫) ಆ ಸಮಯದಲ್ಲಿ ಅವರು ಆಡಿರಬಹುದಾದ ವಚನ.

      ʻಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ ನಿನ್ನ ಧರ್ಮ

      ..................

      ಅಲ್ಲಿ ಉಂಬಡೆ ಸಂಗ ಇಲ್ಲಿ ಉಂಬಡೆ ಸಂಗ!

      ಕೂಡಲ ಸಂಗಮದೇವ ಏಕೋ ಭಾವʼ

ವಚನದ “ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ” ಎಂಬುದು “ಸಂಗನೇ ಕೊಡುವವಂ ಸಂಗನೇ ಕೊಂಬವಂ, ಸಂಗನೇ ಉಂಬವಂ ಸಂಗನೇ ಉಡುವವಂ” ಎಂಬ ರಗಳೆಯ ಸಾಲಾಗಿದೆ. ಹೀಗೆ ಬಸವನ ವಚನಕ್ಕೆ ಒಂದು ಐತಿಹಾಸಿಕ ಘಟನೆಯ ಹಿನ್ನೆಲೆಯನ್ನು ಒದಗಿಸಿಕೊಡುತ್ತಾನೆ. ಕವಿ. ಹೀಗೆಯೇ ಮಹಾದೇವಿಯಕ್ಕನ ರಗಳೆಯಲ್ಲಿ  ಅಕ್ಕಮಹಾದೇವಿ ಕೌಶಿಕನನ್ನು ತ್ಯಜಿಸಿ ಹೊರಟರೂ ಆಕೆಯ ಮೇಲಿನ ವ್ಯಾಮೋಹವನು ಬಿಡಲಾರದೆ  ಭಕ್ತನಂತೆ ವೇಷಧರಿಸಿ ಅವಳನ್ನು ಶ್ರೀಶೈಲಕ್ಕೂ ಅನುಸರಿಸಿ ಬಂದು, ನಾನು ಶಿವಭಕ್ತನಾಗಿದ್ದೇನೆ. ಕೋಪವನ್ನು ಬಿಟ್ಟು ಹಿಂದಕ್ಕೆ ಬಾ, ನನ್ನನ್ನು ಒಲಿ ಎಂದು ಯಾಚಿಸಿದಾಗ ಅಕ್ಕಮಹಾದೇವಿಯು ವೈರಾಗ್ಯದಿಂದ ಗೀತವನ್ನು ಹಾಡಿದ್ದನ್ನು ಹರಿಹರ  ಈ ರೀತಿ ವರ್ಣಿಸುತ್ತಾನೆ.

“ಬಿಟ್ಟಪ್ಪೆನೆಂದಡಂ ಬಿಡದು ನಿನ್ನಯ ಮಾಯೆ”

ಒಟ್ಟಯಿಸಿ ಬಂದದೊಡವಂದಪ್ಪುದೀ ಮಾಯೆ

ಬಿಡದು ನಿನ್ನಯ ಮಾಯೆ ಒಟ್ಟಯಿಸಿ ನಿಂದೊಡಂ

ಜೋಗಿಗಂ ಜೋಗಿಣಿಯದಾಯಿತು ನಿನ್ನಯ ಮಾಯೆ

ರಾಗದಿಂ ಸವಣಂಗೆ ಕಂತಿಯಾಯಿತು ಮಾಯೆ

ಗಿರಿಯನೇರಿದೊಡಿರದೆ ಗಿರಿಯನೇರಿತು ಮಾಯೆ

ಪಿರಿದಡವಿಯಂ ಪೊಕ್ಕೊಡೊಡನೆ ಪೊಕ್ಕುದು ಮಾಯೆ.

ಕರುಣಾಕರ ನಿನ್ನಮಾಯೆಗಂಜುವನೇನಯ್ಯಾ

 ಎಂದು ಮುಂತಾಗಿ ಅವಳು ನುಡಿದಳೆಂದು ಹರಿಹರ ವರ್ಣಿಸುತ್ತಾನೆ. (ಮಹಾದೇವಿಯಕ್ಕನ ರಗಳೆ, ಸ್ಥಲ ೭, ಸಾಲು ೯೧-೧೧೦, ಪು.೪೦೯) ಇಲ್ಲಿ ಮಹಾದೇವಿಯಕ್ಕನ ಎರಡು ವಚನಗಳನ್ನು ಸ್ಪಷ್ಟವಾಗಿ ಗುರುತಿಸ ಬಹುದಾಗಿದೆ.

  ಬಿಟ್ಟನೆಂದಡೆ ಬಿಡದೀ ಮಾಯೆ.....

  ಬಿಡದಿದ್ದರೆ ಬೆಂಬತ್ತಿತ್ತು ಮಾಯೆ

  ಯೋಗಿಗೆ ಯೋಗಿಣಿಯಾಯಿತ್ತು ಮಾಯೆ

  ಸವಣಂಗೆ ಪರಾಕಿಯಾಯಿತ್ತು ಮಾಯೆ

  ಯತಿಗೆ ಪರಾಕಿಯಾಯಿತ್ತು ಮಾಯೆ

  ನಿನ್ನ ಮಾಯೆಗೆ ನಾನಂಜುವಳಲ್ಲ

   ಯೋಗಿಗೆ ಯೋಗಿಣಿಯಾಗಿಹಳು ಮಾಯೆ

   ಜೋಗಿಗೆ ಜೋಗಿಣಿಯಾಗಿಹಳು ಮಾಯೆ

   ಶ್ರವಣಂಗೆ ಕಂತಿಯಾದಳು ಮಾಯೆ. ( ಅಕ್ಕಮಹಾದೇವಿಯ ವಚನ ಸಂಖ್ಯೆ.೩೦೩,ಪು.೯೦)

      ಇಲ್ಲಿ ಕವಿ ಕೆಲವು ಮಾತುಗಳನ್ನು ಹಾಗೇ ಬಳಸಿಕೊಂಡಿದ್ದಾನೆ. “ಯೋಗಿಗೆ ಯೋಗಿಣಿಯಾಯಿತ್ತು ಮಾಯೆ” ಎಂಬುದು ರಗಳೆಯಲ್ಲಿ “ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ” ಎಂದಾಗುತ್ತದೆ. “ಭಾಪು ಸಂಸಾರವೇ ಬೆನ್ನಿಂದ ಬೆನ್ನು ಹತ್ತಿ ಬಂದೆ” ಎಂಬುದು “ಬೆನ್ನ ಕೈಯಂ ಬಿಡದು ಭಾಪು ಸಂಸಾರವೇ” ಎಂದಾಗುತ್ತದೆ. ಮೂಲ ವಚನದ “ಯತಿಗೆ ಪರಾಕಿಯಾಯಿತ್ತು ಮಾಯೆ” ಎಂಬ ಸೊಗಸಾದ ವಿಡಂಬನೆಯ ಮಾತು ಹರಿಹರನಲ್ಲಿ ಬಿಟ್ಟು ಹೋಗಿದೆ. ಅದರ ಬದಲು, “ಭಗವಂಗೆ ಮಾಕಬ್ಬೆಯ ಚೋಹವಾಯ್ತಯ್ಯ” ಎಂಬ ಆ ಕಾಲದ ಮತೀಯ ಚರಿತ್ರೆ ಬರೆಯುವವರಿಗೆ ಬೇಕಾದ ಒಂದು ಹೊಸ ಸಂಗತಿಯನ್ನು ತರುತ್ತಾನೆ. ವಚನಗಳನ್ನು ಬಳಸಿಕೊಳ್ಳುವುದರ ಮೂಲಕ ಹರಿಹರ ವಚನಕಾರರನ್ನು, ಅವರ ವಚನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ್ದಾನೆ.  

      ವಚನಕಾರರ ವಚನಗಳಲ್ಲಿಯ ಸಂದರ್ಭಗಳು ಅಭಿಪ್ರಾಯಗಳು ಹರಿಹರನ ರಗಳೆಗಳಲ್ಲಿ ಕೆಲವೆಡೆ ಸೂಕ್ಷ್ಮವಾಗಿ ಹಾಗೂ ಕೆಲವೆಡೆ ಸ್ಥೂಲವಾಗಿ ನಿರೂಪಿತಗೊಂಡಿವೆ. ವಚನಕಾರರ ಜೀವನ ಚರಿತ್ರೆಗಳನ್ನು ಹಾಗೂ ಸಾಮಾನ್ಯ ಜೀವನ ಸ್ತರದಿಂದ ಬಂದ ಶರಣರನ್ನು ತನ್ನ ರಗಳೆಗಳಿಗೆ ವಸ್ತುವಾಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಸ್ತುವಿನ ಬದಲಾವಣೆಗೆ ಕಾರಣಕರ್ತನಾಗಿದ್ದಾನೆ. ವಚನಕಾರರು ತಮ್ಮ ಭಾವೋದ್ರೇಕವನ್ನೋ ತೀವ್ರಾನುಭವವನ್ನೋ ತುಡಿತವನ್ನೋ ತಾಳಲಾರದೆ ಅವರ ಬಾಯಿಂದ ವಚನಗಳು ಹೊರಹೊಮ್ಮಿದಂತೆ ಚಿತ್ರಿಸಿದ್ದಾನೆ. ವಚನಗಳಿಗೆ ಹರಿಹರನು ಒದಗಿಸುವ ಹಿನ್ನೆಲೆಯ ಚೌಕಟ್ಟು ಅವುಗಳನ್ನು  ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಐತಿಹಾಸಿಕ ಹಿನ್ನೆಲೆಯ ಚೌಕಟ್ಟನ್ನು ನಿರ್ಮಿಸುವುದರ ಮೂಲಕ ವಚನಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕನಾಗಿದ್ದಾನೆ.

    ಹರಿಹರನ ಕಾವ್ಯದ ವಸ್ತು ಮಾತ್ರವಲ್ಲದೇ ಧೋರಣೆಯಲ್ಲಿಯೂ  ವಚನಕಾರರ ಪ್ರಭಾವವನ್ನು ಕಾಣಬಹುದು. ಸ್ವಂತಿಕೆಯ ಪ್ರಜ್ಞೆಯಿದ್ದ ಆ ಕವಿ ತನ್ನ ಕಾವ್ಯ ಪ್ರಕಾರಕ್ಕೆ ರಗಳೆಯನ್ನು ಆರಿಸಿಕೊಂಡು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಹೊಸ ಮಾರ್ಗವೊಂದನ್ನು ತೆರೆದು ತೋರಿಸಿದಂತೆ ತಾನೂ ಹೊಸ ಮಾರ್ಗವೊಂದರ ಪ್ರವರ್ತಕನಾದ. ವಚನಕಾರರನ್ನೂ ಅವರ ಚಿಂತನೆಗಳನ್ನೂ ಕಥನ ರೂಪವಾಗಿ ವ್ಯಾಖ್ಯಾನಿಸಿ ಜನಕ್ಕೆ ಕೊಡುವ ಅಗತ್ಯವಿದ್ದಿತು.

    ಹರಿಹರ ಬೇರೆ ಮೂಲಗಳಿಂದ ಕಥಾವಸ್ತುಗಳನ್ನು ಆಯ್ದುಕೊಂಡಿರಬಹುದು; ಆದರೆ ರಗಳೆಯ ನೆಯ್ಗೆ ಮತ್ತು ಒತ್ತು ಅವನದ್ದೇ ಆಗಿದೆ. ತಿರಸ್ಕಾರಕ್ಕೆ, ಅವಹೇಳನಕ್ಕೆ  ಗುರಿಯಾಗಿದ್ದ ಮುಗ್ಧರನ್ನು ಶಿಷ್ಟ ಸಾಹಿತ್ಯದಲ್ಲಿ ಮೆರೆಯುವಂತೆ ಮಾಡಿ ಜನಪರತೆಯನ್ನು ಮೆರೆದವನು ಹರಿಹರ. ಶರಣರ ಕುರಿತ ಕತೆಗಳು ಸಮಕಾಲೀನ ವಾಸ್ತವಗಳು. ಜನರ ಬಾಯಲ್ಲಿ ನಲಿದಾಡುತ್ತಿದ್ದುದನ್ನು ಕೇಳಿದ ಅವನು ಅದರೊಂದಿಗೆ ತನ್ನ ಕಾಣ್ಕೆಯನ್ನು ಸೇರಿಸಿ ರಗಳೆಗಳಾಗಿ ಮಾರ್ಪಡಿಸಿದ. ಅದು ಅವನಿಗೆ ಸುಲಭವೂ ಅಗಿತ್ತು, ಆಪ್ಯಾಯಮಾನವೂ ಅಗಿತ್ತು. ಜೊತೆಗೆ ಇಲ್ಲಿನ ಕತೆಗಳು, ಮತ್ತವುಗಳಲ್ಲಿನ ವಸ್ತು ಸಮಕಾಲೀನವಾದವು, ಕನಿಷ್ಠ ಪಕ್ಷ, ತನ್ನ ಕಾವ್ಯನಾಯಕರ ಕಾಲದ ಚಿತ್ರಗಳನ್ನೊಳಗೊಂಡವು. ಹೀಗಾಗಿ ಇವು ಸಮಕಾಲೀನ ಮೌಲ್ಯಸಂಘರ್ಷವನ್ನು ಚಿತ್ರಿಸುತ್ತವೆ. ಒಟ್ಟಾರೆ ವಚನಕಾರರನ್ನೂ ಅವರ ಸಮಾಜೋ ಸಾಂಸ್ಕೃತಿಕ ಚಿಂತನೆಗಳನ್ನೂ ಕಥನ ರೂಪವಾಗಿ ವ್ಯಾಖ್ಯಾನಿಸಿ ಜನಕ್ಕೆ ಕೊಡುವ ಅಗತ್ಯವನ್ನು ಹರಿಹರ ಕವಿಯು ತನ್ನ ರಗಳೆಗಳ ಮೂಲಕ ಪೂರ್ಣಗೊಳಿಸಿದ್ದಾನೆ.

 

 ಪರಾಮರ್ಶನ ಗ್ರಂಥಗಳು

೧. ಹರಿಹರನ ರಗಳೆಗಳು ಸಂ. ಎಂ.ಎಂ, ಕಲಬುರ್ಗಿ

  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ,೧೯೯೯

೨. ಎಂ.ಚಿದಾನಂದ ಮೂರ್ತಿ,  ಬಸವಣ್ಣ: ಕರ್ನಾಟPÀ : ಭಾರತ

   ಚಿದಾನಂದ ಸಮಗ್ರ ಸಂಪುಟ ೫, ಸ್ವಪ್ನ ಬುಕ್‌ ಹೌಸ್‌, ಬೆಂಗಳೂರು, ೨೦೦೩,

೩. ಎಸ್.‌ ವಿದ್ಯಾಶಂಕರ, ವೀರಶೈವ ಸಾಹಿತ್ಯ ಚರಿತ್ರೆ, ಸಂ.,  ಹರಿಹರದೇವ ಯುಗ

  ಪ್ರಿಯದರ್ಶಿನಿ ಪ್ರಕಾಶ, ಬೆಂಗಳೂರು ೨೦೧

೪.ಸಿ.ನಾಗಭೂಷಣ, ೧. ಕೆಂಬಾವಿ ಭೋಗಣ್ಣ ,ಪ್ರಚಾರೋಪನ್ಯಾಸ ಮಾಲೆ

                ಪ್ರಸಾರಾಂಗ,ಗುಲಬರ್ಗಾವಿಶ್ವವಿದ್ಯಾಲಯ, ಗುಲಬರ್ಗಾ1996

                    ೨. ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು           

                  ಕನ್ನಡ ಸಾಹಿತ್ಯಪರಿಷತ್, ಬೆಂಗಳೂರು -2000

               ೩. ವೀರಶೈವ ಸಾಹಿತ್ಯ-ಸಂಸ್ಕೃತಿ: ಕೆಲವು ಒಳನೋಟಗಳು

                 ವಿಜೇತ ಪ್ರಕಾಶನ, ಗದಗ-2008,

೫.ಕೆ.ಪಿ.ಮಹಾದೇವಯ್ಯ:ಹರಿಹರನ ರಗಳೆಗಳ ಸಾಂಸ್ಕೃತಿಕ ಅಧ್ಯಯನ,

               ಅಭಿರುಚಿ ಪ್ರಕಾಶನ, ಮೈಸೂರು, ೧೯೯೯

೬. ಶಿವಶರಣೆಯರ ವಚನ ಸಂಪುಟ (ಸಂ) ವೀರಣ್ಣ ರಾಜೂರ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೯೩

೭. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ: (ಪ್ರ. ಸಂ) ಜಿ.ಎಸ್.‌ ಶಿವರುದ್ರಪ್ಪ

   ಸಂ.೩. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೬

                                                                                                                      

 

  ಹರಿಹರ ಕವಿಯು ಚಿತ್ರಿಸಿರುವ ನೂತನ ಮತ್ತು ಪುರಾತನ  ಶರಣರ                ಸಮಾಜೋ ಸಾಂಸ್ಕೃತಿಕ ಮತ್ತು ವಚನ ಧರ್ಮ ನಿಲುವುಗಳು                                  ...