ಬುಧವಾರ, ಅಕ್ಟೋಬರ್ 22, 2025

                 ಕನ್ನಡದಲ್ಲಿ ಸಾಂಗತ್ಯ  ಛಂದೋ ಸಾಹಿತ್ಯ ಪ್ರಕಾರ : ಹುಟ್ಟು ಬೆಳವಣಿಗೆ ಮತ್ತು ವೈಶಿಷ್ಟ್ಯ

                                                   ಡಾ.ಸಿ.ನಾಗಭೂಷಣ

ಸಾಂಗತ್ಯ ಹೆಸರಿನ ಬಗ್ಗೆ ಚರ್ಚೆ:

  ಚಂಪೂ, ಗದ್ಯ, ರಗಳೆ, ಷಟ್ಪದಿ ಈ ಮೊದಲಾದ ಸಾಹಿತ್ಯ ಪ್ರಭೇದಗಳು ಕನ್ನಡ ಸಾಹಿತ್ಯದಲ್ಲಿ ತಲೆದೋರಿ ತಮ್ಮದೇ ಆದ ಚರಿತ್ರೆಗಳನ್ನು ನಿರ್ಮಿಸಿವೆ. ಇವುಗಳೆಲ್ಲದರ ನಂತರಬಂದ ಸಾಂಗತ್ಯ ಸಾಹಿತ್ಯ ಪ್ರಕಾರವು ಐದು ಶತಮಾನಗಳ ಸುದೀರ್ಘವಾದ  ಇತಿಹಾಸವನ್ನು ಹೊಂದಿದೆ. ಜನಪದರಿಗೆಂದು ನಿರ್ಮಿತವಾದ ಈ ದೇಶೀಯ ಕಾವ್ಯಪ್ರಕಾರ ಸುಮಾರು ಇನ್ನೂರಕ್ಕೂ ಮೇಲ್ಪಟ್ಟ ಕಾವ್ಯ-ಪುರಾಣಗಳನ್ನು ಹೊಂದಿರುವುದಲ್ಲದೆ ಇಂದಿನ ಇಪ್ಪತ್ತನೆಯ ಶತಮಾನದಲ್ಲಿಯೂ ಒಗ್ಗಿ ಬಂದಿರುದನ್ನು ಗಮನಿಸಬಹುದಾಗಿದೆ. ಆದರೂ ಈ ಸಾಹಿತ್ಯ ಪ್ರಕಾರಕ್ಕೆ ಲಭ್ಯವಾಗಿರುವ  ಪಟ್ಟವೆಂದರೆ  ಅಜ್ಞಾತವಾಸ  ಎಂದೇ  ಹೇಳಬಹುದು.  ಅಲ್ಲೊಂದು ಇಲ್ಲೊಂದು ಕಾವ್ಯಸಂಪಾದನೆ ಅಥವಾ ಲೇಖನ, ಪ್ರಸಿದ್ಧವೂ, ಜನಪ್ರಿಯವೂ ಆದ ಕೆಲವು ಕಾವ್ಯಗಳ ಪ್ರಕಟಣೆ ಮತ್ತು ಅವುಗಳ ಬಗೆಗಿನ ವಿಮರ್ಶಾತ್ಮಕ ಲೇಖನಗಳು ಇವಿಷ್ಟನ್ನೇ ಬಿಟ್ಟರೆ ಸಾಂಗತ್ಯ ಕವಿಗಳು ಮತ್ತು  ಕೃತಿಗಳು ಎಲೆಮರೆಕಾಯಿಯಂತೆ ಅಡಗಿ ಕುಳಿತಿವೆ.

      ಸಾಂಗತ್ಯ ಪ್ರಕಾರ ರೂಪ ಪಡೆದುಕೊಂಡ ಕಾಲವನ್ನು ಏಳು-ಎಂಟನೆಯ ಶತಮಾನ   ಮತ್ತು ಹನ್ನೆರಡನೆಯ ಶತಮಾನವೆಂದು ನಿರ್ಧರಿಸಲು ಅನೇಕ ಪ್ರಯತ್ನಗಳನ್ನು  ಮಾಡಿದ್ದಾರೆ. ಆ ಪ್ರಯತ್ನಗಳನ್ನು ಸಾರವಾಗಿ ಅನುಕ್ರಮದಲ್ಲಿ ಶಾಸನಸ್ಥ ಪದ್ಯಗಳು,ಸಿರಿಭೂವಲಯಗ್ರಂಥಮತ್ತು ಬಸವಣ್ಣನವರ ಕಾಲಜ್ಞಾನ ವಚನಗಳು ಇವುಗಳಲ್ಲಿ ಸಾಂಗತ್ಯದ ಮೂಲರೂಪವನ್ನು ಗುರುತಿಸಲು ಕೆಲವರು ಹೊರಟಿದ್ದಾರೆ. ಆದರೆ ಶಾಸನಸ್ಥ ಪದ್ಯಗಳಲ್ಲಿ ಸಾಂಗತ್ಯದ ನಿರ್ದಿಷ್ಟ ರೂಪವಿಲ್ಲ. ಸಿರಿಭೂವಲಯ ಮತ್ತು ಕಾಲಜ್ಞಾನವಚನ  ಇವುಗಳ    ಕಾಲದಬಗ್ಗೆ  ಬಲವಾದ  ಸಂದೇಹಗಳಿವೆ. ಆದ್ದರಿಂದ ಉಪಲಬ್ಧವಿರುವ ಸಾಂಗತ್ಯ ಕೃತಿಗಳಿಂದ ಇದರ ಹುಟ್ಟು ಲಕ್ಷಣ ಗಳನ್ನು ಅಧಿಕೃತವಾಗಿ ನಿರೂಪಿಸಬೇಕಾಗಿದೆ.

    ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾಲದಿಂದ ಕಾಲಕ್ಕೆ  ವೈವಿಧ್ಯಮಯ ಪ್ರಕಾರಗಳು  ಹುಟ್ಟಿವೆ; ವಿಕಾಸ ಹೊಂದಿವೆ; ಹೊಂದುತ್ತಲಿವೆ. ಚಂಪೂ, ಷಟ್ಪದಿ, ರಗಳೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ  ತನ್ನದೇ ಆದ ಅನನ್ಯತೆಯನ್ನು ಪಡೆದ ಸಾಹಿತ್ಯವೆಂದರೆ ಅದು  ಸಾಂಗತ್ಯದ ಪ್ರಕಾರವಾಗಿದೆ. ಸಾಂಗತ್ಯದಲ್ಲಿ ವಿಪುಲವಾದ ಸಾಹಿತ್ಯ ರಚನೆಯಾಗಿದ್ದು, ರತ್ನಾಕರ ವರ್ಣಿ, ನಂಜುಂಡ ಕವಿ, ಸಂಚಿ ಹೊನ್ನಮ್ಮನಂತವರು ಸಾಂಗತ್ಯ ಸಾಹಿತ್ಯದ ಶ್ರೀಮಂತಿಕೆಯನ್ನು ಸೊಗಸುಗಾರಿಕೆಯನ್ನು ಹೆಚ್ಚಿಸಿದ್ದಾರೆ. ಇಂತಹ ಕೆಲವು ಸಾಂಗತ್ಯ ಕವಿಗಳು, ಕೃತಿಗಳ  ಕುರಿತು ಅಧ್ಯಯನಗಳು, ವಿಮರ್ಶೆ, ಪ್ರಕಟನೆಗಳು ನಡೆದಿದೆ. ಆದರೂ, ಸಾಹಿತ್ಯ, ಇತಿಹಾಸ, ಸಂಸ್ಕೃತಿ ಮೊದಲಾದ ನೆಲೆಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಬಹುದಾದ ಅನೇಕ ಕೃತಿಗಳು ಇನ್ನೂ  ಹಾಗಿಯೇ   ಉಳಿದಿವೆ. ಜೊತೆಗೆ ಸ್ಥೂಲರೂಪದ, ವ್ಯಾಪಕವಾದ  ಅಧ್ಯಯನಗಳು ನಡೆದಿದ್ದರೂ, ಸಮೃದ್ಧವಾದ ಸಾಂಗತ್ಯ ಕೃತಿಗಳ ಬಗೆಗೆ ಸೂಕ್ಷ್ಮತರದಲ್ಲಿ ನಡೆದಿಲ್ಲ.

     ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೇಗೋ ಹಾಗೆಯೇ ಕನ್ನಡ ಛಂದಸ್ಸಿನ ಚರಿತ್ರೆಯಲ್ಲಿಯೂ ಒಂದು ಪ್ರಕಾರಕ್ಕೂ ಇನ್ನೊಂದು ಪ್ರಕಾರಕ್ಕೂ ಪರಸ್ಪರ ಸಂಬಂಧವೂ, ಆಯಾ ಪ್ರಕಾರದ ಬೆಳವಣಿಗೆಯೂ ಕಂಡುಬರುವುದು ಸಹಜ. ಈ ತತ್ವವನ್ನು ಅವಲಂಬಿಸಿಯೇ ಬಿ.ಎಂ. ಶ್ರೀಕಂಠಯ್ಯನವರು ಕನ್ನಡ ಛಂದಸ್ಸಿನ ಚರಿತ್ರೆಯನ್ನು ಬಹಳ ಹಿಂದೆಯೇ ಬರೆದರು. ಕನ್ನಡ ಕಾವ್ಯಗಳಲ್ಲಿ ಕಂಡುಬರುವ ಸಂಸ್ಕೃತ ಛಂದೋಬಂಧಗಳನ್ನೂ ದೇಶ್ಯಛಂದಸ್ಸುಗಳನ್ನೂ ಬಹಳ ಪರಿಶ್ರಮದಿಂದ ವಿಶ್ಲೇಷಿಸಿ, ತಮ್ಮ ಅಭಿಪ್ರಾಯಗಳನ್ನು ನಿದರ್ಶನಗಳೊಂದಿಗೆ ಅವರು ಸಮರ್ಥಿಸಿದರು. ಆವರೆಗೆ ಅಸ್ಪಷ್ಟವಾಗಿದ್ದ ತ್ರಿಮೂರ್ತಿಗಣಗಳ ಸ್ವರೂಪವನ್ನು ತಮಿಳು ಛಂದಸ್ಸಿನ ಬೆಳಕಿನಲ್ಲಿ ಪರಿಶೀಲಿಸಿ, ಅವುಗಳ ನೈಜ ಸ್ವರೂಪವನ್ನು ಅವರು ಸ್ಪಷ್ಟವಾಗಿ ಪರಿಚಯ ಮಾಡಿಕೊಟ್ಟರು. ಇದರ ಜೊತೆಗೆ ನಾಗವರ್ಮನು ‘ಛಂದೋಂಬುಧಿ’ಯಲ್ಲಿ ಹೇಳಿರುವ ಕರ್ಣಾಟಕ ವಿಷಯ ಜಾತಿ ವೃತ್ತಗಳನ್ನು ಪರಸ್ಪರವಾಗಿ ತೂಗಿ ನೋಡಿ, ಅವುಗಳಲ್ಲಿ ವಿಧಿತವಾಗುವ ವಿಕಾಸಕ್ರಮವನ್ನು ಬಹುಮಟ್ಟಿಗೆ ಯಶಸ್ವಿಯಾಗಿ ಅವರು ಪ್ರತಿಪಾದಿಸಿದರು. ಇವರಲ್ಲದೆ ಇತರ ಕೆಲವರು ವಿದ್ವಾಂಸರು ಈ ವಿಷಯದಲ್ಲಿ ಬಗೆ ಬಗೆಯಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದುಂಟು.

     ಸಾಂಗತ್ಯವೆಂಬ ಹೆಸರಿನ ಬಗ್ಗೆ ವಿದ್ವಾಂಸರು ಸಾಕಷ್ಟು ಜಿಜ್ಞಾಸೆ ಮಾಡಿದ್ದಾರೆ. ಸಾಂಗತ್ಯ ಇದರ ಸಾಮಾನ್ಯ ಅರ್ಥ ಹೊಂದಿಕೆ,ಮೇಳಹೊಂದಿಕೊಳ್ಳುವಿಕೆ ಕೂಟ, ಸಮಿತಿ ಎಂದು ಇದರ ವಿಶೇಷಾರ್ಥ. ಸಂಗೀತ, ಸಾಂಗತ್ಯ, ಸಂಗತಿ, ಪಾಡುಗಬ್ಬ, ವರ್ಣಕಕಾವ್ಯ, ಪದ ಕವಿತೆ, ಪದಸ್ತುತಿ ಎಂದು ವಿವಿಧ ಹೆಸರುಗಳಿಂದ ಕರೆದಿದ್ದಾರೆ. 

     ವಿದ್ವಾಂಸರು ಸಾಂಗತ್ಯವೆಂಬ ಹೆಸರಿನ ಔಚಿತ್ಯದ ಬಗ್ಗೆ ವಿಶೇಷವಾಗಿ ಚರ್ಚೆಮಾಡಿರುತ್ತಾರೆ.  ಅವರಲ್ಲಿ  ಕೆಲವು  ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಈ ರೀತಿಯಾಗಿ  ಸೂಚಿಸಿರುವುದನ್ನು ಕಾಣಬಹುದಾಗಿದೆ.  ಸಾಂಗತ್ಯಕ್ಕೆ ದೊರೆತ ಹೆಸರಿನಷ್ಟು ಒಪ್ಪುವ ಹೆಸರು ಕನ್ನಡ ಮಟ್ಟುಗಳಲ್ಲಿ ಇನ್ನಾವುದಕ್ಕೂ ದೊರೆತಿಲ್ಲ. ಸಾಂಗತ್ಯವು ಹಾಡುಗಬ್ಬಕ್ಕೆ ತುಂಬಾ ಅಳವಡುವ ಮಟ್ಟು. ಅದರ ರಾಗರಂಜನೆ ಅಪ್ರತಿಮವಾದುದು. ಈ ಮೊದಲೆ ತೋರಿಸಿದಂತೆ ಸ್ವರಸಾಂಗತ್ಯವು ಅದರ ಮುಖ್ಯ ಲಕ್ಷಣ ಸಂಗತಿ ಎಂದರೆ ಮೇಳದೊಡನೆ ಸಾಗುವ ಗತಿ ಎಂಬ ದೃಷ್ಟಿಯಿಂದಲೂ-ಸಾಂಗತ್ಯಕ್ಕೆ ಸಮಂಜಸವಾದ ಅರ್ಥವನ್ನು ಮಾಡಬಹುದು. ಅದು ವಾದ್ಯ ವಿಶೇಷದೊಡನೆ ಸಾಗುವ ಸಂಗತಿ ಇದರಿಂದ ಸಾಂಗತ್ಯ ಆಗಿರುವ ಸಾಧ್ಯತೆಯಿದೆ. 

     `ಸಂಗತಿ' ಎಂದರೆ ಕಥಾವಸ್ತು ಎಂಬುದಾಗಿ ತಿಳಿದರೆ, ಕಥಾವಸ್ತುವಿಗೆ ಅನುಗುಣವಾದ ಛಂದಸ್ಸು ಸಾಂಗತ್ಯ  ಎಂದಾಗಬಹುದು. ಸಂಗೀತದ  ಪರಿಭಾಷೆಯಾಗಿ  ಸಂಗತಿ ಹಾಕುವುದು ಎಂಬ ಮತ್ತೊಂದು  ಇರುವಂತಿದೆ. ಇದರಿಂದ ಸಾಂಗತ್ಯ  ಬಂದಿರಬಹುದೇನೋ? ಸಾಂಗತ್ಯವನ್ನು ವರ್ಣಚರಿತೆಯರಾಗ ಎಂದು ಕೂಡ ಆಗಾಗ ಹೇಳಿರುವುದುಂಟು. 

         ಒಟ್ಟಿನಲ್ಲಿ `ಸಾಂಗತ್ಯ' ಎಂದರೆ ಸ್ವರದೊಡನೆ ಕೂಡಿಸಾಗುವ ಗತಿ. ವಾದ್ಯ ಮೇಳದೊಡನೆ ಬೆರೆತು ನಡೆಯುವ ಹಾಡು, ಸಂಗೀತಕ್ಕೆ ಹೊಂದಿಕೆಯಾದ ಕಾವ್ಯ, ಒಂದು ಘಟನೆ ಅಥವಾ ವಿವರಿಸುವ ಕೃತಿ ಎಂದು ಹೇಳಬಹುದು. "ಆಶಯ, ಅಭಿವ್ಯಕ್ತಿ, ಭಾವರೂಪ, ವಾದ್ಯ ಗೀತೆಗಳ ಸಹಿತತ್ವ', ಸಾಮರಸ್ಯ ಎಂಬ ಅರ್ಥ ಸಾಂಗತ್ಯ ಪದದಿಂದ  ಸೂಚಿತವಾಗುತ್ತದೆ. ತಾತ್ಪೂರ್ತಿಕವಾಗಿ   ಹೊಂದಿಕೊಂಡು ಸಾಗುವ ಮಟ್ಟು ಎಂಬ  ಅರ್ಥದಲ್ಲಿ ಸಾಂಗತ್ಯ ಪದ ರೂಢವಾಗಿದೆಯೆಂದು ಭಾವಿಸಬಹುದಾಗಿದೆ".

ಸಾಂಗತ್ಯದ ಛಂದೋಮೂಲ: 

     ಸಾಂಗತ್ಯ ಯಾವುದರಿಂದ ಹುಟ್ಟಿದಂತಹ ಮಟ್ಟು ಇದಕ್ಕೆ ಮೂಲ ಯಾವುದು?ಎಂಬು

ದರ ಬಗೆಗೆ ಕನ್ನಡ ಲಾಕ್ಷಣೀಕರು ಹಾಗೂ  ವಿದ್ವಾಂಸರಲ್ಲಿ  ವಿವಿಧ  ಅಭಿಪ್ರಾಯಗಳು ಹುಟ್ಟಿಕೊಂಡಿವೆ. ಅವುಗಳನ್ನು ಈ ರೀತಿಯಾಗಿ ಸಂಗ್ರಹಿಸಬಹುದು;

  ೦೧)ತಿರುಮಲಾರ್ಯ:

                  ಸಾಂಗತ್ಯದ ಮುಕ್ಕಲ್ವಾಡು(ತ್ರಿಪದಿ)ಗಳು ಚೌಕಂಗೊಂಡವು

  ೦೨)ಕನ್ನಡ ಕೈಪಿಡಿಕಾರರು:

        ಗೀತಿಕೆಯ ಎರಡು ಪಾದಗಳ ಅಥವಾ ಪಿರಿಯಕ್ಕರದ ಎರಡು   ಪಾದಗಳ ರೂಪಾಂತರವೇ ಸಾಂಗತ್ಯವಾಗಿ ತೋರುವುದು

  ೦೩) ಸಾಂಗತ್ಯವು  ತ್ರಿಪದಿಯಿಂದ ಹೊರಟ ಮಟ್ಟು ತ್ರಿಪದಿಯ ಎರಡನೆಯ ಚರಣವನ್ನು ಆವೃತ್ತಿ ಮಾಡಿ ಹಾಡುವ ರೂಢಿ ಸಾಂಗತ್ಯದ ರೂಪ ನಿರ್ಮಾಣಕ್ಕೆ ದಾರಿಯನ್ನು ಮಾಡಿತು. ತ್ರಿಪದಿಯ ಜೀವನಾಡಿಯೇ ಸಾಂಗತ್ಯದ ಜೀವನಾಡಿಯಾಗಿ ನಡೆಯಿತು. 

  ೦೪) ಪಾಂಡುರಂಗ ದೇಸಾಯಿ:                

              ಹಾಡಿನ ತ್ರಿಪದಿಗೂ ಸಾಂಗತ್ಯಕ್ಕೂ ಸಂಬಂಧವಿದೆ. ತ್ರಿಪದಿಯನ್ನು ಹೇಳುವ ಒಂದು ವಿಶಿಷ್ಟ  ರೂಪದಲ್ಲಿಯೇ  ಸಾಂಗತ್ಯ ಉಂಟಾಗಿರಬೇಕು. ಸಾಂಗತ್ಯದ  ಪ್ರಾಚೀನತೆಯಾದರೂ ತ್ರಿಪದಿಯಷ್ಟು ಹಿಂದಕ್ಕೆ ಹೋಗುತ್ತದೆ.   

    ) ಕೆ.ಜಿ.ಕುಂದಣಗಾರ :

           `ಸಾಂಗತ್ಯವು ಪ್ರಾಕೃತದ  ಘತ್ತಾ ಎಂಬ ಷಟ್ಪದಿಯಿಂದ  ಉಗಮವಾಗಿದೆ.'' ತ್ರಿಪದಿಯು ಮೂಲ ಷಟ್ಪದಿಯಾದಾಗ ಮಾತ್ರಾ ಗಣಗಳಲ್ಲಿ ಕುಸುಮ ಷಟ್ಪದಿಯಾಗುವುದು. ಅದಕ್ಕೆ  ಸಂಗೀತದ  ಸಂಗತಿಯು  ಲಭಿಸಿದರೆ  ಅದು  ಸಾಂಗತ್ಯವಾಗುವುದು .'         

) ಎಸ್.ವಿ. ಪರಮೇಶ್ವರ ಭಟ್ :     

     ` ಏಳೆಯಿಂದ ತ್ರಿಪದಿ. ತ್ರಿಪದಿಯಿಂದ ಸಾಂಗತ್ಯ ಹೀಗೆ ಮೂಡಿರ ಬಹುದು .'

    ವಾಸ್ತವವಾಗಿ ಇತರ ಯಾವುದೇ ಕನ್ನಡ ಛಂದಸ್ಸಿನ ಮೂಲದಿಂದ ಸಾಂಗತ್ಯದ  ರೂಪಸಿದ್ಧಿಯನ್ನು ತೃಪ್ತಿಕರವಾಗಿ ಸಾಧಿಸುವುದು ಕಷ್ಟವೆಂದೇ ಹೇಳಬಹುದು. ಬೇರೆಬೇರೆ ಛಂದಸ್ಸಿನ  ಗಣಗಳನ್ನು ಬದಲಿಸುವುದೊಬಿಡುವುದೋ ಅಥವಾ  ಅದಲು ಬದಲು  ಮಾಡುವುದರ ಮೂಲಕ  ಸಾಂಗತ್ಯದ  ಆಕೃತಿಯನ್ನು  ಕೂಡಿಸುವುದು ಚಾತುರ್ಯದ ಲಕ್ಷಣವಾಗಬಹುದಲ್ಲದೆ  ಎಷ್ಟರ ಮಟ್ಟಿಗೆ ನೈಜ  ಪ್ರಮಾಣವಾಗಬಹುದೆಂದು  ತಿಳಿಯದು. ಅಂಶಗಣದ ಜಾಯಮಾನವನ್ನನುಸರಿಸಿ  ಸಾಂಗತ್ಯವು ಸ್ವತಂತ್ರವಾಗಿ ಉಗಮ ಹೊಂದಿದ ಒಂದು ಮಟ್ಟೆಂದು ತೋರುತ್ತದೆ.'                                                       

   `ನಮಗೆ ತೋರುವ ಮಟ್ಟಿಗೆ ಏಳೆಯಿಂದ ತ್ರಿಪದಿ, ತ್ರಿಪದಿಯಿಂದ ಸಾಂಗತ್ಯ ಇದು ಸಹಜ ವಿಕಾಸ ಕ್ರಮವಾಗಿದೆ. ತ್ರಿಪದಿಯಲ್ಲಿ  ಎಂದಿನಿಂದಲೂ ಹಾಡುವಾಗ ಇರುವ ಪುನರಾವರ್ತನೆ ಸಾಂಗತ್ಯ ರಚನೆಗೆ ಸುಲಭವಾಗಿ ದಾರಿ ಮಾಡಿಕೊಟ್ಟಿರಬೇಕು.'                                     

     ಮೇಲಿನ ಎಲ್ಲಾ ಅಭಿಪ್ರಾಯಗಳನ್ನು ಅವಲೋಕಿಸಿದಾಗ ಒಂದರ ಮೂಲವನ್ನು ಮತ್ತೊಂದರ ಹುಡುಕುವುದನ್ನು ಒಂದನ್ನೊಯ್ದು ಮತ್ತೊಂದು ಮಾಡುವದು ಸರಿಯಲ್ಲ. ಎಲ್ಲಮಟ್ಟುಗಳ ಒಂದೇ ಮೂಲದಿಂದ ಹುಟ್ಟಿ ತಮ್ಮತಮ್ಮ ರೂಪವನ್ನು ರೂಪಿಸಿಕೊಂಡಿವೆ. ಸ್ವತಂತ್ರವಾಗಿಬೆಳೆದುಬಂದಿವೆ. ಅದರಂತೆಸಾಂಗತ್ಯವು ಕೂಡಬೇರಾವುದರಿಂದ ಪ್ರೇರಣೆಹೊಂದಿ, ಬೇರಾವುದರ ಪ್ರಭಾವಕ್ಕೊಳಗಾಗಿ ಪ್ರಕಟವಾಗದೆ ಕನ್ನಡ ಛಂದಸ್ಸಿನ ವಿಶಿಷ್ಟ ಲಕ್ಷಣಳಾದ ಗತಿ, ಪ್ರಾಸಗಳನ್ನು ಮೈಗೂಡಿಸಿ ಕೊಂಡು ಸ್ವತಂತ್ರವಾಗಿ ಹುಟ್ಟಿದ ಅಚ್ಛಗನ್ನಡದ ಛಂದೋಬಂಧವೆಂದು ಹೇಳಬಹುದು.                                                        

   ಸಾಂಗತ್ಯವು ಪುರಾತನ ಛಂದೋಗ್ರಂಥ, ಕಾವ್ಯ-ಶಾಸನಗಳಲ್ಲಿ ಸ್ಥಾನ ಪಡೆಯದಿದ್ದರೂ ಉಳಿದೆಲ್ಲಾ ಮಟ್ಟುಗಳಿಗಿಂತ ಹೆಚ್ಚು ಜನಪ್ರಿಯತೆನ್ನು ಗಳಿಸಿಕೊಂಡಿತು. ಉಳಿದ ಬಂಧಗಳಲ್ಲಿಯೂ ಕೆಲವು ಬಿಡಿಬಿಡಿಯಾಗಿ ಕಾವ್ಯ-ಶಾಸನಗಳಲ್ಲಿಯೂಇನ್ನೂ ಕೆಲವು ಬರಿಯ ಛಂದೋಗ್ರಂಥಗಳಲ್ಲಿಯೂ  ಮಾತ್ರ  ಕಾಣಿಸಿಕೊಂಡಿದ್ದರೆ, ಇದು  ಬಿಡಿಯಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಒಮ್ಮೆಲೇ ಇಡಿಯಾಗಿ ಪ್ರಕಟವಾಗಿ  ವಿಪುಲ  ಸಂಖ್ಯೆಯ ಸಾಹಿತ್ಯ ಕೃತಿಗಳ ಮಾಧ್ಯಮವಾಯಿತು. ಕನ್ನಡದಲ್ಲಿ ಸಾಂಗತ್ಯದ ಉಗಮದ ಬಗ್ಗೆ ಅಧಿಕೃತ ಉಲ್ಲೇಖವಿಲ್ಲದಿದ್ದರೂ ಕೂಡ ಕನ್ನಡ ಸಾಹಿತ್ಯದಲ್ಲಿ ಅದು ಪಡೆದುಕೊಂಡ ಸ್ಥಾನ ಅತ್ಯಂತ ಗುಣಾತ್ಮಕವಾದದ್ದು.

   ಬಿ.ಎಂ. ಶ್ರೀಕಂಠಯ್ಯನವರು: ‘‘ಶ್ರೀ’ ಅವರು ಸಾಂಗತ್ಯದ ಸ್ವರೂಪವನ್ನು ಕುರಿತು ಪ್ರಸ್ತಾಪಿಸುವಲ್ಲಿ ‘ಗೀತಿಕೆಯ ಎರಡು ಪಾದಗಳ ಅಥವಾ ಪಿರಿಯಕ್ಕರದ ಎರಡು ಪಾದಗಳ ರೂಪಾಂತರವೇ ಸಾಂಗತ್ಯವಾಗಿ ತೋರುವುದು’ (ಕನ್ನಡ ಕೈಪಿಡಿ, ಪುಟ ೧೩೨, ೧೯೫೫, ಬಿ.ಎಂ.ಶ್ರೀ) ಎಂದು ಪೀಠಿಕೆ ಹಾಕಿ, ಆ ಬಳಿಕ ಅದರ ಸ್ವರೂಪವನ್ನೂ ಪ್ರಭೇದಗಳನ್ನೂ ವಿಚಾರ ಮಾಡಿರುವರು. ಅವರ ಈ ವಿವರಣೆಯ ಮೇರೆಗೆ ಸಾಂಗತ್ಯವು ಬೇರೊಂದು ಛಂದಸ್ಸಿನ ರೂಪಾಂತರವೇ ವಿನಾ, ಅದು ಸ್ವತಂತ್ರವಾದ ಅಸ್ತಿತ್ವವುಳ್ಳ ಒಂದು ಪ್ರಕಾರವಾಗಿ ಪರಿಗಣಿತವಾಗಿಲ್ಲವೆಂದು ವಿಧಿತವಾಗುತ್ತದೆ. ‘ಶ್ರೀ’ ಅವರು ಈ ರೀತಿ ಭಾವಿಸಲು ಕಾರಣಗಳಿಲ್ಲದೆ ಇಲ್ಲ. ಏಕೆಂದರೆ, ನಾಗವರ್ಮನು ಅಂಶಗಣ ಘಟಿತವಾದ ರಚನೆಗಳನ್ನು ಉಲ್ಲೇಖಿಸುವಾಗ ‘ಮದನವತಿ ಅಕ್ಕರ ಚೌಪದಿ ಗೀತಿಕೆ ಏಳೆ ತ್ರಿಪದಿ ಉತ್ಸಾಹ ಷಟ್ಪದಿ ಅಕ್ಕರಿಕೆ ಛಂದೋವತಂಸ’ ಎಂಬ ಹತ್ತು ಬಗೆಗಳನ್ನು ಹೇಳುತ್ತಾನೆಯೇ ಹೊರತು, ಸಾಂಗತ್ಯದ ಸೊಲ್ಲನ್ನೇ ಎತ್ತುವುದಿಲ್ಲ. ಅಕ್ಕರದಲ್ಲಿ ಹಲವಾರು ಉಪಭೇದಗಳಿದ್ದರೂ, ಅವುಗಳಿಗೆ ಮುಖ್ಯವಾಗಿ ಒಂದು ಹೆಸರನ್ನು ಹೇಳಿ ಸುಮ್ಮನಾಗಿದ್ದಾನೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ, ಷಟ್ಪದಿ ಕಾವ್ಯಗಳಂತೆಯೇ ಸಾಂಗತ್ಯ ಕೃತಿಗಳೂ ವಿಪುಲವಾಗಿ ಕಂಡುಬರುತ್ತವೆ. ಇಂಥ ಛಂದಃಪ್ರಕಾರ ಹೇಗೆ ಉದಯವಾಗಿರಬಹುದೆಂಬ ಪ್ರಶ್ನೆ ಕುತೂಹಲಕಾರಿಯಾದುದೇ ಸರಿ. ಆದ್ದರಿಂದ, ನೈಸರ್ಗಿಕ ನಿಯಮಾನುಸಾರವಾಗಿ ಈ ಛಂದೋಭೇದವು ನಾಗವರ್ಮನು ಉಲ್ಲೇಖಿಸಿರುವ ಹತ್ತು ಪ್ರಕಾರಗಳಲ್ಲಿ ಅಲ್ಪ ಸ್ವಲ್ಪ ಮಾರ್ಪಾಟ್ಟು ಮೂಡಿ ಬಂದಿರಬಹುದೆಂದು ಭಾವಿಸಿರುವುದು ಯುಕ್ತವಾದುದು. ಪ್ರಕೃತದಲ್ಲಿ ಈ ರೂಪಾಂತರದ ಸ್ವರೂಪವೇನೆಂಬುದನ್ನು ಮೊದಲು ವಿಶ್ಲೇಷಿಸುವುದು ಅಗತ್ಯ. (ಕನ್ನಡ ಛಂದಸ್ಸಿನ ಚರಿತ್ರೆ, ೨೭೬, ಅಧ್ಯಾಯ ೭, ಸಾಂಗತ್ಯ: ಉಗಮ, ಹೆಸರು, ಲಕ್ಷಣ, ಇತಿಹಾಸ, ಡಾ ಟಿ ವಿ ವೆಂಕಟಾಚಲ ಶಾಸ್ತ್ರಿ ). ‘ಸಾಂಗತ್ಯ ತನ್ನ ಪೂರ್ವಾಶ್ರಮವನ್ನು ಅಜ್ಞಾತವಾಗಿರಿಸುವ ವಿರಕ್ತ ಸಂಪ್ರದಾಯ ಶರಣನಂತೆ, ಮೊದಲು ಜನಪದ ಸಾಹಿತ್ಯ ಗರ್ಭದಲ್ಲಿ ಹುಟ್ಟಿ, ತನ್ನ ಮೂಲ ನಾಮವನ್ನು ಹುಟ್ಟಿನ ಗುಟ್ಟನ್ನು ಮರೆಮಾಚಿ ನಡೆದು ಬಂದು, ೧೨ನೆಯ ಶತಮಾನಕ್ಕೆ ಶರಣರಿಂದ ದೀಕ್ಷೆ ಪಡೆದು ಪ್ರಕಟವಾಯಿತು. ಆಗ ಬಹು ಜನಪ್ರಿಯವಾಗಿದ್ದ ವಚನ, ರಗಳೆ, ಷಟ್ಪದಿ, ತ್ರಿಪದಿಗಳಿಂದ ಸ್ಪೂರ್ತಿ ಪಡೆದು, ಅವುಗಳಲಿದ್ದ ಸತ್ವಗುಣ ವಿಶೇಷಗಳನ್ನು ಹೀರಿಕೊಂಡು ಪುಷ್ಟಿಹೊಂದಿ ಮುಂದೆ ಸಮಗ್ರ ಕಾವ್ಯಕ್ಕೆ ವಾಹಕವಾಗಿ ಬೆಳೆಯಿತು’(ಕನ್ನಡ ಸಾಂಗತ್ಯ ಸಾಹಿತ್ಯ, ಡಾ. ವೀರಣ್ಣ ರಾಜೂರ, ಪುಟ೧೪೭, ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೮, ೧೯೮೫)

      ಸಾಂಗತ್ಯ ಅಂಶಗಣಗಳಿಂದ ಸಂಘಟಿತವಾದುದು. ಇದರಲ್ಲಿ ಒಟ್ಟು ಹದಿನಾಲ್ಕು ಗಣಗಳಿರುತ್ತವೆ. ಅದರ ಒಂದು ಮತ್ತು ಮೂರನೆಯ ಪಾದಗಳು ಒಂದು ಸಮನಾಗಿಯೂ ಎರಡು ಮತ್ತು ನಾಲ್ಕನೆಯ ಪಾದಗಳು ಮತ್ತೊಂದು ಸಮನಾಗಿಯೂ ಇರುತ್ತವೆ. ಒಂದು ಮತ್ತು ಮೂರನೆಯ ಪಾದಗಳಲ್ಲಿ ನಾಲ್ಕು ನಾಲ್ಕು ವಿಷ್ಣುಗಣಗಳೂ ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ಎರಡೆರಡು ವಿಷ್ಣುಗಣಗಳೂ ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ  ಎರಡೆರಡು ವಿಷ್ಣುಗಣಗಳು ಕೊನೆಯಲ್ಲಿ ಒಂದು ಬ್ರಹ್ಮಗಣವೂ ಇರುತ್ತವೆ. ಮಾದರಿಗಾಗಿ ಒಂದು ಪದ್ಯವನ್ನು ನೋಡಬಹುದು.

      ವಿ     ವಿ     ವಿ     ವಿ

ಪರಮ ಪ | ರಂಜ್ಯೋತಿ | ಕೋಟಿ ಚಂ | ದ್ರಾದಿತ್ಯ

      ವಿ     ವಿ     ಬ್ರ

ಕಿರಣ ಸು | ಜ್ಞಾನ ಪ್ರ | ಕಾಶ

      ವಿ     ವಿ     ವಿ     ವಿ

ಸುರರ ಮ | ಕುಟಮಣಿ | ರಂಜಿತ | ಚರಣಾಬ್ಜ

      ವಿ     ವಿ     ಬ್ರ

ಶರಣಾಗು | ಪ್ರಥಮ ಜಿ | ನೇಶ (ಭರತೇಶವೈಭವ)

ಸಾಂಗತ್ಯ ಹಾಡುಗಬ್ಬದ ಜಾತಿಗೆ ಸೇರಿದುದು. ಆದುದರಿಂದ ಆರ್ಥ ಸ್ವಾರಸ್ಯಕ್ಕಾಗಿ, ಹಾಡಿನ ಸೌಲಭ್ಯಕ್ಕಾಗಿ ವಿಷ್ಣುಗಣದ ಸ್ಥಾನದಲ್ಲಿ ಬ್ರಹ್ಮವೋ ರುದ್ರವೋ ಬ್ರಹ್ಮಗಣದ ಸ್ಥಾನದಲ್ಲಿ ವಿಷ್ಣುವೋ ರುದ್ರವೋ ಪರ್ಯಾಯವಾಗಿ ಬರುವುದುಂಟು.    

      ಪ್ರಾಚೀನ ಕನ್ನಡ ಛಂದಃಕಾರರು ಸಾಂಗತ್ಯದ ಲಕ್ಷಣವನ್ನು ಹೇಳಿಲ್ಲ. ನಾಗವರ್ಮನ ಛಂದೋಬುಧಿಯಲ್ಲೂ ಜಯಕೀರ್ತಿಯ ಛಂದೋನುಶಾಸನದಲ್ಲೂ ಈಚಿನ ಇತರ ಕನ್ನಡ ಛಂದೋಗ್ರಂಥಗಳಲ್ಲಿಯೂ ಈಶ್ವರ ಕವಿಯ ಕವಿಜಿಹ್ವಾಬಂಧನದಲ್ಲೂ ನಂದಿಯ ನಂದಿಛಂದಸ್ಸಿನಲ್ಲೂ ಸಾಂಗತ್ಯದ ಉಲ್ಲೇಖವಿಲ್ಲ. ಹೀಗಾಗಿ ಸಾಂಗತ್ಯದ ಉಗಮ ಎಂದಾಯಿತು. ಎಂದು ನಿರ್ಧರಿಸುವುದು ಶಕ್ಯವಿಲ್ಲವಾಗಿದೆ. ಕನ್ನಡ ಸಾಹಿತ್ಯದ ಪ್ರಥಮ ಸಾಂಗತ್ಯಕೃತಿಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿರುವ ದೇಪರಾಜನ ಸೊಬಗಿನ ಸೋನೆ ಒಂದು ವಿಶಿಷ್ಟ ರೀತಿಯದು. ಈ ಕೃತಿಯಲ್ಲಿನ ಪ್ರತಿಯೊಂದು ಪದ್ಯದಲ್ಲಿಯೂ ಬ್ರಹ್ಮಗಣಗಳಿಗೆ ಪರ್ಯಾಯವಾಗಿ ವಿಷ್ಣುಗಣಗಳನ್ನು ಬಳಸಲಾಗಿದೆ. ಕೆಲವು ವಿದ್ವಾಂಸರು ಇದನ್ನು ಬ್ರಹ್ಮಗಣ ಮತ್ತು ಒಂದು ಅಂಶ ಎಂದು ಅಭಿಪ್ರಾಯ ಪಡುತ್ತಾರೆ.   

    ಸಾಂಗತ್ಯ ಶುದ್ಧ ದೇಶೀಯ ಮಟ್ಟು. ಅಂಶಗಣ ಘಟಿತವಾದ ಸಾಂಗತ್ಯಕಿಂತಲೂ ಪ್ರಾಚೀನವಾದ ತ್ರಿಪದಿ ಕಾಲಕ್ರಮದಲ್ಲಿ ಮಾತ್ರಗಣಕ್ಕೆ ತಿರುಗಿದ್ದರೂ ಸಾಂಗತ್ಯ ಇಂದಿಗೂ ಅಂಶಗಣ ಘಟಿತವಾಗಿಯೇ ಉಳಿದುಕೊಂಡು ಬಂದಿರುವುದರಿಂದ ಇದಕ್ಕೆ ಪ್ರತ್ಯೇಕ ಅಸ್ತಿತ್ವವಿದ್ದಿತೆಂದು ಭಾವಿಸುವುದಕ್ಕೆ ಅವಕಾಶವುಂಟು.

ಸಾಂಗತ್ಯದ ಹೆಸರು:

  ‘ಸಾಂಗತ್ಯದ ಹೆಸರಾಗಲಿ ಲಕ್ಷ್ಯ-ಲಕ್ಷಣವಾಗಲಿ ನಮ್ಮ ಯಾವ ಪೂರ್ವ ಛಂದೋಗ್ರಂಥಗಳಲ್ಲಿ ಉಲ್ಲೇಖಿತವಾಗಿಲ್ಲ. ಕನ್ನಡದ ಕೆಲವು ಮಟ್ಟುಗಳ ನಾಮ ನಿರ್ದೇಶನ ಮಾಡಿದ ಶ್ರೀ ವಿಜಯನ ಕವಿರಾಜಮಾರ್ಗ, ಕರ್ಣಾಟ ವಿಷಯಜಾತಿಗಳ ಲಕ್ಷ್ಯ-ಲಕ್ಷಣಗಳನ್ನು ಹೇಳಿದ  ನಾಗವರ್ಮನ ಛಂದೋಂಬುಧಿ, ಜಯಕೀರ್ತಿಯ ಛಂದೋನುಶಾಸನ, ಕನ್ನಡ ಛಂದಃಪ್ರಕಾರಗಳ ವಿಷಯವನ್ನು ಸ್ವಲ್ಪ ಮಟ್ಟಿಗೆ ವಿವರಿಸುವ ಶಾರ್ಙ್ಗದೇವನ ಸಂಗೀತ ರತ್ನಾಕರ, ಸೋಮೇಶನ ಮಾನಸೋಲ್ಲಾಸ, ಈಶ್ವರಕವಿಯ ಕವಿಜಿಹ್ವಾಬಂಧನ, ವೀರಭದ್ರನ ನಂದಿಛಂದಸ್ಸು, ಗುಣಚಂದ್ರನ ಛಂದಸ್ಸಾರ, ಚಂದ್ರರಾಜನ ಮದನತಿಲಕ ಮೊದಲಾದ ಕೃತಿಗಳಲ್ಲಿ ಸಾಂಗತ್ಯದ ಬಗೆಗೆ ಶಬ್ದವಿಲ್ಲ. ‘ಕನ್ನಡ ಕೈಪಿಡಿ ಮೊದಲ ಸಂಪುಟವೇ ನಮಗೆ ಮೊಟ್ಟಮೊದಲು ಇದರ ಲಕ್ಷ್ಯ ಲಕ್ಷಣ ಇತ್ಯಾದಿಯನ್ನು ಒದಗಿಸುವ ಕೃತಿ’ (ಕನ್ನಡ ಸಾಂಗತ್ಯ ಸಾಹಿತ್ಯ, ಡಾ. ವೀರಣ್ಣ ರಾಜೂರ, ಪುಟ೮೮, ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೮, ೧೯೮೫)

‘ ‘ಸಾಂಗತ್ಯ’ ಎಂಬ ಹೆಸರು ಈ ಪದ್ಯಜಾತಿಗೆ ಎಷ್ಟು ಹಳೆಯದು ಎಂಬುದನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಸು. ೧೪೮೫ರಲ್ಲಿದ್ದ ತೆರಕಣಾಂಬಿ ಬೊಮ್ಮರಸನ ‘ಜೀವಂಧರ ಸಾಂಗತ್ಯ’ದಲ್ಲಿ ಕೆಲವು ಸಂಧಿಗಳ ಕೊನೆಯ ಪದ್ಯದಲ್ಲಿ ‘ಜೀವಂಧರ ಸಾಂಗತ್ಯ’ವೆಂದು ಉಕ್ತವಾಗಿದೆ. ಇದಕ್ಕೆ ಸ್ವಲ್ಪ ಮೊದಲಿದ್ದ, ಮೊದಲ ಸಾಂಗತ್ಯ ಗ್ರಂಥವೆನಿಸಿರುವ  ಕಲ್ಯಾಣಕೀರ್ತಿಯ (೧೪೩೯) ‘ಕಾಮನ ಕಥೆ’ಎಂಬ ಸಾಂಗತ್ಯ ಗ್ರಂಥದ ಮೊದಲಲ್ಲಿಯೂ ಪದ್ಯವೊಂದರ ಆದಿಗೆ ‘ಸಾಂಗತ್ಯ’ವೆಂದು ಗುರುತು ಮಾಡಿದೆ: ಅಲ್ಲಿ ‘ಪದ’ ಎಂಬ ಮಾತು ಬಂದಿದೆ. ‘ಸಂಗತಿ’ಯಿಂದ ‘ಸಾಂಗತ್ಯ’ ಹುಟ್ಟಿರಬಹುದು. ‘ವರ್ಣ’ ಎಂಬ ಪದದಂತೆ ‘ಸಂಗತಿ’ ಎಂಬುದು ಕೂಡ ಸಂಗೀತದಲ್ಲಿ ಹಾಡಿಕೆಯ ರೀತಿಯನ್ನು ಹೇಳುವ ಒಂದು ಪರಿಭಾಷೆಯ ಪದ. ಸಾಂಗತ್ಯವು ಹಾಡಿನ ಮಟ್ಟು, ಪಾಡುಗಬ್ಬ, ಪದಕವಿತೆ ಇಂಥ ಮಾತುಗಳಿಂದಲೂ ಗೇಯವಾದ್ದೆಂದು ತಿಳಿಯಬಹುದು.” (ಕನ್ನಡ ಛಂದಸ್ಸು, ಡಾ ಟಿ.ವಿ. ವೆಂಕಟಾಚಲ ಶಾಸ್ತ್ರೀ, ಪು೮೯, ಡಿ.ವಿ.ಕೆ.ಮೂರ್ತಿ ಪ್ರಕಾಶನ, ಮೈಸೂರು-೪, ೪ನೇ ಮುದ್ರಣ ೨೦೦೦)

   ‘ಸಾಂಗತ್ಯ’ವೆಂಬ ಹೆಸರಿನ ಬಗ್ಗೆಯೂ ವಿದ್ವಾಂಸರು ಸಾಕಷ್ಟು ಜಿಜ್ಞಾಸೆ ಮಾಡಿರುತ್ತಾರೆ. ದ್ವಿಪದಿ, ತ್ರಿಪದಿ, ಚೌಪದಿ, ಷಟ್ಟದಿ ಮೊದಲಾದುವುಗಳಂತೆ ಹೆಸರು ಹೇಳಿದ ಕೂಡಲೆ ಇದರ ರೂಪ ಸಹಜವಾಗಿ ವಿಧಿತವಾಗುವುದಿಲ್ಲ. ಆದರೆ ಈ ನಿಯಮ ಸಾರ್ವತ್ರಿಕವಾದುದೇನೂ ಅಲ್ಲ. ಸಂಸ್ಕೃತದ ಮಾರ್ಗ ಪದ್ಧತಿಯನ್ನು ಅನುಕರಿಸಿ ಸೃಷ್ಟಿಯಾಗಿರುವ ವೃತ್ತಗಳ ಹೆಸರಾಗಲಿ, ಪ್ರಾಕೃತದ ಪ್ರಭಾವದಿಂದ ಕನ್ನಡದಲ್ಲಿ ಬಳಕೆಗೆ ಬಂದಿರುವ ಕಂದ ಮತ್ತು ವಿವಿಧ ರಗಳೆಗಳ ಹೆಸರಾಗಲಿ, ಕಡೆಗೆ ಅಂಶಗಣದಲ್ಲಿಯೇ ರಚಿತವಾಗಿರುವ ಇತರ ಬಂಧಗಳ ಹೆಸರಾಗಲಿ ಆಯಾ ಬಂಧದ ಸ್ವರೂಪವನ್ನು ಸ್ವಾಭಾವಿಕವಾಗಿ ವ್ಯಕ್ತಪಡಿಸುವುದಿಲ್ಲ. ಆದರೂ, ವಿದ್ವಾಂಸರು ಸಾಂಗತ್ಯವೆಂಬ ಹೆಸರಿನ ಔಚಿತ್ಯದ ಬಗ್ಗೆ ವಿಶೇಷವಾಗಿ ಚರ್ಚೆಮಾಡಿರುತ್ತಾರೆ. ಅವರಲ್ಲಿ ಕೆಲವು ಪ್ರಮುಖರು ಸೂಚಿಸಿರುವ ಅಭಿಪ್ರಾಯಗಳನ್ನು ಮೊದಲು ಸ್ವಲ್ಪ ಪರಿಶೀಲಿಸಬಹುದು.

,ಡಿ.ಎಸ್. ಕರ್ಕಿಯವರು: “ಸಾಂಗತ್ಯ’ಕ್ಕೆ ದೊರೆತ ಹೆಸರಿನಷ್ಟು ಒಪ್ಪುವ ಹೆಸರು ಕನ್ನಡ ಮಟ್ಟುಗಳಲ್ಲಿ ಇನ್ನಾವುದಕ್ಕೂ ದೊರೆತಿಲ್ಲ. ಸಾಂಗತ್ಯವು ಹಾಡುಗಬ್ಬಕ್ಕೆ ತುಂಬಾ ಅಳವಡುವ ಮಟ್ಟು. ಅದರ ರಾಗರಂಜನೆ ಅಪ್ರತಿಮವಾದುದು. ಈ ಮೊದಲೆ ತೋರಿಸಿದಂತೆ ಸ್ವರಸಾಂಗತ್ಯವು ಅದರ ಮುಖ್ಯ ಲಕ್ಷಣ.....’ಸಂಗತಿ’ ಎಂದರೆ ‘ಮೇಳದೊಡನೆ ಸಾಗುವ ಗತಿ’-ಎಂಬ ದೃಷ್ಟಿಯಿಂದಲೂ ಸಾಂಗತ್ಯಕ್ಕೆ ಸಮಂಜಸವಾದ ಅರ್ಥವನ್ನು ಮಾಡಬಹುದು. ಅದು ವಾದ್ಯ ವಿಶೇಷದೊಡನೆ ಸಾಗುವ ಹಾಡಾಗಿರುವುದರಿಂದಲೇ ಸಾಂಗತ್ಯವೆಂಬ ಹೆಸರನ್ನು ಪಡೆದಿರಬೇಕು......ಹೀಗೆ ಸಾಂಗತ್ಯವು ಹಾಡುಗಬ್ಬ ಮಾತ್ರವಲ್ಲ; ಬಾಜನೆಗಬ್ಬವೂ ಹೌದು. ವಾದ್ಯ ವಿಶೇಷಗಳ ಹಿನ್ನೆಲೆಯಲ್ಲಿ ನಡೆಯುವ ಯಕ್ಷಗಾನದಲ್ಲಿ ಸಾಂಗತ್ಯಕ್ಕೆ ದೊರೆತ ಸ್ಥಾನ ಗಮನಾರ್ಹವಾಗಿದೆ. ‘ಸಂಗತಿ’ ಎಂಬುದು ಸಂಗೀತಕ್ಕೆ ಸಂಬಂಧಿಸಿದ ಒಂದು ಅಂಶ.  ಸಂಗತಿ ಹಾಕು ಎಂಬ ಪ್ರಯೋಗವನ್ನು ಸಂಗೀತದ ಸಂಬಂಧದಲ್ಲಿ ನಾವು ಕೇಳುವುದುಂಟು. ಹೀಗೆ ಸಂಗೀತಕ್ಕೂ ಸಾಂಗತ್ಯಕ್ಕೂ ತಾಂತ್ರಿಕ ಸಂಬಂಧವೂ ಉಂಟು. ‘ಹಾಡುಗಬ್ಬ’ ಎಂಬ ವರ್ಣನೆಯು ಷಟ್ಪದೀ ಕಾವ್ಯಗಳಿಗಿಂತ ಸಾಂಗತ್ಯ ಕಾವ್ಯಗಳಿಗೆ ಹೆಚ್ಚಾಗಿ ಒಪ್ಪುತ್ತದೆ......ಇನ್ನೊಂದು ದೃಷ್ಟಿಯಿಂದಲೂ ಸಾಂಗತ್ಯದ ಅರ್ಥ ಹೊಳೆಯುವಂತಿದೆ. ಸಾಂಗತ್ಯದ ಮೂಲ ಶಬ್ದ ಸಂಗತಿ. ಒಂದು ಸಂಗತಿಯ ನಿರೂಪಣೆಗೆ ‘ಸಾಂಗತ್ಯ’ವೆನ್ನುವುದುಂಟು. ಹಾಡಿನ ರೂಪದಲ್ಲಿ ಒಂದು ಸಂಗತಿಯನ್ನು ನಿರೂಪಿಸುವುದೇ ಸಾಂಗತ್ಯ” (ಡಿ. ಎಸ್. ಕರ್ಕಿ, ಕನ್ನಡ ಛಂದೋವಿಕಾಸ, ಧಾರವಾಡ, ೧೯೫೬,ಪುಟ ೨೭)

      ‘ಸಾಂಗತ್ಯವು ತ್ರಿಪದಿಯಿಂದ ಹೊರಟ ಮಟ್ಟು. ತ್ರಿಪದಿಯ ಎರಡನೆಯ ಚರಣವನ್ನು ಆವೃತ್ತಿ ಮಾಡಿ ಹಾಡುವ ರೂಢಿಯು ಸಾಂಗತ್ಯದ ರೂಪನಿರ್ಮಾಣಕ್ಕೆ ದಾರಿಯನ್ನು ಮಾಡಿತು. ತ್ರಿಪದಿಯ ಜೀವನಾಡಿಯೇ ಸಾಂಗತ್ಯದ ಜೀವನಾಡಿಯಾಗಿ ನುಡಿಯಿತು’(ಕನ್ನಡ ಛಂದೋವಿಕಾಸ, ಡಾ. ಡಿ.ಎಸ್. ಕರ್ಕಿ ಪುಟ,೨೧೩...)

    ೨) ರಂ. ಶ್ರೀ. ಮುಗಳಿಯವರು: ರಂ. ಶ್ರೀ. ಮುಗಳಿ ಅವರು “ಸಾಂಗತ್ಯವೆಂಬ ಹೆಸರು ಹೇಗೆ ಬಂತು? ಅದರ ಅರ್ಥವೇನು? ಎಂಬ ಕುತೂಹಲ ಸ್ವಾಭಾವಿಕ. ಸಂಗತಿ ಇದರಿಂದ ಸಾಂಗತ್ಯ ಎರಡೂ ಕನ್ನಡದಲ್ಲಿ ಈ ವಿಶೇಷಾರ್ಥದಲ್ಲಿ ರ‍್ಯಾಯಪದಗಳಾಗಿವೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಡಿ.ಎಸ್. ಕರ್ಕಿಯವರ ಮೇಲಿನ ವಿವರಣೆಯನ್ನು ಭಾಗಶಃ ಉದಾಹರಿಸಿ, ಕಾವ್ಯನಾಮಗಳಲ್ಲಿ ಸಂಗತಿ, ಸಾಂಗತ್ಯ ಬಂದಿರುವುದು ಅವುಗಳಲ್ಲಿ ಛಂದೋರೂಪವನ್ನು ಸೂಚಿಸುವುದಕ್ಕಾಗಿ ಅಲ್ಲದೆ, ಸಂಗತಿ ಅಥವಾ ಆಖ್ಯಾನದ ಸಂಬಂಧವಿದ್ದಂತಿಲ್ಲ. ದ್ವಾದಶಾನುಪ್ರೇಕ್ಷೆ, ಪರಮಾನುಭವ ಬೋಧೆ, ಹದಿಬದೆಯ ಧರ್ಮ ಈ ಸಾಂಗತ್ಯ ಕೃತಿಗಳಲ್ಲಿ ಸಂಗತಿ ಪ್ರಾಧಾನ್ಯವೆಲ್ಲಿದೆ? ಆದ್ದರಿಂದ ತಾತ್ಪೂರ್ತಿಕವಾಗಿ ‘ಹೊಂದಿಕೊಳ್ಳುವ ಹಾಡಿನ ಮಟ್ಟು’ ಎಂಬ ಅರ್ಥದಲ್ಲಿ ‘ಸಾಂಗತ್ಯ’ ಪದವು ರೂಢವಾಗಿರಬೇಕೆಂದು ಭಾವಿಸಬಹುದು” ಎಂದು ತಮ್ಮ ಆಕ್ಷೇಪವನ್ನು ಎತ್ತಿರುತ್ತಾರೆ. ( ಪುಟ ೨೪೧, ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು, ರಂ. ಶ್ರೀ. ಮುಗುಳಿ, ೧೯೭೩)

೩) ಟಿ.ವಿ. ವೆಂಕಟಚಲಶಾಸ್ತ್ರಿಗಳು: ‘ಸಂಗತಿ’ ಎಂದರೆ ಕಥಾವಸ್ತು ಎಂಬುದಾಗಿ ತಿಳಿದರೆ, ಕಥಾವಸ್ತುವಿಗೆ ಅನುಗುಣವಾದ ಛಂದಸ್ಸು ‘ಸಾಂಗತ್ಯ’ ಎಂದಾಗಬಹುದು. ಸಂಗೀತದ ಪರಿಭಾಷೆಯಾಗಿ ‘ಸಂಗತಿ ಹಾಕುವುದು’ ಎಂಬ ಮಾತೊಂದು ಇರುವಂತಿದೆ; ಇದರಿಂದ ‘ಸಾಂಗತ್ಯ’ ಬಂದಿರಬಹುದೇನೋ? ಸಾಂಗತ್ಯವನ್ನು ‘ವರ್ಣ’ ‘ಚರಿತೆಯ ರಾಗ’ ಎಂದು ಕೂಡ ಆಗಾಗ ಹೇಳಿರುವುದುಂಟು” ಎಂದು ಒಮ್ಮೆ ಭಾವಿಸಿದ್ದ ಟಿ.ವಿ. ವೆಂಕಟಾಚಲಶಾಸ್ತ್ರಿಗಳು, ಈಚಿನ ‘ಕನ್ನಡ ಛಂದಃಸ್ವರೂಪ’ ಎಂಬ ಗ್ರಂಥದಲ್ಲಿ ಮತ್ತೊಮ್ಮೆ ಈ ಬಗ್ಗೆ ಪರಿಶೀಲಿಸಿ ಕೆಲವು ಹೊಸ ಅಂಶಗಳ ಕಡೆಗೆ ತಮ್ಮ ದೃಷ್ಟಿಯನ್ನು ಹರಿಸಿರುತ್ತಾರೆ; ‘ಸಂಗತಿ’ಯಿಂದ ‘ಸಾಂಗತ್ಯ’ ಹುಟ್ಟಿರುವುದು ಅಸಂಭವವೇನಲ್ಲ...... ‘ವರ್ಣ’ ಎಂಬ ಸಂಗೀತ ಪರಿಭಾಷೆಯನ್ನು ‘ಸೊಬಗಿನ ಸೋನೆ’ ಮಟ್ಟಿನ ವಿಷಯದಲ್ಲಿ ಬಳಸಿಕೊಂಡಂತೆ ಅಲ್ಲಿಯ ‘ಸಂಗತಿ’ಯನ್ನು ಸಾಂಗತ್ಯ ಛಂದಸ್ಸಿನ ವಿಷಯದಲ್ಲಿ ಬಳಸಿಕೊಂಡಿರುವುದು ಸಂಭವನೀಯವೇ ಆಗಿದೆ........ ‘ಸಂಗತ’ ಪದವು ‘ಸಾಂಗತ್ಯ’ದ ಮೂಲವಾಗಿದ್ದರೆ, ಆ ಪದದ ‘ಸಮಂಜಸವಾಗಿ ಹೊಂದಿಕೊಂಡಿರುವ ಉಕ್ತಿ’ ಎಂಬರ್ಥವನ್ನು ‘ಸಾಂಗತ್ಯ’ಕ್ಕೆ ಹೇಳಬಹುದು. ಕೆಲವರು ಹಾಡಿನ ರೂಪದಲ್ಲಿ ಒಂದು ಸಂಗತಿಯನ್ನು ಎಂದರೆ ಘಟನೆ, ಸಂದರ್ಭ ಅಥವಾ ವಿಷಯವನ್ನು ನಿರೂಪಿಸುವುದೇ ಸಾಂಗತ್ಯ ಎನ್ನುತ್ತಾರೆ..... ಆದರೆ, ಸಂಗತಿ ಎಂಬ ಪದಕ್ಕೆ ಘಟನೆ, ಸಂದರ್ಭ ಎಂಬ ರೀತಿಯ ಅರ್ಥಗಳು ಹಿಂದೆ ಇದ್ದಂತೆ ತೋರುವುದಿಲ್ಲ; ಸಂಸ್ಕೃತ ನಿಘಂಟುಗಳು ಈ ಅರ್ಥಗಳನ್ನು ಕೊಡುವುದಿಲ್ಲ. (ಪುಟ ೫೭೨, ಕನ್ನಡ ಛಂದಃಸ್ವರೂಪ, ಟಿ. ವಿ. ವೆಂಕಟಾಚಲ ಶಾಸ್ತ್ರೀ, ಮೈಸೂರು, ೧೯೭೮,)

ಅಂಶ ಗಣದ ಜಾಯಮಾನವನ್ನನುಸರಿಸಿ ಸಾಂಗತ್ಯವು ಸ್ವತಂತ್ರವಾಗಿ ಉಗಮಹೊಂದಿದ ಒಂದು ಮಟ್ಟೆಂದು ತೋರುತ್ತದೆ.’(ಕನ್ನಡ ಛಂದಸ್ಸು, ಪುಟ ೭೨)

೪) ಸೇಡಿಯಾಪು ಕೃಷ್ಣಭಟ್ಟರು: ಸೇಡಿಯಾಪು ಕೃಷ್ಣಭಟ್ಟರು ‘ಸಾಂಗತ್ಯ’ ಎಂಬ ಶಬ್ದಕ್ಕೆ ‘ಒಡಗೂಡಿರುವಿಕೆ’ ಎಂದು ಅರ್ಥ. ಈ ಛಂದೋಬಂಧಕ್ಕೆ ‘ಸಂಗತಿ’ ಎಂಬ ಹೆಸರೂ ಕಂಡುಬರುತ್ತದೆ. ಈ ಎರಡು ಹೆಸರುಗಳ ಅಭಿಪ್ರಾಯವೂ ಒಂದೇ ಆಗಿದೆ. ಎರಡು ಏಳೆಗಳ ‘ಒಕ್ಕೂಟ’ ಎಂಬ ಕಾರಣದಿಂದಲೇ ಇದಕ್ಕೆ ಈ ಹೆಸರುಗಳು ಬಂದಿರಬೇಕೆಂದು ನನಗೆ ತೋರುತ್ತದೆ.....ಸಾಂಗತ್ಯ ಬಂಧಕ್ಕೆ ‘ಚರಿತೆ’ ಎಂಬ ಇನ್ನೊಂದು ಹೆಸರೂ ಪ್ರಸಿದ್ಧವಾಗಿದೆ. ಈ ಹೆಸರು ನನ್ನ ಅಭಿಪ್ರಾಯಕ್ಕೆ ಬಹಳ ಪೋಷಕವಾಗಿದೆ. ಚರಿತೆ ಎಂದರೆ ಕಥೆ ಅಥವಾ ಕಥನಕಾವ್ಯ ಎಂದರ್ಥ. ಆದುದರಿಂದ ‘ಚರಿತೆ’ಯಾಗಿ ಮೆರೆಯುವುದಕ್ಕಾಗಿ, ಆವರೆಗೆ ಒಂಟಿಯಾಗಿದ್ದ ಏಳೆಗಳು ‘ಸಾಂಗತ್ಯ’ವನ್ನು ಪಡೆದವೆಂದು ಹೇಳಿದರೆ ತಪ್ಪಾಗಲಾರದೆನ್ನಬಹುದು, ಮತ್ತು ತ್ರಿಮೂರ್ತಿ ಬಂಧಗಳೊಳಗೆ ನಮಗಿಂದು ಲಭ್ಯವಾಗುವ ದೊಡ್ಡ ಮೊತ್ತ ಸಾಂಗತ್ಯದ್ದೇ ಆಗಿರುವುದಕ್ಕೆ, ಹಿಂದಿನ ಕಾಲದಲ್ಲಿ ಏಳೆ ಅತ್ಯಂತ ಜನಪ್ರಿಯವಾದ ಹಾಡಾಗಿದ್ದುದೇ ಕಾರಣವೆಂದೂ ಹೇಳಬಹುದು”

(ಪುಟ ೨೧, ಕನ್ನಡ ಗೀತಿಕೆಯ ಲಕ್ಷಣ ಮತ್ತು ಧಾಟಿ, ಸೇಡಿಯಾಪು ಕೃಷ್ಣ ಭಟ್ಟ, ಬೆಂಗಳೂರು, ೧೯೭೭) ಎನ್ನುವರು.

     ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭವನ್ನು ಗಮನಿಸಿದಾಗ ಚಂಪೂ, ಷಟ್ಪದಿ ಮೊದಲಾದ ಛಂದಸ್ಸಿನ ಪ್ರಬೇಧಗಳು ತಮ್ಮದೇ ಆದ ಕೊಡುಗೆಯನ್ನು ನೀಡಿವೆ; ನೀಡುತ್ತಾ ಬಂದಿವೆ. ಇವುಗಳ ನಂತರ ಬಂದ ಸಾಂಗತ್ಯ ಪ್ರಬೇಧವೂ ಕೂಡ ಸುಮಾರು ಐದು ಶತಮಾನಗಳಿಗೂ ಮಿಗಿಲಾದ ಸುದೀರ್ಘ ಇತಿಹಾಸವನ್ನು ಹೊಂದಿವೆ. ದೇಸಿ ಕಾವ್ಯ ಪ್ರಕಾರವೆನಿಸಿದ ಸಾಂಗತ್ಯದಲ್ಲಿ ಇನ್ನೂರಕ್ಕೂ ಹೆಚ್ಚಿನ ಕೃತಿಗಳು ಲಭ್ಯವಿದೆ. ಇಪ್ಪತ್ತೊಂದನೆಯ ಶತಮಾನಕ್ಕೂ ವಿಸ್ತರಣೆಯಾಗಿರುವ ಸಾಂಗತ್ಯ ಕೃತಿಗಳ ಬಗ್ಗೆ ಅಲ್ಲೊಂದು ಇಲ್ಲೊಂದು ಚರ್ಚೆ ನಡೆದಿರುವುದು ಬಿಟ್ಟರೆ ಹೆಚ್ಚಿನ ವಿಶೇಷ  ಸ್ಥಾನಮಾನ ಬೆಲೆಕಟ್ಟುವ ಕೆಲಸ ವಿಪುಲ ಸಾಹಿತ್ಯಕ್ಕೆ ತಕ್ಕಂತೆ ನಡೆದಿಲ್ಲವೆನಿಸುತ್ತದೆ.

  ‘ಸಾಂಗತ್ಯ ಜನಪದ ಸಾಹಿತ್ಯದಲ್ಲಿ ಮೊದಲಿನಿಂದಲೂ ಗುಪ್ತಗಾಮಿನಿಯಾಗಿ ನಡೆದು ಬಂದು ೧೨ನೇ ಶತಮಾನಕ್ಕೆ ಸುಳುಹುದೋರಿದೆ’. (ಡಾ. ವೀರಣ್ಣ ರಾಜೂರ. ಕನ್ನಡ ಸಾಂಗತ್ಯ ಸಾಹಿತ್ಯ .ಪು ೮೨೭.)

ಸಾಂಗತ್ಯದಲ್ಲಿ ಅನೇಕ ಜೈನ, ವೀರಶೈವ, ಬ್ರಾಹ್ಮಣ(ವೈದಿಕ) ಗ್ರಂಥಗಳು ನಮಗೆ ಲಭ್ಯವಿದ್ದು, ಹಾಡುಗಬ್ಬ ಸಾಂಗತ್ಯದ ರಚನೆ ಸುಮಾರು ೧೩ನೇ ಶತಮಾನದಲ್ಲಿ ಆರಂಭಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ (ಕನ್ನಡ ಕವಿ ಚರಿತೆ-೧, ಪುಟ೩೫೭).  ಹಾಗಿಯೇ ಕ್ರಿ.ಶ. ಸು. ೧೪೧೦ರಲ್ಲಿ ದೇಪರಾಜನು ಬರೆದ ‘ಸೊಬಗಿನ ಸೋನೆ’ ಕೃತಿಯನ್ನೇ ಸಾಂಗತ್ಯ ಕೃತಿಗಳಲ್ಲಿ ಮೊದಲನೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕ್ರಿ.ಶ. ೧೪೩೯ರ ‘ಕಲ್ಯಾಣ ಕೀರ್ತಿ’ಯನ್ನು ಸಾಂಗತ್ಯ ಸಾಹಿತ್ಯದ ಮೊದಲ ಕವಿಯೆಂದೂ, ‘ಕಾಮನ ಕಥೆ’ ಸಾಂಗತ್ಯ ಸಾಹಿತ್ಯದ ಮೊದಲ ಕೃತಿಯೆಂದೂ ತಿಳಿಯಲು ಅವಕಾಶವಿದೆ’(ಆರ್. ಎನ್. ವಿಜಯ ಲಕ್ಷ್ಮಿ, ಕನ್ನಡ ಸಾಹಿತ್ಯ ಪ್ರಕಾರ ಒಂದು ಸಂಕ್ಷಿಪ್ತ ಸಮೀಕ್ಷೆ-ಪುಟ ೪) ಸೊಬಗಿನಸೋನೆ ಛಂದವು ಆದ್ಯಂತವಾಗಿ ವಿಷ್ಣು ಗಣಗಳಿಂದಲೇ ಘಟಿತವಾದುದಾಗಿದೆ.

ಸಾಂಗತ್ಯ’ಕ್ಕೆ ದೊರೆತ ಹೆಸರುಕನ್ನಡದ ಮಟ್ಟಿಗೆ ಇನ್ನಾವುದಕ್ಕೂ ದೊರೆತಿಲ್ಲ. ಸಾಂಗತ್ಯವು ಹಾಡುಗಬ್ಬಕ್ಕೆ ತುಂಬಾ ಆಳವಡುವ ಅದರ ರಾಗ ಸಂಯೋಜನೆ ಅಪ್ರತಿಮವಾದುದು, ಸ್ವರ ಸಾಂಗತ್ಯವೇ ಅದರ ಮುಖ್ಯ ಲಕ್ಷಣ. ಸಾಂಗತ್ಯವು ಮಧುರ ಸ್ವರಗಳ ಸಮ್ಮಿಲನದಿಂದ ಹೊಮ್ಮಿದೆ.

ಸಂಗತಿ’ಎಂದರೆ ‘ಮೇಳದೊಡನೆ ಸಾಗುವ ಗತಿ’ ಎಂಬ ದೃಷ್ಟಿಯಿಂದ ಸಾಂಗತ್ಯಕ್ಕೆ ಸಮಂಜಸವಾದ ಅರ್ಥವನ್ನು ಮಾಡಬಹುದು. (ಕನ್ನಡ ಛಂದೋ ವಿಕಾಸ, ಪುಟ.೨೦೨., ಡಾ ಡಿ ಎಸ್ ಕರ್ಕಿ, ಭಾರತ ಪ್ರಕಾಶನ. ಧಾರವಾಡ. ೧೭ನೇ ಮುದ್ರಣ, ೨೦೧೩-೨೦೧೪).

   ಸಾಂಗತ್ಯ ಉಳಿದ ಪ್ರಕಾರಗಳಿಗಿಂತ ತಡವಾಗಿ  ಸಾಹಿತ್ಯ ರಂಗವನ್ನು ಪ್ರವೇಶಿಸಿದರೂ ಬಹುಬೇಗ  ಜನಪ್ರಿಯತೆಯನ್ನು  ಪಡೆದು ಅಸಂಖ್ಯಾತ ಕೃತಿಗಳಿಗೆ ಮಾಧ್ಯಮವಾಗಿ ಕನ್ನಡದ ಯಾವುದೇ ಪ್ರಕಾರದ ಕೃತಿಸಂಖ್ಯೆಗೆ ಸರಿಮಿಗಿಲಾಗಿ ನಿಲ್ಲುವ ಶಕ್ತಿಯನ್ನು ಗಳಿಸಿಕೊಂಡಿತು. ಇತರೆ ಪ್ರಕಾರಗಳಂತೆ ಇದರಲ್ಲಿಯೂ ಕೆಲವು ಉತ್ತಮ, ಕೆಲವು  ಮಧ್ಯಮ, ಕೆಲವು ತೀರಸಾಮಾನ್ಯ ಕೃತಿಗಳು ರಚನೆಗೊಂಡಿವೆ. ಸಾಂಗತ್ಯ ಅನ್ಯ  ಪ್ರಕಾರಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು, ವೈವಿಧ್ಯತೆಯನ್ನು ಹೊಂದಿದೆ.

       `ಅತ್ಯಂತ ಚಿಕ್ಕ ಪದ್ಯಗಳಾದ ಏಳೆ ತ್ರಿಪದಿಗಳಲ್ಲಿ ದೊಡ್ಡ ಕಾವ್ಯಗಳನ್ನು ಬರೆಯುವುದು ಕಷ್ಟ ಮಾತ್ರವಲ್ಲದೇ  ದೀರ್ಘಕಾಲ ಮಿಡಿಯುವ ಭಾವವನ್ನಾಗಲಿವಿಸ್ತಾರವಾದ ವರ್ಣನೆಯನ್ನಾಗಲಿ ಅದರ ಕಿರಿಕಟ್ಟಿನಲ್ಲಿ ಕೂರಿಸುವುದು ಅಸಾಧ್ಯ' ಎರಡನೆಯ ಸಾಲನ್ನು ಪುನರುಕ್ತಗೊಳಿಸಿಕೊಂಡು ಬರೆದ  ತ್ರಿಪದಿಯ ನಾಲ್ಕುಸಾಲಿನ  ಚತುಷ್ಪದಿಯಾಗುವುದಾದರೂ ಪುನರುಕ್ತದ ಕಾರಣದಿಂದಾಗಿ ಅಲ್ಲಿನ ಭಾವಗಳನ್ನು ಮುಂದುವರೆಸಲಾಗುವುದಿಲ್ಲ. ಅಂಶಗಣದ ಚೌಪದದಲ್ಲಿಯಾದರೂ ಭಾವನಿರೂಪಣೆಯಾಗುವ ಸೌಲಭ್ಯವಿಲ್ಲ. ಅಕ್ಕರಗಳಲ್ಲಿ ದೊಡ್ಡದೂಪ್ರಸಿದ್ಧವಾದುದೂ ಆದ ಪಿರಿಯಕ್ಕರ ಕನ್ನಡ  ಚಂಪೂ  ಕಾವ್ಯಗಳಲ್ಲಿ ವಿಶೇಷವಾಗಿ ಬಳಕೆಹೊಂದಿದೆ. ಸಾಂಗತ್ಯವು ಹಿತಮಿತವಾದ  ಛಂದೋಬಂಧವೆನಿಸಿರುವುದರಿಂದಲೇ  ಸಾಂಗತ್ಯವು ನಿರರ್ಗಳವಾಗಿ ಓದುವುದಕ್ಕೆ ಸಹಕಾರಿಯಾಗಿದೆ. ಸಾಂಗತ್ಯವು ಉಳಿದ ದೇಶೀಛಂದೋಬಂಧಗಳಿಗಿಂತ ಹೆಚ್ಚಿನ ವೈಶಿಷ್ಟ್ಯವನ್ನು, ವೈವಿಧ್ಯವನ್ನು ಹೊಂದಿದೆ.  ಅವುಗಳನ್ನು  ಈ ರೀತಿಯಾಗಿ ಸಂಗ್ರಹಿಸಬಹುದು.

         ಕನ್ನಡದಲ್ಲಿ ಸಾಂಗತ್ಯ ಕೃತಿಗಳು ವಿಪುಲವಾಗಿವೆ. ಸಾಂಗತ್ಯದ ಪ್ರಾಚೀನತೆಯ ಬಗೆಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಸಾಂಗತ್ಯ ಪ್ರಕಾರ ರೂಪ ಪಡೆದುಕೊಂಡ ಕಾಲವನ್ನು ಏಳು-ಎಂಟನೆಯ ಶತಮಾನ   ಮತ್ತು ಹನ್ನೆರಡನೆಯ ಶತಮಾನವೆಂದು ನಿರ್ಧರಿಸಲು ಅನೇಕ ಪ್ರಯತ್ನಗಳನ್ನು  ಮಾಡಿದ್ದಾರೆ. ಆ ಪ್ರಯತ್ನಗಳನ್ನು ಸಾರವಾಗಿ ಅನುಕ್ರಮದಲ್ಲಿ ಶಾಸನಸ್ಥ ಪದ್ಯಗಳು, ಸಿರಿಭೂವಲಯ ಗ್ರಂಥಮತ್ತು ಬಸವಣ್ಣನವರ ಕಾಲಜ್ಞಾನ ವಚನಗಳು ಇವುಗಳಲ್ಲಿ ಸಾಂಗತ್ಯದ ಮೂಲರೂಪವನ್ನು ಗುರುತಿಸಲು ಕೆಲವರು ಹೊರಟಿದ್ದಾರೆ. ಕನ್ನಡ ಸಾಹಿತ್ಯದ ಸಾಂಗತ್ಯಚರಿತ್ರೆಯಲ್ಲಿ ಬಸವೇಶ್ವರ ವಿರಚಿತ ಕಾಲಜ್ಞಾನವೇ ಪ್ರಥಮ ಕೃತಿಯೆಂದು ಹೇಳಿ ಕರ್ಕಿಯವರು ಕವಿಚರಿತ್ರೆಯಿಂದ ಒಂದು ಪದ್ಯವನ್ನು ಉದಾಹರಿಸಿದ್ದಾರೆ.

      ಮಳೆಯಿಲ್ಲೆ ಬೆಳೆಯಿಲ್ಲ ಹೊಳೆಯಿಲ್ಲ ಕೆರೆಯಿಲ್ಲ

            ನೆಳಲಿಲ್ಲ ಉದಕ ಮುನ್ನಿಲ್ಲ

      ಮೊಳೆಯಿಲ್ಲ ಸೂರ್ಯನ ಕಳೆಯಿಲ್ಲ ಗೆಲವಿಲ್ಲ

            ಉಳಿವಿಲ್ಲ ಆ ಪಾಪಿಗಳಿಗೆ                 

ಈ ಪದ್ಯದಲ್ಲಿ ಪ್ರಧಾನವಾಗಿ ಎದ್ದು ಕಾಣುವ ಅಂಶವೆಂದರೆ ಅಂಶಗಣಗಳಿಗೆ ಬದಲಾಗಿ ಮಾತ್ರಾಗಣಗಳು ಬಂದಿರುವುದು. ಪ್ರಥಮ ಸಾಂಗತ್ಯಕೃತಿಯೆಂದು ಭಾವಿಸಲಾಗಿರುವ ಈ ಕಾಲಜ್ಞಾನವಚನ ಬಸವೇಶ್ವರರ ಹೆಸರಿಗೆ ಆರೋಪಿಸಲ್ಪಟ್ಟಿರುವ ಪ್ರಕ್ಷಿಪ್ತ ಕೃತಿಯಾಗಿರಬಹುದು. ಆದರೆ ಶಾಸನಸ್ಥ ಪದ್ಯಗಳಲ್ಲಿ ಸಾಂಗತ್ಯದ ನಿರ್ದಿಷ್ಟ ರೂಪವಿಲ್ಲ. ಸಿರಿಭೂವಲಯ ಮತ್ತು ಕಾಲಜ್ಞಾನವಚನ  ಇವುಗಳ    ಕಾಲದಬಗ್ಗೆ  ಬಲವಾದ  ಸಂದೇಹಗಳಿವೆ. ಆದ್ದರಿಂದ ಉಪಲಬ್ಧವಿರುವ ಸಾಂಗತ್ಯ ಕೃತಿಗಳಿಂದ ಇದರ ಹುಟ್ಟು ಲಕ್ಷಣ ಗಳನ್ನು ಅಧಿಕೃತವಾಗಿ ನಿರೂಪಿಸಬೇಕಾಗಿದೆ.

    ಕರ್ಣಾಟಕ ಕವಿಚರಿತೆಕಾರರು ಕ್ರಿ. ಶ. ೧೨೩೩ರ ಶಿಶುರಾಮಾಯಣನೇ ಪ್ರಥಮ ಸಾಂಗತ್ಯಕಾರನೆಂದು ಹೇಳಿದ್ದಾರೆ. ಆದರೆ ಈತನ ಕಾಲ ಹದಿನೈದನೆಯ ಶತಮಾನದ ಕಡೆಯ ಭಾಗ ಎಂದು ತರುವಾಯದ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದಲ್ಲಿ ಕ್ರಿ. ಶ. ೧೪೧೦ರಲ್ಲಿದ್ದ ದೇವರಾಜನ ಸೊಬಗಿನ ಸೋನೆಯೇ ಪ್ರಥಮ ಸಾಂಗತ್ಯಕೃತಿ. ತರುವಾಯ ಕಾಣಿಸಿಕೊಳ್ಳುವ ಸಾಂಗತ್ಯಕಾರ ಕಾಲದೃಷ್ಟಿಯಿಂದ ಸಂದಿಗ್ಧತೆಗೊಳಗಾಗಿರುವ ಶಿಶುಮಾಯಣ. ಆತನ ಕೃತಿಗಳು-ತ್ರಿಪುರದಹನಸಾಂಗತ್ಯ ಮತ್ತು ಅಂಜನಾಚರಿತ್ರೆ. ಗುಣದ ದೃಷ್ಟಿಯಿಂದಲೂ ಗಾತ್ರದ ದೃಷ್ಟಿಯಿಂದಲೂ ಇವು ಮಿಗಿಲಾಗಿವೆ. ಅಂಜನಾಚರಿತ್ರೆ ಸಾಹಿತ್ಯ ಮತ್ತು ಐತಿಹಾಸಿಕ ದೃಷ್ಟಿಗಳಿಂದ ಉಲ್ಲೇಖಾರ್ಹವಾಗಿದೆ.

    ದೇಪರಾಜಕವಿ ಬರೆದ  ಸೊಬಗಿನ ಸೋನೆ ಕೃತಿಯನ್ನು  ಸಾಂಗತ್ಯಸಾಹಿತ್ಯದ ಮೊದಲ ಕೃತಿಯೆಂದು  ತಿಳಿಯಲಾಗಿತ್ತು. ಆದರೆ  ಕ್ರಿ.ಶ ೧೪೩೯ರ `ಕಲ್ಯಾಣಕೀರ್ತಿ'ಯನ್ನುಸಾಂಗತ್ಯ ಸಾಹಿತ್ಯದ ಮೊದಲ ಕವಿಯೆಂದೂ, ಆತನ ಕಾಮನಕಥೆ  ಸಾಂಗತ್ಯ ಸಾಹಿತ್ಯದ ಮೊದಲಕೃತಿಯೆಂದು ತಿಳಿಯಲು ಅವಕಾಶವಿದೆ. ಸಾಂಗತ್ಯವನ್ನು ಮೊದಲು ಪ್ರಯೋಗಿಸಿದವನು ಕಲ್ಯಾಣ ಕೀರ್ತಿಯೇ ಆದರೂ ಅದನ್ನು ಆ ಹೆಸರಿನಿಂದ ಕರೆದವನು ನೇಮರಸ೧೫. ಆದ್ದರಿಂದ ನಮಗೆ ತಿಳಿದ ಮಟ್ಟಿಗೆ ಕ್ರಿ.ಶ ೧೪೩೯ರ ಕಲ್ಯಾಣಕೀರ್ತಿ ಬಳಸಿದ ಛಂದೋರೂಪಕ್ಕೆ ಸಾಂಗತ್ಯವೆಂಬ  ಹೆಸರು ಬಂದುದು ಕ್ರಿ.ಶ  ೧೪೮೪ರ ನೇಮರಸನಿಂದಲೇ.

 ಸಾಂಗತ್ಯದ ವೈಶಿಷ್ಟ್ಯ

          ಸಾಂಗತ್ಯ ಉಳಿದ ಪ್ರಕಾರಗಳಿಗಿಂತ ತಡವಾಗಿ  ಸಾಹಿತ್ಯ ರಂಗವನ್ನು ಪ್ರವೇಶಿಸಿದರೂ ಬಹುಬೇಗ  ಜನಪ್ರಿಯತೆಯನ್ನು  ಪಡೆದು ಅಸಂಖ್ಯಾತ ಕೃತಿಗಳಿಗೆ ಮಾಧ್ಯಮವಾಗಿ ಕನ್ನಡದ ಯಾವುದೇ ಪ್ರಕಾರದ ಕೃತಿಸಂಖ್ಯೆಗೆ ಸರಿಮಿಗಿಲಾಗಿ ನಿಲ್ಲುವ ಶಕ್ತಿಯನ್ನು ಗಳಿಸಿಕೊಂಡಿತು. ಇತರೆ ಪ್ರಕಾರಗಳಂತೆ ಇದರಲ್ಲಿಯೂ ಕೆಲವು ಉತ್ತಮ, ಕೆಲವು  ಮಧ್ಯಮ, ಕೆಲವು ತೀರಸಾಮಾನ್ಯ ಕೃತಿಗಳು ರಚನೆಗೊಂಡಿವೆ. ಸಾಂಗತ್ಯ ಅನ್ಯ  ಪ್ರಕಾರಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು, ವೈವಿಧ್ಯತೆಯನ್ನು ಹೊಂದಿದೆ.

    ಐತಿಹಾಸಿಕ ದೃಷ್ಟಿಯಿಂದ ಸಾಂಗತ್ಯ ಕೃತಿಗಳ ಬೆಳವಣಿಗೆಯನ್ನು ಗಮನಿಸುವುದಾದರೆ, ಸು. ಹದಿನೈದನೆಯ ಶತಮಾನದಲ್ಲಿ ಮೊದಲಾಗಿರುವ ಈ ರೂಪ ಹದಿನಾರನೆಯ ಶತಮಾನದಲ್ಲಿ ಉತ್ತಮ ಗ್ರಂಥಗಳನ್ನು ನೀಡಿ, ಹದಿನೇಳರಲ್ಲಿ ಸಂಖ್ಯಾಬಲದಿಂದ ಶಿಖರವನ್ನು ಮುಟ್ಟಿ, ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಕ್ರಮ ಕ್ರಮವಾಗಿ ಇಳಿಮುಖವಾಗುತ್ತವೆ.

   ಸಾಂಗತ್ಯದ ರಚನೆಗಳ ಬೆಳವಣಿಗೆಯಲ್ಲಿ ಜೈನರು, ವೀರಶೈವರು ಮತ್ತು ವೈಷ್ಣವರು ಬಹಳ ಶ್ರದ್ಧೆಯಿಂದ ಶ್ರಮಿಸಿರುತ್ತಾರೆ. ಪ್ರೌಢ ಗ್ರಂಥಗಳಲ್ಲಿ ಜೈನರು ಯಾವ ಯಾವ ವಿಷಯಗಳನ್ನು ನಿರೂಪಿಸಿದ್ದರೊ, ಅವುಗಳಲ್ಲಿ ಬಹುಪಾಲನ್ನು ಸರಳವಾಗಿ ನಿರರ್ಗಳವಾದ ಸಾಂಗತ್ಯ ಕೃತಿಗಳಲ್ಲಿಯೂ ಅಡಗಿಸಿ ವಿಸ್ತರಿಸಿರುತ್ತಾರೆ. ಕನ್ನಡ ಸಾಹಿತ್ಯಕ್ಕೇ ವಿಶಿಷ್ಟ ಕೊಡುಗೆಯಂತಿರುವ ರತ್ನಾಕರವರ್ಣಿಯ ‘ಭರತೇಶ ವೈಭವ’ವೆಂಬ ಕೃತಿಯನ್ನು ಸಾಂಗತ್ಯ ಗ್ರಂಥಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ.

   ವೀರಶೈವರ ಸಾಂಗತ್ಯ ಸಾಹಿತ್ಯದಲ್ಲಿ ಆ ಮತದ ಆಚಾರ ವಿಚಾರಗಳನ್ನು ಕುರಿತ ಕೃತಿಗಳು ಮಾತ್ರವಲ್ಲದೆ, ಶಿವಭಕ್ತರ ಮಾಹಾತ್ಮೆಯನ್ನು ಸಾರಿ ಹೇಳುವ ರಚನೆಗಳು ಸಮೃದ್ಧವಾಗಿ ಕಾಣಬರುತ್ತವೆ. ವೈದಿಕರ ಸಾಂಗತ್ಯ ವಾಙ್ಮಯದಲ್ಲಿ ಕನಕದಾಸರಿಗೆ ಮಹತ್ವದ ಸ್ಥಾನ ಸಲ್ಲುತ್ತದೆ.

   ಆಧುನಿಕ ಕವಿಗಳೂ ಸಹ ಕನ್ನಡನುಡಿಗೆ ಸಹಜವಾದ ಅಂಶಗಣಬದ್ಧವಾದ ಸಾಂಗತ್ಯದ ಲಯವನ್ನು ವಿಧವಿಧವಾಗಿ ಬಳಸಿಕೊಂಡಿರುವುದನ್ನು ಕಾಣಬಹುದು. ತೀ.ನಂ. ಶ್ರೀಕಂಠಯ್ಯ (ಒಲುಮೆ), ಎಸ್.ವಿ. ಪರಮೇಶ್ವರ ಭಟ್ಟ (ಇಂದ್ರಚಾಪ), ತೆಕ್ಕುಂಜ ಗೋಪಾಲಕೃಷ್ಟಭಟ್ಟ (ಮಧುರಂಜಿನಿ) ಮುಂತಾದವರು ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಈ ಛಂದಸ್ಸನ್ನು ತಮ್ಮ ಕೃತಿಗಳಲ್ಲಿ ಹೇರಳವಾಗಿ ಬಳಸಿಕೊಂಡಿರುವ ಎಸ್.ವಿ. ಪರಮೇಶ್ವರಭಟ್ಟರು ಸಾಂಗತ್ಯದ ಬಗ್ಗೆ ತಮಗಿರುವ ಒಲವನ್ನು ಕುರಿತು ‘ಇಂದ್ರಚಾಪ’ದ ಅರಿಕೆಯಲ್ಲಿ ಹೀಗೆ ಹೇಳಿರುತ್ತಾರೆ: “ಶ್ಲೋಕ ರೂಪದಲ್ಲಿರುವ ಸಂಸ್ಕೃತದ ಸುಭಾಷಿತಗಳನ್ನೂ ಅನ್ಯೋಕ್ತಿಗಳನ್ನೂ ಚಾಟೂಕ್ತಿಗಳನ್ನೂ ಕನ್ನಡಿಸುವುದಕ್ಕೆ ಸಾಂಗತ್ಯವು ಅತ್ಯಂತ ಸಮರ್ಥವಾದ ಛಂದಸ್ಸು ಎಂಬುದು ನನ್ನ ಗ್ರಹಿಕೆ. ಇದು ಅನುಭವದಿಂದ ಹೇಳಿದ ಮಾತು. ಆದರೆ ಬೇರೆಯವರ ಅನುಭವ ಬೇರೆಯಾಗಿರಲೂಬಹುದು. ನಾಲ್ಕು ಬಗೆಯ ಬ್ರಹ್ಮಗಣಗಳು, ಎಂಟು ಬಗೆಯ ವಿಷ್ಣುಗಣಗಳು ಇರುವಲ್ಲಿ, ವಿಷ್ಣುಗಣಗಳಿಗೆ ಪ್ರತಿಯಾಗಿ ಬ್ರಹ್ಮಗಣ ಬರಬಹುದು ಎಂಬ ಸೌಲಭ್ಯವಿರುವಲ್ಲಿ, ಪ್ರಾಸದ ವಿಷಯದಲ್ಲಿ ಸ್ವಾತಂತ್ರ್ಯವನ್ನು ವಹಿಸಿಕೊಂಡು ನಾನು ಈ ಸಾಂಗತ್ಯದ ಪುಟ್ಟ ಪುಟ್ಟ ಪಾನಪಾತ್ರೆಗಳಲ್ಲಿ ಸಂಸ್ಕೃತದ ಸುಭಾಷಿತಗಳನ್ನೂ, ಮುಕ್ತಕಗಳನ್ನೂ ಕನ್ನಡಿಸಿಕೊಟ್ಟಿದ್ದೇನೆ. ಸಹೃದಯರಿಗೆ ಇದು ಸಾಧುವಾದೀತೆಂದು ನಂಬಿಕೊಂಡಿದ್ದೇನೆ.”

       ಕನ್ನಡ ಸಾಹಿತ್ಯದ ವಿಸ್ತಾರವಾದ ಕ್ಷೇತ್ರವನ್ನು ಪರಿಶೀಲಿಸಿದರೆ ಚಂಪೂ ಮತ್ತು ಷಟ್ಪದಿಗಳಂತೆಯೇ ಸಾಂಗತ್ಯದ ಪ್ರಕಾರವೂ ನಮ್ಮ ಕವಿಗಳ ಮನಸ್ಸನ್ನು ಸಾಕಷ್ಟು ಸೆಳೆದಿದೆ. ಹದಿನೈದನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಸಾಂಗತ್ಯದ ಕೃತಿಗಳು ವಿಶೇಷವಾಗಿ ರಚಿತವಾಗಿವೆ. ಆ ತರುವಾಯ ಈ ರೂಪ ಇಳಿಮುಖವಾಗಿ ಸಾಗಿ, ಪುನಃ ಹೊಸಗನ್ನಡದ ಕವಿಗಳಿಂದ ಮನ್ನಣೆ ಗಳಿಸಿರುತ್ತದೆ. ಚಂಪೂ, ರಗಳೆ, ಷಟ್ಪದೀ ಛಂದಸ್ಸುಗಳಲ್ಲಿರುವ ನಿರ್ಬಂಧಕ್ಕಿಂತಲೂ ಸಾಂಗತ್ಯದ ರಚನೆಯಲ್ಲಿನ ಸೌಲಭ್ಯ, ಸರಳತೆಗಳು ಕವಿಗಳಿಗೆ-ಶ್ರೇಷ್ಠ ಕವಿಗಳು ಮೊದಲ್ಗೊಂಡು ಸಾಮಾನ್ಯ ಕವಿಗಳವರೆಗೆ-ಹೆಚ್ಚು ಪ್ರಿಯವಾಗಿರುವುದೇ ಈ ಸಮೃದ್ಧಿಗೆ ಮುಖ್ಯ ಕಾರಣ ಎನ್ನಬಹುದು. ಅಂಶಗಣದ ನಡೆಯನ್ನು ಅಚ್ಚಳಿಯದೆ ಉಳಿಸಿಕೊಂಡು ಬಂದಿರುವುದೇ ಇದರ ವೈಶಿಷ್ಟ್ಯವೆಂದು ಭಾವಿಸಬಹುದು. ಪ್ರಾಚೀನ ಮತ್ತು ಅರ್ವಾಚೀನ ಛಂದೋಗ್ರಂಥಗಳಲ್ಲಿ ಇದರ ಬಗ್ಗೆ ಅಲಕ್ಷ್ಯ ಇಲ್ಲವೇ ಅನಾಸಕ್ತಿಗಳು ತೋರಿ ಬಂದರೂ, ಜನರ ಮನಸ್ಸಿನಲ್ಲಿ ವಿಶೇಷವಾದ ಆದರಕ್ಕೆ ಪಾತ್ರವಾಗಿರುವ ಈ ಪ್ರಕಾರದ ಪ್ರಾಶಸ್ತ್ಯ ಛಂದಸ್ಸಿನ ಅಧ್ಯಯನದಲ್ಲಿ ಎಷ್ಟು ಮುಖ್ಯವಾದುದು ಎನ್ನುವುದನ್ನು ತೋರಿಸಿಕೊಡಲು ಈವರೆಗೆ ಪ್ರಯತ್ನ ಮಾಡಲಾಗಿದೆ.

    ಸಾಂಗತ್ಯ ಅನ್ಯ ಸಾಹಿತ್ಯ ಪ್ರಕಾರಗಳಿಗಿಂತ ತನ್ನದೇ ಆದ  ವಿಶಿಷ್ಟತೆಯನ್ನು, ವೈವಿಧ್ಯತೆಯನ್ನು ಹೊಂದಿದೆ. ‘ಅತ್ಯಂತ ಚಿಕ್ಕ ಪದ್ಯಗಳಾದ ಏಳೆ ತ್ರಿಪದಿಗಳಲ್ಲಿ ದೊಡ್ಡ ಕಾವ್ಯಗಳನ್ನು ಬರೆಯುವುದು ಕಷ್ಟ. ಮಾತ್ರವಲ್ಲದೇ ದೀರ್ಘಕಾಲ ಮಿಡಿಯುವ ಭಾವವನ್ನಾಗಲಿ, ವಿಸ್ತಾರವಾದ ವರ್ಣನೆಯನ್ನಾಗಲಿ ಅದರ ಕಿರಿಕಟ್ಟಿನಲ್ಲಿ ಕೂರಿಸುವುದು ಅಸಾಧ್ಯ’ (ಡಿ. ಎಸ್ ಕರ್ಕಿ, ಕನ್ನಡ ಛಂದೋವಿಕಾಸ, ಪುಟ ೧೩೧,) ಎರಡನೆಯ ಸಾಲನ್ನು ಪುನರುಕ್ತಗೊಳಿಸಿಕೊಂಡು ಬರೆದ ತ್ರಿಪದಿಯ ನಾಲ್ಕುಸಾಲಿನ ಚತುಷ್ಟದಿಯಾಗುವುದಾದರೂ ಪುನರುಕ್ತದ ಕಾರಣದಿಂದಾಗಿ ಅಲ್ಲಿನ ಭಾವಗಳನ್ನು ಮುಂದುವರೆಸಲಾಗುವುದಿಲ್ಲ. ಅಂಶಗಣದ ಚೌಪದದಲ್ಲಿಯಾದರೂ ಭಾವನಿರೂಪಣೆಯಾಗುವ ಸೌಲಭ್ಯವಿಲ್ಲ. ಅಕ್ಕರಗಳಲ್ಲಿ ದೊಡ್ಡದೂ, ಪ್ರಸಿದ್ಧವಾದುದೂ ಆದ ಪಿರಿಯಕ್ಕರ ಕನ್ನಡ ಚಂಪೂ ಕಾವ್ಯಗಳಲ್ಲಿ ವಿಶೇಷವಾಗಿ ಬಳಕೆಹೊಂದಿದೆ. ‘ಕವಿಗಳು ವರ್ಣನೆಗೋ ವಿವರಗಳನ್ನು ಕೊಡುವುದಕ್ಕಾಗಿಯೋ ಪಿರಿಯಕ್ಕರವನ್ನು ವಿನಿಯೋಗಿಸಿ ಕೊಂಡಿದ್ದಾರೆ.’ (ಡಿ. ಎಸ್ ಕರ್ಕಿ, ಕನ್ನಡ ಛಂದೋವಿಕಾಸ, ಪುಟ ೧೩೬)  ಹೀಗಾಗಿ ಇದು ದೀರ್ಘವಾದ ಕಾವ್ಯಗಳ ಬಳಕೆಗೆ ಒಗ್ಗಿಬಂದಿಲ್ಲ. ಮಾತ್ರ ಛಂದದ (ವಾರ್ಧಕ, ಭಾಮಿನಿ) ಷಟ್ಪದಿಗಳಲ್ಲಿ ಬರೆದ ಕಾವ್ಯಗಳನ್ನೆತ್ತಿಕೊಂಡರೆ ಇದರ ಒಂದೊಂದು ಪದ್ಯವನ್ನು ಓದಿ ಮುಗಿಸುವ ಹೊತ್ತಿಗೆ ಆಯಾಸವಾಗುತ್ತದೆ. ಆದರೆ ಈ ಪದ್ಯದ ವ್ಯಾಪ್ತಿಯೇ ದೊಡ್ಡದು. ಸಾಂಗತ್ಯ ಪದ್ಯವನ್ನು ಎತ್ತಿಕೊಂಡರೆ ಇದು ಅತ್ಯಂತ ಚಿಕ್ಕದಾದ ಏಳೆ ಪದ್ಯಕ್ಕಿಂತ ವಿಸ್ತಾರವಾಗುವುದು ಮತ್ತು ಅತಿದೊಡ್ಡದು ಎನ್ನುವ ಷಟ್ಪದಿ, ಪಿರಿಯಕ್ಕರಗಳಿಗಿಂತ ಚಿಕ್ಕದಾದ ಪದ್ಯವೆನಿಸುವುದು. ಹೀಗೆ ಹಿತಮಿತವಾದ ಛಂದೋಬಂಧ ಎನಿಸಿರುವುದರಿಂದಲೇ ಸಾಂಗತ್ಯವು ನಿರರ್ಗಳವಾಗಿ ಓದುವುದಕ್ಕೆ ಸಹಕಾರಿಯಾಗಿದೆ. ಸಾಂಗತ್ಯವು ಉಳಿದ ದೇಶೀಛಂದೋಬಂಧಗಳಿಗಿಂತ ಹೆಚ್ಚಿನ ವೈಶಿಷ್ಟ್ಯವನ್ನು, ವೈವಿಧ್ಯವನ್ನು ಹೊಂದಿದೆ.  

      `ಅತ್ಯಂತ ಚಿಕ್ಕ ಪದ್ಯಗಳಾದ ಏಳೆ ತ್ರಿಪದಿಗಳಲ್ಲಿ ದೊಡ್ಡ ಕಾವ್ಯಗಳನ್ನು ಬರೆಯುವುದು ಕಷ್ಟ ಮಾತ್ರವಲ್ಲದೇ  ದೀರ್ಘಕಾಲ ಮಿಡಿಯುವ ಭಾವವನ್ನಾಗಲಿವಿಸ್ತಾರವಾದ ವರ್ಣನೆಯನ್ನಾಗಲಿ ಅದರ ಕಿರಿಕಟ್ಟಿನಲ್ಲಿ ಕೂರಿಸುವುದು ಅಸಾಧ್ಯ' ಎರಡನೆಯ ಸಾಲನ್ನು ಪುನರುಕ್ತಗೊಳಿಸಿಕೊಂಡು ಬರೆದ  ತ್ರಿಪದಿಯ ನಾಲ್ಕುಸಾಲಿನ  ಚತುಷ್ಪದಿಯಾಗುವುದಾದರೂ ಪುನರುಕ್ತದ ಕಾರಣದಿಂದಾಗಿ ಅಲ್ಲಿನ ಭಾವಗಳನ್ನು ಮುಂದುವರೆಸಲಾಗುವುದಿಲ್ಲ. ಅಂಶಗಣದ ಚೌಪದದಲ್ಲಿಯಾದರೂ ಭಾವನಿರೂಪಣೆ ಯಾಗುವ ಸೌಲಭ್ಯವಿಲ್ಲ. ಅಕ್ಕರಗಳಲ್ಲಿ ದೊಡ್ಡದೂಪ್ರಸಿದ್ಧವಾದುದೂ ಆದ ಪಿರಿಯಕ್ಕರ ಕನ್ನಡ  ಚಂಪೂ  ಕಾವ್ಯಗಳಲ್ಲಿ ವಿಶೇಷವಾಗಿ ಬಳಕೆಹೊಂದಿದೆ. `ಕವಿಗಳು ವರ್ಣನೆಗೋ ವಿವರಗಳನ್ನು  ಕೊಡುವುದಕ್ಕಾಗಿಯೋ ಪಿರಿಯಕ್ಕರವನ್ನು ವಿನಿಯೋಗಿಸಿ ಕೊಂಡಿದ್ದಾರೆ' ಹೀಗಾಗಿ ಇದು ಕಾವ್ಯಗಳ ಬಳಕೆಗೆ ಒಗ್ಗಿಬಂದಿಲ್ಲ.  ಮಾತ್ರ ಛಂದದ(ವಾರ್ಧಕ, ಭಾಮಿನಿ) ಷಟ್ಪದಿಗಳಲ್ಲಿ ಬರೆದ ಕಾವ್ಯಗಳನ್ನೆತ್ತಿಕೊಂಡರೆ ಇದರ ಒಂದೊಂದು   ಪದ್ಯವನ್ನು ಓದಿ ಮುಗಿಸುವ ಹೊತ್ತಿಗೆ ಆಯಾಸವಾಗುತ್ತದೆ. ಆದರೆ ಈ ಪದ್ಯದ ವ್ಯಾಪ್ತಿಯೇ  ದೊಡ್ಡದು. ಸಾಂಗತ್ಯ ಪದ್ಯವನ್ನು ಎತ್ತಿಕೊಂಡರೆ ಇದು ಅತ್ಯಂತ ಚಿಕ್ಕದಾದ ಏಳೆ  ಪದ್ಯಕ್ಕಿಂತ  ವಿಸ್ತಾರವಾಗುವುದು.ಮತ್ತು ಅತಿದೊಡ್ಡದು ಎನ್ನುವ ಷಟ್ಪದಿ, ಪಿರಿಯಕ್ಕರಗಳಿಗಿಂತ ಚಿಕ್ಕದಾದ ಪದ್ಯವೆನಿಸುವುದು. ಹೀಗೆ  ಹಿತಮಿತವಾದ  ಛಂದೋಬಂಧವೆನಿಸಿರುವುದರಿಂದಲೇ  ಸಾಂಗತ್ಯವು ನಿರರ್ಗಳವಾಗಿ ಓದುವುದಕ್ಕೆ ಸಹಕಾರಿಯಾಗಿದೆ. ಸಾಂಗತ್ಯವು ಉಳಿದ ದೇಶೀಛಂದೋಬಂಧಗಳಿಗಿಂತ ಹೆಚ್ಚಿನ ವೈಶಿಷ್ಟ್ಯವನ್ನು, ವೈವಿಧ್ಯವನ್ನು ಹೊಂದಿದೆ.  ಅವುಗಳನ್ನು  ಈ ರೀತಿಯಾಗಿ ಸಂಗ್ರಹಿಸಬಹುದು.   

  ೧.ಕನ್ನಡ ಸಾಹಿತ್ಯದ ಇತರ ಪ್ರಕಾರಗಳಂತೆ ಸಾಂಗತ್ಯದಲ್ಲಿಯೂ ಧಾರ್ಮಿಕ ಕೃತಿಗಳು ಹೇರಳವಾಗಿ ರಚನೆಗೊಂಡಿವೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಜೈನ, ವೀರಶೈವ ಮತ್ತು ವೈದಿಕಮತದ ಕವಿಗಳು ತಮ್ಮ ತಮ್ಮ ಮತ ತತ್ವಗಳ ನಿರೂಪಣೆಯನ್ನೊಳಗೊಂಡ ಕೃತಿಗಳನ್ನು ಹೆಚ್ಚಾಗಿ ರಚಿಸಿದ್ದಾರೆ. ಕೆಲವು ಕೃತಿಗಳು ಕೇವಲ  ತತ್ವ ಪ್ರಧಾನವಾದರೆ ಇನ್ನೂ ಕೆಲವು ಕಾವ್ಯ ತತ್ವದ ಜೊತೆಗೆ ಧರ್ಮ ತತ್ವವನ್ನು ಬೆರೆಸಿಕೊಂಡುಹೊರಬಂದಿವೆ.  ಸ್ವಮತಪ್ರಚಾರಹೆಗ್ಗಳಿಕೆ ಕೆಲವು ಕೃತಿಗಳಲ್ಲಿ ಕಂಡುಬಂದರೂ  ಅನ್ಯಮತ ದೂಷಣೆ, ಘರ್ಷಣೆ ಅಷ್ಟಾಗಿ ಇಲ್ಲ. ಅದಕ್ಕೆ ಬದಲು ಧರ್ಮ ಸಮನ್ವಯತೆ ಎದ್ದುಕಾಣುತ್ತದೆ. ಅನ್ಯಮತ  ದೂಷಣೆಗಿಂತ ಪೋಷಣೆ, ಪ್ರೇಮ  ಬೆಳೆದುಬಂದಿತ್ತು. ಈ   ಧರ್ಮ ಸಮನ್ವಯವನ್ನು ಸಾಂಗತ್ಯ  ಕವಿಗಳಲ್ಲಿ ನಾವು ಹೆಚ್ಚಾಗಿ ಕಾಣುತ್ತೇವೆ. ಬೇರೆ ಮತದ  ಅರಸರು ಬೇರೆ ಮತದ ಕವಿಗಳಿಗೆ ಪೋಷಣೆಯಿತ್ತದ್ದು. ಕವಿ ಅನ್ಯಮತದವನಾದರೂ ಬೇರೆಮತದ ಅರಸನ ಪ್ರೀತಿಗೋಸ್ಕರ  ಅವನ ಮತ ಪರವಸ್ತುವನ್ನು ಸ್ವೀಕರಿಸಿ ಕೃತಿಗೈದುದು ಇದಕ್ಕೆ  ನಿದರ್ಶನವಾಗಿದೆ. 

 ೨.ಜೈನ, ವೀರಶೈವ, ವೈದಿಕರಂತೆ ಇತರ ಮತದ ಕವಿಗಳು ಹೆಚ್ಚಾಗಿ ಸಾಂಗತ್ಯದಲ್ಲಿ ಕೃಷಿಗೈದಿದ್ದಾರೆ.ಉದಾಹರಣೆಗೆ ಕುರುಬಮತದ ಕನಕದಾಸರು, ಶೂದ್ರಳಾದ ಸಂಚಿಹೊನ್ನಮ್ಮ ಮುಂತಾದವರು.                                        ೩.ಜೈನ ಕವಿಗಳು ಹೆಚ್ಚಾಗಿ ಪೂರ್ವದ ಪ್ರೌಢ ಪರಂಪರೆಯನ್ನು ಅನುಸರಿಸಿದ್ದಾರೆ. ಹಿಂದೆ ಚಂಪೂವಿನಲ್ಲಿ  ಹೇಳಿದ ತೀರ್ಥಂಕರರ ಚರಿತ್ರೆಗಳನ್ನು  ಕೆಲವರು  ಸಾಂಗತ್ಯದಲ್ಲಿ ಎರಕ ಹೊಯ್ದರೆಇನ್ನೂ ಕೆಲವರು  ಅವುಗಳ ಜೊತೆಗೆ ಕಾಮದೇವರುಕೇವಲಿಗಳ ಚರಿತ್ರೆಗಳನ್ನು ಜೈನಪರ ರಾಮಾಯಣ ಮಹಾಭಾರತದ ಕಥೆಗಳನ್ನು ಆರಿಸಿಕೊಂಡು ಕೃತಿಗೈದಿದ್ದಾರೆ.

 ೪.ವೀರಶೈವ ಕವಿಗಳು  ಹರಿಹರನ ವಿದಿತ  ಮಾರ್ಗವಿಡಿದು ಹರಲೀಲೆಗಳನ್ನು, ಹರಶರಣರ ಚರಿತ್ರೆಗಳನ್ನು ತಮ್ಮಕಾವ್ಯಗಳಿಗೆ ವಸ್ತುವನ್ನಾಗಿಸಿಕೊಂಡು ಸಾಗಿದ್ದಾರೆ.

 ೫.ವೈಷ್ಣವ ಕವಿಗಳು ಹೆಚ್ಚಾಗಿ ವಿಷ್ಣುಲೀಲಾಪರ ಕಾವ್ಯಗಳನ್ನುಕೆಲವು ಮಹಾಭಾರತ ಕಥೆಗಳನ್ನೊಳಗೊಂಡ ಕೃತಿಗಳನ್ನು ರಚಿಸಿದ್ದಾರೆ.

 ೬.ಮತೀಯ  ಕೃತಿಗಳಂತೆ ಸಾಂಗತ್ಯದಲ್ಲಿ ಕೆಲವು   ಕಥಾ ಪ್ರಧಾನ ಕಾವ್ಯಗಳೂ ಹುಟ್ಟಿಕೊಂಡಿವೆ.  ಅವುಗಳಲ್ಲಿ  ಮತತತ್ವದ ಲೇಪವಿದ್ದರೂ  ಕಥೆಗೆ ಹೆಚ್ಚಿನ  ಮಹತ್ವ ಸಂದುದು ಕಂಡುಬರುತ್ತದೆ. ಕಥಾಸಾಹಿತ್ಯ ಸಾಂಗತ್ಯದಲ್ಲಿ ಸ್ವಲ್ಪ ಹೆಚ್ಚಿನ  ಪ್ರಮಾಣದಲ್ಲಿ ಬೆಳೆದುಬಂದಿತ್ತೆಂಬುದಕ್ಕೆ ಸಾಕ್ಷಿ. 

 ಉದಾಹರಣೆಗೆಶೃಂಗಾರಕಥೆ, ಮದನ  ಮೋಹಿನಿಕಥೆ, ಶ್ರೀಪಾಲಚರಿತೆ...ಇತ್ಯಾದಿ.

೭.ಚಾರಿತ್ರಿಕ ಕಾವ್ಯಗಳು ಸಾಂಗತ್ಯದಲ್ಲಿ ಉಳಿದ ಪ್ರಕಾರಗಳಿಗಿಂತ ಅಧಿಕಸಂಖ್ಯೆಯಲ್ಲಿ  ರಚನೆ ಗೊಂಡಿವೆ. ಚಂಪೂ ಕಾವ್ಯಗಳಲ್ಲಿ ಕಥೆಗೆ ರ‍್ಯಾಯವಾಗಿ ಕವಿಯ ಪೋಷಕ ಅರಸನಿಗಾಗಿ ಸಂಬಂಧಿಸಿದ ಕೆಲವು ಚಾರಿತ್ರಿಕ ಸಂಗತಿಗಳನ್ನು ಕಾಣುತ್ತೇವೆ. ಆದರೆ ಸಂಪೂರ್ಣ ಚಾರಿತ್ರಿಕವಾಗಿ  ರಚನೆಗೊಂಡಕೃತಿಗಳು ಹಿಂದೆ ರಚನೆಗೊಂಡಿಲ್ಲ.ಸಾಂಗತ್ಯದಲ್ಲಿ ಅಂಥ ಕೃತಿಗಳು ಸಿಕ್ಕುತ್ತವೆ.ಉದಾಹರಣೆಗೆ ನಂಜುಂಡ ಕವಿಯ `ಕುಮಾರರಾಮನಸಾಂಗತ್ಯ'. ಕೆಲವುಸಂಪೂರ್ಣವಾಗಿ ಐತಿಹಾಸಿಕವಾಗಿದ್ದರೆಇನ್ನೂ ಕೆಲವು ಐತಿಹಾಸಿಕ ಮಿಶ್ರಕೃತಿಗಳಾಗಿವೆ. ಇವು ಕನ್ನಡ ಸಾಹಿತ್ಯಕ್ಕೆ ಸಾಂಗತ್ಯರೂಪವು ನೀಡಿದ ಅಪೂರ್ವ ಕಾಣಿಕೆ ಎನಿಸಿವೆ.

  ೮. ಪುರುಷರಂತೆ ಸ್ತ್ರೀಯರೂ ಕೂಡ ಸಾಂಗತ್ಯದಲ್ಲಿ ಇತರ ಪ್ರಕಾರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೃತಿ ರಚನೆ ಮಾಡಿದ್ದಾರೆ. ಸಾಂಗತ್ಯದ ಸರಳತೆ, ಸಹಜತೆ, ಕೋಮಲತೆಗಳು ಇದಕ್ಕೆ ಕಾರಣವಾಗಿರಬೇಕು.

   ೯. ಹರಿಹರನಿಂದ ಉಲ್ಲಂಘಿಸಲ್ಪಟ್ಟ ರಳಕುಳಕ್ಷಳ ಪ್ರಾಸ ನಿಯಮವನ್ನು ಸಾಂಗತ್ಯ ಕವಿಗಳು ಅನುಸರಿಸದೆ ಹೆಚ್ಚಾಗಿ ಸ್ವಚ್ಛಂದವಾಗಿ ಕೃತಿ ರಚಿಸಿದ್ದಾರೆ.

   ೧೦. ಭಾಷೆ ಸರಳ, ದೇಶೀಪದಗಳ ಬಳಕೆ ಹೇರಳ, ಅಲಂಕಾರ-ಕವಿಸಮಯ ಕಡಿಮೆ, ಕೆಲವು ಕೆಲವು ಪ್ರೌಢಕಾವ್ಯಗಳಲ್ಲಿ ಸಂಸ್ಕೃತಮಿಶ್ರ ಬಂಧುರ ಭಾಷಾಪ್ರಯೋಗ ಕಂಡುಬರುತ್ತದೆ. ಆದರೆ ಬಹಳ ಕವಿಗಳು ಅಚ್ಛಗನ್ನಡದ ಬಿಚ್ಚುನುಡಿಯಲ್ಲಿಯೇ ತಮ್ಮ ಕೃತಿಗಳನ್ನು ರಚಿಸುತ್ತೇನೆಂದು ಹೇಳಿ ಹಾಗೆಯೇ ರಚಿಸಿರುವುದನ್ನು ಕಾಣಬಹುದಾಗಿದೆ.

    ೧೧. ‘ಇತರೆ ದೇಸಿ ಛಂದೋಪ್ರಕಾರಗಳು ಅಂಶಗಣದಿಂದ ಮಾತ್ರಾಗಣಕ್ಕೆ ಪಾದಾರ್ಪಣೆ ಮಾಡಿದರೆ ಇದು ದೇಶೀಯತೆಯನ್ನೇ ಕೊನೆಯವರೆಗೆ ಕಾಯ್ದುಕೊಂಡು ಬಂದಿದೆ.

    ೧೨. ರಾಗ-ತಾಳ-ಲಯಗಳನ್ನು ಹೊಂದಿದ ಇದರಲ್ಲಿ ಸರಾಗವಾಗಿ ಹಾಡಿಕೊಂಡು ಹೋಗಲು ಅವಕಾಶ ಹೆಚ್ಚು.

    ೧೩. ಆದಿ ಪ್ರಾಸ ನಿತ್ಯ, ಮಧ್ಯ ಮತ್ತು ಅಂತ್ಯ ಪ್ರಾಸಗಳೂ ಬರುವುದುಂಟು.

    ೧೪. ವಿಷ್ಣುಗಣಕ್ಕೆ ಇದರಲ್ಲಿ ಪ್ರಾಧಾನ್ಯತೆಯಿದೆ. ರುದ್ರಗಣ ಬರುವುದಿಲ್ಲ.

    . ವಿಷ್ಣುವಿನ ಸ್ಥಾನದಲ್ಲಿ ಬ್ರಹ್ಮ, ಬ್ರಹ್ಮನ ಸ್ಥಾನದಲ್ಲಿ ವಿಷ್ಣು ಬಂದರೂ ಹಾಡುವಾಗ ಅವು ಮತ್ತೆ ತಮ್ಮ ಮೂಲ ಪ್ರಮಾಣವನ್ನು ಹೊಂದುತ್ತವೆ.

    . ಸ್ವರಕ್ಕೆ ತಕ್ಕಂತೆ ಆಕುಂಚನ ಪ್ರಸರಣ ವಿಧಾನ ಇದರಲ್ಲುಂಟು.

    . ಪ್ರತಿ ಚರಣಾಂತ್ಯ ಒಂದು ಮೂರನೆಯ ಚರಣದ ಮಧ್ಯಯತಿ ಬರುತ್ತದೆ. ಆದರೆ ಅದು ಕಡ್ಡಾಯವಲ್ಲ.

    .ಮೃದು ಮಧುರ ಭಾವಗಳನ್ನು ಮಂದಾನಿಲದಂತೆ ಸುಳಿಸಲು ಅತಿ ಸಮರ್ಪಕವಾದ ಛಂದೋಬಂಧ ಇದಾಗಿದೆ' (ಕನ್ನಡ ಸಾಂಗತ್ಯ ಸಾಹಿತ್ಯ, ಡಾ. ವೀರಣ್ಣ ರಾಜೂರ, ಪುಟ೧೨೮, ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೮, ೧೯೮೫

                         ಸಾಂಗತ್ಯ ಕಾವ್ಯಗಳು

  ೧.ಇತಿಹಾಸಮಿಶ್ರ ಕಾವ್ಯಗಳು         ೨.ನೀತಿಪ್ರಧಾನ ಕಾವ್ಯಗಳು      

  ೧.ಕುಮಾರರಾಮ ಚರಿತ್ರೆ            ೧.ಹದಿಬದೆಯ ಧರ್ಮ

೨.ಕಂಠೀರವ ನರಸರಾಜವಿಜಯಂ     ೨.ನೀತಿಶತಕದ ಸಾಂಗತ್ಯ

೩.ಬಿಜ್ಜಳರಾಜ ಚರಿತೆ               ೩.ಚಿನ್ಮಯಚಿಂತಾಮಣಿ

೪.ಮುನಿವಂಶಾಭ್ಯುದಯ            ೪.ಹರದನೀತಿ 

                 ೩.ಧಾರ್ಮಿಕ ಕಾವ್ಯಗಳು 

  ಜೈನ                   ವೀರಶೈವ                  ವೈದಿಕ   

 ೧.ನೇಮಿಜನೇಶ ಸಂಗತಿ      ೧.ಭೈರವೇಶ್ವರ ಚರಿತೆ        ೧.ಪದ್ಮಿನಿಕಲ್ಯಾಣ

  ೨.ಭರತೇಶ ವೈಭವ        ೨.ಸಾನಂದಗಣೇಶ ಸಾಂಗತ್ಯ  ೨.ಕೃಷ್ಣಾಚಾರಿತ್ರೆ

  ೩.ನಾಗಕುಮಾರ ಚರಿತೆ      ೩.ದೀಪದಕಾಲಿಯರ ಕಾವ್ಯ   ೩.ಉದ್ಧಾಳನಕಥೆ      

  ೪.ಪದ್ಮಾವತಿ ಚರಿತೆ        ೪.ವೀರೇಶ್ವರ ಚರಿತೆ        ೪.ಪಶ್ಚಿಮರಾಗಧಾಮ ಸಾಂಗತ್ಯ

          

     ಜೈನಕವಿಗಳ ಸಾಹಿತ್ಯಿಕ ಧೋರಣೆಗಳು :

     ಜೈನಕವಿಗಳು ಚಂಪೂ ಎಂಬ ನವೀನ ಕಾವ್ಯಪ್ರಕಾರವನ್ನು ರೂಪಿಸಿಕೊಂಡುಮಹಾಕಾವ್ಯಗಳನ್ನು ರಚಿಸಿದರು.  `ಚಂಪೂ' ಎಂದರೆ  ಜೈನಕವಿಗಳ  ಸಾಹಿತ್ಯ ಪ್ರಕಾರ ಅನ್ನುವಷ್ಟರ ಮಟ್ಟಿಗೆ ಅವರಲ್ಲಿ  ಯಶಸ್ಸು ಕಂಡುಬರುತ್ತದೆ.  ಹನ್ನೆರಡನೆಯ  ಶತಮಾನಕ್ಕೆ ಬರುವಷ್ಟರಲ್ಲಿ  ಪ್ರೌಢ ಚಂಪೂವಿನ  ಕಾಲ  ಹಿಂದಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿ ಜನಸಾಮಾನ್ಯರ ಮನಮುಟ್ಟುವ ದೇಶೀ ಸಾಹಿತ್ಯ ನಿರ್ಮಾಣ ಕಾರ್ಯನಡೆಯಿತು. ಆಗ ಉದಾರಮತಿಗಳಾದ ಜೈನಕವಿಗಳು ಪ್ರೌಢ ಪರಂಪರೆಯನ್ನು ತೊರೆದು ಸರಳತೆಯತ್ತ ಪರಿದು  ಅಚ್ಛಗನ್ನಡದ ಬಿಚ್ಚುನುಡಿಗಳಲ್ಲಿ ಕಾವ್ಯ ರಚನೆ ಮಾಡತೊಡಗಿದರು. ಚಂಪೂ ಪ್ರಕಾರದ ಸ್ಥಾನವನ್ನು ಅನಂತರದಲ್ಲಿ ಷಟ್ಪದಿಯು  ಪಡೆದುಕೊಂಡಿತು. ಅದರಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಮೆರೆದರು.  ಷಟ್ಪದಿಯ  ನಂತರ ಅಚ್ಛ   ದೇಶೀಬಂಧವಾದ ಸಾಂಗತ್ಯ ಪ್ರಕಾರವು ಸಾಹಿತ್ಯದಗದ್ದುಗೆಯನ್ನು ಏರಲು, ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಚಂಪೂ ಪ್ರಕಾರದಂತೆ  ಹುಲುಸಾಗಿಫಲವತ್ತಾಗಿ ಬೆಳೆಸಿದರು. 

  ಈ ಸಾಂಗತ್ಯ ಕವಿಗಳು ತಮ್ಮ ಧೋರಣೆಗಳಲ್ಲಿ ಮಹಾಕಾವ್ಯಗಳ ಲಕ್ಷ ಣಗಳನ್ನೇ ಇಟ್ಟು ಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇವರ  ಧೋರಣೆಗಳೆಂದರೆ

  ೧.ಸಂಸ್ಕೃತ,ಪ್ರಾಕೃತವರಿಯದ ಭವ್ಯರಿಗಾಗಿ ಹೊಸಗನ್ನಡದಲ್ಲಿ ಕಥೆಯನ್ನು  ಹೇಳುವುದು;  

 ೩.ಕಾಮದೇವರ ಚರಿತೆಗಳು : ನಾಗಕುಮಾರ ಚರಿತೆ, ಜೀವಂಧರ ಚರಿತೆ, ಕಾಮನಕಥೆ,   ಭುಜಬಲಿ ಚರಿತೆ.

 ೪.ಜೈನಧರ್ಮ ಪ್ರಕ್ರಿಯೆಗಳ ನಿರೂಪಣಚರಿತೆಗಳು: ದ್ವಾದಶಾನುಪ್ರೇಕ್ಷೆ,ಅಹಿಂಸಾಚರಿತೆ,    ಶ್ರಾವಕಾಚಾರ, ಪಂಚಕಲ್ಯಾಣ ಚರಿತೆ. 

 ೫.ಕಥಾ ಸಾಹಿತ್ಯ: ಸಮ್ಯುಕ್ತ ಕೌಮುದಿಶ್ರೀಪಾಲ ಚರಿತೆಪ್ರಭಂಜನ ಚರಿತೆ, ಧನ್ಯ   ಕುಮಾರಚರಿತೆ.

 ೬.ಚಾರಿತ್ರಿಕ ವಿಷಯ ಸಮಾವೇಶ ಚರಿತೆಗಳು: ಶ್ರೇಣಿಕ ಚರಿತೆ, ಬಿಜ್ಜಳರಾಯ ಚರಿತೆ,   ಕಾರ್ಕಳಗೊಮ್ಮಟೇಶ್ವರ ಚರಿತೆಸೊಣ್ಣಬೈರೇಗೌಡನ ಚರಿತೆ ಅಥವಾ `ಇಡೀ ಜೈನ  ಸಾಹಿತ್ಯವನ್ನು ತೀರ್ಥಂಕರ ಮತ್ತು  ತೀರ್ಥಂಕರೇತರ ಎಂದು ಎರಡು ವರ್ಗಗಳಲ್ಲಿ  ಅಳವಡಿಸಬಹುದು'.    

     ಸರಳತೆಯ ಜೊತೆಗೆ ವಿಶಿಷ್ಟತೆಯನ್ನು ಕೂಡಿಸಿಕೊಂಡು ಸಾಂಗತ್ಯಗಳನ್ನು ಪ್ರವರ್ತಿಸಿ ಅದರಲ್ಲಿ  ಮಹಾಕಾವ್ಯವನ್ನು  ತಂದುಕೊಟ್ಟು ಸಾಂಗತ್ಯದ ಮೌಲಿಕತೆಯನ್ನು ಹೆಚ್ಚಿಸಿದವರು ಜೈನ ಕವಿಗಳು.  ಅಲ್ಲದೆ ಹಲವಾರು  ಉತ್ತಮ  ಕೃತಿಗಳನ್ನು ಇವರು ರಚಿಸಿದ್ದಾರೆಂದಾಗ ಸಾಂಗತ್ಯದಲ್ಲಿ  ಇವರದು  ಮಹತ್ವದ ಸ್ಥಾನವೆಂದು ಯಾರಿಗಾದರೂ ಅನ್ನಿಸದೇ ಇರುವುದಿಲ್ಲ.

                 ವೀರಶೈವ ಕವಿಗಳ ಸಾಹಿತ್ಯಿಕ ಧೋರಣೆಗಳು:  

    ಜೈನ ಕವಿಗಳ ತರುವಾಯ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆಗೆ ನಿಂತವರು ವೀರಶೈವ ಕವಿಗಳು. ಇವರು ಪ್ರೌಢಪರಂಪರೆಯನ್ನು ಬಿಟ್ಟು ಭಾವ ಭಾಷೆಗಳಲ್ಲಿಸರಳತೆಯನ್ನು ತಂದು ಜನ ಬದುಕಬೇಕೆಂದು  ಸಾಹಿತ್ಯ ಸೃಷ್ಟಿಸಿ, ಸಾಹಿತ್ಯ ಸರ್ವರಿಗಾಗಿ ಎಂಬ ಸಂದೇಶವನ್ನು ಸಾರಿದರು. ಇವರು ರಚಿಸಿದ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಹಿರಿದಾದಸ್ಥಾನವನ್ನು ಗಳಿಸಿಕೊಂಡಿದೆ.  `ವೀರಶೈವ ಸಾಹಿತ್ಯವೆಂದರೆ ಕನ್ನಡ ಸಾಹಿತ್ಯಎನ್ನುವಷ್ಟರಮಟ್ಟಿಗೆ ಇದು ಕನ್ನಡ ನಾಡಿನಲ್ಲಿ ತುಂಬಿ ಹರಿದಿದೆ. 

    ಕರ್ನಾಟಕ ಕವಿಚರಿತೆಯ ಪ್ರಕಾರ ವೀರಶೈವ ಕವಿಗಳ ಸಂಖ್ಯೆ ಅಧಿಕ. ಅವರು ರಚಿಸಿದ ಕೃತಿಗಳು  ಕೇವಲ ಸಂಖ್ಯೆಯ  ದೃಷ್ಟಿಯಿಂದ ಹಿರಿದಾಗಿರದೆ  ಸತ್ವದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಬಸವಾದಿಶಿವಶರಣರ ಕ್ರಾಂತಿಯಿಂದಾಗಿ ಕನ್ನಡಸಾಹಿತ್ಯದ ದಿಕ್ಕುಬದಲಾಗಿ ಅನೇಕ ದೇಸಿಪ್ರಕಾರಗಳುಹುಟ್ಟಿಕೊಂಡವು. ಅವುಗಳ ಹುಟ್ಟಿಗೆ ವೀರಶೈವ ಕವಿಗಳು ಕಾರಣರಾದರು. ವಚನ, ರಗಳೆ, ಷಟ್ಪದಿ.. ಪ್ರಕಾರಗಳಿಗೆ  ಆದಿಪುರುಷರೆನಿಸಿಕೊಂಡಂತೆ ಅಚ್ಛದೇಸಿಯವಾದ ಸಾಂಗತ್ಯಕ್ಕೂ ಮೂಲ ಪುರುಷರಾದರು.

     ಜನತೆಯಲ್ಲಿ ಅರಿವನ್ನು ಮೂಡಿಸಲು ಸಾಂಗತ್ಯವೆಂಬ ಹೊಸ ಪ್ರಕಾರವನ್ನು ಸ್ವೀಕರಿಸಿದ ವೀರಶೈವ ಕವಿಗಳು ಬಹುಸಂಖ್ಯಾತರಾಗಿ ಕಾವ್ಯ ರಚನೆಗೆ ತೊಡಗಿರುವುದನ್ನು ಕಾಣಬಹುದಾಗಿದೆ. ಹದಿನೈದನೆಯ ಶತಮಾನದ ಜೈನ ಸಾಂಗತ್ಯಗಳ  ಪ್ರವರ್ತತೆಯನ್ನು ಚೆನ್ನಾಗಿ ಪರಿಪುಷ್ಟವಾಗುವಂತೆ ಮಾಡಿದವರು ವೀರಶೈವ ಸಾಂಗತ್ಯ ಕವಿಗಳು. ಶೈವ ಕವಿಯೆನಿಸಿದ ದೇಪರಾಜನ `ಸೊಬಗಿನ ಸೋನೆ' ಒಂದು ಶೃಂಗಾರಕಾವ್ಯ. ಮುಂದಿನ ಕಾವ್ಯಗಳೆಲ್ಲದರ ಮೇಲೆ ಹೆಸರುಕಥೆಛಂದಸ್ಸು, ವರ್ಣನೆ...ಮೊದಲಾದ ಎಲ್ಲಾ ಅಂಶಗಳಲ್ಲೂ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದ ಕೃತಿ ಇದಾಗಿದೆ. 

    ವೀರಶೈವ ಧರ್ಮ ಪರವಾದಕೃತಿಗಳ ಭದ್ರವಾದ ಹೆಜ್ಜೆಯನ್ನು ಸಾಂಗತ್ಯವು ಹದಿನಾರನೆಯ ಶತಮಾನದಲ್ಲಿ ತೋರಿಸಿಕೊಟ್ಟಿದೆ. ಈ ಶತಮಾನದ  ವೀರಶೈವಸಾಹಿತ್ಯದಲ್ಲಿ ಬರುವ ಕೃತಿಗಳು ಸಂಖ್ಯೆಯಲ್ಲಿ ಹಿಂದಿನ  ಶತಮಾನಕ್ಕೆ ದ್ವಿಗುಣಿತವಾಗಿವೆ.  ಹರಿಶ್ಚಂದ್ರಸಾಂಗತ್ಯ, ವೀರಭದ್ರ ಲೀಲಾರತ್ನ  ಇವುಗಳು ಶಿವಪುರಾಣದಿಂದ ಉದ್ಧೃತವಾದ ಕಥಾನಕಗಳು.  ಜನ ಬದುಕಲೆಂದು ರಾಘವಾಂಕ ಬರೆದ ಹರಿಶ್ಚಂದ್ರ ಕಾವ್ಯವನ್ನು   ಮಾದರಿಯಾಗಿಟ್ಟುಕೊಂಡು ಸಾಂಗತ್ಯ ಕೃತಿಗಳ ಕುರಿತಾಗಿ ಒಂದು ಸಂಪುಟವೇ ಬಂದಿದೆ.  "ಹರಿಶ್ಚಂದ್ರಕಾವ್ಯ  ಬರೆದ ರಾಘವಾಂಕನ ಹಲ್ಲನ್ನು ಹರಿಹರ  ಉದುರಿಸಿದ ಎಂಬ ದಂತಕಥೆ  ಸುಳ್ಳು ಎಂಬುದನ್ನು ಪೋಷಿಸಲು ಈ ಶತಮಾನದ ಕೆಲವು ಸಾಂಗತ್ಯ ಕವಿಗಳು ಆ ಕಾವ್ಯವನ್ನೇ ಎತ್ತಿಕೊಂಡು ಬರೆದಿರುವುದು ಸಾಕ್ಷಿಯಾಗಿದೆ." ಷಟ್ಪದಿಯ ರಾಘವಾಂಕನ ಉದ್ದೇಶ  ಮತ್ತಷ್ಟು ಸ್ಪಷ್ಟವಾಗಿ ಜನರ ಬದುಕಿನಲ್ಲಿ ಬೆರೆತದ್ದು ಈ ಶತಮಾನದ ಸಾಂಗತ್ಯಗಳಲ್ಲಿ ಧಾರ್ಮಿಕ ವಿಷಯಗಳಿಂದ ಇಡಿಕಿರಿದ ಸಾಹಿತ್ಯಕ್ಕೆ ಈ ಕೃತಿ ಸ್ವಲ್ಪಮಟ್ಟಿಗೆ ವೈವಿಧ್ಯವನ್ನು ಕಲ್ಪಿಸಿಕೊಟ್ಟಿದೆ.  

      ಜೈನ ಧಾರ್ಮಿಕ  ಕವಿಗಳು ಹೇಳಿಕೊಂಡ  ಮುಕ್ತಿಲಾಭ, ಭವಭಯದುರಿತನಾಶನ ಇವನ್ನೇ ವೀರಶೈವ ಸಾಂಗತ್ಯ  ಕವಿಗಳು ಪ್ರಮುಖವಾಗಿ  ಹೇಳಿಕೊಂಡಿದ್ದಾರೆ. ಕೆಲವು ಕೃತಿಗಳಲ್ಲಿ ಮಾತ್ರ ಆ ಧಾರ್ಮಿಕ ಸಾಹಿತ್ಯದಲ್ಲಿಯೂ  ಕಾವ್ಯತ್ವದ ಮೌಲ್ಯವನ್ನು ಗಣಿಸಬೇಕೆಂಬ ಪ್ರಾರ್ಥನೆಗಳಿವೆ. ಸಾಂಗತ್ಯ ಪ್ರಕಾರವೆಂಬ ತೋಟದಲ್ಲಿ ಮಹಾಕೃತಿಗಳಾಗಿ  ಮೂಡಿಬಂದ ಜೈನ, ವೈದಿಕ, ವೀರಶೈವ ಕೃತಿಗಳು ಕೆಲವೇ  ಕೆಲವಾದರೂ  ತೋಟಕ್ಕೆ ಸಾಂದ್ರತೆಯನ್ನು, ರಮ್ಯತೆಯನ್ನು ಮೂಡಿಸಲು ಹಲವಾರು ವೀರಶೈವ ಸಾಂಗತ್ಯಗಳು ಪಣತೊಟ್ಟು ನಿಂತಿವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ  ಸಾಂಗತ್ಯ ಶೈಲಿಯ ಪ್ರಸಾರತೆಯ ಕಾರ್ಯದಲ್ಲಿ ವಿರಶೈವ ಕವಿಗಳ ಸಾಧನೆ ಅದ್ಭುತವಾದುದು.

       ವೀರಶೈವ ಸಾಂಗತ್ಯ ಸಾಹಿತ್ಯವನ್ನು ನಾಲ್ಕು ಗುಂಪಿಗೆ ಅಳವಡಿಸಬಹುದು;

   ೧.ವೀರಶೈವ ಮಹಾಪುರುಷರ ಚರಿತೆಗಳು:ದೀಪದಕಾಲಿಯರಚರಿತೆ, ಸತ್ಯೇಂದ್ರಚೋಳನ ಚರಿತೆ

   ೨.ಶಿವಭಕ್ತ ಶ್ರೇಷ್ಟರ ಚರಿತೆಗಳು : ಹರಿಶ್ಚಂದ್ರ ಸಾಂಗತ್ಯಅರವತ್ಮೂರು ಪುರಾತನರ ಸಾಂಗತ್ಯ

   ೩.ಮತ ಪ್ರಕ್ರಿಯೆ ನಿರೂಪಣ ಚರಿತೆಗಳುಅನುಭವ ಮುದ್ರೆ,   ಪ್ರಸಾದ ಸಾಂಗತ್ಯ,     ಪರಮಾನುಭವ ಬೋಧೆ    

  ೪.ಚರಿತ್ರೆಯನ್ನೊಳಗೊಂಡ ಚರಿತೆಗಳು: ಮಡಿವಾಳಯ್ಯನ ಚರಿತೆ, ಅಬ್ಬಲೂರು ಚರಿತೆ.  

    "ಜೈನ ಸಾಹಿತ್ಯದಂತೆ ವೀರಶೈವ ಸಾಹಿತ್ಯವನ್ನು ೬೩ಜನ ಪುರಾತನರ ಮತ್ತು ಇತರ ಎಂದು ಇಬ್ಭಾಗವಾಗಿ ವಿಂಗಡಿಸಿಕೊಳ್ಳಬಹುದು."    

  ವೀರಶೈವ ಕವಿಗಳು ಹಾಗೂ ಅವರ ಕೃತಿಗಳು:   

     ೧.ದೇಪರಾಜನ(ಕಾಲ ಸು.೧೪೦೦) `ಸೊಬಗಿನ ಸೋನೆ'      

     ೨.ನಿಜಗುಣ ಶಿವಯೋಗಿಯ(೧೫೦೦) `ಪರಮಾನುಭವ ಬೋಧೆ'                   

    ೩.ನಂಜುಂಡ ಕವಿಯ(೧೫೨೫) `ಕುಮಾರರಾಮನ ಕಥೆ'     

    ೪.ಮಲ್ಲಿಕಾರ್ಜುನ ಕವಿಯ(೧೬೪೦) `ತೋಂಟದರಾಯನ ಸಾಂಗತ್ಯ'

     ಜನಪದ ಸಾಹಿತ್ಯದಲ್ಲಿ ಸಾಂಗತ್ಯ

ಜನಪದ ಸಾಹಿತ್ಯ ಒಂದು ನಾಡಿನ ಜಾನಪದ ಭಾವನೆಗಳ ಭಾಷಿಕ ಅಭಿವ್ಯಕ್ತಿ. ಅದರಲ್ಲಿ ಅವರ ಆಚಾರ-ವಿಚಾರ, ಶೀಲ-ಸಂಪ್ರದಾಯ ನಡೆ-ನುಡಿ, ನೋವು-ನಲಿವುಗಳು ಯಥಾವತ್ತಾಗಿ ಚಿತ್ರಿತವಾಗಿರುತ್ತವೆ. ಚಿತ್ರಕ್ಕೆ ತಕ್ಕ ಛಂದೋಪಾತ್ರಗಳನ್ನು ರೂಪಿಸಿ ಕೊಂಡಿರುತ್ತವೆ. ಜನಪದ ಸಾಹಿತ್ಯ ಬಳಸಿಕೊಂಡ ಇಂಥ ಸಾವಿರಾರು ಛಂದೋರೂಪಗಳಲ್ಲಿ ತ್ರಿಪದಿಗೆ ಪ್ರಥಮ ಸ್ಥಾನ, ಸಾಂಗತ್ಯಕ್ಕೆ ದ್ವಿತೀಯ ಸ್ಥಾನ.

ಸಾಂಗತ್ಯ ಮೂಲತಃ ಜಾನಪದದ ಜಿಹ್ವಾರಂಗದ ಮೇಲೆ ನಟಿಸಿ ಮುಂದೆ ಶಿಷ್ಟಕವಿಗಳ ಕಾವ್ಯರಂಗವನ್ನೇರಿದರೂ ಅದು ಅನೇಕ ಜನಪದಸಾಹಿತ್ಯ ಪ್ರಕಾರಗಳಲ್ಲಿ ಉಳಿದುಕೊಂಡು ಬಂದಿದೆ.

ಜನಪದ ಸಾಹಿತ್ಯ ಪ್ರಕಾರದಲ್ಲಿ ಹಲವಾರು ಚರಿತ್ರೆಯ ಕೃತಿಗಳು ಸಾಂಗತ್ಯದಲ್ಲಿ ಹುಟ್ಟಿಕೊಂಡಿವೆ. ಉದಾಹರಣೆಗೆ; ‘ಹಾಲುಮತದ ಪುರಾಣಗಳು’, ನಾಗಭೂಷಣ ಕವಿಯ (ಕ್ರಿ.ಶ.೧೭ನೆಯ ಶತಮಾನ) ‘ಮರುಳಸಿದ್ಧೇಶ್ವರ ಸಾಂಗತ್ಯ’, ಶ್ರೀಶೈಲ ಕವಿಯ (ಕ್ರಿ.ಶ.೧೭ನೆಯ ಶತಮಾನ) ‘ಮರುಳಸಿದ್ಧೇಶನ ಪವಾಡ’, ರೇವಣಸಿದ್ಧನ ‘ಆನೆಗೋಡು ಮರುಳಸಿದ್ಧ ಚರಿತೆ’...ಮುಂತಾದವು. ಅಂಥದ್ದರಲ್ಲಿ ಸುವ್ವಿಮಲ್ಲಿಗೆವಡೇರು ಕವಿಯು ಬರೆದ ‘ಶ್ರೀತೋಂಟದ ಸಿದ್ಧೇಶ್ವರನ ಸಾಂಗತ್ಯ’ ಕೃತಿಯೂ ಕೂಡ ಸಿದ್ಧಲಿಂಗರ ಚರಿತ್ರೆ ಮತ್ತು ಪವಾಡದ ಅಂಶಗಳನ್ನು ಒಳಗೊಂಡ ಕೃತಿಯಿದಾಗಿದೆ.

    ಜಾನಪದ ಕವಿಗಳು ಛಂದಸ್ಸು-ವ್ಯಾಕರಣ-ಶಾಸ್ತ್ರಗಳನ್ನು ಕುರಿತು ಓದದೇ ಇದ್ದರೂ (೧.೧೬), ಇವರ ಸಾಹಿತ್ಯದಲ್ಲಿ ಒಂದು ಅನಿರ್ವಚನೀಯವಾದ ಸೊಬಗು, ಸಹಜತೆ, ಸರಳತೆ ಮತ್ತು ನೈಜತೆ ಇರುವುದು ಕಂಡುಬರುತ್ತದೆ.

ಸುವ್ವಿಮಲ್ಲಿಗೆವಡೇರನು ಓರ್ವ ಜಾನಪದ ಕವಿ. ವಂಶಪರಂಪರೆಯಿಂದಲೂ ಸುವ್ವಿಯ ಪದಗಳನ್ನು ಹಾಡುವವರೇ ಆಗಿರುವವರು ಎಂಬುದು ಇವನ ವಂಶಾವಳಿಯಿಂದ ವಿಧಿತವಾಗುತ್ತದೆ. ಸಿದ್ಧಲಿಂಗನ ಓಲಗದಲ್ಲಿ ‘ಸುವ್ವಿಯ ಮೇಳ’ವೂ ಇತ್ತೆಂದು ಇದೇ ಸಾಂಗತ್ಯ ಕೃತಿಯಲ್ಲಿ (೫-೮೩) ಕವಿ ಹೇಳಿರುವನು. ಈತ ಜಾನಪದ ಕವಿಯಾದರೂ ನೀರಸಕವಿಯೇನಲ್ಲ. ಹರದನಪುರ ಪರಿಸರ ಕಗ್ಗೆರೆಯಲ್ಲಿ ಸಿದ್ಧನ ದರ್ಶನಕ್ಕೆ ಸೇರಿದ ಭಕ್ತಜನ ಪರಿಷೆ, ಹೂದೋಂಟದಿಂದ ಕಗ್ಗೆರೆಗೆ, ಕಗ್ಗೆರೆಯಿಂದ ಎಡೆಯೂರಿಗೆ ಚಿತ್ತೆೈಸುವಾಗಿನ ವರ್ಣನೆಗಳು, ಸಿದ್ಧನ ವಾರ್ಷಿಕ ತೇರಪರುಸೆಯ ವರ್ಣನೆ, ತೇರಿಗೆ ಬಂದಿದ್ದ ಸ್ತ್ರೀಪುರುಷರ ಹಾಗೂ ಅವರ ಉಡುಪು-ಆಭರಣಗಳ, ಅಂಗಡಿಮುಂಗಟ್ಟುಗಳ ವರ್ಣನೆಗಳು ರಂಜಕಗಳಾಗಿವೆ. ಹಾಗೂ ನೈಜವಾಗಿವೆ. ಕವಿಯೇ ಪದ್ಯ ೧-೧೬ರಲ್ಲಿ ಹೇಳಿಕೊಂಡಂತೆ;

ಛಂದಸ್ಸು ಶಬ್ದಸೂತ್ರವು ಗ್ರಂಥಶಾಸ್ತ್ರವ

ಒಂದುವನರಿತವನಲ್ಲ (೧-೧೬)

ಸಾಹಿತ್ಯ ಶಾಸ್ತ್ರಾಭ್ಯಾಸವನ್ನು ಮಾಡದಿದ್ದರೂ ಸಿದ್ಧರಾಮಚರಿತ್ರೆ, ಹರಿಶ್ಚಂದ್ರಕಾವ್ಯ ಮುಂತಾದ ಅನೇಕ ಕಾವ್ಯಗಳನ್ನು ಕಿವಿಯಾರೆ ಕೇಳಿದ ಅನುಭವಗಳು ಇವನಲ್ಲಿ ಮೈಗೂಡಿರುವುದರಿಂದ ಅಲ್ಲಲ್ಲಿ ಅತ್ಯುತ್ತಮವಾದ ಕಾವ್ಯಾಂಶಗಳು ಎದ್ದು ಕಾಣುತ್ತವೆ

ಈ ಜಾನಪದ ಸಾಹಿತಿಗಳನ್ನು ಭಾಷಾ ದೃಷ್ಟಿಯಿಂದ ಅಳೆಯಬಾರದು. ಅವರ ಅನುಭವ, ವಿಚಾರ, ವರದಿ(ಮಾಹಿತಿ)...ಇವುಗಳಿಂದ ಮಾತ್ರವೇ ಗುರುತಿಸಬೇಕು. ಸುವ್ವಿಮಲ್ಲನು ಇದೇ ಅಂಶವನ್ನು ವಿನಯದಿಂದ ಪದ್ಯ ೧-೧೬ರಲ್ಲಿ ತೋಡಿಕೊಂಡು ಪ್ರಾರ್ಥಿಸಿ  ಕೊಂಡಿರುವನು. ಛಂದಸ್ಸು-ವ್ಯಾಕರಣ-ಶಾಸ್ತ್ರ... ಮುಂತಾದವುಗಳನ್ನು ಗಮನಿಸಬಾರದು. ಕವಿಯೇ ತಿಳಿಸಿರುವಂತೆ ಇದು ಪದ  ಸಾಂಗತ್ಯ (೫-೪೪) ಬಲ್ಲಂತೆ ಪೇಳಿದೆ ಪದದೊಳು.

    ಒಟ್ಟಾರೆಯಾಗಿ ಜೈನ, ವೀರಶೈವ, ವೈದಿಕ ಕಾವ್ಯಗಳಲ್ಲಿ ಹಲವಾರು ಚರಿತ್ರೆಯ ಕೃತಿಗಳು ಸಾಂಗತ್ಯದಲ್ಲಿ ರಚನೆಯಾದಂತೆ. ಕವಿ ಸುವ್ವಿಮಲ್ಲಿಗೆವಡೇರು ಬರೆದಿರುವ ‘ತೋಂಟದ ಸಿದ್ಧೇಶ್ವರನ ಸಾಂಗತ್ಯ’ ಎಂಬ ಕೃತಿಯು ಕೂಡ ಜಾನಪದೀಯ ಶೈಲಿಯಲ್ಲಿ  ರಚಿಸಿದಂತಹ ಸಾಂಗತ್ಯ ಕೃತಿಯಿದಾಗಿದೆ. ಇಲ್ಲಿಯೂ ಕೂಡ ಸಿದ್ಧಲಿಂಗರ ಚರಿತ್ರೆ ಮತ್ತು ಪವಾಡದ ಅಂಶಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

          ಕನ್ನಡ ಸಾಹಿತ್ಯದಲ್ಲಿ ಸಾಂಗತ್ಯದ ಸ್ಥಾನಮಾನ :

       ಸಾಂಗತ್ಯವು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಹಾಗೂ ಉನ್ನತ ಸ್ಥಾನವನ್ನು ಪಡೆದು ಕೊಂಡಿದೆ. ಉಳಿದ ಪ್ರಕಾರಗಳೊಡನೆ ಹೋಲಿಸಿ ನೋಡಿದಾಗ, ಕೃತಿಸಂಖ್ಯೆ ಹಾಗೂ ಸತ್ವದ ದೃಷ್ಟಿಯಿಂದ ಚಂಪೂ, ಷಟ್ಪದಿಗಳ ತರುವಾಯದ ಮೂರನೆಯ ಸ್ಥಾನ ಇದಕ್ಕೆ ಸಲ್ಲುತ್ತದೆ. ಆದರೆ ಜನಪ್ರಿಯತೆಯ ದೃಷ್ಟಿಯಿಂದ ಉಳಿದೆಲ್ಲ ಪ್ರಕಾರಗಳಿಗಿಂತಲೂ ಒಂದುಹೆಜ್ಜೆ ಮುಂದೆಯೇ ಇದೆಯೆಂದು ಹೇಳಿದರೆ ಅತಿಶಯೋಕ್ತಿಯೆನಿಸದು.

      ಸಾಂಗತ್ಯ ಬಹಳತಡವಾಗಿ ಬೆಳಕಿಗೆ ಬಂದರೂ ಕೂಡ ಬಹುಬೇಗ ಜನಪ್ರಿಯತೆಯನ್ನು ಪಡೆಯಿತು. ಮಹಾಕಾವ್ಯಗಳು, ಉತ್ಕೃಷ್ಟ ಮಹತ್ಕೃತಿಗಳು ಸತ್ಕಾವ್ಯಗಳು ಇದರಲ್ಲಿ  ಮೈದಾಳಿ ಪ್ರಸಿದ್ಧಿಯನ್ನು ಪಡೆದು, ಉಳಿದ ಪ್ರಕಾರಗಳ ಕೃತಿಗಳ ಹೆಗಲೆಣೆಯಾಗಿ ನಿಲ್ಲುವ ಅರ್ಹತೆಯನ್ನು ಹೊಂದಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳಾಗಿ ಪರಿಣಮಿಸಿದವು. ಅಷ್ಟೇ ಅಲ್ಲ ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯದ ಕೀರ್ತಿಯನ್ನು ಬೆಳಗಲು ಸಹಾಯಕವಾದವು.

      ಸಾಂಗತ್ಯ ಕನ್ನಡದಲ್ಲಿ ಎರಡು ವಿಧದಿಂದ ವೈಶಿಷ್ಟ್ಯವನ್ನು ಸಾಧಿಸಿದೆ. ಒಂದುಛಂದೋ ರೂಪವಾಗಿ, ಮತ್ತೊಂದು  ಸಾಹಿತ್ಯ ಪ್ರಕಾರವಾಗಿ. ಮೊದಲನೆಯದಾಗಿ ಇದು ಕನ್ನಡದ ವಿಶಿಷ್ಟ ಛಂದೋರೂಪ. ಕನ್ನಡದಲ್ಲಿ ಕರ್ನಾಟಕದ ವಿಷಯಜಾತಿಗಳೆಂದು ಪ್ರಸಿದ್ಧವಾದ ಛಂದೋಬಂಧಗಳಲ್ಲಿ ಇದಕ್ಕೊಂದು ಪ್ರತ್ಯೇಕವಾದ ಗೌರವದಸ್ಥಾನ ಮೀಸಲಾಗಿದೆ.  ತಡವಾಗಿ ಪ್ರಕಟವಾಯಿತೆಂದೋ ಏನೋ  ಲಾಕ್ಷಣಿಕರ ಗಮನಕ್ಕೆ ಬಾರದೇ, ಲಕ್ಷ್ಯಲಕ್ಷಣ ಸಮೇತ ಉಳಿದ  ಕನ್ನಡ ಮಟ್ಟುಗಳೊಡನೆ  ಛಂದೋಗ್ರಂಥಗಳಲ್ಲಿ  ಸ್ಥಾನ ಪಡೆಯದ ಸಾಂಗತ್ಯ. ಹೊರಬಂದ ಅಲ್ಪಾವಧಿಯಲ್ಲಿಯೇ ಅವುಗಳಿಗಿಂತ ಮಿಗಿಲಾದ ಪ್ರಚಾರ-ಪ್ರತಿಷ್ಠೆಗಳನ್ನು ಗಳಿಸಿ ಘನತೆಗೇರಿ ನಿಂತಿತು. ಇದು ಇತರ ಪ್ರಕಾರಗಳಂತೆತನ್ನ ಮೂಲಲಯವನ್ನು ಬಿಟ್ಟು ಕದಲದೇ ಶುದ್ಧ ದೇಶೀ ಬಂಧವಾಗಿ ಬಾಳಿ ಬದುಕಿದೆ. ಉಳಿದ ಕನ್ನಡ ಛಂದೋಬಂಧಗಳು  ಇಡಿಯಾಗಿ  ಕಾವ್ಯಕ್ಕೆ ವಾಹಕವಾಗಿದೆ.  ಕೇವಲ ಬಿಡಿಯಾಗಿ  ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡರೆ ಸಾಂಗತ್ಯ ಬಿಡಿಯಿಂದಹಿಡಿದು ಇಡಿಯವರೆಗೆ ಕಿರುಕಾವ್ಯದಿಂದ ಹಿರಿಯ ಮಹಾಕಾವ್ಯಗಳವರೆಗೆ ಮೈಚಾಚಿ ನಿಂತಿತು. ಸಾಂಗತ್ಯವು ಯಾವ ಕನ್ನಡ ಬಂಧವು ತೋರದ ಹೊಸತನವನ್ನು ತೋರಿ ಸ್ವಚ್ಛಂದತೆ, ಸರಳತೆ, ನಯಗಾರಿಕೆಯನ್ನು ಮೈಗೂಡಿಸಿಕೊಂಡು ಮೆರೆದಿದೆ. ಎರಡನೆಯದಾಗಿ ಸಾಂಗತ್ಯ ಸಾಹಿತ್ಯ ರೂಪವನ್ನು ತಾಳಿ ಅಲ್ಲಿಯೂ ತನ್ನ ವಿಶಿಷ್ಟತೆಯನ್ನು ಪ್ರದರ್ಶಿಸಿದೆ. ಅದು ತನಗಿಂತ ಹಿಂದೆ ಕನ್ನಡದಲ್ಲಿ ಬೆಳೆದುಬಂದುತಮ್ಮ ಸ್ಥಾನವನ್ನು  ಸ್ಥಿರಗೊಳಿಸಿಕೊಂಡ ಸಾಹಿತ್ಯ  ಪ್ರಕಾರಗಳ  ಸಾರಸರ‍್ವಸ್ವವನೆಲ್ಲಾ ಹೀರಿಕೊಂಡು ತನ್ನದೇ ಆದ ಹಾಗೂ  ಸ್ವಚ್ಛಂದ ಮಾರ್ಗವನ್ನು ಅನುಸರಿಸಿ  ಹೊಸದೊಂದು ಪ್ರಕಾರವಾಗಿ, ಅವುಗಳಷ್ಟೇ ಸುಸ್ಥಿರವಾದ ಸ್ಥಾನವನ್ನು ಗಳಿಸಿಕೊಂಡುನಿಂತಿದೆ. ವಸ್ತು, ವರ್ಣನೆ, ತಂತ್ರ, ರಸ, ಪಾತ್ರ ಇತ್ಯಾದಿಗಳಲ್ಲಿ ಸ್ವಲ್ಪ ಮಟ್ಟಿನ ಪರಂಪರೆಯ ಅನುಕರಣೆ ಇದರಲ್ಲೂ ಕಂಡುಬಂದರೂ ಅದಕ್ಕಿಂತ ಹೆಚ್ಚಾಗಿ ಸ್ವತಂತ್ರತೆ, ಅನುಕರಣಾತೀತತೆ ಎದ್ದು ತೋರುತ್ತದೆ.  

      ಇತರ ಪ್ರಕಾರಗಳಂತೆ ಸಾಂಗತ್ಯದಲ್ಲಿಯೂ ಜೈನ, ವೀರಶೈವ, ಬ್ರಾಹ್ಮಣ ಈ ತ್ರಿಮತದ ಕವಿಗಳು ಸಾಹಿತ್ಯ ಕೃತಿ ಮಾಡಿದ್ದಾರೆ.  ಅದರಂತೆ ಸ್ತ್ರೀಯರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯದಲ್ಲಿ ಸಾಂಗತ್ಯದ ಸ್ಥಾನಮಾನ ಹೆಚ್ಚುವಂತೆ, ಎದ್ದು ತೋರುವಂತೆ ಮಾಡಿದ್ದಾರೆ. ವಸ್ತುವಿನ  ದೃಷ್ಟಿಯಿಂದ ನೋಡಿದರೆ  ಸಾಂಗತ್ಯ ಸಾಹಿತ್ಯ ವೈವಿಧ್ಯಮಯ ವಸ್ತುಗಳನ್ನೊಳಗೊಂಡಿದೆ. ಇತರ  ಪ್ರಕಾರಗಳಂತೆ ಇದರಲ್ಲಿಯೂ ಮತತತ್ವ ಪ್ರಧಾನ ಕಾವ್ಯಗಳು ಹೆಚ್ಚಾಗಿ ಮೂಡಿ ಬಂದಿದ್ದರೂ ಅವು  ಕೇವಲ ಮತಪ್ರಚಾರಕ ಶುಷ್ಕ ಕಾವ್ಯಗಳಾಗಿರದೇ ಕಾವ್ಯ ತತ್ವಗಳನ್ನೊಳಗೊಂಡ  ಕಲಾಕೃತಿಗಳಾಗಿವೆ. ಐತಿಹಾಸಿಕ  ಕಾವ್ಯಗಳು  ಸಾಂಗತ್ಯ ಪ್ರಕಾರಗಳಲ್ಲಿ  ಹೆಚ್ಚಾಗಿ ರಚನೆಗೊಂಡಿವೆ. ಉಳಿದ ಪ್ರಕಾರಗಳಲ್ಲಿ  ಕಾಣಸಿಗದ ಚಾರಿತ್ರಿಕ ವಸ್ತುಗಳಿಗಿಂತ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿದ್ದು ಅದರ  ಕೊರತೆಯನ್ನು ತುಂಬಿದ ಕೀರ್ತಿ ಸಾಂಗತ್ಯಕವಿಗಳಿಗೆ ಸಲ್ಲುತ್ತದೆ.  ಇದು ಕನ್ನಡ ಸಾಹಿತ್ಯಕ್ಕೆ ಸಾಂಗತ್ಯ ಕೊಟ್ಟ ಉಜ್ವಲ ಕಾಣಿಕೆಯಾಗಿದೆ. 

      ಶೃಂಗಾರ ಭಕ್ತಿ ಕರುಣ ರಸಗಳಿಗೆ ಸಾಂಗತ್ಯದಲ್ಲಿ ಹಿರಿದಾದ ಗೌರವಾನ್ವಿತ ಸ್ಥಾನಸಂದಿದೆ. ಉಳಿದ ರಸಗಳು ಅಲ್ಲಲಿ ಪೋಷಕವಾಗಿ ಬಂದಿವೆ. ಕನ್ನಡ ಸಾಹಿತ್ಯಕ್ಕೆ ಸಾಂಗತ್ಯವು ಮಹಾಕಾವ್ಯವೊಂದನ್ನು  ತನ್ನ ಉತ್ಕೃಷ್ಟ  ಹಾಗೂ ಉನ್ನತ  ಕೊಡುಗೆಯಾಗಿ ಅರ್ಪಿಸಿದೆ. ರತ್ನಾಕರನ ಭರತೇಶವೈಭವೇ ಆ ಅಪೂರ್ವ ಕೊಡುಗೆ. ಅದು ಸಾಂಗತ್ಯಸಾಹಿತ್ಯದ ಕೀರ್ತಿ ಶಿಖರವಾಗಿ ಅಷ್ಟೇ ಅಲ್ಲ ಇಡಿ ಕನ್ನಡ ಸಾಹಿತ್ಯದಲ್ಲಿಯೆ ಮೇರು ಕೃತಿಯಾಗಿ, ಮಹಾಕಲಾಕೃತಿಯಾಗಿ ಮೂಡಿ ಬಂದಿದೆ. ಸ್ವತಂತ್ರ ಮತಿಗಳಾಗಿ  ನೂತನ ಮಾರ್ಗ ಸ್ಥಾಪಿಸಿ ಮಹಾಕಾವ್ಯಗಳನ್ನು ರಚಿಸಿ ವಿಶ್ವಸಾಹಿತ್ಯದಲ್ಲಿ ಕನ್ನಡದ ಕೀರ್ತಿಧ್ವಜವನ್ನು ಹಾರಿಸಲು ಕಾರಣರಾದ ಪಂಪ, ಹರಿಹರ, ಕುಮಾರವ್ಯಾಸರ ಸಾಲಿನಲ್ಲಿ ಸರಿದೊರೆಯಾಗಿ ನಿಲ್ಲುವ ಅರ್ಹತೆಯನ್ನು ರತ್ನಾಕರವರ್ಣಿ ಪಡೆದುಕೊಂಡಿದ್ದಾನೆ.    ಸಾಂಗತ್ಯದ ಏರಿಕೆಯ ಕಾಲ ಮುಗಿದ ಮೇಲೆ ಅದು ಇಡೀ ಕಾವ್ಯದಂತೆ ಬಿಡಿಬಿಡಿಯಾಗಿ ಮುಂದೆ ಯಕ್ಷಗಾನ, ಜನಪದ, ಹಾಡು,ಭಾವಗೀತೆಗಳಲ್ಲಿ ಎಡೆಪಡೆದು ತನ್ನ ಜೀವಂತಿಕೆಯನ್ನು ಪ್ರಕಟಪಡಿಸಿದೆ. ಇಂದಿಗೂ ಅದರ ಲಯ ಕವಿಗಳ ಮನವನ್ನುಮಿಡಿದು ಕಾವ್ಯ ಸೃಷ್ಟಿಗೆ ಪ್ರಚೋದಿಸುತ್ತಾ ನಡೆದಿದೆ.

  ಪ್ರಮುಖ ಸಾಂಗತ್ಯ ಕೃತಿಗಳ ಪರಿಚಯ

ರತ್ನಾಕರ್ಣಿಯ ಭರತೇಶ ವೈಭವ

ರತ್ನಾಕರ ಕವಿಯ ಕಾಲ-ವೈಯಕ್ತಿಕ ವಿಚಾರಗಳು:

 ಭರತೇಶವೈಭವ, ರತ್ನಾಕರಾಧೀಶ್ವರ ಶತಕ, ಅಪರಾಜಿತ ಶತಕ, ತ್ರಿಲೋಕಶತಕಗಳೆಂಬ ಶತಕ ತ್ರಯವನ್ನು ಹಾಗೂ ಸುಮಾರು ಎರಡು ಸಾವಿರ ಹಾಡುಗಳನ್ನು ರಚಿಸಿದ್ದಾನೆ. ರತ್ನಾಕರ ಕವಿಯ ಕಾಲದ ಬಗೆ, ಅವರ ತ್ರೆೈಲೋಕ ಶತಕದ ಕೊನೆಯ ವೃತ್ತದಲ್ಲಿ ವಿವರ ಹಾಗೂ ದೇವಚಂದ್ರನ ರಾಜಾವಳೀ ಕಥೆಯ ಒಂದು ಗದ್ಯಭಾಗವನ್ನು ಆಧರಿಸಿ ವಿದ್ವಾಂಸರು ಏಕಾಭಿಪ್ರಾಯವನ್ನು ತಾಳಿದ್ದಾರೆ. 

ತ್ರಿಲೋಕ ಶತಕದ

ಮಣಿಶೈಲಂ ಗತಿಯೆಂದು ಶಾಲಿಶಕ ಕಾಲಂ ಸಂಸಿರಲ್ತೌಳವಾಂ

ಗಣದೊಳ್ವೇಣುಪುರಾಂಕದೊಳ್ ಸೃಜಿಸಿದಂ ರತ್ನಾಕರಾರ್ಯಂ”

ಈ ವೃತ್ತದಲ್ಲಿಯ ಮಣಿ (ರತ್ನ)-9, ಶೈಲ-ಪರ್ವತ-7, ಗತಿ-4, ಇಂದು-ಚಂದ್ರ-1. 9೭೪1,  1479 ಶಾಲಿವಾಹನ ಶಕ. ಅರ್ಥಾತ್ ಕ್ರಿ.ಶ.1557 ಆಗುತ್ತದೆ. ಅಂದರೆ ಕವಿಯೇ ಹೇಳಿಕೊಂಡಿರುವ ಹಾಗೆ ತ್ರಿಲೋಕ ಶತಕದ ರಚನಾಕಾಲ ಕ್ರಿ.ಶ.1557 ಆಗಿದೆ.

   ದೇವಚಂದ್ರನ ರಾಜಾವಳಿಕಥೆಯಲ್ಲಿಯ ವಿವರಣೆಯ ಪ್ರಕಾರ ರತ್ನಾಕರವರ್ಣಿಯು ತುಳುವ ದೇಶದ ಮೂಡ ಬಿದರೆಯವನು, ತ್ರಿಲೋಕಶತಕವನ್ನು ತೌಳವಾಂಗಣದೊಳು ವೇಣುಪುರಾಂಕದೊಳ ಸೃಜಿಸಿದ ಎಂಬ ಹೇಳಿಕೆಯಲ್ಲಿ ಏಣುಪುರದವನು ಎಂದು ತಿಳಿದು ಬರುವುದಾದರೂ ಗೋವಿಂದ ಪೈಗಳು ವೇಣುಪುರ ಹಾಗೂ ಮೂಡಬಿದರೆ ಒಂದೇ ಎಂಬುದನ್ನು ಆಧಾರಗಳ ಮೂಲಕ ಖಚಿತ ಪಡಿಸಿದ್ದಾರೆ. ಕಾರ್ಕಳವು ರಾಜಧಾನಿಯಾಗಿದ್ದ ಸೋಮವಂಶದ ಬೈರರಸ ಒಡೆಯರ ಆಳ್ವಿಕೆಗೆ ಮೂಡಬಿದರೆಯು ಒಳಪಟ್ಟಿತ್ತು. 

 ಕವಿಯ ಬಗೆಗೆ ದೊರೆಯುವ ಆಂತರಿಕ ಹಾಗೂ ಬಾಹ್ಯ ಸಾಕ್ಷ್ಯಗಳನ್ನು ಆಧರಿಸಿ ರತ್ನಾಕರವರ್ಣಿಯು ೧೬ನೇ ಶತಮಾನದ ಕವಿ ಎಂಬ ನಿಲುವಿಗೆ ವಿದ್ವಾಂಸರು ಬಂದಿದ್ದಾರೆ. ರತ್ನಾಕರನು ತನಗೆ ಶೃಂಗಾರ ಕವಿಯೆಂದು ಬಿರುದಿತ್ತ ಇಮ್ಮಡಿ ವೀರ ಭೈರವರಸನ ಆಳಿಕೆಯಲ್ಲಿ (ಸು.೧೪೯೦-೧೫೩೫) ಕ್ರಿ.ಶ.ಸು.೧೫೩೦-೩೫ ರೊಳಗೆ ಭರತೇಶವೈಭವವನ್ನು ರಚಿಸಿದ್ದಾನೆಂದು ಗೋವಿಂದ ಪೈಗಳು ನಿರ್ಣಯಿಸಿದ್ದಾರೆ. ಹೀಗಾಗಿ ಕವಿಯು ಕ್ರಿ.ಶ.೧೫೦೦ರ ನೆರೆಯಲ್ಲಿ ಜನಿಸಿ ಸು.೧೫೩೦-೩೫ ರೊಳಗೆ ಭರತೇಶವೈಭವವನ್ನು, ಸುಮಾರು ೧೫೫೦-೬೦ ರೊಳಗೆ ಮೂರು ಶತಕಗಳನ್ನು ಬರೆದು ಸುಮಾರು ೧೫೬೦-೭೦ ರ ವೇಳೆ ಕಾಲವಾಗಿರಬೇಕು ಎಂದು ಊಹಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ವಿದ್ವಾಂಸರು ನಿರ್ಣಯಿಸಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕವಿಯ ಕಾಲ ಕ್ರಿ.ಶ.೧೫೦೦-೧೫೭೦ ಆಗಿದೆ. 

 ಕವಿಯು ತನ್ನ ಕೃತಿಗಳಲ್ಲಿ ಸ್ವಕೀಯ ವಿವರಗಳ ಬಗೆಗೆ ಹೆಚ್ಚೇನನ್ನೂ ಹೇಳಿಲ್ಲ. ಭರತೇಶವೈಭವದಲ್ಲಿ ತನ್ನನ್ನು ಕ್ಷತ್ರಿಯವಂಶದವನೆಂದು ಹೇಳಿದ್ದಾನೆ. ದೀಕ್ಷಾಗ್ರ ಗುರು ಚಾರುಕೀರ್ತಿ ಯೋಗೀಶ್ವರ ಎಂದಷ್ಟೇ ಹೇಳಿದ್ದಾನೆ. ತಂದೆ,ತಾಯಿಗಳ ಬಗೆಗೆ ಏನನ್ನೂ ಹೇಳಿಲ್ಲ. ರತ್ನಾಕರಧೀಶ್ವರ ಶತಕದಲ್ಲಿ ದೇವೇಂದ್ರ ಕೀರ್ತಿ ಎಂದು ಹೇಳಿಕೊಂಡಿದ್ದಾನೆ. 

 ಜೈನನಾಗಿದ್ದ ರತ್ನಾಕರನು ವೀರಶೈವನಾಗಿ ಪುನ: ಜೈನಮತವನ್ನು ಅಂಗೀಕರಿಸಿದ ಮೇಲೆ ದೇವೇಂದ್ರ ಕೀರ್ತಿಗಳನ್ನು ಗುರುವಾಗಿ ಸ್ವೀಕರಿಸಿದ್ದಿರಬೇಕು. ಎರಡನೇ ಬಾರಿ ಜೈನ ಮತವನ್ನು ಸ್ವೀಕರಿಸಿದ ಮೇಲೆ ರತ್ನಾಕರಾಧೀಶ್ವರ ಶತಕವನ್ನು ಬರೆದಿರಬೇಕು. ಹೀಗಾಗಿ ಚಾರುಕೀರ್ತಿ ಹಾಗೂ ದೇವೇಂದ್ರ ಕೀರ್ತಿಗಳಿಬ್ಬರು ಈತನ ಗುರುಗಳು ಎಂದು ಭಾವಿಸಬಹುದು. 

            ಭರತೇಶವೈಭವ ಕಾವ್ಯದ  ಸಂಕ್ಷಿಪ್ತ ಕಥಾಸಾರ

 ಈ ಕಾವ್ಯವು ಸಾಂಗತ್ಯದ ಛಂದಸ್ಸಿನಲ್ಲಿ ಬರೆದಿರುವ ಸುಮಾರು ಹತ್ತು ಸಾವಿರ ಪದ್ಯಗಳನ್ನೊಳಗೊಂಡಿದೆ. ಈ ಗ್ರಂಥದ ಕೊನೆಯಲ್ಲಿ “ವೃಷಭಮಾಸದಿ ತೊಡಗಿತು ಕುಂಭಮಾಸಸದ್ವಿಷಯದಿ ಕೃತಿಪೂರ್ಣವಾಯ್ತು”ಎಂದು ಕವಿ ಹೇಳಿದ್ದಾನೆ. ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಹತ್ತು ಸಾವಿರ ಪದ್ಯಗಳನ್ನು ರಚಿಸುವುದೆಂದರೆ ಕವಿಯ ಶಕ್ತಿಯ ಅಸಾಧಾರಣವೇ ಸರಿ. ಅದರಲ್ಲಿಯೂ ಬೃಹತ್ ಕೃತಿಗೆ ಹೊಯ್‌ಕಯ್ಯಾದ ಮಹತ್ತೂ ಕಾವ್ಯದಲ್ಲಿ ಕಾಣಬರುವುದರಿಂದ ಕವಿ ಕಾವ್ಯಜಗತ್ತಿನ ಒಬ್ಬ ಪವಾಡಪುರುಷನಂತೆ ಕಾಣಬರುತ್ತಾನೆ.

  ಪ್ರಥಮ ತೀರ್ಥಂಕರ ವೃಷಭನಾಥನ ಹಿರಿಯಮಗನೂ, ೧೬ನೆಯ ಮನುವೂ, ಪ್ರಥಮ ಚಕ್ರೇಶ್ವರನೂ ಆದ ಭರತನು ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಉದಯದಲ್ಲಿಯೇ ಎದ್ದು, ದೇವತಾರ್ಚನೆಯನ್ನು ಮಾಡಿ, ಒಡ್ಡೋಲಗವನ್ನು ನೆರಹಿ, ಮಧ್ಯಾಹ್ನದವರೆಗೂ ಕವಿಗಾಯಕಗೋಷ್ಠಿಯಲ್ಲಿದ್ದು, ಅನಂತರ ಮುನಿಭಕ್ತಿ ನಿಯಮವನ್ನು ಪಾಲಿಸಿದ ಮೇಲೆ ಉಳಿದ ದಿನವನ್ನೆಲ್ಲ ಭೋಗಯೋಗಗಳ ಸಾಮರಸ್ಯದಲ್ಲಿ ಕಳೆಯುವುದು ಆತನ ದಿನಚರಿ. ವಿಸ್ತಾರವಾದ ತನ್ನ ರಾಜ್ಯವನ್ನು ಆತ ನಿಶ್ಚಿಂತೆಯಿಂದ ಸುಕ್ಷೇಮವಾಗಿ ಆಳುತ್ತಿರಲು, ದಿಗ್ವಿಜಯಸೂಚಕವಾದ ಚಕ್ರರತ್ನವು ಆತನ ಆಯುಧಾಗಾರದಲ್ಲಿ ಉದಯಿಸಿತು. ಭರತನು ದಿಗ್ವಿಜಯಕ್ಕೆ ಹೊರಟು ಹೆಚ್ಚು ಹೋರಾಟವಾಗಲೀ ರಕ್ತಪಾತವಾಗಲೀ ಇಲ್ಲದೆ ಷಟ್‌ಖಂಡಗಳನ್ನು ಜಯಿಸಿದನು. ಆತನ ಹೆಸರು ಹೇಳುತ್ತಲೇ ಭೂಚರ ಖೇಚರ ರಾಜರು ಆತನಿಗೆ ಶರಣಾಗತರಾಗಿ ವಜ್ರವೈಡರ‍್ಯಾದಿ ರತ್ನಗಳನ್ನೂ, ತಮ್ಮ ಕನ್ಯಾರತ್ನಗಳನ್ನೂ ಒಪ್ಪಿಸಿ ಕೃತಕೃತ್ಯರಾಗುತ್ತಾರೆ. ಭರತನ ಸಂಸಾರ ಶ್ರೀಮಂತವಾದುದು. ಆತನಿಗೆ ೯೬,೦೦೦ ಹೆಂಡಿರು. ಅನೇಕರು ದಿಗ್ವಿಜಯ ಕಾಲದಲ್ಲಿ ಮಕ್ಕಳನ್ನು ಹೆರುತ್ತಾರೆ. ಭರತನ ದಿಗ್ವಿಜಯ ಮದನನ ದಿಗ್ವಜಯದಂತೆ ವಿವಾಹೋತ್ಸವ, ಪುತ್ರೋತ್ಸವ ಸಂಭ್ರಮಗಳಲ್ಲಿ ಸಾಗಿ, ಆತನು ವಿಜಯದುಂದುಭಿಯೊಡನೆ ತನ್ನ ರಾಜಧಾನಿಗೆ ಹಿಂದಿರುಗುತ್ತಾನೆ. ಆತನು ಪೌದನಪುರದ ಬಳಿಗೆ ಹಿಂತಿರುಗಿದಾಗ ಮಾರ್ಗದರ್ಶಕವಾಗಿದ್ದ ಚಕ್ರರತ್ನವು ಮುಂದಕ್ಕೆ ಉರುಳದೆ ನಿಲ್ಲುತ್ತದೆ. ಅಲ್ಲಿಗೆ ರಾಜನಾದ ಭರತನ ತಮ್ಮ ಭುಜಬಲಿ ಅಣ್ಣನನ್ನು ಪ್ರತಿಭಟಿಸಿ ನಿಲ್ಲುತ್ತಾನೆ. ಆದರೇನು? ಅಣ್ಣನ ಮಾತುಗಳ ಮೋಡಿಗೆ ಸೋತು ಶರಣಾಗುತ್ತಾನೆ. ಭರತನು ಜಗತ್ತಿನ ಚಕ್ರವರ್ತಿಯಾಗುತ್ತಾನೆ. ಇಲ್ಲಿಂದ ಮುಂದೆ ಭರತನ ತಾಯಿ, ಅವನ ಮಕ್ಕಳಲ್ಲಿ ಹಲವರು ದೀಕ್ಷೆವಹಿಸುತ್ತಾರೆ; ತಂದೆಯಾದ ತೀರ್ಥಂಕರನು ಮುಕ್ತನಾಗುತ್ತಾನೆ; ಕನ್ನಡಿಯಲ್ಲಿ ನರೆಗೂದಲನ್ನು ಕಂಡು ಭರತನೂ ದೀಕ್ಷೆವಹಿಸುತ್ತಾನೆ; ಆಮೇಲೆ ಆತನ ಮಕ್ಕಳಾದ ಅರ್ಕಕೀರ್ತಿಯೂ ಆದಿರಾಜನೂ ಕೆಲಕಾಲ ರಾಜ್ಯಭಾರಮಾಡಿ ದೀಕ್ಷೆವಹಿಸುತ್ತಾರೆ.

  ಮೇಲೆ ಹೇಳಿರುವ ಭರತ ಚಕ್ರಿಯ ಕಥೆ ರತ್ನಾಕರನ ಸ್ವಕಪೋಲಕಲ್ಪಿತವಾದುದಲ್ಲ. ಜಿನಸೇನ ಮುನಿಯು ತನ್ನ ಸಂಸ್ಕೃತದ ‘ಪೂರ್ವಪುರಾಣ’ದಲ್ಲಿಯೂ, ಆತನನ್ನು ಅನುಸರಿಸಿ ಆದಿಕವಿ ಪಂಪನು ತನ್ನ ಕನ್ನಡದ ಆದಿಪುರಾಣದಲ್ಲಿಯೂ, ಆದಿ ತೀರ್ಥಂಕರನ ಚರಿತ್ರೆಯನ್ನು ಬರೆಯುವಾಗ, ಪ್ರಥಮ ಚಕ್ರಿಯಾದ ಭರತನ ಕಥೆಯನ್ನೂ ಮುಖ್ಯಕಥೆಯ ಪರಿಶಿಷ್ಟವೆಂಬಂತೆ ಸಾಕಷ್ಟು ವಿಸ್ತಾರವಾಗಿಯೇ ಬರೆದಿದ್ದಾರೆ. ಆದರೆ, ಅವರು ಪ್ರಕರಣವನ್ನು ಮಾತ್ರ ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. ಅವರು ಕೇವಲ ಸೂಚಿಸಿದ್ದನ್ನು ರತ್ನಾಕರನು ವಿಸ್ತರಿಸಿ, ಭರತನ ಭೋಗಜೀವನವನ್ನು ರಂಗುರಂಗಾಗಿ ಚಿತ್ರಿಸಿದ್ದಾನೆ. ಹಿಂದಿನ ಕವಿಗಳಾರೂ ಭರತನ ಕಥೆಯನ್ನೇ ಪ್ರತ್ಯೇಕವಾಗಿ ಪ್ರತಿಪಾದಿಸುವ ಗೋಜಿಗೆ ಹೋಗಿರಲಿಲ್ಲ. ಅವನ ದಿನದಿನದ ಜೀವನ ಹೇಗೆ ರಸಮಯವಾಗಿತ್ತೆಂಬುದನ್ನು ವರ್ಣಿಸುವ ಗೋಜಿಗೂ ಹೋಗಿರಲಿಲ್ಲ. ರತ್ನಾಕರನು ಇವೆರಡನ್ನು ತನ್ನ ಕಾವ್ಯದಲ್ಲಿ ಸಾಧಿಸಿ, ಸಾಹಿತ್ಯ ಜಗತ್ತಿನಲ್ಲಿ ತನ್ನ ವ್ಯಕ್ತಿತ್ವನ್ನು ಸ್ಥಾಪಿಸಿಕೊಂಡಿದ್ದಾನೆ.

  ಜೈನಪುರಾಣಾಂತರ್ಗವಾದ ಕಥೆಯ ಮೂಲರೇಖೆಗಳನ್ನು ರತ್ನಾಕರನು ತನ್ನ ಕಾವ್ಯದಲ್ಲಿ ಬಳಸಿಕೊಂಡಿರುವುನಾದರೂ, ಅವುಗಳಲ್ಲಿ ಅಲ್ಲಲ್ಲಿಯೇ ಕೆಲವು ವ್ಯತ್ಯಾಸಗಳನ್ನು ಮಾಡಿದ್ದಾನೆ. ಈ ವ್ಯತ್ಯಾಸಗಳು ಮುಖ್ಯವಾಗಿ ಎರಡು ತೆರನಾದವು. ಮೂಲಕಥೆಯ ಆಶಯಕ್ಕೆ ಭಂಗಬಾರದಂತೆ ಕವಿಯು ಹೊಸದಾಗಿ ಸೃಷ್ಟಿಸಿ ಸೇರಿಸಿರುವ ಭಾಗಗಳು; ಮೂಲದಲ್ಲಿ ಇದ್ದ ಕಥಾಭಾಗಗಳ ಇವರ ವಿವರಣೆಯಲ್ಲಿ ವ್ಯತ್ಯಾಸ ಮಾಡಿಕೊಂಡಿರುವುದು. ಈ ಬದಲಾವಣೆಗಳ ಮೂಲಕ ಕವಿಯು ಕಥಾನಾಯಕನ ಪಾತ್ರವನ್ನು ಉದಾತ್ತವಾಗಿ, ಮಹೋನ್ನತವಾಗುವಂತೆ ಮಾಡಲು ಪ್ರಯತ್ನಿಸಿದ್ದಾನೆ. ಭರತ ಚಕ್ರಿಯನ್ನು ಕಥಾನಾಯಕನಾಗಿ ಆರಿಸಿಕೊಂಡಿರುವುದರಿಂದಲೇ ನಮಗೆ ಅರ್ಥವಾಗುತ್ತದೆ, ಕವಿಗೆ ಆತನಲ್ಲಿರುವ ಭಕ್ತಿ ಗೌರವಗಳು, ಕಾವ್ಯದ ಆರಂಭದಲ್ಲಿಯೇ ಕವಿ ಹೇಳುತ್ತಾನೆ “ಕಾವ್ಯಪತಿ ಚಕ್ರಿ ಸಾಮಾನ್ಯನಲ್ಲ”ಎಂದು. ಹೇಗೆ ಸಾಮಾನ್ಯನಾದಾನು? ಅಪಾರ ಪೂರ್ವಪುಣ್ಯದ ಫಲವಾಗಿ ಆತನು ಪ್ರಥಮ ತೀರ್ಥಂಕರನ ಮಗನಾಗಿ, ಚಕ್ರವರ್ತಿಯಾಗಿ ಜನಿಸಿದ್ದಾನೆ. ಆತನ ಸಾಧನೆಯೂ ಅಸಾಧಾರಣವಾದುದು. “ಕ್ಷತ್ರಿಯ ಕುಲರತ್ನಗಾಹಾರವುಂಟು, ಮಲವಿಲ್ಲ ಮೂತ್ರವಿಲ್ಲವೆಂದರಿ, ಲೋಕದ ಬಳಕೆಗಾರರ ಪೇಳ್ವ ತೆರನೆ?” ಸಾಧನೆಯಿಂದ ಪರಿಪಕ್ವಚೇತನವಾಗಿ, ವೀತರಾಗನಾಗಿ, ಚಿದಂಬರಪುರುಷನಾಗಿದ್ದಾನೆ. ಆತ. ಆ ಸಿದ್ಧಜೀವಿ “ಮುರಿದು ಕಣ್ಣಿಟ್ಟರೆ ಕ್ಷಣಕ್ಕೆ ಮುಕ್ತಿಯ ಕಾಂಬ” ಮಹಾನುಭಾವ. ತೀರ್ಥಂಕರನ ಚರಿತ್ರೆಯಂತೆ ಭರತನ ಕಥೆಯೂ ಕೇಳುವವರಿಗೆ, ಓದುವವರಿಗೆ ಪುಣ್ಯಪ್ರದ, ಮೋಕ್ಷಪ್ರದ ಎಂಬುದು ಕವಿಯ ಹೇಳಿಕೆ.

  ಭರತೇಶ ವೈಭವದ ಗ್ರಂಥ ವಿಭಾಗದಲ್ಲಿಯೇ ಕವಿ ತನ್ನ ಕಥಾನಾಯಕನಿಗೆ ಹಿರಿದೊಂದು ಸ್ಥಾನವನ್ನು ಗಳಿಸಿಕೊಡಲು ಹೊರಡಿರುವಂತೆ ತೋರುತ್ತದೆ. ತೀರ್ಥಂಕರ ಚರಿತೆಯನ್ನು ಬರೆಯುವ ಜೈನ ಕವಿಗಳು ಗರ್ಭಾವತರಣವೇ ಮೊದಲಾದ ಪಂಚಕಲ್ಯಾಣಗಳನ್ನಾಗಿ ವಿಭಾಗಿಸಿಕೊಂಡು ಅದನ್ನು ಬರೆಯುವ ಪದ್ಧತಿ. ಭರತನು ಜಿನನಲ್ಲ. ಸಂಪ್ರದಾಯದ ಪಂಚಕಲ್ಯಾಣಗಳನ್ನು ಇಲ್ಲಿ ತರುವಂತಿಲ್ಲ. ಆದರೂ ಮೋಕ್ಷಜೀವಿಯಾದ ತನ್ನ ನಾಯಕ ಪಂಚಕಲ್ಯಾಣಗಳಿಗೆ ಅರ್ಹನೆಂದು ಕವಿ ಭಾವಿಸಿರುವಂತೆ ತೋರುತ್ತದೆ. ಆದ್ದರಿಂದ ಆತನು ತನ್ನ ಕಥಾನಾಯಕನಿಗೆ ಪ್ರತ್ಯೇಕವಾದ ಪಂಚಕಲ್ಯಾಣಗಳನ್ನು ಸಾಧಿಸಿಕೊಡಲು ಹೊರಟಿರುವಂತೆ ಕಾಣುತ್ತದೆ. ಇದನ್ನು ಕಾವ್ಯದ ಕೊನೆಯಲ್ಲಿ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ-

      ಭೋಗವಿಜಯಪೂರ್ವಕವಾಗಿ ದಿಗ್ವಿಜಯ ಸು

      ಯೋಗ ವಿಜಯ ಮೋಕ್ಷವಿಜಯ

      ಈಗರ್ಕವಿಜಯವಾಗೆ ಮನಸಿಗೆ

      ಲಾಗಾಯ್ತು ಪಂಚಕಲ್ಯಾಣ”

ಇದನ್ನು ಓದಿದವರು “ಮುಕ್ತಿಗೆ ಮುಂದುವರಿದ ಸಿದ್ಧಾಂತಿ”

  ಭರತೇಶ ವೈಭವದ ಭೋಗವಿಜಯವು ಜಿನಜೀವನದ “ಗರ್ಭಾವತರಣ ಕಲ್ಯಾಣ”ಕ್ಕೆ ಸಂವಾದಿಯಾಗಿದೆ. ಜಿನಕಥೆಯಲ್ಲಿ ಜಿನನ ಜನ್ಮಾಂತರಗಳ ಸುಖ ಭೋಗದ ವರ್ಣನೆಯಾದರೆ ಇಲ್ಲಿ ಭರತನ ಭೋಗವರ್ಣನೆಯಿದೆ. ಜಿನಕಥೆಯಲ್ಲಿನ ಸ್ವರ್ಗಸುಖದ ನೆತ್ತಿಯ ಮೇಲೆ ಮೆಟ್ಟಿದಂತಿದೆ-ಭರತನ ಭೂಲೋಕದ ಭೋಗ ಜೀವನ. ಇದು ಸಂಪೂರ್ಣವಾಗಿ ಕವಿಯ ಸ್ವಂತ ಸೃಷ್ಟಿ. ಎರಡನೆಯದಾದ ದಿಗ್ವಿಜಯವು ಮುನಿಮಾರ್ಗೋಕ್ತವಾದ್ದು; ಇದರಲ್ಲಿ ಕವಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡಿದ್ದಾನೆ. ಅವುಗಳಲ್ಲಿ ಬಹು ಮುಖ್ಯವಾದುದು ಭರತ-ಬಾಹುಬಲಿಗಳ ಪ್ರಸಂಗ. ಮೂರನೆಯದು ಯೋಗವಿಜಯ. ಇದರಲ್ಲಿ ಭರತನು ಶಾಸ್ತ್ರಾಭ್ಯಾಸದಿಂದ ತನ್ನ ಆತ್ಮೋನ್ನತಿಯನ್ನು ಸಾಧಿಸುವ ಚಿತ್ರಣವಿದೆ. ಕ್ಲಿಷ್ಟವೂ ಕಷ್ಟ ಸಾಧ್ಯವೂ ಆದ ಈ ಭಾಗವು ರತ್ನಾಕರನ ಕೈಯಲ್ಲಿ ಸುಲಿದ ಬಾಳೆಯ ಹಣ್ಣಿನಂತೆ ಸುಲಭ-ಸರಳ. ನಾಲ್ಕನೆಯದು ಅರ್ಕಕೀರ್ತಿಯ ವಿಜಯ. ಕಥಾದೃಷ್ಟಿಯಿಂದ ಈ ಭಾಗಕ್ಕೆ ಭರತೇಶ ವೈಭವದಲ್ಲಿ ಔಚಿತ್ಯವೂ ಇಲ್ಲ, ಜೀವನ ಚರಿತ್ರೆಯಲ್ಲಿ ಚಕ್ರಿಯ ಚರಿತ್ರೆಯನ್ನು ಅದರ ಅಂಗವಾಗಿ ತರುವಂತೆ ಭರತನ ಕಥೆಯ ಒಂದು ಅಂಗವಾಗಿ ಅರ್ಕಕೀರ್ತಿಯ ಮದುವೆ, ರಸಿಕತೆ, ಯುದ್ಧ ಇತ್ಯಾದಿಗಳನ್ನು ಇಲ್ಲಿ ತಂದಿದ್ದಾನೆ. ಕಡೆಯದು ಮೋಕ್ಷವಿಜಯ. ಇದರಲ್ಲಿರುವುದು ಭರತನ ದೀಕ್ಷೆ ಮೋಕ್ಷಗಳ ಪ್ರಸಕ್ತಿ.

 ಭರತೇಶ ವೈಭವದ ಕಥಾ ವೈಶಿಷ್ಟ್ಯ :

  ಭರತೇಶ ಚಕ್ರವರ್ತಿಯ ಕಥೆ ಬಹಳ ಪ್ರಾಚೀನವಾದುದು. ಜೈನ ಧಾರ್ಮಿಕ ಸಾಹಿತ್ಯದಲ್ಲಿ ಹಲವು ಕಡೆ ನಿರೂಪಿತವಾಗಿರುವಂತಹದ್ದು. ಮೊಟ್ಟ ಮೊದಲಿಗೆ ಭರತನ ಚರಿತೆ ಕಂಡು ಬರುವುದು ಕ್ರಿ.ಶ.೭೮೩ರಲ್ಲಿ ರಚಿತವಾದ ಜಿನಸೇನರ ಮಹಾಪುರಾಣದಲ್ಲಿ. ಆದಿತೀರ್ಥಂಕರನಾದ ಪುರುಪರಮೇಶ್ವರನ ಚರಿತೆಯ ಕೊನೆಯಲ್ಲಿ ಆತನ ಮಗನೂ ತ್ರಿಷಷ್ಟಿ ಶಲಾಕಾ ಪುರುಷರಲ್ಲಿ ಒಬ್ಬನು ಪ್ರಥಮ ಚಕ್ರಿಯೂ ಆದ ಭರತನ ಕಥೆ ವಿಸ್ತಾರವಾಗಿ ನಿರೂಪಿತವಾಗಿದೆ. ಇದೇ ಕಥೆ ಕನ್ನಡದಲ್ಲಿ ಮೊದಲಿಗೆ ಪಂಪನ ಆದಿಪುರಾಣದಲ್ಲಿ, ಬಳಿಕ ಚಾವುಂಡರಾಯನ ಚಾವುಂಡರಾಯ ಪುರಾಣದಲ್ಲಿ ಇವೆರಡು ಧಾರ್ಮಿಕ ಗ್ರಂಥವಾದುದರಿಂದ ಇಬ್ಬರೂ ಕಥಾನಿರೂಪಣೆಯಲ್ಲಿ ಜಿನಸೇನರನ್ನೇ ಪ್ರಧಾನವಾಗಿ ಅನುಸರಿಸಿದ್ದಾರೆ. ತೀರ್ಥಂಕರರ ಚರಿತ್ರೆಯೊಂದಿಗೆ ಚಕ್ರವರ್ತಿ ಚರಿತೆಯನ್ನು ತಂದಿದ್ದಾರೆ. ಆದರೆ ಜಿನ ಚರಿತೆಯಿಂದ ಚಕ್ರವರ್ತಿ ಚರಿತ್ರೆಯನ್ನು ಪ್ರತ್ಯೇಕಿಸಿ ಅದೊಂದನ್ನೇ ಕಾವ್ಯಕ್ಕೆ ವಸ್ತುವನ್ನಾಗಿ ಮಾಡಿಕೊಂಡು ವಿಸ್ತಾರವಾಗಿ ವರ್ಣಿಸಿರುವ ಕೃತಿಗಳಲ್ಲಿ ರತ್ನಾಕರವರ್ಣಿಯ ಭರತೇಶವೈಭವವೇ ಮೊದಲನೆಯದ್ದಾಗಿದೆ. 

 ಪೇಳುವೆ ಭರತೇಶಚಕ್ರಿಯ ಕಾವ್ಯವ ಎಂದು ರತ್ನಾಕರ ಕಾವ್ಯವನ್ನು ಮೊದಲು ಮಾಡಿದ್ದಾನೆ. ಭರತೇಶ ವೈಭವಕ್ಕೆ ಎರಡು ಮುಖಗಳು. ೧.ಭೋಗವೈಭವ, ೨.ಯೋಗವೈಭವ. ಚಕ್ರವರ್ತಿಯ ಭೋಗವನ್ನೇ ಅಲ್ಲದೆ ಯೋಗವನ್ನು ವರ್ಣಿಸಿರುವುದು ರತ್ನಾಕರನ ವೈಶಿಷ್ಟ್ಯ. ಭರತೇಶವೈಭವವು ಕೇವಲ ಒಬ್ಬ ಚಕ್ರವರ್ತಿಯ ಲೌಕಿಕ ವೈಭವವನ್ನು ಜನ್ಮದಾರಭ್ಯ  ಕೊನೆಯವರೆಗೆ ಅನೂಚಾನವಾಗಿ ಬಣ್ಣಿಸುವ ಕಾವ್ಯವಾಗಿಲ್ಲ. ಆ ಚಕ್ರವರ್ತಿಯ ಪ್ರತೀಕದಲ್ಲಿ ಮೈವೆತ್ತ ಆಧ್ಯಾತ್ಮ ವೈಭವವನ್ನು ಹಾಡಿ ಹೊಗಳಿದ ಕಾವ್ಯವಾಗಿದೆ. 

  ಈ ಕಾವ್ಯದ ಕಥಾವಸ್ತು ಧಾರ್ಮಿಕವಾದುದು. ಕಾವ್ಯದ ನಾಯಕ ಸಾಮಾನ್ಯನಲ್ಲ. ಆತ ಪುರುದೇವನ ಹಿರಿಯ ಕುಮಾರ. ಪ್ರಥಮ ಚಕ್ರವರ್ತಿ. ಭೂಮಂಡಲದ ಏಕೈಕರಾಜ. ಶಲಾಕಾ ಪುರುಷ. ಸುದತಿರಾಜರ ರಾಜಮದನ, ರಾಜರ್ಷಿ ಎಂಬ ಹೆಸರಿಗೆ ಅರ್ಹನಾದ ರತ್ನಾಕರನ ಕಲ್ಪನೆಯ ಆದರ್ಶ ರಾಜನೇ ಭರತ ಚಕ್ರವರ್ತಿಯ ಪಾತ್ರದಲ್ಲಿ ಮೈದಾಳಿದ್ದಾನೆ. 

   ಮಹಾಪುರಾಣದ ಕರ್ತೃವಾಗಲೀ ಅವರನ್ನು ಅನುಸರಿಸಿ ಕಾವ್ಯವನ್ನು ಕಟ್ಟಿರುವ ಇತರೆ ಕವಿಗಳಾಗಲಿ, ಭರತ ಚಕ್ರಿಯ ಗೃಹಜೀವನವನ್ನು ಚಿತ್ರಿಸಲು ಪ್ರಯತ್ನ ಪಟ್ಟಿಲ್ಲ. ಚಕ್ರವರ್ತಿಯಾಗಿರುವರೆಗೆ ಆತನ ಜೀವನವು ಹೇಗೆ ರಸಮಯ ವಾಗಿತ್ತೆಂಬುದನ್ನು ಹೇಳಿಲ್ಲ. ಇತರರು ಹೇಳದೆ ಬಿಟ್ಟ ಈ ಭಾಗವನ್ನು ತೆಗೆದುಕೊಂಡು ರತ್ನಾಕರವರ್ಣಿಯು ರಸಮಯವಾದ ಕಾವ್ಯವನ್ನು ಸೃಷ್ಟಿಸಿದ್ದಾನೆ. ಆತನ ಭೋಗ ಸಂಧಿ ಒಂದು ಶೃಂಗಾರರಸ ಸಾಗರ. ಅಲ್ಲಿನ ಒಂದೊಂದು ಚಿತ್ರವು ಒಂದೊಂದು ಸರಸ ಸಲ್ಲಾಪದ ಮಾಲೆ. 

 ಭೋಗ ವಿಜಯದಲ್ಲಿ ಯೋಗವನ್ನು ಬಿಡದೆ ಭೋಗಕ್ಕೆ ಬಲಿಯಾಗದೆ ಒಂದೊಂದು ದಿನ ಒಂದೊಂದು ತೆರನಾದ ಸುಖಭೋಗಗಳನ್ನು ಅನುಭವಿಸಿ ಸುಖಿಸುತ್ತಿದ್ದ ಭರತನ ಜೀವನದ ಉಜ್ವಲವೂ ರಮಣೀಯವೂ ಆದ ಭೋಗ ಚಿತ್ರಗಳ ಪರಂಪರೆ ಹೆಣೆದುಕೊಂಡಿದೆ. ಒಂದು ದಿನ ಪರಮಾತ್ಮ ಕಲೆಯನ್ನು ನಿರೂಪಿಸುವ ಸಂಗೀತ ಸಾಹಿತ್ಯ ಗೋಷ್ಠಿಗಳನ್ನು ಕೇಳಿ ಆನಂದ ಪಟ್ಟು ಮುನಿಭುಕ್ತಿಯನ್ನು ಭಕ್ತಿಯಿಂದ ನೆರವೇರಿಸಿ ಪತ್ನಿಯರ ಸಹ ಪಂಕ್ತಿ ಭೋಜನದಿಂದ ಹರ್ಷಿತನಾಗಿ ವಾರಿಜಾಕ್ಷಿಯರೊಡನೆ ಸರಸ ಸಲ್ಲಾಪದಲ್ಲಿ ಮಗ್ನನಾಗುತ್ತಾನೆ. 

 ಕವಿಯ ದೃಷ್ಟಿಯಲ್ಲಿ ಕಲೆಯ ಸವಿಯನ್ನರಿಯದ ಬಾಳು ನಿರ್ಭಾಗ್ಯದ ಬಾಳು.

      ಕಲೆಯನರಿವ ಪುರುಷನ ಪಡೆವುದು ನಾರಿ ಮಾಡಿದ ಪುಣ್ಯ

      ಕಲೆಗನುಕೂಲೆಯ ಪಡೆವುದು ಆ ಪುರುಷನ ಬಲು ಪುಣ್ಯ ಎಂದಿದ್ದಾನೆ.

 ಸಮಾನ ಧರ್ಮಿಗಳಾದ ಸತಿಪತಿಯರ ಕಲಾಭಿಜ್ಞವಾದ ಭೋಗವನ್ನು ಚಿತ್ರಿಸಿರುವುದು ಇಲ್ಲಿಯ ಭೋಗವರ್ಣನೆಯ ವಿಶೇಷವಾಗಿದೆ. ಕವಿಯ ರಸಿಕತೆಯೇ ಭರತನ ರಸಿಕತೆಯಾಗಿ ಶೃಂಗಾರ ಸನ್ನಿವೇಶಗಳಲ್ಲಿ ಒಡಮೂಡಿದೆ. ಕವಿಯ ರಸಿಕತೆ, ಕಲಾಭಿಜ್ಞತೆ, ಸದಭಿರುಚಿಗಳಿಂದ ವ್ಯಂಜಿತವಾದ ಭೋಗ ಬಹು ಸ್ವಾದವಾಗಿ ನಿರೂಪಿತವಾಗಿದೆ. 

 ಕಾವ್ಯದ ಉತ್ತರ ಭಾಗದಲ್ಲಿ ಕವಿಯ ಕಲಾಭಿಜ್ಞತೆಯ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಭರತೇಶವೈಭವದಲ್ಲಿ ಕಲಾಭಿಜ್ಞತೆ ವ್ಯಕ್ತಗೊಂಡಿರುವುದು ಅದರ ಪೂರ್ವ ಭಾಗದಲ್ಲಿ ಮಾತ್ರ ಹೀಗಾಗಿ ಭರತೇಶವೈಭವದ ಪೂರ್ವಭಾಗವೇ ಕಾವ್ಯದ ವೈಭವವಾಗಿದೆ. 

     ರತ್ನಾಕರ ಭೋಗವಿಜಯದಲ್ಲಿ ಭರತನ ಕೇವಲ ಭೋಗವನ್ನೇ ಚಿತ್ರಿಸಿಲ್ಲ. ಆದಾಗ್ಯೂ ಭೋಗದ ಜೊತೆ ಜೊತೆಯಲ್ಲಿಯೇ ಅವನ ಅನುದಿನದ ಆತ್ಮಯೋಗವನ್ನು ಜಿನಭಕ್ತಿ, ಮುನಿಭುಕ್ತಿಗಳನ್ನು ಚಿತ್ರಿಸಿ ಅವನು ಭೋಗದಲ್ಲಿ ಮೈಮರೆತಿರಲಿಲ್ಲವೆಂಬುದನ್ನು ತೋರಿಸಿದ್ದಾನೆ. ಭೋಗವರ್ಣನೆ ಬಂದಿರುವ ಪ್ರತಿಯೊಂದು ಸಂದರ್ಭದಲ್ಲೂ ಭರತನ ಬದುಕಿನಲ್ಲಿ ಶೃಂಗಾರ ಆಧ್ಯಾತ್ಮಗಳು ಅಳವಟ್ಟಿರುವ ರೀತಿಯನ್ನು ತೋರಿಸಿ, ಅವನ ತ್ಯಾಗಭೋಗದ ಮೋಡಿಯನ್ನು ಎತ್ತಿಹಿಡಿದಿದ್ದಾನೆ. ಉಪ್ಪರಿಗೆಯೋಲಗದಲ್ಲಿ ಮಡದಿಯ ಕಾವ್ಯರಚನೆಯನ್ನು ಕೇಳಿ ನಲಿದು ಕಾಂತೆಯದೊಡನೆ ಸರಸ ಸಲ್ಲಾಪ ಮಾಡುತ್ತಾ ರಸಿಕರಲ್ಲಿ ರಸಿಕನಾಗಿ ಮೆರೆದ ಭರತ ಚಕ್ರವರ್ತಿ ಓಲಗ ಹರೆಯಿತೊ ಇಲ್ಲವೋ ಕಾಲೋಚಿತವಾದ ಆತ್ಮಯೋಗಕ್ಕೆ ತೊಡಗುತ್ತಾನೆ. ಅದುವರೆಗೂ ಅನುಭವಿಸಿದ ಭೋಗದ ವಾಸನೆಯೂ ಬಳಿಗೆ ಸುಳಿಯದಂತೆ ಧ್ಯಾನಮಗ್ನನಾಗುತ್ತಾನೆ. 

    ರತ್ನಾಕರನ ದಿಗ್ವಿಜಯ ಭಾಗದ ನಿರೂಪಣೆಯಲ್ಲಿ ಕಂಡು ಬರುವ ಒಂದು ವಿಶೇಷವೆಂದರೆ ದಿಗ್ವಿಜಯ ಕಾಲದಲ್ಲೂ ಭರತನ ಗೃಹಜೀವನವನ್ನು ವರ್ಣಿಸಿರುವುದು. ಕೌಟುಂಬಿಕ ಜೀವನದ ಪ್ರಶಾಂತ ರಮಣೀಯತೆಯನ್ನು ವರ್ಣಿಸುವುದೆಂದರೆ ಕವಿಗೆ ಎಲ್ಲಿಲ್ಲದ ಸಂತಸ. ದಿಗ್ವಿಜಯ ಯಾತ್ರೆ ನಡೆಯುತ್ತಿರುವಾಗಲೇ ಅವನಿಗೆ ಹಲವಾರು ಪುತ್ರರು ಜನಿಸುತ್ತಾರೆ. ಹಾಗೆ ಜನಿಸಿದಾಗಲೆಲ್ಲ ಮಗು ದೊಡ್ಡದಾಗುವವರೆಗೆ ಆರಾರುತಿಂಗಳು ಒಂದೆಡೆಯಲ್ಲಿ ತಂಗಿದ್ದು ಬಳಿಕ ದಿಗ್ವಿಜಯವನ್ನು ಮುಂದುವರಿಸುತ್ತಾನೆ. ಅಲ್ಲಲ್ಲಿ ಓಲಗವನ್ನು ನೆರಹಿ ಮಕ್ಕಳ ಬಾಲಲೀಲೆಯನ್ನು ನೋಡಿ ಹಿಗ್ಗುತ್ತಾನೆ. ಜಿನಪೂಜೆ, ಆತ್ಮಯೋಗ, ನಲ್ಲೆಯರೊಂದಿಗೆ ಸರಸ ಭೋಗ ಎಲ್ಲವೂ ಸಾಂಗವಾಗಿ ನಡೆಯುತ್ತಲೇ ಇರುತ್ತದೆ. ಮಕ್ಕಳಿಗೆ ಕಾಲೋಚಿತವಾದ ಜಾತಕರ್ಮ, ಉಪನಯನ, ವಿವಾಹ ಮೊದಲಾದ ಹಲವು ಉತ್ಸವಗಳ ವಿಜೃಂಭಣೆಯಿಂದ ಜರುಗುತ್ತದೆ. ಇವುಗಳ ಜೊತೆ ಜೊತೆಯಲ್ಲಿಯೇ ಭರತನು ಹಲವೆಡೆ ಮದುವಣಿಗನಾಗಿ ನಿಂತು ಸಾವಿರಾರು ಕನ್ಯಾರತ್ನಗಳನ್ನು ಕೈ ಹಿಡಿಯುತ್ತಾನೆ. ಮದುವೆಯ ಕಾಲದಲ್ಲಿ ಅತ್ತಿಗೆ-ನಾದಿನಿಯರ ನಡುವೆ ನಡೆಯುವ ಸರಸ ವಿನೋದಗಳು ಭರತ ದಿಗ್ವಿಜಯಕ್ಕೆ ಬಂದಿದ್ದಾನೆಂಬುದನ್ನೇ ಮರೆಸುವಂತಿವೆ. 

 ಅರವತ್ತು ಸಾವಿರ ವರ್ಷಗಳ ಕಾಲ ದಿಗ್ವಿಜಯ ಯಾತ್ರೆ ನಡೆಯುವಾಗ ಭರತನ ಗೃಹಜೀವನವನ್ನು ಕಡೆಗಣಿಸುವುದು ತರವಲ್ಲವೆಂದು ಕವಿಗೆ ತೋರಿರಬೇಕು. ಇಲ್ಲಿಯ ವಿವಾಹ ಮಂಗಳಗಳು ದಿಗ್ವಿಜಯ ಭಾಗದಲ್ಲೂ ಶೃಂಗಾರ ವರ್ಣನೆ ಮಾಡಲು ಕವಿಗೆ ಅವಕಾಶವನ್ನು ಕಲ್ಪಿಸಿವೆ. ಮೂಲದಲ್ಲಿ ಇವುಗಳು ನಾಲ್ಕಾರು ವಾಕ್ಯಗಳಲ್ಲಿ ಮಾತ್ರ ಬಂದಿವೆ. 

 ಕವಿಯ ಕಥನ ಕಲೆ:

  ರತ್ನಾಕರವರ್ಣಿ ಚತುರ ಕಲೆಗಾರ. ಕೇಳುವವರು ಕಿವಿತೆರೆದು ಕೇಳುವಂತೆ ಬಣ್ಣಿಸಿ ಬಣ್ಣಿಸಿ ಕಥೆಯನ್ನು ಹೇಳಬಲ್ಲ ಕಲಾವಿದ. ಅವನಿಗೆ ವರ್ಣಕ ಕಾವ್ಯದ ಹೆಚ್ಚಿನ ಆಸಕ್ತಿ ಭರತೇಶವೈಭವದಲ್ಲಿ ಕಥೆ ಕಿರಿದು ವರ್ಣನೆ ಹಿರಿದು, ಕಾವ್ಯದ ಒಟ್ಟು ಗಾತ್ರಕ್ಕೆ ಅದರ ಕಥಾವಸ್ತು ವಸ್ತುವನ್ನು ಹೋಲಿಸುವುದೆಂದರೆ ಆನೆಗೂ ಇರುವೆಗೂ ಹೋಲಿಸಿದಂತೆ ಕಥೆಯ ಒಂದೊಂದು ಸಂಗತಿಯನ್ನು ಒಂದೊಂದು ಸಂಧಿಯಲ್ಲಿ ವಿಸ್ತಾರವಾಗಿ ವರ್ಣಿಸುತ್ತಾ ಕಥೆ ಹೇಳುವುದು ಅವನಿಗೆ ತುಂಬ ಪ್ರಿಯ. ವರ್ಣನೆ ಅವನ ಕಥನ ಕಲೆಯ ಅವಿಭಾಜ್ಯ ಅಂಗ. ಇದರ ಪರಿಣಾಮವಾಗಿ ಕಥೆ ಬಹುಮುಖವಾಗಿ ಸಾಗುತ್ತದೆ. 

 ತಾನು ವರ್ಣಿಸಲು ಹೊರಟ ವಿಷಯವನ್ನು ಕಣ್ಣಿಗೆ ಕಟ್ಟುವಂತೆ ಕಿವಿಗೆ ತಟ್ಟುವಂತೆ ಮನಮುಟ್ಟುವಂತೆ ನಿರೂಪಿಸುವ ಕಲೆಗಾರಿಕೆ. ಕವಿಯ ವರ್ಣನಾ ಸಾಮರ್ಥ್ಯ ಅಸಾಧಾರಣವಾದುದು. ರಾಜಾಸ್ಥಾನ, ರಾಜಲಾವಣ್ಯ, ಗಾನ, ನರ್ತನ, ಆರೋಗಣೆ ಅಂತ:ಪುರ ಅರಗಿಳಿಯಾಲಾಪ, ಪ್ರಿಯರ ಸರಸ ಸಲ್ಲಾಪ, ವಿವಾಹ, ಸ್ವಯಂವರ ಹೀಗೆ ವಿಷಯ ಯಾವುದೇ ಇರಲೀ ಎಲ್ಲವನ್ನೂ ಸಮರ್ಥ ರೀತಿಯಲ್ಲಿ ಅಚ್ಚುಕಟ್ಟಾಗಿ ವರ್ಣಿಸಬಲ್ಲ. ಒಂದು ವಿಷಯವನ್ನು ಪರಿಪರಿಯಾಗಿ ಬಣ್ಣಿಸುವುದೆಂದರೆ ಕವಿಗೆ ಬಹಳ ಇಷ್ಟ. ಉಪಮೆಗಳ ಮೇಲೆ ಉಪಮೆಯನ್ನು ತಂದು, ದೃಷ್ಟಾಂತಗಳ ಮೇಲೆ ದೃಷ್ಟಾಂತಗಳನ್ನು ಕೊಟ್ಟು ಓದುಗರನ್ನು ಆಶ್ಚರ್ಯ ಚಕಿತರನ್ನಾಗಿಸಿದ್ದಾನೆ. 

 ಉದಾ:      ಸೊಕ್ಕು ಜವ್ವನೆಯರ ಮೊತ್ತದೊಳಾತುರ ಮಿಕ್ಕರ್ತಿ ಬಂದಂತೆ ನೃಪತಿ

ಚೊಕ್ಕನಾನಂದಿಸುತಿರ್ದನು ಮದಗಜ ಪೊಕ್ಕು ನೀರಾಟವಾಡುವೊಲು

             ಶೃಂಗಾರ ಸೊಬಗಿಂದ ಬಗೆಬಗೆಯಾದಚ್ಛ ವೆಂಗಳೊಳಾ ರಾಜಮೋಹಿ

             ಸಂಗಸಂದಿರ್ದನು ಪೂದೋಟದೊಳು ಮತ್ತ ಭೃಂಗವಾನಂದಿಸುವಂತೆ

  ಕವಿಯ ಕಥನ ಕಲೆಯಲ್ಲಿ ಕಾಣುವ ರಂಜಕವಾದ ಅಂಶವೆಂದರೆ ಕಥೆಯ ಉದ್ದಕ್ಕೂ ವಿವಿಧ ಪಾತ್ರಗಳ ನಡುವೆ ಬಂದಿರುವ ಚತುರವಾದ ಸಂಭಾಷಣೆಗಳು. ಶ್ರವ್ಯಕಾವ್ಯಕ್ಕೆ ಇವು ಅಲ್ಲಲ್ಲಿ ದೃಶ್ಯಕಾವ್ಯದ ಬೆಡಗನ್ನಿತ್ತಿರುವುದೇ ಅಲ್ಲದೆ, ಕವಿಯ ಬಾಯಿಂದಲೆ ಉದ್ದಕ್ಕೂ ಕಥೆಯನ್ನು ಕೇಳಬೇಕಾಗುವ ಏಕತಾನತೆಯನ್ನು ತಪ್ಪಿಸಿದೆ. ಭರತ-ಕುಸುಮಾಜಿಯರ ಜಾಣ್ಣುಡಿ. ಭರತ-ಮಕರಂದಾಜಿಯರ ಸರಸ, ಅತ್ತಿಗೆ-ನಾದಿನಿಯರ ವಿನೋದ ಇಂತಹ ಸನ್ನಿವೇಶಗಳಲ್ಲಿ ಮೈವೆತ್ತಿರುವ ನಾಟಕೀಯತೆ ಕಥೆಗೆ ಕಳೆಗಟ್ಟಿದೆ. 

 ಭರತೇಶಕಾವ್ಯದ ಕಥಾವಸ್ತು ಪೌರಾಣಿಕವೇ ಆಗಿದ್ದರೂ ತಾನು ಕಂಡು ಕೇಳಿರುವ ಸಾಮಾಜಿಕ ಚಿತ್ರಗಳಿಂದಲೂ ಕೌಟುಂಬಿಕ ಚಿತ್ರಗಳಿಂದಲೂ ಕಥಾವಿವರಗಳನ್ನು ಅಲಂಕರಿಸಿರುವುದರಿಂದ ಕಾವ್ಯದ ಮೊದಲಿನಿಂದ ಕೊನೆಯವರೆಗೂ ನಮ್ಮ ಕೇರಿಯಲ್ಲಿ ನಮ್ಮ ನೆರೆಹೊರೆಯಲ್ಲಿ, ನಮ್ಮ ಗೃಹಕೃತ್ಯಗಳಲ್ಲಿ ಜರುಗಬಹುದಾದ, ಜರುಗುವ ದೈನಂದಿನ ವಿದ್ಯಮಾನಗಳಿಗೆ ಯಥೋಚಿತವಾದ ಲಲಿತ ವಚನರೂಪವನ್ನು ಒದಗಿಸಿ ಕಥನಗೈದಂತಿದೆ. 

 ಕಥೆಯ ವರ್ಣನೆಗಳಲ್ಲಿಯೂ ಸಂಭಾಷಣೆಗಳಲ್ಲಿಯು ಬರುವ ದೇಸೀಯ ಬೆಡಗು ಕಥಾಶ್ರವಣದ ಸೌಖ್ಯವನ್ನು ಹೆಚ್ಚಿಸಿದೆ. ದೇಸಿ ಸಾಹಿತ್ಯ ರೂಪವಾದ ಸಾಂಗತ್ಯದ ಶೈಲಿ ನಿರರ್ಗಳವಾಗಿ ಕಥೆಯನ್ನು ಹೇಳಲು ಸಹಾಯಕವಾಗಿದೆ. 

    ಕುಮಾರರಾಮನ ಸಾಂಗತ್ಯ:

  ಚೆನ್ನಿಗರಾಮ, ಕುಮಾರರಾಮ, ರಾಮನಾಥ ಮೊದಲಾದ ಹೆಸರುಗಳಿಂದ ಕನ್ನಡಿಗರ ಮನೆಮಾತಾಗಿರುವ, ಚಾರಿತ್ರಿಕನಾಗಿಯೂ ಪವಾಡ ಪುರುಷರ ಸಾಲಿಗೆ ಸೇರಿ ಹೋಗಿರುವ ಕಡುಗಲಿ, ಪರದಾರ ಸೋದರ, ರಾಮನಾಥನನ್ನು ಕುರಿತು ಶಾಸನಗಳೂ, ಸಾಂಗತ್ಯ ಕಾವ್ಯಗಳೂ, ಜನಪದ ಗೀತೆಗಳೂ, ಯಕ್ಷಗಾನಗಳೂ ರಚಿತವಾಗಿವೆ. ಈತನನ್ನು ವಸ್ತುವನ್ನಾಗಿರಿಸಿಕೊಂಡು ಬರೆದ ಕಾವ್ಯಗಳಲ್ಲಿ ನಂಜುಂಡನ ಕುಮಾರ ರಾಮಚರಿತೆ, ಪಾಂಚಾಳ ಗಂಗನ ಚೆನ್ನ ರಾಮನ ಸಾಂಗತ್ಯ ಹಂಪೆಯ ಚರಪತಿ ಮಹಾಲಿಂಗಸ್ವಾಮಿಯ ಬಾಲರಾಮನ ಸಾಂಗತ್ಯ ಜನಾದರಣೀಯವಾಗಿವೆ. ಈ ವಸ್ತುವನ್ನು ಹೊಳಲುಗೊಡುವ ಜನಜನಿತ ಇತರ ಕಥೆಗಳೂ ಕನ್ನಡದಲ್ಲಿವೆ. ಇದಕ್ಕಿಂತ ಹೆಚ್ಚಳವೆಂದರೆ ತೆಲುಗಿಗೂ ಈ ‘ಶಕಪುರುಷ’ನ ಚರಿತೆ ಹಬ್ಬಿರುವುದು; ‘ಕುಮಾರ ರಾಮುನಿ ಕಥಾ’ ತೆಲುಗು ಭಾಷೆಯಲ್ಲಿ ಪ್ರಚುರವಾಗಿದೆ. ತುಳು ಭಾಷೆಯಲ್ಲೂ ‘ಕೋಮಲ್ ರಾಮಚರಿತ್ರೆ’ ಎಂಬ ಪಾಡ್ಡನವಿದೆ. ಹೀಗೆ ಜನಪದ ಅಧಿಗಮದಿಂದ ಹಿರಿಯ ಕಾವ್ಯದವರೆಗೆ ಹರಿದು ಬಂದ ಕಥೆಯ ವಿಕಾಸ ವಿಧಾನದ ಪರಾಮರ್ಶೆ ವಿಸ್ಮಯಜನ್ಯವಾಗಿದೆ. ರಾಮನಾಥನ ಬಗ್ಗೆ ಜನಾಭಿಪ್ರಾಯ ಬಹು ಹಿಂದೆಯೇ, ಅವನ ಜೀವಿತ ಕಾಲದಲ್ಲಿಯೇ ಚರಿತ್ರೆಯ ಚೌಕಟ್ಟು ದಾಟಿ ಪುರಾಣಗಳ ಸೀಮೆಗೆ ಸೇರಿ ಹೋಯಿತು. ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಅವನ ವಿಚಾರ ಮೈತಳೆದು, ಕಲ್ಪನೆಯ ಕಮಾನು ಕಟ್ಟಿಕೊಂಡು ಪ್ರತಿಭೆಯ ಕಾಮನ ಬಿಲ್ಲಿನಲ್ಲಿ ಕಾವ್ಯ ಸಿಂಹಾಸನದ ಮೇಲೆ ಮೋಹಕ ಠೀವಿಯಿಂದ ಪ್ರತಿಷ್ಠಿತವಾಗತೊಡಗಿತು. ಆತ ಚೆಲುವಿನಲ್ಲಿ (ಚೆನ್ನಿಗರಾಮ), ಅಕಳಂಕ ಶೀಲವ್ರತದಲ್ಲಿ (ಪರದಾರ ಸೋದರರಾಮ), ಧೈರ್ಯ ಸಾಹಸಗಳಲ್ಲಿ (ವೀರರಾಮ), ಮಾತಿಗೆ ತಪ್ಪದೆ ನಡೆಯುವಲ್ಲಿ (ಸತ್ಯ ರಾಮ), ಚಿಕ್ಕವನಾದರೂ ಕಿರಿಯ ವಯಸ್ಸಿಗೆ ಮೀರಿ ತಓರಿದ ಗುಣೋನ್ನತಿಯಲ್ಲಿ (ಬಾಲ ಕುಮಾರರಾಮ) ವಿಖ್ಯಾತನಾಗಿದ್ದನು. ಅದರಿಂದ ಸಹಜವಾಗಿಯೇ ನಂಜುಂಡ ಕವಿ, ಕನ್ನಡ ಕವಿ ಜಾಣ ಪಾಂಚಾಳ ಗಂಗ ಕವಿ (ಇವನಿಗೆ ಕವಿಜಾಣ ಗಂಗಯ್ಯ, ನಾಗ ಸಂಗಯ್ಯ, ಗಂಗ ಕವಿ, ಪಾಂಚಾಳ ಗಂಗ ಎಂಬ ನಾಲ್ಕು ಹೆಸರುಗಳಿವೆ), ಹಂಪೆಯ ಚರಪತಿ ಮಹಲಿಂಗ ಸ್ವಾಮಿ-ಇವರುಗಳು ಕುಮಾರರಾಮನ ಕಥೆಯನ್ನು ಆರಿಸಿಕೊಂಡು ಸುಮಾರು ನೂರು-ನೂರು ವರ್ಷಗಳ ಅಂತರದಲ್ಲಿ ಕೃತಿ ರಚನೆ ಮಾಡಿದ್ದಾರೆ. ಇವರಲ್ಲಿ ಎಲ್ಲ ವಿಧದಲ್ಲೂ ಉತ್ತಮನಾದ ಕವಿ ನಂಜುಂಡ.

ಕನ್ನಡದಲ್ಲಿ ‘ಚಾರಣಕಾವ್ಯ’ವೆನಿಸಿಕೊಳ್ಳಬಹುದಾಗಿ ದೊರೆಯುವ ಮೊದಲನೆಯ ಕಾವ್ಯವೆಂದರೆ ನಂಜುಂಡ ಕವಿಯ ‘ಕುಮಾರರಾಮನ ಕಥೆ’! ಎಂದು ಹೇಳಿರುತ್ತಾರೆ. ಶ್ರೀ.ಡಿ.ಎಲ್.ನರಸಿಂಹಾಚಾರ್ಯರು, ವಿಜಯ ನಗರಕಾಲದ ಕನ್ನಡ ಸಾಹಿತ್ಯವನ್ನು ಪರಿಚಯಮಾಡಿಕೊಡುವ ಸಂದರ್ಭದಲ್ಲಿ “.........ನಂಜುಂಡನ ಕುಮಾರರಾಮನ ಕಥೆ (ಸು.೧೫೨೫) ಕಲ್ಪನೆ ಮತ್ತು ಪ್ರಣಯ ಮಿಶ್ರಿತವಾದ ಚರಿತ್ರೆ. ಒಬ್ಬಿಬ್ಬರು ಚರಿತ್ರಕಾರರು ಈ ಕೃತಿಯನ್ನು ವಿಶ್ಲೇಷಿಸಿ, ಕೆಲವು ಚರಿತ್ರಾಂಶಗಳನ್ನು ಇತ್ಯರ್ಥಗೊಳಿಸಿರುತ್ತಾರೆ. ಕಾವ್ಯದ ದೃಷ್ಟಿಯಿಂದ ಪರಿಶೀಲಿಸಿದಲ್ಲಿ, ಈ ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ” ಎಂದು ಅಭಿಪ್ರಾಯ ಪಟ್ಟಿರುತ್ತಾರೆ. ಅಲ್ಲದೆ ಮತ್ತೊಂದು ಲೇಖನದಲ್ಲಿ, ನಂಜುಂಡನ ಕೃತಿಯನ್ನೇ ವಿಸ್ತಾರವಾಗಿ ಪರಿಶೀಲಿಸಿ “..........ಯಾವ ಕಡೆಯಿಂದ ನೋಡಿದರೂ ಈ ಕಾವ್ಯ ಉತ್ಕೃಷ್ಟವಾದದ್ದೆಂದು ಹೇಳಬಹುದು. ಇದರಲ್ಲಿ, ಮುಖ್ಯವಾಗಿ ರಾಜಕೀಯ ಚರಿತ್ರೆ, ಮೋಹ ಪ್ರೇಮಗಳ ಕಥೆ, ಪುರಾಣದ ಛಾಯೆ- ಈ ಮೂರು ಎಳೆಗಳನ್ನು ಒಟ್ಟಿಗೆ ನೆಯ್ದಿದೆ. ದೇಶಪ್ರೇಮವೂ ಧರ್ಮಾನುರಕ್ತಿಯೂ ಸ್ವಾತಂತ್ರö್ಯವೂ ಸಂಪ್ರದಾಯವೂ ಜೊತೆಗೆ ಸೇರಿ ಕಾವ್ಯವನ್ನು ರಮಣೀಯವಾಗಿ ಮಾಡಿವೆ. ಇಂಥ ಕಾವ್ಯ ಯಾರನ್ನು ತಾನೆ ಮೆಚ್ಚಿಸಲಾರದು? ಎಂದು ಮನವಾರೆ ಹೊಗಳಿರುತ್ತಾರೆ. ಡಾ.ರಂ.ಶ್ರೀ.ಮುಗಳಿ ಅವರು ತಮ್ಮ “ಕನ್ನಡ ಸಾಹಿತ್ಯ ಚರಿತ್ರೆ”ಯಲ್ಲಿ “ಶೂರ ಚರಿತ್ರೆಗಳಲ್ಲಿ ನಂಜುಂಡನ ‘ಕುಮಾರರಾಮನ ಕಥೆ’ ಮತ್ತು ಗಂಗನ ‘ಕುಮಟ ರಾಮನ ಕಥೆ’ ಇವೆರಡಿವೆ. ಎರಡರ ಕಥಾನಾಯಕರು ಕುಮಾರರಾಮ. ಎರಡೂ ಸಾಂಗತ್ಯದಲ್ಲಿಬರೆದವು. ಕುಮಾರರಮ ಕಥೆಯಲ್ಲಿ ಅಲ್ಲಲ್ಲಿ ಕೆಲವು ಷಟ್ಪದಿಗಳೂ ಇವೆ. ಸಾಮಾನ್ಯವಾಗಿ ವೀರಶೈವ ಕವಿಗಳು ಹರಿಹರನು ಹಾಕಿಕೊಟ್ಟ ವಿಷಯ ನಿಯಮವನ್ನು ಅನುಸರಿಸಿದ್ದಾರೆ. ಅದಕ್ಕೆ ಅಪವಾದವಾಗಿ ಇವರಿಬ್ಬರು ಕುಮಾರರಾಮನೆಂಬ ಕಂಪರಾಜನ ಮಗನು ತೋರಿದ ಶೌರ‍್ಯ ಸಚ್ಚಾರಿತ್ರ್ಯಗಳ ಲೌಕಿಕ ಕಥೆಯನ್ನು ನಿರೂಪಿಸಿದ್ದಾರೆ. ಧಾರ್ಮಿಕ ವಿಷಯಗಳಿಂದ ಇಡಿಕಿರಿದ ಸಾಹಿತ್ಯಕ್ಕೆ ಸ್ವಲ್ಪಮಟ್ಟಿಗೆ ವೈವಿಧ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಕಥನ ಶೈಲಿಯಲ್ಲಿ ಮತ್ತು ವರ್ಣನೆಯಲ್ಲಿ ಸೊಗಸಿದೆ” ಎಂದು ತಿಳಿಸಿದ್ದಾರೆ. ಮುಖ್ಯವಾಗಿ, ಕುಮಾರರಾಮನ ಕಥೆ ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟ ಕಾಣಿಕೆ. 

     ಕಥಾವಸ್ತುವಿನಲ್ಲಿ ಕಂಡ ಹಾಗೆಯೇ ಎರಡು ಪ್ರಧಾನ ಭಾಗಗಳುಂಟು. ಕುಮಾರರಾಮನ ಪರಾಕ್ರಮ ಕಾವ್ಯದ ಒಂದು ಭಗವೆನ್ನಿಸಿದರೆ, ಆತನ ಪರದಾರ ಸೋದರತ್ವವೇ ಇನ್ನೊಂದು ಭಾಗವಾಗುತ್ತದೆ. ಇದನ್ನು ನಂಜುಂಡ ಕವಿ “ವರಶುಚಿ ವೀರರಾಮನ ಚರಿತವನಿದನೊರೆವೆನೊಲಿದು ಸತ್ಪುರುಷರು ಇರದಾಲಿಪುದು ಶುಚಿತೆ ವೀರತೆ ಬಂದು ದೊರೆಕೊಂಬುದಂತರಂಗದೊಳು” ಎಂದು ಸ್ಪಷ್ಟವಾಗಿ ವಿಭಾಗಿಸಿಯೇ ಹೇಳಿರುತ್ತಾನೆ. ಎಷ್ಟಾದರೂ ಈತನು ಕಸಿಯಾದ ಕವಿ. ವಿಷಯವನ್ನು ಹೇಗೆ ವಿಂಗಡಿಸಿಕೊಳ್ಳಬೇಕೆಂದು ಯೋಚನೆ ಮಾಡಿರುತ್ತಾನೆ. ಒಟ್ಟು ಕಥಾವಸ್ತುವಿನಲ್ಲಿ ಮೂಡಿ ಕಾಣುವ ಪ್ರಧಾನಾಂಶಗಳೆಂದರೆ ಈ ಎರಡೇ! ರಾಮನು ನವೀರನೂ ಹೌದು; ಶುಚಿಯೂ ಹೌದು. 

     ಮೊದಲು, ರಾಮನ ಸಾಹಸವಿಭಾಗದ ವಸ್ತುರಚನೆಯನ್ನು ನೋಡಬಹುದು. ರಾಮನು ಬಾಲ್ಯದಿಮದಲೇ ತುಂಬ ಸಾಹಸಿ, ಪರಾಕ್ರಮಶಾಲಿ ಎಂಬುದನ್ನು ತಿಳಿಯಪಡಿಸಲು ನಂಜುಂಡನು ಕವಿ ರನ್ನನ ಮಾರ್ಗವನ್ನು ಅನುಸರಿಸಿರುವುದು ವಿದಿತವಾಗುತ್ತದೆ. ಹರಿಹರದೇವಿ ಗರ್ಭಿಣಿಯಾಗಿರುವುದನ್ನು ವರ್ಣಿಸುತ್ತ “ಬಸಿರೊಳಗಣ ಮಗನಿರೆಯದಿರನು ರಿಪುವಸುಧೆಯನೆಂದು ಪೇಳ್ವಂತೆ, ಬಿಸಜಾಕ್ಷಿಗರಿಭೂಮಿಯ ಮೃತ್ತಿಕೆಯ ಸೇವಿಸುವ ಬಯಕೆ ಜನಿಸಿದುದು” ಎಂದು ಹೇಳಿರುತ್ತಾನೆ. ಇಂತೆಯೇ, “ಬರೆ ಬಸಿರಿಗೆ ವಸ್ತುವಾಹನಗಳು ಬಂದವರಮನೆಗಾ ಶಿಶು ಪುಟ್ಟೆ ಇರದೆ ಪುಟ್ಟಿತು ರಾಯಪದವಿ ಕಂಪಿಲಗಾ ತರುಣನ ಸೈಪನೇನೆಂಬೆ” ಎಂಬುದಂತೂ ರನ್ನನ “ಬರೆ ಗರ್ಭಕ್ಕರಿವಸ್ತುವಾಹನಚಯಂ ಕಯ್ಗಯ್ದೆ ವಂದತ್ತು ಪುಟ್ಟೆ ರಣೋತ್ಸಾಹದೆ ಚಕ್ರವರ್ತಿ ವಿಭವಂ ಪುಟ್ಟಿತ್ತು.......(ಗದಾಯುದ್ಧ ೧, ೧೨)” ಎಂಬ ವಾಕ್ಯಗಳ ಪಡಿಯಚ್ಚಿನಂತಿದೆ. ಶುಭ ಮುಹೂರ್ತದಲ್ಲಿ ಹುಟ್ಟಿದ ರಾಮನಿಗೆ ಗುರುಮುಖದಿಂದ ಕ್ಷತ್ರಿಯ ವಿದ್ಯೆಗಳೆಲ್ಲವೂ ಪಾಠವಾಗುತ್ತವೆ. ಅವನ ರೂಪು, ಪ್ರತಾದಗಳು ಒಟ್ಟೊಟ್ಟಿಗೇ ವರ್ಧಿಸುತ್ತವೆ. 

     ನಂಜುಂಡನು ಕುಮಾರರಾಮನ ಸಾಹಸ ವಿಭಾಗವನ್ನು ಹುಳಿಯೇರು (ಹುಳಿಯಾರು?) ಕಾಳಗದಿಂದ ಮೊದಲು ಮಾಡುತ್ತಾನೆ. ಜಾಯಿಲಗಳ ಸಲುವಾಗಿ ಹುಳಿಯೇರಿನ ಅಧಿಪತಿಗೆ ಹೇಳಿ ಕಳುಹಿಸಲು, ಅವನು ಬಲ್ಲಾಳರಾಯನ ಸಾಮಂತನಾಗಿದ್ದುದರಿಂದ ನಿರಾಕರಿಸುವನು. ಅನಂತರ ಕುಪಿತನಾದ ಕುಮಾರರಾಮನು ಹುಳಿಯೇರನ್ನು ಮುತ್ತುವನು. ದೈವಾಂಶಸಂಭೂತನೂ, ದಿವ್ಯಾಶ್ವಸಮೇತನೂ ಆದ ರಾಮನನ್ನು ಅಡ್ಡಗಟ್ಟುವರಾರು? ಹುಳಿಯೇರಿನ ಅಧಿಕಾರಿಯ ಮದೋನ್ಮತ್ತವಾದ ಮಾತುಗಳಿಗೆ ಮಲೆತು ನಿಂತ ರಾಮನು  ಆ ಊರನ್ನು ಮುತ್ತುವುದೇ ತಡ ಯುದ್ಧ ಮೊದಲಾಯಿತು.  ಆ ಹೋರಾಟಕ್ಕೆ ತಾರಕೆಗಳು ಧ್ರುವಲೋಕಕ್ಕೆ ಗೂಳೆಯ ತೆಗೆದವಂತೆ! ನಿಮಿಷ ಮಾತ್ರದಲ್ಲಿ ಆ ಅಗ್ರಹಾರವು ಕಿಚ್ಚಿನ ಬೀಡಾಯ್ತು. ಅಧಿಕಾರಿ ರಾಮನ ಕೈಸೆರೆಯಾದನು. ಆತನನ್ನು ಹಿಡಿದು ತಂದು ತಂದೆಗೆ ಒಪ್ಪಿಸಿದನು. ಹರಿಹರದೇವಿ, ಬುಕ್ಕಾಂಬಿಕೆ (?) ಯರು ಕುವರನ ಸಾಹಸಕ್ಕೆ ಮೆಚ್ಚಿ ಹರಸಿದರು. ನಂಜುಂಡನಲ್ಲಿ ಈ ಕಿರುಗಾಳಗವೇ ಮುಂದೆ ಕದನ ಪರಂಪರೆಗೆ ಪೀಠಿಕೆಯಾಗುವುದು. ತನ್ನ ಸಾಮಂತನಿಗಾದ ಅವಮಾನವನ್ನು ಸಹಿಸಲಾರದೆ ಬಲ್ಲಾಳನು ಕಂಪಿಲನ ಮೇಲೆ ದಂಡೆತ್ತಿ ಬಂದನು. ಬಲ್ಲಾಳನ ಸೇನೆಯೆಂದರೆ ಕೇಳಬೇಕೆ! ತುರುಕ ರಾವುತರು, ಒಡ್ಡಿಯ ರಾವುತರು, ಕನ್ನಡರಾಯ ರಾವುತರು ಮೊದಲಾದ ನಾನಾ ದೇಶಗಳ ವೀರಾಧಿವೀರರು ನೆರೆದು ನಿಂತರು. ದಳಪತಿ ನರಸಿಂಗು, ಸೋಮದಂಡಾಧಿಪ ಮುಂತಾದ ಪ್ರಮುಖರು ಸೇನಾಸೂತ್ರವನ್ನು ಹಿಡಿದರು. ಕಂಪಿಲನೂ ತನ್ನ ಮಗ ರಾಮನೊಂದಿಗೆ ಬಲ್ಲಾಳನನ್ನು ಎದುರಿಸಿದನು. ರೆಡು ಪಡೆಗಳಿಗೂ ಭಿಕರವಾದ ಕಾಳಗ ನಡೆದು, ಕಡೆಗೆ ಆಯಾ ಪಕ್ಷದ ಮಂತ್ರಿಗಳ ಸಲಹೆಯ ಮೇರೆಗೆ ಸಂಧಿಯಲ್ಲಿ ಪರ್ಯವಸಾನವಾಯಿತು. ಈ ಸುದ್ದಿ ವೀರರುದ್ರನಿಗೆ ತಿಳಿದು ಬರುವುದು. ಸಾಲದ್ದಕ್ಕೆ ರಾಮನು “ನವಲಕ್ಕ ತೆಲುಗು ರಾಯರ ಮಿಂಡ” ಎಂಬ ಬಿರುದನ್ನು ಧರಿಸಿದ್ದಾನೆಂದು ಗೊತ್ತಾಗುವುದು. ಒಡನೆಯೇ ಅವನು ತಾನಾಗಿಯೇ ದಂಡೆತ್ತಿ ಬರುವನು. ಈ ಕದನವೂ, ಮೊದಮೊದಲು ಭರದಿಂದ ಸಾಗಿ, ಕಡೆಯಲ್ಲಿ ವೀರರುದ್ರನಿಗೆ ಸೋಲಾಗುವುದು. ಅನಂತರ  ಕಪುಲೇಶ್ವರನ ಸರದಿ. ಈತನು ಸಮಸ್ತ ಸೇನೆಯೊಂದಿಗೆ ಕೂರಿ ಕಂಪಿಲನ ಮೇಲೆ ದಂಡೆತ್ತಿ ಬರುವನು. ಆದರೆ, ಆಶಾಭಂಗಿತನಾಗುವನು. ಈ ರೀತಿ, ಹುಳಿಯೇರಿನ ಕಾಳಗದಿಂದ ಮೊದಲಾದ ರಾಮನ ವಿಜಯ ಪರಂಪರೆಯಿಂದ, ಆತನು ಚಿಕ್ಕವನಾದರೂ ಅಸಮ ಸಾಹಸಿಯೆಂಬುದು ದೃಢವಾಗಿ, ಅವನ ಕೀರ್ತಿ ಡಿಳ್ಳಿಯವರೆಗೂ ವ್ಯಾಪಿಸುತ್ತದೆ. ನಂಜುಂಡನ ಈ ಕಥಾಭಾಗ ಬಹು ಅಚ್ಚುಕಟ್ಟಾಗಿ ಹೆಣೆದುಕೊಂಡು ಬಂದಿದೆ. 

       ಸ್ತ್ರೀಪಾತ್ರವರ್ಗದಲ್ಲಿ ರತ್ನಾಜಿಗೆ ಪ್ರಥಮಸ್ಥಾನ ಸಲ್ಲುತ್ತದೆ. ಕುಮಾರರಾಮನ ಕಥೆಯಲ್ಲಿ ಈ ಖಳ ಪಾತ್ರಧಾರಿಗೆ ಕಥಾನಾಯಕಿಯ ಪಟ್ಟವೂ ಸಲ್ಲುತ್ತದೆ ಎನ್ನಬಹುದು. ಈಕೆಯ ಪಾತ್ರಕ್ಕೆ ನಂಜುಂಡನು ಪೂರ್ವಜನ್ಮದ ಪೀಠಿಕೆಯನ್ನು ಕಲ್ಪಿಸಿ, ದೇವಲೋಕದ ಊರ್ವಶಿಯೇ ಈ ಜನ್ಮದಲ್ಲಿ ರತ್ನಾಜಿಯಾಗಿ ಜನಿಸಿ, ಕುಮಾರರಾಮನಾಗಿ ಹುಟ್ಟಿ ಬಂದಿದ್ದ ಅರ್ಜುನನ ಮೇಲೆ ಮತ್ತೊಮ್ಮೆ ತನ್ನ ಮಾಯಾಜಾಲವನ್ನು ಬೀಸಿದಳೆಂಬುದಾಗಿ ನಿರೂಪಿಸಿರುತ್ತಾನೆ. ಜನ್ಮಾಂತರದ ನಿಮಿತ್ತ ಹೇಗಿದ್ದರೂ ಸರಿಯೆ, ಪ್ರಕೃತ ಕಾವ್ಯಗಳಲ್ಲಿ ಚಿತ್ರಿತವಾಗಿರುವ ರತ್ನಾಜಿ ಅತ್ಯಂತ ಮಾಯಗಾತಿಯೇ ಸರಿ. ಆಕೆ ಡೊಂಬರ ಹೆಣ್ಣು ಎಂದು ಮಹಾಲಿಂಗಸ್ವಾಮಿಯ ಕಲ್ಪನೆ. ಕುಮಾರರಾಮನ ಸೋದರತ್ತೆಯ ಮಗಳು ಎಂಬುದಾಗಿ ಗಂಗನ ಸೃಷ್ಟಿ. ಆಕೆಗೆ ರಮನನ್ನು ಕಂಡ ಕ್ಷಣದಿಂದ ತನ್ನ ವಾವೆಯನ್ನೂ ಮರೆಯುವಷ್ಟರ ಮಟ್ಟಿಗೆ ವ್ಯಾಮೋಹ ಆವರಿಸಿಕೊಂಡು ಕಾಮೋದ್ರೇಕವಾಗುತ್ತದೆ. ಆಕೆಯ ಆಪ್ತಸಖಿಯಾದ ಸಂಗಿಗೇ ಒಡತಿಯ ಆ ವಿಪರೀತವಾದ ವರ್ತನೆ ಆತಂಕವನ್ನು ಮಾಡುತ್ತದೆ. ಆಕೆಯ ಸ್ವಭಾವ ಹಸ್ತಿನಿ ಇಲ್ಲವೇ ಶಂಖಿನಿ ಜಾತಿಯ ಸ್ತ್ರೀಯನ್ನು ಹೋಲುತ್ತದೆ. ಆಕೆಯ ಹೃದಯಕ್ಷೋಭೆಯನ್ನು ಮೂರು ಜನ ಕವಿಗಳೂ ವಿವರವಾಗಿ ಬೆಳೆಸಿರುತ್ತಾರೆ. ರಾಮನ ಸಮಾಗಮನಕ್ಕಾಗಿ ಆಕೆ ದೇವತೆಗಳಲ್ಲಿ ಹರಸಿಕೊಳ್ಳುವ ಸನ್ನಿವೇಶವಾಗಲಿ, ರಾಮನ ಚಿತ್ರಪಟವನ್ನು ಕಂಡು ಆಕೆ ಪರಿತಪಿಸುವ ವಿರಹವ್ಯಾಕುಲವಾಗಲಿ ಹೇಳತೀರದು. ಆಕೆ ಕಾಟನ ಜೊತೆಯಲ್ಲಿ ಹೂಡುವ ನಟನೆ, ಹಡಪದ ಬೊಲ್ಲುಗನನ್ನು ನಾಚಿಸಿ ಕಳುಹಿಸುವ ನೆಪಗಳು ಅವಳ ಕುಟಿಲತನವನ್ನೂ ಜಾಣತನವನ್ನೂ ವ್ಯಕ್ತಪಡಿಸುತ್ತವೆ. ರಾಮನ ಸಮ್ಮುಖದಲ್ಲಿ ಆಡುವ ಒಂದೊಂದು ಮಾತೂ ಆಕೆಯ ನೀಚಸ್ವಭಾವವನ್ನು ಪದರ ಪದರವಾಗಿ ಪರಿಚಯ ಮಾಡಿಕೊಡುತ್ತದೆ. ರಾಮನನ್ನು ಒಲಿಸಿಕೊಳ್ಳುವ ಸಲುವಾಗಿ ಕಂಪಿಲನನ್ನು ಕೊಲ್ಲಿಸಲೂ ಹಿಂತೆಗೆಯದ ಹೆಂಗಸು ಅವಳು. ರಾಮನು ತಾನೂ ಆಕೆಯ ಮಗನೆಂದು ಎಚ್ಚರಿಸಿದರೆ, ತಮದೆಯೂ ಮಗನೂ ಒಂದೇ ಅಂದಳವನ್ನು ಏರಿಬರುವುದು ರೂಢಿಯಲ್ಲಿ ಇಲ್ಲವೆ ಎಂದು ಪ್ರಶ್ನಿಸುವಳು. ಪ್ರಾಣಿಗಳಲ್ಲಿ ಮಾತೃಗಮನವಿಲ್ಲವೆ ಎಂದು ಸವಾಲು ಹಾಕುವುದು ಆಕೆಯ ವಿಕೃತಕಾಮಕ್ಕೆ ತಕ್ಕ ಮಾತೇ ಸರಿ. ಆಕೆಯ ಈ ಒಂದೊಂದು ವಾದವೂ ರಾಮನನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಆದರೆ, ಆಕೆಯ ಹೇಳಿಕೆಗೆ ಬೆಲೆಕೊಡಬಹುದಾದರೆ-ಎಂದರೆ, ಆಕೆ ರಾಮನಿಗಾಗಿಯೇ ನಿಶ್ಚಿತವಾದ ಕನ್ಯೆಯೆಂದೂ, ಕಂಪಿಲನು ಮೋಸಮಾಡಿ ವರಿಸಿದನೆಂದೂ ಆ ತರಳೆಗೆ ಮುದಿ ಮಹರಾಜನ ಸಹವಾಸ ಅಸಹನೀಯವೆಂದೂ ಹೇಳುವ ಮಾತುಗಳು-ಆಕೆಯ ಬಗ್ಗೆ ಅಲ್ಪ ಸ್ವಲ್ಪ ಸಹಾನುಭೂತಿಯನ್ನು ಉಂಟುಮಾಡುತ್ತದೆ. ಆದರೆ ಆ ನೆಪದಲ್ಲಿ ಆಕೆ ಕುಮಾರರಾಮನ ಇಂಗಿತವನ್ನು ಅರ್ಥಮಾಡಿಕೊಳ್ಳಲಾರದೆ ಅವನನ್ನು ಬಲಾತ್ಕರಿಸಲು ತೊಡಗುವುದು ಅಸಮರ್ಥನೀಯವೇ ಸರಿ. ಅನಂತರ, ಆಕೆ ನಾರಿಯಾಗಿದ್ದವಳು ಅಕ್ಷರಶ: ಮಾರಿಯೇ ಆಗುವಳು. ಯಾವ ಅಕಾರ್ಯಕ್ಕಾಗಿ ಕುಮಾರರಾಮನು ಹೆದರಿ ಆಕೆಯನ್ನು ನೂಕಿ ಬಂದನೋ ಆ ಅಕಾರ್ಯದ ಅಪವಾದವನ್ನೇ ಆತನ ತಲೆಯ ಮೇಲೆ ಹೊರಿಸುವಳು. ಬಯಸಿ ಬಯಸಿ ಪಡೆದಿದ್ದ ಮಗನನ್ನು ಇದಕ್ಕಾಗಿ ಕಂಪಿಲನು ತಲೆಕಡಿಯುವ ಆಜ್ಞೆ ಮಡುವಂತೆ ಮಹಾರಾಜನನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಳ್ಳುವಳು. ಆಕೆಯ ರೂಪಕ್ಕೂ ಲಾವಣ್ಯಕ್ಕೂ ಮರುಳಾಗಿದ್ದ ಕಂಪಿಲನಿಗೆ ಮಂತ್ರಿಯ ಹಿತೋಕ್ತಿಗಳಾವುವೂ ಹಿಡಿಸಲಾರದೆ ಹೋಗುವವು. ದುರುಳ ರತ್ನಿಗಾದರೋ ಕುಮಾರರಾಮನ ರುಂಡವನ್ನು ಕಾಣುವತನಕ ಸಮಾಧಾನವಿಲ್ಲ. ಬೈಚಪ್ಪನು ತಲೆಯನ್ನು ತಂದು ಕೊಟ್ಟಾಗ ಅದನ್ನು ಪರೀಕ್ಷಿಸಿ, ತಾನು ಚಿಕ್ಕಂದಿನಂದು ಮಾಡಿದ್ದ ಗುರುತು ಕಾಣದೆ ಶಂಕಿಸಿದಳೆಂದು ಗಂಗನ ಕೆಲವು ಪ್ರತಿಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಆಕೆಯ ಹಠ ನೆರವೇರಿತೋ ಇಲ್ಲವೋ ಎಂಬ ಆತಂಕ. ಅದೇ ಮೇರೆಗೆ, ಮುಂದೆ ವಾಸ್ತವಿಕವಾದ ವೃತ್ತಾಂತವು ಪ್ರಕಟವಾಗಲು, ರತ್ನಗಿ ಕ್ಷಣಮಾತ್ರವೂ ಜೀವಸಹಿತವಿರಲು ಆಗುವುದಿಲ್ಲ. ಈ ವೇಳೆಗಾಗಲೇ ಮನೆ ಮಂದಿಯವರ ಶಾಪವೂ, ಊರಿನವರ ಆಗ್ರಹವೂ ಸಾಕಾದಷ್ಟು ಅವಳಿಗೆ ತಟ್ಟಿತ್ತೋ ಏನೋ! ಅಂತೂ, ತನ್ನ ಕುಟಿಲತನ ಇನ್ನೂ ಪ್ರಕಟವಾಗುತ್ತಿದ್ದಂತೆಯೇ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಳು. ಅಂಥ ಒಡತಿಯ ಸಹವಾಸದೋಷಕ್ಕೆ ಬಲಿಯಾದಳೋ ಎನ್ನುವಂತೆ ಬಡ ಸಂಗಿಯೂ ಸಾಯುವಳು. ಕೆಲವು ಕೃತಿಗಳಲ್ಲಿ ರತ್ನಿಯ ಸೇಡನ್ನು ಇಲ್ಲಿಗೇ ಮುಗಿಸದೆ ಆಕೆ ಮತ್ತೆ ಮಾತಂಗಿಯಾಗಿ ಹುಟ್ಟಿ ಬಂದಳೆಂದು ನಿರೂಪಿತವಾಗಿದೆ. ಈ ಜನ್ಮಾಂತರದ ಕಥೆ ಹೇಗೇ ಇರಲಿ, ರತ್ನಾಜಿಯ ಪಾತ್ರ ಕುಮಾರರಾಮನ ಕಥೆಯಲ್ಲಿ ಅತ್ಯಂತ ಮಹತ್ವವುಳ್ಳದ್ದು. ಕುಮಾರರಾಮನೇ ಹೇಳುವಂತೆ ಆತನ ಪರದಾರಸೋದರತ್ವವನ್ನು ಶಿವನು ಪರೀಕ್ಷಿಸಿ ನೋಡುವ ಒರೆಗಲ್ಲು ರತ್ನಾಜಿ. ಆದ್ದರಿಂದ ಆಕೆಯ ಪಾತ್ರದಲ್ಲಿ ಕಂಡು ಬರುವ ಅತಿರೇಕಗಳು ರಾಮನ ಪಾತ್ರ ವೈಭವವನ್ನು ಹೆಚ್ಚಿಸುವ ಸಾಧನಗಳೆಂದು ಭಾವಿಸಬಹುದು. 

     ಕುಮಾರರಾಮನ ಕಥೆಯಲ್ಲಿ ಸೇರಿದ ರತ್ನಾಜಿಯ ಪ್ರಕರಣದಿಂದ ನಾಯಕನ ಧರ್ಮನಿಷ್ಠೆಯನ್ನೂ ವೀರವ್ರತದೊಡನೆ ಶೌಚವ್ರತವನ್ನೂ ಒರೆಗೆ ಹಚ್ಚಿ ವರ್ಣಿಸಲು ಕವಿಗೆ ಅತ್ಯುತ್ತಮ ಅವಕಾಶವೊದಗುತ್ತದೆ. ಇದರಿಂದ ವೀರರಸದ ಏಕನಾದವನ್ನು ತಪ್ಪಿಸಿ ಭಿನ್ನರಸದ ಪರಿಭಾವನೆಯಿಂದ ವಸ್ತು ವೈವಿಧ್ಯವನ್ನು ತರಲು ಅವಕಾಶವಾಗಿದೆ. ಲೋಕಮೋಹಕವಾದ ಶೃಂಗಾರರಸದ ಪ್ರತಿಪಾದನೆಯಲ್ಲಿ ಕವಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ. ಇದರ ಪರಿಣಾಮವಾಗಿ ಕಂಪಿಲರಾಯನು ಕುಮಾರರಾಮನಿಗೆ ಮರಣ ದಂಡನೆಯನ್ನು ವಿಧಿಸಿದನು. ರಾಜ್ಯಕ್ಕೆ ಏಕೈಕ ಆದಾರಸ್ತಂಭನೂ, ಅದ್ವಿತೀಯ ಸಾಹಸಿಯೂ ಆಗಿದ್ದ ಕುಮಾರರಾಮನಿಗೆ ಕಂಪಿಲನ ಸರ್ವ ವೈಭವಗಳಿಗೆ ತಾನೇ ಕಾರಣಪುರುಷ ಎಂಬ ಕೀಚಕಪ್ರಜ್ಞೆಯ ಅಹಂಭಾವವಿದ್ದಿದ್ದರೆ ಅದನ್ನು ತೋರ್ಪಡಿಸಿ ರಾಜಶಾಸನವನ್ನು ಧಿಕ್ಕರಿಸಬಹುದಿತ್ತು. ನಿರಪರಾಧಿಯಾದ ತನ್ನ ಮೇಎ ಸಿಡಿಲಿನಂತೆರಗಿದ ಅನ್ಯಾಯದ ರಾಜಶಾಸನವನ್ನು ಸಹ ಪ್ರತಿಭಟಿಸದೆ ತಲೆಬಾಗಿದೆ ಕುಮಾರರಾಮನ ವಿನಯ ಪ್ರದರ್ಶನ ಆತನ ವ್ಯಕ್ತಿತ್ವದ ಬಹು ಮುಖಗಳನ್ನು ತೋರಿಸಲು ಕವಿಗೆ ಸುವರ್ಣಾವಕಾಶವನ್ನೊದಗಿಸುತ್ತದೆ. ಆತನನ್ನು ನೆಲಮಾಳಿಗೆಯಲ್ಲಿರಿಸಿ ವಧೆಯ ನಾಟಕವನ್ನು ನಡೆಸಿದ ಮಂತ್ರಿ ಬೈಚಪ್ಪನ ಚಾತುರ್ಯ ಮತ್ತೆ ಯುದ್ಧಮಸೆದಂದು ಸುಲ್ತಾನನ ಸೇನೆಯ ವಿನಾಶಕ್ಕಾಗಿ ಆತನನ್ನು ಮತ್ತೊಮ್ಮೆ ರಣರಂಗಕ್ಕೆ ಕರೆತಂದ ಘಟನೆಗಳು ಮಹಾಭಾರತ ವಿರಾಟ ಪರ್ವದ ಕಥೆಯನ್ನು ಜ್ಞಾಪಕಕ್ಕೆ ತರುತ್ತವೆ. ಅವಿವೇಕದಿಂದ ಅನ್ಯಾಯದ ಶಾಸನಮಾಡಿ ತನ್ನ ವಧೆಯನ್ನು ಕೋರಿದ ತಮದೆಗೆ ಆಪತ್ಕಾಲದಲ್ಲಿ ನೆರವಾಗುವ ರಾಮನ ನಿರ್ನಿಮಿತ್ತ ಸ್ವಾಮಿಭಕ್ತಿಯನ್ನೂ ರಾಷ್ಟ್ರಪ್ರೇಮವನ್ನೂ ಈ ಪ್ರಸಂಗದಿಂದ ಮನಗಾಣಬಹುದು. ಮಾಯಾ ಶಿರಸ್ಸುಗಳ ರಚನೆ, ಸಹಗಮನ, ನೆಲೆಮಾಳಿಗೆಯ ರಹಸ್ಯ ಜೀವನ ಹಠಾತ್ತನೆ ಯುದ್ಧಗಮನ ಮುಂತಾದ ಚಮತ್ಕಾರದ ಪ್ರಸಂಗಗಳು ಈ ಮಹತ್ಕೃತಿಯಲ್ಲಿ ಅದ್ಭುತರಸ ಪ್ರತಿಪಾದನೆಗೆ ನೆರವಾಗುತ್ತವೆ. ಕುಮಾರನು ಸತ್ತನಂತರ ಕಂಪಿಲನ ಶೋಕ, ಮರುಕ, ಮಂತ್ರಿಯ ಭರ್ತ್ಸನೆ ಮುಂತಾದುವು ವಿಸ್ಮಯಕರವಾಗಿವೆ. ಹಲವಾರು ಬಗೆಯ ಆವರ್ತಗರ್ತಗಳಲ್ಲಿ ಸಿಕ್ಕಿ ವಸ್ತು ವೈವಿಧ್ಯವನ್ನು ಪಡೆದು ವಿಭಿನ್ನರಸಗಳ ಉತ್ಕರ್ಷದಿಂದ ಕಥೆ ಕುತೂಹಲದ ಸಮುದ್ರವಾಗುತ್ತದೆ. ಇತಿಹಾಸ ಭೂಮಿಯಾದರೂ ಪುರಾಣ ಭ್ರಾಂತಿಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. 

     ರಾಮಾಯಣ ಮಹಾಭಾರತ ಮುಂತಾದ ಮಹಾಕಾವ್ಯಗಳ ನಾಯಕರು ಮತ್ತೊಮ್ಮೆ ಇತಿಹಾಸ ಗರ್ಭದಲ್ಲಿ ಅವತರಿಸಿದರೋ ಎಂಬಷ್ಟು ಮಟ್ಟಿಗೆ ರೂಪಗುಣ ಸೌಂದರ್ಯನಿಧಿಯಾಗಿ ಕುಮಾರರಾಮನು ಕಾವ್ಯದ ಉದ್ದಕ್ಕೂ ರಂಜಿಸುತ್ತಾನೆ. ಈ ಕಥೆಯಲ್ಲಿನ ಎಲ್ಲ ಘಟನೆಗಳನ್ನೂ ಐತಿಹಾಸಿಕವೆಂದು ಸಿದ್ಧಪಡಿಸಲು ಸಾಕಷ್ಟು ಬಹಿರಂಗದ ಆಧಾರಗಳು ಇಲ್ಲವಾದರೂ ಇತಿಹಾಸ ದೃಷ್ಟಿಯಿಂದ ಅಸಂಭಾವ್ಯತೆಯೇನೂ ಇಲ್ಲಿ ಗೋಚರಿಸುವುದಿಲ್ಲ. ಇಷ್ಟು ಮಟ್ಟಿನ ಆದರ್ಶಗುಣಗಳ ಗಣಿಯಾದ ರಾಮನಾಥನನ್ನು ಅಂದಿನ ಜನ ಅರ್ಜುನನ ಅವತಾರವೆಂದು ಪೂಜಿಸಿದ್ದರೆ ಆಶ್ಚರ್ಯವಿಲ್ಲ. ಅದಕ್ಕೆ ಅನುಗುಣವಶಗಿ ರತ್ನಾಜಿ, ಸುಲ್ತಾನ, ಆತನ ಮಗಳು ಮುಂತಾಧ ವ್ಯಕ್ತಿಗಳು ಊರ್ವಶಿ ಮುಂತಾದ ಪೌರಾಣಿಕ ಸಾಮ್ಯಗಳನ್ನು ಕಂಡುಕೊಳ್ಳಬೇಕಾಯಿತು. ಆದರೆ ಕವಿ ಇಲ್ಲಿ ತಂದಿರುವ ಪುರಾಣಕಥೆ ಕುಮಾರರಾಮನ ಕಥೆಯಲ್ಲಿ ಬೆರೆತು ಕಲಸುಮೇಲೋಗರವಾಗದೆ ಜನ್ಮಾಂತರದ ಕಥೆ ಎಂಬಂತೆ ಉದ್ದ÷ಕ್ಕೂ ಎಣ್ಣೆ ನೀರಿನ ಕೂಟವಾಗಿ ನಿಲ್ಲುತ್ತದೆ. ಆದ್ದರಿಂದ ಕುಮಾರರಾಮನನ್ನು ಕುರಿತ ಘಟನೆಗಳ ಐತಿಹಾಸಿಕತೆಗೆ ಅಪಚಾರವಾಗುವುದಿಲ್ಲ. ಪಂಪಭಾರತದಲ್ಲಿ ಪುರಾಣಕಥೆಗೆ ಕವಿ ಇತಿಹಾಸದ ಎಳೆಯನು ಜೋಡಿಸಲು ಯತ್ನಿಸಿದರೆ ಇಲ್ಲಿ ಕವಿ ಐತಿಹಾಸಿಕ ಕಾವ್ಯಕೆಕ ಪುರಾಣದ ಎಳೆಯನ್ನು ಔಪಚಾರಿಕವಾಗಿ ಎಂಬಂತೆ ಜೋಡಿಸಲು ಯತ್ನಿಸಿರುವುದು ಸ್ಪಷ್ಟವಾಗುತ್ತದೆ. ಈವರೆಗೆನ ಸಂಶೋಧನೆಗಳಿಂದ ಕಂಪಿಲ, ಬೈಚಪ್ಪ, ಕುಮಾರರಾಮ ಮುಂತಾದವರು ಐತಿಹಾಸಿಕ ವ್ಯಕ್ತಿಗಳೆಂಬ ಅಂಶ ವ್ಯಕ್ತಪಟ್ಟಿರುವಂತೆ ಕುಮಾರರಾಮನ ವೀರಸಾಹಸಗಳಲ್ಲಿ ಅವನಿಗೆ ನೆರವಾದ ಅಥವಾ ಪ್ರತಿಭಟಿಸಿದ ವ್ಯಕ್ತಿಗಳ ಮತ್ತು ತತ್ಸಂಬಂಧವಾದ ಘಟನೆಗಳ ಐತಿಹಾಸಿಕತೆ ಇನ್ನು ಮುಂದಿನ ಸಂಶೋಧನೆಗಳಿಂದ ಸಿದ್ಧವಾಗಬೇಕಾಗಿದೆ. 

     ಒಟ್ಟಿನಲ್ಲಿ ಐತಿಹಾಸಿಕ ವೀರನಾದರೂ ಪುರಾಣ ಕಾವ್ಯಗಳ ನಾಯಕರ ಮಹೋನ್ನತ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲೂ ಕೀಳಲ್ಲದ ಕನ್ನಡ ಕಡುಗಲಿಯ ಕಥೆಯನ್ನು ತನ್ನ ‘ಮಹಾ ಪ್ರಬಂಧದ’ ಯೋಗ್ಯ ವಸ್ತುವೆಂದು ಆರಿಸಿಕೊಂಡು ಒಂದು ಸುದೀರ್ಘ ಮಹತ್ ಕೃತಿಯನ್ನು ನಿರ್ಮಿಸಿದ ಕವಿ ನಂಜುಂಡನು ಈ ಪಂಥದ ಕನ್ನಡ ಕವಿಗಳಲ್ಲಿ ಮೊದಲಿಗನೂ ಅಪರೂಪದವನೂ ಆಗಿದ್ದಾನೆ.   

     ನಂಜುಂಡನ ಕುಮಾರರಾಮ ಸಾಂಗತ್ಯವು ಸಮಕಾಲೀನ ಜೀವನವನ್ನು ಪ್ರತಿಬಿಂಬಿಸುವ ದೃಷ್ಟಿಯಿಂದ ಅತ್ಯುತ್ತಮ ಕೃತಿ ಎನ್ನಬಹುದು. ಐತಿಹಾಸಿಕ ಕಾವ್ಯವಾದ್ದರಿಂದ ಅಂದಿನ ಜನ ಜೀವನವನ್ನು ಚಿತ್ರಿಸಲು ಇದರಲ್ಲಿ ಕವಿಗೆ ಶ್ರೇಷ್ಠ ಅವಕಾಶವೊದಗುತ್ತದೆ. ನಂಜುಂಡನು ಈ ಸುವರ್ಣಾವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದಾನೆ. ಆ ಕಾಲದ ಜನರ ಸಂಸ್ಕೃತಿಯ ಹಿರಿಮೆ, ಆಚಾರ ವ್ಯವಹರಗಳು, ರಸಿಕತೆ, ಧ್ಯೇಯ ದರ್ಶನಗಳೂ ಇಲ್ಲಿ ಮುದ್ರೆಯೊತ್ತಿ ನಿಂತಿವೆ. ವಿವಾಹ ಸಂದರ್ಭಗಳು, ಸ್ತ್ರೀಪುರುಷರ ವೇಷಭೂಷಣಗಳು, ಆಭರಣಗಳು, ಅಲಂಕಾರ ಸಾಧನಗಳು, ಹಬ್ಬಹುಣ್ಣಿಮೆಗಳು, ಉತ್ಸವಗಳು, ನಂಬಿಕೆಗಳು, ಗಾದೆಮಾತುಗಳು ಮುಂತಾದುವು ನಂಜುಂಡನ ಕಾಲದ ಕರ್ಣಾಟಕದ ಸಂಸ್ಕೃತಿಯ ಸತ್ಯಕಥನವನ್ನು ನಂಜುಂಡನಂತಹ ಕವಿಗಳ ಕೃತಿಗಳಲ್ಲಿಯೇ ಕಾಣಬೇಕಾಗುತ್ತದೆ. ಇದಲ್ಲದೆ ಅಂದಿನ ಯುದ್ಧ ಕ್ರಮಗಳು, ಸೇನಾತಂತ್ರಗಳು, ಯುದ್ಧ ಸಾಧನಗಳು, ವಾಹನಗಳು, ಆಯುಧಗಳು, ಯುದ್ಧನೀತಿ ಮುಂತಾದ ಅಂಶಗಳನ್ನು ಅರಿಯಲು ನಂಜುಂಡನ ಕೃತಿ ಅಪೂರ್ವ ಆಕರದಂತಿದೆ ಅಚ್ಚಗನ್ನಡತನವನ್ನು ಪ್ರತಿನಿಧಿಸುವ ಜಾತಿ ಕಸುಬು ಮುಂತಾದುವನ್ನು ಸೂಚಿಸುವ ನಾಮವಾಚಕಗಳು ಕನ್ನಡ ಜನಪದ ಜೀವನವನ್ನು ಹಸಿಹಸಿಯಾಗಿ ಚಿತ್ರಿಸುತ್ತವೆ. ಗಿಂಡಿಯ ಲಕ್ಕ, ಗಂಟೆಯ ನಾಗರಂಗುಗ, ಕಂಚುಗಾರರ ತಿಪ್ಪ ಇತ್ಯಾದಿ ಹೆಸರುಗಳ ಸಹಜತೆಯನ್ನು ಇಲ್ಲಿ ಗಮನಿಸಬಹುದು. ಅಂದಿನ ಜನರ ಬೇಟೆಯ ಹವ್ಯಾಸ ಮತ್ತು ವಿಧಾನಗಳು, ಶೂಲದ ಹಬ್ಬ, ಸ್ವಪ್ನಫಲ ಸಂಬಂಧಿ ನಂಬಿಕೆಗಳು, ಸಹಗಮನದಿಂದ ಮಾಸತಿಯಾಗುವ ಭಯಾನಕ ಪದ್ಧತಿ ಇತ್ಯಾದಿಯಾಗಿ ನಂಜುಂಡನ ಕೃತಿ ಅಂದಿನ ಜನಜೀವನದ ಯಥಾರ್ಥ ದರ್ಶನವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ.   ಸಾಂಗತ್ಯವನ್ನು ಪ್ರೌಢಕಾವ್ಯಕ್ಕೆ ಬಳಸಿದ ಕವಿ ಎಂಬ ಕೀರ್ತಿಯಲ್ಲದೆ ಸಾಧ್ಯವಾದ ಮಟ್ಟಿಗೂ ಅದನ್ನು ನವರಸ ವಾಹಕವನ್ನಾಗಿಸುವಲ್ಲಿ ಕವಿ ಅಪೂರ್ವ ಯಶಸ್ಸು ಗಳಿಸಿದ್ದಾನೆ. ದುರ್ಬಲರ ಕೈಯಲ್ಲಿ ಸಾಂಗತ್ಯದ ಮಟ್ಟು ಜಾಳು ಜಾಳಾಗುತ್ತದೆ. ಆದರೆ ಸಮರ್ಥ ಕವಿಗಳಲ್ಲಿ ಸೊಗಸು ಬೀರುತ್ತದೆ. ವೀರರೌದ್ರರಸಗಳ ಪ್ರತಿಪಾದನೆಯಲ್ಲಿ ಒಗ್ಗದ ಈ ಛಂದಸ್ಸನ್ನು ಆದಷ್ಟು ಮಟ್ಟಿಗೆ ಹುರಿಯೇರಿಸಲು ಕವಿ ಮಾಡಿರುವ ಪ್ರಯತ್ನ ಮೆಚ್ಚಬಹುದಾಗಿದೆ. ಆದ್ದರಿಂದ ಡಿ.ಎಲ್.ನರಸಿಂಹಾಚಾರ್ ಹೇಳುವಂತೆ ‘ಯಾವ ಕಡೆಯಿಂದ ನೋಡಿದರೂ ಈ ಕಾವ್ಯ ಉತ್ಕೃಷ್ಟವಾದದ್ದೆಂದು ಹೇಳಬಹುದು’ ಎಂಬ ಮಾತು ಸತ್ಯ. 

     ವಸ್ತು ಸಂವಿಧಾನದಲ್ಲಾಗಲೀ ನಾಯಕನಾದ ವೀರರಾಮನ ಸಾಹಸೋನ್ನತಿಯ ಚಿತ್ರಣದಲ್ಲಾಗಲೀ ಕವಿಯ ಸ್ವತಂತ್ರ ಕಲ್ಪನೆಗಳನ್ನೂ ಮತ್ತು ಜನಜನಿತವಾಗಿ ಬೆಳೆದು ಬಂದ ವಾಡಿಕೆಯ ಕಥಾಸಾಮಗ್ರಿಯನ್ನೂ ವಿಂಗಡಿಸುವುದು ಕಷ್ಟ. ನಂಜುಂಡನ ಕಾಲಕ್ಕೆ ಕುಮಾರರಾಮನು ಅವತಾರಪುರುಷನೆಂಬ ಕಲ್ಪನೆ ಜನಮನದಲ್ಲಿ ಬೇರುಬಿಟ್ಟಿತ್ತೆಂಬುದು ಸ್ಪಷ್ಟ. ಹೀಗಾಗಿ ಆತನ ಕಥೆಗೆ ಊಹಾಪೋಹಗಳ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿರಬಹುದು. ನಮನದ ಆರಾಧ್ಯ ವೀರನ ಚರಿತ್ರೆಗೆ ತನ್ನ ಕಲ್ಪನೆಯ ಸೊಗಸನ್ನೂ ಬೆರೆಸಿ ಕನ್ನಡ ಸಾಹಿತ್ಯದಲ್ಲಿ ಮೊದಲನೆಯ ವೀರಕಾವ್ಯವನ್ನು ಸೃಷ್ಟಿಸಿದ ಕೀರ್ತಿಗೆ ನಂಜುಂಡನು ಭಾಜನನಾಗಿದ್ದಾನೆ. ಆದರೂ ಇಲ್ಲಿ ಕವಿ ಕೇವಲ ಮಧ್ಯವರ್ತಿಯಾಗಿ ನಿಂತಂತಿದೆ. ಕರ್ಣಾಟಕದ ಜನಸಮುದ್ರವೇ ಕಾವ್ಯದ ನಿಜವಾದ ಕರ್ತೃವೆನ್ನಬಹುದು. 

     ಕುಮಾರರಾಮನು ಅವತಾರಪುರುಷನೆಂಬ ಕಲ್ಪನೆ ಜನ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟ ಅಂಶವಾಗಿತ್ತೆಂಬುದಕ್ಕೆ ಆತನ ಚರಿತ್ರೆಯನ್ನು ಕುರಿತು ಇತರ ಕಾವ್ಯಗಳು ಒದಗಿಸುವ ಸತ್ಯ ಸಾಮಗ್ರಿಗಳು ಆಧಾರವಾಗಿವೆ. ಕುಮಾರರಾಮನನ್ನು ಕುರಿತು ಪಾಂಚಾಳ ಗಂಗನ ಕೃತಿ ಆತನ ಅವತಾರ ತತ್ತ್ವವನ್ನು ಒಪ್ಪಿಕೊಂಡು ರಚಿತವಾಗಿದೆ. ಕವಿಚರಿತೆಕಾರರು ಇದನ್ನು ಕುಮಟಿರಾಮ ಸಾಂಗತ್ಯ ಎಂದು ಹೆಸರಿಸುತ್ತಾರೆ. ನಂಜುಂಡನ ಕೃತಿ ವಿದ್ವತ್ಪೂರ್ಣ ಪ್ರೌಢಭಾಷೆಯಲ್ಲಿ ಬಹಾಕಾವ್ಯದ ಧಾಟಿಯಲ್ಲಿ ಬರೆದ ಕೃತಿಯಾದರೆ ಗಂಗನ ಕೃತಿ ಜನ ಸಾಮಾನ್ಯರ ಭಾಷೆಗೆ ಹತ್ತಿರವಾಗಿ ಸರಳವಾದ ಕನ್ನಡದಲ್ಲಿ ರಚಿತವಾಗಿದೆ. ವಸ್ತುವಿನಲ್ಲಿಯೂ ನಂಜುಂಡನ ಕೃತಿಗಿಂತ ಭಿನ್ನವಾದ ಕೆಲವು ಅಂಶಗಳು ಗಂಗನ ಕೃತಿಯಲ್ಲಿ ಕಂಡುಬರುತ್ತವೆ. ಕಾಣಿಕೆಯನ್ನು ನಿರೀಕ್ಷಿಸಿ ಬಂದ ಸುಲ್ತಾನನ ಪಾದುಕೆಗಳನ್ನು ರಾಮನು ಮೆಟ್ಟಿ ಹಾಸ್ಯ ಮಾಡುವ ಪ್ರಸಂಗ ಗಮನಾರ್ಹವಾಗಿದೆ. ನಂಜುಂಡನಲ್ಲಿ ಇದು ಇಲ್ಲ. ಆದರೂ ರಾಮನು ಅವತಾರ ಪುರುಷನೆಂಬ ತತ್ತ್ವ ಎರಡು ಕೃತಿಗಳಿಗೂ ಸಮಾನ ಅಂಶ. ನಂಜುಂಡನ ಸಮಗ್ರ ದೃಷ್ಟಿಯಾಗಲೀ ಪ್ರೌಢಿಮೆಯಾಗಲೀ ಗಂಗನ ಕೃತಿಯಲ್ಲಿ ಕಂಡುಬರುವುದಿಲ್ಲ. ಸಾಂಗತ್ಯ ಕವಿಗಳಲ್ಲಿ ನಂಜುಂಡನು ಗಂಗನೇ ಮುಂತಾದ ಅನಂತರದ ಕವಿಗಳಿಗೆ ಆದರ್ಶವಾಗಿದ್ದಾನೆ. 

     ಕುಮಾರರಾಮ ಸಾಂಗತ್ಯದಲ್ಲಿ ನಂಜುಂಡನ ಸಾಧನೆ ಸಿದ್ಧಿಗಳು ಅಪೂರ್ವವಾದವು. ಪಂಪ, ರನ್ನ, ಕುಮಾರವ್ಯಾಸ, ಹರಿಹರರಂತೆ ನಂಜುಂಡನು ಪ್ರಥಮ ದರ್ಜೆಯ ಕವಿಯಲ್ಲವಾದರೂ ದ್ವಿತೀಯ ದರ್ಜೆಯ ಕವಿಗಳಲ್ಲಿ ಉನ್ನತ ಸ್ಥಾನ ಈತನದು. ಪಂಡಿತ ಪಾಮರ ಪ್ರಿಯನೆನಿಸಿದ ಕವಿ ನಂಜುಂಡನು ಛಂದಸ್ಸು, ವಸ್ತು, ನಿರೂಪಣೆ, ಧ್ಯೇಯ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಕ್ರಾಂತಿಪುರುಷ. ರಗಳೆ ಷಟ್ಪದಿಗಳ ಸಮೆದ ಜಾಡನ್ನು ತೊರೆದು ಸಾಂಗತ್ಯದ ಜನಪದಮಟ್ಟಿಗೆ ಪ್ರೌಢಕಾವ್ಯದ ಪಟ್ಟಗಟ್ಟಿದ್ದೂ, ಪುರಾಣಗಳ ಗಗನ ಕುಸುಮ ಸೌಂದರ್ಯವನ್ನು ಭೂಮಿಗೆಳೆದುತಂದು ಇತಿಹಾಸದ ಕಲ್ಲಿನಲ್ಲಿ ಕೆತ್ತಿ ದಿಟವೂ ಶಾಶ್ವತವೂ ಆದ ಚಿತ್ರವನ್ನು ಬಿಡಿಸಿದ್ದೂ, ಅನಂತರದ ಕವಿಗಳಿಗೆ ಆದರ್ಶದ ಹೆದ್ದಾರಿಯನ್ನೂ ಹಾಕಿ ಜನಾಂಗ ಪ್ರಜ್ಞೆಯ ರಸಜಿಹ್ವೆಯಾಗಿ ನುಡಿದು ಕನ್ನಡ ಸಂಸ್ಕೃತಿಯ ಭಂಡಾರವಾಗಿ ಮೆರೆದದ್ದೂ ಆತನನ್ನು ಸೀಮಾಪುರುಷರ ಸ್ಥಾನಕ್ಕೇರಿಸಿ ನಿಲ್ಲಿಸಿವೆ. ನಂಜುಂಡನಿಂದ ಕನ್ನಡ ಸಾಹಿತ್ಯದಲ್ಲಿ ಸಾಂಗತ್ಯದ ಯುಗವೇ ಆರಂಭವಾಗುತ್ತದೆ. ಮುಂದಿನ ಕವಿಗಳು ಈತನ ಕಾವ್ಯ ತತ್ತ್ವಗಳನ್ನೂ, ಧ್ಯೇಯಗಳನ್ನೂ ಗೌರವಿಸಿ ಅನುಸರಿಸಿದರು. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ ನಂಜುಂಡನ ಸ್ಥಾನವೇನು ಎಂಬುದು ವಿದಿತವಾಗುತ್ತದೆ. ಈತನಂತೆ ಐತಿಹಾಸಿಕ ವಸ್ತುವನ್ನಿಟ್ಟುಕೊಂಡು ಮುಂದಿನ ಕವಿಗಳು ಚಿಕ್ಕದೇವರಾಜ ವಿಜಯ, ಕಂಠೀರವ ನರಸರಾಜ ವಿಜಯ, ಕೆಳದಿನೃಪ ವಿಜಯ ಮುಂತಾದ ಕಾವ್ಯಗಳನ್ನು ರಚಿಸಲು ದಾರಿಯಾಯಿತು.     

     ನಂಜುಂಡ ಕವ ಸಂಸ್ಕೃತ-ಕನ್ನಡ ಕಾವ್ಯಾಭ್ಯಾಸಗಳಿಂದ ರುಚಿ ಶುದ್ಧಿಯನ್ನು ಸಂಪಾದಿಸಿದವನು, ಮುರ್ಖಯವಾಗಿ ಕನ್ನಡ ಕಾವ್ಯ ಶರಧಿಯಲ್ಲಿ ಓಲಾಡಿ ನುಡಿ ಮುತ್ತುಗಳನ್ನು ಆರಿಸಿ ತೆಗೆದವನು, ಚೆಂಗಾಳ್ವ ವಂಶದ ಪ್ರಭುವೂ ಸ್ವತ: ವೀರಯೋಧನೂ ಆಗಿದ್ದನು. ಚಿಕ್ಕಪ್ಪನಾದ ಮೂರನೆಯ ಮಂಗರಸನಂತೆ ಕವಿಗಳಲ್ಲಿ ಹೆಸರಾದನು. ತನಗಿಂತ ಮೊದಲು ಕನ್ನಡ ಜನಮನದಲ್ಲಿ ತುಡಿಯುತ್ತಿದ್ದ ರಾಮನಾಥನ ಪರಾಕ್ರಮವನ್ನೂ, ರತ್ನಾಜಿ ಒಡ್ಡಿದ ಸತ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪರದಾರಸೋದರಸ್ವ ಮೆರೆದುದು ಕರೆಮರೆಯಿಲ್ಲದ ಅವನ ಶೌಚ ಗುಣವನ್ನು ಸ್ಥಾಪಿಸುತ್ತವೆಂಬುದು ಕವಿಯ ಸ್ವಭಾವಕ್ಕೆ ಪ್ರಿಯವಾಯಿತು. ನಂಜುಂಡ ಕವಿ ಕುಮಾರರಾಮನಕಥೆಯನ್ನು ತನ್ಮಯತೆಯಿಂದ ವರ್ಣಿಸಿದ್ದಾನೆ. 

      ಹದಿನಾರನೆಯ ಶತಮಾನದ ಶ್ರೇಷ್ಠ ಸಾಂಗತ್ಯಕೃತಿಗಳನ್ನು ಸೃಷ್ಟಿಸಿದೆ. ಈ ಶತಮಾನದಲ್ಲಿ ಸುಮಾರು ಇಪ್ಪತ್ತೆಂಟು ಸಾಂಗತ್ಯಕೃತಿಗಳು ಹುಟ್ಟಿಕೊಂಡಿವೆ. ಮೂರನೆಯ ಮುಂಗರಸನ ನೇಮಿಜಿನೇಶ ಸಂಗತಿ, ಪ್ರಭಂಜನಚರಿತೆ, ಶ್ರೀಪಾಲ ಚರಿತೆಗಳು, ನಂಜುಂಡನ ರಾಮನಾಥಚರಿತೆ, ಕನಕದಾಸರ ಮೋಹನತರಂಗಿಣಿ, ರತ್ನಾಕರವರ್ಣಿಯ; ಭರತೇಶವೈಭವ, ರಾಮರಸ ವಿರೂಪಾಕ್ಷ, ಬೊಂಬೆಯ ಲಕ್ಕ ಹಲಗ, ಓದುವಗಿರಿಯ ಇವರ ಹರಿಚಂದ್ರ ಸಾಂಗತ್ಯಕೃತಿಗಳು ಹೆಸರಿಸತಕ್ಕವು.

      ಈ ಶತಮಾನದ ಮತ್ತೊಂದು ಕೃತಿ ಕಿಕ್ಕೇರಿಯಾರಾಧ್ಯ ನಂಜುಂಡ ವಿರಚಿತ ಭೈರವೇಶ್ವರಕಾವ್ಯ. ಇದು ಛಂದಸ್ಸಿನ ದೃಷ್ಟಿಯಿಂದ ವಿದ್ವಾಂಸರ ಗಮನವನ್ನು ಸೆಳೆದಿದೆ. ಇದರ ಸಂಪಾದಕರು ಈ ಕಾವ್ಯವನ್ನು ಷಟ್ಪದಿಯೆಂದು ನಿರ್ಧರಿಸಿ ಪ್ರತಿಪದ್ಯವನ್ನೂ ಆರು ಪಾದಗಳಾಗಿ ವಿಂಗಡಿಸಿ ಅಚ್ಚುಮಾಡಿದ್ದರೆ. ಅವರ ಅಭಿಪರಾಯದಂತೆ ಪ್ರತಿ ಪದ್ಯದ ಒಂದು ಎರಡು ನಾಲ್ಕು ಮತ್ತು ಐದನೆಯ ಪಾದಗಳು ಶರಶಟ್ಪದಿಯಲ್ಲೂ ಮೂರು ಮತ್ತು ಆರನೆಯ ಪಾದಗಳು ಕುಸುಮಷಟ್ಪದಿಯಲ್ಲು ರಚಿತವಾಗಿವೆ. ಒಂದು ಪದ್ಯದ ಬೇರೆ ಬೇರೆ ಪಾದಗಳು ಬೇರೆ ಬೇರೆ ಛಂದಸ್ಸಿನಲ್ಲಿ ರಚಿತವಾಗಿರುವುದು ಕನ್ನಡ ಸಾಹಿತ್ಯದಲ್ಲಿ ಎಲ್ಲೂ ಕಂಡುಬರುವುದಿಲ್ಲ. ವಾಸ್ತವವಾಗಿ ಈ ಕಾವ್ಯದ ಛಂದಸ್ಸು ಸಾಂಗತ್ಯ, ಷಟ್ಪದಿಯಲ್ಲ. ಪ್ರತಿ ಪದ್ಯದಲ್ಲೂ ಖಂಡ ಪ್ರಾಸವಿರುವುದೇ ಈ ಭ್ರಾಂತಿಗೆ ಕಾರಣ. ಈ ರೀತಿ ಖಂಡಪ್ರಾಸವನ್ನು ಒಳಕೊಂಡಿರುವ ಕೃತಿಗಳು ಇನ್ನೂ ಕೆಲವು ಕಂಡುಬರುತ್ತವೆ.

      ಹದಿನೇಳನೆಯ ಶತಮಾನದಲ್ಲಿ ಸುಮಾರು ಆರುವತ್ತು ಸಾಂಗತ್ಯ ಕೃತಿಗಳು ಹುಟ್ಟಿಕೊಂಡಿವೆ. ಸಂಖ್ಯಾದೃಷ್ಟಿಯಿಂದ ಈ ಶತಮಾನದ ಕೃತಿಗಳು ವಿಪುಲವಾಗಿದ್ದರೂ ಕಾವ್ಯಗುಣದ ದೃಷ್ಟಿಯಿಂದ  ಹೇಳಿಕೊಳ್ಳುವಂಥವು ಹೆಚ್ಚಾಗಿಲ್ಲ. ಪಂಚಬಾಣನ ಭುಜಬಲಿಚರಿತೆ, ಶಾಂತಮಲ್ಲನ ಅನುಭವಮುದ್ರೆ, ಶೇಷಕವಿಯ ರುಕ್ಮಾಂಗದ ಚರಿತೆ, ತಿರುಮಲಾರ್ಯನ ಕರ್ಣವೃತ್ತಾಂತ ಕಥೆ. ಚಿಕುಪಾಧ್ಯಾಯನ ಯಾದವಗಿರಿ ಮಹಾತ್ಮೆ, ಪಶ್ಚಿಮರಂಗ ಮಹಾತ್ಮೆ, ರಂಗಧಾಮಸ್ತುತಿ ಸಾಂಗತ್ಯ, ರಂಗಧಾಮ ಪರುಷ ವಿರಹ ಸಾಂಗತ್ಯ, ಚಿತ್ರಶತಕ ಸಾಂಗತ್ಯ, ರಂಗನಾಯಕ ರಂಗನಾಯಕೀ ಸ್ತುತಿ ಸಾಂಗತ್ಯ, ನೇಮಿವ್ರತಿಯ ಸುವಿಚಾರಚರಿತೆ, ಧರಣಿಪಂಡಿತನ ಬಿಜ್ಜಳ ರಾಯಚರಿತೆ, ಚಂದ್ರಮನ ಕಾರ್ಕಳದ ಗೊಮ್ಮಟೇಶ್ವರಚರಿತೆ, ಪದ್ಮನಾಭನ ಪದ್ಮಾವತೀ ಚರಿತೆ, ಜಿನದತ್ತರಾಯನ ಚರಿತೆ, ಬಸವಕವಿಯ ರೇಣುಕಾಚಾರ್ಯಚರಿತೆ, ಚೆಲ್ಲಮಲ್ಲೇಶನ ದೀಪದಕಲಿಯಾರ ಕಾವ್ಯ, ಸಿದ್ಧಕವಿಯ ಸಿರುಮನ ಸಾಂಗತ್ಯ, ಚಾಮಯ್ಯನ ದೇವರಾಜೇಂದ್ರ ಸಾಂಗತ್ಯ-ಇವು ಹೆಸರಿಸತಕ್ಕವು. ಗೋವಿಂದ ವೈದ್ಯನ ಕಂಠೀರವ ನರಸರಾಜವಿಜಯ ಒಂದು ಅಪೂರ್ವಕೃತಿ. ಈ ಕವಿ ವೀರರಸ ಪ್ರತಿಪಾದನೆಗೆ ಸಾಂಗತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದ್ದಾನೆ. ಈ ಶತಮಾನದ ವೈಶಿಷ್ಟವೆಂದರೆ ಸ್ತ್ರೀಯರು ಸಾಂಗತ್ಯರಚನೆಗೆ ತೊಡಗಿದ್ದು. ಚಿಕ್ಕದೇವರಾಜನ ಆಸ್ಥಾನದಲ್ಲಿದ್ದ ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ಒಂದು ಉತ್ಕೃಷ್ಟ ಕೃತಿ. ಶೃಂಗಾರಮ್ಮ ಪದ್ಮಿನಿ ಪರಿಣಯವನು ಬರೆದಿದ್ದಾಳೆ.

      ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಗಳಲ್ಲಿ ಸಾಂಗತ್ಯದ ಬೆಳಸು ಅಷ್ಟೊಂದು ಹುಲುಸಾಗಿದ್ದಂತೆ ಕಂಡುಬರುವುದಿಲ್ಲ. ಹದಿನೆಂಟನೆಯ ಶತಮಾನದಲ್ಲಿ ಕೇವಲ ಹದಿನೇಳು ಸಾಂಗತ್ಯಕೃತಿಗಳೂ ಹತ್ತೊಂಬತ್ತನೆಯ ಶತಮಾನದಲ್ಲಿ ಕೇವಲ ಎಂಟು ಸಾಂಗತ್ಯಕೃತಿಗಳು ಹೊರಬಂದಿವೆ. ಹದಿನೆಂಟನೆಯ ಶತಮಾನದಲ್ಲಿ ಗೋಪಾಲಾಚಾರ್ಯ ಶಿಷ್ಯನ ಜೀವೇಶ್ವರ ಸಾಂಗತ್ಯ. ತತ್ತ್ವದ ಸೊಬಗಿನ ಸೋನೆ. ಗುರುಸಿದ್ಧಪ್ಪನ ಮಾದೇಶ್ವರ ಸಾಂಗತ್ಯ. ಚಲುವ ಕವಿಯ ಮಡಿವಾಳಯ್ಯನ ಚರಿತೆ. ದೇಪನ ದೇವಾಂಗಪುರಾಣ, ನೂರೊಂದನ ಸೌಂದರಕಾವ್ಯ. ಪಾಯಣ್ಣನ ಅಹಿಂಸಾ ಚರಿತೆ, ಪದ್ಮನಾಭನ ರಾಮಚಂದ್ರಚರಿತೆ, ತರಳ ಚಲಪತಿಯ ಗಂಗಾಗೌರಿ ಸಂವಾದ-ಇವು ಮುಖ್ಯವಾದವು. ಕ್ರಿ. ಶ. ೧೭೫೦ರಲ್ಲಿದ್ದ ಹೆಳವನಕಟ್ಟೆ ಗಿರಿಯಮ್ಮ ಸುಪ್ರಸಿದ್ಧಳು. ಈಕೆ ಚಂದ್ರಹಾಸನ ಕಥೆ, ಉದ್ದಾಳಿಕನ ಕಥೆ ಮೊದಲಾದ ಭಕ್ತಿ ಮತ್ತು ನೀತಿ ಪ್ರದವಾದ ಕೃತಿಗಳನ್ನು ರಚಿಸಿದ್ದಾಳೆ. ಮತ್ತೊಬ್ಬ ಕವಿಯಿತ್ರಿ ಚಲುವಾಂಬೆಯ ರಚನೆ ವರನಂದಿ ಕಲ್ಯಾಣ.

      ಇಪ್ಪತ್ತನೆಯ ಶತಮಾನದಲ್ಲೂ ಸಾಂಗತ್ಯದ ರಚನೆ ಮುಂದುವರಿದುಕೊಂಡು ಬಂದಿದೆ. ಬಿ. ಎಂ. ಶ್ರೀಕಂಠಯ್ಯ, ಬೇಂದ್ರೆ, ಪು. ತಿ. ನರಸಿಂಹಾಚಾರ್, ಎಸ್. ವಿ. ಪರಮೇಶ್ವರಭಟ್ಟ ಮೊದಲಾದವರು ಸಾಂಗತ್ಯದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪರಮೇಶ್ವರ ಭಟ್ಟರು ನೀಳವಾದ ತಮ್ಮ ಆತ್ಮವೃತ್ತವನ್ನು ಹೇಳುವುದಕ್ಕೂ ಬಿಡಿ ಮುಕ್ತ ರಚನೆಗೂ ಸಾಂಗತ್ಯವನ್ನು ಬಳಸಿದ್ದಾರೆ. ಪರಿಮಾಣ ಮತ್ತು ಯೋಗ್ಯತೆ ಎರಡು ದೃಷ್ಟಿಯಿಂದಲೂ ಇವರ ಸಾಂಗತ್ಯ ಕೃತಿಗಳು ಗಮನಾರ್ಹವಾಗಿವೆ.

      ಕಳೆವುದು ಸಾಬೂನು ಬಟ್ಟೆಯ ಕೊಳೆಯನು

            ಕಳೆವುದು ಸೀಗೆ ಎಣ್ಣೆಯನು

      ಪ್ರಾರ್ಥನೆ ತೊಡವುದು ಮನದ ಕಲ್ಬಿಷವನು

            ಆ ಸೋಪು ಸೀಗೆಗಳಂತೆ      (ಚಂದ್ರವೀಧಿ)

      ಸ್ಕೂಟರು ಹೆಳವನಿಗೇನುಪಯೋಗವು

            ಬೋಳನಿಗೇಕೆ ಬಾಚಣಿಗೆ

      ಅರಸಿಕನಿಗೆ ಏಕೆ ಕಾವ್ಯದ ಗಮಕವು

            ಟ್ರಾನ್ಸಿಸ್ಟರೇಕೆ ಕೆಪ್ಪನಿಗೆ          (ಇಂದ್ರಚಾಪ)

      ಈ ಎರಡು ಪರಮೇಶ್ವರ ಭಟ್ಟರ ಎರಡು ಕೃತಿಗಳಿಂದ ಉದ್ಧರಿಸಿರುವ ಎರಡು ಸಾಂಗತ್ಯ ಪದ್ಯಗಳು.

      ಪ್ರಾಚೀನ ಕಾವ್ಯಪರಂಪರೆಯಲ್ಲಿ ಪ್ರಮುಖವಾದ ಚಂಪೂ, ಷಟ್ಪದಿ, ತ್ರಿಪದಿ ಮುಂತಾದ ಛಂದೋಬಂಧಗಳಲ್ಲಿ ನಿರೂಪಿತವಾಗಿದ್ದ ಕಾವ್ಯ, ಶಾಸ್ತ್ರ ಧರ್ಮ, ಪ್ರತಿಪಾದನೆ ಮೊದಲಾದ ನಿಗೂಢ ವಿಷಯಗಳು ಜನಸಾಮಾನ್ಯಕ್ಕೆ ಸುಲಭವಾಗಿ ನಿಲುಕುವಂತೆ ಶುದ್ಧ ದೇಶೀಯ ಛಂದಸ್ಸಿನಲ್ಲಿ ಹೊರಬರುವುದಕ್ಕೆ ವಾಹಕವಾದುದು ಎಂದರೆ ಒಂದು ಸಾಂಗತ್ಯ ಇನ್ನೊಂದು ಷಟ್ಪದಿ  ಕನ್ನಡ ಛಂದಶಾಸ್ತ್ರದ ಇತಿಹಾಸದಲ್ಲಿ ಬೇರಾವ ಛಂದೋಪ್ರಕಾರಕ್ಕೂ ಇಲ್ಲದ ವೈಶಿಷ್ಟ್ಯ ಸಾಂಗತ್ಯಕ್ಕಿದೆ. ಇದು ತನ್ನ ಗೇಯತೆ ಮತ್ತು ಸೌಲಭ್ಯಗಳಿಂದ ಜನಪ್ರಿಯತೆಯನ್ನು ಗಳಿಸಿರುವುದೇ ಅಲ್ಲದೆ ಕನ್ನಡ ಸಾಹಿತ್ಯಕ್ಕೆ ಮಕುಟಪ್ರಾಯವಾದ ಕೃತಿಗಳನ್ನು ಒದಗಿಸಿದೆ.

 ಪರಾಮರ್ಶನ ಗ್ರಂಥಗಳು

1.ನಂಜುಂಡ ಕವಿಯ ರಾಮನಾಥ ಚರಿತೆ (ಸಂ:ಎಚ್.ದೇವೀರಪ್ಪ)

 ಪ್ರಾಚ್ಯವಿದ್ಯಾ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ,1959,1964.

3. ಜಿ.ವರದರಾಜರಾವ್ , ಕುಮಾರರಾಮನ ಸಾಂಗತ್ಯಗಳು

   ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು,1966

4. ದೇಜಗೌ, ನಂಜುಂಡಕವಿ

  ಉಷಾ ಸಾಹಿತ್ಯಮಾಲೆ, ಮೈಸೂರು

5.ಡಿಎಲ್,ನರಸಿಂಹಾಚಾರ್: ಪೀಠಿಕೆಗಳು ಮತ್ತು ಲೇಖನಗಳು

  ಡಿ.ವಿ.ಕೆ. ಮೂರ್ತಿಪ್ರಕಾಶನ, ಮೈಸೂರು,1971

6.ಹಂಪ.ನಾಗರಾಜಯ್ಯ, ಸಾಂಗತ್ಯ ಕವಿಗಳು

 ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ,1975

7. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ( ಸಂ: ಜಿ.ಎಸ್.ಶಿವರುದ್ರಪ್ಪ)

   ಸಂಪುಟ.5, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 1978

. ವೀರಣ್ಣ ರಾಜೂರ: ಕನ್ನಡ ಸಾಂಗತ್ಯ ಸಾಹಿತ್ಯ

   ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.೧೯೮೫

 ೯. ರತ್ನಾಕರ ವರ್ಣಿಯ ಭರತೇಶ ವೈಭವ  ಸಂ: .ಸು.ಶಾಮರಾಯ

   ಮೈಸೂರು ವಿಶ್ವವಿದ್ಯಾಲಯ, ೧೯೮೬

೧೦. ಭರತೇಶ ವೈಭವ ಸಾಂಸ್ಕೃತಿಕ ಮುಖಾಮುಖಿ ಸಂ: ಅಮರೇಶ ನುಗಡೋಣಿ,

   ಕನ್ನಡ ವಿಶ್ವವಿದ್ಯಾಲಯ ಹಂಪಿ. 2013

೧೧. ರತ್ನಾಕರವರ್ಣಿ, ಕವಿಕಾವ್ಯ ಪರಂಪರೆ ಸಂ:ದಿ.ವಿ.ಸೀತಾರಾಮಯ್ಯ, .ಬಿ.ಎಚ್.‌ ಪ್ರಕಾಶನ,

    ಬೆಂಗಳೂರು, ೧೯೮೪

 

 

 

                  ಕನ್ನಡದಲ್ಲಿ ಸಾಂಗತ್ಯ   ಛಂದೋ ಸಾಹಿತ್ಯ ಪ್ರಕಾರ : ಹುಟ್ಟು ಬೆಳವಣಿಗೆ ಮತ್ತು ವೈಶಿಷ್ಟ್ಯ                                              ...