ಗುರುವಾರ, ಅಕ್ಟೋಬರ್ 16, 2025

  

ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಅಧ್ಯಯನ ವಿಧಾನದ ಇತಿಹಾಸದ ತಾತ್ವಿಕ ನಿಲುವುಗಳು

                          ಡಾ.ಸಿ.ನಾಗಭೂಷಣ

 

   ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗೆ ಸಾಮಾನ್ಯವಾದ ಸ್ವರೂಪ ಇರುವುದು ಎಲ್ಲರೂ ತಿಳಿದಿರತಕ್ಕ ಸಂಗತಿಯಾಗಿದೆ. ಕಾಲಾನುಕ್ರಮದಲ್ಲಿ ಪ್ರಾರಂಭ, ಪ್ರವೃತ್ತಿ,ಪ್ರಭಾವ, ವಿಕಾಸ ಇವು ಸಾಹಿತ್ಯ ಚರಿತ್ರೆಯ ಸಾಮಾನ್ಯ ರೂಪವನ್ನು ಸಹಜವಾಗಿ ಸೂಚಿಸುತ್ತವೆ. ಆಯಾ ಭಾಷೆಯ ಕಾಲದೇಶ ಪರಿಸ್ಥಿತಿ,ರಾಜಕೀಯ ಚರಿತ್ರೆ, ಧಾರ್ಮಿಕ ಸಾಮಾಜಿಕ ಜೀವನ, ಸಾಹಿತ್ಯ ಪರಿಸರ ಇವುಗಳಿಂದಾಗಿ ಆಯಾ ಭಾಷೆಯ ಸಾಹಿತ್ಯ ಚರಿತ್ರೆಗಳು ತಮ್ಮದೇ ಆದ ವಿಶಿಷ್ಟ ಸ್ವರೂಪವನ್ನು ಪಡೆಯುತ್ತವೆ. ಭಾರತೀಯ ಭಾಷೆಗಳಲ್ಲಿ ರಚಿತವಾದ ಭಿನ್ನ ಭಿನ್ನ ಸಾಹಿತ್ಯಗಳಲ್ಲಿ ಭಾರತೀಯ ಜೀವನ ಮತ್ತು ಸಂಸ್ಕೃತಿಗಳ ವೈವಿಧ್ಯಮಯವಾದ ಪರಂಪರೆಯ ಪ್ರಭಾವವು ಆಯಾ ಭಾಷೆಗಳಿಗೆ ವಿಶಿಷ್ಟವಾದ ಸೋಪಜ್ಞತೆಯಲ್ಲಿ ಮೂಡಿರುತ್ತವೆ.

     ಕನ್ನಡನಾಡಿನ  ಸಾಹಿತ್ಯ ಚರಿತ್ರೆಗೆ ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗಿರುವ ಸಾಮಾನ್ಯ ಸ್ವರೂಪವಿದೆ. ಜೊತೆಗೆ ಭಾರತೀಯ ಸಾಹಿತ್ಯದ ಪ್ರಭಾವ ಮುದ್ರೆಯಿದೆ. ತನ್ನದೇ ಆದ ವಿಶಿಷ್ಟ ಸ್ವರೂಪವೂ ಇದೆ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘವಾದ ಪರಂಪರೆಯಿದೆ, ಸಾವಿರಾರು ಕವಿಗಳ ವೈವಿಧ್ಯಪೂರ್ಣವಾದ ಕೊಡುಗೆ ಇದೆ.  ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಸಮಗ್ರ ದರ್ಶನವಾಗಬೇಕಾದರೆ ಈ ಎಲ್ಲ ಮಗ್ಗುಲಿನತ್ತ ಕ್ಷ-ಕಿರಣವನ್ನು ಬೀರಿ ಬಿಡಿಯಾಗಿ ಇಡಿಯಾಗಿ ಮಾತಿನಲ್ಲಿ ಮೂಡಿಸಬೇಕಾಗುತ್ತದೆ.  ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪವು  ಪ್ರಾರಂಭದಿಂದ ಉಪಲಬ್ಧವಾದ ಎಲ್ಲ ಸಾಮಗ್ರಿಯನ್ನು ಬಳಸಿಕೊಂಡು ಚಾರಿತ್ರಿಕವಾಗಿ ಅದರ ಕೂಲಂಕಷವಾದ ವಿವೇಚನೆಮಾಡಿ ವಿಮರ್ಶಾತ್ಮಕ ದೃಷ್ಟಿಯಿಂದ ಅದನ್ನು ತೂಗಿ ಬೆಲೆ ಕಟ್ಟುವುದಾಗಿರುತ್ತದೆ.  ಕನ್ನಡ ಸಾಹಿತ್ಯದ ಪ್ರೇರಣೆ, ಪ್ರಭಾವ-ಪ್ರವೃತ್ತಿಗಳನ್ನು ಗುರುತಿಸುವಾಗ, ಕವಿಗಳ ಕಾವ್ಯಗಳ ನೆಲೆಬೆಲೆಗಳನ್ನು ವಿವರಿಸುವಾಗ ಸಹಜವಾಗಿ ಸಾಹಿತ್ಯ ಚರಿತ್ರೆಯಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವು ಪ್ರಮುಖ ಎಂದೆನಿಸುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಿತಿಯು  ಯಾವುದೇ ಬಗೆಯ ಅತಿರಿಕ್ತ ಅಭಿಮಾನ-ಅಂಧಾನುಕರಣೆಯ ಬರೆವಣಿಗೆಯಿಂದ ದೂರ ಉಳಿಯುವುದು ಬಹುಮುಖ್ಯ.  ಕಾಲಾನುಕ್ರಮದಲ್ಲಿ ವಿವೇಚನೆಯ ಹಿನ್ನೆಲೆಯಲ್ಲಿ ಕೆಲವು ಕಾಲಾವಧಿಗಳನ್ನು ಮಾಡಿಕೊಂಡು ಸಾಹಿತ್ಯ ಚರಿತ್ರೆಯ ವಿವೇಚನೆಯನ್ನು ಮಾಡಿರುವುದನ್ನು ಕಾಣಬಹುದಾಗಿದೆ.  ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಿಂದಿನಿಂದ ಇಂದಿನವರೆಗೆ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯಗಳ ಸಮಗ್ರ ನಿರೂಪಣೆಯ ವಿಶ್ಲೇಷಣೆಯ ಸಂಕ್ಷಿಪ್ತವಾಗಿ ಮತ್ತು ಕೆಲವಡೆ ಸಾಂಸ್ಥಿಕ ಮಟ್ಟದಲ್ಲಿ ವಿಸ್ತೃತವಾಗಿ ವಿವರಿಸಿರುವುದನ್ನು ಕಾಣಬಹುದು.  ಆಧುನಿಕ ಕಾಲದ ಆರಂಭದಲ್ಲಿ ಕ್ರೆೈಸ್ತಮಿಶನರಿ ವಿದ್ವಾಂಸರು ಅಂದು ಅವರಿಗೆ ದೊರೆತ ಸಾಮಗ್ರಿಯನ್ನು ಉಪಯೋಗಿಸಿ ಕನ್ನಡ ಸಾಹಿತ್ಯದ ಪರಿಚಯವನ್ನು ಇಂಗ್ಲಿಷಿನಲ್ಲಿ ಸಂಕ್ಷಿಪ್ತವಾಗಿ ಮಾಡಿಕೊಟ್ಟರು.  ಅವುಗಳನ್ನು ಚರಿತ್ರೆಯೆಂದಾಗಲಿ ಸಮಿಕ್ಷೆಯೆಂದಾಗಲಿ ಕರೆಯುವುದು ಸೂಕ್ತವಾಗದು.  ಆ ಅವಧಿಯಲ್ಲಿ ಕ್ರೆೈಸ್ತ ಮಿಷನರಿಗಳಿಗೆ ಲಭ್ಯವಿದ್ದ  ಸಾಮಗ್ರಿಯೂ ತೀರ ಸ್ವಲ್ಪವಾಗಿತ್ತು.  ನಂತರದಲ್ಲಿ ಆರ್. ನರಸಿಂಹಾಚಾರ್ ಅವರ ‘ಕರ್ಣಾಟಕ ಕವಿಚರಿತೆ’ ಪ್ರಥಮ ಸಂಪುಟ ೧೯೦೭ರಲ್ಲಿ ಪ್ರಕಟವಾಯಿತು.  ದ್ವಿತೀಯ, ತೃತೀಯ ಸಂಪುಟಗಳು ೧೯೧೯, ೧೯೨೯ರಲ್ಲಿ ಪ್ರಕಟವಾದುವು.  ಬಹು ದೊಡ್ಡ ಪ್ರಮಾಣದ ಮೇಲೆ ‘ಕವಿಚರಿತೆ’ ಎಂಬುದು ಈ ಮೂರು ಸಂಪುಟಗಳಲ್ಲಿ ಸಂಕಲನಗೊಂಡು  ಕನ್ನಡಿಗರಿಗೆ ಉಪಯುಕ್ತತೆಯನ್ನು ಮಾಡಿತು.  ಈ ಗ್ರಂಥಕರ್ತರ ಸಂಶೋಧನೆ - ಪರಿಶ್ರಮಗಳು ಸಾರ್ಥಕವಾದುವು.  ಇದರಲ್ಲಿ ಕಾಲಾನುಕ್ರಮದಲ್ಲಿ ಕನ್ನಡ ಕವಿಗಳ ಬಗ್ಗೆ ಅಂದಿನವರೆಗೆ ತಿಳಿದೆಲ್ಲ ವಿಷಯಗಳು ಅಡಕವಾಗಿವೆ.  ಒಂದೊಂದು ಶತಮಾನದಲ್ಲಿ ಆಗಿಹೋದ ಕವಿಗಳ ಕಾಲ, ಸ್ಥಳ, ಮತ, ಕೃತಿವಿಷಯಸಾರ, ಕೃತಿಗಳಿಂದ ಕೆಲವು ಉದ್ಧೃತಿಗಳು ಈ ಕ್ರಮದಲ್ಲಿ ‘ಕವಿಚರಿತೆ’ ಮೈದಾಳಿದೆ.  ಅಲ್ಲಲ್ಲಿ ಕವಿತಾಯೋಗ್ಯತೆ, ಶೈಲಿ ಇವುಗಳ ಬಗ್ಗೆ ಸಾಮಾನ್ಯ ಪ್ರಶಂಸೆ  ಸಂಕ್ಷಿಪ್ತವಾಗಿ ಬಂದಿದೆ.  ಇಷ್ಟು ವಿಸ್ತಾರವಾಗಿ ಕನ್ನಡ ಸಾಹಿತ್ಯದ ಫಸಲನ್ನು ಒದಗಿಸಿಕೊಟ್ಟುದಕ್ಕಾಗಿ ಕನ್ನಡಿಗರು ಕವಿ ಚರಿತೆಕಾರರಿಗೆ ಚಿರಋಣಿಗಳಾಗಿದ್ದಾರೆ.  ಆದರೆ ಈ ಕವಿಚರಿತೆಯು ಪೂರ್ಣ ಅರ್ಥದಲ್ಲಿ ಸಾಹಿತ್ಯ ಸಮಿಕ್ಷೆಯೂ ಆಗಲಿಲ್ಲ, ಸಾಹಿತ್ಯ ಚರಿತ್ರೆಯ ಉದೇಶವೂ ಆಗಿರಲಿಲ್ಲ. ಆದರೆ ನಂತರದ ವೈಯಕ್ತಿಕ ಹಾಗೂ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ನಿರ್ಮಾಣಕ್ಕೆ ಸೂಕ್ತವಾದ ವೇದಿಕೆಯನ್ನು ಒದಗಿಸಿತು. ಅದರಲ್ಲಿ ಬಂದಿರುವ ಮತ್ತು ಆಮೇಲೆ ದೊರಕಿದ ಸಾಮಗ್ರಿಯನ್ನು ಉಪಯೋಗಿಸಿ ಸಂಕ್ಷಿಪ್ತ ವಿಸ್ತೃತ, ಜನಪ್ರಿಯ - ಪ್ರೌಢ ಹೀಗೆ ಸಾಹಿತ್ಯ ಚರಿತ್ರೆಗಳು ಕನ್ನಡದಲ್ಲಿ ಇಲ್ಲಿಯವರೆಗೂ ಪ್ರಕಟವಾಗಿವೆ.  ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಕುರಿತು ಕೆಲವು ಲೇಖನಗಳೂ ಪ್ರಕಟವಾಗಿವೆ.  ಇಷ್ಟಾದರೂ ಉಪಲಬ್ಧ ಎಲ್ಲಾ ಸಾಮಗ್ರಿಯನ್ನು ಎತ್ತಿಕೊಂಡು ಅದನ್ನು ಸಾದ್ಯಂತವಾಗಿ ವಿಶ್ಲೇಷಿಸಿ ವಿಮರ್ಶಾತ್ಮಕ ದೃಷ್ಟಿಯಿಂದ ಪರೀಕ್ಷಿಸಿ ಅವಶ್ಯವಿದ್ದ ವಿಸ್ತಾರವನ್ನು ಪಡೆದ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಅಗತ್ಯವು ಇಂದಿಗೂ ಉಳಿದುಕೊಂಡು ಬಂದಿದೆ.  ಈ ಹಿನ್ನೆಲೆಯಲ್ಲಿ ನಂತರದ ಕಾಲದಲ್ಲಿಯೂ ವಿವಿಧ ಕನ್ನಡ ಸಾಹಿತ್ಯ ಚರಿತ್ರೆಗಳು ಅಧ್ಯಯನ ಕಾರರ ಅನುಕೂಲಕ್ಕಾಗಿ ರಚನೆಯಾದವು.

    ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕುರಿತು ಕೆಲಮಟ್ಟಿನ ಚಿಂತನೆ ಈವರೆಗೆ ನಡೆದಿದೆ.  ಈ ಬಗ್ಗೆ ಬರೆದಿರುವ ತಮ್ಮ ಲೇಖನದಲ್ಲಿ ಡಿ.ಎಲ್. ನರಸಿಂಹಾಚಾರ‍್ಯರು ಆಮೂಲಾಗ್ರವಾಗಿ ಒಂದು ಭಾಷೆಯ ಸಾಹಿತ್ಯರಾಶಿಯ ಅಭ್ಯಾಸವನ್ನು ಕೈಕೊಳ್ಳುವವರು ಹಿಡಿಯಬೇಕಾದ ಕ್ರಮವನ್ನು ಹೀಗೆ ವಿವರಿಸಿದ್ದಾರೆ:  ‘ಆ ಸಾಹಿತ್ಯ ಹೇಗೆ ಆರಂಭವಾಗಿ ಕಾಲಕಾಲಕ್ಕೆ ಬೆಳೆದು ಬಂದಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕು.  ಕಾಲಧರ್ಮಕ್ಕನುಗುಣವಾಗಿ ಅದರಲ್ಲಿ ಆಗಿರುವ ವ್ಯತ್ಯಾಸಗಳು, ಅವಕ್ಕೆ ಕಾರಣಗಳು, ಅವುಗಳಿಂದ ಸಾಹಿತ್ಯಕಲೆಗೆ ಆಗಿರುವ ಪ್ರಯೋಜನಗಳು ಮುಂತಾದ ಅನೇಕ ವಿಷಯಗಳು ವಿಚಾರಕ್ಕೆ ಒಳಪಡುತ್ತವೆ.  ಸಾಹಿತ್ಯವನ್ನು ಸೃಷ್ಟಿಸಿರುವ ಕವಿಗಳ ಕಾಲ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ಸಂಗತಿಗಳು, ಅವರಿಂದ ನಿರ್ಮಿತವಾಗಿರುವ ಗ್ರಂಥಗಳ ಕಾಲ ಮತ್ತು ಅವು ರಚಿತವಾದ ಸಂದರ್ಭ ಸನ್ನಿವೇಶಗಳು ಇವುಗಳ ಪರಿಜ್ಞಾನ ಸಾಹಿತ್ಯ ಚರಿತ್ರೆಗೆ ಮೂಲಾಧಾರ.  ಇವು ಎಷ್ಟೆಷ್ಟು ಖಚಿತವಾಗಿ ತಿಳಿದು ಬರುತ್ತವೆಯೋ ಅಷ್ಟಷ್ಟು ಸಮರ್ಪಕವಾಗಿ ಸಾಹಿತ್ಯದ ಚರಿತ್ರೆಯನ್ನು ಬರೆಯಲು ಸಾಧ್ಯವಾಗುತ್ತದೆ.’ ಸಾಹಿತ್ಯ ಚರಿತ್ರೆಕಾರರು ಸಾಹಿತ್ಯ ಚರಿತ್ರೆಯಲ್ಲಿ  ಪ್ರಮುಖವಾಗಿ ಆಲೋಚಿಸ ಬೇಕಾದ ವಿಷಯಗಳಾದ, ಕವಿಗಳ ಜೀವನ ಚರಿತ್ರೆ,ಅವರ ಮನಸ್ಸಿನ ಮೇಲೆ ಆಗಿರುವ ನಾನಾ ಪ್ರಭಾವಗಳ ಮಹಿಮೆ, ಅವರ ಕೃತಿಗಳಿಗೆ ಪ್ರೇರಕವಾದ ಸಂದರ್ಭಗಳ ಪರಿಚಯ, ಧಾರ್ಮಿಕ ಒಲವು, ಸಮಕಾಲೀನ ಸಾಮಾಜಿಕ ಪರಿಸ್ಥಿತಿ ಇತ್ಯಾದಿ ಅಂಶಗಳ ಬಗೆಗೆ ಹೆಚ್ಚಿನ ಒಲವನ್ನು ವ್ಯಕ್ತಪಡಿಸಬೇಕು. ಸಾಹಿತ್ಯ ಚರಿತ್ರೆಯನ್ನು ಬರೆಯಲು ತೊಡಗಿದವನಿಗೆ ಕೆಲವು ಸಮಸ್ಯೆಗಳು ಉದ್ಭವಿಸುವುದು ಸಹಜ. ಸಾಹಿತ್ಯ ಚರಿತ್ರೆಕಾರ ಎಷ್ಟೇ ವ್ಯುತ್ಪತ್ತಿ ಜ್ಞಾನವುಳ್ಳವನಾದರೂ ಸಾಹಿತ್ಯ ಚರಿತ್ರೆಯ ನಿರ್ಮಿತಿಯಲ್ಲಿ ತನ್ನ ಕಾಲದಲ್ಲಿ ಲಭ್ಯವಿರುವ ಸಾಮಗ್ರಿಯನ್ನು ಅವಲಂಬಿಸುವುದು ಅನಿವಾರ್ಯ. ಒಂದು ವೇಳೆ ಸಾಮಗ್ರಿಯ ಕೊರತೆ ಉಂಟಾದಷ್ಟೊ ಆತನ ಸಾಹಿತ್ಯ ಚರಿತ್ರೆಗೂ ಕೊರತೆ ಉಂಟಾಗುತ್ತದೆ. ಮೂಲ ಸಾಮಗ್ರಿಯ ಅಭಾವದಿಂದಾಗಿ ಸಾಹಿತ್ಯ ಚರಿತ್ರೆಕಾರ ಕೂಡ ನಿರಾಶನಾಗಿರ ಬೇಕಾದ ಸಂದರ್ಭವಿರುತ್ತದೆ.

     ಕವಿಗಳು ತಮ್ಮ ಸುತ್ತಲಿನವರಿಗೆ ಬೇಕಾದ ವಿಚಾರಗಳನ್ನು ಮಾತ್ರ ಹೇಳದೆ, ತಾವು ಕಂಡ ಬದುಕನ್ನೂ ಹೇಳಿದ ಸಂದರ್ಭದಲ್ಲಿ ಕೃತಿ, ಧರ್ಮ ರಾಜಾಶ್ರಯಗಳ ಮಿತಿಯನ್ನು ದಾಟಿ ಬೆಳೆಯುತ್ತದೆ. ಹೀಗೆ ಬೆಳೆದ ಕೃತಿಗಳ ಆ ಯುಗ ಜೀವನದ ಕನ್ನಡಿಗಳೂ ಆಗಿ ನಮಗೆ ಬೇಕಾದ ಕೃತಿಗಳಾಗುತ್ತವೆ. ಈ ಬೆಳವಣಿಗೆಯನ್ನು ಗುರುತಿಸುವುದು, ಕವಿ ಆರಿಸಿಕೊಂಡ ವಸ್ತು, ವಿಧಾನಗಳೆರಡರ ಹಿಂದೆಯೂ ಸಮಕಾಲೀನ ಸಂದರ್ಭದ ಒತ್ತಡಗಳು ಇರುತ್ತವೆ ಎಂಬುದನ್ನು ಶೋಧಿಸುವುದು ಸಾಹಿತ್ಯ ಚರಿತ್ರೆಯ ಕೆಲಸವಾಗುತ್ತದೆ. ಸಾಹಿತ್ಯ ಕೇವಲ ಕಾಲಕಳೆಯುವ ಸಾಧನವೆಂದೋ, ಧರ್ಮವಾಹಕವೆಂದೋ ತಿಳಿದು ಬದುಕುವ ಮನಸ್ಸುಗಳಿಗೆ ಸಾಹಿತ್ಯವೆಂದರೆ ಬದುಕಿನ ಚಟುವಟಿಕೆಗಳನ್ನು ಕಲಾತ್ಮಕವಾಗಿ ಸೆರೆಹಿಡಿಯುವ ಕೆಲಸ ಕೂಡ ಎಂಬುದನ್ನು ತೋರಿಸುವುದು ಸಾಹಿತ್ಯ ಚರಿತ್ರೆಯ ಗುರಿಯಾಗುತ್ತದೆ. ಕಾವ್ಯ ರಚಿಸುವ ಕವಿಯೂ ಕೂಡ ಸಮಾಜ ಜೀವಿಯಾದ್ದರಿಂದ ಅವನು ಎಲ್ಲಿಯೋ ದಂತಗೋಪುರದಲ್ಲಿ ಕುಳಿತು ತನ್ನ ಅಲೌಕಿಕ ಶಕ್ತಿಯಿಂದ ಕಾವ್ಯ ಬರೆಯುವುದಿಲ್ಲ, ಅವನೂ ಕೂಡ ಎಲ್ಲ ಮನುಷ್ಯರಂತೆ ಅವನು ಬದುಕಿದ ಪರಿಸರ, ಗುಂಪುಗಳ ಗುಣದೋಷಗಳನ್ನು ಹೊತ್ತುಕೊಂಡೇ ಆ ಚೌಕಟ್ಟಿನಲ್ಲೇ ಕಾವ್ಯಕಟ್ಟುವ ಕೆಲಸ ಮಾಡಿದ್ದಾನೆ. ಹಾಗೆ ಮಾಡುವಾಗ ಅವನು ತನ್ನ ಕಾಲದ ಜೀವನದ ಸಂಘರ್ಷವನ್ನು ಕಣ್ಣು ಬಿಟ್ಟು ನೋಡಿದ್ದಾನೆಯೇ, ಇಲ್ಲವೆ ಕೇವಲ ಶಬ್ದಗಳ ನಡುವೆ ಹಳೆಯ ಸಾಮಗ್ರಿಯೊಂದಿಗೆ ಕಸರತ್ತು ಮಾಡಿದ್ದಾನೆಯೇ ಎಂಬುದರ ಪರಿಶೀಲನೆ ಸಾಹಿತ್ಯ ಚರಿತ್ರೆಯ ಮೌಲ್ಯವನ್ನು ಹೆಚ್ಚಿಸುತ್ತದೆನ್ನಬಹುದು. ಸಾಹಿತ್ಯ ಚರಿತ್ರೆಕಾರ ಸಾಹಿತ್ಯದ ಬೆಳವಣಿಗೆಯ ಹಿಂದೆ ಕೆಲಸಮಾಡಿರುವ ಸಮಾಜದ ತುಡಿತಗಳನ್ನೂ ತರತಮಗಳ ಸಂಘರ್ಷವನ್ನೂ ಅರ್ಥಮಾಡಿಕೊಂಡಾಗ ಆಯಾ ಕಾಲದ ಕೃತಿಗಳ ಅಂತರಂಗದ ದರ್ಶನ ಸಾಧ್ಯವಾಗುತ್ತದೆ. ಸಾಹಿತ್ಯ ಕೃತಿಯೂ ಕೂಡ ಮನುಷ್ಯನ ಬೇರೆಲ್ಲ ಸೃಷ್ಟಿಗಳಂತೆಯೇ ಆದ್ದರಿಂದ, ಅದು ಅವನ ಬೆಳವಣಿಗೆಯಲ್ಲಿ ವಹಿಸಿದ ಪಾತ್ರದ ಮೇಲೆಯೇ ಅದರ ಬೆಲೆ ನಿರ್ಧರಿತವಾಗಬೇಕಾಗುತ್ತದೆ. ಚರಿತ್ರಕಾರ ತನಗೆ ದೊರೆತ ಮಾಹಿತಿಗಳಿಂದ ಇತಿಹಾಸವನ್ನು ರಚಿಸುವಂತೆ ಸಾಹಿತ್ಯ ಚರಿತ್ರಕಾರನೂ ಸಾಹಿತ್ಯ ಚರಿತ್ರೆಯ ರಚನೆಗೆ ಕಾವ್ಯದ ಅಂತರಂಗವನ್ನು ಕರೆದು ಅನಾವರಣಗೊಳಿಸುವುದು ಅವಶ್ಯಕ. ಇದಕ್ಕೆ ಯಾವುದೇ ಬಗೆಯ ಮುಜುಗರ ಪಡದೆ ಚರಿತ್ರೆಯ ಕಟು ಸತ್ಯದ ನೆರವೊಂದನ್ನೇ ಕೇಳಬೇಕಾಗುತ್ತದೆ. ( ಸಿ.ವೀರಣ್ಣ, ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಪ್ರವೇಶ, ಪು.೧೪) ಇತ್ತೀಚಿಗೆ  ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಯಲ್ಲಿ ವಸ್ತುನಿಷ್ಠ ಶೋಧನೆಗೆ ತೊಡಗಬೇಕೆನ್ನುವ ಆಶಯದಿಂದಲೇ ಸಾಹಿತ್ಯದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳಿಗೆ ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು ಮೀರಿದ, ಸಾಮಾಜಿಕ ಪರಿಸರದ ಪ್ರಭಾವವೇ ಕಾರಣವೆಂಬುದನ್ನು ಕೃತಿಗಳು ಮತ್ತು ಇತಿಹಾಸದ ಪರಸ್ಪರ ಸಂಬಂಧದ ಮೂಲಕವೇ ಗುರುತಿಸುವ ನಂಬಿಕೆ ಇತ್ಯಾದಿ ಹೊಸನೆಲೆಗಟ್ಟಿನ ಆಲೋಚನೆಗಳು ವ್ಯಕ್ತ ಗೊಂಡಿರುವುದು ಹೊಸತನದ ಪ್ರತೀಕವಾಗಿವೆ.  ಆರಂಭಕಾಲದಲ್ಲಿ ಸಾಹಿತ್ಯ ಚರಿತ್ರೆಯನ್ನು ಬರೆಯಲು  ಹೊರಟವರಿಗೆ, ಕವಿಕೃತಿಗಳ ಹಸ್ತಪ್ರತಿಗಳು, ಪೋಷಕವಾಗಿ ಶಿಲಾಶಾಸನಗಳು ಮತ್ತು ಅನ್ಯಭಾಷೆಯ ಕೃತಿಗಳು ತೀರ ಸ್ವಲ್ಪವಾಗಿ ಲಭ್ಯವಿದ್ದವು. ಆದಾಗ್ಯೂ ಕನ್ನಡ ಸಾಹಿತ್ಯ ಚರಿತ್ರೆಯನ್ನು ತಿಳಿದುಕೊಳ್ಳ ಬೇಕು, ಬರೆದಿಡಬೇಕು ಎನ್ನುವ ಆಕಾಂಕ್ಷೆಯಿಂದ ಅಲ್ಪವಾಗಿ ದೊರೆತಿದ್ದ ಕವಿಕೃತಿಗಳ ಹಸ್ತಪ್ರತಿಗಳನ್ನು ಅವು ಅಶುದ್ಧವಾಗಿದ್ದರೂ,ಅಪೂರ್ಣವಾಗಿದ್ದರೂ ನಿಷ್ಠೆ ಮತ್ತು ಪರಿಶ್ರಮದಿಂದ ಅವುಗಳನ್ನು ಬಳಸಿಕೊಂಡು ವಿಷಯ ಸಂಗ್ರಹ ಮಾಡಿ  ಜೋಡಿಸಿ ಕೊಡುವ ಪ್ರಯತ್ನ ಮಾಡಿದರು. ಈ ನಿಟ್ಟಿನಲ್ಲಿ ಆರ್. ನರಸಿಂಹಾಚಾರ್ಯರ ಹೆಸರು ಎದ್ದು ಕಾಣುವಂತಹದ್ದು.

    ಒಂದು ಸಾವಿರ ವರ್ಷದ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅಧ್ಯಯನದ ಸೌಕರ್ಯಕ್ಕಾಗಿ   ಹಲವು ವಿಭಾಗಗಳನ್ನಾಗಿ ಮಾಡಿ ಕೊಂಡಿರುವುದುಂಟು. ಆದರೆ ವಿಭಾಗೀಯ ಕ್ರಮದಲ್ಲಿ  ಏಕರೂಪತೆ ಇಲ್ಲದಿರುವುದು ಪ್ರಮುಖವಾದ ಸಂಗತಿ. ವಿಭಾಗಗಳು ಯಾವುವು ಇರಬೇಕು? ವಿಭಾಗ ಮಾಡುವಾಗ ಅನುಸರಿಸ ಬೇಕಾದ ಕ್ರಮಗಳು ಯಾವುವು? ಅವುಗಳಿಗೆ ಯಾವ ಮಾನದಂಡವನ್ನು ಅನುಸರಿಸಬೇಕು ಇತ್ಯಾದಿ  ಅಂಶಗಳಲ್ಲಿ ಏಕರೂಪತೆ ಇಲ್ಲದಿದ್ದರೂ ಸಾಹಿತ್ಯ ಚರಿತ್ರೆಗಳನ್ನು ರಚಿಸಿರುವ ವಿದ್ಯಾಂಸರು ತಮ್ಮದೇ ಆದ ನಿಲುವುಗಳಲ್ಲಿ ವಿಭಾಗೀಯ ಕ್ರಮಗಳನ್ನು ಅನುಸರಿಸಿರುವುದನ್ನು ಕಾಣಬಹುದು.  ಪಾಶ್ಚಾತ್ಯ ಮತ್ತು ದೇಸಿಯ ಸಾಹಿತ್ಯ ಚರಿತ್ರೆಕಾರರು ತಮ್ಮ ಸಾಹಿತ್ಯ ಚರಿತ್ರೆಯಲ್ಲಿ ರೂಪಿಸಿರುವ ವಿಭಾಗೀಯ ಕ್ರಮಗಳು ಈ ಕೆಳ ಕಂಡಂತಿವೆ.

    ಆರ್.ಎಫ್.ಕಿಟ್ಟಲ್:ಆರಂಭಕಾಲ (ಕ್ರಿ.ಶ.ಸು.೮೦೭-೧೩೦೦),ಅನಂತರ ಲಿಂಗಾಯಿತ ಮತ್ತು ಶೈವಕಾಲ (ಕ್ರಿ.ಶ.೧೩೦೦-೧೫೦೦) ವೈಷ್ಣವ, ಲಿಂಗಾಯಿತ ಶೈವಕಾಲ (ಕ್ರಿ.ಶ.ಸು.೧೩೦೦-೧೮೭೪).

ಬಿ.ಎಲ್.ರೈಸ್:ಪೂರ್ವದ ಹಳಗನ್ನಡ (ಆರಂಭದಿಂದ ಕ್ರಿ.ಶ.೭ನೇ ಶತಮಾನ),ಹಳಗನ್ನಡ ( ೮ ರಿಂದ ೧೨ನೇ ಶತಮಾನ),ಆರಂಭಕಾಲದಿಂದ ಕ್ರಿ.ಶ.ಸು ೧೩೦೦ ರವರೆಗೆ ಜೈನರುಕ್ರಿ.ಶ.ಸು.೧೩೦೦ ರಿಂದ ೧೫೦೦ ರವರೆಗೆ ಲಿಂಗಾಯಿತರು ಕ್ರಿ.ಶ.ಸು ೧೫೦೦ ರಿಂದ ಬ್ರಾಹ್ಮಣರು ಮತ್ತು ವೈಷ್ಣವರು, ಹೊಸಗನ್ನಡ (೧೪ನೇ ಶತಮಾನದಿಂದ ಮುಂದೆ).

ಆರ್.ನರಸಿಂಹಾಚಾರ್ಯ: ಜೈನಯುಗ : ಆರಂಭ ಕಾಲದಿಂದ ಕ್ರಿ.ಶ.೧೨ ಶತಮಾನದವರೆಗೆ, ವೀರಶೈವ ಯುಗ : ಕ್ರಿ.ಶ.೧೨ ರಿಂದ ೧೫ ರವರೆಗೆ. ಬ್ರಾಹ್ಮಣಯುಗ : ಕ್ರಿ.ಶ.೧೫ ರಿಂದ ೧೯ ರವರೆಗೆ

ಇ.ಪಿ.ರೈಸ್: ಜೈನ ಆರಂಭದಿಂದ ೧೨ ನೇ ಶತಮಾನ, ಲಿಂಗಾಯತ ಅಥವಾ ವೀರಶೈವ ೧೨ ರಿಂದ ೧೬ನೇ ಶತಮಾನ, ವೈಷ್ಣವ ೧೭ ರಿಂದ ೧೯ ನೇ ಶತಮಾನದವರೆಗೆ, ಆಧುನಿಕ ಕಾಲ - ೨೦ನೇ ಶತಮಾನದಿಂದ ಮುಂದಕ್ಕೆ.

ಬಿ.ಎಂ.ಶ್ರೀಕಂಠಯ್ಯ: ಆರಂಭಕಾಲ - ೧೦ನೇ ಶತಮಾನದವರೆಗೆ, ಮತಪ್ರಾಬಲ್ಯ ಕಾಲ  ೧೦-೧೯ ಶತಮಾನಗಳು. ಜೈನಕವಿಗಳು ೧೦ ನೇ ಶತಮಾನದಿಂದ, ವೀರಶೈವ ಕವಿಗಳು ೧೨ ನೇ ಶತಮಾನದಿಂದ. ಬ್ರಾಹ್ಮಣ ಕವಿಗಳು ೧೫ ನೇ ಶತಮಾನದಿಂದ. ನವೀನ ಕಾಲ - ೧೯ ನೇ ಶತಮಾನದಿಂದ

 ಎಂ.ಎ.ದೊರೆಸ್ವಾಮಯ್ಯಂಗಾರ್: ಮೂಲಗನ್ನಡಕಾಲ - ಕ್ರಿ,ಶ.೭೫೦ ರವರೆಗೆ,ಹಳಗನ್ನಡ ಕಾಲ - ಕ್ರಿ.ಶ.೭೫೦ ರಿಂದ ೧೧೫೦ ರವೆರೆಗೆ, ಮಧ್ಯಕನ್ನಡ ಕಾಲ - ಕ್ರಿ.ಶ.೧೧೫೦ ರಿಂದ ೧೫೦೦ ರವರೆಗೆ,ಹೊಸಗನ್ನಡ ಕಾಲ - ಕ್ರಿ.ಶ.೧೫೦೦ ರಿಂದ ೧೮೫೦ ರವರೆಗೆ. ನವಗನ್ನಡಕಾಲ - ಕ್ರಿಶ.೧೮೫೭ ರ ಮುಂದೆ

ತಿ.ತಾ.ಶರ್ಮ: ಕ್ಷಾತ್ರಯುಗ ಕ್ರಿ.ಶ. ೧೦ ರಿಂದ ೧೨ ರವರೆಗೆ,ಮತ ಪ್ರಚಾರಯುಗ ಕ್ರಿ.ಶ.೧೨ ರಿಂದ ೧೬ ರವರೆಗೆ, ಸಾರ್ವಜನಿಕ ಯುಗ ಕ್ರಿ.ಶ.೧೬ ರಿಂದ ೧೯ರವರೆಗೆ,ಆಧುನಿಕ ಯುಗ ಕ್ರಿ.ಶ.೧೯ ರಿಂದ ಮುಂದಕ್ಕೆ

ಕೆ.ವೆಂಕಟರಾಮಪ್ಪ: ಆರಂಭಕಾಲ - ಕ್ರಿ.ಶ.೯೦೦ ರವರೆಗೆ, ಪಂಪನ ಕಾಲ-ಕ್ರಿ.ಶ.೯೦೦ ರಿಂದ ೧೨೦೦ ಸ್ವತಂತ್ರಯುಗಕ್ರಿ.ಶ.೧೨ರಿಂದ೧೭ನೇ ಶತಮಾನ, ಚಿಕ್ಕದೇವರಾಯರಕಾಲ-ಕ್ರಿ.ಶ.೧೭ನೇ ಶತಮಾನದಿಂದ, ಸಂಧಿಕಾಲ - ಕ್ರಿ.ಶ.೧೭೯೪ ರಿಂದ ೧೮೬೪ ವರೆಗೆ.

ರಂ.ಶ್ರೀ.ಮುಗಳಿ: ಪಂಪಪೂರ್ವಯುಗ, ಪಂಪಯುಗ, ಬಸವಯುಗ, ಕುಮಾರವ್ಯಾಸ ಯುಗ

ಎಂ.ಮರಿಯಪ್ಪಭಟ್ಟ: ಪೂರ್ವದ ಹಳಗನ್ನಡ, ಹಳಗನ್ನಡ ಗದ್ಯ ಸಾಹಿತ್ಯ, ಚಂಪು ಕಾವ್ಯಗಳು, ಶಾಸನ ಸಾಹಿತ್ಯ, ಶತಕ ಸಾಹಿತ್ಯ, ಲಕ್ಷಣ ಸಾಹಿತ್ಯ, ಶಾಸ್ತ್ರೀಯ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಜಾನಪದ ವಾಙ್ಮಯ, ಹೊಸಗನ್ನಡ ಸಾಹಿತ್ಯ.

ತ.ಸು.ಶಾಮರಾಯ: ಪಂಪ ಪೂರ್ವಯುಗ, ಪಂಪ ಯುಗ, ಹರಿಹರ ಯುಗ.

     ಈ ಮೇಲ್ಕಂಡ ವಿಭಾಗೀಯ ಕ್ರಮಗಳಲ್ಲಿ ನಾಲ್ಕು ವಿಭಾಗಗಳಿಂದ ಏಳು ವಿಭಾಗಗಳ ವರೆಗೆ ಸಾಹಿತ್ಯ ಚರಿತ್ರೆಯನ್ನುವಿಂಗಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ವೈಯಕ್ತಿಕವಾಗಿ ಸಾಹಿತ್ಯ ಚರಿತ್ರೆಯನ್ನು ರಚಿಸಿದ ವಿದ್ವಾಂಸರುಗಳಲ್ಲಿ ಒಬ್ಬೊಬ್ಬರು ತಮ್ಮ ವೈಯಕ್ತಿಕ ದೃಷ್ಟಿಕೋನದ ನೆಲೆಗಟ್ಟಿನಲ್ಲಿ  ಸಾಹಿತ್ಯದ ಚರಿತ್ರೆಯ ವರ್ಗೀಕರಣದ ವಿಭಾಗದಲ್ಲಿಯ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ.  ಆದರೇ ಈ ನಿಲುವುಗಳು ಎಲ್ಲರೂ ಮಾನ್ಯ ಮಾಡುವ ರೀತಿಯಲ್ಲಿ ಇಲ್ಲದಿರುವುದು. ಕಿಟೆಲ್ ಅವರು ತಾವು ಸಂಪಾದಿಸಿದ ಛಂದೋಂಬುಧಿಯ ಪ್ರಸ್ತಾವನೆಯಲ್ಲಿ ಕನ್ನಡ ಸಾಹಿತ್ಯವನ್ನು ಮತಪರವಾದ ಚೌಕಟ್ಟಿನಲ್ಲಿ ಆಗಿನ ಕಾಲಕ್ಕೆ ಲಭ್ಯವಿದ್ದ ಸೀಮಿತ ಸಾಮಗ್ರಿಯನ್ನೇ ಆಧಾರವಾಗಿಟ್ಟು ಕೊಂಡು ಸಾಹಿತ್ಯ ಚರಿತ್ರೆಯ  ಸಮೀಕ್ಷೆ ಮಾಡಿದ್ದು, ನಂತರದ ತಮ್ಮ  ನಿಘಂಟುವಿನ ಉಪೋದ್ಘಾತದಲ್ಲಿ ಭಾಷಿಕ ನೆಲೆಗಟ್ಟಿನಲ್ಲಿ ಅಂದರೆ, ಜೈನಯುಗದಲ್ಲಿ ಹಳಗನ್ನಡ, ವೀರಶೈವಯುಗದಲ್ಲಿ ನಡುಗನ್ನಡ, ಬ್ರಾಹ್ಮಣ ಯುಗದಲ್ಲಿ ಹೊಸಗನ್ನಡ ಪ್ರಮುಖವಾಗಿತ್ತೆಂಬ ನಿಲುವನ್ನು ವ್ಯಕ್ತ ಪಡಿಸಿದರು. ಆದರೆ ಈ ವಿಭಾಗೀಯ ಕ್ರಮವು ತೊಡಕಿನದಾಗಿದ್ದು ಪರಿಪೂರ್ಣತೆಯನ್ನು ಪಡೆದಿರುವುದಿಲ್ಲ. ಏಕೆಂದರೆ  ಜೈನ ಕಾಲಘಟ್ಟದಲ್ಲಿ ವೀರಶೈವ ಸಾಹಿತ್ಯವೂ, ವೀರಶೈವ ಸಾಹಿತ್ಯ ಕಾಲಘಟ್ಟದಲ್ಲಿ ಬ್ರಾಹ್ಮಣ ಸಾಹಿತ್ಯವು ಸೃಷ್ಟಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮತಾನುಸಾರಿಯಾಗಿ ವಿಭಾಗಿಸಿದ್ದನ್ನು  ತಿ.ತಾ.ಶರ್ಮ ಅವರು, ಈ ವಿಭಾಗ ಕ್ರಮವು  ಶುದ್ಧ ಸಾಹಿತ್ಯ ದೃಷ್ಟಿಯಿಂದ ಸರಿಯಾದುದಲ್ಲವೆಂದು  ವಿರೋಧಿಸಿದ್ದಲ್ಲದೆ  ಕವಿಕರ್ಮಕ್ಕೆ ಮೂಲಕಾರಣವಾದ ಸ್ಫೂರ್ತಿ ವಿಶೇಷವನ್ನು ಲಕ್ಷಿಸಿ ಕನ್ನಡ ವಾಙ್ಮಯದ ಇತಿಹಾಸವನ್ನು   ಕ್ಷಾತ್ರಯುಗ, ಮತಪ್ರಚಾರಕ ಯುಗ, ಸಾರ್ವಜನಿಕ ಯುಗ ಮತ್ತು ಆಧುನಿಕ ಯುಗವೆಂದು ನಾಲ್ಕು ವಿಭಾಗಗಳಲ್ಲಿ ವಿಭಾಗಿಸಿದರು. ಜೊತೆಗೆ, ಒಂದೊಂದು ಯುಗದಲ್ಲಿ ಒಂದೊಂದು ರಸವು ಪ್ರಧಾನವಾಗಿತ್ತೆಂದು ವಿವರಿಸಿದರು.  ಕ್ಷಾತ್ರ ಯುಗದಲ್ಲಿ ವೀರ, ಮತಪ್ರಚಾರಕ ಯುಗದಲ್ಲಿ ಶೃಂಗಾರ, ಸಾರ್ವಜನಿಕ ಯುಗದಲ್ಲಿ ಭಕ್ತಿ ಈ ರಸಗಳಿಗೆ ಪ್ರಾಧಾನ್ಯವಿತ್ತೆಂಬುದು ತೀ.ತಾ.ಶರ್ಮರ ಅಭಿಪ್ರಾಯ.  ಇವರ  ವಿಭಾಗೀಯ ಕ್ರಮವೂ ಪರಿಪೂರ್ಣವಲ್ಲ. ಏಕೆಂದರೆ, ಕ್ಷಾತ್ರಯುಗದಲ್ಲಿ ವೀರ ಎಂಬುದು ಕೆಲ ಮಟ್ಟಿಗೆ   ಒಪ್ಪಿತವಾದರೂ ಇತರ ಯುಗಗಳಲ್ಲಿ ಆಯಾ ರಸಗಳ ಉಲ್ಲೇಖವು ಸರಿಹೊಂದುವುದಿಲ್ಲ. ಮತಪ್ರಚಾರಕ ಯುಗದಲ್ಲಿ ಶೃಂಗಾರರಸದ ಪ್ರಾಧಾನ್ಯ ಎಂಬುದಂತು ವ್ಯತಿರಿಕ್ತ ಎಂದೆನಿಸುತ್ತದೆ.  ಮತಪ್ರಚಾರಕಯುಗ ಎಂಬ ಹೆಸರಿನಲ್ಲಿಯೆ ಶುದ್ಧ ಸಾಹಿತ್ಯ ದೃಷ್ಟಿ ಲೋಪವಾಗಿಬಿಡುತ್ತದೆ.  ಹೀಗಾಗಿ  ಸಾರ್ವಜನಿಕಯುಗ ಎಂಬುದರಲ್ಲಿ ಸೂಚಿತವಾದ ಸರ್ವಜನದೃಷ್ಟಿ ಎರಡನೆಯ ಯುಗದಲ್ಲಿಯೇ ಕಂಡುಬಂದಿತ್ತೆಂಬುದನ್ನೂ ಅದರ ಪ್ರಧಾನರಸವಾದ ಭಕ್ತಿ ಅದರಲ್ಲಿಯೆ ತಲೆದೋರಿತ್ತೆಂಬುದನ್ನೂ ಮನದಂದರೆ ಈ ಶೀರ್ಷಿಕೆ ಅತಿವ್ಯಾಪ್ತಿದೋಷದಿಂದ ಬಾಧಿತವಾಗುತ್ತದೆಂಬ ರಂ.ಶ್ರೀ.ಮುಗುಳಿಯವರ ಅನಿಸಿಕೆ ಯೋಚಿಸತಕ್ಕದ್ದಾಗಿದೆ.  ಆದಾಗ್ಯೂ ಸಾಹಿತ್ಯೇತಿಹಾಸವನ್ನು ವಿಭಾಗಿಸುವಾಗ ಸಾಹಿತ್ಯೇತರ-ಮಾನದಂಡಗಳನ್ನು ತ್ಯಜಿಸಿ ಸಾಹಿತ್ಯ ದೃಷ್ಟಿಯನ್ನು ಅನ್ವಯಗೊಳಿಸುವಲ್ಲಿ ತೀ.ತಾ.ಶರ್ಮರದ್ದು ಈ ನಿಟ್ಟಿನಲ್ಲಿ ಮೊದಲನೆಯ ಪ್ರಯತ್ನ.  ಇದು ಮುಂದಿನ ಕೆಲವು ಪ್ರಯತ್ನಗಳಿಗೆ ಪ್ರೇರಕವಾಯಿತು.  ಈ ನಿಟ್ಟಿನಲ್ಲಿ ಮುಂದುವರೆದ ಕೆ.ವೆಂಕಟರಾಮಪ್ಪನವರು   ಸಾಹಿತ್ಯ ಚರಿತ್ರೆಯನ್ನು, ಆರಂಭಕಾಲ, ಪಂಪನ ಯುಗ, ಸ್ವಾತಂತ್ರ‍್ಯ ಯುಗ, ಚಿಕ್ಕದೇವರಾಯರ ಕಾಲ, ಸಂಧಿ ಕಾಲ ಎಂಬುದಾಗಿ ವರ್ಗೀಕರಿಸಿದರು. (ಕನ್ನಡ ಸಾಹಿತ್ಯ, ಮೈ.ವಿ.ವಿ. ಪು.೧೨) ಈ ವರ್ಗೀಕರಣದಲ್ಲಿ ಆಯಾ ಕಾಲಕ್ಕೆ ಪ್ರಧಾನರಾದ ಕವಿ ಅಥವಾ ಕಾವ್ಯಗಳ ವೈಶಿಷ್ಟ್ಯವು ಪ್ರಮುಖವಾದುದ್ದಾಗಿದೆ. ಈ ವಿಭಾಗ ಕ್ರಮದಲ್ಲಿ ಪಂಪಯುಗ, ಚಿಕ್ಕದೇವರಾಯರ ಕಾಲ ಎಂಬ ಶೀರ್ಷಿಕೆಗಳ ಜೊತೆಗೆ, ಸಂಧಿಕಾಲ ಸ್ವಾತಂತ್ರ‍್ಯ ಯುಗ ಎಂಬ ಶೀರ್ಷಿಕೆಗಳು ಬಂದಿದ್ದುಒಂದಕ್ಕಿಂತ ಹೆಚ್ಚು ಆಧಾರ ತತ್ವಗಳು ಬಂದಿರುವುದು ಏಕರೂಪತೆಯಿಂದ ವಿಮುಖವಾಗಿರುವುದನ್ನು ಸೂಚಿಸುತ್ತದೆ. ಬಿ.ಎಂ. ಶ್ರೀಕಂಠಯ್ಯನವರು ತಮ್ಮ ಸಾಹಿತ್ಯ ಚರಿತ್ರೆಯ ಕೃತಿಯಲ್ಲಿ, ಕನ್ನಡ ಸಾಹಿತ್ಯವನ್ನು ಕಾಲ ಮತ್ತು ಮತವನ್ನು ಅನುಸರಿಸಿ ಎರಡು ಬಗೆಯಾಗಿ ವಿಭಾಗ ಮಾಡಿದ್ದಾರೆ.  ಕಾಲಕ್ರಮದ ಪ್ರಕಾರ ಹೋದರೆ, ಆಯಾ ಕಾಲದ ಭಾಷೆ, ಕಾವ್ಯರೂಪ, ರಾಜವಂಶ, ಪ್ರಧಾನ ಕವಿನಾಮ ಮುಂತಾದುವನ್ನು  ದೃಷ್ಟಿಯಲ್ಲಿರಿಸಿಕೊಂಡು ವಿಭಜಿಸಿದ್ದಾರೆ.  ಆದರೆ ಕನ್ನಡ-ಸಾಹಿತ್ಯ ಪ್ರಾಯಶ: ಸಂಪ್ರದಾಯನಿಷ್ಠವಾಗಿದೆ, ಕಾಲಕಾಲಕ್ಕೆ ಹೆಚ್ಚಿನ ಬದಲಾವಣೆಯಿಲ್ಲದೆ ಒಂದೇ ರೀತಿಯಾಗಿದೆ.  ಆದ್ದರಿಂದ ‘ಕಾಲಕ್ಕನುಸಾರವಾಗಿ ಸಾಹಿತ್ಯ ವಿಭಾಗ ಮಾಡಿರುವುದು ಉಚಿತವಲ್ಲ ಎಂದೆನಿಸುತ್ತದೆ.  ಮತದೃಷ್ಟಿಯಿಂದ ನೋಡಿದರೆ ‘ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಮೂರುನಾಲ್ಕು ಘಟ್ಟಗಳು ಅಥವಾ ಚಳುವಳಿಗಳು ಮೇಲಕ್ಕೆದ್ದು ಕಣ್ಣಿಗೆ ಕಾಣುತ್ತವೆ.  ಹೊಳೆಯ ಹೋಲಿಕೆಯನ್ನು ಎತ್ತಿಕೊಂಡು ಬಿ.ಎಂ.ಶ್ರೀ ಅವರು   ಈ ರೀತಿಯಾಗಿ ವಿವರಿಸಿದ್ದಾರೆ. ‘ಈ ನಾಲ್ಕು ಘಟ್ಟಗಳಲ್ಲಿ ಹರಿದು ಬಂದಿರುವ ನಮ್ಮ ಕನ್ನಡ ಸಾಹಿತ್ಯವನ್ನು, ನಮ್ಮ ಕನ್ನಡ ನಾಡಿನ ಏರುತಗ್ಗಿನ ಘಟ್ಟಗಳಲ್ಲಿ ನುಗ್ಗಿಬರುವ ಕಾವೇರಿ ನದಿಗೆ ಹೋಲಿಸಬಹುದು.  ಅದರಂತೆಯೇ ನಮ್ಮ ಸಾಹಿತ್ಯದ ಮೂಲವೂ ಕಾಡಿನಲ್ಲಿ ಅಡಗಿ ಹೋಗಿದೆ.  ಆ ಬಳಿಕ ಉಪನದಿಗಳು ಒಂದೊಂದಾಗಿ ಸೇರುವಂತೆ, ಜೈನಸಾಹಿತ್ಯ ಪ್ರವಾಹವೂ ವೀರಶೈವ ಸಾಹಿತ್ಯ ಪ್ರವಾಹವೂ ಬ್ರಾಹ್ಮಣ ಸಾಹಿತ್ಯ ಪ್ರವಾಹವೂ ಒಂದಾದ ಮೇಲೊಂದು, ಒಂದರ ಕೂಡ ಮತ್ತೊಂದು, ಬಂದು ಮಿಳಿತವಾಗಿ ಮೂರು ಬಣ್ಣದ ನೀರುಳ್ಳ ದೊಡ್ಡ ಹೊಳೆಯಾಗಿದೆ...... ಈ ತತ್ವವನ್ನು ನೆನಪಿನಲ್ಲಿಟ್ಟು ಸಾಹಿತ್ಯ ಚರಿತ್ರೆಯನ್ನು ಇಲ್ಲಿ ಈ ಪ್ರಕಾರ ವಿಭಾಗ ಮಾಡಿರುತ್ತದೆ : (೧) ಆರಂಭಕಾಲ : ೧೦ನೆಯ ಶತಮಾನದವರೆಗೆ (೨) ಮತಪ್ರಾಬಲ್ಯ ಕಾಲ : ೧೦-೧೯ ಶತಮಾನಗಳು (ಜೈನಕವಿಗಳು : ೧೦ನೆಯ ಶತಮಾನದಿಂದ, ವೀರಶೈವ ಕವಿಗಳು : ೧೨ನೆಯ ಶತಮಾನದಿಂದ, ಬ್ರಾಹ್ಮಣ ಕವಿಗಳು (ಮುಖ್ಯವಾಗಿ) : ೧೫ನೆಯ ಶತಮಾನದಿಂದ ) (೩) ನವೀನ ಕಾಲ : ೧೯ನೆಯ ಶತಮಾನದಿಂದ.’ ಈ ವಿಭಜನೆಯಲ್ಲಿ ಮತಪ್ರಾಬಲ್ಯ ಕಾಲ ಎಂಬ ಒಂಬತ್ತು ಶತಮಾನಗಳ ಹರವಿನಲ್ಲಿ ಮೂರು ಮತಗಳ ಕವಿಗಣಕ್ಕೆ ಮೂರು ಉಪ-ಕಾಲಗಳನ್ನು ಕಲ್ಪಿಸಲಾಗಿದೆ.  ಹಿಂದಿನವರ ದೃಷ್ಟಿಯೇ ಇಲ್ಲಿ ಸ್ವಲ್ಪ ಬದಲಾವಣೆಯೊಡಗೂಡಿ ವಿವರಣೆಯ ಮೂಲಕ ವ್ಯಕ್ತಗೊಂಡಿದೆ.(  ಕನ್ನಡ ಕೈಪಿಡಿ.ಭಾಗ-೨, ಪು.೪೬೭)

     ಸಾಹಿತ್ಯ ಚರಿತ್ರೆಯವಿಭಾಗ ಕ್ರಮದಲ್ಲಿ ಮತಪರತ್ವವು ಆಯಾ ಕಾಲದ ಜನಜೀವನ, ಕವಿಮನೋಧರ್ಮ ಮುಂತಾದ ಗುಣಗಳನ್ನು ಸ್ಥೂಲವಾಗಿ ಗಮನಿಸಿದಾಗ ಸರಿ ಕಾಣುತ್ತದೆ.  ಆದರೆ ಬರಬರುತ್ತ ಮತೀಯ ವಿಭಾಗದ ಸಾಹಿತ್ಯ ಚರಿತ್ರೆಯಲ್ಲಿ ಸಂಕೀರ್ಣತೆ ಹೆಚ್ಚುತ್ತ ಹೋಗುವುದೆಂಬುದನ್ನೂ ಯಾವೊಬ್ಬ ಕವಿಯ ಮತವು ಅವನ ಜೀವನದರ್ಶನವನ್ನು ಪೂರ್ತಿಯಾಗಿ ತಿಳಿಸುವುದಿಲ್ಲವೆಂಬುದನ್ನೂ ನೆನೆದಿರಬೇಕು. ʻ ಶುದ್ಧ ಸಾಹಿತ್ಯ ದೃಷ್ಟಿಯನ್ನು ಹಳೆಗಾಲದ ಬರವಣಿಗೆಯಲ್ಲಿ ನಾವು ಅಪರೂಪವಾಗಿ ಕಾಣುತ್ತಿರುವಾಗ ಅದನ್ನು ಅಂದಿನ ಕವಿಗಳ ಮೇಲೆ ಇಂದು ನಾವು ಆರೋಪಿಸುವುದು ಸರಿಯಾಗದು.  ಆದರೆ ಮತಪರವಾದ ವಿಭಜನೆಗೆ ಪೂರಕವಾಗಿ ಸಾಹಿತ್ಯದೃಷ್ಟಿಯಿಂದ ಸೂಚಿತವಾಗುವ ವಿಭಾಗಗಳನ್ನು ಮಾಡಿಕೊಳ್ಳಬಹುದು.  ಉದಾಹರಣೆಗೆ ಜೈನಯುಗವನ್ನು ಮಾರ್ಗನಿಷ್ಠ ಕಾವ್ಯಯುಗವೆಂದೂ ವೀರಶೈವ ಯುಗವನ್ನು ಕ್ರಾಂತಿಯ ಅಥವಾ ಸಂಕ್ರಮಣದ ಯುಗವೆಂದೂ ಬ್ರಾಹ್ಮಣಯುಗವನ್ನು ದೇಸಿನಿಷ್ಠಯುಗವೆಂದೂ ಕರೆಯಬಹುದು. ಆಯಾ ಕಾಲಗಳಲ್ಲಿ ಹಿರಿಯ ಕವಿಗಳೆಂದು ಹೆಸರಾಗಿ ಕೆಲವರ ಮೇಲೆ ತಮ್ಮ ಪ್ರಭಾವ ಬೀರಿದ ಕವಿಗಳ ಹೆಸರಿನಲ್ಲಿಯೂ ಯುಗಗಳ ನಾಮಕರಣವನ್ನು ಮಾಡಬಹುದು.( ರಂ.ಶ್ರೀ.ಮುಗಳಿ, ಸಮಗ್ರ ಸಾಹಿತ್ಯ ಚರಿತ್ರೆಯ ಪೂರ್ ಪೀಠಿಕೆ, ಪು.೯)  ಯಾವ ರೀತಿಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ವಿಭಾಗಗಳನ್ನು ಮಾಡಿದರೂ ಕಟ್ಟುನಿಟ್ಟಾದ ಸರ್ವರೂ ಮಾನ್ಯಮಾಡಬಹುದಾದ  ರೀತಿಗೆ ಅವು ಹೊಂದಿಕೊಳ್ಳಲಾರವು.  ಇದು  ಎಲ್ಲ ಭಾಷೆಗಳ ಸಾಹಿತ್ಯ ಚರಿತ್ರೆಗಳಿಗೆ ಅನ್ವಯಿಸುವ ಮಾತಿದು. ಒಬ್ಬ ಕವಿಯ ನಿರ್ಮಿತಿಯನ್ನು ಕೂಡ ಯಾವುದಾದರೂ ಒಂದೇ ಪ್ರೇರಣೆಯ ದಾವಣಿಯಿಂದ ಕಟ್ಟಲಾಗುವುದಿಲ್ಲ.  ಹೀಗಿರುವಾಗ ಸಾಹಿತ್ಯ ಚರಿತ್ರೆಯಲ್ಲಿಯ ಕಾಲ ವಿಭಾಗ ಕ್ರಮವು ಅಥವಾ ಅದಕ್ಕೆ ಅನುಗುಣವಾದ ಶೀರ್ಷಿಕೆಯು ಸ್ಥೂಲವಾದ ಆಧಾರದ ಮೇಲೆ ಅಧ್ಯಯನದ ಅನುಕೂಲಕ್ಕಾಗಿ ಮಾತ್ರ  ನಾವುಗಳು ಮಾಡಿಕೊಂಡಿದ್ದಾಗಿದೆ.

      ಸಾಹಿತ್ಯ ಚರಿತ್ರೆಯನ್ನು ಕುರಿತ ಅಧ್ಯಯನದ ಇತಿಹಾಸ:

     ಸಾವಿರ ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಕನ್ನಡ ಸಾಹಿತ್ಯವನ್ನು ಕುರಿತ ಅಧ್ಯಯನ ಇತ್ತೀಚಿನ ಪ್ರವೃತ್ತಿಯಾಗಿದೆ. ಸಾಹಿತ್ಯಚರಿತ್ರೆಯ ರಚನೆಗೆ ಶ್ರೀಕಾರ ಹಾಕಿದವರು ಪಾಶ್ಚಾತ್ಯ ವಿದ್ವಾಂಸರೇ ಆಗಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಇಲ್ಲಿಯವರೆಗೂ ನಡೆದಿರುವ ಸಂಶೋಧನೆಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಬಹುದಾಗಿದೆ. 

ಅ)ಪ್ರಥಮ ಹಂತ (ಕ್ರಿ.ಶ.೧೮೪೦-೧೯೦೦): ಪ್ರಥಮ ಹಂತದಲ್ಲಿ ಸಾಹಿತ್ಯ ಚರಿತ್ರೆಯನ್ನು ಕುರಿತ ಹಾಗೆ ಅಧ್ಯಯನ ನಡೆಸಿದವರಲ್ಲಿ ಕಿಟೆಲ್ ಮತ್ತು ರೈಸ್‍ರು ಪ್ರಮುಖರಾಗಿ ಕಂಡುಬರುತ್ತಾರೆ. ಕ್ರಿ.ಶ.೧೮೪೮ರಲ್ಲಿ ವೆಯ್‍ಗ್ಲೆ ಎಂಬ ವಿದ್ವಾಂಸನು ಜರ್ಮನ್ ಪತ್ರಿಕೆ’‘Canares sprache U literatur ಎಂಬ ಜರ್ಮನ್ ಭಾಷೆಯಲ್ಲಿ ರಚಿಸಿದ ೨೮ ಪುಟಗಳ ಲೇಖನವೇ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತ ಮೊದಲ ಲೇಖನವಾಗಿದೆ. ಈ ಲೇಖನದಲ್ಲಿ ಪ್ರಥಮ ಬಾರಿಗೆ ಕನ್ನಡನಾಡು ನುಡಿಗಳ ವಿಚಾರ, ಕನ್ನಡ ಲಿಪಿ, ಕನ್ನಡ ವ್ಯಾಕರಣಗಳ ವಿಚಾರಗಳು ಹಾಗೂ ಕನ್ನಡ ಸಾಹಿತ್ಯದ ಇತಿಹಾಸ ಸಂಕ್ಷಿಪ್ತವಾಗಿ ನಿರೂಪಿತವಾಗಿದೆ. ವ್ಯಾಕರಣ, ಕೋಶ, ಛಂದಸ್ಸು, ಜೈನಸಾಹಿತ್ಯ, ಲಿಂಗಾಯತ ಹಾಗೂ ದಾಸಸಾಹಿತ್ಯ, ಯಕ್ಷಗಾನ ಪ್ರಸಂಗ ಹಾಗೂ ಕನ್ನಡ ಜನಪದ ಸಾಹಿತ್ಯದ ಸಂಕ್ಷಿಪ್ತ ಪರಿಚಯವಿದೆ. ಇವೊತ್ತಿನ ದೃಷ್ಟಿಯಲ್ಲಿ ಮಹತ್ವ ಕಳೆದುಕೊಂಡಿದ್ದರೂ, ಅಪೂರ್ಣ ಎಂದೆನಿಸಿದ್ದರೂ ಈ ಕೃತಿ ೧೫೦ ವರ್ಷಗಳ ಹಿಂದೆಯೇ ಪಾಶ್ಚಾತ್ಯರಿಗೆ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಡಲು ಪ್ರಯತ್ನಿಸಿರುವುದು ಗಮನಾರ್ಹವಾಗಿದೆ.

     ಆರ್.ಎಫ್.ಕಿಟೆಲ್ ಕ್ರಿ.ಶ.೧೮೭೩ರಲ್ಲಿ ಇಂಡಿಯನ್ ಇವಾಂಜಲಿಕಲ್ ರಿವ್ಯೂ ಪತ್ರಿಕೆಯಲ್ಲಿ ಬರೆದ ʻold kanarese literatureʼ ಎಂಬ ಸಂಶೋಧನಾತ್ಮಕ ಲೇಖನ ಹಾಗೂ ತಾವು ಸಂಪಾದಿಸಿ ಪ್ರಕಟಿಸಿದ ನಾಗವರ್ಮನ ಛಂದೋಂಬುಧಿ ಗ್ರಂಥದ ಪ್ರಸ್ತಾವನೆಯಲ್ಲಿಯ ೬೦ಪುಟಗಳ An Essay on canerese literature’ ಲೇಖನಗಳು ನಂತರದ ದೇಶೀಯ ವಿದ್ವಾಂಸರು ಸಾಹಿತ್ಯ ಚರಿತ್ರೆಯನ್ನು ಕುರಿತು ಬರೆಯಲು ಸೂಕ್ತವಾದ ನೆಲೆಗಟ್ಟನ್ನು ಒದಗಿಸಿತು. ೧೦೦ ಕವಿಗಳ ಸಂಕ್ಷಿಪ್ತ ಪರಿಚಯವನ್ನೊಳಗೊಂಡ ಈ ಲೇಖನ ಸಾಹಿತ್ಯ ಚರಿತ್ರೆಯ ಬೆಳವಣಿಗೆಯ ದೃಷ್ಟಿಯಿಂದ ಗಮನಿಸತಕ್ಕುದಾಗಿದೆ. ಬಿ.ಎಲ್.ರೈಸ್‍ರು ತಾವು ಸಂಪಾದಿಸಿದ ಕರ್ಣಾಟಕ ಶಬ್ದಾನುಶಾಸನ ಕೃತಿಯ ಪೀಠಿಕೆಯಲ್ಲಿಯ ೨೮ ಪುಟಗಳ À  Kannada literature ಎಂಬ ಲೇಖನದಲ್ಲಿ ಕವಿಗಳ ಕಾಲ, ದೇಶ, ಕೃತಿ ವಿಚಾರಗಳು, ಕವಿ ಸಂಬಂಧಿ ಐತಿಹ್ಯಗಳ ವಿವರ ವ್ಯಕ್ತವಾಗಿದೆ. ನಂತರ ಈ ಕೃತಿಯ ಪೀಠಿಕೆಯಲ್ಲಿಯ ಲೇಖನಕ್ಕೆ ಹೆಚ್ಚಿನ ವಿವರಗಳನ್ನು ಜೋಡಿಸಿ ʻThe literature of karnataka’ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಾವು ಕಂಡು ಕೊಂಡ ಸಂಶೋಧನೆಗಳಲ್ಲಿ ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿವರಗಳು ಹಾಗೂ ಕವಯತ್ರಿ ಸಂಚಿಹೊನ್ನಮ್ಮನ ಕುರಿತ ವಿವರ ವ್ಯಕ್ತವಾಗಿದೆ. ಮೊದಲನೆ ಹಂತದಲ್ಲಿ ಸ್ವತಂತ್ರವಾದ ಪೂರ್ಣ ಪ್ರಮಾಣದ ಸಾಹಿತ್ಯ ಚರಿತ್ರೆಯನ್ನು ಕುರಿತ ಸಂಶೋಧನಾ ಕೃತಿಗಳು ಪ್ರಕಟವಾಗದೆ, ತಾವು ಸಂಪಾದಿಸಿದ ಕೃತಿಗಳ ಪ್ರಸ್ತಾವನೆಯಲ್ಲಿ ಪ್ರಾಸಂಗಿಕವಾಗಿ ಸಾಹಿತ್ಯ ಚರಿತ್ರೆಯನ್ನು ಕುರಿತು ಚರ್ಚಿಸಿದ್ದಾರೆ. ಸಾಹಿತ್ಯ ಚರಿತ್ರೆಯನ್ನು ಕುರಿತ ಲೇಖನಗಳೆಲ್ಲವು ಜರ್ಮನ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ರಚಿತವಾಗಿದೆ.

ಬ)ದ್ವಿತೀಯ ಹಂತ (ಕ್ರಿ.ಶ.೧೯೦೧-೧೯೫೦):

    ಕಿಟೆಲ್ ಹಾಗೂ ರೈಸ್‍ರು ಕನ್ನಡ ಸಾಹಿತ್ಯ ಚರಿತ್ರೆಯ ಸೌಧಕ್ಕೆ ತಳಪಾಯವನ್ನು ಹಾಕಿದರೆ ಗೋಡೆ ಕಟ್ಟಲು ಪ್ರಾರಂಭಿಸಿದವರು ದೇಶೀಯ ವಿದ್ವಾಂಸರು. ಆರ್.ನರಸಿಂಹಾಚಾರ್ಯರಿಂದ ಕನ್ನಡ ಸಾಹಿತ್ಯದ ಮೇರು ಕೃತಿಗಳೆಂದು ಪರಿಗಣಿಸಲ್ಪಟ್ಟ ‘ಕರ್ಣಾಟಕ ಕವಿಚರಿತೆ’ಯ ಮೂರು ಸಂಪುಟಗಳು (ಕ್ರಿ.ಶ.೧೯೦೭, ೧೯೧೯, ೧೯೨೯) ನಿರ್ಮಾಣಗೊಂಡವು. ಈ ಹಂತದ ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ತೊಡಗಿಕೊಂಡವರು ಕವಿಚರಿತೆಕಾರರ ಜೊತೆಯಲ್ಲಿಯೇ ಎಸ್.ಜಿ.ನರಸಿಂಹಾಚಾರ್ ಹಾಗೂ ಎ.ವೆಂಕಟಸುಬ್ಬಯ್ಯನವರು. ಮೂರು ಸಂಪುಟಗಳಲ್ಲಿ ಕವಿಚರಿತೆಕಾರರು ಕನ್ನಡ ಸಾಹಿತ್ಯದ ಪ್ರಾರಂಭ ಕಾಲದಿಂದ ಹಿಡಿದು ೧೯ನೇ ಶತಮಾನದ ವರೆಗಿನ ಒಂದು ಸಾವಿರಕ್ಕೂ ಹೆಚ್ಚಿನ ಕವಿಗಳನ್ನು ಪರಿಚಯಿಸುವ ಕವಿಸಂಬಂಧಿ ವಿವರಗಳನ್ನೊಳಗೊಂಡಿದ್ದು ವಿಶ್ವಕೋಶ ಸದೃಶವಾದ ಸಂಪುಟಗಳೆನಿಸಿವೆ. ಸುಮಾರು ೪೦ವರ್ಷಗಳ ಸುದೀರ್ಘ ಫಲದ ಶ್ರಮ ಎದ್ದು ಕಾಣುತ್ತದೆ. ಮುಂದಿನ ವೈವಿಧ್ಯಮಯ ರೀತಿಯ ಸಾಹಿತ್ಯ ಚರಿತ್ರೆಗಳ ರಚನೆಗೆ ಆಕರವಾಗಿ ಪರಿಣಮಿಸಿದೆ. ಕನ್ನಡ ವಾಙ್ಮಯದ ಯಾವ ಅಭ್ಯಾಸಕ್ಕೂ ಕೈಪಿಡಿಯಂತಿದೆ. ಕವಿಗಳ ಕಾಲವನ್ನು ನಿರ್ಣಯಿಸುವುದರಲ್ಲಿ ಅವಶ್ಯಕವಾದ ಸಾಮಗ್ರಿಗಳನ್ನು ಸಂಗ್ರಹಿಸಿ ಅವನ್ನು ಅಳವಡಿಸಿಕೊಂಡು ನಿರ್ಧಾರಕ್ಕೆ ಬರುವ ಶಾಸ್ತ್ರೀಯ ಕ್ರಮ ವಿನೂತನವಾದುದು. ತಾಳೆಯೋಲೆಯಲ್ಲಿ ಅಡಗಿದ್ದ ಕವಿಗಳ ಕೃತಿಗಳನ್ನು ಪರೀಕ್ಷಿಸಿ ಅವುಗಳಿಂದ ಸ್ವಾರಸ್ಯಕರವಾದ ಭಾಗವನ್ನು ಸಂಗ್ರಹಿಸಿ ಕೊಟ್ಟಿರುವುದು ಆ ಕಾಲಕ್ಕೆ ಮಹತ್ತರವಾದುದು.

     ಈ ಸಂಪುಟಗಳಲ್ಲಿ ಕವಿಯ ದೇಶ, ವಂಶ, ಮತ, ಗುರು, ಪೋಷಕ ಬಿರುದುಗಳು ಇವೇ ಮೊದಲಾದ ಕವಿಯ ಜೀವನ ವೃತ್ತಾಂತದ ಅಂಶಗಳು, ನಂತರ ಕವಿಯ ಕಾಲ ನಿರ್ಣಯದ ವಿಚಾರ ಪೂರ್ವಕ ಅಂಶಗಳು, ಕವಿಸ್ಮರಿಸುವ ಪೂರ್ವಕವಿಗಳು, ನಂತರ ಕಾವ್ಯದ ಗುಣಮೌಲ್ಯವನ್ನು ಸಾರುವ ಪದ್ಯಗಳು ಉದ್ಧರಿಸಲ್ಪಟ್ಟಿವೆ. ತರುವಾಯ ಕವಿ ಕೃತವಾದ ಗ್ರಂಥಗಳನ್ನು ಒಂದೊಂದಾಗಿ ತೆಗೆದುಕೊಂಡು ಅದರದರ ಸ್ವರೂಪ, ಪ್ರತಿಪಾದಿತವಾದ ವಿಷಯ, ಕಥಾಗರ್ಭ, ಆಶ್ವಾಸ ಸಂಖ್ಯೆ, ಗ್ರಂಥರಚನೆಗೆ ಕಾರಣವಾದ ಸಂದರ್ಭ ಮೊದಲಾದುವನ್ನು ವಿವರಿಸಿದೆ. ಸಾಹಿತ್ಯ ಗುಣ ಎದ್ದು ತೋರುವ ಗ್ರಂಥಾಂತರ್ಗತ ಗದ್ಯ ಪದ್ಯಗಳನ್ನು ಯಥೋಚಿತವಾಗಿ ಉದ್ಧರಿಸಿ ಕವಿಚರಿತ್ರೆಗೆ ಒಂದು ರೀತಿಯ ಸಮಗ್ರತೆ ತಂದು ಕೊಟ್ಟಿದ್ದಾರೆ. ಕವಿಗಳ ಕಾಲ, ದೇಶ, ವೃತ್ತಾಂತಗಳ ವೈಯಕ್ತಿಕ ಪರಿಚಯ, ಗ್ರಂಥಸ್ವರೂಪ, ಕವಿಗಳ ಕಾವ್ಯ ಶಕ್ತಿ, ರಚನೆಯ ಧೋರಣೆ, ಪೂರ್ವಕವಿಗಳ ಅನುಸರಣೆ, ಉತ್ತರಕಾಲೀನ ಕವಿಗಳ ಮೇಲೆ ಪ್ರಭಾವ ಇವೆಲ್ಲಾ ಸ್ಫುಟವಾಗಿ, ಸಂಕ್ಷಿಪ್ತವಾಗಿ ನಿರೂಪಿತವಾಗಿವೆ. ತಾವು ಬಳಸಿದ ಆಕರಗಳನ್ನು ಅಮೂಲಾಗ್ರವಾಗಿಯೇ ಪರಿಶೀಲಿಸಿದ್ದಾರೆ. ಶತಶತಮಾನಗಳಿಂದ ಬೆಳೆದುಬಂದ ಕನ್ನಡ ಸಾಹಿತ್ಯದ ವ್ಯಾಪ್ತಿ, ವಿಸ್ತಾರಗಳು ಪ್ರಥಮ ಬಾರಿಗೆ ಸಮಗ್ರವಾಗಿ ನಿರೂಪಿಸಲ್ಪಟ್ಟಿದೆ. ಆರ್.ನರಸಿಂಹಾಚಾರ್ಯರು ಈ ಮೂರು ಸಂಪುಟಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯ ನೀಲನಕ್ಷೆಯನ್ನು ಬರೆದಿಟ್ಟ ಮೇಲೆ ಈ ಸಂಪುಟಗಳನ್ನು ಅನುಸರಿಸಿ, ಬಳಸಿ ನಂತರದ ಕಾಲದಲ್ಲಿ ವೈವಿಧ್ಯಮಯ ಸಾಹಿತ್ಯ ಚರಿತ್ರೆಗಳು ಸಂಶೋಧಕರಿಂದ ರಚಿಸಿರುವುದನ್ನು ಕಾಣಬಹುದು. ಇತ್ತೀಚೆಗೆ ಸಾಹಿತ್ಯ ಚರಿತ್ರೆಯನ್ನು ಕುರಿತು ನಡೆದ ಸಂಶೋಧನೆಯ ಫಲಿತಾಂಶದಿಂದ ಕವಿಚರಿತೆಯ ಸಂಪುಟಗಳಲ್ಲಿಯ ಎಷ್ಟೋ ಕವಿಗಳ ಕೃತಿಗಳನ್ನು, ಕಾಲವನ್ನು ಪುನರ್ರಚಿಸುವ ಸ್ಥಿತಿ ಒದಗಿದೆ ಎಂದೆನಿಸಿದ್ದರೂ ಈ ಸಂಪುಟಗಳು ಮೌಲಿಕವಾದವುಗಳು ಎಂಬುದನ್ನು ಮರೆಯುವಂತಿಲ್ಲ.

     ಕವಿಚರಿತೆಕಾರರ ಪ್ರಥಮ ಸಂಪುಟ ಹೊರ ಬಂದ ಮೇಲೆ ಇ.ಪಿ.ರೈಸ್ ಅವರು ‘A History of kanarese literature’ ಎಂಬ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ೧೯೧೫ರಲ್ಲಿ ರಚಿಸಿದ್ದಾರೆ. ಶಾಸ್ತ್ರೀಯ ದೃಷ್ಟಿಯನ್ನೊಳಗೊಂಡ ಮೊತ್ತಮೊದಲ ಸಾಹಿತ್ಯ ಚರಿತ್ರೆ ಅದೆಂದು ವಿದ್ವಾಂಸರು ಮಾನ್ಯಮಾಡಿದ್ದಾರೆ. ಕವಿಚರಿತ್ರೆಯ ಎರಡು ಸಂಪುಟಗಳನ್ನು ಆಧರಿಸಿ ಕ್ರಿ.ಶ.೧೯೨೦ರಲ್ಲಿ ಅವರೆ ತಮ್ಮ ಕಾಲದವರೆಗಿನ ಸಾಮಗ್ರಿಯನ್ನು ಅಧ್ಯಯನ ಮಾಡಿ ಸಾಹಿತ್ಯ ಚರಿತ್ರೆಯನ್ನು ಪರಿಷ್ಕೃತ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರೆ ಸೂಚಿಸಿರುವ ಹಾಗೆ ಈ ಕೃತಿಯು ಪಾಶ್ಚಾತ್ಯ ಓದುಗರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ರಚಿತವಾಗಿದೆ.

     ಎ.ವೆಂಕಟಸುಬ್ಬಯ್ಯನವರ ಕೆಲವು ಕನ್ನಡ ಕವಿಗಳ ಜೀವನ ಕಾಲವಿಚಾರ (೧೯೨೭) ಕೃತಿಯು ಕವಿಚರಿತೆಕಾರರ ಸಂಪುಟಗಳನ್ನು ವಿಮರ್ಶಿಸುವ ಸಲುವಾಗಿ ಬರೆದಂತೆ ಹಲವು ಕವಿಗಳ ಜೀವನ ಕಾಲ ವಿಚಾರಗಳ ಸಂಕಲನವಾಗಿದೆ. ಅಲ್ಲದೆ ಪ್ರಾಚೀನ ಸಾಹಿತ್ಯವನ್ನು ಅರ್ಥೈಸಲು ಪ್ರಮಾಣ ಗ್ರಂಥವಾಗಿದೆ.ಕವಿಯ ಕಾವ್ಯಶಕ್ತಿಯ ಸತ್ವ ಹಾಗೂ ದೌರ್ಬಲ್ಯಗಳು,ಕೃತಿ ವಸ್ತುವಿನ ಮಹತ್ವ ಪ್ರಯೋಜನಗಳನ್ನು ಅರ್ಥೈಸಬೇಕಾದರೆ ಕವಿಯ ಹಾಗೂ ಕವಿಕೃತಿಯ ಕಾಲದ ಪರಿಜ್ಞಾನ ಅನಿವಾರ್ಯ ಮತ್ತು ಅಗತ್ಯ. ಕವಿಯ ಮನಸ್ಸಿನ ಮೇಲೆ ಆಯಾಕಾಲದ ಸಂದರ್ಭ ಹಾಗೂ ಸನ್ನಿವೇಶಗಳ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಅಂಶಗಳು ತಿಳಿದು ಬಂದ ಹಾಗೆಲ್ಲಾ ಕವಿಕೃತಿಯ ಮೌಲ್ಯಮಾಪನ ಮಾಡಬಹುದಾಗಿದೆ ಎಂಬ ಆಶಯದ ಹಿನ್ನೆಲೆಯಲ್ಲಿ ಸಾಹಿತ್ಯ ಚರಿತ್ರೆಯ ರೂಪುರೇಷೆಗಳನ್ನು ಚಿತ್ರಿಸಲು ಕವಿಕಾಲ ನಿರ್ಣಯವೇ ಅಡಿಪಾಯ ಎನ್ನುವ ನಿಲುವನ್ನು ಎ.ವೆಂಕಟಸುಬ್ಬಯ್ಯನವರು ತಾಳಿದ್ದರು.   ಇವರ ಕೃತಿಯ ಮೂಲಕ ಕವಿಗಳ ಕಾಲ ಕೃತಿಗಳ ಬಗೆಗೆ ಕವಿಚರಿತೆಕಾರರು ತಾಳಿದ ನಿಲುವುಗಳು ಮರು ಪರಿಶೀಲನೆಗೆ ಒಳಪಟ್ಟವು. ಈ ಸಂದರ್ಭದಲ್ಲಿ ಅಯ್ಯನವರು ಪ್ರಮುಖ ಪಾತ್ರ ವಹಿಸಿ ಕವಿಚರಿತೆಯಲ್ಲಿ ಕೆಲವು ಕನ್ನಡ ಕವಿಗಳ ಜೀವನ ಕಾಲದ ವಿಷಯವಾಗಿ ಪ್ರಸ್ತಾಪಿಸಲ್ಪಟ್ಟಿರುವ ಅಭಿಪ್ರಾಯಗಳು ಅಸಮರ್ಪಕವಾಗಿವೆ ಎಂದು ಭಾವಿಸಿ ಆಳವಾದ ಅಧ್ಯಯನ ಹಾಗೂ ಆಕರಗಳ ಹಿನ್ನಲೆಯಲ್ಲಿ ಕವಿಗಳ ಮತ್ತು ಕೃತಿಗಳ ಕಾಲನಿರ್ಣಯದಲ್ಲಿ ಕವಿಚರಿತೆಕಾರರು ತಾಳಿದ ನಿಲುವಿಗಿಂತ ವಿಭಿನ್ನವಾದ ನಿಲುವುಗಳನ್ನು ವ್ಯಕ್ತಪಡಿಸಿದರು. ಅಯ್ಯನವರ ಕೃತಿಯಲ್ಲಿ ಕವಿಕೃತಿಗಳಲ್ಲಿಯ ಸ್ವಕೀಯ ವಿವರಗಳು,ಪೂರ್ವಕವಿಗಳ ಉಲ್ಲೇಖ, ಲಕ್ಷಣ ಗ್ರಂಥ ಮತ್ತು ಸಂಕಲಿತ ಗ್ರಂಥಗಳ ಸಾಕ್ಷ್ಯ, ಕವಿಗಳ ಹೇಳಿಕೆ, ಶಾಸನಾಧಾರಗಳು,ಆಶ್ರಯದಾತನ ಕಾಲ,ಗುರುಪರಂಪರೆ ಇತ್ಯಾದಿಗಳು ಕವಿಗಳ ಕಾಲನಿರ್ಣಯವನ್ನು ಪುನರ್ ಮೌಲ್ಯೀಕರಿಸಲು ಸಹಾಯಕವಾಗಿವೆ. ಕವಿಗಳ ಕಾಲ ನಿರ್ಣಯದಲ್ಲಿ ಅಯ್ಯನವರು ತಾಳಿದ ತಾಳಿರುವ ನಿಲುವುಗಳಲ್ಲಿ ಕೆಲವು ಇಂದಿಗೂ ಮಾನ್ಯವಾಗಿವೆ. ಪಂಪ ಪೂರ್ವಯುಗ ಹಾಗೂ ಪಂಪಯುಗದ ಕವಿಗಳ ಕಾಲನಿರ್ಣಯ ಮತ್ತು ಕೃತಿವಿಚಾರದಲ್ಲಿ ಅಯ್ಯನವರ ಅಭಿಪ್ರಾಯಗಳು ಇಂದಿಗೂ ಸಾರ್ವಕಾಲಿಕವಾಗಿವೆ. 

     ಕವಿಚರಿತೆಕಾರರ ನಂತರ ಕನ್ನಡ ಎಂ.ಎ.ವಿದ್ಯಾರ್ಥಿಗಳಿಗೆ ಸಾಹಿತ್ಯ ಚರಿತ್ರೆಯನ್ನು ಬೋಧಿಸುವ ಸಲುವಾಗಿ ಕೆಲವು ಸಾಹಿತ್ಯ ಚರಿತ್ರೆಗಳು ರೂಪುಗೊಂಡವು. ಎನ್.ಕೆ.ಕುಲಕರ್ಣಿಯವರ ಕನ್ನಡ ಸಾಹಿತ್ಯ ವಾಹಿನಿ (೧೯೩೯), ಕೆ.ವೆಂಕಟರಾಮಪ್ಪರ ಕನ್ನಡ ಸಾಹಿತ್ಯ (೧೯೩೯), ಬಿ.ಎಂ.ಶ್ರೀ ಅವರ ಕನ್ನಡ ಕೈಪಿಡಿ ಭಾಗ-೨ (೧೯೪೭) ಗಳನ್ನು ಉಲ್ಲೇಖಿಸಬಹುದು. ಬಿ.ಎಂ.ಶ್ರೀ.ರವರರು ಸಾಹಿತ್ಯ ಚರಿತ್ರೆಯನ್ನು ಸಮರ್ಥವಾಗಿ ರಚಿಸಬಲ್ಲಂತಹ ಶಕ್ತಿಯನ್ನುಳ್ಳವರಾಗಿದ್ದರು. ಆದಾಗ್ಯೂ ಇವರ ಅಪೂರ್ಣ ಸಾಹಿತ್ಯ ಚರಿತ್ರೆಯು ಪದ್ಯಗಳ ಉದಾಹರಣೆಗಳ ಭಾರದಿಂದ ತುಂಬಿ ಹೋಗಿದ್ದು ಗದ್ಯದಲ್ಲಿ ಕವಿಗಳ ಪ್ರಶಂಸೆ ವ್ಯಕ್ತವಾಗಿದೆ. ಹೀಗಾಗಿ ಇವರ ಸಾಹಿತ್ಯ ಚರಿತ್ರೆ ಜನತೆಯ ಗಮನಕ್ಕೆ ಅಷ್ಟಾಗಿ ಬಾರದೆ ಹೋಯಿತು.

ಕ)ತೃತೀಯ ಹಂತ (ಕ್ರಿ.ಶ.೧೯೫೧-೧೯೭೪):

    ಈ ಅವಧಿಯಲ್ಲಿ ಪರಿಪೂರ್ಣವಾದ ಸಾಹಿತ್ಯ ಚರಿತ್ರೆ ರಚನೆಗೆ ಹಿನ್ನಲೆಯ ರೀತಿಯಲ್ಲಿ ವಿವಿಧ ವಿದ್ವತ್ ಪತ್ರಿಕೆಗಳಲ್ಲಿ ನೂರಾರು ಸಂಶೋಧಕರ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಸಂಶೋಧನಾತ್ಮಕ ಲೇಖನಗಳು ನಾಡಿನಾದ್ಯಂತ ಪ್ರಕಟವಾಗಿದ್ದವು. ಕೆಲವು ಶಾಸನ ಸಂಪುಟಗಳು, ಇತಿಹಾಸ ಕೃತಿಗಳು, ರಚನೆಯಾಗಿದ್ದವು. ಅದಕ್ಕಿಂತ ಮುಖ್ಯವಾಗಿ ವಿದ್ವತ್ಪೂರ್ಣ ಮುನ್ನುಡಿಗಳನ್ನೊಳಗೊಂಡ ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ಕನ್ನಡ ಕೃತಿಗಳು ಸಂಪಾದನೆಗೊಂಡು ಪ್ರಕಟಗೊಂಡಿದ್ದವು. ಕವಿಚರಿತೆಯ ರಚನೆಯ ಕಾಲದಲ್ಲಿ ಇದ್ದಂತಹ ಸಂಧಿಗ್ದ ಸ್ಥಿತಿ ಇರಲಿಲ್ಲ. ವಸ್ತು ಸಂಗ್ರಹಕ್ಕೆ ಓಲೆಗರಿಯಲ್ಲಿಯೇ ಇರುವ ಕೃತಿಗಳನ್ನು ಪರಿಶೀಲಿಸುವ ಸಲುವಾಗಿ ಎಡಕಾಡುವ ಅವಶ್ಯಕತೆ ಇರಲಿಲ್ಲ. ಕವಿಚರಿತೆಯನ್ನು ಸಾಹಿತ್ಯ ಚರಿತ್ರಯನ್ನಾಗಿಸಬೇಕಾಗಿತ್ತು. ಹೀಗಾಗಿ ಕಾಲವಿಂಗಡನೆಗೆ ಮಾನದಂಡಗಳನ್ನು ರೂಪಿಸುವುದು, ಕಾವ್ಯವಿಮರ್ಶೆಗೆ ಚರಿತ್ರೆಯಲ್ಲಿ ಸೂಕ್ತ ಸ್ಥಾನವನ್ನು ಕಲ್ಪಿಸಿಕೊಡುವುದು, ಸಾಹಿತ್ಯ ಚರಿತ್ರೆಗೆ ಶಾಸ್ತ್ರಗೌರವವನ್ನು ಕಲ್ಪಿಸಿಕೊಡುವುದು, ಯುಗದ ವೈಶಿಷ್ಟ್ಯವನ್ನು ಗುರುತಿಸುವುದು ಇತ್ಯಾದಿ ಅಂಶಗಳನ್ನೊಳಗೊಂಡ ಸಾಹಿತ್ಯ ಚರಿತ್ರೆಗಳು ರಚನೆಯಾಗಿವೆ. ಈ ನಿಟ್ಟಿನಲ್ಲಿ ರಂ.ಶ್ರೀ.ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆಯು ಅವರೇ ಹೇಳಿಕೊಂಡಿರುವ ಹಾಗೆ ಕನ್ನಡ ನಾಡಿನ ಸಾಹಿತ್ಯವನ್ನು ಆಧುನಿಕ ದೃಷ್ಟಿಯಿಂದ ವ್ಯಾಸಂಗ ಮಾಡಬೇಕೆನ್ನುವವರಿಗೆ ಅವಶ್ಯಕವೆಂದು ತೋರುವ ಚಾರಿತ್ರಿಕ ಮತ್ತು ವಿಮರ್ಶಾತ್ಮಕ ವಿವೇಚನೆ ಒಂದು ಸಮಗ್ರ ಗ್ರಂಥ ರೂಪದಲ್ಲಿ ಸಿದ್ಧಪಡಿಸಿರುವ ರೀತಿಯದಾಗಿದೆ. ಅದೇ ರೀತಿ ಎಂ.ಮರಿಯಪ್ಪ ಭಟ್ಟರ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ (೧೯೬೦), ತ.ಸು.ಶಾಮರಾಯ, ಮೇ ರಾಜೇಶ್ವರಯ್ಯರ ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ (೧೯೬೪), ಎನ್.ಅನಂತ ರಂಗಾಚಾರ್ ಅವರ ಸಾಹಿತ್ಯ ಭಾರತಿ (೧೯೭೦), ಸಿ.ಎನ್.ಕೃಷ್ಣಮೂರ್ತಿ ಅವರ ಕನ್ನಡ ಕಾವ್ಯ ಪರಂಪರೆಯ ಪರಿಚಯ(೨೦೧೫)ಗಳು ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸುವ ವಿದ್ಯಾರ್ಥಿಗಳು ಹಾಗೂ ಆಸಕ್ತರನ್ನು ದೃಷ್ಟಿಯಲ್ಲಿಟ್ಟುಕೊಂಡು ವೈಯಕ್ತಿಕವಾಗಿ  ರಚಿತವಾಗಿವೆ.

ಡ)ಚತುರ್ಥ ಹಂತ (ಕ್ರಿ.ಶ.೧೯೭೫ ರಿಂದ, ನಂತರ):

     ಇಲ್ಲಿಯವರೆಗೂ ವೈಯಕ್ತಿಕ ಮಟ್ಟದಲ್ಲಿ ಸಾಹಿತ್ಯ ಚರಿತ್ರೆಯ ನಿರ್ಮಾಣ ನಡೆದರೆ ನಂತರದ ಕಾಲದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗಳು ಸಾಂಸ್ಥಿಕ ಮಟ್ಟದಲ್ಲಿ ಸಂಶೋಧನಾತ್ಮಕ ಮಟ್ಟದಲ್ಲಿ ಸಂಶೋಧನಾತ್ಮಕ ಮಟ್ಟದ ಸಾಹಿತ್ಯ ಚರಿತ್ರೆಯನ್ನು ಸಿದ್ಧಪಡಿಸುವಂತಹ ಯೋಜನೆಯನ್ನು ಹಾಕಿಕೊಂಡವು. ಏಕೆಂದರೆ ಈ ಅವಧಿಯಲ್ಲಿ ಕವಿಕಾವ್ಯ ವಿಚಾರಗಳನ್ನು ಕುರಿತ ಹಾಗೆ ಸಂಶೋಧನಾ ಗ್ರಂಥಗಳು ಪ್ರಕಟಗೊಂಡಿದ್ದವು. ಕವಿ-ಕೃತಿಗಳಿಗೆ ಸಂಬಂಧಿಸಿದ ಹಾಗೆ ಸಂಶೋಧಕರು ಸಾಕಷ್ಟು ನೂತನ ಅಂಶಗಳನ್ನು ಬೆಳಕಿಗೆ ತಂದಿದ್ದರು. ಸಾಹಿತ್ಯ ಚರಿತ್ರೆಯನ್ನು ವ್ಯವಸ್ಥಿತವಾಗಿ ರಚಿಸಲು ಹಿನ್ನೆಲೆಯಾದ ವಿಪುಲವಾದ ಆಧಾರ ಸಾಮಗ್ರಿ ಎದುರಾಗಿತ್ತು. ಈ ಅಗಾಧ ಸಾಮಗ್ರಿಯನ್ನು ಬಳಸಿಕೊಂಡು ಸಮಗ್ರ ಸಾಹಿತ್ಯ ಚರಿತ್ರೆಯನ್ನು ಸಾಂಸ್ಥಿಕ ಮಟ್ಟದಲ್ಲಿ ರೂಪಿಸಲು ಈ ಎರಡು ಸಂಸ್ಥೆಗಳು ಮುಂದಾದವು. ಬೆಂಗಳೂರು ವಿಶ್ವವಿದ್ಯಾಲಯವು, ವಿದ್ವಾಂಸರಲ್ಲದ ಆದರೆ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗೆಗೆ ತಕ್ಕಮಟ್ಟಿಗೆ ಆಸಕ್ತಿ ಅಭಿರುಚಿಯನ್ನು ತಾಳಿದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ’ ಎಂಬ ಯೋಜನೆಯನ್ನು ಹಾಕಿಕೊಂಡು ೧೯೭೫ರಲ್ಲಿ ವಿವಿಧ ಕನ್ನಡ ಸಾಹಿತ್ಯ ರೂಪಗಳಿಗನುಗುಣವಾಗಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿತು. ಈ ಸಂಪುಟಗಳು ಸಂಪಾದಕರೇ ತಿಳಿಸಿರುವ ಹಾಗೇ ಪ್ರಾತಿನಿಧಿಕವಾದ ಪ್ರಮುಖ ಕವಿಗಳನ್ನು ಕೇಂದ್ರದಲ್ಲಿರಿಸಿಕೊಂಡು ಅವರಿಗೆ ಹಿನ್ನಲೆಯಾದ ಯುಗಧರ್ಮದಲ್ಲಿ ಅಂದಂದಿನ ಸಾಹಿತ್ಯಕ್ಕೆ ಒದಗಿದ ಪ್ರೇರಣೆಗಳು, ಅಂದಂದಿನ ಸಾಹಿತ್ಯಕ ಸಾಧನೆಗಳ ಪರಿಚಯವನ್ನು ಒಳಗೊಂಡಿವೆ. ಬರವಣಿಗೆ ವಿಮರ್ಶನ ಹಾಗೂ ಮೌಲ್ಯಮಾಪನ ದೃಷ್ಟಿಯನ್ನೊಳಗೊಂಡ ಹಾಗೆ ಸರಳವಾಗಿದೆ. ಸಮಗ್ರ ಕನ್ನಡ ಸಾಹಿತ್ಯದ ತಕ್ಕಮಟ್ಟಿನ ಪರಿಚಯ ವಾಗಿರುವುದರ ಜೊತೆಗೆ ಮೂಲ ಕನ್ನಡದ ಕವಿಕೃತಿಗಳನ್ನು ಓದಬೇಕೆನ್ನುವ ಆಸಕ್ತಿಯನ್ನು ಮೂಡಿಸಲು ಪ್ರಯತ್ನಿಸಿವೆ.

     ಬೆಂಗಳೂರು ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯವನ್ನು ಅದರ ಐತಿಹಾಸಿಕ ಸಾಂಸ್ಕೃತಿಕ ಸಂದರ್ಭಗಳ ಹಿನ್ನೆಲೆಯಲ್ಲಿರಿಸಿಕೊಂಡು ಕೂಲಂಕುಶವಾಗಿ ಪರಿಶೀಲಿಸುವ ಮತ್ತು ವಿಮರ್ಶಿಸುವ ವ್ಯಾಪಕ ಪ್ರಯತ್ನವನ್ನು ಸಾಂಸ್ಥಿಕ ಮಟ್ಟದಲ್ಲಿ ಕೈಗೊಂಡಿತು. ಸಂಪಾದಕರೇ ಹೇಳಿರುವ ಹಾಗೆ ಈ ಯೋಜನೆಯು ಕನ್ನಡ ಸಾಹಿತ್ಯದ ಆರಂಭಕಾಲದಿಂದ ಹಿಡಿದು ಆಧುನಿಕ ಕಾಲದವರೆಗೆ ಹಲವು ಕಾಲಮಾನಗಳನ್ನು ಮಾಡಿಕೊಂಡು ಪ್ರತಿಯೊಂದು ಕಾಲಮಾನದ ಸಾಹಿತ್ಯಾಭಿವ್ಯಕ್ತಿಯನ್ನು ಅಂದಂದಿನ ಇತಿಹಾಸ, ಭಾಷಾ ಸ್ವರೂಪ, ಸಂಸ್ಕೃತಿ, ಧರ್ಮ ಇವುಗಳ ಹಿನ್ನಲೆಯಿಂದ ಸಮಗ್ರವಾಗಿ ಪರಿಶೀಲಿಸುವುದಲ್ಲದೆ ಈ ಸಾಹಿತ್ಯ ಚರಿತ್ರೆ ಪ್ರಮಾಣಭೂತವೂ ಪುನರ್ ಮೌಲ್ಯಮಾಪನ ದೃಷ್ಟಿಯುಳ್ಳದ್ದು ಆಗಿರಬೇಕೆಂಬ ಆಶಯವನ್ನು ಹೊಂದಿದೆ.

     ೧೯೭೪-೧೯೯೧ರ ವರೆಗೆ ೧೮ ವರ್ಷಗಳ ದುಡಿತದ ಫಲವಾಗಿ ಆರು ಸಂಪುಟಗಳು ಹೊರಬಂದವು.

ಸಂಪುಟ      ಕಾಲವಧಿ                    ಪ್ರಕಟನ ವರ್ಷ       ಪುಟಗಳು

೧      ಪ್ರಾರಂಭಕಾಲದಿಂದ ಕ್ರಿ.ಶ.೮೫೦ರ ವರೆಗೆ       ೧೯೭೪            ೧೬೮

೨      ಕ್ರಿ.ಶ.೮೫೦ರಿಂದ ಕ್ರಿ.ಶ.೧೧೫೦ರ ವರೆಗೆ          ೧೯೭೫            ೩೬೨

೩      ಕ್ರಿ.ಶ.೧೧೫೦ ರಿಂದ ೧೩೫೦ರ ವರೆಗೆ           ೧೯೭೬            ೭೨೪

೪      ಭಾಗ-೧. ಕ್ರಿ,ಶ.೧೩೫೦ ರಿಂದ ೧೫೦೦ರ ವರೆಗೆ    ೧೯೭೭            ೩೬೬

       ಭಾಗ-೨. ಕ್ರಿ.ಶ.೧೫೦೦ ರಿಂದ ೧೬೦೦ರ ವರೆಗೆ     ೧೯೭೮        ೩೬೬-೯೬೭

೫      ಕ್ರಿ.ಶ.೧೬೦೦ ರಿಂದ ೧೮೫೦ರ ವರೆಗೆ            ೧೯೮೨           ೫೦೪

೬      ಕ್ರಿ.ಶ.೧೮೫೦ ರಿಂದ ೧೯೨೦                  ೧೯೯೧            ೪೭೩

 

ಈ ಸಂಪುಟಗಳಲ್ಲಿಯ ವಿವರಗಳು ಕನ್ನಡ ಸಾಹಿತ್ಯ ಚರಿತ್ರೆಯ ವಿಶ್ವದರ್ಶನವನ್ನು ಮಾಡಿಸುತ್ತವೆ. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಒಂದು ಹಿರಿಯ ಸಾಹಸ ಹಾಗೂ ಸಿದ್ಧಿಯಾಗಿದೆ. ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ರಾಜಕೀಯ ಇತಿಹಾಸ, ಧಾರ್ಮಿಕ ಹಾಗೂ ಸಾಮಾಜಿಕ ಜೀವನ, ಭಾರತೀಯ ಹಾಗೂ ಜಾಗತಿಕ ಸಾಹಿತ್ಯ ಚರಿತ್ರೆ, ಕನ್ನಡ ಭಾಷೆಯ ಇತಿಹಾಸ ಇತ್ಯಾದಿ ವೈವಿಧ್ಯಮಯ ಸಮಾಲೋಚನೆಯನ್ನು ಒಳಗೊಂಡಿದೆ. ಈ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ ಆಕರಗಳ ಸಂಗ್ರಹಕ್ಕಿಂತ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ ಈಗಾಗಲೇ ಪ್ರಾತಿನಿಧಿಕವಾಗಿ ಚರ್ಚಿತವಾಗಿರುವ ಕವಿಕೃತಿಗಳನ್ನೇ ವಿಸ್ತಾರವಾಗಿ ವಿಭಿನ್ನ ದೃಷ್ಟಿಕೋನಗಳಿಂದ ವಿಶ್ಲೇಷಣೆಗೆ, ವಿಮರ್ಶೆಗೆ ಒಳಪಡಿಸಲಾಗಿದ್ದು ಸಂಕೀರ್ಣ ಮಾದರಿಯ ಸಾಹಿತ್ಯ ಚರಿತ್ರೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಕವಿಗಳ ಕಾಲ, ದೇಶ, ಕೃತಿಗಳ ಸಂಖ್ಯೆ, ರೂಪ ಛಂದಸ್ಸಿನಲ್ಲಿ ನಡೆದಿರುವ ಸಂಶೋಧನೆಯನ್ನೆಲ್ಲಾ ಬಳಸಿಕೊಂಡು ಪರಿಪೂರ್ಣ ರೀತಿಯಲ್ಲಿ ಸಾಹಿತ್ಯ ಚರಿತ್ರೆಯನ್ನು ರೂಪಿಸಲು ಯತ್ನಿಸಲಾಗಿದೆ. ಈ ಸಂಪುಟಗಳಲ್ಲಿ ಹಳಗನ್ನಡ ಸಾಹಿತ್ಯದ ಅಧ್ಯಯನದಲ್ಲಿ ಮೂಲಭೂತ ವಿಧಾನಗಳನ್ನು ಅನುಸರಿಸಿದ್ದರೂ ಸಾಧ್ಯವಿದ್ದಷ್ಟು ಮಟ್ಟಿಗೆ ಹೊಸತನವನ್ನು ಅಳವಡಿಸಿಕೊಂಡಿದೆ. ಜಿ.ಎಸ್.ಶಿವರುದ್ರಪ್ಪನವರು ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಯೋಜನೆಯಡಿಯಲ್ಲಿ ಪ್ರಾಚೀನ ಸಾಹಿತ್ಯದಿಂದ ಆರಂಭಿಸಿ ಆರು ಸಂಪುಟಗಳನ್ನು ಸಾಹಿತ್ಯ ಸಂದರ್ಭದ ವೈಶಿಷ್ಟ್ಯತೆ, ವೈವಿಧ್ಯತೆ, ಮಹತ್ವಗಳನ್ನರಿತು, ಕಾಲಘಟ್ಟಗಳನು ನಿಗಧಿ ಪಡಿಸಿ ಕಾಲದ ಹಿನ್ನೆಲೆಯಲ್ಲಿ ಚಾರಿತ್ರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಧ್ಯಯನ ಮಹತ್ವದ ವಿವರಗಳನ್ನು ಆಯಾ ವಿಷಯ ಪರಿಣಿತರಿಂದ ವಿದ್ವತ್ಪೂರ್ಣವಾಗಿ ಬರೆಸಿ ಸಿದ್ಧಪಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪ್ರಕಟಿಸಿದ್ದರು. ಕನ್ನಡ ಅಧ್ಯಯನ ಕೇಂದ್ರವು ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿಯಲ್ಲಿ ಹೀಗಾಗಲೇ ಪ್ರಕಟವಾಗಿದ್ದ ಸಮಗ್ರಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳ ಪರಿಷ್ಕರಣೆ, ಪ್ರಕಟನೆಯ ಜೊತೆಗೆ ಆಧುನಿಕ ಸಮಗ್ರ ಸಾಹಿತ್ಯ ಚರಿತ್ರೆಯ ಆರು  ಸಂಪುಟಗಳನ್ನು ವಿವಿಧ ವಿದ್ವಾಂಸರಿಂದ ಸಂಬಂಧಿಸಿದ ಲೇಖನಗಳನ್ನು ಬರೆಸಿ ಸಂಗ್ರಹಿಸಿ ಸಿದ್ಧಪಡಿಸಿ ೨೦೧೪ ರಲ್ಲಿ ಪ್ರಕಟಿಸಿದೆ.  ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸಗನ್ನಡದ ನಾಲ್ಕು ಘಟ್ಟಗಳ ವಿವಿಧ ಸಂವೇದನೆಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆ ಯಾವ ರೀತಿ ನಾವೀನ್ಯತೆಯನ್ನು ಸಾಧಿಸಿದೆ ಎಂಬುದನ್ನು ಈ ಸಂಪುಟಗಳಲ್ಲಿ ಗುರುತಿಸಿರುವುದನ್ನು ಕಾಣಬಹುದು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ:

 ಸುದೀರ್ಘವೂ ಸಂಪದ್ಯುಕ್ತವೂ ಆದ ಕನ್ನಡ ಸಾಹಿತ್ಯ ಚರಿತ್ರೆಯನ್ನು ನಿರೂಪಿಸುವ ಹಲವು ಗ್ರಂಥಗಳು ಈವರೆಗೆ ವೈಯಕ್ತಿಕ ಮಟ್ಟದಲ್ಲಿ ಪ್ರಕಟವಾಗಿದ್ದರೂ, ಅವುಗಳಿಗೆ ಬಗೆಬಗೆಯ ಸೀಮಿತಗಳಿವೆ. ಮುಖ್ಯವಾಗಿ, ಸಾಹಿತ್ಯದ ಪ್ರಾಚೀನತೆ ಹರವುಗಳ ಎದುರಿನಲ್ಲಿ ಈ ಚರಿತ್ರೆಗಳು ಸಂಕ್ಷೇಪವಾದವು: ಸಾಹಿತ್ಯ ಚರಿತ್ರೆಯನ್ನು ಬರೆಯುವವರಿಗೆ ಒದಗುವ ತೊಡಕುಗಳ ಕಾರಣದಿಂದ ಅಪರಿಪೂರ್ಣವಾದವು. ಆದುದರಿಂದ ಸಮಗ್ರವಾದ ಒಂದು ಸಾಹಿತ್ಯ ಚರಿತ್ರೆ ಕನ್ನಡದ ಬಹುದಿನಗಳ ಅಗತ್ಯವಾಗಿತ್ತು. ಕನ್ನಡ ಸಾಹಿತ್ಯದ ವ್ಯಾಪ್ತಿ ಯೋಜನೆ ಕುರಿತು ವೈವಿಧ್ಯಗಳನ್ನು ಗಮನಿಸಿದಾಗಲೆಲ್ಲ ಈ ಮಹಾಸಾಹಿತ್ಯದ ಚರಿತ್ರೆಯ ರಚನೆಗೆ ಅನೇಕ ಕೈಗಳು ಕೂಡಬೇಕಾದುದರ ಅಗತ್ಯ ಸ್ಪಷ್ಟವಾಗುತ್ತಿತ್ತು.  ಇಂಥದೊಂದು ಸಾಹಿತ್ಯ ಚರಿತ್ರೆಯ ನಿರ್ಮಾಣಕ್ಕೆ ಸಾಂಸ್ಥಿಕ ಪ್ರಯತ್ನವೂ ತುಂಬ ಆವಶ್ಯವಿದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಕಾರ್ಯ ತತ್ಫರವಾಯಿತು. ಈ ನಿಟ್ಟಿನಲ್ಲಿ ಪ್ರೊ. ದೇ. ಜವರೇಗೌಡರು ತಾವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾದ ಆರಂಭದಲ್ಲಿಯೇ (ಅಕ್ಟೋಬರ್ , ೧೯೬೪) ಕನ್ನಡ ವಿಭಾಗದ ಆಶ್ರಯದಲ್ಲಿ ಸಮಗ್ರವಾದ ಸಾಹಿತ್ಯ ಚರಿತ್ರೆಯ ರಚನೆಗೆ ಒಂದು ಯೋಜನೆ ಹಾಕಿದರು. ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ, ಸಂಶೋಧಕರ ನೆರವಿನಿಂದ ಹಲವು ಸಂಪುಟಗಳಲ್ಲಿ ವಿವರಣಾತ್ಮಕವೂ, ಅಧಿಕೃತವೂ ಆದ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಿದ್ಧಗೊಳಿಸಿ ಪ್ರಕಟಿಸಬೇಕೆಂದು ತೀರ್ಮಾನಿಸಿ, ರೂಪ ರೇಖೆಗಳನ್ನು ಕೂಲಂಕುಶವಾಗಿ ಚರ್ಚಿಸಿ ಸಿದ್ದಪಡಿಸಿ, ಬರೆಯಬೇಕಾದ ಲೇಖನಗಳ ಸ್ವರೂಪ ವ್ಯಾಪ್ತಿಗಳನ್ನು ಗೊತ್ತುಪಡಿಸಿದರು. ಆದರೆ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ  ಇತರೆ ಸಾಂಸ್ಥಿಕ ಯೋಜನೆಗಳಿಂದಾಗಿ, ಸಾಹಿತ್ಯ ಚರಿತ್ರೆಯ ಯೋಜನೆ ಕುಂಠಿತವಾದರೂ, ಒಂದು ದಶಕದ ಅನಂತರ (ಅಕ್ಟೋಬರ್,೧೯೭೪) “ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ'ಯ ಮೊದಲ ಸಂಪುಟ ಪ್ರಕಟವಾಯಿತು.

ಸಾಹಿತ್ಯ ಸಂಪುಟಗಳ ಸ್ವರೂಪ:   ಮೈಸೂರು ವಿಶ್ವವಿದ್ಯಾನಿಲಯವು ಸಹ ಸಾಂಸ್ಥಿಕ ಮಟ್ಟದಲ್ಲಿ ೧೦ ಸಂಪುಟಗಳಲ್ಲಿ ವಿದ್ವತ್ ವಲಯವನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಹಿತ್ಯ ಚರಿತ್ರೆಯ ಯೋಜನೆಯನ್ನು ಹಾಕಿಕೊಂಡಿತು. ಸಾಂಸ್ಥಿಕ ಮಟ್ಟದ ಸಾಹಿತ್ಯ ಚರಿತ್ರೆಯ ಯೋಜನೆಯು ಸಂಪಾದಕರ ಮಾತಿನಲ್ಲಿಯೇ ಹೇಳುವುದಾದರೆಪ್ರಥಮ ಸಂಪುಟ,ಹಿನ್ನೆಲೆಯ ಸಂಪುಟದಲ್ಲಿ ಸಾಹಿತ್ಯ ಚರಿತ್ರೆಯ ಸ್ವರೂಪ, ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ, ಸಮೀಕ್ಷೆ, ವಿಸ್ತಾರ ಪರಿಮಿತಿ, ರಚನೆಗೆ ಇರುವ ಸಾಧನಗಳು, ವಿಭಜನಕ್ರಮ ; ಕವಿಕಾಲ ನಿರ್ಣಯದ ಆಧಾರಗಳು , ತೊಡಕುಗಳು ; ಭಾರತೀಯ ಹಿನ್ನೆಲೆ : ಕನ್ನಡ ನಾಡು ನುಡಿ ಜನತೆ ಕರ್ನಾಟಕ ಚರಿತ್ರೆಯ ಅವಲೋಕನ, ಸಾಂಸ್ಕೃತಿಕಧಾರ್ಮಿಕ, ಸಾಮಾಜಿಕ ಜನಜೀವನ ಕನ್ನಡ ಹಾಗೂ ಇತರ ಭಾಷೆಗಳ ಪರಸ್ಪರ ಸಂಬಂಧ, ಪ್ರಭಾವ ಮೊದಲಾದ ಸಾಮಾನ್ಯ ವಿಷಯಗಳನ್ನು ಒಳಗೊಂಡಿವೆ. ಎರಡರಿಂದ ಎಂಟನೆಯ ಸಂಪುಟಗಳವರೆಗೆ ಪ್ರತಿಯೊಂದು ಸಂಪುಟದಲ್ಲಿಯೂ ಆಯಾ ಅವಧಿಯ ಕವಿ ಕೃತಿಗಳ ವಿವರವಾದ ಪರಿಚಯ ಮಾತ್ರವಲ್ಲದೆ, ಭಾರತೀಯ ಹಿನ್ನೆಲೆ, ಜನಜೀವನ ಮತ್ತು ಸಾಹಿತ್ಯ; ದಕ್ಷಿಣ ಭಾರತದ ಇತರ ಭಾಷೆಯ ಸಾಹಿತ್ಯಗಳ ಸ್ಥಿತಿಗತಿಗಳು; ರಾಜಕೀಯ ಚರಿತ್ರೆ, ರಾಜಾಶ್ರಯ ಕನ್ನಡ ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜನಜೀವನ; ಭಾಷೆಯ ಸ್ವರೂಪ-ಮೊದಲಾದ ವಿಷಯಗಳ ವ್ಯಾಪಕ ಚರ್ಚೆಯನ್ನು ಒಳಗೊಂಡಿದೆ. ಆಯಾ ಸಂದರ್ಭಗಳಲ್ಲಿ ಪ್ರತಿಯೊಂದು ಸಾಹಿತ್ಯ ಪ್ರಕಾರದ ಉಗಮ, ವಿಕಾಸಗಳ ನಿರೂಪಣೆಯ ಜೊತೆಗೆ ಆಯಾ ಕಾಲಘಟ್ಟದ  ಸಾಹಿತ್ಯದ ವೈಶಿಷ್ಟ್ಯ ಸಾಧನೆಗಳನ್ನು ಪ್ರತಿ ಸಂಪುಟದಲ್ಲಿ ಗುರುತಿಸಿರುವುದನ್ನು ಕಾಣಬಹುದಾಗಿದೆ. ಏಳು ಎಂಟನೇ ಸಂಪುಟಗಳು ಆಧುನಿಕ ಸಾಹಿತ್ಯಕ್ಕೆ ಸಂಬಂಧಿಸಿದ್ದು, ಮೊದಲನೆಯದರಲ್ಲಿ ಕಾದಂಬರಿ, ಸಣ್ಣಕಥೆ, ಕಾವ್ಯ ಪ್ರಕಾರಗಳು ಸೇರುತ್ತವೆ. ಮಿಕ್ಕ ಸಾಹಿತ್ಯ ಪ್ರಕಾರಗಳು, ಶಾಸ್ತ್ರಗಳು ಎರಡನೆಯದರಲ್ಲಿ ಸಮಾವೇಶಗೊಳ್ಳುತ್ತವೆ. ಒಂಭತ್ತನೆಯ ಸಂಪುಟದಲ್ಲಿ ಒಟ್ಟು ಸಾಹಿತ್ಯದ ದೃಷ್ಟಿಯಿಂದ ಜನಪದ ಸಾಹಿತ್ಯ, ಶಾಸನಸಾಹಿತ್ಯ, ಗದ್ಯ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯಗಳನ್ನು ಕುರಿತು ವಿಚಾರ ಮಾಡುವುದಲ್ಲದೆ, ಕನ್ನಡ ಸಾಹಿತ್ಯಕ್ಕೆ ದೊರೆತ ರಾಜಾಶ್ರಯ ಜನಾಶ್ರಯ ಸಾಹಿತ್ಯಕ ಸಂಘಸಂಸ್ಥೆಗಳು; ಅವುಗಳ ಸಾಧನೆ ಇತರ ಭಾಷೆಗಳಲ್ಲಿ ಕನ್ನಡ ಕೃತಿಗಳು; ಕನ್ನಡದಲ್ಲಿ ಇತರ ಭಾಷೆಗಳ ಕೃತಿಗಳು ಕನ್ನಡ ಸಾಹಿತ್ಯದ ಮಹತ್ವ ಪರಿಮಿತಿ ಭಾರತೀಯ ಸಾಹಿತ್ಯದಲ್ಲಿ ಕನ್ನಡದ ನೆಲೆ ಬೆಲೆ; ವಿಶ್ವಸಾಹಿತ್ಯಕ್ಕೆ ಕನ್ನಡದ ಕೊಡುಗೆ ಮೊದಲಾದ ವಿಚಾರಗಳನ್ನು ದಾಖಲು ಮಾಡುವ ಉದ್ದೇಶವನ್ನು ಹೊಂದಿವೆಯಾದರೂ ಕೊನೆಯ ಈ ಸಂಪುಟಗಳು ಇನ್ನೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. 

ಮೈ.ವಿ.ವಿ.ಯ ಕನ್ನಡ ಅಧ್ಯಯನವು ಯೋಜಿಸಿದ್ದ ಸಾಂಸ್ಥಿಕ ಯೋಜನೆಯ ಸ್ಥೂಲ ಸ್ವರೂಪ

ಸಂಪುಟ ೧ : ಹಿನ್ನೆಲೆ

ಸಂಪುಟ ೨ : ಆದಿಕಾಲದಿಂದ ಕ್ರಿ.ಶ.ಸು. ೮೫೦

ಸಂಪುಟ ೩ : ಕ್ರಿ.ಶ. ಸು . ೮೫೦ - ಕ್ರಿ.ಶ. ಸು . ೧೧೫೦

          ಸಂಪುಟ ೪ : ಕ್ರಿ.ಶ. ಸು . ೧೧೫೦ - ಕ್ರಿ.ಶ. ಸು . ೧೩೫೦

          ಸಂಪುಟ ೫ : ಕ್ರಿ.ಶ. ಸು . ೧೩೫೦ - ಕ್ರಿ.ಶ. ಸು . ೧೬೫೦

ಸಂಪುಟ ೬ : ಕ್ರಿ.ಶ. ಸು . ೧೬೫೦ - ಕ್ರಿ.ಶ.ಸು. ೧೮೫೦

ಸಂಪುಟ ೭-೮ : ಕ್ರಿ.ಶ. ಸು . ೧೮೫೦ - ಕ್ರಿ.ಶ.ಸು. ೧೯೭೦

ಸಂಪುಟ ೯ : ಕೆಲವು ವಿಶೇಷ ರೂಪಗಳು , ವಿಷಯಗಳು

ಸಂಪುಟ ೧೦ : ಅನುಬಂಧಗಳು

ಯೋಜನೆಯ ಸ್ವರೂಪ ಹಾಗೂ ಗಾತ್ರವನ್ನು ಹತ್ತು ಸಂಪುಟಗಳ ವರೆಗೆ ಯೋಜಿಸಿದ್ದರೂ ೧೯೭೪-೨೦೧೨ರ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಕೇವಲ ಐದು ಸಂಪುಟಗಳು ಅದರ ಉಪಸಂಪುಟ ಭಾಗಗಳು ಮಾತ್ರ.

 

ಸಂಪುಟ    ಕಾಲಾವಧಿ                               ಪ್ರಕಟನ ವರ್ಷ        ಪುಟಗಳು

 ೧       ಹಿನ್ನಲೆ                                    ೧೯೭೪              ೭೬೩

 ೨       ಆದಿಕಾಲದಿಂದ ಸು.೮೫೦ರ ವರೆಗೆ                    ೧೯೭೫              ೮೩೯

 ೩       ಸು.ಕ್ರಿ.ಶ.೮೫೦ರಿಂದ ಸು.೧೧೫೦ರವರೆಗೆ                  ೧೯೭೬              ೯೦೭

 ೪       ಭಾಗ-೧ ಮತ್ತು ೨

         ಕ್ರಿ.ಶ.೧೧೫೦ರಿಂದ ಕ್ರಿ.ಶ.೧೩೫೦ರವರೆಗೆ                  ೧೯೭೭              ೧೮೩೨

 ೫       ಭಾಗ-೧ ಕ್ರಿ.ಶ.೧೩೫೦ರಿಂದ ಕ್ರಿ.ಶ.೧೪೨೪ರವರೆಗೆ            ೧೯೮೧               ೮೪೦

         ಭಾಗ-೨ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,       ೨೦೦೮

         ಭಾಗ-೩ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,       ೨೦೦೮

         ಭಾಗ-೪ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,       ೨೦೧೨

  ಈ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ ವಿಷಯ ಮಂಡನೆ ಖಂಡನೆಗಳಲ್ಲಿ ವಿದ್ವಾಂಸರಿಂದ ಮಾನ್ಯವಾದ ಸಂಗತಿಗಳನ್ನೆ ಅಳವಡಿಸಿಕೊಳ್ಳಲಾಗಿದೆ. ಸಂಶೋಧಕರ ಪ್ರಬಲವಾದ ವೈಯಕ್ತಿಕ ಅಭಿಪ್ರಾಯಗಳನ್ನು ತಮಗೆ ಕೊಟ್ಟ ವಿಷಯದಲ್ಲಿ ವ್ಯಕ್ತ ಮಾಡಿರುವುದರ ಜೊತೆಗೆ, ಆ ಅಭಿಪ್ರಾಯಗಳ ಜೊತೆಗೆ ಸ್ವೀಕೃತವಾದ ಸಾಮಾನ್ಯ ಅಭಿಪ್ರಾಯಗಳನ್ನು ಒಪ್ಪಿ ಹಾಗೆಯೇ ಉಳಿಸಿಕೊಂಡಿದ್ದಾರೆ. ಈ ಸಂಪುಟಗಳಲ್ಲಿ ಕವಿಗಳ ವಿಚಾರವಾಗಿ ಅನೇಕ ಸಂಶೋಧನಾತ್ಮಕ ಲೇಖನಗಳಲ್ಲಿ ಮೂಡಿ ಬಂದಿರುವ ವಿಚಾರಗಳನ್ನೆಲ್ಲಾ ಸಂಗ್ರಹಿಸಿ ಅಳವಡಿಸಿಕೊಳ್ಳಲಾಗಿದೆ. ಅಂದರೆ ಇಲ್ಲಿಯವರೆಗೂ ಸಾಹಿತ್ಯ ಚರಿತ್ರೆಯ ಬಗೆಗೆ ನಡೆದಿರುವ ಸಂಶೋಧನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. ವಿಷಯ ವಿಶ್ಲೇಷಣೆಗಿಂತ ಆಕರ ಸಾಮಗ್ರಿಗಳ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ ಗಣನೆಗೆ ಬಾರದೆ ಇರುವ ಅಸಂಖ್ಯ ಕವಿಗಳ, ಅವರ ಕೃತಿಗಳ ಬಗ್ಗೆ ಈ ಸಂಪುಟಗಳಲ್ಲಿ ಪ್ರಥಮ ಬಾರಿಗೆ ಅವಕಾಶ ಕಲ್ಪಿತವಾಗಿದೆ. ಶಾಸನೋಕ್ತರಾದ ಕವಿಗಳು, ಕೇವಲ ಹೆಸರಷ್ಟೇ ದೊರಕುವ ಕವಿಕೃತಿಗಳು ಇತ್ಯಾದಿಗಳ ಬಗೆಗೂ ಮಾಹಿತಿ ನೀಡಲಾಗಿದೆ. ಕವಿಗಳ ಕಾಲ ನಿರ್ಧಾರ ನಿಜಕ್ಕೂ ಒಂದು ಸಮಸ್ಯೆಯೇ. ಇಂದಿನವರೆಗೆ ನಡೆದ ಸಂಶೋಧನೆಯ ಬೆಳಕಿನಲ್ಲಿ ಕವಿಗಳ ಕಾಲವನ್ನು ಆದಷ್ಟು ಮಟ್ಟಿಗೆ ನಿರ್ದಿಷ್ಟಗೊಳಿಸಲು ಪ್ರಯತ್ನಿಸಿದ್ದಾರೆ. ಎಲ್ಲಿ ಬೇರೆ ಆಧಾರ ಸಿಕ್ಕಿಲ್ಲವೋ ಅಂತಹ ಕಡೆ ಕವಿಚರಿತೆಕಾರರು ಮತ್ತು ಇತರರು ಉಲ್ಲೇಖಿಸಿದ ಕಾಲವನ್ನೆ ಉಳಿಸಿಕೊಂಡಿದ್ದಾರೆ. ಕವಿ ಕೃತಿಗಳ ವಿಷಯದಲ್ಲಿ ಇದುವರೆಗೆ ನಡೆದಿರುವ ಚರ್ಚೆ ಎಲ್ಲವನ್ನೂ ಇರಬಹುದಾದ ಹೊಸ ಸಂಶೋಧನೆಗಳೊಡನೆ ಸಂಕ್ಷಿಪ್ತವಾಗಿ ನಿರೂಪಿಸುವುದು: ಸಾಧ್ಯವಾದ ಮಟ್ಟಿಗೂ ವಿಮರ್ಶಾತ್ಮಕವಾಗಿ ಕೃತಿಗಳ ಮೌಲ್ಯವನ್ನು ನಿರ್ಧರಿಸುವುದು ಈ ಸಾಹಿತ್ಯ ಚರಿತ್ರೆಯ ಸಂಪುಟಗಳ ಮುಖ್ಯ ಉದ್ದೇಶವಾಗಿರುವುದನ್ನು ನಾವು ನೋಡ ಬಹುದಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಭಾಗಿಯಾದ ಪ್ರತಿಯೊಂದು ಅಂಶವು ದಾಖಲಾಗಬೇಕೆಂಬ ಆಸಕ್ತಿ ಎದ್ದು ಕಾಣುತ್ತದೆ. ಈ ಸಾಹಿತ್ಯ ಚರಿತ್ರೆ ಒಂದು ರೀತಿಯಲ್ಲಿ ವಿಶ್ವಕೋಶದ ಮಾದರಿಯಲ್ಲಿದೆ. ಸಾಮಗ್ರಿಯನ್ನು ಸಂಗ್ರಹಿಸಿ, ಸಂಕಲಿಸಿ, ಸಂಯೋಜಿಸುವಲ್ಲಿ ಸಂಶೋಧನಾತ್ಮಕ ನೆಲೆಗಳು ವ್ಯಕ್ತವಾಗಿವೆ. ಸಾಮಗ್ರಿ ಹಾಗೂ ಪರಿಕರಗಳನ್ನು ವಿಪುಲವಾಗಿ ಒಳಗೊಂಡಿವೆ.

ಸಿ.ವೀರಣ್ಣ ಅವರ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟಗಳು: ಸಾಂಸ್ಥಿಕ ಮಟ್ಟದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯಗಳು ಸಮಗ್ರ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಹೊರತಂದ ಹೊತ್ತಿನಲ್ಲಿಯೇ ಕೆಲವು ವಿದ್ವಾಂಸರು ವೈಯಕ್ತಿಕವಾಗಿ ವಿಭಿನ್ನ ರೀತಿಯ ಒಳನೋಟಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸುವ ಪ್ರಯತ್ನದಲ್ಲಿ ಭಾಗಿಯಾದರು. ಸಾಹಿತ್ಯ ಚರಿತ್ರೆಯ ಮೂಲಕ ಕನ್ನಡ ನಾಡಿನ ಜನ ಜೀವನವನ್ನು ಒಳಹೊಕ್ಕು ನೋಡುವ, ಅದರ ಜೀವನಾಡಿಯ ಮಿಡಿತವನ್ನು ಗುರುತಿಸಬೇಕೆನ್ನುವ ಅಭಿಲಾಷೆಯಿಂದ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಎಂಬ ಯೋಜನೆಯಡಿಯಲ್ಲಿ ಸಿ.ವೀರಣ್ಣನವರು ಐದು ಸಂಪುಟಗಳಲ್ಲಿ ಸಿದ್ಧಪಡಿಸಲು ಸಿದ್ಧರಾದರು. ಸಾಹಿತ್ಯ ಕೃತಿಗಳ ಬಲದಿಂದ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿರುವುದನ್ನು ಕಾಣಬಹುದು.  ಸಿ.ವೀರಣ್ಣ ಅವರು ಸಮಾಜ ಮತ್ತು ಅದರ ಉತ್ಪನ್ನಗಳಲ್ಲಿ ಒಂದಾದ ಸಾಹಿತ್ಯವನ್ನು, ಸಮಾಜೋ-ವೈಜ್ಞಾನಿಕ ಮನೋಭೂಮಿಕೆಯಲ್ಲೇ ವಿಶ್ಲೇಷಿಸುವಂತಹ ಸಾಹಿತ್ಯ ಚರಿತ್ರೆಯನ್ನು ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಶೀರ್ಷಿಕೆಯಡಿಯಲ್ಲಿ ಐದು ಸಂಪುಟಗಳಲ್ಲಿ ಬರೆಯಲು  ಯೋಜನೆಯನ್ನು ಹಾಕಿಕೊಂಡಿದ್ದರು. ಅವುಗಳಲ್ಲಿ ೧. ಪ್ರಾಚೀನ ಸಾಹಿತ್ಯ ( ರಾಜಸತ್ತೆಯ ವೈಭವದ ಕಾಲ ಕ್ರಿ.ಶ.೮೫೦ ರಿಂದ ೧೧೦೦), ೨. ಮಧ್ಯಕಾಲೀನ ಸಾಹಿತ್ಯ ( ರಾಜಸತ್ತೆಯ ವಿಘಟನೆಯ ಕಾಲ ಕ್ರಿ.ಶ.೧೧೦೦ ರಿಂದ ೧೫೦೦) ಎಂಬ ಎರಡು ಸಂಪುಟಗಳು ಬಹಳ ಹಿಂದೆ ಪ್ರಕಟಗೊಂಡಿದ್ದು, ಪುನರ್ ಮುದ್ರಣಗಳನ್ನು ಕಂಡಿವೆ.  ಉಳಿದ ಸಂಪುಟಗಳಾದ ರಾಜಸತ್ತೆಯ ನಿಸ್ತೇಜದ ಕಾಲ ಕ್ರಿ.ಶ. ೧೫೦೦ ರಿಂದ ೧೮೫೦), ವಸಾಹತು ಶಾಹಿಯ ಕಾಲ (ಕ್ರಿ.ಶ.೧೮೫೦ ರಿಂದ ೧೯೫೦), ಬಂಡವಾಳ ಶಾಹಿಯ ಯುಗ (  ಪ್ರತಿಭಟನೆಯ ದನಿಗಳುಳ್ಳ ಆಧುನಿಕ ಸಾಹಿತ್ಯ, ಕ್ರಿ.ಶ. ೧೯೫೦ ರಿಂದ ಈಚೆಗೆ) ಗಳು ಸಿದ್ಧತೆಯಲ್ಲಿವೆ.  ಸಮಾಜ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಆಯಾ ಕಾಲದ ದಾಖಲೆಯ ಕುರುಹುಗಳಾಗಿ ಇವರ ಸಾಹಿತ್ಯ ಚರಿತ್ರೆಯ ಸಂಪುಟಗಳು ರೂಪುಗೊಂಡಿವೆ.

    ಇವರ ʻಕನ್ನಡ ಸಾಹಿತ್ಯ-ಚಾರಿತ್ರಿಕ ಬೆಳವಣಿಗೆ'ಯ ಮೊದಲ ಸಂಪುಟ ಪ್ರಕಟವಾದ ನಂತರ ಒಂದು ರೀತಿಯಲ್ಲಿ 'ಸಾಹಿತ್ಯ ಚರಿತ್ರೆಯನ್ನು ಅಭ್ಯಾಸ ಮಾಡುವ ಕ್ರಮವೇ ಬದಲಾಯಿತು', 'ಸಾಹಿತ್ಯ ಚರಿತ್ರೆ ಕುರಿತ ತಮ್ಮ ಆಲೋಚನೆಯ ದಿಕ್ಕನ್ನೇ' ಓದುಗರು  ಬದಲಾಯಿಸಿಕೊಂಡರು.  ಸಾಹಿತ್ಯ ಚರಿತ್ರೆ ಪಾಠ ಮಾಡುವ ಅಧ್ಯಾಪಕರುಗಳು  ಪಾಠಕ್ಕೊಂದು ನೋಟ ಒದಗಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇವರ ಸಾಹಿತ್ಯ ಚರಿತ್ರೆಯ ಸಂಪುಟಗಳು 'ರಾಜಕೀಯ ಸಾಮಾಜಿಕ ಚೌಕಟ್ಟಿನಲ್ಲಿ ಸಾಹಿತ್ಯ ಚರಿತ್ರೆಯ ನಿರೂಪಣೆ ಮತ್ತು ವಿಶ್ಲೇಷಣೆ ಮಾಡುವ ನೆಲೆಗಟ್ಟನ್ನು ಹೊಂದಿದ್ದು, ಕನ್ನಡದಲ್ಲಿ ಅಂಥ ಅಧ್ಯಯನ ಕ್ರಮವನ್ನು ಗಟ್ಟಿಗೊಳಿಸಿತು ಎಂದು ಅಧ್ಯಯನ ಕಾರರು ಈಗಾಗಲೇ  ಗುರುತಿಸಿದ್ದಾರೆ. ಡಾ. ಹಾ.ಮಾ. ನಾಯಕ ಅವರು 'ಹೊಸ ಹಾದಿ, ಹೊಸ ಹೊರಡುವಿಕೆʼ ಎಂದೂ, ರಂ.ಶ್ರೀ. ಮುಗಳಿ ಅವರು 'ಇದು ಎಷ್ಟೋ ವಿಚಾರಗಳಲ್ಲಿ ನನಗಿಂತ ಮುಂದಿದೆ' ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು  ಈ ಸಂಪುಟಗಳು ಸಾಹಿತ್ಯ ಚರಿತ್ರೆಯನ್ನು ನೋಡುವ ದೃಷ್ಟಿಕೋನದಲ್ಲಿ  ವಿಭಿನ್ನತೆಯನ್ನು ಹುಟ್ಟಿ ಹಾಕಿತು.  ವೈಯಕ್ತಿಕ ಸಾಹಿತ್ಯ ಚರಿತ್ರೆಗಳಲ್ಲಿ, ʻ ಕಿಟ್ಟೆಲ್ ಅವರದು ಕನ್ನೆ ಪ್ರಯತ್ನ, ಚರಿತ್ರೆಯನ್ನು ಒಂದು ರೂಪಕ್ಕೆ ತರುವುದೇ ಅಲ್ಲಿನ ಕೆಲಸ. ನರಸಿಂಹಾಚಾರ್ಯರದು ಕಣಜ ಪ್ರಯತ್ನ. ಸಾಮಗ್ರಿಯ ಸಂಗ್ರಹಣೆಯೇ ಅವರ ಗುರಿ. ಮುಗಳಿಯವರದು ಕಟ್ಟುವ ಪ್ರಯತ್ನ, ಚಾರಿತ್ರಿಕ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡುತ್ತ ಇತಿಹಾಸವನ್ನು ನಿರೂಪಿಸುವುದು ಅದರ ಸ್ವರೂಪ, ವೀರಣ್ಣನವರದು ಕೆದಕುವ ಪ್ರಯತ್ನ, ಒಂದು ವಿಶಿಷ್ಟ ದೃಷ್ಟಿಕೋನದಿಂದ ಚರಿತ್ರೆಯನ್ನು ವಿಶ್ಲೇಷಿಸುವುದು ಅದರ ಉದ್ದೇಶ. ಈ ನಾಲ್ಕು ಪ್ರಯತ್ನಗಳಿಂದ ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ವಿಶಿಷ್ಟವಾದ ರೂಪ ದೊರೆಯುವುದು ಸಾಧ್ಯವಾಗಿದೆ. ಬೇರೆ ಬೇರೆ ದೃಷ್ಟಿಕೋನಗಳಿಂದ ಸಾಹಿತ್ಯವನ್ನು ನೋಡುವುದು ವಿವಿಧ ಉದ್ದೇಶಗಳಿಂದ ಚರಿತ್ರೆಯನ್ನು ನಿರೂಪಿಸುವುದು ಸಹಜವಾದುದು. ವೀರಣ್ಣನವರ ಕೆಲಸ ಈ ದೃಷ್ಟಿಯಿಂದ ಒಂದು ನಾಂದಿ ಎನ್ನಬಹುದು. ( ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಹಾಮಾ ನಾಯಕ, ಬೆನ್ನುಡಿ,೨೦೧೯ ೬ನೆ ಮುದ್ರಣ)  

     ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಇಡಿಯಾದ ಮತ್ತು ಬಿಡಿಯಾದ ಸಂಶೋಧನೆಯಿಂದಾಗಿ ಸಾಹಿತ್ಯ ಚರಿತ್ರೆಯ ಪರಿಧಿ ವಿಸ್ತರಿಸಿತು. ಬೆಳವಣಿಗೆಯ ದೃಷ್ಟಿಯಿಂದ ವಿಕಾಸಹೊಂದಿತು. ಹೆಚ್ಚಿನ ಕವಿಗಳು, ಅವರ ಕೃತಿಗಳು ಬೆಳಕು ಕಂಡವು. ಕೃತಿಗಳ ಪಟ್ಟಿ ಬೆಳೆಯಿತು. ಹಸ್ತಪ್ರತಿಗಳ ರೂಪದಲ್ಲಿದ್ದ ಕೃತಿಗಳು ಸಂಪಾದನೆಗೊಂಡು ಪ್ರಕಟವಾದವು. ಸಾಹಿತ್ಯ ಚರಿತ್ರೆಗೆ ಪೂರಕವಾಗುವ ಕೆಲವು ಶಾಸನಗಳು ಶೋಧಿತವಾದವು. ಈ ಹಿನ್ನಲೆಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆಗಳಾದುದನ್ನು ಗುರುತಿಸಬಹುದು.

೧.     ಕವಿಗಳ ಜನ್ಮಸ್ಥಳಗಳಿಗೆ ಸಂಬಂಧಿಸಿದ ಹಾಗೆ ನೂತನ ಸಂಗತಿಗಳು ಬೆಳಕಿಗೆ ಬಂದವು.

೨.    ಕವಿಗಳ ತಂದೆ ತಾಯಿಗಳ, ಗುರುಗಳ ಆಶ್ರಯದಾತರ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದವು.

೩.     ಒಂದೇ ಹೆಸರಿನ ಇಬ್ಬರು ಕವಿಗಳನ್ನು ಒಬ್ಬನೇ ಎಂದು ತಿಳಿದುಕೊಂಡಿದ್ದು ದೂರವಾಗಿ ಬೇರೆ ಬೇರೆ ಎಂದು ನಿರ್ಧರಿತವಾಯಿತು.

೪.    ಕವಿಗಳನ್ನು, ಕೃತಿಗಳನ್ನು ಉಲ್ಲೇಖಿಸುವ ಶಾಸನಗಳು ಶೋಧಿಸಲ್ಪಟ್ಟವು.

೫.     ವಚನಕಾರರ ಹಾಗೂ ಹರಿದಾಸರ ಅಂಕಿತಗಳಲ್ಲಿ ಏರ್ಪಟ್ಟಿದ್ದ ಸಂದಿಗ್ಧತೆ ದೂರವಾಯಿತು.

೬.    ಒಬ್ಬನೇ ಬರೆದ ಕೃತಿಗಳನ್ನು ಇನ್ನಾರೋ ಕವಿಯ ಹೆಸರಿನಲ್ಲಿ ಗುರುತಿಸಿದ್ದು ನಿವಾರಣೆಯಾಯಿತು.

೭.     ವಚನಕಾರರು ವಚನಗಳ ರಚನೆಯ ಜೊತೆಯಲ್ಲಿಯೇ ಸ್ವರವಚನಗಳನ್ನು ಬರೆದಿದ್ದಾರೆಂಬ ಅಂಶ ಶೋಧಿತವಾಗಿ ಅಸಂಖ್ಯಾತ ಸ್ವರವಚನಗಳು ಹಾಗೂ ತತ್ವ ಪದಗಳು ಬೆಳಕು ಕಂಡವು.

೮.     ಕರ್ತೃ ಯಾರೆಂದು ತಿಳಿಯದಿದ್ದ ಕೃತಿಯೊಂದರ ಕರ್ತೃವಿನ ಹೆಸರು ಲಭಿಸಿತು. (ಇಮ್ಮಡಿನಾಗವರ್ಮ-ವರ್ಧಮಾನ ಪುರಾಣ).

೯.     ಕವಿಸಂಬಂಧಿ ಪ್ರಾಚೀನ ಸ್ಮಾರಕಗಳು ಬೆಳಕಿಗೆ ಬಂದವು. (ಹಂಪೆಯಲ್ಲಿನ ಹರಿಹರ ಹಾಗೂ ಚಾಮರಸರ ವಾಸಸ್ಥಳ ಶೋಧ).

೧೦.    ಕವಿಚರಿತೆಯ ಮೂರು ಸಂಪುಟಗಳಿಗೆ ಹಲವೆಡೆ ಸೂಕ್ತ ತಿದ್ದುಪಡಿ ಮಾಡಬೇಕೆನ್ನುವ ಅಂಶ ವ್ಯಕ್ತವಾಯಿತು.

೧೧.    ಎಷ್ಟೋ ಅನಾಮಧೇಯ ಕವಿಗಳು ಬೆಳಕಿಗೆ ಬಂದವು.

೧೨.    ಕವಿಚರಿತೆಯಲ್ಲಿ ಉಲ್ಲೇಖವಾಗದೆ ಇರುವ ಅಸಂಖ್ಯಾತ ಕವಿಗಳ ಕೃತಿಗಳು ಸಂಶೋಧನೆಯ ಮೂಲಕ ಬೆಳಕು ಕಂಡವು. ಹಸ್ತಪ್ರತಿ ತಜ್ಞ ಎಸ್. ಶಿವಣ್ಣನವರು ಕೊಡ ಮಾಡಿರುವ ಸಂಶೋಧನಾ ಮಾಹಿತಿಯಿಂದ ಕವಿಚರಿತೆಕಾರರು ಸೂಚಿಸಿದ್ದ ಕವಿಗಳ ಕಾಲದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ವಿಶೇಷವಾಗಿ ನಡುಗನ್ನಡ ಹಾಗೂ ನಂತರದ ಕಾಲದಲ್ಲಿಯ ಕವಿಗಳ ಕಾಲನಿರ್ಣಯದಲ್ಲಿ ಸಾಕಷ್ಟು ತಿದ್ದುಪಡಿಯಾಗಿದೆ. ಎಷ್ಟೋ ಕವಿಗಳ ಕಾಲವು ಸುಮಾರು ಇನ್ನೂರು ವರುಷ ಮುಂದೆ ಹಾಕಲಾಗಿದೆ. ಕೆಲವೆಡೆ ಹಿಂದಕ್ಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್. ಶಿವಣ್ಣನವರು ವಿವಿಧ ಮೂಲಗಳ ಆಕರಗಳ ಹಿನ್ನೆಲೆಯಲ್ಲಿ ನೀಡಿರುವ ಕವಿಗಳ ಕಾಲದ ಬಗೆಗಿನ ತಿದ್ದುಪಡಿ ವಿವರಗಳು ಇಂದು ೧೯ ನೇ ಶತಮಾನದವರೆಗಿನ ಆಧುನಿಕ ಪೂರ್ವದ ಸಾಹಿತ್ಯ ಚರಿತ್ರೆಯನ್ನು ಆಮೂಲಾಗ್ರ ಬದಲಾವಣೆಯನ್ನು ಮಾಡಬೇಕಾದ ಅನಿವಾರ್ಯತೆಯನ್ನು ವಿದ್ವಾಂಸರ ಮುಂದಿಟ್ಟಿದೆ.

    ಇಂದು ಸಂಶೋಧನೆಯಿಂದ ಬೆಳಕಿಗೆ ಬಂದ ನೂತನ ಸಂಗತಿಗಳನ್ನು ಅಳವಡಿಸಿಕೊಂಡು ಪರಿಷ್ಕೃತವಾದ ಸಮಗ್ರಸಾಹಿತ್ಯ ಚರಿತ್ರೆಯನ್ನು ರೂಪಿಸ ಬೇಕಾದ ಅಗತ್ಯತೆ ಇಂದು ವಿದ್ವಾಂಸರ ಮೇಲಿದೆ.ಇಂದಿಗೂ ಎಸ್.ಶಿವಣ್ಣ, ಎಲ್.ಬಸವರಾಜು, ವೀರಣ್ಣರಾಜೂರ, ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ, ಹಂಪನಾ, ಕೆ.ಅನಂತರಾಮು, ಬಿ.ಆರ್.ಹಿರೇಮಠ, ಬಿ.ಎಸ್.ಸಣ್ಣಯ್ಯ, ಎನ್.ಎಸ್.ತಾರಾನಾಥ, ಟಿ.ವಿ.ವೆಂಕಟಾಚಲಶಾಸ್ತ್ರಿ, ಬಿ.ನಂಜುಂಡಸ್ವಾಮಿ, ಸಿ.ನಾಗಭೂಷಣ ಮುಂತಾದ ವಿದ್ವಾಂಸರು ಶೋಧಿಸಿಕೊಟ್ಟಿರುವ ಸಂಶೋಧನಾ ವಿವರಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಅಳವಡಿಸಿಕೊಂಡು  ಕನ್ನಡ ಸಾಹಿತ್ಯ ಚರಿತ್ರೆಯ ಪರಿಪೂರ್ಣ ಹಾಗೂ ವಿಸ್ತೃತವಾದ ಪುನರ್ ಮೌಲ್ಯೀಕರಣದ ಅಧ್ಯಯನವನ್ನು ಕೈಕೊಳ್ಳಬೇಕಾಗಿದೆ.

 ಪರಾಮರ್ಶನ ಗ್ರಂಥಗಳು

೧. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ( ಪ್ರ.ಸಂ.ಜಿ.ಎಸ್.ಶಿವರುದ್ರಪ್ಪ) ಸಂಪುಟ-೧

 ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು೧೯೭೩

೨. ಸಿ.ನಾಗಭೂಷಣ, ಕನ್ನಡ ಸಂಶೋಧನೆ ಸಮೀಕ್ಷೆ

   ಶ್ರೀ. ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ.೨೦೦೬

೩.ಸಿ.ವೀರಣ್ಣ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಪ್ರಾಚೀನ ಸಾಹಿತ್ಯ ಸಂ.೧, ನವಕರ್ನಾಟಕ ಪ್ರಕಾಶನ, ಬೆಂಗಳೂರು, ೬ ನೇ ಮುದ್ರಣ, ೨೦೧೯)

೪. ಕನ್ನಡ ಸಾಹಿತ್ಯ ಚರಿತ್ರೆ,      ಸಂ:ಹಾ.ಮಾ.ನಾಯಕ

    ಸಂಪುಟ-೫ ಕನ್ನಡ ಅಧ್ಯಯನ ಸಂಸ್ಥೆಮೈ.ವಿ.ವಿ.ಮೈಸೂರು. ೧೯೮೧

೫.  ಕನ್ನಡ ಸಾಹಿತ್ಯ ಚರಿತ್ರೆರಂ.ಶ್ರೀ.ಮುಗಳಿ  ಪ್ರ: ಉಷಾ ಸಾಹಿತ್ಯ ಮಾಲೆ, ಮೈಸೂರು. ೧೯೭೧

೬. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ,

    ಸಂ. ರಾಮೇಗೌಡ. ಸಂ.೫. ನಾಲ್ಕನೆಯ ಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೨೦೧೨

೬. ಶ್ರೀಮುಖ(ಟಿ.ವಿ.ವೆಂಕಟಾಚಲಶಾಸ್ತ್ರಿ ಅವರ ಅಭಿನಂದನಾ ಗ್ರಂಥ) ಸಂ: ಪ್ರಧಾನ ಗುರುದತ್ತ ಮತ್ತು ಇತರರು, ಮೈಸೂರು,೧೯೯೭

೭. ಕರ್ನಾಟಕ ಕವಿಚರಿತೆ ಭಾಗ ೨ ಮತ್ತು ೩ ಸಂ. ಆರ್. ನರಸಿಂಹಾಚಾರ್ಯ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೧೯೭೩, ೧೯೭೪.

 

 

 

    ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಅಧ್ಯಯನ ವಿಧಾನದ ಇತಿಹಾಸದ ತಾತ್ವಿಕ ನಿಲುವುಗಳು                           ಡಾ.ಸಿ.ನಾಗಭೂಷಣ      ಜಗತ್ತಿನ...