ಕೆಲವು ಅಜ್ಞಾತ ವಚನಕಾರರು
(ಮುನುಮುನಿ ಗುಮ್ಮಟದೇವ, ಭೋಗಣ್ಣ ಮಡಿವಾಳಯ್ಯಗಳ ಸಮಯಾಚಾರದ ಮಲ್ಲಿಕಾರ್ಜುನದೇವ) ಡಾ.ಸಿ.ನಾಗಭೂಷಣ
ಮನುಮುನಿ ಗುಮ್ಮಟದೇವ: ವಚನಕಾರ ಮನುಮುನಿ ಗುಮ್ಮಟದೇವನು ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರ
ಲಿಂಗ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರ ಲಿಂಗ ಈ ಎರಡು ಅಂಕಿತಗಳಲ್ಲಿ ವಚನಗಳನ್ನು ರಚಿಸಿದ್ದಾನೆ.
ಬಸವಯುಗದಲ್ಲಿ ಕಂಡು ಬರುವ ಈತನ ವೈಯಕ್ತಿಯ ವಿಚಾರಗಳ ಕುರಿತು ಹೆಚ್ಚಿನ ವಿಷಯಗಳು ತಿಳಿದು ಬಂದಿಲ್ಲ.
ಇವನ ವಚನಗಳಲ್ಲಿಯ ಕೆಲವು ಆಂತರೀಕ ಸಾಕ್ಷ್ಯಗಳು ಕೆಲವು ಮಾಹಿತಿಯನ್ನು ಪರೋಕ್ಷವಾಗಿ ಒದಗಿಸಿವೆ. ಈತನ
ವಚನಗಳ ಸಂಕಲನದ ಆರಂಭದಲ್ಲಿಯ ಪೀಠಿಕಾ ಭಾಗದಲ್ಲಿಯ ಗದ್ಯಭಾಗವು ಈತನು ಮೊದಲು ಜೈನಮತದವನಾಗಿದ್ದು ನಂತರ
ವೀರಶೈವ ಮತಕ್ಕೆ ಪರಿವರ್ತನೆ ಹೊಂದಿದವನೆಂಬುದರ ಸೂಚನೆಯನ್ನು ಒದಗಿಸುತ್ತದೆ. ಆಭಾಗ ಇಂತಿದೆ.
ಬಿಜ್ಜಳಂಗೆ ಹದಿನೆಂಟು ದೋಷಂಗಳ ತೀರ್ಚಿ ಎಂಭತ್ತು ನಾಲ್ಕು
ಲಕ್ಷ ಜೀವರಾಶಿಗಳ ಸರ್ವ ಆತ್ಮ ಭೂತ ಹಿತವಾಗಿ ಇರೆಂದು ಆತಂಗೆ ಗುರುವಾದ ಮೀಮಾಂಸಕ ಆ ಮೀಮಾಂಸಕಂಗೆ ಸಕಲ
ವ್ರತನೇಮ ನಿತ್ಯ ವ್ರತಮಾನ ಕೃತ್ಯ ಜಿನನೇಮ ಗುಣನಾಮವಂ ಬೋಧಿಸಿದ, ಬೌದ್ಧಂ ಅವತಾರಕ್ಕೆ ಮುಖ್ಯ ಆಚಾರ್ಯನಾದ
ತನ್ನ ಸಮಯಕ್ಕೆ ಸಿಂಧು ಚಂದ್ರನಾದ ಮುನಮುನಿ ಗುಮ್ಮಟದೇವಗಳ ವಚನ
ಈ ಗದ್ಯಭಾಗ ಸಂಕಲನಕಾರನಿಂದ ರಚಿತವಾಗಿದೆಯೆಂಬುದು ನಿಶ್ವಿತ.
ಈ ಗದ್ಯಭಾಗದಲ್ಲಿ ಎರಡು ಸಂಗತಿಗಳು ಗಮನಾರ್ಹವಾಗಿವೆ.
೧. ಬಿಜ್ಜಳನು ಜೈನನಾಗಿದ್ದನೆಂಬುದು.
೨. ಗುಮ್ಮಟದೇವನು ಬಿಜ್ಜಳನ
ಗುರುವಿನ ಗುರು ಎಂಬುದು.
ಆದರೆ ಈ ಗದ್ಯದಲ್ಲಿಯ
ಒಂದು ಸಾಲು ಅನುಮಾನಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ‘ಬೌದ್ಧಂ ಅವತಾರಕ್ಕೆ ಮುಖ್ಯ ಆಚಾರ್ಯನಾದ ಎಂಬುದು
ಜೈನ-ಬೌದ್ಧ ಮತಗಳಿಗೆ ವ್ಯತ್ಯಾಸವಿಲ್ಲದಂತೆ ಪ್ರಯೋಗವಾಗಿದೆ. ಈ ಹೇಳಿಕೆಯ ಬಗೆಗೆ ಕವಿಚರಿತೆಕಾರರು
ಬಹುಶ: ಇದು ತಪ್ಪಿನಿಂದಾಗಿರಬಹುದು ಎಂಬ ಅಭಿಪ್ರಾಯ ತಾಳಿದ್ದಾರೆ. ಈ ಸಂಕಲನ ಕಾರರಿಗೆ ಜೈನ-ಬೌದ್ಧ
ಮತಗಳಿಗೆ ಇರುವ ವ್ಯತ್ಯಾಸ ತಿಳಿಯದೆ ಈ ರೀತಿಯಾಗಿ ವ್ಯಕ್ತಪಡಿಸಿದ್ದಾನೆ ಎಂದೆನಿಸುತ್ತದೆ. ಆದಾಗ್ಯೂ
ಈ ವಚನ ಗದ್ಯಭಾಗ ಪ್ರಕ್ಷಿಪ್ತವೊ ಅಥವಾ ಪರಂಪರಾಗತ ದೋಷದಿಂದಾಗಿ ಬೌದ್ಧ ಎಂಬುದು ನುಸುಳಿದೆಯೇ ಎಂಬ
ಅನುಮಾನವು ನಮ್ಮನ್ನು ಕಾಡುತ್ತದೆ. ಮನುಮುನಿ ಗುಮ್ಮಟದೇವನು ಸಮಸ್ಯಾತ್ಮಕ ವ್ಯಕ್ತಿಯಾಗಿದ್ದಾನೆ. ಆದಾಗ್ಯೂ
ಈತನು ಮೊದಲಿಗೆ ಜೈನನಾಗಿದ್ದು ಅನಂತರ ವೀರಶೈವ ಮತಕ್ಕೆ ಪರಿವರ್ತನೆ ಹೊಂದಿದ ವ್ಯಕ್ತಿಯಾಗಿದ್ದಾನೆಂಬುದಕ್ಕೆ
ಈತನ ವಚನದಲ್ಲಿಯ ‘ಜಿನವಾಸ ಬಿಟ್ಟು ದಿನನಾಶನ ವಾಸವಾಯಿತ್ತು’ ಎಂಬ ನುಡಿಗಳು ಸಮರ್ಥಿಸುತ್ತವೆ.
ಕವಿಚರಿತೆಕಾರರು ಈತನ ಕಾಲವನ್ನು ಬಸವನ ಸಮಕಾಲೀನರ ಕಾಲವನ್ನು
ಹೇಳುವ ಹಾಗೆ ಕ್ರಿ.ಶ.೧೧೬೦ ಎಂದು ಗುರುತಿಸಿದ್ದು, ಈತನು ತನ್ನ ವಚನಗಳನ್ನು ಬಸವಣ್ಣನನ್ನು ಕುರಿತು
ಸ್ಮರಿಸದಿದ್ದರೂ ಒಂದು ವಚನದಲ್ಲಿ
‘ಅಂದಿಂಗೆ ಅನಿಮಿಷ ಕೈಯಲ್ಲಿ
ಇಂದಿಗೆ ಪ್ರಭುವಿನ ಗುಹೆಯಲ್ಲಿ
ಗುಹೇಶ್ವರನಾದೆ
ಎನ್ನ ಗುಡಿಗೆ ಬಂದು ಗುಮ್ಮಟಂಗೆ
ಮಠಸ್ಥನಾದೆ
ಅಗಮ್ಯೇಶ್ವರ ಲಿಂಗವೇ’
(ವ.ಸಂ.೧೦೯೨, ಸ.ವ.ಸಂ.೩.)
ಎಂದು ಅಲ್ಲಮ ಪ್ರಭುವಿನ
ಬಗೆಗೆ ಉಲ್ಲೇಖಿಸಿರುವುದರಿಂದ ಈತನು ಬಸವಯುಗದ ಒಬ್ಬ ವಚನಕಾರನೆಂದು ಭಾವಿಸಬಹುದಾಗಿದೆ.
ಜೈನನಾಗಿದ್ದ ಮನುಮುನಿ ಗುಮ್ಮಟದೇವನು ಯಾರ ಒತ್ತಡದಿಂದಾಗಿ
ಹಾಗೂ ಏತಕ್ಕಾಗಿ ಜೈನಮತವನ್ನು ತ್ಯಜಿಸಿ ವೀರಶೈವನಾದ ಎಂಬುದಕ್ಕೆ ಎಲ್ಲಿಯೂ ಉಲ್ಲೇಖಗಳು ದೊರೆಯುತ್ತಿಲ್ಲ.
ಅಲ್ಲಮಪ್ರಭುವನ್ನು ಕುರಿತು ಉಲ್ಲೇಖಿಸಿರುವ ವಚನದಲ್ಲಿಯ ವಿವರವು ಈತನು ಅಲ್ಲಮ ಪ್ರಭುವಿನಿಂದ ವೀರಶೈವ
ದೀಕ್ಷೆಯನ್ನು ಪಡೆದಿರಬೇಕೆಂಬುದರ ಬಗೆಗೆ ಎಳೆ ಸಿಗುತ್ತಾದರೊ ಸಮರ್ಥಿಸಲು ಹೆಚ್ಚಿನ ಸಾಕ್ಷ್ಯಾಧಾರಗಳು
ಬೇಕಾಗಿವೆ.
ಈತನ ಹೆಸರಿನಲ್ಲಿ ದೊರೆಯುವ ವಚನಗಳ ಸಂಖ್ಯೆ ೧೦೦ ಎಂದು
ಕವಿಚರಿತೆಕಾರರು ಹೇಳಿದ್ದರೂ ಸದ್ಯಕ್ಕೆ ೯೯ ವಚನಗಳು ಮಾತ್ರ ದೊರೆತಿವೆ. ಕ.ವಿ.ವಿ.ಯಿಂದ ಸುಂಕಾಪುರರ
ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಕಲ ಪುರಾತನರ ವಚನಗಳು ಸಂಪುಟದಲ್ಲಿ ೧ರಲ್ಲಿ ಹಾಗೂ ಇತ್ತೀಚೆಗೆ
ಕರ್ನಾಟಕ ಸರ್ಕಾರದಿಂದ ಪ್ರಕಟವಾಗಿರುವ ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿಯ ಸಂಕೀರ್ಣ ವಚನ ಸಂಪುಟ
೩ರಲ್ಲಿಯೂ ಈತನ ಹೆಸರಿನಲ್ಲಿ ೯೯ ವಚನಗಳು ಮಾತ್ರ ಪ್ರಕಟವಾಗಿವೆ. ಈ ವಚನಗಳ ಅಂಕಿತವು ‘ಗುಡಿಯ ಗುಮ್ಮಟನೊಡೆಯ
ಅಗಮ್ಯೇಶ್ವರ ಲಿಂಗ, ಅಥವಾ ‘ಗೂಡಿನೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ’, ಆಗಿದೆ.
ಈತನು ಜೈನಮತದಿಂದ ವೀರಶೈವ ಧರ್ಮದ ಮತಾಂತರ ಹೊಂದಿದ ನಂತರ
ವಚನಗಳನ್ನು ರಚಿಸಿದ್ದರೂ ಈತನ ಬಹುಪಾಲು ವಚನಗಳಲ್ಲಿ ಹೆಚ್ಚಾಗಿ ಭಕ್ತಸ್ಥಲ ಹಾಗೂ ಐಕ್ಯಸ್ಥಲದ ವಿಚಾರಗಳ
ಗ್ರಹಿಕೆಯನ್ನು ಕಾಣಬಹುದಾಗಿದೆ.
ಈತನ ವಚನಗಳಲ್ಲಿ ದಯವೇ ಧರ್ಮದ ಮೂಲ, ಏಕದೇವೋಪಾಸನೆ ಪರಮತ
ದೂಷಣೆಯಂತಹ ಸಂಗತಿಗಳ ಬಗೆಗೆ ವಿವರಣೆ ವಿರಳವಾಗಿ ಕಂಡು ಬರುತ್ತದೆ. ಈತನ ಬಹುಪಾಲು ವಚನಗಳು ಬೆಡಗಿನವಚನಗಳಾಗಿವೆ.
ಕೆಲವೆಡೆ ತಾನು ಪ್ರತಿಪಾದಿಸಬೇಕಾದ ವಿಷಯಗಳನ್ನು ಹಲವಾರು ನಿದರ್ಶನಗಳ ಮೂಲಕ ನಿರೂಪಿಸಲಾಗಿದೆ.
ಈತನ ವಚನಗಳಲ್ಲಿ ಸೌಂದರ್ಯದ ಜೊತೆಗೆ ಭಾವವೂ ಕೇಂದ್ರೀಕೃತ
ಗೊಂಡಿರುವುದನ್ನು ಕಾಣಬಹುದು.
ಕಣ್ಣಿನಲ್ಲಿ ನೋಡುವಡೆ
ತೊಗಲಿನವನಲ್ಲ
ಕೈಯಲ್ಲಿ ಹಿಡಿವಡೆ ಮೈಯಿವನಲ್ಲ
ಭಾವದಲ್ಲಿ ನೋಡುವಡೆ ಬಯಲ
ಸ್ವರೂಪ
ನಿನ್ನೊದಗ ಏತರಿಂದರಿವೆ
ಎನ್ನಭ್ರಾಂತಿನ ಬಲೆಗೆ
ಸಿಕ್ಕಿಸಿಹೋದೆ (ವ.ಸಂ.೨೩)
ಗುಡಿಯ ಗುಮ್ಮಟನೊಡೆಯ
ಅಗಮ್ಯೇಶ್ವರಲಿಂಗ ವಚನದಲ್ಲಿ ಅನಾಥ ಶಿಶುವಿನ ಹಂಬಲವನ್ನು ಗುರುತಿಸಬಹುದಾಗಿದೆ.
ದಯವೇ ಧರ್ಮದ ಮೂಲ ಎಂಬುದನ್ನು ಈ ಕೆಳಕಂಡ ವಚನವು ಅತ್ಯಂತ
ನವುರಾಗಿ ಬಿಂಬಿಸಿಸಿದೆ.
ಕುಲ ಜಾತಿ ವರ್ಗದ ಶಿಶುಗಳಿಗೆ
ಹಲವು ಭೇದದ ಹಾಲು
ನಲವಿಂದ ತಮ್ಮ ತಮ್ಮ ಮೊಲೆಗಳ
ಉಂಡಲ್ಲದೆ ಬೆಳವಣಿಗೆಯಿಲ್ಲ
ಹಾಲು ದೇಹ ಹಲವಾದಡೆ ಅಳಿವು
ಉಳಿವು ಎರಡೇ ಭೇದ
ಏನನರಿತಡೂ ಜೀವನ ನೋವನರಿಯಬೇಕು
ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು
ಬಿರುದು ಹಿರಿಯರೆಂದಡೆ
ಬಿಡಬೇಕಲ್ಲದೆ
ಕಡಿಯಬಹುದೆ ಅಯ್ಯಾ?
(ವ.ಸಂ.೪೩)
ಈತನ ಪ್ರಕಾರ ಪರಮಾತ್ಮನು
ಒಬ್ಬನೇ. ಜ್ಞಾನ ಗುರುಕೊಟ್ಟ ಭಾವದ ಲಿಂಗವಿರೆ (ವ.ಸಂ.೪೬)
ಮತ್ತೇನನು ನೋಡಲೇಕೆ?
ಗಂಡನುಳ್ಳವಳಿಗೆ ಮತ್ತೊಬ್ಬ ಬಂದಡೆ ಚಂದವುಂಟೆ? ಎಂದು ಪ್ರಶ್ನಿಸುತ್ತಾನೆ.
ಅಮೃತದ ಗುಟಿಕೆಯ ಮರೆದು
ಅಂಬಲಿಯನರಸುವನಂತೆ
ಶಂಬರ ವೈರಿ ತನ್ನಲ್ಲಿ
ಇದ್ದು
ಕುಜಾತಿಯ ಬೆಂಬಳಿಯಲ್ಲಿ
ದೋಹವರಿಗೆ
ಗುಡಿಯೊಡೆಯ ಗುಮ್ಮಟನಾಥನ
ಅಗಮ್ಯೇಶ್ವರ ಲಿಂಗ
ಅವರಿಗೆ ಇಲ್ಲಾ ಎಂದೆ
ಎಂಬಲ್ಲಿ (ವ.ಸಂ.೪೫)
ಪರಮತಗಳ ಬಗೆಗೆ ತಿರಸ್ಕಾರವನ್ನು ಕಾಣಬಹುದು.
ಈತನ ವಚನಗಳಲ್ಲಿ ಉಪಮೆ, ಗಾದೆ, ನಾಣ್ಣುಡಿಯಂತಹ ಮಾತುಗಳು
ಸಂದರ್ಭೋಚಿತವಾಗಿ ಪ್ರಯೋಗಗೊಂಡಿವೆ.
ನಿದರ್ಶನಕ್ಕೆ: ಪ್ರಾಣ
ತುಡುಕಿಗೆ ಬಂದಲ್ಲಿ ಕೊರಳ ಹಿಡಿದು ಅವುಂಕಿದರೆಂಬ
ಅಪಕೀರ್ತಿಯೇಕೆ.
ಬೇವ ಮನೆಗೆ ಕೊಳ್ಳಿಯ
ಹಾಕಿ ದುರ್ಜನವ ಹೊರುವನಂತೆ
ಆಲೆಯ ಮನೆಯಲ್ಲಿ ಅಕ್ಕಿಯ
ಹೊಯಿದು ಕೋಣೆಯಲ್ಲಿ ಕೂಳನರಸುವನಂತೆ
ಸುರೆಯ ಮಡಕೆಯಲ್ಲಿ ಹೂಸಿಪ್ಪ
ಶ್ವೇತದಂತೆ (ವ.ಸಂ.೪೪)
ನೋಡುವಲ್ಲಿ ನೆರೆ ಶೃಂಗಾರವಲ್ಲದೆ
ಕೂಡುವಲ್ಲಿ ಉಂಟೆ?
ನುಡಿವಲ್ಲಿ ಮಾತಿನ ಬಲುಮೆಯಲ್ಲದೆ....
(ವ.ಸಂ.೬೯)
ಆತುರ ಹಿಂಗದವಂಗೆ ವೇಶೆಯ
ಪೋಷಿಸಲೇಕೆ
ಈಶ್ವರನ ನರಿಯದವಂಗೆ ಸುಕೃತದ
ಪೂಜೆಯ ಪುಣ್ಯವದೇಕೆ? (ವ.ಸಂ.೯೪)
ಈತನು ತಾನು ಹೇಳಬೇಕಾದ
ತತ್ವವನ್ನು ಹಲವಾರು ನಿದರ್ಶನಗಳನ್ನು ಕೊಟ್ಟು ಸ್ಪಷ್ಟಪಡಿಸಿರುವ ರೀತಿಯನ್ನು ಕೆಲವು ವಚನಗಳು ಸಾಬೀತು
ಪಡಿಸುತ್ತವೆ.
ಉದಾ: ಗತಿಯ ತೋರಿಹೆನೆಂದು
ಪ್ರತಿರೂಪಾದೆ
ಎಳ್ಳಿನೊಳಗಣ ಎಣ್ಣೆ,
ಕಲ್ಲಿನೊಳಗಣ ಬೆಂಕಿ
ಬೆಲ್ಲದೊಳಗಣ ಮಧುರ
ಅಲ್ಲಿಯೆ ಅಡಗಿ ಮಥನದಿಂದಲ್ಲದೆ
ತೋರದವೊಲು
ಅಲ್ಲಿಯೇ ಅಡಗಿದೆ ಗುಡಿಯೊಳಗೆ
(ವ.ಸಂ.೫೬)
ಶಿಲೆಯೊಳಗಣ ಭೇದದಿಂದ
ಒಲವರವಾಯಿತ್ತು
ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ
ಹೊಳೆ ಒಂದೆ ಹಾದಿಯ ಒಲಬು
ಬೇರಲ್ಲದೆ
ಧರೆ ಸಲಿಲ ಪಾವಕ ಇವು
ಬೇರೆ ದೇವರ ಒಲವರವುಂಟೆ
ಧರೆ ಎಲ್ಲರಿಗೂ ಆಧಾರ,
ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ
ಪಾವಕ ಸರ್ವಮಯರಿಗೆ ದಗ್ಧ
ಸರ್ವಮಯ ಪೂಜಿತ ದೈವದ
ಆಧಾರ ನೀನಿಲ್ಲದೆ ಬೇರೆಯಿಲ್ಲ
ಗುಡಿಯ ಗುಮ್ಮಟನೊಡೆಯ
ಅಗಮ್ಯೇಶ್ವರಲಿಂಗವೆ (ವ.ಸಂ.೬೬)
ಕೊಲುವರಿಗೆ ಜೀವದ ದಯವಿಲ್ಲ
ಪರಾಂಗನೆಯ ಬೆರಸುವಂಗೆ
ತರಮೇಶ್ವರನ ಒಲಿವರವಿಲ್ಲ
ಪರರುವ ಬಂಧಿಸಿ ಬೇಡುವಂಗೆ
ಧನದ ಒಲವರವಿಲ್ಲ (ವ.ಸಂ.೫೯)
ಇತ್ಯಾದಿ ವಚನಗಳ ಸಾಲುಗಳು
ಓದುಗರನ್ನು ಆಲೋಚನೆಗೊಳಪಡಿಸುವಲ್ಲಿ ಸಾರ್ಥಕತೆಯನ್ನು ಪಡೆದಿವೆ.
ಈತನ ಲಭ್ಯವಿರುವ ೯೯ ವಚನಗಳಲ್ಲಿ ಸುಮಾರು ೪೨ ವಚನಗಳು
ಬೆಡಗಿನಿಂದ ಧಾಟಿಯಿಂದ ಕೂಡಿವೆ. ಉದಾಹರಣೆಗೆ ಇಲ್ಲಿ ಒಂದು ವಚನವನ್ನು ಉಲ್ಲೇಖಿಸಲಾಗಿದೆ.
ಗಿರಿಯ ಗುಹೆಯಲ್ಲಿ ಒಂದು
ಅರಿ ಬಿರಿದಿನ ಹುಲಿ
ಹುಲ್ಲೆಯ ಭಯಕಾಗಿ ಎಲ್ಲಿಯೂ
ಹೊರಡಲಮ್ಮದೆ ಅಲ್ಲಿ ಅದೆ
ಅದ ಮೆಲ್ಲನೆ ನೋಡಿ ಬಿಲ್ಲಂಬಿನಲ್ಲಿ
ಎಸೆಯೆ
ಹುಲಿಹಾರಿ ಹುಲ್ಲೆಯಾಯಿತ್ತು
ಆ ಹುಲ್ಲೆ ಬಲೆಯೊಳಗಲ್ಲ
ಬಾಣದೊಳಗಲ್ಲ
ಎಲ್ಲಿಯೂ ಸಿಕ್ಕದು ಇದ
ಬಲ್ಲವರಾರು?
ಗುಡಿಯ ಗುಮ್ಮಟನೊಡೆಯ
ಅಗಮ್ಯೇಶ್ವರಲಿಂಗ
ತಿರುಗುವ ಭರಿತನು (ವ.ಸಂ.೨೭)
ಈ ಮೇಲ್ಕಂಡ ಬೆಡಗಿನ ವಚನಗಳಲ್ಲಿ ಪರಮಾತ್ಮನನ್ನು ಅನುಷ್ಠಾನಗೊಳಿಸಿಕೊಳ್ಳುವ
ಪರಿಯನ್ನು ಗೂಡಾರ್ಥದಲ್ಲಿ ಹೇಳಲಾಗಿದೆ. ಸಕಲ ಚರಾಚರಗಳಲ್ಲಿಯು ಪರಮಾತ್ಮನು ಇರತಕ್ಕವನು. ಅವನು ಅಹಂಕಾರಯುತವಾದ
ಜೀವಿಯ ದೇಹದ ಮಧ್ಯಭಾಗದಲ್ಲಿಯೂ ಅಡಗಿ ಕುಳಿತಿರುತ್ತಾನೆ. ಮಾಯಾಪಾಶಬದ್ಧರಾದ ಜೀವಿಗಳ ಕಣ್ಣಿಗೆ ಆತ
ಅಗೋಚರ. ಅವನನ್ನು ಕೇವಲ ಸುಜ್ಞಾನದಿಂದಾಗಲೀ ಮೋಕ್ಷದಿಂದಾಗಲೀ ಕೈವಶಮಾಡಿಕೊಳ್ಳಲು ಸಾಧ್ಯವಿಲ್ಲ. ಸದ್ಬಾವ
ಸುಮನಗಳನ್ನೊಳಗೊಂಡು ಸುಜ್ಞಾನವನ್ನು ಅನುಷ್ಠಾನ ಮಾಡಿದಾಗ ಮಾತ್ರ ಆತನನ್ನು ಕೈವಶಮಾಡಿಕೊಳ್ಳುವುದು
ಸಾಧ್ಯ. ಈ ವಿಷಯವನ್ನು ಇಲ್ಲಿ ಮುನುಮುನಿ ಗುಮ್ಮಟದೇವನು ಪರಮಾತ್ಮನನ್ನು ಹುಲಿಯನ್ನಾಗಿಯೂ, ಜೀವಿಯನ್ನು
ಹುಲ್ಲೆಯನ್ನಾಗಿಯೂ ರೂಪಿಸಿಕೊಂಡು ಅರ್ಥವತ್ತಾಗಿ ವಿವರಿಸಿದ್ದಾನೆ.
ಕೆಲವೆಡೆ ಈತನ ವಚನಗಳಲ್ಲಿ ಅತ್ಯಂತ ನವುರಾದ ವಿಡಂಬಣೆಯಿಂದ
ಕೂಡಿರುವುದನ್ನು ಕಾಣ ಬಹುದಾಗಿದೆ.
ಅರಿವಿಲ್ಲದವನ ಸಂಗ ಯಾವತೆರನಾಗಿರುತ್ತದೆಂಬುದನ್ನು ನಿರೂಪಿಸುವಲ್ಲಿ
ಹಾದಿಯ ತೋರಿದವರೆಲ್ಲರು
ಭಯಕ್ಕೆ ನಿರ್ಭಯವಂತರಾಗಬಲ್ಲರೆ?
ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು
ವೇದಿಸಬಲ್ಲರೆ ನಿಜತತ್ವವ?
ಹಂದಿಯ ಶೃಂಗಾರ, ಪೂಷನ ಕಠಿಣದಂದ ಎಂದು ಬಳಸಿರುವುದು ಗಮನಾರ್ಹವಾಗಿದೆ.
ಒಟ್ಟಾರೆ
ಮನುಮುನಿ ಗುಮ್ಮಟದೇವನ ವಚನಗಳು ಕಿರಿದರಲ್ಲಿ ಹಿರಿದರ್ಥವನ್ನು ತುಂಬಿಕೊಂಡು ಭಾಷೆಬಂಧಗಳ ಬಿಗುವನ್ನು
ಹೊಂದಿವೆ.ಕೆಲವೆಡೆ ಸ್ವಂತಿಕೆಯುಂಟು. ಸ್ವಾನುಭವದ ಅಚ್ಚಿನಲ್ಲಿ ಒಡಮೂಡಿರುವ ಶಿವಾನುಭವನ್ನು ಕೆಲವೆಡೆ
ಗುರುತಿಸ ಬಹುದಾಗಿದೆ.ಮುನುಮುನಿ ಗುಮ್ಮಟದೇವರಂತಹ ಅಲಕ್ಷಿತ ವಚನಕಾರರು ಕೀರ್ತಿಗಾಗಿ, ಪಾಂಡಿತ್ಯ ಪ್ರದರ್ಶನಕ್ಕಾಗಿ
ಎಂದಿಗೂ ವಚನಗಳನ್ನು ರಚಿಸಿದವರಲ್ಲ. ಅವರ ಅಂತರಂಗದ ಅನುಭಾವ ಹೃದಯತುಂಬಿ ಹೊರಸೂಸಿ ವಚನರೂಪ ತಾಳಿವೆ.ತಾವು
ಪಡೆದ ಆಧ್ಯಾತ್ಮ ಜ್ಞಾನವನ್ನು ತಮ್ಮ ಲೌಕಿಕ ಜ್ಞಾನದೊಂದಿಗೆ ಸಮ್ಮಿಳಿನಗೊಳಿಸಿ ಸರಳ ಸುಂದರ ಶೈಲಿಯಲ್ಲಿ
ವಚನಗಳನ್ನು ರಚಿಸಿದವರಾಗಿದ್ದಾರೆ. ಈತನ ವಚನಗಳನ್ನು
ಪರಿಶೀಲಿಸಿದಾಗ ಉತ್ತಮ ದರ್ಜೆಯ ವಚನಕಾರನಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆಯಾದರೂ ಈತನು ಇನ್ನೂ
ಅಜ್ಞಾತಕಾರನಾಗಿ ಉಳಿದಿದ್ದು ಹೆಚ್ಚಿನ ಅಧ್ಯಯನ ನಡೆಯದಿರುವುದು ದುರದೃಷ್ಟಕರ ಸಂಗತಿಯಾಗಿದೆ.
೨. ಭೋಗಣ್ಣ :
ಹನ್ನೆರಡನೆಯ ಶತಮಾನದ ಬಸವಣ್ಣನವರ ಹಿರಿಯಸಮಕಾಲೀನ ವಚನಕಾರರ
ಚರಿತ್ರೆಯನ್ನು ಅಧ್ಯಯನ ಮಾಡುವಾಗ ನಮಗೆ ಮೂವರು ಮಂದಿ
ಭೋಗಣ್ಣರು ಕಾಣಸಿಗುತ್ತಾರೆ. ೧. ಕೆಂಬಾವಿ ಭೋಗಣ್ಣ ೨. ಪ್ರಸಾದಿಭೋಗಣ್ಣ್ರ ೩. ಭೋಗಣ್ಣ .
ಈ ಮೂವರು ವಚನಕಾರರೇ? ಆಗಿದ್ದರೆ ಇವರ ವಚನಗಳ ಅಂಕಿತ, ಇವರ ಅಂಕಿತದ ಹೆಸರಿನಲ್ಲಿ ದೊರೆಯುವ ವಚನಗಳ ಸಂಖ್ಯೆ ಇತ್ಯಾದಿಗಳ ಬಗೆಗೆ ಇಂದಿಗೂ
ಸರ್ವಸಮ್ಮತವಾದ ಉತ್ತರವನ್ನು ಕಂಡುಕೊಳ್ಳಲು ವಿದ್ವಾಂಸರಲ್ಲಿ ಸಾಧ್ಯವಾಗಿಲ್ಲ. ಇವರಲ್ಲಿ ಪ್ರಸಾದಿ ಭೋಗಣ್ಣನು ಬಸವಣ್ಣನ ಸಮಕಾಲೀನ ವಚನಕಾರನಾಗಿದ್ದು
ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗ ಅಂಕಿತದಲ್ಲಿ ರಚಿಸಿರುವ ೧೦೪ ವಚನಗಳು ಸಧ್ಯಕ್ಕೆ ಲಭ್ಯವಿವೆ.
ಕವಿಚರಿತ್ರೆಕಾರರು ಹಾಗೂ ಫ.ಗು.ಹಳಕಟ್ಟಿಯವರು ಭೋಗಯ್ಯನೆಂಬ
ವಚನಕಾರನನ್ನು ಹೆಸರಿಸಿ ಅವನ ವಚನಗಳ ಅಂಕಿತ ನಿಜಗುರು ಭೋಗಸಂಗ, ನಿಜಗುರು ಭೋಗೇಶ್ವರ ಎಂದಿದ್ದು ಈತನೇ
ಹರಿಹರನ ರಗಳೆಯಲ್ಲಿ ನಿರೂಪಿತರಾಗಿರುವ ಕೆಂಭಾವಿ ಭೋಗಣ್ಣನಾಗಿರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಕೆಂಬಾವಿ ಭೋಗಣ್ಣನು ಬಸವಪೂರ್ವಯುಗದ ಶರಣನಾಗಿದ್ದು ತನ್ನ ಜೀವಿತಾವಧಿಯಲ್ಲಿ ನಡೆದ ಘಟನೆಯ ಬಗೆಗೆ ಆದ್ಯವಚನಕಾರ ಜೇಡರದಾಸಿಮಯ್ಯನಿಂದ ಪ್ರಸ್ತಾಪಿಸಲ್ಪಟ್ಟಿದ್ದಾನೆ.
ಹರಿಹರನ ಭೋಗಣ್ಣನ್ನು ಕುರಿತ ರಗಳೆಯಲ್ಲಿ ಕೆಂಭಾವಿಯಲ್ಲಿ ಭೋಗನಾಥ ಎನ್ನುವ ದೇವರು ಇರುವುದರ ಬಗೆಗೆ
ಉಲ್ಲೇಖವಿದೆ.ತನ್ನಿಷ್ಟದೈವದ ಹೆಸರನ್ನು ಇಟ್ಟುಕೊಂಡಿದ್ದರಿಂದ ಕೆಂಬಾವಿಯ ಭೋಗಯ್ಯನೆನಿಸಿಕೊಂಡನು.ಕೆಂಬಾವಿ
ಬೋಗಣ್ಣನನ್ನು ಕುರಿತು ರಚಿತವಾದ ಕಾವ್ಯ ಪುರಾಣಗಳಲ್ಲಿ
ಎಲ್ಲಿಯೂ ಈತನು ವಚನಗಳನ್ನು ರಚಿಸಿದ್ದಾನೆಂಬುದಕ್ಕೆ
ಸುಳುಹು ಗೋಚರಿಸುವುದಿಲ್ಲ. ಈತನು ವಚನಗಳನ್ನು ಬರೆದಿಲ್ಲವೆಂಬುದಕ್ಕೆ ಶಾಂತಲಿಂದೇಶಿಕನ ಭೈರವೇಶ್ವರಕಾವ್ಯಕಥಾಮಣಿ
ಸೂತ್ರರತ್ನಾಕರದಲ್ಲಿ ಸುಳುಹು ಸಿಗುತ್ತದೆ. ಈ ಕಾವ್ಯದಲ್ಲಿ ಎಲ್ಲಾ ಶರಣರ ಚರಿತ್ರೆಯನ್ನು ನಿರೂಪಿಸಿ
ಕೊನೆಯಲ್ಲಿ ಅವರ ಇಷ್ಟದೈವ ( ವಚನಗಳ ಅಂಕಿತ) ವನ್ನು ಕೊಡಲಾಗಿದೆ. ಆದರೆ ಕೆಂಭಾವಿ ಭೋಗಣ್ಣನನ್ನು ಕುರಿತು
ಜೀವನ ಚರಿತ್ರೆ ಇದ್ದರೂ ಇಷ್ಟದೈವ ( ವಚನಗಳ ಅಂಕಿತ)ದ ಉಲ್ಲೇಖ ಕಂಡುಬರುವುದಿಲ್ಲ. ಕೃತಿಯಲ್ಲಿ ಭೋಗಣ್ಣನನ್ನು
ಕುರಿತ ಭಾಗದ ಕೊನೆಯಲ್ಲಿ `` ಪುರವ ಮುನ್ನಿನಂತೆ ರಚಿಸಿ
ವಿಪ್ರರಿಗೆ ಅಭಯವನ್ನು ಕೊಟ್ಟು ಶಿವಭಕ್ತಿಯಂ ಮಾಡಿ ಭೋಗಣ್ಣನು ಲಿಂಗದೊಳಡಗಿದನು ” ಎಂಬ ವಿವರ ಇದೆಯೇ
ಹೊರತು ` ಶಿವಭಕ್ತಯಾನಾಚರಿಸಿ ಗುರು ಕೃಪೆಯಿಂದ ನಿಜವನರಿದು ನಿಜಗುರು ಭೋಗಸಂಗನೆಂಬ ತಮ್ಮಿಷ್ಟಲಿಂಗದಲ್ಲಿ
ಚರಿಸಾಡುತಿರ್ದು’ ಎಂಬ ವಿವರ ಇಲ್ಲ. ಹೀಗಾಗಿ ನಿಜಗುರು ಭೋಗಸಂಗ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಭೋಗಣ್ಣನೆಂಬ ವಚನಕಾರನು ಕೆಂಬಾವಿ ಭೋಗಣ್ಣನಿಗಿಂತ ಬೇರೆಯವನಾಗಿದ್ದು ಬಸವಣ್ಣನ
ಸಮಕಾಲೀನನಾಗಿದ್ದಾನೆ.
ವಚನಕಾರ ಭೋಗಣ್ಣನ ಇತಿವೃತ್ತದ ಬಗೆಗೆ ಆತನ ವಚನಗಳಿಂದಾಗಲೀ, ವೀರಶೈವ
ಕಾವ್ಯ-ಪುರಾಣಗಳಿಂದಾಗಲೀ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ. ನಿಜಗುರು ಭೋಗೇಶ್ವರ ಅಂಕಿತದಲ್ಲಿಈತನು
ರಚಿಸಿರುವ ೨೨ ವಚನಗಳು ಸದ್ಯಕ್ಕೆ ಉಪಲಬ್ಧವಿವೆ. ಈತನು ತನ್ನಕೆಳಕಂಡ ವಚನಗಳಲ್ಲಿ,
ಸಿದ್ಧನಿಜಗುರು ಭೋಗಸಂಗನಲ್ಲಿ
ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ
ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ
ನಮೋ ನಮೋ ಎಂದು ಬದುಕಿದೆ ( ವ.ಸಂ.೮)
ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ
ಇದರ ಭೇದವ ಬಲ್ಲವ ಅಲ್ಲಮನು
ಪ್ರಭುವಿನ ಕರುಣವುಳ್ಳ ಲಿಂಗಾಗಿಗಳಲ್ಲದೆ ( ವ.ಸಂ.೧೨)
ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ ( ವ.ಸಂ.೧೩)
ಎಂದು ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಅಜಗಣ್ಣರನ್ನು ಧನ್ಯತಾ ಭಾವದಿಂದ ಸ್ತುತಿಸಿರುವುದನ್ನು ನೋಡಿದರೆ
ಈತನು ಬಸವಾದಿ ಪ್ರಮಥ ಸಮಕಾಲೀನನಾಗಿದ್ದು ಆತನ ಕಾಲವನ್ನು
ಕ್ರಿ.ಶ.೧೧೬೦ ಎಂದು ಊಹಿಸ ಬಹುದಾಗಿದೆ.
ಈತನ ವಚನಗಳಲ್ಲಿ ಬಹುಪಾಲು ವಚನಗಳು ಧೀರ್ಘತೆಯಿಂದ
ಕೂಡಿರುವುದು ವಿಶೇಷವೆನಿಸುತ್ತದೆ. ಈತನ ವಚನಗಳಲ್ಲಿ ಶರಣನ ಲಕ್ಷಣದ ಬಗೆಗೆ ಹೆಚ್ಚಿನ ವಿವರಣೆ ಕಂಡು ಬರುತ್ತದೆ. ಷಟ್ಸ÷್ಥಲ ಸಿದ್ಧಾಂತದ ಬಗೆಗೂ ವಿವರಣೆ ಕಂಡು
ಬರುತ್ತದೆ.
ಶರಣನ ಲಕ್ಷಣದ ಬಗೆಗಿನ ಈ ಕೆಳಕಂಡ ವಚನವು
ಅಯ್ಯಾ ನಿಮ್ಮ ಶರಣನ ಇರವು
ಹರಿಯ ಕೈಯ ದೀವಿಗೆಯಂತೆ ಇದ್ದಿತಯ್ಯಾ
ಪವನನ ಕೈಯ ಪರಿಮಳದಂತೆ ಇದ್ದಿತಯ್ಯಾ
ನಮ್ಮ ಶರಣನ ಸುಳುಹು (ವ.ಸಂ.೩)
ಬೀಜವಿಲ್ಲದ ವೃಕ್ಷ,ಎಲೆಯಿಲ್ಲದ ಉಲುಹು
ಹೂವಿಲ್ಲದ ಪರಿಮಳ, ಕಾಯಿಲ್ಲದ ಹಣ್ಣು
ರಸವಿಲ್ಲದ ನವರುಚಿ ಮೆಲಬಲ್ಲವನಾರೋ
ಕಾಲು ಕೈಯಿಲ್ಲದ, ಕಿವಿಮೂಗಿಲ್ಲದ ಹುಟ್ಟುಗುರುಡನು
ಆ ಹಣ್ಣ ಮೂಗಿನಲ್ಲಿ ಮೆದ್ದನು
ಕಂಗಳಲ್ಲಿ ತೃಪ್ತಿಯಾಗಿ ಕಿವಿಯಲ್ಲಿ ತೇಗಿ
ತಲೆಯಲ್ಲಿ ಲಿಂಗಕ್ಕರ್ಪಿಸಿ
ಆ ಪ್ರಸಾದವ ಬಾಯಿಂದ ಉಂಡು
ನಿಜಗುರು ಭೋಗಸಂಗನೊಳು
ಒಚ್ಚತವೋದ ಶರಣರ ಇರವು (ವ.ಸಂ.೧೬) ಎಂದು ವರ್ಣಿಸಿದ್ದಾನೆ.
ಈತನ ಪ್ರಕಾರ ಭಕ್ತನ ಮೆಲಬಾರದು, ಭಕ್ತನ ಕೊಂದಡೆ ಪಂಚಮಹಾಪಾತಕ
ಶಿವೋದಾತ ಶಿವೋಭಕ್ತ ಶಿವೋ ಜಗತ್ಸರ್ವಂ ಎಂದುದಾಗಿ ಈ
ಅನುವನರಿದಾತ ಭಕ್ತ ಆತನೇ ಯುಕ್ತ, ಆತನೇ ಮುಕ್ತ ( ವ.ಸಂ.೧೭) ಎಂದು ಭಕ್ತನ ಮಹತ್ವವನ್ನು ವಿವರಿಸಿದ್ದಾನೆ.
ಎರಡು ವಚನಗಳಲ್ಲಿ ಅತ್ಯಂತ ನವುರಾದ ವಿಡಂಬಣೆಯನ್ನು ಕಾಣಬಹುದಾಗಿದೆ.
ಮಾತಿನಲ್ಲಿ ಭಕ್ತಿ ವಿನಯ ಉಪಚಾರವ ನುಡಿದರು
ಅನುವಿಲ್ಲದರಿಯದೆ ಬರಿಯ ಬಾಯಭುಂಜಕರು
ಜಾರೆ ಜಾರನ ಸ್ನೇಹದೊಳಿದ್ದು
ನೀನಲ್ಲದೆ ಅಂತ:ಪುರವನರಿಯೆನೆಂದು
ಕಣ್ಣನೀರತುಂಬುತ್ತ ಬೋಸರಿಗತನದಿಂದ
ಒಡಲಹೊರೆವಳಂತೆ ( ವ.ಸಂ.೧೭)
ವಾಗದ್ವೆೈತದಿಂದ ಒಡಲ ಹೊರೆವ ಶಬ್ದಬೋಧಕರಿಗೆ ಶರಣರ ಪದದೊರೆಯುವುದಿಲ್ಲವೆಂಬ
ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾನೆ. ಈತನ ಪ್ರಕಾರ ಆಗಮ ನಿಗಮ ಶಾಸ್ತ್ರ ಪುರಾಣವೆಂಬ ಆಂಧಕನ ಕೈಗೆ ಕೋಲಕೊಟ್ಟು ನಡಸಿಕೊಂಡು ಹೋಗುವಾಗ,
ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ ಎರಡಕ್ಕೆ ಕೆಟ್ಟ ಜಂಬುಕನಂತೆ
ಆದವರು, ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದವರು, ಸಂತೆಯಲ್ಲಿ ಗುಡಿಸಲನಿಕ್ಕಿ ಹಡದುಂಬ
ಸೂಳೆಯಂತೆ ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನ್ನಿಕ್ಕಿಕೊಂಡು ವಾಚಾಳಿಗತನದಿಂದ ಒಡಲಹೊರೆವವರೆಲ್ಲರೂ ನಿಜಶರಣರಾಗಲು ಸಾಧ್ಯವಿಲ್ಲ.
ಒಂದು ವಚನದಲ್ಲಿ ಭವಿ-ಭಕ್ತರನ್ನು ಕುರಿತು,
ಆಚಾರವುಳ್ಳನ್ನಕ್ಕ ಭಕ್ತನಲ್ಲ
ಅನಾಚಾರವುಳ್ಳನ್ನಕ್ಕ ಭವಿಯಲ್ಲ
ಅಂಗ ನಷ್ಟವಾಗಿ ಕಂಗಳಲ್ಲಿ ಅರ್ಪಿಸಿ
ತಲೆಯಲ್ಲಿ ಉಣ್ಣಬಲ್ಲಡೆ ಭಕ್ತ.
ಅರ್ಪಿಸಿಕೊಳ್ಳದ, ಅನರ್ಪಿತವ ಮುಟ್ಟದೆ
ಅಚ್ಚಪ್ರಸಾದವ ಕೊಳಬಲ್ಲಡೆ ಭವಿ ( ವ.ಸಂ.೫) ಎಂದು ನಿರ್ವಚಿಸಿದ್ದಾನೆ.
ಒಟ್ಟಾರೇ ಈತನ ವಚನಗಳಲ್ಲಿ, ಅಷ್ಟಾವರಣಗಳ ಬಗೆಗೆ, ಭಕ್ತ-ಭವಿ, ಸಾಕಾರ-ನಿರಾಕಾರ, ಅಂಗ-ಲಿಂಗ, ವೇಷಡಂಭಕ-ಶಬ್ದಬೋಧಕ,
ಭವಭಾರಿಗಳ ಬಗೆಗೆ ವಿವರಣೆ ಕಂಡು ಬರುತ್ತದೆ. ಈತನ ವಚನಗಳಲ್ಲಿ ಆರು ವಚನಗಳು ಬೆಡಗಿನ ವಚನಗಳ ಧಾಟಿಯನ್ನು
ಹೊಂದಿವೆ. ಕೆಲವೆಡೆ ಈತನ ವಚನಗಳು ಉಪಮೆಗಳ ಮೂಲಕ ಕಾವ್ಯದ ಸ್ಪರ್ಶವನ್ನು ಪಡೆದಿವೆ. ಆದಾಗ್ಯೂ ಈತನ ವಚನಗಳು ಬಹುಪಾಲು ಗದ್ಯಲಯಕ್ಕೆ
ಸಮೀಪವಾಗಿದ್ದು ನೇರವಾದ ರಚನೆಯಿಂದಲೇ ಓದುಗರನ್ನು ಸೆಳೆಯುತ್ತವೆ.ಸರಳತೆ,ಸ್ಪಷ್ಟತೆಗಳು ತಕ್ಕಮಟ್ಟಿಗೆ
ಈತನ ವಚನಗಳಲ್ಲಿ ಕಂಡು ಬರುತ್ತವೆ.
೩. ಮಡಿವಾಳಯ್ಯಗಳ
ಸಮಯಾಚಾರದ ಮಲ್ಲಿಕಾರ್ಜುನದೇವ :
ಈತನು ಬಸವಯುಗದ ವಚನಕಾರನಾಗಿ ಕಂಡು ಬರುತ್ತಾನೆ. ಈತನ ಹೆಸರಿನಲ್ಲಿರುವ
`ಮಡಿವಾಳಯ್ಯಗಳ ಸಮಯಾಚಾರದ’ ವಿಶೇಷಣವನ್ನು ಗಮನಿಸಿದರೆ ಈತನು ಮಡಿವಾಳ ಮಾಚಿದೇವನ ಅತ್ಯಂತ ನಿಕಟವರ್ತಿಯಾಗಿದ್ದನೆಂದು
ಭಾವಿಸಬಹುದಾಗಿದೆ. ಹೀಗಾಗಿ ಈತನು ಮಡಿವಾಳ ಮಾಚಿದೇವನ ಕಾಲದವನಾದ್ದರಿಂದ ತಾತ್ಕಾಲಿಕವಾಗಿ ಜೀವಿಸಿದ್ದ ಕಾಲವನ್ನು ಕ್ರಿ.ಶ. ೧೧೬೦
ಎಂದು ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ. ಈತನ ವೈಯಕ್ತಿಕ
ವಿವರಗಳ ಬಗೆಗೆ ಈತನೇ ರಚಿಸಿರುವ ವಚನಗಳಿಂದಾಗಲೀ ಅನ್ಯರ ವಚನಗಳಿಂದಾಗಲೀ. ವೀರಶೈವಕಾವ್ಯ-ಪುರಾಣಗಳಿಂದಾಗಲೀ
ಯಾವುದೇ ಮಾಹಿತಿ ತಿಳಿದು ಬರುವುದಿಲ್ಲ. ಈತನ ಪರಮಗುರು
ಶಾಂತಮಲ್ಲಿಕಾರ್ಜುನ ಅಂಕಿತದಲ್ಲಿ ಒಂದು ವಚನ ಹಾಗೂ ಪರಮ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ ಅಂಕಿತದಲ್ಲಿ
ಐದು ವಚನಗಳು ಒಟ್ಟು ೦೬ ವಚನಗಳು ಸದ್ಯಕ್ಕೆ ಉಪಲಬ್ಧವಿವೆ.
ಶರಣನ ಮಹಿಮೆಯನ್ನು ಕುರಿತು,
ಅರಿವನಲ್ಲ ಮರವನಲ್ಲ ಕುರುಹಿಟ್ಟರಸುವನಲ್ಲ
ತಾನೆ ಪರಿಪೂರ್ಣವಾಗಿ ತಾನೆಂಬ ಭಾವವಳಿದು
ಇದಿರೆಂಬ ಶಂಕೆಯನರಿಯ
ಭಾವಿಸಿ ಬಳಲುವ ಭಾವದ ಭ್ರಮೆಯಳಿದು
ಭಾವವೇ ಬ್ರಹ್ಮವಾಗಿ,ಭಾವಿಸುವ ಭಾವಕನಲ್ಲ.
ಆಗುಹೋಗು ಭೋಗಭೂಷಣಂಗಳ ಅನುರಾಗಮಂ ತ್ಯಜಿಸಿ
ಬಂಧಮೋಕ್ಷ ಸಂದುಸಂಶಯವೆಂಬ ಜಡತ್ವವನ್ನು ಕಳೆದು
ನಿಂದ ನಿಲವಿನ ವಶಕ್ಕೆ ವಶವಾಗದೆ,
ಸಹಜ ಶಾಂತಿಸಮತೆ ನೆಲೆಗೊಂಡು ನಿಂದಾತನೆ ಶರಣ ಎಂದು ನಿರೂಪಿಸಿದ್ದಾನೆ.
ಅದಲ್ಲದೆ ಈತನ ಪ್ರಕಾರ ಶರಣ ನುಡಿದುದೆ ಸಿದ್ಧಾಂತ, ನೋಡಿದುದೆ ಅರ್ಪಿತ, ಮುಟ್ಟಿದುದೆ ಪ್ರಸಾದ ಎಂದು
ಹೇಳುತ್ತಾ ಶರಣನ ಬಗೆಗೆ ಧನ್ಯತಾ ಭಾವವನ್ನು ವ್ಯಕ್ತಪಡಿಸಿದ್ದಾನೆ.
ಮತ್ತೊಂದು ವಚನದಲ್ಲಿ ಲಿಂಗೈಕ್ಯನ ಬಗೆಗೆ ಹೇಳುತ್ತಾ,
ಈತನು ರೂಹಿಲ್ಲದ ಕೂಟವ,ಕೂಟವಿಲ್ಲದ ಸುಖವ, ಸುಖವಿಲ್ಲದ ಪರಿಣಾಮವ, ಪರಿಣಾಮವಿಲ್ಲದ ಪರವಶವ, ಪರವಶ ಪರಮಾನಂದವೆಂಬುದಕ್ಕೆ
ಎರವಿಲ್ಲವಾದವನು ಎಂದು ಹೇಳಿದ್ದಾನೆ. ಒಂದು ವಚನದಲ್ಲಿ ಇಹಲೋಕದಲ್ಲಿದ್ದು ಲೌಕಿಕ ಜೀವನದಲ್ಲಿಯೇ ತಾನು
ಮುಳುಗಿ ಹೋದುದರ ಬಗೆಗೆ ` ಸತಿಯ ನೋಡಿ ಸಂತೋಷವ ಮಾಡಿ, ಸುತರ ನೋಡಿ ಸುಮ್ಮಾನವ ಮಾಡಿ,ಮತಿಯ ಹೆಚ್ಚುವಿನಿಂದ
ಮೈಮರೆದೊರಗಿ, ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು ಮರುಳಾದೆ ಎಂದು ಪರಿತಪಿಸಿದ್ದಾನೆ.ಹಾಗೆಯೇ ಸ್ಥಾವರಲಿಂಗ
ಪೂಜೆಯನ್ನು ಕೈಗೊಳ್ಳುವವರನ್ನು,
ಕರಸ್ಥಲದ ಲಿಂಗವ ಬಿಟ್ಟು
ಧರೆಯ ಮೇಲಣ ಪ್ರತುಮೆಗೆರಗುವ
ನರಕಿ ನಾಯಿಗಳನೇನೆಂಬೆನಯ್ಯಾ ಎಂದು ಸ್ಥಾವರಲಿಂಗ
ಪೂಜೆಯನ್ನು ವಿಡಂಬಿಸಿದ್ದಾನೆ.
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು
ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ
ವ್ಯಕ್ತಿಯು,
ಭ್ರಮರದೊಳಡಗಿದ ಕೀಟದಂತೆ
ಉರಿಯೊಳಡಗಿದ ಕರ್ಪುರದಂತೆ
ಕ್ಷೀರದೊಳು ಬೆರೆದ ಪಯದಂತೆ
ಅಂಬುಧಿಯೊಳಡಗಿದ ವಾರಿಕಲ್ಲಿನಂತೆ
ನಾನೀ ಎಂಬೆರಡಳಿದವನಾಗುತ್ತಾನೆ ಎಂದಿದ್ದಾನೆ.
ಈ ವಚನದಲ್ಲಿಯ ಹೋಲಿಕೆಗಳು ಅಲ್ಲಮ ಪ್ರಭು ಹಾಗೂ ಆದಯ್ಯರ ವಚನದ ಸಾಲುಗಳನ್ನು ನೆನಪಿಸುತ್ತವೆ. ಈತನ
ಲಭ್ಯವಿರುವ ಆರು ವಚನಗಳಲ್ಲಿ ವಿಷಯದ ಸ್ಪಷ್ಟತೆಗಾಗಿ ದೈನಂದಿನ ಜೀವನದ ಹೋಲಿಕೆಗಳನ್ನು ಬಳಸಿದ್ದಾನೆ.
ಈತನ ವಚನಗಳು ಗದ್ಯದ ಲಯವನ್ನು ನೆನಪಿಸುತ್ತವೆ.
ಪರಾಮರ್ಶನ ಗ್ರಂಥಗಳು
೧. ಸಂಕೀರ್ಣ ವಚನಸಂಪುಟ- ೩ ( ಸಂ. ಬಿ.ಆರ್.ಹಿರೇಮಠ)
ಕನ್ನಡ ಸಂಸ್ಕೃತಿ ನಿರ್ದೇಶನಾಲಯ
ಬೆಂಗಳೂರು. ೧೯೯೩
೨. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ
( ಪ್ರ.ಸಂ. ಹಾ.ಮಾ.ನಾಯಕ)
ಸಂ.೪
ಪ್ರಸಾರಾಂಗ, ಮೈಸೂರು
ವಿಶ್ವವಿದ್ಯಾಲಯ
ಮೈಸೂರು. ೧೯೭೭
೩. ಸಿ.ನಾಗಭೂಷಣ: ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ೨೦೦೦