ಮಂಗಳವಾರ, ಮೇ 12, 2026

  ಜಿ.ಎಸ್.ಸಿದ್ಧಲಿಂಗಯ್ಯನವರ ಶರಣ ಸಾಹಿತ್ಯ-ಸಂಸ್ಕೃತಿ ಕೊಡುಗೆ : ಸಂಶೋಧನಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ

                             ಡಾ ಸಿ. ನಾಗಭೂಷಣ

    ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಅಪರೂಪದ ವಿದ್ವಾಂಸರು. ಅವರು ಕವಿ, ವಿಮರ್ಶಕ, ಸಂಶೋಧಕ, ಸಂಪಾದಕ, ಅಧ್ಯಾಪಕ, ವಾಗ್ಮಿ ಹಾಗೂ ಚಿಂತಕರಾಗಿ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ವಚನಸಾಹಿತ್ಯ ಹಾಗೂ ಶೂನ್ಯಸಂಪಾದನೆ ಕುರಿತ ಅಧ್ಯಯನಗಳು ಕನ್ನಡ ವಿಮರ್ಶಾ ಪ್ರಪಂಚದಲ್ಲಿ ಅವರಿಗೆ ವಿಶಿಷ್ಟ ಸ್ಥಾನವನ್ನು ಗಳಿಸಿಕೊಟ್ಟಿವೆ. ಕವಿಯಾಗಿ ತಾವು ಬೆಳೆಸಿಕೊಂಡ ಸೂಕ್ಷ್ಮ ಸಂವೇದನೆಯನ್ನು ವಿಮರ್ಶಾ ವಸ್ತುವಿನ ವಿಶ್ಲೇಷಣೆಗೆ ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಕೆಲ ವಿದ್ವಾಂಸರು ಕೇವಲ ಕೃತಿಗಳನ್ನು ರಚಿಸುವ ಮೂಲಕವಲ್ಲ, ಸಾಹಿತ್ಯವನ್ನು ಓದುವ, ಅರ್ಥೈಸುವ, ಮೌಲ್ಯಮಾಪನ ಮಾಡುವ ಹಾಗೂ ಹೊಸ ಸಂಶೋಧನಾ ವಿಧಾನಗಳನ್ನು ರೂಪಿಸುವ ಮೂಲಕ ತಮ್ಮದೇ ಆದ ಬೌದ್ಧಿಕ ಪರಂಪರೆಯನ್ನು ನಿರ್ಮಿಸಿದ್ದಾರೆ. ಅಂತಹ ಅಪರೂಪದ ವಿದ್ವಾಂಸರ ಸಾಲಿನಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಪ್ರಮುಖರು. ಅವರು ಸಲ್ಲಿಸಿರುವ ಕೊಡುಗೆ ಕನ್ನಡ ಜ್ಞಾನಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಅವರ ಬರಹಗಳನ್ನು ಗಮನಿಸಿದಾಗ, ಅಲ್ಲಿ ಕೇವಲ ಮಾಹಿತಿಯ ಸಂಗ್ರಹವಿಲ್ಲ; ಭಾಷೆಯ ಆಂತರಿಕ ಶಕ್ತಿ, ಸಾಹಿತ್ಯದ ಜೀವಂತ ಚಲನೆ, ಸಂಸ್ಕೃತಿಯ ಒಳಧ್ವನಿ, ಪಠ್ಯದ ರೂಪಾಂತರಶೀಲತೆ ಮತ್ತು ಇತಿಹಾಸದ ಮಸುಕಿನೊಳಗಿನ ಅರ್ಥಸಂರಚನೆಗಳನ್ನು ಹಿಡಿಯುವ ಅಪೂರ್ವ ಸಾಮರ್ಥ್ಯ ಕಂಡುಬರುತ್ತದೆ.   

    ಕನ್ನಡದ 12ನೇ ಶತಮಾನದ ಶರಣ ಚಳವಳಿಯು ಭಾರತೀಯ ಸಮಾಜದ ಇತಿಹಾಸದಲ್ಲಿ ಒಂದು ವಿಶಿಷ್ಟ ವೈಚಾರಿಕ ಕ್ರಾಂತಿಯಾಗಿ ಕಾಣುತ್ತದೆ. ಕನ್ನಡ ಸಾಹಿತ್ಯದ ಪರಂಪರೆಯಲ್ಲಿ ವಚನ ಸಾಹಿತ್ಯವು ಕೇವಲ ಭಕ್ತಿಸಾಹಿತ್ಯದ ಒಂದು ಪ್ರಕಾರವಲ್ಲ; ಅದು ಸಾಮಾಜಿಕ ಚಿಂತನೆ, ಧಾರ್ಮಿಕ ಕ್ರಾಂತಿ, ಭಾಷಿಕ ಸರಳತೆ ಮತ್ತು ಮಾನವತಾವಾದಿ ಮೌಲ್ಯಗಳ ಜೀವಂತ ಚಳವಳಿಯಾಗಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಮೊದಲಾದ ವಚನಕಾರರು ರೂಪಿಸಿದ ವಚನಸಾಹಿತ್ಯವು ಸಮಾನತೆ, ಕಾಯಕ, ದಾಸೋಹ, ಅನುಭವ, ಲಿಂಗಾಂಗಸಾಮರಸ್ಯ ಮತ್ತು ಮಾನವೀಯತೆಯ ಮೂಲಭೂತ ತತ್ವಗಳನ್ನು ಪ್ರತಿಪಾದಿಸಿತು. 12ನೇ ಶತಮಾನದಲ್ಲಿ ರೂಪುಗೊಂಡ ಶರಣ ಚಳವಳಿಯ ಪರಿಣಾಮವಾಗಿ ಉದ್ಭವಿಸಿದ ಈ ಸಾಹಿತ್ಯವು ಜಾತಿ, ಲಿಂಗ, ಧರ್ಮ ಮತ್ತು ವರ್ಣಭೇದಗಳ ವಿರುದ್ಧ ಸಮಾನತೆಯ ಧ್ವನಿಯನ್ನು ಪ್ರತಿಪಾದಿಸಿತು. ವಚನ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಗಂಭೀರಗೊಳಿಸಿದ ಮತ್ತು ಆಧುನಿಕ ವಿಮರ್ಶಾ ದೃಷ್ಟಿಕೋನದಿಂದ ಮರುಪರಿಶೀಲಿಸಿದ ವಿದ್ವಾಂಸರಲ್ಲಿ ಜಿ. ಎಸ್. ಸಿದ್ಧಲಿಂಗಯ್ಯ ಪ್ರಮುಖರು. ವಚನ ಸಾಹಿತ್ಯದ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿದ್ದರೂ, ಆಧುನಿಕ ವಿಮರ್ಶಾ ಪರಿಕಲ್ಪನೆಗಳ ನೆಲೆಯಲ್ಲಿ ಅದರ ಪುನರ್ವ್ಯಾಖ್ಯಾನ ಮತ್ತು ಪುನರ್ಮೌಲ್ಯಮಾಪನ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜಿ. ಎಸ್. ಸಿದ್ಧಲಿಂಗಯ್ಯರಂತಹ ವಿದ್ವಾಂಸರು ವಚನ ಸಾಹಿತ್ಯವನ್ನು ಹೊಸ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಿಸಿ, ಅದರ ಸಾಮಾಜಿಕ ಮತ್ತು ತಾತ್ವಿಕ ಗಂಭೀರತೆಯನ್ನು ಕನ್ನಡ ಅಧ್ಯಯನ ಕ್ಷೇತ್ರಕ್ಕೆ ಪರಿಚಯಿಸಿದರು. ಅವರ ಅಧ್ಯಯನವು ವಚನಗಳನ್ನು ಕೇವಲ ಭಕ್ತಿಪರ ಕೃತಿಗಳೆಂದು ನೋಡುವ ಸಂಪ್ರದಾಯವನ್ನು ಮೀರಿ, ಅವುಗಳನ್ನು ಸಮಾಜ ಪರಿವರ್ತನೆಯ ಪಠ್ಯಗಳು, ಮಾನವತಾವಾದದ ತತ್ತ್ವಪರ ದಾಖಲೆಗಳು ಮತ್ತು ಭಾಷಾ-ಶೈಲಿಯ ಅಪೂರ್ವ ರೂಪಗಳು ಎಂದು ಗುರುತಿಸಿತು. ಅವರು ವಚನ ಸಾಹಿತ್ಯದ ಸಾಮಾಜಿಕ ಪುನರ್ನಿರ್ಮಾಣಕ್ಕೆ ಪ್ರಜ್ಞಾಪೂರ್ವಕ ತಳಹದಿ ಹಾಕಿದ ಆಧುನಿಕ ಯುಗದ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ.

      ಜಿ.ಎಸ್.ಸಿದ್ಧಲಿಂಗಯ್ಯರ ವಚನ ಸಾಹಿತ್ಯ ಅಧ್ಯಯನದ ಸ್ವರೂಪ, ವಿಧಾನ, ವೈಚಾರಿಕ ನೆಲೆ, ಪಠ್ಯನಿಷ್ಠತೆ, ಸಾಮಾಜಿಕ ವಿಶ್ಲೇಷಣೆ ಮತ್ತು ತಾತ್ವಿಕ ವಿಮರ್ಶೆಯನ್ನು ಇಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ. ವಿಶೇಷವಾಗಿ ಅವರ ಬರಹಗಳಲ್ಲಿ ವ್ಯಕ್ತವಾಗುವ ವಚನಗಳ ಮಾನವತಾವಾದಿ ಮೌಲ್ಯ, ಸಾಮಾಜಿಕ ಕ್ರಾಂತಿಕಾರಿತ್ವ ಮತ್ತು ಭಾಷಿಕ ಸರಳತೆಯ ವಿಶ್ಲೇಷಣೆಯನ್ನು  ಇಲ್ಲಿ ಗುರುತಿಸಲಾಗಿದೆ.

   ವಚನ ಪರಂಪರೆಯ ಆಧುನಿಕ ಅಧ್ಯಯನ, ಮರುಮೌಲ್ಯಮಾಪನ ಮತ್ತು ವಿಮರ್ಶಾತ್ಮಕ ಅನ್ವೇಷಣೆಯಲ್ಲಿ ಜಿ. ಎಸ್. ಸಿದ್ಧಲಿಂಗಯ್ಯ ಅವರ ಕೊಡುಗೆ ಗಮನಾರ್ಹವಾಗಿದೆ. ಅವರು ವಚನ ಸಾಹಿತ್ಯವನ್ನು ಕೇವಲ ಪಠ್ಯಮಟ್ಟದಲ್ಲಿ ನೋಡದೇ, ಅದರ ಹಿಂದೆ ಅಡಗಿರುವ ಸಾಮಾಜಿಕ-ಸಾಂಸ್ಕೃತಿಕ, ಧಾರ್ಮಿಕ ಹಾಗೂ ತಾತ್ವಿಕ ಆಯಾಮಗಳನ್ನು ವಿಶ್ಲೇಷಣಾತ್ಮಕವಾಗಿ ತೆರೆದಿಟ್ಟಿದ್ದಾರೆ. ವಚನಕಾರರ ಚಿಂತನೆಗಳನ್ನು ಆಧುನಿಕ ದೃಷ್ಟಿಕೋನದಿಂದ ಮರುಪರಿಶೀಲಿಸಿ, ವಚನ ಸಾಹಿತ್ಯದ ಸಾರ್ಥಕತೆಯನ್ನು ಇಂದಿನ ಸಮಾಜಕ್ಕೆ ಸಂಬಂಧಿಸುವ ಕೆಲಸವನ್ನು ಅವರು ಮಾಡಿದ್ದಾರೆ.

    ಜಿ.ಎಸ್.ಸಿದ್ಧಲಿಂಗಯ್ಯನವರು ವಚನ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತು ದೊಡ್ಡ ಹಾಗೂ ಲಘುಕೃತಿಗಳು ರಚಿಸಿದ್ದಾರೆ.  ಜೊತೆಗೆ ಕೆಲವು ಕೃತಿಗಳನ್ನು ಸಂಪಾದಿಸಿದ್ದಾರೆ.ಅವುಗಳಲ್ಲಿ ಪ್ರಮುಖವಾದ ಕೃತಿಗಳೆಂದರೆ, ಪಂಚಮುಖ, ಚಾಮರಸ, ವಚನ ಸಾಹಿತ್ಯ-ಒಂದು ಇಣುಕು ನೋಟ, ವಚನ ವಾಙ್ಮಯ ಮತ್ತು ಭಾಷೆ, ಶೂನ್ಯ ಸಂಪಾದನೆಗಳು-ಒಂದು ಅವಲೋಕನ, ಶೂನ್ಯ ಸಂಪಾದನೆ-ಒಂದು ಮರುಚಿಂತನೆ, ಗೂಳೂರು ಸಿದ್ದವೀರಣ್ಣ, ಶೂನ್ಯ ಸಂಪಾದನೆ, ಶೂನ್ಯ ಸಂಪಾದನೆ-ಕೆಲವು ಪ್ರಶ್ನೆಗಳು, ಅಲ್ಲಮ ಪ್ರಭು, ಮೇದಾರ ಕೇತಯ್ಯ, ಬಸವ-ಅಲ್ಲಮರ-ನೂರು ವಚನಗಳು, ಶಬ್ದ ಸೋಪಾನ, ಕನ್ನಡ ಸಂಸ್ಕೃತಿಗೆ ಹೊಸ ತಿರುವು ಕೊಟ್ಟ ಹರಿಹರ, ಶೂನ್ಯ ಸಂಪಾದನೆಗಳು-ಪರಿಷ್ಕರಣಗಳು, ವಚನ ಸಾಹಿತ್ಯ-ಹಕ್ಕಿನೋಟ, ಬಸವಣ್ಣ, ವಿರತಿಯಸಿರಿಸಪ್ಪಣ್ಣನವರು, ಹೊಸತಿರುವು,ಅಣ್ಣನ ನೂರೊಂದು ವಚನಗಳು, ಸಿದ್ಧಲಿಂಗೇಶ್ವರರ ವಚನಗಳು, ಶರಣೆ ರಾಯಮ್ಮ, ಜೇಶ ಮಸಣಯ್ಯ, ಮುದನೂರು, ಜಂಗಮ ಜ್ಯೋತಿ, ಬಸವ ಸಂದೇಶ, ಶರಣ ಆದಯ್ಯ, ಅಂಬಿಗರ ಚೌಡಯ್ಯ, ಮುರುಗೋಡು, ಶರಣ ಬಸವೇಶ್ವರರು, ನುಲಿಯ ಚಂದಯ್ಯ, ಭಕ್ತಿ ಪರಂಪರೆ-ಸಮಾಜೋ ಧಾರ್ಮಿಕ ಕಾಳಜಿಗಳು, ಹಲಗೆಯಾರ್ಯನ ಶೂನ್ಯ ಸಂಪಾದನೆ (ಎಸ್.‌ವಿದ್ಯಾಶಂಕರ ಅವರ ಜೊತೆಗೂಡಿ). ಈ ಕೃತಿಗಳಲ್ಲಿ ವಚನಕಾರರ ಜೀವನ ಚಿತ್ರ ಮತ್ತು ವಚನಗಳ ಅಧ್ಯಯನಕ್ಕೆ ಸಂಬಂಧಿಸಿದವುಗಳು ಸುಮಾರು ಇಪ್ಪತ್ತಕ್ಕೂ ಮೇಲ್ಪಟ್ಟವುಗಳಾದರೆ ಶೂನ್ಯ ಸಂಪಾದನೆಗೆ ಸಂಬಂಧಿಸಿದಂತೆ ಏಳು ಕೃತಿಗಳನ್ನು ರಚಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ ಶೂನ್ಯ ಸಂಪಾದನೆಗಳಲ್ಲಿ ಕುರಿತು ಅಧ್ಯಯನ ಮಾಡಿದ ವಿದ್ವಾಂಸರುಗಳಲ್ಲಿ ಅತಿ ಹೆಚ್ಚಿನ ಕೃತಿಗಳನ್ನು ರಚಿಸಿದವರು ಇವರೇ ಆಗಿದ್ದಾರೆ. ಶೂನ್ಯ ಸಂಪಾದನೆಯ ಕುರಿತು ಅಧಿಕೃತವಾಗಿ ವ್ಯಾಖ್ಯಾನಿಸುವ ಮತ್ತು ಮಾತನಾಡುವ ವಿದ್ವಾಂಸರ ಪಂಕ್ತಿಯಲ್ಲಿ ಇವರು ಮುಂಚೂಣಿಯಲ್ಲಿದ್ದವರು ಎಂದರೆ ತಪ್ಪಾಗಲಾರು. ತಿಂಗಳಾನುಗಟ್ಟಲೇ ಶೂನ್ಯ ಸಂಪಾದನೆಯ ಕುರಿತು ವ್ಯಾಖ್ಯಾನ ಮಾಡ ಬಲ್ಲಷ್ಟು ವಿದ್ವತ್‌ ಉಳ್ಳವರಾಗಿದ್ದರು.

    ವಚನ ಸಾಹಿತ್ಯದ ಮೂಲವನ್ನು ಕುರಿತ ಸಿದ್ಧಲಿಂಗಯ್ಯನವರ ಮುಖ್ಯ ವಾದವೆಂದರೆ  "ವಚನವೂ ದೇಸಿಯ ನೆಲೆಯಿಂದ ಸ್ಫೂರ್ತವಾಯಿತು" ಎಂಬುದು. ಸಂಸ್ಕೃತ ಮತ್ತು ಮಾರ್ಗ ಸಂಪ್ರದಾಯದ ಪ್ರಭಾವದಿಂದ ವಚನಸಾಹಿತ್ಯವನ್ನು ಅರ್ಥೈಸುವ ಬದಲು, ಅದರ ಸ್ವದೇಶಿ ಮೂಲವನ್ನು ಗುರುತಿಸುವ ಪ್ರಯತ್ನವನ್ನುವರ ವಚನ ಸಾಹಿತ್ಯ ಕುರಿತ ಬರೆಹಗಳಲ್ಲಿ  ಕಾಣಬಹುದಾಗಿದೆ. ಸಿದ್ಧಲಿಂಗಯ್ಯನವರು ವಚನಗಳ ಛಂದಸ್ಸಿನ ಬಗ್ಗೆ ತಮ್ಮ ವಿಶ್ಲೇಷಣೆ ಆರಂಭಿಸುವುದು ಕೊಂಡಗುಳಿ ಕೇಶಿರಾಜನ ಕಂದಗಳಿಂದ ಹಾಗೂ ಜೇಡರ ದಾಸಿಮಯ್ಯನ ತ್ರಿಪದಿ ಲಯದ ಮೂಲಕ ಮುಕ್ತತೆಯ ಈ ಬೆಳವಣಿಗೆಯನ್ನು ಗುರುತಿಸುವುದರೊಂದಿಗೆ. ಇದು ಕೇವಲ ಐತಿಹಾಸಿಕ ಕ್ರಮವನ್ನಷ್ಟೇ ಅಲ್ಲ, ಪ್ರಯೋಗಶೀಲತೆಯ ವಿಕಾಸವನ್ನೂ ಸೂಚಿಸುತ್ತದೆ. ಜೇಡರ ದಾಸಿಮಯ್ಯನ ವಚನಗಳಲ್ಲಿ ತ್ರಿಪದಿ ಲಯದ ಪ್ರಾಬಲ್ಯವನ್ನು ದಾಖಲಿಸಿ, "ಜೇಡರ ದಾಸಿಮಯ್ಯನ ವಚನಗಳೇ ಮಿಕ್ಕ ವಚನಕಾರರಿಗೆ ಮಾದರಿಯೂ ಆಗಿವೆ" ಎಂದು ಅವರು ತೀರ್ಮಾನಿಸುತ್ತಾರೆ. ಇದು ವಚನಗಳ ಸ್ವತಂತ್ರ ಅಸ್ತಿತ್ವವನ್ನು ಪ್ರತಿಪಾದಿಸುವ ಪ್ರಯತ್ನವಾಗಿದೆ. ಈ ತೀರ್ಮಾನವು ವಚನಪ್ರಕಾರದ ಸಂಪೂರ್ಣ ಸ್ವಾತಂತ್ರ್ಯ ಮತ್ತು ಕನ್ನಡದ ಜನಪದ ನೆಲೆಯನ್ನು ಗಟ್ಟಿಯಾಗಿ ಸ್ಥಾಪಿಸುತ್ತದೆ. ವಚನಗಳ ಛಂದಸ್ಸಿನ ಉಗಮ ಮತ್ತು ವಿಕಾಸದ ಕುರಿತು ವರು ನಡೆಸಿರುವ ಅಧ್ಯಯನ ಅತ್ಯಂತ ಮಹತ್ವದ್ದು ಮತ್ತು ಕನ್ನಡ ಭಾಷೆಯಲ್ಲಿ ಸಂಭವಿಸಿದ ಛಂದಸ್ಸಿನ ಸ್ವಾತಂತ್ರ್ಯದ ಕ್ರಾಂತಿಯ ದಾಖಲೆಯಾಗಿದೆ.

    ಅವರು ವಚನಗಳನ್ನು ಕೇವಲ ಧಾರ್ಮಿಕ ಉಪದೇಶಗಳಾಗಿ ಪರಿಗಣಿಸದೆ ಅವುಗಳ ಭಾಷಾ ವಿನ್ಯಾಸ, ಅಂತರಂಗದ ಲಯ, ಅನುಭವದ ತೀವ್ರತೆ, ರೂಪಕಶಕ್ತಿ, ಸಂವಾದಾತ್ಮಕತೆ, ವಸ್ತುನಿಷ್ಠ ಚಿಂತನೆ ಇವುಗಳ ನೆಲೆಯಲ್ಲಿ ಅವುಗಳನ್ನು ವಚನಗಳ ಪಠ್ಯಸ್ವರೂಪದ ಅಧ್ಯಯನದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು. ಅವರ  ವಚನಗಳ ಕುರಿತ ವಚನವು ಪದ್ಯವೂ ಅಲ್ಲ, ಗದ್ಯವೂ ಅಲ್ಲ; ಅದು ಅನುಭವದ ಭಾಷೆಯಾಗಿದೆ.” ಎಂಬ ನಿರೂಪಣೆಯು ವಚನದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಹೊಸ ಸಂಶೋಧನಾ ದಿಕ್ಕನ್ನು ನೀಡಿತು. ಇವರು ವಚನ ಸಾಹಿತ್ಯವನ್ನು ಸಾಮಾಜಿಕ ಅಂತರಂಗದ ವಿಶ್ಲೇಷಣೆ ನೆಲೆಯಲ್ಲಿ ಅಧ್ಯಯನ ಮಾಡಿ ಕೆಲವು ಪ್ರಮುಖ ಅಂಶಗಳನ್ನು ಗುರುತಿಸಿದ್ದಾರೆ. ವಚನಕಾರರ ಪ್ರಯೋಗಗಳು ಕೇವಲ ವಚನದ ಸಿದ್ಧಿಮಾತ್ರವೇ ಆಗಿಲ್ಲ, ಕನ್ನಡ ಭಾಷೆಯ ಸಿದ್ಧಿಯೂ ಆಗಿದೆ ಎಂಬುದು ವರ ಮಹತ್ವದ ವಾದ. ವಚನಕಾರರ ಭಾಷಾಬಳಕೆಯಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತದೆ. ಪಂಡಿತರನ್ನು ಕಾಡಿದ 'ಅರಿಸಮಾಸ' ಭಯ ಅವರನ್ನು ಕಾಡಲೇ ಇಲ್ಲ. ಸಹಜತೆಯೇ ವಚನಗಳ ಉಸಿರಾದುದರಿಂದ ಧಾರಾಳವಾಗಿ ಅನುಕರಣ ಶಬ್ದಗಳನ್ನು, ದ್ವಿರುಕ್ತಿಗಳನ್ನು ಅವರು ಬಳಸಿಕೊಂಡರು.

  ವಚನಕಾರರು ಸಹಜ ಕವಿಗಳು. ಅವರು ಸಾಹಿತ್ಯ ಸೃಷ್ಟಿಸಬೇಕೆಂಬ ಹೆಮ್ಮೆಯಿಂದ ಬರೆಯಲಿಲ್ಲ. ತಮ್ಮ ಅಂತರಾಳದ ಅನುಭವಗಳನ್ನು ಮತ್ತು ಸಾಮಾಜಿಕ ಕಾಳಜಿಯನ್ನು ಅಭಿವ್ಯಕ್ತಿಸುವ ಕ್ರಮವೇ ಕಾವ್ಯವಾಗಿಬಿಟ್ಟಿತು ಎಂದು ವಚನಗಳ ಕಾವ್ಯ ಸಹಜತೆಯನ್ನು ಸಿದ್ಧಲಿಂಗಯ್ಯನವರು ಅತ್ಯಂತ ಪ್ರಾಧಾನ್ಯದಿಂದ ಪ್ರಸ್ತಾಪಿಸುತ್ತಾರೆ. ವಚನಕಾರರು ತಮ್ಮ ವಚನಗಳನ್ನು 'ಸಾಹಿತ್ಯ'ದ ದೃಷ್ಟಿಯಿಂದ ನೋಡಲಿಲ್ಲ ಎಂಬುದನ್ನು ಸಿದ್ಧಲಿಂಗಯ್ಯನವರು ಆಗಾಗ ಒತ್ತಿ ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ವಚನವು ಅನುಭವದ ಅಭಿವ್ಯಕ್ತಿಯೇ ಹೊರತು ಕೇವಲ 'ವಾಗ್ರಚನೆ' ಅಲ್ಲ. ಎಂಬುದನ್ನು ಸಿದ್ಧರಾಮನ ಮಾತನ್ನು ಉಲ್ಲೇಖಿಸುತ್ತಾ, "ವಚನಾನುಭವ ವಾಗ್ರಚನೆಯಲ್ಲ" ಎಂಬ ನಿಲುವನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ.ವರು ವಚನ ಸಾಹಿತ್ಯವನ್ನು, ಸಂಪ್ರದಾಯದ ಜಡವಾದದ ಜೀವನಪ್ರವಾಹವನ್ನು ತಿಳಿಗೊಳಿಸುವ ದೃಷ್ಟಿ, ಅಷ್ಟಾದಶ ವರ್ಣನೆಗಳಿಂದ ಮುಕ್ತಗೊಳಿಸುವ ಬರವಣಿಗೆಯ ಬಗೆ, ಇವುಗಳ ಕಾರಣದಿಂದಾಗಿ ಹನ್ನೆರಡನೆಯ ಶತಮಾನವನ್ನು "ಅನ್ವೇಷಣೆಯ ಯುಗ" ಎಂದು ಕರೆಯುತ್ತಾರೆ.

    ಬಸವಣ್ಣನವರ ವಚನಗಳಲ್ಲಿ ಕಂಡುಬರುವ ಜಾತಿವ್ಯವಸ್ಥೆಯ ವಿರುದ್ಧದ ಧ್ವನಿಯನ್ನು ಅವರು ಸಾಮಾಜಿಕ ಕ್ರಾಂತಿಯ ಭಾಷೆಯಾಗಿ ಓದಿದರು. ಅಕ್ಕಮಹಾದೇವಿಯ ವಚನಗಳಲ್ಲಿ ವ್ಯಕ್ತವಾಗುವ ಆತ್ಮಸ್ವಾತಂತ್ರ್ಯ, ದೇಹ ರಾಜಕೀಯ ಮತ್ತು ಆಧ್ಯಾತ್ಮಿಕ ವಿಮೋಚನೆಯ ವಿಚಾರಗಳನ್ನು ಆಧುನಿಕ ಮಹಿಳಾವಾದಿ ದೃಷ್ಟಿಯಿಂದ ವಿಶ್ಲೇಷಿಸಿದರು. ಕಾಯಕವೇ ಕೈಲಾಸ” ಎಂಬ ತತ್ವವನ್ನು ಅವರು ಆರ್ಥಿಕ ಪ್ರಜಾಪ್ರಭುತ್ವದ ಘೋಷಣೆ ಎಂದು ನಿರೂಪಿಸಿದರು. ವಚನಗಳನ್ನು ಕೇವಲ ಭಕ್ತಿ ಸಾಹಿತ್ಯದ ಕುಗ್ಗಿದ ಕೊಂಡಿಯಾಗಿ ಅಥವಾ ಜಾನಪದ ವಸ್ತುವಾಗಿ ನೋಡದೆ, ಅದನ್ನು ಸ್ವತಂತ್ರ ತಾತ್ವಿಕ ವ್ಯವಸ್ಥೆ ಮತ್ತು ಸಾಮಾಜಿಕ ಕ್ರಾಂತಿಯ ದಾಖಲೆ ಎಂದು ಪ್ರತಿಪಾದಿಸಿದರು. ಜ್ಞಾನವೆಂಬುದು ಕೇವಲ ಮಠಮಾನ್ಯಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ, ಉರಿಲಿಂಗಪೆದ್ದಿಯಂತಹ ದಲಿತ ಶರಣರೂ ಸಂಸ್ಕೃತದ ಆಗಮ-ಉಪನಿಷತ್ತುಗಳ ಸತ್ವವನ್ನು ಜನಭಾಷೆಗೆ ಇಳಿಸಿದ್ದು 'ಜ್ಞಾನದ ವಿಕೇಂದ್ರೀಕರಣ'ದ ಅತ್ಯುನ್ನತ ಘಟ್ಟ ಎಂದು ಅವರು ವಾದಿಸುತ್ತಾರೆ.

    ಸಿದ್ಧಲಿಂಗಯ್ಯನವರು ವಚನಕಾರರೆಂದರೆ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಜೇಡರದಾಸಿಮಯ್ಯ ಮಾತ್ರವಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಸೂಳೆ ಸಂಕವ್ವ, ಕಾಳವ್ವ, ಮಸಣವ್ವ, ಹೆಂಡದ ಮಾರಯ್ಯ, ಹುಂಜಿನ ಕಾಳಗದ ದಾಸಯ್ಯ, ಬಹುರೂಪಿ ಚೌಡಯ್ಯ, ತುರುಗಾಹಿ ರಾಮಣ್ಣ, ಸುಂಕದ ಬಂಕಣ್ಣ, ಸೂಜಿಕಾಯಕದ ರಾಮಿತಂದೆ - ಹೀಗೆ ಭಿನ್ನ ಸ್ತರದ ವಿವಿಧ ವೃತ್ತಿಗಳ ಅನೇಕ ವಚನಕಾರರನ್ನು ಅವರು ಗುರುತಿಸುತ್ತಾರೆ. ಪ್ರತಿಯೊಬ್ಬ ವಚನಕಾರನ ವೈಶಿಷ್ಟ್ಯವನ್ನು ಸಂಕ್ಷಿಪ್ತವಾಗಿ, ಸೂಕ್ಷ್ಮಗಳು ಕಳೆದುಹೋಗದಂತೆ ಹೇಳುವ ಅಭಿವ್ಯಕ್ತಿ ರೀತಿಯನ್ನು ಸಿದ್ಧಲಿಂಗಯ್ಯನವರು ಸಮರ್ಥವಾಗಿ ರೂಢಿಸಿಕೊಂಡಿದ್ದಾರೆ. ಸಿದ್ಧಲಿಂಗಯ್ಯನವರು ಗುರುತಿಸಿರುವ ಮುಖ್ಯ ವಿಷಯವೆಂದರೆ, ವಚನಕಾರರು ಕೇವಲ ಮಾತನಾಡಲಿಲ್ಲ, ಅವರು ಹೊಸ ಪರಿಭಾಷೆಯನ್ನೇ ಸೃಷ್ಟಿಸಿದರು. 'ದಾಸೋಹ', 'ವಚನ', 'ಕಾಯಕ', 'ಜಂಗಮ' ಮುಂತಾದ ಶಬ್ದಗಳು ಸಂಸ್ಕೃತ ಮೂಲದವೇ ಆದರೂ ವಚನಕಾರರು ಅವುಗಳನ್ನು ಪರಿಕಲ್ಪನೆಗಳನ್ನಾಗಿಸಿ ಹೊಸ ಅರ್ಥಸಂಪತ್ತಿನಿಂದ ತುಂಬಿದರು. ಹಾಗೆಯೇ 'ಅರಿವು', 'ಮರೆವು', 'ಕುರುಹು' ಇತ್ಯಾದಿ ಅಚ್ಚ ಕನ್ನಡ ಶಬ್ದಗಳನ್ನೂ ಅವರು ಪರಿಭಾಷೆಯ ನೆಲೆಗೆ ಎತ್ತರಿಸಿದರು. ಅವರು ವಚನ ಸಾಹಿತ್ಯದ ಸಮಗ್ರ ಸ್ವರೂಪದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅವರ ವಿಶ್ಲೇಷಣೆಗಳು ಸಾಹಿತ್ಯಕ ಅದ್ಭುತ ಪ್ರಯೋಗಗಳು ಮತ್ತು ಪರಿಣಾಮಕಾರಿತ್ವದ ಮಿತಿಗಳನ್ನು ಎತ್ತಿ ತೋರಿಸುತ್ತವೆ.

     ಜಿ. ಎಸ್. ಸಿದ್ಧಲಿಂಗಯ್ಯರು ವಚನ ಸಾಹಿತ್ಯದ ತಾತ್ವಿಕ ಆಯಾಮಗಳ ನೆಲೆಯನ್ನು ವಿಶ್ಲೇಷಿಸುವಾಗ ವಚನ ಸಾಹಿತ್ಯದ ಕೆಲವು ಪರಿಕಲ್ಪನೆಗಳಿಗೆ ಹೊಸ ಅರ್ಥವ್ಯಾಪ್ತಿಯನ್ನು ನೀಡಿದರು. ಅವರು ಅನುಭವ ಮಂಟಪವನ್ನು, ಜನತಾಂತ್ರಿಕ ಚಿಂತನೆಯ ವೇದಿಕೆಯಾಗಿ, ಲಿಂಗಾಂಗಸಾಮರಸ್ಯ ವನ್ನು ವ್ಯಕ್ತಿ ಮತ್ತು ವಿಶ್ವದ ಏಕತ್ವ ವಾಗಿ, ದಾಸೋಹದ ಪರಿಕಲ್ಪನೆಯನ್ನು ಸಾಮಾಜಿಕ ಹಂಚಿಕೆ ಮತ್ತು ಸಮಾನತೆಯಾಗಿ, ಕಾಯಕ ತತ್ವವನ್ನು  ಶ್ರಮದ ಗೌರವ ಮತ್ತು ನೈತಿಕ ಬದುಕಿನ ನೆಲೆಯಲ್ಲಿ ಅರ್ಥೈಸಿದರು. ಇವರ ಈ ಹೊಸ ಅಧ್ಯಯನವು ವಚನ ಸಾಹಿತ್ಯವನ್ನು ಭಕ್ತಿಪರ ಸಾಹಿತ್ಯದಾಚೆಯ ಮಾನವತಾವಾದದ ನೆಲೆಯಲ್ಲಿ ನೋಡುವಂತಾಯಿತು. ಸಿದ್ಧಲಿಂಗಯ್ಯರು ವಚನಭಾಷೆಯ ವೈಶಿಷ್ಟ್ಯವನ್ನು ಆಳವಾಗಿ ವಿಶ್ಲೇಷಿಸುವುದರ ಮೂಲಕ ವಚನ ಭಾಷೆಯು ಯಾವರೀತಿ ಜನಭಾಷೆಗೆ ಸಮೀಪವಾದುದು, ಅಲಂಕಾರಪ್ರಿಯತೆಯಿಂದ ದೂರವಾದುದು, ಅನುಭವ ಸತ್ಯಕ್ಕೆ  ಹತ್ತಿರವಾದುದು, ತೀಕ್ಷ್ಣ ಅಭಿವ್ಯಕ್ತಿ ಶಕ್ತಿಯುತವಾದುದು ಎಂಬುದನ್ನು ಕಂಡುಕೊಳ್ಳುವುದರ ಮೂಲಕ  ವಚನಗಳ ಭಾಷೆಗೆ ಕನ್ನಡ ಭಾಷಾ ಚರಿತ್ರೆಯಲ್ಲಿ ಸ್ಥಾನವನ್ನು ಅಧಿಕೃತ ಗೊಳಿಸಿತು. ಪ್ರಯೋಗಗಳಿಂದ ವಚನಭಾಷೆ ಕೇವಲ ವಚನದ ಸಿದ್ಧಿಮಾತ್ರವೇ ಆಗಿಲ್ಲ. ಕನ್ನಡ ಭಾಷೆಯ ಸಿದ್ಧಿಯೂ ಆಗಿದೆ. ಏಕೆಂದರೆ ಅವರು ಅಲ್ಲಿಯವರೆಗಿದ್ದ ಗ್ರಂಥಸ್ಥ ಭಾಷೆ ಕನ್ನಡ ಮತ್ತು ಅಂದಿನ ಆಡು ಭಾಷೆ ಕನ್ನಡ ಈ ಎರಡರ ಕವಲುಗಳನ್ನೂ ಒಂದುಗೂಡಿಸಿ ಭಾಷೆಯನ್ನು ಜೀವಂತವಾಗಿಟ್ಟಿದ್ದು  ವಚನಕಾರರ ಪ್ರಮುಖ ಸಾಧನೆ. ಧಾರ್ಮಿಕ-ನೈತಿಕ-ಸಾಮಾಜಿಕ-ಸಾಹಿತ್ಯಕ ಇತ್ಯಾದಿ ಎಲ್ಲಾ ನೆಲೆಗಳಲ್ಲಿಯೂ ವಚನ ಚಳುವಳಿಯು ೧೨ನೆಯ ಶತಮಾನದಲ್ಲಿ ಮಾನ್ಯತೆ ಗಳಿಸಿದ್ದ ಪರಂಪರೆಗಳನ್ನು ಹಾಗೂ ಮೌಲ್ಯವ್ಯವಸ್ಥೆಗಳನ್ನು ತಿರಸ್ಕರಿಸಿ, ಅವುಗಳ ಸ್ಥಾನದಲ್ಲಿ ಹೊಸವ್ಯವಸ್ಥೆ ಹೊಸಮೌಲ್ಯಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರಿಂದ, ಆ ಚಳುವಳಿಯ ಭಾಷೆಯೂ ಸಿದ್ಧ ಭಾಷೆಯನ್ನು ತಿರಸ್ಕರಿಸಿ ತನ್ನದೇ ಆದ ಹೊಸಭಾಷೆಯನ್ನು ಕಟ್ಟಿಕೊಳ್ಳಬೇಕಾಗಿತ್ತು. ಪ್ರಭುತ್ವಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನರೊಡನೆ ಆ ಚಳುವಳಿಯು ಮಾತನಾಡಬೇಕಾಗಿದ್ದುದರಿಂದ, ಅವರ ಭಾಷೆಯಲ್ಲಿಯೇ ಅವರ ಪದಕೋಶವನ್ನು ಆಧರಿಸಿಯೇ ಮಾತನಾಡಬೇಕಾಗಿತ್ತು. ಆದುದರಿಂದಲೇ ವಚನವಾಙ್ಮಯದ ಭಾಷೆ ಹಿಂದಿನ ಕಾವ್ಯಗಳ ಭಾಷೆಗಿಂತ ಸಂಪೂರ್ಣವಾಗಿ ಭಿನ್ನವಾಯಿತು ಎಂದು ವಚನಕಾರರ ಭಾಷಾಸಿದ್ಧಿಯ ಬಗೆಗಿನ ಇವರ ಅನಿಸಿಕೆಯು ಅವರ ವ್ಯುತ್ಪತ್ತಿ ಹಾಗೂ ಸೋಪಜ್ಞ ಚಿಂತನೆ ಇವೆರಡಕ್ಕೂ ನಿದರ್ಶನವಾಗುತ್ತದೆ.

    ಅವರು ವಚನ ಸಾಹಿತ್ಯವನ್ನು ಉಪನಿಷತ್ ಪರಂಪರೆ, ಭಕ್ತಿ ಚಳವಳಿ, ಸೂಫಿ ಚಿಂತನೆ, ಬೌದ್ಧ ಮಾನವತಾವಾದ, ಆಧುನಿಕ ಅಸ್ತಿತ್ವವಾದ ಇವುಗಳೊಂದಿಗೆ ಹೋಲಿಕೆ ಮಾಡಿ ವಿಶ್ಲೇಷಿಸುವುದರ ಮೂಲಕ ವಚನ ಸಾಹಿತ್ಯದಲ್ಲಿ ಅಡಗಿರುವ  ಜಾಗತಿಕ ಮಾನವೀಯ ಮೌಲ್ಯಗಳ ಸುಳುಹುಗಳನ್ನು ಗುರುತಿಸಿದ್ದಾರೆ. ಇದರಿಂದಾಗಿ ವಚನಗಳನ್ನು ಕೇವಲ ಭಕ್ತಿಪರ ಸಾಹಿತ್ಯವಾಗಿ ನೋಡುವ ದೃಷ್ಟಿಯಿಂದ ಹೊರಬಂದು, ತಾತ್ವಿಕ-ಪಠ್ಯಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಿ ಕೊಟ್ಟಂತಾಯಿತು. ವರು ವಚನಗಳನ್ನು ಕೇವಲ ಭಕ್ತಿ ಸಾಹಿತ್ಯದ ಉಪವಿಭಾಗವಾಗಿ ನೋಡದೆ, ಸ್ವತಂತ್ರ ತಾತ್ವಿಕ ವ್ಯವಸ್ಥೆಯಾಗಿ ಪ್ರತಿಪಾದಿಸಿದರು. ಜೊತೆಗೆ ಸ್ಥಲ ಪರಿಕಲ್ಪನೆಯನ್ನು ಅಂದರೆ  ವಚನಗಳಲ್ಲಿ ಬರುವ ಷಟ್ಸ್ಥಲ ಸಿದ್ಧಾಂತವನ್ನು ಸರಳೀಕರಿಸಿ, ಅದು ವ್ಯಕ್ತಿಯನ್ನು ಆಧ್ಯಾತ್ಮಿಕ ದಾಸೋಹದಿಂದ ಶೂನ್ಯದ ವರೆಗೆ ಕೊಂಡೊಯ್ಯುವ ಒಂದು ಕ್ರಾಂತಿಕಾರಿ ಪ್ರಜ್ಞಾ ವಿಕಾಸ ಎಂದು ವಿಶ್ಲೇಷಿಸುವುದರ ಮೂಲಕ ವಚನಗಳನ್ನು ಸೈದ್ಧಾಂತಿಕವಾಗಿಯೂ ಅಧ್ಯಯನ ಮಾಡಿದ್ದಾರೆ. ಅವರು ವಚನ ಸಾಹಿತ್ಯವನ್ನು 'ಮತ'ದ ಕಿರಿದಾದ ಗೋಡೆಗಳಿಂದ ಹೊರತೆಗೆದು, ಅದನ್ನು 'ಮಾನವೀಯ ಬಂಡಾಯ'ದ ವಿಶಾಲ ವೇದಿಕೆಗೆ ತಂದು ನಿಲ್ಲಿಸಿದರು.

   ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ವಚನಸಾಹಿತ್ಯ ಒಂದು ಮಹತ್ವದ ಸಾಂಸ್ಕೃತಿಕಸಾಹಿತ್ಯಿಕ ಕ್ರಾಂತಿಯ ರೂಪವಾಗಿ ಕಾಣುತ್ತದೆ. ಇದು ಕೇವಲ ಭಕ್ತಿಯ ಅಭಿವ್ಯಕ್ತಿಯ ಸಾಹಿತ್ಯವಲ್ಲ; ಭಾಷೆಯ ಜನತಂತ್ರೀಕರಣ, ಕಾವ್ಯಪ್ರಕಟಣೆಯ ಮುಕ್ತೀಕರಣ, ಅನುಭವಸತ್ಯದ ಭಾಷಿಕ ರೂಪಾಂತರ ಮತ್ತು ಸಾಮಾಜಿಕ ಪ್ರತಿರೋಧದ ಸೌಂದರ್ಯಮೀಮಾಂಸಾತ್ಮಕ ಅಭಿವ್ಯಕ್ತಿಯಾಗಿದೆ. ಈ ನೆಲೆಯಲ್ಲಿ ವಚನಸಾಹಿತ್ಯವನ್ನು ವಿಶ್ಲೇಷಿಸುವಾಗ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಅವರು ಅದನ್ನು ಕನ್ನಡದ ದೇಸೀ ಕಾವ್ಯಪ್ರಜ್ಞೆಯ ಅತ್ಯುನ್ನತ ರೂಪವಾಗಿ ಓದುತ್ತಾರೆ. ಅವರ ವಿಶ್ಲೇಷಣೆಯಲ್ಲಿ ವಚನಗಳ ಭಾಷಾ ವಿನ್ಯಾಸ, ಛಂದೋಲಕ್ಷಣ, ಮತ್ತು ಕಾವ್ಯಪ್ರಜ್ಞೆ ಪರಸ್ಪರ ಸಂಬಂಧಿತ ಸೃಜನಾತ್ಮಕ ಘಟಕಗಳಾಗಿ ಕಾಣಿಸುತ್ತವೆ. ಇವರ ದೃಷ್ಟಿಯಲ್ಲಿ ವಚನಗಳ ಭಾಷೆ ಸಾಹಿತ್ಯಿಕ ಅಲಂಕಾರಶೀಲ ಭಾಷೆಯಲ್ಲ; ಅದು ಅನುಭವದಿಂದ ಮೂಡಿದ ಜೀವಂತ ನುಡಿ. ಈ ಭಾಷೆ ಕೃತಕ ಶೈಲಿಪ್ರಯೋಗದಿಂದ ನಿರ್ಮಿತವಾಗಿಲ್ಲ; ಬದುಕಿನ ನೇರ ಅನುಭವ, ಸಾಮಾಜಿಕ ತಲ್ಲಣ, ಆಧ್ಯಾತ್ಮಿಕ ತೀವ್ರತೆ ಮತ್ತು ಒಳನೋಟದ ಸಂವೇದನೆಗಳಿಂದ ಸ್ವಾಭಾವಿಕವಾಗಿ ಉದ್ಭವಿಸಿದೆ. ಆದ್ದರಿಂದ ವಚನಭಾಷೆಯಲ್ಲಿ ಕಾಣುವ ಸರಳತೆ ಮೇಲ್ನೋಟದ ಸರಳತೆ ಮಾತ್ರ; ಅದರೊಳಗೆ ಅಡಗಿರುವ ಅರ್ಥಪದರಗಳು ಅತ್ಯಂತ ಗಾಢವಾದವುಗಳಾಗಿವೆ ಎಂಬ ಅವರ ವಿಶ್ಲೇಷಣೆಯಲ್ಲಿ ವಚನಸಾಹಿತ್ಯವು ಕನ್ನಡದ ಸ್ವತಂತ್ರ ಕಾವ್ಯಮೀಮಾಂಸೆಗೆ ಮೂಲಪಠ್ಯವಾಗುತ್ತದೆ.

  "ವಚನ ಸಾಹಿತ್ಯದ ಒಟ್ಟು ನಿಲವು ಚರ್ಚೆಯಿಂದ ರೂಪಿತವಾದುದು; ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮುಕ್ತತೆಯೂ ಅವುಗಳ ಹಿರಿಮೆ" ಎಂದು ಬಣ್ಣಿಸುತ್ತಾರೆ. ಹೀಗೆಯೇ, "ವಚನಕಾರರ ಅನುಭಾವದ ಸಂಪತ್ತು ಓದುಗನ ಕೈಗೆ ಎಟುಕುವಂತೆ ಅನುಭಾವದ ವ್ಯಾಖ್ಯಾನವಾಗಿಸಿದ್ದಾರೆ" ಎಂಬ ಅವರ ಮಾತು ತಾವೇ ಒಂದು ನಿರ್ದಿಷ್ಟ ಮಾದರಿಯನ್ನು ಪ್ರಸ್ತಾಪಿಸುತ್ತಿದ್ದರೂ ಅದು ಅಂತಿಮ ಸತ್ಯವಲ್ಲ, ಬದಲಿಗೆ ಒಂದು ಸಾಧ್ಯತೆಯ ಅರ್ಥವಿವರಣೆಯಾಗಿದೆ ಎಂಬ ವಿನಮ್ರತೆಯನ್ನು ತೋರುತ್ತದೆ. ವಚನಗಳನ್ನು ಸಂಸ್ಕೃತ ಮಾರ್ಗದ ಪ್ರಭಾವದಿಂದ ಅರ್ಥೈಸದೆ, ಸ್ವದೇಶಿ, ಜನಪದ, ಗ್ರಾಮೀಣ ನೆಲೆಗಳಿಂದ ಅಂದರೆ ದೇಸೀ ಪ್ರಜ್ಞೆಯ ಮೂಲಕ  ಅರ್ಥೈಸುವ ಪ್ರಯತ್ನವನ್ನು ಅವರ ಅಧ್ಯಯನದಲ್ಲಿ ಕಾಣಬಹುದಾಗಿದೆ.

   ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯನವರು ಜೀವನ ಚರಿತೆ ರಚನೆಯಲ್ಲಿ ತಮ್ಮ ವಿಶಿಷ್ಟ ಛಾಪನ್ನುಮೂಡಿಸಿರುವರು. ಶರಣ ಸಾಹಿತ್ಯ ಸಂಸ್ಕೃತಿ ಕುರಿತು ಸೇವೆಸಲ್ಲಿಸಿದ್ದ ವ್ಯಕ್ತಿಗಳ ಸಾಧನೆ ಸಿದ್ಧಿಗಳನ್ನು ಗುರುತಿಸುವಲ್ಲಿ ಡಾ. ಸಿದ್ಧಯ್ಯ ಪುರಾಣಿಕ, ವಿರತಿಯ ಸಿರಿ ಸಪ್ಪಣ್ಣನವರು, ಬಸವಣ್ಣ, ವಚನ ಗುಮ್ಮಟ (ಡಾ. ಫ.ಗು. ಹಳಕಟ್ಟಿಯವರ ಬದುಕು-ಬರಹಗಳ ವಿಶ್ಲೇಷಣೆ).ಭಾಲ್ಕಿಯ ಚೆನ್ನಬಸವ ಪಟ್ಟದೇವರು ಮೊದಲಾದ ಕಿರು ಹೊತ್ತಿಗೆಗಳು ಗಮನಾರ್ಹವಾಗಿವೆ. ಇಲ್ಲಿನ ಒಂದೊಂದು ವ್ಯಕ್ತಿಚಿತ್ರವೂ ಒಂದೊಂದು ಆದರ್ಶದ, ಮಹೋನ್ನತಿಯನ್ನು ಪಡೆದಿವೆ.

     “ಶಬ್ದಸೋಪಾನʼʼವೆನ್ನುವ ಅವರ ಕೃತಿಬಹಳ ಜನರ ಕಣ್ಣಿಗೆ ಬಿದ್ದಂತಿಲ್ಲ. ಆ ಕೃತಿಯಲ್ಲಿ ಸಮಗ್ರ ವಚನ ಸಾಹಿತ್ಯವಿಶ್ಲೇಷಣೆ ಮಾಡಿದ್ದಾರೆ 189 ವಚನಕಾರರ ವೈಯಕ್ತಿಕ ವಿವರ, ಕಾಯಕ, ವಚನಗಳ ಸಂಖ್ಯೆ, ಅಂಕಿತ ಇತ್ಯಾದಿ ವಚನಕಾರರ ಸಮಗ್ರ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಿ ನೀಡಿದ್ದಾರೆ. ಅಜ್ಞಾತ ಶರಣರ ಪಟ್ಟಿ ಮತ್ತು ಅಂಕಿತಗಳ ಪಟ್ಟಿಯನ್ನು ಅನುಬಂಧವಾಗಿ ನೀಡಿದ್ದಾರೆ." ವಚನಕಾರರ ಮಾಹಿತಿಗಳನ್ನೊಳಗೊಂಡ ಕೋಶ "ಶಬ್ದಸೋಪಾನ"ವು ವಿಶಿಷ್ಟವಾದ ಸಂಶೋಧನಾ ಕೃತಿಯಾಗಿದ್ದು, ಮುಂದಿನ ಸಂಶೋಧಕರಿಗೆ ಅನುಪಮ ಕೈಪಿಡಿಯಾಗಿದೆ. ಜೊತೆಗೆ ಈ ಕೃತಿಯು ಕೇವಲ ಒಂದು ಮಾಹಿತಿ ಕೋಶವಲ್ಲ; ಅದೊಂದು ಸಾಮಾಜಿಕ ದಸ್ತಾವೇಜು. ಅಜ್ಞಾತ ಹಾಗೂ ವಿವಿಧ ತಳವರ್ಗಗಳಿಂದ ಬಂದ ವಚನಕಾರರನ್ನು (ಉದಾ: ಸೂಳೆ ಸಂಕವ್ವ, ಹೆಂಡದ ಮಾರಯ್ಯ, ನುಲಿಯ ಚಂದಯ್ಯ) ದಾಖಲಿಸುವ ಮೂಲಕ, ಅಂಚಿಗೆ ತಳ್ಳಲ್ಪಟ್ಟವರ ಚರಿತ್ರೆಯಾಗಿದ್ದು ವಚನ ಚಳವಳಿಯ 'ಪ್ರಜಾಪ್ರಭುತ್ವೀಕರಣ'ವನ್ನು ಜಿ.ಎಸ್‌.ಎಸ್ ಕಟ್ಟಿಕೊಟ್ಟಿರುವುದನ್ನು ಕಾಣಬಹುದಾಗಿದೆ.

    ಗುರುವೋ, ಲಿಂಗವೋ ಅಥವಾ ಜಂಗಮವೋ ಮುಖ್ಯವಲ್ಲ; ಕಾಯಕವೇ ಇವೆಲ್ಲವನ್ನೂ ಮೀರಿ ನಿಲ್ಲುವ ಕ್ರಾಂತಿಕಾರಕ ತತ್ವ ಎಂಬುದನ್ನು ನುಲಿಯ ಚಂದಯ್ಯನ ವಚನಗಳ ಮೂಲಕ ಎತ್ತಿಹಿಡಿಯಲಾಗಿದೆ. ಕಾಯಕದ ಮೂಲಕ ವ್ಯಕ್ತಿಯು 'ಸಮಾಜಮುಖಿ ಉತ್ಪಾದಕ ಶಕ್ತಿ'ಯಾಗಿ ರೂಪುಗೊಳ್ಳುವ ಆಧುನಿಕ ಚಿಂತನೆ ಇಲ್ಲಿದೆ. ಪ್ರತಿಯೊಬ್ಬ ಶರಣನ ವೃತ್ತಿ-ಪರಿಭಾಷೆಯು ಹೇಗೆ ಆಧ್ಯಾತ್ಮಿಕ ಪರಿಭಾಷೆಯಾಗಿ ರೂಪಾಂತರಗೊಂಡಿತು ಎಂಬುದನ್ನು ವಿಶ್ಲೇಷಿಸುವ ಮೂಲಕ, ಅಲಕ್ಷಿತರ ಚರಿತ್ರೆಯನ್ನು ಕನ್ನಡ ಸಾಹಿತ್ಯದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದಾರೆ.  

   ಅವರ ಸಂಶೋಧನಾಧ್ಯಯನವು ವಚನ ಸಾಹಿತ್ಯ ಅಧ್ಯಯನಕ್ಕೆ ಹೊಸ ಮಾರ್ಗಗಳನ್ನು ತೆರೆದಿದ್ದು, ಕನ್ನಡ ಸಂಶೋಧನಾ ಪರಂಪರೆಯಲ್ಲಿ ಅವರಿಗೆ ವಿಶಿಷ್ಟ ಸ್ಥಾನವನ್ನು ನೀಡಿದೆ. ಕನ್ನಡ ಸಾಹಿತ್ಯದಲ್ಲಿ ವಚನಗಳನ್ನು ಧಾರ್ಮಿಕ ಅಥವಾ ಭಕ್ತಿಪರ ಸಾಹಿತ್ಯವೆಂಬ ಸೀಮಿತ ಪರಿಧಿಯಲ್ಲಿ ನೋಡುವ ಪ್ರವೃತ್ತಿಯನ್ನು ಮೀರಿ, ಅವುಗಳನ್ನು ಭಾಷಿಕ, ಸಾಮಾಜಿಕ, ಸಾಂಸ್ಕೃತಿಕ, ತಾತ್ತ್ವಿಕ ಮತ್ತು ಸೌಂದರ್ಯಾತ್ಮಕ ಅಂಶಗಳ ಸಮಗ್ರ ಸಂಕಲನವಾಗಿ ಅರ್ಥೈಸುವ ಹೊಸ ದಾರಿಯನ್ನು ಅವರು ತೆರೆದರು. ವರು ತಮ್ಮ ವಿಶ್ಲೇಷಣಾತ್ಮಕ ಮತ್ತು ಸಂಶೋಧನಾತ್ಮಕ ಮಾರ್ಗಗಳಿಂದ ವಚನ ಸಾಹಿತ್ಯದ ನೆಲೆಗಟ್ಟನ್ನು ಗಟ್ಟಿಗೊಳಿಸಿದ್ದಾರೆ. ಅವರ ಮೂಲ ಅಧ್ಯಯನ ವಿಧಾನಗಳು, ಇವರನ್ನು ವಚನ ಸಾಹಿತ್ಯದ ಸರ್ವಾಂಗೀಣ ಸಂಶೋಧಕ ಎಂದು ಗುರುತಿಸುವಲ್ಲಿ ಸಹಾಯಕವಾಗಿವೆ. ವಚನ ಸಾಹಿತ್ಯವನ್ನು ಕುರಿತ ಅವರ ನಿಲುವುಗಳು ಸಾಂಪ್ರದಾಯಿಕತೆಯಿಂದ ಮುಕ್ತಗೊಂಡು, ತರ್ಕಬದ್ಧ ಮತ್ತು ಸೂಕ್ಷ್ಮ ಒಳನೋಟಗಳಿಂದ ಕೂಡಿದ್ದು ಮುಂದಿನ ತಲೆಮಾರಿನ ವಿದ್ವಾಂಸರಿಗೆ ಮಾರ್ಗದರ್ಶಿಯಾಗಿವೆ ಮತ್ತು ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಮೈಲಿಗಲ್ಲುಗಳಾಗಿ ಉಳಿಯುತ್ತವೆ ಎಂಬುದು ಅತಿಶಯೋಕ್ತಿ ಎಂದೆನಿಸದು. ಜಿ.ಎಸ್.ಸಿದ್ಧಲಿಂಗಯ್ಯ ಅವರು ವಚನ ಸಾಹಿತ್ಯವನ್ನು ಕೇವಲ ಭಕ್ತಿಯ ಭಾಷೆಯಾಗಿ ನೋಡುವ ಪರಂಪರೆಯನ್ನು ಮೀರಿ, ಅದನ್ನು ಸಾಮಾಜಿಕ ಕ್ರಾಂತಿಯ ಪಠ್ಯ, ಮಾನವತಾವಾದದ ತತ್ವಶಾಸ್ತ್ರ, ಭಾಷಿಕ ಸರಳತೆಯ ಶ್ರೇಷ್ಠ ರೂಪ, ಮತ್ತು ಆಧುನಿಕ ಚಿಂತನೆಗೆ ದಾರಿದೀಪ ಎಂದು ಮರುಸ್ಥಾಪಿಸಿದರು.

     ಇವರ 'ಅಲ್ಲಮಪ್ರಭು' ಎಂಬ ಕೃತಿಯಲ್ಲಿ, ಮುಕ್ತಾಯಕ್ಕನ ಪ್ರಸಂಗದಿಂದ ತಮ್ಮ ಕೃತಿಯನ್ನು ಆರಂಭ ಮಾಡಿರುವ ಜಿ.ಎಸ್‌. ಸಿದ್ಧಲಿಂಗಯ್ಯ ಅವರು ಅಲ್ಲಮಪ್ರಭುವಿನ ಬದುಕಿನ ಮೂರು ಘಟ್ಟಗಳನ್ನು ೧. ಅನಿಮಿಷ ಕೃಪಾಭಾಗ್ಯ, ೨. ಲೋಕ ಹಿತಾರ್ಥ ನಾಡಿನಸಂಚಾರ, , ಶೂನ್ಯ ಸಿಂಹಾಸನಾರೋಹಣ ಎಂದು ಗುರುತಿಸಿದ್ದಾರೆ. ಇದಕ್ಕನುಗುಣವಾಗಿ ಕಾಮಲತೆಯ ಸಂಗ, ಭೂಗತ ದೇವಾಲಯ, ಅನಿಮಿಷಾನುಭವ, ಸಿದ್ದರಾಮಯ್ಯನೊಡನೆ ಕಲ್ಯಾಣಕ್ಕೆ ಆಗಮನ, ಪ್ರಸಾದದ ಕುಳಿಯಲ್ಲಿದ್ದ ಮರುಳುಶಂಕರದೇವ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ, ನುಲಿಯ ಚಂದಯ್ಯನ ಲಿಂಗಯ್ಯಪ್ರಸಂಗ, ಮೋಳಿಗೆ ಮಾರಯ್ಯ-ಮಹಾದೇವಿ, ಗಜೇಶ ಮಸಣಯ್ಯ-ಮಸಣಮ್ಮ, ಹಡಪದ ಅಪ್ಪಣ್ಣ-ಲಿಂಗಮ್ಮ, ಬೊಂತಾದೇವಿ, ಮಾದರ ಧೂಳಯ್ಯ, ಮಹಾದೇವಿಯಕ್ಕ, ಘಟ್ಟಿವಾಳಯ್ಯ, ಗೋರಕ್ಷ ಪ್ರಸಂಗ ಮಾತು-ಮೌನಗಳ ಸಂಘರ್ಷ ಮುಂತಾದವುಗಳನ್ನು ಹಳೆಯ ಕಟ್ಟುಕತೆಗಳಸೂತಕ ಹೊತ್ತು ವ್ಯಾಖ್ಯಾನಿಸಿದ್ದಾರೆ. ಈ ಕೃತಿಯಲ್ಲಿ ಸಿದ್ಧಲಿಂಗಯ್ಯನವರು, ಮೇಲ್ನೋಟಕ್ಕೆ ಅಲ್ಲಮ ಪ್ರಾಧಾನ್ಯ ಕಂಡರೂ ಒಳಹೊಕ್ಕು ನೋಡಿದರೆ ಬಸವ ಪ್ರಾಧಾನ್ಯವೇ ಇರುವುದನ್ನು ಮನಗಾಣಿಸುತ್ತಾರೆ. ಅಲ್ಲಮಪ್ರಭುವಿನ ಬದುಕನ್ನು ಹಳೆಯ ಕಟ್ಟುಕತೆಗಳಿಂದ ಬಿಡಿಸಿ, ಅವನ ವೈಚಾರಿಕತೆ, 'ಶೂನ್ಯ ಸಿಂಹಾಸನ'ದ ಪರಿಕಲ್ಪನೆ ಹಾಗೂ 'ಐಕ್ಯಸ್ಥಲ'ದ ಮಹತ್ವವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಹಳೆಯ ಬೇರು ಮತ್ತು ಹೊಸ ಚಿಗುರು ಎಂಬ ಸಾಮರಸ್ಯದ ಹಾದಿ ಹಿಡಿದಿರುವುದರಿಂದ ಹಳೆಯ ಕಟ್ಟುಕತೆಗಳ ಸೂತಕ ಮತ್ತು ನವೀನ ವಿಚಾರ ಪಥಕ ಎರಡನ್ನೂ ನಿರ್ವಹಿಸುವ ಕೌಶಲವನ್ನು ಸೂಚಿಸುತ್ತದೆ.

      ಮೇದರ ಕೇತಯ್ಯ ಎನ್ನುವ ಅಲಕ್ಷಿತ ಶರಣನ ಬದುಕಿನ ವಿವರಗಳು ಹೇಗೆ ಎಲ್ಲೆಲ್ಲಿ ಹೆಣೆಯಲ್ಪಟ್ಟಿವೆ ಎಂಬುದನ್ನು ದಾಖಲು ಮಾಡುತ್ತಲೇ ಪುರಾಣದ ಕಥೆಗಳಲ್ಲಿ ಹಾಗೂ ಕೃತಿಗಳಲ್ಲಿ ರೂಪಿತವಾಗಿರುವ ಬಗೆಯನ್ನು ಓದುಗರ ಮುಂದಿಡುತ್ತಾರೆ. ಈ ಪ್ರಯತ್ನ ಕೃತಿಯ ಓದನ್ನು ಮತ್ತಷ್ಟು ಹಿಗ್ಗಿಸುತ್ತದೆ. ನಿರೂಪಣೆಯ ಬಗ್ಗೆ ಓದುಗರಿಗೆ ಆಶ್ಚರ್ಯ ಮತ್ತು ಕುತೂಹಲಗಳು ಮೂಡುತ್ತವೆ. ಇಲ್ಲಿನ ಕಥಾಚೌಕಟ್ಟು ಕೃತಿಗೆ ಚಾಲನಾಶಕ್ತಿಯನ್ನು ಒದಗಿಸಿದೆ. ಕೇತಯ್ಯನವರು ಕುಲಕಸುಬನ್ನೇ ಜೀವನಕ್ಕೆ ಆಧಾರವಾಗಿರಿಸಿಕೊಂಡು, ಸದಾಶಿವನನ್ನೇ ಆರಾಧಿಸುತ್ತಾ, ಶಿವಸ್ತುತಿಯನ್ನೇ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಎಲ್ಲರಿಗೂ ಪ್ರಿಯವಾಗುವಂತೆ ಬಾಳಿಬದುಕಿದವರು. ಬಡತನದಲ್ಲೂ ಹಿರಿತನವನ್ನು ಮೆರೆದವರು. ಕೃತಿಯಲ್ಲಿನ ಈ ಬಗೆಯ ಅಂಶಗಳು ಕೇತಯ್ಯನವರನ್ನು ಆಮೂಲಾಗ್ರವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಹಾಗಾಗಿ ಕೇತಯ್ಯನವರ ಬದುಕು-ಬರಹದ ಪರಿಚಯಾತ್ಮಕ ಕೃತಿಯಾಗಿ ನಾವು ಪರಿಗಣಿಸ ಬಹುದಾಗಿದೆ. ಇಲ್ಲಿ ಏಕಕಾಲಕ್ಕೆ ವ್ಯಕ್ತಿಯನ್ನು ಹಾಗೂ ವ್ಯಕ್ತಿತ್ವವನ್ನು ಸೆರೆಹಿಡಿಯುವ ಪ್ರಯತ್ನ ಮಾಡಲಾಗಿದೆ. ನೋವು, ದುಃಖ, ಅಸಹಾಯಕತೆಗಳಲ್ಲಿಯೇ ಎಲ್ಲರನ್ನೂ ಸಾಧ್ಯಗೊಳಿಸಿದ ಕೇತಯ್ಯನನ್ನು ಓದುಗರ ಮನದಾಳದಲ್ಲಿ ಉಳಿಯುವಂತೆ ಮಾಡಿದೆ. ಭಗವಂತ ದಂಪತಿಗಳಿಬ್ಬರನ್ನು ಪರೀಕ್ಷಿಸುವ ಬಗೆ ಮನಕಲುಕುವಂತಿದೆ. ಹಣ, ಐಶ್ವರ್ಯ, ಸಂಪತ್ತಿಗೆ ಹಾತೊರೆಯುವ ವ್ಯಕ್ತಿತ್ವಗಳೇ ಹೆಚ್ಚಿರುವ ಪ್ರಸ್ತುತ ಸಂದರ್ಭದಲ್ಲಿ ಕೇತಯ್ಯ ಮತ್ತು ಸಾತವ್ವ ದಂಪತಿಗಳ ಶ್ರದ್ಧೆ, ಭಕ್ತಿ, ಪ್ರೀತಿ ಶಾಶ್ವತವಾಗಿರುವುದನ್ನು  ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.

     ಕನ್ನಡ ವಚನಸಾಹಿತ್ಯದ ಅಧ್ಯಯನದಲ್ಲಿ ಶೂನ್ಯ ಪರಿಕಲ್ಪನೆ ತಾತ್ವಿಕ ಅಂಶವಾಗಿದೆ. ವೀರಶೈವ ಚಿಂತನೆಯ ದಾರ್ಶನಿಕ ಮೂಲಸತ್ವಗಳನ್ನು, ಅನುಭಾವದ ಆಧ್ಯಾತ್ಮಿಕ ವಿಸ್ತಾರವನ್ನು ಹಾಗೂ ವಚನಗಳ ಆಂತರಿಕ ತಾತ್ವಿಕ ಕಟ್ಟುಗೂಡಿಕೆಯನ್ನು ಅರಿಯಲು ಶೂನ್ಯಸಂಪಾದನೆ ಕೃತಿಗೆ ವಿಶೇಷ ಸ್ಥಾನವಿದೆ. ಶರಣರ ಆಧ್ಯಾತ್ಮಿಕ ಅನುಭವದ ಭಾಷ್ಯವನ್ನು ಸಂಕಲಿತವಾಗಿ ನಿರೂಪಿಸುವ ಕೃತಿಯೇ ಶೂನ್ಯಸಂಪಾದನೆ. ಇದು ಶರಣರ ಅನುಭವ, ಆಧ್ಯಾತ್ಮಿಕ ಸಂವಾದ, ತತ್ವಚಿಂತನೆ ಹಾಗೂ ಶಿವಾನುಭವದ ಶೂನ್ಯ ಪರಿಕಲ್ಪನೆಯನ್ನು ಕಥನಾತ್ಮಕ-ತಾತ್ವಿಕ ರೂಪದಲ್ಲಿ ಕಟ್ಟಿಕೊಡುವುದರ ಮೂಲಕ ಕನ್ನಡ ಸಾಹಿತ್ಯದ ಅಧ್ಯಯನ ಪರಂಪರೆಯಲ್ಲಿ ವಿಶಿಷ್ಟ ಗ್ರಂಥರೂಪದ ಸಾಂಸ್ಕೃತಿಕತಾತ್ವಿಕ ಪಠ್ಯವಾಗಿ ಪರಿಗಣಿತವಾಗಿದೆ. ಇದು ಕೇವಲ ವಚನಗಳ ಸಂಕಲನವಲ್ಲ; ಒಂದು ಚಿಂತನಾ ಚಳವಳಿಯ ಭಾಷಿಕ ರೂಪರೇಖೆ, ಅನುಭವದ ಬಹುಸ್ತರೀಯ ದಾಖಲಾತಿ, ಮತ್ತು ಸಮುದಾಯದ ಆತ್ಮಪರಿಶೀಲನೆಯ ಸಂವಾದಾತ್ಮಕ ವಾಸ್ತುಶಿಲ್ಪವಾಗಿದೆ.

   ಈ ಕೃತಿಯ ಅಧ್ಯಯನ, ಸಂಪಾದನೆ, ಪಾಠಪರಿಶೋಧನೆ ಮತ್ತು ವಿಮರ್ಶಾತ್ಮಕ ಮರುನಿರ್ಮಾಣದಲ್ಲಿ ಜಿ.ಎಸ್. ಸಿದ್ಧಲಿಂಗಯ್ಯ ಸಲ್ಲಿಸಿರುವ ಕೊಡುಗೆ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಒಂದು ಮಹತ್ವದ ಘಟ್ಟವಾಗಿದೆ. ಶೂನ್ಯ ಸಂಪಾದನಾ ಪರಂಪರೆಯ ಕುರಿತು ಗಂಭೀರ ಅಧ್ಯಯನ ನಡೆಸಿದ ಪ್ರಮುಖ ವಿದ್ವಾಂಸರಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರೂ ಒಬ್ಬರಾಗಿದ್ದಾರೆ. ಅವರು ಕೇವಲ ಸಂಪಾದಕರಾಗಿ ಕಾರ್ಯನಿರ್ವಹಿಸದೆ, ಗ್ರಂಥದ ತಾತ್ವಿಕ, ಪಾಠವಿಮರ್ಶಾತ್ಮಕ ಮತ್ತು ಸಂಶೋಧನಾ ಮೌಲ್ಯವನ್ನು ಮರುಸ್ಥಾಪಿಸಿದ ವಿದ್ವಾಂಸರಾಗಿ ಗುರುತಿಸಲ್ಪಡುತ್ತಾರೆ. ಅವರೇ ಒಂದೆಡೆ ಹೇಳಿಕೊಂಡಂತೆ ಅವರಿಗೆ ಶೂನ್ಯಸಂಪಾದನೆ ಅಧ್ಯಯನಕ್ಕೆ ಪ್ರೇರಣೆ ದೊರೆತ್ತಿದ್ದು ತುಮಕೂರಿನ ಸಿದ್ಧಗಂಗಾಮಠದಲ್ಲಿ ಶೂನ್ಯಸಂಪಾದನೆ ಕುರಿತು ೧೩ ಹುಣ್ಣಿಮೆಯ ದಿನಗಳಂದು ೧೩ ವಿಶೇಷ ಉಪನ್ಯಾಸಗಳನ್ನು ನೀಡುವ ಅವಕಾಶವನ್ನು ಶ್ರೀಮಠದ ಪೂಜ್ಯರು ಒದಗಿಸಿದ ಸಂದರ್ಭದಲ್ಲಿ, ಅದು ಅವರ ಬದುಕಿನ ಅಮೃತ ಘಳಿಗೆ, ಅಲ್ಲಿಂದ ಮುಂದೆ ಶೂನ್ಯಸಂಪಾದನೆಯ ಬಗೆಗೆ ಅವರಿಗೆ ಒಂದು ರೀತಿಯ ಬಿಡಲಾರದ ನಂಟು, ಬಿಡಿಸಲಾರದ ಗಂಟು ಬಿಗಿದುಕೊಂಡಿತು. ಅದೇ ರೀತಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಶೂನ್ಯ ಸಂಪಾದನೆಯನ್ನು ಕುರಿತು ಮೂರು ವಿಶೇಷೋಪನ್ಯಾಸಗಳನ್ನು ನೀಡಿದರು. ಈ ಸಂಶೋಧನೆಯ ಫಲವಾಗಿ ಶೂನ್ಯ ಸಂಪಾದನೆಗೆ ಸಂಬಂಧಿಸಿದ ಐದು ಮೌಲಿಕ ಕೃತಿಗಳು ರಚಿತವಾದವು. ವಚನಗಳ ಸಂಕಲನವಾದ ಶೂನ್ಯ ಸಂಪಾದನೆಯ ಪ್ರಕಟಿತ ಕೃತಿಗಳನ್ನು ಸಂಗ್ರಹಿಸಿ, ಹೋಲಿಕೆ ಮಾಡುವ ಮೂಲಕ ಅವರು ಅದರ ಪಠ್ಯ ಸ್ವರೂಪ ಮತ್ತು ಕಾಲನಿರ್ಣಯವನ್ನು ಸ್ಥಾಪಿಸಲು ಪ್ರಯತ್ನಿಸಿದರು. ಅವರ ಸಂಶೋಧನೆಯು ಶೂನ್ಯ ಸಂಪಾದನೆಯ ಕಾಲ ಮತ್ತು ಕರ್ತೃತ್ವದ ಕುರಿತು ಸ್ಪಷ್ಟತೆ ಮೂಡಿಸಿತು. ಶೂನ್ಯ ಸಂಪಾದನೆಯ ಪಾಠಪರಂಪರೆ ಬಹಳ ಸಂಕೀರ್ಣವಾಗಿದೆ. ಹಲವು ಕೃತಿಗಳು, ಪಾಠಭೇದಗಳು, ಕಾಲಾನುಗತ ಪರಿಷ್ಕರಣೆಗಳು ಮತ್ತು ವ್ಯಾಖ್ಯಾನಾತ್ಮಕ ಅಂತರಗಳಿಂದ ಗ್ರಂಥದ ಮೂಲಸ್ವರೂಪವನ್ನು ನಿರ್ಧರಿಸುವುದು ಕಷ್ಟಕರವಾಗಿತ್ತು. ಈ ಸವಾಲನ್ನು ಗಂಭೀರ ಸಂಶೋಧನಾ ಶಿಸ್ತಿನಿಂದ ಎದುರಿಸಿದವರಲ್ಲಿ ಜಿ.ಎಸ್. ಸಿದ್ಧಲಿಂಗಯ್ಯ ಪ್ರಮುಖರು. ಶೂನ್ಯ ಸಂಪಾದನಾ ಸಂಕಲನ ಕೃತಿಗಳ ಬಗೆಗಿನ ಅವರ ಸಂಪಾದಕೀಯ ನಿಲುವು, ಪಾಠಭೇದಗಳ ಪರಿಶೀಲನೆ, ಗ್ರಂಥದ ತಾತ್ವಿಕ ಹಿನ್ನೆಲೆಯ ವಿವರಣೆ, ಹಾಗೂ ವಚನಪರಂಪರೆಯೊಂದಿಗೆ ಶೂನ್ಯಸಂಪಾದನೆಯನ್ನು ಸಂಬಂಧಿಸಿ ನೋಡುವ ದೃಷ್ಟಿಕೋನವು ಕನ್ನಡ ವಿದ್ವತ್‌ಲೋಕಕ್ಕೆ ಹೊಸ ಸಂಶೋಧನಾ ಆಯಾಮವನ್ನು ನೀಡಿದೆ. ಅವರ ಸಂಪಾದಕೀಯ ದೃಷ್ಟಿ ಕೇವಲ ಪಾಠಸಂಸ್ಕರಣೆಯ ಮಟ್ಟದಲ್ಲಿ ನಿಲ್ಲದೆ, ಪಠ್ಯವಿಮರ್ಶೆ, ತಾತ್ವಿಕ ವಿವೇಚನೆ, ವಚನಸಾಹಿತ್ಯದ ಅಂತರ್‌ಸಂಬಂಧಗಳ ಅನ್ವೇಷಣೆ ಮತ್ತು ವೀರಶೈವ ಆಧ್ಯಾತ್ಮಿಕ ಚಿಂತನೆಯ ಮರುಪರಿಶೀಲನೆಯವರೆಗೆ ವಿಸ್ತರಿಸಿರುವುದು ಗಮನಿಸ ತಕ್ಕ ಸಂಗತಿಯಾಗಿದೆ.

    ಶೂನ್ಯಸಂಪಾದನೆಯ ಮಾದರಿ ಬಹುಮುಖಿ ಮತ್ತು ಸಂಕೀರ್ಣವಾಗಿದ್ದು ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ತಮ್ಮ  ಅಧ್ಯಯನದಲ್ಲಿ ಕೆಳಕಂಡ ಲಕ್ಷಣಗಳನ್ನು ಗಮನಿಸಿದ್ದಾರೆ. ಶೂನ್ಯಸಂಪಾದನೆಯನ್ನು ಅದರ ಕರ್ತೃಗಳೇ 'ಮಹಾಪ್ರಸಂಗ' ಎಂದು ಕರೆದುಕೊಂಡಿದ್ದಾರೆ. ಇದರರ್ಥ ಇದು ಹಲವಾರು ಪ್ರಸಂಗಗಳನ್ನು ಒಳಗೊಂಡಿರುತ್ತದೆ. ಇದು ಕೇವಲ ವಚನಗಳ ಸಂಕಲನವಲ್ಲ, ಬದಲಿಗೆ ಉತ್ತರ-ಪ್ರತ್ಯುತ್ತರ ರೂಪದಲ್ಲಿ ಸಂವಾದಾತ್ಮಕ ಮಾದರಿಯಲ್ಲಿ ಸಂಯೋಜಿತವಾಗಿದೆ. ಶರಣರ ನಡುವಿನ ಸಂವಾದವೇ ಇದರ ಮೂಲ ಸತ್ತ್ವ. ಅಲ್ಲಮಪ್ರಭುವನ್ನು ಕಥಾನಾಯಕನನ್ನಾಗಿ ಮಾಡಿಕೊಂಡು, ಅವನ ಸುತ್ತ ಇತರ ಶರಣರ ಪ್ರಸಂಗಗಳು ಹೆಣೆಯಲ್ಪಟ್ಟಿರುವುದರ ಮೂಲಕ ಕಥಾನಾಯಕ ಕೇಂದ್ರಿತ ಮಾದರಿಯಾಗಿದೆ. ಹನ್ನೆರಡನೆಯ ಶತಮಾನದ ವಚನ ಚಳುವಳಿಯನ್ನು ಸಜೀವವಾಗಿ ಮತ್ತು ಸರ್ವಾಂಗೀಣವಾಗಿ ಒಂದು ಮಹಾಕಾವ್ಯದ ರೀತಿಯಲ್ಲಿ ಪ್ರಸ್ತುತಪಡಿಸುವ ಅನನ್ಯ ಪ್ರಕಾರವಾಗಿದೆ ಎಂಬ ಇವರ ಆಳವಾದ ಅಧ್ಯಯನದ ನಿಲುವು ಸ್ವೀಕಾರಾರ್ಹವಾಗಿದೆ.ಇವರ ಪ್ರಕಾರ ಶೂನ್ಯಸಂಪಾದನೆಯು ಸೃಜನಾತ್ಮಕ ಸಂಪಾದನಾ ಮಾದರಿಯಾಗಿದೆ. ಶೂನ್ಯ ಸಂಪಾದನೆಯ ಪರಿಷ್ಕರಣೆಗಳಿಗೆ ಕಾರಣವಾದ ಶಿವಗಣಪ್ರಸಾದಿ ಮಹಾದೇವಯ್ಯನ "ಇಲ್ಲಿ ವಚನಕ್ರಮ ಸೇರುವೆ ತಪ್ಪುಳ್ಳಡೆ ನಿಮ್ಮ ಪರಮಜ್ಞಾನದಿಂ  ತಿದ್ದಿ ಈ ವಚನಾನುಭವ ಪ್ರಸಂಗಮಂ ಮಾಡಿ ಸುಖಿಸುವುದು " ಎಂಬ ಸೂಚನೆಯನ್ನು ಹಲಗೆಯಾರ್ಯನು ಹೇಗೆ ಅರ್ಥಪೂರ್ಣವಾಗಿ ಗ್ರಹಿಸಿದನು, ಸಿದ್ಧರಾಮಾದಿಗಳಿಗೆ ದೀಕ್ಷೆ ನೀಡಿಸಿದನು, ಕಾಯಕ ದರ್ಶನವನ್ನು ಒಳಗೊಂಡ ಹೊಸ ಪ್ರಸಂಗ ಸೃಷ್ಟಿಸಿದನು, ಅಕ್ಕನ ಪ್ರಸಂಗ ಹಾಗೂ ಮರುಳು ಶಂಕರದೇವರ ಪ್ರಸಂಗಗಳನ್ನು ಬೆಳೆಸಿದನು - ಈ ಎಲ್ಲ ವಿವರಗಳನ್ನು ಅವರು ತಮ್ಮದೇ ಆದ ನೆಲೆಯಲ್ಲಿ ಚರ್ಚಿಸಿದ್ದಾರೆ.

      . ಕೆಲವು ವಿದ್ವಾಂಸರು ಅನುಭವ ಮಂಟಪ ಮತ್ತು ಶೂನ್ಯ ಸಂಪಾದನೆಯನ್ನು ಕೇವಲ ದಂತಕಥೆಯ ಆಧಾರದ ಮೇಲೆ ನಿರ್ಮಿತವಾದ ಕಾಲ್ಪನಿಕ ಕಥನವೆಂದು ತಿರಸ್ಕರಿಸಿದ್ದರು. ಈ ಸಮಸ್ಯೆಗಳ ನಿವಾರಣೆಗಾಗಿ ಸಿದ್ಧಲಿಂಗಯ್ಯನವರು ತಮ್ಮ ವೈಜ್ಞಾನಿಕ ಸಂಪಾದನಾ ವಿಧಾನವನ್ನು ಪ್ರಾರಂಭಿಸಿದರು. ಅನುಭವ ಮಂಟಪವನ್ನು ಕೇವಲ ಒಂದು ಕಲ್ಪನೆಯಾಗಿ ನೋಡದೆ, ಅದನ್ನು ಒಂದು ವಾಸ್ತವಿಕ ಸಾಮಾಜಿಕ ವೇದಿಕೆಯಾಗಿ ಪುನರ್ನಿರ್ಮಿಸಿದರು. ಅನುಭಾವ ಮಂಟಪವನ್ನು ಸಿದ್ಧಲಿಂಗಯ್ಯನವರು "ಮಧ್ಯಕಾಲೀನ ಕರ್ನಾಟಕದ ಮೊದಲ ಪ್ರಜಾಸತ್ತಾತ್ಮಕ ಸಂಸತ್ತು" ಎಂದು ಕರೆದರು. ಪ್ರತಿ ವಚನ ಮತ್ತು ಅದರ ಸನ್ನಿವೇಶದ ಕುರಿತು ಟಿಪ್ಪಣಿಗಳನ್ನು ಸಿದ್ಧಪಡಿಸಿದರು. ಈ ಟಿಪ್ಪಣಿಗಳು ಇತಿಹಾಸ, ತತ್ತ್ವ ಮತ್ತು ಸಮಾಜ ವಿಜ್ಞಾನದ ದೃಷ್ಟಿಯಿಂದ ಅತ್ಯಂತ ಮೌಲಿಕವಾಗಿವೆ. ಶೂನ್ಯ ಎಂಬ ಪರಿಕಲ್ಪನೆಯನ್ನು ಜನಪ್ರಿಯ ಮತ್ತು ಪಾಂಡಿತ್ಯಪೂರ್ಣ ಎರಡೂ ಮಟ್ಟದಲ್ಲಿ ಸ್ಪಷ್ಟಪಡಿಸಿದರು. ʻʻಶೂನ್ಯ ಸಂಪಾದನೆ" ಎಂಬ ಹೆಸರು ಸೂಚಿಸುವಂತೆ, ಇದು ಶೂನ್ಯದ ಅನುಭವವನ್ನು ಪಡೆದ ಸಾಧಕರ (ಶರಣರ) ಸಂಪಾದನೆ (ಕ್ರೋಡೀಕರಣ) ಎಂದು ಇವರು ವಿವರಿಸಿದರು. ಸಿದ್ಧಲಿಂಗಯ್ಯನವರು ತಮ್ಮ ಶೂನ್ಯ ಸಂಪಾದನೆಯ ಅಧ್ಯಯನದ ಮೂಲಕ ಇದೊಂದು ಸಮಾನತೆಯ ಸಂವಾದ ಎಂದು ಸಾಬೀತುಪಡಿಸಿದರು. ಅಲ್ಲಮ ಪ್ರಭುವಿನ ಶೂನ್ಯವಾದ ಮತ್ತು ಬಸವಣ್ಣನವರ ಕಾಯಕ ಮತ್ತು ದಾಸೋಹದ ಮಾರ್ಗಗಳು ಪರಸ್ಪರ ಪೂರಕವೇ ಹೊರತು ಪ್ರತಿಸ್ಪರ್ಧಿ ಅಲ್ಲ ಎಂಬ ನಿಲುವನ್ನು ಪ್ರತಿಪಾದಿಸಿದರು.

     ಶೂನ್ಯ ಸಂಪಾದನೆಯನ್ನು ಕುರಿತ ಇವರ ಗಂಭೀರವಾದ ಅಧ್ಯಯನದಲ್ಲಿ   ಶೂನ್ಯಸಂಪಾದನಾ ಸಂಕಲನಗಳ ಅಂತರಂಗದಲ್ಲಿ ಒಟ್ಟುಗೂಡಿರುವ ಅನುಭವಮಂಟಪದ ಸಂವಾದ ಸಂಸ್ಕೃತಿ, ಶರಣರ ತಾತ್ವಿಕ ಚಿಂತನೆ, ಅನುಭವ ಮತ್ತು ಜ್ಞಾನಗಳ ಏಕೀಕರಣ, ಶಿವತತ್ವದ ನಿರಾಕಾರ ವ್ಯಾಖ್ಯಾನ, ಶೂನ್ಯವನ್ನು ಪರಮ ಸತ್ಯವಾಗಿ ನಿರೂಪಿಸುವ ದಾರ್ಶನಿಕ ವಿನ್ಯಾಸ ಇವೆಲ್ಲವುಗಳ ಕುರಿತ ಹೊಸ  ಚಿಂತನೆಯನ್ನು ಕಾಣಬಹುದು. ಅವರು ವಚನ ಸಾಹಿತ್ಯ, ಆಗಮ ಸಾಹಿತ್ಯ, ವೀರಶೈವ ತತ್ವಗ್ರಂಥಗಳು ಹಾಗೂ ಶರಣರ ಅನುಭವಸಾಕ್ಷ್ಯಗಳನ್ನು ಪರಸ್ಪರ ಹೋಲಿಕೆ ಮಾಡಿ ಶೂನ್ಯಸಂಪಾದನೆಯ ಅರ್ಥವ್ಯಾಪ್ತಿಯನ್ನು ವಿಶ್ಲೇಷಿಸಿದರು. ಇದರ ಫಲವಾಗಿ ಈ ಸಂಕಲನ ಕೃತಿಯು ಏಕಾಂಗ ಕೃತಿಯಾಗಿ ಕಾಣದೆ ಪರಂಪರೆಯ ಭಾಗವಾಗಿ ಗುರುತಿಸಿಕೊಳ್ಳುವುದರ ಮೂಲಕ ಬಸವ ಚಿಂತನೆ, ಅಲ್ಲಮಪ್ರಭು ತತ್ವ, ಅಕ್ಕಮಹಾದೇವಿಯ ಅನುಭವ ಭಾಷೆ  ಇವುಗಳೊಂದಿಗೆ ಅದರ ಸಂಬಂಧ ಸ್ಪಷ್ಟವಾಯಿತು.

    ಜಿ.ಎಸ್. ಸಿದ್ಧಲಿಂಗಯ್ಯ ಅವರು ಎಸ್.‌ ವಿದ್ಯಾಶಂಕರ ಅವರೊಡಗೂಡಿ ಬಹುಕಾಲದಿಂದ ಅಪ್ರಕಟಿತವಾಗಿಯೇ ಉಳಿದಿದ್ದ ಪ್ರಥಮ ಪರಿಷ್ಕರಣಕಾರನಾದ ಹಲಗೆಯಾರ್ಯನ  ಶೂನ್ಯಸಂಪಾದನೆಯನ್ನು ಶಾಸ್ತ್ರೀಯವಾಗಿ ಪರಿಷ್ಕರಿಸಿ ಸಂಪಾದಿಸಿದ್ದು, ಅದು ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಮೈಲಿಗಲ್ಲಾಗಿದೆ. ಅಪ್ರಕಟಿತವಾಗಿದ್ದ ಹಲಗೆದೇವರ ಶೂನ್ಯ ಸಂಪಾದನೆಯನ್ನು ಹೊರತರುವಲ್ಲಿಯೂ ಅವರ ಪಾತ್ರ ವೈಶಿಷ್ಟ್ಯ ಪೂರ್ಣವಾದುದು. ಹಲಗೆಯಾರ್ಯನ ಶೂನ್ಯಸಂಪಾದನೆ ಬಹುದಿನಗಳ ವರೆಗೆ ಏನೇನೋ ಕಾರಣಗಳಿಂದಾಗಿ ನಿರ್ಲಕ್ಷ್ಯಕ್ಕೊಳಗಾಗಿ ಹಾಗೇ ಉಳಿದಿತ್ತು. ಅದನ್ನು ಹಸ್ತಪ್ರತಿಯ ಸೆರೆಯಿಂದ ಬಿಡಿಸಿ ಅದರ ಅಜ್ಞಾತವಾಸದ ತೆರೆಯನ್ನು ಸರಿಸಿ ಬೆಳಕಿಗೆ ತರುವ ಮೂಲಕ ಅದರ ವಿಶೇಷತೆಯನ್ನು ಮೊದಲಬಾರಿಗೆ  ಸಾಹಿತ್ಯವಲಯಕ್ಕೆ ಪರಿಚಯಿಸಿದರು, ಅವರು ಈ ಕೃತಿಯನ್ನು ಕೇವಲ ಮುದ್ರಿತ ರೂಪಕ್ಕೆ ತರಲಿಲ್ಲ; ಅದರ ತಾತ್ವಿಕ ಆಳ, ಪಾಠಪರಂಪರೆಯ ಸಂಕೀರ್ಣತೆ ಮತ್ತು ವಚನ ಚಿಂತನೆಯ ಅಂತರಂಗವನ್ನು ಶಾಸ್ತ್ರೀಯವಾಗಿ ಅನಾವರಣಗೊಳಿಸಿದರು. ಗ್ರಂಥಸಂಪಾದನಾ ಶಾಸ್ತ್ರದ ದೃಷ್ಟಿಯಲ್ಲಿ, ಶಿವಗಣಪ್ರಸಾದಿ ಮಹಾದೇವಯ್ಯನ ಮೂಲ ಕೃತಿಗೂ, ಮುಂದಿನ ಗೂಳೂರ ಸಿದ್ದವೀರಣ್ಣನ ಪರಿಷ್ಕರಣ ಕೃತಿಗೂ ನಡುವಿನ ಅತ್ಯಂತ ಮಹತ್ವದ ʻಕೊಂಡಿ' ಹಲಗೆಯಾರ್ಯನ ಶೂನ್ಯ ಸಂಪಾದನೆ ಎಂದು ಇವರು ಸಾಬೀತುಪಡಿಸಿದರು.

   ಹಲಗೆಯಾರ್ಯಶೂನ್ಯ ಸಂಪಾದನೆಯ ಕೃತಿಯ ಹೆಚ್ಚು ಪ್ರತಿಗಳು ಸಿಗದೆ ಇರುವುದು ಮತ್ತು ಅದು ಬಹು ಕಾಲ ಪ್ರಕಟವಾಗದಿದ್ದುದಕ್ಕೆ ಕಾರಣಗಳನ್ನು ಬೇರೆ ಬೇರೆ ವಿದ್ವಾಂಸರು ಬೇರೆ ಬೇರೆ ರೀತಿಯಲ್ಲಿ ಕೊಟ್ಟಿದ್ದಾರೆ. ಅವರುಗಳ ಅಭಿಪ್ರಾಯಗಳಲ್ಲಿ ಕೆಲವನ್ನು ನೋಡ ಬಹುದಾದರೆ, ಈ ಸಂಪಾದನಾ ಕೃತಿಯಲ್ಲಿ ಶರಣರ ಚರಿತ್ರೆಯನ್ನು ಕುರಿತು ಅಸಹಜವಾದ ಅಶ್ಲೀಲ ಹೇಳಿಕೆಗಳಿವೆ; ತಾತ್ವಿಕವಿಷಯಗಳನ್ನು ಅತಿಯಾಗಿ ಅಡಕಗೊಳಿಸಿ ಮೂಲಕೃತಿಯ ಆಶಯವನ್ನು ಅಸ್ತವ್ಯಸ್ತಗೊಳಿಸಲಾಗಿದೆ; ಅಧಿಕ ಸಂಖ್ಯೆಯ ವಚನಗಳನ್ನು ಸೇರಿಸಿ ಕೃತಿ ಶಿಲ್ಪವನ್ನು ಶಿಥಿಲಗೊಳಿಸಲಾಗಿದೆ ಇತ್ಯಾದಿ ಈ ಕಾರಣಗಳಿಂದ ಈ ಕೃತಿಯು ಹೆಚ್ಚು ಮನ್ನಣೆಗೆಪಾತ್ರವಾಗಲಿಲ್ಲ. ಹೆಚ್ಚು ಪ್ರತಿಗಳಾಗಿ ಪ್ರತೀಕರಣಗೊಳ್ಳಲಿಲ್ಲ. ಜೊತೆಗೆ  ದೊರೆತ ಒಂದೇ ಒಂದು ಹಸ್ತಪ್ರತಿಯನ್ನು ಪರಿಷ್ಕರಿಸಿ ಪ್ರಕಟಿಸಲು ಯಾವ ವಿದ್ವಾಂಸರು ಮುಂದೆ ಬರಲಿಲ್ಲ. ಆದರೇ ವಿದ್ವಾಂಸರ ಅನಿಸಿಕೆಗಳಿಗಿಂತ ಇದಕ್ಕೆ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರು ಕೊಡುವ ಕಾರಣಗಳು ಬೇರೆಯೇ ಆಗಿವೆ; ಅವರ ಪ್ರಕಾರ “೧. ಹಲಗೆಯಾರ್ಯನು ತೋಂಟದ ಸಿದ್ಧಲಿಂಗರ ಪೀಠ ಪರಂಪರೆಗೆ ಸೇರದೆ ಭಿನ್ನ ಪೀಠಪರಂಪರೆಗೆ ಸೇರಿದವನಾದುದು. ೨. ಆತನ ಕೃತಿಯಲ್ಲಿರುವ ಕಿನ್ನರಿ ಬೊಮ್ಮಯ್ಯನ ಪರೀಕ್ಷೆಯ ಪ್ರಸಂಗ ಅಶ್ಲೀಲತೆಯಿಂದ ಕೂಡಿರುವುದು. ೩.ಹಲಗೆಯಾರ್ಯನ ಶಿಷ್ಯ ಕೆಂಚ ವೀರಣ್ಣೊಡೆಯ ದೇವರು ಸಿದ್ಧಲಿಂಗರ ಪೀಠಪರಂಪರೆಗೆ ಸೇರಿರುವ ಸಂಭಾವ್ಯತೆ. ೪. ಹಲಗೆಯಾರ್ಯ ದೀರ್ಘಾಯುವಾಗಿರದ ಕಾರಣ ಆತನ ನಂತರ ಪೀಠಕ್ಕೆ ಕೆಂಚವೀರಣ್ಣೊಡೆಯನು ಬಂದಿರ ಬಹುದಾಗಿದ್ದು ಆತನ ಬಳಿಯಿದ್ದ ಹಲಗೆಯಾರ್ಯನ ಶೂನ್ಯ ಸಂಪಾದನೆಯ ಪರಿಷ್ಕರಣವನ್ನೇ ಕೆಂಚವೀರಣ್ಣನ ಪರಿಷ್ಕರಣವೆಂದು ಭ್ರಮಿಸಿರ ಬೇಕು. ಹೀಗೆ ಇಲ್ಲಿ ಹಲವಾರು ಊಹೆಗಳಿಗೆ ಅವಕಾಶವಿದೆ” ಎಂದು ಹೇಳುತ್ತಾರೆ. ಅಂತೂ ಹಲಗೆಯಾರ್ಯನ ಶೂನ್ಯಸಂಪಾದನೆ ಹೆಚ್ಚು ಪ್ರಚಾರ ಪಡೆಯದೇ ಇರಲು ಕೃತಿಯ ಆಂತರಿಕ ಸ್ವರೂಪ ಮತ್ತು ಬಾಹ್ಯಪರಿಸರದ ಒತ್ತಡ ಎರಡೂ ಕಾರಣವಾಗಿರುವಂತೆ ತೋರುತ್ತದೆ. ಹೀಗಿದ್ದೂ ಈ ಕೃತಿ ಅನೇಕ ವೈಶಿಷ್ಟ್ಯಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಮುಂದಿನ ಪರಿಷ್ಕರಣಗಳಿಗೆ ಪ್ರೇರಣೆ ನೀಡಿದೆ.

   ೩೭ ಜನ ವಚನಕಾರರ ಒಟ್ಟು ೧೪೨೪ ವಚನಗಳು ಮತ್ತು ೩೪ ಸ್ವರವಚನಗಳಿಂದ ಸಂಯೋಜಿಸಿದ್ದ  ಹಲಗೆಯಾರ್ಯನ ಶೂನ್ಯಸಂಪಾದನೆಯು ಉಪಲಬ್ಧವಿರುವ ಶೂನ್ಯಸಂಪಾದನೆಗಳಲ್ಲಿಯೇ-ಹಿರಿಯ ಗಾತ್ರದ ಕೃತಿ. ಇದರ ಪರಿಷ್ಕರಣಕ್ಕೆ ಮೈಸೂರುವಿಶ್ವವಿದ್ಯಾಲಯದ ಕನ್ನಡ ಅಧ್ಯಯನಸಂಸ್ಥೆಯ ಹಸ್ತಪ್ರತಿ ಭಾಂಡಾರಕ್ಕೆ ಸೇರಿದ ಏಕೈಕ ಹಸ್ತಪ್ರತಿಯನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪಾಠಾಂತರಗಳನ್ನು ಗುರುತಿಸಲು ಅವಕಾಶವೇ ಇಲ್ಲ. ಮೂಲ ಪಠ್ಯದಲ್ಲಿ ಕಂಡುಬರುವ ಸಂದಿಗ್ಧತೆ, ಪಾಠದೋಷಗಳನ್ನು ಸರಿಪಡಿಸಿಕೊಳ್ಳಲು ಈಗ ಮುದ್ರಿತವಾಗಿರುವ ಸಮಗ್ರ ವಚನ ಸಾಹಿತ್ಯ ಸಂಪುಟಗಳನ್ನು ಮತ್ತು ಇತರ ಪ್ರಕಟಿತ ಶೂನ್ಯಸಂಪಾದನೆಗಳನ್ನು ಆಶ್ರಯಿಸಿರುವುದು ಸಹಜವೆನಿಸಿದೆ. ಆದರೂ ಇನ್ನೂ ಅನೇಕ ವಚನಗಳು ಶಿಥಿಲಬಂಧದಿಂದ ಕೂಡಿವೆ; ವಚನಗಳ ಕ್ರಮಸಂಖ್ಯೆಯಲ್ಲಿ ವ್ಯತ್ಯಯಗಳು ಉಂಟಾಗಿವೆ. ಅನುಬಂಧಗಳು ಸಮಗ್ರವಾಗಿಲ್ಲ; ಮುದ್ರಣ ವಿನ್ಯಾಸದಲ್ಲಿ ಇನ್ನಷ್ಟು ಅಚ್ಚುಕಟ್ಟುತನ ಇರಬೇಕಿತ್ತು ಅನ್ನಿಸುತ್ತದೆ ಗ್ರಂಥ ಪರಿಷ್ಕರಣ ವಿಷಯದಲ್ಲಿ ಈ ಕೆಲವು ಕೊರತೆಗಳ ಕಂಡು ಬಂದಿರುವುದರ ಬಗೆಗೆ ವೀರಣ್ಣ ರಾಜೂರ ಅವರು ಒಂದೆಡೆ ಹೇಳಿದ್ದರೂ, ವಿದ್ವಾಂಸರಿಂದ ಬಹುಕಾಲ ಉಪೇಕ್ಷೆಗೊಳಗಾಗಿದ್ದ ಈ ಮಹತ್ವದ ಕೃತಿಯನ್ನು ಪರಿಷ್ಕರಿಸಿ ಪ್ರಕಟಿಸಲು ಮಾಡಿದ ಸಾಹಸವನ್ನು ಎಲ್ಲರೂ ಮೆಚ್ಚಲೇಬೇಕು.ಈ ಕೃತಿಯ ಬಹುದೊಡ್ಡ ಕೊಡುಗೆ ಎಂದರೆ ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯನವರು ಇದಕ್ಕೆ ಬರೆದ ೨೬ ಪುಟವ್ಯಾಪ್ತಿಯ ಮೌಲಿಕವಾದ ಪ್ರಸ್ತಾವನೆ. ಅವರು ಶೂನ್ಯಸಂಪಾದನೆಗಳ ಪ್ರಕಟಣ ಪರಂಪರೆ, ಸಂಖ್ಯಾನಿರ್ಣಯ, ರಚನಾ ಕ್ರಮ, ಪರಿಷ್ಕರಣೆಗಳಿಗೆ ಕಾರಣಗಳನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ಎಲ್ಲಾ ನಾಲ್ಕು ಶೂನ್ಯಸಂಪಾದನೆಗಳನ್ನು ತೌಲನಿಕವಾಗಿ ವಿಶ್ಲೇಷಿಸುವ ಮೂಲಕ ಸಿದ್ಧಲಿಂಗಯ್ಯನವರು ಪ್ರತಿಯೊಂದರ ವೈಶಿಷ್ಟ್ಯಗಳನ್ನೂ ಗುರುತಿಸುತ್ತಾರೆ. ಅವರ ಪ್ರಕಾರ, ಮಹಾದೇವಯ್ಯನ ಕೃತಿ ಮೂಲ, ಉಳಿದ ಮೂರೂ ಪರಿಷ್ಕರಣಗಳು. ಹಲಗೆಯಾರ್ಯನ ಕೃತಿ ಪ್ರಥಮ ಪರಿಷ್ಕರಣ ಎಂಬುದು ಅವರ ನಿರ್ಣಯ. ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರ ಸಿದ್ಧವೀರಣ್ಣರ ಪರಿಷ್ಕರಣಗಳು ಮೂಲ ಮಹಾದೇವಯ್ಯನ ಕೃತಿಯ ದರ್ಶನ ಹಾಗೂ ಹಲಗೆಯಾರ್ಯನ ಪರಿಷ್ಕರಣಗಳು ಎಂದು ನಿರ್ದೇಶಿಸಿರುವುದು ಅವರ ಅನ್ವೇಷಣೆಯಾಗಿದೆ. ಶೂನ್ಯಸಂಪಾದಕರು ವಚನಗಳನ್ನು ಬಳಸಿಕೊಂಡ ವಿಧಾನದ ನೆಲೆಗಟ್ಟನ್ನು  ಇವರು  ಈ ಕೆಳಕಂಡಂತೆ ಗುರುತಿಸಿರುತ್ತಾರೆ.  

೧.ವಚನಗಳನ್ನು ಇದ್ದ ಹಾಗೆಯೇ ಉತ್ತರ ಪ್ರತ್ಯುತ್ತರ ಸಂಬಂಧವಾಗಿ ಸೇರಿಸುವುದು

೨.ಎರಡು ವಚನಗಳಿಗೆ ಗದ್ಯವನ್ನು ಸಂಬಂಧಕ್ಕಾಗಿ ಸೇರಿಸುವುದು

೩.ಮೂಲವಚನದ ಆದಿಯನ್ನು ಅಂತ್ಯ ಭಾಗಗಳನ್ನು ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಬದಲಿಸುವುದು

೪.ರೂಢಿಯಲ್ಲಿರುವ ವಚನದ ಮಾದರಿಯಲ್ಲಿ ಹೊಸ ವಚನವನ್ನು ರಚಿಸುವುದು

೫.ಮೂಲವಚನದ ಆಶಯವನ್ನು ಗ್ರಹಿಸಿ ಇನ್ನೊಬ್ಬ ವಚನಕಾರನ ವಚನ ಎಂಬಂತೆ ಅಂಕಿತ ಬದಲಿಸುವುದು

೬.ಗದ್ಯದಲ್ಲಿ ವಚನದ ಅಭಿವ್ಯಕ್ತಿ ಶಕ್ತಿಯನ್ನು ಬಳಸಿಕೊಳ್ಳುವುದು ಇತ್ಯಾದಿಯಾಗಿ ಅವರು ಆರು ಹಂತಗಳಾಗಿ ವಿಂಗಡಿಸುತ್ತಾರೆ. ಈ ವರ್ಗೀಕರಣವು ಶೂನ್ಯ ಸಂಪಾದಕರು ಕೇವಲ ಸಂಗ್ರಹಕಾರರಲ್ಲ, ಸೃಜನಶೀಲ ಸಂಪಾದಕರು ಎಂಬುದನ್ನು ಸಾಧ್ಯವಾಗಿಸಿದೆ.

    ಪ್ರತಿಯೊಂದು ಪ್ರಸಂಗವನ್ನು ಸಿದ್ಧಲಿಂಗಯ್ಯನವರು ವಿವರವಾಗಿ ವಿಶ್ಲೇಷಿಸುತ್ತಾರೆ. ಮುಕ್ತಾಯಕ್ಕಳ ಪ್ರಸಂಗ, ಅಕ್ಕಮಹಾದೇವಿಯ ಪ್ರಸಂಗ, ಮರುಳಶಂಕರದೇವರ ಪ್ರಸಂಗ, ಕಿನ್ನರಿ ಬೊಮ್ಮಯ್ಯನ ಪ್ರಸಂಗ, ನುಲಿಯ ಚಂದಯ್ಯನ ಪ್ರಸಂಗ, ಗೋರಕ್ಷನ ಪ್ರಸಂಗ - ಇವೆಲ್ಲವುಗಳ ಸೂಕ್ಷ್ಮ ವಿವರಣೆಯನ್ನು ಅವರು ಮಾಡಿದ್ದಾರೆ. ಪ್ರತಿಯೊಂದು ಪ್ರಸಂಗದಲ್ಲಿ ಬದಲಾವಣೆಗಳನ್ನು, ವಿಸ್ತಾರವನ್ನು, ಹೊಸದಾಗಿ ಸೇರಿಸಿದ ಅಂಶಗಳನ್ನು ಗುರುತಿಸುತ್ತಾರೆ. ಸಿದ್ಧಲಿಂಗಯ್ಯನವರ ಅತ್ಯಂತ ಮಹತ್ವದ ಒಳನೋಟವೆಂದರೆ ಬಸವ-ಅಲ್ಲಮರನ್ನು ವಿರುದ್ಧ ಧ್ರುವಗಳಾಗಿ ನೋಡದೆ ಪೂರಕರಾಗಿ ನೋಡಿದ್ದು. ಅವರ ಪ್ರಕಾರ  "ಹನ್ನೆರಡನೇ ಶತಮಾನದ ಎರಡು ಪ್ರಧಾನ ಚೈತನ್ಯಗಳೆಂದರೆ, ಒಂದು ಬಸವಣ್ಣ ಇನ್ನೊಂದು ಪ್ರಭು. ಬಸವಣ್ಣ ಲೋಕದ ಬದುಕಿಗೆ ಹೊಸ ಹಾದಿಯನ್ನು ಕಲ್ಪಿಸುವ ಕ್ರಾಂತಿಕಾರಕ ಸಾಮಾಜಿಕ ಶಕ್ತಿಯಾದರೆ, ಪ್ರಭು ಬೆಳಕಿನ ಜೀವವಾಗಿ ಎದುರಾದವರ ಬದುಕಿನ ಕತ್ತಲೆಯನ್ನು ಕಳೆಯುವ ಜ್ಯೋತಿಯಾಗಿದ್ದಾರೆ. ಈ ಎರಡೂ ವ್ಯಕ್ತಿತ್ವಗಳು ವಿರೋಧವಾದವುಗಳಲ್ಲ. ಪೂರಕವಾದವುಗಳು."ಈ ನಿಲುವು ಅಲ್ಲಮ ಕೇಂದ್ರಿತ ಮತ್ತು ಬಸವ ಕೇಂದ್ರಿತ ಧ್ರುವೀಕರಣವನ್ನು ಕಳೆದು, ಸಮಗ್ರ ದೃಷ್ಟಿಯನ್ನು ಸ್ಥಾಪಿಸುತ್ತದೆ. ಶೂನ್ಯ ಸಂಪಾದನೆಯ ಬೃಹತ್ ವಾಸ್ತುಶಿಲ್ಪದಲ್ಲಿ ಎರಡೂ ಚೈತನ್ಯಗಳ ಏಕತೆಯನ್ನು ಸಿದ್ಧಲಿಂಗಯ್ಯನವರು ಗುರುತಿಸಿದ್ದಾರೆ.

     ಹಲಗೆಯಾರ್ಯನ ಶೂನ್ಯ ಸಂಪಾದನೆಯಲ್ಲಿಯ ಅಕ್ಕ ಮಹಾದೇವಿ ಮತ್ತು ಕಿನ್ನರಿ ಬೊಮ್ಮಯ್ಯನ ಪ್ರಸಂಗದಲ್ಲಿ ಕಿನ್ನರಿ ಬೊಮ್ಮಯ್ಯನು ಅಕ್ಕಮಹಾದೇವಿಯನ್ನು ಸ್ಪರ್ಶಿಸಿ ಪರೀಕ್ಷಿಸುವ ಪ್ರಸಂಗವನ್ನು ಅವರು ಕೇವಲ ಧಾರ್ಮಿಕ ಪರೀಕ್ಷೆಯೆಂದು ಬಿಡದೆ, "ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣೊಬ್ಬಳು ಎದುರಿಸಬೇಕಾದ ಸ್ಥಿತಿ" ಎಂಬ ಆಧುನಿಕ ಸ್ತ್ರೀವಾದಿ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. "ಹೆಣ್ಣೊಬ್ಬಳು ಹೊಸ ಹೆಜ್ಜೆಯನ್ನಿಡುವಾಗ ಎಲ್ಲ ಕಾಲಕ್ಕೂ ಎದುರಿಸಬೇಕಾದ ಸಮಸ್ಯೆಯ ಸಂಕೇತವಿದು" ಎಂದು ಅವರು ವ್ಯಾಖ್ಯಾನಿಸುತ್ತಾರೆ. ಅಂದರೆ, ಪುರುಷ ಪ್ರಧಾನ ವ್ಯವಸ್ಥೆಯು ಅಕ್ಕನಂತಹ ಪ್ರಖರ ವೈರಾಗ್ಯನಿಧಿಯನ್ನೂ ಅನುಮಾನದಿಂದಲೇ ನೋಡಿತು ಎಂಬ ಕಟು ವಾಸ್ತವವನ್ನು ಕೃತಿಯಾಚೆಗಿನ ಸಾಂಸ್ಕೃತಿಕ ಸತ್ಯವಾಗಿ ಅವರು ಮಂಡಿಸುತ್ತಾರೆ. ಹನ್ನೆರಡನೆಯ ಶತಮಾನದ ಕಲ್ಯಾಣದ ಕ್ರಾಂತಿಯಲ್ಲಿ ನಡೆದ ಮೌಲ್ಯಗಳ ಸಂಘರ್ಷ, ಹರಳಯ್ಯ-ಮಧುವರಸರ ಪ್ರಸಂಗ, ಕಲ್ಯಾಣದ ವಿನಾಶದಂತಹ ತಲ್ಲಣಗಳನ್ನು ಶೂನ್ಯಸಂಪಾದನೆಗಳು ಬಹುಪಾಲು 'ಮೌನ'ವಾಗಿ ದಾಟಿದ್ದನ್ನು ಅವರು ಕಟುವಾಗಿ ಪ್ರಶ್ನಿಸುತ್ತಾರೆ.

     ಶೂನ್ಯ ಸಂಪಾದನೆಯ ಕುರಿತ ಇವರ ನಿಲುವುಗಳಿಂದ ಶೂನ್ಯಸಂಪಾದನೆ ಒಂದು ಧಾರ್ಮಿಕ ಕೃತಿ ಎಂಬ ಮಿತಿಯನ್ನು ಮೀರಿ ದಾರ್ಶನಿಕ ಗ್ರಂಥ, ಸಾಹಿತ್ಯಿಕ ದಾಖಲೆ, ಪಠ್ಯವಿಮರ್ಶೆಯ ವಸ್ತು, ಕನ್ನಡ ಸಂಶೋಧನೆಯ ಮೂಲಾಧಾರ ಇತ್ಯಾದಿಯಾಗಿ ಬಹುಆಯಾಮಿಕ ಸ್ಥಾನಮಾನವನ್ನು ಪಡೆದುಕೊಂಡಿದೆ. ಅವರ ಶೂನ್ಯಸಂಪಾದನೆಯ ಕುರಿತ ಸಂಪಾದನಾ ಕಾರ್ಯ ಮತ್ತು ಅಧ್ಯಯನವು ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಕೇವಲ ಸಂಪಾದನಾ ಕಾರ್ಯಕ್ಕೆ ಸೀಮಿತಗೊಳ್ಳದೆ ಅದು ಪಠ್ಯದ ಮರುಜನ್ಮ, ತಾತ್ವಿಕ ಮರುಪಠನ, ವಚನಸಾಹಿತ್ಯದ ಮರುಸ್ಥಾಪನೆ ಮತ್ತು ಕನ್ನಡ ಸಂಪಾದನಾಶಾಸ್ತ್ರದ ಶಾಸ್ತ್ರೀಯ ರೂಪುಗೊಳ್ಳುವಿಕೆ ಎಂಬ ನಾಲ್ಕು ಆಯಾಮಗಳಲ್ಲಿ ಮಹತ್ವ ಪಡೆದುಕೊಂಡಿದೆ.

   ಜಿ.ಎಸ್. ಸಿದ್ಧಲಿಂಗಯ್ಯನವರ ಸಂಶೋಧನೆಯು ವಚನ ಸಾಹಿತ್ಯವನ್ನು ಪ್ರಾಂತೀಯ ಭಕ್ತಿ ಸಾಹಿತ್ಯದ ಮೇರೆಯನ್ನು ದಾಟಿಸಿ, ಜಾಗತಿಕ ತಾತ್ವಿಕ ಮತ್ತು ಸಾಮಾಜಿಕ ವಿಮರ್ಶೆಯ ವೇದಿಕೆಗೆ ಏರಿಸಲು ಕಾರಣವಾಯಿತು. ಇಂದು ನಾವುಗಳು  ಜಿ.ಎಸ್. ಸಿದ್ಧಲಿಂಗಯ್ಯನವರ ವಚನ ಸಾಹಿತ್ಯ ಸಂಶೋಧನೆಯ ವ್ಯಾಪ್ತಿಯನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು, ಅವರು ಯಾವ ವಿಧಾನಶಾಸ್ತ್ರವನ್ನು ಅನುಸರಿಸಿದರು, ಅದು ಸಮಕಾಲೀನ ವಚನ ವಿಮರ್ಶೆಯ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದನ್ನು ವಿಶ್ಲೇಷಿಸುವುದು ಅಗತ್ಯವಾಗಿದೆ. ಜಿ.ಎಸ್. ಸಿದ್ಧಲಿಂಗಯ್ಯನವರನ್ನು ವಚನ ಸಾಹಿತ್ಯವನ್ನು ಆಧ್ಯಾತ್ಮಿಕ ಭಂಡಾರದಿಂದ ಹೊರತೆಗೆದು ಅದನ್ನು ಸಾಮಾಜಿಕ ಕ್ರಾಂತಿಯ ಆಯುಧವಾಗಿ ಪ್ರತಿಪಾದಿಸಿದ ವಿದ್ವಾಂಸರು ಎಂದರೆ ತಪ್ಪಾಗಲಾರದು. ವಚನ ಸಾಹಿತ್ಯ ಕುರಿತ ಅವರ ಕೊಡುಗೆ ಸಂಶೋಧನೆಯ ಮೂಲ ವಿಧಾನಗಳಿಂದ ಹಿಡಿದು ಸಿದ್ಧಾಂತ ರಚನೆಯವರೆಗೆ ವ್ಯಾಪಿಸಿದೆ. ಶೂನ್ಯ ಸಂಪಾದನೆಯ ಕುರಿತಾದ ಸಿದ್ಧಲಿಂಗಯ್ಯನವರ ಸಂಶೋಧನೆಯು ವಚನ ಸಾಹಿತ್ಯವನ್ನು ಧಾರ್ಮಿಕ ಮಟ್ಟದಿಂದ ಉನ್ನತೀಕರಿಸಿ ವಿಶ್ವವಿದ್ಯಾಲಯ ಮಟ್ಟದ ಅಧ್ಯಯನಕ್ಕೆ ಅರ್ಹವಾದ ವಿಮರ್ಶಾತ್ಮಕ ಸಂಪಾದನೆಯ ಸ್ಥಾನಮಾನವನ್ನು ತಂದುಕೊಟ್ಟಿತು ಎಂದು ಹೇಳಬಹುದು.

   ಸಿದ್ಧಲಿಂಗಯ್ಯನವರು ಯಾವುದೇ ಕೃತಿಯನ್ನು ಪರಿಶೀಲಿಸುವಾಗ ಅದನ್ನು ಸರ್ವಾಂಗೀಣವಾಗಿ ವಿಶ್ಲೇಷಿಸುತ್ತಾರೆ. ಅವರ 'ಶೂನ್ಯಸಂಪಾದನೆ-ಕೆಲವು ಪ್ರಶ್ನೆಗಳು' ಕೃತಿಯಲ್ಲಿ ಅವರು ಎತ್ತುವ ಪ್ರಶ್ನೆಗಳು ಸಂಶೋಧನಾತ್ಮಕ ಆಳವನ್ನು ಪ್ರತಿಬಿಂಬಿಸುತ್ತವೆ: ಶೂನ್ಯಸಂಪಾದನೆಗಳು ಎಷ್ಟು? ಅವುಗಳ ಪರಿಷ್ಕರಣಕ್ಕೆ ಕಾರಣವೇನು? ಇಲ್ಲಿ ಬರುವ ವಚನಗಳ ನಿಜಪಠ್ಯವೆಷ್ಟು-ಪಕ್ಷಿಪ್ತ ಪಠ್ಯವೆಷ್ಟು? ಅಕ್ಕನ ಪ್ರಸಂಗ, ಸಿದ್ಧರಾಮನ ಲಿಂಗದೀಕ್ಷಾ ಪ್ರಸಂಗಗಳು ಹುಟ್ಟಿಕೊಳ್ಳಲು ಕಾರಣ? ಇತ್ಯಾದಿ ಸಂಗತಿಗಳತ್ತ ಗಮನ ಸೆಳೆದಿರುವುದು.ಅವರ ಬರಹಗಳ ಪ್ರಮುಖ ಲಕ್ಷಣವೆಂದರೆ 'ಆನೆಯನ್ನು ಕಿರಿದಾದ ಕನ್ನಡಿಯಲ್ಲಿ ಹಿಡಿದಿರುವಂತೆ' ಸಮಗ್ರ ವಿವರಗಳನ್ನು ಸಂಕ್ಷಿಪ್ತವಾಗಿ ಮತ್ತು ಪರಿಣಾಮಕಾರಿಯಾಗಿ ವಿಸ್ತಾರ-ಸಂಕ್ಷೇಪದ ಸಮತೋಲನದ ಮೂಲಕ ಹಿಡಿದಿರಿಸುವ ಕೌಶಲ್ಯವನ್ನು ಇವರ ಸಂಶೋಧನಾ ಪ್ರಬಂಧಗಳಲ್ಲೂ ಕಾಣ ಬಹುದಾಗಿದೆ.

      ಶೂನ್ಯಸಂಪಾದನೆಯನ್ನು ಕುರಿತು ಅವರು ರಚಿಸಿರುವ ಮತ್ತು ಅವರಿಂದ ಪ್ರೇರಿತವಾದ ಸಂಶೋಧನಾ ಸಾಹಿತ್ಯವನ್ನು ನಾವು ಗಮನಿಸಿದಾಗ - 'ಶೂನ್ಯಸಂಪಾದನೆ-ಒಂದು ಅವಲೋಕನ', 'ಹಲಗೆಯಾರ್ಯನ ಶೂನ್ಯಸಂಪಾದನೆ', 'ಶೂನ್ಯಸಂಪಾದನೆ (ಜೆ.ಎಸ್.ಎಸ್. ಗ್ರಂಥಮಾಲೆ)', 'ಶೂನ್ಯಸಂಪಾದನೆ : ಮರುಚಿಂತನೆ', 'ಶೂನ್ಯಸಂಪಾದನೆ : ಕೆಲವು ಪ್ರಶ್ನೆಗಳು' -  ಈ ಪುಸ್ತಕಗಳನ್ನು ಮನಗಂಡರೆ ಅವರ ಸಂಶೋಧನಾ ಪ್ರಯಾಣ ಎಷ್ಟು ಆಳವಾದುದು, ಸತತವಾದುದು ಎಂಬುದು ಸ್ಪಷ್ಟವಾಗುತ್ತದೆ. ಶೂನ್ಯಸಂಪಾದನೆಯ ಅಧ್ಯಯನ ಮಾಡುವ ಯಾರೇ ಆಗಲಿ, ಅವರ ಕೃತಿಗಳನ್ನು ನೋಡದೆ ಮುಂದೆ ಹೋಗಲಾರರು. ಬೆರಳೆಣಿಕೆಯ ವಿದ್ವತ್ ಶ್ರೇಣಿಯ ಕೃತಿಗಳಲ್ಲಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರ ಕೃತಿಗಳು ಸ್ಥಾನ ಪಡೆಯುತ್ತವೆ.  ಅಷ್ಟರ ಮಟ್ಟಿಗೆ ಅವರ ಕೃತಿಗಳಿಗೆ ಅಧಿಕೃತತೆ ಪ್ರಾಪ್ತವಾಗಿದೆ.ಶೂನ್ಯಸಂಪಾದನೆಯನ್ನು ಕೇವಲ ಶರಣರ ಕಥನಗಳ ಸಂಕಲನವೆಂದು ಪರಿಗಣಿಸದೆ, ಅದು ಒಂದು ಸೃಜನಾತ್ಮಕ ಸಂಪಾದನಾ ಪ್ರಕ್ರಿಯೆ, ಸಂವಾದಾತ್ಮಕ ಮಹಾಪ್ರಸಂಗ, ಪುನರ್ರಚಿತ ಪಠ್ಯವಸ್ತು ಹಾಗೂ ಬಹುಕಂಠೀಯ ಅನುಭಾವದ ವಚನಗಾಥೆ ಎಂದು ವಿಶ್ಲೇಷಿಸುವುದರ ಮೂಲಕ  ಅವರ  ಈ ಅಧ್ಯಯನವನ್ನು ಶೂನ್ಯಸಂಪಾದನೆಯ ಪಠ್ಯಮೀಮಾಂಸಾತ್ಮಕ ಅಧ್ಯಯನ ಎಂದು ಕರೆಯ ಬಹುದಾಗಿದೆ. ಶೂನ್ಯಸಂಪಾದನೆಗಳು ಕೇವಲ ಪೌರಾಣಿಕ ಶರಣಚರಿತ್ರೆಗಳಲ್ಲ; ಅವು ವಚನಗಳ ಪುನಃಸಂಯೋಜನೆ, ಪ್ರಸಂಗಗಳ ಮರುರಚನೆ, ತಾತ್ತ್ವಿಕ ಸಂವಾದದ ನಾಟಕೀಕರಣ, ಹಾಗೂ ಅಲ್ಲಮಪ್ರಭು ಕೇಂದ್ರಿತ ಆಧ್ಯಾತ್ಮಿಕ ಕಥಾವಾಸ್ತುಗಳಾಗಿವೆ. ಈ ಪಠ್ಯವಿಷಯವನ್ನು ಗಂಭೀರವಾಗಿ ಪರಿಶೀಲಿಸಿ, ಅದರೊಳಗಿನ ಪಠ್ಯಪದರಗಳು, ಸಂಪಾದನಾ ವಿಧಾನಗಳು, ಪರಿಷ್ಕರಣ ಚರಿತ್ರೆ, ವಚನಗಳ ಬಳಕೆಯ ತಂತ್ರಗಳು, ಹೊಸ ಪ್ರಸಂಗಗಳ ನಿರ್ಮಾಣ ಮತ್ತು ಶರಣತತ್ತ್ವದ ಅಂತರಂಗಗಳನ್ನು ವಿಶ್ಲೇಷಿಸಿದ ಪ್ರಮುಖ ವಿದ್ವಾಂಸರಲ್ಲಿ ಪ್ರೊ. ಸಿದ್ಧಲಿಂಗಯ್ಯನವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಶೂನ್ಯ ಸಂಪಾದನೆಯನ್ನು ಇವರು ಸಾಮಾನ್ಯ ಸಂಪಾದಿತ ಪಠ್ಯವೆಂದು ಪರಿಗಣಿಸುವುದಿಲ್ಲ; ಬದಲಾಗಿ “ಅನುಭವವಿಚಾರಸಂವಾದಗಳ ಸಜೀವ ಪಠ್ಯವ್ಯವಸ್ಥೆ” ಎಂದು ನಿರ್ವಚಿಸುತ್ತಾರೆ. ಈ ಕಾರಣದಿಂದ ಅವರ ವಿಶ್ಲೇಷಣೆ ಪಠ್ಯಮೀಮಾಂಸೆ, ಸಂಪಾದನಾ ತಂತ್ರ, ಸಂವಾದಾತ್ಮಕ ವಾಸ್ತುಶಿಲ್ಪ ಮೂರು ಕೇಂದ್ರ ಆಯಾಮಗಳಲ್ಲಿ ಬೆಳೆಯುತ್ತದೆ. ಈ ಮೂರು ಆಯಾಮಗಳ ಸಂಯೋಜನೆಯೇ ಶೂನ್ಯಸಂಪಾದನೆಯ ವೈಶಿಷ್ಟ್ಯವನ್ನು ನಿರ್ಧರಿಸುತ್ತದೆ ಎಂಬುದು ಅವರ ಮೂಲ ನಿಲುವಾಗಿದೆ. ಇವರ ಅತ್ಯಂತ ಸೂಕ್ಷ್ಮ ಕೊಡುಗೆ ಎಂದರೆ ಅವರು ಶೂನ್ಯಸಂಪಾದನೆಯನ್ನು ವ್ಯಕ್ತಿ ಮತ್ತು ಆತ್ಮದ ಸಂವಾದ, ವ್ಯಕ್ತಿ ಮತ್ತು ಸಮುದಾಯದ ಸಂವಾದ, ಪರಂಪರೆ ಮತ್ತು ಪ್ರತಿರೋಧದ ಸಂವಾದ, ಮೌನದ ಸಂವಾದ ಎಂದು  ಸಂವಾದಾತ್ಮಕತೆ ನಾಲ್ಕು ಹಂತಗಳನ್ನು ಗುರುತಿಸುವುದರ ಮೂಲಕ ಶೂನ್ಯಸಂಪಾದನೆಯು “ಗ್ರಂಥ”ವಲ್ಲ, ಸಂವಾದದ ವಾಸ್ತುಶಿಲ್ಪ ಎಂದು ಅಧ್ಯಯನಿಸಿರುವುದು. Top of Form

 

    ಇವರ  ಹರಿಹರ ಕವಿಗೆ ಸಂಬಂಧಿಸಿದ  ಕನ್ನಡ ಸಂಸ್ಕೃತಿಗೆ ಹೊಸ ತಿರುವು ಕೊಟ್ಟ ಹರಿಹರ ಪುಸ್ತಕದಲ್ಲಿ,  ಕನ್ನಡಸಾಹಿತ್ಯ ಪರಂಪರೆಯನ್ನು ಗುರುತಿಸುತ್ತಾ ಅದು ಯಾವ ರೀತಿ  ಕನ್ನಡದ ಮಹತ್ವದ ಕವಿಯೊಬ್ಬನಿಂದ ಪಡೆದುಕೊಂಡ ತಿರುವನ್ನು ಪರಿಣಾಮಕಾರಿ ನಿರೂಪಿಸಿದೆ ಹಾಗೂ ಕನ್ನಡದ ಕವಿಯೊಬ್ಬನನ್ನು ಅವರ ಪರಿಸರದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅವನು ಬರೆದಿರುವ ಕೃತಿಗಳ ಮೂಲಕವೇ ಪರಿಚಯಿಸುವ ಒಂದು 'ಮಾದರಿ' ಎನ್ನಬಹುದಾದ ಕೃತಿಯಾಗಿದ್ದು ಹರಿಹರನ ಕೃತಿಗಳಿಗಿದ್ದ ಸಾಂಸ್ಕೃತಿಕ ಪರಿಸರದ ವಿಶೇಷವನ್ನು ಸ್ಪಷ್ಟಪಡಿಸಿದ್ದಾರೆ. ಟಿ. ಎಸ್. ಎಲಿಯಟ್ ಒಂದು ಸಾಲನ್ನು ಉಲ್ಲೇಖಿಸುತ್ತಾ ಇಲಿಯಟ್‌ ನ  "ಒಬ್ಬ ಕವಿ ತನ್ನ ಹಿಂದಿನ ಕವಿಗಳನ್ನು ಅನುಕರಿಸುವುದಿಲ್ಲ, ಅವರನ್ನು ಜೀರ್ಣಿಸಿಕೊಂಡು ತನ್ನದೇ ಆದ ಹೊಸದನ್ನು ಸೃಷ್ಟಿಸುತ್ತಾನೆ." ಎಂಬ ಮಾತನ್ನು ಸಿದ್ಧಲಿಂಗಯ್ಯನವರು ಹರಿಹರನಿಗೆ ಅನ್ವಯಿಸುತ್ತಾರೆ. ಒಂದು ಪರಂಪರೆಯ ಲಾಭ ಪಡೆದು ಮತ್ತೊಂದು ಪರಂಪರೆಯನ್ನು ರೂಪಿಸಿದ ಮಹಾಪ್ರತಿಭಾವಂತ ಹರಿಹರ ಕವಿ' ಎನ್ನುವ ಅವರು ತಮ್ಮ ಮಾತನ್ನು ಸ್ಪಷ್ಟಿಕರಿಸುವುದು ಹೀಗೆ: “ಹರಿಹರನ ಪ್ರತಿಭೆ ಇತಿಹಾಸದಿಂದ ಕಲಿತದ್ದು ಬಹಳ. ಕನ್ನಡ ಭಾಷೆಯ ಲಯದ ದೃಷ್ಟಿಯಿಂದ ನೋಡುವುದಾದರೆ ಆತ ಪಂಪ ರನ್ನಾದಿಗಳ ಅಕ್ಷರ ಗಣಯುಕ್ತ ಸಂಸ್ಕೃತ ಸಮವೃತ್ತಗಳನ್ನು ಹಾಗೂ ಕಂದವನ್ನು ಮಾತ್ರಾಗಣಲಯಕ್ಕೆ ಪಳಗಿಸಿದ ಕನ್ನಡದ ಅಭಿವ್ಯಕ್ತಿ ಶಕ್ತಿ ಹೆಚ್ಚಿಸಿದ್ದನ್ನು ಗಮನಿಸಿದ್ದ. ವಚನಕಾರರು ತಮ್ಮ ವಿನೂತನ ಅಭಿವ್ಯಕ್ತಿಯಾಗಿ ಗದ್ಯ ಪದ್ಯಗಳ ಕೃತಕ ವಿಂಗಡಣೆಗೆ ಸವಾಲೊಡ್ಡಿದ 'ವಚನ' ಮಾಧ್ಯಮದ ಕಸುವನ್ನು ಕಂಡು ಹಿಗ್ಗಿದ್ದ, ಜೊತೆ ಜೊತೆಗೆ ಕ್ವಚಿತ್ತಾಗಿ ಕಂಡು ಮರೆಯಾಗುತ್ತಿದ್ದ 'ರಗಳೆ'ಯ ಲಯದ ಪ್ರಯೋಗಗಳನ್ನು ಗಮನಿಸಿದ್ದ. ಕನ್ನಡ ಲಯಕ್ಕೆ ಹೊಂದುವ ಮಾತ್ರಾಲಯ ಛಂದಸ್ಸಾಗಿ ಆತ ರಗಳೆಯನ್ನು ಬಳಸಿ ನಿಜವಾದ ಅರ್ಥದಲ್ಲಿ ಆತ ರಗಳೆಯ ಮಹತ್ವದ ಕವಿಯಾದ.” (ಪು. ೬) ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರಿಗೆ ಹರಿಹರನ ಕೃತಿಗಳಲ್ಲಿ ಹೆಚ್ಚಿನ ಒಲವು ಅವನ ರಗಳೆಗಳ ಬಗೆಗೆ ಗಿರಿಜಾಕಲ್ಯಾಣ ಮಹಾಪ್ರಬಂಧವನ್ನು ಅವರು ಆರು ಪುಟಗಳಲ್ಲಿ, ಅವನ ಶತಕಗಳನ್ನು ಎರಡು ಪುಟಗಳಲ್ಲಿ ವಿಮರ್ಶಿಸಿದರೆ, ರಗಳೆಗಳನ್ನು ವಿಶೇಷವಾಗಿ ಮೂವತ್ತಾರು ಪುಟಗಳಲ್ಲಿ ಪರಿಚಯಿಸಿದ್ದರೆ. ರಗಳೆಗಳ ವಸ್ತು, ನಿರೂಪಣೆ, ಭಾಷೆ, ಛಂದಸ್ಸು ಇವುಗಳ ಕಡೆಗೆ ಅವರ ಆಸಕ್ತಿ ಮೇಲಿಂದ ಮೇಲೆ ಹೊರಳುತ್ತದೆ. ಹರಿಹರ ಭಕ್ತಿ ಪ್ರಪಂಚ,ಇವನು ಸೃಷ್ಟಿಸುವ ವ್ಯಕ್ತಿ ಹಾಗೂ ಲೋಕಗಳ ಸ್ವಾರಸ್ಯವನ್ನು ಅವರು ರಿಚಯಿಸುವರು. ಜೊತೆಗೆ ಹರಿಹರನನ್ನು ಅರ್ಥಮಾಡಿಕೊಳ್ಳಬೇಕಾದರೆ ಅವನ ರಗಳೆಗಳನ್ನು ಹೇಗೆ ಓದಬೇಕು, ಅವುಗಳಲ್ಲಿನ ಸ್ವಾರಸ್ಯವನ್ನು ಹೇಗೆ ಗ್ರಹಿಸ ಬೇಕು ಎಂಬುದನ್ನು ಇಲ್ಲಿ ತಿಳಿಸಿ ಕೊಟ್ಟಿದ್ದಾರೆ. ಅವರು ವಚನಕಾರರ ಭಾಷೆ ಹಾಗೂ ಛಂದಸ್ಸಿನಮೇಲೆ ಹೇಗೆ ಅಧಿಕೃತವಾಗಿ ಮಾತನಾಡಬಲ್ಲರೊ ಹಾಗೆ ಹರಿಹರನ ಭಾಷೆ ಹಾಗೂ ಛಂದಸ್ಸಿನ ಬಗೆಗೂ ಮಾತನಾಡಬಲ್ಲರು ಎಂಬ ಎಸ್.ವಿದ್ಯಾಶಂಕರ ಅವರ ಅನಿಸಿಕೆ ಒಪ್ಪತಕ್ಕದ್ದಾಗಿದೆ. ಹರಿಹರ ಭಾಷೆಯ ಬಳಕೆಯಲ್ಲಿ ವಚನಕಾರರಿಂದ ಪಡೆದ ಪ್ರಭಾವವನ್ನು ಮೊದಲಿಗೆ ಹೇಳಿ, ಅನಂತರ ಹರಿಹರನ ರಗಳೆಗಳಲ್ಲಿನ ಭಾಷಾ ಪ್ರಯೋಗದ ವಿಶೇಷತೆಯನ್ನು ಮನೋಜ್ಞವಾಗಿ ತಿಳಿಸುವರು (ಪು. ೫೪-೫೯). ಹರಿಹರನ ರಗಳೆಗಳ ಛಂದಸ್ಸಿನ ಬಗೆಗಂತೂ ಅವರ ಆಸಕ್ತಿ ಹಾಗೂ ವ್ಯಾಪಕ ತಿಳುವಳಿಕೆ ಗಮನ ಸೆಳೆಯುವಂತಿದೆ. ಭಾಷೆಯ ಅಭಿವ್ಯಕ್ತಿ ಶಕ್ತಿಯನ್ನು ಹೆಚ್ಚಿಸುವ ನೆಲೆಯಲ್ಲಿ ರಗಳೆಯು ವಹಿಸಿರುವ ಮಹತ್ವದ ಪಾತ್ರವೇನು ಎಂಬುದನ್ನು ತಿಳಿಸುತ್ತಾ "ಹರಿಹರನು ರಗಳೆಗಳ ಛಂದಸ್ಸನ್ನು ಬಳಸಿಕೊಳ್ಳುವುದರ ಮೂಲಕ ಕನ್ನಡ ಕಾವ್ಯದ ಲಯಸತ್ವವನ್ನು ಮಹಾಛಂದಸ್ಸಿನ ಸಿದ್ಧಿಯತ್ತ ಒಯ್ದಿರುವುದಂತೂ ಹೆಮ್ಮೆಯ ಸಂಗತಿ" ಎಂಬ ಅವರ ನಿಲುವನ್ನು ಒಪ್ಪಬಹುದಾಗಿದೆ. ಹೊಸಗನ್ನಡ ಮಹಾಕಾವ್ಯಗಳ ಅಭಿವ್ಯಕ್ತಿಗೆ ಸೂಕ್ತವಾದ ಲಯವಾದದ್ದು (ಪು.೬೬) ರಗಳೆ ಛಂದಸ್ಸಿನ ವಿಶೇಷವೆಂದಿರುವರು. ಒಟ್ಟಿನಲ್ಲಿ ರಗಳೆಯ ಛಂದಸ್ಸಿನ ಬಗೆಗಿನ ಅವರ ವಿಶೇಷವಾದ ಅಧ್ಯಯನವು (ಪು. ೫೯-೭೪) ಪ್ರೊ ಜಿ.ಎಸ್.ಸಿದ್ಧಲಿಂಗಯ್ಯನವರ ವಿದ್ವತ್ತಿನ ಬಗೆಗೆ ಗೌರವ ಹೆಚ್ಚಿಸುತ್ತದೆ. ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯದ ಬಗೆಗೆ ಅವರಿಗೆ ಇರುವ ಉತ್ಕಟವಾದ ಆಸಕ್ತಿ ಈ ಕೃತಿಯಲ್ಲಿ ಎದ್ದು ಕಾಣುತ್ತದೆ.  

     ಹನ್ನೆರಡನೆಯ ಶತಮಾನದ ಶರಣರ ದರ್ಶನ, ಅವರ ಕಾಯಕ-ದಾಸೋಹ ಸಿದ್ಧಾಂತ, ಅವರ ಭಾಷಿಕ ಮತ್ತು ಸಾಹಿತ್ಯಕ ಸಾಧನೆಗಳನ್ನು ಒಟ್ಟಾರೆಯಾಗಿ ಅರ್ಥಮಾಡಿಕೊಳ್ಳಲು ಸಿದ್ಧಲಿಂಗಯ್ಯನವರ ಸಂಶೋಧನೆಗಳು ದಾರಿದೀಪವಾಗಿವೆ. ಅವರ ವಚನಸಾಹಿತ್ಯ ಕುರಿತ ವಿಮರ್ಶಾತ್ಮಕ ಬರಹಗಳು, ಶೂನ್ಯಸಂಪಾದನೆ ಕುರಿತ ಪಠ್ಯಪರಿಶೋಧನಾ ಅಧ್ಯಯನಗಳು, ಹರಿಹರನ ರಗಳೆಗಳ ಕುರಿತು ಅವರ ವಿಶ್ಲೇಷಣೆ, ಹಾಗೂ ಕನ್ನಡ ಸಾಹಿತ್ಯದ ದೇಸೀ ಪರಂಪರೆಯನ್ನು ಅರ್ಥೈಸುವ ಅವರ ಮೂಲಭೂತ ನಿಲುವುಗಳು ಕನ್ನಡ ಸಾಹಿತ್ಯದ ಸಂಶೋಧನಾ ಕ್ಷೇತ್ರದಲ್ಲಿ ಅವರ ಹೆಸರು ಮತ್ತು ಸ್ಥಾನವನ್ನು ಅಜರಾಮರವಾಗಿಸಿವೆ.  ಅದೇ ರೀತಿ ಸಾಹಿತ್ಯವನ್ನು ಕೇವಲ ಬರಹವಾಗಿ ಅಲ್ಲ, ಸಂವಾದಿಸುವ ಜೀವಂತ ಚಿಂತನಾ ವ್ಯವಸ್ಥೆ ಎಂದು ಓದುವ ದೃಷ್ಟಿಕೋನಕ್ಕೆ ಅವರು ನೀಡಿದ ಈ ಕೊಡುಗೆ ಕನ್ನಡ ವಿಮರ್ಶೆಯಲ್ಲಿ ಶಾಶ್ವತ ಮಹತ್ವ ಹೊಂದಿದೆ.

    ಒಟ್ಟಾರೆ ಪ್ರೊ.ಜಿ. ಎಸ್.ಸಿದ್ಧಲಿಂಗಯ್ಯನವರ ವಚನಸಾಹಿತ್ಯ ಮತ್ತು ಶೂನ್ಯಸಂಪಾದನೆ ಕುರಿತ ಅಧ್ಯಯನಗಳು ಕನ್ನಡ ವಿಮರ್ಶೆಯಲ್ಲಿ ದೇಸೀ ಪಠ್ಯಮೀಮಾಂಸಾತ್ಮಕ ವಿಮರ್ಶಾ ಮಾದರಿಯನ್ನು ಸ್ಥಾಪಿಸಿವೆ; ಅವರ ಅಧ್ಯಯನ ವಿಧಾನವು ಪಠ್ಯ, ಪರಂಪರೆ, ಭಾಷೆ, ಸಮಾಜ ಮತ್ತು ಅನುಭಾವಗಳ ಬಹುಮುಖ ಸಂವಾದವನ್ನು ಒಳಗೊಂಡ ಸಮಗ್ರ ಸಾಹಿತ್ಯಾರ್ಥ ವ್ಯಾಖ್ಯಾನದ ಸ್ವಾಯತ್ತ ಮಾದರಿಯಾಗಿವೆ. ವಚನಗಳನ್ನು ಕೇವಲ ಧಾರ್ಮಿಕ ಪಠ್ಯಗಳನ್ನಾಗಿ ನೋಡದೆ, ಅವುಗಳನ್ನು ಇಂದಿನ ಸಾಮಾಜಿಕ ಅಸಮಾನತೆ, ಶ್ರಮ ಸಂಸ್ಕೃತಿ (ಕಾಯಕ) ಮತ್ತು ಮಾನವೀಯ ಮೌಲ್ಯಗಳ ಮುಖಾಮುಖಿಯಾಗಿ ನಿಲ್ಲಿಸುವಲ್ಲಿ ಅವರ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ.

 ಪರಾಮರ್ಶನ ಗ್ರಂಥಗಳು

 ೧. ಶೂನ್ಯಸಂಪಾದನೆ-ಒಂದು ಅವಲೋಕನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೨. ಹಲಗೆಯಾರನ ಶೂನ್ಯಸಂಪಾದನೆ ಸಂಪಾದನೆ : ವಿದ್ಯಾಶಂಕರ ಅವರೊಂದಿಗೆ

 ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು

೩. ಶೂನ್ಯಸಂಪಾದನೆ ಜೆ.ಎಸ್.ಎಸ್. ಗ್ರಂಥಮಾಲೆ, ಮೈಸೂರು

೪. ಶೂನ್ಯಸಂಪಾದನೆ : ಮರು ಚಿಂತನೆ, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ

೫. ಶೂನ್ಯಸಂಪಾನೆ : ಕೆಲವು ಪ್ರಶ್ನೆಗಳು, ಶ್ರೀಸಿದ್ಧಗಂಗಾಮಠ, ತುಮಕೂರು

೬.ಶಬ್ದಸೋಪಾನ, ಶ್ರೀ ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರ, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ೧೯೯೯

೭. ವಚನ ಸಾಹಿತ್ಯ ಇಣುಕು ನೋಟ, ಬಸವ ಸಮಿತಿ, ಬೆಂಗಳೂರು ೧೯೯೯

೮. ವಚನ ವಾಙ್ಮಯ ಮತ್ತು ಭಾಷೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌, ಮೈಸೂರು, ೧೯೯೭

೯.ವಚನ ಸಾಹಿತ್ಯ ಒಂದು ಹಕ್ಕಿನೋಟ, ಸ್ವಪ್ನ ಬುಕ್‌ ಹೌಸ್‌, ಬೆಂಗಳೂರು ೨೦೧೨

೧೦. ಶರಣರ ಆಯ್ದ ವಚನಗಳ ವ್ಯಾಖ್ಯಾನ , ಜಗದ್ಗರು ಶ್ರೀಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು ೨೦೦೯

೧೧. ಕನ್ನಡ ಸಂಸ್ಕೃತಿಗೆ ಮಹಾ ತಿರುವು ಕೊಟ್ಟ ಹರಿಹರ, ಬೆಂಗಳೂರು

೧೨. ನೂರೊಂದರ ಸುತ್ತ, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಬೆಂಗಳೂರು, ೨೦೧೦

೧೩. ನಿಸ್ಸೀಮ ( ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯನವರ ಅಭಿನಂದನ ಗ್ರಂಥ)

  ಸಂ: ಸಿ.ಯು.ಮಂಜುನಾಥ್‌, ಬಿ.ನಂಜುಂಡಸ್ವಾಮಿ

   ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೧೭                          

    ಜಿ.ಎ ಸ್ .ಸಿದ್ಧಲಿಂಗಯ್ಯನವರ ಶರಣ ಸಾಹಿತ್ಯ-ಸಂಸ್ಕೃತಿ ಕೊಡುಗೆ : ಸಂಶೋಧನಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ                              ಡಾ ಸಿ. ನಾಗ...