ಶುಕ್ರವಾರ, ಮೇ 22, 2026

                              ಸುರಂಗ ಕವಿಯ  ತ್ರಿಷಷ್ಟಿ ಪುರಾತನರ ಚಾರಿತ್ರಂ : ಸಮೀಕ್ಷೆ

                             ಡಾ.ಸಿ.ನಾಗಭೂಷಣ

   ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವೀರಶೈವ ಧಾರ್ಮಿಕ ಚಳವಳಿಯ ನಿಮಿತ್ತ ಬಸವಯುಗದ ನಂತರ ಕನ್ನಡದಲ್ಲಿ ಶೈವಭಕ್ತಿ ಸಾಹಿತ್ಯವು ಹಲವು ರೂಪಗಳಲ್ಲಿ ಬೆಳವಣಿಗೆಯಾಯಿತು. ಹರಿಹರ, ರಾಘವಾಂಕ, ಭೀಮಕವಿ, ಚಾಮರಸ,ವಿರೂಪಾಕ್ಷ ಪಂಡಿತ, ಲಕ್ಕಣ್ಣದಂಡೇಶ, ಶಾಂತಲಿಂಗದೇಶಿಕ  ಮೊದಲಾದ ಕವಿಗಳು ಶೈವಭಕ್ತಿಯನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ  ವ್ಯಕ್ತಪಡಿಸುವುದರ ಮೂಲಕ ಜನಮಾನಸದಲ್ಲಿ ನೆಲಸಿದರು. ಈ ಪರಂಪರೆಯ ಮುಂದುವರಿಕೆಯಲ್ಲಿ ಸುರಂಗಕವಿಯ ‘ತ್ರಿಷಷ್ಟಿ ಪುರಾತನ ಚಾರಿತ್ರ’ ಕೃತಿಯು ವಿಶೇಷ ಸ್ಥಾನ ಪಡೆದಿದೆ. ಇದು ಕೇವಲ ಭಕ್ತರ ಚರಿತ್ರೆಗಳ ಸಂಕಲನವಾಗಿಲ್ಲ. ಕನ್ನಡ ಸಾಹಿತ್ಯದಲ್ಲಿ ತಮಿಳು ಶೈವಸಂಪ್ರದಾಯದ ಸಾಂಸ್ಕೃತಿಕ ಮರು ರೂಪಾಂತರವಾಗಿದೆ. ಶೈವಭಕ್ತಿ ಪ್ರಧಾನತೆ,ಚಂಪೂ ಶೈಲಿ,ಮಹಾಕಾವ್ಯ ಲಕ್ಷಣಗಳು, ನಾಯನ್ಮಾರರ ಚರಿತ್ರೆಯ ಸಮಗ್ರ ನಿರೂಪಣೆ,ಕನ್ನಡದಲ್ಲಿ ತಮಿಳು ಶೈವ ಪರಂಪರೆಯ ಪರಿಚಯ ಇವುಗಳು ಈ ಕೃತಿಯ ಮುಖ್ಯ ಲಕ್ಷಣಗಳಾಗಿವೆ.

    ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೧೫-೧೬ನೆಯ ಶತಮಾನವು ಷಟ್ಪದಿ, ಸಾಂಗತ್ಯ ಮುಂತಾದ ದೇಸಿ ಛಂದಸ್ಸುಗಳ ಮೂಲಕ ಅತ್ಯಂತ ಸಂಕೀರ್ಣವಾದ ಹಾಗೂ ಮಹತ್ವದ ಸಾಂಸ್ಕೃತಿಕ ಪಲ್ಲಟಗಳಿಗೆ ಸಾಕ್ಷಿಯಾದ ಕಾಲಘಟ್ಟ. ಈ ಕೃತಿಯು ಹಳಗನ್ನಡ-ನಡುಗನ್ನಡಗಳ ತಾತ್ವಿಕ ಮುಖಾಮುಖಿಯಾಗಿದೆ. ಮಾರ್ಗ ಪರಂಪರೆಯ ಪ್ರೌಢ ಛಂದೋರೂಪವಾದ 'ಚಂಪೂ' ತನ್ನ ಬಿಗಿ ಕಳೆದುಕೊಂಡು, ಷಟ್ಪದಿ, ಸಾಂಗತ್ಯ, ರಗಳೆಗಳಂತಹ 'ದೇಸಿ'  ಪ್ರಕಾರಗಳು ಕನ್ನಡ ಸಾರಸ್ವತ ಲೋಕವನ್ನು ಪ್ರಭಾವಿಸಿದ್ದ ಕಾಲವದು. ಇಂತಹ ಕಾಲಘಟ್ಟದಲ್ಲಿ ಸುರಂಗ ಕವಿಯು 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕಾವ್ಯವನ್ನು ಪುನಃ 'ಚಂಪೂ' ಶೈಲಿಯಲ್ಲಿಯೇ ರಚಿಸಲು ಮುಂದಾಗುವುದು ಕೇವಲ ಹಠಮಾರಿ ಪಾಂಡಿತ್ಯದ ಪ್ರದರ್ಶನವಲ್ಲ; ಅದೊಂದು ಪ್ರಜ್ಞಾಪೂರ್ವಕ ಸಾಂಸ್ಕೃತಿಕ ರಾಜಕಾರಣ. ವೀರಶೈವ ಸಾಹಿತ್ಯ ಮತ್ತು ದೇಸಿ ಸಂಸ್ಕೃತಿಯ ಮರುಮೌಲ್ಯಮಾಪನದ ಹಿನ್ನೆಲೆಯಲ್ಲಿ ಈ ಕಾವ್ಯವನ್ನು ವಿಶ್ಲೇಷಿಸಿದಾಗ, ಸುರಂಗನು ಹಳಗನ್ನಡ ಮತ್ತು ನಡುಗನ್ನಡಗಳ ನಡುವೆ, ಹಾಗೂ ಮಾರ್ಗ ಮತ್ತು ದೇಸಿ ಪರಂಪರೆಗಳ ನಡುವೆ ಕಟ್ಟಿದ ಬೃಹತ್ ತಾತ್ವಿಕ ಸೇತುವೆಯ ಸ್ವರೂಪ ಅನಾವರಣಗೊಳ್ಳುತ್ತದೆ. ಸುಮಾರು 16ನೆಯ ಶತಮಾನದ ಈ ಕೃತಿಯು ವೀರಶೈವ ಪರಂಪರೆಯ ಪ್ರಾಚೀನ ಶರಣರ ಜೀವನ, ತತ್ತ್ವ ಮತ್ತು ಸಂದೇಶಗಳನ್ನು ಸಂರಕ್ಷಿಸುವಂತಹ ಕನ್ನಡದ ಭಕ್ತಿ ಸಾಹಿತ್ಯದ ಪ್ರಮುಖ ಹಾಗೂ ಅಧ್ಯಯನಾರ್ಹ ಕೃತಿಯಾಗಿದೆ.

   ಸುರಂಗ ಕವಿಯು ರಚಿಸಿರುವ 'ತ್ರಿಷಷ್ಟಿ ಪುರಾತನ ಚಾರಿತ್ರ್ಯ' ಕೃತಿಯು ಸುರಂಗ ಕವಿಯ ಏಕೈಕ ಪ್ರಸಿದ್ಧ ಕೃತಿ. ಕೃತಿಯಲ್ಲಿ ಒಟ್ಟು 63 ಆಶ್ವಾಸಗಳು ಇವೆ. ಪ್ರತಿ ಆಶ್ವಾಸದ ಕೊನೆಯಲ್ಲಿ ಗದ್ಯ ಭಾಗವಿದೆ. ಇದು ಕೇವಲ ಜೀವನಚರಿತ್ರೆಗಳ ಸಂಕಲನವಲ್ಲ, ಬದಲಿಗೆ ಸಂಪೂರ್ಣ ಚಂಪೂ ಶೈಲಿಯಲ್ಲಿ ರಚಿತವಾದ ಸಾಹಿತ್ಯಕ ದಾಖಲೆಯಾಗಿದೆ. ಸುರಂಗನ ‘ತ್ರಿಷಷ್ಟಿ ಪುರಾತನ ಚಾರಿತ್ರಂ’ ಕಾವ್ಯವು ಕೇವಲ 63 ಭಕ್ತರ ಕಥಾ-ಗುಚ್ಛವಲ್ಲ. ಅದು ಸಂಸ್ಕೃತ-ತಮಿಳು-ಕನ್ನಡಗಳ ನಡುವಿನ ಸಾಹಿತ್ಯಕ ಕೊಳು-ಕೊಡುಗೆಗಳ, ಮಾರ್ಗ ಮತ್ತು ದೇಸಿ ಛಂದೋರೂಪಗಳ ವಿಕಾಸದ, ಹಾಗೂ ಮಧ್ಯಕಾಲೀನ ದಕ್ಷಿಣ ಭಾರತದ ಶೈವ-ವೀರಶೈವ ತಾತ್ವಿಕತೆಯ ಮರುಮೌಲ್ಯೀಕರಿಸುವಂತಹ ಅಮೂಲ್ಯವಾದ ಆಕರ ಕೃತಿಯಾಗಿದೆ. ಸುರಂಗ ಕವಿಯು 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕಾವ್ಯದಲ್ಲಿ ಶೃಂಗಾರ, ವೀರ, ಮತ್ತು ಕರುಣ ರಸಗಳನ್ನು ಭಕ್ತಿರಸದೊಂದಿಗೆ ಅತ್ಯಂತ ಕಲಾತ್ಮಕವಾಗಿ ಬೆಸೆದಿದ್ದಾನೆ. ಆತನ ಪಾತ್ರಗಳು ಅನುಭವಿಸುವ ಲೌಕಿಕ ಸಂಕಟಗಳು, ಪ್ರೇಮ, ಮತ್ತು ಉಗ್ರವಾದ ತ್ಯಾಗಗಳೆಲ್ಲವೂ ಅಂತಿಮವಾಗಿ ಪರಶಿವನ ಕೃಪೆಗೆ ಪಾತ್ರವಾಗುವ ಸಾಧನಗಳಾಗುತ್ತವೆ. ಚಂಪೂ ಕಾವ್ಯವು ಮೂಲತಃ ರಾಜರು, ಚಕ್ರವರ್ತಿಗಳು ಹಾಗೂ ಪೌರಾಣಿಕ ದೇವತೆಗಳಿಗೇ ಸೀಮಿತವಾಗಿದ್ದ ʻಮಾರ್ಗ' ಪರಂಪರೆಯ ಪ್ರಕಾರವಾಗಿತ್ತು. ಆದರೆ ಸುರಂಗನು ಇದೇ ಪ್ರೌಢ ಚಂಪೂವಿನ ಚೌಕಟ್ಟಿನೊಳಗೆ ಸಮಾಜದ ಕಟ್ಟಕಡೆಯ, ಶ್ರಮಿಕ ವರ್ಗದ ಪಾತ್ರಗಳನ್ನು ನಾಯಕರನ್ನಾಗಿ ತಂದು ನಿಲ್ಲಿಸುತ್ತಾನೆ. ಭಕ್ತಿಯ ಸಮಾಜಶಾಸ್ತ್ರದ ನೆಲೆ, ವರ್ಣಾಶ್ರಮದ ವಿಘಟನೆ ಮತ್ತು 'ದೇಸಿ' ಪ್ರಜ್ಞೆಯ ಸ್ಥಾಪನೆಯನ್ನು ಕಾಣಬಹುದಾಗಿದೆ.

    ಈ ಕಾವ್ಯದ ರಚನೆಯ ಮೂಲಕ, ಸುರಂಗ ಕವಿಯು ವೀರಶೈವ ಧರ್ಮದ ಮೂಲ ಸಿದ್ಧಾಂತಗಳು ಮತ್ತು ಪ್ರಾಚೀನ ಶರಣರ ಸಂದೇಶವನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಸುರಂಗ ಕವಿಯು ಆ ಕಾಲಕ್ಕೆ ಪ್ರಚಲಿತವಿದ್ದ ಮೌಖಿಕ ಸಂಪ್ರದಾಯಗಳು ಮತ್ತು ತಮಗಿಂತ ಹಿಂದಿನ ಕಾವ್ಯಗಳನ್ನು (ಲಿಂಗಪುರಾಣ ಸೇರಿದಂತೆ) ಆಕರವಾಗಿ ಬಳಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಈತನು ಸಾಹಿತ್ಯಕ ದಾಖಲೀಕರಣದಲ್ಲಿ ಹರಿಹರ, ಭೀಮಕವಿ, ರಾಘವಾಂಕ, ಚಾಮರಸ, ಲಕ್ಕಣ್ಣದಂಡೇಶರ ಸಾಲಿನಲ್ಲಿಯೇ ನಿಲ್ಲುತ್ತಾನೆ. ಕನ್ನಡ ಸಾಹಿತ್ಯದ ಸುವರ್ಣ ಯುಗವಾಗಿದ್ದ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ವೀರಶೈವ ಸಾಹಿತ್ಯವು ಅದ್ಭುತವಾದ ಪುನರುಜ್ಜೀವನವನ್ನು ಕಂಡಿತು. ಈ ಕಾಲಘಟ್ಟದಲ್ಲೇ ಸುರಂಗ ಕವಿಯು "ತ್ರಿಷಷ್ಟಿ ಪುರಾತನ ಚಾರಿತ್ರ್ಯ" ಎಂಬ ಮಹತ್ವದ ಗ್ರಂಥವನ್ನು ರಚಿಸಿದನು. ದುರದೃಷ್ಟವಶಾತ್, ಈ ಅಮೂಲ್ಯ ಕೃತಿಯು ಸಂಶೋಧಕರ ಗಮನಕ್ಕೆ ಸಂಪೂರ್ಣವಾಗಿ ಸೆಳೆಯದ ಸ್ಥಿತಿಯಲ್ಲಿಯೇ ಉಳಿದುಕೊಂಡಿದೆ.

    ಕನ್ನಡದಲ್ಲಿ ಪುರಾತನರ ಚರಿತ್ರೆಯನ್ನು ಕುರಿತು ಅನೇಕ ಗ್ರಂಥಗಳು ರಚಿತವಾಗಿದ್ದರೂ, ಸುರಂಗನ ಈ ಕೃತಿಯು ಚಂಪೂ ಶೈಲಿಯಲ್ಲಿ ರಚಿತವಾದ ಏಕೈಕ ಬೃಹತ್ ಕಾವ್ಯವಾಗಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.  ಈ ಕೃತಿಯನ್ನು ಆರ್.ಸಿ. ಹಿರೇಮಠ ಅವರು ಮೂರು ಹಸ್ತಪ್ರತಿಗಳನ್ನು ಉಪಯೋಗಿಸಿ  ಸಂಪಾದಿಸಿ ೧೯೭೮ ರಲ್ಲಿ ಪ್ರಕಟಿಸಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕೃತಿಯ  ಹಸ್ತಪ್ರತಿಯನ್ನು ಆಧರಿಸಿ 1931ರಲ್ಲಿ 'ತ್ರಿಷಷ್ಟಿ ಪುರಾತನ ವಿಲಾಸ' ಎಂಬ ಗದ್ಯ ಗ್ರಂಥವು  ಮಹಾರುದ್ರಪ್ಪ ಮಹಾಲಿಂಗಪ್ಪ, ಮಿರ್ಜಿ ಇವರಿಂದ ರಚಿತವಾಗಿದೆ. ಆ ಗ್ರಂಥದ ಪ್ರಕಾಶಕರು ಹುಬ್ಬಳ್ಳಿಯ ಗುರುಸಿದ್ದಪ್ಪ, ಮಹಾಲಿಂಗಪ್ಪ, ಮಿರ್ಜಿಯವರಾಗಿದ್ದು, ಆಗಿನ ಕಾಲಕ್ಕೆ ಅವರು ಈ ಕೃತಿಯ ಒಂದು ಸಾವಿರ ಪ್ರತಿಗಳನ್ನು ಮುದ್ರಿಸಿದ್ದಾರೆ. ಇದು ತಮಿಳುನಾಡಿನ 63 ಜನ ಶೈವ ಭಕ್ತರ ಅಧ್ಯಯನಕ್ಕೆ ಪ್ರಾಥಮಿಕ ಸಾಧನವಾಗಿದೆ.

  ಕವಿ:ಹಿನ್ನೆಲೆ ಮತ್ತು ಕಾಲ-ದೇಶ ವಿಚಾರ,ವೈಯಕ್ತಿಕ ಸಂಗತಿಗಳು: ಸುರಂಗಕವಿಯ ಜೀವನದ ಕುರಿತು ನಿಖರವಾದ ಐತಿಹಾಸಿಕ ಮಾಹಿತಿಗಳು ಲಭ್ಯವಿಲ್ಲ. ವೈಯಕ್ತಿಕ ಹಿನ್ನೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ,ಆದರೂ ಕೃತಿಯ ಅಂತ್ಯದ ಗದ್ಯಭಾಗಗಳಲ್ಲಿ ಕವಿ ತನ್ನ ತಂದೆಯನ್ನು “ಸಂಗಮವಿಭು”, ತಾಯಿಯನ್ನು “ಮಹದೇವಿ” ಎಂದು ಉಲ್ಲೇಖಿಸಿರುವುದರಿಂದ ಅವನ ಕುಟುಂಬಪರಿಚಯ ಸ್ವಲ್ಪಮಟ್ಟಿಗೆ ದೊರಕುತ್ತದೆ. “ಸಂಗಮವಿಭು” ಎಂಬ ಬಿರುದು ಅವನ ತಂದೆ ಯಾವುದೋ ಪ್ರಾದೇಶಿಕ ಆಡಳಿತವರ್ಗಕ್ಕೆ ಸೇರಿದ್ದಿರಬಹುದೆಂಬ ಊಹೆಗೆ ಕಾರಣವಾಗುತ್ತದೆ. ಕವಿಯು ಸುಕವಿಸುರಂಗ’ 'ಕವಿಚಕ್ರವರ್ತಿ', 'ಕರ್ಣಾಟ ಕವೀಂದ್ರ', 'ಸುರಂಗವರದ', ಮತ್ತು 'ಕವಿಸುರಂಗಳಿ'‘ಕಬ್ಬಿಗರಾಳನ ಕಬ್ಬವೆಳರ’ ('ತ್ರಿಷಷ್ಟಿ ಪುರಾತನ ಚಾರಿತ್ರಂ ಆ.೧. ಪ.೨೯,೩೨,೩೫,೩೬,೪೪)  ಮುಂತಾದ ವಿಶೇಷಣಗಳಿಂದ ಸ್ತುತಿಸಲ್ಪಟ್ಟಿದ್ದಾನೆ. ಸುರಂಗ’ ಬಿರುದು ನೀಡಿದವರು ಯಾರೆಂಬುದು ತಿಳಿದಿಲ್ಲ. ಆದರೆ  ಈ ಕೃತಿಯನ್ನು ಸಂಪಾದಿಸಿದ ಸಂಪಾದಕರಾದ ಡಾ. ಆರ್.ಸಿ. ಹಿರೇಮಠರ ಅಭಿಪ್ರಾಯದಂತೆ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೀರಶೈವ ಪಕ್ಷಪಾತಿಗಳಾದ ದೊರೆಗಳು ಅಥವಾ ಮಾಂಡಲಿಕರು ಈ ಬಿರುದನ್ನು ಕೊಟ್ಟಿರಬಹುದು. ಸಮಕಾಲೀನರು ಈ ಬಿರುದನ್ನು ಕೊಟ್ಟಿದ್ದರೂ, ನಂತರದ ಕನ್ನಡ ಸಾಹಿತ್ಯದಲ್ಲಿ ಅವನ ಹೆಸರು ಅಷ್ಟೊಂದು ಪ್ರಸಿದ್ಧವಾಗಿಲ್ಲ. ಇದನ್ನು ಸ್ವಯಂ-ಘೋಷಿತ ಪ್ರತಿಷ್ಠೆ ಎಂದು ತಳ್ಳಿಹಾಕುವ ಬದಲು, ಅದರ ಸಾಂಸ್ಕೃತಿಕ ಕಾರ್ಯವನ್ನು ಅರ್ಥೈಸಬೇಕು ಎಂದಿದ್ದಾರೆ. ಈ ಕೃತಿಯ ಆಂತರಿಕ ಸಾಕ್ಷದ ಪ್ರಕಾರ,

ಕೃತಿಗಧಿಪತಿ ಸೋಮೇಶಂ

ಕೃತಿತಾನಱುವತ್ತು ಮೂವರಮಳಚರಿತ್ರಂ

ಕೃತಿಪಾಲರಭವಭಕ್ತರ್

ಕೃತಿವೇಳ್ದಂ ಕವಿಸುರಂಗನೆನೆ ಮೆಚ್ಚದರಾರ್(‌ ೧-೩೧) ಎಂಬ ಹಾಗೂ  ಕವಿ ತನ್ನ ಕೃತಿಯ ಪ್ರತಿ ಆಶ್ವಾಸದ ಕೊನೆಯ ಗದ್ಯದಲ್ಲಿ ‘ಶ್ರೀಮತ್‌ ಪುಲಿಗೆರೆಯ ಪುರಾಧಿಪ ಶ್ರೀ ಸೋಮನಾಥ ಭಕ್ತಿಯುಕ್ತ’ ಎಂದು ಕರೆದುಕೊಂಡಿರುವುದರಿಂದ ಕವಿಯ ಸ್ಥಳ ‘ಪುಲಿಗೆರೆ’ ಈಗಿನ ಕರ್ನಾಟಕದ ಲಕ್ಷ್ಮೇಶ್ವರ ಆಗಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಪುಲಿಗೆರೆಯ ಶ್ರೀ ಸೋಮನಾಥನು ಕವಿಯ ಆರಾಧ್ಯ ದೇವತೆ. ಆತನ ಕೃತಿಗಧಿಪತಿ ಸೋಮೇಶನು. ಈ ಕಾವ್ಯದ ಪ್ರಥಮ ಪದ್ಯದಲ್ಲಿ ಕವಿಯು 'ಸುರಂಗವರದ ಶ್ರೀ ಸೋಮನಾಥಂ ಮಹಾ ಪ್ರೇಮಂ ಕೈ ಮಿಗೆ ಕುಂದದೀಗೆ ನಮಗತ್ಯಾನಂದಸಂದೋಹನಂ? ( ೧-೧)ಎಂದು ಪ್ರಾರ್ಥಿಸಿರುವನು. ಅಲ್ಲಿನ ಶ್ರೀ ಸೋಮನಾಥ ದೇವಾಲಯವೇ ಅವನ ಆರಾಧ್ಯ ಕ್ಷೇತ್ರವಾಗಿದ್ದಿರಬಹುದು. ಈತನು ತನ್ನ ಕೃತಿಯನ್ನು 'ಸೋಮನಾಥ' ಎಂಬ ಕಾವ್ಯನಾಮದಿಂದ ರಚಿಸಿರುವುದು ಆತನು ಪುಲಿಗೆರೆಯ (ಲಕ್ಷ್ಮೇಶ್ವರದ) ಶ್ರೀ ಸೋಮನಾಥನ ಪರಮ ಭಕ್ತನಾಗಿದ್ದನು ಎಂಬುದನ್ನು ಸೂಚಿಸುತ್ತದೆ. ಈತನು ತಾನೊಬ್ಬ ವ್ಯಕ್ತಿಕವಿ ಎಂಬುದಕ್ಕಿಂತ ತಮ್ಮ ಆರಾಧ್ಯ ದೈವದ ನಾಮದಲ್ಲಿ ತಮ್ಮ ಕಾವ್ಯವನ್ನು ಸಮರ್ಪಿಸಿಕೊಂಡಿದ್ದಾನೆ.    ಕವಿಯ ಕಾಲದ ಬಗ್ಗೆ ಖಚಿತವಾದ ಲಿಖಿತ ಆಧಾರಗಳಿಲ್ಲವಾದರೂ, ಕಾವ್ಯದ ಆದಿಯಲ್ಲಿ ಆತನು ಬಸವೇಶ್ವರ, ಚನ್ನಬಸವೇಶ್ವರ ಮತ್ತು ಪ್ರಭುದೇವರನ್ನು ಸ್ತುತಿಸಿರುವುದರಿಂದ ಈತನು ಕ್ರಿ.ಶ. ೧೧೬೦ರ ನಂತರದವನು ಎಂಬುದು ಖಚಿತವಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ತನ್ನ ಪೂರ್ವ ಕವಿ ಸ್ತುತಿಯಲ್ಲಿ ಕೇವಲ ಬಾಣ, ಮಯೂರ, ಕಾಳಿದಾಸ, ಭಾರವಿ ಮುಂತಾದ ಸಂಸ್ಕೃತ ಕವಿಗಳನ್ನು ಮಾತ್ರ ಸ್ಮರಿಸುವ ಈತ, ಹರಿಹರ ಅಥವಾ ರಾಘವಾಂಕರಂತಹ ಯಾವುದೇ ಕನ್ನಡ ಕವಿಯ ಹೆಸರನ್ನು ಉಲ್ಲೇಖಿಸಿಲ್ಲ. ಕಾವ್ಯದಲ್ಲಿ ಬಳಕೆಯಾಗಿರುವ ದೇಸಿ ಶಬ್ದಗಳು ಮತ್ತು ಚಂಪೂ ಶೈಲಿಯ ಮೇಲಾಗಿರುವ ಹಾಡುಗಬ್ಬಗಳ ಪ್ರಭಾವವನ್ನು ಗಮನಿಸಿದರೆ, ಸುರಂಗ ಈತನು ೧೫-೧೬ನೇ ಶತಮಾನದ ಹಾಡುಗಬ್ಬಗಳ (ದೇಸಿ) ಕಾಲಘಟ್ಟದಲ್ಲಿ ಜೀವಿಸಿದ್ದರೂ, ಚಂಪೂ ಶೈಲಿಯಲ್ಲಿ ಕಾವ್ಯರಚನೆ ಮಾಡಿದನು. ಅವರ ಕಾಲವನ್ನು ಸುಮಾರು ೧೫೦೦ ಕ್ರಿ.ಶ. ಎಂದು ನಿರ್ಧರಿಸಿದ್ದಾರೆ (ಕರ್ಣಾಟಕ ಕವಿಚರಿತೆ, ಸಂಪುಟ ೨, ಪು. ೧೦೧).ಈತನು ಹದಿನೈದು ಅಥವಾ ಹದಿನಾರನೆಯ ಶತಮಾನದಲ್ಲಿ (ಕ್ರಿ.ಶ. ೧೫-೧೬ನೇ ಶತಮಾನ) ಜೀವಿಸಿರಬಹುದು ಎಂದು  ಕವಿ ಚರಿತೆಕಾರರು ಮತ್ತು ಆರ್.ಸಿ.ಹಿರೇಮಠರು ಅಭಿಪ್ರಾಯಪಟ್ಟಿರುವುದನ್ನು ಸದ್ಯಕ್ಕೆ ಇಟ್ಟುಕೊಳ್ಳ ಬಹುದಾಗಿದೆ.  ಕೃತಿಯ ಕಾಲನಿರ್ಣಯಕ್ಕೆ ದೃಢವಾದ ಆಧಾರಗಳಿಲ್ಲದಿದ್ದರೂ, ಭಾಷೆ, ಶೈಲಿ ಮತ್ತು ವೀರಶೈವ ಪ್ರಭಾವದ ಆಧಾರದ ಮೇಲೆ ಕವಿ ಚರಿತೆಕಾರರ ಹೇಳಿಕೆಯನ್ನೇ ಇಟ್ಟುಕೊಳ್ಳಬಹುದು.

 ಕೃತಿಯ ಮೂಲ: ಸುರಂಗನು ತನ್ನ ಕಾವ್ಯಕ್ಕೆ ಉಪಮನ್ಯು ಮುನಿಯ 'ಭಕ್ತಿವಿಲಾಸ' ಮತ್ತು 'ಲೈಂಗ್ಯ ಪುರಾಣ' ಮೂಲವೆಂದು ಹೇಳಿಕೊಂಡಿದ್ದಾನೆ

 "ಪದೆದೊದವಿರೆ ಲೈಂಗ್ಯಪುರಾ

ಣದೊಳಿರ್ದಂತಭವನಿತ್ತ ವರಮತಿಯಿಂ ಭೂ

ವಿದಿತ ಪುರಾತನ ಚರಿತೆಯ

ನುದಿತೋತ್ಸವದಿಂ ಸುರಂಗವರದಂ ಪೇಳ್ದಂ" (ಆ.೧ ಪ.೪೪) ಉಪಮನ್ಯು ಪ್ರಣೀತವಾದ ಭಕ್ತಿ ವಿಲಾಸವು ಲೈಂಗ್ಯ ಪುರಾಣದಲ್ಲಿ ಅಂತರ್ಗತವಾದಂತಿದೆ. ಸುರಂಗಕವಿಯು ಈ ಉಪಮನ್ಯು ಭಕಿ ವಿಲಾಸವನ್ನೇ ಅನುಸರಿಸಿರು ವೆನೆಂದು ಹೇಳುತ್ತಾನೆ.

ಧರೆಯೊಳಱುವತ್ತು ಮೂವರ್

ಪುರಾತನ‌ರ್ ಮೆಱೆದ ಪರಿಯನುಪಮನ್ಯು ಮುನೀ

ಶ್ವರನಾ ಕಣಾದಗಂ ವಿ

ಸ್ತರಿಸಿದುದಂ ಕವಿ ಸುರಂಗವರದಂ ಪೇಳ್ದಂ (ಆ.೧ ಪ.೨೦)

ಕನ್ನಡದಲ್ಲಿ ತ್ರಿಷಷ್ಟಿ ಪುರಾತನರನ್ನು ಕುರಿತು ಕಾವ್ಯ ಬರೆದ ಸುರಂಗನು ಸಂಸ್ಕೃತಗ್ರಂಥದ ಮಾತೃಕೆಯನ್ನು ಎತ್ತಿ ತೋರಿಸುವುದೂ ತನಗಿಂತ ಪೂರ್ವದಲ್ಲಿ ಬರೆದ ಮಹಾಕವಿ ಹರಿಹರದೇವನ ಪುರಾತನ ರಗಳೆಗಳ ಆಧಾರಗಳನ್ನು ಉಲ್ಲೇಖಿಸದಿರುವುದೂ ಆಶ್ಚರ್ಯಕರವಾಗಿದೆ. ಇದು ಸುರಂಗನಲ್ಲಿ ತನ್ನ ಕಾವ್ಯಕ್ಕೆ ಸ್ವತಂತ್ರವಾದ ಸಂಸ್ಕೃತ ಮೂಲವನ್ನು ಸ್ಥಾಪಿಸುವ ಪ್ರಯತ್ನವಿದೆಯೇ ಹೊರತು, ಹರಿಹರನಿಗೆ ಋಣಿಯಾಗಲು ಇಷ್ಟಪಡದಿರುವಿಕೆಯಲ್ಲ. ಈತನ ಕೃತಿಯನ್ನು ಸಂಶೋಧನಾತ್ಮಕವಾಗಿ ಆಳವಾಗಿ ವಿಶ್ಲೇಷಿಸಿದಾಗ, ಸುರಂಗನ ಕಾವ್ಯದ ಮೇಲೆ ಹಂಪೆಯ ಹರಿಹರ ದೇವನ 'ಪುರಾತನ ರಗಳೆ'ಗಳ ಪ್ರಭಾವವು ಅತೀ ದಟ್ಟವಾಗಿದ್ದು, ಅಚ್ಚೊತ್ತಿದಂತೆ ಕಂಡುಬರುತ್ತದೆ. ವಾಸ್ತವದಲ್ಲಿ ಅವನ ನಿರೂಪಣೆ ಹರಿಹರನ ನಂಬಿಯಣ್ಣನ ರಗಳೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಸುರಂಗನು ಹರಿಹರನ ಹೆಸರನ್ನೇ ಉಲ್ಲೇಖಿಸದಿದ್ದರೂ, ಆತನ ಕಾವ್ಯದ ಕಥಾಸರಣಿ, ಭಾವ, ಕಲ್ಪನೆ ಮತ್ತು ಶಬ್ದ ವಾಕ್ಯವೃಂದಗಳು ಹರಿಹರನನ್ನೇ ನಿಕಟವಾಗಿ ಅನುಸರಿಸಿವೆ. ಕಾರಿಕಾಲಮ್ಮೆ, ರುದ್ರಪಶುಪತಿ, ತಿರುನಾಳೋವರ್, ಅರಿವಾಳ್ತಾಂಡರ್, ಕಣ್ಣಪ್ಪ, ಇಳೆಯಾಂಡಗುಡಿಮಾರ ಮುಂತಾದ ಪುರಾತನರ ಕಥೆಗಳಲ್ಲಿ ಬರುವ ಘಟನೆಗಳು ಮತ್ತು ನಿರೂಪಣಾ ಕ್ರಮವು, ತಮಿಳಿನ ಮೂಲ 'ಪೆರಿಯ ಪುರಾಣ'ಕ್ಕಿಂತ ಹರಿಹರನ ರಗಳೆಗಳಿಗೇ ಹೆಚ್ಚು ನಿಷ್ಠವಾಗಿವೆ. ಸಂಸ್ಕೃತದ ಮೂಲವನ್ನು ಬಳಸಿದ್ದರೆ ಹೆಸರುಗಳು ಸಂಸ್ಕೃತದಲ್ಲಿರಬೇಕಿತ್ತು, ಆದರೆ ಸುರಂಗನು ಪುರಾತನರ ಹೆಸರುಗಳನ್ನು ಸಂಸ್ಕೃತೀಕರಿಸದೆ, ಹರಿಹರನು ಬಳಸಿದಂತೆಯೇ ತಮಿಳು ಮೂಲದ ಹೆಸರುಗಳನ್ನೇ (ಉದಾ: ಕಳಚಂಗ, ವೇಳ್ಕೊತ) ಬಳಸಿದ್ದಾನೆ. ಸುರಂಗನು ತನ್ನ ಕೃತಿಗೆ ಮೂಲವಾಗಿ, ಉಪಮನ್ಯು ಭಕ್ತಿವಿಲಾಸ ಲಿಂಗಪುರಾಣ,ತಮಿಳಿನ ಶೇಕ್ಕಿಳಾರನ ಪೆರಿಯಪುರಾಣ, ಕನ್ನಡದ ಹರಿಹರನ ನಂಬಿಯಣ್ಣನ ರಗಳೆ ಗಳನ್ನು ಅನುಸರಿಸಿದ್ದರೂ ಅವನು ಕೇವಲ ಅನುವಾದಕನಲ್ಲ; ಕಥೆಗಳನ್ನು ಮರುಸಂಯೋಜಿಸಿ ಕನ್ನಡದ ಮಹಾಕಾವ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾನೆ. ಹರಿಹರನ ರಗಳೆಗಳು ಕನ್ನಡದ ನೆಲದಲ್ಲಿ ಹುಟ್ಟಿದ, ಅಪ್ಪಟ ದೇಶಿ ಸೊಗಸಿನ ಕೃತಿಗಳು. ಆದರೆ ಸುರಂಗನು ತನ್ನ ಚಂಪೂ ಕಾವ್ಯಕ್ಕೆ ಶಾಸ್ತ್ರೀಯ ಮತ್ತು ಪೌರಾಣಿಕ ಮನ್ನಣೆ  ಪಡೆಯುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿಯೇ ಹರಿಹರನ ಹೆಸರನ್ನು ಕೈಬಿಟ್ಟು, ಸಂಸ್ಕೃತ ಪುರಾಣದತ್ತ ಬೊಟ್ಟು ಮಾಡುತ್ತಾನೆ.  ಮಧ್ಯಕಾಲೀನ ಕಾವ್ಯಮೀಮಾಂಸೆಯಲ್ಲಿ ಕೃತಿಯೊಂದಕ್ಕೆ ‘ಶಾಸ್ತ್ರೀಯ’ ಅಥವಾ ‘ಮಾರ್ಗ’ ಮಾನ್ಯತೆ ಸಿಗಬೇಕಾದರೆ ಅದಕ್ಕೆ ಸಂಸ್ಕೃತದ ಮೂಲವಿರಬೇಕು ಎಂಬ ಅಲಿಖಿತ ನಿಯಮವಿತ್ತು. ಕಥಾವಸ್ತುವಿನ ದೃಷ್ಟಿಯಿಂದ ಸುರಂಗನ ಕಾವ್ಯವು ಅಚ್ಚುಕಟ್ಟಾಗಿ ಹರಿಹರನ ‘ದೇಸಿ’ ರಗಳೆಗಳನ್ನು ಮತ್ತು ತಮಿಳಿನ ಶೇಕ್ಕಿಳಾರ್‌ನ ‘ಪೆರಿಯ ಪುರಾಣ’ವನ್ನು ಅವಲಂಬಿಸಿದೆ. ಆದರೂ ಆತ ಉದ್ದೇಶಪೂರ್ವಕವಾಗಿ ಅವೆರಡನ್ನೂ ಉಲ್ಲೇಖಿಸದೆ, ಉಪಮನ್ಯು ಮುನಿಯ ಸಂಸ್ಕೃತ ‘ಭಕ್ತಿವಿಲಾಸ’ ಹಾಗೂ ‘ಲೈಂಗ್ಯ ಪುರಾಣ’ಗಳನ್ನು ತನ್ನ ಆಕರಗಳೆಂದು ಘೋಷಿಸುತ್ತಾನೆ. ದೇಸಿ ಕಥನವೊಂದನ್ನು ಮಾರ್ಗ-ಚೌಕಟ್ಟಿಗೆ (ಚಂಪೂವಿಗೆ) ಏರಿಸುವಾಗ ನಡೆಯುವ ಈ ಪಠ್ಯ-ರಾಜಕಾರಣವು ಕೃತಿ ಮತ್ತು ಕಾವ್ಯಮೀಮಾಂಸೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಅಧ್ಯಯನ ವಿಷಯವಾಗಿದೆ.

     ಸೋಮಾಸಿಮಾರ, ಕಲಿಕಾಮ, ಮೆರೆಮಿಂಡ, ಮತ್ತು ನರಸಿಂಗಮೊನೆಯರ ಕಥೆಗಳಲ್ಲಿ ಸುರಂಗನು ಹರಿಹರನ ಕೃತಿಯನ್ನೇ ಯಥಾವತ್ತಾಗಿ ಇಳಿಸಿರುವುದು, ಆತ ಸಂಸ್ಕೃತಕ್ಕಿಂತಲೂ ಕನ್ನಡದ ಮೌಖಿಕ ಮತ್ತು ಲಿಖಿತ ದೇಶಿ ಪರಂಪರೆಯಿಂದಲೇ ಹೆಚ್ಚು ಪ್ರಭಾವಿತನಾಗಿದ್ದ ಎಂಬುದಕ್ಕೆ ಜ್ವಲಂತ ಸಾಕ್ಷಿ. ಆತನ ಪೂರ್ವಕವಿ

ಸ್ತುತಿಯಲ್ಲಿ ಸಂಸ್ಕೃತ ಕವಿಗಳೇ ಹೊರತು ಕನ್ನಡದವರಿಲ್ಲ. ಇದು ಆತನಲ್ಲಿದ್ದ 'ಕವಿಚಕ್ರವರ್ತಿ' ಎಂಬ ಅಹಮಿಕೆಯನ್ನು ಸೂಚಿಸುತ್ತದೆಯೇ ಅಥವಾ  ಸುರಂಗನ ಕನ್ನಡದಲ್ಲಿ ಕಾವ್ಯ ಸಂಪ್ರದಾಯವನ್ನು ಹೊಸದಾಗಿ ಆರಂಭಿಸುವ ಮಹತ್ವಾಕಾಂಕ್ಷೆಯೇ ಅಥವಾ ವರಗುರು ಬಸವೇಶ್ವರರನ್ನು ಸ್ತುತಿಸಿದ ನಂತರ ತನ್ನ ಗುರುಪರಂಪರೆಯನ್ನು ಮೇಲಿನಿಂದಲೇ ಕಟ್ಟುವ ಪ್ರಯತ್ನವೇ ಎಂಬ ಅನಿಸಿಕೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗದೇ ಇರದು. ಸಂಸ್ಕೃತ ಮೂಲಗಳನ್ನು ಆಶ್ರಯಿಸಿ, ಹರಿಹರನ ಪ್ರಭಾವವನ್ನು ಅಲ್ಲಗಳೆಯುವ ಪ್ರಯತ್ನವೂ ಅವನಲ್ಲಿ ಕಾಣುತ್ತದೆ - ಇದು ಒಂದು ಕವಿಯಾಗಿ ತನ್ನ ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಹಂಬಲವಾಗಿದೆಯೇ ಹೊರತು, ದೊಡ್ಡ ಕವಿಯನ್ನು ನಿರಾಕರಿಸುವುದಲ್ಲ ಎಂದು ಭಾವಿಸ ಬಹುದೇನೋ. ವಾಸ್ತವದಲ್ಲಿ ಅವನಿಗೆ ಹರಿಹರನ ಹೆಜ್ಜೆ ತಪ್ಪಿಸಲು ಸಾಧ್ಯವಾಗಿಲ್ಲ. ಹರಿಹರನ ನಂತರ ಸುರಂಗನು ಶೈವ ಪುರಾತನ ಭಕ್ತರನ್ನು ಕುರಿತು ಸಮಗ್ರವಾಗಿ ಹೇಳಿದವನಾಗಿದ್ದಾನೆ. ಆ ಕಾರಣಕ್ಕಾಗಿ ಇವನ ಕೃತಿ ಮುಖ್ಯವಾಗುತ್ತದೆ.    

    ಕೃತಿಯ ಸ್ವರೂಪ:  ಸುರಂಗನ 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕಾವ್ಯವು ಅರುವತ್ತಮೂರು ಆಶ್ವಾಸಗಳನ್ನು ಹೊಂದಿದ್ದು ಪ್ರಥಮಾಶ್ವಾಸವು ಪೀಠಿಕೆಯನ್ನು ಒಳಗೊಂಡಿದ್ದು, ಉಳಿದ ಪ್ರತಿಯೊಂದು ಆಶ್ವಾಸವೂ ಸಾಮಾನ್ಯವಾಗಿ ಒಬ್ಬೊಬ್ಬ ಪುರಾತನನ ಕಥೆಗೆ ಮೀಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ವೀರಶೈವ ಪುರಾಣ ಸಂಪ್ರದಾಯಕ್ಕೆ ಹರಿಹರ ಮತ್ತು ಸುರಂಗ ಇಬ್ಬರೂ ಮೂಲಸ್ತಂಭಗಳು. ಸುರಂಗನು ಸೌಂದರನಂಬಿಯ ಕಥೆಯನ್ನು ಕ್ರಮಬದ್ಧವಾಗಿ, ಸುಸಂಗತವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾನೆ. ಮೊದಲ ಆರು ಆಶ್ವಾಸಗಳಲ್ಲಿ ಸೌಂದರನಂಬಿಯ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು, ನಂತರ ಏಳನೇ ಆಶ್ವಾಸದಿಂದ ಕ್ರಮಾನುಸಾರವಾಗಿ ಇತರ ಪುರಾತನರ ಕಥೆಗಳನ್ನು ಸೇರಿಸಿದ್ದಾನೆ. ಇದು ಹರಿಹರನ ಪೆರಿಯ ಪುರಾಣದಲ್ಲಿ ಅಲ್ಲಲ್ಲಿ ಚದುರಿಹೋಗಿರುವ ನಾಯನ್ಮಾರರ ಕಥೆಗಳನ್ನು ಕ್ರೋಡೀಕರಿಸಿ ಒಂದು ವ್ಯವಸ್ಥಿತ ರೂಪಕೊಡುವ ಪ್ರಯತ್ನವಾಗಿದೆ.

    ಸುರಂಗ ಕವಿಯ ಈ ಕೃತಿಯು  ಶರಣ ಪರಂಪರೆಯ ಅತ್ಯಂತ ಪ್ರಾಚೀನ (ಪುರಾತನ) ಶಿವಶರಣರ ಬಗ್ಗೆ ವಿವರಗಳನ್ನು ದಾಖಲಿಸಿದೆ. ತಮಿಳಿನ ನಾಯನ್ಮಾರರ ಭಕ್ತಿ ಮೂಲತಃ ಜನಪರ ಅನುಭವಪರ ದೈವಿಕ ಪ್ರೇಮಾಧಾರಿತ ಆದರೆ ಸುರಂಗನಲ್ಲಿ ಅದು ಶಾಸ್ತ್ರೀಯ, ಮಹಾಕಾವ್ಯಾತ್ಮಕ, ಅಲಂಕಾರಪ್ರಧಾನ ರೂಪವನ್ನು ಪಡೆದುಕೊಂಡಿದೆ. ಅರುವತ್ತು ಮೂವರು ಪುರಾತನರ ಚರಿತ್ರೆಯನ್ನು ಹೇಳುವ ಬೃಹತ್ ಉದ್ದೇಶವಿದ್ದರೂ, ಸುರಂಗನು ಕೃತಿಯ ಆದಿ-ಅಂತ್ಯಗಳಲ್ಲಿ ಮತ್ತು ಕಥೆಯುದ್ದಕ್ಕೂ ಸೌಂದರನಂಬಿಯನ್ನೇ ಪ್ರಧಾನ ನಾಯಕನನ್ನಾಗಿ ನಿಲ್ಲಿಸಿರುವುದು ಕಂಡು ಬರುತ್ತದೆ. ಸೌಂದರನಂಬಿಯ ಸಮಕಾಲೀನರಾದ ಸೋಮಾಸಿಮಾರ, ಕಲಿಕಾಮ, ಮೆರೆಮಿಂಡ, ನರಸಿಂಗಮೊನೆಯರ ಕಥೆಗಳನ್ನು ಹೇಳುವಾಗಲೂ ಸುರಂಗನು ಹರಿಹರನ ಪುರಾತನ ರಗಳೆಗಳನ್ನೇ ಬಹುಪಾಲು ಯಥಾವತ್ತಾಗಿ ಕೆಲವೆಡೆ ಸ್ವಲ್ಪವೇ ಬದಲಾವಣೆಗಳೊಂದಿಗೆ ಅಳವಡಿಸಿಕೊಂಡಿದ್ದಾನೆ.

   ‘ತ್ರಿಷಷ್ಟಿ ಪುರಾತನ ಚಾರಿತ್ರ’ವು ತಮಿಳುನಾಡಿನ 63 ಶೈವ ನಾಯನ್ಮಾರರ ಕಥೆಗಳನ್ನು ಕನ್ನಡದಲ್ಲಿ ಪರಿಚಯಿಸುವ 63 ಆಶ್ವಾಸಗಳ ಚಂಪೂಕಾವ್ಯ. 'ತ್ರಿಷಷ್ಟಿ' ಎಂದರೆ ಅರವತ್ತಮೂರು, 'ಪುರಾತನ' ಎಂದರೆ ಪುರಾತನರು ಅಥವಾ ಪ್ರಾಚೀನ ಶಿವಶರಣರು, 'ಚಾರಿತ್ರ್ಯ' ಎಂದರೆ ಅವರ ಜೀವನ ಚರಿತ್ರೆಗಳು - ಹೀಗೆ ಈ ಹೆಸರು 'ಅರವತ್ತಮೂರು ಪುರಾತನರ ಚರಿತ್ರೆಗಳು' ಎಂಬ ಅರ್ಥವನ್ನು ನೀಡುತ್ತದೆ. ಈ ಕೃತಿಯ ಹೆಸರು "ತ್ರಿಷಷ್ಟಿ ಪುರಾತನ ವಿಲಾಸಂ" ಮತ್ತು "ತ್ರಿಷಷ್ಟಿ ಪುರಾತನ ಚಾರಿತ್ರ್ಯ" ಎಂಬೆರಡು ರೂಪಗಳಲ್ಲಿ ಸಿಗುತ್ತದೆ. 63 ಪುರಾತನರ ಪರಿಕಲ್ಪನೆಯು ತಮಿಳುನಾಡಿನ ನಾಯನಾರ್ ಸಂಪ್ರದಾಯದಿಂದ ಪ್ರಭಾವಿತವಾಗಿದೆ, ಶರಣ ಸಾಹಿತ್ಯದಲ್ಲಿ ಉಲ್ಲೇಖಿಸಲಾದ "ಆದ್ಯರು", "ಪ್ರಮಥರು", ಮತ್ತು "ಪುರಾತನರು" ಎಂಬುದಕ್ಕೆ ಸುರಂಗ ಕವಿಯು ಸ್ಪಷ್ಟವಾದ ಕಾವ್ಯರೂಪವನ್ನು ನೀಡಿದ್ದಾರೆ. ಇಂದಿನ ಸಮಕಾಲೀನ ಸಂದರ್ಭದಲ್ಲಿ ಸನ್ನಿವೇಶದಲ್ಲಿ ಸುರಂಗ ಕವಿಯ ಈ ಕೃತಿಯ ಮಹತ್ವವನ್ನು ಹಲವಾರು ಕೋನಗಳಿಂದ ಪರಿಶೀಲಿಸಬಹುದು. ಈ ಕೃತಿಯು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ದಾಖಲೆಯಾಗಿದೆ. 16ನೆಯ ಶತಮಾನದ ಸಮಾಜ, ಧಾರ್ಮಿಕ ಆಚರಣೆಗಳು ಮತ್ತು ಭಕ್ತಿ ಪಂಥಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಇದು ನೀಡುತ್ತದೆ. ಈ ಕೃತಿಯಲ್ಲಿ ನಿರೂಪಿತರಾಗಿರುವ ಪುರಾತನರಲ್ಲಿ 15 ಮಂದಿ ಬ್ರಾಹ್ಮಣರು, 12 ಮಂದಿ ಕ್ಷತ್ರಿಯರು, 5 ಮಂದಿ ವೈಶ್ಯರು, ಒಬ್ಬ ಪಂಚಮ, ಮತ್ತು 24 ಮಂದಿ ಶೂದ್ರರು ಇದ್ದಾರೆ. ಇಬ್ಬರು ಸ್ತ್ರೀಯರೂ ಸೇರಿದಂತೆ ಎಲ್ಲ ಕುಲ, ಜಾತಿ ಮತ್ತು ಪಂಥದವರೂ ಈ ಪಟ್ಟಿಯಲ್ಲಿದ್ದಾರೆ. ಇದು ಶರಣ ಧರ್ಮದ ಸಾರ್ವತ್ರಿಕ ಸ್ವಭಾವವನ್ನು ತೋರಿಸುತ್ತದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಎಲ್ಲಾ ಸಮುದಾಯದವರನ್ನು ಭಕ್ತಿಯ ಮಾರ್ಗಕ್ಕೆ ಸೇರಿಸಿಕೊಂಡ ಈ ಚಿತ್ರಣವು ಇಂದಿಗೂ ಸ್ಫೂರ್ತಿದಾಯಕವಾಗಿದೆ. ತಮಿಳುನಾಡಿನ ನಾಯನ್ಮಾರರ ಸಮಗ್ರ ಪರಿಚಯವನ್ನು ಕನ್ನಡಕ್ಕೆ ಮೊದಲ ಬಾರಿ ಮಾಡಿಕೊಟ್ಟಿರುವುದು ವಿಶೇಷವಾಗಿದೆ. ಸುರಂಗ ವಿದ್ವಾಂಸನಾದರೂ ಅನುಕರಣೆ ಮತ್ತು ಸ್ವಂತಿಕೆಯ ಗಡಿಯಲ್ಲಿ ತೊಳಲಾಡಿದ ಕವಿ. ಅದೇನೇ ಇದ್ದರೂ, ‘ತ್ರಿಷಷ್ಟಿ ಪುರಾತನ ಚರಿತ್ರೆ’ ತಮಿಳು ಶೈವ ಭಕ್ತಿ ಸಾಹಿತ್ಯವನ್ನು ಕನ್ನಡದಲ್ಲಿ ಸಮಗ್ರವಾಗಿ ದಾಖಲಿಸಿದ ಪ್ರಮುಖ ಕೃತಿ.

   ಮಾನವ ಸ್ತುತಿಯನ್ನು ಧಿಕ್ಕರಿಸಿ ಕೇವಲ ಪರಶಿವ ಮತ್ತು ಆತನ ಶರಣರನ್ನೇ ಸ್ತುತಿಸುವ ವೀರಶೈವ ಸಾಹಿತ್ಯದ ಪರಮೋದ್ದೇಶವನ್ನು ಕವಿಯು ಅಕ್ಷರಶಃ ಪಾಲಿಸಿದ್ದಾನೆ. ಶರಣರ ತ್ಯಾಗ, ಭಕ್ತಿ, ನಿಷ್ಠೆ ಮತ್ತು ಶಿವಾರ್ಪಣ ಭಾವವನ್ನು ಕಾವ್ಯದುದ್ದಕ್ಕೂ ರಸವತ್ತಾಗಿ ಚಿತ್ರಿಸಿದ್ದಾನೆ. ಇದೊಂದು ಬೃಹತ್ ಚಂಪೂ ಕಾವ್ಯವಾಗಿ, ಹರಿಹರನ ಕಥಾವಸ್ತುವಿಗೆ ಹೊಸ ಕಾವ್ಯಾತ್ಮಕ ಹಾಗೂ ಪಾಂಡಿತ್ಯಪೂರ್ಣ ಮೆರುಗು ನೀಡಿ, ಕನ್ನಡ ಸಾಹಿತ್ಯದ ಭಕ್ತಿ ಮತ್ತು ರಸ ಪ್ರಪಂಚದಲ್ಲಿ ಶಾಶ್ವತವಾದ ಮೈಲುಗಲ್ಲಾಗಿ ನಿಂತಿದೆ.    

   ಸಾಂಸ್ಕೃತಿಕ ಹಿನ್ನೆಲೆಯ ವಿಸ್ತಾರ:    ಹರಿಹರನಲ್ಲಿ ಇಲ್ಲದ ಚೋಳ ದೇಶದ ವರ್ಣನೆಯನ್ನು ಸುರಂಗನು ಸಂಪ್ರದಾಯಪರವಾಗಿ ವಿಸ್ತಾರವಾಗಿ ವರ್ಣಿಸಿದ್ದಾನೆ (ಆ. ೨ ವ. ೧೮-೪೪). ಇದು ತನ್ನ ಕಾವ್ಯಕ್ಕೆ ಸ್ಥಳೀಯ ಸಾಂಸ್ಕೃತಿಕ ಹಿನ್ನೆಲೆಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ. ಸುರಂಗನ ನಿಲುವುಗಳನ್ನು ನೋಡಿದಾಗ, ಅವನು ಹರಿಹರನ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ, ತನ್ನದೇ ಆದ ಕಾವ್ಯ ದೃಷ್ಟಿಯನ್ನು ಹೊಂದಿದ್ದನೆಂದು ತೋರುತ್ತದೆ. ಅವನು ಸೌಂದರನಂಬಿಯ ಕಥೆಯನ್ನು ಹೆಚ್ಚು ವ್ಯವಸ್ಥಿತವಾಗಿ, ಸಂಗ್ರಹವಾಗಿ, ಮತ್ತು ಕೆಲವೆಡೆ ತನ್ನದೇ ಆದ ಬದಲಾವಣೆಗಳೊಂದಿಗೆ ನಿರೂಪಿಸಿದ್ದಾನೆ. ಹರಿಹರನ ಕಾವ್ಯದ ಭಾವಗೀತಾತ್ಮಕತೆ ಮತ್ತು ಮನೋವೈಚಾರಿಕ ಆಳವನ್ನು ಮುಟ್ಟಲಾಗದಿದ್ದರೂ, ಕಥಾ ಸಂಯೋಜನೆಯಲ್ಲಿ ಸುರಂಗನದು ಗಮನಾರ್ಹವಾದ ವ್ಯವಸ್ಥಿತ ಪ್ರಯತ್ನವಾಗಿದೆ.

     ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ, ಸುರಂಗ ಕವಿಯ ತ್ರಿಷಷ್ಟಿ ಪುರಾತನ ಚಾರಿತ್ರಂ ಮತ್ತು ಅದರ ಕೇಂದ್ರ ಪಾತ್ರವಾದ ನಂಬಿಯಣ್ಣನ ಸಂಕಲ್ಪನೆ ಅತ್ಯಂತ ಸಂಕೀರ್ಣವಾದ ಕ್ಷೇತ್ರವಾಗಿದೆ. ಸಂಪ್ರದಾಯವನ್ನು ಸ್ವೀಕರಿಸುವ ಮತ್ತು ಕ್ರೋಢೀಕರಿಸುವ ನಡುವಿನ ಸಂಘರ್ಷವನ್ನು ಸ್ಪಷ್ಟವಾಗಿ ಪ್ರದರ್ಶಿಸುವ ಈ ಕೃತಿಯನ್ನು ವಿಶ್ಲೇಷಿಸುವಾಗ, ನಾವು ಕೇವಲ ಒಬ್ಬ ಅನುವಾದಕನ ಬದಲಿಗೆ ಒಬ್ಬ ಸೃಜನಶೀಲ ಸಂಪಾದಕನನ್ನು ಕಾಣುತ್ತೇವೆ.

    ತ್ರಿಷಷ್ಟಿ ಪುರಾತನರ ಸಂದೇಶ ಮತ್ತು ಪ್ರಭಾವ: ತಮಿಳುನಾಡಿನ ಶಿವಭಕ್ತರಾದ 63ಮೂವರು ನಾಯನಾರರ ಮುಖ್ಯ ಸಂದೇಶಗಳೆಂದರೆ: ಇವರು ಸಂನ್ಯಾಸಿಗಳಾಗಿರದೆ ಪ್ರಪಂಚದೊಳಗೆ ಉಳಿದು, ಸಮಾಜದಲ್ಲಿ ಶಿವಸಾಮ್ರಾಜ್ಯವನ್ನು ಸ್ಥಾಪಿಸುವುದನ್ನೇ ಗುರಿಯಾಗಿಸಿಕೊಂಡಿದ್ದು, ಮಾನವ ಕುಲೋದ್ಧಾರ ಮಾಡಿದವರು. ಇವರ ಜೀವನದಲ್ಲಿಯ ಕೆಲವು ಘಟನೆಗಳು ಅಂದಿನ ಸಾಮಾಜಿಕ ಸಂಘಟನೆಗೆ ಅನಿವಾರ್ಯವಾಗಿದ್ದವು. ಇಂದಿನ ಅಳತೆಗೋಲಿನಿಂದ ಅವರನ್ನು ಅಳೆಯಲಾಗದು. ಅವರ ಹಾಡುಗಳು ಭಕ್ತಿ ಮತ್ತು ಅನುಭಾವವನ್ನು ಒಳಗೊಂಡಿದ್ದು, ಶಿವಭಕ್ತಿ, ದೈವೀಪ್ರೇಮ, ನೊಂದವರಿಗೆ ಸಾಂತ್ವನ, ಮತ್ತು ಮುಮುಕ್ಷುಗಳಿಗೆ ದಾರಿದೀಪವಾಗಿದೆ. ಈ ಪುರಾತನರ ಪ್ರಭಾವ ಕೇವಲ ತಮಿಳುನಾಡಿಗೆ ಸೀಮಿತವಾಗದೆ ಕರ್ನಾಟಕ, ಆಂಧ್ರಗಳಲ್ಲಿಯೂ ವ್ಯಾಪಿಸಿತು.  ಕನ್ನಡ ಸಾಹಿತ್ಯದಲ್ಲಿ ವಿಶೇಷತಃ ವೀರಶೈವ ಕಾವ್ಯ ಪುರಾಣಗಳಲ್ಲಿ ಅರುವತ್ತುಮೂವರು ಪುರಾತನರ ಹೆಸರು ಮೇಲಿಂದ ಮೇಲೆ ಬರುತ್ತದೆ. ಅದಕ್ಕೆ ಕಾರಣಪುರಾತನರ ಪ್ರಭಾವ ಈ ಜನಜೀವನದ ಮೇಲೆ ಆದುದು. ಕನ್ನಡದಲ್ಲಿ ಬಸವಣ್ಣನವರಿಗಿಂತ  ಮೊದಲೇ ಜೇಡರದಾಸಿಮಯ್ಯ (ಕ್ರಿ.ಶ.1040) ಮೊದಲಾದವರು ಈ ಪುರಾತನರನ್ನು ಸ್ಮರಿಸಿದ್ದಾರೆ.

   ಕನ್ನಡದಲ್ಲಿ ಪುರಾತನ ಚರಿತ್ರೆಗಳನ್ನು ಬರೆದ ಮೊದಲ ಕವಿ ಹಂಪೆಯ ಹರಿಹರದೇವ. (ಕ್ರಿ.ಶ. ೧೨೦೦) ಆತನ ಶರಣ ಗಣದ ರಗಳೆಗಳಲ್ಲಿ ಅರುವತ್ತು ಮೂವರು ಪುರಾತನರ ರಗಳೆಗಳನ್ನೂ ಬರೆದಿರುವನು. ಅವು ಕನ್ನಡ ಸಾಹಿತ್ಯದ ಶಾಶ್ವತ ನಿಧಿಯಾಗಿರುವುದು ಸರ್ವಶ್ರುತ, ಭೀಮಕವಿಯು (ಕ್ರಿ. ಶ. ೧೯೦) ತನ್ನ ಬಸವಪುರಾಣದಲ್ಲಿ ಕೆಲವು ಪುರಾತನರ ಕತೆಗಳನ್ನು ಹೇಳುತ್ತಾನೆ. ಲಕ್ಕಣ್ಣ ದಂಡೇಶನ (ಕ್ರಿ.ಶ. ೧೪೨೮) ಶಿವತತ್ವ ಚಿಂತಾಮಣಿಯಲ್ಲಿಯೂ ಪುರಾತನರ ಚರಿತ್ರೆಗಳು ಬರುತ್ತವೆ. ನಿಜಗುಣ ಶಿವಯೋಗಿಗಳ (ಕ್ರಿ. ಶ. ೧೫೦೦) ಪುರಾತನ ತ್ರಿವಿಧಿ ಚಿಕ್ಕದಾದರೂ ಬಹು ಮಹತ್ವದ ಗ್ರಂಥವಾಗಿದೆ. ಕುಮಾರ ಚೆನ್ನ ಬಸವನ ಪುರಾತನರ ಚರಿತೆ, ಕವಿಚಕ್ರವರ್ತಿ ಸುರಂಗನ ತ್ರಿಷಷ್ಟಿಪುರಾತನರ ಚಾರಿತ್ರವೆಂಬುದು ಕನ್ನಡ ಸಾಹಿತ್ಯದಲ್ಲಿ ಪುರಾತನರ ಚರಿತ್ರೆಯನ್ನು ಕುರಿತು ಬರೆದ ಏಕೈಕ ಬೃಹತ್ ಕಾವ್ಯ. ಗುಬ್ಬಿಯಮಲ್ಲಣಾರ್ಯನ (ಕ್ರಿ. ಶ.೧೫೩೦) ವೀರಶೈವಾಮೃತಪುರಾಣ, ವಿರೂಪಾಕ್ಷಪಂಡಿತನ(ಕ್ರಿ.ಶ.೧೫೮೦) ಚನ್ನಬಸವಪುರಾಣ, ಸಿದ್ಧನಂಜೇಶನ (ಕ್ರಿ. ಶ.ಶ. ೧೬೭೨) ಗುರುರಾಜಚಾರಿತ್ರ, ಷಡಕ್ಷರದೇವನ(ಕ್ರಿ.ಶ.೧೬೫೪) ಬಸವರಾಜವಿಜಯ, ಶಾಂತಲಿಂಗದೇಶಿಕನ ಭೈರವೇಶ್ವರ ಕಥಾಮಣಿ ಸೂತ್ರರತ್ನಾಕರ, ಕಳಲೆ ನಂಜರಾಜನ ಅರವತ್ತು ಮೂವರ ತ್ರಿವಿಧಿ ಇವುಗಳಲ್ಲಿಯ ಪುರಾತನರ ಚರಿತ್ರೆಗಳು ಬಂದಿವೆ. ಇವಲ್ಲದೆ ಪ್ರತಿಯೊಂದು ವೀರಶೈವ ಪುರಾಣದಲ್ಲಿಯೂ ಸಾದೃಶ್ಯವನ್ನು ಹೇಳುವಲ್ಲಿ ಅನೇಕ ಪುರಾತನರ ದೃಷ್ಟಾಂತಗಳು ಉಲ್ಲೇಖಿತವಾಗಿರುವುದುಂಟು. (ತ್ರಿಷಷ್ಟಿ ಪುರಾತನರ ಚಾರಿತ್ರ ಸಂ. ಆರ್.ಸಿ. ಹಿರೇಮಠ, ಪ್ರಸ್ತಾವನೆ, ಪು.೪೯)

   ಈತನ 63 ಪುರಾತನರ ಕಥೆಗಳಲ್ಲಿ ಬರುವ ಉಗ್ರ ಭಕ್ತಿಯ ಚಿತ್ರಣಗಳು (ಉದಾ: ಕಣ್ಣಪ್ಪನು ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಹಚ್ಚುವುದು, ಅರಿವಾಳ್ತಾಂಡರ್ ಶಿರಚ್ಛೇದ ಮಾಡಿಕೊಳ್ಳುವುದು, ಚಂಡೇಶನು ಪೂಜೆಗೆ ಅಡ್ಡಿಪಡಿಸಿದ ತಂದೆಯನ್ನೇ ಕಡಿಯುವುದು) ಬಾಹ್ಯ-ಸಾಮಾಜಿಕ ದೃಷ್ಟಿಯಿಂದ ಕ್ರೂರವಾಗಿ ಕಂಡರೂ, ಶೈವ ತಾತ್ವಿಕತೆಯಲ್ಲಿ ಅವು 'ಸರ್ವಾರ್ಪಣ ಭಾವ' ಮತ್ತು 'ನಿಸ್ವಾರ್ಥ ಭಕ್ತಿ'ಯ ಪರಮೋಚ್ಚ ಪ್ರತೀಕಗಳಾಗಿ ಉಗ್ರ ಭಕ್ತಿ ಮತ್ತು ಸಾಮಾಜಿಕ ಕ್ರಾಂತಿಯ ಆಯಾಮ ನೆಲೆಯಲ್ಲಿ ಗುರುತಿಸುವಂತಹವುಗಳಾಗಿವೆ. 63 ಪುರಾತನರ ಕಥೆಗಳು ಕೇವಲ ಭಕ್ತರ ಕಥೆಗಳಲ್ಲ. ಅವು ಮಾನವನ ಅಂತರಂಗದ ಹೋರಾಟ, ಮೋಹ, ಅಹಂಕಾರ ಮತ್ತು ಅಂತಿಮ ಶರಣಾಗತಿಯ ಮನೋವೈಜ್ಞಾನಿಕ ಚಿತ್ರಣಗಳು. ಈ ಕಾವ್ಯದಲ್ಲಿ ಶಿವನು ಕೈಲಾಸದಲ್ಲಿ ಕುಳಿತ ನಿರಾಕಾರ ದೇವನಲ್ಲ; ಆತ ಮಾನವನ ದೈನಂದಿನ ಬದುಕಿನಲ್ಲಿ ಪ್ರವೇಶಿಸುವ ಕ್ರಿಯಾಶೀಲ ಪಾತ್ರ. ಸೌಂದರನಂಬಿಯ ವಿವಾಹವನ್ನು ಕೆಡಿಸಲು ಬರುವ 'ವೃದ್ಧ ಭಿಕ್ಷುಕ'ನ ವೇಷದಲ್ಲಿ ಆತನ ಕೆಮ್ಮು, ಸಿಡುಕು, ಮುರಿದ ಕೊಡೆ ಮತ್ತು ಲಾಕುಳದಿಂದ (ಬೆತ್ತದಿಂದ) ಹೊಡೆಯಲು ಬರುವ ಕೋಪೋದ್ರೇಕ - ಇವೆಲ್ಲವೂ ಶಿವನ ಲೌಕಿಕೀಕರಣ ಅಂದರೆ ದೇವರನ್ನು ಸಂಪೂರ್ಣವಾಗಿ ಮಾನವೀಕರಿಸಿದ ದೇಸಿ ಪರಿಕಲ್ಪನೆಯಾಗಿದೆ.   ಸುರಂಗನ ಕಾವ್ಯದಲ್ಲಿಯ ಪುರಾತನರ ಕಥೆಗಳು ಕೇವಲ ಭಕ್ತಿಗೀತೆಗಳಲ್ಲ; ಅವು ಜೈನ ಮತ್ತು ಬೌದ್ಧ ಧರ್ಮಗಳ ಪ್ರಾಬಲ್ಯದ ವಿರುದ್ಧ ಶೈವ (ಮತ್ತು ವೀರಶೈವ) ಧರ್ಮವು ನಡೆಸಿದ ಬಹುದೊಡ್ಡ ಸಾಂಸ್ಕೃತಿಕ ಹೋರಾಟದ ದಾಖಲೆಗಳಾಗಿದ್ದು  ಶೈವ ಅಸ್ಮಿತೆಯ ಮರು-ಸ್ಥಾಪನೆಯ ಪ್ರತೀಕವಾಗಿವೆ.

    ಅರವತ್ತು ಮೂವರು ಶೈವ ಪುರಾತನರ ಸಮಗ್ರ ಚಿತ್ರಣವನ್ನು ಕೊಡುವ ಬೃಹತ್ ಕ್ಯಾನ್ವಾಸ್ ಅನ್ನು ಸುರಂಗ ಆರಿಸಿಕೊಂಡರೂ, ಆತನ ಕೃತಿಯ ಕೇಂದ್ರಬಿಂದು ಸೌಂದರನಂಬಿಯೇ ಆಗಿದ್ದಾನೆ. ಸುರಂಗನ ಕೃತಿಯಲ್ಲಿ ಅರುವತ್ತುಮೂವರು ಪುರಾತನರ ಕಥೆಗಳಿದ್ದರೂ, ಸೌಂದರನಂಬಿಯೇ ಮುಖ್ಯ ಪಾತ್ರ. ಕೃತಿಯ ಆದಿಯಲ್ಲಿ ಮತ್ತು ಅಂತ್ಯದಲ್ಲಿ ಅವನ ಕಥೆ ಬಂದು, ನಡುವೆ ಇತರರ ಕಥೆಗಳು ಅಳವಟ್ಟಿವೆ. ಹರಿಹರನಲ್ಲಿ ಸೌಂದರನಂಬಿಯ ಕಥೆ ಒಂದು ಸ್ವತಂತ್ರ, ಭಾವನಾತ್ಮಕ ಮಹಾಕಾವ್ಯವಾಗಿ ಹೊರಹೊಮ್ಮುತ್ತದೆ. ಅಲ್ಲಿ ನಂಬಿಯಣ್ಣ ಕೇವಲ ಭಕ್ತನಲ್ಲ; ಆತ ಶಿವನ ಸಖ, ಮಗ, ಮತ್ತು ಕೆಲವೊಮ್ಮೆ ಶಿವನನ್ನೇ ಎದುರುಹಾಕಿಕೊಳ್ಳುವ ಸಾಮಾನ್ಯ ಮನುಷ್ಯ. ಆದರೆ ಸುರಂಗನು ಚಂಪೂ ಕಾವ್ಯದ ಲಕ್ಷಣಗಳಿಗೆ ಅನುಗುಣವಾಗಿ ನಂಬಿಯಣ್ಣನನ್ನು ಒಬ್ಬ 'ಮಾರ್ಗ' ಕಾವ್ಯದ ಉದಾತ್ತ ನಾಯಕನನ್ನಾಗಿ ಚಿತ್ರಿಸಲು ಪ್ರಯತ್ನಿಸುತ್ತಾನೆ. ನಂಬಿಯಣ್ಣನ ಬಗ್ಗೆ ಸುರಂಗನ ನಿಲುವುಗಳನ್ನು ವಿವಿಧ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ಕೃತಿಯ ಕೊನೆಯಲ್ಲಿ ಸೌಂದರನಂಬಿ ಮತ್ತು ಚೇರಮರು ಕೈಲಾಸಕ್ಕೆ ಹೋಗಿ ಗಣಪದವಿ ಪಡೆಯುವವರೆಗಿನ ಕಥಾಸರಣಿ ಈ ನಿಲುವನ್ನು ಸ್ಪಷ್ಟಪಡಿಸುತ್ತದೆ. ನಂಬಿಯಣ್ಣನನ್ನು ಕೇವಲ ಯೋಗಿಯಾಗಲ್ಲದೆ, ಸಾಮಾಜಿಕ ಸಂಸ್ಕಾರಗಳನ್ನು ಪಾಲಿಸುವ ವ್ಯಕ್ತಿಯಾಗಿ ಚಿತ್ರಿಸಲು ಸುರಂಗನಿಗಿದ್ದ ಆಸಕ್ತಿಯನ್ನು ತೋರಿಸುತ್ತದೆ. ಸೌಂದರನಂಬಿಯ ಕುರಿತಾದ ಸುರಂಗನ ನಿಲುವಿನಲ್ಲಿ, ಅತಿಮಾನುಷ ಲೀಲೆಗಳಿಗಿಂತ ಮಾನವೀಯ ಸಂಬಂಧಗಳಿಗೆ (ಪರವೆ, ಸಂಕಿಲಿಯ, ಸ್ನೇಹಿತರು) ಹೆಚ್ಚು ಪ್ರಾಧಾನ್ಯ ನೀಡಿರುವುದು ಕಂಡುಬರುತ್ತದೆ. ನಂಬಿಯಣ್ಣನ ಜೀವನವು ಶೃಂಗಾರ ಮತ್ತು ಭಕ್ತಿಗಳೆರಡರ ಅಪೂರ್ವ ಸಂಗಮವಾಗಿದೆ. ನಂಬಿಯು ಲೌಕಿಕ ಕಾಮನೆಗಳಲ್ಲಿ ತೊಡಗಿದ್ದರೂ, ಆತನ ಅಂತರಂಗದಲ್ಲಿ ಶಿವನ ಬಗ್ಗೆ ಅಚಲವಾದ ಭಕ್ತಿಯಿದೆ. ಪರವೆನಾಚಿ ಮತ್ತು ಸಂಕಿಲೆಯರೊಂದಿಗಿನ ಆತನ ಪ್ರೇಮವಿಲಾಸಗಳನ್ನು ಕವಿ ಅತ್ಯಂತ ಪ್ರೌಢವಾಗಿ ಚಿತ್ರಿಸಿದ್ದಾನೆ. ಸಂಕಿಲೆಯ ಎದೆಯ ಮೇಲಿರುವ ಹೂವಿನ ಹಾರವನ್ನು ಕಂಡು, ಅದನ್ನು ಶಿವಲಿಂಗವೆಂದು ಭ್ರಮಿಸಿ ಪೂಜಿಸುವ ನಂಬಿಯ ಮನಸ್ಥಿತಿಯು, ಕಾಮವು ಹೇಗೆ ಶಿವಧ್ಯಾನವಾಗಿ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ.  

      ಸುರಂಗ ಕವಿಯ ‘ತ್ರಿಷಷ್ಟಿ ಪುರಾತನ ಚಾರಿತ್ರಂ’ ಕಾವ್ಯದಲ್ಲಿ ಶಿವ ಮತ್ತು ಕಣ್ಣಪ್ಪನ ಪಾತ್ರಗಳ ಕುರಿತಾದ ವಿಶ್ಲೇಷಣೆ ಓದುಗರ ಗಮನ ಸೆಳೆದಿದೆ. ಸುರಂಗ ಕವಿಯು ಚಿತ್ರಿಸಿರುವ ಶಿವನ ಪಾತ್ರವು ಭೀಕರತೆ ಮತ್ತು ಮುಗ್ಧತೆಯ ಸಂಗಮವಾಗಿದೆ. ಈ ಕಾವ್ಯದಲ್ಲಿ ಶಿವನು ಕೇವಲ ಪೂಜಿಸಲ್ಪಡುವ ದೈವವಲ್ಲ, ಆತನೇ ಕಥೆಯ ಕೇಂದ್ರ ಬಿಂದು ಮತ್ತು ಪರಮ ಪರೀಕ್ಷಕ. ಕವಿಯು ಶಿವನನ್ನು ಮಾನವ ಸಹಜವಾದ ಅನೇಕ ವಿಶಿಷ್ಟ ರೂಪಗಳಲ್ಲಿ ಚಿತ್ರಿಸಿದ್ದಾನೆ. ಸೌಂದರನಂಬಿ, ತಿರುನೀಲಕಂಠ ಮತ್ತು ಅಮರನೀತಿಯಂತಹ ಭಕ್ತರನ್ನು ಪರೀಕ್ಷಿಸಲು ಶಿವನು ವೃದ್ಧ ತಾಪಸಿಯ (ಭಿಕ್ಷುಕನ) ವೇಷ ರೂಪ ತಾಳುತ್ತಾನೆ. ನರೆತ ಜಡೆ, ಮುರಿದ ಕೊಡೆ, ಹರಿದ ಬಟ್ಟೆ ಮತ್ತು ಹೊಟ್ಟೆ ಬೆನ್ನಿಗೆ ಹತ್ತಿದ ಭಿಕ್ಷುಕನಾಗಿ ಬರುವ ಆತನ ಚಿತ್ರಣ ಅತ್ಯಂತ ನೈಜವಾಗಿದೆ. ತನ್ನ ವಸ್ತುಗಳು ಕಳೆದುಹೋದಾಗ ಆತ ತೋರುವ ಕೋಪ, ಆಕ್ರೋಶ ಮತ್ತು ಲಾಕುಳದಿಂದ (ಬೆತ್ತದಿಂದ) ಹೊಡೆಯಲು ಬರುವ ದೃಶ್ಯಗಳು ಮಾನವನ ಕೋಪೋದ್ರೇಕವನ್ನು ಪ್ರತಿಫಲಿಸುತ್ತವೆ.

   ಚಿರುತ್ತೊಂಡನ (ಸಿರಿಯಾಳನ) ಕಥೆಯಲ್ಲಿ ಶಿವನು ತ್ರಿಶೂಲ, ಡಮರುಗ, ಘಂಟೆಗಳನ್ನು ಧರಿಸಿ ಭಯಂಕರವಾದ ಉಗ್ರಭೈರವನಾಗಿ ಬರುತ್ತಾನೆ. ಆತನ ರೂಪ ಮಾತ್ರವಲ್ಲ, ಆತ ಕೇಳುವ 'ಮಗುವಿನ ಮಾಂಸದ ಅಡಿಗೆ'ಯ ಕೋರಿಕೆಯು ಆತನ ಕೃತಿಯ ಅತಿ ಭೀಕರತೆಯನ್ನು ಸೂಚಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಸೋಮಾಸಿಮಾರರ ಯಾಗಕ್ಕೆ ಆತ 'ಸಂಬೋಳಿ ಸಂಬೋಳಿ' ಎನ್ನುತ್ತಾ ಹೊಲೆಯನ ವೇಷದಲ್ಲಿ ಬರುತ್ತಾನೆ. ಅಲ್ಲಿ ಆತನಿಗೆ ಮಾತು ಬರುವುದಿಲ್ಲ. ಅದೇ ರೀತಿ ಗಣನಾಥನ ಕಥೆಯಲ್ಲಿ ಶಕುನಿಗನಾಗಿ ಬಂದು, ಭಕ್ತನ ಬಲಾತ್ಕಾರದ ಭಸ್ಮಧಾರಣೆಗೆ ಮೂಕವಿಸ್ಮಿತನಾಗಿ ನಿಲ್ಲುತ್ತಾನೆ.   ಇಹಪ್ಪಗೆಯಾಂಡನ ಕಥೆಯಲ್ಲಿ ೧೬ ವರ್ಷದ ಯೌವನದ ಮತ್ತು ಲೌಕಿಕ ರೂಪ ಮೋಹಕ ತರುಣನಾಗಿ ಬಂದು ಆತನ ಪತ್ನಿಯನ್ನೇ ಕೇಳುತ್ತಾನೆ. ಸೌಂದರನಂಬಿಗೆ ಕುಂಟಣಿಯಾಗಿ (ಮಧ್ಯವರ್ತಿಯಾಗಿ) ವರ್ತಿಸುತ್ತಾನೆ. ಇದು ಶಿವನನ್ನು ಮಾನವೀಯ ನೆಲೆಯಲ್ಲಿ ಚಿತ್ರಿಸುವ ಕವಿಯ ವಾಸ್ತವಿಕ ದೃಷ್ಟಿಗೆ ಸಾಕ್ಷಿಯಾಗಿದೆ. ಸುರಂಗ ಕವಿಯು ಶಿವನನ್ನು ಕೇವಲ ದೇವರನ್ನಾಗಿ ಮಾಡದೆ, ಭಕ್ತರ ಮನಸ್ಸಿನ ಆಳವನ್ನು ಅಳೆಯುವ ಮಾನವ-ರೂಪಿಯಾಗಿ ಚಿತ್ರಿಸಿದ್ದಾನೆ. ಈ ಕೃತಿಯಲ್ಲಿ ಶಿವನ ಪಾತ್ರವು ನಟ ಮತ್ತು ಪರೀಕ್ಷಕ ವಿಶ್ವನಾಟಕದ ಸೂತ್ರಧಾರ ವಾಗಿ ಚಿತ್ರಿಸಲ್ಪಟ್ಟಿದೆ. ಸುರಂಗನ ಶಿವನನ್ನು ವಿಶ್ವನಾಟಕದ ನಟ ಎಂದು ಕರೆಯಬಹುದು. ಅವನು ಧರಿಸುವ ಪ್ರತಿಯೊಂದು ವೇಷಕ್ಕೂ ಒಂದು ಅಂತರಂಗ ಸ್ಥಿತಿ ಇರುತ್ತದೆ. ನಾಟಕೀಯ ತಂತ್ರವೃದ್ಧ ತಾಪಸಿಯಾಗಿ,ಚಾಕಚಕ್ಯ, ವಿನೋದ ಕೋಪ, ಆಶ್ಚರ್ಯಕರ ಗಂಭೀರ ಕೋಪ, ನಿರ್ದಯತೆ, ಆರೋಪ ಪ್ರಿಯತೆ, ಭಕ್ತರ ಪ್ರಾಮಾಣಿಕತೆಯನ್ನು ದೀರ್ಘ ಪರೀಕ್ಷೆಗೆ ಒಳಪಡಿಸುವ ವೃದ್ಧ ತಾಪಸಿ, ಕೌಪೀನಕಾಣೆ, ಆಕ್ರೋಶ, ಅಸಹಾಯಕ ಕೋಪ, ಮೊಂಡಾಟವಿಪರ್ಯಾಸ,  ತಾನೇ ಮಾಯ ಮಾಡಿದ ವಸ್ತುವಿಗಾಗಿ ಅಳುವುದು ಇತ್ಯಾದಿ ಸುರಂಗನ ಶಿವನಲ್ಲಿ ಪ್ರತಿವೇಷಕ್ಕೆ ತಕ್ಕಂತೆ ಸ್ವಭಾವ ಬದಲಾಗುವ ಚಮತ್ಕಾರವಿದೆ.

    ಅದೇ ರೀತಿ ಸುರಂಗನು ಕಣ್ಣಪ್ಪನ  ಮುಗ್ಧ ಮತ್ತು ಉಗ್ರ ಭಕ್ತಿಯ ಪರಾಕಾಷ್ಠೆಯನ್ನು ಚಿತ್ರಿಸಿದ್ದಾನೆ. ಕಣ್ಣಪ್ಪನ ಪಾತ್ರವು ಕಾವ್ಯದ ಅತ್ಯಂತ ಪ್ರಭಾವಶಾಲಿ ಮತ್ತು ಸಂಕೀರ್ಣ ಪಾತ್ರಗಳಲ್ಲಿ ಒಂದಾಗಿದೆ. ಕಣ್ಣಪ್ಪನು ಕಾಡಿನ ಬೇಡ ಕಾಡುಗಲಿ ಮತ್ತು ಕಾರಣಪುರುಷ.  ಆದರೆ ಕವಿಯು ಆತನನ್ನು "ಮೋಡದ ಮರೆಯಲ್ಲಿ ಪ್ರಕಾಶಿಸುವ ಸೂರ್ಯ"ನಿಗೆ ಹೋಲಿಸುತ್ತಾನೆ. ಕಾರಣಪುರುಷರು ಯಾವುದೇ ಕುಲದಲ್ಲೂ ಹುಟ್ಟಬಹುದು ಎಂಬ ಜಾತ್ಯತೀತ ಮತ್ತು ಆಧ್ಯಾತ್ಮಿಕ ನಿಲುವು ಸಾಮಾಜಿಕ ಕ್ರಾಂತಿಯ ದ್ಯೋತಕವಾಗಿದೆ.

    ಕಣ್ಣಪ್ಪನಿಗೆ ಶಿವಲಿಂಗವು ಜಡ ವಸ್ತುವಲ್ಲ; ಅದು ಅವನ ಒಡನಾಡಿ. ಆತ ಗುಡಿಯ ಬಾಗಿಲು ತಟ್ಟಿ "ತೆರೆತೆರೆ ಕದಗಳನ್ನ, ನೀನು ನನ್ನವನಾದರೆ" ಎಂದು ಅಧಿಕಾರಯುತವಾಗಿ ಕೇಳುತ್ತಾನೆ. ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಶಿವನಿಗೆ ಹಂಚುವ ಅವನ ಪ್ರೀತಿ, ಆತನ ಮುಗ್ಧತೆಗೆ ಕನ್ನಡಿಯಾಗಿದೆ. ಶಿವನು ತನ್ನ ಮಗುವಿನಂತೆ, ತಾನು ಆತನ ತಾಯಿಯಂತೆ ಕಣ್ಣಪ್ಪ ವರ್ತಿಸುತ್ತಾನೆ. ಬೇಟೆಗೆ ಹೋದಾಗ 'ನನ್ನವನು ಹಸಿವಿನಿಂದ ಕಾಯುತ್ತಿದ್ದಾನಲ್ಲ' ಎಂಬ ಆತನ ತವಕ, ಕಪಿಗಳು ಅವನನ್ನು ಬೆದರಿಸುತ್ತಿವೆಯೋ ಎಂಬ ಆತಂಕ, ಭಕ್ತಿಯು ವಾತ್ಸಲ್ಯವಾಗಿ ಪರಿವರ್ತನೆಗೊಂಡಿರುವುದನ್ನು ತೋರುತ್ತದೆ. ಕಣ್ಣಪ್ಪನು ತನ್ನ ತಲೆಯ ಮೇಲಿನ ಹೂವನ್ನೇ ಶಿವನಿಗೆ ಅರ್ಪಿಸುತ್ತಾನೆ, ಬಾಯಿಯ ನೀರನ್ನೇ ಅಭಿಷೇಕ ಮಾಡುತ್ತಾನೆ. ಶಿವಬ್ರಾಹ್ಮಣನು ಮಾಡುವ ಶಾಸ್ತ್ರೋಕ್ತ ಪೂಜೆಗಿಂತ ಕಣ್ಣಪ್ಪನ ಈ 'ಸಾಜದ (ನೈಜ) ಪೂಜೆ'ಯೇ ತನಗೆ ಪ್ರಿಯವೆಂದು ಶಿವನೇ ಪಾರ್ವತಿಗೆ ವಿವರಿಸುತ್ತಾನೆ. ಶಿವಲಿಂಗದ ಕಣ್ಣಿನಿಂದ ರಕ್ತ ಬರುವುದನ್ನು ಕಂಡು ಕಣ್ಣಪ್ಪನು ಮರುಗುತ್ತಾನೆ. ಕೊನೆಗೆ, ತನ್ನ ಕಣ್ಣನ್ನೇ ಬಾಣದಿಂದ ಕಿತ್ತು ಶಿವನಿಗೆ ಹಚ್ಚುತ್ತಾನೆ. ಈ ತ್ಯಾಗವು ಆತನ ಭಕ್ತಿಯ ಪರಮಾವಧಿಯನ್ನು ತೋರಿಸುತ್ತದೆ. ಕಣ್ಣಪ್ಪ ಕ್ರೂರಕುಲದಲ್ಲಿ ಕರುಣಾಮಯಿ ಭಕ್ತಿ ಸುರಂಗನ ಮೇರು ಸೃಷ್ಟಿ ಕಣ್ಣಪ್ಪನ ಪಾತ್ರವನ್ನು ಪಠ್ಯದಲ್ಲಿ ಸುಮಾರು ೪೦ ಪುಟಗಳಲ್ಲಿ  ವಿಸ್ತರಿಸಿದ್ದಾನೆ. ಇದು ಕಾವ್ಯದ ದೀರ್ಘತಮ ಪಾತ್ರವಿಶ್ಲೇಷಣೆ. ಸುರಂಗನ ಪ್ರತಿಭೆಯ ಪರಾಕಾಷ್ಟೆ ಇಲ್ಲಿದೆ. ಕಣ್ಣಪ್ಪನ ಪಾತ್ರದಲ್ಲಿ ವಿರೋಧಾಭಾಸಗಳ ಸಮನ್ವಯನ್ನು ಕಾಣಬಹುದು.

    ಕಣ್ಣಪ್ಪ ತನ್ನ ಕಣ್ಣನ್ನು ಕಿತ್ತು ಶಿವನ ಕಣ್ಣಿಗೆ ಹಚ್ಚುವುದು ದೇಹದ ಮೇಲಿನ ಮಮಕಾರ ಸಂಪೂರ್ಣ ತ್ಯಾಗದ ಪ್ರತೀಕವಾಗಿದೆ. ಹರಿಹರನ ರಗಳೆಯಲ್ಲೂ ಕಣ್ಣಪ್ಪನ ಕಥೆ ಇದೆ. ಆದರೆ ಸುರಂಗನಲ್ಲಿ ಮನೋವಿಶ್ಲೇಷಣೆ ಹೆಚ್ಚು. ಶಿವಬ್ರಾಹ್ಮಣನ ಬಾಹ್ಯ ಪೂಜೆಗೂ ಕಣ್ಣಪ್ಪನ ಅಂತರಂಗದ ಪೂಜೆಗೂ ನೇರ ಸಂಘರ್ಷ. ಸುರಂಗನ ಶಿವ ಈ ವ್ಯತ್ಯಾಸವನ್ನು ತಾನೇ ವಿವರಿಸಿ, ಕಣ್ಣಪ್ಪನ ಮುಕ್ಕುಳು ನೀರೇ ಗಂಗೋದಕ ಎಂದು ಘೋಷಿಸುವುದು ಇದು ವರ್ಣಾಶ್ರಮ-ಅತೀತ ಭಕ್ತಿಯ ಪ್ರಮಾಣೀಕರಣದ ಸೂಚಕವಾಗಿದೆ.

     ಬೇಡರ ಕಣ್ಣಪ್ಪ, ಅಗಸನಾದ ತಿರುಕುರುಪಿತೊಂಡ, ಕುರುಬರಾದ ಪೆರುಮಳಲೆಯರು, ಹೊಲೆಯನ ವೇಷದಲ್ಲಿ ಬರುವ ಶಿವ ಇತ್ಯಾದಿ ಪಾತ್ರಗಳು ಕೇವಲ ವ್ಯಕ್ತಿಗಳಲ್ಲ; ಅವು ವರ್ಣಾಶ್ರಮ ಧರ್ಮದ ವಿರುದ್ಧ ನಿಂತ ಸಾಂಸ್ಕೃತಿಕ ಪ್ರತಿಮೆಗಳು. ಜೈನ ಮತ್ತು ವೈದಿಕ ಪರಂಪರೆಗಳ ಯತಿ-ಸನ್ಯಾಸಿಗಳ ಮಾದರಿಗೆ ಪ್ರತಿಯಾಗಿ, ಗದ್ದೆ ಉಳುವವನು, ಬಟ್ಟೆ ಒಗೆಯುವವನು, ಮಾಂಸ ಕೊಯ್ಯುವವನು ಮುಕ್ತಿಗೆ ಅರ್ಹನಾಗುತ್ತಾನೆ ಎಂಬುದು ಅಂದಿನ ದೇಸಿ ಸಂಸ್ಕೃತಿಯ ಬಲವಾದ ಪ್ರತಿಪಾದನೆಯಾಗಿದೆ.

     ಸುರಂಗ ಕವಿಯ 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕಾವ್ಯದ ಪಾತ್ರ ಪ್ರಪಂಚವನ್ನು ಸಾಂಪ್ರದಾಯಿಕ ಕಥನಗಳ ಆಚೆಗೆ ನಿಂತು, ಸಾಹಿತ್ಯ ಚರಿತ್ರೆ, ಸಮಾಜಶಾಸ್ತ್ರ, ಮನೋವಿಜ್ಞಾನ ಹಾಗೂ ಶೈವ ತಾತ್ವಿಕತೆಯ ಸಂಶೋಧನಾತ್ಮಕ ನೆಲೆಯಲ್ಲಿ ವಿಶ್ಲೇಷಿಸಿದಾಗ, ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಉಂಟಾದ ಬಹುದೊಡ್ಡ ಸಾಂಸ್ಕೃತಿಕ ಪಲ್ಲಟಗಳು ಮತ್ತು 'ದೇಸಿ' ಪ್ರಜ್ಞೆಯ ಮರುಮೌಲ್ಯಮಾಪನದ ಸ್ವರೂಪವು ನಿಚ್ಚಳವಾಗಿ ಗೋಚರಿಸುತ್ತದೆ.

     ಸುರಂಗ ಕವಿಯ ಕಾವ್ಯದಲ್ಲಿ, ಕಾರಿಕಾಲಮ್ಮೆ, ಮಂಗಾಯಕ್ಕರಸಿ, ಚಂಗಳೆಯರಂತಹ ಸ್ತ್ರೀ ಪಾತ್ರಗಳು ಸಾಂಪ್ರದಾಯಿಕ 'ಪತಿವ್ರತಾ' ಚೌಕಟ್ಟನ್ನು ಮೀರಿ ನಿಲ್ಲುವಂತಹವುಗಳಾಗಿದ್ದು ದೇಹ ನಿರಾಕರಣೆ ಮತ್ತು ಆಧ್ಯಾತ್ಮಿಕ ಬಂಡಾಯದಂತಹ ಸ್ತ್ರೀ ಪಾತ್ರಗಳ ತಾತ್ವಿಕತೆಯ ಪ್ರತೀಕಗಳಾಗಿವೆ.

    ಕಾರಿಕಾಲಮ್ಮೆಯು ತನ್ನ ಶರೀರದ ಮಾಂಸವನ್ನು ಕಿತ್ತು ಬಿಸುಟು, ತಲೆಯಿಂದಲೇ ನಡೆದು ಕೈಲಾಸಕ್ಕೆ ಹೋಗುವ ದೃಶ್ಯವನ್ನು ಕೇವಲ ಪವಾಡವೆಂದು ಭಾವಿಸಲಾಗದು. ಇದೊಂದು ಪ್ರಬಲ 'ಆಧ್ಯಾತ್ಮಿಕ ಸ್ತ್ರೀವಾದಿ' ನಿಲುವು. ಸ್ತ್ರೀಯ ದೇಹವನ್ನು ಕೇವಲ ಭೋಗದ ವಸ್ತುವಾಗಿ ನೋಡುವ ಲೌಕಿಕ ದೃಷ್ಟಿಕೋನವನ್ನು ಆಕೆ ತನ್ನ ದೇಹವನ್ನು ಕುರೂಪಗೊಳಿಸಿಕೊಳ್ಳುವ ಮೂಲಕ ಧಿಕ್ಕರಿಸುತ್ತಾಳೆ. ಕಾರಿಕಾಲಮ್ಮೆಯ ದೇಹ-ನಿರಾಕರಣೆಯು ಭೌತಿಕತೆಯ ಮೇಲಿನ ಅಂತಿಮ ವಿಜಯದ ಸಂಕೇತವಾಗಿದೆ.  ಕಾರಿಕಾಲಮ್ಮೆಯು ಲೌಕಿಕ ಭೋಗವನ್ನು ಧಿಕ್ಕರಿಸಿ, ತನ್ನ ಶರೀರದ ಮಾಂಸವನ್ನು ಕಿತ್ತೊಗೆದು 'ಪೇಚಿಯ' (ಭೂತದ) ರೂಪವನ್ನು ತಾಳುತ್ತಾಳೆ. ಇದು ಸ್ತ್ರೀ ದೇಹವನ್ನು ಕೇವಲ ಕಾಮದ ವಸ್ತುವಾಗಿ ನೋಡುವ ಪಿತೃಪ್ರಧಾನ ಸಮಾಜದ ವಿರುದ್ಧದ ಪ್ರಬಲ 'ಆಧ್ಯಾತ್ಮಿಕಬಂಡಾಯ'ದ ಪ್ರತೀಕವಾಗಿದೆ.  ಮಂಗಾಯಕ್ಕರಸಿಯು ತನ್ನ ಜೈನ ಪತಿಯನ್ನು ಶೈವ ಧರ್ಮಕ್ಕೆ ಮತಾಂತರಿಸುವಲ್ಲಿ ತೋರುವ ಬದ್ಧತೆಯು, ಮಹಿಳೆಯರ ಸ್ವತಂತ್ರ ಧಾರ್ಮಿಕ ಅಸ್ಮಿತೆಯನ್ನು ಎತ್ತಿಹಿಡಿಯುತ್ತದೆ. ಮಂಗಾಯಕ್ಕರಸಿಯು ಜೈನ ರಾಜನ ಪತ್ನಿಯಾಗಿದ್ದರೂ ತನ್ನ ಶೈವ ನಿಷ್ಠೆಯನ್ನು ಬಿಡುವುದಿಲ್ಲ. ಪತಿಯನ್ನು ಪರಿವರ್ತಿಸುವಲ್ಲಿ ಆಕೆ ತೋರುವ ರಾಜಕೀಯ ಮತ್ತು ಧಾರ್ಮಿಕ ಮುತ್ಸದ್ದಿತನವು, ಮಧ್ಯಕಾಲೀನ ಮಹಿಳೆಯರ ಸ್ವತಂತ್ರ ಧಾರ್ಮಿಕ ಅಸ್ಮಿತೆಗೆ  ಸಾಕ್ಷಿಯಾಗಿದೆ.   `ವಾತ್ಸಲ್ಯ' ಮತ್ತು 'ಶರಣಾಗತಿ'ಯ ಸಂಘರ್ಷಪಾತ್ರಗಳ ಮನಸ್ಸಿನ ಪದರುಗಳನ್ನು ಬಿಡಿಸಿ ನೋಡುವಾಗ ಸುರಂಗನ ಮನೋವೈಜ್ಞಾನಿಕ ಗ್ರಹಿಕೆ ಅತ್ಯಂತ ಪ್ರಬುದ್ಧವಾಗಿದೆ. ಸಿರಿಯಾಳ ಮತ್ತು ಚಂಗಳೆಯರ ಪಾತ್ರವನ್ನು ಕೇವಲ 'ತ್ಯಾಗ'ದ ಸಂಕೇತವಾಗಿ ನೋಡದೆ, ಒಂದು ತೀವ್ರ ಮಾನಸಿಕ ತೊಳಲಾಟವಾಗಿ ವಿಶ್ಲೇಷಿಸಬೇಕಾಗುತ್ತದೆ. ಭೈರವನು ಮಗನ ಮಾಂಸವನ್ನು ಕೇಳಿದಾಗ, 'ಬೇರೆಯವರ ಮಗನನ್ನು ಬಲಿಕೊಡೋಣವೇ?' ಎಂದು ಪತಿ ಕೇಳಿದಾಗ, ಚಂಗಳೆ ಕಿವಿಯನ್ನು ಮುಚ್ಚಿಕೊಳ್ಳುತ್ತಾಳೆ. ಇದು ಕೇವಲ ಭಕ್ತಿಯಲ್ಲ, ಅದು ಅವಳಲ್ಲಿದ್ದ ನೈತಿಕ ಪ್ರಜ್ಞೆ . ತಾಯಿಯ ವಾತ್ಸಲ್ಯ  ಮತ್ತು ಇಷ್ಟಲಿಂಗ ನಿಷ್ಠೆಗಳ ನಡುವಿನ ಘರ್ಷಣೆಯಲ್ಲಿ, ಭವದ ವ್ಯಾಮೋಹವನ್ನು ಕಡಿದೊಗೆಯುವ 'ಉನ್ಮಾದ'ದ ಸ್ಥಿತಿಯನ್ನು ಕವಿ ಇಲ್ಲಿ ಮನೋವೈಜ್ಞಾನಿಕವಾಗಿ ಚಿತ್ರಿಸಿದ್ದಾನೆ. ಚಂಗಳೆಯ ಮಾತೃ ಹೃದಯವು ಅನುಭವಿಸುವ ತೊಳಲಾಟವನ್ನು ಕವಿ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ.

   ಸುರಂಗನ ಸ್ತ್ರೀಪಾತ್ರಗಳಾದ ಕಾರಿಕಾಲಮ್ಮೆ, ಮಂಗಾಯಕ್ಕರಸಿ, ಚೆಂಗಳೆ ಸುರಂಗನ ಸ್ತ್ರೀಪಾತ್ರಗಳು ಸಾಂಪ್ರದಾಯಿಕ ವೇದಿಕೆಯನ್ನು ಮೀರಿ ಹೋಗುವುದಿಲ್ಲ. ಅವು ಭಕ್ತಿಯ ನೆಲೆಯಲ್ಲೇ ನಿಂತಿವೆ, ಸ್ವತಂತ್ರ ವ್ಯಕ್ತಿತ್ವ ಅಪರೂಪ. ಪರವೆ ಮತ್ತು ಸಂಕಿಲಿಯರ ಪಾತ್ರಚಿತ್ರಣದಲ್ಲೂ ಇಬ್ಬರು ಕವಿಗಳ ನಡುವಿನ ಅಂತರ ಸ್ಪಷ್ಟವಾಗಿದೆ. ಹರಿಹರನು ಶೃಂಗಾರವನ್ನು ಭಕ್ತಿಯ ಹಿನ್ನೆಲೆಯಲ್ಲಿ ಅತ್ಯಂತ ಸಹಜವಾಗಿ ಮತ್ತು ಮಾನವೀಯವಾಗಿ ಚಿತ್ರಿಸುತ್ತಾನೆ. ಪರವೆಯ ವಿರಹ, ಮುನಿಸು, ವಿಲಾಸಿನಿಯರ ಕಟಕಿಯಾಡುವಿಕೆ - ಇವೆಲ್ಲವೂ ಸಾಮಾನ್ಯ ಸಮಾಜದ ಬಿಂಬಗಳು.  ಸುರಂಗನ ಕೃತಿಯಲ್ಲಿ ಈ ಪಾತ್ರಗಳು ಹೆಚ್ಚು 'ಆದರ್ಶೀಕೃತ' ಗೊಂಡಿವೆ. ಪರವೆಯು ಆಗಸಕ್ಕೆ ನೆಗೆದು ಅದೃಶ್ಯಳಾಗುವ (ಮಾಯವಾಗುವ) ಸುರಂಗನ ಕಲ್ಪನೆಯು ಅವಳನ್ನು ಮನುಷ್ಯ ಸಹಜವಾದ ಮಿತಿಯಿಂದ ಬಿಡಿಸಿ ದೈವಿಕ ಸ್ತರಕ್ಕೆರಿಸುತ್ತದೆ. “ಸ್ತ್ರೀಪಾತ್ರಗಳಿಗೆ ಪುರುಷಪಾತ್ರಗಳಿಗೆ ಕೊಟ್ಟಷ್ಟು ಅವಕಾಶ ಸುರಂಗ ಕೊಟ್ಟಿಲ್ಲ. ಇದು ಅವನ ಕಾಲದ ಸಾಮಾಜಿಕ ಸೀಮಿತಿ ಎಂದೆನಿಸುತ್ತದೆ. ಕಾರಿಕಾಲಮ್ಮೆ, ಮಂಗಾಯಕ್ಕರಸಿ, ಚೆಂಗಳೆ ಇವರು ಮಾತನಾಡುತ್ತಾರೆ, ಆದರೆ ಅವರ ಮನಸ್ಸಿನ ಸ್ವತಂತ್ರ ಚಲನೆ ಕಾಣುವುದಿಲ್ಲ. ಅವರ ಸಂಕಟವನ್ನು ಕವಿಯೇ ವಿವರಿಸುತ್ತಾನೆ, ಪಾತ್ರ ತಾನೇ ಅಭಿವ್ಯಕ್ತಿಸುವುದಿಲ್ಲ. ಸ್ವಧ್ವನಿಯ ಕೊರತೆ ಇದೆ. ಇದು ಸುರಂಗನ ಪುರುಷಪ್ರಧಾನ ದೃಷ್ಟಿಯ ಪ್ರತಿಬಿಂಬ. ಸುರಂಗನ ಸ್ತ್ರೀಯರು ಮಾತಿಗಿಂತ ಕ್ರಿಯೆಯ ಮೂಲಕ ತಮ್ಮನ್ನು ಅಭಿವ್ಯಕ್ತಪಡಿಸುತ್ತಾರೆ. ಚೆಂಗಳೆ ಕಿವಿಮುಚ್ಚಿಕೊಳ್ಳುತ್ತಾಳೆ, ಕಾರಿಕಾಲಮ್ಮೆ ತಲೆಯಿಂದ ನಡೆಯುತ್ತಾಳೆ, ಗಿರಿಜೆ ನಸುನಗುತ್ತಾಳೆ. ಇದು ಪಾತ್ರ ವರ್ಣನೆಯಲ್ಲಿ ಸ್ತ್ರೀ-ಸಂಕೇತ ದೇಹ-ಭಾಷೆಗೆ ಪ್ರಾಧಾನ್ಯ. ಅವನು ಸ್ತ್ರೀಯರ ಆಲೋಚನೆಗಿಂತ ಅವರ ನಿರ್ಣಯಗಳನ್ನು ಮಾತ್ರ ತೋರಿಸುತ್ತಾನೆ. ಅದು ಸಹಜವೇ? ಮಧ್ಯಕಾಲೀನ ಸಮಾಜದಲ್ಲಿ ಸ್ತ್ರೀಯರ ಅಂತರಂಗ ಪುರುಷ ಕವಿಗೆ ಅಗಮ್ಯವಾಗಿತ್ತು ಎಂದೆನಿಸುತ್ತದೆ.

   ಪೆರುಮಳಲೆಯ ಕುರುಬರು, ಚೇರಮ, ಸೋಮಾಸಿಮಾರ, ಕಲಿಕಾಮ, ನಂಬಿಯಣ್ಣ, ಮೆರೆಮಿಂಡ ಇವರೆಲ್ಲ  ಸೌಂದರನಂಬಿಯ ಸುತ್ತ (ಆ.1-6) ಒಂದಿಲ್ಲೊಂದು ರೀತಿಯಲ್ಲಿ ಸಂಬಂಧಿಸಿದ್ದಾರೆ. ಮಾನಕಂಜರ, ಕಂಗುಲಿಯ ಕಲಿಯಾಂಡ, ಊರ್ಪಶಿಲೆಯಾಂಡ, ಇರಿಭಕ್ತ, ಏಣಾದಿನಾಥ, ಮೊನೆಯಾಂಡ ಇವರೆಲ್ಲ ಚೋಳಮಂಡಲದ ಅರಸನಾದ ಪಗಲ್ಚೋಳನೊಡನೆ(ಆ.17-25)ಸಂಪರ್ಕ ಹೊಂದಿದ್ದಾರೆ. ಕುಲಚ್ಚರಿಯರು, ಪಿಳ್ಳೆನಾಯನಾರ್, ಶರ್ವಾಣಿ ಇವರೆಲ್ಲ ಕೂನಪಾಂಡ್ಯ-ಮಂಗಾಯಕ್ಕರಸಿಯರ(ಆ.32-35):  ಸುತ್ತ ಒಂದೇ ಕಥಾಹಂದರದಲ್ಲಿ ಬರುತ್ತಾರೆ. ಕೊನೆಯಲ್ಲಿ ನರಸಿಂಗಮೊನೆಯರು, ಸೌಂದರನಂಬಿ, ಚೇರಮ, ಕಾರಿಕಾಲಮ್ಮೆ, ಯಸ್ಯಜ್ಞಾನಿದೇವಿಯರು ಇವರೆಲ್ಲ (ಆ.60-63) ಕೈಲಾಸಯಾತ್ರೆಯಲ್ಲಿ ಒಂದುಗೂಡುತ್ತಾರೆ. ಕಾವ್ಯದ ವಸ್ತು “ಅನಂತ ತೆರೆಗಳಿಂದ ಕೂಡಿದ ಮಹಾಸಾಗರ”ದಂತಿದೆ. ಆದರೆ ಈ ವೈವಿಧ್ಯದ ನಡುವೆಯೂ ಶಿವಭಕ್ತಿಯೇ ಏಕೀಕರಿಸುವ ಅಂಶವಾಗಿದೆ. ಇದು ಮಹಾಕಾವ್ಯಕ್ಕಿಂತ ಸಂತ ಜೀವನ ಕಾವ್ಯ ಎಂಬ ಪ್ರಕಾರಕ್ಕೆ ಹೆಚ್ಚು ಹೊಂದುತ್ತದೆ. ಕಾವ್ಯದ ಅಸಲಿ ಸತ್ವವಿರುವುದು ಪಾತ್ರಗಳ ಸೃಷ್ಟಿಯಲ್ಲಿ. ಮಾನವ ಮನಸ್ಸಿನ ಓರೆ-ಕೋರೆಗಳನ್ನು, ಭಾವನೆಗಳನ್ನು ಗ್ರಹಿಸುವ ಅದ್ಭುತ ಶಕ್ತಿ ಸುರಂಗನಿಗಿದೆ. ಅರುವತ್ತಮೂರು ಪುರಾತನರಲ್ಲದೆ, ಅವರಿಗೆ ಸಂಬಂಧಿಸಿದ ನೂರಾರು ಉಪಪಾತ್ರಗಳನ್ನು ಆತ ಅತ್ಯಂತ ನೈಜವಾಗಿ ಚಿತ್ರಿಸಿದ್ದಾನೆ. ವಿವಿಧ ವೃತ್ತಿಗಳಿಂದ, ವಿವಿಧ ಸಾಮಾಜಿಕ ಹಿನ್ನೆಲೆಗಳಿಂದ ಬಂದ ಭಕ್ತರ ಮೂಲಕ ಮಾನವಲೋಕ ಮತ್ತು ದೇವಲೋಕವನ್ನು "ಭಕ್ತಿಯ ನಿಚ್ಚಣಿಕೆ"ಯ ಮೂಲಕ ಬೆಸೆದಿದ್ದಾನೆ.

   ಈ ಕಾವ್ಯದಲ್ಲಿ ವ್ಯಕ್ತಗೊಂಡಿರುವ  ವೀರರಸವು ಸಾಂಪ್ರದಾಯಿಕ ಯುದ್ಧಗಳಿಗೆ ಸೀಮಿತವಾಗಿಲ್ಲ; ಅದು ಭಕ್ತಿಯ ತೀವ್ರತೆಯ (ವೀರಭಕ್ತಿ) ರೂಪದಲ್ಲಿ ಪ್ರಕಟವಾಗುತ್ತದೆ. ತಮ್ಮ ಭಕ್ತಿಗೆ ಅಡ್ಡಿಯಾದಾಗ, ಪುರಾತನರು ಹಿಂಸೆಗೆ ಹಿಂಜರಿಯುವುದಿಲ್ಲ. ತನ್ನ ಪತ್ನಿಯನ್ನು ಶಿವನಿಗೆ ಅರ್ಪಿಸುವುದನ್ನು ವಿರೋಧಿಸಿದ ಬಂಧುಗಳನ್ನು ಇಹಃಪಗೆಯಾಂಡ ಕೊಲ್ಲುವುದು, ಶಿವಪೂಜೆಯ ಹೂವನ್ನು ಮೂಸಿನೋಡಿದ ಪತ್ನಿಯ ಮೂಗನ್ನೇ ಕತ್ತರಿಸುವ ಕಳಚಂಗ, ಶಿವಲಿಂಗವನ್ನು ಒದ್ದ ತಂದೆಯ ಕಾಲನ್ನೇ ಕಡಿಯುವ ಚಂಡೇಶ - ಇವೆಲ್ಲವೂ ಉಗ್ರ ಭಕ್ತಿಯ ನಿದರ್ಶನಗಳು. ಸುರಂಗನ ವೀರರಸದಲ್ಲಿ ವೀರಾಧಿವೀರ ಪಾತ್ರಗಳು ತಮ್ಮ ಕೃತ್ಯದಿಂದ ವೀರರಾಗುತ್ತಾರೇ ಹೊರತು, ಅವರ ಮನೋದ್ವಂದ್ವದಿಂದಲ್ಲ. ಕಲಿಕಂಬನು ಸತಿಯನ್ನು ಕೊಲ್ಲುವಾಗ ಆತನಲ್ಲಿ ದ್ವಂದ್ವ ಅಥವಾ ಅನುತಾಪ ಕಾಣುವುದಿಲ್ಲ. ಅವನು ಶಿವಭಕ್ತನೆಂಬ ಕಾರಣಕ್ಕಾಗಿ ನಿಷ್ಕರುಣನಾಗಿರುತ್ತಾನೆ. ಇದು ಒಂದು ಆಯಾಮದ ವೀರತ್ವ. ಆದರೆ ಇದು ಸುರಂಗನ ಮತೀಯ ಪ್ರತಿಬದ್ಧತೆಯ ಸೂಚಕ. ಅವನಿಗೆ ಕ್ರೌರ್ಯ ಮತ್ತು ಭಕ್ತಿ ಎರಡನ್ನೂ ವಿಭಿನ್ನವಾಗಿ ಕಾಣಲು ಸಾಧ್ಯವಾಗಿಲ್ಲ; ಅವು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಅದೊಂದು ಮಧ್ಯಕಾಲೀನ ಕಟ್ಟುನಿಟ್ಟಿನ ಪ್ರತಿಬಿಂಬವಾಗಿದೆ.

   ಚಂಪೂ ಕಾವ್ಯಗಳಲ್ಲಿ "ಅಷ್ಟಾದಶ ವರ್ಣನೆಗಳು" ಕಡ್ಡಾಯವೆಂಬ ನಿಯಮವಿತ್ತು. ಸುರಂಗ ಕವಿಯೂ ಕಾವ್ಯಾರಂಭದಲ್ಲಿ ತಾನು ಈ ಹದಿನೆಂಟು ವರ್ಣನೆಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದಾನೆ. ಆದರೆ, ಆತನ ದೊಡ್ಡ ಗುಣವೆಂದರೆ, ಆತ ವರ್ಣನೆಗಳಿಗಾಗಿ ಕಥೆಯನ್ನು ಬಲಿಕೊಟ್ಟಿಲ್ಲ. ಕಾವ್ಯದುದ್ದಕ್ಕೂ ವರ್ಣನೆಗಳು ಬಂದಿದ್ದರೂ, ಬಹುತೇಕ ಕಡೆ ಅವು ಒಂದೆರಡು ಪದ್ಯಗಳಿಗೆ ಮಾತ್ರ ಸೀಮಿತವಾಗಿವೆ. (ಉದಾ: ಚಂಗಳೆಯ ಗರ್ಭಿಣಿ ವರ್ಣನೆ ಕೇವಲ ೩ ಪದ್ಯಗಳಲ್ಲಿದೆ). ಕೇವಲ ಪಗಲ್ಚೋಳ ರಾಜನ ಕಥೆ ಬರುವ ೧೭ ಮತ್ತು ೨೪ನೇ ಆಶ್ವಾಸಗಳಲ್ಲಿ ಮಾತ್ರ ವರ್ಣನೆಗಳು ದೀರ್ಘವಾಗಿವೆ. ಪಗಲ್ಚೋಳನ ಕಥೆಯ ಸಂದರ್ಭದಲ್ಲಿ. ಪಠ್ಯವು ಇದನ್ನು “ಕಥೆಯಲ್ಲಿರುವ ಕೊರತೆಯನ್ನು ವರ್ಣನೆಗಳಿಂದ ತುಂಬಲೆಳಸಿರುವನೋ” ಎಂದೆನಿಸುತ್ತದೆ. ಉಳಿದೆಡೆ ಕಥಾನಿರೂಪಣೆಯ ವೇಗಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಉಪಮನ್ಯು ಮುನಿಯ ಆಶ್ರಮ, ತಾರಾಚಲದ ಸೌಂದರ್ಯವನ್ನು ಕಾವ್ಯದ ಆರಂಭದಲ್ಲಿಯೇ ತಂದಿರುವುದು ಭಕ್ತಿರಸಕ್ಕೆ ಪೂರಕವಾಗಿದೆ. ಸುರಂಗನು ತಾನು ಅಷ್ಟಾದಶ ವರ್ಣನೆಗಳನ್ನು ಬಳಸುವುದಾಗಿ ಹೇಳಿಯೂ, ಅದನ್ನು ಅತ್ಯಂತ 'ಹಿತಮಿತ'ವಾಗಿ ಬಳಸಿದ್ದಾನೆ. ಸುರಂಗನ ಕಾವ್ಯದಲ್ಲಿ ಋತು ವರ್ಣನೆಗಳು ಕಥೆಯ ಪಾತ್ರಗಳ ಭಕ್ತಿಯನ್ನು ಒರೆಗೆ ಹಚ್ಚುವ 'ಪರೀಕ್ಷಕ'ವಾಗಿ ಕಥಾವೇಗಕ್ಕೆ ಪೂರಕವಾಗಿ ಬರುತ್ತವೆ.  ಸುರಂಗ ಕವಿಯ ‘ತ್ರಿಷಷ್ಟಿ ಪುರಾತನ ಚಾರಿತ್ರಂ’ ಕಾವ್ಯದಲ್ಲಿ ಬರುವ ವರ್ಣನೆಗಳನ್ನು ಕೇವಲ ಕಾವ್ಯದ ಅಲಂಕಾರಗಳಾಗಿ ನೋಡದೆ, ಆತನ ಕಾವ್ಯಮೀಮಾಂಸೆ, ಸೌಂದರ್ಯಪ್ರಜ್ಞೆ ಮತ್ತು ಕಥನತಂತ್ರದ ದೃಷ್ಟಿಯಿಂದ ಇನ್ನೂ ಆಳವಾಗಿ ವಿಶ್ಲೇಷಿಸಿದಾಗ ಈ ಕೆಳಗಿನ ತಾತ್ವಿಕ ಮತ್ತು ಕಲಾತ್ಮಕ ಆಯಾಮಗಳು ಅನಾವರಣಗೊಳ್ಳುತ್ತವೆ. ಸುರಂಗನ ವಿಶಿಷ್ಟ ಶಿವಭಕ್ತಿ ಮತ್ತು ಮಾನವೀಕರಣ ಇದಕ್ಕೆ ಹೊಸ ಆಯಾಮ ನೀಡಿವೆ. ಸುರಂಗನ ನಿಜವಾದ ಕಾವ್ಯ ಪ್ರತಿಭೆ ಈ ಸಮೀರಣ ವರ್ಣನೆಗಳಲ್ಲಿಯೇ ಪ್ರಕಾಶಿಸುತ್ತದೆ.ಇಳೆಯಾಂಡ ಗುಡಿಮಾರನ ಕಥೆಯಲ್ಲಿ ಬರುವ ಮಳೆಗಾಲವೂ ಇದೇ ರೀತಿ ಆತನ ಜಂಗಮ ಪ್ರೇಮವನ್ನು ಪರೀಕ್ಷಿಸುವ ಸಾಧನವಾಗಿ ವರ್ಣಿತವಾಗಿದೆ. ಹಾಗೆಯೇ, 'ಇಳೆಯಾಂಡ ಗುಡಿಮಾರನ' ಕಥೆಯಲ್ಲಿ ಬರುವ "ಮಳೆಗಾಲದ ವರ್ಣನೆ" ಮತ್ತು 'ಪಗಲ್ತೊಣೆಯಾಂಡರ' ಕಥೆಯಲ್ಲಿ ಬರುವ "ಬೇಸಿಗೆಯ ವರ್ಣನೆ" ಕಥೆಯ ತಿರುವುಗಳಿಗೆ ಅತ್ಯಂತ ಅವಶ್ಯಕವಾದ ಮತ್ತು ಪೂರಕವಾದ ಹಿನ್ನೆಲೆಯನ್ನು ಒದಗಿಸಿವೆ.  ಈ ಕಥೆಗಳಲ್ಲಿ ಬರುವ ಭೀಕರ 'ಬೇಸಿಗೆ' - ಮಳೆಗಾಲ ಇವೆರಡೂ ಕೇವಲ ಋತುಗಳಲ್ಲ; ಅವು ಶಿವನು ಭಕ್ತರನ್ನು ಪರೀಕ್ಷಿಸಲು ಒಡ್ಡುವ ನೈಸರ್ಗಿಕ ಸವಾಲುಗಳಾಗಿವೆ. ಪಗಲ್ತೊಣೆಯಾಂಡರು ಪ್ರತಿದಿನ ಹೊಸ ಒರತೆ (ಹಳ್ಳ) ತೋಡಿ ಶುದ್ಧ ನೀರಿನಿಂದ ಶಿವನನ್ನು ಪೂಜಿಸುವ ವ್ರತಧಾರಿಯಾಗಿರುತ್ತಾನೆ. ಈತನ ಪರೀಕ್ಷೆಗೆ ಶಿವನು 'ಬೇಸಿಗೆ'ಯ ರೂಪದಲ್ಲಿ ಬರುತ್ತಾನೆ. ಬೇಸಗೆಯ ವರ್ಣನೆ  ಕುರಿತ,“ನೆಳಲಂ ನೇಸರು ನುಂಗೆ ನೀರನನಿತಂ ಧಾತ್ರಿತಳಂ ನುಂಗೆ ಪೆರ್ಬಳುವಂ ಕಾನನವಹ್ನಿ ನುಂಗೆ, ಖಗಮಂ ಚಕ್ರಾಂಶುಗಳ್‌ ನುಂಗೆ” ( ಆ.೧೨ ಪ.ಸಂ.೭) ಬೇಸಗೆಯಲ್ಲಿ ಸೂರ್ಯನು ನೆಳಲನ್ನು ನುಂಗಿದ, ನೆಲವು ನೀರನ್ನು ನುಂಗಿದ, ಕಾಡು ಹುಲ್ಲನ್ನು ನುಂಗಿದ... ಇದು ಅತಿಶಯೋಕ್ತಿ ಎನಿಸಿದರೂ  ಅಚ್ಚರಿಯನ್ನುಂಟು ಮಾಡುತ್ತದೆ. ಜೊತೆಗೆ  ಬರುವ ವಾಸ್ತವತೆಯಲ್ಲಿಯೂ ವರ್ಣನೆಯ ವೈಖರಿ ಇದೆ.  ಜೊತೆಗೆ ಆ ಭಕ್ತನ ಸಂಕಷ್ಟವನ್ನು ಮತ್ತು ಆತನ ಭಕ್ತಿಯ ಪರಾಕಾಷ್ಠೆಯನ್ನು ಎತ್ತಿಹಿಡಿಯಲು ಅನಿವಾರ್ಯವಾದ ಹಿನ್ನೆಲೆಯಾಗುತ್ತದೆ.   ಸುರಂಗನ ಕಾವ್ಯದಲ್ಲಿ ನಿಸರ್ಗವು ಕೇವಲ ಜಡ ವಸ್ತುವಲ್ಲ, ಅದು ಶಿವಭಕ್ತಿಯ ಒಂದು ಬೃಹತ್ ರೂಪಕವಾಗಿದೆ. ತಾರಾಚಲದ ವರ್ಣನೆಯಲ್ಲಿ ಆತ, ಆಕಾಶವನ್ನೇ ಶಿವಮಂದಿರ, ಭೂಮಿಯನ್ನೇ ಪೀಠ, ನದಿಗಳನ್ನೇ ಅಭಿಷೇಕದ ಜಲ, ಸೂರ್ಯನನ್ನೇ ದೀಪ ಮತ್ತು ಮಾವಿನ ಹಣ್ಣನ್ನು ನೈವೇದ್ಯವನ್ನಾಗಿ ಕಲ್ಪಿಸುತ್ತಾನೆ. ಇದು ಕವಿಯ 'ವಿಶ್ವವೇ ಶಿವಮಯ' ಎಂಬ ವಿರಾಟ್ ದರ್ಶನವನ್ನು ಮತ್ತು ಉನ್ನತ ಮಟ್ಟದ ಕಲ್ಪನಾವಿಲಾಸವನ್ನು ತೋರುತ್ತದೆ. ಕೊಳದಲ್ಲಿ ಮಿಂದೆದ್ದ ಗಾಳಿಯು, ಹೂವಿನ ಪರಾಗವನ್ನು 'ಭಸ್ಮ'ದಂತೆ ಧರಿಸಿ, ಭ್ರಮರಗಳನ್ನು 'ರುದ್ರಾಕ್ಷಿ'ಯಂತೆ ಹೊತ್ತು ಶಿವಭಕ್ತನಂತೆ ಸುಳಿಯಿತು ಎಂಬ ವರ್ಣನೆ ಕವಿಯ ಅಂತರಂಗದ ಭಕ್ತಿ ನಿಸರ್ಗದ ಮೂಲಕ ಹೇಗೆ ಅಭಿವ್ಯಕ್ತಗೊಂಡಿದೆ ಎಂಬುದಕ್ಕೆ  ನಿದರ್ಶನವಾಗಿದೆ.

   ಉಪಮನ್ಯು ಮುನಿಯ ತಪೋವನದ ವರ್ಣನೆಯಲ್ಲಿ ಸುರಂಗನು ಬಳಸುವ ಕಲ್ಪನೆಗಳು ಬೆರಗು ಮೂಡಿಸುವಂತಿವೆ. ನೈಸರ್ಗಿಕ ವೈರಿಗಳಾದ ಸಿಂಹ-ಆನೆ, ಹಾವು-ಮುಂಗುಸಿಗಳು ಮೈತ್ರಿಯಿಂದಿರುವುದು ಸಾಮಾನ್ಯ ವರ್ಣನೆಯಾದರೆ, ಬಿಸಿಲಿನಲ್ಲಿ ಬೇಯುತ್ತಿರುವ 'ಸಿಡಿಗಪ್ಪೆ'ಗಳಿಗೆ ಹಾವು ತನ್ನ ಹೆಡೆಯನ್ನು ಛತ್ರಿಯಂತೆ ಹಿಡಿಯುವುದು ಮತ್ತು ಆ ಹಾವಿಗೆ ನವಿಲು ತನ್ನ ಗರಿಯಿಂದ ನೆರಳು ಕೊಡುವುದು ಅಸಾಧಾರಣ ಕಲ್ಪನೆ. ( ಆ.೧. ಪ.೫೧)ಇದು ತಪೋವನದ ಶಕ್ತಿ ಮತ್ತು ಶಿವಭಕ್ತಿಯು ಹುಟ್ಟಿಸುವ 'ಪರಮ ಶಾಂತಿ' ಯ ಸಂಕೇತವಾಗಿದೆ.  

ಕಾವ್ಯದಲ್ಲಿ ಗಾಳಿಯನ್ನು (ಸಮೀರ) ಅತ್ಯಂತ ಕ್ರಿಯಾಶೀಲವಾಗಿ ಮತ್ತು ಬಹುಮುಖಿಯಾಗಿ ಸುರಂಗನು ಬಳಸಿದ್ದಾನೆ. ಗಾಳಿಯು ಹೂವಿನ ಸುಗಂಧವನ್ನು ಕದ್ದ 'ತಸ್ಕರ' (ಕಳ್ಳ). ಆ ಕಳ್ಳನನ್ನು ದುಂಬಿಗಳು ಬೆನ್ನಟ್ಟಿದಾಗ, ಗಾಳಿಯು ಹೆದರಿ ವಿರಹದಿಂದ ಬೇಯುತ್ತಿದ್ದ ಸ್ತ್ರೀಯರ ಎದೆಯ ಮೇಲಿನ ಗಂಧದ ಲೇಪನದಲ್ಲಿ ಬಿದ್ದು ಗತಿಗೆಟ್ಟಿತು ಎಂಬುದು ಅತ್ಯಂತ ಪ್ರೌಢವಾದ ಶೃಂಗಾರ ಕಲ್ಪನೆ. ಈತನ ಕಾವ್ಯದುದ್ದಕ್ಕೂ 'ಗಾಳಿ' (ಮಾರುತ) ಒಂದು ಜೀವಂತ ಪಾತ್ರವಾಗಿ ಬರುತ್ತದೆ. ಒಮ್ಮೆ ಅದು ಕೊಳದಲ್ಲಿ ಮಿಂದು, ಹೂವಿನ ಪರಾಗವನ್ನೇ ವಿಭೂತಿಯಾಗಿ ಹಚ್ಚಿಕೊಂಡು ಬರುವ 'ಶೈವ'ನಂತೆ ಕಂಡರೆ; ಮತ್ತೊಮ್ಮೆ ವಿರಹಿಗಳ ಎದೆಯ ಮೇಲಿನ ಗಂಧದ ಲೇಪನಕ್ಕೆ ಬಿದ್ದು ಒದ್ದಾಡುವ 'ಕಾಮಿ'ಯಂತೆ ಕಾಣುತ್ತದೆ. ಇದು ಕವಿಯ ಕಲ್ಪನಾ ವಿಲಾಸದ ಪರಾಕಾಷ್ಠೆಯಾಗಿದೆ. ಗಾಳಿಯು ವಿರಹಿಗಳನ್ನು (ದುಷ್ಟರು ಎಂದು) ದಂಡಿಸುತ್ತಾ, ಪ್ರೇಮಿಗಳನ್ನು/ಭೋಗಿಗಳನ್ನು (ಶಿಷ್ಟರು ಎಂದು) ರಕ್ಷಿಸುತ್ತಾ ರಾಜನಂತೆ ವರ್ತಿಸುತ್ತದೆ ಎಂಬುದು ಮಾನವನ ಮನೋಭಾವನೆಗಳನ್ನು ಪ್ರಕೃತಿಯ ಮೇಲೆ ಆರೋಪಿಸುವ ಅತ್ಯುತ್ತಮ ಉದಾಹರಣೆ. ಸುರಂಗನ ಕಾವ್ಯದಲ್ಲಿ ಪ್ರಕೃತಿಯ ವರ್ಣನೆಗಳು ಕೇವಲ ಅಲಂಕಾರಿಕವಲ್ಲ, ಅವು ಶೈವ ತಾತ್ವಿಕತೆಯ ರೂಪಕಗಳು. ಕವಿಯ ಸೌಂದರ್ಯಾನುಭೂತಿಯು ವಿರಾಟ್ ಸ್ವರೂಪದ್ದಾಗಿದೆ.

    ಸುರಂಗ ಕವಿಯ ವರ್ಣನೆಗಳು ಕಾವ್ಯದ ದೇಹಕ್ಕೆ ತೊಡಿಸಿದ 'ಒಡವೆ'ಗಳಲ್ಲ; ಅವು ಕಾವ್ಯದ 'ಉಸಿರು'. ಕಥೆಯ ಸನ್ನಿವೇಶ, ಪಾತ್ರಗಳ ಮನಸ್ಥಿತಿ ಮತ್ತು ಶೈವ ತಾತ್ವಿಕತೆಯನ್ನು ವಿಸ್ತರಿಸಲು ಆತ ಪ್ರಕೃತಿಯನ್ನು, ಋತುಗಳನ್ನು ಮತ್ತು ತನ್ನ ಅದ್ಭುತ ರೂಪಕಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಿದ್ದಾನೆ. ಆತನ ಈ ಕಲ್ಪನಾಶಕ್ತಿಯೇ ಆತನನ್ನು 'ಕವಿಚಕ್ರವರ್ತಿ' ಎಂಬ ಬಿರುದಿಗೆ ಅರ್ಹನನ್ನಾಗಿಸಿದೆ. 

     ಹದಿನೈದನೇ ಶತಮಾನದ ಹಾಡುಗಬ್ಬಗಳ (ದೇಸಿ) ಪ್ರಭಾವವು ಸುರಂಗನ ಪ್ರೌಢ ಚಂಪೂವಿನ ಮೇಲೂ ದಟ್ಟವಾಗಿದೆ. ಸಂಸ್ಕೃತಭೂಯಿಷ್ಠವಾದ ಚಂಪೂವಿನ ಬಿಗಿಯಾದ ಚೌಕಟ್ಟಿನೊಳಗೇ ಆತನು ಮಗಮಗಿಪಲರ್ಗಂಪಂ ತುಂ

ಬಿಗಳುವಂತುಳಿದ ಪುಳುಗಳಱಿವವೆ ಬಗೆಯಿಂ

ಸೊಗಯಿಸುವ ಕಬ್ಬಮಂ ಕ

ಬ್ಬಿಗರಱಿವಂತುಳಿದ ಗೊಡ್ಡರೇನರಿದರೇ ( ತ್ರಿ .ಪು, ಆ. ೧. ಪ. ೩೫,)

ನಂತಹ ಅಪ್ಪಟ ದೇಸಿ ಶಬ್ದಗಳನ್ನು ಯಶಸ್ವಿಯಾಗಿ ಬಳಸಿ, ಶಾಸ್ತ್ರೀಯ ಮತ್ತು ಜನಪದ ವಾಹಿನಿಗಳೆರಡರ ಸಮ್ಮಿಳನವನ್ನು ಸಾಧಿಸಿದ್ದಾನೆ. ಇಲ್ಲಿ ಬಳಸಿರುವ  ಗೊಡ್ಡ ಎಂಬ ದೇಸಿಪದ ಹಾಡುಗಬ್ಬದಲ್ಲಿ ಮಾತ್ರ ಕಂಡುಬರುವಂತಹದ್ದು.

    ಸುರಂಗ ಕವಿಯ ‘ತ್ರಿಷಷ್ಟಿ ಪುರಾತನ ಚಾರಿತ್ರಂ’ ಕೃತಿಯನ್ನು ರಸ-ಪಾತ್ರ-ವರ್ಣನೆಗಳ ಚೌಕಟ್ಟಿನಿಂದಾಚೆಗೆ ನಿಂತು, ಕನ್ನಡ ಸಾಹಿತ್ಯ ಚರಿತ್ರೆಯ ಪಠ್ಯ-ಪರಂಪರೆ, ಭಾಷಿಕ ಪಲ್ಲಟ, ಮತ್ತು ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ಇನ್ನಷ್ಟು ಆಳವಾಗಿ ಶೋಧಿಸಿದಾಗ ಹಲವು ಹೊಸ ಹೊಳಹುಗಳು ಸಿಕ್ಕುತ್ತವೆ. ದೇಸಿ ಸಾಹಿತ್ಯ ಮತ್ತು ಸಂಸ್ಕೃತಿಯ ಮರುಮೌಲ್ಯಮಾಪನದ ದೃಷ್ಟಿಯಿಂದ  ನೋಡಿದ ಕೆಲವು ಒಳನೋಟಗಳು ಕಾಣ ಸಿಗುತ್ತವೆ.    

    ಸುರಂಗನು ಚಂಪೂವಿನ ಬಿಗಿಯಾದ ವೃತ್ತ-ಕಂದಗಳ ನಡುವೆಯೂ ನಡುಗನ್ನಡದ ಸರಳ ಪದಗಳನ್ನು, ವ್ಯಾಕರಣದ ಸಡಿಲಿಕೆಗಳನ್ನು ಧಾರಾಳವಾಗಿ ತರುತ್ತಾನೆ. ಆತನ ಶೈಲಿಯಲ್ಲಿ ಹಳಗನ್ನಡದ ಬಿಗಿ ಮತ್ತು ಹಾಡುಗಬ್ಬದ (ದೇಸಿ) ನಮ್ಯತೆಗಳೆರಡೂ ಇವೆ. ಹರಿಹರನು ಯಾವ ರೀತಿ ರಗಳೆಯ ಮೂಲಕ, ರತ್ನಾಕರವರ್ಣಿಯು ಯಾವ ರೀತಿ ಸಾಂಗತ್ಯದ ಮೂಲಕ ಸಾಧಿಸಿದ ಜನಪರತೆಯನ್ನು, ಸುರಂಗನು ತನ್ನ ಪ್ರೌಢ ಚಂಪೂವಿನೊಳಗೇ ಸಾಧಿಸಿ ತೋರಿಸಿದ್ದಾನೆ. ಮಾರ್ಗ ಮತ್ತು ದೇಸಿಗಳ ನಡುವಿನ ಈ ಕೊಂಡಿಯನ್ನು ನಾವು ‘ಸಮನ್ವಯ ಯುಗ’ದ ಭಾಷಿಕ ಪ್ರಯೋಗವೆಂದು  ಪರಿಗಣಿಸ ಬಹುದು ಎಂದೆನಿಸುತ್ತದೆ.

  ಸುರಂಗನ ವೃತ್ತ ಮತ್ತು ಕಂದ ಪದ್ಯಗಳಲ್ಲಿ ಶಬ್ದಗಳು ಲೀಲಾಜಾಲವಾಗಿ, ಸುಶ್ರಾವ್ಯವಾಗಿ ಹರಿಯುತ್ತವೆ. "ಭೃಂಗಂ, ರಂಗಂ, ಅಂತರಂಗಂ, ಪ್ರಸಂಗಂ..." ಎಂಬಂತಹ ಲಯಬದ್ಧವಾದ ಅನುಪ್ರಾಸಗಳು ಆತನ ಕಾವ್ಯದುದ್ದಕ್ಕೂ ಸಹಜವಾಗಿ ಮೂಡಿಬಂದಿವೆ. ಭಾವ-ಭಾಷೆಗಳ ಅದ್ವೈತ ಸನ್ನಿವೇಶಕ್ಕೆ ತಕ್ಕಂತೆ ಭಾಷೆಯನ್ನು ಕುಣಿಸುವ ಕಲೆ ಸುರಂಗನಿಗೆ ಕರಗತವಾಗಿದೆ. ಆತನ ಶೈಲಿಯು ಪ್ರಕೃತಿಯ ವರ್ಣನೆಯಲ್ಲಿ  ಅತ್ಯಂತ ರಮ್ಯವಾಗಿ, ವರ್ಣರಂಜಿತವಾಗಿ ರೂಪುಗೊಳ್ಳುತ್ತದೆ. ಅದ್ಭುತ ಕಲ್ಪನಾವಿಲಾಸ ಸುರಂಗನ ಕಲ್ಪನಾಶಕ್ತಿ ಬೆರಗು ಮೂಡಿಸುವಂತಹುದು. ಉದಯ ಮತ್ತು ಅಸ್ತವಾಗುತ್ತಿರುವ ಸೂರ್ಯ-ಚಂದ್ರರನ್ನು ಆಕಾಶವೆಂಬ ತೊಲೆಯ ಎರಡು ಬಟ್ಟಲುಗಳಲ್ಲಿಟ್ಟು ತೂಗುತ್ತಿರುವ ಮಣಿಗಳಂತೆ ಕಲ್ಪಿಸಿರುವುದು ಆತನ ಅಸಾಧಾರಣ ಸೌಂದರ್ಯಪ್ರಜ್ಞೆಗೆ ಸಾಕ್ಷಿಯಾಗಿದೆ. ಈ ಕೃತಿಯು ಸುರಂಗನ ಶೈಲಿಯಲ್ಲಿ ಶಬ್ದಸಂಪತ್ತು, ಅನುಪ್ರಾಸ, ಲಯಬದ್ಧತೆ, ಚಿತ್ರನಿರೂಪಣೆ, ಸೂಕ್ಷ್ಮ ನಿರೀಕ್ಷಣೆ, ನಾಣ್ಣುಡಿಗಳ ಬಳಕೆ ಇವೆಲ್ಲವನ್ನೂ ಸೊಗಸಾಗಿ ವಿವರಿಸುತ್ತದೆ. "ಕಾಗೆ ಮೆಚ್ಚದೊಡೆ ಕೋಕಿಳ ನಾದದ ಪೆರ್ಮೆ ಮಾಣ್ಬುದೆ",(ಆ.೧. .೨೦) ಪೋಗದೆ ಬಡವನ ಕರ್ಪರವೊಂದು ಪೋದುದೆ” ತ್ಯಾದಿ ದೇಸಿ ಸೊಗಸು ಮತ್ತು ನಾಣ್ಣುಡಿಗಳು ಕೇವಲ ಪಂಡಿತರ ಭಾಷೆಗಷ್ಟೇ ಅಂಟಿಕೊಳ್ಳದೆ,  ಲೋಕಜ್ಞಾನವನ್ನು ಕವಿವಾಣಿಗೆ ಕೂಡಿಸಿ, ಕಾವ್ಯದ ಸಾರ್ವಕಾಲಿಕತೆ ಹೆಚ್ಚಿಸುವಂತಹವುಗಳು. ಇದು ಕಾವ್ಯದ ಸ್ವಮೌಲ್ಯದ ಪ್ರತಿಪಾದನೆಯ ನಾಣ್ಣುಡಿ ಮತ್ತು ಜನವಾಣಿಯಾಗಿದೆ. ಅರ್ಥಾಂತರನ್ಯಾಸದಿಂದ ನಾಣ್ಣುಡಿ ಕವಿವಾಕ್ಯದ ವ್ಯಾಪ್ತಿಯನ್ನು ಲೋಕವಾಕ್ಯಕ್ಕೆ ವಿಸ್ತರಿಸುತ್ತದೆ. “ಮನೆಯವರಿರ್ದಂತಿರೆ ಬಿರ್ದಿನರಂ ತೇಳಿಂದುದು” ಈ ಆಪ್ತೋಕ್ತಿಯಲ್ಲಿ ವಿಡಂಬನೆಯನ್ನು ಕಾಣಬಹುದು. ಸುರಂಗನ ನಾಣ್ಣುಡಿಗಳು ಪಾತ್ರದ ಸಂಸ್ಕಾರವನ್ನು ಪ್ರತಿಫಲಿಸುವ ಸಾಧನವಾಗಿವೆ. ತಾಪಸಿಯ ಬಾಯಲ್ಲಿ “ಕಿಚ್ಚಿನೊಳಿರ್ದ ಕೀಟದ ತೆರದಿಂ” ಇದು ಲೌಕಿಕದ ಸತ್ಯವನ್ನು ಅಲೌಕಿಕದ ಸನ್ನಿವೇಶದಲ್ಲಿ ನಿಲ್ಲಿಸಿ ವಿಪರ್ಯಾಸ ಸೃಷ್ಟಿಸುತ್ತದೆ. ಇಳೆಯೊಳ್‌ ಕಾಳ್ಬೆಕ್ಕಂತುಯ್ಯಲನಾಡಿದ ರೆಂಬ ಗಾದೆ ಕೇಳುತ್ತಂ ಕಿವುಡರ್‌ ಕಾಣುತ್ತಂ ಕುರುಡರ್‌,( ಆ.೪೫ ಪ.೧೩) ಇತ್ಯಾದಿಯಾಗಿ  ಜನಪದ ಗಾದೆಗಳನ್ನು ಮತ್ತು ನಾಣ್ಣುಡಿಗಳನ್ನು ಯಥೇಚ್ಛವಾಗಿ ಬಳಸಿ ತನ್ನ ಚಂಪೂ ಶೈಲಿಗೆ ಒಂದು ವಿಶಿಷ್ಟವಾದ 'ದೇಸಿ' ಜೀವಕಳೆಯನ್ನು ತುಂಬಿದ್ದಾನೆ. ಸುರಂಗ ಕವಿಯು ತನ್ನನ್ನು "ವಸ್ತುಕ ವರ್ಣಕ ಕವಿಜನ ಕರ್ಣಾಭರಣಂ" ಎಂದು ಕರೆದುಕೊಂಡಿರುವ ಹಿನ್ನೆಲೆಯಲ್ಲಿ ಈತನನ್ನು ವಸ್ತುಕ ಮತ್ತು ವರ್ಣಕಗಳ ತಾತ್ವಿಕ ಸಮನ್ವಯದ ಪ್ರತೀಕ ಎಂದು ಹೇಳಬಹುದು. ಆತ ಆಯ್ದುಕೊಂಡದ್ದು ಪ್ರೌಢ ಚಂಪೂ ಪ್ರಕಾರವಾದರೂ, ಆತನ ಭಾಷೆ ನಡುಗನ್ನಡದತ್ತ ವಾಲಿದೆ. ಹಳಗನ್ನಡದ ಬಿಗಿ ವ್ಯಾಕರಣವನ್ನು ಸಡಿಲಿಸಿ, ಭಾಷೆಯ ಸಹಜತೆಗಾಗಿ "ವಾರತೆ", "ನಿರಾಪರಾಧಿ", "ಕಾವಲಿಯಿಲ್ಲದ" ಎಂಬಂತಹ ನಡುಗನ್ನಡದ ಆಡುಮಾತಿನ ಶಬ್ದಗಳನ್ನು ಮುಕ್ತವಾಗಿ ಬಳಸಿದ್ದಾನೆ.  “ಪುರಹರನಾಣೆ ರುದ್ರನ ಪೊಡರ್ಪು ಮಹೇಶ್ವರನುದ್ಭಕೀರ್ತಿ...” ಪದ್ಯದಲ್ಲಿ ಆಣೆ, ಪೊಡರ್ಪು, ಕೀರ್ತಿ, ಸ್ತವ, ಕಥೆ, ಪೆರ್ಮೆ ಎಲ್ಲಾ ಪದಗಳು ಸ್ಪರ್ಶಗಳಿಂದ ಮತ್ತು ಅಂತ್ಯಾನುಪ್ರಾಸದಿಂದ ಗತಿಯನ್ನು ಸೃಷ್ಟಿಸುತ್ತವೆ. “ವೃತ್ತಮನೇಕಮಿಲ್ಲಿ ರಸಭಾವ ಸಮೇತದಿ ಪುಟ್ಟಿ” ಇಲ್ಲಿ ವೃತ್ತ ಮತ್ತು ಕುಚಗಳ ಸಾದೃಶ್ಯ ಶೃಂಗಾರ, ಕಾಮ ಮತ್ತು ಕವಿತ್ವದ ಸಾಮ್ಯವನ್ನು ವಿಡಂಬನೆಯಿಲ್ಲದೆ ಸಹಜವಾಗಿ ನಿರೂಪಿಸುತ್ತದೆ. “ಪರಿವ ನದೀಜಲಂ ತಿಳಿಯೆ ಜಾಜಿ ಕರಂ ನಲವೇರೆ ಪರ್ಚಿ ಪಂಕರುಹ ಸಮೂಹಮುರ್ಬಿ ಮುಗುಳೊತ್ತೆನೆಲಂ ಸರಿವೀಳೆ” (ಆ.೯. ಪ.೨೬) ಇಲ್ಲಿ ಶರತ್ಕಾಲವನ್ನು ಚಿತ್ರದ ಹಾಗೆ ನಿಲ್ಲಿಸಿದೆ. ತಿಳಿಯೇ, ನಲವೇರೆ, ಪರ್ಚಿ, ಮುಗುಳೊತ್ತು, ಸರಿವೀಳೆ ಕ್ರಿಯಾಪದಗಳು ವರ್ಣನೆಗೆ ಚೈತನ್ಯ ತುಂಬುತ್ತವೆ. ಸುರಂಗನ ವರ್ಣನೆಗಳು ಸ್ಥಿರಚಿತ್ರವಲ್ಲ; ಗತಿಶೀಲ ಚಿತ್ರ. ಸುರಂಗನ ಸ್ತ್ರೀದೇಹದ ಸಾದೃಶ್ಯಗಳು ಕಾವ್ಯದ ಮಾರ್ಗವನ್ನು ಜೀವಂತವಾಗಿಸುತ್ತವೆ. “ಕುರುಳೊಲೆದಾಡೆ ಹಾರವಲುಗಾಡೆ ಕುಚಂ ಕುಣಿದಾಡೆ ಚಾರು ನೂಪು ಮುಲಿದಾಡೆ ಕಾಂಚಿ ಪೊಳೆದಾಡೆ, ಬಳಲ್ಮುಡಿ ಮಾಣದಾಡೆ(ಆ.೨೪. ಪ.೧೫೪) ಇಲ್ಲಿ ಸ್ತ್ರೀ ದೇಹದ ಅಲೆದಾಟವನ್ನು ನೃತ್ಯದಂತೆ ಕಟ್ಟಿಕೊಡುವುದು ಭಾಷೆಯ ಲಯದ ಮೂಲಕ. ಒಲೆದಾಡು, ಅಲುಗಾಡು, ಕುಣಿದಾಡು, ಮುಲಿದಾಡು, ಪೊಳೆದಾಡು ಅಂತ್ಯದಲ್ಲಿ ಆಡು ಕ್ರಿಯಾಪದದ ಪುನರಾವರ್ತನೆ ಸುಸ್ತು ತರುವ ಬದಲು ಉತ್ಸಾಹ ತುಂಬುತ್ತದೆ.

     ಸುರಂಗ ಕವಿಯ ‘ತ್ರಿಷಷ್ಟಿ ಪುರಾತನ ಚಾರಿತ್ರಂ’ ಕಾವ್ಯವು ಮಧ್ಯಕಾಲೀನ ಕನ್ನಡ ಸಾಹಿತ್ಯದ ಒಂದು ಬೃಹತ್ ಸಾಂಸ್ಕೃತಿಕ ಕೃತಿಯಾಗಿದೆ. 63 ಬಿಡಿ ಕಥೆಗಳನ್ನು 'ಶಿವಭಕ್ತಿ'ಯೆಂಬ ಏಕಸೂತ್ರದಲ್ಲಿ ಪೋಣಿಸಿ, ಚಂಪೂವಿನ ಮಾರ್ಗ ಚೌಕಟ್ಟಿಗೆ ದೇಸಿ ಭಾಷೆಯ ಉಸಿರನ್ನು ತುಂಬಿದ ಸುರಂಗನ ಪ್ರತಿಭೆ ಅನನ್ಯವಾದದ್ದು. ಇದು ಕೇವಲ ಕಾವ್ಯವಾಗಿರದೆ, ಇದೊಂದು ಯುಗಧರ್ಮದ, ಭಕ್ತಿ ಚಳವಳಿಯ ಮತ್ತು ಮಾನವನ ಅಂತರಂಗ ಶೋಧನೆಯ ಮಹೋನ್ನತ ದಾಖಲೆಯಾಗಿದೆ. ೧೫-೧೬ನೇ ಶತಮಾನವು ದಕ್ಷಿಣ ಭಾರತದಲ್ಲಿ ಧಾರ್ಮಿಕ ಅಸ್ಮಿತೆಗಳ ಸಂಘರ್ಷದ ಕಾಲ. ಈ ಕಾವ್ಯವು ಕೇವಲ ಸಾಹಿತ್ಯಿಕ ಕೃತಿಯಲ್ಲ, ಅದೊಂದು ಶೈವ ಧರ್ಮದ ಪ್ರಣಾಳಿಕೆ ಎಂದೇಳಬಹುದು. 63 ಪುರಾತನರು ಬೇರೆ ಬೇರೆ ಕಾಲಘಟ್ಟಕ್ಕೆ (ಕ್ರಿ.ಶ. ೫-೯ನೇ ಶತಮಾನ) ಮತ್ತು ಭಿನ್ನ ಪ್ರದೇಶಗಳಿಗೆ ಸೇರಿದವರು. ಹೀಗಾಗಿ ಸಾಂಪ್ರದಾಯಿಕ ಮಹಾಕಾವ್ಯಗಳಲ್ಲಿರುವಂತೆ ಒಂದೇ ಕಥಾನಾಯಕ ಅಥವಾ ನಿರಂತರ ಕಥಾಹರಿವು ಇಲ್ಲಿಲ್ಲ. ಇದೊಂದು ಕಥೆಗಳ ಗುಡ್ಡವಿದ್ದಂತೆ ಎಂಬ ಆರ್.ಸಿ. ಹಿರೇಮಠರ ಮಾತು ಒಪ್ಪತಕ್ಕದ್ದಾಗಿದೆ. ಬಿಡಿ ಕಥೆಗಳ ಸಂಗಮ. ಆದಾಗ್ಯೂ ಎಲ್ಲ ಕಥೆಗಳನ್ನೂ ಒಳಗೆ ಬೆಸೆಯುವ 'ಶಿವಭಕ್ತಿ'ಯ ತೀವ್ರತೆಯೇ ಈ ಕೃತಿಯ ಏಕಸೂತ್ರತೆಯಾಗಿದೆ.

     ಪಾಂಡಿತ್ಯಪೂರ್ಣವಾದ ಚಂಪೂ ಛಂದಸ್ಸನ್ನು, ದೇಸಿ ಸಾಹಿತ್ಯದ ಜೀವಂತಿಕೆ ಹಾಗೂ ಜನಸಾಮಾನ್ಯರ ಭಾವತೀವ್ರತೆಗಳೊಂದಿಗೆ ಬೆಸೆದ ಕೊಂಡಿಯಾಗಿ ಸುರಂಗನ 'ತ್ರಿಷಷ್ಟಿ ಪುರಾತನ ಚಾರಿತ್ರಂ' ನಿಲ್ಲುತ್ತದೆ. ಹಳಗನ್ನಡ-ನಡುಗನ್ನಡಗಳ ಭಾಷಿಕ ಪಲ್ಲಟ, ಮಾರ್ಗ-ದೇಸಿ ಕಾವ್ಯಮೀಮಾಂಸೆಗಳ ಮುಖಾಮುಖಿ, ಮತ್ತು ಶೈವ ತಾತ್ವಿಕತೆಯ ವಿಕಾಸವನ್ನು ಅಭ್ಯಸಿಸುವ ಯಾವುದೇ ಸಂಶೋಧನೆಗೆ ಈ ತೆರನಾದ ಕೃತಿಗಳನ್ನು ಪ್ರಮುಖ ಆಕರಗಳಾಗಿ ಪರಿಗಣಿಸ ಬಹುದಾಗಿದೆ. ಹಿಂದಿನ ಕವಿಗಳ ವಿಚಾರಗಳನ್ನು ಅರೆದು-ಅರಗಿಸಿಕೊಂಡು, ತನ್ನ ಸ್ವಂತ ಪ್ರತಿಭೆಯಿಂದ ಚಂಪೂ-ದೇಸಿಗಳ ಮಧ್ಯಮಾರ್ಗದಲ್ಲಿ ಹೊಸ ಕಾವ್ಯಾತ್ಮಕ ಸೃಷ್ಟಿಯನ್ನು ಮಾಡಿದ ಸುರಂಗನು, ತನ್ನ "ಕವಿಚಕ್ರವರ್ತಿ" ಬಿರುದಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾನೆ.

   ಈ ಕೃತಿಯ ಇತಿಮಿತಿಗಳ ಬಗೆಗೆ ಹೇಳುವುದಾದರೆ, ಎಲ್ಲಾ 63 ಕಥೆಗಳೂ ಕಲಾತ್ಮಕವಾಗಿ ಉನ್ನತ ಮಟ್ಟದಲ್ಲಿಲ್ಲ. ಕೆಲವು ಕಥೆಗಳು ಕೇವಲ 63ರ ಸಂಖ್ಯೆಯನ್ನು ತುಂಬಲು ಬಂದಂತಿವೆ. ಕೂನಪಾಂಡ್ಯ, ಪಿಳ್ಳೆನೈನಾರ ಮುಂತಾದವರ ಕಥೆಗಳಲ್ಲಿ ಶೈವ ಮತ್ತು ಜೈನ ಧರ್ಮಗಳ ನಡುವಿನ ಘರ್ಷಣೆ, ಸ್ವಮತ ಪ್ರಕರ್ಷ ಮತ್ತು ಅನ್ಯಮತ ನಿಂದನೆಗಳು ಅತಿಯಾಗಿ ಬಂದು, ಕಾವ್ಯದ ಮೂಲ ಕಲಾತ್ಮಕತೆಗೆ ಮತ್ತು ಸೌಂದರ್ಯಕ್ಕೆ ಚ್ಯುತಿ ತಂದಿವೆ. ಸುರಂಗ ಕವಿಯು ಈ ಕೃತಿಯಲ್ಲಿ ಬಿಡಿ ಕಥೆಗಳಾಗಿದ್ದರೂ ಕವಿಯು ಕೆಲವು ಕಥೆಗಳನ್ನು ಗುಂಪುಗಳಾಗಿ ಹೆಣೆದಿದ್ದಾನೆ. ಈ ಕೃತಿಯ ಒಟ್ಟು ಆಶ್ವಾಸಗಳಲ್ಲಿ, ಮೊದಲ ೬ ಆಶ್ವಾಸಗಳು ನಂಬಿಯಣ್ಣನಿಗೆ ಸಂಬಂಧಿಸಿದಂತೆ, ೧೭-೨೫ನೇ ಆಶ್ವಾಸಗಳು ಪಗಲ್ಚೋಳ ರಾಜನಿಗೆ ಸಂಬಂಧಿಸಿದವುಗಳಾಗಿವೆ. ಇದು ಸುರಂಗನ ಮಹಾಕಾವ್ಯ ನಿರ್ಮಾಣದ ಶಾಸ್ತ್ರೀಯ ದೃಷ್ಟಿಯನ್ನು ತೋರುತ್ತದೆ.

     ಕವಿಗೆ ಜೀವನದ ವಿವಿಧ ರಂಗಗಳ ಪರಿಚಯವಿದ್ದು, ಆಯಾ ಪಾತ್ರದ ವೃತ್ತಿ ಮತ್ತು ಸ್ವಭಾವಕ್ಕೆ ತಕ್ಕಂತೆ ಹಿನ್ನೆಲೆಯನ್ನು ನಿರ್ಮಿಸಿದ್ದಾನೆ.ಉದಾಹರಣೆಗೆ: ಚೇರಮರಾಜನ ಕಥೆಯಲ್ಲಿ ಯುದ್ಧ-ವೀರದ ಹಿನ್ನೆಲೆ, ಅರಿವಾಳ್ತಾಂಡರ ಕಥೆಯಲ್ಲಿ ಭತ್ತದ ಗದ್ದೆಯ ಪರಿಸರ, ಪಗಲ್ತೊಣೆಯಾಂಡರ ಕಥೆಯಲ್ಲಿ ಶಿವನ ಪರೀಕ್ಷೆಯ ಪ್ರತೀಕವಾಗಿ ಬರುವ ಭೀಕರ ಬೇಸಿಗೆಯ ಚಿತ್ರಣ - ಇವೆಲ್ಲವೂ ಕಥೆಯ ಪರಿಣಾಮವನ್ನು ಹೆಚ್ಚಿಸಿವೆ.

ಸುರಂಗನ ಕೃತಿಯು ತಮಿಳು ಮತ್ತು ಸಂಸ್ಕೃತ ಮೂಲಗಳ ಜೊತೆಗೆ ಕನ್ನಡದ ಸ್ವತಂತ್ರ ಕಾವ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ.“  ಸುರಂಗನ ವೈಶಿಷ್ಟ್ಯವೆಂದರೆ, ಅವನು ಹಾಡುಗಬ್ಬದ (ವರ್ಣಕ) ಮೌಖಿಕ ಶಕ್ತಿಯನ್ನು ಓದುಗಬ್ಬದ (ವಸ್ತುಕ) ರಚನಾತ್ಮಕ ಸ್ಥಿರತೆಯೊಂದಿಗೆ ಸಮನ್ವಯಗೊಳಿಸಿದ್ದಾನೆ. ಸುರಂಗನ "ತ್ರಿಷಷ್ಟಿ ಪುರಾತನ ಚಾರಿತ್ರಂ" ಕೃತಿಯು ಕೇವಲ ಒಂದು ಪುರಾಣದ ಅನುವಾದವಲ್ಲ. ಅದು ಹರಿಹರನ ಭಾವಾವೇಶದ ರಗಳೆಗಳಿಗೆ ಪ್ರೌಢ ಚಂಪೂವಿನ ಶಾಸ್ತ್ರೀಯ ಚೌಕಟ್ಟನ್ನು ತೊಡಿಸಿದ, ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ೧೫-೧೬ನೇ ಶತಮಾನದ ವೀರಶೈವ ತಾತ್ವಿಕತೆಯನ್ನು ಕಟ್ಟಿಕೊಡುವ ಒಂದು ಶ್ರೇಷ್ಠ ಹಾಗೂ ಸಂಕೀರ್ಣ ಕಾವ್ಯವಾಗಿದೆ. ಹಿಂದಿನ ಕವಿಗಳ ಕಥಾವಸ್ತುವನ್ನು ಅರೆದು, ಅರಗಿಸಿಕೊಂಡು, ತನ್ನ ಸ್ವಂತ ಪ್ರತಿಭೆಯಿಂದ ಹೊಸ ಮಾರ್ಗ ಮತ್ತು ದೇಸಿಗಳ ಸಮನ್ವಯವನ್ನು ಸಾಧಿಸಿದ ಕೀರ್ತಿ ಸುರಂಗ ಕವಿಗೆ ಸಲ್ಲುತ್ತದೆ. ಇದು ಚಂಪೂ ಕಾವ್ಯದ ಬಿಗುವಿನೊಳಗೆ ಹಾಡುಗಬ್ಬದ ಪ್ರಭಾವ ನುಸುಳಿದ್ದನ್ನು ರುಜುವಾತುಪಡಿಸುತ್ತದೆ.

   ಈತನ ಕೃತಿಯಲ್ಲಿ ಬಾಹ್ಯ ಆಚಾರಗಳಿಗಿಂತ ಅಂತರಂಗದ ನೈಜ ಭಕ್ತಿಗೆ ಇಲ್ಲಿ ಪರಮೋಚ್ಚ ಸ್ಥಾನ ನೀಡಲಾಗಿದೆ.  ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವವನ್ನು ಮೆಟ್ಟಿ ನಿಲ್ಲಲು ಶೈವ ಧರ್ಮವು ಜಾತಿ, ವರ್ಣಾಶ್ರಮಗಳನ್ನು ಧಿಕ್ಕರಿಸಿ ಮಾನವಕುಲವೆಲ್ಲ ಒಂದೇ ಎಂಬ 'ವಿಶ್ವಪ್ರೇಮ'ವನ್ನು ಸಾರಬೇಕಾಗಿತ್ತು. ಬ್ರಾಹ್ಮಣರಾಗಿ ಜನಿಸಿದ ಅಪ್ಪೂದಿ ಅಡಿಗಳು ವೆಳ್ಳಾಳ ಕುಲದ ಅಪ್ಪರ್ ಅವರ ಭಕ್ತರಾಗುವುದು, ಕುರುಬರಾದ ಪೆರುಮಳಲೆಯರು ನಂಬಿಯಣ್ಣನ ಭಕ್ತರಾಗುವುದು ಮತ್ತು ಕುಲ-ಗೋತ್ರಗಳ ಭೇದವಿಲ್ಲದೆ ಶಿವಭಕ್ತರು ಸಹಭೋಜನ ಮಾಡುವುದು ಇವೆಲ್ಲವೂ ಜಾತಿ-ವರ್ಣಗಳನ್ನು ಮೀರಿ ನಿಂತ ಶರಣ ಪರಂಪರೆಯ ಸಮಾನತೆಯ ತತ್ತ್ವವನ್ನು ಪ್ರತಿಪಾದಿಸುತ್ತವೆ.   

  ಸುರಂಗನ 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕಾವ್ಯದ ಅಗ್ಗಳಿಕೆಯಿರುವುದೇ ಇಲ್ಲಿ. ಆತ ಆಯ್ದುಕೊಂಡದ್ದು ಮಾರ್ಗ ಶೈಲಿಯ ಪ್ರೌಢ 'ಚಂಪೂ' ರೂಪ; ಆದರೆ ಆತನು ಸಾಧಿಸಿದ್ದು ದೇಸಿ ಕಾವ್ಯದ (ವರ್ಣಕದ) ಕಥಾವೇಗ ಮತ್ತು ರಸವತ್ತಾದ ನಿರೂಪಣೆ. ಸುರಂಗನು ತನ್ನನ್ನು ತಾನು "ವಸ್ತುಕ ವರ್ಣಕ ಕವಿಜನ ಕರ್ಣಾಭರಣಂ" ಎಂದು ಕರೆದುಕೊಂಡಿರುವುದು ಕೇವಲ ಆತ್ಮಾಭಿಮಾನದ ಬಿರುದಾಗಿರದೆ, ಅದು ಆತನ ಕಾವ್ಯಮೀಮಾಂಸೆಯ ನಿಖರವಾದ ಪ್ರಣಾಳಿಕೆಯಾಗಿದೆ ಎಂಬುದು ಸಾಬೀತಾಗುತ್ತದೆ. ಹರಿಹರನ ದೇಸಿ ಕಾವ್ಯದ ಪ್ರಭಾವಲಯದ ನಡುವೆಯೂ, ಚಂಪೂ ಪ್ರಕಾರವನ್ನು ಕೇವಲ ಪಂಡಿತರ ಸೊತ್ತಾಗಿಸದೆ, ಅದಕ್ಕೊಂದು ಜನಪರವಾದ (ದೇಸಿ) ಸ್ಪರ್ಶವನ್ನು ನೀಡಿದ ಸುರಂಗನ ಸಮನ್ವಯ ಕೌಶಲವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ವಿಶಿಷ್ಟವಾದದ್ದು. 

    ಸುರಂಗನೇ ಹೆಚ್ಚು ಮಾನವೀಯ ದೃಷ್ಟಿಯನ್ನು ತಂದಿರಬಹುದು.“ಒಂದೊಂದು ಕಥೆಯ ರಹಸ್ಯವನ್ನು ಚನ್ನಾಗಿ ಅರಿತುಕೊಂಡುದರಿಂದ ಯಾವುದನ್ನು ಸಾವಧಾನವಾಗಿ ಹೇಳಬೇಕು, ಯಾವುದನ್ನು ರಭಸ ಗತಿಯಿಂದ ಒರೆಯಬೇಕು ಎಂಬ ತಾರತಮ್ಯವನ್ನು ಸುರಂಗನು ಚನ್ನಾಗಿ ತಿಳಿದಿರುವನು.”“ಪಗಲ್ಚೋಳ, ಕೂನಪಾಂಡ್ಯ, ವಾಗೀಶ, ಪಿಳ್ಳೆನೈನಾರ, ನಾಟ್ಯಮಹಿತಂಡಿ ಮುಂತಾದವರ ಕಥೆಗಳಲ್ಲಿ ಕಲೆಗಿಂತ ಶೋಭೆಯೇ ಎದ್ದು ಕಾಣುತ್ತದೆ. ಅಲ್ಲಿ ಮತಘರ್ಷಣೆ, ಸ್ವಮತ ಪ್ರಕರ್ಷತೆ, ಅನ್ಯಮತ ಅವಹೇಳನೆ ಮಿತಿಮೀರಿ ಬಂದು ಕಾವ್ಯಕ್ಕೂ ಕಲೆಗೂ ಚ್ಯುತಿಯನ್ನು ತಂದಿವೆ. ಇಲ್ಲಿಯ ಮತಘರ್ಷಣೆಯನ್ನು ಕಲೆಗೆ ಚ್ಯುತಿ ಎಂದು ಟೀಕಿಸ ಬಹುದಾದರೂ ಇದನ್ನು ಐತಿಹಾಸಿಕ ಸಾಂಸ್ಕೃತಿಕ ಸಂದರ್ಭದಲ್ಲಿ ಅರ್ಥೈಸಬೇಕು. ಸುರಂಗನ ಕಾವ್ಯ ಆ ಸಂಘರ್ಷದ ದಾಖಲೆ ಮಾತ್ರವಲ್ಲ; ಪ್ರತಿ-ದಾಖಲೆ  ಕೂಡ. ಸುರಂಗನು ತಾನೂ ಆ ಬಿರುಗಾಳಿಗೆ ಪಕ್ಕಾಗಿದ್ದಾನೆ ಎಂಬ ಪಠ್ಯದ ಮಾತು ಸರಿ. ಆದರೆ, ಅವನ ಕಾಲದ ಕವಿಗೆ ನಿರ್ಲಿಪ್ತತೆ ಸಾಧ್ಯವಾಗುತ್ತಿರಲಿಲ್ಲ. ಇಂದಿನ ಮಾನವೀಯ ಮೌಲ್ಯಗಳಿಂದ ನೋಡಿದಾಗ ಇದು ದೋಷ; ಆದರೆ ಮಧ್ಯಕಾಲೀನ ಭಕ್ತಿಸಾಹಿತ್ಯದ ಸ್ವರೂಪದ ದೃಷ್ಟಿಯಿಂದ ಇದು ಲಕ್ಷಣ.”  ಎಂಬ ಆರ್.ಸಿ.ಹಿರೇಮಠರ ಅನಿಸಿಕೆ ಸೂಕ್ತವಾಗಿದೆ. ಸುರಂಗನು ತನ್ನ ಸಮಕಾಲೀನ ವೀರಶೈವ-ಜೈನ ಸಂಘರ್ಷದ ಪ್ರತಿಬಿಂಬವನ್ನು ಪುರಾತನರ ಕಥೆಗಳ ಮೇಲೆ ಹೇರಿರುವ ಸಾಧ್ಯತೆಯನ್ನು ಸೂಚ್ಯವಾಗಿ ಸೂಚಿಸುತ್ತದೆ.

   ಕೆಲವು ಕಥೆಗಳು ಬರೀ ಸಂಖ್ಯೆ ಪೂರೈಕೆಗೆ, ಮತಾಭಿಮಾನದ ಅತಿರೇಕದಂತಹ ಕೆಲವು ನ್ಯೂನತೆಗಳಿದ್ದರೂ ಸುರಂಗನ ಕಥನಕಲೆಯ ಪಾಂಡಿತ್ಯ ಮತ್ತು ಪ್ರಕೃತಿ ವರ್ಣನೆಯು ಇಂದಿಗೂ ಸಹೃದಯರನ್ನು ಬೆರಗುಗೊಳಿಸುವಂಥವು. ಇದು ವಿಭಿನ್ನ ಕಾಲ, ದೇಶ, ಪಾತ್ರಗಳನ್ನುಳ್ಳ ಸಂತರ ಜೀವನಗಳನ್ನು ಒಂದೇ ಧಾರ್ಮಿಕ ಚೌಕಟ್ಟಿನಲ್ಲಿ ಸಮೀಕರಿಸುವ  ಮೂಲಕ ಮಧ್ಯಕಾಲೀನ ಭಕ್ತಿ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದೆ.    

     ಸುರಂಗನ ಕಾವ್ಯದಲ್ಲಿ ಜಂಗಮ ಸೇವೆ, ಕುಲಚ್ಚರಿಯರಂತಹ ಮಠಾಧಿಪತಿಗಳ ಪ್ರಾಬಲ್ಯ, ದೀಕ್ಷೆ, ಗುರುಪರಂಪರೆ ಇವು ಹೆಚ್ಚಿವೆ. ಹರಿಹರನ ರಗಳೆಗಳಲ್ಲಿದ್ದ ಬಡತನ, ಕಾಡು, ಸಹಜ ಭಕ್ತಿಗಿಂತ ಇಲ್ಲಿ ಸಂಸ್ಥೆ, ಸಂಘಟನೆ, ಮತೀಯ ಪ್ರಚಾರ ಹೆಚ್ಚು. ಈ ಸಾಮಾಜಿಕ-ಐತಿಹಾಸಿಕ ನೆಲೆ ಸುರಂಗನ ಕಲೆಯನ್ನು ನಿರ್ಧರಿಸಿದೆ. ಆದ್ದರಿಂದ, ಮತಘರ್ಷಣೆ ಮತ್ತು ಸಂಕೀರ್ಣ ಕಲ್ಪನೆ ಇದರ ಎರಡು ಮುಖಗಳು.  ಈ ಕೃತಿಯನ್ನು ಪ್ರಚಾರ ಕಾವ್ಯ ಎಂದು ಕರೆಯಲು ಮನಸ್ಸಾಗದಿದ್ದರೂ, ಧಾರ್ಮಿಕ ಪ್ರತಿಷ್ಠಾಪನ ಕಾವ್ಯ ಎಂಬುದು ಸೂಕ್ತ ಎಂದೆನಿಸುತ್ತದೆ. ಅವನ ಕಾವ್ಯದೃಷ್ಟಿ ಸ್ವತಂತ್ರವಾಗಿ ಬೆಳೆಯಲು ಮತೀಯ ಆಸಕ್ತಿ ಅಡ್ಡಿಯಾಯಿತು. ಮತಘರ್ಷಣೆಯ ಅತಿರೇಕ, ಪವಾಡಗಳ ಪುನರಾವರ್ತನೆ, ಮತ್ತು ಕೆಲವು ನೀರಸ ಕಥೆಗಳ ಸೇರ್ಪಡೆ ಇವು ಕಲಾತ್ಮಕತೆಗೆ ಕುಂದು ತಂದಿವೆ. ಈ ಕೃತಿಯನ್ನು ಕವಿಚಕ್ರವರ್ತಿ ಸುರಂಗನ ಕೀರ್ತಿಸ್ತಂಭ ಎನ್ನುವುದಕ್ಕಿಂತ, ಕನ್ನಡ ಸಾಹಿತ್ಯದ ನಿರೂಪಣಾ ಸಂಪ್ರದಾಯದ ಸಂಗಮಪೀಠ ಎನ್ನುವುದು ಸೂಕ್ತ. ಇಲ್ಲಿಂದ ಕಥೆ ಹೇಳುವ ಹೊಸ ದಾರಿಗಳು ಹೊರಹೊಮ್ಮಿದವು.

   ಸುರಂಗನ ಪಾತ್ರಪೋಷಣೆ ಮಧ್ಯಕಾಲೀನ ಭಕ್ತಿ ಸಾಹಿತ್ಯದ ಒಂದು ಸಂಗಮ.  ಈ ಕಾವ್ಯದಲ್ಲಿ ಪುರಾಣದ ದಿವ್ಯತೆ, ಕಾವ್ಯದ ಮಾನವೀಯತೆ, ನಾಟಕದ ವಿವರ ಪ್ರಜ್ಞೆಗಳು ಮುಪ್ಪರಿಗೊಂಡಿವೆ. ಕಣ್ಣಪ್ಪ, ರುದ್ರಪಶುಪತಿ, ತಿರುನೀಲಕಂಠ, ಸಿರಿಯಾಳ ಈ ನಾಲ್ಕು ಪಾತ್ರಗಳು ಬಹುಮುಖಿ ಮತ್ತು ಸುರಂಗನ ಕಲೆಯ ಚಿರಂತನ ಸಾಕ್ಷಿಗಳಾಗಿ ನಿಲ್ಲುತ್ತವೆ. ಉಳಿದವುಗಳು ಭಕ್ತಿಸಾಹಿತ್ಯದ ಬೃಹತ್ ಗ್ಯಾಲರಿಯ ಭಾಗ. ಸುರಂಗನ ಪಾತ್ರಗಳು ಸ್ಥಿರವಾದ ವ್ಯಕ್ತಿತ್ವದ ಗೆರೆಯನ್ನು ಹೊಂದಿವೆ. ಸಂಶಯ, ದ್ವಂದ್ವ, ಅನಿರ್ಧಾರ ಇವು ಸುರಂಗನ ಪಾತ್ರಲೋಕದಲ್ಲಿ ಅಪರೂಪ. ಇದು ಭಕ್ತಿ ಸಾಹಿತ್ಯದ ಅಂತರ್ಗತ ಲಕ್ಷಣ. ಇದು ವಿಷಯಾನುಗುಣ ವೈವಿಧ್ಯವನ್ನು ತೋರಿಸುತ್ತದೆ. ಸುರಂಗನ ಕಾವ್ಯ ಕೇವಲ ಒಂದು ಬಗೆಯ ಭಕ್ತಿಯನ್ನಲ್ಲ, 63 ಬಗೆಯ ಭಕ್ತಿಯನ್ನು ತೋರಿಸುತ್ತದೆ. ಇದು ಮಾದರಿಗಳ ಕ್ಯಾಟಲಾಗ್ ಪಾತ್ರಗಳ ಸಾಮಾಜಿಕ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದ್ದು,  ರಾಜ, ಶಬರ, ಬ್ರಾಹ್ಮಣ, ವೈಶ್ಯ, ಸ್ತ್ರೀ, ಗಣಿಕೆ, ಕುರುಬ, ಮೀನುಗಾರ ಎಲ್ಲರೂ ಭಕ್ತರಾಗಬಲ್ಲರು ಎಂಬ ಸಂದೇಶವನ್ನು ಒಳಗೊಂಡಿದೆ.    

ಸುರಂಗ ಕವಿಯ ಸಂಗ್ರಹಣೆ ಮತ್ತು ಸರಳೀಕರಣದ ಪ್ರವೃತ್ತಿ:

  ಹರಿಹರನಲ್ಲಿ ವಿಸ್ತಾರವಾಗಿ ಬರುವ ಅನೇಕ ಪ್ರಸಂಗಗಳನ್ನು ಸುರಂಗನು ಸಂಗ್ರಹವಾಗಿ ಹೇಳುತ್ತಾನೆ. ಉದಾಹರಣೆಗೆ: ವಿವಾಹ ಪ್ರಸಂಗ: ಹರಿಹರನಲ್ಲಿರುವ ಸೂಕ್ಷ್ಮವಾದ ಮನೋವೈಚಾರಿಕ ಚಿತ್ರಣ, ಜೋಯಿಸನ ಲೆಕ್ಕಾಚಾರ, ನಕ್ಷತ್ರಪಾಠಕನ ಸಂದಿಗ್ಧತೆ - ಇವು ಸುರಂಗನಲ್ಲಿ ಕಾಣಸಿಗುವುದಿಲ್ಲ. ಹರಿಹರ ಹತ್ತು ಸಾಲುಗಳಲ್ಲಿ ವರ್ಣಿಸಿದ್ದನ್ನು ಸುರಂಗ ಕೇವಲ ಒಂದು ಸಾಲಿನಲ್ಲಿ ಮುಗಿಸುತ್ತಾನೆ. ಸ್ವತಂತ್ರ ಬದಲಾವಣೆಗಳನ್ನು ಮಾಡಿಕೊಳ್ಳುವ ಪ್ರಯತ್ನವನ್ನು ಕಾಣಬಹುದು. ಕೆಲವೆಡೆ ಸುರಂಗನು ಹರಿಹರನ ಮೂಲ ಕಥಾಸರಣಿಯಲ್ಲಿ ಸ್ವತಂತ್ರ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಪಾರ್ವತಿಯ ಪಾತ್ರ ವಿಸ್ತರಣೆಯನ್ನು ಇಲ್ಲಿ ಪ್ರಸ್ತಾಪಿಸ ಬಹುದು. ಹರಿಹರನಲ್ಲಿ ಶಿವನು ಸಂಕಿಲಿಯ ಪ್ರಸಂಗದಲ್ಲಿ ನೇರವಾಗಿ ತೊಡಗಿದ್ದರೆ, ಸುರಂಗನಲ್ಲಿ ಪಾರ್ವತಿದೇವಿಯು ತಿಳಿಸುವಳು. ಹರಿಹರನಲ್ಲಿ ಪರವೆ ಮಾಹೇಶ್ವರ ಜ್ವರಕ್ಕೆ ಒಳಗಾಗಿ ಕೈಲಾಸ ಸೇರಿದರೆ, ಸುರಂಗನಲ್ಲಿ ಅವಳು ಮಿಂಚಿನಂತೆ ಆಕಾಶಕ್ಕೆ ನೆಗೆದು ಅದೃಶ್ಯಳಾಗುತ್ತಾಳೆ. ಸುರಂಗನು ಕೆಲವೆಡೆ ತನ್ನದೇ ಆದ ಭಕ್ತಿ ನಿರೂಪಣೆಗೆ ಹೊಸ ಆಯಾಮ ನೀಡಿದ್ದಾನೆ. ನಂಬಿಯಣ್ಣನ ಕುರುಡಾಗುವ ಪ್ರಸಂಗದಲ್ಲಿ ಹರಿಹರನಲ್ಲಿ ದೇವಿ ಪಾರ್ವತಿಯೇ ತನ್ನ ಭಾಗದ ಕಣ್ಣನ್ನು ಕೊಡುವಷ್ಟು ತೀವ್ರತೆಯಿದ್ದರೆ, ಸುರಂಗನಲ್ಲಿ ಅದು ಸರಳವಾಗಿ ಕಣ್ಣುಗಳನ್ನು ಅನುಗ್ರಹಿಸುವ ರೀತಿಯಲ್ಲಿ ಬರುತ್ತದೆ.

      ಈ ಕೃತಿಯನ್ನು ಸುರಂಗನ 'ಆಧುನಿಕ ಕನ್ನಡ ಪ್ರಜ್ಞೆ'ಯ ಕನ್ನಡಿಯಾಗಿ ನೋಡಬಹುದು. ಸಂಪ್ರದಾಯವನ್ನು ಎದುರಿಸುವಾಗ, ಅದನ್ನು ಗೌರವಿಸಿದರೂ, ಅದರೊಂದಿಗೆ ಸಂಬಂಧಗಳನ್ನು ಇತ್ಯರ್ಥಪಡಿಸಿಕೊಳ್ಳುವ ಅವನ ಸ್ವಾತಂತ್ರ್ಯಪ್ರಿಯತೆ ಇಲ್ಲಿ ಸ್ಪಷ್ಟವಾಗುತ್ತದೆ. ತ್ರಿಷಷ್ಟಿ ಪುರಾತನ ಚಾರಿತ್ರಂ ಕನ್ನಡದ 'ಭಕ್ತಿ ಸಾಹಿತ್ಯ'ದ ಮೊದಲ ಆಕರ ವಿಶ್ವಕೋಶ (ರೆಫರೆನ್ಸ್ ಎನ್ಸೈಕ್ಲೋಪೀಡಿಯಾ') ಎಂದು ಹೇಳಬಹುದಾದರೆ, ಅದರ ನಾಯಕ ಸೌಂದರನಂಬಿಯ ಕುರಿತಾದ ಸುರಂಗನ ನಿಲುವು, ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಕೀಲಿಗಳನ್ನು ವ್ಯವಸ್ಥಿತಗೊಳಿಸುವ ಮಹಾಪ್ರಯತ್ನವಾಗಿದೆ. 

    ಚಂಪೂ ಕಾವ್ಯ ಪರಂಪರೆ ಮತ್ತು ದೇಶಿ ಸಾಹಿತ್ಯದ ಮರುಮೌಲ್ಯಮಾಪನದ ನಿಟ್ಟಿನಲ್ಲಿ ಇಂತಹ ಅಧ್ಯಯನಗಳು ಕಾವ್ಯಗಳ, ಹಸ್ತಪ್ರತಿಗಳ ಹಾಗೂ ಪಠ್ಯಗಳ ಆಂತರಿಕ ವಿಕಾಸವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ನೆರವಾಗುತ್ತವೆ ಎಂಬ  ಆರ್. ಸಿ. ಹಿರೇಮಠರ ಅಭಿಪ್ರಾಯವನ್ನು ಸಮರ್ಥಿಸುವ ಈ ಕೃತಿಯು, ಸ್ವತಂತ್ರ ಕೃತಿಯೊಂದರ ನಿರ್ಮಿತಿಯ ಹಿಂದಿರುವ ಮತ್ತೊಂದು ಪ್ರಬಲ ಕೃತಿಯ ಪ್ರೇರಣೆಯನ್ನು ಸಾಧಾರವಾಗಿ ನಿರೂಪಿಸಿದೆ.

    ʻತ್ರಿಷಷ್ಟಿ ಪುರಾತನ ಚಾರಿತ್ರಂ' ಕೃತಿಯು ಅರವತ್ತುಮೂರು ಪುರಾತನರ ಕಥೆಯನ್ನು ಹೇಳುವ ನೆಪದಲ್ಲಿ, ಮೂಲತಃ ಹರಿಹರನ ದೇಶಿ ಕಥಾನಕಗಳನ್ನು ಹಳಗನ್ನಡದ ಪ್ರೌಢ ಚಂಪೂ ಶೈಲಿಗೆ ಭಾಷಾಂತರಿಸುವ, ರೂಪಾಂತರಿಸುವ ಸಾಹಸವಾಗಿದೆ. ಇಲ್ಲಿ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಕೇವಲ ಛಂದಸ್ಸಿನ ಬದಲಾವಣೆಯಾಗಿಲ್ಲ; ಕಥೆಯ ಸಂರಚನೆ, ಭಕ್ತಿಯ ಸ್ವರೂಪ ಮತ್ತು ಪಾತ್ರಗಳ ಮನೋವಿಜ್ಞಾನದಲ್ಲೂ ಮಹತ್ತರವಾದ ಮಾರ್ಪಾಡುಗಳಾಗಿವೆ. ಸುರಂಗನು ಹರಿಹರನ ಕೃತಿಯ ಲಿಖಿತ ಪಠ್ಯವನ್ನು ಮಾತ್ರವಲ್ಲದೆ, ಆತನ ಕಾಲಕ್ಕೆ ಜನಮಾನಸದಲ್ಲಿ ಹರಿದಾಡುತ್ತಿದ್ದ ಮೌಖಿಕ ಕಥನಗಳನ್ನೂ ಸಮರ್ಥವಾಗಿ ಬಳಸಿಕೊಂಡಿದ್ದಾನೆ.

     ಒಟ್ಟಾರೆಯಾಗಿ, ಸುರಂಗನ 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕೃತಿಯನ್ನು ಕೇವಲ ಹರಿಹರನ ಕೃತಿಯ 'ಚಂಪೂ ಅನುವಾದ' ಅಥವಾ 'ಅನುಕರಣೆ' ಎಂದು ತಳ್ಳಿಹಾಕುವಂತಿಲ್ಲ. ಸುರಂಗ ಕವಿಯು ಚಂಪೂ ಶೈಲಿಯಲ್ಲಿದ್ದರೂ, ಆ ಕಾಲದ 'ಹಾಡುಗಬ್ಬ'ಗಳ (ದೇಸಿ) ಪ್ರಭಾವವನ್ನು ಮೈಗೂಡಿಸಿಕೊಂಡು, ತನ್ನ ಕಾವ್ಯವನ್ನು ಕೇವಲ ಪಾಂಡಿತ್ಯ ಪ್ರದರ್ಶನವನ್ನಾಗಿಸದೆ, ಔಚಿತ್ಯಪೂರ್ಣ ವರ್ಣನೆಗಳು, ಜೀವಂತ ಕಲ್ಪನೆಗಳು ಮತ್ತು ನೈಜ ಪಾತ್ರಪೋಷಣೆಯ ಮೂಲಕ ಒಂದು ರಸವತ್ತಾದ ಕಾವ್ಯವನ್ನಾಗಿ ರೂಪಿಸಿದ್ದಾನೆ. ಶರಣ ಧರ್ಮದ ಅತ್ಯಂತ ಪ್ರಾಚೀನ ಸಂತರ ಜೀವನ ಚರಿತ್ರೆಗಳನ್ನು ಸಂಗ್ರಹಿಸಿ ದಾಖಲಿಸುವ ಕಾರ್ಯವನ್ನು ಇದು ಮಾಡುತ್ತದೆ. ಈ ದೃಷ್ಟಿಯಿಂದ, ಇದು ಒಂದು ಪ್ರಮುಖ ಶರಣ ಕಥಾ ಸಂಕಲನ ಗ್ರಂಥವಾಗಿದೆ. ವೀರಶೈವ ಧರ್ಮದ ತತ್ತ್ವಗಳನ್ನು ಮತ್ತು ಶರಣರ ಮಹಿಮೆಯನ್ನು ಜನಸಾಮಾನ್ಯರಿಗೆ ತಿಳಿಸುವ ಮಾಧ್ಯಮವಾಗಿ ಈ ಕೃತಿ ಕಾರ್ಯನಿರ್ವಹಿಸಿದೆ. ವಿಶೇಷವಾಗಿ ಬಸವ ಪೂರ್ವಕಾಲದ ವೀರಶೈವ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಲು ಈ ಕೃತಿಯ ಪ್ರಮುಖ ಆಕರವಾಗಿದೆ. ಈ ಕೃತಿಯನ್ನು  ಇದೇ ವಿಷಯವನ್ನುಳ್ಳ ಇತರ ವೀರಶೈವ ಗ್ರಂಥಗಳಾದ: ಹರಿಹರನ ರಗಳೆಗಳು, ಪಾಲ್ಕುರಿಕೆ ಸೋಮನಾಥನ 'ಬಸವಪುರಾಣ', ಲಕ್ಕಣ್ಣದಂಡೇಶನ ಶಿವತತ್ವ ಚಿಂತಾಮಣಿ  ಕೃತಿಗಳನ್ನು ತೌಲನಿಕವಾಗಿ ಅಧ್ಯಯನ ಮಾಡಲು ಅವಕಾಶವಿದೆ. ದುರಾದೃಷ್ಟಕರ ಸಂಗತಿ ಎಂದರೆ ಸುರಂಗ ಕವಿಯ ತ್ರಿಷಷ್ಟಿ ಪುರಾತನ ಚಾರಿತ್ರ್ಯ ಕೃತಿಯು ಹೆಚ್ಚಿನ ಅಧ್ಯಯನಕ್ಕೆ ಒಳಗಾಗಿಲ್ಲ. ಸಮಗ್ರ ಸಾಹಿತ್ಯ ಚರಿತ್ರೆಯ ಹಿರಿಯ ಸಂಪುಟಗಳಲ್ಲಿ ಈ ಕೃತಿಯ ಉಲ್ಲೇಖವು ಅತ್ಯಲ್ಪವಾಗಿದೆ. ಕನ್ನಡದಲ್ಲಿ ನಾಯನ್ಮಾರರ ಚರಿತ್ರೆಯನ್ನು ಮಹಾಕಾವ್ಯ ರೂಪದಲ್ಲಿ ಕಟ್ಟಿಕೊಟ್ಟ ಮೊದಲ ಮಹತ್ವದ ಪ್ರಯತ್ನವೆಂಬ ಕಾರಣಕ್ಕೆ ಅವನ ಕೃತಿ ಅಪೂರ್ವವಾಗಿದೆ. ಸುರಂಗಕವಿ ಹರಿಹರನ ಪರಂಪರೆಯನ್ನು ಅನುಸರಿಸಿದ್ದರೂ ತನ್ನದೇ ಆದ ಮಹಾಕಾವ್ಯ ವಿನ್ಯಾಸ, ಕಥಾಸಂಘಟನೆ ಮತ್ತು ಭಕ್ತಿಪ್ರಧಾನ ದೃಷ್ಟಿಯಿಂದ ವಿಭಿನ್ನ ಸ್ಥಾನ ಪಡೆದಿದ್ದಾನೆ. ಕನ್ನಡದಲ್ಲಿ ಶೈವಭಕ್ತಿ ಸಾಹಿತ್ಯದ ವಿಸ್ತರಣೆಗೆ ಅವನ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಈ ಕೃತಿಯು ಪ್ರಮುಖವಾಗಿ ಋಷಿಗಳು, ಸಿದ್ಧರು, ಯೋಗಿಗಳು, ಮತ್ತು ಶಿವಭಕ್ತಿ ಪಂಥದ ಮಹಿಳೆಯರ ಜೀವನ ಸಾಧನೆತತ್ತ್ವಗಳ ದಾಖಲೀಕರಣವಿದೆ.

    ಇದು ೧೬ನೇ ಶತಮಾನದ ಸಾಹಿತ್ಯಿಕ ಅಭಿರುಚಿಗೆ ತಕ್ಕಂತೆ ದೇಶಿ ಕಥಾನಕವೊಂದನ್ನು ಮಾರ್ಗ ಶೈಲಿಯಲ್ಲಿ ಪುನರ್-ಸೃಷ್ಟಿಸಿದ ಒಂದು ವಿಶಿಷ್ಟ ಪ್ರಯೋಗ. ಹರಿಹರನು ಶಿವಭಕ್ತಿಯನ್ನು ದೇವಾಲಯದ ಗರ್ಭಗುಡಿಯಿಂದ ಬೀದಿಗೆ ತಂದು ಜನಸಾಮಾನ್ಯರ ಭಾಷೆಯಲ್ಲಿ ಮಾತನಾಡಿಸಿದರೆ, ಸುರಂಗನು ಅದೇ ಭಕ್ತಿಯನ್ನು ಮತ್ತೆ ಸಾಹಿತ್ಯಕ ರತ್ನಗಂಬಳಿಯ ಮೇಲೆ ಕೂರಿಸಿ ಶಾಸ್ತ್ರೀಯ ಮನ್ನಣೆ ದೊರಕಿಸಿಕೊಟ್ಟನು. 'ದೇಶಿ ಸಾಹಿತ್ಯ ಮತ್ತು ಸಂಸ್ಕೃತಿಯ ಮರುಮೌಲ್ಯೀಕರಣದ ದೃಷ್ಟಿಯಿಂದ ನೋಡಿದಾಗ, ಸುರಂಗನ ಈ ಕೃತಿಯು ಕಾವ್ಯ ಮೀಮಾಂಸೆ, ಛಂದಸ್ಸಿನ ರೂಪಾಂತರ ಮತ್ತು ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನಕ್ಕೆ ಅತ್ಯಂತ ಪ್ರಮುಖವಾದ ಆಕರವಾಗಿ ನಿಲ್ಲುತ್ತದೆ. ಕಥಾಸರಣಿ ಹರಿಹರನದ್ದೇ ಆದರೂ, ಅದನ್ನು ಚಂಪೂವಿನ ಅಚ್ಚಿಗೆ ಢಾಳಿಸಿದ ಸುರಂಗನ ವಿದ್ವತ್ತು ಮತ್ತು ಶ್ರಮವನ್ನು ಕಡೆಗಣಿಸುವಂತಿಲ್ಲ. ಭಕ್ತಿಯ ಅಭಿವ್ಯಕ್ತಿಯಲ್ಲಿ ಹರಿಹರನ ತೀವ್ರತೆ, ಸೆಳೆತ ಸುರಂಗನಲ್ಲಿ ಇಲ್ಲದಿರಬಹುದು; ಆದರೆ ಕಾವ್ಯದ ಶಿಲ್ಪದಲ್ಲಿ ಆತ ತೋರಿರುವ ಶಿಸ್ತು ಹಳಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆತನ ಸ್ಥಾನವನ್ನು ಭದ್ರಗೊಳಿಸಿದೆ. ಒಟ್ಟಾರೆಯಾಗಿ, ಈ ಕೃತಿಯು ಸುರಂಗ ಕವಿಯನ್ನು "ಹಳಗನ್ನಡದ ಪಾಂಡಿತ್ಯ ಮತ್ತು ನಡುಗನ್ನಡದ ಜನಪರತೆಯ ನಡುವಿನ ಒಂದು ಸುವರ್ಣ ಸೇತುವೆ"ಯಾಗಿ ಕಾಣುವಲ್ಲಿ ಮಹತ್ತರತೆಯನ್ನು ಪಡೆದಿದೆ.

      ಈತನು ತಾಳ್ಮೆಯಿಂದ ದೊಡ್ಡ ಪ್ರಮಾಣದಲ್ಲಿ ಕಥೆಗಳನ್ನು ನಿರೂಪಿಸಿದ್ದರಿಂದ ಕನ್ನಡಿಗರಿಗೆ ತಮಿಳು ಶೈವ ಭಕ್ತರ ಪರಿಚಯವಾಯಿತು. ಸುರಂಗ ಕವಿ ಕನ್ನಡ ಸಾಹಿತ್ಯಕ್ಕೆ ಒಬ್ಬ ಅನನ್ಯ ಕೊಡುಗೆದಾರ. ‘ತ್ರಿಷಷ್ಟಿ ಪುರಾತನ ಚರಿತ್ರೆ’ ಕೇವಲ ಅನುವಾದವಾಗಿರದೆ, ಸ್ವಂತಿಕೆ, ಆತ್ಮವಿಶ್ವಾಸ, ಹಾಗೂ ವ್ಯವಸ್ಥಿತ ನಿರೂಪಣಾ ಕಲೆಯನ್ನು ಹೊಂದಿದೆ. ಅವನ ಕಾವ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಹರಿಹರನ ಕೃತಿಯೊಂದಿಗಿನ ಹೋಲಿಕೆ ಅನಿವಾರ್ಯ. ತನಗಿಂತ ಹಿಂದಿನ ಹಿರಿಯ ಕನ್ನಡ ಕವಿಗಳನ್ನು ಕಡೆಗಣಿಸಿದರೂ, ಅವನ ‘ತ್ರಿಷಷ್ಟಿ ಪುರಾತನ ಚರಿತ್ರೆ’ ತನ್ನ ಸಮಗ್ರ ದೃಷ್ಟಿಯಿಂದಾಗಿ ಮುಂದಿನ ಸಂಶೋಧಕರಿಗೆ, ಭಕ್ತಿ ಸಾಹಿತ್ಯದ ಅಭ್ಯಾಸಿಗಳಿಗೆ ಒಂದು ಮೌಲಿಕ ದಾಖಲೆಯಾಗಿ ಉಳಿದಿದೆ. ಸುರಂಗಕವಿಯ ‘ತ್ರಿಷಷ್ಟಿ ಪುರಾತನ ಚಾರಿತ್ರ’ ಕನ್ನಡ ಸಾಹಿತ್ಯದಲ್ಲಿ ಕೇವಲ ಒಂದು ಭಕ್ತಿಕಾವ್ಯವಲ್ಲ; ಅದು ದಕ್ಷಿಣ ಭಾರತೀಯ ಶೈವಸಂಸ್ಕೃತಿಯ ಪುನರ್‌ರಚನೆಯಾಗಿದೆ. ಹರಿಹರನ ಭಾವಪರಂಪರೆಯನ್ನು, ಸಂಸ್ಕೃತ ಮಹಾಕಾವ್ಯ ಪರಂಪರೆಯನ್ನು ಹಾಗೂ ತಮಿಳು ನಾಯನ್ಮಾರರ ಭಕ್ತಿಚರಿತ್ರೆಯನ್ನು ಒಗ್ಗೂಡಿಸಿ ಕನ್ನಡದಲ್ಲಿ ಮಹತ್ತರ ಸಾಹಿತ್ಯಕ ಸೇತುವೆ ನಿರ್ಮಿಸಿದ ಕೃತಿ ಇದಾಗಿದೆ. ಸುರಂಗನು ಭಕ್ತಿಯನ್ನು ಕೇವಲ ಅನುಭವವಾಗಿ ಅಲ್ಲ, “ಕ್ಲಾಸಿಕಲ್ ಸಾಹಿತ್ಯದ ಮಹಾವ್ಯವಸ್ಥೆ”ಯಾಗಿ ರೂಪಿಸಿದ ಕವಿ. ಆದ್ದರಿಂದ ಅವನ ಕೃತಿ ಮಧ್ಯಕಾಲೀನ ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಆತನ 'ತ್ರಿಷಷ್ಟಿ ಪುರಾತನ ಚಾರಿತ್ರಂ' ಕೇವಲ ಭಕ್ತಿಗೀತೆಯಲ್ಲ, ಅದೊಂದು ಶ್ರೇಷ್ಠ ಕಲಾಕೃತಿಯಾಗಿದ್ದು, ಕನ್ನಡ ಸಾಹಿತ್ಯದ ಕವಿಚಕ್ರವರ್ತಿಗಳ ಪಂಕ್ತಿಯಲ್ಲಿ ಸುರಂಗನಿಗೆ ಶಾಶ್ವತವಾದ ಸ್ಥಾನವನ್ನು ಒದಗಿಸಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಯಾವುದೇ ಬಿಗಿ ಕಥಾಸೂತ್ರವಿಲ್ಲದ, ಭಿನ್ನ ಕಾಲ-ದೇಶಗಳಿಗೆ ಸೇರಿದ 63 ಬಿಡಿ ಕಥೆಗಳನ್ನು ಒಟ್ಟುಗೂಡಿಸಿ, ತನ್ನ ಅಸಾಧಾರಣ ಕಥನಕಲೆ, ನಾಟಕೀಯ ದೃಷ್ಟಿ ಮತ್ತು ರಸವತ್ತಾದ ನಿರೂಪಣೆಯ ಮೂಲಕ ಒಂದು ಭವ್ಯ ಮಹಾಕಾವ್ಯವನ್ನಾಗಿ ರೂಪಿಸಿದ ಸುರಂಗ ಕವಿಯು ಸಹೃದಯರ ಮನಸ್ಸಿನಲ್ಲಿ ಉಳಿಯುವಂತಹವನಾಗಿದ್ದಾನೆ.

ಪರಾಮರ್ಶನ ಗ್ರಂಥಗಳು

೧. ಹಿರೇಮಠ ಆರ್.ಸಿ. ತ್ರಿಷಷ್ಟಿ ಪುರಾತನ ಚಾರಿತ್ರಂ ಕರ್ನಾಟಕ ವಿಶ್ವವಿದ್ಯಾನಿಲಯ,  ಧಾರವಾಡ, 1978

೨. ಸ.ಸ,ಮಾಳವಾಡ ಸ.ಸ. ಹರಿಹರನ ರಗಳೆಗಳಲ್ಲಿ ಜೀವನ ದರ್ಶನ,

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ,1969

೩.ಮಿರ್ಜಿ ಮ.ಮ.ನೂತನ ಗದ್ಯಗ್ರಂಥವು ಅರುವತ್ತೂರು ಪುರಾತನರು

ಪ್ರಕಾಶಕರು ಗುರುಸಿದ್ದಪ್ಪ ಮಹಾಲಿಂಗಪ್ಪ ಮಿರ್ಜಿ, ಹುಬ್ಬಳ್ಳಿ, 1931

೪.ಮುಗಳಿ ರಂ.ಶ್ರೀ.ಕನ್ನಡ ಸಾಹಿತ್ಯ ಚರಿತ್ರೆ,ಗೀತಾ ಬುಕ್ ಹೌಸ್, ಮೈಸೂರು,1993

೫.ಎಂ.ಎಸ್.ಲಠ್ಠೆ, ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ಒಂದು ತೌಲನಿಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ,೧೯೭೫

೬. ವಿದ್ಯಾಶಂಕರ ಎಸ್‌. 1. ನೆಲದ ಮರೆಯ ನಿಧಾನಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು, 1997

            2. ನಂಬಿಯಣ್ಣ ಒಂದು ಅಧ್ಯಯನ, ಸ್ನೇಹ ಪ್ರಕಾಶನ, ಬೆಂಗಳೂರು, 1985

            3. ವಚನಾನುಶೀಲನ, ಸ್ನೇಹ ಪ್ರಕಾಶನ, ಬೆಂಗಳೂರು, 1989

            4. ವೀರಶೈವ ಪುರಾಣಗಳು ಒಂದು ಅಧ್ಯಯನ ಕನ್ನಡಸಾಹಿತ್ಯಪರಿಷತ್‌, ಬೆಂಗಳೂರು,  ೧೯೮೯

           ೫. ವೀರಶೈವ ಸಾಹಿತ್ಯ ಚರಿತ್ರೆ ಸಂ.೩ ಭಾಗ-೧, ಪ್ರಿಯದರ್ಶಿನಿ ಪ್ರಕಾಶನ,೨೦೧೪

೭. ಸಿ.ನಾಗಭೂಷಣ, ಶರಣ ಸಾಹಿತ್ಯ ಸಂಸ್ಕೃತಿ ಬುತ್ತಿ, ಸ್ನೇಹಾ ಪಬ್ಲಿಷಿಂಗ್‌ ಹೌಸ್‌, ಬೆಂಗಳೂರು, ೨೦೨೩

೮. ಪಿ.ವಿ. ಕುಲಕರ್ಣಿ, ತಮಿಳಿನಲ್ಲಿ ಕನ್ನಡ ವೀರಶೈವ ಕೃತಿಗಳು, ಪ್ರಭಸ ಬಿಡುಗಡೆ, ಮಧುರೈ, ೧೯೯೯ 

                                                             

                                ಸುರಂಗ ಕವಿಯ  ತ್ರಿಷಷ್ಟಿ ಪುರಾತನರ ಚಾರಿತ್ರಂ : ಸಮೀಕ್ಷೆ                              ಡಾ.ಸಿ.ನಾಗಭೂಷಣ     ಮಧ್ಯಕಾಲ...