ಶನಿವಾರ, ಆಗಸ್ಟ್ 8, 2026

ಅಲಕ್ಷಿತ ಆಕರ ಧಾರಿತ ಕನ್ನಡ ಸಾಂಸ್ಕೃತಿಕ ಇತಿಹಾಸದ ಪುನರ್‌ನಿರ್ಮಾಣದ ಸಂಶೋಧಕ: ಡಾ.ಬಿ.ನಂಜುಂಡಸ್ವಾಮಿ

                                           ಡಾ.ಸಿ.ನಾಗಭೂಷಣ

      ಡಾ. ಬಿ. ನಂಜುಂಡ ಸ್ವಾಮಿ (ಜನನ: 25-08-1961) ಯವರು ಅವರು ಆಯುರ್ವೇದ ವೈದ್ಯರಾಗಿ ಸಮಾಜ ಸೇವೆ, ಸಂಶೋಧನೆ ಮತ್ತು ಸಾಹಿತ್ಯ ಸಂಪಾದನೆಗಳ ಮೂಲಕ ದೀರ್ಘಕಾಲ ಸೇವೆ ಸಲ್ಲಿಸುತ್ತ ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರಕ್ಕೆ ವೈವಿಧ್ಯಮಯವಾದ ಕೊಡುಗೆ ನೀಡಿದ್ದಾರೆ. ಬಿ. ನಂಜುಂಡಸ್ವಾಮಿ ಅವರು ಕನ್ನಡ ನಾಡಿನ  ಇತಿಹಾಸ, ವಚನ ಸಾಹಿತ್ಯ, ಶರಣ ಪರಂಪರೆ, ಶಾಸನಶಾಸ್ತ್ರ, ಹಸ್ತಪ್ರತಿ ಸಂರಕ್ಷಣೆ, ಸ್ಥಳೀಯ ಇತಿಹಾಸ ಮತ್ತು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಅಪಾರ ಕೊಡುಗೆ ನೀಡಿರುವ ವಿದ್ವಾಂಸರು. ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಪರೂಪದ ವ್ಯಕ್ತಿತ್ವ ಇವರು. ತುಮಕೂರಿನಲ್ಲಿ ಸ್ಥಾಪಿಸಿದ ಪಂಡಿತ ತಾರಾನಾಥ  ಆಯುರ್ವೇದ ಚಿಕಿತ್ಸಾಲಯದ ಮೂಲಕ ವೈದ್ಯಕೀಯ ಸೇವೆ ಮತ್ತು ಸಮುದಾಯ ಆರೋಗ್ಯದ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಬಾಲ್ಯ ಮತ್ತು ಪ್ರಾಥಮಿಕ ಪ್ರಭಾವಗಳು ಗ್ರಾಮೀಣ ಜೀವನದ ನೈಜ ಅನುಭವಗಳು, ಸ್ಥಳೀಯ ಮಠ ಮಂದಿರಗಳ ಆಚರಣೆಗಳು ಮತ್ತು ಹಿರಿಯರ ಕಥನಗಳು ಅವರ ಚಿಂತನೆಗೆ ಆಧಾರವಾಯಿತು. ಕುಟುಂಬದ ಪಾರಂಪರಿಕ ಮೌಲ್ಯಗಳು, ಧಾರ್ಮಿಕ ಆಚರಣೆಗಳು ಮತ್ತು ಗ್ರಾಮೀಣ ಸಮಾಜದ ಅನುಭವಗಳು ಅವರ ವ್ಯಕ್ತಿತ್ವದ ಮೂಲಭೂತ ಅಂಶಗಳಾಗಿ ಬೆಳೆಯಲು ಕಾರಣವಾದವು.

     ವೈದ್ಯಕೀಯ ಸೇವೆಯ ಜೊತೆಗೆ, ಧಾರ್ಮಿಕ ಸಾಂಸ್ಕೃತಿಕ ಅಧ್ಯಯನ ಮತ್ತು ವಚನ ಪರಂಪರೆಯ ಸಂಶೋಧನೆಗಳಲ್ಲಿ ಅವರ ಕಾರ್ಯವು ಪ್ರಾದೇಶಿಕ ಮತ್ತು ಸಾಹಿತ್ಯಿಕ ವಲಯದಲ್ಲಿ ಗಮನಾರ್ಹವಾಗಿದೆ.  ಇವರು ವೃತ್ತಿಯಿಂದ ವೈದ್ಯರಾಗಿದ್ದರೂ, ಪ್ರವೃತ್ತಿಯಿಂದ ಇವರು ಗಂಭೀರ ಸಾಹಿತ್ಯ ಸಂಶೋಧಕರು. ಶರಣ ಧರ್ಮ, ಶರಣ ಸಾಹಿತ್ಯ ಮತ್ತು ಕರ್ನಾಟಕದ ಇತಿಹಾಸದ ಅಧ್ಯಯನದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವರು. ಶರಣ ಸಾಹಿತ್ಯ ಮತ್ತು ಹಸ್ತಪ್ರತಿ ಅಧ್ಯಯನ ಕುರಿತ ನಂಜುಂಡಸ್ವಾಮಿ ಅವರ ಕಾರ್ಯವ್ಯಾಪ್ತಿಯು ಕೇವಲ ಗ್ರಂಥ ರಚನೆಗೆ ಸೀಮಿತವಾಗಿರದೆ, ಮರೆಯಾಗುತ್ತಿದ್ದ ಅಪರೂಪದ ಹಳೆಯ ಹಸ್ತಪ್ರತಿಗಳನ್ನು ಮತ್ತು ಸಾಹಿತ್ಯ ಸಂಪತ್ತನ್ನು ಹುಡುಕಿ, ಸಂಪಾದಿಸಿ ಸಮಾಜದ ಮುಂದಿಡುವಲ್ಲಿ ಅಗಾಧವಾಗಿದೆ.

    ಪ್ರವೃತ್ತಿಯಲ್ಲಿ ಸಂಶೋಧಕರಾದ ಡಾ.ಬಿ.ನಂಜುಂಡಸ್ವಾಮಿಯವರ ಸಂಶೋಧನಾ ಲೇಖನಗಳು, ಕನ್ನಡ ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ, ಮತ್ತು ಸಾಂಸ್ಕೃತಿಕ ಇತಿಹಾಸದ ಅತ್ಯಂತ ಆಳವಾದ ಅಧ್ಯಯನವನ್ನು ಪ್ರಸ್ತುತಪಡಿಸುತ್ತದೆ. ಇವರ ಅಧ್ಯಯನ ಹಳಗನ್ನಡ, ಮತ್ತು ವಚನ ಸಾಹಿತ್ಯದಂತಹ ದೇಸಿ ಸಾಹಿತ್ಯ ಪ್ರಕಾರಗಳ ಮರುಮೌಲ್ಯಮಾಪನಕ್ಕೆ ಕನ್ನಡಿ ಹಿಡಿಯುತ್ತವೆ.

   ನಂಜುಂಡಸ್ವಾಮಿ ಸಂಪಾದನೆ ಮತ್ತು  ಸಂಶೋಧನಾ ಲೇಖನಗಳ ಮೂಲಕ, ವಚನ ಪರಂಪರೆ, ವೀರಶೈವ ಸಂಸ್ಕೃತಿ ಮತ್ತು ಪ್ರಾದೇಶಿಕ ಇತಿಹಾಸದ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇವರ ಸಂಪಾದನೆಗಳು ಮೂಲ ಪಠ್ಯಗಳನ್ನು ಸಂರಕ್ಷಿಸುವುದಲ್ಲದೆ, ಆಧುನಿಕ ಪಠ್ಯ ವ್ಯಾಖ್ಯಾನಗಳಿಗೆ ಸಹಾಯಕವಾಗಿವೆ. ವಚನ ಸಾಹಿತ್ಯದ ಸಂಶೋಧನೆ ವಚನಗಳ ಪಠ್ಯ ಸಂಗ್ರಹಣೆ, ಭಾಷಾಂತರ ಮತ್ತು ಸಮೀಕ್ಷಾ ಕಾರ್ಯಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಚನಕಾರರ ಜೀವನಚರಿತ್ರೆ, ಪಠ್ಯ ಪರಂಪರೆ ಮತ್ತು ವಚನಗಳ ತಾತ್ವಿಕ ಅರ್ಥಗಳ ವಿಶ್ಲೇಷಣೆಗಳಲ್ಲಿ ಅವರ ಲೇಖನಗಳು ಶೈಕ್ಷಣಿಕ ಮತ್ತು ಸಾಮಾನ್ಯ ಓದುಗರಿಗೆ ಮಾರ್ಗದರ್ಶಕವಾಗಿವೆ. ಶಾಸನಗಳ ಮೂಲ ಪಠ್ಯಗಳನ್ನು ಸಂಗ್ರಹಿಸಿ ಅವುಗಳ ತಾತ್ವಿಕ, ಇತಿಹಾಸಾತ್ಮಕ ಮತ್ತು ಸಾಮಾಜಿಕ ಅರ್ಥಗಳನ್ನು ವಿಶ್ಲೇಷಿಸುವಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಹಿಂದಿನ ವಿದ್ವಾಂಸರ ಅಭಿಪ್ರಾಯಗಳನ್ನು ಪ್ರಶ್ನಿಸಿ ಹೊಸ ನಿರ್ಧಾರಗಳಿಗೆ ಬರುವ ಪ್ರಯತ್ನವನ್ನು ಇವರ ಕೆಲವು ಲೇಖನಗಳಲ್ಲಿ ಕಾಣಬಹುದು. ತಮ್ಮದೇ ಕೃತಿಗಳನ್ನು ರಚಿಸುವುದರ ಜೊತೆಗೆ, ಇತರರ ಸಂಶೋಧನೆಗಳಿಗೂ ಬೆನ್ನೆಲುಬಾಗಿ ನಿಲ್ಲುವಂತಹ ವ್ಯಕ್ತಿತ್ವ ಅವರದ್ದು.

ಸಂಪಾದಿತ ಮತ್ತು ಸ್ವತಂತ್ರ ಕೃತಿಗಳು: ಡಾ. ನಂಜುಂಡಸ್ವಾಮಿಯವರ ಸಾಹಿತ್ಯ ಮತ್ತು ಸಂಪಾದಕೀಯ ಕಾರ್ಯವು ವಚನ ಪರಂಪರೆ, ವೀರಶೈವ ಸಂಸ್ಕೃತಿ, ಸ್ಥಳೀಯ ಇತಿಹಾಸ ಮತ್ತು ಧಾರ್ಮಿಕ ಚರಿತ್ರೆಗಳ ಸಂಶೋಧನೆಗೆ ಮಹತ್ವದ ಸಂಪನ್ಮೂಲಗಳನ್ನು ನೀಡಿದೆ. ಪ್ರಮುಖ ಕೃತಿಗಳಲ್ಲಿ ಕೆಲವು:

 ಇವರ ಸ್ವತಂತ್ರ ಮತ್ತು ಸಂಪಾದಿತ ಕೃತಿಗಳ ಸಂಖ್ಯೆ ೩೪ ದಾಟುತ್ತದೆ.

ಸಂಪಾದಿತ ಮತ್ತು ಸ್ವರಚಿತ ಕೃತಿಗಳು

    ೧.ನಮಃಶಿವಾಯ ಸ್ಮರಣಸಂಚಿಕೆ ನಗರ ವೀರಶೈವ ಸಮಾಜ ಸೇವಾ ಸಮಿತಿ, ತುಮಕೂರು, 1993 (ಇತರರೊಂದಿಗೆ)

೨.ಚೆನ್ನುಡಿ ತುಮಕೂರು; ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಗುಬ್ಬಿ, 1997

1.   ಸಂತೃಪ್ತಿ ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಹಾರ ಮಂದಿರಗಳ ಸಂಘದ ಸಮ್ಮೇಳನ, 1997 (ಇತರರೊಂದಿಗೆ)

2.   ತುಮಕೂರು ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳ ಕೃತಿಗಳು, ವೀರಶೈವ ಅಧ್ಯಯನ ಸಂಸ್ಥೆ, ಗದಗ, 1996 (ಇತರರೊಂದಿಗೆ)

3.   ಬಹುಧಾನ್ಯ ಸಿರಿ ಧಾನ್ಯ ವ್ಯಾಪಾರಿಗಳ ಸಂಘ, 1998 (ಇತರರೊಂದಿಗೆ)

4.   ಧಾನ್ಯ ಲಕ್ಷ್ಮಿ ಧಾನ್ಯ ವ್ಯಾಪಾರಿಗಳ ಸಂಘದ ವಜ್ರಮಹೋತ್ಸವ, 2001 (ಇತರರೊಂದಿಗೆ)

5.   ಹೋರಾಟದ ಬದುಕು ಸಾಗರನಹಳ್ಳಿ ಎಸ್. ರೇವಣ್ಣನವರ ನೆನಹಿನ ಸಂಚಿಕೆ, 2004

6.   ಪುರಾಣದ ಸಿದ್ಧಲಿಂಗೇಶ ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ, 2006 (ಇತರರೊಂದಿಗೆ)

7.   ಚಿತ್ಕಳೆ ತುಮಕೂರು ಅಕ್ಕಮಹಾದೇವಿ ಸಮಾಜದ ನೆನಹಿನ ಸಂಚಿಕೆ, 2003

8.   ಮಾಗಡಿ ಶ್ರೀ ವೀರಪ್ಪ ಶಾಸ್ತ್ರಿಗಳು ಶ್ರೀ ಸಿದ್ಧಗಂಗಾ ಪ್ರಕಾಶನ, 2008

9.   ಶಿವಗಂಗಾ ಕ್ಷೇತ್ರ ಹಾಗೂ ವೀರಶೈವ ಮಠಗಳು ಶ್ರೀ ಸಿದ್ಧಗಂಗಾ ಮಠ, 2008

10. ಶ್ರೀ ಸಿದ್ಧೇಶ್ವರ ವಿಜಯವು 2005

11.  ಹೊನ್ನಸಿರಿ 2010

12. ಕಾಯಕ ಯೋಗಿ 2012 (ಇತರರೊಂದಿಗೆ)

13. ಹೊನ್ನುಡಿಕೆ ದರ್ಶನ ತೇಜಸ್ ಪ್ರಕಾಶನ, ತುಮಕೂರು, 1999

14. ಗೋಸಲ ಶ್ರೀ ಗುಬ್ಬಿ ಚನ್ನಬಸವೇಶ್ವರಸ್ವಾಮಿ 2012

15. ಶ್ರೀ ಕಂಬಾಳು ಸಂಸ್ಥಾನಮಠ 2012

16. ದಕ್ಷಿಣ ಕಾಶಿ ಎನಿಸಿದ ಶಿವಗಂಗೆ ಕ್ಷೇತ್ರ ಮಹಾತ್ಮ ಸ್ವರ್ಣ-ಕಿರಣ ಪ್ರಕಾಶನ, ಮೈಸೂರು, 2008 (ಇತರರೊಂದಿಗೆ)

17. ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಮೀಕ್ಷೆ 2009

18. ಮುಡಿಮಾಣಿಕ್ಯ ತುಮಕೂರು ಅಕ್ಕಮಹಾದೇವಿ ಸಮಾಜದ ವಜ್ರಮಹೋತ್ಸವ, 2015

19. ಸಿದ್ಧಾಂತ ಶಿಖಾಮಣಿ ಸ್ಥಲಭೇದಗಳು 2016

20. ಮಹಾ ದಾಸೋಹಿ ಶತಮಾನೋತ್ಸವ ಸಮಿತಿ, ತುಮಕೂರು, 2000

21. ಆದ್ಯ ಆಧುನಿಕ ವಚನಕಾರ 2008 (ಇತರರೊಂದಿಗೆ)

22. ಕಲ್ಪಸಿರಿ ಕನ್ನಡ ಸಾಹಿತ್ಯ ಪರಿಷತ್ತು ಸಂಪುಟ, 2003

23. ಕರ್ಣಾಟ ಕಲ್ಯಾಣಕಾರಕಂ 2014

24. ಎಳಂದೂರು ಪರ್ವತ ಶಿವಯೋಗಿ 2015 (ಇತರರೊಂದಿಗೆ)

25. ಹಸ್ತಪ್ರತಿ ತಜ್ಞ ಎಸ್. ಶಿವಣ್ಣ 2018

26. ಗುಂಡಬಸವೇಶ್ವರಾಂಕಿತ ಸ್ವರವಚನಗಳು 2021

27. ಸೋಮೇಕಟ್ಟಿ ಕರಿವೃಷಭೇಂದ್ರ ಸ್ವರವಚನಗಳು 2018

28. ತತ್ವಪದ ಸಂಪುಟ ಕನಕದಾಸ ಸಂಶೋಧನಾ ಕೇಂದ್ರ, 2020; 2023

29. ಖೇಮಣ್ಣ ಕವಿಯ ಕೈವಲ್ಯ ಸಾಹಿತ್ಯ 2018

30. ಬಿ. ಶಿವಮೂರ್ತಿ ಶಾಸ್ತ್ರಿ ಮತ್ತು ರೇಣುಕ ಪ್ರಸಾದ 2018

31. ಸ್ವಾತಂತ್ರ್ಯ ಹೋರಾಟ : ಮಧುಗಿರಿ ಕರ್ನಾಟಕ ಸಾಹಿತ್ಯ ಅಕಾಡೆಮಿ, 2022

   32. ಸ್ವಾತಂತ್ರ್ಯ ಹೋರಾಟ : ತುಮಕೂರು ಕರ್ನಾಟಕ ಸಾಹಿತ್ಯ ಅಕಾಡೆಮಿ, 2022 ಈ ಪಟ್ಟಿ ಅವರ       ವಿಸ್ತೃತ ಸಂಪಾದಕೀಯ ಕಾರ್ಯದ ಒಂದು ಪ್ರತಿಬಿಂಬ ಮಾತ್ರ; ಇತರ ಅನೇಕ ಸಂಯುಕ್ತ ಸಂಪಾದನೆಗಳು ಮತ್ತು ಸ್ಮರಣ ಸಂಚಿಕೆಗಳಲ್ಲೂ ಅವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. 00 ಕ್ಕೂ ಹೆಚ್ಚು ಲೇಖನಗಳು ವಿವಿಧ ಸಂಶೋಧನಾ  ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲೇಖನಗಳಲ್ಲಿ ಅವರು ಮೂಲ ದಾಖಲೆಗಳ (ಶಾಸನ, ಹಸ್ತಪ್ರತಿ) ವಿಶ್ಲೇಷಣೆ, ಪಠ್ಯ ಪರಂಪರೆಗಳ ತಾತ್ವಿಕ ವಿಶ್ಲೇಷಣೆ ಮತ್ತು ಸಾಮಾಜಿಕ ಧಾರ್ಮಿಕ ಪ್ರಭಾವಗಳ ಸಂಯೋಜನೆಯನ್ನು ಒದಗಿಸಿದ್ದಾರೆ. ಶಾಸನ ಅಧ್ಯಯನ, ಮಠ ಪರಂಪರೆ, ವಚನ ಸಾಹಿತ್ಯದ ಮೂಲಗಳು ಮತ್ತು ಪ್ರಾದೇಶಿಕ ಇತಿಹಾಸದ ವಿಶ್ಲೇಷಣೆಗಳು ಅವರ ಸಂಶೋಧನಾ ಲೇಖನಗಳ ಮೂಲ ಸೆಲೆಯಾಗಿವೆ. ಇವರ ಲೇಖನಗಳಲ್ಲಿ ಪಠ್ಯ ಪರಂಪರೆ, ಭಾಷಾ ರೂಪಾಂತರ ಮತ್ತು ಸಾಮಾಜಿಕ ಧಾರ್ಮಿಕ ಪ್ರಭಾವಗಳ ಸಂಯೋಜನೆ ಸ್ಪಷ್ಟವಾಗಿ ಕಾಣುತ್ತದೆ.

    ಬಿ. ನಂಜುಂಡಸ್ವಾಮಿಯವರ ಸಂಶೋಧನಾ ಲೇಖನಗಳ ಸಮಗ್ರ ಪಠ್ಯವನ್ನು ಅವಲೋಕಿಸಿದಾಗ, ಇದು ಕೇವಲ ಸಾಹಿತ್ಯದ ವಿಮರ್ಶೆಯಾಗಿರದೆ, ಕ್ಷೇತ್ರಕಾರ್ಯ ಹಸ್ತಪ್ರತಿಶಾಸ್ತ್ರ ಮತ್ತು ಶಾಸನಗಳ ಆಳವಾದ ಅಧ್ಯಯನದ ಫಲವಾಗಿ ರೂಪುಗೊಂಡಿದ್ದು ಮೌಲಿಕವಾದವುಗಳು ಎಂಬುದು ಸ್ಪಷ್ಟವಾಗುತ್ತದೆ. ಈ ಲೇಖನಗಳು ಪ್ರಧಾನವಾಗಿ ಹಳೇ ಮೈಸೂರು ಭಾಗದ, ಅದರಲ್ಲೂ ವಿಶೇಷವಾಗಿ ತುಮಕೂರು ಮತ್ತು ಚಿತ್ರದುರ್ಗ ಪ್ರಾಂತ್ಯಗಳ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಹಿತ್ಯಕ ಚರಿತ್ರೆಯನ್ನು ಮರು-ರಚಿಸುವಲ್ಲಿ ಮಹತ್ವದ ಪ್ರಾಥಮಿಕ ಆಕರಗಳಾಗಿ ಒದಗಿಬರುತ್ತವೆ. ಅವರ ಶಾಸನ ಆಧಾರಿತ ಸಂಶೋಧನೆಯ ಉದಾಹರಣೆಗಳು. ಈ ಅಧ್ಯಯನಗಳು ಸ್ಥಳೀಯ ಇತಿಹಾಸದ ಪುನರ್‌ವ್ಯಾಖ್ಯಾನಕ್ಕೆ ಮತ್ತು ಮಠ ಪರಂಪರೆಯ ಸಾಮಾಜಿಕ ಧಾರ್ಮಿಕ ಪ್ರಭಾವದ ವಿಶ್ಲೇಷಣೆಗೆ ಸಹಾಯಮಾಡಿವೆ.

ವಚನ ಸಾಹಿತ್ಯದ ಸಂಪಾದನೆ ಮತ್ತು ಪ್ರಕಟಣೆಯ ಇತಿಹಾಸವನ್ನು ದಾಖಲಿಸುವಲ್ಲಿ ಇವರ ಶ್ರಮ ಅತ್ಯಂತ ಗಮನಾರ್ಹವಾಗಿದೆ. ಕೇವಲ ಪ್ರಕಟಿತ ಕೃತಿಗಳನ್ನು ಅವಲಂಬಿಸದೆ, ಮೂಲ ಓಲೆಗರಿಗಳ ಜಾಡನ್ನು ಹಿಡಿದು ಹೊರಟಿರುವುದು ಈ ಸಂಶೋಧನೆಯ ಗಟ್ಟಿತನವನ್ನು ತೋರಿಸುತ್ತದೆ.

    ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಹಿನ್ನೆಲೆಯಲ್ಲಿ, ಅದರ ಸ್ಥಾಪನೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮುಂತಾದವರ ಪಾತ್ರವನ್ನು ಲೇಖಕರು ವಸ್ತುನಿಷ್ಠವಾಗಿ ನಿರೂಪಿಸಿದ್ದಾರೆ. ʻಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಪೂರ್ವ ಇತಿಹಾಸ ಮತ್ತು ಆರಂಭಿಕ ಬೆಳವಣಿಗೆ' ಕುರಿತಾದ ಲೇಖನವು ಆಕರಗಳ ಕ್ರೂಢೀಕೃತ ವರದಿಯ ಜೊತೆಗೆ  ಸಂಶೋಧನಾ ನಿರೂಪಣೆಯಾಗಿದೆ. ಕೇವಲ ಒಂದೇ ಮೂಲವನ್ನು ಅವಲಂಬಿಸದೆ, ವಿವಿಧ ಆಕರಗಳಿಂದ ಮಾಹಿತಿ ಸಂಗ್ರಹಿಸಿ ಪರಸ್ಪರ ಹೋಲಿಕೆ ಮಾಡಿದ್ದಾರೆ. ಸ್ಥೂಲ ಐತಿಹಾಸಿಕ ಘಟನೆಗಳನ್ನು (ಬ್ರಿಟಿಷ್ ಆಡಳಿತ, ಶಿಕ್ಷಣ ನೀತಿ) ಸ್ಥಳೀಯ ಸಾಂಸ್ಕೃತಿಕ ಬೆಳವಣಿಗೆಯೊಂದಿಗೆ ಜೋಡಿಸಿದ್ದಾರೆ. ಸಂಘಟನೆಯ ಒಳಗಿನ ರಾಜಕಾರಣ, ಸಮಿತಿಗಳ ಚರ್ಚೆಗಳು, ಆರ್ಥಿಕ ವ್ಯವಸ್ಥೆ, ವ್ಯಕ್ತಿಗಳ ಆದರ್ಶ ಇವೆಲ್ಲವನ್ನೂ ಸಮತೋಲನಗೊಳಿಸಿ ನಿರೂಪಿಸಿದ್ದಾರೆ. ಇದು ಕೇವಲ 'ಕಥನ'ವಲ್ಲ, ಬದುಕಿರುವ ಐತಿಹಾಸಿಕ ಪ್ರಕ್ರಿಯೆಯ 'ವಿಶ್ಲೇಷಣಾತ್ಮಕ ದಾಖಲೀಕರಣಆಗಿದೆ. ಸುತ್ತೂರು ಮಠದ ಪ್ರಸಾದ ನಿಲಯದಲ್ಲಿ ಪ್ರೊ. ಬಸವನಾಳರು ನೀಡಿದ ಉಪನ್ಯಾಸ ಮತ್ತು ಅವರ ವಚನ ಸಂಪಾದನಾ ಕಾರ್ಯದಲ್ಲಿ ಶ್ರೀ ಗೌರೀಶಂಕರ ಸ್ವಾಮಿಗಳ ಪಾತ್ರವನ್ನು ದಾಖಲಿಸಿರುವುದು ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕದ ನಡುವಿನ ಬೌದ್ಧಿಕ ವಿನಿಮಯವನ್ನು ಎತ್ತಿತೋರಿಸುತ್ತದೆ.       

     ಹಸ್ತಪ್ರತಿಶಾಸ್ತ್ರದ ದೃಷ್ಟಿಕೋನದಿಂದ 'ಅಕ್ಕಮಹಾದೇವಿ ವಚನಗಳ ಪರಿಷ್ಕರಣೆ' ಲೇಖನವನ್ನು ವಿಮರ್ಶಿಸುವುದು ಅತ್ಯಂತ ಔಚಿತ್ಯಪೂರ್ಣವಾದ ಹೆಜ್ಜೆ. ಕನ್ನಡ ಹಸ್ತಪ್ರತಿಶಾಸ್ತ್ರ ಮತ್ತು ದೇಸಿ ಸಾಹಿತ್ಯದ ಮರು-ಮೌಲ್ಯಮಾಪನದಂತಹ ಗಂಭೀರ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿರುವ ಅಧ್ಯಯನಕಾರರಿಗೆ, ಹಿಂದಿನ ವಿದ್ವಾಂಸರ ಸಂಪಾದನಾ ವಿಧಾನಗಳನ್ನು ವಿಶ್ಲೇಷಿಸುವುದು ಭವಿಷ್ಯದ ಸಂಶೋಧನೆಗಳಿಗೆ ಅತ್ಯಗತ್ಯ ಮಾರ್ಗದರ್ಶಿಯಾಗುತ್ತದೆ. ಡಾ. ಬಿ. ನಂಜುಂಡಸ್ವಾಮಿಯವರ ಈ ಲೇಖನವು, ಅಕ್ಕಮಹಾದೇವಿಯ ವಚನಗಳು ಕಾಲಘಟ್ಟದಿಂದ ಕಾಲಘಟ್ಟಕ್ಕೆ ಹೇಗೆ ವಿವಿಧ ಸಂಪಾದಕರ ಕೈಯಲ್ಲಿ ಪರಿಷ್ಕರಣೆಗೊಂಡವು ಎಂಬುದರ ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇದನ್ನು ಹಸ್ತಪ್ರತಿಶಾಸ್ತ್ರದ ಮೂರು ಪ್ರಮುಖ ನೆಲೆಗಳಲ್ಲಿ ಆಳವಾಗಿ ವಿಮರ್ಶಿಸಬಹುದು.

 ವಚನ ಸಾಹಿತ್ಯದ ಸಂಪಾದನೆಯು ಕೇವಲ ಸಂಗ್ರಹಣೆಯಿಂದ ಪ್ರಾರಂಭವಾಗಿ, ನಂತರ ಶಾಸ್ತ್ರೀಯ ಮತ್ತು ವೈಜ್ಞಾನಿಕ ನೆಲೆಯನ್ನು ಹೇಗೆ ತಲುಪಿತು ಎಂಬುದನ್ನು ಈ ಲೇಖನ ಸ್ಪಷ್ಟಪಡಿಸುತ್ತದೆ.

ಆರಂಭಿಕ ಹಂತ (ಸಂಗ್ರಹ ಮತ್ತು ಪ್ರಕಟಣೆ): ಡಾ. .ಗು. ಹಳಕಟ್ಟಿಯವರು (೧೯೨೬) ಕೇವಲ ೧೨ ಹಸ್ತಪ್ರತಿಗಳನ್ನು ಬಳಸಿ ೧೮೪ ವಚನಗಳನ್ನು ಪ್ರಕಟಿಸಿದರು. ಇದು ವಚನಗಳನ್ನು ವಿಷಯವಾರು (ಉಪಶೀರ್ಷಿಕೆಗಳ ಅಡಿಯಲ್ಲಿ) ವಿಂಗಡಿಸಿದ ಪ್ರಾಥಮಿಕ ಯತ್ನವಾಗಿತ್ತು.

   ಟಿ.ಎಚ್.ಎಂ. ಸದಾಶಿವಯ್ಯನವರ ಸಂಪಾದಕತ್ವದಲ್ಲಿ (೧೯೬೦) ೧೮ ಆಕರಗಳನ್ನು ಬಳಸಲಾಯಿತು. ಇದರಲ್ಲಿ ತಾಳೆಗರಿಗಳ ಜೊತೆಗೆ, ಚಂಪೂ ಕಾವ್ಯ, ಪ್ರಭುಲಿಂಗಲೀಲೆ ಮತ್ತು ಶೂನ್ಯಸಂಪಾದನೆಯಂತಹ ಪೂರಕ ಸಾಹಿತ್ಯಿಕ ಆಕರಗಳನ್ನು (Cross-references) ಬಳಸಿಕೊಂಡಿರುವುದು ಹಸ್ತಪ್ರತಿಶಾಸ್ತ್ರದ ಪ್ರಮುಖ ಘಟ್ಟವಾಗಿದೆ.

     ಡಾ. ಎಲ್. ಬಸವರಾಜು ಅವರ ಸಂಪಾದನಾ ಕಾರ್ಯವು ಹಸ್ತಪ್ರತಿಶಾಸ್ತ್ರದ ಅತ್ಯುನ್ನತ ಮಾದರಿಯಾಗಿದೆ. ಪಾಠಾಂತರಗಳನ್ನು ಗುರುತಿಸಲು ಅವರು ಅನುಸರಿಸಿದ ಸಂಕೇತಗಳ ಬಳಕೆ (ಉದಾ: '.೪೫೦', 'ಲಿಂ.ಲೀ.ವಿ.ಚಾ') ಮತ್ತು ಮೂಲವನ್ನು ಪತ್ತೆಹಚ್ಚುವ ನಿಖರತೆ ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಒಂದು ದಿಕ್ಕೂಚಿಯಾಗಿದೆ. ಅಕ್ಕಮಹಾದೇವಿ ವಚನಗಳ ಸಂಪಾದನಾ ಪರಂಪರೆಯನ್ನು ವಿಶ್ಲೇಷಿಸುವಾಗ, ಲೇಖಕರು ಕೇವಲ ಪ್ರಕಟಿತ ಕೃತಿಗಳನ್ನು ಅವಲಂಬಿಸದೆ ಹಸ್ತಪ್ರತಿಗಳ (ಉದಾ: ಹೊನ್ನವಳ್ಳಿ ಮಠದ ೬೦೦೦ ವಚನಗಳ ಕಟ್ಟು) ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಇದು ಪಠ್ಯ ವಿಮರ್ಶೆಯ (Textual Criticism) ಅತ್ಯುತ್ತಮ ಮಾದರಿಯಾಗಿದೆ. ಅಕ್ಕಮಹಾದೇವಿಯ ವಚನಗಳ ವಿವಿಧ ಆವೃತ್ತಿಗಳನ್ನು ಹೋಲಿಸಿ, ಸಂಪಾದನಾ ವಿಧಾನಗಳ ಮೌಲ್ಯಮಾಪನವನ್ನು ಹಳಕಟ್ಟಿಯವರಿಂದ ಹಿಡಿದು ಆಧುನಿಕ ವಿದ್ವಾಂಸರವರೆಗಿನ ಸಂಪಾದನಾ ಪರಂಪರೆಯ ದಾಖಲೀಕರಣ, ಪಾಠಾಂತರಗಳ, ಆಕರಗಳ ವ್ಯವಸ್ಥಿತ ಚರ್ಚೆಯನ್ನು ಮಾಡಿದ್ದಾರೆ.

. ಹೊನ್ನವಳ್ಳಿ ಮಠದ '೬೦೦೦ ವಚನಗಳ ಕಟ್ಟು' - ಒಂದು ವಿಶಿಷ್ಟ ಶೋಧ

ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಅಧ್ಯಯನದ ದೃಷ್ಟಿಯಿಂದ ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ೬೦೦೦ ವಚನಗಳ ಕಟ್ಟಿನ ವಿವರಣೆ ಕುರಿತ ಇವರ ಲೇಖನ ಅತ್ಯಂತ ಮೌಲಿಕವಾದದ್ದು. ವಚನ ಮತ್ತು ದೇಸಿ ಸಾಹಿತ್ಯದ ಪರಿಷ್ಕರಣೆಯಲ್ಲಿ ಈ ಲೇಖನವು ಅತ್ಯುನ್ನತ ಶೈಕ್ಷಣಿಕ ಶಿಸ್ತನ್ನು ಪ್ರದರ್ಶಿಸುತ್ತದೆ.

ವ್ಯವಸ್ಥಿತ ವರ್ಗೀಕರಣ: ಒಂದೇ ಕಟ್ಟಿನಲ್ಲಿ ಕೋಲ ಶಾಂತಯ್ಯ, ಮಧುವಯ್ಯ, ಬಿಬ್ಬಿ ಬಾಚಯ್ಯ, ಅರಿವಿನ ಮಾರಿತಂದೆ ಹೀಗೆ ಅನೇಕ ವಚನಕಾರರ ವಚನಗಳನ್ನು ಪ್ರತ್ಯೇಕವಾಗಿ ಗುಚ್ಛಗಳಾಗಿ ವಿಂಗಡಿಸಿರುವುದು ಅಂದಿನ ಲಿಪಿಗಾರರ ಅಥವಾ ಸಂಕಲನಕಾರರ ವ್ಯವಸ್ಥಿತ ಅಧ್ಯಯನ ಕ್ರಮವನ್ನು ತೋರಿಸುತ್ತದೆ. ಇದರಲ್ಲಿ ಅಕ್ಕ ಮಹಾದೇವಿಯ ೨೨೩ ವಚನಗಳಿವೆ (ಗರಿ ಸಂಖ್ಯೆ ೨೧೧-೨೨೧).

ಹೊಸ ವಚನಗಳ ಶೋಧ: ಪ್ರಕಟಿತ ಕೃತಿಗಳಲ್ಲಿ ಬಿಟ್ಟುಹೋಗಿದ್ದ ಅಕ್ಕಮಹಾದೇವಿಯ ವಚನವೊಂದನ್ನು (ಸುಖವಿಲ್ಲ ಹಂದೆಗೆ ಎಂತು ಮರುಗಿದಡೆಯು...) ಇವರು ಇದೇ ಹಸ್ತಪ್ರತಿಯ ಹಿನ್ನೆಲೆಯಲ್ಲಿ ಶೋಧಿಸಿ ಪ್ರಕಟಿಸಿರುವುದು ಸಂಶೋಧನಾತ್ಮಕವಾಗಿ ಮಹತ್ವದ ಸಾಧನೆಯಾಗಿದೆ.

. ಶೂನ್ಯಸಂಪಾದನೆಗಳ ವಿಕಾಸ ಮತ್ತು ಪಠ್ಯ ವಿಮರ್ಶೆ

ಶೂನ್ಯಸಂಪಾದನೆ ಎಂಬುದು ಕೇವಲ ಒಂದು ಕೃತಿಯಲ್ಲ, ಅದೊಂದು ಪರಂಪರೆ. ಲೇಖನವೊಂದರಲ್ಲಿ ನಂಜುಂಡಸ್ವಾಮಿಯವರು, ಶೂನ್ಯಸಂಪಾದನೆಗಳು ಕಾಲದಿಂದ ಕಾಲಕ್ಕೆ ಹೇಗೆ ಪರಿಷ್ಕರಣೆಗೊಂಡವು ಎಂಬುದರ ಚಾರಿತ್ರಿಕ ವಿವೇಚನೆ ಮಾಡಿದ್ದಾರೆ.

  ಶಿವಗಣಪ್ರಸಾದಿ ಮಹಾದೇವಯ್ಯನಿಂದ (ಸು.೧೪೦೦) ಆರಂಭವಾದ ಈ ಪರಂಪರೆ, ಹಲಗೆಯಾರ್ಯ (ಸು.೧೫೧೩), ಗುಮ್ಮಳಾಪುರದ ಸಿದ್ಧಲಿಂಗಯತಿ (ಸು.೧೫೭೦), ಮತ್ತು ಗೂಳೂರು ಸಿದ್ಧವೀರಣ್ಣೊಡೆಯನ (ಸು.೧೬೦೦) ವರೆಗೆ ಹೇಗೆ ವಿಸ್ತಾರಗೊಂಡಿತು ಎಂಬುದನ್ನು  ಇವರ ಲೇಖನವು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ. ಕೃತಿಗಳ ಅಂತರ್‌-ಸಂಬಂಧ ಗುಬ್ಬಿ ಮಲ್ಲಣ್ಣನ 'ಗಣಭಾಷಿತ ರತ್ನಮಾಲೆ' ಅಂತ್ಯದಲ್ಲಿ ಬರುವ 'ಸಂಗ್ರಹ ಮಹಾತ್ಮೆ' ಗದ್ಯಕ್ಕೂ, ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯ ಸಮಾಪ್ತಿ ವಾಕ್ಯಕ್ಕೂ ಇರುವ ಹೋಲಿಕೆಯನ್ನು ಡಾ. ಎಂ.ಎಂ. ಕಲಬುರ್ಗಿಯವರ ಉಲ್ಲೇಖದೊಂದಿಗೆ ಚರ್ಚಿಸಿರುವುದು ಪಠ್ಯಗಳ ಅಂತರ್‌-ಸಂಬಂಧವನ್ನು ದೃಢಪಡಿಸುತ್ತದೆ.

  ಕೆಂಚವೀರಣ್ಣೊಡೆಯನ ಶೂನ್ಯಸಂಪಾದನೆಯ ಶೋಧ: ಹಲಗೆಯಾರ್ಯನ ಶಿಷ್ಯ ಕೆಂಚವೀರಣ್ಣೊಡೆಯನ ಶೂನ್ಯಸಂಪಾದನೆ ನಮಗಿನ್ನೂ ಲಭ್ಯವಿಲ್ಲದಿದ್ದರೂ, ಅದರ ಅಸ್ತಿತ್ವವನ್ನು 'ವೀರಶೈವಾಮೃತ ಪುರಾಣ' ಪದ್ಯಗಳ ಆಧಾರದ ಮೇಲೆ ತರ್ಕಿಸಿರುವುದು ಶೈಕ್ಷಣಿಕ ಕುತೂಹಲವನ್ನು ಕೆರಳಿಸುವ ಮತ್ತು ಹೆಚ್ಚಿನ ಸಂಶೋಧನೆಗೆ ಎಡೆಮಾಡಿಕೊಡುವ ಅತ್ಯುತ್ತಮ ವಿಮರ್ಶಾತ್ಮಕ ನೋಟವಾಗಿದೆ. ಕೇವಲ ಗೂಳೂರು ಸಿದ್ಧವೀರಣ್ಣೊಡೆಯನ ಆವೃತ್ತಿಗಷ್ಟೇ ಸೀಮಿತವಾಗಿದ್ದ ಶೈಕ್ಷಣಿಕ ವಲಯಕ್ಕೆ, 'ಹಲಗೆಯಾರ್ಯನ ಶೂನ್ಯಸಂಪಾದನೆ'ಯ ಹಸ್ತಪ್ರತಿಯನ್ನು ಪರಿಷ್ಕರಿಸಿ, ಪ್ರೊ. ಎಸ್. ವಿದ್ಯಾಶಂಕರ ಅವರೊಡಗೂಡಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ಒದಗಿಸಿದ ಕೊಡುಗೆಯನ್ನು ಲೇಖಕರು ಐತಿಹಾಸಿಕ ಮೈಲಿಗಲ್ಲು ಎಂದು ಗುರುತಿಸಿದ್ದಾರೆ.

   ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಯನ್ನು ಗುರುತಿಸುವಾಗ, ನಿರ್ದಿಷ್ಟ ಕೃತಿಯೊಂದು ಕಾಲದಿಂದ ಕಾಲಕ್ಕೆ ಹೇಗೆ ಪರಿಷ್ಕರಣೆಗೊಂಡು ಬೆಳೆಯಿತು ಎಂಬುದನ್ನು ಅವರು ಅತ್ಯಂತ ತಾರ್ಕಿಕವಾಗಿ ವಿಶ್ಲೇಷಿಸುತ್ತಾರೆ. ಶಿವಗಣಪ್ರಸಾದಿ ಮಹಾದೇವಯ್ಯನವರ ಮೂಲ 'ಶೂನ್ಯಸಂಪಾದನೆ'ಯು ತದನಂತರ ಹಲಗೆಯಾರ್ಯ, ಗುಮ್ಮಳಾಪುರದ ಸಿದ್ಧಲಿಂಗಯತಿ ಮತ್ತು ಗೂಳೂರು ಸಿದ್ಧವೀರಣ್ಣ ಒಡೆಯರ ಕಾಲಕ್ಕೆ ಹೇಗೆ ವಿಸ್ತಾರಗೊಂಡಿತು ಎಂಬುದರ ತುಲನಾತ್ಮಕ ಅಧ್ಯಯನ ಇಲ್ಲಿದೆ. ಡಾ. ಎಂ. ಚಿದಾನಂದಮೂರ್ತಿ ಮೊದಲಾದ ಹಿರಿಯ ವಿದ್ವಾಂಸರ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತಲೇ, ಪ್ರತಿಯೊಂದು ಪರಿಷ್ಕರಣೆಯೂ (ಉದಾಹರಣೆಗೆ: ಹಲಗೆಯಾರ್ಯ ಸೇರಿಸಿದ ನುಲಿಯ ಚಂದಯ್ಯನ ಪ್ರಸಂಗ ಅಥವಾ ಅಕ್ಕಮಹಾದೇವಿಯ ವಿಸ್ತೃತ ಕಥಾನಕ) ಮೂಲ ಕೃತಿಗೆ ಪ್ರಕ್ಷಿಪ್ತವಾಗದೆ, ಶರಣ ದರ್ಶನವನ್ನು ಮತ್ತಷ್ಟು ದೀಪ್ತಗೊಳಿಸಿದ ಬಗೆಯನ್ನು ಅವರು ವಿವೇಚಿಸಿದ್ದಾರೆ. ನಾಲ್ಕು ಬೇರೆ ಬೇರೆ ಶೂನ್ಯಸಂಪಾದನೆಗಳ (ಮಹಾದೇವಯ್ಯ, ಹಲಗೆಯಾರ್ಯ, ಸಿದ್ಧಲಿಂಗಯತಿ, ಸಿದ್ಧವೀರಣ್ಣ) ನಡುವಿನ ವ್ಯತ್ಯಾಸಗಳನ್ನು ಅವರು ಕೇವಲ 'ಪಾಠದೋಷ'ಗಳೆಂದು ತಳ್ಳಿಹಾಕುವುದಿಲ್ಲ. ಬದಲಾಗಿ, ಸಿದ್ಧರಾಮೇಶ್ವರರ ದೀಕ್ಷಾ ಪ್ರಸಂಗ, ಅಕ್ಕಮಹಾದೇವಿಯ ಕಥಾನಕದ ವಿಸ್ತರಣೆ ಮತ್ತು ಅಲ್ಲಮಪ್ರಭುವಿನ ಜನನದ ಬಗೆಗಿನ ನಿಲುವುಗಳು ಕಾಲದಿಂದ ಕಾಲಕ್ಕೆ ಹೇಗೆ ಪರಿಷ್ಕರಣೆಗೊಂಡವು ಎಂಬುದನ್ನು ಸೈದ್ಧಾಂತಿಕ ಹಾಗೂ ಸಾಂಸ್ಕೃತಿಕ ವಿಕಾಸವಾಗಿ ವಿವೇಚಿಸಿದ್ದಾರೆ.

   ಜೊತೆಗೆ, ಹಾಗಲವಾಡಿ ಅಳಗಯ್ಯನಂತಹ ಅಜ್ಞಾತ ಲಿಪಿಗಾರರ ಹಸ್ತಪ್ರತಿಗಳ ವಿವರಗಳನ್ನು ದಾಖಲಿಸಿರುವುದು ಹಸ್ತಪ್ರತಿಶಾಸ್ತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆಯಾಗಿದೆ. ಹಾಗಲವಾಡಿ ಅಳಗಯ್ಯನಂತಹ ಅಜ್ಞಾತ ಲಿಪಿಗಾರರ ಹಸ್ತಪ್ರತಿಗಳ (ಉದಾ: ಬಾಲಗ್ರಹ ಗರ್ಭಿಣಿ ಚಿಕಿತ್ಸೆ, ಜ್ಯೋತಿಷ್ಯ ಕಾಲದರ್ಪಣ) ದಾಖಲೀಕರಣವು ದೇಸಿ ಜ್ಞಾನಪರಂಪರೆಯ ಉಳಿವಿನ ದೃಷ್ಟಿಯಿಂದ ಮಹತ್ವದ್ದಾಗಿದೆ.

ಆಂಗ್ಲ ಅನುವಾದಗಳ ಮರುಶೋಧ: ಡಾ. ಫ.ಗು. ಹಳಕಟ್ಟಿಯವರು ಅನುವಾದಿಸಿದ್ದ ಬಸವಣ್ಣನವರ ಅಪ್ರಕಟಿತ ಆಂಗ್ಲ ವಚನಗಳನ್ನು ಪತ್ತೆಹಚ್ಚಿ, ಮೂಲ ಕನ್ನಡ ಪಾಠದೊಂದಿಗೆ ತಾಳೆ ಮಾಡಿರುವುದು ಸಂಶೋಧನಾತ್ಮಕ ಕುತೂಹಲದ ಮತ್ತು ಶೈಕ್ಷಣಿಕ ಬದ್ಧತೆಯ ಸಂಕೇತವಾಗಿದೆ.

  ಗುಬ್ಬಿ ತಾಲೂಕಿನ ಪುರದ ನಾಗಣ್ಣನ (ಅಮರಗೊಂಡದ ಮಲ್ಲಿಕಾರ್ಜುನ ಅಂಕಿತ) ವಚನಗಳನ್ನು ವಿಸ್ತೃತವಾಗಿ ವಿಶ್ಲೇಷಿಸಿದ್ದು ಇವರ ಸಂಶೋಧನಾ ದೃಷ್ಟಿಗೆ ಸಾಕ್ಷಿ. ೧೩ನೇ ಶತಮಾನದ ವಚನಕಾರನಾದ ಪುರದ ನಾಗಣ್ಣನ ೯ ವಚನಗಳನ್ನು ಗುರುತಿಸಿ ಪ್ರಕಟಿಸಿದ್ದಾರೆ.

  ಡಾ. ಬಿ. ನಂಜುಂಡಸ್ವಾಮಿ ಅವರು ವಚನಕಾರರ ಅಂಕಿತಗಳ (ಕಾವ್ಯನಾಮಗಳ) ಕುರಿತು ಮಾಡಿರುವ ಸಂಶೋಧನೆಯು ಬಹಳ ಆಳವಾದದ್ದು ಮತ್ತು ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಅವರು ಹಸ್ತಪ್ರತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಈ ಹಿಂದೆ ವಿದ್ವಾಂಸರು ಮಾಡಿದ್ದ ಕೆಲವು ನಿರ್ಣಯಗಳನ್ನು ಪರಿಷ್ಕರಿಸಿದ್ದಾರೆ.

  ಹೊನ್ನಕವಿಯ "ಗಂಗೇಶ" ಅಂಕಿತದ ಸ್ವರವಚನಗಳನ್ನು ಪ್ರಥಮ ಬಾರಿಗೆ ಶೋಧಿಸಿ ಸಂಪಾದಿಸಿದ್ದಾರೆ. ಗುಮ್ಮಳಾಪುರದ ಸಿದ್ಧಲಿಂಗಯತಿಯ ಶೂನ್ಯಸಂಪಾದನೆ ಕುರಿತು ಸಂಶೋಧನೆ. ಸಿದ್ಧರಾಮೇಶ್ವರನ ಹೊಸ ವಚನಗಳ ಪತ್ತೆ ಮತ್ತು ಪ್ರಕಟಣೆ ಕುರಿತ ಇವರ ಲೇಖನಗಳು ಮೌಲಿಕವಾಗಿವೆ.

೧. ಆರ್. ನರಸಿಂಹಾಚಾರ್ಯರ ಕವಿಚರಿತೆಯ ಪರಿಷ್ಕರಣೆ

ಆರ್. ನರಸಿಂಹಾಚಾರ್ಯರು ೧೯೦೭ರಲ್ಲಿ ಪ್ರಕಟಿಸಿದ 'ಕರ್ಣಾಟಕ ಕವಿಚರಿತೆ' (ಭಾಗ-೧) ಯಲ್ಲಿ ಹಲವು ವಚನಕಾರರ ಅಂಕಿತಗಳನ್ನು ಪಟ್ಟಿ ಮಾಡಿದ್ದರು. ಆದರೆ, ಅಂದಿನ ಕಾಲಕ್ಕೆ ಲಭ್ಯವಿದ್ದ ಮಾಹಿತಿಯ ಕೊರತೆಯಿಂದಾಗಿ ಕೆಲವು ವಚನಕಾರರ ಅಂಕಿತಗಳು ಅವರಿಗೆ ತಿಳಿದಿರಲಿಲ್ಲ. ಆರ್. ನರಸಿಂಹಾಚಾರ್ಯರ ಕವಿಚರಿತೆಯಲ್ಲಿ ಉಲ್ಲೇಖಿತವಾದ ಹಾಗೂ ಬಿಟ್ಟುಹೋದ ವಚನಕಾರರ ಅಂಕಿತಗಳ ಬಗ್ಗೆ ತಾರ್ಕಿಕವಾಗಿ ಚರ್ಚಿಸಿದ್ದಾರೆ ಮತ್ತು ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದಾರೆ. ಡಾ. ನಂಜುಂಡಸ್ವಾಮಿ ಅವರು ಆಧುನಿಕ ಸಂಶೋಧನೆಗಳ ಆಧಾರದ ಮೇಲೆ ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದಾರೆ:

ಮಡಿವಾಳ ಮಾಚಿದೇವ: ಕವಿಚರಿತೆಕಾರರಿಗೆ ಮಾಚಿದೇವರ ವಚನಗಳು ಮತ್ತು ಅಂಕಿತ ಗೊತ್ತಿರಲಿಲ್ಲ. ಡಾ. ನಂಜುಂಡಸ್ವಾಮಿ ಅವರು "ಕಲಿದೇವರದೇವ" ಎಂಬುದು ಮಡಿವಾಳ ಮಾಚಿದೇವರ ಅಂಕಿತ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಜೇಡರ ದಾಸಿಮಯ್ಯ: ಕವಿಚರಿತೆಯಲ್ಲಿ ಇವರ ಕಾಲವನ್ನು ಕ್ರಿ.ಶ. ೧೦೪೦ ಎಂದು ಊಹಿಸಲಾಗಿತ್ತು. ಆದರೆ ಇದನ್ನು ಕ್ರಿ.ಶ. ೧೧೩೦ ಎಂದು ಪರಿಷ್ಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಮಲ್ಲಿಕಾರ್ಜುನ ಪಂಡಿತಾರಾಧ್ಯ: ಇವರ ಕಾಲ ಕ್ರಿ.ಶ. ೧೨೩೦ ಆಗಿದ್ದು, ಇವರ ಅಂಕಿತ "ಅಮರಗೊಂಡ ಮಲ್ಲಿಕಾರ್ಜುನ" ಎಂದು ಗುರುತಿಸಿದ್ದಾರೆ.

೨. ಹೊಸ ವಚನಾಂಕಿತಗಳ ಶೋಧನೆ

ಕಟ್ಟಿಗೆಹಳ್ಳಿ ಸಿದ್ದಲಿಂಗ ಸ್ವಾಮಿಗಳು ಸಂಕಲಿಸಿದ 'ಏಕೋತ್ತರಶತಸ್ಥಲ ಸಾರಾಮೃತ' ಕೃತಿಯ ಹಸ್ತಪ್ರತಿಯನ್ನು ಅಧ್ಯಯನ ಮಾಡುವಾಗ, ಡಾ. ನಂಜುಂಡಸ್ವಾಮಿ ಈ ಸಂಕಲನದಲ್ಲಿ "ಹಂಪೆಯ ವಿರುಪ" ಮತ್ತು "ಹುಲಿಗೆರೆಯ ವರದ ಸೋಮನಾಥ" ಎಂಬ ಎರಡು ಹೊಸ ವಚನಾಂಕಿತಗಳು ಇರುವುದನ್ನು ಶೋಧಿಸಿದ್ದಾರೆ.

"ಹಂಪೆಯ ವಿರುಪ": ಈ ಅಂಕಿತದಲ್ಲಿರುವ ಎರಡು ವಚನಗಳು ಟೀಕಾ ಸಮೇತ ಲಭ್ಯವಾಗಿವೆ. ಹಂಪಿಯ ವಿರೂಪಾಕ್ಷನ ಭಕ್ತನೊಬ್ಬ ಈ ಅಂಕಿತದಲ್ಲಿ ವಚನ ರಚನೆ ಮಾಡಿರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

"ಹುಲಿಗೆರೆಯ ವರದ ಸೋಮನಾಥ": ಈ ಅಂಕಿತದ ಒಂದು ವಚನ ದೊರೆತಿದ್ದು, ಇದು ಮಹಾಲಿಂಗದೇವ, ಕುಮಾರ ಬಂಕನಾಥ ಅಥವಾ ಜಕ್ಕಣಾರ್ಯ- ಇವರಲ್ಲಿ ಒಬ್ಬರ ಅಂಕಿತವಾಗಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

೩. 'ಅಮರಗೊಂಡದ ಮಲ್ಲಿಕಾರ್ಜುನ' ಅಂಕಿತದ ಗೊಂದಲ ನಿವಾರಣೆ

ಡಾ. ಎಂ.ಎಂ. ಕಲಬುರ್ಗಿ ಅವರು 'ಅಮರಗೊಂಡದ ಮಲ್ಲಿಕಾರ್ಜುನ ತಂದೆ'ಗಳ ಅಂಕಿತ 'ಮಾಗುಡದ ಮಲ್ಲಿಕಾರ್ಜುನ' ಎಂದು ಶೋಧಿಸಿದ್ದರು ಮತ್ತು 'ಅಮರಗುಂಡದ ಮಲ್ಲಿಕಾರ್ಜುನ' ಎಂಬುದು ಪುರದ ನಾಗಣ್ಣನ ಅಂಕಿತ ಎಂದು ಹೇಳಿದ್ದರು. ಡಾ. ನಂಜುಂಡಸ್ವಾಮಿ ಅವರು ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ:

ತುಮಕೂರು ಜಿಲ್ಲೆಯ ಗುಬ್ಬಿ (ಅಮರಗೊಂಡ) ತಾಲೂಕಿನ ನಿಟ್ಟೂರು ಪಕ್ಕದ ಪುರಗ್ರಾಮದವನಾದ ಪುರದ ನಾಗಣ್ಣ ತನ್ನ ಗುರುವಿನ (ಅಮರಗೊಂಡ ಮಲ್ಲಿಕಾರ್ಜುನ) ಮೇಲಿನ ಅಪಾರ ಭಕ್ತಿಯಿಂದ "ಅಮರಗೊಂಡದ ಮಲ್ಲಿಕಾರ್ಜುನ" ಎಂಬ ಹೆಸರನ್ನೇ ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡಿದ್ದಾನೆ.ಪುರದ ನಾಗಣ್ಣನ ಮಗನಿರಬಹುದಾದ "ಪುರದ ಮಲ್ಲಯ್ಯ" ಎಂಬಾತನ ಒಂದೇ ಒಂದು ವಚನ ಲಭ್ಯವಿದ್ದು, ಆತ ತನ್ನ ಹೆಸರನ್ನೇ ಅಂಕಿತವಾಗಿ ಬಳಸಿಕೊಂಡಿದ್ದಾನೆ ಎನ್ನುವುದನ್ನು ಅವರು ಶೋಧಿಸಿದ್ದಾರೆ (ಅಂಕಿತ: ಪುರದ ಮಲ್ಲಯ್ಯಾ). "ಅಮರಗೊಂಡದ ಮಲ್ಲಿಕಾರ್ಜುನ" ಅಂಕಿತವಚನಗಳಲ್ಲಿ ಬಸವಾದಿ ಪ್ರಮಥರ ೨೭ ಶರಣರ ಉಲ್ಲೇಖವನ್ನು ಗಮನಿಸಿ, ಅಂದಿನ ವಚನ ಸಾಹಿತ್ಯದ ವ್ಯಾಪ್ತಿಯನ್ನು ತೋರಿಸಿದ್ದಾರೆ. . `ಲಿಂಗಸಾವಧಾನ ವಚನಗಳು', 'ನಿರಾಲಂಬ ಪ್ರಭುದೇವರ ವಚನಗಳು', 'ಕಂಡಿತದ ವಚನಗಳು' ಮುಂತಾದ ಅಜ್ಞಾತ ಹಾಗೂ ಅಪರೂಪದ ವಚನ ಗುಚ್ಛಗಳನ್ನು ಶೋಧಿಸಿ, ವಚನ ಸಂಪುಟಗಳಲ್ಲಿ ಅಳವಡಿಸಿದ ಅವರ ಶೈಕ್ಷಣಿಕ ಶಿಸ್ತು ಇಲ್ಲಿ ಅನಾವರಣಗೊಂಡಿದೆ.

೪. ಆಧುನಿಕ ಆದ್ಯ ವಚನಕಾರನ ಅಂಕಿತದ ಗುರುತಿಸುವಿಕೆ

ಆಧುನಿಕ ವಚನ ರಚನೆಯ ಇತಿಹಾಸವನ್ನು ಕೆದಕಿದ ಅವರು, ಹರ್ಡೆಕರ್ ಮಂಜಪ್ಪನವರ (೧೯೩೨) 'ಪ್ರಭುದೇವ' ಅಂಕಿತದ ವಚನಗಳಿಗಿಂತ ಮುಂಚೆಯೇ ವಚನಗಳು ರಚನೆಯಾಗಿದ್ದನ್ನು ಪತ್ತೆ ಹಚ್ಚಿದ್ದಾರೆ.೧೯೨೫ರಲ್ಲಿಯೇ ಬೆಂಗಳೂರಿನಲ್ಲಿದ್ದ ಜೀರಿಗೆ ಬಸವಲಿಂಗಪ್ಪನವರು ಬಸವಣ್ಣನವರ ಗುಣಗಾನ ಮಾಡುವ ೫ ವಚನಗಳನ್ನು ರಚಿಸಿದ್ದರು. ಇವರು ಬಳಸಿದ ಅಂಕಿತ "ಶಿವಶಂಕರ". ಹೀಗಾಗಿ ಇವರೇ ಆಧುನಿಕ ಆದ್ಯ ವಚನಕಾರರು ಎಂದು ಸಾಧಾರವಾಗಿ ಮಂಡಿಸಿದ್ದಾರೆ.

   ವಚನ ಸಾಹಿತ್ಯ ಪ್ರಕಟಣೆಯ ಇತಿಹಾಸವನ್ನು ಮೊದಲ ಹೆಜ್ಜೆಯಿಂದ ದಾಖಲಿಸುವ ಅವರ ಪ್ರಯತ್ನ ಶ್ಲಾಘನೀಯ. ೧೮೮೨ರ 'ಅಖಂಡೇಶ್ವರ ವಚನ'ದಿಂದ ಪ್ರಾರಂಭಿಸಿ ಫ.ಗು. ಹಳಕಟ್ಟಿ, ಪ್ರೊ. ಶಿ.ಶಿ. ಬಸವನಾಳ, ಡಾ. ಆರ್.ಸಿ. ಹಿರೇಮಠ, ಎಸ್. ಶಿವಣ್ಣ ಅವರಿಂದ ಹಿಡಿದು ಸಮಗ್ರ ವಚನ ಸಂಪುಟಗಳವರೆಗೆ ಯಾರು, ಯಾವಾಗ, ಯಾವ ಹಸ್ತಪ್ರತಿಗಳ ಆಧಾರದ ಮೇಲೆ ಕೃತಿಗಳನ್ನು ಸಂಪಾದಿಸಿದರು ಎಂಬ ನಿಖರವಾದ 'ಗ್ರಂಥ ಸಂಪಾದನಾ ಇತಿಹಾಸ'ವನ್ನು ಅವರು ಒದಗಿಸಿದ್ದಾರೆ.

    ಡಾ. ನಂಜುಂಡಸ್ವಾಮಿ ಅವರ ಸಂಶೋಧನೆಯು ವಚನಕಾರರ ಹೆಸರುಗಳು, ಅವರ ಕಾಲಘಟ್ಟ ಮತ್ತು ಅವರು ಬಳಸಿದ ಅಂಕಿತಗಳ ಹಿಂದಿನ ಸಾಂಸ್ಕೃತಿಕ ಹಾಗೂ ಭೌಗೋಳಿಕ ಹಿನ್ನೆಲೆಗಳನ್ನು ಅತ್ಯಂತ ಕರಾರುವಕ್ಕಾಗಿ ಬಿಡಿಸಿಡುತ್ತದೆ. ಇವರ ಸಂಶೋಧನಾ ಲೇಖನಗಳು ಕೇವಲ ಮಾಹಿತಿಯ ಸಂಗ್ರಹವಲ್ಲ, ಬದಲಾಗಿ ಅವು ಕನ್ನಡ ಸಾಹಿತ್ಯ, ಶಾಸನಶಾಸ್ತ್ರ, ಹಸ್ತಪ್ರತಿಶಾಸ್ತ್ರ ಮತ್ತು ಸಾಂಸ್ಕೃತಿಕ ಇತಿಹಾಸದ ಆಳವಾದ ಹುಡುಕಾಟದ ಪ್ರತಿರೂಪಗಳಾಗಿವೆ.

    ಇವರ ಕೆಲವು ಲೇಖನಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ದಾಖಲೀಕರಣ ಮತ್ತು 'ಉಪ-ಇತಿಹಾಸಮತ್ತು ʻಅಲಕ್ಷಿತ  ಸಂಸ್ಕೃತಿಯ' ಪುನರ್ನಿರ್ಮಾಣದ ಪ್ರತೀಕವಾಗಿವೆ. ನಂಜುಂಡಸ್ವಾಮಿಯವರ ಪ್ರಮುಖ ವಿಶೇಷತೆಯೆಂದರೆ, ಅವರು ಪ್ರಮುಖ ಅರಸುಮನೆತನಗಳ ಇತಿಹಾಸದ 'ಮೇಲ್ಮೈ' (ವಿಜಯನಗರ, ಮೈಸೂರು ಸಾಮ್ರಾಜ್ಯ) ಯನ್ನು ಮಾತ್ರ ಅಧ್ಯಯನ ಮಾಡದೆ, ಆ ಸಾಮ್ರಾಜ್ಯಗಳ ʻನೆರಳಿನಲ್ಲಿ' ಉಳಿದುಹೋದ ಪಾಳೆಯಪಟ್ಟುಗಳು, ಸಣ್ಣ ಮಠಗಳು, ಮತ್ತು ಸ್ಥಳೀಯ ಮನೆತನಗಳ ಇತಿಹಾಸವನ್ನು ಬೆಳಕಿಗೆ ತರುತ್ತಾರೆ.

ಇಲ್ಲಿ ದೊಡ್ಡ ರಾಜರುಗಳೇ ಇತಿಹಾಸದ ನಾಯಕರಲ್ಲ; ಬದಲಾಗಿ, ಒಂದು ಸಣ್ಣ ಪ್ರದೇಶದ (ಗುಬ್ಬಿ/ಗೂಳೂರು, ಬಿಜ್ಜಾವರ, ಕೋರಾ) ಜನ, ಅವರ ಭಕ್ತಿ ಪರಂಪರೆ, ಮತ್ತು ಸ್ಥಳೀಯ ಅಧಿಕಾರಿಗಳು (ಹೊನ್ನಪ್ಪಗೌಡ, ಕೆಂಪೇಗೌಡ) ಹೇಗೆ ಇತಿಹಾಸವನ್ನು ರೂಪಿಸಿದ್ದಾರೆಂಬುದನ್ನು ಅವರು ತೋರಿಸುತ್ತಾರೆ. ಪ್ರಧಾನಿ ಚನ್ನಪ್ಪಯ್ಯನ ಪತ್ರ ಒಂದು ಸಾಮ್ರಾಜ್ಯದ ಆದೇಶವಾಗಿದ್ದರೂ, ಅದು ಸ್ಥಳೀಯ 'ಪಾಳೆಯಗಾರ'ನ ಜವಾಬ್ದಾರಿ ಮತ್ತು ಸಾಂಸ್ಕೃತಿಕ ಪ್ರತಿಷ್ಠೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಅನಾವರಣಗೊಳಿಸುತ್ತಾರೆ. ಒಂದು ಸಣ್ಣ ಪತ್ರವನ್ನು (ಚನ್ನಪ್ಪಯ್ಯನ ಪತ್ರ) ಆಧರಿಸಿ, ಒಂದು ದೊಡ್ಡ ಸಾಮ್ರಾಜ್ಯದ ಆಡಳಿತ ಕಾರ್ಯವಿಧಾನ, ಧಾರ್ಮಿಕ ಕಾರ್ಯತಂತ್ರ, ಮತ್ತು ಸ್ಥಳೀಯ ಆರ್ಥಿಕ/ಸಾಂಸ್ಕೃತಿಕ ಜಾಲವನ್ನು ಪುನರ್ನಿರ್ಮಿಸುತ್ತಾರೆ. ಸಂಸ್ಥೆಗಳ ಇತಿಹಾಸ ಮತ್ತು ಅಜ್ಞಾತವಾಗಿ ಉಳಿದಿದ್ದ ಐತಿಹಾಸಿಕ ವ್ಯಕ್ತಿಗಳ ಕೊಡುಗೆಗಳನ್ನು ಮುನ್ನೆಲೆಗೆ ತರುವಲ್ಲಿ  ಇವರ ಬರಹಗಳು ಯಶಸ್ವಿಯಾಗಿವೆ.

   ರಾಜಕೀಯ ಇತಿಹಾಸದ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಶಾಸನಗಳ ಮೂಲಕ ಕಟ್ಟಿಕೊಟ್ಟಿರುವ ರೀತಿ ಅನನ್ಯವಾಗಿದೆ. ಸ್ಥಳೀಯ ಇತಿಹಾಸ ಮತ್ತು ಪಾಳೆಯಗಾರರ ಆಡಳಿತದ ಬಗ್ಗೆ ಬೆಳಕು ಚೆಲ್ಲಲು ಲೇಖಕರು ಕೇವಲ ಕೈಫಿಯತ್ತುಗಳನ್ನು ಅವಲಂಬಿಸದೆ, ತಾಮ್ರಶಾಸನ ಮತ್ತು ಉಬ್ಬುಶಿಲ್ಪಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಶಿರಾ ತಾಲೂಕಿನ ಮುದಿಗೆರೆಯ ಆಂಜನೇಯ ವಿಗ್ರಹದ ಶಾಸನ, ಶಿಲ್ಪ, ಐತಿಹಾಸಿಕ ಸಂದರ್ಭಗಳ ಸಮಗ್ರ ಅಧ್ಯಯನವು ಇತಿಹಾಸ, ಪುರಾತತ್ವ, ಶಾಸನಶಾಸ್ತ್ರ, ಸಾಹಿತ್ಯ ವಿಮರ್ಶೆಗಳ ಸಮನ್ವಯವಾಗಿದೆ. ಮುದಿಗೆರೆಯಲ್ಲಿನ ೧೮ ಅಡಿ ಎತ್ತರದ ಆಂಜನೇಯನ ವಿಗ್ರಹದಲ್ಲಿ ಕೆತ್ತಲಾದ ರಾಮಾಯಣದ ಉಬ್ಬುಶಿಲ್ಪಗಳ ವಿವರಣೆ ಮತ್ತು ಶಾಸನದ ವಿಶ್ಲೇಷಣೆ ವಿಶಿಷ್ಟವಾಗಿದೆ.  ಮುದಿಗೆರೆಯ ಬೃಹತ್ ಆಂಜನೇಯ ವಿಗ್ರಹದ ಮೇಲಿನ ೧೬೭೯ರ ಶಾಸನವನ್ನು ಆಧರಿಸಿ, ಆ ಶಿಲ್ಪದ ಐತಿಹಾಸಿಕ ಹಿನ್ನೆಲೆಯನ್ನು ಮತ್ತು ಅದರಲ್ಲಿ ಅಡಗಿರುವ ರಾಮಾಯಣದ ಉಬ್ಬುಶಿಲ್ಪಗಳ ಕಥಾನಕವನ್ನು ಬಿಡಿಸಿಟ್ಟಿದ್ದಾರೆ. ಮುದಿಗೆರೆಯಲ್ಲಿರುವ ೧೮ ಅಡಿ ಎತ್ತರದ ಆಂಜನೇಯ ಮೂರ್ತಿಯ ಮೇಲಿನ ಶಾಸನವನ್ನು ಓದಿ, ಅದು ೧೬೭೯ರಲ್ಲಿ ಲಖ್ಯೆ ನಾಯಕನಿಂದ ಪ್ರತಿಷ್ಠಾಪಿತವಾದದ್ದು ಎಂದು ತಿಳಿಸಿದ್ದಾರೆ.

  ಪಾಳೆಯಗಾರರ ದಾನಶಾಸನಗಳು: ಬಿಜ್ಜಾವರ, ಬುಕ್ಕಾಪಟ್ಟಣ, ಮತ್ತು ಹರತಿ ಪಾಳೆಯಗಾರರು ಕೂಡ್ಲಿ ಶೃಂಗೇರಿ ಶಂಕರಮಠಕ್ಕೆ ನೀಡಿದ ದಾನಶಾಸನಗಳ ಅಧ್ಯಯನವು ಅಂದಿನ ಸಮಾಜದಲ್ಲಿದ್ದ ಧಾರ್ಮಿಕ ಸಾಮರಸ್ಯ (ವೀರಶೈವ ಮತ್ತು ಅದ್ವೈತ ಪರಂಪರೆಗಳ ನಡುವಿನ ಸಂಬಂಧ) ಮತ್ತು ಆಡಳಿತ ವ್ಯವಸ್ಥೆಯ ನಿಕಟ ಚಿತ್ರಣವನ್ನು ಒದಗಿಸುತ್ತದೆ.

ಹರತಿ ಪಾಳೆಯಗಾರರ ಜೈನ ತಾಮ್ರಶಾಸನ ಧಾರ್ಮಿಕ ಸಾಮರಸ್ಯದ ದ್ಯೋತಕವಾಗಿ ಪರಿಶೀಲಿಸಿದ್ದಾರೆ.

ಮಧ್ಯಕಾಲೀನ ಕರ್ನಾಟಕದ ಪಾಳೆಯಗಾರರು ಕೇವಲ ಅಧಿಕಾರಶಾಹಿಗಳಾಗಿರದೆ, ಸರ್ವಧರ್ಮ ಸಮನ್ವಯದ ಹರಿಕಾರರಾಗಿದ್ದರು ಎಂಬುದಕ್ಕೆ ಈ ಶಾಸನ ಬಹುದೊಡ್ಡ ಸಾಕ್ಷಿಯಾಗಿದೆ. ಕ್ರಿ.. ೧೬೮೦ರ (ಶಾಲಿವಾಹನ ಶಕ ೧೬೦೨) ಶಾಸನವು ಆಂಧ್ರಪ್ರದೇಶದ ಗಡಿಯಲ್ಲಿರುವ ರತ್ನಗಿರಿಯ ಜಿನೇಶ್ವರ ಸ್ವಾಮಿ ಬಸ್ತಿಗೆ, ಹಿಂದೂ/ವೀರಶೈವ ಹಿನ್ನೆಲೆಯ 'ಹರತಿ ಸಂಮೇಟ ರಂಗಪ್ಪರಾಜರ' ವಂಶಸ್ಥರು ನೀಡಿದ ದಾನವನ್ನು ದಾಖಲಿಸುತ್ತದೆ. ಇದು ಅಂದಿನ ಕಾಲದ ಮಠಾಧೀಶರ (ಲಕ್ಷ್ಮೀಸೇನ ಭಟ್ಟಾರಕರು, ಕೊಲ್ಲಾಪುರ ಜೈನ ಮಠ) ಪ್ರಭಾವ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ. ಧಾರ್ಮಿಕ ಸಾಮರಸ್ಯದ ದಾಖಲೀಕರಣ: ಹರತಿ ಪಾಳೆಯಗಾರರು ಕೊಲ್ಲಾಪುರದ ಜೈನ ಭಟ್ಟಾರಕರಿಗೆ ರತ್ನಗಿರಿ ಬಸ್ತಿಯ ಜೀರ್ಣೋದ್ಧಾರಕ್ಕಾಗಿ ನೀಡಿದ ತಾಮ್ರಶಾಸನದ (ಕ್ರಿ.ಶ. ೧೬೮೦) ವಿಶ್ಲೇಷಣೆಯು ಅಂದಿನ ಕಾಲದ ಮಠಮಾನ್ಯಗಳ ಪ್ರಭಾವ ಹಾಗೂ ಧಾರ್ಮಿಕ ಸಹಿಷ್ಣುತೆಯನ್ನು ದೃಢಪಡಿಸುತ್ತದೆ.

.: ಹುಣಸಿನಾಳ ದೊರೆಗಳ ಶಾಸನಗಳಲ್ಲಿ ಶ್ರಮಿಕ ವರ್ಗದ ದಾಖಲೀಕರಣ ಇರುವುದನ್ನು ಪ್ರಸ್ತಾಪಿಸಿದ್ದಾರೆ.

ಸಾಮಾನ್ಯವಾಗಿ ಶಾಸನಗಳು ರಾಜ-ಮಹಾರಾಜರನ್ನು ಮಾತ್ರ ವೈಭವೀಕರಿಸುತ್ತವೆ ಎಂಬ ಅಪವಾದವಿದೆ. ಆದರೆ ತುಮಕೂರು ಜಿಲ್ಲೆಯ ಹೆಲ್ಲೂರು ಗ್ರಾಮದ ಶಾಸನವು ಇದಕ್ಕೆ ಅಪವಾದವಾಗಿದೆ. ಶ್ರಮಿಕ ವರ್ಗದ ಚರಿತ್ರೆ ಒಳಗೊಂಡಿದೆ. ಹೆಲ್ಲೂರು ಶಾಸನದಲ್ಲಿ ಕ್ರಿ.. ೧೭೧೯ರ (ಶಾ.. ೧೬೪೧) 'ದೇವಾಂಬುಧಿ ಕೆರೆ' ನಿರ್ಮಿಸಿದ ಕಲ್ಲುವಡ್ಡರ, ಮಣ್ಣುವಡ್ಡರ ಸಮುದಾಯದ ಶ್ರಮಿಕರ ಹೆಸರುಗಳನ್ನು ಗುರುತಿಸಿರುವುದನ್ನು ಗಮನಿಸಿದ್ದಾರೆ.

ಈ ಶಾಸನವು 'ದೇವಾಂಬುಧಿ ಕೆರೆ'ಯನ್ನು ಕಟ್ಟಿಸಿದ ವಿವರವನ್ನು ನೀಡುತ್ತದೆ. ಕೇವಲ ದೊರೆ ದೊಡ್ಡಯ್ಯನವರ ಉಲ್ಲೇಖವಷ್ಟೇ ಅಲ್ಲದೆ, ಕೆರೆ ಕೆಲಸ ಮಾಡಿದ ಗಂಟೇಮದನ, ಕಲ್ಲುವಡ್ಡರ ಚೆನ್ನೇಬೋಯಿ, ಮಣ್ಣುವಡ್ಡರ ಸಿದ್ದೇಬೋಯಿ, ದಾಸೇಬೋಯಿ ಮುಂತಾದ ಶ್ರಮಿಕರ ಮತ್ತು ವಡ್ಡರ ಸಮುದಾಯದ ಹೆಸರುಗಳನ್ನು ಶಾಸನದಲ್ಲಿ ಕೆತ್ತಿಸಿರುವುದು ಅಧೀನ ವರ್ಗದ ಇತಿಹಾಸದ (Subaltern History) ದೃಷ್ಟಿಯಿಂದ ಅತ್ಯಂತ ಮೌಲಿಕವಾದದ್ದಾಗಿದೆ.

   ಹುಣಸಿನಾಳದ ನಂಜರಾಜ ವಡೆಯರ ಮೊಮ್ಮಗ ಮತ್ತು ದೇವಾಂಜಮ್ಮನವರ ಪುತ್ರನಾದ ಕುಮಾರ ದೊಡ್ಡಪ್ಪ ಅವರು "ದೇವಾಂಬುಧಿ ಕೆರೆ"ಯನ್ನು ಕಟ್ಟಿಸಿದರು. ಈ ಕೆರೆಯ ಪ್ರಮುಖ ಉದ್ದೇಶವು ವ್ಯವಸಾಯಕ್ಕಲ್ಲ, ಬದಲಾಗಿ ಪಶು-ಪಕ್ಷಿ-ಪ್ರಾಣಿಗಳು ನೀರು ಕುಡಿಯಲು ಎಂಬುದು ಈ ಶಾಸನದ ವಿಶೇಷತೆಯಾಗಿದೆ.ಎರಡನೇ ಶಾಸನ : ಇದೇ ಮನೆತನದವರು ನಿರ್ಮಿಸಿದ "ಹೊನ್ನಾದೇವಿ ಮಂಟಪ"ದ ಪ್ರಸ್ತಾಪವಿದೆ.ಈ ದಾಖಲೆಯು ಹಿಂದಿನ ಕಾಲದಲ್ಲಿ ಗುಬ್ಬಚ್ಚಿಗಳಿಗೆ ನೀರು ಹಾಕುವ (ಗುಬ್ಬಚ್ಚಿ ಕಲ್ಯಾಣಿ) ಪದ್ಧತಿಯನ್ನು ಉದಾಹರಿಸುವ ಮೂಲಕ, ಆ ಅರಸರ ಪಶುಪಕ್ಷಿಗಳ ಮೇಲಿನ ಪ್ರೀತಿ ಮತ್ತು ಪಶು-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ ವಿಷಯವು ಅಂದಿನ ಸಮಾಜದ ಪರಿಸರ ಕಾಳಜಿಯನ್ನು ಪ್ರತಿಫಲಿಸುತ್ತದೆ.

ಮುಮ್ಮಡಿ ಕೃಷ್ಣರಾಜ ಒಡೆಯರು (ಕ್ರಿ.ಶ. ೧೮೪೬) ಕಾಶಿ ಜಂಗಮವಾಡಿ ಮಠಕ್ಕೆ ಒಂದು ತಾಮ್ರ ಶಾಸನವನ್ನು ನೀಡಿದರು.ಈ ಶಾಸನದ ಪ್ರಕಾರ, ಮಠದಲ್ಲಿ ಪ್ರತಿನಿತ್ಯ ೧೨ ಜಂಗಮರಿಗೆ ಗಣಾರಾಧನೆ (ಊಟದ ವ್ಯವಸ್ಥೆ) ನಡೆಯಲು ವರ್ಷಕ್ಕೆ ೬೦೦ ರೂಪಾಯಿಗಳ ದತ್ತಿಯನ್ನು ಏರ್ಪಡಿಸಲಾಯಿತು.ಈ ಶಾಸನವು ಒಡೆಯರ ಧರ್ಮಪ್ರಭುತ್ವ ಮತ್ತು ಮಠಗಳಿಗೆ ನೀಡಿದ ಪ್ರೋತ್ಸಾಹವನ್ನು ಸಾರುತ್ತದೆ.

. ಸ್ಥಳನಾಮ ಮತ್ತು ವಾಸ್ತುಶಿಲ್ಪ: ಗೂಳೂರು (ಕ್ರೀಡಾಪುರಿ), ಬುಕ್ಕಾಪಟ್ಟಣ, ಬಿಜ್ಜಾವರ, ಮತ್ತು ಗುಬ್ಬಿ ಹೊಸಹಳ್ಳಿ ಪಾಳೆಯಗಾರರ ಆಡಳಿತಾತ್ಮಕ ಪಲ್ಲಟಗಳನ್ನು ಕೈಫಿಯತ್ತು, ಶಾಸನ ಮತ್ತು ವಾಸ್ತುಶಿಲ್ಪಗಳ (ಉದಾ: ದೇವಾಲಯದ ಕಂಬಗಳ ಮೇಲಿನ ಉಬ್ಬುಶಿಲ್ಪಗಳು) ಹಿನ್ನೆಲೆಯಲ್ಲಿ ಸಮಗ್ರವಾಗಿ ವಿಶ್ಲೇಷಿಸಿದ್ದಾರೆ. ಗೂಳೂರು (ಕ್ರೀಡಾಪುರಿ) ಹಾಗೂ ಬೀರನಕಲ್ಲು ಬೆಟ್ಟದ ದೇವಾಲಯಗಳ ವಾಸ್ತುಶಿಲ್ಪ, ಕಂಬಗಳಲ್ಲಿನ ಶಿಲ್ಪಗಳ ವಿವರಣೆಗಳು ಸ್ಥಳೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೆರೆದಿಡುತ್ತವೆ.

    ಅವರು ದೇವಾಲಯಗಳಲ್ಲಿನ ಕಂಭಗಳ ಕೆತ್ತನೆಗಳನ್ನು (ಮದನಿಕೆಯರು, ಸ್ತ್ರೀ-ಪುರುಷ ಯುಗಳ ಚಿತ್ರಗಳು, ಲಿಂಗ-ಬಸವ ಚಿತ್ರಗಳು) ಕೇವಲ ಅಲಂಕಾರವಾಗಿ ಕಾಣದೆ, ಅವುಗಳನ್ನು 'ಸಾಮಾಜಿಕ ದಾಖಲೆ' ಎಂದು ಪರಿಗಣಿಸುತ್ತಾರೆ. ಗೂಳೂರಿನ ಗಣಪತಿ ಬಾಗಿಲುವಾಡದಲ್ಲಿ ಕಂಡುಬರುವ 'ಮೀಸೆಯ ರಾಜ', 'ನೃತ್ಯಗಾತಿ', 'ಕಾಮಧೇನು' ಮುಂತಾದ ಸಮಕಾಲೀನ ಜೀವನದ ಪ್ರತಿಬಿಂಬಗಳನ್ನು ಅವರು ವಿಶ್ಲೇಷಿಸುತ್ತಾರೆ. ಇದು "ಸ್ಮಾರಕವು (Monument) ತನ್ನನ್ನು ತಾನೇ ಹೇಳಿಕೊಳ್ಳುವ ನಿರ್ವಿವಾದ ಇತಿಹಾಸ" ಎಂಬ ಅವರ ವಿಶ್ವಾಸವನ್ನು ತೋರಿಸುತ್ತದೆ. ಅಂದರೆ, ಶಿಲ್ಪಿಗಳು ತಮ್ಮ ಕಾಲದ ಸಾಮಾಜಿಕ ಶ್ರೇಣಿಕರಣ,  ವಿನ್ಯಾಸ, ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಕಲ್ಲಿನಲ್ಲಿ ಮುದ್ರಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಶಿಲ್ಪಕಲೆಯ ಸಾಂಕೇತಿಕ ಸಂವಾದವನ್ನು ಇದು ಪ್ರತಿನಿಧಿಸುತ್ತದೆ.

ಸ್ಥಳನಾಮಗಳ ಚರಿತ್ರೆ: ಕ್ರೀಡಾಪುರಿಯ ಅರಸರು ಕಾವಲುಗಾರರಿಗೆ ಮತ್ತು ಡಂಗುರ ಬಾರಿಸುವವರಿಗೆ ನೀಡಿದ 'ಟುಂಕಿಹಳ್ಳಿ'ಯೇ ಕಾಲಕ್ರಮೇಣ 'ತುಮಕೂರು' ಆಯಿತು ಎಂಬ ಐತಿಹಾಸಿಕ ನಿರೂಪಣೆಯು ಸ್ಥಳನಾಮಗಳ ಅಧ್ಯಯನಕ್ಕೆ ಹೊಸ ಆಯಾಮವನ್ನು ಒದಗಿಸುತ್ತದೆ. ತುಮಕೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಸಾಂಸ್ಕೃತಿಕ ಬದುಕಿನ ಅಧ್ಯಯನವು ಸ್ಥಳೀಯ ಇತಿಹಾಸ, ಪರಂಪರೆಗಳ ದಾಖಲೀಕರಣವಾಗಿದ್ದು ಭೌಗೋಳಿಕ-ಸಾಂಸ್ಕೃತಿಕ ಪರಿಧಿಯ ಪ್ರತೀಕವಾಗಿದೆ.

ಗುಬ್ಬಿ ಹೊಸಹಳ್ಳಿ ಕೈಫಿಯತ್ತು: ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಿಂದ ಹಿಡಿದು ಹೈದರಾಲಿ, ಟಿಪ್ಪು ಸುಲ್ತಾನ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರ ಕಾಲದವರೆಗೆ ಗುಬ್ಬಿ ಪಾಳೆಯಗಾರರ ಆಡಳಿತಾತ್ಮಕ ಪಲ್ಲಟಗಳನ್ನು ಕೈಫಿಯತ್ತು ಮತ್ತು ಪತ್ರಗಳ ಮೂಲಕ ಕಟ್ಟಿಕೊಟ್ಟಿರುವುದು ವಿಶೇಷವಾಗಿದೆ.

    ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ, ಸಂಸ್ಕೃತ, ಹಳಗನ್ನಡ, ಛಂದಸ್ಸು, ವ್ಯಾಕರಣಗಳ ಅಧ್ಯಯನ-ಅಧ್ಯಾಪನದ ಕೇಂದ್ರಗಳಾಗಿದ್ದವು ಎಂಬುದನ್ನು ದಾಖಲೆಗಳ ಸಹಿತ ನಿರೂಪಿಸಿದ್ದಾರೆ. ವಿಜಯನಗರ ಕಾಲದ ವಾಸ್ತುಶಿಲ್ಪದಿಂದ ಹಿಡಿದು, ಆಧುನಿಕ ಕಾಲದ ಅನ್ನ-ಜ್ಞಾನ ದಾಸೋಹದವರೆಗಿನ ಪರಂಪರೆಯನ್ನು ಶಾಸನ ಹಾಗೂ ಹಸ್ತಪ್ರತಿಗಳ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

   ಕೇವಲ ಪ್ರಾಚೀನ ಓಲೆಗರಿಗಳು ಮತ್ತು ಶಾಸನಗಳಷ್ಟೇ ಅಲ್ಲದೆ, ಆಕರಗಳನ್ನು ಆಧುನಿಕ ಜಗತ್ತಿಗೆ ಪರಿಚಯಿಸಿದ ಈ ವಿದ್ವಾಂಸರ ಬೌದ್ಧಿಕ ಶ್ರಮವನ್ನು ದಾಖಲಿಸುವುದು 'ಗ್ರಂಥ ಸಂಪಾದನಾ ಚರಿತ್ರೆ' ಬಹುದೊಡ್ಡ ಭಾಗವಾಗಿದೆ. ಮಠಮಾನ್ಯಗಳ ಕತ್ತಲ ಕೋಣೆಯಲ್ಲಿದ್ದ ಹಸ್ತಪ್ರತಿಗಳನ್ನು ವಿಶ್ವವಿದ್ಯಾಲಯಗಳ ಅಂಗಳಕ್ಕೆ ತಂದು, ದೇಸಿ ಸಾಹಿತ್ಯಕ್ಕೆ ಶಾಸ್ತ್ರೀಯ ಚೌಕಟ್ಟನ್ನು ಒದಗಿಸಿದ ಈ ಆಧುನಿಕ ಸಂಶೋಧಕರ ವ್ಯಕ್ತಿಚಿತ್ರಣಗಳನ್ನು ಶೈಕ್ಷಣಿಕ ನೆಲೆಗಳಲ್ಲಿ ವಿಶ್ಲೇಷಿಸಿದ್ದಾರೆ.

    ಸೃಜನಶೀಲತೆ ಮತ್ತು ಸಾಂಸ್ಥಿಕ ಕಟ್ಟುವಿಕೆಯ ಪ್ರತೀಕವಾಗಿ  ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಕುರಿತಾದ ಲೇಖನವು ಕೇವಲ ಒಂದು ಸ್ಮರಣೆಯಾಗಿರದೆ, ಶರಣ ಸಾಹಿತ್ಯವು ಜನಸಾಮಾನ್ಯರನ್ನು ತಲುಪಿದ ಬಗೆಯನ್ನು ದಾಖಲಿಸುತ್ತದೆ.'ಕರ್ತಾರನ ಕಮ್ಮಟ' ಮತ್ತು 'ಕದಳಿಯ ಕರ್ಪೂರ'ದಂತಹ ಕಾದಂಬರಿಗಳ ಮೂಲಕ ಅವರು ವಚನ ಸಾಹಿತ್ಯದ ತಾತ್ವಿಕತೆಯನ್ನು ಐತಿಹಾಸಿಕ ಕಾದಂಬರಿಯ ರೂಪದಲ್ಲಿ ಕಟ್ಟಿಕೊಟ್ಟರು. ಒಣ ಶಾಸ್ತ್ರೀಯತೆಯಿಂದ ಹೊರಬಂದು, ಶರಣರ ಜೀವನವನ್ನು ಸೃಜನಶೀಲವಾಗಿ ಮರುಸೃಷ್ಟಿಸಿದ ಅವರ ವಿಧಾನ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದದ್ದು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಮತ್ತು 'ಶರಣ ತತ್ವ ಚಿಂತನ'ದಂತಹ ಬೌದ್ಧಿಕ ಸಂಪುಟಗಳನ್ನು ಸಂಪಾದಿಸುವಲ್ಲಿ ಅವರ ಪಾತ್ರವನ್ನು ಲೇಖಕರು ಕಟ್ಟಿಕೊಟ್ಟಿರುವ ಪರಿ, ಅಂದಿನ ಕಾಲದ ಸಾಹಿತ್ಯಿಕ ಚಳುವಳಿಗಳ ತೀವ್ರತೆಯನ್ನು ಪರಿಚಯಿಸುತ್ತದೆ.   ಡಾ. ಬಿ.ಆರ್. ಹಿರೇಮಠ ಅವರ ಕುರಿತಾದ ಲೇಖನವು ಅಪ್ಪಟ ಹಸ್ತಪ್ರತಿಶಾಸ್ತ್ರ ಮತ್ತು ವಚನ ಸಾಹಿತ್ಯದ ಸೂಕ್ಷ್ಮ ವರ್ಗೀಕರಣಕ್ಕೆ ಸಂಬಂಧಿಸಿದೆ. ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಮತ್ತು ಡಾ. ಕೆ. ರವೀಂದ್ರನಾಥ್ ಅವರ ವಚನ ಸಾಹಿತ್ಯದ ಸಂಶೋಧನೆ ನಿರಂತರವಾದದ್ದು ಎಂಬುದನ್ನು ಈ ವಿದ್ವಾಂಸರ ಕಾರ್ಯವೈಖರಿ ದೃಢಪಡಿಸುತ್ತದೆ. 'ಡಾ. ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಮೀಕ್ಷೆ'ಯಂತಹ ಕೃತಿಗಳ ಮೂಲಕ ಮೂಲ ಆಕರಗಳನ್ನು ಸಂರಕ್ಷಿಸಿದ ಬಗೆಯನ್ನು ಲೇಖನವು ದಾಖಲಿಸಿದೆ.

   ಪ್ರಾಚೀನ ದೇಸಿ ಸಾಹಿತ್ಯವನ್ನು, ವಿಶೇಷವಾಗಿ ಚಂಪೂ, ಸಾಂಗತ್ಯ ಮತ್ತು ವಚನ ಪ್ರಕಾರಗಳನ್ನುಸಂಶೋಧನಾತ್ಮಕ ನೆಲೆಯಲ್ಲಿ ಮೌಲ್ಯಮಾಪನ ಮಾಡುವ ಯಾವುದೇ ಶೈಕ್ಷಣಿಕ ಪ್ರಕ್ರಿಯೆಗೆ ಈ ಹಿಂದಿನ ವಿದ್ವಾಂಸರು ಹಾಕಿಕೊಟ್ಟ ಪರಂಪರೆಯ ಅರಿವು ಅತ್ಯಗತ್ಯ. ಮಠಮಾನ್ಯಗಳ ಕತ್ತಲ ಕೋಣೆಯಲ್ಲಿದ್ದ ಹಸ್ತಪ್ರತಿಗಳಿಗೆ ಶಾಸ್ತ್ರೀಯ ಚೌಕಟ್ಟು ಒದಗಿಸಿದ ಆಧುನಿಕ ವಿದ್ವಾಂಸರ ಬೌದ್ಧಿಕ ಶ್ರಮವನ್ನು ಈ ಕೃತಿ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುತ್ತದೆ.ಅವರ ವಚನ ಪರಿಷ್ಕರಣೆಯ ಸೂಕ್ಷ್ಮತೆಗಳನ್ನು ಸಾಹಿತ್ಯ ಚರಿತ್ರೆಯ ಭಾಗವಾಗಿ ದಾಖಲಿಸಿದ್ದಾರೆ.

   ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನಾ ಪ್ರಬಂಧಗಳು ಕೇವಲ ಮಾಹಿತಿಯ ಸಂಗ್ರಹವಲ್ಲ; ಇದು ಕರ್ನಾಟಕದ ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಒಂದು ಮಹತ್ವದ ಶೈಕ್ಷಣಿಕ ಕೃತಿ. ಉನ್ನತ ವ್ಯಾಸಂಗ, ಪಿಎಚ್.ಡಿ. ಸಂಶೋಧಕರಿಗೆ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ಅಧ್ಯಯನಕಾರರಿಗೆ ಆಕರಗಳಾಗಿ ಮಾನ್ಯತೆ ಪಡೆಯಲು ಸಂಪೂರ್ಣವಾಗಿ ಅರ್ಹವಾಗಿದೆ. ಇವರ ಬರಹಗಳಲ್ಲಿ  ಸಾಹಿತ್ಯ ಚರಿತ್ರೆ ಮತ್ತು ಸಂಶೋಧನಾ ಪರಂಪರೆಯ ದಾಖಲೀಕರಣವನ್ನು ಕಾಣಬಹುದು.

ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನಾ ಲೇಖನಗಳ ವೈಶಿಷ್ಟ್ಯವನ್ನು ಈ ಕೆಳಗಿನಂತೆ ಗುರುತಿಸಬಹುದು:

೧. ಬಹುಶಿಸ್ತೀಯ ವಿಧಾನ

ಸಾಹಿತ್ಯ, ಇತಿಹಾಸ, ಶಾಸನಶಾಸ್ತ್ರ, ಪುರಾತತ್ವ, ಜೀವನಚರಿತ್ರೆ, ಧರ್ಮಶಾಸ್ತ್ರಗಳ ಸಮನ್ವಯ

ಒಂದೇ ವಿಷಯವನ್ನು ವಿಭಿನ್ನ ಕೋನಗಳಿಂದ ಅಧ್ಯಯನ ಮಾಡಿರುವುದು.

೩. ಐತಿಹಾಸಿಕ ದಾಖಲೀಕರಣ

ಸಮಕಾಲೀನ ದಾಖಲೆಗಳು, ಶಾಸನಗಳು, ಪತ್ರ ವ್ಯವಹಾರಗಳನ್ನು ಆಧರಿಸಿ ಘಟನೆಗಳನ್ನು ದೃಢೀಕರಿಸುವುದು

ಘಟನೆಗಳಿಗೆ ನಿಖರವಾದ ಕಾಲಮಾನ ನಿರ್ಧರಿಸುವ ಪ್ರಯತ್ನ.

ಉದಾ: ಬಸವಣ್ಣನ ಮಹಾಮನೆ ಉಳುವಿಯಲ್ಲಿತ್ತು ಎಂಬುದಕ್ಕೆ ಲಕ್ಕಣ್ಣದಂಡೇಶನ ಕಾವ್ಯದ ಆಧಾರವಾಗಿರಿಸಿಕೊಂಡು ಮಂಡಿಸಿದ್ದಾರೆ.

೪. ಐತಿಹಾಸಿಕ ವ್ಯಕ್ತಿಗಳ ಪುನರ್ ಮೌಲ್ಯಮಾಪನ

ಸಾಂಪ್ರದಾಯಿಕವಾಗಿ ಕಡೆಗಣಿಸಲ್ಪಟ್ಟ ಅಥವಾ ತಪ್ಪಾಗಿ ಗುರುತಿಸಲ್ಪಟ್ಟ ವ್ಯಕ್ತಿಗಳ ಬಗ್ಗೆ ಹೊಸ ದೃಷ್ಟಿಕೋನ

ಉದಾ: ಕೆಂಪೇಗೌಡ ಜಯಪ್ರಶಸ್ತಿಯ ಕರ್ತೃ ಹೊನ್ನಕವಿ ವೀರಶೈವ ಅನುಭಾವಿ ಎಂದು ಸ್ಪಷ್ಟಪಡಿಸಿರುವುದು,

   ಒಂದೇ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಟಿತ-ಅಪ್ರಕಟಿತ ಕೃತಿಗಳನ್ನು ಸಂಗ್ರಹಿಸುವ ಪ್ರಯತ್ನ

ಉದಾ: ಅಟವೀಸ್ವಾಮಿಗಳು, ಕಾರದ ಶಿವಯೋಗಿಗಳ ಬಗ್ಗೆ ಇರುವ ಎಲ್ಲಾ ಮೂಲ ಆಕರಗಳ ಪಟ್ಟಿಯನ್ನು ಕೊಡಮಾಡಿದ್ದಾರೆ.ಸಾಹಿತ್ಯ, ಧರ್ಮ, ರಾಜಕೀಯ, ಆರ್ಥಿಕ, ಸಾಮಾಜಿಕ ಬೆಳವಣಿಗೆಗಳ ಪರಸ್ಪರ ಸಂಬಂಧ ಅಧ್ಯಯನಉದಾ: ೧೯೨೪ರ ಬೆಳಗಾವಿ ಕಾಂಗ್ರೆಸ್ನಲ್ಲಿ ಬಸವತತ್ತ್ವ ಪ್ರಚಾರವನ್ನು ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯೊಂದಿಗೆ ಸಂಯೋಜಿಸಿರುವುದರ ಮೂಲಕ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭೀಕರಣದ ಧ್ರುವೀಕರಣವನ್ನು ಕಾಣಬಹುದು.

  ವಿದೇಶಗಳಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯ ಕೃತಿಗಳನ್ನು ಪತ್ತೆ ಮಾಡುವ ಕುತೂಹಲ ವನ್ನು ಇವರಲ್ಲಿ ಕಾಣಬಹುದು. ಉದಾ: "Wisdom of East" ಮಾಲೆಯಲ್ಲಿ ಪ್ರಕಟವಾದ ಬಸವಣ್ಣನ ವಚನಗಳ ಇಂಗ್ಲೀಷ್ ಅನುವಾದವನ್ನು ಹುಡುಕುವ ಪ್ರಯತ್ನವನ್ನು ಇಲ್ಲಿ ಪ್ರಸ್ತಾಪಿಸ ಬಹುದು.ಐತಿಹಾಸಿಕ-ಸಾಹಿತ್ಯಕ ವಿಷಯಗಳನ್ನು ಇಂದಿನ ಸಂದರ್ಭದಲ್ಲಿ ಪ್ರಸ್ತುತಪಡಿಸುವ ಪ್ರಯತ್ನ. ಮುಂದಿನ ಪೀಳಿಗೆಯ ಸಂಶೋಧಕರಿಗೆ ಮಾರ್ಗದರ್ಶನ ನೀಡುವ ದೃಷ್ಟಿಯನ್ನು ಸೂಚಿಸುತ್ತದೆ.

      ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನೆಯು ಪ್ರಾಥಮಿಕ ಆಕರಗಳ ಆಧಾರಿತ, ವಸ್ತುನಿಷ್ಠ, ಬಹುಶಿಸ್ತೀಯ, ಐತಿಹಾಸಿಕ ದೃಢತೆಯುಳ್ಳ, ಸಾಂಸ್ಕೃತಿಕ ಸಂವೇದನೆಯಿಂದ ಕೂಡಿದ ಒಂದು ಸಮಗ್ರ ಸಂಶೋಧನಾ ವಿಧಾನವಾಗಿದೆ. ಇವರ ಕೃತಿಗಳು ಕೇವಲ ಮಾಹಿತಿ ಸಂಗ್ರಹವಲ್ಲ, ಬದುಕಿದ ಇತಿಹಾಸವನ್ನು ದಾಖಲಿಸುವ, ಮರೆಯುತ್ತಿರುವ ಪರಂಪರೆಯನ್ನು ಮರುಸ್ಥಾಪಿಸುವ, ಮತ್ತು ಭವಿಷ್ಯದ ಸಂಶೋಧಕರಿಗೆ ದಾರಿದೀಪವಾಗುವ ಮಹತ್ವದ ಕೊಡುಗೆಗಳಾಗಿವೆ.

ಡಾ. ಬಿ. ನಂಜುಂಡಸ್ವಾಮಿಯವರ ಲೇಖನಗಳ ಸಂಶೋಧನಾ ವಿಧಾನ ಮತ್ತು ಆಯ್ಕೆಗಳು ಹಲವು ವಿಶಿಷ್ಟ ಗುಣಗಳನ್ನು ಹೊಂದಿವೆ:

1. ಅಪ್ರಕಟಿತ ಮತ್ತು ದುರ್ಲಭ ಆಕರಗಳ ಬಳಕೆ

ನಂಜುಂಡಸ್ವಾಮಿಯವರು ತಮ್ಮ ಸಂಶೋಧನೆಗೆ ಸುಲಭವಾಗಿ ದೊರೆಯದ, ಅಪ್ರಕಟಿತ ಅಥವಾ ಅಲ್ಪಸ್ವಲ್ಪ ಮಾತ್ರ ಉಳಿದುಕೊಂಡಿರುವ ಆಕರಗಳನ್ನು ಆಧಾರವಾಗಿಸಿಕೊಳ್ಳುತ್ತಾರೆ.

ಉದಾಹರಣೆ: ಮೈಸೂರು ಪ್ರಧಾನಿ ಚನ್ನಪ್ಪಯ್ಯನವರ ತುಂಡು ಪತ್ರ, ತ್ರುಟಿತ ಕೈಫಿಯತ್ತು, ಹಾಗಲವಾಡಿ ಅಳಗಯ್ಯನವರ ಓಲೆಗರಿ ಹಸ್ತಪ್ರತಿಗಳು, ವೈಶ್ಯಗುರುಗಳ ಲೇಖನಗಳು, ಮತ್ತು ಖಾಸಗಿ ವ್ಯಕ್ತಿಗಳಲ್ಲಿದ್ದ ತಾಮ್ರಶಾಸನಗಳು ಇವುಗಳನ್ನು ಅವರು ಸಂಶೋಧನೆಗೆ ಬಳಸಿಕೊಂಡಿದ್ದಾರೆ.

2. ಐತಿಹಾಸಿಕ ಘಟನೆಗಳೊಂದಿಗೆ ಸಾಹಿತ್ಯಿಕ/ಸಾಂಸ್ಕೃತಿಕ ಮಾಹಿತಿಯ ಸಮನ್ವಯ

ಅವರು ಕೇವಲ ಒಂದು ಪತ್ರ ಅಥವಾ ಶಾಸನವನ್ನು ಪ್ರತ್ಯೇಕವಾಗಿ ನೋಡದೆ, ಅದನ್ನು ವಿಶಾಲ ಐತಿಹಾಸಿಕ ಸನ್ನಿವೇಶದಲ್ಲಿ ಇರಿಸಿ ನೋಡುತ್ತಾರೆ.ಉದಾಹರಣೆ: ಗುಬ್ಬಿಯಿಂದ ಕೈದಾಳಕ್ಕೆ ವಿಗ್ರಹವನ್ನು ಸ್ಥಳಾಂತರಿಸಿದ ಘಟನೆಯನ್ನು ಅವರು ಕರ್ನಾಟಿಕ್ ಯುದ್ಧಗಳು ಮತ್ತು ನಾಸಿರ್ ಜಂಗ್ನ ಮರಣ (೧೭೫೦) ಜೊತೆಗೆ ಸಮನ್ವಯಗೊಳಿಸಿ, ಆ ಘಟನೆಯ ಕಾಲಮಾನವನ್ನು ಸುಮಾರು ೧೭೬೦ ಎಂದು ನಿರ್ಧರಿಸುತ್ತಾರೆ.

3. ಸಾಹಿತ್ಯಿಕ ಕೃತಿಗಳ ಆಂತರಿಕ ಆಧಾರಗಳಿಂದ ಕಾಲನಿರ್ಧಾರ

ಹಸ್ತಪ್ರತಿಗಳಲ್ಲಿನ ಅಂತಿಮ ಪುಷ್ಪಿಕೆಗಳು (ಪ್ರಶಸ್ತಿ ವಾಕ್ಯಗಳು), ಕವಿಗಳು ತಮ್ಮನ್ನು ಕುರಿತು ಬರೆದುಕೊಂಡಿರುವ ವಂಶಾವಳಿ, ಮತ್ತು ಕೃತಿಗಳಲ್ಲಿನ ಉಲ್ಲೇಖಗಳನ್ನು ಆಧರಿಸಿ ಅವರು ಸಾಹಿತ್ಯ ಕೃತಿಗಳ ಕಾಲವನ್ನು ನಿಖರವಾಗಿ ಗುರುತಿಸುತ್ತಾರೆ.

ಉದಾಹರಣೆ: ಗುಬ್ಬಿ ಮಲ್ಲಣ್ಣನ ಕಾಲವನ್ನು ಅವರು ತನ್ನ ಮೊಮ್ಮಗ ಬರೆದ 'ವೀರಶೈವಾಮೃತ ಪುರಾಣ'ದ ಪದ್ಯಗಳು, ಮತ್ತು 'ಶಿವತತ್ತ್ವ ಚಿಂತಾಮಣಿ'ಯಲ್ಲಿನ ಉಲ್ಲೇಖಗಳ ಆಧಾರದ ಮೇಲೆ ಸುಮಾರು ೧೪೩೦ ಎಂದು ನಿರ್ಧರಿಸುತ್ತಾರೆ.

    ಅವರು ಕೇವಲ ಸಾಹಿತ್ಯಿಕ ಆಕರಗಳಿಗೆ ಸೀಮಿತವಾಗದೆ, ಕ್ಷೇತ್ರಕಾರ್ಯವನ್ನು ನಡೆಸಿ ದೇವಾಲಯಗಳು, ಮಠಗಳು, ಮತ್ತು ಅಲ್ಲಿನ ಕಂಬಗಳ ಕೆತ್ತನೆಗಳಂತಹ ಭೌತಿಕ ಆಕರಗಳನ್ನೂ ವಿಶ್ಲೇಷಿಸುತ್ತಾರೆ.

ಉದಾಹರಣೆ: ಗೂಳೂರಿನಲ್ಲಿರುವ ಬೇಟರಾಯಸ್ವಾಮಿ, ಗಣಪತಿ, ಮತ್ತು ನಡುವಲ ಮಠದ ವಿಗ್ರಹಗಳ ಕುರಿತು ಅವರು ನೀಡಿರುವ ವಿವರಣೆ ಮತ್ತು ಶೈಲಿಯ ವಿಶ್ಲೇಷಣೆ (ಹೊಯ್ಸಳ ಶೈಲಿ, ವಿಜಯನಗರ ಶೈಲಿ) ಇದಕ್ಕೆ ನಿದರ್ಶನ.

'ಗಣಭಾಷ್ಯರತ್ನಮಾಲೆ' ಅಥವಾ 'ಶೂನ್ಯಸಂಪಾದನೆ'ಯಂತಹ ಪ್ರಸಿದ್ಧ ಕೃತಿಗಳ ವಿವಿಧ ಆವೃತ್ತಿಗಳು (ಮುದ್ರಿತ ಮತ್ತು ಹಸ್ತಪ್ರತಿ) ಹೇಗಿವೆ, ಅವುಗಳ ಸಂಪಾದಕರು ಯಾವ ತಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಅವರು ತಾಂತ್ರಿಕವಾಗಿ ವಿಶ್ಲೇಷಿಸುತ್ತಾರೆ.

ಉದಾಹರಣೆ: ನಂ. ಶಿವಪ್ಪ ಶಾಸ್ತ್ರಿಗಳು ಮತ್ತು ಪ್ರಭುಸ್ವಾಮಿಗಳು ತಮ್ಮ ಸಂಪಾದನೆಯಲ್ಲಿ ಮಾಡಿರುವ ಲೋಪಗಳನ್ನು (ಮುನ್ನುಡಿಯ ವ್ಯವಸ್ಥೆ, ಸಂಗ್ರಹ ಮಹಾತ್ಮೆಯ ಅಪೂರ್ಣ ಪಾಠ) ಅವರು ಎತ್ತಿ ತೋರಿಸುತ್ತಾರೆ.

  ಇತಿಹಾಸ, ಪುರಾತತ್ವ, ಛಂದಸ್ಸು, ತತ್ತ್ವಶಾಸ್ತ್ರ ಮತ್ತು ಜಾನಪದವನ್ನು ಒಟ್ಟುಗೂಡಿಸಿ ಸಮಗ್ರ ನೋಟವನ್ನು ನೀಡುತ್ತಾರೆ.ಉದಾಹರಣೆ: ಗೂಳೂರಿನ 'ವಿಭೂತಿ' ಗಾದೆ, ಕರಿಸಿದ್ದೇಶ್ವರರ ಜಾನಪದ ಆಚರಣೆಗಳು, ಮತ್ತು ಅಲ್ಲಿನ ಶಿಲ್ಪಗಳಲ್ಲಿ ಕಾಣುವ ಸಾಮಾಜಿಕ ಜೀವನದ ಚಿತ್ರಣವನ್ನು ಅವರು ಅಧ್ಯಯನಕ್ಕೆ ಸೇರಿಸುತ್ತಾರೆ.

ನಂಜುಂಡಸ್ವಾಮಿಯವರ ಲೇಖನಗಳ ವಿಶೇಷತೆಯೆಂದರೆ "ಕತ್ತಲು ಕೋಣೆಯಲ್ಲಿನ ಮಾಹಿತಿಯನ್ನು ಬೆಳಕಿಗೆ ತರುವ" ಅವರ ಸಮಗ್ರ ಮತ್ತು ಅನ್ವೇಷಣಾತ್ಮಕ ದೃಷ್ಟಿ. ಅವರು ಗ್ರಾಮೀಣ ಇತಿಹಾಸ, ಅಲ್ಪಸಂಖ್ಯಾತ ಅಥವಾ ಕಡೆಗಣಿಸಲ್ಪಟ್ಟ ಸಂಪ್ರದಾಯಗಳು, ಮತ್ತು ಪ್ರಮುಖ ಇತಿಹಾಸದಲ್ಲಿ ದಾಖಲಾಗದ 'ಸಣ್ಣ' ಆದರೆ ಮಹತ್ವದ ಘಟನೆಗಳನ್ನು ಹುಡುಕಿ ತೆಗೆಯುತ್ತಾರೆ. ಇದು ಶಾಸ್ತ್ರೀಯ ಸಂಶೋಧನೆಯಲ್ಲಿ ಗ್ರಂಥ ಸಂಪಾದನೆಯ ಶಿಸ್ತನ್ನು, ಐತಿಹಾಸಿಕ ವಿಶ್ಲೇಷಣೆಯ ಸೂಕ್ಷ್ಮತೆಯನ್ನು, ಮತ್ತು ಕ್ಷೇತ್ರಕಾರ್ಯದ ಅನುಭವವನ್ನು ಯಶಸ್ವಿಯಾಗಿ ಸಂಯೋಜಿಸುವ ಒಂದು ಮಾದರಿಯಾಗಿದೆ.

   ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನಾ ಲೇಖನಗಳನ್ನು ಕೇವಲ ಮಾಹಿತಿ ಸಂಗ್ರಹವಾಗಿ ಅಲ್ಲ, ಬದಲಾಗಿ ಐತಿಹಾಸಿಕ ವಿಧಾನಶಾಸ್ತ್ರದ ಒಂದು ಮಾದರಿಯಾಗಿ ಅರ್ಥೈಸಿಕೊಳ್ಳಬೇಕು. ಅವರ ಬರಹಗಳು 'ಏನು' ಎಂಬುದಕ್ಕಿಂತ 'ಹೇಗೆ' ಎಂಬ ಪ್ರಶ್ನೆಗೆ ಉತ್ತರಿಸುವಲ್ಲಿ ಹೆಚ್ಚು ಪ್ರಾಧಾನ್ಯತೆ ಪಡೆಯುತ್ತವೆ.

'ಶೂನ್ಯಸಂಪಾದನೆ' ಮತ್ತು 'ಗಣಭಾಷ್ಯರತ್ನಮಾಲೆ'ಯ ಸಮಾಪ್ತಿ ವಾಕ್ಯಗಳು ಸರಿಸುಮಾರು ಒಂದೇ ಆಗಿವೆ. ಇದನ್ನು ಕೇವಲ 'ಅನುಕರಣೆ' ಎಂದು ಬಿಟ್ಟುಬಿಡದೆ, ಇದನ್ನು "ಪರಂಪರೆಯ ಸಾಂಸ್ಕೃತಿಕ ಸ್ವಾಮ್ಯ" ದ ದೃಷ್ಟಿಯಿಂದ ನೋಡುತ್ತಾರೆ. ಗುಬ್ಬಿ ಮಲ್ಲಣ್ಣ 'ಸಂಗ್ರಹ ಮಹಾತ್ಮೆ'ಯನ್ನು ಬಳಸಿದ್ದು, ಶಿವಗಣ ಪ್ರಸಾದಿಯ 'ಶೂನ್ಯಸಂಪಾದನೆ'ಯ ಅಧಿಕಾರವನ್ನು ತಮ್ಮ ಕೃತಿಗೆ ವರ್ಗಾಯಿಸಿಕೊಳ್ಳಲು ಎಂದು ಅವರು ಸೂಚ್ಯವಾಗಿ ತೋರಿಸುತ್ತಾರೆ.

    ಬಿ. ಶಿವಮೂರ್ತಿಶಾಸ್ತ್ರಿ, ಪಿ.ಆರ್. ಕರಿಬಸವಶಾಸ್ತ್ರಿ, ಎಲ್.ಬಸವರಾಜು, ಎಂ.ಎಂ. ಕಲಬುರ್ಗಿ, ಎಸ್.ಶಿವಣ್ಣ ರಂತಹ ದಿಗ್ಗಜರ ಸಾಹಿತ್ಯಕ ಸೇವೆಯನ್ನು ಮತ್ತು ಅವರೊಂದಿಗಿನ ಒಡನಾಟವನ್ನು ಅತ್ಯಂತ ಆಪ್ತವಾಗಿ ದಾಖಲಿಸಿದ್ದಾರೆ. ಹಿಂದಿನ ತಲೆಮಾರಿನ ವಿದ್ವಾಂಸರು ಪಟ್ಟ ಕಷ್ಟಗಳನ್ನು ಮತ್ತು ಅವರು ಸಂರಕ್ಷಿಸಿದ ಗ್ರಂಥಗಳ ಮಾಹಿತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾಳಜಿ ಇವರ ಬರವಣಿಗೆಯಲ್ಲಿದೆ.

ಡಾ. ನಂಜುಂಡಸ್ವಾಮಿಯವರ ಲೇಖನಗಳು ಕೇವಲ ಒಣ ಸಂಶೋಧನೆಯಾಗಿರದೆ, ಕನ್ನಡ ನಾಡು-ನುಡಿ, ಶರಣ ಸಂಸ್ಕೃತಿ ಮತ್ತು ಇತಿಹಾಸದ ಮೇಲಿನ ಅವರ ಅಪಾರ ಅಭಿಮಾನದ ಜೀವಂತ ದಾಖಲೆಗಳಾಗಿವೆ.

    ನಂಜುಂಡ ಭಾಗವತನ 'ವೃಷಭೇಂದ್ರ ವಿಳಾಸ' (ಚಿತ್ರಸಮೇತ ಯಕ್ಷಗಾನ ಕೃತಿ), ಸುಗಟೂರು ದೊರೆ ಮುಮ್ಮಡಿ ತಮ್ಮನ 'ಶಂಕರ ಸಂಹಿತೆ' ಮತ್ತು ಜಕ್ಕಣಾರ್ಯನ 'ಏಕೋತ್ತರ ಶತಸ್ಥಲ'ಯಂತಹ ಅಪರೂಪದ ಕೃತಿಗಳನ್ನು ಪರಿಚಯಿಸಿದ್ದಾರೆ. ಹಸ್ತಪ್ರತಿಗಳನ್ನು ಕೇವಲ ಪರಿಚಯಿಸದೆ, ಬೇರೆ ಬೇರೆ ಆಕರಗಳೊಂದಿಗೆ ಹೋಲಿಸಿ ಅವುಗಳ ಐತಿಹಾಸಿಕ ನಿಖರತೆಯನ್ನು ಸಾಬೀತುಪಡಿಸುವ ಸೂಕ್ಷ್ಮತೆ ಇವರ ಲೇಖನಗಳಲ್ಲಿದೆ.

  ಜಕ್ಕಣಾರ್ಯನ 'ಏಕೋತ್ತರ ಶತಸ್ಥಲ', ನಂಜುಂಡ ಭಾಗವತನ 'ವೃಷಭೇಂದ್ರ ವಿಳಾಸ' (ಚಿತ್ರಸಮೇತ ಹಸ್ತಪ್ರತಿ), ಹಾಗೂ ಮುಮ್ಮಡಿ ತಮ್ಮನ 'ಶಂಕರ ಸಂಹಿತೆ'ಯಂತಹ ಹಸ್ತಪ್ರತಿಗಳ ಕೊನೆಯಲ್ಲಿರುವ 'ಪುಷ್ಪಿಕೆ'ಗಳನ್ನು ಬಳಸಿ ಕೃತಿ ರಚನೆಯಾದ ನಿಖರ ಕಾಲ, ಕರ್ತೃವಿನ ಹಿನ್ನೆಲೆ ಮತ್ತು ಆಶ್ರಯದಾತರ ವಿವರಗಳನ್ನು ಕಂಡುಕೊಳ್ಳುವ ಅವರ ವಿಧಾನ ವಿಶಿಷ್ಟವಾದದ್ದು. ಉದಾಹರಣೆಗೆ, ಮೊದಲನೇ ಮಂಗರಾಜನ 'ಖಗೇಂದ್ರಮಣಿ ದರ್ಪಣಂ' ಕೃತಿಯಲ್ಲಿ ಬರುವ "ಚಿಕ್ಕಮುಗುಳಿ" ಮತ್ತು "ದೇವಳಿಗೆ ನಾಡು" ಯಾವುದು ಎಂಬುದನ್ನು ಚಿಕ್ಕಮಗಳೂರಿನ ವೀರಗಲ್ಲು ಮತ್ತು ಐತಿಹಾಸಿಕ ಶಾಸನಗಳ ಮೂಲಕ ನಿಖರವಾಗಿ ಸಾಬೀತುಪಡಿಸಿದ್ದಾರೆ (ಇಂದಿನ ಚಿಕ್ಕಮಗಳೂರು ಮತ್ತು ಹಿರೇಮಗಳೂರು). ಮಹಾಲಿಂಗದೇವನ "ಪುಲಿಗೆರೆ" ಎಂದರೆ ಉತ್ತರ ಕರ್ನಾಟಕದ ಪ್ರಸಿದ್ಧ ಲಕ್ಷ್ಮೇಶ್ವರವಲ್ಲ, ಬದಲಾಗಿ ಅದು ದಕ್ಷಿಣದ ಹೊಸಕೋಟೆ ಬಳಿಯ "ವಾಗಟ" (ವ್ಯಾಘ್ರತಟಾಕ) ಎಂದು ಶಾಸನ ಮತ್ತು ಲಕ್ಕಣ ದಂಡೇಶನ 'ಶಿವತತ್ತ್ವ ಚಿಂತಾಮಣಿ'ಯ ಆಧಾರದ ಮೇಲೆ ಸಾಧಾರವಾಗಿ ಮಂಡಿಸಿದ್ದಾರೆ. ಇದು ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲ್ಲೂಕಿನಲ್ಲಿದೆ.

    ನಂಜುಂಡಸ್ವಾಮಿಯವರು ಹಸ್ತಪ್ರತಿಗಳನ್ನು ಕೇವಲ ಪಠ್ಯಗಳಾಗಿ ನೋಡದೆ, ಅವುಗಳನ್ನು ಸಮಕಾಲೀನ ಸಮಾಜವನ್ನು ಅರ್ಥಮಾಡಿಕೊಳ್ಳುವ 'ಸಾಂಸ್ಕೃತಿಕ ದಾಖಲೆ'ಗಳಾಗಿ ನೋಡುತ್ತಾರೆ. ಹಸ್ತಪ್ರತಿಯ ಕೊನೆಯಲ್ಲಿರುವ 'ಪುಷ್ಪಿಕೆ'ಗಳನ್ನು (ಉದಾಹರಣೆಗೆ: ಕುಮಾರವ್ಯಾಸ ಭಾರತದ ಅರಣ್ಯಪರ್ವವನ್ನು ಕೋಡಿಹಳ್ಳಿ ಮಠದ ಪವಾಡದಪ್ಪ ಬರೆದುಕೊಟ್ಟ ಪುಷ್ಪಿಕೆ ಅಥವಾ ಶಾಂತವೀರ ದೇಶಿಕನ ಕೃತಿಗಳ ಪುಷ್ಪಿಕೆ) ಸೂಕ್ಷ್ಮವಾಗಿ ವಿಶ್ಲೇಷಿಸಿ, ಅಂದಿನ ಕಾಲದ ಲಿಪಿಕಾರರ ಕಾಯಕ, ಅವರ ಆಶ್ರಯದಾತರು ಮತ್ತು ಅಂದಿನ ಧಾರ್ಮಿಕ ಪಲ್ಲಟಗಳನ್ನು ಅತ್ಯಂತ ಕರಾರುವಾಕ್ಕಾಗಿ ಗುರುತಿಸಿದ್ದಾರೆ.

   ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದಲ್ಲಿ ಮಠಗಳ ಪಾತ್ರವನ್ನು ಇವರು ಆಳವಾಗಿ ದಾಖಲಿಸಿದ್ದಾರೆ. ನಿರೂಪಗಳ ಅಧ್ಯಯನ: ಮುಮ್ಮಡಿ ಕೃಷ್ಣರಾಜ ಒಡೆಯರ್, ಹೈದರಾಲಿ, ಮತ್ತು ಕಂಠೀರವ ಒಡೆಯರ್ ಕಾಲದ 'ನಿರೂಪ'ಗಳನ್ನು (ಆಡಳಿತಾತ್ಮಕ ಆಜ್ಞಾಪತ್ರಗಳು) ವಿಶ್ಲೇಷಿಸಿ, ಅಂದಿನ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳನ್ನು ಕಟ್ಟಿಕೊಟ್ಟಿದ್ದಾರೆ (ಉದಾ: ಕರೂರು ಶ್ರೀನಿವಾಸಾಚಾರ್ಯರಿಗೆ ಕೊಟ್ಟ ನಿರೂಪಗಳು, ಕಾಶಿ ಜಂಗಮವಾಡಿ ಮಠಕ್ಕೆ ನೀಡಿದ ಶಾಸನ). ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ, ಗುಬ್ಬಿಯ ತೊರೆಮಠ, ಸುತ್ತೂರು ಮಠ ಮುಂತಾದವುಗಳ ಸಾಹಿತ್ಯಕ, ಶೈಕ್ಷಣಿಕ (ಪ್ರಸಾದ ನಿಲಯಗಳ ಸ್ಥಾಪನೆ) ಮತ್ತು ಸಾಮಾಜಿಕ ಕೊಡುಗೆಗಳನ್ನು ಸಮಗ್ರವಾಗಿ ದಾಖಲಿಸಿದ್ದಾರೆ.

ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಮೈಸೂರು ಸ್ಟಾರ್ ಮುದ್ರಣಾಲಯದಂತಹ ಹಳೆಯ ಪ್ರಕಾಶನ ಸಂಸ್ಥೆಗಳು ಕಷ್ಟಪಟ್ಟು ಪ್ರಕಟಿಸಿದ (ಮತ್ತು ಈಗ ಅಲಭ್ಯವಾಗಿರುವ) ಪ್ರಾಚೀನ ಕೃತಿಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ ಮುಂದಿನ ಪೀಳಿಗೆಯ ಸಂಶೋಧಕರಿಗೆ ದಾರಿದೀಪವಾಗಿದ್ದಾರೆ.

ಶಿವಲಿಂಗ ಚಾರಿತ್ರ ಮತ್ತು ಐತಿಹಾಸಿಕ ಉಲ್ಲೇಖಗಳು

ಶಾಂತವೀರ ದೇಶಿಕ ವಿರಚಿತ "ಶಿವಲಿಂಗ ಚಾರಿತ್ರ" (೧೯೬೬) ಗ್ರಂಥದ ಉಲ್ಲೇಖವಿದೆ.ಈ ಗ್ರಂಥದಲ್ಲಿ ಚನ್ನವೀರಾಚಾರ್ಯರು ಹುಣಸಿನಾಳದ ಅರಸು ನಂಜರಾಜೇಂದ್ರರ ಅರಮನೆಗೆ ಭೇಟಿ ನೀಡಿದ್ದು, ಒಂದು ತಿಂಗಳ ಕಾಲ ಹೊಸ ವಚನಗಳನ್ನು ಹಾಡಿದ ವಿವರವಿದೆ. ಅರಸರು ಗುರುಗಳಿಗೆ ಭೂಮಿ ಮತ್ತು ಕಾಣಿಕೆಗಳನ್ನು ಅರ್ಪಿಸಿದ ಸಂಗತಿಯೂ ಇದೆ.

   ಇವರ ಬರಹಗಳು  ಪ್ರಾಚೀನ ಸಂಪ್ರದಾಯಗಳನ್ನು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವುದು. ಕನ್ನಡ ಸಾಹಿತ್ಯ, ವೀರಶೈವ ಸಂಪ್ರದಾಯ, ಮತ್ತು ದಕ್ಷಿಣ ಭಾರತದ ಇತಿಹಾಸದ ಕುರಿತು ಶಿಲಾಶಾಸನ, ಹಸ್ತಪ್ರತಿ, ಕಾವ್ಯ ಮತ್ತು ಆಧುನಿಕ ವಿಮರ್ಶೆಗಳ ಸಮೃದ್ಧ ವಿದ್ವತ್ ಪರಂಪರೆಯನ್ನು ಪ್ರತಿಬಿಂಬಿಸುವುದಾಗಿದೆ. ನಂಜುಂಡಸ್ವಾಮಿಯವರ ಸಂಶೋಧನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅವರ ಬಹುಶಿಸ್ತೀಯ ವಿಧಾನ: ಶಾಸನಶಾಸ್ತ್ರ ಮತ್ತು ಸಾಹಿತ್ಯದ ಸಮ್ಮಿಲನ: ಇವರು ಶಿಲಾಶಾಸನಗಳನ್ನೂ ಅಧ್ಯಯನ ಮಾಡಿ, ಅವುಗಳನ್ನು ಸಾಹಿತ್ಯಿಕ ಆಕರಗಳೊಂದಿಗೆ ಹೋಲಿಸಿ ಐತಿಹಾಸಿಕ ಸತ್ಯಾಂಶಗಳನ್ನು ಸ್ಪಷ್ಟಪಡಿಸಿದ್ದಾರೆ. ವಚನ ಸಾಹಿತ್ಯದ ಪ್ರಾಚೀನ ಪರಂಪರೆಯನ್ನು ಆಧುನಿಕ ವಚನಕಾರರೊಂದಿಗೆ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ.

   ನಂಜುಂಡ ಭಾಗವತ ವಿರಚಿತ "ವೃಷಭೇಂದ್ರ ವಿಳಾಸ" - ಸಮಗ್ರ ಅಧ್ಯಯನಪರಿಚಯದ ಇವರ ಲೇಖನ ವಿಶಿಷ್ಟವಾಗಿದೆ. ನಂಜುಂಡ ಭಾಗವತ ವಿರಚಿತ "ವೃಷಭೇಂದ್ರ ವಿಳಾಸ" ಕನ್ನಡ ಸಾಹಿತ್ಯ ಮತ್ತು ಚಿತ್ರಕಲಾ ಇತಿಹಾಸದಲ್ಲಿ ಅಪರೂಪದ ಕೃತಿಯಾಗಿದೆ. ಈ ಕೃತಿಯು ಬಸವೇಶ್ವರರ ಜೀವನ ಚರಿತ್ರೆಯನ್ನು ಯಕ್ಷಗಾನ ರೂಪದಲ್ಲಿ ನಿರೂಪಿಸುವುದಲ್ಲದೆ, ಸುಂದರ ವರ್ಣಚಿತ್ರಗಳ ಸಮೇತ ಲಭ್ಯವಾಗಿರುವುದು ಇದರ ವೈಶಿಷ್ಟ್ಯ. ಇದು ಕನ್ನಡ ಸಾಹಿತ್ಯಕ್ಕಷ್ಟೇ ಅಲ್ಲದೆ ಚಿತ್ರಕಲಾ ಪರಂಪರೆಗೂ ಅಮೂಲ್ಯ ಕಾಣಿಕೆಯಾಗಿದೆ. ಚಿತ್ರಸಮೇತವಾದ ಅಪರೂಪದ ಗ್ರಂಥ - ಪ್ರತಿ ಪುಟದಲ್ಲೂ ಕಥೆಗೆ ಸಂಬಂಧಿಸಿದ ವರ್ಣಚಿತ್ರಗಳಿವೆ. ಬಸವೇಶ್ವರರ ಜೀವನ ಚರಿತ್ರೆ - ಹುಟ್ಟಿನಿಂದ ಕೈಲಾಸ ಪ್ರವೇಶದವರೆಗೆ. ಶರಣ-ಶರಣೆಯರ ವ್ಯಕ್ತಿಚಿತ್ರಣ - ಅನೇಕ ಐತಿಹಾಸಿಕ ವ್ಯಕ್ತಿಗಳ ಚಿತ್ರಗಳಿವೆ. - ಅಂದಿನ ಆಚರಣೆ, ವೇಷಭೂಷಣ, ಶಿವಪೂಜಾ ಪರಿಕರಗಳ ಮೂಲಕ ಸಾಂಸ್ಕೃತಿಕ ದಾಖಲೆ ಎನಿಸಿದೆ.

   ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳ ದಾಖಲೆ.ಮೈಸೂರು ಶೈಲಿಯ ಚಿತ್ರಕಲೆಯ ಅಪೂರ್ವ ಉದಾಹರಣೆ ಶಿವಪೂಜಾ ಪರಿಕರಗಳು, ವೇಷಭೂಷಣಗಳ ದೃಶ್ಯ ದಾಖಲೆ ಸನ್ನಿವೇಶಗಳ ಸಾಂಕೇತಿಕ ಚಿತ್ರಣ. ಸಾಂಸ್ಕೃತಿಕ ಮಹತ್ವ ಅಂದಿನ ಅರಮನೆಯ ವೈಭವದ ಚಿತ್ರಣ ವೀರಶೈವ ಧರ್ಮದ ಆಚರಣೆಗಳ ದಾಖಲೀಕರಣ, ರಾಜ-ಮಹಾರಾಜರ ಸಂಬಂಧಗಳು ಈ ಕೃತಿಯಲ್ಲಿ ಅಡಗಿರುವುದನ್ನು ಗಮನಿಸಿದ್ದಾರೆ. ಈ ಕೃತಿಯಲ್ಲಿನ ಮುಮ್ಮಡಿ ಕೃಷ್ಣರಾಜ, ಅಳಿಯ ಲಿಂಗರಾಜ, ಮತ್ತು ಕವಿಯ ಚಿತ್ರಗಳ ಐತಿಹಾಸಿಕ ಮಹತ್ವವನ್ನು ವಿಶ್ಲೇಷಿಸಿದ್ದಾರೆ. ಶರಣ-ಶರಣೆಯರ ೬೩ ಚಿತ್ರಗಳ ಸಾಂಸ್ಕೃತಿಕ ಮಹತ್ವವನ್ನು ದಾಖಲಿಸಿದ್ದಾರೆ.

     ಹಸ್ತಪ್ರತಿಗಳನ್ನು ಕೇವಲ ಪಠ್ಯವಾಗಿ ನೋಡದೆ, ಅವುಗಳ ಸಾಂಸ್ಕೃತಿಕ ಹಾಗೂ ಕಲಾತ್ಮಕ ಆಯಾಮಗಳನ್ನು ಗುರುತಿಸುವುದು ಅವರ ಮತ್ತೊಂದು ವಿಶೇಷತೆ ಎಂಬುದಕ್ಕೆ  ನಂಜುಂಡ ಭಾಗವತ ವಿರಚಿತ 'ವೃಷಭೇಂದ್ರ ವಿಳಾಸ' ಎಂಬ ಸಚಿತ್ರ ಯಕ್ಷಗಾನ ಕೃತಿಯ ವಿಶ್ಲೇಷಣೆಯೇ ಸಾಕ್ಷಿ. ಕಾವ್ಯದ ಪಠ್ಯದ ಜೊತೆಜೊತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್, ಅಳಿಯ ಲಿಂಗರಾಜ ಮತ್ತು ಶರಣರ ಚಿತ್ರಗಳನ್ನು ವರ್ಣಮಯವಾಗಿ ಬಿಡಿಸಿರುವ ಚಿತ್ರಕಲಾ ಪರಂಪರೆಯನ್ನು ಅವರು ಅನಾವರಣಗೊಳಿಸಿದ್ದಾರೆ. ದೇಶಿ ಸಾಹಿತ್ಯದ ಮರು-ಮೌಲ್ಯಮಾಪನದಲ್ಲಿ ಇಂತಹ ಕಲಾ-ಸಾಹಿತ್ಯದ ಸಮನ್ವಯ ದೃಷ್ಟಿ ಅತ್ಯಂತ ಮಹತ್ವದ್ದಾಗಿದೆ. ನಂಜುಂಡ ಭಾಗವತನ 'ವೃಷಭೇಂದ್ರ ವಿಳಾಸ' ಯಕ್ಷಗಾನ ಕೃತಿಯ ಹಸ್ತಪ್ರತಿಯಲ್ಲಿರುವ ವರ್ಣಚಿತ್ರಗಳನ್ನು (ಮುಮ್ಮಡಿ ಕೃಷ್ಣರಾಜ ಒಡೆಯರ್, ಅಳಿಯ ಲಿಂಗರಾಜ ಮತ್ತು ಶರಣರ ಚಿತ್ರಗಳು) ಅವರು ವಿಶ್ಲೇಷಿಸಿರುವ ರೀತಿ ಅಪರೂಪದ್ದಾಗಿದೆ. ಸಾಹಿತ್ಯದ ಪಠ್ಯವೊಂದು ಅರಮನೆಯ ಚಿತ್ರಕಲಾ ಪರಂಪರೆಯೊಂದಿಗೆ ಹೇಗೆ ಅನುಸಂಧಾನ ಮಾಡಿಕೊಂಡಿತು ಎನ್ನುವುದನ್ನು ಅವರು ತಲಸ್ಪರ್ಶಿಯಾಗಿ ಶೋಧಿಸಿದ್ದಾರೆ.

    ನಂಜುಂಡಸ್ವಾಮಿಯವರ ಸಂಶೋಧನೆಯಲ್ಲಿ ಕ್ಷೇತ್ರಕಾರ್ಯಕ್ಕೆ ವಿಶೇಷ ಒತ್ತು ಕೊಟ್ಟಿದ್ದಾರೆ. ಹಸ್ತಪ್ರತಿಗಳನ್ನು ನೇರವಾಗಿ ಪರಿಶೀಲಿಸಲು ಗುಬ್ಬಿ, ಅದರಂಗಿ, ಹೊನ್ನವಳ್ಳಿ, ಮುದಿಗೆರೆ ಮುಂತಾದ ಕಡೆಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಸ್ಥಳೀಯ ಹಿರಿಯರೊಂದಿಗೆ ಸಂದರ್ಶಿಸಿ ಮೌಖಿಕ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಾಹಿತ್ಯವನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ವಿಶ್ಲೇಷಿಸಿರುವುದು ಮತ್ತುಅಳಿದು ಹೋಗುತ್ತಿರುವ ಸಾಂಸ್ಕೃತಿಕ ಆಚರಣೆಗಳನ್ನು ದಾಖಲಿಸಿರುವುದು ಇವರ ಮಹತ್ವದ ಸಾಧನೆಗಳಾಗಿವೆ.

ಇವರ ಪ್ರಮುಖ ಸಂಶೋಧನಾ ನಿರ್ಣಯಗಳು

೧. ಕಾಲನಿರ್ಣಯಗಳು

ಹಲಗೆಯಾರ್ಯನ ಕಾಲ: ಶಾ.ಶ. ೧೪೫೦ = ಕ್ರಿ.ಶ. ೧೫೨೮

ಪುರದ ನಾಗಣ್ಣನ ಕಾಲ: ಸು. ೧೨೪೦-೫೦

ಹುಣಸಿನಾಳ ನಂಜರಾಜ ವಡೆಯರ ಕಾಲ: ಸು. ೧೬೬೦

ಮುದಿಗೆರೆ ಶಾಸನದ ಕಾಲ: ಕ್ರಿ.ಶ. ೧೬೭೯

ಕೋರಾ ಶಾಸನದ ಕಾಲ: ಶಕ ೧೪೧೭ = ಕ್ರಿ.ಶ. ೧೪೯೫

ಇವರ ಸಂಶೋಧನೆಯು ಶಾಸನಗಳನ್ನು ಕೇವಲ ದಾಖಲೆಗಳಾಗಿ ಕಾಣದೆ, ಅವುಗಳನ್ನು ಸಾಹಿತ್ಯಿಕ ಆಕರಗಳೊಂದಿಗೆ ಸಂವಾದ ಮಾಡಿಸುತ್ತದೆ. ಈ ವಿಧಾನವು ತ್ರಿವಿಧ ಸಮನ್ವಯವನ್ನು ಸಾಧಿಸುತ್ತದೆ.

"ಗಣಭಾಷ್ಯರತ್ನಮಾಲೆ" ಪುಷ್ಪಿಕೆ:

"ಪುಂಗನೂರು ದೊಡ್ಡಮಠದ ಪ್ರಭುಸ್ವಾಮಿಗಳ ಕರಕಂಜೋದ್ಭವರಾದ ಶಾಂತಮಲ್ಲ ಮರಿದೇವರು... ಬರೆದುಕೊಟ್ಟ ಪುಸ್ತಕ"ಇದರಿಂದ ತಮಿಳುನಾಡಿನ ಪುಂಗನೂರು ಸಂಸ್ಥಾನ ಮತ್ತು ಗುಬ್ಬಿ ಮಲ್ಲಣ್ಣನ ಕೃತಿಯ ಪ್ರಸಾರ ತಿಳಿಯುತ್ತದೆ.

"ವೀರಶೈವ ಪ್ರದೀಪಿಕೆ" ಪುಷ್ಪಿಕೆ:

"ತೋಂಟದ ಸಿದ್ದೇಶ್ವರನೆಂಬಾಚಾರ್ಯನಿಂ ಸಂಗ್ರಹಿಸಲ್ಪಟ್ಟ ವೀರಶೈವ ಪ್ರದೀಪಿಕೆಯೊಳ್"ಇದನ್ನು ಮರಿತೋಂಟದಾರರ ಕೃತಿ ಎಂದು ತಪ್ಪಾಗಿ ನಿರ್ಣಯಿಸಿದ್ದ ಸಂಪ್ರದಾಯವನ್ನು, ಪುಷ್ಪಿಕೆಯ ಸೂಕ್ಷ್ಮ ವಿಶ್ಲೇಷಣೆಯಿಂದ ಸರಿಪಡಿಸಿರುವುದು.

    ಡಾ. ಬಿ. ನಂಜುಂಡಸ್ವಾಮಿಯವರ ಲೇಖನಗಳು ಕೇವಲ ಮಾಹಿತಿ ಸಂಗ್ರಹವಾಗಿರದೆ, ಕನ್ನಡ ಸಾಹಿತ್ಯ, ಹಸ್ತಪ್ರತಿಶಾಸ್ತ್ರ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಹೊಸ ದೃಷ್ಟಿಕೋನದಲ್ಲಿ ಮರು-ಮೌಲ್ಯಮಾಪನ ಮಾಡುವ ಉನ್ನತ ಮಟ್ಟದ ಶೈಕ್ಷಣಿಕ ಆಕರಗಳಾಗಿವೆ. ಅವರ ಸಂಶೋಧನಾ ವಿಧಾನವು ಕೇವಲ ಮಾಹಿತಿ ಸಂಗ್ರಹಕ್ಕೆ ಸೀಮಿತವಾಗಿರದೆ, ಸಮಗ್ರ ಸಾಂಸ್ಕೃತಿಕ ಚರಿತ್ರೆಯ ಮರು-ನಿರ್ಮಾಣದ ಸ್ವರೂಪವನ್ನು ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಮಹಾಕಾವ್ಯಗಳು ಮತ್ತು ರಾಜಮನೆತನಗಳ ಇತಿಹಾಸದ ಜೊತೆಜೊತೆಗೆ, ಸ್ಥಳೀಯ ಆಚರಣೆಗಳು ಹಾಗೂ ದೇಸಿ ಸಂಸ್ಕೃತಿಯ ಮರು-ಮೌಲ್ಯಮಾಪನ ಇವರ ಲೇಖನಗಳ ಪ್ರಮುಖ ವೈಶಿಷ್ಟ್ಯವಾಗಿದೆ.

    ಡಾ. ನಂಜುಂಡಸ್ವಾಮಿಯವರ ಲೇಖನಗಳು ಕೇವಲ ಪ್ರಾಚೀನ ಪಠ್ಯಗಳ ಪರಿಚಯವಷ್ಟೇ ಅಲ್ಲ; ಅವು ಹಸ್ತಪ್ರತಿಶಾಸ್ತ್ರ, ದೇಸಿ ಪರಂಪರೆಯ ಶೋಧ, ಛಂದಸ್ಸಿನ ವಿಕಾಸ (ಚಂಪೂ/ಸಾಂಗತ್ಯ) ಮತ್ತು ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ಒಗ್ಗೂಡಿಸಿ ನೋಡುವ ಅತ್ಯಂತ ಪ್ರಬುದ್ಧ ಶೈಕ್ಷಣಿಕ ಒಳನೋಟಗಳಾಗಿವೆ.

    ಐತಿಹಾಸಿಕ ದತ್ತಾಂಶಗಳ ಮರುಪರಿಶೀಲನೆ ಮತ್ತು ತಿದ್ದುಪಡಿ

ಈಗಾಗಲೇ ಸ್ಥಾಪಿತವಾಗಿರುವ ಮಾಹಿತಿಗಳನ್ನು ಕುರುಡಾಗಿ ಒಪ್ಪಿಕೊಳ್ಳದೆ, ಹೊಸ ಆಕರಗಳು ದೊರೆತಾಗ ಅವುಗಳನ್ನು ಮುಕ್ತವಾಗಿ ಮರುಪರಿಶೀಲಿಸುವ ಗುಣ ಒಬ್ಬ ನೈಜ ಸಂಶೋಧಕನ ಲಕ್ಷಣ.

ಉದಾಹರಣೆ: 'ಬಸವಣ್ಣನವರ ಷಟ್‌ಸ್ಥಲ ವಚನಗಳ ಪ್ರಥಮ ಪ್ರಕಟಣೆ 1889 ಅಲ್ಲ 1886' ಎಂಬ ಅವರ ಲೇಖನ. ವಚನ ಸಾಹಿತ್ಯದ ಮುದ್ರಣ ಇತಿಹಾಸದಲ್ಲಿ ಇದೊಂದು ಬಹುಮುಖ್ಯವಾದ ತಿದ್ದುಪಡಿಯಾಗಿದೆ. ಹಳೆಯ ಮುದ್ರಿತ ಕೃತಿಗಳು ಮತ್ತು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ಐತಿಹಾಸಿಕ ನಿಖರತೆಯನ್ನು ಅವರು ಮರುಸ್ಥಾಪಿಸಿದರು.

      ಸಂಶೋಧನೆ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಒಂಟಿ ಪ್ರಯತ್ನವಲ್ಲ, ಅದು ಜ್ಞಾನ ಹಂಚಿಕೆಯ ಮೂಲಕ ಬೆಳೆಯುವ ಒಂದು ಸಮೃದ್ಧ ಕ್ಷೇತ್ರ ಎಂಬುದನ್ನು ಡಾ. ನಂಜುಂಡಸ್ವಾಮಿ ಅವರು ನಂಬಿದ್ದರು ಮತ್ತು ತಮ್ಮ ಕಾರ್ಯದ ಮೂಲಕ ಅದನ್ನು ಸಾಬೀತುಪಡಿಸಿದರು.

    ಡಾ. ಸಿ. ವೀರಣ್ಣ ಅವರು ರಚಿಸಿದ 'ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ' ಎಂಬ ಪ್ರಮುಖ ಕೃತಿಗೆ ಬೇಕಾದ ಅತ್ಯಮೂಲ್ಯ ಮಾಹಿತಿಗಳು ಮತ್ತು ಮೂಲ ಆಕರ ಸಾಮಗ್ರಿಗಳನ್ನು ಒದಗಿಸಿದ ಶ್ರೇಯಸ್ಸು ಡಾ. ನಂಜುಂಡಸ್ವಾಮಿ ಅವರಿಗೆ ಸಲ್ಲುತ್ತದೆ.ಡಾ. ಸಿ. ವೀರಣ್ಣ ಅವರಷ್ಟೇ ಅಲ್ಲದೆ, ಡಾ. ಎಂ. ಚಿದಾನಂದಮೂರ್ತಿ, ಡಾ. ಎಂ. ಎಂ. ಕಲಬುರ್ಗಿ, ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಹಾಗೂ ಡಾ. ಎಸ್. ವಿದ್ಯಾಶಂಕರ (ಅವರ 'ಸಮಗ್ರ ವೀರಶೈವ ಸಾಹಿತ್ಯ ಚರಿತ್ರೆ' ಕೃತಿಗೆ) ಅವರಂತಹ ಶ್ರೇಷ್ಠ ಸಂಶೋಧಕರಿಗೂ ಅಗತ್ಯವಾದ ಆಕರ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅವರ ಅಧ್ಯಯನ ಕಾರ್ಯಗಳಿಗೂ ಇವರು ನೆರವಾದರು. ಇವರ ಮನೆಯಲ್ಲಿ ಕನ್ನಡ, ಇತಿಹಾಸ, ಸಂಶೋಧನೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಸುಮಾರು 40,000ಕ್ಕೂ ಅಧಿಕ ಅಪರೂಪದ ಗ್ರಂಥಗಳಿವೆ. ಇದು ರಾಜ್ಯದ ಅನೇಕ ಸಂಶೋಧಕರಿಗೆ ಒಂದು ಪ್ರಮುಖ ಆಕರ ಕೇಂದ್ರವಾಗಿದೆ. 

ಕೇವಲ ರಾಜ-ಮಹಾರಾಜರ ಆಡಳಿತಕ್ಕಷ್ಟೇ ಸೀಮಿತವಾಗಿದ್ದ ಶಾಸನಾಧ್ಯಯನವನ್ನು ಶರಣ ಪರಂಪರೆಯ ಮರುನಿರ್ಮಾಣಕ್ಕೆ ಅವರು ಬಳಸಿಕೊಂಡ ಬಗೆಯನ್ನು ಈ ಕೆಳಗಿನ ಪ್ರಮುಖ ಅಂಶಗಳ ಮೂಲಕ ವಿಶ್ಲೇಷಿಸಬಹುದು:

೧. ಶಾಸನಗಳ ಮೂಲಕ ಶರಣರ ಚರಿತ್ರೆಯ ಶೋಧನೆ

ಮರೆತುಹೋಗಿದ್ದ ಅಥವಾ ಕೇವಲ ಸಾಹಿತ್ಯದಲ್ಲಿ ಮಾತ್ರ ಉಲ್ಲೇಖವಾಗಿದ್ದ ಶರಣರ ಐತಿಹಾಸಿಕತೆಯನ್ನು ಶಿಲಾಶಾಸನಗಳ ಮೂಲಕ ದೃಢಪಡಿಸುವ ಮಹತ್ವದ ಕೆಲಸವನ್ನು ಅವರು ಮಾಡಿದರು.

ಹೊನ್ನಡುಕೆ ಗ್ರಾಮದ ಶಾಸನ: ಕೆಂಪಸೋಮಯ್ಯ ಒಡೆಯರ ಶಾಸನದ ಮೂಲಕ ತೋಂಟದ ಸಿದ್ಧಲಿಂಗೇಶ್ವರರ ಗುರುಗಳಾದ ಗೋಸಲ ಗುಬ್ಬಿ ಶ್ರೀ ಚೆನ್ನಬಸವೇಶ್ವರರಿಗೆ ಸಂಬಂಧಿಸಿದ ನಿರ್ಣಾಯಕ ಐತಿಹಾಸಿಕ ಮಾಹಿತಿಗಳನ್ನು ಅವರು ಬೆಳಕಿಗೆ ತಂದರು.

  ನಂಜನಗೂಡು ಶಾಸನ: ನಂಜನಗೂಡಿನ ವೀರಭದ್ರ ದೇವಾಲಯದಲ್ಲಿರುವ ತೋಂಟದ ಸಿದ್ಧಲಿಂಗನ ಮೂರ್ತಿ ಹಾಗೂ ಶಾಸನೋಕ್ತ ಉಲ್ಲೇಖಗಳನ್ನು ಅಧ್ಯಯನ ಮಾಡುವ ಮೂಲಕ, ಶಾಸನ-ದೇವಾಲಯ ಮತ್ತು ಶರಣ ಪರಂಪರೆಯ ನಡುವಿನ ನಿಕಟ ಸಂಬಂಧವನ್ನು ವಿವರಿಸಿ, ಸಿದ್ಧಲಿಂಗ ಶಿವಯೋಗಿಗಳ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಿದರು.

ಕಾವ್ಯ, ಪುರಾಣ ಮತ್ತು ಐತಿಹ್ಯಗಳ ವೈಜ್ಞಾನಿಕ ವಿಶ್ಲೇಷಣೆ

ಪ್ರಾಚೀನ ಕಾವ್ಯಗಳಲ್ಲಿ ಹುದುಗಿರುವ ಐತಿಹಾಸಿಕ ಸತ್ಯಗಳನ್ನು ಹೆಕ್ಕಿ ತೆಗೆಯಲು ಅವರು ಪಠ್ಯಗಳನ್ನು ಕೇವಲ ಕಾವ್ಯವಾಗಿ ನೋಡದೆ ಐತಿಹಾಸಿಕ ದಾಖಲೆಗಳಾಗಿ ಪರಿಶೀಲಿಸಿದರು.

 ಮಹಾಮನೆಯ ಸ್ಥಳಾಂತರದ ಜಿಜ್ಞಾಸೆ: ‘ಬಸವಣ್ಣನವರ ಮಹಾಮನೆ ಉಳಿವಿಗೆ ಸ್ಥಳಾಂತರಗೊಂಡಿತ್ತೇ?’ ಎಂಬ ಸಂಶೋಧನೆಯಲ್ಲಿ ಅವರು ಕೇವಲ ಸ್ಥಳಪುರಾಣಗಳನ್ನು ನಂಬದೆ, ಶಿವತತ್ವ ಚಿಂತಾಮಣಿಯಂತಹ ಪ್ರಾಚೀನ ಕಾವ್ಯಗಳು ಮತ್ತು ಲಭ್ಯ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಕಲ್ಯಾಣದಿಂದ ಉಳಿವಿಗೆ ನಡೆದ ಪಲ್ಲಟದ ಸತ್ಯಾನ್ವೇಷಣೆ ಮಾಡಿದರು.

ಸ್ಥಾಪಿತ ನಂಬಿಕೆಗಳ ಮರುಪರಿಶೀಲನೆ (ಕಾಲಜ್ಞಾನ ಮತ್ತು ಮಹಿಳೆ)

ಲಭ್ಯವಿರುವ ಹಳೆಯ ಕೃತಿಗಳು ಮತ್ತು ಹಸ್ತಪ್ರತಿಗಳ ಆಳವಾದ ಅಧ್ಯಯನವು ಸಮಾಜದಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ಹೇಗೆ ಹೋಗಲಾಡಿಸುತ್ತದೆ ಎಂಬುದಕ್ಕೆ ಅವರ ಸಂಶೋಧನೆಗಳೇ ಸಾಕ್ಷಿ.

ಈವರೆಗೂ 'ಕಾಲಜ್ಞಾನ ಸಾಹಿತ್ಯ' ಪರಂಪರೆಯು ಸಂಪೂರ್ಣವಾಗಿ ಪುರುಷ ನಿರ್ಮಿತ ಎಂಬ ಬಲವಾದ ಭಾವನೆ ಇತ್ತು. ಆದರೆ ಡಾ. ನಂಜುಂಡಸ್ವಾಮಿ ಅವರು ‘ಕಾಲಜ್ಞಾನ ರಚನೆ ಮಾಡಿದ ನೀಲಮ್ಮ’ ಎಂಬ ಅಧ್ಯಯನದ ಮೂಲಕ, ಶರಣರ ಕಾಲಜ್ಞಾನ ಪರಂಪರೆಯನ್ನು ಮಹಿಳೆಯರೂ ಮುಂದುವರಿಸಿದ್ದರು ಎಂಬ ಬಹುಮಹತ್ವದ ವಿಚಾರವನ್ನು ಸಾಧಾರವಾಗಿ ನಿರೂಪಿಸಿದರು.

   ನಂಜುಂಡಸ್ವಾಮಿಯವರ ಸಂಶೋಧನಾ ವೈಶಿಷ್ಟ್ಯಗಳು

ಡಾ. ಬಿ. ನಂಜುಂಡಸ್ವಾಮಿ ಅವರು ವೈದ್ಯ ವೃತ್ತಿಯ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿದರೆ, ಸಾಹಿತ್ಯ ಸಂಶೋಧನೆಯ ಮೂಲಕ ಕನ್ನಡದ ಸಾಂಸ್ಕೃತಿಕ ಆರೋಗ್ಯವನ್ನು ಕಾಪಾಡಿದ ಮಹನೀಯರು.” 

ಹಳೆಯ ಹಸ್ತಪ್ರತಿಗಳು, ಅಪರೂಪದ ಗ್ರಂಥಗಳು ಮತ್ತು ಶರಣ ಪರಂಪರೆಯ ಸಾಹಿತ್ಯವನ್ನು ಸಂರಕ್ಷಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.” ಧಾರ್ಮಿಕ ಪಠ್ಯಗಳನ್ನು ಕೇವಲ ತಾತ್ವಿಕವಾಗಿ ಅಲ್ಲದೆ ಇತಿಹಾಸ, ಸಮಾಜ ಮತ್ತು ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ. ಡಾ. ಬಿ. ನಂಜುಂಡಸ್ವಾಮಿ ಅವರ ಸಂಶೋಧನೆಯನ್ನು ಕೇವಲ ಒಂದು ಶೈಕ್ಷಣಿಕ ಅಧ್ಯಯನವಾಗಿ ನೋಡದೆ, ‘ಸಾಂಸ್ಕೃತಿಕ ಪ್ರಾಕ್ತನಶಾಸ್ತ್ರ’ ಮತ್ತು ‘ಜ್ಞಾನ ಪುನಃಸ್ಥಾಪನಾ ಚಿಕಿತ್ಸೆ’ ಎಂದು ಕರೆಯಬಹುದು. ಅವರ ಸಂಶೋಧನೆಯ ವಿಶೇಷತೆಯನ್ನು ಆಳವಾಗಿ ಗುರುತಿಸುವುದಾದರೆ, ಅದು ಈ ಕೆಳಗಿನ ಆರು ಆಯಾಮಗಳಲ್ಲಿ ವ್ಯಕ್ತವಾಗುತ್ತದೆ:

೧. ‘ಪಠ್ಯ ವಿಮರ್ಶೆ’ಯಲ್ಲಿ ಸಾಕ್ಷ್ಯಾಧಾರಿತ ಕಟ್ಟುನಿಟ್ಟು. ಅವರ ಸಂಶೋಧನೆಯ ಪ್ರಥಮ ಗುರುತು ಎಂದರೆ ಇತಿಹಾಸದ ಸುಳ್ಳು/ಸರಿಯಾದ ದಿನಾಂಕಗಳನ್ನು, ಕರ್ತೃತ್ವಗಳನ್ನು ವೈಜ್ಞಾನಿಕವಾಗಿ ತಿದ್ದುಪಡಿ ಮಾಡುವ ಪರಿಶ್ರಮ. ‘ಬಸವಣ್ಣನವರ ಷಟ್ಸ್ಥಲ ವಚನಗಳ ಪ್ರಥಮ ಪ್ರಕಟಣೆ ೧೮೮೯ ಅಲ್ಲ, ೧೮೮೬’ ಎಂದು ನಿಖರವಾಗಿ ಸ್ಥಾಪಿಸಿದ್ದು, ‘ಹಲಗೆಯಾರ್ಯನ ಶೂನ್ಯಸಂಪಾದನೆ’ಯ ಕುರಿತು ಹೊಸ ವಾದಗಳನ್ನಿಟ್ಟಿದ್ದುಇವು ಕೇವಲ ಊಹೆಯಲ್ಲ; ಇವು ಹಸ್ತಪ್ರತಿಗಳ ಕಾಲನಿರ್ಧಾರ, ಮುದ್ರಣದ ಇತಿಹಾಸ, ಮತ್ತು ಆ ಕಾಲದ ಸಾಮಾಜಿಕ ಸನ್ನಿವೇಶಗಳನ್ನು ಪರಸ್ಪರ ಹೋಲಿಸಿ ನಿಷ್ಕರ್ಷಿಸಿದ ವೈಜ್ಞಾನಿಕ ನಿಲುವುಗಳಾಗಿವೆ. ಇದು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಆಗಾಗ ಸ್ವೀಕೃತವಾಗಿದ್ದ ‘ಪೌರಾಣಿಕ ಸ್ವೀಕಾರ’ವನ್ನು ನಿರಾಕರಿಸಿ, ‘ಶಾಸ್ತ್ರೀಯ ಅನುಮಾನ’ವನ್ನು ಪ್ರತಿಷ್ಠಾಪಿಸಿದ ಮಾದರಿ.

    ಸಾಮಾನ್ಯ ಇತಿಹಾಸಕಾರರು ರಾಜರು, ರಾಜವಂಶಗಳ ಮೇಲೆ ಕೇಂದ್ರೀಕರಿಸಿದರೆ, ಇವರು ತುಮಕೂರು, ಮಧುಗಿರಿ, ಗೂಳೂರು, ಹೊನ್ನವಳ್ಳಿ, ಬೀರನಕಲ್ಲು ಮುಂತಾದ ಸಣ್ಣ ಪಾಳೆಯಗಾರರು ಮತ್ತು ಗ್ರಾಮೀಣ ಕ್ಷೇತ್ರಗಳ ಕಡೆ ಗಮನ ಹರಿಸುತ್ತಾರೆ. ಇದಲ್ಲದೆ, ವಚನ ಸಾಹಿತ್ಯದಲ್ಲಿ ಕಡೆಗಣಿಸಲ್ಪಟ್ಟಿದ್ದ ‘ನೀಲಮ್ಮ’ (ಕಾಲಜ್ಞಾನ ರಚನೆ) ಮತ್ತು ಮೈಸೂರು ಸ್ಟಾರ್ ಪತ್ರಿಕೆಯ ‘ವೀರಸಂಗಪ್ಪ’ನವರಂತಹ ವ್ಯಕ್ತಿಗಳನ್ನು ಬೆಳಕಿಗೆ ತಂದು, ಇತಿಹಾಸದ ಪ್ರಧಾನ ಪ್ರವಾಹದ ಹೊರಗಿರುವ ಶಕ್ತಿಗಳನ್ನು ದಾಖಲಿಸಿದ್ದಾರೆ. ಹಸ್ತಪ್ರತಿ ತಜ್ಞ ಎಸ್. ಶಿವಣ್ಣ’ನವರಂತಹ ಆಕರ ವಿಜ್ಞಾನಿಗಳನ್ನು ಗುರುತಿಸಿ ಅವರ ಕೊಡುಗೆಯನ್ನು ದಾಖಲಿಸಿದ್ದು ಅವರ ಸಂಶೋಧನೆಯ ವೈಶಿಷ್ಟ್ಯ. ಇದು ಇತಿಹಾಸದ ಪ್ರಜಾಪ್ರಭುತ್ವೀಕರಣಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯಾಗಿದೆ.

  ವಾಚಿಕ ಸಾಹಿತ್ಯ’ವನ್ನು (Oral Traditions) ಲಿಖಿತ ಪ್ರಮಾಣೀಕರಣಕ್ಕೆ ತರುವ ಕ್ರಾಂತಿಕಾರಿ ಪ್ರಯತ್ನ ಮಾಡಿದ್ದಾರೆ. ‘ಸ್ವರವಚನಗಳು’ ಮತ್ತು ‘ತತ್ವಪದಗಳು’ ಕನ್ನಡ ಸಾಹಿತ್ಯದ ಸುಪ್ತ ಪ್ರಕಾರಗಳಾಗಿದ್ದವು (ಸಂಗೀತ ಮತ್ತು ವಾಚಿಕ ಪ್ರಸಾರವನ್ನು ಅವಲಂಬಿಸಿದ್ದವು). ಇವುಗಳನ್ನು ಶಾಸ್ತ್ರೀಯ ಸಂಪಾದನಾ ಚೌಕಟ್ಟಿನೊಳಗೆ (ಗುಂಡಬಸವೇಶ್ವರಾಂಕಿತ ಸ್ವರವಚನಗಳು, ಸೋಮೇಕಟ್ಟಿ ಕರಿವೃಷಭೇಂದ್ರ ಸ್ವರವಚನಗಳು, ಖೇಮಣ್ಣನ ತತ್ವಪದಗಳು) ಮೊದಲ ಬಾರಿಗೆ ಮುದ್ರಿತ ರೂಪಕ್ಕೆ ತಂದು, ಅವಕ್ಕೆ ವಿಸ್ತೃತ ಪ್ರಸ್ತಾವನೆಗಳ ಮೂಲಕ ತಾತ್ವಿಕ ಹಿನ್ನೆಲೆ ನೀಡಿದ್ದು ಅವರ ಅತ್ಯಂತ ವಿಶಿಷ್ಟ ಸಾಧನೆ. ಸಾಹಿತ್ಯ ಸಂಶೋಧನೆ ಸಾಮಾನ್ಯವಾಗಿ ಪುಸ್ತಕ ರೂಪದ ಸಾಹಿತ್ಯಕ್ಕೆ ಸೀಮಿತವಾಗಿದ್ದರೆ, ಇವರು ‘ಶ್ರುತಿ-ಸ್ಮೃತಿ’ಯನ್ನು ಸಮಾನವಾಗಿ ಪರಿಗಣಿಸಿದ ವಿರಳ ವಿದ್ವಾಂಸರು.

   ಸಾಮಾನ್ಯ ಸಂಶೋಧಕರು ತಮ್ಮ ಕಂಡುಕೊಂಡ ಅಪರೂಪದ ದಾಖಲೆಗಳನ್ನು ತಮ್ಮ ಸ್ವಂತ ಕೃತಿಗಳಿಗೆ ಮಾತ್ರ ಬಳಸಿಕೊಳ್ಳುತ್ತಾರೆ. ಇದು ಅವರ ವೈಯಕ್ತಿಕ ಸಾಧನೆಗಿಂತ, ‘ಜ್ಞಾನ ಸಮುದಾಯ ಕಟ್ಟುವ’ ಮಹತ್ವಾಕಾಂಕ್ಷೆಗೆ ಸಾಕ್ಷಿಯಾಗಿದೆ. ತಮ್ಮದೇ ಆದ ಸಂಶೋಧನಾ ಮುದ್ರೆ ಉಳಿಸುವುದಕ್ಕಿಂತಲೂ, ಇತರರ ಸಂಶೋಧನೆಗೆ ‘ಬೆನ್ನೆಲುಬಾಗಿʼ ಕೆಲಸ ಮಾಡುವ ಸಂಸ್ಕೃತಿಯನ್ನು ಇವರು ಪ್ರತಿನಿಧಿಸುತ್ತಾರೆ.

   ಕೇವಲ ಹಸ್ತಪ್ರತಿಗಳನ್ನು ಮುದ್ರಿಸಿಬಿಡುವುದಲ್ಲದೆ, ಅವರು ಪ್ರತಿಯೊಂದು ಸಂಪಾದಿತ ಕೃತಿಗೂ ದೀರ್ಘ, ಐತಿಹಾಸಿಕ ಮತ್ತು ತಾತ್ವಿಕ ಪ್ರಸ್ತಾವನೆಯನ್ನು ಬರೆಯುತ್ತಾರೆ. ‘ಸಿದ್ಧಾಂತ ಶಿಖಾಮಣಿ’, ‘ಬಿ. ಶಿವಮೂರ್ತಿ ಶಾಸ್ತ್ರಿಗಳು’, ‘ಕೈವಲ್ಯ ಪದ್ಧತಿ’ಗಳಿಗೆ ಬರೆದಿರುವ ಪ್ರಸ್ತಾವನೆಗಳು ಅರ್ಧಕ್ಕಿಂತ ಹೆಚ್ಚು ಕೃತಿಯನ್ನು ಆಕ್ರಮಿಸಿದ್ದು, ಅವು ಆಯಾ ಗ್ರಂಥದ ತಾತ್ವಿಕ ಮೀಮಾಂಸೆ ಮತ್ತು ಸಾಮಾಜಿಕ ಪ್ರಸ್ತುತತೆಯನ್ನು ವಿವರಿಸುತ್ತವೆ. ಇದು ಪ್ರಾಚೀನ ಪಠ್ಯವನ್ನು ಆಧುನಿಕ ಓದುಗರ ಚಿಂತನೆಗೆ ಸಮೀಪ ತರುವ ಪ್ರಕ್ರಿಯೆಯಾಗಿದ್ದು, ಇದು ಆಳವಾದ ಜ್ಞಾನಶಾಸ್ತ್ರೀಯ  ಕ್ರಿಯೆಯಾಗಿದೆ.

   ನಂಜುಂಡಸ್ವಾಮಿಯವರ ಸಂಶೋಧನೆಯ ಮೂಲ ವಿಶೇಷತೆಯೆಂದರೆ, ಅದು ‘ಸಂಸ್ಕೃತಿಯ ಸರ್ಜನ್’. ಒಂದೆಡೆ ಅಪ್ರಕಟಿತ ಹಸ್ತಪ್ರತಿಗಳನ್ನು ಪತ್ತೆ ಮಾಡಿ ಶುದ್ಧೀಕರಿಸುತ್ತಾರೆ; ಮತ್ತೊಂದೆಡೆ ಕಾಲಗರ್ಭದಲ್ಲಿ ಮರೆಯಾದ ಪಾಳೆಯಗಾರರು, ಮಹಿಳಾ ಕವಯಿತ್ರಿಗಳು ಮತ್ತು ಸ್ಥಳೀಯ ಆಚರಣೆಗಳನ್ನು ಪುನರುಜ್ಜೀವನಗೊಳಿಸುತ್ತಾರೆ. ಇವರನ್ನು ಕೇವಲ ‘ಸಂಶೋಧಕ’ ಎನ್ನುವುದಕ್ಕಿಂತ, ‘ಕನ್ನಡದ ಸಾಂಸ್ಕೃತಿಕ ವಕೀಲ’ ಮತ್ತು ‘ಸ್ಮೃತಿ ಸಂರಕ್ಷಕ’ ಎಂದು ಕರೆಯುವುದೇ ಹೆಚ್ಚು ಸಮಂಜಸವಾಗಿದೆ. ಸ್ವಾತಂತ್ರ್ಯ ಹೋರಾಟದ ದಾಖಲೀಕರಣದವರೆಗೆ ವಿಸ್ತರಿಸಿರುವ ಅವರ ದೃಷ್ಟಿ; ಇವೆಲ್ಲವೂ ಸೇರಿ ಅವರನ್ನು "ಸಾಂಸ್ಕೃತಿಕ ಸ್ಮಾರಕ ಸಂರಕ್ಷಕ" ಎಂದು ಕರೆಯ ಬಹುದು ಎಂದೆನಿಸುತ್ತದೆ.

      ಡಾ. ಬಿ. ನಂಜುಂಡಸ್ವಾಮಿ ಅವರ ಸಂಶೋಧನೆಯನ್ನು ಆಳವಾಗಿ ಅವಲೋಕಿಸಿದಾಗ, ಅದು ಕೇವಲ ಐತಿಹಾಸಿಕ ಮಾಹಿತಿಯ ಸಂಗ್ರಹವಲ್ಲ; ಅದು ಕನ್ನಡದ ಸಾಂಸ್ಕೃತಿಕ ಅಸ್ತಿತ್ವವನ್ನು ಪುನರ್ರಚಿಸುವ, ಕಾಣೆಯಾದ ಕೊಂಡಿಗಳನ್ನು ಹುಡುಕಿ ಜೋಡಿಸುವ ಮತ್ತು ವಿಸ್ಮೃತಿಯ ಅಂಧಕಾರದಿಂದ ಅಮೂಲ್ಯವಾದ ಜ್ಞಾನವನ್ನು ಬೆಳಕಿಗೆ ತರುವ ಒಂದು ಮಹಾಯಜ್ಞ.

  ಸಾಮಾನ್ಯವಾಗಿ ಸಂಶೋಧಕರು ಒಂದು ನಿರ್ದಿಷ್ಟ ಕಾಲಘಟ್ಟ, ವ್ಯಕ್ತಿ ಅಥವಾ ವಿಷಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ. ಆದರೆ ಡಾ. ನಂಜುಂಡಸ್ವಾಮಿ ಅವರ ಅಧ್ಯಯನದ ವ್ಯಾಪ್ತಿ ಬೃಹತ್ ಮತ್ತು ಸಮಗ್ರವಾದುದು. ಅವರು ಕೇವಲ ವಚನ ಸಾಹಿತ್ಯವನ್ನಾಗಲೀ, ಶರಣರನ್ನಾಗಲೀ ಪ್ರತ್ಯೇಕವಾಗಿ ಅಧ್ಯಯನ ಮಾಡಲಿಲ್ಲ. ಬದಲಾಗಿ, ಅದನ್ನು ಸಮಾಜಶಾಸ್ತ್ರ, ರಾಜಕೀಯ ಇತಿಹಾಸ, ಧಾರ್ಮಿಕ ತತ್ವಶಾಸ್ತ್ರ, ಶಾಸನಶಾಸ್ತ್ರ, ಕಲೆ, ಮತ್ತು ಪತ್ರಿಕೋದ್ಯಮದಂತಹ ವಿಭಿನ್ನ ಕ್ಷೇತ್ರಗಳೊಂದಿಗೆ ಸಂಬಂಧಿಸಿ ನೋಡಿದರು

  ನಂಜುಂಡಸ್ವಾಮಿ ಅವರ ಸಂಶೋಧನೆಯು ಪ್ರಾಚೀನದಲ್ಲಿ ಮುಳುಗಿರಲಿಲ್ಲ; ಅದು ಸಮಕಾಲೀನ ಸಮಾಜದ ಸಮಸ್ಯೆಗಳೊಂದಿಗೆ ಸತತವಾಗಿ ಸಂವಾದ ನಡೆಸಿತು. 'ಸ್ವಾತಂತ್ರ್ಯ ಹೋರಾಟ'ದಂತಹ ವಿಷಯಗಳನ್ನು ಆಯ್ದುಕೊಳ್ಳುವುದು, 'ಬಸವ ಜಯಂತಿ ನಡೆದು ಬಂದ ದಾರಿ'ಯನ್ನು ದಾಖಲಿಸುವುದು, ಅಥವಾ 'ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಗೆ ಬಸವತತ್ವ ದರ್ಶನ'ವಾದ ಬಗೆಯನ್ನು ವಿವರಿಸುವುದುಇವೆಲ್ಲವೂ ಇತಿಹಾಸವನ್ನು ಪ್ರಸ್ತುತದೊಂದಿಗೆ ಸಂಪರ್ಕಿಸುವ ಅವರ ಪ್ರಯತ್ನವನ್ನು ತೋರಿಸುತ್ತವೆ.

    ಒಟ್ಟಾರೆಯಾಗಿ, ಡಾ. ಬಿ. ನಂಜುಂಡಸ್ವಾಮಿ ಅವರ ಸಂಶೋಧನೆಯು, ಕನ್ನಡದ ನೆಲದಲ್ಲಿ ಹುದುಗಿರುವ ಜ್ಞಾನದ ಪದರಗಳನ್ನು ಪತ್ತೆ ಮಾಡಿ, ಅವುಗಳನ್ನು ಎಚ್ಚರಿಕೆಯಿಂದ ಹೊರತೆಗೆದು, ಶುದ್ಧೀಕರಿಸಿ, ವರ್ಗೀಕರಿಸಿ, ಮತ್ತು ಅವುಗಳಿಗೆ ಹೊಸ ಅರ್ಥವನ್ನು ನೀಡಿದ್ದಾರೆ. ಅವರ ಸಂಶೋಧನೆಯು ವಿಶ್ವಾಸಾರ್ಹತೆ (ಸಾಕ್ಷ್ಯ), ಸಮಗ್ರತೆ (ಬಹುಶಿಸ್ತೀಯತೆ), ಮತ್ತು ಸಮಾಜಮುಖಿ ದೃಷ್ಟಿಕೋನಗಳ ಸಮ್ಮಿನವಾಗಿದೆ. ಅವರ ಕಾರ್ಯವು ಮುಂದಿನ ಪೀಳಿಗೆಯ ಸಂಶೋಧಕರಿಗೆ ದಾರಿದೀಪವಾಗಿದ್ದು, ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುವಲ್ಲಿ ಒಂದು ಮೈಲಿಗಲ್ಲಾಗಿದೆ.

   ಒಟ್ಟಾರೆ, ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನೆಯನ್ನು "ಆಕರ ಧಾರಿತ ಕನ್ನಡ ಸಾಂಸ್ಕೃತಿಕ ಇತಿಹಾಸದ ಪುನರ್‌ನಿರ್ಮಾಣ" ಎಂದು ವ್ಯಾಖ್ಯಾನಿಸಬಹುದು. ಅವರ ಅಧ್ಯಯನಗಳಲ್ಲಿ ಕಾಣುವ ಮೂಲಾಧಾರಗಳ ಶೋಧನೆ, ವೈಜ್ಞಾನಿಕ ಪಠ್ಯಸಂಪಾದನೆ, ಇತಿಹಾಸದ ಮರುಪರಿಶೀಲನೆ, ಶರಣ ಸಾಹಿತ್ಯದ ಹೊಸ ವ್ಯಾಖ್ಯಾನ, ಹಸ್ತಪ್ರತಿ ಸಂರಕ್ಷಣೆ ಮತ್ತು ಸ್ಥಳೀಯ ಇತಿಹಾಸದ ದಾಖಲಾತಿಇವೆಲ್ಲವೂ ಅವರನ್ನು ಸಮಕಾಲೀನ ಕನ್ನಡ ಸಂಶೋಧನೆಯಲ್ಲಿ ವಿಶಿಷ್ಟ ಸ್ಥಾನಕ್ಕೇರಿಸಿವೆ. ಅವರ ಸಂಶೋಧನಾ ಪರಂಪರೆ ಕೇವಲ ಪ್ರಕಟಿತ ಕೃತಿಗಳ ಸಮೂಹವಲ್ಲ; ಅದು ಕನ್ನಡದ ಜ್ಞಾನಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಹಸ್ತಾಂತರಿಸುವ ದೀರ್ಘದೃಷ್ಟಿಯ ಶೈಕ್ಷಣಿಕ ಚಳವಳಿಯಾಗಿದೆ.

    ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನೆಯನ್ನು ಕೇವಲ "ಶರಣ ಸಾಹಿತ್ಯ ಸಂಶೋಧನೆ" ಅಥವಾ "ಇತಿಹಾಸ ಸಂಶೋಧನೆ" ಎಂದು ಹೇಳುವುದು ಅಪೂರ್ಣವಾಗುತ್ತದೆ. ಅವರ ಸಂಶೋಧನೆಯು ವಾಸ್ತವವಾಗಿ ಕನ್ನಡ ಜ್ಞಾನಪರಂಪರೆಯ ಪುನರುಜ್ಜೀವನ ಚಳವಳಿಯಾಗಿದೆ. ಅವರ ಸಂಶೋಧನಾ ವಿಧಾನದಲ್ಲಿ ಭಾರತೀಯ ಪಾಂಡಿತ್ಯ ಪರಂಪರೆ, ಆಧುನಿಕ ಇತಿಹಾಸಶಾಸ್ತ್ರ, ಪಠ್ಯವಿಮರ್ಶೆ  ಸಾಂಸ್ಕೃತಿಕ ಅಧ್ಯಯನ, ಆಕರಶಾಸ್ತ್ರ ಮತ್ತು ದಾಖಲೀಕರಣ ಇವೆಲ್ಲವೂ ಸಮನ್ವಯಗೊಂಡಿವೆ.

  ನಂಜುಂಡ ಸ್ವಾಮಿಯವರು ಮೊದಲು ದಾಖಲೆಗಳನ್ನು ಪತ್ತೆಹಚ್ಚುತ್ತಾರೆ. ನಂತರ ಅವುಗಳನ್ನು ಸಂಪಾದಿಸುತ್ತಾರೆ. ಆಮೇಲೆ ವಿಶ್ಲೇಷಿಸುತ್ತಾರೆ. ಉದಾಹರಣೆಗೆ ಒಂದು ವಚನವನ್ನು ವಿಶ್ಲೇಷಿಸುವಾಗ, ಯಾರು ಬರೆದರು?ಯಾವ ಕಾಲ?ಯಾವ ಮಠ? ಯಾವ ಸಾಮಾಜಿಕ ಪರಿಸ್ಥಿತಿ? ಯಾವ ಚಳವಳಿಯ ಪರಿಣಾಮ? ಎಂಬ ಪ್ರಶ್ನೆಗಳನ್ನು ಎತ್ತುತ್ತಾರೆ.

    ಡಾ. ನಂಜುಂಡಸ್ವಾಮಿಯವರಲ್ಲಿ ಕಾಣುವ ಅತ್ಯಂತ ಅಪರೂಪದ ಗುಣವೆಂದರೆ ಪಾಠಭೇದಗಳ ವಿಮರ್ಶೆ. ಯಾವುದು ಮೂಲ? ಯಾವುದು ನಂತರದ ಸೇರ್ಪಡೆ? ಯಾವುದು ಮುದ್ರಣದ ತಪ್ಪು? ಯಾವುದು ಲಿಪಿಕಾರನ ತಪ್ಪು? ಯಾವುದು ಸಂಪಾದಕರ ವ್ಯಾಖ್ಯಾನ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾರೆ. ಅವರ ಬಹುತೇಕ ಕೃತಿಗಳು ದಾಖಲೀಕರಣದ ಉದ್ದೇಶ ಹೊಂದಿವೆ.

  ಉದಾಹರಣೆಗೆ ಮಠಗಳ ಇತಿಹಾಸ, ವ್ಯಕ್ತಿಚಿತ್ರಣ, ಸ್ಮರಣ ಗ್ರಂಥಗಳು, ಸಮುದಾಯದ ಇತಿಹಾಸ, ಗ್ರಾಮಗಳ ಇತಿಹಾಸ ಇವು ಕೇವಲ ವರ್ಣನೆಗಳಲ್ಲ. ಮುಂದಿನ ಸಂಶೋಧಕರಿಗೆ  ಮೂಲ ದತ್ತಾಂಶಗಳಾಗಿವೆ. ಇವರು ಒಂದುಗ್ರಾಮ, ಮಠ, ದೇವಾಲಯ, ಕುಟುಂಬ, ವ್ಯಕ್ತಿ, ಇವುಗಳ ಮೂಲಕ ಸಂಪೂರ್ಣ ಸಮಾಜವನ್ನು ಓದುತ್ತಾರೆ. ಮಾತನಾಡದ ಇತಿಹಾಸವನ್ನು ಮಾತನಾಡಿಸುವಂತಹರು. ಅವರು ಬೆಳಕಿಗೆ ತಂದವರು ಮಹಿಳಾ ಲೇಖಕರು, ಮರೆತ ಶರಣರು, ಪಾಳೇಗಾರರು, ಸ್ಥಳೀಯ ರಾಜರು, ಅಪರಿಚಿತ ಕವಿಗಳು ಲಿಪಿಕಾರರು, ಮಠಾಧೀಶರು ಇವರಿಲ್ಲದೆ ಕನ್ನಡದ ಇತಿಹಾಸ ಅಪೂರ್ಣವಾಗಿರುತ್ತಿತ್ತು. ಅವರ ಸಂಶೋಧನೆಯಲ್ಲಿ ಪುಸ್ತಕ, ಹಸ್ತಪ್ರತಿ ಶಾಸನ ದೇವಾಲಯ ಮಠ, ಗ್ರಾಮ ಸಂಸ್ಕೃತಿ, ಜನ ಸಂಸ್ಕೃತಿ ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಅವರು ಹಿಂದಿನ ಸಂಶೋಧಕರನ್ನು ತಿರಸ್ಕರಿಸುವುದಿಲ್ಲ. ಆದರೆ ಹೊಸ ದಾಖಲೆಗಳ ಮೂಲಕ ಪ್ರಕಟಣೆಯ ದಿನಾಂಕ, ಕರ್ತೃತ್ವ, ಐತಿಹಾಸಿಕ ಘಟನೆ ಪಠ್ಯ, ಇವುಗಳನ್ನು ತಿದ್ದುಪಡಿ ಮಾಡುತ್ತಾರೆ. ಅವರು ಸಾಹಿತ್ಯದೊಳಗಿನ ಪುರಾತತ್ವವನ್ನು ಮಾಡುತ್ತಾರೆ. ಅಂದರೆ ಒಂದು ವಚನದಿಂದ ಒಂದು ಕಾಲವನ್ನು, ಒಂದು ಶಾಸನದಿಂದ ಒಂದು ಸಮಾಜವನ್ನು, ಒಂದು ಪತ್ರದಿಂದ ಒಂದು ಆಡಳಿತವನ್ನು, ಒಂದು ಮಠದಿಂದ ಒಂದು ನಾಗರಿಕತೆಯನ್ನು ಪುನರ್‌ನಿರ್ಮಿಸುತ್ತಾರೆ.

   ನಂಜುಂಡಸ್ವಾಮಿಯವರ ಸಂಶೋಧನಾ ವಿಧಾನವನ್ನು ಕೆಳಗಿನ ಮಾದರಿಯಲ್ಲಿ ವಿವರಿಸಬಹುದು:

ಆಕರಶೋಧನೆ ಆಕರ ಪರಿಶೀಲನೆ ಪಠ್ಯ ವಿಮರ್ಶೆ ಐತಿಹಾಸಿಕ ಪುನರ್‌ನಿರ್ಮಾಣ ಸಾಂಸ್ಕೃತಿಕ ವಿಶ್ಲೇಷಣೆ ವೈಜ್ಞಾನಿಕ ಸಂಪಾದನೆ ದಾಖಲೀಕರಣ ಜ್ಞಾನ ಪ್ರಸಾರ ಮುಂದಿನ ಸಂಶೋಧನೆಗೆ ಆಕರ ನಿರ್ಮಾಣ ಈ ಕ್ರಮವು ಅವರ ಸಂಶೋಧನೆಯನ್ನು ಕೇವಲ ಲೇಖನ-ರಚನೆಯ ಮಟ್ಟದಲ್ಲಿರಿಸದೆ, ಜ್ಞಾನ ನಿರ್ಮಾಣ ಮತ್ತು ಜ್ಞಾನ ಸಂರಕ್ಷಣೆ  ಎಂಬ ಎರಡು ಮಹತ್ವದ ಅಕಾಡೆಮಿಕ್ ಗುರಿಗಳನ್ನು ಒಂದೇ ಸಮಯದಲ್ಲಿ ಸಾಧಿಸುವ ಮಾದರಿಯನ್ನಾಗಿ ರೂಪಿಸಿದೆ.

    ಡಾ. ಬಿ. ನಂಜುಂಡಸ್ವಾಮಿಯವರ ಸಂಶೋಧನೆಯ ಅತ್ಯಂತ ದೊಡ್ಡ ಕೊಡುಗೆ "ಕನ್ನಡದ ಮರೆತುಹೋದ ಜ್ಞಾನಸಂಪತ್ತನ್ನು ಆಕರಾಧಾರಿತ ವೈಜ್ಞಾನಿಕ ವಿಧಾನದಲ್ಲಿ ಪುನಃ ಸಾರ್ವಜನಿಕ ಜ್ಞಾನವಲಯಕ್ಕೆ ತಂದದ್ದು" ಎಂಬುದಾಗಿದೆ. ಅವರು ಕೇವಲ ಇತಿಹಾಸವನ್ನು ಬರೆದಿಲ್ಲ; ಇತಿಹಾಸದ ಮೂಲಗಳನ್ನು ಹುಡುಕಿದರು. ಕೇವಲ ವಚನಗಳನ್ನು ಸಂಪಾದಿಸಲಿಲ್ಲ; ಅವುಗಳ ಪಾಠ ಪ್ರಾಮಾಣಿಕತೆಯನ್ನು ಸ್ಥಾಪಿಸಿದರು. ಕೇವಲ ವ್ಯಕ್ತಿಚರಿತ್ರೆಗಳನ್ನು ದಾಖಲಿಸಲಿಲ್ಲ; ವ್ಯಕ್ತಿಸಂಸ್ಥೆಸಂಸ್ಕೃತಿಕಾಲಘಟ್ಟಗಳ ಪರಸ್ಪರ ಸಂಬಂಧವನ್ನು ವಿಶ್ಲೇಷಿಸಿದರು. ಈ ಕಾರಣದಿಂದ ಅವರ ಸಂಶೋಧನಾ ಪರಂಪರೆಯನ್ನು ಕನ್ನಡ ಅಧ್ಯಯನದಲ್ಲಿ "ಆಕರಕೇಂದ್ರಿತ ಸಾಂಸ್ಕೃತಿಕ ಇತಿಹಾಸಶಾಸ್ತ್ರ" (Source-centred Cultural Historiography) ಎಂಬ ಸಂಶೋಧನಾ ಮಾದರಿಯಾಗಿ ಪರಿಗಣಿಸಬಹುದಾದ ಶೈಕ್ಷಣಿಕ ಬಲವಿದೆ. ವಚನ ಮತ್ತು ವೀರಶೈವ ಅಧ್ಯಯನದ ಮೂಲಕ ಪ್ರಾದೇಶಿಕ ಧಾರ್ಮಿಕ ಸಾಂಸ್ಕೃತಿಕ ಜ್ಞಾನವನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಪೂರೈಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಶಾಸನ, ಹಸ್ತಪ್ರತಿ ಮತ್ತು ಸ್ಥಳೀಯ ದಾಖಲೆಗಳ ಆಧಾರಿತ ಸಂಶೋಧನೆಗಳು ಪ್ರಾದೇಶಿಕ ಇತಿಹಾಸದ ಪುನರ್‌ವ್ಯಾಖ್ಯಾನಕ್ಕೆ ಸಹಾಯಮಾಡಿವೆ.

   ಡಾ. ಬಿ. ನಂಜುಂಡ ಸ್ವಾಮಿ ಅವರ ಜೀವನ ಮತ್ತು ಕಾರ್ಯವು ಆಯುರ್ವೇದ ವೈದ್ಯಕೀಯ ಸೇವೆ, ವಚನ ಸಾಹಿತ್ಯ ಸಂಶೋಧನೆ ಮತ್ತು ಪ್ರಾದೇಶಿಕ ಇತಿಹಾಸದ ಸಂರಕ್ಷಣೆಯಲ್ಲಿ ಸಮನ್ವಯಿತ ಕೊಡುಗೆ ನೀಡಿದೆ. ಅವರ ಸಂಪಾದಕೀಯ ಕಾರ್ಯಗಳು ಮತ್ತು ಸಂಶೋಧನಾ ಲೇಖನಗಳು ಸ್ಥಳೀಯ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಅರಿವನ್ನು ವಿಸ್ತರಿಸುತ್ತವೆ. ಇವರ ಸಂಪಾದನೆಗಳು ಮೂಲ ಪಠ್ಯಗಳನ್ನು ಸಂರಕ್ಷಿಸುವುದಲ್ಲದೆ, ಆಧುನಿಕ ಪಠ್ಯ ವ್ಯಾಖ್ಯಾನಗಳಿಗೆ ಸಹಾಯಕವಾಗಿವೆ. ಇವು ಮುಂದಿನ ತಲೆಮಾರಿಗೆ ಪಠ್ಯ ಸಂಪನ್ಮೂಲಗಳಾಗಿ ಉಳಿಯುತ್ತವೆ. ಭವಿಷ್ಯದಲ್ಲಿ ಅವರ ಸಂಗ್ರಹಿತ ಕೃತಿಗಳು ಮತ್ತು ಸಂಶೋಧನಾ ದಾಖಲೆಗಳು ಇನ್ನಷ್ಟು ಶೈಕ್ಷಣಿಕ ಮತ್ತು ಸಾರ್ವಜನಿಕ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ.

     ಡಾ. ಬಿ. ನಂಜುಂಡಸ್ವಾಮಿಯವರ ಲೇಖನಗಳು ಕೇವಲ ಡೆಸ್ಕ್-ಟಾಪ್ ಸಂಶೋಧನೆ ಯಾಗಿರದೆ, ಕ್ಷೇತ್ರಕಾರ್ಯದ ಸ್ಪರ್ಶವನ್ನು ಹೊಂದಿವೆ. ಹಸ್ತಪ್ರತಿಗಳ ಅಧ್ಯಯನ, ಶಾಸನ ಪಾಠಗಳ ಪರಿಷ್ಕರಣೆ ಮತ್ತು ಹಿರಿಯ ವಿದ್ವಾಂಸರ ಕಾರ್ಯಗಳ ಮೇಲಿನ ವಿಮರ್ಶಾತ್ಮಕ ನೋಟವು ಇವರ ಸಂಶೋಧನಾ ಬರಹಗಳಿಗೆ ಉನ್ನತ ಶೈಕ್ಷಣಿಕ ತೂಕವನ್ನು ತಂದುಕೊಟ್ಟಿದೆ. ಶಾಸನ ಮತ್ತು ಸಾಹಿತ್ಯಾಧಾರಗಳಿಂದ ಐತಿಹಾಸಿಕ ಕಾಲಮಾನಗಳನ್ನು ನಿರ್ಧರಿಸಿರುವುದು ಸಾಂಸ್ಕೃತಿಕ ದೃಷ್ಟಿಕೋನ   ಸಾಹಿತ್ಯವನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ವಿಶ್ಲೇಷಿಸಿರುವುದು ಇವರ ಲೇಖನಗಳ ವೈಶಿಷ್ಟ್ಯವಾಗಿದೆ ಮಧ್ಯಕಾಲೀನ ಕನ್ನಡ ಸಾಹಿತ್ಯ, ಪಾಳೆಯಗಾರರ ಇತಿಹಾಸ, ಮತ್ತು ಹಸ್ತಪ್ರತಿಶಾಸ್ತ್ರದಲ್ಲಿ ಆಸಕ್ತಿಯಿರುವ ಸಂಶೋಧಕರಿಗೆ  ಇವರ ಸಂಶೋಧನಾ ಬರಹಗಳು ಅತ್ಯಮೂಲ್ಯವಾಗಿವೆ. ಭವಿಷ್ಯದಲ್ಲಿ ಅವರ ಸಂಗ್ರಹಿತ ದಾಖಲೆಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನಾವು ನೀಡಬೇಕು. ಅಂತಿಮವಾಗಿ "ಕನ್ನಡದ  ಅಲಕ್ಷಿತ  ಜ್ಞಾನಸಂಪತ್ತನ್ನು ಆಕರಧಾರಿತ ವೈಜ್ಞಾನಿಕ ವಿಧಾನದಲ್ಲಿ ಪುನಃ ಸಾರ್ವಜನಿಕ ಜ್ಞಾನವಲಯಕ್ಕೆ ತಂದ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ ಎಂದೇಳಬಹುದು.

           

    ಇವರ ಪ್ರಕಟಿತ ಪ್ರಮುಖ ಲೇಖನಗಳು

೧.ಹೊನ್ನುಡುಕೆ ಗ್ರಾಮದಲ್ಲಿ ದೊರೆತ ಕೆಂಪಸೋಮಯ ಒಡೆಯರ ಶಾಸನ : (ತೋಂಟದ ಸಿದ್ಧಲಿಂಗೇಶ್ವರರ ಗುರುಗಳಾದ ಗೋಸಲ ಗುಬ್ಬಿ ಶ್ರೀ ಚನ್ನಬಸವೇಶ್ವರರಿಗೆ ಸಂಬಂಧಪಟ್ಟದ್ದು), ಇತಿಹಾಸ ದರ್ಶನ, ೧೯೯೩.

೨.ಮೈಸೂರು ಸ್ಟಾರ್ ಪತ್ರಿಕೆ ಹಾಗೂ ಯಜಮಾನ್ ವೀರಸಂಗಪ್ಪನವರು, ಇತಿಹಾಸ ದರ್ಶನ, ೧೯೯೪.

೩.ಮುತ್ತಿನ ಮುಮ್ಮಡಿ ಏಳನಾಡುಪ್ರಭುಗಳು, ಕೋರಾ, ಇವರಲ್ಲಿರುವ ಜಯರೇಖೆ, ಇತಿಹಾಸ ದರ್ಶನ,

೪.ಈ ಶತಮಾನದ ಓಲೆಗರಿಯ ಲಿಪಿಗಾರ ಹಾಗಲವಾಡಿ ಅಳಗಯ್ಯ (ಸುಮಾರು ೧೮೪೦-೧೯೨೮) ಇತಿಹಾಸ ದರ್ಶನ, ೧೯೯೬.

೫.ಗುಬ್ಬಿ ಹೊಸಹಳ್ಳಿ ಅರಸು ಮನೆತನದವರಲ್ಲಿ ದೊರೆತ ಮೈಸೂರು ಅರಸರ ಪ್ರಧಾನ ಚನ್ನಪ್ಪಯ್ಯನ ಪತ್ರ ಇತಿಹಾಸ ದರ್ಶನ, ೧೯೯೭

೬. ಬೆಟ್ಟದಕೋಟೆ ಪ್ರಭುಗಳ ವಂಶಸ್ಥರು ಶಿವಗಂಗೆ ಗಂಗಾಧರೇಶ್ವರನಿಗೆ ಕೊಟ್ಟ ಪೂಜಾದತ್ತಿ ತಾಮ್ರಶಾಸನ, ಇತಿಹಾಸ ದರ್ಶನ, ೧೯೯೮

೭.ಹೈದರ್ ನಾಮಾ ಕೃತಿ ಕರ್ತೃ ಯಾರು ?

೮. ಸೀಬಿ ನರಸಿಂಹಸ್ವಾಮಿ ದೇವಸ್ಥಾನದ ಮಹಾದ್ವಾರದ ದಕ್ಷಿಣದ ಮಾಳಿಗೆಯಲ್ಲಿ ಕಪ್ಪು

೯. ಕಾಲಜ್ಞಾನ ರಚನೆ ಮಾಡಿದ ನೀಲಮ್ಮ  ಇತಿಹಾಸ ದರ್ಶನ, ೨೦೦೧.

೧೦.ಮೈಸೂರು ಪ್ರಭುಗಳು, ಇತಿಹಾಸ ದರ್ಶನ, ೨೦೦೨.

. ತೀರ್ಥಹಳ್ಳಿ ತಾಲ್ಲೂಕು ದರ‍್ವಾಸಪುರದ (ತುಂಗಭದ್ರಾ ತೀರ) ಮುಳಬಾಗಿಲು ಕೃಷ್ಣಾನಂದ ಮಠ ಪರಂಪರೆ, ಇತಿಹಾಸದರ್ಶನ, ೨೦೦೩.

. ಅಹೋಬಲನ “ವಿರೂಪಾಕ್ಷ ವಸಂತೋತ್ಸವ ಚಂಪೂ” ರಥೋತ್ಸವ ಕಾಂಡದ ಉಕ್ತ ಪ್ರಸಿದ್ಧ ವಂಶದ ಪ್ರಭುಗಳು, ಇತಿಹಾಸದರ್ಶನ, ೨೦೦೪.

. ಗುಬ್ಬಿ ಹೊಸಹಳ್ಳಿ ಅರಸು ಮನೆತನದಲ್ಲಿ ಕಂಠೀರವ ನರಸರಾಜ ಒಡೆಯರ ನಿರೂಪಗಳು ಮತ್ತು ಚಿಕ್ಕದೇವರಾಜ ಒಡೆಯರನಿರೂಪಗಳು, ಇತಿಹಾಸ ದರ್ಶನ, ೨೦೦೭.

. ʻಖಗೇಂದ್ರ ಮಣಿ ದರ್ಪಣ' ಕರ್ತೃ ಮೊದಲನೇ ಮಂಗರಾಜನ ಆಳ್ವಿಕೆಯ ಪ್ರದೇಶ ಮತ್ತು ಸ್ವಸ್ಥಾನಇತಿಹಾಸ ದರ್ಶನ,೨೦೦೭.

. ನಂಜನಗೂಡು ಶಾಸನೋಕ್ತ ವೀರಭದ್ರ ದೇಗುಲ ಕಪಿಲಾ ನದಿ ತೀರದ ಶಿವಾಲಯದಲ್ಲಿರುವ ತೋಂಟದ ಸಿದ್ಧಲಿಂಗರಮೂರ್ತಿ, ಇತಿಹಾಸ ದರ್ಶನ, ೨೦೦೭.

. ಉರವಗೊಂಡ ಗವಿಮಠದ ಚನ್ನಬಸವಸ್ವಾಮಿಗಳಿಗೆ ಮುಮ್ಮಡಿ ಕೃಷ್ಣರಾಜ ಒಡೆಯರ ಗ್ರಾಮ ಭೂದಾನ ಪತ್ರ, ಇತಿಹಾಸದರ್ಶನ, ೨೦೦೮.

. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಬೆಂಗಳೂರು ಕೃಷ್ಣರಾಜ ವಿಲಾಸ ಮುದ್ರಾಕ್ಷರ ಶಾಲೆ, ಇತಿಹಾಸ ದರ್ಶನ,೨೦೦೯.

. ದಾನಿವಾಸದ ದೊರೆಗಳು ಮತ್ತು ರಂಭಾಪುರಿ ಸಂಸ್ಥಾನ ಮಠ, ಇತಿಹಾಸ ದರ್ಶನ, ೨೦೧೦.

 ಇತರ ನಿಯತಕಾಲಿಕೆಗಳಲ್ಲಿ

೧. ಹರ್ಡೇಕರ ಮಂಜಪ್ಪನವರು ಸಂಪಾದಿಸಿದ 'ವಚನಕಾರರ ಸಮಾಜ ರಚನೆ : ಒಂದು ಪರಿಚಯ, ಸುಕುಮಾರ, ಫೆಬ್ರವರಿ೨೦೦೩.

೨. ಪಿ.ಆರ್.ಕರಿಬಸವಶಾಸ್ತ್ರೀ ಸಂಪಾದಿತ ಕಳಲೆ ನಂಜರಾಜನ 'ಸೌಂದರ್ಯ ಚರಿತ್ರೆ', ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ ೭೮,೨೦೦೦, ಸಂಚಿಕೆ ೧.

೩. ಲಿಂಗಪೂಜಾ ವಿಧಾನಂ : ಗುಬ್ಬಿ ವೀರೇಶ್ವರ ಶಾಸ್ತ್ರೀ ಸಂಪಾದಿತ ವೀರಶೈವಾಚಾರ ಕೌಸ್ತುಭಾದಿ ಗ್ರಂಥಾಂತರತ ಅಹಕ ಪ್ರಕರಣ, ಲಿಂಗಪೂಜಾ ವಿಧಾನಂ, ೧೮೯೨, ಪ್ರಸಾದ ನವೆಂಬರ್-ಡಿಸೆಂಬರ್ ೨೦೦೧.

೪. ರೆ.ಉತ್ತಂಗಿ ಚನ್ನಪ್ಪನವರ ಸರ್ವಜ್ಞನ ವಚನಗಳು ಪುಸ್ತಕದ ಪ್ರಥಮ ಮುದ್ರಣಕ್ಕೆ ವಚನ ಪಿತಾಮಹ ಫ.ಗು.ಹಳಕಟ್ಟಿ ಬರೆದಮುನ್ನುಡಿ ಗತಕಥನ (ಚಿತ್ರದುರ್ಗ) ಜುಲೈ-ಡಿಸೆಂಬರ್ ೨೦೧೫.

೫. ಕುಣಿಗಲ್ ಶ್ರಾವಕರ ಮನೆಯ ಹಸ್ತಪ್ರತಿಗಳು ಅರವಂಟಿಗೆ (ಶ್ರವಣಬೆಳಗೊಳ), ಆಗಸ್ಟ್ ೧೯೯೯,

. ನಂಜುಂಡ ಭಾಗವತವಿರಚಿತ 'ವೃಷಭೇಂದ್ರ ವಿಳಾಸ' ಜಗಜ್ಯೋತಿ ಬಸವೇಶ್ವರ ಕುರಿತ ಯಕ್ಷಗಾನ ಮಹಾನಾಟಕ, ಮಹಾಮನೆ, ಅಕ್ಟೋಬರ್೨೦೦೯.

ಬಸವ ಪಥ ನಿಯತಕಾಲಿಕೆ

೧. ಗುಬ್ಬಿ ಮಲ್ಲಣ್ಣಾರ್ಯನ ಹೊಸ ಕೃತಿಯ ಉಲ್ಲೇಖ, ಬಸವಪಥ, ಜೂನ್ ೨೦೦೦,

೨. ಮಹಾಲಿಂಗದೇವ - ವಾರಣಾಸೀಂದ್ರ, ಬಸವಪಥ, ಜನವರಿ ೨೦೦೭,

೩. ಜಕ್ಕಣ್ಣಾರ್ಯರ ಕೃತ ಏಕೋತ್ತರ ಶತಸ್ಥಲ ಕಳೆದ ಶತಮಾನದಲ್ಲಿ ಅಚ್ಚಾಗಿತ್ತೇ ? ಬಸವಪಥ, ನವೆಂಬರ್೨೦೦೯.

೪. ಗೋಸಲ ಗುಬ್ಬಿ ಶ್ರೀ ಚನ್ನಬಸವೇಶ್ವರರು, ಬಸವಪಥ, ಮಾರ್ಚ್ ೨೦೦೯.

೫. ಶಿವಗಂಗಾ ಕ್ಷೇತ್ರದಲ್ಲಿ ಬಸವೇಶ್ವರ ಸ್ಮರಣೋತ್ಸವ, ಬಸವಪಥ, ಏಪ್ರಿಲ್ ೨೦೧೧.

೬. ಕಂಚಿ ಶಂಕರಾರಾಧ್ಯನ ಸಂಸ್ಕೃತ “ಬಸವೇಶ ವಿಜಯ", ಜನವರಿ ೨೦೦೫.

೭. ಹರ್ಡೇಕರ್ ಮಂಜಪ್ಪನವರ ಜೀವನ-ಸಾಧನೆ, ಬಸವಪಥ, ಆಗಸ್ಟ್ ೨೦೧೧.

೮. “ಶ್ರೀ ಶರಣಗೀತಾ” ನೂರೊಂದು ವಚನಗಳ ಸಂಗ್ರಹ, ಬಸವಪಥ, ನವೆಂಬರ್ ೨೦೦೭.

೯. “ಅಂಬಿಗರ ಚೌಡಯ್ಯನ ವಚನವು” ವಚನ ಸಂಕಲನ ಗ್ರಂಥ, ಶೋಧಿಸಿದ ಗಣೇಶೋಪಾಸಕರು ಯಾರು? ನವೆಂಬರ್ ೨೦೦೫.

೧೦. 'ದೀಕ್ಷಾ ಮತ್ತು ಅಯ್ಯಾಚಾರದ ಸಂಪುಟ, ಬಸವಪಥ, ಜೂನ್ ೧೯೯೬,

೧೧. ಕೊಟ್ಟೂರು ಬಸವರಾಜ ವಿರಚಿತ ಬಸವರಾಜೀಯಂ ವೈದ್ಯ ಗ್ರಂಥ-ಒಂದು ಪರಿಚಯ, ಆಗಸ್ಟ್ ೨೦೦೫.

೧೨. ಪದ್ಮಶ್ರೀ ಬಿ.ಶಿವಮೂರ್ತಿ ಶಾಸ್ತ್ರೀಗಳ “ಶರಣ ಸಾಹಿತ್ಯ”, ಮಾಸಿಕ ಪತ್ರಿಕೆಯ ವಿಜ್ಞಾಪನಾ ಪತ್ರ, ಅಕ್ಟೋಬರ್ ೨೦೦೧.

೧೩. ವಚನ ಪಿತಾಮಹ ಫ.ಗು.ಹಳಕಟ್ಟಿ ಭಾಷಾಂತರಿಸಿದ ಬಸವಣ್ಣನ ಮೂರು ಹೊಸ ಆಂಗ್ಲ ವಚನಗಳು, ಮೇ ೨೦೧೩.

೧೪. ಅಷ್ಟಾವರಣದಲ್ಲಿ ಗುರು, ಸೆಪ್ಟೆಂಬರ್ ೨೦೦೮.

೧೫. ಬಸವ ಜಯಂತಿ ನಡೆದು ಬಂದ ದಾರಿ, ಏಪ್ರಿಲ್ ೨೦೧೨.

೧೬. ವಚನ ಸಾಹಿತ್ಯದ ಪ್ರಥಮ ಪ್ರಕಟಣೆ : ಅಖಂಡೇಶ್ವರ ವಚನ ೧೮೮೨, ಸೆಪ್ಟೆಂಬರ್ ೧೯೯೪.

೧೭. ಚಿದೈಶ್ಚರ್ಯ ಚಿದಾಭರಣದ ಆದಿ ಅಂತ್ಯದಲ್ಲಿ ಪ್ರಶಸ್ತಿ ಉಲ್ಲೇಖಗಳು, ಫೆಬ್ರವರಿ ೧೯೯೪.

೧೮. ಹಲಗೆಯಾರನ ಶಿಷ್ಯ ಕೆಂಚವೀರಣೋಡೆಯ ಶೂನ್ಯಸಂಪಾದನೆ ರಚಿಸಿದ್ದನೆ ? ಏಪ್ರಿಲ್ ೨೦೦೭.

೧೯. ಸ್ವರವಚನಕಾರ - ಹೊನ್ನಕವಿ, ಏಪ್ರಿಲ್ ೧೯೯೬.

೨೦. ಹಲಗೆಯಾರ್ಯನ ಶೂನ್ಯಸಂಪಾದನೆ - ಒಂದು ಟಿಪ್ಪಣಿ, ಸೆಪ್ಟೆಂಬರ್ ೨೦೦೬.

೨೧. ಹಲಗೆಯಾರ್ಯನ ಬಗೆಗಿನ ಇತ್ತೀಚಿನ ಶೋಧನೆಗಳು, ಮಾರ್ಚ್ ೨೦೦೧.

೨೨. ಬಸವಣ್ಣನವರ ಷಟ್‌ಸ್ಥಲ ವಚನಗಳ ಪ್ರಥಮ ಪ್ರಕಟಣೆ ೧೮೮೯ ಅಲ್ಲ ೧೮೮೬ ಮಾರ್ಚ್, ಬಸವಪಥ, ಆಗಸ್ಟ್ ೧೯೯೩.

ಹಸ್ತಪ್ರತಿ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ನೂರೈವತ್ತಕ್ಕೂ ಅಧಿಕ ಲೇಖನಗಳು ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥ, ಇತರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ

ಅಲಕ್ಷಿತ ಆಕರ ಆ ಧಾರಿತ ಕನ್ನಡ ಸಾಂಸ್ಕೃತಿಕ ಇತಿಹಾಸದ ಪುನರ್‌ನಿರ್ಮಾಣ ದ ಸಂಶೋಧಕ: ಡಾ.ಬಿ.ನಂಜುಂಡಸ್ವಾಮಿ                                              ಡಾ.ಸಿ.ನ...