ಶನಿವಾರ, ಡಿಸೆಂಬರ್ 27, 2025

                              ಕೆಲವು ಅಜ್ಞಾತ  ವಚನಕಾರರು

(ಮುನುಮುನಿ ಗುಮ್ಮಟದೇವ, ಭೋಗಣ್ಣ ಮಡಿವಾಳಯ್ಯಗಳ ಸಮಯಾಚಾರದ ಮಲ್ಲಿಕಾರ್ಜುನದೇವ)     ಡಾ.ಸಿ.ನಾಗಭೂಷಣ

    ಮನುಮುನಿ ಗುಮ್ಮಟದೇವ:  ವಚನಕಾರ ಮನುಮುನಿ ಗುಮ್ಮಟದೇವನು ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರ ಲಿಂಗ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರ ಲಿಂಗ ಈ ಎರಡು ಅಂಕಿತಗಳಲ್ಲಿ ವಚನಗಳನ್ನು ರಚಿಸಿದ್ದಾನೆ. ಬಸವಯುಗದಲ್ಲಿ ಕಂಡು ಬರುವ ಈತನ ವೈಯಕ್ತಿಯ ವಿಚಾರಗಳ ಕುರಿತು ಹೆಚ್ಚಿನ ವಿಷಯಗಳು ತಿಳಿದು ಬಂದಿಲ್ಲ. ಇವನ ವಚನಗಳಲ್ಲಿಯ ಕೆಲವು ಆಂತರೀಕ ಸಾಕ್ಷ್ಯಗಳು ಕೆಲವು ಮಾಹಿತಿಯನ್ನು ಪರೋಕ್ಷವಾಗಿ ಒದಗಿಸಿವೆ. ಈತನ ವಚನಗಳ ಸಂಕಲನದ ಆರಂಭದಲ್ಲಿಯ ಪೀಠಿಕಾ ಭಾಗದಲ್ಲಿಯ ಗದ್ಯಭಾಗವು ಈತನು ಮೊದಲು ಜೈನಮತದವನಾಗಿದ್ದು ನಂತರ ವೀರಶೈವ ಮತಕ್ಕೆ ಪರಿವರ್ತನೆ ಹೊಂದಿದವನೆಂಬುದರ ಸೂಚನೆಯನ್ನು ಒದಗಿಸುತ್ತದೆ.  ಆಭಾಗ ಇಂತಿದೆ.

      ಬಿಜ್ಜಳಂಗೆ ಹದಿನೆಂಟು ದೋಷಂಗಳ ತೀರ್ಚಿ ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳ ಸರ್ವ ಆತ್ಮ ಭೂತ ಹಿತವಾಗಿ ಇರೆಂದು ಆತಂಗೆ ಗುರುವಾದ ಮೀಮಾಂಸಕ ಆ ಮೀಮಾಂಸಕಂಗೆ ಸಕಲ ವ್ರತನೇಮ ನಿತ್ಯ ವ್ರತಮಾನ ಕೃತ್ಯ ಜಿನನೇಮ ಗುಣನಾಮವಂ ಬೋಧಿಸಿದ, ಬೌದ್ಧಂ ಅವತಾರಕ್ಕೆ ಮುಖ್ಯ ಆಚಾರ್ಯನಾದ ತನ್ನ ಸಮಯಕ್ಕೆ ಸಿಂಧು ಚಂದ್ರನಾದ ಮುನಮುನಿ ಗುಮ್ಮಟದೇವಗಳ ವಚನ

      ಈ ಗದ್ಯಭಾಗ ಸಂಕಲನಕಾರನಿಂದ ರಚಿತವಾಗಿದೆಯೆಂಬುದು ನಿಶ್ವಿತ. ಈ ಗದ್ಯಭಾಗದಲ್ಲಿ ಎರಡು ಸಂಗತಿಗಳು ಗಮನಾರ್ಹವಾಗಿವೆ.

೧. ಬಿಜ್ಜಳನು ಜೈನನಾಗಿದ್ದನೆಂಬುದು.

೨. ಗುಮ್ಮಟದೇವನು ಬಿಜ್ಜಳನ ಗುರುವಿನ ಗುರು ಎಂಬುದು.

ಆದರೆ ಈ ಗದ್ಯದಲ್ಲಿಯ ಒಂದು ಸಾಲು ಅನುಮಾನಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ‘ಬೌದ್ಧಂ ಅವತಾರಕ್ಕೆ ಮುಖ್ಯ ಆಚಾರ್ಯನಾದ ಎಂಬುದು ಜೈನ-ಬೌದ್ಧ ಮತಗಳಿಗೆ ವ್ಯತ್ಯಾಸವಿಲ್ಲದಂತೆ ಪ್ರಯೋಗವಾಗಿದೆ. ಈ ಹೇಳಿಕೆಯ ಬಗೆಗೆ ಕವಿಚರಿತೆಕಾರರು ಬಹುಶ: ಇದು ತಪ್ಪಿನಿಂದಾಗಿರಬಹುದು ಎಂಬ ಅಭಿಪ್ರಾಯ ತಾಳಿದ್ದಾರೆ. ಈ ಸಂಕಲನ ಕಾರರಿಗೆ ಜೈನ-ಬೌದ್ಧ ಮತಗಳಿಗೆ ಇರುವ ವ್ಯತ್ಯಾಸ ತಿಳಿಯದೆ ಈ ರೀತಿಯಾಗಿ ವ್ಯಕ್ತಪಡಿಸಿದ್ದಾನೆ ಎಂದೆನಿಸುತ್ತದೆ. ಆದಾಗ್ಯೂ ಈ ವಚನ ಗದ್ಯಭಾಗ ಪ್ರಕ್ಷಿಪ್ತವೊ ಅಥವಾ ಪರಂಪರಾಗತ ದೋಷದಿಂದಾಗಿ ಬೌದ್ಧ ಎಂಬುದು ನುಸುಳಿದೆಯೇ ಎಂಬ ಅನುಮಾನವು ನಮ್ಮನ್ನು ಕಾಡುತ್ತದೆ. ಮನುಮುನಿ ಗುಮ್ಮಟದೇವನು ಸಮಸ್ಯಾತ್ಮಕ ವ್ಯಕ್ತಿಯಾಗಿದ್ದಾನೆ. ಆದಾಗ್ಯೂ ಈತನು ಮೊದಲಿಗೆ ಜೈನನಾಗಿದ್ದು ಅನಂತರ ವೀರಶೈವ ಮತಕ್ಕೆ ಪರಿವರ್ತನೆ ಹೊಂದಿದ ವ್ಯಕ್ತಿಯಾಗಿದ್ದಾನೆಂಬುದಕ್ಕೆ ಈತನ ವಚನದಲ್ಲಿಯ ‘ಜಿನವಾಸ ಬಿಟ್ಟು ದಿನನಾಶನ ವಾಸವಾಯಿತ್ತು’ ಎಂಬ ನುಡಿಗಳು ಸಮರ್ಥಿಸುತ್ತವೆ. 

      ಕವಿಚರಿತೆಕಾರರು ಈತನ ಕಾಲವನ್ನು ಬಸವನ ಸಮಕಾಲೀನರ ಕಾಲವನ್ನು ಹೇಳುವ ಹಾಗೆ ಕ್ರಿ.ಶ.೧೧೬೦ ಎಂದು ಗುರುತಿಸಿದ್ದು, ಈತನು ತನ್ನ ವಚನಗಳನ್ನು ಬಸವಣ್ಣನನ್ನು ಕುರಿತು ಸ್ಮರಿಸದಿದ್ದರೂ ಒಂದು ವಚನದಲ್ಲಿ

‘ಅಂದಿಂಗೆ ಅನಿಮಿಷ ಕೈಯಲ್ಲಿ

ಇಂದಿಗೆ ಪ್ರಭುವಿನ ಗುಹೆಯಲ್ಲಿ ಗುಹೇಶ್ವರನಾದೆ

ಎನ್ನ ಗುಡಿಗೆ ಬಂದು ಗುಮ್ಮಟಂಗೆ ಮಠಸ್ಥನಾದೆ

ಅಗಮ್ಯೇಶ್ವರ ಲಿಂಗವೇ’ (ವ.ಸಂ.೧೦೯೨, ಸ.ವ.ಸಂ.೩.)

ಎಂದು ಅಲ್ಲಮ ಪ್ರಭುವಿನ ಬಗೆಗೆ ಉಲ್ಲೇಖಿಸಿರುವುದರಿಂದ ಈತನು ಬಸವಯುಗದ ಒಬ್ಬ ವಚನಕಾರನೆಂದು ಭಾವಿಸಬಹುದಾಗಿದೆ.

      ಜೈನನಾಗಿದ್ದ ಮನುಮುನಿ ಗುಮ್ಮಟದೇವನು ಯಾರ ಒತ್ತಡದಿಂದಾಗಿ ಹಾಗೂ ಏತಕ್ಕಾಗಿ ಜೈನಮತವನ್ನು ತ್ಯಜಿಸಿ ವೀರಶೈವನಾದ ಎಂಬುದಕ್ಕೆ ಎಲ್ಲಿಯೂ ಉಲ್ಲೇಖಗಳು ದೊರೆಯುತ್ತಿಲ್ಲ. ಅಲ್ಲಮಪ್ರಭುವನ್ನು ಕುರಿತು ಉಲ್ಲೇಖಿಸಿರುವ ವಚನದಲ್ಲಿಯ ವಿವರವು ಈತನು ಅಲ್ಲಮ ಪ್ರಭುವಿನಿಂದ ವೀರಶೈವ ದೀಕ್ಷೆಯನ್ನು ಪಡೆದಿರಬೇಕೆಂಬುದರ ಬಗೆಗೆ ಎಳೆ ಸಿಗುತ್ತಾದರೊ ಸಮರ್ಥಿಸಲು ಹೆಚ್ಚಿನ ಸಾಕ್ಷ್ಯಾಧಾರಗಳು ಬೇಕಾಗಿವೆ.

      ಈತನ ಹೆಸರಿನಲ್ಲಿ ದೊರೆಯುವ ವಚನಗಳ ಸಂಖ್ಯೆ ೧೦೦ ಎಂದು ಕವಿಚರಿತೆಕಾರರು ಹೇಳಿದ್ದರೂ ಸದ್ಯಕ್ಕೆ ೯೯ ವಚನಗಳು ಮಾತ್ರ ದೊರೆತಿವೆ. ಕ.ವಿ.ವಿ.ಯಿಂದ ಸುಂಕಾಪುರರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಕಲ ಪುರಾತನರ ವಚನಗಳು ಸಂಪುಟದಲ್ಲಿ ೧ರಲ್ಲಿ ಹಾಗೂ ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ಪ್ರಕಟವಾಗಿರುವ ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿಯ ಸಂಕೀರ್ಣ ವಚನ ಸಂಪುಟ ೩ರಲ್ಲಿಯೂ ಈತನ ಹೆಸರಿನಲ್ಲಿ ೯೯ ವಚನಗಳು ಮಾತ್ರ ಪ್ರಕಟವಾಗಿವೆ. ಈ ವಚನಗಳ ಅಂಕಿತವು ‘ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರ ಲಿಂಗ, ಅಥವಾ ‘ಗೂಡಿನೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ’, ಆಗಿದೆ.

  ಈತನು ಜೈನಮತದಿಂದ ವೀರಶೈವ ಧರ್ಮದ ಮತಾಂತರ ಹೊಂದಿದ ನಂತರ ವಚನಗಳನ್ನು ರಚಿಸಿದ್ದರೂ ಈತನ ಬಹುಪಾಲು ವಚನಗಳಲ್ಲಿ ಹೆಚ್ಚಾಗಿ ಭಕ್ತಸ್ಥಲ ಹಾಗೂ ಐಕ್ಯಸ್ಥಲದ ವಿಚಾರಗಳ ಗ್ರಹಿಕೆಯನ್ನು ಕಾಣಬಹುದಾಗಿದೆ.

      ಈತನ ವಚನಗಳಲ್ಲಿ ದಯವೇ ಧರ್ಮದ ಮೂಲ, ಏಕದೇವೋಪಾಸನೆ ಪರಮತ ದೂಷಣೆಯಂತಹ ಸಂಗತಿಗಳ ಬಗೆಗೆ ವಿವರಣೆ ವಿರಳವಾಗಿ ಕಂಡು ಬರುತ್ತದೆ. ಈತನ ಬಹುಪಾಲು ವಚನಗಳು ಬೆಡಗಿನವಚನಗಳಾಗಿವೆ. ಕೆಲವೆಡೆ ತಾನು ಪ್ರತಿಪಾದಿಸಬೇಕಾದ ವಿಷಯಗಳನ್ನು ಹಲವಾರು ನಿದರ್ಶನಗಳ ಮೂಲಕ ನಿರೂಪಿಸಲಾಗಿದೆ.

      ಈತನ ವಚನಗಳಲ್ಲಿ ಸೌಂದರ್ಯದ ಜೊತೆಗೆ ಭಾವವೂ ಕೇಂದ್ರೀಕೃತ ಗೊಂಡಿರುವುದನ್ನು ಕಾಣಬಹುದು.

ಕಣ್ಣಿನಲ್ಲಿ ನೋಡುವಡೆ ತೊಗಲಿನವನಲ್ಲ

ಕೈಯಲ್ಲಿ ಹಿಡಿವಡೆ ಮೈಯಿವನಲ್ಲ

ಭಾವದಲ್ಲಿ ನೋಡುವಡೆ ಬಯಲ ಸ್ವರೂಪ

ನಿನ್ನೊದಗ ಏತರಿಂದರಿವೆ

ಎನ್ನಭ್ರಾಂತಿನ ಬಲೆಗೆ ಸಿಕ್ಕಿಸಿಹೋದೆ (ವ.ಸಂ.೨೩)

ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ವಚನದಲ್ಲಿ ಅನಾಥ ಶಿಶುವಿನ ಹಂಬಲವನ್ನು ಗುರುತಿಸಬಹುದಾಗಿದೆ.

      ದಯವೇ ಧರ್ಮದ ಮೂಲ ಎಂಬುದನ್ನು ಈ ಕೆಳಕಂಡ ವಚನವು ಅತ್ಯಂತ ನವುರಾಗಿ ಬಿಂಬಿಸಿಸಿದೆ.

ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು

ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ

ಹಾಲು ದೇಹ ಹಲವಾದಡೆ ಅಳಿವು ಉಳಿವು ಎರಡೇ ಭೇದ

ಏನನರಿತಡೂ ಜೀವನ ನೋವನರಿಯಬೇಕು

 ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು

ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ

ಕಡಿಯಬಹುದೆ ಅಯ್ಯಾ? (ವ.ಸಂ.೪೩)

ಈತನ ಪ್ರಕಾರ ಪರಮಾತ್ಮನು ಒಬ್ಬನೇ. ಜ್ಞಾನ ಗುರುಕೊಟ್ಟ ಭಾವದ ಲಿಂಗವಿರೆ (ವ.ಸಂ.೪೬)

ಮತ್ತೇನನು ನೋಡಲೇಕೆ? ಗಂಡನುಳ್ಳವಳಿಗೆ ಮತ್ತೊಬ್ಬ ಬಂದಡೆ ಚಂದವುಂಟೆ? ಎಂದು ಪ್ರಶ್ನಿಸುತ್ತಾನೆ.

ಅಮೃತದ ಗುಟಿಕೆಯ ಮರೆದು

ಅಂಬಲಿಯನರಸುವನಂತೆ

ಶಂಬರ ವೈರಿ ತನ್ನಲ್ಲಿ ಇದ್ದು

ಕುಜಾತಿಯ ಬೆಂಬಳಿಯಲ್ಲಿ ದೋಹವರಿಗೆ

ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರ ಲಿಂಗ

ಅವರಿಗೆ ಇಲ್ಲಾ ಎಂದೆ

ಎಂಬಲ್ಲಿ (ವ.ಸಂ.೪೫) ಪರಮತಗಳ ಬಗೆಗೆ ತಿರಸ್ಕಾರವನ್ನು ಕಾಣಬಹುದು.

      ಈತನ ವಚನಗಳಲ್ಲಿ ಉಪಮೆ, ಗಾದೆ, ನಾಣ್ಣುಡಿಯಂತಹ ಮಾತುಗಳು ಸಂದರ್ಭೋಚಿತವಾಗಿ ಪ್ರಯೋಗಗೊಂಡಿವೆ.

ನಿದರ್ಶನಕ್ಕೆ: ಪ್ರಾಣ ತುಡುಕಿಗೆ ಬಂದಲ್ಲಿ ಕೊರಳ ಹಿಡಿದು ಅವುಂಕಿದರೆಂಬ

ಅಪಕೀರ್ತಿಯೇಕೆ.

ಬೇವ ಮನೆಗೆ ಕೊಳ್ಳಿಯ ಹಾಕಿ ದುರ್ಜನವ ಹೊರುವನಂತೆ

ಆಲೆಯ ಮನೆಯಲ್ಲಿ ಅಕ್ಕಿಯ ಹೊಯಿದು ಕೋಣೆಯಲ್ಲಿ ಕೂಳನರಸುವನಂತೆ

ಸುರೆಯ ಮಡಕೆಯಲ್ಲಿ ಹೂಸಿಪ್ಪ ಶ್ವೇತದಂತೆ (ವ.ಸಂ.೪೪)

ನೋಡುವಲ್ಲಿ ನೆರೆ ಶೃಂಗಾರವಲ್ಲದೆ ಕೂಡುವಲ್ಲಿ ಉಂಟೆ?

ನುಡಿವಲ್ಲಿ ಮಾತಿನ ಬಲುಮೆಯಲ್ಲದೆ.... (ವ.ಸಂ.೬೯)

ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ

ಈಶ್ವರನ ನರಿಯದವಂಗೆ ಸುಕೃತದ ಪೂಜೆಯ ಪುಣ್ಯವದೇಕೆ? (ವ.ಸಂ.೯೪)

ಈತನು ತಾನು ಹೇಳಬೇಕಾದ ತತ್ವವನ್ನು ಹಲವಾರು ನಿದರ್ಶನಗಳನ್ನು ಕೊಟ್ಟು ಸ್ಪಷ್ಟಪಡಿಸಿರುವ ರೀತಿಯನ್ನು ಕೆಲವು ವಚನಗಳು ಸಾಬೀತು ಪಡಿಸುತ್ತವೆ.

ಉದಾ: ಗತಿಯ ತೋರಿಹೆನೆಂದು ಪ್ರತಿರೂಪಾದೆ

ಎಳ್ಳಿನೊಳಗಣ ಎಣ್ಣೆ, ಕಲ್ಲಿನೊಳಗಣ ಬೆಂಕಿ

ಬೆಲ್ಲದೊಳಗಣ ಮಧುರ

ಅಲ್ಲಿಯೆ ಅಡಗಿ ಮಥನದಿಂದಲ್ಲದೆ ತೋರದವೊಲು

ಅಲ್ಲಿಯೇ ಅಡಗಿದೆ ಗುಡಿಯೊಳಗೆ (ವ.ಸಂ.೫೬)

ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು

ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ

ಹೊಳೆ ಒಂದೆ ಹಾದಿಯ ಒಲಬು ಬೇರಲ್ಲದೆ

ಧರೆ ಸಲಿಲ ಪಾವಕ ಇವು ಬೇರೆ ದೇವರ ಒಲವರವುಂಟೆ

ಧರೆ ಎಲ್ಲರಿಗೂ ಆಧಾರ, ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ

ಪಾವಕ ಸರ್ವಮಯರಿಗೆ ದಗ್ಧ

ಸರ್ವಮಯ ಪೂಜಿತ ದೈವದ ಆಧಾರ ನೀನಿಲ್ಲದೆ ಬೇರೆಯಿಲ್ಲ

ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ (ವ.ಸಂ.೬೬)

 

ಕೊಲುವರಿಗೆ ಜೀವದ ದಯವಿಲ್ಲ

ಪರಾಂಗನೆಯ ಬೆರಸುವಂಗೆ ತರಮೇಶ್ವರನ ಒಲಿವರವಿಲ್ಲ

ಪರರುವ ಬಂಧಿಸಿ ಬೇಡುವಂಗೆ ಧನದ ಒಲವರವಿಲ್ಲ (ವ.ಸಂ.೫೯)

ಇತ್ಯಾದಿ ವಚನಗಳ ಸಾಲುಗಳು ಓದುಗರನ್ನು ಆಲೋಚನೆಗೊಳಪಡಿಸುವಲ್ಲಿ ಸಾರ್ಥಕತೆಯನ್ನು ಪಡೆದಿವೆ.

      ಈತನ ಲಭ್ಯವಿರುವ ೯೯ ವಚನಗಳಲ್ಲಿ ಸುಮಾರು ೪೨ ವಚನಗಳು ಬೆಡಗಿನಿಂದ ಧಾಟಿಯಿಂದ ಕೂಡಿವೆ. ಉದಾಹರಣೆಗೆ ಇಲ್ಲಿ ಒಂದು ವಚನವನ್ನು ಉಲ್ಲೇಖಿಸಲಾಗಿದೆ.

ಗಿರಿಯ ಗುಹೆಯಲ್ಲಿ ಒಂದು ಅರಿ ಬಿರಿದಿನ ಹುಲಿ

ಹುಲ್ಲೆಯ ಭಯಕಾಗಿ ಎಲ್ಲಿಯೂ ಹೊರಡಲಮ್ಮದೆ ಅಲ್ಲಿ ಅದೆ

ಅದ ಮೆಲ್ಲನೆ ನೋಡಿ ಬಿಲ್ಲಂಬಿನಲ್ಲಿ ಎಸೆಯೆ

ಹುಲಿಹಾರಿ ಹುಲ್ಲೆಯಾಯಿತ್ತು

ಆ ಹುಲ್ಲೆ ಬಲೆಯೊಳಗಲ್ಲ ಬಾಣದೊಳಗಲ್ಲ

ಎಲ್ಲಿಯೂ ಸಿಕ್ಕದು ಇದ ಬಲ್ಲವರಾರು?

ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ

ತಿರುಗುವ ಭರಿತನು (ವ.ಸಂ.೨೭)

      ಈ ಮೇಲ್ಕಂಡ ಬೆಡಗಿನ ವಚನಗಳಲ್ಲಿ ಪರಮಾತ್ಮನನ್ನು ಅನುಷ್ಠಾನಗೊಳಿಸಿಕೊಳ್ಳುವ ಪರಿಯನ್ನು ಗೂಡಾರ್ಥದಲ್ಲಿ ಹೇಳಲಾಗಿದೆ. ಸಕಲ ಚರಾಚರಗಳಲ್ಲಿಯು ಪರಮಾತ್ಮನು ಇರತಕ್ಕವನು. ಅವನು ಅಹಂಕಾರಯುತವಾದ ಜೀವಿಯ ದೇಹದ ಮಧ್ಯಭಾಗದಲ್ಲಿಯೂ ಅಡಗಿ ಕುಳಿತಿರುತ್ತಾನೆ. ಮಾಯಾಪಾಶಬದ್ಧರಾದ ಜೀವಿಗಳ ಕಣ್ಣಿಗೆ ಆತ ಅಗೋಚರ. ಅವನನ್ನು ಕೇವಲ ಸುಜ್ಞಾನದಿಂದಾಗಲೀ ಮೋಕ್ಷದಿಂದಾಗಲೀ ಕೈವಶಮಾಡಿಕೊಳ್ಳಲು ಸಾಧ್ಯವಿಲ್ಲ. ಸದ್ಬಾವ ಸುಮನಗಳನ್ನೊಳಗೊಂಡು ಸುಜ್ಞಾನವನ್ನು ಅನುಷ್ಠಾನ ಮಾಡಿದಾಗ ಮಾತ್ರ ಆತನನ್ನು ಕೈವಶಮಾಡಿಕೊಳ್ಳುವುದು ಸಾಧ್ಯ. ಈ ವಿಷಯವನ್ನು ಇಲ್ಲಿ ಮುನುಮುನಿ ಗುಮ್ಮಟದೇವನು ಪರಮಾತ್ಮನನ್ನು ಹುಲಿಯನ್ನಾಗಿಯೂ, ಜೀವಿಯನ್ನು ಹುಲ್ಲೆಯನ್ನಾಗಿಯೂ ರೂಪಿಸಿಕೊಂಡು ಅರ್ಥವತ್ತಾಗಿ ವಿವರಿಸಿದ್ದಾನೆ.

   ಕೆಲವೆಡೆ ಈತನ ವಚನಗಳಲ್ಲಿ ಅತ್ಯಂತ ನವುರಾದ ವಿಡಂಬಣೆಯಿಂದ ಕೂಡಿರುವುದನ್ನು ಕಾಣ ಬಹುದಾಗಿದೆ.

  ಅರಿವಿಲ್ಲದವನ ಸಂಗ ಯಾವತೆರನಾಗಿರುತ್ತದೆಂಬುದನ್ನು ನಿರೂಪಿಸುವಲ್ಲಿ

  ಹಾದಿಯ ತೋರಿದವರೆಲ್ಲರು

  ಭಯಕ್ಕೆ ನಿರ್ಭಯವಂತರಾಗಬಲ್ಲರೆ?

  ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು

  ವೇದಿಸಬಲ್ಲರೆ ನಿಜತತ್ವವ?

  ಹಂದಿಯ ಶೃಂಗಾರ, ಪೂಷನ ಕಠಿಣದಂದ ಎಂದು ಬಳಸಿರುವುದು ಗಮನಾರ್ಹವಾಗಿದೆ.

 

   ಒಟ್ಟಾರೆ ಮನುಮುನಿ ಗುಮ್ಮಟದೇವನ ವಚನಗಳು ಕಿರಿದರಲ್ಲಿ ಹಿರಿದರ್ಥವನ್ನು ತುಂಬಿಕೊಂಡು ಭಾಷೆಬಂಧಗಳ ಬಿಗುವನ್ನು ಹೊಂದಿವೆ.ಕೆಲವೆಡೆ ಸ್ವಂತಿಕೆಯುಂಟು. ಸ್ವಾನುಭವದ ಅಚ್ಚಿನಲ್ಲಿ ಒಡಮೂಡಿರುವ ಶಿವಾನುಭವನ್ನು ಕೆಲವೆಡೆ ಗುರುತಿಸ ಬಹುದಾಗಿದೆ.ಮುನುಮುನಿ ಗುಮ್ಮಟದೇವರಂತಹ ಅಲಕ್ಷಿತ ವಚನಕಾರರು ಕೀರ್ತಿಗಾಗಿ, ಪಾಂಡಿತ್ಯ ಪ್ರದರ್ಶನಕ್ಕಾಗಿ ಎಂದಿಗೂ ವಚನಗಳನ್ನು ರಚಿಸಿದವರಲ್ಲ. ಅವರ ಅಂತರಂಗದ ಅನುಭಾವ ಹೃದಯತುಂಬಿ ಹೊರಸೂಸಿ ವಚನರೂಪ ತಾಳಿವೆ.ತಾವು ಪಡೆದ ಆಧ್ಯಾತ್ಮ ಜ್ಞಾನವನ್ನು ತಮ್ಮ ಲೌಕಿಕ ಜ್ಞಾನದೊಂದಿಗೆ ಸಮ್ಮಿಳಿನಗೊಳಿಸಿ ಸರಳ ಸುಂದರ ಶೈಲಿಯಲ್ಲಿ ವಚನಗಳನ್ನು ರಚಿಸಿದವರಾಗಿದ್ದಾರೆ.  ಈತನ ವಚನಗಳನ್ನು ಪರಿಶೀಲಿಸಿದಾಗ ಉತ್ತಮ ದರ್ಜೆಯ ವಚನಕಾರನಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆಯಾದರೂ ಈತನು ಇನ್ನೂ ಅಜ್ಞಾತಕಾರನಾಗಿ ಉಳಿದಿದ್ದು ಹೆಚ್ಚಿನ ಅಧ್ಯಯನ ನಡೆಯದಿರುವುದು ದುರದೃಷ್ಟಕರ ಸಂಗತಿಯಾಗಿದೆ.    

೨. ಭೋಗಣ್ಣ :

  ಹನ್ನೆರಡನೆಯ ಶತಮಾನದ ಬಸವಣ್ಣನವರ ಹಿರಿಯಸಮಕಾಲೀನ ವಚನಕಾರರ ಚರಿತ್ರೆಯನ್ನು ಅಧ್ಯಯನ ಮಾಡುವಾಗ  ನಮಗೆ ಮೂವರು ಮಂದಿ ಭೋಗಣ್ಣರು ಕಾಣಸಿಗುತ್ತಾರೆ. ೧. ಕೆಂಬಾವಿ ಭೋಗಣ್ಣ ೨. ಪ್ರಸಾದಿಭೋಗಣ್ಣ್ರ  ೩. ಭೋಗಣ್ಣ .  ಈ ಮೂವರು ವಚನಕಾರರೇ? ಆಗಿದ್ದರೆ ಇವರ ವಚನಗಳ ಅಂಕಿತ, ಇವರ  ಅಂಕಿತದ ಹೆಸರಿನಲ್ಲಿ ದೊರೆಯುವ ವಚನಗಳ ಸಂಖ್ಯೆ ಇತ್ಯಾದಿಗಳ  ಬಗೆಗೆ  ಇಂದಿಗೂ ಸರ್ವಸಮ್ಮತವಾದ  ಉತ್ತರವನ್ನು ಕಂಡುಕೊಳ್ಳಲು ವಿದ್ವಾಂಸರಲ್ಲಿ  ಸಾಧ್ಯವಾಗಿಲ್ಲ. ಇವರಲ್ಲಿ  ಪ್ರಸಾದಿ ಭೋಗಣ್ಣನು ಬಸವಣ್ಣನ ಸಮಕಾಲೀನ ವಚನಕಾರನಾಗಿದ್ದು ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗ ಅಂಕಿತದಲ್ಲಿ ರಚಿಸಿರುವ ೧೦೪ ವಚನಗಳು ಸಧ್ಯಕ್ಕೆ ಲಭ್ಯವಿವೆ.

     ಕವಿಚರಿತ್ರೆಕಾರರು ಹಾಗೂ ಫ.ಗು.ಹಳಕಟ್ಟಿಯವರು ಭೋಗಯ್ಯನೆಂಬ ವಚನಕಾರನನ್ನು ಹೆಸರಿಸಿ ಅವನ ವಚನಗಳ ಅಂಕಿತ ನಿಜಗುರು ಭೋಗಸಂಗ, ನಿಜಗುರು ಭೋಗೇಶ್ವರ ಎಂದಿದ್ದು ಈತನೇ ಹರಿಹರನ ರಗಳೆಯಲ್ಲಿ ನಿರೂಪಿತರಾಗಿರುವ ಕೆಂಭಾವಿ ಭೋಗಣ್ಣನಾಗಿರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೆಂಬಾವಿ ಭೋಗಣ್ಣನು ಬಸವಪೂರ್ವಯುಗದ ಶರಣನಾಗಿದ್ದು ತನ್ನ ಜೀವಿತಾವಧಿಯಲ್ಲಿ ನಡೆದ ಘಟನೆಯ ಬಗೆಗೆ  ಆದ್ಯವಚನಕಾರ ಜೇಡರದಾಸಿಮಯ್ಯನಿಂದ ಪ್ರಸ್ತಾಪಿಸಲ್ಪಟ್ಟಿದ್ದಾನೆ. ಹರಿಹರನ ಭೋಗಣ್ಣನ್ನು ಕುರಿತ ರಗಳೆಯಲ್ಲಿ ಕೆಂಭಾವಿಯಲ್ಲಿ ಭೋಗನಾಥ ಎನ್ನುವ ದೇವರು ಇರುವುದರ ಬಗೆಗೆ ಉಲ್ಲೇಖವಿದೆ.ತನ್ನಿಷ್ಟದೈವದ ಹೆಸರನ್ನು ಇಟ್ಟುಕೊಂಡಿದ್ದರಿಂದ ಕೆಂಬಾವಿಯ ಭೋಗಯ್ಯನೆನಿಸಿಕೊಂಡನು.ಕೆಂಬಾವಿ ಬೋಗಣ್ಣನನ್ನು ಕುರಿತು  ರಚಿತವಾದ ಕಾವ್ಯ ಪುರಾಣಗಳಲ್ಲಿ ಎಲ್ಲಿಯೂ ಈತನು ವಚನಗಳನ್ನು ರಚಿಸಿದ್ದಾನೆಂಬುದಕ್ಕೆ  ಸುಳುಹು ಗೋಚರಿಸುವುದಿಲ್ಲ. ಈತನು ವಚನಗಳನ್ನು ಬರೆದಿಲ್ಲವೆಂಬುದಕ್ಕೆ ಶಾಂತಲಿಂದೇಶಿಕನ ಭೈರವೇಶ್ವರಕಾವ್ಯಕಥಾಮಣಿ ಸೂತ್ರರತ್ನಾಕರದಲ್ಲಿ ಸುಳುಹು ಸಿಗುತ್ತದೆ. ಈ ಕಾವ್ಯದಲ್ಲಿ ಎಲ್ಲಾ ಶರಣರ ಚರಿತ್ರೆಯನ್ನು ನಿರೂಪಿಸಿ ಕೊನೆಯಲ್ಲಿ ಅವರ ಇಷ್ಟದೈವ ( ವಚನಗಳ ಅಂಕಿತ) ವನ್ನು ಕೊಡಲಾಗಿದೆ. ಆದರೆ ಕೆಂಭಾವಿ ಭೋಗಣ್ಣನನ್ನು ಕುರಿತು ಜೀವನ ಚರಿತ್ರೆ ಇದ್ದರೂ ಇಷ್ಟದೈವ ( ವಚನಗಳ ಅಂಕಿತ)ದ ಉಲ್ಲೇಖ ಕಂಡುಬರುವುದಿಲ್ಲ. ಕೃತಿಯಲ್ಲಿ ಭೋಗಣ್ಣನನ್ನು ಕುರಿತ  ಭಾಗದ ಕೊನೆಯಲ್ಲಿ `` ಪುರವ ಮುನ್ನಿನಂತೆ ರಚಿಸಿ ವಿಪ್ರರಿಗೆ ಅಭಯವನ್ನು ಕೊಟ್ಟು ಶಿವಭಕ್ತಿಯಂ ಮಾಡಿ ಭೋಗಣ್ಣನು ಲಿಂಗದೊಳಡಗಿದನು ” ಎಂಬ ವಿವರ ಇದೆಯೇ ಹೊರತು ` ಶಿವಭಕ್ತಯಾನಾಚರಿಸಿ ಗುರು ಕೃಪೆಯಿಂದ ನಿಜವನರಿದು ನಿಜಗುರು ಭೋಗಸಂಗನೆಂಬ ತಮ್ಮಿಷ್ಟಲಿಂಗದಲ್ಲಿ ಚರಿಸಾಡುತಿರ್ದು’ ಎಂಬ ವಿವರ ಇಲ್ಲ.  ಹೀಗಾಗಿ  ನಿಜಗುರು ಭೋಗಸಂಗ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಭೋಗಣ್ಣನೆಂಬ  ವಚನಕಾರನು ಕೆಂಬಾವಿ ಭೋಗಣ್ಣನಿಗಿಂತ ಬೇರೆಯವನಾಗಿದ್ದು ಬಸವಣ್ಣನ ಸಮಕಾಲೀನನಾಗಿದ್ದಾನೆ.

          ವಚನಕಾರ  ಭೋಗಣ್ಣನ ಇತಿವೃತ್ತದ ಬಗೆಗೆ ಆತನ ವಚನಗಳಿಂದಾಗಲೀ, ವೀರಶೈವ ಕಾವ್ಯ-ಪುರಾಣಗಳಿಂದಾಗಲೀ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ. ನಿಜಗುರು ಭೋಗೇಶ್ವರ ಅಂಕಿತದಲ್ಲಿಈತನು ರಚಿಸಿರುವ ೨೨ ವಚನಗಳು ಸದ್ಯಕ್ಕೆ ಉಪಲಬ್ಧವಿವೆ. ಈತನು ತನ್ನಕೆಳಕಂಡ ವಚನಗಳಲ್ಲಿ,

     ಸಿದ್ಧನಿಜಗುರು ಭೋಗಸಂಗನಲ್ಲಿ

     ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ

     ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ

     ನಮೋ ನಮೋ ಎಂದು ಬದುಕಿದೆ ( ವ.ಸಂ.೮)

     ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ

     ಇದರ ಭೇದವ ಬಲ್ಲವ ಅಲ್ಲಮನು

     ಪ್ರಭುವಿನ ಕರುಣವುಳ್ಳ ಲಿಂಗಾಗಿಗಳಲ್ಲದೆ ( ವ.ಸಂ.೧೨)

     ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ ( ವ.ಸಂ.೧೩) ಎಂದು ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಅಜಗಣ್ಣರನ್ನು ಧನ್ಯತಾ ಭಾವದಿಂದ ಸ್ತುತಿಸಿರುವುದನ್ನು ನೋಡಿದರೆ ಈತನು  ಬಸವಾದಿ ಪ್ರಮಥ ಸಮಕಾಲೀನನಾಗಿದ್ದು ಆತನ ಕಾಲವನ್ನು ಕ್ರಿ.ಶ.೧೧೬೦ ಎಂದು  ಊಹಿಸ ಬಹುದಾಗಿದೆ.

            ಈತನ ವಚನಗಳಲ್ಲಿ ಬಹುಪಾಲು ವಚನಗಳು ಧೀರ್ಘತೆಯಿಂದ ಕೂಡಿರುವುದು ವಿಶೇಷವೆನಿಸುತ್ತದೆ. ಈತನ ವಚನಗಳಲ್ಲಿ ಶರಣನ ಲಕ್ಷಣದ ಬಗೆಗೆ  ಹೆಚ್ಚಿನ ವಿವರಣೆ ಕಂಡು ಬರುತ್ತದೆ. ಷಟ್ಸ÷್ಥಲ ಸಿದ್ಧಾಂತದ ಬಗೆಗೂ ವಿವರಣೆ ಕಂಡು ಬರುತ್ತದೆ.

  ಶರಣನ ಲಕ್ಷಣದ ಬಗೆಗಿನ ಈ ಕೆಳಕಂಡ ವಚನವು

   ಅಯ್ಯಾ ನಿಮ್ಮ ಶರಣನ ಇರವು

   ಹರಿಯ ಕೈಯ ದೀವಿಗೆಯಂತೆ ಇದ್ದಿತಯ್ಯಾ

   ಪವನನ ಕೈಯ ಪರಿಮಳದಂತೆ ಇದ್ದಿತಯ್ಯಾ

    ನಮ್ಮ ಶರಣನ ಸುಳುಹು (ವ.ಸಂ.೩)

    ಬೀಜವಿಲ್ಲದ ವೃಕ್ಷ,ಎಲೆಯಿಲ್ಲದ ಉಲುಹು

    ಹೂವಿಲ್ಲದ ಪರಿಮಳ, ಕಾಯಿಲ್ಲದ ಹಣ್ಣು

    ರಸವಿಲ್ಲದ ನವರುಚಿ ಮೆಲಬಲ್ಲವನಾರೋ

    ಕಾಲು ಕೈಯಿಲ್ಲದ, ಕಿವಿಮೂಗಿಲ್ಲದ ಹುಟ್ಟುಗುರುಡನು

    ಆ ಹಣ್ಣ ಮೂಗಿನಲ್ಲಿ ಮೆದ್ದನು

    ಕಂಗಳಲ್ಲಿ ತೃಪ್ತಿಯಾಗಿ ಕಿವಿಯಲ್ಲಿ ತೇಗಿ

    ತಲೆಯಲ್ಲಿ ಲಿಂಗಕ್ಕರ್ಪಿಸಿ

    ಆ ಪ್ರಸಾದವ ಬಾಯಿಂದ ಉಂಡು

    ನಿಜಗುರು ಭೋಗಸಂಗನೊಳು

    ಒಚ್ಚತವೋದ ಶರಣರ ಇರವು (ವ.ಸಂ.೧೬) ಎಂದು  ವರ್ಣಿಸಿದ್ದಾನೆ.

     ಈತನ ಪ್ರಕಾರ ಭಕ್ತನ ಮೆಲಬಾರದು, ಭಕ್ತನ ಕೊಂದಡೆ ಪಂಚಮಹಾಪಾತಕ

      ಶಿವೋದಾತ ಶಿವೋಭಕ್ತ ಶಿವೋ ಜಗತ್ಸರ್ವಂ ಎಂದುದಾಗಿ ಈ ಅನುವನರಿದಾತ ಭಕ್ತ ಆತನೇ ಯುಕ್ತ, ಆತನೇ ಮುಕ್ತ ( ವ.ಸಂ.೧೭) ಎಂದು ಭಕ್ತನ ಮಹತ್ವವನ್ನು ವಿವರಿಸಿದ್ದಾನೆ.

 ಎರಡು ವಚನಗಳಲ್ಲಿ ಅತ್ಯಂತ ನವುರಾದ ವಿಡಂಬಣೆಯನ್ನು ಕಾಣಬಹುದಾಗಿದೆ.

  ಮಾತಿನಲ್ಲಿ ಭಕ್ತಿ ವಿನಯ ಉಪಚಾರವ ನುಡಿದರು

  ಅನುವಿಲ್ಲದರಿಯದೆ ಬರಿಯ ಬಾಯಭುಂಜಕರು

   ಜಾರೆ ಜಾರನ ಸ್ನೇಹದೊಳಿದ್ದು

   ನೀನಲ್ಲದೆ ಅಂತ:ಪುರವನರಿಯೆನೆಂದು

   ಕಣ್ಣನೀರತುಂಬುತ್ತ ಬೋಸರಿಗತನದಿಂದ

    ಒಡಲಹೊರೆವಳಂತೆ ( ವ.ಸಂ.೧೭)

   ವಾಗದ್ವೆೈತದಿಂದ ಒಡಲ ಹೊರೆವ ಶಬ್ದಬೋಧಕರಿಗೆ ಶರಣರ ಪದದೊರೆಯುವುದಿಲ್ಲವೆಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾನೆ. ಈತನ ಪ್ರಕಾರ ಆಗಮ ನಿಗಮ ಶಾಸ್ತ್ರ  ಪುರಾಣವೆಂಬ ಆಂಧಕನ ಕೈಗೆ ಕೋಲಕೊಟ್ಟು ನಡಸಿಕೊಂಡು ಹೋಗುವಾಗ, ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ ಎರಡಕ್ಕೆ ಕೆಟ್ಟ ಜಂಬುಕನಂತೆ ಆದವರು, ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದವರು, ಸಂತೆಯಲ್ಲಿ ಗುಡಿಸಲನಿಕ್ಕಿ ಹಡದುಂಬ ಸೂಳೆಯಂತೆ ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನ್ನಿಕ್ಕಿಕೊಂಡು ವಾಚಾಳಿಗತನದಿಂದ ಒಡಲಹೊರೆವವರೆಲ್ಲರೂ  ನಿಜಶರಣರಾಗಲು ಸಾಧ್ಯವಿಲ್ಲ.

 ಒಂದು ವಚನದಲ್ಲಿ ಭವಿ-ಭಕ್ತರನ್ನು ಕುರಿತು,

  ಆಚಾರವುಳ್ಳನ್ನಕ್ಕ ಭಕ್ತನಲ್ಲ

  ಅನಾಚಾರವುಳ್ಳನ್ನಕ್ಕ ಭವಿಯಲ್ಲ

  ಅಂಗ ನಷ್ಟವಾಗಿ ಕಂಗಳಲ್ಲಿ ಅರ್ಪಿಸಿ

   ತಲೆಯಲ್ಲಿ ಉಣ್ಣಬಲ್ಲಡೆ ಭಕ್ತ.

  ಅರ್ಪಿಸಿಕೊಳ್ಳದ, ಅನರ್ಪಿತವ ಮುಟ್ಟದೆ

  ಅಚ್ಚಪ್ರಸಾದವ ಕೊಳಬಲ್ಲಡೆ ಭವಿ ( ವ.ಸಂ.೫) ಎಂದು ನಿರ್ವಚಿಸಿದ್ದಾನೆ. ಒಟ್ಟಾರೇ ಈತನ ವಚನಗಳಲ್ಲಿ, ಅಷ್ಟಾವರಣಗಳ ಬಗೆಗೆ, ಭಕ್ತ-ಭವಿ, ಸಾಕಾರ-ನಿರಾಕಾರ, ಅಂಗ-ಲಿಂಗ, ವೇಷಡಂಭಕ-ಶಬ್ದಬೋಧಕ, ಭವಭಾರಿಗಳ ಬಗೆಗೆ ವಿವರಣೆ ಕಂಡು ಬರುತ್ತದೆ. ಈತನ ವಚನಗಳಲ್ಲಿ ಆರು ವಚನಗಳು ಬೆಡಗಿನ ವಚನಗಳ ಧಾಟಿಯನ್ನು ಹೊಂದಿವೆ. ಕೆಲವೆಡೆ ಈತನ ವಚನಗಳು ಉಪಮೆಗಳ ಮೂಲಕ ಕಾವ್ಯದ ಸ್ಪರ್ಶವನ್ನು  ಪಡೆದಿವೆ. ಆದಾಗ್ಯೂ ಈತನ ವಚನಗಳು ಬಹುಪಾಲು ಗದ್ಯಲಯಕ್ಕೆ ಸಮೀಪವಾಗಿದ್ದು ನೇರವಾದ ರಚನೆಯಿಂದಲೇ ಓದುಗರನ್ನು ಸೆಳೆಯುತ್ತವೆ.ಸರಳತೆ,ಸ್ಪಷ್ಟತೆಗಳು ತಕ್ಕಮಟ್ಟಿಗೆ ಈತನ ವಚನಗಳಲ್ಲಿ ಕಂಡು ಬರುತ್ತವೆ.  

೩. ಮಡಿವಾಳಯ್ಯಗಳ ಸಮಯಾಚಾರದ ಮಲ್ಲಿಕಾರ್ಜುನದೇವ :

  ಈತನು ಬಸವಯುಗದ ವಚನಕಾರನಾಗಿ ಕಂಡು ಬರುತ್ತಾನೆ. ಈತನ ಹೆಸರಿನಲ್ಲಿರುವ `ಮಡಿವಾಳಯ್ಯಗಳ ಸಮಯಾಚಾರದ’ ವಿಶೇಷಣವನ್ನು ಗಮನಿಸಿದರೆ ಈತನು ಮಡಿವಾಳ ಮಾಚಿದೇವನ ಅತ್ಯಂತ ನಿಕಟವರ್ತಿಯಾಗಿದ್ದನೆಂದು ಭಾವಿಸಬಹುದಾಗಿದೆ. ಹೀಗಾಗಿ ಈತನು ಮಡಿವಾಳ ಮಾಚಿದೇವನ ಕಾಲದವನಾದ್ದರಿಂದ  ತಾತ್ಕಾಲಿಕವಾಗಿ ಜೀವಿಸಿದ್ದ ಕಾಲವನ್ನು ಕ್ರಿ.ಶ. ೧೧೬೦ ಎಂದು  ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ. ಈತನ ವೈಯಕ್ತಿಕ ವಿವರಗಳ ಬಗೆಗೆ ಈತನೇ ರಚಿಸಿರುವ ವಚನಗಳಿಂದಾಗಲೀ ಅನ್ಯರ ವಚನಗಳಿಂದಾಗಲೀ. ವೀರಶೈವಕಾವ್ಯ-ಪುರಾಣಗಳಿಂದಾಗಲೀ ಯಾವುದೇ ಮಾಹಿತಿ ತಿಳಿದು ಬರುವುದಿಲ್ಲ. ಈತನ  ಪರಮಗುರು ಶಾಂತಮಲ್ಲಿಕಾರ್ಜುನ ಅಂಕಿತದಲ್ಲಿ ಒಂದು ವಚನ ಹಾಗೂ ಪರಮ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ ಅಂಕಿತದಲ್ಲಿ ಐದು ವಚನಗಳು ಒಟ್ಟು ೦೬ ವಚನಗಳು ಸದ್ಯಕ್ಕೆ ಉಪಲಬ್ಧವಿವೆ.

 ಶರಣನ ಮಹಿಮೆಯನ್ನು ಕುರಿತು,

  ಅರಿವನಲ್ಲ ಮರವನಲ್ಲ ಕುರುಹಿಟ್ಟರಸುವನಲ್ಲ

  ತಾನೆ ಪರಿಪೂರ್ಣವಾಗಿ ತಾನೆಂಬ ಭಾವವಳಿದು

  ಇದಿರೆಂಬ ಶಂಕೆಯನರಿಯ

  ಭಾವಿಸಿ ಬಳಲುವ ಭಾವದ ಭ್ರಮೆಯಳಿದು

  ಭಾವವೇ ಬ್ರಹ್ಮವಾಗಿ,ಭಾವಿಸುವ ಭಾವಕನಲ್ಲ.

  ಆಗುಹೋಗು ಭೋಗಭೂಷಣಂಗಳ ಅನುರಾಗಮಂ ತ್ಯಜಿಸಿ

  ಬಂಧಮೋಕ್ಷ ಸಂದುಸಂಶಯವೆಂಬ ಜಡತ್ವವನ್ನು ಕಳೆದು

  ನಿಂದ ನಿಲವಿನ ವಶಕ್ಕೆ ವಶವಾಗದೆ,

  ಸಹಜ ಶಾಂತಿಸಮತೆ ನೆಲೆಗೊಂಡು ನಿಂದಾತನೆ ಶರಣ ಎಂದು ನಿರೂಪಿಸಿದ್ದಾನೆ. ಅದಲ್ಲದೆ ಈತನ ಪ್ರಕಾರ ಶರಣ ನುಡಿದುದೆ ಸಿದ್ಧಾಂತ, ನೋಡಿದುದೆ ಅರ್ಪಿತ, ಮುಟ್ಟಿದುದೆ ಪ್ರಸಾದ ಎಂದು ಹೇಳುತ್ತಾ ಶರಣನ ಬಗೆಗೆ ಧನ್ಯತಾ ಭಾವವನ್ನು ವ್ಯಕ್ತಪಡಿಸಿದ್ದಾನೆ.

      ಮತ್ತೊಂದು ವಚನದಲ್ಲಿ ಲಿಂಗೈಕ್ಯನ ಬಗೆಗೆ ಹೇಳುತ್ತಾ, ಈತನು ರೂಹಿಲ್ಲದ ಕೂಟವ,ಕೂಟವಿಲ್ಲದ ಸುಖವ, ಸುಖವಿಲ್ಲದ ಪರಿಣಾಮವ, ಪರಿಣಾಮವಿಲ್ಲದ ಪರವಶವ, ಪರವಶ ಪರಮಾನಂದವೆಂಬುದಕ್ಕೆ ಎರವಿಲ್ಲವಾದವನು ಎಂದು ಹೇಳಿದ್ದಾನೆ. ಒಂದು ವಚನದಲ್ಲಿ ಇಹಲೋಕದಲ್ಲಿದ್ದು ಲೌಕಿಕ ಜೀವನದಲ್ಲಿಯೇ ತಾನು ಮುಳುಗಿ ಹೋದುದರ ಬಗೆಗೆ ` ಸತಿಯ ನೋಡಿ ಸಂತೋಷವ ಮಾಡಿ, ಸುತರ ನೋಡಿ ಸುಮ್ಮಾನವ ಮಾಡಿ,ಮತಿಯ ಹೆಚ್ಚುವಿನಿಂದ ಮೈಮರೆದೊರಗಿ, ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು ಮರುಳಾದೆ ಎಂದು ಪರಿತಪಿಸಿದ್ದಾನೆ.ಹಾಗೆಯೇ ಸ್ಥಾವರಲಿಂಗ ಪೂಜೆಯನ್ನು ಕೈಗೊಳ್ಳುವವರನ್ನು,

                 ಕರಸ್ಥಲದ ಲಿಂಗವ ಬಿಟ್ಟು

                 ಧರೆಯ ಮೇಲಣ ಪ್ರತುಮೆಗೆರಗುವ

                 ನರಕಿ ನಾಯಿಗಳನೇನೆಂಬೆನಯ್ಯಾ ಎಂದು ಸ್ಥಾವರಲಿಂಗ ಪೂಜೆಯನ್ನು ವಿಡಂಬಿಸಿದ್ದಾನೆ.

          ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು

           ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ

           ವ್ಯಕ್ತಿಯು,

           ಭ್ರಮರದೊಳಡಗಿದ ಕೀಟದಂತೆ

           ಉರಿಯೊಳಡಗಿದ ಕರ್ಪುರದಂತೆ

           ಕ್ಷೀರದೊಳು ಬೆರೆದ ಪಯದಂತೆ

           ಅಂಬುಧಿಯೊಳಡಗಿದ ವಾರಿಕಲ್ಲಿನಂತೆ

           ನಾನೀ ಎಂಬೆರಡಳಿದವನಾಗುತ್ತಾನೆ ಎಂದಿದ್ದಾನೆ. ಈ ವಚನದಲ್ಲಿಯ ಹೋಲಿಕೆಗಳು ಅಲ್ಲಮ ಪ್ರಭು ಹಾಗೂ ಆದಯ್ಯರ ವಚನದ ಸಾಲುಗಳನ್ನು ನೆನಪಿಸುತ್ತವೆ. ಈತನ ಲಭ್ಯವಿರುವ ಆರು ವಚನಗಳಲ್ಲಿ ವಿಷಯದ ಸ್ಪಷ್ಟತೆಗಾಗಿ ದೈನಂದಿನ ಜೀವನದ ಹೋಲಿಕೆಗಳನ್ನು ಬಳಸಿದ್ದಾನೆ. ಈತನ ವಚನಗಳು ಗದ್ಯದ ಲಯವನ್ನು ನೆನಪಿಸುತ್ತವೆ.

 ಪರಾಮರ್ಶನ ಗ್ರಂಥಗಳು

೧.     ಸಂಕೀರ್ಣ ವಚನಸಂಪುಟ- ೩ ( ಸಂ. ಬಿ.ಆರ್.ಹಿರೇಮಠ)

ಕನ್ನಡ ಸಂಸ್ಕೃತಿ ನಿರ್ದೇಶನಾಲಯ

ಬೆಂಗಳೂರು.  ೧೯೯೩

೨.    ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ

( ಪ್ರ.ಸಂ. ಹಾ.ಮಾ.ನಾಯಕ) ಸಂ.೪

ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ

 ಮೈಸೂರು. ೧೯೭೭

೩.  ಸಿ.ನಾಗಭೂಷಣ: ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

     ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ೨೦೦೦

 

 

 

 

   

 ಪಂಪ ಪೂರ್ವಯುಗದ (ಚಂಪೂ)ಹಳಗನ್ನಡ ಸಾಹಿತ್ಯ ರೂಪಗಳು, ಛಂದಸ್ಸು: ಕೆಲವು    ಟಿಪ್ಪಣಿಗಳು

                                   ಡಾ.ಸಿ.ನಾಗಭೂಷಣ

      ಕನ್ನಡ ಸಾಹಿತ್ಯಕ್ಕೆ ಬಹು ಪ್ರಾಚೀನವೂ ಸಮೃದ್ಧವೂ ಆದ ಚರಿತ್ರೆ ಇದೆ. ಸದ್ಯಕ್ಕೆ ಆರ್.ನರಸಿಂಹಾಚಾರ್ಯರ ಕರ್ನಾಟಕ ಕವಿಚರಿತೆಯ ಆಧಾರದ ಮೇಲೆ ಹೇಳುವುದಾದರೆ 19ನೆಯ ಶತಮಾನದ ಆದಿ ಭಾಗದವರೆಗಾಗಲೇ ಸಾವಿರದ ಇನ್ನೂರು ಕವಿಗಳು ಕಾಣಸಿಗುತ್ತಾರೆ. ಈಚೆಗಿನ ಅನುಕ್ತ ಕೃತಿಸೂಚಿಯನ್ನು ಗಮನಿಸಿದಾಗ ಇನ್ನೂ ನಾನೂರು ಹೊಸ ಹೆಸರುಗಳು ಗೋಚರವಾಗುತ್ತವೆ. ಕನ್ನಡ ಸಾಹಿತ್ಯ ಚರಿತ್ರೆ ಕನ್ನಡ ನಾಡಿನ ರಾಜಕೀಯ, ಧಾರ್ಮಿಕ, ಸಾಮಾಜಿಕ, ಜೀವನದ ಚರಿತ್ರೆಯೂ ಆಗಿದ್ದು ಅಂದಂದಿನ ಯುಗ ಧರ್ಮವನ್ನು ಪ್ರತಿಬಿಂಬಿಸುವಂತಿದೆ. ಒಟ್ಟಾರೆಯಾಗಿ ಗಮನಿಸುವುದಾದರೆ ಭಾರತೀಯ ಭಾಷಾ ಸಾಹಿತ್ಯಗಳ ಮೂಲ ಧೋರಣೆ, ಸಾಂಸ್ಕೃತಿಕ ದೃಷ್ಠಿಕೋನಗಳನ್ನು ಇಲ್ಲೂ ಕಾಣಬಹುದಾಗಿದೆ. ಪಂಪ, ರನ್ನ, ಜನ್ನ, ನಾಗವರ್ಮ, ಬಸವಣ್ಣ ಮಹದೇವಿಯಕ್ಕ, ಹರಿಹರ, ರಾಘವಾಂಕ, ಪುರಂದರ, ಕನಕದಾಸ, ನಾರಾಯಣಪ್ಪ, ಲಕ್ಷ್ಮೀಶ, ಸರ್ವಜ್ಞ, ರತ್ನಾಕರವರ್ಣಿ, ಕೆಂಪುನಾರಾಯಣ, ಮುದ್ದಣ್ಣ ಮೊದಲಾದವರ ಕೃತಿಗಳಲ್ಲಿ ಹಲವು ಪ್ರಪಂಚದ ಅತಿ ಶ್ರೇಷ್ಠ ಕೃತಿಗಳ ಮಟ್ಟದವಾಗಿವೆ.

      ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕವಿರಾಜಮಾರ್ಗ ಮತ್ತು ಇನ್ನಿತರ ಆಧಾರಗಳು ಕ್ರಿ.. 850ಕ್ಕಿಂತ ಹಿಂದೆ ಕನ್ನಡ ಸಾಹಿತ್ಯವಿದ್ದಿತು ಎಂಬುದಕ್ಕೆ ಆಧಾರಗಳೇ ಹೊರತು ಎಷ್ಟು ಹಿಂದೆ ಎಂಬುದಕ್ಕಲ್ಲ. ಕ್ರಿ.ಪೂ 3ನೇ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಬರುವಇಸಿಲಎಂಬ ಸ್ಥಳವಾಚಿ ಪದವು ಅಚ್ಚಗನ್ನಡವೆಂದೂ, ತೇದಿಯುಳ್ಳ ಅತ್ಯಂತ ಪ್ರಾಚೀನವಾದ ಕನ್ನಡ ಪದವೆಂದು ಈಗಾಗಲೇ ಸಂಶೋಧಕರು ಗುರುತಿಸಿದ್ದಾರೆ. ಇತ್ತೀಚೆಗೆ ಇದಕ್ಕೆ  ವ್ಯತಿರಿಕ್ತವಾದ ಅಭಿಪ್ರಾಯಗಳನ್ನು ಷ.ಶೆಟ್ಟರ್‌ ಅವರು ಕಲಬುರಗಿ ಜಿಲ್ಲೆಯ ಚಿತಾಪುರ ತಾಲೋಕಿನ ಕನಗನಹಳ್ಳಿಯಲ್ಲಿ ದೊರೆತ ಪ್ರಾಕೃತ ಶಾಸನಗಳ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿದ್ದಾರೆ.  ಆದಾಗ್ಯೂ ಕ್ರಿಸ್ತಶಕಕ್ಕಿಂತಲೂ ಪೂರ್ವದಲ್ಲಿ ಕನ್ನಡ ಭಾಷೆ ಸಾಕಷ್ಟು  ಪ್ರಚಾರದಲ್ಲಿತ್ತು ಎಂಬುದಕ್ಕೆ ಕನ್ನಡ ಭಾಷೆಯಲ್ಲಿಯ ಆಂತರಿಕ ಸಾಕ್ಷ್ಯಗಳು ಮತ್ತು ಅನ್ಯಭಾಷೆಯ ಸಾಕ್ಷಾಧಾರಗಳು ಆಕರಗಳಾಗಿವೆ.

      ಕವಿರಾಜಮಾರ್ಗದಂತಹ ಲಕ್ಷಣಕೃತಿಗಳನ್ನು ಪರಿಶೀಲಿಸುವ ವರೆಗೆ ಅದಕ್ಕೂ ಹಿಂದೆ ಕನ್ನಡದಲ್ಲಿ ರಚನೆಯನ್ನು ಮಾಡಿದ ಗದ್ಯ ಪದ್ಯ ಕವಿಗಳ ಉಲ್ಲೇಖ ಮಾತ್ರ ವಿದಿತವಾಗುವುದಲ್ಲದೆ, ಅಂತಹ ಕವಿಗಳ ಕಾವ್ಯಗಳ ಸ್ವರೂಪ ಯಾವ ವಿಧವಾಗಿದ್ದಿತು ಎಂಬುದನ್ನು ತಿಳಿಯುವಲ್ಲಿ ಕಾಲದ ಶಾಸನ ಸಾಹಿತ್ಯದತ್ತ ಹೊರಳಿ ನೋಡಬೇಕಾಗುತ್ತದೆ. ಬಾದಾಮಿ ಚಾಲುಕ್ಯರ ಮತ್ತು ಅದಕ್ಕೂ ಪೂರ್ವದ ಕಾಲದ ಹಲವಾರು ಕನ್ನಡ ಶಾಸನಗಳು ನಮಗೆ ಲಭ್ಯವಿವೆ. ಇವುಗಳಿಂದ ಶಾಸನಗಳಲ್ಲಿ ಮಾತ್ರವಲ್ಲದೆ ಹೊರಗಡೆಯಲ್ಲಿಯೂ ಆ ಕಾಲದ ಕನ್ನಡ ಸಾಹಿತ್ಯದ ಸ್ವರೂಪ ಯಾವ ರೀತಿ ಇದ್ದಿತು ಎಂಬುದು ಕೆಲ ಮಟ್ಟಿಗೆ ತಿಳುವಳಿಕೆಯಾಗುತ್ತದೆ. ಕವಿರಾಜಮಾರ್ಗಕ್ಕಿಂತ ಪೂರ್ವದಲ್ಲಿ ದೊರೆಯುವ ಶಾಸನಗಳ ಪದ್ಯದ ಭಾಷೆಗೂ ಕವಿರಾಮಾರ್ಗದ ಭಾಷೆಗೂ ಸಾಕಷ್ಟು ವ್ಯತ್ಯಾಸವಿರುವುದು ಎದ್ದು ಕಾಣುತ್ತದೆ. ಕವಿರಾಜಮಾರ್ಗದಲ್ಲಿ ಪೂರ್ವದ ಹಳಗನ್ನಡದ ಗ್ರಹಿಕೆಯನ್ನು ಕಾಣುವುದು ದುಸ್ತರವಾಗಿದೆ. ಶಾಸನ ಪದ್ಯಗಳಲ್ಲಿಯಾದರೂ ಪೂರ್ವದ ಹಳಗನ್ನಡದ ಸ್ವರೂವನ್ನು ಗುರುತಿಸಬಹುದಾಗಿದೆ. ಶಾಸನಗಳ ಪದ್ಯಗಳಲ್ಲಿ ಸಂಸ್ಕೃತ ಪ್ರಾಕೃತಗಳಿಂದ ಎರವಲು ಪಡೆದ ಪದಗಳೇ ಅಧಿಕೃತವಾಗಿರುವುದು ಕಂಡುಬರುತ್ತವೆಯಾದರೂ ಅಚ್ಚಗನ್ನಡ ಪ್ರಯೋಗಗಳು ಬಳಕೆಯಾಗಿವೆ. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ, ಶ್ರವಣ ಬೆಳಗೊಳದ 22,76, 88ನೇ ಸಂಖ್ಯೆಯ ಶಾಸನಗಳು ಮತ್ತು ವಳ್ಳಿಮಲೆ ಶಾಸನಗಳಲ್ಲಿ ಸಂಸ್ಕೃತ ಮತ್ತು ಕನ್ನಡಗಳು ಹದವಾಗಿ ಬೆರೆತುಕೊಂಡಿರುವುದು ಕಂಡುಬರುತ್ತದೆ. ಶಾಸನ ಪದ್ಯಗಳು ಕರ್ನಾಟಕದಾದ್ಯಂತ ದೊರೆತಿರುವುದು ಅಂದಿನ ಕನ್ನಡ ಸಾಹಿತ್ಯದ ಪ್ರಮಾಣ (Standard) ಭಾಷೆಯನ್ನು ಪ್ರತಿನಿಧಿಸುತ್ತದೆ. ಅಂದಿನ ಕಾಲದ ಸಾಹಿತ್ಯ ಆಚಾರ್ಯರಿಂದ ಮನ್ನಣೆ ಪಡೆದ ಭಾಷೆಯ ಸ್ವರೂಪ ಬಹುಶಃ ಶಾಸನಗಳ ಪದ್ಯಗಳ ಭಾಷೆಯಂತಿದ್ದಿರಬೇಕು ಎಂದು ಭಾವಿಸಿದರೆ ಆರಂಭಕಾಲದ ಕನ್ನಡ ಸಾಹಿತ್ಯ ಕೃತಿಗಳು ಭಾಷಿಕವಾಗಿ ಹೇಗಿದ್ದವು ಎಂಬುದನ್ನು ಊಹೆಮಾಡಿಕೊಳ್ಳಬಹುದಾಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಚಾರಿತ್ರಿಕವಾಗಿ ಗಮನಿಸುವುದಾದರೆ ಅದಕ್ಕೆ ನಿಶ್ಚಿತವಾದ ಮಾನದಂಡವನ್ನು ಶಾಸನಗಳಲ್ಲಿ ಹುಡುಕಬಹುದು. ಕ್ರಿ..700ಕ್ಕಿಂತ ಪೂರ್ವದ ಕರ್ನಾಟಕದ ಕಾವ್ಯಮಯವಾದ ಶಾಸನಗಳಲ್ಲೆಲ್ಲಾ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿದ್ದು ಚಂಪೂ ಸ್ವರೂಪದ ಲಕ್ಷಣಗಳನ್ನು ತಕ್ಕ ಮಟ್ಟಿಗೆ ಒಳಗೊಂಡಿದೆ. ಕ್ರಿ..450 ತಾಳಗುಂದ ಶಾಸನದ ಕರ್ತೃ ಕುಬ್ಜ. ಕ್ರಿ. 634 ಐಹೊಳೆ ಶಾಸನದ ಕರ್ತೃ ರವಿಕೀರ್ತಿ. ಕ್ರಿ. 602 ಮಹಾಕೂಟ ಶಾಸನದ ಅಜ್ಞಾತ ಕವಿ ಇವರೆಲ್ಲ ಕನ್ನಡ ನಾಡಿನ ಶಾಸನ ಕವಿಗಳು. ಇವರೆಲ್ಲಾ ಸಂಸ್ಕೃತದಲ್ಲಿ ಶಾಸನಗಳನ್ನು ರಚಿಸಲು ಬಹುಶಃ ಕನ್ನಡವು ಪದ್ಯ ರಚನೆಗೆ ಇನ್ನೂ ಅಷ್ಟಾಗಿ ಬಳಕೆಯಾಗಿದ್ದುದೇ ಅಥವಾ ರವಿಕೀರ್ತಿಯಂತವರು ತಾನು ಕಾಳಿದಾಸ, ಭಾರವಿಯವರಿಗೆ ಸಮಾನ ಕೀರ್ತಿಯುಳ್ಳವನು ಎಂದು ಹೇಳಿಕೊಂಡಿರುವುದನ್ನು ಮನಗಂಡರೆ ಆ ಕಾಲದ ಕವಿಗಳು ಸಂಸ್ಕೃತದಲ್ಲಿ ಕಾವ್ಯ ರಚನೆ ಮಾಡಿ ಅಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದುದೇ ಕಾರಣ ವಾಗಿರ ಬಹುದು ಎಂಬುದಾಗಿ ತಿಳಿದುಬರುತ್ತದೆ.

      ಕನ್ನಡ ಸಾಹಿತ್ಯದ ಪ್ರಾಚೀನರೂಪಗಳ ಬಗೆಗೆ ಶಾಸನಗಳಲ್ಲಿ ಕೆಲವು ಮಾಹಿತಿಗಳು ಲಭ್ಯವಿವೆ. ಅಚ್ಚಗನ್ನಡ ದೇಸೀ ಛಂದೋರೂಪದ ಬಳಕೆ ಕ್ರಿ. 700 ಬಾದಾಮಿ ಶಾಸನದಲ್ಲಿ ಪ್ರಥಮವಾಗಿ ಕಂಡುಬರುತ್ತದೆ. ತ್ರಿಪದಿ ರೂಪದ ಶಾಸನವು ಕನ್ನಡ ವೀರನೊಬ್ಬನ ಸುಸಂಸ್ಕೃತವಾದ ಗುಣವೈಶಿಷ್ಟ್ಯವನ್ನು ತಿಳಿಸುತ್ತದೆ. ಪ್ರಾಚೀನ ಕನ್ನಡ ಶಾಸನ ಸಾಹಿತ್ಯದಲ್ಲಿ ವ್ಯಕ್ತಿ ಚಿತ್ರಣಕ್ಕೆ ಪ್ರಾಧಾನ್ಯತೆ ದೊರೆತಿರುವುದು ಇದರಿಂದ ವ್ಯಕ್ತವಾಗುತ್ತದೆ. ಬಾದಾಮಿ ಶಾಸನದ ತ್ರಿಪದಿಗಳು ಕಾಲಕ್ಕಿಂತಲೂ ಹಿಂದಿನಿಂದಲೂ ಕನ್ನಡದಲ್ಲಿ ಪ್ರಚಲಿತವಾಗಿದ್ದ ಜನಪದಗೀತ ಸಾಹಿತ್ಯವಿದ್ದಿರಬೇಕು ಎಂಬ ಅರಿವನ್ನು ಮೂಡಿಸುತ್ತದೆ. ನಗರ ತಾಲ್ಲೂಕಿನ ಹುಂಚ ಶಾಸನದಲ್ಲಿಯ ಗಂಗರಸ ಸೈಗೊಟ್ಟ ಶಿವಮಾರನ ಗಜಾಷ್ಟಕ ಎಂಬ ಒನಕೆವಾಡು ದೇಸಿ ಕಾವ್ಯದ ಪ್ರಸ್ತಾಪದಿಂದ ಜಾತಿಯ ದೇಶಿಯ ಪದ್ಯರಚನೆ ಕನ್ನಡದಲ್ಲಿ ಕೆಲವು ಕಾಲದಿಂದಲೂ ನಡೆಯುತ್ತಿದ್ದುದು ಮಾತ್ರವಲ್ಲದೆ ಕವಿಗಳ ಹಾಗೂ ಲಾಕ್ಷಣಿಕರ ಮನ್ನಣೆಗೂ ಪಾತ್ರವಾಗಿದ್ದಿತು ಎಂಬುದು ತಿಳಿದುಬರುತ್ತದೆ. ಒನಕೆವಾಡು ಎಂದರೆ ಕುಟ್ಟುವ ಎಂದರೆ ಬೀಸುವ ಕೇರುವ ಹಾಡು. ಒನಕೆವಾಡುವಿನ ಬಗೆಗೆ 10ನೇ ಶತಮಾನದ ನಂತರದ ದುರ್ಗಸಿಂಹ, ನೇಮಿಚಂದ್ರ, ಸುರಂಗ, ಶಾಂತಲಿಂಗ ದೇಶಿಕ, ಷಡಕ್ಷರಿ ಕವಿಗಳ ಕೃತಿಗಳಲ್ಲಿಯೂ ಪ್ರಸ್ತಾಪವಿದ್ದು ಒನಕೆವಾಡು ಶೀರ್ಷಿಕೆಯ ಕೆಳಗೆ ಕೆಲವು ತ್ರಿಪದಿಗಳು ಕಂಡುಬರುತ್ತವೆ. ಹಿನ್ನೆಲೆಯಲ್ಲಿ ಒನಕೆವಾಡು ಎನಿಸಿಕೊಂಡ ಗಜಾಷ್ಟಕ ಕುಟ್ಟುವ ಹಾಡಲು ಬಳಸುತ್ತಿದ್ದ ತ್ರಿಪದಿರೂಪವಾಗಿದ್ದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

      ಸಾಹಿತ್ಯವು ಸಾಕಷ್ಟು ಸಮೃದ್ಧವಾಗಿ ಬೆಳೆಯದ ಹೊರತು ಶಾಸನಗಳು ಹುಟ್ಟುವುದು ಸಾಧ್ಯವಿಲ್ಲ. ಕನ್ನಡದಲ್ಲಿ ಬಹುಪ್ರಾಚೀನ ಕಾಲದಲ್ಲಿಯೇ ಕನ್ನಡ ಗದ್ಯ ಪದ್ಯ ಶಾಸನಗಳು ದೊರಕುತ್ತವೆ. ಪದ್ಯ ಶಾಸನಗಳಲ್ಲಿ ಹಲವು ವಿಧದ ವೃತ್ತಗಳು ಬಳಕೆಯಾಗಿವೆ. ಇವುಗಳಲ್ಲಿ ಹಲವು ಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುವ ವೃತ್ತಗಳು ಇಲ್ಲಿನ ಭಾಷೆ ಪುರಾತನ ಹಳಗನ್ನಡವಾಗಿರುವುದರ ಜೊತೆಗೆ ಸಂಸ್ಕೃತ ಶಬ್ದ ಬಾಹುಳ್ಯವನ್ನು ಒಳಗೊಂಡಿದೆ. ಇದನ್ನು ನೋಡಿದರೆ ಪದ್ಯ ಸಾಹಿತ್ಯ ವೇಳೆಗೆ ಸಾಕಷ್ಟು ಬೆಳೆದುದಿದ್ದಿತ್ತು ಎನಿಸುತ್ತದೆ. ಶಾಸನಗಳು ಹುಟ್ಟುವುದಕ್ಕಿಂತ ಎರಡು ಮೂರು ಶತಮಾನಗಳಿಗೆ ಮುಂಚಿನಿಂದಲೂ ನಮ್ಮ ಸಾಹಿತ್ಯ ಬೆಳೆದುಕೊಂಡು ಬಂದಿರಬೇಕೆಂದು ಊಹಿಸಿದರೆ ತಪ್ಪಾಗಲಾರದೆಂದು ತೋರುತ್ತದೆ.

      ಕನ್ನಡ ಸಾಹಿತ್ಯ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಎಂ ಗೋವಿಂದ ಪೈರವರು ಕ್ರಿ. 2ನೇ ಶತಮಾನದಷ್ಟು ಹಿಂದಿನಿಂದಲೂ ಕನ್ನಡ ಶಾಸನಗಳು ದೊರೆಯುತ್ತದೆಂದು ಹೇಳಿ ಅಂತಹ ಶಾಸನಗಳಲ್ಲಿ ಹಲವನ್ನು ನಮ್ಮ ಕನ್ನಡ ಸಾಹಿತ್ಯದಲ್ಲಿ ಹಳಮೆ ಲೇಖನದಲ್ಲಿ ಎತ್ತಿಕೊಟ್ಟಿದ್ದಾರೆ. ಸಾಹಿತ್ಯವಿಲ್ಲದೆ ಶಾಸನಗಳು ಹುಟ್ಟಲಾರವು ಎಂಬುದು  ಖಂಡಿತವಿರುವುದರಿಂದ ಕ್ರಿ.. 1ನೇ ಶತಮಾನಕ್ಕೆ ಹಿಂದೆಯೇ ಕನ್ನಡದಲ್ಲಿ ಪ್ರಗಲ್ಭವಾದ ಸಾಹಿತ್ಯವಲ್ಲದಿದ್ದರೂ ಸಾಮಾನ್ಯವಾದ ಸಾಹಿತ್ಯವಾದರೂ ಹುಟ್ಟಿರಬೇಕು. ಎಂದು ಸಹಜವಾಗಿಯೇ ಅನುಮಾನಿಸಲಾಗುತ್ತದೆ ಎಂದು ಹೇಳುತ್ತಾರೆ.   ಇದಕ್ಕೆ ಪೂರಕವಾಗಿ ಕ್ರಿ.ಶ. ೧೭೨-೯೩ ರ ಕಾಲಾವಧಿಯ ಗಟ್ಟಿವಾಡು ಶಾಸನ, ಕ್ರಿ.ಶ.೨೬೭ರ ನಂಜನಗೂಡು ಶಾಸನ, ಕ್ರಿ.ಶ. ೩೪೯ ರ ಮುಮ್ಮಡಿ ಮಾಧವನ ತಾಗರ್ತಿಯ ಶಾಸನಗಳನ್ನು ಕನ್ನಡ ಶಾಸನಗಳೆಂದು ಆ ಶಾಸನಗಳಲ್ಲಿ ಕನ್ನಡದ ಹಳಮೆಯನ್ನು ಗುರುತಿಸ ಬಹುದೆಂದು ಹೇಳಿದ್ದರೂ ಇವರು ಪ್ರಸ್ತಾಪಿಸಿರುವ ಶಾಸನಗಳು ಹಲ್ಮಿಡಿ ಶಾಸನದ ನಂತರದ ಕಾಲದವುಗಳು ಎಂಬುದಾಗಿ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ  ಇವರ ಅನಿಸಿಕೆಯಲ್ಲಿ ಸ್ವಲ್ಪ ಮಟ್ಟಿಗೆ ಹುರುಳಿರುವುದನ್ನು ಕಾಣಬಹುದಾಗಿದೆ.

 ಕನ್ನಡದ ಮೊಟ್ಟ ಮೊದಲ ಶಾಸನವೆಂದು ಬಹುಕಾಲದವರೆಗೆ ಸ್ವೀಕರಿಸಲಾಗಿದ್ದ ಬಾದಾಮಿಯ ಮಂಗಳೇಶನ ಶಾಸನವು (ಕ್ರಿ. 578) ಸಾಹಿತ್ಯ ದೃಷ್ಟಿಯಿಂದ ಕೇವಲ ಶುಷ್ಕವಾದದ್ದು. ಪಂಪ ಪೂರ್ವ ಯುಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಅಥವಾ ಕಾವ್ಯ ಗುಣಗುಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ ತಮಟ ಕಲ್ಲಿನ ಶಾಸನ ಮತ್ತು ಶ್ರವಣಬೆಳಗೊಳದ  ನಿಷದಿ ಶಾಸನಗಳಲ್ಲಿ. ನಿಷದಿ ಶಾಸನಗಳನ್ನು ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ವಿದ್ವಾಂಸರು ಗುರುತಿಸಿರುವುದು ರಿಶೀಲನಾರ್ಹವಾಗಿದೆ. ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಶಿಲಾಲೇಖನ (E.C.V 11. ಚಿತ್ರದುರ್ಗ 43) ಇದರ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಸುಮಾರು ಐದನೆಯ ಶತಮಾನದಿದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ.

ಬಿಣಿಮಣಿ (ಫಣಿಮಣಿ) ಅನ್ತುಭೋಗಿ ಬಿಣಿ (ಫಣ) ದುಳ್ಮಣಿ ಚಿಲ್ಮನದೋಳ್

ರಣಮುಖದುಳ್ಳ ಕೋಲಂ ನೆರೆಯರ್ಕುಮನಿದ್ದ್ಯ ಗುಣನ್

ಪ್ರಣಯಿ ಜನಕ್ಕೆ ಕಾಮನಸಿತೋದ್ಘಲ ವರ್ಣನವಣ್

ಗುಣಮಧುರಾಂಕ್ಕ ದಿವ್ಯಪುರುಷನ್ ಪುರುಷ ಪ್ರವರನ್

      ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ. ವೃತ್ತದ ಛಂದಸ್ಸು ಅತ್ಯಂತ ಅಪೂರ್ವ ವಾದುದು. ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ. ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಟಿ ನಡೆದಿರಬಹುದು ಎಂದು ಊಹಿಸಲು ಅವಕಾಶವಿದೆ.

ಶ್ರವಣಬೆಳಗೊಳದ ಬಿಡಿಮುಕ್ತಗಳು ಕೆಲವು ಒಳ್ಳೆಯ ಕಾವ್ಯದ ತುಣುಕುಗಳೇ ಆಗಿವೆ. ಶಾಸನಗಳನ್ನು ಬರೆದವರು ಕಾವ್ಯರಚನೆಯನ್ನು ಬಲ್ಲವರಾಗಿರಬೇಕು. 7ನೇ ಶತಮಾನದಲ್ಲಿ ಹುಟ್ಟಿದ ಶ್ರವಣಬೆಳಗೊಳದ ಶಾಸನವನ್ನು (ನಂ-88) ಉದಾಹರಿಸಬಹುದಾಗಿದೆ.

ಸುರಚಾಪಂಬೋಲೆ ವಿದ್ಯುಲತೆಗಳ ತೆರವೋಲ್ ಮಂಜುವೋಲ್ ತೋಱಿ ಬೇಗಂ

ಪಿರಿಗುಂ ಶ್ರೀ ರೂಪ ಲೀಲಾ ಧನ ವಿಭವ ಮಹಾರಾಶಿಗಳ್ ನಿಲ್ಲವಾರ್ಗ್ಗಂ

ಪರಮಾರ್ತ್ಥಂ ಮೆಚ್ಚೆನಾನೀ ಧರಣಿಯುಳಿರವಾನ್ದು ಸನ್ಯಾಸನಂಗೆ

ಯ್ದುರು ಸತ್ವನ್ ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸಂನ್ದಾನ್||

ಕ್ರಿ. 7ನೇ ಶತಮಾನದ ಶ್ರವಣಬೆಳಗೊಳದ ಶಾಸನವು ಸನ್ಯಸನ ವಿಧಿಯಿಂದ ದೇಹತ್ಯಾಗ ಮಾಡಿದ ಮುನಿಯೊಬ್ಬನನ್ನು ಕುರಿತ ಸಂಗತಿ ಅಥವಾ ನಿರೂಪಣೆಗೆ ಮಾತ್ರ ಸೀಮಿತವಾದ ಕಾವ್ಯೋಚಿತವಾದ ಉಪಮೆ-ರೂಪಕಗಳ ಮೂಲಕ ಸನ್ನಿವೇಶವನ್ನು ಕಾವ್ಯಮಯವಾಗಿ ವರ್ಣಿಸುವ ಉದ್ದೇಶವುಳ್ಳದ್ದಾಗಿದೆ.

ಆಧ್ಯಾತ್ಮಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಯತಿಯೊಬ್ಬರ ಮನಸ್ಸು ಲೋಕದ ಸೌಂದರ್ಯ ಮತ್ತು ಸಂಪತ್ತು ರೂಪ ವೈಭವಗಳು ಸುರಚಾಪದಹಾಗೆ ಮಿಂಚಿನ ಬಳ್ಳಿಗಳಹಾಗೆ ಮಂಜಿನ ಹಾಗೆ ಕ್ಷಣಾರ್ಧದಲ್ಲಿ ಇಲ್ಲವಾಗುತ್ತವೆ, ಎಂಬ ಅಚಲ ನಿರ್ಧಾರವನ್ನು ತೆಗೆದುಕೊಂಡು ಸನ್ಯಾಸನ ವಿಧಿಯಿಂದಾಗಿ ದೇವಲೋಕಕ್ಕೆ ಸಂದ ಸಂಗತಿಯನ್ನು ಕ್ರಮಬದ್ಧವಾಗಿ ವರ್ಣಿಸುತ್ತದೆ. ಕವಿರಾಜಮಾರ್ಗದ ಪೂರ್ವದಲ್ಲಿಯೆ ಲಭ್ಯವಿರುವ ಶಾಸನ ಪದ್ಯ ನಿಜಕ್ಕೂ ಅಂದಿನ ಕನ್ನಡ ಕಾವ್ಯಸಾಧನೆಯ ದಾಖಲೆಯಾಗಿ ಕಂಡಿದ್ದುಕನ್ನಡದ ನಿಜವಾದ ಶಾಸನಕಾವ್ಯಎಂದು ಕರೆಯಬಹುದಾಗಿದೆ. ಶಾಸನ ಪದ್ಯದಲ್ಲಿಯ ಉಪಮಾ ಸಾಮಗ್ರಿ ಅನಂತರದ ಕನ್ನಡದ ಚಂಪೂ ಕವಿಗಳ ಅಭಿವ್ಯಕ್ತಿಯ ಮೇಲೆ, ಅದರಲ್ಲೂ ಬದುಕಿನ ನಶ್ವರ ಮನೋಹರತೆಯನ್ನು ವರ್ಣಿಸುವ, ವೈರಾಗ್ಯಪರವಾದ ಭಾವವನ್ನು ಹೇಳುವ ಸಂದರ್ಭಗಳ ಮೇಲೆ ಪ್ರಭಾವ ಬೀರಿರುವುದನ್ನು ಗುರುತಿಸಬಹುದಾಗಿದೆ. ಶಾಸನದ ಪ್ರಭಾವ ನಂತರದ ಚಂಪೂಕವಿಗಳಾದ ಪಂಪ, ದುರ್ಗಸಿಂಹ ಹಾಗೂ ಜನ್ನ ಕವಿಯ ಕಾವ್ಯಗಳಲ್ಲಿ ಗುರುತಿಸಬಹುದಾಗಿದೆ.

ಪಂಪನ ಆದಿಪುರಾಣದಲ್ಲಿ ವಜ್ರದಂತ ಮಹಾರಾಜನಿಗೆ ಸಂಸಾರದ ಬಗೆಗೆ ವೈರಾಗ್ಯವುಂಟಾದ ಸಂದರ್ಭವನ್ನು ನಿರೂಪಿಸಿರುವ ಪದ್ಯವು ಶ್ರವಣಬೆಳಗೊಳ ಶಾಸನದ ರೂಪಾಂತರವೇನೋ ತೋರಿಬರುತ್ತದೆ.

ತೃಣ ಶಿಖರಾದ್ಯುಷಿತಾಂಭಃ

ಕಣ ಸಂಚಲಮಮರ ಚಾರ ಚಪಲಂ ವಿದ್ಯುತ್

ಕ್ಷಣಿಕಂ ನಿಟ್ಟಿಯೆ ತನುಭೃ

ದ್ಗಣ ಯೌವನ ರೂಪ ವಿಭವ ಭೋಗಾಭೋಗಂ” (.ಪು.4-75)

ಅದೇ ರೀತಿ ಆದಿಪುರಾಣದ ನೀಲಾಂಜನೇಯ ನೃತ್ಯ ಸಂದರ್ಭದಲ್ಲಿ ಆದಿದೇವನಿಗೆ ವೈರಾಗ್ಯ ಉಂಟಾದ ಸನ್ನಿವೇಶವನ್ನು ನಿರೂಪಿಸಿರುವ ಪದ್ಯವನ್ನು ನೋಡಬಹುದಾಗಿದೆ.

ತನು ರೂಪ ವಿಭವ ಯೌವನ

ಧನ ಸೌಭಾಗ್ಯಾಯುರಾದಿಳ್ಗೆಣೆ ಕುಡುಮಿಂ

ಚಿನ ಪೊಳಪು ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ

ನರಭೋಗಮೆಂಬೀ ಪನಿಪುಲ್ಲ ನೆಕ್ಕೆ

ತೃಷ್ಣೆ ಪೇಳ್ ಪೋದಪುದೇ……..” (.ಪು.9-46)

ಆದಿಪುರಾಣದ ಮೂರು ಕಂದ ಪದ್ಯಗಳು ಬದುಕಿನ ನಶ್ವರತೆಯನ್ನು ಸೂಚಿಸಲು ಕಾಮನಬಿಲ್ಲು, ಮಿಂಚಿನ ಹೊಳಪು, ಹುಲ್ಲ ಮೇಲಿನ ಹನಿ, (ಮಂಜು) ಉಪಮೆ ರೂಪಕಗಳನ್ನೇ ಬಳಸಿರುವುದನ್ನು ಕಾಣಬಹುದು

ದುರ್ಗಸಿಂಹನ ಪಂಚತಂತ್ರದಲ್ಲಿಯೂ ಶಾಸನದ ಪ್ರಭಾವವನ್ನು ಗುರುತಿಸಬಹುದಾಗಿದೆ.

ಅನಿಮಿಷಾಚಾಪದಂತೆ ಸಿರಿ ಶಾರದ ನೀರಿದ ಕಾಂತಿಯಂತೆ ಯೌ

ವನದೆಸಕಂ ತೃಣಾಗ್ರಗತವಾಂಕಣಿಕಾಗ್ರದಂತೆ ಸಂತ ಜೀ

ವನಮದರಿಂ ಭವ ಪ್ರಭವ ಜೀವಿಗೆ ನಿರ್ಮಲ ಧರ್ಮಮಾರ್ಗದೊಳ್

ಮನಮೊಸೆದಾಗಳುಂ ನಡೆಯವೇಳ್ವುದು ವಿಶ್ವಮೃಗೇಂದ್ರವಲ್ಲಭಾ (ಭೇದ ಪ್ರಕರಣ : ಪದ್ಯ. 116)

ಜನ್ನನ ಅನಂತನಾಥ ಪುರಾಣದಲ್ಲಿ

ದಿವಿಜಚಾಪದಿಂ ಚಾಪಳಂ ಪೊದಳ್ದ ಸಿರಿಯೆಂಬುದು” (ಅನಂತನಾಥ ಪುರಾಣ 9-28)

ಎಯ್ದೆ ತೋರ್ಪ ಮಿಂಚಿನ ಪೊಳಪು” (ಅನಂತನಾಥ ಪುರಾಣ 9-29)

ಮಾನಸರ ಮಾನಸವಾಳ್

      ಮನುಷ್ಯನ ಜೀವನ ಹಾಗೂ ಅದರ ಸುಖ ಭೋಗಗಳು ನಶ್ವರವೆಂಬುದನ್ನು ಸಂಕೇತಿಸುವ ಸುರಚಾಪ (ಕಾಮನಬಿಲ್ಲು) ಮಿಂಚಿನ ಬಳ್ಳಿ (ವಿದ್ಯುಲತೆ) ಮಂಜಿನ ಹನಿ ಇತ್ಯಾದಿ ರೂಪಕಗಳು ಶ್ರವಣಬೆಳಗೊಳದ ಶಾಸನದಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಗೊಂಡಿದ್ದು, ಅಭಿವ್ಯಕ್ತಿಯ ಸೊಗಸು ನಂತರದ ಕನ್ನಡದ ಪ್ರಮುಖ ಚಂಪೂ ಕವಿಗಳಾದ ಪಂಪ, ದುರ್ಗಸಿಂಹ, ಹಾಗೂ ಜನ್ನರ ಕಾವ್ಯಗಳಲ್ಲಿ ಅನುರಣನಗೊಂಡಿರುವುದನ್ನು ಮನಗಂಡರೆ ಕ್ರಿ.. 7ನೇ ಶತಮಾನದ ಶಾಸನದಲ್ಲಿಯೇ ಪದ್ಯ ಸಾಹಿತ್ಯದ ದೃಷ್ಟಿಯಿಂದ ಮಹತ್ತರವಾದುದು ಎಂದೆನಿಸುತ್ತದೆ.

      ವೈರಾಗ್ಯ ಗೀತೆಯಂತಿರುವ ಶಾಸನದಲ್ಲಿ ಮಾತುಗಳ ಮೋಡಿ ಹಾಗೂ ಜೋಡಣೆಗಳು ಶಾಸನ ಕರ್ತೃವಿನ ಕವಿ ಹೃದಯವನ್ನು ದಿಗ್ಧರ್ಶಿಸುತ್ತವೆ. ಇಂತಹ ಪದ್ಯ ರಚನೆ ಶ್ರವಣಬೆಳಗೊಳದ ಸುಮಾರು 30 ಶಾಸನಗಳಲ್ಲಿ ದೊರೆಯುತ್ತಿರುವುದು ಗಮನಿಸ ಬೇಕಾದ ಸಂಗತಿಯಾಗಿದೆ. ಇವುಗಳ ಕರ್ತೃಗಳಲ್ಲಿ ಕೆಲವರು ಕಾವ್ಯಗಳನ್ನು ಬರೆದಿದ್ದರೂ ಬರೆದಿರಬಹುದು. ಕಾವ್ಯ ಕರ್ತೃಗಳಲ್ಲಿ ಕೆಲವರು ಶಾಸನ ಕರ್ತೃಗಳಾಗಿರುವುದು ಕಂಡುಬರುತ್ತದೆ. ಶಾಸನ ಕರ್ತೃಗಳಲ್ಲಿ ಕೆಲವರು ಕಾವ್ಯ ಕರ್ತೃಗಳಾಗಿದ್ದರೂ ಇರಬಹುದೆಂದು ಊಹಿಸಲು ಅವಕಾಶವಿದೆ.

      ಪಟ್ಟದಕಲ್ಲಿನ ಒಂದು ಶಿಲಾ ಶಾಸನದಲ್ಲಿ ದೇವಯ್ಯಗಳಾ ಮಗ ಅಚಲ ಎಂಬ ಕವಿ ನಟನೊಬ್ಬನನ್ನು ಕುರಿತುಇನ್ನಾತನೇ ನರ್ತಕಂ ನಟರೊಳಗ್ಗಳಂ ಭುವನಾನ್ತರಂಗದೋಳ್ಎಂದು ಮುಕ್ತ ಕಂಠದಿಂದ ಹೊಗಳಲಾಗಿದೆ. ಮಧುರಚೆನ್ನರು ಶಿಲಾ ಶಾಸನದ ಕಾಲ ಕ್ರಿ..8ನೇ ಶತಮಾನವೆಂದು ಹೇಳುತ್ತಾರೆ. ಹೇಳಿಕೆ ಸರಿ ಎಂದಾದರೆ 8ನೇ ಶತಮಾನದಷ್ಟು ಪೂರ್ವದಲ್ಲಿಯೇ ಒಬ್ಬ ಕವಿ ಮತ್ತು ನಟನ ವಿಷಯವಾಗಿ ನಮಗೆ ತಿಳಿದಂತಾಗುತ್ತದೆ. ಶಿಲಾ ಶಾಸನಗಳನ್ನು ಗಮನಿಸಿ ಹೇಳುವುದಾದರೆ ಕನ್ನಡ ಸಾಹಿತ್ಯದ ಇತಿಹಾಸವನ್ನು ಕ್ರಿ.. 650ಕ್ಕಿಂತ ಹಿಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಾರದು. ಅದಕ್ಕಿಂತ ಹಿಂದೆ ಪದ್ಯ ಕಾವ್ಯಗಳು ಹುಟ್ಟಿದ್ದರೆ ಪದ್ಯರೂಪವಾದ  ಕೆಲವು ಶಾಸನಗಳು ದೊರಕುತ್ತಿದ್ದವು. ಗದ್ಯ ಕೃತಿಗಳು ಹುಟ್ಟಿದ್ದರೆ ಒಳ್ಳೆಯ ಗದ್ಯವು ಶಾಸನಗಳಲ್ಲಿ ದೊರೆಯುತ್ತಿತ್ತು . ಕವಿರಾಜಮಾರ್ಗದಲ್ಲಿ ಉಲ್ಲೇಖಿಸಿರುವ ಕನ್ನಡ ಗದ್ಯ ಪದ್ಯ ಕವಿಗಳು 7ನೇ ಶತಮಾನಕ್ಕಿಂತ ಈಚಿನವರು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ.

      ಶ್ರೀ ವಿಜಯ ಕೃತ ಕವಿರಾಜಮಾರ್ಗ (ಕ್ರಿ..817) ಕನ್ನಡದಲ್ಲಿ ಇದುವರೆಗೆ ಲಬಿಸಿರುವ ಗ್ರಂಥಗಳಲ್ಲೆಲ್ಲಾ ಅತ್ಯಂತ ಪ್ರಾಚೀನವಾದುದು. ಆದರೆ ಅದಕ್ಕೂ ಹಿಂದೆಯೇ ಕನ್ನಡದಲ್ಲಿ ಕಾವ್ಯ ರಚನೆ ವಿಶೇಷವಾಗಿ ನಡೆದಿತ್ತೆಂದು ನಂಬಲು ಹಲವು ಕಾರಣಗಳಿವೆ. ಅದರ ಹೆಸರೇ ಹೇಳುವಂತೆ ಕವಿರಾಜಮಾರ್ಗ ಒಂದು ಲಕ್ಷಣ ಗ್ರಂಥ. ವ್ಯಾಕರಣ, ಅಲಂಕಾರಗಳಿಗೆ ಸಂಬಂಧಿಸಿದ ಹಲವು ಅಂಶಗಳನ್ನು ಒಳಗೊಂಡ ಕೃತಿ ಕನ್ನಡ ಕವಿಗಳಿಗೆ ಮಾರ್ಗದರ್ಶನ ಮಾಡುತ್ತದೆ. ಕಾವ್ಯ ರಚನೆಯೇ ನಡೆಯದಿದ್ದ ಭಾಷೆಯಲ್ಲಿ ಮೊದಲು ಇಂತಹ ಶಾಸ್ತ್ರಗ್ರಂಥಗಳು ಹುಟ್ಟುವುದು ಅಸಂಭವ. ಕವಿರಾಜಮಾರ್ಗದ ಕರ್ತೃವೇ ತನಗಿಂತ ಹಿಂದಿನ ಅನೇಕ ಕವಿಗಳ ಹೆಸರುಗಳನ್ನು ಹೇಳಿದ್ದಾನೆ. ಅವರಲ್ಲಿ ಪದ್ಯ-ಗದ್ಯ ಕರ್ತೃಗಳಿಬ್ಬರೂ ಇದ್ದಾರೆ. ಆಗಿನ ಕಾಲದಲ್ಲಿ ಬಳಕೆಯಲ್ಲಿದ್ದ ಚತ್ತಾಣ, ಬೆದಂಡೆ ಮೊದಲಾದ ಕಾವ್ಯ ಜಾತಿಗಳನ್ನು ಹೆಸರಿಸಿ ಅವುಗಳ ಲಕ್ಷಣಗಳನ್ನೂ ಹೇಳಿರುವುದರಿಂದ ಆ ಕಾಲಕ್ಕೆ ಕನ್ನಡದಲ್ಲಿ ಅನೇಕ ಕೃತಿಗಳು ಹುಟ್ಟಿದ್ದವೆಂದು ತಿಳಿಯಬಹುದು. ಅಲ್ಲದೆ ಆ ಗ್ರಂಥದಲ್ಲಿ ಕೊಟ್ಟಿರುವ ಹಲವು ಉದಾಹರಣೆ ಪದ್ಯಗಳು ಕಾಲದ ಕನ್ನಡ ಕೃತಿಗಳಿಂದ ಆರಿಸಿಕೊಂಡಂಥವು ಎಂದು  ನಾವು ಊಹಿಸಬಹುದಾಗಿದೆ.

ಕವಿರಾಜಮಾರ್ಗ ಒದಗಿಸುವ ಸಾಕ್ಷ್ಯಗಳು:-  ಕನ್ನಡ ಕಾವ್ಯಗಳಲ್ಲಿ ಎಂದರೆ ಮೇಲಾದ ಗುಣವುಳ್ಳ ಗದ್ಯ-ಪದ್ಯ ಸಮಿಶ್ರಣದ ಪ್ರಕಾರವನ್ನು ಗದ್ಯಕಥೆ ಎಂಬ ಹೆಸರಿನಿಂದ ಪ್ರಾಚೀನರಾದ ಆಚಾರ್ಯರು (ಕವಿಗಳು) ರಚಿಸಿರುತ್ತಾರೆ ಎಂಬುದಾಗಿ ಪ್ರಥಮ ಪರಿಚ್ಛೇದದ ಆರಂಭ ಭಾಗದಲ್ಲಿ ಹೇಳಿದೆ. (:27) ಅಲ್ಲದೆ ಅಲಂಕಾರ ವ್ಯಾಕರಣ ಶಾಸ್ತ್ರಗಳ ನಿಯಮಗಳಿಗೆ ಒಪ್ಪುವಂತಹ ಒಳ್ಳೆಯ ಗದ್ಯ ಕಾವ್ಯಗಳನ್ನು ಬರೆಯಬೇಕಾದರೆ, ಅನೇಕ ಬಗೆಯ ವಿದ್ಯೆಗಳನ್ನು ಭಾಷೆಗಳನ್ನು ಬಲ್ಲಂತಹ ಲೌಕಿಕ ಧಾರ್ಮಿಕ ವರ್ಣನೆಗಳಿಂದ ದ್ರವಾದ ಪ್ರಖ್ಯಾತ ವಸ್ತುವನ್ನು ವಿಸ್ತರಿಸಲು ಶಕ್ತನಾದಂತಹ ವ್ಯಕ್ತಿಯಾಗಿರಬೇಕೆಂದು ಹೇಳಿದೆ.

      ಹೇಳಿಕೆಯಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆಯ ದೃಷ್ಟಿಯಿಂದ ಒಂದೆರಡು ಅಂಶಗಳು ಸ್ಫುಟವಾಗುತ್ತದೆ. ಅವು ಯಾವುವೆಂದರೆ 1) ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚಾದ ಕಾವ್ಯ ಪ್ರಕಾರಗಳಿದ್ದವು 2) ಅವುಗಳಲ್ಲಿ ಗದ್ಯಕಥೆ ಎಂಬುದು ಗದ್ಯ-ಪದ್ಯವನ್ನು ಬೆರೆಸಿ ಬರೆಯುತ್ತಿದ್ದ ಒಂದು ಪ್ರಕಾರ, 3) ಕನ್ನಡದಲ್ಲಿ ಪ್ರಾಯಶಃ ಇಂತ ಗದ್ಯ ಕಥೆಗಳನ್ನು ಅಥವಾ ಗದ್ಯ ಕಾವ್ಯಗಳನ್ನು ಬರೆದವರಲ್ಲಿ ಖ್ಯಾತರಾದ ವಿಮಳೋದಯಾದಿ ಕವಿಗಳು ಖ್ಯಾತವಾದ ವಸ್ತುವನ್ನು ವರ್ಣನೆಗಳಿಂದ ಪುಷ್ಟವನ್ನಾಗಿ ಮಾಡಿ ಬರೆಯುವುದರಲ್ಲಿ ಒಳ್ಳೆಯ ವ್ಯುತ್ಪತ್ತಿವುಳ್ಳವರಾಗಿದ್ದರು. ಹೀಗೆ ಅರ್ಥ ಮಾಡುವುದು ಸರಿಯಾಗಿದ್ದರೆ ಕನ್ನಡದಲ್ಲಿ ಕವಿರಾಜಮಾರ್ಗಕ್ಕಿಂತ ಹಿಂದೆ ಕೆಲ ಮಟ್ಟಿಗೆ ಸಾಹಿತ್ಯ ಸಂಪನ್ನ ಗದ್ಯರಚನೆಗಳಿದ್ದು ಅದರಲ್ಲಿ ಗದ್ಯಕಥೆ ಎಂಬ ಒಂದು ಪ್ರಕಾರವನ್ನು ಅದೇ ಭಾಷೆಯ ಪೂರ್ವ ಕವಿಗಳು ರೂಢಿಸಿದ್ದರೆಂದು ಹೇಳಬೇಕಾಗುತ್ತದೆ.

      ಹೀಗೆಯೇ ಶ್ರೀ ವಿಜಯ, ಚಂದ್ರ ಲೋಕಪಾಲ ಮುಂತಾದವರ ಮೀರಿಸುವುದಕ್ಕಾಗದ ಪದ್ಯಕಾವ್ಯಗಳು ಕನ್ನಡದ ಅಗ್ರಮಾನ್ಯವಾದ ಅಥವಾ ಅತ್ಯುತ್ಕೃಷ್ಟವಾದ ಪದ್ಯಕಾವ್ಯಕ್ಕೆ ಯಾವಾಗಲೂ ಉದಾಹರಣೆಗಳಾಗಿವೆ ಎಂದೂ, (.32) ಕನ್ನಡದಲ್ಲಿ ಷ್ಟೇ ಕಂಡುಬರುತ್ತಿರುವ ನಡೆಯುತ್ತಿರುವ ಕಾಲದಲ್ಲಿ ಕೂಡ ಪ್ರಸಿದ್ಧವಾಗಿರುವ ಚತ್ತಾಣ ಮತ್ತು ಬೆದಂಡೆಗಳೆಂಬ ಪದ್ಯ ಕಾವ್ಯ ಪ್ರಕಾರಗಳಲ್ಲಿ ಪ್ರಾಚೀನರಾದ ಕವಿಗಳು ಗ್ರಂಥ ರಚನೆ ಮಾಡಿದ್ದಾರೆ ಎಂದು (.33) ಪ್ರಥಮ ಪರಿಚ್ಛೇದದಲ್ಲಿ ಮುಂದುವರಿದು ಹೇಳಿದೆ.

ಇಲ್ಲಿ ಪ್ರಾಚೀನತೆಯ ದೃಷ್ಠಿಯಿಂದ ಊಹಿಸಬಹುದಾದ ಸಂಗತಿಗಳು : 1) ಕವಿರಾಜಮಾರ್ಗಕ್ಕೆ ಹಿಂದೆ ಕನ್ನಡದಲ್ಲಿ ಗದ್ಯಕಾವ್ಯಗಳು ಹಾಗೆಯೇ ಪದ್ಯಕಾವ್ಯಗಳೂ ಇದ್ದವು 2) ಕಾವ್ಯಗಳಲ್ಲಿ ಶ್ರೀ ವಿಜಯ ಮೊದಲಾದವರು ಬರೆದವು ಗಣ್ಯವಾದವು. 3) ಚತ್ತಾಣ ಮತ್ತು ಬೆದಂಡೆಗಳೆಂಬ ಎರಡು ಬಗೆಯ ಪದ್ಯ ಕಾವ್ಯಗಳು ಕವಿರಾಜ ಮಾರ್ಗಕಾರನ ಕಾಲದಲ್ಲಿ ಪ್ರಸಿದ್ಧವಾಗಿದ್ದವು. ಅಲ್ಲದೆ ಹಿಂದೆಯೂ ಎರಡೂ ಬಗೆಯ ಕಾವ್ಯಗಳು ಪ್ರಾಚೀನ ಕವಿಗಳಿಂದ ರಚಿತವಾಗಿದ್ದವು. ಗಣನೆ ಮಾಡಬಹುದಾದ ಒಳ್ಳೆಯ ಪದ್ಯಕವಿಗಳು, ಪದ್ಯ ಕಾವ್ಯಗಳು ಕವಿರಾಜಮಾರ್ಗಕಾರನ ಕಾಲದಲ್ಲಿಯೂ ಅದರ ಮೊದಲು ಆಗಿಹೋದದ್ದು ಕನ್ನಡಕ್ಕೆ ವಿಶಿಷ್ಟವಾದ ಎರಡು ಪದ್ಯ ಕಾವ್ಯ ಪ್ರಕಾರಗಳೂ ಸಾಕಷ್ಟು  ಹಿಂದಿನ ಕಾಲದಲ್ಲಿಯೇ ತಲೆದೋರಿದುದು ಮೇಲಿನ ಹೇಳಿಕೆಯಿಂದ ವಿಶದವಾಗುತ್ತದೆ. ಗದ್ಯ ಪದ್ಯ ಕೃತಿಗಳು ಕಾಲದ ಹಾವಳಿಗೆ ತುತ್ತಾಗಿ ಹಾಳಾಗಿದ್ದರೂ ನೃಪತುಂಗನ ಕಾಲಕ್ಕೆ ಅವು ಅತ್ಯಂತ ಜನಪ್ರಿಯವಾಗಿದ್ದವೆಂಬುದರಿಂದ ರಾಷ್ಟ್ರಕೂಟರ ಕಾಲಕ್ಕೆ ಕನ್ನಡ ಭಾಷೆ ಚನ್ನಾಗಿ ಬಲಿತ ಭಾಷೆಯಾಗಿತ್ತೆಂದು ಅದರಲ್ಲಿ ಸಾಕಷ್ಟು ಸಾಹಿತ್ಯವಿದ್ದಿತೆಂದು ತಿಳಿಯುವುದಾಗಿ ಕೆ.ಬಿ.ಪಾಠಕ್ ಕವಿರಾಜಮಾರ್ಗದ ತಮ್ಮ ಪರಿಷ್ಕರಣಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

ಕನ್ನಡದ ಮೊದಲ ಕವಿಯೆಂಬ ಪ್ರಶಸ್ತಿಗೆ ಪಾತ್ರನಾದ ಪಂಪ ತನಗಿಂತಾ ಮುಂಚೆ ಸಮಸ್ತ ಭಾರತವನ್ನು ಬರೆದ ಕವಿಗಳಿಲ್ಲವೆಂದು ಹೇಳಿಕೊಂಡಿರುವುದರಿಂದ ಅವನಿಗಿಂತ ಮುಂಚೆ ಭಾರತ ಕಥೆಯ ಭಾಗಗಳನ್ನು ಆಯ್ದುಕೊಂಡು ಕೃತಿ ರಚನೆಮಾಡಿದ ಕನ್ನಡ ಕವಿಗಳಿದ್ದರೆಂದು ತಿಳಿಯಬೇಕಾಗಿದೆ. ಅಲ್ಲದೆ ತನ್ನ ಎರಡೂ ಮಹಾ ಪ್ರಬಂಧಗಳು ಮುಂದಿನ ಕಬ್ಬಗಳನ್ನೆಲ್ಲಾ ಇಕ್ಕಿ ಮೆಟ್ಟಿದುವು ಎಂಬ ಹೇಳಿಕೆ ಪಂಪ ಭಾರತದ ಕಡೆಯಲ್ಲಿ ಬಂದಿದೆ. ಆದ್ದರಿಂದ ಅವನಿಗಿಂತ ಮುಂಚೆ ಕನ್ನಡದಲ್ಲಿ ಅನೇಕ ಕೃತಿಗಳ ರಚನೆಯಾಗಿದ್ದಿತ್ತೆಂಬ ವಿಷಯದಲ್ಲಿ ಸಂದೇಹಕ್ಕೆ ಎಡೆಯಿಲ್ಲ.

ಚೂಡಾಮಣಿ ಎಂಬ ಹೆಸರಿನ ತತ್ವಾರ್ಥ ಮಹಾ ಶಾಸನ ವ್ಯಾಖ್ಯಾನ ರೂಪವಾದ 96 ಸಾವಿರ ಶ್ಲೋಕಗಳುಳ್ಳ ಒಂದು ಗ್ರಂಥ ಇತ್ತೆಂದು ಶ್ರವಣಬೆಳಗೊಳದ ಒಂದು ಶಾಸನ ಹೇಳುತ್ತದೆ. ಗ್ರಂಥವನ್ನು ದಂಡಿ ಸ್ತೋತ್ರ ಮಾಡಿದನೆಂದು ತಿಳಿಯುತ್ತದೆ. ಕೃತಿಯನ್ನು ಕುರಿತು ಶಬ್ದಾನುಶಾಸನಕಾರನಾದ ಭಟ್ಟಾಕಳಂಕ ಹೇಳಿದ್ದಾನೆ. ದೇವಚಂದ್ರನ ರಾಜಾವಳಿಕಥೆಯಲ್ಲಿಯೂ ಇದರ ಪ್ರಸ್ಥಾಪವಿದೆ. ಇದನ್ನು ಬರೆದವನು ಶ್ರೀವರ್ಧದೇವನೇ ಅಥವಾ ತುಂಬುಲೂರು ಆಚಾರ್ಯನೇ ಎಂಬ ಬಗ್ಗೆ ಸಂದೇಹವಿದೆ. ಶ್ರೀ ರ್ಧದೇವನೇ ತುಂಬುಲೂರಿನ ಆಚಾರ್ಯನಿದ್ದರೂ ಇರಬಹುದೆಂಬ ಊಹೆಯು ಸಂಶೋಧಕರಿಂದ ವ್ಯಕ್ತವಾಗಿದೆ. ಅದು ಹೇಗೆ ಇರಲಿ ಸಾವಿರಾರು ಪದ್ಯವನ್ನೊಳಗೊಂಡ ಬೃಹತ್ ಗ್ರಂಥವೊಂದು ಪಂಪಪೂರ್ವಯುಗದಲ್ಲಿಯೇ ಕನ್ನಡದಲ್ಲಿ ಪ್ರಸಿದ್ಧವಾಗಿತ್ತೆಂದು ತಿಳಿಯಬಹುದಾಗಿದೆ.

ಪಂಪಪೂರ್ವ ಯುಗದಲ್ಲಿಯವುಗಳು ಎನ್ನಲಾದ ಕಾವ್ಯಗಳು ಯಾವುವು ಲಭಿಸಿಲ್ಲವಾದುದರಿಂದ ಕಾಲದ ಕನ್ನಡ ಸಾಹಿತ್ಯದ ಸ್ವರೂಪ, ವಿಸ್ತಾರ, ವ್ಯಾಪ್ತಿ ಮೊದಲಾದ ಸಂಗತಿಗಳು ಯಾವುವೂ ತಿಳಿಯವು. ಆದರೆ ಆರಂಭಕಾಲದಲ್ಲಿ ಅನೇಕ ಕನ್ನಡ ಶಾಸನಗಳು ಲಭಿಸಿದ್ದು ಅವುಗಳಲ್ಲಿ ಅನೇಕ ಸುಂದರವಾದ ಕನ್ನಡ ಪದ್ಯಗಳು ಸಿಕ್ಕಿವೆ. ಶಿಲಾ ಶಾಸನಗಳಲ್ಲಿಯೇ ಇಷ್ಟು ಶ್ರೇಷ್ಠವಾದ ಪದ್ಯಗಳನ್ನು ಬರೆದ ಕವಿಗಳು ತಮ್ಮ ಆತ್ಮ ಸಂತೋಷಕ್ಕಾಗಿ ಬರೆದ ಕಾವ್ಯಗಳು ಇನ್ನೂ ಮುಂತಾಗಿ ಇದ್ದಿರಬೇಕು. ಅನೇಕ ಕವಿಗಳ ಹೆಸರುಗಳೂ ಶಾಸನಗಳಲ್ಲಿ ಲಭಿಸಿವೆ. ಭುವನೈಕ ರಾಮಾಭ್ಯುದಯ , ಹರಿವಂಶ, ಶೂದ್ರಕ ಮೊದಲಾದ ಹಲವು ಕೃತಿಗಳ ಪ್ರಶಂಸೆ ಶಾಸನಗಳಲ್ಲಿಯೂ ಕಾವ್ಯಗಳಲ್ಲಿಯೂ ಲಕ್ಷಣ ಗ್ರಂಥಗಳಲ್ಲಿಯೂ ಬಂದಿದೆ. ಆದರೆ ಕೃತಿಗಳು ಲಭಿಸಿಲ್ಲ. ಆದಾಗ್ಯೂ ಪಂಪ ರನ್ನರಿಗಿಂತಾ ಹಲವು ಶತಮಾನಗಳ ಹಿಂದೆಯೇ ಕನ್ನಡದಲ್ಲಿ ಕಾವ್ಯ ಸೃಷ್ಟಿ ನಡೆದಿದ್ದಿತೆಂಬ ಹೇಳಿಕೆಯನ್ನು ತಳ್ಳಿಹಾಕುವಂತಿಲ್ಲ.

ಕವಿರಾಜಮಾರ್ಗದ ಹಾಗೆಯೇ ಅದರ ಈಚಿನ ಕನ್ನಡ ಸಂಸ್ಕೃತ ಗ್ರಂಥಗಳೂ ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಗುರುತಿಸಲು ಶಕ್ತವಾಗಬಹುದಾದ ಕೆಲವು ಉಲ್ಲೇಖಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. ಅಂಥ ಉಲ್ಲೇಖಗಳು ಯಾವುವು, ಅವು ಎಷ್ಟರಮಟ್ಟಿಗೆ ಸಹಾಯಕ ಸಾಕ್ಷ್ಯಗಳಾಗಬಲ್ಲವು ಎಂಬುದನ್ನು ಗಮನಿಸಬಹುದು. ಸಾಹಿತ್ಯ ಗ್ರಂಥಗಳು ಲಕ್ಷಣ ಮತ್ತು ಸಂಕಲನ ಗ್ರಂಥಗಳು ಮತ್ತು ಸಂಸ್ಕೃತ ಭಾಷೆಯ ಗ್ರಂಥಗಳು ಅನ್ಯ ಭಾಷೆಯ ಗ್ರಂಥಗಳು ಎಂಬ ವರ್ಗೀಕರಣದ ಹಿನ್ನೆಲೆಯಲ್ಲಿ ಲಭ್ಯವಿರುವ ಸಂಬಂಧಪಟ್ಟ ಸಾಕ್ಷ್ಯಗಳನ್ನು ಮುಂದೆ ಕ್ರೂಢೀಕರಿಸಿ ಕೊಡಲಾಗಿದೆ.

1) ಸಾಹಿತ್ಯ ಗ್ರಂಥಗಳು:- ) ಪಂಪ ಕವಿಯ (941) ವಿಕ್ರಮಾರ್ಜುನ ವಿಜಯದಲ್ಲಿಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾರತ ಮನಪೂರ್ವಮಾಗೆ ಸಲೆ ಪೇಳ್ದ ಕವೀಶ್ವರರಿಲ್ಲಎಂದಿರುವುದನ್ನು ಲಕ್ಷಿಸಿ, “ಪಂಪನಿಗಿಂತ ಮುಂಚೆ ಬೇರೆ ಬಗೆಯಲ್ಲ ಬರೆದ ಕನ್ನಡ ಭಾರತಗಳಿರಬಹುದೆಂಬ ಊಹೆಗೆ ಎಡೆ ದೊರೆಯುತ್ತದೆ ಎನ್ನಲಾಗಿದೆ. ಸಮಸ್ತ ಎಂಬ ಸಮಸ್ತ ಅಥವಾ ಸಮಾಸೀಕೃತಪದ, ಈ ಯಾವುದೇ ಅರ್ಥವನ್ನು ಕೊಡಲಿ ಹಿಂದೆ ಭಾರತವೋ ಅದರ ಆಖ್ಯಾನ ಭಾಗಗಳೋ ರಚಿತವಾಗಿದ್ದುದರ ಸಾಧ್ಯತೆಯನ್ನು ಪಂಪನ ಮಾತು ಕೊಂಚ ಮಟ್ಟಿಗೆ ಸೂಚಿಸುವಂತೆ ತೋರುತ್ತದೆ. ಕವಿರಾಜಮಾರ್ಗದ ಕಾಲದಲ್ಲಿ ಅಥವಾ ಅದರ ಮೊದಲು ಅಂಹ ಗ್ರಂಥಗಳು ಹುಟ್ಟಿರಬಹುದು. ಒಂದನೆಯ ಗುಣವರ್ಮನ ಹರಿವಂಶ ಕೂಡ ಒಂದು ಬಗೆಯಲ್ಲಿ ಭಾರತವೇ ಆದುದರಿಂದ ಅದೂ ಪಂಪನ ಲಕ್ಷ್ಯದಲ್ಲಿರಬಹುದು ಎಂಬ ಸೂಚನೆ ಕೂಡ ಈಗಾಗಲೇ  ಕೆಲವು ಸಂಶೋಧಕರಿಂದ  ಬಂದಿದೆ.

      ಪಂಪಭಾರತದಲ್ಲಿ ಬರುವ ಇನ್ನೊಂದು ಮಾತು ಹೆಚ್ಚು ಸ್ಪಷ್ಟವಾದುದು. “ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟಿದುವು ಸಮಸ್ತ ಭಾರತಮಾದಿಪುರಾಣ ಮಹಾ ಪ್ರಬಂಧಮುಂ ಎಂಬ ಆ ಮಾತು  (14-59) ಪಂಪನಿಗೆ ಹಿಂದೆ ಕನ್ನಡದಲ್ಲಿ ಕಾವ್ಯ ಸಾಹಿತ್ಯವಿದ್ದುದನ್ನು ನಿಸ್ಸಂಧಿಗ್ದವಾಗಿ ಹೇಳುತ್ತದೆ. ಪಂಪನಿಗೆ ಹಿಂದೆ ಗುಣನಂದಿ, ಒಂದನೆಯ ಗುಣವರ್ಮ, ಅಸಗ ಇವರು ಇದ್ದರೆಂಬುದು ಈಗ ವಿದಿತವಾಗಿದೆ. ಕವಿರಾಜಮಾರ್ಗೋಕ್ತರು ಪೂರ್ವಕಾಲಿಕರೂ ಪಂಪನ ಅಭಿಮಾನದ ಉಕ್ತಿಯಲ್ಲಿ ವಿವಕ್ಷಿತವಾಗಿರಬಹುದು.

2) ನಾಗಚಂದ್ರನ (ಕ್ರಿ.ಶ.1140) ರಾಮಚಂದ್ರಚರಿತಪುರಾಣದ ಪೀಠಿಕಾಭಾಗದಲ್ಲಿ ʻʻಉಪ ದೇಶಂಗೇಯ್ದು ಕಾವ್ಯಚ್ಛಲಿದಿನಖಿಲಧರ್ಮಂಗಳಂ ಪರಮ ಪುರಾಣಗಳಂ ಪೇರು ಕಲ್ಪಾಂತರಿಪ ಖ್ಯಾತಿಯಂ ತಾಳ್ದಿದ ಪರಮಕವಿಜ್ಯೇಷ್ಠರಾದರ್ (1-28) ಎಂಬ ಪ್ರಸ್ತಾಪವಿದೆ. ಈ ಮಾತು ಸಂಸ್ಕೃತ ಕನ್ನಡ ಜೈನ ಪುರಾಣಗಳನ್ನು ರಚಿಸಿದ ಪ್ರಾಚೀನರನ್ನು ಕುರಿತಿದೆ ಎಂಬುದು ಸ್ಪಷ್ಟ. ಕನ್ನಡದ ಮಟ್ಟಿಗೆ ಕವಿರತ್ನತ್ರಯರು ಆ ಪೂರ್ವದವರೂ ನಾಗಚಂದ್ರನ ಗಮನದಲ್ಲಿರಬಹುದು. ಆದರೆ ಈ ಸಾಧಾರಣೋಕ್ತಿಯಿಂದ ಕನ್ನಡ ಸಾಹಿತ್ಯದ ಹಳಮೆಯ ಹರಹನ್ನು ಊಹಿಸುವುದು ಸಾಧ್ಯವಿಲ್ಲ.

3) ಇಮ್ಮಡಿ ನಾಗವರ್ಮನು (ಸು.ಕ್ರಿ.ಶ. 1042-1145) ವರ್ಧಮಾನ ಪುರಾಣದಲ್ಲಿ ಕವಿರತ್ನತ್ರಯರನ್ನು ಅವರ ಕೃತಿಗಳನ್ನೂ ಅಲ್ಲದೆ ಶ್ರೀವಿಜಯರಘುವಂಶ ಮಹಾಪುರಾಣವನ್ನು, ಗುಣವರ್ಮನು ಹರಿವಂಶವನ್ನು ,ನಾಗವರ್ಮನ ವತ್ಸರಾಜಚರಿತೆಯನ್ನು, ನಾಗದೇವನು ಸುಲೋಚನಾಚರಿತವನ್ನು ರಚಿಸಿದ್ದರೆಂಬುದಾಗಿ ಉಲ್ಲೇಖಿಸಿದ್ದಾರೆ. ಈ ಭಾಗದಲ್ಲಿ ಪೂರ್ವಕವಿಗಳ ಉಲ್ಲೇಖ ಅವರ ಜೀವಿತಾವಧಿಯ ಅನುಪೂರ್ವಿಗೆ ಹೊಂದಿಬರುವಂತೆ ತೋರುತ್ತದೆ. ಕವಿರಾಜಮಾರ್ಗೋಕ್ತನು ಕೆಲವರು ಭಾವಿಸುವಂತೆ ಕವಿರಾಜಮಾರ್ಗಕೃತ ಆಗಿರುವ ಶ್ರೀವಿಜಯನೂ ನಾಗವರ್ಮೋಕ್ತ ಶ್ರೀ ವಿಜಯನೂ ಅಭಿನ್ನರಾಗಿದ್ದ ಪಕ್ಷದಲ್ಲಿ ಸಾಹಿತ್ಯದ ಪ್ರಾಚೀನತೆಗೆ ಈ ಶೋಧದಿಂದ ಹೆಚ್ಚು ಸಹಾಯವಾಗದು. ವತ್ಸರಾಜಚರಿತ ಸುಲೋಚನಾ ಚರಿತಗಳ ಕವಿಗಳು ಕಾಲಾನುಪೂರ್ವಿಯನ್ನು ಹಿಡಿದು ಉಲ್ಲೇಖಗೊಂಡಿರಬಹುದಾದರಲ್ಲವಾದರೆ ಅವರು ಇಮ್ಮಡಿ ನಾಗವರ್ಮನಿಗೆ ಹಿಂದೆ ಯಾವಾಗಲೋ ಇದ್ದರೆಂದಾಗಿ ಅದು ಪ್ರಾಚೀನತೆಯ ದೃಷ್ಠಿಯಿಂದ ವಿಚಾರಣೀಯ ಸಾಕ್ಷ್ಯವಾಗಬಹುದಾಗಿದೆ.

ಲಕ್ಷಣ ಮತ್ತು ಸಂಕಲನ ಗ್ರಂಥಗಳು :-

ಕಾವ್ಯಾವಲೋಕನದಲ್ಲಿಯೇ ನಾಗವರ್ಮ, ಗುಣವರ್ಮ ಮತ್ತು ಶಂಖವರ್ಮನೆಂಬ ಮೂವರು ಮಾರ್ಗಕವಿಗಳ ಹೆಸರುಗಳನ್ನು ಹೇಳಿದ್ದು (.185) ಇವರಲ್ಲಿ ಶೂದ್ರಕದ ಕರ್ತೃವಿರಬಹುದಾದ ಗುಣವರ್ಮನನ್ನು ಹೊರತುಪಡಿಸಿದರೆ ಉಳಿದಿಬ್ಬರು ಯಾರು, ಯಾವ ಮತಕ್ಕೆ ಸೇರಿದರೆಂಬುದು ಗೊತ್ತಾಗಬೇಕಾಗಿದೆ. ನಾಗವರ್ಮನು ಛಂದೋಂಬುಧಿಯ ಕರ್ತೃವೋ, ವತ್ಸರಾಜಚರಿತೆಯ ಕರ್ತೃವೋ ನಿಶ್ಚಿತವಾಗಿ ತಿಳಿಯದು. ಪದ್ಯ 547 ರಲ್ಲಿ ಉಕ್ತನಾದ ನಾಗವರ್ಮನ ವಿಚಾರವು ಸಂಧಿಗ್ದ ವಾದುದು. ವರ್ಧಮಾನ ಪುರಾಣದ ರಚನಾ ಕಾಲ 11ನೇ ಶತಮಾನದ ಪೂರ್ವಾರ್ಧವೆಂದು ಇತ್ತೀಚೆಗೆ ತಿಳಿದಿರುವುದರಿಂದ ಶಂಖವರ್ಮನ ವಿಚಾರದಲ್ಲಿ ಆರ್.ನರಸಿಂಹಾಚಾರ್ಯರ ಸಮೀಕರಣ ಸರಿ ಇರಲಾರದು. ದಿಟವಾಗಿ ಆತ ಯಾರು, ಯಾವ ಕುಲಕ್ಕೆ ಸೇರಿದವನು ಎಂಬುದನ್ನು ಹೇಳುವಂತಿಲ್ಲ.

ಕವಿರಾಜಮಾರ್ಗ ಕಾವ್ಯಾವಲೋಕನಗಳಲ್ಲದೇ ಭಾಷಾಭೂಷಣ, ಶಬ್ದಾನುಶಾಸನಗಳ ಕರ್ತೃಗಳು,  ಶಬ್ದಮಣಿ ದರ್ಪಣವೆಂಬ ಪ್ರಸಿದ್ಧ ಹಳಗನ್ನಡ ವ್ಯಾಕರಣ ಗ್ರಂಥವೂ, ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣ, ಮಲ್ಲ ಕವಿಯ ‘’ಕಾವ್ಯಸಾರ’’,ಅಭಿನವವಾದಿ ವಿದ್ಯಾನಂದನ ಕಾವ್ಯಸಾರ ಈ ಕೆಲವು ಸಂಕಲನ ಗ್ರಂಥಗಳು ಆಯ್ದ ಹಲವು ಪದ್ಯಗಳನ್ನು, ಪದ್ಯ ಭಾಗಗಳನ್ನೂ ತಮ್ಮ ಉದ್ದೇಶಗಳಿಗೆ ಅನುಗುಣವಾಗಿ ಒಳಪಡಿಸಿಕೊಂಡಿರುವುದು ಕಂಡುಬರುತ್ತದೆ. ಪೂರ್ವಕವಿಯ ಸ್ಮರಣೆಯ ಮೂಲಕ ಕವಿಗಳ ಹೆಸರುಗಳ ಮಾತ್ರ ಗೊತ್ತಾಗಿ ಕೃತಿಗಳೇನೋ ದೊರೆಯದಿರುವ, ಎರಡು ಗೊತ್ತಾದರೂ ಕೃತಿಗಳಿಗೆ ಸಿಕ್ಕದಿರುವ ಅನೇಕ ಕವಿಗಳ ಒಂದೋ, ಹಲವೋ ಗ್ರಂಥಗಳಿಂದೆತ್ತಿಕೊಂಡವು. ಆ ಪದ್ಯಗಳು ಅಥವಾ ಪದ್ಯ ಭಾಗಗಳು ಕವಿಯೂ ಕೃತಿಯೂ ಎರಡೂ ತಿಳಿಯದ ಅಜ್ಞಾತವಾದ ಆಕರಗಳ ಉದ್ಧೃತಿಗಳು ವಿಪುಲವಾಗಿದೆ. ಸಗ, ಗಜಾಂಕುಶ, ಶ್ರೀವಿಜಯ, ಗುಣನಂದಿ, ಮನಸಿಜ, ಚಂದ್ರಭಟ್ಟ, ಹರಿಪಾಲ, ಹಂಸರಾಜ, ಸುಮನೋಬಾಣ ಹೀಗೆ ಹಲವಾರು ಪ್ರಾಚೀನ ಕನ್ನಡ ಕವಿಗಳಿದ್ದು ಇವರಲ್ಲಿ ಹಲವರ ಕೃತಿ ಸಂಬಂಧವಾದ ವಿವರಗಳು ತಿಳಿಯವು. ಹೀಗೆಯೇ ವತ್ಸರಾಜ ಚರಿತೆ, ಸುಲೋಚನಾಚರಿತೆ, ಚೂಡಾಮಣಿ, ಕರ್ಣಾಟ ಕುಮಾರಸಂಭವ, ಕರ್ಣಾಟೇಶ್ವರ ಕಥಾ ಕರ್ಣಾಟ, ಮಾಲತೀ ಮಾಧವ, ರಘುವಂಶ ಮಹಾಪುರಾಣ, ಈ ಕೆಲವು ಕೃತಿಗಳ ಹೆಸರುಗಳು ಕೆಲವಕ್ಕೆ ಕರ್ತೃಗಳ ಹೆಸರುಗಳೂ ಕೂಡ ತಿಳಿದಿದ್ದರೂ ಕೃತಿಗಳಾವುವೂ ಇಂದು ದೊರೆಯುವುದಿಲ್ಲ. ಅಜ್ಞಾತ ಕಾಲ ಕರ್ತೃಕಗಳಾದ ಸ್ಮರಣ ಯೋಗ್ಯವಾದ ಹಲವು ಸೂಕ್ತಿಗಳ ಆಕರಗಳ ವಿಷಯವಾದರೂ ಇಷ್ಟೇ ಕಾಲಗತಿಯಲ್ಲಿ ಇಂಥಾ ಪರಿಸ್ಥಿತಿ ಸಹಜವಾಗಿ  ಘಟಿಸುತತ್ತದೆಂಬುದನ್ನು ಗಮನಿಸುತ್ತಾ ತೀ.ನಂ.ಶ್ರೀಕಂಠಯ್ಯನವರು ತಮ್ಮ ಒಂದು ಉಪನ್ಯಾಸದಲ್ಲಿ ಆದಿಕವಿ ಎನಿಸಿಕೊಂಡಿರುವ ಪಂಪನಿಗೆ ಮುಂಚೆ ಅನೇಕ ಕೃತಿಗಳು ರಚಿತವಾಗಿರಬಹುದೆಂದು, ಆದರೆ ಆನೆಯ ಹಿಂಡಿನಂತೆ ಸಾಗಿಹೋದ ಕೃತಿಗಳ ನೆನಪಿಗಾಗಿ ಕೆಲವು ಸೂಚನೆಗಳು ಮಾತ್ರಾ ಕಾಣುತ್ತಿದೆ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಕವಿಗಳು ಸಾಮಾನ್ಯವಾಗಿ ಪೂರ್ವಕವಿಗಳ ಹೆಸರುಗಳನ್ನು ಉಲ್ಲೇಖಿಸುವಾಗ ಕಾಲಾನುಕ್ರಮವನ್ನು ಅನುಸರಿಸುವುದಿಲ್ಲವಾದ್ದರಿಂದ ಬೇರೆ ಆಧಾರಗಳು ಸರಿಯಾಗಿ ಒದಗದೆಡೆಗಳಲ್ಲಿ ಈ ನಾಮಾವಶೇಷರಾದ ಅಥವಾ ಕೃತಿನಾಮಾವಶೇಷರಾದ ಕವಿಗಳ ಕಾಲದಲ್ಲಿ ಕಾಲಾನುಕ್ರಮಣಿಕೆಯನ್ನು ಗೊತ್ತು ಮಾಡುವುದು ಕಷ್ಟವಾಗಿದೆ. ಇಂತಹ ಸಂದರ್ಭವಿರುವಾಗ ನಮ್ಮ ಪ್ರಾಚೀನರು ಅರ್ವಾಚೀನರು ಸ್ಮರಿಸುವ ಕೆಲವು ಕವಿಗಳಲ್ಲಿ ಒಬ್ಬರಿಬ್ಬರಾದರೂ ಕೃತಿಗಳಲ್ಲಿ ಒಂದೆರಡಾದರೂ ಕವಿರಾಜಮಾರ್ಗ ಕಾಲಕ್ಕೆ ಹಿಂದಿನ ಅವಧಿಗೆ ಸೇರಿರಹುದಾಗಿ ಊಹಿಸಲು ಅವಕಾಶವಿದೆ. ಆದರೆ ಈ ವಿಷಯದಲ್ಲಿ ಹೀಗೆಯೇ ಸರಿ ಎನ್ನುವಂತಿಲ್ಲ.

ಕನ್ನಡ ಭಾಷೆಯ ಕಾವ್ಯಗಳೂ ಪುರಾಣಗಳೂ ಮತ್ತು ಇತರೆ ಗ್ರಂಥಗಳು ಈಗ ಎಷ್ಟು ಸಂಖ್ಯೆಯಲ್ಲಿ ದೊರೆತಿವೆಯೇ ಸರಿ ಸುಮಾರು ಅಷ್ಟೇ ಸಂಖ್ಯೆಯವು ನಷ್ಟವಾಗಿರಬಹುದು ಅಥವಾ ಇನ್ನೂ ಬೆಳಕಿಗೆ ಬರದೆ ಇರಬಹುದು ಎನ್ನುವುದು ಕೆಲವರು ವಿದ್ವಾಂಸರ ಎಣಿಕೆಯಾಗಿದೆ. ಈಗ ನಷ್ಟವಾಗಿರುವ ಅಥವಾ ಅಜ್ಞಾತವಾಗಿರುವ ಗ್ರಂಥರಾಶಿಯು ಕಾಲಮಾನದ ದೃಷ್ಠಿಯಿಂದ ಪ್ರಾಚೀನವೂ ಇರಬಹುದು. ಅರ್ವಾಚೀನವೂ ಇರಬಹುದು. ಪ್ರಾಚೀನ ಅವಧಿಗೆ ಸೇರಿದ್ದು ಎಷ್ಟು ನಷ್ಟವಾಗಿದೆ ಅಥವಾ ಅಜ್ಞಾತವಾಗಿದೆ ಎಂಬುದು ಸರಿಯಾಗಿ ಗೊತ್ತಾಗುವುದಾದರೆ ಕನ್ನಡ ಸಾಹಿತ್ಯದ ಉದಯ ಮತ್ತು ಆರಂಭಕಾಲಗಳ ಬಗೆಗೆ ಹೊಸ ದಿಗಂತಗಳು ತೋರಬಹುದು. ಆದರೆ ಈ ವರೆಗೆ ಅಂತಾ ಪ್ರಯತ್ನಗಳು ವಿಶೇಷವಾಗಿ ಸಫಲವಾಗಿಲ್ಲ. ಈಗ ಮಾತ್ರ ಪ್ರಸಿದ್ಧವಾಗಿರುವ ಲಕ್ಷಣ ಮತ್ತು ಸಂಕಲನ ಗ್ರಂಥಗಳನ್ನು ಆಕರಗಳನ್ನು ಗುರುತಿಸಲು ಸಾಧ್ಯವಾಗದೆ ಉಳಿದುಕೊಂಡಿರುವ ಹಲವಾರು ಕಂದವೃತ್ತಗಳುಂಟು. ಚರಿತ್ರೆ, ಪೌರಾಣಿಕಥೆ, ಭಾಷೆ ಶೈಲಿಗಳ ಆಧಾರದಿಂದ ಇದನ್ನು ವಿಂಗಡಿಸಿ ಕ್ರೂಢೀಕರಿಸಿ ಅವು ಯಾವ ಕಾಲಕ್ಕೆ ಸೇರಿದ್ದಿರಬಹುದು, ಯಾವ ಕವಿಯು ಅಥವಾ ಕೃತಿಯ ರಚನೆಯಾಗಿರಬಹುದು ಎಂಬುದನ್ನು ಗುರುತಿಸುವ ಪ್ರಯತ್ನ ಈಗಾಗಲೆ ಕೆಲಮಟ್ಟಿಗೆ ನಡೆದಿದೆ. ಕವಿ, ಕೃತಿ ಅಥವಾ ಆ ಕಾಲವನ್ನು ಕೆಲಮಟ್ಟಿಗಾದರೂ ಗುರುತಿಸುವ ಯಾವುದೇ ರೀತಿಯ ಸಾಕ್ಷಿಗಳು ಆಯಾ ಪದ್ಯ ಅಥವಾ ಪದ್ಯ ಭಾಗದಲ್ಲಿ ಕಾಣಬರದೆ ಇದ್ದಾಗ ಕೇವಲ ವರ್ಣನಾಂಶಗಳು ನೈತಿಕ ತತ್ವಾಕಾಂಕ್ಷೆಗಳು ಇವೇ ಅವುಗಳ ಆಶಯಗಳಾಗಿದ್ದಾಗ ಉದ್ಧೃತ ಸಾಹಿತ್ಯ ಭಾಗ ಯಾವ ಅವಧಿಯದು ಎಂದು ಗೊತ್ತುಮಾಡುವುದು ಕಷ್ಟ, ಆದಾಗ್ಯೂ ಅದು ಪ್ರಾಚೀನವಾಗಿರುವುದರ ಸಂಭಾವ್ಯತೆ ಇದ್ದೇ ಇರುತ್ತದೆ.

ಸಂಸ್ಕೃತ ಕನ್ನಡಗಳಲ್ಲಿಯೂ ಇತರ ಕೆಲವು ಭಾರತೀಯ ಭಾಷೆಗಳಲ್ಲಿಯೂ ಚಂಪೂ ಎಂಬುದು ಪ್ರಾಚೀನವೂ ಪ್ರಸಿದ್ಧವೂ ಆದ ಒಂದು ಸಾಹಿತ್ಯ ರೂಪವಾಗಿದೆ. ಈ ಸಾಹಿತ್ಯ ಪ್ರಕಾರದಲ್ಲಿ ಆಯಾ ಭಾಷೆಯಲ್ಲಿ ಬಹುಕಾಲ ನಿಲ್ಲುವ ಉತ್ಕೃಷ್ಟವಾದ ಸಾಹಿತ್ಯ ನಿರ್ಮಿತವಾಗಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಮೊದಮೊದಲಿನ ಶ್ರೇಷ್ಠ ಕವಿಗಳು ಈ ಪ್ರಕಾರವನ್ನು ಯಶಸ್ವಿಯಾಗಿ ಬೆಳೆಸಿಕೊಂಡು ಉತ್ತಮ ಸಾಹಿತ್ಯವನ್ನು ನಿರ್ಮಾಣ ಮಾಡಿದ್ದು ಮುಂದೆ ಅದು ವಿಶೇಷವಾಗಿ ಪ್ರಬಲಿಸಿ ಕನ್ನಡ ಸಾಹಿತ್ಯದಲ್ಲಿ ಗಣ್ಯವೂ ಸುಸ್ಥಿರವೂ ಆದ ನೆಲೆಯನ್ನು ಗಳಿಸಿಕೊಳ್ಳುವಂತಾಯಿತು.

ಚಂಪೂವಿನ ಲಕ್ಷಣವನ್ನು ದಂಡಿಯ (ಸು.690) ಕಾವ್ಯಾದರ್ಶವೆಂಬ ಸಂಸ್ಕೃತ  ಭಾಷೆಯ ಲಕ್ಷಣ ಗ್ರಂಥದಲ್ಲಿ ಮೊದಲು ನಿರೂಪಿಸಿದೆ. ಅನಂತರದಲ್ಲಿ ಹೇಮಚಂದ್ರ (1188-1272) ವಿಶ್ವನಾಥ (14ನೇ ಶತಮಾನ ) ವಿದ್ಯಾನಾಥ (14ನೇ ಶ) ಮುಂತಾದ ಸಂಸ್ಕೃತ ಲಾಕ್ಷಣಿಕರು ತಮ್ಮ ಅಲಂಕಾರಿಕ ಗ್ರಂಥಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಕನ್ನಡದಲ್ಲಿಯೂ ಒಂದನೇಯ ನಾಗವರ್ಮ, ಉದಯಾದಿತ್ಯರು ತಮ್ಮ ಅಲಂಕಾರ ಗ್ರಂಥಗಳಲ್ಲಿ ಚಂಪೂ ಲಕ್ಷಣವನ್ನು ಪ್ರಸ್ತಾಪಿಸಿದ್ದಾರೆ. ದಂಡಿ ಚಂಪೂವಿನ ಲಕ್ಷಣವನ್ನು ಗದ್ಯಪದ್ಯಮಯಿ ಕಾಚಿತ್‌ ಚಂಪೂರೀತ್ಯಭಿದೀಯತೆ (೧-೩೧) ಎಂದು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ನಂತರದ ಲಾಕ್ಷಣಿಕರು ವ್ಯಕ್ತಪಡಿಸಿದ್ದಾರೆ. ಚಂಪೂ ಎಂಬ ಪದದ ಮೂಲ ಅನಿರ್ದಿಷ್ಟವಾದದು. ಅದರ ನಿಷ್ಪತ್ತಿಯನ್ನು ಬೇರೆ ಬೇರೆ ರೀತಿಯಲ್ಲಿ ವಿದ್ವಾಂಸರು ವಿವರಿಸಿದ್ದಾರೆ. ಕನ್ನಡ ವಿದ್ವಾಂಸರ ಅಭಿಪ್ರಾಯ ಹೀಗೆ: ಕೆನ್, ಚೆನ್, ಎಂಬ ಮೂಲ ಶಬ್ದಗಳಿಂದಾದ ಕೆಂಪು, ಚೆಂಪು ಎಂಬ ಪದಗಳು ಸುಂದರ, ಮನೋಹರ ಎಂಬ ಅರ್ಥವನ್ನು ಕೊಡುತ್ತದೆ. ಗದ್ಯ ಪದ್ಯ ಮಿಶ್ರವಾದ ಕಾವ್ಯ ವಿಶೇಷವೊಂದನ್ನು ಕೇಳಿ ಅದು ಸುಂದರವಾಗಿದೆ, ಮನೋಹರವಾಗಿದೆ ಎಂಬ ಉದ್ಗಾರವಾಚಿಯಾಗಿ ಚೆಂಪು ಎಂಬುದು ಮೊದಲು ಹುಟ್ಟಿ ಮುಂದೆ ರೂಢಿ ಬಲದಿಂದ ಆ ಕಾವ್ಯ ರೂಪಕ್ಕೆ ಚೆಂಪು,ಚಂಪು ಎಂಬ ಹೆಸರು ನೆಲೆಗೊಂಡಿರಬೇಕು. ಇದು ರಂ.ಶ್ರೀ ಮುಗಳಿಯವರ ಅಭಿಪ್ರಾಯವಾಗಿದೆ.

ಕನ್ನಡದಲ್ಲಿ ಚಂಪೂ ಸಾಹಿತ್ಯ ಪದ್ಧತಿಗೆ ಮೊದಲು ಚತ್ತಾಣ ಮತ್ತು ಬೆದಂಡೆ ಎಂಬ ಪ್ರಕಾರದ ಕಾವ್ಯಗಳು ಪ್ರಸಿದ್ಧವಾಗಿದ್ದವು ಎಂದು ಕವಿರಾಜಮಾರ್ಗದ ಉಲ್ಲೇಖದಿಂದ ತಿಳಿಯುತ್ತದೆ. ಆ ಗ್ರಂಥದಲ್ಲಿ ಉಕ್ತರಾದ ಪದ್ಯಕವಿಗಳೂ ಕೆಲವರಾದರೂ ಅಂತಹ ಕಾವ್ಯಗಳನ್ನು ರಚಿಸಿರಬೇಕೆಂದು ತಿಳಿಯುವುದಕ್ಕೆ ಅವಕಾಶವಿದೆ. ಆ ಕಾವ್ಯ ಪ್ರಕಾರಗಳ ಸ್ವರೂಪವನ್ನು ಅಲ್ಲಿ ವಿವರಿಸಿದೆ. ಆ ಲಕ್ಷಣ ಗ್ರಂಥ ಮುಖ್ಯವಾಗಿ ದಂಡಿಯ ಕಾವ್ಯಾದರ್ಶವನ್ನು ಅನುಸರಿಸಿಯೂ ಚಂಪೂವಿನ ಹೆಸರನ್ನು ಎತ್ತದಿರುವುದನ್ನು ಗಮನಿಸಿದರೆ ಆತನಿಗೆ ಪೂರ್ವದಲ್ಲಿಯೂ ಆತನ ಕಾಲದಲ್ಲಿಯೂ ಈ ಚತ್ತಾಣ, ಬೆದಂಡೆಗಳ ರೂಪದಲ್ಲಿ ಕೃತಿ ರಚನೆ ನಡೆಯುತ್ತಿದ್ದಿರಬೇಕೆಂಬ ಭಾವನೆ ಉಂಟಾಗುತ್ತದೆ. ಕವಿರಾಜಮಾರ್ಗದ ಕಾಲದಿಂದ ಈಚೆಗೆ ಚತ್ತಾಣದಲ್ಲಿ ನಡುನಡುವೆ ಗದ್ಯಭಾಗಗಳು ಕೂಡಿ ಚಂಪೂ ರೀತಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡಿರಬಹುದು.

ಕನ್ನಡದಲ್ಲಿ ಚಂಪೂಸಾಹಿತ್ಯವನ್ನು ಗಮನಿಸುವ ಮೊದಲು ಕನ್ನಡ ಚಂಪೂವಿನ ಸಾಮಾನ್ಯ ಚೌಕಟ್ಟನ್ನು ಸ್ವಲ್ಪ ಗಮನಿಸಬೇಕು. ಕನ್ನಡ ಚಂಪೂವನ್ನು ರೂಢಿಯಲ್ಲಿ ವಸ್ತುಕ, ಓದುಗಬ್ಬ, ಮಾರ್ಗ ಕವಿತ್ವ ಎಂದು ಹೇಳುವುದುಂಟು. ಅದರಲ್ಲಿ ಪ್ರತಿಪಾದಿತವಾಗುವ ವಸ್ತು ಲೌಕಿಕ, ಧಾರ್ಮಿಕ ಅಥವಾ ಐತಿಹಾಸಿಕವಾಗಿರುತ್ತದೆ. ರಾಮಾಯಣ ಭಾರತಗಳು, ವೈದಿಕ ಜೈನಪುರಾಣಗಳು, ಕಲ್ಪಿತ ಕಥಾವಸ್ತುವುಳ್ಳ ಕಾವ್ಯಗಳು, ಐತಿಹಾಸಿಕ ವೃತ್ತಾಂತಗಳು ಇವು ವಸ್ತುವಿಗೆ ಪ್ರಮುಖವಾದ ಆಕರಗಳು. ಪ್ರಾಚೀನ ಸಂಸ್ಕೃತ ಕಾವ್ಯ ಪರಂಪರೆಯಲ್ಲಿ ಕಾಣುವಂತೆ ಉದಾತ್ತ ನಾಯಕನ ಮಹಿಮಾತಿಷಯ ನಿರೂಪಣೆ, ನಾಯಕ ಪ್ರತಿನಾಯಕ ಸಂಘರ್ಷ, ಇಷ್ಟ ದೈವ, ದೈವಭಕ್ತ, ಧಾರ್ಮಿಕ ಕ್ಷೇತ್ರಾದಿಗಳ ಉತ್ಕರ್ಷ ಸಾಧನೆ ಮತ್ತು ಮಹಿಮೆ ಮುಂತಾದವುಗಳ ಕಥನ, ಮತಪ್ರಸಾರ, ತತ್ವ ಪ್ರಸಾರ ಮನೋರಂಜನೆ- ಇವು ಇಲ್ಲಿಯೂ ಕಾಣುತ್ತವೆ. ಸಂಸ್ಕೃತ ಸಾಹಿತ್ಯದ ಪ್ರೌಢಕವಿಗಳ ರೀತಿಯಲ್ಲಿ ಇರುವಂತೆಯೇ ವಿವಿಧ ಸಾಂಪ್ರದಾಯಿಕ ವರ್ಣನೆಗಳ ಪ್ರಾಚುರ್ಯ, ಅಲಂಕಾರಪ್ರಿಯತೆ, ವಿಭಿನ್ನ ರಸದೃಷ್ಟಿ ಇವು ಎದ್ದು ಕಾಣುವಂತಿರುತ್ತದೆ. ಸಾಮಾನ್ಯವಾಗಿ ಕಥೆಗಿಂತಲೂ ಕವಿ ಸಮಯಕ್ಕೆ ಹೆಚ್ಚು ಅವಕಾಶ ದೊರೆಯುತಿರುತ್ತವೆ. ದೇಶಿಯವಾದ ಮಾತುಗಾರಿಕೆ, ಮತ್ತು ಸಂಸ್ಕೃತ ಭೂಯಿಷ್ಠವಾದ ಅಲಂಕಾರಿಕ ಪದರಚನೆ ಇವುಗಳಲ್ಲಿ ಒಮ್ಮೆ ಅದು ಒಮ್ಮೆ ಇದು ಮೇಲುಗೈ ಆಗಿರುತ್ತದೆ. ವಿಶೇಷವಾಗಿ ಎರಡನೆಯದರ ಪ್ರಾಬಲ್ಯವೇ ಹೆಚ್ಚು. ಒಮೊಮ್ಮೆ ಆ ಎರಡರ ಹಿತಮಿತವಾದ ಮಿಶ್ರಣವಿರುತ್ತದೆ.     

   ಕನ್ನಡ ಚಂಪೂವಿನಲ್ಲಿ, ಲಕ್ಷಣಾನುಸಾರವಾಗಿ ಗದ್ಯಪದ್ಯಗಳ ಸಮಪ್ರಾಚುರ್ಯ ಸಾಮಾನ್ಯವಾಗಿರುತ್ತದೆ. ಆದರೆ ಪದ್ಯ ಗದ್ಯಕ್ಕಿಂತ ಹೆಚ್ಚಾಗಿ ಬರುವುದೇ ಸಾಮಾನ್ಯ. ಗದ್ಯಪದ್ಯಗಳು ಇಷ್ಟೇ ಪ್ರಮಾಣದಲ್ಲಿ ಇಂತದ್ದೇ ವಿಷಯಕ್ಕಾಗಿ, ಹೀಗೆಯೇ ಯೋಜನೆಗೊಂಡಿರಬೇಕೆಂಬ ನಿಶ್ಚಿತವಾದ ನಿಯಮವೇನಿಲ್ಲ. ಆದರೆ ವರ್ಣನೆಗಳು, ಇತಿ ವೃತ್ತಾತ್ಮಕ ವಿವರಣೆಗಳು ಸಂಬಂಧ ಸೂಚನೆಗಳು ಗದ್ಯದಲ್ಲಿರುವುದುಂಟು. ಕೃತಿ ಸಾಮಾನ್ಯವಾಗಿ ಆಶ್ವಾಸಗಳಾಗಿ ವಿಭಾಗವಾಗಿರುತ್ತದೆಆಶ್ವಾಸಗಳ ಸಂಖ್ಯೆ 14 ಅಥವಾ 16 ಇರಬಹುದು. ಮುಂದೆ ಮುಂದೆ ಸಂಖ್ಯೆಯಲ್ಲಿ ಹೆಚ್ಚುಕಡಿಮೆಗಳಾಗಿವೆ. ಅವುಗಳ ಆದ್ಯಂತಗಳಲ್ಲಿ ಒಂದು ಗೊತ್ತಾದ ರೀತಿಯ ಪದ್ಯಬಂಧ ಮತ್ತು ಗದ್ಯಬಂಧಗಳಿರುತ್ತವೆ. ಕೃತಿಯ ಉಪಕ್ರಮದಲ್ಲಿ ಇಷ್ಟದೇವತಾ ಸ್ತುತಿ, ಕೃತಿ ಕರ್ತೃವಿನ, ಪೋಷಕ ವಿಚಾರ- ಇತ್ಯಾದಿ ಸಾಂಪ್ರದಾಯಿಕ ಸರಣಿಯ ವಿವರಗಳೂ ಉಪಸಂಹಾರದಲ್ಲಿ ಫಲಶೃತಿಯೂ ಬರುತ್ತದೆ. ಛಂದಸ್ಸಿನ ದೃಷ್ಟಿಯಲ್ಲಿ ಕಂದಪದ್ಯಗಳೂ ಅವಕ್ಕೆ ಸ್ವಲ್ಪ ಕಡಿಮೆಯಾಗಿ ಖ್ಯಾತಕರ್ನಾಟಕಗಳೆಂದು ರೂಢಿಯಲ್ಲಿರುವ ಆರು ವರ್ಣವೃತ್ತಗಳು ಹೆಚ್ಚು ಸಂಖ್ಯೆಯಲ್ಲಿರುತ್ತವೆ. ಇವಲ್ಲದೆ ವಿರಳವಾಗಿ ತರಳ, ಲ್ಲಿಕಾಮಾಲೆ, ಮುಂತಾದ ಇನ್ನೂ ಕೆಲವು ವರ್ಣವೃತ್ತಗಳೂ ಪ್ರಾಕೃತ ಪ್ರಭಾವದ ರಗಳೆಯ ಪ್ರಬೇಧಗಳೂ, ದೇಶೀಯಗಳಾದ ಅಕ್ಕರ, ತ್ರಿಪದಿ ಮುಂತಾದವೂ ಕೃತಿಯ ಮೈಯಲ್ಲಿ ಲ್ಲಲ್ಲಿ ಸೇರಿಕೊಂಡಿರುತ್ತವೆ. ಒಟ್ಟಿನಲ್ಲಿ ಕಂದವೃತ್ತಗಳು ವಿರಳವಾಗಿ ಇತರ ಪದ್ಯಜಾತಿಗಳೂ ನಡುನಡುವೆ ಗದ್ಯವೂ ಹಾಸುಹೊಕ್ಕಾಗಿ ಸೇರಿಕೊಂಡು ಕೃತಿಯ ರೂಪದಲ್ಲಿ ವೈವಿಧ್ಯ ಸಾಧಿತವಾಗಿರುತ್ತದೆ. ಕೃತಿವಸ್ತು ಇವುಗಳಲ್ಲಿ ಅನುಚೂತವಾಗಿ ಹರಿದುಕೊಂಡು ಹೋಗುತ್ತದೆ. ಒಮೊಮ್ಮೆ , ಒಂದೇ ಪದ್ಯದಲ್ಲಿ ಅಥವಾ ಗದ್ಯಭಾಗದಲ್ಲಿ ಮುಗಿಯದ ಒಂದು ಸಂಗತಿಯೋ ಭಾವವೋ ಮುಂದಿನ ಪದ್ಯಕ್ಕೋ ಗದ್ಯಕ್ಕೋ ಮುಂದುವರಿಯುವುದುಂಟು. ಕೃತಿಯ ಛಂದಸ್ಸಿನ ಬಳಕೆಯಿಂದುಂಟಾಗುವ ಗತಾನುಗತಿಯತೆಯನ್ನು ನಿಷ್ಠುರ ನಿಯಮಬದ್ಧತೆಯನ್ನೂ ನಿವಾರಿಸುವುದಲ್ಲದೆ, ಕವಿಗೆ ಹೆಚ್ಚಿನ ರಚನಾ ಸ್ವಾಂತಂತ್ರವೂ ಸೌಲಭ್ಯವೂ ಇದರಿಂದ ದೊರೆಯುವಂತಾಗಿದೆ. ರಚನೆಯ ಸೌಕರ್ಯಕ್ಕೆ ಹಾಗೂ ರಸಭಾವಗಳ ವೈವಿದ್ಯಕ್ಕೆ ತಕ್ಕಂತೆ ಹೀಗೆ ವಿವಿಧ ಪದ್ಯ ಜಾತಿಗಳನ್ನು ಗದ್ಯವನ್ನು ಬಳಸುವುದು ಕಾವ್ಯ ಪುಷ್ಠಿಗೆ ಅನುಕೂಲವೇ ಆಗಿದೆ.

ಕನ್ನಡ ಚಂಪೂ ಸಾಹಿತ್ಯಕ್ಕೆ ಉಜ್ವಲವೂ ಸುದೀರ್ಘವೂ ಆದ ಇತಿಹಾಸವಿದೆ. ಉಳಿದ ಕಾವ್ಯಪದ್ಯಗಳಿಗಿಂತ ಅದು ಕವಿಜನರಿಗೆ ಹೆಚ್ಚು ಆದರಣೀಯವೂ ವಿದ್ವನ್ಮಾನ್ಯವೂ ಆಗಿದೆ. ಚಂಪೂ ಸಾಹಿತ್ಯ ಕನ್ನಡದಲ್ಲಿ ಎಂದಿನಿಂದ ರಚನೆಯಾಗುತ್ತ ಬಂದಿದೆ. ಆರಂಭಕಾಲದ ಚಂಪೂಕೃತಿಗಳು ಯಾವುವು ಎಂಬ ವಿಷಯಗಳೂ ನಮಗೆ ತಿಳಿದಿಲ್ಲ. ದೊರೆತ ಚಂಪೂ ಕಾವ್ಯಗಳಲ್ಲಿ ಪಂಪಕವಿಯ (ಕ್ರಿ..941) ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯಗಳೇ ಅತ್ಯಂತ ಪ್ರಾಚೀನವಾದವು. ಅವುಗಳ ಚೌಕಟ್ಟನ್ನು ಪರಿಶೀಲಿಸಿದರೆ ಅವು ಪದ್ಧತಿಯ ಪರಿಣಿತ ರಚನೆಗಳೇ ಆಗಿರುವಂತೆ ತೋರುತ್ತದೆ. ಆದರೆ ಕೃತಿರಚನೆಗಳಿಗಿಂತ ಪೂರ್ವದಲ್ಲಿ ಚಂಪೂ ರೂಪದಲ್ಲಿ ಕಾವ್ಯಗಳು ರಚನೆಯಾಗಿರುವ ಸಾಧ್ಯತೆ ಇದೆ.

ಕವಿರಾಜ ಮಾರ್ಗವು ಒಂದು ಲಕ್ಷಣಗ್ರಂಥ ದುರ್ಗಸಿಂಹ (ಕ್ರಿ..931) ಕವಿಯ ಮಾತಿನಲ್ಲಿ ಹೇಳಿವುದಾದರೆ ಶ್ರೀ ವಿಜಯರ ಕವಿಮಾರ್ಗ, ಭಾವಿಪ ಕವಿಜನ ಮನಕೆ ಕನ್ನಡಿಯುಂ ಕೈ ದೀವಿಗೆಯು ಮಾದುದುಆದ್ದರಿಂದ ಅದಕ್ಕಿಂತಲೂ ಪೂರ್ವದಲ್ಲಿ ಸಾಕಷ್ಟು ಸಮೃದ್ಧವಾದ ಸಾಹಿತ್ಯವಿತ್ತೆಂದು ಸ್ವಯಂ ವೇದ್ಯವಾಗಿದೆ. ಕವಿರಾಜಮಾರ್ಗ ಕರ್ತೃವು ಇದನ್ನು ಸ್ಪಷ್ಟವಾಗಿ ತಿಳಿಸುತ್ತಾನೆ.

ಮಿಗೆ ಕನ್ನಡಗಬ್ಬಂಗಳೋ

ಳಗಣಿತ ಗುಣ ಗದ್ಯ ಪದ್ಯ ಸಮ್ಮಿಶ್ರಿತಮಂ

ನಿಗದಿಸುವರ್ ಗದ್ಯಕಥಾ

ಪ್ರಗೀತಿಯಂ ತಚ್ಚಿರಂತನಾಚಾರ್ಯರ್ಕಳ್

ಪ್ರಾಚೀನ ಪ್ರಸಿದ್ಧ ಪಂಡಿತರು ಗದ್ಯ-ಪದ್ಯ ಮಿಶ್ರಿತವಾದ ಗದ್ಯಕಥೆ ಎಂಬ ಕಾವ್ಯ ಪ್ರಕಾರವೊಂದು ಹೇಳಿದ್ದಾರೆಯಂತೆ ! ನಮಗೆ ಗೊತ್ತಿರುವ ಚಂಪೂ ಕಾವ್ಯದಿಂದ ಇದು ಭಿನ್ನವಾದುದಿರಬೇಕು. ‘’ಗದ್ಯಕಥೆ’’ ಎಂಬ ಹೆಸರು ಸಾರ್ಥಕವಾಗುತ್ತದೆ. ಇದರಲ್ಲಿ ಪದ್ಯಕ್ಕಿಂತ ಗದ್ಯವೇ ಹೆಚ್ಚು ಪ್ರಮುಖ ಸ್ಥಾನವನ್ನು ಪಡೆದಿರಬೇಕು. ಬಹುಶಃ ವಡ್ಡಾರಾಧನೆಯಂತೆ ಕೆಲವೇ ಪದ್ಯಗಳನ್ನು ಒಳಗೊಂಡು ಪದ್ಯವಾಗಿರಬಹುದು. ಅಥವಾ ಸಾಮಾನ್ಯ ಚಂಪೂ ಗ್ರಂಥಗಳಿಗಿಂತ ಹೆಚ್ಚು ಗದ್ಯವನ್ನು ಒಳಗೊಂಡಂತೆ ಕಥಾ ಪ್ರಧಾನವಾದ ಪಂಚತಂತ್ರ ಅಥವಾ ಧರ್ಮಾಮೃತದಂತಹ ಕಾವ್ಯಗಳಾಗಿರಬಹುದು  ಎಂದೆನಿಸುತ್ತದೆ.  

ಗದ್ಯಕಥೆಯಂತೆ ಚತ್ತಾಣ ಬೆದಂಡೆಗಳೆಂಬ ಎರಡೂ ಕಾವ್ಯ ರೂಪಗಳನ್ನು ಕವಿರಾಜಮಾರ್ಗ ಕರ್ತೃ ಹೆಸರಿಡುತ್ತಾನೆ.

ನುಡಿಗೆಲ್ಲಂ ಸಲ್ಲದ

ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ

ಗಡಿನ ನೆರೆಯ ಕಬ್ಬದೊ

ಳೊಡಂಬಡಂ ಮಾಡಿದರ್ ಪುರಾತನ ಕವಿಗಳ್

ಪದ್ಯದಲ್ಲಿ ಅರ್ಥ ಸ್ಪಷ್ಟವಾಗಿಲ್ಲವಾದರೂ ಕಾವ್ಯ ರೂಪಗಳು ಬಹು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದು ತನ್ನ ಕಾಲದಲ್ಲಿಯೂ ಬಳಕೆಯಾಗಿರುವುದಾಗಿ ಹೇಳುವಂತೆ ತೋರುತ್ತದೆ, ಕಂದಗಳೂ ವೃತ್ತಗಳು ಬೆಡಂಗೊಂದಿ ಸುಂದರ ರೂಪಿನಲ್ಲಿ ಬಂದರೆ ಅದು ಬೆದಂಡೆ. ಕಂದಗಳು ಹಲವು ಬಂದು ಅವುಗಳ ನಡುನಡುವೆ ಸುಂದರವಾದ ಕನ್ನಡ ವೃತ್ತಗಳಾದ ಅಕ್ಕರ ಚೌಪದಿ ಗೀತಿಕೆ ತ್ರಿಪದಿಗಳು ಬಂದರೆ ಅದು ಚತ್ತಾಣಇವೆರಡೂ ಪದ್ಯಕಾವ್ಯಗಳೇ ಅವುಗಳ ರಚನಾ ವಿಧಾನವನ್ನು ನೋಡಿದರೆ ಅವುಗಳಲ್ಲಿ ಮೊದಲಿನದು ಓದುಗಬ್ಬವಾಗಿಯೂ ಎರಡನೆಯದು ಹಾಡುಗಬ್ಬವಾಗಿಯೂ ದ್ದಿರಬೇಕೆಂದು ತೋರುತ್ತದೆ. ಕಾಲಕ್ಕಾಗಲೇ ತ್ರಿಪದಿ, ಚೌಪದಿ, ಅಕ್ಕರ ಮೊದಲಾದ ದೇಸಿಯ ಛಂದಸ್ಸುಗಳು ಬಳಕೆಗೆ ಬಂದಿದ್ದವೆಂದು ಅರ್ಥವಾಗುತ್ತದೆ. ಕವಿರಾಜಮಾರ್ಗಕಾರನುಚಿರಂತನಾಚಾರ್ಯರ್ಕಳ್ಪುರಾತನ ಕವಿಗಳ್, ಎಂದು ಹೇಳಿರುವಂತೆಯೇ ಕವಿವೃಷಭರ್ ಕವಿಪ್ರಧಾನರ್, ಪುರಾಣಕವಿಗಳ್, ಪೂರ್ವಾಚಾರ್ಯರ್ಇತ್ಯಾದಿ ಮಾತುಗಳನ್ನು ಬಳಸಿರುವುದನ್ನು ನೋಡಿದರೆ ಆತನಿಗಿಂತಲೂ ಪೂರ್ವದಲ್ಲಿ ವಿಪುಲವಾದ ಸಾಹಿತ್ಯವು ಸೃಷ್ಟಿಯಾಗಿರಬೇಕೆಂಬ ಅನಿಸಿಕೆ ವ್ಯಕ್ತವಾಗುತ್ತದೆ, ಇದಕ್ಕೆ ತಕ್ಕಂತೆ ಕವಿರಾಜಮಾರ್ಗ ಕರ್ತೃ ತನ್ನ ಕಾವ್ಯನಿಯಮಗಳಿಗೆ ಲಕ್ಷ್ಯವಾಗಬಲ್ಲ ಗದ್ಯ, ಪದ್ಯ ಕಾವ್ಯಗಳನ್ನು ಬರೆದ ಕವಿಗಳದೊಂದು ದೊಡ್ಡ ಪಟ್ಟಿಯನ್ನೇ ಕೊಡುತ್ತಾನೆ.

ಕವಿರಾಜಮಾರ್ಗದಲ್ಲಿ ವರ್ಣಿತವಾಗಿರುವ ಸುಪ್ರಸಿದ್ಧ ಪದ್ಯಕವಿಗಳನ್ನು ಕುರಿತಾದ ಕಂದ ಪದ್ಯದಲ್ಲಿ,

ಪರಮ ಶ್ರೀ ವಿಜಯ ಕವೀ

ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ

ನಿರತಿಶಿಯೆ ವಸ್ತುವಿಸ್ತಾರ

ವಿರಚನೆ ಲಕ್ಷ್ಯ ತದಾದ್ಯ ಕಾವ್ಯಕ್ಕೆಂದುಂ

ಶ್ರೀ ವಿಜಯ ಕವೀಶ್ವರ ಪಂಡಿತ ಚಂದ್ರ ಲೋಕಪಾಲ- ಇವರು ಪದ್ಯ ಕವಿಗಳು. ಚಂದ್ರಪ್ರಭ ಪುರಾಣ ವೆಂಬ ಚಂಪೂಕಾವ್ಯವನ್ನು ಶ್ರೀವಿಜಯನು ಬರೆದನೆಂದೂ ಅವನೇ ನೃಪತುಂಗ ಹೆಸರಿನಲ್ಲಿ ಕವಿರಾಜಮಾರ್ಗವನ್ನು ಬರೆದಿರಬೇಕೆಂದೂ ಆರ್.ನರಸಿಂಹಾಚಾರ್ಯರು ತಿಳಿಸುತ್ತಾರೆ. ಅವನು ಬರೆದ ಚಂದ್ರಪ್ರಭ ಪುರಾಣ ಈಗ ಉಪಲಬ್ಧವಿಲ್ಲ. ಆದರೆ ಚಂದ್ರಪ್ರಭಾಪುರಾಣವನ್ನು ಚಂಪೂವಾಗಿ ಬರೆದ ಶ್ರೀ ವಿಜಯನನ್ನು ಮಂದಿನ ಂದಿಬ್ಬರು ಕವಿಗಳು ಬಣ್ಣಿಸಿದ್ದಾರೆ. ಕೇಶಿರಾಜ ತನ್ನ ಶಬ್ದಮಣಿದರ್ಪಣದ ಲಕ್ಷಣಗಳಿಗೆ ಲಕ್ಷ್ಯವನ್ನು ಒದಗಿಸಿದವರಲ್ಲಿ ಶ್ರೀವಿಜಯ ಹೆಸರನ್ನು ಹೇಳುವುದರಿಂದ ಅವನು ಯಾವುದೋ ಒಂದು ಕಾವ್ಯವನ್ನು ಬರೆದಿಬೇಕು. ಅದು ಚಂದ್ರಪ್ರಭಾ ಪುರಾಣವಾಗಿರಬಹುದು. ದೊಡ್ಡಯ್ಯ ಕವಿ (ಕ್ರಿ..955) ತನ್ನ ಚಂದ್ರಪ್ರಭ ಸಾಂಗತ್ಯದಲ್ಲಿ ವಿಜಯ ಕವೀಂದ್ರನನ್ನು ಹೊಗಳಿದ್ದಾನೆ. ಅವನು ಚಂದ್ರಪ್ರಭ ಪುರಾಣವನ್ನು ಬರೆದು ಶ್ರೀವಿಜಯ ಕವೀಂದ್ರನೇ ಇರಬೇಕು. ದೊಡ್ಡಯ್ಯನು ಹೆಸರಿಸಿರುವುದನ್ನು ನೋಡಿದರೆ ಕವೀಶ್ವರನೆಂಬುದು ಪ್ರತ್ಯೇಕ ಕವಿಯೊಬ್ಬನ ಹೆಸರಾಗಿರದೆ ಅದು ಶ್ರೀ ವಿಜಯನ ಬಿರುದಾಗಿರಬಹುದೆನಿಸುತ್ತದೆ.

ಚಂದ್ರಕವಿ ಈತನ ವಿಚಾರವಾಗಿ ಹೆಚ್ಚಿನ  ಸಂಗತಿಗಳೇನೂ ಗೊತ್ತಿಲ್ಲ. ದುರ್ಗಸಿಂಹ, ರುದ್ರಭಟ್ಟ, ಕೇಶಿರಾಜ, ಅರ್ಹದಾಸ ಮೊದಲಾದ ಕವಿಗಳು ಪೂರ್ವ ಕವಿಗಳ ಸ್ತುತಿಯಲ್ಲಿ ತನಗಿಂತಾ ಪೂರ್ವದ ಒಬ್ಬ ಚಂದ್ರಭಟ್ಟನನ್ನು ಸ್ತೋತ್ರ ಮಾಡುತ್ತಾರೆ. ಅವನು ಕವಿರಾಜ ಮಾರ್ಗದ ಚಂದ್ರಕವಿಯೇ ಇರಬಹುದೆಂಬ ಊಹೆಯನ್ನು ಮಾಡಬಹುದಾಗಿದೆ. ಏನೋ ಅರ್ಹದಾಸನ ರಟ್ಟಮತದಲ್ಲಿ ನಿರೂಪಿತನಾಗಿರುವ ಚಂದ್ರಭಟ್ಟ ಮಳೆಯ ಶಾಸ್ತ್ರವನ್ನು ಕುರಿತು ಬರೆದ ಶಾಸ್ತ್ರಕಾರ. ಈತನು ಕವಿ ಚಂದ್ರಭಟ್ಟನಿಂದ  ಭಿನ್ನನಾದವನು ಅಥವಾ ಅವನೇ ಕವಿಯೂ ಶಾಸ್ತ್ರಕಾರನೂ ಆಗಿದ್ದವನೋ ಗೊತ್ತಿಲ್ಲ. ಇವನು ವೈದಿಕ ಕವಿಯಾಗಿದ್ದಿಬಹುದೆಂದು ಕ್ರಿ. 5-6ನೆಯ ಶತಮಾನಕ್ಕೆ ಸೇರಿದವನಾಗಿರಬಹುದು ಎಂದು  .ರಾ.ಬೇಂದ್ರೆಯವರು ಊಹಿಸುತ್ತಾರೆ. ಲೋಕಪಾಲ ಕವಿಯ ವಿಚಾರವಾಗಿ ಏನೂ ತಿಳಿದುಬಂದಿಲ್ಲ. ಗದ್ಯ ಪದ್ಯ ಮಹಾಕವಿಗಳು ಕೆಲವರು ಶ್ರೀ ವಿಜಯ ಸಮಕಾಲೀನರಾಗಿದ್ದು ನೃಪತುಂಗ ಮಹಾರಾಜನ ಆಸ್ಥಾನ ಕವಿಗಳಾಗಿದ್ದರೂ ಇರಬಹುದು.

ಕವಿರಾಜಮಾರ್ಗಕಾರನು ಕವಿಗಳ ಹೆಸರನ್ನು ತಿಳಿಸುವಂತೆಯೇ ಹಲವಾರು ಕವಿಕಾವ್ಯಗಳ ಪದ್ಯಗಳನ್ನು ಲಕ್ಷ್ಯವಾಗಿ ಉದ್ಧರಿಸಿದ್ದಾನೆ. ಕವಿಗಳಂತೆ ಕಾವ್ಯ ಭಾಗಗಳ ಪರಿಚಯವೂ ಅನಿರ್ದಿಷ್ಟ. ಪದ್ಯಗಳಲ್ಲಿ ಕೆಲವನ್ನು ಕವಿರಾಜಮಾರ್ಗಕಾರನೇ ತನ್ನ ನಿಯಮಗಳಿಗೆ ಉದಾಹರಣಾ ರೂಪವಾಗಿ ಬರೆದಿದ್ದರೂ ಬರೆದಿರಬಹುದು. ಆದರೆ ರಾಮಾಯಣದ ಹಲವು ಸನ್ನಿವೇಶಗಳನ್ನು ಚಿತ್ರಿಸುವ ಹಲವಾರು ಪದ್ಯಗಳು ಇಲ್ಲಿ ಕಾಣಿಸಿಕೊಂಡು ಇದಕ್ಕೂ ಪೂರ್ವದಲ್ಲಿ ಕನ್ನಡ ರಾಮಾಯಣವೊಂದು ಹುಟ್ಟಿದ್ದಿರಬೇಕೆಂಬ ಬಲವಾದ ಸಂಖ್ಯೆಗೆ ಆಸ್ಪದವೀಯುತ್ತದೆ. ಪದ್ಯಗಳ ಶೈಲಿ ಕವಿರಾಜಮಾರ್ಗದ ಶೈಲಿಗಿಂತ ಭಿನ್ನವಾಗಿದೆ. ಅಲ್ಲದೆ ಪದ್ಯಗಳ ಶೈಲಿಯಲ್ಲಿ ಏಕರೂಪತೆಯಿದೆ. ಆದ್ದರಿಂದ ಅವೆಲ್ಲವೂ ಏಕಕವಿ ಕೃತವಾಗಿದ್ದು ಅದನ್ನು ಒಂದು ಗ್ರಂಥದಿಂದಲೇ ಎತ್ತಿಕೊಂಡಿರಬೇಕೆಂದು ದೃಢಪಡುತ್ತದೆ. ಪದ್ಯಗಳೆಲ್ಲಾ ಯಾವುದೋ ಒಂದು ಜೈನರಾಮಾಯಣದಿಂದ ಎತ್ತಿಕೊಂಡವುಗಳಾಗಿರಬೇಕು. ವಿಶೇಷ ಪದವನ್ನು ಸಮಾಸ ಮಾಡದೆ ಬಿಡಿಸಿಹೇಳಬೇಕೆಂಬ ನಿಯಮಕ್ಕೆ ಉದಾಹರಣೆಯಾಗಿ ಕೊಟ್ಟಿರುವ ಪದ್ಯವನ್ನು ನೋಡಿ.

ಪರಿದೆಯ್ದಿ ತಾಗಿದಂ

ಸುರತರ ರಘುಲಲಾಮ ಲಕ್ಷ್ಮೀಧರನೋಳ್

ಪರಿಕೋಪ ವಿಧೃತ ವಿಸ್ಫುರ

ದುರು ರಕ್ತ ಕಠೋರ ನಯನಯುತಂ ದಶವದನಂ!

ಇಲ್ಲಿ ಲಕ್ಷ್ಮಣನನ್ನು ಲಕ್ಷ್ಮೀಧರನೆಂದು ಕರೆದಿರುವುದಲ್ಲದೇ ರಾವಣನು ಯುದ್ಧದಲ್ಲಿ ಅವನ ಮೇಲೆ ಬಿದ್ದನೆಂಬ ವರ್ಣನೆ ಇದೆ. ಜೈನ ರಾಮಾಯಣದಲ್ಲಿ ರಾವಣನು ಕೊಂದವನು ಲಕ್ಷ್ಮಣನೇ ಹೊರತು ರಾಮನಲ್ಲವಾದ್ದರಿಂದ ಮೇಲಿನ ಪದ್ಯ ಗಮನಾರ್ಹವಾಗಿ ಅರ್ಥವತ್ತಾಗಿದೆ. ಹನುಮಂತನನ್ನು ಇಲ್ಲಿನ ಪದ್ಯಗಳಲ್ಲಿ ಅಣುವ ಎಂದು  ಕರೆಯಲಾಗಿದೆ. ಇದರಿಂದ ಇದು ಜೈನ ರಾಮಾಯಣವೇ ಇರಬೇಕು. ಲಂಕೆಯಲ್ಲಿರುವ ಜಾನಕಿಯನ್ನು ಕರೆದು ತಾ ಎಂದು ಶ್ರೀರಾಮನು ಹನುಮಂತನಿಗೆ ಹೇಳಬಹುದಾಗಿರುವ ಒಂದು ಸನ್ನಿವೇಶದಲ್ಲಿತಾರಾದಿ ವಿಜಯೋದಿಯಾಎಂದು ಹನುಮಂತನನ್ನು ಸಂಭೋದಿಸಿರುವುದು ಜೈನರಾಮಾಯಣದ ವೈಶಿಷ್ಟ್ಯ ಎಂದು ತಿಳಿದು ಬರುತ್ತದೆ. ಪದ್ಯಗಳೆಲ್ಲಾ ಬಹು ಮಟ್ಟಿಗೆ ಕಂದ ರೂಪದಲ್ಲಿರುವಾದರೂ ಎರಡು ಪದ್ಯಗಳು ಮಾತ್ರ ಶ್ಲೋಕ ರೂಪದಲ್ಲಿವೆ. ಆದ್ದರಿಂದ ಇದು ಬೇರೆ-ಬೇರೆ ಛಂದಸ್ಸುಗಳಿಂದ ಕೂಡಿದ ಚಂಪೂ ರೂಪದಲ್ಲಿ ಇದ್ದಿರಬಹುದು ಎಂಬ ಅನಿಸಿಕೆ ಸಂಶೋಧಕರಿಂದ ವ್ಯಕ್ತವಾಗಿದೆ. ಹಿನ್ನಲೆಯಲ್ಲಿ ಕವಿಗಳ ಮತ್ತು ಕಾವ್ಯಗಳ ವಿಸ್ತೃತ ವಿವರಣೆಯನ್ನು ಳಗೊಂಡಿರುವ ಕವಿರಾಜಮಾರ್ಗಕ್ಕಿಂತ ಹಲವು ಶತಮಾನಗಳ ಹಿಂದಿನಿಂದಲೂ ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆದುಕೊಂಡು ಬಂದಿರಬೇಕೆಂದು ಊಹಿಸಬಹುದಾಗಿದೆ.

ಪಂಪ ಪೂರ್ವಕಾಲದ ಕವಿ ಒಂದನೇ ಗುಣವರ್ಮ (ಕ್ರಿ, ಸುಮಾರು 9ನೇಶತಮಾನ) ಬರೆದಿದ್ದಂತೆ ತಿಳಿದಿರುವ ಎರಡು ಕೃತಿಗಳಲ್ಲಿ ಶೂದ್ರಕ ಎಂಬುದು ಒಂದು ಚಂಪೂ ಕಾವ್ಯ ಆಗಿರಬೇಕು. ಕಾಲದ ಕಾವ್ಯದ ಕೆಲವು ಪದ್ಯಗಳ ಜೊತೆಗೆ ಒಂದು ಗದ್ಯ ಭಾಗವು ಭಿನವಾದಿ ವಿದ್ಯಾನಂದನ ಕಾವ್ಯಸಾರದಲ್ಲಿ ದೊರೆತಿರುವುದು ಅದಕ್ಕೆ ಸಾಕ್ಷೀ. ಗುಣವರ್ಮನ ಕೃತಿಗಳಲ್ಲಿ ಶೂದ್ರಕ ಒಂದು ಚಂಪೂ ಕಾವ್ಯವಾಗಿತ್ತು ಎಂಬುದನ್ನು ತೋರಿಸುವ ಆಧಾರವಿದೆ. ಸಾದೃಶ್ಯದ ಮೇಲೆ ಇನ್ನೊಂದು ಕೃತಿ ಹರಿವಂಶ ಕೂಡ ಚಂಪೂವಾಗಿದ್ದರಬೇಕು. ಎಂಬುದನ್ನು ಊಹಿಸಲು ಶಕ್ಯವಿದೆ. ಅಭಿನವವಾದಿ ವಿದ್ಯಾನಂದನ (ಕ್ರಿ.ಶ.1577) ಕಾವ್ಯಸಾರದಲ್ಲಿ ಆಕರ ಸೂಚಿಯೊಂದಿಗೆ ಉದ್ಧೃತವಾದ ಶೂದ್ರಕದ ವರ್ಣವೃತ್ತಗಳಲ್ಲಿ ಕಂಡುಬರುವ ಛಂದೋಲಕ್ಷಣ ಬಂಧಲಕ್ಷಣಗಳು ಆಮೇಲಿನ ಖ್ಯಾತ ಚಂಪೂ ಕಾವ್ಯಗಳ ವೃತ್ತಗಳ ಖ್ಯಾತ ಕರ್ನಾಟಕ ಶ್ರೇಣಿಯವಾಗಿದ್ದು ಚಂಪಕಮಾಲೆ ಮತ್ತೇಭವಿಕ್ರೀಡಿತಗಳಿಗೆ ಅಲ್ಲಿ ಪ್ರಾಶಸ್ತ್ಯ ಇರುವಂತಿದೆ. ಸ್ರಗ್ಧರೆಗೆ ನಿದರ್ಶನವಿರುವಂತಿಲ್ಲ.

ಹರಿವಂಶದ ಒಂದೇ ವೃತ್ತದ ವಿರಳ ಪ್ರಯೋಗ ವಂಶಸ್ಥವಾಗಿದೆ. ಇದು ಸಂಸ್ಕೃತಕಾವ್ಯ ಸಾಹಿತ್ಯದಲ್ಲಿ ಜಗತಿ ವರ್ಗದ ಇಂದ್ರ ವಂಶದ ಜೊತೆಗೆ ಪ್ರಸಿದ್ದವಾದದ್ದು ಎಂಬುದು ತಿಳಿದಿದೆ. ಅಸಗನ ವೃತ್ತಗಳ ವೈವಿಧ್ಯ ಅಭಿರುಚಿ ಇವನ್ನು ತಿಳಿಯಲು ಸಮಾವೇಶವಾಗಿರುವ ಆಕರ ಗ್ರಂಥಗಳಲ್ಲಿ ಆತನವೆನ್ನಲಾದ ವೃತ್ತಗಳ ಅನಿಶ್ಚತ್ತತೆ ಇನ್ನೂ ಉಳಿದಿರುವುದರಿಂದ ಸಾಧ್ಯವಾಗದೆ ಇದೆ. ಗುಣವರ್ಮನ ಶೂದ್ರಕದ ವೃತ್ತಗಳ ಸ್ವರೂಪವನ್ನು ಪರಿಶೀಲಿಸಿದ್ದು, ಆ ಗ್ರಂಥ ರಚಿತವಾಗಿರಬಹುದಾದ ಕಾಲದಿಂದ ಸುಮಾರು 5-1 ವರ್ಷಗಳಷ್ಟು ಹಿಂದಿನಿಂದಲೇ ಎಂದರೆ ಸುಮಾರು ಕ್ರಿ.ಶ. 8-85 ರಿಂದಲೇ ಕನ್ನಡ ವರ್ಣ ವೃತ್ತಗಳ ಪ್ರಯೋಗದಲ್ಲಿ ಛಂದೋಲಕ್ಷಣ ಬಂಧಲಕ್ಷಣಗಳು ಪರಿಪೂರ್ಣ ಸ್ಥಿತಿಗೆ ಮುಟ್ಟಿದ್ದುವೆಂದು ಧಾರಾಳವಾಗಿ ಹೇಳಬಹುದಾಗಿದೆ.

ಪಂಪ ರನ್ನ ಮೊದಲಾದ ಜೈನ  ಕವಿಗಳ ಉತ್ತರಕಾಲೀನ ಕಾವ್ಯ ಸಂಪ್ರದಾಯವನ್ನು ಗಮನಿಸಿ ಗುಣವರ್ಮನ ಲೌಕಿಕ ಕಾವ್ಯ ಚಂಪೂ ಆಗಿದ್ದಂತೆ, ಆತನ ಧಾರ್ಮಿಕ ಕಾವ್ಯ ಹರಿವಂಶ ಕೂಡ ಚಂಪೂ ಆಗಿದ್ದಿರಬೇಕೆಂದು ತಿಳಿದರೆ ತಪ್ಪಾಗಲಾರದು. ಪಂಪನಿಗಿಂತ ಪೂರ್ವದಲ್ಲಿಯೇ ಚಂಪೂ ಪರಂಪರೆಯಲ್ಲಿ ಲೌಕಿಕ ಹಾಗೂ ಆಗಮಿಕ ಕಾವ್ಯದ ಪರಿಕಲ್ಪನೆ ಮೂಡಿದ್ದಿತು ಎಂಬುದಕ್ಕೆ ಒಂದನೇ ಗುಣವರ್ಮನು ನಿದರ್ಶನವಾಗಿದ್ದಾನೆ.

ಈಚೆಗೆ 3ನೇ ಮಂಗರಸ (158) ತನ್ನ ನೇಮಿಜಿನೇಶ ಸಂಗತಿಯಲ್ಲಿ ಶ್ರೀವಿಜಯನೆಂಬ ಕವಿ ಚಂದ್ರಪ್ರಭಾ ಪುರಾಣವನ್ನು ಚಂಪೂ ರೂಪವಾಗಿ ರಚಿಸಿದಂತೆ ಹೇಳಿದ್ದಾನೆ. ಸಂಗತಿಯನ್ನು ಗಮನಿಸಿ ಕವಿರಾಜ ಮಾರ್ಗದಲ್ಲಿ ಉಲ್ಲೇಖವಾಗಿರುವ ಪ್ರಾಚೀನ ಪದ್ಯಕವಿಗಳಲ್ಲಿ ಒಬ್ಬನಾದ ಶ್ರೀವಿಜಯನೇ (ಸು.885) ಪುರಾಣ ಕರ್ತೃ ಎಂಬುದಾಗಿ ಕನ್ನಡ ವಿದ್ವತ್ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದು ನಿಜವಾದರೆ ಕನ್ನಡದ ಚಂಪೂ ಸಾಹಿತ್ಯದ ಇತಿಹಾಸವನ್ನು 9ನೇ ಶತಮಾನದ ಪೂರ್ವ ಅಥವಾ ಮಧ್ಯಭಾಗದಿಂದಲೇ ಮೊದಲು ಮಾಡಲು ಸಾಧ್ಯವಾಗುತ್ತದೆ. ಆದರೆ ಕವಿರಾಜಮಾರ್ಗದಲ್ಲಿ ಉಕ್ತವಾಗಿರುವ ಶ್ರೀವಿಜಯನೇ ಚಂದ್ರಪ್ರಭಾ ಪುರಾಣದ ಕರ್ತೃ ಎಂಬುದಕ್ಕೆ ಪ್ರಲವಾದ ಆಧಾರಗಳಿಲ್ಲ. ಕವಿರಾಜಮಾರ್ಗದಲ್ಲಿ ಉಕ್ತರಾದ ಇತರ ಕವಿಗಳ ಕೃತಿ ವಿಚಾರ ನಮಗೆ ಸರಿಯಾಗಿ ಏನೂ ತಿಳೀಯದು. ಅಸಗ ಕವಿ (853) ಕನ್ನಡದಲ್ಲಿ ಕರ್ಣಾಟ ಕುಮಾರಸಂಭವ ಕಾವ್ಯವನ್ನು ರಚಿಸಿದಂತೆ ನಿಶ್ಚಯವಾಗಿ ತಿಳಿದಿದೆಯಾದರೂ ಅದು ಯಾವ ರೂಪದಲ್ಲಿತ್ತು. ಎಂಬುದನ್ನು ತಿಳಿಯಲು ನಮಗೆ ಗ್ರಂಥ ದೊರೆತಿಲ್ಲ. ಚಂಪೂ ಆಗಿದ್ದಿರುವುದು ಅಸಂಭವವೇನಲ್ಲ. ಕವಿರಾಜಮಾರ್ಗದ ಹಿಂದು ಅಥವಾ ಸ್ವಲ್ಪ ಮುಂದೆ ಇದ್ದಂತಹ ಗುಣನಂದಿ ಎಂಬ ಕವಿಯನ್ನು ದರ್ಪಣಕಾರ ಕೇಶಿರಾಜನು ತನ್ನ ಕಾವ್ಯಕ್ಕೆ ಲಕ್ಷ್ಯವನ್ನು ಒದಗಿಸಿರುವ ಕವಿಗಳ ಸಾಲಿನಲ್ಲಿ ಪ್ರಸ್ತಾಪಿಸಿದ್ದಾನೆ. ಸೂಕ್ತಿಸುಧಾರ್ಣವ ಕಾವ್ಯ ಸಂಕಲನದಲ್ಲಿ ಆಯ್ದುಕೊಂಡಿರುವ ಕವಿಕಾವ್ಯಗಳಲ್ಲಿ ಈತನ ಕಾವ್ಯ ಭಾಗವು ಯಾವ ಕಾವ್ಯದ್ದು ಎಂಬುದಾಗಲೀ ತಿಳಿದುಬರುವುದಿಲ್ಲ. ಕೇಶಿರಾಜನು ರಳಕ್ಕೆ ಪ್ರತಿಯಾಗಿ ರೇಫೆಯೊಡನೆ ಕೂಡಿದ ದ್ವಿತ್ವವನ್ನು ಪ್ರಾಸ ಸ್ಥಾನದಲ್ಲಿ ಬಳಸಿರುವುದಕ್ಕೆ ಗುಣನಂದಿಯ ಪದ್ಯಭಾಗವನ್ನು ಉದ್ಧರಿಸಿದ್ದಾನೆ.

ಚುರ್ಚಿದವೋಲ್ ಬಿಸಿಲಳುರೆ ಕಿ

ಮುಳ್ಚದ ತಳಿರಂತೆ ನೊಂದು

ಶಬ್ದಮಣಿದರ್ಪಣದಲ್ಲಿಯ ಈತನ ಉದ್ಧೃತಪದ್ಯದ ಸಾಲುಗಳನ್ನು ನೋಡಿದರೆ ಪಂಪಪೂರ್ವಯುಗದ ಉತ್ತಮ ಕವಿಯಾಗಿದ್ದಿರಲು ಸಾಧ್ಯತೆ ಇದೆ. ಈತನ ಬಗ್ಗೆ ಕವಿಚರಿತಾಕಾರನು ಈತನು ಪಂಪಕವಿಯ ಗುರುವಾದ ದೇವೇಂದ್ರ ಸೈದ್ಧಾಂತಿಕನ ಗುರುವೆಂದು ಈತನ ಕಾಲ ಕ್ರಿ. 9ನೇ ಶತಮಾನ ಎಂದು ಹೇಳಿದ್ದರೂ ಕಾಲಕ್ಕಿಂತ ಪೂರ್ವದವನು ಎಂದು ಹೇಳಲು ಅವಕಾಶವಿದೆ. ಸು.ಕ್ರಿ.ಶ. 850 ರಿಂದ ಸು.900 ರವರೆಗೆ ಅಸಗ ಗುಣವರ್ಮರೆಂಬ ಕವಿಗಳೂ ಪ್ರಾಯಶಃ ಗುಣನಂದಿ ಎಂಬುವವನು ಇದ್ದರು. ಇವರಲ್ಲಿ ಅಸಗನು (857) ಕರ್ಣಾಟ ಕುಮಾರ ಸಂಭವ ಎಂಬ ಕಾವ್ಯವನ್ನು, ಗುಣವರ್ಮನು (ಸು.9) ಶೂದ್ರಕ ಹರಿವಂಶಗಳೆಂಬ ಎರಡು ಕಾವ್ಯವನ್ನೂ ರಚಿಸಿದರು ಎಂಬುದಾಗಿ ಕವಿಚರಿತೆಕಾರರು ಹೇಳಿರುವರಾದರೂ  ಕರ್ಣಾಟ ಕುಮಾರಸಂಭವ ಚಂಪೂ ರೂಪದಲ್ಲಿ ರಚಿತವಾಗಿತ್ತೇ ಇಲ್ಲವೇ ನಿಶ್ಚಯಿಸಲು ಈಗಿನ ಮಟ್ಟಿಗೆ ಆಧಾರಗಳು ಸಾಲವು.

ಅಂತೂ ಕನ್ನಡದಲ್ಲಿ ಚಂಪುವಿನ ಇತಿಹಾಸ ಈಗ ತಿಳಿದ ಮಟ್ಟಿಗೆ ಒಂದನೆ ಗುಣವರ್ಮನಿಂದ ಕ್ರಿ. ಸು.9 ಆರಂಭವಾದಂತೆ ಇಟ್ಟುಕೊಳ್ಳುವುದು ಸೂಕ್ತ. .10ನೇ ಶತಮಾನದಿಂದ 12ನೇ ಶತಮಾನದ ಮಧ್ಯ ಭಾಗದವರೆಗೆ ಕನ್ನಡದಲ್ಲಿ ಚಂಪೂ ಸಾಹಿತ್ಯ ವಿಶೇಷವಾಗಿ ರಚನೆಯಾಗಿದೆ. ಕಾಲವನ್ನು ಚಂಪೂ ಯುಗ ಎನ್ನುವುದುಂಟು. 10ನೇ ಶತಮಾನವಂತೂ ಆಕಾಲದ ಉತ್ಕೃಷ್ಟ ಚಂಪೂ ಕಾವ್ಯಗಳ ರಚನೆಯಿಂದಾಗಿ ಕನ್ನಡ ಸಾಹಿತ್ಯದ ಸ್ವರ್ಣಯುಗವೆಂದು ಖ್ಯಾತವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಚಂಪೂವಿನ ಪ್ರಥಮ ಪುರಸ್ಕೃತರು ಜೈನಕವಿಗಳು. ಅವರಲ್ಲಿ ಆದ್ಯರು ಅನಂತರದವರು ಸಂಸ್ಕೃತ -ಪ್ರಾಕೃತ ಭಾಷೆಯಲ್ಲಿ ರಚಿತವಾಗಿರುತ್ತಿದ್ದ ಪೂರ್ವಾಚಾರ್ಯರ ಪದ್ಯ ರೂಪದ ಜೈನಮಹಾಪುರಾಣ, ಹರಿವಂಶಪುರಾಣ ಮೊದಲಾದವನ್ನು ಅಥವಾ ಅವುಗಳ ಭಾಗಗಳನ್ನು ಥೋಚ್ಚಿತವಾಗಿ ಸಂಗ್ರಹಿಸಿ ಅಥವಾ ವಿಸ್ತರಿಸಿ ಚಂಪೂ ರೂಪದಲ್ಲಿ ತಮ್ಮ ಜೈನ ಪುರಾಣಗಳನ್ನು ರಚಿಸಿದರು. ಹಾಗೆಯೇ ಅವರು ರಚಿಸಿದ ಲೌಕಿಕ ಕಾವ್ಯಗಳೂ ಕೂಡ ಪದ್ಯರೂಪದ ಸಂಸ್ಕೃತ (ಪ್ರಾಕೃತ) ಮಹಾಭಾರತ, ರಾಮಾಯಣಗಳ ಚಂಪೂ ರೂಪಗಳಾಗಿದ್ದು, ಅವುಗಳಲ್ಲಿಯೇ ಸಂಸ್ಕೃ ನಾಟಕಗಳ ಹಾಗೂ ಕಾವ್ಯ ಸಾಹಿತ್ಯದ ವಸ್ತು ಶೈಲಿಗಳು ಅಳವಟ್ಟಿರುವುದು ಕಂಡುಬರುತ್ತದೆ. ಕಾಳಿದಾಸಾದ್ಯರ ಸಂಸ್ಕೃತ ಮಹಾಕಾವ್ಯಗಳ ಸಾಂಪ್ರದಾಯಿಕ ಲಕ್ಷಣಗಳು, ವರ್ಣನೆಗಳು, ಅಲಂಕಾರ ನಿರೂಪಣಾ ವಿಧಾನ ಕಥಾಂಶ, ನಾಯಕವ್ಯಕ್ತಿ, ಇತ್ಯಾದಿ ಕಾವ್ಯಗಳಲ್ಲಿ ಗರ್ಭೀಕೃತವಾಗಿವೆ. ತೀರ್ಥಂಕರರ ಚರಿತೆಗಳಲ್ಲಿ ಆಯಾ ತೀರ್ಥಂಕರನ (ಸಹಚರ ಜೀವರ) ಪೂರ್ವ ಭವಾವಳಿಗಳು ಮತ್ತು ಪಂಚಕಲ್ಯಾಣದ ವಿವರಗಳು ಬರುತ್ತವೆ. ಲೌಕಿಕ ಕಾವ್ಯಗಳಲ್ಲಿ ಪೌರಾಣಿಕ ಮತ್ತು ತತ್ಕಾಲೀನ ಚಾರಿತ್ರಿಕ ವ್ಯಕ್ತಿಗಳ ಸಮೀಕರಣ ಮೂಲಕವಾದ ವಸ್ತು ಕಥನವಿರುತ್ತದೆ. ಇನ್ನು ಕಲ್ಪಿತ ಕಥಾವಸ್ತುವಿನ ಸಂಸ್ಕೃತ ಗದ್ಯ ಕಾವ್ಯಗಳನ್ನು ಕನ್ನಡಕ್ಕೆ ತಂದುಕೊಳ್ಳುವಾಗ ಚಂಪೂ ಪದ್ಧತಿಗೆ ಅಳವಡಿಸಿಕೊಂಡು ನಿರೂಪಿಸಿರುವ ಸಂಪ್ರದಾಯವನ್ನು ಮೊದಲು ಹೂಡಿದ ಕವಿ ಆದಿ ನಾಗವರ್ಮ. ಆತ ತನ್ನ ಕೃತಿ ಕರ್ಣಾಟಕ ಕಾದಂಬರಿಯಲ್ಲಿ, ಕಲ್ಪಿತ ಕಥೆಯನ್ನು ಕಾವ್ಯ ವಸ್ತುವನ್ನಾಗಿ ಮಾಡಿಕೊಂಡದ್ದು ಹಾಗೂ ಗದ್ಯ ರೂಪದ ಕೃತಿಯನ್ನು ಚಂಪೂ ರೂಪಕ್ಕೆ ತಿರುಗಿಸಿದ್ದು ಒಂದು ವೈಶಿಷ್ಟ್ಯಪೂರ್ಣವಾದ ಸಾಹಸ. ಪರಂಪರೆ ಮುಂದೆ ನೇಮಿಚಂದ್ರ, ದೇವಕವಿ ಮತ್ತು ಚೌಂಡರಸರ ಕೈಯಲ್ಲಿ ಮಂದುವರಿಯಿತು. ಮೂಲ ಶುದ್ಧವಾಗಿ ಪದ್ಯದಲ್ಲಿರಲೀ ಅಥವಾ ಗದ್ಯದಲ್ಲಿರಲೀ ಅದನ್ನು ಚಂಪೂವಿಗೆ ತಿರುಗಿಸುವ ಪ್ರಯತ್ನ ಕನ್ನಡ ಸಾಹಿತ್ಯದಲ್ಲಿ ಚಂಪೂವಿನ ಪ್ರಾಬಲ್ಯವನ್ನೂ ಕನ್ನಡ ಕವಿಗಳ ಒಲವು ಸಂಪ್ರದಾಯ ಶ್ರದ್ಧೆಗಳನ್ನೂ ಎತ್ತಿ ತೋರಿಸುತ್ತದೆ.

ಇಲ್ಲಿ ಪ್ರಾಚೀನತೆಯ ದೃಷ್ಠಿಯಿಂದ ಊಹಿಸಬಹುದಾದ ಸಂಗತಿಗಳು 1. ಕವಿರಾಜಮಾರ್ಗಕ್ಕೆ ಹಿಂದೆ ಕನ್ನಡದಲ್ಲಿ ಗದ್ಯಕಾವ್ಯಗಳು, ಹಾಗೆಯೇ ಪದ್ಯಕಾವ್ಯಗಳೂ ಇದ್ದವು. 2. ಕಾವ್ಯಗಳಲ್ಲಿ ಶ್ರೀವಿಜಯ ಮೊದಲಾದವರು ಬರೆದವು ದ್ಯ ಪ್ರಕಾರದವುಗಳು. 3. ಚತ್ತಾಣ ಮತ್ತು ಬೆದಂಡೆಗಳೆಂಬ ಎರಡು ಬಗೆಯ ಪದ್ಯಕಾವ್ಯಗಳು ಕವಿರಾಜಮಾರ್ಗಕಾರನ ಕಾಲದಲ್ಲಿ ಪ್ರಸಿದ್ದವಾಗಿದ್ದವು. ಗಣನೆ ಮಾಡಬಹುದಾದ ಒಳ್ಳೆಯ ಪದ್ಯಗಳೂ ಪದ್ಯ ಕಾವ್ಯಗಳೂ ಕವಿರಾಜಮಾರ್ಗಕಾರನ ಕಾಲದಲ್ಲಿಯೂ ಅದರ ಮೊದಲ ಆಗಿಹೋಗಿದ್ದು ಕನ್ನಡಕ್ಕೆ ವಿಶಿಷ್ಟವಾದ ಎರಡು ಪದ್ಯಕಾವ್ಯ ಪ್ರಕಾರಗಳು ಸಾಕಷ್ಟು ಹಿಂದಿನ ಕಾಲದಲ್ಲಿಯೇ ತಲೆದೋರಿದುದು ಮೇಲಿನ ಹೇಳಿಕೆಯಿಂದ ತಿಳಿದುಬರುತ್ತದೆ. ಇಲ್ಲಿ ಹೇಳಿರುವ ಪುರಾತನ ಕವಿಗಳ್ ಎಂಬುದರ ಹಳಮೆಯ ವ್ಯಾಪ್ತಿ ಇಷ್ಟೇ ಎನ್ನುವಂತಿಲ್ಲ.

ಲಿಪಿಕಾರ ಸ್ಕಾಲಿತ್ಯಗಳು ಕೂಡಿ ಭಾಷಿಕ ಮತ್ತು ಛಂದಃ ಸ್ವರೂಪಗಳ ಪರಿಶೀಲನೆಯನ್ನು ಜಟಿಲಗೊಳಿಸಿರುವುದುಂಟು. ಛಂದಸ್ಸುಗಳಲ್ಲಿ ಸಂಸ್ಕೃತ ಸಾಹಿತ್ಯದಲ್ಲಿ ಪ್ರಚುರವಾದ ಶಾರ್ದೂಲ ವಿಕ್ರೀಡಿತದಂತಹ ವಂಶಸ್ಥ ವಸಂತ ತಿಲಕಗಳಂತಹ ವೃತ್ತಗಳ ಜೊತೆಗೆ ಅಪ್ರಚುರವಾದ ಮಹಾಸ್ರಗ್ಧರೆ, ಮತ್ತೇಭವಿಕ್ರೀಡಿತ ಉತ್ಪಲಮಾಲೆ ಗಳಂತಹವು ತಕ್ಕ ಮಟ್ಟಿಗೆ ಬಳಕೆಗೊಂಡಿವೆ. ಕನ್ನಡ ಶಾಸನ ಕವಿಗಳು ಸಂಸ್ಕೃತ ವೃತ್ತಗಳ ನಿಯಮ ನಿಬಂಧನೆಗಳನ್ನು ಬಲ್ಲವರಾಗಿದ್ದು, ಅವನ್ನು ತಮ್ಮ ಕವಿತ್ವ ಪದ್ಧತಿಗೆ ಅಳವಡಿಸಿಕೊಂಡಿರುವುದು ಕಾಣುತ್ತದೆ. ಜೊತೆಗೆ ಅವರು ಪ್ರಯೋಶೀಲರಾಗಿ ಜಾಡಿನ ಹೊಸ ವೃತ್ತಗಳನ್ನು ಅಲ್ಪ ವ್ಯತ್ಯಾಸಗಳೊಡನೆ ಲ್ಪಿಸಿಕೊಂಡರೆಂದು ತಿಳಿಯುವುದರಿಂದ ಅವರು ಕನ್ನಡ ಕವಿತ್ವದ ರೂಪರೇಖೆಗಳ ಬಗೆಗೆ ಪ್ರತಿಭೆ ಕೌಶಲಗಳಿಂದ ಸ್ವತಂತ್ರವಾಗಿ ಯೋಚಿಸಬಲ್ಲವರಾಗಿದ್ದರೆಂದು ಹೇಳಬಹುದು. ಇಂತಹ ಪ್ರಯೋಗಗಳನ್ನು ಬಹುಮಟ್ಟಿಗೆ 6-7ನೇ ಶತಮಾನಗಳ ಆಚೀಚೆಯ ಕಾಲಗಳಿಂದ ನಡೆಸುತ್ತಿದ್ದಿರಬೇಕು ಎಂದು ಭಾವಿಸಿದರೆ ತಪ್ಪಾಗಲಾರದು

ಶ್ರವಣಬೆಳಗೊಳದ ನಿಷದಿ ಶಾಸನ ಪದ್ಯಗಳು ಕನ್ನಡ ಸಾಹಿತ್ಯದಲ್ಲಿ ಕವಿತ್ವರಚನೆ ಅದರ ಆರಂಭದ ದೆಸೆಯಲ್ಲಿ ತೊಟ್ಟು ತೊಟ್ಟಾಗಿ ತೊಡಗಿತೆಂಬುದನ್ನು ಸೂಚಿಸುತ್ತವೆ. ವೃತ್ತಬಂಧನ ವಿಶ್ಲೇಷಣೆಯಿಂದಲೂ ಅಂಶವನ್ನು ಸಮರ್ಥಿಸಿರುವುದು ಕಂಡುಬರುತ್ತದೆ, ಸಂಬಂಧವಾಗಿಶ್ರವಣಬೆಳಗೊಳದ ಬಿಡಿ ಪದ್ಯಗಳ ಛಂದಸ್ಸು ಎಂದರೆ ಯತಿ ಸಾಧನೆ ಮತ್ತು ಕೆಲವೆಡೆ ಯತಿಭಂಗ ಇವು ವೃತ್ತಗಳನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳುತ್ತಿದ್ದ ಆರಂಭದ ಪ್ರಯತ್ನಗಳನ್ನು ಸೂಚಿಸುವಂತೆ ಕಾಣುತ್ತದೆಎಂಬ ಟಿ.ವಿ.ವೆಂಕಟಚಲಶಾಸ್ತ್ರೀ ಅವರ ನಿಲುವು ಯೋಚಿಸತಕ್ಕದ್ದಾಗಿದೆ. ಆದರೆ ಈಚಿನ ಕನ್ನಡ ಕಾವ್ಯ ಪದ್ಧತಿಯಲ್ಲಿ ಕೂಡ ಯತಿಯ ಪಾಲನೆ ಉಲ್ಲಂಘನೆಗಳು ಸ್ವಚ್ಛಂವಾಗಿ ತಲೆದೋರಿರುವುದರಿಂದ ಯತಿ ಪಾಲನೆಯ ಘಟ್ಟ ಎಂದು ನಿಂತಿತು, ಉಲ್ಲಂಘನೆಯ ಘಟ್ಟ ಎಂದು ತೊಡಗಿತು ಎಂಬುದರ ಬಗ್ಗೆ ನಾವು ಹೇಳುವ ಸ್ಥಿತಿಯಲ್ಲಿಲ್ಲ. ದ್ವಿತೀಯಾಕ್ಷರ ಪ್ರಾಸದ ನಿಯಮಬದ್ಧವಾದ ಪ್ರಯೋಗ ಕನ್ನಡ ಕವಿತ್ವದಲ್ಲಿ ಒಂದು ಅವಶ್ಯ ನಿಯಮವೆಂಬಂತೆ ಸಂಘಟಿಸಿದ್ದು ಸಾಕಷ್ಟು ಹಿಂದಿನಿಂದ ನಡೆಯುತ್ತಾ ಬಂದ ಛಂದಃ ಪ್ರಯೋಗಗಳ ಫಲವೇ ಇರಬಹುದು ಎಂಬ ವಿದ್ವಾಂಸರ ಅನಿಸಿಕೆ ಸ್ವೀಕಾರಾರ್ಹವಾಗಿದೆ.

ಒಂದೇ ಬಗೆಯ ವಸ್ತು ರಚನೆಯ ಒಂಟಿ ಪದ್ಯಗಳಲ್ಲಿಯೇ ಕವಿತ್ವ ನಿರ್ಮಿತಿ ಕೃತ ಕೃತ್ಯವಾಗುವುದು. ಸಂಧಿ ಸಮಾಸಗಳು ವಾಕ್ಯರಚನೆ ಮೊದಲಾದವುಗಳು, ಭಾಷೆ ಹಲವೆಡೆ ವ್ಯಾಕರಣ ನಿಯಮಗಳಿಗೆ ಕಟ್ಟು ಬೀಳದಿರುವುದು ಹಾಗೂ ಕಟ್ಟು ಬಿದ್ದಿರುವುದು, ವೃತ್ತ ರಚನೆಗಳು ಪೂರ್ವದ ಹಳಗನ್ನಡವೆಂಬ ಭಾಷಾ ಸ್ವರೂಪವನ್ನು ಹೆಚ್ಚಾಗಿ ತೋರಿಸುತ್ತಿರುವುದು- ಇಂತಾ ಸಂಗತಿಗಳನ್ನು ಪರಿಶೀಲಿಸಿದರೆ ಪ್ರಾಯಃ ಸು.ಕ್ರಿ.ಶ.  6೦೦-650 ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪ್ರಾಯೋಗಿಕ ಸ್ಥಿತಿಯಲ್ಲಿ ಕಣ್ಣು ಬಿಡುತ್ತಿದ್ದಿರುವುದು ಸಾಧ್ಯ ಎನ್ನಬೇಕಾಗುತ್ತದೆ. ಶಾಸನಗಳು ಒದಗಿಸುವ ಸಾಕ್ಷಿಗಳಿಂದ ನಿರ್ಣಯ ಪಾಕ್ಷಿಕವಾಗಿ ಮಾತ್ರ ಸರಿ. ಪ್ರಯೋಗಶೀಲ ಮತ್ತು ಪರಿಣಿತಿ ಎರಡಕ್ಕೂ ನಿದರ್ಶನಗಳು ತೋರುತ್ತಿರುವುದನ್ನು ಗಮನಿಸಿದರೆ ಪ್ರಾಯಶಃ ಪೂರ್ವದ ಹಳಗನ್ನಡ ಹಳಗನ್ನಡಕ್ಕೆ ತಿರುಗುತ್ತಿರುವ ಭಾಷಾ ಸ್ಥಿತಿಗೆ ಅನುಗುಣವಾಗಿ ಛಂದಃ ಪ್ರಯೋಗತೀರಾ ಪ್ರಾಚೀನಕಾಲವು ಪರಿಷ್ಕೃತ ಛಂಸ್ಸಿನ ಪರಿಣತಿಯ ಕಾಲದ ಕಡೆಗೆ ಸಾಗುವ ಯತ್ನದಲ್ಲಿದ್ದಿರಬಹುದೆಂದು ತೋರುತ್ತದೆ. ವಿಪುಲವಾಗಿ ಕನ್ನಡ ಶಾಸನಗಳು ರಚಿತವಾದ 7ನೆ ಶತಮಾನ ಮತ್ತು ಈಚಿನ ಕಾಲದ ಖ್ಯಾತ ಕರ್ಣಾಟಕಗಳೂ ಇತರ ವೃತ್ತಗಳೂ, ಸಂಸ್ಕೃತ ಭಾಷಾ ಸಾಹಿತ್ಯಗಳ ವರ್ಚಸ್ಸು ಕನ್ನಡದ ಮೇಲೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತೋರಿಸಲು ಸಮರ್ಥವಾಗಿದೆ.

ಕವಿರಾಜ ಮಾರ್ಗದ ವರ್ಣವೃತ್ತಗಳು, ಆದಿಪ್ರಾಸ ಪಾಲನೆಯ ವಿಶೇಷ ಹೊರತಾಗಿ ಉಳಿದಂತೆ ಸಂಸ್ಕೃತ ವರ್ಣವೃತ್ತಗಳ ಸಾಮಾನ್ಯ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಸೂಚಿತ ಸ್ಥಾನಯತಿ ಮತ್ತು ಪಾದಾಂತ ಯತಿ ಹಲವೆಡೆ ಗಮನಕ್ಕೆ ಬರುವಂತೆ ಪಾಲಿತವಾಗಿ ಇರುವುದು ಉಲ್ಲೇಖನೀಯವಾಗಿದೆ. ವೃತ್ತಗಳು ಉತ್ತರ ಕಾಲೀನ ಚಂಪುಗಳಲ್ಲಿ ಕಂಡುಬರುವಂತೆ ಕಂದ ಮತ್ತು ಗದ್ಯಖಂಡಗಳ ನಡುನಡುವೆ ಬೆರೆತು ಬರೆದ ಲ್ಲಲ್ಲಿ ಹಿಂಡುಹಿಂಡಾಗಿ ಸಾಲುಗಟ್ಟಿ ಬರುವುದು ಕುತೂಹಲಕರವಾಗಿದೆ. ಒಂದೇ ಬಗೆಯ ಅಥವಾ ಸಮೀಪ ಸಾದೃಶ್ಯ, ವೃತ್ತ ಭೇಧಗಳು ಹೀಗೆ ಬರುವುದನ್ನು ಕಂಡಾಗ ಕವಿ ಯಾವ ಉದ್ದೇಶದಿಂದಾಗಿ ಹೀಗೆ ಮಾಡಿದ್ದಾನೆಂಬುದನ್ನು ತಿಳಿಯುವ ಕುತೂಹಲ ಹುಟ್ಟುತ್ತದೆ. ಕವಿರಾಜಮಾರ್ಗ ಪೂರ್ವಕಾಲೀನ ಕಾವ್ಯ ಸಾಹಿತ್ಯದ ಅಥವಾ ಲಕ್ಷಣ ಸಾಹಿತ್ಯದ ಯಾವ ಗ್ರಂಥಗಳೂ ಈಗ ದೊರೆಯದೇ ಇರುವುದರಿಂದ ವಿಷಯದಲ್ಲಿ ಏನನ್ನಾದರೂ ಹೇಳುವುದು ಕಷ್ಟ. ಕನ್ನಡ ಲಕ್ಷಣಗ್ರಂಥಗಳ ಚೌಕಟ್ಟಿನಲ್ಲಿ ಒಂದೇ ಬಗೆಯ  ಛಂದಸ್ಸು ಪ್ರಾಶಸ್ತ ಪಡೆದು ಬಳಕೆಯಾಗುವುದು ಸಾಮಾನ್ಯ. ಆದರೆ ಕವಿರಾಜ ಮಾರ್ಗದಲ್ಲಿ ಛಂದೋವೈವಿಧ್ಯವಿದೆ.

ಚಂಪೂವಿನ ಯುಗ ಪ್ರವರ್ತಿಸಿದಾಗ ಗದ್ಯಭಾಗಗಳು ನಡುನಡುವೆ. ಕೂಡಿಕೊಂಡಿದ್ದರ ಪ್ರತ್ಯೇಕತೆ ಹೊರತಾಗಿ ಉಳಿದಂತೆ ಕವಿರಾಜಮಾರ್ಗದಲ್ಲಿ ಪರಿಚಿತವಾದ ಗಣ್ಯ ಛಂದಸ್ಸುಗಳೇ ಬಲುಮಟ್ಟಿಗೆ ಮುಂದುವರಿದುಕೊಂಡು ಬಂದಿರುವ ಹಾಗೆ ತೋರುತ್ತದೆ.

ಚಂಪೂವಿನ ಛಂದೋವೈವಿದ್ಯತೆಯನ್ನು ಆರಂಭ ಕಾಲದ ಚಂಪೂ ಛಂದೋವೈವಿದ್ಯತೆಯ ಸ್ವರೂಪವನ್ನು ತಿಳಿಯಲು ಶಾಸನಗಳ ನೆರವು ಅತ್ಯಗತ್ಯವಾಗಿವೆ. ಸಂಸ್ಕೃತದಿಂದ ಕನ್ನಡಕ್ಕೆ ಹೊಸದಾಗಿ ಅಕ್ಷರ ವೃತ್ತಗಳನ್ನು ಸ್ವೀಕರಿಸಿದಾಗ ಇದ್ದ ಪರಿಸ್ಥಿತಿಯ ಪರಿಚಯಕ್ಕೆ ನಾವು 7ನೇ ಶತಮಾನದ ಆದಿ ಭಾಗಕ್ಕೆ ಹೋಗಬೇಕಾಗುತ್ತದೆ. ಕ್ರಿ. 5 ತಮ್ಮಟಕಲ್ಲಿನ ಬಿಡಿ ಮುಕ್ತಕವು ಪಿಂಗಲನ ಅವಿಥತವೆಂದು ಕರೆಯುವ ಇತರರು ನರ್ಕುಟಕ ಅಥವಾ ನರ್ದಟಕ ಎಂಬುದಾಗಿ ಕರೆದಿರುವ ಒಂದು ವರ್ಣಸಮ ವೃತ್ತದಲ್ಲಿ ರಚಿತವಾಗಿದೆ. ಕನ್ನಡದಲ್ಲಿ ಪ್ರಥಮ ವರ್ಣದ ಬಳಕೆ ಕ್ರಿ.. ಸು. 5ನೇ ಶತಮಾನದ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲು ಶಾಸನದಲ್ಲಿ ಕಂಡುಬರುತ್ತದೆ.ಈ ಪದ್ಯವನ್ನು  ಹಿಂದೆ ಈಗಾಗಲೇ ನೋಡಲಾಗಿದೆ.

ಶಾಸನದಲ್ಲಿ ಬಳಕೆಯಾಗಿರುವ ಅಕ್ಷ ವೃತ್ತವು 17ನೆಯ ಅತ್ಯಷ್ಟಿಯಲ್ಲಿದ್ದು ಕನಕಾಬ್ಜಿನಿ ಅಥವಾ ನರ್ಕುಟಕವಾಗಿದೆ. ಆರಂಭಕಾಲೀನ ಶಾಸನ ಪದ್ಯವು ನಿರ್ದಿಷ್ಟ ಸ್ಥಾನದಲ್ಲಿ ಯತಿಯ ಪಾಲನೆ, ಆದಿ ಪ್ರಾಸ, ಅಂತ್ಯಪ್ರಾಸ, ಪಾದಾಂತ್ಯದಲ್ಲಿ ಪದ ಪದ ನಿಲುಗಡೆಗಳನ್ನು ಒಳಗೊಂಡಿದ್ದು ವೃತ್ತವು ನಂತರ ಕಾಲದ ಚಂಪೂ ಕವಿಗಳಾದ ನಾಗವರ್ಮ, ನೇಮಿಚಂದ್ರ ಮುಂತಾದವರ ಕಾವ್ಯಗಳಲ್ಲಿ ಕಾಣಿಸಿಕೊಂಡಿದೆ.

ಕ್ರಿ.. 7ನೇ ಶತಮಾನದ ಶ್ರವಣಬೆಳಗೊಳದ ಬಿಡಿಮುಕ್ತಕಗಳಲ್ಲಿ ಸುಮಾರು 30ರಷ್ಟು ಪದ್ಯ ಶಾಸನಗಳಿವೆ. ಶಾಸನ ಪದ್ಯಗಳ ವರ್ಣಛಂದಸ್ಸಾಗಿದೆ. ಬಿಡಿಮುಕ್ತಕಗಳಲ್ಲಿ ವೈವಿಧ್ಯಮಯವಾದ ಅಕ್ಷರಛಂದಸ್ಸಿನ 12 ಪದ್ಯಗಳನ್ನು ಗುರುತಿಸಬಹುದಾಗಿದೆ. ಶಾರ್ದೂಲ ವಿಕ್ರೀಡಿತ 4 (ಶಾಸನ ಸಂಖ್ಯೆ 13, 22, 27, 116) ಮತ್ತೇವಿಕ್ರೀಡಿತ 4 ( ಶಾಸನ ಸಂಖ್ಯೆ 76, 77, 97,98) ಮಲ್ಲಿಕಾ ಮಾಲೆ 1 (ಶಾಸನ ಸಂಖ್ಯೆ 31) ವಂಶಸ್ಥ 1 (ಶಾ,ಸಂ.114) ಇತ್ಯಾದಿ ಶ್ರವಣಬೆಳಗೊಳದ ವೈವಿದ್ಯಮಯ ಬಿಡಿಮುಕ್ತಕಗಳಲ್ಲಿಯ ವರ್ಣವೃತ್ತಗಳು ಸಂಸ್ಕೃತ ಛಂದಸ್ಸನ್ನು ವಿಪುಲವಾಗಿ ಬಳಸಿಕೊಂಡಿದ್ದಕ್ಕೆ ನಿದರ್ಶನವಾಗಿದೆ. ಕವಿರಾಜಮಾರ್ಗದ ಪೂರ್ವದಲ್ಲಿಯೇ ತಮಟಕಲ್ಲು, ಶ್ರವಣಬೆಳಗೊಳ ಮಾತ್ರವಲ್ಲದೇ ಮಂಗಳೂರು, ಉದಯಾವರ, ಬೆಲವತ್ತೆ, ಪಟ್ಟದಕಲ್ಲು, ನರಸಿಂಹರಾಜಪುರದ ಶಾಸನಗಳಲ್ಲಿಯೂ ಅಕ್ಷರವೃತ್ತಗಳು ಬಳಕೆಯಾಗಿವೆ. ವೃತ್ತಗಳು ಖ್ಯಾತಕರ್ಣಾಟಗಳು, ವಂಶಸ್ಥ, ವಸಂತತಿಲಕ, ಮಂಗಲ, ಮಲ್ಲಿಕಾಮಾಲೆ ಇತ್ಯಾದಿ ವಿರಳ ಪ್ರಯೋಗಗಳನ್ನು ಒಳಗೊಂಡಿದೆ. ಪಂಪಪೂರ್ವ ಯುಗದಲ್ಲಿಯೇ ಶಾಸನಗಳಲ್ಲಿ ಬಳಕೆಯಾಗಿರುವ ವರ್ಣವೃತ್ತಗಳು ಛಂದಸ್ಸಿನ ದೃಷ್ಠಿಯಿಂದ ಕೆಲವೆಡೆ ಶೈಥಿಲ್ಯಗಳನ್ನು ವೈಚಿತ್ರ್ಯಗಳನ್ನು ಹೊಂದಿದ್ದರೂ ನಂತರದ ಪಂಪಾದಿ ಚಂಪೂ ಕವಿಗಳ ವೃತ್ತಗಳ ರಚನೆಗಳೊಡನೆ ಹೋಲಿಸಿ ನೋಡಿದಾಗ ಇವುಗಳು ಒಂದು ಬಗೆಯ ಪೂರ್ವ ಕಾಲದ ಸ್ಥಿತ್ಯಂತರಗಳನ್ನೂ ಪ್ರಾಯೋಗಿಕ ಪ್ರಯತ್ನಗಳನ್ನು ತೋರಿಸುವಂತಿವೆ. ಜೊತೆಗೆ ಶಾಸನಗಳಲ್ಲಿ ಬಳಕೆಯಾಗಿರುವ ಖ್ಯಾತ ಕರ್ನಾಟಕ ವೃತ್ತಗಳು ಇತರ ವೃತ್ತಗಳು ಸಂಸ್ಕೃತ ಭಾಷಾ ಸಾಹಿತ್ಯಗಳ ವರ್ಚಸ್ಸು ಕನ್ನಡದ ಮೇಲೆ ಎಷ್ಟರ ಮಟ್ಟಿಗೆ ಆಗಿವೆ ಎಂಬುದನ್ನು ತೋರಿಸಲು ಸಹಾಯಕವಾಗಿವೆ. ಕನ್ನಡದ ಬಹುತೇಕ ಶಾಸನಗಳು ಚಂಪುವಿನ ಚೌಕಟ್ಟನ್ನು ಛಂದೋವೈವಿದ್ಯತೆಯನ್ನು ಎಲ್ಲಾ ಕಾಲಕ್ಕೂ ಅಳವಡಿಸಿಕೊಂಡಿದ್ದು ವರ್ಣವೃತ್ತಗಳಲ್ಲಿಯ ಸಮ , ರ್ಧಸಮ, ವಿಷಮ ವೃತ್ತಗಳಲ್ಲಿ ವೈವಿಧ್ಯತೆಯನ್ನು ಗುರುತಿಸಬಹುದಾಗಿದೆ.  

ಪರಾಮರ್ಶನ ಗ್ರಂಥಗಳು:

೧. ಎಂ.ಬಿ.ನೇಗಿನಹಾಳ: ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ

   ಪ್ರಸಾರಾಂಗ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1994

೨. ‍ಷ‍.ಶೆಟ್ಟರ್ಪ್ರಾಕೃತ ಜಗದ್ವಲಯ,( ಪ್ರಾಕೃತ- ಕನ್ನಡ -ಸಂಸ್ಕೃತ ಭಾಷೆಗಳ ಅನುಸಂಧಾನ) ಅಭಿನವ ಪ್ರಕಾಶನ, ಬೆಂಗಳೂರು,

೩.ಟಿ.ವಿ.ವೆಂಕಟಾಚಲ ಶಾಸ್ತ್ರೀ: ಶಾಸ್ತ್ರೀಯ ಸಂ.2, ಸ್ವಪ್ನಬುಕ್ ಹೌಸ್, ಬೆಂಗಳೂರು,1999 

೪. ಎಂ.ಚಿದಾನಂದಮೂರ್ತಿ: ಹೊಸತು ಹೊಸತು, ಪ್ರಸಾರಾಂಗ

  ಕನ್ನಡ ವಿಶ್ವವಿದ್ಯಾಲಯ, ಹಂಪಿ.1993  65.

೫.ಎಂ.ಎಂ.ಕಲಬುರ್ಗಿ: ಶಾಸನ ವ್ಯಾಸಂಗ ,ಸಂ.1. ಪ್ರಸಾರಾಂಗ

   ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1974

೬. ಸಿ.ನಾಗಭೂಷಣ: ಸಾಹಿತ್ಯ ಸಂಸ್ಕೃತಿ ಹುಡುಕಾಟ

  ಅಮೃತವರ್ಷಿಣಿ ಪ್ರಕಾಶನ, ರಾಯಚೂರು 2೦೦2

  ಶಾಸನಗಳು ಮತ್ತು ಕನ್ನಡ ಸಾಹಿತ್ಯ,ಪ್ರಸಾರಾಂಗ

  ಗುಲಬರ್ಗಾ ವಿಶ್ವವಿದ್ಯಾಲಯ,ಗುಲಬರ್ಗಾ 2೦೦5

೭.ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂ: ಜಿ.ಎಸ್.ಶಿವರುದ್ರಪ್ಪ) ಸಂಪುಟ-೧,

 ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ೧೯೭೪

೮. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ (ಸಂ) ಹಾ.ಮಾ ನಾಯಕ,

  ಎರಡನೇ ಸಂಪುಟ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು,೧೯೭೫

೯. ಶಾಸನಗಳು ಮತ್ತು ಕನ್ನಡ ಶಾಸ್ತ್ರೀಯತೆ ಸಂ: ಮಾರುತಿ ಆರ್.ತಳವಾರ ಮತ್ತು ರಾಜಶೇಖರ ಮಠಪತಿ

    ಕುಕ್ಕೆಶ್ರೀ ಪ್ರಕಾಶನ,ಬೆಂಗಳೂರು 2009

೧೦.ಎ.ವೆಂಕಟಸುಬ್ಬಯ್ಯ: ಕೆಲವು ಕನ್ನಡ ಕವಿಗಳ ಜೀವನ-ಕಾಲ ವಿಚಾರ

  ಸೆಂಟ್ರಲ್‌ ಕಾಲೇಜಿನ ಕರ್ಣಾಟಕಸಂಘ, ಬೆಂಗಳೂರು,೧೯೨೭

೧೧. ಆರ್.ನರಸಿಂಹಾಚಾರ್ಯ: ಕರ್ಣಾಟಕ ಕವಿಚರಿತೆ, ಮೊದಲನೆ ಸಂಪುಟ

   ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು, ೧೯೭೦

೧೨. ಶ್ರೀವಿಜಯಕೃತ ಕವಿರಾಜಮಾರ್ಗ ಸಂ: ಎಂ.ವಿ.ಸೀತಾರಾಮಯ್ಯ

    ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನ, ಬೆಂಗಳೂರು ೧೯೯೪

 

 

 

 

                 ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ                 ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು                 ...