ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಮೇ 5, 2025

 ಬಸವಣ್ಣನವರನ್ನು ಕುರಿತ ಅರ್ಜುನವಾಡ ಮತ್ತು ಇತರ ಶಾಸನಗಳು

                                                                                                                          ಡಾ.ಸಿ.ನಾಗಭೂಷಣ

  ಕನ್ನಡ ನಾಡಿನ ವಿವಿಧ ಅರಸು ಮನೆತನಗಳ ಸಾಮಂತರ ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳು ನಾಡಿನ ಜನಾಂಗದ ಬದುಕಿನ ವಿಶ್ವಕೋಶಗಳಾಗಿವೆ.  ನಮ್ಮ ನಾಡಿನ ಚಾರಿತ್ರಿಕ ಆಧಾರಗಳ ಅಭಾವ, ಅಸಮರ್ಪಕತೆ, ಅವಿಶ್ವಾಸನೀಯತೆಗಳನ್ನು ಗಮನಿಸಿದಾಗ ಶಾಸನಗಳ ಮಹತ್ತ್ವ ಹಾಗೂ ಪ್ರಾಮುಖ್ಯ ತಿಳಿಯುತ್ತದೆ. ಶಾಸನಗಳು ಪ್ರಮುಖವಾಗಿ ಒಂದು ಕಾಲದಲ್ಲಿ ನಡೆದ ವ್ಯವಹಾರಗಳ ಲಿಖಿತ ದಾಖಲೆಗಳು; ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ರಚಿಸುವಲ್ಲಿ ಉಳಿದೆಲ್ಲವುಗಳಿಗಿಂತ ಮಹತ್ತರವಾದ ಮತ್ತು ಅಧಿಕೃತ ದಾಖಲೆಗಳಾಗಿವೆ. ಶಾಸನಗಳು ಆರಂಭವಾದ ಕಾಲದಿಂದಲೂ ಪ್ರೌಢವಾದ ಚಂಪೂ ಶೈಲಿಯನೇ ಮಾದರಿಯಾಗಿಟ್ಟು ಕೊಂಡಿತು. ಹನ್ನೆರಡನೇ ಶತಮಾನದ ನಂತರ ಕನ್ನಡ ಸಾಹಿತ್ಯದಲ್ಲಿ ದೇಸಿ ಸಾಹಿತ್ಯ ಪ್ರಕಾರಗಳಾದ ವಚನ, ರಗಳೆ, ಷಟ್ಪದಿ, ಸಾಂಗತ್ಯ, ಇತ್ಯಾದಿ ಪ್ರಕಾರಗಳು ರೂಪುಗೊಂಡು ಜನಪ್ರಿಯತೆಯನ್ನು ಪಡೆಯಿತಾದರೂ ಆ ಕಾಲದ ಶಾಸನಗಳು ಎಂದಿನ ಚಂಪೂ ಶೈಲಿಯನ್ನೇ ಬಹುಮಟ್ಟಿಗೆ ಅನುಸರಿಸಿದವು. ಚಂಪೂ ಕವಿಗಳ-ಕಾವ್ಯಗಳ ಪ್ರಭಾವ ಶಾಸನ ಕವಿಗಳ ಮೇಲಾದ ಹಾಗೆ ದೇಸಿ ಸಾಹಿತ್ಯ ಪ್ರಕಾರಗಳ ಪ್ರಭಾವ ಶಾಸನಗಳ ಮೇಲಾಗಲಿಲ್ಲ. ಹೀಗಾಗಿ ಕನ್ನಡ ನಾಡಿನಲ್ಲಿ ದೊರೆಯುವ ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಕನ್ನಡ ಶಾಸನಗಳಲ್ಲಿ ಅಚ್ಚಗನ್ನಡ ಬೇಸಾಯಗಾರರಾದ ಶರಣರನ್ನು ಕುರಿತು, ಅವರ ವಚನಗಳಿಂದ ಪ್ರಭಾವಿತವಾದ ಶಾಸನಗಳ ಸಂಖ್ಯೆ ತೀರ ವಿರಳ ಎಂದೇ ಹೇಳಬೇಕು. ವಿರಳವಾಗಿ ಉಪಲಬ್ಧವಿರುವ ಶರಣರನ್ನು ಉಲ್ಲೇಖಿಸುವ ಶಾಸನಗಳಲ್ಲಿ ಶಿವಶರಣರ ಹೆಸರು, ಜನ್ಮಸ್ಥಳ, ಅವರ ವಚನಗಳ ಉಲ್ಲೇಖ ಇತ್ಯಾದಿ ವಿವರಗಳು ಕ್ವಚಿತ್ತಾಗಿ ಕಂಡುಬರುತ್ತವೆಯೆ ಹೊರತು ಕಾವ್ಯ ಪುರಾಣಗಳಲ್ಲಿ ನಿರೂಪಿತವಾದಂತೆ ಸುದೀರ್ಘವಾದ ವೈಯುಕ್ತಿಕ ವಿವರಗಳು ಶಾಸನಗಳಲ್ಲಿ ಕಂಡು ಬರುವುದಿಲ್ಲ. 

     ವ್ಯಕ್ತಿಗಳನ್ನು ಕುರಿತ ಪುರಾಣ ಸಂಗತಿಗಳಿಗಿಂತ ಭಿನ್ನವಾದ ರೀತಿಯಲ್ಲಿ ಶುದ್ದ ಇತಿಹಾಸ ಶಾಸನಗಳಲ್ಲಿಯೂ ಸಿಗುತ್ತದೆಂಬುದಕ್ಕೆ ಶರಣರನ್ನು ಕುರಿತ ಕೆಲವು ಶಾಸನಗಳನ್ನು ಅದರಲ್ಲೂ ಏಕಾಂತದ ರಾಮಯ್ಯನ್ನು ಕುರಿತ ಅಬ್ಬಲೂರು ಶಾಸನ ಮತ್ತು ಬಸವಣ್ಣನವರನ್ನು ಕುರಿತ ಅರ್ಜುನವಾಡ ಶಾಸನಗಳನ್ನು ಉದಾಹರಿಸಬಹುದು. ಶರಣರನ್ನು ಅವರು ಜೀವಿಸಿದ್ದ ಕಾಲ ಘಟ್ಟಗಳಲ್ಲಿ ನಿಲ್ಲಿಸಿ ಕಾಲನಿರ್ಣಯ ಮಾಡಿ ವೀರಶೈವ ಧರ್ಮ ಹಾಗೂ ಸಾಹಿತ್ಯದ ಚರಿತ್ರೆಯನ್ನು ಕಾಲಬದ್ಧವಾಗಿ ರಚಿಸುವಲ್ಲಿ ಶರಣರನ್ನು ಕುರಿತ ಪುರಾಣ ಕಾವ್ಯಗಳಿಗಿಂತ ಕಾಲಸಹಿತ ವ್ಯಕ್ತಿ ನಿರ್ದೇಶನ ಮಾಡುವ ಶಾಸನಗಳು ಪ್ರಮುಖ ಪಾತ್ರವಹಿಸಿವೆ. ಹದಿಮೂರನೆಯ ಶತಮಾನದ ನಂತರದ ಶಾಸನಗಳಲ್ಲಿ ಶರಣರ ಚರಿತ್ರೆ ಸುದೀರ್ಘವಾಗಿ ವ್ಯಕ್ತವಾಗದಿದ್ದರೂ ಅವರ ಕಾರ್ಯಸಿದ್ದಿಯ ಕ್ಷೇತ್ರ, ಹೆಸರು ಇತ್ಯಾದಿಗಳ ಮೂಲಕ ಶರಣರ ಚರಿತ್ರೆಯನ್ನು  ರೂಪಿಸಲು ಕಾವ್ಯ ಪುರಾಣಗಳಲ್ಲಿ ದೊರೆಯುವ ಮಾಹಿತಿಗಳಿಗೆ ಪೂರಕವಾಗಿ ಶಾಸನಗಳು ಆಕರಗಳಾಗಿ ಕೆಲಸ ಮಾಡಿರುವುದು ಕಂಡು ಬರುತ್ತದೆ.

      ಬಸವಣ್ಣ ಅಥವಾ ಬಸವೇಶ್ವರರ ವಿಷಯವಾಗಿ ಚಾರಿತ್ರಿಕ ಸಂಶೋಧನೆಯು ಇತ್ತೀಚೆಗೆ ವಿಶೇಷವಾಗಿ ನಡೆಯುತ್ತಿರುವುದು ಬಹು ಸ್ವಾಗತಾರ್ಹ ಸಂಗತಿ. ಕರ್ಣಾಟಕ ಚರಿತ್ರೆಯ ಅಧ್ಯಯನವು ಇನ್ನೂ ಪ್ರಾರಂಭದಶೆಯಲ್ಲಿದ್ದಾಗ, ಚರಿತ್ರಕಾರರನೇಕರು , ಬಸವಣ್ಣನವರು ಕೇವಲ ಪುರಾಣ ಪುರುಷರೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ ಎಂದು ನಂಬಿದ್ದರು. ವೀರಶೈವ ಮತ್ತು ಜೈನಪುರಾಣಗಳಲ್ಲಿ ಮತ್ತು ಇತರ ಕನ್ನಡ ಗ್ರಂಥ ಗಳಲ್ಲಿ ಬಸವಣ್ಣನವರ ಪ್ರಸ್ತಾಪವು ವಿಶೇಷವಾಗಿಯೇ ಇದೆ. ಆದರೆ ಇಲ್ಲಿ ದೊರೆಯುವ ಮಾಹಿತಿಗಳು ಪರಸ್ಪರ ವಿರೋಧಾತ್ಮಕವಾದುವು. ಸಾಹಿತ್ಯಗ್ರಂಥಗಳಿಗಿಂತಲೂ ಸಮಕಾಲೀನ ಶಾಸನಗಳು ಚರಿತ್ರೆಯ ಉತ್ತಮ ಮಾಹಿತಿಗಳೆನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರಸಿದ್ಧ ಚರಿತ್ರಕಾರರಾದ ಜೆ.ಎಫ್. ಪ್ಲೀಟ್‌ರವರು ಬಸವಾದಿ ಪ್ರಮಥರ ಬಗೆಗೆ No epigraphic mention of Basava and Channa Basava has been obtained which is really peculiar is they held the high office that is allotted to them by tradition ಎಂದು ಬಸವ ಮತ್ತು ಚೆನ್ನಬಸವರ ವಿಷಯವಾಗಿ ಶಾಸನಗಳು ಏನೂ ಹೇಳದೆ ಮೌನವನ್ನು ತಾಳಿರುವುದು ಬಲು ಸೋಜಿಗದ ಸಂಗತಿಯೆಂದು ಉದ್ಧಾರವೆತ್ತಿದ್ದರು. ಅದೇ ರೀತಿ ವೀರಶೈವಮತ ಸ್ಥಾಪಕರೆಂದು ಪ್ರಸಿದ್ಧರಾದ ಬಸವ, ಚೆನ್ನಬಸವಾದಿಗಳು ಕ್ರಿ.ಶ. 1156 - 67 ರಲ್ಲಿ ಆಳುತ್ತಿದ್ದ ಬಿಜ್ಜಳನ ಕಾಲದಲ್ಲಿದ್ದರೆಂದು ಸರ್ವತ್ರ ಪ್ರತೀತಿ ಇದ್ದು ಕರ್ನಾಟಕ ದೇಶದ ಶಾಸನಗಳಲ್ಲಿ ಇದಕ್ಕೆ ಯಾವ ವಿಧವಾದ ಆಧಾರವು ದೊರೆಯುವುದಿಲ್ಲ. ಅವರು ಕ್ರಿ.ಶ. 1156-67 ರಲ್ಲಿ ಇರಲಿಲ್ಲವೆಂದಂತೆ ಸುಮಾರಾಗಿ ದೃಢವಾಗಿಯೇ ಹೇಳಬಹುದು ಎಂದು ಎ. ವೆಂಕಟಸುಬ್ಬಯ್ಯ ಹೇಳುವಂತಾಯಿತು  ಇದಕ್ಕೆ ಉತ್ತರವೋ ಎಂಬಂತೆ ಚರಿತ್ರಕಾರರು ಶಾಸನಗಳಲ್ಲಿ ಬಸವಣ್ಣನವರ ಉಲ್ಲೇಖವನ್ನು ಹುಡುಕತೊಡಗಿದರು. ಒಂದಾದ ಮೇಲೆ ಒಂದರಂತೆ ಅನೇಕ ಶಾಸನಗಳು ಬೆಳಕಿಗೆ ಬಂದವು. ಹೆಚ್ಚು ಶಾಸನಗಳಲ್ಲಿ ಬಸವಣ್ಣನವರ ಉಲ್ಲೇಖವು ಕಂಡುಬಂದಂತೆ, ಅಭಿಪ್ರಾಯ ಭೇದಗಳೂ ಹೆಚ್ಚಿದವು. ಶಾಸನಗಳನ್ನು ಹುಡುಕ ಹೊರಟು ಬಸವ ಎಂಬ ಹೆಸರು ಕಂಡ ತಕ್ಷಣ ಹೋಲಿಕೆ ರೂಪದ ಚಾರಿತ್ರಿಕ ಅಂಶಗಳು ಲಭಿಸಿದ ತಕ್ಷಣ ಭ್ರಾಂತಿಯಿಂದ ಜೆ.ಎಫ್.ಪ್ಲೀಟ್‌, ಫ.ಗು.ಹಳಕಟ್ಟಿ, ಶಿ.ಚೆ.ನಂದಿಮಠ, ಸಿ ನಾರಾಯಣ ರಾವ್, ನಾ.ರಾಜಪುರೋಹಿತ, ಮಧುರ ಚೆನ್ನ, ಗೋವಿಂದಪೈ, ಚೆನ್ನಮ್ಮಲ್ಲಿಕಾರ್ಜುನ, ಎಸ್.ಶ್ರೀಕಂಠಶಾಸ್ತ್ರಿ ಮುಂತಾದ ವಿದ್ವಾಂಸರು ಸುಮಾರು ಅಸಮ್ಮತ ಸಮ್ಮತ ಒಟ್ಟು 18 ಶಾಸನಗಳನ್ನು ಸಂಗ್ರಹಿಸಿದರು. ಕೆಲವರು ಖಚಿತ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಶಾಸನಗಳಲ್ಲಿ ಕಾಣಬರುವ ಬಸವ, ಸಂಗನ ಬಸವ, ಬಸವರಸ,ಬಸವಣ್ಣ ಮುಂತಾದ ಹೆಸರುಗಳು ಕಲ್ಯಾಣದ ಬಸವಣ್ಣನವರನ್ನು ಕುರಿತವೇ, ಅಥವಾ ಅವು ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಪಟ್ಟವೇ ಎಂದು ಚರ್ಚೆಗಳು ಪ್ರಾರಂಭವಾಗಿ ಅರ್ಜುನವಾಡ ಶಾಸನದ ಸಂಗನ ಬಸವನೇ ಕಲ್ಯಾಣದ ಬಸವಣ್ಣನವರೆಂದೂ  ಸಂಶೋಧಕರು ಮಾನ್ಯ ಮಾಡಿದ್ದಾರೆ. 

     ಬಸವಣ್ಣನವರ ಚರಿತ್ರೆಯನ್ನು ರೂಪಿಸುವಲ್ಲಿ ವಚನಗಳು, ಕಾವ್ಯ-ಪುರಾಣಗಳ ಜೊತೆಯಲ್ಲಿ ಕೆಲವು ಶಾಸನಗಳು ಸಹಕಾರಿಯಾಗಿವೆ. ಬಸವಣ್ಣನವರ ಚರಿತ್ರೆ ಹಾಗೂ ವ್ಯಕ್ತಿತ್ವದ ಮೇಲೆ ಪ್ರತ್ಯಕ್ಷವಾದ ಹಾಗೂ ಪರೋಕ್ಷವಾಗಿ ಬೆಳಕು ಚೆಲ್ಲುವ, ಸಂಶೋಧಕರಿಂದ ಮಾನ್ಯ ಮಾಡಲ್ಪಟ್ಟ ಹದಿಮೂರು ಶಾಸನಗಳು ಬೆಳಕಿಗೆ ಬಂದಿವೆ.

೧. ಬಸವಣ್ಣನ ಹೆಸರನ್ನು ಪ್ರಸ್ತಾಪಿಸುವ ಶಾಸನಗಳು: ಬಸವಣ್ಣನವರ ಪರ್ಯಾಯ ನಾಮಗಳನ್ನು ಪ್ರಸ್ತಾಪಿಸುವ ೧೧ ಶಾಸನಗಳು ಸಂಶೋಧಕರಿಂದ ಮಾನ್ಯತೆ ಪಡೆದ ಸರ್ವಸಮ್ಮತವಾದ ಶಾಸನಗಳಾಗಿವೆ. ಅವುಗಳೆಂದರೆ

ಕ್ರಿ.ಶ. ೧೨೫೯ರ ಹಿರಿಯೂರ ಶಾಸನ- ಬಸವಯ್ಯ

ಕ್ರಿ.ಶ ೧೨೬೦ರ ಅರ್ಜುನವಾಡ ಶಾಸನ - ಬಸವರಾಜ, ಸಂಗನಬಸವ

ಕ್ರಿ.ಶ ೧೨೬೩ ರ ಚೌಡದಾನಪುರದ ೨ ಶಾಸನಗಳು _ಸಂಗಮೇಶನ ಪುತ್ರ, ಬಸವಯ್ಯ, ಸಂಗನ ಬಸವ

ಕ್ರಿ.ಶ ೧೨೭೯ ರ ಕಲ್ಲೆದೇವರಪುರದ ಶಾಸನದಲ್ಲಿ _ ಬಸವರಾಜ

ಕ್ರಿ.ಶ ೧೨೮೦ರ ಮರಡಿಪುದ ಶಾಸನ – ಸಂಗನ ಬಸವಯ್ಯ

೧೪ನೇಯ ಶತಮಾನದ ಗುಡಿಹಾಳ ಶಾಸನದಲ್ಲಿಯ – ಬಸವರಾಜದೇವರು

ಕ್ರಿ.ಶ.೧೬೬೦ರ ಆನಂದಪುರ ಮಠದ ತಾಮ್ರಶಾಸನದಲ್ಲಿ – ಬಸವೇಶ್ವರ

ಕ್ರಿ.ಶ ೧೬೮೬ ರ ಜೋಡೀದಾಸೇನಹಳ್ಳಿಯ ಶಾಸನ – ಬಸವರಾಜೇಂದ್ರ

ಕ್ರಿ.ಶ ೧೭೦೦ರ ಕಾನಕಾನಹಳ್ಳಿಯ ೨ ತಾಮ್ರ ಶಾಸನಗಳು – ಬಸವೇಶ್ವರಸಾಮುಲು, ಕಲ್ಯಾಣದ ಬಸವಪ್ಪನವರು

ಈ ಮೇಲ್ಕಂಡ ಶಾಸನಗಳಲ್ಲಿಯ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರದ್ದೇ ಆಗಿದೆ.

ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ.ಶ.೧೨೬೦ರ ಅರ್ಜುನವಾಡ ಶಾಸನ, ಕ್ರ.ಶ.೧೨೫೯ ರ ಹಿರಿಯೂರ ಶಾಸನ, ಕ್ರಿ.ಶ. ೧೨೬೩ ರ ಚೌಡದಾನಪುರ ಶಾಸನಗಳು ಹರಿಹರ-ಪಾಲ್ಕುರಿಕೆ ಸೋಮನಾಥರ ಕಾವ್ಯಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟವುಗಳಾಗಿವೆ. ಬಸವಣ್ಣನ ಇತಿವೃತ್ತ, ಶಿವಪಾರಮ್ಯದ ವಿವರ, ಇತ್ಯಾದಿಗಳನ್ನು ಗುರುತಿಸುವಲ್ಲಿ ಇವು ವಿಶ್ವಾಸನೀಯಗಳಾಗಿವೆ. 

      ಬಸವಣ್ಣನವರ ಚರಿತ್ರೆಯನ್ನು ಬಸವರಾಜದೇವರ ರಗಳೆ ಕೃತಿ ರೂಪದಲ್ಲಿ ಬರೆದ ಹರಿಹರನಿಗಿಂತಲೂ ಪೂರ್ವದಲ್ಲಿಯೇ ಬಸವಣ್ಣನವರ ವೈಯಕ್ತಿಕ ಚರಿತ್ರೆ, ಜನ್ಮಸ್ಥಲದ ಮೇಲೆ ಬೆಳಕು ಚೆಲ್ಲುವ ಹಾಗೂ ಬಸವರಾಜ ದೇವರ ರಗಳೆಯಲ್ಲಿ ಬಸವಣ್ಣನವರ ತಂದೆ ಊರುಗಳ ಬಗೆಗೆ ಇದ್ದ ಸಂದೇಹವನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರವನ್ನು ಕ್ರಿ.ಶ.1260ರ ಅರ್ಜುನವಾಡ ಶಾಸನ ವಹಿಸಿದೆ. ಈ ಶಾಸನದಲ್ಲಿ ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಗಳಿಗಿಂತ ಪ್ರಾಚೀನವಾಗಿದ್ದು ವಿಶ್ವಾಸನೀಯವಾಗಿವೆ. 

   ಬಸವಣ್ಣನವರ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಿದ ಈ ಅಪೂರ್ವ ಶಾಸನವನ್ನು ಮೊದಲು ಕಂಡು ಹಿಡಿದವರು ನಾ.ಶ್ರೀ. ರಾಜಪುರೋಹಿತರು. ಅದನ್ನು ಪುನಃ ಅಚ್ಚು ಮಾಡಿಕೊಂಡು ಬಂದವರು ಮಧುರ ಚೆನ್ನರು.  ಶಿ.ಚೆ. ನಂದಿಮಠ ರವರು ಲಿಂಗೈಕ್ಯ ಮಧುರಚೆನ್ನರು ಓದಿ ಸಿದ್ಧ ಮಾಡಿಕೊಟ್ಟ ಈ ಶಾಸನವು ಹಳಕಟ್ಟಿಯವರ ಹೆಸರಿನಲ್ಲಿ 19೨8 ರಲ್ಲಿ ಶಿವಾನುಭವ ಪತ್ರಿಕೆಯ  ಸಂ.3 ಸಂ ೯ ರಲ್ಲಿ ಮೊದಲು ಪ್ರಕಟಗೊಂಡಿತು. ಆನಂತರ ಬಸವೇಶ್ವರರ ವಚನಗಳು [ದ್ವಿ. ಮು] E.I. XXI, ಭಕ್ತಿ ಭಂಡಾರಿ ಬಸವಣ್ಣನವರು ಹೀಗೆ ಅನೇಕ ಕಡೆಗಳಲ್ಲಿ ಪ್ರಕಟವಾಯಿತು. ಈ ಶಾಸನ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಕೇಂದ್ರದಿಂದ ೪-೫ ಕಿ.ಮೀ. ದೂರದ ಅರ್ಜುನವಾಡದ ಹಾಲಶಂಕರ ಲಿಂಗ ದೇವಸ್ಥಾನದಲ್ಲಿ ಇದ್ದು, ಇದರ ಮಹತ್ವವನ್ನು ಕಂಡು ನಂತರ ಹುಕ್ಕೇರಿಯ ತಾಲೂಕು ಕಚೇರಿಗೆ  ಸಾಗಿಸಲ್ಪಟ್ಟು ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ  ಕನ್ನಡ ಸಂಶೋಧನ ಸಂಸ್ಥೆಯಲ್ಲಿಡಲಾಗಿದೆ. ಈ ಶಿಲಾಶಾಸನವು ಸುಮಾರು ೭೬ ಸೆಂ.ಮೀ. ಮತ್ತು ೩೫ ಸೆಂ.ಮೀ ಉದ್ದಗಲವನ್ನು ಹೊಂದಿದೆ. ೧೩ನೆಯ ಶತಮಾನದ ಲಿಪಿಯನ್ನು ಈ ಶಾಸನದಲ್ಲಿ ಕಾಣಬಹುದಾಗಿದೆ. 

   ಈ ಶಾಸನವು ಒಟ್ಟು ೮೦ ಸಾಲುಗಳನ್ನು ಒಳಗೊಂಡಿದೆ. ಮೊದಲಿನ ಒಂದು ಅನುಷ್ಟುಪ್ ಶ್ಲೋಕವನ್ನು ಬಿಟ್ಟರೆ ಉಳಿದ ಭಾಗ ಕನ್ನಡ ಗದ್ಯ ಪದ್ಯಗಳಲ್ಲಿದೆ. ಈ ಶಾಸನದಲ್ಲಿ ಮೂರು ಲೋಕಗಳಿಗೆ ಮೂಲಸ್ತಂಭವಾಗಿರುವ ಶಂಭುದೇವನನ್ನು ಸ್ತುತಿಸಲಾಗಿದೆ. ಶಾಸನದ ಮೇಲುಭಾಗದಲ್ಲಿ ಲಿಂಗ, ನಂದಿ ಮತ್ತು ಭಕ್ತನೊಬ್ಬನ ಚಿತ್ರ/ಶಿಲ್ಪವಿದೆ. 

  ಈ ಶಾಸನದಲ್ಲಿ ಕಲ್ಲಿನಾಥನ ಪ್ರಾರ್ಥನೆ. ಬಸವಣ್ಣನ ತಂದೆ ಮಾದಿರಾಜನ ಉಲ್ಲೇಖ, ದೇವಗಿರಿಯ ಯಾದವ ದೊರೆ ಕನ್ನರದೇವ, ಅವನ ಕೈ ಕೆಳಗಿನ ಅಧಿಕಾರಿಗಳಾಗಿದ್ದ ಚಾವುಂಡ. ನಾಗರಾಜ ಮತ್ತು ಚೌಡಿಶೆಟ್ಟಿಯರ ಉಲ್ಲೇಖ, ಯತಿ ಹಾಲಬಸವಿ ದೇವನ ವಿವರ, ಕವಿಳಾಸತೀರ್ಥದ ವರ್ಣನೆ, ದಾನದ ವಿವರಗಳಿವೆ. ಶಾಸನದ ಕೊನೆಯಲ್ಲಿ ಉಭಯ ನಾನಾ ದೇಸಿಗಳು ಮತ್ತು ಮುಮ್ಮುರಿ ದಂಡಗಳು ಈ ಶಾಸನವನ್ನು ಹಾಕಿಸಿದರು ಎಂಬ ವಿವರಗಳನ್ನು ಒಳಗೊಂಡಿದೆ.

ಶಾಸನದ ಕಾಲ:

ದೇವಗಿರಿಯ ಯಾದವ (ಸೇವುಣ) ದೊರೆ ಕನ್ನರನ ಕಾಲದಲ್ಲಿ ಅವನ ಪ್ರಧಾನಿ ನಾಗರಾಜ ಹಾಗೂ ಚಾವುಂಡ ಶೆಟ್ಟಿ (ಚೌಡಿ ಸೆಟ್ಟಿ)ಯರು ಬಸವಣ್ಣನವರ ವಂಶದವನಾದ ಹಾಲಬಸವಿದೇವನಿಗೆ ಕವಿಳಾಸಪುರದ ಮಲ್ಲಿಕಾರ್ಜುನ, ಸಂಗಮೇಶ್ವರ ಮತ್ತು ನಾಗೇಶ್ವರ ದೇವಾಲಯದ ಅಂಗಭೋಗ ರಂಗಭೋಗ ಜೀರ್ಣೋದ್ಧಾರ, ಜಂಗಮರ ಪಾರಣೆಗೆ ಕೊತ್ತಸಿ, ಕುರುವನಿಗೆ ಮೊದಲಾದ ಗ್ರಾಮಗಳನ್ನು ದತ್ತಿಯಾಗಿ ಕೊಡುತ್ತಾರೆ. ದಾನ ಮಾಡಿದ ಕಾಲ ಶಕವರ್ಷ ೧೧೮೨ನೇ ಸಿದ್ದಾರ್ಥಿ ಚೈತ್ರ ಬಹುಳ ಅಮಾವಾಸ್ಯೆ ಸೋಮವಾರ ಸೂರ್ಯಗ್ರಹಣದ ದಿನ. ಇದು ಕ್ರಿ.ಶ. ೧೨೬೦ ಏಪ್ರಿಲ್ ೧೨ಕ್ಕೆ ಸರಿಹೊಂದುತ್ತದೆ. ಈ ಹಿನ್ನೆಲೆಯಲ್ಲಿ ಶಾಸನದ ಕಾಲವನ್ನು ಬಹುಮಟ್ಟಿಗೆ ಎಲ್ಲಾ ವಿದ್ವಾಂಸರು ಕ್ರಿ.ಶ,೧೨೬೦ ಎಂಬುದನ್ನು ಸ್ವೀಕರಿಸಿದ್ದಾರೆ.

    ಶಾಸನದ ಪ್ರಾರಂಭದಲ್ಲಿಯೇ 'ತರ್ದವಾಡಿ ಮಧ್ಯಗ್ರಾಮ ಬಾಗವಾಡಿ ಪುರವರಾಧೀಶ್ವರ ಮಾದಿರಾಜನ ತನುಜ ಬಸವರಾಜನ ಮಹಿಮೆಯೆಂತೆಂದಡೆ' ಎಂದು ಹೇಳಿದೆ. ಮಂಗಳ ಕೀರ್ತಿಯುಳ್ಳ ಪುರಾತನ ಜಂಗಮರು ಮತ್ತು ಶಿವನಭಕ್ತಿಯ ಅಲೆಯಲ್ಲಿಯೇ ಬದುಕಿದ್ದ 'ಸಂಗನ ಬಸವ' ನಮ್ಮ ಭಕ್ತಿಯಲ್ಲಿ ಅನವರತ ಸಂಗತಿಯನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದೆ. ಅದಕ್ಕಿಂತ ಮುಖ್ಯವಾಗಿ ಈ ಶಾಸನದ ಮುಖ್ಯ ಭಾಗವಾದ `ಮತ್ತಂ ತರ್ದವಾಡಿ ಮಧ್ಯಗ್ರಾಮ ಭಾಗವಾಡಿ ಪುರವರಾಧೀಶ್ವರ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯೆಂತೆಂದಡೆ' ಎಂಬ ಸಂಗತಿಗಳು ಬಸವಣ್ಣನ ತಂದೆ ಮತ್ತು ಜನ್ಮ ಸ್ಥಳದ ಬಗೆಗೆ ಖಚಿತವಾದ ಸಂಗತಿಯನ್ನು ಹೊರ ಹಾಕಿದೆ.  ಬಸವಣ್ಣನವರ ವೈಯಕ್ತಿಕ ಸಂಗತಿಗಳ ಬಗೆಗೆ, ವಂಶಾವಳಿಯ ಬಗೆಗೆ ಸಂಬಂಧಪಟ್ಟ ಕೆಲವು ಹೊಸ ವಿಷಯಗಳನ್ನು ಹೊರಗೆಡವಿದ ಈ ಶಾಸನಕ್ಕೆ ಚಾರಿತ್ರಿಕ ಪ್ರಾಮುಖ್ಯತೆ ಸಂದಿದೆ. ಕ್ರಿ.ಶ. ಅರ್ಜುನವಾಡ ಶಾಸನದ ಈ ಸಂಗತಿಗಳು ಬಸವಣ್ಣನವರ ತಂದೆಯ ಹೆಸರು ಮತ್ತು ಜನ್ಮಸ್ಥಳದ ಬಗೆಗೆ ಸಂಶೋಧಕರು ಹುಟ್ಟು ಹಾಕಿದ್ದ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರವನ್ನು ನೀಡುವುದರ ಮೂಲಕ ಹೋಗಲಾಡಿಸಿವೆ. 

    ಈ ಶಾಸನದಲ್ಲಿ ಉಲ್ಲೇಖಿತವಾಗಿರುವ ಕವಿಳಾಸಪುರ ಯಾವುದು? ದೇವರಾಜ ಮುನಿಪ ಸಂಘನ ಮುಂತಾದವರ ಸಂಬಂಧವೇನು ಎಂಬ ಸಂಗತಿಗಳ ಬಗ್ಗೆ ಸ್ಪಷ್ಟವಾದ ಗ್ರಹಿಕೆ ಇಲ್ಲ ಶ್ರೀಮಲ್ಲ ಶ್ರೀ ಚನ್ನಮಲ್ಲಿಕಾರ್ಜುನರು ಮನಗೂಳಿ ಶಾಸನದ ಕಲಿದೇವ ಮಹೇಶ ನಿವಾಸ ಕಲಿದೇವೇಶ ವಿಳಾಸ  ಭೂಸುರ ಗೃಹಂ ಎಂಬೆರಡು ಮಾತುಗಳನ್ನಾಧರಿಸಿ ಕವಿಳಾಸಪುರವೆಂದರೆ ಮನಗೂಳಿ ಎಂದು ಊಹಿಸಿದ್ದಾರೆ. ಶಿ.ಚೆ.ನಂದಿಮಠರು ಚೌಡದಾನಪುರ ಶಾಸನದ ಧರೆಯೊಳ್ಕವಿಳಾಸ ಮೆನಿಪ ಮುಕ್ತಿ ಕ್ಷೇತ್ರ ಎಂಬ ಶಾಸನೋಕ್ತಿಯನ್ನು ಅವಲಂಬಿಸಿ ಕವಿಳಾಸಪುರವೆಂದರೆ ಚೌಡದಾನಪುರವಾಗಿ ಇರಬೇಕು ಎಂದಿದ್ದಾರೆ. ಆದರೆ ಈ ಶಾಸನದಲ್ಲಿ ಉತ್ತರಾರ್ಧದಲ್ಲಿ ಹೇಳಲಾದ ಪಡುವಲು ತೊರೆಯ ಕೂಡಿದ ಹಳ್ಳ ನೀರು ವರಿಯೆ ಮೇರೆಯಾಗಿ ಮೇಗೆ ಕಲುಕಂಟಿಗಗೆಱೆ ಬಸವಗೋಡಿ ಬಡಗಲು ಮೊಸರುಗುತ್ತಿಯೆ ರಾರಾವಿಡಿದು ಮೂಡಲು ಜಂಬೆಕಲ್ಲ ಕಣಿ ಕುಚ್ಚ ಗೋಡಿಯಿಂ ಬಂದ ಹಳ್ಳನೀರುವರಿಯೆ ತೆಂಕಲು ತೊರೆಯ ಕೂಡಲು ಯೀ ಚತುಸ್ಸೀಮಾಭ್ಯಂತರ ಕವಿ ವಿಳಾಸಪುರʼ ಎಂಬ ವಿವರವು ಕವಿಳಾಸಪುರದ ಸೀಮೆಯನ್ನು ತೋರಿಸಿಕೊಡುತ್ತದೆ. ಮಲ್ಲಿಕಾರ್ಜುನ ನಾಗೇಶ್ವರ ಸಂಗಮೇಶ್ವರ ದೇವಾಲಯಗಳನ್ನು ಒಳಗೊಂಡ ಈ ಕವಿಳಾಸಪುರವಿದ್ದಿದ್ದು ನೂಲೆನಾಡ ಪ್ರದೇಶದಲ್ಲಿ ಎಂಬುದಕ್ಕೆ ಶಾಸನದಲ್ಲಿಯೇ ಆಧಾರವಿದೆ. ಅರ್ಜುನವಾಡ ಶಾಸನದಲ್ಲಿ ಉಕ್ತವಾಗಿರುವ ಕವಿಳಾಸಪುರ ಯಾವುದು ಎಂಬುದರ ಬಗೆಗೆ ಅನೇಕ ಚರ್ಚೆ ನಡೆದಿದೆ. ಎಂ.ಎಂ. ಕಲಬುರ್ಗಿಯವರು ಈ ವಿಷಯದ ಸಲುವಾಗಿ ಚರ್ಚಿಸಿರುವ ಸಂಗತಿಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು :

೧) ಚೌಡದಾನಪುರ ಶಾಸನದಲ್ಲಿ 'ಧರೆಯೊಳ್ ಕವಿಳಾಸಮೆನಿಪ ಮುಕ್ತಿ ಕ್ಷೇತ್ರಂ' ಎಂದಿದೆ. ಆದ್ದರಿಂದ ಕವಿಳಾಸಪುರ ಎಂದರೆ ಚೌಡದಾನಪುರವೇ ಆಗಿರಬೇಕು.

೨) ಅರ್ಜುನವಾಡದ ಶಾಸನದಲ್ಲಿ ಕವಿಳಾಸಪುರದ ಗಡಿಭಾಗಗಳನ್ನು ಹೇಳಿದೆ. ಮಲ್ಲಿಕಾರ್ಜುನ, ನಾಗೇಶ್ವರ ಮತ್ತು ಸಂಗಮೇಶ್ವರ ದೇವಾಲಯಗಳನ್ನೊಳಗೊಂಡ ಈ ಕವಿಳಾಸಪುರ ನೂಲೆನಾಡ ಪ್ರದೇಶದಲ್ಲಿತ್ತು.

ಈ ಶಾಸನದಲ್ಲಿಯ ಕಂದಪದ್ಯದ ತೃಟಿತ ಭಾಗವು  ಸಂಶೋಧಕರಲ್ಲಿ ತೀವ್ರ ಚರ್ಚೆಗೆ ಒಳಗು ಮಾಡಿದೆ ಈ ತೃಟಿತ ಭಾಗದಿಂದ ಬಸವಣ್ಣನವರ ವಂಶಾವಳಿಯನ್ನು ಅರಿಯುವಲ್ಲಿ ಕೆಲಮಟ್ಟಿಗೆ ತೊಡಕನ್ನು ಉಂಟುಮಾಡುತ್ತದೆ ಸಂಗಬಸವನ ಅಗ್ರ X

X ಗೈಕಂ ದೇವರಾಜ ಮುನಿಪನತನಯಂ 

ಜಂಗಮ ಪರುಸಂ XX ರ

ಸಂಗಂ ಪ್ರಿಯ ಸುತನೆನಿಪ್ಪ ಕಲಿದೇವರಸಂ   ಇಲ್ಲಿ ನಷ್ಟವಾದ ಅಕ್ಷರಗಳನ್ನು ಸಂಶೋಧಕರು ಬೇರೆ ಬೇರೆ ರೀತಿಯಲ್ಲಿ ತುಂಬಿಕೊಡಲು ಪ್ರಯತ್ನಿಸಿದ್ದಾರೆ

 1. ಅಗ್ರಜ X ಗೈಕಂ  XX   ಫ.ಗು. ಹಳಕಟ್ಟಿ, 1920

 2. ಅಗ್ರಜ ಸಂಗಾಂಕಂ  ಜಂಗಮ ಪರುಸಂ ಶರಣರ ಸಂಗಂ - ಎಸ್ ಶ್ರೀಕಂಠಶಾಸ್ತ್ರಿ 1931-32 

 3. ಅಗ್ರಜ ಲಿಂಗೈಕಂ . . .  ಜಂಗಮ ಪರುಸಂ ಕಾವರ ಸಂಗಂ-

                                 ಎನ್. ಲಕ್ಷ್ಮೀನಾರಾಯಣರಾಯ 1931-೩೨

 4. ಅಗ್ರಜ ನಿಂಗೈಕಂ ಜಂಗಮ ಪುರುಷಂ ಶರಣರ ಸಂಗಂ- ಕಪಟ್ರಾಳ ಕೃಷ್ಣರಾಯ 1947 

5. ಅಗ್ರಜ ಲಿಂಗೈಕಂ.. ಜಂಗಮ ಪುರುಷಂ ಬಸವರ ಸಂಗಂ – ಟಿ.ಎನ್.  ಮಲ್ಲಪ್ಪ 1997 

6 ಅಗ್ರಜ ಲಿಂಗೈಕಂ (ಕ್ಯಂ).. ಜಂಗಮ ಪುರುಷಂ ಬಸವರ ಸಂಗಂ  - ಚೆನ್ನಮಲ್ಲಿಕಾರ್ಜುನ 1950 

7 ಅಗ್ರಜ ಲಿಂಗೈಕಂ ಜಂಗಮ ಪುರುಷಂ ಸೋವರ ಸಂಗಂ   - ಪಿ.ಬಿ.ದೇಸಾಯಿ

  ಮೇಲಿನ ಏಳು ಜನ ಸಂಶೋಧಕರು ತೃಟಿತವಾದ ಅಕ್ಷೆಗಳನ್ನು ತುಂಬಿಕೊಟ್ಟಿರುವಲ್ಲಿ  ಈಗಿನ ಮಟ್ಟಿಗೆ ಎನ್.ಲಕ್ಷ್ಮಿನಾರಾಯಣರಾಯರು ಕಟ್ಟಿಕೊಟ್ಟ ಪಾಠವನ್ನು ಮತ್ತು ಅದರಿಂದ ಹೊರಡುವ ವಂಶಾವಳಿಯನ್ನು ಬಹುತೇಕ ವಿದ್ವಾಂಸರು ಸ್ವೀಕರಿಸಿದ್ದಾರೆ. ಆ ಪಾಠ ಇಂತಿದೆ.

 

ಸಂಗನ ಬಸವನ ಅಗ್ರ [ ಜ]

[ಲಿಂ] ಗೈಕಂ ದೇವರಾಜ ಮುನಿಪನತನಯಂ

ಜಂಗಮ ಪರುಸಂ [ಕಾವ]ರ

ಸಂಗಂ ಪ್ರಿಯ ಸುತನೆನಿಪ್ಪ ಕಲಿದೇವರಸಂ

ಈ ಶಾಸನವು ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಉಲ್ಲೇಖಿಸಿದೆ.

                          ಮಾದಿರಾಜ

                   |----------------|

             ದೇವರಾಜ           ಸಂಗನಬಸವ

               |

            ಕಾವರಸ

               |

            ಕಲಿದೇವ 

               |

           ಹಾಲಬಸವಿದೇವ

 ಬಸವಣ್ಣನ ವೈಯಕ್ತಿಕ ಸಂಗತಿಗಳ ಬಗೆಗೆ, ವಂಶಾವಳಿಯ ಬಗೆಗೆ ಬೇರೆ ಎಲ್ಲಿಯೂ ದೊರೆಯದ ಕೆಲವು ಹೊಸ ಸಂಗತಿಗಳು ಈ ಶಾಸನದ ಮೂಲಕ  ಪ್ರಥಮ ಬಾರಿಗೆ ಬೆಳಕಿಗೆ ಬಂದಿವೆ. 

   ಈ ಕಂದಪದ್ಯದಲ್ಲಿಯ ವಿವರದಲ್ಲಿ ಬಸವಣ್ಣನವರಿಗೆ ಒಬ್ಬ ಅಣ್ಣ ಇದ್ದನೆಂದು ಅಣ್ಣನ ಹೆಸರು ದೇವರಾಜ ಎಂದೂ ಆತನ ಮಗ ಕಲಿದೇವ ಹಾಗೂ ಆತನ ಮಗ ಹಾಲಬಸವಿದೇವರ ಉಲ್ಲೇಖಗಳು ಈ ಶಾಸನದ ಮೂಲಕ ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದವು. ಈ ವಿವರ ಬಸವಣ್ಣನವರನ್ನು ಕುರಿತ ಅಪಾರ ಸಂಖ್ಯೆಯಲ್ಲಿ ರಚನೆಯಾಗಿರುವ ವೀರಶೈವ ಕಾವ್ಯಪುರಾಣಗಳಲ್ಲಿ ಎಲ್ಲಿಯೂ ಉಲ್ಲೇಖಿತಗೊಂಡಿಲ್ಲ. 

ಈ ಪದ್ಯದಲ್ಲಿ “ಕಾವರಸಂಗ ಪ್ರಿಯಸುತನೆನಿಪ ಕಲಿದೇವರಸಂ” ಎಂಬಲ್ಲಿ ತನಯಂ ಎಂಬ ಪದಕ್ಕೆ ನೇರವಾದ ಮಗನೆಂದು ಪ್ರಿಯಸುತನೆಂದರೆ ಶ್ರೇಷ್ಠನೆಂದೂ ಅರ್ಥೈಸಬೇಕು  ಎಂದು ಎಂ.ಎಂ.ಕಲಬುರ್ಗಿಯವರು  ಅಭಿಪ್ರಾಯ ಪಟ್ಟಿದ್ದಾರೆ.  ಮುಂದುವರಿದು, ಯಾವ ವ್ಯಕ್ತಿಯೇ ಆಗಲಿ ತಾನು ತನ್ನ ತಂದೆಗೆ ಪ್ರೀತಿಯ ಮಗನು ಎಂದು ಹೇಳುವುದು ಕೃತ್ರಿಮ ಎನಿಸುತ್ತದೆ ಎಂಬುದು  ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಪದ್ಯವನ್ನು ಸಂಗನ ಬಸವನ ಅಣ್ಣನಾದ ಲಿಂಗೈಕ್ಯ ದೇವರಾಜನು ಜಂಗಮ ಪುರುಷನಾದ ಕಾವರಸನಿಗೂ (ಶಿಷ್ಯನೆಂಬ ಅರ್ಥದಲ್ಲಿ) ಪ್ರೀತಿಯ ಮಗನೆನಿಸಿದ ವಿಷಯ ವ್ಯಕ್ತವಾಗುತ್ತದೆ. ಇದರಿಂದಾಗಿ ಕಲಿದೇವರಸನು ದೇವರಾಜನಿಗೆ ಉದರ ಸಂಜಾತನೂ ಕಾವರಸನಿಗೆ ಕರಸಂಜಾತನೂ ಆಗಿದ್ದನೆಂದು ಅರ್ಥ ಧ್ವನಿಸುತ್ತದೆ. ಈ ಅರ್ಥದಿಂದ ಹೊರಹೊಮ್ಮುವ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಂ.ಎಂ.ಕಲಬುರ್ಗಿರವರು, ಎಂ.ಲಕ್ಷ್ಮಿನಾರಾಯಣರಾಯರು ತುಂಬಿ ಕೊಟ್ಟಿದ್ದ ಅರ್ಜುನವಾಡ ಶಾಸನದ ಈ ತ್ರುಟಿತ  ಕಂದ ಪದ್ಯದಿಂದ ಹೊರಡುವ ಪಾಠವನ್ನು ಎಂ.ಎಂ ಕಲಬುರ್ಗಿ ತಿದ್ದುಪಡಿಮಾಡಿ ಕೊಟ್ಟಿದ್ದಾರೆ. ಎನ್.ಲಕ್ಷ್ಮಿನಾರಾಯಣ ಮುಂತಾದ ವಿದ್ವಾಂಸರು ರೂಪಿಸಿದ್ದ ಬಸವಣ್ಣನ ವಂಶಾವಳಿಯನ್ನು ಮಾರ್ಪಡಿಸಿಕೊಟ್ಟಿದ್ದಾರೆ. 

                                     ಮಾದಿರಾಜ

                               |--------|--------|

      ಕಾವರಸ            ದೇವರಾಜ           ಸಂಗನಬಸವ

        |                  |

      (ಪ್ರಿಯ ಸುತ)        (ಸುತ)

        |----------------|

               |

            ಕಲಿದೇವ 

               |

           ಹಾಲಬಸವಿದೇವ

ಎಂಬ ಶಾಸನ ಪದ್ಯದ ಉಲ್ಲೇಖದಿಂದ ಬಸವಣ್ಣನವರ ಅಣ್ಣನ ಹೆಸರು ದೇವರಾಜ. ಆತನ ಮಗ ಕಲಿದೇವ ಹಾಗೂ ಆತನ ಮಗ ಹಾಲಬಸವಿದೇವರ ಉಲ್ಲೇಖ ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದಿತು. ಈ ಶಾಸನದಲ್ಲಿ ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಉಲ್ಲೇಖ ಮಾಡಿದೆ. ಆದಾಗ್ಯೂ  ಹಿಂದು ಮುಂದು ಯಾವ ಅನ್ಯ  ಆಧಾರಗಳು ಇಲ್ಲದ ಯಾವುದೇ ನಂತರದ ಶಾಸನಗಳಲ್ಲಿ  ಉಲ್ಲೇಖ ಇರದ ವಂಶಾವಳಿಯಾಗಿದೆ. ಈ ವಿವರ ಬಸವಣ್ಣನವರನ್ನು ಕುರಿತು ಅಪಾರ ಸಂಖ್ಯೆಯಲ್ಲಿ ರಚಿತವಾಗಿರುವ ವೀರಶೈವ ಕಾವ್ಯ-ಪುರಾಣಗಳಲ್ಲಿ ಎಲ್ಲಿಯೂ ವ್ಯಕ್ತವಾಗಿಲ್ಲ. ಬಸವಣ್ಣನವರ ಅಣ್ಣನಾದ ದೇವರಾಜ ಮುನಿಪನ ಸಂತಾನ ಆತನ ಮೊಮ್ಮಗನಾದ  ಹಾಲಬಸವಿ ದೇವನ ನಂತರ ಏನಾಯಿತು ಎಂಬುದರ ಬಗೆಗೆ ಯಾವುದೇ ಉಲ್ಲೇಖಗಳು ನಂತರದ ಶಾಸನಗಳು, ಕಾವ್ಯ-ಪುರಾಣಗಳಲ್ಲಿ  ಲಭ್ಯವಿಲ್ಲ. ಅದರಲ್ಲಿಯೂ ಬಸವಣ್ಣನವರನ್ನು ಕುರಿತ ಕಾವ್ಯ-ಪುರಾಣಗಳು ಮತ್ತು  ವೀರಶೈವ ಕಥಾ ಸಂಕಲನ ಕೋಶಗಳಾದ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, , ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ, ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಉತ್ತರದೇಶದ ಬಸವಲಿಂಗನ ಬಸವೇಶ್ವರ ಪುರಾಣ ಕಥಾಸಾಗರ ಮುಂತಾದ ಸಂಕಲಿತ ಕೃತಿಗಳಲ್ಲಿ  ಉಲ್ಲೇಖ ಇಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.   ಈ ಶಾಸನದಲ್ಲಿ ಬಸವಣ್ಣನವರನ್ನು ಕುರಿತು ಉಲ್ಲೇಖಿಸಿರುವ ಪುರಾತನ ಜಂಗಮ, ಲಿಂಗೈಕ್ಯಭಕ್ತಿ ನಿರ್ಭರ ಲೀಲಾಸಂಗಂ ಮತ್ತು ಸಮಯ ಭಕ್ತಿ ಸಂಪನ್ನಂ ಎಂಬ ವಿಶೇಷಣಗಳು ಅವರ ವ್ಯಕ್ತಿ ಸಿದ್ಧಿಯ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ.

     ಈ ಶಾಸನದ ವಿವರದ ಪ್ರಕಾರ, ಚಿಕ್ಕ ಎನ್ನುವವನ ಮಗ ಮಲ್ಲ. ಅವನ ತಮ್ಮ ಬೀಚುಗಿ. ಮಲ್ಲನ ಮಗನೇ ಚಾವುಂಡ. ಈ ಚಾವುಂಡನ ಸ್ನೇಹಿತ ನಾಗರಾಜ. ವಾಣಸ ವಂಶದ ದಿವಾಕರ ದೇವನ ಮಗನಾದ ಈ ನಾಗರಾಜನು 'ಪಂಡಿತ ಪಾರಿಜಾತ' ನಾಗಿದ್ದ. ಜನಾರ್ಧನನ ಭಕ್ತನಾಗಿದ್ದಎಂದು ಶಾಸನವು ಕೀರ್ತಿಸಿದೆ ಈ ಚಾವುಂಡ ನಾಗರಾಜರು ಹಾಲಬಸವಿದೇವನಿಗೆ ದತ್ತಿಯನ್ನು ನೀಡಿದರು.

    ಹಾಲಬಸವಿದೇವನನ್ನು ಶಾಸನದಲ್ಲಿ ಮಹಾಮಹೇಶ್ವರ ಕವಿಳಾಸಪುರ ವರಾಧೀಶ್ವರ, ಸುವರ್ಣ ವೃಷಭಧ್ವಜ, ೬೩ ಮಂದಿ ಪುರಾತನರನ್ನು ಪೂಜೆ ಮಾಡುವವನು, ಮಹಾಲಿಂಗ ಜಂಗಮ ಪ್ರಸಾದ ನಿಯತ, ಸಮಯ ಭಕ್ತಿ ಸಂಪನ್ನ, ಬಸವರಾಜನ ವಂಶದ ತಪಃ ಚಕ್ರವರ್ತಿ, ವೀರವ್ರತಿ ಎಂದು ಹೊಗಳಿದೆ. ನಾಗರಾಜ (ನಾಗರಸ) ಮತ್ತು ಚೌಡಿಸೆಟ್ಟಿ (ಚಾವುಂಡ) ಯರು ಕವಿಳಾಸ ತೀರ್ಥದ ವಿಶೇಷವನ್ನು ಕೇಳಿದಾಗ ಹಾಲಬಸವಿದೇವನು ಅದರ ಮಹಿಮೆಯನ್ನು ವಿವರಿಸಿದ. ಈ ಪ್ರಸಂಗ ನಡೆದುದು ಪುಲಿಗೆರೆಯ (ಇಂದಿನ ಲಕ್ಷ್ಮೀಶ್ವರ) ಸೋಮನಾಥ ದೇವರ ಸನ್ನಿಧಿಯಲ್ಲಿ. ಆಗ ಪ್ರಾಚೀನ ಕಾಲದಿಂದ ಇದ್ದ ದತ್ತಿಯನ್ನು ನಾಗರಾಜ ಚೌಡಿ ಸೆಟ್ಟಿಯರು ಸ್ಥಿರಗೊಳಿಸಿದರು.

ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಶಾಸನದ ಭಾಷೆ ನಡುಗನ್ನಡ ಲಿಪಿಕಾರನ ಅಜ್ಞಾನದಿಂದಾಗಿ ಭಾಷೆಯಲ್ಲಿ ಅನೇಕ ದೋಷಗಳು ಕಂಡುಬರುತ್ತವೆ ಆಡು ಮಾತಿನ ಪ್ರಭಾವ ದಟ್ಟವಾಗಿ ಆಗಿರುವುದು ಕಂಡು ಬರುತ್ತದೆ. ನಿದರ್ಶನಕ್ಕೆ: ಕೆಲವೆಡೆ ವಕಾರದ ಬದಲು ಬಕಾರ ಆಗಿದೆ. ಬ್ರಿಂದಕೆ ವೀರಬ್ರತಿ 

ಶ.ಷಕಾರದ ಬದಲು ಸಕಾರ ಕಂಡು ಬರುತ್ತದೆ.

ಅಧೀಸ್ವರ ಭುವನಾಸ್ರೇಯಂ

ಸಕವರುಷ, ವಿಶೇಸ, ಸಾಸನಸ್ಥ, ನಾಗೇಸ್ವರ, ಮಲ್ಲೇಸ್ವರ, ಸಂಗಮೇಸ್ವರ ಇತ್ಯಾದಿ

ಋಕಾರದ ಬದಲು ರಿಕಾರ ಕಂಡು ಬರುತ್ತದೆ.

ಕ್ರಿತಯುಗ

ನ್ರಿತ್ಸ

ಕೆಲವೆಡೆ ಶಬ್ದರೂಪಗಳೇ ತಪ್ಪಾಗಿವೆ

ಸಂವಛರ( ಸಂವತ್ಸರ)

ಮುಕ್ಷ [ಮುಖ್ಯ], ನೀರುವರಿಎ( ನೀರುವರಿಯೆ)ಭಕುತಿ ( ಭಕ್ತಿ)

ಈಗಾಗಿ ಈ ಶಾಸನದ ಭಾಷೆಯಿಂದ ಆ ಕಾಲದ ಭಾಷಾ ಸ್ವರೂಪವನ್ನು ನಾವು ತಿಳಿಯುವುದು ಕಷ್ಟವಾಗಿದೆ ಇಲ್ಲಿ ಬಹಳಷ್ಟು ಭಾಷಾ ದೋಷಗಳು ಕಂಡುಬಂದಿದ್ದು, ಇವು ಆ ಕಾಲದ ಆಡುಭಾಷೆಯಾಗಿರುವುದೇನೋ ಎಂದೆನಿಸುತ್ತದೆ. ಶಾಸನಕಾರ ತನ್ನಕಾಲದ ಆಡುಭಾಷೆಯ ಪದಗಳನ್ನು ಬಳಸಿರಬೇಕು ಎಂದೆನಿಸುತ್ತದೆ.

ಸಾಹಿತ್ಯದ ದೃಷ್ಟಿಯಿಂದ ಕಲ್ಲಿನಾಥನ ವರ್ಣನೆ  ಯಾದವಕನ್ನರ ಚಕ್ರವರ್ತಿಯ ವರ್ಣನೆ ಹಾಲಬಸವಿದೇವರ ಕುರಿತ  ವರ್ಣನೆಗಳು ಉತ್ತಮವಾಗಿದೆ

      ದಾನದ ವಿಷಯ ಯಾದವ ಕನ್ನರನ ಪ್ರಧಾನಿ ನಾಗರಸ ಮತ್ತು ಚೌಡಿ ಸೆಟ್ಟಿಯರು ವೀರಭದ್ರಿ ಹಾಲಬಸವಿ ದೇವರಿಗೆ ಕವಿಳಾಸಪುರವನ್ನು ಪೂರ್ವದತ್ತವೆಂದು ಧಾರಾಪೂರ್ವಕವಾಗಿ ಮಾಡಿಕೊಟ್ಟರೆಂದು ಅಂದರೆ ಪ್ರಾಚೀನ ಕಾಲದ 1 ದತ್ತಿಯನ್ನು [ಮಾಂಧಾತ ಚಕ್ರವರ್ತಿ ಕೊಟ್ಟರು ]ಹಾಲಬಸವಿ ದೇವರಿಗೆ ಪುನಃ ಸ್ಥಿರಗೊಳಿಸಿ ಕೊಟ್ಟರೆನ್ನಬಹುದು ಜೊತೆಗೆ ನಾಗೇಶ್ವರ ಮಲ್ಲೇಶ್ವರ ದೇವರಿಗೆ ಕುರುವನಿಗೆಯನ್ನು ಸಂಗಮೇಶ್ವರ ದೇವರು ಜಂಗಮ ರೋಗಣೆಗಳಿಗೆ ಕೊಟ್ಟ ಸಿ ಗ್ರಾಮವನ್ನು  ದತ್ತಿಯಾಗಿ ಬಿಟ್ಟಿರುವುದಲ್ಲದೆ ಇತರ ಸುಂಕ ತೆರಿಗೆಗಳನ್ನು ದೇವಾಲಯಗಳಿಗೆ ಬಿಟ್ಟುಕೊಡುತ್ತಾರೆ. ಈ ಸಂದರ್ಭದಲ್ಲಿ ಉಭಯ ನಾನಾ ದೇಸಿ ಮುಮ್ಮರಿ ದಂಡಗಳು ಮಲೆನಾಡಿನೊಳಗಿನ ಸಂತೆಗಳ ಆದಾಯ ಕೋಣನ ಮೇಯಿದರೆ ಸುಂಕಗಳನ್ನು ದೇವಾಲಯಗಳಿಗೆ ಬಿಟ್ಟು ಕೊಟ್ಟಿರುವುದನ್ನು ಪೋಷಿಸಿ ಶಾಸನ ಹಾಕಿಸಿ ಕೊಡುತ್ತಾರೆ.

  ಶಾಸನದ ಕಾಲ ಕ್ರಿ.ಶ. ೧೨೬೦ ಆದ್ದರಿಂದ ಹಾಲಬಸವಿ ದೇವನ ತಾತ ದೇವರಾಜ ಮುನಿಪನ ಕಾಲ ಕ್ರಿ.ಶ. ಸುಮಾರು ೧೨೦೦ ಆಗುತ್ತದೆ.ಬಸವಣ್ಣನ ಅಣ್ಣನಾದ ದೇವರಾಜನ ಕಾಲ ಹಾಗೂ ಬಸವಣ್ಣನ ಅಂತ್ಯಕಾಲ ಎಂದು ವಿದ್ವಾಂಸರು ಸಾಮಾನ್ಯವಾಗಿ ಒಪ್ಪುವ ಕ್ರಿ.ಶ. ೧೧೮೦-೧೨೦೦ ಎಂಬ ಮಾತಿಗೆ ಈ ಶಾಸನದ ಕಾಲ ಹೊಂದಿಕೆಯಾಗುತ್ತದೆ.

   ಬಸವಣ್ಣ ಹಾಗೂ ಹಾಲಬಸವಿದೇವ ಇಬ್ಬರಿಗೂ ಅನ್ವಯವಾಗುವಂತಿರುವ 'ಪುರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭರ ಲೀಲಾಸಂಗಂ', 'ಸಮಯ ಭಕ್ತಿ ಸಂಪನ್ನಂ', 'ಮಂಗಳಕೀರ್ತಿ' ಎಂಬ ಮಾತುಗಳು. ಬಸವಣ್ಣನ ನಂತರವೂ ಅವರು ಮಾಡಿದ ಕೆಲಸ ಮುಂದುವರಿದುದಕ್ಕೆ ಸಾಕ್ಷಿಯಾಗಿದೆ. ಕಲಿದೇವರಸನನ್ನು 'ಜಂಗಮ ಪರುಸ' ಎಂದಿರುವುದೂ ಹಾಲಬಸವಿದೇವನನ್ನು 'ಮಹಾಮಾಹೇಶ್ವರ' 'ಮಹಾಲಿಂಗ ಜಂಗಮಪ್ರಸಾದ ನಿಯತ' ಎಂದಿರುವುದು, ಬಸವಣ್ಣನ ನಂತರ ಆತನ ಮನೆಯವರು, 'ದಾಸೋಹ' ಕೆಲಸವನ್ನು ಮುಂದುವರಿಸಿರುವುದಕ್ಕೆ ಸಾಕ್ಷಿಯಾಗಿದೆ. ಅರ್ಜುನವಾಡದ ಶಿವಾಲಯವನ್ನು ಹಾಲಶಂಕರ ಲಿಂಗದೇವಾಲಯ ಎಂದಿರುವುದು ಹಾಲ ಬಸವಿದೇವನು ಅರ್ಜುನವಾಡದಲ್ಲೂ ಇದ್ದನೆಂಬುದಕ್ಕೆ ಸೂಚನೆಯಾಗಿದೆ. ಅರ್ಜುನವಾಡವೇ ಕವಿಳಾಸಪುರ ವಾಗಿರಬಹುದು ಎಂಬುದನ್ನು ಇದು ಪರೋಕ್ಷವಾಗಿ ಧ್ವನಿಸುತ್ತದೆ.

ಬಸವಣ್ಣನ ವ್ಯಕ್ತಿತ್ವ

ಬಸವಣ್ಣನವರ ಘನವ್ಯಕ್ತಿತ್ವವನ್ನು ಶಾಸನಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಸ್ತಾಪಿಸಿವೆ. ಅರ್ಜುನವಾಡ ಶಾಸನವು ಬಸವಣ್ಣನವರನ್ನು 

ಮಂಗಳ ಕೀರ್ತಿ ಪುರಾತನ

ಜಂಗಮ ಲಿಂಗೈಕ ಭಕ್ತಿ ನಿರ್ಭರ ಲೀಲಾ

ಸಂಗಂ ಸಂಗನ ಬಸವಂ

ಸಂಗತಿಯಂ ಮಾಳ್ಕೆ ಭಕ್ತಿಯೊಳನವರತಂ  

ಎಂದೂ ಸಮಯಭಕ್ತಿ ಸಂಪನ್ನಂ ಎಂದು ಸ್ತುತಿಸಿದೆ. ಈ ಪದ್ಯದಲ್ಲಿಯ ಪುರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭದ ಲೀಲಾಸಂಗಂ ಸಮಯಭಕ್ತಿ ಸಂಪನ್ನ ಎನ್ನುವ ವಿಶೇಷಣಗಳು ಆಗಿನ ಕಾಲಕ್ಕೆ ಬಸವಣ್ಣನವರು ಪಡೆದಿದ್ದ ಕೀರ್ತಿ, ಪಸರಿಸಿದ್ದ ಪ್ರಭಾವ ಇವುಗಳನ್ನು ಸೂಚಿಸುತ್ತದೆ. 

ಬಸವಣ್ಣನವರ  ಜೀವಿತದ ಪರಮಾವಧಿಯ ಕಾಲ: 

ಎಲ್.ಬಸವರಾಜು ಅವರ ಬಸವಣ್ಣನವರನ್ನು ಕುರಿತ 'ಬಸವೇಶ್ವರನ ಜೀವಮಾನಾವಧಿ' ಮತ್ತು  'ಬಸವೇಶ್ವರನ ಜನ್ಮದಾತರು ಮತ್ತು ಜನ್ಮಭೂಮಿ ಎರಡು ವಿದ್ವತ್‌ ಪೂರ್ಣ ಸಂಶೋಧನಾಲೇಖನಗಳಲ್ಲಿ ಬಸವಣ್ಣನವರ ಸಮಕಾಲೀನ ಪರಿಸರದ  ಐತಿಹಾಸಿಕತೆಯನ್ನು  ತದಲಬಾಗಿ, ಇಂಗಳೇಶ್ವರ, ವಳಸಂಗ ಗ್ರಾಮಗಳಲ್ಲಿಯ ಶಾಸನಗಳ ಮೂಲಕ ನಿರೂಪಿಸಿದ್ದಾರೆ. ಬಸವಣ್ಣನವರ  ಕಾಲಮಾನದ ನಿಶ್ಚಯಕ್ಕಾಗಿ ಕ್ರಿ.ಶ.೧೨೬೦ ರ ಅರ್ಜುನವಾಡ ಶಾಸನವನ್ನು ಆಧರಿಸಿದ್ದಾರೆ. ಶಾಸನೋಕ್ತ ದಾನಿಯಾದ ಚೌಡರಸನು ೧೨-೪-೧೨೬೦ನೇ ಸೋಮವಾರ ಸೂರ್ಯಗ್ರಹಣದಂದು ಶ್ರೀ ಬಸವರಾಜನನ್ವಯದ ತಪ ಚಕ್ರವರ್ತಿ ವೀರಬ್ರತಿ ಹಾಲಬಸವನನ್ನು ಕುರಿತು ಕವಿಳಾಸತೀರ್ಥದ ಮಹಿಮೆಯನ್ನು ಕೇಳುವನು. ಅದಕ್ಕೆ ಉತ್ತರವಾಗಿ ಹಾಲಬಸವಿದೇವನು “ಕವಿಳಾಸ ತೀಥಂ ನಾಲ್ಕು ಯುಗದ ಪುರಾಣೋಕ್ತದಿಂ ಬಂದ ಕ್ಷೇತ್ರವೆಂದೂ ಅಲ್ಲಿಯ ದೇವರನ್ನು ಸಮಸ್ತಗಣೇಶ್ವರರೂಕೃತ-ತ್ರೇತ-ದ್ವಾಪರ-ಕಲಿಯುಗಗಳಲ್ಲಿ ಆರಾಧಿಸಿ, ಸಾಲೋಕ್ಯಾದಿ ದಿವ್ಯಪದವಿಗಳನ್ನು ಪಡೆದರೆಂದೂ, ಆ ಕವಿಳಾಸಪುರವು ಆ ದೇವರಿಗೆ ಮಾಂಧಾತನು ಬಿಟ್ಟ ಧರ್ಮವೆಂದೂ ಮುಂತಾಗಿ ಬಹಳ ಪುರಾತನ ವಿಚಾರಗಳನ್ನೆಲ್ಲಾ ಹೇಳುವನು. ಅದೇ ಶಾಸನದಲ್ಲಿ ಹಾಲಬಸವಿದೇವನನ್ನು ಪ್ರಶಂಸಿಸುತ್ತ “ಸಲೆ ಮೂಜಗದೊಳಗೆ ಮೆರೆವ ಮಾನವದೇವಂ ಗೆಲಿದಂ ಅಶನಬೆಸನವಂ, ಛಲರಧಿಕಂ ಹಾಲಬಸವಿದೇವ ಮುನೀಶಂ” (ಶಾಸನ ಸಂಗ್ರಹ ಸಂ. ಎ.ಎಂ.ಅಣ್ಣಿಗೇರಿ ಮತ್ತು ಆರ್.ಶೇಷಶಾಸ್ತ್ರಿ, ಪು.೯೬) ಎಂದು ಕೊಂಡಾಡುವುದರಿಂದ ಆತನು ಕ್ರಿಶ. ೧೨೬೦ರ ವೇಳೆಗೆ ಮಹಾಮಾಹೇಶ್ವರನಷ್ಟೇ ಅಲ್ಲದೆ, ವೃದ್ಧಮಾಹೇಶ್ವರನೂ ಆಗಿದ್ದಂತೆ ತೋರುವುದು. ಶಾಸನ ಬರೆದ ೧೨೬೦ರಹೊತ್ತಿಗೆ ಹಾಲಬಸವಿದೇವನಿಗೆ ೬೫ವರ್ಷ ವಯಸ್ಸೆಂದಿಟ್ಟುಕೊಳ್ಳಬಹುದು. ಅಂದರೆ ಆತನು ಹುಟ್ಟಿದ್ದು ಕ್ರಿ.ಶ. ೧೧೯೫ರಲ್ಲಿ. ಈ ೧೧೯೫ ರ ಹೊತ್ತಿಗೆ ಆತನ ತಂದೆಯಾದ ಕಲಿದೇವನಿಗೆ ಸುಮಾರು ೨೦ ವರ್ಷಗಳಾಗಿಬೇಕು. ಆದ್ದರಿಂದ ಕಲಿದೇವನು ಹುಟ್ಟಿದ್ದು ಕ್ರಿ.ಶ.೧೧೭೫ರಲ್ಲಿ. ಈ ೧೧೭೫ರ ಹೊತ್ತಿಗೆ ಆ ಕಲಿದೇವನ ತಂದೆಯಾದ ಕಾವರಸನಿಗೆ ೨೦ ವರ್ಷವಾಗಿರಬೇಕು.  ಈ ೧೧೫೫ರ ಹೊತ್ತಿಗೆ ಕಾವರಸನ ತಂದೆಯಾದ ದೇವರಾಜನಿಗೆ ಸುಮಾರು ೨೦ ವರ್ಷವಾಗಿರಬೇಕು.  ಆದ್ದರಿಂದ ಕಾವರಸನು ಹುಟ್ಟಿದ್ದು ಕ್ರಿ.ಶ. ಪ್ರಾಯಶಃ ೧೧೫೫ ರಲ್ಲಿ, ೨೦ವರ್ಷ ವಯಸ್ಸಾಗಿರಬೇಕು. ಆದ್ದರಿಂದ ಆ ದೇವರಾಜನು ಹುಟ್ಟಿದ್ದು ಕ್ರಿ.ಶ. ೧೧೩೫ರಲ್ಲಿ. ಅರ್ಜುನವಾಡದ ಶಾಸನದ ಪ್ರಕಾರ ಈ ದೇವರಾಜನ ತಮ್ಮ  ಬಸವೇಶ್ವರನು ಕ್ರಿ.ಶ. ೧೧೩೫ ಆದ ಮೇಲಲ್ಲದೆ ಮೊದಲು ಹುಟ್ಟಿರಲಾರ. ಇದನ್ನು ಖಚಿತವಾಗಿ ಹೇಳಲು ನಮಗೆ ಲಕ್ಕಣ್ಣದಂಡೇಶನ ಶಿವತತ್ತ್ವ ಚಿಂತಾಮಣಿಯು ಬಸವನ ಜನನದ ಕಾಲವನ್ನು ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ ಸಹಿತವಾಗಿಕೊಟ್ಟು ಸಹಕರಿಸುವುದು. ಆ ಪ್ರಕಾರ ಕ್ರಿ.ಶ. ೨೭-೧೦-೧೧೪೦ಕ್ಕೆ ಸರಿಯಾಗುವುದು, ಆದ್ದರಿಂದ ಬಸವನ ಜನನದ ವರ್ಷ ನಿಸ್ಸಂಶಯವಾಗಿ ಕ್ರಿ.ಶ. ೧೧೪೦. ಬಸವನು ಕಲ್ಯಾಣಕ್ಕೆ ಬಂದಾಗ ಬಿಜ್ಜಳನು ಚಕ್ರವರ್ತಿ ಯಾಗಿದ್ದುದರಿಂದ, ಆತನು ಅಲ್ಲಿಗೆ ಬಂದುದು ಕ್ರಿ.ಶ. ೧೧೬೨ಕ್ಕಿಂತ ಹಿಂದೆಂಬುದು ಅಸಾಧ್ಯ. ಬಿಜ್ಜಳನು ಮಂಗಳವಾಡದಲ್ಲಿ ಆಳುತ್ತಿದ್ದಾಗ, ಕ್ರಿ.ಶ. ೧೧೫೬ರಲ್ಲೇ ಬಸವನು ಅವನ ಆಸ್ಥಾನಕ್ಕೆ ಬಂದು ಸೇರಿದನೆಂದು ಊಹಿಸಿದರೂ, ಆ ವೇಳೆಗಾಗಲೇ ಅವನಿಗೆ ೩೦ ವರ್ಷ ವಯಸ್ಸಾಗಿರಬೇಕು. ಆ ಅಪರ ವಯಸ್ಸಿನಲ್ಲಿ ಬಸವನು ಸಿದ್ಧರಸ ಅಥವಾ ಬಲದೇವನ ಮಗಳನ್ನು ಮದುವೆಯಾದನೆಂಬುದು ವಿಕೃತವಾಗಿ ಕಾಣುವುದು ಮತ್ತು ಕ್ರಿ.ಶ. ೧೧೦೬ರಲ್ಲಿ ಹುಟ್ಟಿದ ಬಸವನಿಗೆ ಕ್ರಿ.ಶ.೧೧೧೪ರ ವೇಳೆಗೆ ನಡೆದ ಉಪನಯನಕ್ಕೆ ಬಿಜ್ಜಳನಮಂತ್ರಿಯಾದ ಬಲದೇವನು ಬಂದಿದ್ದನೆಂಬುದು ತೀರ ಅಸಂಭಾವ್ಯ ಏಕೆಂದರೆ, ಆ ವೇಳೆಗೆ ಬಹುಶಃ ಬಿಜ್ಜಳನೇ ಹುಟ್ಟಿರುವುದಿಲ್ಲವಾಗಬಹುದು. ಆತನು ತನ್ನ ತಂದೆಯಿಂದ ರಾಜ್ಯಭಾರ ವಹಿಸಿಕೊಂಡುದೇ ಕ್ರಿ.ಶ.೧೧೪೦ರಷ್ಟು ಈಚೆಗೆ. ಆದುದರಿಂದ ಬಸವನು ಹುಟ್ಟಿದ ವರ್ಷವನ್ನು ಕ್ರಿ.ಶ. ೧೧೪೦ರ ಹಿಂದು ಹಿಂದಕ್ಕೆ ಒಯ್ದಂತೆಲ್ಲ ಸತ್ಯವೂ ದೂರವಾಗುತ್ತ ಹೋಗುವುದಲ್ಲದೆ, ಬಸವನ ಜೀವನದಲ್ಲಿ ನಡೆದಿರಬಹುದಾದ ವಾಸ್ತವಾಂಶಗಳೆಲ್ಲ ಮುಂದು ಹಿಂದಾಗುತ್ತವೆ”(ಎಲ್.‌ ಬಸವರಾಜು, ಸಂಶೋಧನಾ ಪಥ, ಪು.೪೬-೪೭) ಎಂದು ೧೯೬೭ರಲ್ಲಿಯೇ ಎಲ್.ಬಸವರಾಜು ಅವರು ವ್ಯಕ್ತಪಡಿಸಿರುವ ಬಸವಣ್ಣನ ಜೀವಿತಾವಧಿ ವಿವರಗಳು  ಬಸವಣ್ಣನವರ ಜೀವಿತಾವಧಿಯ ಬಗೆಗೆ ಜಿಜ್ಞಾಸೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿವೆ. ಈ ಸಂಗತಿಗಳು ಕಾವ್ಯ-ಪುರಾಣಗಳಲ್ಲಿಯ ವಿವರಗಳಿಗಿಂತ ಶಾಸನ ಇತ್ಯಾದಿ ಆಕರಗಳ ಹಿನ್ನೆಲೆಯಲ್ಲಿ ಒಳಗೊಂಡವುಗಳಾಗಿದ್ದು ಯೋಚಿಸತಕ್ಕದ್ದಾಗಿವೆ. 

     ನೆಲದ ಮರೆಯ ನಿಧಾನವಾಗಿದ್ದ ಬಸವಣ್ಣನವರ ಜೀವನಕ್ಕೆ ಸಂಬಂಧಪಟ್ಟ ಕೆಲವು ಹೊಸ ವಿಷಯಗಳನ್ನು ಹೊರಗೆಡವಿದ ಈ ಶಾಸನಕ್ಕೆ ಚರಿತ್ರೆಯ ದೃಷ್ಟಿಯಿಂದ ಪ್ರಾಮುಖ್ಯತೆ ಸಲ್ಲಬೇಕಾಗಿದೆ ತರ್ದವಾಡಿ ಮಧ್ಯ ಗ್ರಾಮ ಬಾಗವಾಡಿ ಪುರಾದೀಶ್ವರ ಮಾದಿರಾಜನ ತನುಜಂ ಬಸವರಾಜ ಎಂಬ ಹೇಳಿಕೆ ಅವರ ತಂದೆಯ ವಿಷಯದಲ್ಲಿ ತಲೆದೋರಿದ ಸಂದೇಹಗಳು ಅತ್ಯಂತಿಕವಾಗಿ ನಿವಾರಿಸಿದೆ ಬಸವಣ್ಣನವರ ಅಣ್ಣ ದೇವರಾಜ ಈತನ ಮಗ ಕಲಿದೇವರಸ ಈತನ ಮಗ ಹಾಲಬಸವಿದೇವ ಎಂಬ ವಿನೂತನ ಸಂಗತಿಗಳು ಈ ಶಾಸನದಿಂದ ವ್ಯಕ್ತವಾಗಿದೆ ಪುಲಿಗೆರೆಯ ಸೋಮನಾಥನ ಸನ್ನಿಧಿಯಲ್ಲಿ ದತ್ತಿ ಪಡೆದ ಹಾಲಬಸವಿದೇವನನ್ನು ಮೂಜಗದೊಳಗೆ ಮೆರೆದಮಾನವ ದೇವಂ ನೆಲಿದಂ ಅಸನ ಬೆಸೆನವ ಛಲ ರಧಿಕ ಎಂದೂ ಸ್ವಸ್ತಿ ಸಮಸ್ತ ಭುವನಾಶ್ರಯ ಮಹಾಮಹೇಶ್ವರ ಕವಿ ವಿಳಾಸಪುರಾಧೀಶ್ವರರುಂ ಸುವರ್ಣ ವೃಷಭಧ್ವಜಂ ಮುನೇಶಂ ಯತಿರಾಯ ಹಾಲಲಬಸವಿ ದೇವಂಎಂದು ಕರೆದಿದ್ದು ಬಸವಣ್ಣನವರ ಮುಂದಣ ಸಂತತಿ ಕೆಲವು ಕಾಲ ಅದೇ ಎತ್ತರದಲ್ಲಿ ಮುನ್ನಡೆದುದ್ದಕ್ಕೆ ಸಾಕ್ಷಿ ಎನಿಸಿದೆ .

ಈ ಶಾಸನದ ಬಗೆಗೆ ಕೆಲವು ಸಂಶೋಧಕರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.

ಶಾಸನ ಹಾಕಿಸಿ ಕೊಟ್ಟ ಸ್ಥಳದ ಬಗೆಗೆ ಖಚಿತವಾದ ಮಾಹಿತಿ ಇಲ್ಲ. ಅಂತ್ಯಭಾಗ ಗೊಂದಲಮಯದಿಂದ ಕೂಡಿರುವುದು. ಶಾಸನದಲ್ಲಿಯ ಪದ್ಯದ ಭಾಷೆಯ ಬಂಧಗಳಿಗೂ ಗದ್ಯದ ಒಕ್ಕಣೆಗೂ ಗಮನಾರ್ಹವಾದ ವ್ಯತ್ಯಾಸ ಕಂಡು ಬಂದಿರುವುದು. ಗದ್ಯದಲ್ಲಿ ಅನೇಕ ದೋಷಪೂರಿತ ಶಬ್ದಗಳು ಮತ್ತು ವ್ಯಾಕರಣದೋಷ ಹೆಚ್ಚಾಗಿರುವುದು. ಈ ಹಿನ್ನೆಲೆಯಲ್ಲಿ ಇದನ್ನು ಕೂಟ ಶಾಸನ ಎಂದು ಪರಿಗಣಿಸಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬಸವರಾಜನನ್ವಯರುಮಪ್ಪ ಎಂಬ ಪದಕ್ಕೆ ಬಸವಣ್ಣನವರ ಬೆಂಬಲಿಗರು, ಸಂಗಡಿಗರು, ಅನುಯಾಯಿಗಳು ಆಗಿರುವ ಎಂದು ಅರ್ಥೈಸುವುದೇ ಸೂಕ್ತ ಎಂಬ ನಿಲುವನ್ನು ವ್ಯಕ್ತಪಡಿಸಿರುವುದರ ಜೊತೆಗೆ ಉಳ್ಳವರು ಶಿವಾಲಯ ಮಾಡುವರು........ ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ  ಎಂದು ಮೃದುವಾದ ಮಾತಿನಲ್ಲಿ ಸಮರ್ಥ ರೀತಿಯಲ್ಲಿ ಲಿಂಗವಂತ ಧರ್ಮದ ತಿರುಳನ್ನೇ ಧ್ವನಿ ತುಂಬಿ ಲಿಂಗ ಪೂಜೆಯನ್ನು ಖಂಡಿಸಿರುವ ಬಸವಣ್ಣನವರ ಅಣ್ಣನ ಮಗನೋ ಮೊಮ್ಮಗನೋ ಮರಿಮೊಮ್ಮಗನೋ ಸಾಮಾನ್ಯವಾಗಿ ದೇವಾಲಯದ ಅರ್ಚಕನಾಗಿದ್ದನೆನ್ನುವುದು,  ಹಾಗೆ ಅನ್ನುವುದು ನಂಬುವುದು ಬಸವಣ್ಣನವರನ್ನು ಅವರ ವಿಶ್ವಮಾನ್ಯ ತತ್ವಗಳನ್ನು ಕೊಲೆ ಮಾಡಿದಂತೆ ಎಂದು ಆಕ್ಷೇಪಣೆ ಎತ್ತಿದ್ದಾರೆ.ಈ ಆಕ್ಷೇಪಣೆ ಏನೇ ಇರಲಿ ಕ್ರಿ.ಶ, ೧೨೬೦ ಅರ್ಜುನವಾಡ ಶಾಸನವು ಬಸವಣ್ಣನವರ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಶಾಸನವಾಗಿದೆ ಎಂಬುದನ್ನು ಒಪ್ಪಬಹುದಾಗಿದೆ.

  ಅನುಬಂಧ:

ಅರ್ಜುನವಾಡದ ಶಾಸನದ ಪಠ್ಯ

ಶಾಸನ ಪಾಠ

ನಮಸ್ತುಂಗ [ಶಿ]ರಶ್ಚುಂಬಿ ಚಂದ್ರ ಚಾಮರ ಚಾರವೇ 

ತ್ರೈಳೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ ||ಶ್ಲೋಕ ೧।।

[||ವೃ||]

ಶ್ರೀಯಂ ಶ್ರೀ ಕಲ್ಲಿನಾಥಂ ಕುಡುಗೆ ಭವಹರಂ ಭಕ್ತವೃಂದಕೆ ಗೌರೀ 

ಜಾಯಾ ಕಾಯಾನುಷಂಗಾಕಳಿತ ಲಳಿತ ತಾಪ್ರೋಲ್ಲಸದ್ವಾಮಭಾಗಂ 

ಸ್ವೀಯ ಸ್ವಾಯತ್ತ ಶಕ್ತಿತ್ರಯಮಯ ಮಹಿಮಂ ದೇವದಾಯಾದಮಾಯಾ 

ಪಾಯಾಭಿಪ್ರಾಯ ಲೀಲಂ ಪ್ರಣತಜನ ದುರಂತಾಘಸಂಘಟ್ಟಶೀಲಂ ||೧||

[||ವ।।] ಮತ್ತಂ ತದ[೯]ವಾಡಿ ಮಧ್ಯಗ್ರಾಮ[0] ಬಾಗವಾಡೀ ಪುರವರಾಧೀ[ಶ್ವ]ರಂ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯೆಂತೆಂದಡೆ||

[||ಕಂ||]

ಮಂಗಳ ಕೀರ್ತ್ತಿ ಪುರಾತನ

ಜಂಗಮ ಲಿಂಗೈಕ ಭಕ್ತಿ ನಿರ್ಬ್ಭರ ಲೀಲಾ

ಸಂಗಂ ಸಂಗನ ಬಸವಂ

ಸಂಗತಿಯಂ ಮಾಳ್ಕೆ ಭಕ್ತಿಯೊ[ಳ]ಗನವರತಂ ||೨||

[||ವೃ||]

ಯಾದವಭೂಮಿಪಾಳರಿಳೆಯಂ ಚತುರ[ಬ್ಧಿ] ಪರೀತೆಯಂ ನಿಸ 

ರ್ಗ್ಗೋದಯರಾಳ್ವರನ್ತವರೊಳಸ್ವಚನ ವೂಚಯ ವಾರ್ದ್ಧಿ ಸಿಂಹಣ 

ಕ್ಷ್ಮಾದಯಿತಂ ತದಗ್ಗ್ರ ತನಯ ಪ್ರಭವಂ [ನೃ]ಪ ಕಂನರಂ ಸಮ 

ಸ್ತೋದಧಿ ವೇಳೆಯಿಂ ಪೊಱಗೆ ಬೆಳ್ಗೊಡೆಯೊಳ್ನೆಳಲಂ ನಿಮಿರ್ಚ್ಚಿದಂ ||೩||

[||ಕಂ||]

ಸಲೆ ಭೂದೇವರ್ಕ್ಕಳ್ಳಿ 

ತ್ತಲಸದೆ ಗೋಭೂಮಿ ಹೇಮ ವಸ್ತ್ರಾದಿಗಳಂ 

ಮಲೆವರಸುಗಳೊಳ್ಕೊಂಬಂ 

ಬಲವಂತಂ ಕಂನರಂ ಪ್ರತಾಪಸಹಾಯಂ ||೪||

[||ವ।।] ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ[ಪೃ}ಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕ ದ್ವಾರಾವತೀ ಪುರವರಾಧೀಶ್ವರ ಯಾದವಕುಳ ಕಮಳ ಕಳಿಕಾ ವಿಕಾಸ ಭಾಸ್ಕರ ಅರಿರಾಯ ಜಗಜ್ಝಂಪ ಮಾಳವರಾಯ ಮದನತ್ರಿಣೇತ್ರ ಗೂರ್ಜ್ಜರರಾಯ ಭಯಂಕರ ತೆಲುಂಗರಾಯ ಸ್ಥಾಪನಾಚಾರ್ಯ ಇತ್ಯಾದಿ ನಾಮಾವಳೀ ಸಮಾಳಂ[ಕೃ]ತ ಶ್ರೀಮತ್ ಪ್ರೌಢಪ್ರತಾಪ ಚಕ್ರವರ್ತ್ತಿ ಶ್ರೀ ಕಂನರದೇವಂ ದೇವಗಿರಿಯ ನೆಲೆವೀಡಿನೊ[ಳ್] ಸುಖಸಂಕಥಾ ವಿನೋದದಿನ್ ಅನವರತಂ ರಾಜ್ಯಂಗೆಯ್ಯುತ್ತುಮಿರೆ॥

ತತ್ಪಾದಪದ್ಮೋಪಜೀವಿ।।

[||ಕಂ||]

ಚಿಕ್ಕನ ಚಿಕ್ಕ ಮಗಂ ವಿಭ 

ವಕ್ಕೆ ಕುಬೇರಂಗೆ ಸೆಣಸುವಂ ರಾಯರುಮಂ 

ಮಿಕ್ಕ[ಂ] ಬೀಚುಗಿಯೌದಾ 

ರ್ಯಕ್ಕಾರಿಂ ಪಿರಿಯನಾತನಂಣಂ ಮಲ್ಲಂ ||೫||

||ವೃ||

ಚಾವುಂಡಂ ಪಾರ್ವತೀ ವಲ್ಲಭಚರಣ ಸರೋಜದ್ವಯಾಮೋದ [ಭೃಂ]ಗಂ 

ಚಾವುಂಡಂ ತ್ಯಾಗಭೋಗಾನುಭವಭವಸುಖ ಶ್ರೀ ವಧೂ[ನೃ]ತ್ಯರಂಗಂ 

ಚಾವುಂಡಂ ಸಾಮಭೇದ ಪ್ರ[ಭೃ]ತಿ ಸಕಳ ಮಂ[ತ್ರಾಂ]ಗ ವಿದ್ಯಾಸಮುದ್ರಂ 

ಚಾವುಂಡಂ ವೀರವೈರಿ ಪ್ರಕರ ಸಮರ ಸಂಘ[ಟ್ಟ] ಕಾಳಾಗ್ನಿರುದ್ರಂ ||೬||

||ಕಂ||

ಯೆನೆ ನೆಗಳ್ದಾ ಚಾವುಂಡನ 

ಮನದನ್ನಂ ನಾಗರಾಜನ[ಖಿ]ಳ ನಿಯೋಗ 

[ಜ್ಞ]ನೆನಿಪ್ಪ ದಿವಾಕರ ದೇ 

ವನಪುತ್ರಂ ವಾಣಸಾನ್ವಯಾಂಬರ ಮಿತ್ರಂ ||೭||

[||ವೃ||]

ತ್ಯಾಗಗುಣಕ್ಕೆ ತಾಯ್ವನೆ ಸಮಸ್ತ[ನೃ]ಪಾಳ ನಿಯೋಗ ವರ್ತ್ತನಾ 

ಶ್ರೀಗೆ ನಿವಾಸಮಿಷ್ಟರ ವಿಶಿಷ್ಟರ ತೋಷಣಪೋಷಣಂಗಳೊ 

ಳ್ಳಾಗರಮೆಂದು ಬಂಣ್ನಿಸುವುದೀ ಧರೆ ಪಂಡಿತಪಾರಿಜಾತನಂ 

ನಾಗನನಾ ಜನಾರ್ದ್ಧನನ ಭಕ್ತಿ ಭರ ಪ್ರಭವಾನುರಾಗನಂ ||೮||

[||ಕಂ||] 

ಸಂಗನ ಬಸವನ ಅಗ್ರ[ಜ] 

[ಲಿ]ಂಗೈಕಂ ದೇವರಾಜ ಮುನಿಪನ ತನಯಂ 

ಜಂಗಮ ಪರುಸಂ [ಕಾವ]ರ 

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ ||೯||

ಕಲಿದೇವ ಮುನಿಪನಾತ್ಮಜ 

ಸಲೆ ಮೂಜಗದೊಳಗೆ ಮೆಱೆವ ಮಾನವ ದೇವಂ 

ಗೆಲಿದಂ ಅ[ಶ]ನ ಬೆಸನವಂ 

ಛಲರಧಿಕಂ ಹಾಲಬಸವಿದೇವ ಮುನೀ[ಶ]ಂ     ||೧೦||

[ವ||] ಸ್ವಸ್ತಿ ಸಮಸ್ತ ಭವನಾ[ಶ್ರ]ಯಂ ಮಹಾಮಾಹೇಶ್ವರಂ ಕವಿಳಾಸಪುರವರಾಧೀ।ಶ್ವ]ರರುಂ ಸುವಂರ್ಣ್ನ[ವೃಷ]ಭಧ್ವಜಂ ತೇಸಠ್ಠಿ ಪುರಾ[ತನ] ಪಾದಾರ್ಚ್ಚಕರುಂ ಮಹಾಲಿಂಗ ಜಂಗಮ ಪ್ರ[ಸಾ]ದ ನಿಯತರುಂ ಸಮಯ ಭಕ್ತಿ ಸಂಪಂನ್ನ ಶ್ರೀ ಬಸವರಾಜನಂನ್ವಯರುಮಪ್ಪ ತಪಃಚಕ್ರವರ್ತ್ತಿ ವೀರಬ್ರತಿ ಹಾಲಬಸವಿದೇವಂಗೆ ಆ ಮಹಾಪ್ರಧಾನಂ ಱಟ್ಟರಾಜ್ಯ ಪ್ರತಿಷ್ಠಾಚಾರ್ಯನುಮಪ್ಪ ನಾಗರಸರ್ ಸಕ ವರುಷಂ ಸಾಸಿರದ ನೂಱಯೆಂಭತ್ತಯೆರಡನೆಯ ಸಿದ್ಧಾ[ರ್ತ್ಥಿ] ಸಂವತ್ಸರದ ಚೈತ್ರ ಬಹುಳ ಅಮಾಸೆ ಸೋಮವಾರ ಸೂರ್ಯಗ್ರಹಣದಲ್ಲಿ ಹುಲಗೆಱೆಯ ಸೋಮನಾಥ ದೇವರ ಸಂನಿಧಿಯಲ್ಲಿ ಆ ಚೌಡಿ ಸೆಟ್ಟಿಯ[ರ್] ತೀರ್ತ್ಥ ವಿಶೇಷಮಂ ಬೆಸಗೊಳ[ಲ್] ನೂಲೆನಾಡೊಳ[ಗಿ]ನ [ಮನಿತನದಿ] ಕವಿಳಲಸ ತೀ[ರ್ತ್ಥಂ] ನಾಲ್ಕು ಯುಗದ ಪುರಾಣೋಕ್ತದಿಂ ಬಂದ ಕ್ಷೇತ್ರವದೆಂತೆಂದಡೆ

[ಕೃ]ತ[ಯು]ಗದಲ್ಲಿ ಕವಿಳಾಸಮುನಿ ಕವಿಳಾಸನಾಥ [ತ್ರೇ] ತೆಯಲಿ ಅಂಕರಾಜಮುನಿ ಅಂಕನಾಥ ದ್ವಾಪರದಲ್ಲಿ ಮಹಾರಾಜಮುನಿ ಮಹಲಿಂಗದೇವ, ಕಲಿಯುಗದಲ್ಲಿ ಕಲಿರಾಜಮುನಿ ಕಲಿದೇವನಾಮ [ಈ] ಮುನಿಗ[ಳ್] ಮು[ಖ್ಯ] ಸಮಸ್ತ ಗಣೇ[ಶ್ವ]ರ[ರ್] ಆರಾಧಿಸಿ ಸಾಲೋಕ್ಯ ಸಾರೂಪ್ಯ ಸಾಮೀ[ಪ್ಯ] ಸಾಯು[ಜ್ಯ]ಮಂ ಪಡೆದ[ರ್] ಆ ದೇವರಿಗೆ ಅಂಕನಾಥವೆಸರಿಂ ಅಂಕವಲ ತಳ[ವೃತ್ತಿ] ಕೊತ್ತಸಿ ಕುಱುವನಿಗೆ [ಈ] ಹಳ್ಳಿ ಮಾಂಧಾತ ಚಕ್ರವರ್ತ್ತಿ ಬಿಟ್ಟ ಧಂರ್ಮ್ಮ ಆ ತೀ[ರ್ತ್ಥ] ಕ್ಕದು [ಶಾ]ಸನಸ್ಥವೆಂಬುದಂ ಚವುಡಿಸೆಟ್ಟಿಯರು ಕೇ[ಳ್ದು] ನಾಗರಸರೂ ತಾವೂ ಏಕಸ್ಥರಾಗಿ ಕವಿಳಾಸಪುರದೊಳಗೆ ಸ್ವಯಂಭು ಮಲ್ಲಿಕಾರ್ಜ್ಜುನ ಸಂಗಮೇ[ಶ್ವ]ರ ನಾಗೇ[ಶ್ವರ]ರ ಯೀಮೂಱು ಲಿಂಗ[ಕ್ಕಂ] ಅಂಗಭೋಗ ರಂಗಭೋಗ ಜೀರ್ಣ್ನೋದ್ಧಾರಕ್ಕಂ ಪಾರಣೆಯ ಜಂಗಮಾರಾಧನೆಗಂ ಕೊತ್ತಸಿ ಕುಱುವನಿಗೆ ತಳ[ವೃ]ತ್ತಿ ಅಂಕವಲ ಕೂಂಡಿನಾಡೊ[ಳ್] ಸಲುವಂತೆ ಹೆಜ್ಜುಗಿಯ ಹಬ್ಬ ವೊ[ಂ]ಭತ್ತು [ದಾನ] ಸುಂಕ ನೂಱೆ[ತ್ತಿ]ನ ಪರಿಹಾರ ಯಿಂತಿನಿತುಮಂ ಸರ್ವ್ವಬಾ[ಧೆ] ಸರ್ವ್ವನಮಸ್ಯವಂ ಮಾಡಿ ಚವುಡಿಸೆಟ್ಟಿಯ[ರ್] ನಾಗರಸ[ರ್] ಯತಿರಾಯ ಹಾಲಬಸವಿದೇವಂಗೆ ಪೂರ್ವ್ವದತ್ತವೆಂದು ಧಾರಾಪೂರ್ವ್ವಕಂ ಮಾಡಿಕೊಟ್ಟ[ರ್]

ಆ ಚವುಡಿ ಸೆಟ್ಟಿಯರ ನಿಯಾಮದಿಂ ನಾಗರಸ[ರ್] ಪುರದಿಂ ಪಡುವಲು ತೊಱೆಯ ಕೂಡಿದ ಹಳ್ಳ ನೀರುವರಿ[ಯೆ] ಮೇರೆಯಾಗಿ ಮೇಗೆ ಕಲುಕಂಟಗಗೆಱೆ ಬಸವಗೋಡಿ ಬಡಗಲು ಮೊಸರಗುತ್ತಿ [ಎ]ರಾರವಿಡಿದು ಮೂಡಲು ಜಂಬೆಗಲ್ಲ ಕಣಿ ಕುಚ್ಚಗೋಡಿಯಿಂ ಬಂದ ಹಳ್ಳ ನೀರುವರಿ[ಯೆ] ತೆಂಕಲು ತೊಱೆಯ ಕೂಡಲು ಯೀ ಚತುಸ್ಸೀಮಾಭ್ಯಂತರ ಕವಿಳಾಸಪುರ[ದ]ಲಿ ಸುಂಕ ಸಾದ ತಳಸಾರಿಗೆ ಬ[ಟ್ಟೆ]ಯ ಬಾಧೆ ಗ್ರಾಮಬ್ರಯ(?) ನಿಧಿ ನಿಕ್ಷೇಪ ಅಂಕ ಟಂಕ ಆಣೆ[ಘೋಷಣೆ] ಮುದ್ರೆ ನಾಗೇ[ಶ್ವ]ರಕೆ ಮಲ್ಲೇ[ಶ್ವ]ರಕೆ ಕುಱುವನಿಗೆ ಸಂಗಮೇ[ಶ್ವ]ರಕೆ ಪಾರಣೆಯ ಜಂಗಮಾರಾಧನೆಗೆ ಕೊತ್ತಸಿಗೆ [ಈ] ಧರ್ಮ್ಮಕೆ ಇದು ವಿವರವೆಂದು ನಾಗರಸರು ಕೊಟ್ಟ [ಶಾ]ಸನ ನಾಲ್ಕುಂ ಪಟ್ಟಣಂಗ[ಳ್] ನೂಲೆನಾಡೊಳಗೆ ಸಂತೆಗಳ ಆಯದಾಯ ಇ[ರ್ಪ]ಂತು ಕೋಣ ಮೆಯಿದೆಱೆ ಸುಂಕಹದಿನೆಂಟು ಸಮಯವೂ ಅಱುವತ ಮೂವರೂ ಬಣಜು ಭಕುತಿ ಭೇದವಿಲ್ಲ ಕವಿಳಾಸಪುರವೇ [ಶಾ]ಸನದ ಮನೆ ಬಸವರಾಜನೇ [ಶಾ]ಸನಿಗನೆಂದು ವುಭಯ ನಾನಾದೇಸಿ ಮುಂಮುರಿದಂಡಂಗ[ಳ್] ಕೊಟ್ಟ [ಶಾ]ಸನ।।

( ಆಧಾರ: ಎಪಿಗ್ರಫಿಯಾ ಇಂಡಿಕಾ, ಸಂ. XXI ಪು. ೯-೧೬ ಮತ್ತು ಶಿವಾನುಭವ ಪತ್ರಿಕೆ ಸಂ.೩, ಸಂ.೯)

ಬಸವಣ್ಣನವರನ್ನು ಉಲ್ಲೇಖಿಸಿರುವ ಇತರೆ ಶಾಸನಗಳು:

೧.ಕ್ರಿ.ಶ೧೨೫೯ರ ಹಿರಿಯೂರ (ಅರಸಿಕೆರೆ ತಾಲೋಕು) ಶಾಸನ: ಈ ಶಾಸನವು ಹಿರಿಯೂರಿನ (ಹಾಸನ ಜಿಲ್ಲೆ) ಕುಂಜೇಶ್ವರ ದೇವಾಲಯದಲ್ಲಿದೆ. ಈ ಶಾಸನದಲ್ಲಿ ತಮಿಳುನಾಡಿನ ಅತಿಪುರಾತನರು ಹಾಗೂ ಪ್ರಾಚೀನ ಶರಣರ ಸಾಲಿನಲ್ಲಿ ಬಸವಣ್ಣನವರನ್ನು “ಸಿರಿಯಾಳ್ವಂ ಬಸವಯ್ಯ ನೊಳ್ವೆಸೆವ…..ಬಾಣನುರಂ…..ಸಿಂಧುಬಲ್ಲಾಳನೀಧರೆ ಕೊಂಡಾಡುವ ದಾಸಿಮಯ್ಯನೆನಿಸಿರ್ದೀ ಭಕ್ತಸಂದೋಹವಾ… ಎಂದು ಉಲ್ಲೇಖಿಸಿದೆ. ಪುರಾತನರ ಶರಣರ ಸಾಲಿನಲ್ಲಿ ಬಸವಣ್ಣನವರನ್ನು ಮಾತ್ರ ಈ ಶಾಸನ ಪ್ರಸ್ತಾಪಿಸಿರುವುದು ಅವರ ಮಹಿಮೆಯ ದ್ಯೋತಕವಾಗಿದೆ.

೨. ಅರ್ಜುನವಾಡ ಶಾಸನ - ೨: ಅರ್ಜುನವಾಡದಲ್ಲಿ ಅದೇ ಕಾಲದ ಇನ್ನೊಂದು ಶಾಸನವು ದೊರೆತಿದೆ.

ಇದು ಲಿಂಗಮುದೆಯ ಸೀಮೆಯ ಕಲ್ಲು. ಈ ಶಾಸನದಲ್ಲಿ ಶ್ರೀಬಸವಣ ದಂಣಾಯಕರ ಕೆಯ್ ಎಂಬ ಉಲ್ಲೇಖವಿದ್ದು ಬಸವಣ್ಣನವರನ್ನು ದಂಡನಾಯಕ ಎಂದು ಕೀರ್ತಿಸಲಾಗಿದೆ.

೩.  ಚೌಡದಾನಪುರ ಶಾಸನ ಕ್ರಿ.ಶ ೧೨೬೩ರ ಚೌಡದಾನಪುರ ಶಾಸನವು ಬಸವಣ್ಣನವರ ಲಿಂಗಜಂಗಮ ಸೇವೆ ಪ್ರಸಾದ ಸಿದ್ಧಿಗಳನ್ನು ವಿವರಿಸಿದೆ. “ಲಿಂಗಕ್ಕೆ ಜಂಗಮಕ್ಕಂಹಿಂಗದೆ ದಾಸತ್ವ ಮಾಳ್ಪುದೇ ಬೆಸನೆಂದಾಸಂಗನಬಸವಂ ಮೃಡಗಣ ವರಪ್ರಸಾದಮಪಡೆದಂ ಜಗವರಿಯಲಂದು ಸಂಗನಬಸವಂ ಪಡೆದ ಪ್ರಸಾದ ಸಿದ್ಧಿಯʼʼ ಎಂದು ಹೇಳಿದ್ದು ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಸ ಹಿಡಿದಂತಿದೆ. ಬಸವಣ್ಣನವರ ಈ ವಿಶೇಷಣಗಳು ಲಿಂಗ, ದಾಸೋಹ, ಜಂಗಮಗಳು ಸಮಾಜದ ಮೇಲೆ ದಟ್ಟವಾಗಿ ಬೀರಿದ್ದ ಪ್ರಭಾವದ ಪ್ರತೀಕವೆನಿಸಿವೆ.

 ೪.  ಕಲ್ಲೇದೇವರಪುರ ಶಾಸನ , ಜಗಳೂರು, ಚಿತ್ರದುರ್ಗ: ಕ್ರಿ.ಶ, ೧೨೭೯ರ ಕಲ್ಲೇದೇವರಪುರ ಶಾಸನದಲ್ಲಿ ‘ಚೇರಚೋಳನಂಬಿ ಚಿಕ್ಕ, ಕಕ್ಕ, ಚೆಂನ ಹೊಂನ, ಬಂಕ, ಬಸವರಾಜ, ಭೊಜ ಮೊದಲಾದ ಮರ್ತ್ಯ ಲೋಕದ ಮಹಾಗಣಾಚಾರ ಧರಾಭಾರ ಧೌರೇಯ, ಲಿಂಗೈಕ್ಯಸಂಗ ಸದ್ಭಾವನಂ ಎಂಬುದಾಗಿ ಬಸವ ಪೂರ್ವಯುಗ ಹಾಗೂ ಬಸವ ಯುಗದ ಶರಣರನ್ನು ಕೀರ್ತಿಸಿದೆ.  ಈ ಶಾಸನದಲ್ಲಿ ಮರ್ತ್ಯಲೋಕದ ಪುರಾತನ ನೂತನ ಮಹಾಗಣಗಳ ಸಮೂಹದ ನಡುವೆ ಬಸವಣ್ಣನ ಹೆಸರು ಪ್ರಸ್ತಾಪಿತವಾಗಿರುವುದು ಗಮನಿಸಬೇಕಾದ ಅಂಶವಾಗಿದೆ. 

  ೫. ಮರಡಿಪುರ ಶಾಸನ: 

 ಕ್ರಿ.ಶ ೧೨೮೦ ಮರಡಿಪುರ ಶಾಸನದಲ್ಲಿ  ‘ ಓಹಿಲ, ಉದ್ಭಟ, ನಂಬಿ, ಕುಂಬಾರ ಗುಂಡ, ಆಂಡವಲ, ಕರಿಕಾಲ ಚೋಳ, ಭೋಗದೇವ, ಬಾಣ, ಮಯೂರ, ಕಾಳಿದಾಸ, ಕೇಶಿರಾಜ ದಣ್ನಾಯಕ, ಸುರಿಗೆಯ ಚಲ್ವಡರಾಯ, ಸಂಗನ ಬಸವಯ್ಯ, ಕೇಶವರಾಜ, ಜಗದೇವದಣ್ನಾಯಕ, ಏಕಾನ್ತದ ರಾಮಯ್ಯ, ಸೊನ್ನಲಿಗೆ ರಾಮಯ್ಯ, ಹುಲಿಗೆರೆಯ ಪೊನ್ನಯ್ಯ ನೆಲವಿಗೆಯ ಸಾಂತಯ್ಯ ಸಕಳಗಣ ಪರಿವೇಷ್ಟಿತ ಶ್ರೀ ಪ್ರಶಸ್ತಿ ಮಂಗಳಂ ಎಂಬುದಾಗಿ ಮರ್ತ್ಯಲೋಕದಲ್ಲಿ ಪ್ರಸಿದ್ಧರಾದ ನೂತನ ಪುರಾತನ ಗಣಂಗಳ ನಡುವೆ ಬಸವಣ್ಣನವರನ್ನು ಉಲ್ಲೇಖಿಸಿದೆ. ಬಸವಣ್ಣನವರನ್ನು ಸಂಗನ ಬಸವಯ್ಯ ಎಂದು ಉಲ್ಲೇಖಿಸಿದ್ದಾರೆ. ಇದು ಬಸವಣ್ಣನವರ ಇಷ್ಟದೈವ ಸಂಗಮೇಶ್ವರ ಮತ್ತು ಬಸವಣ್ಣನವರ ನಡುವಿನ ದೈವೀ ಸಂಬಂಧವನ್ನು ಸೂಚಿಸುತ್ತದೆ. 

ತಾಮ್ರ ಶಾಸನಗಳು

೧) ಆನಂದಪುರ ಸಂಸ್ಥಾನ ಪಠದ ತ್ರಾಮ ಶಾಸನ ಕ್ರಿಶ. ೧೬೬೦ :ಈ ಶಾಸನದ ಮುಖ್ಯ ಪಠ್ಯ ಭಾಗವು ಹೀಗಿದೆ.

". .. ಪೂರ್ವ ಕಲ್ಯಾಣ ಪಟ್ಟಣದಲ್ಲಿ ನಿರಂಜನ ಪ್ರಭು ಸ್ವಾಮಿಗಳು ತಮ್ಮ ಶೂನ್ಯ ಸಿಂಹಾಸನಕ್ಕೆ ಮುಂದೆ

ವಬ್ಬರ ಯೋಗ್ಯರ ಮಾಡಬೇಕೆಂದು ಚನ್ನಬಸವ ಬಸವೇಶ್ವರ ಮುಂತಾದ ಪ್ರಥಮ ಬಿನೈಸಿಕೊಂಡದಕ್ಕೆ . ..

ಇಲ್ಲಿ ಬಸವಣ್ಣನವರನ್ನು ಬಸವೇಶ್ವರ ಎಂದು ಕರೆಯಲಾಗಿದೆ. ಪ್ರಮಥರ ಸಾಲಿನಲ್ಲಿಬಸವಣ್ಣನವರನ್ನು ಪರಿಗಣನೆ ಮಾಡಿರುವುದು ಗಮನಾರ್ಹ ಅಂಶ.

೨) ಕಾನಕಾನಹಳ್ಳಿ ತಾಮ್ರ ಶಾಸನ-೧: ತೆಲುಗು ಭಾಷೆಯಲ್ಲಿರುವ ಈ ಶಾಸನದ ಕಾಲ ಸುಮಾರು

ಕ್ರಿ.ಶ.೧೭೦೦. ಬಸವಣ್ಣನವರನ್ನು ಬಸವೇಶ್ವರ ಎಂದು ಕರೆಯಲಾಗಿದೆ.

“ಕಲ್ಯಾಣ ಪಟ್ಟಮಂದು ಬಸವೇಶ್ವರ ಸ್ಪ(ಸ್ಟಾ) ಮಲುವಾರು ನಿರ್ಣಯಂ ಚೇಶಿಂದಿ.” ಎಂಬುದು

ಪಠ್ಯದ ಭಾಗ. ಇದರಲ್ಲಿ ಮಡಿವಾಳ ಮಾಚಿದೇವನು ಅಗಸರಿಗೆ ಹಕ್ಕುಗಳನ್ನು ನೀಡಿದುದನ್ನು

ದಾಖಲಿಸಲಾಗಿದೆ.

    ಈ ಮೇಲ್ಕಂಡ ಶಾಸನಗಳಲ್ಲಿನ ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತ ವಿವರಗಳು, ಬಸವಣ್ಣನವರನ್ನು ಕುರಿತ ಕಾವ್ಯ ಪುರಾಣಗಳಲ್ಲಿಯ ವಿವರಗಳಿಗಿಂತ ಪೂರ್ವದವುಗಳಾಗಿದ್ದು ವಿಶ್ವಾಸನೀಯ ದಾಖಲೆಗಳಾಗಿದೆ.

ಪರಾಮರ್ಶನ ಗ್ರಂಥಗಳು

1.ಎಂ.ಎಂ.ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು, ಶ್ರೀ.ಜಗದ್ಗುರು ತೋಂಟದಾರ್ಯ ಮಠ, ಗದಗ, 1978

                  ಮಾರ್ಗ ಸಂ.4. ಸ್ವಪ್ನ ಪುಸ್ತಕಾಲಯ,ಬೆಂಗಳೂರು 2004

2. ಎಂ.ಚಿದಾನಂದಮೂರ್ತಿ: ಸ್ಥಾವರ-ಜಂಗಮ, ಸ್ವಪ್ನ ಪುಸ್ತಕಾಲಯ,ಬೆಂಗಳೂರು 2004

3. ಎಂ.ಜಿ.ನಾಗರಾಜು, ಸಾಂಸ್ಕೃತಿಕ ವೀರಶೈವ, ಶ್ರೀ ದೇಗುಲ ಮಠ, ಕನಕಪುರ,2005

4.ಬಸವೇಶ್ವರ ಸಮಕಾಲೀನರು: ಬಸವ ಸಮಿತಿ, ಬೆಂಗಳೂರು 2000 ( ದ್ವಿ.ಮು)

೫. ನೀಲಗಿರಿ ತಳವಾರ ಮತ್ತು ದೇವರಡ್ಡಿ ಹದ್ಲಿ, ಡಾ.ಎಲ್.ಬಸವರಾಜು ಸಂಶೋಧನ ಪಥ, ಸಪ್ನ ಬುಕ್ ಹೌಸ್, ಬೆಂಗಳೂರು. ೨೦೧೮.

೬.ಕೈದಾಳ ರಾಮಸ್ವಾಮಿ ಗಣೇಶ: ಶಾಸನ ಸರಸ್ವತಿ, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ

  ಧಾರವಾಡ, ೨೦೦೮

೭. ಶಾಸನ ಸಂಗ್ರಹ ಸಂ. ಎ.ಎಂ.ಅಣ್ಣಿಗೇರಿ ಮತ್ತು ಆರ್.ಶೇಷಶಾಸ್ತ್ರಿ,

   ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೭

೮. ಸಿ.ನಾಗಭೂಷಣ: 1.ಸಾಹಿತ್ಯ ಸಂಸ್ಕೃತಿ ಹುಡುಕಾಟ, ಅಮೃತವರ್ಷಿಣಿ ಪ್ರಕಾಶನ, ಯರಗೇರ-ರಾಯಚೂರು, 2002

                               2. ವೀರಶೈವ ಸಾಹಿತ್ಯ ಕೆಲವು ಒಳನೋಟಗಳು, ವಿಜೇತ ಪ್ರಕಾಶನ, ಗದಗ, 2008

                              3. ಶಾಸನಗಳು ಮತ್ತು ಕನ್ನಡ ಸಾಹಿತ್ಯ: ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ, 2005  

                             



 ಏಕಾಂತ ರಾಮಯ್ಯನನ್ನು ಕುರಿತ  ಶಾಸನ ಮತ್ತು ಶಿಲ್ಪಗಳು 

              ಡಾ.ಸಿ.ನಾಗಭೂಷಣ                              

ಕನ್ನಡ ನಾಡು ವಿವಿಧ ಮತ ಧರ್ಮಗಳ ತವರು. ಪ್ರತಿಯೊಂದು ಮತಧರ್ಮವೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಪಾತ್ರವಹಿಸಿದೆ. ಕನ್ನಡ ನಾಡಿನ ಧಾರ್ಮಿಕ ಚರಿತ್ರೆಯಲ್ಲಿ ಕ್ರಿ.ಶ. ಹನ್ನೆರಡನೆಯ ಶತಮಾನದ ಆರಂಭಕಾಲವು ಬಹುಮುಖ್ಯವಾದ ಕಾಲ. ಈ ಅವಧಿಯಲ್ಲಿ ಶ್ರೀವೈಷ್ಣವ ಮತ ಮತ್ತು ವೀರಶೈವ ಮತಗಳು ಜೊತೆ ಜೊತೆಯಲ್ಲಿಯೇ ಆವಿರ್ಭವಿಸಿದವು. ಶೈವಮತವು ರಾಜಾನುಗ್ರಹ ಮತ್ತು ಪ್ರಜಾನುರಾಗವನ್ನು ಪಡೆಯುವಲ್ಲಿ ಸಫಲವಾಯಿತು. ಕ್ರಿ.ಶ. ಹನ್ನೊಂದು ಮತ್ತು ಹನ್ನೆರಡನೇ ಶತಮಾನಗಳಲ್ಲಿ ಧಾರ್ಮಿಕ ಘರ್ಷಣೆ ನಡೆದಿರುವುದಕ್ಕೆ ಆಧಾರಗಳಿವೆ.

  ಉಚ್ಛ್ರಾಯ ಸ್ಥಿತಿಯಲ್ಲಿದ್ದ ಒಂದು ಮತವು ಭದ್ರತೆಯನ್ನು ಕಳೆದುಕೊಂಡಾಗ ಮತ್ತೊಂದು ಮತವು ಪ್ರಬುದ್ಧಮಾನಕ್ಕೆ ಬರಲು ಪ್ರಯತ್ನಿಸುತ್ತದೆ. ಇಳಿಮುಖದತ್ತ ಪಯಣಿಸುತ್ತಿರುವ ಅನ್ಯಮತದೊಂದಿಗೆ ತೀವ್ರವಾದ ಘರ್ಷಣೆಗೆ ತೊಡಗುವುದು ಅನಿವಾರ್ಯವೇ ಆಗುತ್ತದೆ. ಹನ್ನೊಂದನೇ ಶತಮಾನದ ಕೊನೆಯ ಭಾಗಕ್ಕಾಗಲೇ ಇಳಿಮುಖಗೊಳ್ಳುತ್ತಿದ್ದ ಜೈನ ಮತ ಮತ್ತು ಪ್ರಬುದ್ಧ ಮಾನಕ್ಕೆ  ಬರಲು ಪ್ರಯತ್ನಿಸುತ್ತಿದ್ದ ವೀರಶೈವಮತ ಇವೆರಡರ ನಡುವೆ ಅಸ್ತಿತ್ವದ ಸಲುವಾಗಿ ಧಾರ್ಮಿಕ ಸಂಘರ್ಷವು ನಡೆದಿರುವುದಕ್ಕೆ ಶಾಸನ ಕಾವ್ಯ ಪುರಾಣಗಳಲ್ಲಿ ಆಧಾರಗಳಿವೆ.

   ಕ್ರಿ.ಶ. ಹನ್ನೆರಡನೇ ಶತಮಾನವು ವೀರಶೈವಧರ್ಮವು ಕನ್ನಡ ನಾಡಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಕಾಲವಾಗಿದೆ. ವೀರಶೈವ ಶರಣರ 'ವೀರ ಮಾಹೇಶ್ವರ ನಿಷ್ಠೆ' ಅಥವಾ 'ದಿಟ್ಟಿವಾರಿ' ಪದಗಳು ಮಧ್ಯಕಾಲೀನ ಧಾರ್ಮಿಕ ಚರಿತ್ರೆಯಲ್ಲಿ ಮಹತ್ವವನ್ನು ಪಡೆದಿವೆ. ಶಿವನಲ್ಲಿ ಅತ್ಯಂತ ನಿಷ್ಠೆಯಿಂದ ಕೂಡಿರುವುದು, ಶಿವನಿಂದೆಯನ್ನು ಆಲಿಸದಿರುವುದು, ಒಬ್ಬ ವ್ಯಕ್ತಿ ಯಾವ ಕುಲಕ್ಕೆ ಸೇರಿದ್ದರೂ ಶಿವಭಕ್ತನಾಗಿದ್ದರೆ ಅವನನ್ನು ಗೌರವಿಸುವುದು, ಶಿವನಿಂದೆಯನ್ನು ಆಲಿಸಿದಿರೆ, ನಿಂದಿಸಿದ ವ್ಯಕ್ತಿಯನ್ನು ಸಂಹರಿಸುವುದು ಅಥವಾ ತನ್ನ ಪ್ರಾಣವನ್ನೇ ಅರ್ಪಿಸಿಕೊಳ್ಳುವುದು- ಅಚಲನಿಷ್ಠೆಯ ಪ್ರತೀಕವಾಗಿದೆ

   ಈ ಪದಗಳು ಏಕದೇವೋಪಾಸನೆಯನ್ನೂ ಪ್ರತಿಬಿಂಬಿಸುವಂತಹದ್ದಾಗಿವೆ. ಬಸವಯುಗದ ಕೆಲವು ಶರಣರು ವೀರಮಾಹೇಶ್ವರ ನಿಷ್ಠೆಯ ಮೂಲಕ ಏಕದೈವದಲ್ಲಿ ಉಗ್ರನಂಬಿಕೆ ಇರಿಸಿ ಆಗ ವಿರೋಧಿಭಾವದಲ್ಲಿದ್ದ ಅನ್ಯ ಮತಗಳ ವಿರುದ್ಧ ಹೋರಾಡಿ ಶಿವಮತ ಪ್ರಸಾರದಲ್ಲಿ ತೊಡಗಿದ್ದರು. ಇಂತಹವರಲ್ಲಿ ಏಕಾಂತ ರಾಮಯ್ಯನೂ ಒಬ್ಬ. ಶಾಸನ ಮತ್ತು ವೀರಶೈವ ಕಾವು-ಪುರಾಣಗಳಲ್ಲಿ ಈತನ ವಿವರ ಸಮಗ್ರವಾಗಿ ಒಡಮೂಡಿದೆ. ಕನ್ನಡ ನಾಡಿನಲ್ಲಿ ಶೈವನಿಷ್ಠೆಯ ಮೇಲ್ಮೈಯನ್ನು ಪ್ರಸ್ತಾಪಿಸಿದ ವೀರ ಶಿವಭಕ್ತರಲ್ಲಿ ಗಣ್ಯ. ಕಾಲ 12ನೆಯ ಶತಮಾನದ ಉತ್ತರಾರ್ಧ. ಸೋಮನಾಥನ ಗಣಸಹಸ್ರನಾಮಾವಳಿಯಲ್ಲಿ ಇವನ ಹೆಸರಿದೆ. ಈತ ತನ್ನ ಪವಾಡಗಳನ್ನು ಮೆರೆದ ಸ್ಥಳ ಅಬಲೂರು. ಏಕಾಂತ ರಾಮಯ್ಯನ ಹೆಸರು ವೀರಶೈವ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಹೆಸರು. ಶಾಸನಗಳು ಮತ್ತು ಸಾಹಿತ್ಯ ಕೃತಿಗಳು ಈತನನ್ನು ಏಕಾಂತರಾಮ (ಅಬಲೂರು ಶಾಸನ), ಏಕಾಂತರಾಮೇಶ್ವರ (ಕೆಂಪನಪುರ ಶಾಸನ), ಏಕಾಂತದ ರಾಮಿತಂದೆ (ಸಕಲ ಪುರಾತನರ ವಚನಗಳು), ಏಕಾಂತ ರಾಮದೇವ (ಬಸವರಾಜ ವಿಜಯ, ಆಶ್ವಾಸ ೩೬, ಪದ್ಯ ೭೦), ಏಕಾಂತದ ರಾಮಪ್ರಭು (ಅದೇ, ಆಶ್ವಾಸ ೩೬, ಪದ್ಯ ೭೧), ಶೂಲಿಯೇಕಾಂತ ರಾಮಯ್ಯ (ಬಸವ ಪವಾಡ ಸಂ. ೩. ಪದ್ಯ ೧೬೩), ಏಕೋರಾಮಾಚಾರ್ಯ (ಹರದನಹಳ್ಳಿ ನಂಜಣಾರ್ಯನ ಏಕೋರಾಮೇಶ್ವರ ಪುರಾಣ) ಇತ್ಯಾದಿ ಹೆಸರುಗಳಿಂದ ಉಲ್ಲೇಖಿಸಿವೆ.

ಏಕಾಂತ ರಾಮಯ್ಯನ ಕಾಲ

   ಏಕಾಂತ ರಾಮಯ್ಯನು ಜೀವಿಸಿದ ಕಾಲದ ಬಗೆಗೆ ವಿಭಿನ್ನ ರೀತಿಗಳಲ್ಲಿ ಪ್ರತಿಪಾದಿಸಿದ್ದಾರೆ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ಬಸವೋತ್ತರ ಯುಗದಲ್ಲಿ ಈತನ ಕಾಲವನ್ನು ಗುರುತಿಸಿದ್ದಾರೆ. ಕವಿಚರಿತೆಕಾರರು ಈತನ ಕಾಲವನ್ನು ಕ್ರಿ.ಶ. ೧೧೬೦ ಎಂದು ಹೇಳಿದ್ದಾರೆ ಏಕಾಂತರಾಮಯ್ಯನನ್ನು ಕುರಿತ ಅಬಲೂರು ಶಾಸನದ ಕಾಲ ಕ್ರಿ.ಶ. ೧೨೦೦ ಎಂದು ಸಂಪಾದಕರು ಊಹಿಸಿದ್ದಾರೆ. ಅಬಲೂರು ಶಾಸನ ಮತ್ತು ಕವಿ ಚರಿತೆಕಾರರ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡರೆ ಏಕಾಂತ ರಾಮಯ್ಯನು ಕ್ರಿ.ಶ. ೧೨೦೦ಕ್ಕೆ ಪೂರ್ವದಲ್ಲಿ ಇದ್ದವನು ಎಂಬುದಾಗಿ ತಿಳಿದುಬರುತ್ತದೆ. ಎಷ್ಟು ಹಿಂದೆ ಇದ್ದ ಎಂಬುದನ್ನು ಗುರುತಿಸಬೇಕಾಗಿದೆ. ಕ್ರಿ.ಶ. ೧೧೮೪ರ ತಾಳಿಕೋಟೆ ಶಾಸನದಲ್ಲಿ 'ಪರಿಯಳಿಗೆ, ಅಣಿಲೆವಾಡ, ಉಣುಕಲ್ಲು, ಸಂಪಗಾವಿ, ಬಮ್ಮಕೂರು, ಅಬಲೂರು, ಮಾರುಡಿಗೆ, ಅಣಂಪೂರು, ಕರಹಾಡ, ಕೆಂಬಾವಿ, ಮೊದಲಾದ ಅನನ್ನ ದೇಶಾನ್ತರದಲಿದಿರಾದ ಪರಸಮಯಿಗಳಂ ಪಡಲ್ವಡ್ಲಿ ಲೋಕಮನಾಕಂಪಗೊಳ್ಳಿ ಬಸದಿಗಳನ್ನು ಹೊಸದು ಮುಕ್ತಿ ಶಿವಲಿಂಗ ಸಿಂಹಾಸನಮ(ಂ] ಕಡ್ಕೊಳ್ಳಿ ಚಲಮಂ ಮೆರೆದು ಧೀರರೊಳ್ ನೆರೆದು ತೋರಿದ ಪುರಾತನ ನೂತನರೆನಿಸಿದ ಅಸಂಖ್ಯಾತ ಗಣಂಗಳ....' ಉಲ್ಲೇಖ ಬರುತ್ತದೆ. ಈ ಶಾಸನದಲ್ಲಿ ಪುರಾತನ ನೂತನರೆನಿಸಿದ ಶರಣರ ಹೆಸರನ್ನು ಉಲ್ಲೇಖಿಸದೆ, ಅವರು ಎಸಗಿದ ಕಾರ್ಯದ ಅಥವಾ ಅವರಿದ್ದ ಸ್ಥಳಗಳ ಮೂಲಕ ಉಲ್ಲೇಖಿಸಿದೆ. ಏಕಾಂತ ರಾಮಯ್ಯನು ಅಬಲೂರಿನ ಜೈನಬಸದಿಯಲ್ಲಿ ಶಿವಲಿಂಗ ಸ್ಥಾಪಿಸಿದ ವಿವರ ಅಬಲೂರು ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ ಬಂದಿದೆ. ತಾಳಿಕೋಟೆ ಶಾಸನದಲ್ಲಿ ಬಂದಿರುವ ಅಬಲೂರು ಗ್ರಾಮವು ಏಕಾಂತ ರಾಮಯ್ಯನು ಪವಾಡ (ಸದೃಶ ಕ್ರಿಯೆ) ಎಸಗಿದ ಸ್ಥಳವೇ ಆಗಿದೆ. ಈ ಶಾಸನದ ಕಾಲ ಕ್ರಿ.ಶ. ೧೧೮೪ ಆದ್ದರಿಂದ ಈ ಕಾಲಕ್ಕಿಂತ ಪೂರ್ವದಲ್ಲಿ ರಾಮಯ್ಯನ ಈ ಘಟನೆ ನಡೆದಿರಬೇಕು. ಕುತೂಹಲಕರ ಸಂಗತಿ ಎಂದರೆ ಚನ್ನಬಸವಣ್ಣನವರ, ಮಡಿವಾಳ ಮಾಚಿದೇವರ, ಪ್ರಸಾದಿ ಭೋಗಣ್ಣನವರ ವಚನಗಳಲ್ಲಿ ಏಕಾಂತ ರಾಮಯ್ಯನ ಬಗೆಗೆ ಉಲ್ಲೇಖ ಇದೆ.

ʻಭಕ್ತಿಯ ಪ್ರಭಾವದಿಂದ ಏಕಾಂತರಾಮಯ್ಯನು ತನ್ನ ಹರಿದ ಶಿರವನ್ನು ಹಚ್ಚಿ ಮೆರೆದುದುʼ

ʻನಿರ್ವಾಚವಾಯಿತ್ತು ಬಸವಣ್ಣಂಗೆ ಕಪ್ಪಡಿಯ ಸಂಗಮಯ್ಯನಲ್ಲಿʼ

ʻಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತದ ರಾಮಯ್ಯ ಮೊದಲಾದ ಶಿವಗಣಂಗಳ ದಂಡು ನಡೆಯಿತ್ತು ಕೈಲಾಸಪುರಕ್ಕೆʼ

ʻಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದ ರಾಮ ಇಂತೀ ಪ್ರಥಮದ ಆಚಾರ್ಯರು ಇಟ್ಟ ಮತಂಗಳಿಂದ ಗುರುಸ್ಥಲ ಲಿಂಗಸ್ಥಲ ಉಭಯಮಾರ್ಗ......' 

ಹೀಗಾಗಿ ಏಕಾಂತ ರಾಮಯ್ಯನು ನಡೆಸಿದ ಪವಾಡ ಸದೃಶ ಕ್ರಿಯೆಯ ಉಲ್ಲೇಖ ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಪ್ರಸಾದಿ ಭೋಗಣ್ಣರ ವಚನಗಳು, ಅಬಲೂರು ಶಾಸನ, ತಾಳೀಕೋಟೆ ಶಾಸನಗಳಲ್ಲಿ ಬಂದಿರುವುದರಿಂದ ಏಕಾಂತ ರಾಮಯ್ಯನು ಕ್ರಿ.ಶ. ೧೧೨೦ ರಿಂದ ೧೧೯೦ರ ವರೆಗೆ ಜೀವಿಸಿದ್ದನೆಂದು ಸದ್ಯಕ್ಕೆ ಭಾವಿಸಬಹುದಾಗಿದೆ.

    ಏಕಾಂತ ರಾಮಯ್ಯನ ಜೀವನವನ್ನು ಶಾಸನಗಳು, ಕಾವ್ಯಗಳು, ಪುರಾಣ ಕೃತಿಗಳಿಂದ ಪುನಾರಚಿಸಬಹುದಾಗಿದೆ. ಈತನ ಚರಿತ್ರೆ ಹಲವಾರು ಮಾರ್ಪಾಡುಗಳನ್ನು ಹೊಂದಿರುವುದರ ಬಗೆಗೆ ಶಾಸನಗಳು ಮತ್ತು ವೀರಶೈವ ಸಾಹಿತ್ಯದಲ್ಲಿ ಗುರುತಿಸಬಹುದಾದರೂ ಮೂಲ ಉದ್ದೇಶಕ್ಕೆ ಎಲ್ಲಿಯೂ ವ್ಯತ್ಯಯ ಉಂಟಾಗಿಲ್ಲ. ಈತನ ಚರಿತ್ರೆಯನ್ನೊಳಗೊಂಡ ಶಾಸನ ಹಾಗೂ ಸಾಹಿತ್ಯ ಕೃತಿಗಳನ್ನು ಎರಡು ಭಾಗ ಮಾಡಬಹುದು.

೧. (ಅ) ರಾಮಯ್ಯನನ್ನು ಕುರಿತ ಸ್ವತಂತ್ರ ಶಾಸನಗಳು

೧. ಅಬಲೂರು ಶಾಸನ (ಕ್ರಿ.ಶ. ೧೨೦೦)

೨. ಬಂದಳಿಕೆ ಶಾಸನ (ಕ್ರಿ.ಶ. ೧೨೦೭)

೩. ಕೆಂಪನಪುರ ಶಾಸನ (ಕ್ರಿ.ಶ. ೧೫ನೇ ಶತಮಾನ)

(ಆ) ರಾಮಯ್ಯನನ್ನು ಪರೋಕ್ಷವಾಗಿ ಉಲ್ಲೇಖಿಸುವ ಶಾಸನಗಳು

೧. ಭೋಗಾವೆ ಶಾಸನ (ಕ್ರಿ.ಶ. ೧೨ನೇ ಶತಮಾನ)

೨. ಕುಡುತಿನಿ ಶಾಸನ (ಕ್ರಿ.ಶ. ೧೨೧೦)

೩. ಮರಡಿಪುರ ಶಾಸನ (ಕ್ರಿ.ಷ. ೧೨೮೦)

೪. ತಾಳಿಕೋಟೆ ಶಾಸನ (ಕ್ರಿ.ಶ. ೧೧೮೪)

     ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರು ಗ್ರಾಮದ ಸೋಮೇಶ್ವರ ದೇವಾಲಯದ ನವರಂಗದ ಎಡಪಕ್ಕದಲ್ಲಿ (ದ್ವಾರದ ಬಳಿ) ನಿಲ್ಲಿಸಿರುವ ೧೦೪ ಸಾಲಿನ ಈ ಶಾಸನವನ್ನು ಎಪಿಗ್ರಾಫಿಯಾ ಇಂಡಿಕಾದ ಐದನೆಯ ಸಂಪುಟದಲ್ಲಿ  ಜೆ.ಎಫ್.ಪ್ಲೀಟರು ಮೊದಲಿಗೆ ಪ್ರಕಟಿಸಿದರು. ಏಕಾಂತ ರಾಮಯ್ಯನ ಕಥೆಯನ್ನು ಸಾರುವ ಅಬಲೂರು ಶಾಸನವು ಪುಟ್ಟ ಚಂಪೂ ಕಾವ್ಯದಂತಿದೆ. ಈ ಶಾಸನವನ್ನು ರಚಿಸಿದವನು ಸೇನಾಪತಿಯಾದ ಕೇಶವರಾಜ ಚಮೂಪನು ಕವಿಪ್ರತಿಭೆಯುಳ್ಳವನಾಗಿದ್ದಾನೆ. ಅದನ್ನು ತಿದ್ದಿ ಸುಂದರವಾಗಿ ಕಲ್ಲಿನ ಮೇಲೆ ಬರೆದವನು ಈಶನ ದಾಸನಾದ ಶಿವಶರಣ ಸರಣ.

  ಏಕಾಂತರಾಮಯ್ಯನ ಚರಿತ್ರೆಯು ಅಬಲೂರು ಶಾಸನ, ಹರಿಹರನ ರಗಳೆ ಮತ್ತು ಅಬಲೂರು ಚರಿತೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದೊರಕುತ್ತದೆ. ವಿಶೇಷ ಸಂಗತಿ ಎಂದರೆ ರಾಮಯ್ಯನ ವಿವರದ ಬಗೆಗೆ ಅಬಲೂರು ಶಾಸನದಲ್ಲಿನ ಉಲ್ಲೇಖಕ್ಕೂ, ಸಾಹಿತ್ಯ ಕೃತಿಗಳಲ್ಲಿನ ಉಲ್ಲೇಖಕ್ಕೂ ಹೋಲಿಕೆ ಇದೆ. ಈ ರೀತಿ ಅನ್ಯಶರಣರನ್ನು ಕುರಿತ ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿನ ವಿವರದಲ್ಲಿ ಒಂದೇ ವಿವರ ಕಂಡು ಬರುವುದು ವಿರಳ.

ಅಬಲೂರು ಶಾಸನದಲ್ಲಿ ಏಕಾಂತರಾಮಯ್ಯನ ಬಗೆಗೆ ವ್ಯಕ್ತಗೊಂಡಿರುವ ವಿಷಯವನ್ನು ಕೆಳಕಂಡಂತೆ ವರ್ಗೀಕರಿಸಿಕೊಳ್ಳಬಹುದಾಗಿದೆ.

೧) ಏಕಾಂತರಾಮಯ್ಯನ ಹುಟ್ಟೂರಾದ ಅಲಂದೆಯ ವರ್ಣನೆ

೨) ಏಕಾಂತರಾಮಯ್ಯನ ಹುಟ್ಟು ಮತ್ತು ಅವನ ತಂದೆ-ತಾಯಿಗಳು

೩) ಏಕಾಂತ ರಾಮಯ್ಯನು ಅಬಲೂರಿಗೆ ಬಂದದ್ದು

೪) ಅಬಲೂರಿನ ಜೈನರೊಡನೆ ಏಕಾಂತರಾಮಯ್ಯನ ಜಗಳ ಮತ್ತು ಪವಾಡ

೫) ಬಿಜ್ಜಳನು ಏಕಾಂತರಾಮಯ್ಯನಿಗೆ ಜಯಪತ್ರ ನೀಡಿದುದು

೬) ಚಾಳುಕ್ಯ ಚಕ್ರವರ್ತಿ ಸೋಮೇಶ್ವರನಿಂದ ಏಕಾಂತರಾಮಯ್ಯನಿಗೆ ಗೌರವ

೭) ಕದಂಬ ಕಾಮದೇವರಸನಿಂದ ಏಕಾಂತರಾಮಯ್ಯನಿಗೆ ಗೌರವ

೮) ಏಕಾಂತರಾಮಯ್ಯನ ವ್ಯಕ್ತಿತ್ವ

 ಏಕಾಂತ ರಾಮಯ್ಯನ ಜನ್ಮಸ್ಥಳ ಅಲಂದೆ ಎಂಬುದು ಅಬಲೂರು ಶಾಸನದ ಸೊಗಯಿವುದಲನೆಯೆಂಬುದು ನಗರಂ ಚಲುವೆಸೆದು ಮತ್ತು ಅಬಲೂರು ಚರಿತ'ದ"ಚಪ್ಪನ್ನದೇಶದೊಳ್ಳುಳ್ಳ ಕರ್ಣಾಟಕ ವೊಪ್ಪಿರೆ ವಾಯುವ್ಯ ದೆಸೆಯೊ ಇಪ್ಪುದು ಅಲದಿಯ ಪುರುವೆಸೆದುದು"'ಎಂಬ ಹೇಳಿಕೆಗಳಿಂದ ವ್ಯಕ್ತವಾಗುತ್ತದೆ.  ಶಾಸನ ಕವಿಯು ಪಾರಂಪರಿಕವಾದ ಶಿವನ ಪ್ರಾರ್ಥನೆಯ ನಂತರ, ಸಮುದ್ರ ವರ್ಣನೆ, ಹಿಮಗಿರಿಯ ವರ್ಣನೆಗಳು ಬಂದು, ಕುಂತಲ ದೇಶದ ಅಲಂದೆ ನಗರದ ವರ್ಣನೆಯನ್ನು ಅತಿಶಯವಾಗಿಯೇ ವರ್ಣನೆ  ಮಾಡಿದ್ದಾನೆ. ಯಾವಾಗಲೂ ಸಮೃದ್ಧಿಯಾದ ಬೆಳೆಯಿಂದ ಧನ-ಜಲ ಸಂಪತ್ತಿನಿಂದ ಕೂಡಿದ ಅಲಂದೆ ನಗರ ಇಂದ್ರನ ಅಮರಾವತಿಯನ್ನು ಮೀರಿಸಿತ್ತು. ಆ ಅಮರಾವತಿಯಲ್ಲಿ ಸುಕೇಶಿ ಮತ್ತು ಮಂಜುಘೋಷೆ ಎಂಬ ಇಬ್ಬರು ಅಪ್ಸರೆಯರಿದ್ದಾರೆ. ಆದರೆ ಅಲಂದೆಯ ಎಲ್ಲ ಹೆಣ್ಣುಗಳೂ ಸುಕೇಶಿಯರಾಗಿದ್ದಾರೆ. ಮಂಜುಘೋಷೆಯಾಗಿದ್ದಾರೆ ಎಂದು ಕವಿ ಹೊಗಳಿದ್ದಾನೆ. ಗದ್ದೆಗಳಿಂದ. ಉದ್ಯಾನಗಳಿಂದ, ಸರೋವರಗಳಿಂದ, ಭಾವಿಗಳಿಂದ ಕೂಡಿದ. ಸಾರಸ, ದುಂಬಿ. ಗಿಣಿ, ಕೋಗಿಲೆಗಳ ನಾದದಿಂದ, ಗಣಿಕೆಯರ ವೀಣಾನಾದದಿಂದ ಕೂಡಿದ ಅಲಂದೆ ಶೋಭಿಸುತ್ತಿತ್ತು. ಅಲ್ಲಿನ ಸೋಮೇಶ್ವರ ದೇವಾಲಯದ ಕಾರಣದಿಂದ ಅದನ್ನು ಸೋಮನಾಥಪುರ ಎಂದೂ ಕರೆಯುತ್ತಿದ್ದರು.   ಅದು ಈಗಿನ ಗುಲಬರ್ಗಾ ಜಿಲ್ಲೆಗೆ ಇಪ್ಪತ್ತಮೂರು ಮೈಲಿ ದೂರದಲ್ಲಿ ಇರುವ ಆಳಂದವೇ ಆಗಿದೆ. ಈಗಿನ ಆಳಂದವು ಪ್ರಾಚೀನ ಕಾಲದಲ್ಲಿ ಕಲ್ಯಾಣದಷ್ಟೇ ಪ್ರಖ್ಯಾತಿಯನ್ನು ಪಡೆದಿತ್ತು. ಏಕಾಂತ ರಾಮಯ್ಯನು ಜನಿಸುವ ವೇಳೆಗೆ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಳಂದೆಯಲ್ಲಿ ಸೋಮನಾಥ ದೇವಾಲಯವು ಇದ್ದಿತು ಎಂಬುದು 

  ಅಬಲೂರು ಶಾಸನದ "ಅವತರಿಸಿರ್ದನಲ್ಲಿ ರಜತಾಚಳದಿಂ ಗಿರಿಜಾ ಸಮೇತಮುತ್ಸವದೊಳೆ ಸೋಮನಾಥನ್” ಎಂಬ ಹೇಳಿಕೆಗಳಿಂದ ತಿಳಿದುಬರುತ್ತದೆ. ಈಗಲೂ ಅಳಂದೆಯಲ್ಲಿ ಸೋಮನಾಥ ದೇವಾಲಯವಿದೆ. ಈಗಲೂ ಇದು ಪ್ರಮುಖ ದೇವಾಲಯವಾಗಿದ್ದು ಇದನ್ನು 'ಶಿವಶರಣ ಏಕಾಂತ ರಾಮಯ್ಯನ ಜನ್ಮಮಂದಿರ' ಎಂದು ಕರೆಯುತ್ತಾರೆ. ಆಲಯದಲ್ಲಿ ಸೋಮೇಶ್ವರ ಲಿಂಗವಿದೆ. ಲಿಂಗದ ಹಿಂಭಾಗದಲ್ಲಿ ಇತ್ತೀಚೆಗೆ ಏಕಾಂತ ರಾಮಯ್ಯನ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಏಕಾಂತ ರಾಮಯ್ಯನ ಮುಂದಿನ ಜೀವನದುದ್ದಕ್ಕೂ ಸೋಮನಾಥನಿಗೂ ಅವಿನಾಭಾವ ಸಂಬಂಧ ಉಂಟಾಗಿರುವುದನ್ನು ಗಮನಿಸಬಹುದು. ರಾಮಯ್ಯನ ಜನ್ಮಸ್ಥಳವಾದ ಅಲಂದೆಯ ಅಧಿದೈವ ಸೋಮನಾಥ. ಆತನು ತನ್ನ ಅನುಷ್ಠಾನದಿಂದ ಶಿವಪ್ರಸಾದ ಸಾಫಲ್ಯವನ್ನು ಸಂಪಾದಿಸಿದ ಪವಿತ್ರ ಕ್ಷೇತ್ರವಾದ ಹುಲಿಗೆರೆಯ ಇಷ್ಟದೈವವೂ ಸೋಮನಾಥ, ತನ್ನ ಶೈವಸಿದ್ಧಿಯ ಕಾರ್ಯಕ್ಷೇತ್ರವಾದ ಅಬಲೂರಿನಲ್ಲಿ ತನ್ನ ಮಾಹೇಶ್ವರ ನಿಷ್ಠೆಯ ಸ್ಮಾರಕವಾಗಿ ನಿರ್ಮಿಸಿದ ದೇವಾಲಯವೂ ವೀರಸೋಮೇಶ್ವರ ದೇವಾಲಯ, ಏಕಾಂತ ರಾಮಯ್ಯನಂತಹ ವೀರಮಾಹೇಶ್ವರ ನಿಷ್ಠನನ್ನು ಪಡೆದ ಅಲಂದೆಯು ಅಂಥ ಶರಣರನೆಲೆವೀಡಾಗಿದ್ದಿತು ಎಂಬಲ್ಲಿ ಅನುಮಾನವೇ ಇಲ್ಲ.

೨.ಏಕಾಂತರಾಮಯ್ಯನ ಹುಟ್ಟು ಮತ್ತು ಅವನ ತಂದೆ-ತಾಯಿಗಳು:

  ಆ ಸೋಮನಾಥಪುರದ (ಅಲಂದೆಯ) ಬ್ರಹ್ಮಪುರಿಯಲ್ಲಿ (ನಗರಗಳಲ್ಲಿ ಬ್ರಾಹ್ಮಣರು ವಾಸ ಮಾಡುವ ಭಾಗಕ್ಕೆ ಸಾಮಾನ್ಯವಾಗಿ ಇರುವ ಹೆಸರು) ಪುರುಷೋತ್ತಮನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ಪದ್ಮಾಂಬಿಕೆ. ಬಹಳಕಾಲ ಮಕ್ಕಳಿಲ್ಲದುದರಿಂದ 'ಮಕ್ಕಳಿಲ್ಲದೆ ಸದ್ದತಿಯಿಲ್ಲ' ಎಂಬ ಮಾತಿನಿಂದ, ಅವರು ಮಕ್ಕಳ ಆಸೆಯಿಂದ ಶಿವನನ್ನು ಪೂಜಿಸಿದರು. ಆ ಸಮಯದಲ್ಲಿ ನೆರೆದಿದ್ದ ಕೈಲಾಸದ ಶಿವನ ಸಭೆಗೆ ನಾರದನೆಂಬ ಗಣೇಶ್ವರನು ಬಂದು, ಜೈನ ಬೌದ್ದರಿಂದ ಶಿವಭಕ್ತಿಗೆ ಅಡಚಣೆಯಾಗಿದೆ ಎಂದು ತಿಳಿಸಿದ. ಆಗ ಶಿವನು, ವೀರಭದ್ರನಿಗೆ ʻನೀನು ನಿನ್ನ ಅಂಶದಲ್ಲಿ ಒಬ್ಬನನ್ನು ಭೂಲೋಕದಲ್ಲಿ ಹುಟ್ಟಿಸಿ ಪರಧರ್ಮಿಗಳನ್ನು ಹಿಡಿತದಲ್ಲಿಡು' ಎಂದು ಅಪ್ಪಣೆ ಮಾಡಿದನು. ಅದರಂತೆ ವೀರಭದ್ರನು ಪುರುಷೋತ್ತಮ ಭಟ್ಟರ ಕನಸಿನಲ್ಲಿ ಬಂದು ಜೈನರನ್ನು ಬಗ್ಗು ಬಡಿಯುವ ಒಬ್ಬ ಮಗ ನಿಮಗೆ ಹುಟ್ಟುತ್ತಾನೆ ಎಂದು ವರ ನೀಡಿ ಹೋದನು. ವರದಂತೆ ಪಡೆದ ಮಗನಿಗೆ ಪುರುಷೋತ್ತಮ ಭಟ್ಟರು ರಾಮನೆಂದು ಹೆಸರಿಟ್ಟರು.

 ಏಕಾಂತ ವಿಶೇಷಣ:  ರಾಮಯ್ಯನಿಗೆ ಏಕಾಂತ ಎಂಬ ವಿಶೇಷಣ ಬಂದುದರ ಬಗೆಗೆ ಅಬಲೂರು ಶಾಸನದಲ್ಲಿ ಸ್ಪಷ್ಟವಾದ ಉಲ್ಲೇಖ ಇದೆ.

ಏಕಾಗ್ರ ಭಕ್ತಿಯೋಗದಿ

ನೇಕಾಕಿಯೆನ ಸಂದು ಶಿವನು ಪಿರಿದ

ಪ್ಪೆಕಾಂತದೊಳಾರಾಧಿಸಿ

ಯೇಕಾಂತದ ರಾಮನೆಂಬ ಪೆಸರ[ಂ] ಪಡೆದಂ

ನೆಚ್ಚಿನ ಶಿವನನ್ನು ಏಕಾಗ್ರಚಿತ್ತತೆಯಿಂದ ಏಕಾಂತದಲ್ಲಿ ವಿಶೇಷವಾಗಿ ಆರಾಧಿಸಿದ್ದರಿಂದ ಏಕಾಂತ ವಿಶೇಷಣ ಪ್ರಾಪ್ತವಾಯಿತು ಎಂದಿದೆ. ರಾಮಯ್ಯನಿಗೆ ಪ್ರಾಪ್ತವಾದ ಏಕಾಂತ ವಿಶೇಷಣದ ಬಗೆಗೆ ಪಿ.ಬಿ. ದೇಸಾಯಿಯವರು 'ಏಕಾಂತ' ಎಂಬ ವಿಶೇಷಣವು ರಾಮಯ್ಯನಿಗೆ ಜೈನಮತದ ಮೇಲಿನ ಅವನ ವಿಜಯದ ನಂತರ ಬಂದಿರಬಹುದೆಂದು ಊಹಿಸಿ ಆ ವಿಶೇಷಣವು ಅವನ ಶಿವನಿಷ್ಠೆಯನ್ನು ಸೂಚಿಸುವುದರ ಜೊತೆಗೆ ಜೈನಮತದಲ್ಲಿನ ಅನೇಕಾಂತವಾದವನ್ನು ಗೆದ್ದುದಕ್ಕೆ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಯನ್ನು ಕೆಂಪನಪುರ ಶಾಸನವು ಸಮರ್ಥಿಸುತ್ತದೆ. ರಾಮಯ್ಯನನ್ನು ಸ್ತುತಿಸುತ್ತಾ 'ಅನೇಕಾಂತಾದಿ ವಿರುದ್ಧ ವಾಗ್ವಿಘಟನ ಪ್ರೌಢಪ್ರತಾಪೋಜ್ವಲ' ಎಂದು ಕೀರ್ತಿಸಿದೆ. ಒಟ್ಟಾರೆ ರಾಮಯ್ಯನು ಬಾಲ್ಯದಲ್ಲಿಯೇ ಶಿವನನ್ನು ಏಕಾಂತದಲ್ಲಿ ಆರಾಧಿಸಿದ್ದರಿಂದ, ಮುಂದೆ ಜೈನರ 'ಅನೇಕಾಂತವಾದ'ವನ್ನು ಮುರಿದಿದ್ದರಿಂದ ʻಏಕಾಂತ' ವಿಶೇಷಣವು ರಾಮಯ್ಯನ ಹೆಸರಿನ ಹಿಂದೆ ಬಂದಿರಬೇಕು. ಏಕಾಂತ ರಾಮಯ್ಯನುಶಿವಭಕ್ತಿಯಲ್ಲಿ ಏಕಾಗ್ರನಿಷ್ಠೆಯನ್ನು ಸಾಧಿಸಿಕೊಂಡಿದ್ದಾನೆ.

೩) ಏಕಾಂತ ರಾಮಯ್ಯನು ಅಬಲೂರಿಗೆ ಬಂದದ್ದು:

 ಶಾಸನದ ಪ್ರಕಾರ ಅನೇಕ ಶಿವಾಗಮೋಕ್ತ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಏಕಾಂತರಾಮಯ್ಯನು ದಕ್ಷಿಣ ಸೋಮನಾಥನ ವಾಸಸ್ಥಾನವಾದ ಪುಲಿಗೆರೆಗೆ ಬಂದು ಅಲ್ಲಿ ಸೋಮೇಶ್ವರನನ್ನು ಪೂಜಿಸುತ್ತಿರುವ ಸಮಯದಲ್ಲಿ ಶಿವನೇ ಪ್ರತ್ಯಕ್ಷನಾಗಿ ಹೀಗೆ ಆದೇಶ ನೀಡಿದನು.

ʻರಾಮ, ನನ್ನ ಆಜ್ಞೆಯಂತೆ ಅಬಲೂರಿಗೆ ಹೋಗು, ಅಲ್ಲಿ ಪೂಜೆ ಮಾಡಿಕೊಂಡಿರು. ಜೈನರಲ್ಲಿ ಕಲಹವುಂಟಾದಾಗ ಯಾವುದೇ ಹಿಂಜರಿಕೆಯಿಲ್ಲದೆ, ತಲೆಯನ್ನು ಪಣಕ್ಕೆ ಇಟ್ಟು ಜಯಶಾಲಿಯಾಗು', ಅದರಂತೆ ಏಕಾಂತ ರಾಮಯ್ಯನು ಅಬಲೂರಿಗೆ ಬಂದನು.

೪. ಅಬಲೂರಿನ ಜೈನರೊಡನೆ ಏಕಾಂತರಾಮಯ್ಯನ ಜಗಳ ಮತ್ತು ಪವಾಡ:

ಏಕಾಂತರಾಮಯ್ಯನು ಅಬಲೂರಿನ ಬ್ರಹ್ಮೇಶ್ವರ ದೇವಾಲಯದಲ್ಲಿ ಯಾವ ಗಲಾಟೆಯೂ ಇಲ್ಲದೆ ಪೂಜೆ ಮಾಡಿಕೊಂಡಿರುತ್ತಾನೆ. ಜೈನರು ಆ ಶಿವಾಲಯಕ್ಕೆ ಬಂದು (ಸಂಕಗೌಂಡನು ಅವರ ನಾಯಕ) ಬೇಡವೆಂದರೂ ಕೇಳದೆ, ಜಿನನೇ ದೇವರೆಂದು ಶಿವನ ಎದುರಿನಲ್ಲಿ ರಾಮಯ್ಯನನ್ನು ಕೆಣಕಿದರು. ʻಎನೆ ಜೈನರೆಂಗು ನೀಂ ಮುಂನಿನ ಹಿತರರ ಹೇಳಲೇಕೆ ನಿಂನಯ ಶಿರಮಂ ಜನಮಱೆಯಲರಿದು ಕೊಟ್ಟಾತನೊಳಿಂ ಪಡೆ ನೀನೆ ಭಕ್ತನಾತನೇ ದೇವಂ ಎನಲೇಕಾನ್ತದ ರಾಮಂ ಮನಸಿಜರಿಪುಗಿತ್ತು ತಲೆಯ ನಾಂ ಪಡೆದಡೆ ನೀವೆನಗೀವ ಪಣದಮದೇನೆನೆ ಮುನಿದೆಂದರ್ಜಿನನ ಕಿತ್ತು ಶಿವನಂ ನಿಲಿಪೆವು ಎನೆ ಕುಡುವುದೋಲೆಯಂ ನೀವನಗೆಂದಿತ್ತೋಲೆಗೊಂಡು ಶಿರಮಂತಾಂ ಭೋಂಕೆನಲರಿದು ಕುಡುವ ಪದದೊಳು ಶಿವನಂ ಸಾಂನಿಧ್ಯಮಾಡಿ ರಾಮಂ ನುಡಿಗಂ ಉಡುಗದೆ ಶಂಭುನೀನೆ ಶರಣೆಂನದಡಂ ಮನಮನ್ಯ ಭಾವದೊಳೊಡರ್ದಡಮೀಕೃಪಾಣಮುಖದಿಂ ತಲೆಹೋಗದೆ ನಿಲ್ಕದಲ್ಲದಿರ್ದ್ಹಡೆ ಶಿವ ನಿಂನ ಮುನ್ನಡಿಗುರುಳುಗೆನುತಂ ಕಲಿ ರಾಮನಾರ್ದ್ದು ಕೆಯ್ಗಿಡದರಿದಿಕ್ಕುಲುಂರಯಿಸಿದಂ ಶಿರಮಂ ಶಿವನಂಫ್ರಿಯುಗ್ಮದೊಳು ಅರೆಗಯಿ (ಗಾಯ್‌)ಗೊಂಡನೆ ಕಿತ್ತು ನೋಡಿದನೆ ಕೂರ್ಪಂಗಳುಕಿ ಮೆಯಿಗಯ್ದನೆ ಸೆರಗಂ ಪಾರ್ದ್ದನೆ ಬಾಳ್ಗೆ ಭಕ್ತರೆನುತಂ ಬಲ್ಲಾಳು ರಾಮಂ ಸ್ವಕಂಧರಮಂ ಚಕ್ಕನೆ ಹುಲ್ಲಕಟ್ಟನರಿವಂತಕೇಶದಿಂದಾಗಳಂ ತರಿದೀಶಾಂಘ್ರಿಯೊಳಿಕ್ಕಿ ಶಂಕರಗಣಕ್ಕಾನಂದವಂ ಮಾಡಿದಂʼ

ʻಅರಿದ ತಲೆ ಏಳುದೆವಸಂ 

ಬರೆಗಂ ಮೆಱೆದಿಂ ಬಳಿಕ್ಕವಿತ್ತಂ ಹರನಾ 

ದರದಿಂ ತಲೆಕಲೆಯಿಲ್ಲದೆ 

ತಿರವಾದುದು ಲೋಕವಱೆಯೆ ರಾಮಂ ಪಡೆದಂʼ

 'ಶಿವನ ಸನ್ನಿಧಿಯಲ್ಲಿ ಅನ್ಯ ದೈವವನ್ನು ಹೊಗಳಲಾಗದು ಹೋಗಿ' ಎಂದು ರಾಮಯ್ಯನು ಹೇಳಿದರೂ ಕೇಳದೆ ವಾದ ಮಾಡಿದರು. ಜಗತ್ತನ್ನು ಸೃಷ್ಟಿ ಮಾಡುವವನು, ಆಪತ್ಕಾಲದಲ್ಲಿ ಕಾಪಾಡುವವನು, ಕೋಪ ಬಂದರೆ ಸಂಹಾರ ಮಾಡುವವನು-ಶಂಭು: ಅವನಿರುವಾಗ ಬೇರೆ ಬೇರೆ ಜನ್ಮಗಳಲ್ಲಿ ಸಂಸಾರದ ಸಂಕಟದಲ್ಲಿ ಸಿಲುಕಿ ಕೊನೆಗೆ ತಪಸ್ಸಿಗೆ ಹೋಗಿ ಸುಖವನ್ನು ಪಡೆದ ಜಿನನು ದೇವನೆ ಎಂದು ರಾಮಯ್ಯನೂ ಟೀಕಿಸಿದ. ನಮ್ಮ ಶಿವನಂತೆ ನಿಮ್ಮ ಅರ್ಹಂತನು ವರಕೊಡುತ್ತಾನೆಯೇ. ಹಿಂದೆ ಅನೇಕ ಶಿವಭಕ್ತರು ಶಿವನಿಂದ ವರಗಳನ್ನು ಪಡೆದಿದ್ದಾರೆ ಎಂದ. ಆಗ ಜೈನರು ʻಹಿಂದಿನವರ ಕಥೆಯನ್ನು ಹೇಳುವುದೇಕೆ ನಿನ್ನ ತಲೆಯನ್ನು ಕಡಿದು-ಕೊಟ್ಟು, ಶಿವನಿಂದ ಮತ್ತೆ ತಿರುಗಿ ಪಡೆದರೆ, ನೀನೇ ಭಕ್ತ, ಅವನೇ ದೇವರು ಎಂದು ಸವಾಲು ಹಾಕಿದರು.

ʻನಾನು ಹಾಗೆ ಮಾಡಿ ತಲೆಯನ್ನು ಮತ್ತೆ ಪಡೆದರೆ ನೀವು ಇಡುವ ಪಣವೇನು' ಎಂದ ರಾಮಯ್ಯನ ಮಾತಿಗೆ ಜೈನರು ಕೋಪದಿಂದ 'ಜಿನನನ್ನು ಕಿತ್ತು ಶಿವನನ್ನು ಸ್ಥಾಪಿಸುತ್ತೇವೆ' ಎಂದರು. ಹಾಗೆಯೇ ರಾಮಯ್ಯನು ಅವರಿಂದ ಓಲೆಯನ್ನು ಬರೆಸಿಕೊಂಡು, ಶಿವನನ್ನು ಧ್ಯಾನಿಸುತ್ತ, ಹುಲ್ಲಕಟ್ಟನ್ನು ಕತ್ತರಿಸುವಂತೆ, ಅನುಮಾನವಿಲ್ಲದೆ ತಲೆಯನ್ನು ಕತ್ತರಿಸಿಕೊಂಡನು. ಹಾಗೆ-ಕತ್ತರಿಸಿಕೊಂಡ ತಲೆ ಏಳುದಿನಗಳ ಬಳಿಕ, ಶಿವನ-ಕರುಣೆಯಿಂದ ಮತ್ತೆ ಅವನ ಶರೀರದ ಮೇಲೆ ಕತ್ತರಿಸಿಕೊಂಡ ಗುರುತೂ ಇಲ್ಲದಂತೆ ಸ್ಥಿರವಾಯಿತು. ಇದರಿಂದ ಆಶ್ಚರ್ಯಗೊಂಡ ಜೈನರೆಲ್ಲ 'ಜಿನಪ್ರಳಯ' ಮಾಡಬೇಡವೆಂದು ಕಾಲು ಹಿಡಿದು ಕೇಳಿಕೊಂಡರೂ ಸುಮ್ಮನಿರದೆ ಜಿನನ ತಲೆಯನ್ನು ಒಡೆದು ಹಾಕಿದ ರಾಮಯ್ಯ. ಈ ಪ್ರಸಂಗವನ್ನೇ ಸೋಮೇಶ್ವರ ದೇವಾಲಯದ ಜಾಲಂದ್ರ ಶಿಲ್ಪ ಮತ್ತು ಲಘುಬರಹಗಳು ನಿರೂಪಿಸುತ್ತವೆ. ಏಕಾಂತದ ರಾಮಯ್ಯನು ಜೈನಬಸದಿಯನ್ನೊಡೆದು ಶೈವವಿಗ್ರಹಗಳನ್ನು ಪ್ರತಿಷ್ಠಾಪಿಸಿದ ವಿಷಯವನ್ನು ಪ್ರಸ್ತಾಪಿಸಿರುವುದಲ್ಲದೆ,ಅವನು ಬಸದಿಯ ಯಾವ ಯಾವ ಸ್ಥಾನಗಳಲ್ಲಿ ಸಾಹಸಕಾರ್ಯಗಳನ್ನು ಮಾಡಿದ ಎಂಬುದನ್ನು ಶಿಲ್ಪದಲ್ಲಿ ಚಿತ್ರಿಸಿ ಕೆಳಗೆ ಆ ಚಿತ್ರಗಳಿಗೆ ಸರಿಹೊಂದುವ ಮಾಹಿತಿಗಳನ್ನು ಲಿಪಿಗಳಲ್ಲಿ ಕೆತ್ತಲಾಗಿದೆ.

ಅಬಲೂರು ಸೋಮೇಶ್ವರದೇವಾಲಯದಲ್ಲಿ ಚಿತ್ರ ಹಾಗೂ ಆ ಚಿತ್ರದ ಮಾಹಿತಿಯು ಈ ರೀತಿ ಇದೆ.

೧. ಶ್ರೀ ಬ್ರಹ್ಮೇಶ್ವರ ದೇವರಲ್ಲಿ ಏಕಾಂತದ ರಾಮಯ್ಯಂ ಬಸದಿಯ ಜಿನನೊಡ್ಡವಾಗಿ

ತಲೆಯನರಿದು ಹರಿದ ಠಾವು.

೨. ಸಂಕಗಾವುಂಡನೊಡೆಯಲೀಯದೆ ಆಳುಂ ಕುದುರೆಯನ್ನೊಡ್ಡಿರಲು ಏಕಾಂತದ

ರಾಮಯ್ಯ ಕಾದಿ ಗೆಲ್ದು ಜಿನನನೊಡೆದು ಲಿಂಗ ಪ್ರತಿಷ್ಠೆಯಂ ಮಾಡಿದ ಠಾವು

೩. ಶ್ರೀಮದೇಕಾಂತದ ರಾಮಯ್ಯಮಗೆ ಸಂಕಗಾವುಂಡನೋಲೆಯಂ ಕುಡುವ ಠಾವು

  ಜಿನನನ್ನು ಉಳಿಸಲು ಜೈನರು ಸೈನ್ಯವನ್ನು ತೆಗೆದುಕೊಂಡು ಬಂದರೂ ಲೆಕ್ಕಿಸದೆ ಬಾಳೆಯ ವನವನ್ನು ಕಾಡಾನೆ ಪ್ರವೇಶಿಸಿದ ಹಾಗೆ ನುಗ್ಗಿ, ಸೈನಿಕರೆಲ್ಲ ʻಜೈನರ ಮಾರಿ ಬಂದುದು' ಎಂದು ಕೂಗುತ್ತಾ ಓಡಿಹೋಗುವಂತೆ ಮಾಡಿ, ಜಿನನನ್ನು ಒಡೆದು ಹಾಕಿ. ರಾಮಯ್ಯನು ಸೋಮೇಶ್ವರನನ್ನು ಅಲ್ಲಿ ಪ್ರತಿಷ್ಠೆ ಮಾಡಿದ. ಈ ಅದ್ಭುತವನ್ನು ಕಂಡ ಜೈನರು ದಿಗ್ಭ್ರಾಂತರಾದರು. ರಾಮಯ್ಯ ತನ್ನ ಪ್ರತಿಜ್ಞೆಯಂತೆ ಜಿನನನ್ನು ಧ್ವಂಸಮಾಡಲು ಮುಂದುವರಿದ. ಆತನನ್ನು ವಿರೋಧಿಸಿದ ಜೈನರೆಲ್ಲರೂ ಸೋತು ಶರಣಾಗತರಾಗಿ ರಾಮಯ್ಯನಿಗೆ ಜಯಪತ್ರವನ್ನು ಬರೆದುಕೊಟ್ಟು ಶೈವಧರ್ಮಾವಲಂಬಿಗಳಾದರು.

೫) ಬಿಜ್ಜಳನು ಏಕಾಂತರಾಮಯ್ಯನಿಗೆ ಜಯಪತ್ರ ನೀಡಿದುದು:

  ಜೈನರು ಬಿಜ್ಜಳನ ಬಳಿಗೆ ಹೋಗಿ ರಾಮಯ್ಯನ ಮೇಲೆ ದೂರು ಹೇಳಿದರು. ಕೋಪದಿಂದ ಬಿಜ್ಜಳನು ರಾಮಯ್ಯನನ್ನು ಕರೆಸಿ, ನೀನು ಈ ಅನ್ಯಾಯವನ್ನೇಕೆ ಮಾಡಿದೆ ಎಂದಾಗ ಜೈನರು ಕೊಟ್ಟ ಓಲೆಯನ್ನು ತೋರಿಸಿದ. ಅವರು ಕೊಟ್ಟ ಓಲೆಯನ್ನು ನೀನು ಗಮನಿಸು ಈಗ, ಅದನ್ನು ನಿನ್ನ ಭಂಡಾರದಲ್ಲಿಡು. ಇನ್ನು ಬೇಕಾದರೆ, ನನ್ನ ತಲೆಯನ್ನು ಕತ್ತರಿಸಿಕೊಡುತ್ತೇನೆ. ಅವರು ಅದನ್ನು ಸುಡಲಿ. ಬಳಿಕ ನಾನು ತಲೆಯನ್ನು ಮತ್ತೆ ಪಡೆಯುತ್ತೇನೆ. ಅದಕ್ಕೆ ಅವರು ಆನೆಸೆಜ್ಜೆಯ ಬಸದಿ ಮುಂತಾದ ೮೦೦ ಬಸದಿಗಳ ಜಿನರನ್ನು ಪಣವಾಗಿ ಒಡ್ಡಲಿ ಎಂದು ಸವಾಲೆಸೆದನು. ಬಿಜ್ಜಳನು ಈ ಕೌತುಕವನ್ನು ನೋಡೋಣ ಎಂದು ಆ ಬಸದಿಗಳ ಪಂಡಿತರನ್ನು ಜೈನರನ್ನು ಕರೆಸಿಕೊಂಡು, ನಿಮಗೆ ಧೈಯವಿದ್ದರೆ ಬಸದಿಗಳನ್ನು ಪಣವಾಗಿಟ್ಟು ಓಲೆಯನ್ನು ಬರೆದುಕೊಡಿ ಎಂದ. ಜೈನರು ಆಗ ಜೈನರು ಬಸದಿಯನ್ನು ಒಡೆದದ್ದಕ್ಕೆ ದೂರು ಕೊಡಲು ಬಂದೆವೆ ಹೊರತು ಜಿನಪ್ರಳಯವನ್ನು ಮಾಡಲು ಬಂದವರಲ್ಲ ಎಂದು ಹೇಳಿದರು.ಇಲ್ಲಿ ಜೈನಧರ್ಮದ ಶರಣಾಗತ ಸ್ಥಿತಿಯನ್ನು ಕಾಣಬಹುದಾಗಿದೆ. ‘ನೀವು ಇನ್ನು ಉಸಿರೆತ್ತದೆ ಹೋಗಿ’ ಎಂದು ಬಿಜ್ಜಳನು ನಗುತ್ತಾ ಜೈನರನ್ನು ಕಳುಹಿಸಿಕೊಟ್ಟು ಏಕಾಂತ ರಾಮಯ್ಯನಿಗೆ ಜಯಪತ್ರವನ್ನು ನೀಡಿದನು. ಬಿಜ್ಜಣದೇವನು ʻರಾಮಯ್ಯಂಗಳ್ ಮಾಡಿದ ಪರಮ ಸಾಹಸಕಂ ನಿರತಿಶಯಮಪ್ಪ ಮಾಹೇಶ್ವರ ಭಕ್ತಿಗಂ ಮೆಚ್ಚಿ ವೀರಸೋಮನಾಥ ದೇವರ ದೇಗುಲದ ಮಾಟಕೂಟ ಪ್ರಾಕಾರ ಖಣ್ಡಸ್ಫುಟಿತ ಜೀರ್ಣ್ನೋದ್ಧಾರಕ್ಕಂ ದೇವರಂಗಭೋಗ ನೈವೇದ್ಯಕ್ಕಂ ಬನವಾಸೆ ಪನಿರ್ಚ್ಛಾಸಿರದ ಕಂಪಣ೦ ಸತ್ತಳಿಗೆಯೆಪ್ಪತ್ತಱ ಮಂನೆಯ ಚ[ಟ್ಟ]ರಸನುಮಾ ಕoಪಣದಗ್ರಾಯಿತ ಪ್ರಭು ಗೌಣ್ಡುಗಳಂ ಮುಂದಿಟ್ಟು ಶ್ರೀಮದು ಬಿಜ್ಜಣದೇವ[ಂ] ಸತ್ತಳಿಗೆಯೆಪ್ಪತ್ತರೊಳಗೆ ಮಳುಗುಂದದಿಂ ತೆಂಕಣ ಗೋಗಾವೆಯೆಂಬ ಗ್ರಾಮಮಂ ಪ್ರಸಿದ್ಧ ಸೀಮಾಸಹಿತಂ ತ್ರಿಭೋಗಮಂ ಶ್ರೀಮದೇಕಾನ್ತದ ರಾ[ಮ]ಯ್ಯಂಗಳ ಕಾಲಂಕರ್ಚ್ಚಿ ಧಾರಾಪೂರ್ವ್ವಕಂ ಮಾಡಿಕೊಟ್ಟು ಪ್ರತಿಪಾಳಿಸಿದಂ; ಎಂಬ ವಿವರದ ಪ್ರಕಾರ ರಾಮಯ್ಯನ ಪಾದಗಳನ್ನು ತೊಳೆದು ಸತ್ತಳಿಗೆ-೭೦ ರ ಮಳುಗುಂದ ಗ್ರಾಮದ ದಕ್ಷಿಣ ದಿಕ್ಕಿನಲ್ಲಿರುವ ಗೋಗಾವೆ ಎಂಬ ಗ್ರಾಮವನ್ನು ದತ್ತಿಯಾಗಿ ನೀಡಿದನು.

 ಬಿಜ್ಜಳನ ಶಾಸನದ ಈ ಭಾಗದಲ್ಲಿ ಬಿಜ್ಜಳನ ಶೌರ್ಯವನ್ನು, ಬಿರುದುಗಳನ್ನು ಹೊಗಳಲಾಗಿದೆ. ಅಗಸ್ಯನು ಕೊಡದೊಳಗೆ ಹುಟ್ಟಿ, ಸಮುದ್ರವನ್ನು ಕುಡಿದ. ಕಳಚೂರ್ಯರೊಳಗೆ ಹುಟ್ಟಿ, ಚಾಳುಕ್ಯ ವಂಶವೆಂಬ ಸಮುದ್ರವನ್ನು ಕುಡಿದ ಶೌರ್ಯ ಸಜ್ಜನ ಬಿಜ್ಜಳನದು ಎಂದು ಕವಿ ಹೊಗಳಿದ್ದಾನೆ. ಚಾಳುಕ್ಯರ ವಂಶವನ್ನು ನಾಶಮಾಡಿದ ಎಂದು ಹೇಳಿದ ಮೇಲೂ ಶಾಸನ ಬಿಜ್ಜಳನನ್ನು ಮಹಾ ಮಂಡಳೇಶ್ವರ ಎಂದೇ ಕರೆದಿದೆ. ಬಿಜ್ಜಳನಿಗಿದ್ದ ಕದನ ಪ್ರಚಣ್ಡಂ। ಮೊನೆಮುಟ್ಟೆ ಗಂಡಂ| ಸುಭಟರಾದಿತ್ಯಂ। ಕಲಿಗಳಂಕು[ಶ]ಂ| ಗಜಸಾಮನ್ತ ಶರಣಾಗತ ವಜ್ರಪಂಜರಂ, ಪ್ರತಾಪ ಲಂಕೇಶ್ವರಂ, ಪರನಾರೀಸಹೋದರಂ, ಶನಿವಾರಸಿದ್ಧಿ, ಗಿರಿದುರ್ಗ್ಗಮಲ್ಲಂ, ಚಲದಂಕರಾಮಂ, ನಿಶ್ಯಂಕಮಲ್ಲನಿತ್ಯಖಿಳನಾಮಾದಿ ಸಮಸ್ತ ಪ್ರಶಸ್ತಿ ಸಹಿತ ಬಿರುದುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

೬. ಚಾಳುಕ್ಯ ಚಕ್ರವರ್ತಿ ಸೋಮೇಶ್ವರನಿಂದ ಏಕಾಂತರಾಮಯ್ಯನಿಗೆ ಗೌರವ- ಮನ್ನಣೆ:

   ಕಲ್ಯಾಣದ ಚಾಲುಕ್ಯರ ನಾಲ್ಕನೆಯ ಸೋಮೇಶ್ವರನ ಕಾಲದಲ್ಲಿ ರಾಮಯ್ಯನಿಗೆ ಗೌರವ ಸಂದ ವಿವರವನ್ನು ಶಾಸನದಲ್ಲಿ ೬೧ನೇ ಸಾಲಿನಿಂದ ೮೦ ಸಾಲಿನವರೆಗೆ ಕಾಣಬಹುದು. ತೈಲಪದೇವಂಗೆ ಸತ್ಯಾಶ್ರಯದೇವನೆಂಬ ಮಗಂ ಪುಟ್ಟಿದಂ ತತ್ತನಯಂ ವಿಕ್ರಮದೇವಂ, ತದನುಜಂ ದಶವರ್ಮ್ಮದೇವನಾತನ ಮಗಂ ಜಯಸಿಂಗರಾಯನಾತನ ಮಗನಾಹವಮಲ್ಲನಾತನ ಮಗಂ ತ್ರಿಭುವನಮಲ್ಲ ಪೆರ್ಮಾಡಿರಾಯನಾತನ ಮಗಂ ಭೂಲೋಕಮಲ್ಲ ಸೋಮೇಶ್ವರದೇವನಾತನ ಮಗಂ ಪ್ರತಾಪ ಚಕ್ರವರ್ತಿ ಜಗದೇಕಮ[ಲ್ಲ]ನಾತನ [ತಮ್ಮಂ] ತ್ರೈಲೋಕ್ಯಮಲ್ಲ ನೂರ್ಮಡಿ ತೈಲಪನಾತನ ಮಗಂ ತ್ರಿಭುವನಮಲ್ಲ ಸೋಮೇಶ್ವರದೇವನಾತನ ಪರಾಕ್ರಮ ಪ್ರಭಾವಮೆಂತೆಂದಡೆ ಎಂಬುದಾಗಿ ಸಂಕ್ಷಿಪ್ತವಾಗಿ ಕಲ್ಯಾಣಚಾಲುಕ್ಯರ ವಂಶವೃಕ್ಷವನ್ನು ಕೊಡುತ್ತಾ ಶಾಸನದಲ್ಲಿ ಸೋಮೇಶ್ವರನ ಶೌರ್ಯವನ್ನು ವರ್ಣಿಸಲಾಗಿದೆ. ಕಳಚೂರ್ಯರನ್ನು ಮೂಲೆಗೊತ್ತಿ ಮತ್ತೆ ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಸೋಮೇಶ್ವರನಿಗೆ ಸಹಾಯ ಮಾಡಿದ ಕುಮಾರ ಬಮ್ಮಯ್ಯನ ಉಲ್ಲೇಖವೂ ಈ ಭಾಗದಲ್ಲಿದೆ. ಆ ಬಮ್ಮರಸನನ್ನು ಶಾಸನ 'ಚಾಲುಕ್ಯರಾಜ್ಯ ಪ್ರತಿಷ್ಠಾಪಕ' ಎಂದೇ ಕರೆದಿದೆ. ಚಾಳುಕ್ಯರಾಜ್ಯ ಪ್ರತಿಷ್ಠಾಪಕನಪ್ಪ ಕುಮಾರ ಬಮೈಯನುಂ ತಾನುಂ ಸಲೆಯಹಳ್ಳಿಯ ಕೊಪ್ಪದೊಳ್ ಸುಖಸಂಕಥಾ ವಿನೋದದಿನಿರ್ದ್ದೊಂದು ದೆವಸಂ ಧರ್ಮ್ಮಗೋಷ್ಠಿಯೊಳಿರ್ದ್ದು ಪುರಾತನ ನೂತನರಪ್ಪ ಶಿವಭಕ್ತರ ಗುಣಸ್ತವನಂ ಮಾಡುತ್ತಮಿರ್ದೇಕಾನ್ತದ ರಾಮಯ್ಯಂಗಳಬ್ಬಲೂರಲಿದ್ದಲ್ಲಿ ಜೈನರೆಲ್ಲಂ ನೆರೆದು ಬಂದು ಮಹಾವಿವಾದಮಂ ಮಾಡಿ ನೀಂ ತಲೆಯನರಿದುಕೊಂಡು ಶಿವನ ಕೈಯೊಳ್ಪಡದೆಯಪ್ಪಡೆ ಜಿನನನೊಡೆದು ಶಿವನಂ ಪ್ರತಿಷ್ಠೆ ಮಾಡುವೆವೆಂದೊಡ್ಡಮನೊಡ್ಡಿಯೋಲೆಯಂ ಕೊಟ್ಟಡವರು ಕೊಟ್ಟೋಲೆಯಂ ಕೊಂಡು ತಂನ ತಲೆಯನರಿದುಕೊಂಡು ಶಿವಂಗೆ ಪೂಜೆ ಮಾಡಿ ಬಳಿಕಾ ತಲೆಯಂ ಏಳು ದಿವಸಕೆ ಮುನ್ನಿನನ್ತೆ ತಲೆಯಂ ಪೊಲೆವೀೞವನ್ತು ಪಡೆದು ಬಿ[ಜ್ಜ]ಣದೇವನ ಕೈಯ್ಯಲು ಜಯಪತ್ರವಂ ಪೂಜೆ ಸಹಿತಂ ಕೊಂಡುದುಮಂ ಜಿನನನೊಡೆದು ಬಸದಿಯನಳಿದು ಬಿಸುಟು ನೆಲನಂ ಖಂಡಿಸಿ ವೀರಸೋಮನಾಥದೇವರಂ ಪ್ರತಿಷ್ಠೆ ಮಾಡಿ ಶಿವಾಗಮೋಕ್ತಮಾಗೆ ಪರ್ವತ ಪ್ರಮಾಣದ ದೇಗುಲಮಂ ತ್ರಿಕೂಟಮಾಗೆ ಮಾಡಿಸಿದರೆಂಬುದಂ ಕೇಳ್ದು ತ್ರಿಭುವನಮಲ್ಲ ಸೋಮೇಶ್ವರದೇವಂ ವಿಸ್ಮಯಂಬಟ್ಟು ನೋಡುವರ್ತ್ತಿಯಿಂ ಬಿನ್ನವತ್ತಳೆಯಂ ಬರೆಯಿಸಿ ಬರಿಸಿಯವರನಿದಿಗೊ[೯]ಂಡು ತನ್ನ ಮನೆಗೊಡಗೊಣ್ಡುಪೋಗಿ ಪಿರಿದುಂ ಸತ್ಕಾರದಿಂ ಪೂಜಿಸಿ ಶ್ರೀಮದ್ ವೀರಸೋಮನಾಥ ದೇವರ ದೇಗುಲದ ಮಾಟಕೂಟ ಪ್ರಾಕಾರ ಖಂಡ ಸ್ಫುಟಿತ ಜೀರ್ಣ್ನೋದ್ಧಾರಕ್ಕಂ ದೇವರ ಅಂಗಭೋಗ ರಂಗಭೋಗ ನೈವೇದ್ಯಕ್ಕಂ ಬನವಾಸೆ ಪನಿರ್ಚ್ಛಾಸಿರದ ಕಂಪಣಂ ನಾಗರಖಂಡವೆಪ್ಪತ್ತಱೊಳಗಣ ಅಬಲೂರನಾ ದೇವರ್ಗ್ಗಾವೂರಾಗಲ್ ವೇಳ್ಕುಮೆಂದು ಪರಮಭಕ್ತಿಯಿಂದಾ ಕಂಪಣದ ಮನ್ನೆಯ ಮಲ್ಲಿದೇವನಂ ಮುಂದಿಟ್ಟಾವೂರ ಮೇಲಾಳಿಕೆ ಮನ್ನೆಯ ಸುಂಕ ದಂಡ ದೋಷ ನಿಧಿ ನಿಕ್ಷೇಪ ಸಹಿತವಾಗಿ ಏಕಾನ್ತದ ರಾಮಯ್ಯಂಗಳ ಕಾಲಂಕರ್ಚ್ಚಿ ಪೂರ್ವ್ವ ಪ್ರಸಿದ್ಧ ಸೀಮಾಸಹಿತಂ ತ್ರಿಭೋಗಸಹಿತಂ ಧಾರಾಪೂರ್ವಕಂ ಮಾಡಿ ಪಾರಮೇಶ್ವರ ದತ್ತಿಯಾಗೆ ತಾಂಬ್ರಶಾಸನಮಂ ಕೊಟ್ಟಾನೆಯನೇಱಿಸಿ ಮೆಱೆಯಿಸಿ ಪರಮ ಭಕ್ತಿಯಿಂ ಪ್ರತಿಪಾಳಿಸಿದಂ ಎಂಬ ವಿವರದ ಪ್ರಕಾರ ಕುಮಾರ ಬಮ್ಮಯ್ಯನ ಜೊತೆಯಲ್ಲಿ ಸಲೆಯಹಳ್ಳಿ ಕೊಪ್ಪದಲ್ಲಿ ಬೀಡು ಬಿಟ್ಟಿದ್ದಾಗ, ಸೋಮೇಶ್ವರನಿಗೆ ರಾಮಯ್ಯನು ಮಾಡಿದ ಪವಾಡದ ವಿಚಾರ ತಿಳಿಯುತ್ತದೆ. ಆಗ ಅವನು ರಾಮಯ್ಯನನ್ನು ಬರಮಾಡಿಕೊಂಡು ಅರಮನೆಯಲ್ಲಿ ಸತ್ಕರಿಸಿ, ವೀರ ಸೋಮನಾಥದೇವರಿಗೆ 'ಪಾರಮೇಶ್ವರ ದತ್ತಿ'ಯಾಗಿ ಅಬಲೂರು ಗ್ರಾಮವನ್ನು ಕೊಟ್ಟು ಆನೆಯ ಮೇಲೆ ಕೂರಿಸಿ ಮೆರೆಸಿದ. (ಬನವಾಸಿ ೧೨೦೦೦ದ ಕಂಪಣವಾದ ನಾಗರಖಂಡ ೭೦ ರ ಗ್ರಾಮ ಅಬಲೂರು)

೭.ಕದಂಬ ಕಾಮದೇವರಸನಿಂದ ಏಕಾಂತರಾಮಯ್ಯನಿಗೆ ಗೌರವ:

ಈ ಶಾಸನದಲ್ಲಿ ಹಾನಗಲ್ಲ ಕದಂಬ ದೊರೆ ಕಾಮದೇವರಸನು ಏಕಾಂತರಾಮಯ್ಯನಿಗೆ ಗೌರವ ಸಲ್ಲಿಸುವ ವಿವರದಲ್ಲಿ ಹಾನಗಲ್ಲ ಕದಂಬರ ಅರಸರ ಬಗೆಗೆ ಕೆಲವೊಂದ ವಿವರಗಳು ಕಂಡು ಬರುತ್ತವೆ. ಮಹಾಮಣ್ಡಳೇಶ್ವರಂ ಬನವಾಸಿ ಪುರವರಾಧೀಶ್ವರಂ ಜಯನ್ತೀ ಮಧುಕೇಶ್ವರದೇವಲಬ್ಧ ವರಪ್ರಸಾದಂ ವಿದ್ವಜ್ಜನಾರ್ಹ್ಲಾದಂ ಮಯೂರವರ್ಮ್ಮ ಕುಲಭೂಷಣಂ ಕಾದಂಬ ಕಂಣ್ಠೀರವಂ ಕದನ ಪ್ರಚಣ್ಡಂ ಸಾಹಸೋತ್ತುಂಗಂ ಕಲಿಗಳಂಕುಶಂ ಸತ್ಯರಾಧೇಯಂ ಶರಣಾಗತ ವಜ್ರಪಂಜರಂ ಯಾಚಕ ಕಾಮಧೇನುವಿತ್ಯಖಿಳ ನಾಮಾವಳಿ ಸಹಿತನಪ್ಪ ಶ್ರೀಮನ್ಮಹಾಮಣ್ಡಳೇಶ್ವರಂ ಕಾಮದೇವರಸರ್ಪ್ಪಾನುಂಗಲ್ಲೈನೂಱುವಂ ದುಷ್ಟನಿಗ್ರಹ ಶಿಷ್ಟ ಪ್ರತಿಪಾಳನದಿನಾಳುತ್ತಮಿರ್ದಬ್ಬಲೂರ ವೀರ ಸೋಮನಾಥ ದೇವರಂ ಬಂದು ಕಣ್ಡು ರಾಮಯ್ಯಂಗಳ್ ಶಿವಾಗಮ ವಿಧಾನದಿಂ ಮಾಡಿಸಿದ ಪರ್ವತೋಪ ಮಾನಮಪ್ಪ ದೇಗುಲಮಂ ಕಣ್ಡವರು ಮಾಡಿದ ಸಾಹಸಮಂ ಸವಿಸ್ತರಂ ಕೇಳ್ದು ಮೆಚ್ಚಿ ಪರಮ ಪ್ರೀತಿಯಿಂದೊಡಂಗೊಂಡು ಪೋಗಿ ಪಾನುಂಗಲ್ಲ ನೆಲವೀಡಿನೊಳ್‌ ಪ್ರಧಾನರುಂ ತಾನುಂ ಮದುಕೆಯ ಮಂಡಳಿಕ ಸಹಿತಂ ಸುಖಸಂಕಥಾ ವಿನೋದದಿಂ ಕುಳ್ಳಿರ್ದ್ದು ಪರಮ ಭಕ್ತಿಯಿಂ ವೀರ ಸೋಮನಾಥದೇವರ್ಗ್ಗೆ ಪಾನುಂಗಲ್ಲೈನೂಱಱೊಳಗಣ ಕಂಪಣಂ ಹೊಸನಾಡೆಪ್ಪತ್ತಱೊಳಗೆ ಮುಣ್ಡಗೋಡ ಸಮೀಪದ ಜೋಗೇಸರದಿಂ ಬಡಗಣ ಮಲ್ಲವಳ್ಳಿಯೆಂಬ ಗ್ರಾಮಮಂ ಪ್ರಸಿದ್ಧ ಸೀಮಾಸಹಿತವಾಗಿ ತ್ರಿಭೋಗಾಭ್ಯನ್ತರಂ ನಮಸ್ಯಂ ಮಾಡಿಯಾ ದೇವರ ದೇಗುಲದ ಖಣ್ಡಸ್ಫುಟಿತ ಜೀರ್ಣ್ಣೋದ್ಧಾರಕಂ ದೇವರಂಗಭೋಗ ರಂಗಭೋಗ ನೈವೇದ್ಯಕ್ಕಂ ಚೈತ್ರ ಪವಿತ್ರ ವಸಂತೋತ್ಸವಾದಿ ಪರ್ಬ್ಬಗಳ್ಗಂ ಅನ್ನದಾನಕ್ಕಂ ಯೆಂದು ರಾಮಯ್ಯಂಗಳ ಕಾಲಂಕರ್ಚಿ ಧಾರಾಪೂರ್ವ್ವಕಂ ಮಾಡಿ ಪರಮ ಭಕ್ತಿಯಿಂ ಕೊಟ್ಟು ಧರ್ಮ್ಮಮಂ ಪ್ರತಿಪಾಳಿಸಿದಂ ಎಂಬ ವಿವರದಲ್ಲಿ ಅಬಲೂರಿಗೆ ಬಂದಿದ್ದ ಹಾನಗಲ್ಲಿನ ಕದಂಬರ ದೊರೆ ಕಾಮದೇವರಸ, ಏಕಾಂತರಾಮಯ್ಯನ ಸಾಹಸವನ್ನು ಕೇಳಿ, ಪ್ರೀತಿಯಿಂದ ಮಲ್ಲವಳ್ಳಿ ಎಂಬ ಗ್ರಾಮವನ್ನು ದತ್ತಿಯಾಗಿ ನೀಡಿ ಅವನ ಕಾಲುತೊಳೆದು ಗೌರವಿಸಿದ ವಿವರಗಳು ಕಂಡು ಬರುತ್ತವೆ. (ಹಾನುಗಲ್ಲು ೫೦೦ ರ ಕಂಪಣ ಹೊಸನಾಡು ೭೦. ಅದರೊಳಗೆ ಇದ್ದ ಗ್ರಾಮ ಮಲ್ಲವಳ್ಳಿ)

 ಒಟ್ಟಾರೆ ಈ ಸುದೀರ್ಘ ಶಾಸನದಲ್ಲಿ,  ಅಬಲೂರಿನ ಜೈನಪ್ರಮುಖ ಸಂಕಗಾವುಂಡನು ರಾಮಯ್ಯನು ತಂಗಿದ್ದ ಬ್ರಹ್ಮಶ್ವರ ದೇವಾಲಯಕ್ಕೆ ಜೈನರೊಂದಿಗೆ ಬಂದು ಜಿನನೆ ದೊಡ್ಡವನೆಂದು ಜಿನಪಾರಮ್ಯವನ್ನು ಘೋಷಿಸಿ ಶಿವಪಾರಮ್ಯವನ್ನು ಘೋಷಿಸಲು ಪ್ರೇರೇಪಣೆಯಾಗುತ್ತಾನೆ. ಶಿರಸ್ ಪವಾಡದಲ್ಲಿ ವಿಜಯಿಯಾಗಿ ಶಿವಸಮಯವನ್ನು ಭಂಗಿಸಿದ ಜೈನರ ವಿರುದ್ಧ ಹೋರಾಡಿ ಜೈನರನ್ನು ಸೋಲಿಸಿ ಅಬಲೂರಿನ ಜಿನಬಸದಿಗಳನ್ನು ಶಿವಾಲಯಗಳನ್ನಾಗಿ ಮಾರ್ಪಡಿಸುತ್ತಾನೆ. ಅಬಲೂರಲ್ಲಿ ತಾನು ನಡೆಸಿದ ಕಾರ್ಯಕ್ಕೆ ಕಲಚೂರಿ ದೊರೆ ಬಿಜ್ಜಳ, ಕಲ್ಯಾಣ ಚಾಲುಕ್ಯ ದೊರೆ ನಾಲ್ವಡಿ ಸೋಮೇಶ್ವರ, ಹಾನಂಗಲ್ಲಿನ ಒಬ್ಬ ಕದಂಬ ದೊರೆ ಕಾಮದೇವ ಮತ್ತು ಅದೇ ವಂಶದ ಇನ್ನೊಬ್ಬ ದೊರೆ ಮಲ್ಲಿದೇವರಂತಹ ರಾಜರು ಮತ್ತು ಮಾಂಡಳಿಕರಿಂದ ದತ್ತಿಯಾಗಿ ಗೋಗಾವೆ, ಅಬಲೂರು, ಧೂಪದ ಹಳ್ಳಿ, ನೂಲಗೇರಿ, ಭೋಗಾವಿ ಮುಂತಾದ ಊರುಗಳನ್ನು ಪಡೆಯುತ್ತಾನೆ. ಬಸವಣ್ಣನವರ ಸಮಕಾಲೀನನಾದ ಪವಾಡ ಪುರುಷ ವೀರ ಶಿವಶರಣ ಏಕಾಂತದ ರಾಮಯ್ಯನ ಕಥೆಯನ್ನು ಹೇಳುವುದರ ಜೊತೆಗೆ  ಕಲಚೂರಿ, ಕಲ್ಯಾಣ ಚಾಲುಕ್ಯ ಮತ್ತು ಹಾನಗಲ್ಲು ಕದಂಬರ  ಮನೆತನದ ಮೂವರು ಬೇರೆ ಬೇರೆ ದೊರೆಗಳ ಬಗೆಗೆ ಐತಿಹಾಸಿಕ ಮಾಹಿತಿಯನ್ನು ಒಳಗೊಂಡಿರುವ ಈ ಶಾಸನ ಒಂದು ಸಂಕಲಿತ ಶಾಸನವಾಗಿದೆ. ತನ್ನ ತಲೆಯನ್ನೇ ಪಣವಾಗಿಟ್ಟು ತರಿದುಕೊಟ್ಟು ತಿರುಗಿ ಪಡೆದು ಶಿವನೇ ದೇವರೆಂದು ಸಿದ್ಧಪಡಿಸಿ. ಜೈನರನ್ನು ಸೋಲಿಸಿ, ಜನಮೂರ್ತಿಯನ್ನೊಡೆದು ಆ ಸ್ಥಳದಲ್ಲಿ ʻವೀರ ಸೋಮೇಶ್ವರ' ಎಂಬ ಶಿವಲಿಂಗವನ್ನು ಸ್ಥಾಪಿಸಿದವನು ಏಕಾಂತದ ರಾಮಯ್ಯ. ಈ ಪ್ರಸಂಗವನ್ನು ಶಾಸನದಲ್ಲಿ ನಾಟಕೀಯವಾಗಿ ಬಣ್ಣಿಸಲಾಗಿದೆ. ಕಲಚೂರ್ಯರ ಬಿಜ್ಜಳ, ಕಲ್ಯಾಣದ ಚಾಲುಕ್ಯರ ಸೋಮೇಶ್ವರ ಮತ್ತು ಹಾನಗಲ್ಲಿನ ಕದಂಬರ ಕಾಮದೇವರಸರಿಂದ ಏಕಾಂತ ರಾಮಯ್ಯನಿಗೆ ಸಂದ ಗೌರವ ಮತ್ತು ಪಡೆದ ದತ್ತಿಗಳ ವಿವರಗಳನ್ನು ಈ ಶಾಸನವು ದಾಖಲಿಸಿದೆ. ಸೋಮೇಶ್ವರ ದೇವಾಲಯದಲ್ಲಿರುವ ಏಕಾಂತ ರಾಮಯ್ಯನ ಪವಾಡಗಳನ್ನು ನಿರೂಪಿಸುವ ಶಿಲ್ಪಗಳು, ಆತನ ಪ್ರಸಿದ್ದಿಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತವೆ. ಶಾಸನದ ೯೧ ನೇ ಸಾಲಿನಿಂದ ೯೮ ರವರೆಗೆ ಫಲಶ್ರುತಿಯ ಪದ್ಯಗಳೂ ಶ್ಲೋಕಗಳೂ ಇವೆ. ಈ ಶಾಸನವು ಹಳಗನ್ನಡ ಮತ್ತು ಸಂಸ್ಕೃತ ಭೂಯಿಷ್ಠವಾಗಿದ್ದು, ವೃತ್ತ, ಕಂದ ಪದ್ಯಗಳ ಜೊತೆಗೆ ಗದ್ಯವನ್ನು ಒಳಗೊಂಡಿದ್ದು ಪುಟ್ಟ ಚಂಪೂಕಾವ್ಯದಂತಿದೆ. ಈ ಶಾಸನ ಕವಿಯಾದ ಕೇಶವರಾಜ ಚಮೂಪನು  ಬಹುಶಃ ಕಾವ್ಯಗಳನ್ನು ಬರೆದಿರುವ ಸಾಧ್ಯತೆ ಇದೆ ಎನಿಸುತ್ತದೆ.

೮. ಅಬಲೂರಿನ ಶಿಲ್ಪ ಶಾಸನ:

ಏಕಾಂತದ ರಾಮಯ್ಯನು ಅಬ್ಬಲೂರಿನಲ್ಲಿ ಶಿವಪಾರಮ್ಯವನ್ನು ಘೋಷಿಸಿದ ಮೇಲೆ ಅಲ್ಲಿ ಸೋಮೇಶ್ವರ ದೇವಾಲಯವನ್ನು ಕಟ್ಟಿಸುತ್ತಾನೆ. ಈತನು ಕಟ್ಟಿಸಿರುವ ಸೋಮೇಶ್ವರ ದೇವಾಲಯದ ರಂಗಮಂಟಪದ ಹೊರಭಿತ್ತಿಯಲ್ಲಿ ಮತ್ತು ದೇವಾಲಯದ ಒಳಗೆ ಭಿತ್ತಿಯ ಮೇಲೆ ಏಕಾಂತದ ರಾಮಯ್ಯ ತಲೆಹರಿದುಕೊಂಡು, ಪುನಃ ಪಡೆದು, ಸಂಕಗೌಡನೊಂದಿಗೆ ಹೋರಾಡಿ ಜಿನಮೂರ್ತಿಯನ್ನು ಹೊಡೆದು ಲಿಂಗ ಪ್ರತಿಷ್ಠಾಪಿಸಿದ ಶಿವಪಾರಮ್ಯದ ಘಟನೆಯನ್ನು ಯಥಾವತ್ತಾಗಿ ಪಡಿಮೂಡಿಸುವಂತೆ ಶಿಲಾಫಲಕದಲ್ಲಿ ಕೆತ್ತಲಾಗಿದೆ. ಆ ಶಿಲ್ಪಗಳಲ್ಲಿ ಏಕಾಂತದ ರಾಮಯ್ಯನ ಶಿಲ್ಪವೂ ಇದೆ. ಏಕಾಂತದ ರಾಮಯ್ಯನು ಉದ್ದ ಕೂದಲು ಬಿಟ್ಟಿದ್ದು ಅವನ್ನೆಲ್ಲ ಒಟ್ಟುಗೂಡಿಸಿ ನೆತ್ತಿಯ ಮೇಲೆ ತುರುಬು ಕಟ್ಟಿಕೊಂಡಿದ್ದಾನೆ. ಕಿವಿಯಲ್ಲಿ ಓಲೆಗಳಿವೆ, ರಟ್ಟೆಗೆ, ಜನಿವಾರದ ರೂಪದಲ್ಲಿ ಕೊರಳಲ್ಲಿ ರುದ್ರಾಕ್ಷಿಸರ ಧರಿಸಿದ್ದಾನೆ. 

   ಅಬಲೂರಿನ ಸೋಮೇಶ್ವರ ದೇವಾಲಯದಲ್ಲಿ ಏಕಾಂತದ ರಾಮಯ್ಯನಿಗೆ ಸಂಕಗಾವುಂಡನು ಓಲೆ ಕೊಡುವುದು, ತಲೆಯನ್ನು ಕಡಿದುಕೊಂಡು ಪುನಃ ಪಡೆಯುವುದು, ಜಿನನನ್ನು ಒಡೆದು ಲಿಂಗವನ್ನು ಪ್ರತಿಷ್ಠೆ ಮಾಡಿದುದು, ಆ ಘಟನೆಗಳನ್ನು ನಿರೂಪಿಸುವ ಐದು ಶಿಲ್ಪಗಳಿವೆ. ಅವುಗಳಲ್ಲಿ ಮೂರರ ಮೇಲೆ ಆಯಾ ಘಟನೆಗಳನ್ನು ವಿವರಿಸುವ ಶಾಸನಗಳಿವೆ. 

ಶಿಲ್ಪ-1 : ಈ ಶಿಲ್ಪವು ಮುಖಮಂಟಪದ ಬಲಭಾಗದ ಕಕ್ಷಾಸನದ ಮೇಲಿದೆ. ಶಿಲ್ಪವು ಒಂದು ಬದಿಯಿಂದ ಪ್ರಾರಂಭಗೊಂಡು ಮತ್ತೊಂದು ಬದಿಯಲ್ಲಿ ಮುಂದುವರೆದಿದೆ. ಶಿಲ್ಪದಲ್ಲಿ ನಾಲ್ಕು ದೃಶ್ಯಗಳಿವೆ. ಮೊದಲನೆಯದು ಏಕಾಂತದ ರಾಮಯ್ಯ ತಲೆಯನ್ನು ಕತ್ತರಿಸಿಕೊಂಡು ಮತ್ತೆ ಪಡೆದಿರುವುದು, ಎರಡನೆಯ ಸಂಕಗಾವುಂಡನೊಂದಿಗೆ ಯುದ್ಧ ಮಾಡುತ್ತಿರುವುದು, ಮೂರನೆಯ ಜಿನನ್ನು ಒಡೆಯುತ್ತಿರುವುದು, ನಾಲ್ಕನೆಯ ಲಿಂಗವನ್ನು ಪ್ರತಿಷ್ಠೆ ಮಾಡುತ್ತಿರುವುದು.

 ಶಿಲ್ಪದ ಬಲಭಾಗದಲ್ಲಿರುವ ಮೊದಲನೇ ದೃಶ್ಯದಲ್ಲಿ ಲಿಂಗವಿದೆ. ಎಡಭಾಗದಲ್ಲಿ ತಲೆಯನ್ನು ಕತ್ತರಿಸಿಕೊಂಡ ಏಕಾಂತದ ರಾಮಯ್ಯ ಲಿಂಗವನ್ನು ಅಪ್ಪಿಕೊಂಡು ಬಿದ್ದಿದ್ದಾನೆ. ಅವನ ಬಲಗೈಯಲ್ಲಿ ಖಡ್ಗವಿದೆ. ಅವರ ತಲೆ ಲಿಂಗದ ಪೀಠದ ಮೇಲಿದೆ. ಮುಂಡವು ಕೆಳಗೆ ಇದೆ. ತಲೆಯನ್ನು ಮರಳಿ ಪಡೆದರಾಮಯ್ಯ ಬಲಭಾಗದಲ್ಲಿ ನಿಂತು ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ. ಮಧ್ಯದಲ್ಲಿರುವ ಎರಡನೇ ದೃಶ್ಯದಲ್ಲಿ ಯುದ್ಧದ ಸನ್ನಿವೇಶವಿದೆ. ಜಿನನನ್ನು ಒಡೆದು ಲಿಂಗವನ್ನು ಪ್ರತಿಷ್ಠೆ ಮಾಡಲು, ಸಂಕಗಾವುಂಡನು ಸೈನ್ಯವನ್ನು ಒಡ್ಡಿ ಅಡ್ಡಿ ಮಾಡಿದಾಗ ನಡೆದ ಯುದ್ಧದ ದೃಶ್ಯವದು. ಈ ದೃಶ್ಯದ ಬಲಭಾಗದಲ್ಲಿ ಸಂಕಗಾವುಂಡ ಕತ್ತಿ ಗುರಾಣಿಗಳನ್ನು ಹಿಡಿದು ನಿಂತಿದ್ದಾನೆ. ಅವನ ತಲೆಯ ಮೇಲೆ ಕಿರೀಟವಿದೆ. ಎಡಭಾಗದಲ್ಲಿ ಏಕಾಂತ ರಾಮಯ್ಯ ಮತ್ತು ಅನುಯಾಯಿಗಳಿದ್ದಾರೆ. ಮಧ್ಯದಲ್ಲಿ ಎರಡು ತಂಡಗಳ ನಡುವೆ ಯುದ್ಧ ನಡೆಯುತ್ತಿದೆ; ಯುದ್ಧ ಮಾಡುತ್ತಿರುವವರ ಕೈಯಲ್ಲಿ ಕತ್ತಿ ಗುರಾಣಿಗಳು ಮತ್ತು ಬಿಲ್ಲು ಬಾಣಗಳು ಇವೆ. ಕುದುರೆ ಸವಾರರ ಕೈಯಲ್ಲಿ ಉದ್ದವಾದ ಬರ್ಚಿಗಳಿವೆ. ಯುದ್ಧದಲ್ಲಿ ಮಡಿದವರು ಕೆಳಗೆ ಬಿದ್ದಿದ್ದಾರೆ. ಎಡಭಾಗದಲ್ಲಿರುವ ಮೂರನೇ ದೃಶ್ಯದಲ್ಲಿ ಏಕಾಂತದ ರಾಮಯ್ಯನು ಜಿನಮೂರ್ತಿಯನ್ನು ಸುತ್ತಿಗೆಯಿಂದ ಒಡೆಯುತ್ತಿದ್ದಾನೆ. ಅವನ ಹಿಂದೆ ಅವನ ಅನುಯಾಯಿಗಳಿದ್ದಾರೆ. ಜಿನಮೂರ್ತಿಯ ಮತ್ತೊಂದು ಬದಿಗೆ ನಿಂತಿರುವ ಸಂಕಗಾವುಂಡನು ಖಡ್ಗವನ್ನು ಮೇಲೆತ್ತಿ ಏಕಾಂತದ ರಾಮಯ್ಯನನ್ನು ತಡೆಯಲು ಯತ್ನಿಸುತ್ತಿದ್ದಾನೆ. ಈ ಕಾರ್ಯದಲ್ಲಿ ಅವನ ಹಿಂದೆ ನಿಂತಿರುವ ಅನುಯಾಯಿ ಸಹ ಖಡ್ಗವನ್ನು ಮೇಲೆತ್ತಿ ತಡೆಯಲು ಪ್ರಯತ್ನಿಸುತ್ತಿದ್ದಾನೆ. ಶಿಲ್ಪದ ಮತ್ತೊಂದು ಬದಿಗಿರುವ ನಾಲ್ಕನೇ ದೃಶ್ಯದಲ್ಲಿ ಲಿಂಗವನ್ನು ಪ್ರತಿಷ್ಠೆ ಮಾಡಲಾಗಿದೆ. ಲಿಂಗದ ಒಂದು ಬದಿಗೆ ಏಕಾಂತದ ರಾಮಯ್ಯ ಮತ್ತೊಂದು ಬದಿಗೆ ಸಂಕಗಾವುಂಡ ನಿಂತು ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಶಿಲ್ಪದ ಮೇಲೆ ನಾಲ್ಕೂ ದೃಶ್ಯಗಳನ್ನು ವಿವರಿಸುವ ಈ ಶಾಸನವಿದೆ:

 ಶ್ರೀ ಬ್ರಹ್ಮೇಶ್ವರ ದೇವರಲ್ಲಿ ಏಕಾಂತದ ರಾಮಯ್ಯ

 ಬಸದಿಯ ಜಿನನೊಡ್ಡವಾಗಿ ತಲೆಯನರಿದು ಪಡೆದ ಠಾವು||

 ಸಂಕಗಾವುಂಡ ಬಸದಿಯನೊಡೆಯಲೀಯದೆ ಆಳು ಕುದುರೆಯ

 ನೊಡ್ಡಿರಲು ಏಕಾನ್ತದ ರಾಮಯ್ಯ ಕಾದಿ ಗೆಲ್ದು ಜಿನನೊಡೆದು

 ಲಿಂಗಮಂ ಪ್ರತಿಷ್ಠೆಯ ಮಾಡಿದ ಠಾವು||

ಶಿಲ್ಪ-2 : ಈ ಶಿಲ್ಪವು ರಂಗಮಂಟಪದ ಬಲಗೋಡೆಯ ಮೇಲೆ ಜಾಲಂದ್ರದ ಕೆಳಗೆ ಇದೆ. ಶಿಲ್ಪದ ಬಲಭಾಗದಲ್ಲಿ ಸಂಕಗಾವುಂಡ ಮತ್ತು ಆತನ ಅನುಯಾಯಿಗಳು ನಿಂತಿದ್ದಾರೆ. ಎಡಭಾಗದಲ್ಲಿ ಏಕಾಂತದ ರಾಮಯ್ಯ ಮತ್ತು ಋಷಿವೇಷದ ಕೆಲವು ಮನುಷ್ಯರು ನಿಂತಿದ್ದಾರೆ. ಸಂಕಗಾವುಂಡನ ಕೈಯಲ್ಲಿ ಖಡ್ಗ ಮತ್ತು ಗುರಾಣಿ ಇವೆ. ಏಕಾಂತದ ರಾಮಯ್ಯನ ಎಡಗೈಯಲ್ಲಿ ಸಂಕಗಾವುಂಡನು ಕೊಟ್ಟ ಓಲೆಯಿದೆ. ಅವನು ಬಲಗೈಯನ್ನು ಮೇಲಕ್ಕೆತ್ತಿ ಸಂಕಗಾವುಂಡನೊಂದಿಗೆ ಮಾತನಾಡುತ್ತಿದ್ದಾನೆ. ಶಿಲ್ಪದ ಮೇಲೆ ಕೆಳಗಿನ ಶಾಸನವಿದೆ.

 ಶ್ರೀಮದೇಕಾನ್ತದ ರಾಮಯ್ಯಂಗೆ ಸಂಕಗಾವುಂಡನೋಲೆಯಂ ಕುಡುವ ಠಾವು

ಶಿಲ್ಪ-3 : ರಂಗಮಂಟಪದ ಎಡಗೋಡೆಯ ಮೇಲಿರುವ ಜಾಲಂದ್ರದ ಕೆಳಗಿರುವ ಈ ಶಿಲ್ಪದಲ್ಲಿ ಜಿನನನ್ನು ಒಡೆದು ಲಿಂಗವನ್ನು ಪ್ರತಿಷ್ಠೆ ಮಾಡುವ ದೃಶ್ಯಗಳಿವೆ. ಶಿಲ್ಪದ ಎಡಭಾಗದಲ್ಲಿರುವ ದೃಶ್ಯದಲ್ಲಿ ನೆಲದ ಮೇಲೆ ಬಿದ್ದಿರುವ ಜಿನನನ್ನು ಏಕಾಂತ ರಾಮಯ್ಯ ಸುತ್ತಿಗೆಯಿಂದ ಒಡೆಯುತ್ತಿದ್ದಾನೆ. ಬಲಭಾಗದಲ್ಲಿರುವ ದೃಶ್ಯದಲ್ಲಿ ಲಿಂಗದ ಪ್ರತಿಷ್ಠೆಯಾಗಿದೆ. ಲಿಂಗದ ಶಿಲ್ಪವು ಭಿನ್ನವಾಗಿರುವುದರಿಂದ ಸರಿಯಾಗಿ ಕಾಣುವುದಿಲ್ಲ. ಲಿಂಗದ ಒಂದು ಬದಿಗೆ ಏಕಾಂತದ ರಾಮಯ್ಯ ಮತ್ತೊಂದು ಬದಿಗೆ ಸಂಕಗಾವುಂಡ ತಮ್ಮ ಅನುಯಾಯಿಗಳೊಂದಿಗೆ ನಿಂತಿದ್ದಾರೆ. ಸಂಕಗಾವುಂಡನ ಅನುಯಾಯಿಗಳ ಕೈಯಲ್ಲಿ ಖಡ್ಗ ಗುರಾಣಿಗಳಿವೆ. ಈ ಎರಡು ದೃಶ್ಯಗಳನ್ನು ವಿವರಿಸುವ ಶಾಸನವು ಶಿಲ್ಪದ ಮೇಲ್ಭಾಗದಲ್ಲಿದೆ:

 ಯೇಕಾನ್ತದ ರಾಮಯ್ಯಂಗಳ ಜಿನನೊಡೆದು ಲಿಂಗಪ್ರತಿಷ್ಠೆಯಂ ಮಾಡಿದ ಠಾವು

ಶಿಲ್ಪ-4 : ಇದೇ ಜಾಲಂದ್ರದ ಐದನೇ ಪಟ್ಟಿಯ ಮಧ್ಯದಲ್ಲಿ ಏಕಾಂತದ ರಾಮಯ್ಯನು ಜಿನನನ್ನು ಒಡೆಯುವ ಮತ್ತೊಂದು ಶಿಲ್ಪವಿದೆ. ನಿಂತಿರುವ ಜಿನನನ್ನು ರಾಮಯ್ಯನು ಸುತ್ತಿಗೆಯಿಂದ ಒಡೆಯುತ್ತಿದ್ದಾನೆ. ಒಡೆದ ತಲೆಯು ಕೆಳಗೆ ಬಿದ್ದಿದೆ.

ಶಿಲ್ಪ-5 : ಬಲಗೋಡೆಯ ಜಾಲಂದ್ರದ ಮೂರನೇ ಪಟ್ಟಿಯ ಮಧ್ಯದಲ್ಲಿ ಇದೇ ದೃಶ್ಯದ ಮತ್ತೊಂದು ಶಿಲ್ಪವಿದೆ. ಇಲ್ಲಿ ಕೆಳಗೆ ಬಿದ್ದಿರುವ ಜಿನನನ್ನು ರಾಮಯ್ಯನು ಸುತ್ತಿಗೆಯಿಂದ ಒಡೆಯುತ್ತಿದ್ದಾನೆ. ಪಕ್ಕದಲ್ಲಿ ನಿಂತಿರುವ ನಾಲ್ವರು ಇದನ್ನು ವೀಕ್ಷಿಸುತ್ತಿದ್ದಾರೆ. 

 ಬುಕ್ಕಸಾಗರ ಶಿಲ್ಪ: ಬಳ್ಳಾರಿ ಜಿಲ್ಲೆಯ ಬುಕ್ಕಸಾಗರದ ವೀರಭದ್ರ ದೇವಾಲಯದ ರಂಗಮಂಟಪದ ಕುಂಭದ ಮೇಲೆ ಈತನ ಶಿಲ್ಪವನ್ನು ಕೆತ್ತಲಾಗಿದೆ. ಬುಕ್ಕ ಸಾಗರದ ದೃಶ್ಯದಲ್ಲಿ ಏಕಾಂತದ ರಾಮಯ್ಯನು ತನ್ನ ತಲೆಯನ್ನು ಆಗಲೇ ಕತ್ತರಿಸಿ ಕೊಂಡಿದ್ದು ಅದನ್ನು ತನ್ನ ಎರಡೂ ಕೈಗಳಲ್ಲಿ ಎತ್ತಿ ಹಿಡಿದುಕೊಂಡು, ಶಿವಲಿಂಗಕ್ಕೆ (ಅಬ್ಬಲೂರಿನ ಬ್ರಹ್ಮೇಶ್ವರ ಲಿಂಗಕ್ಕೆ) ಅರ್ಪಿಸಿರುವಂತೆ ಕಡೆಯಲಾಗಿದೆ. ಅದೇ ಸಮಯದಲ್ಲಿ, ಸುಪ್ರೀತನಾದ ಶಿವನು ತನ್ನ ನಿಜರೂಪದಲ್ಲಿ ಶಿಲಾಲಿಂಗವನ್ನು ಭೇದಿಸಿಕೊಂಡು ಹೊರಬಂದು ಏಕಾಂತರಾಮಯ್ಯನಿಗೆ ಅಭಯವನ್ನೀಯುತ್ತಿರುವಂತೆ ಶಿಲೆಯಲ್ಲಿ ಕಂಡರಿಸಲಾಗಿದೆ. ನಿಜರೂಪದ ಶಿವನು ನಾಲ್ಕು ಕೈಗಳನ್ನು ಹೊಂದಿದ್ದು, ಹಿಂದಿನ ಹಸ್ತಗಳಲ್ಲಿ ತ್ರಿಶೂಲ ಮತ್ತು ಡಮರುಗಳನ್ನು ಹಿಡಿದುಕೊಂಡಿದ್ದಾರೆ. ಮುಂದಿನ ಬಲದ ಹಸ್ತವು ಅಭಯ ಮುದ್ರೆಯಲ್ಲಿ ಮತ್ತು ಎಡದ ಹಸ್ತವು ಮರದ ಮುದ್ರೆಯಲ್ಲಿವೆ. ಏಕಾಂತ ರಾಮಯ್ಯ ತಲೆಗೂದಲನ್ನು ಸುತ್ತಿ ಮೇಲಕ್ಕೇತ್ತಿ ಕಟ್ಟಿದ್ದಾನೆ. ವೀರಕಾಚಾ ಧರಿಸಿದ್ದಾನೆ.

 ಏಕಾಂತ ರಾಮಯ್ಯ ತನ್ನ ಹಾಗೂ ನಂತರದ ಕಾಲದಲ್ಲಿ ಭಾರೀ ಪ್ರಭಾವ ಬೀರಿದ ವ್ಯಕ್ತಿಯಾಗಿದ್ದಾನೆ. ಆತನ ಐತಿಹಾಸಿಕತೆಯನ್ನು ಪ್ರತಿಬಿಂಬಿಸಿರುವ ಶಿಲ್ಪಗಳು ಹಾಗೂ ಸ್ಮಾರಕಗಳು ತುಂಗಭದ್ರೆಯ ದಕ್ಷಿಣ ಭಾಗದಲ್ಲಿ ಕೆಲವೆಡೆ ದೊರೆತಿವೆ. ರಾಮಯ್ಯನು ಜೈನ ರೊಡನೆ ಹೋರಾಡಿ ಶಿವಪಾರಮ್ಯವನ್ನು ಪೋಷಿಸುವ ಸ0ದರ್ಭದಲ್ಲಿಯ ಘಟನೆಯ ವಿವರಗಳನ್ನು ಅಬ್ಬಲೂರಿನ ಸೋಮೇಶ್ವರ ದೇವಾಲಯದ ಕಟಾಂಜನದಲ್ಲಿಯ ಶಿಲ್ಪಗಳಲ್ಲಿ ಕೆತ್ತಲಾಗಿದೆ. ಅದರಲ್ಲಿ ವೀರಮಾಹೇಶ್ವರ ನಿಷ್ಠೆಯ ರಾಮಯ್ಯನ ವಿವಿಧ ಶಿಲ್ಪಗಳನ್ನು ಈಗಲೂ ಗುರುತಿಸಿಬಹುದಾಗಿದೆ. ಅಬ್ಬಲೂರಿನ ಸೋಮೇಶ್ವರ ದೇವಾಲಯದ ನವರಂಗದ ಬಲಗಡೆಯ ಕೊಠಡಿಯಲ್ಲಿ ಇರುವ ಬೃಹತ್ ಲಿಂಗವನ್ನು ಏಕಾಂತ ರಾಮಯ್ಯನ ಲಿಂಗವೆಂದು ಕರೆಯುತ್ತಾರೆ.

೯) ಏಕಾಂತರಾಮಯ್ಯನ ವ್ಯಕ್ತಿತ್ವ :

ಶಾಸನದ ಕೊನೆಯಲ್ಲಿ ಶಾಸನ ಕವಿಯು ಏಕಾಂತ ರಾಮಯ್ಯನ ವ್ಯಕ್ತಿ ವಿಶೇಷವನ್ನು ಬಣ್ಣಿಸಿದ್ದಾನೆ. "ಹರನಿಂದ ತವನಿಧಿ (ಭಂಡಾರ) ಯನ್ನು ಪಡೆದ ರಾಮಯ್ಯನು ಸೋಮೇಶ್ವರ ದೇವಾಲಯವನ್ನು ಶಿವನ ಕೈಲಾಸದಂತೆ ಮಾಡಿಸಿದನು; ದೇವಾಲಯಕ್ಕೆ ಎಂದು ಭಕ್ತಿಯಿಂದ ಯಾರೇ ಆಗಲಿ ಒಂದು ಹಾಗವನ್ನು ಕೊಟ್ಟರೂ ಬಿಡದೆ ತೆಗೆದುಕೊಂಡನು. ಆದರೆ ಯಾವ ರಾಜರನ್ನೂ ದೈನ್ಯದಿಂದ ಹೋಗಿ ಬೇಡಿ ಪಡೆಯಲಿಲ್ಲ" ಎಂದಿದ್ದಾನೆ ಶಾಸನ ಕವಿ. ಹಾನಗಲ್ಲಿನ ದೊರೆ ಕದಂಬ ಕಾಮದೇವನನ್ನು ಹೇಳುವುದರಿಂದ ಶಾಸನದ ಕಾಲವನ್ನು ಕ್ರಿ.ಶ. ಸುಮಾರು ೧೨೦೦ ರ ಕಾಲಕ್ಕೆ ಹಾಕಬೇಕಾಗುತ್ತದೆ. ಮೂರು ಬೇರೆ ಬೇರೆ ವಂಶದ ದೊರೆಗಳ ಪ್ರಸ್ತಾಪ ಬಂದ ತಾಮ್ರಪತ್ರಗಳಲ್ಲಿ ಇದ್ದ ವಿಚಾರವನ್ನು ಸಂಕಲನ ಮಾಡಿ ಕಲ್ಲಿನ ಮೇಲೆ ಬರೆದಿರಬಹುದೇನೋ ಎಂಬ ಅನುಮಾನಗಳೂ ಮೂಡುತ್ತವೆ. ಆದರೆ ತಾಮ್ರಪತ್ರಗಳಲ್ಲಿ ಇಷ್ಟೊಂದು ಕಾವ್ಯಾಂಶ ಭಾಗಗಳು ಸಾಮಾನ್ಯವಾಗಿ ಕಂಡು ಬರುವುದಿಲ್ಲ.

    ಸಮಕಾಲೀನ ವ್ಯಕ್ತಿಯೊಬ್ಬನ ಪವಾಡದ ಕಥೆಯನ್ನು ಹೇಳುವ ಏಕಮಾತ್ರ ಶಾಸನ ಇದು ಎಂದು ಹೇಳಿದರೆ ಬಹುಶಃ ತಪ್ಪಾಗಲಾರದು. ತನ್ನ ಧರ್ಮವನ್ನು ಮೆರೆಸುವುದಕ್ಕೆ ಮತ್ತೊಂದು ಧರ್ಮದೊಂದಿಗೆ ಘರ್ಷಣೆಗೆ ಸಿದ್ಧವಾಗುವುದು. ತನ್ನ ತಲೆಯನ್ನು ಕೊಟ್ಟಾದರೂ ಧರ್ಮದ ಅವಹೇಳನವನ್ನು ನಿಲ್ಲಿಸುವುದೂ ಕ್ರಿ.ಶ. ೧೧- ೧೨ನೇ ಶತಮಾನದ ಧಾರ್ಮಿಕ ವಾತಾವರಣ. ಅಂತಹ ಘರ್ಷಣೆಯೊಂದಕ್ಕೆ ರಾಜಕೀಯವಾಗಿ ಪರಿಹಾರ ಸಿಗದೆ, ಶೈವರು ಪ್ರಬಲರಾದರು. ಜೈನರು ರಾಜಾಶ್ರಯವನ್ನು ಕಳೆದುಕೊಂಡರು ಎಂಬುದು ಈ ಶಾಸನದಿಂದ ಸೂಚಿತವಾಗುತ್ತದೆ. ಅಬಲೂರಿನಲ್ಲಿ ಈಗ ಜೈನರ, ಜೈನಧರ್ಮದ ಹೆಸರೇ ಕೇಳಿಬರುವುದಿಲ್ಲ. ಶೈವಧರ್ಮದ ಆರ್ಭಟಕ್ಕೆ ಶೌರ್ಯಕ್ಕೆ ಜೈನಧರ್ಮ ಬಾಗಿ ಮುದುಡಿಹೋಯಿತು ಎಂದು ಹೇಳಲು ರಾಮಯ್ಯನ ಉದಾಹರಣೆಗಿಂತ ಬೇರೆ ಸಾಕ್ಷಿ ಬೇಕಿಲ್ಲ. ರಾಮಯ್ಯನ ಕೀರ್ತಿಯನ್ನು ಕೇಳಿ ಬೇರೆ ರಾಜರು ಪ್ರಭಾವಿತರಾದರು. ಚಾಲುಕ್ಯ ನಾಲ್ಕನೆಯ ಸೋಮೇಶ್ವರ, ಕದಂಬ ಕಾಮದೇವರಿಂದ ಈತ ಸನ್ಮಾನಿತನಾದ. ಇದು ಶಾಸನದಲ್ಲಿರುವ ಸಂಗತಿ. ಈ ಶಾಸನ ವೃತ್ತಾಂತದ ಕೆಲವು ವಿವರಗಳು ಹರಿಹರನ ರಗಳೆಯಲ್ಲಿ ಸಿಕ್ಕುವುದಿಲ್ಲ. ಶಾಸನಗಳಲ್ಲಿರದ ಒಂದೆರಡು ಹೆಚ್ಚಿನ ಅಂಶಗಳು ಹೀಗಿವೆ : ಹುಲಿಗೆರೆಯ ಅಗ್ಗಣಿಯ ಹೊನ್ನಿತಂದೆಯೆಂಬ ಶಿವಭಕ್ತ ಏಕಾಂತರಾಮಯ್ಯನ ಶಿರಸ್‌ಪವಾಡ ಕ್ರಿಯೆಯಲ್ಲಿ ರಾಮಯ್ಯನಿಗೆ ಸಹಾಯಕನಾದ. ರಾಮಯ್ಯನ ರುಂಡವನ್ನು ಪುಲಿಗೆರೆ, ಅಣ್ಣಿಗೆರೆ, ಕೆಂಬಾವಿ, ಕಪ್ಪಡಿಸಂಗಮ, ನಾಗನಾಥ, ಸೊನ್ನಲಿಗೆ, ಹಂಪೆ ಮೊದಲಾದ ಶೈವಕ್ಷೇತ್ರಗಳಲ್ಲಿ ಏಳು ದಿನಗಳವರೆಗೆ ಮೆರೆಯಿಸಿದ.

      ಅಬಲೂರು ಶಾಸನ ಈಗಿನ ಹಾವೇರಿ ಜಿಲ್ಲೆಯ ಹೀರೆಕೆರೂರಿನ ತಾಲ್ಲೂಕಿನ 'ಅಬಲೂರು' ಎಂಬ ಗ್ರಾಮದಲ್ಲಿದೆ. ಅಬ್ಬಲೂರು ಕನ್ನಡ ನಾಡಿನ ಸಾಂಸ್ಕೃತಿಕ ಸ್ಥಳಗಳಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಪಡೆದಿದೆ. ಸರ್ವಜ್ಞ ಹಾಗೂ ಏಕಾಂತರಾಮಯ್ಯರಿಂದಾಗಿ ಅಬ್ಬಲೂರಿಗೆ ಕನ್ನಡ ನಾಡಿನ ಸಂಸ್ಕೃತಿಯಲ್ಲಿ ಮಹತ್ವ ಬಂದಿದೆ. ಈ ಶಾಸನದ ಕೇಂದ್ರವ್ಯಕ್ತಿ ಏಕಾಂತ ರಾಮಯ್ಯ. ಈತ ಜೈನರ ಸವಾಲನ್ನು ಸ್ವೀಕರಿಸಿ, ಅದರಂತೆ ತನ್ನ ಶಿರವನ್ನೇ ಕತ್ತರಿಸಿ, ಮತ್ತೆ ಜೀವವನ್ನು ಪಡೆದ ಘಟನೆಯನ್ನು ತಿಳಿಸುತ್ತದೆ. ಜೈನರೊಡನೆ ವಾದಿಸಿ ಲೋಕಕ್ಕೆಲ್ಲ ಒಂದೇ ದೈವ ಅದು ಶಿವ ಎಂಬ ಅಂಶವನ್ನು ತಿಳಿಸುತ್ತಾನೆ. ಈ ಮೂಲಕ ಶೈವಪರಂಪರೆ ಈ ಪರಿಸರದಲ್ಲಿ ಒಂದಾಗಿತ್ತೆಂಬ ಸತ್ಯಸಂಗತಿ ತಿಳಿಯುತ್ತದೆ. ರಾಮಯ್ಯ ಪ್ರತಿಷ್ಠೆಮಾಡಿದ ವೀರಸೋಮೇಶ್ವರ ದೇವಾಲಯ ಈಗಲೂ ಅಬಲೂರಲ್ಲಿದೆ. ಈ ದೇವಾಲಯದ ಭಿತ್ತಿಗಳ ಮೇಲೆ ರಾಮಯ್ಯನ ಜಿನವಿಜಯದ ಸನ್ನಿವೇಶಗಳನ್ನು ಜೊತೆಯ ವಿವರಣೆಗಳೊಂದಿಗೆ ಚಿತ್ತಾಕರ್ಷಕವಾಗಿ ಕೆತ್ತಲಾಗಿದೆ. ಭೂಗತವಾಗಿದ್ದ ನೂರಾರು ಚಿಕ್ಕ ಶಿವಲಿಂಗಗಳು ಕೆಲವರ್ಷಗಳ ಹಿಂದೆ ಈ ಊರಲ್ಲಿ ದೊರೆತಿವೆ. ದೇವಾಲಯದಲ್ಲಿ ಸೋಮೇಶ್ವರ ಲಿಂಗವಲ್ಲದೆ ರಾಮಯ್ಯ, ಅಗ್ಗಣಿಯ ಹೊನ್ನಯ್ಯರ ಸ್ಮಾರಕಗಳಾದ ಎರಡು ಬೃಹತ್ ಲಿಂಗಗಳಿವೆ. ಅಬಲೂರಿನ ಸೋಮೇಶ್ವರ ದೇವಸ್ಥಾನವು ಮೂಲತಃ ಜೈನ ಬಸದಿಯಾಗಿದ್ದರೆ, ದೇವಾಲಯದ ಒಳಗೆ ಇನ್ನೊಂದು ಶಿವಲಿಂಗವನ್ನು ಏಕಾಂತರಾಮಯ್ಯ ಮತ್ತು ಅಗ್ಘಣಿಹೊನ್ನಯ್ಯ (ರಾಮಯ್ಯನ ಗುರು) ಹೆಸರಿನಲ್ಲಿ ಪ್ರತಿಷ್ಠಾಪಿಸಿದ್ದಾರೆ. ಏಕಾಂತರಾಮಯ್ಯ ಜೈನರನ್ನು ಗೆದ್ದ ಕಥೆಯನ್ನು ಶಾಸನ ಮತ್ತು ಶಿಲ್ಪವು ಚಿತ್ರಿಸುತ್ತದೆ. ಅಬಲೂರು ಶಾಸನವು ಒಂದು ರೀತಿಯಲ್ಲಿ ಜೈನಧರ್ಮದ ಅವನತಿಯನ್ನು ಸೂಚಿಸುವ ಶಾಸನವಾಗಿದೆ. ಈ ಶಾಸನದಲ್ಲಿ ಬರುವ ಏಕಾಂತದ ರಾಮಯ್ಯನು ತನ್ನಕಾಲದಲ್ಲಿ ಹಾಗೂ ಮುಂದಿನ ದಿನಮಾನಗಳಲ್ಲಿ ಪ್ರಸಿದ್ದನಾಗಿರಲು ಕಾರಣ ಆತನ ಧಾರ್ಮಿಕ ನಿಷ್ಠೆಯಾಗಿದೆ. 

    ವೀರಶೈವ ಧಾರ್ಮಿಕ ಚರಿತ್ರೆಯಲ್ಲಿ ಏಕಾಂತ ರಾಮಯ್ಯನ ಹೆಸರು ಮುಖ್ಯವಾದುದು. ತುಂಗಭದ್ರೆಯ ಉತ್ತರ ಭಾಗ (ಕಲ್ಯಾಣ)ದಲ್ಲಿ ಸಮಾಜೋಧಾರ್ಮಿಕ ಸುಧಾರಣೆ, ಮತಪ್ರಸಾರದ ಚಟುವಟಿಕೆಗಳು ನಡೆದರೆ, ತುಂಗಭದ್ರೆಯ ದಕ್ಷಿಣ ಭಾಗದ (ಬಳ್ಳಿಗಾವೆ ಇತ್ಯಾದಿ ಪರಿಸರದ)ಲ್ಲಿ ಕೇವಲ ಮತಪ್ರಸಾರದ ಚಟುವಟಿಕೆಗಳು ನಡೆದಿರುವುದನ್ನು ಕಾಣಬಹುದಾಗಿದೆ. ಇವೆರಡು ಚಟುವಟಿಕೆಗಳೂ ನಡೆದಿರುವುದು ಕಲಚೂರಿ ದೊರೆ ಬಿಜ್ಜಳನ ಕಾಲದಲ್ಲಿ. ಕ್ರಿ.ಶ. ೧೧೪೦-೫೦ರ ಕಾಲದ ಬಿಜ್ಜಳನನ್ನು ಕುರಿತ ಶಾಸನಗಳಲ್ಲಿ ಆತನು ಕಲ್ಯಾಣ ಚಾಲುಕ್ಯರ ಮಾಂಡಳಿಕನಾಗಿದ್ದು ಬನವಾಸಿ ಪ್ರಾಂತ್ಯದಲ್ಲಿ ಆಧಿಪತ್ಯ ನಡೆಸುತ್ತಿದ್ದ ಎಂಬುದಾಗಿ ತಿಳಿದುಬರುತ್ತದೆ. ಏಕಾಂತ ರಾಮಯ್ಯನ ವೀರಮಾಹೇಶ್ವರ ನಿಷ್ಠೆ ಮತ್ತು ಸಾಹಸವನ್ನು ಮೆಚ್ಚಿ ರಾಮಯ್ಯನು ನಿರ್ಮಿಸಿದ ಸೋಮನಾಥದೇವರ ಪ್ರಾಸಾದದ ಜೀರ್ಣೋದ್ಧಾರ ಅಂಗಭೋಗ ನೈವೇದ್ಯದ ಸಲುವಾಗಿ, ಬನವಾಸೆ ಹನ್ನೆರಡು ಸಾವಿರ ಪ್ರಾಂತ್ಯದ ಗೋಗಾವೆ ಗ್ರಾಮವನ್ನು ಬಿಜ್ಜಳನು "ಕಾಲಂಕರ್ಚಿ" ದತ್ತಿ ನೀಡಿದ್ದು ಬನವಾಸಿ ಪ್ರಾಂತ್ಯದ ಮಾಂಡಳಿಕನಾಗಿದ್ದಾಗಲೇ ಎಂಬುದು ಮಹತ್ವಪೂರ್ಣವಾದ ವಿಷಯವಾಗಿದೆ. ಇದೇ ಕಲಚೂರಿ ದೊರೆ ಬಿಜ್ಜಳನು ಕಲ್ಯಾಣದಲ್ಲಿ ಅಲ್ಪಕಾಲ ಚಕ್ರವರ್ತಿಯಾಗಿದ್ದಾಗ, ಕಲ್ಯಾಣದಲ್ಲಿ ಪೆರ್ಮಾಡಿರಾಯನ ಕಾಲದಲ್ಲಿ ಅಸ್ಪಷ್ಟವಾಗಿ ಗೋಚರಿಸಿದ ಆಂದೋಲನವನ್ನು ಬಸವಾದಿ ಪ್ರಮಥರು ಬಹಿರಂಗವಾಗಿ ಪ್ರಸಾರ ಮಾಡಿದರು. ತುಂಗಭದ್ರೆಯ ದಕ್ಷಿಣ ಭಾಗದಲ್ಲಿ ಏಕಾಂತ ರಾಮಯ್ಯನ ಮತಪ್ರಸಾರದ ಚಟುವಟಿಕೆಗಳು ಕೆಲಮಟ್ಟಿಗೆ ಹಿಂಸಾತ್ಮಕವಾಗಿ ಕಂಡು ಬರುತ್ತವೆಯಾದರೂ ಈತನು ಬನವಾಸಿ ಪರಿಸರದಲ್ಲಿ ವೀರಶೈವಮತ ಹಬ್ಬಲಿಕ್ಕೆ ಕಾರಣಕರ್ತನಾಗಿದ್ದಾನೆ. ಈತನು ಜನಪ್ರಿಯ ವ್ಯಕ್ತಿಯಾಗಿದ್ದುದರಿಂದಲೋ ಏನೋ ಕನ್ನಡ ನಾಡಿನ ವಿವಿದೆಡೆಗಳಲ್ಲಿ ಈತನ ಹೆಸರಿನಲ್ಲಿ ಸ್ಮಾರಕಗಳು ನಿರ್ಮಿತವಾಗಿವೆ. ಆಳಂದೆಯಲ್ಲಿ ಈತನ ವಿಗ್ರಹ ಕಂಡು ಬಂದರೆ.  ಏಕಾಂತದ ರಾಮಯ್ಯನ ಶಾಸನವು ಒಂದು ಕಾವ್ಯದ ರೂಪದಲ್ಲಿದೆ. ೧೨ನೆಯಶತಮಾನದಲ್ಲಿ ಬಂದ ಹಲವು ವಚನಕಾರರನ್ನು ಕುರಿತು ಹಲವು ಕವಿಗಳು(ಹರಿಹರ,ರಾಘವಾಂಕ, ಪಾಲ್ಕುರಿಕೆ ಸೋಮ ಸೇರಿದಂತೆ ಹಲವರು ಬಸವಾದಿ ಶರಣರನ್ನು ಕುರಿತು ಪುರಾಣಗಳನ್ನು ರಚಿಸಿದ್ದಾರೆ) ರಚಿಸಿದ ಪುರಾಣಗಳ ಪ್ರಭಾವದಿಂದ ಸೋಮನಾಥ ದೇಗುಲವನ್ನು ನಿರ್ಮಿಸಿದ ರಾಮಯ್ಯನನ್ನು ಕುರಿತು ಕಲ್ಪನಾತ್ಮಕವಾದ ಕಾವ್ಯಶಾಸನದ ಮೂಲಕ ಕವಿ ಕೇಶವರಾಜಚಮೂಪ ಸ್ಮರಿಸಿರುವ ಸಾಧ್ಯತೆ ಇದೆ. ಅಲ್ಲದೇ ಶಾಸನದಲ್ಲಿರುವ ವಿಷಯಕ್ಕೂ ಹಾಗೂ ದೇಗುಲದ ಮೇಲೆ ಚಿತ್ರಿಸಿದ ಚಿತ್ರಪಟಕ್ಕೂ ಕೆಲವು ಸಾಮ್ಯತೆಗಳು, ಕೆಲವು ಅಂತರಗಳು ಕಂಡುಬರುತ್ತವೆ.

  ಏಕಾಂತ ರಾಮಯ್ಯನ  ಶಾಸನ, ನಿರ್ಮಿಸಿದ ದೇವಾಲಯ ಮತ್ತು ಐಕ್ಯ ಹೊಂದಿದ ಸ್ಥಳವಾದ ಅಬಲೂರು  ಅಲ್ಲಮಪ್ರಭು, ಅನಿಮಿಷಯ್ಯ, ಗೊಗ್ಗಯ್ಯ, ಬಂಕಯ್ಯ, ಅಕ್ಕಮಹಾದೇವಿ, ಮುಕ್ತಾಯಕ್ಕ, ಅಜಗಣ್ಣ ಮುಂತಾದ ಶರಣಶರಣೆಯರು ನೆಲೆಸಿದ್ದ ಪ್ರದೇಶವಾದ ಬಳ್ಳಿಗಾವೆಯ ಸನಿಹದಲ್ಲಿದೆ. ಬಳ್ಳಿಗಾವೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜನಿಸಿದ ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದವರು ಉತ್ತರ ಕರ್ನಾಟಕದ ಕಲ್ಯಾಣದಲ್ಲಿನ ಅನುಭವ ಮಂಟಪದತ್ತ ಪಯಣ ಕೈಗೊಂಡಿದ್ದರೆ ಕಲ್ಯಾಣ ಸಮೀಪ ಆಳಂದೆಯಲ್ಲಿ ಜನಿಸಿದ ಏಕಾಂತರಾಮಯ್ಯ ಶೈವಶರಣಕ್ಷೇತ್ರಗಳನ್ನು ಸಂದರ್ಶಿಸುವ ಸಲುವಾಗಿ ತುಂಗಭದ್ರ ನದಿಯ ದಕ್ಷಿಣ ಭಾಗದಲ್ಲಿ ಸಂಚಾರ ಕೈಗೊಂಡು ಬಳ್ಳಿಗಾವೆಯ ಸುತ್ತಮುತ್ತಲ ಪ್ರದೇಶದಲ್ಲಿ ವೀರಶೈವಮತ ಪ್ರಸಾರದಲ್ಲಿ ಕಾರ್ಯೋನ್ಮುಖನಾಗಿದ್ದುದು ಮಹತ್ವದ ಸಂಗತಿಯಾಗಿದೆ.

       ಏಕಾಂತ ರಾಮಯ್ಯನನ್ನು ಕುರಿತ ಶಾಸನ,  ಮತ್ತು ಶಿಲ್ಪಗಳಿಂದ ದೊರೆತ ಮಾಹಿತಿಗಳು, ಜನ್ಮಸ್ಥಳ, ಜನ್ಮದಾತರ ಹೆಸರು, ಏಕಾಂತ ವಿಶೇಷಣ ಪ್ರಾಪ್ತಿ, ವೀರಮಾಹೇಶ್ವರ ನಿಷ್ಠೆಯನ್ನು ಮೆರೆದ ಸ್ಥಳ, ವೀರ ಮಾಹೇಶ್ವರ ನಿಷ್ಠೆಯನ್ನು ಮರೆಯಲು ಸಹಾಯ ಮಾಡಿದ ವ್ಯಕ್ತಿ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿದ ಸ್ಥಳ, ಹೆಸರಿನ ವಿಗ್ರಹ ಮತ್ತು ದೇವಾಲಯಗಳು ಇರುವ ಸ್ಥಳನಾಮ, ವ್ಯಕ್ತಿನಾಮ ಇತ್ಯಾದಿಗಳು ಐತಿಹಾಸಿಕತೆಯ ಪ್ರತೀಕವಾಗಿವೆ. ಜೈನರ ವಿರುದ್ಧ ಹೋರಾಡಿ ತಲೆಯನರಿದುಕೊಂಡು ಏಳುದಿನಗಳ ನಂತರ ಮರಳಿ ಪಡೆದ ಪವಾಡ ಘಟನೆಗಳು ರಾಮಯ್ಯನು ಕೈಗೊಂಡ `ವೀರಶೈವ ಮತ ಪ್ರಸಾರ ಉದ್ದೇಶ್ಯದ ಸಾಂಕೇತಿಕ ಕ್ರಿಯೆಗಳು ಎಂಬುದಾಗಿ ತಿಳಿದು ಬರುತ್ತದೆ.

ಅನುಬಂಧ:

ಏಕಾಂತ ರಾಮಯ್ಯನ ಅಬಲೂರು ಶಾಸನ

( ಎಪಿಗ್ರಫಿಯಾ ಇಂಡಿಕಾ ಸಂಪುಟ, ೫ ಪುಟಗಳು. 245-252]

ಶಾಸನ ಪಾಠ

ಭಾಗ - ೧

ಓಂ||

ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ 

ತ್ರೈಳೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || ಶ್ಲೋಕ ೧।।

[||ವೃ||]

ಶ್ರೀಮದ್ಗಂಗಾತರಂಗೋಚ್ಚಳಿತ ಜಳಕಣಶ್ರೇಣಿ ಪುಃಪಾಳಿಶೋಭಾ 

ಧಾಮಂ ಚಂಚಜ್ಜಟಾಪಲ್ಲವಮ[ಮೃ]ತಕರೋದ್ಯತ್ಫಳಂ ಬಾಹುಶಾಖಾ 

ರಾಮಂ ಗೌರೀಲತಾಲಿಂಗಿತಮಮರನುತಂ ಶಂಭುಕಲ್ಪದ್ರುವಾದಂ 

ರಾಮಂಗೀಗರ್ಥಿಯಿಂ ವಾಂಚ್ಛಿತಫಳಚಯಮಂ ಸಂತೋತ್ಸಾಹದಿಂದಂ ||೧||

ಶ್ರೀಕಣ್ಠಂ ರಾಮದೇವಂಗನು[ಪ]ಮ ಮಹಿಮಂಗೀಗೆ ಸಂಪತ್ತನೆಂದುಂ 

ನಾಕೌಕಾನೀಕಮೌಳಿಪ್ರಕರಮಣಿಗಣ ಶ್ರೇಣಿಶೋಣಾಂಶುಜಾಳ 

ಬ್ಯಾಕೀರ್ಣ್ಣಾಂಘ್ರಿದ್ವಯಾಳಂ [ಕೃ]ತನಮರವರಂ ಶೀತಶೈಲೇ[ಂ]ದ್ರ ಕನ್ಯಾ 

ಳೋಕಾಂಶು ಶ್ರೀನಿವಾಸಂ ಸಕಳಗಣ[ವೃ]ತಂ ವೀರಸೋಮೇಶನೀಶಂ ।।೨।।

ಚಳದುಗ್ರಗ್ರಾಹವಕ್ತ್ರ[ಚ್ಯು]ತ ತಿಮಿನಿಕರಾತುಚ್ಚಪುಚ್ಛಾಗ್ರ ಘಾತಾ 

ಕುಳಿತಾಂಭಃ ಕುಂಭಿಯೂಥಪ್ರಕರಸಜಳ ಫೂತ್ಕಾರಹಸ್ತಾ[ಭ್ರ] ಮಾಳಾ 

ಮಿಳಿತಂ ಸುತ್ತಿಪ್ಪೊ[೯]ದುದ್ಯನ್ಮಣಿಗಣಕಿರಣಸ್ಫಾರಮುಕ್ತಾಂಶು ವೇಳಾ 

ಚಳಮಾಳಂ ಭೂರಮಾಮಣ್ಢನ ವಿಪುಳಕಟೀದೇಶಮುದ್ರಂ ಸಮುದ್ರಂ ||೩||

[||ವ||] ಅಂತನೇಕ ಜಳಚರನಿವಾ[ಸ]ಮುಂ ಸ[ಮು]ತ್ತುಂಗ ಲಹರೀ ನಿವಾಸಮುಮೆನಿಸಿ ಸೊಗಯಿಸುವ ಲವಣಸಮುದ್ರದಿಂ ಪರಿ[ವೃ]ತವಾದಜಂಬೂದ್ವೀಪದಿ ತೆಂಕಲು ನೀಳನಿಷದ[ಧ] ಹಿಮವಂತ ಪರ್ವತಗಂಗಳೊಳವಲ್ಲಿ,

[||ವೃ||]

ಎಸೆಗುಂ ಪೂರ್ವಾಪರಾಂಭೋನಿಧಿಮಿ[ತಿ] ವಿತತಾಯಾಮದಿಂ ಸಿದ್ಧಕನ್ಯಾ

ವಿಸರಾನಂಗೋರುಕೇಳೀಶ್ರಮಶಮ ಮಹಿಮಾಕಂದರಂ ಸ್ವರ್ಧುಣೀವಾಃ 

ಪ್ರಸರೋಪಕ್ಷುಣ್ಣ ನಾನಾ[ನಗನಿ]ಕರಗಳದ್ಗಣ್ಡ ಶೈಳಾಳಿಮಾಳಾ 

ವಿಸರಂ ಪ್ರಸ್ಫಾರ ಶೀತದ್ಯುತಿರುಚಿನಿಚಯ ಭ್ರಾಜಿತಂ [ಶೀ]ತಶೈಲಂ ||೪||

[||ವ||] ಆ ಹಿಮಗಿ[ರೀ]ಂದ್ರದ ದಕ್ಷಿಣಪಾರ್ಶ್ವವ[ರ್ತ್ತಿ]ಯತ್ತಿಪ್ಪ ಭಾರತವರ್ಷದೊಳ್ ಕುಂತಳ ದೇಶವೆಂಬುದಧಿಕ ಶೋಭೆವೆತ್ತೆಸುವುದಲ್ಲಿ, 

||ಕಂ||

ಸೊಗಯಿಪುದಲನ್ದೆಯೆಂಬುದು

ನಗರಂ ಚೆಲುವೆಸೆದು ನಾಡೆ[ಯ]ಮರಾವತಿಗಂ 

ಮಿಗಿಲೆನಿಸಿ ವಿಬುಧ ಜನದಿಂ 

ದಗಣಿತ ಧನ ಧಾನ್ಯಜಳಸ[ಮೃ]ದ್ಧಿಯಿನೆಂದುಂ ||೫||

||ಮತ್ತಂ||

ಪ್ರಕಟಿತಕಮರಾವತಿಯೊಳ್ 

ಸುಕೇಶಿಯು[ಂ] ಮಂಜುಘೋಷೆಯುಂ ತಾಮಿರ್ಬ್ಬ 

ರ್ಸಕಳ ವಧೂತತಿಯೆಲ್ಲಂ 

ಸುಕೇಶಿಯರ್ಮಂಜುಘೋಷೆಯತ್ತತ್ಪುರದೊಳ್ ||೬||

[||ವೃ||]

ಅದು ನಾನಾವಿಧ ಗಂಧಸಾಳಿವನದಿಂ ಸರ್ವ್ವರ್ತ್ತು[ಕೋ]ದ್ಯಾನ ನಂ 

ದನದಿಂ ಪೂ[ರ್ಣ್ಣ]ತಟಾಕಕೂಪಸರಸೀಸಂನ್ದೋಹದಿಂ ಸಾರಸೋ 

ನ್ಮದ[ಭೃ]ಂಗೀ ಪಿಕಕೋಕಕೇಕಿಶುಕ ಸಂಘಾನೀಕ ಶಾಕುಂತನಾ 

ದದಿನೆತ್ತಂ ಗಣಿಕಾವಿನೋದ[ಕೃ]ತವೀಣಾನಾದದಿಂ[ದೊ]ಪ್ಪುಗುಂ ||೭||

[||ವ||] ಅಂತಪರಿಮಿತ ಕೇದಾರಭೂಮಿಯುಮಪಾರ ಜಳಾಶ್ರಯಾಭಿ ರಾಮಮುಂ ಬಹುಜನಾಕೀ[ರ್ಣ್ಣ]ಮುಮಮೇಯಗಣಿಕಾನಿವಾಸಮುಮಗಣಿತವಣಿಗ್ಜನಾಶ್ರಯಮುಮೆನಿಸಿ ಶೋಭಾನಿವಾಸಮಾಗೆ||

[||ವೃ||]

ಅವತರಿಸಿರ್ದ್ದನಲ್ಲಿ ರಜತಾಚಳದಿಂ ಗಿರಿಜಾಸಮೇತಮು 

ತ್ಸವದೊಳೆ ಸೋಮನಾಥನಖಿಳಾಮರ [ಮೌ]ಳಿ ವಿನದ್ಧರತ್ನ ಸಂ 

ಭವ[ಕಿ]ರಣಪ್ರಭಾಪಟಲ ಪುಂಜ ಪರಾಗ ಪದಾ[ಬ್ಜ]ನರ್ಥಿಯಿಂ 

ದವನತ ಭಾಕ್ತಿಕಾಭಿಮತ ಸಿದ್ದಿಫಳೋದಯ ಕಳ್ಪಭೂರುಹಂ ||೮||

[||ಕಂ||]

ಆ ಸೋಮನಾಥಪುರ ಸಂ

ವಾಸಿತರೊ[ಳ್] ಬ್ರಹ್ಮಪುರಿಗಳೊ[ಳ್ವಿ]ಪ್ರರೊಳಾ 

[ವ್ಯಾ]ಸ ಶುಕವಾಮದೇವ ಪ

ರಾಶರ ಕಪಿಳಾದಿ ಸ[ದೃ]ಶನೊರ್ಬ್ಬನ್ನೆಗಳ್ದಂ ||೯||

ಶ್ರೀವತ್ಸಗೋತ್ರನು[ರ್ವ್ವೀ]

ದೇವನುತಂ ನಿಖಿಳವೇದ ವೇದಾಂಗವಿದಂ

ಪಾವನ ಚರಿತ್ರ ಗುಣ ಸ

ದ್ಭಾವಂ ಪುರುಷೋತ್ತಮಂ [ದ್ವಿ]ಜೋತ್ತಮನೆನಿಪಂ ||೧೦||

ಆ ವಿಪ್ರನಸತಿ ಸೀತಾ 

ದೇವಿಗ[ಮಾ][ಸ]ತ್ಯತಪನಸತಿಗಂ ಗುಣಸ 

ದ್ಭಾವದೆ ಪದ್ಮಾಂಬಿಕೆ ಸಲೆ 

ಪಾವನಸುಚರಿತ್ರೆ ಪತಿಹಿತ[ವ್ರ]ತೆಯೆನಿಪಳ್ (?) ||೧೧||

[||ವ||] ಆ ದಂಪತಿಗಳ್ಪಲಕಾಲವನಪತ್ಯರಾಗಿರ್ದ್ದೊಂದು ದೆವಸಂ ನಾಪುತ್ರಸ್ಯ ಲೋಕೋಸ್ತಿ ಎಂಬ ವೇದವಾಕ್ಯಮ[ಂ] ತಿ[ಳಿದು]

[||ಕಂ||]

ಪುತ್ರಾರ್ತ್ಥವಾಗಿ ಸತ್ಯಪ 

ವಿತ್ರಾಚರಣಂ ನೆಗಳ್ದ ಪುರುಷೋತ್ತಮನಾ 

ಪತ್ತ್ರಾಣನೀಶನೆಂದು ಕ

ಳತ್ರಾನ್ವಿತನಾಗಿ ಶಂಭುವಂ ಪೂಜಿಸಿದನ್ ||೧೨||

[||ವ]|| ಅಂನೆಗಮಿತ್ತ ದಿವಿಜ ದನುಜ[ವೃಂ]ದ ವಂದಿತ ಪಾದಾರವಿಂದ[ನಪ್ಪ] ಮಹೇಶ್ವರಂ ಕವಿಳಾಸ ಪ[ರ್ವ್ವ]ತದ ರಮ್ಯಭೂಮಿಯೊಳ್ ಕೇಶವ ವಾಸವಾಬ್ಜಭವ ರೋಲಗಿಸಲಸಂಖ್ಯಾತಗಣ ಪರಿ[ವೃ]ತನುಮಾಸಹಿತಂ ವಡ್ಡೋಲಗದೊ[ಳ್] ಸುಖಸಂಕಥಾ ವಿನೋದದಿಂದಮಿರೆ ನಾರದನೆಂಬ ಗಣೇಶ್ವರನಿಂತೆಂದಂ

[||ವೃ||]

ಓಹಿಲದಾಸಿ ಚೆಂನ ಸಿರಿಯಾಳ ಹಳಾಯುಧ ಬಾಣನುದ್ಭಟ 

ರ್ದೇಹದೊಳೊಂದಿ ಬಂದ ಮಳಯೇಶ್ವರ ಕೇಶವರಾಜರಾದಿಯಾ 

ಗೈಹಿಕ ಸೌಖ್ಯಮಂ ಬಿಸುಟಸಂಖ್ಯಗಣಂ ನಿಜವಾದ ಭಕ್ತಿ ಸ 

ದ್ಗೇಹದೊಳಿಲ್ಲಿರ[ಲ್] ಸಮಯಮುಕ್ತಟವಾದುವು ಜೈನಬೌ[ದ್ಧ]ರೊ[ಳ್] ||೧೩||

[||ವ||] ಎಂಬುದುಂ ಮಹೇಶ್ವರಂ ದರಹಸಿತ ವದನಾರವಿಂದನಾಗಿ ವೀರಭದ್ರನಂ ನೀಂ ಮನುಷ್ಯಲೋಕದೊ[ಳ್] ನಿಂನಂಶದೊಳೊ[ರ್ಬ್ಬ]ನಂ ಪುಟ್ಟಿಸಿ ಪರಸಮಯಂಗಳಂ ನಿಯಾಮಿಸೆಂಬುದುಂ ವೀರಭದ್ರನುಂ ಪುರುಷೋತ್ತಮಭಟ್ಟರ್ಗ್ಗೆ ಸ್ವಪ್ನದೊಳ್ತಾಪಸರೂಪದಿಂ ಬಂದು ಪುತ್ರಂ ಪರಸಮಯ ನಿಯಾಮಕಂ ನಿಮಗೆ ಪುಟ್ಟುಗುಮೆ[೦]ದು ಮತ್ತಮಿಂತೆದ[0]

ಜೈನ ಮಾರ್ಗ್ಗೇಷು ಯೇ ಯಾತಾ ಬಹವೋ ದಕ್ಷಿಣಾಪಥೇ 

ತೇ ದೂಷಿತಾ ಭವ[ನ್] ಸರ್ವೇರಾಮೇಣ ತವಸೂನುನಾ ||ಶ್ಲೋಕ ೨||

[||ವ||] ಎಂದು [ಪ]ರಮ ಪ್ರಸಾದಂ ಮಾಡಿ ಪೋಪುದುಂ ಪುರುಷೋತ್ತಮ ಭಟ್ಟರುಂ[ಕೃ]ತಾರ್ತ್ಥರಾಗಿ ಸಂತಸಂಬಟ್ಟು ಮಗನಂ ಪಡೆದು ಜಾತಕರ್ಮಾದಿ ಕ್ರಿಯೆಗಳಂ ಮಾಡಿ ದೇವತೋ[ದ್ದೇ]ಶದಿಂ ರಾಮನೆ[ಂ]ದು ಪೆಸರನಿಟ್ಟರಾತನುಂ ತನ್ನ ದಿ[ವ್ಯ] ಜನ್ಮಾನುರೂಪಮಾಗೆ ಶಿವಯೋಗಯುಕ್ತನಾಗಿ ನಿಸ್ಪೃಹ[ವೃ]ತ್ತಿಯಿಂ ಚರಿಯಿಸುತ್ತುಂ

[||ಕಂ||]

ಏಕಾಗ್ರ ಭಕ್ತಿಯೋಗದಿ 

ನೇಕಾಕಿಯೆನಲ್ಕೆ ಸಂದು ಶಿವನಂ ಪಿರಿದ 

ಪ್ಪೇಕಾಂತದೊಳಾರಾಧಿಸಿ

ಯೇಕಾಂತದ ರಾಮನೆಂಬ ಪೆಸರ[o] ಪಡೆದಂ ||೧೪||

ಸತತಂ ಸಂದು ಶಿವಾಗಮೋಕ್ತ ವಿವಿಧ ಕ್ಷೇತ್ರಂಗಳೊ[ಳ್] ಸಾಂಭವಾ 

ಯತನಾನೇಕ ನದೀನದ ಪ್ರಕರದೊ[ಳ್] ಗೌರೀ]ವರಾಂಘ್ರಿದ್ವಯಾ

ಶ್ರಿತ ವಾಕ್ಕಾಯಮನೋನುಗಂ ಚರಿಯಿಸುತ್ತುಂ ಬಂದು ಕಣ್ಡಂ ಸುರಾ 

ರ್ಚಿತನಂ ದಕ್ಷಿಣ ಸೋಮನಾಥನನಘೌಘತ್ರಾಸಿಯಂ ಪ್ರೀತಿಯಿಂ ||೧೫||

[||ವ||] ಅನ್ತು ಬಂದನವರತ ವಿನಮದಮರವರಮೌಳಿಮಣಿ ಕಿರಣ ಮಂಜರೀ ರಂಜಿತಾಂಘ್ರಿಯುಗ್ಮನಪ್ಪ ಹುಲಿಗೆಱೆಯ ಸೋಮನಾಥನನಾರಾಧಿಸುತ್ತಮಿಪ್ಪುದುಮಾ ಪರಮೇಶ್ವರಂ ಪ್ರತ್ಯಕ್ಷವಾಗಿ

||ಅತ್ರ ಶ್ಲೋಕಧ್ವಯಂ॥

ಅಬಲೂರು ವರಗ್ರಾಮಂ ಗತ್ವಾರಾಮ ಮಮಾ[ಜ್ಞ]ಯಾ

ತತ್ರವಾಸಂ ಕುರು ಸ್ವಸ್ಥಂ ಯಜಮಾಂ ಭಕ್ತಿಯೋಗತಃ ॥ಶ್ಲೋಕ ೩||

ಜೈನೈಃಸಹ ವಿವಾದಂ ಚ ಶಂಕಾಂ ಹಿತ್ವಾ ಕುರುಷ್ವಥ 

ಸ್ವಶಿರೋಪಿ ಪಣಂ [ಕೃ]ತ್ವಾ ಪುತ್ರತ್ವಂ ವಿಜಯೀಭವ ॥ಶ್ಲೋಕ ೪||

[||ವ||] ಎಂದುಸೋಮನಾಥ ದೇವರ್ಬೆಸಸಿದಡೇಕಾನ್ತದ ರಾಮಯ್ಯನಬ್ಬಲೂರ ಬ್ರಹ್ಮೇಶ್ವರಸ್ಥಾ[ನದೊಳ್] ನಿ[ಷ್ಪೃ]ಹ[ವೃ]ತ್ತಿ ಯಿಂದಮಿರೆ,

[||ಕಂ||]

[ಉ]ಲಿದಡ್ಡಿ ಬಂದು ಜೈನ

ರ್ಪಲರನ್ತಾ ಸಂಕಗೌಣ್ಡ ಸಹಿತಂ ಪಿರಿದುಂ

ಚಲದಿಂ ಕೈವಾರಿಸಿದ

ರ್ತೊಲಗದೆ ಜಿನದೈವನೆನ್ದು ಶಿವ ಸಂನಿಧಿಯೊ[ಳ್] ||೧೬||

[||ವ||] ಅದಂ ಕೇಳ್ದೇಕಾನ್ತದ ರಾಮಯ್ಯಂನತಿಕೃ[ದ್ಧ]ನಾಗಿ ಶಿವಸಂನಿಧಿಯೊಳನ್ಯದೇವತಾಸ್ತವನಂ ಮಾಡಲಾಗದೆಂದಡಡ[ದಂ] ಮಾಣದೆ ನುಡಿ[ಯು]ತ್ತಿರಲಿಂತೆಂದಂ,

[||ವೃ||]

ಜಗಮಂ ಮಾಡುವನಾನಾವನದನಾಪತ್ಕಾ[ಲ]ದೊಳ್ ಕಾವನಿಂ 

ಮಿಗೆ ಕೋಪಂ ತನಗಾಗೆ ಸಂಹರಿಸಲಾವಂ ದಕ್ಷನಾ ಶಂಭು ಸ

ರ್ವ್ವಗನಿರ್ದನ್ತೆ ಗತಪ್ರಭಾವ ವಿಭವಂ ಸಂಸಾರದೊ[ಳ್] ಬಿರ್ದ್ದು ದಂ

ದುಗದೊ[ಳ್]ಬ[ರ್ದ್ದು] ತಪ[ಕ್ಕೆ]ಸಾರ್ದ್ದು ಸುಖಮಂಪೊರ್ದ್ದಿರ್ಪನುಂ ದೇವನೇ ||೧೭||

[||ಕಂ||]

ಹರನನ್ತಿರೀವನೇ ನಿ

ಮ್ಮರುಹಂ ಮುಂ ಕೊಟ್ಟಿಟಾ[ವು]ದಾವುದು ಮು[ನ್ನಂ] 

ಹರನೊಳ್ಪಡೆದರನೇಕ 

ರ್ವ್ವರಮಂ ಬಾಣದಿನಿಶಾಳ ಭಕ್ತಗಣಂಗಳು[0] ||೧೮||

ಎನೆ ಜೈನರೆಂಗು ನೀಂ ಮುಂ 

ನಿನ ಹಿತರರ ಹೇಳಲೇಕೆ ನಿಂನಯ [ಶಿ]ರಮಂ 

ಜನಮಱೆಯಲರಿದುಕೊಟ್ಟಾ 

ತನೊಳಿಂ ಪಡೆ ನೀನೆ ಭಕ್ತನಾತನೆ ದೇವಂ ||೧೯||

ಎನಲೇಕಾನ್ತದ ರಾಮಂ 

ಮನಸಿಜರಿಪುಗಿತ್ತು ತಲೆಯನಾಂ ಪಡೆದಡೆ ನೀ 

ವೆನಗೀವ ಪಣಮದೇನೆನೆ 

ಮುನಿದೆಂದರ್ಜ್ಜಿನನ ಕಿತ್ತು ಶಿವನಂ ನಿಲಿಪೆ[ವೂ] ||೨೦||

ಎನೆ ಕುಡುವುದೋಲೆಯಂ ನೀ 

ವೆನಗೆಂದಿತ್ತೋಲೆಗೊಂಡು ಶಿರಮಂ ತಾಂ [ಭೋಂ] 

ಕೆನಲರಿದು ಕುಡುವ ಪದದೊ[ಳ್]

ಶಿವನಂ ಸಾಂನಿಧ್ಯಮಾಡಿ ರಾಮಂ ನುಡಿಗುಂ ||೨೧||

[||ವೃ||]

ಉಡುಗದೆ ಶಂಭು ನೀನೆ ಶರಣೆಂನದಡಂ ಮನಮನ್ಯ[ಭಾ]ವದೋ] 

ಳೊಡರ್ದಡಮೀ [ಕೃ]ಪಾಣ ಮುಖದಿಂ ತಲೆಪೋಗದೆ ನಿಲ್ಕದಲ್ಲದಿ 

ರ್ದ್ದಡೆ ಶಿವನಿಂನ ಮುನ್ನಡಿಗುರುಳ್ಗೆನುತಂ ಕಲಿ ರಾಮನಾರ್ದ್ದು ಕೆ

ಯ್ಗಿದರಿದಿಕ್ಕರಾಯಿಸಿದಂ ಶಿರಮಂ ಶಿವನಂಫ್ರಿಯುಗ್ಮದೊ[ಳ್] ||೨೨||

ಅರೆ[ಗಯ್]ಗೊಂಡನೆ ಕಿತ್ತು ನೋಡಿದನೆ ಕೂರ್ಪ್ಪಂಗ[ಳ್ಕಿ] [ಮೆಯ್‌ಗಾಯ್ದನೇ] 

ಸೆರಗಂ ಪಾರ್ದ್ದನೆ ಬಾಳ್ಗೆ ಭಕ್ತರೆನುತಂ ಬಲ್ಲಾಳು ರಾಮಂ ಸ್ವಕಂ 

ಧರಮಂ ಚಕ್ಕನೆ ಹುಲ್ಲಕಟ್ಟನರಿವಂತಕ್ಲೇಶದಿಂದಾಗಳಂ 

ತರಿದೀಶಾಂಘ್ರಿಯೊಳ[ಕ್ಕಿ ಶಂಕರ]ಗಣ[ಕ್ಯಾ]ನ[0]ದವಂ ಮಾಡಿದಂ ||೨೩||

[||ಕಂ||]

ಅರಿದ ತಲೆ ಏಳುದೆವಸಂ 

ಬರೆಗಂ ಮೆಱೆದಿಂ ಬಳಿಕ್ಕವಿತ್ತಂ ಹರನಾ 

ದರದಿಂ ತಲೆಕಲೆಯಿಲ್ಲದೆ 

ತಿರವಾದುದು ಲೋಕವ[ಱೆ]ಯೆ ರಾಮ[0] ಪಡೆದಂ ||೨೪||

ಬೆಱಗಾಗಿ ಜೈನರೆಲ್ಲಂ 

ಮ[ಱು]ಗಿ ಜಿನಪ್ರ[ಳ]ಯವೆಂಬುದಂ ಮಾಡದಿರೆಂ 

ದೆಱಗಿ ಕಾಲ್ವಿಡಿಯೆ ಮಾಣದೆ 

ಬಱಸಿಡಿಲಂತೆಱಗಿ ಜಿನನ ತಲೆಯಂ ಮುಚಿದಂ ||೨೫||

[||ವೃ||]

ಬಡಿಗೊಂಡೊರ್ಬ್ಬನೆ ಸೊಕ್ಕಿ ಬಾಳೆವನಮಂ ಕಾಡಾನೆ ಪೊಕ್ಕನ್ತಿ[ರಲ್] 

ಕಡಗ[ಲ್] ಕಾಪಿನ ವೀರರಂ ತುರುಗಮಂ ಸಾಮಂತರಂ ತೂಳ್ದು ಮಾ 

ರ್ಪಡೆಗ[ಳ್] ಜೈನರ ಮಾರಿ ಬಂದುದೆನುತುಂ ಬೆ[ಂ]ಗೊಟ್ಟು ಪೋಗ[ಲ್] ಜಿನಂ

ಕೆಡೆವ[0]ನಂ ಬಡಿದಲ್ಲಿ ಕೈಕೊಳಿಸಿದಂ ಶ್ರೀ ವೀರಸೋಮೇಶನಂ ||೨೬||

ಅದನೆಲ್ಲಂ ನೆಱೆಪೋಗಿ ಬಿಜ್ಜಣ ಮಹೀಪಾಳಂಗೆ ಜೈನರ್ಕ್ಕಳು 

ರ್ಕ್ಕವದಿಂ ಪೇಳ್ದು ವಿರೋಧವಾಗೆ ಪಿರಿದುಂ ದೂರುತ್ತಿರ[ಲ್] ಕೋಪದು 

ರ್ಮ್ಮದನಾ ಬಿಜ್ಜಣ ಭೂಭುಜಂ ಮುನಿಸಿನಿಂ ರಾಮೈಯನಂ ಕಂಡು ನೀ 

ನಿದನನ್ಯಾಯಮನೇಕೆ ಮಾಡಿದೆಯೆನಲ್ಕೋ[ಟ್ಟೋ]ಲೆಯಂ ತೋಱಿದಂ ।।೨೭||

[||ಕಂ||] 

ಅವರಿತ್ತಯೋಲೆಯಿದೆ ನೀ 

ನವಧರಿಸುವುದಿಕ್ಕು ನಿಂನ ಭಂಡಾರದೊಳಿಂ 

ನವರೊಡ್ಡವಿರಲಿ ಯಿನ್ನೊ 

ಡ್ಡುವುದಾರ್ಪಡೆ ನಿಂನ ಮುನ್ದೆ ಜಿನರಂ ಪಲರಂ ||೨೮||

[||ವ||] ಅನ್ತಪ್ಪಡೀ ತಲೆಯನರಿದವರ ಕೈಯೊಳೊ[ಡ್ಡು]ವೆನವರದಂ ಸುಟ್ಟಿಂ ಬಳಕವಾಂ ಪ[ಡೆ]ವೆನೆನಗಾನೆಸೆಜ್ಜೆಯ ಬಸದಿ[ಮು]ಖ್ಯವಾಗಿ ಯೆಂನುಱುವ ಬಸದಿ ಜಿನರಂ ಪಲರನೊಡ್ಡುವುದೆನೆ ಬಿಜ್ಜಣರಾಯಂ ನಾಮೀಕೌತುಕಮಂ ನೋಡು[ವೆಮೆಂ]ದು ಬಸದಿಗಳ ಪಂಡಿತರುಮಂ ಜೈನರಂ ಕರೆದು ನೀಮಾರ್ಪ್ಪಡೆ ಬಸದಿಗಳಂ ಪಣಂಮಾಡಿ ಓಲೆಯಂ ಕುಡಿಮೆನ್ದದಡವರಾವೀ ಮುಂನೊಡದ ಬಸದಿಯಂ ದೂಱಲ್ ಬನ್ದೆವಲ್ಲದಿನೊಡ್ಡಿ ಜಿನಪ್ರ[ಳ]ಯಂ ಮಾಡಲು ಬಂದವರ[ಲ್ಲ]ವೆನೆ ಬಿಜ್ಜಣರಾಯಂ ನಕ್ಕು ನೀವಿಂನುಸಿರದೆ ಪೋಗಿ ಸುಖದಿನಿರಿಮೆಂದವರಂ ಕಳಿಪಿ ರಾಮಯ್ಯ[0]ಗಳಿಗೆಲ್ಲರು ಮಱೆಯೆ ಜಯಪತ್ರಮಂ ಕೊ[ಟ್ಟಂ]

ಭಾಗ – ೨

[||ವೃ||]

ಅರಿರಾಯಕ್ಷಿತಿ[ಭೃ]ಂನಗಾರಿಯರಿರಾಯಾಂಭೋಧಿ ಕುಂಭೋದ್ಭವಂ 

ಅರಿರಾಯೇಂಧನ ತೀ[ವ್ರ]ವಹ್ನಿ ಅರಿರಾಯಾನಂಗ ಭಾಳೇಕ್ಷಣಂ 

ಅರಿರಾಯೋಗ್ರಭುಜಂಗ ಭೂರಿಗರುಡಂ ಶ್ರೀ ಬಿಜ್ಜಣ ವೈರಿರಾ 

ಜ್ಯ ರಮಾಕರ್ಷಣದೋ[ಲಿ]ತಾಸಿ ಸು[ಹೃ]ದಂ ಕೀರ್ತ್ಯಂಗನಾವಲ್ಲಭಂ ||೨೯||

ಚೋಳನನಿಕ್ಕಿ ಲಾಳನನಧಕ್ಕರಿಸಿ ಸ್ಥಿತಿಹೀನಮಾಡಿ ನೇ 

ಪಾಳನನಂಧ್ರನಂ ತುಳಿದು ಗುರ್ಜರನಂ ಸೆಱೆಯಿಟ್ಟು ಚೇದಿ ಭೂ 

ಪಾಳನ ಮೈಮೆಯಂ ಮುಱಿದು ವಂಗನ ಬೀಸಿ[ಸಿ] ಕಾದಿಕೊಂದು ಬಂ

ಗಾಳ ಕ[ಳಿಂ]ಗ ಮಾಗಧ ಪಟಸ್ವರ ಮಾಳವ ಭೂಮಿಪಾಳರಂ 

ಪಾಳಿಸಿದಂ ಧರಾವ[ಳ]ಯಮಂ ಕಲಿಬಿಜ್ಜಣರಾಯ ಭೂಭುಜಂ ||೩೦||

[||ಕಂ||]

ಕೊಡದೊಳಗೆ ಪುಟ್ಟಿ ಕಡಲಂ 

ಕುಡಿದಂ ಘಟಯೋನಿ ಪು[ಟ್ಟಿ] ಕಳಚೂರ್ಯರೊಳೋ 

ಗಡಿಸದೆ ಚಳುಕ್ಯರನ್ವಯ

ಗಡಲಂ ಕುಡಿದುರ್ಕ್ಕು ಸಜ್ಜನಂ ಬಿಜ್ಜಣನೊ[ಳ್] ||೩೧||

[।।ವ।।]ಸ್ವಸ್ತಿಸಮಧಿಗತ ಪಂಚಮಹಾಶಬ್ದ ಮಹಾಮಂಣ್ಡಳೇಶ್ವರಂ ಕಾ[ಳ]ಂಜರ ಪುರವರಾಧೀಶ್ವರಂ। ಸುವ[ರ್ಣ್ಣ][ವೃ]ಷಭಧ್ವಜಂ। ಡಮರುಗ ತೂರ್ಯ ನಿರ್ಗ್ಘೋಷಣಂ। ಕಳಚೂರ್ಯಕುಳಕ[ಮಳ] ಮಾರ್ತ್ತಂಡಂ ಕದನ ಪ್ರಚಣ್ಡಂ। ಮೊನೆಮುಟ್ಟೆ ಗಂಡಂ| ಸುಭಟರಾದಿತ್ಯಂ। ಕಲಿಗಳಂಕು[ಶ]ಂ| ಗಜಸಾಮನ್ತ ಶರಣಾಗತ ವಜ್ರಪಂಜರಂ| ಪ್ರತಾಪ ಲಂಕೇಶ್ವರಂ| ಪರನಾರೀಸಹೋದರಂ। [ಶ]ನಿವಾರಸಿದ್ಧಿ। ಗಿರಿದುರ್ಗ್ಗಮಲ್ಲಂ । ಚಲದ[ಂ]ಕ ರಾಮಂ। ನಿ[ಶ್ಯ]ಂಕಮಲ್ಲನಿತ್ಯಖಿಳನಾಮಾದಿ ಸಮಸ್ತ ಪ್ರಶಸ್ತಿ ಸಹಿತ[ಂ] ಶ್ರೀಮತು ಬಿಜ್ಜಣದೇವಂ ರಾಮಯ್ಯಂಗ[ಳ್] ಮಾಡಿದ ಪರಮ ಸಾಹಸಕಂ ನಿರತಿಶಯಮಪ್ಪ [ಮಾಹೇಶ್ವರ ಭಕ್ತಿಗ[0] ಮೆಚ್ಚಿ ವೀರಸೋಮನಾಥ ದೇವರ ದೇಗುಲದ ಮಾಟಕೂಟ ಪ್ರಾಕಾರ ಖಣ್ಡಸ್ಫುಟಿತ ಜೀರ್ಣ್ನೋದ್ಧಾರಕ್ಕ[ಂ] ದೇವರಂಗಭೋಗ ನೈವೇದ್ಯ[ಕ್ಕಂ] ಬನವಾಸೆ ಪನಿರ್ಚ್ಛಾಸಿರದ ಕಂಪಣ[೦] ಸ[ತ್ತ]ಳಿಗೆಯೆ[ಪ್ಪತ್ತಱ ಮ[0]ನೆಯ ಚ[ಟ್ಟ]ರಸನುಮಾ ಕ[o]ಪಣದಗ್ರಾಯಿತ ಪ್ರಭು ಗೌಣ್ಡುಗಳಂ ಮುಂದಿಟ್ಟು ಶ್ರೀಮದು ಬಿಜ್ಜಣದೇವ[ಂ] ಸತ್ತಳಿಗೆಯೆಪ್ಪತ್ತರಱೊಳಗೆ ಮಳುಗುಂದದಿಂ ತೆಂಕಣ ಗೋಗಾವೆಯೆಂಬ ಗ್ರಾಮಮಂ ಪ್ರಸಿದ್ಧ ಸೀಮಾಸಹಿತಂ ತ್ರಿಭೋಗಮಂ ಶ್ರೀಮದೇಕಾನ್ತದ ರಾ[ಮ]ಯ್ಯಂಗಳ ಕಾಲಂಕರ್ಚ್ಚಿ ಧಾರಾಪೂ[ರ್ವ್ವ]ಕಂ ಮಾಡಿಕೊಟ್ಟು [ಪ್ರ]ತಿಪಾಳಿಸಿದಂ

ಭಾಗ-೩

||ಓಂ||

[||ವೃ||]

ಶ್ರೀ ನುತಕೀರ್ತಿ ವಿಕ್ರಮದೊಳೊಂದಿದ ಸೋಮಕುಲೈಕ ಭೂಷಣಂ 

ತಾನೆನಿಪೀ ಚಳುಕ್ಯ[ನೃ]ಪರನ್ವಯದೊ[ಳ್] ವಸುಧಾಧಿನಾಥರಾ 

ಖ್ಯಾನ ಪರಾಕ್ರಮರ್ಕಳಿಯೆ ಧಾತ್ರಿ ಪರಾ[ಹೃ]ತೆಯಾಗೆ ತೈಲಪಂ 

ತಾನೆ ಚಳುಕ್ಯ ಧಾತ್ರಿ ಕುಲಶೈಲನೆನ[ಲ್] ಮುದದಿಂದೆ ತಾಳಿದಂ ||೩೨||

||ವ|| ಅಂತಾ ತೈಲಪದೇವಂಗೆ ಸತ್ಯಾಶ್ರಯದೇವನೆಂಬ ಮಗಂ ಪುಟ್ಟಿದಂ ತತ್ತನಯಂ ವಿಕ್ರಮದೇವಂ ತದನುಜಂ ದಶವರ್ಮ್ಮದೇವನಾತನ ಮಗಂ ಜಯಸಿಂಗರಾಯನಾತನ ಮಗನಾಹವಮಲ್ಲನಾತನ ಮಗಂ ತ್ರಿಭುವನಮಲ್ಲ ಪೆರ್ಮಾಡಿರಾಯನಾತನ ಮಗಂ ಭೂಲೋಕಮ[ಲ್ಲ] ಸೋಮೇಶ್ವರದೇವನಾತನ ಮಗಂ ಪ್ರತಾಪ ಚಕ್ರವರ್ತಿ ಜಗದೇಕಮ[ಲ್ಲ]ನಾತನ [ತಮ್ಮಂ] ತ್ರೈಲೋಕ್ಯಮಲ್ಲ ನೂರ್ಮಡಿ ತೈಲಪನಾತನ ಮಗಂ ತ್ರಿಭುವನಮಲ್ಲ ಸೋಮೇಶ್ವರದೇವನಾತನ ಪರಾಕ್ರಮ ಪ್ರಭಾವಮೆಂತೆಂದಡೆ

[||ವೃ||]

ಕೋಡುಳ್ಳುಗ್ರಮದೇಭವೊಂದೆರಡೆನ[ಲ್ಕೆ]ಂಬತ್ತುಮೊಡ್ಡಾಗಿರ 

ಲ್ಕೋಡಿಟ್ಟಾನದೆ ತಳ್ತುಕಾದಿ ಗೆ[ಲಿದಂ] ಕೋಡಿಲ್ಲದೊಂದಾನೆಯಿಂ 

ನಾಡಂ ಬೀಡನಿಭಂಗಳಂ ತುರಗಮಂ ಸೋಮೇಶ್ವರಂ ಬಿಲ್ಲಮಂ 

ನೋಡಲ್ಕಾ ಕಳಚೂರ್ಯ್ಯ ವಂಶಮನದಂ ನಿರ್ಮೂಳವಂ ಮಾಡಿದಂ ।।೩೩।। 

[ಧ]ರೆನೀ[]ಸಾ ಪತ್ನವಾಗ[ಲ್] ಸಿರಿ ನಿಜವ[ಶ]ದಿಂ ಸ[ಂ]ದುದಾರಕ್ಕೆ ತಾನಾ 

ಗರವಾಗ[ಲ್] ಕೀರ್ತ್ತಿ ದಿಕ್ಪಾಳಕನಿಕರ ಮುಖಾದೇಶವಾಗ[ಲ್] ಜಯಾಸೌಂ 

ದರಿ ನಿಚ್ಚಂ ತೋಳಬಾಳಂ ಸೆಱೆವಿಡಿದಿರೆ ಸಾಮ್ರಾಜ್ಯಮಂ ತಾಳ್ದಿದಂ ದು

ರ್ದ್ಧರ ಶೌರ್ಯಂ ವೀರಸೋಮೇಶ್ವರನಹಿತವಧೂನೇತ್ರ ನೀರೇಜಸೋಮಂ ।।೩೪।।

[||ಕಂ||]

ಅಂಧತಮವೆನಿಪ ಕಳಚೂ 

ರ್ಯಾಂಧಂ ಮಸುಳಲ್ಕೆ ತಂನ ತೇಜದೆ ಧರೆಗನು 

ಬಂಧಂ ತಂನೊಳೆ ಸಲೆ ಸ 

ಮ್ಮಂಧಿಸೆ ಚಾಳುಕ್ಯರಾಯ ಸೋಮಂ ನೆಗಳಂ ||೩೫||

[||ವ||] ಅಂತಾ ತ್ರಿಭುವನಮಲ್ಲ ಸೋಮೇಶ್ವರದೇವಂ ಸಕಳಚಮೂನಾಥ ಶಿರೋಮಣಿಯುಂ ಚಾಳುಕ್ಯರಾಜ್ಯ ಪ್ರತಿಷ್ಠಾಪಕನಪ್ಪ ಕುಮಾರ ಬಮೈಯನುಂ ತಾನು[o] ಸಲೆಯಹ[ಳ್ಳಿ]ಯ ಕೊಪ್ಪದೊಳ್ ಸುಖಸಂ[ಕ]ಥಾ ವಿನೋದದಿನಿರ್ದ್ದೊಂದು ದೆವಸಂ ಧರ್ಮ್ಮಗೋಷ್ಠಿಯೊಳಿರ್ದ್ದು ಪುರಾತ[ನ] ನೂತ[ನ]ರಪ್ಪ ಶಿವಭಕ್ತರ ಗುಣಸ್ತವನಂ ಮಾಡುತ್ತಮಿರ್ದೇಕಾನ್ತದ ರಾಮಯ್ಯಂಗಳ[ಬ್ಬ]ಲೂರಲಿದ್ದಲ್ಲಿ ಜೈನರೆಲ್ಲಂ ನೆರೆದು ಬಂದು ಮಹಾವಿವಾದಮಂ ಮಾಡಿ ನೀ[ಂ] ತಲೆಯನರಿದುಕೊಂಡು ಶಿವನ ಕೈಯೊಳ್ಪಡದೆಯಪ್ಪಡೆ ಜಿನನನೊಡೆದು ಶಿವನಂ ಪ್ರತಿಷ್ಠೆ ಮಾಡುವೆ[ವೆ]ಂದೊಡ್ಡಮನೊಡ್ಡಿಯೋಲೆಯಂ [ಕೊ]ಟ್ಟಡವರು ಕೊಟ್ಟೋಲೆಯಂ ಕೊಂಡು ತಂನ ತಲೆಯನರಿದುಕೊಂಡು ಶಿವಂಗೆ ಪೂಜೆ ಮಾಡಿ ಬಳಿಕಾ ತಲೆಯಂ ಏಳು ದಿವಸಕೆ ಮುನ್ನಿನನ್ತೆ ತಲೆಯಂ ಪೊಲೆವೀೞವನ್ತು ಪಡೆದು ಬಿ[ಜ್ಜ]ಣದೇವನ ಕೈಯ್ಯಲು ಜಯಪತ್ರವಂ ಪೂಜೆ ಸಹಿತಂ ಕೊಂಡುದುಮಂ ಜಿನನನೊಡೆದು ಬಸದಿಯನಳಿದು ಬಿಸುಟು ನೆಲನಂ ಖಂ[ಡಿ]ಸಿ ವೀರಸೋಮನಾಥದೇವರಂ ಪ್ರತಿಷ್ಠೆ ಮಾಡಿ ಶಿವಾಗಮೋಕ್ತಮಾಗೆ ಪರ್ವತ ಪ್ರ[ಮಾ]ಣದ ದೇಗುಲಮಂ ತ್ರಿಕೂಟಮಾಗೆ ಮಾಡಿಸಿದರೆಂಬುದಂ ಕೇಳ್ದು ತ್ರಿಭುವನಮಲ್ಲ ಸೋಮೇಶ್ವರದೇವಂ ವಿಸ್ಮಯಂ[ಬ]ಟ್ಟು ನೋಡುವರ್ತ್ತಿಯಿಂ ಬಿನ್ನವತ್ತಳೆಯಂ ಬರೆಯಿಸಿ ಬರಿಸಿಯವರನಿದಿಗೊ[೯]ಂಡು ತನ್ನ ಮನೆಗೊಡಗೊಣ್ಡುಪೋಗಿ ಪಿರಿದುಂ ಸತ್ಕಾರದಿಂ ಪೂಜಿಸಿ ಶ್ರೀಮದ್ ವೀರಸೋಮನಾಥ ದೇವರ ದೇಗುಲದ ಮಾಟಕೂಟ ಪ್ರಾಕಾರ ಖಂಡ ಸ್ಫುಟಿತ ಜೀರ್ಣ್ನೋದ್ಧಾರಕ್ಕಂ ದೇವರ ಅಂಗಭೋಗ ರಂಗಭೋಗ ನೈವೇದ್ಯಕ್ಕಂ ಚೈತ್ರ ಪವಿತ್ರ ವಸಂತೋತ್ಸವಾದಿ ಪ[ರ್ವ್ವ}ಗಳಿಗವನ್ನದಾನ ವಿದ್ಯಾದಾನಕ್ಕ(೦) ಬನವಾಸೆ ಪನಿರ್ಚ್ಛಾಸಿರದ ಕ[0]ಪಣಂ ನಾಗರಖಂಡವೆಪ್ಪ[ತ್ತ]ಱೊಳಗಣ ಅ[ಬ್ಬ]ಲೂರನಾ ದೇವರ್ಗ್ಗಾವೂರಾಗಲ್ ವೇಳ್ಕುಮೆಂದು ಪರಮಭಕ್ತಿಯಿಂದಾ ಕ[೦]ಪಣದ) ಮನ್ನೆಯ ಮಲ್ಲಿದೇವನಂ ಮು[ಂ]ದಿಟ್ಟಾವೂರ ಮೇಲಾಳಿಕೆ ಮನ್ನೆಯ ಸುಂಕ ದಂಡ ದೋಷ ನಿಧಿ ನಿಕ್ಷೇಪ ಸಹಿತವಾಗಿ ಏಕಾನ್ತ[ದ] ರಾಮಯ್ಯ[ಂ]ಗಳ ಕಾಲಂಕರ್ಚ್ಚಿ ಪೂರ್ವ್ವ ಪ್ರಸಿದ್ಧ ಸೀಮಾಸಹಿತಂ ತ್ರಿಭೋಗಸಹಿತಂ ಧಾರಾಪೂರ್ವಕಂ ಮಾಡಿ ಪಾರಮೇಶ್ವರ ದತ್ತಿಯಾಗೆ ತಾಂಬ್ರಶಾಸನಮಂ ಕೊ[ಟ್ಟಾ]ನೆಯನೇ[ಱಿ]ಸಿ ಮೆಱೆಯಿಸಿ ಪರಮ ಭಕ್ತಿಯಿಂ ಪ್ರತಿಪಾಳಿಸಿದಂ

ಭಾಗ-೪

||ಓಂ||

[||ಕಂ||]

ಶ್ರೀ ಕಂಠ ಪದಾಂಬುಜಮನ 

ನಾಕುಳ ಚಿತ್ತದೊಳೆ ಪೂಜಿಪಂ ಶಿವಸಮಯ 

ಪ್ರಾಕಾರನೆನಿಸಿ ಸಲೆ ನೆಗ 

ಳ್ದೇಕಾಂತದ ರಾಮನೀಶಭಕ್ತಿಪ್ರೇಮಂ ||೩೬||

[||ವೃ||] 

ಶ್ರೀಯಂ ದೀ[ರ್ಘಾ]ಯುವಂ ಕೀರ್ತಿಯನನುದಿನವುಂ ಮಾಳ್ಕೆ ಗೀರ್ವಾಣ[ವೃಂ]ದ 

ಜ್ಯಾಯಂ ಶ್ರೀ ವೀರಸೋಮಂ ವಿ[ಧೃ]ತ ಹಿಮಕರಂ ಕಾಮದೇವಂಗುದಾರ 

ಶ್ರೀ ಯುಕ್ತಂಗದ್ರಿಜಾಸಸ್ಮಿತ ಸಿತ ತರಳಾಲೋಲ ವಿಸ್ತಾರಲೀಲಾ 

ನೇ[X]ಳೋಕೋದ್ಧತ ಶ್ರೀ ಲಲಿತರತಿಕಳಾಲಾಸ್ಯ ಶೈಲೂಷವೇಷಂ ||೩೭||

[||ವ||] ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಮಣ್ಡಳೇಶ್ವರಂ ಬನವಾಸಿ ಪುರವರಾ[ಧೀ]ಶ್ವರಂ ಜಯನ್ತೀ ಮಧುಕೇಶ್ವರದೇವಲಬ್ಧ ವರಪ್ರಸಾದಂ ವಿದ್ವ[ಜ್ಜ]ನಾರ್ಹ್ಲಾದಂ ಮಯೂರವರ್ಮ್ಮ ಕುಲಭೂಷಣಂ ಕಾದಂಬ ಕಂಣ್ಠೀರವಂ ಕದನ ಪ್ರಚಣ್ಡಂ ಸಾಹಸೋತ್ತು[ಂ]ಗಂ ಕಲಿಗಳಂಕು[ಶ]ಂ ಸತ್ಯರಾಧೇಯಂ ಶರಣಾಗತ ವಜ್ರಪಂಜರ[0] ಯಾಚಕ ಕಾಮ[ಧೇ]ನುವಿತ್ಯಖಿಳ ನಾಮಾವಳಿ ಸಹಿತನಪ್ಪ ಶ್ರೀಮನ್ಮಹಾಮಣ್ಡಳೇಶ್ವರ[ಂ] ಕಾಮದೇವರಸರ್ಪ್ಪಾನುಂಗ[ಲ್ಲೈ]ನೂಱುವಂ ದುಷ್ಟನಿಗ್ರಹ ಶಿಷ್ಟ ಪ್ರತಿಪಾಳನದಿನಾಳುತ್ತಮಿರ್ದಬ್ಬಲೂರ ವೀರ ಸೋಮನಾಥ ದೇವರಂ ಬಂದು ಕಣ್ಡು ರಾಮಯ್ಯಂಗಳ್ ಶಿವಾಗ[ಮ] ವಿಧಾನದಿಂ ಮಾಡಿಸಿದ ಪರ್ವತೋಪ ಮಾನಮಪ್ಪ ದೇಗುಲಮಂ ಕಣ್ಡವರು ಮಾಡಿದ ಸಾಹಸಮಂ ಸವಿಸ್ತರ[ಂ] ಕೇಳ್ದು ಮೆಚ್ಚಿ ಪರಮ ಪ್ರೀತಿಯಿಂದೊಡಂಗೊಂಡು ಪೋಗಿ ಪಾನುಂಗಲ್ಲ ನೆಲವೀಡಿನೊಳ್ರ್ಪಧಾನರು[ಂ] ತಾನುಂ ಮದುಕೆಯ ಮಂಡಳಿಕ ಸಹಿತಂ ಸುಖಸಂಕಥಾ ವಿನೋದದಿ[ಂ] ಕುಳ್ಳಿರ್ದ್ದು ಪರಮ ಭಕ್ತಿಯಿಂ ವೀರ ಸೋಮನಾಥದೇವರ್ಗ್ಗೆ ಪಾನು[0]ಗಲ್ಲೈನೂಱಱೊಳಗಣ ಕಂಪಣಂ ಹೊಸನಾಡೆಪ್ಪತ್ತಱೊಳಗೆ ಮುಣ್ಡಗೋಡ ಸಮೀಪದ ಜೋಗೇಸರದಿಂ ಬಡಗಣ ಮಲ್ಲವಳ್ಳಿಯೆಂಬ ಗ್ರಾಮಮಂ ಪ್ರಸಿದ್ಧ ಸೀಮಾಸಹಿತವಾಗಿ ತ್ರಿಭೋಗಾಭ್ಯನ್ತರಂ ನಮಸ್ಯಂ ಮಾಡಿಯಾ ದೇವರ ದೇಗುಲದ ಖಣ್ಡಸ್ಫುಟಿತ ಜೀರ್ಣ್ಣೋದ್ಧಾರಕಂ ದೇವರಂಗಭೋಗ ರಂಗಭೋಗ ನೈವೇದ್ಯ[ಕ್ಕಂ] ಚೈತ್ರ ಪವಿತ್ರ ವಸಂತೋತ್ಸವಾದಿ ಪರ್ಬ್ಬಂಗಳ್ಗಂ ಅನ್ನದಾನಕ್ಕಂ ಯೆಂದು ರಾಮಯ್ಯಂಗಳ ಕಾಲಂಕರ್ಚಿ ಧಾರಾಪೂರ್ವ್ವಕಂ ಮಾಡಿ ಪರಮ ಭಕ್ತಿಯಿಂ ಕೊಟ್ಟು ಧರ್ಮ್ಮಮಂ ಪ್ರತಿಪಾಳಿಸಿದಂ।।

  ||ಸ್ವಸ್ತ್ಯಸ್ತು ಓಂ।।

[।।ವ।।] ಇನ್ತೀ ಧರ್ಮ್ಮಂಗಳಂ ಪ್ರತಿಪಾಳಿಯಿಸಿದವ[ರ್] ಶ್ರೀ ವಾರಣಾಸಿ ಪ್ರಯಾಗ ಕುರುಕ್ಷೇತ್ರ ಅರ್ಗ್ಘ್ಯ ತೀರ್ತ್ಥ ಶ್ರೀಪರ್ವ್ವತಾದಿ ಪುಣ್ಯಕ್ಷೇತ್ರ[ಂಗಳೊಳ್] ಸಾಯಿರ ಕವಿಲೆಗಳ ಕೋಡುಂ ಕೊಳಗುಮಂ ಹೊನ್ನೊಳ್ಕಟ್ಟಿಸಿ ಚತುರ್ವ್ವೇದ ಪಾರಗರಪ್ಪ ಸುಬ್ರಾಹ್ಮಣರ್ಗ್ಗೆ ಸೂರ್ಯ್ಯಗ್ರಹಣ ಸೋಮಗ್ರಹಣ[ವ್ಯ]ತೀಪಾತ ಸ[ಂ]ಕ್ರಮ[ಣಾ]ದಿ ಪುಣ್ಯಕಾಲದೊಳ್ ವಿಧಿಯುಕ್ತಮಾಗೆ ಕೊಟ್ಟ [ಫ]ಲವಂ ಪಡೆವ[ರ್] ಈ ಧರ್ಮ್ಮಮನಳಿದವರಾ ಗಂಗೆ ವಾರಣಾಸಿ ಕುರುಕ್ಷೇತ್ರ ಪ್ರಯಾಗಾದಿ ಪುಣ್ಯಕ್ಷೇತ್ರಂಗಳೊಳಾ ಕವಿಲೆಗಳುಮಂ ಬ್ರಾಹ್ಮಣರುಮಂ ಕೊಂದ ಪಾಪಮಂ ಪಡವರೀಯರ್ಥ ಸಂದೇಹವಿಲ್ಲೆಂಬುದಂ ಮುನ್ನ ಮನುವಾಕ್ಯಂಗ[ಳುಂ] ಪೇಳ್ಗು[0]

ಬಹುಭಿರ್ವ್ವಸುಧಾ ಭುಕ್ತಾ ರಾಜಭಿಃ ಸಗರಾದಿಭಿಃ 

ಯಸ್ಯಯಸ್ಯಯದಾ ಭೂಮಿಸ್ತಸ್ಯ ತದಾ[ಫ]ಲಂ ||ಶ್ಲೋಕ ೫।।

ಗಣ್ಯಂತೇ ಪಾಂಸವೋ ಭೂಮೇರ್ಗಣ್ಯ[ಂ]ತೇ ವೃಷ್ಟಿ ಬಿಂದವಃ 

ನಗಣ್ಯಂತೇ ವಿಧಾತ್ತಾಪಿ ಧರ್ಮ್ಮ ಸಂರಕ್ಷಣೇ ಫಲಂ ||ಶ್ಲೋಕ ೬ ।।

ಸ್ವದತ್ತಾಂ ಪರದತ್ತಾಂ ವಾಯೋ ಹರೇತ ವಸುಂಧರಾಂ 

ಷಷ್ಟಿರ್ವ್ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ॥ ||ಶ್ಲೋಕ ೭||

ಕರ್ಮಣಾ ಮನಸಾ ವಾಚಾಯಃ ಸಮರ್ತ್ಥೋಪ್ಯುಪೇಕ್ಷತೇ  

ಸ[ಭ್ಯ]ಸ್ತಥೈವ ಚಾಂಡಾಲಃ ಸರ್ವ್ವಧರ್ಮ್ಮಬಹಿಷ್ಕೃತಃ। | ||ಶ್ಲೋಕ ೮।।

ಕುಲಾನಿ ತಾರಯೇತ್ಕರ್ತಾ ಸಪ್ತಸಪ್ತ ಚ ಸಪ್ತಚ 

ಅಧೋ ವಪಾತ ಯೇದ್ಧರ್ತಾ ಸಪ್ತಸಪ್ತ ಚ ಸಪ್ತಚ ||ಶ್ಲೋಕ ೯||

ಅಪಿಗಂಗಾದಿ ತೀರ್ತ್ಥೇಷು ಹಂತುರ್ಗಾಮಥವಾ ದ್ವಿಜಂ 

ನಿ[ಷ್ಕೃ]ತಿಸ್ಯಾನ್ನ [ದೇ]ವಸ್ವ ಬ್ರಹ್ಮಸ್ವ ಹರ[ಣೇ]ನೃಣಾಂ॥      ||ಶ್ಲೋಕ ೧೦।।

[||ವೃ||]

ಸಾಮಾನ್ಯೋಯಂ ಧರ್ಮ್ಮಸೇತು ರ್ನೃಪಾ[ಣಾಂ] 

ಕಾಲೇಕಾಲೇ ಪಾಲನೀಯೋ ಭವದ್ಭಿಃ 

ಸರ್ವ್ವಾನೇತಾ(ನ್) ಭಾವಿ[ನಃ] ಪಾ[ರ್ಥ್ಥಿ]ವೇಂದ್ರಾ[ನ್] 

ಭೂಯೋ ಭೂಯೋ ಯಾಚತೇ ರಾಮಚಂದ್ರಃ ||೩೮||

||ಸ್ವತ್ತ್ಯಸ್ತು ಮಂಗಳಂ ಚ | ಶ್ರೀಶ್ಚ॥

||ಓಂ||

ಭಾಗ – ೫

[||ಕಂ||]

ಹರನೊಳ್ತವನಿಧಿಯಂ ತಾಂ 

ದರವುರವಿಲ್ಲೆನಿಸಿ ಪಡೆದು ದೇಗುಲಮಂ ಪುರ 

ಹರನ ಕಯಿಳಾಸದಂತಿದೆ 

ವಿರಚಿಸಿದಂ ಶಂಭು ಭಕ್ತಿಧಾಮಂ ರಾಮಂ ||೩೯||

[||ವೃ||]

ದೇಗುಲಕೆಂದು ಭಕ್ತಜನವಾದರದಿನ್ದಿದಿರೆರ್ದ್ದು ಕೊ[ಟ್ಟಡಂ] 

ಹಾಗವನಾದಡಂ ಕಳದುಕೊಳ್ಳದೆ ಬೇಡದೆ ನಾಡೆ [ದೈ]ನ್ಯದಿಂ 

ಪೋಗಿ [ನೃ]ಪಾಳರಂ ಶಿವನನುಗ್ರಹವಕ್ಷಯವಾಗೆ ಮಾಡಿದಂ 

ದೇಗುಲ[ವಂ] [ಹರಾದ್ರಿ]ಗೆ[ಣೆ]ಯಾಗಿರೆ ರಾಮನಿದೇಂ [ಕೃ]ತಾರ್ಥನೋ ||೪೦||

[||ಕಂ||] 

ಕೇಶವರಾಜ ಚಮೂಪಂ 

ಶಾಸನವಂ ಪೇಳ್ದನಂತದಂ ತಿರ್ದ್ದಿ ನಿರಾ 

ಯಾಸನೆ ಬರದಂ ಈಶನ 

ದಾಸಂ ಶಿವಚರಣಕಮಳ ಶರಣಂ ಸರಣಂ

||ಓಂ||

||ವ|| ಸ್ವಸ್ತಿ ಶ್ರೀಮ[ತು] ಹರಧರಣೀ ಪ್ರಸೂತ ಮುಕ್ಕಂಣ ಕಾದಂಬ [ವಂಶ] ರುಂ ಬನ[ವಾ]ಸೀ ಪುರವರಾಧೀಶ್ವರರುಂ ಶ್ರೀಮ[ಧು]ಕನಾಥದೇವರ ದಿ[ವ್ಯ] ಶ್ರೀಪಾದ ಪದ್ಮಾರಾಧಕರುಂ ||ಮಲ್ಲಿದೇವರಾಯರುಂ।। ನಾಗರಖಂಡೆಯ...... ರಿಗೆ ನಾಡುಮಂ…….ಕೊಟ್ಟರ್

ಪರಾಮರ್ಶನ ಗ್ರಂಥಗಳು

೧. ಶಾಸನ ಸಂಗ್ರಹ ಸಂ. ಎ.ಎಂ.ಅಣ್ಣಿಗೇರಿ ಮತ್ತು ಆರ್.ಶೇಷಶಾಸ್ತ್ರಿ,

   ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೭

೨. ಎಂ.ಎಂ.ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು, ಶ್ರೀ.ಜಗದ್ಗುರು ತೋಂಟದಾರ್ಯ ಮಠ, ಗದಗ, 1978

೩. ಕೈದಾಳ ರಾಮಸ್ವಾಮಿ ಗಣೇಶ: ಶಾಸನ ಸರಸ್ವತಿ, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ

  ಧಾರವಾಡ, ೨೦೦೮

೪. ಬಸವೇಶ್ವರ ಸಮಕಾಲೀನರು: ಬಸವ ಸಮಿತಿ, ಬೆಂಗಳೂರು 2000 (ದ್ವಿ.ಮು)

೫. ಸಿ.ನಾಗಭೂಷಣ: . ಅಲಂದೆಯ ಏಕಾಂತ ರಾಮಯ್ಯ̧̧    ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ 

                                               ಹಾರಕೂಡ-ಬಸವಕಲ್ಯಾಣ-1994                                                 

                  ಏಕಾಂತ ರಾಮಯ್ಯ ಮತ್ತು ಆದಯ್ಯ ಒಂದು ತೌಲನಿಕ ಅಧ್ಯಯನ, ಬಸವ ಸಮಿತಿ,

                                             ಬಸವ ಭವನ    ಬೆಂಗಳೂರು-2005

                  ಶಿವಶರಣರ ಕಾರ್ಯಕ್ಷೇತ್ರಗಳು : ಸಮೀಕ್ಷೆ

                     (ಬಸವ ಪೂರ್ವ,ಬಸವಯುಗ ಹಾಗೂ ಬಸವೋತ್ತರ ಯುಗದ ಶರಣರರು)

                        ಡಾ.ಶ್ರೀ.ಶಿವಕುಮಾರ ಸ್ವಾಮಿಗಳ ಶತಮಾನೋತ್ಸವ ಅಭಿನಂದನಾ ಸಮಿತಿ

                                     ಶ್ರೀ ಸಿದ್ಧಗಂಗಾ ಮಠ, ತುಮಕೂರು.  2008

೭. ಶಾಸನ ಸಾಹಿತ್ಯ ಸಂಚಯ ಸಂ: ಎಂ.ಎಂ.ಅಣ್ಣಿಗೇರಿ ಮತ್ತು ಮೇವುಂಡಿ ಮಲ್ಲಾರಿ

ಕನ್ನಡ ಸಂಶೋಧನಾ ಸಂಸ್ಥೆ, ಧಾರವಾಡ,  ೧೯೬೧   

                                   


                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...