ಸೋಮವಾರ, ಮೇ 5, 2025

 ಬಸವಣ್ಣನವರನ್ನು ಕುರಿತ ಅರ್ಜುನವಾಡ ಮತ್ತು ಇತರ ಶಾಸನಗಳು

                                                                                                                          ಡಾ.ಸಿ.ನಾಗಭೂಷಣ

  ಕನ್ನಡ ನಾಡಿನ ವಿವಿಧ ಅರಸು ಮನೆತನಗಳ ಸಾಮಂತರ ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳು ನಾಡಿನ ಜನಾಂಗದ ಬದುಕಿನ ವಿಶ್ವಕೋಶಗಳಾಗಿವೆ.  ನಮ್ಮ ನಾಡಿನ ಚಾರಿತ್ರಿಕ ಆಧಾರಗಳ ಅಭಾವ, ಅಸಮರ್ಪಕತೆ, ಅವಿಶ್ವಾಸನೀಯತೆಗಳನ್ನು ಗಮನಿಸಿದಾಗ ಶಾಸನಗಳ ಮಹತ್ತ್ವ ಹಾಗೂ ಪ್ರಾಮುಖ್ಯ ತಿಳಿಯುತ್ತದೆ. ಶಾಸನಗಳು ಪ್ರಮುಖವಾಗಿ ಒಂದು ಕಾಲದಲ್ಲಿ ನಡೆದ ವ್ಯವಹಾರಗಳ ಲಿಖಿತ ದಾಖಲೆಗಳು; ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ರಚಿಸುವಲ್ಲಿ ಉಳಿದೆಲ್ಲವುಗಳಿಗಿಂತ ಮಹತ್ತರವಾದ ಮತ್ತು ಅಧಿಕೃತ ದಾಖಲೆಗಳಾಗಿವೆ. ಶಾಸನಗಳು ಆರಂಭವಾದ ಕಾಲದಿಂದಲೂ ಪ್ರೌಢವಾದ ಚಂಪೂ ಶೈಲಿಯನೇ ಮಾದರಿಯಾಗಿಟ್ಟು ಕೊಂಡಿತು. ಹನ್ನೆರಡನೇ ಶತಮಾನದ ನಂತರ ಕನ್ನಡ ಸಾಹಿತ್ಯದಲ್ಲಿ ದೇಸಿ ಸಾಹಿತ್ಯ ಪ್ರಕಾರಗಳಾದ ವಚನ, ರಗಳೆ, ಷಟ್ಪದಿ, ಸಾಂಗತ್ಯ, ಇತ್ಯಾದಿ ಪ್ರಕಾರಗಳು ರೂಪುಗೊಂಡು ಜನಪ್ರಿಯತೆಯನ್ನು ಪಡೆಯಿತಾದರೂ ಆ ಕಾಲದ ಶಾಸನಗಳು ಎಂದಿನ ಚಂಪೂ ಶೈಲಿಯನ್ನೇ ಬಹುಮಟ್ಟಿಗೆ ಅನುಸರಿಸಿದವು. ಚಂಪೂ ಕವಿಗಳ-ಕಾವ್ಯಗಳ ಪ್ರಭಾವ ಶಾಸನ ಕವಿಗಳ ಮೇಲಾದ ಹಾಗೆ ದೇಸಿ ಸಾಹಿತ್ಯ ಪ್ರಕಾರಗಳ ಪ್ರಭಾವ ಶಾಸನಗಳ ಮೇಲಾಗಲಿಲ್ಲ. ಹೀಗಾಗಿ ಕನ್ನಡ ನಾಡಿನಲ್ಲಿ ದೊರೆಯುವ ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಕನ್ನಡ ಶಾಸನಗಳಲ್ಲಿ ಅಚ್ಚಗನ್ನಡ ಬೇಸಾಯಗಾರರಾದ ಶರಣರನ್ನು ಕುರಿತು, ಅವರ ವಚನಗಳಿಂದ ಪ್ರಭಾವಿತವಾದ ಶಾಸನಗಳ ಸಂಖ್ಯೆ ತೀರ ವಿರಳ ಎಂದೇ ಹೇಳಬೇಕು. ವಿರಳವಾಗಿ ಉಪಲಬ್ಧವಿರುವ ಶರಣರನ್ನು ಉಲ್ಲೇಖಿಸುವ ಶಾಸನಗಳಲ್ಲಿ ಶಿವಶರಣರ ಹೆಸರು, ಜನ್ಮಸ್ಥಳ, ಅವರ ವಚನಗಳ ಉಲ್ಲೇಖ ಇತ್ಯಾದಿ ವಿವರಗಳು ಕ್ವಚಿತ್ತಾಗಿ ಕಂಡುಬರುತ್ತವೆಯೆ ಹೊರತು ಕಾವ್ಯ ಪುರಾಣಗಳಲ್ಲಿ ನಿರೂಪಿತವಾದಂತೆ ಸುದೀರ್ಘವಾದ ವೈಯುಕ್ತಿಕ ವಿವರಗಳು ಶಾಸನಗಳಲ್ಲಿ ಕಂಡು ಬರುವುದಿಲ್ಲ. 

     ವ್ಯಕ್ತಿಗಳನ್ನು ಕುರಿತ ಪುರಾಣ ಸಂಗತಿಗಳಿಗಿಂತ ಭಿನ್ನವಾದ ರೀತಿಯಲ್ಲಿ ಶುದ್ದ ಇತಿಹಾಸ ಶಾಸನಗಳಲ್ಲಿಯೂ ಸಿಗುತ್ತದೆಂಬುದಕ್ಕೆ ಶರಣರನ್ನು ಕುರಿತ ಕೆಲವು ಶಾಸನಗಳನ್ನು ಅದರಲ್ಲೂ ಏಕಾಂತದ ರಾಮಯ್ಯನ್ನು ಕುರಿತ ಅಬ್ಬಲೂರು ಶಾಸನ ಮತ್ತು ಬಸವಣ್ಣನವರನ್ನು ಕುರಿತ ಅರ್ಜುನವಾಡ ಶಾಸನಗಳನ್ನು ಉದಾಹರಿಸಬಹುದು. ಶರಣರನ್ನು ಅವರು ಜೀವಿಸಿದ್ದ ಕಾಲ ಘಟ್ಟಗಳಲ್ಲಿ ನಿಲ್ಲಿಸಿ ಕಾಲನಿರ್ಣಯ ಮಾಡಿ ವೀರಶೈವ ಧರ್ಮ ಹಾಗೂ ಸಾಹಿತ್ಯದ ಚರಿತ್ರೆಯನ್ನು ಕಾಲಬದ್ಧವಾಗಿ ರಚಿಸುವಲ್ಲಿ ಶರಣರನ್ನು ಕುರಿತ ಪುರಾಣ ಕಾವ್ಯಗಳಿಗಿಂತ ಕಾಲಸಹಿತ ವ್ಯಕ್ತಿ ನಿರ್ದೇಶನ ಮಾಡುವ ಶಾಸನಗಳು ಪ್ರಮುಖ ಪಾತ್ರವಹಿಸಿವೆ. ಹದಿಮೂರನೆಯ ಶತಮಾನದ ನಂತರದ ಶಾಸನಗಳಲ್ಲಿ ಶರಣರ ಚರಿತ್ರೆ ಸುದೀರ್ಘವಾಗಿ ವ್ಯಕ್ತವಾಗದಿದ್ದರೂ ಅವರ ಕಾರ್ಯಸಿದ್ದಿಯ ಕ್ಷೇತ್ರ, ಹೆಸರು ಇತ್ಯಾದಿಗಳ ಮೂಲಕ ಶರಣರ ಚರಿತ್ರೆಯನ್ನು  ರೂಪಿಸಲು ಕಾವ್ಯ ಪುರಾಣಗಳಲ್ಲಿ ದೊರೆಯುವ ಮಾಹಿತಿಗಳಿಗೆ ಪೂರಕವಾಗಿ ಶಾಸನಗಳು ಆಕರಗಳಾಗಿ ಕೆಲಸ ಮಾಡಿರುವುದು ಕಂಡು ಬರುತ್ತದೆ.

      ಬಸವಣ್ಣ ಅಥವಾ ಬಸವೇಶ್ವರರ ವಿಷಯವಾಗಿ ಚಾರಿತ್ರಿಕ ಸಂಶೋಧನೆಯು ಇತ್ತೀಚೆಗೆ ವಿಶೇಷವಾಗಿ ನಡೆಯುತ್ತಿರುವುದು ಬಹು ಸ್ವಾಗತಾರ್ಹ ಸಂಗತಿ. ಕರ್ಣಾಟಕ ಚರಿತ್ರೆಯ ಅಧ್ಯಯನವು ಇನ್ನೂ ಪ್ರಾರಂಭದಶೆಯಲ್ಲಿದ್ದಾಗ, ಚರಿತ್ರಕಾರರನೇಕರು , ಬಸವಣ್ಣನವರು ಕೇವಲ ಪುರಾಣ ಪುರುಷರೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ ಎಂದು ನಂಬಿದ್ದರು. ವೀರಶೈವ ಮತ್ತು ಜೈನಪುರಾಣಗಳಲ್ಲಿ ಮತ್ತು ಇತರ ಕನ್ನಡ ಗ್ರಂಥ ಗಳಲ್ಲಿ ಬಸವಣ್ಣನವರ ಪ್ರಸ್ತಾಪವು ವಿಶೇಷವಾಗಿಯೇ ಇದೆ. ಆದರೆ ಇಲ್ಲಿ ದೊರೆಯುವ ಮಾಹಿತಿಗಳು ಪರಸ್ಪರ ವಿರೋಧಾತ್ಮಕವಾದುವು. ಸಾಹಿತ್ಯಗ್ರಂಥಗಳಿಗಿಂತಲೂ ಸಮಕಾಲೀನ ಶಾಸನಗಳು ಚರಿತ್ರೆಯ ಉತ್ತಮ ಮಾಹಿತಿಗಳೆನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರಸಿದ್ಧ ಚರಿತ್ರಕಾರರಾದ ಜೆ.ಎಫ್. ಪ್ಲೀಟ್‌ರವರು ಬಸವಾದಿ ಪ್ರಮಥರ ಬಗೆಗೆ No epigraphic mention of Basava and Channa Basava has been obtained which is really peculiar is they held the high office that is allotted to them by tradition ಎಂದು ಬಸವ ಮತ್ತು ಚೆನ್ನಬಸವರ ವಿಷಯವಾಗಿ ಶಾಸನಗಳು ಏನೂ ಹೇಳದೆ ಮೌನವನ್ನು ತಾಳಿರುವುದು ಬಲು ಸೋಜಿಗದ ಸಂಗತಿಯೆಂದು ಉದ್ಧಾರವೆತ್ತಿದ್ದರು. ಅದೇ ರೀತಿ ವೀರಶೈವಮತ ಸ್ಥಾಪಕರೆಂದು ಪ್ರಸಿದ್ಧರಾದ ಬಸವ, ಚೆನ್ನಬಸವಾದಿಗಳು ಕ್ರಿ.ಶ. 1156 - 67 ರಲ್ಲಿ ಆಳುತ್ತಿದ್ದ ಬಿಜ್ಜಳನ ಕಾಲದಲ್ಲಿದ್ದರೆಂದು ಸರ್ವತ್ರ ಪ್ರತೀತಿ ಇದ್ದು ಕರ್ನಾಟಕ ದೇಶದ ಶಾಸನಗಳಲ್ಲಿ ಇದಕ್ಕೆ ಯಾವ ವಿಧವಾದ ಆಧಾರವು ದೊರೆಯುವುದಿಲ್ಲ. ಅವರು ಕ್ರಿ.ಶ. 1156-67 ರಲ್ಲಿ ಇರಲಿಲ್ಲವೆಂದಂತೆ ಸುಮಾರಾಗಿ ದೃಢವಾಗಿಯೇ ಹೇಳಬಹುದು ಎಂದು ಎ. ವೆಂಕಟಸುಬ್ಬಯ್ಯ ಹೇಳುವಂತಾಯಿತು  ಇದಕ್ಕೆ ಉತ್ತರವೋ ಎಂಬಂತೆ ಚರಿತ್ರಕಾರರು ಶಾಸನಗಳಲ್ಲಿ ಬಸವಣ್ಣನವರ ಉಲ್ಲೇಖವನ್ನು ಹುಡುಕತೊಡಗಿದರು. ಒಂದಾದ ಮೇಲೆ ಒಂದರಂತೆ ಅನೇಕ ಶಾಸನಗಳು ಬೆಳಕಿಗೆ ಬಂದವು. ಹೆಚ್ಚು ಶಾಸನಗಳಲ್ಲಿ ಬಸವಣ್ಣನವರ ಉಲ್ಲೇಖವು ಕಂಡುಬಂದಂತೆ, ಅಭಿಪ್ರಾಯ ಭೇದಗಳೂ ಹೆಚ್ಚಿದವು. ಶಾಸನಗಳನ್ನು ಹುಡುಕ ಹೊರಟು ಬಸವ ಎಂಬ ಹೆಸರು ಕಂಡ ತಕ್ಷಣ ಹೋಲಿಕೆ ರೂಪದ ಚಾರಿತ್ರಿಕ ಅಂಶಗಳು ಲಭಿಸಿದ ತಕ್ಷಣ ಭ್ರಾಂತಿಯಿಂದ ಜೆ.ಎಫ್.ಪ್ಲೀಟ್‌, ಫ.ಗು.ಹಳಕಟ್ಟಿ, ಶಿ.ಚೆ.ನಂದಿಮಠ, ಸಿ ನಾರಾಯಣ ರಾವ್, ನಾ.ರಾಜಪುರೋಹಿತ, ಮಧುರ ಚೆನ್ನ, ಗೋವಿಂದಪೈ, ಚೆನ್ನಮ್ಮಲ್ಲಿಕಾರ್ಜುನ, ಎಸ್.ಶ್ರೀಕಂಠಶಾಸ್ತ್ರಿ ಮುಂತಾದ ವಿದ್ವಾಂಸರು ಸುಮಾರು ಅಸಮ್ಮತ ಸಮ್ಮತ ಒಟ್ಟು 18 ಶಾಸನಗಳನ್ನು ಸಂಗ್ರಹಿಸಿದರು. ಕೆಲವರು ಖಚಿತ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಶಾಸನಗಳಲ್ಲಿ ಕಾಣಬರುವ ಬಸವ, ಸಂಗನ ಬಸವ, ಬಸವರಸ,ಬಸವಣ್ಣ ಮುಂತಾದ ಹೆಸರುಗಳು ಕಲ್ಯಾಣದ ಬಸವಣ್ಣನವರನ್ನು ಕುರಿತವೇ, ಅಥವಾ ಅವು ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಪಟ್ಟವೇ ಎಂದು ಚರ್ಚೆಗಳು ಪ್ರಾರಂಭವಾಗಿ ಅರ್ಜುನವಾಡ ಶಾಸನದ ಸಂಗನ ಬಸವನೇ ಕಲ್ಯಾಣದ ಬಸವಣ್ಣನವರೆಂದೂ  ಸಂಶೋಧಕರು ಮಾನ್ಯ ಮಾಡಿದ್ದಾರೆ. 

     ಬಸವಣ್ಣನವರ ಚರಿತ್ರೆಯನ್ನು ರೂಪಿಸುವಲ್ಲಿ ವಚನಗಳು, ಕಾವ್ಯ-ಪುರಾಣಗಳ ಜೊತೆಯಲ್ಲಿ ಕೆಲವು ಶಾಸನಗಳು ಸಹಕಾರಿಯಾಗಿವೆ. ಬಸವಣ್ಣನವರ ಚರಿತ್ರೆ ಹಾಗೂ ವ್ಯಕ್ತಿತ್ವದ ಮೇಲೆ ಪ್ರತ್ಯಕ್ಷವಾದ ಹಾಗೂ ಪರೋಕ್ಷವಾಗಿ ಬೆಳಕು ಚೆಲ್ಲುವ, ಸಂಶೋಧಕರಿಂದ ಮಾನ್ಯ ಮಾಡಲ್ಪಟ್ಟ ಹದಿಮೂರು ಶಾಸನಗಳು ಬೆಳಕಿಗೆ ಬಂದಿವೆ.

೧. ಬಸವಣ್ಣನ ಹೆಸರನ್ನು ಪ್ರಸ್ತಾಪಿಸುವ ಶಾಸನಗಳು: ಬಸವಣ್ಣನವರ ಪರ್ಯಾಯ ನಾಮಗಳನ್ನು ಪ್ರಸ್ತಾಪಿಸುವ ೧೧ ಶಾಸನಗಳು ಸಂಶೋಧಕರಿಂದ ಮಾನ್ಯತೆ ಪಡೆದ ಸರ್ವಸಮ್ಮತವಾದ ಶಾಸನಗಳಾಗಿವೆ. ಅವುಗಳೆಂದರೆ

ಕ್ರಿ.ಶ. ೧೨೫೯ರ ಹಿರಿಯೂರ ಶಾಸನ- ಬಸವಯ್ಯ

ಕ್ರಿ.ಶ ೧೨೬೦ರ ಅರ್ಜುನವಾಡ ಶಾಸನ - ಬಸವರಾಜ, ಸಂಗನಬಸವ

ಕ್ರಿ.ಶ ೧೨೬೩ ರ ಚೌಡದಾನಪುರದ ೨ ಶಾಸನಗಳು _ಸಂಗಮೇಶನ ಪುತ್ರ, ಬಸವಯ್ಯ, ಸಂಗನ ಬಸವ

ಕ್ರಿ.ಶ ೧೨೭೯ ರ ಕಲ್ಲೆದೇವರಪುರದ ಶಾಸನದಲ್ಲಿ _ ಬಸವರಾಜ

ಕ್ರಿ.ಶ ೧೨೮೦ರ ಮರಡಿಪುದ ಶಾಸನ – ಸಂಗನ ಬಸವಯ್ಯ

೧೪ನೇಯ ಶತಮಾನದ ಗುಡಿಹಾಳ ಶಾಸನದಲ್ಲಿಯ – ಬಸವರಾಜದೇವರು

ಕ್ರಿ.ಶ.೧೬೬೦ರ ಆನಂದಪುರ ಮಠದ ತಾಮ್ರಶಾಸನದಲ್ಲಿ – ಬಸವೇಶ್ವರ

ಕ್ರಿ.ಶ ೧೬೮೬ ರ ಜೋಡೀದಾಸೇನಹಳ್ಳಿಯ ಶಾಸನ – ಬಸವರಾಜೇಂದ್ರ

ಕ್ರಿ.ಶ ೧೭೦೦ರ ಕಾನಕಾನಹಳ್ಳಿಯ ೨ ತಾಮ್ರ ಶಾಸನಗಳು – ಬಸವೇಶ್ವರಸಾಮುಲು, ಕಲ್ಯಾಣದ ಬಸವಪ್ಪನವರು

ಈ ಮೇಲ್ಕಂಡ ಶಾಸನಗಳಲ್ಲಿಯ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರದ್ದೇ ಆಗಿದೆ.

ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ.ಶ.೧೨೬೦ರ ಅರ್ಜುನವಾಡ ಶಾಸನ, ಕ್ರ.ಶ.೧೨೫೯ ರ ಹಿರಿಯೂರ ಶಾಸನ, ಕ್ರಿ.ಶ. ೧೨೬೩ ರ ಚೌಡದಾನಪುರ ಶಾಸನಗಳು ಹರಿಹರ-ಪಾಲ್ಕುರಿಕೆ ಸೋಮನಾಥರ ಕಾವ್ಯಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟವುಗಳಾಗಿವೆ. ಬಸವಣ್ಣನ ಇತಿವೃತ್ತ, ಶಿವಪಾರಮ್ಯದ ವಿವರ, ಇತ್ಯಾದಿಗಳನ್ನು ಗುರುತಿಸುವಲ್ಲಿ ಇವು ವಿಶ್ವಾಸನೀಯಗಳಾಗಿವೆ. 

      ಬಸವಣ್ಣನವರ ಚರಿತ್ರೆಯನ್ನು ಬಸವರಾಜದೇವರ ರಗಳೆ ಕೃತಿ ರೂಪದಲ್ಲಿ ಬರೆದ ಹರಿಹರನಿಗಿಂತಲೂ ಪೂರ್ವದಲ್ಲಿಯೇ ಬಸವಣ್ಣನವರ ವೈಯಕ್ತಿಕ ಚರಿತ್ರೆ, ಜನ್ಮಸ್ಥಲದ ಮೇಲೆ ಬೆಳಕು ಚೆಲ್ಲುವ ಹಾಗೂ ಬಸವರಾಜ ದೇವರ ರಗಳೆಯಲ್ಲಿ ಬಸವಣ್ಣನವರ ತಂದೆ ಊರುಗಳ ಬಗೆಗೆ ಇದ್ದ ಸಂದೇಹವನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರವನ್ನು ಕ್ರಿ.ಶ.1260ರ ಅರ್ಜುನವಾಡ ಶಾಸನ ವಹಿಸಿದೆ. ಈ ಶಾಸನದಲ್ಲಿ ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಗಳಿಗಿಂತ ಪ್ರಾಚೀನವಾಗಿದ್ದು ವಿಶ್ವಾಸನೀಯವಾಗಿವೆ. 

   ಬಸವಣ್ಣನವರ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಿದ ಈ ಅಪೂರ್ವ ಶಾಸನವನ್ನು ಮೊದಲು ಕಂಡು ಹಿಡಿದವರು ನಾ.ಶ್ರೀ. ರಾಜಪುರೋಹಿತರು. ಅದನ್ನು ಪುನಃ ಅಚ್ಚು ಮಾಡಿಕೊಂಡು ಬಂದವರು ಮಧುರ ಚೆನ್ನರು.  ಶಿ.ಚೆ. ನಂದಿಮಠ ರವರು ಲಿಂಗೈಕ್ಯ ಮಧುರಚೆನ್ನರು ಓದಿ ಸಿದ್ಧ ಮಾಡಿಕೊಟ್ಟ ಈ ಶಾಸನವು ಹಳಕಟ್ಟಿಯವರ ಹೆಸರಿನಲ್ಲಿ 19೨8 ರಲ್ಲಿ ಶಿವಾನುಭವ ಪತ್ರಿಕೆಯ  ಸಂ.3 ಸಂ ೯ ರಲ್ಲಿ ಮೊದಲು ಪ್ರಕಟಗೊಂಡಿತು. ಆನಂತರ ಬಸವೇಶ್ವರರ ವಚನಗಳು [ದ್ವಿ. ಮು] E.I. XXI, ಭಕ್ತಿ ಭಂಡಾರಿ ಬಸವಣ್ಣನವರು ಹೀಗೆ ಅನೇಕ ಕಡೆಗಳಲ್ಲಿ ಪ್ರಕಟವಾಯಿತು. ಈ ಶಾಸನ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಕೇಂದ್ರದಿಂದ ೪-೫ ಕಿ.ಮೀ. ದೂರದ ಅರ್ಜುನವಾಡದ ಹಾಲಶಂಕರ ಲಿಂಗ ದೇವಸ್ಥಾನದಲ್ಲಿ ಇದ್ದು, ಇದರ ಮಹತ್ವವನ್ನು ಕಂಡು ನಂತರ ಹುಕ್ಕೇರಿಯ ತಾಲೂಕು ಕಚೇರಿಗೆ  ಸಾಗಿಸಲ್ಪಟ್ಟು ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ  ಕನ್ನಡ ಸಂಶೋಧನ ಸಂಸ್ಥೆಯಲ್ಲಿಡಲಾಗಿದೆ. ಈ ಶಿಲಾಶಾಸನವು ಸುಮಾರು ೭೬ ಸೆಂ.ಮೀ. ಮತ್ತು ೩೫ ಸೆಂ.ಮೀ ಉದ್ದಗಲವನ್ನು ಹೊಂದಿದೆ. ೧೩ನೆಯ ಶತಮಾನದ ಲಿಪಿಯನ್ನು ಈ ಶಾಸನದಲ್ಲಿ ಕಾಣಬಹುದಾಗಿದೆ. 

   ಈ ಶಾಸನವು ಒಟ್ಟು ೮೦ ಸಾಲುಗಳನ್ನು ಒಳಗೊಂಡಿದೆ. ಮೊದಲಿನ ಒಂದು ಅನುಷ್ಟುಪ್ ಶ್ಲೋಕವನ್ನು ಬಿಟ್ಟರೆ ಉಳಿದ ಭಾಗ ಕನ್ನಡ ಗದ್ಯ ಪದ್ಯಗಳಲ್ಲಿದೆ. ಈ ಶಾಸನದಲ್ಲಿ ಮೂರು ಲೋಕಗಳಿಗೆ ಮೂಲಸ್ತಂಭವಾಗಿರುವ ಶಂಭುದೇವನನ್ನು ಸ್ತುತಿಸಲಾಗಿದೆ. ಶಾಸನದ ಮೇಲುಭಾಗದಲ್ಲಿ ಲಿಂಗ, ನಂದಿ ಮತ್ತು ಭಕ್ತನೊಬ್ಬನ ಚಿತ್ರ/ಶಿಲ್ಪವಿದೆ. 

  ಈ ಶಾಸನದಲ್ಲಿ ಕಲ್ಲಿನಾಥನ ಪ್ರಾರ್ಥನೆ. ಬಸವಣ್ಣನ ತಂದೆ ಮಾದಿರಾಜನ ಉಲ್ಲೇಖ, ದೇವಗಿರಿಯ ಯಾದವ ದೊರೆ ಕನ್ನರದೇವ, ಅವನ ಕೈ ಕೆಳಗಿನ ಅಧಿಕಾರಿಗಳಾಗಿದ್ದ ಚಾವುಂಡ. ನಾಗರಾಜ ಮತ್ತು ಚೌಡಿಶೆಟ್ಟಿಯರ ಉಲ್ಲೇಖ, ಯತಿ ಹಾಲಬಸವಿ ದೇವನ ವಿವರ, ಕವಿಳಾಸತೀರ್ಥದ ವರ್ಣನೆ, ದಾನದ ವಿವರಗಳಿವೆ. ಶಾಸನದ ಕೊನೆಯಲ್ಲಿ ಉಭಯ ನಾನಾ ದೇಸಿಗಳು ಮತ್ತು ಮುಮ್ಮುರಿ ದಂಡಗಳು ಈ ಶಾಸನವನ್ನು ಹಾಕಿಸಿದರು ಎಂಬ ವಿವರಗಳನ್ನು ಒಳಗೊಂಡಿದೆ.

ಶಾಸನದ ಕಾಲ:

ದೇವಗಿರಿಯ ಯಾದವ (ಸೇವುಣ) ದೊರೆ ಕನ್ನರನ ಕಾಲದಲ್ಲಿ ಅವನ ಪ್ರಧಾನಿ ನಾಗರಾಜ ಹಾಗೂ ಚಾವುಂಡ ಶೆಟ್ಟಿ (ಚೌಡಿ ಸೆಟ್ಟಿ)ಯರು ಬಸವಣ್ಣನವರ ವಂಶದವನಾದ ಹಾಲಬಸವಿದೇವನಿಗೆ ಕವಿಳಾಸಪುರದ ಮಲ್ಲಿಕಾರ್ಜುನ, ಸಂಗಮೇಶ್ವರ ಮತ್ತು ನಾಗೇಶ್ವರ ದೇವಾಲಯದ ಅಂಗಭೋಗ ರಂಗಭೋಗ ಜೀರ್ಣೋದ್ಧಾರ, ಜಂಗಮರ ಪಾರಣೆಗೆ ಕೊತ್ತಸಿ, ಕುರುವನಿಗೆ ಮೊದಲಾದ ಗ್ರಾಮಗಳನ್ನು ದತ್ತಿಯಾಗಿ ಕೊಡುತ್ತಾರೆ. ದಾನ ಮಾಡಿದ ಕಾಲ ಶಕವರ್ಷ ೧೧೮೨ನೇ ಸಿದ್ದಾರ್ಥಿ ಚೈತ್ರ ಬಹುಳ ಅಮಾವಾಸ್ಯೆ ಸೋಮವಾರ ಸೂರ್ಯಗ್ರಹಣದ ದಿನ. ಇದು ಕ್ರಿ.ಶ. ೧೨೬೦ ಏಪ್ರಿಲ್ ೧೨ಕ್ಕೆ ಸರಿಹೊಂದುತ್ತದೆ. ಈ ಹಿನ್ನೆಲೆಯಲ್ಲಿ ಶಾಸನದ ಕಾಲವನ್ನು ಬಹುಮಟ್ಟಿಗೆ ಎಲ್ಲಾ ವಿದ್ವಾಂಸರು ಕ್ರಿ.ಶ,೧೨೬೦ ಎಂಬುದನ್ನು ಸ್ವೀಕರಿಸಿದ್ದಾರೆ.

    ಶಾಸನದ ಪ್ರಾರಂಭದಲ್ಲಿಯೇ 'ತರ್ದವಾಡಿ ಮಧ್ಯಗ್ರಾಮ ಬಾಗವಾಡಿ ಪುರವರಾಧೀಶ್ವರ ಮಾದಿರಾಜನ ತನುಜ ಬಸವರಾಜನ ಮಹಿಮೆಯೆಂತೆಂದಡೆ' ಎಂದು ಹೇಳಿದೆ. ಮಂಗಳ ಕೀರ್ತಿಯುಳ್ಳ ಪುರಾತನ ಜಂಗಮರು ಮತ್ತು ಶಿವನಭಕ್ತಿಯ ಅಲೆಯಲ್ಲಿಯೇ ಬದುಕಿದ್ದ 'ಸಂಗನ ಬಸವ' ನಮ್ಮ ಭಕ್ತಿಯಲ್ಲಿ ಅನವರತ ಸಂಗತಿಯನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದೆ. ಅದಕ್ಕಿಂತ ಮುಖ್ಯವಾಗಿ ಈ ಶಾಸನದ ಮುಖ್ಯ ಭಾಗವಾದ `ಮತ್ತಂ ತರ್ದವಾಡಿ ಮಧ್ಯಗ್ರಾಮ ಭಾಗವಾಡಿ ಪುರವರಾಧೀಶ್ವರ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯೆಂತೆಂದಡೆ' ಎಂಬ ಸಂಗತಿಗಳು ಬಸವಣ್ಣನ ತಂದೆ ಮತ್ತು ಜನ್ಮ ಸ್ಥಳದ ಬಗೆಗೆ ಖಚಿತವಾದ ಸಂಗತಿಯನ್ನು ಹೊರ ಹಾಕಿದೆ.  ಬಸವಣ್ಣನವರ ವೈಯಕ್ತಿಕ ಸಂಗತಿಗಳ ಬಗೆಗೆ, ವಂಶಾವಳಿಯ ಬಗೆಗೆ ಸಂಬಂಧಪಟ್ಟ ಕೆಲವು ಹೊಸ ವಿಷಯಗಳನ್ನು ಹೊರಗೆಡವಿದ ಈ ಶಾಸನಕ್ಕೆ ಚಾರಿತ್ರಿಕ ಪ್ರಾಮುಖ್ಯತೆ ಸಂದಿದೆ. ಕ್ರಿ.ಶ. ಅರ್ಜುನವಾಡ ಶಾಸನದ ಈ ಸಂಗತಿಗಳು ಬಸವಣ್ಣನವರ ತಂದೆಯ ಹೆಸರು ಮತ್ತು ಜನ್ಮಸ್ಥಳದ ಬಗೆಗೆ ಸಂಶೋಧಕರು ಹುಟ್ಟು ಹಾಕಿದ್ದ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರವನ್ನು ನೀಡುವುದರ ಮೂಲಕ ಹೋಗಲಾಡಿಸಿವೆ. 

    ಈ ಶಾಸನದಲ್ಲಿ ಉಲ್ಲೇಖಿತವಾಗಿರುವ ಕವಿಳಾಸಪುರ ಯಾವುದು? ದೇವರಾಜ ಮುನಿಪ ಸಂಘನ ಮುಂತಾದವರ ಸಂಬಂಧವೇನು ಎಂಬ ಸಂಗತಿಗಳ ಬಗ್ಗೆ ಸ್ಪಷ್ಟವಾದ ಗ್ರಹಿಕೆ ಇಲ್ಲ ಶ್ರೀಮಲ್ಲ ಶ್ರೀ ಚನ್ನಮಲ್ಲಿಕಾರ್ಜುನರು ಮನಗೂಳಿ ಶಾಸನದ ಕಲಿದೇವ ಮಹೇಶ ನಿವಾಸ ಕಲಿದೇವೇಶ ವಿಳಾಸ  ಭೂಸುರ ಗೃಹಂ ಎಂಬೆರಡು ಮಾತುಗಳನ್ನಾಧರಿಸಿ ಕವಿಳಾಸಪುರವೆಂದರೆ ಮನಗೂಳಿ ಎಂದು ಊಹಿಸಿದ್ದಾರೆ. ಶಿ.ಚೆ.ನಂದಿಮಠರು ಚೌಡದಾನಪುರ ಶಾಸನದ ಧರೆಯೊಳ್ಕವಿಳಾಸ ಮೆನಿಪ ಮುಕ್ತಿ ಕ್ಷೇತ್ರ ಎಂಬ ಶಾಸನೋಕ್ತಿಯನ್ನು ಅವಲಂಬಿಸಿ ಕವಿಳಾಸಪುರವೆಂದರೆ ಚೌಡದಾನಪುರವಾಗಿ ಇರಬೇಕು ಎಂದಿದ್ದಾರೆ. ಆದರೆ ಈ ಶಾಸನದಲ್ಲಿ ಉತ್ತರಾರ್ಧದಲ್ಲಿ ಹೇಳಲಾದ ಪಡುವಲು ತೊರೆಯ ಕೂಡಿದ ಹಳ್ಳ ನೀರು ವರಿಯೆ ಮೇರೆಯಾಗಿ ಮೇಗೆ ಕಲುಕಂಟಿಗಗೆಱೆ ಬಸವಗೋಡಿ ಬಡಗಲು ಮೊಸರುಗುತ್ತಿಯೆ ರಾರಾವಿಡಿದು ಮೂಡಲು ಜಂಬೆಕಲ್ಲ ಕಣಿ ಕುಚ್ಚ ಗೋಡಿಯಿಂ ಬಂದ ಹಳ್ಳನೀರುವರಿಯೆ ತೆಂಕಲು ತೊರೆಯ ಕೂಡಲು ಯೀ ಚತುಸ್ಸೀಮಾಭ್ಯಂತರ ಕವಿ ವಿಳಾಸಪುರʼ ಎಂಬ ವಿವರವು ಕವಿಳಾಸಪುರದ ಸೀಮೆಯನ್ನು ತೋರಿಸಿಕೊಡುತ್ತದೆ. ಮಲ್ಲಿಕಾರ್ಜುನ ನಾಗೇಶ್ವರ ಸಂಗಮೇಶ್ವರ ದೇವಾಲಯಗಳನ್ನು ಒಳಗೊಂಡ ಈ ಕವಿಳಾಸಪುರವಿದ್ದಿದ್ದು ನೂಲೆನಾಡ ಪ್ರದೇಶದಲ್ಲಿ ಎಂಬುದಕ್ಕೆ ಶಾಸನದಲ್ಲಿಯೇ ಆಧಾರವಿದೆ. ಅರ್ಜುನವಾಡ ಶಾಸನದಲ್ಲಿ ಉಕ್ತವಾಗಿರುವ ಕವಿಳಾಸಪುರ ಯಾವುದು ಎಂಬುದರ ಬಗೆಗೆ ಅನೇಕ ಚರ್ಚೆ ನಡೆದಿದೆ. ಎಂ.ಎಂ. ಕಲಬುರ್ಗಿಯವರು ಈ ವಿಷಯದ ಸಲುವಾಗಿ ಚರ್ಚಿಸಿರುವ ಸಂಗತಿಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು :

೧) ಚೌಡದಾನಪುರ ಶಾಸನದಲ್ಲಿ 'ಧರೆಯೊಳ್ ಕವಿಳಾಸಮೆನಿಪ ಮುಕ್ತಿ ಕ್ಷೇತ್ರಂ' ಎಂದಿದೆ. ಆದ್ದರಿಂದ ಕವಿಳಾಸಪುರ ಎಂದರೆ ಚೌಡದಾನಪುರವೇ ಆಗಿರಬೇಕು.

೨) ಅರ್ಜುನವಾಡದ ಶಾಸನದಲ್ಲಿ ಕವಿಳಾಸಪುರದ ಗಡಿಭಾಗಗಳನ್ನು ಹೇಳಿದೆ. ಮಲ್ಲಿಕಾರ್ಜುನ, ನಾಗೇಶ್ವರ ಮತ್ತು ಸಂಗಮೇಶ್ವರ ದೇವಾಲಯಗಳನ್ನೊಳಗೊಂಡ ಈ ಕವಿಳಾಸಪುರ ನೂಲೆನಾಡ ಪ್ರದೇಶದಲ್ಲಿತ್ತು.

ಈ ಶಾಸನದಲ್ಲಿಯ ಕಂದಪದ್ಯದ ತೃಟಿತ ಭಾಗವು  ಸಂಶೋಧಕರಲ್ಲಿ ತೀವ್ರ ಚರ್ಚೆಗೆ ಒಳಗು ಮಾಡಿದೆ ಈ ತೃಟಿತ ಭಾಗದಿಂದ ಬಸವಣ್ಣನವರ ವಂಶಾವಳಿಯನ್ನು ಅರಿಯುವಲ್ಲಿ ಕೆಲಮಟ್ಟಿಗೆ ತೊಡಕನ್ನು ಉಂಟುಮಾಡುತ್ತದೆ ಸಂಗಬಸವನ ಅಗ್ರ X

X ಗೈಕಂ ದೇವರಾಜ ಮುನಿಪನತನಯಂ 

ಜಂಗಮ ಪರುಸಂ XX ರ

ಸಂಗಂ ಪ್ರಿಯ ಸುತನೆನಿಪ್ಪ ಕಲಿದೇವರಸಂ   ಇಲ್ಲಿ ನಷ್ಟವಾದ ಅಕ್ಷರಗಳನ್ನು ಸಂಶೋಧಕರು ಬೇರೆ ಬೇರೆ ರೀತಿಯಲ್ಲಿ ತುಂಬಿಕೊಡಲು ಪ್ರಯತ್ನಿಸಿದ್ದಾರೆ

 1. ಅಗ್ರಜ X ಗೈಕಂ  XX   ಫ.ಗು. ಹಳಕಟ್ಟಿ, 1920

 2. ಅಗ್ರಜ ಸಂಗಾಂಕಂ  ಜಂಗಮ ಪರುಸಂ ಶರಣರ ಸಂಗಂ - ಎಸ್ ಶ್ರೀಕಂಠಶಾಸ್ತ್ರಿ 1931-32 

 3. ಅಗ್ರಜ ಲಿಂಗೈಕಂ . . .  ಜಂಗಮ ಪರುಸಂ ಕಾವರ ಸಂಗಂ-

                                 ಎನ್. ಲಕ್ಷ್ಮೀನಾರಾಯಣರಾಯ 1931-೩೨

 4. ಅಗ್ರಜ ನಿಂಗೈಕಂ ಜಂಗಮ ಪುರುಷಂ ಶರಣರ ಸಂಗಂ- ಕಪಟ್ರಾಳ ಕೃಷ್ಣರಾಯ 1947 

5. ಅಗ್ರಜ ಲಿಂಗೈಕಂ.. ಜಂಗಮ ಪುರುಷಂ ಬಸವರ ಸಂಗಂ – ಟಿ.ಎನ್.  ಮಲ್ಲಪ್ಪ 1997 

6 ಅಗ್ರಜ ಲಿಂಗೈಕಂ (ಕ್ಯಂ).. ಜಂಗಮ ಪುರುಷಂ ಬಸವರ ಸಂಗಂ  - ಚೆನ್ನಮಲ್ಲಿಕಾರ್ಜುನ 1950 

7 ಅಗ್ರಜ ಲಿಂಗೈಕಂ ಜಂಗಮ ಪುರುಷಂ ಸೋವರ ಸಂಗಂ   - ಪಿ.ಬಿ.ದೇಸಾಯಿ

  ಮೇಲಿನ ಏಳು ಜನ ಸಂಶೋಧಕರು ತೃಟಿತವಾದ ಅಕ್ಷೆಗಳನ್ನು ತುಂಬಿಕೊಟ್ಟಿರುವಲ್ಲಿ  ಈಗಿನ ಮಟ್ಟಿಗೆ ಎನ್.ಲಕ್ಷ್ಮಿನಾರಾಯಣರಾಯರು ಕಟ್ಟಿಕೊಟ್ಟ ಪಾಠವನ್ನು ಮತ್ತು ಅದರಿಂದ ಹೊರಡುವ ವಂಶಾವಳಿಯನ್ನು ಬಹುತೇಕ ವಿದ್ವಾಂಸರು ಸ್ವೀಕರಿಸಿದ್ದಾರೆ. ಆ ಪಾಠ ಇಂತಿದೆ.

 

ಸಂಗನ ಬಸವನ ಅಗ್ರ [ ಜ]

[ಲಿಂ] ಗೈಕಂ ದೇವರಾಜ ಮುನಿಪನತನಯಂ

ಜಂಗಮ ಪರುಸಂ [ಕಾವ]ರ

ಸಂಗಂ ಪ್ರಿಯ ಸುತನೆನಿಪ್ಪ ಕಲಿದೇವರಸಂ

ಈ ಶಾಸನವು ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಉಲ್ಲೇಖಿಸಿದೆ.

                          ಮಾದಿರಾಜ

                   |----------------|

             ದೇವರಾಜ           ಸಂಗನಬಸವ

               |

            ಕಾವರಸ

               |

            ಕಲಿದೇವ 

               |

           ಹಾಲಬಸವಿದೇವ

 ಬಸವಣ್ಣನ ವೈಯಕ್ತಿಕ ಸಂಗತಿಗಳ ಬಗೆಗೆ, ವಂಶಾವಳಿಯ ಬಗೆಗೆ ಬೇರೆ ಎಲ್ಲಿಯೂ ದೊರೆಯದ ಕೆಲವು ಹೊಸ ಸಂಗತಿಗಳು ಈ ಶಾಸನದ ಮೂಲಕ  ಪ್ರಥಮ ಬಾರಿಗೆ ಬೆಳಕಿಗೆ ಬಂದಿವೆ. 

   ಈ ಕಂದಪದ್ಯದಲ್ಲಿಯ ವಿವರದಲ್ಲಿ ಬಸವಣ್ಣನವರಿಗೆ ಒಬ್ಬ ಅಣ್ಣ ಇದ್ದನೆಂದು ಅಣ್ಣನ ಹೆಸರು ದೇವರಾಜ ಎಂದೂ ಆತನ ಮಗ ಕಲಿದೇವ ಹಾಗೂ ಆತನ ಮಗ ಹಾಲಬಸವಿದೇವರ ಉಲ್ಲೇಖಗಳು ಈ ಶಾಸನದ ಮೂಲಕ ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದವು. ಈ ವಿವರ ಬಸವಣ್ಣನವರನ್ನು ಕುರಿತ ಅಪಾರ ಸಂಖ್ಯೆಯಲ್ಲಿ ರಚನೆಯಾಗಿರುವ ವೀರಶೈವ ಕಾವ್ಯಪುರಾಣಗಳಲ್ಲಿ ಎಲ್ಲಿಯೂ ಉಲ್ಲೇಖಿತಗೊಂಡಿಲ್ಲ. 

ಈ ಪದ್ಯದಲ್ಲಿ “ಕಾವರಸಂಗ ಪ್ರಿಯಸುತನೆನಿಪ ಕಲಿದೇವರಸಂ” ಎಂಬಲ್ಲಿ ತನಯಂ ಎಂಬ ಪದಕ್ಕೆ ನೇರವಾದ ಮಗನೆಂದು ಪ್ರಿಯಸುತನೆಂದರೆ ಶ್ರೇಷ್ಠನೆಂದೂ ಅರ್ಥೈಸಬೇಕು  ಎಂದು ಎಂ.ಎಂ.ಕಲಬುರ್ಗಿಯವರು  ಅಭಿಪ್ರಾಯ ಪಟ್ಟಿದ್ದಾರೆ.  ಮುಂದುವರಿದು, ಯಾವ ವ್ಯಕ್ತಿಯೇ ಆಗಲಿ ತಾನು ತನ್ನ ತಂದೆಗೆ ಪ್ರೀತಿಯ ಮಗನು ಎಂದು ಹೇಳುವುದು ಕೃತ್ರಿಮ ಎನಿಸುತ್ತದೆ ಎಂಬುದು  ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಪದ್ಯವನ್ನು ಸಂಗನ ಬಸವನ ಅಣ್ಣನಾದ ಲಿಂಗೈಕ್ಯ ದೇವರಾಜನು ಜಂಗಮ ಪುರುಷನಾದ ಕಾವರಸನಿಗೂ (ಶಿಷ್ಯನೆಂಬ ಅರ್ಥದಲ್ಲಿ) ಪ್ರೀತಿಯ ಮಗನೆನಿಸಿದ ವಿಷಯ ವ್ಯಕ್ತವಾಗುತ್ತದೆ. ಇದರಿಂದಾಗಿ ಕಲಿದೇವರಸನು ದೇವರಾಜನಿಗೆ ಉದರ ಸಂಜಾತನೂ ಕಾವರಸನಿಗೆ ಕರಸಂಜಾತನೂ ಆಗಿದ್ದನೆಂದು ಅರ್ಥ ಧ್ವನಿಸುತ್ತದೆ. ಈ ಅರ್ಥದಿಂದ ಹೊರಹೊಮ್ಮುವ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಂ.ಎಂ.ಕಲಬುರ್ಗಿರವರು, ಎಂ.ಲಕ್ಷ್ಮಿನಾರಾಯಣರಾಯರು ತುಂಬಿ ಕೊಟ್ಟಿದ್ದ ಅರ್ಜುನವಾಡ ಶಾಸನದ ಈ ತ್ರುಟಿತ  ಕಂದ ಪದ್ಯದಿಂದ ಹೊರಡುವ ಪಾಠವನ್ನು ಎಂ.ಎಂ ಕಲಬುರ್ಗಿ ತಿದ್ದುಪಡಿಮಾಡಿ ಕೊಟ್ಟಿದ್ದಾರೆ. ಎನ್.ಲಕ್ಷ್ಮಿನಾರಾಯಣ ಮುಂತಾದ ವಿದ್ವಾಂಸರು ರೂಪಿಸಿದ್ದ ಬಸವಣ್ಣನ ವಂಶಾವಳಿಯನ್ನು ಮಾರ್ಪಡಿಸಿಕೊಟ್ಟಿದ್ದಾರೆ. 

                                     ಮಾದಿರಾಜ

                               |--------|--------|

      ಕಾವರಸ            ದೇವರಾಜ           ಸಂಗನಬಸವ

        |                  |

      (ಪ್ರಿಯ ಸುತ)        (ಸುತ)

        |----------------|

               |

            ಕಲಿದೇವ 

               |

           ಹಾಲಬಸವಿದೇವ

ಎಂಬ ಶಾಸನ ಪದ್ಯದ ಉಲ್ಲೇಖದಿಂದ ಬಸವಣ್ಣನವರ ಅಣ್ಣನ ಹೆಸರು ದೇವರಾಜ. ಆತನ ಮಗ ಕಲಿದೇವ ಹಾಗೂ ಆತನ ಮಗ ಹಾಲಬಸವಿದೇವರ ಉಲ್ಲೇಖ ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದಿತು. ಈ ಶಾಸನದಲ್ಲಿ ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಉಲ್ಲೇಖ ಮಾಡಿದೆ. ಆದಾಗ್ಯೂ  ಹಿಂದು ಮುಂದು ಯಾವ ಅನ್ಯ  ಆಧಾರಗಳು ಇಲ್ಲದ ಯಾವುದೇ ನಂತರದ ಶಾಸನಗಳಲ್ಲಿ  ಉಲ್ಲೇಖ ಇರದ ವಂಶಾವಳಿಯಾಗಿದೆ. ಈ ವಿವರ ಬಸವಣ್ಣನವರನ್ನು ಕುರಿತು ಅಪಾರ ಸಂಖ್ಯೆಯಲ್ಲಿ ರಚಿತವಾಗಿರುವ ವೀರಶೈವ ಕಾವ್ಯ-ಪುರಾಣಗಳಲ್ಲಿ ಎಲ್ಲಿಯೂ ವ್ಯಕ್ತವಾಗಿಲ್ಲ. ಬಸವಣ್ಣನವರ ಅಣ್ಣನಾದ ದೇವರಾಜ ಮುನಿಪನ ಸಂತಾನ ಆತನ ಮೊಮ್ಮಗನಾದ  ಹಾಲಬಸವಿ ದೇವನ ನಂತರ ಏನಾಯಿತು ಎಂಬುದರ ಬಗೆಗೆ ಯಾವುದೇ ಉಲ್ಲೇಖಗಳು ನಂತರದ ಶಾಸನಗಳು, ಕಾವ್ಯ-ಪುರಾಣಗಳಲ್ಲಿ  ಲಭ್ಯವಿಲ್ಲ. ಅದರಲ್ಲಿಯೂ ಬಸವಣ್ಣನವರನ್ನು ಕುರಿತ ಕಾವ್ಯ-ಪುರಾಣಗಳು ಮತ್ತು  ವೀರಶೈವ ಕಥಾ ಸಂಕಲನ ಕೋಶಗಳಾದ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, , ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ, ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಉತ್ತರದೇಶದ ಬಸವಲಿಂಗನ ಬಸವೇಶ್ವರ ಪುರಾಣ ಕಥಾಸಾಗರ ಮುಂತಾದ ಸಂಕಲಿತ ಕೃತಿಗಳಲ್ಲಿ  ಉಲ್ಲೇಖ ಇಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.   ಈ ಶಾಸನದಲ್ಲಿ ಬಸವಣ್ಣನವರನ್ನು ಕುರಿತು ಉಲ್ಲೇಖಿಸಿರುವ ಪುರಾತನ ಜಂಗಮ, ಲಿಂಗೈಕ್ಯಭಕ್ತಿ ನಿರ್ಭರ ಲೀಲಾಸಂಗಂ ಮತ್ತು ಸಮಯ ಭಕ್ತಿ ಸಂಪನ್ನಂ ಎಂಬ ವಿಶೇಷಣಗಳು ಅವರ ವ್ಯಕ್ತಿ ಸಿದ್ಧಿಯ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ.

     ಈ ಶಾಸನದ ವಿವರದ ಪ್ರಕಾರ, ಚಿಕ್ಕ ಎನ್ನುವವನ ಮಗ ಮಲ್ಲ. ಅವನ ತಮ್ಮ ಬೀಚುಗಿ. ಮಲ್ಲನ ಮಗನೇ ಚಾವುಂಡ. ಈ ಚಾವುಂಡನ ಸ್ನೇಹಿತ ನಾಗರಾಜ. ವಾಣಸ ವಂಶದ ದಿವಾಕರ ದೇವನ ಮಗನಾದ ಈ ನಾಗರಾಜನು 'ಪಂಡಿತ ಪಾರಿಜಾತ' ನಾಗಿದ್ದ. ಜನಾರ್ಧನನ ಭಕ್ತನಾಗಿದ್ದಎಂದು ಶಾಸನವು ಕೀರ್ತಿಸಿದೆ ಈ ಚಾವುಂಡ ನಾಗರಾಜರು ಹಾಲಬಸವಿದೇವನಿಗೆ ದತ್ತಿಯನ್ನು ನೀಡಿದರು.

    ಹಾಲಬಸವಿದೇವನನ್ನು ಶಾಸನದಲ್ಲಿ ಮಹಾಮಹೇಶ್ವರ ಕವಿಳಾಸಪುರ ವರಾಧೀಶ್ವರ, ಸುವರ್ಣ ವೃಷಭಧ್ವಜ, ೬೩ ಮಂದಿ ಪುರಾತನರನ್ನು ಪೂಜೆ ಮಾಡುವವನು, ಮಹಾಲಿಂಗ ಜಂಗಮ ಪ್ರಸಾದ ನಿಯತ, ಸಮಯ ಭಕ್ತಿ ಸಂಪನ್ನ, ಬಸವರಾಜನ ವಂಶದ ತಪಃ ಚಕ್ರವರ್ತಿ, ವೀರವ್ರತಿ ಎಂದು ಹೊಗಳಿದೆ. ನಾಗರಾಜ (ನಾಗರಸ) ಮತ್ತು ಚೌಡಿಸೆಟ್ಟಿ (ಚಾವುಂಡ) ಯರು ಕವಿಳಾಸ ತೀರ್ಥದ ವಿಶೇಷವನ್ನು ಕೇಳಿದಾಗ ಹಾಲಬಸವಿದೇವನು ಅದರ ಮಹಿಮೆಯನ್ನು ವಿವರಿಸಿದ. ಈ ಪ್ರಸಂಗ ನಡೆದುದು ಪುಲಿಗೆರೆಯ (ಇಂದಿನ ಲಕ್ಷ್ಮೀಶ್ವರ) ಸೋಮನಾಥ ದೇವರ ಸನ್ನಿಧಿಯಲ್ಲಿ. ಆಗ ಪ್ರಾಚೀನ ಕಾಲದಿಂದ ಇದ್ದ ದತ್ತಿಯನ್ನು ನಾಗರಾಜ ಚೌಡಿ ಸೆಟ್ಟಿಯರು ಸ್ಥಿರಗೊಳಿಸಿದರು.

ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಶಾಸನದ ಭಾಷೆ ನಡುಗನ್ನಡ ಲಿಪಿಕಾರನ ಅಜ್ಞಾನದಿಂದಾಗಿ ಭಾಷೆಯಲ್ಲಿ ಅನೇಕ ದೋಷಗಳು ಕಂಡುಬರುತ್ತವೆ ಆಡು ಮಾತಿನ ಪ್ರಭಾವ ದಟ್ಟವಾಗಿ ಆಗಿರುವುದು ಕಂಡು ಬರುತ್ತದೆ. ನಿದರ್ಶನಕ್ಕೆ: ಕೆಲವೆಡೆ ವಕಾರದ ಬದಲು ಬಕಾರ ಆಗಿದೆ. ಬ್ರಿಂದಕೆ ವೀರಬ್ರತಿ 

ಶ.ಷಕಾರದ ಬದಲು ಸಕಾರ ಕಂಡು ಬರುತ್ತದೆ.

ಅಧೀಸ್ವರ ಭುವನಾಸ್ರೇಯಂ

ಸಕವರುಷ, ವಿಶೇಸ, ಸಾಸನಸ್ಥ, ನಾಗೇಸ್ವರ, ಮಲ್ಲೇಸ್ವರ, ಸಂಗಮೇಸ್ವರ ಇತ್ಯಾದಿ

ಋಕಾರದ ಬದಲು ರಿಕಾರ ಕಂಡು ಬರುತ್ತದೆ.

ಕ್ರಿತಯುಗ

ನ್ರಿತ್ಸ

ಕೆಲವೆಡೆ ಶಬ್ದರೂಪಗಳೇ ತಪ್ಪಾಗಿವೆ

ಸಂವಛರ( ಸಂವತ್ಸರ)

ಮುಕ್ಷ [ಮುಖ್ಯ], ನೀರುವರಿಎ( ನೀರುವರಿಯೆ)ಭಕುತಿ ( ಭಕ್ತಿ)

ಈಗಾಗಿ ಈ ಶಾಸನದ ಭಾಷೆಯಿಂದ ಆ ಕಾಲದ ಭಾಷಾ ಸ್ವರೂಪವನ್ನು ನಾವು ತಿಳಿಯುವುದು ಕಷ್ಟವಾಗಿದೆ ಇಲ್ಲಿ ಬಹಳಷ್ಟು ಭಾಷಾ ದೋಷಗಳು ಕಂಡುಬಂದಿದ್ದು, ಇವು ಆ ಕಾಲದ ಆಡುಭಾಷೆಯಾಗಿರುವುದೇನೋ ಎಂದೆನಿಸುತ್ತದೆ. ಶಾಸನಕಾರ ತನ್ನಕಾಲದ ಆಡುಭಾಷೆಯ ಪದಗಳನ್ನು ಬಳಸಿರಬೇಕು ಎಂದೆನಿಸುತ್ತದೆ.

ಸಾಹಿತ್ಯದ ದೃಷ್ಟಿಯಿಂದ ಕಲ್ಲಿನಾಥನ ವರ್ಣನೆ  ಯಾದವಕನ್ನರ ಚಕ್ರವರ್ತಿಯ ವರ್ಣನೆ ಹಾಲಬಸವಿದೇವರ ಕುರಿತ  ವರ್ಣನೆಗಳು ಉತ್ತಮವಾಗಿದೆ

      ದಾನದ ವಿಷಯ ಯಾದವ ಕನ್ನರನ ಪ್ರಧಾನಿ ನಾಗರಸ ಮತ್ತು ಚೌಡಿ ಸೆಟ್ಟಿಯರು ವೀರಭದ್ರಿ ಹಾಲಬಸವಿ ದೇವರಿಗೆ ಕವಿಳಾಸಪುರವನ್ನು ಪೂರ್ವದತ್ತವೆಂದು ಧಾರಾಪೂರ್ವಕವಾಗಿ ಮಾಡಿಕೊಟ್ಟರೆಂದು ಅಂದರೆ ಪ್ರಾಚೀನ ಕಾಲದ 1 ದತ್ತಿಯನ್ನು [ಮಾಂಧಾತ ಚಕ್ರವರ್ತಿ ಕೊಟ್ಟರು ]ಹಾಲಬಸವಿ ದೇವರಿಗೆ ಪುನಃ ಸ್ಥಿರಗೊಳಿಸಿ ಕೊಟ್ಟರೆನ್ನಬಹುದು ಜೊತೆಗೆ ನಾಗೇಶ್ವರ ಮಲ್ಲೇಶ್ವರ ದೇವರಿಗೆ ಕುರುವನಿಗೆಯನ್ನು ಸಂಗಮೇಶ್ವರ ದೇವರು ಜಂಗಮ ರೋಗಣೆಗಳಿಗೆ ಕೊಟ್ಟ ಸಿ ಗ್ರಾಮವನ್ನು  ದತ್ತಿಯಾಗಿ ಬಿಟ್ಟಿರುವುದಲ್ಲದೆ ಇತರ ಸುಂಕ ತೆರಿಗೆಗಳನ್ನು ದೇವಾಲಯಗಳಿಗೆ ಬಿಟ್ಟುಕೊಡುತ್ತಾರೆ. ಈ ಸಂದರ್ಭದಲ್ಲಿ ಉಭಯ ನಾನಾ ದೇಸಿ ಮುಮ್ಮರಿ ದಂಡಗಳು ಮಲೆನಾಡಿನೊಳಗಿನ ಸಂತೆಗಳ ಆದಾಯ ಕೋಣನ ಮೇಯಿದರೆ ಸುಂಕಗಳನ್ನು ದೇವಾಲಯಗಳಿಗೆ ಬಿಟ್ಟು ಕೊಟ್ಟಿರುವುದನ್ನು ಪೋಷಿಸಿ ಶಾಸನ ಹಾಕಿಸಿ ಕೊಡುತ್ತಾರೆ.

  ಶಾಸನದ ಕಾಲ ಕ್ರಿ.ಶ. ೧೨೬೦ ಆದ್ದರಿಂದ ಹಾಲಬಸವಿ ದೇವನ ತಾತ ದೇವರಾಜ ಮುನಿಪನ ಕಾಲ ಕ್ರಿ.ಶ. ಸುಮಾರು ೧೨೦೦ ಆಗುತ್ತದೆ.ಬಸವಣ್ಣನ ಅಣ್ಣನಾದ ದೇವರಾಜನ ಕಾಲ ಹಾಗೂ ಬಸವಣ್ಣನ ಅಂತ್ಯಕಾಲ ಎಂದು ವಿದ್ವಾಂಸರು ಸಾಮಾನ್ಯವಾಗಿ ಒಪ್ಪುವ ಕ್ರಿ.ಶ. ೧೧೮೦-೧೨೦೦ ಎಂಬ ಮಾತಿಗೆ ಈ ಶಾಸನದ ಕಾಲ ಹೊಂದಿಕೆಯಾಗುತ್ತದೆ.

   ಬಸವಣ್ಣ ಹಾಗೂ ಹಾಲಬಸವಿದೇವ ಇಬ್ಬರಿಗೂ ಅನ್ವಯವಾಗುವಂತಿರುವ 'ಪುರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭರ ಲೀಲಾಸಂಗಂ', 'ಸಮಯ ಭಕ್ತಿ ಸಂಪನ್ನಂ', 'ಮಂಗಳಕೀರ್ತಿ' ಎಂಬ ಮಾತುಗಳು. ಬಸವಣ್ಣನ ನಂತರವೂ ಅವರು ಮಾಡಿದ ಕೆಲಸ ಮುಂದುವರಿದುದಕ್ಕೆ ಸಾಕ್ಷಿಯಾಗಿದೆ. ಕಲಿದೇವರಸನನ್ನು 'ಜಂಗಮ ಪರುಸ' ಎಂದಿರುವುದೂ ಹಾಲಬಸವಿದೇವನನ್ನು 'ಮಹಾಮಾಹೇಶ್ವರ' 'ಮಹಾಲಿಂಗ ಜಂಗಮಪ್ರಸಾದ ನಿಯತ' ಎಂದಿರುವುದು, ಬಸವಣ್ಣನ ನಂತರ ಆತನ ಮನೆಯವರು, 'ದಾಸೋಹ' ಕೆಲಸವನ್ನು ಮುಂದುವರಿಸಿರುವುದಕ್ಕೆ ಸಾಕ್ಷಿಯಾಗಿದೆ. ಅರ್ಜುನವಾಡದ ಶಿವಾಲಯವನ್ನು ಹಾಲಶಂಕರ ಲಿಂಗದೇವಾಲಯ ಎಂದಿರುವುದು ಹಾಲ ಬಸವಿದೇವನು ಅರ್ಜುನವಾಡದಲ್ಲೂ ಇದ್ದನೆಂಬುದಕ್ಕೆ ಸೂಚನೆಯಾಗಿದೆ. ಅರ್ಜುನವಾಡವೇ ಕವಿಳಾಸಪುರ ವಾಗಿರಬಹುದು ಎಂಬುದನ್ನು ಇದು ಪರೋಕ್ಷವಾಗಿ ಧ್ವನಿಸುತ್ತದೆ.

ಬಸವಣ್ಣನ ವ್ಯಕ್ತಿತ್ವ

ಬಸವಣ್ಣನವರ ಘನವ್ಯಕ್ತಿತ್ವವನ್ನು ಶಾಸನಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಸ್ತಾಪಿಸಿವೆ. ಅರ್ಜುನವಾಡ ಶಾಸನವು ಬಸವಣ್ಣನವರನ್ನು 

ಮಂಗಳ ಕೀರ್ತಿ ಪುರಾತನ

ಜಂಗಮ ಲಿಂಗೈಕ ಭಕ್ತಿ ನಿರ್ಭರ ಲೀಲಾ

ಸಂಗಂ ಸಂಗನ ಬಸವಂ

ಸಂಗತಿಯಂ ಮಾಳ್ಕೆ ಭಕ್ತಿಯೊಳನವರತಂ  

ಎಂದೂ ಸಮಯಭಕ್ತಿ ಸಂಪನ್ನಂ ಎಂದು ಸ್ತುತಿಸಿದೆ. ಈ ಪದ್ಯದಲ್ಲಿಯ ಪುರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭದ ಲೀಲಾಸಂಗಂ ಸಮಯಭಕ್ತಿ ಸಂಪನ್ನ ಎನ್ನುವ ವಿಶೇಷಣಗಳು ಆಗಿನ ಕಾಲಕ್ಕೆ ಬಸವಣ್ಣನವರು ಪಡೆದಿದ್ದ ಕೀರ್ತಿ, ಪಸರಿಸಿದ್ದ ಪ್ರಭಾವ ಇವುಗಳನ್ನು ಸೂಚಿಸುತ್ತದೆ. 

ಬಸವಣ್ಣನವರ  ಜೀವಿತದ ಪರಮಾವಧಿಯ ಕಾಲ: 

ಎಲ್.ಬಸವರಾಜು ಅವರ ಬಸವಣ್ಣನವರನ್ನು ಕುರಿತ 'ಬಸವೇಶ್ವರನ ಜೀವಮಾನಾವಧಿ' ಮತ್ತು  'ಬಸವೇಶ್ವರನ ಜನ್ಮದಾತರು ಮತ್ತು ಜನ್ಮಭೂಮಿ ಎರಡು ವಿದ್ವತ್‌ ಪೂರ್ಣ ಸಂಶೋಧನಾಲೇಖನಗಳಲ್ಲಿ ಬಸವಣ್ಣನವರ ಸಮಕಾಲೀನ ಪರಿಸರದ  ಐತಿಹಾಸಿಕತೆಯನ್ನು  ತದಲಬಾಗಿ, ಇಂಗಳೇಶ್ವರ, ವಳಸಂಗ ಗ್ರಾಮಗಳಲ್ಲಿಯ ಶಾಸನಗಳ ಮೂಲಕ ನಿರೂಪಿಸಿದ್ದಾರೆ. ಬಸವಣ್ಣನವರ  ಕಾಲಮಾನದ ನಿಶ್ಚಯಕ್ಕಾಗಿ ಕ್ರಿ.ಶ.೧೨೬೦ ರ ಅರ್ಜುನವಾಡ ಶಾಸನವನ್ನು ಆಧರಿಸಿದ್ದಾರೆ. ಶಾಸನೋಕ್ತ ದಾನಿಯಾದ ಚೌಡರಸನು ೧೨-೪-೧೨೬೦ನೇ ಸೋಮವಾರ ಸೂರ್ಯಗ್ರಹಣದಂದು ಶ್ರೀ ಬಸವರಾಜನನ್ವಯದ ತಪ ಚಕ್ರವರ್ತಿ ವೀರಬ್ರತಿ ಹಾಲಬಸವನನ್ನು ಕುರಿತು ಕವಿಳಾಸತೀರ್ಥದ ಮಹಿಮೆಯನ್ನು ಕೇಳುವನು. ಅದಕ್ಕೆ ಉತ್ತರವಾಗಿ ಹಾಲಬಸವಿದೇವನು “ಕವಿಳಾಸ ತೀಥಂ ನಾಲ್ಕು ಯುಗದ ಪುರಾಣೋಕ್ತದಿಂ ಬಂದ ಕ್ಷೇತ್ರವೆಂದೂ ಅಲ್ಲಿಯ ದೇವರನ್ನು ಸಮಸ್ತಗಣೇಶ್ವರರೂಕೃತ-ತ್ರೇತ-ದ್ವಾಪರ-ಕಲಿಯುಗಗಳಲ್ಲಿ ಆರಾಧಿಸಿ, ಸಾಲೋಕ್ಯಾದಿ ದಿವ್ಯಪದವಿಗಳನ್ನು ಪಡೆದರೆಂದೂ, ಆ ಕವಿಳಾಸಪುರವು ಆ ದೇವರಿಗೆ ಮಾಂಧಾತನು ಬಿಟ್ಟ ಧರ್ಮವೆಂದೂ ಮುಂತಾಗಿ ಬಹಳ ಪುರಾತನ ವಿಚಾರಗಳನ್ನೆಲ್ಲಾ ಹೇಳುವನು. ಅದೇ ಶಾಸನದಲ್ಲಿ ಹಾಲಬಸವಿದೇವನನ್ನು ಪ್ರಶಂಸಿಸುತ್ತ “ಸಲೆ ಮೂಜಗದೊಳಗೆ ಮೆರೆವ ಮಾನವದೇವಂ ಗೆಲಿದಂ ಅಶನಬೆಸನವಂ, ಛಲರಧಿಕಂ ಹಾಲಬಸವಿದೇವ ಮುನೀಶಂ” (ಶಾಸನ ಸಂಗ್ರಹ ಸಂ. ಎ.ಎಂ.ಅಣ್ಣಿಗೇರಿ ಮತ್ತು ಆರ್.ಶೇಷಶಾಸ್ತ್ರಿ, ಪು.೯೬) ಎಂದು ಕೊಂಡಾಡುವುದರಿಂದ ಆತನು ಕ್ರಿಶ. ೧೨೬೦ರ ವೇಳೆಗೆ ಮಹಾಮಾಹೇಶ್ವರನಷ್ಟೇ ಅಲ್ಲದೆ, ವೃದ್ಧಮಾಹೇಶ್ವರನೂ ಆಗಿದ್ದಂತೆ ತೋರುವುದು. ಶಾಸನ ಬರೆದ ೧೨೬೦ರಹೊತ್ತಿಗೆ ಹಾಲಬಸವಿದೇವನಿಗೆ ೬೫ವರ್ಷ ವಯಸ್ಸೆಂದಿಟ್ಟುಕೊಳ್ಳಬಹುದು. ಅಂದರೆ ಆತನು ಹುಟ್ಟಿದ್ದು ಕ್ರಿ.ಶ. ೧೧೯೫ರಲ್ಲಿ. ಈ ೧೧೯೫ ರ ಹೊತ್ತಿಗೆ ಆತನ ತಂದೆಯಾದ ಕಲಿದೇವನಿಗೆ ಸುಮಾರು ೨೦ ವರ್ಷಗಳಾಗಿಬೇಕು. ಆದ್ದರಿಂದ ಕಲಿದೇವನು ಹುಟ್ಟಿದ್ದು ಕ್ರಿ.ಶ.೧೧೭೫ರಲ್ಲಿ. ಈ ೧೧೭೫ರ ಹೊತ್ತಿಗೆ ಆ ಕಲಿದೇವನ ತಂದೆಯಾದ ಕಾವರಸನಿಗೆ ೨೦ ವರ್ಷವಾಗಿರಬೇಕು.  ಈ ೧೧೫೫ರ ಹೊತ್ತಿಗೆ ಕಾವರಸನ ತಂದೆಯಾದ ದೇವರಾಜನಿಗೆ ಸುಮಾರು ೨೦ ವರ್ಷವಾಗಿರಬೇಕು.  ಆದ್ದರಿಂದ ಕಾವರಸನು ಹುಟ್ಟಿದ್ದು ಕ್ರಿ.ಶ. ಪ್ರಾಯಶಃ ೧೧೫೫ ರಲ್ಲಿ, ೨೦ವರ್ಷ ವಯಸ್ಸಾಗಿರಬೇಕು. ಆದ್ದರಿಂದ ಆ ದೇವರಾಜನು ಹುಟ್ಟಿದ್ದು ಕ್ರಿ.ಶ. ೧೧೩೫ರಲ್ಲಿ. ಅರ್ಜುನವಾಡದ ಶಾಸನದ ಪ್ರಕಾರ ಈ ದೇವರಾಜನ ತಮ್ಮ  ಬಸವೇಶ್ವರನು ಕ್ರಿ.ಶ. ೧೧೩೫ ಆದ ಮೇಲಲ್ಲದೆ ಮೊದಲು ಹುಟ್ಟಿರಲಾರ. ಇದನ್ನು ಖಚಿತವಾಗಿ ಹೇಳಲು ನಮಗೆ ಲಕ್ಕಣ್ಣದಂಡೇಶನ ಶಿವತತ್ತ್ವ ಚಿಂತಾಮಣಿಯು ಬಸವನ ಜನನದ ಕಾಲವನ್ನು ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ ಸಹಿತವಾಗಿಕೊಟ್ಟು ಸಹಕರಿಸುವುದು. ಆ ಪ್ರಕಾರ ಕ್ರಿ.ಶ. ೨೭-೧೦-೧೧೪೦ಕ್ಕೆ ಸರಿಯಾಗುವುದು, ಆದ್ದರಿಂದ ಬಸವನ ಜನನದ ವರ್ಷ ನಿಸ್ಸಂಶಯವಾಗಿ ಕ್ರಿ.ಶ. ೧೧೪೦. ಬಸವನು ಕಲ್ಯಾಣಕ್ಕೆ ಬಂದಾಗ ಬಿಜ್ಜಳನು ಚಕ್ರವರ್ತಿ ಯಾಗಿದ್ದುದರಿಂದ, ಆತನು ಅಲ್ಲಿಗೆ ಬಂದುದು ಕ್ರಿ.ಶ. ೧೧೬೨ಕ್ಕಿಂತ ಹಿಂದೆಂಬುದು ಅಸಾಧ್ಯ. ಬಿಜ್ಜಳನು ಮಂಗಳವಾಡದಲ್ಲಿ ಆಳುತ್ತಿದ್ದಾಗ, ಕ್ರಿ.ಶ. ೧೧೫೬ರಲ್ಲೇ ಬಸವನು ಅವನ ಆಸ್ಥಾನಕ್ಕೆ ಬಂದು ಸೇರಿದನೆಂದು ಊಹಿಸಿದರೂ, ಆ ವೇಳೆಗಾಗಲೇ ಅವನಿಗೆ ೩೦ ವರ್ಷ ವಯಸ್ಸಾಗಿರಬೇಕು. ಆ ಅಪರ ವಯಸ್ಸಿನಲ್ಲಿ ಬಸವನು ಸಿದ್ಧರಸ ಅಥವಾ ಬಲದೇವನ ಮಗಳನ್ನು ಮದುವೆಯಾದನೆಂಬುದು ವಿಕೃತವಾಗಿ ಕಾಣುವುದು ಮತ್ತು ಕ್ರಿ.ಶ. ೧೧೦೬ರಲ್ಲಿ ಹುಟ್ಟಿದ ಬಸವನಿಗೆ ಕ್ರಿ.ಶ.೧೧೧೪ರ ವೇಳೆಗೆ ನಡೆದ ಉಪನಯನಕ್ಕೆ ಬಿಜ್ಜಳನಮಂತ್ರಿಯಾದ ಬಲದೇವನು ಬಂದಿದ್ದನೆಂಬುದು ತೀರ ಅಸಂಭಾವ್ಯ ಏಕೆಂದರೆ, ಆ ವೇಳೆಗೆ ಬಹುಶಃ ಬಿಜ್ಜಳನೇ ಹುಟ್ಟಿರುವುದಿಲ್ಲವಾಗಬಹುದು. ಆತನು ತನ್ನ ತಂದೆಯಿಂದ ರಾಜ್ಯಭಾರ ವಹಿಸಿಕೊಂಡುದೇ ಕ್ರಿ.ಶ.೧೧೪೦ರಷ್ಟು ಈಚೆಗೆ. ಆದುದರಿಂದ ಬಸವನು ಹುಟ್ಟಿದ ವರ್ಷವನ್ನು ಕ್ರಿ.ಶ. ೧೧೪೦ರ ಹಿಂದು ಹಿಂದಕ್ಕೆ ಒಯ್ದಂತೆಲ್ಲ ಸತ್ಯವೂ ದೂರವಾಗುತ್ತ ಹೋಗುವುದಲ್ಲದೆ, ಬಸವನ ಜೀವನದಲ್ಲಿ ನಡೆದಿರಬಹುದಾದ ವಾಸ್ತವಾಂಶಗಳೆಲ್ಲ ಮುಂದು ಹಿಂದಾಗುತ್ತವೆ”(ಎಲ್.‌ ಬಸವರಾಜು, ಸಂಶೋಧನಾ ಪಥ, ಪು.೪೬-೪೭) ಎಂದು ೧೯೬೭ರಲ್ಲಿಯೇ ಎಲ್.ಬಸವರಾಜು ಅವರು ವ್ಯಕ್ತಪಡಿಸಿರುವ ಬಸವಣ್ಣನ ಜೀವಿತಾವಧಿ ವಿವರಗಳು  ಬಸವಣ್ಣನವರ ಜೀವಿತಾವಧಿಯ ಬಗೆಗೆ ಜಿಜ್ಞಾಸೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿವೆ. ಈ ಸಂಗತಿಗಳು ಕಾವ್ಯ-ಪುರಾಣಗಳಲ್ಲಿಯ ವಿವರಗಳಿಗಿಂತ ಶಾಸನ ಇತ್ಯಾದಿ ಆಕರಗಳ ಹಿನ್ನೆಲೆಯಲ್ಲಿ ಒಳಗೊಂಡವುಗಳಾಗಿದ್ದು ಯೋಚಿಸತಕ್ಕದ್ದಾಗಿವೆ. 

     ನೆಲದ ಮರೆಯ ನಿಧಾನವಾಗಿದ್ದ ಬಸವಣ್ಣನವರ ಜೀವನಕ್ಕೆ ಸಂಬಂಧಪಟ್ಟ ಕೆಲವು ಹೊಸ ವಿಷಯಗಳನ್ನು ಹೊರಗೆಡವಿದ ಈ ಶಾಸನಕ್ಕೆ ಚರಿತ್ರೆಯ ದೃಷ್ಟಿಯಿಂದ ಪ್ರಾಮುಖ್ಯತೆ ಸಲ್ಲಬೇಕಾಗಿದೆ ತರ್ದವಾಡಿ ಮಧ್ಯ ಗ್ರಾಮ ಬಾಗವಾಡಿ ಪುರಾದೀಶ್ವರ ಮಾದಿರಾಜನ ತನುಜಂ ಬಸವರಾಜ ಎಂಬ ಹೇಳಿಕೆ ಅವರ ತಂದೆಯ ವಿಷಯದಲ್ಲಿ ತಲೆದೋರಿದ ಸಂದೇಹಗಳು ಅತ್ಯಂತಿಕವಾಗಿ ನಿವಾರಿಸಿದೆ ಬಸವಣ್ಣನವರ ಅಣ್ಣ ದೇವರಾಜ ಈತನ ಮಗ ಕಲಿದೇವರಸ ಈತನ ಮಗ ಹಾಲಬಸವಿದೇವ ಎಂಬ ವಿನೂತನ ಸಂಗತಿಗಳು ಈ ಶಾಸನದಿಂದ ವ್ಯಕ್ತವಾಗಿದೆ ಪುಲಿಗೆರೆಯ ಸೋಮನಾಥನ ಸನ್ನಿಧಿಯಲ್ಲಿ ದತ್ತಿ ಪಡೆದ ಹಾಲಬಸವಿದೇವನನ್ನು ಮೂಜಗದೊಳಗೆ ಮೆರೆದಮಾನವ ದೇವಂ ನೆಲಿದಂ ಅಸನ ಬೆಸೆನವ ಛಲ ರಧಿಕ ಎಂದೂ ಸ್ವಸ್ತಿ ಸಮಸ್ತ ಭುವನಾಶ್ರಯ ಮಹಾಮಹೇಶ್ವರ ಕವಿ ವಿಳಾಸಪುರಾಧೀಶ್ವರರುಂ ಸುವರ್ಣ ವೃಷಭಧ್ವಜಂ ಮುನೇಶಂ ಯತಿರಾಯ ಹಾಲಲಬಸವಿ ದೇವಂಎಂದು ಕರೆದಿದ್ದು ಬಸವಣ್ಣನವರ ಮುಂದಣ ಸಂತತಿ ಕೆಲವು ಕಾಲ ಅದೇ ಎತ್ತರದಲ್ಲಿ ಮುನ್ನಡೆದುದ್ದಕ್ಕೆ ಸಾಕ್ಷಿ ಎನಿಸಿದೆ .

ಈ ಶಾಸನದ ಬಗೆಗೆ ಕೆಲವು ಸಂಶೋಧಕರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.

ಶಾಸನ ಹಾಕಿಸಿ ಕೊಟ್ಟ ಸ್ಥಳದ ಬಗೆಗೆ ಖಚಿತವಾದ ಮಾಹಿತಿ ಇಲ್ಲ. ಅಂತ್ಯಭಾಗ ಗೊಂದಲಮಯದಿಂದ ಕೂಡಿರುವುದು. ಶಾಸನದಲ್ಲಿಯ ಪದ್ಯದ ಭಾಷೆಯ ಬಂಧಗಳಿಗೂ ಗದ್ಯದ ಒಕ್ಕಣೆಗೂ ಗಮನಾರ್ಹವಾದ ವ್ಯತ್ಯಾಸ ಕಂಡು ಬಂದಿರುವುದು. ಗದ್ಯದಲ್ಲಿ ಅನೇಕ ದೋಷಪೂರಿತ ಶಬ್ದಗಳು ಮತ್ತು ವ್ಯಾಕರಣದೋಷ ಹೆಚ್ಚಾಗಿರುವುದು. ಈ ಹಿನ್ನೆಲೆಯಲ್ಲಿ ಇದನ್ನು ಕೂಟ ಶಾಸನ ಎಂದು ಪರಿಗಣಿಸಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬಸವರಾಜನನ್ವಯರುಮಪ್ಪ ಎಂಬ ಪದಕ್ಕೆ ಬಸವಣ್ಣನವರ ಬೆಂಬಲಿಗರು, ಸಂಗಡಿಗರು, ಅನುಯಾಯಿಗಳು ಆಗಿರುವ ಎಂದು ಅರ್ಥೈಸುವುದೇ ಸೂಕ್ತ ಎಂಬ ನಿಲುವನ್ನು ವ್ಯಕ್ತಪಡಿಸಿರುವುದರ ಜೊತೆಗೆ ಉಳ್ಳವರು ಶಿವಾಲಯ ಮಾಡುವರು........ ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ  ಎಂದು ಮೃದುವಾದ ಮಾತಿನಲ್ಲಿ ಸಮರ್ಥ ರೀತಿಯಲ್ಲಿ ಲಿಂಗವಂತ ಧರ್ಮದ ತಿರುಳನ್ನೇ ಧ್ವನಿ ತುಂಬಿ ಲಿಂಗ ಪೂಜೆಯನ್ನು ಖಂಡಿಸಿರುವ ಬಸವಣ್ಣನವರ ಅಣ್ಣನ ಮಗನೋ ಮೊಮ್ಮಗನೋ ಮರಿಮೊಮ್ಮಗನೋ ಸಾಮಾನ್ಯವಾಗಿ ದೇವಾಲಯದ ಅರ್ಚಕನಾಗಿದ್ದನೆನ್ನುವುದು,  ಹಾಗೆ ಅನ್ನುವುದು ನಂಬುವುದು ಬಸವಣ್ಣನವರನ್ನು ಅವರ ವಿಶ್ವಮಾನ್ಯ ತತ್ವಗಳನ್ನು ಕೊಲೆ ಮಾಡಿದಂತೆ ಎಂದು ಆಕ್ಷೇಪಣೆ ಎತ್ತಿದ್ದಾರೆ.ಈ ಆಕ್ಷೇಪಣೆ ಏನೇ ಇರಲಿ ಕ್ರಿ.ಶ, ೧೨೬೦ ಅರ್ಜುನವಾಡ ಶಾಸನವು ಬಸವಣ್ಣನವರ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಶಾಸನವಾಗಿದೆ ಎಂಬುದನ್ನು ಒಪ್ಪಬಹುದಾಗಿದೆ.

  ಅನುಬಂಧ:

ಅರ್ಜುನವಾಡದ ಶಾಸನದ ಪಠ್ಯ

ಶಾಸನ ಪಾಠ

ನಮಸ್ತುಂಗ [ಶಿ]ರಶ್ಚುಂಬಿ ಚಂದ್ರ ಚಾಮರ ಚಾರವೇ 

ತ್ರೈಳೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ ||ಶ್ಲೋಕ ೧।।

[||ವೃ||]

ಶ್ರೀಯಂ ಶ್ರೀ ಕಲ್ಲಿನಾಥಂ ಕುಡುಗೆ ಭವಹರಂ ಭಕ್ತವೃಂದಕೆ ಗೌರೀ 

ಜಾಯಾ ಕಾಯಾನುಷಂಗಾಕಳಿತ ಲಳಿತ ತಾಪ್ರೋಲ್ಲಸದ್ವಾಮಭಾಗಂ 

ಸ್ವೀಯ ಸ್ವಾಯತ್ತ ಶಕ್ತಿತ್ರಯಮಯ ಮಹಿಮಂ ದೇವದಾಯಾದಮಾಯಾ 

ಪಾಯಾಭಿಪ್ರಾಯ ಲೀಲಂ ಪ್ರಣತಜನ ದುರಂತಾಘಸಂಘಟ್ಟಶೀಲಂ ||೧||

[||ವ।।] ಮತ್ತಂ ತದ[೯]ವಾಡಿ ಮಧ್ಯಗ್ರಾಮ[0] ಬಾಗವಾಡೀ ಪುರವರಾಧೀ[ಶ್ವ]ರಂ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯೆಂತೆಂದಡೆ||

[||ಕಂ||]

ಮಂಗಳ ಕೀರ್ತ್ತಿ ಪುರಾತನ

ಜಂಗಮ ಲಿಂಗೈಕ ಭಕ್ತಿ ನಿರ್ಬ್ಭರ ಲೀಲಾ

ಸಂಗಂ ಸಂಗನ ಬಸವಂ

ಸಂಗತಿಯಂ ಮಾಳ್ಕೆ ಭಕ್ತಿಯೊ[ಳ]ಗನವರತಂ ||೨||

[||ವೃ||]

ಯಾದವಭೂಮಿಪಾಳರಿಳೆಯಂ ಚತುರ[ಬ್ಧಿ] ಪರೀತೆಯಂ ನಿಸ 

ರ್ಗ್ಗೋದಯರಾಳ್ವರನ್ತವರೊಳಸ್ವಚನ ವೂಚಯ ವಾರ್ದ್ಧಿ ಸಿಂಹಣ 

ಕ್ಷ್ಮಾದಯಿತಂ ತದಗ್ಗ್ರ ತನಯ ಪ್ರಭವಂ [ನೃ]ಪ ಕಂನರಂ ಸಮ 

ಸ್ತೋದಧಿ ವೇಳೆಯಿಂ ಪೊಱಗೆ ಬೆಳ್ಗೊಡೆಯೊಳ್ನೆಳಲಂ ನಿಮಿರ್ಚ್ಚಿದಂ ||೩||

[||ಕಂ||]

ಸಲೆ ಭೂದೇವರ್ಕ್ಕಳ್ಳಿ 

ತ್ತಲಸದೆ ಗೋಭೂಮಿ ಹೇಮ ವಸ್ತ್ರಾದಿಗಳಂ 

ಮಲೆವರಸುಗಳೊಳ್ಕೊಂಬಂ 

ಬಲವಂತಂ ಕಂನರಂ ಪ್ರತಾಪಸಹಾಯಂ ||೪||

[||ವ।।] ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ[ಪೃ}ಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕ ದ್ವಾರಾವತೀ ಪುರವರಾಧೀಶ್ವರ ಯಾದವಕುಳ ಕಮಳ ಕಳಿಕಾ ವಿಕಾಸ ಭಾಸ್ಕರ ಅರಿರಾಯ ಜಗಜ್ಝಂಪ ಮಾಳವರಾಯ ಮದನತ್ರಿಣೇತ್ರ ಗೂರ್ಜ್ಜರರಾಯ ಭಯಂಕರ ತೆಲುಂಗರಾಯ ಸ್ಥಾಪನಾಚಾರ್ಯ ಇತ್ಯಾದಿ ನಾಮಾವಳೀ ಸಮಾಳಂ[ಕೃ]ತ ಶ್ರೀಮತ್ ಪ್ರೌಢಪ್ರತಾಪ ಚಕ್ರವರ್ತ್ತಿ ಶ್ರೀ ಕಂನರದೇವಂ ದೇವಗಿರಿಯ ನೆಲೆವೀಡಿನೊ[ಳ್] ಸುಖಸಂಕಥಾ ವಿನೋದದಿನ್ ಅನವರತಂ ರಾಜ್ಯಂಗೆಯ್ಯುತ್ತುಮಿರೆ॥

ತತ್ಪಾದಪದ್ಮೋಪಜೀವಿ।।

[||ಕಂ||]

ಚಿಕ್ಕನ ಚಿಕ್ಕ ಮಗಂ ವಿಭ 

ವಕ್ಕೆ ಕುಬೇರಂಗೆ ಸೆಣಸುವಂ ರಾಯರುಮಂ 

ಮಿಕ್ಕ[ಂ] ಬೀಚುಗಿಯೌದಾ 

ರ್ಯಕ್ಕಾರಿಂ ಪಿರಿಯನಾತನಂಣಂ ಮಲ್ಲಂ ||೫||

||ವೃ||

ಚಾವುಂಡಂ ಪಾರ್ವತೀ ವಲ್ಲಭಚರಣ ಸರೋಜದ್ವಯಾಮೋದ [ಭೃಂ]ಗಂ 

ಚಾವುಂಡಂ ತ್ಯಾಗಭೋಗಾನುಭವಭವಸುಖ ಶ್ರೀ ವಧೂ[ನೃ]ತ್ಯರಂಗಂ 

ಚಾವುಂಡಂ ಸಾಮಭೇದ ಪ್ರ[ಭೃ]ತಿ ಸಕಳ ಮಂ[ತ್ರಾಂ]ಗ ವಿದ್ಯಾಸಮುದ್ರಂ 

ಚಾವುಂಡಂ ವೀರವೈರಿ ಪ್ರಕರ ಸಮರ ಸಂಘ[ಟ್ಟ] ಕಾಳಾಗ್ನಿರುದ್ರಂ ||೬||

||ಕಂ||

ಯೆನೆ ನೆಗಳ್ದಾ ಚಾವುಂಡನ 

ಮನದನ್ನಂ ನಾಗರಾಜನ[ಖಿ]ಳ ನಿಯೋಗ 

[ಜ್ಞ]ನೆನಿಪ್ಪ ದಿವಾಕರ ದೇ 

ವನಪುತ್ರಂ ವಾಣಸಾನ್ವಯಾಂಬರ ಮಿತ್ರಂ ||೭||

[||ವೃ||]

ತ್ಯಾಗಗುಣಕ್ಕೆ ತಾಯ್ವನೆ ಸಮಸ್ತ[ನೃ]ಪಾಳ ನಿಯೋಗ ವರ್ತ್ತನಾ 

ಶ್ರೀಗೆ ನಿವಾಸಮಿಷ್ಟರ ವಿಶಿಷ್ಟರ ತೋಷಣಪೋಷಣಂಗಳೊ 

ಳ್ಳಾಗರಮೆಂದು ಬಂಣ್ನಿಸುವುದೀ ಧರೆ ಪಂಡಿತಪಾರಿಜಾತನಂ 

ನಾಗನನಾ ಜನಾರ್ದ್ಧನನ ಭಕ್ತಿ ಭರ ಪ್ರಭವಾನುರಾಗನಂ ||೮||

[||ಕಂ||] 

ಸಂಗನ ಬಸವನ ಅಗ್ರ[ಜ] 

[ಲಿ]ಂಗೈಕಂ ದೇವರಾಜ ಮುನಿಪನ ತನಯಂ 

ಜಂಗಮ ಪರುಸಂ [ಕಾವ]ರ 

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ ||೯||

ಕಲಿದೇವ ಮುನಿಪನಾತ್ಮಜ 

ಸಲೆ ಮೂಜಗದೊಳಗೆ ಮೆಱೆವ ಮಾನವ ದೇವಂ 

ಗೆಲಿದಂ ಅ[ಶ]ನ ಬೆಸನವಂ 

ಛಲರಧಿಕಂ ಹಾಲಬಸವಿದೇವ ಮುನೀ[ಶ]ಂ     ||೧೦||

[ವ||] ಸ್ವಸ್ತಿ ಸಮಸ್ತ ಭವನಾ[ಶ್ರ]ಯಂ ಮಹಾಮಾಹೇಶ್ವರಂ ಕವಿಳಾಸಪುರವರಾಧೀ।ಶ್ವ]ರರುಂ ಸುವಂರ್ಣ್ನ[ವೃಷ]ಭಧ್ವಜಂ ತೇಸಠ್ಠಿ ಪುರಾ[ತನ] ಪಾದಾರ್ಚ್ಚಕರುಂ ಮಹಾಲಿಂಗ ಜಂಗಮ ಪ್ರ[ಸಾ]ದ ನಿಯತರುಂ ಸಮಯ ಭಕ್ತಿ ಸಂಪಂನ್ನ ಶ್ರೀ ಬಸವರಾಜನಂನ್ವಯರುಮಪ್ಪ ತಪಃಚಕ್ರವರ್ತ್ತಿ ವೀರಬ್ರತಿ ಹಾಲಬಸವಿದೇವಂಗೆ ಆ ಮಹಾಪ್ರಧಾನಂ ಱಟ್ಟರಾಜ್ಯ ಪ್ರತಿಷ್ಠಾಚಾರ್ಯನುಮಪ್ಪ ನಾಗರಸರ್ ಸಕ ವರುಷಂ ಸಾಸಿರದ ನೂಱಯೆಂಭತ್ತಯೆರಡನೆಯ ಸಿದ್ಧಾ[ರ್ತ್ಥಿ] ಸಂವತ್ಸರದ ಚೈತ್ರ ಬಹುಳ ಅಮಾಸೆ ಸೋಮವಾರ ಸೂರ್ಯಗ್ರಹಣದಲ್ಲಿ ಹುಲಗೆಱೆಯ ಸೋಮನಾಥ ದೇವರ ಸಂನಿಧಿಯಲ್ಲಿ ಆ ಚೌಡಿ ಸೆಟ್ಟಿಯ[ರ್] ತೀರ್ತ್ಥ ವಿಶೇಷಮಂ ಬೆಸಗೊಳ[ಲ್] ನೂಲೆನಾಡೊಳ[ಗಿ]ನ [ಮನಿತನದಿ] ಕವಿಳಲಸ ತೀ[ರ್ತ್ಥಂ] ನಾಲ್ಕು ಯುಗದ ಪುರಾಣೋಕ್ತದಿಂ ಬಂದ ಕ್ಷೇತ್ರವದೆಂತೆಂದಡೆ

[ಕೃ]ತ[ಯು]ಗದಲ್ಲಿ ಕವಿಳಾಸಮುನಿ ಕವಿಳಾಸನಾಥ [ತ್ರೇ] ತೆಯಲಿ ಅಂಕರಾಜಮುನಿ ಅಂಕನಾಥ ದ್ವಾಪರದಲ್ಲಿ ಮಹಾರಾಜಮುನಿ ಮಹಲಿಂಗದೇವ, ಕಲಿಯುಗದಲ್ಲಿ ಕಲಿರಾಜಮುನಿ ಕಲಿದೇವನಾಮ [ಈ] ಮುನಿಗ[ಳ್] ಮು[ಖ್ಯ] ಸಮಸ್ತ ಗಣೇ[ಶ್ವ]ರ[ರ್] ಆರಾಧಿಸಿ ಸಾಲೋಕ್ಯ ಸಾರೂಪ್ಯ ಸಾಮೀ[ಪ್ಯ] ಸಾಯು[ಜ್ಯ]ಮಂ ಪಡೆದ[ರ್] ಆ ದೇವರಿಗೆ ಅಂಕನಾಥವೆಸರಿಂ ಅಂಕವಲ ತಳ[ವೃತ್ತಿ] ಕೊತ್ತಸಿ ಕುಱುವನಿಗೆ [ಈ] ಹಳ್ಳಿ ಮಾಂಧಾತ ಚಕ್ರವರ್ತ್ತಿ ಬಿಟ್ಟ ಧಂರ್ಮ್ಮ ಆ ತೀ[ರ್ತ್ಥ] ಕ್ಕದು [ಶಾ]ಸನಸ್ಥವೆಂಬುದಂ ಚವುಡಿಸೆಟ್ಟಿಯರು ಕೇ[ಳ್ದು] ನಾಗರಸರೂ ತಾವೂ ಏಕಸ್ಥರಾಗಿ ಕವಿಳಾಸಪುರದೊಳಗೆ ಸ್ವಯಂಭು ಮಲ್ಲಿಕಾರ್ಜ್ಜುನ ಸಂಗಮೇ[ಶ್ವ]ರ ನಾಗೇ[ಶ್ವರ]ರ ಯೀಮೂಱು ಲಿಂಗ[ಕ್ಕಂ] ಅಂಗಭೋಗ ರಂಗಭೋಗ ಜೀರ್ಣ್ನೋದ್ಧಾರಕ್ಕಂ ಪಾರಣೆಯ ಜಂಗಮಾರಾಧನೆಗಂ ಕೊತ್ತಸಿ ಕುಱುವನಿಗೆ ತಳ[ವೃ]ತ್ತಿ ಅಂಕವಲ ಕೂಂಡಿನಾಡೊ[ಳ್] ಸಲುವಂತೆ ಹೆಜ್ಜುಗಿಯ ಹಬ್ಬ ವೊ[ಂ]ಭತ್ತು [ದಾನ] ಸುಂಕ ನೂಱೆ[ತ್ತಿ]ನ ಪರಿಹಾರ ಯಿಂತಿನಿತುಮಂ ಸರ್ವ್ವಬಾ[ಧೆ] ಸರ್ವ್ವನಮಸ್ಯವಂ ಮಾಡಿ ಚವುಡಿಸೆಟ್ಟಿಯ[ರ್] ನಾಗರಸ[ರ್] ಯತಿರಾಯ ಹಾಲಬಸವಿದೇವಂಗೆ ಪೂರ್ವ್ವದತ್ತವೆಂದು ಧಾರಾಪೂರ್ವ್ವಕಂ ಮಾಡಿಕೊಟ್ಟ[ರ್]

ಆ ಚವುಡಿ ಸೆಟ್ಟಿಯರ ನಿಯಾಮದಿಂ ನಾಗರಸ[ರ್] ಪುರದಿಂ ಪಡುವಲು ತೊಱೆಯ ಕೂಡಿದ ಹಳ್ಳ ನೀರುವರಿ[ಯೆ] ಮೇರೆಯಾಗಿ ಮೇಗೆ ಕಲುಕಂಟಗಗೆಱೆ ಬಸವಗೋಡಿ ಬಡಗಲು ಮೊಸರಗುತ್ತಿ [ಎ]ರಾರವಿಡಿದು ಮೂಡಲು ಜಂಬೆಗಲ್ಲ ಕಣಿ ಕುಚ್ಚಗೋಡಿಯಿಂ ಬಂದ ಹಳ್ಳ ನೀರುವರಿ[ಯೆ] ತೆಂಕಲು ತೊಱೆಯ ಕೂಡಲು ಯೀ ಚತುಸ್ಸೀಮಾಭ್ಯಂತರ ಕವಿಳಾಸಪುರ[ದ]ಲಿ ಸುಂಕ ಸಾದ ತಳಸಾರಿಗೆ ಬ[ಟ್ಟೆ]ಯ ಬಾಧೆ ಗ್ರಾಮಬ್ರಯ(?) ನಿಧಿ ನಿಕ್ಷೇಪ ಅಂಕ ಟಂಕ ಆಣೆ[ಘೋಷಣೆ] ಮುದ್ರೆ ನಾಗೇ[ಶ್ವ]ರಕೆ ಮಲ್ಲೇ[ಶ್ವ]ರಕೆ ಕುಱುವನಿಗೆ ಸಂಗಮೇ[ಶ್ವ]ರಕೆ ಪಾರಣೆಯ ಜಂಗಮಾರಾಧನೆಗೆ ಕೊತ್ತಸಿಗೆ [ಈ] ಧರ್ಮ್ಮಕೆ ಇದು ವಿವರವೆಂದು ನಾಗರಸರು ಕೊಟ್ಟ [ಶಾ]ಸನ ನಾಲ್ಕುಂ ಪಟ್ಟಣಂಗ[ಳ್] ನೂಲೆನಾಡೊಳಗೆ ಸಂತೆಗಳ ಆಯದಾಯ ಇ[ರ್ಪ]ಂತು ಕೋಣ ಮೆಯಿದೆಱೆ ಸುಂಕಹದಿನೆಂಟು ಸಮಯವೂ ಅಱುವತ ಮೂವರೂ ಬಣಜು ಭಕುತಿ ಭೇದವಿಲ್ಲ ಕವಿಳಾಸಪುರವೇ [ಶಾ]ಸನದ ಮನೆ ಬಸವರಾಜನೇ [ಶಾ]ಸನಿಗನೆಂದು ವುಭಯ ನಾನಾದೇಸಿ ಮುಂಮುರಿದಂಡಂಗ[ಳ್] ಕೊಟ್ಟ [ಶಾ]ಸನ।।

( ಆಧಾರ: ಎಪಿಗ್ರಫಿಯಾ ಇಂಡಿಕಾ, ಸಂ. XXI ಪು. ೯-೧೬ ಮತ್ತು ಶಿವಾನುಭವ ಪತ್ರಿಕೆ ಸಂ.೩, ಸಂ.೯)

ಬಸವಣ್ಣನವರನ್ನು ಉಲ್ಲೇಖಿಸಿರುವ ಇತರೆ ಶಾಸನಗಳು:

೧.ಕ್ರಿ.ಶ೧೨೫೯ರ ಹಿರಿಯೂರ (ಅರಸಿಕೆರೆ ತಾಲೋಕು) ಶಾಸನ: ಈ ಶಾಸನವು ಹಿರಿಯೂರಿನ (ಹಾಸನ ಜಿಲ್ಲೆ) ಕುಂಜೇಶ್ವರ ದೇವಾಲಯದಲ್ಲಿದೆ. ಈ ಶಾಸನದಲ್ಲಿ ತಮಿಳುನಾಡಿನ ಅತಿಪುರಾತನರು ಹಾಗೂ ಪ್ರಾಚೀನ ಶರಣರ ಸಾಲಿನಲ್ಲಿ ಬಸವಣ್ಣನವರನ್ನು “ಸಿರಿಯಾಳ್ವಂ ಬಸವಯ್ಯ ನೊಳ್ವೆಸೆವ…..ಬಾಣನುರಂ…..ಸಿಂಧುಬಲ್ಲಾಳನೀಧರೆ ಕೊಂಡಾಡುವ ದಾಸಿಮಯ್ಯನೆನಿಸಿರ್ದೀ ಭಕ್ತಸಂದೋಹವಾ… ಎಂದು ಉಲ್ಲೇಖಿಸಿದೆ. ಪುರಾತನರ ಶರಣರ ಸಾಲಿನಲ್ಲಿ ಬಸವಣ್ಣನವರನ್ನು ಮಾತ್ರ ಈ ಶಾಸನ ಪ್ರಸ್ತಾಪಿಸಿರುವುದು ಅವರ ಮಹಿಮೆಯ ದ್ಯೋತಕವಾಗಿದೆ.

೨. ಅರ್ಜುನವಾಡ ಶಾಸನ - ೨: ಅರ್ಜುನವಾಡದಲ್ಲಿ ಅದೇ ಕಾಲದ ಇನ್ನೊಂದು ಶಾಸನವು ದೊರೆತಿದೆ.

ಇದು ಲಿಂಗಮುದೆಯ ಸೀಮೆಯ ಕಲ್ಲು. ಈ ಶಾಸನದಲ್ಲಿ ಶ್ರೀಬಸವಣ ದಂಣಾಯಕರ ಕೆಯ್ ಎಂಬ ಉಲ್ಲೇಖವಿದ್ದು ಬಸವಣ್ಣನವರನ್ನು ದಂಡನಾಯಕ ಎಂದು ಕೀರ್ತಿಸಲಾಗಿದೆ.

೩.  ಚೌಡದಾನಪುರ ಶಾಸನ ಕ್ರಿ.ಶ ೧೨೬೩ರ ಚೌಡದಾನಪುರ ಶಾಸನವು ಬಸವಣ್ಣನವರ ಲಿಂಗಜಂಗಮ ಸೇವೆ ಪ್ರಸಾದ ಸಿದ್ಧಿಗಳನ್ನು ವಿವರಿಸಿದೆ. “ಲಿಂಗಕ್ಕೆ ಜಂಗಮಕ್ಕಂಹಿಂಗದೆ ದಾಸತ್ವ ಮಾಳ್ಪುದೇ ಬೆಸನೆಂದಾಸಂಗನಬಸವಂ ಮೃಡಗಣ ವರಪ್ರಸಾದಮಪಡೆದಂ ಜಗವರಿಯಲಂದು ಸಂಗನಬಸವಂ ಪಡೆದ ಪ್ರಸಾದ ಸಿದ್ಧಿಯʼʼ ಎಂದು ಹೇಳಿದ್ದು ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಸ ಹಿಡಿದಂತಿದೆ. ಬಸವಣ್ಣನವರ ಈ ವಿಶೇಷಣಗಳು ಲಿಂಗ, ದಾಸೋಹ, ಜಂಗಮಗಳು ಸಮಾಜದ ಮೇಲೆ ದಟ್ಟವಾಗಿ ಬೀರಿದ್ದ ಪ್ರಭಾವದ ಪ್ರತೀಕವೆನಿಸಿವೆ.

 ೪.  ಕಲ್ಲೇದೇವರಪುರ ಶಾಸನ , ಜಗಳೂರು, ಚಿತ್ರದುರ್ಗ: ಕ್ರಿ.ಶ, ೧೨೭೯ರ ಕಲ್ಲೇದೇವರಪುರ ಶಾಸನದಲ್ಲಿ ‘ಚೇರಚೋಳನಂಬಿ ಚಿಕ್ಕ, ಕಕ್ಕ, ಚೆಂನ ಹೊಂನ, ಬಂಕ, ಬಸವರಾಜ, ಭೊಜ ಮೊದಲಾದ ಮರ್ತ್ಯ ಲೋಕದ ಮಹಾಗಣಾಚಾರ ಧರಾಭಾರ ಧೌರೇಯ, ಲಿಂಗೈಕ್ಯಸಂಗ ಸದ್ಭಾವನಂ ಎಂಬುದಾಗಿ ಬಸವ ಪೂರ್ವಯುಗ ಹಾಗೂ ಬಸವ ಯುಗದ ಶರಣರನ್ನು ಕೀರ್ತಿಸಿದೆ.  ಈ ಶಾಸನದಲ್ಲಿ ಮರ್ತ್ಯಲೋಕದ ಪುರಾತನ ನೂತನ ಮಹಾಗಣಗಳ ಸಮೂಹದ ನಡುವೆ ಬಸವಣ್ಣನ ಹೆಸರು ಪ್ರಸ್ತಾಪಿತವಾಗಿರುವುದು ಗಮನಿಸಬೇಕಾದ ಅಂಶವಾಗಿದೆ. 

  ೫. ಮರಡಿಪುರ ಶಾಸನ: 

 ಕ್ರಿ.ಶ ೧೨೮೦ ಮರಡಿಪುರ ಶಾಸನದಲ್ಲಿ  ‘ ಓಹಿಲ, ಉದ್ಭಟ, ನಂಬಿ, ಕುಂಬಾರ ಗುಂಡ, ಆಂಡವಲ, ಕರಿಕಾಲ ಚೋಳ, ಭೋಗದೇವ, ಬಾಣ, ಮಯೂರ, ಕಾಳಿದಾಸ, ಕೇಶಿರಾಜ ದಣ್ನಾಯಕ, ಸುರಿಗೆಯ ಚಲ್ವಡರಾಯ, ಸಂಗನ ಬಸವಯ್ಯ, ಕೇಶವರಾಜ, ಜಗದೇವದಣ್ನಾಯಕ, ಏಕಾನ್ತದ ರಾಮಯ್ಯ, ಸೊನ್ನಲಿಗೆ ರಾಮಯ್ಯ, ಹುಲಿಗೆರೆಯ ಪೊನ್ನಯ್ಯ ನೆಲವಿಗೆಯ ಸಾಂತಯ್ಯ ಸಕಳಗಣ ಪರಿವೇಷ್ಟಿತ ಶ್ರೀ ಪ್ರಶಸ್ತಿ ಮಂಗಳಂ ಎಂಬುದಾಗಿ ಮರ್ತ್ಯಲೋಕದಲ್ಲಿ ಪ್ರಸಿದ್ಧರಾದ ನೂತನ ಪುರಾತನ ಗಣಂಗಳ ನಡುವೆ ಬಸವಣ್ಣನವರನ್ನು ಉಲ್ಲೇಖಿಸಿದೆ. ಬಸವಣ್ಣನವರನ್ನು ಸಂಗನ ಬಸವಯ್ಯ ಎಂದು ಉಲ್ಲೇಖಿಸಿದ್ದಾರೆ. ಇದು ಬಸವಣ್ಣನವರ ಇಷ್ಟದೈವ ಸಂಗಮೇಶ್ವರ ಮತ್ತು ಬಸವಣ್ಣನವರ ನಡುವಿನ ದೈವೀ ಸಂಬಂಧವನ್ನು ಸೂಚಿಸುತ್ತದೆ. 

ತಾಮ್ರ ಶಾಸನಗಳು

೧) ಆನಂದಪುರ ಸಂಸ್ಥಾನ ಪಠದ ತ್ರಾಮ ಶಾಸನ ಕ್ರಿಶ. ೧೬೬೦ :ಈ ಶಾಸನದ ಮುಖ್ಯ ಪಠ್ಯ ಭಾಗವು ಹೀಗಿದೆ.

". .. ಪೂರ್ವ ಕಲ್ಯಾಣ ಪಟ್ಟಣದಲ್ಲಿ ನಿರಂಜನ ಪ್ರಭು ಸ್ವಾಮಿಗಳು ತಮ್ಮ ಶೂನ್ಯ ಸಿಂಹಾಸನಕ್ಕೆ ಮುಂದೆ

ವಬ್ಬರ ಯೋಗ್ಯರ ಮಾಡಬೇಕೆಂದು ಚನ್ನಬಸವ ಬಸವೇಶ್ವರ ಮುಂತಾದ ಪ್ರಥಮ ಬಿನೈಸಿಕೊಂಡದಕ್ಕೆ . ..

ಇಲ್ಲಿ ಬಸವಣ್ಣನವರನ್ನು ಬಸವೇಶ್ವರ ಎಂದು ಕರೆಯಲಾಗಿದೆ. ಪ್ರಮಥರ ಸಾಲಿನಲ್ಲಿಬಸವಣ್ಣನವರನ್ನು ಪರಿಗಣನೆ ಮಾಡಿರುವುದು ಗಮನಾರ್ಹ ಅಂಶ.

೨) ಕಾನಕಾನಹಳ್ಳಿ ತಾಮ್ರ ಶಾಸನ-೧: ತೆಲುಗು ಭಾಷೆಯಲ್ಲಿರುವ ಈ ಶಾಸನದ ಕಾಲ ಸುಮಾರು

ಕ್ರಿ.ಶ.೧೭೦೦. ಬಸವಣ್ಣನವರನ್ನು ಬಸವೇಶ್ವರ ಎಂದು ಕರೆಯಲಾಗಿದೆ.

“ಕಲ್ಯಾಣ ಪಟ್ಟಮಂದು ಬಸವೇಶ್ವರ ಸ್ಪ(ಸ್ಟಾ) ಮಲುವಾರು ನಿರ್ಣಯಂ ಚೇಶಿಂದಿ.” ಎಂಬುದು

ಪಠ್ಯದ ಭಾಗ. ಇದರಲ್ಲಿ ಮಡಿವಾಳ ಮಾಚಿದೇವನು ಅಗಸರಿಗೆ ಹಕ್ಕುಗಳನ್ನು ನೀಡಿದುದನ್ನು

ದಾಖಲಿಸಲಾಗಿದೆ.

    ಈ ಮೇಲ್ಕಂಡ ಶಾಸನಗಳಲ್ಲಿನ ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತ ವಿವರಗಳು, ಬಸವಣ್ಣನವರನ್ನು ಕುರಿತ ಕಾವ್ಯ ಪುರಾಣಗಳಲ್ಲಿಯ ವಿವರಗಳಿಗಿಂತ ಪೂರ್ವದವುಗಳಾಗಿದ್ದು ವಿಶ್ವಾಸನೀಯ ದಾಖಲೆಗಳಾಗಿದೆ.

ಪರಾಮರ್ಶನ ಗ್ರಂಥಗಳು

1.ಎಂ.ಎಂ.ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು, ಶ್ರೀ.ಜಗದ್ಗುರು ತೋಂಟದಾರ್ಯ ಮಠ, ಗದಗ, 1978

                  ಮಾರ್ಗ ಸಂ.4. ಸ್ವಪ್ನ ಪುಸ್ತಕಾಲಯ,ಬೆಂಗಳೂರು 2004

2. ಎಂ.ಚಿದಾನಂದಮೂರ್ತಿ: ಸ್ಥಾವರ-ಜಂಗಮ, ಸ್ವಪ್ನ ಪುಸ್ತಕಾಲಯ,ಬೆಂಗಳೂರು 2004

3. ಎಂ.ಜಿ.ನಾಗರಾಜು, ಸಾಂಸ್ಕೃತಿಕ ವೀರಶೈವ, ಶ್ರೀ ದೇಗುಲ ಮಠ, ಕನಕಪುರ,2005

4.ಬಸವೇಶ್ವರ ಸಮಕಾಲೀನರು: ಬಸವ ಸಮಿತಿ, ಬೆಂಗಳೂರು 2000 ( ದ್ವಿ.ಮು)

೫. ನೀಲಗಿರಿ ತಳವಾರ ಮತ್ತು ದೇವರಡ್ಡಿ ಹದ್ಲಿ, ಡಾ.ಎಲ್.ಬಸವರಾಜು ಸಂಶೋಧನ ಪಥ, ಸಪ್ನ ಬುಕ್ ಹೌಸ್, ಬೆಂಗಳೂರು. ೨೦೧೮.

೬.ಕೈದಾಳ ರಾಮಸ್ವಾಮಿ ಗಣೇಶ: ಶಾಸನ ಸರಸ್ವತಿ, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ

  ಧಾರವಾಡ, ೨೦೦೮

೭. ಶಾಸನ ಸಂಗ್ರಹ ಸಂ. ಎ.ಎಂ.ಅಣ್ಣಿಗೇರಿ ಮತ್ತು ಆರ್.ಶೇಷಶಾಸ್ತ್ರಿ,

   ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೭

೮. ಸಿ.ನಾಗಭೂಷಣ: 1.ಸಾಹಿತ್ಯ ಸಂಸ್ಕೃತಿ ಹುಡುಕಾಟ, ಅಮೃತವರ್ಷಿಣಿ ಪ್ರಕಾಶನ, ಯರಗೇರ-ರಾಯಚೂರು, 2002

                               2. ವೀರಶೈವ ಸಾಹಿತ್ಯ ಕೆಲವು ಒಳನೋಟಗಳು, ವಿಜೇತ ಪ್ರಕಾಶನ, ಗದಗ, 2008

                              3. ಶಾಸನಗಳು ಮತ್ತು ಕನ್ನಡ ಸಾಹಿತ್ಯ: ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ, 2005  

                             



              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು                                                          ಡಾ. ಸಿ.ನಾಗಭೂಷಣ    ...