ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಮೇ 5, 2025

 ಬ್ಹಿ. ವಿ. ಶಿರೂರ  ಕನ್ನಡ ವಿದ್ವತ್‌ ಪರಂಪರೆಯ ವಿದ್ವತ್ತಿನ ಪ್ರತೀಕ  

                                                       ಡಾ.ಸಿ.ನಾಗಭೂಷಣ

ಡಾ. ಬಿ.ವಿ. ಶಿರೂರ ಅವರು ಆದರ್ಶ ಕನ್ನಡ ಪ್ರಾಧ್ಯಾಪಕರಾಗಿ, ಶ್ರೇಷ್ಠ ಸಂಶೋಧಕರಾಗಿ ಕಳೆದ ಮೂವತ್ತೈದು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ದುಡಿದವರು. ಸಂಶೋಧನೆ, ಹಳಗನ್ನಡ, ಹಸ್ತಪ್ರತಿ, ಶಾಸನ ಹಾಗೂ ಸಂಪಾದನ ಕ್ಷೇತ್ರಗಳಲ್ಲಿ ಕೃಷಿ ಮಾಡಿ, ಮೌಲಿಕ ಕೃತಿಗಳನ್ನು ರಚಿಸಿದವರು. ಕನ್ನಡ ವಿದ್ವತ್‌ ವಲಯದ ಕೊನೆಯ ತಲೆಮಾರಿನ ಡಾ. ಶಿರೂರ ಅವರ ಸಂಶೋಧನ ಶಿಸ್ತು, ಪರಿಶ್ರಮ ಪ್ರವೃತ್ತಿ ಅವರನ್ನು ಅಪರೂಪದ ಸಂಶೋಧಕರನ್ನಾಗಿ ಮಾಡಿವೆ.

    ಡಾ. ಬಸವರಾಜ ವೀರಭದ್ರಪ್ಪ ಶಿರೂರ ಅವರು ಕೊಪ್ಪಳ ಜಿಲ್ಲೆ ಯಲಬುರ್ಗಿ ತಾಲೂಕಿನ ಆಡೂರ ಗ್ರಾಮದವರು. ಇವರ ತಂದೆಯವರು ಅಪ್ಪಟ ಗಾಂಧಿವಾದಿಗಳೂ, ನ್ಯಾಯನಿಷ್ಠುರರೂ ಆಗಿದ್ದರು. ಸತ್ಯಾಗ್ರಹ, ಚಳುವಳಿ, ರಾಜಕಾರಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದವರು. ಆದರ್ಶ ಸಮಾಜಸೇವಕರಾಗಿದ್ದ ವೀರಭದ್ರಪ್ಪನವರ ಪ್ರೇರಣೆ ಪ್ರಭಾವಗಳು ಡಾ. ಶಿರೂರ ಅವರ ಮೇಲೆ ಗಾಢವಾಗಿ ಆಗಿರುವುದು ಕಂಡುಬರುತ್ತದೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾದ ಅಂದಾನಮ್ಮನವರು ಶಿರೂರ ಅವರ ತಾಯಿಯವರು. ಇವರ ಪುಣ್ಯಗರ್ಭದಲ್ಲಿ ಮಾರ್ಚ್ ೨, ೧೯೪೧ ರಂದು ಬಸವರಾಜ ಜನಿಸಿದರು. ಬಾಲ್ಯದಲ್ಲಿ ತಾಯಿಯವರನ್ನು ಕಳೆದುಕೊಂಡು, ಬಡತನದ ಬವಣೆಯನ್ನು ಅನುಭವಿಸಿದರು. ತುಂಬಾ ಚುರುಕಾಗಿದ್ದ ಇವರು ಗದಗ ಮತ್ತು ಆಡೂರಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಕೊಪ್ಪಳ ಮತ್ತು ಕುಕನೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪಿ.ಯು.ಸಿ. ಶಿಕ್ಷಣವನ್ನು ರಾಯಚೂರಿನಲ್ಲೂ ಪದವಿ ಶಿಕ್ಷಣವನ್ನು ಹುಬ್ಬಳ್ಳಿ-ಧಾರವಾಡಗಳಲ್ಲೂ ಪೂರೈಸಿದರು. ೧೯೬೨ರಲ್ಲಿ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ ಪಾಸು ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಎಂ.ಎ. ಅಧ್ಯಯನ ಮಾಡಿದರು. ಡಾ. ಆರ್.ಸಿ. ಹಿರೇಮಠ, ಡಾ. ಎಂ.ಎಸ್. ಸುಂಕಾಪುರ ಅವರಂಥ ವಿದ್ವತ್ತಿನ ಪ್ರಾಧ್ಯಾಪಕರ ಪ್ರಭಾವಕ್ಕೆ ಒಳಗಾದರು. ಡಾ. ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ 'ಶ್ರವಣಬೆಳಗೊಳ - ರಾಜಕೀಯ ಸಾಹಿತ್ಯಕ, ಸಾಂಸ್ಕೃತಿಕ ಮಹತ್ವ' ಎಂಬ ವಿಷಯ ಕುರಿತು ಪಿಎಚ್.ಡಿ ಸಂಶೋಧನ ಕಾರ್ಯ ಕೈಗೊಂಡರು.

ಡಾ. ಬಿ.ವಿ. ಶಿರೂರ ಅವರು ೧೯೬೫ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ವಚನವಾಲ್ಮೀಯ ವಿಭಾಗದಲ್ಲಿ ಸಹಾಯಕ ಸಂಶೋಧಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ೧೯೬೬ ರಲ್ಲಿ ನರೇಗಲ್ಲದ ಶ್ರೀ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಕೌಟುಂಬಿಕ ಜೀವನದ ತಾಪತ್ರಯಗಳ ಮಧ್ಯದಲ್ಲೂ ತಮ್ಮ ಸಂಶೋಧನ ಕಾವ್ಯವನ್ನು ಮುಂದುವರೆಸಿದರು. ೧೯೭೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದರು.

ವಿದ್ಯಾರ್ಜನೆ' ಎನ್ನುವುದು ಆಸಕ್ತರಿಗೆ ಅಧ್ಯಯನಶೀಲ ಪ್ರವೃತ್ತಿಯವರಿಗೆ ಬತ್ತದ ಹೊಳೆಯಂತೆ. ಡಾ. ಶಿರೂರ ಅವರು ಜೀವನದುದ್ದಕ್ಕೂ ಈ ಅಧ್ಯಯನಶೀಲ ಪ್ರವೃತ್ತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ನರೇಗಲ್ ಪದವಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಚಾರ್ಯರಾಗಿ, ನ್ಯಾಯಯುತವಾದ ಸೇವೆ ಸಲ್ಲಿಸಿದ್ದಾರೆ. ಆ ಶಿಕ್ಷಣ ಸಂಸ್ಥೆಯಲ್ಲಿ ಡಾ. ಶಿರೂರ ಅವರಂಥ ದಕ್ಷ, ಪ್ರಾಮಾಣಿಕ ಹಾಗೂ ಶಿಸ್ತಿನ ಪ್ರಾಧ್ಯಾಪಕರು ಇರುವುದರಿಂದ ಅದಕ್ಕೆ ಘನತೆ ಗೌರವಗಳು ಪ್ರಾಪ್ತವಾಗಿದ್ದವು. ಇವರು ಪ್ರಾಚಾರ್ಯರಾಗಿ ಸಲ್ಲಿಸಿದ ಸೇವೆ ಅನುಕರಣೀಯವಾದುದು.

     ಡಾ. ಶಿರೂರ ಅವರಲ್ಲಿಯ ಪ್ರತಿಭೆ, ಪಾಂಡಿತ್ಯ, ಶ್ರಮವಹಿಸಿ ದುಡಿಯುವ ಗುಣಗಳಿಂದಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಜೈನಸಾಹಿತ್ಯದ ಪ್ರವಾಚಕರಾಗಿ ೧೯೮೫ ರಲ್ಲಿ ಸೇರ್ಪಡೆಯಾದರು. ತಮ್ಮ ಪಾಂಡಿತ್ಯಪೂರ್ಣ ಪಾಠಬೋಧನೆಯಿಂದ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಗಳನ್ನು ಗಳಿಸಿದರು, ಸೇವಾ ಮನೋಭಾವದ ದುಡಿಮೆಯಿಂದ ಬೆಳೆಯುತ್ತಲೇ ಹೋದರು. ಈ ಅವಧಿಯಲ್ಲಿಯೇ ಮಹತ್ವಪೂರ್ಣವಾದ ಸಾಹಿತ್ಯಕ ಕೃತಿಗಳ ರಚನೆಯನ್ನು ಮಾಡಿದರು. ನಾಡಿನ ವಿದ್ವತ್ಪತ್ರಿಕೆಗಳಲ್ಲಿ ಮೌಲಿಕವಾದ ನೂರಾರು ಲೇಖನಗಳನ್ನು ಪ್ರಕಟಿಸಿದರು. ಅವರ ಸಂಶೋಧನ ಕೃತಿ, ಲೇಖನ ಹಾಗೂ ಸಂಪಾದನ ಕೃತಿಗಳನ್ನು ಕೆಳಗಿನಂತೆ ಸಮೀಕ್ಷಿಸಬಹುದು.

     ಡಾ. ಬಿ.ವಿ. ಶಿರೂರ ಅವರ ಆಸಕ್ತಿಯ ಕ್ಷೇತ್ರ ಸಂಶೋಧನೆ. ಶ್ರಮ, ಶ್ರದ್ಧೆ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಂತಹ ಗುಣಗಳಿಂದಾಗಿ ಅವರೊಬ್ಬ ಸಮರ್ಥ ಸಂಶೋಧಕರೆನಿಸಿದ್ದಾರೆ. ಸಂಶೋಧನೆ ಅವರ ಬದುಕಿನ ಒಂದು ಅಂಗವಾಗಿದೆ. ಅವರು ಡಾ. ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಶ್ರವಣಬೆಳಗೊಳ-ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ, ಮಹತ್ವ' ಎಂಬ ಮಹಾಪ್ರಬಂಧಕ್ಕೆ ೧೯೭೩ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. “ಕನ್ನಡ ನಾಡಿನ ಇತಿಹಾಸವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕೆಲವೇ ಸ್ಥಳಗಳಲ್ಲಿ ಶ್ರವಣಬೆಳಗೊಳ ಸುಪ್ರಸಿದ್ಧವಾದುದು. ಇಂಥ ಸಾಂಸ್ಕೃತಿಕ ಕೇಂದ್ರವೊಂದನ್ನು ಸಮಗ್ರ ಸಂಶೋಧನಾಧ್ಯಯನಕ್ಕೆ ಒಳಪಡಿಸಿರುವ ಶಿರೂರ ಅವರ ಈ ಮಹಾಪ್ರಬಂಧ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಸಂದ ಮೌಲಿಕ ಕೊಡುಗೆ ಎನಿಸಿದೆ. ಕ್ರಿ.ಪೂ. ೩ನೆಯ ಶತಮಾನದಷ್ಟು ಹಿಂದೆಯೇ ಉತ್ತರ ಭಾರತದ ಭದ್ರಬಾಹು, ಚಂದ್ರಗುಪ್ತರನ್ನು ಶ್ರವಣಬೆಳಗೊಳ, ಕರ್ನಾಟಕದಲ್ಲಿ ಜೈನಧರ್ಮದ ಜಾಗೃತ ಕೇಂದ್ರವಾಗಿದೆ. ಶಾಸನ, ಸಾಹಿತ್ಯ ಹಾಗೂ ವಾಸ್ತು ಶಿಲ್ಪಗಳ ಆಧಾರದಿಂದ ಶ್ರವಣಬೆಳಗೊಳದ ಚಾರಿತ್ರಿಕ ಮಹತ್ವವನ್ನು ಡಾ. ಶಿರೂರ ಅವರು ಕಟ್ಟಿಕೊಟ್ಟಿದ್ದಾರೆ. ಕುಂದಕುಂದ, ಸಮಂತಭದ್ರ ಮೊದಲಾದ ಮುನಿವರ್ಯರು, ಚಾವುಂಡರಾಯ, ಗಂಗರಾಜ ಶಾಂತಲೆಯಂಥ ಶ್ರಾವಕರು, ಅವರು ರೂಪಿಸಿದ ಕೃತಿಗಳು, ಸ್ಥಾಪಿಸಿದ ಜಿನಮಂದಿರ ಹಾಗೂ ಮಂಟಪಗಳ ಅಧಾರದಿಂದ ಅಧ್ಯಯನ ಮಾಡಿದ್ದಾರೆ.

ಮಾನಸ್ತಂಬ, ಗೊಮ್ಮಟಮೂರ್ತಿ ಮೊದಲಾದವುಗಳನ್ನು ಶಾಸನ, ಸಾಹಿತ್ಯ ಕೃತಿಗಳು ಮತ್ತು ವಾಸ್ತುಶಿಲ್ಪಗಳಆಕರ್ಷಿಸಿದ ಶ್ರವಣಬೆಳೊಳವನ್ನು ರಾಜಕೀಯ ನೆಲೆಯಾಗಿಟ್ಟುಕೊಂಡು ವಿವಿಧ ಅರಸುಮನೆತನಗಳು ಮಾಡಿದ ಸಾಧನೆಗಳನ್ನು ದಾಖಲಿಸಿದ್ದಾರೆ. ಕ್ರಿ.ಪೂ. ೩ನೆಯ ಶತಮಾನದಿಂದಲೇ ಭದ್ರಬಾಹು, ಚಂದ್ರಗುಪ್ತರನ್ನು ಆಕರ್ಷಿಸಿದ ಶ್ರವಣಬೆಳೊಳ ಉತ್ತರ ಮತ್ತು ದಕ್ಷಿಣ ಭಾರತದ ಜೈನರ ಪ್ರಮುಖ ಕೇಂದ್ರವಾಗಿಪರಿಣಮಿಸಿರುವುದನ್ನು ನಿಖರವಾಗಿ ಗುರುತಿಸಿದ್ದಾರೆ. ಗಂಗ ಅರಸರ ಕಾಲವನ್ನು ಶ್ರವಣಬೆಳಗೊಳದ ಸುವರ್ಣಯುಗವೆಂದು ಕರೆಯಲಾಗುತ್ತಿದೆ. ಗಂಗರ ರಾಚಮಲ್ಲನ ಮಂತ್ರಿ ಚಾವುಂಡರಾಯ ಕೆತ್ತಿಸಿದ ಗೊಮ್ಮಟ ವಿಗ್ರಹದಿಂದಾಗಿ ಪ್ರಾಪ್ತವಾದ ಇದರ ಖ್ಯಾತಿಯನ್ನು ಬಣ್ಣಿಸಿದ್ದಾರೆ. ರಾಷ್ಟ್ರಕೂಟ ಮತ್ತು ಚಾಲುಕ್ಯ ದೊರೆಗಳು ಶ್ರವಣಬೆಳಗೊಳದೊಂದಿಗೆ ಇಟ್ಟುಕೊಂಡ ಸಂಪರ್ಕವನ್ನು ಆಧಾರಯುಕ್ತವಾಗಿ ವಿವರಿಸಿದ್ದಾರೆ. ಹೊಯ್ಸಳರ ಕಾಲದಲ್ಲಿ ಪುನಃ ಪ್ರವರ್ಧಮಾನಕ್ಕೆ ಬಂದ ಶ್ರವಣಬೆಳಗೊಳದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ವಿಷ್ಣುವರ್ಧನ ಮತ್ತು ಶಾಂತಲೆಯರ ಸಾಧನೆ-ಸಿದ್ಧಿಗಳನ್ನು ಗುರುತಿಸಿದ್ದಾರೆ. ಶ್ರವಣಬೆಳಗೊಳದ ಸಾಹಿತ್ಯಕ ವಿವರಗಳನ್ನು ಶ್ರವಣಬೆಳಗೊಳದ ಕವಿ ಸಾಹಿತ್ಯ, ಸ್ಥಳದಿಂದ ಪ್ರಭಾವಿತರಾದ ಕವಿ ಸಾಹಿತ್ಯ, ಶಾಸನ ಸಾಹಿತ್ಯ ಮತ್ತು ಶಾಸನೋಕ್ತ ಕವಿ ಸಾಹಿತ್ಯವೆಂಬ ಉಪಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಅನೇಕ ಜನ ಕವಿಗಳನ್ನು ಅವರ ಕೃತಿಗಳಲ್ಲಿ ಅಂತರ್ಗತವಾದ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಉದಾಹರಣೆಗೆ ಚಿದಾನಂದಕವಿಯ ಮುನಿವಂಶಾಭ್ಯುದಯ ಮತ್ತು ಅನಂತಕವಿಯ ಗೊಮ್ಮಟೇಶ್ವರ ಚರಿತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅವು ಬೆಳಕು ಕಾಣುವಂತೆ ಮಾಡಿದ್ದಾರೆ. ಇಲ್ಲಿಯ ಸುಮಾರು ೫೭೩ ಶಾಸನಗಳಲ್ಲಿ ಹುದುಗಿರುವ ಭದ್ರಬಾಹು, ಕುಂದಕುಂದ, ಉಮಾಸ್ವಾತಿ, ಶಿವಕೋಟಿಸೂರಿ, ಸಮಂತಭದ್ರ ಮೊದಲಾದ ಕವಿ ಕೃತಿಗಳನ್ನು ವಿಶ್ಲೇಷಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಶ್ರವಣಬೆಳೊಳ ಒಂದು ಪ್ರಮುಖ ಜೈನ ಕೇಂದ್ರವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವುದನ್ನು ಆಧಾರ ಸಹಿತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸ್ಥಳದ ಮಹತ್ವದೊಂದಿಗೆ ಕನ್ನಡಿಗರ ಜನಜೀವನ, ಧರ್ಮಸಮನ್ವಯತೆ ಮೊದಲಾದವುಗಳ ವಿವರಗಳೊಂದಿಗೆ ಅವರ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿತೋರಿದ್ದಾರೆ. ಡಾ. ಬಿ. ಶಿರೂರ ಅವರ ಈ ಸಂಶೋಧನ ಮಹಾಪ್ರಬಂಧ ಒಂದು ಸಾಂಸ್ಕೃತಿಕ ಕೇಂದ್ರವನ್ನು ಮೂಲ ವಸ್ತುವನ್ನಾಗಿಟ್ಟುಕೊಂಡು ಆಗಿರುವ ಕೆಲಸಗಳಲ್ಲಿ ಇದೇ ಮೊದಲನೆಯದು. ಇತರ ಸಾಂಸ್ಕೃತಿಕ ಕೇಂದ್ರಗಳನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಆಕರಗ್ರಂಥವಾಗಿದೆ. ಕನ್ನಡದ ವಿದ್ವತ್ಪೂರ್ಣವಾದ ಮಹಾಪ್ರಬಂಧಗಳಿಗೆ ಇದು ಮಾದರಿಯಾಗಿದೆ. ಕನ್ನಡ ಸಂಶೋಧನ ಕ್ಷೇತ್ರಕ್ಕೆ ಸಂದ ಈ ಅಪರೂಪದ ಕೊಡುಗೆಗೆ ಶ್ರವಣಬೆಳೊಳದ ಬಾಹುಬಲಿ ಪ್ರತಿಷ್ಠಾನವು ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಯಲಬುರ್ಗಿಯ ಸಿಂದರು ಡಾ. ಬಿ. ವೈ. ಶಿರೂರ ಅವರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ನೀಡಿದ ಉಪನ್ಯಾಸದ ಕಿರುಕೃತಿ. ಯಲಬುರ್ಗಿ ಸಿಂದರ ಚರಿತ್ರೆಯನ್ನು ಮೊದಲ ಬಾರಿಗೆ ಕಟ್ಟಿಕೊಡುವ ಮಹತ್ವದ ಗ್ರಂಥ. ಇದು ಆಕೃತಿಯಲ್ಲಿ ಕಿರಿದಾದರೂ ವಸ್ತು ಸಂಗ್ರಹಣೆ ದೃಷ್ಟಿಯಿಂದ ಹಿರಿದಾಗಿದೆ. ಈ ಕೃತಿಗೆ ಮೂವತ್ತೆಂಟು ಶಾಸನಗಳನ್ನು ಬಳಸಿಕೊಂಡಿರುವುದರಿಂದ ಚಾರಿತ್ರಿಕವಾಗಿ ಇದು ಮೌಲಿಕವೆನಿಸಿದೆ. ಇತಿಹಾಸ ನಿರೂಪಕನಿಗಿರಬೇಕಾದ ನಿಷ್ಪಕ್ಷಪಾತ ಗುಣ, ಪ್ರಾಮಾಣಿಕತೆ, ಡಾ. ಶಿರೂರ ಅವರಲ್ಲಿ ಮೇಳೆಸಿರುವುದರಿಂದ ಲಭ್ಯವಿರುವ ಎಲ್ಲ ಆಧಾರಗಳನ್ನು ಬಳಸಿಕೊಂಡು ವಿಷಯವನ್ನು ಚರ್ಚಿಸಿರುವ ರೀತಿ ಅನನ್ಯವಾಗಿದೆ. ಈ ಚಿಕ್ಕ ಗ್ರಂಥ ಕುರುಗೋಡ ಸಿಂದರು' ಎಂಬಂಥ ಮಹಾಪ್ರಬಂಧ ರಚನೆಗೆ ಪ್ರೇರಕವಾಗಿದೆ. ಸಿಂದವಂಶದ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಇದು ಆಕಗ್ರಂಥವಾಗಿದೆ. ಕರ್ನಾಟಕದಲ್ಲಿ ಸಂಶೋಧನಶಾಸ್ತ್ರ ಇನ್ನೂ ಬೆಳವಣಿಗೆ ಹಂತದಲ್ಲಿದೆ. ಕನ್ನಡ ಸ್ನಾತಕೋತ್ತರ ಪದವಿಯ ಅಧ್ಯಯನ ಮಾಡಿ ಸಂಶೋಧಕರಾಗಿ ಹೊರಹೊಮ್ಮಲು ಬಯಸುವವರಿಗೆ ಸಂಶೋಧನಶಾಸ್ತ್ರ'ದ ತಿಳುವಳಿಕೆ ಮಾಡಿಕೊಡಲು ಡಾ. ಎಂ. ಚಿದಾನಂದಮೂರ್ತಿಯವರ 'ಸಂಶೋಧನೆ' ಎಂಬ ಚಿಕ್ಕಪುಸ್ತಕ ಮಾತ್ರವಿತ್ತು, ಈ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಸಂಶೋಧನೆಯ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ 'ಸಂಶೋಧನ ವ್ಯಾಸಂಗ'ವೆಂಬ ಕೃತಿಯನ್ನು ಶಿರೂರ ಅವರು ೧೯೯೦ ರಲ್ಲಿ ಪ್ರಕಟಿಸಿದರು. ಈ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಸ್ಮಾರಕ ಬಹುಮಾನ ಬಂದಿರುವುದು ಇದರ ಹೆಗ್ಗಳಿಕೆಯಾಗಿದೆ. ಒಂದೇ ವರ್ಷದಲ್ಲಿ ಇದರ ಎಲ್ಲಾ ಪ್ರತಿಗಳು ತೀರಲು ಈ ಗ್ರಂಥಕ್ಕೆ ಇನ್ನು ಕೆಲವು ಮಹತ್ವದ ವಿಷಯಗಳನ್ನು ಸೇರಿಸಿ, ಪರಿಷ್ಕರಿಸಿ 'ಸಂಶೋಧನ ಸ್ವರೂಪ' ಎಂಬ ಹೆಸರಿನಲ್ಲಿ ೨೦೦೨ ರಲ್ಲಿ ಪ್ರಕಟಿಸಿದರು. ಇದು ಸಂಶೋಧನೆಯ ವಿಧಿವಿಧಾನಗಳನ್ನು ತಿಳಿಸುವ ಮಹತ್ವದ ಗ್ರಂಥವಾಯಿತು. ಸಾಹಿತ್ಯದಲ್ಲಿ ಸಂಶೋಧನೆ, ಸಂಶೋಧನೆಯ ವಿವಿಧ ರೂಪಗಳು, ಸಂಶೋಧಕನ ಅರ್ಹತೆಗಳು ಮತ್ತು ಗುಣಲಕ್ಷಣಗಳು, ವಿಷಯದ ಆಯ್ಕೆ, ಸಂಶೋಧನ ರೂಪರೇಷೆ, ವಿಷಯ ಸಂಗ್ರಹಣೆ ಮೊದಲಾದ ಸಂಗತಿಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ನಿರೂಪಿಸಿದ್ದಾರೆ. 'ಮಹಾಪ್ರಬಂಧದ ವಿನ್ಯಾಸ, ಮನೋವೈಜ್ಞಾನಿಕ ಸಂಶೋಧನೆ, ಕೇಸ್‌ಸ್ಟಡಿ, ಮಾರ್ಕ್ಸಸಿದ್ಧಾಂತ, ಬಹುಶಿಸ್ತೀಯ ಸಂಶೋಧನೆ, ಕವಿಯ ಕಾಲ, ಚರಿತ್ರೆ, ಕೃತಿಸಂಖ್ಯೆ, ರಚನಾಕ್ರಮ, ಸ್ವರೂಪಗಳ ನಿರ್ಣಯ, ಸಾರಲೇಖ, ಸಂಶೋಧನ ಪ್ರಬಂಧದ ಮೌಲ್ಯಮಾಪನ, ಅದರ ವರದಿ' ಮುಂತಾದವುಗಳನ್ನು ವಿಕೃತವಾಗಿ ಮತ್ತು ಉದಾಹರಣೆ ಸಮೇತವಾಗಿ ವಿಶ್ಲೇಷಿಸಿದ್ದಾರೆ. ಈ ಗ್ರಂಥದ ಕೊನೆಯಲ್ಲಿ ಈವರೆಗೆ ಕನ್ನಡದಲ್ಲಿ ಆದ ಸಂಶೋಧನ ಮಹಾಪ್ರಬಂಧಗಳ ಸುದೀರ್ಘ ಯಾದಿ ಕೊಟ್ಟಿರುವುದು ಸಂಶೋಧನ ಕ್ಷೇತ್ರದಲ್ಲಿ ಹೊಸದಾಗಿ ಪ್ರವೇಶ ಮಾಡುವವರಿಗೆ ಇದೊಂದು ಮಾದರಿಯ ದಿಕ್ಕೂಚಿಯಾಗಿದೆ. ಈ ಕೃತಿಯಲ್ಲಿಯ 'ಕರ್ನಾಟಕದಲ್ಲಿ ಸಂಶೋಧನೆ' ಎಂಬ ಅಧ್ಯಾಯವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹೊರ ತಂದಿರುವ 'ಶತಮಾನದ ಸಂಶೋಧನೆ' ಎಂಬ ಮಹಾಸಂಪುಟಕ್ಕೆ ಆಯ್ಕೆ ಮಾಡಿಕೊಂಡಿರುವುದು ಮತ್ತು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ 'ಸಂಶೋಧನ ಪಥ' ಗ್ರಂಥಕ್ಕೆ, ಇದರಲ್ಲಿಯ ಸಂಶೋಧನ ಪ್ರಕಾರಗಳು' ಎಂಬ ಅಧ್ಯಾಯವನ್ನು ಆರಿಸಿಕೊಂಡಿರುವುದು ಅದರ ಗುಣಾತ್ಮಕತೆಗೆ ನಿದರ್ಶನವೆನಿಸಿದೆ. ಡಾ.ಎಂ.ಎಂ. ಕಲಬುರ್ಗಿಯವರ 'ಕನ್ನಡ ಸಂಶೋಧನಾಶಾಸ್ತ್ರ' ಮತ್ತು ಡಾ. ಸಂಗಮೇಶ ಸವದತ್ತಿಮಠ ಅವರ 'ಸಂಶೋಧನಾ ಮಾರ್ಗ' ಇತ್ಯಾದಿ ಗ್ರಂಥಗಳಿದ್ದರೂ ಇದು ಸಂಶೋಧನಾಸಕ್ತರ ಮೆಚ್ಚುಗೆಗೆ ಪಾತ್ರವಾಗಿರುವುದು ವಿಶೇಷವಾದುದಾಗಿದೆ. ಡಾ. ಶಿರೂರ ಅವರು “ಸಂಶೋಧನ ಸ್ವರೂಪ' ಕೃತಿಯನ್ನು ರಚಿಸಿದ ಮೇಲೂ ಸಂಶೋಧನಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು  ರಚಿಸಿದ್ದಾರೆ. 

    ಡಾ. ಬಿ. ವಿ. ಶಿರೂರ ಅವರು ನಾಡಿನ ವಿದ್ವತ್ ಪತ್ರಿಕೆ, ಅಭಿನಂದನ ಗ್ರಂಥಗಳಿಗೆ ನೂರಾ ಐವತ್ತಕ್ಕೂ ಅಧಿಕ ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಒಂದು ನೂರು ಸಂಶೋಧನ ಲೇಖನಗಳನ್ನು ಒಳಗೊಂಡ 'ಸಂಶೋಧನ ಚತುರ್ಮುಖ'ವೆಂಬ ಬೃಹತ್ ಗ್ರಂಥವನ್ನು ಪ್ರಕಟಿಸಿದ್ದಾರೆ. ಜೈನ, ವೀರಶೈವ, ಸಂಶೋಧನ/ಗ್ರಂಥ ಸಂಪಾದನೆ/ಶಾಸನ/ಚರಿತ್ರೆ ಹಾಗೂ ಇತರ ಎಂಬ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಈ ಲೇಖನಗಳು ಹರಡಿಕೊಂಡಿವೆ. ಶ್ರವಣಬೆಳಗೊಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾಪ್ರಬಂಧದಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯಗಳನ್ನು ಇಲ್ಲಿಯ ಲೇಖನಗಳಲ್ಲಿ ಆಳವಾಗಿ ಮತ್ತು ವಿಕೃತವಾಗಿ ಪುನರ್ ರಚಿಸಿದ್ದಾರೆ. ಶ್ರವಣಬೆಳೊಳದ ಸಾಂಸ್ಕೃತಿಕ ಅಧ್ಯಯನ, ಶ್ರವಣಬೆಳೊಳ ಮತ್ತು ಗಂಗರು ಮೊದಲಾದವುಗಳನ್ನು ಹೆಸರಿಸಬಹುದು. ಶ್ರವಣಬೆಳೊಳದ ಕವಿಪರಂಪರೆ, ಶ್ರವಣಬೆಳೊಳದ ಶ್ರೀಮಠ ಮೊದಲಾದವುಗಳನ್ನೊಳಗೊಂಡ ಹದಿನಾರು ಪ್ರಬಂಧಗಳು ಅಲ್ಲದೆ ಜೈನಸಾಹಿತ್ಯಕ್ಕೆ ಸಂಬಂಧಿಸಿದ ವಿದ್ವತ್ತೂರ್ಣ ಸಂಶೋಧನ ಬರವಣಿಗೆಗಳು ಇಲ್ಲಿವೆ. ಆಕರ ಸಾಹಿತ್ಯದ ಭಾಷೆ ಮತ್ತು ಅಭಿವ್ಯಕ್ತಿಯ ಮಾಧ್ಯಮಗಳೆರಡರ ಅಡಚಣೆಯಲ್ಲಿ ತೊಳಲಾಡುತ್ತಿದ್ದ ಇತಿಹಾಸ ಅಧ್ಯಾಪಕರಿಗಿಂತಲೂ ಹೆಚ್ಚಿನ ಕೊಡು ಈ ಭಾಷಾ ಅಧ್ಯಾಪಕರಿಂದ ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿರುವುದನ್ನು ಈ ಹಿನ್ನೆಲೆಯಲ್ಲಿ ನಾವು ಎತ್ತಿ ಹೇಳಬೇಕಾಗಿದೆ. ಈ ದೃಷ್ಟಿಯಿಂದ ಡಾ. ಶಿರೂರ ಅವರ ಈ ಕೃತಿ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಒಂದು ಅಮೂಲ್ಯ ಆಕರಗ್ರಂಥವಾಗಿದೆ.

     ಡಾ. ಬಿ. ವಿ, ಶಿರೂರ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರವೆಂದರೆ ವೀರಶೈವ ವಲಯವೆಂದು ಹೇಳಬಹುದು. ಸಂಶೋಧನ ಚತುರ್ಮುಖದಲ್ಲಿ ವಚನ ಸಾಹಿತ್ಯ, ಕವಿ ಕೃತಿ, ವೀರಶೈವ ಧರ್ಮ, ವ್ಯಕ್ತಿಮಠ ಇವೇ ಮೊದಲಾದ ವಿಷಯಗಳನ್ನು ಕುರಿತು ನಲ್ವತ್ತೆರಡು ಸಂಶೋಧನ ಲೇಖನಗಳಿವೆ. ಈವರೆಗೆ ಬಸವಯುಗದ ಸಾಹಿತ್ಯಕ ಚರ್ಚೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು ಸರ್ವವಿದಿತವಾಗಿದೆ. ಆದರೆ ಬಸವೋತ್ತರ ಯುಗವನ್ನು ಉಪೇಕ್ಷಿಸಲಾಗಿದೆ. ಡಾ. ಶಿರೂರ ಅವರು ಈ ಉಪೇಕ್ಷಿತ ಕ್ಷೇತ್ರವನ್ನು ಕೇಂದ್ರವನ್ನಾಗಿಟ್ಟುಕೊಂಡು, ವೈವಿಧ್ಯಮಯವಾದ ಲೇಖನಗಳನ್ನು ರಚಿಸಿರುವುದು ಸ್ತುತ್ಯಕಾರವಾಗಿದೆ.

     ಬಸವೋತ್ತರ ಯುಗದ ಪ್ರಮುಖರಾದ ಗಣದಾಸಿ ವೀರಣ್ಣ ಕೆಸ್ತೂರದೇವ, ಬಸವಲಿಂಗದೇವರು, ಮಹಾಲಿಂಗದೇವ, ಹೇಮಗಲ್ಲ ಹಂಪ, ಹಲಗೆಯಾರ್ಯ, ಜಕ್ಕಣಾರ್ಯ, ಧೂಪದ ರಾಜೇಶ, ಗುರುಲಿಂಗವಿಭು, ಮುಪ್ಪಿನ ಷಡಕ್ಷರಿ ಮತ್ತು ದ್ಯಾಂಪುರ ಚೆನ್ನಕವಿ ಮೊದಲಾದ ಅನುಭಾವಿಗಳನ್ನು ಕುರಿತುಹೊಸ ವಿವರಗಳನ್ನು ಬೆಳಕಿಗೆ ತಂದಿದ್ದಾರೆ. ಶಿರೂರ ಅವರು ಬರೆದ 'ಬಿಜ್ಜಳನನ್ನು ಕೊಂದ ಮೊಲೆಬೊಮ್ಮಯ್ಯ ಸಂಶೋಧನ ಲೇಖನವೊಂದಕ್ಕೆ ವಿಪುಲ ಆಕರಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ವೀರಶೈವ ಮಠಗಳನ್ನು ಕುರಿತು ಕ್ಷೇತ್ರಕಾರ್ಯದ ಮೂಲಕ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ ಶಿರಹಟ್ಟಿ, ಗಂಗಾವತಿ, ಹಾಲಕೆರೆ, ಯಲಬುರ್ಗಾ ಮಠಗಳ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಡಾ. ಶಿರೂರ ಅವರು ಭಾವಾವೇಶಕ್ಕೆ ಒಳಗಾಗದೆ, ಅನ್ಯರಿಂದಾಗಿರಬಹುದಾದ ಅಲ್ಪ ತಪ್ಪುಗಳನ್ನು ಹಿಗ್ಗಿಸಿ ಬೆಳೆಸದೆ ತಮಗನಿಸಿದ್ದನ್ನು ಸಂಯಮಪೂರ್ಣ ಭಾಷೆಯಿಂದ ಅಭಿವ್ಯಕ್ತಿಗೊಳಿಸಿರುವುದು ಮೌಲ್ಯವನ್ನು ಎತ್ತಿ ತೋರಿದೆ. ಕನ್ನಡ ಸಂಶೋಧನ ಶಾಸ್ತ್ರದ ವಿವಿಧ ಆಯಾಮಗಳನ್ನು ಈ ಲೇಖನಗಳ ಮೂಲಕ ಪರಿಚಯಿಸಿದ್ದಾರೆ. ಕನ್ನಡಕ್ಕೆ ಹೊಸದೆನಿಸುವ ಸಂಶೋಧನ ಶಾಸ್ತ್ರ, ಗ್ರಂಥಸಂಪಾದನ ಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರಗಳನ್ನು ತಮ್ಮ ಅನುಭವದ ನಿದರ್ಶನಗಳ ಹಿನ್ನೆಲೆಯಲ್ಲಿ ರಚಿಸಿದ ರೀತಿ ವಿನೂತನವಾಗಿದೆ. ಅಲ್ಲದೆ ಈ ಕ್ಷೇತ್ರಗಳಲ್ಲಿ ದುಡಿದ ಕೆಲವು ಮಹನೀಯರ ಕೊಡುಗೆಗಳನ್ನು ದಾಖಲಿಸಿದ್ದಾರೆ. ಡಾ. ಆರ್. ನರಸಿಂಹಾಚಾರ್ಯ ಅವರನ್ನು ಕುರಿತ ಲೇಖನ ಸಂಶೋಧಕರೊಬ್ಬರ ಸಮಗ್ರ ವಿವರಗಳನ್ನು ಕೊಡುವ ಮಹತ್ವದ ಸಂಪ್ರಬಂಧವಾಗಿದೆ. ಈ ಲೇಖನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 'ಸಾಲುದೀಪಗಳು ನಾಲ್ಕನೆಯ ಭಾಗದಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಲೇಖನಗಳಿವೆ. ಇದರಲ್ಲಿ 'ಹೂಗಾರರು' ಎಂಬ ಸಂಶೋಧನ ಲೇಖನವೊಂದು ಡಾ. ಶಿರೂರ ಅವರು ಕೃತಿಯಲ್ಲಿ ಸೇರ್ಪಡೆಯಾಗಿದೆ. ಕಲೆಹಾಕಿದ ವಿಷಯ ಸಂಗ್ರಹ ಅಚ್ಚರಿಯನ್ನುಂಟುಮಾಡುತ್ತದೆ, ಈ ಲೇಖನ ಮಹಾಪ್ರಬಂಧದ ರಚನೆಗೆ ಆಕರವಾಗಬಲ್ಲ ವಸ್ತು ಸಾಮಗ್ರಿಯನ್ನು ಒಳಗೊಂಡಿದೆ. 

       ಡಾ. ಬಿ.ವಿ. ಶಿರೂರ ಅವರು ಗ್ರಂಥಸಂಪಾದನ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಅವರ ಸಂಪಾದನ ಕಾರ್ಯವನ್ನು ಈ ಕೆಳಗಿನಂತೆ ವರ್ಗೀಕರಿಸಿ, ಅವುಗಳಲ್ಲಿ ಪ್ರಕಟಗೊಂಡ ಸಂಶೋಧನಾತ್ಮಕ ವಿಷಯಗಳನ್ನು ಹೀಗೆ ವಿವರಿಸಬಹುದು.

೧. ಪ್ರಾಚೀನ ಕೃತಿಗಳು :

ಕನ್ನಡ ಸಂಶೋಧನೆಯ ಬಹಳ ಪ್ರಮುಖವಾದ ಒಂದು ಅಂಗವೆಂದರೆ ಗ್ರಂಥಸಂಪಾದನೆ. ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾದ ಪರಿಶ್ರಮ ಇರುವವರಿಗೆ ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶಿಸಲು ಸಾಧ್ಯ, ಹಳಗನ್ನಡ ಸಾಹಿತ್ಯ, ಸಂಸ್ಕೃತಿ, ಛಂದಸ್ಸು, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳಲ್ಲಿ ಪರಿಣತಿ ಹೊಂದಿದ ಡಾ. ಶಿರೂರ ಅವರು ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಉದಾಹರಣೆಗೆ ಅನಂತಕವಿಯ ಗೊಮ್ಮಟೇಶ್ವರ ಚರಿತ್ರೆ, ಮೊಲೈಬೊಮ್ಮಯ್ಯಗಳ ಕಾವ್ಯ, ರತ್ನಕರಂಡಕದ ಕಥೆಗಳು, ಭಿಕ್ಷಾಟನೆಚರಿತೆ, ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಪುರಾಣ ಮೊದಲಾದವು. ಡಾ. ಶಿರೂರ ಅವರು ಮೊದಲಬಾರಿಗೆ ಪ್ರಕಟಿಸಿರುವ ಸಂಪಾದನ ಕೃತಿಯೆಂದರೆ ಕವಿಯ 'ಗೊಮ್ಮಟೇಶ್ವರ ಚರಿತೆ'. ಇದು ಕನ್ನಡಸಾಹಿತ್ಯ ಪರಿಷತ್ತಿನ ಬೆಳ್ಳಿ ಬಿಟ್ಟ ಬಳ್ಳಿ ಮಾಲೆ'ಯಲ್ಲಿ ಪ್ರಕಟವಾಗಿದೆ. ಇದರ ಎರಡು ಅಸಮಗ್ರ ಹಸ್ತಪ್ರತಿಗಳನ್ನು ಇಟ್ಟುಕೊಂಡು 'ಗೊಮ್ಮಟೇಶ್ವರ ಚರಿತೆ'ಯ ಕಾವ್ಯವೊಂದನ್ನು ಪ್ರಕಟಪಡಿಸಿದ ಶ್ರೇಯಸ್ಸು ಶಿರೂರ ಅವರಿಗೆ ಸಲ್ಲುತ್ತದೆ. ಅವರು ಈ ಕಾವ್ಯದ ಪಾಠ ನಿರ್ಣಯಕ್ಕೆ ಮೂರು ಕ್ರಮಬದ್ಧವಾದ ಮಾರ್ಗಗಳನ್ನು ಅನುಸರಿಸಿದ್ದಾರೆ. ''ಸಂಪಾದಕತ್ವದ ಪಾಠಗಳನ್ನು ನೀಡುವುದು, ಜೀರ್ಣವಾದೆಡೆಗಳಲ್ಲಿ ಖಾಲಿಸ್ಥಳ ಬಿಡುವುದು ಮತ್ತು ಅರ್ಥವಾಗದ ಕಡೆ ಪ್ರಶ್ನೆ ಚಿಹ್ನೆಯನ್ನು ಹಾಕಿ ಮುನ್ನಡೆಯುವುದು.'' ಈ ಕೃತಿ ಪ್ರಕಟವಾದ ನಂತರ ಶ್ರೀ ಮಹೇಂದ್ರ ಎಂಬವರಿಗೆ ಒಂದು ಸಮಗ್ರ ಓಲೆಗರಿ ಪ್ರತಿ ಸಿಕ್ಕು ಅದರ ಸಹಾಯದಿಂದ ಈ ಕಾವ್ಯದ ಸಂಪಾದನೆಯನ್ನು ಒರೆಗೆ ಹಚ್ಚಿ ಡಾ. ಶಿರೂರ ಅವರು ಇಲ್ಲಿ ಮಾಡಿದ ಊಹೆಗಳೆಲ್ಲ ಸರಿ ಇವೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇದರಿಂದ ಶಿರೂರ ಅವರ ನಿಲುವುಗಳಿಗೆ ಖಚಿತತೆಯನ್ನು ಒದಗಿಸಿದಂತಾಗಿದೆ. ಕವಿಚರಿತೆಕಾರರು ಅನಂತಕವಿ ಶ್ರವಣಬೆಳೊಳದವನು ಎಂದು ಹೇಳಿರುವುದನ್ನು ತಳ್ಳಿಹಾಕಿ, ಈತ ಹಾಸನದವನು ಎಂದು ಶಿರೂರ ಅವರು ಹೇಳಿರುವುದು, ಮೊದಲ ಬಾರಿಗೆ ಆತನ ಸಮಗ್ರ ವಂಶಾವಳಿಯನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.ಪ್ರಸ್ತಾವನೆಯಲ್ಲಿ ಈ ಕಾವ್ಯದ ಗುಣದೋಷ, ಕಾವ್ಯದ ವಿಶೇಷತೆಗಳನ್ನು ಎತ್ತಿ ಹೇಳಿರುವುದು. ಶಬ್ದಾರ್ಥಕೋಶ, ಅನುಬಂಧದಲ್ಲಿ ವಿಷಯಾನುಕ್ರಮಣಿಕೆ ಕೊಟ್ಟಿರುವುದು, ಡಾ. ಶಿರೂರ ಅವರು ಒಬ್ಬ ಸಮರ್ಥ ಸಂಪಾದಕರೆಂಬುದು ಸ್ಪಷ್ಟವಾಗುತ್ತದೆ.

     ಡಾ. ಶಿರೂರ ಅವರು ಯಲಬುರ್ಗಿಯ ಹಿರೇಮಠದಲ್ಲಿ ತಮಗೆ ದೊರೆತ ಕಾಗದ ಪ್ರತಿಗಳ ಸಹಾಯದಿಂದ ಧೂಪದ ರಾಚೇಶನ ಮೊಟ್ಟೆ ಬೊಮ್ಮಯ್ಯಗಳ ಕಾವ್ಯವನ್ನು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಇತಿಹಾಸ, ಪುರಾಣ, ಐತಿಹ್ಯಗಳ ಆಗರವಾದ ಈ ಕಾವ್ಯದ ಆಕರಗಳನ್ನೆಲ್ಲ ಸಮಗ್ರವಾಗಿ ಶೋಧಿಸಿದ್ದಾರೆ. ಈ ಕಾವ್ಯದಲ್ಲಿ ಅಂತರ್ಗತವಾದ ಆಧಾರಗಳ ಮೂಲಕ ಬಿಜ್ಜಳನನ್ನು ಕೊಂದ ಇಬ್ಬರುವ್ಯಕ್ತಿಗಳಲ್ಲಿ ಮೊಲ್ಲೆ ಬೊಮ್ಮಯ್ಯನೂ ಒಬ್ಬ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕಾವ್ಯದ ಕರ್ತೃ ಧೂಪದರಾಚೇಶ, ಈತನ ಊರು ಯಲಬುರ್ಗಿ ತಾಲೂಕಿನ ಕಲ್ಲೂರು, ಈತನು ಸಿದ್ದೇಶನ ಶಿಷ್ಯ ಮತ್ತು ಈತನ ಕಾಲಸು. ೧೬೫೦ ಎಂದು ಸಾದರಪೂರ್ವಕವಾಗಿ ನಿರ್ಧರಿಸಿದ್ದಾರೆ. ಈ ಕಾವ್ಯಕ್ಕೆ ಬರೆದ ಇಪ್ಪತ್ತೂರು ಪುಟದ ಪ್ರಸ್ತಾವನೆ ವಿದ್ವತೂರ್ಣವಾಗಿದೆ. ಈ ಕಾವ್ಯವನ್ನು ಸಂಪಾದಿಸುವ ಮೂಲಕ ಬಿಜ್ಜಳನನ್ನು ಕೊಂದವರುಜಗದೇವ ಮತ್ತು ಮೊಲ್ಲೆಬೊಮ್ಮಯ್ಯ, ಈ ಮೊಲ್ಲೆಬೊಮ್ಮಯ್ಯನ ಊರು ಯಲಬುರ್ಗಿ ತಾಲೂಕಿನ ರಾವಣಕಿ, ಈತ ಕಲ್ಲೂರಿನ ಕಲ್ಲಿನಾಥನ ಭಕ್ತನಾಗಿದ್ದು, ಕಲ್ಯಾಣಕ್ಕೆ ಹೋಗಿ ಜಗದೇವನನ್ನು ಕೂಡಿಕೊಂಡು ಬಿಜ್ಜಳನನ್ನು ಕೊಂದದ್ದು - ಇವೇ ಮೊದಲಾದ ಸಂಗತಿಗಳನ್ನು ಮೊದಲ ಬಾರಿಗೆ ಬೆಳಕಿಗೆ ತರಲಾಗಿದೆ. ಸಂಪಾದನ ಕ್ಷೇತ್ರದ ಸಾಧನೆಯ ಕೀರ್ತಿಯನ್ನು ತಂದುಕೊಟ್ಟ ಕೃತಿ ಎಂದರೆ 'ರತ್ನಕರಂಡಕದ ಕಥೆಗಳು', ಡಾ. ಬಿ.ವಿ, ಶಿರೂರ ಅವರು ಸಂಪಾದಿಸಿರುವ ಈ ಕೃತಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (೧೯೯೩) ಮತ್ತು ಶ್ರೇಷ್ಠ ಸಂಪಾದನ ಕೃತಿಗೆ ಕೊಡಲ್ಪಡುವ ದೇವೇಂದ್ರ ಕೀರ್ತಿ ಭಟ್ಟಾರಕ ಪ್ರಶಸ್ತಿ ಪ್ರಾಪ್ತವಾಗಿವೆ.

ಡಾ. ಬಿ. ವಿ, ಶಿರೂರ ಅವರು ಅನಾಮಧೇಯ ಜೈನ ಕತೆಗಾರನೊಬ್ಬನಿಂದ ರಚನೆಯಾದ ಈ ಕೃತಿಯನ್ನು

ಸಂಪಾದಿಸಲು ಮೂರು ಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಅ, ಬ ಮತ್ತು ಕ ಪ್ರತಿಗಳಲ್ಲಿ 'ಅ' ಪ್ರತಿಯನ್ನು ಮೂಲವಾಗಿಟ್ಟುಕೊಂಡು ಇದನ್ನು ಸಂಪಾದಿಸಿದ್ದಾರೆ. ಆಯಾ ಪ್ರತಿಗಳಲ್ಲಿ ಇಲ್ಲದ ಭಾಗವನ್ನು ... ಚಿಹ್ನೆಯಿಂದಲೂ ತ್ರುಟಿತವಾಗಿರುವ ಭಾಗವನ್ನು XXX ಚಿಹ್ನೆಯಿಂದಲೂ ಹೆಚ್ಚಿನ ಭಾಗವನ್ನು ಚಿಹ್ನೆಯಿಂದಲೂ ಗುರುತಿಸಲಾಗಿದೆ' ಎಂದು ಹೇಳಿದ್ದಾರೆ. ವಿದ್ವತ್‌ವಲಯದ ಗಮನಕ್ಕೆ ಬಾರದ ಈ ಕೃತಿಯ ಶೋಧ ಚಾರಿತ್ರಿಕವಾಗಿ ತುಂಬ ಮಹತ್ವದ್ದೆನಿಸಿದೆ. ವಡ್ಡಾರಾಧನೆ ಕೃತಿಯ ನಂತರ ಜೈನ ಕಥಾಪರಂಪರೆಯಲ್ಲಿ ಈ ಕೃತಿಗೆ ವಿಶೇಷ ಸ್ಥಾನವಿದೆ. ಇದು ವಡ್ಡಾರಾಧನೆಯ ಕಾಲದ ಸುಮಾರಿನಲ್ಲಿಯೇ ರಚನೆಗೊಂಡಿರಬಹುದು ಎಂದು ಡಾ. ಶಿರೂರ ಅವರು ಊಹೆಯನ್ನು ಮಾಡಿರುವುದು ಬಹುಮಹತ್ವದ್ದೆನಿಸಿದೆ. ಈ ಕೃತಿಯಲ್ಲಿಯ ಕಥೆಗಳ ಸಾರವನ್ನು ಹೊಸಗನ್ನಡದಲ್ಲಿ ಕೊಟ್ಟಿದ್ದಾರೆ. ಕೊನೆಯಲ್ಲಿರುವ ಜೈನ ಪಾರಿಭಾಷಿಕ ಪದಕೋಶ ಈ ಕೃತಿಯ ಸಾಂಸ್ಕೃತಿಕ ಪರಿಸರ ಅಧ್ಯಯನಕ್ಕೆ ತುಂಬ ಉಪಯುಕ್ತವಾಗಿದೆ. ಡಾ. ಶಿರೂರ ಅವರು ಇಂಥ ಮಹತ್ವದ ಕೃತಿಯೊಂದನ್ನು ಶೋಧಿಸಿ ಪರಿಷ್ಕರಿಸಿ ಮೊದಲ ಬಾರಿಗೆ ಕನ್ನಡ ಸಾರಸ್ವತ ಪ್ರಪಂಚಕ್ಕೆ ಕೊಟ್ಟಿದ್ದಾರೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮುತ್ತಿನಹಾರ ಮಾಲಿಕೆಗಾಗಿ ಡಾ. ಶಿರೂರ ಅವರು ರಾಜಶೇಖರವಿಳಾಸ, ಶಬರಶಂಕರ ವಿಳಾಸ ಹಾಗೂ ಬಸವರಾಜ ವಿಳಾಸ ಈ ಮೂರು ಕೃತಿಗಳನ್ನು ಸಂಕ್ಷೇಪಿಸಿ ಷಡಕ್ಷರದೇವ ಎಂಬ ಹೆಸರಿನಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಿದ ಕಾವ್ಯಗಳ ಕಥಾವಸ್ತುವಿಗೆ ಬಾಧೆ ಬರದಂತೆ ಕಥೆಯಿಂದ ಕಥೆಗೆ ಸಹಸಂಬಂಧ ತಪ್ಪದಂತೆ ಪದ್ಯಗಳನ್ನು ಆಯ್ದುಕೊಂಡಿರುವ ಕ್ರಮ ಸಂಪಾದಕರ ಪಾಂಡಿತ್ಯಕ್ಕೆ ಷಡಕ್ಷರದೇವನ ಕೃತಿಗಳ ಮೇಲಿನ ಪ್ರಭುತ್ವಕ್ಕೆ ನಿದರ್ಶನವಾಗಿದೆ. ಈ ಕೃತಿಗೆ ಬರೆದ ಪ್ರಾಸ್ತಾವಿಕ ಮಾತುಗಳು, ಅನುಬಂಧದಲ್ಲಿ ಕೊಟ್ಟಪದ್ಯಗಳು, ಕಠಿಣಪದಗಳಿಗೆ ಅರ್ಥಕೋಶವನ್ನು ಒದಗಿಸಿರುವುದು ಓದುಗರಿಗೆ ಉಪಯುಕ್ತವಾಗಿವೆ. ಡಾ. ಬಿ.ವಿ. ಶಿರೂರ ಅವರು 'ಭಿಕ್ಷಾಟನ ಚರಿತೆ' ಯಂಥ ಚಮತ್ಕಾರಯುಕ್ತವಾದ ಹಳಗನ್ನಡ ಕೃತಿಯನ್ನು ಹೊಸಗನ್ನಡ ಗದ್ಯಾನುವಾದ ಮಾಲಿಕೆಯಲ್ಲಿ ಸರಳವಾದ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇದು ಪ್ರಕಟವಾಗಿದೆ. ಹದಿನೈದು ಪುಟಗಳ ಅಭ್ಯಾಸಪೂರ್ಣವಾದ ಪ್ರಸ್ತಾವನೆ ಇದೆ. 

ಕವಿ, ಕಾವ್ಯ, ಕಥಾಸಾರ, ಪಾತ್ರ ಚಿತ್ರಣ, ಕೃತಿ ವಿಮರ್ಶೆ ಮೊದಲಾದವುಗಳನ್ನು ಶಾಸ್ತ್ರದನ್ವಯವಾಗಿ ಮಾಡಿಕೊಟ್ಟಿದ್ದಾರೆ. ಸಂಪಾದನೆಯ ಸಣ್ಣಬರಹದ ಗುರುಬಸವರಾಜದೇವರು ಸೇರಿಸಿದ 'ಶರಣಚಾರಿತ್ರದ ವಚನಗಳು' ಎಂಬ ಕೃತಿಯನ್ನು ಡಾ. ಶಿರೂರ ಅವರು ಸಂಪಾದಿಸಿದ್ದಾರೆ. ಇದು ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನಮಠದ ವೀರಶೈವ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗಿದೆ. ಈ ಕೃತಿಯಲ್ಲಿ ಶರಣನಲ್ಲಿರಬೇಕಾದ ಗುಣವಿಶೇಷಗಳನ್ನು ವಿವರಿಸುವ ಉದ್ದೇಶ ಒಂದಾದರೆ, ಆ ಶರಣರ ವಚನಗಳ ಮೂಲಕ ಅವರವರ ವ್ಯಕ್ತಿತ್ವಗಳನ್ನು ಗುರುತಿಸುವುದು ಮತ್ತೊಂದು' ಎಂದು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಇಲ್ಲಿ ಒಟ್ಟು ೨೭೯ ವಚನಗಳಿವೆ. ಅವುಗಳಲ್ಲಿ ೧೭೦ ಹೊಸ ವಚನಗಳು ಈವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ಹಲವಾರು ಹೊಸ ಅಂಕಿತಗಳು ಇಲ್ಲಿ ದೊರೆತಿವೆ. ಇವುಗಳಿಂದ ಈ ಕೃತಿಯ ವಿಶೇಷತೆ ಹೆಚ್ಚಿದೆ ಎಂಬ ಸಂಪಾದಕರ ಮಾತುಗಳು ಗಮನಾರ್ಹವಾಗಿವೆ. ಅದೇ ರೀತಿ ನಿರಾಳ ಮಂತ್ರಗೋಪ್ಯ, ಶರಣಮುಖ ಮಂಡನೆ, ಸರ್ವಾಚಾರ ಸಾರಾಮೃತಸುಧೆ ಮೊದಲಾದ ವಚನ ಕೃತಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿರುವ ೧೫ ಸಮಗ್ರ ವಚನ ಸಂಪುಟಗಳಲ್ಲಿ ಡಾ. ಶಿರೂರ ಅವರು ಸಂಪಾದಿಸಿದ ಕೃತಿಗಳು ಎರಡು ಸಂಪುಟಗಳಿಗೆ ಆಕರವಾಗಿರುವುದನ್ನು ಇಲ್ಲಿ ಎತ್ತಿ ತೋರಬಹುದಾಗಿದೆ.

“ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಪುರಾಣ'ವನ್ನು ಡಾ. ಶಿರೂರ ಅವರು ಸಂಪಾದಿಸಿದ್ದಾರೆ. ಇದು ಪಂಡಿತ ವೈ.ನಾಗೇಶಶಾಸ್ತ್ರಿಗಳ ಕೃತಿ. ಇದನ್ನು ಆಮೂಲಾಗ್ರವಾಗಿ ಅವಲೋಕನ ಮಾಡಿ ಇದು ನಾಗೇಶಶಾಸ್ತ್ರಿಗಳೇ ಬರೆದ ಕೃತಿಯೆಂಬುದನ್ನು ನಿರ್ದಿಷ್ಟಪಡಿಸಿ ಮೊದಲ ಬಾರಿಗೆ ಪ್ರಕಟಿಸಿದ್ದು ಶಿರೂರ ಅವರ ಹೆಗ್ಗಳಿಕೆಯಾಗಿದೆ. ಇದರಲ್ಲಿ ಸಂಧಿಗಳಿಗೆ ಅನುಸಾರವಾಗಿ ಕಥಾಸಾರವನ್ನು ಕೊಟ್ಟಿದ್ದಾರೆ. ಅದರಲ್ಲಿ ನಿರೂಪಿತವಾಗಿರುವ ವೀರಶೈವ ಧರ್ಮಾಚರಣೆಗೆ ಸಂಬಂಧಿಸಿದ ಪಂಚಾಚಾರ, ಅಷ್ಟಾವರಣ, ಷಟಸ್ಥಲ ಇವುಗಳ ಪರಿಚಯ ಹಾಗೂ ಮಹತ್ವ ಅದರೊಂದಿಗೆ ಶ್ರೀ ಮಠದ ಸರ್ವಧರ್ಮ ಸಮನ್ವಯದೃಷ್ಟಿಕೋನವನ್ನು ಎತ್ತಿತೋರಿಸಿದ್ದಾರೆ.”

    ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎರಡನೆಯ ಪ್ರಶಸ್ತಿ ಪಡೆದ 'ಭಕ್ತಿರಸಸೋನೆ' ಡಾ. ಶಿರೂರ ಅವರು ಸಂಪಾದಿಸಿದ ಮತ್ತೊಂದು ಮಹತ್ವದ ಕೃತಿಯಾಗಿದೆ. ಕರ್ನಾಟಕದ ಶರಣ ಸಮುದಾಯದಲ್ಲಿ ಅಗ್ರಸ್ಥಾನ ಪಡೆದ ಬಸವಣ್ಣನವರ ಚರಿತ್ರೆಯನ್ನು ಕುರಿತು ಬರೆದ ಪಂಚಯ್ಯನ 'ಭಕ್ತಿರಸಸೋನೆ' ಒಂದು ಸಾಂಗತ್ಯ ಕೃತಿಯಾಗಿದೆ. ಬಸವಣ್ಣನವರ ಚರಿತ್ರೆಯನ್ನೊಳಗೊಂಡ ಕೆಲವು ಸಾಂಗತ್ಯ ಕೃತಿಗಳ ಮಧ್ಯದಲ್ಲಿ ಡಾ. ಶಿರೂರ ಅವರು ಪ್ರಥಮ ಬಾರಿಗೆ ಈ ಕೃತಿ ಬೆಳಕು ಕಾಣುವಂತೆ ಮಾಡಿ ಇದರ ವಿಶೇಷತೆಯನ್ನು ಗುರುತಿಸಿದ್ದಾರೆ. ಇದರ ಪ್ರಸ್ತಾವನೆಯಲ್ಲಿ ಕವಿಯ ಹೆಸರು, ಕಾಲ, ಕೃತಿ ಕುರಿತ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ''ಈ ಕೃತಿ ಅನೇಕ ಪೌರಾಣಿಕ ಚಾರಿತ್ರಿಕ ವ್ಯಕ್ತಿಗಳನ್ನೊಳಗೊಂಡಿದೆ. ಈ ಎಲ್ಲಾ ಕಥೆಗಳು ಕಥಾನಾಯಕನಾದ ಬಸವಣ್ಣನ ಚರಿತ್ರೆಗೆ ಪೂರಕವಾಗಿ ಬಂದಿರುವುದು ವಿಶೇಷವಾಗಿದೆ.'' ಸಂಪಾದಕರು ಇದರ ಕಥಾವಸ್ತುವನ್ನು ಸಂಧಿಗಳಿಗೆ ಅನುಸಾರವಾಗಿ ಕೊಟ್ಟಿದ್ದು ಅದು ಎರಡು ಪ್ರಮುಖ ಪ್ರಕಾರಗಳಲ್ಲಿ ಬಸವಣ್ಣನವರ ಚರಿತ್ರೆ ಹರಿದು ಬಂದಿರುವುದರ ವಿವರಗಳನ್ನೊಳಗೊಂಡಿದೆ. ಈ ಕಥೆಗಳ ಆಕರ, ರೂಪಾಂತರ ಮತ್ತು ಅವುಗಳ ಔಚಿತ್ಯ ಕುರಿತ ದೀರ್ಘವಾದ ಪ್ರಸ್ತಾವನೆ, ಡಾ. ಶಿರೂರ ಅವರ ವ್ಯಾಪಕ ಅಧ್ಯಯನಕ್ಕೆ ಸಂಶೋಧನ ದೃಷ್ಟಿಕೋನಕ್ಕೆ ಹಾಗೂ ಚರಿತ್ರೆಗೆ ಒದಗಿಸಿದ ನ್ಯಾಯಕ್ಕೆ ನಿದರ್ಶನವಾಗಿದೆ. 

೨. ಅಭಿನಂದನ ಗ್ರಂಥಗಳು :- ಇತ್ತೀಚೆಗೆ ಅಭಿನಂದನ ಗ್ರಂಥಗಳು ಕನ್ನಡ ಸಾಹಿತ್ಯದ ಶಾಶ್ವತ ಆಸ್ತಿಯಾಗಿ ಪರಿಣಮಿಸುತ್ತಿವೆ. ಡಾ.ಶಿರೂರ ಅವರು ಕನ್ನಡದ ಕೆಲವು ಮಹತ್ವದ ಅಭಿನಂದನ ಗ್ರಂಥಗಳ ಸಂಪಾದಕರಾಗಿ ಕಾರ ಮಾಡಿದ್ದಾರೆ. ಕನ್ನಡದ ಘನವಿದ್ವಾಂಸರಾದ ಪ್ರೊ. ಭೂಸನೂರಮಠ ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥ 'ಗೌರವ', ಇದು ಗದುಗಿನ ವೀರಶೈವ ಅಧ್ಯಯನ ಸಂಸ್ಥೆಯಿಂದ ೧೯೮೯ರಲ್ಲಿ ಪ್ರಕಟವಾಗಿದೆ. ಇದು ವ್ಯಕ್ತಿ ಸಾಹಿತ್ಯ ಮತ್ತು ವೀರಶೈವ ಲಘುಸಾಹಿತ್ಯ ಎಂಬ ಮೂರು ಸ್ಥಳಗಳಲ್ಲಿ ೬೦೭ ಪುಟಗಳ ವ್ಯಾಪ್ತಿಯನ್ನು ಹೊಂದಿದೆ ಬೃಹತ್ ಗ್ರಂಥವಾಗಿದೆ. ಪ್ರೊ. ಭೂಸನೂರಮಠ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತ ಮೌಲಿಕವಾದ ಲೇಖನಗಳನ್ನು ಮೊದಲೆರಡು ಭಾಗಗಳಲ್ಲಿ ಸಂಕಲಿಸಿದ್ದಾರೆ. ಮೂರನೆಯ ಭಾಗದಲ್ಲಿ ವೀರಶೈವ ಲಘುಸಾಹಿತ್ಯ ಪ್ರಕಾರಗಳನ್ನು ಕುರಿತ ಸಂಶೋಧನಾತ್ಮಕ ಲೇಖನಗಳಿವೆ. ಈ ಲೇಖನಗಳಿಂದ ಪ್ರೇರಣೆ ಹೊಂದಿ ಹೊಸ ಹೊಸ ಸಂಶೋಧಕರು ತಮ್ಮ ಪಿಎಚ್.ಡಿ. ಮಹಾಪ್ರಬಂಧಗಳಿಗೆ ವಿಷಯಗಳನ್ನು ಆಯ್ದುಕೊಳ್ಳುತ್ತಿರುವುದನ್ನು ನೋಡಿದರೆ ಈ ಕೃತಿಯ ಮಹತ್ವದ ಅರಿವಾಗುತ್ತದೆ. ಡಾ. ಶಿರೂರ ಅವರಂತಹ ವಿಶಿಷ್ಟ, ಸಂಶೋಧಕರು ಮಾತ್ರ ಇಂಥ ಅಲಕ್ಷಿತ ಸಾಹಿತ್ಯದೆಡೆಗೆ ಸಂಶೋಧನಾಸಕ್ತರ ಗಮನ ಸೆಳೆಯಲುಸಾಧ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಗೌರವ ಗ್ರಂಥಕ್ಕೆ ಡಾ. ಶಿರೂರ ಅವರೇ ಬರೆದ 'ಕರಣಹಸುಗೆ ಸಾಹಿತ್ಯ'ದ ಸಮಗ್ರ ವಿಶ್ಲೇಷಣೆ ಅವರ ವಿದ್ವತ್ತಿಗೆ ನಿದರ್ಶನವಾಗಿದೆ. ಈ ಲೇಖನ ಸುತ್ತೂರು

'ವೀರಶೈವ ಸಾಹಿತ್ಯ ಸಮೀಕ್ಷೆ' ಗ್ರಂಥದಲ್ಲಿ ಎಡೆಪಡೆದಿರುವುದು ಇದರ ಮಹತ್ವವನ್ನು ಹೇಳುತ್ತಿದೆ. “ಸಿದ್ದರಾಮ ಸಂಪದ' ಎಂಬ ಕೃತಿ ಯಲಬುರ್ಗಿಯ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳ ಗೌರವ ಗ್ರಂಥವು 'ವೀರಶೈವ ಅರಸರಪಟ್ಟಾಧಿಕಾರದ ಸಂದರ್ಭದಲ್ಲಿ ಡಾ. ಶಿರೂರ ಅವರ ಸಮರ್ಥ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಈ ವೀರಶೈವ ಗುರುಗಳು ಎಂಬ ಮಹತ್ವದ ವಿಷಯಗಳನ್ನೊಳಗೊಂಡಿದೆ. ಕರ್ನಾಟಕವನ್ನಾಳಿದ ಸುಮಾರು ನಲ್ವತ್ತಕ್ಕೂ ಹೆಚ್ಚು ವೀರಶೈವ ಅರಸುಮನೆತನಗಳು ಮತ್ತು ಅವುಗಳ ರಾಜಗುರುಗಳ ಚರಿತ್ರೆಯಲ್ಲಿ ೨೨ ಜನ ರಾಜಗುರುಗಳ ಇತಿಹಾಸವನ್ನು ಈ ಗ್ರಂಥದ ಮೂಲಕ ಡಾ. ಶಿರೂರ ಅವರು ಮೊದಲ ಬಾರಿಗೆ ಬೆಳಕಿಗೆ ತಂದಿದ್ದಾರೆ. ಇಲ್ಲಿ ಎಲ್ಲ ಗುರುಗಳ ಇತಿಹಾಸವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಕುರಿತು ಇನ್ನೂ ಒಂದು ಸಂಪುಟವಾಗುತ್ತದೆ. ಇದಲ್ಲದೆ ವೀರಶೈವ ಅರಸರಿಗೆ ವೀರಶೈವೇತರ ರಾಜಗುರುಗಳೂ ಇದ್ದ ಉಲ್ಲೇಖಗಳು ಇವೆ. ಇದನ್ನು ಕುರಿತು ಮತ್ತೊಂದು ಸಂಪುಟವಾಗಬಹುದು'' ಎಂಬ ಸಂಪಾದಕರ ಪ್ರಸ್ತಾವನೆಯ ಮಾತುಗಳು ಉಳಿದ ಎಲ್ಲರಾಜ ಗುರುಗಳ ಚರಿತ್ರೆಯನ್ನು ಶೋಧಿಸುವ ಸಂಶೋಧಕರಿಗೆ ದಿಕೂಚಿಯಾಗಿವೆ. ಕನ್ನಡ ಸಂಶೋಧನಕ್ಷೇತ್ರಕ್ಕೆ ಈ ಮೂಲಕ ಕೆಲ ಹೊಸ ಸಂಗತಿಗಳನ್ನು ಡಾ. ಶಿರೂರ ಅವರು ಸೇರಿಸಿದಂತಾಗಿದೆ.

 ''ಸಿದ್ದ'' ಕೃತಿಯು ಡಾ. ಶಿರೂರ ಅವರು ಸಂಪಾದಿಸಿದ ಯಲಬುರ್ಗಿ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಮತ್ತೊಂದು ವಿಶಿಷ್ಟವಾದ ಕೃತಿಯಾಗಿದೆ. 'ಸಿದ್ದ'ಕೃತಿಯು ಯಲಬುರ್ಗಿ ತಾಲೂಕಿನ ದರ್ಶನವನ್ನು ನೀಡುವುದರಿಂದ ಸರಕಾರಿ ಗೆಜೆಟಿಯರ್‌ದಂತೆ ಗಮನಾರ್ಹ ಕಾವ್ಯವನ್ನು ಮಾಡಿದೆ. ಈ ದಿಸೆಯಲ್ಲಿ ಪ್ರಸ್ತುತ ಗ್ರಂಥ ಮುಂಬರುವ ಗೌರವ ಗ್ರಂಥಗಳಿಗೆ ಒಂದು ಉತ್ತಮ ಮಾದರಿ. ಶ್ರೀ ಮಠದ ದರ್ಶನ ಮತ್ತು ಯಲಬುರ್ಗಿ ತಾಲೂಕು ದರ್ಶನ ಎಂಬ ಎರಡು ಭಾಗಗಳಿವೆ. ಮೊದಲ ಭಾಗಶ್ರೀ ಮಠದ ಮತ್ತು ಪ್ರಮುಖ ಮಹಾಸ್ವಾಮಿಗಳ ಚರಿತ್ರೆಯನ್ನು ಒಳಗೊಂಡಿದೆ. ಎರಡನೆಯ ಭಾಗದ ಪಿಎಚ್.ಡಿ. ಒಂಬತ್ತು ಲೇಖನಗಳು ಈ ತಾಲೂಕಿನ ಇತಿಹಾಸ, ವೀರಶೈವ ಮಠಗಳು, ದೇವಾಲಯಗಳು, ಸಾಹಿಗಳು, ಕಲಾವಿದರು, ಶಾಸಕರು, ನ್ಯಾಯಾಧೀಶರು, ಶಿಕ್ಷಣ ಸಂಸ್ಥೆಗಳು ಮತ್ತು ಈ ತಾಲೂಕಿನ ಪ್ರಗತಿಯ ಪಕ್ಷಿನೋಟ ವಿವರಗಳನ್ನು ಒಳಗೊಂಡಿವೆ. ಇದರಲ್ಲಿಯ ಕೆಲವು ಲೇಖನಗಳು ಮಹಾಪ್ರಬಂಧಕ್ಕೆ ಆಕರಗಳಾಗಿವೆ. ಉದಾಹರಣೆಗೆ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ಯಲಬುರ್ಗಿ ತಾಲೂಕಿನ ಕಲಾವಿದರ ಲೇಖನ 'ಯಲಬುರ್ಗಿ ತಾಲೂಕಿನ ವೃತ್ತಿ ರಂಗಭೂಮಿ' ಎಂಬ ಪಿಎಚ್.ಡಿ. ಮಹಾಪ್ರಬಂಧ ರಚನೆಗೆ ಕಾರಣವಾಗಿರುವುದು. ಡಾ. ಶಿರೂರ ಅವರ ಮಾರ್ಗದರ್ಶನದಲ್ಲಿಯೇ ಡಾ. ಕುಂಬಾರ ಅವರು ಇದನ್ನು ಸಿದ್ಧಪಡಿಸಿರುವುದನ್ನು ಸ್ಮರಿಸಬಹುದು. 'ಶಿವಸಂಗಮ' ಯಲಬುರ್ಗಿ ತಾಲೂಕಿನ ಬೆದವಟ್ಟಿಯ ಶ್ರೀ. ಷ.ಬ್ರ.ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಂಸ್ಕರಣ ಗ್ರಂಥವಾಗಿದೆ. ಈ ಗ್ರಂಥದ ಮೊದಲ ಭಾಗದಲ್ಲಿ ವಿವಿಧ ವಿದ್ವಾಂಸರು ಶ್ರೀಗಳ ವ್ಯಕ್ತಿತ್ವದರ್ಶನ ಮಾಡಿಸುವ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಅಲಕ್ಷಿತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಕನ್ನಡ ಟೀಕಾಸಾಹಿತ್ಯ' ಕುರಿತು ಇಪ್ಪತ್ತೆರಡು ಸಂಶೋಧನಾತ್ಮಕ ಲೇಖನಗಳಿವೆ. ಕನ್ನಡ ಸಾಹಿತ್ಯದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಜನ ಬೇರೆ ಬೇರೆ ಕೃತಿಗಳಿಗೆ ಬರೆದ ಟೀಕಾಕಾರರ ಪ್ರಸ್ತಾಪವಿದೆ. ಅದರಲ್ಲಿ ಈಗ ಕೇವಲ ಇಪ್ಪತ್ತೆರಡು ಜನ ಟೀಕಾಕಾರರನ್ನು ಕುರಿತು ಲೇಖನಗಳನ್ನು ಬರೆಯಿಸಲು ಸಾಧ್ಯವಾಗಿದೆ. ಮುಂದೆ ಅವಕಾಶ ಸಿಕ್ಕರೆ ಇನ್ನುಳಿದ ಟೀಕಾಕಾರರ ಬಗೆಗೂ ಬರೆಯಿಸುವ ಸಂಕಲ್ಪ' ಮಾಡಿರುವ ಸಂಪಾದಕರ ಶ್ರಮ ಮತ್ತು ಅಲಕ್ಷಿತ ಟೀಕಾಸಾಹಿತ್ಯವನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಇರುವ ಅವರ ಸಂಶೋಧನ ದೂರದೃಷ್ಟಿಯನ್ನು ಕಾಣಬಹುದಾಗಿದೆ.

ಪಠ್ಯಗಳು :

ಡಾ. ಶಿರೂರ ಅವರು ಸಂಪಾದಿಸಿದ 'ಬಸವಣ್ಣನವರ ವಚನವಾಹಿನಿ' ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಬಿ.ಎ. ಭಾಗ-೩ರ ಉಪ ಪ್ರಧಾನ ಪಠ್ಯವಾಗಿದ್ದಿತ್ತು. ಇದರಲ್ಲಿರುವ ೨೭೮ ಬಸವಣ್ಣನವರ ವಚನಗಳನ್ನು ಭಕ್ತಿ, ಆಚಾರ, ನಡೆ ನುಡಿ, ಡಾಂಭಿಕತೆ, ವಿಡಂಬನೆ, ಅಸ್ಪೃಶ್ಯತೆ, ಕಾಯಕ, ಅಂತರಂಗ ನಿರೀಕ್ಷೆ, ಅಹಂಕಾರ ನಿರಸನ ಹಾಗೂ ಶರಣರ ಸಂಗ ಎಂಬ ಉಪಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ ವಚನಗಳನ್ನು ಜೋಡಿಸಿರುವುದು ವಿದ್ಯಾರ್ಥಿಗಳ ಅಭ್ಯಾಸದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ಶೀರ್ಷಿಕೆಗಳ ಹಿನ್ನೆಲೆಯಲ್ಲಿ ಬರೆದ ಪ್ರಸ್ತಾವನೆ ಬಸವಣ್ಣನವರ ವಚನಗಳ ಅಂತರಂಗವನ್ನು ಅರಿಯಲು ನೆರವಾಗುತ್ತದೆ. ಬಸವಣ್ಣನವರ ಇತಿವೃತ್ತವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ, ಅವರಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೈಕೊಂಡ ಶಿರೂರ ಅವರ ಕಾರ ಸ್ತುತ್ಯವಾಗಿದೆ. ಕೊನೆಯಲ್ಲಿ ಒಪ್ಪೋಲೆ, ಕಠಿಣ ಪದಕೋಶ, ಸಂದರ್ಭ ವಿವರಣೆ ವಚನಗಳ ಅಕಾರಾದಿ ಹೀಗೆ ಒಂದು ಒಳ್ಳೆಯ ಪಠ್ಯ ಒಳಗೊಳ್ಳಬೇಕಾದ ಎಲ್ಲ ವಿಷಯಗಳನ್ನು 'ಬಸವಣ್ಣನವರ ವಚನವಾಹಿನಿ' ಒಳಗೊಂಡಿರುವುದು ಅದರ ವೈಶಿಷ್ಟ್ಯವೆನಿಸಿದೆ. 

    ಡಾ. ಶಿರೂರ ಅವರು ಸಂಪಾದಿಸಿದ ಇನ್ನೊಂದು ಪಠ್ಯ 'ನಳಚರಿತ್ರೆ ಸಂಗ್ರಹ' ಇದು ಬಿ.ಎ. ಭಾಗ-೧ ಕನ್ನಡ ಪ್ರಧಾನ ವಿಷಯದ ಪಠ್ಯವಾಗಿದ್ದಿತು. ನಳದಮಯಂತಿಯರ ಸ್ವಾರಸ್ಯವಾದ ಕಥಾಭಾಗವನ್ನು ಎಲ್ಲೂ ಕಥಾ ಸಂದರ್ಭ ತಪ್ಪದಂತೆ ಪದ್ಯಗಳ ಜೋಡಣೆ ಮಾಡಿದ್ದು, ಸಂಪಾದಕರ ಜಾಣೆಗೆ ಸಾಕ್ಷಿಯಾಗಿದೆ. ಒಂದು ಪಠ್ಯ ಬಹಳ ಸಣ್ಣದೂ ಇರಬಾರದು, ದೊಡ್ಡದೂ ಇರಬಾರದು. ವರ್ಷದ ಅವಧಿಯೊಳಗೆ ಓದಿ ಮುಗಿಸಬಹುದಾದ ಗಾತ್ರದ್ದು ಇರಬೇಕೆಂಬ ದೃಷ್ಟಿಯಿಂದ ರಚಿತವಾದ ಈ ಪಠ್ಯವನ್ನು ನಾನು ಬಿ.ಎ. ತರಗತಿಯಲ್ಲಿ ಓದಿರುವುದರಿಂದ ಮತ್ತು ಈ ಪಠ್ಯ ಕುರಿತು ಈಗ ಬರೆಯುವ ಸಂದರ್ಭ ಬಂದಿರುವುದರಿಂದ ಪುನಃ ಅದನ್ನು ಓದಿದಾಗ ಅದೊಂದು ಮಾದರಿ ಪಠ್ಯವಾಗಿ ನನಗೆ ತೋರುತ್ತಿದೆ. ಪ್ರಸ್ತಾವನೆಯಲ್ಲಿ ಬರೆದ ಸೊಗಸಾದ ವಿವರಣೆ, ಪಾತ್ರಗಳ ವೈಶಿಷ್ಟ್ಯ, ಇಂಥ ಕಾವ್ಯಗಳ ಓದಿನೆಡೆಗೆ ಆಸಕ್ತಿಯನ್ನುಂಟು ಮಾಡುವ ರೀತಿಯಲ್ಲಿರುವುದು ಗಮನಾರ್ಹವಾಗಿದೆ.

'ಪಂಚವಟಿ' ಬಿಎಸ್.ಸಿ. ಭಾಗ-೧ ಕ್ಕೆ ಶಿರೂರ ಅವರು ಪಠ್ಯವನ್ನಾಗಿ ರೂಪಿಸಿಕೊಟ್ಟ ಕೃತಿ. ಪಂಡಿತರ ಅಲಕ್ಷಕ್ಕೆ ಗುರಿಯಾಗಿರುವ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣದ ಪದ್ಯಗಳನ್ನು ಸಂಗ್ರಹಿಸಿ ಇಲ್ಲಿಕೊಡಲಾಗಿದೆ. 'ಪಂಚವಟಿ' ಸೀತಾಪಹರಣ ನಡೆದ ಪ್ರದೇಶವಾಗಿದ್ದು, ಅಲ್ಲಿಂದ ಇಡೀ ರಾಮಾಯಣದ

ಕತೆಗೆ ಮಹತ್ವದ ತಿರುವು ದೊರೆತಿರುವುದರಿಂದ ಈ ಹೆಸರಿನ ಔಚಿತ್ಯ ಎದ್ದು ಕಾಣುವಂತಾಗಿದೆ. ಇಲ್ಲೂ ಕೂಡಾ ಸಂದರ್ಭ ತಪ್ಪದ ಹಾಗೆ ಪದ್ಯಗಳನ್ನು ಜೋಡಿಸಿರುವ ರೀತಿ ಮೆಚ್ಚುವಂತಿದೆ. ಇದಕ್ಕೂ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನುಂಟುಮಾಡುವ ಹಾಗೆ ಬರೆದಿರುವ ಪ್ರಸ್ತಾವನೆ ಸೊಗಸಾಗಿದೆ.

ಡಾ. ಶಿರೂರ ಅವರು ಕನ್ನಡದ ಒಬ್ಬ ಸಮರ್ಥ ಸಂಶೋಧನ ಮಾರ್ಗದರ್ಶಕ (Research Guide) ರೆಂದು ಹೆಸರು ಪಡೆದವರು. ಅವರ ಬಳಿ ಪಿಎಚ್.ಡಿ. ಸಂಶೋಧನ ಅಧ್ಯಯನ ಮಾಡುವುದೇ ಒಂದು ಪ್ರತಿಷ್ಠೆಯ ವಿಷಯ. ಅವರು ಸ್ವತಃ ತಾವೂ ದುಡಿದು ವಿದ್ಯಾರ್ಥಿಗಳನ್ನೂ ದುಡಿಸಿ ಮೌಲಿಕವಾದ ಸಂಶೋಧನ ಮಹಾಪ್ರಬಂಧಗಳು ಹೊರಬರಲು ಕಾರಣಕರ್ತರಾಗಿದ್ದಾರೆ. ಆ ಮೂಲಕವೂ ಸಂಶೋಧನ ಕ್ಷೇತ್ರಕ್ಕೆ ಇವರ ಸೇವೆ ಗಮನಾರ್ಹವಾಗಿದೆ. ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಕಾರ್ಯಕೈಕೊಂಡ ಹದಿನೆಂಟು ಜನ ವಿದ್ಯಾರ್ಥಿಗಳು ಡಾಕ್ಟರೇಟ ಪದವಿ ಪಡೆದುಕೊಂಡಿದ್ದಾರೆ. ಡಾ. ಬಿ. ಎಂ. ಹೊಸಮನಿ ಅವರ “ಕರ್ನಾಟಕದ ವೇಷಗಾರರು~ ಒಂದು ಸಾಂಸ್ಕೃತಿಕ ಅಧ್ಯಯನ', ಡಾ. ಚೆನ್ನಬಸಯ್ಯ ಹಿರೇಮಠರ' ಕುರುಗೋಡು ಸಿಂದರು - ಒಂದು ಅಧ್ಯಯನ', ಡಾ. ರಾಜಶೇಖರ ಇಚ್ಚಂಗಿ ಅವರ 'ಪಾರ್ಶ್ವನಾಥಪುರಾಣ ~ ಒಂದು ತೌಲನಿಕ ಅಧ್ಯಯನ' ಡಾ. ಧನವಂತ ಹಾಜವಗೋಳ ಅವರ “ಮುಳಗುಂದ ನಾಡು ಒಂದು ಅಧ್ಯಯನ', ಡಾ. ಸರಸ್ವತಿದೇವಿ ಭಗವತಿ ಅವರ 'ಹಂಪೆ ಶಾಸನಗಳು- ಒಂದು ಅಧ್ಯಯನ' ಇವೇ ಮೊದಲಾದ ಮಹತ್ವದ ಪಿಎಚ್.ಡಿ. ಮಹಾಪ್ರಬಂಧಗಳನ್ನು ಹೆಸರಿಸಬಹುದಾಗಿದೆ. ಹನ್ನೊಂದು ಜನವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಪ್ರಬಂಧಗಳನ್ನು ರಚಿಸಿ ಎಂ. ಫಿಲ್. ಪದವಿಗಳನ್ನು ಪಡೆದಿದ್ದಾರೆ. ಹೀಗೆ ಕನ್ನಡ ಸಂಶೋಧನ ಕ್ಷೇತ್ರದ ಬೆಳವಣಿಗೆಗೆ ಅವರು ಸಲ್ಲಿಸಿದ ಸೇವೆ ಅಮೂಲ್ಯವಾದುದು. ಡಾ. ಬಿ.ವಿ. ಶಿರೂರ ಅವರದು ಮೃದು ಹೃದಯದ ಸರಳ ಸಜ್ಜನಿಕೆಯ ನಿರಾಡಂಬರ ವ್ಯಕ್ತಿತ್ವ. ಸ್ನೇಹ ಜೀವಿಗಳಾದ ಅವರು ಅಜಾತಶತ್ರುಗಳು, ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಆಕರ್ಷಿಸುವ ಆಜಾನುಬಾಹು ಅಪರೂಪದ ವ್ಯಕ್ತಿ. ಗಂಭೀರ ಓದು, ಸಂಶೋಧನ ನಿಷ್ಠೆ, ಪ್ರಾಮಾಣಿಕತೆಯ ಸ್ಪರ್ಶ, ಕರ್ತವ್ಯಪ್ರಜ್ಞೆ, ಸೇವಾ ಮನೋಭಾವ ಇವೇ ಮೊದಲಾದ ವಿಶೇಷ ಗುಣಗಳಿಂದಾಗಿ ಅವರೊಬ್ಬ ವಿಶಿಷ್ಟ ಮಾದರಿ ಸಂಶೋಧಕರೆನಿಸಿದ್ದಾರೆ. ಅವರು ಕೈಕೊಂಡ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಹಲವು ಪ್ರಶಸ್ತಿ ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಶ್ರವಣಬೆಳಗೊಳದ ಬಾಹುಬಲಿ ಪ್ರತಿಷ್ಠಾನದ ಬಹುಮಾನ, ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಪ್ರತಿಷ್ಠಾನದ ಸಂಶೋಧನ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಭಾರತ ರತ್ನವಿಶ್ವೇಶ್ವರಯ್ಯ ಪ್ರಶಸ್ತಿ, ಜಚನಿ ಪ್ರಶಸ್ತಿ, ಮುಂತಾದವು ಅವರು ಪಡೆದ ಪ್ರಮುಖ ಪ್ರಶಸ್ತಿಗಳಾಗಿವೆ. ಡಾ. ಬಿ.ವಿ. ಶಿರೂರ ಅವರ ವಿದ್ಯಾರ್ಥಿಗಳು, ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು

ಹಾಗೂ ಅಭಿಮಾನಿಗಳು “ಸಿರಿಸಂಪದ' ವೆಂಬ ಎಂಟನೂರಾ ಐವತ್ತು ಪುಟಗಳ ಅಭಿನಂದನ ಗ್ರಂಥ ಸಮರ್ಪಿಸಿ ಗೌರವಿಸಿದ್ದಾರೆ. ಅವರ ವ್ಯಕ್ತಿತ್ವ ಸಾಹಿತ್ಯ ಹಾಗೂ ಗ್ರಂಥಸಂಪಾದನ ಕ್ಷೇತ್ರದಲ್ಲಿ ದುಡಿದ ಅರವತ್ನಾಲ್ಕು ಜನ ಸಂಪಾದಕರ ಸಾಧನೆ, ಸಂಪಾದನ ಕೃತಿಗಳ ಮೌಲಿಕತೆಯನ್ನೊಳಗೊಂಡ ಬೃಹತ್ಗ್ರಂಥ ಇದಾಗಿದೆ. ಕನ್ನಡದ ಕೆಲವೇ ಕೆಲವು ಮಹತ್ವದ ಆಕರ ಗ್ರಂಥಗಳಲ್ಲಿ ಇದೂ ಒಂದಾಗಿದೆ. ಕರ್ನಾಟಕದ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕಾಲದ ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸದ ಮೇಲೆ ಹೊಸ ಬೆಳಕು ಬೀರುತ್ತ ಬಂದ ಇತಿಹಾಸ ಅಕಾಡೆಮಿಯ ೯ನೆಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಿ ಸಪ್ಟೆಂಬರ ೧೧, ೧೨ ಹಾಗೂ ೧೩, ೨೦೦೫ ರಂದು ಗುಲ್ಬರ್ಗಾ ಜಿಲ್ಲೆ ಸೇಡಂನಲ್ಲಿ ನಡೆದ ಇತಿಹಾಸ ಸಮ್ಮೇಳನದಲ್ಲಿ ಇವರನ್ನು ಗೌರವಿಸಿರುವುದು ಅಭಿಮಾನದ ಸಂಗತಿಯಾಗಿದೆ.

      ಡಾ. ಬಿ. ವಿ. ಶಿರೂರ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿಯಿಂದ ಸಂಶೋಧಕರಾದ ಇವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ದ ಮೇಜರ್ ಪ್ರಾಜೆಕ್ಟ್ ಅಡಿಯಲ್ಲಿ ಪ್ರಾಚೀನ ಕರ್ನಾಟಕದ ಶೈವ ಶಾಖೆಗಳು' ಎಂಬ ಯೋಜನೆಯನ್ನು ಪೂರೈಸಿದ್ದಾರೆ.


  ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಶಾಸನಗಳು ಮತ್ತು ಶಿಲ್ಪಗಳು                                                           ಡಾ.ಸಿ.ನಾಗಭೂಷಣ    ಶರಣರು ಐತ...