ಶನಿವಾರ, ಅಕ್ಟೋಬರ್ 11, 2025

 ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣೀ ಸೂತ್ರರತ್ನಾಕರದಲ್ಲಿ ಬಸವಣ್ಣನವರ    ಕುರಿತ ಸಂಗತಿಗಳು         ಡಾ.ಸಿ.ನಾಗಭೂಷಣ

 

      ಕವಿಯ ಇತಿವೃತ್ತ: ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಕೃತಿಯ ಸಮಾಪ್ತಿ ವಾಕ್ಯದಲ್ಲಿಯ `ಭಕ್ತಿ ಜ್ಞಾನ ವೈರಾಗ್ಯವೇ ರೂಪುವೆತ್ತ ಷಟ್‌ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರೆಂಬ ಸದ್ಗುರು ಮೂರ್ತಿಯಲ್ಲಿ ಅವರ ಮಹಾನುಭಾವ ವಾಕ್ಯ ಪ್ರಸನ್ನ ಪ್ರಸಾದಾಮೃತಮಂ ಭೈರವದೇವನ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನ್ನು ವಿಶಾಲವಾಗಿ ಬರೆದು ಸಂಗ್ರಹಿಸೆಂದು ನಿರೂಪಿಸೆ' ಎನ್ನುವ ಹೇಳಿಕೆಯಿಂದ ಈ ಕೃತಿಯನ್ನು ರಚಿಸಿದ ಕವಿಯ ಹೆಸರು ಶಾಂತಲಿಂಗದೇಶಿಕ ಎಂಬುದು ವ್ಯಕ್ತವಾಗುತ್ತದೆ. ಈ ಕೃತಿಯಲ್ಲಿಯ ಕವಿಯನ್ನು ಕುರಿತ ಹಾಗೆ ಆಂತರಿಕ ಸಾಕ್ಷ್ಯಗಳಿಂದ ತಿಳಿದುಬರುವ ಸಂಗತಿಗಳೆಂದರೆ - 

೧. ಈ ಕಾವ್ಯದ ಕರ್ತೃ ಶಾಂತಲಿಂಗ ದೇಶಿಕ

೨. ಈತನ ಗುರು ಷಟ್‌ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರು

೩. ಕನ್ನಡ, ಸಂಸ್ಕೃತ, ಪ್ರಾಕೃತ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಬಲ್ಲಿದನಾಗಿ ವೇದಾಗಮ ಪುರಾಣ, ಇತಿಹಾಸಗಳ ಸಾರವನ್ನು ಹೀರಿ ಈ ಕೃತಿಯನ್ನು ರಚಿಸಿದ್ದಾನೆ.

      ಕೃತಿಯು ರಚನೆಗೊಂಡ ಕಾಲದ ಬಗೆಗೆ ಕವಿಯೇ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ.`ಶಾಲಿವಾಹನ ಶಕ ೧೫೯೪ನೆಯ ಪರಿದಾವಿ ಸಂವತ್ಸರದ ಮಾರ್ಗಶಿರ ಮಾಸ ಶುದ್ಧ ೧೦ ಉತ್ತರ ಭಾದ್ರಪದ ನಕ್ಷತ್ರ ಶನಿವಾರದಲ್ಲಿ ಸಂಗ್ರಹಿಸಿ ಬರೆದು ಸಂಪೂರ್ಣವಾಯಿತು' ಎನ್ನುವ ಉಲ್ಲೇಖದಿಂದ ಈ ಕೃತಿಯು ಕ್ರಿ.ಶ.೧೬೭೨ರಲ್ಲಿ ರಚನೆಯಾಗಿದೆ. ಕವಿಯ ವೈಯಕ್ತಿಕ ವಿವರಗಳ ಬಗೆಗೆ ಈ ಕೃತಿಯಲ್ಲಾಗಲೀ, ನಂತರದ ಕೃತಿಗಳಲ್ಲಾಗಲೀ ತಿಳಿದುಬಂದಿಲ್ಲ. ಕವಿಯು ಷಟ್‌ಸ್ಥಲಾಚಾರ್ಯ ವಿರಕ್ತ ನಮಃ ಶಿವಾಯ ದೇವರ ಶಿಷ್ಯನಾಗಿ ವಿರಕ್ತಾಶ್ರಮವನ್ನು ಸ್ವೀಕರಿಸಿದಂತೆ ತಿಳಿದುಬಂದಿದೆ. `ಶಾಂತಲಿಂಗ ದೇಶಿಕ' ಹೆಸರು ಈ ಅಂಶವನ್ನು ಪುಷ್ಟೀಕರಿಸುತ್ತದೆ. `ದೇಶಿಕ' ಅಂದರೆ ಗುರು, ಮಾರ್ಗದರ್ಶಕ ಎಂದು ಹೇಳುವುದುಂಟು. ದೇಶಿಕರು ನಿರಾಭಾರಿಗಳಾಗಿದ್ದು ಮನೆ, ಮಾರು, ಕುಲ, ಕುಟುಂಬಗಳನ್ನು ತೊರೆದು ದೇಶವನ್ನು ಸಂಚರಿಸುತ್ತ ಶಿವಾನುಭವ ಸಂಪನ್ನರಾಗಿರುವವರು. ವೀರಶೈವ ಸಾಹಿತ್ಯದಲ್ಲಿ ಅಲ್ಲಲ್ಲಿ ಇಂತಹ ದೇಶಿಕರ ಪ್ರಸ್ತಾಪ ಬಂದಿದೆ. ಉದಾ: ೧. ಮುರಿಗೆಯ ದೇಶಿಕ ೨. ಸದಾಶಿವ ದೇಶಿಕ ೩. ಷಡಕ್ಷರ ದೇವರ ಗುರು ಪರಂಪರೆಯ ಚಿಕ್ಕವೀರ ದೇಶಿಕ ಶಿಖಾಮಣಿ ಇತ್ಯಾದಿಯವರನ್ನು ಹೆಸರಿಸಬಹುದು. ಈ ಹಿನ್ನೆಲೆಯಲ್ಲಿ `ದೇಶಿಕ' ಹೆಸರನ್ನು ಅನ್ವರ್ಥವಾಗಿ ಹೊತ್ತಿರುವಂತೆ ಶಾಂತಲಿಂಗ ಕವಿಯು ವಿರಕ್ತಾಶ್ರಮಿಯಾಗಿರಬೇಕು ಎಂಬುದಾಗಿ ತಿಳಿದುಬರುತ್ತದೆ. ವಿರಕ್ತಾಶ್ರಮಿಯಾದ ಶಾಂತಲಿಂಗರು ತನ್ನ ತಂದೆ-ತಾಯಿಗಳ ಹೆಸರು, ಜನ್ಮಸ್ಥಳ, ಪ್ರಾದೇಶಿಕ ವಿಷಯಗಳ ಬಗೆಗೆ ನಿರುತ್ತರರಾಗಿದ್ದಾರೆ. ಪೂರ್ವಾಶ್ರಮ ನಿರಸನ ಮಾಡಿದ ವಿರಕ್ತಾಶ್ರಮವಾಸಿಗಳಿಗೆ ಹಿಂದಿನ ಸಂಬಂಧ ತಪ್ಪಿ ಹೋಗುವುದರಿಂದ ಅವರು ಕೇವಲ ಗುರುವಿನ ಕರಕಮಲ ಸಂಜಾತರಾದ್ದರಿಂದ ಗುರುವಿನ ಹೆಸರನ್ನು ಮಾತ್ರ ಉಲ್ಲೇಖಿಸುವುದುಂಟು. ಶಾಂತಲಿಂಗ ದೇಶಿಕರು ಮಾಡುರುವುದು ಅದನ್ನೇ. ಕವಿಯ ಜನ್ಮಸ್ಥಳದ ಬಗೆಗೆ ಈ ಕೃತಿಯನ್ನು ಸಂಪಾದಿಸಿದ ಸಂಪಾದಕರುಗಳಾದ ಆರ್.ಸಿ.ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ ಅವರು ಉತ್ತರ ದೇಶ ಎಂದು ಹೇಳಿದ್ದಾರೆ. ಅಂದರೆ ಉತ್ತರ ಕರ್ನಾಟಕದವನಾಗಿರಬೇಕು ಎಂದು ಊಹಿಸಿದ್ದಾರೆ. ಅವರು ಊಹಿಸಲು ಕಾರಣ ಇಷ್ಟೇ. ಈ ಕೃತಿಯನ್ನು ಹೋಲುವಂತಹ ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕತೆಗಳು ಸಂಕಲನ ಕೃತಿಯನ್ನು ಸಿದ್ಧಪಡಿಸಿದ ಉತ್ತರ ದೇಶದ ಬಸವಲಿಂಗನು (ಕಾಲ ಕ್ರಿ.ಶ.೧೬೦೦) ಉತ್ತರ ದೇಶದವನಾಗಿದ್ದು, ಅದೇ ಮಾದರಿಯಲ್ಲಿ ಆಕರ ಗ್ರಂಥವನ್ನು ಹೋಲುವ ರೀತಿಯಲ್ಲಿ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರವನ್ನು ಸಂಕಲಿಸಿರುವ ಶಾಂತಲಿಂಗದೇಶಿಕನು ಉತ್ತರ ನಾಡಿನವನಾಗಿದ್ದಾನೆ ಎಂದು ಊಹಿಸಿದ್ದಾರೆ. ಹಸ್ತಪ್ರತಿ ತಜ್ಞರಾದ ಶ್ರೀ ಎಸ್.ಶಿವಣ್ಣನವರು ಇತ್ತೀಚೆಗೆ ಉತ್ತರ ದೇಶದ ಬಸವಲಿಂಗನ ಕಾಲವನ್ನು ಕ್ರಿ.ಶ.೧೬೦೦ಕ್ಕೆ ಬದಲಾಗಿ ಕ್ರಿ.ಶ.೧೬೭೮-೭೯ ಎಂದು ಆಕರಗಳ ಹಿನ್ನೆಲೆಯಲ್ಲಿ ಖಚಿತಪಡಿಸಿದ್ದಾರೆ. ಹೀಗಾಗಿ ಇಲ್ಲಿಯವರೆಗೂ ತಾಳಿದ್ದ ಉತ್ತರ ದೇಶದ ಬಸವಲಿಂಗನ ಸಂಕಲಿತ ಕೃತಿಗಳನ್ನು ಅನುಸರಿಸಿ ಶಾಂತಲಿಂಗ ದೇಶಿಕನು ಈ ಕೃತಿಯನ್ನು ಸಿದ್ಧಪಡಿಸಿದ್ದಾನೆ ಎನ್ನುವ ಅಭಿಪ್ರಾಯವನ್ನು ನಿರಾಕರಿಸಬೇಕಾಗಿದೆ. ಯಾಕೆಂದರೆ ಈ ರೀತಿಯ ಮಹತ್ವಪೂರ್ಣ ಸಂಕಲನ ಕೃತಿಯನ್ನು ಉತ್ತರ ದೇಶದ ಬಸವಲಿಂಗನಿಗಿಂತ ಮೊದಲೇ ಸಿದ್ಧಪಡಿಸಿದ ಕೀರ್ತಿ ಶಾಂತಲಿಂಗ ದೇಶಿಕನಿಗೆ ಸಲ್ಲುತ್ತದೆ. ಹೀಗಾಗಿ ಸಂಪಾದಕರ ಅಭಿಪ್ರಾಯವನ್ನು ಪುಷ್ಟೀಕರಿಸಲು ಸಾಧ್ಯವಿಲ್ಲ. ಕವಿಯು ಬಸವಪೂರ್ವ ಯುಗ, ಬಸವಯುಗ ಮತ್ತು ಬಸವೋತ್ತರ ಯುಗದ ನೂತನ ಶರಣರ ಬಗೆಗೆ ಪ್ರಸ್ತಾಪಿಸುವಾಗ ಕಲ್ಯಾಣ ನಾಡಿನ ಶರಣರ ಜನ್ಮಸ್ಥಳ, ಪ್ರಾದೇಶಿಕ ನೆಲೆ ಇತ್ಯಾದಿ ಅಂಶಗಳ ಬಗೆಗೆ ಖಚಿತ ಸಂಗತಿಗಳನ್ನು ವ್ಯಕ್ತಪಡಿಸಿರುವುದರಿಂದ ಕಲ್ಯಾಣ ನಾಡಿನ ಭೌಗೋಳಿಕ ಪ್ರದೇಶದ ಪರಿಚಯ ವಿಶೇಷವಾಗಿದ್ದಂತೆ ಕಂಡುಬರುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ನಾಡಿನವನಾಗಿದ್ದಿರಬೇಕು ಎಂದು ಊಹಿಸಲು ಅವಕಾಶ ಇದೆ.

      ಈ ಸಂಕಲನ ಕೃತಿ ರಚನೆಗೆ ಹಿನ್ನೆಲೆಯಾಗಿರುವ ಭೈರವೇಶ್ವರನ ಚರಿತೆ: ಮೋಪೂರಿನ ದೊರೆ ಸಂಗಮ ರಾಜ ಮತ್ತು ಮಹಾದೇವಿಯರೆಂಬ ಶಿವಭಕ್ತರ ಉದರದಲ್ಲಿ ಜನಿಸಿದ ಭೈರವ ರಾಜನು ಪ್ರಹುಡಾಚಾರ್ಯನೆಂಬ ಪುರಾಣಿಕನಿಂದ ಕೀರ್ತಿಶಾಲಿಗಳಾದ ಅನೇಕ ದಾನವೀರ ದೊರೆಗಳ ಚರಿತ್ರೆಯನ್ನು, ಶೈವ-ವೀರಶೈವದನ್ವಯ ಮುಕ್ತರಾದ ಮಹಾನುಭಾವರ ಚರಿತ್ರೆಗಳನ್ನು ಕೇಳಿ ಅವರಂತೆ ಮೋಕ್ಷಾಪೇಕ್ಷಿಯಾಗುವನು. ಸ್ವಪ್ನದಲ್ಲಿ ಸೋಮನಾಥನು ಬಂದು ಮಲ್ಲಿಪಟ್ಟಣಕ್ಕೆ ಹೋಗಬೇಕೆಂದು ಅಪ್ಪಣೆ ಕೊಡುವನು. ಅರಸೊತ್ತಿಗೆಯನ್ನು ಬಿಟ್ಟು ಪತ್ನಿ ಪುತ್ರ ಸಮೇತನಾಗಿ ಭೈರವರಸನು ಮಲ್ಲಿ ಪಟ್ಟಣಕ್ಕೆ ಬರುವನು. ಭೈರವ ರಾಜನು ಹಾಲ ಸೋಮೇಶ್ವರನ ರೂಪದಿಂದ ಬಂದ ಸೋಸಲೆಯ ಸೋಮನಾಥನಿಂದ ದೀಕ್ಷೆಯನ್ನು ಪಡೆದು ಸೋಸಲೆಗೆ ತೆರಳುವನು. ಅಲ್ಲಿ ಶಿವಭಕ್ತಿಯಲ್ಲಿ ಲೀನನಾಗಿ ಬಸವಣ್ಣನಂತೆ ಅನೇಕ ಪವಾಡಗಳನ್ನೆಸಗುವನು. ಈತನ ಭಕ್ತಿಯ ಖ್ಯಾತಿ ದಶದಿಕ್ಕುಗಳನ್ನು ವ್ಯಾಪಿಸುವುದು. ಸೋಮನಾಥನೇ ನಾನಾ ರೂಪದಿಂದ ಬಂದು ಅದನ್ನು ಪರೀಕ್ಷೆ ಮಾಡುವನು. ಆ ದಿವ್ಯಗಳೆಲ್ಲ ಭೈರವ ದೇವನ ಭಕ್ತಿ ಪುಟವಿಟ್ಟ ಕುಂದಣದಂತೆ ತೊಳಗಿ ಬೆಳಗುವುದು. ಕೊನೆಯಲ್ಲಿ ಸೋಮನಾಥನು ಭೈರವರಸನನ್ನು ಕೈಲಾಸಕ್ಕೆ ಕರೆಯಲು, ಈಗ ಬಾರನೆಂದು ಹೇಳಿ ಗಣಾಧೀಶ್ವರರ ಸನ್ನಿಧಿಯಲ್ಲಿ ತಾವು ಶಿವಸಾಯುಜ್ಯವನ್ನು ಪಡೆಯುವ ದಿನವನ್ನು ವಿವರಿಸುವರು. ಎಲ್ಲರ ಸಮ್ಮುಖದಲ್ಲಿ ಗಣವರರಿಗೆ ಬೇಡಿದುದನ್ನು ಮನದಣಿಯವಿತ್ತು ಅವರ ಆಶೀರ್ವಾದ ಪಡೆದು ಸೋಮನಾಥನು ಧ್ಯಾನಪರನಾಗಿ ಲಿಂಗೈಕ್ಯನಾಗುವನು.

      ಕೃತಿಯ ಮೂಲವ್ಯಕ್ತಿ ಭೈರವೇಶ್ವರನ ಕಥೆ ಕವಿ ಕಲ್ಪಿತವಾದುದಲ್ಲ, ಐತಿಹಾಸಿಕವಾದುದು ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ. ಕಾವ್ಯದಲ್ಲಿ ಉಲ್ಲೇಖಿತವಾಗಿರುವ ಮೋಪೂರು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂಡ್ಲು ತಾಲ್ಲೋಕಿನಲ್ಲಿದೆ. ಅಲ್ಲಿ ಭೈರವ ಹೆಸರಿನ ದೇವಾಲಯ ಇದೆ. ಮೋಪೂರು ಚೋಳರ ಆಧಿಪತ್ಯಕ್ಕೆ ಒಳಪಟ್ಟಿದ್ದು ಮಾಂಡಳೀಕರು ಆಳ್ವಿಕೆ ನಡೆಸುತ್ತಿದ್ದುದರ ಬಗೆಗೆ ಶಾಸನಗಳಿಂದ ತಿಳಿದುಬರುತ್ತದೆ. ಮೋಪೂರಿನಲ್ಲಿ ಮಾಂಡಳಿಕ ಮನೆತನಕ್ಕೆ ಸಂಬಂಧಪಟ್ಟವನಾದ ಭೈರವರಾಜನು ಶಿವಭಕ್ತಿಯ ಉತ್ಕಟತೆಯಿಂದಲೋ ಅಥವಾ ಬೇರಾವ ಕಾರಣದಿಂದಲೋ ರಾಜ್ಯವನ್ನು ತೊರೆದು ಕನ್ನಡ ನಾಡಿಗೆ ಅಂದರೆ ಮಲ್ಲಿಪಟ್ಟಣ, ಸೋಸಲೆಯ ಕಡೆಗೆ ಪಯಣಿಸಿದಂತೆ ಕಂಡುಬರುತ್ತದೆ. ಹೀಗಾಗಿ ಈ ಕೃತಿಯಲ್ಲಿ ಬರುವ ಮೋಪೂರು ಐತಿಹಾಸಿಕ ಸ್ಥಳವಾಗಿದ್ದು; ಅಲ್ಲಿರುವ ಭೈರವ ದೇವಾಲಯದ ಬಗೆಗೆ ಶಾಸನಗಳ ಉಲ್ಲೇಖದ ಜೊತೆಗೆ ಈ ಕಾವ್ಯದ ಆರಂಭದಲ್ಲಿಯೂ ಉಲ್ಲೇಖಿತವಾಗಿದೆ. ಈ ಕೃತಿಯ ಪ್ರಾರಂಭದ ಪದ್ಯಗಳಲ್ಲಿಯ ವಿವರಣೆಯಿಂದ ಮೋಪೂರು ರಾಜಧಾನಿಯಾಗಿದ್ದು ಅಲ್ಲಿಯ ದೊರೆ ಸಂಗಮರಾಜ, ಆತನ ಮಗನೇ ಭೈರವನೆಂದು ತಿಳಿದುಬರುತ್ತದೆ. ಈ ಕೃತಿಯಲ್ಲಿಯ `ಬಸವಾದಿ ಪ್ರಮಥರು ಮರ್ತ್ಯಲೋಕದ ಮಣಿಹವಂ ಪೂರೈಸಿ ಕೈಲಾಸಕ್ಕೆಯ್ದಿ ಘನಸುಖದಿಂದಿರಲು, ಇತ್ತ ಭೂಲೋಕದಲ್ಲಿ ವೀರಶೈವಾಚಾರವೆಲ್ಲವಂ ಮಸುಳಿಸಿ ಪೋಗಲು ಕಾಲಸಂಹರನೆಂಬ ಗಣಾಧೀಶ್ವರನನ್ನು ಶಿವನು ಕರೆದು ಭೂಲೋಕಕ್ಕೆ ಹೋಗಿ ವೀರಶೈವಾಚಾರವನುಂಟು ಮಾಡಿ ಪವಾಡಗಳ ಗೆಲಿದು ವಾದಮಂ ಖಂಡಿಸಿ ಗೆಲಿದು ನೀನಿರುತಿರಲ್ಕೆ ನಾಂ ಬಂದು ಕೈಲಾಸಕ್ಕೆ ಕರೆದುಕೊಂಡು ಬಪ್ಪೆನು, ಪೋಗೆನಲು' ಆ ವ್ಯಕ್ತಿಯೇ ಭೈರವದೇವನಾಗಿ ಭೂಲೋಕದಲ್ಲಿ ಅವತರಿಸುತ್ತಾನೆ ಎಂದಿದೆ. ಈ ಹೇಳಿಕೆಯಲ್ಲಿಯ ಅಂಶಗಳನ್ನು ಸಾಂಕೇತಿಕವಾಗಿ ಐತಿಹಾಸಿಕ ಹಿನ್ನೆಲೆಯಲ್ಲಿ ಪರಿಗಣಿಸುವುದಾದರೆ `ಬಸವಾದಿ ಪ್ರಮಥರ ನಂತರದ ಕಾಲದವನು ಎಂಬುದು ವ್ಯಕ್ತವಾಗುತ್ತದೆ. ಭೈರವದೇವನು ೧೨ನೇ ಶತಮಾನದ ಕೊನೆಯ ಭಾಗದಲ್ಲಿ ಜನಿಸಿದ್ದು ಹಾಲ ಬಸವೇಶ್ವರನೆಂಬ ಗುರುವಿನಿಂದ ಲಿಂಗದೀಕ್ಷೆಯನ್ನು ಪಡೆದಿದ್ದಾನೆ' ಎಂದೆನಿಸುತ್ತದೆ.

      ಭೈರವದೇವನು ನೆಲೆನಿಂತ ಸಾಸಲು ಅಥವಾ ಸೋಸಲೆಯು ಈಗಿನ ಮಂಡ್ಯಜಿಲ್ಲೆಯ ಕೆ.ಆರ್.‌ ಪೇಟೆ ತಾಲ್ಲೋಕಿನಲ್ಲಿ ಕಂಡುಬರುವ ಸಾಸಲು ವೇ ಆಗಿದೆ. ಇಲ್ಲಿ ಭೈರವರಾಜನ ದೀಕ್ಷಾಗುರುವಾದ ಹಾಲ ಸೋಮೇಶನ ದೇವಾಲಯ ಇದೆ. ಸೋಮನಾಥ ದೇವಾಲಯದಲ್ಲಿರುವ ಕೆಲವು ವಿಗ್ರಹಗಳಲ್ಲಿ ಕುದುರೆ ಮೇಲೆ ಕುಳಿತ ಒಬ್ಬ ರಾಜನ ಮೂರ್ತಿ ಇದ್ದು, ಅದು ಭೈರವ ರಾಜನಿಗೆ ಸಂಬಂಧಪಟ್ಟದ್ದಾಗಿರಬೇಕೆಂಬ ಅಭಿಪ್ರಾಯ ಇದೆ. ಸಾಸಲುವಿನಲ್ಲಿ ಈಗಲೂ ಭೈರವದೇವನು ಕೈಲಾಸಕ್ಕೆ ಹೋದ ಸ್ಥಳವನ್ನು, ಆತನ ರಾಣಿ ಮಹಾದೇವಿಗೆ ಪ್ರಸಾದ ದೊರೆಯುತ್ತಿದ್ದ ಸ್ಥಳವನ್ನು ಅಲ್ಲಿಯ ಜನ ತೋರಿಸುತ್ತಾರೆ. ಈ ಅಂಶಗಳಿಂದಾಗಿ ಭೈರವ ದೇವನು ಮಲ್ಲಿಪಟ್ಟಣದಿಂದ ಸಾಸಲುವಿಗೆ ಬಂದು ನೆಲೆಸಿದ್ದು ಅನೇಕ ಪವಾಡಗಳನ್ನು ಎಸಗಿರಬೇಕು ಎಂದೆನಿಸುತ್ತದೆ.

      ಭೈರವದೇವನು ಐತಿಹಾಸಿಕ ವ್ಯಕ್ತಿಯಾಗಿದ್ದು ರಾಜರಲ್ಲಿ ಶರಣ, ಶರಣರಲ್ಲಿ ರಾಜನಾಗಿ ಜನತೆಯಲ್ಲಿ ಭಕ್ತಿಭಾವನೆಯನ್ನು ಬೀರಿ ಲಿಂಗಾಂಗ ಸಾಮರಸ್ಯವನ್ನು ಪಡೆದವನಾದ್ದರಿಂದಲೇ ಏನೋ ಭೈರವೇರ್ಶವರನ ಕಥೆ ನಾಡಿನಾದ್ಯಂತ ಹಬ್ಬಿದ್ದು, ಈತನ ಹೆಸರಿನಲ್ಲಿ ಕಾವ್ಯಗಳು ಹುಟ್ಟಿಕೊಳ್ಳಲು ಕಾರಣವಾಗಿವೆ ಎಂದೆನಿಸುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಭೈರವರಸನನ್ನು ಕುರಿತು ಕಾಲಾನುಕ್ರಮದಲ್ಲಿ ಒಟ್ಟು ಆರು ಕೃತಿಗಳು ರಚನೆಯಾಗಿವೆ.

 

ಕ್ರ.ಸಂ        ಕವಿ                     ಕೃತಿ        ಕಾಲ        ಸ್ವರೂಪ

೧     ಕಿಕ್ಕೇರಿಯ ನಂಜುಂಡಾರಾಧ್ಯ    ಭೈರವೇಶ್ವರ ಕಾವ್ಯ     ಕ್ರಿ.ಶ.೧೫೫೦     ಮಿಶ್ರ ಷಟ್ಪದಿ

೨     ಕುಮಾರ ಚನ್ನಬಸವ   ಸಾಸಲ ಭೈರವೇಂದ್ರ ಚರಿತ್ರೆ     ಕ್ರಿ.ಶ.೧೫೫೦     ---

೩     ಶಾಂತಲಿಂಗ ದೇಶಿಕ    ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಕ್ರಿ.ಶ.೧೬೭೨  ಗದ್ಯ

೪     ಉತ್ತರ ದೇಶದ ಬಸವಲಿಂಗ    ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕಥೆಗಳು ಕ್ರಿ.ಶ.೧೬೭೮-೨೯ ಗದ್ಯ

೫     ಸಿದ್ಧಲಿಂಗ ಶಿವಯೋಗಿ  ಭೈರವೇಶ್ವರ ಪುರಾಣ   ಕ್ರಿ.ಶ.೧೭೩೦     ಚಂಪೂ

೬     ಗುರುಚೆನ್ನಬಸವೇಶ್ವರ ಶಿಷ್ಯಕೃತ   ಭೈರವೇಶ್ವರ ಪವಾಡ    ---  ತಾರಾವಳಿ

        (ಸೋಮೆಕಟ್ಟೆ ಚೆನ್ನವೀರಸ್ವಾಮಿ)

 

      ಈ ಆರುಕೃತಿಗಳಲ್ಲಿ ೩ ಕಾವ್ಯಗಳು, ಒಂದು ತಾರಾವಳಿ ಹಾಗೂ ಎರಡು ಸಂಕಲಿತ ಗದ್ಯ ಕೃತಿಗಳಾಗಿವೆ. ಈ ಗದ್ಯಕೃತಿಗಳು ಭೈರವೇಶ್ವರನ ಕಥೆಯನ್ನು ವಿಸ್ತರಿಸುವ ಕಥಾಮಣಿ ಮತ್ತು ಕಥಾಸಾಗರಗಳಾಗಿವೆ. ಈ ಗದ್ಯಕೃತಿಗಳಲ್ಲಿ ಮೊದಲನೆಯದು ಶಾಂತಲಿಂಗ ದೇಶಿಕನ ಕೃತಿಯಾಗಿದೆ.

ಕೃತಿಯ ಆಕರಗಳು: ಬೇರೆ ಬೇರೆ ಭಾಷೆಗಳಲ್ಲಿಯ ಪ್ರಾಚೀನ ಕಾವ್ಯ ಪುರಾಣಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಐತಿಹಾಸಿಕ ಹಾಗೂ ಪುರಾಣ ಪುರುಷರಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಿ ಗದ್ಯ ಮತ್ತು ಪದ್ಯ ಕಾವ್ಯಗಳಲ್ಲಿ ವಿವರಿಸುವ ಒಂದು ಪದ್ಧತಿಯು ಕನ್ನಡ ಸಾಹಿತ್ಯದಲ್ಲಿ ಪರಂಪರೆಯಾಗಿ ಬೆಳೆದಿದೆ. ಜೈನಧರ್ಮದ ಸಾಹಿತ್ಯದಲ್ಲಿ ವಡ್ಡಾರಾಧನೆ (ಆರಾಧನಾ ಕರ್ನಾಟ ಟೀಕಾ), ಚಾವುಂಡರಾಯ ಪುರಾಣ, ನೊಂಪಿಯ ಕತೆಗಳು, ದೇವಚಂದ್ರನ ರಾಜಾವಳಿ ಇತ್ಯಾದಿ ಈ ತೆರನಾದ ಕಾವ್ಯಗಳು ಕಂಡುಬಂದರೆ; ವೀರಶೈವ ಸಾಹಿತ್ಯದಲ್ಲಿ ಹರಿಹರನ ರಗಳೆಗಳು, ಭೀಮಕವಿಯ ಬಸವ ಪುರಾಣ, ಗುಬ್ಬಿಯ ಮಲ್ಲಣಾರ್ಯರ ವೀರಶೈವಾಮೃತ ಮಹಾಪುರಾಣ, ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ಶೂನ್ಯಸಂಪಾದನಾ ಕೃತಿಗಳನ್ನು ಉದಾಹರಿಸಬಹುದು. ವೀರಶೈವ ಕಾವ್ಯ-ಪುರಾಣಗಳು ಹಾಗೂ ಇನ್ನಿತರ ವೈದಿಕ ವಾಙ್ಮಯದ ಪುರಾಣಗಳನ್ನು ಆಧರಿಸಿ ಶಾಂತಲಿಂಗದೇಶಿಕನು ಈ ಕೃತಿಯನ್ನು ಸಂಕಲಿಸಿದ್ದಾನೆ. ಕವಿಯ ಈ ಸಂಕಲಿತ ಕೃತಿಯಲ್ಲಿ ಪೂರ್ವದ ಕಾವ್ಯ-ಪುರಾಣಗಳಲ್ಲಿಯ ಕಥೆಗಳನ್ನು ಸಂಗ್ರಹಿಸಿ ಗದ್ಯ ಪ್ರಕಾರದಲ್ಲಿ ಹೇಳ ಹೊರಟಿದ್ದಾನೆಯೇ ಹೊರತು ಕಲ್ಪಿತ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ.

      ಈ ಕೃತಿಯು ತನ್ನ ಕಥಾಗರ್ಭದಲ್ಲಿ ಅಡಗಿಸಿಕೊಂಡಿರುವ ನೂತನ ಪುರಾತನ ಶಿವಶರಣರಿಗೆ ಸಂಬಂಧಿಸಿದ ಸಂಗತಿಗಳಿಂದಾಗಿ ಇಂದಿಗೂ ವೀರಶೈವ ಸಾಹಿತ್ಯ-ಸಂಸ್ಕೃತಿಯನ್ನು ಅಧ್ಯಯನ ಮಾಡುವ ಆಸಕ್ತರಿಗೆ ಮೆಚ್ಚಿಕೆಯಾಗಿದೆ. ಅಪ್ಪಟ ಶಿವಭಕ್ತ ಭೈರವ ದೇವನ ಚರಿತ್ರೆಯನ್ನು ಹೇಳಹೊರಟ ಕವಿಯು ಅದರ ಜೊತೆಗೆ ಅಸಂಖ್ಯಾತ ಶಿವಭಕ್ತರ ಕಥೆಯನ್ನು ಎಣೆದಿದ್ದಾನೆ. ಕೃತಿಯಲ್ಲಿಯ ಆಂತರಿಕ ಹೇಳಿಕೆಯಿಂದ ಕವಿಯು ಕೃತಿ ರಚಿಸಿರುವಲ್ಲಿ ಕಲೆಹಾಕಿರುವ ಆಕರ ಕೃತಿಗಳ ಬಾಹುಳ್ಯ ವ್ಯಕ್ತವಾಗುತ್ತದೆ.

      ಶಾಂತಲಿಂಗ ದೇಶಿಕನು ``ಸಕಲ ವೀರಮಾಹೇಶ್ವರರುಗಳ ನಿರೂಪದಿಂದ ಭೈರವದೇವನ ಕಾವ್ಯದಲ್ಲಿ ಸೂಚನೆಯಾಗಿರ್ದ ಕಥೆಗಳನುವಿಶಾಲವಾಗಿ ಬರೆದು ಸಂಗ್ರಹಿಸೆಂದು ನಿರೂಪಿಸೆ ಅವರ ಮಾಹಾನುಭಾವ ನಿರೂಪವಿಡಿದು ಮೂಲದರಿಷ್ಟವಾದ ಕಥೆಗಳಿಗೆ ದೃಷ್ಟವಾದ ಉಪಕಥೆಗಳನು ಸಂಗ್ರಹಿಸುವದಕ್ಕೆ ಸಕಲ ವೇದಾಗಮ ಪುರಾಣ ಇತಿಹಾಸಂಗಳಲ್ಲಿ. . . .ಲಕ್ಷಣಶುದ್ಧವಾಗಿ ಪೇಳಲು ಪಟ್ಟ ವೀರಮಾಹೇಶ್ವರರ ಸಿದ್ಧಾಂತ, ವೀರಮಾಹೇಶ್ವರ ತಂತ್ರ, ವೀರಮಾಹೇಶ್ವರರಾಚಾರಸಂಗ್ರಹ, ಸೋಮನಾಥನ ಭಾಷ್ಯೆ, ಪ್ರಾಕೃತ  ಇಂತೀ ಭಾಷೆಗಳಿಂದ ಸಂಗ್ರಹಿಸಿದ ಪ್ರಕರಣಗಳಲ್ಲಿ ಪೇಳುತ್ತಿರ್ದ ಕಥೆಗಳನ್ನು, ಭಾರತ, ಮಹಾಭಾರತ, ಆರಾಧ್ಯ ಚಾರಿತ್ರ, ನನ್ನಯ್ಯನ ಕಾವ್ಯ, ಬಸವಚಾರಿತ್ರ, ಸಿಂಗಿರಾಜನ ಕೃತಿ ಮೊದಲಾದ ಸಮಸ್ತ ಸಾಂಗತ್ಯ ಚಾರಿತ್ರದ ಕಥೆಗಳಿಗೆ ಮಾತೃ ಸ್ಥಾನವಾಗಿಪ್ಪುದು. ಬಸವಾದಿ ಪ್ರಮಥರು ನಿರೂಪಿಸಿದ ಶೂನ್ಯಸಂಪಾದನೆ ಮೊದಲಾದ ವಚನಾಮೃತಸಾಗರದಲ್ಲಿ ಪೇಳುತ್ತಿರ್ದ ಕಂದ, ವೃತ್ತ, ಗ್ರಂಥ, ಸ್ಮೃತಿ-ಶೃತಿ, ಪದ-ಪದ್ಯ, ವಚನ, ರಗಳೆ, ಷಟ್ಪದ, ಪಂಚರತ್ನಸ್ವರೂಪದ ತಾರಾವಳಿಗಳು ಮೊದಲಾದವರಲ್ಲಿ ಹೇಳಲ್ಪಟ್ಟ ಕಥೆಗಳಿಂ ನೋಡಿ ಪುರಾತನ ವಚನದ ಮೇಲೆ ಸಂಧಿ ವಿಡಿದು ಕಾವ್ಯದ ಕಥೆ ಸಂಗ್ರಹಕ್ಕೆ ಬೇಕಾದವಂ ತೆಗೆದುಕೊಂಡು ಸಂಗ್ರಹಿಸಿದೆನು." ಕವಿಯ ಈ ಹೇಳಿಕೆಯ ಹಿನ್ನೆಲೆಯಲ್ಲಿ ಈ ಸಂಕಲನ ಕೃತಿಯಲ್ಲಿ ಬಂದಿರುವ ಕಥೆಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಬಹುದಾಗಿದೆ.

೧. ಕನ್ನಡ ನಾಡಿನಲ್ಲಿ ಬಾಳಿಬೆಳಗಿದ ಶಿವಶರಣರು ಹಾಗೂ ಶಿವಕವಿಗಳಿಗೆ ಸಂಬಂಧಿಸಿದ ಕಥೆಗಳು.

೨. ತಮಿಳುನಾಡು, ಗೂರ್ಜರ ಮೊದಲಾದ ನಾಡಿನ ಪುರಾತನ ಶಿವಭಕ್ತರ ಕಥೆಗಳು

೩. ಶಿವನ ಪಂಚವಿಂಶತಿ ಲೀಲೆಗಳು

೪. ರಾಮಾಯಣ, ಮಹಾಭಾರತ, ಹದಿನೆಂಟು ಪುರಾಣ, ಪಂಚತಂತ್ರ, ಭತ್ತಿಸಪುತ್ಥಳಿ, ಇಪ್ಪತ್ತೆಂಟು ಆಗಮ ಮುಂತಾದ ಭಾರತೀಯ ವಾಙ್ಮಯದಿಂದ ಎತ್ತಿಕೊಂಡ ಕಥೆಗಳು ಈ ಕಥಾಸಾಗರವನ್ನು ನಿರೂಪಿಸುವಲ್ಲಿ ಕವಿಯ ಬಹು ಶೃತತ್ವ, ಶ್ರಮ, ಪಾಂಡಿತ್ಯ, ವ್ಯುತ್ಪತ್ತಿ ಹಾಗೂ ಲೋಕಾನುಭವ ವ್ಯಕ್ತಗೊಂಡಿದೆ.

 ಕೃತಿಯ ಕಥಾವೈಶಿಷ್ಟ್ಯ: ಈ ಕೃತಿಯನ್ನು ಆರ್.ಸಿ.ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ ಅವರು ಹನ್ನೆರಡು ಹಸ್ತಪ್ರತಿಗಳನ್ನುಪಯೋಗಿಸಿಕೊಂಡು ಎರಡು ಸಂಪುಟಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ೧೯೬೪ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ಪ್ರಾರಂಭದಲ್ಲಿ ಕವಿಯು ಭೈರವ ರಾಜನು ಮಾಡಿದನೆನ್ನಲಾದ ಶಿವಪಾರಮ್ಯವನ್ನು ಸಾರುವ ಹನ್ನೊಂದು ಪವಾಡಗಳನ್ನು ನಿರೂಪಿಸಿದ್ದಾನೆ. ಒಟ್ಟು ೫ ಸಂಧಿಗಳಲ್ಲಿ ಶಿವಶರಣರು ಹಾಗೂ ಶಿವಕವಿಗಳು ಹಾಗೂ ಇತರೆಯವರಿಗೆ ಸಂಬಂಧಿಸಿದ ೫೧೮ ಕಥೆಗಳನ್ನು ಗದ್ಯರೂಪದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಪ್ರತಿಯೊಂದು ಪ್ರಸಂಗವನ್ನು ನಿರೂಪಿಸುವಾಗ ಮೊದಲಿಗೆ ಒಂದು ಅಂಶ ಷಟ್ಪದಿಯಲ್ಲಿ ಪ್ರಸಂಗದ ಸಾರವನ್ನು ನಿರೂಪಿಸಿ ನಂತರ ಗದ್ಯದಲ್ಲಿ ವಿಸ್ತಾರವಾಗಿ ನಿರೂಪಿಸಿದ್ದಾನೆ. ೪ನೇ ಸಂಧಿಯಲ್ಲಿ ಭೈರವಾಂಕನಿಗೆ ಸಂಬಂಧಿಸಿದಂತೆ ೨೨ ಕತೆಗಳನ್ನು ಅದಕ್ಕೆ ಪೂರಕವಾದ ನೂತನ-ಪುರಾತನ ಶರಣರು ಹಾಗೂ ಶಿವಕವಿಗಳಿಗೆ ಸಂಬಂಧಿಸಿದ ನೂರಾರು ಉಪಕತೆಗಳನ್ನು ಹೊಂದಿಸಿ ಏಕರೂಪತೆಗೆ ಭಂಗ ಬರದಂತೆ ನಿರೂಪಿಸಿದ್ದಾನೆ.  ಈ ಸಂಕಲಿತ ಕೃತಿಯ  ಎರಡು ಸಂಪುಟಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿ ಸಂಗತಿಗಳು  ಸುಮಾರು  ೨೫ ಕಡೆ ಪ್ರಸ್ತಾಪಿಸಲ್ಪಟ್ಟಿವೆ

    ಈ ಸಂಕಲನ ಕೃತಿಯಲ್ಲಿ ಬಸವಣ್ಣನವರಿಗೆ ಸಂಬಂಧಿಸಿದ ಕತೆಗಳನ್ನು ನಾಲ್ಕು ರೀತಿಯಾಗಿ ವರ್ಗೀಕರಿಸ ಬಹುದಾಗಿದೆ.

 ೧.ಬಸವಣ್ಣನಬಾಲ್ಯ ಜೀವನಕ್ಕೆ ಹಾಗೂಅಂತ್ಯಜೀವನ ಹಾಗೂ ಇತರೆ ಘಟನೆಗಳಿಗೆ ಸಂಬಂಧಿಸಿದ ಕಥೆಗಳು

 ೨.ಬಸವಣ್ಣನವರ ವಚನಗಳ ಆಶಯದ ಹಿನ್ನೆಲೆಗನುಗುಣವಾಗಿ ಮೂಡಿ ಬಂದಿರುವ ಕತೆಗಳು

 ೩.ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಪವಾಡಗಳಿಗೆ ಪೂರಕವಾಗಿ ಮೂಡಿ ಬಂದಿರುವ ಕತೆಗಳು           ೪.ಇತರೆ  ಸಮಕಾಲೀನ ಶರಣರ ಕಥೆಯೊಂದಿಗೆ ಬೆರೆತ ಬಸವಣ್ಣನವರ ಸಂಗತಿಗಳು

೧.ಬಸವಣ್ಣನ  ಬಾಲ್ಯ ಜೀವನ ಹಾಗೂ ಇತರೆ ಘಟನೆಗಳಿಗೆ  ಸಂಬಂಧಿಸಿದ ಕಥೆಗಳು:

   ಬಸವಣ್ಣನವರ ಬಾಲ್ಯ ಜೀವನ, ಅವರು ಕಲ್ಯಾಣದಲ್ಲಿ ಬಿಜ್ಜಳನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗಿನ ಸಂದರ್ಭ ಹಾಗೂ ಇವರ ಜೀವಿತಾವಧಿಯ ಕೊನೆಯ ಕಾಲದ ವಿವರಗಳನ್ನು ಕವಿಯು ತಾನು ಕಿವಿಯಾರೆ ಕೇಳಿದ ಹಾಗೂ ಪೂರ್ವದ ಕಾವ್ಯ-ಪುರಾಣ ಸಂಕಲನ ಕೃತಿಗಳನ್ನು ಆಧರಿಸಿ ಗದ್ಯರೂಪದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಇಲ್ಲಿಯ ವಿವರಗಳು ಬಸವಣ್ಣನ ಬಗೆಗೆ  ಕವಿಯ ಕಾಲಕ್ಕೆ ಯಾವ ರೀತಿ ಜನಮನದಲ್ಲಿ ಬೇರೂರಿದ್ದವು ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಸಂಗ್ರಹ ಕತೆಯಲ್ಲಿಯೂ ಕವಿಯು ಬಸವಣ್ಣನ ಬಗೆಗೆ ತಾನು ಎಷ್ಟು ಕೇಳಿ ಓದಿ ತಿಳಿದಿದ್ದನೋ  ಆ ಎಲ್ಲಾ ಸಂಗತಿಗಳನ್ನು ಈ ಸಂಕಲನದಲ್ಲಿ ಗದ್ಯರೂಪದಲ್ಲಿ ಕೊಡಮಾಡಿದ್ದಾನೆ. ಕೆಲವೆಡೆ ಬಸವಣ್ಣನಿಗೆ ಸಂಬಂಧಿಸಿದ ಹಾಗೆ ಪೂರ್ವದ ಕಾವ್ಯ ಪುರಾಣಗಳಲ್ಲಿ ಇಲ್ಲದ ನೂತನ ಸಂಗತಿಗಳು ಕಂಡು ಬಂದಿವೆ. ಬಸವಣ್ಣನ ಬಾಲ್ಯಜೀವನಕ್ಕೆ ಸಂಬಂಧಿಸಿದ  ಹಾಗೂ ಇತರೆ ಸಂಗತಿಗಳನ್ನು ಆರು ಪ್ರಸಂಗಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ.

೧.ಬಸವಗೆ ದೀಕ್ಷೆಯನಿತ್ತ ಕೂಡಲ ಸಂಗನಂತೆ ಎಂಬುದಕ್ಕೆ ಕಥೆ ಎಂಬ ಪ್ರಸಂಗದಲ್ಲಿ ಬಸವನಿಗೆ ಕಪ್ಪಡಿಯ ಸಂಗಮನಾಥನು ದೀಕ್ಷೆಯನ್ನಿತ್ತ ವಿವರವಿದೆ.

   ಅನಾದಿ ನಂದೀಶ್ವರನೆ ಶಿವನ ನಿರೂಪದಿಂದ ಮಂಡಿಗೆ ಮಾದರಸ ಮಾದಲಾಂಬಿಕೆಯರ ಭಕ್ತಿಗೆ ಪ್ರಸನ್ನವಾದಲ್ಲಿ, ಕೂಡಲ ಸಂಗಮೇಶ್ವರನೆಂಬ ಪರಶಿವ ತಾನೆ ಗುರುಮೂರ್ತಿಯಾಗಿ ಬಂದು ಶಿಶು ಜನಿತವಾದಾಗ ಬಾಲ್ಯೋಪಚಾರವ ಮಾಡುವದಕ್ಕೆ ಮುನ್ನವೇ ಜನರರಿಯದಂತೆ ಅಂಗಕ್ಕೆ ಲಿಂಗೋಪದೇಶವಂ ಮಾಡಿ, ಹಸ್ತವಂ ಮಸ್ತಕದ ಮೇಲಿಟ್ಟು, ಮಂತ್ರೋಪದೇಶವಂ ಮಾಡಿ, ಭಸ್ಮ ರುದ್ರಾಕ್ಷೆಯ ಸಾಂಗವಂ ಮಾಡಿ ಬಸವನೆಂಬ ಪೆಸರಿಟ್ಟು, ಬಳಿಕ ಮಾತಾಪಿತರಿಗೆ ಎಚ್ಚರದೋರಲಾಗ ಲಿಂಗಸಂಬಂಧವಾಗಿಪ್ಪ ಶಿಶುವಂ ಕಂಡು ಮಾದರಸ ಮೊದಲಾದವರಚ್ಚರಿವಡುವಾಗ ಸಂಗಮನಾಥ ಚರರೂಪ ಧರಿಸಿ ಮತ್ತೆ ಬಂದು ಅಕ್ಕನಾಗಮ್ಮ ಮೊದಲಾದವರಿಗೆ ಪೇಳಿದನು: ಕಪ್ಪಡಿಯ ಸಂಗಮನಾಥ ನಾನು ದೀಕ್ಷೆಯನಿತ್ತೆನು, ಬಸವ ನಾಮದ ಶಿಶುವಿಗೆ ಲಿಂಗಪ್ರಸಾದವಲ್ಲದೆ ಅನ್ಯವೆ ಕೊಡಬೇಡಾ ಎಂದಾಣೆಯನ್ನಿಕ್ಕಿ ನಂದೀಶ್ವರನ  ಪೂರ್ವವನವರಿಗೆ  ಪೇಳಿ ಅವರಿಂದ ಪೊಡಮಡಿಸಿಕೊಂಡು ಪೋದ ಸಂಗಮನಾಥನು. ಇತ್ತಕ್ಕನಾಗಮ್ಮನು ಗುರು ಮೂರ್ತಿ ಪೇಳಿದ ಕ್ರೀಯವ ನಡೆಸುತ್ತ ಬಸವನೆಂಬ ನಾಮವನೆ ಕರವುತ್ತಿರ್ದರು.( ಪು.೮೨ ಭಾಗ .೨) ಬಸವಣ್ಣನವರ ಜನನದ ಸಂಗತಿಗಳನ್ನು ಸಂಕ್ಷಿಪ್ತವಾಗಿ ವಿವಿಧ ಮೂಲಗಳಿಂದ ಸಂಗ್ರಹಿಸಿ ಕೊಟ್ಟಿದ್ದಾನೆ.

೨.ಗಂಗೆ ಬಸವಗೆ ತೆರಪು ಕೊಟ್ಟಂತೆ ಎಂಬುದಕ್ಕೆ ಕಥೆ,

  ಅನಾದಿ ನಂದೀಶ್ವರನೆ ಬಾಗವಾಡಿಯಲ್ಲಿ ಮಂಡಗೆಯ ಮಾದರಸ ಮಾದಲಾಂಬಿಕೆಯ ಭಕ್ತಿಗೆ ಪ್ರಸನ್ನವಾಗಿ ಬಸವನೆಂಬ ನಾಮದಿಂದ ಬಾಲಲೀಲೆಯಲ್ಲಿರುವಾಗ ಮಕ್ಕಳೊಡನಾಡುತ್ತ ಭೀಮಪಂಡಿತರ ಕರೆಗೆ ಬರಲಲ್ಲಿ ದಾಮೋದರನೆಂಬ ವಿಪ್ರನ ಮೂರು ವರುಷದ ಮಗಂ ಮೋಸದಿಂ ಮುಳುಗಿ ಸಾಯಲು, ಬಸವಣ್ಣ ನೂಕಿದನೆಂದು ಆಡುವ ಮಕ್ಕಳು ಸಠೆಯಂ ಪೇಳಲಾಗ, ವಿಪ್ರರೆಲ್ಲ ಹಿಡಿ ಬಡಿ ಎಂದು ಬಂದು ಬಸವಣ್ಣನ ಬೆನ್ನಟ್ಟಿ ಬರಲಾಗ, ಬಸವನು ಎನ್ನಲ್ಲಿ ತಪ್ಪಿಲ್ಲ  ಬರಿದೆ ನೀವೆನ್ನೊಡನೆ ವೈರವ ಮಾಡಬೇಡೆನುತ ಶಿಶು ಸತ್ತ ಕೆರೆಯಿಂದ ಊರ ದಾರಿಯನ್ನು ಬಿಟ್ಟು ಸಂಗಮದ ದಾರಿಯ ಮೆಟ್ಟಿ, ವಿಪ್ರರ ಧಿಕ್ಕರಿಸುತ್ತೆ ಬರಲಾಗಲವರು ಬೆನ್ನಟ್ಟಿ ಮತ್ತೆಯು ಬರುತ್ತಿರಲು ಮುಂದೆ ಕೃಷ್ಣವೇಣಿಯೆಂಬ ಪಿರಿಯ ನದಿ ತಟ ಸೂಸಿ ಬಂದಿರಲಾಗ, ಬಸವಣ್ಣ ಬರಲು ನದಿ ದಾರಿಯಂ ಬಿಡಲಾಗ, ಬಸವಣ್ಣನು ಕಪ್ಪಡಿಯ ಸಂಗಮೇಶ್ವರನೆಂಬ ಗುರುಸ್ವಾಮಿಯಿರ್ದಲ್ಲಿಗೆ ಪೋಗಲು ಜಂಗಮ ಮೂರ್ತಿಯಾಗಿ ಬಂದು ಬಸವಣ್ಣನ ಮನ್ನಿಸುವಾಗಳಿತ್ತ, ವಿಪ್ರರು ಹರುಗೋಲನೇರಿ ಸಂಗಮಕೆ ಬಂದವರು ನೆರೆದ ಜನರಲ್ಲಿ ಬಸವಣ್ಣನ ಮೇಲಿಲ್ಲದ ದೂರ್ಜನವ ಪೇಳಲಾಗ ಸಂಗಮನೇ ಬಲ್ಲಂ ನಾನಲ್ಲವೆನಲವರು, ಸಂಗಮನ ನುಡಿಸೆನಲಾಗಳವರ್ಗೆ ಸಂಗಮನಾಥ ಬಸವಂನ ಪಕ್ಷದಿಂ ನುಡಿದನು: ದಾಮೋದರನೆಂಬ ವಿಪ್ರನ ಮಗನ, ಜನಾರ್ಧನನ ಮಗ ಕೃಷ್ಣನು ಕೆರೆಗೆ ನೂಕಿದನೆಂದು ಸಂಗಮೇಶ್ವರನು ಸಾಕ್ಷಿಯ ನುಡಿಯಲಾಗ, ವಿಪ್ರರು ಭಂಗಿತರಾಗಿ ಬಸವಂಗೆ ವಂದಿಸಿ ಪೋಗಲತ್ತ, ಇತ್ತ ಬಸವಣ್ಣನು ಸಂಗಮೇಶ್ವರನಿಂದ ಕಳುಹಿಸಿಕೊಂಡು ಇಂಗಳೇಶ್ವರದಲ್ಲಿರ್ದ ಬಲದೇವ ಮಂತ್ರಿಯ ಮನೆಗೆ ಪೋದರು.  ( ಪು.೧೩೬-೧೩೭, ಭಾಗ.೨) ಬಸವ ಪುರಾಣದಲ್ಲಿ ಇಲ್ಲದ ಈ ವಿವರವನ್ನು ಬೇರೆ ಮೂಲದಿಂದ ಕಲೆಹಾಕಿ ಸಹಜವಾಗಿ ನಡೆದಿರುವ ರೀತಿಯಲ್ಲಿ  ನಿರೂಪಿಸಿದ್ದಾನೆ. ಬಸವಣ್ಣನ ಬಾಲ್ಯಜೀವನದ ಚಿತ್ರಣವು ಅತ್ಯಂತ ಸಹಜವಾಗಿ ಮೂಡಿ ಬಂದಿದೆ.

೩.ಬಲದೇವಗಳಿಗೆ ಶರಣು ಎಂಬುದಕ್ಕೆ ಕಥೆ: ಬಸವನ ಬಾಗವಾಡಿ ಇಂಗಳೇಶ್ವರವೆಂಬಗ್ರಹಾರದಲ್ಲಿ ಬಲದೇವ ಮಂತ್ರಿಯೆಂಬ ಭೂಸುರೋತ್ತಮನಾಗಿರ್ದು ವಿಪ್ರಚಾರವಂ ಬಿಟ್ಟು ವೀರಶೈವ ದೀಕ್ಷೆಯಂ ಪಡೆದಿರುತಂ ಗಂಗಾಂಬಿಕೆಯೆಂಬ ಸುತೆಯಂ ಪೆತ್ತು ಶಿವಾಚಾರ ನಿಷ್ಠೆಯಿಂದಿರಲು, ಇತ್ತಂ ಮಂಡಿಗೆಯ ಮಾದರಸ ಮಾದಲಾಂಬಿಕೆಯು ವೃಷಭನ ನೋಂಪಿಯಿಂದ ನಂದೀಶ್ವರನೇ ತಮ್ಮ ಸುತನಾಗಿರಲೆಂದು ಬೇಡಿ ಪಡೆದಿರಲು, ಆತ ಬಸವನೆಂಬ ನಾಮದಿಂದಿರುವಾಗ ತಂದೆ ಮಾದರಸ ಮುಂಜೆಗಟ್ಟುವೆನೆಂದು ಸಂಭ್ರಮಿಸಲು ಆದ ಆ ಜರದು ಬಸವನು ಮಹಾಮನೆಗೆ ಬರಲು, ಬಲದೇವನು ತನ್ನ ಸುತೆಯಂ ಬಸವಂಗೆ ಮದುವೆಯಂ ಮಾಡಲು, ಬಸವಣ್ಣನು ತನ್ನ ಸತಿ ಗಂಗಾಂಬಿಕೆ ಅಕ್ಕನಾಗಮ್ಮ ಸಹಿತ ಕಪ್ಪಡಿಯ ಸಂಗಮಕ್ಕೆ ಗುರುದರುಶನಕೆ ಬರಲು, ಅತ್ತ ಕೈಲಾಸದಲ್ಲಿ ಪ್ರಮಥರು  ಬಲದೇವನು ತನ್ನ ಸುತೆಯ ಬಸವಂಗೆ ಕೊಟ್ಟನೆಂಬ ಭಕ್ತಿಗೆ ಮೆಚ್ಚಿ ಕೈಲಾಸಕ್ಕೆ ಪೋದನು ಬಲದೇವ ಮಂತ್ರಿ. ಈ ಲಘು ಕತೆಯಲ್ಲಿ ಬಲದೇವನು ತನ್ನ ಮಗಳನ್ನು ಬಸವಣ್ಣನಿಗೆ ಕೊಟ್ಟು ಮದುವೆ ಮಾಡಿದುದಕ್ಕೆ ಕೈಲಾಸಕ್ಕೆ  ಹೋದನು ಎಂಬ ವಿವರ ಗಮನಾರ್ಹವಾದುದಾಗಿದೆ.( ಪು.೩೭೨-೭೩, ಭಾಗ.೨) ಬಸವಣ್ಣನ ಮಾವ ಬಲದೇವನು ಇಂಗಳೇಶ್ವರದಲ್ಲಿದ್ದನೆಂಬ ಸಂಗತಿಯನ್ನು ಇಲ್ಲಿ ಕೊಡ ಮಾಡಿದ್ದಾನೆ.

೪.ಬಸವರಾಜನೆಂಬುದಕ್ಕೆ ಕಥೆ

 ಕಲ್ಯಾಣದಲ್ಲಿ ಬಸವೇಶ್ವರ ದೇವರು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಚರಮೂರ್ತಿಗಳಿಗೆ ಇಚ್ಛಾಭೋಜನವ ನೀಡಿ ಹನ್ನೆರಡು ಸಾವಿರ ಪಣ್ಯಾಂಗನೆಯರಲ್ಲಿ ಭೋಗಿಪ ವಿಟ ಜಂಗಮಕ್ಕೆ ಅವರಿಚ್ಛಾಭೋಜನಕ್ಕೆ ಸಾಧನವ ನಡೆಸಿ ಷಟ್ಸ್ಥಲ ಜ್ಞಾನ ಕ್ರೀಯಿಂದಿಪ್ಪ ಚನ್ನಬಸವಣ್ಣ ಮೊದಲಾದ ಮುವತ್ತಾರು ಸಾವಿರ  ವೀರಮಾಹೇಶ್ವರರ್ಗೆ ಮನದಿಚ್ಛೆಯ ಪದಾರ್ಥವ ಬಸವಣ್ಣನರಿದು ಅವರು ಬೇಡಿದ ಮುನ್ನ ನೀಡಿ ತತ್ಕಾಲ ಬಿನ್ನಹವ ನಡಸಿ ಶೀಲವ್ರತಾಚರವುಳ್ಳವರ್ಗೆ ಅವರ ಕ್ರಿಯಾಭೋಜನಕ್ಕೆ ಪದಾರ್ಥವ ನಡಸಿ, ಚರಮೂರ್ತಿಗಳಿಗೆ ಮಾಡಿ ನೀಡಿ ಅವರೊಕ್ಕ ಮಿಕ್ಕ ಪ್ರಸಾದವನಾಯ್ದಕೊಂಡು  ಬಸವಣ್ಣನು ತಾವು ಮೊದಲಾದ ಅಂಗಸೋಬಲ ಲಿಂಗಸೋಬಲರು ಅವರಿಗೆ ತುತ್ತ ಮಾಡಿ ಊಡಿಸಿ ತಾನು ಮುವ್ವತ್ತಾರು ಸಾವಿರ ಸಮಯಚಾರದ ಭಕ್ತ ಜಂಗಮ ಸಹವಾಗಿ ಸವಿದು ಪ್ರಭು ದೇವರೆಂಬ ಮಹಾಜ್ಞಾನ ಜಂಗಮಕ್ಕೆ ತುತ್ತ ನೀಡಿ ತೃಪ್ತಿಯಾದಲ್ಲಿ, ಸಚರಾಚರ ತೃಪ್ತಿಯಾದ ಭೇದವನು ಬಿಜ್ಜಳಂಗೆ ಬೇಕನೊಡಲೊಳಗೆ ದ್ರುಷ್ಟಮಂ ತೋರಿ ಕೂಡಲಸಂಗಮೇಶ್ವರನೆಂಬ ತಮ್ಮಿಷ್ಟಲಿಂಗದಲ್ಲಿ ಬಸವಣ್ಣ ನಿರ್ವಯಲಾದರು. ( ಪುಟ.೨೬೧.ಭಾಗ೨)

೫. ಬಸವನರಸಿಯುಟ್ಟ ವಸನವ ಚರ ಬೇಡೆ ಕೊಟ್ಟನೆಂಬುದಕ್ಕೆ ಕಥೆ:ಕಲ್ಯಾಣ ಪಟ್ಟಣದಲ್ಲಿ ಬಸವದಂಡೇಶನ ಭಕ್ತಿಯಲಿ ಹನ್ನೆರಡು ಸಾವಿರ ಮಿಂಡ ಜಂಗಮವು ವೇಶಿಯರ ಮನೆಯಲ್ಲಿ ಭೋಗದೊಳಿರುವಾಗ ಅವರಿಗೆ ಸಕಲ ಪದಾರ್ಥವ ಬಸವಣ್ಣ ಕೊಟ್ಟು ಪೂಜಿಸುವಲ್ಲಿ,ಮಿಂಡ ನಾಗಯ್ಯನೆಂಬ ವಿಟ ಜಂಗಮದೇವರು ಶಿವದೇವಿಯೆಂಬ ವೇಶಸ್ತ್ರೀಯ್ಯ ಸಂಗದಲ್ಲಿರುತಂ ತಮ್ಮ ಮನೆಯ ದಾಸಿಯ ಕರದು ಬಸವೇಶ್ವರನ ಮನೆಗೆ ಪೋಗಿ ನಿಚ್ಚಂ ನಮಗೆ ಕೊಡುವ ಪಡಿ ಹೊನ್ನಂ  ಕೊಂಡು ಬಾರೆಂದು ಕಳುಹಲವಳು ಪೋಗಿ ಗಂಗಾಂಬಿಕೆಯುಟ್ಟಿರ್ದ ವಸನವಂ ಕಂಡವಳು ತಿರುಗಿ ಬಂದು ಒಡತಿಗೆಂದಳು: ಒಂದಕ್ಕಜವ ನಾ ಕಂಡೆನಕ್ಕ| ಬಸವನ ರಾಣಿಯುಟ್ಟ ಸೀರಿಗೆ ಸಮಾನವ ನೋಡಲು ಕಾಣೆ| ಶ್ರೀಗೌರಿಪಟ್ಟು, ಇಂದ್ರರಾಗ, ಉದಿಯರಾಗ, ಸಂಜೆರಾಗ, ಸರದೆ,ರಾಜಶೇಖರ, ತವರಾಜ ಮಾಂದಳಿರು, ಮರಕತ, ಭಾವಜತಿಲಕ, ಭೂತಿಲಕ, ರುದ್ರತಿಲಕ, ಚಂದ್ರಾತಪ, ಮೇಘರಂಜಿ, ಜಯರಂಜಿ, ಕಾಂಭೋಜಿ, ಸಣ್ಣ ವಡಂಜಿ, ಫಳ್ಳಿಯು,ಪಡ್ಢಾವಳಿ, ನೇತ್ರಾವಳಿ, ಚಿತ್ರಾವಳಿ, ಹರಿಣಾವಳಿ, ಪಿಂಜಾವಳಿ, ತುರುಗಾವಳಿ, ನಾಗಾವಳಿ,ಗಜಾವಳಿ, ವೃಷಭಾವಳಿ, ಗಣಾವಳಿ, ಹಂಸಾವಳಿ, ಮನುಜಾವಳಿ, ದನುಜಾವಳಿ, ಲಿಂಗಾವಳಿ ಮೊದಲಾದ ಬಣ್ಣಿಗೆಯ ಸೀರೆಗಳ ಕಂಡು ಬಲ್ಲೆವು, ಇಂತಾ ಸೀರೆಯನೆಲ್ಲಿಯು ಕಾಣೆನೆನಲಾಗ ವೇಶಿಯು ತನ್ನ ವಿಟನ ಮೋರೆಯ ನೋಡಿ ನನಗಾ ಸೀರೆಯಂ ತಂದು ಕೊಡೆನಲಾತ, ಪೋಗಿ, ಬಸವಯ್ಯ ನಿಮ್ಮ ರಾಣಿಯುಟ್ಟ ಸೀರೆಯನೆನಗೆ ಕೊಡೆನಲಾಗ, ಸಭೆಗೆ ತನ್ನ ಸತಿಯಂ ಕರಸಿ ಬಸವನು ಸತಿಯುಟ್ಟ ಸೀರೆಯ ಸುಗಿದು ಜಂಗಮ ದೇವರಿಗೆ ಕೊಡಲು ಬೆಳ್ಳಿಯ ಬೆಟ್ಟದಂತೆ ಬೀಳಲದ ಕಂಡು ಸಾಕೆನುತ ಕೊಂಡು ಪೋಗಿ ತನ್ನ ವೇಶಿಗೆ ಕೊಟ್ಟು ಸುಖದಲ್ಲಿರ್ದನಾ ಮಿಂಡ ಜಂಗಮವು. ಇತ್ತ ಗಂಗಾಂಬಿಕೆಯುಟ್ಟ ಸೀರೆಯುಟ್ಟಂತಿರ್ದುದಂ ಕಂಡು, ಗಣಾವಳಿಯು ಬಸವನ ಭಕ್ತಿಭಾವನೆ ಕುಂದದಿಲ್ಲದ ಕಾರಣ ಅರವಿಂದ ಗಂಧಿಯಭಿಮಾನ ಕುಂದಾಗದಾಯಿತೆಂದು ಕೊಂಡಾಡುತ್ತಿರ್ದರು. ( ಪು.೧೫೫. ಭಾಗ.೨) ಈ ಪ್ರಸಂಗದಲ್ಲಿ  ಕವಿಯು ತನ್ನ ಕಾಲದಲ್ಲಿ ಪ್ರಚಲಿತವಿದ್ದ ವಿವಿಧ ಬಗೆಯ ಸೀರೆಗಳ ಪ್ರಕಾರಗಳನ್ನು ಪ್ರಸ್ತಾಪಿಸಿದ್ದಾನೆ. ಈ ಪವಾಡ ಪ್ರಸಂಗದಲ್ಲಿ ಬಸವಣ್ಣ ಜಂಗಮ ಪಕ್ಷಪಾತಿ ಎಂಬುದನ್ನು ಸೂಚಿಸುತ್ತದೆ. ಬಸವಣ್ಣನು ಬೇಡಿದವರಿಗೆ ಇಲ್ಲವೆನ್ನದೆ ಬೇಡಿದ್ದುದನ್ನು ನೀಡುತ್ತಿದ್ದನು ಎಂಬುದನ್ನು ಸಂಕೇತಿಸುತ್ತದೆ. ಕವಿಯ ಕಾಲಕ್ಕೆ ಈ ಕಥೆ ಯಾವರೀತಿ ಜನಮನದಲ್ಲಿ ರೂಪುಗೊಂಡಿತ್ತೆಂಬುದನ್ನು ಗ್ರಹಿಸ ಬಹುದಾಗಿದೆ.

೬.ನೀಲಾಂಬಿಕೆ ಲಿಂಗದಲ್ಲಿ ಬೆರೆದಳು ಎಂಬುದಕ್ಕೆ ಕಥೆಯಾಗಿ ನೀಲಾಂಬಿಕೆಗೆ ಸಂಬಂಧಿಸಿದ ವಿವರಗಳನ್ನು ಕೊಟ್ಟಿದ್ದಾನೆ. ಆ ವಿವರ ಇಂತಿದೆ.  ಕಲ್ಯಾಣ ಪಟ್ಟಣದಲ್ಲಿ ನೀಲಲೋಚನೆಯಮ್ಮನು ತನ್ನ ಪತಿ ದಂಡನಾಯಕ ಸಹವಾಗಿ ಜಂಗಮ ದಾಸೋಹವ ಮಾಡಿ, ಗುರುಭಕ್ತಿ ಮಣಿಹವು ಪೂರೈಸಲು, ಬಸವಣ್ಣನು ಕಪ್ಪಡಿಯ ಸಂಗಮನಾಥನಲ್ಲಿಗೆಯ್ದಿ ಸದ್ಗುರು ಸಂಗಮನಾಥನೆಂಬ ಜಂಗಮ ಲಿಂಗದಲ್ಲಿ ಐಕ್ಯವನೆಯ್ದುವಾಗ ಹಡಪದಪ್ಪಣ್ಣನ ಕೂಡ `ನೀಲಲೋಚನೆಯ ಲಿಂಗೈಕ್ಯಕ್ಕೆ ಇಲ್ಲಿಗೆ ಬರಹೇಳೆಂದು’ ಅಪ್ಪಣ್ಣನ ಕಲ್ಯಾಣಕ್ಕೆ ಕಳುಹಿ ಕರಸಲು ನೀಲಮ್ಮ ಕೇಳಿ ` ಅಲ್ಲಿಗೆ ನನ್ನ ಬರಹೇಳಿದರೆ ಬಸವಯ್ಯನು? ಇಲ್ಲಿ ತಾನಿಲ್ಲವೆ ಸಂಗಯ್ಯನು? ಅಲ್ಲಿ ಇಲ್ಲಿ ಎಂಬ ಸಂದೇಹ ಬಲ್ಲಸುಜ್ಞಾನಿಗಳಿಗುಂಟೆ’ ಎಂದು ಹಡಪದಪ್ಪಣ್ಣಂಗೆ ಬಿನ್ನಯಿಸಿ, ತಮ್ಮ ಕರಸ್ಥಲದಲ್ಲಿಪ್ಪ ಸಂಗಯ್ಯನೆಂಬ ಇಷ್ಟಲಿಂಗದಲ್ಲಿ ಉರಿ ಕರ್ಪುರವ ಬರೆದಂತೆ ಲಿಂಗೈಕ್ಯವಾಗಲು, ಈ ಸುದ್ದಿಯ ಬಸವಣ್ಣ ಕೇಳಿ ಲಿಂಗೈಕ್ಯವಾದರು. ಎಂಬ ವಿವರವನ್ನು ದಾಖಲಿಸಿದ್ದಾನೆ. ( ಪುಟ.೪೪. ಭಾಗ-೨) ಈ ಪ್ರಸಂಗವನ್ನು ಕವಿಯು ನೀಲಲೋಚನೆಯ ಹೆಸರಿನಲ್ಲಿ ದೊರೆಯುವ ಸ್ವರವಚನವನ್ನು ಆಧರಿಸಿ ನಿರೂಪಿಸಿದ್ದಾನೆ. ಈ ಭಾಗದಲ್ಲಿ ಬಸವಣ್ಣನಿಗೆ ಸಂಬಂಧಿಸಿದ ವಿವರಗಳಲ್ಲಿ ಕೆಲವು ಸಂಗತಿಗಳು ಹೆಚ್ಚಿನದಾಗಿ ಪ್ರಸ್ತಾಪಿಸಲ್ಪಟ್ಟಿವೆ.

೨.ಬಸವಣ್ಣನವರ ವಚನಗಳ ಆಶಯದ ಹಿನ್ನೆಲೆಗನುಗುಣವಾಗಿ ಮೂಡಿ ಬಂದಿರುವ ಕತೆಗಳು:  ಈ ವರ್ಗೀಕರಣಕ್ಕೆ ಅನುಗುಣವಾಗಿ  ಮೂರುಪ್ರಸಂಗಗಳು ಕಂಡು ಬಂದಿದ್ದು ಇವುಗಳಲ್ಲಿ ಬಸವಣ್ಣನವರ ವಚನಗಳ ಛಾಯೆಯನ್ನು ಗುರುತಿಸ ಬಹುದಾಗಿದೆ.

೧.ಬೇಡುವ ಒಡೆಯರುಗಳಿಲ್ಲದೆ ಬಡವಾದೆ ಎಂಬುದಕ್ಕೆ ಕಥೆ:

    ಕಲ್ಯಾಣದಲ್ಲಿ ಬಸವಣ್ಣನು ಗುರುಲಿಂಗ ಜಂಗಮಕ್ಕೆ ದಾಸೋಹವ ಮಾಡುತ್ತ ತನು ಮನ ಧನ ಮೊದಲಾದ ಸಕಲ ಪದಾರ್ಥವ ನಿರ್ವಂಚನೆಯಿಂದ ಕೊಡುವೆನೆಂಬ ಪ್ರೀತಿಯಿಂದ ಬಸವಣ್ಣನು ಒಂದು ಗೀತವ ಹಾಡಿದನು. ಅದೆಂತೆಂದೊಡೆ”

 ಕಂದಿದೆನಯ್ಯ ಎನ್ನ ನೋಡುವರಿಲ್ಲದೆ

 ಕುಂದಿದೆನಯ್ಯ ಎನ್ನ ನುಡಿಸುವರಿಲ್ಲದೆ

 ಬಡವಾದೆನಯ್ಯ ಎನ್ನ ಬೇಡುವರಿಲ್ಲದೆ

 ಕಾಡಿ ಬೇಡುವ ಶರಣರ ತಂದು ಕಾಡಿ ಬೇಡಿಸು

 ಕೂಡಲಸಂಗಮದೇವ

ಎಂದು ವಚನವ ಬಸವಣ್ಣ ಹಾಡಲು, ಮಡಿವಾಳಯ್ಯಗಳು ಭಕ್ತರಿಂದಾ ವಚನವ ಕೇಳಿ ಕರ್ಣವ ಮುಚ್ಚಿಕೊಂಡು ಬಸವಣ್ಣನ ಭಕ್ತಿಗೆ ಹಮ್ಮು ಹುಟ್ಟಿತಲ್ಲ ಅದ ನಷ್ಟವಂ ಮಾಡಬೇಕೆಂದು ಬಸವಣ್ಣನರಮನೆಗೆ ಕೋಪದಿಂದ ಕಾಯಕಕ್ಕೆ ಮಡಿವಾಳಯ್ಯನೆಯ್ತರಲು, ಬಸವಣ್ಣನದನರಿದು ಹೆದರಿ ನಡುನಡುಗುತ್ತ ನಡೆತಂದು ಅಷ್ಟಾಂಗವೆರಗಿ ಕೈಮುಗಿದು ನಿಂದು, ಬಸವಣ್ಣನು ದೈನ್ಯದಿಂದ

 `ನಾನು ಭಕ್ತನಲ್ಲವಯ್ಯ; ನಾನು ವೇಷಧಾರಿಯಯ್ಯ

 ಕಾಟುಗ,ಕೇತುಗ ಪೋಲುಗನೆಂಬುದು ಎನ್ನ ಹೆಸರು

 ಕೂಡಲ ಸಂಗಮದೇವಾ

 ನಿಮ್ಮಶರಣರ ಮನೆಯ ಮಗ ನಾನಯ್ಯ

 ಎಂದು ಭಿನ್ನೆೈಸಿ ನಿಂದಿರಲು, ಮಡಿವಾಳಯ್ಯನು `ನೀನು ಬೇಡುವರಿಲ್ಲದೆ ಹೇಂಗೆ ಬಡವದೈ? ನಮ್ಮ ಮಹಾನುಭಾವಿಗಳ ಬಡತನದಿರವ ನಿನಗೆ ತೋರುವೆನು’ ಎಂದು ಪಾದದಿಂದುಕವ ಚೆಲ್ಲಲು, ನವರತ್ನ ರಾಸಿಯಾಗಿ ಬೆಟ್ಟದಂತೆ ಬಿದ್ದಿರಲು ಚಂದ್ರ ಸೂರ್ಯಾಗ್ನಿ ಪ್ರಕಾಶವ ಗೆಲುವ ನವರತ್ನ ರಾಸಿಯಿರಲು,ಬಿಜ್ಜಳ ಮೊದಲಾದ ಪುರಜನವು ಬಂದು ನೋಡಿ ಕೊಂಡಾಡುತ್ತಿರಲು  `ನಮ್ಮ ಕಲಿದೇವನ ಶರಣರ ಬೀಳುಡಿಗೆಯ ತೊಳೆವ ಲೆಂಕನ ಬಡತನವ ನೋಡು’ ಎಂದು ಬಸವಣ್ಣಗೆ ಪೇಳಲು, ಹಮ್ಮಳಿದು ಬಸವಣ್ಣ ವಂದಿಸಲು, ಆ ರತ್ನರಾಸಿಯ ಜಂಗಮಕ್ಕೆ ಸಮರ್ಪಿಸಿ, ಬಸವಣ್ಣಂಗೆ ನಿರಹಂಭಾವದ ಭಕ್ತಿಯಂ ಬೋಧಿಸುತ ಮಡಿವಾಳಯ್ಯಗಳು ಸುಖದಲ್ಲಿರ್ದರು.( ಪು.೩೪೭-೪೮, ಭಾಗ-೧)   ಈ ಪ್ರಸಂಗವು ಬಸವನಲ್ಲಿ ಭಕ್ತಿಯ  ಅಹಂಕಾರ ತಲೆದೋರಿದಾಗ ಅಹಂಕಾರ ನಿರಸನ ಮಾಡಿಸಿಕೊಂಡ ವಿವರವನ್ನು ಸೂಚಿಸುತ್ತದೆ.

 ೨.ಅನವರತವಾರಾರು ಬೇಡದ ಮುನ್ನೀವ ಬಸವಣ್ಣನು ಎಂಬುದಕ್ಕೆ ಕಥೆ

 ಕಳಿಂದ ದೇಸದ ರುದ್ರಾಪುರದಲ್ಲಿ ಮಹದೇವಸೆಟ್ಟಿಯೆಂಬ ಭಕ್ತರ ಮುಂದೆ ಬಸವಣ್ಣ ಹಾಡಿದ ವಚನಮಂ ಕೊಂಡಾಡಲು       `ತನುವ ಬೇಡಿದಡೀವೆ ಮನವ ಬೆಡಿದಡೀವೆ ಧನವ ಬೇಡಿದಡೀವೆ ಬೇಡು ಬೇಡು ಎಲೆ ತಂದೆ;ಕಣ್ಣ ಬೇಡಿದಡೀವೆ ಕೂಡಲಸಂಗಮದೇವ, ನೀ ಬೇಡಿದುದನಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತನರ ಮನೆಯಲ್ಲಿ.’ ಎಂಬ ವಚನಮಂ ಮಹಾದೇವ ಸೆಟ್ಟಿ ಕೇಳಿ ನಡುನಡುಗಿ ಮುನ್ನಿನ ಪುರಾತನರಾರು ಇಂತಪ್ಪ ಗೀತವ ಹಾಡಿದವರಿಲ್ಲ. ಈ ವಚನದ ಪರೀಕ್ಷೆಯಂ ನೋಡಬೇಕೆಂದು `ನಾನು ಮುತ್ತು ರತ್ನಗಳ ಬೇಡುವೆನೆಂದು’ ಬರುತ್ತಿರಲಿತ್ತ, ಸಂಗಮೇಶ್ವರನು ಆ ಭಕ್ತರು ಬರುವ ಸೂಚನೆಯಂ ಬಸವಣ್ಣಂಗೆ ಪೇಳಲು ಕೇಳಿ, ` ಇಂದೆನ್ನ ತನುವಂ ನಾಳೆನ್ನ ಮನವ ಬೇಡಿದಡೀವೆನೆಂದು ನುಡಿದಿರಲಷ್ಟಕ್ಕೆ ಮಹದೇವಸೆಟ್ಟಿಯರು ಬಂದರೆಂಬುದ ಕೇಳಿ, ಇದಿರೆದ್ದು ಪೋಗಿ ವಂದಿಸಿ ಕರತಂದು, ಸಕಲ ಸತ್ಕಾರಮಂ ಮಡಿ ದೇವಾನ್ನ ದಿವ್ಯಾನ್ನವಂ ನೀಡಿ ಸಲಿಸುವಾಗ ` ಬಸವಣ್ಣ ನಿಮ್ಮಲ್ಲಿ ನಮಗೆ ಬೇಕಾದ ವಸ್ತುವ ಬೇಡುವದಕ್ಕೆ ಬಂದೆವು’ ಎನೆ `ಬೇಡಿ ಭಕ್ತಯ್ಯಾಯೆನಲು ನುಡಿ ತಡಬಡಿಸಿ ಶಿವಾಜ್ಞೆಯಿಂ ಮುತ್ತು ರತ್ನ ಮಾಣಿಕ ಬೇಕೆಂಬುದ ಮರದು ಜೋಳ ಕಡಲೆ ತೊಗರೆಗಳ ಕೊಡಿ ಎನಲು ಅ ಮಾತಿಗೆ ಬಸವಣ್ಣ ನಗುತಲೆಂದನು: ನೀವೇನ ಬಯಸಿ ಬಂದಿದ್ದರಿ ಅದನೆ ಬೇಡಿ ಎನಲು ಆ ಭಕ್ತನು ` ಮುತ್ತುರತ್ನ ಮಾಣಿಕ ಹೊನ್ನುಗಳು ಮುವತ್ತು ಹೇರಾಗಬೇಕೆನಲು ಕೊಟ್ಟು ಕಳುಹುವದ ಕಲ್ಯಾಣದಲ್ಲಿರ್ದ ಸಕಲ ಪ್ರಮಥರೆಲ್ಲರು ಕಂಡು ಆಶ್ಚರ್ಯಮಂ ಬಟ್ಟು `ಬಯಕೆಗತ್ತ ಮುನ್ನ ಕೊಡುವ ಭಕ್ತಿಭಾವ ಕೂಡಲ ಸಂಗನು ಎಂಬ ವಚನದರ್ಥದ ಬಿರಿದು ಬಸವಣ್ಣಂಗೆ ಸಂದಿತೆಂದು ಸ್ತೋತ್ರವಂ ಮಾಡುತ್ತಿರ್ದರು. ( ಪುಟ.೩೨೧-೨೨, ಭಾಗ-೧) ಈ ಪ್ರಸಂಗದಲ್ಲಿ ಬಸವಣ್ಣ ಅಪ್ರತಿಮ ತ್ಯಾಗ ನಿಷ್ಠೆಯನ್ನು ಬಸವಣ್ಣನ ವಚನದ ಛಾಯೆಯನ್ನು ಅನುಸರಿಸಿ ನಿರೂಪಿಸಿದ್ದಾನೆ. ಈ ಕಥೆಯ ನಿರೂಪಿಸುವಲ್ಲಿ ಕವಿಯು ಹರಿಹರನ ಬಸವರಾಜದೇವರ ರಗಳೆಯಿಂದ ಸ್ಫೂರ್ತನಾಗಿದ್ದಾನೆ.

೩.ಹುತ್ತಿನಿಂ ತೆಗದು ಸರ್ಪನಾ ಸರ್ಪನಾಭರಣವಂ ಮಾಡಿದ ಬಾಲ ಸಂಗಯ್ಯನೆಂಬುದಕ್ಕೆ ಕಥೆ

      ಕಲ್ಯಾಣದಲ್ಲಿ ಬಸವ ದಂಡೇಶನು ಬಿಜ್ಜಳನ ಸಮಸ್ತ ನಿಯೋಗದ ಪಾರು ಪತ್ಯವಂ ನಡಸುತ್ತ ಲಕ್ಷದ ಮೇಲೆ ತೊಂಭತ್ತಾರುಸಾವಿರ ಜಂಗಮಕ್ಕೆ ಯಿಚ್ಛಾ ಭೋಜನವ ನೀಡಿ ಹನ್ನೆರಡು ಸಾವಿರ ವಿಟಜಂಗಮಕ್ಕೆ ಬೇಡಿದ ಪದಾರ್ಥವನಿತ್ತು ಬರುವ ಭಕ್ತ ಜಂಗಮವನಿದಿರುಗೊಂಡು ಕರಕೊಂಡು ಬರುವದ ಕಂಡು ಕೊಂಡೆಯರು ಬಿಜ್ಜಳಗೆಂದರು: ಭಂಡಾರಿ ಬಸವಣ್ಣನು ನಿನ್ನ ಭಂಡಾರದ ದ್ರವ್ಯವನ್ನೆಲ್ಲಾ ಜಂಗಮಕ್ಕೆ ಕೊಟ್ಟು ನಿನ್ನ ಭಂಡಾರವ ಬರಿಗೈದನು. ಮಂತ್ರಿತನವ ತೆಗದರೆ ತನ್ನ ಮಿಂಡ ಜಂಗಮಕ್ಕೇನ ಕೊಟ್ಟುಹನೊ ನೋಡುವೆವೆನಲಾಗಂ ಬಿಜ್ಜಳನು ಬಸವಣ್ಣನ ಕರಿಸಿ ಮುದ್ರೆಯುಂಗರವ ತೆಗೆದುಕೊಂಡು ಭಂಡಾರದ ಲೆಕ್ಕವನೊಪ್ಪಿಸಿಕೊಂಡು ನಿಮ್ಮ ಮಂತ್ರಿತನ ನಮಗೆ ಸಾಕು ಎನಲು ಸಂಗಮೇಶ್ವರನಪ್ಪಣೆ ನಮಗಾಯಿತೆಂದು ಬಸವಣ್ಣ ತಮ್ಮ ಮನೆಯಂ ಪೊಗದೆ ಬಿಜ್ಜಳನೋಲಗದಿಂದ ಪಟ್ಟಣವಂ ಬಿಟ್ಟು ತಾ ಪೋಗಿ ನೀಲಮ್ಮ ಗಂಗಮ್ಮ ಅಕ್ಕನಾಗಮ್ಮ ಬಾಲಸಂಗಯ್ಯ ಮೊದಲಾದ ಗಣಂಗಳ ಕರಸಿಕೊಂಡು ಮೂಗಾವುದ ನಡದು ಸತಿಸುತರ ಪದತಳ ನೊಂದು ಬೆಂಡಾಗಿ ಬಸವಳಿದು ಮತ್ತಿಗಟ್ಟದ ಹಳ್ಳದಲ್ಲಿರಲಾಗಲಿತ್ತಂ ಚರಮೂರ್ತಿಗಳೆಲ್ಲಾ ಬಸವಣ್ಣನಿದ್ದಲ್ಲಿಗೆ ಬಂದು ನಮಗೆ ದಿನಂಪ್ರತಿಯಲ್ಲಿ ಕೊಡುವ ಪಡಿಯ ತಾ  ಬಸವಣ್ಣ ಎಂದು ವಿಟಜಂಗಮ ದೇವರುಗಳು ಬೇಡಲು ಬಸವಣ್ಣ  ಕೊಡುವುದಕ್ಕೆ ಪದಾರ್ಥವಿಲ್ಲದೆ ಇಲ್ಲಾ ಎಂದು ನುಡಿಯಲಾರದೆ  ಶಿವಶಿವಾಯೆಂದು ಚಿಂತಿಸಿ ನುಡಿದ ವಾಕ್ಯವು: ಆವನಾದಡೇನು ಹೇಮವಿಲ್ಲದೆ ಅಂಗಮಿಸಬಹುದೆ ಕೊಡವಿಲ್ಲವೆಂಬುದರಿಂದ ಸಾಯಲುಬಹುದು ಸೈರಿಸಬಾರದು ಬೇಡುವರ ನೋಡಿ ಯೀಯ್ಯಲಿಲ್ಲದ ಜೀವನವೇಕೆ ಕೂಡಲ ಸಂಗಮದೇವಾ ಎಂದು ಬಸವಣ್ಣನು ಗೀತವಂ ಪಾಡಿ ನಿಬ್ಬೆರಗಿನಿಂದಿರುವಾಗ ಇತ್ತ ಕೂಡಲ ಸಂಗಮೇಶ್ವರನು. ಬಸವಣ್ಣನ ಪುತ್ರನಾದ ಬಾಲಸಂಗಯ್ಯನೊಡನೆಂದರು: ಅಕಾಶವಾಕಾಗಿ ಯೀಹುತ್ತದೊಳಗೆ ಶಿವಾಭರಣಕ್ಕೆ ಸಮಾನವಾದ ಲೇವಳವದೆ ತೆಗೆಯನಲು ಆಗ ಬಾಲಸಂಗಯ್ಯನು ಹುತ್ತದೊಳಗೆ ಹಸ್ತವನಿಕ್ಕಿ ಸರ್ಪನ ತೆಗೆಯಲಾಗ ಅದು ನಾಗ ಬಂಧದ ಸುವರ್ಣದ ಲೇವಳವಾಗಿರಲು ಅದನು  ಕಲ್ಯಾಣಕ್ಕೊಯ್ದು ಸಿದ್ದಸೆಟ್ಟಿಯೆಂಬ ಹರದನಲ್ಲಿ ಅಡಪವನಿರಿಸಿ ದ್ರವ್ಯವಂ ತಂದು ವಿಟಚರಮೂರ್ತಿಗಳು ಮೊದಲಾದ ಚರಮೂರ್ತಿಗಳಿಗೆ ದಾಸೋಹವ ಮಾಡುತ್ತಿರಲು ಕೊಂಡೆಯರು ಬಿಜ್ಜಳಗೆಂದರು. ನಿಮ್ಮರಮನೆಯಾಭರಣವ ನೊತ್ತೆಯಿಟ್ಟು ಯಚ್ಚವ ಮಾಡುತಹರೆಂದು ಹೇಳಲಾಗರಸು ಬಸವಣ್ಣನ ಕರಸಿ ನಮ್ಮಾಭರಣವನೊಯ್ಯಬಹುದೆ ಎನಲು ಆಗ ನಿಮ್ಮೊಡವೆಯಾದರೆ ತೆಗೆದುಕೊಳ್ಳಿ ಎಂದು ಬಸವಣ್ಣನು ಹರದರ ಮನೆಯಲ್ಲಿರ್ದ ಲೇವಳದ ಪೆಟ್ಟಿಗೆಯಂ ತರಿಸಿ ಬಿಜ್ಜಳನ ಮುಂದಿಡಲು ಆಗ ಬಿಜ್ಜಳ ಕೈದುಡುಕಿ ತೆಗವಲ್ಲಿ ಘಟಸರ್ಪವಾಗಿ ಭೋರೆಂದು ಹೆಡೆಯೆತ್ತಲು ಆಗ ರಾಯ ಹೆದರಿ ನಮ್ಮದಲ್ಲ ಬಸವಣ್ಣಾ ಸರ್ಪದಿಂದಾದ ಭೀತಿಯಂ ಪರಿಹರಿಸೆಂದು ಕೀರ್ತಿಸಲು ಆಗ ಸರ್ಪನ ಆಭರಣವ ಮಾಡಿ ಸಿದ್ದಸೆಟ್ಟಿಗೆ ಕೊಟ್ಟಿರಲಾಗ ಇತ್ತ ಬಸವಣ್ಣನ ಪ್ರಧಾನಿಕೆಯಂ ರಾಯ ತೆಗೆದನೆಂಬುದ ಕೇಳಿ ಅಯಿವತ್ತಾರು ದೇಶದರಸುಗಳು ಕಪ್ಪವಂ ಕೊಡದೆ ವಾಲಗಕ್ಕೆ ಬಾರದಿರಲು ಬಿಜ್ಜಳನಾಗ ಬಸವಂಣಂಗೆ ಕರವ ಮುಗಿದು ಮುದ್ರೆಯುಂಗರವನಿತ್ತು ಎಂದಿನಂತೆ ಪ್ರಧಾನಿಕೆಯಿಂದ ನನ್ನರಾಜ್ಯವ ಪಾಲಿಸುತ್ತಿರೆಂದು ಬೇಡಿಕೊಳಲಾಗ ಬಸವಣ್ಣನು ಮತ್ತಿಗಟ್ಟದಲ್ಲಿರ್ದ ಬಂಧುಗಳ ಕಲ್ಯಾಣಕ್ಕೆ ಬರೆಸಿಕೊಂಡು ಜಂಗಮಾರ್ಚನೆಯಂ ಮಾಡುತ್ತ ಬಿಜ್ಜಳಗೆ ಭಂಡಾರಿತನವ ನಡಸುವಾಗಲಿತ್ತಂ ಬಸವಣ್ಣನ ಕುಮಾರನಾದ ಬಾಲಸಂಗ್ಯಂಗೆ ಶಿವನ ಬೆಸನದಿಂದ ಮರ್ತ್ಯದ ಮಣಿಹ ಪೂರೈಸಲು ಕಮಠೇಶ್ವರನೆಂಬ ತಮ್ಮಿಷ್ಟಲಿಂಗದಲ್ಲಿ ನಿರವಯವನೆಯ್ದಲಾಗ ಬಸವಣ್ಣ ಮೊದಲಾದ ಸಕಲ ಪ್ರಮಥರು ನುತಿಸುತಿಂತೆಂದರು: ಪುಷ್ಪವಿದ್ದಂತೆ ಮೊಗ್ಗೆಯ ನರ್ಪಿಸಿಕೊಂಡ ಶಿವನು ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ದ ಶಿವನೆಂದು ಬಸವಣ್ಣ ಪ್ರಮಥರಿಗೆ ಬಿನ್ನೆೈಸಿ ಭಕ್ತಿ ಸುಖದಿಂದಲೊಪ್ಪುತ್ತಿರ್ದರು. ( ಪುಟ.೨೯೭-೮, ಭಾಗ.೨)

 ಈ ಪ್ರಸಂಗವು ಬಸವಣ್ಣನನ್ನು ಕುರಿತ  ಇತರೆ ಕಾವ್ಯ-ಪುರಾಣಗಳಲ್ಲಿಗಿಂತ ವಿನೂತನವಾಗಿ ಮೂಡಿದೆ. ಬಸವಣ್ಣನ ವಚನವೊಂದನ್ನು ಸಂಗ್ರಹಕಾರ ಈ ಪ್ರಸಂಗದಲ್ಲಿ ಅಳವಡಿಸಿಕೊಂಡಿರುವುದು ಮಹತ್ತರವಾದುದು. ಬಸವಣ್ಣನ ಪುತ್ರ ಬಾಲಸಂಗಯ್ಯನ ಅಕಾಲಿಕ ಮರಣದ ಸಂಗತಿಯನ್ನು ದಾಖಲಿಸಿದ್ದಾನೆ, ಪುತ್ರನ ಮರಣದನಂತರ ಬಸವಣ್ಣನು ಪುತ್ರ ಶೋಕತಪ್ತನಾಗಿ ನುಡಿದಿದ್ದ  ನುಡಿಗಳನ್ನು ಇಲ್ಲಿ ಕೊಟ್ಟಿರುವುದು ಗಮನಾರ್ಹವಾಗಿದೆ.

೩.ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದರೆನ್ನಲಾದ ಪವಾಡಗಳಿಗೆ ಪೂರಕವಾಗಿ ಮೂಡಿ ಬಂದಿರುವ ಕತೆಗಳು

೧.  ಕಲ್ಯಾಣದಲ್ಲಿ ಬಸವಣ್ಣನು ಜಂಗಮಕ್ಕೆ ಪ್ರಾಣವಿತ್ತುದಕ್ಕೆ ಕಥೆ 

      ಕಲ್ಯಾಣದಲ್ಲಿ ಬಸವೇಶ್ವರ ದೇವರು ಭಕ್ತಿಯಲ್ಲಿ ಪೂಜೆಗೊಂಬಹನ್ನೆರಡು ಸಾವಿರ ವಿಟಜಂಗಮದೊಳು ಮಿಂಡ ಮಲ್ಲಿನಾಥಯ್ಯನೆಂಬ ಜಂಗಮದೇವರು ಬಸವಣ್ಣಾ ನಾವು ಬಿಜ್ಚಳನರಮನೆಯ ನೋಡಬೇಕೆನಲು ಆಗಲೊಬ್ಬ ಪರಿಚಾರಕನ ಕೂಡಿಸಿ ಬಿಜ್ಜಳನರಮನೆಯ ತೋರೆಂದು ಬಸವಣ್ಣ ಕಳುಹಲು ಅವನು ಮನೆಯ ಮೊದಲಾದ ಅರವತ್ತು ಕೋಟಿ ಮಾಳಿಗೆಯಂ ನೋಡಿ ಮುವತ್ತೆರಡುಪ್ಪರಿಗೆ ಭದ್ರಮಂಟಪವಿಪ್ಪತ್ತಾರು ಹನ್ನೆರಡು ಬಣ್ಣದ ಚಾವಡಿ ವಂಭತ್ತು ಗರುಡಿಯ ಮನೆ ಶೃಂಗಾರ ಮಂಟಪ ಹದಿನೇಳು ಶೃಂಗಾರದೋಂಟ ಕಾಸಾರ ತಿಳಿನೀರು ಕೊಳ ಮುವತ್ತಾರು ಮೀಹಣದ ಮನೆ ಮೂವತ್ತು ಯಿಂತಿವಲ್ಲದೆ ಬಿಜ್ಜಳನ ರಾಣಿವಾಸ ನೂರಿಪ್ಪತೈದು ಯಿರುವ ಮನೆಗಳ ಬೇರೆ ಬೇರೆ ನೋಡಿಕೊಂಡು ಬರುವಲ್ಲಿ, ಜಾಳಂದ್ರ ದೇಶದ ಪಾಲಂಧರ ಭೂಪನ ಮಗಳಾದ ರೋಹಿತಾಂಬರೆ ಯಂಬವಳು ಮಿಂಡ ಮಲ್ಲಿನಾಥಯ್ಯನ ಲಾವಣ್ಯವಂ ಕಂಡು ಯಿದಿರುವಂದು ನಮಸ್ಕರಿಸಿ ವಿಭೂತಿ ವಿಳ್ಳೆಯವನಿತ್ತು ತನ್ನ ಮನೆಗೊಡಗೊಂಡು ಪೋಗಿ ಯೇಕಾಂತ ವಾಸದಲ್ಲಿರಲು ರತಿಕೇಳಿಗೆ ಕರೆಯಲು ವಲ್ಲದಿರಲು ಆಗ ಚರಮೂರ್ತಿ ನನ್ನ ಪಿಡಿದನೆಂದು ಬೊಬ್ಬಿಡಲು  ಆ ಅಬ್ಬರವ ಬಿಜ್ಜಳಂ ಕೇಳಿ ಬಂದು ಆಮಿಂಡ ಮಲ್ಲಿನಾಥಯ್ಯನನು ಆ ಸತಿಯನ್ನು ಯಿಬ್ಬರನು ಯಿರಿದೊಂದು ಬಾವಿಯಲ್ಲಿ ಹಾಕಿ ಬಸವಣ್ಣನ ಕರಿಸಿ ಯಿಂತೆಂದನು ವೀರ ಬಿಜ್ಜಳರಾಯ ಹೆಮ್ಮಾರಾಯ ಪೆರ್ಮಡಿರಾಯ ಮೊದಲಾದವರು ವಂಶಕ್ಕೆ ಜಾರತವಿಲ್ಲದವರಿಗೆ ಅಭಿಮಾನವನಪಹರಿಸೆಂದು ಕಳುಹಿಸಿದೆಯಾ ವಿಟಜಂಗಮವ ಬಸವಣ್ಣಾ ಯನಲು ಆಗ ಅವರು ಅರಮನೆಯ  ನೋಡುವುದಕ್ಕೆ ಬಂದ ಜಂಗಮವಲ್ಲದೆ ಆಕೃತ್ಯವ ಮಾಡುವದಕ್ಕೆ ಬಂದವರಲ್ಲ ಸಠೆಯೆನಲು ಆಗವ ದಿಟವೆಂದು ಬಿಜ್ಜಳ ಕರೆದುಕೊಂಡು  ಪೋಗಿ ಬಸವಣಂಗೆ ಭಾವಿಯ ತೋರಲು ಆಗ ಕಂಡು ಅರಮನೆಯ ನೋಡಿದುದು ಸಾಲದೆ ಕೂಪವ ನೋಡುವದೇನು ಬನ್ನಿ ಶರಣಾರ್ಥಿಯಂದು ಬಸವಣ್ಣ ಕರೆಯಲು ಆಗ ಮಿಂಡ ಮಲ್ಲಯ್ಯನೆದ್ದು ಬರಲು ಆಗ ಘಾಯರಕ್ತವಣುಮೂತ್ರವಿಲ್ಲದಿರಲು ಆಗ ಬಸವಣ್ಣ ವಂದಿಸಿ, ಯಲೆ ಸ್ತ್ರೀಯೆ, ನೀನಾರೆಂದು ಬಸವಣ್ಣ ಕರೆಯಲು ಆ ಸತಿಯನಿರಿದ ಘಾಯದಲ್ಲಿ ಸತಿ ಪುಟ್ಟಿದಂತೆ ಮ್ಯಾಲಕ್ಕೆ ಬಂದು  ಬಸವಣಂಗೆ ಆ ಜಂಗಮಕ್ಕೆ ನಮಿಸಿ ನಿಲಲು, ನಿನ್ನ ಹೆಸರೇನೆಂದು ಕೇಳಲು ಆಗ ನಾನು ಮುಕ್ತಾಯಂಗನೆ ಬಸವಣ್ಣ, ನಿನ್ನ ಭಕ್ತಿಯ ನೋಡಿ ಬಿಜ್ಜಳನ ವೀರಲಕ್ಷ್ಮಿ ಜಯಲಕ್ಷ್ಮಿಯ ನೋಡಲೆಂದು ಅರಮನೆಗೆ ಬಂದಲ್ಲಿ ಜಂಗಮದ ದರುಷನದಿಂದ ಮುಕ್ತಿಯಾಯಿತೆಂದು ಆ ಬಸವಣ್ಣಂಗೆ ಜಂಗಮಗೆ ವಂದಿಸಿ ಆಕಾಶಮಾರ್ಗದೊಳು ಕೈಲಾಸಕ್ಕೆ ಪೋಗಲತ್ತ ಯಿತ್ತ ಬಿಜ್ಜಳ ಹೆದರಿ ಬಸವಣ್ಣಂಗೆ ವಂದಿಸಿ ಲೋಹಿತಾಂಬರೆ ಯನ್ನ ಸತಿ ಸತ್ತಳು ಅವಳ ಪ್ರಾಣವ ನೀವು ಕೊಡಬೇಕು ಯಂದು ಬೇಡಲು ಬಸವಣ್ಣನೆಂದನು: ನಿನ್ನ ಸತಿ ನಿನ್ನ ಮನೆಯಲ್ಲಿದ್ದಾಳು ನೋಡೆನಲು ಆಗ ಸತಿ ಮನೆಯಲ್ಲಿರಲು ಕೊಂಡೆಯರು ಮೊದಲಾದವರಿಗೆ ಶಿಕ್ಷೆಯ ಮಾಡುವೆನೆಂದು ಬಿಜ್ಜಳ ನುಡಿದು ಮಿಂಡ ಮಲ್ಲಿನಾಥಂಗೆ ಮುತ್ತು ರತ್ನಾಭರಣವ ಕೊಟ್ಟು ವಂದಿಸಿ ಕಳುಹಲು ಆ ಬಸವಣ್ಣನೊಡನೆ ಮನೆಗೆ ಬಂದು ಮಿಂಡ ಮಲ್ಲಯ್ಯ ಸುಖದೊಳಿರ್ದರು. ( ಪು.೩೨೦-೩೨೧, ಭಾಗ.೨) ಈ ಪ್ರಸಂಗದಲ್ಲಿ ಬಸವಣ್ಣ ತನ್ನ ಜಂಗಮ ಭಕ್ತರಿಗೆ ತೊಂದರೆಯಾದಾಗ ಆಪದ್ಬಾಂಧವನಂತೆ ಯಾವ ರೀತಿ ಕಾಣಿಸಿಕೊಳ್ಳುತ್ತಾನೆಂಬ ವಿವರ ಗಮನಾರ್ಹವಾಗಿದೆ.

೨.ಗುರುಲಿಂಗಜಂಗಮ ಪ್ರಾಣಿ ಬಸವನ ರಾಣಿಯೆಂಬುದಕ್ಕೆ ಕಥೆ:  ಕಲ್ಯಾಣದಲ್ಲಿ ಬಸವಣ್ಣ ಭಕ್ತಿಯಿಂ ಮಾಡುತ್ತಿರ್ದು ಲಿಂಗಾರ್ಚನೆಯ ಮಾಡುವ ಪರವಸದೊಳು ಇರ್ದೊಂದು ದಿನಂ ಶಿವಯೋಗದಲ್ಲಿ ಲೀನವಾಗಿರಲು ಇತ್ತಲೊಬ್ಬ ಚರಮೂರ್ತಿ ಬಸವಣ್ಣನ ನೋಡುವುದಕ್ಕೆ ಬರುತ್ತಿರ್ದು ಬಾಗಿಲದವರಿಂದ ಬಸವಣ್ಣನ ಬೇಧವ ತಿಳಿದು ಮರಳಿ ಪೋಗಲು, ಬಸವಣ್ಣ ಜಂಗಮಪ್ರಾಣಿಯಾಗಿಯವರೊಡನೆ ಪ್ರಾಣವೆಯ್ದುವಾಗ, ಎಲ್ಲರ ಪ್ರಾಣವೊಂದು ಕಂಡಯ್ಯಾ, ಎನ್ನಪ್ರಾಣ ಒಂದು ಕಂಡಯ್ಯಾ, ಎನಗೆ ಜಂಗಮವೆ ಪ್ರಾಣ ಕೂಡಲ ಸಂಗಮದೇವಾ ಎಂದು ಭಾಷೆಯ ನುಡಿದು ಆ ಚರಲಿಂಗದೊಡನೆ ಬಸವಣ್ಣನ ಪ್ರಾಣವೆಯ್ದಲು ಇತ್ತಂ ಚನ್ನಬಸವಣ್ಣ ಮೊದಲಾದ ಪ್ರಮಥರು ನೆರೆದು ಬಸವಣ್ಣನ ಭಾವವಂ ಕಂಡು ಸಮಸ್ತ ನಿಯೋಗದವರಂ ವಿಚಾರಿಸಿ ಬಸವಣ್ಣನ ವಚನ ಭಂಡಾರದ ಸಿವುಡಿಯನೋಳ್ಪಲ್ಲಿ, ಭಾಷೆಯ ವಚನವಂ ಕಂಡು ದ್ವಾರ ಪಾಲಕರಿಂದ ಚರಮೂರ್ತಿ ತಿರಿಗಿ ಪೋದ ಬೇಧವನರಿದು ಅರಸಿ ಮರಳಿ ಕರತರಲು ಬಸವಣ್ಣನ ಪ್ರಾಣ ಬಂದಿತ್ತು. ಕಿನ್ನರಯ್ಯ, ಮೇದಾರ ಕೇತಯ್ಯ, ಗುಪ್ತ ಮಂಚಣ್ಣಗಳ ಪ್ರಾಣದೊಡನೆ ಪೋಗಿ ಅವರೊಡನೆ ಬಂದಿತ್ತಲಾ ಎಂದು ಪ್ರಮಥರು ಕೊಂಡಾಡಿ ನುತಿಸುತ್ತಿರಲಾಗಿ. ( ಪು.೩೭೦-೭೧, ಭಾಗ.೨)

೩. ಬಸವೇಶನರುಹವಾದದಲ್ಲಿ ಚರಣರಕ್ಷೆಯನಂಬರದಲ್ಲಿ ಇಟ್ಟನೆಂಬುದಕ್ಕೆ ಕಥೆ:

   ಕಲ್ಯಾಣದಲ್ಲಿ ಬಸವಣ್ಣನ ಭಕ್ತಿಯ ಮಹತ್ವದ ಪವಾಡವ ಬಿಜ್ಜಳ ನೋಡಿ ಸೈರಿಸಲಾರದೆ, ತನ್ನ ಗುರು ಮೀಮಾಂಸನ ಕರಸಲು ಬಂದು ಬಸವಣ್ಣನೊಡನೆ ವಾದಿಸಬೇಕೆನಲು ಬಸವನೊಂದು ತೃಣವನೆ ಪುರುಷವ ಮಾಡಿ, ಆ ಮೀಮಾಂಸನ ವಾದವ ಗೆದ್ದರು. ಸ್ರವಣರು ಇಂದ್ರಜಾಲ ಮಹೇಂದ್ರಜಾಲವ ತೋರುತ್ತ, ತಮ್ಮ ತಟ್ಟು ಕುಂಚವ ಆಕಾಶಕ್ಕೆ ಇಟ್ಟು ನಿಲಿಸಿ, ಬಿಜ್ಜಳಂಗೆ ತೋರಲು ಭೂಪ ತಲೆದೂಗುವಾಗ ಬಸವಣ್ಣನು ತನ್ನ ಎಡದ ಪಾದರಕ್ಷೆಯ ಆ ತಟ್ಟಿಗಿಂದ ಮೇಲೆ ತಾಳಮರನ ಪ್ರಮಾಣದಲ್ಲಿ ನಿಲ್ಲಿಸಲು ಶಿವಭಕ್ತರು ನೋಡಿ ಕೊಂಡಾಡುತ್ತಿರಲು, ಬಿಜ್ಜಳ ಭೂಪ ತಲೆದೂಗಿ ನಗುವಾಗ  ಆ ಚಮ್ಮಾವುಗೆ ತಟ್ಟು ಕುಂಚವನೊದ್ದು ಭೂಮಿಗೆ ಕೆಡಹಲು ಆಗ ಅದು ಶ್ರವಣರ ಗುದದಲ್ಲಿ ಪೊಕ್ಕು ಕೊಲುವಾಗ ರಾಯ ಬಂದು ಬಸವಣ್ಣನ ಬೇಡಿಕೊಳಲು ಶ್ರವಣರ ಪ್ರಾಣವ ಕಾಯ್ದು ಬಸವನು ಅಯ್ಯಾ ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದೆಂದು ಗೀತವ ಹಾಡಿ ಶ್ರವಣರ ಗೆದ್ದು ಪವಾಡವ ನೆರೆದ ಬಸವಣ್ಣ.

     

೪. ಭಿತ್ತಿಯು ಸಂಯಮಿಗೆ ಮಣ್ಣೆತ್ತಿಗೆ ಪ್ರಾಣವನಿತ್ತ ತೊಗರೆಯ ರತ್ನವ ಮಾಡಿದ ಬಸವಣ್ಣನೆಂಬುದಕ್ಕೆ ಕಥೆ:

    ಬಿಜ್ಜಳರಾಯ ಹೊಸ ಅರಮನೆಯಂ ಕಟ್ಟಿ ಅದರಲ್ಲಿ ಚಿತ್ರದ ಜಂಗಮರೂಪ ಬಂದಿರಲು ಬಸವಣ್ಣನ ಕರಿಸಿ ಮನೆ ಚಂದವಾಯಿತೆಂದು ತೋರುತ್ತ ಬರುವಾಗ ಚಿತ್ರದ ಜಂಗಮವ ಕಂಡು ಭೂಪನೆಂದನು: ಈತನೊಬ್ಬ ಜಂಗಮ ಸತ್ತಂತೆ ಮುನಿದು ಕುಳಿತೈದಾನೆ. ಇದು ಚಿತ್ರಸಮಂ ನೋಡು ಬಸವಣ್ಣಾ ಎನಲು ಆ ಜಂಗಮಕ್ಕೆ ಪ್ರಾಣವನಿತ್ತು ತಮ್ಮೊಡನೆ ಕರತಂದರು. ಕಾರಹುಣ್ಣಿಮೆಯ ದಿನದಲ್ಲಿ ಎತ್ತುಗಳ ಹರಿಸಿ ಎಂದು ರಾಯ ಪೇಳಿದುದ ಕೇಳಲು, ಬಡ ಭಕ್ತನೊಬ್ಬಮಣ್ಣೆತ್ತ ಮಾಡಿ ಮನೆಯ ಮುಂದೆ ನಿಲಿಸಲದನು ಬಿಜ್ಜಳ ಕಂಡು ಶಿವನ ವಾಹನ ಸತ್ತು ಮಣ್ಣಾಯಿತೆನಲು, ಬಸವಣ್ಣನದಕೆ ಪ್ರಾಣವನ್ನಿತ್ತು, ಮಣ್ನೆತ್ತಾದರೇನು ನಮ್ಮೆತ್ತು ಗೆಲುವದೆಂದು ಬಿಜ್ಜಳನ ಆನೆ ಕುದುರೆಗೆ ಮುಂದೆ ಓಡಿಸಿ ಗೆಲಿಸಲಾಗಂ ಅರಸಂ ಚೋದ್ಯಂಬಟ್ಟು ನೋಡುತ್ತಾ ಬರಲು ( ಪುಟ.೩೮೨-೮೩, ಭಾಗ.೨)

೫. ಲಿಂಗದಂಘ್ರಿ ಪೂಜಾಮಹಾಚಿತ್ತನುನ್ನತ ಗುಣಾಂಬುಧಿ ಎಂಬುದಕ್ಕೆ ಕಥೆಗೆ ಪೂರಕವಾಗಿ,

   ಕಲ್ಯಾಣದಲ್ಲಿ ಬಸವಣ್ಣನು ಬಿಜ್ಜಳನು ಚಾರಿಯಂ ಹೋಗಿ ಬರುವಾಗ ಬೇವಿನ ಪುಷ್ಪದ ಪರಿಮಳವಂ ಕಂಡು ಅರಸು ನಿಂದು ಬೇವಿನ ಕುಸುಮದ ಪರಿಮಳವ ಬಸವಣ್ಣಾ ನಿನ್ನ ಲಿಂಗಕ್ಕೆ ಅರ್ಪಿಸು ಎನಲು, ನಾವು ನಮ್ಮ ಭಾವಲಿಂಗಕ್ಕೆ ಸಮರ್ಪಿಸಿದೆವು ಎನೆ, ಇಲ್ಲವೆಂದು ಕೊಂಡೆಯರು ಸಹವಾಗಿ ಹಾಸ್ಯವ ಮಾಡಲು, ಉಂಟೆಂದು ಭಂಡಾರಿ ನುಡಿಯಲು, ದೃಷ್ಟವೇನು ಎನಲು, ಎಲ್ಲಾ ಲಿಂಗದ ಗುಡಿಯಲ್ಲಿ ಬೇವಿನ ಪುಷ್ಪದ ಪೂಜೆಯ ಬಿಜ್ಜಳಂಗೆ ತೋರಿ ಮೆರೆದರು, ಶರಣರ ಚಿತ್ತವು ಲಿಂಗದಲ್ಲಿ ತಲ್ಲೀನವಾಗಿ ಭಕ್ತರು ನೆನೆದಂತೆ ಶಿವನು ಪೂಜೆಗೊಂಬನೆಂದು ಎಂಬ ಆಶಯವನ್ನು ಈ ಪವಾಡ ಕಥೆಯು ಸಂಕೇತಿಸುತ್ತದೆ. ( ಪು.೧೯, ಭಾಗ-೧)

೬. ಭೈರದೇವನಂ ಕೀರ್ತಿಸುವನೆ ಮುಕ್ತಿ ಮೂಲಿಗ ಎಂಬ ಕಥೆಗೆ ಉಪಕಥೆಯಾಗಿ ಬಸವಣ್ಣನಿಗೆ ಸಂಬಂಧಿಸಿದಂತೆ ಬರುವ ಪ್ರಸಂಗದಲ್ಲಿ, ಬಿಜ್ಜಳನು, ಬಸವಣ್ಣನನ್ನು ಕುರಿತು, ಬಸವಣ್ಣಾ ನಿಮ್ಮ ಭಕ್ತರ ಕೀರ್ತಿಸಿದವರು ಸರ್ವಾಂಗ ಸುಖಿಗಳಾಗುವರೆಂಬುದು ಸಟೆಯೋ ದಿಟವೋ ಎನೆ, ಶಿವಗಣಂಗಳ ಹಾಡಿದವರು ನೋಡಿದವರು ಮುಟ್ಟಿದವರು ಮುಕ್ತರೆಂದು ಬಿಜ್ಜಳಂಗೆ ಪೇಳಲು ಮರುದಿನ ಬಿಜ್ಜಳ ಚಿಂತಿಸೆ, ಮಂಚಣ್ಣನು ಅರಸು ನೋಡುವಂತೆ ಆ ಭಟ್ಟನಿಗೆ ಜಂಗಮ ವೇಷವ ಧರಿಸಿ ಬಸವನಿಗೆ ಕೃತಕದಿಂದ ತೋರಲು, ಬಸವಣ್ಣ ವಂದಿಸಲು, ಭೂಪ ನೋಡೆಂದು ಮಂಚಿ ಹಾಸ್ಯವ ಮಾಡಲು, ಬಸವಣ್ಣನಂದವಂಗವಯವಮಂ ಕೊಟ್ಟು ನಿಜಭಕ್ತನಂ ಮಾಡಿ ವೇದಪಾಠವನೋದಿಸುತ್ತಾನೆ.(ಪು.೨೦)

೭. ಸೂಳೆ ನಿಂಬೆಗೆ ಕರುಣಾಳು ದೇವರ ದೇವ ಹೊನ್ನಮಳೆಗೆರೆದನು ಎಂಬ ಕಥೆಗೆ  ಅನುಗುಣವಾಗಿ, ಮಾಳಾದೇವಿಯೆಂಬ ವಾರಾಂಗನೆಯು ಬಿಜ್ಜಳನ ವಾಲಗಕ್ಕೆ ಹೋಗುವಾಗ ತ್ರಿಪುರಾಂತಕನ ಗುಡಿಯಲ್ಲಿ ಶಿವಪುರಾಣವವೋದುವಲ್ಲಿ, ಭವಿಜನ್ಮದಲ್ಲಿ ಹುಟ್ಟುವುದು ಮಹಾಪಾಪವೆಂದು ಹೇಳುತ್ತಿರಲು ಅದಕೇಳಿ ಮನೆಗೆ ಬಂದು ಸರ್ವಾಂಗದಲ್ಲಿ ಭಸಿತ ರುದ್ರಾಕ್ಷಿಯಂ ಧರಿಸಿ ಲಿಂಗವ ಪೂಜಿಸ ಬೇಕೆಂಬ ಮನಸ್ಕಳಾಗಿ, ಲಿಂಗವ ಪೂಜಿಸಲು ಗುರುಕೃಪೆಯು ಅಗತ್ಯವೆಂದು, ಅದು ಜಂಗಮದೇವರಿಂದ ಸಾಧ್ಯವೆಂದು ಭಕ್ತರಿಂದ ತಿಳಿದು, ಆ ಜಂಗಮ ದೇವರು ನನಗೆ ಕೊಟ್ಟುದು ಅದೇ ಲಿಂಗವೆಂದು ಪೂಜಿಪನೆಂದು ಭಾವಿಸುತ್ತ ಇರಲಾಗ, ಮಿಂಡಸಂಗಯ್ಯನೆಂಬ ಪರಮ ಜಂಗಮವು ರಾಯನೋಲಗದಲ್ಲಿಯಾಡುವಾಗ ಕಾಳಾಸಂ ಕೊಡುವ ಸಮಯಕ್ಕೆ ಮಚ್ಚಿ ವಿಲಾಸದಿಂದ ಬಸವಣ್ಣ ನೋಡುವಂತೆ ನಿಂಬಿಯ ಪಣ್ಣಿಂನಿಂದಾಕೆಯನೆದೆಯ ಮೇಲಿಡಲು, ಅಂತರದಲ್ಲಿ ಪಿಡಿದು ಇದೇ ನನಗೆ ಪ್ರಾಣಲಿಂಗವೆಂದು ಮನೆಗೆ ತೆಗೆದುಕೊಂಡು ಹೋಗಿ, ಪೂಜೆಯಂ ಮಾಡಿ, ನೋಡಿ ಧ್ಯಾನಿಸುತ್ತಿರಲಾಗ ಬೆಳಗಾಗಿ ಬಿಜ್ಜಳನ ವಾಲಗಕ್ಕೆ ಬರುವುದು ತಡವಾಗಲು ಅವರು ಬಂದು ಕರೆಯಲು ಮಾತನಾಡದೆ ಇರಲು, ಬಂದ ಪರಿಚಾರಕರು ತಿರಿಗಿ ಪೋಗಿ ` ಎಲೆ ಭೂಪಾಲ ತಲೆಯಲ್ಲಿ ಬೂದಿಯನ್ನು ಪೊಯ್ದುಕೊಂಡು, ಕೊರಳಲ್ಲಿ ಹರಳಕಾಯ ಕಟ್ಟಿಕೊಂಡು ನಾವು ಕರೆದಡೆ ಮಾತನಾಡದಿದ್ದಳು, ಮಿಂಡಸಂಗಯ್ಯನೇನು ಮರುಳಮದ್ದನೂಡಿದನೊ ಕಾಣೆವೆಂದು ಪೇಳಲು, ಕೇಳಿ ಬಿಜ್ಜಳನೆಂದನು`ಬಸವಣ್ಣ ನಿಮ್ಮ ಮಿಂಡಜಂಗಮವು ನಮ್ಮ ನಾಟಕಸಾಲೆಯ ಹೆಣ್ಣುಗಳನಿಂತು ಮರುಳಮಾಡಬಹುದೆ’ ಎನಲು, ಬಸವಣ್ಣನಿಂತೆದನು ` ಗುರುವು ಲಿಂಗವ ಕೊಟ್ಟು ಭಸಿತ ರುದ್ರಾಕ್ಷೆಗಳ ಧರಿಸೆಂದು ಪೇಳ್ದುದು ತಪ್ಪೆ’ ಎನಲು, `ಕೊಳಕ ನಿಂಬೆಯ ಹಣ್ಣ ಕೊಟ್ಟು ಲಿಂಗವೆನ ಬಹುದೆ’ ಎನಲು ಅದಕೆ ಬಸವಣ್ಣನೆಂದನು:  ಅದು ಲಿಂಗವಾದಡೆ ಆತನೆ ಗುರು, ಅಕೆಯೇ ಭಕ್ತೆಯೆಂದು ವಂದಿಸ ಬಹುದೆನಲು, ಆ ಕ್ಷಣದಲ್ಲಿಯೇ ಬಸವಣ್ಣನು ಮಾಳಾದೇವಿಯಂ ಕರಸಲು, ಭಸ್ಮ ರುದ್ರಾಕ್ಷೆ ಕರದಲ್ಲಿ ಪಿಡಿದ ನಿಂಬಿಯ ಹಣ್ಣು ಸಹವಾಗಿ ಬಂದು ನಿಲ್ಲಲು, ಬಿಜ್ಜಳನು `ಆಗಿನ ನಿಂಬಿಯ ಹಣ್ಣಲ್ಲವೇ’ ಎನಲು ಬಸವಣ್ಣ ಅಲ್ಲಾ ಎನಲು, ಲಿಂಗವ ತೋರಿ ಎನಲು, ಬಸವಣ್ಣನಾಗ ನಿಂಬಿಯ ಹಣ್ಣು ತರಸಲು, ಆ ಹಣ್ಣೆ ನಿಂಬಿಯ ಕಾಯ ಮಾಟದ ಕರಡಿಗೆಯಾಯಿತ್ತು. ಒಳಗೆ ಜ್ಯೋತಿರ್ಮಯವಾದ ಲಿಂಗವಿರಲು ಕಂಡು, ಹೆದರಿ, ಬಿಜ್ಜಳ  ಬಸವಣ್ಣಂಗೆ ಮಾಳಾದೇವಿಗೆ ವಂದಿಸಿ ಸಕಲ ವಸ್ತುವನ್ನಿತ್ತು ಕಳುಹಿಸುತ್ತಾನೆ. ಇತ್ತ ಬಳಿಕ ಮಾಳಾದೇವಿಗೆ ನಿಂಬೆಯ ಹಣ್ಣೆ ಲಿಂಗವಾದುದರಿಂದ ಸೂಳೆ ನಿಂಬೆಯಕ್ಕನೆಂಬ ಹೆಸರಿಟ್ಟು ಪರಮಗುರು ಬಸವಣ್ಣನ ಕರದಲ್ಲಿ ಮುಟ್ಟಿದುದೆ ಕ್ರಿಯಾದೀಕ್ಷೆಯಾಗಿ ಶಿವಾಚಾರ ಕ್ರಿಯೆಯನಾಚರಿಸುತ್ತ, ತನ್ನ ದ್ರವ್ಯವ ಜಂಗಮದಾಸೋಹವ ಮಾಡುತ್ತಾ ಬಸವಣ್ಣನಿಂದ ಬೀಳ್ಕೊಂಡು ರಾಜಮಹೀಂದ್ರವೆಂಬ ಪಟ್ಟಣಕ್ಕೆತನ್ನ ಜನ್ಮ ಭೂಮಿಗೆ ಹೋಗಿ ನೆಲೆಸುತ್ತಾಳೆಂಬ ವಿವರ ದಾಖಲಾಗಿದೆ. ( ಪು.೧೪೭-೧೪೮) ಈ ಪ್ರಸಂಗವು ಉಳಿದೆಲ್ಲಾ ಕಾವ್ಯ -ಪುರಾಣಗಳಿಗಿಂತ ವಿಸ್ತೃತವಾಗಿ ಸಹಜವಾಗಿ  ನಿರೂಪಿತವಾಗಿದೆ.  ನಿಂಬೆಯಕ್ಕ ಎಂಬ ಹೆಸರು ಯಾವರೀತಿ ಬಂದಿತೆಂಬುದಕ್ಕೆ ಈ ಸಂಕಲನ ಕೃತಿಯಲ್ಲಿಯ ನಿದರ್ಶನ ಗಮನಾರ್ಹವಾದುದಾಗಿದೆ.

 ಈ ಕೃತಿಯಲ್ಲಿ ಬಸವಣ್ಣನಿಗೆ ಸಂಬಂಧಿಸಿದಂತೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಬಂಧಿಸಿದಂತೆ ಕತೆಗಳು  ಸಂಗ್ರಹಿಸಿ ನಿರೂಪಿಸಲ್ಪಟ್ಟಿದೆ. ಈ ಪವಾಡದ  ಪ್ರಸಂಗಗಳು  ಬಸವಣ್ಣನು  ಮುಖ್ಯವಾಗಿ ಭಕ್ತ, ಭಕ್ತ ಪಕ್ಷಪಾತಿ ಹಾಗೂ ಪವಾಡ ಪುರುಷ ಎಂಬುದನ್ನು ಸೂಚಿಸುತ್ತವೆ.  ಈ ಕೃತಿಯ ೫ ಸಂಧಿಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿದಂತೆ ೧೬ ಕಡೆಗಳಲ್ಲಿ ಪವಾಡಗಳನ್ನು ಪ್ರಸ್ತಾಪಿಸಿದ್ದಾನೆ. ಬಸವಣ್ಣನವರು ಮಾಡಿದರೆನ್ನಲಾದ ಪವಾಡಗಳಲ್ಲಿ ಬಹುಪಾಲು ಬಿಜ್ಜಳನ ಸಮ್ಮುಖದಲ್ಲಿ ನಡೆದ ಹಾಗೆ ನಿರೂಪಿಸಿದ್ದು, ಪ್ರತಿಯೊಂದು ಪವಾಡದಲ್ಲಿಯೂ ಶಿವನ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಪ್ರಸಂಗಕ್ಕೆ ಬಿಜ್ಜಳನು ತಲೆಬಾಗಿ ಗೌರವಿಸುವುದು ಈ ರೀತಿಯಲ್ಲಿ ನಿರೂಪಿಸಿದ್ದಾನೆ. ವೀರಶೈವ ಸಿದ್ಧಾಂತದಲ್ಲಿ ಅಂಗದೋಪಾದಿಯಲ್ಲಿರುವ ಅಷ್ಟಾವರಣಗಳು (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ) ಹಾಗೂ ಪ್ರಾಣೋಪಾದಿಯಲ್ಲಿರುವ ಪಂಚಾಚಾರಗಳ (ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ) ಮಹತ್ವವನ್ನು ಬಿಂಬಿಸುವ  ಅಂಶಗಳನ್ನು ಈ ಮೇಲಿನ ಸಂಗ್ರಹಿತ ಕತೆಗಳು  ಹೊಂದಿದ್ದು ಅಧ್ಯಯನಾಸಕ್ತರಿಗೆ ಭಕ್ತಿ ಭಾವವನ್ನುಂಟುಮಾಡುವಂತಿವೆ.

೪.ಇತರೆ ಸಮಕಾಲೀನ ಶರಣರ  ಕಥೆಯೊಂದಿಗೆ ಬೆರೆತ ಬಸವಣ್ಣನವರ ಸಂಗತಿಗಳು:ಕಲ್ಯಾಣದಲ್ಲಿ              ಬಸವಣ್ಣನವರೊಂದಿಗಿದ್ದ ಇತರೆ ಸಮಕಾಲೀನ ಶರಣರಿಗೆ  ಸಂಬಂಧಿಸಿದ ಹಾಗೆ  ಕಥೆಗಳನ್ನು ಕವಿಯು ವಿವಿಧ ಮೂಲಗಳಿಂದ ಕಲೆಹಾಕಿ ಕಥನ ರೂಪದಲ್ಲಿ ಕಟ್ಟಿಕೊಟ್ಟಿದ್ದಾನೆ. ಈ ವಿವರಗಳು ಬಸವಣ್ಣನ ದಿವ್ಯ ವ್ಯಕ್ತಿತ್ವವನ್ನು ಬಿಂಬಿಸುವುದರ ಜೊತೆಗೆ ಆ ಶರಣರ ಚರಿತ್ರೆಯನ್ನು ವ್ಯಕ್ತಿ ನಿಷ್ಠವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿವೆ. ಈ ಸಂಗ್ರಹಿತ ಕಥೆಗಳಲ್ಲಿಯೂ ಶರಣರ ವಚನಗಳ ಛಾಯೆಯನ್ನು ಕೆಲವೆಡೆ ಗುರುತಿಸ ಬಹುದಾಗಿದೆ.

೧. ಆಯ್ದಕ್ಕಿ ಮಾರಯ್ಯನ ಪ್ರಸಂಗ ಮತ್ತು ಬಸವಣ್ಣ:  ಆಯ್ದಕ್ಕಿ ಮಾರಯ್ಯನು ಕಲ್ಯಾಣ ಪಟ್ಟಣದಲ್ಲಿ ಕಾಯಕದಿಂದ ದಾಸೋಹವ ಮಾಡುತ್ತಿರುವಾಗ, ಬಸವಣ್ಣ ಮೊದಲಾದ ಪ್ರಮಥರು ಆಶ್ಚರ‍್ಯವಟ್ಟು ಕೀರ್ತಿಸುತ್ತಿರಲು, ಮತ್ತೊಂದು ದಿನದಲ್ಲಿ  ಬೀದಿಯಲ್ಲಿ ಬಿದ್ದಕ್ಕಿಯನಾಯ್ವುತ ಬರುವುದ  ಬಸವಣ್ಣ ಕಂಡು, ಶಿವಾ ಶಿವಾ ಎಂದು ತನ್ನ ಮನೆಯ ಮುಂದಳ ಬೀದಿಯಲ್ಲಿ ಮತ್ತಷ್ಟಕ್ಕಿಯ ಚೆಲ್ಲಿಸಲಾಗ, ಮಾರಯ್ಯನು ಅಕ್ಕಿಯನಾಯ್ವುತಲ್ಲಿಗೆ ಬಂದು ಅಕ್ಕಿ ಘನವಾಗಿ ಚೆಲ್ಲಿರಲಾಗ ಮತ್ತಷ್ಟಕ್ಕಿಯನಾಯ್ದು ಒಪ್ಪಿಡಿಯಕ್ಕಿಗೆ ಮಿಗಿಲಾಗಿ ಇಪ್ಪಿಡಿಗೆ ಕಡಮೆಯಾಗಿ ತೆಗೆದುಕೊಂಡು ಬಂದು ಮನೆಗೆ ಪೋಗಲಾಗ, ಸತಿ ಲಕ್ಕಮ್ಮ ಕೋಪಿಸುತ್ತೆಂದಳು, ಆಸೆಯೆಂಬುದು ಅರಸಿಂಗೆ, ರೋಷವೆಂಬುದೆ ಯಮದೂತರಿಗೆ, ಈಶನ ಭಕ್ತರ್ಗೆ ಆಶೆ ರೋಷ ಸಲ್ಲದು, ಈಸಕ್ಕಿಯಾಸೆ ನಿಮಗೇತಕ್ಕೆ? ಮಾರಯ್ಯಪ್ರೀಯ್ಯ ಅಮರೇಶ್ವರ ಲಿಂಗಕ್ಕೆ ಸಲ್ಲದ ನೇಮವೆಂದು ಪುರುಷರಿಗೆ ಪೇಳಿ, ಒಪ್ಪಿಡಿಯಕ್ಕಿಯ ತೆಗೆದುಕೊಂಡು ಮಿಕ್ಕಕ್ಕಿಯನಲ್ಲಿ ಚೆಲ್ಲಿ ಬನ್ನಿ ಎನಲಾಗ,ಮಾರಯ್ಯನು ಅಕ್ಕಿಯನೊಯ್ದು ಚೆಲ್ಲಿ, ಅನುಭಾವಮಂಟಪದಲ್ಲಿಗೆ ಪೋಗಿ, ಚೆನ್ನಬಸವಣ್ಣ ಮೊದಲಾದ ಪುರಾತನರಿಗೆ ತನ್ನ ಸತಿ ಕೋಪಿಸಿದ ಪರಿಯ ಪೇಳಲಾಗ, ಅವರೆಂದರು: ಆಚರಣೆಯ ಗೊತ್ತ ಮುಟ್ಟಿದಳು, ಮುಕ್ತಾಂಗನೆಯೊಡನೆ ನಿಮಗೆ ಕೋಪವೇಕೆ ಮಾರಯ್ಯ ಎಂಬಾಗ, ಸತಿ ಬಂದು ಪುರಾತನರಿಗೆ ಪೇಳಿ ವಂದಿಸಿ ತನ್ನ ಪುರುಷನ ಮನೆಗೆ ಕರೆದೊಯ್ದು ಎಂದಿನಂತೆ ಜಂಗಮಕ್ಕೆ ನೀಡುತ್ತಿರಲಾಗಿ. ( ಪುಟ.೧೫೭. ಭಾಗ.೨) ಈ ಕತೆಯ ಭಾಗವು ಶೂನ್ಯ ಸಂಪಾದನೆಯ ಆಯ್ದಕ್ಕಿ ಮಾರಯ್ಯನ ಪ್ರಸಂಗದ ರೀತಿಯಲ್ಲಿಯೇ ನಿರೂಪಿಸಲ್ಪಟ್ಟಿದೆ. ವಚನದ ಎಳೆಯನ್ನು ಗುರುತಿಸ ಬಹುದಾಗಿದೆ.

೨.ಚಿತ್ರದ ಜಂಗಮವನಿರಿದವರನಿರಿದ ಕೋಲಶಾಂತಯ್ಯನೆಂಬುದಕ್ಕೆ ಕಥೆ:

  ಬಸವಣ್ಣನು ಒಂದು ಭದ್ರಚಾವಡಿಯ ಕಟ್ಟಿಸಿ ಅದಕ್ಕೆ ಶಿವಮಹಿಮೆಯ ಚಿತ್ರವಂ ಬರೆಸಿರಲು ಬಿಜ್ಜಳ ಕಂಡು ತನಗೆ ಬೇಕೆನಲು ಬಸವಣ್ಣ ಕೊಡಲು ಅದರಲ್ಲಿ ಕೆಲಂಬುಕಾಲ ಕುಳ್ಳಿರ್ದು ತನ್ನ ಸಮಯದ ಪುರಾಣ ಕೇಳುತ್ತಲಿರುವಾಗ ಮಂಚಣ್ಣನೆಂದನು, ಚಾವಡಿಯ ಕೆಡಹಿಸಿ ಹರಿಪ್ರತಿಮೆಯಂ ಬರೆದು ನೋಡುವಂತೆ ಹರವಾಗಿ ಕಟ್ಟಿಸ ಬೇಕೆನಲು ಆಗ ಕಂಬ ಕುಸಿದಿರಲು ಬಿಚ್ಚಿ ಕಟ್ಟಿಸೆಂದು ಬಿಜ್ಜಳ ಹರಿದಾಸನೆಂಬ ಉಪ್ಪಾರಗಪ್ಪಣೆಯ ಕೊಡಲು, ಅವನು ಹಾರಿ ಗುದ್ದಲಿ ಸಹಿತ ಮಂದಿಯ ಕೂಡಿಕೊಂಡು ಬಂದು ಮಂಟಪವ ಕೆಡಹುವಾಗ ಚಿತ್ರದಲ್ಲಿ ಜಡೆಯ ಜಂಗಮವಿರಲು ಕಂಡು, ಯಿರಿಯಿವನ ಕಂಗಳಂ ಜೆಡೆ ಮುಡಿಯನೊಡೆ ಕಯಿಕಾಲ್ಗಳ ತಿವಿ ಯಿವ ಕಂಡ ಕಂಡ ಭಕ್ತರಲ್ಲಿ ಉಂಡುವುಂಡು ಡೊಳ್ಳ ಹೊಟ್ಟೆಯ ಬೆಳಸಿಕೊಂಡವನೆ ಜಂಗಮನೆಂದು ಹಾರೆಯಲ್ಲಿರಿಯುವಾಗ ಬಸವಣ್ಣನಲ್ಲಿ ಕಟ್ಟಿಗೆವಿಡಿದು ಮಾಲದಾರ ನಿಯೋಗವನು ನಡೆಸುವ ಕೋಲಶಾಂತಯ್ಯನು ಆ ನುಡಿಯ ಕೇಳಿಬಂದು ನೋಡುವಲ್ಲಿ ಜಂಗಮವನಿರಿ ಚಿತ್ರದ ಜಂಗಮವನಿರಿಯೆನಲು ಜಂಗಮವೆಂದು ಯಿರಿಯಬೇಡಾ ಸುಮ್ಮನೆ ಗೋಡೆಯ ಕೆಡಹಿಯನಲು ಅವರು ಮತ್ತೆಯು ಜಂಗಮವನಿರಿಯೆಂದು ಗೋಡೆಯನೊಡೆಯಲು ಕೋಲಶಾಂತಯ್ಯನು ಕಾಮಾಟದವರ ಸಂಹರಿಸಲು ಬಿಜ್ಜಳ ಕೇಳಿ ಬಸವಣ್ಣಂಗೆಂದನು. ನಿಮ್ಮ ಜಂಗಮ ಕಟ್ಟಿಗೆದಾರ  ಶಾಂತಯ್ಯನು ಉಪ್ಪಾರರ ಕೊಲಬಹುದೆ ಎನಲು, ಆಗ ಅವ ನಮ್ಮ ಜಂಗಮವ ನಿರಿಯಬಹುದೆಯೆನಲು ಚಿತ್ರದ ಜಂಗಮವನಿರಿದಡೆ ನಿಮ್ಮ ಜಂಗಮವನಿರಿದನೆಂಬುದು ಚಿತ್ರ ನಿಮ್ಮ ಜಂಗಮವಾದೆಡೆಬ್ಬಿಸಿ ಕರೆತನ್ನಿಯೆನ್ನಲು ಆಗ ಬಸವಣ್ಣನು ಚಿತ್ರದ ಸಂಗಯ್ಯ ಬನ್ನಿಯೆನಲು ಆಗ ಎಲೆ ಬಸವಣ್ಣ ಹಾರೆತಾಗಿ  ನೊಂದೆವೆಂದು ನುಡಿದು ನಡವಾಗ ಪಾದ ನೊಂದುದೆಂದು ಘಾಯಮಂ ತೋರಲು ಆಗ ಬಸವಣ್ಣನೆಂದನು: ನೀವು ನೊಂದುದಲ್ಲಾಯನ್ನೊಡೆಯಾ ನಾನೊಂದೆನು ಎಂದುಘಾಯ ಮೊದಲಾದ ನೋವು ಪರಿಹರಿಸಿ ಬಸವಣ್ಣ ನಮಿಸಲು ಬಿಜ್ಜಳರಾಯ ಕಂಡು ಬಸವಣ್ಣಂಗೆರಗಿ ನಮ್ಮವರ ರಕ್ಷಿಸೆಂದು ಬೇಡಿಕೊಳಲು ಬಸವಣ್ಣನು ಬಿಜ್ಜಳನು ಬಂದು ಕೋಲಶಾಂತಯ್ಯಂಗೆರಗಿ ಮುನ್ನಿರಿದವರ ಪ್ರಾಣವಂ ಕೊಡಿ ಎಂದು ನಮಿಸಲು ಕೋಲಶಾಂತಯ್ಯನು ನಗುತ ಬಸವಣ್ಣಂಗೆರಗಿ ಕರದಲ್ಲಿ ಪಿಡಿದ ಕಟ್ಟಿಗೆಯಿಂದ ಬಡಿದು ಬಸವಣ್ಣನ ಕೃಪೆಯುಂಟು ಯೇಳೆಲೋ ಹರಿದಾಸ ಯೆನಲು ಆಗ ಮಡಿದ ಉಪ್ಪಾರರೆಲ್ಲ ಯೆದ್ದು ಬಿಜ್ಜಳನೊಡಗೂಡಿ ಬಂದು ಬಸವಣ್ಣಂಗೆ ನಮಿಸಿ ತಮ್ಮ ತಮ್ಮ ಮನೆಗೆ ಪೋದರು. ಇತ್ತ ಕೋಲಶಾಂತಯ್ಯನು ಬಸವಣ್ಣನೋಲಗದ ಚಾವಡಿಯಲ್ಲಿ ಸಭೆಯ ಸದ್ದನಡಗಿಸುತ್ತಂ ಬಂದ ಭೂಪಾಲರಂ ಕೋಲಿಂದ ಬಡಿದು ಸಸಿನಕ್ಕೆ ನಿಲಿಸುತ್ತಂ ನಿಯೋಗದವರ ಕರೆದು ಹುಜುರ ಮಾಡುತ್ತಂ ಭಲರೆ ಭಾಪುರೆ ಬಸವದಂಡೇಶ ಎಂದು ಕೈವಾರಿಸಿ  ಬಸವಣ್ಣನಿಂದ ಕಾಯಕವ ತೆಗೆದುಕೊಂಡು ದಾಸೋಹವ ಮಾಡುತ್ತ ಸುಖದಿಂದಿರ್ದರು. ( ಪುಟ.೩೨೩-೪, ಭಾಗ-೨)  ಈ  ವಿವರವು ಕೋಲಶಾಂತಯ್ಯನ ಬಗೆಗೆ  ಬೇರೆಲ್ಲಿಯೂ ದೊರೆಯದ ವಿವರಗಳನ್ನು ದಾಖಲಿಸಿದೆ. ಜೊತೆಗೆ ಕೋಲಶಾಂತಯ್ಯನ ವಚನಗಳ ಅಂಕಿತವನ್ನು  ಉಲ್ಲೇಖಿಸಿದೆ. ಈ ಪ್ರಸಂಗದಲ್ಲಿ ವೀರಶೈವ ಗಣಾಚಾರ ಹಾಗೂ ಜಂಗಮದ ಶ್ರೇಷ್ಠತೆಯನ್ನು ಕಾಣಬಹುದಾಗಿದೆ.

   ಭೈರವನ ಸತಿ ಮಹಾದೇವಿಯು ಅಕ್ಕಿಯ ಥಳಿಸುವಾಗ ಸೋಮೇಶನು ಜಂಗಮರೂಪಾಗಿ ಬರಲು ಒನಕೆ ಅಂತರದಲ್ಲಿ ನಿಂದುದು ಪ್ರಸಂಗಕ್ಕೆ ಪೂರಕವಾಗಿ ಬಂದಿರುವ ಉಪಕಥೆಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿದ ೩ ಕಥೆಗಳು ಪ್ರಸ್ತಾಪಿಸಲ್ಪಟ್ಟಿವೆ.

೩.. ಬಸವ  ಬಾಚರಸರ ಲೆಕ್ಕ ನಿಮಿತ್ಯವ  ತರಣಿಯ ನಿಲಿಸಿದನು.: ಸೊಡ್ಡಳ ಬಾಚರಸರು ಬಿಜ್ಜಳರಾಯನಲ್ಲಿ  ಕರಣಿಕತ್ವಕ್ಕೆ ಮುಖ್ಯ ನಾಯಕರಾಗಿ ಲೆಕ್ಕವ ಬರವಲ್ಲಿ   ತಾವು ಪಂಚಾಕ್ಷರಿ ಮಂತ್ರಸಿದ್ಧರಾದ ಕಾರಣದಿಂದ ಕೊಟ್ಟುದುದನೆ ತೆಗೆದುಕೊಂಡುದು  ನಮಃ ಶಿವಾಯ ಸಂದದು ನಿಂದದು ನಮಃ ಶಿವಾಯ ಬಂದದು ಬಾರದದು ನಮಃ ಶಿವಾಯ ಎಂದು ಮಂತ್ರವನೆ ಬರೆಯಲು ಆ ಬರದ ಸಿವುಡಿಯ ಕೊಂಡೆಯರು ಬಿಜ್ಜಳಗೆ ತೋರಲು ಬಸವಣ್ಣನ ಭೂಪ ಕರಸಿ ಬಾಚರಸರ ಲೆಕ್ಕವ ಮಧ್ಯಾಹ್ನಕ್ಕೆ ಒಪ್ಪಿಸು ಎಂದು ಉಗ್ರವ ಮಾಡಲುಲೆಕ್ಕವನೋದುವಾಗ ಸೂರಿಯನು ಮಧ್ಯಾಹ್ನದಲ್ಲಿಯೇ ಹನ್ನೊಂದು ದಿನ ನಿಂತಿರಲು ಘಳಿಗೆ ಜಾವಗಟ್ಟಳೆಯಲ್ಲಿ ಹನ್ನೊಂದು ದಿನವಾದುದು. ಸರ್ವರು ಕಂಡು ಬಸವಣ್ಣನ ಕೊಂಡಾಡುತ್ತಿರಲು ಆಗ ೩೬೦ ಕರಣುಕರ ಸಿವುಡಿ ಲೆಕ್ಕಕ್ಕೆ ಪಂಚಾಕ್ಷರಿಯಂಬರ ಸಿವುಡಿಯಲ್ಲಿ ಸಮಾನವಾಗಿ ಬಾಚರಸರು ಓದಲು ಆಶ್ಚಯಂ ಪಟ್ಟು ರಾಯ ಬಸವಣ್ಣಂಗೆ ಬಾಚರಸಯ್ಯಂಗೆ ಮುತ್ತು ರತ್ನ ನೂತ್ನಾಂಬರಮನಿತ್ತು ವಂದಿಸಿ ಕಳಹಲು, ಬಸವಯ್ಯ ತನ್ನರಮನೆಗೆ ಬರಲು ಇತ್ತಂ ಸೂರ್ಯನಸ್ತಮಿಸಿದನು. ಸೊಡ್ಡಳ ಬಾಚರಸರು ಬಿಜ್ಜಳನ ಭಂಡಾರದಲ್ಲಿ ಮುಖ್ಯ ಕರಣಿಕನಾಗಿದ್ದರೆಂಬ ಸಂಗತಿ ಗಮನಾರ್ಹವಾದುದಾಗಿದೆ.

  ೪.ಈಶಭಕ್ತರು ಅಧಿಕವೆಂದು ಬಸವೇಶ ಶಿವನಾಗಮಯ್ಯನ ಕರದಲ್ಲಿ ಅಮೃತವ ಕರೆದರೆಂಬುದಕ್ಕೆ ಕಥೆ:

     ನೈಮಿಷಾರಣ್ಯವಾಸದ ಮುನಿಗಳು ಕುಲದಲ್ಲಿ  ಅಧಿಕರಾರೆಂದು ಕೇಳಲು ಪೇಳುತ್ತಿರ್ದನು. ಸೂತ ಮುನೀಂದ್ರನು ಕ್ರಿಮಿ ಕೀಟ ಪತಂಗ ಮೊದಲಾದ ಸಚರಾಚರ ಚೌರಾಸಿ ಪ್ರಾಣಿಗಳೊಳಗೆ ಗೋವುಗಳಧಿಕ, ಗೋವಿನಿಂದ ಮನುಷ್ಯರಧಿಕ, ಮನುಷ್ಯರಿಂದ  ಅಷ್ಟಭೂತಗಳಧಿಕ,ಅಷ್ಟಭೂತಗಳಿಂದ ಅಷ್ಟವಸುಗಳಧಿಕ, ಅಷ್ಟವಸುಗಳಿಂದ ಅಷ್ಟದಿಕ್ಪಾಲರಧಿಕ, ಅವರಿಂದ ನವಗ್ರಹಂಗಳಧಿಕ, ನವಗ್ರಹಂಗಳಿಂದ ದ್ವಾದಶಾದಿತ್ಯರಧಿಕ, ಆದಿತ್ಯರಿಂ ನವಬ್ರಹ್ಮರಧಿಕ, ಆ ಬ್ರಹ್ಮರಿಂ ಅರವತ್ತೆಂಟು ಕೋಟಿ ತೀರ್ಥವಧಿಕ, ತೀರ್ಥದಿಂ ಯಮುನೆಯೆಂಬ ನದಿಯಧಿಕ, ನದಿಯಿಂ ಜಾಹ್ನವಿಯಧಿಕ, ಜಾಹ್ನವಿಗಿಂತ ಜಹ್ನುಮುನಿಯಧಿಕ, ಮುನಿಗಿಂತ ಸಗರನ ಸುತ ಭಗಿರಥನಧಿಕ, ಅವನಿಗಿಂದ ಹಿಮದ ನಗವಧಿಕ, ನಗದಿಂ ಹಿಮಭೂಮಿಯಧಿಕ, ಅದರಿಂ ಶರಧಿಗಳಧಿಕ, ಶರಧಿಯಿಂ ಮೇಘವಧಿಕ, ಅದರಿಂ ನಕ್ಷತ್ರವಧಿಕ, ಅವರಿಂ ಚಂದ್ರನಧಿಕ, ಅದರಿಂ ಸೂರ್ಯನಧಿಕ, ಸೂರ್ಯನಿಂ ಅಗ್ನಿಯಧಿಕ, ಅದರಿಂ ದೇವರ್ಕಗಳಧಿಕ, ಅವರಿಂ ಯಜ್ಞವಧಿಕ, ಅದರಿಂ ದ್ವಿಜರಧಿಕ, ಅವರಿಂ ವಿಪ್ರರಧಿಕ, ಅದರಿಂ ಕೃತ ಬುದ್ಧಿಗಳಧಿಕ, ಅದರಿಂ ಜೋಗಿ ಕರ್ತಾರಧಿಕ,ಅವರಿಂದ ಯಮನಿಯಮ ಪಂಚಕಯೋಗಿಗಳಧಿಕ, ಅದರಿಂ ಜೋಗಿ ವೆಮಳರಧಿಕ, ಅವರಿಂ ಸನ್ಯಾಸಿಗಳಧಿಕ, ಅವರಿಂ ಪಾಶುಪತಿಗಳಧಿಕ, ಅವರಿಂ  ಆದಿಶೈವ ಶುದ್ದಶೈವ ಮಾರ್ಗಶೈವ ಪ್ರವರಶೈವರಧಿಕ, ಅವರಿಂ ಅದ್ವೆೈತ ಜ್ಞಾನಿಗಳಧಿಕ, ಅವರಿಂ ಶಿವಾರ್ಚಕರಧಿಕ, ಆ ಶಿವಾರ್ಚಕರ್ಗೆ ಹರಿಯಜ ಸುರಪ ಮನು ಮುನಿಗಳು ಸಮಾನವಲ್ಲ. ಅಂತಾ ಶಿವಾರ್ಚಕರು ವೀರಶೈವಸಂಪನ್ನರಾದ ಲಿಂಗಾಂಗ ಸಂಬಂಧಿಗಳಿಗೆ ಆ ಹದಿನಾಲ್ಕು ಭುವನದೊಳಗೆ ಆರು ಸಮಾನವಿಲ್ಲವಾಗಿ, ಹೊಲೆಯನಾದರೂ ಶಿವಪೂಜೆಯಿಂದ ಸತ್ಕುಲಜನಪ್ಪನು. ಅದೆಂತೆಂದೊಡೆ ವೇದವ್ಯಾಸ ಬೋಯಿತಿಯ ಮಗ; ಮತಂಗಿಯ ಮಗ ಮಾತಂಗನು; ಸುನಕನ ಮಗ ಸನಕನು; ಉರ್ವಸಿಯೆಂಬ ವೇಶಿಯ ಮಗ ವಶಿಷ್ಟನು. ಮಂಡೋದರಿ ಕಪ್ಪೆ ಮಗಳು, ಆಕೆಯ ಮಗ ಮಾಂಡವ್ಯನು, ಅಗಸ್ತ್ಯ ಕಬ್ಬಿಲನು, ದೂರ್ವಾಸ ಮುಚ್ಚಿಗನು, ಕಶ್ಯಪ ಕಮ್ಮಾರನು, ಕೌಂಡಲ್ಯನೆಂಬ ಮುನಿಯು ನಾಯಿಂದನು, ಸಾಂಖ್ಯಮುನಿ ಸ್ವಪಚನು; ವಾಲ್ಮೀಕಿ ಮುನಿಯು ವ್ಯಾಧನು; ಪರಾಶರ ಮುನಿಯು ಬೇಡನು; ಶೃಂಗಮುನಿ ಎರಳೆಯ ಮಗನು; ಇವರೆಲ್ಲರು ಶಿವಭಕ್ತಿಯಿಂದ ಸತ್ಕುಲಜರಾದರು. ಶಿವನಾಗಮಯ್ಯನವರೆಂಬ ಹಿರಿಯ ಭಕ್ತರ ಒಂದು ರೋಮಕ್ಕೆ ವಿಪ್ರ ಎಣೆಯಲ್ಲವೆಂದು ಬಸವಣ್ಣನೆನಲು ಬಿಜ್ಜಳ ಕೇಳಿ ನುಡಿದನು.ಭಕ್ತರ ಚಿವುಟಿದರೆ ಮೈಯ್ಯಲ್ಲಿ ಹಾಲು ಒಗುವುದೆ? ಭವಿಗಳ ಚಿವುಟಿದರೆ ಮೈಯಲ್ಲಿ ನೀರು ಒಕ್ಕಾವೆ ಎನಲು, ಬಸವಣ್ಣನು ಶಿವಭಕ್ತರೆ ನಿತ್ಯವಾದ ಸತ್ಕುಲಜರೆಂಬುದ ತೋರುವೆನೆಂದು ಶಿವನಾಗಮಯ್ಯಗಳೆಂಬ ಹಿರಿಯ ಭಕ್ತರ ಕರದಲ್ಲಿ ಅಮೃತದವ ಕರದು ಮೆರದರಂದು. ( ಪುಟ.೪೩೭-೩೮, ಭಾಗ-೨)  ಈ  ಕತೆಯಲ್ಲಿ ಶಿವಭಕ್ತರ ಪಾರಮ್ಯದ ಶ್ರೇಷ್ಠತೆಯನ್ನು ಕಾಣಬಹುದಾಗಿದೆ.    

 ೫. ಶಿವನಿಂದೆಗೆಯ್ದನನಿರಿದ ಜಗದೇವ ಎಂಬುದಕ್ಕೆ ಕಥೆ:

  ಮಂಗಳವಾಡದಲ್ಲಿ ಹಳ್ಳಯ ಮಧುವಯ್ಯಗಳು ಉತ್ಕೃಷ್ಟ ನಿಃಕೃಷ್ಟ ಕುಲವೆಂದು ನೋಡದೆ ಸದ್ಭಕ್ತಿ ಭಾವನೆಯಿಂದ ನಂಟುತನವಂ ಮಾಡಲು ಪಿಸುಣರು ಬಿಜ್ಜಳಗೆಂದರು: ವಿಪ್ರರು ಸ್ವಪಚರಿಗೆಯು ಬೀಗತನವಾಯಿತೆಂದು ಪೇಳಲು ಬಿಜ್ಜಳನವರಂ ಕರ ತರಸಿ ನಯನಕ್ಕಾಜ್ಞೆಯ ಮಾಡಲು ಬಸವಣ್ಣ ಮೊದಲಾದ ಪ್ರಮಥರು ನೆರೆದು ಆ ಕ್ಷಣವವರ ನಯನಗಳ ಪಡದು ಬಿಜ್ಜಳನ ಸಂತಾನ ನಿಃಸಂತಾನವಾಗುವಂತೆ ಪ್ರಮಥರು ಮುನಿದು ಪಟ್ಟಣವಿನ್ನುಳಿಯದೆಂದು ಬಿಜ್ಜಳನಳಿದು ಪೋದಾನು ಪ್ರಮಥರ ಸ್ವತಂತ್ರ ಲಕ್ಷಕ್ಕೆ ಚಿತ್ತೆೈಶಾರುಯಂದು ಪ್ರಮಥಾಳಿ ತಮ್ಮಳಾಳೋಚಿಸಿ ಮಾತನಾಡುವಾಗ ಮುನ್ನ ಜಗದೇವನು ಬಸವಣ್ಣ ಮೊದಲಾದ ಪ್ರಮಥರಿಗೆ ವಿಭೂತಿಯ ಸಂಬಂಧಿಸಿ ಯಿತ್ತ ದ್ವಿಜಕ್ರಿಯ ನಾಚರಿಸಲು ಬಸವಣ್ಣ ಮುನಿದು ಬರಲೊಲ್ಲದೆ ಧಿಕ್ಕರಿಸಿ ನುಡಿಯಲು ಜಗದೇವನುಪಾವಸ್ತೆಯಿಂದ ತನ್ನದಪರಾಧವೆನಲು ಪ್ರಮಥಾವಳಿಯು ಬಸವಣ್ಣನು ಜಗದೇವಂಗೆ ಶರಣ ಮಾರ್ಗವ ಪ್ರತಿಷ್ಠಿಸಿ ಮುಂದೆ ಭಕ್ತದ್ರೋಹಿಯಾದ ಅರಸನ ಕೊಲ್ಲೆಂದು ವೀರದಂಬುಲವನಿತ್ತು ಬೆಸನ ಕೊಡಲಾಗ ಜಗದೇವನ ತಾಯಿ ಸೋಮಕ್ಕನು ತನ್ನ ಜಗದೇವನ ಕೂಡೆಯಂದಳು ಹಳ್ಳಯ್ಯ ಮಧುವಯ್ಯನವರಿಗೆ ಆಗ್ನೆಯಂ ಮಾಡುವದ ನೀ ನೋಡಿಬಂದೆಯಾ ಪ್ರಮಥರು ನಿನಗಿತ್ತ ಮಣಿಹವ ಮರದೆಯಾ ನಿನ್ನ ಭಾಷೆಯ ಗೊತ್ತ ಮುಟ್ಟುವನ್ನಕ್ಕ ಪ್ರಮಥರ ಸೇವೆ ಪೂರೈಸುವನ್ನಕ್ಕ ನೀ ನನಗೆ ಮಗನಲ್ಲ ನೀ ಸುನಿಗಿಂತ ಕಡೆಯೆಂದು ನೆಲದಲ್ಲಿಯೂಟವನಿಕ್ಕಲು ಜಗದೇವನು ಭವಿಸುವ ವಾರ್ತೆಯ ಮಲ್ಲಯ್ಯ ಬೊಮ್ಮಯ್ಯಗಳು ಕೇಳಿ ಸಗರದಿಂದ ಬಂದು ತಾವು ಜಗದೇವನಂತೆ ಮಾತೆಯಿಕ್ಕಿದ ಪೂರ್ಣ ಪ್ರಸಾದವನಾರೋಗಿಸುತ್ತಿರಲು ಆಗ ಬಸವಣ್ಣ  ಕಪ್ಪಡಿಗೆ ಹೋದರೆಂಬ ವಾರ್ತೆಯಂ ಕೇಳಿ ವೀರ ಜಡೆಗಳಂ ಕಟ್ಟಿ ವೀರವತಾರರು ಭಸಿತವನುದ್ಧೂಳಿಸಿ ವೀರಗಾಸೆಯನುಟ್ಟು ವೀರಭದ್ರಾಯನಮೋಯಂದುಘ್ಘಡಿಸುತ್ತಾ ಮೂವರು ಬಿಜ್ಜಳನ ಯಿರುಳಿನೋಲಗಕ್ಕೆಯ್ದಿ  ಪೋಗುವಾಗ ನಂದಿರೂಪಿನ ಗೂಳಿ ಮುಂದೆ ನಡೆಯಲು ಒಳಪೊಕ್ಕು ಪೋಗುವಾಗ ಚತುರಂಗಬಲ ಮೊದಲಾದ ಪಟುಭಟರು ದಾರಿಯಂ ತೊಲಗಿ ಕಡೆಗೆ ಪೋಗಲು ಬಿಜ್ಜಳನ ಸಭೆಯಲ್ಲಿ ಯಿತ್ತರದ ಸತ್ತಿಗೆ ಆಲವಟ್ಟ ಚಾಮರ ಬೀಸಣಿಗೆ ಮೊದಲಾದ ನಿಯೋಗದವರು ವಾಲೈಸುವಾಗ ಐವತ್ತಾರು ದೇಶದ ಭೂಪಾಲಕರು ಬೆಸನ ಹಾರುವಾಗ ಸಿಡಿಲೆರಗಿದಂತೆ ಪೋಗಿ ರತ್ನದ ಗರ್ದ್ದುಗೆಯ ಮೇಲಿರ್ದ ಬಿಜ್ಜಳನನಿರಿದು ಹಲ್ಲಕಿತ್ತು ಹಣೆಯ ಮೇಲಿಟ್ಟು ನಾಲಗೆಯ ಕೊಯ್ದುಯದೆಯಮೇಲಿಟ್ಟು ಕಯ್ಯಕೊಯ್ದು ಕಠಾರಿಯ ಮೋನೆಯ ಮೇಲಾಂತು ವೀರ ಪ್ರಂಥರ ಬಿರಿದಿನ ಮಾಸಾಳುಗಳು ಪರವಾದಿ ಬಿಜ್ಜಳನ ಕೊಂದೆವೆನುತ್ತಾ ಬೊಬ್ಬಿರಿದಾಲುತ್ತ ಬರಲುಯಿತ್ತ ಬಿಜ್ಜಳನ ಸಭೆ ತಮ್ಮಲ್ಲಿ ತಾವು ಕಾದು ಮಡಿಯಲು ಪಟ್ಟಣ ಹಾಳಾಗಲಾಕ್ಷಣದಲ್ಲಿ ಪ್ರಮಥರು ವುಳುವಿಗೆ ಪೋಗಲು ಸೋಮಲದೆವಿಯಕ್ಕನು ತನ್ನ ಸುತ ಜಗದೇವನ ಇದಿರುಗೊಂಡು ಆರತಿಯನೆತ್ತಿ ಜಯಸೇಸೆಯನಿಡಲು ಇತ್ತ ಶಿವನೊಲಿದು ಸೋಮಕ್ಕ ಮೊದಲಾದ ನಾಲ್ವರನು ಪ್ರಮಥಗಣ ಸಹಿತ ಬಂದು ಯಿದಿರ್ಗೊಂಡು ಕರದೊಯ್ದು ಪ್ರಮಥಗಣಾನಂದ ಪದವನಿತ್ತ ಶಿವನು. ( ಪು.೩೧೫-೧೬, ಭಾಗ-೨) ಈ ಪ್ರಸಂಗವು ಭೀಮ ಕವಿಯ ಬಸವ ಪುರಾಣವನ್ನು ಅನುಸರಿಸಿ ನಿರೂಪಿಸಲ್ಪಟ್ಟಿದ್ದರೂ  ಹೆಚ್ಚಿನ ವಿವರ ಹಾಗೂ ಕೆಲವೆಡೆ ಹೊಸ ಸಂಗತಿಗಳನ್ನು ದಾಖಲಿಸಿದೆ.

   ಈ ಸಂಕಲನ ಕೃತಿಗೆ ಭಕ್ತಿಯೇ ಸ್ಥಾಯಿ. ಭೈರವೇಶ್ವರನ ಜೀವನಕ್ಕೆ ಸಂಬಂಧಿಸಿದ ಪವಾಡಗಳು ಹಾಗೂ ಶಿವನಿಷ್ಠೆಯನ್ನು ಹೋಲುವ ಕಥೆಗಳಲ್ಲಿಯ ಭಕ್ತರ ನಿಷ್ಠೆ, ಆಚಾರ ಅಚಲ, ಸುದೃಢ ನಂಬಿಕೆಯೇ ಭಕ್ತಿಯ ಸ್ಥಾಯಿಗೆ ಪೋಷಕವಾಗಿದೆ. ಈ ಕೃತಿಯಲ್ಲಿ ಬಸವಣ್ಣನಿಗೆ ಸಂಬಂಧಿಸಿದ ಭಾಗಗಳಲ್ಲಿ ಶಿವಪಾರಮ್ಯವೇ ಮುಖ್ಯವಾಗಿದ್ದರೂ ಅಲ್ಲಲ್ಲಿ  ಬಸವಣ್ಣನು ಶಿವನ ಪರೀಕ್ಷೆಗೆ ಒಳಗಾಗಿರುವ ಹಾಗೂ ಅನ್ಯಮತೀಯರ ವಿಡಂಬನೆಗೆ ಸಿಲುಕಿ, ಸಿಡಿದೆದ್ದು ಶಿವನಿಷ್ಠೆಯನ್ನು ಮೆರೆವ ನಿಸ್ವಾರ್ಥ ವ್ಯಕ್ತಿತ್ವದವರಾಗಿ ಕಂಡು ಬಂದಿದ್ದಾರೆ. ಶಿವಭಕ್ತನ, ಶಿವಸಾಧಕನ ಜೀವನ ಯಾವ ರೀತಿ ಮುಕ್ತಿ ಪಥದತ್ತ ಸಾಗಿ ಶಿವನ ಒಲುಮೆಯನ್ನು ಗಳಿಸಿಕೊಂಡಿತು ಎಂಬುದನ್ನು ಬಸವಣ್ಣನವರ ಕಥೆಯ ಮೂಲಕ ನಿರೂಪಿಸುವುದೇ ಕವಿಯ ಉದ್ದೇಶ. ಕವಿಯ ಈ ಕೃತಿಯಲ್ಲಿ ಭಕ್ತನು ನಿಜವಾಗಿ ಪೂರ್ಣಾರ್ಥದಲ್ಲಿ ಶಿವದಾಸನಾದರೆ ಶಿವನು ಭಕ್ತನಿಗೆ ದಾಸನಾಗಿ ಬೇಡಿತ್ತ ಕೊಡುವುದಲ್ಲದೆ ಭಕ್ತನ ಯೋಗಕ್ಷೇಮ ಒಳಿತುಕೆಡುಕುಗಳನ್ನು ನೋಡಿಕೊಳ್ಳುತ್ತಾನೆ ಎನ್ನುವ ಶಿವ ಸಂದೇಶವನ್ನು ಸಾರಿದ್ದಾನೆ. ಈ ಕೃತಿಯು `ಪುರಾಣ ಕಥೆಗಳ ಸಾಗರ' ಎಂದು ಒಂದು ರೀತಿಯಲ್ಲಿ ಕಂಡುಬಂದರೂ ಮತ್ತೊಂದು ರೀತಿಯಲ್ಲಿ ಐತಿಹಾಸಿಕ ಕಾವ್ಯವಾಗಿಯೂ ವ್ಯಕ್ತಗೊಂಡಿದೆ. ಈ ಕೃತಿಯು  ಬಸವಣ್ಣ ಹಾಗೂ ಇತರ ನೂತನ-ಪುರಾತನ ಶರಣರನ್ನು  ಅಧ್ಯಯನ ಮಾಡುವ ದೃಷ್ಟಿಯಿಂದ ಹಾಗೂ ಕನ್ನಡ ಕಥಾಸಾಹಿತ್ಯವನ್ನು ಅಭ್ಯಾಸ ಮಾಡುವವರ ದೃಷ್ಟಿಯಿಂದ ಮಹತ್ತರ ಎನಿಸಿದೆ.

      ಹರಿಹರ, ರಾಘವಾಂಕ, ಸಿದ್ಧನಂಜೇಶ, ಲಕ್ಕಣ್ಣ ದಂಡೇಶ, ಕುಮಾರವ್ಯಾಸ ಭಾರತ, ಶೂನ್ಯಸಂಪಾದನಾಕಾರರು, ಸಿಂಗಿರಾಜ, ಗುಬ್ಬಿಯ ಮಲ್ಲಣಾರ್ಯ ಮೊದಲಾದ ಪೂರ್ವದ ಹಿರಿಯ ಕವಿಗಳ ಕಾವ್ಯಗಳಲ್ಲಿಯ ಸಂಗತಿಗಳನ್ನು ಸರಳ ಗದ್ಯಕ್ಕೆ ಅಳವಡಿಸಿ ಜನಸಾಮಾನ್ಯರೂ ತಿಳಿಯುವಂತೆ ಮಾಡಿದ ಯಶಸ್ಸು ಶಾಂತಲಿಂಗ ದೇಶಿಕನಿಗೆ ಸಲ್ಲುತ್ತದೆ. ಆ ಕಾವ್ಯ-ಪುರಾಣಗಳನ್ನೆಲ್ಲಾ ನೋಡಿ ಓದಿ ಅವುಗಳಲ್ಲಿರುವ ಕಥಾ ಸಾರವನ್ನು ಸಂಗ್ರಹಿಸಿದ್ದಾನೆ. ಈ ಸಂಕಲನದಲ್ಲಿಯ ಕತೆಗಳ ಅನೇಕತೆ ಕಾವ್ಯದ ಏಕಮುಖತೆಗೆ ಭಂಗವನ್ನುಂಟುಮಾಡಿಲ್ಲ. ಈ ಕತೆಗಳಲ್ಲಿಯ  ಬಸವಣ್ಣ ಮತ್ತು ಇತರೆ ಶರಣರ ಬಗೆಗೆ ಕವಿಯು ಕಂಡಂತೆ ಕೇಳಿದಂತೆ ಸ್ವಾನುಭವದಿಂದ ಅನುಭವಿಸಿ ಹೇಳಿದ್ದಾನೆ. ಕವಿಯ ಸರಳ ಗದ್ಯ ಸಂಭಾಷಣಾ ಕೌಶಲ ಜನಸಾಮಾನ್ಯರೂ ಅರ್ಥಮಾಡಿಕೊಳ್ಳುವ ಧಾಟಿಯಲ್ಲಿದೆ. ಕಾವ್ಯದುದ್ದಕ್ಕೂ ಜನಜೀವನದಿಂದ ತೆಗೆದುಕೊಂಡ ಅನೇಕ ಸರಳ ಸಾಮಾನ್ಯ ದಿನಬಳಕೆಯ ಪದಗಳ ಪ್ರಯೋಗ ಕಂಡುಬರುತ್ತದೆ.

 ಆಕರ ಕೃತಿಯಾಗಿ: ಕನ್ನಡ ಸಾಹಿತ್ಯದಲ್ಲಿ ಅದರಲ್ಲಿಯೂ ವೀರಶೈವ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ಧರಾದ ಕೆಲವು ವಚನಕಾರರ ವೈಯಕ್ತಿಕ ವಿವರಗಳು ಮತ್ತು ವೀರಶೈವ ಕವಿಗಳ ಬಗೆಗೆ ಉಂಟಾಗಿರುವ ಸಮಸ್ಯೆಗಳತ್ತ ಈ ಕಾವ್ಯ ತನ್ನದೇ ಆದ ವಿವರಣೆಯನ್ನು ನೀಡುತ್ತದೆ.

      ಈ ಸಂಕಲನ ಕೃತಿಯಲ್ಲಿ ಶೂನ್ಯಸಂಪಾದನೆಗಳಂತಹ ಸಂಕಲನ ಕೃತಿಗಳಲ್ಲಿ ಗುರುತಿಸುವಹಾಗೆ ಸಾಹಿತ್ಯಕ ಆಂಶಗಳನ್ನು ಹುಡುಕಲು ಸಾಧ್ಯವಿಲ್ಲ. ಆದಾಗ್ಯೂ ಕವಿಯ ಶಿವಭಕ್ತರ ಮನಸ್ತಿತಿಯನ್ನು ವರ್ಣಿಸುವಾಗ ಅವರ ಶಿವನಿಷ್ಟೆ, ಅವರು ಎದುರಿಸಿದ ಸಂಧಿಗ್ಧ ಪರಿಸ್ಥಿತಿಯನ್ನು ನಿರೂಪಿಸುವಾಗ ಕವಿಯ ಮನಸ್ಸು ಸಿಡಿದೆದ್ದು, ನುಡಿಗಳು ತಾವಾಗಿಯೇ ಚಿಲುಮೆಯಂತೆ ಚಿಮ್ಮಿ ಬಂದಿರುವುದಕ್ಕೆ ನಿದರ್ಶನವಾಗಿ  ಬಸವಣ್ಣನವರ ಈ ಕತೆಗಳೇ ಸಾಕ್ಷಿಯಾಗಿವೆ. ಇಂತಹ ಸಂದರ್ಭಗಳಲ್ಲಿ ಕವಿಯ ಕಾವ್ಯಾತ್ಮಕ ಅಂಶಗಳನ್ನು ಕೆಲಮಟ್ಟಿಗೆ ಗುರುತಿಸಬಹುದಾಗಿದೆ. ಈ ಸಂಕಲಿತ ಕೃತಿ ಕನ್ನಡ ಗದ್ಯಗ್ರಂಥಗಳ ಸಾಲಿನಲ್ಲಿ ಒಂದು ಬಗೆಯಾಗಿದೆ. ಈ ಕೃತಿಯಲ್ಲಿ ಹಳಗನ್ನಡಕ್ಕೆ ಸಹಜವಾದ ಹೊಸಗನ್ನಡಕ್ಕೆ ಹೊಂದಿಕೊಳ್ಳದ ದೀರ್ಘ-ಸುದೀರ್ಘವಾದ ವಾಕ್ಯ ವೃಂದಗಳಿವೆ. ದೀರ್ಘವಾಕ್ಯಗಳಿದ್ದರೂ ಬಳಸಿರುವ ಪದಪುಂಜಗಳಲ್ಲಿ ಬಹುಪಾಲು ದಿನನಿತ್ಯದ ಬಳಕೆಗಳಾಗಿವೆ. ಹಳಗನ್ನಡ ಮತ್ತು ಹೊಸಗನ್ನಡ ಇವುಗಳ ನಡುವಣ ಸಂಧಿಕಾಲದ ಗದ್ಯವನ್ನು ಕಾಣಬಹುದಾಗಿದೆ. ಈಕೃತಿಯಲ್ಲಿ ಕವಿಯ ದ್ರಷ್ಟಿ ಕಾವ್ಯಕ್ಕೆ ಸಹಜವಾದ ಕಲ್ಪನಾ ಸಾಮಾಜ್ಯಕ್ಕಿಂತಲೂ ಮಾತಿಗೆ ಸಹಜವಾದ ನಿತ್ಯಜೀವನದ ಕಡೆಗೆ ಇದೆ.

      ಶಾಂತಲಿಂಗ ದೇಶಿಕನು ಸದಭಿರುಚಿಯ ಸಂಗ್ರಹಕಾರ. ಈತನ ಗದ್ಯದ ಶೈಲಿ ಸರಳವೂ ಸುಲಲಿತವೂ ಆಗಿದೆ. ಶಿವಶರಣರ ಚರಿತ್ರೆಯನ್ನು ಗದ್ಯದಲ್ಲಿ ಬರೆಯುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾನೆ. ವೀರಶೈವ ಸಾಹಿತ್ಯಕ್ಕೆ ಇದ್ದ ವಿಸ್ತಾರವಾದ ಹರವನ್ನುಳ್ಳ ಗದ್ಯಕಾವ್ಯದ ಕೊರತೆಯನ್ನು ಈ ಕೃತಿ ಸ್ವಲ್ಪಮಟ್ಟಿಗೆ ತುಂಬಿಕೊಟ್ಟಿದೆ. ವೈದಿಕ, ಶೈವ ಕಾವ್ಯ ಪುರಾಣಗಳು ಹಾಗೂ ಇತಿಹಾಸ ಕಾವ್ಯಗಳಲ್ಲಿಯ ಕಥೆಗಳು ಜನತೆಯ ಮೇಲೆ ಬೀರುವ ಪ್ರಭಾವವನ್ನು ಮನಗಂಡು ಆ ಎಲ್ಲಾ ವಿವರಗಳನ್ನು ಈ ಕೃತಿಯಲ್ಲಿ ಸಂಕಲಿಸಿ ಕೊಟ್ಟಿದ್ದಾನೆ. ಕವಿಯ ಉದ್ದೇಶ ಪಂಡಿತರನ್ನು ದೃಷ್ಟಿಯಲ್ಲಿರಿಸಿ ಕೊಂಡಿರುವುದಕ್ಕಿಂತ ಮುಖ್ಯವಾಗಿ ಜನಸಾಮಾನ್ಯರನ್ನು ಗಮನದಲ್ಲಿರಿಸಿಕೊಂಡು ರಚಿಸಿದ ಹಾಗೆ ಕಂಡುಬರುತ್ತದೆ. ಶಾಂತಲಿಂಗದೇಶಿಕನ ಈ ಸಂಕಲನ ಕೃತಿಯು ಬಸವಣ್ಣನನ್ನು ಅರ್ಥ ಮಾಡಿಕೊಳ್ಳಲು  ಒಂದು ಒಳ್ಳೆಯ ಆಕರ ಕೃತಿಯಾಗಿದೆ.

      ಒಟ್ಟಾರೆ  ಬಸವಾದಿ ಪ್ರಮಥರ  ಚರಿತ್ರೆ ಮತ್ತು ಶಿವಕವಿಗಳ ಚರಿತ್ರೆಯನ್ನು ರೂಪಿಸುವುದರ ಮೂಲಕ ಕಥೆಗಳ ತವರಾಗಿ ಗದ್ಯದ ನೆಲೆಯಾದ ಈ ಕೃತಿಯು ಕಥಾಕೋಶ, ಕಥಾಸಾಗರ, ಕಥಾಚಿಂತಾಮಣಿ ಎಂದೆನಿಸಿದೆ. ಬಸವಾದಿ ಪ್ರಮಥರು ಇಟ್ಟ ಕ್ರಾಂತಿಕಾರಕ ಹೆಜ್ಜೆಯ ಗುರುತುಗಳು,ಅವರ ಕಾಯಕತತ್ವ, ಜಾತೀಯತೆಯ ಮನೋಭಾವ,ಸ್ತ್ರೀಪುರುಷರ ಸಮಾನತೆ ಮುಂತಾದ ಪ್ರಗತಿಪರ ಧೋರಣೆಗಳನ್ನು ಸಾಂಕೇತಿಕವಾಗಿ  ಹಾಗೂ ಅವರ ಮಹಿಮೆಗಳನ್ನು ಪವಾಡ ಕಥೆಗಳ ಮೂಲಕ ನಿರೂಪಿಸುವತ್ತ  ಕವಿಯು ಆಸಕ್ತಿ ವಹಿಸಿದ್ದಾನೆ. ಈ ಸಂಕಲನ ಕೃತಿಯಲ್ಲಿ ಬಸವಣ್ನನ ಜೀವಿತ ಕಥೆಯ ಪ್ರಮಾಣ ಕಡಿಮೆಯಿದ್ದರೂ ವ್ಯಕ್ತಿತ್ವದ ಪ್ರಭೆ ಮಸಕಾಗಿಲ್ಲ. ಇಂದಿಗೂ ಅಪ್ರಸಿದ್ಧ ವಚನಕಾರರ ವೈಯಕ್ತಿಕ  ವಿವರಗಳನ್ನು  ತಿಳಿಯಲು ವಿದ್ವಾಂಸರು ಈ ಸಂಕಲನ ಕೃತಿಯನ್ನು ಆಶ್ರಯಿಸ ಬೇಕಾಗಿರುವುದು ಅದರ ಮಹತ್ತರತೆಯ ಹೆಗ್ಗುರತಾಗಿದೆ. ಆದಾಗ್ಯೂ ಇಂತಹ ಮಹತ್ತರ ಸಂಕಲಿತ ಕೃತಿಗೆ ಕನ್ನಡ ಸಾಹಿತ್ಯದಲ್ಲಿ ದೊರೆಯಬಹುದಾದ ಸ್ಥಾನ ದೊರೆತಿಲ್ಲ. ಕನ್ನಡ ಸಾಹಿತ್ಯ  ಚರಿತ್ರೆಯ ಪರಂಪರೆಯಲ್ಲಿ ಶಾಂತಲಿಂಗದೇಶಿಕ ಮತ್ತು ಆತನ ಕೃತಿ ಇಂದಿಗೂ ಅಲಕ್ಷಿತವಾಗಿಯೇ ಉಳಿದಿರುವುದು ದುರ್ದೈವದ ಸಂಗತಿಯಾಗಿದೆ.

  ಪರಾಮರ್ಶನ ಗ್ರಂಥಗಳು

) ಶಾಂತಲಿಂಗದೇಶಿಕ ವಿರಚಿತ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಭಾಗ   ೧ ಮತ್ತು ೨ ಸಂಪಾದಕರು : ಆರ್.ಸಿ. ಹಿರೇಮಠ ಮತ್ತು ಎಂ.ಎಸ್.ಸುಂಕಾಪುರ

          ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ೧೯೬೮

)  ನಂಜುಂಡದೇವ ಕವಿಕೃತ ಭೈರವೇಶ್ವರ ಕಾವ್ಯ,   ಸಂ: ಶ್ರೀ.ಶಿವಬಸವ ಸ್ವಾಮಿಗಳು,                  ಮೈಸೂರು, ೧೯೫೪

. ಸಿದ್ಧಲಿಂಗ ಶಿವಯೋಗಿ ಕೃತ ಭೈರವೇಶ್ವರ ಪುರಾಣ

    ಸಂ. ವೈ.ಸಿ.ಭಾನುಮತಿ, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ,

   ಬೆಂಗಳೂರು  ೨೦೦೭

. ಉತ್ತರ ದೇಶದ ಬಸವಲಿಂಗ ವಿರಚಿತ ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕಥೆಗಳು  ಸಂ.ಎಸ್.ಉಮಾಪತಿ ,ವೀರಶೈವ ಅಧ್ಯಯನ ಸಂಸ್ಥೆ, ಗದಗ ೨೦೦೦

. ಭೈರವೇಶ್ವರನ ಪವಾಡಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳ ಕೃತಿಗಳು

     ಸಂ. ಸಾ.ಶಿ.ಮರುಳಯ್ಯ, ಜಿ.ಎ.ಶಿವಲಿಂಗಯ್ಯ ಮತ್ತು ಬಿ.ನಂಜುಂಡಸ್ವಾಮಿ

    ವೀರಶೈವ ಅಧ್ಯಯನ ಸಂಸ್ಥೆ, ಗದಗ, ೧೯೯೬

.  ಉತ್ತರದೇಶ ಬಸವಲಿಂಗ ವಿರಚಿತ ಬಸವೇಶ್ವರ ಪುರಾಣದ ಕಥಾ ಸಾಗರ

     ಸಂ.ಎಸ್. ಉಮಾಪತಿ

     ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೬

೭. ಎಸ್.ಶಿವಣ್ಣ ಬಿಡುಮುತ್ತು, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು ೨೦೦೪

೮.ಸಿ. ನಾಗಭೂಷಣ:  ವೀರಶೈವ ಸಾಹಿತ್ಯ ಕೆಲವು ಒಳನೋಟಗಳು

                  ವಿಜೇತ ಪ್ರಕಾಶನ,ಗದಗ,೨೦೦೮               

                   ಶರಣ ಸಾಹಿತ್ಯ ದೀಪಿಕೆ

                    ಶ್ರೀ ಸಿದ್ಧಲಿಂಗೇಸ್ವರ ಪ್ರಕಾಶನ, ಕಲಬುರಗಿ ೨೦೧೭

೯. ಶಿವಶರಣ ಕಥಾರತ್ನ ಕೋಶ           ಸಂ:ತ.ಸು.ಶ್ಯಾಮರಾಯ,

                             ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ-೪,

                                  ಮೈಸೂರು. ೧೯೬೭

                 ವಚನ ಸಾಹಿತ್ಯದಲ್ಲಿ ಸ್ಥಾವರ-ಜಂಗಮದ ಪರಿಕಲ್ಪನೆ                                             ಡಾ.ಸಿ.ನಾಗಭೂಷಣ                 ಸ್ಥಾವರ ಎಂದರೆ ಜಡವಾದುದು. ಜಡವಾದ ವ್ಯವಸ್ಥೆ. ಸಮಾಜದ ಸಾಂಪ್ರದಾಯಿಕ ಕಟ್ಟುಪಾಡುಗಳು ಮೇಲು ಕೀಳುಗಳನ್ನು ಇದರಲ್ಲಿ ಸೇರಿಸಬಹುದು. ಜಂಗಮವೆಂದರೆ ಜಡದಲ್ಲಿ ಚೈತನ್ಯ ಸಂಚಾರವಾಗುವುದು. ಜಂಗಮವು ಸಾಂಪ್ರದಾಯಿಕತೆಯನ್ನು ಮೀರಿದ ಜೀವಂತ ಚಲನಶೀಲತೆಯಾಗಿದೆ. ಬಸವಣ್ಣನವರ ವಚನ ಚಳುವಳಿ ಜಡ ಸಮಾಜವನ್ನು ಜಂಗಮಗೊಳಿಸಿದ್ದಲ್ಲದೆ ಜಡ ಧರ್ಮವನ್ನು ಜೀವಂತಿಕೆ ಗೊಳಿಸಿತು. ವಚನಚಳುವಳಿಯಲ್ಲಿ ಜಂಗಮ ಎನ್ನುವುದು ವೃತ್ತಿಗಿಂತ ಹೆಚ್ಚಾಗಿ ಚಲನಶೀಲವಾದ ಸಮಷ್ಠಿತತ್ತ್ವವಾಗಿ ಪರಿಣಮಿಸಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸ್ಥಾವರ ಒಂದು ಕಡೆ ಇರುವ ಇಷ್ಟಲಿಂಗ. ಜಂಗಮ ಇಷ್ಟಲಿಂಗದ ನಡೆದಾಡುವ ರೂಪ. ಎರಡು ಸಮಾನವಾಗಿ ಪ್ರಮುಖ. ಎರಡರ ಪೂಜೆ ನಡೆಯುತ್ತದೆ. ಅವೆರಡರಲ್ಲಿ ಜಂಗಮಕ್ಕೆ ಹೆಚ್ಚಿನ ಮಾನ್ಯತೆಯಿದೆ. ಸ್ಥಾವರವು ಉಣ್ಣದ ಲಿಂಗ, ಜಂಗಮವು ಉಣ್ಣುವ ಲಿಂಗ.    

       ದೇಹವೇ ದೇಗುಲ, ಕಲ್ಲ ಮನೆಯ ಮಾಡಿ ಕಲ್ಲ ದೇವರ ಆ ಕಲ್ಲು ಕಡೆದರೆ ಆ ದೇವರತ್ತ ಹೋದರೋ? ಇತ್ಯಾದಿ ವಚನಕಾರರ ಚಿಂತನೆಗಳು ದೇವಾಲಯ ಸಂಸ್ಕೃತಿಗೆ ಶರಣ ಚಿಂತನೆ ಒಡ್ಡಿದ ತಡೆಗೋಡೆ ಎಂಬಿತ್ಯಾದಿ ಅಭಿಪ್ರಾಯ ಆಧುನಿಕ ವಿಚಾರಧಾರೆಯವರಲ್ಲಿ ವ್ಯಕ್ತಗೊಂಡಿವೆಯಾದರೂ ಆ ಕಾಲದ ಚಾರಿತ್ರಿಕ ಹಿನ್ನಲೆಯಲ್ಲಿ ಈ ಅಭಿಪ್ರಾಯ ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯು ಉದ್ಭವಿಸುತ್ತದೆ.  ಬಸವಣ್ಣನವರ ಉಳ್ಳವರು ಶಿವಾಲಯವ ಮಾಡಿಹರು ನಾನೇನ ಮಾಡಲಿ ಬಡವನಯ್ಯ, ---ಸ್ಥಾವರಕ್ಕಳಿವುಂಟು-ಜಂಗಮಕ್ಕಳಿವಿಲ್ಲಾ ಎನ್ನುವ ಮಾತಿನಲ್ಲಿ ನಮ್ಮೊಳಗಿರುವ ದೇವನನ್ನು ಮರೆತು ಹೊರೆಗೆಲ್ಲೋ ಯಾವುದೇ ಶಿಲೆಯಿಂದ ನಿರ‍್ಮಿತವಾದ ದೇಗುಲದಲ್ಲಿ ಕಾಣುವ  ಮೌಢ್ಯದ ಟೀಕೆಯ ಜೊತೆಗೆ ಒಳಗಿರುವ ಚೈತನ್ಯವೆಂಬ ದೇವನಿಗೆ ಆವಾಸ ಸ್ಥಾನವಾಗಿರುವ ದೇಹವನ್ನೇ ದೇವಾಲಯ ಮಾಡುವ ಪ್ರಕ್ರಿಯೆ ಇದೆ.ಈ ವಚನವು ಮೇಲ್ನೋಟಕ್ಕೆ ಉಳ್ಳವರು ಮತ್ತು ಬಡವರು ಈ  ಎರಡು ವರ್ಗಗಳ ನಡುವಿನ ಅಂತರದ ಪ್ರತೀಕವಾಗಿದೆ.

      ಶಿವಾಲಯ ಭಕ್ತರಿಗೆ ಯಾವ ರೀತಿ ಒಂದು ರೀತಿಯ ಸಂಕೇತವೋ ಉಳ್ಳವರಿಗೆ ಅದರ ಜೊತೆಗೆ ಮತ್ತೊಂದು ಸಂಕೇತವಾಗುತ್ತದೆ. ಈ ವಚನವು  ವೀರಶೈವಧರ್ಮದ ಜಂಗಮದ ಕ್ರಿಯಾಶೀಲ ತಾತ್ವಿಕತೆಯನ್ನು ಪ್ರತಿಪಾದಿಸುತ್ತಲೇ ಅದರ  ಮೂಲಕ ಸ್ಥಾವರ ಪರಿಕಲ್ಪನೆಯನ್ನು ನಿರಾಕರಿಸುತ್ತಾ ಬಂದಿದೆ ಎನ್ನುವ ಅಭಿಪ್ರಾಯವು ಸಮ್ಮತವಾದುದಲ್ಲ. Speaking of shiva  ದಲ್ಲಿಯ ಎ.ಕೆ.ರಾಮಾನುಜನ್ ರವರು ಬಸವಣ್ಣನವರ ಈ ವಚನವನ್ನು ದೇಹ ಮತ್ತು ದೇವಾಲಯ ಎನ್ನುವ ನೆಲೆಯಿಂದಲೇ ಗ್ರಹಿಸುತ್ತಾರೆ. ಮುಂದುವರೆದು ಅವರು ಈ ವಚನಕ್ಕೆ ಸಂಬಂಧಿಸಿದ ಹಾಗೆ ಈ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭಾರತೀಯ ದೇವಾಲಯಗಳು ಮನುಷ್ಯ ಶರೀರದ ವಾಸ್ತು ಪ್ರತಿಮೆಗಳಾಗಿವೆ. ನೆಲದಿಂದ ಮೇಲೇಳುವ ದೇವಾಲಯವು ಮನುಷ್ಯನ ಹುಟ್ಟಿನಂತೆಯೇ ಕ್ಷೇತ್ರ-ಬೀಜ ಸಂಬಂಧವನ್ನು ಹೋಲುತ್ತದೆ. ಆದ್ದರಿಂದಲೇ ಮನುಷ್ಯನ ಅಂಗಾಂಗಗಳ ಹೆಸರುಗಳನ್ನೇ ದೇವಾಲಯದ ವಿವಿಧ ಭಾಗಗಳಿಗೆ ಇಡಲಾಗಿದೆ ಎಂದಿದ್ದಾರೆ. ಇಲ್ಲಿ ಹಸ್ತ ಪಾದ ನೆತ್ತಿ(ಕಳಸ) ಅಂಗ ಭೋಗ ಗರ್ಭಗುಡಿ ಇತ್ಯಾದಿ ಹೆಸರುಗಳನೋ ನಿಜ. ಒಂದು ರೀತಿಯಲ್ಲಿ ಸ್ಥಾವರಗಳಿಗೆಲ್ಲಾ ಜೀವ ತುಂಬುವ ಬಸವಣ್ಣನ ಆದರ್ಶದ ಕನಸು.  ಅದನ್ನು ಜಂಗಮಗೊಳಿಸುವ ಬಸವಣ್ಣನ ಯೋಜನೆ ಏನೇ ಸರಿ ಇರಬಹುದು. ಆದರೆ ಈ ರೀತಿಯ ಆಲೋಚನೆಯನ್ನು ೧೨ನೇ ಶತಮಾನದ ಚಾರಿತ್ರಿಕ ಸಂದರ್ಭದ ಹಿನ್ನಲೆಯಲ್ಲಿ ಪರಿಭಾವಿಸಲು ಸಾಧ್ಯವೇ ಎನ್ನುವ ಪ್ರಶ್ನೆಯು ಉದ್ಭವಿಸುವುದು ಸಹಜ. ಈ ವಚನಗಳನ್ನು ಬರೀ ವಚನಗಳ ನೆಲೆಯಲ್ಲೆ ಗ್ರಹಿಸಿದರೆ ವಚನಗಳ ಸಮಗ್ರ ಅಧ್ಯಯನ ಆಗಲು ಸಾಧ್ಯವೇ?

   ವಚನಕಾರರು ಕೇವಲ  ಕೆಲವೇ ವಚನಗಳಲ್ಲಿ ಸ್ಥಾವರ ಲಿಂಗ ಅಥವಾ ದೇವಾಲಯದ ನಿರಾಕರಣೆಯ ಬಗೆಗೆ ಟೀಕಿಸಿದಾಕ್ಷಣ ಸಂಪೂರ್ಣವಾಗಿ ವಚನಕಾರರು ಸ್ಥಾವರ ಲಿಂಗ ವಿರೋಧಿಗಳು ಎಂಬ ನಿರ್ಣಯಕ್ಕೆ ಬರುವುದು ಆತುರದ ನಿರ್ಣಯವಾದೀತು. ನಮಗೆ ತಿಳಿದ ಮಟ್ಟಿಗೆ ಮೂವತ್ತು ಸಾವಿರಕ್ಕೂ ಮೇಲ್ಪಟ್ಟ ವಚನಗಳಲ್ಲಿ ಸ್ಥಾವರಲಿಂಗದ ವಿರೋಧಿಯ ನೆಲೆಯಲ್ಲಿ ಹೊರಡುವ ವಚನಗಳು ಸಂಖ್ಯೆ ಎಂಟನ್ನು ದಾಟುವುದಿಲ್ಲ. ಬಸವಣ್ಣನವರ ೨ ವಚನಗಳು, ಅಲ್ಲಮಪ್ರಭುವಿನ ವಚನಗಳು ೩, ಆದಯ್ಯನದು ೧, ಅಂಬಿಗರ ಚೌಡಯ್ಯನದು ೧ ವಚನ ಮಾತ್ರ ಸ್ಥಾವರ ಲಿಂಗದ ವಿರೋಧಿ ಭಾವವನ್ನು ಸೂಚಿಸುವ ಆಶಯವನ್ನು ಹೊಂದಿವೆ. ಒಂದು ರೀತಿಯಲ್ಲಿ ಇವು ವೀರಶೈವ ಧರ್ಮದ ತಾತ್ವಿಕ ನೆಲೆಯನ್ನು ಪ್ರತಿಪಾದಿಸುತ್ತವೆ. ಆ ಕಾಲದ ಶಾಸನಗಳು ಹಾಗೂ ಇನ್ನಿತರ ದಾಖಲೆಗಳನ್ನು ಅವಲೋಕಿಸಿದರೆ ಕನ್ನಡನಾಡಿನಲ್ಲಿ ೧೧. ೧೨. ೧೩ನೇ ಶತಮಾನಗಳಲ್ಲಿಯೇ ಅತಿ ಹೆಚ್ಚು ದೇವಾಲಯಗಳು ಅದರಲ್ಲಿಯೂ ಶಿವಾಲಯಗಳು ನಿರ್ಮಾಣ ಗೊಂಡಿರುವುದು ಜ್ವಲಂತ ಸಾಕ್ಷಿ. ಬಸವಣ್ಣನ ನಂತರದ ಕಾಲದಲ್ಲಿ ವೀರಶೈವ ಧರ್ಮವನ್ನು ಅವಲಂಬಿಸಿದ ಜನತೆ ದೇವಾಲಯಗಳ ನಿರ್ಮಾಣವನ್ನು ತಿರಸ್ಕಾರ ದೃಷ್ಟಿಯಿಂದ ಕಾಣದೆ ಉದಾರ ದೃಷ್ಟಿಯಿಂದ ಕಂಡರು. ದೇವಾಲಯಗಳನ್ನು ನಿರ್ಮಿಸಿದರು. ಕೆಲವು ಆಲಯಗಳನ್ನು ಜೀಣೋದ್ಧಾರ ಮಾಡಿಸಿದರು. ಇವೆಲ್ಲಕ್ಕೂ ಆ ಕಾಲದ ಐತಿಹಾಸಿಕ ದಾಖಲೆಗಳು ಸಾಕ್ಷ್ಯಾಧಾರಗಳಾಗಿ ನಮ್ಮ ಕಣ್ಮುಂದೆ ನಿಂತಿವೆ. ಈ ಮೂರು ಶತಮಾನಗಳನ್ನು ದೇವಾಲಯಗಳ ನಿರ್ಮಾಣದ ಉಚ್ಛ್ರಾಯ ಕಾಲವೆಂದು ಕರೆದರೂ ತಪ್ಪಾಗಲಾರದು.

   ವಚನ ಚಳುವಳಿಯು ವೈದಿಕ ಸಂಸ್ಕೃತಿಯನ್ನು ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ ರೀತಿಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಉಗ್ರರೀತಿಯಲ್ಲಿ ದೇವಾಲಯ ನಿರ್ಮಿತಿಯ ನಿರಾಕರಣೆಯನ್ನು ತಿರಸ್ಕರಿಸಿತು. ವಚನ ಸಂಸ್ಕೃತಿಯು, ಪ್ರಾರಬ್ಧ ಹಾಗೂ ಕರ್ಮವನ್ನು ಬೋಧಿಸುತ್ತಿದ್ದ ದೇವಾಲಯ ಸಂಸ್ಕೃತಿಯನ್ನು ಒಪ್ಪಿ ಕೊಳ್ಳುವುದು ಸಾಧ್ಯವಿರಲಿಲ್ಲ ಎನ್ನುವ ವೈಚಾರಿಕ ಆಲೋಚಕರ ನಿಲುವು ಅವರ ವೈಚಾರಿಕ ವಿಚಾರಧಾರೆಗಷ್ಟೇ ಸೀಮಿತ ಎನ್ನಬೇಕಾಗಿದೆ.

    ವಚನಕಾರರು ನಿಜವಾಗಿಯೂ ದೇವಾಲಯಗಳ ನಿರ್ಮಾಣವನ್ನು ನಿರಾಕರಿಸಿದರೇ? ಈ ಪ್ರಶ್ನೆಗೆ ಇಂದಿಗೂ ಸರ್ವಸಮ್ಮತ ನಿಲುವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲವಾಗಿದೆ. ಬಸವಣ್ಣನೇ ಕೂಡಲ ಸಂಗಮನಾಥ ದೇವಾಲಯದ ಜೊತೆಗೆ ಸಂಬಂಧ ಇಟ್ಟು ಕೊಂಡಿದ್ದಾನೆ. ಪ್ರತಿಯೊಬ್ಬ ವಚನಕಾರರು ಒಂದಲ್ಲೊಂದು ರೀತಿಯ ಸ್ಥಾವರ ಲಿಂಗದ ಜೊತೆ ಸಂಬಂಧವಿರಿಸಿಕೊಂಡಿರುವುದು ಗೊತ್ತಾಗುತ್ತದೆ. ಹೀಗಿರುವಾಗ ವಚನ ಸಂಸ್ಕೃತಿಯಲ್ಲಿಯ ಸ್ಥಾವರ ದೇವಾಲಯದ ನಿರಾಕರಣೆಯ ಬಗೆಗಿನ ಗ್ರಹಿಕೆ ವಾಸ್ತವ ಸತ್ಯಕ್ಕೆ ದೂರವಾದುದು. ವೀರಶೈವಧರ್ಮವು ಸ್ಥಾವರರೂಪಿ ದೇವಾಲಯಗಳ ನಿರ್ಮಾಣಕ್ಕೆ ಪ್ರೇರಣಕರ್ತವಾಗಿದೆ.

     ಬಸವಣ್ಣನವರ ಸಮಾಜೋಧಾರ್ಮಿಕ ಆಂದೋಲನದ ಮೂಲಕ ಪ್ರಕರ್ಷಗೊಂಡ ವೀರಶೈವ ಚಳುವಳಿಯು ದೇವಾಲಯದ ಸ್ಥಾಪನೆಯನ್ನು ನಿರಾಕರಿಸಿತೆ? ಎಂಬ ಪ್ರಶ್ನೆ ಆಶ್ಚರ್ಯಕರ ಸಂಗತಿಯಾಗಿದೆ. ಪರಂಪರಾಗತವಾಗಿ ಜನರ ಬದುಕಿನೊಂದಿಗೆ ಬೆಸೆದು ಕೊಂಡು ಬಂದ ದೇವಸ್ಥಾನವೆಂಬ ಸಾಂಸ್ಕೃತಿಕ ಸಂಸ್ಥೆಯನ್ನು ಅಪ್ಪಟ ದೈವಭಕ್ತ ಧಾರ್ಮಿಕ ಶ್ರದ್ಧೆಯುಳ್ಳವರೂ, ಶಿವನಲ್ಲಿ ನಿಷ್ಠೆಯುಳ್ಳವರೂ ಆದ ವಚನಕಾರರು ದೇವಾಲಯದ ಪರಿಕಲ್ಪನೆಯನ್ನು ವೈಚಾರಿಕ ಚಿಕಿತ್ಸೆಗೆ ಒಳಪಡಿಸಿ ಆಧ್ಯಾತ್ಮಿಕ ನೆಲೆಯಲ್ಲಿ ಪುನರ್ ವ್ಯಾಖ್ಯಾನಿಸಿರುವುದು ಮಹತ್ತರವಾದ ಅಂಶ. ದೇವರು ಧರ್ಮವನ್ನು ಒಪ್ಪಿಕೊಂಡ ವಚನ ಚಳುವಳಿ ನಿಜವಾಗಿಯೂ ದೇವಾಲಯದ ಸ್ಥಾಪನೆಯನ್ನು ನಿರಾಕರಿಸಿತೇ? ಅಥವಾ ನಿರಾಕರಿಸುವ ನಿಲುವಿನಂತೆ ತೋರಿದೆಯೇ ಎಂದೆನಿಸುತ್ತದೆ.

   ಶರಣರು ದೇವಾಲಯದ ಕಲ್ಪನೆಯನ್ನು ಸಂಪೂರ್ಣವಾಗಿ ನಿರಾಕರಿಸಿದರು ಎನ್ನುವದಕ್ಕಿಂತ ತಾನು ಪ್ರಬುದ್ಧಗೊಳಿಸಿದ ಹೊಸ ಧರ್ಮದ ತಾತ್ವಿಕ ನೆಲೆಯಲ್ಲಿ ದೇವಾಲಯದ ಕಲ್ಪನೆಯನ್ನು ತನ್ನ ಸಾಮಾಜಿಕ ಕ್ರಾಂತಿಯ ಆಶಯಕ್ಕನುಗುಣವಾಗಿ ಪುನಾರಚನೆ ಗೊಳಿಸಿದರು ಎನ್ನುವುದೇ ಸೂಕ್ತ.

       ವಚನ ಚಳುವಳಿಗೆ ಹಿನ್ನಲೆಯಾದ ಶೈವ ಪುರಾತನರ ನಿಲುವು ದೇವಸ್ಥಾನ ಕೇಂದ್ರಿತವಾದದ್ದು. ತಮಿಳುನಾಡಿನ ೬೩ಮಂದಿ ಶೈವ ನಾಯನ್ಮಾರರು ಸ್ಥಾವರ ಲಿಂಗದ ಆರಾಧಕರು. ಇವರನ್ನು ವಚನಕಾರರು ತಮ್ಮ ವಚನಗಳಲ್ಲಿ ಭಕ್ತಿ ಭಾವದಿಂದ ಸ್ಮರಿಸಿದ್ದಾರೆ. ವಚನಕಾರರ ಭಕ್ತಜೀವನ ದೇವಸ್ಥಾನಗಳೊಂದಿಗೆ ಅನಿವಾರ್ಯ ಸಂಬಂಧವನ್ನು ಹೊಂದಿದ್ದುದಾಗಿತ್ತು ಎಂದೇಳಬಹುದಾಗಿದೆ.

      ವಚನಕಾರರು ದೇವರನ್ನು ಭಕ್ತಿಯನ್ನು ಒಪ್ಪಿಕೊಂಡು ದೇವಸ್ಥಾನವನ್ನು ನಿರಾಕರಿಸುವ ನಿಲುವನ್ನು ತೆಗೆದು ಕೊಂಡಿದ್ದು ಯಾಕೆ? ಎಂಬ ಪ್ರಶ್ನೆಗೆ, ಈಗಾಗಲೇ ಎಲ್ಲರೂ ಕಂಡುಕೊಂಡಿರುವ ಕಾರಣ ವೀರಶೈವ ಧರ್ಮವು ದೇವರ ಕಲ್ಪನೆಯನ್ನು ದೇವಸ್ಥಾನದಿಂದ ಮನುಷ್ಯನ ಶರೀರಕ್ಕೆ ಸ್ಥಾವರಲಿಂಗದಿಂದ ಇಷ್ಟಲಿಂಗಕ್ಕೆ ಸ್ಥಳಾಂತರ ಗೊಳಿಸಿದ್ದೇ ಆಗಿದೆ. ದೇವರು ಎಲ್ಲೆಲ್ಲಿಯೂ ಇದ್ದಾನೆ. ಆತ ಸರ್ವಾಂತಯಾಮಿ ಎಂಬ ಭಾವನೆಗೆ ದೇವರು ದೇವಸ್ಥಾನದಲ್ಲಿ ಇದ್ದಾನೆ ಎಂದು ತಿಳಿಯುವ ಹಾಗೂ ನಡೆದು ಕೊಳ್ಳುವ ಕ್ರಮ ವಿರೋಧಾಭಾಸದಂತೆ ವಚನಕಾರರಿಗೆ ಕಂಡಿರಬೇಕು. ಹೀಗಾಗಿ ಅವರು ದೇವಾಲಯದ ನಿರಾಕರಣೆಯ ನಿಲುವನ್ನು ವ್ಯಕ್ತ ಪಡಿಸಿದರು ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತ ಪಡಿಸಿದ್ದಾರೆ.

   ಆದರೆ ದೇವರು ಎಲ್ಲೆಲ್ಲಿಯೂ ಇದ್ದಾನೆ ಎನ್ನುವ ವಚನಕಾರರ ನಿಲುವಿನ ಪ್ರಕಾರವೇ ನೋಡಿದರೂ ದೇವಸ್ಥಾನದಲ್ಲಿಯೂ ದೇವರು ಇದ್ದಾನೆ ಎಂಬುದೇ ಆಗಿದೆ. ಜನಸಾಮಾನ್ಯರಿಗೆ ದೇವಸ್ಥಾನಗಳು ಅವರ ಧರ್ಮಶ್ರದ್ಧೆಗನುಗುಣವಾಗಿ ಅತ್ಯಂತ ಅಗತ್ಯವಾದವುಗಳು. ಹಾಗೂ ದೇವರನ್ನು ಮೂರ್ತಿ ರೂಪದಲ್ಲಿ ಅನುಭವಿಸಬಲ್ಲರು. ಅನುಭಾವಿಗಳು ದೇವರನ್ನು ಮೂರ್ತಿ ರೂಪದಲ್ಲಿ ಹಾಗೂ ಅಮೂರ್ತದಲ್ಲಿಯೂ ಅನುಭವಿಸಬಲ್ಲರು. ಇವರಿಗೆ ದೇವರ ಆಕಾರ ಎಷ್ಟು ಸತ್ಯವೋ ಅಷ್ಟೇ ನಿರಾಧಾರವೂ ಅಷ್ಟೆ. ಆದರೆ ಎಲ್ಲರೂ ಅನುಭಾವಿಗಳಾಗಲೂ ಸಾಧ್ಯವಿರಲಿಲ್ಲ. ಭಕ್ತಿಯ ನೆಲೆಯಲ್ಲಿ ಬದುಕುವ ಬಹುಸಂಖ್ಯಾತ ಭಕ್ತಜನತೆಗೆ ತಮಗೆ ಇಷ್ಟವಾದ ದೈವದ ಆಕಾರದಲ್ಲಿ ಪೂಜಿಸಲು ದೇವಸ್ಥಾನದ ಅನಿವಾರ್ಯತೆ ಇದ್ದಿತು. ಆದರೆ ವಚನಕಾರರಲ್ಲಿ ವಿಶೇಷವಾಗಿ ಬಸವಣ್ಣ ಹಾಗೂ ಅಲ್ಲಮಪ್ರಭುಗಳು ಬಹುಸಂಖ್ಯಾತ ಭಕ್ತಜನತೆಯ ಭಕ್ತಿಯ ಅವಲಂಬನ ನೆಲೆಯಾಗಿದ್ದ ದೇವಸ್ಥಾನವನ್ನು ನಿರಾಕರಿಸಿ ದೇವರ ಹಾಗೂ ದೇವಸ್ಥಾನದ ಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿದ್ದಲ್ಲದೆ ಅದನ್ನು ಒಪ್ಪಿಕೊಳ್ಳುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದರೂ ಅದು ಯಶಸ್ವಿಯಾಗಿ ನಂತರದ ಕಾಲದಲ್ಲಿ ಮುಂದುವರೆದುಕೊಂಡು ಬರಲಿಲ್ಲ ಎನ್ನುವುದು ಅಷ್ಟೇ ಸತ್ಯದ ಸಂಗತಿಯಾಗಿದೆ.

     ವಚನಕಾರರ ದೇವರ ಕಲ್ಪನೆ ಮೂಲತಃ ಪರಂಪರಾಗತವಾದ ದೇವರ ಕಲ್ಪನೆಗಿಂತ ಭಿನ್ನವಾದುದ್ದು. ಶಿವನ ಮೂರ್ತಿಪೂಜೆ ಹಾಗೂ ಲಿಂಗ (ಸ್ಥಾವರಲಿಂಗ) ಪೂಜೆ ಪರಂಪರಾಗತವಾಗಿ ರೂಢಿಯಲ್ಲಿದ್ದಿತು.ವಚನಕಾರರು ದೇವಸ್ಥಾನ ಕೇಂದ್ರಿತವಾದ ಈ ಎರಡು ರೂಪಗಳನ್ನು ದೇವಸ್ಥಾನಸಮೇತ ನಿರಾಕರಿಸಿ ದೈವತ್ವ ಕಲ್ಪನೆಯ ಸಾಂಕೇತಿಕ ರೂಪವನ್ನಾಗಿ ಇಷ್ಟಲಿಂಗವನ್ನು ಸ್ವೀಕರಿಸಿ ದೇಹದ ಮೇಲೆ ಧರಿಸಿಕೊಂಡರು. ಈ ರೀತಿಯಾಗಿ ದೇವರ ಕಲ್ಪನೆಯನ್ನು ದೇವಾಲಯದಿಂದ ಮತ್ತು ಅದರ ಪೌರಾಣಿಕ ಹಿನ್ನಲೆಗಳಿಂದ ಬಿಡಿಸಿ ಮನುಷ್ಯನ ಶರೀರಕ್ಕೆ ಸ್ಥಳಾಂತರ ಮಾಡುವುದರ ಮೂಲಕ ಮನುಷ್ಯನ ದೇಹವನ್ನೇ ಆಲಯವನ್ನಾಗಿ ಮಾಡಿದರು. ಇಷ್ಟಲಿಂಗ ನಿಷ್ಠೆಯ ಹಿನ್ನಲೆಯಲ್ಲಿ ದೇಹವೇ ದೇವಾಲಯ ಎನ್ನುವ ಕಲ್ಪನೆಯನ್ನು ಗಟ್ಟಿಗೊಳಿಸುವ ಉದ್ದೇಶ್ಯದಿಂದ ವಚನಕಾರರು ದೇವಸ್ಥಾನಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಆಚರಣೆ-ವಿಧಿಗಳನ್ನು ನಿರಾಕರಿಸಿದರು.

    ಲಿಂಗವು ದೈವದ ಪ್ರತೀಕ. ದೇವಾಲಯದ ಶಿವಲಿಂಗವು ಶಿವನ ಪ್ರತೀಕವೇ ಆದರೂ ದೇವಾಲಯದ ಶಿವಲಿಂಗಕ್ಕೂ ಇಷ್ಟ ಲಿಂಗಕ್ಕೂ ವ್ಯತ್ಯಾಸವಿದೆ. ಆಲಯದಲ್ಲಿಯ ಶಿವಲಿಂಗವನ್ನು ಯಾರೇ ಸ್ಥಾಪಿಸಿದ್ದು ಆದರ ದರ್ಶನಕ್ಕೆ ಹೋಗುವ ಭಕ್ತನಿಗೂ ಲಿಂಗಕ್ಕೂ ಇರುವ ಸಂಬಂಧ ಅವೈಯಕ್ತಿಕವಾದುದು. ಆಲಯದಲ್ಲಿರುವ ಲಿಂಗವನ್ನು ದರ್ಶಿಸಲು ಭಕ್ತನಾದವನಿಗೆ ಕೆಲವು ನಿರ್ಬಧಗಳು ಉಂಟು, ನಿಗದಿಪಡಿಸಿದ ವೇಳೆಯಲ್ಲಿಯೇ ಭಕ್ತನು ದೇವಾಲಯದ ಶಿವಲಿಂಗದ ದರ್ಶನಕ್ಕೆ ಹೋಗಬೇಕು. ತನ್ನ ಜಾತಿ ಅಂತಸ್ತಿಗೆ ಅನುಗುಣವಾಗಿ ಶಿವಲಿಂಗದ ಬೇರೆ-ಬೇರೆ ಭೌತಿಕ ಅಂತರದಲ್ಲಿರಬೇಕಾಗುತ್ತದೆ. ದೇವಸ್ಥಾನದಲ್ಲಿ ಭಕ್ತ ತಾನೇ ಕೈಯಿಟ್ಟು ಪೂಜಿಸುವಂತಿಲ್ಲ. ದೇವರಿಗೂ ಭಕ್ತನಿಗೂ ಮಧ್ಯವರ್ತಿಯಾಗಿ ಅರ್ಚಕ ಇರುತ್ತಾನೆ. ಭಕ್ತ ಸಿರಿವಂತನಾದಷ್ಟು ದೇವಾಲಯದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ವೈಭವ ಹಾಗೂ ಆಡಂಬರದ ಪೂಜೆ ಏರ್ಪಡಿಸುವಂತಾಗುತ್ತದೆ. ಈ ರೀತಿಯ ಭಕ್ತ ಹಾಗೂ ದೇವಾಲಯದಲ್ಲಿಯ ಶಿವಲಿಂಗದ ದರ್ಶನದ ನಡುವೆ ಇರುವ ತಾರತಮ್ಯವನ್ನು ನಿವಾರಿಸಲು ವಚನಕಾರರು ಕಂಡುಕೊಂಡಿದ್ದು ಇಷ್ಟಲಿಂಗದ ಪರಿಕಲ್ಪನೆ. ಗುರುವು ತಾನೇ ಕೈಯಾರ ಹರಸಿ ಪೂಜಾ ವಿಧಾನದ ಮಂತ್ರಗಳೊಡನೆ ಪ್ರೀತಿಯಿಂದ ಕೊಟ್ಟ ಇಷ್ಟಲಿಂಗವು ಭಕ್ತನಾದವನಿಗೆ ಸೇರಿದ್ದುದ್ದಾಗಿರುತ್ತದೆ. ಭಕ್ತನಿಗೂ ಇಷ್ಟ ಲಿಂಗಕ್ಕೂ ಇರುವ ಸಂಬಂಧ ಗಾಢವಾದದ್ದು ಇಷ್ಟಲಿಂಗದ ಅರ್ಚನೆಯಲ್ಲಿ ಅರ್ಚಕನ ಮಾಧ್ಯಮವಿಲ್ಲ. ಜಾತಿಯ ಅಂತಸ್ಥಿನ ಪ್ರಶ್ನೆ ಉದ್ಭವಿಸುವುದಿಲ್ಲ. ದೇವಾಲಯದ ಪ್ರವೇಶ ನಿರ್ಬಂಧ ಇರುವುದಿಲ್ಲ. ದೇಹದ ಮೇಲೆ ಸದಾ ಇಷ್ಟಲಿಂಗದ ಧರಿಸಿರುವುದರಿಂದ ಆ ಭಕ್ತನಿಗೆ ತನ್ನನ್ನು ಕಾಪಾಡುವ ದೈವ ತನ್ನ ಅಂಗದ ಮೇಲೆ ಇದೆ ಎನ್ನುವ ಆತ್ಮವಿಶ್ವಾಸ ಹಾಗೂ ನಂಬಿಕೆ ಆತನಲ್ಲಿ ಮನೆ ಮಾಡಿರುತ್ತದೆ.

     ದೇವಾಲಯಗಳ ನಿರಾಕರಣೆಗೆ ಮತ್ತೊಂದು ಕಾರಣವು ಇದ್ದಿರಬಹುದು. ಕನ್ನಡನಾಡಿನಲ್ಲಿ ಆಗಿನ ಕಾಲಕ್ಕೆ ಹಲವಾರು ಧಾರ್ಮಿಕ ಆಚರಣೆಗಳು, ಬಹುದೇವತಾ ಆರಾಧನೆಯ ಪದ್ಧತಿಗಳು ಸಾಮಾಜಿಕ ಸ್ತರವಿನ್ಯಾಸಗಳು ಜನತೆಯ ಬದುಕನ್ನು ವಿಘಟನೆ ಗೊಳಿಸುವಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದವು. ಜನತೆಯ ವಿಘಟನೆಗೊಂಡ ಬದುಕನ್ನು ಹಾಗೂ ಮನಸ್ಥಿತಿಯನ್ನು ಸಂಘಟಿಸುವ ಹಿನ್ನಲೆಯಲ್ಲಿ ಬಹುದೇವತಾರಾಧನೆ ಹಾಗೂ ದೇವಸ್ಥಾನಗಳ ನಿರ್ಮಾಣವನ್ನು ನಿರಾಕರಿಸಲು ಸಾಧ್ಯವಾಯಿತು.

     ಜನತೆಯ ನಂಬಿಕೆಗನುಗುಣವಾಗಿ ಜನಮನದಲ್ಲಿ ಮನೆಮಾಡಿಕೊಂಡು ಪೂಜೆಗೊಳ್ಳುತ್ತಿದ್ದ ಬಹು ಸಂಖ್ಯಾತ ಕ್ಷುದ್ರದೇವತೆಗಳನ್ನು ಮಡಕೆ ದೈವ, ಮೊರದೈವ, ಬೀದಿಯ ಕಲ್ಲು ದೈವ ಎಂದು ಪೂಜಿಸುವ ಪ್ರವೃತ್ತಿಗಳನ್ನು ಹಾಗೂ ಆಗಲೇ ನೆಲೆನಿಂತ ದೇವಾಲಯಗಳಿಗೆ ದಾನದತ್ತಿ, ಜೀರ್ಣೋದ್ಧಾರ ಮಾಡುವ ಪ್ರವೃತ್ತಿಯನ್ನು ಹೊಸ ಆಲಯಗಳ ನಿರ್ಮಾಣ ಇತ್ಯಾದಿಗಳನ್ನು ಖಂಡಿಸಿ ಏಕದೇವನಿಷ್ಠೆಗೆ ಒಳಗುಮಾಡಿದ್ದು ವಚನಚಳುವಳಿಯ ಬಹು ಮುಖ್ಯ ಪಾತ್ರವಾಗಿದೆ. ಏಕದೈವವಾದ ಶಿವ, ಇಷ್ಟಲಿಂಗ ರೂಪದಿಂದ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೇ ಇದ್ದಾನೆ ಮತ್ತು ಆ ಮೂಲಕ ತನ್ನ ದೇಹವೇ ದೇಗುಲವಾಗಿದೆ. ಈ ರೀತಿ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡಿದ್ದವರೆಲ್ಲರೂ ವರ್ಣ-ವರ್ಗಗಳ ತಾರತಮ್ಯದಿಂದ ಮುಕ್ತರಾಗಿ ಆಧ್ಯಾತ್ಮಿಕವಾಗಿ ಸಮಾನರು ಎಂಬ ವಿನೂತನ ಧಾರ್ಮಿಕ ಶ್ರದ್ಧೆಯನ್ನು ಮೂಡಿಸುವ ಸಲುವಾಗಿ ದೇವಾಲಯದ ನಿರಾಕರಣೆ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ದೇವಾಲಯ ನಿರಾಕರಣೆಯಿಂದ ಇಷ್ಟಲಿಂಗದ ನಿಷ್ಠೆಯನ್ನು ದೃಢಗೊಳಿಸುವ ಈ ಪದ್ಧತಿಯು ಭಕ್ತನಿಗೂ ದೇವರಿಗೂ ದೇವಾಲಯದ ಕಾರಣದಿಂದ ನಡುವೆ ಸ್ಥಾಪಿತವಾದ ಪೂಜಾರಿಯ ಮಾಧ್ಯಮವನ್ನು ನಿರಾಕರಿಸಿ ಭಕ್ತಿ ಎನ್ನುವುದು ಭಕ್ತ ಹಾಗೂ ಭಗವಂತನ ನಡುವಣ ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನ ಎನ್ನುವ ನಿಲುವನ್ನು ವ್ಯಕ್ತಪಡಿಸಿದೆ. ವಚನಚಳುವಳಿಯ ಕಾಲಕ್ಕೆ ಇದ್ದಂತಹ ದೇವಾಲಯ ಸಂಸ್ಕೃತಿ ಉಳ್ಳವರ ಹಾಗೂ ಉಚ್ಛವರ್ಗದವರ ಸ್ವತ್ತಾಗಿದ್ದು ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡ ಅವರನ್ನು ಶೋಷಣೆಗೆ ಗುರಿಪಡಿಸುವ ಸಾಧನವಾಗಿತ್ತು. ಶೋಷಿತ ವರ್ಗದ ಜನತೆಗೆ ದೇವಾಲಯದ ಪ್ರವೇಶವನ್ನು ನಿರಾಕರಿಸಿತ್ತು.  ವಚನಕಾರರು ಈ ಪ್ರವೃತ್ತಿಯನ್ನು ದೇವಾಲಯ ನಿರಾಕರಣೆಯ ಮೂಲಕ ವಚನ ಚಳುವಳಿ ನಿರಾಕರಿಸಿತು. ವಚನ ಚಳುವಳಿಯು ಸ್ಥಾವರಲಿಂಗ ಪ್ರತೀಕವಾದ ದೇವಾಲಯದ ಕಲ್ಪನೆಯನ್ನು ನಿರಾಕರಣೆ ಮಾಡದೆ ದೇವಾಲಯವನ್ನೇ ಸಂಘಟನೆಯನ್ನಾಗಿ ಮಾಡಿಕೊಂಡು ಅದರ ಮೂಲಕವೇ ಸಮಾಜೋಧಾರ್ಮಿಕ ಚಳುವಳಿಯನ್ನು ಕೈಗೊಳ್ಳಬಹುದಾಗಿತ್ತಲ್ಲ ಎನ್ನುವ ಪ್ರಶ್ನೆಯೂ ಉದ್ಭವಿಸಬಹುದು.

     ವಚನ ಚಳುವಳಿಯ ಕಾಲದಲ್ಲಿ ವೀರಶೈವ ಮತದ ಮೂಲಕ ಅಸಂಖ್ಯಾತ ಶಿವಾಲಯಗಳು ನಿರ್ಮಾಣಗೊಂಡವು, ನಿರ್ಮಾಣಗೊಳ್ಳುತ್ತಿದ್ದವು. ವಚನ ಚಳುವಳಿಯ ರಾಜಕೀಯ ಕಾಲವಾದಂತಹ ಕಲ್ಯಾಣ ಚಾಲುಕ್ಯರು ಹಾಗೂ ಕಲಚೂರಿಗಳ ಆಳ್ವಿಕೆಯ ಕಾಲದಲ್ಲಿ ೫೦೦ಕ್ಕೂ ಮೇಲ್ಪಟ್ಟು ದೇವಾಲಯಗಳ ನಿರ್ಮಾಣವಾಗಿರುವುದಕ್ಕೆ ಆ ಕಾಲದ ಶಾಸನಗಳ ಉಲ್ಲೇಖಗಳೇ ನಿದರ್ಶನ. ಇದರಿಂದ ನಮಗೆ ಮನದಟ್ಟಾಗುತ್ತದೆ. ವಚನ ಚಳುವಳಿಯ ಕಾಲದಲ್ಲಿಯೇ ಅದರ ಕೇಂದ್ರ ಭಾಗವನ್ನು ಹೊರತು ಪಡಿಸಿ ಉಳಿದ ಭಾಗಗಳಲ್ಲಿ ದೇವಾಲಯಗಳು ನಿರ್ಮಾಣಗೊಂಡಿವೆ. ಇದರಿಂದಾಗಿ ವಚನ ಚಳುವಳಿಯ ಕಾಲಘಟ್ಟ. ಸಂಪೂರ್ಣವಾಗಿ ಸ್ಥಾವರಲಿಂಗಗಳ ಪ್ರತೀಕಗಳಾದ ದೇವಾಲಯಗಳ ನಿರ್ಮಾಣವನ್ನು ಸಂಪೂರ್ಣವಾಗಿ ವಿರೋಧಿಸಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತೇ? ಎನ್ನುವ ಪ್ರಶ್ನೆಗೆ ಇಲ್ಲ ಎಂದೇ ಹೇಳಬೇಕಾಗುತ್ತದೆ.

     ವಚನಕಾರರು ದೇವಾಲಯಗಳ ವಿರೋಧದ ಕುರಿತು ತಾಳಿರುವ ನಿಲುವು ಮೇಲ್ನೋಟಕ್ಕೆ ಸರಿಯೆಂದು ಕಂಡು ಬಂದರೂ ವಾಸ್ತವವಾಗಿ ದೇವಾಲಯಗಳ ಸ್ಥಾಪನೆ ಬಗ್ಗೆ ಎಂದಿಗೂ ವಿರೋಧವನ್ನು ತಾಳಿರಲಿಲ್ಲ ಎನ್ನಬಹುದು. ವಚನಕಾರರು ಒಂದಿಲ್ಲೊಂದು ರೀತಿಯಲ್ಲಿ ದೇವಾಲಯಗಳ ಸಂಪ್ರದಾಯಕ್ಕೆ ಒಳಗಾದವರೇ ಆಗಿದ್ದಾರೆ. ವಚನಕಾರರ ಅಂಕಿತಗಳಂತು ಸ್ಪಷ್ಟವಾಗಿ ಸ್ಥಾವರಲಿಂಗದ ಪ್ರತೀಕಗಳಾಗಿವೆ. ಬಸವಣ್ಣನವರ ಅಂಕಿತವಾದಂತಹ ಕೂಡಲಸಂಗಮದೇವ, ಇಂದಿಗೂ ಕೂಡಲಸಂಗಮದ ದೇವಸ್ಥಾನವನ್ನು ನೆನಪಿಸಿದರೆ, ಅಕ್ಕಮಹಾದೇವಿಯ ಚೆನ್ನಮಲ್ಲಿಕಾರ್ಜುನ ಅಂಕಿತವು ಶ್ರೀಶೈಲದ ಚನ್ನಮಲ್ಲಿಕಾರ್ಜುನ ದೇವಸ್ಥಾನವನ್ನು ಪ್ರತಿನಿಧಿಸುತ್ತದೆ. ಅಲ್ಲಮನ ಗೋಗೇಶ್ವರ ಅಂಕಿತವು ಬಳ್ಳಿಗಾವೆಯ ಗೊಗ್ಗೇಶ್ವರ ಸ್ಥಾವರಲಿಂಗವನ್ನು ಪ್ರತಿನಿಧಿಸುತ್ತದೆ. ಆದಯ್ಯನ ಸೌರಾಷ್ಟ್ರ ಸೋಮೇಶ್ವರ ಅಂಕಿತವು ಸೌರಾಷ್ಟ್ರ ಸೋಮೇಶ್ವರ ದೇವಾಲಯದ ಪ್ರತೀಕವಾಗಿದೆ. ಹೀಗೆ ಹಲವಾರು ವಚನಕಾರರ ಅಂಕಿತಗಳು ಅವರವರ ಕಾರ್ಯಕ್ಷೇತ್ರದಲ್ಲಿನ ದೇವಾಲಯಗಳ ಸ್ಥಾವರಲಿಂಗಗಳನ್ನು ಸಂಕೇತಿಸುತ್ತದೆ. ವಚನಕಾರರಲ್ಲಿ ಸಿದ್ಧರಾಮ, ಏಕಾಂತರಾಮಯ್ಯ, ಮುಂತಾದ ವಚನಕಾರರು ದೇವಾಲಯಗಳನ್ನು ತಾವೇ ನಿರ್ಮಿಸಿದ್ದಕ್ಕೆ ಶಾಸನ, ಕಾವ್ಯ, ಪುರಾಣಗಳಲ್ಲಿ ಉಲ್ಲೇಖವಿದೆ. ಬಹುಪಾಲು ವಚನಕಾರರ ವಚನಗಳ ಅಂಕಿತಗಳು ದೇವಾಲಯಗಳ ಸ್ಥಾವರಲಿಂಗದಿಂದ ಪ್ರಚೋದಿತವಾಗಿವೆ.

      ಕೆಲವು ವಚನಕಾರರ ಅಂಕಿತಗಳು ಸ್ಥಳೀಯವಾದ ದೇವಾಲಯಗಳನ್ನೆ ಸೂಚಿಸುತ್ತವೆಯಾದರೂ ವಚನಕಾರರ ಧೋರಣೆ ದೇವಾಲಯವನ್ನು ನಿರಾಕರಿಸುವ ಹಾಗೂ ಮೀರುವ ನೆಲೆಯನ್ನು ತಲುಪಿದ್ದಲ್ಲದೆ ದೇಹವೇ ದೇವಾಲಯ ಎನ್ನುವ ಕಲ್ಪನೆಯನ್ನು ಹುಟ್ಟುಹಾಕಿದ್ದು ವಿಪರ್ಯಾಸದ ಸಂಗತಿ. ಬಸವಣ್ಣನವರ ‘ಉಳ್ಳವರು ಶಿವಾಲಯವ ಮಾಡುವರಯ್ಯ..........’ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವ ವಚನವು ದೇವಾಲಯವೇ ಮಾನವ ಶರೀರ, ಮಾನವ ಶರೀರವೇ ದೇವಸ್ಥಾನ ಎನ್ನುವ ಸಮೀಕರಣ ಕ್ರಿಯೆಯಾಗಿದೆ. ಅಲ್ಲದೆ ವಚನಕಾರರ ದೇವಾಲಯದ ಪರಿಕಲ್ಪನೆಗೆ ಅತ್ಯುತ್ತಮ ವ್ಯಾಖ್ಯಾನದಂತಿದೆ. ಶ್ರೀಮಂತರು ನಿರ್ಮಿಸುವ ದೇವಾಲಯದೊಂದಿಗೆ ಬಸವಣ್ಣ ತಾನೂ ಮಾಡುವ ದೇವಸ್ಥಾನವನ್ನು ಮುಖಾಮುಖಿಯಾಗಿರಿಸಿ ಒಂದು ಕಾಲಕ್ಕೆ ಸಾಂಸ್ಕೃತಿಕವಾಗಿ ಅರ್ಥಪೂರ್ಣವಾಗಿದ್ದ ದೇವಾಲಯ ತನ್ನ ಅರ್ಥವನ್ನು ಕಳೆದುಕೊಂಡು ಸ್ಥಾವರವಾಗಿದೆ ಎಂಬುದನ್ನು ಸೂಚಿಸುತ್ತಾ ಅದಕ್ಕೆ ಪರ್ಯಾಯವಾಗಿ ‘ದೇಹವೇ ದೇಗುಲವೆಂಬ, ಜಂಗಮ ಅಥವಾ ಚಲನಶೀಲ ಸ್ಥಿತಿಯನ್ನು ಪ್ರತಿಪಾದಿಸುವ ಕ್ರಮವಾಗಿದೆ. ಈ ವಚನ ಶಿವಾಲಯವನ್ನು ಮಾಡುವ ಕ್ರಿಯೆಯನ್ನು ಹೊರತು ಪಡಿಸಿ ವ್ಯಕ್ತಿ ತಾನೇ ಶಿವಾಲಯ ಆಗುವ ಪ್ರಕ್ರಿಯೆಯನ್ನು ಪ್ರತಿಪಾದಿಸುತ್ತದೆ.

     ಸ್ಥಾವರ ಲಿಂಗವು ಒಂದು ವಿಧದಲ್ಲಿ ತನ್ನ ಭಕ್ತರಿಗೆ ಇಷ್ಟಾರ್ಥವನ್ನು ಅನುಗ್ರಹಿಸುವುದರಿಂದ ಅದು ಅವರಿಗೆ ಇಷ್ಟಲಿಂಗ ಎನ್ನಿಸುತ್ತದೆ. ವಚನಕಾರರ ಚರಿತ್ರೆಯನ್ನು ಅವಲೋಕಿಸಿದರೆ, ಅವರು ತಮಗೆ ಇಷ್ಟವಾಗಿರುವ ಸ್ಥಾವರಲಿಂಗದ ಕುರುಹಾಗಿ ಇಷ್ಟಲಿಂಗವನ್ನು ಪ್ರವಾಸದ ಸಂದರ್ಭದಲ್ಲಿ ಜೊತೆಗೆ ಕೊಂಡೊಯ್ಯುತ್ತಿದ್ದರು ಎಂಬುದಾಗಿ ತಿಳಿದು ಬರುತ್ತದೆ.

     ಬಾಲಕ ಬಸವಣ್ಣ ಬಾಗೇವಾಡಿಯನ್ನು ಬಿಟ್ಟು ಕೂಡಲಸಂಗಮಕ್ಕೆ ತೆರಳುವಾಗ ಓಡಿ ಬಂದೊಳಗಂ ಪೊಕ್ಕು ತನ್ನಯ ಲಿಂಗಮಂ ಕೊಂಡು ಹೋದನೆಂದು ಸಿಂಗಿರಾಜ ಪುರಾಣ (೫.೯೪) ಹೇಳುತ್ತದೆ. ಅದರಂತೆ ಬಾಲಕ ಸಿದ್ಧರಾಮನು ತಂದೆ-ತಾಯಿಗಳು ಸೂಚಿಸಿದ ಧೂಳಿಮಾಕಾಳ ದೇವತೆಯ ಪೂಜೆಯನ್ನು ತಿರಸ್ಕರಿಸಿ ನಿಮ್ಮ ಮನೆಯೊಳು ನಿಲ್ಲುವನಲ್ಲೆಂದು ಲಿಂಗಮಂ ಧರಿಸಿ ಪಿಡಿದುಕೊಂಡು ಹೊರಟುಹೋದನೆಂದು ಸಿದ್ಧರಾಮ ಚಾರಿತ್ರ (೩.೩೬) ತಿಳಿಸುತ್ತದೆ.

     ಶರಣರು ಪ್ರವಾಸ ಸಂದರ್ಭದಲ್ಲಿ ಲಿಂಗವನ್ನು ಒಂದು ಸಣ್ಣ ಪೆಟ್ಟಿಗೆಯಲ್ಲಿಟ್ಟುಕೊಂಡು ಒಯ್ಯುತ್ತಿದ್ದುದಾಗಿ ತಿಳಿದು ಬರುತ್ತದೆ. ಪೂಜೆಯ ಪ್ರಸಂಗದಲ್ಲಿ ತಮ್ಮ ಅನುಕೂಲದಂತೆ ನೆಲದ ಮೇಲೆಯೇ ಅಥವಾ ಅಂಗೈ ಮೇಲೆಯೇ ಇಟ್ಟು ಪೂಜಿಸುತ್ತಿರಬಹುದು. ಹರಿಹರನ ಕೊಂಡುಗುಳಿಕೇಶಿರಾಜ ದಣ್ಣಾಯಕರ ರಗಳೆಯಲ್ಲಿ ಕೊಂಡಗುಳಿ ಕೇಶಿರಾಜನು ಪ್ರವಾಸದ ಸಂದರ್ಭದಲ್ಲಿ ಲಿಂಗವನ್ನು ಒಯ್ದು ತೆಲುಗು ಜೊಮ್ಮಯ್ಯನ ಮನೆಯಲ್ಲಿ ನೆಲದ ಮೇಲಿಟ್ಟು ಪೂಜಿಸಿದ ಉಲ್ಲೇಖಇದೆ. ಕೊಂಡಗುಳಿ ಕೇಶಿರಾಜನು ಆತನು ಅಂಗೈಯೊಳಿಟ್ಟು ಪೂಜಿಸುತ್ತಿದ್ದ ಸೂಚನೆಯು ಆತನ ಕಂದ ಪದ್ಯಗಳಿಂದ ವ್ಯಕ್ತವಾಗುತ್ತದೆ. ಕೊರಳಲ್ಲಿ ಕಟ್ಟಿಕೊಂಡರೂ ಕರದಲ್ಲಿ ಪೂಜಿಸಿದರೂ ಇಷ್ಟಲಿಂಗ ಹೆಸರಿನಿಂದ ಕರೆದರೂ ಈ ಸ್ಥಾವರಲಿಂಗ ಸೂಚೀ ಇಷ್ಟಲಿಂಗವು ಶರಣರ ಇಷ್ಟಲಿಂಗದಿಂದ ತಾತ್ವಿಕವಾಗಿ ಭಿನ್ನವಾಗಿದೆ. ಸ್ಥಾವರಲಿಂಗವೇ ಇಷ್ಟಲಿಂಗವೆನಿಸಿಕೊಂಡು ಕೊನೆಗೆ ಶರೀರದ ಮೇಲೆ ನೆಲೆಗೊಂಡಿತು. ಕರಪೀಠದಲ್ಲಿ ಪೂಜೆಗೊಂಡಿತು. ಈಗಾಗಲೇ ನೋಡಿರುವ ಹಾಗೆ ವಚನಕಾರರು ಸ್ಥಾವರಲಿಂಗದ ಹೆಸರನ್ನು ಮುದ್ರಿಕೆಯಾಗಿಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ.

     ಬಹುತೇಕ ವಚನಕಾರರ ಅಂಕಿತದ ಹೆಸರಿನ ಸ್ಥಾವರಲಿಂಗಗಳು ಅವರವರ ಗ್ರಾಮಗಳಲ್ಲಿ ಕಂಡುಬರುತ್ತವೆ. ಪುಲಿಗೆರೆಯ ವರದ ಸೋಮೇಶ್ವರಾ ಅಂಕಿತದಲ್ಲಿ ಪುಲಿಗೆರೆಯೆಂಬ ಗ್ರಾಮಸೂಚಿಕಂಡುಬಂದರೆ, ಏಲೇಶ್ವರಲಿಂಗ ಅಂಕಿತದಲ್ಲಿ ಗ್ರಾಮನಾಮದಿಂದಲೇ ಸ್ಥಾವರಲಿಂಗವನ್ನು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ವಚನಗಳ ಅಂಕಿತ ಇಷ್ಟಲಿಂಗವನ್ನೇ ಸೂಚಿಸುತ್ತಿದ್ದರೂ ಮೂಲತಃ ಅವು ಸ್ಥಾವರಲಿಂಗತತ್ವದ ಇಷ್ಟಲಿಂಗವೇ ಆಗಿವೆ. ಇಷ್ಟಲಿಂಗವು ಇಷ್ಟವಾಗಿರುವ ಸ್ಥಾವರಲಿಂಗದ ಪ್ರತೀಕವಾಗಿದೆ.

      ವಚನಕಾರರು ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಲಿಲ್ಲ. ದೇವಾಲಯಗಳು ಶೋಷಣೆಯ ಕೇಂದ್ರಗಳಾಗಬಾರದೆಂಬುದೇ ಅವರ ಮುಖ್ಯ ಉದ್ದೇಶವಾಗಿತ್ತು. ವಚನಕಾರರು ಸ್ಥಾವರಲಿಂಗ ವಿರೋಧಿಗಳು ಎನ್ನುವ ಹೇಳಿಕೆಯನ್ನು ಆಕರಗಳ ಹಿನ್ನಲೆಯಲ್ಲಿ ಪುನರ್‌ಪರಿಶೀಲಿಸುವ ಅಗತ್ಯವಿದೆ. ಬಸವಣ್ಣ ಅಲ್ಲಮರ ಒಂದೆರಡು ವಚನಗಳಲ್ಲಿ ಸ್ಥಾವರ ಲಿಂಗದ ಟೀಕೆ ಕಂಡು ಬಂದರೂ ವಚನಕಾರರು ಸ್ಥಾವರಲಿಂಗದ ಕಡು ವಿರೋಧಿಗಳಲ್ಲ. ದೇವಾಲಯಗಳಲ್ಲಿನ ಸ್ಥಾವರಲಿಂಗದ ಬಗೆಗೆ ಶರಣರು ಏನಾದರೂ ಟೀಕೆ ಮಾಡಿದ್ದರೆ ಬಹಿಷ್ಕರಿಸಲೆಂದಲ್ಲ ಪರಿಷ್ಕರಿಸಲೆಂದು ಎನ್ನುವ ಎಲ್.ಬಸವರಾಜುರವರ ಮಾತು ಒಪ್ಪತಕ್ಕದ್ದೇ. ಶರಣರನ್ನು ಕುರಿತ ಶಾಸನಗಳು ಹಾಗೂ ಕಾವ್ಯ ಪುರಾಣಗಳಲ್ಲಿ ಶರಣರು ಊರಿಂದ ಊರಿಗೆ ಸಂಚರಿಸುತ್ತಿದ್ದಾಗ ತಂಗುತ್ತಿದ್ದುದು ಶಿವದೇಗುಲಗಳಲ್ಲಿ ಎಂಬ ವಿವರ ತಿಳಿದ ಸಂಗತಿಯಾಗಿದೆ. ಶರಣರು ದೇವಾಲಯಗಳನ್ನು ಕಟ್ಟಿಸಿದ್ದರ ಬಗೆಗೆ ಶಾಸನಗಳಲ್ಲಿ ಉಲ್ಲೇಖ ಇದೆ. ಏಕಾಂತದ ರಾಮಯ್ಯ ಆದಯ್ಯ ಶಂಕರದಾಸಿಮಯ್ಯ ಮಾರುಡಿಗೆ  ನಾಚಿತಂದೆ, ಸಿದ್ಧರಾಮ, ಹುಳಿಯಮೇಶ್ವರಚಿಕ್ಕಯ್ಯ. ಮುಂತಾದ ಶರಣರು ಊರಿಂದೂರಿಗೆ ಹೊರಟರೆ ತಂಗುತ್ತಿದ್ದುದು ಶಿವಾಲಯಗಳಲ್ಲಿ ಎಂಬುದು ಅವರನ್ನು ಕುರಿತ ಶಾಸನಗಳು ಮತ್ತು ಕಾವ್ಯ ಪುರಾಣಗಳಲ್ಲಿ ವಿದಿತವಾಗುತ್ತದೆ. ಬಸವಣ್ಣನವರು ದೇವಾಲಯಗಳು ಮಹತ್ವವನ್ನು ಬಲ್ಲವರಾದ್ದರಿಂದ ಅವು ಜಡತ್ವವನ್ನು ಮಾಡಬಾರದೆಂಬ ಕಾರಣದಿಂದ ಅವುಗಳಿಗೆ ಹೆಚ್ಚಿನ ಮಹತ್ವ ನೀಡಲಿಲ್ಲ. ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಸಿದ್ಧರಾಮ, ಆದಯ್ಯ, ಏಕಾಂತದ ರಾಮಯ್ಯರಂತಹ ವಚನಕಾರರು ಕೊಂಡಗುಳಿ ಕೆಂಭಾವಿ, ಸೊನ್ನಲಿಗೆ, ಪುಲಿಗೆರೆ ಅಬ್ಬಲೂರುಗಳಲ್ಲಿ ದೇವಾಲಯಗಳನ್ನು ಕಟ್ಟಿದರು ಎಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖ ಇದೆ. ವಚನಗಳ ಅಂಕಿತ ಆಯಾ ಶರಣರ ಇಷ್ಟಲಿಂಗದಿಂದಲೇ ಪ್ರಚೋದಿತವಾಗಿದೆ. ಆದಯ್ಯ, ಪ್ರಭುದೇವ ಸೊಡ್ಡಳ ಬಾಚರಸ ಮುಂತಾದವರ ಸ್ಥಳಗಳಲ್ಲಿ ಅವರ ವಚನಗಳ ಅಂಕಿತದ ಸೋಮೇಶ್ವರ, ಗೊಗ್ಗೇಶ್ವರ ಮುಂತಾದ ದೇವಾಲಯಗಳು ಕಂಡು ಬರುತ್ತವೆ.ಅಲ್ಲಮನ ಅಂಕಿತ ಗೊಗ್ಗೇಶ್ವರ ಅಥವಾ ಗುಹೇಶ್ವರವು  ದೇವಾಲಯ ಸಂಸ್ಕೃತಿಯ ಇತಿಹಾಸದಲ್ಲಿ ದೇವಾಲಯಗಳ ರಚನೆಗಳ ಪೂರ್ವಾವಸ್ಥೆಯಾದ ಗುಹೆಯನ್ನು ಅಥವಾ ಗುಹಾಲಯ ಶಿಲ್ಪಗಳ ಪರಂಪರೆಯನ್ನು ಸೂಚಿಸುತ್ತದೆ ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿರುವುದನ್ನು ಗಮನಿಸಬಹುದಾಗಿದೆ. ಜೇಡರ ದಾಸಿಮಯ್ಯನ ಗ್ರಾಮವಾದ ಮುದೆನೂರಿನಲ್ಲಿ ಆತನ ವಚನ ಮುದ್ರಿಕೆಯಾದ ರಾಮನಾಥ ಹೆಸರಿನ ಸ್ಥಾವರಲಿಂಗ. ಸಿದ್ಧರಾಮರ ಸೊನ್ನಲಿಗೆಯಲ್ಲಿ ಆತನ ವಚನ ಮುದ್ರಿಕೆಯಾದ ಕಪಿಲಸಿದ್ಧ ಮಲ್ಲಿಕಾರ್ಜುನ ಹೆಸರಿನ ಸ್ಥಾವರ ಲಿಂಗಗಳಿವೆ. ಬಸವಣ್ಣನವರು ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತನ್ನ ಇಷ್ಟ ದೈವ ಕ್ಷೇತ್ರವಾದ ಕೂಡಲ ಸಂಗಮಕ್ಕೆ ಬಂದರು ಎಂಬುದಾಗಿ ಅವರನ್ನು ಕುರಿತ ಕಾವ್ಯ ಪುರಾಣಗಳಿಂದ ತಿಳಿದುಬರುತ್ತದೆ. ಒಂದು ವೇಳೆ ಅವರು ದೇವಾಲಯಗಳ ಕಡು ವಿರೋಧಿಗಳಾಗಿದ್ದರೆ ಕೂಡಲ ಸಂಗಮಕ್ಕೆ ಎಂದೆಂದಿಗೂ ಬರಲು ಸಾಧ್ಯವೇ ಇರಲಿಲ್ಲ. ಬಸವಣ್ಣನವರ ವಂಶಜರು ದೇವಾಲಯಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು ಎಂಬುದಕ್ಕೆ ಅರ್ಜುನವಾಡ ಶಾಸನವೇ ನಿದರ್ಶನವಾಗಿದೆ. ಬಸವಣ್ಣನ ವಂಶಜನಾದ ಹಾಲಬಸವಿದೇವನು ನಾಗೇಶ್ವರ, ಮಲ್ಲೇಶ್ವರ ದೇವರುಗಳಿಗೆ ಕುರುವನಿಗೆ(ಈಗಿನ ಕೋಚರಿ) ಗ್ರಾಮವನ್ನು ಸಂಗಮೇಶ್ವರ ದೇವರು ಮತ್ತು ಜಂಗಮಾರೋಗಣೆಗೆ ಕೊತ್ತನಿ(ಈಗಿನ  ಕೋಚರಿ) ಗ್ರಾಮಗಳನ್ನು ಪುಲಿಗೆರೆಯ ಸೋಮನಾಥ ದೇವರ ಸನ್ನಿಧಿಯಲ್ಲಿ ದತ್ತಿಯಾಗಿ ಪಡೆದ  ವಿವರ ಅರ್ಜುನವಾಡ ಶಾಸನದಲ್ಲಿ ವ್ಯಕ್ತಗೊಂಡಿದೆ. ಈ ವಿವರಗಳು ಬಸವಣ್ಣನವರ ವಂಶಸ್ಥರು ದೇವಾಲಯ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬಂದಿದ್ದರು ಎಂಬುದನ್ನು ಸೂಚಿಸುತ್ತದೆ.

    ೧೨ರಿಂದ೧೫ನೇ ಶತಮಾನದವರೆವಿಗೂ ಶಿವದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ದೇವಾಲಯಗಳಿಗೆ ದತ್ತಿ ದಾನಗಳನ್ನು ಬಿಡುವುದು ಇತ್ಯಾದಿ ಚಟುವಟಿಕೆಗಳನ್ನು ಆಯಾಕಾಲದ ಅರಸು ಮನೆತನಗಳು ಅಧಿಕಾರಿಗಳು, ಮಾಂಡಳಿಕರು ವರ್ತಕರು ಜನಸಾಮಾನ್ಯರು ಕೈಗೊಂಡಿದ್ದರು ಎಂಬುದಕ್ಕೆ ಅಪಾರ ಸಂಖ್ಯೆಯ ಶಾಸನಗಳೇ ನಿದರ್ಶನವಾಗಿವೆ. ಒಂದು ವೇಳೆ ವಚನಕಾರರು ಸ್ಥಾವರ ಲಿಂಗದ ಕಡು ವಿರೋಧಿಗಳು ಎಂಬ ನಿಲುವಿಗೆ ನಾವು ಬದ್ಧರಾದರೆ ಶರಣರ ವೈಚಾರಿಕ ಕ್ರಾಂತಿಯ ಪರಿಣಾಮ ವಚನಕಾರರ ನೆಲೆಯ ಭಾಗವಾದ ಈಗಿನ ಬಸವಕಲ್ಯಾಣವನ್ನು ಹೊರತು ಪಡಿಸಿ ಉಳಿದ ಭಾಗಗಳ ಮೇಲೆ ಆಗಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ದೇವಾಲಯಗಳಿಗೆ ಸಂಬಂಧಿಸಿದಂತೆ ಇವರ ವೈಚಾರಿಕ ಕ್ರಾಂತಿಯ ಪ್ರಭಾವ ಆಗಿಲ್ಲವೆಂದೇ ಹೇಳಬೇಕಾಗುತ್ತದೆ. ದೇವಾಲಯಗಳೆಂಬ ಸ್ಥಾವರ ಲಿಂಗಗಳು ಬಸವಣ್ಣನವರ ಕಾಲದಲ್ಲೂ ನಂತರದ ಕಾಲದಲ್ಲೂ ನಿರ್ಮಿತಗೊಂಡಿವೆ. ದೇವಾಲಯಗಳ ನಿರ್ಮಾಣದ ಕಲ್ಪನೆ ಭಾರತೀಯ ಸಂಸ್ಕೃತಿಯ ಪುರಾತನ ಸಂಸ್ಕೃತಿಯಾಗಿ ಬೇರುಬಿಟ್ಟಿದ್ದರಿಂದ ಅದನ್ನು ಕಿತ್ತುಹಾಕುವಂತಹ ಮನಸ್ಥಿತಿಗೆ ಜನತೆ ಒಳಗಾಗಿರಲಿಲ್ಲವೆಂದೇ ಹೇಳಬೇಕಾಗುತ್ತದೆ. ವಚನಕಾರರಲ್ಲಿ ಹಲವರ ಗದ್ದುಗೆಗಳು ದೇವಾಲಯಗಳ ಆವರಣಗಳಲ್ಲಿಯೇ ಕಂಡು ಬರುತ್ತದೆ. ಉದಾ||ಆದಯ್ಯ, ಏಕಾಂತರಾಮಯ್ಯ, ಸಿದ್ಧರಾಮರ, ಅಕ್ಕಮಹಾದೇವಿ, ಬಸವಣ್ಣರ ಗದ್ದುಗೆಗಳು ಪುಲಿಗೆರೆಯ ಸೋಮೇಶ್ವರ ದೇವಾಲಯ, ಅಬ್ಬಲೂರಿನ ವೀರಸೋಮೇಶ್ವರ, ಸೊನ್ನಲಿಗೆಯ ಕಪಿಲಸಿದ್ದ ಮಲ್ಲಿಕಾರ್ಜುನ ದೇವಾಲಯ, ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯ, ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಆವರಣಗಳಲ್ಲಿ ಕಂಡು ಬರುತ್ತಿವೆ. ಶರಣರು ದೇವಾಲಯಗಳನ್ನು ಕಟ್ಟಿಸಿದ ಹಾಗೂ ಆಲಯಗಳಲ್ಲಿ ಲಿಂಗಗಳನ್ನು ನಿರ್ಮಿಸಿದ ಬಗೆಗೆ ಶಾಸನಗಳಲ್ಲಿ ಹಾಗೂ ಅವರನ್ನು ಕುರಿತಾದ ಕಾವ್ಯ-ಪುರಾಣಗಳಲ್ಲಿ ನಿದರ್ಶನಗಳು ದೊರೆಯುತ್ತವೆ. ಕ್ರಿ.ಶ.೧೧೮೪ರ ತಾಳಿಕೋಟೆ ಶಾಸನವು ವರದಾನಿ ಗುಡ್ಡವ್ವೆ ಎಂಬ ಶಿವಶರಣೆ ಆಣಂಪುರದಲ್ಲಿ ಬಾಲಬ್ರಹ್ಮೇಶ್ವರ ಲಿಂಗವನ್ನು ಹಾಗೂ ಭೋಗಣ್ಣರು ಕೆಂಬಾವಿಯಲ್ಲಿ ಭೋಗೇಶ್ವರ ದೇವಾಲಯವನ್ನು ನಿರ್ಮಿಸಿದ್ದ ಬಗೆಗೆ ಪರೋಕ್ಷವಾಗಿ ಉಲ್ಲೇಖಿಸಿದೆ. ಪುಲಿಗೆರೆಯಲ್ಲಿ ವಚನಕಾರ ಆದಯ್ಯನು ಸೌರಾಷ್ಟ್ರದ ಸೋಮೇಶ್ವರನನ್ನು ತಂದು ಸುರಹೊನ್ನೆಬಸದಿಯಲ್ಲಿ ಪುನರ್ ಪ್ರತಿಷ್ಠಾಪಿಸಿದ ವಿವರ ವೀರಶೈವ ಕಾವ್ಯ-ಪುರಾಣಗಳಲ್ಲಿ ವ್ಯಕ್ತಗೊಂಡಿದೆ. ಏಕಾಂತರಾಮಯ್ಯನು ಅಬ್ಬಲೂರಿನಲ್ಲಿ ವೀರಸೋಮೇಶ್ವರದೇವಾಲಯವನ್ನು ನಿರ್ಮಿಸಿದ್ದರ ಬಗೆಗೆ ಕ್ರಿ.ಶ,೧೨೦೦ರ ಅಬ್ಬಲೂರಿನ ಶಾಸನ ಹಾಗೂ ಆತನನ್ನು ಕುರಿತ ಕಾವ್ಯ-ಪುರಾಣಗಳಲ್ಲಿ ವ್ಯಕ್ತಗೊಂಡಿದೆ. ಶಿವಯೋಗಿ ಸಿದ್ಧರಾಮರೂ ಸೊನ್ನಲಿಗೆಯಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವನ್ನು ಸ್ಥಾಪಿಸಿದ ವಿಷಯ ಪ್ರಸಿದ್ಧವಾಗಿದೆ.

     ವಚನಕಾರರ ದೇವಾಲಯಗಳಲ್ಲಿಯ ಸ್ಥಾವರಲಿಂಗವನ್ನು ತಮ್ಮ ವಚನಾಂಕಿತದಲ್ಲಿಟ್ಟುಕೊಂಡು ಶಿವನನ್ನು ತಮ್ಮ ಇಷ್ಟಲಿಂಗದಲ್ಲಿಯೇ ಕಂಡುಕೊಂಡರು. ವಚನಕಾರರ ಬಹುಪಾಲು ಅಂಕಿತಗಳೆಲ್ಲವೂ ದೇವಾಲಯಗಳ ಶಿವನಿಗೆ ಅನ್ವಯಿಸಿವೆ. ವೀರಶೈವರು ದೇವಾಲಯಗಳ ಶಿವನನ್ನು ತಮ್ಮ ಅಂಕಿತವನ್ನಾಗಿಸಿ ಕೊಂಡುದನ್ನು ಮನಗಂಡರೆ ನಿಜಕ್ಕೂ ಅವರು ದೇವಾಲಯಗಳನ್ನು ಬಹಿಷ್ಕರಿಸಿದರು ಎಂಬ ಪ್ರಶ್ನೆಯನ್ನು ಪುನರ್ ಆಲೋಚನೆಗೆ ಒಳಪಡಿಸಬೇಕಾಗಿದೆ. ವಚನಕಾರರನ್ನು ಕುರಿತು ನಂತರದ ಹರಿಹರ ರಾಘವಾಂಕ ಮುಂತಾದ ವೀರಶೈವ ಕವಿಗಳು ಕಾವ್ಯ-ಪುರಾಣಗಳನ್ನು ರಚಿಸಲು, ವಸ್ತುವಾಗಿ ಆಕರ್ಷಿಸಿದ್ದು ವಚನಕಾರರ ವಚನಗಳಿಗಿಂತಲೂ ಅವರು ವೀರಶೈವ ಮತ ಪ್ರಸಾರಕ್ಕಾಗಿ ಕೈಗೊಂಡ ಕಾರ್ಯಗಳೇ ಆಗಿವೇ ಎಂಬುದನ್ನು ಮನಗಾಣಬಹುದಾಗಿದೆ.  

     ದೇವಾಲಯ ಸಂಸ್ಕೃತಿಯನ್ನು ಅಲ್ಲಗಳೆದ ಶಿವಶರಣರ ಸಮಕಾಲೀನ ಸಂದರ್ಭದಲ್ಲೇ ನಿರಾತಂಕವಾಗಿ ನಿರಂತರವಾಗಿ ದೇವಾಲಯಗಳು ನಿರ್ಮಾಣಗೊಂಡಿದ್ದು ಇಂದಿಗೂ ಅವುಗಳ ಪಳಿಯುಳಿಕೆಗಳು ಕಂಡು ಬರುತ್ತಿರುವುದು ಚಾರಿತ್ರಿಕ ನಿದರ್ಶನವಾಗಿದೆ.

      ‘ಜಂಗಮ ಪದ ವೀರಶೈವಕ್ಕೆ ವಿಶಿಷ್ಟವಾದುದು. ಷಟ್‌ಸ್ಥಲ ಮಾರ್ಗದ ಮುನ್ನಡೆಯಲ್ಲಿ ಇದರ ಮಹತ್ವ ಇದೆ. ಅಷ್ಟಾವರಣದಲ್ಲಿ ಗುರು, ಲಿಂಗಗಳ ಜೊತೆಯಲ್ಲಿ ಜಂಗಮವು ಪ್ರಾಮುಖ್ಯತೆಯನ್ನು ಪಡೆದಿದೆ. ಜಂಗಮದ ಪದದ ಅರ್ಥ ಕಾಲದಿಂದ ಕಾಲಕ್ಕೆ ಮಾರ್ಪಾಡು ಆಗಿದ್ದರೂ ವಚನ ಸಾಹಿತ್ಯ ಹುಟ್ಟಿದ ಕಾಲದಲ್ಲಿ ಬಳಕೆಯಲ್ಲಿ ಅರ್ಥದ ಹಿನ್ನಲೆಯಲ್ಲಿಯೇ ಈ ಪದವನ್ನು ಗ್ರಹಿಸಬೇಕಾಗುತ್ತದೆ. ಗುರು ಮತ್ತು ಜಂಗಮ ಪದಗಳು ಮೇಲ್ನೋಟಕ್ಕೆ ಸಮನಾರ್ಥಕ ಪದಗಳೆನಿಸಿದ್ದರೂ ವಚನ ಸಾಹಿತ್ಯದ ಪ್ರಯೋಗಗಳಲ್ಲಿ ಇವೆರಡು ಪದಗಳು ಭಿನ್ನ- ಭಿನ್ನ ಸ್ವರೂಪದವುಗಳಾಗಿವೆ.  ಗುರುವಿನ ಮಹತ್ವ ಎಲ್ಲಾ ಧರ್ಮಗಳಲ್ಲಿ ಕಂಡುಬಂದಿದೆ. ಜಂಗಮ ಎಂಬುದು ವೀರಶೈವ ಧರ್ಮಕ್ಕೆ ವಿಶಿಷ್ಟವಾದ ಪರಿಕಲ್ಪನೆಯಾಗಿದೆ. ಗುರು ಸಾಧಕನಿಗೆ ಲಿಂಗವನ್ನು ಅನುಗ್ರಹಿಸುವುದರೊಂದಿಗೆ ಅದರ ರಹಸ್ಯವನ್ನು ಹೇಳಿ ಆತನನ್ನು ಷಟ್‌ಸ್ಥಲ ಮಾರ್ಗದಲ್ಲಿ ತೊಡಗಿಸುತ್ತಾನೆ. ಷಟ್‌ಸ್ಥಲ ಮಾರ್ಗದಲ್ಲಿ ಮುನ್ನಡೆದ ಸಾಧಕನ ಪ್ರಗತಿಯನ್ನು ಜಂಗಮನು ಅಳೆಯುತ್ತಾನೆ. ಹೀಗಾಗಿ ಗುರು ಶಿಕ್ಷಕನಾದರೆ ಜಂಗಮ ಪರೀಕ್ಷಕನಾಗಿ ಕಂಡು ಬರುತ್ತಾನೆ. ತ್ರಿವಿಧ ದಾಸೋಹ ಸೂತ್ರವು ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು ಅರ್ಪಿಸಿದಂತೆ, ಜಂಗಮಕ್ಕೆ ಧನವನ್ನು ಅರ್ಪಿಸಬೇಕು ಎಂಬ ನಿಲುವನ್ನು ತಾಳಿದೆ. 

     ವಚನ ಸಾಹಿತ್ಯದಲ್ಲಿ ‘ಜಂಗಮ ಪರಿಕಲ್ಪನೆಯನ್ನು ಬೇರೆ ಬೇರೆ ಹಂತಗಳಲ್ಲಿ ವ್ಯಾಪಕಾರ್ಥದಲ್ಲಿ ಬಳಸಿದ್ದಾರೆ.

`ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಾ ಈ ಮಾತುಗಳಲ್ಲಿ ಜಂಗಮ ಪದವು ಪಡೆದುಕೊಂಡಿರುವ ವಿಶಾಲಾರ್ಥವನ್ನು ಗಮನಿಸಬಹುದಾಗಿದೆ. ಬಸವಣ್ಣನವರ ವಚನದಲ್ಲಿ ಬಂದಿರುವ ಜಂಗಮ ಪದವು ಶಿವಲಿಂಗದ ಸಂಕ್ಷಿಪ್ತ ಆವೃತ್ತಿಯನ್ನು ಇಷ್ಟಲಿಂಗವನ್ನು ಸೂಚಿಸುತ್ತದೆ. ಈ ಇಷ್ಟಲಿಂಗಕ್ಕೆ ಚಲನೆ ಉಂಟು. ಅದನ್ನು ಕೈಯಲ್ಲೋ ಮೈಮೇಲೆ ಧರಿಸಿಯೋ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಬಹುದಾಗಿದೆ. ‘ಜಂಗಮ ಎಂಬುದು ಚಲನಶೀಲತೆಯ ಚೈತನ್ಯದ ಸಂಕೇತವಾಗಿ ವಚನಗಳಲ್ಲಿ ಕಾಣಿಸಿಕೊಂಡಿದೆ. ಗುರು ಮತ್ತು ಜಂಗಮ ಪದಗಳು ಮೇಲ್ನೋಟಕ್ಕೆ ಸಮನಾರ್ಥಕ ಪದಗಳೆನಿಸಿದರೂ ವಚನ ಸಾಹಿತ್ಯದ ಪ್ರಯೋಗಗಳಲ್ಲಿ ಇವೆರಡು ಪದಗಳು ಭಿನ್ನ- ಭಿನ್ನ ಸ್ವರೂಪದವುಗಳಾಗಿವೆ. ಚನ್ನಬಸವಣ್ಣ ಒಂದೆಡೆ ಲಿಂಗ ಪೂಜೆ ಮಾಡಲು ಗುರು ಮತ್ತು ಜಂಗಮದ ಪಾದತೀರ್ಥ ಬಳಸ ಬೇಕೆನ್ನುತ್ತಾನೆ. ಗುರುವಿನ ಗುರು   ಜಂಗಮ. ಗುರು ಮತ್ತು ಜಂಗಮದ ಬಗೆಗೆ ವಚನಗಳಲ್ಲಿಯ ಪ್ರಸ್ತಾಪದಲ್ಲಿ ವಚನಕಾರರು ಜಂಗಮದಲ್ಲಿ ಜಾತಿಯ ಹುಡುಕಬಾರದು ಎಂದಿರುವುದು ಗಮನಿಸ ತಕ್ಕ ಸಂಗತಿಯಾಗಿದೆ. ವೃತ್ತಿಯ ಜಂಗಮನಾಗಲು ಜಾತಿಯು ಅಡ್ಡಿಯಾಗುತ್ತಿರಲಿಲ್ಲ. ಒಬ್ಬ ವ್ಯಕ್ತಿ ಯಾವುದೇ ಜಾತಿಯಿಂದ ಬಂದು ಹೊಸದಾಗಿ ವೀರಶೈವನಾಗಿರಲಿ ಅಥವಾ ಹುಟ್ಟು ವೀರಶೈವನಾಗಿರಲಿ ಅವನು ಜಂಗಮನಾಗಬಹುದಿತ್ತು. ಆದಾಗ್ಯೂ ಜಂಗಮ ವಿಷಯದಲ್ಲಿ ಭೇದಭಾವದ ಬಗೆಗೆ ಜನಸಾಮಾನ್ಯರ ನಡೆವಳಿಕೆಗಳಲ್ಲಿ ಕಂಡು ಬರುತ್ತಿದ್ದರಿಂದಲೇ ಏನೋ `ಜಂಗಮರಲ್ಲಿ ಜಾತಿಯ ಹುಡುಕಬೇಡಿ ಎಂಬ ಮಾತು ಕಾಣಿಸಿ ಕೊಂಡಿದೆ ಎಂದೆನಿಸುತ್ತದೆ. ಗುರುವನ್ನು ಕುರಿತು ಈ ತೆರನಾದ ಅನಿಸಿಕೆ ವಚನಕಾರರಲ್ಲಿ ವ್ಯಕ್ತವಾಗಿಲ್ಲ.ವ್ಯಕ್ತಿಯೊಬ್ಬ ಜಂಗಮ ಆಗುವುದರ ಬಗೆಗೆ ಚನ್ನ ಬಸವಣ್ಣನ ವಚನದಲ್ಲಿ ಇಂತಿದೆ.

ಚನ್ನ ಬಸವಣ್ಣನವರ ವಚನದಲ್ಲಿಯ,

    ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ

    ಆ ಭಕ್ತ ಹೋಗಿ ಜಂಗಮವಾಗಿ ಗುರುವಿನ ಮಠಕ್ಕೆ ಬಂದಡೆ

    ಆ ಜಂಗಮವೆನ್ನ ಶಿಷ್ಯನೆಂದು ಗುರುವಿನ ಮನದಲ್ಲಿ ಹೊಳೆದಡೆ

    ಪಂಚಮಹಾಪಾತಕ

    ಈ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ ಭಯಭೀತಿ ಹೊಳೆದಡೆ

    ರೌರವ ನರಕ

    ಇಂತೀ ಭೇದವ ಕೂಡಲ ಚನ್ನಸಂಗಯ್ಯನಲ್ಲಿ

    ನಿಮ್ಮ ಶರಣರೆ ಬಲ್ಲರು  ಎಂಬ ವಿವರದಲ್ಲಿ ಈ ವಚನದಲ್ಲಿ ಭವಿಯಾದವನು ಗುರುವಿನಿಂದ ಲಿಂಗ ಪಡೆದು ತನ್ನ ಪೂರ್ವಶ್ರಮವ ಕಳೆದು ಭಕ್ತನಾದ ಮೇಲೆ ಆ ಭಕ್ತನೇ ಹೋಗಿ ಅಥವಾ ತಿರುಗಾಡಿ ಜಂಗಮವಾಗಿ ಹಿಂದಕ್ಕೆ ತನ್ನ ಗುರುವಿನ ಮನೆಗೆ ಬಂದಾಗ ಜಂಗಮನು ತನ್ನ ಶಿಷ್ಯನೆಂದು ಗುರುವು ಭಾವಿಸಬಾರದೆಂದೂ ಜಂಗಮನಿಗೆ ಗುರುವೆಂದು ಮನದಲ್ಲಿ ಭಯಭೀತಿ ಬರಬಾರದೆಂದೂ ವಿವರಣೆ ಇದೆ. ಈ ವಚನದಲ್ಲಿ ಗುರುವಿಗಿಂತ ಜಂಗಮ ಶ್ರೇಷ್ಠ ಎಂಬ ಭಾವನೆ ಇದೆ.     ಭವಿಯಾಗಿ ಹುಟ್ಟಿದವನು ಗುರುವಿನ ದೀಕ್ಷೆಯಿಂದ ವೀರಶೈವನಾಗಿ ಮುಂದೆ ಜಂಗಮನೂ ಆಗಬಹುದೆಂಬ ವಿಷಯವನ್ನು ಚನ್ನ ಬಸವಣ್ಣನವರ ಈ ವಚನ ಧ್ವನಿಸುತ್ತದೆ.

  ಜಂಗಮ ಪದ ವ್ಯಕ್ತಿಸೂಚಿಯಾಗಿ:

    ಜಂಗಮದ ಲಕ್ಷಣ ತಿರುಗಾಟ ನಿಂತ ಜಾಗದಲ್ಲಿ ನಿಲ್ಲದೆ ನಿರಂತರವಾಗಿ ಚಲಿಸುತ್ತಿದ್ದವನು. `ಜ್ಞಾನಕ್ಕಾಗಿ, ಬೆಳಕಿಗಾಗಿ, ಆತ್ಮೋದ್ಧಾರಕ್ಕೆ ಎಲ್ಲವನ್ನು ತ್ಯಜಿಸಿ ಬಡತನವನ್ನು ಸ್ವಪೇರಣೆಯಿಂದ ಅರಿಸಿಕೊಂಡು ನಿತ್ಯ ಸಂಚಾರಿಯಾಗಿದ್ದ ವ್ಯಕ್ತಿಯೇ ಜಂಗಮ. ಈತ ಅನುಭಾವದ ಆತ್ಮಜ್ಞಾನ ಕ್ಷೇತ್ರಧಾರಿ. ಆತ್ಮಜ್ಞಾನಕ್ಕಾಗಿ ಹಂಬಲಿಸುವವನಾದ್ದರಿಂದ ಜಂಗಮನಲ್ಲಿ `ತಿರುಗಾಟ ಪ್ರಮುಖ ಅಂಶವಾಗಿತ್ತು.

       ವಚನಕಾರರಲ್ಲಿ ಅಲ್ಲಮ ಪ್ರಭುವು ಜಂಗಮ ತತ್ವಕ್ಕೆ ಅತ್ಯುತ್ತಮ ನಿದರ್ಶನವಾಗಿ ಕಂಡು ಬರುತ್ತಾನೆ.  ಅಲ್ಲಮನು ಹುಟ್ಟಿನಿಂದ ಶೂದ್ರನಾಗಿದ್ದು ಪತ್ನಿ ಕಾಮಲತೆಯನ್ನು ಕಳೆದು ಕೊಂಡು ಅಪಾರ ದುಃಖದ ಸ್ಥಿಯಲ್ಲಿರುವಾಗ ದೊರಕಿದ  ಇಷ್ಟಲಿಂಗವನ್ನು ಸ್ವೀಕರಿಸಿ ದೇಶದಾದ್ಯಂತ ತಿರುಗಾಡಿ ಸಾಧನೆ ಗೈದು ಬೆಳಕನ್ನು ಕಂಡವನು ಅಲ್ಲಮನು ತನ್ನ ನಿರಂತರ ಅಲೆದಾಟ  ಸಮಯದಲ್ಲಿ ಭೇಟಿಯಾದ ಹಲವು ಸಾಧಕರನ್ನು ಕೈಹಿಡಿದು ಉದ್ಧರಿಸುತ್ತಾನೆ. ಜ್ಞಾನ ಬೆಳಕು ಅನುಭಾವದ ಮಾರ್ಗವನ್ನು ತೋರುತ್ತಾನೆ. ಅಲ್ಲಮನು ಹುಟ್ಟಿನಿಂದ ಜಂಗಮನಲ್ಲ. ಸಾಧನೆಯಿಂದ ಜಂಗಮ. ವೀರಶೈವ ಪರಂಪರೆಯಲ್ಲಿ ಗುರುವಿನ ಮೇಲ್ಮೆಯನ್ನು ಒಪ್ಪಿ ಕೊಂಡಿದ್ದರೂ ಗುರುವಿಗಿಂತ `ಜಂಗಮ ದೊಡ್ಡವನು ಎನ್ನುತ್ತದೆ.

      ಆದರೆ ಭಾರತೀಯ ಪರಂಪರೆಯಲ್ಲಿ ಗುರುವಿಗಿಂತ ದೊಡ್ಡವರು ಯಾರೂ ಇಲ್ಲ. ಭಾರತೀಯ ಧರ್ಮ ಪರಂಪರೆಯಲ್ಲಿ ಪೌರೋಹಿತ್ಯವು ಪ್ರಮುಖವಾದುದು. ಇಲ್ಲಿ ಪೌರೋಹಿತ್ಯವು ಒಂದು ನಿರ್ದಿಷ್ಟ ಜಾತಿ ಅಥವಾ ಪಂಗಡಕ್ಕೆ ಮೀಸಲಾಗಿರುತ್ತದೆ. ಅದು ಅನಿವಾರ್ಯವೂ ಹೌದು. ಅಂತಹ ಸಂದರ್ಭದಲ್ಲಿ ಕೆಳಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಪುರೋಹಿತ ವರ್ಗದ ವ್ಯಕ್ತಿಗಿಂತ ಶ್ರೇಷ್ಠ ಎನಿಸಿ ಕೊಳ್ಳಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉದ್ಭವಿಸುತ್ತದೆ. ಆದರೆ ವಚನಕಾರರ ಕಾಲದಲ್ಲಿ ರೂಪಗೊಂಡ ಜಂಗಮದ ಪರಿಕಲ್ಪನೆಯಲ್ಲಿ ಕ್ರಾಂತಿಕಾರಕ ಲಕ್ಷಣವನ್ನು ಗುರುತಿಸಬಹುದು.

   ಪೌರೋಹಿತ್ಯದ ಗುರುವೇ ದೊಡ್ಡವನಾದರೂ ಆತನೂ ಸೇರಿದಂತೆ ಉಳಿದ ಯಾವ ವರ್ಗದವರೇ ಆಗಲೀ, ಜಂಗಮನಾದರೆ ಆತ ಗುರುವಿಗಿಂತ ಶ್ರೇಷ್ಠ ಎನ್ನಿಸಿ ಕೊಳ್ಳುತ್ತಾನೆ. ಸಾಮಾಜಿಕವಾಗಲೀ, ಧಾರ್ಮಿಕವಾಗಿಯಾಗಲೀ ಜಂಗಮ ಗುರುವಿಗಿಂತ ಮೇಲೇರಬಲ್ಲ. ಗುರು ಮತಧರ್ಮವನ್ನು ಬೋಧಿಸುವವನು ಹಾಗೂ ಧರ್ಮದ ಆಚರಣೆಯ ಭಾಗದ  ಸಂರಕ್ಷಕನಾಗಿ ಕಂಡುಬಂದರೆ, ಜಂಗಮನ ಕ್ಷೇತ್ರವು ಮತ ಧರ್ಮಕ್ಕಿಂತ ಆಧ್ಯಾತ್ಮ ಕ್ಷೇತ್ರ. ಜಗತ್ತಿನಲ್ಲಿ ಸಂಚರಿಸಿ ಜನರ ನೋವನ್ನು ಹಂಚಿಕೊಳ್ಳುವವನು. ಆ ಮೂಲಕವೇ ಬೆಳೆಯುವನು. ವಚನಕಾರರು ` ಜಂಗಮ ಪರಿಕಲ್ಪನೆಯ ಮೂಲಕ ಮತಾಚಾರಿಗಳಿಗಿಂತ ಆಧ್ಯಾತ್ಮಕ್ಕೆ, ದೊಡ್ಡ ಬದುಕಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.    

     ವಚನ ಚಳುವಳಿ ವ್ಯಕ್ತಿಯ ಪರಿಮಿತಿಯನ್ನು ಮೀರಿದ ಸಾಮಾಜಿಕ ಶಕ್ತಿಯಾಗಿ ಜಂಗಮವನ್ನು ಕಂಡಿದ್ದರೂ ಜಂಗಮವನ್ನು ವ್ಯಕ್ತಿಗತವಾಗಿಯೂ ನೋಡಲಾಗಿದೆ. ಜಂಗಮವನ್ನು ವ್ಯಕ್ತಿಯಾಗಿ ನೋಡುವಾಗ ಸಾಧನೆಯ ತುತ್ತ ತುದಿಯನ್ನೇರಿದ ಅನುಭಾವಿಯ ಹಂತದ ವ್ಯಕ್ತಿಯಾಗಿ ಜಂಗಮ ಕಂಡು ಬರುತ್ತಾನೆ. ಲಿಂಗಾಂಗ ಸಾಮರಸ್ಯವನ್ನು ಪಡೆದವನಾಗಿದ್ದಾನೆ. ಅಲ್ಲಮಪ್ರಭುವನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಆತನ ನಡೆಯೆಲ್ಲ ಪಾವನ. ನುಡಿಯೆಲ್ಲ ಲಿಂಗ. ಆತ ನಡೆದು ನಿರ್ಗಮನಿ, ನುಡಿದು ನಿಶ್ಯಬ್ದ, ಭೌತಿಕ ಸ್ಥಾವರವನ್ನು ಮೀರಿ ಆಂತರಿಕವಾಗಿ ಜಗತ್ತನ್ನೇ ವ್ಯಾಪಿಸಿರುವ ಜಂಗಮನಾತ. ಅಂತಹ ನಿಲುವನ್ನು ಕುರಿತು ಬಸವಣ್ಣನ ವಚನದಲ್ಲಿ ವ್ಯಕ್ತಗೊಂಡಿರುವ

ಸ್ಥಾವರ ಭಕ್ತರಿಗೆ ಸೀಮೆಯಲ್ಲದೆ

ಘನಲಿಂಗ ಜಂಗಮಕ್ಕೆ ಸೀಮೆಯೆಲ್ಲಿಯದು

ಎಂಬ ಮಾತು ಅಲ್ಲಮನಂತಹ ಜಂಗಮನಿಗೆ ಅನ್ವಯಿಸುತ್ತದೆ. ಅಲ್ಲಮನಂತಹ ಜಂಗಮರು ತಾವೂ ಸಾಧಕರಾಗಿದ್ದು, ಆ ಮಾರ್ಗದಲ್ಲಿ ಮುಂದುವರೆಯುತ್ತಾ ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆಯ ಒಂದು ಭಾಗವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಚನ ಚಳುವಳಿಯಲ್ಲಿ ಜಂಗಮವು ವ್ಯಕ್ತಿಗತವಾಗಿಯೂ ಗೋಚರವಾಗಿತ್ತು. ಬಸವಣ್ಣನವರು ವ್ಯಕ್ತಿಸಾಧನೆ ಹಾಗೂ ಸಮಷ್ಟಿ ಜಾಗೃತಿಯಲ್ಲಿ ಜಂಗಮರ ಮಹತ್ವವನ್ನು ಮನಗಂಡಿದ್ದರು. ಜಂಗಮವೇ ಲಿಂಗ, ಜಂಗಮವೇ ಪ್ರಾಣ, ಧಾರ್ಮಿಕ ಸಾಧನೆಯ ಕೇಂದ್ರ ಶಕ್ತಿ ಜಂಗಮ ಎಂದು ಹೇಳುತ್ತಾ ಜಂಗಮಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಹೀಗಾಗಿ ಆ ಕಾಲದ ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಂಗಮ ಸಾರ್ವಭೌಮನಾದ. ತಾವು ಅನುಭವಿಸುವುದನ್ನು, ಪಡೆಯುವುದನ್ನು ಮೊದಲು ಜಂಗಮಕ್ಕೆ ಅರ್ಪಿಸಿ ಪ್ರಸಾದ ರೂಪವಾಗಿ ಅದನ್ನು ಪಡೆಯಬೇಕು ಎಂಬ ಭಾವನೆ ಉಂಟಾಗುವಷ್ಟರಮಟ್ಟಿಗೆ ಅದರ ಪ್ರಭಾವವಾದುದನ್ನು ಶರಣರ ಕೆಲವು ವಚನಗಳು ಸ್ಥಿರೀಕರಿಸುತ್ತವೆ.

   ೧೨ನೇ ಶತಮಾನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಎರಡು ಸ್ತರಗಳಲ್ಲಿ ಜಂಗಮತತ್ವ ಅತ್ಯಂತ ಮಹತ್ವ ಪಡೆದಿತ್ತು. ಚಲನಶೀಲ ಪ್ರತೀಕವಾದ ಜಂಗಮ ತತ್ವಕ್ಕೆ ಶರಣರು ವಸ್ತು, ವ್ಯಕ್ತಿ, ತತ್ವ ಇತ್ಯಾದಿ ರೀತಿಯಲ್ಲಿ ವಿವರಿಸಿದ್ದಾರೆ. ತನ್ನನ್ನು ತಾನೂ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ವ್ಯಕ್ತಿ ಜಂಗಮರ ವ್ಯಕ್ತಿ ರೂಪನಾಗುತ್ತಾನೆ. ಆಚಾರವೇ ಜಂಗಮ, ಕೋಪ ತಾಪವ ಬಿಟ್ಟು, ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮನಾಗಬೇಕು ಇತ್ಯಾದಿ ವಚನೋಕ್ತಿಗಳಲ್ಲಿ ಜಂಗಮದ ವಿಶ್ಲೇಷಣೆ ಸ್ಪಷ್ಟವಾಗಿದೆ. ಪ್ರಗತಿಪರ ಸಿದ್ಧಾಂತದ ಪ್ರತೀಕವಾದ ಜಂಗಮನಿಗೆ ವಚನಕಾರರು ಸಮಾಜದಲ್ಲಿ ಅತ್ಯಂತ ಮಹತ್ವದ ಸ್ಥಾನಕೊಟ್ಟಿದ್ದರು. ಜಂಗಮನಿಗೆ ವಿಶಿಷ್ಟವಾದ ಗುಣಲಕ್ಷಣಗಳಿದ್ದವು ಎಂಬುದನ್ನು ವಚನಗಳು ಸಾಬೀತು ಪಡಿಸುತ್ತವೆ.

ಜಂಗಮಕ್ಕೆ ಮಾತಾಪಿತರಿಲ್ಲ

ಜಂಗಮಕ್ಕೆ ಜಾತಿ ಬಂಧುಗಳಿಲ್ಲ

ಜಂಗಮಕ್ಕೆ ನಾಮರೂಪಗಳಿಲ್ಲ

ಜಂಗಮಕ್ಕೆ ಸೀಮೆ ಸಂಗಗಳಿಲ್ಲ

ಜಂಗಮಕ್ಕೆ ಕುಲಗೋತ್ರಗಳಿಲ್ಲ ನೋಡಾ ಅಖಂಡೇಶ್ವರಾ

ಇಂತಹ ಲಕ್ಷಣಗಳುಳ್ಳ ಜಂಗಮ ಸದಾ ಸಂಚಾರಿಯಾಗಿದ್ದು ಧರ್ಮ ಪ್ರಚಾರಕ, ಧರ್ಮ ಪರೀಕ್ಷನಾಗಿ ತಪ್ಪಿದವರಿಗೆ ಸರಿ ದಾರಿ ತೋರಿಸುವ ಮಾರ್ಗದರ್ಶಕನಾಗಿ ಕಂಡು ಬರುತ್ತಾನೆ.

     ಹನ್ನೆರಡನೇ ಶತಮಾನದ ತರುವಾಯ ಧಾರ್ಮಿಕ ವ್ಯವಸ್ಥೆಯಲ್ಲಿ ಮಠಗಳ ಪ್ರಾಬಲ್ಯ ಜಾಸ್ತಿಯಾದಾಗ ಮಠಗಳ ಒಡೆತನದಲ್ಲಿ ಜಂಗಮರು ಭಾಗಿಯಾದರು. ಜೊತೆಗೆ ಗುರುಗಳೂ ಮಠಗಳ ಅಸ್ತಿತ್ವದಲ್ಲಿ ಒಡೆತನವನ್ನು ಪಡೆದುಕೊಂಡರು. ಇವೆರಡು ಮಠಗಳ ನಡುವೆ ಪ್ರತ್ಯೇಕತೆ ಹಾಗೂ ಸ್ಪರ್ಧೆ ಉಂಟಾದವು. ಜಂಗಮ ಮಠಗಳು ಧಾರ್ಮಿಕ ಚಲನಶೀಲತೆಯ ಒಂದು ಭಾಗವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದೆ ತಮ್ಮ ಸುತ್ತ ಪರಿಮಿತಿಯ ಗೋಡೆಯನ್ನು ನಿರ್ಮಿಸಿಕೊಂಡು ಸ್ಥಾವರರೂಪ ಪಡೆದವು. ಈ ರೀತಿಯಾಗಿ ನಂತರದ ಕಾಲದಲ್ಲಿ ‘ಜಂಗಮ ಒಂದು ಜಾತಿ ಸೂಚಕವಾಗಿ ರೂಪುಗೊಳ್ಳಲು ಪ್ರಾರಂಭಿಸಿತು.      ಜಂಗಮರು ಅನುವಂಶೀಯವಾಗಿ ತಮ್ಮ ಹಿರಿಮೆಯನ್ನು ಸ್ಥಾಪಿಸತೊಡಗಿದರು. ‘ಜಂಗಮ ಎನ್ನುವ ಪರಿಕಲ್ಪನೆ ಬುದ್ಧಿವಂತ ಜನರ ಕೈಯಲ್ಲಿ ಸಿಕ್ಕು ‘ಜಂಗಮ ಹುಟ್ಟಿನಿಂದಲೇ ಬರುವ ಜಾತಿಯಾಗುವುದಕ್ಕೆ ಕಾರಣವಾಯಿತು. ಹೀಗಾಗಿ ‘ಜಂಗಮ ಒಂದು ವರ್ಗವಾಯಿತು. ಅದನ್ನೆ ತನ್ನ ಹಕ್ಕಾಗಿ ಸ್ಥಾಪಿಸಿಕೊಂಡು ವೀರಶೈವಧರ್ಮದಲ್ಲಿ ಪುರೋಹಿತಶಾಹಿಗೆ ಕಾರಣವಾಯಿತು.

     ಜಂಗಮ ಶರಣರ ಆಕಾಂಕ್ಷೆಗನುಗುಣವಾಗಿ ಪ್ರಚಾರಕನಾಗಿ, ಅವರ ಜ್ಞಾನಕಾರ್ಯಗಳಿಗೆ ಕ್ರಿಯೆ ದೀಕ್ಷೆ ಕೊಡುವನಾಗಿ, ಜನರನ್ನು ಜಾಗೃತಗೊಳಿಸುವನಾದ್ದರಿಂದ ಸಹಜವಾಗಿ ಅಪಾರವಾದ ಗೌರವವನ್ನು ಪಡೆದವನಾಗಿದ್ದ. ಸಮಾಜ ಕೊಡುತ್ತಿದ್ದ ಅಪಾರ ಗೌರವ ಹಾಗೂ ಜಂಗಮತ್ವ ಆತನಿಗೆ ಪೂರಕವಾಗಿ ಇದ್ದಾಗ ಅನಿವಾರ್ಯವಾಗಿ ಅವನತಿಯತ್ತ ಸಾಗಿತು. ಜಂಗಮರು ಜಂಗಮವನ್ನು ಉಪಜೀವನದ ವೃತ್ತಿಯನ್ನಾಗಿಸಿಕೊಂಡರು. ವಚನ ಚಳುವಳಿಯು ಇಷ್ಟಲಿಂಗಕ್ಕೆ ಒತ್ತು ಕೊಡುವುದರ ಮೂಲಕ ಪುರೋಹಿತಶಾಹಿಗಳ ಮೂಲಕ ದೇವಾಲಯಗಳೆಂಬ ಸ್ಥಾವರಗಳು ಜನತೆಯ ಶೋಷಣೆಯ ಕೇಂದ್ರಗಳಾಗಿರುವುದನ್ನು ತಪ್ಪಿಸಲು ಪ್ರಯತ್ನಿಸಿತು. ಪುರೋಹಿತಶಾಹಿಯನ್ನು ಹೊಡೆದು ಹಾಕುವ ಸಲುವಾಗಿ ಜಂಗಮತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಿತು. ಧರ್ಮ ಮತ್ತು ಸಮಾಜ ಎರಡರ ಸ್ವಾಸ್ಥತೆಯನ್ನು ಕಾಯ್ದುಕೊಳ್ಳಲು, ಸಮಾಜ-ಧರ್ಮಗಳ ರಕ್ಷಣೆಯನ್ನೇ ಪೂರ್ಣಾವಧಿ ಕಾಯಕವನ್ನಾಗಿ ಜಂಗಮರು ಸ್ವೀಕರಿಸಿ ಸಮಾಜದ ಗೌರವಕ್ಕೆ, ಪ್ರತಿಷ್ಠೆಗೆ ಪಾತ್ರರಾದರೂ ನಂತರದ ಕಾಲದಲ್ಲಿ ಪ್ರಲೋಬನೆಗಳು ಹಾಗೂ ಸ್ವಂತ ಹಿತಾಸಕ್ತಿಗನುಗುಣವಾಗಿ ತಮ್ಮ ಜವಾಬ್ದಾರಿಯಿಂದ ವಿಮುಖರಾದರು.

     ವಚನಕಾರರ ಕಾಲದಲ್ಲಿ ಜಂಗಮರಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದರೂ ನಂತರದಲ್ಲಿ ಕಾಲ ಬದಲಾದಂತೆ ಜಂಗಮರ ಸ್ಥಿತಿಯೂ ಬದಲಾಯಿತು. ವಂಶಪಾರಂಪರ್ಯವಾಗಿ ನಡೆಸುತ್ತ ಬಂದ ಧರ್ಮಕಾರ್ಯ ಭಿಕ್ಷಾಟನದಿಂದ ಸಾಧ್ಯವಾಗದೆ ಬದುಕು ದುರ್ಬರವಾಗಿ ಉದ್ಯೋಗ ಕಾಯಕ ಹಿಡಿಯಬೇಕಾಯಿತು. ಪರಿಣಾಮವಾಗಿ ಸಂಸಾರಿಗಳಾಗಬೇಕಾಯಿತು. ಹೀಗಾಗಿ ನಂತರದ ಕಾಲದಲ್ಲಿ ಜಾತಿ ಇಲ್ಲದೆ ಜಂಗಮರಾಗಿದ್ದ ಅವರು ಒಂದು ಜಾತಿಯಂತಾಗಿ ವೀರಶೈವ ಸಮಾಜದಲ್ಲಿ ಒಂದು ಅಂಗವಾಗಿ ಪರಿಣಮಿಸಿದರು.

     ೧೨ನೇ ಶತಮಾನದ ನಂತರದ ಕಾಲದಲ್ಲಿ ಜಂಗಮ ಜಾತಿಸೂಚಕವಾಗಿಯೇ ಮುಂದುವರೆದುಕೊಂಡು ಬಂದಿದೆ. ಯಾವ ವಚನ ಚಳುವಳಿ ಜಾತಿ ರಹಿತ ಸಮಾನತೆಯ ಸಮಾಜ ನಿರ್ಮಿಸಲು ಪ್ರಯತ್ನಿಸಿದರೋ ಅವರ ಉದ್ದೇಶಕ್ಕೆ ವಿರುದ್ಧ ಎಂಬಂತೆ ಜಂಗಮರೇ ಒಂದು ಜಾತಿಯಾಗಿ ಪರಿಣಮಿಸಿದ್ದಾರೆ. ಹೀಗೆ ವ್ಯಕ್ತಿ ರೂಪದ ಜಂಗಮ ನಿರಂತರ ಸ್ಥಾವರ ಗುಣಗಳ ಆಗರವೇ ಆಗುತ್ತಾ ಸಾಗಿದ್ದಾನೆ. ಜಂಗಮವು ತನ್ನ ನಡತೆ, ಮನೋಧರ್ಮಗಳಿಂದಾಗಿ ಯಾವನೇ ವ್ಯಕ್ತಿ ಪಡೆಯುತ್ತಿದ್ದ ಸ್ಥಿತಿಯನ್ನು ಹೇಳುತ್ತಿದ್ದುದು ಕ್ರಮೇಣ ಜಾತಿವಾಚಕವಾಯಿತು.ಹನ್ನೆರಡನೆಯ ಶತಮಾನದಲ್ಲಿ ಅರ್ಥವಂತಿಕೆಯನ್ನು ಪಡೆದು ಕೊಂಡಿದ್ದ ಜಂಗಮದ ಪರಿಕಲ್ಪನೆ ನಂತರದ ವೀರಶೈವ ಧರ್ಮದ ಇತಿಹಾಸದಲ್ಲಿ ಅದರಲ್ಲಿಯೂ ಆಧುನಿಕ ಕಾಲದಲ್ಲಿ ಜಾತಿಸೂಚಕವಾಗಿ ಬಳಕೆಯಾಗುತ್ತಿದೆ. ಆದರೆ ಇಂದು ನಾವು ವಚನಕಾಲದ ಜಂಗಮರನ್ನೂ ಇಂದಿನ ಕಾಲದ ಜಂಗಮರನ್ನು ಒಂದೇ ಎಂದು ಭಾವಿಸಿ ನೋಡುತ್ತಿರುವುದು ಜಂಗಮತ್ವದ ಬಗೆಗಿನ ಜಟಿಲತೆಗೆ ಕಾರಣವಾಗಿದೆ. ಆಧುನಿಕ ಕಾಲದ ಜಂಗಮತ್ವ ಹುಟ್ಟಿನಿಂದ ಬರತಕ್ಕದ್ದು ಎಂಬ ಸಂಕುಚಿತಾರ್ಥಕ್ಕೆ ಸೀಮಿತಗೊಂಡಿದೆ. ವಚನಚಳುವಳಿಯ ಕಾಲದಲ್ಲಿ ಗುರು,ಲಿಂಗ,ಜಂಗಮ ಈ ಮೂರು ಕಲ್ಪನೆಗಳು ಪ್ರತ್ಯೇಕವಾಗಿ ಬಳಕೆಯಾಗಿರುವುದು ಎಲ್ಲರಿಗೂ ತಿಳಿದಿರ ತಕ್ಕ ಸಂಗತಿಯೇ ಆಗಿದೆ. ಅಂದಿನ ಜಂಗಮರು ಇಂದಿನ ಜಂಗಮರಿಗಿಂತ ಬೇರೆಯೆಂಬುದು ಸ್ಪಷ್ಟವಾಗಿದೆ.  ಆದರೆ ಹನ್ನೆರಡನೇ ಶತಮಾನದ ಬಳಿಕ ವೀರಶೈವ ಧರ್ಮದ ಇತಿಹಾಸದ ಘಟ್ಟದಲ್ಲಿ ಒಂದೇ ಆಗಿಬಿಟ್ಟವು.

    ಬಹುಮಟ್ಟಿಗೆ ವಚನ ಸಾಹಿತ್ಯದಲ್ಲಿ ಬಳಕೆಯಾಗಿರುವ ಜಂಗಮ ಪದವು ನಪುಂಸಕದಲ್ಲಿದೆ. ಪುರುಷಲಿಂಗದಲ್ಲಿಲ್ಲ. ಒಟ್ಟಾರೆ ಹನ್ನೆರಡನೇ ಶತಮಾನದಲ್ಲಿ ಜಂಗಮ ಪರಿಕಲ್ಪನೆ ಮನುಷ್ಯ ಪ್ರತೀಕವಾಗಿರದೆ ಲಿಂಗದ ನಡೆದಾಡುವ ರೂಪವಾಗಿತ್ತು. ವಚನ ಸಾಹಿತ್ಯದಲ್ಲಿ ಗುರುವಿಗಿಂತ ಜಂಗಮ ದೊಡ್ಡವನು ಎನ್ನುವ ಜಂಗಮದ ಪರಿಕಲ್ಪನೆಯು ಕ್ರಾಂತಿಕಾರಕ ಲಕ್ಷಣವಾಗಿದೆ. ಲಿಂಗವು ಸ್ಥಾವರ, ಜಂಗಮವೆಂಬ ಎರಡು ವಿಧಗಳ ಬಗೆಗೆ ವಚನ ಸಾಹಿತ್ಯದಲ್ಲಿ ಅಸಂಖ್ಯಾತ ನಿದರ್ಶನಗಳು ದೊರೆಯುತ್ತವೆ.  

 

  ಪರಾಮರ್ಶನ ಗ್ರಂಥಗಳು

೧.ಬಸವಣ್ಣನವರ ವಚನ ಸಂಪುಟ (ಸಂ: ಎಂ.ಎಂ.ಕಲಬುರ್ಗಿ)

 ಸ.ವ.ಸಂ.೧.ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) ೨೦೦೧

೨.ಸಂಕೀರ್ಣ ವಚನ ಸಂಪುಟ ೨ ( ಸಂ.ಎಸ್.ವಿದ್ಯಾಶಂಕರ)

 ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) ೨೦೦೧

೩.ಎಂ.ಚಿದಾನಂದಮೂರ್ತಿ, ಸ್ಥಾವರ-ಜಂಗಮ

 ಚಿದಾನಂದ ಸಮಗ್ರ ಸಂಪುಟ-೪

 ಸ್ವಪ್ನ ಪುಸ್ತಕಾಲಯ, ಬೆಂಗಳೂರು, ೨೦೦೪

೪. ಬಸವರಾಜು.ಸಿ,ಕಲ್ಗುಡಿ, ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ

  ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು,೨೦೦೧ ( ಮೂ.ಮು)

೫. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-೩

  ಸ್ವಪ್ನ ಪುಸ್ತಕಾಲಯ, ಬೆಂಗಳೂರು, ೧೯೯೭

೬. ಜಾನ್ ಪೀಟರ್ ಶೌಟನ್, ಅನುಭಾವಿಗಳ ಕ್ರಾಂತಿ( ಅನು:ಟಿ.ಆರ್.ಚಂದ್ರಶೇಖರ)

  ವೀರಶೈವ ಅಧ್ಯಯನಸಂಸ್ಥೆ, ಗದಗ, ೨೦೦೦

೭.ಸಿ.ನಾಗಭೂಷಣ,  ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

               ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦

                ವೀರಶೈವಸಾಹಿತ್ಯ : ಕೆಲವು ಒಳನೋಟಗಳು

                ವಿಜೇತ ಪ್ರಕಾಶನ, ಗದಗ,೨೦೦೮

೮..ವಚನಕಾರರ ಪ್ರಮುಖ ಪರಿಕಲ್ಪನೆಗಳು (ಸಂ:ಷಣ್ಮುಖಯ್ಯ ಅಕ್ಕೂರ ಮಠ)

 ಶ್ರೀ.ಸರ್ಪಭೂಷಣ ಶಿವಯೋಗೀಶ್ವರ ಮಠ, ಬೆಂಗಳೂರು,೧೯೯೪

 

 

 

 

 

 

 

 

 

 

 

 

 

 

 

                 ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ                 ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು                 ...