ವಚನ ಭಂಡಾರಿ ಶಾಂತರಸ
ಡಾ.ಸಿ.ನಾಗಭೂಷಣ
‘ವಚನಭಂಡಾರ’. ಕಲ್ಯಾಣದ ಮಧ್ಯಭಾಗದಲ್ಲಿ
ನಿರ್ಮಿಸಲ್ಪಟ್ಟ ಸುಂದರವಾದ ಭವ್ಯವಾದ ಕಟ್ಟಡ, ಅನುಭವ
ಮಂಟಪಕ್ಕೆ ಅತಿ ದೂರ. ಅನುಭಾವ ಮಂಟಪದಲ್ಲಿ
ಅನುಭಾವ ಶಿರೋಮಣಿಗಳಾದ ಬಸವಾದಿ ಪ್ರಮಥರಿಂದ ಮಥಿಸಲ್ಪಟ್ಟ ಅನುಭಾವದ ನುಡಿಗಟ್ಟುಗಳೇ ವಚನಗಳು, ಅನುಭಾವ ಗೀತೆಗಳು, ಅವುಗಳನ್ನು ಲಿಖಿಸುವುದು ತಾಳೆ ಗರಿಗಳಲ್ಲಿ, ಅವುಗಳಿಗೆ ತಾಡೋಲೆಗಳೆಂದು ಹೆಸರು. ತಾಡೋಲೆಗಳ ಗುಚ್ಛವೇ ವಚನಗಳ ಕಟ್ಟು ,ಕವಳಿಗೆ.
‘ಕಟ್ಟು’ ಅಥವಾ ‘ಕವಳಿಗೆ’ ಎಂದರೆ ತಾಳ ಓಲೆಯ ಗ್ರಂಥ ಅಥವಾ ತಾಡೋಲೆಯ
ಕಟ್ಟುಗಳು. ಜೊತೆಗೆ ಇಂದಿನ ‘ಪುಸ್ತಕ ಎಂದರ್ಥ.
ತಾಡಪತ್ರಗಳ ರೂಪದಲ್ಲಿದ್ದ ವಚನ ಗ್ರಂಥಗಳನ್ನು ‘ಓರಣವಾಗಿಡುವುದು, ಓದಬೇಕೆಂದವರಿಗೆ ಕೊಡುವುದು’ ಅಲ್ಲಿಯ
ವಚನಭಂಡಾರದ ಅಧಿಕಾರಿ(Librarian) ಯ ಮುಖ್ಯ ಕೆಲಸ.
ಹನ್ನೆರಡನೆಯ
ಶತಮಾನದಲ್ಲಿ ಬಸವೇಶ್ವರನ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ‘ಮಹಾಮನೆ’ ಅಥವಾ ‘ಅರುಹಿನ ಮನೆ’
ಇಲ್ಲವೆ ‘ಅನುಭವ ಮಂಟಪ’ವು ಮಾಡಿದ ಅದ್ಭುತ ಕ್ರಾಂತಿಯು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ
ಬರೆಯುವಂಥದ್ದಾಗಿದೆ. ಸಕಲ ಜೀವಾತ್ಮರ ಲೇಸನೇ ತನ್ನ ಗುರಿಯನ್ನಾಗಿಟ್ಟುಕೊಂಡ ಅನುಭವ ಮಂಟಪದ ಅಂಗ
ಸಂಸ್ಥೆಯೇ ವಚನ ಭಂಡಾರವಾಗಿತ್ತೆಂದು ಹೇಳಲು ಅನೇಕ ಆಧಾರಗಳುಂಟು, ವಿಪ್ರ ಮೊದಲಾಗಿ ಅಂತ್ಯಜ ಕಡೆಯಾಗಿ ಸಕಲ ಮಾನವರಿಗೆ ಅನುಭವ ಮಂಟಪದ
ಹೆಬ್ಬಾಗಿಲು ತೆರೆಯಲ್ಪಟ್ಟಂತೆ ವಚನ ಭಂಡಾರದ ದ್ವಾರವು ಸಹ ಸಾರ್ವಜನಿಕರಿಗಾಗಿ
ಮುಕ್ತವಾಗಿತ್ತೆಂಬುದರಲ್ಲಿ ಸಂದೇಹವೇ ಇಲ್ಲ.
ಈ ವಚನ ಭಂಡಾರದ ಬಗೆಗೆ ವಚನ ಪಿತಾಮಹ ಫ.ಗು.ಹಳಕಟ್ಟಿಯವರು
ಪ್ರಕಟಿಸಿರುವ “ಕಾಲಜ್ಞಾನದ ವಚನಗಳು” (1934) ಗ್ರಂಥದಲ್ಲಿ
ಅನೇಕ ಉಲ್ಲೇಖಗಳು ಸಿಗುತ್ತವೆ. ಅವುಗಳಲ್ಲಿ
ಕೆಲವನ್ನು ಇಲ್ಲಿ ಕೊಡಲಾಗಿದೆ.
‘ನಮ್ಮ ಶಿವಶರಣರು
ಮರ್ತ್ಯಕ್ಕೆ ಬಂದು ವಚನಗಳ
ಹಾಡಿ ಹಾಡಿ ಕೊಂಡಾಡಿದರಯ್ಯಾ ಪ್ರಭುದೇವರು,
ಮುಖ್ಯರಾದ 220
ಅಮರಗಣಂಗಳು ತಮ್ಮ
ವಚನ ಭಂಡಾರ ನಿಕ್ಷೇಪಿಸಿದರಯ್ಯಾ
‘ನೀವು ಬಾಹಂದಿಗೆ
ನಿಮ್ಮ ವಚನ ಭಂಡಾರದಲ್ಲಿಹ
ವಚನಗಳು ತೆಗೆದು ಅವು ಮರ್ತ್ಯದಲ್ಲಿ ಹರಿದಾವು
ದಿಕ್ಕುದಿಕ್ಕಿನಲ್ಲಿ ಕೊಂಡಾಡಿಸಿಕೊಂಡು ಮೆರೆದಾವು’.
ಪುರಾತನರ ವಚನ ಭಂಡಾರವು ತೆಗದೋದಿಸುವ
ಆ ಕಾಲ ಈಗಲೇ ಬಂದಿದೆ ನಮ್ಮ ಆದ್ಯರ ವಚನ
ಭಂಡಾರವಂ ಪ್ರಭುದೇವರು ಮುಖ್ಯವಾದ,
ಅಸಂಖ್ಯಾತ ಪುರಾತನರು ಹೇಳಿ ಕೇಳಿ ಕೊಂಡಾಡಿದರು
ಮೇಲಿನ ವಚನ ಸಾಲುಗಳಲ್ಲಿ ಕಂಡು ಬರುವ 220 ಅಮರಗಣಂಗಳು ಅಸಂಖ್ಯಾತ ಪುರಾತನರು ಎಂಬ
ಶಬ್ದಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ವಚನ ಭಂಡಾರವು ಸಕಲ ತರದ ಅಸಂಖ್ಯಾತ ಜನರಿಗೆ
ಅವಕಾಶ ಕಲ್ಪಿಸಿ ಕೊಟ್ಟಿತೆಂಬುದು ಸ್ಪೃಷ್ಟವಾಗುತ್ತದೆ.
ಅಲ್ಲದೆ ವಚನಗಳು ‘ಮರ್ತ್ಯದಲ್ಲಿ ಹರಿದಾವು’ ದಿಕ್ಕು ದಿಕ್ಕಿನಲ್ಲಿ ಕೊಂಡಾಡಿಸಿಕೊಂಡು
ಮೆರೆದಾವು ಎಂಬ ಮಾತಿನಿಂದ ಸಾಮಾನ್ಯ ಜನತೆಯ ಸರ್ವತೋಮುಖ ಏಳ್ಗೆಗಾಗಿ ಉಗ್ಗಡಿಸಿದವುಗಳು
ವಚನಗಳೆಂದಾಗುತ್ತದೆ. ಸರ್ವರಿಂದ ಸರ್ವರ
ಹಿತಕ್ಕಾಗಿ ರಚಿಸಲ್ಪಟ್ಟ ವಚನ ಗ್ರಂಥಗಳನ್ನು ಸಾರ್ವಜನಿಕ ಗ್ರಂಥಾಲಯವಾದ ವಚನಭಂಡಾರದಲ್ಲಿ
ಇಡಲಾಗಿತ್ತೆಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಈ ವಚನ ಗ್ರಂಥ ಭಂಢಾರದ ಬಗೆಗೆ ಸ್ಪೃಷ್ಟ ಚಿತ್ರಣದ
ಕೊರತೆ ಇದೆ.
ವಚನ ಗ್ರಂಥಗಳು ಹೇಗೆ ನಿರ್ಮಾಣಗೊಳ್ಳುತ್ತಿದ್ದುವು, ವಚನ ಭಂಡಾರಕ್ಕೆ ಹೇಗೆ
ಕಳಿಸಲ್ಪಡುತ್ತಿದ್ದವೆಂಬುದರ ಬಗೆಗೆ ರೆ. ಉತ್ತಂಗಿ ಚೆನ್ನಪ್ಪನವರಿಗೆ ಸಿಕ್ಕ ಪ್ರಭುದೇವರ
ಸೃಷ್ಟಿಯ ವಚನದ ಟೀಕೆ ಗ್ರಂಥದಲ್ಲಿ ಹೀಗೆ ನಿರೂಪಿತವಾಗಿದೆ :
ವಚನ ಭಂಡಾರದ ಶಾಂತಯ್ಯಗಳು ವಚನಾಮೃತವ
ಲೇಖನಂಗೈದು ಬಸವರಾಜ ದೇವಂಗೆ ಕೊಡಲು
ಅವರು ಅದನ್ನೋದಿಕೊಂಡು ಷಟ್‍ಸ್ಥಲ ಜ್ಞಾನ
ಸಾರೋದ್ಧಾರ ಲಿಂಗೋದಾರಣ ವಿಮಳ ವೀಕ್ಷಣರಾದ
ಚೆನ್ನಬಸವೇಶ್ವರ ದೇವರು ಷಟ್‍ಸ್ಥಲಬ್ರಹ್ಮಿಗಳೊ
ಳಗೊಂಡಿರುವಂತೆ ಅನುಭಾವ ಮಂಟಪಕ್ಕೆ
ಬಸವರಾಜ ದೇವರು ಸುಪ್ರಭಾತ ಸಮಯದೊಳು
ಈಶ್ವರಾರ್ಚನೆಯಂ ಗೈದು ಅಸಂಖ್ಯಾತರೊಡಗೊಂಡು
ಬಂದು ಚೆನ್ನಬಸವೇಶ್ವರ ದೇವರಿಗೆ ಅಷ್ಟಾಂಗ
ಪ್ರಣೀತರಾಗಿ ಮೂರ್ತವ ಮಾಡಿಕೊಂಡಿರಲು
ಬಸವರಾಜ ದೇವರು ಅದನೋದಿಕೊಂಡು
ಚೆನ್ನಬಸವರಾಜ ದೇವರಿಗೆ ಕೊಡಲು ಅವರು
ತ್ರಿವಿಧಲಿಂಗಾನುಭಾವಮಂ ಮಾಡಲು ಎಲ್ಲ ಅಸಂಖ್ಯಾತ
ಮಹಾಗಣಂಗಳು ಒಂದು ಜಾವ ಹೊತ್ತು ಕೇಳಿ
ತಮ್ಮ ದಿವ್ಯ-ಧ್ಯಾನಾವಸಾನರಿದುಕೊಂಡು ಬಳಿಕ
ತಮ್ಮ ತಮ್ಮ ಗೃಹಕ್ಕೆ ಹೋಗಿ ಕಾಯಕ ವೃತ್ತಿಯಂ
ಕೈಕೊಂಡು ಗುರುಭಕ್ತಿ ಲಿಂಗಪೂಜೆ, ಜಂಗಮ
ದಾಸೋಹದೊಳು ಪರಿಣಿತರಾಗುತ್ತಿದ್ದರು............
ಈ
ವಚನದಲ್ಲಿ, ಶಿವಾನುಭವ
ಮಂಟಪದಲ್ಲಿ ಶಿವಶರಣರು ಸುಪ್ರಭಾತ ಸಮಯದಲ್ಲಿ ಬಸವೇಶ್ವರನೊಡನೆ ಸಭೆಯಾಗಿ ಸೇರಿಬಂದು ಒಂದು ಜಾವ
ಹೊತ್ತು ವಚನಾಮೃತವನ್ನು ಕೇಳಿ ಅದನ್ನು ಕುರಿತು ಧ್ಯಾನಿಸಿ ಬಳಿಕ ತಮ್ಮ ತಮ್ಮ ಕಾರ್ಯಕ್ಕೆ
ಹೋಗುತ್ತಿದ್ದರು ಮತ್ತು ಆಯಾ ಶಿವಶರಣರು ಹೊಸದಾಗಿ
ರಚಿಸಿದ ವಚನಗಳು ಅವುಗಳನ್ನು ಬರೆದುಕೊಂಡವರಿಂದ ಮೊದಲು ಬಸವೇಶ್ವರನಿಗೆ
ಒಪ್ಪಿಸಲ್ಪಡುತ್ತಿದ್ದವು. ಅವುಗಳನ್ನು
ಬಸವೇಶ್ವರನು ಓದಿಕೊಂಡು ಚೆನ್ನಬಸವೇಶ್ವರನಿಗೆ ಕೊಡುತ್ತಿದ್ದನು. ಅವನು ಪ್ರವಚನವನ್ನು ಮಾಡಿ ಶಿವಾನುಭವಿಗಳೆಲ್ಲರಿಗೆ
ವಿವರಿಸಿ ಹೇಳುತ್ತಿದ್ದನು. ಶಿವಾನುಭವ
ಮಂಟಪದಲ್ಲಿ ಅದು ಚೆನ್ನಾಗಿ ಮಥಿಸಲ್ಪಟ್ಟು ಬಸವ, ಚೆನ್ನಬಸವ, ಪ್ರಭುದೇವರು ಮೊದಲಾದ ಮುಖ್ಯ ಪ್ರಮುಖರಿಂದ
ಒಪ್ಪಿಗೆ ಪಡೆದ ನಂತರ ಕಲ್ಯಾಣದ ವಚನಭಂಡಾರಿ ಶಾಂತರಸನು ಆ ವಚನಗಳನ್ನು ತನ್ನ ಕರಣಿಕ ಸಂಘದವರಿಂದ
ಪ್ರತಿಮಾಡಿಸಿ ಅವುಗಳನ್ನು ವಚನಭಂಡಾರದಲ್ಲಿ
ವ್ಯವಸ್ಥಿತವಾದ ರೀತಿಯಿಂದ ರಕ್ಷಿಸುತ್ತಿದ್ದರೆಂಬ ವಿಷಯ ಮೇಲ್ಕಂಡ ವಚನದಿಂದ ಮೇಲ್ನೋಟಕ್ಕೆ
ವಿದಿತವಾಗುತ್ತದೆ.
ವಚನಕಾರರು
ತಮ್ಮ ಅನುಭವಗಳನ್ನು ತಾವು ಮನೆಯಲ್ಲಿ ಕುಳಿತು ಬರೆದಿಡುತ್ತಿದ್ದರು. ಅವರು ಗೋಷ್ಠಿಗಳಲ್ಲಿ
ಕುಳಿತು ಚರ್ಚಿಸುತ್ತಿರುವಾಗ ಒಮ್ಮೊಮ್ಮೆ ಅವರ ಬಾಯಿಂದ ಸುಂದರವಾದ ಮಾತೊಂದು ಬಂದರೆ ಅದನ್ನು
ಬರೆದಿಡುಕೊಳ್ಳುತ್ತಿದ್ದ ವ್ಯವಸ್ಥೆ ಇತ್ತು ಎಂಬುದು ಆಧುನಿಕ ವಿದ್ವಾಂಸರ ಅನಿಸಿಕೆಯಾಗಿದೆ.
ವಚನಕಾರರಲ್ಲಿ ಪ್ರಮುಖರಾದವರು ಒಂದೆಡೆ ಸೇರಿ ಚರ್ಚೆಗಳನ್ನು ನಡೆಸುತ್ತಿದ್ದುದು ವಚನ ಚಳುವಳಿಯ
ಪ್ರಮುಖ ಅಂಗವಾಗಿದ್ದಿತು. ಇಲ್ಲಿಯ ಚರ್ಚೆಯು ಪರಸ್ಪರ ನಿಕಟ ಸಂಪರ್ಕದ ಮೂಲಕ ಹೆಚ್ಚು
ಆತ್ಮೀಯರಾಗಲು ಅವಕಾಶ ಕಲ್ಪಿಸಿ ಕೊಟ್ಟಿದ್ದಿರ ಬೇಕು. ವೈಯಕ್ತಿಕ ಸಾಧನೆಯನ್ನು ಪ್ರಮುಖ
ಆದರ್ಶವಾಗಿರಿಸಿ ಕೊಂಡಿದ್ದ ಶರಣರು ತಮ್ಮ ಸಾಧನೆಯ ಮಾರ್ಗದಲ್ಲಿ ಎದುರಿಸಿದ ಸಮಸ್ಯೆ-ಕಂಟಕಗಳು, ವೈಶಿಷ್ಟ್ಯಗಳನ್ನು ಒಬ್ಬರೊಬ್ಬರು
ಹೇಳಿಕೊಳ್ಳಲು ಒಂದೆಡೆ ಸೇರುವುದರಿಂದ ಸಾಧ್ಯವಾಗಿರಬಹುದು. ಇಂತಹ ಚರ್ಚೆಗಳ ಸಮಯದಲ್ಲಿ ಮೇಲು
ಕೀಳುಗಳಿಲ್ಲದೆ ಸಮಾನರೆಂಬಂತೆ ಶರಣರು ಪಾಲ್ಗೊಳ್ಳುತ್ತಿದ್ದರೆಂಬುದನ್ನು ವಚನಗಳ ಆಧಾರಗಳಿಂದಲೇ
ಭಾವಿಸ ಬಹುದು. ಇದರಿಂದಾಗಿ ಸಾಮಾನ್ಯ ಜನತೆಗೆ
ವಚನಕಾರರು ಬೋಧಿಸುತ್ತಿದ್ದ ಸಮಾನತೆ, ಸಜ್ಜನಿಕೆ
ಇತ್ಯಾದಿಗಳು ಕೇವಲ ಬಾಯಿಮಾತುಗಳಾಗದೇ ಅವರ ನೈಜ ಕಾಳಜಿಯಾಗಿ ಕಂಡು ಪ್ರಭಾವವನ್ನುಂಟು ಮಾಡಿರ
ಬಹುದು. ಪ್ರಮುಖ ವಚನಕಾರರ ಚರ್ಚೆಯಿಂದ ಪ್ರೇರಿತರಾಗಿ ಸಾಮಾನ್ಯರೂ ತಮ್ಮ ಅನಿಸಿಕೆಗಳನ್ನು
ಹೇಳಿಕೊಳ್ಳುವ ಆಸಕ್ತಿಯನ್ನು ತಾಳಿದವರಾಗಿದ್ದಿರ ಬಹುದು. ಹೀಗೆ ಅನುಭವ ಮಂಟಪದಲ್ಲಿ
ಚರ್ಚಿತವಾಗುತ್ತಿದ್ದ ವಚನರೂಪದಲ್ಲಿಯ ಸಂಗತಿಗಳನ್ನು ಬರೆಹರೂಪಕ್ಕಿಳಿಸುವ ಪ್ರಯತ್ನವೂ
ನಡೆಯುತ್ತಿದ್ದಿತೆಂದು ಊಹೆ ಮಾಡಲು ಅವಕಾಶವಿದೆ. ಈ ಬಗೆಗೆ ಖಚಿತವಾಗಿ ಹೇಳಲು ಆಧಾರಗಳು
ಲಭ್ಯವಿಲ್ಲ.
ಬೆಳಗಿನ ನಾಲ್ಕು ಗಂಟೆಯ ಸಮಯಕ್ಕೆದು ಸ್ನಾನ
ಪೂಜೆಗೈದು ಅನುಭಾವವದ ನುಡಿಗಳನ್ನು ಲಿಖಿಸಿ ಅನುಭವ ಮಂಟಪಕ್ಕೆ ಬಂದು, ಶಿವಶರಣರು ತಾವು ವಚನಗಳನ್ನು ಬರೆದು ತಂದು
ನೆರೆಯುತ್ತಿದ್ದರು. ಅಲ್ಲಿ ಬಸವ, ಚೆನ್ನಬಸವ, ಅಲ್ಲಮ,ಅಕ್ಕಮಹಾದೇವಿ
ಮುಂತಾದವರು ತಾವು- ಇತರರು ಬರೆದ ಅನುಭಾವದ ಲಿಖಿತ ನುಡಿಗಳನ್ನು ಅವಲೋಕಿಸುತ್ತಿದ್ದರು. ವಿಮರ್ಶಿಸುತ್ತಿದ್ದರು. ಕೆಲ ಸಮಯದ ಚರ್ಚೆಯಾಗುತ್ತಿತ್ತು. ಚೆನ್ನಬಸವೇಶನು ಪರಾಮರ್ಶೆಯ ಉಪಸಂಹಾರ ಮಾಡಿದ ನಂತರ ಆ
ನುಡಿಗಳಿಗೆ ‘ವಚನ’ಗಳೆಂದು ಮುದ್ರೆ ಬೀಳುತ್ತಿತ್ತು.
ಅನಂತರ ಸುಪ್ರಭಾತ ಸಮಯವಾಗಲು ಎಲ್ಲರೂ ತಮ್ಮ ತಮ್ಮ ಕಾಯಕಕ್ಕೆ ಹೋಗುತ್ತಿದ್ದರು. ಅನುಭವ
ಮಂಟಪಕ್ಕೆ ಸಂಬಂಧಿಸಿದಂತೆ ವಿದ್ವಾಂಸರು, ಅಲ್ಲಿಯ
ವಚನ ರಚನೆಗೆ ಸಂಬಂಧಿಸಿದಂತೆ, ಅನುಭವ
ಮಂಟಪದಲ್ಲಿ ಶರಣರ ನಡುವಣ ಚರ್ಚೆಯು ನಡೆಯುತ್ತಿದ್ದಾಗಲೇ ಶಾಂತರಸನು ಅವುಗಳನ್ನು
ಬರೆದಿಡುಕೊಳ್ಳುತ್ತಿದ್ದ ಎಂಬುದು. ಬಸವ ಪುರಾಣ ಮುಂತಾದವೀರಶೈವ ಪುರಾಣಗಳಲ್ಲಿಯ ವಿವರಗಳನ್ನು
ಆಧರಿಸಿ ವಚನ ಭಂಡಾರ ಸಂಸ್ಥೆಯಿದ್ದಿತೆಂದೂ ಆಡಿದಾಗಲೇ ಬರೆಹರೂಪಕ್ಕಿಳಿಸಲು ಕರಣಿಕರಿದ್ದರೆಂಬ
ಅನಿಸಿಕೆಯನ್ನು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ.
ಈ ಅನುಭವ ಮಂಥನದಲ್ಲಿ ನಿತ್ಯವೂ ಪಾಲ್ಗೊಳ್ಳುವ ಕಾಯಕ ವಚನ ಭಂಡಾರಿ
ಶಾಂತರಸನದು. ಮಂಥನದಲ್ಲಿ ಒಪ್ಪಿಗೆ ಪಡೆದ
ವಚನಗಳನ್ನು ಶಾಂತರಸನಿಗೆ ಒಪ್ಪಿಸಲಾಗುತ್ತಿತ್ತು.
ಅವನು ಅವುಗಳನ್ನು ಜೋಕೆಯಿಂದ ಸಂರಕ್ಷಿಸುತ್ತಿದ್ದನು. ಅಷ್ಟೇ ಅಲ್ಲ, ಅವುಗಳ ಅಧ್ಯಯನ ಮಾಡಬೇಕೆನ್ನುವವರಿಗೆ ಓದಲು ಕೊಡುತ್ತಿದ್ದನು. ಓದುಗರು ತಮ್ಮ ಹೃದಯಕ್ಕೆ ನಾಟಿದ ವಚನಗಳ ಪ್ರತಿಗಳು
ತಮ್ಮ ಸ್ವಂತದ ನಿತ್ಯ ಅವಲೋಕನಕ್ಕೆ ಬೇಕೆಂದು ತಿಳಿಸಿದರೆ ವಚನ ಭಂಡಾರಿ ಶಾಂತರಸ ಅಂಥ ವಚನಗಳನ್ನು
ಪ್ರತಿಮಾಡಿಸಿ ಒದಗಿಸುತ್ತಿದ್ದನು. ಅಂದರೆ ಇಂದಿನ
ಮುದ್ರಣಾಲಯಗಳು ನಿರ್ವಹಿಸುತ್ತಿರುವ ಕಾರ್ಯವನ್ನು ಅಂದು ವಚನ ಭಂಡಾರಿ ಶಾಂತರಸನು ತನ್ನ ಸಿಬ್ಬಂದಿಯೊಂದಿಗೆ
ನಿರ್ವಹಿಸುತ್ತಿದ್ದನು. ವಚನಗಳನ್ನು
ಪ್ರತಿಮಾಡಿಕೊಡುವುದಕ್ಕೆ ನೇಮಕಗೊಂಡ ಕೆಲವರ ಹೆಸರುಗಳು
“ಗಣನಾಮ ಸ್ತೋತ್ರ ತ್ರಿವಿಧಿ” ಗ್ರಂಥದಲ್ಲಿ ಸಿಗುತ್ತವೆ. ಇದರಲ್ಲಿ ವಚನ ಭಂಡಾರಿ ಶಾಂತರಸನ ಹೆಸರಲ್ಲದೆ, ಓಲೆಕಾಯಕದ ರಾಮಯ್ಯ ಮತ್ತು ಶಾಂತಯ್ಯ
ಇವರುಗಳ ಹೆಸರು ಬರುತ್ತವೆ. ಆ ತ್ರಿಪದಿಗಳು
ಇಂತಿವೆ:
ರಾಮಯ್ಯ ಓಲೆಯ ರಾಮಯ್ಯ ಏಕಾಂತ
ರಾಮಯ್ಯ ಸಿದ್ಧರಾಮಯ್ಯ ಮೈದುನ
ರಾಮಯ್ಯ ನನಗೆ ಕೃಪೆಯಾಗು:
ಶಾಂತಯ್ಯ ಓಲೆಯ ಶಾಂತಯ್ಯ ಗಿರುಗಟ್ಟಿ
ಶಾಂತಯ್ಯ ಕೋಲ ಶಾಂತಯ್ಯ ಯೋಗೇಶ
ಶಾಂತಯ್ಯ ನನಗೆ ಕೃಪೆಯಾಗು;
ಶಾಂತರಸನು
ವಚನ ಭಂಡಾರಕ್ಕೆ ಮುಖ್ಯಾಧಿಕಾರಿಯಾಗಿದ್ದರೆ ‘ಓಲೆಯ ರಾಮಯ್ಯನು ವಚನಗಳನ್ನು
ಬರೆದಿಡುತ್ತಿದ್ದ. ಆ ಕರಣಿಕ ಸಂಘದ
ಹೆಗ್ಗಡೆಯಾಗಿರಬಹುದೆಂದು ಊಹೆ ಮಾಡಲು ಅವಕಾಶವಿದೆ.
ವಚನಗಳ ಹಸ್ತಪ್ರತಿಗಳನ್ನು ಸಂಗ್ರಹಿಸುತ್ತಿದ್ದ ವಚನಭಂಡಾರವೊಂದಿತ್ತೆಂಬುದಕ್ಕೆ ಬಸವ ಪುರಾಣದ ಒಂದು ಉಲ್ಲೇಖ ಆಧಾರವಾಗಿದೆ. ವಚನ ಭಂಡಾರದ ಮೇಲ್ವಿಚಾರಕನೇ ವಚನಭಂಡಾರ ಶಾಂತರಸ ಎಂದು ಹೇಳುತ್ತಾರೆ. ಶೈವಬ್ರಾಹ್ಮಣನಾಗಿದ್ದ ಶಾಂತರಸನು ವಚನ ಭಂಡಾರಿ ಆಗಿದ್ದ. ವಚನ ಸಂಕಲನಗಳು ಸೇರಿದಂತೆ ವೀರಶೈವ ಕೃತಿಗಳ ಗ್ರಂಥಾಲಯದ ಮುಖ್ಯಸ್ಥನಾಗಿದ್ದನೆಂದು ವೀರಶೈವ ಪುರಾಣಗಳಲ್ಲಿ ಪರೋಕ್ಷವಾದ ಪ್ರಸ್ತಾಪವಿದೆ. ಶಾಂತರಸನು, ತಾನು ಬಸವಣ್ಣನ ಸೂಚನೆಯಂತೆ ಲಿಂಗವನ್ನು ಧರಿಸಿದರೂ ಜನಿವಾರವನ್ನು ತ್ಯಜಿಸಲು ಮತ್ತು ಸಂಬಂಧ ಬೆಳಸುವಾಗ ದ್ವಿಜರನ್ನು ಕೈ ಬಿಡಲು ಮನಸ್ಸು ಒಪ್ಪುತ್ತಿಲ್ಲವೆಂಬ ಮನಸ್ಸಿನ ಒಳತೋಟಿಯನ್ನು ಹೇಳಿಕೊಂಡಿದ್ದಾನೆ. ಈತನು ಮೊದಲು ಬ್ರಾಹ್ಮಣನಿದ್ದು ತನಗೆ ಒಡೆಯರೆನಿಸಿದ ಅಣ್ಣನವರ ಸೂಚನೆಯನ್ನು ಮೀರಲಾರದೆ ವೀರಶೈವ ಧರ್ಮವನ್ನು ಸ್ವೀಕರಿಸಿದ ಎಂಬುದು ‘ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಅಡಿ ಇಡಲಮ್ಮದೆ ಕಟ್ಟಿದೆ’ ಮುಂತಾದ ಆತನವೇ ಆದ ವಚನ ಭಾಗಗಳಿಂದ ತಿಳಿದುಬರುತ್ತದೆ. ಬಿಜ್ಜಳನ ಮಂತ್ರಿಯಾಗಿದ್ದಾಗ ಕಲ್ಯಾಣದಲ್ಲಿ ಬಸವಣ್ಣನ ಕೈಕೆಳಗೆ ಹೆನ್ನೆರಡು ಜನ ಭಂಡಾರಿಗಳಿದ್ದುದಾಗಿ ‘ಬಸವಪುರಾಣ’ದಿಂದ ತಿಳಿದುಬರುತ್ತದೆ. ವಚನ ಭಂಡಾರಿ ಶಾಂತರಸನು ಇವರಲ್ಲೊಬ್ಬ. ಆದ್ದರಿಂದ ಇವನ ಕಾಲ ಸು. 1160 ಎಂದು ಇಟ್ಟುಕೊಳ್ಳಬಹುದು. ಈತನ ವೃತ್ತಿ ಯಾವುದು ಎಂಬುದರ ಬಗ್ಗೆ ಈತನ ವಚನಗಳಲ್ಲಿ ಆಧಾರ ಸಿಕ್ಕುವುದಿಲ್ಲ. ಆದರೆ ಅಲ್ಲಮಪ್ರಭುವಿನ ಸೃಷ್ಟಿಯ ವಚನವೊಂದಕ್ಕೆ ಟೀಕೆಯನ್ನು ಬರೆದ ಶರಣನೊಬ್ಬನು ವಚನಸಂಗ್ರಹಕಾರ್ಯದ ಬಗ್ಗೆ ಹೀಗೆ ಹೇಳಿದ್ದಾನೆ : “ವಚನ ಭಂಡಾರದ ಶಾಂತರಸಯ್ಯಗಳು ವಚನಾಮೃತ ಲೇಖನಂಗೈದು ಬಸವರಾಜದೇವರಿಗೆ ಕೊಡಲು............” ಅದನ್ನು ಬಸವಣ್ಣನು ಅನುಭವಮಂಟಪದಲ್ಲಿ ಚರ್ಚೆಗೆ ಇಡುತ್ತಿದ್ದನು ; ಅನಂತರ ಅದನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಶಾಂತರಸನ ಕಾಯಕವು ವಚನಗಳನ್ನು ಬರೆದುಕೊಳ್ಳುವುದೂ ಸಂಗ್ರಹಿಸುವುದೂ ಆಗಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಈತ ಮೊದಲು ಬ್ರಾಹ್ಮಣನಾಗಿದ್ದು ತರುವಾಯ ಬಸವಣ್ಣನಿಂದ ವೀರಶೈವದೀಕ್ಷೆಯನ್ನು ಪಡೆದನೆಂಬುದು ಈ ಕೆಳಗಿನ ವಚನಗಳಿಂದ ತಿಳಿದುಬರುತ್ತದೆ.
ಶಿವಶಿವ ಎಲ್ಲರೂ ಉಂಟಾದುದ ಹೇಳಿ
ಇಲ್ಲದ ಬಯಲಿಂಗೆ ಮನವನಿಕ್ಕಿದರು
ಎನಗಿನ್ನಾವುದು ಬಟ್ಟೆ ?
ಬಸವಣ್ಣನ ಕರುಣೆಯಿಂದ ಕಟ್ಟಿದ ಲಿಂಗಕ್ಕೆ
ಹುಟ್ಟು ಮೆಟ್ಟನರಿಯೆ.
ಕೊಟ್ಟಾತ ಹೇಳಿದುದಿಲ್ಲ,
ಕಟ್ಟಕೋ ಎಂದಾತ ಈ ಬಟ್ಟೆಯಲ್ಲಿರು ಎಂದುದಿಲ್ಲ
ಕಡ್ಡಾಯಕ್ಕೆ ಕಟ್ಟಿದ ಈ ಒಡ್ಡುಗಲ್ಲಿನ ಮುರಿಯೇ ಎನಗೊಂದು ಬುದ್ಧಿಯ
ಹೇಳಾ
ಅಲೇಖನಾದ ಶೂನ್ಯ ಕಲ್ಲಿನೊಳಗೆ ಏಕಾದೆಯಯ್ಯಾ ? ( ಸಂಕೀರ್ಣವಚನ.ಸಂ.೪.,ವ.ಸಂ.೫೮)
ಇನ್ನೆಲ್ಲರ ಕೇಳುವುದಕ್ಕೆ ಕುಲ ಛಲ ಮಲ ದೇಹಿಕರು ಬಿಡರೆನ್ನ
ಎದೆಯಲ್ಲಿ ಕಟ್ಟಿದ ಎಳೆಯಾಸೆ ಬಿಡದು
ಕೊಡುವ ಕೊಂಬಲ್ಲಿ ದ್ವಿಜರ ಒಡಗೂಡುವುದು ಬಿಡದು
ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಅಡಿಯಿಡಲಮ್ಮದೆ ಕಟ್ಟಿದೆ.......... ( ಸಂಕೀರ್ಣವಚನ.ಸಂ.೪.,ವ.ಸಂ.೫೮)
‘ವಚನಭಂಡಾರ’ದ ಮುಖ್ಯಸ್ಥನ ಹೆಸರು
ಶಾಂತರಸ. ವಚನಭಂಡಾರಿ ಶಾಂತರಸನೆಂದೇ ಅವನು
ಪ್ರಸಿದ್ಧಿ ಪಡೆದಿದ್ದ. ‘ವಚನಭಂಡಾರ’ದ
ಆಗುಹೋಗುಗಳನ್ನೆಲ್ಲ ನೋಡಿಕೊಳ್ಳುವುದೇ ಅವನ ಜವಾಬ್ದಾರಿ.
ಅದು ಅವನ ಕಾಯಕ. ಜೀವನದ ವೃತ್ತಿ. ಬದುಕಿಗಾಗಿ ಮಾಡುವ ಉದ್ಯೋಗ. ವಚನಭಂಡಾರಿ ಶಾಂತರಸನದು ಕೇವಲ ವಚನ ಭಂಡಾರವನ್ನು
ವ್ಯವಸ್ಥೆಗೊಳಿಸುವದಕ್ಕಷ್ಟೇ ಮೀಸಲಾದ ಕೆಲಸವಲ್ಲ.
ಅವನು ಸುಶಿಕ್ಷಿತ, ಅವನು
ಅರಸುಮನೆತನಕ್ಕೆ ಸೇರಿದವನಿರಬೇಕು, ಅಥವಾ
ಪುಟ್ಟರಾಜ್ಯದ ಅರಸನಾಗಿರಬೇಕು ಎಂಬ ಊಹೆಗೆ ಅವನ ಹೆಸರಿನ ಕೊನೆಗಿರುವ ‘ಅರಸ’ (ಶಾಂತ-ಅರಸ,ಶಾಂತರಸ)ಎಂಬುದು ಇಂಬುಕೊಡುತ್ತದೆ. ಕಾಯಕ ನಿಷ್ಠರಾಗಿ ಬಾಳಿದ ಅನೇಕ ಶಿವಶರಣರು ಅನುಭವ
ಮಂಟಪದಲ್ಲಿದ್ದರೆಂಬ ಐತಿಹಾಸಿಕ ಸತ್ಯ ನಮ್ಮ ಊಹೆಗೆ
ಸಾಕ್ಷಿಯಾಗಿದೆ. ಅರಸೊತ್ತಿಗೆಯನ್ನು ಬದಿಗೊತ್ತಿ ಬಂದ? ವಚನ ಭಂಡಾರಿ ಶಾಂತರಸನು ಮಹಾಮೇಧಾವಿಯಾಗಿದ್ದನು. ಶ್ರೇಷ್ಠ ವಚನಕಾರನಾಗಿದ್ದನು. ಇಂದಿಗೆ ಲಭ್ಯವಿರುವ ಅವನ 65 ವಚನಗಳನ್ನು ಅವಲೋಕಿಸಿದರೆ ಈ ಮಾತು ಸಿದ್ಧವಾಗುತ್ತದೆ. ಅವನಲ್ಲಿ ಅಪಾರವಾದ ಲೋಕಾನುಭವವೂ, ಆಳವಾದ ಶಿವಾನುಭವವೂ ಏಕ ಪ್ರಕಾರವಾಗಿ
ಎರಕಗೊಂಡಿದ್ದವೆನ್ನುವುದಕ್ಕೆ ಅವನ ವಚನಗಳು ಸಾಕ್ಷಿಯಾಗಿ ನಿಂತಿವೆ. ವಚನಕಾರನೂ ಗ್ರಂಥಪಾಲನೂ ಆಗಿದ್ದ ಶಾಂತರಸನು, ಶಿವಶರಣರು ರೂಪಿಸಿದ ಹೊಸ ಮಾದರಿಯ
ಶಿಕ್ಷಣಕ್ರಮವನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವನು.
ವಚನಭಂಡಾರಿ ಶಾಂತರಸನು ಕಲ್ಯಾಣದಲ್ಲಿ ಶರಣರ ವಚನಗಳನ್ನು ಬರೆದು ಕೊಳ್ಳುವ, ಸಂಗ್ರಹಿಸುವಕಾಯಕ ಮಾಡುತ್ತಿದ್ದ. ವಚನಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಈತನು `ಅಲೇಖನಾದ ಶೂನ್ಯಕಲ್ಲಿನೊಳಗಾದ' ಅಂಕಿತದಲ್ಲಿ ವಚನ ಬರೆದಿದ್ದಾನೆ. ಈ ಅಂಕಿತದಲ್ಲಿಯ ಈತನವುಗಳೆಂದು ಹೇಳಲಾದ 65 ವಚನಗಳು ಸದ್ಯಕ್ಕೆ ಉಪಲಬ್ಧವಿವೆ. ಆಗಾಗ ಪ್ರತಿಮೆಗಳನ್ನು ಬಳಸಿದ್ದರೂ ಅವುಗಳಲ್ಲಿ ಹೊಸತನ ಕಂಡು ಬರುವುದಿಲ್ಲ. ಕೆಲವು ವಚನಗಳಲ್ಲಿ ಖಚಿತತೆಯಿದ್ದರೂ ಇನ್ನು ಕೆಲವು ವಚನಗಳಲ್ಲಿ ಅರ್ಥಕ್ಲಿಷ್ಟತೆ ಎದ್ದುಕಾಣುತ್ತದೆ. ಇಲ್ಲಿಯ ಬೆಡಗಿನ ವಚನಗಳಲ್ಲಿ ಅಲ್ಲಮಪ್ರಭುವಿನ ವಚನಗಳ ಪ್ರಭಾವವನ್ನು ಗುರುತಿಸಬಹುದಾಗಿದೆ. ತತ್ವನಿರೂಪಣೆ, ಕಲ್ಯಾಣದ ಕೊನೆಯ ವಿವರಗಳು ಈತನ ವಚನಗಳಲ್ಲಿರುತ್ತವೆ .ಇವನ “ವಚನಗಳಲ್ಲಿಯೂ ಅಂತಹ ಹೊಸತನವೇನೂ ಕಾಣದು. ಇತರ ವಚನಕಾರರಲ್ಲಿ ಬರುವ ಪರಿಚಿತ ಪ್ರತಿಮೆಗಳೇ ಇಲ್ಲಿಯೂ ಗೋಚರವಾಗುತ್ತವೆ” ಎಂದು ಎಂ. ಚಿದಾನಂದಮೂರ್ತಿಯವರು ಹೇಳಿದ್ದಾರೆ. ವಿರುದ್ಧ ಅಂಶಗಳನ್ನು ಹೋಲಿಸುತ್ತಾ ತತ್ತ್ವನಿರೂಪಣೆ ಮಾಡುವ ಶಾಂತರಸನ ಕೌಶಲಕ್ಕೆ ಉದಾಹರಣೆಯಾಗಿ ಈ ವಚನವನ್ನು ನೋಡಬಹುದು:
ಮಲವ ತೊಳೆಯಬಹುದಲ್ಲದೆ ಅಮಲವ ತೊಳೆಯಬಹುದೇ ಅಯ್ಯಾ ?
ಮಾತನಾಡಬಹುದಲ್ಲದೆ ಆಜಾತನನರಿಯಬಹುದೆ ಅಯ್ಯಾ ?
ಮಾಟವ ಮಾಡಬಹುದಲ್ಲದೆ ವರ್ಮದ ಕೂಟವ ಕೂಡಬಹುದೇ ಅಯ್ಯಾ ?
ರಣದ ಪಂಥವ ಹೇಳಬಹುದಲ್ಲದೆ ಕಾದಬಹುದೇ ಅಯ್ಯಾ ?
ಮಾತುಗಳ ಕೂಡಿ ಓತು ಹೇಳುವರೆಲ್ಲರು ಉಮಾಕಾಂತನ ಬಲ್ಲರೆ ?
ಈ ಮಾಲೆಗೆ ಅಂಜಿ ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ. ( ಸಂಕೀರ್ಣವಚನ.ಸಂ.೪.,ವ.ಸಂ.೫೧)ಸರಳತೆ ಸ್ಪೃಷ್ಟತೆಗಳನ್ನು ಈ ವಚನದಲ್ಲಿ ಗುರುತಿಸಬಹುದು ; ಆದರೆ ಇವನ ಎಲ್ಲ ವಚನಗಳಲ್ಲೂ ಈ ಗುಣವನ್ನು ಗುರುತಿಸುವುದು ಸಾಧ್ಯವಿಲ್ಲ. ಕೆಲವು ವಚನಗಳಲ್ಲಿ ಅನಗತ್ಯವೆಂದು ತೋರಬಹುದಾದ ರೀತಿಯಲ್ಲಿ ಮಾತು ಬೆಳೆಯುತ್ತ ಹೋಗಿ ‘ಮಾತಿನ ಮಾಲೆ’ಯಾಗಿ ಅರ್ಥಕ್ಲಿಷ್ಟತೆಗೆ ದಾರಿಯಾಗಿರುವುದೂ ಉಂಟು.
ಅವನು ವಚನಗಳನ್ನು ಬರೆದು ಬರೆಯಿಸುವ ಕಾಯಕವನ್ನು
ಕೈಕೊಂಡಿದ್ದನು. ಶಾಂತರಸನ ವಚನಗಳಲ್ಲಿ ಅವನ
ಆತ್ಮಚರಿತ್ರೆಯನ್ನು ಆ ಕಾಲದ ಧಾರ್ಮಿಕ ಪರಿಸ್ಥಿತಿಯೂ ಸ್ವಲ್ಪ ಮಟ್ಟಿಗೆ ಚಿತ್ರಿತವಾಗಿರುವುದನ್ನು
ಕಾಣಬಹುದು. ಷಟ್ಥ್ಸಲದ ಮಹತ್ವದ ಬಗೆಗೆ ಮೂರು
ವಚನಗಳಲ್ಲಿ ವಿವರಿಸಿದ್ದಾನೆ.
ಸ್ಥಳಕುಳವನರಿಯಬೇಕೆಂಬರು ;
ಭಕ್ತನಾಗಿ
ಮಹೇಶ್ವರನಾಗಬೇಕೆಂಬರು
ಮಹೇಶ್ವರನಾಗಿ
ಪ್ರಸಾದಿಯಾಗಬೇಕೆಂಬರು
ಪ್ರಸಾದಿಯಾಗಿ
ಪ್ರಾಣಲಿಂಗಿಯಾಗಬೇಕೆಂಬರು
ಪ್ರಾಣಲಿಂಗಿಯಾಗಿ ಶರಣನಾಗಬೇಕೆಂಬರು,
ಶರಣನಾಗಿ ಐಕ್ಯನಾಗಬೇಕೆಂಬರು
ಐಕ್ಯ
ಏತರಿಂದ ? ಕೂಟ ನಾನರಿಯೆ !
ಒಳಗಣ ಮಾತು ಹೊರಹೊಮ್ಮಿಯಲ್ಲದೆ ಎನಗೆ
ಅರಿಯಬಾರದು
ಎನಗೆ ಐಕ್ಯನಾಗಿ ಶರಣನಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು
ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು
ಪ್ರಸಾದಿಯಾಗಿ ಮಹೇಶ್ವರನಾಗಬೇಕು,
ಮಹೇಶ್ವರನಾಗಿ ಭಕ್ತನಾಗಬೇಕು
ಭಕ್ತನಾಗಿ
ಸಕಲಯುಕ್ತಿಯಾಗಬೇಕು,
ಯುಕ್ತಿ
ನಿಶ್ಚಯವಾದಲ್ಲಿಯೇ ಐಕ್ಯಸ್ಥಳ !
ಒಳಹೊರಗಾಯಿತ್ತು, ಅಲೇಖ ಲೇಖವಾಯಿತು,
ಎನಗೆಕಾಣಬಂದಿತ್ತು
ಅಲೇಖನಾದ
ಶೂನ್ಯಶಿಲೆಯ ಹೊರಹೊಮ್ಮಿ ಕಂಡೆ ನಿನ್ನನು, (ಸಂಕೀರ್ಣವಚನ.ಸಂ.೪.,ವ.ಸಂ.೬೧)
ಶಾಂತರಸನ
ಹೃದಯತರಂಗವು ಹೊರಹೊಮ್ಮುವ ಅವರೋಹಣ ರೀತಿಯಿದು.
ಇವನ ವಚನಗಳಲ್ಲಿ ಇವನ ವೃತ್ತಿಯನ್ನು ಸೂಚಿಸುವ ಅಂಶಗಳು ಇಲ್ಲವೇ ಇಲ್ಲ. ವಚನಗಳಲ್ಲಿಯೂ ಅಂತಹ ಹೊಸತನವೇನೂ ಕಾಣದು.ಇತರ ವಚನಕಾರರಲ್ಲಿ ಬರುವ ಪರಿಚಿತ ಪ್ರತಿಮೆಗಳೇ ಇಲ್ಲಿಯೂ ಗೋಚರವಾಗುತ್ತವೆ. ಈತನ ವಚನಗಳಲ್ಲಿ ಬೆಡಗಿನ ವಚನಗಳ ಪ್ರಾಧಾನ್ಯ ಇದೆ. ಅಲ್ಲಮಪ್ರಭುವಿನ ವಚನಗಳಲ್ಲಿ ಕಾಣಬರುವ ಕಾಂತಿ ಇಲ್ಲಿಲ್ಲದಿದ್ದರೂ ಅವನ ಪ್ರಭಾವಿರುವುದು ಕಾಣುತ್ತದೆ. ಉದಾ.ಗೆ ಎರಡನ್ನು ನೋಡಬಹುದು.
ಊರೊಳಗಣ ಅರಳಿಯ ಮರದಲ್ಲಿ ಮೂರುವರ್ಣದ ಗಿಣಿ ಮರಿಯನಿಕ್ಕಿತ್ತು
ರೆಕ್ಕೆ ಬಲಿದು ಹಾರಲಾರದು ಕೊಕ್ಕು ಬಲಿದು ಕೆಂಪಾಗದು
ಬಾಯಿ ಬಲಿದು ಹಣ್ಣು ಮೆಲಲಾರದು
ಅದ ಓಡಿಸುವರಿಗೆ ಅಸಾಧ್ಯ
ಅಲೇಖನಾದ ಶೂನ್ಯ ಇದರ ಹೊಲಬ ಕೇಳಿಹರೆಂದು ಕಲ್ಲಿನೊಳಗಾದ. (ಸಂಕೀರ್ಣವಚನ.ಸಂ.೪.,ವ.ಸಂ.೬೧)
ಮಗನ ಕೊಂದು ತಿಂದ ತಾಯ ಕಂಡೆ
ಬಂಧುಗಳ ಕೊಂದು ನಂಟರಲ್ಲಿ ಕೂಪನ ಕಂಡೆ
ಅತ್ತೆ ಅಳಿಯನ ಒತ್ತಿನಲ್ಲಿ ಮಲಗಿ ಕೂಸು ಹುಟ್ಟಿತ್ತು
ಅಳಿಯ ಅತ್ತೆಯ ನೋಡಿ ಅತ್ತೆ ಅಳಿಯನ ನೋಡಿ
ಹೋಯಿತ್ತು ಹೋಗದಿದೆಯೆಂದು ನಗುವರ ಕಂಡೆ
ಅವರಿಬ್ಬರ ನೋಡಿ ಹೆತ್ತ ಕೂಡು ನಾನಿವರ ಅಳಿಯನೆಂದು ಹೋಯಿತ್ತು
ಇದ ಕೇಳಿಹರೆಂದು ಹೇಳಲಂಜಿ ಅಲೇಖನಾದ ಶೂನ್ಯ ಕಲ್ಲಿನ ಒಳಹೊಕ್ಕ. (ಸಂಕೀರ್ಣವಚನ.ಸಂ.೪.,ವ.ಸಂ.೪೯)
ಈತನ ಬೆರಳೆಣಿಕೆಯ
ವಚನಗಳು ಮಾತ್ರ ಸತ್ವ ಹಾಗೂ ಕಾವ್ಯಾತ್ಮಕತೆಯಿಂದ ಕೂಡಿರುವುದನ್ನು ಗಮನಿಸ ಬಹುದಾಗಿದೆ. ನಿದರ್ಶನಕ್ಕೆ
ಈ ಕೆಳಕಂಡ ವಚನಗಳನ್ನು ನೋಡ ಬಹುದಾಗಿದೆ.
ಹುಟ್ಟಿಸುವವ ಪೃಥ್ವಿಗೆ ಹಂಗಾದ, ಬೆಳೆಯಿಸುವವ ಅಪ್ಪುವಿಗೆ ಹಂಗಾದ.
ಕೊಯಿಸುವವ ಕಾಲಗೆ ಹಂಗಾದ, ನಿನ್ನನರಿತೆಹೆನೆಂಬವ ಶಿಲೆಗೆ ಹಂಗಾದ.
ಇವರೆಲ್ಲರ
ಹಂಗಿಗೆ ಹರುಹ ಕೇಳಿಹರೆಂದಂಜಿ,
ಅಲೇಖಮಯನಾದ ಶೂನ್ಯ ಕಲ್ಲಿನ ಮರೆಯಾದೆಯಾ ? (ಸಂಕೀರ್ಣವಚನ.ಸಂ.೪.,ವ.ಸಂ.೬೪)
ನಿನ್ನ
ಸೋದಿಸುವಡೆ ಎನ್ನ ಕೈಯಲ್ಲಿ ಆಗದು.
ಎಳ್ಳಿನೊಳಗಣ ಎಣ್ಣೆಯಂತೆ, ಹಣ್ಣಿನೊಳಗಣ
ರುಚಿಯಂತೆ,
ಹೂವಿನೊಳಗಣ ಸಂಜ್ಞೆಯಂತೆ, ತರುಧರ
ಅಗ್ನಿಯ ಕೂಟದಂತೆ,
ಕಂಡಡೆ
ಕರಗಿ, ಕಾಣದಡೆ
ಬಿರುಬಾಗಿ, ಇವರಂಗವ ಕಂಡು
ಅಡಗಿದೆಯೆ ?
ನಿನ್ನ
ಸಂಗವನರಿವುದಕ್ಕೆ ಎನ್ನಂಗದ ಇರವಾವುದು ?
ತನುವ ದಂಡಿಸುವುದಕ್ಕೆ ನೀ ಸರ್ವಮಯ, ನಿನ್ನ ಖಂಡಿಸುವದಕ್ಕೆ ನೀ ಪರಿಪೂರ್ಣ.
ಎನ್ನ ಮರೆದು, ನಿನ್ನ ಕಾಬುದಕ್ಕೆ ಒಳಗಿಲ್ಲ.
ನಿನ್ನ ಕಾಬುದಕ್ಕೆ ನೀ ಅಲೇಖಮಯ ಅನಂತಶೂನ್ಯ, ಕಲ್ಲಿನ ಮರೆಯಾದೆಯಲ್ಲಾ,
ಎಲ್ಲರಿಗೆ ಅಂಜಿ (ಸಂಕೀರ್ಣವಚನ.ಸಂ.೪.,ವ.ಸಂ.೬೪)
ಸಂಪಾದನೆಯ
ಕಾರ್ಯವು ಒಂದು ವಿಶಿಷ್ಟರೀತಿಯಲ್ಲಿ ಇವನ ಕಾಲದಲ್ಲಿ ನಡೆಯುತ್ತಿದ್ದುದು ತಿಳಿದುಬರುತ್ತದೆ. ಆ ಕಾಲದಲ್ಲಿ ವಚನ ಸಂರಕ್ಷಣೆಯಂತಹ ಉತ್ತಮ ಕೆಲಸದಿಂದಾಗಿ
ಈತನ ಕಾಯಕ ಸಾರ್ಥಕವಾಗಿದೆ. ಬಸವಾದಿ ಶಿವಶರಣರು ನೀತಿಯ ನೆಲೆಗಟ್ಟುಳ್ಳ, ಇಹದಲ್ಲಿ ಶಾಂತಿ, ಸೌಹಾರ್ದತೆಯಿಂದ ಬಾಳ ಕಲಿಸಬಲ್ಲ
ಶಿಕ್ಷಣವನ್ನು ಜಾರಿಯಲ್ಲಿ ತಂದರು. ಇಂಥ
ತತ್ವಗಳನ್ನಾಧರಿಸಿದ ಪುಸ್ತಕಗಳನ್ನು ರಚಿಸಿದರು.
ಅವೇ ವಚನ ಪುಸ್ತಕಗಳು, ಗೀತ
ಗ್ರಂಥಗಳು, ಕವಳಿಗೆಗಳು, ಇವುಗಳನ್ನಿಟ್ಟು ಸಂರಕ್ಷಿಸಿಕೊಂಡು
ತಲೆತಲಾಂತರದ ಜನಪದ ಸುಧಾರಣೆಗೆ ಶಿಕ್ಷಣಕ್ಕೆ ಪ್ರಯೋಜನ ಬೀಳಲೆಂದೇ `ವಚನ ಭಂಡಾರ'ದ
ನಿರ್ಮಾಣವಾಯಿತು. ಭಾರತದ ಗ್ರಂಥಾಲಯದ ಚಳುವಳಿಯ
ಇತಿಹಾಸದಲ್ಲಿ `ವಚನ ಭಂಡಾರ'ವೇ ಪ್ರಪ್ರಥಮ ಸಾರ್ವಜನಿಕ
ಗ್ರಂಥಾಲಯವಾಯಿತು. ಕಲ್ಯಾಣದ ವಚನ ಭಂಡಾರಿ ಶಾಂತರಸನು ಆ ಗ್ರಂಥಾಲಯದ ಮೊದಲ ಗೌರವ ಗ್ರಂಥ
ಭಂಡಾರಿಯಾದನು. ಭಂಡಾರಿ ಶಾಂತರಸನಿಗೆ ವಚನಭಂಡಾರಿ ಎಂಬ ಹೆಸರು ಬಂದಿದೆ. ಆದರೇ ಆತನ
ವಚನಗಳಲ್ಲಾಗಲೀ, ಇತರರ
ವಚನಗಳಲ್ಲಾಗಲೀ ಇವನು ವಚನಗಳನ್ನು ಇತರರು ಹೇಳಿದಂತೆಲ್ಲಾ ಪ್ರತಿಮಾಡುವುದು ಅವನ
ಕೆಲಸವಾಗಿತ್ತೆಂಬುದರ ಬಗೆಗೆ ಖಚಿತವಾದ ಆಧಾರಗಳು ದೊರೆಯುವುದಿಲ್ಲ. ಹಳಕಟ್ಟಿಯವರ, `ಶಾಂತರಸನು ಭಂಡಾರಕ್ಕೆ ಸಂಬಂಧಿಸಿದಂತೆ ಯಾವುದೋ ಕಾಯಕವನ್ನು
ಅವಲಂಬಿಸಿದ್ದನೆಂಬುದು ಎನ್ನುವ ನಿಲುವು' ಯೋಚಿಸತಕ್ಕದ್ದಾಗಿದೆ.
ಸಂಪಾದನೆಯ ಕಾರ್ಯವು ಒಂದು ವಿಶಿಷ್ಟ ರೀತಿಯಲ್ಲಿ ಇವನ ಕಾಲದಲ್ಲಿ ನಡೆಯುತ್ತಿದ್ದುದು
ತಿಳಿದುಬರುತ್ತದೆ. ಆ ಕಾಲದಲ್ಲಿ ವಚನ
ಸಂರಕ್ಷಣೆಯಂತಹ ಉತ್ತಮ ಕೆಲಸದಿಂದಾಗಿ ಈತನ ಕಾಯಕ ಸಾರ್ಥಕವಾಗಿದೆ.ಏನೇ ಇರಲಿ ವಚನ ಭಂಡಾರಿ
ಶಾಂತರಸನು ಬಸವ ಕಾಲದ ವಚನಕಾರನಾಗಿ ಪ್ರಸಿದ್ಧಿಯನ್ನು ಪಡೆಯದಿದ್ದರೂ ಶರಣರ ವಚನಗಳನ್ನು ಸಂಗ್ರಹಿಸಿ
ಸಂರಕ್ಷಿಸುವಂತಹ ಮಹತ್ತರವಾದ ಕಾಯಕದಲ್ಲಿ ನಿರತನಾಗಿದ್ದುದರಿಂದ ವಚನಸಾಹಿತ್ಯ-ಸಂಸ್ಕೃತಿಯ ಪ್ರಸಾರ
ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾನೆ.
ಗ್ರಂಥ ಋಣ
1.ಬಸವೇಶ್ವರ
ಸಮಕಾಲೀನರು
ಬಸವ ಸಮಿತಿ, ಬೆಂಗಳೂರು. 01
ನಾಲ್ಕನೆಯ ಮುದ್ರಣ, 2007
2. ಸಂಕೀರ್ಣ ವಚನ
ಸಂಪುಟ 4
ಸಂ: ಬಿ.ಆರ್.
ಹಿರೇಮಠ
ಕನ್ನಡ ಪುಸ್ತಕ
ಪ್ರಾಧಿಕಾರ
ಬೆಂಗಳೂರು. 2001
3. ಸಮಗ್ರ ಕನ್ನಡ
ಸಾಹಿತ್ಯ ಚರಿತ್ರೆ, ಸಂ.04
(ಸಂ: ಜಿ.ಎಸ್.ಶಿವರುದ್ರಪ್ಪ) ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು. 1977
4.ಕನ್ನಡ ಅಧ್ಯಯನ
ಸಂಸ್ಥೆಯ ಸಾಹಿತ್ಯ ಚರಿತ್ರೆ ಸಂ.04
ಸಂ:
ಟಿ.ವಿ.ವೆಂಕಟಾಚಲ ಶಾಸ್ತ್ರೀ
ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು 1980
5. ಎಂ. ಚಿದಾನಂದಮೂರ್ತಿ,ವಚನ ಸಾಹಿತ್ಯ
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು. 2000 ( ದ್ವಿ.ಮು)
6. ಸಿ.ನಾಗಭೂಷಣ:
ವೀರಶೈವ ಸಾಹಿತ್ಯ ಕೆಲವು ಒಳನೋಟಗಳು
ವಿಜೇತ
ಪ್ರಕಾಶನ, ಗದಗ.2008