ಸಿದ್ಧನಂಜೇಶನ ಬಸವಶತಕ ಸಮೀಕ್ಷೆ
ಡಾ.ಸಿ.ನಾಗಭೂಷಣ
ಮಧ್ಯಕಾಲೀನ ವೀರಶೈವ ಕನ್ನಡ ಸಾಹಿತ್ಯದಲ್ಲಿ ಚಿಕ್ಕನಂಜೇಶ ಅಥವಾ ಸಿದ್ಧನಂಜೇಶನದು ಎದ್ದು ಕಾಣುವ ಹೆಸರು. ಸಿದ್ಧನಂಜೇಶನು ವೀರಶೈವ ಕವಿಗಳಲ್ಲಿ ಒಬ್ಬನಾಗಿದ್ದಾನೆ. ಈತನ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳಲ್ಲಿ ಎರಡರಲ್ಲೂ ಬಲ್ಲಿದನಾಗಿದ್ದಾನೆ. ಬೆ.ವಿ.ವಿ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿರುವ ಕಾಗದದ ಪ್ರತಿಯ ಪುಷ್ಪಿಕೆಯಲ್ಲಿ ಈತನ ಬಗೆಗೆ ಪಂಚವಣ್ಣಿಗೆ ’ಸಿದ್ಧನಂಜೇಶ್ವರ ದೇವರ ಪಾದ ಪದ್ಮಂಗಳಿಗೆ ಸುಧಾರಕನಾದ ಚಿಕ್ಕ ನಂಜಾಚಾರ್ಯ ಬಗೆಯೋತ್ಪನ್ನ ಗುರು ಮಠ ಜಾಲಿಹಾಡ ಮಠ, ಹಿರೆಮಠದ ಪಂಚವಣಿಗೆ ಗುರು ಶಾಂತದೇವರ ಕರಜಾತ ಗುರು ವಿರೂಪಾಕ್ಷಸ್ವಾಮಿಗಳವರ’ ಎಂಬ ವಿವರ ಇದ್ದು ಹೂಲಿ ಸಿಂಹಾಸನ ಪೀಠಕ್ಕೆ ಸೇರಿದವನು ಎಂಬುದು ವ್ಯಕ್ತವಾಗುತ್ತದೆ. ನೀಲಗುಂದದ ಅನ್ನದಾನೇಶ್ವರನ ಶಿಷ್ಯ ಕುರುವತ್ತಿಯ ನಂಜೇಶ, ಕುರುವತ್ತಿಯ ನಂಜೇಶನ ಶಿಷ್ಯ ಹೂಲಿಯ ಸಿದ್ಧನಂಜೇಶ ಈ ಹೂಲಿಯ ಸಿದ್ಧ ನಂಜೇಶನ ಮಗನೇ ಬಸವಶತಕದ ಕರ್ತೃವಾದ ಚಿಕ್ಕ ನಂಜೇಶ ಅಥವಾ ಸಿದ್ಧನಂಜೇಶ. ಹೂಲಿಯ ಸಿದ್ದನಂಜೇಶನ ಶಿಷ್ಯನಾಗಿದ್ದ ಕಾಲದಲ್ಲಿ ಚಿಕ್ಕನಂಜೇಶನೆಂಬ ಹೆಸರೂ, ನಂದ್ಯಾಲಪುರದ ಮಠಾಧಿಪತಿಯಾಗಿದ್ದ ಕಾಲದಲ್ಲಿ ಸಿದ್ಧನಂಜೇಶನೆಂಬ ಹೆಸರು ಇದ್ದುದುದಾಗಿ ತಿಳಿದು ಬರುತ್ತದೆ.
ಸಿದ್ಧನಂಜೇಶನ ಕಾಲದ ಬಗೆಗೆ ಆರ್.
ನರಸಿಂಹಾಚಾರ್ಯರು ತಮ್ಮ ʻಕರ್ಣಾಟಕ ಕವಿಚರಿತೆ'ಯ ದ್ವಿತೀಯ ಸಂಪುಟ (೧೯೧೯) ಪು.
೩೭೯-೮೧ರಲ್ಲಿ ಸು. ೧೬೦೦ ಎಂಬ ನಿಲುವಿಗೆ
ಬಂದಿದ್ದಾರೆ. ಸಿದ್ಧನಂಜೇಶನು ರಚಿಸಿರುವ ʻಗುರುರಾಜ ಚಾರಿತ್ರ'ವನ್ನು ಸಂಪಾದಿಸಿ
ಪ್ರಕಟಿಸಿದ ಪ್ರೊ.ಸಂ.ಶಿ.ಭೂಸನೂರಮಠರು ತಮ್ಮ ಕೃತಿಯ
ಪ್ರಸ್ತಾವನೆಯಲ್ಲಿ ಈತನ ಕಾಲದ ಬಗೆಗೆ ಚರ್ಚಿಸಿ, “ಸಿದ್ಧನಂಜೇಶ ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿರಬೇಕು” ಎಂಬ ಅಭಿಪ್ರಾಯವನ್ನು
ವ್ಯಕ್ತಪಡಿಸಿದ್ದಾರೆ. ಮೇಲಿನ ಇಬ್ಬರ ಅಭಿಪ್ರಾಯಗಳನ್ನು ಪುನರ್ ಪರಿಶೀಲಿಸಿ ತಮಗೆ ಕಂಡು ಬಂದಕಾಲದ
ಬಗೆಗಿನ ಹೊಸ ಅಂಶಗಳನ್ನು ಕೂಡಿಸಿಕೊಂಡು ಶ್ರೀ ಎಚ್. ದೇವೀರಪ್ಪನವರು ʻಸಿದ್ಧನಂಜೇಶನ
ಕಾಲ' ಎಂಬ ʻಪ್ರಬುದ್ಧ
ಕರ್ಣಾಟಕ'ದಲ್ಲಿನ
ಲೇಖನದಲ್ಲಿ ಸಿದ್ಧನಂಜೇಶನು ಕ್ರಿ.ಶ. ೧೬೩೦ ಸುಮಾರು ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು. ತದನಂತರದಲ್ಲಿ
ಅವರೇ ʻಪ್ರಬುದ್ಧ ಕರ್ಣಾಟಕ'ದ ಸಂ.೪೧, ಸಂಚಿಕೆ ೩ ರಲ್ಲಿ ಪ್ರಕಟಿಸಿದ
ಮತ್ತೊಂದು ಲೇಖನದಲ್ಲಿ ಆತನ ಕಾಲವನ್ನು ಸು.ಕ್ರಿ.ಶ. ೧೭೦೦ ಎಂದು ಸೂಚಿಸಿ ತಮ್ಮ ಮೊದಲ ಅಭಿಪ್ರಾಯವನ್ನು
ತಿದ್ದಿಕೊಂಡಿದ್ದಾರೆ.
ಆದರೆ ಎಸ್.
ಶಿವಣ್ಣನವರು ಗದಗದಲ್ಲಿನ ಶ್ರೀ
ಜಗದ್ಗುರು ತೋಂಟದಾರ್ಯ ಮಠದ ಹಸ್ತಪ್ರತಿ ಸಂಗ್ರಹದಲ್ಲಿ
ತಮಗೆ ದೊರೆತ ಚಿಕ್ಕನಂಜೇಶನ ಮತ್ತೊಂದು ಅನುಪಲಬ್ಧ ಕೃತಿಯಾದ ತೋಂಟದ ಸಿದ್ಧದೇಶಿಕನ ‘ಭಾವರತ್ನಾಭರಣ
ಸ್ತೋತ್ರ’ದ ಕಾಗದದ ಪ್ರತಿ ೫೭ಯಲ್ಲಿಯ ಆ ಪ್ರತಿಯು ಲಿಖಿತವಾದ ಕಾಲದ ಬಗೆಗಿನ ವಿವರಗಳನ್ನು ಅಧರಿಸಿ
ಆತನ ಕಾಲವಿಚಾರವನ್ನು ಪುನರ್ ಪರಿಶೀಲಿಸಿದ್ದಾರೆ
ಗದಗದಲ್ಲಿಯ ಶ್ರೀ ಜಗದ್ಗುರು
ತೋಂಟದಾರ್ಯ ಮಠದ ಹಸ್ತಪ್ರತಿ ಸಂಗ್ರಹದಲ್ಲಿ ಚಿಕ್ಕನಂಜೇಶನು ರಚಿಸಿರುವ ʻತೋಂಟದ ಸಿದ್ಧದೇಶಿಕನ
ಭಾವರತ್ನಾಭರಣ ಸ್ತೋತ್ರ'ದ ಕಾಗದದ ಪ್ರತಿಯೊಂದಿದ್ದು ಅಲ್ಲಿಯ
ಹಸ್ತಪ್ರತಿ ಪುಷ್ಪಿಕೆಯಲ್ಲಿ ಆ ಪ್ರತಿ ಲಿಖಿತವಾದ ಕಾಲದ ಬಗೆಗೆ ಈ ರೀತಿ ಇದೆ. ʻಸ್ವಸ್ತಿ ನೃಪ
ಸಾಲಿವಾಹನ ಸಖ ೧೫೬೩ ಪ್ರವರ್ತಮಾನೆ ಚಿತ್ರಭಾನು ಸಂವತ್ಸರೆ ಭಾದ್ರಪದ ಮಾಸೆ ಕುಷ್ಟಪಕ್ಷ ತಿಥಿ
ಯೇಕಾದಸಿ ದಿನ ಶುಕ್ರವಾರ ಅಯಿದನಯ ತಾಸಲಿ ಸ್ತೋತ್ರ ಸಮಾಪ್ತವಾಯಿತ್ತು. ಈ ಪುಸ್ತಕದ
ಬರೆದವರಾರೆಂದರೆ ಮೋಟಗಿ ಸಿದ್ಧಲಿಂಗಪ್ಪನವರ ಮೊಂಮಗ ಮುರಿಗೆಪ್ಪನವರ ಮರಿ ಗುರುಲಿಂಗೈಯನು ಬರೆದ
ಪುಸ್ತಕವು (ಶ್ರೀ ಜಗದ್ಗುರು ತೋಂಟದಾರ್ಯ ಮಠದ
ಹಸ್ತಪ್ರತಿ ಸಂಗ್ರಹ, ಬಿ.
೧೮೯/೯, ಹಾಳೆ ೧೯). ಈ
ಹಸ್ತಪ್ರತಿ ಪುಷ್ಪಿಕೆಯಲ್ಲಿಯ ಉಲ್ಲೇಖದ ಪ್ರಕಾರ ಸಿದ್ಧನಂಜೇಶನ ರಚನೆಗಳಲ್ಲೊಂದಾದ ತೋಂಟದ
ಸಿದ್ಧದೇಶಿಕನ ‘ಭಾವರತ್ನಭರಣ ಸ್ತೋತ್ರ’ ಕೃತಿಯು ಕ್ರಿ.ಶ. ೧೬೪೧ರಲ್ಲಿ ಲಿಖಿತಗೊಂಡಿದೆಯೆಂಬ ಅಂಶ
ಖಚಿತವಾಗಿದೆ. ಹೀಗಾಗಿ ಸಿದ್ಧನಂಜೇಶನ ಕಾಲವನ್ನು ೧೬೪೧ ಎಂದು ಇವರು ನಿಗದಿ
ಪಡಿಸಿದ್ದಾರೆ. (ಎಸ್. ಶಿವಣ್ಣ,
ಬಿಡುಮುತ್ತು, ಬೆಂಗಳೂರು, ೨೦೦೪, ಪುಟ. ೧೩-೧೪)
ಈ ಉಲ್ಲೇಖದಿಂದಾಗಿ ಸಿದ್ಧನಂಜೇಶನ ಕೃತಿಗಳಲ್ಲಿ
ಒಂದಾದ ತೋಂಟದ ಸಿದ್ಧದೇಶಿಕನ ಭಾವರತ್ನಾಭರಣ ಸ್ತೋತ್ರವು ಕ್ರಿ.
ಶ.೧೬೪೧ ರಲ್ಲಿ ಲಿಖಿತಗೊಂಡಿದೆಯೆಂಬ ಅಂಶ ಖಚಿತವಾಗುತ್ತದೆ. ಹೀಗಾಗಿ ಸಿದ್ಧನಂಜೇಶನಕಾಲ ಪ್ರತೀಕರಣಗೊಂಡ
ಕಾಲವಾದ ಕ್ರಿ.ಶ. ೧೬೪೧ಕ್ಕಿಂತ ಹಿಂದಕ್ಕೆ ಹೋಗುತ್ತದೆ.
ಈತನು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಒಟ್ಟು 12 ಕಾವ್ಯಗಳನ್ನು ಬರೆದಿದ್ದಾರೆ. ಆ ಕೃತಿಗಳೆಂದರೆ, 1.ರಾಘವಾಂಕ ಚಾರಿತ್ರ: ಕೃತಿಯ ವಿಶೇಷವೆಂದರೆ 1873 ರಲ್ಲಿಯೇ ಕಲ್ಲಚ್ಚಿನಲ್ಲಿ ಮುದ್ರಿತವಾದ ಹಿರಣ್ಯ ಗರ್ಭನ ವಿಶ್ವಕೃತಿ ಪರೀಕ್ಷಣ ಸಂಕಲನ ಕೃತಿಯಲ್ಲಿ ಇಲ್ಲಿಯ ಪದ್ಯಗಳು ಕಂಡು ಬಂದಿರುವುದು. ಈ ಕೃತಿ ವಾರ್ಧಕ ಷಟ್ಪದಿಯಲ್ಲಿದ್ದು 19 ಸಂಧಿ ಹಾಗೂ 1521 ಪದ್ಯಗಳಿವೆ. ಈ ಕೃತಿಯನ್ನು ಮಾಗಡಿ ವೀರಪ್ಪಶಾಸ್ತ್ರಿಗಳು ಕ್ರಿ. ಶ 1904ರಲ್ಲಿಯೂ ಸ.ಸ ಮಾಳವಾಡರೂ 1954ರಲ್ಲಿ ಧಾರವಾಡದಿಂದ ಪ್ರಕಟಿಸಿದ್ದಾರೆ. 2. ಗುರುರಾಜ ಚಾರಿತ್ರ. ಈ ಕೃತಿಯು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದ್ದು 19 ಸಂಧಿ 1277 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಪಂಚಾಚಾರ್ಯರುದ್ಭವ, ಶಿವನ ಪಂಚವಿಂಶತಿ ಲೀಲೆ, ಗಣಸಹಸ್ರನಾಮ, ನೂತನ ಪುರಾತನರ ಚರಿತ್ರೆ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ. ಈ ಕೃತಿಯು ಧಾರ್ಮಿಕ ವಿಷಯಗಳ ಸಂಕ್ಷಿಪ್ತ ವಿಶ್ವಕೋಶವೆನಿಸಿದೆ. ಕವಿಚರಿತೆಕಾರರು ತಮ್ಮ ಕವಿಚರಿತೆಯ ಎರಡನೇ ಸಂಪುಟದಲ್ಲಿ ಈ ಕೃತಿಯ ಬಗೆಗೆ ಪ್ರಸ್ತಾಪಿಸಿದ್ದಾರೆ. 3. ಅದ್ಭುತ ಕಾಲಜ್ಞಾನವು ಕೃತಿಯು 138 ತ್ರಿಪದಿಗಳನ್ನು ಒಳಗೊಂಡಿದ್ದು ಸಿದ್ಧಾಂತಿ ಶಿವ ಬಸವ ಶಾಸ್ತ್ರಿಗಳಿಂದ ಪ್ರಕಟವಾಗಿದೆ. 4. ಮುತ್ತಿನ ಕಂತೆ ದೇವರ ವಚನವು ಕೃತಿಯು ಭಾಮಿನಿ ಷಟ್ಪದಿಯಲ್ಲಿ 84 ಪದ್ಯಗಳನ್ನು ಒಳಗೊಂಡಿದ್ದು ಶ್ರೀ.ಜಿ.ಎ.ಶಿವಲಿಂಗಯ್ಯ ಅವರಿಂದ 1956 ರಲ್ಲಿ ಪ್ರಕಟಗೊಂಡಿದೆ. 5. ತೋಟದ ಸಿದ್ಧದೇಶಿಕನ ಭಾವರತ್ನಭರಣ. ಕೃತಿಯು ವಾರ್ಧಕ ಷಟ್ಪದಿಯಲ್ಲಿ 111 ಪದ್ಯಗಳನ್ನು ಒಳಗೊಂಡಿದೆ. ತೋಂಟದ ಸಿದ್ಧಲಿಂಗರ ಪವಾಡಗಳ ನಿರೂಪಣೆ ಮತ್ತು ಸ್ತುತಿ ಈ ಕೃತಿಯ ವಸ್ತುವಾಗಿದೆ. ಈ ಕೃತಿಯನ್ನು ಗದ್ಯಾನುವಾದದೊಡನೆ ಎಂ.ಎಂ.ಕಲುಬುರ್ಗಿ ಮತ್ತು ಬಿ. ಆರ್ ಹಿರೇಮಠರವರು ಸಂಪಾದಿಸಿ 1979ರಲ್ಲಿ ಗದುಗಿನ ತೋಂಟದಾರ್ಯ ಮಠದಿಂದ ಪ್ರಕಟಿಸಿದ್ದಾರೆ. 6. ಬಸವ ಶತಕ. 7, ಗಂಗಮ್ಮನ ತ್ರಿವಿಧಿ ಬಸವಣ್ಣನವರ ಧರ್ಮ ಪತ್ನಿಯಾದ ಗಂಗಮ್ಮನವರನ್ನು ಕುರಿತು ತ್ರಿವಿಧಿಗಳನ್ನು ರಚಿಸಿದ್ದಾರೆ ಈ ಲಘು ಕೃತಿಯನ್ನು ಎಸ್, ಶಿವಣ್ಣನವರು ಸಂಪಾದಿಸಿ ಬಸವ ಪಥ ಸಂ-7, ಸಂ-1ರಲ್ಲಿ ಪ್ರಕಟಿಸಿದ್ದಾರೆ. 8, ನೀಲಾಂಬಿಕೆಯ ತತ್ತ್ವ ಮಾಲಾಸ್ತೋತ್ರ ಈ ಲಘು ಕೃತಿಯು ಬಸವಣ್ಣನವರ ವಿಚಾರ ಪತ್ನಿ ಎನಿಸಿದ ನೀಲಮ್ಮನವರನ್ನು ಕುರಿತ ಸ್ತುತಿ. ಈ ಲಘು ಕೃತಿಯನ್ನು ಬಿ.ಆರ್. ಹಿರೇಮಠ ಅವರು ಸಂಪಾದಿಸಿ ಬಸವಪಥ ಮಾಸಿಕ ಪತ್ರಿಕೆಯ ಸಂ-6, ಸಂ-10ರಲ್ಲಿ ಪ್ರಕಟಿಸಿದ್ದಾರೆ. 9. ದೇವಿಯ ಸ್ತೋತ್ರದ ತಾರಾವಳಿ ಈ ಲಘುಕೃತಿಯು 30 ವಾರ್ಧಕ ಷಟ್ಪದಿಗಳನ್ನು ಒಳಗೊಂಡಿದ್ದು. 1994ರಲ್ಲಿ ವೀರಣ್ಣ ರಾಜೂರ ರವರಿಂದ ಸಂಪಾದಿತಗೊಂಡು, ಗದುಗಿನ ತೋಂಟದಾರ್ಯಮಠದ ಮೂಲಕ ವೀರಶೈವ ತಾರಾವಳಿ ಸಂಪುಟದಲ್ಲಿ ಪ್ರಕಟಗೊಂಡಿದೆ. ಈ ಒಂಭತ್ತು ಕನ್ನಡ ಕೃತಿಗಳ ಜೊತೆಗೆ ಸಂಸ್ಕೃತದಲ್ಲಿ ಮೂರು ಕೃತಿಗಳನ್ನು ರಚಿಸಿದ್ದಾರೆ. 1. ಜಗದ್ಗುರು ವಿಶ್ವಕರ್ಣ ವಿಜಯನಕ್ಷತ್ರಮಾಲಿಕ. 2. ಶಿವಸಿದ್ಧಾಂತ ಚಂದ್ರಿಕೆ, 3.ಸಂಸ್ಕೃತ ಕಾಲಾಜ್ಞಾನ, ಇವುಗಳನ್ನು ಒಳಗೊಂಡಿದೆ.
ಸಿದ್ಧನಂಜೇಶನ ಬಸವಶತಕ ಕೃತಿಯು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದ್ದು, 26 ವಾರ್ಧಕ ಪದ್ಯಗಳ ಅಪೂರ್ಣ ಕೃತಿಯನ್ನು ಮೊದಲಿಗೆ ಎಂ.ಎಂ.ಕಲಬುರ್ಗಿರವರು ಮಾರ್ಗ ಸಂಪುಟ-1 ಕೃತಿಯಲ್ಲಿ ಪ್ರಕಟಿಸಿದ್ದರು. ನಂತರದಲ್ಲಿ ದಿವಂಗತ ಎಸ್. ಶಿವಣ್ಣನವರು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ಸಂಶೋಧನಾ ಸಂಸ್ಥೆಯ ಸಂಗ್ರಹದ ಕ್ರಮಾಂಕ ಪಿ.9764/20 ಪ್ರತಿಯನ್ನುಆಧರಿಸಿ 112 ಪದ್ಯಗಳ ಈ ವಾರ್ಧಕ ಕಾವ್ಯವನ್ನು ಸಂಪಾದಿಸಿ ಗದುಗಿನ ವೀರಶೈವ ಅಧ್ಯಯನ ಸಂಸ್ಥೆಯ ಮೂಲಕ 2001ರಲ್ಲಿ ಪ್ರಕಟಿಸಿದ್ದಾರೆ.
ಕನ್ನಡದಲ್ಲಿ ಶತಕ ಸಾಹಿತ್ಯ
ಸುಮಾರು 1500 ವರ್ಷಗಳ ಪ್ರಾಚೀನತೆಯುಳ್ಳ ಕನ್ನಡ ಸಾಹಿತ್ಯದಲ್ಲಿ ಚಂಪೂ, ಷಟ್ಪದಿ, ವಚನ, ತ್ರಿಪದಿ, ಹಾಡುಗಳು, ನಾಟಕಗಳು ಮೊದಲಾದ ಸಾಹಿತ್ಯ ಭಾಗಗಳಲ್ಲಿ ಇರುವಂತೆ ಶತಕ ಸಾಹಿತ್ಯವೂ ಉಂಟು. ನೂರು ಪದ್ಯಗಳಿಂದ ಕೂಡಿದ ಗ್ರಂಥವನ್ನು ಶತಕ ಎಂದು ಕರೆಯುತ್ತಾರೆ. ವೃತ್ತ, ಕಂದ, ಷಟ್ಪದಿ, ಸಾಂಗತ್ಯ ಹೀಗೆ ಯಾವುದಾದರು ಛಂದಸ್ಸನ್ನ ಇಲ್ಲಿ ಬಳಸಿರುವುದುಂಟು. ಈ ಶತಕಗಳು ಭಕ್ತಿಜ್ಞಾನ, ವೈರಾಗ್ಯ ಬೋಧಕವಾಗಿಯಾಗಲಿ ನೀತಿ ಬೋಧಕವಾಗಲಿ ಇರುತ್ತವೆ. ಕೆಲವು ಶತಕಗಳಲ್ಲಿ 101, 108,
110, 122ರ ವರೆಗೆ ಪದ್ಯಗಳಿರುವುದುಂಟು. ಪೀಠಿಕೆ ಮತ್ತು ಉಪಸಂಹಾರ ಭಾಗದಲ್ಲಿ ಕೆಲವು ಪದ್ಯಗಳು ಸೇರಿ ಬಹುಶಃ ಪದ್ಯಸಂಖ್ಯೆ ನೂರನ್ನು ದಾಟುತ್ತದೆಂದು ಕಾಣುತ್ತದೆ. ಈ ಶತಕಗಳು ಹಿತಮಿತವಾದ ಭಾಷೆಯಲ್ಲಿ ಲೌಕಿಕರ ಮನಸ್ಸಿಗೆ ಹಿಡಿಯುವ ರೀತಿಯಲ್ಲಿರುವುದರಿಂದ ಹೆಚ್ಚು ಜನಪ್ರಿಯವೆನಿಸಿವೆ. ‘ಶತಕ ಪ್ರಕಾರದಲ್ಲಿ ರಚಿತವಾಗುವ ಕೃತಿಗಳು ಕರಾರುವಕ್ಕಾಗಿ ೧೦೦ಕ್ಕೆ ಮುಕ್ತಾಯವಾಗಬೇಕಿಲ್ಲ. ಅಲ್ಲದೆ ನೂರಕ್ಕೆ ನಿಲ್ಲಿಸುವುದು ಮಾನಸಿಕವಾಗಿ ಸರಿಯಲ್ಲವೆಂದು ಕಾಣಿಸುತ್ತದೆ. ಹೀಗಾಗಿ ಶತಕಗಳಲ್ಲಿ ಅಧಿಕವಾಗಿ ಪದ್ಯಗಳು ಬರುವುದೂ ಉಂಟು. ಎಷ್ಟಿರಬಹುದು ಎಂದಾಗ’ ಒಂದರಿಂದ ಮೂವತ್ತೈದರವರೆಗೂ ತುಯ್ದುಕೊಂಡಿರುತ್ತದೆ.
ಶತಕ ರಚನೆಯ ಉದ್ದೇಶ ಜನತೆಗೆ ಶತಕಕಾರನು ತನ್ನ ಅನುಭವವನ್ನು ನೇರವಾಗಿ ತಿಳಿಸುವುದೇ ಆಗಿರುತ್ತದೆ. ಕಾವ್ಯ ರಚನೆಯಲ್ಲಿ ಕಂಡು ಬರುವ ಕವಿಯೇ ಬೇರೆ, ಶತಕ ರಚನೆಯಲ್ಲಿ ಕಂಡು ಬರುವ ಕವಿಯೇ ಬೇರೆ. ಒಂದರಲ್ಲಿ ಅಧೀನ, ಮತ್ತೊಂದರಲ್ಲಿ ಸ್ವತಂತ್ರ ‘ವಾಕ್ಯಂ ರಸಾತ್ಮಕಂ’ ಎಂಬ ಮಾತು ಕಾವ್ಯಗಳಿಗೆ ಅನ್ವಯಿಸಿದರೆ. ವಾಕ್ಯಂ ಸ್ವಾನುಭವಾತ್ಮಕಂ’ ಎಂಬ ಮಾತು ಶತಕಗಳಿಗೆ ಅನ್ವಯಿಸುತ್ತದೆ. ಶತಕಗಳು ಭಾವಗೀತಾತ್ಮವಾದವುಗಳು, ಕವಿಯ ಅಭಿವ್ಯಕ್ತಿ ಸ್ವಾತಂತ್ರವನ್ನು
ಇವುಗಳಲ್ಲಿ ಕಾಣಬಹುದು ಎನ್ನುವ ಹೇಳಿಕೆಯಲ್ಲಿ ಸತ್ಯ ಅರ್ಧಮಾತ್ರವಿರುತ್ತದೆ. ಏಕೆಂದರೆ ಧರ್ಮ ನಿರೂಪಣೆ ಸಿದ್ಧಾಂತ ಬೋಧನೆ ಶಾಸ್ತ್ರ ನಿರೂಪಣೆಯಿಂದ ಕೂಡಿದ ಶತಕಗಳಲ್ಲಿ
ಆಯಾಯಾ ವಿಷಯಗಳ ಪರಿಧಿಯಲ್ಲೇ ಶತಕವು ರಚಿತವಾಗಿ ಅಂತಹವುಗಳಲ್ಲಿ ಕೃತಿಕಾರನು ತನ್ನದನ್ನಾಗಿ ಏನನ್ನೂ
ಹೇಳಲು ಸಾಧ್ಯವಿರುವುದಿಲ್ಲ.
ಶತಕಗಳೂ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ
ಕವಿ ಪ್ರತಿಭೆಯನ್ನು ಓರೆ ಹಚ್ಚಲು ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ಸಣ್ಣ ಕನ್ನಡಿಯಲ್ಲಿ ಗಜಗಾತ್ರವನ್ನು ಸೆರೆಹಿಡಿಯುವಂತೆ ಶತಕದ ಒಂದೊಂದು ಪದ್ಯದಲ್ಲಿಯೂ
ತನ್ನ ಜೀವನಾನುಭವವನ್ನೋ ಇಲ್ಲವೆ ಲೋಕಸತ್ಯವನ್ನೋ ಪಾರದರ್ಶಕದಂತೆ ಓದುಗನ ಮುಂದೆ ಇಡುವುದು ಸುಲಭವಾದ
ಕಾರ್ಯವಲ್ಲ. ರಣಪಂಡಿತನಿಗೆ ಶಸ್ತ್ರಾನು ಸಂಧಾನವಿರುವಂತೆ ಪ್ರಕಾಂಡ ಪಂಡಿತನಿಗೆ
ಲಲಿತಪದನುಸಂಧಾನವಿರುತ್ತದೆ.
ಶತಕಗಳನ್ನು ಪ್ರಧಾನವಾಗಿ ಆರು ಭಾಗಗಳನ್ನಾಗಿ ವಿಂಗಡಿಸಬಹುದು
1.
ಪ್ರಾರ್ಥನಾ ಪ್ರಧಾನವಾದ ಶತಕಗಳು
2.
ನೀತಿ ಪ್ರಧಾನವಾದ ಶತಕಗಳು
3.
ಶಾಸ್ತ್ರ ಪ್ರಧಾನವಾದ ಶತಕಗಳು.
4.
ಧಾರ್ಮಿಕ ಸಿದ್ಧಾಂತ ಬೋಧ ಪ್ರಧಾನವಾದ ಶತಕಗಳು.
5.
ಕಥಾ ಪ್ರಧಾನವಾದ ಶತಕಗಳು.
6.
ಉದ್ದೇಶ ನಿರೂಪಣಾ ಪ್ರಧಾನ ಶತಕಗಳು
ಆದರೂ ಈ ವಿಭಾಗಗಳಲ್ಲದ ಅಪರೂಪದ ಶತಕಗಳೂ ಇರಬಹುದು
ಸಂಸ್ಕೃತ ಹಲವಾರು ವಿಷಯಗಳಲ್ಲಿ ಕನ್ನಡಕ್ಕೆ ಮಾರ್ಗದರ್ಶಕವಾಗಿರುವಂತೆ ಶತಕಗಳ ನಿರ್ಮಾಣದಲ್ಲಿಯೂ ದಿಗ್ಧರ್ಶಕವೆನಿಸಿದೆ. ಶತಕ ಸಾಹಿತ್ಯಕ್ಕೆ ಸಂಸ್ಕೃತ ಸಾಹಿತ್ಯದ ಪ್ರೇರಣೆ ಮಾರ್ಗದರ್ಶನಗಳು ವಚನ ಸಾಹಿತ್ಯದ ಅನುಭಾವ ಸಂಪತ್ತಿನ ಪುಷ್ಟಿಯೂ ದೊರೆಯಿತು. ಗೀರ್ವಾಣಭಾಷೆಯಾದ ಸಂಸ್ಕೃತದಲ್ಲಿ ಭರ್ತೃಹರಿಯ ಶತಕತ್ರಯ ಸೂರ್ಯಶತಕ, ನ್ಯಾಯಶತಕ ಮೊದಲಾದವೂ ಪ್ರಸಿದ್ಧವಾಗಿವೆ. ಅಂತೆಯೇ ಕನ್ನಡದಲ್ಲಿಯೂ ಹಂಪೆಯ ಹರಿಹರನ ಪಂಪಾಶತಕ, ರಕ್ಷಾಶತಕಗಳು ರತ್ನಾಕರವರ್ಣಿಯ ಅಪರಾಜಿತೇಶ್ವರ ಮತ್ತು ರತ್ನಾಕರಾಧೀಶ್ವರ ಶತಕಗಳೂ ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕವೂ ಅಳಸಿಂಗಳಾರ್ಯಚಾರ್ಯರ ಚೆಲ್ವ ನಾರಾಯಣ ಶತಕವೂ ಪ್ರಸಿದ್ಧವಾಗಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಪಾರ್ವತಿವಲ್ಲಭ ಶತಕ ಮತ್ತು ಸಿರಿನಂಜುಂಡ ಶತಕ, ಬಸವಪ್ಪಶಾಸ್ತ್ರೀಗಳ ನೀತಿಶತಕ, ಶಂಕರಶತಕ, ಮತ್ತು ಕನ್ನಡ ಭರ್ತೃಹರಿಶತಕ, ಆರ್ಯಶತಕ, ಸ್ವಾದಿಸದಾಶಿವರಾಜನ ಪಂಚಾಶತಕ, ವಿರೂಪಾಕ್ಷಶತಕ, ಮಲ್ಲಿಕಾರ್ಜುನನ ಶಿವಮಹಿಮಾಶತಕ ಶಿವಭಕ್ತಿಸಾರ, ಕನಕದಾಸರ ಹರಭಕ್ತಿಸಾರ ಮೊಗ್ಗೆ ಮಾಯಿದೇವರ ಶತಕತ್ರಯಗಳು, ಪಿ.ಆರ್.ಕರಿಬಸವಶಾಸ್ತ್ರೀಗಳ ನಯಶತಕ ಇವು ವಿದ್ವಾಂಸರ ಮನ್ನಣೆಗೆ ಪಾತ್ರವಾಗಿವೆ. ಅಂತು ಕನ್ನಡದಲ್ಲಿ ನಾಲ್ಕುನೂರು ಶತಕಗಳು ಇವೆ ಎಂದು ವಿದ್ವಾಂಸರು ಗುರುತಿಸಿದ್ದಾರೆ.
ಸ್ತೋತ್ರಸಾಹಿತ್ಯದಲ್ಲಿ ಶತಕಗಳಿಗೆ ಹಿರಿಯ ಸ್ಥಾನವಿದೆ. ಶತಕ ಸಾಹಿತ್ಯ ತನ್ನ ತತ್ತ್ವೋದ್ಧೇಶವನ್ನು ರಸಪಥದ ಮೂಲಕ ಸಾಧಿಸಿದೆ. ಓದುಗ ಆತ್ಮಾನುಭವದ ರಸದಲ್ಲಿ ತೇಲಿ ತನ್ಮಯವಾಗುವಂತೆ ಶತಕಕಾರ ಮಾಡಬಲ್ಲ. ಆಧ್ಯಾತ್ಮಿಕ ವಿಚಾರಗಳನ್ನು ಮನನಂಬುವಂತೆ ನಿರೂಪಿಸಬಲ್ಲ ಸಮಾಜದ ಆತ್ಮಪ್ರಗತಿಗೆ ಸಾಧಕವಾದ ಸುಮಾರ್ಗವನ್ನವನು ತೋರಿಸಬಲ್ಲ ಚಂಪೂ ಕೃತಿಗಳ ಸಂಪ್ರದಾಯಬದ್ಧವಾದ ಕಟ್ಟುಪಾಡಿನಲ್ಲಿ ಸಿಲುಕಿದ ಕವಿ. ಶತಕ ರಚನೆಯಲ್ಲಿ ಆತ್ಮಸ್ವಾತಂತ್ರವನ್ನು ಪಡೆದಂತೆ ತೋರುತ್ತದೆ. ಶತಕ ಸಾಹಿತ್ಯ ವಸ್ತುನಿಷ್ಠವಾಗಿರುವುದಕ್ಕಿಂತಲೂ ಆತ್ಮನಿಷ್ಠವಾಗಿದೆ. ಎಂಬ ಮಾತು ಸತ್ಯ. ಶತಕಗಳು ಸ್ವಾನುಭವದ ಕುಸುಮಗಳು ಮುಕ್ತಿಸಾಧನೆಯ ಮೂಲವಾದ ಭಕ್ತಿ, ಜ್ಞಾನ, ವೈರಾಗ್ಯಗಳ ನಿರೂಪಣೆಯೇ ಶತಕ ರಚನೆಯ ಮೂಲ ಉದ್ದೇಶ. ಇವು ಹಾಡುಗಬ್ಬಗಳಂತೆ ನಿತ್ಯಜೀವನದಲ್ಲಿ ಉಪಯೋಗವಾಗುತ್ತವೆ. ಈ ನಿಟ್ಟಿನಲ್ಲಿ ಸಿದ್ಧನಂಜೇಶನ ಬಸವಶತಕವು ಸ್ತೋತ್ರ ಪ್ರಧಾನವಾದ ಲಘು ಶತಕಕೃತಿಯಾಗಿದೆ.
ಭಾರತೀಯ ಸಮಾಜದ ಎಲ್ಲಾವರ್ಗಗಳ ಮೇಲೆ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ನಿಜವಾದ ಅರ್ಥದ ಸಮಾಜೋ-ಧಾರ್ಮಿಕ ಆಂದೋಲನದ ನೇತೃತ್ವವನ್ನುವಹಿಸಿದ ಬಸವಣ್ಣನವರು ಯಾವ ನೆಲೆಗಟ್ಟಿನಿಂದ ನೋಡಿದರೂ ಘನವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ. ಶ್ರೇಷ್ಠ ವಚನಗಳನ್ನು ರಚಿಸಿರುವುದರಿಂದ ಕವಿಗಳು ನೂತನ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ್ದರಿಂದ ಸಮಾಜ ಸುಧಾರಕರು, ಭಗವಂತನ ಸಾಕ್ಷಾತ್ಕಾರಕ್ಕಾಗಿ ಜೀವನದುದ್ದಕ್ಕೂ ಹಂಬಲಿಸಿದ್ದರಿಂದ ಸಾಧಕರು. ಪ್ರಮುಖ ನಾಯಕರು. ಇಂತಹ ಹಲವು ವೈವಿದ್ಯಮಯ ವ್ಯಕ್ತಿತ್ವವನ್ನುಳ್ಳ ಬಸವಣ್ಣನವರ ಚರಿತ್ರೆಯನ್ನು ತಿಳಿಯಲು ಕನ್ನಡ ಸಾಹಿತ್ಯದಲ್ಲಿ ವಿಪುಲವಾದ ಸಾಮಗ್ರಿ ಇದೆ. ಇಂದು ಕನ್ನಡ ಸಾಹಿತ್ಯದಲ್ಲಿ ಬಸವಣ್ಣನವರನ್ನು ಕುರಿತು ರಚಿತವಾಗಿರುವಷ್ಟು ಕಾವ್ಯ-ಪುರಾಣಗಳು ಕಾದಂಬರಿಗಳು, ನಾಟಕಗಳು, ಹಾಗೂ ಇತರೆ ಲೇಖನಗಳು ಮತ್ತಾರನ್ನು ಕುರಿತು ರಚಿತವಾಗಿಲ್ಲ. ಎಂಬುದನ್ನು ಮನಗಾಣಬಹುದು. ಶ್ರೇಷ್ಠಅನುಭಾವಿಯೂ, ಭಕ್ತಿಭಂಡಾರಿಯೂ, ಉತ್ತಮ ವಚನಕಾರರೂ ಆದ ಬಸವಣ್ಣನವರು ನಡೆದು-ನುಡಿದ ತತ್ವಗಳು ಎಲ್ಲಾ ಕಾಲಕ್ಕೂ ಆದರ್ಶಪ್ರಾಯವೂ, ಅನುಸರಣೀಯವೂ ಆಗಿದೆಯೆಂದರೆ ತಪ್ಪಾಗಲಾರದು. ಬಸವೇಶ್ವರರ ಚರಿತೆಯನ್ನು ಕುರಿತು ಸಾಹಿತ್ಯದ ವಿವಿಧ ಪ್ರಕಾರಗಳಾದ ಚಂಪು,ರಗಳೆ, ತ್ರಿಪದಿ, ಸಾಂಗತ್ಯ, ಶತಕಗಳಲ್ಲಿ ಹಲವಾರು ಕಾವ್ಯಗಳು ಮೈದಾಳಿವೆ. ಬಸವೇಶ್ವರನನ್ನು ಕುರಿತು ಹುಟ್ಟಿಕೊಂಡ ಸ್ವತಂತ್ರಕಾವ್ಯಗಳು ಕೆಲವಾದರೆ ಅದರ ಕಥೆಯನ್ನು ಬಿಡಿ ಬಿಡಿಯಾಗಿ ಬಿತ್ತರಿಸಿದ ಕಾವ್ಯಗಳು ಹಲವು. ಬಸವಣ್ಣನ ಕುರಿತಾದ ಕನ್ನಡದ ಬಹುಮುಖ್ಯ ಕೃತಿಗಳು ಪುರಾಣ ಸ್ವರೂಪಕ್ಕೆ ಸಂಬಂಧಿಸಿದವುಗಳಾಗಿವೆ. ಸುಮಾರು ಕ್ರಿ.ಶ.1230ರಲ್ಲಿ ಹರಿಹರನ ‘ಬಸವರಾಜ ದೇವರ ರಗಳೆ ಬಸವಣ್ಣನನ್ನು ಕುರಿತ ಮೊದಲ ಕೃತಿಯಾದರೂ ಅಪೂರ್ಣವಾದ ಕಾರಣ ಅದೇ ಶತಮಾನದಲ್ಲಿದ್ದ ಪಾಲ್ಕುರಿಕೆ ಸೋಮನಾಥನು ತೆಲುಗಿನಲ್ಲಿ ರಚಿಸಿರುವ ‘ಬಸವಪುರಾಣಮು’ ಎಂಬ ಕೃತಿಯನ್ನು ನಂತರದ ಕಾಲದಲ್ಲಿ ಬಸವಣ್ಣನನ್ನು ಕುರಿತು ಕಾವ್ಯ-ಪುರಾಣ ಬರೆದ ಭೀಮಕವಿ, ವಿರೂಪಾಕ್ಷ ಪಂಡಿತ, ಷಡಕ್ಷರದೇವ ಮುಂತಾದವರೆಲ್ಲಾ ಅನುಸರಿಸಿದ್ದಾರೆ.
ಬಸವಣ್ಣನನ್ನು ಸರ್ವಸ್ವವೆಂದು ಬಗೆದು ಆರಾಧನಾಭಾವದಿಂದ ತಮ್ಮ ಅಂತರಂಗದಲ್ಲಿ ಪೂರ್ಣವಾಗಿ ಬಸವಮೂರ್ತಿಯನ್ನು ತುಂಬಿಕೊಂಡು ಅವರನ್ನು ಹಲವಾರು ವಿಶೇಷಣಗಳಿಂದ ಸಿದ್ಧನಂಜೇಶನು ಈ ಲಘು ಕೃತಿಯಲ್ಲಿ ವರ್ಣಿಸಿದ್ದಾರೆ. ಬಸವಶತಕ ಕೃತಿಯ ಉದ್ದೇಶ ಬಸವಣ್ಣನವರನ್ನು ಪವಾಡ ಹಾಗೂ ಅತಿಶಯವಾದ ಮಹಿಮೆಗಳು ಇತ್ಯಾದಿಗಳ ಮೂಲಕ ಕೃತಿಯುದ್ದಕ್ಕೂ ಸ್ತುತಿಸುವುದಾಗಿದೆ. ಈ ಕೃತಿಯಲ್ಲಿ 112 ಪದ್ಯಗಳಿದ್ದು ಪ್ರತಿಯೊಂದು ಪದ್ಯವೂ ಶರಣಾರ್ಥಿ ವೃಷಭೇಂದ್ರ ಧರ್ಮಮೂರ್ತಿ ಎಂಬ ಅಂಕಿತದಿಂದ ಕೊನೆಗೊಳ್ಳುತ್ತದೆ.
ಮಹಾತ್ಮರೆಲ್ಲರೂ ವಾಸ್ತವ ಬದುಕಿನಲ್ಲಿ ಉಸಿರಾಡಿದ ಮಾನುಷ ಜೀವಿಗಳೇ, ಆತ್ಮ ಸಂಸ್ಕಾರಗೊಂಡು, ಬದುಕಿನಲ್ಲಿ ಸತ್ ಶ್ರದ್ಧೇ, ಸತ್ ಸಂಕಲ್ಪ, ಭಿನ್ನವಿಲ್ಲದ ನಡೆನುಡಿ ಆದರ್ಶಪೂರ್ಣವಾದ ಯತ್ನ ಹಾಗೂ ಮಾನವ ಜನಾಂಗದ ಏಳಿಗೆಯ ಚಿಂತನೆ ಇವೇ ಮೊದಲಾದವುಗಳನ್ನು ಅಳವಡಿಸಿಕೊಂಡು ಬಾಳಿದಾಗ ಲೋಕದ ಕಣ್ಣಿಗೆ ಅಂತಹ ವ್ಯಕ್ತಿ ಭಿನ್ನವಾಗಿ ಕಾಣಬರುತ್ತಾನೆ. ವಸ್ತುಶಃ ದುಃಖಮಯವಾಗಿರುವ ಬದುಕಿಗೆ ಪರಿಹಾರವನ್ನು ಯಾವನು ಕಾಣಿಸುತ್ತಾನೋ ಅವನು ಪ್ರಾಪಂಚಿಕ ನೆಲೆಯಲ್ಲಿ ಪೂಜ್ಯನಾಗುತ್ತಾನೆ. ದೇವಮಾನವನಾಗುತ್ತಾನೆ. ಕಾಲದಿಂದ ಕಾಲಕ್ಕೆ ಜನರಲ್ಲಿ ಬೆಳೆದು ಬಂದ ಈ ನಂಬುಗೆ ಭಕ್ತಿಭಾವಗಳೆ ನಂತರದ ಕವಿಗಳು ಭಾವಪರವಶರಾಗಿ ಸ್ತುತಿಸಲು ಸಾಧ್ಯವಾಗಿದೆ. ಓರ್ವ ಮಹಿಮಾಪುರುಷ ತನ್ನ ಬದುಕು ಮಣಿಹಗಳಿಂದ ಸಮಕಾಲೀನ ಸಾಮಾಜಿಕ ಜೀವನದ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದಾಗ ಸಹಜವಾಗಿ ಅವನ ಸ್ಥಾನಮಾನಗಳು ದೈವತ್ವಕ್ಕೇರುತ್ತವೆ. ಅಂತಹ ವ್ಯಕ್ತಿಯು ಕವಿಗಳ ಕಾವ್ಯದ ವಸ್ತುವಾಗುತ್ತಾನೆ. ಇದಕ್ಕೆ ಬಸವಣ್ಣನವರನ್ನೇ ನಿದರ್ಶನವಾಗಿ ಕೊಡಬಹುದು. ಬಸವಣ್ಣನವರು ಅತಿಮಾನುಷವಾದ ವ್ಯಕ್ತಿತ್ವದ ಸೆಳೆತಕ್ಕೆ ಒಳಗಾಗಿದ್ದಾರೆ ಎಂದೆನಿಸುತ್ತದೆ. ಸಿದ್ಧನಂಜೇಶನು ಬಸವಶತಕದಲ್ಲಿ ಬಸವಣ್ಣನವರನ್ನು ಕುರಿತು ಭಕ್ತಿಭಾವ ಮೈದುಂಬಿ ಬಹುವಿಶೇಷಣಗಳಿಂದ ಸ್ತುತಿಸಿದ್ದಾನೆ. ಬಸವ ಎಂಬ ಮೂರಕ್ಷರಗಳ ಮಹತ್ವವನ್ನು ಅದರಿಂದ ಉಂಟಾಗುವ ಫಲಗಳನ್ನು ಮನದುಂಬಿ ವರ್ಣಿಸಿದ್ದಾನೆ. ಬಸವಣ್ಣನವರ ಭವ್ಯ ವ್ಯಕ್ತಿತ್ವವನ್ನು ಮನದಾಳದಲ್ಲಿ ಮೂಡಿಸಿಕೊಂಡು ಕವಿ ಈ ಶತಕದಲ್ಲಿ ಅದಕ್ಕೊಂದು ರೂಪು ಕೊಡಲು ಪ್ರಯತ್ನಿಸಿದ್ದಾನೆ. ಬಸವಶತಕವು ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿಯ ಬಸವ ಪುರಾಣಗಳಲ್ಲಿ ಕೆಲವಡೆ ನಿರೂಪಿತವಾಗಿರುವ ಬಸವ ಸ್ತುತಿಯ ಮಾದರಿಯಲ್ಲಿಯೇ ನಿರೂಪಿತವಾಗಿದೆ.
ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿಯ ಬಸವ ಸ್ತುತಿಯು
ಬಸವಗೆ ಶರಣೆನ್ನೆ ಪಾಪದ ಕ್ಷಯವು
ಬಸವಗೆ ಶರಣನ್ನೆ ಪರಮ ಪಾವನವು
ಬಸವಗೆ ಶರಣನ್ನೆ ಪ್ರತ್ಯಕ್ಷ ಸುಖವು
ಬಸವಗೆ ಶರಣನ್ನೆ ಭವರೋಗ ನಾಶ
ಬಸವಗೆ ಶರಣನ್ನೆ ಭಕ್ತಿ ವರ್ಧನವು
ಬಸವಗೆ ಶರಣನ್ನೆ ಬಂಧವಿಮೋಚನೆಯು
ಬಸವಗೆ ಶರಣನ್ನೆ ಭಾಗ್ಯ ಸೇರ್ಪಡೆಯು
ಬಸವಗೆ ಶರಣನ್ನೆ ಮೆರೆವುದು ಶೀಲ
ಬಸವಗೆ ಶರಣನ್ನೆ ಪ್ರಬಲ ಸಂಪದವು
ಬಸವಗೆ ಶರಣನ್ನೆ ಅಅತಿಶಯ ಕೀರ್ತಿ
ಬಸವಗೆ ಶರಣನ್ನೆ ಫಲಿಸುವುದಿಚ್ಛೆ
ಬಸವಗೆ ಶರಣನ್ನೆ ಯಹುದು ವಾಕ್ಸಿದ್ಧಿ
ಬಸವಗೆ ಶರಣನ್ನೆ ಬುದ್ಧಿ ಭ್ರಾಜಿಪುದು (ತೆಲುಗು ಬಸವ ಪುರಾಣ 1.1190-202) ಇದೇ ಮಾದರಿಯಲ್ಲಿಯೇ ಸಿದ್ಧನಂಜೇಶನು ಬಸವಣ್ಣನವರ ಬಗೆಗೆ ತಾನು ಇರಿಸಿಕೊಂಡಿದ್ದ ಭಕ್ತಿ, ಶ್ರದ್ಧೇ, ನಂಬುಗೆಗಳನ್ನು ಭಾವನಾ ಪೂರ್ವಕವಾಗಿ ಮನದುಂಬಿ ಈ ಶತಕಗಳಲ್ಲಿ ವರ್ಣಿಸಿದ್ದಾನೆ.
ಬಸವ ಎಂಬ ಹೆಸರಿನ ಮೂರಕ್ಷರಗಳನ್ನು, ಸಿದ್ಧನಂಜೇಶನು,
ಬಾಯೆನಲು ಭವಬಂಧನಂಗಳಿರದೋಡುವವು
ಸಾಯೆನಲು ಸಕಲ ಸಂಸಿದ್ಧಿಗಳು ಸಮನಿಪವು (ಪ.ಸಂ.19)
ವಾಯೆನಲು ವಾಂಛಿತ ಫಲಂಗಳಿರದಪ್ಪವುಂ ಬಸವಾಕ್ಷರದ ಮಹಿಮೆಯು ಎಂದು ವಿವರಿಸಿದ್ದಾನೆ.
ಬಸವಯೆಂಬವನೊಡಲು ಪರಮಾಮೃತದ ಕಡಲು
ಬಸವಯೆಂಬುವನ ನುಡಿ ಭಕ್ತಿ ಸುರಲತೆಯ ಕುಡಿ
ಬಸವನೆಂಬವನರ್ಥ ಪರಮಾರ್ಥ ಬಸವಯೆಂಬವನ ವದನ ಶಿವಸದನವು
ಬಸವಯೆಂಬವನ ಕುಡಿನೋಟ ಭವಭಯದೋಟ’(ಪ.ಸಂ.17)
ಬಸವಯೆಂದೆಂಬವನ ಬೇಟ ಮುಕ್ತಿಯ ಕೂಟ ಎಂದು ಭಕ್ತಿಪೂರ್ವಕವಾಗಿ ಸರ್ವದರಲ್ಲೂ ಬಸವಣ್ಣನನ್ನು ಕಾಣುವ ಪ್ರಯತ್ನ ಈ ಪದ್ಯದಲ್ಲಿ ಮಾಡಿದ್ದಾನೆ.
ಮತ್ತೊಂದು ಶತಕ ಪದ್ಯದಲ್ಲಿ
ಬಸವಯೆಂದೆಂಬಮಲ ಕಲ್ಪತರುವಿರುತಿರಲು
ಬಸವಯೆಂದೆಂಬಮಲ ಸುರಧೇನುವಿರುತಿರಲು
ಬಸವಯೆಂದೆಂಬ ಚಿಂತಾರತ್ನವಿರೆ ಬಸವನೆಂಬ ಸುರಗಿರಿಯಿರುತಿರೆ
ಬಸವನಾಮಾಮೃತದಿ ಪಡೆಯದಿಹ ಫಲವೊಳವೆ (ಪ.ಸಂ.-20)
ಬಸವನಿಂದತ್ಯಧಿಕವಿಲ್ಲವೀ ಲೋಕದೊಳು ಎಂದು ಬಸವಣ್ಣನನ್ನು ಸ್ತುತಿಸಿದ್ದಾನೆ.
ಬಸವಾಕ್ಷರವನ್ನು ಜಪಿಸುವುದರಿಂದ ಭೂತಗಳನ್ನು ಅಟ್ಟ ಬಹುದೆಂದು, ಪಾಪಾದಿಗಳನ್ನು ಮೆಟ್ಟಬಹುದೆಂದು, ದಾರಿದ್ರ್ಯ ದುಃಖಕಾಂತರ ದುರ್ಭವವ ಸುಟ್ಟುರುಹ ಬಹುದೆಂದು. ಸಕಲೇಷ್ಟ ಸಂಸಿದ್ಧಿಗಳು, ಸಿದ್ಧಿಸುವವು ಎಂದು ಹೇಳಿದ್ದಾನೆ. ಬಸವಾ ಬಸವಾಯೆಂದು ಸ್ಮರಿಸುವ ವ್ಯಕ್ತಿಯು ರೋಗಹರನೂ ಮೃತ್ಯುಹರನೂ ದಾರಿದ್ರ ಹರನೂ ಆಗಿರುವನೆಂದು ವರ್ಣಿಸಿದ್ದಾನೆ.
ಮತ್ತೊಂದು ಶತಕದಲ್ಲಿ
ಸತಿಗೋಸುಗಂ ಕೆಟ್ಟದೊಂದು ಕೋಟಿಯ ಕಂಡು
ಕ್ಷಿತಿಗೋಸುಗಂ ಕೆಟ್ಟುದೊಂದು ಕೋಟಿಯ ಕಂಡು
ಗತಿಕೆಟ್ಟ ಧನಕೆ ಕೆಟ್ಟರ ಕೋಟಿಯಂ ಕಂಡು ಸತಿ ಭೂಮಿ ಧನವ ಬಯಸಿ
ವ್ರತಗೆಟ್ಟು ಸದ್ಗತಿಯ ಮರದು ನಿರಿಯಕ್ಕಿಳಿವ
ಮತಿಹೀನನಂ ನೋಡಿ ಸುಜ್ಞಾನಮಂ ಕೊಟ್ಟು
ಕೃತ ಪುಣ್ಯನಂ ಮಾಡು ಎಂದು ನಿವೇದಿಸಿಕೊಂಡಿದ್ದಾನೆ. (ಪ.ಸಂ-52)
ಬಸವಯೆಂದೆನೆ ಕಾಮ ನಿರ್ಧೂಮವಾಗುವುದು. ಬಸವಯೆಂದೆನೆ ಕ್ರೋಧ ಕೋಡಾಹಿ ಕಡೆಸಾರ್ದುದು, ಲೋಭ ಲೂಟ್ಯಾದುದು, ಮೋಹ ಮಗ್ಗಿದುದು, ಮದಂ ಮುರೆದೋಡಿದುದು, ಎಂದು ಬಸವನ ಹೆಸರಿನ ಮಹಿಮೆಯನ್ನು ಕೊಂಡಾಡಿದ್ದಾನೆ. ಬಸವಾಕ್ಷರವು ದುರಿತಚಯಕೆ ಮಾರಮಂತ್ರ, ಕರಣತತಿಗೆ ಸ್ತಂಭನ ಮಂತ್ರ, ಭಕ್ತಿ ಮುಕ್ತಿಗಳಿಗೆ ಮೋಹನ ವಶೀಕರಣ ಮಂತ್ರ, ದರಿದ್ರೋಚ್ಛಾಟತನದ ಮಂತ್ರ, ಎಂದು ಬಸವಾಕ್ಷರದ ಮಹತ್ವವನ್ನು ಭಕ್ತಿಪರವಶನಾಗಿ ವರ್ಣಿಸಿದ್ದಾನೆ.
ಬಸವನಾಮವನ್ನು ಚಿತ್ತಶುದ್ಧದಿಂದ ಪ್ರಾರ್ಥಿಸುವವರಿಗೆ ರೋಗಾಪಮೃತ್ಯುಯಗಳು ದೂರಸರಿಯುವವು. ಸಕಲೇಷ್ಟ ಸಂಸಿದ್ಧಿಗಳು ಸಂಸಿದ್ಧಿಸುವುವು. ಧನವನಾರ್ಜಿಸಿ ದಾನಧರ್ಮಂಗಳನು ಮಾಡಿ ತನುವ ದಂಡಿಸಿ ತಪವನೆಸಗಿದಲ್ಲದೆ ಮೇಣು ಮನಸಿನಭಿಮಾನ ಸಿದ್ಧಿಗಳು ದೊರೆಯುತ್ತವೆಂಬ ಆಮಿಷಕ್ಕೆ ಈಡಾಗದೇ ಬಸವೇಶನನ್ನು ಚಿತ್ತಶುದ್ಧಿಯಿಂದ ನೆನೆದರೆ ಸುಕೃತವು ತನಗೆತಾನೆ ದೊರಕುವುದೆಂಬ ಆಶಯವನ್ನು ವ್ಯಕ್ತಪಡಿಸಿದ್ದಾನೆ.
ಬಸವ ಬಸವಾಯೆಂದು ನಡೆದುದೇ ಸನ್ಮಾರ್ಗ
ಬಸವ ಬಸವಾಯೆಂದು ಪಿಡಿದುದೇ ಸದ್ವರ್ತವು
ಬಸವ ಬಸವಾಯೆಂದು ನುಡಿದುದೇ ಸಕಲಶಾಸ್ತ್ರಾಗಮಶ್ರುತಿ ಪ್ರಮಾಣ
ಬಸವ ಬಸವಾಯೆಂದು ಮಾಡಿದುದೆ ಸಾಧನಮಂ
ಬಸವ ಬಸವಾಯೆಂದು ನೋಡಿದುದೆ ಪಾವನಂ
ಬಸವ ನೆನಹಿಂಗೆಣೆಯೇ (ಪ.ಸಂ.-79) ಎಂದು ಬಸವನ ಮಹಿಮೆಯ ಫಲವನ್ನು ಸಾರಿದ್ದಾನೆ.
ಮತ್ತೊಂದು ಶತಕದಲ್ಲಿ
ಬಸವ ದಂಡಾಧೀಶನಗಣಿತ ಪವಾಡಗಳ
ಬಸವ ದಂಡಾಧೀಶನಾಮಧುರಗೀತಗಳ
ಬಸವದಂಡೇಶ್ವರನ ಭಕ್ತಿದಾಸೋಹಮಂ ಬಸವರಸಮಲಗೃಹವ
ಬಸವದಂಡೇಶ್ವರನ ಬರದೋದಿ ಪೇಳ್ವವನ
ಬಸವ ಪವಾಡಗಳ ಮನವೊಲಿದು ಕೇಳ್ವವನ
ಬಸವ ಸಾಮರ್ಥ್ಯಮಂ ಛಂದಲಕ್ಷಣಗೆಡದೆ ಮಧುರಕವಿತೆಯನುಸುರ್ವನ
ಬಸವ ನಾಮವನಾವಗಂ ಬಿಡದೆ ನೆನೆವವನ
ಬಸವ ಸತ್ಕ್ರೀಗಳಂ ನಡಸುವನ ಪದವಿಡಿದರೆ (ಪ.ಸಂ-85-86) ಸಕಲ ಸಿದ್ಧಿಗಳು ಲಭಿಸುವವು ಎಂದಿದ್ದಾನೆ.
ಮುಂದುವರೆದು,
ಎಲ್ಲಿ ಶಿವಭಕ್ತಿ ತಲೆದೋರೆ ರಾಜಿಸುತ್ತಿರ್ಪು
ದಲ್ಲಿ ಬಸವೇಶ್ವರನ ಕಾರುಣ್ಯದೊದವು
ಮತ್ತಲ್ಲಿಯಷ್ಟಾವರಣ ನಿಷ್ಟೆಯಿಹುದಲ್ಲಿ ಸಂಪೂರ್ಣ ಬಸವನ ಚೇತನ
ಎಲ್ಲಿ ಧರ್ಮಾಚಾರ ವರ್ತಿಸುತ್ತಿರ್ಪುದಂತಲ್ಲಿ (ಪ.ಸಂ-88)
ಬಸವೇಶ್ವರನ ಸತ್ಪ್ರಭಾವಂ ಉಂಟೆಂಬುದೆಂಬ ಭಾವವನ್ನು ವ್ಯಕ್ತ ಪಡಿಸಿದ್ದಾನೆ.
ಮೂರು ಶತಕಗಳಲ್ಲಿ ಸಿದ್ಧ ನಂಜೇಶನು ಬಸವನಲ್ಲಿ ಆತ್ಮ ನಿವೇದನೆಯನ್ನು ಮಾಡಿಕೊಂಡಿದ್ದಾನೆ. ಆ ಪದ್ಯಗಳು ಇಂತಿವೆ.
ಕೆಟ್ಟೆ ಶಿವಧೋ ಬಸವ ದುರ್ವಿಷಯದಿಂದ ಕಂ
ಗೆಟ್ಟೆ ಶಿವಧೋ ದುಷ್ಟಭವದಲ್ಲಿ ಕೈ
ವಿಟ್ಟೊಡಾರ್ಮೊರೆ ತವರು ನೀನೆ ಗತಿ ಬಸವ ಶರಣಾಗತ ಸುರಕ್ಷಾಮಣಿ
ಮುಟ್ಟಿ ಬಸವೇಶ ಪರಿರಕ್ಷಿಸು ಕೃಪಾಸರಧಿ
ನೆಟ್ಟನುದ್ಧರಿಸು ಬಸವೇಶ (ಪ.ಸಂ-98)
ಆರಿಂಗೆ ಪೇಳುವೆನದಾರಿಂಗೆ ದೂರುವೆನ
ದಾರೆನ್ನ ದುಃಖಮಂ ಕೇಳಿ ಪರಿಹರಿಸುವರು
ಕಾರುಣ್ಯನಿಧಿ ಬಸವ ನಿಜಭಕ್ತಿ ಮಂದಾರ ನೀನಲ್ಲದಾರು ದಿಕ್ಕು
ಸಾರ ಸದ್ಭಕ್ತಿ ಪ್ರಸಾದವಿತ್ತಂಜದಿರು
ಸಾರಿ ನಿನ್ನ ಪೊರೆವನೆಂದೆಂಬಭಯವೀಯಯೆಂದು ಪ್ರಾರ್ಥಿಸಿಕೊಂಡಿದ್ದಾನೆ.
ಅಯ್ಯ ಬಸವಯ್ಯ ಸದ್ಗತಿಯು ನೀನೆಯೆನಗೆ
ಅಯ್ಯ ಬಸವಯ್ಯ ಸನ್ಮತಿಯು ನೀವೇಯೆನಗೆ
ಅಯ್ಯ ಬಸವಯ್ಯ ಅಧೃತಿಯು ನೀವೆಯೆನಗೆ ಸಕಲ ಸೌಭಾಗ್ಯ ನೀವೆ (ಪ.ಸಂ-99)
ಅಯ್ಯ ಬಸವಯ್ಯ ಫಲಪದವು ನೀವೆಯೆನಗೆ ಎಂದು ಸಕಲವೂ ಬಸವನೇ ಎನಗೆ ಎಂದು ಬೇಡಿಕೊಂಡಿದ್ದಾನೆ.
ಬಸವಣ್ಣನ ಜೀವ ಕಾರುಣ್ಯ, ಗುರು ಲಿಂಗ ಜಂಗಮ ಪ್ರೇಮ, ಸರ್ವಾರ್ಪಣದ ಬುದ್ದಿ, ದಾಸೋಹಂ ಭಾವ, ಲಿಂಗಾಯತ ತತ್ವಗಳಲ್ಲಿ ಅಚಲ ನಿಷ್ಠೆ ಮುಂತಾದವುಗಳಿಗೆ ಸಂಬಂಧಪಟ್ಟ ವಿವರಗಳು ಭಕ್ತಭಾವುಕ ಜನರ ಬಾಯಿಂದ ಬಾಯಿಗೆ ಹೋಗುತ್ತಾ ಪವಾಡದ ಕತೆಗಳಾಗಿ ಮಾರ್ಪಟ್ಟಿದ್ದವು. ಇಂತಹ ಪವಾಡ ಕಥೆಗಳನ್ನು ಬಸವಣ್ಣನವರನ್ನು ಕುರಿತ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣ, ಭೀಮಕವಿಯ ಬಸವಪುರಾಣ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ ಮುಂತಾದ ಕಾವ್ಯ ಪುರಾಣಗಳಲ್ಲಿ ಕಾಣುತ್ತೇವೆ. ಈ ಕಾವ್ಯ-ಪುರಾಣಗಳಲ್ಲಿ ನಿರೂಪಿತವಾಗಿರುವ ಬಸವಣ್ಣನವರು ಮಾಡಿದರೆನ್ನಲಾದ ಪವಾಡಗಳಲ್ಲಿ ಕೆಲವನ್ನು ಸಿದ್ಧನಂಜೇಶನು ಸಂಕ್ಷಿಪ್ತವಾಗಿ ಈ ಶತಕದಲ್ಲಿ ಉಲ್ಲೇಖಿಸಿದ್ದಾರೆ.
ಬಸವ ಶತಕ ಕೃತಿಯಲ್ಲಿಯ ಬಸವಣ್ಣನ ಪವಾಡಗಳ ಪ್ರಸ್ತಾಪ
1.
ಮರದ ತಪಸಿಗೆ ಪ್ರಾಣಮಂ ಕೊಟ್ಟು ಭಕ್ತಿಯೊಳು
ಬರೆದ ಚಿತ್ರಕ್ಕಸುವನಿತ್ತು ಪ್ರಾಣಂಗಳೆದ
2.
ತರಳಾಕ್ಷಿಯರಸಂಗೆ ಹರಣಮಂ ಪಾಲಿಸಿದೆ (ಪ.ಸಂ-7)
3.
ಹುಲ್ಲ ಪುರುಷನಿಗೋದಿಸಿದನು ವೇದಾಗಮಗ
ಳೆಲ್ಲವಂ ಜಗವರಿಯೆ ಪಂಡಿತಾರಾಧ್ಯರ್ಗೆ
ಸಲ್ಲಲಿತ ಕರ್ನಾಟ ಭಾಷೆಯಂ ಕೊಟ್ಟಸಾಧಾರಣ ಮಹಾತ್ಮ (ಪ.ಸಂ-4)
4.
ಪಾತಾಳಲೋಕದೊಳಗೆಸೆವ ಸರ್ಪನ ತರಿಸಿ
ಭೂತಳದೊಳುರೆ ಪರಿವ ನದಿಯ ನಿಮಿಷದಿ ನಿಲಿಸಿ
ಯೋತು ನಭಮಂಡಲದಿ ತೊಳಗುವಾದಿತ್ಯಂ ತಡೆದು ಮೂಲೋಕ್ಕೆಲ್ಲ
ಸಾತಿಶಯ ಬಸವನೇ ಕಟ್ಟರಸು ವೆಂಬುದೊಣ
ಮಾತಲ್ಲ ಸಿದ್ಧಾಂತ (ಪ.ಸಂ-13)
5.
ಗುರುಲಿಂಗ ಜಂಗಮ ದಾಸೋಹಿ ಜಠರದೊಳ
ಗಿರುವ ಬಾಲಕನನೋದಿಸಿದ ದಿವ್ಯಜ್ಞಾನಿ
ಪರಿಭವಾಸ್ವದ ವಿಪ್ರಕರ್ಮವ ನಿರಾಕರಿಸದ ಜಡನೆನಸಿದ ಬಸವನ (ಪ.ಸಂ-15)
6.
ಗೊಲ್ಲತಿಯ ಜಾರೆ ಬಸವಾಯೆನಲು ನೃಪನ ಸಭೆ
ಯಲ್ಲಿರ್ದು ಪಿಡಿಯನೇ ಸರ್ಪ ಕಚ್ಚಳಿವ ಭಯ
ದಲ್ಲಿ ಬಸವಾಯೆನಲು ನೃಪನ ಹರಣವ ಕಾಯ್ದು ಮೆರೆಯನೆ ಜನ ಪೊಗಳಲು (ಪ.ಸಂ-18)
7.
ಪೆಟ್ಟಿಗೆಯ ಧನವ ಜಂಗಮಕಿತ್ತು ನರಪತಿಯ
ಹೆಟ್ಟಗೆಯ ವಿಟಜಂಗಮಕೆ ಕೊಟ್ಟು ಲಾಯದೊಳು
ಕಟ್ಟಿರ್ದ ಕುದುರೆಯಂ ಚರಮೂರ್ತಿ ಬೇಡತ್ತಲ್ಲಿಯೇ ತೋರ್ದು ನೃಪಗೆ
ಪೆಟ್ಟಿಗೆಯ ಧನವನುಂ ಸತಿಯನು ಲಾಯದೊಳು
ಕಟ್ಟಿರ್ದ ತೇಜಿಯಂ ಸೃಷ್ಟಿಸಿದ ಪರಬ್ರಹ್ಮ
ಪಟ್ಟ ಬದ್ದತೆವಡೆದ ಗುರುಬಸವ (ಪ.ಸಂ-29)
8.
ನರಪ ನಾಗಾಂಬಿಕೆಯನೊಂದಡೆಯೊಳಿಟ್ಟು ಬಸ
ವರಸ ನೀನೊಲಿದೀ ಪ್ರಸಾದಮಂ ಭೋಗಿಪೆನೆ
ವರ ಬಾಲನಾಗಿ ಮೊಲೆವಾಲನುಂಡಿರಿ ನೋಡೆ (ಪ.ಸಂ-32)
ಮರದ ತಪಸಿಗೆ ಭಕ್ತಿಯೊಳು ನರೆದ ಚಿತ್ರಕ್ಕೆ
ಧರೆಯಲ್ಲಿ ಚೈತನ್ಯವಿತ್ತು ನಡೆಸಿದ ಮಹಿಮ
ಸುರಗಿರಿಯ ಸುತ್ತಿ ಬಹಯಿನನ ಚೈತನ್ಯಮಂ ಕೆಡಿಸಿ ನಿಲಿಸಿದ ಬಸವನ (ಪ.ಸಂ-39)
9.
ಶರಣ ಕಿನ್ನರಿ ಬ್ರಹ್ಮದೇವ ಪ್ರಿಯಾರ್ಥವೀ
ಧರೆಯೆಲ್ಲ ಭೋಜ್ಯವಹ ಕಂದತ್ರಯಂಗಳಂ
ಸುರುಚಿರ ಸು ಭೋಜ್ಯವ ಮಾಡಿ ಶರಣಾರ್ಥಿ ವಳಿಯನುಣಿಸಿ ನಿರ್ನಿಂದ್ಯನೆನಿಸಿ
ಮೆರೆದ ಮಹಿಮಾಭರಣ (ಪ.ಸಂ-41)
10. ವೇದೋಕ್ತ ನಿಂದಿತಂ ಪುಸಿತ ಶಂಕರ ವಹಿತ
ವಾದ ಕೇತಕಿಯಂ ಪೂವಂ ಶಿವಾರ್ಪಣಗೆಯ್ದು
ಮೋದದಿ ಶಿವಲಿಂಗ ಶಿರದೊಳಲ್ಲಂ ತೋರೆ ನಿರ್ದೋಷಯೆನಿಸಿದನಘಂ (ಪ.ಸಂ-42)
11.
ಬಸವನಾಮ ಸ್ಮರಣೆಯೇ ಜೀವನಾಗಿರ್ಪ
ಕುಶಲಮತಿ ಮೊರನವೇಮಯ್ಯ ನಾನಿಷ್ಟಮಂ
ವಸುಧೆಯೊಳಗಿಯ್ಯನೇ ಬಸವಲಿಂಗಾಯೆಂಬ ಪಾಲ್ಕುರಿಕೆ ಸೋಮೇಶಗೆ
ಒಸೆದು ಪ್ರತ್ಯಕ್ಷವಾಗನೆ ಬಸವ ಬಸವಯೆಂ
ದುಸುರುವವನಿಷ್ಟಾರ್ಥವಾಗದಿಹುದೇ ಬಿಡದೆ (ಪ.ಸಂ-63)
12. ಕೋಕನದಸಂಭವನ ಬುದ್ಧಿಗಂ ಗೋಚರಿಸ
ಭೂಕಾಂತ ಬಿಜ್ಜಳಗೆ ತೋರೆಸಿದ ಸರ್ವಸಾಮರ್ಥ್ಯಯುತ ನಿಮ್ಮ ಪದವ
ಆಕಾಂಕ್ಷೆಯಿಂದ ಭಜಿತ ಪುಣ್ಯ ಸ್ವರೂಪಂಗೆ
ಬೇಕಾದ ಸುಕೃತ ಸಮನಿಸದಿಹುದೆ (ಪ.ಸಂ-64)
13. ಸರ್ವಾಧಿಕತ್ವದಿಂ ಬಂದ ಮೀಮಾಂಸಕನ
ಗರ್ವಮಂ ತೃಣಪುರುಷನಿಂ ಮುರಿದೆ (ಪ.ಸಂ-27)
14. ಮಲ್ಲಿಕಾರ್ಜುನ ಪಂಡಿತಾರಾಧ್ಯರಭಿಮತವ
ಸಲ್ಲಲಿತ ನಿಜಲಿಂಗದಲ್ಲಿ ಕಾಣಿಸಿಕೊಟ್ಟೆ
ರೆಲ್ಲರರಿಯಲು ಸಿದ್ಧರಾಮೇಶ್ವರನ ಕುಕ್ಷಿಯಲಿ ಕಾಣಿಸಿ ಪೊರೆದಿರಿ
ಬಲ್ಲಿದಂ ಮೊರನವೇಮಯ್ಯನಿಷ್ಟವ ಹಸುಳ
ನಲ್ಲಿ ನಿಜದೋರೆ ಪಾಲಿಸಿದಿರೆನ್ನಯ ಹೃದಯದಲ್ಲಿ ನೆಲೆಗೊಂಡೆನ್ನ (ಪ.ಸಂ.73)
15. ಶಿವಪೂಜೆಯನ್ನೆಸಗಿದಂ ಮರದ ತವಸಿ ತಾ
ನಾವ ಸ್ತೋತ್ರವ ಮಾಡಿ ತುಂಬುರದ ಚಿತ್ರಮತ್ತಾವ
ಸ್ತುತಿ ಧ್ಯಾನಪೂಜೆಗಳನಾಚರಿಸಿದರು ಮನವಚನ ಕಾಯಕದೊಳು
ಭಾವೆಯನು ಕಾವರುಂ ನಿಮ್ಮಯ ವಿನೋದಕ್ಕೆ
ನೀವೆಯುದ್ಧರಿಸಿ ತೋರಿದಿರಿ (ಪ.ಸಂ.74)
16. ಶರಣಸತ್ಯಣ್ಣ ಮೊದಲಾಗಿರ್ದ ವಿಟ ಮಹೇಶ್ವರರ
ನಿಜಲಿಂಗಂಗಳೊಲಿದು ಪೂಜಿಸೆ ಮೇಣು
ಹರಭಕ್ತ ಮೇದಾರಕೇತಯ್ಯ ಮೊದಲಾದರೊಡನೆ ಪ್ರಾಣವ ಕಳುಹಲು
ಧರೆಯಲ್ಲಿ ಲಿಂಗಕ್ಕೆ ಜಂಗಮಕೆ ಬಸವನೇ ಪಿರಿದು ಚೈತನ್ಯವೆಂಬುದು (ಪ.ಸಂ.95)
ಈ ಮೇಲ್ಕಂಡ ಶತಕ ಪದ್ಯಗಳಲ್ಲಿ ಬಸವಣ್ಣನು ಮಾಡಿದನೆನ್ನಲಾದ ಪವಾಡಗಳ ಪ್ರಸ್ತಾಪವನ್ನು ಮಾಡುವ ಸಂದರ್ಭದಲ್ಲಿ ಬಸವಣ್ಣನ ಸಮಕಾಲೀನ ಶರಣರಾದ ಅಕ್ಕನಾಗಲೆ ( ಅಕ್ಕನಾಗಮ್ಮ), ಕಿನ್ನರಯ್ಯ, ಸಿದ್ಧರಾಮ ಪಂಡಿತಾರಾಧ್ಯ, ಮೇದಾರಕೇತಯ್ಯ, ಮುಸುಟಿ ಚೌಡಯ್ಯ, ಮೋಳಿಗೆ ಮಾರಯ್ಯ, ಶಿವನಾಗಮಯ್ಯ, ಹಾಗೂ ನಂತರದ ಶರಣರಾದ ಪಾಲ್ಕುರಿಕೆ ಸೋಮನಾಥ ಹಾಗೂ ಪುರಾತನ ಶರಣ ಮಾದಾರ ಚನ್ನಯ್ಯರನ್ನು ಪ್ರಸ್ತಾಪಿಸಿದ್ದಾನೆ.
ಈ ಶತಕದಲ್ಲಿ ಕೆಲವು ಪದ್ಯಗಳನ್ನು ಬಸವಣ್ಣನ ವಚನಗಳಿಂದಲೂ ಸ್ಫೂರ್ತಗೊಂಡು ರಚಿತವಾದವುಗಳಾಗಿವೆ.
ನಿದರ್ಶನಕ್ಕೆ,
ಕೊರಡು ಕೊನರದೆ ನೋಡೆ ಮಣ್ಣು ಹೊನ್ನಾಗದೇ
ಬರಡು ಕರಯದೇ ಕೊಲ್ವನೆಂದೆಳಸಿ ಬಂದವರು
ನೆರೆ ಮಹಿತರಾಗರೇ ಮರಣಭಯವಳಿಯದೇ ನೀನೊಲಿದಡೇನಾಗದು.
ಸಿದ್ಧನಂಜೇಶನಿಗೆ ಬಸವಣ್ಣನು ಎಲ್ಲವೂ ಆಗಿದ್ದಾನೆ. ಬಸವ ಶರಣಾಗ್ರಣಿ, ಬಸವ ಚಿಂತಾಮಣಿ, ಬಸವ ಪುರುಷದ ಕಣಿ, ಬಸವ ಚೂಡಾಮಣಿ, ಬಸವ ತೀರ್ಥದ ಡೋಣೆ, ಬಸವ ವೃಷಬೇಂದ್ರ ಮೂರ್ತಿ, ಬಸವರಾಜೇಂದ್ರ ಭಕ್ತ ಕುವಲಯ ಚಂದ್ರ, ಪ್ರತ್ಯಕ್ಷ ಬೃಷಭೇಂದ್ರ, ಸರ್ವಜ್ಞ ನಿಸ್ತಂದ್ರ ಭವದಕಳಿ ಸಾಮಜೇಂದ್ರ, ದುರಿತಗಿರಿ ದೇವೇಂದ್ರ, ಸಕಲ ಸತ್ಪ್ರಮತೇಂದ್ರ, ಸುಜನ ಭಕ್ತಪ್ರಿಯ, ಪರವಾದ ಜಿತಸೂರ್ಯ, ಹರಭಕ್ತ ದುರ್ದೋಶ, ದಿಗ್ಭರಿತ ಚಿತ್ಪ್ರಕಾಶ, ಸದ್ಭಕ್ತ ಹೃದ್ವೇದ್ಯ, ಎರಡನೇ ಮುಕ್ಕಣ್ಣ, ಪಂಚಸರ ಮದಸಮನ, ಭೀಕರಾಂತಕ ಮದನ, ದಾರಿದ್ರಕುಜ ಕುಠಾರ, ದುರಿತ ಕುಲಗಿರಿ, ಕುಲಿಶ, ಸದ್ಭಕ್ತ ಭಂಡಾಗಾರ, ಘನವೀರಶೈವಾಚಾರ, ಸದ್ಭಕ್ತ ಜನ ಮಂದಾರ, ಸುಗುಣ ಗುಣ ಮಣಿವಿಹಾರ, ಶಿವಸ್ಕೃಪಾಪಾರಪೂರ, ಪ್ರಮಥಗಣ ಸುಖಪಾರ ಇತ್ಯಾದಿಯಾಗಿ ಹಲವಾರು ವಿಶೇಷಣಗಳಿಂದ ಭಕ್ತಿ ಪೂರ್ವಕವಾಗಿ ಸ್ತುತಿಸಿದ್ದಾನೆ.
ಒಂದು ಶತಕದಲ್ಲಿ,
ದಾನಿ ಬಸವಂ ದಯಾಪೂರ ಬಸವಂ ಭಕ್ತ ಸ
ನ್ಮಾನಿ ಬಸವಂ ಸಕಲ ಧರ್ಮಿ ಬಸವಂ ಶಿವ
ಜ್ಞಾನಿ ಬಸವಂ ಸುಕೃತ ರೂಪ ಬಸವಂ ಸುಪ್ರಧಾನಿ ಬಸವಂ ದುರ್ಜನ
ಹಾನಿ ಬಸವಂ ಮಹಾಮಹಿಮ ಬಸವಂ ಪರಮ
ಮಾನಿ ಬಸವಂ ಶಿವಧ್ಯಾನಿ ಭಸವಂ ನುತ ವಿ
ತಾನಿ ಬಸವಂ ಎಂದು ಬಸವಣ್ಣನವರನ್ನು ಪ್ರಾರ್ಥಿಸಿದ್ದಾನೆ. (ಪ.ಸಂ.95)
ಬಸವನಾಮವನ್ನು ಚಿತ್ತಶುದ್ಧಿಯಿಂದ ಜಪಿಸುತ್ತಿರ್ದರೆ ಮನವಚನಕಾಯದೊಳಗುದಿತ ದೋಷವ್ರಾತಗಳು, ಪಾಪಗಳು ತನಗೆ ತಾನೆ ಓಡುವವು ಎಂದಿದ್ದಾರೆ. ಈ ಲಘು ಕೃತಿ ಶತಕ ಕಾವ್ಯವನ್ನು ಪಠಿಸುವುದರಿಂದ ಜನತೆಗೆ ಮುಕ್ತಿ ಲಭಿಸುತ್ತದೆಂಬುದನ್ನು,
ಶಿವಕವೀಶ್ವರ ಸಿದ್ಧನಂಜ ಭಕ್ತಿಯಲೊರೆದ
ಶಿವರೂಪ ಬಸವರಾಜೇಂದ್ರ ಸಂಸ್ತೋತ್ರಮಂ
ಭುವಿಯಲಿ ಬರದೋದಿ ಪಠಿಸಿ ಕೇಳುವ ಭಕ್ತರಿಗೆ ಮನೋರಥ ಸಿದ್ಧಿಯಂ
ಅವಿರಳದ ಭಕ್ತಿ ಸುಜ್ಞಾನ ವೈರಾಗ್ಯಮಂ
ಸವೆಯದಾನಂದಾಯುರಾರೋಗ್ಯಮಂ ಕೊಟ್ಟು
ತವಕದಿಂ ಪಾಲಿಪಂ (ಪ.ಸಂ.112) ಎಂದು ವರ್ಣಿಸಿದ್ದಾನೆ.
ಒಟ್ಟಾರೆ ಸಿದ್ಧನಂಜೇಶನ 112 ಪದ್ಯಗಳ ಈ ಕೃತಿಯು ಬಸವಣ್ಣನ ಬಗೆಗೆ ಮಹತ್ತರವಾದ ಅಂಶಗಳ ಬಗೆಗೆ ಹೆಚ್ಚಿನ ಬೆಳಕು ಚೆಲ್ಲದಿದ್ದರೂ ಬಸವಣ್ಣ ಬಗೆಗ ಗೌರವದಿಂದ ಭಕ್ತಿ ಪೂರ್ವಕವಾಗಿ ಮೈದುಂಬಿ ಬಗೆಬಗೆಯಾಗಿ ಸ್ತುತಿಸುವುದರ ಮೂಲಕ ಬಸವಣ್ಣನ ವ್ಯಕ್ತಿತ್ವ ಹಾಗೂ ಬಸವ ಮೌಲ್ಯದ ಪ್ರತಿಪಾದನೆಯ ಜೊತೆಗೆ ಜನತೆಯಲ್ಲಿ ಬಸವಣ್ಣನ ಬಗೆಗ ಗೌರವಾದರಗಳು ಹಿಮ್ಮಡಿಸುವಂತೆ ಮಾಡಿದ್ದಾನೆ. ಗುರುವರ್ಗದ ಮಠವೊಂದರ ಪೀಠಾಧಿಪತಿಯಾಗಿದ್ದ ಸಿದ್ಧನಂಜೇಶನು ಬಸವಣ್ಣನನ್ನು ಕುರಿತು ಬಸವಣ್ಣನಿಂದತ್ಯಧಿಕವಿಲ್ಲವೀ ಲೋಕದೊಳು ಎಂದು ಹೇಳಿರುವ ಮಾತು ಇಂದಿನ ಪರಿಸ್ಥಿತಿಯಲ್ಲಿ ಗಮನಾರ್ಹವಾದುದಾಗಿದೆ.