ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಆಗಸ್ಟ್ 18, 2025

 

          ಮಧುಗಿರಿ ಮಹಾನಾಡ ಪ್ರಭುಗಳು ಹಾಗೂ ಹಾಗಲವಾಡಿ ಪಾಳೆಯಗಾರರ                          ಕಾಲದ ಸಾಹಿತ್ಯ                                                              ಡಾ.ಸಿ.ನಾಗಭೂಷಣ         ಸಾಹಿತ್ಯವು ಸಾಮಾಜಿಕ ಪರಿಸರದಲ್ಲಿ ಘಟಿಸುವ ಒಂದು ಕ್ರಿಯೆ. ಕವಿಯು ಕಾಲದ ಸಮಾಜವು ಕವಿಯು ದೃಷ್ಟಿಯನ್ನು ಅವನ ವಸ್ತುವಿನ ಆಯ್ಕೆಯನ್ನು ನಿರ್ಧರಿಸಬಹುದು. ಒಂದು ಸಮಾಜದ ಅತ್ಯುನ್ನತವಾದ ಆಲೋಚನೆಗಳು ಮತ್ತು ಅತ್ಯಂತ ಗಹನವಾದ ಅನುಭವಗಳು ಆಯಾ ಸಾಹಿತ್ಯದಲ್ಲಿ ವ್ಯಕ್ತವಾಗುತ್ತದೆ. ದೃಷ್ಟಿಯಿಂದ ಸಾಹಿತ್ಯವುಸಮಸ್ತ ಚರಿತ್ರೆಯ ಸಾರವೂ ಸಂಗ್ರಹವೂ ಆಗಿರುತ್ತದೆ. ಯಾವುದೇ ಸಾಹಿತ್ಯ ತನ್ನ ಸುತ್ತಮುತ್ತಣ ಪರಿಸರಣ ಪ್ರಭಾವದ ಮುದ್ರೆಯನ್ನು ಹೊತ್ತೇ ಬರುತ್ತದೆ. ನಿಜವಾದ ಗತಕಾಲದ ಇತಿಹಾಸ ಅಂದರೆ ಕಾಲದಿಂದ ಕಾಲಕ್ಕೆ ಆಳಿದ ರಾಜರ ಪಟ್ಟಿಯಲ್ಲ. ನಿಜವಾದ ಇತಿಹಾಸ ಒಂದು ಸಮಗ್ರ ಜನತೆಯ ಜೀವನದ ಸಂಸ್ಕೃತಿಯ ಚರಿತ್ರೆ ಆಗಿರುತ್ತದೆ. ದೇಶ ಇತಿಹಾಸ ಅಲ್ಲಿಯ ಜನತೆಯ ಇತಿಹಾಸ. ಸಾಹಿತ್ಯ ಸಮಾಜದ ಅವಶ್ಯಕತೆಯ ಪೂರೈಕೆಗಾಗಿ ರೂಪುಗೊಂಡಿದೆ. ಸಾಹಿತ್ಯವನ್ನು ಸೃಷ್ಟಿಸುವ ವ್ಯಕ್ತಿ ಕಾಲದ ಜನಪ್ರತಿನಿಧಿಯಾಗಿರುತ್ತಾನೆ. ಸಾಹಿತ್ಯದ ಬಗೆಗೆ ಅಧ್ಯಯನ ಮಾಡುವವರು ಕಾಲದ ಸಾಮಾಜಿಕ ಚೌಕಟ್ಟನ್ನು ಅಲಕ್ಷಿಸುವಂತಿಲ್ಲ. ಇತಿಹಾಸ ಎಂದರೆ ಜನ ನಂಬಿದ್ದು. ಆಚರಿಸಿದ್ದು ಸಾಧಿಸಿದ್ದು. ಜನರ  ಇತಿಹಾಸವಿಲ್ಲದ ಇತಿಹಾಸ ಪರಿಪೂರ್ಣವಾದುದಲ್ಲ. ಜನತೆಯ ಇತಿಹಾಸಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಆಕರ ಸಾಹಿತ್ಯ . ಒಂದು ಸಾಹಿತ್ಯ ಕೃತಿ ತನ್ನ ಕಾಲಕ್ಕೆ   ಸ್ಪಂದಿಸಿದ ರೀತಿಯನ್ನು ಹೇಳುತ್ತದೆ. ಸಾಹಿತ್ಯ  ಮತ್ತು ಚರಿತ್ರೆಗಳಿಗೆ ಆಕರವಾಗುವ ಕೃತಿ ಸಾಂಸ್ಕೃತಿಕ ಪ್ರತಿನಿಧಿಯಾಗಿರುತ್ತದೆ. ರಾಜನ ವೈಭವ ಬದುಕಿನ ಪ್ರಮುಖ ಘಟನೆಯು ಇತಿಹಾಸವಾಗುವ ಹಾಗೆ ಕೋಟೆ ಕಟ್ಟಿದ ಶ್ರಮಿಕ, ಯುದ್ದದಲ್ಲಿ ಹೋರಾಡಿ ಮಡಿದ ಸೈನಿಕರ ಅನುಭವವೂ ಇತಿಹಾಸವಾಗಬಹುದುಸಾಹಿತ್ಯವು   ಪರಂಪರೆಯನ್ನು ಮೂಲಕ ಸಮಾಜದ ವಿವಿಧ ನೆಲೆಗಳನ್ನು ಕಾಯ್ದಿರಿಸುವ ಗುಣವನ್ನು ಹೊಂದಿದೆ. ಸಾಹಿತ್ಯವು ತನ್ನ ಕಾಲದ ಚಟುವಟಿಕೆಯನ್ನು ಪ್ರಾಸಂಗಿಕವಾಗಿಯೇ ಅನುಷಂಗಿಕವಾಗಿಯೇ ಒಳಗೊಂಡು ಇತಿಹಾಸವನ್ನು ಜೀವಂತವಾಗಿಡುವ ಪ್ರಕ್ರಿಯೆಯಾಗಿದೆ.

  ರಾಜರುಗಳ ಕಾಲದ ಸೂಕ್ಷ್ಮ ಒಳನೋಟದ ಬಗೆಗೆ ಮಾಹಿತಿ ದೊರೆಯುವುದು ಸಾಹಿತ್ಯ ಕೃತಿಗಳಲ್ಲಿ ಮಾತ್ರ. ಯಾವುದೇ ಒಂದು ಉತ್ತಮ ಕೃತಿ ನಿರ್ದಿಷ್ಟ ಕಾಲದ ರಾಜಕೀಯ ಸಾಮಾಜಿಕ ಪರಿಸರದಿಂದ ಮೂಡಿಬರುವಂಥದ್ದು. ಕಾಲದ ಜನಜೀವನದ ಸ್ಪಂದನ ಮಿಡಿತ ಇರುತ್ತದೆ. ಅಂತಹ ಕೃತಿಯನ್ನು ಸಾಮಾಜಿಕ ಚೌಕಟ್ಟಿನ ಪರಿಧಿಯಲ್ಲಿ ಪರಿಭಾವಿಸಿಕೊಂಡಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ.

    ಹಿಂದಿನ ಹಾಗೂ  ಇಂದಿನ ಚರಿತ್ರೆಗಳಿಗಿರುವ ಸಂಬಂಧ ಸ್ವರೂಪಗಳು ಬೇರೆ ಬೇರೆಯಾಗಿದ್ದಂತೆ ವಿಶ್ಲೇಷಣಾ ವಿಧಾನ ಕೂಡಾ ಬೇರೆಯ ಸ್ವರೂಪದ್ದಾಗಿದೆ. ಆಧುನಿಕ ಕಾಲದ ಬಗೆಗೆ ದೊರೆಯುವಷ್ಟು ಸಾಮಗ್ರಿ ಪ್ರಾಚೀನ ಕಾಲದ ಬಗೆಗೆ ಅಷ್ಟಾಗಿ ದೊರೆಯುವುದಿಲ್ಲ. ಪ್ರಾಚೀನ ರಾಜತ್ವದಲ್ಲಿಯ ಅತ್ಯಂತ ಸಾಮಾನ್ಯವೆನಿಸುವ ಸಂಗತಿಗಳನ್ನು ಇಂದು ತಿಳಿಯಲು ಸಾಧ್ಯವಿಲ್ಲದಾಗಿದೆ. ಸಾಕ್ಷ್ಯಾಧಾರಗಳು ಯಾವ ವಿವರಣೆಯನ್ನು ಕೊಡುತ್ತವೆ ಎಂಬ ದೃಷ್ಟಿಯಿಂದ ನೋಡಿದರೆ ಮಾತ್ರ ನಾವು ಯಾವುದನ್ನು ನೋಡ ಬಯಸುತ್ತಿದ್ದೇವೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದ ಕಾವ್ಯಗಳಲ್ಲಿ ಕಾಲದ ವರ್ತಮಾನದ ಅಂಶಗಳ ಸುಳುಹು  ವ್ಯಕ್ತವಾಗಿದೆ. ಪ್ರಾಚೀನ ಕಾಲದ ಶಾಸನಗಳು ಬಖೈರುಗಳು. ಅರ್ಥಶಾಸ್ತ್ರ ನ್ಯಾಯಸಿದ್ಧಾಂತ ನೀತಿ,ಟೀಕೆ ವ್ಯಾಖ್ಯಾನಗಳು ವಂಶಾವಳಿಗಳು ನಿರ್ದಿಷ್ಟ ಉದ್ದೇಶವನ್ನು ಹೊಂದಿರುವ ದಾಖಲೆಗಳು. ಇಲ್ಲೆಲ್ಲಾ ರಾಜನ ಅಥವಾ ಶ್ರೀಮಂತರು ಅನುಗ್ರಹ ಮತ್ತು ದಯಪಾಲಿಸುವಿಕೆಯ ಚಿತ್ರವನ್ನು  ಕಾಣುತ್ತಿದ್ದೇವೆಯೇ ಹೊರತು ಸಹಜವಾಗಿ ಜನ ಏನು ಮಾಡಿದರು ಎಂಬ ಚಿತ್ರಣ ಅಲ್ಲಿ ದೊರೆಯುವುದಿಲ್ಲ. ಚಾರಿತ್ರಿಕ ವಿಶ್ಲೇಷಣೆಯಲ್ಲಿ ಕಂಡು ಬರುವ ದೊಡ್ಡ ಅಂತರ ಎಂದರೆ ಸಮಕಾಲೀನ ರಾಜಕೀಯ ಧೋರಣೆಗಳನ್ನು ಒಳಗೊಂಡಿರುವ ಹೊತ್ತಿನ ಸಾಹಿತ್ಯಕ ಕೃತಿಗಳಿಗಿಂತ ನಮ್ಮ ಪ್ರಾಚೀನ ಸಾಹಿತ್ಯದ ಧೋರಣೆ  ವಿಭಿನ್ನವಾಗಿರುವುದು.

     ಕನ್ನಡ ನಾಡಿನ ಇತಿಹಾಸದಲ್ಲಿ ಮಧ್ಯಕಾಲೀನಯುಗ ಮಹತ್ವಪೂರ್ಣ ತಿರುವಿಗೆ ಕಾರಣವಾಗಿದೆ. ಚಕ್ರವರ್ತಿಯ ಅಧೀನತ್ವಕ್ಕೆ ಒಳಪಟ್ಟಿರುವ ಸಾಮಂತರು, ಮಹಾಮಂಡಲೇಶ್ವರರೂ, ಮಂಡಲೇಶ್ವರರೂ ಪ್ರಾದೇಶಿಕವಾಗಿ ರಾಜರು ಎಂದು ಗುರುತಿಸಿಕೊಂಡರು. ಅವಕಾಶ ಸಿಕ್ಕಿದಾಗ ಅಧೀನತೆಯಿಂದ ಮುಕ್ತರಾಗಲು ಬಯಸಿದ್ದ ಕಾಲವಾಗಿತ್ತು. ವಿಜಯನಗರ ಸಾಮ್ರಾಜ್ಯದ ಕಾಲ ಹಾಗೂ ನಂತರದ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಸ್ಥಳೀಯ ಅರಸರುಗಳು ತಮ್ಮ ತಮ್ಮ ಪ್ರಾದೇಶಿಕ ವ್ಯಾಪ್ತಿಯಲ್ಲಿ ಪ್ರಭುಗಳಾಗಿ ಆಳ್ವಿಕೆ ನಡೆಸಿದ ಸಂಗತಿಗಳು ಶಾಸನಗಳು, ಸಾಹಿತ್ಯ ಕೃತಿಗಳು, ಕೈಫಿಯತ್ತುಗಳು ಮುಂತಾದ ದಾಖಲೆಗಳ ಮೂಲಕ ತಿಳಿದುಬರುತ್ತದೆ. ಸ್ಥಳೀಯ ಅರಸರುಗಳು ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವ, ಪೋಷಿಸುವ ಸಲುವಾಗಿ ಕವಿಗಳಿಗೆ ಆಶ್ರಯ ನೀಡಿದ್ದಲ್ಲದೆ ತಾವೂ ಸಹ ಸಾಹಿತ್ಯ ಕೃಷಿ ನಡೆಸಿ ಸಾಹಿತ್ಯದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಇವರು ಬಹುಮಟ್ಟಿಗೆ ವೀರಶೈವ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

   ಮಹಾನಾಡ ಪ್ರಭುಗಳ ಮತ್ತು ಹಾಗಲವಾಡಿ ಅರಸರ ನೆಲೆವೀಡಾದ  ತುಮಕೂರು ಜಿಲ್ಲೆಯು ಹಲವು ರಾಜಮನೆತನಗಳ ರಾಜಕೀಯ ಏಳುಬೀಳುಗಳಿಗೊಳಗಾಗಿ ವಿಭಿನ್ನ ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯ ಕಲೆಗಳ ನೆಲೆವೀಡಾಗಿದೆ. ಜಿಲ್ಲೆಯ ಉದ್ದಗಲಕ್ಕೂ ಹರಡಿರುವ ಶಾಸನಗಳು ಹಾಗೂ ರಚನೆಯಾಗಿರುವ ಸಾಹಿತ್ಯ ಕೃತಿಗಳು ಈ ವಿವರವನ್ನು ಸಾಬೀತುಪಡಿಸುತ್ತವೆ. ಕನ್ನಡ ನಾಡಿನಲ್ಲಿ ಒಂಭತ್ತನೆಯ ಶತಮಾನದ ಶ್ರೀವಿಜಯ ಕೃತ ಕವಿರಾಜ ಮಾರ್ಗದ ಕಾಲದಿಂದಲೂ ಸಾಹಿತ್ಯ ಸೃಷ್ಟಿಯಾಗಿದ್ದರೂ ಜಿಲ್ಲೆಯಲ್ಲಿ ಸಾಹಿತ್ಯಕ ಚಟುವಟಿಕೆಗಳು ಹನ್ನೆರಡನೇ ಶತಮಾನದಲ್ಲಿ ತಕ್ಕಮಟ್ಟಿಗೆ ಗೋಚರವಾಗಿವೆ.   ಹದಿನೈದನೆಯ ಶತಮಾನಕ್ಕಿಂತ ಪೂರ್ವದಲ್ಲಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳು ಮಂದಗತಿಯಲ್ಲಿ ನಡೆದಿವೆ ಎಂದೆನಿಸುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಕವಿಕೃತಿಗಳು ನಮಗೆ ಲಭ್ಯವಿಲ್ಲ. ಬಹುಶಃ ಇದಕ್ಕೆ ಕಾರಣವನ್ನು ಎರಡು ರೀತಿಯಲ್ಲಿ ಊಹಿಸಬಹುದು. 1. ಕನ್ನಡ ನಾಡಿನ ಅರಸು ಮನೆತನಗಳಲ್ಲಿ ಯಾವೊಂದು ಸ್ವತಂತ್ರ ಅರಸುಮನೆತನದ ನೆಲೆವೀಡು ಜಿಲ್ಲೆಯಲ್ಲಿ ಕಾಣದೆ ಇದ್ದುದ್ದು ಹಾಗೂ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹ ದೊರೆಯದೆ ಇದ್ದುದ್ದು. 2. ಈ ಅವಧಿಯ ಸಾಹಿತ್ಯ ಇನ್ನೂ ಅಜ್ಞಾತವಾಗಿಯೇ ಉಳಿದಿದ್ದಿರಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕಾಗಿದೆ.

    ವಿಜಯನಗರೋತ್ತರ ಕಾಲದ ಸ್ಥಳೀಯ ಅರಸರಾದ ಬಿಜ್ಜಾವರದ ಮಹಾನಾಡು ಪ್ರಭುಗಳು ಹಾಗೂ ಹಾಗಲವಾಡಿ ಅರಸರುಗಳ ಕಾಲದ ಸಾಹಿತ್ಯಕ್ಕೆ ಪ್ರಮುಖ ಪ್ರೇರಣೆ ಮತಧರ್ಮ, ಸಂಸ್ಕೃತ ಸಾಹಿತ್ಯ ಹಾಗೂ ರಾಜಾಶ್ರಯವಾಗಿದೆ. ಕವಿಗಳು ಹುಟ್ಟಿಬೆಳೆದ ಪರಿಸರದಲ್ಲಿದ್ದ ಹಾಗೂ ಶ್ರದ್ಧೆಯಿಂದ ಒಪ್ಪಿಕೊಂಡಿದ್ದ ಪ್ರಮುಖ ಮತಧರ್ಮಗಳು ಮತ್ತು ಕನ್ನಡ ಸಾಹಿತ್ಯಕ್ಕೆ ಆರಂಭ ಕಾಲದಿಂದಲೂ ಹಿನ್ನೆಲೆಯಾಗಿದ್ದುಕೊಂಡು ಕಾವ್ಯಗಳ ವಸ್ತು ಹಾಗೂ ಭಾಷೆಯ ಮೇಲೆ ಪ್ರಬಲವಾದ ಪ್ರಭಾವವನ್ನು ಬೀರುತ್ತ ಬಂದ ಸಂಸ್ಕೃತ ಸಾಹಿತ್ಯ ಪರಂಪರೆಗಳು  ಈ ಅರಸರುಗಳ ಕಾಲದ ಕವಿಗಳಿಗೆ ಪ್ರೇರಣೆ ನೀಡಿವೆ. ಇವುಗಳು ಒಂದು ರೀತಿಯಲ್ಲಿ ಆತಂಕ ಮತ್ತು ಸವಾಲುಗಳಾಗಿಯೂ ಪರಿಣಮಿಸಿವೆ.

  ಅರಸರುಗಳು ಕವಿಗಳ ಮತಧರ್ಮವನ್ನು ಗಣನೆಗೆ ತೆಗೆದುಕೊಳ್ಳದೆ ಕವಿಕಾವ್ಯ ಪಕ್ಷಪಾತಿಗಳಾಗಿ ಮೆರೆದಿದ್ದಾರೆ. ಕವಿಗಳಿಗೆ ಆಶ್ರಯ ನೀಡುವುದರ ಮೂಲಕ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪೋಷಿಸಿಕೊಂಡು ಬಂದಿದ್ದಾರೆ. ಕನ್ನಡ ಸಾಹಿತ್ಯಪರಂಪರೆಯನ್ನು ವಿಸ್ತರಿಸಲು, ಕವಿಗಳಿಗೆ ಸಾಹಿತ್ಯ ಕೃಷಿ ನಡೆಸಲು ಆಶ್ರಯ ಪ್ರೇರಣೆಯನ್ನು ನೀಡಿದ ಅರಸರುಗಳು ತಾವೂ ಸಾಹಿತ್ಯ ನಿರ್ಮಾಣ ಮಾಡಿದ್ದಾರೆ. ರಾಜಮನೆತಗಳಲ್ಲಿರುವ ಕೆಲವು ಅರಸರುಗಳು ತಾವೇ ಸ್ವತಃ ಕವಿಗಳಾಗಿದ್ದು ಸಾಹಿತ್ಯ ಹಾಗೂ ಶಾಸ್ತ್ರವಿಷಯ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೆ ಮೌಲಿಕವಾದ ಕೃತಿಗಳನ್ನು ವಿಭಿನ್ನ ಭಾಷೆಗಳಲ್ಲಿ ರಚಿಸಿರುವುದು ಕಂಡುಬರುತ್ತದೆ. ಅರಸರುಗಳು ಕನ್ನಡ ಕವಿಗಳಿಗೆ ಪ್ರೋತ್ಸಾಹ ನೀಡಿದರೂ ತಾವು ಮಾತ್ರ ಬಹುಮಟ್ಟಿಗೆ ಕನ್ನಡ ಭಾಷೆಯನ್ನು ಹೊರತುಪಡಿಸಿ ಸಂಸ್ಕೃತ ಹಾಗೂ ಇತರೆ ಅನ್ಯಭಾಷೆಗಳಲ್ಲಿಯೇ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಸ್ಥಳೀಯ ಅರಸರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ ಹಾಗೂ ವಿಜಯನಗರೋತ್ತರ ಕಾಲದಲ್ಲಿ ಸ್ಥಳೀಯ ಅರಸರು ಹೆಚ್ಚಾಗಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಹೆಚ್ಚಿನ ಸಂಗತಿ ಎಂದರೆ ಅರಸುಮನೆತನದವರು ರಚಿಸಿರುವ ಕೃತಿಗಳು ಹೆಚ್ಚಾಗಿ ಶಾಸ್ತ್ರ ಸಾಹಿತ್ಯ, ಟೀಕಾ ಸಾಹಿತ್ಯ ಹಾಗೂ ವಿಶ್ವಕೋಶ ಸಾಹಿತ್ಯ ಪರಿಧಿಯ ವ್ಯಾಪ್ತಿಗೆ ಒಳಪಟ್ಟಿವೆ. ಅರಸರುಗಳ ಸಾಹಿತ್ಯ ಕೃಷಿಯಲ್ಲಿ ಕೆಲವೆಡೆ ಪುರಾಣದ ವಸ್ತುವನ್ನೇ ಅಳವಡಿಸಿಕೊಂಡರೂ ಅದರ ಜೊತೆ ತತ್ಕಾಲೀನ ರಾಜಕೀಯ ಸಾಂಸ್ಕೃತಿಕ ಸಂಗತಿಗಳನ್ನು ಸಮೀಕರಿಸಿರುವುದು ಕಂಡುಬರುತ್ತದೆ. ಕನ್ನಡ ನಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ರಚಿಸುವಲ್ಲಿ ಈ ಅರಸರುಗಳ ಸಾಹಿತ್ಯ ಕೃತಿಗಳು ಗಮನಿಸತಕ್ಕಂತವುಗಳಾಗಿವೆ. ಸ್ಥಳಿಯ ಅರಸರುಗಳ ಜೊತೆಯಲ್ಲಿ ಕೆಲವು ಅರಸಿಯರೂ ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಅರಸಿಯರ ಸಾಹಿತ್ಯ ಕೃತಿಗಳು ಧಾರ್ಮಿಕ ವಿಷಯಗಳನ್ನು ಒಳಗೊಂಡಿದ್ದು ಸಂಸ್ಕೃತ ಹಾಗೂ ಕನ್ನಡ ಭಾಷೆಗಳೆರಡರಲ್ಲಿಯೂ ರಚಿತವಾಗಿವೆ. ಅರಸರುಗಳು ರಚಿಸಿರುವ ಬಹಳಷ್ಟು ಕೃತಿಗಳು ಅಪ್ರಕಟಿತವಾಗಿಯೇ ಉಳಿದಿವೆ. ಬೇರೆ ಬೇರೆ ಆಕರಗಳಲ್ಲಿಯ ಮಾಹಿತಿಯಿಂದ ಅರಸರುಗಳು ರಚಿಸಿರುವ ಕೃತಿಗಳ ಬಗೆಗೆ ಉಲ್ಲೇಖ ತಿಳಿದುಬಂದಿದೆ. ಅರಸರು ರಚಿಸಿರುವ ಎಷ್ಟೋ ಕೃತಿಗಳು ಅಪ್ರಕಟಿತವಾಗಿರುವುದರಿಂದ ಹೆಸರುಗಳಷ್ಟೇ ತಿಳಿದುಬರುತ್ತದೆಯೇ ಹೊರತು ಆ ಕೃತಿಗಳ ಸ್ವರೂಪದ ಬಗೆಗೆ ಏನನ್ನೂ ಹೇಳುವಂತಿಲ್ಲ.     

  ಹನ್ನೆರಡನೇ ಶತಮಾನದ ಶಿವಶರಣರ ಆಂದೋಲನ ಹಾಗೂ ನಂತರದ ಚಟುವಟಿಕೆಗಳು  ಈ ಪರಿಸರದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದುದರಿಂದಲೋ ಏನೋ ದೇಸೀ ಸಾಹಿತ್ಯ ಪ್ರಕಾರಗಳಲ್ಲಿಯೇ ಸಾಹಿತ್ಯ ಕೃಷಿ ವಿಪುಲವಾಗಿ ನಡೆದಿದೆ. ವಿಜಯನಗರೋತ್ತರ ಕಾಲದಲ್ಲಿ ಜಿಲ್ಲೆಯಲ್ಲಿ ಸ್ಥಳೀಯ ಪಾಳೆಯ ಪಟ್ಟುಗಳು ಅಸ್ತಿತ್ವಕ್ಕೆ ಬಂದವು. ಜಿಲ್ಲೆಯಲ್ಲಿ ಆಗಿಹೋದ ಸ್ಥಳೀಯ ಅರಸರು (ಹಾಗಲವಾಡಿ ಪಾಳೆಯಗಾರರು, ಬಿಜ್ಜಾವರದ ಮಹಾನಾಡು ಪ್ರಭುಗಳು) ಕವಿಗಳಿಗೆ ಆಶ್ರಯ ನೀಡುವುದರ ಜೊತೆಗೆ ತಾವೇ ಸ್ವತಃ ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ರಚಿಸಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಬಿಜ್ಜಾವರದ ಅರಸರಲ್ಲಿ ಒಬ್ಬನಾದ ಇಮ್ಮಡಿ ಚಿಕ್ಕ ಭೂಪಾಲನು ಸಾಹಿತ್ಯಾಸಕ್ತ ಹಾಗೂ ಸಾಹಿತ್ಯ ಪೋಷಕನಾಗಿದ್ದು ಆಗಿನ ಕಾಲಕ್ಕೇ ತನ್ನ ಅರಮನೆಯಲ್ಲಿ ಶಾರದಾ ಭಂಡಾರವನ್ನು ಹೊಂದಿದ್ದನು. ತನ್ನ ಶಾರದ ಭಂಡಾರಕ್ಕೆ ವಿವಿಧ ಹಸ್ತಪ್ರತಿಕಾರರಿಂದ ಪಾರಮಾರ್ಥಿಕ, ಸಾನಂದ ಪುರಾಣ, ಆರಾಧ್ಯ ಚಾರಿತ್ರ, ಭರತೇಶ್ವರ ಚರಿತ್ರೆ ಇತ್ಯಾದಿ ಕೃತಿಗಳನ್ನು ಪ್ರತಿ ಮಾಡಿಸಿ ಇರಿಸಿದ್ದಲ್ಲದೆ, ದೂರದ ಸ್ಥಳಗಳಿಂದಲೂ ಮಹತ್ತರವಾದ ಕೃತಿಗಳನ್ನು ಪ್ರತಿ ಮಾಡಿಸಿ ಗ್ರಂಥ ಭಂಡಾರಕ್ಕೆ ಒದಗಿಸಿದ್ದು ದಾಖಲಿಸುವ ಸಂಗತಿಯಾಗಿದೆ.

  ಮತಧರ್ಮದ ದೃಷ್ಟಿಯಿಂದ ಈ ಪಾಳೆಯಗಾರರ ಕಾಲದ ಕವಿಗಳ ಮೇಲೆ ವೀರಶೈವ ಧರ್ಮದ ಪ್ರಭಾವವೇ ಯಥೇಚ್ಫವಾಗಿರುವುದರಿಂದ ವೀರಶೈವ ಸಾಹಿತ್ಯದ ಕೃಷಿ ಹುಲುಸಾಗಿದೆ.  ಈ ಅರಸರ ಕಾಲದ ವೀರಶೈವ ಕವಿಗಳು ತಮ್ಮ ಧಾರ್ಮಿಕ ಶ್ರದ್ಧೆಯನ್ನು, ವೀರಶೈವ ಧರ್ಮದ ಆಚರಣೆ ತತ್ವಗಳನ್ನು ಕುರಿತು ನಿರೂಪಿಸುವಲ್ಲಿ ಪ್ರಕಟಪಡಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಧಾರ್ಮಿಕ ಪ್ರೇರಣೆಯಿಂದಾಗಿ ಆಳಅಗಲಗಳು ಪ್ರಾಪ್ತವಾಗಿವೆ ಎಂದೆನಿಸಿದ್ದರೂ ಧರ್ಮದ ಅತಿಯಾದ ಅನುಸರಣದಿಂದಾಗಿ ಇವರ ಕಾಲದ ಸಾಹಿತ್ಯ ಕೆಲವೆಡೆ ಶುಷ್ಕ ಎಂದೆನಿಸಿದೆ.  ಈ ಪಾಳೆಯಗಾರರ ಕಾಲದ ಕೆಲವು ಕವಿಗಳು ಬಹುಶ್ರುತರೂ, ಬಹುಭಾಷಾ ಪಂಡಿತರೂ ಆಗಿದ್ದರಿಂದ ಸಂಸ್ಕೃತ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಕೃತಿರಚನೆ ಮಾಡಿರುವ ಸಾಮರ್ಥ್ಯವುಳ್ಳವರು ಆಗಿದ್ದಾರೆ. ಭಾಷೆಯ ದೃಷ್ಟಿಯಿಂದ ಸಂಸ್ಕೃತದಿಂದ ಬಿಡುಗಡೆ ಪಡೆದಿದ್ದರೂ ಮೂಲತಃ ವಸ್ತು ಹಾಗೂ ಸತ್ವಗಳಲ್ಲಿ  ಈ ಪಾಳೆಯಗಾರರ ಕಾಲದ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿದೆ.

  15 ಮತ್ತು 16ನೇ ಶತಮಾನಗಳಲ್ಲಿ ಸಾಹಿತ್ಯ ಸೃಷ್ಟಿಯ ಸುಗ್ಗಿಯೇ ನಡೆದಿದೆ. ಧಾರ್ಮಿಕ ದೃಷ್ಟಿಯಿಂದ ಹೇಳುವುದಾದರೆ ವೀರಶೈವ ಕವಿಗಳದ್ದೆ ಸಿಂಹಪಾಲು. ಇವರ ಕಾಲದ ಸಾಹಿತ್ಯ ನಿರ್ಮಾಣವು, ವಚನ ಸಾಹಿತ್ಯ, ವಚನ ಸಂಕಲನ ಸಾಹಿತ್ಯ, ಚಂಪೂ, ರಗಳೆ, ಸಾಂಗತ್ಯ, ಸ್ವರವಚನ ಸಾಹಿತ್ಯ, ಟೀಕಾ ಸಾಹಿತ್ಯ ಇತ್ಯಾದಿ ಪ್ರಕಾರಗಳಲ್ಲಿ ನಡೆದಿದೆ ಗೂಳೂರು ಸಿದ್ಧವೀರಣ್ಣೊಡೆಯ, ವಿರಕ್ತ ತೋಂಟದಾರ್ಯ, ಮಲ್ಲಿಕಾರ್ಜುನ ಕವಿ, ಸೋಸಲೆ ರೇವಣಾರಾಧ್ಯಮುಂತಾದ ಕವಿಗಳು ಪ್ರಮುಖ ರಾಗಿದ್ದಾರೆ. ಎಸ್. ಶಿವಣ್ಣ, ಬಿ. ನಂಜುಂಡಸ್ವಾಮಿ ಮುಂತಾದ ಸಂಶೋಧಕರು ಇತ್ತೀಚೆಗೆ ಹಸ್ತಪ್ರತಿಗಳಲ್ಲಿಯೇ ಅಡಗಿದ್ದ ಇವರ ಕಾಲಾವಧಿಯಲ್ಲಿ ಆಗಿಹೋದ ಇತರೆ ಕವಿಗಳನ್ನು, ಅವರು ರಚಿಸಿರಬಹುದಾದ ಕೃತಿಗಳ ಬಗೆಗೆ ಬೆಳಕು ಚೆಲ್ಲಿದ್ದಾರೆ.

  ಈ ಎರಡು ಸ್ಥಳೀಯ ಅರಸು ಮನೆತನಗಳ ಕಾಲದ ಕವಿಗಳ ಸಾಹಿತ್ಯವನ್ನು ಅವಲೋಕಿಸಿದರೆ ಕೆಲವೊಂದು ವೈಶಿಷ್ಟ್ಯಗಳು ಕಂಡುಬರುತ್ತವೆ. 1. ವಚನ ರಚನೆಯ ಪರಂಪರೆಯಲ್ಲಿ ಇವರೀರ್ವರ ಆಳ್ವಿಕೆಯ ಕಾಲ ಮಹತ್ತರ ಪಾತ್ರವಹಿಸಿದೆ. ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತುಮಕೂರು ಪರಿಸರದ ಎಡೆಯೂರು, ಗುಬ್ಬಿ, ಗೂಳೂರು, ಹಾಗಲವಾಡಿ, ಬಿಜ್ಜಾವರ, ಸುತ್ತಮುತ್ತಲ ಪ್ರಾಂತ್ಯಗಳು ಸಂಘಟನೆ ಪ್ರಧಾನ ಕೇಂದ್ರ ಆಗಿದ್ದು ವೀರಶೈವ ಧರ್ಮದ ಅಧ್ಯಯನ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು ಕಲ್ಪಿಸಿಕೊಟ್ಟಿತು. ಪರಿಣಾಮ ವೀರಶೈವ ಸಾಹಿತ್ಯ ಹುಲುಸಾಗಿ ಸೃಷ್ಟಿಯಾಯಿತು. ವಚನ ಸಾಹಿತ್ಯ ಪರಂಪರೆಯ ದ್ವಿತೀಯ ಘಟ್ಟದಲ್ಲಿ ವಚನಗಳನ್ನು ರಚಿಸುವುದರ ಮೂಲಕ ದ್ವಿತೀಯ ಘಟ್ಟದ ಪರಂಪರೆಯ ಪ್ರವರ್ತಕರಾಗಿದ್ದಾರೆ. ಜೊತೆಗೆ ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನರಾಶಿಯನ್ನು ಸಂರಕ್ಷಿಸುವ, ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ರಕ್ಷಿಸಿಕೊಂಡು ಬರಲು ಜಿಲ್ಲೆಯ ವಚನಕಾರರು, ಸಂಕಲನಕಾರರು ಕಾರಣರಾಗಿದ್ದಾರೆ.

  ವಚನ ಪರಂಪರೆಯಲ್ಲಿ ಈ ಮಹತ್ಕಾರ್ಯದ ನೇತೃತ್ವವನ್ನು ವಹಿಸಿದ್ದವರು ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು. ವಚನ ರಚನೆ ಹಾಗೂ ವಚನ ರಕ್ಷಣೆ,ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. ಆಕರ, ವಸ್ತು ವಿನ್ಯಾಸ, ನಿರೂಪಣಾ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಶೂನ್ಯಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾದವುಗಳು. ಇವು ಸಿದ್ಧಲಿಂಗರ ಶಿಷ್ಯರ ಮೂಲಕ ಸಿದ್ಧಗೊಂಡವುಗಳೇ ಆಗಿವೆ. ನಾಲ್ಕನೇ ಶೂನ್ಯಸಂಪಾದನಕಾರರಾದ ಗೂಳೂರು ಸಿದ್ಧವೀರಣ್ಣೊಡೆಯರು ನೇರವಾಗಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾಗಿದ್ದು  ಮಹಾನಾಡು ಪ್ರಭುಗಳ ಆಳ್ವಿಕೆಯ ಕಾಲಕ್ಕೆ ಸಂಬಂಧಪಟ್ಟವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪಾಳೇಗಾರರ ಕಾಲಾವಧಿಯು ದ್ವಿತೀಯ ಘಟ್ಟದ ವಚನ ಸಾಹಿತ್ಯ ಚಟುವಟಿಕೆಗಳಲ್ಲಿ ಗಮನೀಯ ಪಾತ್ರವಹಿಸಿದೆ.

    ಹಾಗಲವಾಡಿ,  ಮಹಾನಾಡ ಪ್ರಭುಗಳು ಇತ್ಯಾದಿ ಸ್ಥಳೀಯ ಅರಸರ ಕಾಲದಲ್ಲಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಾಗಿದೆ. ಕನ್ನಡ ನಾಡನ್ನು ಆಳಿದ ಅರಸರುಗಳು ವಿವಿಧ ಮತಧರ್ಮಗಳಿಗೆ ಸೇರಿದವರಾದರೂ ಅವರು ಅನುಸರಿಸಿದ ಧಾರ್ಮಿಕ ದೃಷ್ಟಿ ಮಾತ್ರ ಸ್ಮರಣೀಯವಾದುದು. ಮಧುಗಿರಿ ಮಹಾನಾಡ ಪ್ರಭುಗಳ ಮನೆತನ ಧರ್ಮ, ರಾಜಧರ್ಮ ಹಾಗೂ ಕಾವ್ಯಧರ್ಮಗಳ ತ್ರಿವೇಣಿ ಸಂಗಮವಾಗಿದೆ. ಈ ಮನೆತನದ ಇಮ್ಮಡಿ ಚಿಕ್ಕಭೂಪಾಲನು ಗುರು-ಲಿಂಗ-ಜಂಗಮಗಳ ಮಹಾ ಸಂಗಮವಾದರೆ, ಈತನ ಹಿರಿಯ ಮಗ ತೋಟೇಂದ್ರ ಸಮರನೀತಿತಜ್ಞನೂ, ಇನ್ನೊಬ್ಬ ಮಗ ಸಪ್ಪೆಯಾರ್ಯನು ಸಂಗೀತ ನೀತಿಜ್ಞನಾಗಿದ್ದಾನೆ. ಈ ಮನೆತನದ ಅರಸರುಗಳು ತಾವೇ ಸಾಹಿತ್ಯ ಕೃತಿ ರಚಿಸುವುದರೊಂದಿಗೆ ಸಾಹಿತ್ಯ ಸೃಷ್ಟಿಗೂ ಆಶ್ರಯದಾತರಾಗಿದ್ದಾರೆ. ಮಲ್ಲಿಕಾರ್ಜುನ ಕವಿ, ವಿರಕ್ತ ತೋಟದಾರ್ಯರಂತಹ ಕವಿಗಳು ಇವರ ಆಶ್ರಯದಲ್ಲಿ ನಲವತ್ತಕ್ಕೂ ಮೇಲ್ಪಟ್ಟು ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ. ಇವರ ಆಶ್ರಯದಲ್ಲಿ ರಚಿತವಾದ ಕೃತಿಗಳಲ್ಲಿ ಕಾವ್ಯಗಳಿವೆ, ಮತಸಿದ್ಧಾಂತ ಕೃತಿಗಳಿವೆ, ಶಾಸ್ತ್ರ ಕೃತಿಗಳಿವೆ, ಟೀಕೆಗಳಿವೆ. ಕೆಲವು ಕಾವ್ಯಗಳು ಇಮ್ಮಡಿ ಚಿಕ್ಕ ಭೂಪಾಲನನ್ನು  ನೂತನ ಭೋಜರಾಜನೆಂದು ಪ್ರಶಂಸಿಸಿವೆ. ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವ ಕಾಲಘಟ್ಟದಲ್ಲಿ ವೀರಶೈವ ಧರ್ಮದ ಆಚಾರ, ವಿಚಾರ, ಸಂಸ್ಕೃತಿ, ಸಾಹಿತ್ಯವನ್ನು  ಸಂರಕ್ಷಿಸುವ ಹೊಣೆ ಹೊತ್ತಿದ್ದ ತೋಂಟದ ಸಿದ್ಧಲಿಂಗ ಯತಿಗಳ ಹಾಗೂ ಅವರ ಶಿಷ್ಯ-ಪ್ರಶಿಷ್ಯರಿಗೆ ಬೆಂಬಲ, ಆಶ್ರಯ ಕೊಡುವ ಸುವರ್ಣಾವಕಾಶ ಈ ಮಹಾನಾಡ ಪ್ರಭುಗಳಿಗೆ ಒದಗಿ ಬಂದಿತು. ಇದರಿಂದಾಗಿ ಒಂದು ಪುಟ್ಟ ಸ್ಥಳೀಯ ಅರಸು ಮನೆತನದ ಕಾಲಾವಧಿಯಲ್ಲಿ ಧಾರ್ಮಿಕ ಕೃತಿಗಳು, ಶಿವಶರಣರನ್ನು ಕುರಿತ ಕಾವ್ಯಗಳು, ಟೀಕಾ-ವ್ಯಾಖ್ಯಾನ  ಮುಂತಾದ ಧಾರ್ಮಿಕ ಹಾಗೂ ಲೌಕಿಕ ಸಾಹಿತ್ಯ ಕೃತಿಗಳು ಹುಲುಸಾಗಿ ನಿರ್ಮಿತವಾಗಲು ಸಾಧ್ಯವಾಯಿತು. ಒಂದು ರೀತಿಯಲ್ಲಿ ವೀರಶೈವ ಸಾಹಿತ್ಯ-ಸಂಸ್ಕೃತಿಯನ್ನು ಪುನರ್ ನಿರ್ಮಿಸುವ ವಾತಾವರಣವನ್ನು ಈ ಅರಸರುಗಳು ಕಲ್ಪಿಸಿ ಕೊಟ್ಟರು. ಮಹಾನಾಡ ಪ್ರಭುಗಳ ಆಶ್ರಯದಲ್ಲಿ ಸೃಜನ ಮತ್ತು ವ್ಯಾಖ್ಯಾನ ಸಾಹಿತ್ಯಗಳೆರಡೂ ರಚನೆಯಾಗಿವೆ. ಅಂದರೆ  ಸ್ವರವಚನ ಸಾಹಿತ್ಯ, ಅನುವಾದ ಸಾಹಿತ್ಯ, ಸಂಸ್ಕೃತ ಕಾವ್ಯ-ಶಾಸ್ತ್ರ-ಧರ್ಮಗ್ರಂಥಗಳ ಸಂಗ್ರಹ , ಸಂಕಲನ ಸಾಹಿತ್ಯ, ಚಾರಿತ್ರಿಕ ಕಾವ್ಯ ಇತ್ಯಾದಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಾಗಿದೆ. ಹೀಗಾಗಿ ಈ ಮಹಾನಾಡ ಪ್ರಭುಗಳ ಮನೆತನದಲ್ಲಿ ಸಾಹಿತ್ಯ ಪರಿಸರ,ಸಾಹಿತ್ಯ ಸೃಷ್ಟಿ ಮತ್ತು ಸಾಹಿತ್ಯ ಪ್ರಸಾರ ಕಾರ್ಯಗಳು ಅವ್ಯಾಹತವಾಗಿ ನಡೆದುಕೊಂಡು ಬಂದವು. ಮಹಾನಾಡ ಪ್ರಭುಗಳ ಕಾಲದಲ್ಲಿ ವಚನ ಸಂಕಲನ ಮತ್ತು ರಚನೆಯಂತಹ ಮಹತ್ ಕಾರ್ಯಗಳು ನಡೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಇವರು ರಾಜಕೀಯ ಸಾಮ್ರಾಜ್ಯವನ್ನು ಮಾತ್ರ ಮುನ್ನಡೆಸದೇ ಅದರ ಜೊತೆಗೆ ಧರ್ಮ ಸಾಮ್ರಾಜ್ಯ ಮತ್ತು ಸಾಹಿತ್ಯ ಸಾಮ್ರಾಜ್ಯವನ್ನು  ಮುನ್ನೆಡೆಸಿದರು. ಇವರ ಕಾಲದ ಸಾಹಿತ್ಯ ಸೃಷ್ಟಿಯು ಅಗಾಧವೆನಿಸುತ್ತದೆ. ಇವರ ಕಾಲದಲ್ಲಿ ಕಂಡು ಬರುವ ಕವಿಗಳ ವಿವರವು ಈ ಕೆಳಕಂಡಂತಿವೆ.

  ಮಲ್ಲಿಕಾರ್ಜುನ ಕವಿ : ಈತ ಬಿಜ್ಜಾವರ ಮಹಾನಾಡು ಪ್ರಭುಗಳ ರಾಜಾಶ್ರಯದಲ್ಲಿದ್ದವನು. ಕಾಲ ಕ್ರಿ.ಶ.1589 ರಿಂದ 1650. ಈತ ಸಂಸ್ಕೃತ ಹಾಗೂ ಕನ್ನಡ ಭಾಷೆಗಳೆರಡರಲ್ಲಿಯೂ ಬಲ್ಲಿದನಾಗಿದ್ದು ಉಭಯ ಭಾಷೆಗಳಲ್ಲಿಯೂ ಕೃತಿ ರಚನೆ ಮಾಡಿದ್ದಾನೆ. ಸಂಸ್ಕೃತದಲ್ಲಿ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾನೆ. ಈತ ಶ್ರೇಷ್ಠ ವ್ಯಾಖ್ಯಾನಕಾರನೂ ಹೌದು. ಕನ್ನಡದಲ್ಲಿ ಬಿಜ್ಜಾವರದ ಮಹಾನಾಡು ಪ್ರಭುಗಳ ಚರಿತ್ರೆಯನ್ನು ಕುರಿತು `ಇಮ್ಮಡಿ ಚಿಕ್ಕ ಭೂಪಾಲನ ಸಾಂಗತ್ಯ' ಎಂಬ ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯ ಹಸ್ತಪ್ರತಿಯ ಮೇಲೆ `ಕಾಳಗದ ವೀರವರ ತೋಂಟದ ರಾಯ ಸಾಂಗತ್ಯ' ಎಂಬ ಹೆಸರಿದೆ. ಈ ಸಾಂಗತ್ಯ ಕೃತಿಯಲ್ಲಿ ಉಲ್ಲೇಖಗೊಂಡ ವ್ಯಕ್ತಿನಾಮ, ಗ್ರಂಥನಾಮ, ಸ್ಥಳನಾಮ, ರಾಜಕೀಯ ಸಂಘರ್ಷ, ಧಾರ್ಮಿಕ ಕಾರ್ಯ, ಜೀವನ ಮೌಲ್ಯ ಆಚರಣೆಗಳ ಮೂಲಕ ಹದಿನಾರನೆಯ ಶತಮಾನದ ವೀರಶೈವ ಪಾಳೆಯಗಾರರ ಪರಿವಾರ ಮತ್ತು ಪ್ರಜೆಗಳನ್ನು ಪರಿಚಯ ಮಾಡಿಕೊಳ್ಳಬಹುದಾಗಿದೆ. ಈ ಕೃತಿಯು 17 ಸಂಧಿಗಳು, 1486 ಪದ್ಯಗಳನ್ನು ಒಳಗೊಂಡಿದ್ದು ಎಂ.ಎಂ. ಕಲಬುರ್ಗಿ, ಬಿ.ಆರ್. ಹಿರೇಮಠ ಅವರಿಂದ ಸಂಪಾದನೆಗೊಂಡು 1977 ರಲ್ಲಿ ಪ್ರಕಟವಾಗಿದೆ. ಈತನ ಇನ್ನೊಂದು ಸ್ವತಂತ್ರ ಕೃತಿ `ಶಿವತತ್ವ ವಿವೇಕ' ಸಂಸ್ಕೃತ ಕೃತಿ ಅಲಭ್ಯವಾಗಿದೆ. ಈ ಕವಿಯು ಸಂಸ್ಕೃತದಲ್ಲಿಯ 11 ಕೃತಿಗಳಿಗೆ ಕನ್ನಡದಲ್ಲಿ ಟೀಕೆಯನ್ನು ರಚಿಸಿದ್ದಾನೆ. ಆದರೆ ಇವೆಲ್ಲವೂ ಅಪ್ರಕಟಿತ ಕೃತಿಗಳಾಗಿವೆ. ಅವುಗಳೆಂದರೆ 1. ಕಂಚಿ ಶಂಕರಾರಾಧ್ಯ ಕೃತ ಸಂಸ್ಕೃತ ಬಸವ ಪುರಾಣದ ಟೀಕೆ, 2. ಗುರುರಾಜ ಕವಿ ವಿರಚಿತ ಸಂಸ್ಕೃತ ಪಂಡಿತಾರಾಧ್ಯ ಚಾರಿತ್ರ ಟೀಕೆ, 3. ಅಕ್ಷರಾಂಕ ಗದ್ಯ, 4. ಪಂಚ ಪ್ರಕಾರ, 5.  ಅಮೃತೇಶ್ವರ ಭಾಷ್ಯ.  . ಪಂಚಶ್ಲೋಕ ೭. ಭಾರತಸಾರ ವ್ಯಾಖ್ಯಾನ, . ಬ್ರಹ್ಮತರ್ಕಸ್ತವ ವ್ಯಾಖ್ಯಾನ,  . ಆದಿತ್ಯ ಸ್ತೋತ್ರದ ವ್ಯಾಖ್ಯಾನ, 10. ಶಿವಕರ್ಣಾಮೃತ ಕರ್ಣಾಟಕ ವ್ಯಾಖ್ಯಾನ, ೧೧. ರಾಮಾಯಣ ಸಾರ ವ್ಯಾಖ್ಯಾನ, ವ್ಯಾಖ್ಯಾನ ಕೃತಿಗಳಲ್ಲಿ  ಮೊದಲ ಆರು ಕೃತಿಗಳು ಬೇರೆಯವರಿಂದ ರಚಿತವಾದ ಕೃತಿಗಳ ವ್ಯಾಖ್ಯಾನವಾಗಿವೆ. ಉಳಿದ ಐದು ಕೃತಿಗಳು ತಾನೇ ರಚಿಸಿದ ಸಂಸ್ಕೃತ ಮೂಲಕೃತಿಗಳಿಗೆ ತಾನೇ ಬರೆದ ವ್ಯಾಖ್ಯಾನ ಕೃತಿಗಳಾಗಿವೆ. ಕವಿಯ ಟೀಕಾ ರಚಿತ ಕೃತಿಗಳಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಮತ್ತು ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯಕೃತಿಯಲ್ಲಿ ಪ್ರತಿಭಾ ಸಂಪತ್ತನ್ನು ಕಾಣಬಹುದು. ಈತನು ಶಂಕರ ಕವಿಯ ಸಂಸ್ಕೃತ ಬಸವ ಪುರಾಣಕ್ಕೆ ಬರೆದಿರುವ ಕನ್ನಡ  ಟೀಕೆಯ ಅಂತ್ಯದ ಗದ್ಯಭಾಗದಲ್ಲಿ, ತನಗೆ ಪೋಷಕನಾಗಿದ್ದ ಚಿಕ್ಕಭೂಪಾಲನ ಮಗನಾದ ಬಿಜ್ಜಾವರ ಪುರಾವರಧೀಶ್ವರ ಇಮ್ಮಡಿ ಚಿಕ್ಕ ಭೂಪಾಲನ ಬಗೆಗೆ ಹೇಳಿಕೊಂಡಿದ್ದಾನೆ. ಹಸ್ತಪ್ರತಿಯ ಪುಷ್ಪಿಕೆಯಲ್ಲಿ ` ಸಮರ ನಿಶ್ಯಂಕ ಚಿಕ್ಕಭೂಪಾಲ ಗರ್ಭಾಬ್ಧಿ ಚಂದ್ರೋದಯ ಸೋಮಾಂಬಿಕಾ ಗರ್ಭಶುಕ್ತಿ ಮುಕ್ತಾಫಲ ಸತತ ಸಂತರ್ಪಿತ ನಿವಧಿಕ ವೀರಮಾಹೇಶ್ವರ ವಾಂಛಿತಾರ್ಥ ಸಾರ್ಥ ಶ್ರೀಮದ್ಬಿಜ್ಜತರ ಪುರವರಾಧೀಶ್ವರ ಶ್ರೀಮದಿಮ್ಮಡಿ ಚಿಕ್ಕಭೂಪಾಲ ಕೃಪಾಲಾಲಿತ ಮಲ್ಲಿಕಾರ್ಜುನ ಕವೀಶ್ವರ ವಿರಚಿತಮಪ್ಪ ಶಂಕರಾರಾಧ್ಯಸ್ಯ ಕೃತೇ ಸಂಸ್ಕೃತ ಬಸವಪುರಾಣದ ಕರ್ಣಾಟಕ ವ್ಯಾಖ್ಯಾನಎಂಬುದಾಗಿದೆ. ಇಮ್ಮಡಿ ಚಿಕ್ಕಭೂಪಾಲನಿಗೆ ವಂಕಿನಾರಾಯನ, ಸಮರ ನಿಶ್ಯಂಕ, ನೂತನ ಭೋಜರಾಜ, ತಲಾಘರಾಮರಾವುತ, ವೇಶ್ಯಾ ಭುಜಂಗ, ಚಿಕ್ಕಭೂರಮಣ ಇತ್ಯಾದಿ ಬಿರುದುಗಳು ಇದ್ದವು ಎಂಬುದಾಗಿ  ಗುರುರಾಜ ಕವಿ ವಿರಚಿತ ಸಂಸ್ಕೃತ ಪಂಡಿತಾರಾಧ್ಯ ಚಾರಿತ್ರ  ಟೀಕೆಯಲ್ಲಿ ಉಲ್ಲೇಖಿಸಿದ್ದಾನೆಅದಕ್ಕಿಂತಲೂ ಮುಖ್ಯವಾಗಿ ಅಮೃತೇಶ್ವರಭಾಷ್ಯದ ಕೊನೆಯಲ್ಲಿ ಕನ್ನಡ ಚಂಪೂಕಾವ್ಯಗಳಲ್ಲಿ ಬಳಸದಿರುವ ಮತ್ತು ಕ್ವಚಿತ್ತಾಗಿ ಬಳಸಲ್ಪಟ್ಟಿರುವ ವಸಂತ ತಿಲಕ, ಇಂದ್ರವಜ್ರ, ಆರ್ಯಾ, ಉಪಜಾತಿ, ಸುಮಂಗಲಿನಿ ಇತ್ಯಾದಿ ವರ್ಣವೃತ್ತಗಳನ್ನು ಬಳಸಿರುವುದನ್ನು ನೋಡಿದರೆ ಈತನು ಛಂದಸ್ಸಿನಲ್ಲಿಯೂ ಪ್ರೌಢಿಮೆಯನ್ನು ಪಡೆದಿದ್ದ ಎಂಬುದು ವ್ಯಕ್ತವಾಗುತ್ತದೆ.

   ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯು ಅರ್ಧ ಚಾರಿತ್ರಿಕ ಲಕ್ಷಣದ ಸಾಹಿತ್ಯ ಕೃತಿಯಾಗಿದೆ. ಪುರಾಣ ಮತ್ತು ಐತಿಹ್ಯವನ್ನು ಕುರಿತ ಸಾಹಿತ್ಯ ಕೃತಿಗಳಿಗಿಂತ ಕೃತಿಯು ಸ್ವಲ್ಪ ಮಟ್ಟಿಗೆ ಚಾರಿತ್ರಿಕ ಸಂಗತಿಗಳಿಗೆ ಹತ್ತಿರವಾಗಿದೆ. ಆದಾಗ್ಯೂ ಇಂತಹ ಕೃತಿಗಳಲ್ಲಿಯೂ ಇತಿಹಾಸಕಾರನು ಕವಿಯ ಆಲೋಚನೆಯನ್ನು ರೂಪಿಸಿರುವ ಸಾಹಿತ್ಯಕ ಸಂಪ್ರದಾಯದ ಪ್ರಭಾವದಿಂದ ತಪ್ಪಿಸಿಕೊಳ್ಳುವ ಜೊತೆಗೆ ಕೃತಿಯಲ್ಲಿ ಒಡಮೂಡಿರುವ ಸಾಂಪ್ರದಾಯಿಕ ಹೇಳಿಕೆಗಳನ್ನೇ ನಿಜವಾದ ಸಂಗತಿಗಳೆಂದು  ಸ್ಥಿರೀಕರಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಮಲ್ಲಿಕಾರ್ಜುನ ಕವಿಯು ತನ್ನ ಆಶ್ರಯದಾತರಾದ ಮಹಾನಾಡ ಪ್ರಭುಗಳ ಕುರಿತು ಕಾವ್ಯ ಬರೆದಿದ್ದು ಕೆಲವೆಡೆ ವಾಸ್ತವ ವಲ್ಲದ ವಿವರಗಳನ್ನು ಒಳಗೊಂಡಿದ್ದರೂ ಬೇರೆಡೆ ದೊರೆಯದ ಮಹತ್ವದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾನೆ. ರಾಜನ ದಿಗ್ವಿಜಯದ ವಿವರಗಳನ್ನು ಕೆಲವೆಡೆ ಅತಿರಂಜಿತವಾಗಿ ನಿರೂಪಿಸಲ್ಪಟ್ಟಿದ್ದರೂ ರಾಜನ ಜೀವನ ಮತ್ತು ಅವನ ಕಾಲದ ನಿಜವಾದ ಚಿತ್ರಣಗಳನ್ನು ಕೆಲವೆಡೆ ಚಿತ್ರಿಸಿದ್ದಾನೆ. ತೆರನಾದ ಚಾರಿತ್ರಿಕ ಭಿತ್ತಿಯ ಮೇಲೆ ನಿರ್ಮಿತಗೊಂಡಿರುವ ಸಾಹಿತ್ಯ ಕೃತಿಗಳು ಇತಿಹಾಸ-ಸಂಸ್ಕೃತಿಯ ಪುನರ್ರಚನೆಗೆ ಆಕರಗಳಾಗಿದ್ದು ಇವುಗಳನ್ನು ಬರಿಯ ಕಟ್ಟು ಕಥೆ, ಕಾಲ್ಪನಿಕ ಎಂದು ನಿರಾಕರಿಸುವುದು ತಪ್ಪಾಗುತ್ತದೆ. ಕೃತಿಯಲ್ಲಿ ಕವಿಯು ಚರಿತ್ರೆ-ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳನ್ನು ತನ್ನದೇ ರೀತಿಯಲ್ಲಿ ಕವಿಸಹಜವಾದ ಕವಿವಾಣಿಯಲ್ಲಿ ಹೇಳಲು ಪ್ರಯತ್ನಿಸಿರುತ್ತಾನೆ. ಕವಿಕೃತಿಯಲ್ಲಿಯ ಕವಿಸಮಯ, ಸಂಪ್ರದಾಯಗಳನ್ನು ನಿಜವಾಗಿ ಅರ್ಥಮಾಡಿಕೊಂಡಾಗ ಕೃತಿಗಳಲ್ಲಿಯ ಚಾರಿತ್ರಿಕ ಸಂಗತಿಗಳನ್ನು ಶೋಧಿಸಲು ಸಾಧ್ಯವಾಗುತ್ತದೆ. ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯದಂತಹ ಕೃತಿಗಳಲ್ಲಿ ಕವಿಯು ಹಿಂದಿನದಕ್ಕಿಂತ ಹೆಚ್ಚು ಇತಿಹಾಸಕಾರನಾಗಿ ಕಾಣಿಸಿ ಕೊಂಡಿರುವುದು ಗಮನಿಸ ಬೇಕಾದ ಸಂಗತಿ. ಚಾರಿತ್ರಿಕ ಸಂಗತಿಗಳ ಸಾಮಗ್ರಿಗಳ ದೊಡ್ಡ ಹರವು ಕೃತಿಯಲ್ಲಿದೆ. ವಿಜಯನಗರ ಅರಸರ ಸಾಮಂತರಾಗಿ ಮಹಾನಾಡ ಪ್ರಭುಗಳು ಎಂಬ ಹೆಸರಿನಲ್ಲಿ ಆಳ್ವಿಕೆ ನಡೆಸಿದ್ದ ಬಿಜ್ಜಾವರದ ಇಮ್ಮಡಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಂಟದರಾಯನ ಹೋರಾಟದ ವಿವರಗಳು ಮತ್ತು ವೀರ ಮರಣಗಳನ್ನು ಚಿತ್ರಿಸಿದೆ. ಕೃತಿಯ ಮುಖ್ಯ ಐತಿಹಾಸಿಕ ವಿಷಯವು, ಇಮ್ಮಡಿ ವೆಂಕಟಪತಿರಾಯನ ಪೆನುಗೊಂಡೆಯನ್ನು ಹಾವಳಿ ರಣಭೈರೇಗೌಡ ವಶಪಡಿಸಿ ಕೊಂಡುದು ಮತ್ತು ಆದ ಕಾರಣ ಇಮ್ಮಡಿ ಚಿಕ್ಕ ಭೂಪಾಲ ಅವನೊಡನೆ ಯುದ್ಧಕ್ಕಿಳಿದುದು. ಅಂತಿಮವಾಗಿ ಪೆನಗೊಂಡೆಯನ್ನು ಹಿಂದಕ್ಕೆ ಪಡೆಯಲಾಗದೇ ಹರವೇ ಕಾಳಗದಲ್ಲಿ ಅದು ಮುಕ್ತಾಯ ಪಡೆಯಿತು. ಹರವೆಕೋಟೆಯ ಕಾಳಗವೇ ಕೃತಿಯ ಮುಖ್ಯ ಚಾರಿತ್ರಿಕ ವಿಷಯವಾಗಿದೆ. ಇಬ್ಬರು ಸ್ಥಳೀಯ ಅರಸರ ನಡುವೆ ನಡೆದ ಕದನದಲ್ಲಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಟೆಂದ್ರ ಮಡಿದು ಚಿಕ್ಕಭೂಪಾಲನ ಇನ್ನೊಬ್ಬ ಮಗ ಸಪ್ಪೇಂದ್ರನು ಆಳ್ವಿಕೆ ನಡೆಸಿದುದೇ ಕೃತಿಯ ನಿರ್ಣಾಯಕ ಹಾಗೂ ಐತಿಹಾಸಿಕ ದಾಖಲಾತಿಯ ವಿಚಾರವಾಗಿದೆ.

    ಇದು ಪುರಾಣಕಥೆಯಲ್ಲವೆಂಬ ಕಾರಣದಿಂದ ಜನತೆ ನಿರಾಕರಿಸ ಬಹುದು ಎಂಬ ಅನುಮಾನದಿಂದಲೋ ಕವಿಯು ತನ್ನ ಕೃತಿಯು  ಇತಿಹಾಸದ ಕತೆಯೇ ಆದರೂ ಇದೊಂದು ಸದಮಳ ಚಾರು ಚರಿತ್ರೆ ಎಂದು ಒತ್ತುಕೊಟ್ಟು ಹೇಳಿದ್ದಾನೆ. ಅಂದರೆ  ಇದುಚರಿತ್ರವೇ ಆದರೂಚಾರಿತ್ರವೂ ಆಗಿದೆ ಎಂಬುದು ಗಮನಿಸ ಬೇಕಾದ ಸಂಗತಿ.  ಈ ಸಾಂಗತ್ಯ ಕೃತಿಯ ವಸ್ತು ಇಮ್ಮಡಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಂಟದ ರಾಯರ ಪರಬಲದ ವಿರುದ್ಧದ ಹೋರಾಟ ಹಾಗೂ ವೀರಮರಣಗಳನ್ನು ಹೇಳುತ್ತದೆ.    ಮಲ್ಲಿಕಾರ್ಜುನ ಕವಿಯು ಇಮ್ಮಡಿಚಿಕ್ಕಭೂಪಾಲ ಮತ್ತು ಸಪ್ಪೇಂದ್ರರ ಸಮಕಾಲೀನನೆಂದೂ  ರಾಜಾಶ್ರಿತನೆಂದೂ ಕೃತಿಯ ಆಂತರಿಕ ಸಾಕ್ಷ್ಯದಿಂದ ತಿಳಿದು ಬಂದಿರುವುದರಿಂದ ಈ ಕೃತಿಯಲ್ಲಿ ಚಿತ್ರಿತವಾಗಿರುವ ಘಟನೆಗಳ ಹೆಚ್ಚು ವಾಸ್ತವಿಕತೆಯಿಂದ ಕೂಡಿರಲು ಸಾಧ್ಯವಿದೆ. ಇತಿಹಾಸಕಾವ್ಯ ಬರೆಯಹೊರಟ ಕವಿಗಳಿಗೂ ಇತಿಹಾಸದ ಕಾಲಕ್ಕೂ ಬಹಳ ಅಂತರವಿರುವುದನ್ನೇ ನಾವು ಹೆಚ್ಚಿನ ಸಂದರ್ಭದಲ್ಲಿ ಕಾಣುವುದು. ದೃಷ್ಟಿಯಿಂದ ಸಮಕಾಲೀನ ಇತಿಹಾಸಕ್ಕೆ ಕಾವ್ಯದ ಸ್ವರೂಪ ಕೊಡಮಾಡಿರುವ ಮಲ್ಲಿಕಾರ್ಜುನ ಕವಿಯ ಪ್ರಯತ್ನ ಗಣನೀಯವಾದುದ್ದಾಗಿದೆ.  ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯಲ್ಲಿ,  ಐತಿಹಾಸಿಕ ಸಾಮಗ್ರಿ ಇರುವುದು ಕೊನೆಯ ಆರು ಸಂಧಿಗಳಲ್ಲಿ ಮಾತ್ರ. ಕೃತಿಯ ಮುಖ್ಯ ಚಾರಿತ್ರಿಕ ವಿಷಯವೆಂದರೆ ಹಾವಳಿ ರಣಭೈರೇಗೌಡನು ಪೆನುಗೊಂಡೆಯನ್ನು ವಶಪಡಿಕೊಂಡಿದ್ದು ಅದರ ಪರಿಣಾಮವಾಗಿ ಹಾವಳೀಂದ್ರನಿಗೂ ಇಮ್ಮಡಿ ಚಿಕ್ಕಭೂಪಾಲನಿಗೂ ಯುದ್ದ ಸಂಭವಿಸಿದ್ದು. ಘಟನೆಯ ಮೇಲೆ ಇಡೀ ಕೃತಿಯ ಐತಿಹಾಸಿಕ ಸಾಮಗ್ರಿ  ಅಡಗಿದೆ.   ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯು ಚಾರಿತ್ರಿಕ ಕಾವ್ಯವಾಗಿದ್ದು ಇಮ್ಮಡಿ ಚಿಕ್ಕಭೂಪಾಲನ ತಂದೆ-ತಾಯಿ, ಹೆಂಡತಿ, ಮಕ್ಕಳು, ಹರವೆಯ ಕಾಳಗದ ವಿವರ, ಅರಮನೆ ಮತ್ತು ಗುರುಮನೆ ಸಂಬಂಧಗಳ ವಿವರಗಳನ್ನು ಕಾಣಬಹುದಾಗಿದೆ. ಈ ಕೃತಿಯಲ್ಲಿ ಮಹಾನಾಡ ಪ್ರಭುಗಳ ಪೂರ್ವಜರ ವೃತ್ತಾಂತವಾಗಲೀ, ಇತರೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಬಗೆಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಮಹಾನಾಡ ಪ್ರಭುಗಳ ಮನೆತನದ ಪೂರ್ಣ ಚಾರಿತ್ರಿಕ ಸಂಗತಿಗಳನ್ನು ಈ ಕೃತಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲವಾಗಿದೆ. ಈ ಕೃತಿಯಲ್ಲಿ ಚಾರಿತ್ರಿಕ ವಿವರಗಳಿಗಿಂತ ವರ್ಣನೆಗಳಿಗೆ ಅಧಿಕ ಸ್ಥಾನ ಕಲ್ಪಿಸಿ ಕೊಡಲಾಗಿದೆ. ಆದಾಗ್ಯೂ ಕವಿಯು ಸಮಕಾಲೀನನಾಗಿದ್ದು ಇಮ್ಮಡಿ ಚಿಕ್ಕಭೂಪಾಲನ ಕಾಲದ ಅಂದಿನ ಅರಮನೆಯ ವಿದ್ಯಮಾನಗಳನ್ನು,ಯುದ್ಧದ ಪ್ರಸಂಗಗಳನ್ನು ಪ್ರತ್ಯಕ್ಷವಾಗಿ ಕಂಡವನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈ ಸಾಂಗತ್ಯ ಕೃತಿಯಲ್ಲಿ ಉಲ್ಲೇಖ ಗೊಂಡ ವಿವರಗಳಲ್ಲಿ ಸ್ವಲ್ಪ ಮಟ್ಟಿಗೆ ಐತಿಹಾಸಿಕತೆ ಇದ್ದು ಚಾರಿತ್ರಿಕ ಕಾವ್ಯವಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟತೆಯನ್ನು ಪಡೆದು ಕೊಂಡಿದೆ. ಆದರೆ ಈ ಕೃತಿಯ ಬಗೆಗೆ ಹೆಚ್ಚಿನ ಅಧ್ಯಯನ ನಡೆಯದ ಕಾರಣ ಮಲ್ಲಿಕಾರ್ಜುನ ಕವಿ ಮತ್ತು ಆತನ ಈ ಕೃತಿಯು ಸಾಹಿತ್ಯಾಭ್ಯಾಸಿಗಳಿಗೆ ಅಪರಿಚಿತವೇ ಆಗಿದೆ.

   ಕೃತಿಯಲ್ಲಿ ಉಲ್ಲೇಖ ಗೊಂಡ ವ್ಯಕ್ತಿನಾಮ, ಗ್ರಂಥನಾಮ, ಸ್ಥಳನಾಮ, ರಾಜಕೀಯ ಸಂಘರ್ಷ, ಧಾರ್ಮಿಕ ವಿವರ, ಜೀವನ ಮೌಲ್ಯ ಹಾಗೂ ಆಚರಣೆಗಳ ಮೂಲಕ ೧೬ ನೆಯ ಶತಮಾನದ ಸ್ಥಳೀಯ ಅರಸುಮನೆತನದ ಪರಿವಾರದ ಮತ್ತು ಪ್ರಜಾಪರಿಸರದ ಪರಿಚಯವನ್ನು ಮಾಡಿಕೊಳ್ಳ ಬಹುದಾಗಿದೆ. ಕೃತಿಯಲ್ಲಿ ರಾಜಧಾನಿಯ ವಿವರ, ರಾಜಗೃಹ, ರಾಜಬೀದಿಗಳ ವರ್ಣನೆ, ಸಿದ್ಧಮಲ್ಲೇಶನು ತೋಂಟದ ರಾಯನಿಗೆ ಭೋಧಿಸಿದ ರಾಜನೀತಿ, ಬೇಟೆಯ ವರ್ಣನೆ, ಪರನಾರಿ ಸೋದರ ರಾಮನಾಥ ಚರಿತೆಯ ಪಠನ, ಸೈನ್ಯ ಸಂಗ್ರಹ, ಕೋಟೆಯ ಕಾಳಗ, ಚಿನಾಗನ ಮಸ್ತಕಾರ್ಪಣೆ, ಚೆನ್ನಬಸವಮ್ಮನ ಸಹಗಮನ, ಇತ್ಯಾದಿ ವಿವರಗಳು ಆಕಾಲದ ಯುಗಧರ್ಮದ ವಿವರಗಳ ದಾಖಲಾತಿಯೇ ಸರಿ. ಜೊತೆಗೆ ಕೃತಿಯಲ್ಲಿಯ ಆರೋಗಣೆ ಭಾಗದಲ್ಲಿ ಬರುವ ಭಕ್ಷ ಭೋಜ್ಯದ ವಿವರಗಳು ಮಧ್ಯ ಕರ್ನಾಟಕದಲ್ಲಿದ್ದ ಭಕ್ಷ್ಯ ಭೋಜ್ಯಗಳ ಮಾಹಿತಿಯನ್ನು ತಿಳಿಸುತ್ತವೆ. ವಿವರಗಳು ಇಂತಿವೆ. ನೀರೆಯರು ಸವಿಯ ಸಾಲಿಡುತ್ತಿರುವ ಹಾಗಲ, ಪಡುವಲ, ಬದನೆ, ತೊಗರಿ, ಚಮಚಿ, ಅವರೆ, ಹೀರೆ ಮೊದಲಾದ ಮೇಲೋಗರವನ್ನು ನೀಡಿದರು. ಹಲವು ಬಗೆಯ ಕಲಪು, ಕಚ್ಚರಿ, ಪಚ್ಚರಿ, ಹಲವು ರೀತಿಯ ಸೀಕರಣೆ ರಸಾಯನಗಳನ್ನು ತಂದು ತಂದು ನೀಡಿದರು. ಶಾಲ್ಯನ್ನ, ತೊವ್ವೆ,ತುಪ್ಪ, ಪಳಿದ್ಯ, ಹಪ್ಪಳ ಸಂಡಿಗೆ, ಹಲವು ಬಗೆಯ ಉಪ್ಪಿನ ಕಾಯಿ ಬಡಿಸಿದರು.ಪರಡಿ, ಗವುಲೆ, ಸಜ್ಜಿಗೆ, ಒಪ್ಪೆಯ ಸಣ್ಣ ಸರಳಿಗೆ, ಕಳವೆ, ಪಾಯಸಗಳನ್ನು ಸಡಗರದಿಂದ ಎಡೆ ಮಾಡಿದರು. ಹೂರಿಗೆ ಗಡುಬು, ಸೂಸಲಗಡುಬು,ಬಿಚ್ಚೂರಿಗೆ, ಬೀಸೂರಿಗೆ, ಗಾರಿಗೆ, ಎಳ್ಳಗಾರಿಗೆ, ಎಣ್ಣೆಬೆಣ್ಣೆಯ ಗಾರಿಗೆಗಳನ್ನು ನೀಡಿದರು.ಗರವಳಿಗೆ, ಬಿಚ್ಚಂಗರವಳಿಗೆ, ಹೊಲಂಗರವಳಿಗೆ, ಸಜ್ಜಿಗೆಯ ಅಂಗರವಳಿಗೆ, ಸುಖಿಯನುಂಡೆ, ಫೇಣಿ, ತಾರಂಗ ಫೇಣಿಗಳನ್ನು ನೀಡಿದರು. ಲಡ್ಡುಗೆ, ಚಿಲಿಪಾಲ ಲಡ್ಡುಗೆ, ತೆಂಗಾಯ ಲಡ್ಡುಗೆ, ಎಣ್ಣೆ ಲಡ್ಡುಗೆ, ಮಣಿಲಡ್ಡುಗೆ, ಇಡ್ಡಲಿಗೆಗಳನ್ನು ಬಡಿಸಿದರು. ರುಚಿಯಾದ ಖರ್ಜೂರ, ಚಕ್ಕುಲಿ, ಸಂಬಾರ ಚಕ್ಕುಲಿ,, ನೆಯ್ಯಪಗಳ, ನಾರಿಕೆಳಾಮೃತ, ಘೃತಪೂರಸಾರ  ಕರ್ಪೂರಾಮೃತಗಳನ್ನು ನೀಡಿದರು.ಮಂಡಿಗೆ, ಸಕ್ಕರೆ ಮಂಡಿಗೆ,ಬೆಲ್ಲ ಮಂಡಿಗೆ, ಹಾಲಮಂಡಿಗೆ, ಹಾಲೌಗು, ಹೋಳಿಗೆಗಳನ್ನು ತಂದು ನೀಡಿದರು. ಕರಜಿಯಕಾಯಿ, ಸುಧಾಸುಮಮಂಜರಿ, ಎರೆಯಪ್ಪ, ಜೋಗೊಡ,ರಸಗಳನ್ನು ತಂದು ನೀಡಿದರು. ಪನಸುಫಳಾಮೃತ, ಚೂತಫಲಾಮೃತ, ದ್ರಾಕ್ಷಾಮೃತ, ರೊಟ್ಟಿಗಳನ್ನು ತಂದು ತಂದು ನೀಡಿದರು. ಮಲ್ಲಿಕಾರ್ಜುನ ಕವಿಯು ಉಲ್ಲೇಖಿಸಿರುವ ತೆರನಾದ ಭಕ್ಷ್ಯ ಭೋಜಗಳು ನಾಲಿಗೆಗೆ- ರುಚಿಗೆ ಸಂಬಂಧ ಪಟ್ಟವುಗಳ ಜೊತೆಗೆ ಪ್ರಾದೇಶಿಕವಾದವುಗಳು ಆಗಿವೆ. ವಿವಿಧ ಭೋಜ್ಯ-ಭಕ್ಷಗಳಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಎಲ್ಲೆಲ್ಲಿ ಬಳಕೆಯಲ್ಲಿವೆ ಹಾಗೂ ಸಿದ್ಧಪಡಿಸುವ ವಿಧಾನಗಳು ಯಾವುವು ಎಂಬುದು ಸ್ವಾರಸ್ಯಕರ ಸಂಶೋಧನೆಯಾಗುತ್ತದೆ. ಇಮ್ಮಡಿ ಚಿಕ್ಕಭೂಪಾಲನಂತಹ ಸ್ಥಳೀಯ ಅರಸನು ಲೌಕಿಕ ನೆಲೆಯಲ್ಲಿ ನಿಂತರೂ ಪಾರಲೌಕಿಕ ನೆಲೆಗೆ ತಲುಪಿದ ಉನ್ನತ ವ್ಯಕ್ತಿತ್ವವನ್ನು ಮಲ್ಲಿಕಾರ್ಜುನ ಕವಿಯ ಕಾವ್ಯದಲ್ಲಿ ಕಾಣಬಹುದಾಗಿದೆ.

      ಒಟ್ಟಾರೆ ಕನ್ನಡ ಕಾವ್ಯಗಳಲ್ಲಿ ಪ್ರಕಟವಾಗುವ ಐತಿಹಾಸಿಕ ಸಂಗತಿಗಳ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಪುನರ್ರಚಿಸುವಲ್ಲಿ ಹಾಗೂ ಕಾವ್ಯಗಳನ್ನು ಚಾರಿತ್ರಿಕ ನೆಲೆಯಲ್ಲಿಯೂ ಅರ್ಥಮಾಡಿಕೊಳ್ಳಬಹುದು ಎಂಬುದಕ್ಕೆ ಈ ಸಾಂಗತ್ಯ ಕೃತಿಯು ನಿದರ್ಶನವಾಗಿದೆ. ಸಣ್ಣ ಪಾಳೆಗಾರನ ಕುಟುಂಬವು ನಾಡಿನ ರಕ್ಷಣೆಗಾಗಿ, ವೈರಿಗಳೊಡನೆ ಕಾದುವ ಮೂಲಕ ವೀರಸ್ವರ್ಗವನ್ನು ಪಡೆದ ವೀರಗಾಥೆಯು ನಾಡಿನ ಇತಿಹಾಸ-ಸಂಸ್ಕೃತಿಯ ಭಾಗವಾಗಿರುವುದರಿಂದ ಕೃತಿಯು ಇಂದು ಓದುಗರಿಗೆ ಸಾಹಿತ್ಯಕವಾಗಿ, ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾಗುತ್ತದೆ. ತೆರನಾದ ಕೃತಿಗಳಲ್ಲಿಯ ಐತಿಹಾಸಿಕ-ಸಾಂಸ್ಕೃತಿಕ ವಿಷಯಗಳನ್ನು ಹೆಕ್ಕಿ ತೆಗೆದು ಅಧ್ಯಯನ ಮಾಡುವುದರ ಮೂಲಕ ಕನ್ನಡ ನಾಡು,ನುಡಿ, ಸಂಸ್ಕೃತಿಯ  ಸೂಕ್ಷ್ಮಸ್ತರದ ಅಧ್ಯಯನದ ವ್ಯಾಪ್ತಿಯ ಪರಿಧಿಯನ್ನು ವಿಸ್ತರಿಸಲು ಸಹಾಯಕವಾಗುತ್ತದೆ. ಕೃತಿಯು 16 ನೇ ಶತಮಾನದ ಚಾರಿತ್ರಿಕ, ಧಾರ್ಮಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯುವಲ್ಲಿ ಆಕರಗ್ರಂಥವಾಗಿ ಬಳಸಿಕೊಳ್ಳ ಬಹುದಾಗಿದೆ.

ಮುಮ್ಮಡಿ ಚಿಕ್ಕ ಭೂಪಾಲ : ಕಾಲ ಕ್ರಿ.ಶ. 1646. ಈತ ಬಿಜ್ಜಾವರದ ಅರಸು ಇಮ್ಮಡಿ ಚಿಕ್ಕಭೂಪಾಲನ ಕಿರಿಯ ಪುತ್ರ. ಮೊದಲ ಹೆಸರು ಸಪ್ಪೆಯಾರ್ಯ. ಈತನು ಸಂಸ್ಕೃತದಲ್ಲಿ ಅಭಿನವ ಭರತ ಸಾರಸಂಗ್ರಹ ಹಾಗೂ ವೀರಶೈವ ವಿರೋಧಿ ಗಜಾಂಕುಶ ಎಂಬ ಎರಡು ಕೃತಿಗಳನ್ನು ರಚಿಸಿದ್ದಾನೆ. ಈ ಕೃತಿಯು ಆರ್. ಸತ್ಯನಾರಾಯಣ ಅವರಿಂದ ಸಂಪಾದನೆಗೊಂಡು ಪ್ರಕಟವಾಗಿದೆ. ಎರಡನೇ ಕೃತಿ ಪ್ರಕಟವಾಗಿಲ್ಲ.  ಕೃತಿಯ ಓಲೆ ಪ್ರತಿ ಬಸವ ಸಮಿತಿಯ ಓಲೆ ಭಂಡಾರದಲ್ಲಿದೆ. ಅಭಿನವ ಭರತ ಸಾರಸಂಗ್ರಹವು ಸಂಗೀತ ಪ್ರಧಾನ ಕೃತಿಯಾಗಿದ್ದು ವಾಧ್ಯಾಧ್ಯಾಯ ಮತ್ತು ಗೀತಾಧ್ಯಾಯ ಎಂಬ ಎರಡು ಅಧ್ಯಾಯ ಗಳನ್ನೊಳಗೊಂಡಿದೆ. ವಾದ್ಯಾಧಿಕಾರವೆಂಬ ಪ್ರಥಮಾಧ್ಯಾಯದಲ್ಲಿ ಒಟ್ಟು ೮೬೪ ಶ್ಲೋಕಗಳಿವೆ. ಗೀತಾಧ್ಯಾಯವೆಂಬ ಪಂಚಮಾಧ್ಯಾಯದಲ್ಲಿ ೧೩೫೩ ಶ್ಲೋಕಗಳಿವೆ. ಮೊದಲನೆ ವಾದ್ಯಾಧ್ಯಾಯದಲ್ಲಿ ಚತುರ್ವಿಧವಾದ್ಯಗಳು,ತತ್ವಾದ್ಯ ಸ್ವರೂಪ ಸಂಗ್ರಹ,ವಾದ್ಯದ ಪ್ರಯೋಜನ,ವೀನಾದಂಡದ ಲಕ್ಷಣ,ಪಟಹ ವಾದ್ಯವನ್ನು ನುಡಿಸುವ ಲಕ್ಷಣ, ಮಾರ್ಗ ಪಟಹ ಲಕ್ಷಣ,ಮೃದಂಗವಾದ್ಯದ ಶಬ್ದ ಪ್ರಬೇಧಗಳು, ಡೋಲು ವಾದ್ಯ,ವಾದ್ಯದ ಮತ್ತು ವಾದಕನ ಗುಣದೋಷಗಳು ಇತ್ಯಾದಿ ವಿಷಯಗಳನ್ನು ಅನುಕ್ರಮವಾಗಿ ಲಕ್ಷಣ ಸಮನ್ವಿತವಾಗಿ ವಿವರಿಸಲಾಗಿದೆ. ಅದೇ ರೀತಿ ಗೀತಾಧ್ಯಾಯದಲ್ಲಿ  ಮಾರ್ಗದೇಶೀ ಸಂಗೀತ ಲಕ್ಷಣ,ಸ್ವರಗಳ ಕುಲ,ವಾಗ್ಗೇಯಕಾರರ ವಿಶೇಷಲಕ್ಷಣ ಇತ್ಯಾದಿ ವಿವರಗಳ ಬಗೆಗೆ ಮಾಹಿತಿ ಇದೆ. ಅದಕ್ಕಿಂತ ಮುಖ್ಯವಾಗಿ ಈ ಕೃತಿಯ ಕೊನೆಯಲ್ಲಿ ಬರುವ ಬಿರುದಾವಳಿಗಳಾದ ಇತಿ ಶ್ರಿಮದ್ದಗಿರಿಶಾಸನಾಂಕ, ಮರೆಹೊಕ್ಕವರ ಕಾವ, ಮಾರಾಂತರ ಕೊಲಗವ, ವಡಗೆರೆ ಮಲ್ಲ, ಶಂಖಚಕ್ರ ಬಿರುದ, ಶ್ರಿಮದ್ವಜ್ಜವರ ಪುರವರಾಧೀಶ್ವರೋಜ್ವಲ, ಕುಮಾರ ಸಮೀರನಂದನ, ಇತ್ಯಾದಿಗಳು ಮುಮ್ಮಡಿ ಚಿಕ್ಕಭೂಪಾಲನವ್ಯಕ್ತಿತ್ವದ ವಿವಿಧ ಮುಖಗಳನ್ನು ಪ್ರತಿಬಿಂಬಿಸುತ್ತದೆ.

 ವಿರಕ್ತ ತೋಂಟದಾರ್ಯ : ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದವನು. ಎಸ್. ಶಿವಣ್ಣನವರ ಪ್ರಕಾರ ಈತನ ಕಾಲ ಕ್ರಿ.ಶ. 1616. ಈತನ ಸಾಹಿತ್ಯ ದೃಷ್ಟಿ ವಿಪುಲ ಹಾಗೂ ವೈವಿದ್ಯಮಯವಾಗಿದೆ. ಸತ್ವ ಹಾಗೂ ಸಂಖ್ಯೆಯ ದೃಷ್ಟಿಯಿಂದಲೂ ಗಮನಾರ್ಹ ಎನಿಸಿವೆ. ವಿವಿಧ ವಸ್ತು ಹಾಗೂ ಛಂದೋಬಂಧಗಳಲ್ಲಿ 24 ಕೃತಿಗಳನ್ನು ರಚಿಸಿದ್ದು ಪುರಾಣ, ಶತಕ, ರಗಳೆ, ನಿಘಂಟು, ನಾಮಾವಳಿ, ಟೀಕೆ, ಗದ್ಯ, ಚಂಪೂ, ಸ್ವರವಚನ, ಹಸ್ತಪ್ರತಿ ನಕಲು ಎಂದು ವಿಭಾಗಿಸಬಹುದು.ಕನ್ನಡ ಸಾಹಿತ್ಯ ಚರಿತ್ರೆಗೆ ಅದರಲ್ಲಿಯೂ ವೀರಶೈವ ಸಾಹಿತ್ಯ ಚರಿತ್ರೆಗೆ ಕೊಟ್ಟ ಕೊಡುಗೆ ಗಣನೀಯವಾದುದ್ದು. ಆತನು ಆಧ್ಯಾತ್ಮ ಯೋಗಿ ಮತ್ತು ಕಾವ್ಯಯೋಗಿಯಾಗಿ ದ್ವಿವಿಧ ವ್ಯಕ್ತಿತ್ವವನ್ನು ಹೊಂದಿದ್ದಾನೆ. ಈತನ ಸಮಾಧಿಯು ಮಧುಗಿರಿ ತಾಲ್ಲೋಕಿನ ಬೇಡತ್ತೂರಿನಲ್ಲಿರುವುದನ್ನು ಡಾ. ಬಿ. ನಂಜುಂಡ ಸ್ವಾಮಿಯವರು ಪತ್ತೆ ಹಚ್ಚಿದ್ದಾರೆ.

1.     ಪುರಾಣಗಳು   :ಶ್ರೀ ಸಿದ್ಧೇಶ್ವರ ಪುರಾಣ (ವಾರ್ಧಕ ಷಟ್ಪದಿ) ಪಾಲ್ಕುರಿಕೆ ಸೋಮೇಶ್ವರ ಪುರಾಣ (ವಾ.ಷ.)

2.    ಶತಕ  : ನಿರಂಜನಲಿಂಗ ಶತಕ, ನಿರಂಜನ ಶತಕ, ಸಿದ್ಧಲಿಂಗೇಶ್ವರ ಶತಕ, ಸರ್ವಮಂಗಳೆ ಶತಕ (ಅಪ್ರಕಟಿತ).

3.     ರಗಳೆ  :      ತೋಂಟದಾರ್ಯ ರಗಳೆ, ನೂತನ ಪುರಾತನರ ರಗಳೆ.

4.    ನಿಘಂಟು     :      ಕರ್ನಾಟಕ ಶಬ್ದಮಂಜರಿ (ವಾರ್ಧಕ ಷಟ್ಪದಿ)

5.     ನಾಮಾವಳಿ    :      ಸ್ವರವಚನ : 1. ಬಸವೇಶ್ವರನ ನೂರೆಂಟು ನಾಮ (ಕನ್ನಡ ಹಾಡು ಅಪ್ರಕಟಿತ), 2. ಬಸವೇಶ್ವರನ ಸಹಸ್ರನಾಮ (ಸಂಸ್ಕೃತ), 3. ಶಿವ ಸಹಸ್ರನಾಮ (ಅಪ್ರಕಟಿತ), 4. ದೇವಿ ಸಹಸ್ರನಾಮ, 5. ಶರಣೆಯರ ನೂರೆಂಟು ನಾಮ, ಐದು ಸ್ವರವಚನಗಳು ಸ್ವರವಚನ ಸಂಪುಟ1 ಮತ್ತು2 ರಲ್ಲಿ( ಸಂ.ಎಸ್.ಶಿವಣ್ಣ) ಪ್ರಕಟವಾಗಿವೆ.

6. ಪಿಂಡೋತ್ಪತ್ತಿ ಪದ (ಅಪ್ರಕಟಿತ).

೭.    ಟೀಕೆ   :      ಮನೋವಿಜಯ ತಾತ್ಪರ್ಯ ಚಂದ್ರಿಕೆ, ಶತಕತ್ರಯ ಟೀಕೆ, ಕೈವಲ್ಯಸಾರದ ಟೀಕೆ, ಪಂಚಗದ್ಯದ ಟೀಕೆ,  ( ಅಲಭ್ಯ)ಶೈವ ಸಂಜೀವಿನಿ.

೮.     ಗದ್ಯ   :      ಅನಾದಿ ವೀರಶೈವ ಸಂಗ್ರಹ.

೯.     ಚಂಪು :      ಚಿದಾನಂದ ಸಿಂಧು, ಷಟ್‍ಸ್ಥಲಜ್ಞಾನ ಚಿಂತಾಮಣಿ.

೧೦.    ಹಸ್ತಪ್ರತಿ ನಕಲು : ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಪ್ರತಿ ಮಾಡಿದ್ದಾನೆ.

  ವಿರಕ್ತ ತೋಂಟದಾರ್ಯನು ವೀರಶೈವ ಸಿದ್ಧಾಂತ ಕ್ಷೇತ್ರಕ್ಕೆ, ಕಾವ್ಯಛಂದಸ್ಸು ನಿಘಂಟು ಕ್ಷೇತ್ರಕ್ಕೆ, ಟೀಕೆ, ಕೋಶ ಕ್ಷೇತ್ರಕ್ಕೆ ಅದ್ವಿತೀಯವಾದ ಕೊಡುಗೆಯನ್ನು ಸಲ್ಲಿಸಿದ್ದಾನೆ. ವಿರಕ್ತ ತೋಂಟದಾರ್ಯನು ಮಹಾನಾಡ ಪ್ರಭುಗಳ ರಾಜಗುರುವೂ ಧರ್ಮ ಗುರುವು ಆಗಿರುವುದು ಆತನ ವ್ಯಕ್ತಿತ್ವದ ಒಂದು ಮುಖವಾದರೆ ಕವಿ-ಶಾಸ್ತ್ರಕಾರ-ಟೀಕಾಕಾರ-ನಿಘಂಟುಕಾರ- ಹಸ್ತಪ್ರತಿಕಾರನಾಗಿರುವುದು  ವ್ಯಕ್ತಿತ್ವದ ಇನ್ನೊಂದು ಮುಖವಾಗಿದೆ. ಕನ್ನಡ-ಸಂಸ್ಕೃತ ಉಭಯಭಾಷಾ ಪಂಡಿತನಾಗಿರುವ ಈತನ ಕಾವ್ಯಗಳಲ್ಲಿ ಧರ್ಮವೇ ಪ್ರಧಾನವಾಗಿದ್ದರೂ ಸಿದ್ಧೇಶ್ವರ ಪುರಾಣದಲ್ಲಿ ಶಿವಯೋಗಿಯೋರ್ವನ ಚರಿತ್ರೆಯನ್ನು  ಪವಾಡಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾನೆ. ಜೊತೆಗೆ ತೋಂಟದ ಸಿದ್ಧಲಿಂಗರನ್ನು ಕುರಿತ ಆರು ಕೃತಿಗಳಲ್ಲಿಯೇ ಈತನ ಕೃತಿಯಲ್ಲಿ ಸಿದ್ಧಲಿಂಗರ ಸಮಗ್ರ ಚರಿತ್ರೆ  ನಿರೂಪಿತವಾಗಿರುವುದು. ಸಿದ್ಧಲಿಂಗರ ಅವತಾರ, ಅವರ ತಪಸ್ಸು, ಲೋಕ ಸಂಚಾರ, ಬೋಧೆ  ಹಾಗೂ ವ್ಯಕ್ತಿತ್ವ- ವೈಶಿಷ್ಟ್ಯಗಳನ್ನುತುಂಬ ಭಕ್ತಿಯಿಂದ ಚಿತ್ರಿಸಿದ್ದಾನೆ. ಪುರಾಣ-ತತ್ವ ಮತ್ತು ಚರಿತ್ರೆಗಳು ಈ ಕೃತಿಯಲ್ಲಿ ಮುಪ್ಪರಿಗೊಂಡಿವೆ. ಪಾಲ್ಕುರಿಕೆ ಸೋಮೇಶ್ವರನ ಪುರಾಣದಲ್ಲಿ ಶಿವಕವಿಯೊಬ್ಬನ ಧೀಮಂತ ವ್ಯಕ್ತಿತ್ವವನ್ನು ನಿರೂಪಿಸಿದ್ದಾನೆ. ಟೀಕಾ ಗ್ರಂಥಗಳಲ್ಲಿ ವೀರಶೈವದ ತಾತ್ವಿಕ ಭಾಗ ಪ್ರಧಾನವಾಗಿದೆ. ಚಿದಾನಂದ ಸಿಂಧು ಅಲಭ್ಯ ಚಂಪೂಕೃತಿಯಾಗಿದ್ದು ಆ ಹಸ್ತಪ್ರತಿಯನ್ನು ಬಿ.ನಂಜುಂಡಸ್ವಾಮಿಯವರು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಶಬ್ದಮಂಜರಿಯು ಕನ್ನಡದ ಮಹತ್ವದ ಶಬ್ದಕೋಶವಾಗಿದ್ದು, 120 ವಾರ್ಧಕ ಷಟ್ಪದಿಗಳಲ್ಲಿ ಹಳಗನ್ನಡ ಪದಗಳಿಗೆ ಅರ್ಥಗಳನ್ನು ನೀಡಿದೆ. ಅದಕ್ಕಿಂತ ಮುಖ್ಯವಾಗಿ ಈ ಶಾಸ್ತ್ರಕೃತಿಯು ಸಂಸ್ಕೃತದ ಅಮರಕೋಶವನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮತೆಗಳನ್ನು ಗಮನದಲ್ಲಿರಿಸಿಕೊಂಡು ತನ್ನ ಅಪಾರವಾದ ವ್ಯತ್ಪತ್ತಿ ಜ್ಞಾನದ ಮೂಲಕ  ಅಪೂರ್ವವಾದ ಕೋಶವನ್ನು ಸಿದ್ಧಪಡಿಸಿ ಕನ್ನಡಿಗರಿಗೆ ದಯಪಾಲಿಸಿದ್ದಾನೆ. ಷಟ್ಸ್ಥಲ ಚಿಂತಾಮಣಿಯು ಸಂಸ್ಕೃತದಲ್ಲಿದ್ದು 25 ಅಧ್ಯಾಯ, 1605 ಶ್ಲೋಕಗಳನ್ನು ಒಳಗೊಂಡ ಬೃಹತ್ ಕೃತಿಯಾಗಿದೆ. ಸಪ್ತಕಾವ್ಯದ ಗುರುಬಸವನ ಮನೋವಿಜಯ ಕಾವ್ಯಕ್ಕೆ ಬರೆದ ತಾತ್ಪರ್ಯ ಚಂದ್ರಿಕೆ ಹಾಗೂ ಮಗ್ಗೆಯ ಮಾಯಿದೇವನಶತಕತ್ರಯಕ್ಕೆ ಬರೆದ ಟೀಕೆಗಳು ಕನ್ನಡದ ಟೀಕೆಗಳಾಗಿದ್ದು ಕನ್ನಡದ ಶ್ರೇಷ್ಠ ಟೀಕಾಕಾರ ನೆಂಬುದನ್ನು ಸಾಬೀತು ಪಡಿಸುತ್ತವೆ. ಈತನ ವೈವಿಧ್ಯಮಯವಾದ ಕೃತಿಸರಣಿಯನ್ನು ಗಮನಿಸಿದರೆ ಮಹಾನಾಡು ಪ್ರಭುಗಳ ಕಾಲದ ಪ್ರತಿಭಾವಂತ ಕವಿ ಮಾತ್ರವಲ್ಲದೆ ಕನ್ನಡ ನಾಡಿನ ಪ್ರಮುಖ ಕವಿಗಳಲ್ಲಿ ಒಬ್ಬ ಎಂದು ಹೇಳಬಹುದಾಗಿದೆ.  ವೀರಶೈವ ಸಿದ್ಧಾಂತ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾನೆ. ದುರಾದೃಷ್ಟವಶಾತ್ ಈ ಕೃತಿಗಳ ಬಗೆಗೆ ಸರಿಯಾದ ಅಧ್ಯಯನ ನಡೆಯದ ಕಾರಣ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈತನಿಗೆ ಸರಿಯಾದ ಸ್ಥಾನ ದೊರಕದೇ ಹೋಗಿದೆ. ಆದಾಗ್ಯೂ ಇತ್ತೀಚೆಗೆ ಮೊದಲ ಬಾರಿಗೆ  ದಿ.ಎಸ್.ವಿದ್ಯಾಶಂಕರ ಅವರು ತಮ್ಮ ವೀರಶೈವ ಸಾಹಿತ್ಯ ಚರಿತ್ರೆ ಸಂ.4 ರಲ್ಲಿ ಈತನ ಕೃತಿಗಳ ಬಗೆಗೆ ವಿಸ್ತೃತವಾದ ವಿವರಗಳನ್ನು ಒದಗಿಸಿ ಸೂಕ್ತಸ್ತಾನವನ್ನು ಕಲ್ಪಿಸಿ ಕೊಟ್ಟಿದ್ದಾರೆ.

 ಹಾಗಲವಾಡಿ ಪಾಳೆಯ ಗಾರರು: ತುಮಕೂರು ಜಿಲ್ಲೆಯ ಹಾಗಲವಾಡಿಯು  ಕ್ರಿ.. 1478 ರಿಂದ 1765 ರ ವರೆಗೆ ಆಳ್ವಿಕೆ ನಡೆಸಿದ ಪಾಳೆಯಗಾರರ ವಂಶವೊಂದರ ಮೂಲ ಸೆಲೆಯಾಗಿದ್ದು ಅವರನ್ನು ಹಾಗಲವಾಡಿ ಪಾಳೆಯಗಾರರೆಂದೇ ಕರೆಯಲಾಗಿದೆ. ಎರಿಮಾದನಾಯಕನಿಂದ ಹಿಡಿದು ಇಮ್ಮಡಿ ಮುದಿಯಪ್ಪ ನಾಯಕನ ವರೆಗೆ ಸಮಾರು ಎಂಟು ಜನ ಆಳ್ವಿಕೆ ನಡೆಸಿದ್ದಾರೆ. ಈ ಪಾಳೆಯಗಾರರ ಆಳ್ವಿಕೆಯಲ್ಲಿ ಮೊದಲನೆ ಮುದಿಯಪ್ಪ ನಾಯಕ( ಕ್ರಿ.. 1578-1618) ಮತ್ತು ಇಮ್ಮಡಿ ಮುದಿಯಪ್ಪ ನಾಯಕರ ( ಕ್ರಿ...1720-1740) ಆಳ್ವಿಕೆಯ ಕಾಲದಲ್ಲಿ ಸಾಹಿತ್ಯ ಮತ್ತು ಧಾರ್ಮಿಕ ಚಟುವಟಿಕೆಗಳು  ಬೆಳವಣಿಗೆ ಕಂಡವು.ಇವರ ಆಳ್ವಿಕೆಯ ಕಾಲದಲ್ಲಿ ಅನೇಕ ವಚನಕಾರರು, ಕವಿಗಳು ಆಗಿ ಹೋಗಿದ್ದಾರೆ. ಅವರಲ್ಲಿ ಪ್ರಮುಖರು ಮುದ್ವೀರ ಸ್ವಾಮಿಗಳು ಮತ್ತು ಸೋಸಲೆ ರೇವಣಾರಾಧ್ಯರು. ಇವರು ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳೆರಡರಲ್ಲಿಯೂ ಬಲ್ಲಿದರು. ಇವರು ವೀರಶೈವ ಸಿದ್ಧಾಂತದ ಬಗೆಗೆ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದರು.

  ಹಾಗಲವಾಡಿ ಮುದ್ವೀರ ಸ್ವಾಮಿ : ಹಾಗಲವಾಡಿ ಅರಸರ ರಾಜಗುರುವಾಗಿದ್ದು ಉಭಯ ಭಾಷೆಗಳಲ್ಲಿ ಸಾಹಿತ್ಯ ಕೃಷಿಗೈದಿದ್ದಾನೆ. ಈತನ ಕಾಲ ಸುಮಾರು ಕ್ರಿ.ಶ. 1738. ಈತನು `ಶಿವತತ್ವ ಸುಜ್ಞಾನ ಪ್ರದೀಪಿಕೆ' ಎಂಬ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾನೆ. ಇದು ಸಂಸ್ಕೃತದ ಷಟ್‍ಸ್ಥಲ ಬ್ರಹ್ಮ ದೀಪಿಕಾ ಕೃತಿಯ ಸಾರಸಂಗ್ರಹ ಕಾವ್ಯ. ಈ ಕೃತಿಯಲ್ಲಿ ವೇದ ಆಗಮ ಉಪನಿಷತ್‍ಗಳಿಂದ ಸಂಸ್ಕೃತ ಶ್ಲೋಕಗಳನ್ನು ಎತ್ತಿಕೊಂಡು ಉದ್ಧರಿಸುತ್ತ ವೀರಶೈವ ಷಟ್‍ಸ್ಥಲ ತತ್ವವನ್ನು ಸರಳ ಷಟ್ಪದಿಯಲ್ಲಿ ನಿರೂಪಿಸಲಾಗಿದೆ. ಜೊತೆಗೆ 109 ಸ್ವರವಚನಗಳನ್ನು ರಚಿಸಿದ್ದಾನೆ. ಸ್ವರವಚನಗಳಲ್ಲಿ ತತ್ವಬೋಧೆ ಮತ್ತು ಲೋಕನೀತಿಗಳು ಪ್ರಕಟವಾಗಿದ್ದು ಉತ್ತಮ ಅನುಭಾವಕವಿ ಎಂಬುದು ವ್ಯಕ್ತವಾಗುತ್ತದೆ. ಸ್ವರವಚನಗಳ ಅಂಕಿತ ಮುದ್ವೀರ ಪ್ರಿಯ ಸಂಗಮೇಶ್ವರ ಆಗಿದೆ. ಮೊದಲು ವೀರಣ್ಣ ರಾಜೂರ ಅವರು 1986 ಸಂಪಾದಿಸಿ ಪ್ರಕಟಿಸಿದ್ದರು. ಈಗ ಈ ಸ್ವರವಚನಗಳು ಎಸ್. ಶಿವಣ್ಣನವರು ಸಂಪಾದಿಸಿರುವ ಸ್ವರವಚನ ಸಂಪುಟ. 1 ರಲ್ಲಿ 1995ರಲ್ಲಿ ಪ್ರಕಟವಾಗಿವೆ. ಈತನ ವಚನಾಂಕಿತಗಳಲ್ಲಿ ಏಕರೂಪತೆ ಇಲ್ಲ. ಗುರು ಸಂಗ, ಗುರುಸಂಗಮೇಶ್ವರ ಎಂಬ ಅಂಕಿತಗಳು ಹೆಚ್ಚಿನ ಸ್ವರ ವಚನದಲ್ಲಿವೆ. ಈತನ ಸ್ವರ ವಚನಗಳಲ್ಲಿ ಕೆಲವು ಸ್ವರವಚನಗಳಿಗೆ ಮಾತ್ರ ರಾಗ-ತಾಳಗಳ ಸೂಚನೆಗಳಿವೆ. ಈತನ ಸ್ವರ ವಚನಗಳು ವಿವಿಧ ಪ್ರಕಾರಗಳಲ್ಲಿದ್ದು ಸ್ತೋತ್ರ, ಜೋಗುಳ, ಸುವ್ವಿ, ಉಪ್ಪವಡಿಸುವ ಹಾಡು, ಚಂದಮಾಮ, ತಾಲೆಲೆ, ಮಂಗಳಾರತಿ ಪದ ಇತ್ಯಾದಿಗಳಲ್ಲಿದ್ದು ಯೋಗ ತತ್ವದ ನಿರೂಪಣೆಯನ್ನು ಪ್ರತಿಪಾದಿಸಿವೆ. ಇವುಗಳು ತತ್ವ ಪ್ರಧಾನವಾಗಿಯೂ, ಶರಣಸತಿ-ಲಿಂಗ ಪತಿ ಭಾವವನ್ನು ಹಾಗೂ ಕೆಲವೆಡೆ ಲೋಕನೀತಿಯನ್ನು ಒಳಗೊಂಡಿವೆ. ಈ ಸ್ವರವಚನಗಳು ಧಾರ್ಮಿಕ ಹಾಗೂ ತಾತ್ವಿಕ ವಿಷಯಗಳನ್ನು ಹೊಂದಿರುವುದರಿಂದ ದೇಸಿ ಸಾಹಿತ್ಯ ಪ್ರಕಾರದಲ್ಲಿಯೇ ರಚಿತವಾಗಿದ್ದರೂ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿಯನ್ನು ವ್ಯಕ್ತಪಡಿಸಿಲ್ಲ. ಆದರೂ   ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಯಲ್ಲಿ (ಕ್ರಮಾಂಕ ಬಿ67131 ಮುಂಭಾಗ, 32 ಹಿಂಭಾಗ) ಹಾಗಲವಾಡಿ ಮುದ್ವೀರ ಸ್ವಾಮಿಗಳು ರಚಿಸಿರುವ ಅಪ್ರಕಟಿತ 11 ವಾರ್ಧಕ ಷಟ್ಪದಿ ನುಡಿಗಳ ಸ್ವರವಚನದಲ್ಲಿಯ 8ನೇ ನುಡಿಯಲ್ಲಿ ವೀರಶೈವ ಕೃತಿಕಾರರು ಮತ್ತು ಮಠಾಧೀಶರ ಉಲ್ಲೇಖ ಇರುವುದನ್ನು ಎಸ್. ಶಿವಣ್ಣನವರು ತಿಳಿಸಿರುತ್ತಾರೆ.  ಮುದ್ವೀರಪ್ರಿಯ ಸಂಗಮೇಶ್ವರ ಅಂಕಿತದ ವಚನವೊಂದು ಲಭ್ಯವಿದ್ದು ಸೈದ್ಧಾಂತಿಕ ವಿಷಯ ನಿರೂಪಣೆಯನ್ನು ಹೊಂದಿದೆ. ಮುದ್ವೀರ ಸ್ವಾಮಿಗಳ ಸ್ವರವಚನಗಳನ್ನು  ಧರ್ಮತತ್ವ, ಸಾಹಿತ್ಯ-ಸಂಗೀತ, ಛಂದಸ್ಸು ಮುಂತಾದ ನೆಲೆಗಟ್ಟಿನಲ್ಲಿಯೂ ಅಧ್ಯಯನ ಮಾಡ ಬಹುದಾಗಿದೆ. ಸ್ವರವಚನಗಳು ವಿವಿಧ ಲಘುಸಾಹಿತ್ಯ ಪ್ರಕಾರಗಳಲ್ಲಿ ಕಂಡು ಬರುತ್ತಿದ್ದು ಅವುಗಳನ್ನು ದೇಸಿ ಸಾಹಿತ್ಯ ಪ್ರಕಾರದ ಒಳ ಪ್ರಕಾರಗಳಾಗಿಯೂ ಅಧ್ಯಯನ ಮಾಡ ಬಹುದಾಗಿದೆ.

 ಬಿ.ನಂಜುಂಡ ಸ್ವಾಮಿಯವರು ಈಗಾಗಲೇ ಮುದ್ವೀರ ಸ್ವಾಮಿಗಳ ಹೆಸರಿನಲ್ಲಿ ರಾಜೂರ ಅವರು ಪ್ರಕಟಿಸಿರುವ ಸ್ವರವಚನಗಳಲ್ಲಿ ಧೀರ ಮುದ್ವೀರ, ಗುರು ಮುದ್ವೀರೇಶ, ಮುದ್ವೀರ ದೇಶಿಕೋತ್ತಮ ಎಂಬ ಮೂರು ಸ್ವರ ವಚನಗಳು ಹಾಗಲವಾಡಿ ಅಳಗೈಯನವರಲ್ಲಿ ದೊರೆತ ಹಸ್ತಪ್ರತಿಯ ಆಧಾರದಿಂದ ಮೂರು ಸ್ವರವಚನಗಳ ಕರ್ತೃ ಮುದ್ವೀರ ಸ್ವಾಮಿಯಲ್ಲ, ಅವರ  ಶಿಷ್ಯನದು ಎಂಬುದಾಗಿ ತಿಳಿಸಿದ್ದಾರೆ. ಮುದ್ವೀರ ಅಂಕಿತದ ಸುವ್ವಿಪದದಲ್ಲಿ  ಮುದಿಯಪ್ಪ ನಾಯಕನ ಬಗೆಗೆ ಮಾಹಿತಿ ಇದೆ. ಲೋಕವಂದಿತ ಎಲ್ಲರಿಂದ ಹೊಗಳಿಸಿ ಕೊಳ್ಳುವ ಮುನಿಮನೋವಾಸ ಮುದಿಯಪ್ಪ ನಾಯಕನಿಗೆ ಆಶಿರ್ವದಿಸಿದ ಹಾಗಲವಾಡಿಯಲ್ಲಿ ನೆಲಸಿರುವ ಮುದ್ವಿರೇಶ ನಮ್ಮನ್ನು ಸಲಹು ಎಂಬ  ವಿವರವಿದ್ದು ಮುದ್ವೀರ ಸ್ವಾಮಿ ಮತ್ತು ಮುದಿಯಪ್ಪ ನಾಯಕರ ಬಗೆಗೆ ಪ್ರಸ್ತಾಪವಿದೆ. ಮುದ್ವೀರಸ್ವಾಮಿಯು ಸೋಸಲೆ ರೇವಣಾರಾಧ್ಯರು ಸಂಸ್ಕೃತದಲ್ಲಿ ರಚಿಸಿದ ಷಟ್ಸ್ಥಲ ಬ್ರಹ್ಮದೀಪಿಕೆ ಎಂಬ ಕೃತಿಯ ಸಾರ ಸಂಗ್ರಹವನ್ನು ಕನ್ನಡದಲ್ಲಿ ಶಿವಸುಜ್ಞಾನ ದೀಪಿಕೆ ಹೆಸರಿನಲ್ಲಿ ರಚಿಸಿದ್ದಾರೆ. ಸಂಗ್ರಹಾನುವಾದ ಕೃತಿಯು 508 ವಾರ್ಧಕ ಷಟ್ಪದಿಗಳನ್ನು ಹಾಗೂ 445 ಸಂಸ್ಕೃತ ನಿದರ್ಶನ ಶ್ಲೋಕಗಳನ್ನು ಒಳಗೊಂಡಿದೆ. ಕೃತಿಯಲ್ಲಿ ನಾಲ್ಕು ಉಪದೇಶಗಳಿದ್ದು ಒಂದೊಂದು ಉಪದೇಶವನ್ನು ಶಿವಾಗಮ ಕೃತಿಗಳ ಹಾಗೆ ಜ್ಞಾನಪಾದ, ಕ್ರಿಯಾಪಾದ, ಚರ್ಯಾಪಾದ ಮತ್ತು ಯೋಗಪಾದಗಳೆಂದು ಕರೆಯಲಾಗಿದೆ.

      ಸೋಸಲೆ ರೇವಣಾರಾಧ್ಯ : ಹಾಗಲವಾಡಿ ಪಾಳೆಯಗಾರರ ಆಶ್ರಯದಲ್ಲಿದ್ದು ಉಭಯ ಭಾಷೆಗಳಲ್ಲಿ ಕೃತಿ ಹಾಗೂ ಟೀಕಾ ಸಾಹಿತ್ಯವನ್ನು ಬರೆದಿದ್ದಾನೆ.  ಈತನು ರಚಿಸಿರುವ ಮಹಿಮ್ನಸ್ತವ ಟೀಕೆಯು ಮಹಿಮ್ನಃ ಪ್ರದೀಪಿಕಾ ಎಂಬ ಪರ್ಯಾಯ ಹೆಸರನ್ನು ಹೊಂದಿದ್ದು ಈ ಕೃತಿಯಲ್ಲಿ ` ಚಿಕ್ಕನಾಯಕ ಪೊಷ್ಕರ್ತುರ್ಮುದಿನಾಯಕ ಭೂಭುಜಃ ಮುದೇ ಟೀಕಾಕಾರಿತೇಯಂ ಸೋಮಶೇಖರ ಯೋಗಿನಾ ಎಂದು ಹೇಳಿಕೊಂಡಿದ್ದಾನೆ. ಅಂದರೆ ಚಿಕ್ಕನಾಯ್ಕನಪುರದ ಅರಸನಾದ ಮುದಿನಾಯಕನ ಸಂತೋಷಾರ್ಥವಾಗಿ ಸೋಮಶೇಖರ ಯೋಗಿಯು ತನ್ನಿಂದ ಮಹಿಮ್ನಸ್ತವ ಟೀಕೆಯನ್ನು ಬರೆಸಿದ ಎಂಬುದಾಗಿ ತಿಳಿದು ಬರುತ್ತದೆ. ಈತನು ಮಹಿಮ್ನಸ್ತವ, ವೀರಶೈವ ಸಿದ್ಧಾಂತ ಶಿಖಾಮಣಿ, ಶಿವಾಧಿಕ್ಯ ಶಿಖಾಮಣಿ, ಸದ್ಗುರು ರಗಳೆ, ಅಂತಃಕರಣ ಪ್ರಕಾಶಿಕೆ ಟೀಕೆ, ಪರಮಾತ್ಮ ಪ್ರಕಾಶಿಕೆ, ಸ್ವಸ್ವರೂಪ ಪ್ರಕಾಶಿಕೆ, ಪರಮಮುಕ್ತಿ ಪ್ರದೀಪಿಕೆ, ರುದ್ರಭಾರತಗಳಿಗೆ ಟೀಕೆಯನ್ನು ಬರೆದಿದ್ದಾನೆ. ಈತನ ವೀರಶೈವ ಸಿದ್ಧಾಂತ ಶಿಖಾಮಣಿ ಟೀಕೆಗೆ ಸಿದ್ಧಾರ್ಥ  ಸಂಭೋಧಿನಿ ಎಂಬ ಪರ್ಯಾಯ ಹೆಸರಿದ್ದು ಮೋಗ ಮಲ್ಲೇಶನ ಶಿಷ್ಯನಾದ ಸಿದ್ಧ ವೃಕ್ಷೇಶ್ವರನ ಆಜ್ಞಾನುಸಾರವಾಗಿ ಬರೆದುದಾಗಿ ತಿಳಿದು ಬರುತ್ತದೆ.  ಈತನು ಉಭಯ ಭಾಷೆಗಳಲ್ಲಿ ರಚಿಸಿರುವ  ಸಾಹಿತ್ಯ ಕೃತಿಗಳನ್ನು ಸಂಸ್ಕೃತ ಸಂಕಲನ ಸಂಗ್ರಹ ಕೃತಿಗಳು, ಕನ್ನಡ ವ್ಯಾಖ್ಯಾನ ಕೃತಿಗಳು, ಮತ್ತು ಕನ್ನಡ ಸ್ವತಂತ್ರ ಕೃತಿಗಳು ಎಂದು ವರ್ಗೀಕರಿಸ ಬಹುದಾಗಿದೆ.

 ಸಂಸ್ಕೃತ ಸಂಕಲನ ಕೃತಿಗಳು: 1. ಶಾರೀರ ಪ್ರಕಾಶಿಕೆ. 2. ಅಂತಃಕರಣ ಪ್ರಕಾಶಿಕೆ.3.ಸ್ವಸ್ವರೂಪ ಪ್ರಕಾಶಿಕೆ. 4. ಪರಮಾತ್ಮ ಪ್ರಕಾಶಿಕೆ 5. ನಿಜದೀಪ್ತಿ ಪ್ರಕಾಶಿಕೆ 6. ಶಿವಜ್ಞಾನ ಪ್ರಕಾಶಿಕೆ  ಇವು ಅಪ್ರಕಟಿತ ಕೃತಿಗಳಾಗಿದ್ದು ಕರ್ನಾಟಕ ವಿ.ವಿ.ಯ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಂಡಾರದಲ್ಲಿವೆ.

7. ಷಟ್ಸ್ಥಲ ಬ್ರಹ್ಮದೀಪಿಕೆ ಕೃತಿಯು ಫ.ಗು.ಹಳಕಟ್ಟಿ ಅವರಿಂದ ಸಂಪಾದಿತಗೊಂಡು ಶಿವಾನುಭ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಇವು ಸ್ವತಂತ್ರ ಗ್ರಂಥಗಳಲ್ಲ. ವೇದ, ಆಗಮ, ಉಪನಿಷತ್ತು ಮೊದಲಾದ ಗ್ರಂಥಗಳಲ್ಲಿಯ ವೀರಶೈವ ಪರ ಇರುವ ಸಂಸ್ಕೃತ ಶ್ಲೋಕಗಳನ್ನು ಸಂಗ್ರಹಿಸಿ ಅವುಗಳಿಗೆ ನಡುವೆ ಸಂಕ್ಷಿಪ್ತ ಹಾಗೂ ಕೆಲವೆಡೆ ವಿಸ್ತೃತ ರೂಪದ ಕನ್ನಡ ವಿವರಣೆಗಳನ್ನು ಕೊಡ ಮಾಡಿದ್ದಾನೆ. ಷಟ್ಸ್ಥಲ ಬ್ರಹ್ಮದೀಪಿಕೆ ಕೃತಿಯನ್ನು ಹಾಗಲವಾಡಿ ಮುದ್ವೀರ ಸ್ವಾಮಿಯು ಶಿವತತ್ವ ಸುಜ್ಞಾನ ಪ್ರದೀಪಿಕೆ ಹೆಸರಿನಲ್ಲಿ ಕನ್ನಡದಲ್ಲಿ ರಚಿಸಿದ್ದಾನೆ. ಹಾಗಲವಾಡಿ ಅರಸು ಮನೆತನದ ಆಳ್ವಿಕೆಯ ಕಾಲದಲ್ಲಿ ಅವರ ಆಶ್ರಯದಲ್ಲಿ ಇವರಿಬ್ಬರೂ ಸಂಸ್ಕೃತ ಮತ್ತು ಕನ್ನಡದಲ್ಲಿ ರಚಿಸಿರುವುದು ಗಮನಾರ್ಹ ಸಂಗತಿಯಾಗಿದೆ.

ಕನ್ನಡ ವ್ಯಾಖ್ಯಾನ ಕೃತಿಗಳು: 1. ವೀರಶೈವ ಸಿದ್ಧಾಂತ ಶೀಕಾಮಣಿ ಟೀಕೆ 2. ಮಹಿಮ್ನಸ್ತವ ಟೀಕೆ 3.ಶ್ರೀ ರುದ್ರಭಾಷ್ಯ ಟೀಕೆ 4. ಶಿವಾಧಿಕ್ಯ ಶಿಖಾಮಣಿ ಟೀಕೆ.5. ಸದ್ಗುರು ರಗಳೆ ಟೀಕೆ 6. ಶರಣು ಬಸವ ರಗಳೆ ಟೀಕೆ 7. ಚನ್ನಬಸವ ರಗಳೆ ಟೀಕೆ. 8.ನಮಸ್ಕಾರ ಗದ್ಯ ಟೀಕೆ 9. ಅಕ್ಷರ ಮಾಲಿಕಾ ಗದ್ಯ ಟೀಕೆ 10. ಅಕ್ಷರಾಂಕ ಗದ್ಯ ಟೀಕೆ ( ಕ್ರ.ಸಂ. 5 ರಿಂದ 10 ರವರೆಗಿನ ಕೃತಿಗಳು ಪಾಲ್ಕುರಿಕೆ ಸೋಮನಾಥವು) 11. ರುದ್ರ ಭಾರತದ ಟೀಕೆ  ಈ ವ್ಯಾಖ್ಯಾನ ಕೃತಿಗಳೆಲ್ಲವೂ  ಅಪ್ರಕಟಿತ ವಾಗಿವೆ.ಕನ್ನಡ ವ್ಯಾಖ್ಯಾನ ಕೃತಿಗಳು ಪಾಲ್ಕುರಿಕೆ ಸೋಮನಾಥ, ಶಿವಯೋಗಿ ಶಿವಾಚಾರ್ಯ ರ ವೀರಶೈವಪರ ಸಂಸ್ಕೃತ ಗ್ರಂಥಗಳಿಗೆ ಬರೆದ ವ್ಯಾಖ್ಯಾನಗಳಾಗಿವೆ.

ಇತ್ತೀಚೆಗೆ ಈತನ ಟೀಕಾಸಂಸ್ಕೃತ ಮತ್ತು ಕನ್ನಡ  ಕೃತಿಗಳಲ್ಲಿ ಸದ್ಗುರು ರಗಳೆ ಟೀಕೆ, ಪರಮಾತ್ಮ ಪ್ರಕಾಶಿಕೆ ಟೀಕೆ, ಪರಮಮುಕ್ತಿ ಪ್ರದೀಪಿಕೆ ಟೀಕೆಗಳು ಎಸ್. ಶಿವಣ್ಣ ಮತ್ತು ಹೊಸಮಠದ ಬಸವಲಿಂಗ ಸ್ವಾಮಿಗಳವರಿಂದ ಸಂಪಾದನೆಗೊಂಡು ಪ್ರಕಟವಾಗಿವೆ.

 ಕನ್ನಡ ಸ್ವತಂತ್ರ ಕೃತಿಗಳು: 1. ಸ್ವರ ವಚನ ( ಪ್ರಕಟಿತ) ಅರಿವಿನ ಮಹತ್ವವನ್ನು ತಿಳಿಸುತ್ತದೆ. 2. ಯೋಗ ತಾರಾವಳಿಯು ಅನುಪಲಬ್ಧವಾಗಿದ್ದು ವೀರಶೈವ ಯೋಗ ಪ್ರಕಾರದ ವಿಚಾರಗಳನ್ನು ಒಳಗೊಂಡಿರ ಬೇಕು ಎಂಬುದನ್ನು ಕೃತಿಯ ಹೆಸರಿನಿಂದ ಊಹಿಸ ಬಹುದಾಗಿದೆ. ಈತನು ಬರೆದಿರುವ ಸ್ವರವಚನಗಳನ್ನು ಶೋಧಿಸಿ ವೀರಣ್ಣರಾಜೂರ ಅವರು ಪ್ರಕಟಿಸಿದ್ದಾರೆ. ಹಾಗಲವಾಡಿ ಅರಸರ ಆಳ್ವಿಕೆಯ ಕಾಲದಲ್ಲಿ ಸೋಸಲೆ ರೇವಣಾರಾಧ್ಯರಂತಹ ಕವಿಗಳು ಈಗಾಗಲೇ ಆಗಿಹೋಗಿದ್ದ ವಚನಕಾರರ ಹಾಗೆ ದೇಸಿ ಭಾಷೆಯಲ್ಲಿ ತಿಳಿಯಾದ ಕನ್ನಡದಲ್ಲಿಯೇ ಗಹನವಾದ ಆಧ್ಯಾತ್ಮಿಕ ವಿವರಗಳನ್ನುತಿಳಿಯ ಪಡಿಸಲು ಅವಕಾಶವಿದ್ದರೂ ಯಾಕೆ ಮಾರ್ಗ ಭಾಷೆಯನ್ನು ಬಳಸಿದ ಎಂಬುದು ಯೋಚಿಸತಕ್ಕ ಸಂಗತಿಯಾಗಿದೆ. ಬಹುಶಃ ವೀರಶೈವರೂ ವೈದಿಕ ಪಂಡಿತರ ಹಾಗೆ ಸಂಸ್ಕೃತದಲ್ಲಿ ಬರೆಯುವ ಅರ್ಹತೆಯನ್ನು ಪಡೆದಿದ್ದರು ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿ ರೇವಣಾರಾಧ್ಯನು ಸಂಸ್ಕೃತದಲ್ಲಿ ಬರೆದಿರ ಬೇಕು ಎಂದೆನಿಸುತ್ತದೆ. ಸೋಸಲೆ ರೇವಣಾರಾಧ್ಯನು ಪಾಲ್ಕುರಿಕೆ ಸೋಮನಾಥನ ಆರು ಸಂಸ್ಕೃತ ಕೃತಿಗಳಿಗೆ ಟೀಕೆಯನ್ನು ಬರೆದಿರುವುದನ್ನು ನೋಡಿದರೆ ಹಾಗಲವಾಡಿ ಪರಿಸರದ ಪಾಲ್ಕುರಿಕೆಯೇ  ಸೋಮನಾಥನ ನೆಲೆ ಎಂಬ ಸಂಶೋಧನಾ ಪ್ರಮೇಯಕ್ಕೆ ಪುಷ್ಠಿಯನ್ನೊದಗಿಸುತ್ತದೆ.

ಹಾಗಲವಾಡಿ ಸಿದ್ಧರಾಮಪ್ಪ ನಾಯಕ : ಹಾಗಲವಾಡಿ ಪಾಳೆಯಗಾರರಲ್ಲಿ ಒಬ್ಬನಾಗಿದ್ದು ಕ್ರಿ.ಶ. 1671 ರಿಂದ171 ರವರೆಗೆ ಆಳಿದ ರಾಮಪ್ಪ ನಾಯಕನೇ ಈತನೆಂದು ಸಂಶೋಧಕರ ಅಭಿಪ್ರಾಯ. ಈ ಗ್ರಂಥದ ಆದಿಯಲ್ಲಿ `ಹಾಗಲವಾಡಿ ಸಿದ್ಧರಾಮಪ್ಪ ನಾಯಕರು ನಿರೂಪಿಸಿದ ಮಹಾನುಭಾವ ಪ್ರಕಾಶಿಕೆ' ಎಂದಿದೆ. ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ ಸಂಪಾದಕರು ಕೃತಿಯ ಆದಿ ಅಂತ್ಯವನ್ನು ಪರಿಶೀಲಿಸಿ ಹಾಗಲವಾಡಿ ವೀರಶೈವ ರಾಜಮನೆತನಕ್ಕೆ ಸೇರಿದ ಸಿದ್ಧರಾಮಪ್ಪ ನಾಯಕನಿಂದ ಈ ಕೃತಿ ರಚಿಸಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  ಈತನು ಗದ್ಯರೂಪದ `ಮಹಾನುಭಾವ ಪ್ರಕಾಶಿಕೆ' ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯು ಎಂ.ಎಸ್. ಮಹಾಂತಯ್ಯನವರಿಂದ ಸಂಪಾದನೆಗೊಂಡು 1934ರಲ್ಲಿ ಪ್ರಕಟಗೊಂಡಿದೆ.

ಹಾಗಲವಾಡಿ ಮುದ್ವೀರಪ್ಪ ನಾಯಕನ ಮಗಳು : ಹೆಸರು ಲಭ್ಯವಿಲ್ಲದ ಈಕೆಯ ಕಾಲ ಕ್ರಿ.ಶ. ಸು. 1700. ಈಕೆಯ ಸ್ವರವಚನಗಳನ್ನು `ಚೆನ್ನಸಂಗಮೇಶ್ವರ ಲಿಂಗವೇ' ಅಂಕಿತದಲ್ಲಿ ರಚಿಸಿದ್ದಾಳೆ. ಈ ಹಾಡುಗಳು ಶಿವಾನುಭವ ಸಂಚಿಕೆಯ 9ನೇ ಸಂಪುಟ, ಸಂಚಿಕೆ 5, ಪು. 37ರಲ್ಲಿ ಪ್ರಕಟವಾಗಿವೆ. ಜೊತೆಗೆ ಗುರು ಧೀರಹುಚ್ಚಾರ್ಯ ಅಂಕಿತದ ಸ್ವರ ವಚನವೊಂದು ದೊರೆತಿದ್ದು ಅದನ್ನು ಮುದ್ವೀರಪ್ಪನ ಮಗಳು ರಚಿಸಿದ್ದಾಳೆಂದು ನಂಜುಂಡಸ್ವಾಮಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಚೆನ್ನವೀರ : ಈತನ ಕಾಲ ಸು. ಕ್ರಿ.ಶ. 1850. ಇವರು ಹಾಗಲವಾಡಿ ಮುದ್ವೀರ ಸ್ವಾಮಿಗಳ ಜೀವನ ಚರಿತ್ರೆಯ ಚಿತ್ರಣವುಳ್ಳ ಮುದ್ವೀರ ತಾರಾವಳಿಯನ್ನು ರಚಿಸಿದ್ದಾರೆ. ಈ ತಾರಾವಳಿಯು ವೀರಣ್ಣ ರಾಜೂರ ಸಂಪಾದಿಸಿ ಪ್ರಕಟಿಸಿರುವ ಕನ್ನಡ ತಾರಾವಳಿ ಸಂಪುಟದಲ್ಲಿ ಪ್ರಕಟವಾಗಿದೆ. ಇವನು ಸ್ವರ ವಚನಗಳನ್ನು  ರಚಿಸಿದ್ದು ಮೂರು ಸ್ವರ ವಚನಗಳು ಲಭ್ಯವಿದ್ದು ಪ್ರಕಟಗೊಂಡಿರುವುದಿಲ್ಲ.

  ಇಮ್ಮಡಿ ಮುದಿಯಪ್ಪನಾಯಕನು ವೆಂಗನಸುಧಿ ಎಂಬ ವಿದ್ವಾಂಸನಿಂದ ಷಡಕ್ಷರದೇವನ ಕವಿಕರ್ಣರಸಾಯನ ಮಹಾಕಾವ್ಯಕ್ಕೆ ಸುದೋದಯ ಎಂಬ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಬರೆಸಿರುವುದಾಗಿ  ಎಂ.ಎಸ್.ಬಸವರಾಜಯ್ಯ ಅವರು ಕವಿಕರ್ಣರಸಾಯನದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಆಸಕ್ತದಾಯಕ ಸಂಗತಿ ಯೆಂದರೆ ವೆಂಗನಸುಧಿಯು ಈ ವ್ಯಾಖ್ಯಾನ ಕೃತಿಯಲ್ಲಿ ಇಮ್ಮಡಿ ಮುದಿಯಪ್ಪ ನಾಯಕನ ಆಡಳಿತವನ್ನು` ದಾನಾದಿ ಸದ್ಗುಣ ಸಂಪತ್ತಿನಿಂದ ಮಂಡಿತನಾಗಿ ದುಷ್ಟ ಶಿಕ್ಷಕನಾಗಿ ಆಳ್ವಿಕೆ ಮಾಡುತ್ತಿದ್ದ ಕಾರಣ ಮುದಿಯ ಮಹೀಪಾಲನ ಕೀರ್ತಿಯು ದಿಗಂತ ವ್ಯಾಪ್ತಿಯಾಗಿದ್ದಿತು. ಪರಸ್ಪರ ವಿರುದ್ಧಗಳಾದ ವೀರಗುಣ ಹಾಗೂ ಶಾಂತಿಗುಣಗಳನ್ನು ಸಮನ್ವಯ ಮಾಡಿಕೊಂಡು ಮಹೀಪಾಲನು ಸ್ವಭುಜಬಲ ಪರಾಕ್ರಮವೆಂಬ ಪ್ರಖರ ಸೂರ್ಯನ ತೇಜಸ್ಸಿನಿಂದಲೂ ಶ್ರೀ ಮದ್ವೀರ ಮಹಾಗುರುವಿನ ಅನುಗ್ರಹದಿಂದುಂಟಾದ ತನ್ನ ಆತ್ಮ ತೇಜಸ್ಸಿನಿಂದಲೂ ಬಾಹ್ಯಾಭ್ಯಂತರ ಶತ್ರುಗಳೆನಿಸಿದ  ದುರ್ಜಯ ವೈರಿ ವರ್ಗವನ್ನೂ, ಅಜೇಯ ಕಾಮಾದ್ಯರಿಷಡ್ವರ್ಗವನ್ನೂ ಜಯಿಸಿ ನಿರಾತಂಕವಾಗಿ ರಾಜ್ಯಭಾರ ಮಾಡುತ್ತಿದ್ದನು ಎಂಬುದಾಗಿ ವಿವರಿಸಿದ್ದಾನೆ. ಒಟ್ಟಾರೆ ಹಾಗಲವಾಡಿ ಅರಸರ ಆಳ್ವಿಕೆಯ ಕಾಲವು ಕನ್ನಡ ಸಾಹಿತ್ಯ ಪರಂಪರೆಯ ಕಾಲಘಟ್ಟದಲ್ಲಿನ ದೇಸಿಯುಗವೆಂದು ಕರೆಯಲ್ಪಟ್ಟಿದ್ದರೂ ಜನತೆಗೆ ಹತ್ತಿರದ ಸಾಹಿತ್ಯ ನಿರ್ಮಿತವಾಗದೆ ಪಾಂಡಿತ್ಯ ಭೂಯಿಷ್ಠತೆಯನ್ನು ಹೊಂದಿದೆ. ಅದರಲ್ಲೂ  ವೀರಶೈವ ಧಾರ್ಮಿಕ ಸಾಹಿತ್ಯ ಹಾಗೂ ಟೀಕಾ ವ್ಯಾಖ್ಯಾನ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಿರುವುದನ್ನು ಗುರುತಿಸ ಬಹುದಾಗಿದೆ. ಈ ಅರಸುಮನೆತನದ ಕಾಲದಲ್ಲಿ ಸ್ತ್ರೀಯರು ಸಹ ಕ್ವಚಿತ್ತಾಗಿ ಸಾಹಿತ್ಯಾಭಿವ್ಯಕ್ತಿಯಲ್ಲಿ ತೊಡಗಿಕೊಂಡಿರುವುದು.ಇವರ ಕಾಲ ಸಾಹಿತ್ಯಸೃಷ್ಟಿಯಲ್ಲಿ ಚಾರಿತ್ರಿಕ -ಸಾಂಸ್ಕೃತಿಕ ಸಂಗತಿಗಳಿಗಿಂತ ಧಾರ್ಮಿಕ ತತ್ವ ನಿರೂಪಣೆಯ ಸಾಹಿತ್ಯವೇ ಮೇಲುಗೈ ಪಡೆದಿದೆ.

 ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಸಂಬಂಧಿಸಿದ ಹಸ್ತಪ್ರತಿ ಪುಷ್ಪಿಕೆಗಳು: ಹಸ್ತಪ್ರತಿ ಸಂಪತ್ತಿನ ಬಗೆಗೆ ಹೇಳುವಾಗ ಮಹಾನಾಡು ಪ್ರಭುಗಳ ಶಾರದಾ ಭಂಡಾರ ಹಾಗೂ ಅದರಲ್ಲಿದ್ದ ಹಸ್ತಪ್ರತಿಗಳ ಪುಷ್ಟಿಕೆಗಳು ಒದಗಿಸುವ ಮಾಹಿತಿಗಳ ಮಹತ್ವದ ಬಗೆಗೆ ಪ್ರಸ್ತಾಪಿಸಲೇ ಬೇಕಾಗಿದೆ. 17ನೇ ಶತಮಾನದಲ್ಲಿ ಬಿಜ್ಜಾವರದ ಮಹಾನಾಡುಪ್ರಭುಗಳು ಅದರಲ್ಲಿಯು ಇಮ್ಮಡಿ ಚಿಕ್ಕಪ್ಪಗೌಡರ ಆಳ್ವಿಕೆಯ ಕಾಲದಲ್ಲಿ ತಮ್ಮ ಅರಮನೆಯಲ್ಲಿ ಶಾರದಾ ಭಂಡಾರವನ್ನು ಹೊಂದಿದ್ದರು ಎಂಬ ಸಂಗತಿ ಐತಿಹಾಸಿಕ ಮಹತ್ವ ಪಡೆದಿದೆ.  ತಮ್ಮ ಅರಮನೆಯ ಶಾರದಾ ಭಂಡಾರಕ್ಕೆ ಬೇರೆಯವರಿಂದ ಪ್ರತಿಮಾಡಿಸಿ ಸೇರಿಸುತ್ತಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಮಹಾನಾಡು ಸಂಸ್ಥಾನದ ಶಾರದ ಭಂಡಾರದಲ್ಲಿ ಹಸ್ತಪ್ರತಿಗಳ ಬಗೆಗೆ ಸಂಬಂಧಿಸಿದ ಹಾಗೆ ಕ್ರಿ.ಶ.1601ರಿಂದ1621 ಕಾಲಾವಧಿಯಲ್ಲಿ 7 ಹಸ್ತಪ್ರತಿಗಳ ಪುಷ್ಟಿಕೆಗಳು ಲಭ್ಯವಿವೆ. ಸಾನಂದ ಪುರಾಣ, ಭರತೇಶ ಚರಿತೆ, ಪಂಚಪ್ರಕಾರ ಗದ್ಯ, ಪಾರಮಾರ್ಥಿಕ ಪುಸ್ತಕ ಸ್ತೋತ್ರಭಾಷ್ಯಗಳ ಪುಸ್ತಕ, ಆರಾಧ್ಯ ಚಾರಿತ್ರೆ, ಜನವಶ್ಯ ಕೃತಿಗಳನ್ನು ಬರೆಸಿ ಶಾರದ ಭಂಡಾರಕ್ಕೆ ಸೇರಿಸಿದ್ದರ ಬಗೆಗೆ ಪುಷ್ಪಿಕೆಗಳಿಂದ ತಿಳಿದು ಬರುತ್ತದೆ. 1620ರಲ್ಲಿ ರಚಿತವಾದ ಸ್ತೋತ್ರಭಾಷ್ಯಗಳ ಪ್ರತಿಯ ಪುಷ್ಪಿಕೆಯಲ್ಲಿ ಇಮ್ಮಡಿ ಚಿಕ್ಕಪ್ಪಗೌಡರ ಶಾರದಾ ಭಂಡಾರದ ಉಲ್ಲೇಖವಿದೆ. ಸ್ಥಳೀಯ ಅರಸರೊಬ್ಬರ ಆಳ್ವಿಕೆಯ ಕಾಲದಲ್ಲಿ ಸರಸ್ವತಿ ಭಂಡಾರದ ಸ್ಥಾಪನೆ ಹಾಗೂ ಅದರ ಸಲುವಾಗಿ ವಿಶೇಷ ಆಸಕ್ತಿ ವಹಿಸಿ ಕೆಲವು ಪ್ರಮುಖ ಕೃತಿಗಳನ್ನು ಪ್ರತಿಮಾಡಿಸಿ ಶಾರದಾ ಭಂಡಾರಕ್ಕೆ ಸೇರಿಸಿದ್ದು ಮಹತ್ತರ ಸಂಗತಿಯಾಗಿದೆ. ಹಸ್ತಪ್ರತಿ ಪುಷ್ಪಿಕೆಗಳ ವಿವರ ಇಂತಿದೆ.

1.ರೌದ್ರಿ ಸಂವತ್ಸರದ ಶ್ರಾವಣ ಶುದ್ಧ 11ಲ್ಲು ಶ್ರೀಮನ್ಮಹಾನಾಡಪ್ರಭು ಬಿಜ್ಜವರದ ಇಮ್ಮಡಿಚಿಕ್ಕಪ್ಪಗೌಡರಯ್ಯನವರ ಶಾರದಾಭಂಡಾರಕ್ಕೆ ಅನುಭವದ ಸೊಂಪೆದೇವರ ಮಕ್ಕಳು ವೀರಸೋಂಪದೇವರು ಬರೆದ ಸ್ತೋತ್ರ ಭಾಷ್ಯಗಳ ಪುಸ್ತಕ

2 ಇದು ಪರಮೇಶ್ವರಾಂಘ್ರಿಸರಸೀರುಹ ಷಟ್ಪದ ಶಾತ್ರವರ್ಗರ್ವದ ಪರ್ವತ ಶತಹೃದ ಕಾಮಿನೀಜನ ಲಸತ್ಕುಸುಮಾಸ್ತ್ರೀ ಸತ್ಕೃಪಾಕಾರ ಬುಧಕಲ್ಪ ಮಹೀರುಹ ಸದ್ಗುರುಲಿಂಗಜಂಗಮ ಸೇವಾ ದುರಂಧರ ವೀರಶೈವ ನಿಷ್ಟಾ ಸಮವತರ್ತಿ ತೋಟ ಭೂಪಾಲ ಗರ್ಭಾಬ್ಧಿ ಪೂರ್ಣ ಹಿಮಕರ ಸಂಗಮಾಂಬಾ ತನೂಜ ಪ್ರಭುಲಲಾಮಲಾಮ ಯಿಂಮಡಿ ತೋಟ ಭೂಪಾಲಕಂ ಬರಯಿಸಿದ ಮದನ ತಿಲಕದ ಪುಸ್ತಕ ಸಿದ್ಧಾರ್ತಿ ಸಂವತ್ಸರದ ಕಾರ್ತಿಕ ಶು.5 ಬುಧವಾರದಲೂ ತ್ತೋಂಟದೈಯ್ಯ ನಾಯಕರವರಿಗೆ ಚಿಟ್ಟನಹಳ್ಳಿಯ ಸೇನಭಾಗ ಲಿಂಗಪ್ಪನು ಬರೆದು ಕೊಟ್ಟ ಮದನತಿಲಕದ ಪುಸ್ತಕ

3. ಪ್ಲವಸಂವತ್ಸರ ಮಾರ್ಗಶಿರ ಬ.10ರಲ್ಲು ಶ್ರೀಮನ್ಮಹಾನಾಡ ಪ್ರಭು ಬಿಜ್ಜಾವರದ ಇಮ್ಮಡಿ ಚಿಕ್ಕಪ್ಪಗೌಡರು ಬರೆಸಿದ ಸಾನಂದಪುರಾಣಂ. ಇದನು ಬರೆದಾತನು ಯಜ್ಞನಾರಾಯಣ ದೀಕ್ಷಿತರ ಮಗ ವಿಶ್ವನಾಥನು. ಇದ ಬರೆಸಿದ ಇಮ್ಮಡಿ ಚಿಕ್ಕಪ್ಪ ಗೌಡರಿಗೆ ಅಷ್ಟ್ಯಶ್ವರ್ಯವೂ ಈಶ್ವರ ಕೃಪಾದೃಷ್ಟಿಯೂ ಅಚಂದ್ರಾರ್ಕಮಸ್ತು.

   ಹಸ್ತಪ್ರತಿಗಳಲ್ಲಿಯ ಕೆಲವು ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಕವಿಗಳ ಹೆಸರನ್ನು ಕಾವ್ಯಗಳ ಕಾಲವನ್ನು ಅರ್ಥೈಸಲು ಸಹಕಾರಿಯಾಗಿವೆ.ಈ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ ಸಂಗತಿಗಳು ಸಾಹಿತ್ಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸಿವೆ.

    ಪ್ಲವ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು   ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.167ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿದ್ದನ್ನು ತಿಳಿಸುತ್ತದೆ. ಪಾರಮಾರ್ಥಿಕದ ಪುಸ್ತಕ ಸರ್ವಜ್ಞನ ವಚನ ಸಂಕಲನ ವಾಗಿದ್ದು ಇದರಲ್ಲಿ 77ಪದ್ಧತಿಗಳಿದ್ದು 937 ತ್ರಿಪದಿಗಳಿವೆ, ಹಸ್ತಪ್ರತಿ ತಜ್ಞರಾಗಿದ್ದ ದಿವಂಗತ ಎಸ್.ಶಿವಣ್ಣನವರ ಪ್ರಕಾರ ಈ ಪುಷ್ಪಿಕೆಯಲ್ಲಿಯ ಉಲ್ಲೇಖವು ಕಾಲೋಲ್ಲೇಖವಿರುವ ಸರ್ವಜ್ಞನ ಕೃತಿಯ ಪ್ರತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕೃತಿಯಾಗಿದ್ದು, ಈ ಪ್ರತಿಯಲ್ಲಿಯ ಕಾಲದ ಉಲ್ಲೇಖವು ಸರ್ವಜ್ಞನ ಕಾಲನಿರ್ಣಯಕ್ಕೆ ಒಂದು ಮೈಲುಗಲ್ಲಾಗಿದೆ.

      ಕ್ರಿ.ಶ.1603ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರ ವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ. 1603ರಲ್ಲಿ ಗೂಳೂರು ಸಿದ್ಧವೀರೇಶ್ವರ ದೇವರು ಜೀವಿಸಿದ್ದರು ಎಂಬುದು ತಿಳಿದುಬರುತ್ತವೆ.

  ಮಹಾನಾಡ ಪ್ರಭುಗಳ ಒಡ್ಡೋಲಗದಲ್ಲಿ ಕವಿ-ಗಮಕಿ-ವಾದಿ-ವಾಗ್ಮಿಗಳ ಕೂಟವಿದ್ದುದನ್ನು  ಹಾಗೂ  ಕುಮಾರ ರಾಮನ ಸಾಂಗತ್ಯದ ಓಲೆಕಟ್ಟೊಂದನ್ನು ತಂದು ರಾಜನ ಆಸ್ಥಾನದಲ್ಲಿ ವಾಚಿಸಿದ ಸಂದರ್ಭವೊದನ್ನು  ಇಮ್ಮಡಿ ಚಿಕ್ಕಭೂಪಾಲನ ಕೃತಿಯು ಪ್ರಸ್ತಾಪಿಸುವುದರಿಂದ ಈ ಅರಸರುಗಳ ಸಾಹಿತ್ಯ ಪ್ರೇಮ ಎಂತಹದ್ದು ಎಂಬುದು ಮನದಟ್ಟಾಗುತ್ತದೆ.

 ಹಾಗಲವಾಡಿ ಪಾಳೆಯಗಾರರಲ್ಲಿ ಕೆಲವು ಪಾಳೆಯಗಾರರ ಪ್ರಸ್ತಾಪ ಹಸ್ತಪ್ರತಿಗಳ ಪುಷ್ಪಿಕೆಯಲ್ಲಿ ಸಿಗುತ್ತವೆ.

ಶ್ರೀ ರುಧಿರೋದ್ಗಾರಿ ಸಂವತ್ಸರದ ಚೈತ್ರ ಶುದ್ಧ 6 ಬುಧವಾರದ ದಿವಶಕ್ಕೆ ಸಂದ ಸಾಲಿವಾಹನ ಶಖವರುಷ 1545 ಚಿಕನಾಯಕನಹಳ್ಳಿಯ ಶಿವಭಕ್ತ ಮುದಿಯಪ್ಪನಾಯಕರ ಶಿವಲಿಂಗದೇವರು ಬರೆದ ಆರಾಧ್ಯ ಚಾರಿತ್ರ ಶಿವಮಸ್ತು. ( ಬೆ.ವಿ.ವಿ. .,ಕೇಂ.ಕೆ.1520.) ಅಮಿಗಿದೇವಯ್ಯನವರ ಚರಿತ್ರೆ ಪುಸ್ತಕವನ್ನು ದೇವರಾಜಶ್ರೀ ಹಾಗಲವಾಡಿ ಸೀಮೆ ಕೋಟೇ ಸ್ಥಳದ ಕುರುವಿನ ಮುದ್ಧಪುರದ ಲಿಂಗಣ್ಣನ ಮಗ ಭೈರಣ್ಣನಿಗೆ ವೋದಿಕೊಳ್ಳುವುದಕ್ಕೆ ಬರದು ಕೊಟ್ಟ ಪುಸ್ತಕಕ್ಕೆ ಶುಭಮಸ್ತು. ಸಿದ್ಧರಾಮೈನವರ ಸಾಂಗತ್ಯ, ಅಮಿಗಿ ದೇವೈಯ್ಯನವರ ಕಾವ್ಯ ಸಮಾಪ್ತ.

  ಸ್ವಸ್ತಿಶ್ರೀ ವಿಜಯಾಭ್ಯುದಯ ಸಾಲಿವಾಹನ ಶಕ ವರುಷಂಗಳು.. ನೆಯ ಕ್ರೋಧ ಸಂವತ್ಸರ ಭಾದ್ರಪದ ಶುದ್ಧ 12ರಲ್ಲು ಮುದಿಯಪ್ಪ ನಾಯಕರ ಬಂಟನಾದಂಥ ಗಡೆಯ ಪಾಪಯ್ಯನ ಸುಪುತ್ರ ಕೃಷ್ಣಯ್ಯನು ಬರೆದು ಸಮರ್ಪಸಿದ ಪುಣ್ಯ ಪುರಾತನರ ಶಾಸ್ತ್ರ ಪುಸ್ತಕ, ಹಂಪೆಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಮಂಗಳಾಮಹಾ ಶ್ರೀ ಶ್ರೀ ಶ್ರೀ. ಈ ಪುಷ್ಪಿಕೆಯಲ್ಲಿ ಇಮ್ಮಡಿ ಮುದಿಯಪ್ಪ ನಾಯಕನು ಕೃಷ್ಣಯ್ಯ ಎಂಬ ಪ್ರತಿಕಾರನಿಂದ ಪುರಾತನರನ್ನು ಕುರಿತ ಕೃತಿಯನ್ನು ಪ್ರತಿ ಮಾಡಿಸಿದ್ದಾನೆಕುತೂಹಲಕರ ಸಂಗತಿ ಎಂದರೆ ಇಲ್ಲಿಯ ಹೇಳಿಕೆಯಲ್ಲಿಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಎಂಬುದು ಹರಿಹರ ಕವಿಯು ರಚಿಸಿರುವ ರಗಳೆಗಳ ಸಂಖ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ.

    ಒಟ್ಟಾರೆಯಾಗಿ ನಾಡಿನ ಸ್ಥಳೀಯ ಚರಿತ್ರೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ  ಹಾಗಲವಾಡಿ ನಾಯಕರು  ಮತ್ತು ಮಧುಗಿರಿ ಮಹಾನಾಡ ಪ್ರಭುಗಳು ತಮ್ಮ ರಾಜಕೀಯ ಏರಿಳಿತಗಳ ನಡುವೆಯೂ ನಾಡಿನ ಸಾಹಿತ್ಯ ರಚನೆಗೆ ಪ್ರೇರಕರಾಗಿರುವುದರ ಜೊತೆಗೆ ಕೆಲವೆಡೆ ಸ್ವತಃ ತಾವೇ ಉಭಯಭಾಷೆಗಳಲ್ಲಿ ವೈವಿಧ್ಯಮಯ ಕೃತಿಗಳ ಕರ್ತೃಗಳಾಗಿರುವುದು ನಾಡಿನ ಸ್ಥಳೀಯ ಅರಸುಮನೆತನಗಳ ಚರಿತ್ರೆಯಲ್ಲಿ ಗಮನಿಸತಕ್ಕ ಸಂಗತಿಯಾಗಿದೆ.

ಪರಾಮರ್ಶನ ಗ್ರಂಥಗಳು

    .ಕವಿ ಮಲ್ಲಿಕಾರ್ಜುನಕೃತ ಮಹಾನಾಡ ಪ್ರಭು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ( ಸಂ:ಎಂ.ಎಂ   ಕಲಬುರ್ಗಿಮತ್ತು ಬಿ.ಆರ್.ಹಿರೇಮಠ) ಶ್ರೀ ಮುರುಘಾಮಠ, ಧಾರವಾಡ, ೧೯೭೭

 . ಮಹಾನಾಡ ಪ್ರಭುಗಳು ಸಂ: ಕೆ.ಆರ್.ಬಸವರಾಜು, ಎಸ್.ಪರಮಶಿವಮೂರ್ತಿ,

    ನೊಳಂಬ ವೀರಶೈವ ಸಂಘ, ಬೆಂಗಳೂರು, ೧೯೯೫

    3. ಡಿ.ಎನ್. ಯೋಗೀಶ್ವರಪ್ಪ: ಹಾಗಲವಾಡಿ ನಾಯಕರು

      ಮುರುಘರಾಜೇಂದ್ರ ಗ್ರಂಥಮಾಲೆ, ಚಿತ್ರದುರ್ಗ, ದ್ವಿ.ಮು. 2016

    . ರಾಮೇಗೌಡ, ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು

         ಚಿತ್ರಕೂಟ, ಮೈಸೂರು, ೧೯೯೨

    5. ಎಸ್.ಶಿವಣ್ಣ: ಬಿಡುಮುತ್ತುಗಳು, ಕನ್ನಡ ಸಾಹಿತ್ಯ ಪರಿಷತ್

           ಬೆಂಗಳೂರು  2004

    6. ಸಿ. ನಾಗಭೂಷಣ, ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು

       ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦

7. ಸಿ. ನಾಗಭೂಷಣ, ಸಾಹಿತ್ಯ-ಸಂಸ್ಕೃತಿ ಹುಡುಕಾಟ,ಅಮೃತವರ್ಷಿಣಿ ಪ್ರಕಾಶನ, ರಾಯಚೂರು, ೨೦೦೨                          ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ, ಸಿ.ವಿ.ಜಿ. ಪಬ್ಲಿಕೇಶನ್, ಬೆಂಗಳೂರು,2006

        8.    ಎಸ್. ವಿದ್ಯಾಶಂಕರ: ವೀರಶೈವ ಸಾಹಿತ್ಯ ಚರಿತ್ರೆ, ಸಂ.4

              ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು 2015

 

                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...