ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಆಗಸ್ಟ್ 17, 2025

                                  ಹಂಪೆಯ ವಿರೂಪಾಕ್ಷ : ಕಾಲಾನುಕ್ರಮಣಿಕೆಯ ಬೆಳವಣಿಗೆ

(ಕನ್ನಡ ಸಾಹಿತ್ಯ ಹಾಗೂ ಶಾಸನಗಳನ್ನು ಅನುಲಕ್ಷಿಸಿ)

                                       ಡಾ.ಸಿ.ನಾಗಭೂಷಣ 

   ಹಂಪೆಯನ್ನೊಳಗೊಂಡಂತೆ ಕನ್ನಡ ನಾಡಿನಲ್ಲಿ ವಿರೂಪಾಕ್ಷನನ್ನು ಆರಾಧಿಸುವ ಪದ್ಧತಿ ಯಾವಾಗ ಪ್ರಾರಂಭವಾಯಿತು ಎಂಬುದು ನಿಖರವಾಗಿ ತಿಳಿಯದಿದ್ದರೂ ಪೂರ್ವದಿಂದಲೂ ವಿರೂಪಾಕ್ಷನ ಆರಾಧನೆ ಕಂಡುಬರುತ್ತದೆ. ಹತ್ತನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಶಿವನನ್ನು ವಿರೂಪಾಕ್ಷನೆಂದು ಕರೆದು ಆರಾಧಿಸುವ ಪದ್ಧತಿ ಕನ್ನಡ ನಾಡಿನಲ್ಲಿ ಇತ್ತು ಎಂಬುದು ಸಾಹಿತ್ಯ ಹಾಗೂ ಶಾಸನಗಳಲ್ಲಿಯ ಉಲ್ಲೇಖದಿಂದತಿಳಿದುಬರುತ್ತದೆ. ವಿರೂಪಾಕ್ಷ ಎಂಬುದು ಸ್ಥಳದೈವ ಶಿವನ ಹೆಸರು. ವರ್ತುಲ ಸ್ತಂಭಾಕೃತಿಯ ಲಿಂಗರೂಪದಲ್ಲಿ ನೆಲೆನಿಂತಿದೆ. ಈ ಲಿಂಗವು ಮಾನವ ನಿರ್ಮಿಸಿದುದಲ್ಲ. ಸ್ವಯಂಭುಲಿಂಗ ಎಂಬುದು ಪರಂಪರಾಗತ ನಂಬಿಕೆ. ದೇವತೆಗಳು ಹಾಗೂ ವಿಗ್ರಹಗಳು ಉದ್ಭವವಾದವು ಎಂಬ ಕಲ್ಪನೆ ಅಥವಾ ನಂಬಿಕೆ ಇದ್ದಾಗ ಅವಿಗ್ರಹಗಳು ಸ್ವಯಂಭು ಎನ್ನಿಸಿಕೊಳ್ಳುತ್ತವೆ. ಶಿವಸ್ವರೂಪಿಯಾದ ಲಿಂಗವು ಸ್ವಯಂಭು ಆಗುವ ಅವಕಾಶ ಹೆಚ್ಚಾಗಿರುವುದರಿಂದ ಅಂತಹ ಲಿಂಗಗಳು ಪ್ರತಿಷ್ಠಿತವಾಗಿರುವ ದೇವಾಲಯಗಳು ಸ್ವಯಂಭು ಸ್ಥಾನಗಳೆಂದು ಪರಿಗಣಿತವಾಗಿವೆ. ವಿರೂಪಾಕ್ಷ : ವಿರೂಪ + ಅಕ್ಷಿ ಅಂದರೆ ವಿಕಾರವಾದ ಕಣ್ಣುಳ್ಳವನು ಎಂದೂ, ಈಶ್ವರ, ಮುಕ್ಕಣ್ಣ, ತ್ರಿಯಂಬಕ ಇತ್ಯಾದಿ ಸಮಾನಾರ್ಥಕ ಪದಗಳು ಅನ್ವಯಿತವಾಗಿವೆ. ಸಾಮಾನ್ಯ ಅರ್ಥದಲ್ಲಿ ತ್ರಿನೇತ್ರವುಳ್ಳವನೂ ಎಂಬ ಅರ್ಥವನ್ನು ಪಡೆದಿದೆ. ಹರನ ರೂಪಾಂತರಗಳಲ್ಲಿ `ವಿರೂಪಾಕ್ಷ' ಎನ್ನುವುದು ಒಂದು ಎಂಬುದು ಜಗನ್ನಾಥ ದಾಸರ ಕೀರ್ತನೆಯಿಂದ ತಿಳಿದುಬರುತ್ತದೆ. ವಿರೂಪಾಕ್ಷನೆಂದರೆ ತ್ರಿಪುರಾರಿ, ತ್ರಿನೇತ್ರವುಳ್ಳವನು. ಹಂಪೆಯ ವಿರೂಪಾಕ್ಷನ ರೂಪಗಳ ಬಗೆಗೆ ಕನ್ನಡ ಸಾಹಿತ್ಯ ಕೃತಿಗಳಲ್ಲಿ ವರ್ಣನೆ ಇದೆ. ಬಸವಣ್ಣನವರು ತಮ್ಮ ವಚನದಲ್ಲಿ ನಾಲ್ಕು ಯುಗಗಳಲ್ಲಿ ಶಿವನು ಒಂದೊಂದೆಡೆಯಿದ್ದ ಬಗೆಗೆ ಹೇಳುತ್ತ `ಕೃತಯುಗದಲ್ಲಿ ಕೇದಾರ ಎಂಬ ಮೂಲ ಸ್ಥಾನ',1 ತ್ರೇತಾಯುಗದಲ್ಲಿ ವಾರಣಾಸಿ ಮೂಲಸ್ಥಾನ, ದ್ವಾಪರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ, ಕಲಿಯುಗದಲ್ಲಿ ಪರ್ವತ ಸ್ಥಾನ ಎಂದಿದ್ದು ನಾಲ್ಕು ಕಾಲಗಳಲ್ಲಿ ಶಿವನು ಒಂದೊಂದು ಪೀಠ ಸ್ಥಾನದಲ್ಲಿದ್ದ ಅಂದರೆ ಕೇದಾರ, ಕಾಶಿ, ಹಂಪೆ, ಶ್ರೀಶೈಲ ಪೀಠದಲ್ಲಿದ್ದ ಎಂಬುದಾಗಿ ತಿಳಿದುಬರುತ್ತದೆ. ದ್ವಾಪರಯುಗದಲ್ಲಿಯೇ ವಿರೂಪಾಕ್ಷ ಸ್ಥಾನ ಇತ್ತು ಎಂದು ವಿರೂಪಾಕ್ಷನ ಕಲ್ಪನೆಯನ್ನು ಬಹಳ ಹಿಂದಕ್ಕೆ ಕೊಂಡೊಯ್ದಿರುವುದನ್ನು ಈ ವಚನ ತಿಳಿಸುತ್ತದೆ. ಹರಿಹರನು ತನ್ನ ಕೃತಿಗಳಲ್ಲಿ ವಿರೂಪಾಕ್ಷನ ಕಲ್ಪನೆಯನ್ನು ಕುರಿತು ಸುದೀರ್ಘವಾಗಿ ವರ್ಣಿಸಿದ್ದಾನೆ.

ಹಂಪೆಯರಸನ ರಗಳೆಯಲ್ಲಿ ವಿರೂಪಾಕ್ಷನನ್ನು ಕುರಿತು 

ನಿತ್ಯ ಶ್ರೀಕಂಠ ಕಂಠಾಭರಣ ಕಿರಣ ಸಂಘಾತ ಸಂಬೂತ ನೂತ್ನಾ

ದಿತ್ಯ ವ್ರಾತಾಂಗ ಗಂಗಾಧರ ಪುರಹರ ಭಾಳಾಕ್ಷ ಚಂಚದ್ಭವಾನೀ

ಪ್ರತ್ಯಕ್ಷ ಸ್ವಾಮಿ ಕಾಮಾಂತಕ ನಿಖಿಳ ಮಖಾಧಾರ ವಿಸ್ತೀರ್ಣ ಭಕ್ತ

ರ್ಗತ್ಯಂತ ಪ್ರೇಮಿ ಪಂಪಾಪುರದರಸ ವಿರೂಪಾಕ್ಷ

ಆಪುರದೊಳೊಪ್ಪುವ ಶಶಿಧರಂ ವಿಷಧರಂ

ಕಾಪಾಲಿ ದಕ್ಷನ ಧ್ವರಹರಂ ಪುರಹರಂ

ದುರಿತ ತಿಮಿರ ವ್ರಜ ದಿವಾಕರ ಭೀಕರಂ

ಸಕಳ ಚೈತನ್ಯ ವಿಸ್ತಾರಕಂ ಪ್ರೇರಕಂ

ಶರಣ ನಿಕರ ಸ್ತೋತ್ರ ಪೂಜಿತಂ ಯೋಜಿತಂ

ನಿಖಿಳ ಶಾಶ್ವತ ಶಿವ ಮಹೋನ್ನತಂ ಸನ್ನುತಂ

ನೆಲಸಿಪ್ಪನಖಿಲಗುರು ಪಂಪಾ ವಿರೂಪಾಕ್ಷ2

ವಿರೂಪಾಕ್ಷಾಷ್ಟಕದಲ್ಲಿ ವಿರೂಪಾಕ್ಷನನ್ನು ಕುರಿತು,

ಅವನ ನಯನದೊಳು ಹವಿ

ತ್ರಿಶೂಲದ ಪೆಣ

ಮತ್ತವನ ಶಿರದೊಳ್ಸುರನದ ಇದೇವ ವಿರೂಪಾಕ್ಷ...

ಎಂದು ವರ್ಣನೆ ಇದೆ.

ಗಿರಿಜಾಕಲ್ಯಾಣದಲ್ಲಿ ಹರಿಹರನು ತನ್ನ ಆರಾಧ್ಯ ದೈವ ಪಂಪಾಪುರದರಸ ವಿರೂಪಾಕ್ಷನನ್ನು ಅಷ್ಟತನುಮೂರ್ತಿ ಸ್ವರೂಪದವನೆಂದು ಕೊಂಡಾಡಿದ್ದಾನೆ.

ಶ್ರೀಮಚ್ಛೈಲೇಂದ್ರಪುತ್ರೀಗುರುತರಹೃ ದಯ ಕ್ಷೀರವಾರಾಶಿ ಚಂದ್ರಂ    

ವೋಮಾರ್ಕೇಂದು ಕ್ಷಮಾತ್ಮಾನಲಜಲ ತಪಮಾನಾಷ್ಟ ಮೂರ್ತಿ ಪ್ರಸಿದ್ಧಂ3

ಹೈಮಾವತಿಯ ಪ್ರೇಮಲ ಹೃದಯವೆಂಬ ಪಾಲ್ಗಡಲಿಗೆ ಚಂದ್ರನೂ, ನೆಲ, ನೀರು, ಬೆಂಕಿ, ಗಾಳಿ, ಬಯಲು,

ರವಿ, ಶಶಿ ಮತ್ತು ಒಡೆಯರೆಂಬ ಎಂಟು ತನು ಮೂರ್ತಿಗಳಿಂದ ಪ್ರಸಿದ್ಧ ಸ್ವರೂಪವುಳ್ಳವನು ಆದ ಪಂಪಾ

ವಿರೂಪಾಕ್ಷ. ಹರಿಹರನು ವರ್ಣಿಸಿರುವ ಅಷ್ಟತನ ತತ್ವವನ್ನೊಳಗೊಂಡ ಶಿವನ ಶಿಲ್ಪವನ್ನು ಹಂಪೆಯಲ್ಲಿ ಮೊದಲ ಬಾರಿಗೆ ಸಂಶೋಧಕರು ಗುರುತಿಸಿದ್ದಾರೆ. ಶಿಲ್ಪಶೈಲಿಯ ದೃಷ್ಟಿಯಿಂದ ಈ ಶಿಲ್ಪವು 1415ನೇ ಶತಮಾನದಲ್ಲಿ ರೂಪುತಳೆದಿರಬೇಕೆಂದು ಭಾವಿಸಿದ್ದಾರೆ.4 ಈ ಶಿಲ್ಪವು ಪಂಪಾ ವಿರೂಪಾಕ್ಷನನ್ನು ಸಾಕಾರ ರೂಪದಲ್ಲಿ ಪ್ರತಿನಿಧಿಸುವಂತಹದ್ದಾಗಿದೆ. 

ರಾಘವಾಂಕನು ಸೋಮನಾಥ ಚಾರಿತ್ರ ಕೃತಿಯಲ್ಲಿ ವಿರೂಪಾಕ್ಷನನ್ನು ಕುರಿತು,

ಶ್ರೀಮಾಯಾವರನಿಂದುಧರನುಗ್ರನಭಯಂಕರ

ಮಾಯೂರಿಭಕ್ತ ಭಯಹಾರಿ ಗಂಗಾವಾರಿ

ಮಾಯುಭೂಗ್ಭುಷನುತ್ತಮವೇಶನಘತಿಮಿರ ಪೂಷನ ತಿವಿಗತ ದೋಷ

ಸ್ವಾಯುತಾಖಿಳ ಲೋಕದಾನತ ವಜ್ರಪುಮ್ಯ ದಾಯಕಂ ಹರಿವಿರಂಚ್ಯಾದಿ

ಪ್ರಮುಖ ದೇವರಾಯ ಪಂಪಾ ವಿರೂಪಾಕ್ಷ5 ಎಂದು ವರ್ಣಿಸಿದ್ದಾನೆ.

ಈ ಸಾಹಿತ್ಯ ಕೃತಿಗಳಲ್ಲಿಯ ಉಲ್ಲೇಖಗಳಲ್ಲಿ ವಿರೂಪಾಕ್ಷನ ರೂಪವು ತ್ರಿನೇತ್ರ, ತ್ರಿಪುರಾರಿ ಗಂಗಾಧರ, ಕಾಪಾಲಿ,

ದಕ್ಷನ ಧ್ವರ ಹರಂ, ನಡುಗಣ್ಣಿನವ, ಕಾಮಾಂತಕ, ಪುರಹರ, ಭಾಳಾಕ್ಷ, ಅಷ್ಟತನುಮೂರ್ತಿ ಇತ್ಯಾದಿ ರೀತಿಯಲ್ಲಿ ವ್ಯಕ್ತವಾಗಿದೆ. ಸಾಹಿತ್ಯ ಕೃತಿಗಳಲ್ಲಿ ವರ್ಣಿತವಾಗಿರುವ ವಿರೂಪಾಕ್ಷನ ರೂಪಗಳು ಹಂಪೆಯ ವಿರೂಪಾಕ್ಷನಿಗೆ ಸಂಬಂಧಪಟ್ಟವುಗಳಾಗಿವೆ.

   ವಿರೂಪಾಕ್ಷ ದೇವಾಲಯವು ಹಂಪೆಯಲ್ಲಿ ಯಾವಾಗ ಸ್ಥಾಪಿತವಾಯಿತೆಂದು ಹೇಳುವುದು ಕಷ್ಟವಾದರೂ,ಹನ್ನೆರಡನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಶಕ್ತಿ ಕೇಂದ್ರವಾಗಿದ್ದ ಹಂಪೆಯು ಶೈವ ಕ್ಷೇತ್ರವಾಗಿ ಪರಿಣಮಿಸಿದ್ದು, ಆ ಅವಧಿಯಲ್ಲಿ ಸ್ಥಾಪಿತವಾಗಿರಬೇಕು ಎಂದೆನಿಸುತ್ತದೆ. ಹಂಪೆಯು ಪ್ರಾಚೀನ ಕಾಲದಿಂದಲೂ ವಿರೂಪಾಕ್ಷ ದೇವಾಲಯದ ಮೂಲಕ ಪ್ರಸಿದ್ಧ ಧಾರ್ಮಿಕ ನೆಲೆವೀಡಾಗಿದ್ದಿತು ಎಂಬುದು ಪುರಾತತ್ತ್ವ ಅವಶೇಷಗಳು ಹಾಗೂ ಸಾಹಿತ್ಯದಲ್ಲಿಯ ಪುರಾವೆಗಳಿಂದ ವಿದಿತವಾಗುತ್ತದೆ. ಹಂಪೆಯಲ್ಲಿ ವಿರೂಪಾಕ್ಷನು ನೆಲೆ ಊರಿದ್ದಾಗಿಲಿನಿಂದ ಜನತೆಯ ಜೀವನ ಶ್ರದ್ಧೆ ಹಾಗೂ ನಿಷ್ಠೆಗಳ ಪ್ರತೀಕವಾಗಿದ್ದಾನೆ. ಹಂಪೆಯ ವಿರೂಪಾಕ್ಷ ದೇವಾಲಯವು ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರದರಸರು, ಸ್ಥಳೀಯ ಅರಸರು ಹಾಗೂ ಇಲ್ಲಿಯವರೆವಿಗೂ ತನ್ನದೇ ಆದ ರೀತಿಯಲ್ಲಿ ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಈಗಿನ ವಿರೂಪಾಕ್ಷ ದೇವಾಲಯದ ಸಂಕೀರ್ಣದ ವಿವಿಧ ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ದೇವಾಲಯದ ವಿವಿಧ ಭಾಗಗಳು ವಿವಿಧ ಅರಸು ಮನೆತನಗಳ ಕಾಲದಲ್ಲಿ ಕ್ರಿ.ಶ. 7ನೇ ಶತಮಾನದಿಂದೀಚೆಗೆ ವಿಭಿನ್ನ ಕಾಲಗಳಲ್ಲಿ ನಿರ್ಮಾಣವಾಗಿರುವುದು ಹಾಗೂ ಕೆಲಭಾಗಗಳು ಜೀರ್ಣೋದ್ಧಾರ ಗೊಂಡಿರುವುದು ಕಂಡುಬರುತ್ತದೆ.

   ಹಂಪೆಯು ಪೂರ್ಣಕಾಲದಿಂದಲೂ ಪಂಪಾಕ್ಷೇತ್ರ, ಪಂಪಾಪುರ, ಪಂಪಾಪಟ್ಟಣ, ಪಂಪಾತೀರ್ಥ ಎಂದುಶಾಸನ, ಕಾವ್ಯಗಳಲ್ಲಿ ಕರೆಯಲ್ಪಟ್ಟಿದೆ. ಪಂಪಾಕ್ಷೇತ್ರ ಎಂದರೆ ಈಗಿನ ವಿರೂಪಾಕ್ಷ ದೇವಾಲಯದ ಸುತ್ತಲಪ್ರದೇಶಗಳೇ ಆಗಿವೆ. ಕ್ರಿ.ಶ. 1199ರ ಶಾಸನದಲ್ಲಿಯ ವಿವರದ ಪ್ರಕಾರ `ಪಂಪಾತೀರ್ಥ ಪ್ರದೇಶವನ್ನು ವಿರೂಪಾಕ್ಷ ಸೀಮೆ' ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. ಈಗಿನ ಚಕ್ರತೀರ್ಥವೆಂದು ಕರೆಯುವ ಭಾಗವು ಕಾವ್ಯಶಾಸನಗಳಲ್ಲಿ ಉಲ್ಲೇಖವಾಗಿರುವ ಪಂಪಾತೀರ್ಥವಾಗಿದೆ. ಈಗಲೂ ಚಕ್ರತೀರ್ಥ ಪ್ರದೇಶದ ಬಳಿ ಇರುವಪ್ರದೇಶವೇ ವಿರೂಪಾಕ್ಷ ದೇವರಿಗೆ ಪವಿತ್ರವಾದ ಸ್ಥಳವಾಗಿ ಕಂಡುಬರುತ್ತದೆ. ಚಕ್ರತೀರ್ಥದ ಬಳಿಯೇ ವಿರೂಪಾಕ್ಷನ ಫಲಪೂಜೆಯು ನಡೆಯುತ್ತಿದ್ದು ಇದು ಹಿಂದಿನಿಂದಲೂ ಹಂಪಿಯಲ್ಲಿ ವಿರೂಪಾಕ್ಷನ ಪೂಜೆಯಲ್ಲಿಯ ಬಹುಮುಖ್ಯವಾದ ಆಚರಣೆಯಾಗಿದೆ. ಈ ಪ್ರದೇಶವೇ ವಿಜಯನಗರ ಪೂರ್ವದಲ್ಲಿಯ ಪಂಪಾಕ್ಷೇತ್ರವಾಗಿದ್ದಿತು. ಈ ಪಂಪಾಕ್ಷೇತ್ರದ ಅರಸ, ಒಡೆಯನಾಗಿ ವಿರೂಪಾಕ್ಷ ಪ್ರಸಿದ್ಧಿಯನ್ನು ಪಡೆದಿದ್ದು, ವಿಜಯನಗರ ಪೂರ್ವದಲ್ಲಿಯೇ ವಿರೂಪಾಕ್ಷನು ಜನತೆಯ ಆರಾಧ್ಯ ದೈವವಾಗಿದ್ದನು. ವಿರೂಪಾಕ್ಷನ ಮಹಿಮೆಯಿಂದಲೇ ಹಂಪೆಯೂ ಪ್ರಸಿದ್ಧಿಯನ್ನು ಪಡೆಯಿತೆಂದು ಹೇಳಬಹುದು. ಹರಿಹರನ ಏಕಾಂತರಾಮಿತಂದೆ ರಗಳೆಯಲ್ಲಿ ಜೈನರ ವಿರುದ್ಧ ಪಣವೊಡ್ಡಿ ಶಿರವನ್ನರಿದುಕೊಂಡ ಏಕಾಂತರಾಮಯ್ಯನ ರುಂಡವನ್ನು ಅಗ್ಗಣಿಯ ಹೊನ್ನಿತಂದೆಗಳು, ಅಗ್ಗಳೆಯ ದೇವರಸರು ಮತ್ತು ಇತರೆ ಶರಣರ ಜೊತೆ ಹೊನ್ನ ಹರಿವಾಣದಲ್ಲಿಟ್ಟುಕೊಂಡು ಪುಲಿಗೆರೆಯ ಸೋಮನಾಥ, ಅಣ್ಣಿಗೆರೆಯ ಅಮೃತನಾಥ, ಕೆಂಭಾವಿಯ ಭೋಗನಾಥ, ಕಪ್ಪಡಿಯ ಸಂಗಮೇಶ, ಆವುಂದದ ನಾಗನಾಥ, ಹಂಪೆಯ ವಿರೂಪಾಕ್ಷ ಮೊದಲಾದ ಶೈವಕ್ಷೇತ್ರಗಳಲ್ಲಿ ಮೆರೆಸಿ ಅಬ್ಬಲೂರಿನ ಬ್ರಹ್ಮೇಶ್ವರ ದೇವಾಲಯಕ್ಕೆ ತರುತ್ತಾರೆಂಬ ಉಲ್ಲೇಖ ಇದೆ.6 ಈ ಕ್ಷೇತ್ರಗಳು ಆಗಿನ ಕಾಲಕ್ಕೆ ಪ್ರಸಿದ್ಧ ಶೈವಕ್ಷೇತ್ರಗಳಾಗಿದ್ದಂತೆ ಕಂಡುಬರುತ್ತವೆ. ಹನ್ನೆರಡನೇ ಶತಮಾನದ ವೇಳೆಗಾಗಲೇ ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಸಿದ್ಧ ವಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿತ್ತು ಎಂಬುದು ವ್ಯಕ್ತವಾಗುತ್ತದೆ.

   ಹಂಪೆಯಲ್ಲಿ ವಿರೂಪಾಕ್ಷ ಹೆಸರಿನ ದೇವಾಲಯದ ಪ್ರಸ್ತಾಪ ಶಾಸನಗಳಲ್ಲಿ ಕಂಡುಬರುವುದರ ಜೊತೆಯಲ್ಲಿಯೇ ರಾಣಿಬೆನ್ನೂರು ತಾಲ್ಲೂಕಿನ ಇಟಗಿ, ಹರಪನಹಳ್ಳಿ ತಾಲ್ಲೂಕಿನ ಬೆಣ್ಣೆಹಳ್ಳಿ, ಬಳ್ಳಾರಿ ತಾಲ್ಲೂಕಿನ ಓರ್ವಾಯಿಗಳಲ್ಲಿಯೂ ವಿರೂಪಾಕ್ಷ ಹೆಸರಿನ ದೇವಾಲಯಗಳು ಸ್ಥಾಪಿತವಾಗಿದ್ದವು ಎಂಬುದುಶಾಸನೋಕ್ತ ಸಂಗತಿಗಳಿಂದ ವ್ಯಕ್ತವಾಗುತ್ತದೆ. ತುಂಗಭದ್ರಾ ಪರಿಸರದಲ್ಲಿಯೇ ಈ ದೇವಾಲಯಗಳು ಸ್ಥಾಪಿತವಾಗಿರುವುದು ಗಮನಿಸತಕ್ಕ ಸಂಗತಿಯಾಗಿದೆ. ಕ್ರಿ.ಶ. 169ರ ಶಾಸನದ ಪ್ರಕಾರ ನೂಱುಂಬಾಡದಮನೆಯತನವನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬ ಇಟ್ಟಿಗೆಯ ವಿರೂಪಾಕ್ಷ ದೇವರಿಗೆ ಸ್ಥಾನ ನಿವೇದಕ್ಕೆ ಭೂದಾನನೀಡಿದ್ದು ತಿಳಿದುಬರುತ್ತದೆ.7 ಕ್ರಿ.ಶ. 1149 ಓರ್ವಾಯಿ ಶಾಸನದಲ್ಲಿಯ ಉಲ್ಲೇಖದ ಪ್ರಕಾರ ಕಲ್ಯಾಣ ಚಾಲುಕ್ಯದೊರೆ ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ದೊರೆವದಿ ನಾಡಿನ ಕಾಚರಸ, ಗಂಗರಸರಲ್ಲದೆ ಇಮ್ಮಡಿ ರಾಚಮಲ್ಲನ ಮಹಾ ಪ್ರಧಾನನಾದ ಕಪ್ಪೆಯರಾಹಾರದಾನ ವಿನೋದಿಯಾದ ಲಖ್ಖೆಯ ನಾಯಕನು ಮತ್ತವನತಮ್ಮಂದಿರಾದ ಮಾದೆಯ ನಾಯಕ, ವಿರುಪೆಯ ನಾಯಕ, ಆಚೆಯ ನಾಯಕರು ದೊರೆವದಿನಾಡಿನ ಎಪ್ಪತ್ತರ

ಪ್ರಭು ಗಾವುಂಡುಗಳು, ಮೂಲಿಗರು, ಎಂಟು ಹಿಟ್ಟುಗಳು ಸೇರಿ ಕುತ್ತುಕನೂರಿನಲ್ಲಿ ವಿರೂಪಾಕ್ಷ ದೇವಾಲಯಗಳನ್ನು ಕಟ್ಟಿಸಿ ಓರುವಾಯಿಯ ಚಳೇಶ್ವರ ಪಂಡಿತನ ಮಗ ಭೀಮರಾಶಿ ಪಂಡಿತನ ಕಾಲು ತೊಳೆದು ದಾನ ನೀಡಿದ ಸಂಗತಿ ವ್ಯಕ್ತವಾಗಿದೆ.8 ಬೆಣ್ಣೆಹಳ್ಳಿ ಶಾಸನವು ಕ್ರಿ.ಶ. 1148ರ ಕಾಲಕ್ಕೆ ಪಂಪಾಪತಿ ಅಥವಾ ವಿರೂಪಾಕ್ಷ ದೇವಾಲಯವು ಕಲ್ಯಾಣ ಚಾಲುಕ್ಯ ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣಗೊಂಡಿದ್ದನ್ನು ದಾಖಲಿಸಿದೆ.9 ಶಾಸನದಲ್ಲಿ ಈ ದೇವಾಲಯವನ್ನು ಸ್ವಯಂಭು ವಿರೂಪಾಕ್ಷನೆಂದೇ ಕರೆದಿದೆ. ಇತ್ತೀಚಿನ ಆಧಾರಗಳ ಪ್ರಕಾರ ಮೇಲ್ಕಂಡ ಸ್ಥಳಗಳಲ್ಲಿಯ ವಿರೂಪಾಕ್ಷ ದೇವಾಲಯಕ್ಕಿಂತ ಹಂಪೆಯ ವಿರೂಪಾಕ್ಷ ದೇವಾಲಯವೇ ಅತೀ ಪ್ರಾಚೀನ ಎಂಬುದು ವ್ಯಕ್ತವಾಗಿದೆ.

     ಪಂಪಾಕ್ಷೇತ್ರವು ಪ್ರಾಚೀನ ಪುಣ್ಯಕ್ಷೇತ್ರವಾಗಿದ್ದುದರಿಂದ ಪೂರ್ವದಿಂದಲೂ ದೇವಾಲಯಗಳು ಸ್ಥಾಪಿತಗೊಂಡಿದ್ದವು ಎಂದೇಳಬಹುದು. ಈಗಿನ ಹಂಪೆಯ ಅವಶೇಷಗಳಲ್ಲಿ ಸಂಶೋಧಕರು ಅಭಿಜ್ಞಿಸಿರುವಪ್ರಕಾರ ದೇವಾಲಯ ಪ್ರದೇಶದ ಪರಿಸರದಲ್ಲಿ ಅಂದು ತುಂಗಭದ್ರಾ ನದಿಯ ಬಲತಡಿಯಲ್ಲಿ ದೇವಾಲಯಗಳ ರಚನೆ ಸ್ಪರ್ಧಾತ್ಮಕ ರೀತಿಯಲ್ಲಿ ನಡೆದಿರುವುದು ದೇವಾಲಯಗಳ ಅವಶೇಷಗಳಿಂದ ವಿದಿತವಾಗುತ್ತದೆ. ಅದರಲ್ಲಿಯೂ ಪ್ರಾಚೀನ ದೇವಾಲಯಗಳು ಹೇಮಕೂಟ ಪ್ರದೇಶದಲ್ಲಿ ರಚಿತವಾಗಿವೆ. ಹೇಮಕೂಟದಲ್ಲಿಯ ಕೆಲವು ದೇವಾಲಯಗಳ ಕಟ್ಟಡಗಳು ಕಾಲದಿಂದ ಕಾಲಕ್ಕೆ ಬದಲಾವಣೆಗೊಳಗಾಗಿವೆ. ಬಾದಾಮಿ ಚಾಲುಕ್ಯದೊರೆ ವಿನಯಾದಿತ್ಯನ ಕಾಲದ ಕ್ರಿ.ಶ. 689ರ ತಾಮ್ರ ಶಾಸನವು ಹಂಪೆಯನ್ನು ಪಂಪಾತೀರ್ಥ ಎಂದು ಕರೆದಿದ್ದು ಈ ಶಾಸನದ ಕಾಲಕ್ಕೆ ಹಂಪೆಗೆ ಪಂಪಾತೀರ್ಥವೆಂಬ ಪರ್ಯಾಯ ಹೆಸರು ಇತ್ತು ಎಂಬುದು ವ್ಯಕ್ತವಾಗಿದೆ. ಕೆಂಪು ಉಸುಗು ಮರಳಗಲ್ಲಿನ ಕೆಲವು ದೇವಾಲಯಗಳು ಹೇಮಕೂಟ ಪರಿಸರದಲ್ಲಿ ಕ್ರಿ.ಶ. 7ನೇ ಶತಮಾನದ ವೇಳೆಗೆ ರಚಿತವಾಗಿದ್ದವು ಎಂಬುದಾಗಿ ವಾಸ್ತುಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. 118ರ ಬಾಗಳಿ ಶಾಸನದಲ್ಲಿಯ `ಉದಯಾದಿತ್ಯ ದೇವರ್ಪಂಪಾಪುರದ ತೀರ್ಥಕ್ಕೆ ಬಿಜಯಂಗೆಯ್ದು' ಎಂಬ ಉಲ್ಲೇಖದಿಂದ1ನೊಳಂಬ ದೊರೆ ಪಂಪಾತೀರ್ಥಕ್ಕೆ ಭೇಟಿ ನೀಡಿದ್ದ ಎಂಬುದು ತಿಳಿದುಬರುತ್ತದೆ. ಈ ವೇಳೆಗಾಗಲೇ ಪಂಪಾತೀರ್ಥದಲ್ಲಿ ದೇವಾಲಯಗಳು ಸ್ಥಾಪಿತವಾಗಿದ್ದವೆಂದು ಹೇಳಬಹುದು. ವಿರೂಪಾಕ್ಷ ದೇವಾಲಯದ ಸಂಕೀರ್ಣದಲ್ಲಿಯ ದುರ್ಗಾದೇವಾಲಯದಲ್ಲಿನ ಕ್ರಿ.ಶ. 1199ರ ಶಾಸನವು ವಿರೂಪಾಕ್ಷನ ಉಲ್ಲೇಖ ಮಾಡಿದ್ದು ಶಾಸನದಲ್ಲಿಯ11 ವಿವರದ ಪ್ರಕಾರ 2ನೇ ರಾಚಮಲ್ಲನ ಅಮಾತ್ಯನಾದ ವೀರ ಕಲಿದೇವರಸ ಕುರುಗೋಡಿನಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ವಿರೂಪಾಕ್ಷ ತೀತ್ರ್ಥ ರಕ್ಷಣಾತ್ರ್ಥ ಸಾಮನ್ತ ಮಾದೆಯ ನಾಯಕಂ ಮತಂಗ ಪರ್ವತಮಂ ಪ್ರತಿಪಾಳಿಸುತ್ತ ಮಿರೆ ಇವನ ಮೈದುನ ಚೌಡಯ್ಯನು ವಿರೂಪಾಕ್ಷ ದೇವಾಲಯಕ್ಕೆ ಸೇರಿದಂತೆ ಪಂಪಾದೇವಿಗೆ ಚಿನ್ನದ ಕಲಶ ಹಾಗೂ ಪೂಜಾ ಪರಿಕರಗಳನ್ನು ಮಾಡಿಸಿಕೊಡುತ್ತಾನೆ. ಅಲ್ಲದೆ ಈ ಶಾಸನದಲ್ಲಿ ಹೇಮಕೂಟದಲ್ಲಿ ನೆಲೆಸಿರುವ ವಿರೂಪಾಕ್ಷನನ್ನು 

`ಶ್ರೀ ಮದ್ಗೌರೀ ಸಮೇತಂ ನೆಲಸಿರಲಿದು ತಾಂ ತಕ್ಕುದೀ ಪುಣ್ಯ ತೀತ್ರ್ಥ

ಶ್ರೀ ಮೆಯ್ವೆತ್ತೊಪ್ಪುವೀ ಹೇಮಶಿಲೆಯಿದೆನುತಂ ತಚ್ಚಿಲೇಂದ್ರಾಗ್ತ ಮೆಂದುಂ

ಧಾಮನ್ತಾನಾಗೆ ಸನ್ತಂ ನೆಲಸಿ ಸೊಗಯಿಪಾ ಶ್ರೀ ವಿರೂಪಾಕ್ಷದೇವಂ'

ಎಂದು ವರ್ಣಿಸಿದೆ. ಈ ಶಾಸನದಲ್ಲಿಯ ಮಾಹಿತಿಯಿಂದ ಕ್ರಿ.ಶ. 1199ಕ್ಕಿಂತ ಪೂರ್ವದಲ್ಲಿಯೇ ಹಂಪೆಯಲ್ಲಿವಿರೂಪಾಕ್ಷ ದೇವಾಲಯ ಸ್ಥಾಪಿತವಾಗಿತ್ತು ಎಂಬುದು ತಿಳಿದು ಬರುತ್ತದೆ. ಎಷ್ಟು ಮೊದಲು ಎಂಬುದಕ್ಕೆ ಕುಷ್ಟಗಿ ತಾ|| ಪುರದ ಶಾಸನ ಆಧಾರ ಒದಗಿಸಿದೆ. ಕ್ರಿ.ಶ. 118ರ ಪುರದ ಶಾಸನದಲ್ಲಿಯ12 ಪ್ರಕಾರ ಚಾಳುಕ್ಯಜಗದೇಕಮಲ್ಲನ ದಂಡನಾಯಕನು ಕೆಳವಡಿ3ಂಂನ್ನು ಆಳುತ್ತಿದ್ದಾಗ ಅಗ್ರಹಾರ ಬೈಳೆನೆಗೆಯೂರಿನ ಒಡೆಯಕೊಣ್ಡಯವಾರಿ ಅಯ್ಯಣಯ್ಯಂಗೆ `ಪಂಪಾಸ್ಥಾನ ವಿರೂಪಾಕ್ಷ ದೇವರ ಸನ್ನಿಧಾನದೊಳ್' 5 ಮತ್ತರು ಗದ್ದೆಯನ್ನು ದಾನವಾಗಿ ನೀಡಿದ ವಿಷಯ ವ್ಯಕ್ತವಾಗಿದೆ. ಕ್ರಿ.ಶ. 118ರ ಪುರದ ಶಾಸನವೇ ಹಂಪೆಯ ವಿರೂಪಾಕ್ಷನನ್ನು ಉಲ್ಲೇಖಿಸುವ ಪ್ರಥಮ ಶಾಸನವಾಗಿದೆ. ಹೀಗಾಗಿ ಕ್ರಿ.ಶ. 118ರ ವೇಳೆಗಾಗಲೇ ಹಂಪೆಯಲ್ಲಿ ವಿರೂಪಾಕ್ಷ ದೇವಾಲಯವು ಸ್ಥಾಪಿತವಾಗಿದ್ದು, ಧಾರ್ಮಿಕ ವ್ಯಕ್ತಿಗಳಿಗೆ ತನ್ನ ಸನ್ನಿಧಾನದಲ್ಲಿ ದತ್ತಿಯನ್ನು ಅರಸರುಗಳು ಬಿಡುವಷ್ಟರಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿತ್ತು. ಕ್ರಿ.ಶ. 1163ರ ಕುಕನೂರ ಶಾಸನದಲ್ಲಿ13 (ಬಿಜ್ಜಳನ ಕಾಲ) ಮಹಾಪ್ರದಾನ ದಂಡನಾಯಕ ಬಲದೇವಯ್ಯ ಮತ್ತವನ ಕರಣಗಳು ಬಿಜ್ಜಳದೇವನಲ್ಲಿ ಬಿನ್ನಹವನ್ನು ಮಾಡಿಕೊಂಡು ಕುಕ್ಕನೂರ3ರ ಶ್ರೀಮಂತ ಗ್ರಾಮವಾದ ಎಡೆಹಳ್ಳಿಯಲ್ಲಿ ಸರ್ವಬಾಧಾ ಪರಿಹಾರವಾಗಿ ಹಂಪೆಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಪುನರ್ದತ್ತಿಯಾಗಿ ಪಡೆದು ಮಲ್ಲಿಕಾರ್ಜುನ ದೇವರಿಗೆ ಹಾಗೂ ಬ್ರಾಹ್ಮಣರಿಗೆ ದಾನ ನೀಡಿದ ವಿವರ ವ್ಯಕ್ತವಾಗಿದೆ. ಕ್ರಿ.ಶ. 1163ರ ವೇಳೆಗಾಗಲೇ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಪುನರ್ದತ್ತಿಯಾಗಿ ನೀಡುವಷ್ಟರ ಮಟ್ಟಿಗೆ ಖ್ಯಾತಿ ಪಡೆದಿತ್ತು ಎಂಬುದು ವ್ಯಕ್ತವಾಗುತ್ತದೆ. ಈಗಿನ ವಿರೂಪಾಕ್ಷ ದೇವಾಲಯದ ಸುತ್ತಲು ಮೂಲ ಪ್ರಾಚೀನ ದೇವಾಲಯಗಳು ಹಾಗೂ ಮನ್ಮುಖ ತೀರ್ಥ ಇರುವುದರಿಂದ ಅದುವೇ ವಿರೂಪಾಕ್ಷ ದೇವಾಲಯ ಆಗಿದ್ದು ಉಳಿದವು ನಂತರದ ಬೆಳವಣಿಗೆಗಳಾಗಿವೆ.

   ಕ್ರಿ.ಶ. 1199ರ ಶಾಸನದ ಪ್ರಕಾರ ಕುರುಗೋಡಿನ ದೊರೆಗಳು ಹಂಪೆಯಲ್ಲಿ ತಮ್ಮ ಸೈನ್ಯವನ್ನು ವಿರೂಪಾಕ್ಷ ತೀರ್ಥ ರಕ್ಷಣಾರ್ಥವಾಗಿ ಇಟ್ಟಿದ್ದನ್ನು, ಸೈನ್ಯದ ಮುಖಂಡರು ಮತಂಗ ಪರ್ವತದಲ್ಲಿ ನೆಲೆಸಿದ್ದನ್ನು ಹೇಳುತ್ತದೆ. ಈ ಸಂಗತಿಗಳು ಹಂಪೆಯನ್ನು ರಕ್ಷಿಸುವ ಹೊಣೆಯು ಕುರುಗೋಡಿನ ದೊರೆಗಳದಾಗಿತ್ತು ಎಂಬುದಾಗಿ ತಿಳಿದುಬರುತ್ತದೆ. ಹಂಪೆಯನ್ನು ವಿರೂಪಾಕ್ಷ ತೀರ್ಥ ಎಂದು ಕರೆಯುವುದು ಆ ವೇಳೆಗಾಗಲೇವಿರೂಪಾಕ್ಷ ಅಲ್ಲಿಯ ಜನಮನದ ಆರಾಧ್ಯ ದೈವವಾಗಿದ್ದನ್ನು ಸೂಚಿಸುತ್ತದೆ. ಹಂಪೆಯನ್ನು ರಕ್ಷಿಸುವ ಕಾರ್ಯದಲ್ಲಿ ಬಾಗಿಯಾಗಿರಲು ಕಾರಣ ಬಹುಶಃ ಹಂಪೆಯ ನಿಜವಾದ ಒಡೆಯ ವಿರೂಪಾಕ್ಷನೇ ಎಂದು ಆ ಪ್ರದೇಶದ ಜನತೆ ಮಾನ್ಯ ಮಾಡಿದ್ದುದು. ಹಂಪೆಯ ಪರಿಸರದ ಗದ್ದೆ ತೋಟಗಳು ಆಡಳಿತ ಇತ್ಯಾದಿಗಳ

ಉಸ್ತುವಾರಿಯನ್ನು ಕುರುಗೋಡು ದೊರೆಗಳ ಆಯಾ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರೂ ಇಡೀ ಪಂಪಾಪುರ ಪ್ರದೇಶದ ನಿಜವಾದ ರಾಜ ವಿರೂಪಾಕ್ಷ ಸ್ವಾಮಿಯೇ ಎಂಬಂತೆ ಭಾವಿಸಲಾಗಿತ್ತು. ವಿರೂಪಾಕ್ಷನೇ ಹಂಪೆಯ ಸಾಮ್ರಾಟನೆಂಬ ಪರಿಕಲ್ಪನೆ ತಾತ್ವಿಕ ಮಟ್ಟದಲ್ಲಿ ನಂಬಿಕೆಯ ಮಟ್ಟದಲ್ಲಿ ಎಂಬುದುದರಿಂದ ಮಥಿತವಾಗುತ್ತದೆ.14 ವಿರೂಪಾಕ್ಷ ದೇವಾಲಯವು ವಿಜಯನಗರ ಅರಸರುಗಳಿಗಿಂತ ಪೂರ್ವದಲ್ಲಿಯೇ ಜನತೆಯ ಆರಾಧ್ಯ ದೈವವಾಗಿತ್ತು. ವಿರೂಪಾಕ್ಷ ದೇವಾಲಯದಲ್ಲಿ ಇಂದು ಪ್ರಾಚೀನ ವಾಸ್ತುಶಿಲ್ಪದ ಕುರುಹುಗಳು ಕಾಣದಿರುವುದಕ್ಕೆ ನಂತರ ಕಾಲದಲ್ಲಿ ಅದರಲ್ಲಿಯೂ ವಿಜಯನಗರದ ಅರಸರ ಕಾಲದಲ್ಲಿ ಹಲವಾರು ಮಾರ್ಪಾಡುಗಳಿಗೆ ಒಳಗಾದುದು ಹಾಗೂ ಹಲವಾರು ಹೊಸ ಭಾಗಗಳು ಸೇರ್ಪಡೆಗೊಂಡು ವಿಸ್ತಾರಗೊಳ್ಳುತ್ತ ಸಂಕೀರ್ಣ ದೇವಾಲಯವಾಗಿ ಪರಿಣಮಿಸಿರುವುದು ವಿಜಯನಗರ ಸಾಮ್ರಾಜ್ಯ ಉದಯಗೊಳ್ಳುವ ಪೂರ್ವದಲ್ಲಿಯೇ ವಿರೂಪಾಕ್ಷನ ಸಾನ್ನಿಧ್ಯದಿಂದ ಹಂಪೆಯು ಶೈವಕ್ಷೇತ್ರ ಹಾಗೂ ವಿದ್ಯಾಕೇಂದ್ರವಾಗಿದ್ದು ಸಾಂಸ್ಕೃತಿಕ ಕೇಂದ್ರ ಎನಿಸಿ `ವಿಜಯ ವಿರೂಪಾಕ್ಷಪುರ' ಹೆಸರಿನಿಂದ ಗುರುತಿಸಲ್ಪಟ್ಟಿತು.

12ನೇ ಶತಮಾನದ ಕೊನೆಯ ಭಾಗಕ್ಕಾಗಲೇ ಹಂಪೆಯ ವಿರೂಪಾಕ್ಷ ದೇವರ ಪೂಜೆಗೋಸ್ಕರ ಮೀಸಲಾಗಿ ಹೂದೋಟ (ದೇವತೋಟ) ಇದ್ದುದಾಗಿ ತಿಳಿದುಬರುತ್ತದೆ. ವಿರೂಪಾಕ್ಷನ ಪೂಜೆಗೋಸ್ಕರ ಈ ಹೂದೋಟವನ್ನು ನಿರ್ಮಾಣ ಮಾಡಿದವರು ವಿರೂಪಾಕ್ಷ ತೀರ್ಥದ ಸಂರಕ್ಷಣೆಗಾಗಿಯೇ ಕುರುಗೋಡುದೊರೆಗಳು ನೇಮಿಸಿದ್ದ ನಾಯಕ ಪಾಳೆಗಾರ ಮನೆತನದವರು. ಹಂಪೆಯ ಸಂರಕ್ಷಣೆಗಾಗಿಯೇ ನೇಮಕವಾಗಿದ್ದು ನಾಯಕರ ಹೆಸರಿನ ದೇವತೋಟವು ಹಂಪೆಯ ವಿರೂಪಾಕ್ಷ ಸ್ವಾಮಿಯದ್ದೇ ಆಗಿತ್ತೆಂಬುದು ಸ್ಪಷ್ಟವಾಗುತ್ತದೆ.15 ಶಾಸನದಲ್ಲಿ ಉಲ್ಲೇಖಿತವಾಗಿರುವ ವಿರೂಪಾಕ್ಷ ಸ್ವಾಮಿಗೆ ಹೂವನ್ನು ಒದಗಿಸುತ್ತಿದ್ದ ನಾಯಕರ ದೇವತೋಟವು ಹರಿಹರನ ಪುಷ್ಪರಗಳೆಯಲ್ಲಿ ಸೂಚಿತವಾಗಿರುವ ಹೂದೋಟವು ಆಗಿದ್ದಿರಬಹುದು ಎಂದೆನಿಸುತ್ತದೆ. ಕ್ರಿ.ಶ. 1199 ರ ಶಾಸನದಲ್ಲಿ ಬರುವ ಹೂದೋಟ ಹಾಗೂ ಅಡಕೆ ತೋಟದ ಪ್ರದೇಶವು ಆ ಕಾಲದಲ್ಲಿ ವಿರೂಪಾಕ್ಷ ಸ್ವಾಮಿಗೆ ಸೇರಿತ್ತು ಎಂಬುದಾಗಿ ಊಹಿಸಬಹುದಾಗಿದೆ.

ಹನ್ನೆರಡು ಹಾಗೂ ಹದಿಮೂರನೇ ಶತಮಾನಗಳಲ್ಲಿ ವಿರೂಪಾಕ್ಷನ ಆವಾಸ ಸ್ಥಾನವಾದ ಹಂಪೆಯು ಧಾರ್ಮಿಕ ಗ್ರಂಥ ರಚನಾತ್ಮಕ ಕಾರ್ಯ ನಿರ್ವಹಣೆಯ ಪ್ರಮುಖ ಸ್ಥಾನವಾಗಿದ್ದಿತು. ವೀರಶೈವ ಧರ್ಮದಅನುಯಾಯಿಗಳಾಗಿದ್ದ ಕುರುಗೋಡಿನ ಅರಸರ ಪ್ರೋತ್ಸಾಹದಿಂದಾಗಿ ಶರಣರನ್ನು ಆಕರ್ಷಿಸಿತು. ಈ ನಿಟ್ಟಿನಲ್ಲಿ ಹರಿಹರ ಮೊದಲಿಗನಾಗಿ ಕಂಡುಬರುತ್ತಾನೆ. ಹರಿಹರನು ತನ್ನ ಗುರು ಪರಂಪರೆಯನ್ನು ಹೇಳಿಕೊಂಡಿರುವುದನ್ನು ನೋಡಿಕೊಂಡರೆ ಹರಿಹರನಿಗಿಂತ ಪೂರ್ವದಲ್ಲಿಯೇ ವೀರಶೈವ ಮಠಗಳು, ಗುರುಕುಲಾಶ್ರಮಗಳು ಇದ್ದವು ಎಂಬುದು ವ್ಯಕ್ತವಾಗುತ್ತದೆ.

  ಹೊಯ್ಸಳ ದೊರೆ ನರಸಿಂಹನ ಆಸ್ಥಾನದಲ್ಲಿ ಕರಣಿಕನಾಗಿದ್ದ ಹರಿಹರನು ರಾಜ ಸೇವೆಯನ್ನು ತ್ಯಜಿಸಿ ಜಿಗುಪ್ಸೆಗೊಂಡು ಹಂಪೆಗೆ ಹಿಂದಿರುಗಿದನೆಂದು ಪ್ರತೀತಿ ಇದೆ. ತನ್ನ ಆರಾಧ್ಯದೈವ ಹಂಪೆಯ ವಿರೂಪಾಕ್ಷನಸೇವೆಯಲ್ಲಿ ತನ್ನನ್ನು ಅರ್ಪಿಸಿಕೊಂಡು ಗ್ರಂಥರಚನೆಯಲ್ಲಿ ತೊಡಗಿದ್ದುದು ತಿಳಿದುಬರುತ್ತದೆ. ವೀರಶೈವ ಧರ್ಮವು ಪ್ರತಿಪಾದಿಸಿದ ತತ್ವಗಳಿಗೆ ಅನುಗುಣವಾಗಿ ಜೀವನ ಸಾಗಿಸುತ್ತ ವಿರೂಪಾಕ್ಷ ಸ್ವಾಮಿಗೆ ಸೇವೆ ಸಲ್ಲಿಸುತ್ತ ಬದುಕಿದ್ದುದರ ಬಗೆಗೆ ಸಿದ್ಧನಂಜೇಶನ ರಾಘವಾಂಕ ಚರಿತದಿಂದ ವ್ಯಕ್ತವಾಗುತ್ತದೆ. ರಾಘವಾಂಕ ಚರಿತೆಯ ಪ್ರಕಾರ ಹರಿಹರದೇವನು ವಿರೂಪಾಕ್ಷ ಸ್ವಾಮಿಯ ದೇವಸ್ಥಾನಕ್ಕೆ ಹತ್ತಿರದಲ್ಲೇ ಇದ್ದ ನಾಗನಾಥ ದೇವಾಲಯದಲ್ಲಿ ವಾಸವಾಗಿದ್ದ ಎಂಬುದು ವ್ಯಕ್ತವಾಗುತ್ತದೆ. ಹರಿಹರನ ಕಾಲಕ್ಕೆ ವಿರೂಪಾಕ್ಷ ದೇವಾಲಯವುಸಂಕೀರ್ಣ ದೇವಾಲಯವಾಗಿರದೆ ಕೇವಲ ಗರ್ಭಗುಡಿ, ನಂದಿಮಂಟಪಗಳಿಂದ ಕೂಡಿದ ದೇವಾಲಯವಾಗಿದ್ದಿತು. ಹರಿಹರನ ಸಮಗ್ರ ಕೃತಿಗಳಲ್ಲಿ ಹಂಪೆಯ ವಿರೂಪಾಕ್ಷನನ್ನು ಪಂಪಾ ಪುರದರಸ ಎಂದೇ ಸಂಬೋಧಿಸಿದ್ದಾನೆ. ವಿರೂಪಾಕ್ಷನನ್ನು ತನ್ನ ಕೃತಿಗಳುದ್ದಕ್ಕೂ ಹಂಪೆಯ ಆಳ್ವ, ಅರಸ, ಒಡೆಯ, ಅಧೀಶ್ವರ ಎಂದು ಸ್ತುತಿಸಿದ್ದಾನೆ.

ವಿಜಯನಗರ ಪೂರ್ವದಲ್ಲಿ ಹಂಪೆಯು ವಿರೂಪಾಕ್ಷ ದೇವರ ಅಧೀನಕ್ಕೆ ಒಳಪಟ್ಟಿತ್ತು ಎಂಬುದನ್ನು ಹರಿಹರನಕೃತಿಗಳಲ್ಲಿಯ `ಪಂಪಾಪುರದರಸ' ಎಂಬ ಹೇಳಿಕೆ ಪುಷ್ಠೀಕರಿಸುತ್ತದೆ. ವಿರೂಪಾಕ್ಷನೆ ಅಧಿದೈವ, ಒಡೆಯನಾದಪಂಪಾಪುರದ ಗಡಿಗಳ ಬಗೆಗೆ ಹರಿಹರನ ಪಂಪಾಕ್ಷೇತ್ರದ ರಗಳೆಯಲ್ಲಿ ಉಲ್ಲೇಖ ಸಿಗುತ್ತದೆ.

ಆ ಪುರದೊಳುಂ ನಾಲ್ಕು ಬಾಗಿಲುಗಳುಂ ನೋಡೆ

ಅಲ್ಲಿ ಮೂಡಣ ಬಾಗಿಲೊಳಗಿರ್ಪ ನುನ್ನತಂ

ಸಲ್ಲರಿತ ಗುಣ ಕಿನ್ನರೇಶ್ವರಂ ಶಾಶ್ವತಂ

ಅಲ್ಲಿ ತೆಂಕಣ ಬಾಗಿಲೊಳಗಿರ್ಪನ ಚಳಿತಂ

ಬಲ್ಲ ಶರಣರ ಜಂಬುಕೇಶ್ವರಂ ಶಾಶ್ವತಂ

ಪಶ್ಚಿಮ ದ್ವಾರದೊಳು ನೆಲಸಿರ್ಪ ನೊಪ್ಪದಿಂ

ನಿಶ್ಚಯಂ ದಿಟಂ ಸೋಮನಾಥಯ್ಸನತಿ ಪ್ರೇಮದಿಂ

ಉತ್ತರ ದ್ವಾರದೊಳು ನೆಲಸಿರ್ಪನೀಶ್ವರಂ

ಉತ್ತಮ ಗುಣಸ್ಥಾಣು ವಾಣಿಭದ್ರೇಶ್ವರಂ16

ಈ ವಿವರಣೆಯಿಂದ ಹರಿಹರನ ಕಾಲದ ಹಂಪೆಯ ನಾಲ್ಕು ಗಡಿಗಳು ಹಾಗೂ ಆಗಿನ ಕಾಲದ ಹಂಪೆಯ ವ್ಯಾಪ್ತಿಯನ್ನು ತಿಳಿಯಬಹುದಾಗಿದೆ. ಹದಿಮೂರನೇ ಶತಮಾನದ ಹಂಪೆಯ ವಿಸ್ತೀರ್ಣವು ವಿರೂಪಾಕ್ಷ ದೇವಾಲಯವನ್ನು ಕೇಂದ್ರದಲ್ಲಿಟ್ಟು ನೋಡಿದರೆ ಅದರ ನಾಲ್ಕು ದಿಕ್ಕುಗಳಿಗೆ ಸರಿಯಾಗಿ ಅಲ್ಲಿಗೆ ಸುಮಾರು ಹತ್ತು ಹದಿನೈದು ಕಿ.ಮೀ. ದೂರದಲ್ಲಿ ಆ ನಾಲ್ಕು ದೇವಾಲಯಗಳಿವೆ. ಕಿನ್ನರೇಶ್ವರನನ್ನು ಬಿಟ್ಟರೆ ಉಳಿದ ಮೂರು ದೇವಾಲಯಗಳು ಬೆಟ್ಟದ ಮೇಲಿವೆ. ಶಿವರಾತ್ರಿಯ ದಿವಸ ವಿರೂಪಾಕ್ಷನ ಶಾಸ್ತ್ರೋಕ್ತ ದರ್ಶನವಾಗಬೇಕಾದರೆ ನಾಲ್ಕು ದೇವಾಲಯಗಳನ್ನು ದರ್ಶಿಸಿ ವಿರೂಪಾಕ್ಷ ದೇವಾಲಯದಲ್ಲಿ ಅಂತಿಮ ಪೂಜೆ ಸಲ್ಲಿಸುವ ಪದ್ಧತಿ ಈಚಿನವರೆಗೂ ಇತ್ತು.17 ಇದರಿಂದಾಗಿ ವಿಜಯನಗರ ಪೂರ್ವದಲ್ಲಿ ವಿರೂಪಾಕ್ಷನ ಅಧೀನತ್ವದ ಹಂಪೆಯ ವಿಸ್ತಾರದ ಹರವು ವ್ಯಕ್ತವಾಗುತ್ತದೆ.

 ಹರಿಹರನ ಕಾಲಕ್ಕಾಗಲೇ ಹಂಪೆಯು ಯಾರ ಒಡೆತನಕ್ಕೂ ಒಳಗಾಗದ ದೇವರ ಸಾಮ್ರಾಜ್ಯವಾಗಿದ್ದಿತು. ಆದೇವರ ಸಾಮ್ರಾಜ್ಯದ ಪರ್ಯಾಯ ನಾಮ ವಿರೂಪಾಕ್ಷನೇ ಆಗಿತ್ತು. ವಿರೂಪಾಕ್ಷನಲ್ಲಿ ಅಚಲನಿಷ್ಠೆಯನ್ನುಳ್ಳ ಹರಿಹರ ತನ್ನ ಹೆಸರನ್ನು ಬಿಟ್ಟು ವಿರೂಪಾಕ್ಷನ ಹೆಸರಿನಲ್ಲಿ ಕಾವ್ಯ ಬರೆದ. ಹರಿಹರನಿಗೆ ವಿರೂಪಾಕ್ಷನೇ ಕವಿ ಲಿಪಿಕಾರ ನಾನು ಎನ್ನುವಷ್ಟರಮಟ್ಟಿಗೆ ಭಾವುಕನಾದವನು ದ್ವಾರಸಮುದ್ರದಲ್ಲಿ ಕರಣಿಕ ಕಾಯಕ ತೊಡಗಿಕೊಂಡಿದ್ದ ದರ್ಭದಲ್ಲಿ ದೂರದ ಹಂಪೆಯ ವಿರೂಪಾಕ್ಷನ ತೆರೆಗೆ ಆವರಿಸಿದ್ದ ಉರಿಯನ್ನು ಆರಿಸುವಷ್ಟರ ಮಟ್ಟಿಗೆ ಮಹಿಮಾಶಾಲಿಯಾಗಿದ್ದ. ಹರಿಹರನು ಚಂಪೂ, ರಗಳೆ, ಶತಕ ಸಾಹಿತ್ಯ ಪ್ರಕಾರಗಳ ಕೃತಿಗಳಲ್ಲಿ ವಿರೂಪಾಕ್ಷನಲ್ಲಿ ತನಗಿರುವ ಉತ್ಕಟಭಕ್ತಿಯನ್ನು ವಿಧವಿಧವಾಗಿ ವ್ಯಕ್ತಪಡಿಸಿದ್ದಾನೆ. ಹರಿಹರನ ಗಿರಿಜಾಕಲ್ಯಾಣ ಕೃತಿಯ ಪ್ರಕಾರ ಶಿವಗಿರಿಜೆಯರ ವಿವಾಹ ಕಾರ್ಯ ನಡೆಯುವುದು ದೂರದ ಹಿಮಾಲಯದಲ್ಲಿ ಅಲ್ಲ. ಹಂಪೆಯ ಪರಿಸರದಲ್ಲಿಯೇ ನಡೆಯುವುದು. ಗಿರಿಜೆಯು (ಪಂಪಾಂಬಿಕೆ) ಶಿವನ (ವಿರೂಪಾಕ್ಷ) ಕೈಹಿಡಿಯುವ ಪ್ರಸಂಗವೇ ಗಿರಿಜಾ ಕಲ್ಯಾಣದ ವಸ್ತು. ಈಗಲೂ ಗಿರಿಜಾ ಕಲ್ಯಾಣೋತ್ಸವ ವಿಧಿಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಾಚರಣೆಗಳನ್ನು ಇಲ್ಲಿಯ ವಿರೂಪಾಕ್ಷ ಹಾಗೂ ಪಂಪಾಂಬಿಕೆಯರ ದೇವಾಲಯದಲ್ಲಿ ಪ್ರತೀವರ್ಷವೂ ನಿಗದಿಪಡಿಸಿದ ದಿನಾಂಕದಂದು ಆಚರಿಸುತ್ತಾರೆ. ಹರಿಹರನ ಅಸಂಖ್ಯಾತ ರಗಳೆಗಳಲ್ಲಿ ಆದಿ ಮತ್ತು ಅಂತ್ಯಗಳಲ್ಲಿ ತಪ್ಪದೆ ಅಧಿದೈವ ವಿರೂಪಾಕ್ಷ ಮುದ್ರಿಕೆಯ ಕಂದ ಬಳಕೆಯಾಗಿದೆ. ರಕ್ಷಾಶತಕ ಕಾವ್ಯ 11 ಪದ್ಯಗಳಿಂದ ಡಿದ್ದು ಪ್ರತಿಯೊಂದು ಪದ್ಯವೂ ಪಂಪಾಪುರದರಸ ವಿರೂಪಾಕ್ಷ ರಕ್ಷಿಪುದೆನ್ನಂ ಎಂದು ಕೊನೆಗೊಳ್ಳುತ್ತದೆ. ತನ್ನನ್ನು ಪಂಪಾಪುರದರಸನ ಸಾಕ್ಷಾತ್ ಸುಪುತ್ರನೆಂದು ಕರೆದುಕೊಂಡಿದ್ದಾನೆ. ವಿರೂಪಾಕ್ಷಾಷ್ಟಕ ಹಾಗೂ ಹಂಪೆಯರಾಯ ಶತಕ ಲಘುಕೃತಿಗಳಲ್ಲಿಯೂ ವಿರೂಪಾಕ್ಷನನ್ನು ಮನದುಂಬಿ ಸ್ತುತಿಸಿದ್ದಾನೆ. ಹರಿಹರನು, ಹಂಪೆಯಾಳ್ದ ವಿರೂಪಾಕ್ಷನೊಬ್ಬನನ್ನು ಮಾತ್ರ ಹೊಗಳಬೇಕೆಂದು ಮತ್ತೆ ಮತ್ತೆ ಘೋಷಿಸಿಕೊಂಡಿದ್ದಾನೆ. ದೊರೆಗಳಾದರೂ ಅವರ ಮೇಲೆ ಕಾವ್ಯಗಳನ್ನು ಬರೆಯಬಾರದೆಂಬ ಸಂಕಲ್ಪವನ್ನು ಮಾಡುವ ಧೈರ್ಯ ಹರಿಹರನಿಗೆ ಬರಲು ಕಾರಣ, ಅವನ ಹುಟ್ಟೂರಾದ ಹಂಪೆಯ ಬಹುಶಃ ಯಾವುದೇ ರಾಜರ ಅಧೀನದಲ್ಲೂ ಇರದೆ ಒಂದು ರೀತಿಯಲ್ಲಿ ಸ್ವತಂತ್ರವಾಗಿದ್ದುದೇ ಆಗಿದೆ. `ಅವನು ಇದ್ದ ವಾತಾವರಣದಲ್ಲಿ ದೈವಕ್ಕೆ ಬಾಗುವುದಿತ್ತೇ ಹೊರತು ರಾಜನಿಗಲ್ಲ. ಆ ದೈವ ಬೇರಾರು ಆಗಿರದೆ ಹಂಪೆಯ ವಿರೂಪಾಕ್ಷನೇ ಆಗಿದ್ದ.'18 ಹರಿಹರನ ಸೋದರಳಿಯನಾದ ರಾಘವಾಂಕನು ಹಂಪೆಯ ವಿರೂಪಾಕ್ಷನ ರೂಪವನ್ನು ಕುರಿತು ಸೋಮನಾಥಚರಿತ್ರೆ, ಹರಿಶ್ಚಂದ್ರ ಕಾವ್ಯ ಹಾಗೂ ವೀರೇಶ ಚರಿತೆಗಳಲ್ಲಿ ವರ್ಣಿಸಿದ್ದಾನೆ. ಹರಿಶ್ಚಂದ್ರ ಕಾವ್ಯದಲ್ಲಿ ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ಹೇಳುತ್ತಾ ತಾನು ಇಡೀ ಭೂಮಂಡಲದ ಒಡೆಯನಾಗಿದ್ದರೂ ತನ್ನ ಆಳ್ವಿಕೆಗೆ `ಹೇಮಕೂಟಂ ವಾರಣಾಸಿಗಳು' ಹೊರಗು, ಆ ಎರಡು ಪ್ರದೇಶಗಳಿಗೆ ನೀನು ಒಡೆಯನಲ್ಲ. ಅವಕೆ ವಿಶ್ವೇಶ್ವರ ವಿರೂಪಾಕ್ಷರೇ ಒಡೆಯರು, ಅವನಿಯೊಳಗಲ್ಲಿ ನಿನ್ನಾಜ್ಞೆಗಳು ಸಲ್ಲ'19 ಎಂದು ಹರಿಶ್ಚಂದ್ರ ವಾದಿಸುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಂಪೆ, ವಾರಣಾಸಿಗಳಿಗೆ ವಿರೂಪಾಕ್ಷ, ವಿಶ್ವೇಶ್ವರರೇ ಅಧಿಪತಿಗಳು. ಭೂರಾಜರುಗಳ ಆಜ್ಞೆ, ಅಧಿಕಾರಗಳು ನಡೆಯುವುದಿಲ್ಲ ಎಂಬುದು ಹದಿಮೂರನೇ ಶತಮಾನದ ವೇಳೆಗಾಗಲೇ ಜನಮನದಲ್ಲಿ ಪಂಪಾಪುರದ ಪ್ರದೇಶದ ನಿಜವಾದ ರಾಜ ವಿರೂಪಾಕ್ಷ ಸ್ವಾಮಿಯೇ ಎಂಬ ಕಲ್ಪನೆ ಬೆಳೆದಿತ್ತು. ಕ್ರಿ.ಶ. 122 ರಲ್ಲಿದ್ದ ಸೋಮರಾಜ ಕವಿಯು ತನ್ನ ಉದ್ಭಟ ಕಾವ್ಯದಲ್ಲಿ ಹಂಪೆಯ ಅಧಿದೇವತೆ ವಿರೂಪಾಕ್ಷನ ಪ್ರಾರ್ಥನೆ ಇರುವುದರ ಜೊತೆಗೆ ಕೃತಿಯ ಒಳಗಡೆ ಹಂಪೆಯ ಪರಿಸರ, ವಿರೂಪಾಕ್ಷ ಸ್ವಾಮಿಯ ಬಗೆಗೆ ಸವಿವರವಾದ ವರ್ಣನೆ ಇದೆ. ಹರಿಹರನ ಪ್ರಯತ್ನದಿಂದಾಗಿ ಹಂಪೆಯ ಪರಿಸರದಲ್ಲಿ ವಿರೂಪಾಕ್ಷನ ಬಗೆಗಿನ ಭಕ್ತಿ ನಿಷ್ಠೆ, ಧರ್ಮಜಾಗೃತಿ ಜನತೆಯಲ್ಲಿ ಇಮ್ಮಡಿಸಿತು. ಭಕ್ತರ ಸಂಖ್ಯೆಯು ಹೆಚ್ಚಿತು. ವಿಜಯನಗರ ಸಾಮ್ರಾಜ್ಯ ಪೂರ್ವದಲ್ಲಿಯೇ ವಿರೂಪಾಕ್ಷನ ಕೀರ್ತಿ ಎಲ್ಲೆಡೆ ಪಸರಿಸಿತ್ತು ಹಾಗೂ ಹಂಪೆಯ ವಿರೂಪಾಕ್ಷ ಸ್ವಾಮಿಯ ದೇವಾಲಯವನ್ನು ಕೇಂದ್ರವಾಗಿರಿಸಿಕೊಂಡು ಬಹು ಪ್ರಮುಖವಾದ ಒಂದು ಹಿಂದೂ ಧರ್ಮದ ಕ್ಷೇತ್ರವಾಗಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿತ್ತು ಎಂಬದು ವಿದಿತವಾಗುತ್ತದೆ.2ಹೊಯ್ಸಳರ ಅರಸರ ಕಾಲಾವಧಿಯಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎಂಬುದಾಗಿ ತಿಳಿದುಬರುತ್ತದೆ. ಹೊಯ್ಸಳ ಅರಸ ಸೋಮೇಶ್ವರ ದೇವನ ಒಂದು ಶಾಸನವು ಅರಸನು ಹಂಪೆಯ ವಿರೂಪಾಕ್ಷ ದೇವರಿಗೆ ಆ ರಾಜಧಾನಿಯ ಪರಿಸರದಲ್ಲಿ ತನ್ನ ಕಾರ್ಯಸಿದ್ಧಿಗಾಗಿ ಚಿಕ್ಕಗರಜೆ ಗ್ರಾಮವನ್ನು ದಾನ ನೀಡಿದ್ದು ಆ ಗ್ರಾಮದ ಆದಾಯವು ದೇವರ ಪೂಜೆಗೆ ಸಲ್ಲಬೇಕೆಂದು ನಿರೂಪಿಸಿದೆ.21 ಜೊತೆಗೆ ವಿರೂಪಾಕ್ಷನನ್ನು ಕುರಿತು ವಿಶೇಷಣಗಳಿಂದ ಕುರಿತು ಸ್ತುತಿಸಲಾಗಿದೆ.

ದೆಹಲಿಯ ಸುಲ್ತಾನರ ದಾಳಿಗೆ ತುತ್ತಾದ ಹೊಯ್ಸಳ ಸಾಮ್ರಾಜ್ಯ ಬಲ್ಲಾಳನ ಕಾಲದಲ್ಲಿ ಕಷ್ಟಗಳಿಗೆ ಗುರಿಯಾಯಿತು. ಈ ಹಂತದಲ್ಲಿ ಮೂರನೆಯ ಬಲ್ಲಾಳನು ವಿರೂಪಾಕ್ಷ ಸ್ವಾಮಿಯಲ್ಲಿ ಮೊರೆ ಹೊಕ್ಕು ಸಮಕಾಲೀನ ಜನತೆಯ ಸಹಾಯ, ಸಹಕಾರ, ಪ್ರೋತ್ಸಾಹಗಳನ್ನು ನಿರೀಕ್ಷಿಸಿದನು. ಆ ವೇಳೆಗೆ ವಿರೂಪಾಕ್ಷನುಜನರ ಮನಸ್ಸಿನ ಅಧಿದೈವನಾಗಿ ಖ್ಯಾತಿಗೊಂಡಿದ್ದರಿಂದ ಜನತೆಯಿಂದ ಸಹಾಯ ಸಹಕಾರ ನಿರೀಕ್ಷಿಸಲು ತನ್ನನ್ನು ವೀರ ವಿರೂಪಾಕ್ಷ ಬಲ್ಲಾಳ ಎಂದು ಕರೆದುಕೊಂಡಿದ್ದಲ್ಲದೆ, ಹಂಪೆಯ ಒಡೆಯನೆಂದು ಹೇಳಿಕೊಂಡನು. ಆತನು ತನ್ನ ರಾಜಧಾನಿಯನ್ನು ತಾತ್ಕಾಲಿಕವಾಗಿ ಹಂಪೆಗೆ ಬದಲಾಯಿಸಿ ಅದನ್ನು ಶ್ರೀ ವೀರವಿಜಯ ವಿರೂಪಾಕ್ಷಪುರ, ಹೊಸ ಹಂಪೆಯ ಪಟ್ಟಣ ಎಂದು ಕರೆದನು. ಹಂಪೆಯನ್ನು ಉಪರಾಜಧಾನಿಯನ್ನಾಗಿ ಮಾಡಿಕೊಳ್ಳಲು ಕಾರಣ ಬಹುಶಃ ಪಂಪಾವಿರೂಪಾಕ್ಷನ ಸಾನ್ನಿಧ್ಯದಲ್ಲಿರುವ ಹಾಗೂ ತುಂಗಭದ್ರೆ ಮತ್ತು ಉದ್ದಕ್ಕೂ ಚಾಚಿರುವ ಕಾಡುಗಲ್ಲಿನ ಪರ್ವತ ಶ್ರೇಣಿಗಳು ಉತ್ತರ ಧಾಳಿಯನ್ನು ತಡೆಗಟ್ಟಲು ಅನುಕೂಲವಾಗಿದ್ದಿತು. ಮುಮ್ಮಡಿ ಬಲ್ಲಾಳ ನಿರ್ಮಿತ ಆ ಪಟ್ಟಣವು ಆ ಕಾಲದ ಶಾಸನಗಳಲ್ಲಿ ಹೊಸ ಹಂಪೆಯ ಪಟ್ಟಣ, ವಿರೂಪಾಕ್ಷ ಹೊಸ ಪಟ್ಟಣವಿರೂಪಾಕ್ಷ ಪಾದ ಇತ್ಯಾದಿ ಹೆಸರುಗಳಿಂದ ಉಲ್ಲೇಖಿತವಾಗಿದೆ. ಕ್ರಿ.ಶ. 1139ರ ಶಾಸನದಲ್ಲಿ ಮೂರನೇ ಬಲ್ಲಾಳನು `ಶ್ರೀ ವೀರವಿಜಯ ವಿರೂಪಾಕ್ಷಪುರ' ನೆಲೆವೀಡಿನಿಂದ ಆಳುತ್ತಿದ್ದಂತೆ ಉಲ್ಲೇಖಿಸಿದೆ.22 ಬಲ್ಲಾಳನು ಈ ರೀತಿ ಕಾರ್ಯ ಪ್ರವೃತ್ತನಾಗಲು ಮತ್ತೊಂದು ಕಾರಣ ಎಂದರೆ `ವಿರೂಪಾಕ್ಷ ದೈವದ ಘನತೆಯಿಂದಾಗಿ ಪ್ರಭಾವಿತವಾಗಿದ್ದ ಶೈವ / ವೀರಶೈವ ಸಮಾಜ. ಆ ಸಮಾಜದ ಜಾಗ್ರತಾ ಶಕ್ತಿ.'23 ಈ ಶಕ್ತಿಯನ್ನು ತನ್ನ ಅನುಕೂಲಕ್ಕೆ ಉಪಯೋಗಿಸಿಕೊಂಡನು. ವಿಪತ್ತಿನ ಸಮಯದಲ್ಲಿ ತನ್ನ ಉದ್ದೇಶ ಸಾಧನೆಗಾಗಿ ಅಲ್ಲಿಯ ಬಹುಸಂಖ್ಯಾತ ಪ್ರಜೆಗಳ ಬಲವನ್ನು ಗಳಿಸಿಕೊಳ್ಳುವ ಸಲುವಾಗಿ ತನ್ನ ಸುತನಿಗೆ ಹಂಪೆಯ ವಿರೂಪಾಕ್ಷನ ಹೆಸರನ್ನೇ ಇಟ್ಟನು. ಪ್ರಭಾವೀ ದೈವವಾಗಿದ್ದ ಹಂಪೆಯ ಹೆಸರನ್ನು ಮುಂದುವರೆಸಿಕೊಂಡು ಹಂಪೆಯ ಪರಿಸರದ ಜನತೆಯ ಸಹಕಾರಗಳನ್ನು ನಿರೀಕ್ಷಿಸಿದನು. ಹದಿನಾಲ್ಕನೇ ಶತಮಾನದ ವೇಳೆಗಾಗಲೇ ವಿರೂಪಾಕ್ಷ ದೇವಾಲಯ ಸುಪ್ರಸಿದ್ಧ ದೇವಾಲಯವಾಗಿದ್ದು ಹೊಯ್ಸಳ ರಾಜ್ಯದ ಉತ್ತರ ಮೇರೆಯಲ್ಲಿಯ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿ ಪಾತ್ರವಹಿಸಿತ್ತು. ಕ್ರಿ.ಶ. 134ಂರಲ್ಲಿ ಮೂರನೆಯ ಬಲ್ಲಾಳನು ತನ್ನ ಪುತ್ರ ವಿರೂಪಾಕ್ಷ ನಾಲ್ಕನೇ ಬಲ್ಲಾಳನ ಯುವರಾಜ ಪಟ್ಟ ಮಹೋತ್ಸವವನ್ನು ವಿರೂಪಾಕ್ಷ ದೇವಾಲಯದಲ್ಲಿಯೇ ನೆರವೇರಿಸಿದ. ಹೀಗಾಗಿಹೊಯ್ಸಳ ಅರಸರ ಕೊನೆಯ ಆಳ್ವಿಕೆಯ ದಿವಸಗಳಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯವು ಮಹತ್ತರ ಪಾತ್ರ ವಹಿಸಿತ್ತು. ಹದಿಮೂರು ಹಾಗೂ ಹದಿನಾಲ್ಕನೇ ಶತಮಾನಗಳಲ್ಲಿ ವಿರೂಪಾಕ್ಷ ದೇವಾಲಯವು, ಕುರುಗೋಡು ದೊರೆಗಳ, ಹೊಯ್ಸಳ ಕೊನೆಯ ಅರಸರುಗಳ, ಕವಿಗಳ ಆರಾಧ್ಯ ದೈವವಾಗಿದ್ದು ಹಂಪೆಯ ಸಮಸ್ತ ಜನತೆಯ ಚಟುವಟಿಕೆಗಳನ್ನು ನಿಯಂತ್ರಿಸುವ ಸಾಂಸ್ಕೃತಿಕ ಕೇಂದ್ರವಾಗಿದ್ದು ಜನತೆಯ ಜೀವನಾಡಿಯಾಗಿ ಪರಿಣಮಿಸಿತ್ತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಮೇಲೆ ಆರಂಭಕಾಲದ ಸಂಗಮ ವಂಶದ ಅರಸರುಗಳ ಕಾಲದಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯವು ಎಲ್ಲಾ ರೀತಿಯಿಂದಲೂ ವ್ಯಾಪಕ ಮಹತ್ವವನ್ನು ಪಡೆಯಿತು. ಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಹಕ್ಕಬುಕ್ಕರು ಹಂಪೆಯ ಪ್ರದೇಶವನ್ನು ಆರಿಸಿಕೊಳ್ಳಲು ಸಹಜ ಪ್ರಾಕೃತಿಕ ರಕ್ಷಣೆಯೊಡಗೂಡಿದ ದುರ್ಗಮ ಪ್ರದೇಶದ ಜೊತೆಗೆ `ಬಹುಶಃ ತಾತ್ವಿಕವಾಗಿಯಾದರೂ ಹಂಪೆಯ ಪ್ರದೇಶವು ಯಾವುದೇ ರಾಜನ ಪ್ರಭುತ್ವದಿಂದ ಮುಕ್ತವಾಗಿದ್ದ (ವಿರೂಪಾಕ್ಷನ ಆಡಳಿತವಿದ್ದ) ಪ್ರದೇಶವೂ ಆಗಿತ್ತು'25 ಎಂಬುದು ಕಾರಣವಾದಂತಿದೆ. ಸಂಗಮ ವಂಶದ ಅರಸರುಗಳ ಮೇಲೆ ಈ ದೈವ ಬಹಳವಾಗಿ ಪ್ರಭಾವ ಬೀರಿದೆ. ಸಂಗಮ ವಂಶದ ಅರಸರುಗಳು ತಾವು ಹೊಸದಾಗಿ ಸ್ಥಾಪಿಸಿದ್ದ ರಾಜ್ಯವನ್ನು ರಕ್ಷಿಸುವ ಹಾಗೂ ಭದ್ರಪಡಿಸಿಕೊಳ್ಳುವ ಉತ್ಕಟ ಆಕಾಂಕ್ಷೆಯಿಂದ ಹಂಪೆಯ ಅಧಿದೈವವಾದ ವಿರೂಪಾಕ್ಷ ಸ್ವಾಮಿಯನ್ನು ತಮ್ಮ ಕುಲದ ದೈವವೆಂದು ಪ್ರಾರಂಭದಿಂದಲೇ ಸಾರಿದರು. ಸಂಗಮರ ಕಾಲದ ಆರಂಭದ ಶಾಸನದಲ್ಲಿಯೇಪಂಪಾ ವಿರೂಪಾಕ್ಷ : ಸಾಕ್ಷಾತ್ ಕುಲ ಪರಮದೈವ26 ಎಂಬ ಉಲ್ಲೇಖ ಇದೆ. ಪ್ರೌಢ ದೇವರಾಯನ ಕಾಲದಶಾಸನವು ವಿಜಯನಗರ ಸಾಮ್ರಾಜ್ಯವನ್ನು `ಶ್ರೀಮದ್ಭಾಸ್ಕರ ಕ್ಷೇತ್ರದ ಶ್ರೀ ವಿರೂಪಾಕ್ಷ ದೇವರ ಪಂಚಕೋಶದೊಳಗೆ'27 ಎಂದು ಕೀರ್ತಿಸಿದೆ. ಇಮ್ಮಡಿ ಹರಿಹರನ ಕಾಲದ ಕ್ರಿ.ಶ. 1379ರ ಶಾಸನದ ಪ್ರಕಾರ,ಶ್ರೀ ವಿರೂಪಾಕ್ಷನು ಹೇಮಕೂಟ ಪರಿಸರದ ಪ್ರಾಕಾರದಿಂದ ಕೂಡಿರುವ ತುಂಗಭದ್ರೆಯಿಂದ ಪವಿತ್ರವಾದಭೂಮಿಗೆ ಅಭಯವನ್ನು ನೀಡುವ ರಕ್ಷಕನಾಗಿದ್ದಾನೆ. ಸಂಗಮರ ಕಾಲದಲ್ಲಿ ವಿರೂಪಾಕ್ಷ ದೇವಾಲಯವುಬಹಳಷ್ಟು ವಿಸ್ತೀರ್ಣಗೊಂಡಿತು. ಗರ್ಭಗೃಹ, ಸುಖನಾಸಿ, ನವರಂಗ ಪ್ರಕಾರ ಹಾಗೂ ಮುಖ್ಯ ಗೋಪುರಗಳನ್ನು ಒಳಗೊಂಡಿತ್ತು. ಇವರ ಕಾಲದಲ್ಲಿ ಹಂಪೆಯ ವಿರೂಪಾಕ್ಷನ ಹೆಸರಿನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದತ್ತಿದಾನಗಳನ್ನು ನೀಡಿರುವ ಶಾಸನಗಳ ಉಲ್ಲೇಖ ಅಧಿಕವಾಗಿವೆ. ಸಂಗಮ ವಂಶದ ಆರಂಭದ ದೊರೆಗಳಾದ ಬುಕ್ಕರಾಯ ಹಾಗೂ ಇಮ್ಮಡಿ ಹರಿಹರನ ಕಾಲದಲ್ಲಿಯೇ ವಿರೂಪಾಕ್ಷ ದೇವಾಲಯವು ದಾನವನ್ನು ಪಡೆದುಕೊಂಡಿದೆ. ಕ್ರಿ.ಶ. 1379ರ ಶಾಸನವು ಅರಸನ ಆಜ್ಞೆಯ ಮೇರೆಗೆ ಮುದ್ದ ದಂಡೇಶನು ವಿರೂಪಾಕ್ಷ ದೇವರ ಪೂಜೆಗೆ ಹೆಬ್ಬಾಳು ಮತ್ತು ದಂಡನಾಥ ಪುರಗಳನ್ನು ದಾನ ನೀಡಿದ್ದನ್ನು ದಾಖಲಿಸಿದೆ. ಹಾಗೆಯೇ ಸಂಗಮರ ಕಾಲದ ಆರು ಶಾಸನಗಳು ವಿರೂಪಾಕ್ಷ ದೇವರಿಗೆ ದಾನದತ್ತಿಗಳನ್ನು ನೀಡಿದ್ದನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಉಲ್ಲೇಖಿಸಿವೆ.

     ಸಂಗಮರ ಕಾಲದಲ್ಲಿ ಹಂಪೆಯ ವಿರೂಪಾಕ್ಷ ದೇವರಿಗೆ ಹೆಚ್ಚಿನ ಮಾನ್ಯತೆ ದೊರೆತು ಅಪಾರ ದಾನ ದತ್ತಿಗಳ ಮೂಲಕ ಸಂಪತ್ತು ಸಂಗ್ರಹಿಸಲ್ಪಟ್ಟು ಸ್ಥಳೀಯ ಜನತೆಯ ಆರಾಧ್ಯ ದೈವವಾಗಿ ಸಕಲ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯಾಯಿತು. ಸಂಗಮ ವಂಶದ ರಾಜರುಗಳು ತಾವು ಹೊರಡಿಸಿದ ತಾಮ್ರ ಶಾಸನಗಳಕೊನೆಯಲ್ಲಿ ತಮ್ಮ ಹೆಸರಿನ ಅಂಕಿತ ಅಥವಾ ಒಪ್ಪದ ಬದಲಿಗೆ `ಶ್ರೀ ವಿರೂಪಾಕ್ಷ' ಎಂಬ ತಮ್ಮ ಕುಲದೈವದಹೆಸರನ್ನೇ ಹೊರಡಿಸಿರುವುದು ವ್ಯಕ್ತವಾಗುತ್ತದೆ. ಇಮ್ಮಡಿ ಹರಿಹರನಿಂದ ಹಿಡಿದು ಎರಡನೇ ಪ್ರೌಢದೇವರಾಯನವರೆಗೂ ವಿರೂಪಾಕ್ಷನ ಹೆಸರಿನಲ್ಲಿ ಒಪ್ಪವನ್ನು ಹಾಕಿಸಿರುವುದು ಶಾಸನಗಳಿಂದ ತಿಳಿದುಬರುತ್ತದೆ. ಈ ದೊರೆಗಳು ತಮ್ಮ ರಾಜ ಶಾಸನಗಳನ್ನು ತಮ್ಮ ಹೆಸರಿನಲ್ಲಿ ಹೊರಡಿಸದೆ ಪಂಪಾ ವಿರೂಪಾಕ್ಷನ ಹೆಸರಿನಲ್ಲಿ ಹೊರಡಿಸಿರುವುದನ್ನು ಮನಗಂಡರೆ ಹಂಪೆಯ ಪ್ರದೇಶದಲ್ಲಿ ತಾವು ರಾಜತ್ವ ನಡೆಸುತ್ತಿದ್ದರೂ ನಿಜವಾದ ದೊರೆ ವಿರೂಪಾಕ್ಷ, ಆತನ ಪ್ರತಿನಿಧಿಗಳು ನಾವು ಎಂದು ಪರಿಭಾವಿಸಿರುವಂತೆ ಕಂಡುಬರುತ್ತದೆ. ಈ ಅರಸರುಗಳು ಚಿನ್ನದ ನಾಣ್ಯಗಳನ್ನು ಠಂಕಿಸಿ ಅವುಗಳ ಮುಂದಿನ ಮುಖದ ಮೇಲೆ ಶಿವಪಾರ್ವತಿಯರ ರೂಪುಗಳನ್ನು ಮುದ್ರಿಸಿದರು. ಈ ರೂಪುಗಳು ಹಂಪೆಯ ವಿರೂಪಾಕ್ಷ ಹಾಗೂಪಂಪಾಂಬಿಕೆಯರ ಪ್ರತೀಕವಾಗಿದೆ. ವಿಜಯನಗರದ ಆರಂಭದ ದೊರೆಗಳು ಹಂಪೆಯ ವಿರೂಪಾಕ್ಷ ಹಾಗೂ ಪಂಪಾಂಬಿಕೆಯರ ರೂಪಗಳನ್ನು ಚಿನ್ನದ ನಾಣ್ಯಗಳ ಮೇಲೆ ಕಾಣಬರುವಂತೆ ಅಳವಡಿಸಿಕೊಂಡಿರುವುದು ವಿರೂಪಾಕ್ಷ ದೈವದ ಪ್ರಭಾವ ಸೂಚಿಸುತ್ತದೆ. ಜನತೆಯ ಆರಾಧ್ಯ ದೈವವಾಗಿದ್ದ ವಿರೂಪಾಕ್ಷನಲ್ಲಿ ಸಂಗಮ ವಂಶದ ದೊರೆಗಳು ಹೆಚ್ಚಿನ ನಿಷ್ಠೆ ತೋರಲು `ಬಹುಶಃ ಎಲ್ಲಾ ರೀತಿಯ ಬೆಂಬಲಗಳನ್ನೊದಗಿಸುತ್ತಿದ್ದ ಶೈವ /ವೀರಶೈವ ಅನುಯಾಯಿಗಳನ್ನು ಸಂತೃಪ್ತಿಪಡಿಸಲೋಸುಗ ಕೈಗೊಂಡಿದ್ದ ಕ್ರಮಗಳಲ್ಲೊಂದಾಗಿತ್ತು ಎಂದು ಹೇಳಬಹುದು.'28

   ಸಾಹಿತ್ಯ ಕೃತಿಗಳು ಹಾಗೂ ಶಾಸನಗಳ ಉಲ್ಲೇಖದ ಪ್ರಕಾರ ವಿರೂಪಾಕ್ಷ ದೇವಾಲಯವು ಒಂದನೇ ದೇವರಾಯ ಹಾಗೂ ಪ್ರೌಢದೇವರಾಯನ ಕಾಲದಲ್ಲಿ ಹೊಸ ಭಾಗಗಳ ಸೇರ್ಪಡೆಯೊಂದಿಗೆ ವಿಸ್ತಾರಗೊಂಡಿತು. ವಿರೂಪಾಕ್ಷ ದೇವಾಲಯದ ಮುಖ್ಯ ಗೋಪುರವನ್ನು ಇಮ್ಮಡಿ ಪ್ರೌಢದೇವರಾಯನ ದಂಡನಾಯಕ ಪ್ರೋಲಗಂಟಿ ತಿಪ್ಪನು ಕಟ್ಟಿಸಿದನೆಂದು ಶಾಸನ ಹಾಗೂ ಹರಿಭದ್ರನ ಉತ್ತರ ನಾರಸಿಂಹ ಪುರಾಣಮ್ ಕೃತಿಯಿಂದ ತಿಳಿದುಬರುತ್ತದೆ. ಹದಿನೈದನೆಯ ಶತಮಾನದ ಪ್ರಾರಂಭದ ಕಾಲದಲ್ಲಿಯೂ ವಿರೂಪಾಕ್ಷನು ಕವಿಗಳ ಅಧಿದೈವನಾಗಿ ರೂಪುಗೊಂಡಿದ್ದನು. ಒಂದನೇ ದೇವರಾಯನ ಕಾಲದಲ್ಲಿ ಇದ್ದನೆಂದು ಹೇಳಲಾದ ಅನಾಮಧೇಯ ಕವಿಯು `ವಿರೂಪಾಕ್ಷ ಶತಕ' ಎಂಬ ಶತಕ ಪ್ರಕಾರದಲ್ಲಿ ರಚಿಸಿರುವ ಕೃತಿಯಲ್ಲಿ ಅಧಿದೈವ ವಿರೂಪಾಕ್ಷನನ್ನು ಕುರಿತ ವಿವಿಧ ರೀತಿಯ ವರ್ಣನೆ ಇದೆ. ವಿರೂಪಾಕ್ಷನನ್ನು ಕುರಿತು `ಪಂಪಾಧೀಶ ಜಯಜಯ ಶ್ರೀ ವಿರೂಪಾಕ್ಷ, ಹರ ಹರಾ ಹಂಪೆಯ ನಿವಾಸನೇ, ಹರಹರ ಹಂಪೆಯ ವಿಲಾಸನೆ, ಹಂಪೆಯ ಮಹಾವೈಭವದ ಸಂಭ್ರಮನೆ' ಇತ್ಯಾದಿ ರೀತಿಯಲ್ಲಿ ವರ್ಣಿಸಿದ್ದಾನೆ. ಈ ಕೃತಿಯ ಪದ್ಯಗಳೆಲ್ಲವೂ ಶ್ರೀ ವಿರೂಪಾಕ್ಷನ ಅಂಕಿತದಿಂದ ಕೊನೆಗೊಳ್ಳುತ್ತವೆ. ಪ್ರೌಢದೇವರಾಯನು ತಾನು ದೊರೆಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ವಿರೂಪಾಕ್ಷ ದೇವಾಲಯಕ್ಕೆ ಸಲ್ಲಿಸಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಯ ಬಗೆಗೆ ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿಯ ಮೂರು ಪದ್ಯಗಳಲ್ಲಿ ಮಹತ್ತರವಾದ ಸಂಗತಿ ವ್ಯಕ್ತವಾಗಿದೆ.

`ದೇವಲೋಕದ ಸಕಲ ವೈಭವಂಗಳು ಸಹತಿ

ಭೂವಿನುತ ವಿಜಯ ಕಲ್ಯಾಣ ಪುರಕೆಯ್ತಂದು

ಭಾವಜವಿದಾರಿ ಪಂಪಾ ವಿರೂಪಾಕ್ಷ ಭವನದ ನಾಲ್ಕು ದೆಸೆಗಳಲ್ಲಿ

ತೀವಿ ಕಿಕ್ಕಿರಿದ ಮಣಿಗಳಸ ಕೋಟೆಗಳ

ಲಾವಣ್ಯತರ ಗೋಪುರಂಗಳ ರಚಿಸಿದಂ'

`ತ್ರಿಪುರ ವಿಜಯಿತ ವಿರೂಪಾಕ್ಷನ ಮನೋರಥಕೆ

ಸುಪಥವಾದುದು ದೇವ ರಾಜೇಂದ್ರನುದಯದಿಂ

ವಿಪುಳೆಯೊಳು ದೃಷ್ಟವಿದೆಯೆಂದೆಂಬ ಮಾಳ್ಕೆಯಿಂ ಪಂಪಾಪುರದೊಳನುದಿನಂ

ಅಪರಿಮಿತ ಗೋಪುರಂಗಳ ಮಧ್ಯವೀಧಿಯಿಂ

ರಿಪು ಕಂಟಕಂಗಳಂ ಸವಱುವಂದದಿ ಸವಱಿ

ಸುಪವಿತ್ರವೆನಿಸಿದಂ ರಥಪಥವನ್......'

ಆ ಮಹಾರಥ ಪಥದೊಳವಿರತಂ ಸಂಚರಿಪ

ಕಾಮಿತಾರ್ಥಗಳ ಕಲ್ಪಿಸಿದ ಸುಫಲಂಗಳಂ

ಪ್ರೇಮದಿಂದೀವ ಭರದಿಂ ಸುರದ್ರುಮಕುಲಂ ಗೋಪುರದೊಳಿಕ್ಕೆಲದೊಳು

ಪಂಪಾಪತಿಯ ಮನೋರಥ ರೂಪ ತಾನಾದ

ಪೆಂಪಂ ಜಗಕ್ಕೆಱುಪಿ ತೋಱಿದನೊ ಎಂಬಂತೆ

ಸೊಂಪೇಱಿ ಮೆರೆಸುವ ವಿರೂಪಾಕ್ಷ ನತುಳ ರಥ ಪಂಪಾಂಬಿಕಾ ರಥವನು

ಂಪಳಿಪ ನಾನಾರಸದ ಗಣಾಧಿಪ ರಥವ

ಗುಂಪಱಿವರಳವಲ್ಲವೆನೆ ರೂಢಿವಡಿಸಿದನ

ದೇಂ ಪ್ರತಾಪನೊ ದೇವರಾಜೇಂದ್ರನ....'29

ಲಕ್ಕಣ್ಣ ದಂಡೇಶನ ಈ ಮೇಲ್ಕಂಡ ಪದ್ಯಗಳ ಪ್ರಕಾರ ಪ್ರೌಢದೇವರಾಯನು ವಿರೂಪಾಕ್ಷ ದೇವಾಲಯದ

ನಾಲ್ಕು ದಿಕ್ಕುಗಳಲ್ಲಿ ಮಣಿಗಳಸಗಳನ್ನು ಕೋಟೆಗಳ ಲಾವಣ್ಯತರ ಗೋಪುರಗಳನ್ನು ಕಟ್ಟಿಸಿದನಂತೆ. ಅಲ್ಲದೆ ಈ ಗೋಪುರಗಳ ಮಧ್ಯದ ಬೀದಿಯಲ್ಲಿ ರಥವು ಸುಗಮವಾಗಿ ಸಾಗಲು ಅಡಚಣೆಯಾಗಿದ್ದ ಗಿಡಗಂಟೆಗಳನ್ನು ಕೀಳಿಸಿ ಅನುಕೂಲವಾಗುವಂತೆ ಮಾಡಿಸಿದನಂತೆ. ಬೀದಿಯ ಇಕ್ಕೆಡೆಗಳಲ್ಲಿ ನಾನಾ ಫಲಂಗಳ ಮರಗಳನ್ನು ನಡೆಸಿದನಂತೆ.

ಇದಕ್ಕಿಂತ ದೊರೆಯ ಮಹತ್ವದ ಕೊಡುಗೆ ಎಂದರೆ ವಿರೂಪಾಕ್ಷನ ರಥ, ಪಂಪಾಂಬಿಕ ರಥ, ಗಣೇಶ ರಥಗಳನ್ನು ಮಾಡಿಸಿ ರಥೋತ್ಸವವನ್ನು ರೂಢಿಗೆ ತಂದದ್ದು3 ತಿಳಿದುಬರುತ್ತದೆ. ಪ್ರೌಢದೇವರಾಯನು ವಿರೂಪಾಕ್ಷ ದೇವರಿಗೆ ಮಾಡಿದ ಸಾಂಸ್ಕೃತಿಕ ಸೇವೆಯ ವಿವರ ಮತ್ತೆಲ್ಲಿಯೂ ದೊರೆತಿಲ್ಲ. ಸಂಗಮ ಅರಸರುಗಳ ಕಾಲದಲ್ಲಿ ವಿರೂಪಾಕ್ಷನ ರಥೋತ್ಸವ ಆಚರಣೆಗೆ ಬಂದಿದ್ದು, ರಥೋತ್ಸವದ ಸಂದರ್ಭದಲ್ಲಿ ನಾಡಿನಾದ್ಯಂತ ಸ್ಥಳೀಯ ಅರಸರು ಮಠಾಧೀಶರು ಭಾಗವಹಿಸುತ್ತಿದ್ದ ವಿವರ ಅಹೋಬಲ ಕವಿಯ `ವಿರೂಪಾಕ್ಷ ವಸಂತೋತ್ಸವ ಚಂಪು' ಸಂಸ್ಕೃತ ಕಾವ್ಯದಿಂದ ತಿಳಿದುಬರುತ್ತದೆ. ಹದಿನಾಲ್ಕನೆಯ ಶತಮಾನದ ಕೊನೆಯಲ್ಲಿದ್ದ ಅಹೋಬಲನು ವಿರೂಪಾಕ್ಷನ ರಥೋತ್ಸವದ ವರ್ಣನೆಯ ಬಗೆಗೆ ವಿವರಿಸಿದ್ದಾನೆ. ಸಂಗಮರ ಆಳ್ವಿಕೆಯ ಕಾಲದಲ್ಲಿ ವಿರೂಪಾಕ್ಷನ ವಸಂತೋತ್ಸವವು ಒಂಬತ್ತು ದಿವಸಗಳ ಅವಧಿಯದಾಗಿತ್ತು. ಚೈತ್ರಶುದ್ಧನವಮಿಯಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳುವ ಈ ಉತ್ಸವ ಚೈತ್ರ ಬಹುಳ ದ್ವಿತೀಯಯೆಂದು ಅವಭೃತ ಸ್ನಾನದೊಂದಿಗೆ ಪೂರ್ಣಗೊಳ್ಳುತ್ತಿತ್ತು. ಸ್ವತಃ ಕವಿಯು ತಾನೇ ಕಣ್ಣಾರೆ ಕಂಡ ವಿರೂಪಾಕ್ಷನ ವಸಂತೋತ್ಸವ ವಿವರವನ್ನು ವರ್ಣಿಸಿದ್ದಾನೆ. `ಈ ರಥೋತ್ಸವದಲ್ಲಿ ಪಾಲ್ಗೊಂಡವರಲ್ಲಿ ವಿಜಯನಗರದ ಅರಸ, ಶಿರಶಿಯ ಲಿಂಗಾಯತ ಸಾಮಂತ, ಕರ್ನೂಲ್ ಜಿಲ್ಲೆಯ ಮೋಕ್ಷಗುಂಡ ಅಧಿಪತಿ, ಸಿದ್ಧರಾಮೇಶ್ವರ ಆರಾಧಕರಾದ ಬಳ್ಳಾರಿಯ ಅಧಿಪತಿ, ಹರಿಹರ ನಗರದ ಅಧಿಪತಿ, ವಿಜಯನಗರದ ಅರಸನ ಸೇನಾಪತಿಗಳಲ್ಲೊಬ್ಬನಾದ ರಾಮದುರ್ಗದ ಅಧಿಪತಿ, ಹರಿಹರ ನಗರದ ಅಧಿಪತಿ, ಭುಜಂಗ ನಗರದ ಅಧಿಪತಿ ಹಾಗೂ ಲಕ್ಷ್ಮೇಶ್ವರದ ಅಧಿಪತಿ ಮೊದಲಾದವರು ಇದ್ದಾರೆ. ರಥೋತ್ಸವ ಮುಗಿದ ಮೇಲೆ ಯಾತ್ರಿಕರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು.'31 ಸಹ್ಯಾದ್ರಿಯ ಕಡೆಗಿದ್ದ ಬತ್ತಲೇಶ್ವರ ವಿರಕ್ತನು ಸಂಸಾರಿಯಾದ ಮೇಲೆ ಪದ್ಮಾವತಿಯೊಡನೆ ರಥೋತ್ಸವ ನೋಡಲೆಂದು ಹಂಪೆಗೆ ಬಂದನೆಂದು ನೂರೊಂದು ವಿರತರ ಕಾವ್ಯದಲ್ಲಿ ಹೇಳಲಾಗಿದೆ.32 ಅಹೋಬಲನು ತನ್ನ ಕೃತಿಯಲ್ಲಿ ವರ್ಣಿಸಿರುವ ವಿರೂಪಾಕ್ಷನ ರಥೋತ್ಸವದ ವಿವರವನ್ನು ವಿಜಯನಗರ ಕಾಲದ ಶಾಸನಗಳು ಸಮರ್ಥಿಸುತ್ತವೆ. ಕ್ರಿ.ಶ. 152ಂರ ಗಿಣಿಗೇರಾ ತಾಮ್ರ ಶಾಸನವು ಶ್ರೀ ವಿರೂಪಾಕ್ಷ ದೇವರ ರಥೋತ್ಸವಕ್ಕೆ ಅಂತರವಳ್ಳಿ ನಿರಂಜನಯ್ಯ ಮೂರುಜಾವದಯ್ಯಯೆಂಬುವರು ವುಭಯತ್ರರು ಬಂದು,33 ಎಂಬ ವಿವರವನ್ನು ದಾಖಲಿಸಿದ್ದು, ವಿರೂಪಾಕ್ಷನ ರಥೋತ್ಸವಕ್ಕೆ ಸುತ್ತಮುತ್ತಲಿನ ಪ್ರತಿಷ್ಠಿತ ಸ್ಥಳೀಯ ಅರಸರುಗಳು ಪಾಲ್ಗೊಳ್ಳುತ್ತಿದ್ದರು ಎಂಬುದನ್ನು ಸಮರ್ಥಿಸುತ್ತದೆ. ವಿಜಯನಗರದ ಉಚ್ಛ್ರಾಯ ಸ್ಥಿತಿಯ ಕಾಲದಲ್ಲಿ ವಿರೂಪಾಕ್ಷ ದೇವಾಲಯದ ಮುಂದೆ ಪ್ರಸಿದ್ಧ ಬಜಾರು ಇದ್ದು ಅದಕ್ಕೆ ವಿರೂಪಾಕ್ಷ ಬಜಾರು ಎಂಬ ಹೆಸರು ಲಭಿಸಿತ್ತು. ಚಂದ್ರಶೇಖರ ಕವಿಯು `ಪಂಪಾ ವಿರೂಪಾಕ್ಷ ಸ್ಥಾನ ವರ್ಣನಂ'ಎಂಬ ಚಂಪೂಕೃತಿಯನ್ನು ರಚಿಸಿದ್ದು ಅದರಲ್ಲಿ `ಹಂಪಿಯಾಳ್ದನೆಸೆವೋಲಗಂ' ಎಂದು ವಿರೂಪಾಕ್ಷನ ಓಲಗವನ್ನುವರ್ಣಿಸಿದ್ದಾನೆ. ಹಂಪೆಯ ಭೌಗೋಳಿಕ ಪರಿಸರದ ಹಿನ್ನೆಲೆಯಲ್ಲಿಯ ವಿರೂಪಾಕ್ಷನ ಆಸ್ಥಾನದ ವರ್ಣನೆಯನ್ನು ಮಾಡಿದ್ದಾನೆ. ಕವಿಯ ಆಶಯ ಎಂದರೆ ವಿರೂಪಾಕ್ಷನನ್ನು ಒಬ್ಬ ದೊರೆ ಎಂದು ಭಾವಿಸಿ ಅವನ ಆಸ್ಥಾನವನ್ನು, ಆಸ್ಥಾನದಲ್ಲಿ ನಡೆಯುತ್ತಿದ್ದ ನರ್ತನ ಗಾಯನಾದಿಗಳನ್ನು ವರ್ಣಿಸಿದ್ದಾನೆ. ಹಂಪೆಯ ವಿರೂಪಾಕ್ಷನ ದೇವಾಲಯವೇ ಅರಮನೆ, ಆ ದೇವಾಲಯದ ನವರಂಗವೇ ಆ ವಿರೂಪಾಕ್ಷಸ್ವಾಮಿ ಎಂಬ ರಾಜನ ಆಸ್ಥಾನ. ಇದು ಹರಿಹರನ ಕಾಲದ ಪರಿಕಲ್ಪನೆಯ ಮುಂದುವರಿಕೆಯೇ ಆಗಿದೆ.34 ಪಂಪಾವಿರೂಪಾಕ್ಷನ ನೆಲೆವೀಡಾಗಿದ್ದಹಂಪೆಯು ಸಂಗಮರ ಕಾಲದಲ್ಲಿ ವೀರಶೈವ ಸಾಹಿತ್ಯಸಂಸ್ಕೃತಿಯ ಪುನರುಜ್ಜೀವನದ ಮುಖ್ಯ ಕೇಂದ್ರವಾಗಿದ್ದಿತು. ಕಲ್ಯಾಣ ಕ್ರಾಂತಿಯ ವಿಪ್ಲವ ಹಾಗೂ ಮುಸ್ಲಿಂ ಆಕ್ರಮಣದಿಂದಾಗಿ ಚದುರಿಹೋಗಿದ್ದ ಹಾಗೂ ಅಳಿದುಳಿದ ವಚನ ರಾಶಿಯನ್ನು ಸಂಕಲಿಸುವ, ಸಂಸ್ಕರಣ ವ್ಯಾಖ್ಯಾನ ಸ್ಥಲಕಟ್ಟು ನಿಯೋಜನೆಗೊಳಿಸುವ ಮಹತ್ವಪೂರ್ಣ ಕಾರ್ಯಕ್ಕೆ ನೆಲೆಯೊದಗಿಸಿತು.ಪ್ರೌಢದೇವರಾಯನ ದಂಡನಾಯಕನಾದ ಲಕ್ಕಣ್ಣ ದಂಡೇಶನು ಹಂಪೆಯ ವಿರೂಪಾಕ್ಷನ ನಿಷ್ಠಾವಂತ ಭಕ್ತನಾಗಿದ್ದ ಎಂಬುದಕ್ಕೆ ಅವನ ಕೃತಿ ಶಿವತತ್ತ್ವ ಚಿಂತಾಮಣಿಯೇ ನಿದರ್ಶನ. ಮುಳಬಾಗಲ ಪ್ರಾಂತಕ್ಕೆ ಅಧಿಕಾರಿಯಾಗಿದ್ದ ಲಕ್ಕಣ್ಣನು ತಾನು ನಿರ್ಮಿಸಿದ ಹೊಸ ಪಟ್ಟಣಕ್ಕೆ ವಿರೂಪಾಕ್ಷಪುರ ಎಂಬ ಹೆಸರಿಟ್ಟು ಅಲ್ಲಿ

ಪ್ರಸನ್ನ ವಿರೂಪಾಕ್ಷ ದೇವಸ್ಥಾನವನ್ನು ಕಟ್ಟಿಸಿ ಸುವರ್ಣ ಕಲಶದಿಂದ ಪರಿಶೋಭಿಸುವ ಗೋಪುರ, ಮನ್ಮಥಕುಂಡ, ಕೆರೆ, ಉದ್ಯಾನ ಮುಂತಾದವುಗಳನ್ನು ನಿರ್ಮಿಸಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ.35 ಮನ್ಮಥಕುಂಡ ಪುಷ್ಕರಿಣಿಯು ಹಂಪೆಯ ವಿರೂಪಾಕ್ಷ ದೇವಾಲಯದ ಮನ್ಮುಖ ಪುಷ್ಕರಣಿಯನ್ನು ನೆನಪಿಸುತ್ತದೆ.ಲಕ್ಕಣ್ಣನು ಹಂಪೆಯ ವಿರೂಪಾಕ್ಷನ ಮೇಲಿನ ಅಭಿಮಾನದಿಂದ ಅದೇ ಮಾದರಿಯ ದೇವಾಲಯವನ್ನು ತನ್ನಪ್ರಾಂತ್ಯದಲ್ಲಿ ನಿರ್ಮಿಸಿರುವುದು ಹಂಪೆಯ ವಿರೂಪಾಕ್ಷನು ಅಮಾತ್ಯರಲ್ಲಿ ಬೀರಿದ್ದ ಪ್ರಭಾವದ ಪ್ರತೀಕವಾಗಿದೆ.ಸಂಗಮರ ಆಳ್ವಿಕೆಯಲ್ಲಿ ಅಮಾತ್ಯರು, ದಂಡನಾಯಕರು ವಿರೂಪಾಕ್ಷನಿಗೆ ದಾನದತ್ತಿಗಳನ್ನು ನೀಡಿರುವ ಉಲ್ಲೇಖ ಶಾಸನಗಳಿಂದ ತಿಳಿದುಬರುತ್ತದೆ. ಮಾಧವಾಮಾತ್ಯನ ಮಗ ಶಶಿಧರನು ವಿರೂಪಾಕ್ಷ ದೇವರಿಗೆ ದೀಪದ ಕಂಬವನ್ನು ಮಾಡಿಸಿದ ವಿವರ ಕ್ರಿ.ಶ. 1429ರ ಶಾಸನ ತಿಳಿಸುತ್ತದೆ. ಕ್ರಿ.ಶ. 1467ರ ಶಾಸನವು36 ವಿಜಯನಗರದ ದೊರೆ ವಿರೂಪಾಕ್ಷನು ಸೋಮಲಾಪುರವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ಅದಕ್ಕೆ ವಿರೂಪಾಕ್ಷಪುರವೆಂದು ಹೆಸರಿಟ್ಟ ವಿವರವನ್ನು ತಿಳಿಸುತ್ತದೆ. ಸಂಗಮರ ಕಾಲದಲ್ಲಿ ಸಾಮಂತರು, ದಂಡನಾಯಕರು, ಇತರರು ರಾಜದಾನಿಯ ಹೊರಗಡೆ ದತ್ತಿದಾನಗಳನ್ನು ಬಿಡುವಾಗ ಕೆಲವೆಡೆ `ತುಂಗಭದ್ರಾನದೀ ತೀರದ ಪಂಪಾಕ್ಷೇತ್ರದ ವಿರೂಪಾಕ್ಷ ದೇವರ' ಹೆಸರಿನಲ್ಲಿ ದತ್ತಿಯನ್ನು ನೀಡುವಷ್ಟರ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿತ್ತು. ಸಂಗಮರ ಆಳ್ವಿಕೆಯ ನಂತರದ ರಾಜವಂಶಗಳ ಕಾಲದಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯಕ್ಕೆ ದತ್ತಿದಾನಗಳು, ದೇವಾಲಯದ ವಿಸ್ತರಣೆ, ಜೀರ್ಣೋದ್ಧಾರ ಇತ್ಯಾದಿ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರಿದಂತೆ ಅಲ್ಲೊಂದು ಇಲ್ಲೊಂದು ಶಾಸನಗಳಿಂದ ಮೇಲ್ನೋಟಕ್ಕೆ ಕಂಡುಬರುತ್ತದೆಯಾದರೂ ಹಜಾರರಾಮ ಮತ್ತು ವಿಜಯ ವಿಠಲ ದೇವಾಲಯಗಳೇ ಅಧಿಕ ಸಂಖ್ಯೆಯಲ್ಲಿ ರಾಜರುಗಳಿಂದ, ಮಾಂಡಳಿಕರಿಂದಪ್ರತಿಷ್ಠಿತರಿಂದ ಪಡೆದಿರುವುದು ಶಾಸನಗಳಿಂದ ವ್ಯಕ್ತವಾಗುತ್ತದೆ. ಈ ಅರಸರ ಧಾರ್ಮಿಕ ಆಸಕ್ತಿಯ ಬದಲಾವಣೆಯ ಕಾರಣವಾಗಿ ವಿರೂಪಾಕ್ಷ ತನ್ನ ಹೆಚ್ಚುಗಾರಿಕೆಯಲ್ಲಿ ಸ್ವಲ್ಪಮಟ್ಟಿಗೆ ಕಳೆದುಕೊಂಡಂತಾಯಿತು. ಸಂಗಮರ ಆಳ್ವಿಕೆಯವರೆಗೂ ನಿರಂತರವಾಗಿ ಸಾಗಿಬಂದಿದ್ದ ವಿರೂಪಾಕ್ಷ ಪರಂಪರೆಯು ನಂತರದ ರಾಜವಂಶಗಳಲ್ಲಿ ಹಂತಹಂತವಾಗಿ ಇಳಿಮುಖವಾದಂತೆ ಕಂಡುಬರುತ್ತದೆ. ಸಾಳುವರ ಆಳ್ವಿಕೆಯಲ್ಲಿಯೇ, ಇಲ್ಲಿಯವರೆಗೂ ರಾಜಮುದ್ರೆಯಲ್ಲಿ ಉಪಯೋಗಿಸುತ್ತಿದ್ದ`ಶ್ರೀ ವಿರೂಪಾಕ್ಷ' ಎಂಬ ಅಂಕಿತದ ಸ್ಥಾನದಲ್ಲಿ `ಶ್ರೀರಾಮಾ' ಎಂಬ ಅಂಕಿತವನ್ನು ಪಯೋಗಿಸುತ್ತಿದ್ದರುಎಂಬುದು ರಾಜನಾಥ ಡಿಂಡಿಮನ `ಸಾಳುವಾಭ್ಯುದಯ' ಕೃತಿಯಿಂದ ತಿಳಿದುಬರುತ್ತದೆ.ತುಳುವ ವಂಶದ ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ವಿರೂಪಾಕ್ಷ ದೇವಾಲಯದ ಮುಖಮಂಟಪವನ್ನು ನಿರ್ಮಿಸಿದ್ದಲ್ಲದೆ ಸಂಗಮ ಅರಸರ ಕಾಲದಲ್ಲಿ ಕಟ್ಟಲ್ಪಟ್ಟ ಮುಖ್ಯ ಗೋಪುರವನ್ನುಜೀರ್ಣೋದ್ಧಾರ ಮಾಡಿಸಿದನು. ಜೊತೆಗೆ ವಿಶಾಲ ಪ್ರಾಕಾರದೊಳಗಿದ್ದ ರಂಗಮಂಟಪದ ಮುಂಭಾಗದಲ್ಲಿ ಚಿಕ್ಕ ಗೋಪುರವನ್ನು ಕಟ್ಟಿಸಿದ್ದಲ್ಲದೆ, ಸಿಂಗೆನಾಯಕನ ಹಳ್ಳಿಯನ್ನು ವಿರೂಪಾಕ್ಷ ದೇವಸ್ಥಾನಕ್ಕೆ ದತ್ತಿಯಾಗಿ ನೀಡಿದ ವಿವರ ಶಾಸನದಿಂದ37 ತಿಳಿದುಬರುತ್ತದೆ. ಕ್ರಿ.ಶ. 1513 ರ ಶಾಸನದ ಪ್ರಕಾರ ಹಂಪೆಯ ವಿರೂಪಾಕ್ಷನಿಗೆ ವರ್ಷಪೂರ್ತಿ ಅಮೃತಪಡಿ ನೈವೇದ್ಯ, ನಿತ್ಯ ನೈಮಿತ್ತಿಕ, ಚಯಿತ್ರ ಮಾಸದ ರಥೋತ್ಸವ, ಮಕರ ಸಂಕ್ರಾಂತಿ ರಥೋತ್ಸವ, ಮಾಸೋತ್ಸವ, ಪಕ್ಷೋತ್ಸವ, ಸಂವತ್ಸರೋತ್ಸವದ ದೀಪರಾಧನೆ, ಪಂಚಪರ್ವ ಇತ್ಯಾದಿ ಪೂಜಾ ಕಾರ್ಯಗಳು ನಡೆಯುತ್ತಿದ್ದವು ಎಂಬುದಾಗಿಯೂ, ಆ ಚಟುವಟಿಕೆಗಳು ನಿರಾತಂಕವಾಗಿ ನಡೆಯಲು ದತ್ತಿದಾನಗಳು ಸಲ್ಲುತ್ತಿದ್ದವು ಎಂಬುದಾಗಿ ತಿಳಿದುಬರುತ್ತದೆ.38 ಕೃಷ್ಣದೇವರಾಯನ ಕಾಲದಲ್ಲಿ ದಂಡನಾಯಕರು ಪ್ರಜಾವರ್ಗದವರು ವಿರೂಪಾಕ್ಷನಿಗೆ, ವಿರೂಪಾಕ್ಷನ ಹೆಸರಿನಲ್ಲಿ ದತ್ತಿ ದಾನಗಳನ್ನು ನೀಡಿದ ವಿವರ ಶಾಸನಗಳಿಂದ ತಿಳಿದುಬರುತ್ತದೆ. 1516ನೇ ಶತಮಾನದ ಶಾಸನದಲ್ಲಿ ವಿರೂಪಾಕ್ಷ ದೇವರ ಸ್ತಾನಿಕ ಲಿಂಗಣಾರಾಧ್ಯನಿಗೆ ವೀರಣ್ಣ ನಾಯಕನು ತನ್ನ ತಂದೆ ಸಂಗಮೇಶ ನಾಯಕನಿಗೆ ಪುಣ್ಯವಾಗಲೆಂದು ವಿರೂಪಾಕ್ಷ ದೇವರಿಗೆ ಎರಡು ಹರಿವಾಣ ನೈವೇದ್ಯಕ್ಕಾಗಿ ಭೂದಾನ ನೀಡುತ್ತಾನೆ.39 ಕ್ರಿ.ಶ. 151ಂರ ಶಾಸನದಲ್ಲಿ ನರಸನಾಯಕನ ತಾಯಿ ಬುಕ್ಕಾಜಿ ಅಂಮನು ಹಂಪೆಯ ತಿರುಮಲ ಭಟ್ಟನ ಮಗ ಸಾಇ ಭಟ್ಟನಿಗೆ ವಿರೂಪಾಕ್ಷದೇವರ ನೈವೇದ್ಯಕ್ಕಾಗಿ ಭೂದಾನ ಮಾಡಿದ ವಿವರ4೦ ವ್ಯಕ್ತವಾಗಿದೆ.ತುಳುವ ಅರಸರ ಕಾಲದಲ್ಲಿ ಮಾಂಡಳಿಕರು, ಸಾಮಂತರು ಊರೊಡೆಯರು ವಿರೂಪಾಕ್ಷನಿಗೆ ದಾನವಾಗಿನೀಡುವಾಗ ವಿರೂಪಾಕ್ಷನ ಹೆಸರಿನಲ್ಲಿ ವ್ಯಕ್ತಿಗಳಿಗೆ ದಾನ ನೀಡಿದ ವಿವರ ಶಾಸನಗಳಲ್ಲಿ ವ್ಯಕ್ತವಾಗಿದೆ. ದಾನಗಳನ್ನು ಪಡೆದವರು ಅದನ್ನು ಸಮರ್ಥವಾಗಿ ವಿರೂಪಾಕ್ಷ ದೇವರಿಗೆ ಸದ್ವಿನಿಯೋಗಿಸಿದರು ಎಂಬುದರಬಗೆಗೆ ಶಾಸನಗಳಲ್ಲಿ ಮಾಹಿತಿ ಲಭ್ಯವಿಲ್ಲ. ತುಳುವ ಹಾಗೂ ಅರವೀಡು ಅರಸರ ಕಾಲದಲ್ಲಿ ವಿರೂಪಾಕ್ಷ ದೇವರಿಗೆ ದತ್ತಿದಾನಗಳು ಮುಂದುವರಿದರೂ, ಉಳಿದ ದೇವಾಲಯಗಳು ಪಾಲನ್ನು ಕೇಳಲಾರಂಭಿಸಿದ್ದು ಅದರಲ್ಲಿಯೂ ವಿಠಲ ದೇವಾಲಯವು ಸಿಂಹಪಾಲನ್ನು ಪಡೆಯಲು ಆರಂಭಿಸಿತ್ತು. ತುಳುವ ಅರಸರ ಕಾಲದಲ್ಲಿ ವೈಷ್ಣವ ಪಂಥದ ವಿಠಲ ಪರಂಪರೆಯು ಪ್ರಮುಖ ಸ್ಥಾನವನ್ನು ಪಡೆದುಕೊಂಡಿತೆನ್ನಬಹುದು. ವಿಜಯನಗರದಲ್ಲಿ ವಿಠಲ ಭಕ್ತಿಗೆ ಹೆಚ್ಚಿನ ಆದ್ಯತೆ ದೊರೆತಿದ್ದು ಕೃಷ್ಣದೇವರಾಯನಿಂದಲೇ ಅಲ್ಲ. ಕೃಷ್ಣದೇವರಾಯನ ತಂದೆಯ ಲಕ್ಕೆ ಶ್ರೀವಿಠಲನ ಶ್ರೀ ವಿರೂಪಾಕ್ಷ ದೇವರೊಡನೆ ರಾಜ ಮರ್ಯಾದೆಗಳನ್ನು ಸ್ವೀಕರಿಸುತ್ತಿದ್ದನೆಂದು, ವಿಜಯನಗರವೂ ಪಂಡರಿಯಂತೆ ಒಂದು ವಿಠಲ ಕ್ಷೇತ್ರವಾಗಲಾರಂಭಿಸಲು ಪ್ರಾರಂಭಿಸಿತ್ತು41 ಎಂದು ಶಂ.ಬಾ.ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ. ತುಳುವ ಅರಸರ ದೃಷ್ಟಿಯಲ್ಲಿ ಹಂಪೆಯ ವಿರೂಪಾಕ್ಷ ಮರೆಯಾಗಲು ಪ್ರಾರಂಭಿಸಿದ್ದ ಎಂದೆನಿಸುತ್ತದೆ. ತುಳುವ ಮತ್ತು ಅರವೀಡು ಮನೆತನಗಳ ಕಾಲದ ಕೆಲವು ಶಾಸನಗಳಲ್ಲಿ ಶ್ರೀ ವಿರೂಪಾಕ್ಷ ಹಾಗೂ ವಿಠಲ ಇಬ್ಬರ ಹೆಸರನ್ನು ಒಟ್ಟಿಗೆ ಸೇರಿಸಿ ಅವರ ಹೆಸರಿನಲ್ಲಿ ದಾನವನ್ನು ಬಿಟ್ಟಿರುವುದು ಕಂಡುಬರುತ್ತದೆ. ಸದಾಶಿವರಾಯನ ಕಾಲದ ಕ್ರಿ.ಶ. 1565ರ ಶಾಸನದಲ್ಲಿ42 ಬೆಳುಗಲ್ಲ ಸಿದ್ಧೇಶ್ವರ ದೇವರ ಅಮøತ ಪಡಿಗೆ, ಅರ್ಚನ ವಿಧಿಗೆ ಶ್ರೀ ತುಂಗಭದ್ರಾ ತೀರದಲು ಶ್ರೀ ವಿರೂಪಾಕ್ಷ ವಿಠಲರ ಸನ್ನಿಧಿಯಲ್ಲಿ ಭೂದಾನವನ್ನು ರಘುನಾಥ ರಾಜಯ್ಯ ಅರಸು ನೀಡಿದ್ದ ವಿವರ ನಿದರ್ಶನವಾಗಿದೆ. ಸಂಗಮರ ನಂತರದ ಅರಸರುಗಳ ಧಾರ್ಮಿಕ ಆಸಕ್ತಿಯ ಫಲವಾಗಿ ಹಂಪೆಯ ವಿರೂಪಾಕ್ಷ ದೇವಾಲಯವು ಹಂತ ಹಂತವಾಗಿ ಹೆಚ್ಚುಗಾರಿಕೆಯನ್ನು ಕಳೆದುಕೊಂಡಿತು. ಇಲ್ಲಿಯವರೆಗೂ ವಿರೂಪಾಕ್ಷ ದೇವಾಲಯದಲ್ಲಿ ಕೇಂದ್ರೀಕೃತಗೊಳ್ಳುತ್ತಿದ್ದ ಸಂಪತ್ತು ಹಜಾರರಾಮ, ವಿಠಲ ಇತ್ಯಾದಿ ದೇವಾಲಯಗಳತ್ತ ವಿಕೇಂದ್ರಿಕರಣಗೊಳ್ಳತೊಡಗಿತು. ವಿರೂಪಾಕ್ಷನಷ್ಟೇ ಪ್ರಭಾವವನ್ನು ವಿಠಲ ದೇವಾಲಯವು ಪಡೆದಿತ್ತು. ಕೃಷ್ಣದೇವರಾಯ ಮೊದಲುಗೊಂಡು ಅರಸಿಯರು, ಸಾಮಂತರು ಮಾಂಡಳಿಕರು, ಸಾಮಾನ್ಯ ಜನತೆ ವಿವಿಧ ರೀತಿಯಲ್ಲಿ ದತ್ತಿ ದಾನಗಳನ್ನು ವಿಠಲದೇವರಿಗೆ ನೀಡಿರುವುದನ್ನು ಸು. 34 ಹಂಪೆಯ ಪರಿಸರದ ಶಾಸನಗಳು ದೃಢಪಡಿಸಿವೆ.43 ಕ್ರಿ.ಶ. 1524ರ ವೇಳೆಗಾಗಲೇ ವಿರೂಪಾಕ್ಷ ದೇವಾಲಯಕ್ಕೆ ನೀಡಿದ ದತ್ತಿಯಲ್ಲಿಯ ಕೆಲ ಭಾಗವನ್ನು ಅನ್ಯ ದೇವರಿಗೆ ನೀಡಲು ರಾಜರು ಆಜ್ಞೆ ಮಾಡಿದ್ದನ್ನು ಶಾಸನ ತಿಳಿಸುತ್ತದೆ. ತೆರಕಣಾಂಬಿಯ ವಿರೂಪಾಕ್ಷ ಭಟ್ಟನ ಮಗ ಗೋಪಿನಾಥ ದೀಕ್ಷಿತನು ಹಿರಿಯ ಕಾಲುವೆಯಲ್ಲಿ ತಾನು ಪ್ರತಿಷ್ಠಾಪಿಸಿದ ರಘುನಾಥ ದೇವರಿಗೆ ಪಂಪಾ ವಿರೂಪಾಕ್ಷದೇವರ ದೇವಾಲಯದಿಂದ ದಿನವೊಂದಕ್ಕೆ ಉದು ಪಡಿ ಅಕ್ಕಿ, ಕಾಲುಪಡಿ ಎಣ್ಣೆಯನ್ನು ಕೊಡುವ ಕಟ್ಟಳೆಯನ್ನು ಅರಸ ಕೃಷ್ಣದೇವರಾಯ ಮಾಡಿದ ವಿವರ ಕಂಡುಬರುತ್ತದೆ.44 ಕ್ರಿ.ಶ. 1529ರ ಶಾಸನವು ಕನ್ನಿಸೆಟ್ಟಿ ಪಿಚಾರಿಸೆಟ್ಟಿ ಮತ್ತು ಇತರರು ವೊಳಕೋಟೆಯ ರೆಂಮುಜೆಡಿಯ ಬಳಿಯ ಮಡುವಿನ ಒಂದು ಖಂಡುಗ ಹೊಲಗದ್ದೆಯನ್ನು ತೆಗೆದುಕೊಂಡು ಅದರಲ್ಲಿ ರಾಮಚಂದ್ರ ದೇವಸ್ಥಾನದ ಭಾಗವನ್ನು ಕಳೆದು ಉಳಿದ ಭಾಗವನ್ನು ವಿರೂಪಾಕ್ಷ ದೇವರಿಗೆ ದಾನವಾಗಿ ಕೊಟ್ಟರು ಎಂಬ ವಿಷಯವನ್ನು ದಾಖಲಿಸಿದೆ.45 ಕ್ರಿ.ಶ. 1535ರ ಶಾಸನವು ವಿರೂಪಾಕ್ಷ ಸನ್ನಿಧಿಯ ಪದ್ಮ ವಿನಾಯಕನಿಗೆ ತಿರುಮಲದೇವಿ ಪಟ್ಟಣದ ಬಳಿ ತೋಟವನ್ನು ಸಮರ್ಪಿಸಿದ ವಿಷಯ ತಿಳಿಸುತ್ತದೆ. ಶಾಸನಗಳನ್ನು ಉಲ್ಲೇಖಿಸಿ ಹೇಳುವುದಾದರೆ ತುಳುವ ಅರಸರ ಕಾಲಕ್ಕಾಗಲೇ ವಿರೂಪಾಕ್ಷನ ಸಾಮ್ರಾಜ್ಯದೊಳಗೆ ವಿಜಯವಿಠಲ ದೇವನು ಪಾಲನ್ನು ಕೇಳಲು ಪ್ರಾರಂಭಿಸಿ, ವಿರೂಪಾಕ್ಷನಷ್ಟೇ ಸ್ಥಾನವನ್ನೇವಿಠಲನು ಪಡೆದುಕೊಂಡಿದ್ದ ಎಂದು ಹೇಳಬಹುದು. ಹಂಪೆಯಲ್ಲಿ ಅತ್ಯಂತ ಪ್ರಭಾವಶಾಲಿ, ಏಕಮೇವಾದ್ವಿತೀಯನಾಗಿದ್ದ ವಿರೂಪಾಕ್ಷನಿಗೆ ವಿಠಲ ಸ್ವಾಮಿಯು ಪ್ರಬಲ ಸ್ಪರ್ಧಿಯಾಗಿ ಕ್ರಿ.ಶ. 152೦ರ ನಂತರಕಾಣತೊಡಗಿದ್ದು ಶಾಸನಗಳಿಂದ ವ್ಯಕ್ತವಾಗುತ್ತದೆ. ಕೆಲವು ಕಾಲ ವಿರೂಪಾಕ್ಷನಿಗಿಂತ ವಿಠಲನ ವೈಭವವೇಹೆಚ್ಚಾದಂತೆ ಕಂಡುಬರುತ್ತದೆ. ರಾಜಧಾನಿಯ ಹೊರಗಡೆ ದತ್ತಿದಾನಗಳನ್ನು ನೀಡುವ ವ್ಯಕ್ತಿಗಳು `ತುಂಗಭದ್ರಾ ತೀರದಲು ಭಾಸ್ಕರ ಕ್ಷೇತ್ರದಲು ಪಂಪಾ ಸರಸ್ಸುವಿನ ಸಮೀಪವಾದ ಶ್ರೀ ವಿಜಯವಿಠಲ ದೇವರ ಸನ್ನಿಧಿಯಲ್ಲಿ'ಎಂದು ಉಲ್ಲೇಖಿಸಿ ದಾನಗಳನ್ನು ನೀಡುವಷ್ಟರ ಮಟ್ಟಿಗೆ ಖ್ಯಾತಿಯನ್ನು ಪಡೆದಿದ್ದ ಎಂಬುದು ವ್ಯಕ್ತವಾಗುತ್ತದೆ. ಕ್ರಿ.ಶ. 1542ರ ಶಾಸನದಲ್ಲಿಯ ವಿವರ ಪ್ರಕಾರ ಹಿಂದೆ ವಿರೂಪಾಕ್ಷ ದೇವರ ಪಡಿಗೆ ಕುರುಗೋಡು ಸೀಮೆಗೆ ಸಲುವ ಗುಂಡಿಗೆ ನೂರ ಗ್ರಾಮವನ್ನು ಪ್ರತಾಪ ದೇವರಾಯನು ಲಕ್ಷ್ಮೀಕಾಂತ ದೀಕ್ಷಿತರಿಗೆ ನೀಡಿದ್ದನ್ನು ಲಕ್ಕಣ ದಣಾಯಕನು ಅರಮನೆಗೆ ಮುಟ್ಟುಗೋಲು ಹಾಕಿಕೊಂಡಿದ್ದನೆಂದೂ ಇದನ್ನು ಲಕ್ಷ್ಮೀಕಾಂತ ದೀಕ್ಷಿತರ ವಂಶಸ್ಥರ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿ ಸದಾಶಿವರಾಯರು ಆ ವಂಶದವರಿಗೆ ಮತ್ತೆ ನೀಡಿದ ವಿವರ ಉಕ್ತವಾಗಿದೆ.47 ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರತಾಪರಾಯನು ಲಕ್ಷ್ಮೀಕಾಂತ ದೀಕ್ಷಿತರಿಗೆ ನೀಡಿದ್ದ ವಿರೂಪಾಕ್ಷ ದೇವರ ಪಡಿಗೆ ಕುರುಗೋಡು ಸೀಮೆಗೆ ಸಲುವ ಗುಂಡಿಗೆನೂರ ಗ್ರಾಮವನ್ನು ಲಕ್ಕಣ್ಣ ದಂಡನಾಯಕ ಮುಟ್ಟುಗೋಲು ಹಾಕಿಕೊಂಡಿದ್ದ ಎಂಬುದು. ಬಹುಶಃ ಇದಕ್ಕೆ ಕಾರಣ ವಿರೂಪಾಕ್ಷನ ಹೆಸರಿನಲ್ಲಿ ನೀಡಿದ ದಾನ ಸದ್ವಿನಿಯೋಗವಾಗದೇ ಇದ್ದುದನ್ನು ಕಂಡು ವಿರೂಪಾಕ್ಷನಲ್ಲಿ ನಿಷ್ಠೆಯನ್ನುಳ್ಳ ದಂಡನಾಯಕನು ಅದನ್ನು ಅರಮನೆಗೆ ಮುಟ್ಟುಗೋಲು ಹಾಕಿಕೊಂಡಿದ್ದಿರಬಹುದು ಎಂದು ಊಹೆ ಮಾಡಲು ಅವಕಾಶ ಇದೆ. ಈ ರೀತಿಯ ಉಲ್ಲೇಖಗಳು ವಿರೂಪಾಕ್ಷನ ಹೆಸರಿನಲ್ಲಿ ನೀಡಿದ ದಾನಗಳ ಬಳಕೆಯ ಸಾರ್ಥಕತೆಯ ಬಗೆಗೆ ಬೆಳಕು ಚೆಲ್ಲುತ್ತದೆ. ಹಂಪೆಯ ವಿರೂಪಾಕ್ಷ ದೇವರಿಗೆ ಸಂಗಮರ ಅರಸರುಗಳ ಹಾಗೆ ನಂತರದ ಅರಸರುಗಳಿಂದ ಪ್ರೋತ್ಸಾಹ ದೊರೆಯದಿದ್ದರೂ ಪೂರ್ವದಿಂದ ಜನತೆಯ ಆರಾಧ್ಯ ದೈವನಾಗಿದ್ದ ವಿರೂಪಾಕ್ಷನು ಭಕ್ತ ಜನತೆಯ ನೆರವಿನಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದನೆಂದು ಹೇಳಬಹುದು. ವಿರೂಪಾಕ್ಷನು ಮಹಿಮಾಶಾಲಿಯಾಗಿ 1516ನೇ ಶತಮಾನದಲ್ಲಿಯೂ ಮುಂದುವರಿದಿದ್ದ ಎಂಬುದಕ್ಕೆ ಶಾಸನಗಳಲ್ಲಿ ಮಾಹಿತಿ ಇದೆ. ಕೆಲವು ದಂಡನಾಯಕರು, ಜನತೆ ವಿರೂಪಾಕ್ಷ ದೇವರನ್ನು, ದೇವಾಲಯದ ಶಿಖರವನ್ನು, ಕಳಸವನ್ನು ದರ್ಶನ ಮಾಡಿದರೆ ಕೃತಾರ್ಥರಾದೆವು ಎನ್ನುವ ಭಾವನೆಯನ್ನು ತಾಳಿದವರಾಗಿದ್ದರು. ರಾಮಯ್ಯನ ಮಗ ಪಿರಿಯ ಗಣನು ವಿರೂಪಾಕ್ಷ ದೇವರ (ದೇವಸ್ಥಾನದ) ಶಿಖರಕ್ಕೆ ನಮಸ್ಕಾರ ಮಾಡಿ ಕೃತಾರ್ಥನಾದನೆಂದು ಶಾಸನವೊಂದು ತಿಳಿಸುತ್ತದೆ.48 ಮತ್ತರಸನ ಮಗಳು ರಾಮಾಯಿಯು ವಿರೂಪಾಕ್ಷ ದೇವರ ಕಳಸವನ್ನು ನೋಡಿ ನಮಸ್ಕಾರ ಮಾಡಿ ಕೃತಾರ್ಥಳಾದಳೆಂದು ಶಾಸನ ತಿಳಿಸುತ್ತದೆ.49 ಕೇತಪ್ಪನ ಮಗ ಮಾದಣ್ಣನು ಮತಂಗ ಪರ್ವತಕ್ಕೆ ಬಂದು ವಿರೂಪಾಕ್ಷ ದೇವರನ್ನು ಕಂಡು ಕೃತಾರ್ಥನಾದನೆಂದು ಶಾಸನದಿಂದ ತಿಳಿದುಬರುತ್ತದೆ.5೦ ಹದಿನೈದನೇ ಶತಮಾನದ ಶಾಸನದಲ್ಲಿ ಬೊಮ್ಮೋಜ ತನ್ನನ್ನು ವಿರೂಪಾಕ್ಷ ದೇವರ ಸೇವಕ ಎಂದು ಕರೆದುಕೊಂಡಿದ್ದಾನೆ.ಕ್ರಿ.ಶ. 1516ನೇ ಶತಮಾನದ ಶಾಸನದಲ್ಲಿ `ವಿರೂಪಾಕ್ಷ ದೇವರ ಪಾದಗಳ ಉಲ್ಲೇಖ ಇದ್ದು ಈ ಸ್ಥಳಕ್ಕೆ ಬಂದು ಪಾದಗಳನ್ನು ಪೂಜೆ ಮಾಡದವರಿಗೆ ಶಾಪ ವಿಧಿಸಿದ ವಿಷಯ ವ್ಯಕ್ತವಾಗಿದೆ.51 ಈ ವಿವರ ಪರೋಕ್ಷವಾಗಿ ಹಂಪೆ ವಿರೂಪಾಕ್ಷನ ಪ್ರಭಾವದಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾದುದ್ದನ್ನು ಸೂಚಿಸುತ್ತದೆ. ತುಳುವ ಹಾಗೂ ನಂತರದ ಅರಸರ ಕಾಲದಲ್ಲಿಯ ವಿರೂಪಾಕ್ಷ ದೇವಾಲಯಕ್ಕೆ ನೀಡಿದ ದತ್ತಿದಾನಗಳು ವಿಜಯವಿಠಲ ದೇವಾಲಯಕ್ಕೆ ಬಿಟ್ಟ ದತ್ತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವುದಾದರೆ ಅಂತಹ ಗಣನೀಯವಾದವುಗಳಲ್ಲ ಎಂದೆನಿಸುತ್ತದೆ. ಬಹುಮಟ್ಟಿಗೆ ಸಾಮಾನ್ಯ ಭಕ್ತ ಜನತೆ ನೀಡಿದ ಕೊಡುಗೆಗಳಾಗಿವೆ.

ಶ್ರೀ ವಿರೂಪಾಕ್ಷ ದೇವರಿಗೆ ಮಂಲಣರಸ ಮಾಡಿಸಿದುದು, ಹತ್ತಿ ಬೆಳಗಲ್ಲಿನ ನಾಗಣ ಗವುಡ ಮತ್ತು ಮುದೆಯಂಮ್ಮನ ಕೊಮರ ಸೋಮಣ ಗವುಡನು ವಿರೂಪಾಕ್ಷ ದೇವರಿಗೆ ಸಮರ್ಪಿಸಿದ ಘಂಟೆ52 ಇತ್ಯಾದಿಅಂಶಗಳು ಮೇಲಿನ ಹೇಳಿಕೆಯನ್ನು ಸಾಕ್ಷೀಕರಿಸುತ್ತವೆ. ಭಕ್ತ ಜನತೆಯ ಮೂಲಕ ಯಥಾರೀತಿಯಲ್ಲಿ ವಿರೂಪಾಕ್ಷ ದೇವಾಲಯದ ಪೂಜಾ ಕಾರ್ಯಗಳು ನಡೆಯುತ್ತಿದ್ದವು ಎನ್ನಬಹುದು. ವಿಜಯನಗರ ಪೂರ್ವಹಾಗೂ ವಿಜಯನಗರದ ಸಂಗಮ ಅರಸರುಗಳ ಕಾಲದಲ್ಲಿ ಧಾರ್ಮಿಕ ಚಕ್ರಾಧಿಪತ್ಯವನ್ನು ಪಡೆದುಕೊಂಡು,ಸಾಹಿತ್ಯಕ, ಆರ್ಥಿಕ, ಸಾಂಸ್ಕೃತಿಕ ಕೇಂದ್ರವಾಗಿದ್ದ ಹಂಪೆಯ ವಿರೂಪಾಕ್ಷ ದೇವಾಲಯವು ನಂತರ ಅರಸರುಗಳ ಕಾಲದಲ್ಲಿ ಧಾರ್ಮಿಕ ಶ್ರದ್ಧೆಯ ಬದಲಾವಣೆಯ ಕಾರಣ ಅರಸರ ನಿರ್ಲಕ್ಷೆಗೆ ಒಳಗಾಯಿತು. ಆದಾಗ್ಯೂ ಕ್ರಿ.ಶ. 1565ರ ರಕ್ಕಸತಂಗಡಗಿ ಯುದ್ಧದಲ್ಲಿಯ ವಿಜಯನಗರದ ಪತನದ ನಂತರ ಉಳಿದೆಲ್ಲಾ ದೇವಾಲಯಗಳು ಅಸ್ತಿತ್ವ ಕಳೆದುಕೊಂಡರೂ ಹಂಪೆಯ ವಿರೂಪಾಕ್ಷ ದೇವಾಲಯವು ಭಕ್ತ ಜನತೆಯ ಪ್ರೋತ್ಸಾಹದಿಂದ ಮುಂಚಿನಷ್ಟು ಅಲ್ಲದಿದ್ದರೂ ಬಹುಮಟ್ಟಿಗೆ ಅಸ್ತಿತ್ವವನ್ನು ಉಳಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಮುಂದುವರಿದುಕೊಂಡು ಬಂದಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪೆಯ ವಿರೂಪಾಕ್ಷನಲ್ಲಿ ಕವಿಗಳು, ಜನತೆಯೂ, ಸ್ಥಳೀಯ ಅರಸರು ಎಂದಿನಂತೆ ನಿಷ್ಠೆಯನ್ನು ವ್ಯಕ್ತಪಡಿಸಿರುವುದು ಕಂಡುಬರುತ್ತದೆ. ಕ್ರಿ.ಶ. 1584 ರಲ್ಲಿದ್ದ ವಿರೂಪಾಕ್ಷ ಪಂಡಿತನು ತನ್ನ ಚನ್ನಬಸವ ಪುರಾಣದಲ್ಲಿ ಪ್ರತಿಸಂಧಿಯ ಮೊದಲ ಪದ್ಯದಲ್ಲಿ ಪ್ರಾರ್ಥನಾ ರೂಪವಾಗಿ ಹಂಪೆಯ ವಿರೂಪಾಕ್ಷನ ಸ್ತುತಿಯನ್ನು ಮಾಡಿದ್ದಾನೆ. ಹಸ್ತಪ್ರತಿಗಳಲ್ಲಿ ವಿರೂಪಾಕ್ಷನ ಸ್ತುತಿ ಇರುವ ಪದ್ಯಗಳೇ ಪ್ರತ್ಯೇಕವಾಗಿ ಸಿಗುತ್ತಿದ್ದು ಚೆನ್ನಬಸವ ಪುರಾಣದ ನಾಂದ್ಯ ಪದ್ಯಗಳಾಗಿವೆ. ಕ್ರಿ.ಶ. 175 ರಲ್ಲಿದ್ದ ಯೋಗಾನಂದ ಕವಿಯು ಹಂಪೆಯ ವಿರೂಪಾಕ್ಷನನ್ನು ಕುರಿತು ಶತಕ ರಚಿಸಿದ್ದಾನೆ. ಈ ಕೃತಿಯಲ್ಲಿಯ 13 ಕಂದ ಪದ್ಯಗಳಲ್ಲಿ ವಿರೂಪಾಕ್ಷನ ಮಹಿಮೆಯನ್ನು ಕುರಿತ ವಿವಿಧ ರೀತಿಯಲ್ಲಿಯ ಸ್ತುತಿ ಇದೆ. ಹದಿನೇಳು ಹಾಗೂ ಹದಿನೆಂಟನೇ ಶತಮಾನಗಳಲ್ಲಿ ಹಸ್ತಪ್ರತಿಗಳನ್ನು ನಕಲು ಮಾಡಿರುವ ಹಸ್ತಪ್ರತಿಕಾರರು ತಮ್ಮ ಪುಷ್ಪಿಕೆಗಳಲ್ಲಿ ಹಂಪೆ ವಿರೂಪಾಕ್ಷನನ್ನು ಕುರಿತು `ಹಂಪೆ ವಿರೂಪಾಕ್ಷದೇವ, ಶ್ರೀಗುರು ಹಂಪೆ ವಿರೂಪಾಕ್ಷ ಲಿಂಗಾಯ ನಮಃ, ಹಂಪೆ ವಿರೂಪಾಕ್ಷ ಲಿಂಗ ಸ್ವಾಮಿಯವರ ಪಾದವೇ ಗತಿ. ಶ್ರೀ ಹಂಪೆ ವಿರೂಪಾಕ್ಷ ಲಿಂಗಯೇ ನಮಹಾ, ಶ್ರೀಗುರು ಹಂಪೆಯ ವಿರೂಪಾಕ್ಷಾಯಿ ನಮಃ'53 ಎಂದು ಮುಕ್ತ ಕಂಠದಿಂದ ಸ್ತುತಿಸಿರುವುದನ್ನು ನೋಡಿದರೆ ಕವಿಗಳ, ಲಿಪಿಕಾರರ, ಜನತೆಯ ಆರಾಧ್ಯ ದೈವವಾಗಿ ಹಂಪೆಯ ವಿರೂಪಾಕ್ಷ ಮುಂದುವರೆದುಕೊಂಡು ಬಂದಿದ್ದ ಎಂಬುದು ವ್ಯಕ್ತವಾಗುತ್ತದೆ.

     ಒಟ್ಟಾರೆ ಹಂಪೆಯ ವಿರೂಪಾಕ್ಷ ದೇವಾಲಯವು ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಹಲವಾರು ಏರಿಳಿತಗಳ ನಡುವೆಯೂ ಅರಸರುಗಳ, ಸಾಮಂತರ, ಅಮಾತ್ಯರ, ಸ್ಥಳೀಯ ಅರಸರ, ಸಾಮಾನ್ಯ ಜನತೆಯ ಆಶಯದ ಪ್ರತೀಕವಾಗಿದ್ದು ಸಾಂಸ್ಕೃತಿಕ ಜೀವನ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದೆ.

 

ಅಡಿಟಿಪ್ಪಣಿಗಳು

 

1. ಬಸವಣ್ಣನವರ ಷಟ್ಸ್ಥಲ ವಚನಗಳು (ಸಂ. ಶಿ.ಶಿ. ಬಸವನಾಳ), ವ.ಸಂ. 393.

2. ಹರಿಹರನ ರಗಳೆಗಳು (ಸಂ. ಎಂ.ಎಂ. ಕಲಬುರ್ಗಿ), ಪು. 497, 51.

3. ಗಿರಿಜಾ ಕಲ್ಯಾಣ ಮಹಾಪ್ರಬಂಧಂ (ಸಂ. ಎಂ.ಜಿ. ನಂಜುಂಡಾರಾಧ್ಯ), 1, ಪ.ಸಂ. 1.

4. ಹಂಪೆಯಲ್ಲಿ ವೀರಶೈವ ಪ್ರಾಚೀನ ಕುರುಹುಗಳು. ಎನಗಿಂತ ಕಿರಿಯರಿಲ್ಲ

(ಸಂ. ಬಸವರಾಜು ಮಲಶೆಟ್ಟಿ), ಪು. 319.

5. ಸೋಮನಾಥ ಚಾರಿತ್ರ (ಸಂ. ಆರ್.ಸಿ. ಹಿರೇಮಠ, ಎಂ.ಎಸ್. ಸುಂಕಾಪುರ), ಸ್ಥ. 1, ಪು.ಸಂ. 6.

6. ಹರಿಹರದೇವ ಕೃತ ನೂತನ ಪುರಾತನ ರಗಳೆಗಳು, (ಸಂ. ಎಂ.ಎಸ್. ಸುಂಕಾಪುರ), ಪು. 351.

7. ಇತಿಹಾಸ ದರ್ಶನ (ಸಂ. ಎಂ.ಜಿ. ನಾಗರಾಜು, ಪಿ.ವಿ. ಕೃಷ್ಣಮೂರ್ತಿ), ಸಂ.13, ಪು. 1೦೦.

8. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ1, ಬಳ್ಳಾರಿ ಶಾ.ಸಂ. 4, ಪು. 54.

9. ಅದೇ ಹರಪನಹಳ್ಳಿ ಶಾ.ಸಂ. 199, ಪು. 643, 644.     

1. ಅದೇ ಹರಪನಹಳ್ಳಿ ಶಾ.ಸಂ. 136, ಪು. 64.

11. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ3, ಹಂಪೆಯ ಶಾಸನಗಳು, ಸಂ. 55, ಪು. 46.

12. ಅದೇ ಸಂ.ಪು. 2, ಕುಷ್ಟಗಿ ಶಾ.ಸಂ. 18, ಪು. 297.

13. ಅದೇ ಶಾಸನ ಸಂ. 2, ಯಲಬುರ್ಗಾ ಶಾ.ಸಂ. 4, ಪು. 28.

14. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 473.

15. ಅದೇ, ಪು. 31.

16. ಹರಿಹರನ ರಗಳೆಗಳು, (ಸಂ. ಎಂ.ಎಂ. ಕಲಬುರ್ಗಿ), ಪು. 59.

17. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 478.

18. ಅದೇ, ಪು. 474.     

19. ಹರಿಶ್ಚಂದ್ರ ಕಾವ್ಯ ಸಂಗ್ರಹ (ಸಂ. ಎ.ಆರ್. ಕೃಷ್ಣಶಾಸ್ತ್ರಿ), ಸಂ. 5, ಪ.ಸಂ.32,34.  

2. ಎನಗಿಂತ ಕಿರಿಯರಿಲ್ಲ (ಸಂ. ಬಸವರಾಜ ಮಲಶೆಟ್ಟಿ), ಪು. 231.

21. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ3, ಹಂಪೆಯ ಶಾಸನಗಳು ಸಂ. 54, ಪು. 4243.

22. ಎಸ್. ರಾಜಶೇಖರ, ಹೊಯ್ಸಳಸಂಗಮರ ಸಂಬಂಧ, ಕರ್ನಾಟಕ ಭಾರತಿ, ಸಂ.6, ಸಂ. 3, ಪು. 31.

23. ಎನಗಿಂತ ಕಿರಿಯರಿಲ್ಲ (ಸಂ. ಬಸವರಾಜ ಮಲಶೆಟ್ಟಿ), ಪು. 261.

24. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 474.

25. ಎಸ್.ಉ.ಉ. ಸಂ. 9, ನಂ. 259, ಪು. 54.

26. ಕನ್ನಡ ವಿಶ್ವವಿದ್ಯಾಲಯ ಶಾಸನ, ಸಂ. 1, ಹೊಸಪೇಟೆ ಶಾ.ಸಂ. 32, ಪು.17.

27. ಎನಗಿಂತ ಕಿರಿಯರಿಲ್ಲ (ಸಂ. ಬಸವರಾಜ ಮಲಶೆಟ್ಟಿ), ಪು. 26.

28. ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ (ಸಂ. ಎಸ್. ಬಸಪ್ಪ), ಸಂ. 38, ಪ.ಸಂ. 251254.

29. ನಾಗಭೂಷಣ, ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ, ಪು. 144.

3. ವಿಜಯ ಕಲ್ಯಾಣ (ಸಂ. ಸಂ.ಶಿ. ಭೂಸನೂರ ಮಠ), ಪು. 199.

31. ವ್ಹಿ. ಶಿವಾನಂದ : ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ, ಪು. 6೦

32. ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟ2, ಕೊಪ್ಪಳ ಶಾಸನ, ಸಂ. 139, ಪು. 138.

33. ಎಂ. ಚಿದಾನಂದಮೂರ್ತಿ, ಹೊಸತು ಹೊಸತು, ಪು. 475.

34. ಎಪಿಗ್ರಫಿಯಾ ಕರ್ನಾಟಿಕಾ ಸಂ. 1, ಮುಳಬಾಗಿಲ ಶಾ.ಸಂ. 69.

35. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ1, ಬಳ್ಳಾರಿ ಶಾ.ಸಂ. 71, ಪು.89.

36. ಅದೇ, ಶಾಸನ ಸಂಪುಟ3, ಹಂಪೆಯ ಶಾಸನ ಸಂಖ್ಯೆ34, ಪು. 22.

37. ಅದೇ, ಶಾಸನ ಸಂಪುಟ, ಹಂಪೆಯ ಶಾಸನ ಸಂಖ್ಯೆ33, ಪು. 17.

38. ಅದೇ, ಹಂಪೆಯ ಶಾಸನ ಸಂಖ್ಯೆ 29, ಪು. 14.

39. ಅದೇ, ಹಂಪೆಯ ಶಾಸನ ಸಂಖ್ಯೆ 32, ಪು. 16.

4. ದ್ಧೃತ : ಸತ್ಯಶುದ್ಧಕಾಯಕ (ಸಂ. ಬಿ. ರಾಜಶೇಖರಪ್ಪ), ಸಂ. 5, ಸಂ.34, ಪು. 96.

41. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ.1, ಬಳ್ಳಾರಿ ಶಾ.ಸಂ. 69, ಪು. 86.

42. ಹೆಚ್ಚಿನ ವಿವರಗಳಿಗೆ ನೋಡಿ, ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟ3, ಹಂಪೆಯ ಶಾಸನಗಳು, ಪು.13೦,176.

43. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ3, ಹಂಪೆಯ ಶಾಸನಗಳು ಸಂ. 229, ಪು. 179. ಶಾ.ಸಂ. 27, ಪು.13.

44. ಅದೇ, ಶಾ.ಸಂ. 27, ಪು. 13.

45. ಅದೇ, ಶಾಸನ ಸಂಪುಟ1, ಹೊಸಪೇಟೆ ಸಂ. 3, ಪು. 14.

46. ಅದೇ, ಶಾಸನ ಸಂಪುಟ1, ಸಿರುಗುಪ್ಪ ಸಂ. 43, ಪು. 121.

47. ಅದೇ, ಶಾಸನ ಸಂಪುಟ3, ಶಾ.ಸಂಖ್ಯೆ 115, ಪು. 97.

48. ಅದೇ, ಶಾಸನ ಸಂಖ್ಯೆ 116, ಪು. 98.

೪೯.ಅದೇ, ಶಾಸನ ಸಂಖ್ಯೆ 117, ಪು. 99.

5. ಅದೇ, ಶಾಸನ ಸಂಖ್ಯೆ 23, ಪು. 11.

51. ಅದೇ, ಶಾಸನ ಸಂಖ್ಯೆ 48, ಪು. 27.  

52. ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು, (ಸಂ. ಎಸ್. ಶಿವಣ್ಣ), ಪು. 24,26,112.

 

 

                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...