ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಮೇ 9, 2025

 ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಶಾಸನಗಳು ಮತ್ತು ಶಿಲ್ಪಗಳು

                                                          ಡಾ.ಸಿ.ನಾಗಭೂಷಣ

   ಶರಣರು ಐತಿಹಾಸಿಕ ವ್ಯಕ್ತಿಗಳು; ನಮ್ಮಂತೆಯೇ ಹುಟ್ಟಿ, ಸಾಮಾನ್ಯ ಜನತೆಯ ಏಳ್ಗೆಗಾಗಿ ದುಡಿದವರು. ತಮ್ಮ ಬದುಕನ್ನು ಜನತೆಯ ಏಳ್ಗೆಗಾಗಿ ಮೀಸಲಾಗಿಟ್ಟವರು.  ಇಂತಹ ಶರಣರು ಶಿವಪಾರಮ್ಯಗೈದ, ಸಾಧನೆಗೈದ,ಐಕ್ಯರಾದ ಕಾರ್ಯಕ್ಷೇತ್ರಗಳ ಪರಿಚಯ ಇಂದು ಆಸಕ್ತ ಜನತೆಗೆ ಆಗ ಬೇಕಾಗಿದೆ. ಆದ್ದರಿಂದ ಇಂಥವರ ಕ್ಷೇತ್ರಗಳನ್ನು ಕುರಿತು ಸಂಶೋಧನೆ ಮತ್ತು ಸಂರಕ್ಷಣೆಯು ಇತಿಹಾಸ ರಚನೆಯ ದೃಷ್ಟಿಯಿಂದ ಹಾಗೂ ನಾಡಿನ ಸಂಸ್ಕೃತಿಯ ದೃಷ್ಟಿಯಿಂದ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಆದ್ದರಿಂದ ನಮ್ಮ ಉಜ್ವಲ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಸರಿಯಾದ ಜ್ಞಾನ ಮತ್ತು ಅದರ ಬಗ್ಗೆ ಅರಿವನ್ನು ಮೂಡಿಸ ಬೇಕಾಗಿದೆ. ಯಾವ ಜನಾಂಗಕ್ಕೆ ತನ್ನ ಐತಿಹಾಸಿಕ ಪ್ರಜ್ಞೆ ಇರುವುದಿಲ್ಲವೋ ಆ ಜನಾಂಗ ಇತಿಹಾಸವನ್ನು ನಿರ್ಮಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಶರಣ ಧರ್ಮ- ಸಂಸ್ಕೃತಿಯ ದೃಷ್ಟಿಯಿಂದ ಶರಣರ ಕ್ಷೇತ್ರಗಳ ಬಗ್ಗೆ ಸಂಶೋಧನೆ ಮತ್ತು ಸಂರಕ್ಷಣೆ ಅತ್ಯವಶ್ಯಕವಾಗಿದೆ. ಶರಣರ ಚರಿತ್ರೆಯ ಬಗ್ಗೆ ಮತ್ತು ಕಾರ್ಯ ಕ್ಷೇತ್ರಗಳ  ವೀರಶೈವ ಕಥಾ ಸಂಕಲನಕಾರರಾದ ಶಾಂತಲಿಂಗ ದೇಶಿಕ, ಕಿಕ್ಕೇರಿಯ ನಂಜುಂಡಾರಾಧ್ಯ, ಉತ್ತರ ದೇಶದ ಬಸವಲಿಂಗರು ತಮ್ಮ ಭೈರವೇಶ್ವರ ಕಾವ್ಯ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಬಸವೇಶ್ವರ ಪುರಾಣ ಕಥಾ ಸಾಗರ ಕಥಾ ಸಂಕಲನಗಳಲ್ಲಿ ದಾಖಲುಗೊಳಿಸಿದ್ದರು. ಆ ಕೃತಿಗಳ ಮಾಹಿತಿಯನ್ನು ಹಾಗೂ ಕ್ಷೇತ್ರಕಾರ್ಯವನ್ನಾಧರಿಸಿ ಶಿವಶರಣರ ಕಾರ್ಯ ಕ್ಷೇತ್ರಗಳ ಬಗೆಗೆ ಮಾಹಿತಿಯನ್ನು ದಾಖಲಿಸುವಲ್ಲಿ, ಅಧ್ಯಯನ ಮಾಡುವಲ್ಲಿ ಲಿಂ.ಫ.ಗು.ಹಳಕಟ್ಟಿಯವರೇ ಬಹುಶಃ ಮೊದಲಿಗರಾಗಿ ಕಂಡು ಬರುತ್ತಾರೆ. ಈ ಅಧ್ಯಯನ, ಅವರಿಗೆ ಪ್ರಾಥಮಿಕ ಅಧ್ಯಯನದ ವಸ್ತುವಾಗಿರಲಿಲ್ಲ. ವಚನ ಸಾಹಿತ್ಯದ ಸಂಪಾದನೆ ಮತ್ತು ಪ್ರಕಟನೆಯ ಮಹತ್ತರವಾದ ಕಾರ್ಯದಲ್ಲಿ ಶರಣಕ್ಷೇತ್ರಗಳ ಅಧ್ಯಯನವೂ ಜೊತೆಯಾಗಿಯೇ ನಡೆಯಿತು. ಅವರ ಶಿವಶರಣರ ಚರಿತ್ರೆಗಳ ಮೂರು ಸಂಪುಟಗಳು ಅನುಪಮ ಮತ್ತು ಇಂದಿಗೂ ಮೂಲ ಆಕರ ಗ್ರಂಥಗಳಾಗಿವೆ. ನಂತರ ಪ್ರಕಟವಾದ ಸಿದ್ಧಯ್ಯ ಪುರಾಣಿಕರ ``ಶರಣ ಚರಿತಾಮೃತ'' ಮತ್ತು ತ.ಸು.ಶಾಮರಾಯರ ``ಶಿವಶರಣರ ಕಥಾ ರತ್ನಕೋಶ'', ಕೃತಿಗಳು ಶರಣರ ಜನ್ಮಸ್ಥಳ, ಶಿವಪಾರಮ್ಯಗೈದ ಸ್ಥಳ,ಐಕ್ಯರಾದ ಸ್ಥಳಗಳ ಬಗೆಗೆ ಮಾಹಿತಿಯನ್ನು ಒದಗಿಸುವ ಕೃತಿಗಳಾಗಿವೆ. ಎಂ.ಎಂ.ಕಲಬುರ್ಗಿಯವರ ಶಾಸನಗಳಲ್ಲಿ ಶಿವಶರಣರು ಜೆ.ಎಂ.ನಾಗಯ್ಯನವರ ಶಿಲ್ಪಗಳಲ್ಲಿ ಶರಣರು,ಇವು ಶರಣರಿಗೆ ಸಂಬಂಧಿಸಿದ ಶಾಸನಗಳು ಹಾಗೂ ಶಿಲ್ಪಗಳ ಬಗೆಗೆ ಮಾಹಿತಿಯನ್ನು ಒದಗಿಸುವ ಪ್ರಮುಖ ಆಕರಗಳಾಗಿವೆ. 

 ತೋಂಟದ ಸಿದ್ಧಲಿಂಗ ಯತಿಗಳು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಯೋಗಿಗಳು. ವಚನಕಾರರು, ಪ್ರಬುದ್ಧ ಷಟ್‍ಸ್ಥಲಜ್ಞಾನಿಗಳು, ಶಾಸ್ತ್ರಕಾರರು, ವೀರಶೈವ ಗುರು ಪ್ರಮುಖರು. ಇವರ ಶಿಷ್ಯ-ಪ್ರಶಿಷ್ಯರ ಬಳಗ ದೊಡ್ಡದು. ವಚನಕಾರರಾಗಿ ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು. ಮಠವೊಂದರ ಪೀಠಾಧಿಪತಿಯಾಗಿ ಮಠ ಪರಂಪರೆಯನ್ನೇ ಸೃಷ್ಟಿಸಿದವರು. ಅನುಭವಿಗಳಾಗಿ ಷಟ್‍ಸ್ಥಲ ಶಾಸ್ತ್ರವನ್ನು ಸಾರೋದ್ಧಾರಗೊಳಿಸಿದವರು. ತಿಳಿಯದ ತತ್ವ ವಿವೇಕವನ್ನು ತಿಳಿಯಾದ ಮಾತುಗಳಲ್ಲಿ ತಿಳಿಸಿ ಹೇಳಿದವರು. ಭಕ್ತ ಕುಲ ಕೋಟಿಗೆ ಸಾಕ್ಷಾತ್ ಪರಶಿವಮೂರ್ತಿಯಾಗಿ ಪರಿಣಮಿಸಿದವರು. ವ್ಯಕ್ತಿಯಾಗಿ ಜನಿಸಿ ಕಾಲ ದೇಶ ಪರಿಸರದ ಮೇಲೆ ಮೀರಿ ಬೆಳೆದವರು ತಪಸ್ಸುದಾಯಕದ ಮೂಲಕ ಸಿದ್ಧಿಪಡೆದ ಅಲ್ಲಮನ ಅವತಾರಿಗಳು ಇಂತಹವರ ಸಾಂಸ್ಕೃತಿಕ  ಕೊಡುಗೆ ಅದ್ಭುತವಾಗಿದೆ. 

ಷಟ್‍ಸ್ಥಲ ಜ್ಞಾನಸಾರಾಮೃತ ಕೃತಿಯನ್ನು ಮುಂದಿಟ್ಟುಕೊಂಡು ಆಳವಾಗಿ ಅಧ್ಯಯನ ಮಾಡಿದಾಗ ಅದರಲ್ಲಿ ಸಿದ್ಧಲಿಂಗರ ವಚನಮಯ ವ್ಯಕ್ತಿತ್ವ ಮಹತ್ತರವಾಗಿ ಗೋಚರವಾಗುತ್ತದೆ. ಕಲ್ಯಾಣ ಕ್ರಾಂತಿಯ ನಂತರದ ದಿನಮಾನಗಳಲ್ಲಿ ನೇಪಥ್ಯಕ್ಕೆ ತರುವಲ್ಲಿ ಮತ್ತು ಅದನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ತರ ಪಾತ್ರ ಶಿವಯೋಗಿಗಳದು.  ಬಸವೋತ್ತರ ಯುಗದ ವಚನ ಸಾಹಿತ್ಯದ ಆದ್ಯ ಪ್ರವರ್ತಕ ಸಿದ್ಧಲಿಂಗ ಯತಿ ಎಂಬುದು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ. ತೋಂಟದ ಸಿದ್ಧಲಿಂಗರ  ಅವತಾರದಿಂದ ಕರ್ನಾಟಕ ಮಾತ್ರವಲ್ಲ ಭಾರತವೆ ಪುನೀತವಾಗಿದೆ.  ತೋಂಟದ ಸಿದ್ಧಲಿಂಗ ಯತಿಗಳು ಏಕೋತ್ತರ ಶತಸ್ಥಲದ ಪರಂಪರೆಯ ನಿರ್ಮಾಪಕರು ಹೌದು. ಇವರ ನೇತೃತ್ವದಲ್ಲಿ ವಚನಗಳ ಸಂಗ್ರಹ, ಸಂಪಾದನೆ, ಅಧ್ಯಯನ ತತ್ವ ತಳಹದಿಯ ಮೇಲಿನ ವೈವಿಧ್ಯಮಯ ಸಂಕಲನಗಳ ಮಹತ್ತರ ಕಾರ್ಯ ನಡೆಯಿತು. ಇವರ ಅನೇಕ ಜನ ಕರಕಮಲ ಸಂಜಾತ ಶಿಷ್ಯರು-ಪ್ರಶಿಷ್ಯರುಗಳು ಸ್ವತಃ  ವಚನಕಾರರಾಗಿದ್ದಾರೆ. ಶೂನ್ಯಸಂಪಾದನಾಕಾರರಾಗಿದ್ದಾರೆ. ಷಟ್‍ಸ್ಥಲ ತತ್ವಕ್ಕನುಗುಣವಾಗಿ ವಚನಗಳನ್ನು ಸಂಕಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಶಾಸ್ತ್ರಕ್ಕೆ ಟೀಕೆ, ವ್ಯಾಖ್ಯಾನ, ಟಿಪ್ಪಣಿ ಬರೆದಿದ್ದಾರೆ ಅಷ್ಟೇ ಅಲ್ಲ ವೀರಶೈವ ಪುರಾಣ ಕರ್ತೃಗಳು ಆಗಿದ್ದಾರೆ. ಹೀಗೆ ಇದನ್ನೆಲ್ಲ ಮನನ ಮಾಡುತ್ತಾ ಹೋದಾಗ ಸಿದ್ಧಲಿಂಗ ಯತಿಯ ಹಿಂದೆ ಒಂದು ಸಾಹಿತ್ಯ ಪರಂಪರೆ ಮತ್ತೊಂದು ಶಾಸ್ತ್ರ ಪರಂಪರೆ, ಒಂದು ಗುರು ಪರಂಪರೆ, ಒಂದು ಆಧ್ಯಾತ್ಮ ಪರಂಪರೆ, ಒಂದು ವೀರಶೈವ ಧರ್ಮ ಪರಂಪರೆ ಅದಕ್ಕೆ ಆಗರವಾದ ಮಠ ಪರಂಪರೆ ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮುಖಗಳ ವಿಕಾಸಕ್ಕೆ ಕಾರಣವಾದ ಹಿನ್ನೆಲೆ ಇರುವುದು ಕಂಡು ಬರುತ್ತದೆ.  ಆ ಮಹಿಮಾಶಾಲಿ ವ್ಯಕ್ತಿತ್ವದ ಪ್ರಭಾವಗಳು ಹಿಂದಿಗೂ ಅಚ್ಚಳಿಯದೇ ಉಳಿದಿದೆ. ಸಿದ್ಧಲಿಂಗ ಯತಿಗಳ ಕುರಿತಾಗಿ ಪಂಡಿತರಿಂದ ಹಿಡಿದು ಪಾಮರರ ವರೆಗೆ ಎಲ್ಲ ವರ್ಗದ ಜನರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 

   ಸಿದ್ಧಲಿಂಗರ ವಚನ ಸಾಹಿತ್ಯ, ಶಾಸ್ತ್ರಗಳ ಕುರಿತಾಗಿ ಪ್ರಕಟವಾದ ಪುಸ್ತಕ, ಲೇಖನಗಳಿಗೆ ಕೊರತೆಯಿಲ್ಲ. ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಬಸವಣ್ಣನವರನ್ನು ಹೊರತು ಪಡಿಸಿದರೆ ಅಧಿಕ ಸಂಖ್ಯೆಯಲ್ಲಿ ಕಾವ್ಯ-ಪುರಾಣಗಳಲ್ಲಿ ಉಲ್ಲೇಖಿತರಾದವರು ಇವರೇ ಆಗಿದ್ದಾರೆ. ಅವರು ಅವತಾರ ಪುರುಷರಾಗಿ ಅನೇಕ ಪವಾಡ ಮಹಿಮಾ ವಿಶೇಷಣಗಳನ್ನು ಮಾಡಿ ಎರಡನೆಯ ಪ್ರಭುದೇವರೆಂಬ ಪ್ರಶಂಸೆ ಪಡೆದುದ್ದನ್ನು ಅರಿತು ಅವರಲ್ಲಿ ಅಪಾರವಾದ ಪ್ರೀತಿ ಉಂಟಾಗಿ ಅವರ ಮೇಲೆ ಹೆಚ್ಚಿನ ಕಾವ್ಯ ಪುರಾಣ ಬರೆಯುವ ಪರಿಪಾಠವನ್ನು ಕವಿಗಳು ಮಾಡಿದರು. 

     ತೋಂಟದ ಸಿದ್ಧಲಿಂಗರೊಬ್ಬ ಅನುಭಾವಿ ಸಂಕಲನಕಾರರಾಗಿ, ವ್ಯಾಖ್ಯಾನಕಾರರಾಗಿದ್ದು, ವೀರಶೈವ ಸಾಹಿತ್ಯ ಸಮೃದ್ಧಿಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು, ವೀರಶೈವರು ಆಚರಿಸಬೇಕಾದ ಷಟಸ್ಥಲ ಸಿದ್ಧಾಂತ ಹಾಗೂ ಅಷ್ಟಾವರಣ ವಿಧಿ ವಿಧಾನಗಳು ನಿಯಮಗಳನ್ನು ಕುರಿತು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಮಹಾ ತಾತ್ವಿಕ ಪ್ರತಿಭಾವಂತರು. ವೀರಶೈವ ಧರ್ಮದ ಪುನರುದ್ಧಾರಕರಾದ ತೋಂಟದ ಸಿದ್ಧಲಿಂಗರು ವೀರಶೈವ ತತ್ವ ಶಾಸ್ತ್ರ ವಾಙ್ಮಯ ಪ್ರಪಂಚಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ವೀರಶೈವ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವುದಕ್ಕಾಗಿ ಅನೇಕ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡ ಸಾಹಿತ್ಯ ಪ್ರೇಮಿ.  

  ತೋಂಟದ ಸಿದ್ಧಲಿಂಗ ಯತಿಗಳ ಜೀವಿತದ ರೂಪರೇಷಗಳನ್ನು ಪುನರ್ ರಚಿಸಲು ಆಕರ ಸಾಮಗ್ರಿಗಳೆಂದರೆ, ತೋಂಟದ ಸಿದ್ಧಲಿಂಗಯತಿಗಳ ಸ್ವಂತ ಕೃತಿಗಳು, ಸಮಕಾಲೀನ ಹಾಗೂ ನಂತರದ ಶಾಸನಗಳು, ವಚನಕಾರರ ವಚನಗಳು,ಕವಿಗಳ ಕಾವ್ಯ ಪುರಾಣಗಳು ಮತ್ತು ಇತರೆ ಮೂಲಗಳಿಂದ ದೊರೆತ ಮಾಹಿತಿಗಳನ್ನು ಸಂಗ್ರಹಿಸಿ ಸತ್ಯಾಸತ್ಯತೆಯನ್ನು ಓರೆಹಚ್ಚ ಬೇಕಾಗಿದೆ. ಸಿದ್ಧಲಿಂಗಯತಿಗಳ    ಜೀವಿತದ ಕಾಲಾನಂತರ ಬಂದ ಕೃತಿಗಳೆಷ್ಟು? ಅವುಗಳೊಂದಿಗೆ ಕಾಲಕಳೆದಂತೆಲ್ಲಾ ಹಲವಾರು ಮಾರ್ಪಾಡುಗಳೊಡನೆ ಸೇರುತ್ತಾ ಬಂದ ವೃತ್ತಾಂತಗಳಾವುವು ? ಸೇರಲಿಕ್ಕೆ ಕಾರಣಗಳೇನು? ವಸ್ತು ದೃಷ್ಟಿಯಿಂದ ಎಷ್ಟು ವಿಭಾಗ ಮಾಡಬಹುದು? ಸೇರ್ಪಡೆಯಾದ ಪುರಾಣ ಸಂಗತಿಗಳಲ್ಲಿ ಐತಿಹಾಸಿಕತೆಯ ಗ್ರಹಿಕೆ, ತೋಂಟದ ಸಿದ್ಧಲಿಂಗ ಯತಿಯ ಚರಿತ್ರೆಯ ಬೆಳವಣಿಗೆಯ ರೀತಿ ಇತ್ಯಾದಿಗಳನ್ನು ಕುರಿತ ಅಧ್ಯಯನ ಸ್ವಲ್ಪ ಮಟ್ಟಿಗೆ ನಡೆದಿದೆ. 

    15ನೇ ಶತಮಾನದಿಂದ ಹಿಡಿದು 18ನೇ ಶತಮಾನದ ವರೆಗಿನ ಶಾಸನ ಹಾಗೂ ವೀರಶೈವ ಸಾಹಿತ್ಯದಲ್ಲಿ ತೋಂಟದ ಸಿದ್ಧಲಿಂಗರ ದಂತ ಕಥೆ ಹಲವಾರು ಮಾರ್ಪಾಡುಗಳೊಡನೆ ಮೈದಾಳಿದೆ. ತೋಂಟದ ಸಿದ್ಧಲಿಂಗರ ಕಾವ್ಯ-ಪುರಾಣಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಆಗಿರುವುದುಂಟು. ಸಿದ್ಧಲಿಂಗನನ್ನು ಕುರಿತ ಶಾಸನ ಕಾವ್ಯ ಪುರಾಣಗಳಲ್ಲಿ ಮತ್ತು ಹಲವು ಪರೋಕ್ಷವಾಗಿ ಉಲ್ಲೇಖಿಸಲ್ಪಟ್ಟವುಗಳಾಗಿವೆ. 

   ತೋಂಟದ ಸಿದ್ಧಲಿಂಗ ಯತಿಗಳ  ಜೀವನ ವಿವರಗಳನ್ನು ನೇರವಾಗಿ  ಪ್ರಸ್ತಾಪಿಸುವ   ಶಾಸನಗಳು ಸದ್ಯಕ್ಕೆ ಲಭ್ಯವಿಲ್ಲ. ಆದರೆ ಪರೋಕ್ಷವಾಗಿ ಪ್ರಸ್ತಾಪವಿರುವ  ಶಾಸನಗಳು ಲಭ್ಯವಿವೆ. ಹೆಸರನ್ನು ಬಹುತೇಕ ಶಾಸನಗಳು ಪ್ರಸ್ತಾಪಿಸಿವೆ. ಅವು ಈ ಕೆಳಕಂಡಂತಿವೆ. 

         ೧. ಎಡೆಯೂರು ಶಾಸನ ಮತ್ತು ಇತರೆ ಲಘು ಬರೆಹಗಳ ಶಾಸನಗಳು

       ೨. ಕಗ್ಗೆರೆ ಶಾಸನಗಳು  ಮತ್ತು ಇತರೆ ಲಘು ಬರೆಹಗಳ ಶಾಸನಗಳು

       ೩. ಕಾಮಿಡಿಹಳ್ಳಿ ಶಾಸನ

       ೪. ತೋಂಟದ ಸಿದ್ಧಲಿಂಗರ ವಚನ ಉತ್ಕೀರ್ಣವಾಗಿರುವ  ಚಿತ್ರದುರ್ಗದ ಶಾಸನ

       

೧. ತೋಂಟದ ಸಿದ್ಧಲಿಂಗ ಯತಿಗಳ ಉಲ್ಲೇಖವಿರುವ ಎಡೆಯೂರು ಮಠದ ಶಾಸನ

    ಕಾಲದ ಬಗೆಗೆ ಖಚಿತತೆ ಇಲ್ಲದ ಎಡೆಯೂರು ಶಾಸನದಲ್ಲಿ ಸಿದ್ಧಲಿಂಗರ ಆರಂಭ ಕಾಲದ ಬದುಕಿನ ವಿವರಗಳಿಗಿಂತ ಅಂತಿಮ ಕಾಲದ ವಿವರಗಳ ಬಗೆಗೆ ಮಾಹಿತಿಗಳು ಲಭ್ಯವಿವೆ. ಎಡೆಯೂರು ಶಾಸನದಲ್ಲಿಯ ವಿವರದ ಪ್ರಕಾರ   ದೊಡ್ಡ ಸಿದ್ಧೇಶ್ವರರು ಸಿದ್ಧಲಿಂಗರ ಸಮಕಾಲೀನ ಐತಿಹಾಸಿಕ ವ್ಯಕ್ತಿಯಾಗಿದ್ದರೆಂಬುದಾಗಿ ತಿಳಿದು ಬರುತ್ತದೆ. ಈ ನಿರ್ವಿಕಲ್ಪ ಸಮಾಧಿಯ ಸುತ್ತ ಬೃಹತ್ತಾದ ಆವರಣವನ್ನು ನಿರ್ಮಿಸಿ, ಆ ಸ್ಥಳದಲ್ಲಿ ದೇವಾಲಯದಂತಹ ಗದ್ದುಗೆಯನ್ನು ನಿರ್ಮಿಸಿದವರು ತೋಂಟದ ಸಿದ್ಧಲಿಂಗಯತಿಗಳ ಪರಮ ಭಕ್ತರಾಗಿದ್ದ ದಾನಿವಾಸ ಅರಸರು. ಅವರು ಆ ನಿರ್ವಿಕಲ್ಪ ಸಮಾಧಿಗೆ ಭದ್ರತೆಯನ್ನೊದಗಿಸಿ ನಿತ್ಯ ಪೂಜಾಕಾರ್ಯ ಮತ್ತು ದಾಸೋಹ ನಡೆಸುವಂತೆ ದತ್ತಿಯನ್ನು ನೀಡಿದರು. ಅದರ ವಿವರ ಇಂದಿಗೂ ಸಿದ್ಧಲಿಂಗೇಶ್ವರ ದೇವಾಲಯದಲ್ಲಿರುವ ಆವರಣದಲ್ಲಿರುವ ಶಾಸನದಲ್ಲಿ ಉಲ್ಲೇಖವಾಗಿದೆ. ಎಡೆಯೂರಲ್ಲಿ ತೋಂಟದ ಸಿದ್ಧಲಿಂಗರ ಮಠದ ಗರ್ಭಗುಡಿಯಲ್ಲಿ ಲಿಂಗೈಕ್ಯರಾಗಿದ್ದು ಅವರ ಸ್ಮಾರಕವಾಗಿ ಲಿಂಗವೊಂದನ್ನು ಇಲ್ಲಿ ಸ್ಥಾಪಿಸಿದ್ದಾರೆ. ಈ ಮಠದಲ್ಲಿಯ ಶಾಸನದ ಕಾಲ ಕ್ರಿ.ಶ.1600 ಎಂದು ಅಂದಾಜಿಸಿದ್ದರೂ ಈ ಶಾಸನ ಕಾಲದ ಖಚಿತತೆ ಇಲ್ಲ. ಈ ಶಾಸನವು ಸಿದ್ಧಲಿಂಗರ ಜೀವಿತಾವಧಿಯಲ್ಲಿ ರಚಿತವಾಗಿಲ್ಲ ಎನ್ನಬಹುದು. ಈ ಶಾಸನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳಿಗೆ ಅವರ ಶಿಷ್ಯ ಚಿಟ್ಟಿಗದೇವನು ದಾನಿವಾಸಿ ದಂಪತಿಗಳ ಕೋರಿಕೆಯ ಮೇರೆಗೆ ಕಲ್ಲು ಮಠವನ್ನು ಮತ್ತು ನಿತ್ಯದಾಸೋಹದ ಕಾಯಕಕ್ಕೆ ಅಡಿಗೆ ಮನೆ ಮತ್ತು ಉಗ್ರಾಣದ ಮನೆಯನ್ನು ಕಟ್ಟಿಕೊಟ್ಟ ವಿವರವಿದೆ. ಈ ಶಾಸನದಲ್ಲಿ ಸಿದ್ಧಲಿಂಗರ ಬಗೆಗೆ ಅತಿಶಯವಾಗಿ ಹೊಗಳಿರುವುದಲ್ಲದೇ ಅವರ ಶಿಷ್ಯ ಬಳಗದ ಕೆಲವರನ್ನು ಉಲ್ಲೇಖಿಸಿದೆ. ಆದರೆ ಈ ಶಾಸನದಲ್ಲಿ ಗ್ರಾಂಥಿಕ ಪದಗಳಿಗಿಂತ ಆಡುಭಾಷೆಯ ಪದಗಳೇ ಅಧಿಕವಾಗಿ ಕಂಡು ಬರುತ್ತವೆ. 

ಆ ಶಾಸನದ ಪಠ್ಯ ಹಾಗೂ ಸಂಬಂಧಿಸಿದ ವಿವರ ಇಂತಿದೆ.  

೧. ಕೊಡಗಿಹಳಿಯ ದೇವರು ತಾಉ ಪಡದ ಭೂಮಿಯಲಿ ತೋಂಟದಸ್ವಾಮಿ

೨. ಗೆ ತಂಮ ಭಕ್ತಿಯಿಂದಾ ಕಟ್ಟಿಸಿ ಕೊಟ್ಟ ಮಠ ಯಿ ಮಹಶಿದ್ದೇಶ್ವರನ ಅತಿಸಯವೆಂತೆಂದ

೩. ಡೆ [||*] ಶ್ರೀಮತು ಸಚಿದಾನಂದನಿತ್ಯಪರಿಪೂರ್ಣವನುಳ್ಳ ಅನಾದಿಭಕ್ತ ಆ ಭಕ್ತನ ಹ್ರುದೆಯದಲ್ಲಿ ಜಂ

೪. ಗಮ ಜಂಗಮದ ಮಕುಟದಲ್ಲಿ ಶೂನ್ಯಲಿಂಗ ಆ ಲಿಂಗದಲ್ಲಿ ಚಿದಂಬರಶಿವಶಕ್ತಿ ಪಂಚ

೫. ಶಕ್ತಿ ಪಂಚನಾದ ಪಂಚಬ್ರಂಹ ಯೀಶ್ವರಾಷ್ಟಕ ಮಹೇಶ್ವರ ಪಂಚವಿಂಸತಿರುದ್ರರೇಕಾ

೬. ದಶತ್ರಯವಯ . . ರಂಣ್ಯಗರ್ಭ ವಿರಾಟಮೂರ್ತಿ ಯಿಂತೀ ಯೆಂಭತೊಂದು ಮೂರ್ತಿ

೭. ಯೆ ಅಂಗವಾಗಿರ್ಪಾತನೆ ಅನಾದಿಭಕ್ತನು ಆ ಭಕ್ತನ ಪ್ರಾಣಕಳಾಚೈತ(ಂ)ನ್ಯಸ್ವ

೮. ರೂಪೇ ತೋಂಟದ ಸಿದ್ದಲಿಂಗೇಶ್ವರನು ಆ ಸಿದ್ಧಲಿಂಗೇಶ್ವರನ ಮೂರ್ತಿಕ್ರಮವೆಂತೆಂದ

೯. ಡೆ [||*] ಪ್ರಣಮವೆ ಶಿರಸು ನಮಸಾರವೇ ಭುಜ ಶಿಕೂರವೇ ದೇಹ ವಷಟ್ಕಾರವೇ ಪಾದ ಅನಂ

೧೦. ತಕೋಟಿಬ್ರಹ್ಮಾಂಡಗಳೇ ಮಕುಟ ಸಮಸ್ತಲೋಕಾದಿಲೋಕಂಗಳೇ ದೇಹದ ಒಳವ

೧೧. ಳೆಯ ಆಕಾಶವೇ ಮುಖ ದಶದಿಕ್ಕುಗಳೇ ತೋಳು ಚಂದ್ರಸೂರ್ಯಾದಿಗಳೇ ನಯನ ಪಾತಾಳ

೧೨. ವೇ ಹೆದೆ ಮೇಘಂಗಳೇ ಜಟಾಬಂಧ ಆ ಜಟಾಬಂಧದಲ್ಲಿ ಶೂನ್ಯಲಿಂಗ ವೇದಪುರಾಣಂಗಳೇ ತ್ರಿನ

೧೩. ಕ್ಷತ್ರಂಗಳೇ ಪುಷ್ಪ ಚಂದ್ರಪ್ರಕಾಶವೇ ವಿಭೂತಿ ಅಷ್ಟಕುಲಪರ್ವತಂಗಳೇ ರುದ್ರಾಕ್ಷಿ ಸಪ್ತ ಸಮುದ್ರಂಗ

೧೪. ಳೇ ಕಮಂಡಲ ಭುವನಶ್ರುಷ್ಟಿಎ ಕಂತೆ ದಿವಾರಾತ್ರೆಗಳೇ ಮಠ ಷಡುರುತುಗಳೇ ಪಡುಸ್ಥಲ ಮಹಾಸೇ

೧೫. ಷನೇ ಕಟಿಸೂತ್ರ ಪರಿಪೂರ್ನ್ನಗ್ಞಾನವೇ ಪಂಚಮುದ್ರೆ ತ್ರಿಕಾಲಜ್ಞಾನವೇ ಮಹದೈಶ್ವರ್ಯ್ಯ ಮಹಾ

೧೬. ಮೇರುವೆ ದಂಡ ಸದ್ಗುಣವೆ ಕರ್ಪರ ಕುಲವೆ ಶಿವಕುಲ ಯಿಂತಪ್ಪ ಅನಾದಿಜಂಗಮವೆ

೧೭. ಜಗದ್ಧಿತಾರ್ತ್ಥವಾಗಿ ಚರಿಸಿದ ಕ್ರಮವೆಂತೆಂದರೆ ಜ್ಞಾನಕ್ರಿಯಾಸ್ವರೂಪನು ಸರ್ವ್ವಾಗಲಿಂ

೧೮. ಗಿ ಷಟ್ಸ್ಥಲ ಜ್ಞಾನಿ ಸರ್ವ್ವಾಚಾರಸಂಪಂನ್ನ ಪಾದೋದಕಪ್ರಸಾದಪ್ರತಿಷ್ಟಾಚಾರ್ಯರು

೧೯. ಅಷ್ಟಾವರಣಾಲಂಕರಣ ದ್ವೆೈತಾದ್ವೆೈತತಿಮಿರಮಾರ್ತಾಂಡನುಂ ಯಿಂತಪ್ಪ ದಿವ್ಯ ಶಿವಯೋಗಿ ಸಿದ್ದಲಿ

೨೦. ಂಗೇಶ್ವರಂಗೆ ಸಂಮ್ಯಗ್ಞಾನೋದಯವಾಗಿ ಸಂಸಾರಹೇಯ . . ವಂ ಮಾಡಿ ಶರಣುಹೊಕ್ಕ ಸಿಷ್ಯಜನಂ

೨೧. ಗಳ ನಾಮಪರಿಕ್ರಮಗಳೆಂತಂದಡೆ [||*] ಸಪ್ಪೆದೇವರು ಉಪ್ಪಿನಹಳ್ಳಿಯ ಸಾಮಿ ಸಿದ್ದೇದೇವರು ನಂಜೇದೇ

೨೨. ವರು ಬೋಳಬಸವರಾಜದೇವರು ಗುಂಮಳಾಪುರದ ಸಿದ್ದಲಿಂಗದೇವರು ಪಟಣದೇವರು ರೇವ 

೨೩. ಣಸಿದ್ದೇದೇವರು ಸೀಲವಂತದೇವರು ಚಿಟ್ಟಿಗದೇವರು ಯಿಂತೆ ಯಿವರು ಮುಕ್ಯವಾದ ಭಕ್ತ ಮಾ

೨೪. ಹೇಸ್ಸರರ್ಗ್ಗೆ ಷಡುಸ್ತಲಜ್ಞಾನಲಿಂಗಾಂಗಸಂಮಂಧ ಸಮರಸಏಕಾರ್ತ್ತಮಂ ಬೋಧಿಸಿ ಮುಕ್ತರಂ

೨೫. ಮಾಡಿ ಷಡುಸ್ತಲಯೇಕಾರ್ತವಾಗಿ ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಯೆಡೆಯೂರಲ್ಲಿ ತಮಗೆ ಕಟ್ಟಿ

೨೬. ಸಿದ ಮಟದಲ್ಲಿ ಸಿವಯೋಗಸಮಾಧಿಸಂನದ್ಧರಾದರು [||*] ತೋಂಟದಸ್ವಾಮಿಯ ಪಾದಪದ್ಮರಾದಕರಾದಾ ದಾ

೨೭. ನಿವಾಸನಿವಾಸಿಗಳಾದ ಚೆಂನರಾಯವಡೆಯರು ಚೆಂನರಾಯವಡೆಯರ ಮಕ್ಕಳು ಲಿಂಗಪ್ಪವಡೆ

೨೮. ಯರು ಲಿಂಗಪ್ಪವಡೆಯರ ಮಕ್ಕಳು ಪಾದೋದಕಪ್ರಸಾದಸಂಪನ್ನರಾದ ಚೆನ್ನವೀರಪ್ಪವಡೆಯರು ಚೆಂನ

೨೯. ವೀರಪ್ಪವಡೆಯರ ಸತಿ ಪರ್ವತಂಮದಂಪತಿಗಳು ತಂಮ ಭಕ್ತಿಯಿಂದ ತೋಂಟದ ಸ್ವಾಮಿಗೆ ಕಲ್ಲ ಮಟವ ಕಟ್ಟ

೩೦. ಬೇಕೆಂದು ಚಿಟ್ಟಿಗದೇವರಿಗೆ ಪದಾರ್ತಮಂ ನಮಸ್ಕಾರಮಂ ಮಾಡಲಾಗಿ ಭಕ್ತಿಪದಾರ್ತಮಂ ಕೈಕೊಂಡು ಯೆ

೩೧. ಡೆಯೂರಿಗೆ ಬಿಜೆಯಂಗೆಯಿದು ತೋಂಟದ ಸ್ವಾಮಿಗೆ ಕಲ್ಲಮಟವನು ಯೆಂಟು ಜೆಡೆಯ ಬಗೆಯ ಹಿ

೩೨. ರಿಯರು ಚಿಟ್ಟಿಗದೇವರು ಕಟ್ಟಿಸಿದರು [||*] ಯೆಡೆಯೂರುಸ್ತಲದಲಿ ಆದ ಕೊಡಗಿಮಾನ್ಯ ನಿತ್ಯಾ ಬಂ

೩೩. ದ ಕಾಣಿಕೆ ಸೀಮೇ ಮೇಲೆ ತಂದ ನಂ[ದಾ*]ದೀಪದ ಕಾಣಿಕೆ ಯಿಷ್ಟು ಯಿ ಮಟದ ಹಿರೀರು ಪಚೆಕಂತೆ

೩೪. ಯ ಚೆನಮಲ್ಲಿಕಾರ್ಜುನದೇವರದು ಯೆಂಟು ಜಡೆಯ ಬಗೆಯ ಹಿರೀರು ಚಿಟ್ಟಿಗದೇವರು ಪ

೩೫. ಡದ ಪುರವರ್ಗವು ಸಹಮುಕದಲ್ಲಿ ಬಂದ ಕಾಣಿಕೆ ತೋಂಟದ ಶ್ವಾಮಿಯ ದಾಸೋಹ

೩೬. ದ ದ್ರವ್ಯ ಯಿ ಮಟದಲ್ಲಿ ತೋಂಟದ ಸ್ವಾಮಿಯ ದಾಸೋಹವನು ಚಿಟ್ಟಿಗದೇವರು ಯಿ

೩೭. ಡ್ಸಿದ ಅ . ದಲಿ ವಡೆಯರು ಭಕ್ತರು ವಪ್ಪಿದ ಸತ್ಪುರುಸರು ಯಿ ದಾಸೋಹವನು ಮಾ

೩೮. ಡುವರು ಯಿ ದ್ರವ್ಯ ತೋಂಟ ಸ್ವಾಮಿಯ ದಾಸೋಹಕ್ಕೆ ಸಲುವದು ಆರಿಗೂ ವರ್ಗಪಾ

೩೯. ರಂಪರಿಗೆ ಸಲ್ಲದು ಸಜ್ಜನಸತ್ಪುರುಸರು ಯಿ ಮಟದಲಿ ಯಿ ಪದಾರ್ತವ ಅನು

೪೦. ಭವಿಸುವರು ಯೀ ಮಠದಲ್ಲಿ ಕಟ್ಟಿಸಿದ ಅಡಿಗೆ ಮನೆ ಉಗ್ರಾಣದ ಮನೆಯೂ

೪೧. ಈ ತೋಟದ ಸ್ವಾಮಿಯ ದಾಸೋಹಕ್ಕೆ ಸಲುವದು [||*] ಶ್ರೀ ಸಿದ್ಧೇಶ್ವರ (ಎಪಿಗ್ರಾಫಿಯ ಕರ್ನಾಟಿಕ ಸಂ.೨೪( ಪರಿಷ್ಕೃತ), ಪು.ಸಂ.೨೨೬-೨೨೭)

ಎಡೆಯೂರ ಶಾಸನದ ಗದ್ಯಾನುವಾದ 

ಕೊಡಗಿಹಳ್ಳಿ ದೇವರು ತಾವು ಪಡೆದ ಮಠದ ಭೂಮಿಯಲ್ಲಿ ತೋಂಟದ ಸಿದ್ಧಲಿಂಗೇಶ್ವರರಿಗೆ ತಮ್ಮ ಭಕ್ತಿಯಿಂದ ಕಟ್ಟಿಸಿಕೊಟ್ಟ ಮಠ, ಈ ತೋಂಟದ ಸಿದ್ದಲಿಂಗೇಶ್ವರರ ಮಹಿಮೆ ಎಂತೆಂದಡೆ ಶ್ರೀಮತು ಸಚ್ಚಿದಾನಂದ ನಿತ್ಯಪರಿಪೂರ್ಣವನುಳ್ಳ ಅನಾಧಿ ಭಕ್ತ ಆ ಭಕ್ತನ ಹೃದಯದಲ್ಲಿ ಜಂಗಮ, ಜಂಗಮದ ಮುಕುಟದಲ್ಲಿ ಶೂನ್ಯಲಿಂಗ, ಆ ಲಿಂಗದಲ್ಲಿ, ಚಿದಂಬರ ಶಿವಶಕ್ತಿ, ಪಂಚಶಕ್ತಿ, ಪಂಚನಾದ, ಪರಬ್ರಹ್ಮ, ಈಶ್ವರಾಷ್ಟಕ, ಮಹೇಶ್ವರ ಪಂಚವಿಂಶತಿ ರುದ್ರರೇಕಾದಶತ್ರಯವಯ ಹಿರಣ್ಯಗರ್ಭ ವಿರಾಟಮೂರ್ತಿ ಇಂತೀ ಎಂಬತ್ತೊಂದು ಮೂರ್ತಿಯೇ ಲಿಂಗವಾಗಿಪ್ಪಾತನೇ ಅನಾದಿ ಭಕ್ತನು ಆಭಕ್ತನ ಪ್ರಾಣಕಳಾ ಚೈತನ್ಯ ಸ್ವರೂಪೇ ತೋಂಟದ ಸಿದ್ಧಲಿಂಗೇಶ್ವರನು ಆ ಸಿದ್ದಲಿಂಗೇಶ್ವರನ ಮೂರ್ತಿ ಕ್ರಮವೆಂತೆಂದರೆ ಪ್ರಣಮವೇ ಶಿರಸ್ಸು, ನಮಸ್ಕಾರವೇ ಭುಜ, ಶಿಕಾರವೇ ದೇಹ, ವಯಸ್ಕಾರವೇ ಪಾದ, ಅನಂತಕೋಟಿ ಬ್ರಹ್ಮಾಂಡಗಳೇ ಮುಕುಟ, ಸಮಸ್ತಲೋಕಾದಿಲೋಕಂಗಳು ದೇಹದ ಚಲವಳಯ ಆಕಾಶವೇ ಮುಖ, ದಶದಿಕ್ಕುಗಳೇ ತೋಳು, ಚಂದ್ರ ಸೂರ್ಯಾದಿಗಳೇ ನಯನ, ಪಾತಾಳವೇ ಎದೆ, ಮೇಘಂಗಳೇ ಜಟಾಬಂಧ, ಆ ಜಟಾಬಂಧದಲ್ಲಿ ಶೂನ್ಯಲಿಂಗ, ವೇದ ಪುರಾಣಗಳೇ ಕ್ರೀ, ನಕ್ಷತ್ರಗಳೇ ಪುಷ್ಪ, ಚಂದ್ರಪ್ರಕಾಶವೇ ವಿಭೂತಿ, ಅಷ್ಟಕುಲಪರ್ವತಗಳೇ ರುದ್ರಾಕ್ಷಿ, ಸಪ್ತಸಮುದ್ರಗಳೇ ಕಮಂಡಲ, ಭುವನಸೃಷ್ಟಿಯೇ ಕಂಡೆ, ದಿನರಾತ್ರಿಗಳೇ ಮಠ, ಷಡುಋತುಗಳೇ ಷಡುಸ್ಥಲ, ಮಹಾಶೇಷನೇ ಸೂತ್ರ, ಪರಿಪೂರ್ಣ ಜ್ಞಾನವೇ ಪಂಚಮುದ್ರ ತ್ರಿಕಾಲ ಜ್ಞಾನವೇ ಮಹದೈಶ್ವರ್ಯ ಮಹಾಮೇರುವೇ ದಂಡ, ಸದ್ಗುಣವೇ ಕರ್ಪರ, ಕುಲವೇ ಶಿವಕುಲ ಇಂತಪ್ಪ ಅನಾದಿ ಜಂಗಮವೇ ಜಗಹಿತಾರ್ಥವಾಗಿ ಕ್ರಮವೆಂತೆಂದರೆ: ಜ್ಞಾನಕ್ರಿಯಾ ಸ್ವರೂಪನು ಸರ್ವಾಂಗಲಿಂಗಿ ಷಟ್‌ಸ್ಥಲಜ್ಞಾನಿ, ಸರ್ವಾಚಾರ ಸಂಪನ್ನ ಪಾದೋದಕಮ ಪ್ರಸಾದ ಪ್ರತಿಷ್ಠಾಚಾರ್ಯರು ಅಷ್ಟಾವರಣಾಲಂಕರಣ, ದ್ವೈತಾದ್ವೈತ ತಿಮಿರ, ಮಾರ್ತಾಂಡನುಂ ಇಂತಪ್ಪ ದಿವ್ಯ ಶಿವಯೋಗಿ ಸಿದ್ಧಲಿಂಗೇಶ್ವರರಿಗೆ ಸಮ್ಯಕ್‌ ಜ್ಞಾನೋದಯವಾಗಿ ಸಂಸಾರಹೇಯವನ್ನು ಮಾಡಿ ಶರಣುಹೊಕ್ಕ ಶಿಷ್ಯಜನರ ವಾಮಪರಿಕ್ರಮಗಳೆಂದರೆ: ಸಪ್ಪೆದೇವರು, ಉಪ್ಪಿನ ಹಳ್ಳಿಯ ಸ್ವಾಮಿ, ಸಿದ್ದೇದೇವರು, ನಂಜೇದೇವರು, ಬೋಳಬಸವರಾಜ ದೇವರು, ಗುಮ್ಮಳಾಪುರದ ಸಿದ್ಧಲಿಂಗದೇವರು, ಪಟ್ಟಣ ದೇವರು, ರೇವಣ ಸಿದ್ಧೇದೇವರು, ಶೀಲವಂತ ದೇವರು, ಚೆಟ್ಟಿಗದೇವರು, ಇಂತಿವರು ಮುಖ್ಯವಾದ ಭಕ್ತಮಹೇಶ್ವರರಿಗೆ ಷಡುಸ್ಥಲಜ್ಞಾನ ಲಿಂಗಾಂಗ ಸಂಬಂಧ ಸಮರಸ ಏಕಾರ್ಥವನ್ನು ಭೋದಿಸಿ ಮುಕ್ತರನ್ನು ಮಾಡಿ ಷಡುಸ್ಥಲ ಏಕಾರ್ಥವಾಗಿ ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಎಡೆಯೂರಲ್ಲಿ ತಮಗೆ ಕಟ್ಟಿಸಿದ ಮಠದಲ್ಲಿ ಶಿವಯೋಗಸಮಾಧಿ ಸನ್ನದ್ಧರಾದರು. ತೋಂಟದ ಸಿದ್ಧಲಿಂಗೇಶ್ವರರ ಪಾದಪದ್ಮಾರಾಧಕರಾದ ದಾನಿವಾಸದ ನಿವಾಸಿ ಚನ್ನರಾಯ ಒಡೆಯರು, ಅವರ ಮಕ್ಕಳು ಲಿಂಗಪ್ಪ ಒಡೆಯರು, ಅವರ ಮಕ್ಕಳಾದ ಪಾದೋದಕ ಪ್ರಸಾದ ಸಂಪನ್ನರಾದ ಚನ್ನವೀರಪ್ಪ ಒಡೆಯರು, ಅವರ ಸತಿ ಪಾರ್ವತಮ್ಮ ದಂಪತಿಗಳು ತಮ್ಮ ಭಕ್ತಿಯಿಂದ ತೋಂಟದ ಸಿದ್ಧಲಿಂಗೇಶ್ವರರಿಗೆ ಕಲ್ಲುಮಠವ ಕಟ್ಟಬೇಕೆಂದು ಚಿಟ್ಟಿಗದೇವರಿಗೆ ಪದಾರ್ತವನ್ನು ನಮಸ್ಕಾರವನ್ನು ಮಾಡಲಾಗಿ ಭಕ್ತಿ ಪದಾರ್ಥವನ್ನು ಕೈಗೊಂಡು ಎಡೆಯೂರಿಗೆ ಬಿಜಯಂಗೈದು ತೋಂಟದ ಸ್ವಾಮಿಯವರಿಗೆ ಕಲ್ಲುಮಠವನ್ನು ಎಂಟುಜಡೆಯ ಬಗೆಯ ಹಿರಿಯರು ಚಿಟ್ಟಿಗದೇವರು ಕಟ್ಟಿಸಿದರು. ಎಡೆಯೂರು ಸ್ಥಳದಲ್ಲಿ ಆದೆ ಕೊಡಗಿ ಮಾನ್ಯ ನಿತ್ಯಾಬಂದ ಕಾಣಿಕೆ ಸೀಮೆಮೇಲೆ ತಂದ ನಂದಾದೀಪದ ಕಾಣಿಕೆ ಇಷ್ಟ ಈ ಮಠದ ಹಿರಿಯರು ಪಂಚಕಂತೆಯ ಚನ್ನಮಲ್ಲಿಕಾರ್ಜುನದೇವರದು. ಎಂಟು ಜಡೆಯ ಬಗೆಯ ಹಿರಿಯರು ಚಿಟ್ಟಿಗದೇವರು ಪಡೆದ ಪುರವರ್ಗವು ಸಮ್ಮುಖದಲ್ಲಿ ಬಂದ ಕಾಣಿಕೆ ತೋಂಟದ ಸ್ವಾಮಿಯ ದಾಸೋಹವ ದ್ರವ್ಯ ಈ ಮಠದಲ್ಲಿ ತೋಂಟದ ಸ್ವಾಮಿಯ ದಾಸೋಹವನ್ನು ಚಿಟ್ಟಿಗದೇವರು ಇಡಿಸಿದ ಆ ಮಠದಲ್ಲಿ ಒಡೆಯರು ಭಕ್ತರು ಒಪ್ಪಿದ ಸತ್ಪುರುಷರು ಈ ದಾಸೋಹವನ್ನು ಮಾಡುವರು. ಈ ದ್ರವ್ಯ ತೋಂಟದ ಸ್ವಾಮಿಯ ದಾಸೋಹಕ್ಕೆ ಸಲ್ಲುವದು. ಯಾರಿಗೂ

ವರ್ಗಪಾರಂಪರಿಗೆ ಸಲ್ಲದು ಸಜ್ಜನ ಸತ್ಪುರುಷರು ಈ ಪದಾರ್ಥವನ್ನು ಅನುಭವಿಸುವರು.ಈ ಮಠದಲ್ಲಿ ಕಟ್ಟಿಸಿದ ಅಡಿಗೆ ಮನೆ ಉಗ್ರಾಣದ ಮನೆಯು ಈ ತೋಂಟದ ಸ್ವಾಮಿಯ ದಾಸೋಹಕ್ಕೆ ಸಲ್ಲುವದು ಶ್ರೀ ಸಿದ್ದೇಶ್ವರ. 

    ತೋಂಟದ ಸಿದ್ಧಲಿಂಗ ಯತಿಗಳಿಗೆ ಅವರ ಶಿಷ್ಯ ಚಿಟ್ಟಿಗದೇವನು ದಾನಿವಾಸಿ ದಂಪತಿಗಳ ಕೋರಿಕೆಯ ಮೇರೆಗೆ ಕಲ್ಲು ಮಠವನ್ನು ಮತ್ತು ನಿತ್ಯದಾಸೋಹದ ಕಾಯಕಕ್ಕೆ ಅಡಿಗೆ ಮನೆ ಮತ್ತು ಉಗ್ರಾಣದ ಮನೆಯನ್ನು ಕಟ್ಟಿಕೊಟ್ಟ ವಿವರವಿದೆ. ಮೂಜಗಕ್ಕೊಡೆಯನಾದ ಸಿದ್ಧೇಶನು ಮೂರ್ತನಾದ ನೆಲೆಮಾಳಿಗೆಯ ಮೇಲಿನ ಸಜ್ಜೆಯ ಗೃಹವನ್ನು ಮರೆ ವಿಗ್ರಹ (ಉತ್ಸವ ಮೂರ್ತಿ, ಲಿಂಗ ಮೂರ್ತಿ)ವಿಟ್ಟು ಸಕಲ ಸಂಭ್ರಮಗಳಿಂದ ಅಲಂಕರಿಸಿ ಅದಕ್ಕೆ ತಲತಲನೆ ಹೊಳೆಯುವ ನಾಗಾಭರಣವನ್ನು ಅಳವಡಿಸಿ ಮಝರೆ ಎಂದು ಹರ್ಷಧ್ವನಿಗೈದು ಸಹಸ್ರ ನಾಮದ ಪೂಜೆಗೂ ಅಣಿ ಮಾಡಿರುವುದನ್ನು ಈಗಲೂ ಕಾಣಬಹುದಾಗಿದೆ. ಆ ಸಿದ್ಧಲಿಂಗನ ಗುಡಿಗೆ ಲಗತ್ತಿಸಿದಂತೆ ಬಸವನಂಕಣ, ಕುಳಿತು ಪ್ರಸಾದವನ್ನು ನೀಡುವ ಮಂಚವಿರುವ ಪಟ್ಟಸಾಲೆ, ಕುಶಲ ಕೆತ್ತನೆಯ ನವರಂಗ ಮತ್ತು ಪಾತಾಳಂಕಣ ಇವುಗಳ ಕಂಭಗಳು ಹೊಸ ರೀತಿಯಲ್ಲಿ ನಿರ್ಮಿಸಲ್ಪಟ್ಟಿವೆ. ನವರಂಗದ ಮಧ್ಯದ ಹೊತ್ತಿನಲ್ಲಿ ಚಿತ್ರಕಾರರಿಂದ ರಚಿತವಾದ ನಾನಾ ವಿಧ ಪ್ರತಿಮೆಗಳು ಇಡಲ್ಪಟ್ಟಿವೆ. ಹಾಗೆಯೇ ಭುವನೇಶ್ವರಿ ಮೇಲ್ಗಡೆಯಲ್ಲಿ  ಶಿವರಣರ, ಸದ್ಭಕ್ತರ ಹಾಗೂ ವ್ರತಿಗಳ ಪ್ರತಿಮೆಗಳು ಅಲಂಕೃತವಾಗಿ ಕೆತ್ತಲ್ಪಟ್ಟಿವೆ. ಗುಡಿಯ ಸುತ್ತಲೂ ಬಳಸಿಕೊಂಡಿದ್ದ ಪ್ರಾಕಾರದಂಕಣ ಕೆತ್ತುಗಲ್ಲಿನ ಕಳಶಗಳು ಮತ್ತು ಚಿತ್ರಗಾರರು ಬರೆದ ನಾನಾ ಬಗೆಯ ಪ್ರತಿಮೆಗಳು ವಿರಾಜಿತವಾಗಿವೆ. ಈಗಲೂ ದೇವಾಲಯದ ಹೊರ ಗೋಡೆ ಮತ್ತು ಒಳ ಗೋಡೆಯ ಮೇಲೆ ಆತ್ಮ ಲಿಂಗ ಶರಣನ ಶಿಲ್ಪ ತಪೋವನಗೈದ ಹುತ್ತದ ಪ್ರಸಂಗ ಶಿಲ್ಪಗಳು ಕಂಡು ಬರುತ್ತವೆ. ದೇವಾಲಯದ ಪ್ರಾಕಾರದ ಸುತ್ತಲೂ ಸಿದ್ಧಲಿಂಗರು ಮಾಡಿದರೆನ್ನಲಾದ ಪವಾಡಸದೃಶ ಘಟನೆಗಳ ವಿವರಗಳನ್ನು ಚಿತ್ರ ಸಮೇತ ನಂತರದ ಕಾಲದಲ್ಲಿ ನಿರ್ಮಿಸಿದ್ದಾರೆ.

    ತೋಂಟದ ಸಿದ್ಧಲಿಂಗಯತಿಗಳ ಗದ್ದುಗೆ ದೇವಾಲಯವು ಹದಿನಾರನೇ ಶತಮಾನದ ಕಟ್ಟಡವಾಗಿದ್ದು ಗರ್ಭಗುಡಿ, ಸುಖನಾಸಿ, ಮುಖಮಂಟಪವನ್ನು ಒಳಗೊಂಡಿದೆ. ಮುಖಮಂಟಪವು ತೆರೆದ ಅಂಕಣವಾಗಿದ್ದು ಅದನ್ನು ಹದಿನೈದು ಅಡಿ ಎತ್ತರದ ಕಂಬಗಳು ಹೊತ್ತುನಿಂತಿವೆ. ಮುಖಮಂಟಪದಲ್ಲಿ ಸುಖನಾಸಿಗೆ ಹೋಗುವ ಮಾರ್ಗದಲ್ಲಿ ಎರಡೂ ಕಡೆ ಜಗುಲಿ ಇದೆ. (ಇಂದು ಅವುಗಳೆಲ್ಲ ಆಧುನೀಕರಣಗೊಂಡಿವೆ.) ಮುಖಮಂಟಪದ ಕಂಬಗಳ ಮೇಲೆ ಅನೇಕ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಅಂತಹ ಉಬ್ಬು ಶಿಲ್ಪಗಳಲ್ಲಿ ತೋಂಟದ ಸಿದ್ಧಲಿಂಗಯತಿಗಳ ಶಿವಪೂಜಾನುಷ್ಠಾನ ಶಿಲ್ಪವಿದೆ. ಇದು ಅತ್ಯಂತ ಮನಮೋಹಕವಾಗಿದೆ. ಮೇಲ್ಭಾಗದ ಚಾವಣಿಯ ಸುತ್ತ ಸಿದ್ಧಲಿಂಗಯತಿಗಳ ಬದುಕಿಗೆ ಸಂಬಂಧಿಸಿದ ಗಾರೆಮೂರ್ತಿಗಳನ್ನು ಬಿಡಿಸಲಾಗಿದ್ದು ಅವುಗಳನ್ನು ಗೂಡುಗಳಲ್ಲಿಡಲಾಗಿದೆ.

ಮುಖ್ಯ ಕಟ್ಟಡದ ಮೇಲ್ಭಾಗದಲ್ಲಿ ಮಂಟಪವೊಂದನ್ನು ನಿರ್ಮಿಸಲಾಗಿದೆ. ಅದರಲ್ಲಿ ನಾಲ್ಕು ಕಂಬಗಳಿದ್ದು ಅದರ ಮೇಲೆ ಶಿಖರವಿದೆ. ಸುತ್ತಲೂ ಅನೇಕ ಕಂಬಗಳುಳ್ಳ ಅಂಕಣಗಳಿವೆ. ಆ ಕಂಬಗಳಲ್ಲಿ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಅವುಗಳಲ್ಲಿ ಒಂದು ಅಂಕಣದ ಕಂಬದಲ್ಲಿ ಶಿಲಾಶಾಸನವಿದೆ. ಆ ಶಾಸನ ಇಂತಿದೆ;

ಹೆಗರನ ಕಟ್ಟಿದ ತೋಂಟದೈ

ಕಟ್ಟಿಸ್ತ ಅಂಕಣ

ಸಿದ್ದೇಶ್ವರಂಗೆ ಸ ಷ ಶ್ರೀ ಶ್ರೀ

ಆ ಅಂಕಣವನ್ನು ಹೆಗರನಕಟ್ಟದ ತೋಟದಯ್ಯನು ಕಟ್ಟಿಸಿರುವುದು ಸ್ಪಷ್ಟವಾಗುತ್ತದೆ. ಆ ಅಂಕಣದಲ್ಲಿ ಇದೀಗ ವೀರಭದ್ರನ ದೇವಾಲಯವಿದೆ. ಈ ಕಂಬಶಾಸನದಲ್ಲಿ ಪಕ್ಕದಲ್ಲಿಯೇ ಆ ಅಂಕಣವನ್ನು ಕಟ್ಟಿಸಿದ ತೋಂಟದಯ್ಯ ಮತ್ತು ಆತನ ಪತ್ನಿಯ ಉಬ್ಬುಶಿಲ್ಪಗಳಿವೆ. ಇದೀಗ ಈ ಸ್ಥಳ ಸಂಪೂರ್ಣ ನವೀಕರಣಗೊಂಡಿದ್ದು ಮುಂಭಾಗದಲ್ಲಿ ಐವತ್ತು ಅಡಿ ಎತ್ತರದ ಪ್ರವೇಶದ್ವಾರವಿದೆ. 

 ಯಡೆಯೂರಿನ ದೇವಾಲಯದ ಪ್ರಾಂಗಣದಲ್ಲಿ ಸ್ಥಳೀಯ ವ್ಯಕ್ತಿಗಳು  ಮತ್ತು ಇತರರು  ಸಿದ್ಧಲಿಂಗರಿಗೆ ಸಲ್ಲಿಸಿದ  ಸೇವಾ ಕೈಂಕರ್ಯದ ಬಗೆಗೆ ಲಘುಬರೆಹಗಳ ಶಾಸನಗಳು ಕಂಡು ಬರುತ್ತವೆ. ಯಾವ ಲಘುಶಾಸನಗಳಲ್ಲಿಯೂ  ಕಾಲದ ಉಲ್ಲೇಖ ಇಲ್ಲ. ಜೊತೆಗೆ  ಈ ಬರೆಹಗಳಲ್ಲಿ ಅಂತಹ  ವಿಶೇಷ ಸಂಗತಿಗಳು ಅಷ್ಟಾಗಿ ಇಲ್ಲ. ಈ ಶಾಸನಗಳಲ್ಲಿ ಗ್ರಾಂಥಿಕ ಭಾಷೆಯ ಬಳಕೆಗಿಂತ  ಹೆಚ್ಚಾಗಿ ಗ್ರಾಮ್ಯ ಭಾಷೆಯ ಪದಗಳನ್ನು ಕಾಣಬಹುದಾಗಿದೆ. ಆ ಲಘು ಬರೆಹವುಳ್ಳ ಶಾಸನಗಳ ವಿವರಗಳು ಇಂತಿವೆ.

೧.ಎಡೆಯೂರು ಶಾಸನ ಸಂಖ್ಯೆ 60 (ಹಳೆಯ ಇ.ಸಿ. ಸಂಪುಟ XVI ಕು 68) 

ಸಿದ್ಧಲಿಂಗೇಶ್ವರ ದೇವಸ್ಥಾನದ ಬೆಳ್ಳಿ ಕೊಳಗದ ಮೇಲಿರುವ ಶಾಸನ

ಬಿರೂರ || ತೋಟಪ್ಪನ ಶಿದ್ದಪ್ಪನ ಭಕ್ತಿ 

೨. ಶಾಸನ ಸಂಖ್ಯೆ: ೬೧ (ಹಳೆಯ ಇ.ಸಿ. ಸಂಪುಟ XVI ಕು 69) 

ಅದೇ ದೇವಸ್ಥಾನದ ಪಾದಗಳುಳ್ಳ ಶೇಷನ ಲಘು ಶಾಸನ

    ಅತಿಗುಪೆ ಅವಲಕಿ ಸಿದಂಮನ ಭಕ್ತಿ

೩.ಶಾಸನ ಸಂಖ್ಯೆ: 62 (ಹಳೆಯ ಇ.ಸಿ. ಸಂಪುಟ XVI ಕು 70) 

ಅದೇ ದೇವಸ್ಥಾನದ ಗದ್ದಿಗೆ ತಗಡಿನ ಮೇಲಿರುವ ಲಘುಶಾಸನ

1. ಸಿದಲಿಂಗೇಶ್ವರ

2. ಸ್ವಾಮಿಪಾದಕೆ ತುರು

3. ವೆಕೆ[ರೆ] ಅರಳೆ ಸಿ

4. ದಲಿಂಗೈಯನ

5. ಮಗ ರುದ್ರೈಯ

6. ವಪ್ಪಿಸಿದ ಭಕ್ತಿ

ಶಾಸನ ಸಂಖ್ಯೆ 63 (ಹಳೆಯ ಇ.ಸಿ. ಸಂಪುಟ XVI ಕು 71) 

ಅದೇ ದೇವಸ್ಥಾನದ ಹಿತ್ತಾಳೆ ತಟ್ಟೆಯ ಮೇಲಿರುವ ಲಘುಶಾಸನ

೧. ಯಡೆಯೂರ ಸಿಧಲಿಂಗೇಶ್ವರಸ್ವಾಮಿ ಪಾಧಕೆ

2. ಬೋರಸಂದ್ರದ ಮರಡಶೆಟ್ಟಿ ಭಕ್ತಿ

೪.ಶಾಸನ ಸಂಖ್ಯೆ:64 (ಹಳೆಯ ಇ.ಸಿ. ಸಂಪುಟ XVI ಕು 72)

 ಅದೇ ದೇವಸ್ಥಾನದ ಹಿತ್ತಾಳೆ ಅರಕಂಚಟ್ಟಿ ಮೇಲಿರುವ ಲಘು ಶಾಸನ

ಯಡೆಯೂರ ಸಿದ್ಧೇಶ್ವರಸ್ವಾಮಿಯವರ ಮಾಡೊ ಪಾದಕೆ ಚನ್ನರಾಯಪಟಣ ಸಿದ್ದಲಿಂಗೈಯ ಮಾಡೊ ಬಕ್ತಿ


೫.ಶಾಸನ ಸಂಖ್ಯೆ: 65 (ಹಳೆಯ ಇ.ಸಿ. ಸಂಪುಟ XVI ಕು 73)

ಅದೇ ದೇವಸ್ಥಾನದ ಹಿತ್ತಾಳೆ ಬಿಂದಿಗೆಗಳಲ್ಲಿ

ಒಂದನೆಯ ಬಿಂದಿಗೆಯ ಮೇಲೆ

ಯಡಿಯುರ ಸಿದ್ಧೇಶ್ವರಸ್ವಾಮಿಗೆ | ತೊರೆಬೊಮ್ಮನಳ್ಳಿಯ || ಬಸವೈಯ್ಯನು ಕೊಠ್ಠ ಬಿಂದಿಗೆ ಭಕ್ತಿ 

೬.ಶಾಸನ ಸಂಖ್ಯೆ: 66 (ಹಳೆಯ ಇ.ಸಿ. ಸಂಪುಟ XVI ಕು 74)

ಎರಡನೆಯ ಬಿಂದಿಗೆಯ ಮೇಲೆ

ಯಡೆಯೂರ ಸಿದ್ದಲಿಂಗೇಶ್ವರಸ್ವಾಮಿ ಪಾದಕ್ಕೆ ಬಾಚಿಹಳ್ಳಿ ಚಿಕ್ಕಸಂಗಪನ ಬಕ್ತಿ

೭.ಶಾಸನ ಸಂಖ್ಯೆ:67 (ಹಳೆಯ ಇ.ಸಿ. ಸಂಪುಟ XVI 6 75)

ಮೂರನೆಯ ಬಿಂದಿಗೆಯ ಮೇಲೆ

ಗೋವಿಂದನಳ್ಳಿ ಚಂನಮಲಸೆಟಿ ಯಡೂರ ಶಿದಲಿಂಗೇಸ್ವರಗೆ ವೊಪಿಸಿದ ಸೆವರ್ತ ||

೮. ಶಾಸನ ಸಂಖ್ಯೆ: 68 (ಹಳೆಯ ಇ.ಸಿ. ಸಂಪುಟ XVI ಕು 76)

ನಾಲ್ಕನೆಯ ಬಿಂದಿಗೆಯ ಮೇಲೆ

ಅಂಕನತಪುರಧ ಶಿದಲಿಂಗಶೆಠ್ಠರ ಮಗಳ ತೈರ್ರಿನ ಹಣ ಬಕ್ತಿ | ಯಡೆಯುರ ಸಿದಲಿಂಗೇಶ್ವರನ ಪಾದಕ್ಕೆ ಶಿವನಮ್ಮ ವಪಿಸಿದ ಭಕ್ತಿ ಸಂತು 

೯.ಶಾಸನ ಸಂಖ್ಯೆ: 69 (ಹಳೆಯ ಇ.ಸಿ. ಸಂಪುಟ XVI ಕು 77)

ಅದೇ ದೇವಸ್ಥಾನದ ಬೆಳ್ಳಿಕೋಲುಗಳ ಮೇಲಿರುವ ಶಾಸನ

ಯಡೆಯೂರ ತೋಂಟದ ಸಿಧಲ್ಲಿಂಗಶ್ವಾಮಿಪಾದಕ್ಕೆ | ಮಂಜ್ರಬಾದು ತಾಲೂಕು 

ಯಸಳೂರು ಪೇಟೆ | ಹದಲು ಗುರುಶಾಂತ್ತಪನ ಭಕ್ತಿ ಬೆಳಿಕೊಲು ಯರಡು 

೧೦.ಶಾಸನ ಸಂಖ್ಯೆ: 70 (ಹಳೆಯ ಇ.ಸಿ. ಸಂಪುಟ XVI ಕು 78)

ಅದೇ ದೇವಸ್ಥಾನದ ರಥದ ಕಲಶದ ಮೇಲಿರುವ ಶಾಸನ

ಶ್ರೀಗುರುವೇ ಗತಿ || ಹೊನ್ನವರದ ಲಿಂಗಸೆಟರ ಮಗ ಸಿಂದಲಿಂಗಸಟಿ ಯಡವುರ 

ಸಿದಲಿಂಗೇಶ್ವರಸೋಮಿ ಪದಕೆ ಮಲರ(|)ಸೈನ ಕಳಸ ॥ ಯೀ ನಗದ ತೂಕ ||

ದೊಡ ಹಳತ || ನ ೨ || ೩ ಮೂರು ಸೇರು

೧೧.ಶಾಸನ ಸಂಖ್ಯೆ: 71 (ಹಳೆಯ ಇ.ಸಿ. ಸಂಪುಟ XVI ಕು 79)

ಅದೇ ದೇವಸ್ಥಾನದ ಬೆಳ್ಳಿಸತ್ತಿಗೆಯ ಮೇಲಿರುವ ಶಾಸನ

ಅಂಕಿಹ(ಂ)ಳಿಯ ಚಂನಬಸಪನ ಮಗ ತೊಠಪ ಯಡೆಉರ ಸಿಧೇಸ್ವರ[ಸ್ವಾ]ಮಿಯವರ 

ಪದಕೆ ವಪಿಸಿದ ಸತ್ತಿಗೆ ಕೊಂಬು ಸ್ತಳ 

೧೨.ಶಾಸನ ಸಂಖ್ಯೆ: 72 (ಹಳೆಯ ಇ.ಸಿ. ಸಂಪುಟ XVI ಕು 80)

ಅದೇ ದೇವಸ್ಥಾನದ ಹಂಡೆಯ ಮೇಲಿರುವ ಶಾಸನ

ಯಡೂರು ತೋ ॥ ಶಿಧಲ್ಲಿಂಗೇಶ್ವರ ಸ್ವಮಿಯವರಿಗೆ ಹಳೇಬೀಡು ಮರಿಶೆಟ್ರ ಮಗ ತೋಟಶೆಟ್ಟಿ ಸೇವಾರ್ತ

೧೩.ಶಾಸನ ಸಂಖ್ಯೆ: 73 (XVI ಕು 81)

ಅದೇ ದೇವಸ್ಥಾನದ ಮೇಲ್ಪಾವಣಿಗೆ ಕಟ್ಟಿರುವ ಎಡಗಡೆ ದೊಡ್ಡ ಗಂಟೆಯ ಮೇಲೆ (ಮೇಲ್ಬಾಗದಲ್ಲಿ)

ದಳವಾಯಿ ಬಸವರಾಜೈಯನವರ ಪತ್ನಿಯಾದ ಮೀನಾಕ್ಷಂಮನವರ ಸೇವೆ |

೧೪. ಶಾಸನ ಸಂಖ್ಯೆ: 74 (ಹಳೆಯ ಇ.ಸಿ. ಸಂಪುಟ XVI ಕು 82)

ಅದೇ ಗಂಟೆಯ ಕೆಳಭಾಗದಲ್ಲಿರುವ ಶಾಸನ

ಸಿಧಲಿಂಗೇಶ್ವರಸ್ವಾಮಿಯವರ್ರಿಗೆ ಬಾದಶಹ ಟಿಪ್ಪುಸುಲುತಾನ ಕಾನಜಾರಿ ಅಮೀಲು ಜಾಪರಕಾನ ಬೊಂಮಣಿಯವರ ಸೇವೆ

೧೫.ಶಾಸನ ಸಂಖ್ಯೆ:75 (ಹಳೆಯ ಇ.ಸಿ. ಸಂಪುಟ XVI ಕು 83)

ಅದೇ ಸ್ಥಳದಲ್ಲಿ ಬಲಗಡೆ ಗಂಟೆಯ ಮೇಲಿರುವ ಶಾಸನ

ಸಿಧಲಿಂಗೇಶ್ವರಸ್ವಾಮಿಯವರ್ರಿಗೆ ಬಾದಶಹ ಟಿಪುಸುಲುತಾನ ಕಾನಜಾರಿ ಅಮೀಲ ಜಾಪರಕಾನ ಬೊಂಮಣಿಯವರ ಸೇವೆ

ಶಾಸನ ಸಂಖ್ಯೆ ೭೩, ೭೪ ಮತ್ತು ೭೫ ರ ಲಘು ಬರೆಹದ ವಿವರಗಳಲ್ಲಿ  ದಳವಾಯಿ ಬಸವರಾಜಯ್ಯ ಮತ್ತು ಟಿಪ್ಪು ಸುಲ್ತಾನರ ಪ್ರಸ್ತಾಪ ಇದ್ದು, ತೋಟದ ಸಿದ್ಧಲಿಂಗರ ದೇವಾಲಯದ ನಿತ್ಯದ ಪೂಜೆಯ ಸಂದರ್ಭದಲ್ಲಿಯ ಘಂಟೆ ಸೇವೆಯ ಸಲುವಾಗಿ ದೊಡ್ಡ ಘಂಟೆಯನ್ನು ಒದಗಿಸಿರುವುದನ್ನು ಕಾಣಬಹುದಾಗಿದೆ.ಈ ಲಘು ಶಾಸನಗಳ ಬರೆಹದಲ್ಲಿ  ಮೈಸೂರು ಸಂಸ್ಥಾನದ ವ್ಯಕ್ತಿಗಳ ಪ್ರಸ್ತಾಮ ಕಂಡು ಬಂದಿದೆ.

೧೬.ಶಾಸನ ಸಂಖ್ಯೆ: 76 (ಹಳೆಯ ಇ.ಸಿ. ಸಂಪುಟ XVI 6 84)

ಅದೇ ದೇವಸ್ಥಾನದ ವೀರಭದ್ರ ಗುಡಿಯ ಬಾಗಿಲ್ವಾಡದ ಮೇಲಿರುವ ಶಾಸನ

೧. ಶಿದ್ದಲಿಂಗೇಶ್ವರಸ್ವಾ

2. ಮಿಗೆ ಬಸರಾಳ

3. ಚಂನಸಠ್ಠರು |

೪. ಮಕ್ಕಳು ಸಿಧ

5. ವೀರಸರಿ ಬಸ

೬. ಠ್ಠಿ ಮಾಡಿದ

೭. ಬಕ್ತಿ [||*] ಬಾಗಿ

೮. ಲವಾಡ

೯. ಸಣಬದ ಶಂಕರ ಸ್ವಾಮಿ ಪದ

೧೦. ಕೆ ಮಾಡಿದ ಬಕ್ತಿ [||*] 

   ಎಡೆಯೂರು ದೇವಾಲಯದ ಪ್ರಾಂಗಣದಲ್ಲಿರುವ ಒಟು ೧೬ ಲಘು ಶಾಸನ ಬರೆಹಗಳು  ಸಿದ್ಧಲಿಂಗೇಶ್ವರರು ಐಕ್ಯವಾದ ಎಡೆಯೂರಿನಲ್ಲಿ ಸ್ಥಾಪಿತವಾದ ಅವರ ಹೆಸರಿನ ದೇವಾಲಯದ ಪೂಜೆ-ಪುರಸ್ಕಾರಗಳು  ದಿನನಿತ್ಯ ನಿರಂತರವಾಗಿ ನಡೆಯಲು ಸಿದ್ಧಲಿಂಗೇಶ್ವರರ ಭಕ್ತರುಗಳಾದ ಸ್ಥಳೀಯ ಜನ ಸೇವೆಯನ್ನು ಒದಗಿಸಿರುವುದನ್ನು ಪ್ರಸ್ತಾಪಿಸಿವೆ.

   

೨. ತೋಟದ ಸಿದ್ಧಲಿಂಗರು ತಪಸ್ಸು ಮಾಡಿದ ಕಗ್ಗೆರೆಗ್ರಾಮದ ಬಳಿ ಇರುವ ಶಾಸನ ಕಲ್ಲುಗಳು 

ತೋಂಟದ ಸಿದ್ಧಲಿಂಗರು ತಪೋನುಷ್ಠಾನಗೈದ ಕಗ್ಗೆರೆಯಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ ಗರ್ಭಗೃಹ, ಸುಖನಾಸಿ, ರಂಗಮಂಟಪ ಹಾಗೂ ತೆರೆದ ಮುಖಮಂಟಪವನ್ನು ಒಳಗೊಂಡಿದೆ. ದೇವಾಲಯದ ಮುಖಮಂಟಪ ಹಾಗೂ ನವರಂಗದ ಕಂಭಗಳಲ್ಲಿ ಧ್ಯಾನಾಸಕ್ತರಾದ ಸಿಧ್ಧಲಿಂಗರ ನಾಲ್ಕುಉಬ್ಬುಶಿಲ್ಪಗಳನ್ನು ಕಾಣ ಬಹುದಾಗಿದೆ. ದೇವಾಲಯದ ಗರ್ಭಗುಡಿಯ ಬಲಭಾಗದಲ್ಲಿ ಸಿದ್ಧಲಿಂಗರ ಹುತ್ತದ ಪ್ರಸಂಗಕ್ಕೆ ಕಾರಣಕರ್ತರಾದ ನಂಬೆಣ್ಣ ದಂಪತಿಗಳ ಉಬ್ಬು ಶಿಲ್ಪವನ್ನು ಕಾಣಬಹುದಾಗಿದೆ.ಸಿದ್ದಲಿಂಗೇಶ್ವರರಿಗೆ ಭಕ್ತಿಯಿಂದ ನಡೆದುಕೊಂಡಲ್ಲಿ ಇಷ್ಟಾರ್ಥಸಿದ್ಧಿಯಾಗುತ್ತೆಂಬ ನಂಬುಗೆ ಜನಗಳಲ್ಲಿ ಬಲವಾಗಿ ಬೇರೂರಿದೆ.

  ಕಗ್ಗೆರೆ ಶಾಸನ:

  (ಎಪಿಗ್ರಾಫಿಯ ಕರ್ನಾಟಿಕ ಸಂ.೨೪(ಪರಿಷ್ಕೃತ), ಪು.ಸಂ.೧೯೧-೧೯೨) (ಹಳೆಯಸಂಪುಟ: ಇ.ಸಿ.XII 6 46)

ಒಂದನೆಯ ಕಲ್ಲು

1. ಶುಭಮಸ್ತು [||*] ನಮಸ್ತುಂಗಸಿರಶ್ಚುಂಬಿ

೨. ಚಂದ್ರಚಾಮರಚಾರವೇ [|*] ತ್ರೈಲೋಕ್ಯನಗರಾ

3. ರಂಭಮೂಲಸ್ತಂಭಾಯ ಶಂಭವೇ [||*] ಶುಭಮಸ್ತು [||*]

4. ಸ್ವಸ್ತಿ [||*] ಶ್ರೀ ವಿಜಯಾಭ್ಯುದಯ ಶಾಲಿವಾಹನಶಕವ

5. ರುಷ ೧೫೮೫ ಸಂದ ವರ್ತಮಾನವಾದ ಕ್ರೋಧಿ ಸಂ

6. ವತ್ಸರದ ಕಾರ್ತಿಕ ಶು ೨ ಲು ಶ್ರೀಮದ್ರಾಜಾಧಿರಾಜ ರಾಜ

7. ಪರಮೇಶ್ವರ ಶ್ರೀವೀರಪ್ರತಾಪ ವೀರ ಶ್ರೀರಂಗರಾಯ(ರ)ದೇವ

8. (ದೇವ) ಮಹಾರಾಯರೈಯ್ಯನವರು ಪ್ರುಥ್ವೀಸಾಂಬ್ರಾಜ್ಯಂ ಗೈ

೯. ಉತ್ತಿರಲು ಆತ್ರೇಯಗೋತ್ರರಾದ ಮೈಸೂರ ರಾಜವಡೇರ ಪ

10. ಉತ್ರರಾದ ದೇವರಾಜವಡೇರ ಪುತ್ರರಾದ ದೇವರಾಜವಡೇ

11. ರೈಯ್ಯನವರು ಕಗ್ಗೆರೆಯ ತೋಂಟದ ಸಿದೇಶ್ವರಸ್ವಾಮಿಯವರಿ

12. ಗೆ ಸಮರ್ಪಿಸಿದ ಗ್ರಾಮದ ಸಿಲಾಶಾಸನದ ಕ್ರಮವೆಂತೆಂ

13. ದರ್ರೆ [||*] ದಳವಾಯಿ ನಂದಿನಾಥೈಯ್ಯನು ಸಮರಸಂನಾಹ

14. ವ ಮಾಡಿ ಯಿಕೇರ್ರಿಯವರ ಮೇಲಣ ಕಾರಕ್ಕೆ ಕಳುಹಿಸು

15. ವಲ್ಲಿ ಪ್ರಾರ್ಥನೆ ಮಾಡಿ

ಎರಡನೆಯ ಕಲ್ಲು

16. ಕೊಂಡು ಯಿದೇವಾದ ನಿಮಿತ್ಯ ಆ ಕಾರ್ಯ್ಯಉ ನಮ

17. ಗೆ ದಿಗ್ವಿಜಯವಾಗಲಾಗಿ ನಂಮ್ಮ ಆಳಿವಿಕೆಗೆ ಸಲ್ಲು

18. ವ ಕುಣಿಗಿಲಸ್ತಳದ ಕಗ್ಗೆರೆ ಗ್ರಾಮದ ಚತುಸೀಮೆ

19. ವಳಗಾದ ಭೂಮಿಯನು ತುಲಾಸಂಕ್ರಮಣಪುಂ

20. ಣ್ಯಕಾಲದಲ್ಲಿ ಸ್ವಾಮಿಸೇವೆಗೆ ಸಮರ್ಪಿಸಿ ಸಿಲಾಪ್ರ

21. ತಿಷ್ಠೆ ಮಾಡಿಸ್ತೆಉ ಯೆಂದು ಬರದ ಶಾಸನಾ || ಸ್ವದ

22. ತ್ತಾ ದ್ವಿಗುಣಂ ಪುಂಣ್ಯಂ ಪರದತ್ತಾನುಪಾಲನಂ [|*] ಪ

23. ರದತ್ತಾಪಹಾರೇಣ ಸ್ವದತ್ತಂ ನಿಷ್ಪಲಂ ಭವೇತ್ [|*] ಸ್ವದ

24. ತಂ ಪರದತಂ ವಾ ಯೋ ಹರೇತಿ ವಸುಂಧರ [|*] ಷಷ್ಟಿವ

25. ರುಷಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ ||೧ ಯಿ

26. ಧರ್ಮವ ಅಪಹರ್ರಿಸೇನು ಯಂದು ಯೋಚಿಸ್ತವನು

27. ತಂಮ ಮಾತಾಪಿತ್ರುಗಳ ಕಾಸಿಯಲ್ಲಿ ವಧೆಮಾಡಿದ

28. ವನೂ [||*]

 ಮೈಸೂರಿನ ರಾಜ ಒಡೆಯರ ಮೊಮ್ಮಗ, ದೇವರಾಜ ಒಡೆಯರ ಮಗನಾದದೇವರಾಜ ಒಡೆರಯ್ಯನು ಹಿಂದೆ ಮೈಸೂರು ಒಡೆಯರ್ ದಳವಾಯಿ ನಂದಿನಾಥಯ್ಯ ಎಂಬುವರು ಇಕ್ಕೇರಿಯ ಜನರೊಂದಿಗೆ ನಡೆದ ಯುದ್ಧ ಪ್ರಸಂಗದಲ್ಲಿ ಮೈಸೂರು ಅರಸರಿಗೆ ದಿಗ್ವಿಜಯ ಲಭಿಸಿದ ನಿಮಿತ್ತವಾಗಿ ತಮ್ಮ ಆಳ್ವಿಕೆಯ ವ್ಯಾಪ್ತಿಯಲ್ಲಿಯ  ಕುಣಿಗಲ ಸ್ಥಳದ  ಕಗ್ಗೆರೆ ಗ್ರಾಮದ ಈ ಕ್ಷೇತ್ರಕ್ಕೆ ಭೂಮಿಯನ್ನು ಬಿಟ್ಟುಕೊಟ್ಟ ವಿವರವನ್ನು ಮೇಲಿನ ಶಾಸನ ದಾಖಲಿಸಿದೆ.

ಶಾಸನ ಸಂಖ್ಯೆ: 8 (ಹಳೆಯ ಇ.ಸಿ. ಸಂಪುಟ XII ಕು 47)

 ಕಗ್ಗೆರೆಯ ಸಿದ್ಧಲಿಂಗೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ನೆಟ್ಟ ಕಲ್ಲಿನ ಮೇಲಿರುವ ಶಾಸನ

1. ಸಿದ್ದೇಶ್ವರನ ಶ್ವಸ್ತಿ [||*] ಆವವ

2. ನದರು ಆಲಿಪಿದರೆ ಆ

3. ವಾನೂ ದೇವಲೋಕಕೆ

4. ಮರ್ತ್ಯಲೋಕಕೆ ಹೊರ

5. ಗೂ ಸಿಧೇಶ್ವರ

6. . . . . . . . . . ಅಸ್ಪಷ್ಟ ಬರೆಹವಿದೆ


ಶಾಸನ ಸಂಖ್ಯೆ: 9 (ಹಳೆಯ ಇ.ಸಿ. ಸಂಪುಟ XII ಕು 48)

ಕಗ್ಗೆರೆಯ ದೇವಸ್ಥಾನದ ಬಂಡಿಯ ಚಕ್ರದ ಮೇಲಿರುವ ಶಾಸನ

1. ಕಗ್ಗೆರೆ ಶ್ರೀಶಿದ್ದಲಿಂಗೇಶ್ವರಸ್ವಾಮಿಪಾದಕ್ಕೆ ಕುಣಿಗಲು ಚನ್ನಬ

2. ಸಪ್ಪನ ಮಗ ರೇಶ್ಮೆ ದಲ್ಲಾಳಿ ವೀರಸೆಟಪ್ಪನ ಹೆಂಡತಿ ಗಂಗ

3. ಮ್ಮನ ಭಕ್ತಿ ಹೇವಳಂಬಿ ಸಂ ।

4. ಸನ್ ೧೮೯೮ ನೇ ಯ್ಸ್ವಿ

ಶಾಸನ ಸಂಖ್ಯೆ: 10 (ಹಳೆಯ ಇ.ಸಿ. ಸಂಪುಟ XVI ಕು 85)

ಸಿದ್ಧಲಿಂಗೇಶ್ವರ ದೇವಸ್ಥಾನದ ಹಿತ್ತಾಳೆ ಕೊಳಗದ ಮೇಲೆ

1. ಶ್ರೀ ಕಗ್ಗೆರೆಯ ಸಿಧಲಿಂಗೇಶ್ವರಸ್ವಾಮಿಯರವರಿಗೆ ಹೆ || ಪುಟ್ಟಿಯ

2. ನ ಮಗ ಚಂನಬಸಪನ ಬಕ್ತಿ || ಜಯ ಸಂ ॥ ಮಾರ್ಗಿಶ್ವರ ಶು

೩. ಧ ೧೩ ಲು || ಂ

ಸಿದ್ಧಲಿಂಗರಿಗೆ ಸಂಬಂಧಿಸಿದ  ಕಗ್ಗೆರೆಯಲ್ಲಿಯ ೮, ೯. ೧೦ ನೇ ಸಂಖ್ಯೆಯ ಲಘು ಶಾಸನಗಳ ಬರೆಹವು ಅಸ್ಪಷ್ಟವಾಗಿ ಕೂಡಿದ್ದರೂ  ಸ್ಥಳೀಯ ಜನತೆ ಸಿದ್ಧಲಿಂಗರಿಗೆ ಭಕ್ತಿಯಿಂದ ನಡೆದು ಕೊಳ್ಳುತ್ತಿದ್ದುದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿವೆ.

೩. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಾಮಿಡಿಹಳ್ಳಿ ಗ್ರಾಮದ ಬಸವನ ಗುಡಿಯ ಎದುರಿನ ಶಿಲಾಶಾಸನ( ಕಾಲ: ಕ್ರಿ.ಶ.೧೫೨೧, ಏಪ್ರಿಲ್ ೧೭, ಬುಧವಾರ)


  ವಿಜಯನಗರ ಅರಸು  ಕೃಷ್ಣದೇವರಾಯನ ಕಾಲಕ್ಕೆ ಸೇರಿದ ಕಾಮಿಡಿಹಳ್ಳಿ ಶಾಸನವು ಸಿದ್ಧಲಿಂಗರಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ದಾಖಲಿಸಿದೆ. ಈ ಶಾಸನವು ತೋಂಟದ ಸಿದ್ದಲಿಂಗೇಶ್ವರರ ಜೀವಿತಾವಧಿಯ ಪ್ರಪ್ರಥಮ ಶಾಸನವಾಗಿದೆ. ಜೊತೆಗೆ ಇಲ್ಲಿಯವರೆಗೂ ಇವರ ಕಾಲದ ಬಗೆಗೆ ಎಳೆದಾಡಿದ್ದ ಸಂಶೋಧಕರ ಅನಿಸಿಕೆಗಳಿಗೆ ಖಚಿತತೆಯನ್ನು ಒದಗಿಸಿದೆ.

ಸಿದ್ಧಲಿಂಗಯತಿಗಳ ಕಾಲನಿರ್ಣಯಕ್ಕಾಗಿ ನೇರವಾಗಿ ಪ್ರಯತ್ನಿಸಿದ ಕೆಲವು ವಿದ್ವಾಂಸರ ಲೇಖನಗಳನ್ನೆಲ್ಲ ಅವಲೋಕಿಸಿದಾಗ ಈ ಕೆಳಕಂಡ ನಿರ್ಣಯಗಳು ವ್ಯಕ್ತವಾಗುತ್ತವೆ. 

1. ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ  ಸಿದ್ಧಲಿಂಗೇಶ್ವರರ ವಚನ ಕೃತಿ ಷಟ್‍ಸ್ಥಲ ಜ್ಞಾನಾಮೃತದಲ್ಲಿ ಕಾಲದ ಸೂಚನೆ ಇಲ್ಲ.

2. ಕೇವಲ ಪುರಾಣಗಳಲ್ಲಿ ದೊರೆಯುವ ಪರೋಕ್ಷ ಪ್ರಮಾಣಗಳನ್ನು ಅವಲಂಬಿಸಬೇಕಾಗಿದೆ.

3. ಸಿಕ್ಕಿರುವ ಸಾಮಗ್ರಿಯು ತೀರ ಸ್ವಲ್ಪ.

4. ಈ ಮಿತಿಯಲ್ಲಿಯೇ ತೋಂಟದ ಸಿದ್ಧಲಿಂಗ ಯತಿಗಳ ಕಾಲ ನಿರ್ಣಯಕ್ಕಾಗಿ ವಿದ್ವಾಂಸರು ಪ್ರಯತ್ನಿಸಿದ್ದಾರೆ.

5. ಸದ್ಯಕ್ಕಂತೂ ಹೆಚ್ಚಿನ ಹೊಸ ಸಾಕ್ಷ್ಯಾಧಾರಗಳು ಅನುಪಲಬ್ಧತೆ.

ಈ ಅಂಶಗಳನ್ನು ಗಮನಿಸಿದಾಗ ತೋಂಟದ ಸಿದ್ಧಲಿಂಗ ಯತಿಗಳ ಕಾಲನಿರ್ಣಯ ಅತ್ಯಂತ ತೊಡಕಿನದಾಗಿದ್ದು; ಖಚಿತವಾದ ಕಾಲನಿರ್ಣಯ ಸಾಧ್ಯವಾಗದೆ ಅಂದಾಜು ಕಾಲಮಾನವನ್ನು ನಿರ್ಣಯಿಸಲಾಗಿದೆ.ವಿದ್ವಾಂಸರು ಸೂಚಿಸಿರುವ ಕಾಲದ ವಿವರ ಈ ರೀತಿ ಇದೆ.

1. ಶ್ರೀ ಬಸಪ್ಪ ವೀರಪ್ಪ ಕೋಟಿ ಕ್ರಿ.ಶ. 1281-1381

2. ಪ್ರೊ. ಸಿ. ಮಹಾದೇವಪ್ಪ ಕ್ರಿ.ಶ. 1400-1470

3. ಶ್ರೀ ಆರ್. ನರಸಿಂಹಾಚಾರ್ಯರು ಕ್ರಿ.ಶ. 1470

4. ಪ್ರೊ. ಎಚ್. ದೇವೀರಪ್ಪ ಕ್ರಿ.ಶ. 1450-1500

5. ಪ್ರೊ. ಆರ್.ಸಿ. ಹಿರೇಮಠ ಕ್ರಿ.ಶ. 1480

6. ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿ ಕ್ರಿ.ಶ. 1510

ಈ ಎಲ್ಲಾ ಅಭಿಪ್ರಾಯಗಳು  ಸಿದ್ಧಲಿಂಗರ ಬಗೆಗೆ ಹೆಚ್ಚಿನ ಆಧಾರಗಳು ದೊರೆಯುವ ಪೂರ್ಣದಲ್ಲಿ ವ್ಯಕ್ತಪಡಿಸಿರುವ ಪ್ರಾಥಮಿಕ ಹಂತದ ಪ್ರಯತ್ನಗಳು ಆಗಿವೆ. 

  ಜಿಗುನಿ ಮರುಳಾರ್ಯನು ‘ನಿಜಗುರುಸಿದ್ಧಶಾಂತ’ ಅಂಕಿತದಲ್ಲಿ ಸ್ವರವಚನಗಳನ್ನು ರಚಿಸಿದ್ದಾನೆ. ಒಂದು ಸ್ವರವಚನದಲ್ಲಿಯ  ‘ಯೋಗಿಬಂದಕಾಣೆಯಮ್ಮ ರಾಗ ವಿರಾಗ ವಿದೂರ ಜಂಗಮಲಿಂಗಯೋಗಿ ಬಂದ ಕಾಣೆ’ ಎಂಬ ಪಲ್ಲವಿಯೊಂದಿಗೆ ಆರಂಭವಾಗಿದೆ.  ಈ ಸ್ವರವಚನದಲ್ಲಿ ಜಂಗಮಲಿಂಗ ಯೋಗಿ ವಿರಕ್ತ ಸಿದ್ಧಲಿಂಗನ ವರ್ಣನೆ ಬಂದಿದ್ದು ಅವರು ತೋಂಟದ ಸಿದ್ಧಲಿಂಗರೇ ಆಗಿದ್ದಾರೆ. ಎಲ್.ಬಸವರಾಜರವರು ತಮ್ಮ ಲೇಖನವೊಂದರಲ್ಲಿ  ತೋಂಟದ ಸಿದ್ಧಲಿಂಗ ಯತಿಗಳು ಕ್ರಿ.ಶ.1530ರವರೆಗೆ ಇನ್ನೂ ಹುಟ್ಟಿರಲಿಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. 

  ಎಸ್.ಶಿವಣ್ಣನವರು ಲೇಖನವೊಂದರಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ಕಾಲ ವಿಚಾರ ಕುರಿತಂತೆ ಮರು ಪರಿಶೀಲನೆ ಮಾಡಿದ್ದಾರೆ. ತೋಂಟದಾರ್ಯನ ಪ್ರಮುಖ ಶಿಷ್ಯರಲ್ಲೊಬ್ಬನಾದ ಘನಲಿಂಗಿ ದೇವನ ಪರಂಪರೆಯಲ್ಲಿ ಬರುವ ಪರ್ವತದೇವ - ಭಂಡಾರಿ ಬಸವಪ್ಪೊಡೆಯರಿಗೆ ಸಂಬಂಧಿಸಿದ ಕ್ರಿ.ಶ.1514ರ ಎರಡು ಶಾಸನಗಳು ನಂಜನಗೂಡಿನಲ್ಲಿ ಸಿಗುತ್ತವೆ. ತಲೆ ಮಾರಿಗೆ 26 ವರ್ಷ ಹಿಡಿದರೆ ಶಿಷ್ಯ ಕೂಗಲೂರು ನಂಜಯ್ಯನ ಕಾಲ ಕ್ರಿ.ಶ. 1539. ಪ್ರಶಿಷ್ಯ ಘನಲಿಂಗಿದೇವನ ಕಾಲ ಕ್ರಿ.ಶ. 1564 ಆಗುತ್ತದೆ. ಈ ಘನಲಿಂಗಿ ದೇವರಿಗೆ ಹಿರಿಯ ಸಮಕಾಲೀನನಾದ ಸಿದ್ಧಲಿಂಗ ಯತಿಯ ಕಾಲವು ಕ್ರಿ.ಶ.1564 ಆಗಿರಬಹುದು. ಹೀಗೆ ಘನಲಿಂಗಿ ದೇವನು ಹೇಳಿಕೊಂಡಿರುವ ತನ್ನ ಪರಂಪರೆಯ ಜಾಡನ್ನು ಅವಲಂಬಿಸಿ ಎಸ್.ಶಿವಣ್ಣನವರು ಹೇಳುವ ಕ್ರಿ.ಶ.1561 ಮತ್ತು ವಿವಿಧ ಮೂಲಗಳಿಂದ ಎಲ್.ಬಸವರಾಜು ತಳೆದ ಅಭಿಪ್ರಾಯ ಕ್ರಿ.ಶ. 1584 ಇವುಗಳಲ್ಲಿ ಕಾಣುವ ಅಂತರ ಅಷ್ಟೇನು ದೊಡ್ಡದಲ್ಲ. ತೋಂಟದಾರ್ಯರು ಚೆನ್ನಬಸವ ಪುರಾಣದ ಕಾಲವಾದ ಕ್ರಿ.ಶ.1584ರ ವರೆಗೆ ಬದುಕಿದ್ದರೆಂದು ಇನ್ನೂ ಸ್ಪೃಷ್ಟವಾಗುತ್ತದೆ. ಈ ಅವಧಿಯಲ್ಲಿ ಗುರು ತೋಂಟದಾರ್ಯರ ಸ್ಮಾರಕವೊಂದು ಇಮ್ಮಡಿ ಚಿಕ್ಕಭೂಪಾಲನು ಸಿದ್ಧಾಪುರ ಹೆಸರಿನ ಗ್ರಾಮವನ್ನು ಕಟ್ಟಿಸಿರಬಹುದೆಂದು ಸಿದ್ಧಾಪುರ ಶಾಸನ (ಕ್ರಿ.ಶ.1594) ದಿಂದ ಭಾವಿಸಬಹುದಾಗಿದೆ. ಈ ಎಲ್ಲ ಸಂಗತಿಗಳ ಆಧಾರದಿಂದ ತೋಂಟದ ಸಿದ್ಧಲಿಂಗಯತಿಗಳು  ಬದುಕಿದ ಅವಧಿ ಎಸ್. ಶಿವಣ್ಣ, ಬಿ.ಆರ್., ವೀರಣ್ಣ , ಸಿ.ನಾಗಭೂಷಣ ಮುಂತಾದ ಸಂಶೋಧಕರು ಸೂಚಿಸಿರುವ ಹಾಗೂ ಹೆಚ್ಚು ಕಡಿಮೆ ಎಲ್.ಬಸವರಾಜುರವರು ವ್ಯಕ್ತಪಡಿಸಿರುವ ಕಾಲನಿರ್ಣಯವನ್ನೇ ಒಪ್ಪಬಹುದಾಗಿದೆ. ಈ ವಿಷಯವನ್ನು ಇನ್ನೂ ಹೆಚ್ಚು ಖಚಿತಗೊಳಿಸಲು ಡಿ. ವಿ. ಪರಮಶಿವ ಮೂರ್ತಿಯವರು ಶೋಧಿಸಿರುವ ಕಾಮಿಡಿಹಳ್ಳಿ ಶಾಸನದ ವಿವರಗಳು ನೆರವಾಗಿವೆ.

 ಆ ಶಾಸನದ ಪಾಠ ಇಂತಿದೆ. 

೧ ಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷಂಗಳು ೧೪೪೩ನೆಯ ವೃಷ ಸಂ

೨ ವತ್ಸರದ ವಯಿಶಾಖ ಶು ೧೧ ಬುಧವಾರದಲು ಶ್ರೀಮನ್‌ಮಹಾರಾಜಾಧಿರಾಜ ರಾಜ.

೩ ರಮೇಶ್ವರ ಶ್ರೀ ವೀರಪ್ರತಾಪ ಕ್ರುಷ್ಣರಾಯ ಮಹಾರಾಯರ ರಾಣಿವಾಸ ದೇವಿಯರಾದ ಚಿಂ

೪ ನಾದೇವಿಯಂಮನವರು ವಿಜಯನಗರದ ವಿರೂಪಾಕ್ಷದೇವರ ಹಂಪೆಯೊಳಗಣ

೫ ತೋಟಮಠದ ನಿರಂಜನದೇವರಿಗೆ ಮಲ್ಲಿಕಾರ್ಜುನ ದೇವರಿಗು ಯಿಬ್ಬರಿಗೂ ಕೊಟ್ಟ, ದಾನವಾ ಕ್ರ

೬ ಮವೆಂತೆಂದರೆ ನಮ್ಮ ತಂದೆ ಚೊಕ್ಕಣನಾಯಕರ ಚಿಕ್ಕನಾಯಕ್ಕರ ಮಗ ಸೇನಾಸಮು.

೭ ಸಾಳುವ ಗಜಸಿಂಹ ವೀರಪ್ಪೊಡೆಯರ ನಾಯಕತನಕೆ ಸಲುವ ನಾಗಮಂಗಲ

೮ ಸ್ಥಳದ ದಡಿಗದ ಸೀಮೆಯವೊಳಗಣ ಕಾಮಿಡಿಹಳ್ಳಿಯ ಗ್ರಾಮವನು ಪೂರ್ವದ ಹೆಸ..

೯ ಲಿ ಸಿವಧರ್ಮ ಹೆಸರಲಿನಲಿ ಬಸವೋಜಯ್ಯಂಗಳಪುರವೆಂಬ ಹೆಸರನು ಕೊಟ್ಟು ಶ್ರೀ

೧೦ ಮದ್ ಶಕ್ತಿ.......ವಾಗಿ ಶ್ರೀಕೃಷ್ಣರಾಯರಿಗೆ ಧರ್ಮವಾಗಿ ಬಸವೋಜಯ್ಯ...

೧೧ ಪುರವನು....... ತ್ರಿ…………… ಕೆರೆಯನು ಕಟ್ಟಿಸಿ ಕೊ.....

೧೨ ಟ್ಟು ಗ್ರಾಮಂ........ ಪುರವಾಗಿ ಕೊಟ್ಟ ಗ..ಗ್ರಾಮ.....

೧೩ ವನು ನಿಮಗೆ ಕೊಟ್ಟು……….. ಸೀಮೆಯನು ನಿಮ…..ವರು.

೧೪ ಯ ವೊಪಹಾಕಿಸಿ ಕೊಟು......... ಸೀಮೆವೊಳಗಾದ.......

೧೫ ಲು ತೋಟ ತುಡಿಕೆ ಆದಾಯ…… ಬೞಿಯಲು ಸಲುವ......

೧೬ ಭ ನೀರಾರಂಭ ಕಿಱುಕುಳ ಸುವರ್ಣಾದಾಯ ಸುಂಕ ಮಗ್ಗ ಮನೆವಣ......

೧೭ ಸ್ವಾಸ್ಥೆಯನು ಆಗುಮಾಡಿಕೊಂಡು ನೀವೆ ಅನುಭವಿಸಿಬಹಿರೆಂದು.......

೧೮....ನ ಸಂನಿಧಿಯಲ್ಲಿ ಶ್ರೀಕ್ರುಷ್ಣರಾಯರಿಗೆ ಆಯುರಾರೋಗ್ಯ…….

೧೯ ದ್ಧಿಯಾಗಬೇಕೆಂದು ಪೂಜೆಯಂ ಮಾಡಿಕೊಂಡು ಆ ಚಂದ್ರಾ..........

೨೦ ಪಾರಂಪರ್ಯೆಯಾಗಿ ಆ....ಯ.. ವಾಗಿ............

೨೧ ಳ ನಿಧಿನಿಕ್ಷೇಪ ಜಲಪಾಷಾಣ…… ಯಾಗಾಮಿ ಸಿದ್ಧ...

೨೨ ನಾಳು…… ಯೆಂದು ನಂಮ ಸ್ವಾನು……….

೨೩ ನಪಾಲನಯೋರ್ಮಧ್ಯೇ ದಾನಾಛ್ರೇಯೋನುಪಾಲ.......

೨೪ ತಂ ಪದಂ ಸ್ವದತ್ತಂ ದ್ವಿಗುಣಂ ಪುಣ್ಯಂ………ಸ್ವದತ್ತಂ

೨೫ ನಿಷ್ಪಲಂಭವೇತ್……………………………….

೨೬ ವಸುಂಧರಾಂ ಷಷ್ಟಿರ್ವರ್ಷ……………..ಹನಾ ಕೈಗಳ…..

೨೭ ಆದಿ ದಿಕ್ಕಿನ....................................................................

೨೮ ವ.......ಬಹ ಯೀ ಕ್ರಮಕ್ಕೆ ಯಾವನೊಬ್ಬ ಆಳುಪಿದವರು ತಂ

೨೯ ಮ ತಂದೆ ತಾಯಿಗಳ ವಾರಣಾಶಿಯಲಿ ಕೊಂದ ಪಾಪಕ್ಕೆ ಹೋಹರು ಬ್ರಂಹಹತ್ಯ ಗೋಹತ್ಯ ಶ್ರೀ

೩೦ ಹತ್ಯಾ ಸುರಾಪಾನವ ಸೇವಿಸಿದ ಪಾಪಕ್ಕೆ ಹೋಹರು ಕಪಿಲೆಯ ಕೊಂದ ಪಾಪಕ್ಕೆ ಹೋಹರು

೩೧....ನ ಪಾದಕ್ಕೆ ತಪ್ಪಿದವ ವೀರವೊಡೆಯರ ವೊಪ್ಪ ವೀರೈಯ

( ಕೃಷ್ಣದೇವರಾಯನ ಶಾಸನಗಳು ಸಂ: ಡಿ.ವಿ.ಪರಮಶಿವಮೂರ್ತಿ, ಪುಟ ಸಂಖ್ಯೆ ೨೮೯-೨೯೦, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦)

     ಎಡೆಯೂರಿನ ತೋಂಟದ ಸಿದ್ದಲಿಂಗೇಶ್ವರರು ತಮ್ಮ ಪ್ರವಾಸ ಕಾಲದಲ್ಲಿ ಹಂಪೆಗೆ ಬಂದು ವಿರೂಪಾಕ್ಷನದರ್ಶನ ಪಡೆದರೆಂದೂ ಮತ್ತು ಅಲ್ಲಿದ್ದ ಸೋಮವಾರದ ಬಸಮ್ಮ ಎಂಬುವಳ ಭಕ್ತಿ ಆತಿಥ್ಯವನ್ನು ಸ್ವೀಕರಿಸಿದರೆಂದೂ ಅನೇಕ ಕಾವ್ಯಗಳು ವರ್ಣಿಸಿವೆ. ಆದರೆ ಸಿದ್ಧಲಿಂಗಯತಿಗಳು ಯಾವ ಕಾಲದಲ್ಲಿ ಹಂಪಿಗೆ ಆಗಮಿಸಿ ವಿರೂಪಾಕ್ಷನ ದರ್ಶನ ಮಾಡಿದರು ಎಂಬುದಕ್ಕೆ ಇದೂವರೆಗೂ ಸಿದ್ಧಲಿಂಗರನ್ನು ಕುರಿತ ಕಾವ್ಯ-ಪುರಾಣಗಳಲ್ಲಿ  ನಿಖರ ಮಾಹಿತಿ ಕಂಡು ಬಂದಿರಲಿಲ್ಲ. 

   ಆದರೆ ಮೇಲಿನ ಕ್ರಿ.ಶ.೧೫೨೧ರ ಕಾಮಿಡಿಹಳ್ಳಿಯ ಶಾಸನದ ಪಠ್ಯದ ಆಧಾರದಿಂದ ಸಿದ್ದಲಿಂಗಯತಿಗಳ ಕಾಲದ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ತಳೆಯಬಹುದಾಗಿದೆ. ತೋಂಟದಸಿದ್ಧಲಿಂಗಯತಿಗಳು ಮತ್ತು ಮಲ್ಲಿಕಾರ್ಜುನ ದೇವರು ಹಂಪೆಗೆ ಆಗಮಿಸಿದಾಗ ಕೃಷ್ಣದೇವರಾಯನ ಪ್ರಿಯರಾಣಿ ಚಿಂನಾದೇವಿಯಂಮನು ಇವರ ಗೌರವಾರ್ಥ ಪೂಜಾಕಾರ್ಯಕ್ಕಾಗಿ ತನ್ನತಂದೆಯಾದ ವೀರಪೊಡೆಯನು ಆಳುತ್ತಿದ್ದ ನಾಗಮಂಗಲ ಸೀಮೆಯ ದಡಿಗದ ಸ್ಥಳದ ಕಾಮಿಡಿಹಳ್ಳಿಯನ್ನು ದಾನವಾಗಿ ನೀಡುತ್ತಾಳೆ. ಈ ಕಾಮಿಡಿಹಳ್ಳಿಗೆ ಪೂರ್ವದ ಹೆಸರಾದ ಬಸವೋಜಯ್ಯಂಗಳಪುರವೆಂಬ ಹೆಸರಿಟ್ಟು ದಾನ ನೀಡುವಳು. ಶಾಸನವು ದಾನದ ವಿವರದ ಭಾಗದಲ್ಲಿ ತುಟಿತವಾಗಿರುವುದರಿಂದ ಹೆಚ್ಚಿನ ವಿವರ ದೊರೆಯದೆ ಕೇವಲ ದೇವಾಲಯ ಮತ್ತು ಶಾಸನದಲ್ಲಿ ತೋಂಟದ ಸಿದ್ಧಲಿಂಗರ ಹೆಸರನ್ನು ನೇರವಾಗಿ ಪ್ರಸ್ತಾಪ ಮಾಡದಿರುವುದನ್ನು ಸಂಪಾದಕರು ಪ್ರಸ್ತಾಪಿಸಿದ್ದಾರೆ. ಆದಾಗ್ಯೂ ಈ ಶಾಸನದಲ್ಲಿ  ಉಲ್ಲೇಖಿತರಾಗಿರುವ ತೋಟಮಠದ ನಿರಂಜನ ದೇವರು  ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರೇ ಎಂದು ನಿಖರವಾಗಿ ಗುರುತಿಸ ಬಹುದಾಗಿದೆ. ಈ ಶಾಸನದಲ್ಲಿ  ತೋಂಟದ ಸಿದ್ಧಲಿಂಗಯತಿಗಳ ಬಗೆಗಿನ ಪ್ರತ್ಯಕ್ಷ ಹಾಗೂ ಪರೋಕ್ಷ ವಿವರಗಳು ಈ ಕೆಳಕಂಡಂತೆ ಕಂಡು ಬರುತ್ತವೆ.

೧.ಕಾಮಿಡಿಹಳ್ಳಿಯ ಶಾಸನದ ಕಾಲ ಕ್ರಿ.ಶ.೧೫೨೧, ಏಪ್ರಿಲ್ ೧೭, ಬುಧವಾರ

೨. ಸಿದ್ದಲಿಂಗಯತಿಗಳು ಹಂಪೆಯ ವಿರೂಪಾಕ್ಷ ದರ್ಶನಕ್ಕೆ ಬಂದಿದ್ದರೆಂಬ ಅಂಶವನ್ನು ಈ ಶಾಸನವು ಸಮರ್ಥಿಸಿರುವುದರಿಂದ ಕ್ರಿ.ಶ.೧೫೨೧, ಏಪ್ರಿಲ್ ೧೭, ಬುಧವಾರದಂದು ಸಿದ್ದಲಿಂಗಯತಿಗಳು ಹಂಪಿಯ ವಿರೂಪಾಕ್ಷದೇವನ ದರ್ಶನಕ್ಕೆ ಬಂದಿದ್ದರೆಂದು ತಿಳಿಯಬಹುದಾಗಿದೆ. 

೩. ಕೃಷ್ಣದೇವರಾಯನ ರಾಣಿ ಚಿನ್ನಾದೇವಿಯು ಸಿದ್ಧಲಿಂಗಯತಿಗಳಿಗೆ ಕಾಮಿಡಿಹಳ್ಳಿ(ಬಸವೋಜಯ್ಯಂಗಳ ಪುರ)ಯನ್ನು ದಾನವಾಗಿ ನೀಡಿರುವಳು.

೪. ಕ್ರಿ.ಶ.೧೫೨೧ರ ವೇಳೆಗೆ ಸಿದ್ಧಲಿಂಗಯತಿಗಳು ದಾನ ಪಡೆಯುವಷ್ಟು ಪ್ರಸಿದ್ಧರಾಗಿದ್ದರೆಂದರೆಅವರ ವಯಸ್ಸು ಕಡಿಮೆಯೆಂದರೂ ೩೦ ವರ್ಷಗಳಾದರೂ ಆಗಿರುತ್ತದೆ. ಇದರಿಂದ ಸಿದ್ಧಲಿಂಗಯತಿಗಳು ಕ್ರಿ.ಶ.೧೪೯೦-೯೫ರ ನಡುವೆ ಜನಿಸಿರುವರು ಎಂದು ಊಹಿಸಲು ಅವಕಾಶ ಇದೆ.

 ೫. ಪ್ರಸ್ತುತ ಶಾಸನ ಮತ್ತು ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ಒರೆಗಲ್ಲಿಗೆ ಹಚ್ಚಿ ಹೇಳುವುದಾದರೆ ಸಿದ್ಧಲಿಂಗರ ಜೀವಿತಾವಧಿ ಕ್ರಿ.ಶ.೧೪೯೫ ರಿಂದ ಕ್ರಿ.ಶ.೧೫೮೫ ಎಂದು ಹೇಳಬಹುದು. ಸಿದ್ಧಲಿಂಗರನ್ನು ಕುರಿತ ಸಾಹಿತ್ಯ ಕೃತಿಗಳಲ್ಲಿ ಅವರನ್ನು ಮುದಿಯಯ್ಯ ಎಂದು ಕರೆದಿರುವುದನ್ನು ಗಮನಿಸಿದರೆ ಅವರು ಹೆಚ್ಚು ಕಾಲ ಬದುಕಿದ್ದರು ಎಂದೆನಿಸುತ್ತದೆ

೬. ಕಾಮಿಡಿಹಳ್ಳಿಯ ಶಾಸನವು ಸಿದ್ಧಲಿಂಗಯತಿಗಳ ಜೀವತಾವಧಿಯ ಪ್ರಥಮ ಶಾಸನವಾಗಿದೆ. 

೭. ಶಾಸನಶಿಲ್ಪದಲ್ಲಿ ಸಿದ್ಧಲಿಂಗಯತಿಗಳು ಅಂಗೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಧ್ಯಾನಾಸಕ್ತರಾದಂತೆ ಕುಳಿತಿರುವ ಶಿಲ್ಪವಿದ್ದು, ಈ ಶಿಲ್ಪವು ಅವರ ಜೀವಿತಾವಧಿಯ ಪ್ರಥಮಶಿಲ್ಪವಾಗಿ ಕಂಡುಬರುತ್ತದೆ.

೮. ಸಿದ್ಧಲಿಂಗಯತಿಗಳು ಬಹುಶ್ಯಃ ಕ್ರಿ.ಶ.೧೫೧೮-೧೯ರಲ್ಲಿ ತಮ್ಮ ಶಿಷ್ಯಗಣದ ಜೊತೆ ದೇಶಸಂಚಾರಕ್ಕಾಗಿ ಕಗ್ಗೆರೆಯಿಂದ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಕಡೆಯಿಂದ ಹಂಪೆಯ ವಿರೂಪಾಕ್ಷನ ದರ್ಶನಕ್ಕೆ ಕ್ರಿ.ಶ.೧೫೨೧ಕ್ಕೆ ಆಗಮಿಸಿದರೆಂದು ಊಹಿಸಬಹುದು. ಸುವ್ವಿಮಲ್ಲನ ಸಿದ್ಧೇಶ್ವರ ಸಾಂತ್ಯದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ವಿದ್ಯಾನಗರಿಗೆ ಆಂಧ್ರಪ್ರದೇಶದ ಕಣೆಕಲ್‌ ಮಾರ್ಗವಾಗಿ ಪ್ರಯಾಣಿಸಿದರು ಎಂದು ಉಲ್ಲೇಖಿಸಿದ್ದಾನೆ.

  ಸಿದ್ಧಲಿಂಗ ಯತಿಗಳನ್ನು ಕುರಿತ ಕಾವ್ಯ-ಪುರಾಣಗಳಲ್ಲಿ, ವಿದ್ಯಾನಗರಿ/ವಿಜಯನಗರಕ್ಕೆ ಸಿದ್ಧಲಿಂಗರು ಬಂದಿದ್ದರೆ ಆ ವಿವರವು, ಸಾಂಗತ್ಯ ಕವಿ ಸುವ್ವಿಮಲ್ಲನಲ್ಲಿ, ತೋಂಟದ ಸಿದ್ಧಲಿಂಗ ಯತಿಗಳು ಕಣಿಯಕಲ್ಲಿನಿಂದ ‘ವಿದ್ಯಾನಗರಿ’ಗೆ ಬಂದನು. ‘ಆ ಊರಿನಲ್ಲಿದ್ದ ಸೋಮವಾರದ ಬಸವಮ್ಮನೆಂಬ ದೃಢಭಕ್ತೆಯು, ಸಿದ್ಧೇಶನು ಬಂದ ಕೂಡಲೆ ಭಿನ್ನಹವನ್ನು ಮಾಡಿದಳು’ ಆಕೆಯ ಬಿನ್ನಹವನ್ನು ಸ್ವೀಕರಿಸಿದ ಯತಿಗಳು ಆಕೆಯ ಮನೆಯಲ್ಲಿ ಪೂಜೆಗೆ ಮೂರ್ತಗೊಂಡಾಗ ಪಾದೋದಕವನ್ನು ಕರುಣಿಸಲು, ಆಕೆಯು ಚಿನ್ನದ ಮಿಳ್ಳೆಯಲ್ಲಿ ಕಾಶಿ ತೀರ್ಥವನ್ನು ತಂದು ಇದು ವಿಶೇಷವಾದ ತೀರ್ಥವೆಂದು ಸಿದ್ಧೇಶನ ಮುಂದಿಟ್ಟಳು(ಪ.80). ದೋಷರಹಿತನಾದ ಸಿದ್ಧೇಶನು ಪಾದೋದಕ ಮತ್ತು ಕಾಶಿಯುದಕಗಳೆರಡನ್ನು ತಕ್ಕಡಿ(ತ್ರಾಸಿ)ಯಲ್ಲಿ ತೂಗಿ ಜಂಗಮ ಪಾದ ತೀರ್ಥವೇ ಅಧಿಕವೆಂದು, ಆ ಪಾದ ತೀರ್ಥ ಸೇವನೆಯೇ ಮುಕ್ತಿಗೆ ಸೋಪಾನವೆಂದು ತೋರಿದುದನ್ನು ಭಕ್ತರು ನೋಡಿ ಅತ್ಯಾಶ್ಚರ್ಯಗೊಂಡರು. ಇದಕ್ಕೆ ದೃಷ್ಟಾಂತವನ್ನು ನೀಡುತ್ತಾ, ಸಿದ್ಧೇಶ್ವರನು ಸೋಮವಾರದ ಬಸವಮ್ಮನಿಗೆ ಪಾದೋದಕ್ಕಿಂತಲೂ ಕಾಶೀ ತೀರ್ಥವು ಮಿಗಿಲಲ್ಲವೆಂದು ತಿಳಿಸಿ ಇದನ್ನು ನೀನು ಪ್ರಚಾರ ಮಾಡು ಎಂದು ನೀತಿ ಬೋಧನೆ ಮಾಡಿದನು. ಹಾಗಿಯೇ ಪ್ರಸಾದ ,ವಿಭೂತಿ, ರುದ್ರಾಕ್ಷಿಗಳ ಮಹತ್ವದ ಬಗ್ಗೆ ದೃಷ್ಟಾಂತಗಳ ಮೂಲಕ ಬಸವಮ್ಮನಿಗೆ ಬೋಧಿಸಿ, ಅರಿವನ್ನುಂಟು ಮಾಡಿದನು ಎಂಬ ವಿವರಗಳು ಸುವ್ವಿ ಮಲ್ಲನಲ್ಲಿ ದೊರೆಯುತ್ತವೆ. ಸುಮಾರು 33 ಪದ್ಯಗಳಲ್ಲಿ ಸುದೀರ್ಘವಾಗಿ (79ರಿಂದ 112 ಪದ್ಯಗಳವರೆಗೆ) ವಿದ್ಯಾನಗರಿಯಲ್ಲಿನ ಸೋಮವಾರದ ಬಸವಮ್ಮನ ಪ್ರಸಂಗದ ವಿವರಗಳಿವೆ.

೯. ಇವರು ಹಂಪಿಗೆ ಬಂದಾಗ ಗ್ರಾಮದಾನ ಪಡೆದಿದ್ದಲ್ಲದೆ ಆ ಅವಧಿಯಲ್ಲಿ ಹಂಪಿಯಲ್ಲಿದ್ದ ವೀರಶೈವ ಮಠಗಳ ಜೀರ್ಣೋದ್ದಾರ ಅಥವಾ ನೂತನ ಮಠಗಳ ನಿರ್ಮಾಣ ನಡೆಸಿರಬೇಕು. ವಿರೂಪಾಕ್ಷನೆಂಬ ಭಕ್ತನಿಗೆ ದೀಕ್ಷೆ ನೀಡಿದ್ದು ಮತ್ತು ಸೋಮವಾರದ ಬಸಮ್ಮಳೆಂಬ ಭಕ್ಕಳ ಆತಿಥ್ಯ ಸ್ವೀಕರಿಸಿದ್ದು ಇತ್ಯಾದಿ ಕಾವ್ಯ-ಪುರಾಣಗಳಲ್ಲಿಯ ಈ ಅಂಶವನ್ನು ಪುಷ್ಠೀಕರಿಸುತ್ತದೆ.

೧೦. ತೋಂಟದ ಸಿದ್ದಲಿಂಗಯತಿಗಳ ಮತ್ತು ವಿಜಯನಗರದ ಅರಸ ಕೃಷ್ಣದೇವರಾಯನ ರಾಣಿ ಚಿನ್ನಾದೇವಿಗೂ ಭಕ್ತಿಪೂರ್ವಕ ಸಂಬಂಧವಿದ್ದುದು ಈ ಶಾಸನದಿಂದ ತಿಳಿದು ಬರುತ್ತದೆ.  

   ಡಿ.ವಿ.ಪರಮಶಿವಮೂರ್ತಿರವರು ಶೋಧಿಸಿರುವ  ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೋಕಿನ ಬೆಳ್ಳೂರು ಹೋಬಳಿಗೆ ಸೇರಿದ ಕಾಮಿಡಿಹಳ್ಳಿಯ ಬಸವಣ್ಣನ ಗುಡಿಹತ್ತಿರದ ವಿಜಯನಗರದರಸ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಕ್ರಿ.ಶ.1521ರ ಶಾಸನದಲ್ಲಿ  ಕೃಷ್ಣದೇವರಾಯನ ಪ್ರಿಯರಾಣಿ ಚಿಂನಾದೇವಿ ಯಂಮನು ತೋಂಟದ ಸಿದ್ಧಲಿಂಗಯತಿಗಳು ಮತ್ತು ಮಲ್ಲಿಕಾರ್ಜುನ ದೇವರುಗಳು  ಹಂಪೆಗೆ ಶ್ರೀ ವಿರೂಪಾಕ್ಷನ ದರ್ಶನಾರ್ಥ ಆಗಮಿಸಿದಾಗ ಇವರ ಗೌರವಾರ್ಥ ಪೂಜಾಕಾರ್ಯಕ್ಕಾಗಿ ತನ್ನ ತಂದೆಯಾದ ವೀರಪ್ಪೊಡೆಯನು ಆಳುತ್ತಿದ್ದ ನಾಗಮಂಗಲ ಸೀಮೆಯ ದಡಿಗದ ಸ್ಥಳದ ಕಾಮಿಡಿಹಳ್ಳಿಯನ್ನು ಪೂರ್ವದ ಹೆಸರಾದ ಬಸವೋಜಯ್ಯಂಗಳಪುರವೆಂದು ಹೆಸರಿಟ್ಟು ದಾನ ನೀಡುವಳು. ಈ ಶಾಸನದಲ್ಲಿ ತೋಂಟದ ಸಿದ್ಧಲಿಂಗಯತಿಗಳ ಹೆಸರನ್ನು ನೇರವಾಗಿ ಹೇಳದಿದ್ದರೂ ತೋಟಮಠದ ನಿರಂಜನ ದೇವನೆಂದು ಹೇಳಿದೆ. ಇವರು ತೋಂಟದ ಸಿದ್ಧಲಿಂಗಯತಿಗಳೆ ಎಂದು ಪೂರಕ ಆಕರಗಳ ಮೂಲಕ ನಿರ್ಧರಿಸ ಬಹುದಾಗಿದೆ.  ಕಾಮಿಡಿಹಳ್ಳಿಯ ಈ ಶಾಸನವು ತೋಂಟದಸಿದ್ಧಲಿಂಗಯತಿಗಳು ಬದುಕಿದ್ದ ಕಾಲಾವಧಿಯಲ್ಲಿ ಹಾಕಿಸಿದ ಪ್ರಥಮ ಶಾಸನವಾಗಿದೆ.  ಅಲ್ಲದೆ  ಈ ಶಾಸನಶಿಲ್ಪದಲ್ಲಿ  ಸಿದ್ಧಲಿಂಗಯತಿಗಳು ಅಂಗೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಧ್ಯಾನಾಸಕ್ತರಾದಂತೆ ಕುಳಿತಿರುವ ಶಿಲ್ಪವಾಗಿದ್ದು ಅದೂ ಕೂಡಾ ಅವರ ಜೀವಿತಾವಧಿಯ ಪ್ರಥಮ ಶಿಲ್ಪವಾಗಿದೆ. ತೋಂಟದ ಸಿದ್ಧಲಿಂಗಯತಿಗಳನ್ನು ಉಲ್ಲೇಖಿಸಿರುವ ಈ ಶಾಸನವು ಇವರ ಕಾಲವನ್ನು ತಿಳಿಯಲು ಸಹಕಾರಿಯಾಗಿದೆ. ವಿವಿಧ ವಿದ್ವಾಂಸರ ಉಲ್ಲೇಖ ಹಾಗೂ  ಇತ್ತೀಚೆಗೆ ದೊರೆತ ಕಾಮಿಡಿಹಳ್ಳಿ ಶಾಸನಗಳಲ್ಲಿ ಮಾಹಿತಿಗಳನ್ನು ಕ್ರೂಢೀಕರಿಸಿ ಹೇಳುವುದಾದರೆ  ಕ್ರಿ.ಶ.1೪೯೫-158೫ರ ನಡುವೆ ತೋಂಟದ ಸಿದ್ಧಲಿಂಗ ಯತಿಗಳು ಜೀವಿಸಿರಬೇಕೆಂಬ  ನಿಲುವನ್ನು ಸದ್ಯಕ್ಕೆ ತಾಳಬಹುದಾಗಿದೆ.

ಶಾಸನವು ಬಹಳ ತ್ರುಟಿತವಾಗಿದ್ದು, ಕಾಲವನ್ನು ಶಕವರ್ಷಂಗಳು ೧೪೪೩ನೆಯ ವೃಷಭ ಸಂವತ್ಸರದ ವಯಿಶಾಖ ಶು ೧೧ ಬುಧವಾರದಲು ಎಂದು ನೀಡಿದ್ದು, ಇದು ಕ್ರಿ.ಶ. ೧೫೨೧ ಏಪ್ರಿಲ್ ೧೭, ಬುಧವಾರಕ್ಕೆ ಸಮನಾಗುತ್ತದೆ. ಈ ಅವಧಿಯಲ್ಲಿ ಕೃಷ್ಣದೇವರಾಯನ ರಾಣಿ ವಾಸದ ಚಿಂನಾದೇವಿಯಮನು ಹಂಪೆಗೆ ಆಗಮಿಸಿದ್ದ ತೋಂಟಮಠದ ನಿರಂಜನದೇವರು ಮತ್ತು ಮಲ್ಲಿಕಾರ್ಜುನ ದೇವರ ಸೇವಾರ್ಥ ವೀರವೊಡೆಯರ ನಾಯಕತನಕ್ಕೆ ಸಂದ ನಾಗಮಂಗಲ ಸ್ಥಳದ, ದಡಿಗದ ಸೀಮೆಯ ಕಾಮಿಡಿಹಳ್ಳಿಯನ್ನು ದಾನವಾಗಿ ನೀಡಿದೆ ವಿಷಯ ತಿಳಿದುಬರುತ್ತದೆ. ಶಾಸನದಲ್ಲಿ ದಾನ ಪಡೆದಿರುವ ತೋಂಟಮಠದ ನಿರಂಜನದೇವನು ಸುಪ್ರಸಿದ್ದ ವೀರಶೈವ ಯತಿ ಎಡೆಯೂರಿನ ತೋಂಟದ ಸಿದ್ಧಲಿಂಗೇಶ್ವರರೇ ಆಗಿದ್ದಾರೆ. ಈ ಕಾಮಿಡಿಹಳ್ಳಿಗೆ ಪೂರ್ವದ ಹೆಸರಾದ ಬಸವೋಜಯ್ಯಂಗಳಪುರವೆಂದು ಮರು ಹೆಸರಿಟ್ಟು, ಈ ದಾನವನ್ನು ನೀಡಲಾಗಿದೆ. ಈ ಶಾಸನದ ಪ್ರಕಾರ ರಾಣಿ ಚಿನ್ನಾದೇವಿಯು ವೇಶ್ಯೆ ಅಲ್ಲವೆಂದು ಅವಳು ವಿಜಯನಗರದ ಅಧಿಕಾರಿಗಳ ಕುಟುಂಬದವಳೆಂದು ತಿಳಿದುಬರುತ್ತದೆ. ಈ ಶಾಸನ ದೊರೆತ ಸ್ಥಳವು ತೋಂಟದ ಸಿದ್ದಲಿಂಗೇಶ್ವರರ ಎಡೆಯೂರಿಗೆ ಸುಮಾರು ಹದಿನೈದು ಕಿ.ಮೀ.ದೂರದಲ್ಲಿದೆ. ಈ ಶಾಸನ ಶಿಲ್ಪದ ಭಾಗದಲ್ಲಿ ಸಿದ್ದಲಿಂಗೇಶ್ವರರು ಕೈಯಲ್ಲಿ ಇಷ್ಟ ಲಿಂಗವನ್ನು ಹಿಡಿದು ಧ್ಯಾನಾಸ್ತರಾಗಿರುವಂತೆ ಚಿತ್ರವಿದೆ ಶಾಸನದ ರಚನೆಕಾರ ವೀರಯ್ಯನೆಂಬುವವನಾಗಿದ್ದಾನೆ.  ಒಟ್ಟಾರೆ ಡಿ.ವಿ.ಪರಮಶಿವ ಮೂರ್ತಿ ಅವರಿಂದ ಶೋಧಿಸಲ್ಪಟ್ಟ ಕ್ರಿ.ಶ. 1521ರ ‘ಕಾಮಿಡಿಹಳ್ಳಿಯ ಶಾಸನ ದಲ್ಲಿನ ವಿವರಗಳು ಸಿದ್ಧಲಿಂಗ ಯತಿಗಳ ಕಾಲದ ಬಗೆಗೆ ಸ್ಪಷ್ಟವಾದ ನಿಲುವನ್ನು ತಳೆಯಲು ಪುಷ್ಟಿ ನೀಡುತ್ತದೆ.  

೪. ತೋಂಟದ ಸಿದ್ಧಲಿಂಗರ ವಚನ ಉತ್ಕೀರ್ಣವಾಗಿರುವ  ಚಿತ್ರದುರ್ಗದ ಶಾಸನ

ಇನ್ನೊಂದು ಶಾಸನದಲ್ಲಿ ಸಿದ್ಧಲಿಂಗ ಶಿವಯೋಗಿಗಳ ಷಟ್ಸ್ಥಲ ಜ್ಞಾನ ಸಾರಾಮೃತ ವಚನ ಸಂಕಲನದ  ವಚನವು ಚಿತ್ರದುರ್ಗದ ಶಾಸನದಲ್ಲಿ ಉದ್ಧೃತವಾಗಿದೆ. ಚಿತ್ರದುರ್ಗದ ಮೋಕ್ಷಗುಂಡಂ ಶ್ರೀನಿವಾಸ ಅವಧಾನಿಗಳ ತೋಟದೊಳಗಿನ ಒಂದು ಶಿಲಾಶಾಸನದಲ್ಲಿ:

ನಾದ ಬಿಂದು ಕಳೆ ಭೇದವ ಶಿಳಿದಲ್ಲ 

ಆರಕ್ಷರವಾದ ತೆರವನರಿಯ ಬಾ 

ರದು | ಆರಕ್ಷಕೆ ಮೂಲಪ್ರಣಮನ 

ತಿಳಿದಲ್ಲದೆ ನಾದಕಲೆದೋರದು ಆ ನಾದದೊ 

ಳಗಿನ ಕಳೆಯ ನೋಡಿ ಕಂಡಲ್ಲದೆ ರಾಜಶಿವಯೋ 

ಗಿಯಾಗಬಾರದು 1 ರಾಜಶಿವಯೋಗವೆಂಬುದು 

ಆದಿಯಲ್ಲಿ ಶಿವಬೀಜವಾದ ಮಹಾಮಹಿ 

ಮರಿಗೆ ಸಾಧ್ಯವಪ್ಪುದಲ್ಲದೆ ತ್ರೈಜಗದಲ್ಲಾರಿ 

ಗು ಅಸಾಧ್ಯ ನೋಡಾ ಮಹಾಲಿಂಗಗುರುಶಿವ ಸಿದ್ಧೇಶ್ವರ ಪ್ರಭುವೆ 

ಎಂಬ ವಚನವಿದೆ. ಈ ಶಿಲಾಶಾಸನವನ್ನು ಯಂತ್ರದ ಕಲ್ಲೆಂದು ಕರೆಯಲಾಗುತ್ತಿದೆ. ಜನರು ದನಕರುಗಳಿಗೆ ಬೇನೆ ಬಂದಾಗ ಇದನ್ನು ತೊಳೆದ ನೀರನ್ನು ಅವುಗಳಿಗೆ ಕುಡಿಸುತ್ತಾರೆ. ರೋಗ ಗುಣವಾಗುತ್ತದೆಯೆಂಬ ಭಾವನೆ ಆ ಜನರಲ್ಲಿದೆ. ಇದೊಂದು ಯಂತ್ರದ ಕಲ್ಲಾಗಿರುವುದು ನಿಜವೆಂದು ತೋರುತ್ತದೆ. ಏಕೆಂದರೆ ಈ ವಚನದ ಮೇಲ್ಬಾಗದಲ್ಲಿ ಷಡಕ್ಷರ ಮಂತ್ರದ ಕುಂಡಲಿಯು ಉದ್ಧೃತವಾಗಿದೆ. ದತ್ತಿ ಮುಂತಾದ ಬೇರೆ ಯಾವ ವಿಷಯವೂ ಈ ಶಾಸನದಲ್ಲಿಲ್ಲದ ಮೂಲಕ ಇದನ್ನು ಕೇವಲ ಈ ಮಂತ್ರಮಹಿಮೆಯನ್ನು ಬಿತ್ತರಿಸುವುದಕ್ಕಾಗಿಯೇ ಕೆತ್ತಿದಂತೆ ತೋರುತ್ತದೆ. ಇಲ್ಲಿ ಸಿದ್ಧಲಿಂಗ ಶಿವಯೋಗಿಗಳ ವಚನವನ್ನು ಉದ್ಧರಿಸಿರುವುದರಿಂದ ಈ ಶಾಸನದ ಕಾಲಕ್ಕೆ ಅಂದರೆ ಕ್ರಿ. ಶ. ೧೭೩೮ರ ಹೊತ್ತಿಗೆ ಶಿವಯೋಗಿಗಳ ವಚನಗಳು ಮಂತ್ರಸ್ವರೂಪವನ್ನು ತಳೆದಿದ್ದವೆಂಬ ಮಾತು ದೃಢವಾಗುತ್ತದೆ. ಇದು ಅವರ ಘನವಾದ ವ್ಯಕ್ತಿತ್ವದ ಬಗೆಗೆ ಜನತೆ ಇಟ್ಟುಕೊಂಡ ಭಕ್ತಿ ವಿಶ್ವಾಸಗಳ ಕುರುಹಾಗಿದೆ.

   ಒಟ್ಟಾರೆ ಸಿದ್ಧಲಿಂಗೇಶ್ವರರು ತಮ್ಮ ಅದ್ಭುತ ದೈವಿ ಶಕ್ತಿ ಪವಾಡಗಳನ್ನು ನಡೆಸುವುದರ ಜೊತೆಗೆ ವಚನಗಳನ್ನು ರಚಿಸಿ, ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಎಚ್ಚರಗೊಳಿಸಿ ಅವರಲ್ಲಿ ಧರ್ಮ ಜಾಗೃತಿ ಉಂಟು ಮಾಡುವಲ್ಲಿ ಸಫಲರಾದವರು. ತಮ್ಮ ಶಿಷ್ಯರೊಂದಿಗೆ ಇಡೀ ಭರತ ಖಂಡವನ್ನು ಸುತ್ತಿ ಭೂಮಿಯನ್ನು ಪವಿತ್ರಗೊಳಿಸಿ ಕೊನೆಗೆ ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಹೊಂದಿದರು. ಅವರು ನಿರ್ವಿಕಲ್ಪ ಸಮಾಧಿ ಹೊಂದಿ 410 ವರ್ಷಗಳಾಗಿದ್ದರೂ ಇಂದಿಗೂ ಜಾಗೃತಾವಸ್ಥೆಯಲ್ಲಿದ್ದುಕೊಂಡು ಭಕ್ತ ಕೋಟೆಯನ್ನು ಹರಸುತ್ತಾರೆಂದು ಅವರ ಅಭಿಷ್ಟಗಳನ್ನು ತಮ್ಮ ತಪಶಕ್ತಿಯಿಂದ ಪೂರ್ಣಗೊಳಿಸುತ್ತಾರೆಂಬುದು ಸದ್ಭಕ್ತರ ನಂಬಿಕೆಯಾಗಿದೆ. ತೋಂಟದ ಸಿದ್ಧಲಿಂಗರನ್ನು ಕುರಿತು ಶಾಸನಗಳು ಪರೋಕ್ಷವಾಗಿಯಾದರೂ  ಇವರ ಕಾಲದ ಬಗೆಗೆ ಹಾಗೂ  ಭಕ್ತರು ಇವರ ಮೇಲೆ ಇಟ್ಟುಕೊಂಡಿದ್ದ ಭಕ್ತ ಭಾವದ ಬಗೆಗೆ, ಸಲ್ಲಿಸಿದ ಸಾಂಸ್ಕೃತಿಕ ಸೇವೆಯ ಬಗೆಗೆ ಬೆಳಕು ಚೆಲ್ಲುತ್ತವೆ.

ಗ್ರಂಥ ಋಣ

1. ಸುವ್ವಿಮಲ್ಲನ ತೋಂಟದ ಸಿದ್ಧೇಶ್ವರನ ಸಾಂಗತ್ಯ ಸಂ:ಎಂ.ಎಸ್.ಬಸವರಾಜಯ್ಯ,

ಶಿವಧರ್ಮ ಗ್ರಂಥಮಾಲ, ಗುರು ನಿವಾಸ, ತಿಪಟೂರು. 1995

೨. ಎಪಿಗ್ರಫಿಯಾ ಕರ್ನಾಟಿಕ  ಸಂಪುಟ-೨೪ ( ಪರಿಷ್ಕೃತ)

   ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,ಮೈಸೂರು ವಿ.ವಿ.ಮೈಸೂರು. 20೦೯

೪. ಕೃಷ್ಣದೇವರಾಯನ ಶಾಸನಗಳು ಸಂ.ಡಿ.ವಿ. ಪರಮಶಿವಮೂರ್ತಿ

   ಸಂಪುಟ ೧,  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦

5.    ತೋಂಟದ ಸಿದ್ಧಲಿಂಗ ಶಿವಯೊಗಿವಿರಚಿತ ಷಟಸ್ಥಲ ಜ್ಞಾನಸಾರಾಮೃತ ಸಂ:ಆರ್.ಸಿ.ಹಿರೇಮಠ,

ವೀರಶೈವ ಅಧ್ಯಯನ ಸಂಸ್ಥೆ  ಶ್ರೀಜಗದ್ಗುರು ತೋಂಟದಾರ್ಯ   ಸಂಸ್ಥಾನ ಮಠ, ಗದಗ. 1999 

9. ಸಿ.ನಾಗಭೂಷಣ,   ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ   ಅಮೃತ ವರ್ಷಿಣಿ ಪ್ರಕಾಶನ, ನಂದಿ ಹಳ್ಳಿ. 1999

10. ಸಿ.ನಾಗಭೂಷಣ, ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು  , ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2000

11. ಆರ್.ಸಿ.ಹಿರೇಮಠ, ಷಟ್‍ಸ್ಥಲ ಪ್ರಭೆ  :   ಪ್ರ:ಕ.ವಿ.ವಿ., ಧಾರವಾಡ. 1966              ಡಾ.ಸಿ.ನಾಗಭೂಷಣ

               ಹಿರಿಯ ಪ್ರಾಧ್ಯಾಪಕರು

               ಕನ್ನಡ ಅಧ್ಯಯನ ಕೇಂದ್ರ 

       ಬೆಂಗಳೂರು ವಿಶ್ವವಿದ್ಯಾಲಯ

              ಬೆಂಗಳೂರು ೫೬೦೦೫೬


  ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಶಾಸನಗಳು ಮತ್ತು ಶಿಲ್ಪಗಳು                                                           ಡಾ.ಸಿ.ನಾಗಭೂಷಣ    ಶರಣರು ಐತ...