ಸೋಮವಾರ, ಮೇ 5, 2025

              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು

                                                         ಡಾ. ಸಿ.ನಾಗಭೂಷಣ

 

 ಆಧುನಿಕಪೂರ್ವ ಕಾಲಘಟ್ಟದಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಮಾಡುವ ಮೂಲಕ ತುಮಕೂರು ಜಿಲ್ಲೆಯ ಸಾಹಿತ್ಯವು ತನ್ನದೆ ಆದ ವೈಶಿಷ್ಟ್ಯತೆಯನ್ನು ಪಡೆದಿದೆ ಮತ್ತು ಕೆಲವು ಸಂಗತಿಗಳಲ್ಲಿ ಮೊದಲಾಗಿದೆ. ಬಹುಮಟ್ಟಿಗೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಚಂಪು, ಕಂದ, ವೃತ್ತ, ರಗಳೆ, ಷಟ್ಪದಿ, ಸಾಂಗತ್ಯ ವಚನ, ಸ್ವರವಚನ, ಕೀರ್ತನೆ, ನಾಮಾವಳಿ, ತಾರಾವಳಿ, ಅಷ್ಟಕ, ದಂಡಕ, ಶತಕ, ಸಂಕಲನ, ಟೀಕೆ, ವ್ಯಾಖ್ಯಾನ, ಶೂನ್ಯಸಂಪಾದನೆ, ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಈ ಜಿಲ್ಲೆಯ ಕವಿಗಳು ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಆಧುನಿಕ ಕಾಲದಲ್ಲಿಯು ತುಮಕೂರು ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೆ ಮಹಾನ್ ಸಾಹಿತಿಗಳನ್ನು ನೀಡುವುದರ ಮೂಲಕ ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ. 

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಲ್ಪತರು ನಾಡಿನ ಸಾಹಿತ್ಯವು ಆಧುನಿಕ ಪೂರ್ವ ಕಾಲಘಟ್ಟದಲ್ಲಿ, ಅದರಲ್ಲಿಯೂ ದೇಸಿ ಸಾಹಿತ್ಯ ಪ್ರಕಾರದಲ್ಲಿ ತನ್ನದೇ ಆದ ಕೆಲವು ಹೆಗ್ಗಳಿಕೆಗಳನ್ನು, ವೈಶಿಷ್ಟ್ಯವನ್ನು ಪಡೆದಿದೆ.

 1. ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ಎರಡು ಐತಿಹಾಸಿಕ ಕಾವ್ಯಗಳನ್ನು ಕೊಡುಗೆಯಾಗಿ ನೀಡಿದೆ, ನಂಜುಂಡ ಕವಿಯ ಕುಮಾರ ರಾಮನ ಸಾಂಗತ್ಯ, ಲಿಂಗಣ್ಣ ಕವಿಯ ಕೆಳದಿನೃಪ ವಿಜಯ, ಗೋವಿಂದ ವೈದ್ಯನ ಕಂಠೀರವ ನರಸರಾಜ ವಿಜಯ ಮೊದಲಾದ ಐತಿಹಾಸಿಕ ಕಾವ್ಯಗಳ ಸಾಲಿಗೆ ತುಮಕೂರು ಜಿಲ್ಲೆಯ ಮಲ್ಲಿಕಾರ್ಜುನ ಕವಿಯ ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯನ್ನು ನಾವು ಪರಿಗಣಿಸ ಬಹುದಾಗಿದೆ. ಅದೇ ರೀತಿ ಮದ್ದಗಿರಿ ನಂಜಪ್ಪನ ಕೃಷ್ಣರಾಜ ವಿಲಾಸ ಕಾವ್ಯವು ಸಹ ಚಾರಿತ್ರಿಕ ಮತ್ತು ಸ್ತುತಿಕಾವ್ಯವಾಗಿದ್ದು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಇಲ್ಲಿ ಕವಿಯು ತನ್ನ ಆಶ್ರಯದಾತನಾದ ಕೃಷ್ಣರಾಜ ಒಡೆಯರ ಸ್ತುತಿಯನ್ನು ಮಾಡುವುದರ ಜೊತೆಗೆ ರಾಜನ ಸಾಮ್ರಾಜ್ಯದ ಸಂಪೂರ್ಣವಾದ ವಿವರವನ್ನು ಕೊಡುವುದರ ಮೂಲಕ ಇದು ಸಾಹಿತ್ಯ ಕೃತಿಯಾಗುವುದರೊಂದಿಗೆ ಐತಿಹಾಸಿಕವಾದ ಅಂಶಗಳನ್ನೂ ಕೂಡ ತಿಳಿಯಪಡಿಸುತ್ತದೆ. ರಾಜನ ದಿನಚರಿ, ರಾಜೋಪಚಾರಗಳು, ಮೆರವಣಿಗೆ, ರಾಜನ ಸಭಾಪ್ರವೇಶ, ರಾಜನೀತಿ, ಮೆರವಣಿಗೆ, ಪುತ್ರೋತ್ಸವ ಮೊದಲಾದವುಗಳನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾನೆ.

2.ತೋಂಟದ ಸಿದ್ಧಲಿಂಗಯತಿಗಳು ವಚನ ಪರಂಪರೆಯಲ್ಲಿ ವಚನ ರಚನೆ ಹಾಗೂ ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನಗಳನ್ನು ಸಂರಕ್ಷಿಸುವ ಸಂಕಲಿಸುವ, ಸಂಪಾದಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. ಆಕರ, ವಸ್ತು ವಿನ್ಯಾಸ, ನಿರೂಪಣಾ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿರುವ ಮತ್ತು ಸಿದ್ಧವಚನಗಳನ್ನು ಬಳಸಿಕೊಂಡು ಸಂವಾದರೂಪದಲ್ಲಿ ಹೆಣೆದ ಹೊಸ ರೀತಿಯ ಸಾಂಸ್ಕೃತಿಕ ಪಠ್ಯಗಳು ಎಂದು ವಿದ್ವಾಂಸರಿಂದ ಕರೆಯಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಶೂನ್ಯಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾದವುಗಳು. ಇವು ತುಮಕೂರು ಜಿಲ್ಲೆ ಹೆಮ್ಮೆಯ ಕೊಡುಗೆಗಳು ಎಂದು ಹೇಳುವಲ್ಲಿ ಸಂತಸ ಎನಿಸುತ್ತದೆ. ಇವು ತೋಂಟದ ಸಿದ್ಧಲಿಂಗರ ಶಿಷ್ಯರಾದ ಗುಮ್ಮಳಾಪುರದ ಸಿದ್ದಲಿಂಗಯತಿ, ಗೂಳೂರು ಸಿದ್ಧವೀರಣ್ಣೊಡೆಯರ ಮೂಲಕ ಪರಿಷ್ಕರಣೆಗೊಂಡು ಪ್ರಸಿದ್ಧಿಯನ್ನು ಪಡೆದವುಗಳಾಗಿವೆ. ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಪರಿಷ್ಕರಿಸಿದ ನಂತರದ ಶೂನ್ಯಸಂಪಾದನಕಾರರು ತುಮಕೂರು ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರು ಆಗಿರುವುದು. ಈ ಹಿನ್ನೆಲೆಯಲ್ಲಿ ತುಮಕೂರು ದ್ವಿತೀಯ ಘಟ್ಟದ ವಚನ ಸಾಹಿತ್ಯ ಚಟುವಟಿಕೆಗಳಲ್ಲಿ ಗಮನೀಯ ಪಾತ್ರವಹಿಸಿದೆ. ಇನ್ನೊಂದು ಅಂಶ ಎಂದರೆ ಪಾಶ್ಚಾತ್ಯರಿಂದ ಭಾರತಕ್ಕೆ ಆಗಮಿಸಿತೆಂದು ಹೇಳಲಾಗುವ ಗ್ರಂಥ ಸಂಪಾದನೆಯ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ ಹಾಗೂ ವಿಶ್ಲೇಷಣೆ ಎಂಬ ಮೂರು ಹಂತಗಳ ಪರಿಚಯ 16ನೇ ಶತಮಾನದಲ್ಲಿಯ ತುಮಕೂರು ಜಿಲ್ಲೆಯ ಸಂಕಲನಕಾರರಿಗೆ ತಿಳಿದಿದ್ದಿತು ಎಂಬುದು. ಅಳಿದುಳಿದ ವಚನರಾಶಿಯನ್ನು ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ, ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ. ಇದರಿಂದಾಗಿ ಪಾಶ್ಚಾತ್ಯರ ಮೂಲಕ ಈ ತತ್ವಗಳು ನಮ್ಮಲ್ಲಿಗೆ ಪ್ರವೇಶಿಸುವುದಕ್ಕಿಂತ ಪೂರ್ವದಲ್ಲಿಯೇ ತುಮಕೂರು ಜಿಲ್ಲೆಯ ನಮ್ಮ ಸಂಕಲನಕಾರರು ಮತ್ತು ಸಂಪಾದಕರಿಗೆ ತಿಳಿದಿದ್ದವು ಎಂಬುದು ದಾಖಲಾರ್ಹವಾಗಿದೆ.

3. 17ನೇ ಶತಮಾನದಲ್ಲಿ ತುಮಕೂರು ಪರಿಸರದ ಬಿಜ್ಜಾವರದ ಮಹಾನಾಡುಪ್ರಭುಗಳು ಅದರಲ್ಲಿಯು ಇಮ್ಮಡಿ ಚಿಕ್ಕಪ್ಪಗೌಡರ ಆಳ್ವಿಕೆಯ ಕಾಲದಲ್ಲಿ ತಮ್ಮ ಅರಮನೆಯಲ್ಲಿ ಶಾರದಾ ಭಂಡಾರವನ್ನು ಹೊಂದಿದ್ದರು ಎಂಬ ಸಂಗತಿ ಐತಿಹಾಸಿಕ ಮಹತ್ವ ಪಡೆದಿದೆ. ತಮ್ಮ ಅರಮನೆಯ ಶಾರದಾ ಭಂಡಾರಕ್ಕೆ ಬೇರೆಯವರಿಂದ ಪ್ರತಿಮಾಡಿಸಿ ಸೇರಿಸುತ್ತಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಮಹಾನಾಡು ಸಂಸ್ಥಾನದ ಶಾರದ ಭಂಡಾರದಲ್ಲಿ ಹಸ್ತಪ್ರತಿಗಳ ಬಗೆಗೆ ಸಂಬಂಧಿಸಿದ ಹಾಗೆ ಕ್ರಿ.ಶ.1601ರಿಂದ1621 ಕಾಲಾವಧಿಯಲ್ಲಿ 7 ಹಸ್ತಪ್ರತಿಗಳ ಪುಷ್ಟಿಕೆಗಳು ಲಭ್ಯವಿವೆ. ಸಾನಂದ ಪುರಾಣ, ಭರತೇಶ ಚರಿತೆ, ಪಂಚಪ್ರಕಾರ ಗದ್ಯ, ಪಾರಮಾರ್ಥಿಕ ಪುಸ್ತಕ ಸ್ತೋತ್ರಭಾಷ್ಯಗಳ ಪುಸ್ತಕ, ಆರಾಧ್ಯ ಚಾರಿತ್ರೆ, ಜನವಶ್ಯ ಕೃತಿಗಳನ್ನು ಬರೆಸಿ ಶಾರದ ಭಂಡಾರಕ್ಕೆ ಸೇರಿಸಿದ್ದರ ಬಗೆಗೆ ಪುಷ್ಪಿಕೆಗಳಿಂದ ತಿಳಿದು ಬರುತ್ತದೆ. ಮಹಾನಾಡ ಪ್ರಭುಗಳ ಒಡ್ಡೋಲಗದಲ್ಲಿ ಕವಿ-ಗಮಕಿ-ವಾದಿ-ವಾಗ್ಮಿಗಳ ಕೂಟವಿದ್ದುದನ್ನು ಹಾಗೂ ಕುಮಾರ ರಾಮನ ಸಾಂಗತ್ಯದ ಓಲೆಕಟ್ಟೊಂದನ್ನು ತಂದು ರಾಜನ ಆಸ್ಥಾನದಲ್ಲಿ ವಾಚಿಸಿದ ಸಂದರ್ಭವೊದನ್ನು ಇಮ್ಮಡಿ ಚಿಕ್ಕಭೂಪಾಲನ ಕೃತಿಯು ಪ್ರಸ್ತಾಪಿಸಿದೆ. 

 4. ತುಮಕೂರು ಜಿಲ್ಲೆಗೆ ಸಂಬಂಧಿಸಿದ ಹಸ್ತಪ್ರತಿಗಳಲ್ಲಿಯ ಕೆಲವು ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಕವಿಗಳ ಹೆಸರನ್ನು ಕಾವ್ಯಗಳ ಕಾಲವನ್ನು ಅರ್ಥೈಸಲು ಸಹಕಾರಿಯಾಗಿವೆ.ಈ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ ಸಂಗತಿಗಳು ಸಾಹಿತ್ಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸಿವೆ. 

 ಪ್ಲವ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.1607ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿದ್ದನ್ನು ತಿಳಿಸುತ್ತದೆ. ಪಾರಮಾರ್ಥಿಕದ ಪುಸ್ತಕ ಸರ್ವಜ್ಞನ ವಚನ ಸಂಕಲನ ವಾಗಿದ್ದು ಇದರಲ್ಲಿ 77ಪದ್ಧತಿಗಳಿದ್ದು 937 ತ್ರಿಪದಿಗಳಿವೆ, ಹಸ್ತಪ್ರತಿ ತಜ್ಞರಾಗಿದ್ದ ದಿವಂಗತ ಎಸ್.ಶಿವಣ್ಣನವರ ಪ್ರಕಾರ ಈ ಪುಷ್ಪಿಕೆಯಲ್ಲಿಯ ಉಲ್ಲೇಖವು ಕಾಲೋಲ್ಲೇಖವಿರುವ ಸರ್ವಜ್ಞನ ಕೃತಿಯ ಪ್ರತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕೃತಿಯಾಗಿದ್ದು, ಈ ಪ್ರತಿಯಲ್ಲಿಯ ಕಾಲದ ಉಲ್ಲೇಖವು ಸರ್ವಜ್ಞನ ಕಾಲನಿರ್ಣಯಕ್ಕೆ ಒಂದು ಮೈಲುಗಲ್ಲಾಗಿದೆ. 

 ಸ್ವಸ್ತಿಶ್ರೀ ವಿಜಯಾಭ್ಯುದಯ ಸಾಲಿವಾಹನ ಶಕ ವರುಷಂಗಳು.. ನೆಯ ಕ್ರೋಧ ಸಂವತ್ಸರ ಭಾದ್ರಪದ ಶುದ್ಧ 12ರಲ್ಲು ಮುದಿಯಪ್ಪ ನಾಯಕರ ಬಂಟನಾದಂಥ ಗಡೆಯ ಪಾಪಯ್ಯನ ಸುಪುತ್ರ ಕೃಷ್ಣಯ್ಯನು ಬರೆದು ಸಮರ್ಪಸಿದ ಪುಣ್ಯ ಪುರಾತನರ ಶಾಸ್ತ್ರ ಪುಸ್ತಕ, ಹಂಪೆಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಮಂಗಳಾಮಹಾ ಶ್ರೀ ಶ್ರೀ ಶ್ರೀ. ಈ ಪುಷ್ಪಿಕೆಯಲ್ಲಿ ಇಮ್ಮಡಿ ಮುದಿಯಪ್ಪ ನಾಯಕನು ಕೃಷ್ಣಯ್ಯ ಎಂಬ ಪ್ರತಿಕಾರನಿಂದ ಪುರಾತನರನ್ನು ಕುರಿತ ಕೃತಿಯನ್ನು ಪ್ರತಿ ಮಾಡಿಸಿದ್ದಾನೆ. ಕುತೂಹಲಕರ ಸಂಗತಿ ಎಂದರೆ ಇಲ್ಲಿಯ ಹೇಳಿಕೆಯಲ್ಲಿಯ ಹರೀಶ್ವರ ದೇವರು ವಿರಚಿಸಿದ ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ ಎಂಬುದು ಹರಿಹರ ಕವಿಯು ರಚಿಸಿರುವ ರಗಳೆಗಳ ಸಂಖ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ.

 ಬೇಡತ್ತೂರಿನ ಡಾ.ರಾಮಾಂಜನೇಯ ಅವರ ಮನೆಯಲ್ಲಿದ್ದ ಪ್ರಭುಲಿಂಗಲೀಲೆಯ ಹಸ್ತಪ್ರತಿಯ ಪುಷ್ಪಿಕೆಯಲ್ಲಿಯ ಹಂಪೆಯ ಚಾಮರಸೈನವರು ನಿರೂಪಿಸಿದ ಪ್ರಭುಲಿಂಗಲೀಲೆ ಬರೆಯುವುದಕ್ಕೆ ನಿರ್ವಿಘ್ನಮಸ್ತು ಹೇಳಿಕೆಯ ಪ್ರಕಾರ ಪ್ರಭುಲಿಂಗಲೀಲೆಯ ಕರ್ತೃ ಚಾಮರಸ, ಆತ ಹಂಪೆಯವನ್ನು ಎಂಬುದು ನಮಗೆ ಅಧಿಕೃತವಾಗಿ ಮನದಟ್ಟಾಗುತ್ತದೆ.

5. ಕನ್ನಡ ನಾಡಿನ ಕವಿಗಳ ಸಾಹಿತ್ಯ ಚಟುವಟಿಕೆಗಳನ್ನು ಪರಿಶೀಲಿಸಿದರೆ ತುಮಕೂರು ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಯಾವ ಭಾಗದಲ್ಲಿಯೂ ಒಂದೇ ಮನೆತನದ ಕವಿಗಳು ಮನೆತನದುದ್ದಕ್ಕೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡುಬಂದಿರುವುದಿಲ್ಲ. ಜಿಲ್ಲೆಯ ಅಮರಗೊಂಡ (ಗುಬ್ಬಿ)ದ 1. ಅಮರಗೊಂಡ ಮಲ್ಲಿಕಾರ್ಜುನ ತಂದೆ, 2. ಗುಬ್ಬಿಯ ಮಲ್ಲಣ, 3. ಗುಬ್ಬಿಯ ಮಲ್ಲಣಾರ್ಯ, 4. ಶಾಂತೇಶ, 5, ಚೇರಮಾಂಕ 6. ಅಮರಗುಂಡದ ಮಲ್ಲಿಕಾರ್ಜುನನ ವಂಶೋದ್ಭವನಾದ ಶಾಂತಲಿಂಗನ ಮಗನಾದ ಸಾಸಲದ ಚಿಕ್ಕಣಾರಾಧ್ಯ ಕವಿಗಳು ಒಂದೇ ಮನೆತನದವರಾಗಿದ್ದು ಸಾಹಿತ್ಯ ಕೃಷಿ ನಡೆಸಿದ್ದಾರೆ.

7. ಜಿಲ್ಲೆಯ ಶಂಕರದೇವ, ವಿರಕ್ತ ತೋಂಟದಾರ್ಯ, ಮಲ್ಲಿಕಾರ್ಜುನ ಕವಿ, ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳು, ಚಂದ್ರಸಾಗರವರ್ಣಿಯಂತಹ ಕವಿಗಳು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾವ್ಯ ರಚನೆಯನ್ನು ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.

 8. ಹರಿಹರನಂತಹ ಮಹಾಕವಿ ಹುಟ್ಟುಹಾಕಿದ ದೇಸೀಯ ಛಂದೋ ಪ್ರಕಾರಗಳಲ್ಲಿ ಒಂದಾದ ರಗಳೆ ಸಾಹಿತ್ಯದ ಪ್ರಕಾರವನ್ನು ಹರಿಹರನ ನಂತರ ಬಂದಂತಹ ಕವಿಗಳು ಈ ಪ್ರಕಾರವನ್ನು ಅಷ್ಟಾಗಿ ಮುಂದುವರಿಸಲಿಲ್ಲ ಎಂಬ ಮಾತು ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಲ್ಲಿ ಕೇಳಿಬರುತ್ತಿತ್ತು, ಹರಿಹರನ ನಂತರ ಅವನಷ್ಟು ವಿಪುಲವಾಗಿ ಮತ್ತು ಸಮರ್ಥವಾಗಿ ಮುಂದುವರೆಸಿಕೊಂಡು ಅಧಿಕ ಸಂಖ್ಯೆಯಲ್ಲಿ ರಗಳೆ ಸಾಹಿತ್ಯ ಪ್ರಕಾರದಲ್ಲಿ ಕಾವ್ಯಗಳನ್ನು ರಚಿಸಿರುವ ಶಂಕರದೇವ, ವಿರಕ್ತ ತೋಂಟದಾರ್ಯ, ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳು ಸೋಸಲೆರೇವಣಾರಾಧ್ಯ, ನಿಡುಮಾಮಿಡಿ ಕರಿಸಿದ್ದಯ್ಯ ಕವಿಗಳು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಶಂಕರದೇವನು ಸುಮಾರು ಐವತ್ತರಿಂದ ಅರವತ್ತು ರಗಳೆಗಳನ್ನು ರಚಿಸಿದ್ದಾನೆ. ಆದ್ದರಿಂದ ರಗಳೆ ಸಾಹಿತ್ಯ ಪ್ರಕಾರವನ್ನು ಹೆಚ್ಚು ವ್ಯಾಪಕವಾಗಿ ಬಳಸಿದ ಕೀರ್ತಿ ತುಮಕೂರು ಜಿಲ್ಲೆಯ ರಗಳೆ ಕವಿಗಳಿಗೆ ಸಲ್ಲುತ್ತದೆ. 

8. ಸಾಂಗತ್ಯ ಪ್ರಕಾರದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ರಚಿತವಾಗಿರುವ ವೈದಿಕ ರಾಮಾಯಣಗಳಲ್ಲಿ, ಶೇಷಗಿರಿ ವಿರಚಿತ ಶ್ರೀರಾಮ ಚರಿತೆಯು ಮೊದಲನೆಯ ವೈದಿಕ ರಾಮಾಯಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕವಿಯು ವೈದಿಕ ರಾಮಾಯಣದಲ್ಲಿ ಬುದ್ಧನ ಹೆಸರನ್ನು ಸೇರಿಸಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಶ್ರೀರಾಮನ ಚರಿತ್ರೆಯನ್ನು ಜನರು ಕೇಳಿ, ಓದಿ ಆನಂದಿಸಲಿ ಹಾಗೂ ರಾಮನ ಕತೆಯಲ್ಲಿ ತಲ್ಲೀನವಾಗಲಿ ಎಂದು ಕವಿಯು ಆಶಿಸಿದ್ದಾನೆ. 

9. ಪಾಲ್ಕುರಿಕೆ ಸೋಮನಾಥನ ಬಸವಪುರಾಣದ ಪರಂಪರೆಯಲ್ಲಿ ಬರುವ ಭೀಮಕವಿ ಮತ್ತು ಷಡಕ್ಷರಕವಿಗಳಿಗಿಂತ ಭಿನ್ನವಾಗಿ ಗರುಣಿಯ ಬಸವಲಿಂಗ ಕವಿಯು ಬಸವಣ್ಣನವರನ್ನು ಕುರಿತು ಹಾಡುಗಬ್ಬ ಪ್ರಕಾರವಾದ ಸಾಂಗತ್ಯ ಪ್ರಕಾರದಲ್ಲಿ ಬಸವೇಶ್ವರನ ಕಾವ್ಯವನ್ನು ರಚಿಸಿದ್ದಾನೆ. ಗರುಣಿ ಬಸವಲಿಂಗನ ಬಸವೇಶ್ವರ ಕಾವ್ಯವು ಸಾಂಗತ್ಯದಲ್ಲಿ ರಚಿತಗೊಂಡಿದ್ದು ಬಸವಣ್ಣನ ಬಗ್ಗೆ ಹೆಚ್ಚಿನ ಸಂಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಗರುಣಿ ಬಸವಲಿಂಗನು ಈ ಕೃತಿಯಲ್ಲಿ ಬಸವಣ್ಣನನ್ನು ಒಬ್ಬ ಪವಾಡಪುರುಷನಾಗಿ ನೋಡುವುದಕ್ಕಿಂತ ಹೆಚ್ಚಿನದಾಗಿ ಒಬ್ಬ ಐತಿಹಾಸಿಕ ವ್ಯಕ್ತಿಯನ್ನಾಗಿ ಚಿತ್ರಿಸುವ ಪ್ರಯತ್ನವನ್ನು ಮಾಡಿದ್ದಾನೆ. 

10.ಕನ್ನಡ ಟೀಕಾ ಸಾಹಿತ್ಯ ಮತ್ತು ಸಂಕಲನ ಸಾಹಿತ್ಯದಲ್ಲಿ ತುಮಕೂರು ಜಿಲ್ಲೆ ಕೊಡುಗೆ ಅಪಾರವಾದುದು. ಇವರುಗಳು ಸಂಸ್ಕೃತ ಕಾವ್ಯಗಳಿಗೆ ಟೀಕು ಮತ್ತು ವ್ಯಾಖ್ಯಾನಗಳನ್ನು ಬರೆಯುವುದರ ಮೂಲಕ ಆಕಾಲಕ್ಕೆ ಕನ್ನಡವನ್ನು ಸಂಸ್ಕೃತದ ಸರಿಸಮಾನವಾದ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ಕನ್ನಡವನ್ನು ಕಟ್ಟುವ ಕೆಲಸವನ್ನು ಗುಬ್ಬಿಯ ಮಲ್ಲಣ, ಯಾಗಂಟಿ ಚೆನ್ನವೀರ, ಮಲ್ಲಿಕಾರ್ಜುನ ಕವಿ, ವಿರಕ್ತ ತೋಂಟದಾರ್ಯ ಮುಂತಾದ ಟೀಕಾಕಾರರು ಮಾಡಿರುವುದು ಗಮನಾರ್ಹವಾದ ಸಂಗತಿಯಾಗಿದೆ.

11. ಮಧುಗಿರಿಯ ತಿಮ್ಮಾಂಬೆ : ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದಾದ ತಾರಾವಳಿ ಸಾಹಿತ್ಯವನ್ನು ಕುರಿತು ಕವಿಗಳು ವಿಪುಲ ಸಂಖ್ಯೆಯಲ್ಲಿ ರಚಿಸಿದ್ದರೂ ಸ್ತ್ರೀಯೊಬ್ಬಳು ರಚಿಸಿರುವುದು ಇತ್ತೀಚಿನವರೆಗೂ ಗಮನಕ್ಕೆ ಬಂದಿರಲಿಲ್ಲ. ತಾರಾವಳಿ ಸಾಹಿತ್ಯ ಪ್ರಕಾರದಲ್ಲಿ ಕಾವ್ಯ ರಚಿಸಿರುವ ಏಕೈಕ ಮಹಿಳಾ ಕವಿ. ಕ್ರಿ.ಶ.1700 ರ ಮಧುಗಿರಿ ತಿಮ್ಮಾಂಬೆ. ಈಕೆಯು ತಾರಾವಳಿ ಸಾಹಿತ್ಯ ಪ್ರಕಾರದಲ್ಲಿ `ಮಧುಗಿರಿ ಮಲ್ಲೇಶ್ವರ ಬಿಲ್ವ ವೃಕ್ಷೋತ್ಸವ' ತಾರಾವಳಿಯನ್ನು ರಚಿಸಿ `ತಾರಾವಳಿ ಸಾಹಿತ್ಯ ಪ್ರಕಾರದ ಏಕೈಕ ರಚನಕಾರ್ತಿ' ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ತನ್ನ ಜನ್ಮಭೂಮಿಯಲ್ಲಿ ಜರುಗುವ ಉತ್ಸವವನ್ನು ವರ್ಣಿಸಿದ್ದಾಳೆ. ಈ ಕೃತಿ ಚಿಕ್ಕ ತಾರಾವಳಿ ಕೃತಿಯಾದರೂ ಚೊಕ್ಕವಾಗಿ ಹಿತಮಿತವಾಗಿ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ನಾಟುವಂತೆ ರಚಿತವಾಗಿದೆ. ಈ ಕೃತಿಯು ವೀರಣ್ಣ ರಾಜೂರ ಅವರು ಸಂಪಾದಿಸಿರುವ ತಾರಾವಳಿ ಸಂಪುಟದಲ್ಲಿ ಪ್ರಕಟಗೊಂಡಿದೆ.

12.ಕೇಶಿರಾಜನ ಶಬ್ದಮಣಿದರ್ಪಣಕ್ಕೆ ಎರಡು ಟೀಕೆಗಳು ರಚಿಸಿದ್ದು ಅದರಲ್ಲಿ ನಿಟ್ಟೂರು ನಂಜಯ್ಯನ ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ಟೀಕೆಯೇ ಗ್ಯಾರೆಟ್, ಕಿಟೆಲ್, ಡಿ.ಎಲ್.ನರಸಿಂಹಾಚಾರ್ಯಾದಿಯಾಗಿ ತಮ್ಮ ಸಂಪಾದನೆಗೆ ಅನುಸರಿಸಿರುವುದು ಮತ್ತು ಇಂದಿಗೂ ಪ್ರಸಿದ್ಧಿಯನ್ನು ಪಡೆದಿರುವುದು.

6. ಕನ್ನಡ ನವೋದಯ ಸಾಹಿತ್ಯದ ಆರಂಭಕಾಲದ ಸ್ವತಂತ್ರ ಕಾಲ್ಪನಿಕ ಶೃಂಗಾರಾದ್ಭುತವಾದ ವಸ್ತುವನ್ನೊಳಗೊಂಡ ಕಾದಂಬರಿ ಎಂಬ ಕೀರ್ತಿಗೆ ಪಾತ್ರವಾದ ʼಶೃಂಗಾರಚಾತುರ್ಯೋಲ್ಲಾಸಿನಿʼ ಕಾದಂಬರಿ ರಚನಾಕಾರರು ಗುಬ್ಬಿ ಸೋ ಮುರಿಗಾರಾಧ್ಯ.

13.ಕರ್ಣಾಟಕಶಬ್ದ ಮಂಜರಿ :

ಜಿಲ್ಲೆಯ ವಿರಕ್ತ ತೋಂಟದಾರ್ಯರು ಕರ್ನಾಟಕ ಶಬ್ದ ಮಂಜರಿಯಂತಹ ನಿಘಂಟು ಸಂಬಂಧಿ ಕೃತಿಯನ್ನು ರಚಿಸಿದ್ದಾನೆ. ಕರ್ನಾಟಕ ಶಬ್ದ ಮಂಜರಿಯು ವಾರ್ಧಕ ಷಟ್ಪದಿಯಲ್ಲಿದೆ. ಈ ಕಾವ್ಯವು 120 ಪದ್ಯಗಳನ್ನು ಒಳಗೊಂಡಿದೆ. ಹಳಗನ್ನಡ ಪದಗಳಿಗೆ ಅರ್ಥವನ್ನು ತಿಳಿಸುವ ನಿಘಂಟು ರೂಪವಾದ ಗ್ರಂಥವಾಗಿದೆ. “ಅಚ್ಛಗನ್ನಡ ಗೂಢಪದ ತತ್ಸಮಂ ತದ್ಭವಗಳೆಂಬ ಶಬ್ದ ನಾಮಗಳನೋರಂತೆ ವಿರಚಿಸಿದೆನೆಲ್ಲಾ ಕವೀರರುದಾಹರಣಸನ್ಮಾರ್ಗವಿಡಿದು” ಎಂದು ಕವಿ ಹೇಳುತ್ತಾನೆ. 

14. ವೆಂಕಮಾತ್ಯ:

 ತುಮಕೂರು ಜಿಲ್ಲೆಯ ಕೊರಟೆಗೆರೆ ತಾಲ್ಲೂಕಿನ ಅಕ್ಕಿರಾಮಪುರದ ಕವಿಯಾದ ವೆಂಕಮಾತ್ಯನ ಬಗೆಗೆಪ್ರಸ್ತಾಪಿಸಲೇ ಬೇಕಾಗಿದೆ. ಜಿಲ್ಲೆಯಲ್ಲಿ ಬೃಹತ್ ಕಾವ್ಯವನ್ನು ರಚಿಸಿದ ಹೆಗ್ಗಳಿಕೆಗೆ ಈತ ಬಾಜನನಾಗಿದ್ದಾನೆ. ಈತನು ವೆಂಕಮಾತ್ಯ ವಿರಚಿತ ಶ್ರೀ ಮದ್ರಾಮಾಯಣಂ ಎಂಬ ರಾಮಾಯಣ ಕೃತಿಯನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ”ನಾಗಚಂದ್ರನ ಪಂಪರಾಮಾಯಣ,ಕುಮುದೇಂದು ರಾಮಾಯಣ, ಕುಮಾರ ವಾಲ್ಮಿಕಿಯ ತೊರವೆರಾಮಾಯಣ, ಮುಂತಾದವು ಪ್ರಸಿದ್ಧವಾಗಿವೆ. ಪಂಪರಾಮಾಯಣವು ಜೈನಸರಣಿಯನ್ನನುಸರಿಸಿ ಬರೆಯಲ್ಪಟ್ಟಿದೆ. ಇಷ್ಟೆಲ್ಲಾ ರಾಮಾಯಣಗಳಿದ್ದರೂ ಷಟ್ಪದಿಗಳಲ್ಲಿ ಹಿರಿದೆನಿಸಿದ ವಾರ್ಧಕ ಷಟ್ಪದಿಯಲ್ಲಿ ಬರೆದ ರಾಮಾಯಣಗಳಾವುವೂ ಇದುವರೆಗೆ ಪ್ರಕಟವಾಗಿಲ್ಲ. ಮಾತ್ರವಲ್ಲ, ವಾಲ್ಮಿಕಿರಾಮಾಯಣದ ಕಥೆಯನ್ನೇ ಯಥವತ್ತಾಗಿ ಕನ್ನಡಕ್ಕೆ ಕಾವ್ಯರೂಪದಲ್ಲಿ ಪರಿವರ್ತಿಸಿದ ಗ್ರಂಥಗಳಾವೂವೂ ಈತನಕ ಬೆಳಕಿಗೆ ಬಂದಿಲ್ಲ. ಈ ಕೊರತೆಯನ್ನು ನಿವಾರಿಸಲು ಕೈಗೊಂಡ ಪ್ರಯತ್ನದ ಫಲ ರೂಪವಾಗಿ ಕನ್ನಡಿಗರಿಗೆ ಅರ್ಪಿಸಿರುವ ಮೊದಲ ಕೃತಿಯೇ ವೆಂಕಮಾತ್ಯ ವಿರಚಿತ ಶ್ರೀ ಮದ್ರಾಮಾಯಣಂ. ಈ ಸುಂದರಕಾಂಡವು”(ವೆಂಕಮಾತ್ಯಕವಿ ವಿರಚಿತಂ ಶ್ರೀಮದ್ರಾಮಾಯಣಂ ಸುಂದರಕಾಂಡಂ. ಸಂಪಾದಕರು ಟಿ. ಚಂದ್ರಶೇಖರನ್, 1952. ಪು. ಸಂ iii) ಎಂದು ಸಂಪಾದಕರಾದ ಮದ್ರಾಸು ಸರ್ಕಾರದ ಸರ್ಕಾರಿ ಪ್ರಾಚ್ಯ ಹಸ್ತಪ್ರತಿ ಭಂಡಾರದ ಕ್ಯೂರೇಟರ್ ಮತ್ತು ಸಂಪಾದಕರಾದ ಟಿ.ಚಂದ್ರಶೇಖರನ್ ಅವರು ಹೇಳಿದ್ದಾರೆ. 

 ಈ ಕೃತಿಯು 195 ಸಂಧಿ 9865 ಪದ್ಯಗಳನ್ನು ಒಳಗೊಂಡಿದ್ದು ವೆಂಕಮಾತ್ಯನ ರಾಮಾಯಣವೆಂದೆ ಪ್ರಸಿದ್ದವಾಗಿದೆ. ಈ ಕೃತಿಯನ್ನು 1952-62ರ ಅವಧಿಯಲ್ಲಿ ಮದ್ರಾಸ ಸರ್ಕಾರದ ಸರ್ಕಾರಿ ಪ್ರಾಚ್ಯ ಹಸ್ತಪ್ರತಿ ಭಂಡಾರವು ಹಂತ ಹಂತವಾಗಿ ಪ್ರಕಟಿಸಿದೆ. ”ಈ ಕಥೆಯನ್ನಯ ಶಿವನು ಪಾರ್ವತಿಗೆ ಹೇಳಿದಂತೆಯೂ ಆಮೇಲೆ ಸೂತನು ಋಷಿಗಳಿಗೆ ಹೇಳಿದಂತೆಯೂ ತಿಳಿಯುತ್ತದೆ.” ಈ ಕೃತಿಯ ಪ್ರತಿಯೊಂದು ಕಾಂಡದ ಕೊನೆಯಲ್ಲಿ “ ಇದು ರಾಮಚಂದ್ರ ಪಾದಾರವಿಂದ ವಂದನ ಪವನಂದನ ವರಪ್ರಾಸಾದಾಸದಿತ ಸರಸಸಾಹಿತ್ಯ ಸಾಮ್ರಾಜ್ಯ, ರಾಮಪುರೀ ಹಂಪೆಯಾಮಾತ್ಯ ತನೂಭವ ವೆಂಕಾಹ್ವಯ ವಿರಚಿತಮಾದ ಶ್ರೀಮಾದ್ರಾಮಾಯಣ ಮಹಾಪ್ರಬಂಧದೊಳ್….. ಸಮಾಪ್ತಂ” ಎಂದಿದೆ. 

 ತುಮಕೂರು ಜಿಲ್ಲೆಯಲ್ಲಿ 18ನೇ ಶತಮಾನದಿಂದ 20ನೇ ಶತಮಾನದ ಪೂರ್ವಾರ್ಧದಲ್ಲಿ ಎಷ್ಟೋ ಜನ ಸ್ವರವಚನಕಾರರೂ, ಕವಿಗಳು ಆಗಿಹೋಗಿದ್ದಾರೆ. ಅವರ ಉಲ್ಲೇಖ ಎಲ್ಲಿಯೂ ದಾಖಲಾಗದಿರುವುದು ದುರಾದೃಷ್ಟಕರಸಂಗತಿಯಾಗಿದೆ. ಸಿರಿಗನ್ನಡ ಗ್ರಂಥ ಚರಿತ್ರ ಕೋಶದಲ್ಲಿ ಕೆಲವು ಕವಿಗಳ ಉಲ್ಲೇಖ ಮಾತ್ರ ಸಿಗುತ್ತದೆ. ಕೆಲವು ಕವಿಗಳ ಉಲ್ಲೇಖ ಎಲ್ಲಿಯೂ ಸಿಕ್ಕಿಲ್ಲ. ಆದಾಗ್ಯೂ ಎಸ್. ಶಿವಣ್ಣನವರು ಹಸ್ತಪ್ರತಿ ಸಂಗ್ರಹಗಳಲ್ಲಿಯ ಹಸ್ತಪ್ರತಿಗಳ ಪರಿಶೀಲಿಸಿ ಹಾಗೂ ಸ್ವರವಚನ ಸಂಪುಟಗಳಲ್ಲಿ ದಾಖಲಾಗಿರುವ ಜಿಲ್ಲೆಯ ಕವಿಗಳ, ಸ್ವರವಚನಕಾರರ ಹೆಸರುಗಳು ಹಾಗೂ ಕೃತಿಗಳ ಬಗೆಗೆ ಗಮನ ಸೆಳೆದಿದ್ದಾರೆ. ಈ ಕವಿಗಳ ಬಗೆಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಈ ಬಗೆಗೆ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ. ಬಹಳಷ್ಟು ಅನಾಮಧೇಯ ಕವಿಗಳು ಮಧುಗಿರಿ ತಾಲ್ಲೋಕಿನಲ್ಲಿಯೇ ಕಂಡುಬಂದಿರುವುದನ್ನು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ. ಮದ್ದಗಿರಿ ಪದ್ದಯ್ಯ, ಮಧುಗಿರಿ ಬ್ರಹ್ಮಸೂರಿ ಕವಿ (ಭಾವನಾಸ್ತುತಿ, ಸಾಂಗತ್ಯ), ಮಧುಗಿರಿ ಪದುಮಯ್ಯ (ವಿಮಲನಾಥ ಸ್ವಾಮಿ ಪಂಚಕಲ್ಯಾಣ ದ್ವಿಪದಿ), ಮಧುಗಿರಿ ಒಡೆಯ (ಸ್ವರವಚನ) ಮಧುಪುರಿವಾಸ ಮಲ್ಲಿಕಾರ್ಜುನ, ಸ್ವರವಚನ, ಮಿಡಗೇಸಿ ಮುದ್ದಮಲ್ಲ (ಸ್ವರವಚನ) ಇತ್ಯಾದಿ. ಹಾಗೆಯೇ ಜಿಲ್ಲೆಯಲ್ಲಿ ಕವಿಗಳ ಹೆಸರುಗಳು ಅನಾಮಧೇಯವಾಗಿದ್ದು ಅವರು ರಚಿಸಿರುವ ಸ್ವರವಚನಗಳ ಅಂಕಿತ ದೊರೆತಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ನಿಡುಗಲ್ಲು ವೀರಭದ್ರಾಷ್ಟಕ, ಅಮರಕುಂಡ ಮಲ್ಲಿನಾಥಯ್ಯ, ಕರಿಗಿರಿಚೆನ್ನ, ಕರಿಗಿರಿನಾರಸಿಂಹ (ನರಸಿಂಹಾಷ್ಟಕ) ಗುಬ್ಬಿ ಮಲ್ಲೇಶ, ಗುಬ್ಬಿಪುರದ ಮುರಿಗೆ ಚೆನ್ನಬಸವ, ಮಧುಗಿರಿ ಲಿಂಗ, ಮಧುಗಿರಿ ವರನಿಲಯ, ಮಧುಗಿರಿ ಪುರಾವರಧೀಶ್ವರ ಇತ್ಯಾದಿ ಅಂಕಿತಗಳಲ್ಲಿ ಸ್ವರವಚನಗಳನ್ನು ರಚಿಸಿದ್ದಾರೆ. ಈ ಹಾಡುಗಾರರ ಇತಿವೃತ್ತದ ಬಗೆಗೆ ಇನ್ನೂ ಹೆಚ್ಚನ ಸಂಶೋಧನೆ ನಡೆಸಲು ಅವಕಾಶವಿದೆ. ಅದೇರೀತಿ ಗೂಳೂರು ಶಂಕರ ಕವಿಯ ಇತಿವೃತ್ತದ ಬಗೆಗೆ ಬೆಳಕು ಚೆಲ್ಲಬಹುದಾಗಿದೆ. ಈ ಅನಾಮಧೇಯ ಕವಿಗಳು ರಚಿಸಿರುವ ಹಾಡುಗಳು, ಕೃತಿಗಳು ಹಸ್ತಪ್ರತಿಗಳಲ್ಲಿಯೇ ಉಳಿದಿವೆ. ಇವುಗಳನ್ನು ಶೋಧಿಸಿ, ಸಂಪಾದಿಸಿ ಪ್ರಕಟಿಸುವ ಕಾರ್ಯವನ್ನು ಮಾಡ ಬಹುದಾಗಿದೆ. ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಾಗಲೀ, ವೈಯಕ್ತಿಕ ಸಾಹಿತ್ಯ ಚರಿತ್ರೆಯಲ್ಲಾಗಲೀ ಜಿಲ್ಲೆಯ ಆಧುನಿಕ ಪೂರ್ವದ ಕವಿಗಳಿಗೆ ಯೋಗ್ಯಸ್ಥಾನ ದೊರೆತಿಲ್ಲ. ಇದಕ್ಕೆ ಕಾರಣವೂ ಇದೆ. ಜಿಲ್ಲೆಯ ಬಹಳಷ್ಟು ಕವಿಗಳ ಕೃತಿಗಳು ಹಸ್ತಪ್ರತಿಗಳಲ್ಲಿಯೇ ಅಡಗಿ ಕುಳಿತಿರುವುದು. ಮೊದಲಿಗೆ ಜಿಲ್ಲೆಯ ಅಪ್ರಕಟಿತ ಸಾಹಿತ್ಯ ರಾಶಿಯನ್ನು ಶೋಧಿಸಿ ಪ್ರಕಟಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ. ಇಲ್ಲವಾದರೆ ಅಪ್ರಕಟಿತ ಹಾಗೂ ಅಲಕ್ಷಿತ ಸಾಹಿತ್ಯವಾಗಿಯೇ ಉಳಿಯುವ ಸಂಭವ ಇದೆ. ಇತ್ತೀಚಿನ ಸಂಶೋಧನೆಯನ್ನು ಆಧರಿಸಿ ಹೇಳುವುದಾದರೆ ಇತ್ತೀಚಿನ ಸಂಶೋಧನೆಯನ್ನು ಆಧರಿಸಿ ಹೇಳುವುದಾದರೆ ಆಧುನಿಕ ಪೂರ್ವಕಾಲದಲ್ಲಿಯೇ ಸುಮಾರು 800 ಜನ ಪ್ರಮುಖ ಹಾಗೂ ಅಪ್ರಮುಖ ಕವಿಗಳು ಜಿಲ್ಲೆಯಲ್ಲಿ ದಾಖಲಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಹಳಷ್ಟು ಕವಿಗಳ ಕೃತಿಗಳ ಹೆಸರು ದೊರೆತಿದ್ದು ಪ್ರಕಟವಾಗದೆ ಅಜ್ಞಾತವಾಗಿಯೇ ಉಳಿದಿವೆ. ಅವುಗಳನ್ನು ಶೋಧಿಸುವ ಅಭಿಜ್ಞಿಸುವ ಪ್ರಯತ್ನ ಇನ್ನು ಮುಂದೆಯಾದರೂ ನಡೆಯ ಬೇಕಾಗಿದೆ ಜಿಲ್ಲೆಯ ಕವಿಗಳ ಬಗೆಗೆ ಇನ್ನು ಮುಂದೆಯಾದರೂ ವ್ಯವಸ್ಥಿತ ಅಧ್ಯಯನ ನಡೆದು ಸಾಹಿತ್ಯ ಚರಿತ್ರೆಯಲ್ಲಿ ಸೂಕ್ತವಾದ ಸ್ಥಾನ ಸಿಗಲು ನಾವೆಲ್ಲರೂ ಪ್ರಯತ್ನಿಸ ಬೇಕಾಗಿದೆ. ಜೊತೆಗೆ ಪ್ರಾಚೀನ ಸಾಹಿತ್ಯದಲ್ಲಿ ಕೇವಲ ಕವಿಪ್ರತಿಭೆಯನ್ನಷ್ಟೇ ಗುರುತಿಸದೆ ಅದರಲ್ಲಿರುವ ಮಾನವೀಯತೆ, ಭ್ರಾತೃತ್ವ, ಸಮಾನತೆಯ ಅಂಶಗಳನ್ನು ತಿಳಿಯಬೇಕಾಗಿದೆ. ಆ ಮೂಲಕ ನಮ್ಮ ಪೂರ್ವ ಕವಿಗಳು ಸಮಾಜವನ್ನು ಗ್ರಹಿಸಿದ ಮತ್ತು ಮಾನವೀಯತೆಗೆ ಮಿಡಿದ ಬಗೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮಕನ್ನಡದ ವಿವಿಧ ಬಗೆಗಳನ್ನು, ಅವುಗಳ ನಡುವೆಯಿರುವ ಒಳ ಸಂಬಂಧಗಳನ್ನು ಶೋಧಿಸಲು ಸಾಧ್ಯವಾಗುತ್ತದೆ. ಬಹುತ್ವದ ಕರ್ನಾಟಕದಂತೆಯೇ ಬಹುತ್ವದ ಸಾಹಿತ್ಯದ ಮೂಲಕಬದುಕಿನ ಮೂಲಸೆಲೆಗಳನ್ನು ಇಂದು ನಾವು ಕಂಡುಕೊಳ್ಳ ಬೇಕಾಗಿದೆ.

 ಆಧುನಿಕ ಕಾಲಘಟ್ಟದಲ್ಲಿಯಂತು ಜಿಲ್ಲೆಯ ಸಾಹಿತ್ಯವು ಸಂಶೋಧನೆ, ಸೃಜನ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ವೈವಿಧ್ಯತೆಯಿಂದ ಕೂಡಿದೆ. ಜಿಲ್ಲೆಯಲ್ಲಿ ಕನ್ನಡವಿದ್ವತ್ ಪರಂಪರೆಯಲ್ಲಿ ಗುರುತಿಸಿಕೊಂಡಿರುವ ಬಿ.ಎಂ.ಶ್ರೀಕಂಠಯ್ಯ, ಬೆಳ್ಳಾವೆ ನಾರಾಣಪ್ಪ, ತೀನಂಶ್ರೀ, ಕೆ.ವೆಂಕಟರಾಮಪ್ಪ, ಸಿ.ಕೆ. ಪರಶುರಾಮಯ್ಯ, ಜಿ.ಬ್ರಹ್ಮಪ್ಪ, ಬೆಳ್ಳಾವೆ ವೆಂಕಟನಾರಾಣಪ್ಪ, ಜಿ.ಎಸ್.ಸಿದ್ಧಲಿಂಗಯ್ಯ, ಬಿ.ನಂ.ಚಂದ್ರಯ್ಯ, ಸಾ.ಶಿ.ಮರುಳಯ್ಯ, ಕಮಲಾ ಹಂಪನಾ, ಬರಗೂರು ರಾಮ ಚಂದ್ರಪ್ಪ, ಎಸ್. ಜಿ. ಸಿದ್ಧರಾಮಯ್ಯ, ವೀ.ಚಿ. ಕೆ.ಬಿ.ಸಿದ್ಧಯ್ಯ, ಕೆ.ಜಿ.ನಾಗರಾಜಪ್ಪ, ಡಿ.ಕೆ.ರಾಜೇಂದ್ರ,ಎಚ್.ಜಿ.ಸಣ್ಣಗುಡ್ಡಯ್ಯ ಕವಿತಾಕೃಷ್ಣ, ಬೀಚನಹಳ್ಳಿ ಕರೀಗೌಡ, ದೊಡ್ಡರಂಗೇಗೌಡ ಪಿ.ವಿ.ನಾರಾಯಣ, ತಿ,ನಂ.ಶಂಕರನಾರಾಯಣ ಜಿ.ರಾಮಕೃಷ್ಣ, ವಡ್ಡಗೆರೆ ನಾಗರಾಜಯ್ಯ, ಬಿ.ಸುನಂದಮ್ಮ, ನಿರುಪಮ, ಎ.ಪಂಕಜ, ಮುಂತಾದ ಸಾಹಿತಿಗಳ ಸೃಜನಶೀಲ ಸಾಹಿತ್ಯ, ಸಂಶೋಧನೆ, ವಿಮರ್ಶೆ ಇತ್ಯಾದಿ ವೈವಿಧ್ಯಮಯ ಸಾಹಿತ್ಯ ಕೃಷಿ ಜಿಲ್ಲೆಯ ಆಧುನಿಕ ಸಾಹಿತ್ಯ ಪರಂಪರೆಯನ್ನು ಮೇಲ್ದರ್ಜೆಗೇರಿಸಿದೆ. ಇತ್ತೀಚಿನ ಯುವ ಕವಿಗಳು, ಮತ್ತು ಬರೆಹಗಾರರು, ಮಹಿಳಾ ಬರೆಹಗಾರ್ತಿಯರ ಸಾಹಿತ್ಯವು ಹೊಸ ದೃಷ್ಟಿಕೋನ, ಹೊಸ ಆಲೋಚನೆಗಳಿಂದ ಕೂಡಿದ್ದು ಸಾಹಿತ್ಯವನ್ನು ಅರ್ಥೈಸುವಲ್ಲಿ ಹೊಸತನವನ್ನು ಕಾಣಬಹುದಾಗಿದೆ. ರಂಗಭೂಮಿಗೆ ಗುಬ್ಬಿ ಕಂಪನಿಯ ಕೊಡುಗೆ ಏನು ಎಂಬುದು ಎಲ್ಲರೂ ತಿಳಿದಿರತಕ್ಕ ಸಂಗತಿಯೇ ಆಗಿದೆ. ಜಿಲ್ಲೆಯ ವೈವಿಧ್ಯಮಯ ಜನಪದ ಸಾಹಿತ್ಯವು ಇಂದು ಜನಪದ ವಿದ್ವಾಂಸರ ಮೂಲಕ ಬೆಳಕು ಕಂಡಿದೆ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕಲ್ಪತರು ನಾಡಿನ ಸಾಹಿತ್ಯ ಯಥೇಚ್ಚವಾಗಿದ್ದು, ಕನ್ನಡ ಸಾಹಿತ್ಯ ಚರಿತ್ರೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. 

 ಜಿಲ್ಲೆಯಲ್ಲಿ ಸಾಹಿತ್ಯದವಿಷಯಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ಜೊತೆಗೆ ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಅಲಕ್ಷಿತ ಅಥವಾ ಉಪೇಕ್ಷಿತ ಹಸ್ತಪ್ರತಿಗಳು ಬಹಲಷ್ಟು ಲಭ್ಯ ಇವೆ. ಇವುಗಳ ಬಗೆಗೆ ಹೇಳುವುದಾದರೆ, ಕೆಲವೊಂದು ಹಸ್ತಪ್ರತಿ ಭಂಡಾರಗಳಲ್ಲಿ ಸಂಗ್ರಹಗೊಂಡು ಅನಾದಾರಣೆಗೆ ಒಳಗಾಗಿರುವ ಉಪೇಕ್ಷಿತ ಹಸ್ತಪ್ರತಿಗಳೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಈ ಶಾಸ್ತ್ರಕೃತಿಗಳನ್ನು ಜರೂರಾಗಿ ಸಂಪಾದಿಸಿ ಪ್ರಕಟಗೊಳಿಸುವುದರ ಮೂಲಕ ಅವುಗಳಲ್ಲಿ ಹುದುಗಿರುವ ದೇಸಿಸಂಸ್ಕೃತಿಯ ಪರಂಪರೆಯನ್ನು ಶೋಧಿಸ ಬೇಕಾಗಿದೆ. ಉಪೇಕ್ಷಿತ ಹಸ್ತಪ್ರತಿಗಳಲ್ಲಿರುವ ಅಪಾರ ವಿಷಯ ಸಾಮಗ್ರಿಗಳನ್ನು, ಮಾಹಿತಿಗಳನ್ನು ಆಧುನಿಕ ಚಿಂತನಾ ಕ್ರಮಕ್ಕೆ ಅಳವಡಿಸ ಬೇಕಾಗಿದೆ. ಇಲ್ಲಿಯ ಮಾಹಿತಿ ಸಂಪತ್ತನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸುವುದು, ಪ್ರಾಚೀನ ನಂಬಿಕೆ, ವಿಚಾರ, ಮೌಲ್ಯಗಳನ್ನು ಸಂವಾದಕ್ಕೆ ಪ್ರೇರೇಪಿಸುವುದು, ಆಯಾ ಜ್ಞಾನಶಾಸ್ತ್ರಗಳ ಪಾರಂಪರಿಕ ಹಾಗೂ ಸಮಕಾಲೀನ ಕ್ಷೇತ್ರಗಳ ಮೌಲ್ಯ ವಿವೇಚನೆ ಮಾಡುವುದು, ಹಸ್ತಪ್ರತಿ ಸಂಪತ್ತನ್ನು ಇಂದಿನ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ ಅನ್ವಯಿಸುವುದು ಇತ್ಯಾದಿ ಕಾರ್ಯಗಳನ್ನು ಆಯೋಜಿಸಬೇಕಾಗಿದೆ. ಸಾತ್ರೆಯ ಪಟ್ಟಿಯ ವಿವರ ಎಂಬ ಹಸ್ತಪ್ರತಿಯಲ್ಲಿ, ( ಕ.ಹ.ವ.ಸೂ. ಸಂ.9 ಕ್ರ.ಸಂ.103) ಬರುವ ಶ್ರೀ ವೀರಪ್ರದಾಪ ವೀರವೆಂಕಟಪತ್ತಿರಾಯರವರು ಪೃತ್ವಿರಾಜ್ಯಗೈವಲ್ಲಿ ಆಮತು ನರಸರಾಜ ಅಯ್ಯನವರ ನಿರೂಪದಿಂದಿಂದಲ್ಸು ದಳವಾಯಿ ನಂಜರಾಜಯ್ಯನವರು ಶಂಕರ ಭಟ್ಟರಿಗೆ ಕೊಟ್ಟ ಸಾತ್ರೆಯ ಪಟ್ಟಿಉ ಕ್ರಮವೆಂತೆಂದಡೆ ಎಂಬ ಆದಿಯ ಪದ್ಯ ಹಾಗೂ ಅಂತ್ಯದಲ್ಲಿಯ ಆ ತೋಟದ ಫಲಕ್ಕೆ ಬಂದಾಗ ಮೊದಲೊರುಷ ಮಾನ್ಯ ಯರಡನೆ ವರುಷ ಮುಕ್ಕುಪ್ಪೆ ಮೂಱುನೆ ವರುಷ ವಾರ ನಾಲ್ಕನೆ ವರುಷಕ್ಕೆ ಯೆಣಿಸಿಕೊಂಬಲ್ಲಿ ದಶವಿಧ ಮರನ ಕಳಿವವಿವರ ಕೋಡಿ ಕಲ್ಲುಳಿ ಕತೆವಾಲ ಬಾವಿತಡಿ ಬಿಸಿಲ ಹೊಡೆ ಬಿಸಮರ ತಾಟಿ ಪೋಟಿ ತೊಂನ ತುರುಗ ಕಡಲ ಗರಿಕೆ ಯಿಂತೀ ದಶವಿಧದ ಮರನ ಕಳಿದು ದ್ರಷ್ಟಮರ ಸಾವಿರಕ್ಕೆ ಅಡಕೈಕ್ಷವನ್ನು ಸುಲಿವಾಗ ದಶವಿಧದ ಅಡಕೆಯ ಕಳಿವ ವಿವರ ಕಾಟಿ ಪೋಟಿ ಗೋಟು ಗಂಟಿಕೆ ಚಿಲ್ಲು ಹೊಡೆ ಹುಣುಬು ತೊಂನ್ನ ಕಡಲ ಗರಿಕೆ ಯಿಂತೀ ದಶವಿಧದ ಅಡಕೆಯಂ ಎಂಬ ವಿವರದಲ್ಲಿ ದಶವಿಧ ಅಡಕೆಯ ವಿವರ ಅಡಿಕೆ ತೋಟವನ್ನು ಬೆಳಸಿ ಅನುಭವಿಸುವ ಷರತ್ತುಗಳ ವಿವರವನ್ನು ಆರ್ಥಿಕ ಹಾಗೂ ವ್ಯವಹಾರಿಕ ಒಪ್ಪಂದದ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಗ್ರಹಿಸ ಬಹುದಾಗಿದೆ. ಇಂದು ಉಪೇಕ್ಷಿತ ಹಸ್ತಪ್ರತಿಗಳು ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಹಸ್ತಪ್ರತಿಗಳಲ್ಲಿರುವ ಮಾಹಿತಿಯನ್ನು ನಾವು ಪ್ರಾಯೋಗಿಕವಾಗಿ ಆಚರಣೆಗೆ ತರಬೇಕಾಗಿದೆ. ಉಪೇಕ್ಷಿತ ಹಸ್ತಪ್ರತಿಗಳಲ್ಲಿಯ ವಿವರಗಳನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ ಪ್ರಶ್ನೆ. ಅವರು ಏನ್ಹೇಳಿದ್ದಾರೆ ಅದನ್ನು ಮೊದಲು ಆಚರಣೆಗೆ ತರಲು ಪ್ರಯತ್ನಿಸಬೇಕು. ಅದು ದೇಸಿ ಪದ್ಧತಿಯೇ ಇರಬಹುದು. ಅದನ್ನು ಪರೀಕ್ಷಾರ್ಥವಾಗಿಯಾದರೂ ಅನುಸರಿಸಬೇಕಾಗಿದೆ. ಆ ಹಿನ್ನಲೆಯಲ್ಲಿ ನಾವು ಉಪೇಕ್ಷಿತ ಹಸ್ತಪ್ರತಿಗಳಲ್ಲಿರುವ ಮಾಹಿತಿ ಸಂಪತ್ತನ್ನು ಒಂದು ರೀತಿ ಜನತೆಯ ಕಲ್ಯಾಣದ ಹಿನ್ನಲೆಯಲ್ಲಿ ಬಳಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ. ಇಂದು ನಮ್ಮ ಪರಂಪರೆಯ ದೇಸಿಸಂಸ್ಕೃತಿಯನ್ನು ಗುರುತಿಸಿ ಅದನ್ನು ಉಳಿಸಿ ಬೆಳಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುವ ತುರ್ತು ಇಂದು ನಮ್ಮೆಲ್ಲರ ಪ್ರಮುಖ ಹೊಣೆಯಾಗಿದೆ. ಒಟ್ಟಾರೆ ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯವು ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು ಕನ್ನಡ ಸಾಹಿತ್ಯ ಚರಿತ್ರೆಯ ಪರಿಧಿಯನ್ನು ವಿಸ್ತರಿಸಲು ಆಕರಗಳನ್ನು ಒದಗಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.                                            

 ಪರಾಮರ್ಶನ ಕೃತಿಗಳು:   

೧.  ಕನ್ನಡ ಸಾಹಿತ್ಯ ಚರಿತ್ರೆ,  ರಂ.ಶ್ರೀ.ಮುಗಳಿ  ಪ್ರ: ಉಷಾ ಸಾಹಿತ್ಯ ಮಾಲೆ, ಮೈಸೂರು. 1971

೨.  ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.೪-೬, ಸಂ.ಜಿ.ಎಸ್.ಶಿವರುದ್ರಪ್ಪ

      ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೮.

೩.ಮಹಾನಾಡ ಪ್ರಭುಗಳು ( ಬಿಜ್ಜಾವರ – ಮಧುಗಿರಿ ವೀರಶೈವ ಅರಸುಮನೆತನಗಳು) 

    ಸಂ:ಆರ್ .ಬಸವರಾಜು, ಎಸ್ ಪರಮಶಿವಮೂರ್ತಿ, ನೊಳಂಬ ವೀರಶೈವ ಸಂಘ, ಬೆಂಗಳೂರ. 1995.  

೪.ಎನ್. ಯೋಗೀಶ್ವರಪ್ಪ‌: ಕಲ್ಪಶೋಧ, ಪ್ರಗತಿ ಗ್ರಾಫಿಕ್ಸ್‌, ಬೆಂಗಳೂರು, ೨೦೧೨

೫. ಸಿ.ನಾಗಭೂಷಣ 

    ೧. ಶರಣಸಾಹಿತ್ಯಸಂಸ್ಕೃತಿ ಕೆಲವು ಅಧ್ಯಯನಗಳು ಕನ್ನಡ ಸಾಹಿತ್ಯಪರಿಷತ್,   ಬೆಂಗಳೂರು -2000

    ೨. ಸಾಹಿತ್ಯ-ಸಂಸ್ಕೃತಿ ಹುಡುಕಾಟ ಅಮೃತ ವರ್ಷಿಣಿ ಪ್ರಕಾಶನ, ಯರಗೇರ - ರಾಯಚೂರು, 2002

    ೩. ತೋಂಟದ ಸಿದ್ಧಲಿಂಗೇಶ್ವರ, ಶ್ರೀ.ಸಿದ್ಧಲಿಂಗೇಶ್ವರ ಪ್ರಕಾಶನ   ಸರಸ್ವತಿ ಗೋದಾಮ,     ಗುಲಬರ್ಗಾ- 2006    

    ೪. ವೀರಶೈವ ಸಾಹಿತ್ಯ-ಸಂಸ್ಕೃತಿ: ಕೆಲವು ಒಳನೋಟಗಳುವಿಜೇತ ಪ್ರಕಾಶನ,ಗದಗ-2008, 

    ೫. ಶರಣ ಸಾಹಿತ್ಯ ದೀಪಿಕೆ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ 2017   

೬. ಎಸ್.ಶಿವಣ್ಣ, ಬಿಡುಮುತ್ತು (ಸಂಶೋಧನಾ ಲೇಖನಗಳು)

    ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೪

೭. ಎಸ್. ವಿದ್ಯಾಶಂಕರ ವೀರಶೈವ ಸಾಹಿತ್ಯ ಚರಿತ್ರೆಯ೬ಸಂಪುಟಗಳು ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೧೪, ೨೦೧೫.

೮. ಜಯಮಂಗಲಿ ೬೯ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಸಂ.ಡಿ.ಎನ್.ಯೋಗೀಶ್ವರಪ್ಪ, - ಕನ್ನಡ ಸಾಹಿತ್ಯ ಪರಿಷತ್ತು . ಬೆಂಗಳೂರು, ೨೦೦೨

೯. ಕಲ್ಪಸಿರಿ - ಅಖಿಲ ಭಾರತ 69 ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರು. ಸಂ. ಡಾ. ಬಿ ನಂಜುಂಡಸ್ವಾಮಿ- 2002.

೧೦. ಚೆನ್ನುಡಿ ಸ್ಮರಣ ಸಂಚಿಕೆ, ಪ್ರ.ಸಂ.ಕೆ.ಎಸ್. ಸಿದ್ಧಲಿಂಗಪ್ಪ, ತುಮಕೂರು ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಗುಬ್ಬಿ ೧೯೯೭                                             


                                                  


              ತುಮಕೂರು ಜಿಲ್ಲೆಯ ಆಧುನಿಕ ಪೂರ್ವ ಸಾಹಿತ್ಯದ ವೈಶಿಷ್ಟ್ಯಗಳು                                                          ಡಾ. ಸಿ.ನಾಗಭೂಷಣ    ...