ಶುಕ್ರವಾರ, ಅಕ್ಟೋಬರ್ 10, 2025

ಮುರಿಗೆ ಶಾಂತವೀರ ಸ್ವಾಮಿಗಳ ಮನುರಾಜೇಂದ್ರ ತಾರಾವಳಿ

                           ಡಾ.ಸಿ.ನಾಗಭೂಷಣ


    ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಅದರಲ್ಲಿಯೂ ವೀರಶೈವ ಲಘುಸಾಹಿತ್ಯ ಪ್ರಕಾರಗಳಲ್ಲಿ ಹೆಚ್ಚಾಗಿ ತಾರಾವಳಿ ಪ್ರಕಾರವು ಬಳಕೆಯಾಗಿದೆ. ತಾರಾವಳಿ ಎಂಬ ಪದದ ಪದಶಃ ಅರ್ಥ ಗಮನಿಸುವುದಾದರೆ ತಾರೆ ಮತ್ತು ಆವಳಿ ಎಂಬ ಎರಡು ಪದಗಳು ಸೇರಿ ತಾರಾವಳಿ ಎಂದಾಗಿದೆ. ತಾರಾವಳಿ ಎಂದರೆ ನಕ್ಷತ್ರಗಳ ಸಾಲು ಎಂದರ್ಥ. ಆಗಸದಲ್ಲಿ ಪ್ರಕಾಶಮಾನವಾಗಿ ಮಿನುಗುವ ೨೭ ನಕ್ಷತ್ರ ಮಾಲಿಕೆಗಳಂತೆ ೨೭ ನುಡಿಗಳಿಂದ ಕೂಡಿದ ವಿಶಿಷ್ಟ ಸಾಹಿತ್ಯ ಪ್ರಕಾರ ತಾರಾವಳಿ ಎಂದು ಹೇಳಬಹುದು. ʻಕೇವಲ೨೭ ಪದ್ಯಗಳಲ್ಲಿ ಓರ್ವ ಮಹಿತ ವ್ಯಕ್ತಿಯ, ಓರ್ವ ಮಹಿತಳ, ಪೂಜ್ಯ ವಸ್ತುವಿನ ಸಮಗ್ರ ವಿಚಾರವನ್ನು ಸಂಕ್ಷಿಪ್ತವಾಗಿ ಅಣಿಮುತ್ತುಗಳಂತಹ ಸುಶ್ರಾವ್ಯ ತಾಳಬದ್ಧ ಕಾವ್ಯವಾಣಿಯಲ್ಲಿ ಮೆರೆದು ಮುಗಿಸತಕ್ಕ ಸಾಹಿತ್ಯಕ್ಕೆ ʻತಾರಾವಳಿ ಸಾಹಿತ್ಯ' ಎಂದು ಕರೆಯಲಾಗಿದೆ. ಅಷ್ಟಕ ಶತಕಗಳಂತೆ ಕೇವಲ ದೇವತಾಸ್ತುತಿಗಾಗಿ ಸೋತ್ರ ರೂಪದಲ್ಲಿ ಹುಟ್ಟಿಕೊಂಡ ಇದನ್ನು ಕನ್ನಡಕ್ಕೆ ತಂದು ಹುಲುಸಾಗಿ ಬೆಳೆಸಿದ ಶ್ರೇಯಸ್ಸು ವೀರಶೈವ ಕವಿಗಳಿಗೆ ಸಲ್ಲುತ್ತದೆ. ಈ ವಿಶಿಷ್ಟ ಬಗೆಯಸಾಹಿತ್ಯ ಪ್ರಕಾರವು ಬಳಕೆಗೆ ಬಂದುದು ಪ್ರೌಢದೇವರಾಯನ ಕಾಲದಲ್ಲಿ, ಸದ್ಯದ ಮಟ್ಟಿಗೆ ತಾರಾವಳಿ ಸಾಹಿತ್ಯಕ್ಕೆ ಆದಿಕೃತಿ ಮತ್ತು ಅಗ್ರಕೃತಿ ಎಂದರೆ ನೂರೊಂದು ವಿರಕ್ತರಲ್ಲಿ ಒಬ್ಬನಾದ ಕರಸ್ಥಲ ನಾಗಿದೇವನು ರಚಿಸಿದ 'ಮಡಿವಾಳಯ್ಯನ ತಾರಾವಳಿ. ತಾರಾವಳಿ ಪ್ರಕಾರದ ಎಲ್ಲ ಲಕ್ಷಣಗಳನ್ನು ಇದು ಒಳಗೊಂಡಿದೆ. ಹೀಗೆ ೧೫ನೆಯ ಶತಮಾನದಲ್ಲಿ ಕನ್ನಡದಲ್ಲಿ ಹುಟ್ಟಿದ ತಾರಾವಳಿ ಸಾಹಿತ್ಯ ಅಲ್ಲಿಂದ ಮುಂದೆ ೧೯ನೆಯ ಶತಮಾನದವರೆಗೂ ಉಳಿದ ಲಘುಸಾಹಿತ್ಯ ಪ್ರಕಾರಗಳ ಜೊತೆಗೆ ಸರಿದೊರೆಯಾಗಿ ಬೆಳೆದು ಬಂದಿದೆ. ಅದರಲ್ಲೂ ೧೫, ೧೬, ೧೭ ಶತಮಾನಗಳು ತಾರಾವಳಿಯ ಸುಗ್ಗಿಯ ಕಾಲವೆನಿಸಿವೆ.

     ತಾರಾವಳಿ ಎಂದರೆ ಕೇವಲ ೨೭ ನುಡಿಗಳ ಸಾಹಿತ್ಯ ಪ್ರಕಾರ ಎನ್ನುವ ಸಾಂಕೇತಿಕ ಅರ್ಥವನ್ನು ಕಳೆದುಕೊಂಡು ಅದೊಂದು ಸ್ವಚ್ಚಂದ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದುದು ವ್ಯಕ್ತವಾಗುತ್ತದೆ.ತಾರಾವಳಿಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಇದೊಂದು ಹಾಡುಗಬ್ಬವಾಗಿದೆ. 

     ಇಪ್ಪತ್ತೇಳು ನುಡಿಗಳನ್ನು ಹೊಂದಿರುವ ತಾರಾವಳಿಗಳಲ್ಲಿ ಪ್ರಾರಂಭದಲ್ಲಿ ಪಲ್ಲವಿ, ಅಂತ್ಯದಲ್ಲಿ ಒಂದು ಅಥವಾ ಎರಡು ಕಂದಗಳು ಇಲ್ಲವೇ ವೃತ್ತ ಇರುತ್ತದೆ. ಆದರೆ, ಕೆಲವು ತಾರಾವಳಿಗಳು ಇದಕ್ಕೆ ಹೊರತಾಗಿವೆ ಆದಿಪ್ರಾಸ ಕಡ್ಡಾಯವಾಗಿದ್ದು ಅಂತ್ಯ ಪ್ರಾಸವು ಕೆಲವು ತಾರಾವಳಿಗಳಲ್ಲಿ ಕಂಡು ಬರುತ್ತವೆ. ಪ್ರಾಸರಹಿತವಾದ ತಾರಾವಳಿಗಳು ಕಂಡುಬಂದಿವೆ. ತಾರಾವಳಿ ಸಾಹಿತ್ಯ ವನ್ನು “ರೂಪದ ದೃಷ್ಟಿಯಿಂದ ನೋಡಿದಾಗ ಹೆಚ್ಚಿನ ತಾರಾವಳಿಗಳು ರಗಳೆಯ ನಡೆಯನ್ನು ಅನುಸರಿಸುತ್ತದೆ. ಇದೆ ಅವುಗಳ ಮೂಲ ಛಂದಸ್ಸಾಗಿದ್ದು ಮುಂದೆ ಕಂದ ತ್ರಿಪದಿ, ಷಟ್ಪದಿ, ವೃತ್ತಗಳು ಎಡೆಪಡೆದು ರೂಪ ವೈವಿಧ್ಯವನ್ನು ಸಾಧಿಸುವಂತೆ ತೋರುತ್ತದೆ. ಇವು ತಾರಾವಳಿಯ ಬಾಹ್ಯ ಲಕ್ಷಣಗಳು. ಇನ್ನು ಆಂತರಿಕ ಲಕ್ಷಣಗಳಲ್ಲಿ ತಾರಾವಳಿ ಅಳವಡಿಸಿ ಕೊಂಡ ವಸ್ತು, ಭಾಷೆ, ರಸ- ರಸಭಾವಗಳು ಸಮಾವೇಶಗೊಳ್ಳುತ್ತವೆ. ತಾರಾವಳಿಗಳ ವಸ್ತು ಹೆಚ್ಚಾಗಿ ಸ್ತುತಿ ಪರವಾದುದು. ಶಿವಶರಣರು, ಮಹಿಮಾಸ್ಥಾನ ಯಾತ್ರೆ ಇತ್ಯಾದಿ ಕುರಿತ ಸ್ತುತಿರೂಪದ ವರ್ಣನೆ ಭಕ್ತಿಶೃಂಗಾರ ರಸ ಪ್ರತಿಪಾದನೆ, ಶಿಷ್ಟ-ಜಾನಪದ ಮಿಶ್ರ, ಸರಳಭಾಷೆಯ ಬಳಕೆ- ಇವು ಇಲ್ಲಿ ಎದ್ದು ಕಾಣುತ್ತವೆ. ಕಾವ್ಯಾಂಶ ಕಡಿಮೆ; ಹಾಡುಗಬ್ಬವಾಗಿರುವುದರಿಂದ ರಾಗರಮ್ಯತೆ, ಗೇಯ ಗುಣ ಹೆಚ್ಚು” ಹೆಣೆಯುವಿಕೆ ತಾರಾವಳಿಯ ಮುಖ್ಯ ಲಕ್ಷಣ ವ್ಯಕ್ತಿ ಹೆಸರುಗಳನ್ನಾಗಲಿ, ವಸ್ತುನಾಮವನ್ನಾಗಲಿ, ಛಂದಸ್ಸಿಗನುಗುಣವಾಗಿ ಜೋಡಿಸುವುದಾಗಿದೆ. 

ವಸ್ತುವಿನ ದೃಷ್ಟಿಯಿಂದ ತಾರಾವಳಿಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು.

೧) ಸ್ತುತಿ ರೂಪದ ತಾರಾವಳಿಗಳು

೨) ಜಾತ್ರೆ, ಪೂಜೆ, ಪಲ್ಲಕ್ಕಿ ವರ್ಣನಾಪರ ತಾರಾವಳಿಗಳು

೩) ತತ್ವ ಪ್ರಧಾನ ತಾರಾವಳಿಗಳು

೪) ಐತಿಹಾಸಿಕ ಸಂಗತಿಗಳನ್ನೊಳಗೊಂಡ ತಾರಾವಳಿಗಳು

ಇವುಗಳಲ್ಲಿ ಪ್ರಮುಖವಾಗಿ ಶಿವಸ್ತುತಿ, ಗಣಸ್ತುತಿ, ಶರಣಸ್ತುತಿ, ವಿರಕ್ತರ ಸ್ತುತಿ ಎಂದು ಉಪಭಾಗಗಳನ್ನು ಕಲ್ಪಿಸಬಹುದು. ವಿರಕ್ತರ ಸ್ತುತಿಪರವಾದ ಕೃತಿಗೆ ಒಂದು ಅತ್ಯುತ್ತಮ ನಿದರ್ಶನ ಇಮ್ಮಡಿ ಮುರಿಗಾ ಗುರುಸಿದ್ಧರʻಮುರಿಗೆ ತಾರಾವಳಿ'. ತಾರಾವಳಿ ಪ್ರಕಾರದ ಎಲ್ಲ ಲಕ್ಷಣಗಳನ್ನೊಳಗೊಂಡ ಈ ಕೃತಿ ತಾರಾವಳಿ

ಸಾಹಿತ್ಯದಲ್ಲಿಯೇ ಎದ್ದು ಕಾಣುವ ವೈಶಿಷ್ಟ್ಯವನ್ನು ಪಡೆದಿದೆ. ವಚನ ರಚನೆಯಲ್ಲಿ ಬಾರದ ವಿಷಯಗಳನ್ನು ಕಥಾರೂಪದಲ್ಲಿ ಅರುಹಲು ಈ ಸಾಹಿತ್ಯ ಜನ್ಮತಳೆಯಿತು. ಶಿಷ್ಟ ಭಾಷೆಗೆ ತೀರ ಹತ್ತಿರವಾದ ವಚನಗಳು ಸರಳಗನ್ನಡವಾಗಿದ್ದವು. ಆದರೆ ತಾರಾವಳಿಗಳು ಜನಪದ ಲಯವನ್ನು ಆಡುಭಾಷೆಯೊಂದಿಗೆ ಹೇಳುವದರಿಂದ ತಾರಾವಳಿಗಳು ಹೆಚ್ಚು ಜನಾನುರಾಗಿಯಾದವು. ಸಂಕ್ಷಿಪ್ತ ದೃಷ್ಟಿಯಿಂದ ವಚನಗಳು ಜನಪ್ರಿಯವಾದರೆ ವಸ್ತುವೈವಿಧ್ಯದಿಂದ ತಾರಾವಳಿಗಳು ಜನಮನ ಗೆದ್ದವು.

      ಶೂನ್ಯಸಿಂಹಾಸನ ಪರಂಪರೆಗೆ ಸಂಬಂಧಿಸಿದ ಚಿನ್ಮೂಲಾದ್ರಿಯ (ಚಿತ್ರದುರ್ಗ) ಬೃಹನ್ಮಠವು ಶರಣ ಪರಂಪರೆಯಲ್ಲಿ ಅಗ್ರಗಣ್ಯ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದ್ದು ಶರಣ ಸಮಾಜ-ಸಂಸ್ಕೃತಿಯ ಪುರೋಭಿವೃದ್ಧಿಗಾಗಿ ಅತಿಶಯವಾದ ಸೇವೆಯನ್ನು ಸಲ್ಲಿಸುತ್ತಲಿದೆ.    ಮುರುಘಾ ಮಠ ಪರಂಪರೆಯ ಇತಿಹಾಸವನ್ನು ತಿಳಿಯುವಲ್ಲಿ ಗುರುಪೀಠದ ಇಮ್ಮಡಿ ಗುರುಸಿದ್ಧಸ್ವಾಮಿಗಳ (೧೭೨೯) 'ಮುರಿಗೆ ತಾರಾವಳಿ” ಹಾಗೂ ಅಜ್ಞಾತ ಕೃತ 'ಮುರಿಗೆ ಸ್ವಾಮಿಗಳ ಯಕ್ಷಗಾನ ಪ್ರಮುಖ ಆಕರಗಳಾಗಿವೆ. ಮುರಿಗಾ ಶಾಂತವೀರರ ಶಿಷ್ಯರಾದ ಜ್ವಲಕಂಠ ಮಹಂತಸ್ವಾಮಿಗಳ (೧೭೧೪) 'ಮಹಂತಸ್ವಾಮಿಗಳು ನಿರೂಪಿಸಿದ,ನಾಂದ್ಯ ಸೋಮಶೇಖರ ಶಿವಯೋಗಿಗಳ (೧೭೦೦) 'ಷಟ್ಟಲಜ್ಞಾನಸಾರಾಮೃತ ಬೆಡಗಿನ ವಚನ ಟೀಕೆ" ಮತ್ತು ಮಹಾದೇವನ (೧೮೬೩/೧೮೭೦) 'ಮಹಾಲಿಂಗೇಂದ್ರ ವಿಜಯ'ಗಳನ್ನು ಗಮನಿಸಬಹುದಾಗಿದೆ. ಇವಲ್ಲದೆ ಆನುಷಂಗಿಕ ಆಕರಗಳಾದ 'ಪಟ್ಟವಲ್ಲರಿ'  ಹಾಗೂ 'ನಿರಂಜನವಂಶರತ್ನಾಕರ' ಭಾಗ(೧ಮತ್ತು ಭಾಗ ೨) ಗಳನ್ನು ಗಮನಿಸಬಹುದು. ಆದಾಗ್ಯೂ ಇವುಗಳಲ್ಲಿ ಬೃಹನ್ಮಠದ ಗುರುಪರಂಪರೆಯ ನಿರೂಪಣೆಯಲ್ಲಿ ಏಕತೆಯಿಲ್ಲ.

 ಚಿತ್ರದುರ್ಗದ  ಬೃಹನ್ಮಠದ  ಸಾಹಿತ್ಯ ಇತಿಹಾಸವನ್ನು

೧. ಜಗದ್ಗುರು ವರ್ಗದ ಸಾಹಿತ್ಯ

೨. ಶಾಖಾಮಠಾಧ್ಯಕ್ಷರ ಸಾಹಿತ್ಯ

೩. ಆಶ್ರಿತಕವಿ ಸಾಹಿತ್ಯ

ಎಂದು  ವಿಭಾಗಿಸ ಬಹುದಾಗಿದೆ. ಜಗದ್ಗುರು ವರ್ಗದಲ್ಲಿ  ಬರುವ ಜಗದ್ಗುರುಪೀಠದ ಮುರಿಗಾ ಶಾಂತವೀರರು (೧೬೫೬-೧೭೦೩) ಮುರುಘಾ ಪರಂಪರೆಯ ಮೊದಲ ಮತ್ತು ಮಹತ್ವದ ಕವಿಗಳು, ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರಾದ ಶಾಂತವೀರರು.   ಚಿನ್ಮೂಲಾದ್ರಿಯ ಪ್ರಭುಪೀಠದ ಪರಂಪರೆಗೆ ಸೇರಿದ ಕಟ್ಟಿಗೆಹಳ್ಳಿ ಸಿದ್ಧಲಿಂಗರ ಕರಕಮಲಸಂಜಾತರು, ಗುರುಕುಲತಿಲಕರು, ಸುಧರ್ಮಪಾತಕರು, ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರಾದ ಶಾಂತವೀರರು ಕೇವಲ ಒಬ್ಬ ಸ್ವಾಮಿಗಳಾಗದೆ, ಪ್ರಕಾಂಡ ಪಂಡಿತರಾಗಿ, ಹಲವು ವಿಚಾರಗಳ ಜ್ಞಾನಶಕ್ತಿಯಾಗಿ ಕವಿಗಳಾಗಿ, ಸಾಹಿತ್ಯದ ಆರಾಧಕರಾಗಿ, ಸಮಾಜಸುಧಾರಕರಾಗಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದಾರೆ. ಇವರು ಕೇವಲ ಒಂದು ಮಠದ ಪೀಠಾಧಿಪತಿಗಳಾಗದೆ ಸಮಾಜ ಸುಧಾರಕರಾಗಿ, ಧರ್ಮ ಪ್ರಚಾರಕರಾಗಿ, ದಿವ್ಯಜ್ಞಾನಿಗಳಾಗಿ, ತಪಸ್ವಿಗಳಾಗಿ ಸಾಹಿತ್ಯಜ್ಞರಾಗಿ ಇದ್ದವರು. ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲಿಯೂ ಬಲ್ಲಿದರಾಗಿದ್ದರು. 

ಮುರಿಗೆ ಶಾಂತವೀರರಿಗೆ ಮುರುಗೆಯ ದೇಶಿಕ, ಮುರಿಗೆ ಗುರು, ಮುರುಗೆರಾಯ ಮೊದಲಾದ ಹೆಸರುಗಳಿವೆ. ಇಮ್ಮಡಿ ಗುರುಸಿದ್ದರು ʻಮುರಿಗೆ ತಾರಾವಳಿ' ಯಲ್ಲಿ ಒಂದೆಡೆ ಇವರನ್ನು ಮುರಿಗೆಯ ರುದ್ರರೆಂದು ಹೆಸರಿಸಿದ್ದಾರೆ. ಅಜ್ಞಾತ ಕೃತ 'ಮುರಿಗೆ ಶಾಂತವೀರೇಶ್ವರನ ಕಂದ' ವು ಇವರಿಗೆ ಕರಿಬಸವರೆಂಬ ಹೆಸರಿದ್ದ ಅಂಶವನ್ನು ಸೂಚಿಸಿದೆ. ಸೋದೆ ಸದಾಶಿವರಾಯನ ಸ್ವರವಚನದಲ್ಲಿಯೂ ಕರಿಬಸವ ಎಂಬ ಹೆಸರು ಪ್ರಸ್ತಾಪಿತವಾಗಿದೆ.

   ಮುರಿಗೆ ಶಾಂತವೀರರ ಆಕೃತಿ ಮತ್ತು ವ್ಯಕ್ತಿತ್ವದ ಬಗೆಗೆ ಇಮ್ಮಡಿ ಗುರುಸಿದ್ಧಸ್ವಾಮಿಗಳ  ಸ್ವರವಚನ  ಹಾಗೂ 'ಪಾದಸ್ತೋತ್ರ'ದಲ್ಲಿನ ಮಂಗಳಾರತಿ ರೂಪದ ಹಾಡಿನಲ್ಲಿ ಉಲ್ಲೇಖಗಳಿವೆ. ಶಾಂತವೀರರ ವ್ಯಕ್ತಿತ್ವದ ಬಗೆಗೆ ಸಂಬಂಧಿಸಿದಂತೆ, ಅವರು ಕೈಯಲ್ಲಿ ಚೂರಿ ಕೋಲ್ತಲೆ ಪಾಗು ನಡುಸುತ್ತು, ಮೈಯಲ್ಲಿ ಗುಬ್ಬಿ ಕಟ್ಟನು ಕಟ್ಟಿ ಬಿಗಿದಿದ್ದರು ಎಂದು ಹೇಳಲಾಗಿದೆ.( ಇಮ್ಮಡಿ ಮುರಿಗಾ ಸಿದ್ಧಶಿವಯೋಗಿಗಳ ಐದು ಕೃತಿಗಳು(ಸಂ.ಬಿ.ಆರ್.‌ ಹಿರೇಮಠ) ಆನಂದಪುರ-ಶಿವಮೊಗ್ಗ, ಪು.೮೧) ಅವರು ವೀರ ಶೈವಾಚಾರ ಷಟ್ಸ್ಥಲ ಬ್ರಹ್ಮಿ, ಪರಮೇಶ್ವರನವತಾರ, ಪರಸಮಯ ದೂಷಕರ ಎದೆಗೂಟ, ಷಟ್ಸ್ಥಲ ಚಕ್ರವರ್ತಿ, ಪ್ರಣಮ ಶಾಸ್ತ್ರದಿ ಜಾಣರೆಂದು ಪ್ರಕೀರ್ತಿತರಾಗಿದ್ದರು ಇತ್ಯಾದಿಯಾಗಿ ವಿವರಗಳನ್ನು ಕಾಣಬಹುದಾಗಿದೆ.ಇವರು ಮಠಾಧೀಶರಾಗಿ, ಪ್ರಕಾಂಡ ಪಂಡಿತರಾಗಿ, ಕವಿಗಳಾಗಿ, ಸಾಹಿತ್ಯದ ಸಾಧಕರಾಗಿ, ಸಮಾಜ ಸುಧಾರಕರಾಗಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ  ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದವರು.

   ಮುರಿಗೆ ಶಾಂತವೀರರ ಪ್ರಕಾಂಡ ಪಾಂಡಿತ್ಯದ ಬಗೆಗೆ, ಅವರನ್ನು ರಾಜಾಧಿರಾಜ ಕವಿಸುರಭೂಜರರು, ನಿಗಮಾಗಮ ಪೌರಾಣ ನಿಪುಣ ನೀತಿಭೂಷಣರು ಎಂದು  ಉಲ್ಲೇಖಿಸಿದ್ದಾರೆ. ಇಮ್ಮಡಿ ಗುರುಸಿದ್ಧರ ಮನದಳಲು ಕಾವ್ಯಾಭಿವ್ಯಕ್ತಿ ರೂಪದಲ್ಲಿ ಹೊರಹೊಮ್ಮಿದೆ. ಚಿಮ್ಮುಲಗಿರಿದುರ್ಗದ ದೊರೆ ಬ್ರಹ್ಮಭೂಪಾಲನಿಗೆ ಶಾಂತವೀರರು ವರವಿತ್ತ ಸಂಗತಿ ಉಕ್ತವಾಗಿದೆ. ಮುರಿಗಾ ಶಾಂತವೀರರು ನಿಗಮಾಗಮ ಪೌರಾಣ ನೀತಿಭೂಷಣರೆಂತೋ ಅಂತೆ ನವರಸಭರಿತ ಕಾವ್ಯನಾಟಕಾಲಂಕಾರ ವಿವಿಧ ಗೂಡಾರ್ಥ ಚಿತ್ರಾರ್ಥ ವಿಸ್ತಾರ ಸವೆಯದುಭಯ ವ್ಯಾಕರಣ ಮುಖ್ಯ ಸಾಹಿತ್ಯಭವನ ಭುವನ ಸ್ತ್ಯುತರಾಗಿ ಮೆರೆದವರು ಎಂದು ಸ್ತುತಿಸಲ್ಪಟ್ಟಿದ್ದಾರೆ.

ಮಹಾದೇವ ಕವಿ ತನ್ನ ಮಹಾಲಿಂಗೇಂದ್ರವಿಜಯದಲ್ಲಿ, ಅಲ್ಲಮನ ಅಪರಾವತಾರದಂತಿದ್ದ ಶಾಂತವೀರನು ಹಸ್ತದಲ್ಲಿ ವೀಣಾನಾದದೊಡನೆ ದೇಶಗಳ ಸಂಚಾರ ಮಾಡುತ್ತ ಚಿನ್ಮೂಲಗಿರಿಯ ಬಳಿಗೆ ಬಂದಾಗ ಅವರ ವೇಷದ ಬಗೆಗೆ  ಮಾಹಿತಿಯನ್ನು  ಕೊಡ ಮಾಡಿದ್ದಾನೆ. ಭಸ್ಮಧಾರಣೆ, ಕೊರಳಲ್ಲಿ ಧರಿಸಿದ ರುದ್ರಾಕ್ಷಿಮಾಲೆ, ಎಡಗೈಯಲ್ಲಿ ಹಿಡಿದಿರುವ ಕಿನ್ನರವೀಣೆ, ಜಪಿಸುವ ಪಂಚಾಕ್ಷರಿಯ ಮಂತ್ರ, ಬಲಗೈಯಲ್ಲಿ ಮುರಿಗೆಯ ಮುದ್ಗರ, ತಲೆಗೆ ಸುತ್ತಿದ ಕೇಶಾಂಬರ, ಬಿಗಿದು ಕಟ್ಟಿರುವ ಕೌಪೀನದ ಜೀಲು, ಎದೆಬೆನ್ನಿಗೆ ಮುರಿಗೆಯಾಗಿ ಹೊದ್ದ ಶಾಲು  ಈ ರೀತಿಯಾಗಿ ವ್ಯಕ್ತಿತ್ವದ ಬಗೆಗೆ ಮಾಹಿತಿಯನ್ನು ಕೊಡಮಾಡಿದ್ದಾನೆ. ( ಮಹಾಲಿಂಗೇಂದ್ರವಿಜಯ ಸಂ: ಎಲ್.‌ ಬಸವರಾಜು ಸಂ.೧೭, ಪ.ಸಂ.೬)

     ಶಾಂತವೀರರ ಸ್ವಕೀಯ ಸಂಗತಿಗಳ ಬಗೆಗೆ  ಯಾವುದೇ ಖಚಿತ ಮಾಹಿತಿಯನ್ನು ತಿಳಿಸಿರುವುದಿಲ್ಲ. ಇವರ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸಲು ಇಮ್ಮಡಿ ಮುರಿಗಾ ಗುರುಸಿದ್ಧರ ಮುರಿಗೆತಾರಾವಳಿ, ಸೋಮಶೇಖರ ಶಿವಯೋಗಿಗಳ ಷಟ್ಟಲ ಜ್ಞಾನ ಸಾರಾಮೃತದ ಬೆಡಗಿನ ವಚನಟೀಕೆ, ಅಜ್ಞಾತಕೃತ ಮುರಿಗೆಯ ಸ್ವಾಮಿಗಳ ಯಕ್ಷಗಾನ, ಜ್ವಲಕಂಠಮಹಾಂತಸ್ವಾಮಿಗಳ ನಾಂದ್ಯ, ಮಹಾದೇವನ ಮಹಲಿಂಗೇಂದ್ರ ವಿಜಯ ಮೊದಲಾದ ಕೃತಿಗಳು ಪ್ರಮುಖ ಆಕರಗಳಾಗಿ ಬಳಸಿಕೊಳ್ಳ ಬಹುದಾಗಿದೆ. 

ಮುರಿಗೆ ಶಾಂತವೀರಸ್ವಾಮಿಗಳ ಶಿಷ್ಯರ ಲಘುಕೃತಿಗಳಲ್ಲಿಯ ಇವರ  ಬಗೆಗಿನ ಉಲ್ಲೇಖಗಳು:

ಮುರಿಗೆ ಶಾಂತವೀರ ಸ್ವಾಮಿಗಳ ಬಗೆಗೆ ಸಂಬಂಧಿಸಿದ ಇತರೆ ಉಲ್ಲೇಖಗಳ ಬಗೆಗೆ ಎಸ್.ಶಿವಣ್ಣನವರು ವಿವಿಧ ಮೂಲಗಳಿಂದ ಸಂಗ್ರಹಿಸಿ ಕೊಡ ಮಾಡಿದ್ದಾರೆ. (ಎಸ್.ಶಿವಣ್ಣ: ಬಿಡುಮುತ್ತು, ಪು.೩೮೬-೩೮೮) ಕ್ರಿ. ಶ. ೧೬೭೮ ರಲ್ಲಿ ಪ್ರತಿಯಾದ 'ಸೂಕ್ತಿಸಂಗ್ರಹಟೀಕಾ' ಎಂಬ ಕೃತಿಯ ಅಂತ್ಯದಲ್ಲಿ 'ಲಿಖಿತಾ ಮುರಿಗಾ ಶಾಂತವೀರೇಶ ಶಿವಯೋಗಿ ಮುದೇ' ಎಂದಿದೆ. ವಿರೂಪಾಕ್ಷಾಂಕಿತದ 'ಹರಿಶ್ಚಂದ್ರ ಕಥೆ' ಶರಷಟ್ಟದಿ ಕೃತಿಯ ಅಂತ್ಯದ ಪುಷ್ಟಿಕಾ ಭಾಗದಲ್ಲಿ 'ಲಿಖಿತವ ಬರದರು ಮುರಿಗೆ ಶಾಂತವೀರಸ್ವಾಮಿಗಳು' ಎಂದಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ (ಮೈಸೂರು) ಸಂಗ್ರಹದಲ್ಲಿನ ಕೆ. ೧೧೫ನೆಯ ಓಲೆ ಕಟ್ಟನ್ನು 'ಶ್ರೀ ಗುರು ಶಾಂತವೀರೇಶ್ವರನ ಕೃಪಾಕಟಾಕ್ಷದಿಂದ' ಬರೆದಂತೆ ಅಂತ್ಯದಲ್ಲಿ ತಿಳಿಸಿದೆ. ಮಹಾಂತ ಸ್ವಾಮಿ ( ೧೭೧೪) ಕೃತ ಅಯ್ಯನವರ ನಾಂದ್ಯದಲ್ಲಿ, ಇವರನ್ನು ಕುರಿತು,  ಭುವನದಿ ಭವಹರನು ತಾನೊಂದು ರೂಪದಿ ಶಿವಲೋಕದಿಂದಿಳಿದ ಮುರಿಗೆಯ ಶಾಂತವೀರೇಶಾ ಎಂದು ಉಲ್ಲೇಖಿಸಿದೆ. ಕಪ್ಪಿನಂಜಯ್ಯನ ನಾಂದ್ಯದಲ್ಲಿಯೂ ಶಾಂತವೀರರ ಬಗೆಗೆ ಪ್ರಸ್ತಾಪ ಇದೆ. ಶಿವಲಿಂಗದೇವ (೧೭೦೦)-ನ ಸ್ವರವಚನದಲ್ಲಿ, ಶಾಂತವೀರಸ್ವಾಮಿಗಳನ್ನು ಮುರಿಗೆ ಕರಿಬಸವರಾಜೇಂದ್ರರೆಂದಿದೆ. ಸೋದೆ ಸದಾಶಿವರಾಜ ತಾನು ರಚಿಸಿರುವ 'ಗುರುಸಿದ್ದೇಶ್ವರ ಸ್ತೋತ್ರ'ದಲ್ಲಿ ಶಾಂತವೀರಸ್ವಾಮಿಗಳನ್ನು ಮುರಿಗೆ ಕರಿಬಸವೇಶರೆಂದು ಹೆಸರಿಸಿದ್ದಾನೆ. ಇದರಂತೆ ಅವನಿಂದ ರಚಿತವಾದ ಸ್ವರವಚನವೊಂದರಲ್ಲಿ ಕರಿಬಸವೇಶನೆಂದಿದೆ.

ಮುರಿಗೆ ಶಾಂತವೀರರ ಕಾಲ :

ಆರ್. ನರಸಿಂಹಾಚಾರ್ಯರು ಮುರಿಗೆ ಶಾಂತವೀರರ ಕಾಲದ ಬಗೆಗೆ 'ತೋಂಟದ ಸಿದ್ಧಲಿಂಗದೇವರ ಪ್ರಶಿಷ್ಯರಾದುದರಿಂದ ಇವರ ಕಾಲವು ಸುಮಾರು ೧೫೩೦ ಆಗಬಹುದು' ಎಂದಿದ್ದಾರೆ. ಅನಂತರ ಅವರೇ ಕವಿಚರಿತೆ ಸಂಪುಟದ ಪರಿಶಿಷ್ಟ ೨ ರಲ್ಲಿ 'ಸೋಮಶೇಖರ ಶಿವಯೋಗಿ (ಪು. ೫೨೭) ಕೊಟ್ಟಿರುವ ತೋಂಟದ ಸಿದ್ದಲಿಂಗನ ಶಿಷ್ಯ ಪರಂಪರೆಯ ಪ್ರಕಾರ ಮುರಿಗೆಯ ಶಾಂತವೀರರು ಆ ಗುರುವಿನಿಂದ ಆರನೆಯವನಾಗುತ್ತಾರೆ. ಇದು ನಿಜವಾಗಿದ್ದ ಪಕ್ಷದಲ್ಲಿ ಇವನ ಕಾಲವನ್ನು ಸುಮಾರು ಮೂವತ್ತು ವರುಷ ಈಚೆ ಹಾಕಬೇಕಾಗುತ್ತದೆ' ಎಂದಿದ್ದಾರೆ.(ಆರ್.‌ ನರಸಿಂಹಾಚಾರ್ಯ, ಕವಿಚರಿತೆ ಸಂ,೨, ಪು.ಸಂ.೨೧೨) ಪುನಃ ಕವಿಚರಿತೆಯ ತೃತೀಯ ಸಂಪುಟದಲ್ಲಿ(ಪು.ಸಂ.೨೧೨) ಇಮ್ಮಡಿ ಮುರಿಗೆಯಸ್ವಾಮಿಯ ಕಾಲದ ಬಗೆಗೆ ವಿವೇಚಿಸುತ್ತ 'ಕವಿಯು ಗುರುಸಿದ್ದ ತೋಂಟದ ಸಿದ್ದಲಿಂಗನ ಶಿಷ್ಯ ಪರಂಪರೆಯಲ್ಲಿ ಏಳನೆಯವರಾಗುವುದರಿಂದ ಇವರ ಕಾಲವು ಸುಮಾರು ೧೬೬೦ ಆಗಬಹುದು.... ಇದರಿಂದ ಗುರು ಮುರಿಗೆಯ ಶಾಂತವೀರ ಮುಂತಾದವರ ಕಾಲವನ್ನು ಯಥೋಚಿತವಾಗಿ ಈಚೆಗೆ ಹಾಕಬೇಕಾಗುತ್ತದೆ' ಎಂದಿದ್ದಾರೆ?” ಆದರೆ ನರಸಿಂಹಾಚಾರರು ನಿರ್ದಿಷ್ಟವಾಗಿ ಕಾಲವನ್ನು ಸೂಚಿಸಿಲ್ಲ.

   ಎಂ.ಎಸ್.ಬಸವರಾಜಯ್ಯನವರು ತಮ್ಮ ಲೇಖನವೊಂದರಲ್ಲಿ,  ಮುರಿಗೆ ಶಾಂತವೀರರ ಕಾಲದ ಬಗೆಗೆ, ಇಮ್ಮಡಿ ಮರುಘ ಗುರುಸಿದ್ಧದೇಶಿಕೇಂದ್ರರು ತಮ್ಮ ಕೃತಿಯಲ್ಲಿ ʻ ಸ್ವಭಾನು ಸಂವತ್ಸರ ಅಧಿಕ ಶ್ರಾವಣ ಶುದ್ಧ ಬಿದಿಗೆ ಸೋಮವಾರ ರಾತ್ರಿ ಮೂರುವರೆ ತಾಸಿನಲ್ಲಿ (ಅಂದರೆ ಕ್ರಿ. ಶ. ೫-೭-೧೭೦೩ ರಲ್ಲಿ) ಶ್ರೀಮುರುಘ ಶಾಂತವೀರದೇಶಿಕೇಂದ್ರರು ಶಿವಲಿಂಗದೊಳು ಬೆರದರೆಂದು ಸ್ಪಷ್ಟಪಡಿಸಿರುವರು.(ಎಂ.ಎಸ್. ಬಸವರಾಜಯ್ಯ, ಶ್ರೀ ಮುರುಘಾ ಶಾಂತವೀರದೇಶಿಕೇಂದ್ರ ಮಹಾಸ್ವಾಮಿಯವರು, ಗುರುಕುಲ, ಪು.೪೦೫)    ಈ ಹೇಳಿಕೆಯನ್ನು ಆಧರಿಸಿ, ಒಟ್ಟಿನಲ್ಲಿ ಇವರ ಜನನ ಕಾಲಮಾತ್ರ ನಮಗೆ ದೊರಕಿಲ್ಲವಾದರೂ ಶಿವಲಿಂಗ ದೊಳಗೆ ಬೆರೆತ ಕಾಲ ಸ್ಪಷ್ಟವಾಗಿ ಗೋಚರಿಸುವುದರಿಂದ, ಜನನಕಾಲ ಖಚಿತವಾಗುವವರೆಗೆ, ಇವರ ಕಾಲವನ್ನು ಸ್ಥೂಲವಾಗಿ ಕ್ರಿ. ಶ. ೧೬೫೬-೧೭೦೩ ಎಂದು ಸದ್ಯಕ್ಕೆ ನಿರ್ಧರಿಸಬಹುದು” ಎಂದಿದ್ದಾರೆ.(  ಇದನ್ನೇ ಎಸ್.ಶಿವಣ್ಣನವರು ಸ್ವೀಕರಿಸಿದ್ದಾರೆ. ಇನ್ನು ಕೆಲವು ವಿದ್ವಾಂಸರು ಕ್ರಿ.ಶ. ೧೬೪೦-೧೭೦೩ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಈ ಹೇಳಿಕೆಯನ್ನು ಪುಷ್ಠೀಕರಿಸುವ ಆಧಾರಗಳು ಲಭ್ಯವಿಲ್ಲ.

ಮುರಿಗೆ ಶಾಂತವೀರರನ್ನು ಕುರಿತ ಕೃತಿಗಳು

ಇವರನ್ನು ಕುರಿತು,ʻಮುರಿಗೆ ಸ್ವಾಮಿಗಳ ಯಕ್ಷಗಾನ, ಅಜ್ಞಾತ ಕೃತ 'ತರಳವೃತ್ತ'ಅಷ್ಟಕ ಶಾಂತವೀರಸ್ವಾಮಿಗಳ ಸ್ತುತಿ - ಮೂರು ವಾರ್ಧಕ ಷಟ್ಟದಿಗಳ ʻಗುರು ಮುರಿಗೇಂದ್ರ ಷಟ್ಟದಿ': ೨೫ ಕಂದಗಳ ಮುರಿಗೆ ಶಾಂತವೀರಸ್ವಾಮಿಗಳ ಸ್ತುತಿಯುಳ್ಳ ಟೀಕಾಸಹಿತ ಅಜ್ಞಾತಕೃತ 'ಮುರಿಗೆ ಶಾಂತವೀರೇಶ್ವರನ ಕಂದ': . ಮುರಿಗೆ ಶಾಂತವೀರರ ಅಂಕಿತನಾಮವನ್ನೇ ಸ್ವರವಚನಾಂಕಿತವಾಗಿ ಬಳಸಿಕೊಂಡು ಅಜ್ಞಾತ ಕೃತಿಕಾರನೊಬ್ಬ ರಚಿಸಿರುವ ಎರಡು ಸ್ವರ ವಚನಗಳು ಉಪಲಬ್ಧವಿವೆ.

    ಮುರುಘಾ ಸಂಪ್ರದಾಯದ ಮೂಲ ಕರ್ತೃಗಳಾದ ಮುರಿಗಾ ಶಾಂತವೀರರು ಚಿತ್ರದುರ್ಗ ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರು, ವೀರಶೈವ ಧರ್ಮನಿಷ್ಠರು, ಕನ್ನಡ-ಸಂಸ್ಕೃತ ಉಭಯಭಾಷಾಪಂಡಿತರು, ತತ್ವಸಾಹಿತ್ಯ ಸಿದ್ಧಾಂತ ನಿಷ್ಣಾತರು, ಅನುಭಾವಿಗಳು, ಸೃಜನಶೀಲ ಕವಿಗಳು ಆಗಿದ್ದು, ಒಟ್ಟು ಪ್ರಕಟಿತ ಮತ್ತು ಅಪ್ರಕಟಿತ ಕೃತಿಗಳನ್ನೊಳಗೊಂಡಂತೆ  ೧೭ ಕೃತಿಗಳನ್ನು ರಚಿಸಿದ್ದಾರೆ. 

ಮುರಿಗೆ ಶಾಂತವೀರ ಕೃತಿಗಳು:

ಆರ್. ನರಸಿಂಹಾಚಾರ್ಯರು ಶಾಂತವೀರರ ಹೆಸರಿನಲ್ಲಿ ಈ ಕೆಳಕಂಡ ೪ ಕೃತಿಗಳನ್ನು ಸೂಚಿಸಿದ್ದಾರೆ. 

೧. ಏಕೋನವಿಂಶತಿಪ್ರಬಂಧ

೨. ಪ್ರಭುಲಿಂಗದ ಕಂದ

೩. ವೈರಾಗ್ಯ ಷಟ್ಟದಿ

೪. ಶಿವಲಿಂಗಮಹಿಮಾ ಷಟ್ಟದಿ

ಅಲ್ಲದೆ  ಹಮ್ಮೀರ ಕಾವ್ಯ ಅಥವಾ 'ರಾಜೇಂದ್ರ ವಿಜಯ' ವನ್ನು ಮುರಿಗೆ ದೇಶಿಕನ ಕರ್ತೃತ್ವದಲ್ಲಿ ಹೆಸರಿಸಿದ್ದಾರೆ.

ಎಂ. ಎಸ್. ಬಸವರಾಜಯ್ಯನವರು ಈ ಮುಂದಿನ ಕೃತಿಗಳನ್ನು ಮುರಿಗೆಯ ಶಾಂತವೀರರದೆಂದು ಸೂಚಿಸಿದ್ದಾರೆ. 

೧. ಕಟ್ಟಿಗೆಹಳ್ಳಿಸ್ವಾಮಿಗಳ ತಾರಾವಳಿ 

೨. ನೀಲಾಂಬಿಕೆ ಲಲಿತಸ್ತೋತ್ರ 

೩. ಪಾರಿಜಾತ (ಭಾ.ಷ.)

೪. ಮನುರಾಜೇಂದ್ರನ ತಾರಾವಳಿ

೫. ಮುರಿಗೆಸ್ವಾಮಿಗಳ ಮುಕ್ತಿಪ್ರದೀಪಿಕೆ'

೬. ಮುರುಗೆಸ್ವಾಮಿಗಳ ವಚನ

೭. ಲಿಂಗಸಾವಧಾನ ಪ್ರಣವ ಸಂಬಂಧಿ ಸಮಾಧಿ ಕ್ರಿಯದ ಉದ್ದರಣೆ (ಪಟ್ಟದಿ)

(ಕವಿಚರಿತೆಕಾರರು ಈ ಕೃತಿಯನ್ನೇ 'ಮುರಿಗೆ ಸ್ವಾಮಿಗಳ ಸಮಾಧಿಕ್ರಿಯೆ' ಎಂದು ಹೆಸರಿಸಿದಂತಿದೆ.)

ಇದಲ್ಲದೆ ಮುರಿಗೆ ದೇಶಿಕನ ಹೆಸರಿನಲ್ಲಿ ಏಳು ಪದ್ಯಗಳನ್ನುಳ್ಳ (ಲಿಂ)ಗದ ಮಹಿಮೆ' ಎಂಬ ಕೃತಿ ಲಭ್ಯವಿದೆ.” 

  ಇವುಗಳಲ್ಲದೆ ಈ ಕೆಳಗಿನ ಕೃತಿಗಳೂ ಶಾಂತವೀರರು ರಚಿಸಿರ ಬಹುದೆಂದು ಜಿ.ಜಿ. ಮಂಜುನಾಥನ್‌ರವರು  ಅಭಿಪ್ರಾಯ ಪಡುತ್ತಾರೆ.  ಲಘುಕೃತಿಗಳನ್ನು ಶೋಧಿಸಿ ಸಂಪಾದಿಸಿ, ಪರಿಷ್ಕರಿಸಿ-ಪ್ರಕಟಿಸುವ ಕಾರ್ಯವು ನಡೆಯಬೇಕಾಗಿದೆ.

೧. ಶಿವಗಣ ಚಾರಿತ್ರ

3. ಶಿವಮಹತ್ವರಸಾರ ಶಿಖಾಮಣಿ ಸಂಗ್ರಹ ಶತಕ

೫. ನಂಜುಂಡ ಚಾರಿತ್ರ

೭. ಅಮ್ಮಮೈಯ ಚರಿತ

೨. ಸೌಂದರೇಶ್ವರ ಯಕ್ಷಗಾನ

೪. ಗಿರಿಜಾದೇವಿಯ ಸಂಕೀರ್ತನ

೬. ಮುಗ್ಧರ ಚಾರಿತ್ರ

೭.ಬಿಲ್ಲಮೇಶ್ವರ ತಾರಾವಳಿ     

 ಎಸ್.‌ ಶಿವಣ್ಣನವರು  ಈಗಾಗಲೇ ಬಿಡಿ ಬಿಡಿಯಾಗಿ ಬೇರೆಡೆಗಳಲ್ಲಿ ಪ್ರಕಟವಾಗಿದ್ದ ಹಮ್ಮೀರ ಕಾವ್ಯ, ಪ್ರಭುಲಿಂಗದ ಕಂದ, ಮನುರಾಜೇಂದ್ರನ  ತಾರಾವಳಿ, ಕಟ್ಟಿಗೆಯ ತಾರಾವಳಿ, ನೀಲಾಂಬಿಕ ಲಲಿತ ಪಂಚವಿಂಶತಿ, ಹಾಗೂ ಹಸ್ತಪ್ರತಿ ರೂಪದಲ್ಲಿದ್ದ ಇತರ ಲಘುಕೃತಿಗಳಾದ, ಶಬ್ದರತ್ನಾಕರ, ಏಕೋನವಿಂಶತಿ ಪದ, ಷಡ್ವಕ್ತ್ರ ಸ್ತೋತ್ರ,  ಮುರಿಗೆಸ್ವಾಮಿಗಳು ನಿರೂಪಿಸಿದ ನಾಂದ್ಯ,  ಲಘು ಕೃತಿಗಳನ್ನು   ಒಟ್ಟುಗೂಡಿಸಿ, ಮುರಿಗೆ ಶಾಂತವೀರರು  ಸ್ವಾಮಿಗಳ ಕೃತಿಗಳು  ಎಂಬ ಹೆಸರಿನಲ್ಲಿ ಸಂಪಾದಿಸಿ ಚಿತ್ರದುರ್ಗದ ಶ್ರೀ ಬೃಹನ್ಮಠ ಸಂಸ್ಥಾನದ ಮೂಲಕ  ೧೯೮೯ ರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಶಾಂತವೀರಸ್ವಾಮಿಗಳ ಒಂಬತ್ತು ಕನ್ನಡ ಕೃತಿ ಹಾಗೂ ಸಂಸ್ಕೃತದಲ್ಲಿನ ಒಂದು ಕಿರುಕೃತಿಯೂ ಇದ್ದು ಅವುಗಳ ವಿವರವಿಂತಿದೆ.

೧. ಹಮ್ಮೀರ ಕಾವ್ಯ: ಕೃತಿಗೆ 'ರಾಜೇಂದ್ರ ವಿಜಯ'ವೆಂಬ ಮತ್ತೊಂದು ಹೆಸರಿದೆ. ೯ ಪ್ರಕರಣಗಳಲ್ಲಿನ ಚಂಪೂಕೃತಿಯ ವಸ್ತು ಅಲ್ಲಮಪ್ರಭುಗಳ ಗುರುಗಳಾದ ಪಟ್ಟದಕಲ್ಲಿನ ಅನಿಮಿಷದೇವರ ಚರಿತೆ. ಇದೇ ವಿಷಯದ ಬಗೆಗೆ 'ತಾರಾವಳಿ'ಯೊಂದನ್ನು ರಚಿಸಿದ್ದಾರೆ.

೨. ಪ್ರಭುಲಿಂಗದ ಕಂದ: ೫೩ ಕಂದಗಳನ್ನುಳ್ಳ ಶಿವಯೋಗ ನಿರೂಪಣೆ ಕಂದದ ವಸ್ತು. ಪ್ರತಿ ಕಂದವೂ ಪ್ರಾಯಿಕವಾಗಿ ರಾಜಲಿಂಗ ಪ್ರಭುವೇ ಎಂದು ಮುಗಿಯುತ್ತದೆ. ಈ ಕೃತಿಗೆ ಪರ್ವತ ಶಿವಯೋಗಿಗಳ (೧೭೦೦) ಹಾಗೂ ಅಜ್ಞಾತ ಕೃತ ಟೀಕೆಗಳಿವೆ.

೩. ನೀಲಾಂಬಿಕಾ ಲಲಿತ ಪಂಚವಿಂಶತಿ: 'ನೀಲಮ್ಮನವರ ನಾಂದ್ಯ'ವೆಂಬ ಹೆಸರೂ ಇದೆ. ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆಯ ಸ್ತುತಿ ಕೃತಿವಸ್ತು. ಭಾಮಿನೀ-ವಾರ್ಧಕಗಳಲ್ಲಿನ ೨೫ ಷಟ್ಟದಿಗಳಿವೆ. ಇಲ್ಲಿನ ಕ್ರಮಾಂಕ ೧೮, ೧೯, ೨೪ ನೆಯ ವಾರ್ಧಕಗಳಿಗೆ ಅಜ್ಞಾತಕರ್ತೃ ಕೃತ ಟೀಕೆ ಇದೆ.

೪. ವೈರಾಗ್ಯ ಷಟ್ಟದಿ: ಇದು ಸಂಕಲನ ರೂಪದ ಕೃತಿಯಾಗಿದ್ದು ೧೦೧ ವಾರ್ಧಕ ಷಟ್ಟದಿಗಳಿವೆ. ಇಲ್ಲಿನ ೯೮ ಷಟ್ಟದಿಗಳು ಮುಖಬೋಳು ಸಿದ್ದರಾಮನ (೧೫೯೬) 'ಷಟ್ಸ್ಥಲ ತಿಲಕ' ದಲ್ಲಿರುವುದನ್ನು ಎಂ. ಎಸ್. ಬಸವರಾಜಯ್ಯನವರು ಗುರುತಿಸಿದ್ದಾರೆ.

೫. ಮನುರಾಜೇಂದ್ರನ ತಾರಾವಳಿ: 'ಮುರಿಗೆಯ ನಾಗರಪತಿಭರಣ' ಅಂಕಿತದಲ್ಲಿದೆ. ಪಲ್ಲವಿ, ೧೧ಪದ ಹಾಗೂ ಅಂತ್ಯದಲ್ಲಿ ೪ ಕಂದಗಳಿವೆ. ಈ ಕೃತಿಯ ವಸ್ತು 'ಹಮ್ಮೀರ ಕಾವ್ಯ'ದಲ್ಲಿನದೇ ಆಗಿದೆ.

೬. ಕಟ್ಟಿಗೆಯ ತಾರಾವಳಿ: 'ಮುರಿಗೆಯ ರಾಯ' ಅಂಕಿತದಲ್ಲಿ ಈ ಕೃತಿಯಲ್ಲಿ ಪಲ್ಲವಿ ಹಾಗೂ ೫ ಪದಗಳಿವೆ. ಕಟ್ಟಿಗೆಯ ವಿವಿಧೋಪಯೋಗಗಳ ವಿವರಣೆ ಕೃತಿಯ ವಸ್ತು. ಕಾಷ್ಠಪುರದ ಸಿದ್ಧಲಿಂಗ ಬಗೆಯ ಉಲ್ಲೇಖ ಗಮನಾರ್ಹ.

೭. ಮುರಿಗೆ ಸ್ವಾಮಿಗಳು ನಿರೂಪಿಸಿದ ನಾಂದ್ಯ: ಸಿರಿಗೆರಿಯ 'ಬೃಹನ್ಮಠ'ದ ಸಂಗ್ರಹದಲ್ಲಿ ಈ ಕೃತಿಯ ಬಗೆಗೆ 'ಮುರಿಗೆಯ ಶಾಂತವೀರಸ್ವಾಮಿಗಳು ನಿರೂಪಿಸಿದ' ಎಂದಿದೆ. ಇದು ಇಮ್ಮಡಿ ಗುರುಸಿದ್ದರ ಹೆಸರಿನಲ್ಲಿ ಈ ಹಿಂದೆ ೧೯೮೪ ರಲ್ಲಿ ಪ್ರಕಟವಾಗಿತ್ತು. ಇದರಲ್ಲಿ ೨೪ ವಾರ್ಧಕ, ಪರಿವರ್ಧಿನಿ, ಭಾಮಿನೀ ಷಟ್ಟದಿಗಳಿವೆ. ಅಜ್ಞಾತ ಕೃತ ಟೀಕೆಯೊಂದು ಲಭ್ಯವಿದೆ.

೮. ಶಬ್ದರತ್ನಾಕರ: ೧೮೮೩ ರಲ್ಲಿ ಬೆಂಗಳೂರಿನಿಂದ ತೋವಿನಕೆರೆ ರಾಯಣ್ಣ ಈ ಕೃತಿಯನ್ನು ಕರ್ತೃವಿನ ಹೆಸರಿಲ್ಲದೆ ಪ್ರಕಾಶಪಡಿಸಿದ್ದನು. ಗದುಗಿನ 'ತೋಂಟದಾರ್ಯ ಸಂಸ್ಥಾನ ಮಠದಲ್ಲಿ'ನ ಸಂಗ್ರಹದಲ್ಲಿನ 'ಶಬ್ದರತ್ನಾರಕ'ದ ಓಲೆ ಪ್ರತಿಯಲ್ಲಿ 'ಮುರಿಗೆ ಸ್ವಾಮಿಗಳು ಸೇರಿಸಿದ' ಎಂದಿದೆ. ಹೀಗಾಗಿ ಸಂಕಲನ ಪ್ರಕಾರಕ್ಕೆ ಸಂಬಂಧಿಸಿದೆ. ಕಂದಗಳಲ್ಲಿನ ಈ ಕಿರುಕೃತಿಯ ವಸ್ತು ಪದಗಳಿರುವ ನಾನಾರ್ಥಗಳನ್ನು ತಿಳಿಸುವುದೇ ಆಗಿದೆ.

೯. ಏಕೋನವಿಂಶತಿ ಪದ: ಕೃತಿಗೆ 'ಹತ್ತೊಂಬತ್ತು ಪದ'ವೆಂಬ ಹೆಸರೂ ಉಂಟು. ೨೧ ವಾರ್ಧಕ ಷಟ್ಟದಿಗಳಲ್ಲಿರುವ ಈ ಕೃತಿಯ ವಸ್ತು ವೀರಶೈವ ಸಿದ್ಧಾಂತದ ಶಾಸ್ತ್ರಭಾಗ ವಿವರಣೆ. ಕೃತಿಗೆ ಅಜ್ಞಾತ ಕರ್ತೃಕ ಟೀಕೆಯಿದೆ.

೧೦. ಷಡ್ಡಕ ಸ್ತೋತ್ರ: ಮುರಿಗೆ ಶಾಂತವೀರರ ಸಂಸ್ಕೃತ ಕೃತಿ. ೯ ವೃತ್ತಗಳಿವೆ. ಕೆಲವು ಹಸ್ತ ಪ್ರತಿಗಳಲ್ಲಿ ೭ ವೃತ್ತಗಳಿವೆ. ಈಶ್ವರನ ಆರು ಮುಖಗಳ ವರ್ಣನೆ ಸ್ತೋತ್ರದ ವಸ್ತು. 

ಒಟ್ಟಾರೆ  ಈವರೆಗಿನ ಶೋಧನೆಯಿಂದ ಮುರಿಗಾ ಶಾಂತವೀರರ ಒಟ್ಟು ೧೭ ಕೃತಿಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ೧೦ ಕೃತಿಗಳು ಪ್ರಕಟಗೊಂಡಿದ್ದು. ಉಳಿದ ೭ ಕೃತಿಗಳು ಹಸ್ತಪ್ರತಿಯಲ್ಲಿಯೇ ಉಳಿದಿವೆ.

�ಅಪ್ರಕಟಿತ ಕೃತಿಗಳು :

೧. ಪಾರಿಜಾತ

೨. ಮುರಿಗೆಸ್ವಾಮಿಗಳ ಮುಕ್ತಿ ಪ್ರದೀಪಿಕೆ

೩. ಮುರಿಗೆ ಸ್ವಾಮಿಗಳ ವಚನ (ಸ್ವರವಚನ)

೪. ಮುರಿಗೆಸ್ವಾಮಿಗಳ ಸಮಾಧಿಕ್ರಿಯೆ

೫. ಲಿಂಗಸಾವಧಾನ ಪ್ರಣವ ಸಂಬಂಧಿ ಸಮಾಧಿ ಕ್ರಿಯೆಯ ಉದ್ಧರಣೆ

೬ ಲಿಂಗದ ಮಹಿಮ

೭ ಎರ್ದೆಗೊಂತ ಪುರಾಣ

     ತಾರಾವಳಿ ಸಾಹಿತ್ಯವೆಂದರೆ ಕೇವಲ ಭಕ್ತಿಗಾಗಿ ಸೃಷ್ಟಿಗೊಂಡ ಸಾಹಿತ್ಯವಲ್ಲ.ಅಲ್ಲಿಯೂ ಐತಿಹಾಸಿಕ ಅಂಶಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ಆದರೆ ಇಲ್ಲಿ ವಸ್ತು ಐತಿಹಾಸಿಕವಾಗಿದ್ದರೂ, ವರ್ಣನೆ ಮಾತ್ರ ಅದೇರೀತಿ ಇರುತ್ತದೆ. ಅಂದರೆ ವರ್ಣನೆಗೆ ಇಲ್ಲಿಯೂ ಕೂಡಾ ಪ್ರಮುಖ ಸ್ಥಾನ ಪ್ರಾಪ್ತವಾಗಿರುತ್ತದೆ. ಯುದ್ಧವರ್ಣನೆ, ರಾಜನ ವರ್ಣನೆ, ಆ ಕಾಲದ ಸಾಮಾಜಿಕ ವರ್ಣನೆಗಳು ಇಲ್ಲಿ ಕಂಡು ಬರುತ್ತವೆ. ಇದಕ್ಕೆ ನಿದರ್ಶನವಾಗಿ ಇವರು ರಚಿಸಿರುವ  ಮನುರಾಜೇಂದ್ರ ತಾರಾವಳಿಯನ್ನು ಉದಾಹರಿಸ ಬಹುದಾಗಿದೆ. ಈ ತಾರಾವಳಿಯು  ಲಘುಕೃತಿಯಾಗಿದ್ದು,ಈಕೃತಿಯುಪ್ರಾರಂಭದಲ್ಲಿಯ,    ಸ್ತುತಿಸಲೆನ್ನಳವೆನಿಮ್ಮತಿಶಯಮಹಿಮೆ(ಯ)ಕ್ಷಿತಿವರಹಮ್ಮೀರರಾಜೇಂದ್ರತೇಜನೆ”

ಎಂಬ ಪಲ್ಲವಿಯೊಂದಿಗೆ ಪ್ರಾರಂಭವಾಗಿ ನಂತರದಲ್ಲಿ ೧೧ ನುಡಿಪದ ಹಾಗೂ ಅಂತ್ಯದಲ್ಲಿ ೪ ಕಂದಪದ್ಯಗಳನ್ನು ಒಳಗೊಂಡಿದೆ. ಈ ತಾರಾವಳಿಯು ʻಮುರಿಗೆಯ ನಾಗರಪತಿಭರಣ' ಅಂಕಿತದಲ್ಲಿದೆ. ಈ ಕೃತಿಯ ವಸ್ತು  ಇವರ ಮತ್ತೊಂದು ಚಂಪೂಕೃತಿಯಾದ 'ಹಮ್ಮೀರ ಕಾವ್ಯ'ದಲ್ಲಿನದೇ ಆಗಿದೆ. ಈಗಾಗಲೇ  ಚಂಪೂ ಸಾಹಿತ್ಯ ಪ್ರಕಾರದಲ್ಲಿ ಈ ವಸ್ತುವನ್ನು ಕುರಿತು ಕಾವ್ಯ ರಚಿಸಿದ್ದರೂ ತಾರಾವಳಿ ಸಾಹಿತ್ಯ ಪ್ರಕಾರದಲ್ಲಿ ಹಾಡುಗಬ್ಬರೂಪದಲ್ಲಿ ಮತ್ತೊಮ್ಮೆ ರಚಿಸಲು ಕಾರಣವಾದರೂ ಏನು ಎಂದೆನಿಸುತ್ತದೆ. ಬಹುಶಃ ಚಂಪೂ ರೂಪದಲ್ಲಿರುವ ಅಲ್ಲಮಪ್ರಭುಗಳ ಗುರುಗಳಾದ ಅನಿಮಿಷದೇವರ ವಿವರ ಹಾಗೂ ಅಲ್ಲಮ ಪ್ರಭುವಿನ ಲೀಲೆಗಳು ಜನಸಾಮಾನ್ಯರಿಗೆ ನಿಲುಕಲಾರವು ಎಂದು ಪರಿಗಣಿಸಿ ದೇಸಿರೂಪದಲ್ಲಿ ಜನತೆಗೆ ತಲುಪಿಸುವ ಸಲುವಾಗಿ ತಾರಾವಳಿ ರೂಪದಲ್ಲಿ  ಅದೇ ವಿಷಯವನ್ನು ರಚಿಸಿರ ಬಹುದು ಎಂದೆನಿಸುತ್ತದೆ.

    ಈ ತಾರಾವಳಿಯ ಹನ್ನೊಂದು ನುಡಿಗಳಲ್ಲಿ, ಪ್ರಣವಾವತಾರನಾದ ಶ್ರೀ ಮನುರಾಜನ ಸ್ಥೂಲ ಪರಿಚಯ, ಪ್ರಣವಾವತಾರ ಹಮ್ಮೀರರಾಜನ ಅವಿರ್ಭಾವ, ಗೌರೀ-ಹಮ್ಮೀರ ರಾಜರ ವೈಭವದ ವಿವಾಹ,  ಹಮ್ಮೀರನ ಮೇಲೆ ಚಂಡಕೋದಂಡನು ದಂಡೆತ್ತಿ ಹೋದುದು, ಹಮ್ಮೀರನು ಕೋದಂಡನ ಸೈನ್ಯವನ್ನು ನಡುಗಿಸಿದುದು, ಹಮ್ಮೀರ ಚಂಡಕೋದಂಡರು ಗೈದ ಮಹಾಯುದ್ಧ, ಹಮ್ಮೀರ ರಾಜನ ವನಮಹೋತ್ಸವ,ಕ್ರೂರ ಮೃಗಗಳ ಹಾವಳಿಯನ್ನು ತಡೆಗಟ್ಟಲು ಕಾಲ ವಿಕ್ರಮನಾಯಕನಿಗೆ ಬೇಂಟೆಯಾಡಲು ಆಜ್ಞೆಯಿತ್ತುದು, ಹಮ್ಮೀರ ರಾಜನೂ ತಾನೂ ಶಿವಸೂತ್ರವಿಡಿದು ಬೇಟೆಯಾಡುವ ವನಕ್ಕೆ ವೈಹಾಳಿ ಹೊರಟುದು, ಹಮ್ಮೀರ ರಾಜನ ಕಡು ಶಿವಲಿಂಗನಿಷ್ಠೆ ಹಾಗೂ ಉಂಟಾದ ಕಡುದಾಹ, ಲಿಂಗಸ್ಥಾನ ಹುಡುಕಲು ಚರರ ಸುತ್ತಾಟ, ಶ್ರೀ ಗುರುವೃಷಭೇಶನು ಭಕ್ತಿಗೆ ಮೆಚ್ಚಿ ಮನುರಾಜನಿಗೆ ದೀಕ್ಷೆಯಿತ್ತು ಕರಸ್ಥಲಕ್ಕೆ ಲಿಂಗವನ್ನನುಗ್ರಹಿಸಿ ಉಪದೇಶವಿತ್ತು ಬಯಲಾದುದು, ಶ್ರೀ ಗುರುವಿನಾಣತಿಯಂತೆ ಇಷ್ಟಲಿಂಗದಲ್ಲಿ ಅನುಮಿಷ ದೃಷ್ಟಿಯಿಟ್ಟು ಶಿವಯೋಗ ಮಗ್ನನಾಗಲು ಆತನ ಮೇಲೆಗುಡಿಗಟ್ಟಿ ಆ ಗುಡಿಯನ್ನು ನಿಕ್ಷೇಪಿಸಿದುದು, ಆ ನಿಕ್ಷೇಪಿಸಿದ ಗುಡಿಯಿದ್ದ ಜಾಗದಲ್ಲಿ ಗೊಗ್ಗಯ್ಯನು ಹೂದೋಟ ಮಾಡಿಕೊಂಡಿದ್ದುದು, ಪ್ರಭುವಿನ ಸಂಕ್ಷಿಪ್ತ ಪರಿಚಯ, ಅನಿಮಿಷ ಕ್ಷೇತ್ರಕ್ಕೆ ಪ್ರಭುವಿನಾಗಮನ, ಗೊಗ್ಗಯ್ಯನಿಂದ ಅಗೆಸಿ ಆ ಗುಡಿಯ ದರ್ಶನ, ಗೊಗ್ಗಯ್ಯನ ವಿಸ್ಮಯ, ಅನಿಮಿಷನ ಇಷ್ಟಲಿಂಗವನ್ನೇ ಪ್ರಭುವು ತಮ್ಮ ಕರಸ್ಥಲದಲ್ಲಿ ಧರಿಸಿ ಹೊರಟುದು, ಆಗ ಗೊಗ್ಗಯ್ಯನು ತಡೆಗಟ್ಟಿ ವಿವರ ಕೇಳಿದುದು, ಗೊಗ್ಗಯ್ಯನಿಗೆ ಶ್ರೀ ಪ್ರಭುವು ಅನಿಮಿಷ(ಮನುರಾಜನ) ವಿಚಾರವನ್ನು ವಿವರಿಸಿ ಬೋಧಿಸಿದುದು, ತನ್ನ ಗುರುವಾದ ಅನಿಮಿಷನ ಪೂರ್ವ ಚರಿತ್ರೆಯನ್ನು ಪ್ರಭುವು ವಿವರಿಸಿದುದು, ಮುಂದೆ ಗೊಗ್ಗಯ್ಯನು ಕೇಳಿದುದುಕ್ಕೆಲ್ಲಾ ಉತ್ತರವನ್ನು ಕೊಟ್ಟು, ವಿವರಿಸಿ, ಪ್ರಭುವು ತಡಮಾಡದೆ ಮುಂದಕ್ಕೆ ಪಾದ ಬೆಳಸಿದ್ದು, ಮುಕ್ತಾಯಕ್ಕನಿಗೆ ಬೋಧೆ ನೀಡಿದುದು, ಸಿದ್ಧರಾಮನಿಗೆ ಕಲ್ಯಾಣದಲ್ಲಿ ದೀಕ್ಷೆ ಕೊಡಿಸಿದುದು, ಕೊನೆಯಲ್ಲಿ ಹಮ್ಮೀರರಾಜನ ಮಹಿಮೆ ಇತ್ಯಾದಿ ವಿವರಗಳನ್ನು ಸಂಕ್ಷಿಪ್ತವಾಗಿ  ಮುರಿಗಾ ಶಾಂತವೀರರು ಈ ತಾರಾವಳಿ ಕೃತಿಯಲ್ಲಿ ವಿವರಿಸಿದ್ದಾರೆ.

    ಮುರಿಗೆಯ ಶಾಂತವೀರರ ಇನ್ನೊಂದು ಕಾವ್ಯವಾದ ಹಮ್ಮೀರ ಕಾವ್ಯದ ವಸ್ತುವನ್ನೇ ಒಳಗೊಂಡಿರುವ 'ಮನುರಾಜೇಂದ್ರ ತಾರಾವಳಿ'ಯಲ್ಲಿ ಹಮ್ಮೀರ ಬಿರುದಾಂಕಿತ ಮನುರಾಜ ಅರಸನ ಭಕ್ತಿಯ ಚರಿತ್ರೆಯನ್ನು ರೂಪಿಸಿದ್ದಾರೆ. ಈ ಕೃತಿಯಲ್ಲಿ ಮನುರಾಜೇಂದ್ರನ ಬದುಕಿನ ಮುಖ್ಯ ಘಟನಾವಳಿಯನ್ನು ಎರಡು ನೆಲೆಗಳಲ್ಲಿ ಗುರುತಿಸ ಬಹುದಾಗಿದೆ. ೧. ದ್ವಾಪರದಲ್ಲಿ ಹಮ್ಮೀರ ರಾಜನಾಗಿದ್ದ ಈ ಮಹಿಮನು ಶಿವನಲ್ಲಿ ಐಕ್ಯನಾದನು. ೨. ಅನಿಮಿಷದೇವನಾಗಿದ್ದ ಇವನ ಕರಸ್ಥಲದ ಲಿಂಗವನ್ನು ಪ್ರಭುದೇವನು ತನ್ನ ಕರಸ್ಥಲಕ್ಕೆ ತೆಗೆದುಕೊಳ್ಳಲು ಕೈಲಾಸಕ್ಕೆ ಹೋದನು, ಅಲ್ಲಿ ಗಣಕುಲದ ನಡುವೆ ಶೋಭಿಸಿದನು ಎಂದು ಹೇಳಲಾಗಿದೆ. ಅಂದರೆ ಈ ತಾರಾವಳಿಯ ಪೂರ್ವಾರ್ಧದಕತೆ ಹಮ್ಮೀರನದ್ದಾದರೆ, ನಂತರದ ಉತ್ತರಾರ್ಧದ ಕಥೆಯು ಅನಿಮಿಷನಿಂದ ಲಿಂಗವನ್ನು ಪಡೆದು ಲೋಕಸಂಚಾರ ಕೈಗೊಂಡು ಲೋಕವನ್ನುಧ್ಧರಿಸಿದ ಅಲ್ಲಮಪ್ರಭುವಿನ ಕಥೆಯಾಗುತ್ತದೆ. ಕೊನೆಯದರಲ್ಲಿ ಇದನ್ನು ಬರೆದು ಓದಿದರೆ ಪರಶಿವನಲ್ಲಿ ಬೆರೆದು ನಿತ್ಯಪದವಿಯನ್ನು ಹೊಂದುವುದು ಸತ್ಯವೆಂದಿರುವನು. ಈ ತಾರಾವಳಿಯ ಪಲ್ಲವಿಯಲ್ಲಿ ತೇಜೋವಂತನಾದ ಹಮ್ಮೀರ ರಾಜೇಂದ್ರಗೆ ನಿನ್ನ ಮಹಿಮೆಯನ್ನು ಸ್ತುತಿಸಲು ನನ್ನಿಂದ ಸಾಧ್ಯವೆ? ಎಂದು ಕವಿ ಶಾಂತವೀರನು ಉದ್ಧರಿಸಿರುವನು.       

    ಮೊದಲನೆಯ ನುಡಿಯಲ್ಲಿ ಪಟ್ಟದಕಲ್ಲೆನ್ನುವ ನಗರವನ್ನಾಳುವ ನವನಂದನರೂ, ದಶಗುಪ್ತರಾಯರೂ, ವಿಂಶತಿ ಮೌರ್ಯರಾಯರೂ, ಸಪ್ತವಿಂಶತಿರಾಜೇಂದ್ರರೂ ಮತ್ತು ವಿಂಶತಿಚಾಳುಕ್ಯರಾಯರೂ ಆಯಾ ರಾಜವಂಶೋದ್ಧಾರಕರಾಗಿ ತ್ರೈಲೋಕ್ಯ ಚೂಡಾಮಣಿರಾಯ ಹಾಗೂ ಅವನ ಪಟ್ಟದರಾಣಿ ಮಹಾದೇವಿಯಮ್ಮನೂ ನಿಷ್ಠೆಯಿಂದ ಪ್ರಸಿದ್ಧರಾಗಿರುವರು. ಆ ಪಟ್ಟದಕಲ್ಲನ್ನು ಮಹಾಶೂರನಾದ ತ್ರೈಲೋಕ್ಯ ಚೂಡಾಮಣಿ ಮಾರ್ಕಂಡೇಯ ಪುರಾಣವನ್ನು ಕೇಳಿ ಸತ್ಪುತ್ರನಿಲ್ಲದಿದ್ದರೆ ಸದ್ಗತಿಯಿಲ್ಲವೆಂದು ತಿಳಿದು'ಬಟ್ಟಬಯಲ ಪರಶಿವ'ನನ್ನು ಧ್ಯಾನಿಸಿದರು. ಶಿವನು ಅವರ ಧ್ಯಾನಕ್ಕೆ ಪ್ರತ್ಯಕ್ಷನಾಗಿ ನಿನ್ನಿಷ್ಟಾರ್ಥವನ್ನು ಕೊಡುವೆನು, ಅಯೋನಿಜನಾದ ಕಾರಣಿಕಪುತ್ರನೊಬ್ಬನನ್ನು ಅನುಗ್ರಹಿಸುವನೆಂದು ಹೇಳಿ ಅದೃಶ್ಯನಾಗುವನು. 

        ಎರಡನೆಯ ನುಡಿಯಲ್ಲಿ ತ್ರೈಲೋಕ್ಯಚೂಡಾಮಣಿ ಮತ್ತು ಮಹಾದೇವಿಯರು ಅರಮನೆಯಲ್ಲಿ ಮಂಚದಲ್ಲಿ ಸ್ಥಿರಚಿತ್ತದಿಂದ ಶಿವಯೋಗ ನಿದ್ರಾಮುದ್ರಾವಸ್ಥೆಯಲ್ಲಿರುವಾಗ ಓಂಕಾರವೇ ಸುತನಾಗಿ ಅವತರಿಸಿ ಅವರ ಮುಂದೆ ಆಡುತ್ತಿತ್ತು. ಶಿವನ ಮಾತನ್ನು ಅವರು ನೆನೆದು ದಾನಧರ್ಮಾದಿಗಳನ್ನು ಮಾಡಿ ಮಗುವನ್ನು ರತ್ನಖಚಿತವಾದ ತೊಟ್ಟಿಲಲ್ಲಿಟ್ಟು ತರುಣಿಯರೊಂದಿಗೆ ಜೋಗುಳವಾಡಿ ಧುರವೀರ ಹಮ್ಮೀರರಾಜನೆಂದು ನಾಮಕರಣ ಮಾಡಿದರು. ಬಾಲ್ಯದಲ್ಲಿಯೇ ಹಮ್ಮೀರರಾಜನು ಸಕಲ ಶಾಸ್ತ್ರಗಳನ್ನು ಆನೆ ಕುದುರೆಗಳನ್ನು ಏರುವ ಸಾಹಸವಿದ್ಯೆಯನ್ನು ಕಲಿತನು. ಮಹಾರಾಜನು ಮಗನಿಗೆ ಪಟ್ಟವನ್ನು ಕಟ್ಟಿ ಶಿವನನ್ನು ಸ್ಮರಿಸುತ್ತ ಕಾಲ ಕಳೆಯುತ್ತಿರಲು, ಹಮ್ಮೀರನ ಪ್ರಸಿದ್ಧಿಯನ್ನು ಕೇಳಿ ಪಕ್ಕದ ರಾಜ ಕಾಂಭೋಜನು ತನ್ನ ಮಗಳು ಗೌರಿಯನ್ನು ವಿವಾಹಮಾಡಿಕೊಟ್ಟನು.

   ಮೂರನೆಯ ನುಡಿಯಲ್ಲಿ ಈ ದಂಪತಿಗಳಿಗೆ ಕಾಂಭೋಜನ ಪತ್ನಿ ಹಾಗೂ ಸುತ್ತಣ ೫೬ ದೇಶಗಳ ದೊರೆಗಳ ಪತ್ನಿಯರು ಮುತ್ತಿನಾರತಿ ಬೆಳಗಿದರು. ನವದಂಪತಿಗಳನ್ನು ಮನೋಹರವಾದ ಮಂಟಪದಲ್ಲಿ ಕುಳ್ಳಿರಿಸಿ ನಾಟ್ಯವೇರ್ಪಡಿಸಿದರು. ತೆತ್ತಿಗರೂ ಆಚಾರ್ಯರೂ ಎಲ್ಲರೂ ಸೇರಿ ನೂತನ ದಂಪತಿಗಳ ನೆತ್ತಿಯ ಮೇಲೆ ಸೇಸೆ (ತಂಡು ಲಾಕ್ಷತೆ) ತಳಿದು ಶಿವ ಕೃಪೆಯಿಂದ ನಿತ್ಯರಾಗಿರೆಂದು ಹಾರೈಸಿದರು ಎಂದು ಆಶೀರ್ವದಿಸಿದರು. ಮಂತ್ರರಾಜನು ಸತ್ಯದಿಂದ ರಾಜ್ಯವನ್ನಾಳುತ್ತಲಿದ್ದನು. ಈತನ ಆಳ್ವಿಕೆಗೆ ಅಸೂಯೆಗೊಂಡ ಗರ್ವಿಷ್ಠನಾದ ಚಂಡಕೋದಂಡನು ಹಮ್ಮೀರನ ಮೇಲೆ ದಂಡೆತ್ತಿ ಹೋಗಬಯಸಿ ತನ್ನ ತಲೆಗೆ ತಾನೇ ಕತ್ತಿಯನ್ನು ಹಿಡಿದುಕೊಂಡು ಮೃತ್ಯುವನ್ನು ತಂದುಕೊಂಡನು. 

ನಾಲ್ಕನೆಯ ನುಡಿಯಲ್ಲಿ ದಿಂಡೆಯತನದಿಂದ ಚಂಡಕೋದಂಡನು ಸೇನಾಪತಿ ವೀರಜಂಭನನ್ನೂ, ಚಂದ್ರಬುದ್ಧನೆಂಬ ಮಂತ್ರಿಯನ್ನೂ, ಕೊಂಡೆಕುತರ್ಕದ ಮಂಡಲಪತಿಗಳನ್ನೂ, ಹಿಂಡುಹಿಂಡು ಮನ್ನೆಯರನ್ನೂ ಮತ್ತು ಚತುರಂಗಸೇನೆಯನ್ನೂ ತೆಗೆದುಕೊಂಡು ಹಮ್ಮೀರನಮೇಲೆ ದಾಳಿಮಾಡಲು ತುರವಿಗುಡ್ಡಕ್ಕೆ ಮುತ್ತಿಗೆ ಹಾಕಿದನು. ಈ ಮುತ್ತಿಗೆಯನ್ನು ಕಂಡವರು ತಿಳಿಸಲು, ಹಮ್ಮೀರರಾಜನು ವಿಚಾರವೆಲ್ಲವ ಕೇಳಿ, ಕನಲಿ, ಖಡ್ಗವನ್ನು ಹಿಡಿದು, ಹಲ್ಲಲ್ಲು ಕಡಿಯುತ್ತಾ ದಂಡನಾಯಕ ವಿಕ್ರಮ ಕೌಜೆಯನ್ನು ಕರೆದು, ದಂಡು ಕೂಡಿಸಿಕೊಂಡು ನಡೆಯೆಂದು ಅಣತಿಯಿತ್ತು, ತಾನೂ ಕುದುರೆಯೇರಿ ಧಾಳಿಯನ್ನು ನಿರ್ಮೂಲನಗೊಳಿಸಲು ಚಂಡನ ಹೃದಯ ತಲ್ಲಣ ಗೊಳ್ಳುವ ರೀತಿಯಲ್ಲಿ ಪ್ರತಿಧಾಳಿಗೆ ಸಿದ್ದನಾಗಿ, ಗಂಡುಗಲಿಗಳಾದ ರಾಯರಾವುತರಿಗೆ ಶಿರಸ್ತ್ರಾಣ - ಪಾಗು - ಪಟ್ಟ ಪೀತಾಂಬರ ಮುಂತಾಗಿ ಖಿಲ್ಲತ್ತುಗಳನ್ನು ಹರ್ಷದಿಂದಿತ್ತು ಮನ್ನಣೆ ಮಾಡಿದನು. ಅವರೆಲ್ಲರೂ ಹಮ್ಮೀರರಾಜರನೊಡಗೂಡಿ ದಂಡೆತ್ತಿ ನಡೆದರು. ಸಮರ ಭೇರಿಯನ್ನು ಮೊಳಗಿಸುತ್ತಾ ಚಂಡಕೋದಂಡನ ಸೈನ್ಯ ವನ್ನೂ ಆತನನ್ನೂ ಮುತ್ತಿಗೆ ಹಾಕಿ ನಡುಗಿಸಿ ಬಿಟ್ಟರು.ಹಮ್ಮೀರರಾಜನು ಚಂಡಕೋದಂಡನ ಮೇಲೆ ಸೈನ್ಯದೊಂದಿಗೆ ಏರಿಹೋದನು. ಹಮ್ಮೀರನು ಚಂಡಕೋದಂಡನನ್ನು ಸೋಲಿಸಿ, ಮರೆಹೊಕ್ಕವರನು ಬಿಟ್ಟುಮಲೆತವರನ್ನು ಸಂಹರಿಸಿ ತನ್ನ ಹಮ್ಮೀರನ ಗರಿಗೆ ಹಿಂತಿರುಗಿದನು.

 ಐದನೆಯ ನುಡಿಯಲ್ಲಿ,  ಹೀಗಿರಲು ವನಪಾಲನು ಬಂದು ಉದ್ಯಾನವನವನ್ನು ನೋಡಿ ಆನಂದಿಸಲು ದೊರೆಗೆ ಆಹ್ವಾನ ನೀಡುವನು. ಮಂಗಳವಾದ್ಯಗಳೊಂದಿಗೆ ಪತ್ನಿಸಮೇತನಾಗಿ ಉಪವನವನ್ನು ಪ್ರವೇಶಿಸಿ, ಅಲ್ಲಿನ ಕೊಳದಲ್ಲಿ ಈಜಾಡಿ ಎಲ್ಲರೂ ಸಾಕೆನ್ನಲು ಸೋಪಾನ ಹತ್ತಿ ಮಂಟಪಕ್ಕೆ ಬಂದು ಹೆಂಗಳೆಯರಿಗೆ ಪಟ್ಟಾವಳಿ ಮುಂತಾದ ಶ್ರೇಷ್ಠ ವಸ್ತುವನ್ನಿತ್ತು ಗೌರವಿಸಿ, ಶಿವಪೂಜೆಮಾಡಿ ತನ್ನ ನಗರಕ್ಕೆ ಹಿಂತಿರುಗಿ ಸುಖದಿಂದಿದ್ದನು. 

   ಆರನೆಯ ನುಡಿಯಲ್ಲಿ ಕಾಲವಿಕ್ರಮನಾಯಕನು ಬಂದು, ಕಾಡಿನಲ್ಲಿ ಕ್ರೂರ ಮೃಗಗಳ ಕಾಟದಿಂದ ಜನರು ಹೆದರಿರುವರೆಂದು ವಿನಂತಿಸುತ್ತ ಆನೆ ಸಿಂಹಗಳ ಮಸ್ತಕಸ್ಥ ಮುತ್ತು ರತ್ನಗಳನ್ನು ಮುಂದಿಟ್ಟು ಬೇಟೆಗೆ ಆಹ್ವಾನನೀಡುವನು. ಹಮ್ಮೀರನು ಅದಕ್ಕೆ ಒಪ್ಪಿಗೆ ಕೊಟ್ಟು ಶಿವಸೂತ್ರವಿಡಿದು ಬೇಟೆಯಾಡಲು ವನಕ್ಕೆ ಹೊರಟನು. ಕೂಡಲೇ ತಾನೂ ಚತುರಂಗ ಸೈನ್ಯ ಸಮೇತನಾಗಿ ಕುದುರೆಯೇರಿ ಪಟ್ಟಣದಿಂದ ವೈಹಾಳಿಗೆ ಹೊರಟು ಅವನು ವೈಹಾಳಿಯಲ್ಲಿ ಬೇಡರ ಪಡೆಯಿದ್ದ ನದೀತೀರವನ್ನು ನೋಡುತ್ತ ಬನವಸೆಗೆ ಮೂಡಣದಿಕ್ಕಿನ ಪ್ರಚುರ ಪರ್ವತ ಪ್ರದೇಶದ ತಪ್ಪಲು ಪ್ರಾಂತವನ್ನು ಪ್ರವೇಶಿಸಿದನು. ಕಾಡಿನಲ್ಲಿ ಪಯಣಿಸುವಾಗ ಬಾಯಾರಿಕೆಯಾದರೂ ಲಿಂಗಾರ್ಚನೆಗೆ ಸರಿಯಾದ ಲಿಂಗತಾಣ ದೊರೆಯದಿರಲು ಕಡುದಾಹವನ್ನು ಸಹಿಸಿಕೊಂಡನು. ಆಗ ಪರಿಚಾರಕರು ಮುಂದೆ ಬಂದು ಈ ಕಾಡಿನಲ್ಲೇಕೆ ಲಿಂಗಪೂಜಾದಿ ಸಂಕಲ್ಪವೆನ್ನುವರು. ರಾಜನು ಅವರಮೇಲೆ ಮುನಿಸುಗೊಂಡು ಶಿವಾಗಮದ ಪ್ರಕಾರ ಲಿಂಗಪೂಜೆಯಿಲ್ಲದೆ ಜಲಪಾನವನ್ನೂ ಮಾಡಲಾಗದೆನ್ನುವನು. 

    ಏಳನೆಯ ಮತ್ತು ಎಂಟನೆಯ ನುಡಿಯಲ್ಲಿ ಲಿಂಗಸ್ಥಾನವನ್ನು ಹುಡುಕಲು ಚರರು ಸುತ್ತಾಡುವರು. ಇದನ್ನು ಕೇಳಿದವರು ನಾಲ್ದೆಸೆಯಲ್ಲಿ ಲಿಂಗವಿರ್ಪ ತಾಣವನ್ನು ಪತ್ತೆಮಾಡಿ ಕೊಂಡು ಬರಲು ಸುತ್ತಿ, ಸುಳಿದಾಡಿ, ಎಲ್ಲಿಯೂ ಕಾಣದೇ ಒಡೆಯನಿಗೆ ಸತ್ಯಾಂಶವನನ್ನರುಹಿ ಚಿಂತಾಕ್ರಾಂತರಾಗಿದ್ದರು. ಅಷ್ಟರಲ್ಲಿ ಬಡಗಣ ದಿಕ್ಕಿನಲ್ಲಿ ಲಿಂಗವಿರ್ಪ ತಾಣವನ್ನು ಹುಡುಕಲು ಹೋದವರೊಳಗೋರ್ವನು ಬಂದು ಅಡ್ಡ ಬಿದ್ದು ಪ್ರಭೋ ! ಅಲ್ಲೊಂದು ಮೃಡನ ವಾಹನವಾದ ಗೂಳಿಯೊಂದಿದ್ದು, ಅದರ ಬಲದೊಡೆಯ ಮೇಲೆ ಲಿಂಗಮುದ್ರೆಯ ಗುರುತಿದೆ. ಇದನ್ನು ಬಿಟ್ಟಾವ ಲಿಂಗತಾಣಗಳೂ ಕಾಣಬರಲಿಲ್ಲ ಎಂದನು.

    ರಾಜನು ಸಡಗರದಿಂದ ಲಿಂಗಮುದ್ರೆಯಿರುವ ಗೂಳಿಯ ಬಳಿಗೆ ಹೋಗಿ ನಿಂತು ನೋಡುತ್ತಿರಲು ಆ ಗೂಳಿಯು ತನ್ನ ನಾಲಗೆಯನ್ನು ಚಾಚಿ ಅದರ ಮೇಲೆ ಲಿಂಗವನ್ನು ಮೂಡಿಸಿ ತೋರಿಸಿತು. ರಾಜನು ಅದನ್ನು ಕಣ್ಣಾರೆ ಕಂಡು ಮನವಾರೆ ಹಸ್ತವಂ ನೀಡಿ ಪೂಜಿಸುತ್ತಿರಲು ಆ ನಾಲಗೆಯನ್ನು ಹಿಂದಕ್ಕೆ ಸೆಳೆದುಕೊಂಡೊಡನೆ ರಾಯನು ಪರವಶನಾದನು.

    ವೃಷಭೇಂದ್ರನು ಆಚಾರ್ಯನಾಗಿ ಮನುರಾಜೇಂದ್ರನಿಗೆ ಶ್ರೀಗುರು ನಂದಿರಾಯನು ಶುದ್ಧ ಪ್ರದೇಶದಲ್ಲಿ ಪಂಚಕಲಶಗಳನ್ನು ಹೂಡಿ ದರ್ಭೆ-ಪತ್ರೆ-ಕರಿಕೆ-ಮಾಂದಳಿರು-ಗಾಂಧಾರಿ ನಿರ್ಗುಂಡಿ-ಗಿರಿಜೊತ ಮತ್ತು ಪಂಚ ವರ್ಣದ ಪುಷ್ಪಗಳನ್ನೆಲ್ಲಾ ಅಳವಡಿಸಿ ಕಲಶಾರ್ಚನೆ ಮಾಡಿ ಸುವರ್ಣಕಾಣಿಕೆಯಿತ್ತು. ಶಿಷ್ಯನ (ಮನುರಾಜನ) ಮಸ್ತಕದ ಮೇಲೆ ತನ್ನ ಪವಿತ್ರ ಹಸ್ತವನ್ನಿರಿಸಿ ಶಿವಪಂಚಾಕ್ಷರಿ ಮಂತ್ರವನ್ನು ಕಿವಿಯಲ್ಲಿ ಉಪದೇಶಿಸಿ ದೀಕ್ಷೆಯನ್ನಿತ್ತು ಅವನ ಕರಸ್ಥಲಕ್ಕೆ ಲಿಂಗವನ್ನು ಅನುಗ್ರಹಿಸಿ ಉಪದೇಶವಿತ್ತು ನೋಡುವುದೆಂದಾಣತಿಯಿತ್ತು ಕೂಡಲೇ  ಬಯಲಾಯಿತು. ಶ್ರೀಗುರುವಿನ ಆಜ್ಞೆಯಂತ ಅರಬಿರಿದ ಅನಿಮಿಷ ದೃಷ್ಟಿಯಿಂದ ರಾಜನು ಲಿಂಗವನ್ನು ನೋಡುತ್ತ, ಅದನ್ನು ಧ್ಯಾನದಿಂದ ಹೃದಯಕಮಲಕ್ಕೆ ಒಯ್ದು ಚಿತ್ರದಿಂದ ಅರಿದು ನಿರ್ಗುಣಪೂಜೆ ಮಾಡುತ್ತಿರುವುದನ್ನು ನೋಡಿ ಪಾದಗಳಿಗೆ ವಂದಿಸಿ ನಗರಕ್ಕೆ ತೆರಳಿ ಮತ್ತೆ ಬಂದು ಸುವರ್ಣದ ಗುಡಿಯನ್ನು ಕಟ್ಟಿ ಕೋಟಿ ಸೂರ್ಯಪ್ರಕಾಶವಾದ ಕಳಶವನ್ನು ಆ ಗುಡಿಗೇರಿಸಿ ಆ ಗುಡಿಯನ್ನು ಪೂರ್ಣವಾಗಿ ಮಣ್ಣಿನಿಂದ ಮುಚ್ಚಿದರು.  ವೃಷಭದೇವನು ಅನುಗ್ರಹಿಸಿದ ಲಿಂಗವನ್ನು ಈತನು ಅನಿಮಿಷ ದೃಷ್ಟಿಯಿಂದ ತದೇಕ ಚಿತ್ತದಿಂದ ದೃಷ್ಟಿಸಲಾರಂಭಿಸಿದ ಕೂಡಲೆ ಅನಿಮಿಷದೇವನೆಂಬ ಹೆಸರು ಪ್ರಾಪ್ತಿಯಾಗುತ್ತದೆ

 ಇಲ್ಲಿಯವರೆಗೂ ಕೇವಲ ಶಿವಭಕ್ತನಾಗಿದ್ದ ಅರಸ ಮುಂದೆ ಲಿಂಗದೀಕ್ಷೆಯಿಂದ ಲಿಂಗದೇವನಾಗಿ ಯೋಗೀಶ್ವರನಾಗುತ್ತಾನೆ. ಆ ಗುಡಿಯನ್ನು ನಿಕ್ಷೇಪಿಸಿದ ಜಾಗದಲ್ಲಿ ಗೊಗ್ಗಯ್ಯನೆಂಬ ಶರಣನೋರ್ವನು ಬಂದು ಹೂದೋಟ ಮಾಡಿಕೊಂಡು ನೆಲೆ ನಿಂತನು. ಆ ಸ್ಥಳದಲ್ಲಿ ಮುನಿಗಳನೇಕರು ತಪಸ್ಸು ಮಾಡುತ್ತಲಿದ್ದರು.

ಒಂಬತ್ತನೆಯ ನುಡಿಯಲ್ಲಿ ಪ್ರಭುದೇವರ ಬಗೆಗಿನ ವಿವರಗಳನ್ನು  ಬಹುಮಟ್ಟಿಗೆ ಚಾಮರಸನ ಪ್ರಭುಲಿಂಗಲೀಲೆಯ ವಿವರಗಳನ್ನು ಆಧರಿಸಿ ಸಂಕ್ಷಿಪ್ತವಾಗಿ ಕೊಡ ಮಾಡಿದ್ದಾರೆ. ಶಿವನ ಆಜ್ಞೆಯಂತೆ ಪ್ರಭುದೇವರು ನಿರಹಂಕಾರ-ಸುಜ್ಞಾನಿದೇವಿಯರಿಗೆ ಮಗನಾಗಿ ಅವರಿಗೆ ಸಂತೋಷವನ್ನುಂಟು ಮಾಡಿ, ಅವರ ಅನುಮತಿ ಪಡೆದು ಇಂತಪ್ಪ ಆ ತಾಣಕ್ಕೆ ಮುಕ್ಕಣ್ಣನಾಜ್ಞೆಯಿಂದ ಪ್ರಭುದೇವರು, ಬಯಸಿ ನಿರಹಂಕಾರಿ-ಸುಜ್ಞಾನಿ ದೇವಿಯರಿಗೆ ಪ್ರತ್ಯಕ್ಷ (ಮಗುವಾಗಿ) ರಾಗಿ ಸಂತಸವಿತ್ತು ಅವರ (ತಾಯ್ತಂದೆಗಳ) ಅನುಮತಿ ಪಡೆದು ಬನವಾಸಿಗೆ ಬರುವನು. ಅವನು ಅಲ್ಲಿಯ ಮಮಕಾರರಾಯನ ಮಗಳಲ್ಲಿ ಮೋಹವನ್ನುಂಟುಮಾಡಿ ಅವಳಿಗೆ ವಶನಾಗದೆ ಮಾಯಾಕೋಲಾಹಲನೆನಿಸಿ ಗೊಗ್ಗಯ್ಯನಲ್ಲಿಗೆ ಬಂದು ಆತನೊಡನೆ ಸಂಭಾಷಿಸಿ ಆತನಿಂದಲೇ ಆ ತಾಣವನ್ನು ಗುದ್ದಲಿಯಿಂದ ಆಗೆಯಿಸಲು, ತಳದಲ್ಲಿ ಝಗಝಗಿಪ ಸುವರ್ಣದ ಕಳಶವೂ ಬಳಿಕ ಗುಡಿಯೂ ಕಾಣಬಂದಿತು. ಅವನು ವಿಸ್ಮಯದಿಂದ ನೋಡುತ್ತಿರಲು ಕೂಡಲೇ ಗೊಗ್ಗಯ್ಯನು ವಿಸ್ಮಿತನಾಗಿ ಕುಳಿತು ನೋಡುತ್ತಿರುವಷ್ಟರಲ್ಲಿಯೇ ಪ್ರಭುವು ಆ ಗುಡಿಯ ಒಳಹೊಕ್ಕು, ಅಲ್ಲಿ ಶಿವಯೋಗದಲ್ಲಿದ್ದ ಅನಿಮಿಷದೇವ (ಮನು ರಾಜ)ನ ಲಿಂಗ (ಇಷ್ಟಲಿಂಗ)ವನ್ನು ತಮ್ಮ ಕರಸ್ಥಳದಲ್ಲಿ ತಳೆದು (ಧರಿಸಿ) ಹೋಗುವ ಸಮಯದಲ್ಲಿ ಗೊಗ್ಗಯ್ಯನು ಪ್ರಭುವನ್ನು ತಡೆಗಟ್ಟಿ ಅಲ್ಲಯ್ಯಾ ನಿನ್ನೀ ರೀತಿ ನೀತಿ ನಮಗೆ ಚೋದ್ಯವಾಗಿದೆ. ಈ ಸುಳುಹಿನ ಭೇದವೇನು ?ಇಲ್ಲಿರುವ ಶಿವಯೋಗಿ ಯಾರು? ಎಲ್ಲವನ್ನೂ ವಿವರವಾಗಿ ಮರೆಮಾಚದೆ ತಿಳಿಸಿ ಎಂದು ಪ್ರಾರ್ಥಿಸುವನು. ಅದಕ್ಕೆ ಪ್ರಭುವು ದ್ವಾಪರಯುಗದಲ್ಲಿ ಈತನು ಪತ್ನಿಪುತ್ರರನ್ನೂ ರಾಜ್ಯವನ್ನೂ ತ್ಯಜಿಸಿ ಬಂದು ಶಿವಯೋಗದಲ್ಲಿ ನೆಲೆಸಿದನು ಎನ್ನುವನು.

   ಹತ್ತನೆಯನುಡಿಯಲ್ಲಿ ಹೀಗೆ ರಾಜ್ಯವನ್ನಾಳಿ ಸಂಪತ್ತನ್ನು ತ್ಯಜಿಸಿ ಶಿವನಲ್ಲಿ ಏಕತ್ವವನ್ನುಪಡೆದವರುಂಟೆ? ಎಂದು ಗೊಗ್ಗಯ್ಯನು ಪ್ರಭುವನ್ನು ಕೇಳುವನು. ಅದಕ್ಕೆ ಪ್ರಭುವು ಮುನ್ನ, ಭೂಲೋಕದಲ್ಲಿ ಕಾಂಚೀನಗರದ ದೊರೆಯು ಅಂತರವಿಲ್ಲದೆ ವೈಷ್ಣವ ಮತ ಸ್ವೀಕರಿಸಿ ಹಮ್ಮಿನಿಂದಿರಲು, ಅಲ್ಲಿಗೆ ಶಿವನ ನಿರೂಪದಿಂದ ಪರಮ ನಿಶ್ಚಿಂತರಾದ ರೇವಣಸಿದ್ದರು ಆಗಮಿಸಿ ಮಹಿಮೆಗಳನ್ನು ತೋರಿ, ಕಿಕ್ಕಿರಿದ ವೈಷ್ಣವ ಮತ ವನ್ನೆಲ್ಲಾ ನಿರಾಕರಿಸಿದರು.ಅಲ್ಲದೆ ನಂದೆಣ, ಚೇರಮರಾಯ, ಪಾಂಡ್ಯರು. ನಿಡುಮಾರದೇವರು ಹಾಗೂ ಮುಂಚಿನ ಭದ್ರಾಯುರಾಜ ಸತ್ಯಸಂಧನಾದ ಸತ್ಯೇಂದ್ರ ಚೋಳಾದಿ ನವಚೋಳರೇ ಮೊದಲಾದ ಅನಂತ ಭೂಪತಿಗಳೂ ಶಿವಧರ್ಮಾಸಕ್ತರಾಗಿ ಆಳಿ ಬಾಳಿ ಹೋಗಿರುವರು. ಕೇಳು ಕೇಳು. ಆದರೆ ನಮ್ಮಿ ಗುರು (ಅನಿಮಿಷರು)ಗಳು ಅವರಂತೆ ಅಲ್ಲ, ಚಿದ್ರೂಪನು, ಶಿವನ ಸಾಕ್ಷಾತ್ಕಾರದಿಂದ ಸಂತುಷ್ಟನಾದವನು ಎಂದು ಹೇಳಿ ಪ್ರಭುವು ಮುಂದೆ ನಡೆಯುವನು.  

     ಹನ್ನೊಂದನೆಯ ನುಡಿಯಲ್ಲಿ ಅಜಗಣ್ಣನ ಅಗಲಿಕೆಗೆ ಪ್ರಲಾಪಿಸುತ್ತಿದ್ದ ಮುಕ್ತಾಯಕ್ಕಳನ್ನು ಸಮಾಧಾನಿಸಿ, ಸಿದ್ಧರಾಮನ ಹಠಯೋಗ ಹಾಗೂ ಶೈವಪೂಜೆಯನ್ನು ಬಿಡಿಸಿ, ಅವನನ್ನು ಜೊತೆಯಲ್ಲಿ ಕರೆದುಕೊಂಡು ಕಲ್ಯಾಣಕ್ಕೆ ಬಂದು ಅವನಿಗೆ ಚನ್ನಬಸವಣ್ಣನಿಂದ ದೀಕ್ಷೆಯನ್ನು ಕೊಡಿಸಿ, ಶ್ರೀಶೈಲಕ್ಕೆ ಬಂದು ಹಠಯೋಗಿ ಗೋರಕ್ಷನಿಗೆ ನಿಜವನ್ನಿತ್ತು, ಮಂಗಳವಾಡಕ್ಕೆ ಬಂದು ಅಲ್ಲಿ ಶೂನ್ಯಸಿಂಹಾಸನವನ್ನು ನಿರ್ಮಿಸಿ, ಅದನ್ನೇರಿ ಬಸವರಾಜೇಂದ್ರನ ಭಕ್ತಿಯನ್ನು ಸಂದೇಹವಿಲ್ಲದೇ ಸ್ವೀಕರಿಸಿ, ಮರುಳಶಂಕರದೇವನಿಗೆ ಐಕ್ಯ ಪದವಿಯನ್ನು ಅನುಗ್ರಹಿಸಿ, ಬಸವಣ್ಣನಿಗೆ ಇನ್ನು ಮೂರುತಿಂಗಳಿಗೆ ನೀವು ಶಿವನಲ್ಲಿ ಐಕ್ಯರಾಗುವಿರೆಂದು ಭವಿಷ್ಯ ನುಡಿಯುವನು. ಇಲ್ಲಿ ಇವರು  ಶೂನ್ಯ ಸಿಂಹಾಸನವನ್ನು ನಿರ್ಮಿಸಿದ್ದು ಮಂಗಳವಾಡದಲ್ಲಿ ಎಂದು  ಉಲ್ಲೇಖಿಸಿದ್ದಾರೆ. ಆದರೆ ಬಸವಣ್ಣನವರನ್ನು ಕುರಿತ ಇತರ ಕಾವ್ಯ ಪುರಾಣಗಳಲ್ಲಿ ವಿವರಗಳು  ಹಾಗೂ ಎಲ್ಲರೂ ತಾಳಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಶೂನ್ಯ ಸಿಂಹಾಸನವನ್ನು ನಿರ್ಮಿಸಿದ್ದು ಕಲ್ಯಾಣದಲ್ಲಿ. ಆದರೆ ಮುರಿಗಾ ಶಾಂತವೀರರು  ಯಾವ ಆಧಾರದಲ್ಲಿ ಈ ರೀತಿಯಾಗಿ ವಿಷಯವನ್ನು ಪ್ರಸ್ತಾಪಿಸಿದ್ದಾರೋ ತಿಳಿಯದು. ಬಿಜ್ಜಳರಾಯನು ಕರ್ಮಾನುಸಾರಿಯಾಗಿ ಸಾವನ್ನು ಹೊಂದಲು ಕಲ್ಯಾಣದ ಶಿವಗಣಂಗಳು ಉಳಿವೆಯಲ್ಲಿ ನಿಂತರು. ಪ್ರಭುವು ಶೀಘ್ರದಲ್ಲಿಯೇ ಕೈಲಾಸಕ್ಕೆ ನಡೆದನು. 

 ಕೊನೆಯ ನಾಲ್ಕು ಕಂದ ಪದ್ಯಗಳಲ್ಲಿ ಹಮ್ಮೀರ ರಾಜನ ಮಹಿಮೆಯನ್ನು ಸಂಕ್ಷಿಪ್ತವಾಗಿ ಕೊಡ ಮಾಡಿದ್ದಾರೆ.

ದ್ವಾಪರಯುಗದಲ್ಲಿ ಹಮ್ಮೀರ ರಾಜನು ದೇಶವನ್ನು ಆಳಿ. ಬಳಿಕ ಪರಮ ಶಿವನಲ್ಲಿ ಏಕಾರ್ಥ (ಸಮರಸ)ವಾಗಿ ಅತಿಶಯ ಮಹಿಮಾ ಸಂಪನ್ನನೆನಿಸಿದನು. ಅನಿಮಿಷದೇವರ ಇಷ್ಟಲಿಂಗ ಪಡೆದು ಪ್ರಭುದೇವನು ಕೈಲಾಸಕ್ಕೆ ಪ್ರಯಾಣ ಮಾಡಿದುದು. ಚಿನ್ಮಯನಾದ ಪ್ರಭುದೇವನು ಆಗಮಿಸಿ, ಅನಿಮಿಷದೇವರ ಲಿಂಗ (ಇಷ್ಟಲಿಂಗ) ವನ್ನು ತನ್ನ ಕರತಳದಲ್ಲಿ ವಿನಯದಿಂದ ಧರಿಸಿಕೊಂಡ ಕೂಡಲೆ ಕೈಲಾಸಕ್ಕೆ ಸುಖದೊಳ್‌ ಪೋದಂ.

'ಪೋಗಿ ಗಣಕುಲದ ಮಧ್ಯದ

ಆಗಮಕತಿದೂರ ಶಂಭು ಶಂಕರ ಶುಭಕರ

'ಯೋಗಿವರ ಕರುಣಿ ಮುರಿಗೆಯ

ನಾಗರಪತಿಭರಣ ನಿತ್ಯ ದೇವನೊಳೆಸೆದಂ'

ಈ ತಾರಾವಳಿಯನ್ನು ಬರೆಪ, ಓದುವ, ಗೌರವಿಸುವ ಹಾಗೂ ಶಿವಭಕ್ತಗಣಕ್ಕೆ ಅರ್ಥಮಾಡಿ ಹೇಳುವ ನಿಜಶರಣರೆಲ್ಲರೂ ಪರಶಿವನಲ್ಲಿ ಬೆರದು ನಿತ್ಯರಪ್ಪರು. ಇದು ಸತ್ಯವು.  ಎಂದು ಮುಕ್ತಾಯಗೊಳ್ಳುತ್ತದೆ.  ಕೊನೆಯ ಒಂದು ವೃತ್ತದಲ್ಲಿ  ಮುರಿಗಾ ಶಾಂತವೀರಾಖ್ಯ ಯೋಗಿವರ್ಯೇಣ ಸಾದರಂ ರಚಿತ ಮನುರಾಜೇಂದ್ರ ತಾರಾವಳಿಯಂ ಅರಿ ಎಂಬ ಉಲ್ಲೇಖ ಕಂಡು ಬರುತ್ತದೆ.

       ರಾಜೇಂದ್ರವಿಜಯ” ಎಂಬ ಪರ್ಯಾಯ ನಾಮವನ್ನು ಹೊಂದಿರುವ ಹಮ್ಮೀರ ಕಾವ್ಯದ ವಸ್ತುವನ್ನೇ

"ಮನುರಾಜೇಂದ್ರ ತಾರಾವಳಿ” ಒಳಗೊಂಡಿದೆ. ಇವರು ಹಮ್ಮೀರ ಚಂಪೂಕಾವ್ಯದಲ್ಲಿ ಮನುರಾಜೇಂದ್ರನ  ಚರಿತ್ರೆಯನ್ನು ೯ ಪ್ರಕರಣ ಮತ್ತು ೬೧೯ ಪದ್ಯಗಳಲ್ಲಿ ವಿಸ್ತಾರವಾಗಿ ವಿವರಿಸಿದ್ದರೆ, ಮನುರಾಜೇಂದ್ರ ತಾರಾವಳಿಯಲ್ಲಿಇದೇ ವಿವರವನ್ನು ಈಗಾಗಲೇ ಹೇಳಿರುವಂತೆ ೧೧ ನುಡಿಪದ ಹಾಗೂ ಅಂತ್ಯದಲ್ಲಿ ಅಂತ್ಯದಲ್ಲಿ ೪ ಕಂದಪದ್ಯಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಏನೇ ಇರಲಿ ಈ ಎರಡೂ ಕೃತಿಗಳು ಅಲ್ಲಮಪ್ರಭುಗಳ ಗುರುಗಳಾದ ಪಟ್ಟದಕಲ್ಲಿನ ಅನಿಮಿಷದೇವರ ಚರಿತ್ರೆಯನ್ನು ಹೇಳುತ್ತವೆ. ಪ್ರಭುದೇವರು  ಗೊಗ್ಗಯ್ಯನಿಗೆ ಈ ಮನುರಾಜೇಂದ್ರನ ಚರಿತ್ರೆಯನ್ನು ಬೋಧಿಸುತ್ತಾರೆ. ಪ್ರಣವಾವತಾರನಾದ ಶ್ರೀಮನುರಾಜನ ಸ್ಥೂಲಪರಿಚಯ, 'ಹಮ್ಮೀರ' ನಾಮಾಂಕಿತನಾದ ಈತನ ಬಾಲ್ಯ, ಯೌವ್ವನ, ಭೋಜರಾಜನ ಪುತ್ರಿ ಕಾಂತಾಗೌರಿಯೊಡನೆ ವೈಭವದ ವಿವಾಹ, ಹಮ್ಮೀರನ ಶಿವಲಿಂಗ ನಿಷ್ಠೆ, ಅವನಿಗುಂಟಾದ ಶಿವಲಿಂಗದ ಕಡುದಾಹ ಈ ಎಲ್ಲ ಅಂಶಗಳನ್ನು ಗೊಗ್ಗಯ್ಯನಿಗೆ ಪ್ರಭುದೇವರು ವಿವರಿಸಿ ಬೋಧಿಸುತ್ತಾರೆ. ಹೀಗೆ ಅನಿಮಿಷದೇವರ ಚರಿತ್ರೆಯನ್ನು ಹೇಳುವ ಮೂಲಕ“ಹಮ್ಮೀರಕಾವ್ಯ” ಹಾಗೂ “ಮನುರಾಜೇಂದ್ರ ತಾರಾವಳಿ” ಕೃತಿಗಳು ಚಾರಿತ್ರಿಕ ದೃಷ್ಟಿಯಿಂದ ತಮ್ಮದೇ ಆದ ಮಹತ್ವವನ್ನು ಪಡೆದಿವೆ. 

   ಮುರುಘಾ ಪರಂಪರೆಯ   ಮುರಿಗಾ ಶಾಂತವೀರರ ಭಾಷಾ ಪ್ರಯೋಗವನ್ನು ಗಮನಿಸಿದರೆ ಉಭಯ ಭಾಷಾ ವಿಶಾರದರಾಗಿದ್ದ ಅವರು ಮಾರ್ಗ-ದೇಶಿ ಭಾಷೆಗಳೆರಡನ್ನು ತಮ್ಮ ಕಾವ್ಯಗಳಲ್ಲಿ ಬಳಸಿಕೊಂಡಿದ್ದಾರೆ. ಚಂಪೂ, ಷಟ್ಪದಿಯಂಥ ದೀರ್ಘ ಕಾವ್ಯಗಳಲ್ಲಿ ಸಂಸ್ಕೃತ ಭಾಷೆಯ ಪ್ರಾಬಲ್ಯ ಕಂಡುಬಂದರೆ, ಸ್ತೋತ್ರರೂಪದ ಲಘುಕೃತಿಗಳಲ್ಲಿ ಪ್ರಾದೇಶಿಕ ದೇಶಿ ಭಾಷೆಯ ಸೊಗಡುಹೆಚ್ಚಾಗಿ ಕಾಣಬರುತ್ತದೆ. ಈ ಕೃತಿಯಲ್ಲಿ, ಹಾಡುಗಬ್ಬದ ರೀತಿಯ ದೇಸಿ ಪದಗಳು ಬಳಕೆಗೊಂಡಿದ್ದು ಜನಸಾಮಾನ್ಯರಿಗೂ ಅರ್ಥವಾಗುವಂತಿದೆ. ನಿದರ್ಶನಕ್ಕೆ,  ಭೇರಿಯ ಕರಡೆ, ಕಂಸಾಳೆ, ಹೆಗ್ಗಾಳೆ, ರಣಗಾಳೆಯ,  ಮಂಡಿಸಿ ನಿಂದರಾಗ, ದಂಡೆತ್ತಿ ನಡೆದರಾಗ, ಖಂಡಿಸಿ ಬಿಟ್ಟರಾಗ,  ಎರಗಿ ಕೊಂಡಾಡಿ ಪರಿಣಾಮದೊಳೋಲಾಡಿ, ಎತ್ತುವನೆಂದ ದಂಡ, ಕತ್ತಿಯ ಪಿಡಿದುಕೊಂಡ, ಮಿತ್ತುವ ತಂದುಕೊಂಡ, ಸಡಗರದಿಂದೆ ಲಾಲಿಸಿ, ಒಡನೇ ನಿರೀಕ್ಷಿಸಿ, ಈ ಬಗೆಯ ಪದಗಳು ಬಳಕೆಯಾಗಿದ್ದು, ಇವರ ದೇಸಿ ಪದಗಳ ಬಗೆಗಿನ  ಬಳಕೆಯ ಬಗೆಗೆ ವೇದ್ಯವಾಗುತ್ತದೆ. 

    ಈ ತಾರಾವಳಿ ಲಘುಕೃತಿಯು ಏಕಕಾಲದಲ್ಲಿ ಪುರಾಣದ ವಿವರಗಳನ್ನು ಚಾರಿತ್ರಿಕ ಸಂಗತಿಗಳನ್ನು ಒಳಗೊಂಡ ಶರಣ ಚರಿತ್ರೆಯಾಗಿದೆ. ಶಾಂತವೀರರ ವಿಭಿನ್ನ ಆಲೋಚನೆಯಿಂದ ಕಲ್ಪಿತವಾದ ಈ ಕೃತಿ ಹಲವು ವಿಷಯಗಳ ಸಂಗಮವಾಗಿದೆ. ಸ್ತೋತ್ರರೂಪದಲ್ಲಿರುವ ಇದು ಶಾಂತವೀರರಿಂದಲೇ ರಚನೆಗೊಂಡ ಚಂಪೂಶೈಲಿಯ ಹಮ್ಮೀರ ಕಾವ್ಯದ ವಸ್ತುವನ್ನು ಆಧರಿಸಿದೆ. ಹರಿಹರನ ರಗಳೆಯಂತೆ ಇಲ್ಲಿಯ ನಡೆಯಿದೆ. “ಈ ತಾರಾವಳಿಯಲ್ಲಿ ಬರುವ ಪ್ರಮುಖ ಅಂಶಗಳನ್ನು ನೋಡುವುದಾದರೆ, ಕರ್ನಾಟಕದ ಮಧ್ಯಭಾಗದಲ್ಲಿರುವ, ಕೋಟೆಕೊತ್ತಲಗಳಿಂದ ಆವೃತವಾಗಿರುವ ಪಟ್ಟದಕಲ್ಲು(ಶಿಲಾಪುರ)ನ್ನು ಆಳುತ್ತಿರುವವನು ತ್ರೈಲೋಕ್ಯ ಚೂಡಾಮಣಿ ಹಾಗೂ ಮಹಾದೇವಿಯರ ಉದರಸಂಜಾತನೇ ಈ ಮನುರಾಜೇಂದ್ರ. ಈತನನ್ನು ಬೇರೆ ಬೇರೆ ನಾಮಧೇಯಗಳಿಂದ  ಈ ಲಘು ಕೃತಿಯಲ್ಲಿ ಉಲ್ಲೇಖಿಸಲಾಗಿದ್ದು ಮಂತ್ರರಾಜ, ಹಮ್ಮೀರ, ರಾಜೇಂದ್ರ ಹಾಗೂ ಅನಿಮಿಷದೇವ ಇತ್ಯಾದಿಯಾಗಿ ಕರೆಯಲಾಗಿದೆ. ಪುತ್ರಾಪೇಕ್ಷೆಯ ಕಾರಣವಾಗಿ ಶರಣದಂಪತಿಗಳು ಮಾಡಿದ ತಪಸ್ಸಿನ ಫಲವಾಗಿ ಹಮ್ಮೀರ ರಾಜನ ಜನನವಾಗುತ್ತದೆ. ಈತನ ಬಾಲ್ಯ-ಯೌವ್ವನಗಳ ಸಂಗತಿಯನ್ನು ಕಾವ್ಯ ವರ್ಣಿಸುತ್ತದೆ. ಹಾಗೆಯೇ ಕಾಂಭೋಜರಾಜನ ಪುತ್ರಿ ಕಾಂತಾಗೌರಿಯೊಡನೆ ವಿವಾಹವೇರ್ಪಟ್ಟ ಪ್ರಸಂಗ, ಸತಿ-ಪತಿಗಳೊಂದಾಗಿ ಸುಖಜೀವನ ನಡೆಸುವ ಪರಿ, ರಾಜ್ಯಭಾರ ಮಾಡುವ ಕಾರ್ಯವೈಖರಿ, ಹಮ್ಮೀರನ ಎಳೆಯನ್ನು ಸಹಿಸದ ಚಂಡಕೋದಂಡನು ದಂಡೆತ್ತಿ ಬರುವ ಸನ್ನಿವೇಶ, ಇವರಿಬ್ಬರ ಯುದ್ಧಪ್ರಸಂಗ, ಚಂಡಕೋದಂಡನನ್ನು ಸದೆಬಡಿಯುವುದು, ಹಮ್ಮೀರ ಗೆದ್ದು ರಾಜಧಾನಿಗೆ ಮರಳಿಬರುವುದು, ಹಮ್ಮೀರರಾಜನ ವನಮಹೋತ್ಸವ, ಜಲಕ್ರೀಡೆ ಮುಂತಾದ ವರ್ಣನೆಗಳು ಕಾವ್ಯಸೊಬಗನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ ಮನುರಾಜನು ಶಿವಲಿಂಗನಿಷ್ಠೆಯಿಂದ ಲೌಕಿಕ ಆಸೆಗಳು ಕುಂಠಿತಗೊಂಡು ಅಲೌಕವಾದ ಪಾರಮಾರ್ಥಿಕದೆಡೆಗೆ ಸಾಗುವ ಮನೋಭಾವ, ಲಿಂಗಮುದ್ರೆಯಿರುವ ವೃಷಭನಿಂದ ಸಂಸ್ಕಾರವೆಂಬ ದೀಕ್ಷೆಯನ್ನು ಪಡೆಯುವುದು. ಆ ಅಣತಿಯಂತೆ ಪಡೆದು ಮನುರಾಜನು ಗುರುವಿನಿಂದ ಕರಸ್ಥಲಕ್ಕೆ ಅನುಗ್ರಹಿಸುವ ತಾತ್ವಿಕತೆ, ನಂದೀಶನ ಅಣತಿಯಂತೆ ಇಷ್ಟಲಿಂಗದಲ್ಲಿ ಅನಿಮಿಷ ದೃಷ್ಟಿಯಿಟ್ಟು ಶಿವಯೋಗ ಮಗ್ನನಾಗುವುದು, ಮನುರಾಜೇಂದ್ರ ಎಂಬ ಪದನಾಮದಿಂದ ಅನಿಮಿಷದೇವನಾಗಿ, ಶ್ರೇಷ್ಠ ಮುನಿಯಾಗಿ, ಭಕ್ತಿ-ಜ್ಞಾನದ ವೈರಾಗ್ಯಮೂರ್ತಿಯಾದ ಅಲ್ಲಮಪ್ರಭುವಿನ ಸಾಧನೆಗೆ  ಗುರುವಾಗಿ ಕಂಗೊಳಿಸಿದ್ದಾನೆ. ಸಾಧನೆಗೆ ಸಂಸಾರವೂ ಮುಖ್ಯ ತಾತ್ವಿಕತೆಗೆ ಧರ್ಮವೂ ಮುಖ್ಯ. ಒಂದರಲ್ಲಿ ಒಂದು ಅಡಗಿಕೊಂಡು ಹೊಸ ಅನುಭವವನ್ನು ಕೊಡುತ್ತವೆ ಎಂಬ ವಿಚಾರವನ್ನು ತಿಳಿಯಪಡಿಸಿದ್ದಾರೆ.        

    ಚಂಪೂ ಪ್ರಕಾರದಲ್ಲಿ ಮುರಿಗಾ ಶಾಂತವೀರರು ೯ ಪ್ರಕರಣ ೬೧೯ ಪದ್ಯಗಳಲ್ಲಿ ಹಮ್ಮೀರ ಕಾವ್ಯವಾಗಿ ವಿಸ್ತರಿಸಿರುವ ಈ ಕಥಾಭಿತ್ತಿಯ ತೆಳುಹಂದರದ ಕಥಾವಸ್ತುವನ್ನೇ ಇನ್ನೊಂದು ಸಾಹಿತ್ಯ ರೂಪವಾದ ಹಾಡುಗಬ್ಬದಲ್ಲಿ    'ಮನುಜೇಂದ್ರನ ತಾರಾವಳಿ'ರೂಪದಲ್ಲಿ ಮತ್ತೆ ಬಂದದ್ದು ಕುತೂಹಲಕಾರಿ ಸಂಗತಿ. ಹಮ್ಮೀರ ಕಾವ್ಯದಲ್ಲಿ  ಮುರಿಗಾ ಶಾಂತವೀರರ ಪ್ರತಿಭೆ ಚಂಪೂಕಾವ್ಯವಾಗಿ ಆ ಕಥೆಯನ್ನು ಹೇಳಬೇಕೆನ್ನುವಲ್ಲಿ ಕವಿ ಸಹಜವಾದ ಅಭಿವ್ಯಕ್ತಿಯಲ್ಲಿನ ಹೊಸತನ್ನು ಕಾಣಿಸಬೇಕೆನ್ನುವ ಆಕಾಂಕ್ಷೆಯಿದೆ. 

 ಮನುರಾಜೇಂದ್ರ ತಾರಾವಳಿಯು ' ಹಮ್ಮೀರನೆನ್ನುವ ರಾಜನ ಕಥೆಯೆನ್ನಿಸಿದ್ದು, ಅದು ಪೂರ್ಣ ಸತ್ಯವಲ್ಲ. ಕಾವ್ಯದ ಮೊದಲರ್ಧಭಾಗ ಹಮ್ಮೀರರಾಜೇಂದ್ರನ ವಿಜಯವನ್ನು ನಿರೂಪಿಸಿದರೂ ಕಾವ್ಯದ ಉತ್ತರಾರ್ಧವು ಹಮ್ಮೀರನು ಅನಿಮಿಷನಾಗಿ ಅಲ್ಲಮಪ್ರಭುವಿಗೆ ಇಷ್ಟಲಿಂಗವನ್ನು ಅನುಗ್ರಹಿಸಿದ ಕಥನವಾಗಿದೆ.ಅಲ್ಲಮಪ್ರಭುವಿನ ಜನನ, ಅವನ ದೇಶ ಪರ್ಯಟನದಲ್ಲಿ ಗೊಗ್ಗಯ್ಯ, ಮುಕ್ತಾಯಿ, ಸಿದ್ಧರಾಮ ಗೋರಕ್ಷರ ಭೇಟಿ, ಕಲ್ಯಾಣದ ಶೂನ್ಯಸಿಂಹಾಸನವನ್ನೇರಿದುದು ಬಸವಣ್ಣನಿಗೆ ಅವನಲಿಂಗೈಕ್ಯದ ಪೂರ್ವ ಸೂಚನೆ, ಬಿಜ್ಜಳನ ಮರಣ,ಶರಣರ ಉಳಿವೆಯತ್ತಲಿನ ಪ್ರಯಾಣ-ಇವುಗಳು ಬಂದಿವೆ. ಇದು ಒಂದು ರೀತಿಯಲ್ಲಿ  ಪ್ರಭುಲಿಂಗಲೀಲೆ ಮತ್ತು ಶೂನ್ಯಸಂಪಾದನೆಗಳಲ್ಲಿ ನಿರೂಪಿತವಾಗಿರುವ ಅಲ್ಲಮನ ಕಥೆಯ ಶೀರ್ಷಿಕೆಗಳಾಗಿವೆ. ಮುರಿಗಾಶಾಂತವೀರರಿಗೆ ಪ್ರಭುವಿನ ಕಥನ ನಿರೂಪಣೆಗೆ ಚಾಮರಸನ ಪ್ರಭುಲಿಂಗಲೀಲೆ, ಶೂನ್ಯಸಂಪಾದನೆ ಆಕರವಾಗಿದೆ. ಕೃತಿಯ ನಡುವೆ ರೇವಣಸಿದ್ಧೇಶ್ವರರ ಪ್ರಸ್ತಾಪವನ್ನು ತಂದು ಸೇರಿಸಿರುವುದು ಕಥಾಸಂಯೋಜನೆಯಲ್ಲಿನ ಸಡಿಲ ಬಂಧವನ್ನು ಎತ್ತಿ  ತೋರಿಸುತ್ತದೆ. ಈ ರೀತಿ ಯಾಕೆ ಮಾಡಿದರೋ ತಿಳಿಯದು.

    ಈ  ತಾರಾವಳಿಯ ಪದ್ಯದ  ಸಾಲುಗಳು ಆದಿಪ್ರಾಸವನ್ನು ಅನುಸರಿಸುವುದರ ಜೊತೆಗೆ ಜೋಗುಳಪದ, ಸುವ್ವಾಲಿಪದ ಸೋಬಾನ ಪದಗಳ ಅರ್ಥವತ್ತಾದ ಧಾಟಿಯನ್ನು ಅನುಸರಿಸುವುದರ ಮೂಲಕ ಕಾವ್ಯದ ರಮ್ಯತೆಯನ್ನು ಹೆಚ್ಚಿಸಿವೆ. ಸ್ವಾನುಭವ ಜ್ಞಾನಿಯಾದ ಅಲ್ಲಮ ತನ್ನ ಗುರು ಅನಿಮಿಷದೇವರು ಶಿವಯೋಗ ಸಮಾಧಿಯಲ್ಲಿರುವ ವಿಷಯವನ್ನು ತಿಳಿದು ಅವರ ಕರದಿಷ್ಟಲಿಂಗವನ್ನು ತನ್ನ ಇಷ್ಟಬ್ರಹ್ಮದೊಳಗೆ ಇಟ್ಟುಕೊಳ್ಳುವನು. ಸ್ನೇಹಿತನಾದ ಗೊಗ್ಗಯ್ಯನಿಗೆ ಈ ವಿಷಯವನ್ನು ತಿಳಿಯಪಡಿಸಿ ಅನೇಕ ಶಿವಭಕ್ತರ ಕಥೆಗಳನ್ನು ಹೇಳುತ್ತಾನೆ. ಈ ಎಲ್ಲಾ ಪ್ರಮುಖ ಕಥಾಗುಚ್ಛ  ಈ ತಾರಾವಳಿಯ ಒಟ್ಟಾರೆ ಆಶಯವಾಗಿದೆ.

   ಮನುರಾಜೇಂದ್ರ ತಾರಾವಳಿ, ಶಾಂತವೀರರ ವಿಭಿನ್ನ ಆಲೋಚನೆಯಿಂದ ಕಲ್ಪಿತವಾದ ಈ ಕೃತಿ ಹಲವು ವಿಷಯಗಳ ಸಂಗಮವಾಗಿದೆ. ಸ್ತೋತ್ರರೂಪದಲ್ಲಿರುವ ಇದು ಶಾಂತವೀರರಿಂದಲೇ ರಚನೆಗೊಂಡ ಚಂಪುಶೈಲಿಯ ಹಮ್ಮೀರ ಕಾವ್ಯದ ವಸ್ತುವನ್ನು ಆಧರಿಸಿದೆ. ಹರಿಹರನ ರಗಳೆಯಂತೆ ಇಲ್ಲಿಯ ನಡೆಯಿದೆ. ಇಲ್ಲಿ ಕವಿ ಸಾಧನೆಗೆ ಸಂಸಾರವೂ ಮುಖ್ಯ ತಾತ್ವಿಕತೆಗೆ ಧರ್ಮವೂ ಮುಖ್ಯ, ಒಂದರಲ್ಲಿ ಒಂದು ಆಡಗಿಕೊಂಡು ಹೊಸ ಅನುಭವವನ್ನು ಕೊಡುತ್ತವೆ ಎಂಬ ವಿಚಾರವನ್ನು ತಿಳಿಯಪಡಿಸಿದ್ದಾನೆ. ಜೋಗುಳಪದ, ಸುವ್ವಾಲಿಪದ ಸೋಬಾನಪದಗಳ ಅರ್ಥವತ್ತಾದ ಧಾಟಿಯನ್ನು ಅನುಸರಿಸುವುದರೊಂದಿಗೆ ಕಾವ್ಯದ ರಮ್ಯತೆಯನ್ನು ಹೆಚ್ಚಿಸಿವೆ. ಇಂತಹ ಚಾರಿತ್ರಿಕ ಮತ್ತು ಶರಣರ ಚರಿತ್ರೆಯ ಬಗೆಗೆ ಬೆಳಕು ಚೆಲ್ಲುವ ಮನುರಾಜೇಂದ್ರನ ತಾರಾವಳಿಯನ್ನು ಒಳಗೊಂಡಂತೆ  ಇಮ್ಮಡಿ ಮುರಿಗಾ ಶಾಂತವೀರರ ಒಟ್ಟು ಕೃತಿಗಳ ಬಗೆಗೆ   ಇನ್ನು ಮುಂದೆಯಾದರೂ ವ್ಯವಸ್ಥಿತವಾದ ಅಧ್ಯಯನ ನಡೆದು ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇವರ ಸ್ಥಾನವನ್ನು ನಿಗದಿ ಪಡಿಸುವ ಕೆಲಸವಾಗಲೆಂದು ಆಶಿಸುತ್ತೇನೆ. 

ಆಕರ ಗ್ರಂಥಗಳು:

೧. ಮುರಿಗೆ ಶಾಂತವೀರಸ್ವಾಮಿಗಳ ಕೃತಿಗಳು – ಸಂ, ಎಸ್. ಶಿವಣ್ಣ, ಶ್ರೀ ಬೃಹನ್ಮಠ ಸಂಸ್ಥಾನ, 

    ಚಿತ್ರದುರ್ಗ, ೧೯೮೯, 

೨. ಎಸ್.ಶಿವಣ್ಣ, ಬಿಡುಮುತ್ತು, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು, ೨೦೦೪

೩. ವೀರಶೈವ ತಾರಾವಳಿ ಸಂಪುಟ – ಸಂ. ಡಾ. ವೀರಣ್ಣ ರಾಜೂರ, ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೧೯೯೪ 

೪. ಎಸ್.‌ ವಿದ್ಯಾಶಂಕರ ವೀರಶೈವ ಸಾಹಿತ್ಯ ಚರಿತ್ರೆ ಸಂಪುಟ ೪, 

  ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೧೫

೫. ಪುಷ್ಪಾ ಬಸನಗೌಡರ, ಮುರುಘಾಪರಂಪರೆಯ ಪ್ರಾಚೀನ ಸಾಹಿತ್ಯ, 

    ಶ್ರೀ ಮುರುಘಾ ಮಠ, ಚಿತ್ರದುರ್ಗ, ೨೦೧೬

೬. ಮಹಾಲಿಂಗ ಕವಿಯ ಮಹಾಲಿಂಗೇಂದ್ರ ವಿಜಯ ಸಂ. ಎಲ್.‌ ಬಸವರಾಜು

           ಶ್ರೀ ಮುರುಘಾ ಮಠ, ಚಿತ್ರದುರ್ಗ, ೧೯೭೫

                                                                                       



 


  ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣೀ ಸೂತ್ರರತ್ನಾಕರದಲ್ಲಿ ಬಸವಣ್ಣನವರ     ಕುರಿತ ಸಂಗತಿಗಳು          ಡಾ.ಸಿ.ನಾಗಭೂಷಣ         ಕವಿಯ ಇತಿವೃತ್ತ : ಭ...