ಗುರುವಾರ, ಅಕ್ಟೋಬರ್ 1, 2026

 ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ ಸಮಗ್ರ ಸಾಹಿತ್ಯ ಸಂಪುಟ- ೯   ಸಮಗ್ರ ನೋಟ: ಕಾವ್ಯ ಸಾಹಿತ್ಯ: ಕೃತಿಗಳು-1

                                                         ಡಾ.ಸಿ.ನಾಗಭೂಷಣ

        ಕನ್ನಡ ಸಾಹಿತ್ಯವು ಆಧುನಿಕ ಕಾಲಕ್ಕೆ ಬಂದಾಗ ಹಲವು ಹತ್ತು ಪ್ರಯೋಗಗಳಿಗೆ ಒಳಗಾಗಿದ್ದು ಮಾತ್ರವಲ್ಲದೆ, ನಾಡು-ನುಡಿಗಳ ಚರಿತ್ರೆಯ ಪುನರ್ ನಿರ್ಮಾಣದಲ್ಲಿ ಕೂಡ ತೊಡಗಿಕೊಂಡಿತು. ಆ ಕಾಲದ ಸಂಶೋಧಕರು, ಅಧ್ಯಯನಕಾರರು ಸೃಜನ, ಸೃಜನೇತರಗಳಲ್ಲಿ ಹಿರಿದಾದುದನ್ನು ಸಾಧಿಸಿದರು. ಶಿಸ್ತುಬದ್ಧ ಮತ್ತು ಶಾಸ್ತ್ರೀಯ ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನ, ಸಂಶೋಧನಾ ವಿಧಿ ವಿಧಾನಗಳ ಹಿನ್ನಲೆ ಇಲ್ಲದಿದ್ದರೂ, ತಮ್ಮದೇ ದಾರಿಯಲ್ಲಿ ನಡೆದು ಅಪೂರ್ವವಾದ ಸಾಧನೆ ಮಾಡಿದ ದೇಶಿಯ ವಿದ್ವಾಂಸರ ಸಾಧನೆಗಳನ್ನು ಮರೆಯುವಂತಿಲ್ಲ. ಸಾಹಿತ್ಯ, ಶಾಸನ, ಹಸ್ತಪ್ರತಿ, ಮತ್ತಿತರ ಆಕರಗಳನ್ನು ಸಂಶೋಧಿಸಿ, ಪರಿಶೀಲಿಸಿ, ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದ್ದು ಅಲ್ಲದೆ, ಅವುಗಳನ್ನು ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮಾಡಿದವರಲ್ಲಿ ಡಾ. ಫ.ಗು.ಹಳಕಟ್ಟಿ ಅವರು ಕನ್ನಡಿಗರು ಮರೆಯಲಾರದ ವಿದ್ವಾಂಸರಾಗಿದ್ದಾರೆ. ಹಲವು ಸಾಧನೆ ಮತ್ತು ಕಾರ್ಯಗಳಿಂದ ಇಂದಿಗೂ ಮುಖ್ಯರಾಗುವ ಅವರು ಆಕರಶೋಧ ಸಂಗ್ರಹ, ಪರಿಶೀಲನೆ, ವಿಶ್ಲೇಷಣೆ, ವಿಮರ್ಶೆಗಳಿಂದ ಗಮನ ಸೆಳೆಯುತ್ತಾರೆ. ಕೆ.ಬಿ.ಪಾಠಕ, ಎಂ.ಎಸ್.ಪುಟ್ಟಣ್ಣ, ಹರ್ಡೇಕರ ಮಂಜಪ್ಪ, ಚೆನ್ನಮಲ್ಲಿಕಾರ್ಜುನ ಮಾಸ್ತರರು, ಉತ್ತಂಗಿ ಚನ್ನಪ್ಪ, ಮುಂತಾದವರು ಚರಿತ್ರೆ, ಸಂಸ್ಕೃತಿ ಮತ್ತು ಸಾಹಿತ್ಯದ ಅಧ್ಯಯನ, ಪುನರ್ ನಿರ್ಮಾಣದಲ್ಲಿ ತೊಡಗಿದ್ದ ಅವಧಿಯಲ್ಲಿ ಹೊಸ ಅಧ್ಯಯನ ಸಾಧ್ಯತೆಗಳು, ದಿಕ್ಕು ದಿಸೆಗಳು ತೆರೆದುಕೊಂಡಿದ್ದವು. ಇದರತ್ತ ಆಕರ್ಷಿತರಾದ ಹಳಕಟ್ಟಿ ಅವರು ಅನೇಕ ಶರಣರ ಚರಿತ್ರೆಗಳನ್ನು ಶೋಧಿಸಿ, ರೂಪಿಸಿ ಎದುರಿಗಿಡುವ ಪಣ ತೊಟ್ಟರು. ಅದನ್ನು ಏಕಪ್ರಕಾರವಾಗಿ ಬೆನ್ನಟ್ಟಿ ಸಾಧಿಸಿಯೂ ತೋರಿಸಿದರು. ಅವರು ಇತಿಹಾಸವನ್ನು ಗೌರವಿಸಿದರು. ಗುರುತಿಸಿದರು, ಶೋಧಿಸಿದರು, ಪುನರ್ ರಚಿಸಿದರು, ವಿವರಿಸಿ ವಿಶ್ಲೇಷಿಸಿದರು. ಆ ಕಾರಣದಿಂದ ಇತಿಹಾಸದ ಭಾಗವಾದರು.  ಕನ್ನಡ ಸಾಹಿತ್ಯದ ಆಧುನಿಕ ಪುನರುಜ್ಜೀವನದ ಚರಿತ್ರೆಯನ್ನು ಅವಲೋಕಿಸಿದಾಗ, ಹಸ್ತಪ್ರತಿ–ಸಂಗ್ರಹ, ಪಠ್ಯಸಂಪಾದನೆ, ಗ್ರಂಥಪ್ರಕಟನೆ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಂಶೋಧನೆ—ಈ ಐದು ಕ್ಷೇತ್ರಗಳನ್ನು ಏಕಕಾಲದಲ್ಲಿ ಜೋಡಿಸಿದ ಅಪೂರ್ವ ವ್ಯಕ್ತಿತ್ವವಾಗಿ ಫ.ಗು. ಹಳಕಟ್ಟಿಯವರು ಕಾಣಿಸಿಕೊಳ್ಳುತ್ತಾರೆ. ವಿಶೇಷವಾಗಿ ವಚನಸಾಹಿತ್ಯದ ವಿಷಯದಲ್ಲಿ ಅವರ ಕಾರ್ಯ ಕೇವಲ ಕೆಲವು ಹಳೆಯ ಕೃತಿಗಳನ್ನು ಮುದ್ರಿಸುವ ಮಟ್ಟಕ್ಕೆ ಸೀಮಿತವಾಗಿರಲಿಲ್ಲ. ಅವರು ಮರೆತುಹೋಗಿದ್ದ ಪಠ್ಯವನ್ನು ಹುಡುಕಿದರು; ಪಠ್ಯವನ್ನು ಪರಿಶೀಲಿಸಿದರು; ಸಂಪಾದಿಸಿದರು; ಓದುಗರಿಗೆ ತಲುಪಿಸಿದರು, ನಂತರ ಅದನ್ನು ಗ್ರಂಥರೂಪಕ್ಕೆ ತಂದರು. ಹಳಕಟ್ಟಿಯವರ ಈ ಸಮಗ್ರ ಕಾರ್ಯದ ಪ್ರಮುಖ ವೇದಿಕೆಯೇ ‘ಶಿವಾನುಭವ’ ಪತ್ರಿಕೆ. ‘ಶಿವಾನುಭವ’ ಪತ್ರಿಕೆಯ ಉದಯವು ಆಕಸ್ಮಿಕವಾಗಿ ಅಥವಾ ಏಕಾಏಕಿ ಸಂಭವಿಸಿದ ಘಟನೆಯಲ್ಲ; ೧೯೨೬ರಲ್ಲಿ ಪತ್ರಿಕೆ ಆರಂಭವಾದರೂ ಅದರ ಹಿಂದೆ ಸುಮಾರು ಮೂರು ದಶಕಗಳ ಚಿಂತನೆ, ಪರಿಶ್ರಮ ಮತ್ತು ವೀರಶೈವ ಗ್ರಂಥಗಳ ಅನ್ವೇಷಣೆಯ ಅನುಭವವಿತ್ತು. ‘ಪ್ರಭುಲಿಂಗಲೀಲೆ’ ಮತ್ತು ‘ಗಣಭಾಷಿತರತ್ನಮಾಲೆ’ ಮೊದಲಾದ ಕೃತಿಗಳು ಹಳಕಟ್ಟಿಯವರ ಸಂಶೋಧನಾ ಆಸಕ್ತಿಯನ್ನು ತೀವ್ರಗೊಳಿಸಿದ ಪ್ರೇರಕ ಗ್ರಂಥಗಳಾಗಿದ್ದವು. ೧೯೨೬ ಫೆಬ್ರವರಿ ೧೧ ರಂದು ಡಾ. ಫ.ಗು. ಹಳಕಟ್ಟಿಯವರು ‘ಹಿತಚಿಂತಕ ಮುದ್ರಣಾಲಯ’ವನ್ನು ಸ್ಥಾಪಿಸಿದರು. ಅದೇ ತಿಂಗಳಿಂದ ಶಿವಾನುಭವ ಪತ್ರಿಕೆಯ ಪ್ರಕಟಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ೩೫ ವರ್ಷಗಳ ಸುದೀರ್ಘ ಕಾಲ ಶಿವಾನುಭವ ಪತ್ರಿಕೆಯನ್ನು ಎಂತಹ ಗಂಡಾಂತರ ಬಂದರೂ ನಿಲ್ಲಿಸಿದೆ ಪ್ರಕಟಿಸಿದ್ದು ಅವರ ಶರಣ ಶ್ರದ್ಧೆಗೆ ಹಿಡಿದ ಕನ್ನಡಿ. ಪತ್ರಿಕೆಗೆ ‘ಶಿವಾನುಭವ’ ಎಂಬ ಹೆಸರಿಡಲು ಕೇವಲ ಧಾರ್ಮಿಕ ಅಭಿಮಾನ ಕಾರಣವಾಗಿರಲಿಲ್ಲ; ಅದರ ಹಿಂದೆ ಗಾಢವಾದ ತಾತ್ವಿಕ ಚಿಂತನೆಯಿತ್ತು. ಇದನ್ನು ಸ್ವತಃ ಹಳಕಟ್ಟಿಯವರೇ ಹೀಗೆ ನಿರೂಪಿಸಿದ್ದಾರೆ. ಶಿವಾನುಭವ ಪತ್ರಿಕೆಗೆ ಆ ಹೆಸರಿಡಲು ಕಾರಣವೇನು? ಎಂಬುದನ್ನು ಅವರೇ ಒಂದೆಡೆ ಹೀಗೆ ಪ್ರಸ್ತಾಪಿಸಿದ್ದಾರೆ:   ‘ಶಿವಶರಣರ ತತ್ವಗಳ ಉದ್ದೇಶವು ಶಿವನ ಅನುಭವ. ಎಂದರೆ ಶಿವನನ್ನು ಕಾಣುವುದು ಅಥವಾ ಅರಿಯುವುದೇ ಮುಖ್ಯವಾಗಿದ್ದರಿಂದಲೂ, ಬಸವಾದಿ ಪ್ರಮಥರು ಕಲ್ಯಾಣ ಪಟ್ಟಣದಲ್ಲಿದ್ದಾಗ ತಮ್ಮ ಶರಣರ ಕೂಟಕ್ಕೆ ‘ಶಿವಾನುಭವ ಮಂಟಪ’ ಎಂಬ ಹೆಸರನ್ನು ಇಟ್ಟಿದ್ದರಿಂದಲೂ ನಾನು ಈ ಪತ್ರಿಕೆಗೆ ‘ಶಿವಾನುಭವ’ ಎಂದು ಹೆಸರಿಟ್ಟೆನು.   "ಹನ್ನೆರಡನೆಯ ಶತಮಾನದ ಕಲ್ಯಾಣದ ‘ಶಿವಾನುಭವ ಮಂಟಪ’ವು ಜಾತಿ, ಲಿಂಗ, ಕಾಯಕದ ಭೇದವಿಲ್ಲದೆ ಜ್ಞಾನಮೀಮಾಂಸೆಯನ್ನು ನಡೆಸಿದ ವಿಶ್ವದ ಪ್ರಥಮ ಪ್ರಜಾಸತ್ತಾತ್ಮಕ ಆಧ್ಯಾತ್ಮಿಕ ವೇದಿಕೆಯಾಗಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಅಂತಹದ್ದೇ ಒಂದು ಮುಕ್ತ ಚಿಂತನೆಯ, ಜ್ಞಾನ ಪ್ರಸಾರದ ಅಕ್ಷರ ಮಂಟಪವನ್ನು ಮರುಸೃಷ್ಟಿಸುವುದೇ ಈ ಪತ್ರಿಕೆಯ ಮೂಲ ಧ್ಯೇಯವಾಗಿತ್ತು. ಸುಮಾರು ನಾಲ್ಕು ದಶಕಗಳ ಕಾಲ ಪತ್ರಿಕೆ ನಿರಂತರವಾಗಿ ಪ್ರಕಟವಾಗಿದ್ದು, ಅಪರಿಚಿತವಾಗಿದ್ದ ಅನೇಕ ಸಾಹಿತ್ಯಕೃತಿಗಳಿಗೆ ಪ್ರಕಟಣಾ ವೇದಿಕೆಯಾಯಿತು. ಆದ್ದರಿಂದ ‘ಶಿವಾನುಭವ’ವನ್ನು ಕೇವಲ ವೀರಶೈವ ಧಾರ್ಮಿಕ ಪತ್ರಿಕೆಯೆಂದು ಗುರುತಿಸುವುದು ಅದರ ಸ್ವರೂಪವನ್ನು ಕುಗ್ಗಿಸುವಂತಾಗುತ್ತದೆ. ಅದು ಸಾಹಿತ್ಯ–ಧರ್ಮ–ಇತಿಹಾಸ–ಸಂಶೋಧನೆ–ಸಮಾಜ–ಸಂಸ್ಕೃತಿಗಳನ್ನು ಪರಸ್ಪರ ಜೋಡಿಸಿದ ಒಂದು ಜ್ಞಾನಪ್ರಸರಣ ವೇದಿಕೆಯಾಗಿದೆ. ಇದು ಕೇವಲ ಒಂದು ಪತ್ರಿಕೆಯಾಗಿರದೆ,  ವಚನ ಸಾಹಿತ್ಯದ ಪುನರುಜ್ಜೀವನದ ಯಜ್ಞಕುಂಡವಾಗಿತ್ತು. ಉನ್ನತ ತತ್ವಪ್ರಚಾರ, ಧಾರ್ಮಿಕ ಚಿಂತನೆ, ಸಾಹಿತ್ಯಿಕ ಅರಿವು ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಂಡ ಈ ಪತ್ರಿಕೆಯು ಕನ್ನಡ ಜನತೆಗೆ ಅಪಾರವಾದ ಜ್ಞಾನ ಸಂಪತ್ತನ್ನು ನೀಡಿತು. ಡಾ. ಫ.ಗು.ಹಳಕಟ್ಟಿಯವರ ಲೇಖನಗಳು ಶಿವಾನುಭವ ಪತ್ರಿಕೆಯ ಬೆನ್ನೆಲುಬು ಆಗಿದ್ದವು. ಅವು ಕೇವಲ ಸಾಹಿತ್ಯ ಪ್ರಕಟಣೆಯಾಗಿರದೆ, ಶರಣ ಸಾಹಿತ್ಯದ ಸರ್ವಸ್ವರೂಪವನ್ನು ಜನಸಾಮಾನ್ಯರಿಗೆ ತಲುಪಿಸುವ ಸೇತುವೆ ಆಗಿದ್ದವು. ಅವರ ಲೇಖನಗಳ ವೈಶಿಷ್ಟ್ಯವೆಂದರೆ:ಸಂಶೋಧನಾ ನಿಷ್ಠೆ,ವಸ್ತು ವೈವಿಧ್ಯ, ಪ್ರಸ್ತಾವನೆಗಳ ಮೂಲಕ ಪಾರದರ್ಶಕತೆ, ಸಾಮಾಜಿಕ ಕ್ರಾಂತಿಯ ಮನೋಭಾವ, ಸ್ವರವಚನಗಳಿಗೂ ಪ್ರಾಧಾನ್ಯ ನೀಡಿದ ಕ್ರಾಂತಿಕಾರಿ ದೃಷ್ಟಿ, ಅವರ ಲೇಖನಗಳು ಶಿವಾನುಭವ ಪತ್ರಿಕೆಗೆ ಒಂದು ಶಾಶ್ವತವಾದ ಸಾಹಿತ್ಯಕ ಆಸ್ತಿಯನ್ನು ದಾನ ಮಾಡಿದವು. ಇಂದಿಗೂ ಆ ಲೇಖನಗಳು ಸಂಶೋಧಕರು, ಸಾಹಿತ್ಯಾಸಕ್ತರು, ಧರ್ಮಜಿಜ್ಞಾಸುಗಳಿಗೆ ಅಮೂಲ್ಯ ಆಕರಗಳಾಗಿ ಉಳಿದಿವೆ.

    ಹಳಕಟ್ಟಿಯವರು ವಚನ ಸಾಹಿತ್ಯದ ಸಂಪಾದಕರಾಗಿ ನಾಡಿನ ಜನತೆಗೆ ಚಿರಪರಿಚಿತರಾದಂತೆ ಪತ್ರಿಕೋದ್ಯಮಿಯಾಗಿಯೂ ಜನಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಹಳಕಟ್ಟಿಯವರು ಶಿವಾನುಭವ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಸ್ಥಿರಗೊಳಿಸಿಕೊಂಡಿದ್ದಾರೆ. ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಒಂದು ವೇಳೆ ಶರಣ ಸಾಹಿತ್ಯದ ಕಡೆಗೆ ಲಕ್ಷ್ಯ ಹರಿಸದೇ ಇದ್ದರೆ ಇಂದು ನಮಗೆ ಶಿವಶರಣರ ವಚನಗಳು ದೊರಕುತ್ತಿರಲಿಲ್ಲ. ಕತ್ತಲ ಕಾಲ ಗರ್ಭದಲ್ಲಿದ್ದ ವಚನಗಳನ್ನು ಒಬ್ಬ ಸಾಮಾನ್ಯ ವಕೀಲರಾಗಿದ್ದುಕೊಂಡು ಶರಣರ ತತ್ವಾದರ್ಶಗಳು ಅವರೊಳಗಿದ್ದ ವೈಚಾರಿಕ ಮಾನವ ಪ್ರಜ್ಞೆಯನ್ನು ಎತ್ತಿ ತೋರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.  

  ಫ.ಗು. ಹಳಕಟ್ಟಿಯವರ ‘ಶಿವಾನುಭವ’ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳು ಕೇವಲ ಧಾರ್ಮಿಕ ಅಥವಾ ವೀರಶೈವ ವಿಚಾರಗಳ ಲೇಖನಗಳಲ್ಲ; ಅವು ಕನ್ನಡದ ವಚನಸಾಹಿತ್ಯದ ಪುನರುಜ್ಜೀವನ, ಹಸ್ತಪ್ರತಿ ಸಂರಕ್ಷಣೆ, ಪಠ್ಯಸಂಪಾದನೆ, ಶರಣಚರಿತ್ರೆ ನಿರ್ಮಾಣದ ಪ್ರಯೋಗಾಲಯ, ವೀರಶೈವ ಸಾಹಿತ್ಯದ ದಾಖಲೆ ಭಂಡಾರ, ಸಂಶೋಧನಾ ಲೇಖನಗಳ ವೇದಿಕೆ, ಧಾರ್ಮಿಕ-ತಾತ್ವಿಕ ಚರ್ಚೆಯ ವೇದಿಕೆ, ಸಾಮಾಜಿಕ ಚಿಂತನೆಯ ಮಾಧ್ಯಮ, ಕನ್ನಡ ಸಾಹಿತ್ಯ-ಸಂಸ್ಕೃತಿಯ ಜಾಗೃತಿಯ ಸಾಧನ,  ಸಾಹಿತ್ಯಚರಿತ್ರೆಯ ಪುನರ್‌ರಚನೆ ಮತ್ತು ಸಾಮಾಜಿಕ-ಮಾನವೀಯ ಮೌಲ್ಯಗಳ ಪ್ರಸರಣವನ್ನು ಒಳಗೊಂಡ ಬಹುಮುಖ ಜ್ಞಾನ ಪ್ರಯತ್ನಗಳಾಗಿವೆ. ‘ಶಿವಾನುಭವ’ ಪತ್ರಿಕೆಯ ಉದಯವನ್ನು ಪ್ರತ್ಯೇಕವಾದ ಪತ್ರಿಕಾ ಘಟನೆಯಾಗಿ ನೋಡುವುದಕ್ಕಿಂತ, ಹಳಕಟ್ಟಿಯವರ ದೀರ್ಘಕಾಲದ ಸಂಶೋಧನಾ ಸಿದ್ಧತೆಯ ಫಲವಾಗಿ ನೋಡಬೇಕು. ‘ಶಿವಾನುಭವ’ವನ್ನು ಕೇವಲ ಒಂದು ಪತ್ರಿಕೆಯೆಂದು ಕರೆಯುವುದು ಅದರ ಮಹತ್ವವನ್ನು ಸೀಮಿತಗೊಳಿಸುವಂತಾಗುತ್ತದೆ.

   ಶಿವಾನುಭವ’ದಲ್ಲಿ ಪತ್ರಿಕಾ ಧಾರಾವಾಹಿ ಒಂದು ಸಂಪಾದನಾ ತಂತ್ರವಾಗಿ ಧಾರಾವಾಹಿಯಿಂದ ಗ್ರಂಥರೂಪಕ್ಕೆ ನಾಂದಿಯಾಡಿತು. ಹಳಕಟ್ಟಿಯವರ ವಿಶಿಷ್ಟ ಸಂಪಾದಕೀಯ ಕ್ರಮಗಳಲ್ಲಿ ಒಂದು ಧಾರಾವಾಹಿ ಪ್ರಕಟಣೆ. ಹಸ್ತಪ್ರತಿಗಳಿಂದ ಪರಿಷ್ಕರಿಸಿದ ಅಪೂರ್ವ ಪಠ್ಯಗಳನ್ನು ಹಳಕಟ್ಟಿಯವರು ಮೊದಲು ‘ಶಿವಾನುಭವ’ ಪತ್ರಿಕೆಯ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿದ್ದರು (ಉದಾಹರಣೆಗೆ: ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ, ಹರಳಯ್ಯನ ತ್ರಿಪದಿ, ನೂರೊಂದರ ಹಾಡುಗಳು). ಕೃತಿ ಚಿಕ್ಕದಾಗಿದ್ದರೆ ಒಂದೇ ಸಂಚಿಕೆಯಲ್ಲಿ; ದೀರ್ಘವಾಗಿದ್ದರೆ ಹಲವು ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿ, ನಂತರ ಸ್ವತಂತ್ರ ಗ್ರಂಥವಾಗಿ ಹೊರತರುವ ಕ್ರಮವನ್ನು ಅನುಸರಿಸುತ್ತಿದ್ದರು. ಇದು ಕೇವಲ ಸಂಪಾದಕೀಯ ತಂತ್ರವಲ್ಲ. ಇದು ಒಂದು ಸಾಹಿತ್ಯ-ಪುರಾತತ್ವದ ವಿಧಾನ. ಇದು ಮೂರು ಉದ್ದೇಶಗಳನ್ನು ಪೂರೈಸಿತು. ದೀರ್ಘ ಪಠ್ಯವನ್ನು ಓದುಗರಿಗೆ ಹಂತ ಹಂತವಾಗಿ ತಲುಪಿಸುವುದು. ಅಪ್ರಕಟಿತ ಕೃತಿಯನ್ನು ಸಾರ್ವಜನಿಕ ವಲಯಕ್ಕೆ ತರುವುದು. ನಂತರ ಗ್ರಂಥಪ್ರಕಟನೆಗೆ ಪೂರ್ವಭಾವಿ ರೂಪ ಸಿದ್ಧಪಡಿಸುವುದು. ಹೀಗಾಗಿ ‘ಶಿವಾನುಭವ’ವು ಒಂದು ಅರ್ಥದಲ್ಲಿ ಧಾರಾವಾಹಿ ಪಠ್ಯ ಪ್ರಕಟಣಾ ಪ್ರಯೋಗಾಲಯ ಆಗಿತ್ತು.  ಈ ದ್ವಿಮುಖ ಪ್ರಕಟಣಾ ನೀತಿಯು ಓದುಗರಿಗೆ ಪತ್ರಿಕೆಯ ಮೂಲಕ ನಿರಂತರ ಅಧ್ಯಯನಕ್ಕೂ, ಸಂಶೋಧಕರಿಗೆ ಕೃತಿರೂಪದ ಆಕರವಾಗಿಯೂ ಒದಗಿಬಂತು.

 ಶಿವಾನುಭವ ಪತ್ರಿಕೆಯಲ್ಲಿ ಪ್ರತಿಯೊಂದು ಕೃತಿಯ ಆರಂಭದಲ್ಲೂ ಹಳಕಟ್ಟಿಯವರು ಬರೆಯುತ್ತಿದ್ದ ಪ್ರಸ್ತಾವನೆಗಳು ಸಂಶೋಧನಾ ಜಗತ್ತಿಗೆ ಮಾದರಿಯಾಗಿವೆ. ಹಸ್ತಪ್ರತಿ ತಮಗೆ ಹೇಗೆ ಲಭಿಸಿತು? ಒದಗಿಸಿದವರು ಯಾರು? (ಉದಾ: ಶಾಲಾ ಮಾಸ್ತರರಾದ ದುಂಡನಗೌಡ ಪಾಟೀಲರು, ವಕೀಲ ಎಚ್.ಆರ್. ಮಹಾಂತಯ್ಯನವರು, ಸಿ.ನಾ. ಮಹಾಂತಣ್ಣವರ), ಕೃತಿಯ ಗುಣದೋಷಗಳೇನು? ಛಂದಸ್ಸಿನ ಸ್ವರೂಪವೇನು? ಎಂಬುದನ್ನು ಮುಚ್ಚುಮರೆಯಿಲ್ಲದೆ ವಸ್ತುನಿಷ್ಠವಾಗಿ ದಾಖಲಿಸುತ್ತಿದ್ದರು.

 ಹಳಕಟ್ಟಿಯವರ ‘ಶಿವಾನುಭವ’ ಲೇಖನಗಳನ್ನು ಆಧುನಿಕ ಅರ್ಥದಲ್ಲಿ ಸಂಶೋಧನಾ ಲೇಖನಗಳ ಪೂರ್ವರೂಪಗಳೆಂದು ಪರಿಗಣಿಸಬಹುದು. ಹಳಕಟ್ಟಿಯವರ ಸಾಹಿತ್ಯಪ್ರಕಟಣಾ ಕ್ರಮವನ್ನು ಈ ಕೆಳಗಿನಂತೆ ರೂಪಿಸಬಹುದು: ಅಂದರೆ: ಆಕರಶೋಧನೆ → ಆಕರಸಂಗ್ರಹ → ಆಕರಪರಿಶೀಲನೆ → ಪಠ್ಯಪರಿಷ್ಕರಣೆ ಪರಿಶೀಲನೆ → ಪಠ್ಯನಿರ್ಣಯ → ಸಂಪಾದನೆ → ಪತ್ರಿಕೆಯಲ್ಲಿ ಪ್ರಕಟಣೆ → ಓದುಗರ ಪ್ರತಿಕ್ರಿಯೆ/ಪ್ರಚಾರ → ಗ್ರಂಥರೂಪ ಎಂಬ ಒಂದು ಪೂರ್ಣ ಸಾಹಿತ್ಯ ಸಂರಕ್ಷಣಾ ಚಕ್ರದ ಸಂಶೋಧನಾ ವೈಧಾನಿಕತೆಯನ್ನು ಗುರುತಿಸ ಬಹುದು. ಇದು ಅವರ ಕಾರ್ಯದ ಅತ್ಯಂತ ಪ್ರಮುಖ ವೈಶಿಷ್ಟ್ಯ. ಉದಾಹರಣೆಗೆ, ಮೂಲಪಠ್ಯದ ರೂಪದಲ್ಲಿ  ಪದಮಂತ್ರಗೋಪ್ಯ, ನೂರೊಂದರ ಹಾಡುಗಳು, ಸಟೀಕ ಏಕೋತ್ತರ ಶತಸ್ಥಲ, ಅವಧೂತಗೀತೆ, ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ, ಶಿವಯೋಗಾಚರಣೆ, ಶಿವಶರಣರ ಪದಗಳು, ಹರಳಯ್ಯನ ತ್ರಿಪದಿ ಮೊದಲಾದ ಕೃತಿಗಳು ಹಳಕಟ್ಟಿಯವರ ಕಾವ್ಯಸಂಪಾದನಾ ಪರಂಪರೆಯ ಭಾಗವಾಗಿ ಗುರುತಿಸಲ್ಪಟ್ಟಿವೆ.

      ಶಿವಾನುಭವ’ ಪತ್ರಿಕೆಯ ಲೇಖನಗಳನ್ನು ಮುಖ್ಯವಾಗಿ “ಹಳಕಟ್ಟಿಯವರ ಲೇಖನಗಳು” ಮತ್ತು “ಇತರ ಲೇಖನಗಳು” ಎಂದು ಎರಡು ವಿಭಾಗಗಳಲ್ಲಿ ಗುರುತಿಸುತ್ತದೆ. ಹಳಕಟ್ಟಿಯವರ ಲೇಖನಗಳಲ್ಲಿ ಮತ್ತೆ ವಚನ, ಸ್ವರವಚನ ಮತ್ತು ಕಾವ್ಯಸಂಪಾದನೆಗಳಿಗೆ ವಿಶೇಷ ಸ್ಥಾನವಿದೆ. ಇತರ ಲೇಖನಗಳನ್ನು ಸೃಜನ ಮತ್ತು ಸೃಜನೇತರ ಎಂಬ ಎರಡು ವಿಭಾಗಗಳಲ್ಲಿ ವಿಂಗಡಿಸಿ, ಸೃಜನಾತ್ಮಕ ವಿಭಾಗದಲ್ಲಿ ಕಥೆ, ಕವನ, ನಾಟಕ ಹಾಗೂ ಸೃಜನೇತರ ವಿಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಐತಿಹಾಸಿಕ, ಸಂಶೋಧನಾತ್ಮಕ ಮತ್ತು ವ್ಯಕ್ತಿಚಿತ್ರಣ ಮೊದಲಾದ ಪ್ರಕಾರಗಳನ್ನು ಗುರುತಿಸಲಾಗಿದೆ. ಇದರಿಂದ ಒಂದು ಮಹತ್ವದ ಸಂಗತಿ ಸ್ಪಷ್ಟವಾಗುತ್ತದೆ.‘ಶಿವಾನುಭವ’ವು ಏಕವಿಷಯಕ ಧಾರ್ಮಿಕ ಪತ್ರಿಕೆಯಾಗಿ ಉಳಿಯದೆ, ವಚನಸಾಹಿತ್ಯವನ್ನು ಕೇಂದ್ರವಾಗಿಟ್ಟುಕೊಂಡ ಬಹುಪ್ರಕಾರದ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯಾಗಿತ್ತು. ಆದರೆ ಅದರ ಕೇಂದ್ರಬಿಂದು ಹಳಕಟ್ಟಿಯವರ ವಚನಸಾಹಿತ್ಯದ ಸಂಶೋಧನೆ ಮತ್ತು ಸಂಪಾದನೆಯೇ ಆಗಿತ್ತು. ಹಳಕಟ್ಟಿಯವರ ‘ಶಿವಾನುಭವ’ ಲೇಖನಗಳ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಈಗಾಗಲೇ ಪ್ರಸಿದ್ಧವಾಗಿದ್ದ ಸಾಹಿತ್ಯವನ್ನು ಕುರಿತು ಬರೆಯುವುದಕ್ಕಿಂತ, ಅಪ್ರಕಟಿತವಾಗಿದ್ದ ಸಾಹಿತ್ಯವನ್ನು ಹುಡುಕಿ ಜನರ ಮುಂದಿಡುವುದು. ಅವರು, ಪ್ರಕಟಿತ ವಚನಗಳನ್ನು, ಸ್ವರವಚನಗಳನ್ನು, ವೀರಶೈವ ಕಾವ್ಯಗಳನ್ನು, ಹಸ್ತಪ್ರತಿಗಳನ್ನು ಶೋಧಿಸಿ, ಪರಿಶೀಲಿಸಿ, ಪರಿಷ್ಕರಿಸಿ, ಸಂಕ್ಷಿಪ್ತ ಪ್ರಸ್ತಾವನೆಯೊಂದಿಗೆ ಪ್ರಕಟಿಸುತ್ತಿದ್ದರು.

   ಪಠ್ಯವು ಹಳಕಟ್ಟಿಯವರು ನೂರಾರು ಹಸ್ತಪ್ರತಿಗಳನ್ನು ಪರಿಶೀಲಿಸಿದ್ದರು ಎಂದು ಸೂಚಿಸುತ್ತದೆ. ವಿಶೇಷವಾಗಿ ವಚನ, ಸ್ವರವಚನ ಮತ್ತು ಕಾವ್ಯಗಳನ್ನು ಹಸ್ತಪ್ರತಿಗಳ ಆಧಾರದಲ್ಲಿ ಸಂಪಾದಿಸುವುದು ಅವರ ಪ್ರಮುಖ ಕಾರ್ಯವಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಹಳಕಟ್ಟಿಯವರು ಆಧುನಿಕ ವಿಶ್ವವಿದ್ಯಾಲಯದ ಪಠ್ಯಸಂಪಾದನಾ ಶಾಸ್ತ್ರ ಸಂಪೂರ್ಣವಾಗಿ ರೂಪುಗೊಳ್ಳುವ ಮೊದಲೇ ಪ್ರಾಯೋಗಿಕ ಪಠ್ಯಸಂಪಾದನಾ ವಿಧಾನವೊಂದನ್ನು ರೂಪಿಸಿಕೊಂಡಿದ್ದರು. ಅವರು ನಾಡಿನ ವಿವಿಧ ಭಾಗಗಳಿಗೆ ತೆರಳಿ ಮನೆಗಳು, ಮಠಗಳು, ದೇವಾಲಯಗಳು ಮತ್ತು ತಾಳೆಓಲೆಗಳಲ್ಲಿದ್ದ ವಚನಗಳನ್ನು ಹುಡುಕಿದರು. ಹಳಕಟ್ಟಿಯವರ ಸಂಶೋಧನೆಗೂ ಮುನ್ನ ಕವಿ ಚರಿತೆಕಾರರ ಗಮನಕ್ಕೆ ಬಂದಿದ್ದ ವಚನಕಾರರ ಸಂಖ್ಯೆ ಸುಮಾರು ೫೦ರಷ್ಟಿದ್ದರೆ, ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ ೨೫೦ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆಯೂ ಅವರಿಗೆ ಸಲ್ಲುತ್ತದೆ. ಇದರಿಂದ ‘ಶಿವಾನುಭವ’ ಪತ್ರಿಕೆಯಲ್ಲಿ ಪ್ರಕಟವಾದ ವಚನಸಂಬಂಧಿ ಲೇಖನಗಳ ಮಹತ್ವವನ್ನು ಮೂರು ಹಂತಗಳಲ್ಲಿ ಗ್ರಹಿಸಬಹುದು:

    ೧. ಮರೆಯಾಗಿದ್ದ ಪಠ್ಯಗಳ ಪತ್ತೆ

    ೨.ಅವುಗಳ ವೈಜ್ಞಾನಿಕ/ಪರಿಶೀಲನಾತ್ಮಕ ಸಂಪಾದನೆ

    ೩.ಸಾರ್ವಜನಿಕ ಓದುಗರಿಗೆ ಅವುಗಳ ಪ್ರಸರಣ  ಈ ಮೂರೂ ಸೇರಿ ವಚನಸಾಹಿತ್ಯದ ಪುನರುಜ್ಜೀವನಕ್ಕೆ ಕಾರಣವಾದವು.

ಹಳಕಟ್ಟಿಯವರ ವಿಶೇಷ ಸಾಧನೆ ಕೇವಲ ವಚನಸಾಹಿತ್ಯಕ್ಕಷ್ಟೇ ಸೀಮಿತವಾಗಿಲ್ಲ. ಹಳಕಟ್ಟಿಯವರ ಸಂಪಾದನಾ ವ್ಯಾಪ್ತಿಯ ಮತ್ತೊಂದು ಪ್ರಮುಖ ಕ್ಷೇತ್ರ ಸ್ವರವಚನ. ವಚನ ಮತ್ತು ಸ್ವರವಚನಗಳ ನಡುವಿನ ಸಾಹಿತ್ಯಿಕ ವ್ಯತ್ಯಾಸವನ್ನು ಗುರುತಿಸಿ ಅವುಗಳನ್ನು ಪ್ರತ್ಯೇಕ ಪಠ್ಯಪರಂಪರೆಯಾಗಿ ದಾಖಲಿಸುವುದು ಅವರ ಸಂಪಾದನಾ ದೃಷ್ಟಿಯ ವಿಸ್ತಾರವನ್ನು ತೋರಿಸುತ್ತದೆ. ‘ನೂರೊಂದರ ಹಾಡುಗಳು’  ಇದಕ್ಕೆ ಗಮನಾರ್ಹ ಉದಾಹರಣೆ. ಇದು ಜಕ್ಕಣಾರ್ಯನ ‘ಸ್ವರ ಏಕೋತ್ತರ ಶತಸ್ಥಲ’ಕ್ಕೆ ಸಂಬಂಧಿಸಿದ ಕೃತಿಯಾಗಿದ್ದು, ‘ಅಂಗಸ್ಥಲ’ ಮತ್ತು ‘ಲಿಂಗಸ್ಥಲ’ ಎಂಬ ಭಾಗಗಳಲ್ಲಿ ಷಟ್‌ಸ್ಥಲಕ್ಕೆ ಅನುಗುಣವಾಗಿ ವಿಷಯವನ್ನು ನಿರೂಪಿಸುತ್ತದೆ. ಅವರು ವಚನ = ಶರಣ ಸಾಹಿತ್ಯ ಎಂಬ ಸರಳ ಸಮೀಕರಣದಲ್ಲಿ ನಿಲ್ಲಲಿಲ್ಲ. ಬದಲಿಗೆ, ವಚನ + ಸ್ವರವಚನ + ಪದ + ರಗಳೆ + ತ್ರಿಪದಿ + ಷಟ್ಪದಿ + ಇತರ ವೀರಶೈವ ಕಾವ್ಯಪ್ರಕಾರಗಳು ಎಂಬ ವಿಶಾಲ ಸಾಹಿತ್ಯನಕ್ಷೆಯನ್ನು ನಿರ್ಮಿಸಿದರು. ಆ ಕಾರಣದಿಂದಲೇ ಅವರನ್ನು ‘ಸ್ವರವಚನ ಪಿತಾಮಹ’ ಎಂದೂ ಗುರುತಿಸುವ ಸಾಧ್ಯತೆಯನ್ನು  ಪರಿಶೀಲಿಸ ಬಹುದಾಗಿದೆ.  ಅಪರಿಚಿತ ಪಠ್ಯವನ್ನು ಮೊದಲು ಓದುಗರಿಗೆ ಪರಿಚಯಿಸುವುದು; ನಂತರ ಅದನ್ನು ಶಾಶ್ವತ ಗ್ರಂಥರೂಪಕ್ಕೆ ತರುವುದು. ಈ ಹಿನ್ನೆಲೆಯಲ್ಲಿ ಶಿವಾನುಭವ’ವನ್ನು ಒಂದು ಪತ್ರಿಕೆಯಾಚೆಯ ಸಾಂಸ್ಕೃತಿಕ ಸಂಸ್ಥೆ ಎಂದು ಕರೆಯ ಬಹುದು.

  ‘ಶಿವಾನುಭವ’ದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅದರ ಪ್ರಕಟಣಾ ಉದ್ದೇಶವನ್ನು ಅದರ ಕಾಲದ ಸಾಹಿತ್ಯಿಕ ಪರಿಸ್ಥಿತಿಯೊಂದಿಗೆ ಜೋಡಿಸಬೇಕು.  ಹಸ್ತಪ್ರತಿಗಳ ಸಂಗ್ರಹಕಾರ್ಯವು ನಂತರ ಸಂಪಾದನಾ ಕಾರ್ಯವಾಗಿ ಮತ್ತು ಸಂಪಾದನಾ ಕಾರ್ಯವು ಪತ್ರಿಕಾ ಪ್ರಕಟಣೆಯಾಗಿ ರೂಪುಗೊಂಡಿತು. ಪತ್ರಿಕೆಯ ಲೇಖನವು ತಾತ್ಕಾಲಿಕ ಪತ್ರಿಕಾ ಬರಹವಾಗದೆ ಭವಿಷ್ಯದ ಸಂಶೋಧನೆಗೆ ಮೂಲದಾಖಲೆಯಾಗಿ ಪರಿವರ್ತಿತವಾಯಿತು. ಹಳಕಟ್ಟಿಯವರ ‘ಶಿವಾನುಭವ’ ಕಾರ್ಯವು ವಚನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವೀರಶೈವ ಕಾವ್ಯಗಳ ವಿವಿಧ ಪ್ರಕಾರಗಳನ್ನು ಅವರು ಪ್ರಕಟಿಸಿದರು. ಈ ಕಾರಣದಿಂದ ಹಳಕಟ್ಟಿಯವರ ಸಂಪಾದನಾ ಕಾರ್ಯವು ವಚನಕೇಂದ್ರಿತವಾದರೂ ವಚನಸೀಮಿತವಲ್ಲದ ಸಾಹಿತ್ಯದೃಷ್ಟಿಯನ್ನು ಹೊಂದಿದೆ.

  ಹಳಕಟ್ಟಿಯವರು ಸಂಪಾದಿಸಿರುವ ಲಘುಕೃತಿಗಳು ಒಂದು ರೀತಿಯಲ್ಲಿ, ಕಾವ್ಯವೂ ಹೌದು, ಚರಿತ್ರೆಯ ಆಕರವೂ ಹೌದು,  ಧಾರ್ಮಿಕ ಚಳವಳಿಯ ದಾಖಲೆಯೂ ಹೌದು. ಹೀಗಾಗಿ ಹಳಕಟ್ಟಿಯವರ ಸಂಪಾದನಾ ದೃಷ್ಟಿ ಪಠ್ಯದ ಸೌಂದರ್ಯವನ್ನು ಮಾತ್ರವಲ್ಲದೆ ಅದರ ಸಾಂಸ್ಕೃತಿಕ ಆಕರಮೌಲ್ಯವನ್ನೂ ಪರಿಗಣಿಸುತ್ತದೆ.  ಶಿವಾನುಭವ’ದ ಲೇಖನಗಳ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಪತ್ರಿಕೆಯಲ್ಲಿ ಪ್ರಕಟವಾದ ಬರಹವು ಅಂತಿಮ ಉತ್ಪನ್ನವಾಗಿರಲಿಲ್ಲ. ಅದು ಮುಂದಿನ ಹಂತದಲ್ಲಿ ಗ್ರಂಥವಾಗುತ್ತಿತ್ತು. ಉದಾಹರಣೆಗೆ, ಪದಮಂತ್ರಗೋಪ್ಯ, ನೂರೊಂದರ ಹಾಡುಗಳು,ಸಟೀಕ ಏಕೋತ್ತರ ಶತಸ್ಥಲ, ಅವಧೂತಗೀತೆ, ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ ಶಿವಯೋಗಾಚರಣೆ ಹರಳಯ್ಯನ ತ್ರಿಪದಿ ಮೊದಲಾದ ಕೃತಿಗಳಲ್ಲಿ ಕೆಲವು ಮೊದಲು ‘ಶಿವಾನುಭವ’ದಲ್ಲಿ ಪ್ರಕಟಗೊಂಡು ನಂತರ ಗ್ರಂಥರೂಪ ಪಡೆದವು. ಶಿವಾನುಭವ ಪತ್ರಿಕೆಯಲ್ಲಿ ಹಳಕಟ್ಟಿಯವರ ಲೇಖನಗಳಿಗೆ ಅಗ್ರಸ್ಥಾನ. ಅವುಗಳಲ್ಲಿ ಸಂಪಾದನೆಗಳು ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ ಇತರ ಲೇಖನಗಳು ಸಮಾವೇಶಗೊಳ್ಳುತ್ತವೆ.

          ‘ಶಿವಾನುಭವ’ ಪತ್ರಿಕೆಯು ಶರಣ ಸಾಹಿತ್ಯ, ವಚನ ಪರಂಪರೆ, ಧಾರ್ಮಿಕ ಮೌಲ್ಯಗಳು ಮತ್ತು ಮಾನವೀಯ ಚಿಂತನೆಗಳನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸಿತು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಜನರಲ್ಲಿ ಅಭಿಮಾನವನ್ನು ಬೆಳೆಸುವಲ್ಲಿ ‘ಶಿವಾನುಭವ’ದ ಪಾತ್ರ ಅಪಾರವಾಗಿದೆ. ಅಜ್ಞಾನ ಮತ್ತು ನಿರ್ಲಕ್ಷ್ಯದ ಅಂಧಕಾರದಲ್ಲಿದ್ದ ಕನ್ನಡಿಗರಿಗೆ ಶರಣರ ವಿಚಾರಧಾರೆ, ವಚನಗಳ ಮೌಲ್ಯ ಮತ್ತು ಆಧ್ಯಾತ್ಮಿಕ ಚಿಂತನೆಯ ಬೆಳಕನ್ನು ನೀಡಿದ ಕಾರ್ಯ ‘ಶಿವಾನುಭವ’ದ ಮೂಲಕ ಸಾಧ್ಯವಾಯಿತು. ‘ಶಿವಾನುಭವ’ಪತ್ರಿಕೆಯ ಹಳೆಯ ಸಂಪುಟಗಳು ಇಂದಿಗೂ ಸಂಶೋಧಕರು, ಸಾಹಿತ್ಯಾಸಕ್ತರು ಮತ್ತು ಧರ್ಮಜಿಜ್ಞಾಸುಗಳಿಗೆ ಅಮೂಲ್ಯವಾದ ಆಕರಗಳಾಗಿವೆ. ಶಿವಾನುಭವ’ಪತ್ರಿಕೆಯಲ್ಲಿ ಬಸವಾದಿ ಶಿವಶರಣರ ವಚನಗಳು, ವಚನ ಸಂಕಲನಗಳು, ಈ ಎಲ್ಲ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರಕಿರುವುದು ಒಂದು ಅಪೂರ್ವ ಅನುಭವವಾಗಿದೆ.  ಧಾರ್ಮಿಕ ಚಿಂತನೆ, ಸಾಮಾಜಿಕ ಇತಿಹಾಸ, ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ಅಧ್ಯಯನ ಮಾಡುವವರಿಗೆ ಅವು ಅಪಾರವಾದ ಮಾಹಿತಿಯ ಸಂಪತ್ತನ್ನು ಒದಗಿಸುತ್ತವೆ.

         ‘ಶಿವಾನುಭವ’ಪತ್ರಿಕೆಯ ಆರಂಭವಾಗಿ ಸುಮಾರು ನೂರು ವರ್ಷಗಳ ಕಾಲ ಕಳೆದಿದೆ. ಈ ದೀರ್ಘ ಅವಧಿಯಲ್ಲಿ ಪತ್ರಿಕೆಯು ಅನೇಕ ಏರುಪೇರುಗಳನ್ನು ಕಂಡರೂ ತನ್ನ ಮೂಲ ಧ್ಯೇಯವಾದ ಜ್ಞಾನ ಪ್ರಸಾರ, ಧಾರ್ಮಿಕ ಚಿಂತನೆ ಮತ್ತು ಸಾಹಿತ್ಯ ಸೇವೆಯಿಂದ ಹಿಂದೆ ಸರಿಯಲಿಲ್ಲ. ಒಂದು ಶತಮಾನಕ್ಕೂ ಹೆಚ್ಚು ಕಾಲ ನಿರಂತರವಾಗಿ ಒಂದು ವಿಚಾರಧಾರೆಗೆ ಸೇವೆ ಸಲ್ಲಿಸಿದ ಪತ್ರಿಕೆಗಳು ವಿರಳ.

ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿಯ ಲೇಖನಗಳ ದೊಡ್ಡ ಕೊಡುಗೆ ಎಂದರೆ ಕನ್ನಡ ಸಾಹಿತ್ಯದ ಲಭ್ಯ ನಕ್ಷೆಯನ್ನು ವಿಸ್ತರಿಸಿದ್ದು. ಅವರ ಮೊದಲು ಪರಿಚಿತವಾಗಿದ್ದ ಕೆಲವು ಪ್ರಮುಖ ಕವಿಗಳ ಸುತ್ತ ಸಾಹಿತ್ಯ ಇತಿಹಾಸ ಸೀಮಿತವಾಗಿದ್ದರೆ, ಹಳಕಟ್ಟಿಯವರು, ಅಪರಿಚಿತ ಕವಿ → ಪಠ್ಯ → ವಚನ → ಚರಿತ್ರೆ → ಸಾಹಿತ್ಯ ಇತಿಹಾಸ ಎಂಬ ಹೊಸ ಸಂಬಂಧವನ್ನು ರೂಪಿಸಿದರು. ಅವರು ಶರಣರನ್ನು ಕೇವಲ ಧಾರ್ಮಿಕ ವ್ಯಕ್ತಿಗಳಾಗಿ ಅಲ್ಲದೆ ಕನ್ನಡ ಸಾಹಿತ್ಯದ ನಿರ್ಮಾಪಕರಾಗಿ ಗುರುತಿಸಿದರು. ‘ಶಿವಾನುಭವ’ದ ಜನಮುಖಿ ಸ್ವರೂಪವು ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದು. ಅವರು ವಿಶ್ವವಿದ್ಯಾಲಯದ ಸಂಶೋಧಕರಿಗಾಗಿ ಮಾತ್ರ ಸಂಪಾದಿಸಲಿಲ್ಲ. ಅವರ ಪತ್ರಿಕೆ: ಸಾಮಾನ್ಯ ಓದುಗರಿಗೆ, ಧಾರ್ಮಿಕ ಆಸಕ್ತರಿಗೆ, ಸಾಹಿತ್ಯಾಸಕ್ತರಿಗೆ, ಕನ್ನಡಾಭಿಮಾನಿಗಳಿಗೆ, ಶರಣಪರಂಪರೆಯ ಅನುಯಾಯಿಗಳಿಗೆ ತಲುಪುವ ಮಾಧ್ಯಮವಾಗಿತ್ತು. ಅವರ ಪತ್ರಿಕೋದ್ಯಮವು ಸಾಮಾನ್ಯ ವರದಿ ಪತ್ರಿಕೋದ್ಯಮವಲ್ಲ. ಅದು ಸಂಶೋಧನಾ ಪತ್ರಿಕೋದ್ಯಮ. ಅಂದರೆ ಹಳೆಯ ಆಕರವನ್ನು ಹುಡುಕಿ,  ಸಂಶೋಧಿಸಿ,  ಸಂಪಾದಿಸಿ,  ಜನರಿಗೆ ಪರಿಚಯಿಸುವ ಪತ್ರಿಕೋದ್ಯಮ.

      ಹಳಕಟ್ಟಿಯವರ ‘ಶಿವಾನುಭವ’ ಲೇಖನಗಳ ಸ್ವರೂಪವನ್ನು ಕೆಳಗಿನ ಐದು ಆಯಾಮಗಳಲ್ಲಿ ಸಂಕ್ಷಿಪ್ತಗೊಳಿಸಬಹುದು:1. ಪಠ್ಯ ಆಯಾಮ:ಅಪರೂಪದ ಪಠ್ಯಗಳ ಸಂಗ್ರಹ ಮತ್ತು ಪ್ರಕಟಣೆ.2. ಸಾಹಿತ್ಯಿಕ ಆಯಾಮ:ವಚನ, ಸ್ವರವಚನ, ರಗಳೆ, ತ್ರಿಪದಿ ಮುಂತಾದ ಸಾಹಿತ್ಯಪ್ರಕಾರಗಳ ಸಂರಕ್ಷಣೆ. 3. ಚಾರಿತ್ರಿಕ ಆಯಾಮ: ಶರಣರು ಮತ್ತು ವೀರಶೈವ ಪರಂಪರೆಯ ಇತಿಹಾಸ ನಿರ್ಮಾಣ. 4. ಸಾಮಾಜಿಕ ಆಯಾಮ, ಕಾಯಕ, ದಾಸೋಹ, ಸಮಾನತೆ, ಮಾನವೀಯತೆ ಮೊದಲಾದ ಮೌಲ್ಯಗಳ ಪ್ರಸಾರ. 5. ಸಾಂಸ್ಕೃತಿಕ ಆಯಾಮ ಕನ್ನಡ ಭಾಷೆ ಮತ್ತು ಶರಣಸಾಹಿತ್ಯದ ಬಗ್ಗೆ ಆಧುನಿಕ ಸಾಂಸ್ಕೃತಿಕ ಸ್ಮೃತಿ ನಿರ್ಮಾಣ.

ಕನ್ನಡದಲ್ಲಿ ಇನ್ನೂ ಕನ್ನಡಿಗರ ಚರಿತ್ರೆಗಳು ಕಣ್ಣು ಕಣ್ಣು ಬಿಡುತ್ತಿರುವ ಸಂಕ್ರಮಣ ಕಾಲದಲ್ಲಿ ಅವುಗಳ ಅಗತ್ಯ ಗುರುತಿಸಿ, ಕಾರ್ಯಪ್ರವೃತ್ತರಾಗಿ ಇಷ್ಟೆಲ್ಲ ಶರಣ ಸಾಹಿತ್ಯ-ಸಂಸ್ಕೃತಿಯನ್ನು ಪರಿಚಯಿಸಿದ ಅವರ ಕಾರ್ಯ ಅಸಾಧಾರಣವಾದುದು.

   ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ ೯ ಕಾವ್ಯ ಸಾಹಿತ್ಯ-ಎರಡನೇ ಸಂಪುಟ. ಮೂವತ್ತಾರು ಪುಟ ಪ್ರಸ್ತಾವನೆ ಮತ್ತು ಎಂಟನೂರ ಅರವತ್ತೊಂದು ಪುಟಗಳು ಇರುವ ಈ ಸಂಪುಟವನ್ನು ಸಂಪಾದಿಸಿದವರು ಡಾ. ಬಾಳಣ್ಣ ಸೀಗೀಹಳ್ಳಿ. ಈ ಸಂಪುಟದಲ್ಲಿ ಕಾವ್ಯ ರೂಪದಲ್ಲಿ ಇರುವ ಹದಿನೇಳು ಕೃತಿಗಳು ಇವೆ. ಸಂಪುಟ ೯ ರಲ್ಲಿ ಮೇಳೈಸಿರುವ ಪೂರ್ವಾರ್ಧದ ಲೇಖನಗಳು  ಹಳಕಟ್ಟಿಯವರನ್ನು  ವಚನ ಪಿತಾಮಹ’ನಿಂದ ‘ಸ್ವರವಚನ ಪಿತಾಮಹ’ನೆಡೆಗೆ ಕೊಂಡೊಯ್ಯುವವಗಳಾಗಿವೆ.

  ಹಳಕಟ್ಟಿಯವರ ಸಾಹಿತ್ಯಿಕ ಕೊಡುಗೆಯನ್ನು ಪರಾಮರ್ಶಿಸುವಾಗ, ಡಾ. ಬಾಳಣ್ಣ ಶೀಗೀಹಳ್ಳಿಯವರು ಸಂಪಾದಿಸಿರುವ ‘ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ ೯ (ಕಾವ್ಯ ಸಾಹಿತ್ಯ ಭಾಗ–೨)’ ಅತ್ಯಂತ ಮಹತ್ವದ ತಿರುವನ್ನು ನೀಡುತ್ತದೆ. ಈ ಬೃಹತ್ ಸಂಪುಟವು ಹಳಕಟ್ಟಿಯವರು ಕೇವಲ ಗದ್ಯರೂಪದ ವಚನಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಿಗೆ ಕನ್ನಡದ ಕಾವ್ಯ ಮತ್ತು ಹಾಡುಗಬ್ಬ ಸಾಹಿತ್ಯ ಪರಂಪರೆಗೆ ಜೀವ ತುಂಬಿದವರು ಎಂಬುದನ್ನು ಸಾಬೀತುಪಡಿಸುತ್ತದೆ.      

     ತ್ರಿಪದಿ / ಚೌಪದಿ ಸಾಹಿತ್ಯ ರೂಪಕ್ಕೆ ಸಂಬಂಧಿಸಿದ  ಹರಳಯ್ಯನ ತ್ರಿಪದಿ  ನೂರೊಂದರ ಹಾಡುಗಳು ಶಿವಯೋಗಾಚರಣೆ ಅವಧೂತಗೀತೆ (ಚೌಪದಿ)ಗಳು.  ಸ್ವರವಚನ / ಗೀತಸಾಹಿತ್ಯಕ್ಕೆ ಸಂಬಂಧಿಸಿದಂತೆ ಪದಮಂತ್ರಗೋಪ್ಯ ಶಿವಶರಣರ ಪದಗಳು (ಭಾಗ-೧), ಷಟ್ಪದಿ / ಟೀಕಾ ಗ್ರಂಥಗಳಿಗೆ ಸಂಬಂಧಿಸಿದಂತೆ ಪ್ರಾಣಲಿಂಗ ಜ್ಞಾನದರ್ಪಣ ಸಟೀಕ ಏಕೋತ್ತರ ಶತಸ್ಥಲ ಕೃತಿಗಳು ಈ ಸಂಪುಟದಲ್ಲಿ ಶಾಸ್ತ್ರ ಮತ್ತು ತಾತ್ವಿಕ ವಿಷಯದ ಕೃತಿಗಳಾಗಿವೆ.          

   ವಚನಗಳೆಂದರೆ ಸಾಮಾನ್ಯವಾಗಿ ಲಯಬದ್ಧ ಗದ್ಯವೆಂಬ ಭಾವನೆಯಿದೆ. ಆದರೆ ಶರಣರ ಅನುಭಾವವು ಹಾಡುಗಬ್ಬವಾಗಿ, ರಾಗ-ತಾಳಬದ್ಧವಾಗಿ ಹೊರಹೊಮ್ಮಿದ ಪ್ರಕಾರವೇ ‘ಸ್ವರವಚನ’. ಹಳಕಟ್ಟಿಯವರು ಶಿವಾನುಭವ ಪತ್ರಿಕೆಯ ಮೂಲಕ ಈ ಸ್ವರವಚನಗಳನ್ನು ಶೋಧಿಸಿ ಪ್ರಕಟಿಸದೇ ಹೋಗಿದ್ದರೆ, ಕನ್ನಡ ಗೀತಸಾಹಿತ್ಯದ ಒಂದು ಸಮೃದ್ಧ ಕವಲು ಅಜ್ಞಾತವಾಗಿಯೇ ಉಳಿದುಬಿಡುತ್ತಿತ್ತು.

ಛಂದೋವೈವಿಧ್ಯದ ಅನಾವರಣ

ಹಳಕಟ್ಟಿಯವರು ಪ್ರಕಟಿಸಿದ ಕೃತಿಗಳಲ್ಲಿ ಛಂದಸ್ಸಿನ ವೈವಿಧ್ಯತೆ ಅಪಾರವಾದುದು. ದೇಸಿ ಛಂದಸ್ಸುಗಳಾದ:

  • ತ್ರಿಪದಿ: ‘ಹರಳಯ್ಯನ ತ್ರಿಪದಿ’, ‘ಶಿವಯೋಗಾಚರಣೆ’
  • ಚೌಪದಿ: ಗುರುಬಸವನ ‘ಅವಧೂತಗೀತೆ’
  • ಷಟ್ಪದಿ: ‘ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ’ (ವಾರ್ಧಕ ಷಟ್ಪದಿ)
  • ರಗಳೆ, ಸಾಂಗತ್ಯ ಮತ್ತು ದ್ವಿಪದಿಗಳು: ವಿವಿಧ ಸಂಚಿಕೆಗಳಲ್ಲಿ ಪ್ರಕಟವಾದ ಕೃತಿಗಳು.

ಈ ಮೂಲಕ ವೀರಶೈವ-ಶರಣ ಸಾಹಿತ್ಯವು ಕೇವಲ ವಚನರೂಪದಲ್ಲಿ ಮಾತ್ರವಲ್ಲದೆ, ಕನ್ನಡದ ಸಕಲ ದೇಸಿ ಛಂದೋರೂಪಗಳಲ್ಲಿಯೂ ಅಭಿವ್ಯಕ್ತಿ ಪಡೆದಿದೆ ಎಂಬುದನ್ನು ಹಳಕಟ್ಟಿಯವರು ಪತ್ರಿಕೆಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು. ಶಿವಾನುಭವ’ ಪತ್ರಿಕೆಯ ಒಂಬತ್ತನೆಯ ಸಂಪುಟ ಫ.ಗು.ಹಳಕಟ್ಟಿ ಸಮಗ್ರಸಾಹಿತ್ಯ ಸಂಪುಟ ೯: ಕಾವ್ಯಸಾಹಿತ್ಯ ಭಾಗ-೨  ಹಾಗೂ ಪತ್ರಿಕೆಯ ಒಟ್ಟಾರೆ ಹಿನ್ನೆಲೆಯನ್ನು ಕೇಂದ್ರವಾಗಿಟ್ಟುಕೊಂಡು, ಅದರಲ್ಲಿ ಪ್ರಕಟಗೊಂಡ ಲೇಖನ ಮತ್ತು ಕೃತಿಗಳ ವೈಶಿಷ್ಟ್ಯವನ್ನು  ಇಲ್ಲಿ ಗಮನಿಸಲಾಗಿದೆ. ಪ್ರಸ್ತುತ ಇದರಲ್ಲಿ ಒಟ್ಟು ವೀರಶೈವ ಧರ್ಮದ ತಾತ್ವಿಕ ಚೌಕಟ್ಟಿಗೆ ಸೇರಿದ್ದು ಇವುಗಳು ಈ ಕೆಳಗಿನ ಅನುಕ್ರಮದಲ್ಲಿವೆ.

೧. ಪದಮಂತ್ರಗೋಪ್ಯ

೨.ನೂರೊಂದರ ಹಾಡುಗಳು

೩.ಸಟೀಕ ಏಕೋತ್ತರ ಶತಸ್ಥಲ

೪.ಕವಿ ಗುರುಬಸವಕೃತ ಅವಧೂತಗೀತೆ

೫.ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ

೬.ಶಿವಯೋಗಾಚರಣೆ

೭.ಶಿವಶರಣರ ಪದಗಳು ಭಾಗ -೧

೮.ಹರಳಯ್ಯನ ತ್ರಿಪದಿ

ಪ್ರಸುತ ಕೃತಿಗಳಲ್ಲಿ ಕೆಲವನ್ನು ಹಳಕಟ್ಟಿಯವರು ನೇರವಾಗಿ ಗ್ರಂಥರೂಪದಲ್ಲಿ, ಇನ್ನು ಕೆಲವನ್ನು ಮೊದಲು ಶಿವಾನುಭವ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಅನಂತರ ಗ್ರಂಥರೂಪದಲ್ಲಿ ಪ್ರಕಟಿಸಿದ್ದಾರೆ. ಕೆಲವನ್ನು ಅಪೂರ್ಣಸ್ಥಿತಿಯಲ್ಲಿಯೇ ಪ್ರಕಟಿಸಿದ್ದಾರೆ. ಕೆಲವನ್ನು ತಾವೇ ಪ್ರಸ್ತಾವನೆ ಬರೆದು, ಕೆಲವೊಮ್ಮೆ ಬರೆಯದೆ ಪ್ರಕಟಿಸಿರುವುದೂ ಕಂಡುಬರುತ್ತದೆ. ಆದ್ದರಿಂದ ಈ ಕೃತಿಗಳು ಒಂದಿಷ್ಟು ಸ್ಪಷ್ಟನೆ ಬಯಸುವುದರಿಂದ ಇವುಗಳ "ಪ್ರಕಟನಾ ಇತಿಹಾಸ' ಮತ್ತು ಇವುಗಳನ್ನು ಸಂಪಾದಿಸುವಲ್ಲಿ ಅವರು ಅನುಸರಿಸಿದ ವಿಧಿ- ವಿಧಾನಗಳನ್ನು ಪರಿಶೀಲಿಸಲಾಗಿದೆ.

೧. ಪದಮಂತ್ರಗೋಪ್ಯ: ಈ ಲಘುಕೃತಿಯು ‘ಶಿವಾನುಭವ’ ಪತ್ರಿಕೆಯ ಸಂಪುಟ ೧೪, ಸಂಚಿಕೆ ೧ ಮತ್ತು ೨ ರಲ್ಲಿ (ಅಕ್ಟೋಬರ್ ಪು. ೪೪–೪೬, ನವೆಂಬರ್ ಪು. ೮೯–೯೧, ೧೯೩೯) ಪ್ರಕಟವಾಯಿತು. ನಂತರ ಗ್ರಂಥಮಾಲೆಯ ಕಿರುಹೊತ್ತಿಗೆಯಾಗಿ (ಬೆಲೆ: ೧ ಆಣೆ) ಮುದ್ರಣಗೊಂಡಿತು. ಈ ಲಘು ಕೃತಿಗಳ ಸಂಪಾದನೆ ಬಹು ಕಷ್ಟಕರವಾದದ್ದು ಹಲವು ಹಸ್ತಪ್ರತಿಗಳು ಲಭ್ಯವಿದ್ದು, ಅವುಗಳ ಸಂಪಾದನೆ ಸಂಪಾದಕನಿಗೆ ಬಹುದೊಡ್ಡ ಸವಾಲೇ ಸರಿ. ಹಳಕಟ್ಟಿಯವರು ನೂರಾರು ಹಸ್ತಪ್ರತಿಗಳನ್ನು ಪರಿಶೀಲಿಸಿದ್ದರಿಂದ ಸೂಕ್ತವಾದ ಹಸ್ತಪ್ರತಿಯನ್ನು ಪರಿಶೀಲಿಸಿ ಸಂಪಾದಿಸಿದ್ದಾರೆ. ಇದು ಷಟ್‌ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರ ರಚನೆ. ಈ ಕೃತಿ ""ಶ್ರೀಗುರು ಚನ್ನಬಸವೇಶ್ವರ ಸ್ವಾಮಿಗಳು ನಿರೂಪಿಸಿದ ವಸ್ತು ನಿರ್ದೇಶ ಮಂತ್ರಗೋಪ್ಯ''ಎಂಬ ಸೂಚನೆಯೊಂದಿಗೆ ಆರಂಭಗೊಂಡಿದ್ದು ವಿಷಯ ನಿರೂಪಣೆಗೆ ಉಪಶೀರ್ಷಿಕೆಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಈ ಶೀರ್ಷಿಕೆಗಳ ಕೊನೆಯಲ್ಲಿ ನಾಲ್ಕಾರು ಸಾಲಿನ ಗದ್ಯವಿದ್ದು ಅದು ಆಯಾ ಉಪಶೀರ್ಷಿಕೆಗಳ ಪಠ್ಯದ ತಿರುಳನ್ನು ವಿವರಿಸುತ್ತದೆ. ಇದರಲ್ಲಿ ಇಷ್ಟಲಿಂಗ, ಪ್ರಾಣಲಿಂಗ ಪೂಜಾವಿಧಾನ, ನವಲಿಂಗ, ಪರತತ್ತ್ವಲಿಂಗ ಪ್ರಕಾಶ, ಮಹಾಲಿಂಗೈಕ್ಯ ಮತ್ತು ಜ್ಞಾನಶೂನ್ಯವೆಂಬ ಉಪಶೀರ್ಷಿಕೆಗಳಲ್ಲಿ ೭ ಸ್ವರವಚನಗಳನ್ನು ಸೇರಿಸಿದ್ದಾರೆ.    ಪ್ರತಿಯೊಂದು ಪದ್ಯದ ಕೊನೆಯಲ್ಲಿ ನಾಲ್ಕಾರು ಸಾಲುಗಳ ಗದ್ಯವಿದ್ದು, ಅದು ಆಯಾ ಪದ್ಯದ ಗೂಢ ತತ್ತ್ವಾರ್ಥವನ್ನು ವಿವರಿಸುತ್ತದೆ. ಗಹನವಾದ ಆಧ್ಯಾತ್ಮಿಕ ಸಾಧನೆಯನ್ನು ಸಂಕ್ಷಿಪ್ತ ಸೂತ್ರಗಳಲ್ಲಿ ಹಿಡಿದಿಟ್ಟಿರುವ ಈ ಲಘು ಕೃತಿಯನ್ನು ಹಳಕಟ್ಟಿಯವರು ಹಲವು ಹಸ್ತಪ್ರತಿಗಳನ್ನು ತಾಳೆನೋಡಿ ಸಂಪಾದಿಸಿದ್ದಾರೆ. ಚೆನ್ನಬಸವಣ್ಣನವರ ರಚನೆಯಾಗಿರುವ ಪ್ರತಿಯೊಂದು ಉಪಶೀರ್ಷಿಕೆಯ ಕೊನೆಯಲ್ಲಿ ನಾಲ್ಕಾರು ಸಾಲುಗಳ ಗದ್ಯವಿದ್ದು, ಅದು ಪದ್ಯದ ತಿರುಳನ್ನು ಸ್ಪಷ್ಟಪಡಿಸುತ್ತದೆ. ಈ ಲಘುಕೃತಿಯ ಸಂಪಾದನೆಯಲ್ಲಿ ಸಂಪಾದಕರ ಮೂರು ಮುಖಗಳು ಕಾಣುತ್ತವೆ. ಪಠ್ಯಸಂಪಾದಕ + ವಿವರಣಕಾರ + ಓದುಗರ ಮಾರ್ಗದರ್ಶಕ. ಇದು ಹಳಕಟ್ಟಿಯವರ ಲೇಖನಗಳ ವಿಶಿಷ್ಟ ಸಂಪಾದಕೀಯ ಗುಣದ ಪ್ರತೀಕವಾಗಿದೆ. ‘ಪದಮಂತ್ರಗೋಪ್ಯ’ದಲ್ಲಿ ಹಳಕಟ್ಟಿಯವರು ಪಠ್ಯವನ್ನು ಪ್ರಕಟಿಸುವುದರ ಜೊತೆಗೆ ಅದರ ಅಂತರಂಗವನ್ನು ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿದರು.

೨. ನೂರೊಂದರ ಹಾಡುಗಳು (ಸ್ವರ ಏಕೋತ್ತರ ಶತಸ್ಥಲ): ಈ ಕೃತಿಯನ್ನು ೧೯೫೫ ರಿಂದ ೧೯೫೭ರ ಅವಧಿಯಲ್ಲಿ ಶಿವಾನುಭವದ ೨೯ನೆಯ ಸಂಪುಟದ ೪, ೫, ೬, ೭, ೮, ೧೦, ೧೧ನೆಯ ಸಂಚಿಕೆಗಳಲ್ಲಿ, ೩೦ನೆಯ ಸಂಪುಟದ ೧, ೫, ೮, ಸಂಚಿಕೆಗಳಲ್ಲಿ ಮತ್ತು ೩೧ನೆಯ ಸಂಪುಟದ ೧, ೨, ೩ನೆಯ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಮೊದಲಿಗೆ ಪ್ರಕಟಿಸಿದರು. ಇದು ಶಿವಾನುಭವ ಗ್ರಂಥಮಾಲೆಯ ಪುಸ್ತಕವಾಗಿ ಪ್ರಕಟವಾಗಿಲ್ಲ. ಈ ಕೃತಿಗೆ ಕೆಲವು ಹಸ್ತಪ್ರತಿಗಳಲ್ಲಿ "ಸ್ವರಯೇಕೋತ್ತರ ಶತಸ್ಥಲ" ಎಂದು ಕರೆಯಲಾಗಿದೆ. ಹಳಕಟ್ಟಿಯವರು ಕೃತಿಗೆ ಪ್ರಸ್ತಾವನೆ ಬರೆದು ಪುಸ್ತಕ ರೂಪದಲ್ಲಿ ತರಬೇಕು ಎಂದುಕೊಂಡಿದ್ದರು.ಅದರೆ ಅವರಿಗೆ ಅವಕಾಶವಾಗಲಿಲ್ಲ. ಇದು ಪ್ರತ್ಯೇಕ ಪುಸ್ತಕವಾಗಿ ಪ್ರಕಟವಾಗುವ ಮೊದಲೇ ಹಳಕಟ್ಟಿಯವರು ಕಾಲವಶರಾದ ಕಾರಣ ಪತ್ರಿಕೆಯಲ್ಲೇ ಉಳಿದುಕೊಂಡಿತ್ತು. ಅದು ಹಳಕಟ್ಟಿಯವರ ಸಮಗ್ರ ಸಂಪುಟ ೯ ರಲ್ಲಿ ಇಡಿಯಾಗಿ ಪ್ರಕಟಗೊಂಡಿದೆ. ಇದರ ಕರ್ತೃ ವಿಜಯನಗರದ ಪ್ರೌಢದೇವರಾಯನ ಆಸ್ಥಾನದಲ್ಲಿದ್ದ ಮಹಾಲಿಂಗದೇವನ ಶಿಷ್ಯ ಹಾಗೂ ಕುಮಾರ ಬಂಕನಾಥನ ಕರಸಂಜಾತನಾದ ಜಕ್ಕಣಾರ್ಯ (ಸು. ೧೪೩೦). ಇದು ಬಸವಾದಿ ಶರಣರ ಸ್ವರವಚನಗಳ ಮಹಾಸಂಕಲನ. ಮಹಾಲಿಂಗದೇವನ ‘ಏಕೋತ್ತರ ಶತಸ್ಥಲ’ದ ವಚನಗಳನ್ನು ಬಿಟ್ಟು, ಉಳಿದ ಸೂತ್ರ ಮತ್ತು ಸ್ವರವಚನಗಳನ್ನು ಸಂಗ್ರಹಿಸಿ ರೂಪಿಸಿದ ಬೃಹತ್ ಗ್ರಂಥವಿದು. ಒಟ್ಟು ೫೫೦ ಪದಗಳಿವೆ. ಈ ಕೃತಿಗೆ ಹಲವಾರು ಟೀಕೆಗಳು ರಚಿತವಾಗಿವೆ. ಇದರಲ್ಲಿ ‘ಅಂಗಸ್ಥಲ’ ಮತ್ತು ‘ಲಿಂಗಸ್ಥಲ’ ಎಂಬೆರಡು ಮುಖ್ಯ ಭಾಗಗಳಿದ್ದು, ಷಟ್‌ಸ್ಥಲಗಳಿಗನುಗುಣವಾಗಿ ಒಟ್ಟು ೫೫೦ ಪದಗಳನ್ನು ಸಂಕಲಿಸಲಾಗಿದೆ. ಗ್ರಂಥದ ಕೊನೆಯ ೧೦೧ನೇ ಸ್ವರವಚನವು ಅಲ್ಲಮಪ್ರಭುವಿನ ‘ಗುಹೇಶ್ವರ’ ಅಂಕಿತದಲ್ಲಿದ್ದು, ಜ್ಞಾನಶೂನ್ಯ ಸ್ಥಲದೊಂದಿಗೆ ಮುಕ್ತಾಯವಾಗುತ್ತದೆ. ಹೀಗೆ ಹಳಕಟ್ಟಿಯವರು ಈ ಕ್ಷೇತ್ರದಲ್ಲಿಯೂ ಮಾಡಿದ ಕೆಲಸ ಇನ್ನು ಮೇಲಾದರೂ ಪ್ರಚಾರಕ್ಕೆ ಬರಬೇಕಾಗಿದೆ. ಇಂಥ ಹಾಡುಗಬ್ಬ ಕೃತಿಗಳನ್ನು ಪ್ರಕಟಿಸುವ ಮೂಲಕ ಕೇವಲ ವಚನಗಳಿಗೆ ಮಾತ್ರ ಸೀಮಿತವಾಗದೆ, ಸ್ವರವಚನಗಳನ್ನೂ ಬೆಳಕಿಗೆ ತಂದ ಕೀರ್ತಿ ಹಳಕಟ್ಟಿಯವರದಾಗಿದೆ.  ಇಂತಹ ಕೃತಿಗಳನ್ನು ಪ್ರಕಟಿಸಿದ ಹಳಕಟ್ಟಿಯವರು ‘ವಚನ ಪಿತಾಮಹ’ರಷ್ಟೇ ಅಲ್ಲ, ‘ಸ್ವರವಚನ ಪಿತಾಮಹ’ರೂ ಆಗಿದ್ದಾರೆ.

೩. ಸಟೀಕ ಏಕೋತ್ತರ ಶತಸ್ಥಲ: ಈ ಸಟೀಕ ಏಕೋತ್ತರ ಶತಸ್ಥಲ ಟೀಕ ಕೃತಿಯನ್ನು ೧೯೪೦ ರ ಶಿವಾನುಭವದ ೧೫ ನೇ ಸಂಪುಟದ ೧೦,೧೧,೧೨ ಸಂಚಿಕೆಗಳಲ್ಲಿ ಮತ್ತು ೧೯೪೧ ರ ೧೬ನೇ ಸಂಪುಟದ ಒಂದನೇ ಸಂಚಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಿಸಲಾಗಿದೆ. ೧೯೪೧ ರಲ್ಲಿ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಶಿವಾನುಭವ’ ಸಂಪುಟ 15 (ಸಂಚಿಕೆ 10, 11, 12, 1940) ಮತ್ತು ಸಂಪುಟ 16 (ಸಂಚಿಕೆ 1, 1941)ರಲ್ಲಿ ಪ್ರಕಟ ಗೊಂಡು ನಂತರ 1941/1953ರಲ್ಲಿ ಗ್ರಂಥಮಾಲೆಯ 60ನೇ ಕೃತಿಯಾಗಿ ಹೊರಬಂದಿತು. ಇದು ಜಕ್ಕಣಾರ್ಯನ ‘ನೂರೊಂದರ ಹಾಡುಗಳು’ ಕೃತಿಗೆ ಬರೆಯಲಾದ ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯ ಟೀಕೆಯಾಗಿದೆ. ಆದರೆ ಹಳಕಟ್ಟಿಯವರಿಗೆ ದೊರೆತ ಹಸ್ತಪ್ರತಿಯಲ್ಲೇ ಪಠ್ಯ ಅಪೂರ್ಣವಾಗಿದ್ದರಿಂದ, ಒಟ್ಟು ೧೦೧ ಸ್ಥಲಗಳ ಪೈಕಿ ಕೇವಲ ೮ ಸ್ಥಲಗಳು ಮಾತ್ರ  ಪ್ರಕಟಗೊಂಡಿವೆ.

  ಈ ಟೀಕೆಯಲ್ಲಿ ಜೀವಾತ್ಮ-ಪರಮಾತ್ಮರ ಸಂಬಂಧವನ್ನು ‘ಬಿಂಬ-ಪ್ರತಿಬಿಂಬ’ ಪರಿಕಲ್ಪನೆಯ ಮೂಲಕ ವಿವರಿಸಿ, ಜೀವಾತ್ಮನು ಮರಳಿ ಪರಮಾತ್ಮನಲ್ಲಿ ಸಾಯುಜ್ಯ ಹೊಂದುವ ಮಾರ್ಗವನ್ನು ನಿರೂಪಿಸಲಾಗಿದೆ. ಶಿವಾನಂದ ವಿರಕ್ತಮಠರು ಹೇಳುವಂತೆ, ಏಕೋತ್ತರ ಶತಸ್ಥಲಕ್ಕೆ ಬರೆದ ಟೀಕೆಗಳು ವಿಪುಲವಾಗಿವೆ. ಹಳಕಟ್ಟಿಯವರು ಉಪಯೋಗಿಸಿರುವ ಟೀಕೆಯಲ್ಲಿ ಒಟ್ಟು ಶರಣರನ್ನು ಆದ್ಯರು, ವೇದ್ಯರು, ಸಾದ್ಯರು ಎಂದು ಮೂರು ಭಾಗ ಮಾಡಿದೆ. ಬಸವಣ್ಣ, ಚೆನ್ನಬಸವಣ್ಣ ಮೊದಲಾದವರು ಪೂರ್ವ ಪುರಾತನರು ಆದ್ಯಗಣಂಗಳೆನಿಸುವರು, ವೇದ್ಯರೆಂದರೆ ಕೋಲಶಾಂತಯ್ಯ, ಕುದುರೆ ಶಾಂತಯ್ಯ, ಮಂಚದ ಶಾಂತಯ್ಯ ಮೊದಲಾದವರು ಚೆನ್ನ ಬಣ್ಣದ ಹಾಂಗೆ ತಮ್ಮ ವಸ್ತುವಿಗೂ ತಮಗೂ ಭೇದವಿಲ್ಲದೆ ನೂರೊಂದು ಸ್ಥಳಕುಳ ಆಚರಣೆಯ ಆಚರಿಸುವಂಥ ನೂರೊಂದು ವಿರಕ್ತರು, ಸಾಧ್ಯರೆಂದೊಡೆ ಗುಮ್ಮಳಾಪುರದ ಸಿದ್ದಲಿಂಗ ಸ್ವಾಮಿಗಳು ನಂದಿಕೇಶ್ವರ ಸ್ವಾಮಿಗಳು, ಚೆನ್ನಂಜೇಸ್ವಾಮಿಗಳು, ಎಂದು ಮೂರು ವಿಭಾಗಗಳಲ್ಲಿ ಗುರುತಿಸಿ ವ್ಯಾಖ್ಯಾನಿಸುವ ಅಪರೂಪದ ತಾತ್ವಿಕ ಚೌಕಟ್ಟನ್ನು ಹೊಂದಿದೆ. ಆದರೆ ಇದು ಅಪೂರ್ಣ ಸ್ಥಿತಿಯಲ್ಲಿದೆ. ಒಟ್ಟು 101 ಸ್ಥಲಗಳ ಪೈಕಿ ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ ಮತ್ತು ಪಂಚಾಕ್ಷರಿಸ್ಥಲ—ಹೀಗೆ ಕೇವಲ 8 ಸ್ಥಲಗಳಿಗೆ ಸಂಬಂಧಿಸಿದ ಪಠ್ಯ ಮಾತ್ರ ಇಲ್ಲಿ ಪ್ರಕಟವಾಗಿದೆ. ಉಳಿದ 93 ಸ್ಥಲಗಳು ಲಭ್ಯವಾಗಿ ಪ್ರಕಟಗೊಂಡಿದ್ದರೆ ಈ ಕೃತಿಗೆ ಪರಿಪೂರ್ಣತೆ ಬರುತ್ತಿತ್ತು. ಜೀವಾತ್ಮ-ಪರಮಾತ್ಮರ ಬಿಂಬ-ಪ್ರತಿಬಿಂಬ ಪರಿಕಲ್ಪನೆಯನ್ನು ಸಮೀಕರಿಸುತ್ತ ಮರಳಿ ಸಾಯುಜ್ಯ ಸೇರುವ ಪರಿಕ್ರಮವನ್ನು ಇದರಲ್ಲಿ ಬೋಧಿಸಲಾಗಿದೆ.

   ಈ ಟೀಕಾಗ್ರಂಥ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸಂಪಾದನೆಗೊಂಡು ಅಚ್ಚಾಗಿಲ್ಲ. ಕೃತಿ ಸಂಪೂರ್ಣವಾಗಿ ಮುದ್ರಣವಾಗಿದ್ದರೆ ಕೃತಿಯ ಬಗ್ಗೆ, ಹಸ್ತಪ್ರತಿ ವಿವರ ಎಲ್ಲವನ್ನೂ ನೀಡುತ್ತಾ ಇದ್ದರು. ಕೃತಿಯ ಮಹತ್ವವನ್ನು ಗ್ರಹಿಸಿ ಮುಂದೆ ಬಂದ ವಿದ್ವಾಂಸರು ಈ ಕೆಲಸವನ್ನು ಪೂರೈಸಬೇಕಾಗಿತ್ತು. ಈಗಲಾದರೂ ಆದಷ್ಟು ಬೇಗ ಈ ಟೀಕಾಗ್ರಂಥ ಸಂಪಾದನೆಗೊಂಡು ಪ್ರಕಟವಾಗಬೇಕು.

೪. ಕವಿ ಗುರುಬಸವಕೃತ ಅವಧೂತಗೀತೆ: ಈ ಕೃತಿಯು ೧೯೪೩ರಲ್ಲಿ ಶಿವಾನುಭವ ಗ್ರಂಥಮಾಲೆಯ ೬೩ನೇ ಪುಷ್ಪವಾಗಿ ಪ್ರಕಟವಾಯಿತು (೧೬ ಪುಟಗಳ ಪಠ್ಯ, ೪ ಪುಟಗಳ ಪ್ರಸ್ತಾವನೆ; ಬೆಲೆ: ೨ ಆಣೆ ೬ ಪೈಸೆ). ಇಂಡಿ ತಾಲೂಕಿನ ಉಮರ್ಜಿ ಶಾಲಾ ಶಿಕ್ಷಕರಾದ ಗ್ರಾಮದ ಶ್ರೀ ದುಂಡನಗೌಡ, ರಾಮನಗೌಡ ಪಾಟೀಲ, ಅವರು ಕಳುಹಿಸಿದ ಹಸ್ತಪ್ರತಿಯಿಂದ ಪರಿಷ್ಕರಿಸಿ, ಈ ಕೃತಿಯನ್ನು ಪ್ರಕಟಿಸಿದ್ದಾರೆ. 16 ಪುಟಗಳ ಈ ಕೃತಿಗೆ ಹಳಕಟ್ಟಿಯವರು 4 ಪುಟಗಳ ವಿದ್ವತ್ಪೂರ್ಣ ಪ್ರಸ್ತಾವನೆ ಬರೆದಿದ್ದಾರೆ. ಪ್ರಸ್ತಾವನೆಯಲ್ಲಿ ಹಳಕಟ್ಟಿಯವರು ಇದರ ಕರ್ತೃ ವಿಜಯನಗರದ ಇಮ್ಮಡಿ ದೇವರಾಯನ ಆಳ್ವಿಕೆಯಲ್ಲಿದ್ದ ೧೦೧ ವಿರಕ್ತರಲ್ಲಿ ಒಬ್ಬನಾದ ‘ಮತಸ್ಥಾಪನಾಚಾರ್ಯ’ ಕವಿ ಗುರುಬಸವ. ಈತ ಬಸವಣ್ಣನವರ ಮೇಲೆ ‘ವೃಷಭಗೀತೆ’ಯನ್ನೂ, ಪರಿವರ್ಧಿನಿ, ಭಾಮಿನಿ, ಭೋಗ, ಕುಸುಮ ಷಟ್ಪದಿಗಳಲ್ಲಿ ಸಪ್ತಕಾವ್ಯಗಳನ್ನೂ ರಚಿಸಿದ ಪ್ರಸಿದ್ಧ ವಿದ್ವಾಂಸ.  ಗುರುಬಸವ ಕವಿಯು ವಚನಕಾರರನ್ನು ತನ್ನ ಗ್ರಂಥಗಳಲ್ಲಿ ಬಹಳ ಸ್ತುತಿಸಿರುತ್ತಾನೆ. ಅವನು ಬಸವೇಶ್ವರಾದಿ ಶಿವಶರಣರ ವಿಷಯ ವಾಗಿ ಅತ್ಯಂತ ಪೂಜ್ಯ ಭಾವವುಳ್ಳವನು. ಹಾಗೆಯೇ ಅವನು ಒಳ್ಳೇ ಜ್ಞಾನಿಯೂ ಯೋಗಿಯೂ ಆಗಿದ್ದನೆಂದು ಕಂಡುಬರುತ್ತದೆ. ಅವನು ಯೋಗಾಭ್ಯಾಸದಲ್ಲಿ ಬಹಳ ಆಸಕ್ತಿಯುಳ್ಳವನೆಂಬುದು ಈಗ ನಾವು ಇವುಗಳಿಂದ ಚೆನ್ನಾಗಿ ತಿಳಿದುಬರುತ್ತದೆ. ಅವನು ವೀರಶೈವ ತಾತ್ವಿಕ ವಿಷಯಗಳಲ್ಲಿಯೂ ಚೆನ್ನಾಗಿ ಬಲ್ಲಿದವನಾಗಿದ್ದನು. ಎಂದಿದ್ದಾರೆ....... ಅವಧೂತ ಗೀತೆಯಲ್ಲಿಯ ವಿಷಯಗಳು ವೀರಶೈವ ವಚನಕಾರರು ಸಂಸಾರ ಹೇಯ ಸ್ಥಳಗಳಲ್ಲಿ ನಿರೂಪಿಸುವ ವಿಷಯಗಳನ್ನು ಬಹಳ ಹೋಲುತ್ತದೆ. “ಮತಸ್ಥಾಪನಾಚಾರ್ಯ'ಎಂಬ ಹೆಗ್ಗಳಿಕೆ ಈ ಕವಿಗಿರುವುದರಿಂದ ಮತ್ತು ಕಲ್ಯಾಣೇಶ್ವರ ಮೊದಲಾದ ಇನ್ನೂ ಆರು ಕೃತಿಗಳನ್ನು ಕ್ರಮವಾಗಿ ಪರಿವರ್ಧಿನಿ, ಭಾಮಿನಿ, ಪರಿವರ್ಧಿನಿ, ಭಾಮಿನಿ, ಭೋಗ, ಕುಸುಮ - ಷಟ್ಟದಿಗಳಲ್ಲಿಯೂ"ಅವಧೂತಗೀತೆ'ಯನ್ನು ಚೌಪದಿಯಲ್ಲಿಯೂ ರಚಿಸಿರುವುದರಿಂದ ಈ ಕವಿ, ಪ್ರಾಚೀನ ವೀರಶೈವಗ್ರಂಥಕಾರರಲ್ಲಿ ವಿಶೇಷ ಮನ್ನಣೆಗೆ ಪಾತ್ರನಾಗಿದ್ದನೆಂದೂ, ಈತ ನಿಜಗುಣ ಶಿವಯೋಗಿಗೆ ಸಮಾನನಾಗಿದ್ದನೆಂದೂ ಸಂಪಾದನಕಾರರು ಅಭಿಪ್ರಾಯಪಟ್ಟಿದ್ದಾರೆ. ಅವಧೂತಗೀತೆ’ಯ ಸಂಪಾದನೆಯಲ್ಲಿ ಹಳಕಟ್ಟಿಯವರು ಕೃತಿಯನ್ನು ಕೇವಲ ಮುದ್ರಿಸಲಿಲ್ಲ. ಕವಿ ಗುರುಬಸವನ ಪರಿಚಯ, ಕೃತಿಯ ತಾತ್ವಿಕ ಹಿನ್ನೆಲೆ, ಷಟ್‌ಸ್ಥಲ ಸಿದ್ಧಾಂತ, ಯೋಗ ಮತ್ತು ವೇದಾಂತದ ಸಂಬಂಧ ಇತ್ಯಾದಿಗಳನ್ನು ಪ್ರಸ್ತಾವನೆಯಲ್ಲಿ ಚರ್ಚಿಸಿದ್ದಾರೆ.  

  ಅವಧೂತಗೀತೆ’ಯು ಒಟ್ಟು 101 ಚೌಪದಿಗಳನ್ನು ಒಳಗೊಂಡಿದೆ. ಷಟ್‌ಸ್ಥಲ ಸಿದ್ಧಾಂತದೊಂದಿಗೆ ರಾಜಯೋಗ ಮತ್ತು ಅದ್ವೈತ ವೇದಾಂತವನ್ನು ಸಮನ್ವಯಗೊಳಿಸಿದೆ. ಈ ಕೃತಿಯ ಆಶಯವು ಶರಣರ ‘ಸಂಸಾರಹೇಯಸ್ಥಲ’ದ ತಾತ್ವಿಕತೆಗೆ ಅತ್ಯಂತ ಸಮೀಪವಾಗಿದೆ. ಸಂಸಾರದಲ್ಲಿ ಮುಳುಗಿ ದುಃಖಪಡದೆ, ಯೋಗಾಭ್ಯಾಸದ ಮೂಲಕ ಜಗತ್ತಿನಲ್ಲಿ ಇದ್ದೂ ಇಲ್ಲದಂತಿದ್ದು ಕಡೆಗೆ ‘ಅವಧೂತ’ ಸ್ಥಿತಿಯನ್ನು ಮುಟ್ಟಬೇಕೆಂಬುದು ಇದರ ಸಂದೇಶ. ಇದು ಶರಣರ ‘ಸಂಸಾರಹೇಯಸ್ಥಲ’ದ ವಿಚಾರಗಳಿಗೆ ಸಂಪೂರ್ಣವಾಗಿ ಸಂವಾದಿಯಾಗಿದೆ. ಹಳಕಟ್ಟಿಯವರು ಇದನ್ನು ಎರಡು ಸ್ವತಂತ್ರ ಹಸ್ತಪ್ರತಿಗಳನ್ನು ಆಧರಿಸಿ ಸಂಪಾದಿಸಿದರು.‘ ಈ ಸಂಪಾದನಾ ಕೃತಿಯ  ಮೂಲಕ “ಪಠ್ಯ + ಕರ್ತೃ + ಕಾಲ + ತತ್ವ + ಹಸ್ತಪ್ರತಿ + ಸಂಪಾದನಾ ವಿಧಾನ” ಎಂಬ ಸಮಗ್ರ ಮಾದರಿ ರೂಪುಗೊಂಡಿತು.

೫. ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ : ಈ ಕೃತಿಯು ಶಿವಾನುಭವ ಪತ್ರಿಕೆಯ ೨೫ನೇ ಸಂಪುಟದ ೭ ರಿಂದ ೧೧ನೇ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ನಂತರ ೧೯೫೨ರಲ್ಲಿ ಗ್ರಂಥಮಾಲೆಯ ೭೬ನೇ ಕೃತಿಯಾಗಿ ಹೊರಬಂದಿತು (ಬೆಲೆ: ೧೨ ಆಣೆ). ಹುನ್ನೂರ ಶ್ರೀ.ಸಿ.ನಾ. ಮಹಾಂತಣ್ಣವರ ಒದಗಿಸಿದ ಹಸ್ತಪ್ರತಿಯಿಂದ ಇದನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ವಾರ್ಧಕ ಷಟ್ಪದಿಯ ಈ ಲಘು ಕೃತಿಯಲ್ಲಿ ಪದ್ಯಗಳು ಇದ್ದು ಕನ್ನಡ ಟೀಕಾ ಸಮೇತ ಪ್ರಕಟವಾಗಿದೆ. ಕೃತಿಯ ಅಂತ್ಯದಲ್ಲಿ ಪಲ್ಲವಿಯುಕ್ತ ಹನ್ನೊಂದು ನುಡಿಯ ಮಂಗಳಾರತಿ ಪದ್ಯವಿದೆ.  ಪದ, ಟೀಕು, ಸಾಕ್ಷಿ ಶ್ಲೋಕ, ತಾತ್ಪರ್ಯಗಳಿದ್ದು ಈ ತಂತ್ರವನ್ನನುಸರಿಸಿ ವಿಷಯವನ್ನು ಮಂಡಿಸಿದ್ದಾರೆ. ಈ ಕೃತಿ ಕರ್ತೃವಿನ ಬಗ್ಗೆ ಎಸ್. ಶಿವಣ್ಣನವರು ಚಿತ್ರದುರ್ಗ ಬೃಹನ್‌ಮಠದ ಹಸ್ತಪ್ರತಿ ಸೂಚಿಯಲ್ಲಿ ೧೯೯೧ ರಲ್ಲಿ 'ಗಂಡುಗತ್ತರಿ ಚೆನ್ನವೀರ' ಇವನ ಕಾಲ ೧೭೦೦ ಎಂದು ತಿಳಿಸಿದ್ದಾರೆ. ಈತನ ಇನ್ನೊಂದು ಕೃತಿ 'ದಶಚಕ್ರದ ವಾರ್ಧಕ'. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ಸೂಚಿಯಲ್ಲಿ ಚೆನ್ನವೀರ ಎಂದು ಮಾತ್ರ ಹೇಳಿದ್ದಾರೆ. ಸ್ಥಳದ ಅಭಾವದಿಂದ ಗಂಡುಗತ್ತರಿ ಬಿಟ್ಟಿರಬೇಕು. ವಿದ್ವಾಂಸರಾದ ಎಸ್. ಶಿವಣ್ಣನವರ ಸಂಶೋಧನೆಯ ಪ್ರಕಾರ ಸಂಶೋಧಕರ ಪ್ರಕಾರ ಇದರ ಕರ್ತೃ ‘ಗಂಡುಗತ್ತರಿ ಚೆನ್ನವೀರ’ (ಸು. 1700, ದಶಚಕ್ರದ ವಾರ್ಧಕ ಕೃತಿಯ ಕರ್ತೃ) ಅಥವಾ ತುಮಕೂರು ಸೋಮೇಕಟ್ಟೆ ಮಠದ ಚೆನ್ನವೀರ ಸ್ವಾಮಿಗಳು (ಸು. 1740) ಎಂದು ಗುರುತಿಸಲಾಗಿದೆ.  ವಾರ್ಧಕ ಷಟ್ಪದಿಯ ಈ ಕೃತಿಯಲ್ಲಿ ಸ್ತುತಿ ಮತ್ತು ಮಂಗಳ ಪದ್ಯಗಳಲ್ಲದೆ ೨೮ ಪದ್ಯಗಳು, ೩೧ ಟೀಕುಗಳು, ೧೯ ಸಂಸ್ಕೃತ ಸಾಕ್ಷಿ ಶ್ಲೋಕಗಳು ಮತ್ತು ತಾತ್ಪರ್ಯಗಳಿವೆ; ಅಂತ್ಯದಲ್ಲಿ ಪಲ್ಲವಿಯುಕ್ತ ೧೧ ನುಡಿಗಳ ಮಂಗಳಾರತಿ ಪದವಿದೆ. ಹಳಕಟ್ಟಿಯವರು ಈ ಕೃತಿಯ ಮಹತ್ವದ ಕುರಿತು ಹೇಳಿದ್ದು ಹೀಗಿದೆ: “ಇದರಲ್ಲಿ ಪ್ರಾಣಲಿಂಗದ ಸ್ವರೂಪದ ವಿವರಣೆ ಬಹುಚೆನ್ನಾಗಿ ಮಾಡಿರುತ್ತಾನೆ. ಇಲ್ಲಿಯ ತತ್ವಗಳನ್ನು ಅಂತರಂಗದ ಲಿಂಗಪೂಜಾ ವಿಧಾನವನ್ನು ವೈಜ್ಞಾನಿಕವಾಗಿ ವಿವರಿಸುವ ಅತ್ಯುನ್ನತ ಯೋಗಶಾಸ್ತ್ರ ಗ್ರಂಥವಿದು. ಇದು ಚಿಕ್ಕಗ್ರಂಥವಾದರೂ ಅರ್ಥಪೂರ್ಣವಾಗಿದೆ. ಇದು ತಿಳಿದು ಆಚರಿಸತಕ್ಕ ವಿಷಯವಾಗಿದೆ. ಇದರಲ್ಲಿಯ ತತ್ವಗಳನ್ನು ಲಿಂಗಪೂಜಾಕ್ರಮದಲ್ಲಿ ಅನುಗೊಳಿಸಬಹುದಾಗಿದೆ'' ಎಂದು ನಿವೇದಿಸಿದ್ದಾರೆ. ಕೃತಿ ಅಪೂರ್ಣವಾಗಿದ್ದರೂ ಅದರ ತಾತ್ವಿಕ ಮಹತ್ವವನ್ನು ಹಳಕಟ್ಟಿಯವರು ಗುರುತಿಸಿದರು. ಪೂರ್ಣವಾಗಿಲ್ಲವೆಂಬ ಕಾರಣಕ್ಕೆ ಪಠ್ಯವನ್ನು ನಿರ್ಲಕ್ಷಿಸದೆ, ಅದರಲ್ಲಿರುವ ಸಂಶೋಧನಾಮೌಲ್ಯವನ್ನು ಗುರುತಿಸಿ ಪ್ರಕಟಿಸುವುದು ಆಕರಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ನಿಲುವು.

  "ಶ್ರೀ ಗುರು ಬಸವಲಿಂಗಾಯ ನಮಃ. ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ ಬರೆಯುವುದಕ್ಕೆ ಶುಭಮಸ್ತು। ಶ್ರೀರಸ್ತು" ಎಂಬ ಆರಂಭದ ಪದ್ಯಕ್ಕೆ ದರ್ಪಣ-ಕನ್ನಡಿಯಾಗುಳ್ಳಂಥ, ಚಾರಿತ್ರ್ಯ-ಇಂತಪ್ಪ-ಪ್ರಾಣಲಿಂಗಗಳ ಲಕ್ಷಣವನ್ನು ಈ ಕನ್ನಡಿಯೆನಿಸುವ ಇಪ್ಪತ್ತೇಳು ಪದಂಗಳಲ್ಲಿ ಕಾಣಬರುತ್ತಿಹುದು ಎಂಬುದಾಗಿ ಪ್ರಾಣಲಿಂಗ ಜ್ಞಾನದರ್ಪಣ ಚಾರಿತ್ರ್ಯವೆಂಬ ಶಬ್ದಕ್ಕರ್ಥ, ಬರೆಯುವುದಕ್ಕೆ-ಶರಣಗಣಂಗಳು ಓದಿ ಅರ್ಥವಿಟ್ಟು ಆನಂದಿಸಲೆಂದು ಲಿಖಿಸುವುದಕ್ಕೆ ಶುಭಮಸ್ತು” ಎಂದು ಅರ್ಥಬರೆಯಲಾಗಿದೆ. ಇದು ಚಿಕ್ಕ ಗ್ರಂಥವಾದರೂ ಅರ್ಥಪೂರ್ಣವಾಗಿದೆ. ಇದು ತಿಳಿದು ಆಚರಿಸತಕ್ಕ ವಿಷಯವಾಗಿದೆ. ಇದರಲ್ಲಿಯ ತತ್ತ್ವಗಳನ್ನು ಲಿಂಗಪೂಜಾ ಕ್ರಮದಲ್ಲಿ ಅನುಗೊಳಿಸಬಹುದಾಗಿದೆ. ವೀರಶೈವ ಸಾಹಿತ್ಯ, ಸಿದ್ಧಾಂತವನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ ಶಿವಾನುಭವಿಯು ಟೀಕೆ ಬರೆದಿರಬೇಕು. ಟೀಕೆ ಬಹಳ ಮೇಲು ಮಟ್ಟದ್ದಾಗಿದೆ.ವಚನ ಸಾಹಿತ್ಯವನ್ನು ತಲಸ್ಪರ್ಶಿ ಯಾಗಿ ಅಧ್ಯಯನ ಮಾಡಿ ಅವರ ಸಾರರೂಪ ನವನೀತವನ್ನು ಕೊಟ್ಟವರು ತುಮಕೂರು ಸೋಮೇಕಟ್ಟೆ ಮಠದ ಚನ್ನವೀರಸ್ವಾಮಿಗಳು.

೬. ಶಿವಯೋಗಾಚರಣೆ : ಈ ಕೃತಿಯು ೧೯೨೬ರಲ್ಲೇ ಶಿವಾನುಭವ ಗ್ರಂಥಮಾಲೆಯ ೮ನೇ ಕೃತಿಯಾಗಿ ನೇರವಾಗಿ ಪ್ರಕಟವಾಯಿತು (೫ ಪುಟಗಳು, ಬೆಲೆ: ೧ ಆಣೆ). "ಪ್ರಸ್ತಾವನೆ'ಯಿಲ್ಲ. ತ್ರಿಪದಿ ಛಂದಸ್ಸಿನಲ್ಲಿದೆ.  ಕವಿ ಅಜ್ಞಾತವಾಗಿರುವ ಈ ಕಿರುಕೃತಿಯಲ್ಲಿ ೪೫ ತ್ರಿಪದಿ ಪದ್ಯಗಳಿವೆ. ಕೇವಲ ಬಾಹ್ಯ ವೇಷಭೂಷಣಗಳಿಂದ ಯಾರೂ ಶಿವಯೋಗಿಯಾಗಲು ಸಾಧ್ಯವಿಲ್ಲ ಎಂಬುದನ್ನು ಕಟುವಾಗಿ ಸಾರುವ ನೈತಿಕ ಕಾವ್ಯವಿದು. ಢಾಂಬಿಕ ಭಕ್ತಿ, ಕ್ರೋಧ, ಲೋಭ ಮತ್ತು ಬೇಡಿ ತಂದು ಹಣ ಕೂಡಿಡುವ ಕಪಟ ವಿರಕ್ತಿಯನ್ನು ಇದು ನಿರ್ದಾಕ್ಷಿಣ್ಯವಾಗಿ ಛೀಮಾರಿ ಹಾಕುತ್ತದೆ:

"ಶ್ರೀ ಪರಶಿವನ ಪಾದವನು ಮರೆದು ಮನ ಹೋಹ ಪರಿಯಲ್ಲಿ ನಡೆದು ನುಡಿದಾಡುವ |

ಕ್ರೋಧಿಗೆಲ್ಲಿಯದು ಶಿವಯೋಗ ||"

"ದೇಶ ದೇಶವ ತಿರುಗಿ ಹೇಸದೆಲ್ಲರ ಬೇಡಿ ಕಾಸಗಂಟಿಕ್ಕಿ ತಾ |ವಿರಕ್ತನಾದೆನೆಂಬ ಹೇಸಿಗೆಲ್ಲಿಯದೊ ಶಿವಯೋಗ ಢಾಂಬಿಕತೆ, ಕ್ರೋಧ, ಲೋಭಗಳನ್ನು ತೊರೆದು ಸದಾಚಾರದಿಂದ ಇರುವುದೇ ಶಿವಯೋಗ ಎಂಬುದನ್ನು ಕೃತಿ ಕಟುವಾಗಿ ಸಾರುತ್ತದೆ. ಎಂಥವರಿಗೆ ಶಿವಯೋಗಪ್ರಾಪ್ತಿ ಎಂಬ ಸಂಗತಿಯನ್ನು ಈ ಕೃತಿ ನಿರ್ದಾಕ್ಷಿಣ್ಯವಾಗಿ ಹೇಳುತ್ತದೆ. ಗುರು-ಹಿರಿಯರಿಗೆ ನಿಂದನೆ ಮಾಡುವ ಕಾಮಭರಿತರಿಗೆ, ಸಿಟ್ಟು ಸೆಡವು ಉಳ್ಳವರಿಗೆ, ನೀತಿಬಿಟ್ಟವರಿಗೆ, ಡಾಂಬಿಕರಿಗೆ, ಹೊಗಳುವ ಭಟ್ಟಂಗಿಗಳಿಗೆ, ಲಿಂಗಾಯತಧರ್ಮದ 'ಶಿವಯೋಗಾಚಾರಣೆ' ಮಾಡುವುದು ಸಾಧ್ಯವಿಲ್ಲ. ದೇಶ ಸುತ್ತುವ, ಹೇಯತನಕ್ಕೆ ಹೇಸದೆ ಬೇಡಿಕೊಂಡು ಬಂದ ಹಣದಿಂದ ಹೊಟ್ಟೆ ತುಂಬ ಊಟಮಾಡದೆ ಕಾಸನ್ನು ಗಂಟುಕಟ್ಟಿಡುವ, ತನ್ನ ತಾ ವಿರಕ್ತ ಎಂದು ಹೇಳಿಕೊಳ್ಳುವವನಿಗೆ ಎಂದಾದರೂ 'ಶಿವಯೋಗ' ಸಾಧ್ಯವೆ? ಎಂದು ಪ್ರಶ್ನಿಸಲಾಗಿದೆ. ನೀತಿಯನ್ನು ಸಾರುವುದೇ ಇದರ ಮುಖ್ಯ ಗುರಿಯಾಗಿದೆ.  

೭. ಶಿವಶರಣರ ಪದಗಳು (ಭಾಗ–೧): ಈ ಕೃತಿಯು ಶಿವಾನುಭವ ಪತ್ರಿಕೆಯಲ್ಲಿ ಪ್ರಕಟವಾಗದೆ ನೇರವಾಗಿ ಶಿವಾನುಭವ ಗ್ರಂಥಮಾಲೆಯ ಪುಸ್ತಕವಾಗಿ ೧೯೪೩ರಲ್ಲಿ ಪ್ರಕಟವಾಗಿದೆ. (ಬೆಲೆ: ೧೨ ಆಣೆ).ತುಮಕೂರಿನ ಪ್ರಸಿದ್ಧ ವಕೀಲರಾದ ಎಚ್.ಆರ್. ಮಹಾಂತಯ್ಯ ಮತ್ತು ಹೊನ್ನುಡಿಕೆಯ ಯಜಮಾನ ರುದ್ರಯ್ಯನವರು ಸಂಗ್ರಹಿಸಿಕೊಟ್ಟ ಹಸ್ತಪ್ರತಿ ೨. ಮಾಗಡಿ ಶ್ರೀ ಸೋಮೇಕಟ್ಟೆ ನಿರಂಜನ ಪ್ರಣವ ಸ್ವರೂಪಿ ರುದ್ರಮುನಿ ಸ್ವಾಮಿಗಳು ಕೃಪೆ ಮಾಡಿ ಕಳುಹಿಸಿ ಕೊಟ್ಟ ಪ್ರತಿ ಮತ್ತೊಂದು ಅಲ್ಲಲ್ಲಿ ಶಿಷ್ಯರು ಹಾಡುತ್ತಾ ಇದ್ದ ಪದ್ಯಗಳನ್ನು ಸಂಗ್ರಹಿಸಿ ಈ ಸ್ವರವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ಧಾರೆ.

  ಈ ಗ್ರಂಥವನ್ನು ಏಕೆ ಸಂಪಾದಿಸಿದರು ಎಂಬುದನ್ನು ಹಳಕಟ್ಟಿಯವರು ಹೇಳಿದ ಮಾತುಗಳಿಂದ ಅರಿಯಬಹುದಾಗಿದೆ. “ವೀರಶೈವರಲ್ಲಿ ಭಕ್ತಿರಸವನ್ನು ಸೂಸುವ ಸುಂದರವಾದ ಪದ್ಯಗಳು ಅಸಂಖ್ಯಾತ ವಾಗಿವೆ. ವಚನಗಳು, ರಗಳೆಗಳು, ತ್ರಿಪದಿಗಳು ಮೊದಲಾದವುಗಳಂತೆ ಇವುಗಳಿಗೂ ವೀರಶೈವ ವಾಙ್ಮಯದಲ್ಲಿ ಉಚ್ಚ ಸ್ಥಾನವಿದೆ. ಅವುಗಳನ್ನು ಸಂಗ್ರಹಿಸಿ ಪ್ರಕಟಿಸುವುದು ಒಂದು ಮಹತ್ವದ ಕಾರ್ಯವಾಗಿರುತ್ತದೆ. ಇಂಥ ಕವಿಗಳು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಆಗಿ ಹೋಗಿದ್ದಾರೆ. ಅವರು ರಚಿಸಿದ ಪದಗಳು ಆಯಾ ಭಾಗಗಳಲ್ಲಿ ಪ್ರಚಲಿತವಿರುತ್ತವೆ. ಇವುಗಳನ್ನು ರಚಿಸಿದವರು ಬಹುಶಃ ಸಾಧುಗಳೂ, ಆಚಾರ ನಿಷ್ಠರೂ ಆಗಿ, ಪಾರಮಾರ್ಥಿಕ ಬೋಧೆಯನ್ನು ಯಾವಾಗಲೂ ಮಾಡುತ್ತ ಜನತೆಯಲ್ಲಿ ಅತ್ಯಂತ ಮನ್ನಣೆಯನ್ನು ಹೊಂದಿದವರಿರುತ್ತಾರೆ. ಇಂಥವರು ರಚಿಸಿದ ಪದ್ಯಗಳಲ್ಲಿ ಉಚ್ಚತರದ ಭಕ್ತಿಭಾವವು ಯಾವಾಗಲೂ ತುಂಬಿಕೊಂಡಿರುತ್ತದೆ. ಇಂಥ ಪದಗಳನ್ನು ಶಕ್ಯವಿದ್ದಷ್ಟರ ಮಟ್ಟಿಗೆ ಸಂಗ್ರಹಿಸುತ್ತ 'ಶಿವಶರಣರ ಪದಗಳು' ಎಂಬ ಹೆಸರಿನಿಂದ ಒಂದು ಮಾಲೆಯನ್ನು ಪ್ರಕಟಿಸಬೇಕೆಂದು ಯೋಚಿಸಿ, ಇದರ ಒಂದನೇ ಭಾಗವನ್ನು ಈಗ ಹೊರಪಡಿಸಿದ್ದೇವೆ. ಮುಂದೆ ಪದಗಳು ನಮಗೆ ದೊರೆತ ಹಾಗೆ ಅವುಗಳನ್ನು ಬೇರೆ ಬೇರೆ ಭಾಗಗಳಲ್ಲಿ ಕ್ರಮೇಣ ಪ್ರಸಿದ್ದಿಸುತ್ತ ಹೋಗುವೆವು. ಎಂದು ಹೇಳಿ, ಧಾರ್ಮಿಕ ಪುರುಷರಾದ ಕರಸ್ಥಲದ ನಾಗಲಿಂಗಪ್ಪ, ಹಾಗಲವಾಡಿ ಮುದಿಯಪ್ಪ ನಾಯಕರ ಮಗಳು, ಮಲ್ಲೇನಹಳ್ಳಿಯ ಚೆನ್ನಬಸವದೇವರು, ಹೊನ್ನುಡಿಕೆಯ ಗಂಗಾಧರಸ್ವಾಮಿಗಳು ಮುಂತಾದ ತುಮಕೂರು-ಮಾಗಡಿ-ಸೋಮೇಕಟ್ಟೆ ಭಾಗದ ಮಹಾತ್ಮರು ರಚಿಸಿದ 35ಕ್ಕೂ ಹೆಚ್ಚು ಭಕ್ತಿಪೂರ್ಣ ಸ್ವರವಚನ-ಪದಗಳನ್ನು ಇದರಲ್ಲಿ ಸಂಕಲಿಸಿದ್ದಾರೆ. ವೀರಶೈವ ವಾಙ್ಮಯದಲ್ಲಿ ಸ್ವರವಚನಗಳ ಮಹತ್ವವನ್ನು ಮನಗಂಡು ಹಳಕಟ್ಟಿಯವರು ಕೈಗೊಂಡ ಪ್ರಮುಖ ಕಾರ್ಯವಿದು.ಕರ್ನಾಟಕದ ವಿವಿಧ ಗ್ರಾಮೀಣ ಭಾಗಗಳಲ್ಲಿ ಪ್ರಚಲಿತವಿದ್ದ ಸ್ವರಪದಗಳನ್ನು ಅಳಿಸಿಹೋಗದಂತೆ ರಕ್ಷಿಸಿದ ಕೀರ್ತಿ ಈ ಪ್ರಕಟಣೆಗೆ ಸಲ್ಲುತ್ತದೆ.  

   ಕೃತಿಯ ಆರಂಭದಲ್ಲಿರುವ ಲಿಂಗಪೂಜಾಸ್ತುತಿ, ಪ್ರಮಥರ ಸುತ್ತಿ, ನಿರಾಳಗುರುಸೋತ್ರ ಹಾಗೂ ಶೀರ್ಷಿಕೆ ಇಲ್ಲದ ನಾಲ್ಕನೆಯ ಪದ-ಇವುಗಳಿಗೆ ಕರ್ತೃವಿನ ಹೆಸರೆ ಇಲ್ಲ ೧೦೫ ಕಂದಪದ್ಯಗಳನ್ನು ಒಳಗೊಂಡ ಶರಣಸಾಹಿತ್ಯದ ಮಹತ್ವದ ಭಾಗವಾಗಿರುವ ಗೀತಸಾಹಿತ್ಯದ ಪ್ರಕಟನೆಯ ಅವಶ್ಯಕತೆಯನ್ನು ಅರಿತ ಹಳಕಟ್ಟಿಯವರು, ಇದರ ಪ್ರಕಟನೆಗೂ ಶ್ರೀಕಾರ ಹಾಕಿದುದು ಗಮನಿಸಬೇಕಾದ ಅಂಶವಾಗಿದೆ . ಹಳಕಟ್ಟಿಯವರು ಪ್ರತಿಯೊಂದು ಶಿವಾನುಭವ ಸಂಚಿಕೆಗಳಿಗೆ ಹೊಸತನವನ್ನು ನೀಡಿದ್ದಾರೆ ಎಂಬುದಕ್ಕೆ 'ಶಿವಶರಣರ ಪದಗಳು ಭಾಗ-೧' ಕೃತಿ ಉದಾಹರಣೆಯಾಗಿದೆ. ಶಿವಶರಣರ ಪದಗಳು ಹಲವು ಸ್ವರವಚನಗಳ ಸಂಕಲನ ಈ ಪ್ರಕಟಿತ ಸ್ವರ ವಚನ ಸೂಕ್ಷ್ಮ ವಾದ ಅಧ್ಯಯನ ಇಂದು ನಡೆಯಬೇಕಾಗಿದೆ ಅಂದು ಆಕರ ಸಂಗ್ರಹ ಪ್ರಕಟಣೆ ಕಾಲ ಈಗ ಸೂಕ್ಷ್ಮ ವಾದ ಅಧ್ಯಯನ ವಿಶ್ಲೇಷಣೆ ಕಾಲ.

ಸ್ವರವಚನ ಶೀರ್ಷಿಕೆ ಅಂಕಿತ

೧. ಲಿಂಗಪೂಜಾ ಸ್ತುತಿ ಸ್ವರವಚನ ''ರಮಣ ನಿರಂಜನ'')

೨. ಪ್ರಮಥರ ಸ್ತುತಿ ಸ್ವರವಚನ "ಶ್ರೀ ಪ್ರಭುವಿನ”)

೩. ನಿರಾಳ ಗುರುಸ್ತೋತ್ರ - ಈ ಲಘು ಕೃತಿ ಕರ್ತೃ ೧೭ನೇ ಶತಮಾನದ ಷಣ್ಮುಖ ಸ್ವಾಮಿಗಳು

೪. ಲಿಂಗನ ಕಂಡೆ – ಈ ಲಘು ಕೃತಿ ಕರ್ತೃ ೧೭ನೇ ಶತಮಾನದ ಶಿವಯೋಗಿ ನಂಜೇಶ

೫. ಕರಸ್ಥಲದ ನಾಗಲಿಂಗಪ್ಪನವರು ಹಾಡಿದ್ದು ನಾಗಲಿಂಗಯ್ಯ

೬. ಸದ್ಗುರು ಮೂರ್ತಿ ಚಿದಾನಂದ

೭. ಹಾಗಲವಾಡಿ ಮುದಿಯಪ್ಪ ನಾಯಕರ ಮಗಳು ರಚಿಸಿದ್ದು ಗಮನ ಹುಚ್ಚಾರ

೮. (ಮಾರುತ್ತರ) ಗುರುಸಿದ್ದರಾಮ

೯. (ಸುಖವಾಯಿತೆನಗೆ) ಚದುರ ಚನ್ನಬಸವೇಶ

೧೦. (ಗಂಡ ಕಲಿಸಿದ ಹಾಡನ) ಚದುರ ಧೀರ

೧೧. (ಮೂರು ದಾರಿ) ಶಿವಯೋಗಿ ನಂದೀಶನ

೧೨. (ಗುರು ಮಲ್ಲೇಶನ ಗುಪಿತದ) ಗುರುಮಲ್ಲೇಶನ ಗುಪಿತದ

೧೩. (ರತ್ನ ಬಂದಿದೆ) ಶ್ರೀ ಗುರು ಸಿದ್ದಲಿಂಗ

೧೪. (ಬೆಳಗುತಿದೆ ಜ್ಯೋತಿ) ಸಚ್ಚಿದಾನಂದ

೧೫. (ಕರ್ಪೂರಾರತಿ ಎತ್ತಿರೆ) ಉದ್ದಂಡ ಪ್ರಭು ತೋಂಟದಾರ್ಯ

೧೬. (ಮಂಗಳಾರತಿ-ಬಸವಾದಿ ಪ್ರಮಥರಿಗೆ) ಧೀರ ಬಸವನಿಗೆ

೧೭. (ಕುಮಾರ ದೇವಗೆ ಮಂಗಳಂ) ಷಣ್ಮುಖದಿಂದೆಸೆಯುವ

೧೮. (ಲಿಂಗದೇವಗೆ ಮಂಗಳಂ) ಲಿಂಗಮಹಾಂತೇಶಗೆ

೧೯. (ಶಾಂತವೀರಗೆ) ಕಾಶೀ ವಿಶ್ವನಾಥ

೨೦. (ನಿತ್ಯಪರಿಪೂರ್ಣನಿಗೆ) ಪಂಚಾಂಗಲಿಂಗ ಶ್ರೀ ವಿರೂಪಾಕ್ಷ

೨೧. (ಮದ್ಗುರುವೆ) ಅಂಕಿತ ಇಲ್ಲ

೨೨. (ಮಂಗಳಂ ಜಯ ಮಂಗಳಂ) ವೃಷಭ

೨೩. (ಶ್ರೀ ಗುರುವರ ಜಯತು) ಚಟಕಪುರಿ ಚನ್ನವೃಷಭಸ್ವರವಚನದ ಕರ್ತೃ ವೀರಾರಾಧ್ಯ (ಗುಬ್ಬಿ ಚನ್ನಬಸವೇಶ್ವರ)

೨೪. (ಪುಷ್ಪಾಂಜಲಿ) ಇಕ್ಕೇರಿ ಪುರದೊಳು ನೆಲೆಸಿಹ ಶ್ರೀ ಗುರು ಮಡಿವಾಳೇಶ

೨೫. (ದೀಪ ಬೆಳಗುವೆನು) ಮಹಾಂತೇಶನ

೨೬. (ಕರ್ಪೂರ ಜ್ಯೋತಿ ಪ್ರಕಾಶ) ಪ್ರಿಯ ಬೋಳೇಶ

೨೭. (ಏಳುಗಿರಿಜಾರಮಣ) ಅಂಕಿತ ಇಲ್ಲ

೨೮. (ಎಂತು ಮರೆಯಲಿ ರಮಣಿ) ಶಾಂಭವದಿರನ

೨೯. (ಭುಜಗ ಭೂಷಣನಿಗೆ ನಮೋ ನಮೋ) ಇಷ್ಟಲಿಂಗ ಹಾಗಲವಾಡಿ ಮುದ್ವೀರಸ್ವಾಮಿ

೩೦. (ಚನ್ನ ಶ್ರೀಗುರುಪಾದ) ಮಹದೇವ

೩೧. (ಸಂಗನಬಸವಣ್ಣನಿಗೆ) ಗುಬ್ಬಿಯ ಪುರವಾಸವಾಗಿರ್ಪ ಗುರುಚನ್ನಬಸವಣ್ಣನಿಗೆ

೩೨. (ಎನ್ನ ಗುಣವ ನೋಡಬೇಡ) ಪಟ್ಟದ ಕೈಲಾಸ ಪ್ರಭುವೆ ಲಿಂಗಯ್ಯ

೩೩. (ಆರು ಬಲ್ಲರಯ್ಯ ಸ್ವಾಮಿ) ತುರುವೆ ಗುಡ್ಡದ ಶಿವನೆ

೩೪. (ಬೆಳಗಿನ್ನೆಲ್ಲಿಹದೊ) ಸಂಗನಬಸವ

೩೫. (ಶ್ರೀ ಗುರುದೇವಗೆ ಮಂಗಳಂ) ಸ್ವತಂತ್ರ ಗವಿಯ ಸಿದ್ದಲಿಂಗ

೮. ಹರಳಯ್ಯನ ತ್ರಿಪದಿ: ಈ ಕೃತಿಯು ಮೊದಲು ಶಿವಾನುಭವ ಪತ್ರಿಕೆಯ ಸಂಪುಟ೧೫ ಸಂಚಿಕೆ ೭, ೮, ೯, ೧೦, ೧೧ರಲ್ಲಿಯೂ ಪ್ರಕಟವಾಗಿದೆ. ಶಿವಾನುಭವ ಪತ್ರಿಕೆಯ ಸಂಪುಟ ೧೫ರ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಬಂದು, ೧೯೪೧ರಲ್ಲಿ ಗ್ರಂಥಮಾಲೆಯ ೫೭ನೇ ಕೃತಿಯಾಗಿ ಹೊರಬಂದಿತು (೨೫ ಪುಟಗಳು, ಬೆಲೆ: ೬ ಆಣೆ). ಕೃತಿ ಶೀರ್ಷಿಕೆ ಸೂಚಿಸುವಂತೆ ಇದು ೨೧೪ ಪದ್ಯಗಳ   ತ್ರಿಪದಿ   ಛಂದಸ್ಸಿನಲ್ಲಿದೆ. ಪಠ್ಯ ಮೂರು ಸಂಧಿಗಳಲ್ಲಿ ವಿಂಗಡನೆಗೊಂಡಿದ್ದು, ೭೮, ೧೦೮, ೨೮ ತ್ರಿಪದಿಗಳನ್ನು ಆಯಾ ಭಾಗಗಳು ಒಳಗೊಂಡಿವೆ. ಈ ಕೃತಿ ತಮಗೆ ಲಭ್ಯವಾದ ಬಗ್ಗೆ ಸಂಪಾದಕರು ಹೇಳಿಕೊಂಡಿದ್ದಾರೆ.ಇಂಡಿ ತಾಲೂಕಿನ ಉಮರ್ಜಿ ಗ್ರಾಮದ ಶಾಲಾ ಶಿಕ್ಷಕರಾದ ಶ್ರೀ ದುಂಡನಗೌಡ ರಾಮನಗೌಡ ಪಾಟೀಲರು  ಒದಗಿಸಿದ ಏಕೈಕ ಹಸ್ತಪ್ರತಿಯಿಂದ ಇದನ್ನು ಸಂಪಾದಿಸಿದ್ದಾರೆ. ಆದರೆ ಈ ಕೃತಿಯ ಬೇರೆ ಪ್ರತಿಗಳು ತಮಗೆ ದೊರೆಯದ್ದರಿಂದ ಇದನ್ನು ತಮಗೆ ತಿದ್ದಲಿಕ್ಕೆ ಸಾಧ್ಯವಾಗಿಲ್ಲವೆಂದೂ, ಕವಿ ಇಲ್ಲಿ ಛಂದೋನಿಯಮವನ್ನು ಅನುಸರಿಸಿಲ್ಲವೆಂದೂ ಹಳಕಟ್ಟಿಯವರು ಅಭಿಪ್ರಾಯಪಟ್ಟಿದ್ದಾರೆ. ವಿಸ್ತೃತವಾದ "ಪ್ರಸ್ತಾವನೆ'. ಯನ್ನೊಳಗೊಂಡಿದೆ. ಅಸ್ಪೃಶ್ಯ ಕುಲದಲ್ಲಿ ಜನಿಸಿ, ಕಲ್ಯಾಣ ಕ್ರಾಂತಿಯ ಕೇಂದ್ರಬಿಂದುವಾದ ಶರಣ ಹರಳಯ್ಯ ಮತ್ತು ಆತನ ಪತ್ನಿ ಕಲ್ಯಾಣಮ್ಮ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗೆ ಜೋಡು ಹೊಲಿದು ಸಮರ್ಪಿಸಿದ ಅಪೂರ್ವ ತ್ಯಾಗದ ಕಥಾನಕ ಇಲ್ಲಿದೆ.

   ವೀರಶೈವ ಧರ್ಮದಲ್ಲಿ ಸ್ಪೃಶ್ಯಾಸ್ಪೃಶ್ಯ ಭಾವನೆಗಳಿಗೆ ಎಡೆಯಿಲ್ಲವೆಂದು ಪ್ರತಿಪಾದಿಸಲು ಈ ಕಥೆಯನ್ನು ದುಡಿಸಿಕೊಳ್ಳಲಾಗಿದೆ.   ಈ ಕೃತಿಗೆ ಬರೆದ ಸುದೀರ್ಘ ಪ್ರಸ್ತಾವನೆಯಲ್ಲಿ ಹಳಕಟ್ಟಿಯವರು "ಸ್ಪೃರ್ಶ್ಯ-ಅಸ್ಪೃಶ್ಯ ಭಾವವು ವೀರಶೈವ ಧರ್ಮದಲ್ಲಿರುವದಿಲ್ಲ. ವೀರಶೈವ ಸಮಾಜದಲ್ಲಿ ಆಗಿಹೋಗಿರುವ ತತ್ತ್ವ ಜ್ಞಾನಿಗಳೂ, ಶರಣರೂ, ಸಾಧುಗಳೂ, ವಚನಕಾರರೂ ಬಹು ಸ್ಪಷ್ಟ ಶಬ್ದಗಳಿಂದ ಇದನ್ನು ಖಂಡಿಸಿದ್ದಾರೆ. ಈ ಬಗ್ಗೆ ಅವರ ಉಕ್ತಿಗಳು ಅಸಂಖ್ಯವಾಗಿರುತ್ತದೆ. ವೀರಶೈವ ಧರ್ಮವು ಪಂಚಸೂತಕ ಗಳನ್ನು ಎಣಿಸುವುದಿಲ್ಲ. ಜನನಸೂತಕ, ಪ್ರೇತಸೂಚಕ. ಉಚ್ಛಿಷ್ಟ ಸೂತಕ, ರಜಸೂತಕ, ಜಾತಿಸೂತಕ ಇವುಗಳೇ ಈ ಪಂಚಸೂತಕಗಳಾಗಿದ್ದು, ಇವುಗಳಲ್ಲಿ ಜಾತಿ ಸೂತಕವಿರುವುದರಿಂದ ವೀರಶೈವರು ಇದನ್ನು ಮನ್ನಿಸಿರುವುದಿಲ್ಲ. ಹೀಗೆ ಬಹು ವಿಸ್ತಾರವಾದ ಪ್ರಸ್ತಾವನೆ ಬರೆದಿದ್ದಾರೆ. ಅಸ್ಪೃಶ್ಯತೆಯ ನಿವಾರಣೆಗೆ ಶರಣರ ಕಾಲದಲ್ಲೇ ನಡೆದ ಮಹಾಕ್ರಾಂತಿಯನ್ನು ಈ ಕೃತಿಯ ಮೂಲಕ ಸಮಾಜದ ಕಣ್ಮುಂದೆ ತಂದರು.

  ಶರಣ ಹರಳಯ್ಯ ಕಲ್ಯಾಣ ಕ್ರಾಂತಿಗೆ ಮೂಲ ಬೀಜವಾದ ಶರಣ. ಅಸ್ಪೃಶ್ಯಕುಲದಲ್ಲಿ ಜನಿಸಿದ ಈತ, ಶರಣ ಸಂಕುಲದಲ್ಲೇ ಉಚ್ಚಸ್ಥಾನವನ್ನು ಹೊಂದಿದ ಮಾದರ ಚೆನ್ನಯ್ಯನಂತೆ ಪ್ರಸಿದ್ಧ ಪುರುಷನಾಗಿದ್ದಾನೆ. ಕಲ್ಯಾಣ ಕ್ರಾಂತಿಯ ಮಹಾಪುರುಷ ಶರಣ ಹರಳಯ್ಯನ ಪಾದರಕ್ಷೆ ಸಮರ್ಪಣೆಯ ಕಥಾನಕ ಇದರಲ್ಲಿದೆ. ಹಳಕಟ್ಟಿಯವರು ಇದಕ್ಕೆ ಸುದೀರ್ಘ ಪ್ರಸ್ತಾವನೆ ಬರೆದು, ಶರಣ ಧರ್ಮದಲ್ಲಿ ಜಾತಿ ಸೂತಕ, ಸ್ಪರ್ಶಾಸೂತಕಗಳಿಗೆ ಯಾವುದೇ ಸ್ಥಾನವಿಲ್ಲವೆಂಬುದನ್ನು ತತ್ತ್ವಬದ್ಧವಾಗಿ ಪ್ರತಿಪಾದಿಸಿದ್ದಾರೆ.

     ಹಳಕಟ್ಟಿಯವರು ಸಾಹಿತ್ಯ ಸಂಪಾದನೆಗೆ ತೊಡಗಿದ ಕಾಲಘಟ್ಟದಲ್ಲಿ ಇಂದಿನ ವೈಜ್ಞಾನಿಕ ‘ಗ್ರಂಥಸಂಪಾದನಶಾಸ್ತ್ರ’ವು (Textual Criticism) ಶಿಸ್ತುಬದ್ಧವಾಗಿ ರೂಪುಗೊಂಡಿರಲಿಲ್ಲ; ಮುದ್ರಣ ತಂತ್ರಜ್ಞಾನವೂ ಅಷ್ಟಾಗಿ ಬೆಳೆದಿರಲಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಅವರು ಏಕಾಂಗಿಯಾಗಿ ಸಾವಿರಾರು ಹಸ್ತಪ್ರತಿಗಳನ್ನು ಹುಡುಕಿ, ಪರಿಶೀಲಿಸಿ ಪ್ರಕಟಿಸಿದರು. ಲೇಖನ ಚಿಹ್ನೆಗಳ ಅಸಮರ್ಪಕ ಬಳಕೆ, ಮುದ್ರಣ ದೋಷಗಳು, ಛಂದೋಭಂಗ ಅಥವಾ ಪುನರಾವರ್ತನೆಗಳಂತಹ ಕೆಲವು ತಾಂತ್ರಿಕ ಮಿತಿಗಳು ಅವರ ಕೃತಿಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದರೂ, ಪ್ರತಿಯೊಂದು ಕೃತಿಯ ‘ಪ್ರಸ್ತಾವನೆ’ಯಲ್ಲಿ ಆಕರ ದೊರೆತ ಬಗೆ, ಹಸ್ತಪ್ರತಿಯ ಗುಣದೋಷ, ಗ್ರಂಥಕರ್ತರ ವಿವರ ಮತ್ತು ಪಠ್ಯದ ತಿರುಳನ್ನು ದಾಖಲಿಸುವಲ್ಲಿ ಅವರು ತೋರಿದ ಪ್ರಾಮಾಣಿಕತೆ ಅನನ್ಯವಾದುದು. ಹಳಕಟ್ಟಿಯವರ ಲೇಖನಗಳು ಕೇವಲ ವಚನಗಳಿಗೆ ಸೀಮಿತವಾಗಿರಲಿಲ್ಲ. ವಚನಗಳಷ್ಟೇ ಪ್ರಾಚೀನವೂ ಪ್ರಭಾವಶಾಲಿಯೂ ಆದ ಸ್ವರವಚನಗಳು ಮತ್ತು ಕಾವ್ಯ ಪ್ರಕಾರಗಳನ್ನು ಅವರು ಮುಂಚೂಣಿಗೆ ತಂದರು:

   ಜಕ್ಕಣಾರ್ಯನ ‘ನೂರೊಂದರ ಹಾಡುಗಳು’ (ಸ್ವರ ಏಕೋತ್ತರ ಶತಸ್ಥಲ), ಚೆನ್ನಬಸವಣ್ಣನವರ ‘ಪದಮಂತ್ರಗೋಪ್ಯ’, ಹಾಗೂ ಸೋಮೇಕಟ್ಟೆ-ತುಮಕೂರು ಭಾಗದ ಸಂತರು ರಚಿಸಿದ ‘ಶಿವಶರಣರ ಪದಗಳು’ ಸಂಕಲನಗಳನ್ನು ಪ್ರಕಟಿಸುವ ಮೂಲಕ ಕನ್ನಡ ಗೀತಸಾಹಿತ್ಯ/ಸ್ವರವಚನಗಳ ಮಹತ್ವವನ್ನು ಶಾಸ್ತ್ರೀಯವಾಗಿ ಸ್ಥಾಪಿಸಿದರು. ರಗಳೆ, ಷಟ್ಪದಿ (ವಾರ್ಧಕ, ಭಾಮಿನಿ ಇತ್ಯಾದಿ), ತ್ರಿಪದಿ (ಹರಳಯ್ಯನ ತ್ರಿಪದಿ, ಶಿವಯೋಗಾಚರಣೆ), ಚೌಪದಿ (ಗುರುಬಸವನ ಅವಧೂತಗೀತೆ), ಸಾಂಗತ್ಯ ಮೊದಲಾದ ವಿವಿಧ ಛಂದೋರೂಪಗಳ ಕೃತಿಗಳನ್ನು ಸಂಶೋಧಿಸಿ ಪ್ರಕಟಿಸಿದರು.

   ಹಳಕಟ್ಟಿಯವರು ಪ್ರತಿಯೊಂದು ಕೃತಿಯ ಮುನ್ನುಡಿಯಲ್ಲಿ ಬರೆಯುತ್ತಿದ್ದ ಮಾತುಗಳು ಇಂದಿನ ಸಂಶೋಧಕರಿಗೂ ಆದರ್ಶಪ್ರಾಯವಾಗಿವೆ. ಕೃತಿಯಲ್ಲಿರುವ ಮಿತಿಗಳನ್ನು ಅವರು ಎಂದಿಗೂ ಮುಚ್ಚಿಡುತ್ತಿರಲಿಲ್ಲ. ಹರಳಯ್ಯನ ತ್ರಿಪದಿ’ಯ ಪ್ರಸ್ತಾವನೆಯಲ್ಲಿ: ತಮಗೆ ಒಂದೇ ಹಸ್ತಪ್ರತಿ ದೊರೆತ ಕಾರಣ ಬೇರೆ ಪ್ರತಿಗಳೊಂದಿಗೆ ತಾಳೆನೋಡಿ ಪಾಠಶೋಧನೆ ಮಾಡಲು ಸಾಧ್ಯವಾಗಲಿಲ್ಲವೆಂದೂ, ಕವಿಯು ಹಲವೆಡೆ ಛಂದೋನಿಯಮಗಳನ್ನು ಮೀರಿದ್ದಾನೆಂದೂ ಸ್ಪಷ್ಟವಾಗಿ ದಾಖಲಿಸಿದರು.

‘ಸಟೀಕ ಏಕೋತ್ತರ ಶತಸ್ಥಲ’ದಲ್ಲಿ: ೧೦೧ ಸ್ಥಲಗಳಲ್ಲಿ ತಮಗೆ ಕೇವಲ ೮ ಸ್ಥಲಗಳ ಪಠ್ಯ ಮಾತ್ರ ಸಿಕ್ಕಿದೆ, ಉಳಿದ ೯೩ ಸ್ಥಲಗಳು ದೊರೆತರೆ ಮಾತ್ರ ಕೃತಿಗೆ ಪರಿಪೂರ್ಣತೆ ಬರುತ್ತದೆ ಎಂದು ನಮೂದಿಸಿದರು.

‘ಶಿವಶರಣರ ಪದಗಳು’ ಕೃತಿಯಲ್ಲಿ: ತುಮಕೂರಿನ ಮಹಾಂತಯ್ಯನವರ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿ, ಗ್ರಂಥದ ಒಂದು ಭಾಗದ ಸಂಪಾದನಾ ಗೌರವವನ್ನು ಅವರಿಗೇ ಬಿಟ್ಟುಕೊಟ್ಟರು.

ತಮಗೆ ಹಸ್ತಪ್ರತಿ ಎಲ್ಲಿ ಸಿಕ್ಕಿತು, ಯಾರಿಂದ ಬಂತು, ಗ್ರಂಥದ ಬೆಲೆ ಎಷ್ಟು, ಅದರ ತಾತ್ವಿಕ ತಿರುಳೇನು ಎಂಬುದನ್ನು ಪ್ರತಿಯೊಂದು ಪುಸ್ತಕದಲ್ಲೂ ಕರಾರುವಾಕ್ಕಾಗಿ ದಾಖಲಿಸುವ ಮೂಲಕ, ಅವರು ಆಧುನಿಕ ಕನ್ನಡ ಗ್ರಂಥಸಂಪಾದನಾ ಕ್ಷೇತ್ರಕ್ಕೆ ಭದ್ರವಾದ ನೈತಿಕ ಅಡಿಪಾಯ ಹಾಕಿದರು.

    ಹಳಕಟ್ಟಿಯವರ ಸಂಪಾದನಾ ಕಾರ್ಯವನ್ನು ಇಂದಿನ ಅತ್ಯಾಧುನಿಕ ವೈಜ್ಞಾನಿಕ ‘ಪಠ್ಯವಿಮರ್ಶೆ’ (Textual Criticism) ಮತ್ತು ಡಿಜಿಟಲ್ ಮುದ್ರಣ ತಂತ್ರಜ್ಞಾನದ ಕನ್ನಡಕದಿಂದ ನೋಡಿ ತೀರ್ಮಾನಿಸುವುದು ಐತಿಹಾಸಿಕ ಪ್ರಮಾದವಾಗುತ್ತದೆ. ಅವರು ಕೆಲಸ ಮಾಡಿದ ಕಾಲಘಟ್ಟದ ಭೌತಿಕ ಮತ್ತು ಸಾಂಸ್ಥಿಕ ಮಿತಿಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಹಳಕಟ್ಟಿಯವರ ಸಂಪಾದನೆಗಳಲ್ಲಿ ಕಂಡುಬರುವ ಮುದ್ರಣ ದೋಷಗಳು ಅಥವಾ ಪಾಠದ ಅಪೂರ್ಣತೆಗಳು ಅವರ ಲೋಪಗಳಲ್ಲ; ಬದಲಾಗಿ ನೂರಾರು ವರ್ಷಗಳ ಕಾಲ ಕತ್ತಲೆಯಲ್ಲಿದ್ದ ಅಮೂಲ್ಯ ಸಾಹಿತ್ಯವು ನಾಶವಾಗಿ ಹೋಗಬಾರದೆಂಬ ಅವರ ಧಾವಂತದ, ತುರ್ತಿನ ಫಲಗಳು. ಹಳಕಟ್ಟಿಯವರು ಹಾಕಿಕೊಟ್ಟ ಈ ಅಡಿಪಾಯದ ಮೇಲೆ ನಿಂತು, ಆ ಕೊರತೆಗಳನ್ನು ನಿವಾರಿಸಿ, ಆಧುನಿಕ ಸಂಪಾದನಶಾಸ್ತ್ರದ ಶಿಸ್ತಿನಲ್ಲಿ ಈ ಕೃತಿಗಳನ್ನು ಮರು-ಸಂಪಾದನೆ ಮಾಡುವುದೇ ಇಂದಿನ ವಿದ್ವಾಂಸರು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ.

‘ಶಿವಾನುಭವ’ ಪತ್ರಿಕೆಯ ಒಂಬತ್ತನೆಯ ಸಂಪುಟ ಮತ್ತು ಅದರ ಸಮಗ್ರ ಲೇಖನ ಪರಂಪರೆಯನ್ನು ಅವಲೋಕಿಸಿದಾಗ ಮೂಡಿಬರುವ ಪ್ರಮುಖ ಸತ್ಯವೆಂದರೆ—ಡಾ. ಫ.ಗು. ಹಳಕಟ್ಟಿಯವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದರು ಎಂಬುದು.

೧೯೨೬ರಲ್ಲಿ ಆರಂಭವಾದ ‘ಶಿವಾನುಭವ’ ಪತ್ರಿಕೆಯು ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ಕೆಳಗಿನ ನಾಲ್ಕು ಪ್ರಮುಖ ನೆಲೆಗಳಲ್ಲಿ ಸಂಕ್ಷೇಪಿಸಬಹುದು:

1.    ಸಾಹಿತ್ಯಿಕ ಆಯಾಮ: ಕೇವಲ ೫೦ ವಚನಕಾರರಿಗೆ ಸೀಮಿತವಾಗಿದ್ದ ಕನ್ನಡ ಸಾಹಿತ್ಯ ಲೋಕವನ್ನು ೨೫೦ಕ್ಕೂ ಹೆಚ್ಚು ವಚನಕಾರರಿಗೆ ವಿಸ್ತರಿಸಿತು; ವಚನಗಳ ಜೊತೆಗೆ ನೂರಾರು ಸ್ವರವಚನಗಳನ್ನು, ಅಪರೂಪದ ಷಟ್ಪದಿ-ತ್ರಿಪದಿ ಕಾವ್ಯಗಳನ್ನು ಮತ್ತು ಹರಿಹರನ ರಗಳೆಗಳನ್ನು ಬೆಳಕಿಗೆ ತಂದು ಕನ್ನಡದ ಸಾಹಿತ್ಯಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿತು.

2.   ಚಾರಿತ್ರಿಕ ಆಯಾಮ: ‘ಶಿವಶರಣರ ಚರಿತ್ರೆಗಳು’ ಕೃತಿಯ ನಾಲ್ಕು ಭಾಗಗಳ ಮೂಲಕ ೧೭೦ ಶರಣ-ಶರಣೆಯರ ಇತಿಹಾಸವನ್ನು ವಚನ, ಕಾವ್ಯ, ಶಾಸನ ಮತ್ತು ಕ್ಷೇತ್ರಕಾರ್ಯಗಳ ವೈಜ್ಞಾನಿಕ ಸಮನ್ವಯದೊಂದಿಗೆ ಪುನರ್ ನಿರ್ಮಿಸಿತು.

3.   ಸಾಮಾಜಿಕ ಆಯಾಮ: ‘ಹರಳಯ್ಯನ ತ್ರಿಪದಿ’ ಮತ್ತು ‘ಶಿವಯೋಗಾಚರಣೆ’ಯಂತಹ ಕೃತಿಗಳ ಮೂಲಕ ಪಂಚಸೂತಕಗಳ, ಅಸ್ಪೃಶ್ಯತೆಯ ಮತ್ತು ಬೂಟಾಟಿಕೆಯ ಆಚರಣೆಗಳನ್ನು ಖಂಡಿಸಿ, ಸಮಾನತೆ ಮತ್ತು ಸದಾಚಾರದ ಶರಣ ತತ್ತ್ವಗಳನ್ನು ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿಸಿತು.

4.   ಸಂಪಾದನಾ ಶಾಸ್ತ್ರದ ಆಯಾಮ: ಯಾವುದೇ ಸಾಂಸ್ಥಿಕ ಅನುದಾನಗಳಿಲ್ಲದೆ, ಸ್ವಂತ ಮುದ್ರಣಾಲಯದ ಮೂಲಕ ೩೫ ವರ್ಷಗಳ ಕಾಲ ನಿರಂತರವಾಗಿ ಅಪರೂಪದ ಹಸ್ತಪ್ರತಿಗಳನ್ನು ಪರಿಷ್ಕರಿಸಿ, ಪ್ರಾಮಾಣಿಕ ಪ್ರಸ್ತಾವನೆಗಳೊಂದಿಗೆ ದಾಖಲಿಸುವ ಮೂಲಕ ಆಧುನಿಕ ಹಸ್ತಪ್ರತಿಶಾಸ್ತ್ರಕ್ಕೆ ದಿಕ್ಸೂಚಿಯಾಯಿತು.

ಹೀಗೆ, ‘ಶಿವಾನುಭವ’ ಪತ್ರಿಕೆಯ ಒಂಬತ್ತನೆಯ ಸಂಪುಟದಲ್ಲಿರುವ ಕಾವ್ಯ-ಸಾಹಿತ್ಯ ಕೃತಿಗಳು ಮತ್ತು ಪತ್ರಿಕೆಯ ಲೇಖನಗಳ ವೈಶಿಷ್ಟ್ಯವು ಕೇವಲ ಗತಕಾಲದ ದಾಖಲೆಗಳಲ್ಲ. ಅವು ಇಂದಿಗೂ ಮತ್ತು ಮುಂದಿಗೂ ಕನ್ನಡ ಸಂಸ್ಕೃತಿ, ಭಾಷೆ ಹಾಗೂ ಶರಣ ಧರ್ಮದ ಆಳವಾದ ಅಧ್ಯಯನಕ್ಕೆ ಅತ್ಯಂತ ಪ್ರಮುಖವಾದ ಆಕರ ಗ್ರಂಥಗಳಾಗಿ ಶಾಶ್ವತವಾಗಿ ಕಂಗೊಳಿಸುತ್ತವೆ.

  ಶಿವಾನುಭವ ಪತ್ರಿಕೆಯ ಲೇಖನಗಳು ಕೇವಲ ಸಾಹಿತ್ಯಿಕ ಚರ್ಚೆಯಾಗಿರದೆ, ಸಮಾಜ ಸುಧಾರಣೆಯ ಚಾಲಕಶಕ್ತಿಯಾಗಿದ್ದವು: ಹರಳಯ್ಯನ ತ್ರಿಪದಿ’ ಯ ಪ್ರಸ್ತಾವನೆಯಲ್ಲಿ ಅವರು ವೀರಶೈವ/ಶರಣ ಸಿದ್ಧಾಂತದಲ್ಲಿ ಜಾತಿ ಸೂತಕ, ಜನನ-ಪ್ರೇತ-ರಜ-ಉಚ್ಛಿಷ್ಟಾದಿ ಪಂಚಸೂತಕಗಳಿಗೆ ಸ್ಥಾನವಿಲ್ಲವೆಂಬುದನ್ನು ತತ್ತ್ವಬದ್ಧವಾಗಿ ಪ್ರತಿಪಾದಿಸಿ, ಸಮಾಜ ಸುಧಾರಣೆಗೆ ವಚನ ಚಳವಳಿಯ ಪ್ರಸ್ತುತತೆಯನ್ನು ಎತ್ತಿಹಿಡಿದರು. ‘ಶಿವಯೋಗಾಚರಣೆ’ ಕೃತಿಯ ಮೂಲಕ ಕೇವಲ ವೇಷಭೂಷಣ ತೊಟ್ಟು, ಊರೂರು ತಿರುಗಿ ಹಣ ಗಂಟಿಕ್ಕುವ ಬೂಟಾಟಿಕೆಯ ‘ವಿರಕ್ತಿ’ಯನ್ನು ಕಟುವಾಗಿ ವಿಮರ್ಶಿಸಿ, ಸದಾಚಾರ-ಕಾಯಕ-ದಾಸೋಹಗಳೇ ನಿಜವಾದ ಧರ್ಮವೆಂದು ಸಾರಿದರು. ಫ.ಗು. ಹಳಕಟ್ಟಿಯವರ ಸಂಪಾದಕತ್ವದ ‘ಶಿವಾನುಭವ’ ಪತ್ರಿಕೆಯು ಅಂದಿನ ಮುದ್ರಣ ಕೊರತೆಗಳು ಮತ್ತು ಸಂಪಾದನಾ ಶಾಸ್ತ್ರದ ಆರಂಭಿಕ ಮಿತಿಗಳ ನಡುವೆಯೂ ಕೈಗೊಂಡ ಕಾರ್ಯ ಅಸಾಧಾರಣವಾದುದು. ಕತ್ತಲೆಯಲ್ಲಿದ್ದ ಶರಣರ ಜೀವನಾದರ್ಶ, ವಚನ-ಸ್ವರವಚನಗಳ ಅಪೂರ್ವ ಸಂಪತ್ತು ಹಾಗೂ ಚಾರಿತ್ರಿಕ ಸತ್ಯಗಳನ್ನು ಹೊರತರುವ ಮೂಲಕ, ಆಧುನಿಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಒಂದು ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿಕೊಟ್ಟ ಕೀರ್ತಿ ‘ಶಿವಾನುಭವ’ ಪತ್ರಿಕೆಯ ಲೇಖನ ಪರಂಪರೆಗೆ ಸಲ್ಲುತ್ತದೆ.

  ಫ.ಗು. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ‘ಶಿವಾನುಭವ’ ಪತ್ರಿಕೆಯು (೧೯೨೬–೧೯೬೧) ಆಧುನಿಕ ಕರ್ನಾಟಕದ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅಪೂರ್ವ ಅಧ್ಯಾಯ. ವಚನ ಸಾಹಿತ್ಯದ ಸಂಶೋಧನೆ ಮತ್ತು ಪ್ರಕಟಣೆಯ ಮೂಲಕ ‘ವಚನ ಪಿತಾಮಹ’ರೆಂದು ಖ್ಯಾತರಾದ ಹಳಕಟ್ಟಿಯವರು, ಶಿವಾನುಭವ ಪತ್ರಿಕೆಯ ಮೂಲಕ ಕೇವಲ ವಚನಗಳನ್ನಷ್ಟೇ ಅಲ್ಲದೆ, ವಚನೇತರ ಸಾಹಿತ್ಯ ಪ್ರಕಾರಗಳಾದ ಸ್ವರವಚನ, ಕಾವ್ಯ, ಚರಿತ್ರೆ, ತತ್ತ್ವಶಾಸ್ತ್ರ ಮತ್ತು ಸೃಜನೇತರ ಜ್ಞಾನಶಿಸ್ತುಗಳನ್ನು ಅನ್ವೇಷಿಸಿ ನಾಡಿಗೆ ನೀಡಿದರು.‘

   ಆಧುನಿಕ ಕರ್ನಾಟಕದ ಪತ್ರಿಕಾರಂಗವು ರಾಷ್ಟ್ರೀಯತೆ, ಸ್ವಾತಂತ್ರ್ಯ ಚಳವಳಿ ಮತ್ತು ಭಾಷಿಕ ಜಾಗೃತಿಯ ಸಂಕ್ರಮಣ ಕಾಲದಲ್ಲಿದ್ದ ಕಾಲವದು. ಪತ್ರಿಕೋದ್ಯಮದ ಭೀಷ್ಮ ಶ್ರೀ ಮೊಹರೆ ಹನುಮಂತರಾಯ, ಡಾ. ರಂಗನಾಥ ದಿವಾಕರ, ಪ್ರೊ. ಶಿ.ಶಿ. ಬಸವನಾಳ, ಶ್ರೀ ಬೆಟಗೇರಿ ಕೃಷ್ಣಶರ್ಮ ಮೊದಲಾದ ಮಹನೀಯರು ಪತ್ರಿಕೋದ್ಯಮದ ಮೂಲಕ ಹೊಸ ಸಂಚಲನ ಮೂಡಿಸುತ್ತಿದ್ದರು. ಇವರ ಸಮಕಾಲೀನರಾಗಿದ್ದ ಹಳಕಟ್ಟಿಯವರು, ರಾಜಕೀಯ ಪತ್ರಿಕೋದ್ಯಮಕ್ಕಿಂತ ಭಿನ್ನವಾಗಿ ‘ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಂಶೋಧನಾತ್ಮಕ ಪತ್ರಿಕೋದ್ಯಮ’ಕ್ಕೆ ಭದ್ರ ಬುನಾದಿ ಹಾಕಿದರು. ಯಾವುದೇ ಆರ್ಥಿಕ ಲಾಭವಿಲ್ಲದಿದ್ದರೂ, ಎಂತಹ ಕಠಿಣ ಗಂಡಾಂತರಗಳು ಎದುರಾದರೂ ಮೂವತ್ತೈದು ವರ್ಷಗಳ ಕಾಲ ಪತ್ರಿಕೆಯನ್ನು ಅವ್ಯಾಹತವಾಗಿ ನಡೆಸಿದ್ದು ಅವರ ಅಚಲವಾದ ಶರಣ ಶ್ರದ್ಧೆಗೆ ಸಾಕ್ಷಿಯಾಗಿದೆ.

   ‘ಶಿವಾನುಭವ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಪರಿಶೀಲಿಸಿದಾಗ, ಹಳಕಟ್ಟಿಯವರಲ್ಲಿದ್ದ ಒಬ್ಬ ಶ್ರೇಷ್ಠ ಸಂಪಾದಕನ ವ್ಯವಸ್ಥಿತ ವರ್ಗೀಕರಣ ಪ್ರಜ್ಞೆ ಎದ್ದು ಕಾಣುತ್ತದೆ. ಪತ್ರಿಕೆಯ ಒಟ್ಟು ವಿಷಯ ವ್ಯಾಪ್ತಿಯನ್ನು ಪ್ರಮುಖವಾಗಿ ಎರಡು ದೊಡ್ಡ ವಿಭಾಗಗಳಲ್ಲಿ ಗುರುತಿಸಬಹುದು. ಮುದ್ರಿತ ಆವೃತ್ತಿಗಳಿಗಿಂತ ಹಸ್ತಪ್ರತಿಗಳಿಗೆ ಆದ್ಯತೆ. ಬಹುಪ್ರತಿ ಪರಿಶೀಲನೆ ಅಂದರೆ ಲಭ್ಯವಿರುವ ವಿವಿಧ ಪ್ರತಿಗಳನ್ನು ಹೋಲಿಕೆ ಮಾಡುವುದು. ಪಠ್ಯಪರಿಷ್ಕರಣೆ ಲೇಖಕರ/ಲಿಪಿಕಾರರ ದೋಷಗಳನ್ನು ಗುರುತಿಸಿ ಪಠ್ಯವನ್ನು ಓದಲು ಯೋಗ್ಯಗೊಳಿಸುವುದು. ಪ್ರಸ್ತಾವನೆ, ಕೃತಿ, ಕರ್ತೃ, ಕಾಲ, ವಿಷಯ ಮತ್ತು ಮಹತ್ವವನ್ನು ಪರಿಚಯಿಸುವುದು.ಧಾರಾವಾಹಿ ಪ್ರಕಟಣೆ, ದೀರ್ಘ ಪಠ್ಯವನ್ನು ಹಂತ ಹಂತವಾಗಿ ಪ್ರಕಟಿಸುವುದು. ಗ್ರಂಥೀಕರಣ ಅಂದರೆ, ಪತ್ರಿಕೆಯಲ್ಲಿ ಪ್ರಕಟಿಸಿದ ಪಠ್ಯವನ್ನು ನಂತರ ಸ್ವತಂತ್ರ ಕೃತಿಯಾಗಿ ಪ್ರಕಟಿಸುವುದು. ಈ ಕ್ರಮವನ್ನು ಮೂಲಪಠ್ಯ ನೇರವಾಗಿ ಸೂಚಿಸುತ್ತದೆ.

  ಶಿವಾನುಭವ’ದಲ್ಲಿನ ಹಳಕಟ್ಟಿಯವರ ಪ್ರಕಟಣಾ ಚಟುವಟಿಕೆಯಲ್ಲಿ ಹಳಕಟ್ಟಿಯವರ ಸಾಹಿತ್ಯದೃಷ್ಟಿ ವಚನಕೇಂದ್ರಿತವಾದರೂ ವಚನಕ್ಕೆ ಸೀಮಿತವಾಗಿರಲಿಲ್ಲ.ಅವರು ವಚನವನ್ನು ಒಂದು ವಿಶಾಲ ಶರಣ ಸಾಹಿತ್ಯ ಪರಂಪರೆಯ ಕೇಂದ್ರವಾಗಿ ನೋಡಿದರು. ‘ಶಿವಾನುಭವ’ದ ಲೇಖನಗಳ ಮತ್ತೊಂದು ಮುಖ್ಯ ಲಕ್ಷಣವೆಂದರೆ ಧರ್ಮವನ್ನು ಸಾಮಾಜಿಕ ನೈತಿಕತೆಯೊಂದಿಗೆ ಜೋಡಿಸುವುದು. ‘ಶಿವಯೋಗಾಚರಣೆ’ಯಂತಹ ಕೃತಿಗಳಲ್ಲಿ ಕೇವಲ ಆಚರಣೆಯ ಪ್ರಶ್ನೆಯಲ್ಲದೆ, ಕ್ರೋಧ, ಢಾಂಬಿಕತೆ,ಗುರುನಿಂದೆ, ಲೋಭ, ಪಟ ವಿರಕ್ತತೆ, ನೀತಿಭ್ರಷ್ಟತೆ ಮೊದಲಾದ ಸಾಮಾಜಿಕ-ನೈತಿಕ ಸಮಸ್ಯೆಗಳನ್ನು ಪ್ರಶ್ನಿಸಲಾಗಿದೆ. ಹೀಗಾಗಿ ‘ಶಿವಾನುಭವ’ದ ಧಾರ್ಮಿಕ ಚಿಂತನೆ ಆಧ್ಯಾತ್ಮಿಕತೆಯನ್ನು ಸಾಮಾಜಿಕ ನೈತಿಕತೆಯಾಗಿ ಪರಿವರ್ತಿಸುವ ಸ್ವರೂಪ ಹೊಂದಿದೆ. ಬಸವಾದಿ ಪ್ರಮಥರ ತತ್ವಗಳು ಆಚರಣೆಯಲ್ಲಿ ಇರಲಿಲ್ಲ ಎಂಬ ಅಭಿಪ್ರಾಯವನ್ನು ಪ್ರಶ್ನಿಸುವುದು, ವಿವಿಧ ಜಾತಿ, ವರ್ಗ ಮತ್ತು ವಯೋಮಾನದ ಜನರು ಶರಣತತ್ವದಿಂದ ಪ್ರಭಾವಿತರಾದುದನ್ನು ತೋರಿಸುವುದು, ಶರಣರ ಸಾಮಾಜಿಕ-ಧಾರ್ಮಿಕ ಕಾರ್ಯಗಳನ್ನು ಪರಿಚಯಿಸುವುದು, ವಚನಕಾರರ ಪ್ರಭಾವದ ಭೌಗೋಳಿಕ ವ್ಯಾಪ್ತಿಯನ್ನು ಗುರುತಿಸುವುದು, ಕಾಯಕ, ದಾಸೋಹ, ಸದಾಚಾರ, ಸ್ವಾಭಿಮಾನ, ವಿನಯ, ಪರೋಪಕಾರ ಮತ್ತು ಸಾಮರಸ್ಯದ ಬದುಕನ್ನು ಪರಿಚಯಿಸುವುದು ಮುಖ್ಯವಾಗಿದ್ದವು. ಆದ್ದರಿಂದ ಅವರ ಲೇಖನಗಳು ಭೂತಕಾಲದ ಸಾಹಿತ್ಯವನ್ನು ದಾಖಲಿಸುವುದರ ಜೊತೆಗೆ ವರ್ತಮಾನದ ಸಮಾಜಕ್ಕೆ ನೈತಿಕ ಮಾದರಿಯನ್ನು ನೀಡುವ ಪ್ರಯತ್ನವೂ ಆಗಿದ್ದವು. ಪಠ್ಯವು ಅವರನ್ನು ತಮ್ಮ ಸಮಕಾಲೀನ ಪತ್ರಕರ್ತರ ಸಾಲಿನಲ್ಲಿ ಗುರುತಿಸಿ, ‘ಶಿವಾನುಭವ’ದ ಮೂಲಕ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಸ್ಥಿರಗೊಳಿಸಿಕೊಂಡರೆಂದು ಹೇಳುತ್ತದೆ.

   ಫ.ಗು. ಹಳಕಟ್ಟಿಯವರ ಬದುಕು ಮತ್ತು ಬರಹಗಳನ್ನು ಪರಿಶೀಲಿಸಿದಾಗ, ಅವರು ಆರಂಭಿಸಿದ ‘ಶಿವಾನುಭವ’ ಪತ್ರಿಕೆಯು ಕೇವಲ ಒಂದು ನಿಯತಕಾಲಿಕೆಯಾಗಿರದೆ, ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಪುನರ್ ನಿರ್ಮಾಣಕ್ಕೆ ನಾಂದಿಹಾಡಿದ ಮಹಾನ್ ಸಾಂಸ್ಕೃತಿಕ ಆಂದೋಲನವಾಗಿ ಗೋಚರಿಸುತ್ತದೆ. ಪ್ರಸ್ತುತ ಪಠ್ಯದ ವಿವರಗಳನ್ನು ಆಧರಿಸಿ, ‘ಶಿವಾನುಭವ’ ಪತ್ರಿಕೆಯ ಹಿನ್ನೆಲೆ ಹಾಗೂ ಅದರಲ್ಲಿ ಪ್ರಕಟಗೊಂಡಿರುವ ಲೇಖನ ಮತ್ತು ಸಂಪಾದಿತ ಕೃತಿಗಳ ಆಳವಾದ ವಿಶೇಷತೆ-ವೈಶಿಷ್ಟ್ಯಗಳನ್ನು ಕೆಳಗಿನ ಪ್ರಮುಖ ಆಯಾಮಗಳಲ್ಲಿ ವಿಶ್ಲೇಷಿಸಬಹುದು:

೧೮. ‘ಶಿವಾನುಭವ’ದ ಲೇಖನಗಳ ಪ್ರಮುಖ ಆಕರಶೋಧನೆ

ವೈಶಿಷ್ಟ್ಯಗಳು

ಹಸ್ತಪ್ರತಿ, ತಾಳೆಓಲೆ, ಕಾಗದದ ಪ್ರತಿಗಳ ಅನ್ವೇಷಣೆ

ಪಠ್ಯಸಂಪಾದನೆ

ವಿವಿಧ ಪ್ರತಿಗಳನ್ನು ಪರಿಶೀಲಿಸಿ ಪಠ್ಯ ಸಿದ್ಧಪಡಿಸುವುದು

ಅಪ್ರಕಟಿತ ಸಾಹಿತ್ಯ

ಮರೆಯಾಗಿದ್ದ ವಚನ, ಸ್ವರವಚನ, ಕಾವ್ಯ ಪ್ರಕಟಣೆ

ವಚನ ಪುನರುಜ್ಜೀವನ

ಅಪರಿಚಿತ ವಚನಕಾರರನ್ನು ಬೆಳಕಿಗೆ ತರುವುದು

ಸ್ವರವಚನ ಸಂರಕ್ಷಣೆ

‘ನೂರೊಂದರ ಹಾಡುಗಳು’ ಮೊದಲಾದ ಪ್ರಕಟಣೆ

ಶರಣಚರಿತ್ರೆ

ವಚನ, ಕಾವ್ಯ, ಶಾಸನ, ಐತಿಹ್ಯ, ಕ್ಷೇತ್ರಕಾರ್ಯ ಬಳಕೆ

ಪತ್ರಿಕಾ ಧಾರಾವಾಹಿ

ದೀರ್ಘ ಕೃತಿಗಳನ್ನು ಹಲವು ಸಂಚಿಕೆಗಳಲ್ಲಿ ಪ್ರಕಟಿಸುವುದು

ಗ್ರಂಥೀಕರಣ

ಪತ್ರಿಕೆಯ ಲೇಖನಗಳನ್ನು ನಂತರ ಸ್ವತಂತ್ರ ಕೃತಿಗಳನ್ನಾಗಿ ಮಾಡುವುದು

ಪ್ರಸ್ತಾವನೆ

ಕೃತಿ, ಕರ್ತೃ, ತತ್ವ, ಹಸ್ತಪ್ರತಿ ಕುರಿತು ಪರಿಚಯ

ವಿಮರ್ಶಾತ್ಮಕತೆ

ಪಠ್ಯದ ಮಹತ್ವ ಮತ್ತು ತಾತ್ವಿಕತೆಯನ್ನು ವಿವರಿಸುವುದು

ಸಾಮಾಜಿಕತೆ

ಕಾಯಕ, ದಾಸೋಹ, ನೀತಿ, ಸಮಾನತೆ, ಸಾಮರಸ್ಯ

ಸಾಂಸ್ಕೃತಿಕತೆ

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿಮಾನ

ಬಹುಪ್ರಕಾರತೆ

ವಚನ, ರಗಳೆ, ತ್ರಿಪದಿ, ಷಟ್ಪದಿ, ಚೌಪದಿ, ಪದ ಮುಂತಾದವು

ಭವಿಷ್ಯದ ಸಂಶೋಧನೆ

ಮುಂದಿನ ಅಧ್ಯಯನಕಾರರಿಗೆ ಮೂಲ ಆಕರ ಒದಗಿಸುವುದು

ಹಳಕಟ್ಟಿಯವರನ್ನು ಕೇವಲ ಸಂಗ್ರಾಹಕ ಎಂದು ಕರೆಯುವುದು ಅಪೂರ್ಣ.ಅವರ ಕೆಲಸವನ್ನು ನಾಲ್ಕು ಹಂತಗಳಲ್ಲಿ ನೋಡಬಹುದು:

ಮೊದಲ ಹಂತ — ಸಂರಕ್ಷಣೆ,“ಇದು ನಾಶವಾಗಬಾರದು.”

ಎರಡನೇ ಹಂತ — ಸಂಪಾದನೆ“ಇದು ಸರಿಯಾದ ಪಠ್ಯರೂಪದಲ್ಲಿ ಲಭ್ಯವಾಗಬೇಕು.”

ಮೂರನೇ ಹಂತ — ವಿವರಣೆ“ಓದುಗರು ಇದರ ಅರ್ಥವನ್ನು ಗ್ರಹಿಸಬೇಕು.”

ನಾಲ್ಕನೇ ಹಂತ — ಚರಿತ್ರೀಕರಣ“ಈ ಪಠ್ಯ ಮತ್ತು ಅದರ ಕರ್ತೃ ಕನ್ನಡ ಸಾಹಿತ್ಯ-ಸಂಸ್ಕೃತಿಯ ಇತಿಹಾಸದಲ್ಲಿ ಯಾವ ಸ್ಥಾನ ಹೊಂದಿದ್ದಾರೆ ಎಂಬುದು ತಿಳಿಯಬೇಕು.”ಈ ನಾಲ್ಕು ಹಂತಗಳು ಸೇರಿ ‘ಶಿವಾನುಭವ’ವನ್ನು ಒಂದು ಸಾಂಸ್ಕೃತಿಕ ಆಕರ-ಪತ್ರಿಕೆಯನ್ನಾಗಿ ಮಾಡಿವೆ. ಶಿವಾನುಭವ ಪತ್ರಿಕೆಯ ಸಾಧನೆಯ ಮುಖವನ್ನು ನೋಡುವುದಾದರೆ,ಅದು ಅಪ್ರಕಟಿತ ಸಾಹಿತ್ಯದ ಸಂರಕ್ಷಣೆಯ ಪ್ರತೀಕವಾಗಿದೆ.

  ಹಳಕಟ್ಟಿಯವರ ‘ಶಿವಾನುಭವ’ ಲೇಖನಗಳನ್ನು ಕೇವಲ ಧಾರ್ಮಿಕ ಲೇಖನಗಳೆಂದು ವರ್ಗೀಕರಿಸುವುದು ಅವುಗಳ ನಿಜವಾದ ಸಂಶೋಧನಾ ವ್ಯಾಪ್ತಿಯನ್ನು ಅರಿಯಲು ಸಾಧ್ಯವಾಗುವುದಿಲ್ಲ. ಶಿವಾನುಭವದ ಲೇಖನಗಳೊಳಗೆ ಹಸ್ತಪ್ರತಿ ಸಂಗ್ರಹವಿದೆ, ಪಠ್ಯಸಂಪಾದನೆಯಿದೆ, ಸಾಹಿತ್ಯ ವಿಮರ್ಶೆಯಿದ,
ಶರಣಚರಿತ್ರೆಯಿದೆ, ಇತಿಹಾಸ ಶೋಧನೆಯಿದೆ, ಸಾಮಾಜಿಕ ಚಿಂತನೆಯಿದೆ, ಧಾರ್ಮಿಕ ತತ್ವವಿದೆ, ಪತ್ರಿಕೋದ್ಯಮವಿದೆ, ಸಾಂಸ್ಕೃತಿಕ ಪುನರುಜ್ಜೀವನವಿದೆ. ಹೀಗಾಗಿ ‘ಶಿವಾನುಭವ’ದ ಹಳಕಟ್ಟಿಯವರ ಲೇಖನಗಳು ಒಂದೇ ಪ್ರಕಾರಕ್ಕೆ ಸೇರದ ಬಹುಶಿಸ್ತೀಯ ಸಂಶೋಧನಾ ದಾಖಲೆಗಳು. ಫ.ಗು. ಹಳಕಟ್ಟಿಯವರ ‘ಶಿವಾನುಭವ’ ಪತ್ರಿಕೆಯನ್ನು ಕನ್ನಡದ ಆಧುನಿಕ ವಚನಸಾಹಿತ್ಯ ಪುನರುಜ್ಜೀವನದ ಒಂದು ಪ್ರಮುಖ ಸಂಸ್ಥಾತ್ಮಕ ಪ್ರಯೋಗವೆಂದು ಗುರುತಿಸಬಹುದು. ಅವರ ಸಾಧನೆಯ ಶ್ರೇಷ್ಠತೆಯೆಂದರೆ, ಅವರು ಹಳೆಯ ಪಠ್ಯವನ್ನು ಕೇವಲ ಉಳಿಸಲಿಲ್ಲ; ಅದನ್ನು ಆಧುನಿಕ ಕನ್ನಡ ಓದುಗರ ಸಾಂಸ್ಕೃತಿಕ ಸ್ಮೃತಿಯ ಭಾಗವನ್ನಾಗಿ ಮಾಡಿದರು. ಅಪರಿಚಿತ ವಚನಕಾರರ ಪರಿಚಯ ಸ್ವರವಚನಗಳ ಪ್ರಕಟಣೆ ಹಸ್ತಪ್ರತಿ ಆಧಾರಿತ ಸಂಪಾದನೆ ಕ್ಷೇತ್ರಕಾರ್ಯದ ಬಳಕೆ ಶರಣಚರಿತ್ರೆಯ ನಿರ್ಮಾಣ ಪತ್ರಿಕೆ ಮತ್ತು ಗ್ರಂಥದ ಸಮನ್ವಯ ಕನ್ನಡ ಸಾಹಿತ್ಯಚರಿತ್ರೆಯ ಪುನರ್‌ರಚನೆ ಇವೆಲ್ಲ ಅವರ ಅಪೂರ್ವ ಸಾಧನೆಗಳು. ಶಿವಾನುಭವ ಪತ್ರಿಕೆಯಲ್ಲಿಯ ಹಳಕಟ್ಟಿಯವರ ಲೇಖನಗಳನ್ನು ಆಧುನಿಕ ಸಂಶೋಧನೆಗೆ ಅಮೂಲ್ಯ ಪ್ರಾಥಮಿಕ/ದ್ವಿತೀಯ ಆಕರಗಳನ್ನು ಒಳಗೊಂಡ ಸಂಶೋಧನಾ ಕ್ಷೇತ್ರವೆಂದು ಪರಿಗಣಿಸುವುದು ಹೆಚ್ಚು ಸೂಕ್ತ.
   

   ಹಳಕಟ್ಟಿಯವರ ಅಂದಿನ ಸಂಪಾದನ ಕಾರ್ಯವನ್ನು ಇಂದಿನ ಶಾಸ್ತ್ರಶಿಸಿನ ಕಣ್ಣಿನಿಂದ ನೋಡುವುದೇ ಪ್ರಮಾದವೆನಿಸುತ್ತದೆ. ಹಳಕಟ್ಟಿಯವರು ಲೇಖನ ಚಿಹ್ನೆಗಳನ್ನು ಸರಿಯಾಗಿ ಬಳಸಿಲ್ಲ ಮುದ್ರಣದೋಷಗಳು ಸಾಕಷ್ಟಿವೆ, ವಿನ್ಯಾಸದ ಕಡೆಗೆ ಗಮನಕೊಟ್ಟಿಲ್ಲ ಅರ್ಥಸಂದಿಗ್ಗತೆಗೆ ಎಡೆಮಾಡಿಕೊಡುವ ಶಬ್ದಗಳನ್ನು ಬದಲಿಸಬೇಕಿತ್ತು ,ಪುನರಾನವರ್ತನೆಗಳನ್ನು ಗಮನಿಸಲಿಲ್ಲ ಹಾಡು, ಪದ್ಯಗಳಿಗೆ ಶೀರ್ಷಿಕೆಗಳನ್ನು ಕಲ್ಪಿಸಬಹುದಿತ್ತು ಛಂದೋಲಯವನ್ನು ಲಕ್ಷಿಸಿ ಕಾವ್ಯದ ಸಾಲುಗಳನ್ನು ಸಂಯೋಜಿಸಲಿಲ್ಲ, ಅಡಿಟಿಪ್ಪಣಿಗಳು ತಪ್ಪಿವೆ- ಇಂಥ ಅನೇಕ ಮಿತಿಗಳ ಮಧ್ಯೆಯೂ ಹಳಕಟ್ಟಿಯವರು ತಮ್ಮ ಸಂಪಾದನೆಯ ಬಹುತೇಕ ಪುಸಕಗಳಿಗೆ ತಾವು ಬರೆದ "ಪ್ರಸ್ತಾವನೆ'ಗಳಲ್ಲಿ ಯಾವುದೋ ಒಂದು ಕೃತಿ ತಮಗೆ ಹೇಗೆ ಲಭಿಸಿತು, ಅದು ಯಾರಿಂದ ಎಲ್ಲಿಂದ ಕೈಸೇರಿತು, ಆ ಗ್ರಂಥ ಅಪೂರ್ಣವಾಗಿದ್ದರೆ ಅದಕ್ಕೆ ಸ್ಪಷ್ಟನೆ, ಅದರ ಗುಣದೋಷಗಳೇನು, ಗ್ರಂಥಕರ್ತರು ಯಾರು, ಆಯಾ ಪಠ್ಯಗಳ ತಿರುಳೇನು, ಅವುಗಳ ಉಪಯುಕ್ತತೆ ಏನು -ಇತ್ಯಾದಿ ಕುತೂಹಲದ ಪ್ರಶ್ನೆಗಳನ್ನು ತಾವೇ ಕೇಳಿಕೊಂಡು, ಅವುಗಳಿಗೆ ಸರಿಯಾದ ವಿವರಗಳನ್ನು ನಮೂದಿಸಿದ್ದಾರೆ. ಎಲ್ಲ ಪರಿಷ್ಕರಣೆಯನ್ನು ಸಿಬ್ಬಂದಿಗಳ ಸಹಾಯವಿಲ್ಲದೆ ಹಳಕಟ್ಟಿಯವರೇ ಮಾಡಿ ಮುಗಿಸಿದ್ದಾರೆ, ಹತ್ತಾರು ಹೊಣೆಗಳಿಲ್ಲದೆ ನೇರವಾಗಿ ಸಾಹಿತ್ಯಕಾರ್ಯದಲ್ಲಿ ತೊಡಗಿದ್ದರೆ, ಇಂದು ನಾವು ಪುನರ್‌ಸಂಪಾದನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ ಹಳಕಟ್ಟಿಯವರ ಸಂಪಾದನೆಯ ಕಾರ್ಯದ ಮುಂದುವರಿಕೆ ಅಂದರೆ ಅಲ್ಲಿಯ ಕೊರತೆಗಳನ್ನು ಸಾಧ್ಯವಿದ್ದಷ್ಟರ ಮಟ್ಟಿಗೆ ನಿವಾರಿಸುವ ಪ್ರಯತ್ನವೆಂಬ ಭಾವನೆಯಿಂದ,

ಒಟ್ಟಿನಲ್ಲಿ, ‘ಶಿವಾನುಭವ’ದಲ್ಲಿ ಪ್ರಕಟಗೊಂಡ ಹಳಕಟ್ಟಿಯವರ ಲೇಖನಗಳ ಅತ್ಯಂತ ದೊಡ್ಡ ವಿಶೇಷತೆ ಅವುಗಳ “ಬಹುಮುಖ ಆಕರಮೌಲ್ಯ” ಮತ್ತು “ಪುನರುಜ್ಜೀವನಾತ್ಮಕ ಉದ್ದೇಶ”ದಲ್ಲಿದೆ. ಅವು ಒಂದೇ ಸಮಯದಲ್ಲಿ, ಲೇಖನಗಳೂ ಹೌದು, ಸಂಪಾದಿತ ಪಠ್ಯಗಳೂಹೌದು, ಸಂಶೋಧನಾ ದಾಖಲೆಗಳೂ ಹೌದು,
ಶರಣ ಚರಿತ್ರೆಗಳೂ ಹೌದು, ಸಾಂಸ್ಕೃತಿಕ ಪುನರುಜ್ಜೀವನದ ದಾಖಲೆಗಳೂ ಹೌದು. ‘ಶಿವಾನುಭವ’ವು ಶರಣ ಸಾಹಿತ್ಯ, ವಚನ ಪರಂಪರೆ, ಧಾರ್ಮಿಕ ಮೌಲ್ಯಗಳು ಮತ್ತು ಮಾನವೀಯ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ವೇದಿಕೆಯಾಯಿತು; ಜೊತೆಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು ಬೆಳೆಸಿತು. ಆದ್ದರಿಂದ ‘ಶಿವಾನುಭವ’ದಲ್ಲಿ ಹಳಕಟ್ಟಿಯವರ ಲೇಖನಗಳನ್ನು ಓದುವುದು ಎಂದರೆ ಕೇವಲ ಹಳಕಟ್ಟಿಯವರ ಬರಹಗಳನ್ನು ಓದುವುದಲ್ಲ; ಕನ್ನಡ ವಚನಸಾಹಿತ್ಯದ ಪುನರುಜ್ಜೀವನದ ಒಂದು ಶತಮಾನದ ಆರಂಭಿಕ ಬೌದ್ಧಿಕ ಚರಿತ್ರೆಯನ್ನು ಓದಿದಂತಾಗುತ್ತದೆ. ಇನ್ನೂ ಮುಖ್ಯವಾಗಿ, ಹಳಕಟ್ಟಿಯವರ ಪ್ರಯತ್ನದಲ್ಲಿ “ಹಸ್ತಪ್ರತಿ
→ ಪಠ್ಯ → ಪತ್ರಿಕೆ → ಓದುಗ → ಗ್ರಂಥ → ಸಂಶೋಧನೆ → ಸಾಹಿತ್ಯಚರಿತ್ರೆ” ಎಂಬ ಪರಿವರ್ತನಾ ಸರಪಳಿ ನಿರ್ಮಾಣಗೊಂಡಿದೆ. ಇದೇ ‘ಶಿವಾನುಭವ’ದ ಐತಿಹಾಸಿಕ-ಸಾಹಿತ್ಯಿಕ ವೈಶಿಷ್ಟ್ಯದ ಕೇಂದ್ರಬಿಂದು. ಹೀಗಾಗಿ ಹಳಕಟ್ಟಿಯವರ ‘ಶಿವಾನುಭವ’ ಲೇಖನಗಳನ್ನು ಕನ್ನಡದ ಆಧುನಿಕ ಪಠ್ಯಸಂಪಾದನಾ ಪರಂಪರೆ, ವಚನಸಾಹಿತ್ಯದ ಪುನರುಜ್ಜೀವನ ಮತ್ತು ಕನ್ನಡ ಸಾಹಿತ್ಯಚರಿತ್ರೆಯ ಪುನರ್‌ನಿರ್ಮಾಣ — ಈ ಮೂರರ ಸಂಗಮಬಿಂದು ಎಂದು ನಿರ್ಣಯಿಸಬಹುದು. ಅನೇಕ ಅಪರೂಪದ ಪಠ್ಯಗಳು ಮೊದಲ ಬಾರಿಗೆ ಮುದ್ರಿತ ರೂಪದಲ್ಲಿ ದೊರೆತದ್ದು. ಈ ಪತ್ರಿಕೆಯ ಪಠ್ಯಸಂಪಾದನಾ ಮೌಲ್ಯವು ಮುಂದಿನ ಸಂಶೋಧಕರಿಗೆ ಒಂದು ಆಧಾರಪಠ್ಯ ಒದಗಿಸಿದ್ದಾರೆ, ಸಾಹಿತ್ಯಚರಿತ್ರೆಯ ಮೌಲ್ಯವು ಅಪರಿಚಿತ ಕವಿಗಳು ಮತ್ತು ಕೃತಿಗಳನ್ನು ಸಾಹಿತ್ಯ ಇತಿಹಾಸಕ್ಕೆ ಸೇರಿಸಿದ್ದಾಗಿದೆ. ಅದೇ ರೀತಿ ಸಾಮಾಜಿಕ ಇತಿಹಾಸದ ಮೌಲ್ಯ ಶರಣ ಚಳವಳಿಯ ಸಾಮಾಜಿಕ ವ್ಯಾಪ್ತಿಯನ್ನು ಗುರುತಿಸಲು ನೆರವಾದರೆ, ಸಾಂಸ್ಕೃತಿಕ ಸ್ಮೃತಿಮೌಲ್ಯವು ಶರಣರನ್ನು ಆಧುನಿಕ ಕನ್ನಡ ಸಮಾಜದ ಸಾಂಸ್ಕೃತಿಕ ಸ್ಮೃತಿಯಲ್ಲಿ ಪುನಃಸ್ಥಾಪಿಸಿದ್ದಾಗಿದೆ.

    ಇಂದಿಗೂ ಹಳಕಟ್ಟಿಯವರ ಸಂಶೋಧನಾ ಪರಂಪರೆ ಮುಂದುವರಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ಹಳಕಟ್ಟಿ ಸಂಶೋಧನಾ ಕೇಂದ್ರವು ಅವರ ಸಂಗ್ರಹಿತ/ಸಂಪಾದಿತ ಶರಣಸಾಹಿತ್ಯವನ್ನು 15 ಸಂಪುಟಗಳಲ್ಲಿ, ಸುಮಾರು 12,500 ಪುಟಗಳಲ್ಲಿ ಪ್ರಕಟಿಸಿದೆ. ಅವರ ಕಾರ್ಯದ ಪರಿಣಾಮವಾಗಿ ವಚನಸಾಹಿತ್ಯವು ಮಠ, ಮನೆ, ತಾಳೆಓಲೆ ಮತ್ತು ಹಸ್ತಪ್ರತಿಯ ಸೀಮಿತ ವಲಯದಿಂದ ಹೊರಬಂದು ಮುದ್ರಿತ ಸಾರ್ವಜನಿಕ ಸಾಹಿತ್ಯದ ವಲಯಕ್ಕೆ ಪ್ರವೇಶಿಸಿತು. ಇದೇ ‘ಶಿವಾನುಭವ’ದ ಐತಿಹಾಸಿಕ ಪಾತ್ರದ ಕೇಂದ್ರಬಿಂದು. 2026ರಲ್ಲಿ ‘ಶಿವಾನುಭವ’ದ ಶತಮಾನೋತ್ಸವ ವರ್ಷವನ್ನು ಗುರುತಿಸಲಾಗುತ್ತಿರುವುದು ಈ ಪತ್ರಿಕೆಯ ದೀರ್ಘಕಾಲೀನ ಸಾಂಸ್ಕೃತಿಕ ಪ್ರಭಾವದ ಸಮಕಾಲೀನ ಸ್ಮರಣೆಯಾಗಿದೆ. ಹೀಗಾಗಿ ಹಳಕಟ್ಟಿಯವರ ‘ಶಿವಾನುಭವ’ ಲೇಖನಗಳನ್ನು ಕನ್ನಡದ ಆಧುನಿಕ ಪಠ್ಯಸಂಪಾದನಾ ಚರಿತ್ರೆಯ ಪ್ರಾರಂಭಿಕ ಮೈಲುಗಲ್ಲು, ವಚನಸಾಹಿತ್ಯದ ಪುನರುಜ್ಜೀವನದ ಪ್ರಮುಖ ಆಕರ ಮತ್ತು ಕನ್ನಡ ಸಾಹಿತ್ಯ–ಸಾಮಾಜಿಕ ಇತಿಹಾಸದ ಪರ್ಯಾಯ ದಾಖಲೆ ಎಂದು ನಿರ್ಣಯಿಸುವುದು ಸಮಂಜಸ. ಫ.ಗು. ಹಳಕಟ್ಟಿಯವರ ‘ಶಿವಾನುಭವ’ ಪತ್ರಿಕೆಯ ಲೇಖನಗಳು ವಚನಸಾಹಿತ್ಯದ ಪ್ರಕಟಣೆಯ ಮಾಧ್ಯಮ ಮಾತ್ರವಲ್ಲ; ಅವು ಹಸ್ತಪ್ರತಿ ಸಂಸ್ಕೃತಿಯಿಂದ ಮುದ್ರಿತ ಆಧುನಿಕ ಸಾಹಿತ್ಯ ಸಂಸ್ಕೃತಿಗೆ ನಡೆದ ಪರಿವರ್ತನೆಯ ಜೀವಂತ ದಾಖಲೆಗಳಾಗಿವೆ. ಹಳಕಟ್ಟಿಯವರ ಸಂಪಾದನಾ ಕ್ರಮವು ಪಠ್ಯಸಂರಕ್ಷಣೆ, ಆಕರಶೋಧನೆ, ಚರಿತ್ರಾನಿರ್ಮಾಣ ಮತ್ತು ಜನಮುಖಿ ಜ್ಞಾನಪ್ರಸರಣಗಳನ್ನು ಒಂದೇ ವ್ಯವಸ್ಥೆಯಲ್ಲಿ ಸಂಯೋಜಿಸಿತು. ಅವರ ವಿಧಾನಗಳಲ್ಲಿ ಆಧುನಿಕ ಪಠ್ಯವಿಮರ್ಶೆಯ ದೃಷ್ಟಿಯಿಂದ ಮಿತಿಗಳಿದ್ದರೂ, ಕನ್ನಡ ವಚನಸಾಹಿತ್ಯದ ಪುನರುಜ್ಜೀವನಕ್ಕೆ ಅವರು ನಿರ್ಮಿಸಿದ ಆಕರಾಧಾರಿತ ನೆಲೆ ನಂತರದ ಸಂಶೋಧನಾ ಪರಂಪರೆಗಳ ಬಹುಪಾಲಿಗೆ ಮೂಲಾಧಾರವಾಯಿತು.” .ಇಂದಿನ ಪೀಳಿಗೆಗೆ ಶಿವಾನುಭವ ಎಂಬುದು ಅಮೂಲ್ಯ ಸಾಹಿತ್ಯಕ ಆಸ್ತಿ. ಅದು ಶರಣರು ನಿರ್ಮಿಸಿದ ಸಾಹಿತ್ಯ ಸಾಮ್ರಾಜ್ಯದ ಕಿಟಕಿಯಾಗಿದ್ದು, ಕನ್ನಡದ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಿ ನಿಂತಿದೆ. ಇದರ ಸಂರಕ್ಷಣೆ, ಅಧ್ಯಯನ ಮತ್ತು ಪ್ರಸಾರ ಮುಂದಿನ ತಲೆಮಾರಿನ ಜವಾಬ್ದಾರಿಯಾಗಿದೆ. ಕೇವಲ ಪತ್ರಿಕೆಯಲ್ಲ, ಒಂದು ಚಳುವಳಿ. ಶಿವಾನುಭವ ಪತ್ರಿಕೆಯು ಕನ್ನಡದ ಒಂದು ನಿಯತಕಾಲಿಕೆಯಾಗಿರಲಿಲ್ಲ; ಅದು ೧೨ನೇ ಶತಮಾನದ ಶರಣರ ವಚನ ಸಾಹಿತ್ಯವನ್ನು ಕಾಲಗರ್ಭದಿಂದ ಹೊರತೆಗೆದು, ಆಧುನಿಕ ಸಮಾಜದ ಮುಂದಿಡುವ ಏಕೈಕ ಉದ್ದೇಶದಿಂದ ಹುಟ್ಟಿಕೊಂಡ ಒಂದು ಸಾಂಸ್ಕೃತಿಕ-ಸಾಹಿತ್ಯಿಕ ಚಳುವಳಿಯಾಗಿತ್ತು. ಡಾ. ಫ.ಗು. ಹಳಕಟ್ಟಿಯವರು ಈ ಪತ್ರಿಕೆಯ ಮೂಲಕ ಕೇವಲ ಸಾಹಿತ್ಯ ಪ್ರಕಟಣೆಯನ್ನು ಮಾಡಲಿಲ್ಲ. ಅವರು ಕನ್ನಡ ಸಮಾಜದಲ್ಲಿ ವಿಸ್ಮೃತಿಯ ಪೊರೆಯನ್ನು ಕಳಚಿ, ತನ್ನದೇ ಆದ ಒಂದು ಸಂಶೋಧನಾ ಪರಂಪರೆಯನ್ನೇ ಸೃಷ್ಟಿಸಿದರು. ಅವರ ಪರಿಶ್ರಮ, ಶ್ರದ್ಧೆ, ಮತ್ತು ಶರಣರ ತತ್ವದ ನಿಷ್ಠೆಯಿಂದಲೇ ಶಿವಾನುಭವ ಪತ್ರಿಕೆ ಕನ್ನಡ ಜನತೆಗೆ ಅಜರಾಮರವಾದ ಕೊಡುಗೆಯಾಗಿ ಉಳಿಯಿತು. 

    ಪರಾಮರ್ಶನ ಗ್ರಂಥಗಳು

೧. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ( ಕಾವ್ಯ ಸಾಹಿತ್ಯ) ಸಂಪುಟ.೯

  ಸಂ.ಬಾಳಣ್ಣ  ಸೀಗಿಹಳ್ಳಿ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ

 ಬಿ.ಎಲ್.ಡಿ.ಇ ಸಂಸ್ಥೆ, ವಿಜಾಪರ ೨೦೦೭

Bottom of Form

 

 ೨. ಬಿ.ನಂಜುಂಡಸ್ವಾಮಿ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಮೀಕ್ಷೆ

  ಪ್ರಭುದೇವರ ಜನಕಲ್ಯಾಣ ಸಂಸ್ಥೆ, ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತ ಮಠ

  ಸೊಂಡೂರು, ೨೦೦೯

೩. ಸಿ.ನಾಗಭೂಷಣ, ಕನ್ನಡ ಹಸ್ತಪ್ರತಿಗಳು ಮತ್ತು ಗ್ರಂಥಸಂಪಾದನೆ: ಸಾಂಸ್ಕೃತಿಕ-ಪಠ್ಯಕೇಂದ್ರಿತ ಅಧ್ಯಯನಗಳು

   ಸ್ನೇಹಾ ಪಬ್ಲಿಷಿಂಗ್‌ ಹೌಸ್‌, ಬೆಂಗಳೂರು ೨೦೨೨.

೪. ಸಿರಿಸಂಪದ: ಬ್ಹಿ.ವಿ.ಶಿರೂರ ಅವರ ಅಭಿನಂದನಾಗ್ರಂಥ

  ಸಂ: ಎಫ್.ಟಿ.ಹಳ್ಳಿಕೇರಿ ಮತ್ತು ಕೆ.ರವೀಂದ್ರನಾಥ

  ಯಲಬುರ್ಗಾ,                                                               

  ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ ಸಮಗ್ರ ಸಾಹಿತ್ಯ ಸಂಪುಟ- ೯    ಸಮಗ್ರ ನೋಟ: ಕಾವ್ಯ ಸಾಹಿತ್ಯ: ಕೃತಿಗಳು-1                                        ...