ಒಟ್ಟು ಪುಟವೀಕ್ಷಣೆಗಳು

ಸೋಮವಾರ, ಮೇ 5, 2025

      ಎಡೆಯೂರು ತೋಂಟದ ಸಿದ್ಧಲಿಂಗಯತಿಗಳ ಗುರು-ಶಿಷ್ಯ ಪರಂಪರೆ

                                                                ಡಾ.ಸಿ.ನಾಗಭೂಷಣ

                                   

     ತೋಂಟದ ಸಿದ್ಧಲಿಂಗ ಯತಿಗಳು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಯೋಗಿಗಳು. ವಚನಕಾರರು, ಪ್ರಬುದ್ಧ ಷಟ್‍ಸ್ಥಲಜ್ಞಾನಿಗಳು, ಶಾಸ್ತ್ರಕಾರರು, ವೀರಶೈವ ಗುರು ಪ್ರಮುಖರು. ಇವರ ಶಿಷ್ಯ-ಪ್ರಶಿಷ್ಯರ ಬಳಗ ದೊಡ್ಡದು. ವಚನಕಾರರಾಗಿ ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು. ಮಠವೊಂದರ ಪೀಠಾಧಿಪತಿಯಾಗಿ ಮಠ ಪರಂಪರೆಯನ್ನೇ ಸೃಷ್ಟಿಸಿದವರು. ಅನುಭವಿಗಳಾಗಿ ಷಟ್‍ಸ್ಥಲ ಶಾಸ್ತ್ರವನ್ನು ಸಾರೋದ್ಧಾರಗೊಳಿಸಿದವರು. ತಿಳಿಯದ ತತ್ವ ವಿವೇಕವನ್ನು ತಿಳಿಯಾದ ಮಾತುಗಳಲ್ಲಿ ತಿಳಿಸಿ ಹೇಳಿದವರು. ಭಕ್ತ ಕುಲ ಕೋಟಿಗೆ ಸಾಕ್ಷಾತ್ ಪರಶಿವಮೂರ್ತಿಯಾಗಿ ಪರಿಣಮಿಸಿದವರು. ವ್ಯಕ್ತಿಯಾಗಿ ಜನಿಸಿ ಕಾಲ ದೇಶ ಪರಿಸರದ ಮೇಲೆ ಮೀರಿ ಬೆಳೆದವರು ತಪಸ್ಸುದಾಯಕದ ಮೂಲಕ ಸಿದ್ಧಿಪಡೆದ ಅಲ್ಲಮನ ಅವತಾರಿಗಳು ಇಂತಹವರ ಸಾಂಸ್ಕೃತಿಕ  ಕೊಡುಗೆ ಅದ್ಭುತವಾಗಿದೆ. 

ಷಟ್‍ಸ್ಥಲ ಜ್ಞಾನಸಾರಾಮೃತ ಕೃತಿಯನ್ನು ಮುಂದಿಟ್ಟುಕೊಂಡು ಆಳವಾಗಿ ಅಧ್ಯಯನ ಮಾಡಿದಾಗ ಅದರಲ್ಲಿ ಸಿದ್ಧಲಿಂಗರ ವಚನಮಯ ವ್ಯಕ್ತಿತ್ವ ಮಹತ್ತರವಾಗಿ ಗೋಚರವಾಗುತ್ತದೆ. ಕಲ್ಯಾಣ ಕ್ರಾಂತಿಯ ನಂತರದ ದಿನಮಾನಗಳಲ್ಲಿ ನೇಪಥ್ಯಕ್ಕೆ ತರುವಲ್ಲಿ ಮತ್ತು ಅದನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ತರ ಪಾತ್ರ ಶಿವಯೋಗಿಗಳದು.  ಬಸವೋತ್ತರ ಯುಗದ ವಚನ ಸಾಹಿತ್ಯದ ಆದ್ಯ ಪ್ರವರ್ತಕ ಸಿದ್ಧಲಿಂಗ ಯತಿ ಎಂಬುದು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ ತೋಂಟದ ಸಿದ್ಧಲಿಂಗ ಯತಿಗಳು ಏಕೋತ್ತರ ಶತಸ್ಥಲದ ಪರಂಪರೆಯ ನಿರ್ಮಾಪಕರು ಹೌದು. ಇವರ ನೇತೃತ್ವದಲ್ಲಿ ವಚನಗಳ ಸಂಗ್ರಹ, ಸಂಪಾದನೆ, ಅಧ್ಯಯನ ತತ್ವ ತಳಹದಿಯ ಮೇಲಿನ ವೈವಿಧ್ಯಮಯ ಸಂಕಲನಗಳ ಮಹತ್ತರ ಕಾರ್ಯ ನಡೆಯಿತು. ವೀರಶೈವರು ಆಚರಿಸಬೇಕಾದ ಷಟಸ್ಥಲ ಸಿದ್ಧಾಂತ ಹಾಗೂ ಅಷ್ಟಾವರಣ ವಿಧಿ ವಿಧಾನಗಳು ನಿಯಮಗಳನ್ನು ಕುರಿತು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಮಹಾ ತಾತ್ವಿಕ ಪ್ರತಿಭಾವಂತರು. ಇವರ ಅನೇಕ ಜನ ಕರಕಮಲ ಸಂಜಾತ ಶಿಷ್ಯರು-ಪ್ರಶಿಷ್ಯರುಗಳು ಸ್ವತಃ  ವಚನಕಾರರಾಗಿದ್ದಾರೆ. ಶೂನ್ಯಸಂಪಾದನಾಕಾರರಾಗಿದ್ದಾರೆ. ಷಟ್‍ಸ್ಥಲ ತತ್ವಕ್ಕನುಗುಣವಾಗಿ ವಚನಗಳನ್ನು ಸಂಕಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಶಾಸ್ತ್ರಕ್ಕೆ ಟೀಕೆ, ವ್ಯಾಖ್ಯಾನ, ಟಿಪ್ಪಣಿ ಬರೆದಿದ್ದಾರೆ ಅಷ್ಟೇ ಅಲ್ಲ ವೀರಶೈವ ಪುರಾಣ ಕರ್ತೃಗಳು ಆಗಿದ್ದಾರೆ. ಹೀಗೆ ಇದನ್ನೆಲ್ಲ ಮನನ ಮಾಡುತ್ತಾ ಹೋದಾಗ ಸಿದ್ಧಲಿಂಗ ಯತಿಯ ಹಿಂದೆ ಒಂದು ಸಾಹಿತ್ಯ ಪರಂಪರೆ ಮತ್ತೊಂದು ಶಾಸ್ತ್ರ ಪರಂಪರೆ, ಒಂದು ಗುರು ಪರಂಪರೆ, ಒಂದು ಆಧ್ಯಾತ್ಮ ಪರಂಪರೆ, ಒಂದು ವೀರಶೈವ ಧರ್ಮ ಪರಂಪರೆ ಅದಕ್ಕೆ ಆಗರವಾದ ಮಠ ಪರಂಪರೆ ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮುಖಗಳ ವಿಕಾಸಕ್ಕೆ ಕಾರಣವಾದ ಹಿನ್ನೆಲೆ ಇರುವುದು ಕಂಡು ಬರುತ್ತದೆ.  

    ಅವರು ಅವತಾರ ಪುರುಷರಾಗಿ ಅನೇಕ ಪವಾಡ ಮಹಿಮಾ ವಿಶೇಷಣಗಳನ್ನು ಮಾಡಿ ಎರಡನೆಯ ಪ್ರಭುದೇವರೆಂಬ ಪ್ರಶಂಸೆ ಪಡೆದುದ್ದನ್ನು ಅರಿತು ಅವರಲ್ಲಿ ಅಪಾರವಾದ ಪ್ರೀತಿ ಉಂಟಾಗಿ ಅವರ ಮೇಲೆ ಹೆಚ್ಚಿನ ಕಾವ್ಯ ಪುರಾಣ ಬರೆಯುವ ಪರಿಪಾಠವನ್ನು ಕವಿಗಳು ಮಾಡಿದರು. ಆಯಾ ಕವಿಗಳಲ್ಲಿ ಪ್ರಮುಖರಾದವರೆಂದರೆ ಶಾಂತೇಶ, ವಿರಕ್ತತೋಂಟದಾರ್ಯ,ವಿರೂಪಾಕ್ಷ ಪಂಡಿತ, ಸಿದ್ಧನಂಜೇಶ, ಚೆನ್ನವೀರಜಂಗಮ, ಮೊದಲಾದವರು. ಅದರಲ್ಲಿಯೂ ತೋಂಟದ ಸಿದ್ಧಲಿಂಗ ಯತಿಗಳನ್ನು ಕೇಂದ್ರೀಕರಿಸಿ ರಚನೆಯಾದ ಸುವ್ವಿಮಲ್ಲಿಗೆ ವಡೇರನ ‘ತೋಂಟದ ಸಿದ್ಧೇಶ್ವರನ ಸಾಂಗತ್ಯ,’ ಯತಿ ಬಸವಲಿಂಗೇಶನ ‘ತೋಂಟದ ಸಿದ್ಧಲಿಂಗೇಶ್ವರ ಸಾಂಗತ್ಯ’ ಮತ್ತು ಹೇರಂಬ ಕವಿಯ ‘ಸಿದ್ಧಲಿಂಗೇಶ್ವರ ಸಾಂಗತ್ಯ’ ಕೃತಿಗಳು ಸಿದ್ಧಲಿಂಗರ ವ್ಯಕ್ತಿತ್ವವನ್ನು ತಿಳಿಸುತ್ತವೆ. ಈ ಕೃತಿಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚಿತವಾಗಿದ್ದು, ತೋಂಟದ ಸಿದ್ಧಲಿಂಗರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ತಿಳಿಸುತ್ತವೆ. ಅದೇ ರೀತಿ, ಸಿದ್ಧಲಿಂಗರನ್ನು ವಸ್ತುವಾಗಿಟ್ಟುಕೊಂಡು ಕನ್ನಡದಲ್ಲಿ ರಚಿತವಾದ ದೀರ್ಘಕೃತಿಗಳಿರುವಂತೆ ಕೆಲವು ಲಘು ಕೃತಿಗಳಿವೆ. ಇವು ಸಾಂದರ್ಭಿಕವಾಗಿ ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಚರಿತ್ರೆಯನ್ನು ನಿರೂಪಿಸಿದರೂ, ಕವಿಕಲ್ಪನೆ ಮತ್ತು ಜನಮಾನಸದಲ್ಲಿ ನಡೆದದ್ದಕ್ಕಿಂತ ನಡೆಯಬೇಕಾದುದನ್ನೇ ಹೆಚ್ಚಿಗೆ ಕಾಣುವಂತೆ ಅವರನ್ನು ಸ್ತುತಿಸುವ, ವೀರಶೈವ ತತ್ವವನ್ನು ಪ್ರಚುರ ಪಡಿಸುವ ಗ್ರಂಥಗಳೇ ಅಧಿಕವಾಗಿವೆ. ಇಲ್ಲಿ ಷಟ್ಪದಿ, ತ್ರಿಪದಿ, ರಗಳೆ, ಅಷ್ಟಕ, ಶತಕ, ತಾರಾವಳಿ, ಸ್ವರವಚನ ಮೊದಲಾದ ಪ್ರಕಾರಗಳ ಲಘುಕೃತಿಗಳಿವೆ. ಇಲ್ಲಿನ ಕೃತಿಗಳು  ‘ಗಾತ್ರದಲ್ಲಿ ಕಿರಿದು ಪಾತ್ರದಲ್ಲಿ ಹಿರಿದು’ ಎಂಬಂತಿವೆ. ಹಿರಿದಾದ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡಿರುವುದರಿಂದ ಅವು ಮೌಲಿಕವೆನಿಸಿವೆ. ಅವುಗಳಲ್ಲಿ ತೋಂಟದ ಸಿದ್ಧೇಶ್ವರ ಭಾವರತ್ನಾಭರಣ ಸ್ತೋತ್ರ, ತೋಂಟದ ಸಿದ್ಧೇಶ್ವರ ಅಷ್ಟಕ, ತೋಂಟದ ಸಿದ್ಧೇಶ್ವರ ವಾರ್ಧಿಕ, ಸಿದ್ಧಲಿಂಗಾಷ್ಠಕ, ಸಿದ್ಧಲಿಂಗ ಶತಕ, ನಿರಂಜನ ಶತಕ, ಮಲ್ಲಿಕಾರ್ಜುನ ವಿರಚಿತ ಜಯಸಿದ್ಧಲಿಂಗರಗಳೆ, ಸಿದ್ಧೇಶ್ವರ ಪವಾಡ ರಗಳೆ, ಚೆನ್ನಕವಿ ವಿರಚಿತ ತೋಂಟದ ಸಿದ್ಧಲಿಂಗ ಯತಿಸುವ್ವಿ, ದಶವಿಧಪಾದೋಧಕ ನಿರ್ಣಯ, ಗರಣಿ ಬಸವಲಿಂಗ ವಿರಚಿತ ಸಿದ್ಧೇಶ್ವರ ಮಹಿಮಾ ತಾರಾವಳಿ, ಸುವ್ವಿಮಲ್ಲ ವಿರಚಿತ ತೋಂಟದ ಸಿದ್ಧಲಿಂಗೇಶ್ವರ ಮಹಿಮಾ ತಾರಾವಳಿ, ಸಿದ್ಧೇಶ್ವರ ತ್ರಿವಿಧಿ ಮೊದಲಾದ ಕೃತಿಗಳನ್ನು ಹೆಸರಿಸ ಬಹುದು.  

     ತೋಂಟದ ಸಿದ್ಧಲಿಂಗರು ಅನುಭಾವಿ ಸಂಕಲನಕಾರರಾಗಿ, ವ್ಯಾಖ್ಯಾನಕಾರರಾಗಿದ್ದು, ವೀರಶೈವ ಸಾಹಿತ್ಯ ಸಮೃದ್ಧಿಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವೀರಶೈವ ಧರ್ಮದ ಪುನರುದ್ಧಾರಕರಾದ ತೋಂಟದ ಸಿದ್ಧಲಿಂಗರು ವೀರಶೈವ ತತ್ವ ಶಾಸ್ತ್ರ ವಾಙ್ಮಯ ಪ್ರಪಂಚಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಬಿಜ್ಜಾವರ ದೊರೆ ತೋಂಟದ ಸಿದ್ಧಲಿಂಗ ಭೂಪಾಲಕನು ಪಾದ ಪೂಜೆ ಮಾಡಿದ ಘಟನೆ ಇವರ ದಿವ್ಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತೋಂಟದ ಸಿದ್ಧಲಿಂಗರು ಸಾಧಕರಾಗಿ 701 ಜನ ಶಿಷ್ಯರೊಂದಿಗೆ ಇಡೀ ಭಾರತದ ತುಂಬ ಯಾತ್ರೆ ಕೈಗೊಂಡು ತಮ್ಮ ಅದ್ಭುತ ದೈವಿ ಶಕ್ತಿ, ಪವಾಡ ಮತ್ತು ವಚನವಾಣಿಯ ಮೂಲಕ ಜನರಲ್ಲಿ ಧರ್ಮ ಜಾಗೃತಿ ಉಂಟುಮಾಡಿದರು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಭಿತ್ತಿ ಬೆಳೆಸಿದವರು. 

ಗುರು ಪರಂಪರೆ : 

ಷಟಸ್ಥಲ ಜ್ಞಾನಾಮೃತದ ಎಂಟನೆ ವಚನವು ಸ್ವಯಂ ತೋಂಟದ ಸಿದ್ಧಲಿಂಗ ಯತಿಗಳ ರಚನೆಯಾದುದರಿಂದ ಅತ್ಯಂತ ಹಳೆಯ ಅಧಿಕೃತ ಆಕರವಾಗಿದೆ. ಈ ವಚನದಲ್ಲಿ ಗುರು ಪರಂಪರೆಗೂ ವಂಶಾವಳಿಯಾಗಿ ಉಲ್ಲೇಖಿತವಾಗಿದೆ. ಇದರಂತೆ ೧. ಅನಾದಿ ಗಣೇಶ್ವರ ೨. ಆದಿ ಗಣೇಶ್ವರ ೩. ನಿರ್ಮಾಯ ಗಣೇಶ್ವರ ೪. ನಿರಂಜನ ಗಣೇಶ್ವರ ೫. ಜ್ಞಾನನಂದ ಗಣೇಶ್ವರ ೬. ಆತ್ಮ ಗಣೇಶ್ವರ ೭. ಆಧ್ಯಾತ್ಮ ಗಣೇಶ್ವರ ೮. ರುದ್ರ ಗಣೇಶ್ವರ ಅಂತು ಎಂಟು ಗಣೇಶ್ವರರು ತರುವಾಯದಲ್ಲಿ ೧. ಬಸವಪ್ರಭುದೇವರು ೨. ಆದಿಲಿಂಗದೇವರು ೩. ಚೆನ್ನವೀರೇಶ್ವರ ದೇವರು ೪. ಹರದನಹಳ್ಳಿ ಗೋಸಲ ದೇವರು ೫. ಶಂಕರ ದೇವರು ೬. ದಿವ್ಯಲಿಂಗ ದೇವರು ೭. ಚೆನ್ನಬಸವೇಶ್ವರ ದೇವರು ಅಂತು ಏಳು ದೇವರುಗಳು ಅನುಸೂತ್ಯವಾಗಿ ಗುರು ಪರಂಪರೆಯಲ್ಲಿ ಉಲ್ಲೇಖಿತರಾಗಿದ್ದಾರೆ. ೭ನೆಯ ಚೆನ್ನಬಸವೇಶ್ವರ ದೇವರ ಕರಕಮಲ ಸಂಜಾತರು ತಾವೆಂದು ತೋಂಟದ ಸಿದ್ಧಲಿಂಗ ಯತಿಗಳೆ ನೇರವಾಗಿ ಹೇಳಿದ್ದಾರೆ.

    ಈ ಹೇಳಿಕೆಯನ್ನು ಪರಿಶೀಲಿಸಿ ನೋಡಿದಾಗ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಮೊದಲು ಉಕ್ತರಾದ ಎಂಟು ಗಣೇಶ್ವರರು ನೈಜ ವ್ಯಕ್ತಿಗಳಾಗಿರದ ಸಿದ್ಧಾಂತ ಪರಿಭಾಷೆಯವರು ಆಗಿದ್ದಾರೆ. ಹರದನಹಳ್ಳಿಯಲ್ಲಿಯ ದಿವ್ಯಲಿಂಗೇಶ್ವರ ಸ್ಥಾವರ ಲಿಂಗವು ಸ್ಥಾಪಿತವಾದದ್ದು ಕ್ರಿ.ಶ.೧೩೧೭ರಲ್ಲಿ ಎಂಬುದು ಶಾಸನೋಕ್ತ ಐತಿಹಾಸಿಕ ಸತ್ಯ. ಇದೇ ಅನ್ವಯದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಮೊದಲು ಉಕ್ತರಾದ ಎಂಟು ಗಣೇಶ್ವರರು ನೈಜ ವ್ಯಕ್ತಿಗಳಾಗಿರದೆ ಸಿದ್ಧಾಂತ ಪರಿಭಾಷೆಯಾಗಿದ್ದಾರೆ ಮತ್ತು ಏಳು ದೇವರುಗಳೇ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯ ನೈಜವ್ಯಕ್ತಿಗಳಾಗಿದ್ದಾರೆ.ಆದುದರಿಂದ ವಾಸ್ತವಿಕವಾಗಿ ತೋಂಟದ ಸಿದ್ಧಲಿಂಗ ಯತಿಗಳ ಷಟ್ಸ್ಥಲಜ್ಞಾನ ಸಾರಾಮೃತದ ಎಂಟನೆಯ ವಚನದಲ್ಲಿ ಉಕ್ತರಾದ ಏಳು ದೇವರುಗಳ ಪೈಕಿ ಮೊದಲನೆಯವರಾದ ಬಸವ ಪ್ರಭುದೇವರೇ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯ ಆದಿ ಗುರುವಾಗಿದ್ದಾರೆ. ಆ ಲೆಕ್ಕದಂತೆ ಏಳು ದೇವರುಗಳ ತರುವಾಯ ಸ್ವಯಂ ಉಲ್ಲೇಖಸಿಕೊಂಡ ತೋಂಟದ ಸಿದ್ಧಲಿಂಗ ಯತಿಗಳು ಆ ವಂಶಾವಳಿಯಲ್ಲಿ ಎಂಟನೆಯ ಗುರುವೆನಿಸಿಕೊಂಡಿದ್ದಾರೆ. 

    ಹೀಗೆ ತೋಂಟದ ಸಿದ್ಧಲಿಂಗ ಯತಿಗಳ ಗುರು ಪರಂಪರೆಯಲ್ಲಿ ಬಸವ ಪ್ರಭು ದೇವರಿಂದ ಹಿಡಿದು ಗೋಸಲ ಚೆನ್ನಬಸವೇಶ್ವರ ವರೆಗಿನ ಏಳು ವ್ಯಕ್ತಿಗಳು ಸಂದಿದ್ದಾರೆ ಎಂದು ನಿರ್ಧರಿಸಬಹುದು. ಈ ಏಳು ವ್ಯಕ್ತಿಗಳ ಮೇಲೆ ಸಾಕಷ್ಟು ಪೌರಾಣಿಕ ಕಥೆಗಳಿದ್ದರೂ ಅವೆಲ್ಲವನ್ನೂ ಇತಿಹಾಸವೆನ್ನಲಾಗುವುದಿಲ್ಲ. ಒಟ್ಟಿನಲ್ಲಿ ಏಳು ಮಹನೀಯರು ಬಸವಾದಿ ಪ್ರಮಥರ ಗುರು ಪರಂಪರೆಯವರು ಎಂಬುದಕ್ಕೆ ಆದಿ ಗುರುವಿನ ಬಸವ ಪ್ರಭುದೇವರೇ ಎಂಬ ಹೆಸರೆ ಸಾಕ್ಷಿಯಾಗಿದೆ.

     ತದನಂತರ ಗೋಸಲ ಚೆನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದು ಭಕ್ತಿಭಾವದಿಂದ ಸೇವೆ ಮಾಡುತ್ತಿದ್ದ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಸಾಧಾರಣವಾದ ಭಕ್ತಿಭಾವವನ್ನು ಕಂಡು ಗುರುಗಳು ಆತನಿಗೆ ತನ್ನ ಪಟ್ಟಾಧಿಕಾರವನ್ನು ವಹಿಸಿ ಕೊಡುವರು. ನಂತರ ದೇಶ ಸಂಚಾರಕ್ಕಾಗಿ ತೋಂಟದ ಸಿದ್ಧಲಿಂಗ ಯತಿಗಳು ಅನೇಕ ಚರಮೂರ್ತಿಗಳನ್ನೊಳಗೊಂಡು ಹೊರಡುವರು. ಶ್ರೀಶೈಲ, ಸೌರಾಷ್ಟ್ರ, ಕೊಲ್ಲಿಪಾಕಿ, ಕೇದಾರ, ದ್ರಾಕ್ಷಾರಾಮ, ಹಂಪಿ, ಗೋಕರ್ಣ, ಪೊನ್ನಾಂಬಲ, ಶಿವಗಂಗೆ, ರಾಮೇಶ್ವರ, ಚಿದಂಬರ, ಕಂಚಿ, ಕಾಳಹಸ್ತಿ ಮುಂತಾದ ಕ್ಷೇತ್ರಗಳನ್ನು ಸಂದರ್ಶನ ಮಾಡಿ ಅರುಣಾಚಲಕ್ಕೆ ಬರುವರು. ಅಲ್ಲಿಯೂ ಶಿವಭಕ್ತರಿಂದ ಅನೇಕ ಕಪ್ಪಕಾಣಿಕೆ ಮತ್ತು ಮುತ್ತಿನ ಹಾರಗಳನ್ನು ಸ್ವೀಕರಿಸುವರು.  ಹೀಗೆ ಸಂಚಾರವನ್ನು ಮಾಡುತ್ತಾ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅನೇಕ ಪವಾಡಗಳನ್ನು ಮಾಡಿ; ಮೈಸೂರು ಭಾಗದ ತುಮಕೂರು ಜಿಲ್ಲೆಯ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸುವರು. ಮುಂದೆ ಕಗ್ಗೆರೆ ಹೊರವಲಯದಲ್ಲಿರುವ ತೋಪಿನ ಹೂದೋಂಟದಲ್ಲಿ ಮಾವಿನ ಮರದಡಿಯಲ್ಲಿ ತೋಂಟದ ಶಿವಯೋಗಿಗಳು ಹುತ್ತಿನಲ್ಲಿ ಆರುತಿಂಗಳು ಶಿವಧ್ಯಾನ ಮಗ್ನರಾಗಿ, ಹುತ್ತದ ಪ್ರಸಂಗದ ಹಿನ್ನೆಲೆಯಲ್ಲಿ ತೋಂಟದ ವಿಶೇಷಣವನ್ನು ಪಡೆದು. ನಂತರ ಕಗ್ಗೆರೆ ಸಮೀಪದ ಎಡೆಯೂರಲ್ಲಿ ಸಿದ್ಧಲಿಂಗ ಶಿವಯೋಗಿಗಳು ಬಂದು ಕೆಲವು ಕಾಲ ಧರ್ಮ ಪ್ರಸರಣ ಕಾರ್ಯದಲ್ಲಿ ನಿಂತು, ಬಳಿಕ  ಬೋಳಬಸವೇಶ್ವರರಿಗೆ ತಮ್ಮ ನಿರಂಜನ ಪಟ್ಟಕಟ್ಟಿ ಸಪ್ಪೆದೇವರು, ಉಪ್ಪಿನಳ್ಳಿಯ ಸ್ವಾಮಿ, ಗುಮ್ಮಳಾಪುರದ ಸಿದ್ಧಲಿಂಗ ದೇವರು, ಶೀಲವಂತ ದೇವರು ಮುಂತಾದವರಿಗೆ ದೀಕ್ಷೆಯನ್ನು ಕೊಟ್ಟು ಎಡೆಯೂರು ಕಲ್ಲುಮಠದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಹೊಂದುವರು.

   ವಿಜಯನಗರ ಸಾಮ್ರಾಜ್ಯವು ಸ್ಥಾಪಿತವಾದ ಮೇಲೆ ವೀರಶೈವರ ಪುನರುಜ್ಜೀವನಕ್ಕೆ ಎರಡು ಕೇಂದ್ರಗಳು ದಕ್ಷಿಣ ಕರ್ನಾಟಕದಲ್ಲಿ ಸ್ಥಾಪಿತವಾದುವು. ಜಕ್ಕಣಾರ್ಯ, ಲಕ್ಕಣದಂಡೇಶ ಮೊದಲಾದ ನಾಯಕರ ನೇತೃತ್ವದಲ್ಲಿ ಹಂಪೆಯ ಒಂದು ಕೇಂದ್ರವೂ, ತೋಂಟದ ಸಿದ್ಧಲಿಂಗ ಯತಿಯ ಮುಂದಾಳುತನದಲ್ಲಿ ನಾಗಿಣೀ ನದಿಯ ತೀರದಲ್ಲಿರುವ ಎಡೆಯೂರಿನಲ್ಲಿ ಇನ್ನೊಂದು ಕೇಂದ್ರವೂ ಸ್ಥಾಪಿತವಾದುವು. ಮೊದಲಿನ ಚಳುವಳಿಯಷ್ಟು ಕ್ರಾಂತಿಕಾರಕವಲ್ಲದಿದ್ದರೂ ಈ ಎರಡನೆಯ ಚಳುವಳಿಯು  ವೀರಶೈವ ಧರ್ಮದ ಪುನರುಜ್ಜೀವನಕ್ಕೆ ಪ್ರಯತ್ನ ಪಟ್ಟಿತೆಂಬ ಅಂಶ ನಿಜ. ಹಿಂದಿನ ವಚನ ಸಾಹಿತ್ಯವನ್ನು ಒಟ್ಟು ಕಲೆಹಾಕುವುದು; ಅದನ್ನು ಪಾಲಿಸಿಕೊಂಡು ರುವುದು; ಅವ್ಯವಸ್ಥಿತವಾಗಿದ್ದ ಪುರಾತನ ವಚನಗಳನ್ನು ಷಟಸ್ಥಲ ಕ್ರಮದಲ್ಲಿ ಜೋಡಿಸುವುದು; ಕಷ್ಟವಾದ ವಚನಗಳಿಗೆ ತಕ್ಕ ವ್ಯಾಖ್ಯಾನ ಟೀಕುಗಳನ್ನು ಬರೆಯುವುದು-ಈ ಕೆಲಸಗಳು ಬಹಳ ರಭಸದಿಂದ ನಡೆದವು. 

      ಕಲ್ಯಾಣ ಕ್ರಾಂತಿಯ ನಂತರ ಚದುರಿಹೋದ  ಅಪಾರವಾದ ವಚನ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವ ಮಹಾಕಾರ್ಯ ನಡೆದದ್ದು ತೋಂಟದ ಸಿದ್ಧಲಿಂಗರ ಕಾಲದಲ್ಲಿ. ಅದು ಅವರ ಶಿಷ್ಯ-ಪ್ರಶಿಷ್ಯರ ಸಮೂಹದಿಂದ ನೆರವೇರಿತು. ವಚನ ಸಾಹಿತ್ಯ ಸೃಷ್ಟಿಸಿದ ವಚನಕಾರರಿಗೆ ಸಲ್ಲುವಷ್ಟು ಕೀರ್ತಿ ಈ ವಚನ ಸಂಗ್ರಹಕಾರರಿಗೂ ಸಲ್ಲುತ್ತದೆ. ಬಸವೇಶ್ವರನ ಕಾಲದಲ್ಲಿ ವಚನಗಳು ಶರಾವತಿಯ ಪ್ರವಾಹದಂತೆ ತುಂಬಿಕೊಂಡು ಬಂದವು.  ಆದರೆ ಒಮ್ಮಿಂದೊಮ್ಮಲೇ ರೂಪುಗೊಳ್ಳುತ್ತಿದ್ದ ಸಂಘಟನೆ ಒಡೆಯಿತು. ತೇಜೋಗರ್ಭಿತವಾದ ಈ (ವಚನ) ಜಲವನ್ನು ಸಂಗ್ರಹಿಸಿ ತೇಜಸ್ಸನ್ನು ಹೊರಗೆಡಹುವ ಕಾರ್ಯ ತೋಂಟದ ಸಿದ್ಧಲಿಂಗ ಯತಿಗಳು ಹಾಗೂ ಅವರ ಶಿಷ್ಯರ ಮೂಲಕ ನೆರವೇರಿತು ಎಂಬ ರಂ.ಶ್ರೀ. ಮುಗಳಿಯವರ ಮಾತು ಸತ್ಯ.

ನೂರೊಂದು ವಿರಕ್ತರು ಷಡುಸ್ಥಲವನ್ನು ಉದ್ಧರಿಸಿದ ಅವಧಿಯಲ್ಲಿಯೆ ಮತ್ತೆ ವೀರಶೈವದಲ್ಲಿ ಸ್ವಲ್ಪ ಶೈಥಿಲ್ಯವುಂಟಾದ್ದರಿಂದ ಏಳುನೂರ ಒಂದು ಜನ ವಿರಕ್ತರು ಉದಯವಾಗಿ ಷಟಸ್ಥಲವನ್ನು ಉದ್ಧರಿಸಿದರೆಂದು ಚೆನ್ನಬಸವ ಪುರಾಣದಲ್ಲಿ ಹೇಳಿದೆ (ಸಂ.೬೩:೪೩-೪೪). ಈ ಏಳುನೂರಾ ಒಂದು ಜನ ವಿರಕ್ತರಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳೇ ಅಗ್ರಗಣ್ಯರೆಂದೂ, ಮಿಕ್ಕ ಏಳುನೂರು ಜನರೆಲ್ಲ ಅವರ ಶಿಷ್ಯರಾಗಿ ಅವರು ಕೈಕೊಂಡ ಕಾರ್ಯವನ್ನು ನೆರವೇರಿಸಲು ಹೆಣಗಿದರೆಂದೂ ಷಟಸ್ಥಲ ಜ್ಞಾನಾಸಾರಾಮೃತದ ಸಂಪಾದಕರು ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸರಿಯಾಗಿದೆ. ಎಡೆಯೂರಿನಲ್ಲಿ ವೀರಶೈವ ಪುನರುಜ್ಜೀವನವು ಸಿದ್ಧಲಿಂಗ ಶಿವಯೋಗಿಗಳ ಪ್ರಭಾವದಿಂದ ನಡೆಯಿತು. ಈ ಪರಿಸರದಲ್ಲಿಯೇ ‘ಶೂನ್ಯ ಸಂಪಾದನೆ’ಯೆಂಬ ಅಪೂರ್ವವಾದ ಆಧ್ಯಾತ್ಮಿಕ ಸಂಪಾದನ ರೂಪಕವು ಮೈದಾಳಿತು.”ತೋಂಟದ ಸಿದ್ಧಲಿಂಗ ಯತಿಗಳಲ್ಲಿ ಒಂದು ಶಾಸ್ತ್ರೀಯ ಕ್ರಮಬದ್ಧತೆ ಇರುವಂತೆ ಅನುಭವದ ಎತ್ತರ ಬಿತ್ತರಗಳನ್ನು ಕಾಣುತ್ತೇವೆ.  ಸಮಗ್ರವಾದ ದೃಷ್ಟಿಯಿಲ್ಲದೆ ವ್ಯವಸ್ಥಿತವಾದ ಶಾಸ್ತ್ರೀಯವಾಗಿ ವಚನಗಳನ್ನು ಸಂಕಲಿಸುವುದು ಅಸಾಧ್ಯ. 

ಸಿದ್ಧಲಿಂಗ ಯತಿಗಳು ತಮ್ಮ ಅಸಾಮಾನ್ಯ ವ್ಯಕ್ತಿತ್ವದಿಂದ ಅನೇಕ ಶಿಷ್ಯ-ಪ್ರಶಿಷ್ಯ ಸಮೂಹವನ್ನು ಪಡೆದಿದ್ದರು. ಹೀಗಾಗಿ ಅಪೂರ್ವ ರೀತಿಯಲ್ಲಿ ವೀರಶೈವ ಧರ್ಮದ ವ್ಯಾಪಕ ಪ್ರಸಾರವನ್ನು ಮಾಡಲು ಸಾಧ್ಯವಾಯಿತು. ಬಸವಾದಿ ವಚನಕಾರರಿಗೆ ಇದ್ದ ಧಾರ್ಮಿಕ, ಸಾಮಾಜಿಕ ಒತ್ತಡ ಸಿದ್ಧಲಿಂಗರ ಕಾಲದಲ್ಲಿ ಇರಲಿಲ್ಲ ಒಂದು ರೀತಿಯ ಸಿದ್ಧ ಚೌಕಟ್ಟಿಗೆ ಸತ್ವ ತುಂಬುವ ಅಳವಡಿಸುವ, ವ್ಯಾಖ್ಯಾನಿಸುವ, ಆಕರ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು. ಪೂರ್ವ ಪರಂಪರೆಯ ಉತ್ತರಾಧಿಕಾರಿಗಳೆಂದು ತಮ್ಮನ್ನು ಅದರೊಂದಿಗೆ ಗುರುತಿಸಿಕೊಂಡು ಶ್ರದ್ಧೆ, ಗೌರವಗಳಿಂದ ಆ ಮಾರ್ಗದಲ್ಲಿ ನಡೆದು ತಮ್ಮತ್ತ ಗಮನಾರ್ಹ ಸಂಖ್ಯೆಯಲ್ಲಿ ಜನರನ್ನು ಸೆಳೆದಿದ್ದಾರೆ.  ಇದು ಬಹು ದೊಡ್ಡ ಸಾಧನೆಯೇ ಆಗಿದೆ.”     

   ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ.     ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. 

        ಶೂನ್ಯಸಂಪಾದನೆಯ ಮೂರು ಪರಿಷ್ಕರಣಗಳು ನಡೆಯುವ ಸಂದರ್ಭದಲ್ಲಿ ಮತ್ತು ಆ ಕಾಲದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಮತ್ತು ಪ್ರಭಾವವನ್ನು ಪಡೆದಿದ್ದ ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಬೋಳಬಸವೇಶ್ವರರು ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರಿದವರಾಗಿ ಕಂಡು ಬರುತ್ತಾರೆ. ಮೂರನೇ ಮತ್ತು ನಾಲ್ಕನೇ ಶೂನ್ಯಸಂಪಾದನಕಾರರಾದ ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರು ನೇರವಾಗಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಮತ್ತು ಪ್ರಶಿಷ್ಯರಾಗಿದ್ದಾರೆ. 

    ತೋಂಟದ ಸಿದ್ಧಲಿಂಗರು ಧಾರ್ಮಿಕವಾಗಿ ಷಟ್ಸ್ಥಲ ಸಿದ್ಧಾಂತದ ಮಹಾನುಭವಿಗಳು ಅದನ್ನು ‘ಷಟಸ್ಥಲಜ್ಞಾನಾಮೃತಸಾರಾಯ’ದ ವಚನಗಳ ರೂಪದಲ್ಲಿ ಜನತೆಗೆ ಧಾರೆಯೆರೆದವರಾಗಿದ್ದಾರೆ.  ಅವರ ಪ್ರಭಾವ ವಲಯಕ್ಕೆ ಬಂದ ಅನೇಕ ಜನ ವಿರಕ್ತರು ಮಹಾಂತರು, ದೇಶಿಕರು, ವಚನ ಸಾಹಿತ್ಯದ ಸಂಕಲನ, ಸಂಗ್ರಹ, ಸಂಪಾದನೆ, ಟೀಕೆ, ವ್ಯಾಖ್ಯಾನ ಮುಂತಾದ ವಚನ ಸಾಹಿತ್ಯದ ಪುನರುಜ್ಜೀವನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರಲ್ಲದೆ, ಸ್ವತಃ ವಚನಕಾರರು ಆಗಿದ್ದಾರೆ.  ಘನಲಿಂಗಿದೇವ, ವಿರಕ್ತ ತೋಂಟದಾರ್ಯ, ಸ್ವತಂತ್ರ ಸಿದ್ಧಲಿಂಗೇಶ್ವರ, ಮಗ್ಗಿಯ ಮಾಯಿದೇವ ಹೀಗೆ ಮುಂತಾದ ಅನೇಕರು ವಚನಗಳನ್ನು ರಚಿಸಿದ ವಚನಕಾರರಾಗಿದ್ದಾರೆ. ಇನ್ನು ಮೂರು-ನಾಲ್ಕನೇ ಶೂನ್ಯಸಂಪಾದನೆ ಪರಿಷ್ಕರಣಕಾರರಾದ ಗುಮ್ಮಳಾಪುರದ ಸಿದ್ಧಲಿಂಗ ದೇವರು, ಗೂಳೂರು ಸಿದ್ಧವೀರಣ್ಣೊಡೆಯರು. ತೋಂಟದ ಸಿದ್ಧಲಿಂಗರ ಶಿಷ್ಯರೇ ಆಗಿದ್ದಾರೆ.  ಗುಮ್ಮಳಾಪುರದ ಸಿದ್ಧಲಿಂಗದೇವ ನೇರವಾಗಿ ತೋಂಟದ ಸಿದ್ಧಲಿಂಗ ಶಿವಯೋಗಿಗಳಿಗೆ ಶಿಷ್ಯನಾಗಿದ್ದರೆ ನಂತರದ ಶೂನ್ಯ ಸಂಪಾದನಾ ಪರಿಷ್ಕರಣಕಾರ ಸಿದ್ಧವೀರಣ್ಣೊಡೆಯ ಈತ ಗುಮ್ಮಳಾಪುರ ಸಿದ್ಧಲಿಂಗನ ಶಿಷ್ಯನಾದ ಬೋಳಬಸವಾರ್ಯನ ಶಿಷ್ಯ. ಒಟ್ಟಿನಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಸಾಹಿತ್ಯದ ಪ್ರಭಾವಕ್ಕೆ ಮತ್ತು ಆಧ್ಯಾತ್ಮದ ಧಾರ್ಮಿಕ ಪರಂಪರೆಗೆ ಒಳಪಟ್ಟ ಶಿಷ್ಯ-ಪ್ರಶಿಷ್ಯರಿಬ್ಬರು ಶೂನ್ಯ ಸಂಪಾದನೆಯ ಪರಿಷ್ಕರಣಕಾರರು ಆಗಿದ್ದಾರೆಂಬುದು ಗಮನಿಸಬೇಕಾದ ಸಂಗತಿ.

ಒಟ್ಟಿನಲ್ಲಿ ತೋಂಟದ ಸಿದ್ಧಲಿಂಗರ ಪ್ರಭಾವ ಮತ್ತು ಪರಂಪರೆಯ ಶಿಷ್ಯಂದಿರು ಶೂನ್ಯ ಸಂಪಾದನೆಗಳಿಗೆ ಹೊಸ ಜೀವ ತುಂಬಿದುದಲ್ಲದೆ ಅವುಗಳ ಮಹತ್ವವನ್ನು ಹೆಚ್ಚಿಸಿದ್ದಾರೆ.  ಅಂದರೆ ಶೂನ್ಯ ಸಂಪಾದನೆಯ ಬೆಳವಣಿಗೆಯಲ್ಲಿ ತೋಂಟದ ಸಿದ್ಧಲಿಂಗರ ಪ್ರಭಾವವು ಕೆಲಸ ಮಾಡಿದೆ ಎಂಬುದನ್ನು ಒಪ್ಪಲೇಬೇಕು.ಏಕೋತ್ತರ ಶತಸ್ಥಲದ  ವಚನಗಳನ್ನು ಸಂಗ್ರಹಿಸಿದ ತೋಂಟದ ಸಿದ್ಧಲಿಂಗರು ಆ ಪರಂಪರೆಯ ಹರಿಕಾರರು ಹೌದು. ಇದನ್ನು ಅನುಸರಿಸಿಯೇ ಈ ನೂರೊಂದು ಸ್ಥಲದ ಪರಂಪರೆಯಲ್ಲಿ ಅನೇಕ ಕವಿಗಳು, ವಿರಕ್ತರು ಆಗಿಹೋಗಿದ್ದು ಅವರೆಲ್ಲರೂ ತಮ್ಮ ಏಕೋತ್ತರ ಶತಸ್ಥಲದ ಕೃತಿಗಳಲ್ಲೂ ಸಿದ್ಧಲಿಂಗರನ್ನು ಸ್ಮರಣೆಗೈದಿದ್ದಾರೆ.  ಅವರನ್ನು ಪಟ್ಟಿ ಮಾಡಬಹುದಾದರೆ ಅವರಲ್ಲಿ ಘನಲಿಂಗಿದೇವ, ಗುಬ್ಬಿಯ ಮಲ್ಲಣ್ಣ (೧೪೭೫), ಸ್ವತಂತ್ರ ಸಿದ್ಧಲಿಂಗೇಶ್ವರ (೧೬೦೦), ಗುಮ್ಮಾಳಾಪುರದ ಸಿದ್ಧಲಿಂಗೇಶ್ವರ (೧೫೮೦), ಗೂಳೂರು ಸಿದ್ಧವೀರಣ್ಣಾರ್ಯ(೧೬೧೬), ಸಾನಂದ ಶಿವಯೋಗಿ (೧೭೯೦), ಮಲ್ಲಿಕಾರ್ಜುನಕವಿ (ಸು. ೧೬೦೦), ಆನಂದ ಬಸವಲಿಂಗ ಶಿವಯೋಗಿ (೧೬೦೦), ಗುರುನಂಜ (೧೫೦೦), ಗುಬ್ಬಿಯ ಮಲ್ಲಣ್ಣಾರ್ಯ (೧೪೫೦), ಪ್ರಭುಲಿಂಗ (೧೫೨೦), ಓದುವ ಗಿರಿಯ (೧೫೨೫), ಚೇರಮಾಂಕ (೧೫೨೬), ಮುರಿಗೆಯ ಶಾಂತವೀರ (೧೭೦೩), ಸಂಪಾದನೆಯ ಚೆನ್ನಂಜದೇವ (೧೫೮೦), ಇಮ್ಮಡಿ ತೋಂಟದಯ್ಯ (೧೫೮೦), ಯೆಮ್ಮೆಯ ಬಸವ (೧೬೪೦), ಚೆನ್ನಬಸವಾಂಕ (೧೫೧೫), ಕುಮಾರಚೆನ್ನಬಸವ (೧೫೫ಂ), ಸಿರಿನಾಮದೇಯ (೧೫೫ಂ), ವಿರಕ್ತ ತೋಂಟದಾರ್ಯ (೧೬೧೬), ಮುರಿಗೆ ದೇಶಿಕೇಂದ್ರ (೧೫೬ಂ), ಮಹಾಂತಸ್ವಾಮಿ (೧೫೬೦), ಶಾಂತೇಶ (೧೫೬ಂ), ಎಳಮಲೆಯ ಗುರುಶಾಂತದೇವ (೧೫೮೦), ವಿರೂಪಾಕ್ಷಪಂಡಿತ (೧೫೮೪), ಇಮ್ಮಡಿ ಮುರಿಗೆಸ್ವಾಮಿ (೧೭ಂ೩), ಉತ್ತರದೇಶದ ಬಸವಲಿಂಗ (೧೭೭೯-೮೦), ಸಿದ್ಧಲಿಂಗಶಿವಯೋಗಿ (೧೭೩೦), ಸಂಪಾದನೆಯ ವೀರಣ್ಣಾರ್ಯ (೧೬೦೦), ಹರೀಶ್ವರ (೧೬೦೬), ಬಸವಲಿಂಗ(೧೬೧೧), ಶಾಂತವೀರದೇಶಿಕ (೧೬೫೦), ಸಿದ್ಧನಂಜೇಶ (೧೬ಂಂ), ಶಾಂತಮಲ್ಲ (೧೭೪೦), ಪರ್ವತಶಿವಯೋಗಿ (೧೭೦೦), ಷಡಕ್ಷರದೇವ (೧೬೫೪), ಬಸವಲಿಂಗ (೧೬೭೯), ಸಂಪಾದನೆಯ ಪರ್ವತೇಶ (೧೬೯೮), ಸೋಮಶೇಖರ ಶಿವಯೋಗಿ (೧೭೫೦), ಸೋಮ (೧೭೦೦), ನೂರೊಂದ (೧೭೪೦), ನಂದಿನಾಥ (೧೭೪೫), ಮಹಾದೇವ, ಮೋದಿಯ ರುದ್ರ ಮುಂತಾದವರನ್ನು ಹೆಸರಿಸ ಬಹುದು. 

     ತೋಂಟದ ಸಿದ್ಧಲಿಂಗರ ಶಿಷ್ಯ ಪ್ರಶಿಷ್ಯ ಪರಂಪರೆ ಅನಂತ ಶಾಖೋಪಶಾಖೆಗಳಲ್ಲಿ ಹಬ್ಬಿ ಮಹಾವೃಕ್ಷವಾಗಿ ಬೆಳೆದು ನಿಂತಿದೆ. ಇವರ ಶಿಷ್ಯರಲ್ಲಿ ಬೋಳಬಸವೇಶ್ವರನಿಗೆ ಅಗ್ರ ಪ್ರಾಶಸ್ತ್ಯ. ಸಿದ್ಧಲಿಂಗರ ಪ್ರಥಮ ಶಿಷ್ಯನಾಗಿ ಅವರ ನಂತರದಲ್ಲಿ ನಿರಂಜನ ಪೀಠವನ್ನು ಮುಂದುವರಿಸಿಕೊಂಡು ಸಾಗಿದ ಈತನಿಂದ ಅನುಗ್ರಹಿತರಾಗಿ ಶಿಷ್ಯತ್ವವಹಿಸಿ ಸಾಹಿತ್ಯ ಸಿದ್ಧಾಂತ-ಆಧ್ಯಾತ್ಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಸಂಖ್ಯೆ ಅಪಾರ. ಅವರಲ್ಲಿ ಕೇವಲ ಅಧ್ಯಾತ್ಮವಾದಿಗಳಾಗಿ ಷಟ್‌ಸ್ಥಲ ಲೋಪದೋಷ ಲೋಕಕಲ್ಯಾಣ ಕಾರ್ಯದಲ್ಲಿ ತೊಡಗಿದವರಾದರೆ, ಮತ್ತೆ ಕೆಲವರು ಸಾಹಿತ್ಯ ಸೃಷ್ಟಿ ಮಾಡಿ ಆಧ್ಯಾತ್ಮ ತತ್ವಗಳನ್ನು ಸಾಹಿತ್ಯ ಕೃತಿಗಳ ಮೂಲಕ ಜನತೆಗೆ ಬೋಧಿಸಿದರು. ಇನ್ನೂ ಕೆಲವರು ಬಸವಾದಿ ಪ್ರಮಥರು ಉಸುರಿದ ವಚನ ಸಾಹಿತ್ಯವನ್ನು ಶೋಧಿಸುವ, ಸ್ಥಲಾನುಗುಣವಾಗಿ ಜೋಡಿಸುವ ವ್ಯಾಖ್ಯಾನ, ಟೀಕೆ, ಟಿಪ್ಪಣೆ ಬರೆಯುವ ಕಾರ್ಯದಲ್ಲಿ ತೊಡಗಿದವರು. ವಿವಿಧ ಮೂಲಗಳಲ್ಲಿ ದೊರೆಯುವ ಆತನ ಶಿಷ್ಯ ಪ್ರಶಿಷ್ಯ ಪರಂಪರೆಯನ್ನು ಅದರಲ್ಲಿ ಉಂಟಾದ ಕವಲುಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ಹೀಗೆ ಈ ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಯು ಹರದನಹಳ್ಳಿಯಲ್ಲಿ ಗುರು ಗೋಸಲ ಚೆನ್ನಬಸವೇಶ್ವರರ ಶಿಷ್ಯನಾಗಿ ಕಗ್ಗೆರೆಯಲ್ಲಿ ತಪಸ್ಸುಮಾಡಿ ಎಡೆಯೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಕರ್ನಾಟಕದ ಒಳಹೊರಗು ದೇಶ ಸಂಚಾರ ಮಾಡಿವಿರಕ್ತ ಪರಂಪರೆಯನ್ನೇ ಕಟ್ಟಿ ಆ ಗುಂಪಿನ ನಾಯಕ ವ್ಯಕ್ತಿಯಾಗಿ ಮೆರೆದವರು ತೋಂಟದ ಸಿದ್ಧಲಿಂಗರು. ಏಳುನೂರೊಂದು ವಿರಕ್ತರ ಹೆಸರು ಅವರು ಕಾರ್ಯಗೈದ ವಿವರ ಕುರಿತಾಗಿ ಇಂದಿಗೂ ಲಭ್ಯವಿಲ್ಲ. ಒಂದೆರಡು ಕೃತಿಗಳೂ ಮಾತ್ರ ಕೆಲವು ವಿರಕ್ತರ ಹೆಸರು ಮತ್ತು ಕಾರ್ಯಗಳನ್ನು ತಿಳಿಸುತ್ತವೆ. ಅವರಲ್ಲಿ ನೇರವಾಗಿ ಗುರುಪೀಠವನ್ನೇರಿದವರು ಬೋಳಬಸವೇಶ್ವರರು. ಆಮೇಲೆ ಶಿಷ್ಯ ಪರಂಪರೆ ಅವ್ಯಹತವಾಗಿ ಮುಂದುವರೆದಿದೆ.ಲಭ್ಯವಿರುವ ಆಕರಗಳ ಹಿನ್ನೆಲೆಯಲ್ಲಿ ಇವರ ಶಿಷ್ಯ ಪರಂಪರೆಯನ್ನು ಈ ರೀತಿಯಾಗಿ ಗುರುತಿಸ ಬಹುದು.

                                                       ತೋಂಟದ ಸಿದ್ಧಲಿಂಗ            

                             

                                                         ಬೋಳಬಸವೇಶ

                                                          ಬೋಳ ಬಸವೇಶ್ವರರು




      ಗೂಳೂರು ಸಿದ್ಧಲಿಂಗ    ಗೂಳೂರು ಸಿದ್ಧವೀರ      ಹರತಾಳ ಚೆನ್ನಂಜೇದೇವ            ಅನಂದ 


                                        

                                        


   ಬಸವಲಿಂಗಶಿವಯೋಗಿ



ಗುಮ್ಮಳಾಪುರ ಸಿದ್ಧಲಿಂಗ                     ಎಳಂದೂರ ಹರೀಶ್ವರ          ಎಳಮಲೆಯ ಗುರು ಶಾಂತದೇವ

 



 ಗಗನದಾರ‍್ಯ(ಉದ್ದನಾರ‍್ಯ)                   

                   

                            ಪರ್ವತೇಂದ್ರ                      ಸಂಪಾದನೆಯ ಸಿದ್ಧವೀರಣ್ಣಾರ‍್ಯ



      ಕಟ್ಟಿಗಹಳ್ಳಿ ಸಿದ್ಧಲಿಂಗ                                         ವಿರಕ್ತತೋಂಟದಾರ್ಯ


                                       

ಮುರಿಗೆ ಶಾಂತವೀರೇಶ್ವರ               ಚೆನ್ನಮಲ್ಲಿಕಾರ್ಜುನದೇವ  ಸಂಪಾದನೆಯ ಬೋಳಬಸವ


ಮುರಿಗೆ ಗುರುಸಿದ್ಧೇಶ್ವರ                         ಸಂಪಾದನೆಯ ಪರ್ವತೇಶ         ಸಂಪಾದನೆಯ ಗುರುಲಿಂಗದ


                       ಸೋಮಶೇಖರ ಶಿವಯೋಗಿ


                                              ತೋಂಟದ ಸಿದ್ಧಲಿಂಗ                                                


                                           ಬೋಳಬಸವೇಶ್ವರ



                     ಗುಮ್ಮಳಾಪುರದ ಸಿದ್ಧಲಿಂಗಯತಿ



                   ಗೂಳೂರು ಸಿದ್ಧವೀರಣ್ಣೊಡೆಯ

 


                       ಗಗನದಾರ್ಯ




ಚೀಲಾಳಪ್ಪ ಸ್ವಾಮಿ(ಚೀಲಾಳ ಸ್ವಾಮಿ)                      ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿ


éಹರಿಹರ ಸ್ವಾಮಿ                                                

                                ಮುರಿಗೆ ಶಾಂತವೀರ   ನೋಡ ಸಿದ್ಧಲಿಂಗ

ಭಿಕ್ಷುದ ಬಸವಲಿಂಗಾರ್ಯ             (ಮುರಿಗಾ ಸಮಯ)      (ಕುಮಾರ ಸಮಯ)


ಕಟ್ಟಿಗೆಹಳ್ಳಿ ರಾಚೋಟಿಸ್ವಾಮಿ                                     


                                                   ಕುಮಾರದೇಶೀಕೇಂದ್ರ                 

ಅಣ್ಣಿಗೇರಿ ಮಹಾಂತ ಸ್ವಾಮಿ                      ಇಮ್ಮಡಿ ಗುರುಸಿದ್ಧಸ್ವಾಮಿ

                                                ಸಿದ್ಧಬಸವಸ್ವಾಮಿ

ಅರ್ಧನಾರೀಶ್ವರ ಸ್ವಾಮಿ  

                            ಕಪ್ಪಿನಂಜೇಸ್ವಾಮಿ  ಸ್ವಾದಿವೀರಚೆನ್ನಬಸವಾರ‍್ಯ  ಮಹಾಂತಸ್ವಾಮಿ


  ಈಸೂರುನಂದೀಶ್ವರಸ್ವಾಮಿ    

                                   ಹುಬ್ಬಳ್ಳಿ ಸಂಗನ                          ಬಸವ ದೇಶಿಕ                                                                                                                    


      ಸದಾಶಿವಸ್ವಾಮಿ                        ಶಿರಹಟ್ಟಿ ಸಿದ್ಧಲಿಂಗಸ್ವಾಮಿ                    ಶಾಂತವೀರದೇಶಿಕ



ಮಹಾಂತಸ್ವಾಮಿ                                    ಗುರುಪಾದಸ್ವಾಮಿ                             ಕುಮಾರದೇಶಿಕ                                   


 


 ವೃದ್ಧತೋಂಟಾದಾರ್ಯ                ಮೂರುಸಾವಿರದ ಗುರುಪಾದಸ್ವಾಮಿ   ಶಿವಪೂಜಾ ಬಸವಲಿಂಗದೇಶಿಕ




              ಮೃತ್ಯುಂಜಯ ಸ್ವಾಮಿ                 ಮೂರುಸಾವಿರದ ಸಿದ್ಧಲಿಂಗಸ್ವಾಮಿ       

      


                                                  ಗುರುಮಲ್ಲಸ್ವಾಮಿ ಇಮ್ಮಡಿಬಸವಲಿಂಗದೇಶಿಕ



                                                          

  ಸಿದ್ಧೇಶ್ವರಸ್ವಾಮಿ                       ಒಪ್ಪೊತ್ತಿನ ಚೆನ್ನವೀರಸ್ವಾಮಿ 

 


ಗುರುಬಸವಸ್ವಾಮಿ                                 ವ್ಯಾಕರಣದ ಸಿದ್ಧಲಿಂಗಸ್ವಾಮಿ      ಸಿದ್ಧಬಸವಲಿಂಗದೇಶಿಕ                        


ಶಿವಕುಮಾರಸ್ವಾಮಿ                            ನಿಘಂಟಿನಸಿದ್ಧಬಸವಸ್ವಾಮಿ          ಬಸವಲಿಂಗದೇಶಿಕ 

 


                                                ಸಣ್ಣಬರಹದ ರಾಚೋಟಿಸ್ವಾಮಿ


                           ತೋಂಟದ ಸಿದ್ಧಲಿಂಗಸ್ವಾಮಿ (ಗದುಗಿನಲ್ಲಿದ್ದವರು)  


                                                 

                                                                           ಮಹಾಲಿಂಗಸ್ವಾಮಿ

                          

                     

                                             ಹೆಬ್ಬಾಳದ ರುದ್ರಸ್ವಾಮಿ



                                      ಮುಪ್ಪಿನ ರುದ್ರಸ್ವಾಮಿ



                                              ಮುಪ್ಪಿನಸ್ವಾಮಿ


                                                                       ಜಯದೇವಸ್ವಾಮಿ



                                      ಜಯವಿಭವಸ್ವಾಮಿ


                                                            ಮಲ್ಲಿಕಾರ್ಜುನಸ್ವಾಮಿ

( ಆಕರ:ವೀರಣ್ಣ ರಾಜೂರ, ವಚನ ಸಂಶೋಧನ,ಪು.೭೮-೮೦,  ಎಸ್. ಶಿವಣ್ಣ, ಬಿಡು ಮುತ್ತು)

                                 

         ತೋಂಟದ ಸಿದ್ಧಲಿಂಗಯತಿಗಳು  ಕೇವಲ ವ್ಯಕ್ತಿಯಲ್ಲ ಅವರೊಬ್ಬ ಕಲಾತೀತ ಶಕ್ತಿ ಎಂದು ಹೇಳಬಹುದು. ಈ ಮಾತಿಗೆ ಅವರಿಂದ ಆರಂಭವಾಗಿ ಅವರ ಶಿಷ್ಯ ಪ್ರಶಿಷ್ಯರಿಂದ ಮುಂದುವರಿದು ನಾಡಿನ ತುಂಬ ಬೆಳೆದು ನಿಂತಿರುವ ಮಠಗಳ ಪರಂಪರೆ ನಿದರ್ಶನವಾಗಿವೆ. ತೋಂಟದ ಸಿದ್ಧಲಿಂಗರ ಸಮಯಕ್ಕೆ ಸೇರಿದ ೩೨ ಮಠಗಳು ನಾಡಿನಾದ್ಯಂತ ಕಂಡು ಬರುತ್ತವೆ. ವಿರಕ್ತ ಸಂಪ್ರದಾಯದ ಮಠ ಜಗತ್ತಿನ ಜಗದ್ಗುರು ಪೀಠ ಪರಂಪರೆ ಆರಂಭವಾಗಿರುವುದು ತೋಂಟದ ಸಿದ್ಧಲಿಂಗರಿಂದ. ಅದರಲ್ಲೂ ವಿಶೇಷವಾಗಿ ಚೀಲಾಳ, ಮುರಘಾಸಮಯ, ಕೆಂಪಿನಸಮಯ ಮತ್ತು ಕುಮಾರ ಸಮಯದ ಮಠಗಳು ತೋಂಟದಾರ್ಯರ ಶಿಷ್ಯರಿಂದ ಆರಂಭವಾಗುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ವೀರಶೈವ ಗುರುವರ್ಗದಲ್ಲಿ ಐದು ಪೀಠ ಪರಂಪರೆಗಳಿರುವಂತೆ ವಿರಕ್ತ ವರ್ಗದಲ್ಲಿಯೂ ಐದು ಸಮಯ ಪರಂಪರೆಗಳಿವೆ. ಇವುಗಳಲ್ಲಿ ಕೆಂಪಿನ ಸಮಯ ಸಂಪಾದನ ಸಮಯಗಳಿಗಿಂತ ಜಗದ್ಗುರು ಪ್ರತಿಷ್ಠೆಯ ಮುರುಘಾ ಸಮಯ, ಕುಮಾರ ಸಮಯ, ಚೀಲಾಳ ಸಮಯಗಳು ತುಂಬ ಪ್ರಸಿದ್ಧವಾಗಿವೆ. ಅಂದರೆ ಕ್ರಮವಾಗಿ ಈ ಮೂರು ಸಂಪ್ರದಾಯಕ್ಕೆ ಸೇರಿದ ೩೧, ೧೦೩ ಮತ್ತು ೪೨ ಹೀಗೆ ಒಟ್ಟು ೧೭೬ ಮಠಗಳು ಸಿದ್ಧಲಿಂಗರ ಶಿಷ್ಯ ಪರಂಪರೆಯ ಮಠಗಳು ಎಂದಂತಾಯಿತು.  ಇದಲ್ಲದೆ, ವಿರಕ್ತ ಸಂಪ್ರದಾಯದ ೭೨ ಮಠಗಳಲ್ಲಿ ೧೨ನೇ ಶತಮಾನಕ್ಕೆ ಸೇರಿದ ಕೆಲವು ಮಠಗಳು ಇರಬಹುದು. ಮತ್ತು ತೋಂಟದ ಸಿದ್ಧಲಿಂಗರ ಪರಂಪರೆಗೆ ಸೇರಿದ ಮಠಗಳು ಕೆಲವು ಇರಬಹುದು.

ಅಂದರೆ ವಿರಕ್ತ ಸಂಪ್ರದಾಯದಿಂದ ಇರುವ ೭೨ ಮಠಗಳಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಮಠಗಳು ಸಿದ್ಧಲಿಂಗರ ಪ್ರಭಾವದಿಂದ ಅವರ ಪ್ರಭಾವಳಿಯಲ್ಲಿ ಬೆಳೆದ ಮಠಗಳಾಗಿರಬಹುದು. ೧೨ನೇ ಶತಮಾನದ ವಿರಕ್ತ ಮಠಗಳೆಂದು ದಾಖಲಾಗಿರುವ ಮಠಗಳ ಕಾಲದ ಸತ್ಯಾಸತ್ಯತೆಯನ್ನು ಕಂಡುಹಿಡಿದರೆ ೧೨ನೇ ಶತಮಾನಕ್ಕೆ ಸೇರಬಹುದಾದ ಮಠಗಳನ್ನು ಬಿಟ್ಟು ಉಳಿದುವೆಲ್ಲಾ ಸಿದ್ಧಲಿಂಗರ ಸಂಪ್ರದಾಯಕ್ಕೆ ಸೇರಬಹುದೇನೋ, ವಚನ ಸಂಪಾದನೆಗಾಗಿ ಹುಟ್ಟಿಕೊಂಡ ಮಠಗಳೆ ಬಹುಶಃ ಸಂಪಾದನ ಸಮಯದ ಮಠಗಳೆನ್ನಿಸಿರಬಹುದು. ಈ ಸಮಯಕ್ಕೆ ಸೇರಿದ ೪ ಮಠಗಳಲ್ಲಿಯೂ ಸಿದ್ಧಲಿಂಗರ ಸಂಪ್ರದಾಯಕ್ಕೆ ಸೇರಿದ ಮಠಗಳು ಇರಲೂಬಹುದು. ಕೆಂಪಿನ ಸಮಯದ ೩ ಮಠಗಳು ಅವುಗಳ ಮೂಲವನ್ನು ಕುರಿತು ಐತಿಹಾಸಿಕ ಅಧ್ಯಯನವಾಗಬೇಕು. ಇಷ್ಟೆಲ್ಲ ಅಲ್ಲದೆ ನೇರವಾಗಿ ೩೨ ಮಠಗಳು ತೋಂಟದ ಸಿದ್ಧಲಿಂಗರ ಸಮಯದ ಮಠಗಳೆಂದು ಕರ್ನಾಟಕ ವೀರಶೈವ ಮಠಗಳ ಕುರಿತು  ಸಂಪಾದನೆ ಮಾಡಿರುವ ಚಂದ್ರಶೇಖರ ನಾರಾಯಣಾಪುರ ಅವರ ಗ್ರಂಥದಲ್ಲಿ ಉಲ್ಲೇಖಗೊಂಡಿವೆ.

   ಅಂತೂ ಕರ್ನಾಟಕದ ವೀರಶೈವ ಅದರಲ್ಲೂ ವಿರಕ್ತ ಸಂಪ್ರದಾಯದ ವ್ಯಾಪಕ ಮಠಗಳ ಹುಟ್ಟು ಬೆಳವಣಿಗೆಗೆ ಸಿದ್ಧಲಿಂಗ ಶಿವಯೋಗಿಗಳ ಕತೃತ್ವಶಕ್ತಿಯೇ  ಪ್ರಮುಖವಾಗಿದೆ.  ನಾಡಿನ ಅನೇಕ ಮಠಗಳು ಸಿದ್ಧಲಿಂಗರಿಂದ ಆರಂಭವಾದ ಅಥವಾ ಸಿದ್ಧಲಿಂಗರ ಶಿಷ್ಯರಿಂದ ಆರಂಭವಾದ ಚೀಲಾಳ ಮುರುಘಾ ಅಥವಾ ಕುಮಾರ ಸಮಯಕ್ಕೆ ಸೇರಿದ ಮಠಗಳಾಗಿವೆಂಬುದು ಗಮನಿಸಬೇಕಾದ ಸಂಗತಿ. ಇದರಿಂದ ನಾಡಿನ ಮಠ ಪರಂಪರೆಗೆ ಸಿದ್ಧಲಿಂಗ ಶಿವಯೋಗಿಗಳಿಂದ ಬಹುದೊಡ್ಡ ಕೊಡುಗೆ ಸಂದಿದೆ ಎಂಬುದು ವಿದಿತವಾಗುತ್ತದೆ.  

ಸಿದ್ಧಲಿಂಗ ಯತಿಗಳಿಂದ ಆರಂಭವಾದ ವಚನ ಪುನರುಜ್ಜೀವನ ಕಾರ್ಯ ಅವರ ಬಳಿಕವು ನಿಲ್ಲದೆ ಮುಂದುವರೆಯಿತು. ಅವರ ಶಿಷ್ಯರಾದ ಸ್ವತಂತ್ರ ಸಿದ್ಧಲಿಂಗೇಶ್ವರರು ಮತ್ತು ಗುಮ್ಮಳಾಪುರದ ಸಿದ್ಧಲಿಂಗೇಶ್ವರರು ಅನೇಕ ವಚನಗಳನ್ನು ಬರೆದಿದ್ದಾರೆ. ಈ ಸಾಲಿನಲ್ಲಿಯೇ ಸಿದ್ಧಲಿಂಗೇಶ್ವರನು ಸಿದ್ಧಲಿಂಗ ಯತಿಗಳಂತೆ ಬಸವಾದಿಗಳ ವಚನಗಳಿಗೆ ಸಂಪೂರ್ಣ ಮಾರು ಹೋಗಿದ್ದ ವ್ಯಕ್ತಿ. ಏಕೆಂದರೆ ಆತನ ಮೇಲೆ ಬಸವ ಮೊದಲಾದವರ ಪ್ರಭಾವ ಆಗಿರುವುದನು ಗುರುತಿಸ ಬಹುದಾಗಿದೆ. ಸಿದ್ಧಲಿಂಗ ಯತಿಗಳ ಇನ್ನೊಬ್ಬ ಶಿಷ್ಯರಾದ ಘನಲಿಂಗಿ ದೇವರು ಸಾಹಿತ್ಯ ದೃಷ್ಟಿಯಿಂದ ಹೆಚ್ಚು ಗಮನಾರ್ಹವಾದ ವಚನಗಳನ್ನು ಸೃಷ್ಟಿಸಿದ್ದಾರೆ. 

ಹೀಗೆ ವಚನ ಸಂಕಲನ ವ್ಯಾಖ್ಯಾನಗಳಿಗೆ ಮಹಾಲಿಂಗ ಜಕ್ಕಣ್ಣ ಮುಂತಾದವರ ಬಳಿಕ ಎರಡನೆ ಕೇಂದ್ರ ವ್ಯಕ್ತಿಯಾಗಿ ಪರಿಣಮಿಸಿ ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಆ ಕೆಲಸಗಳನ್ನು ನಡೆಸಿದರು. ವಚನ ಸೃಷ್ಟಿಯ ಕಾರ್ಯ ಕನ್ನಡದಲ್ಲಿ ಎರಡನೆ ಬಾರಿ ನಡೆದದ್ದಕ್ಕೆ ತಾವೇ ಸ್ವತಃ ಆದ್ಯರಾದರು. ಹೀಗೆ ವಚನ ಪರಂಪರೆಯಲ್ಲಿ ಮಹತ್ವಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

   ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಯು ಹರದನಹಳ್ಳಿಯಲ್ಲಿ ಗುರು ಗೋಸಲ ಚೆನ್ನಬಸವೇಶ್ವರರ ಶಿಷ್ಯನಾಗಿ ಕಗ್ಗೆರೆಯಲ್ಲಿ ತಪಸ್ಸುಮಾಡಿ ಎಡೆಯೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಕರ್ನಾಟಕದ ಒಳಹೊರಗು ದೇಶ ಸಂಚಾರ ಮಾಡಿವಿರಕ್ತ ಪರಂಪರೆಯನ್ನೇ ಕಟ್ಟಿ ಆ ಗುಂಪಿನ ನಾಯಕ ವ್ಯಕ್ತಿಯಾಗಿ ಮೆರೆದವರು ತೋಂಟದ ಸಿದ್ಧಲಿಂಗರು. ಏಳುನೂರೊಂದು ವಿರಕ್ತರ ಹೆಸರು ಅವರು ಕಾರ್ಯಗೈದ ವಿವರ ಕುರಿತಾಗಿ ಇಂದಿಗೂ ಲಭ್ಯವಿಲ್ಲ. ಒಂದೆರಡು ಕೃತಿಗಳೂ ಮಾತ್ರ ಕೆಲವು ವಿರಕ್ತರ ಹೆಸರು ಮತ್ತು ಕಾರ್ಯಗಳನ್ನು ತಿಳಿಸುತ್ತವೆ. ಅವರಲ್ಲಿ ನೇರವಾಗಿ ಗುರುಪೀಠವನ್ನೇರಿದವರು ಬೋಳಬಸವೇಶ್ವೃರು. ಆಮೇಲೆ ಶಿಷ್ಯ ಪರಂಪರೆ ಅವ್ಯಹತವಾಗಿ ಮುಂದುವರೆದಿದೆ. ಸದ್ಯಕ್ಕೆ ಈ ಪರಂಪರೆಯಲ್ಲಿ ತೋಂಟದಾರ್ಯರು ೧೮ನೇ ಜಗದ್ಗುರುಗಳಾದರೆ ತದನಂತರದವರು ಹೀಗಿದ್ದಾರೆ.   

ವಚನ ಸಾಹಿತ್ಯ ರಚನೆ,ಸಂಪಾದನೆ, ಸಂಕಲನ ಕಾರ್ಯವನ್ನು ಮುಂದುವರೆಸಿಕೊಂಡು ಬಂದ ಶಿಷ್ಯ ಪರಂಪರೆ:

೧.ಸಪ್ಪೆಯಾರ್ಯ : ಎಡೆಯೂರು ಶಿಲಾಶಾಸನದಲ್ಲಿ ಉಕ್ತವಾಗಿರುವ ಶ್ರೀ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯರ ಹೆಸರುಗಳಲ್ಲಿ ಈತನ ಹೆಸರೇ ಮೊಟ್ಟಮೊದಲನೆಯದು. ಈತನನ್ನು ಸಪ್ಪೆಯಾರ್ಯ, ಸಪ್ಪೆಯತೀಶನೆಂದು ಕರೆದಿದ್ದಾರೆ. ಯತೀಶ್ವರನಾಗಿ ಸದ್ಭಕ್ತರನ್ನು ಪಾವನಗೊಳಿಸುತ್ತಾ ದೇಶವನ್ನೆಲ್ಲ ಸುತ್ತಾಡಿ ಕೀರ್ತಿಯನ್ನು ಸಂಪಾದಿಸಿದ ಈತ ಕನ್ನಡದಲ್ಲಿ ಯಾವ ಕೃತಿ ರಚನೆ ಮಾಡಿದನು ತಿಳಿಯದು. ಆದರೆ ‘ಅಮೃತೇಶ್ವರ ಭಾಷ್ಯ’ ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿರುವನೆಂದು ತಿಳಿದು ಬರುತ್ತದೆ.  

೨.ಬೋಳಬಸವಾರ್ಯ (ನಾಗವಲ್ಲಿಯ ಶಿವಪೂಜೆಯಾರ್ಯ): ಇವರು ಮೂಲತಹ ಚಾಮರಾಜನಗರ ತಾಲೋಕಿನ ನಾಗವಲ್ಲಿಯವರು. ಎಡೆಯೂರು ಶಾಸನದಲ್ಲಿಯೂ ಉಕ್ತರಾಗಿದ್ದಾರೆ. ಇವರು ತೋಂಟದ ಸಿದ್ಧಲಿಂಗ ಸ್ವಾಮಿಗಳ ತರುವಾಯ ಷಟ್‌ಸ್ಥಲ ಪಟ್ಟದ ಮುಂದಾಳತ್ವವನ್ನು ವಹಿಸಿದರು. ಇವರ ಶಿಷ್ಯರಾದ ಸಪ್ಪೆ ದೇಶಿಕರು ಪಟ್ಟಣ ದೇವರು ಚಿಟ್ಟಿಗೆ ದೇವ ಮುಂತಾದವರು ಬೋಳಬಸವರಿಂದ ಚರಪಟ್ಟ ಪಡೆದು ಭಕ್ತಿಜ್ಞಾನ ವೈರಾಗ್ಯ ಸಂಪನ್ನರಾಗಿ ಧರೆಯನ್ನೆಲ್ಲ ಸಂಚರಿಸಿದರು. ಇದರಿಂದಾಗಿ ಬೋಳಬಸವರಿಂದ ಇಡೀ ಷಟ್‌ಸ್ಥಲದ ಕೀರ್ತಿ ವ್ಯಾಪಿಸಿತು. ಶರಣ ಜನಬಾಂಧವ, ಶರಣಜಲಹೃತ್ಕಮಲ ಕರ್ಣಿಕಾವಾಸ ಅನಾದಿ ಪರಶಿವನೆನಿಸುವ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯರು ಈ ಶೂನ್ಯಸಂಪಾದನೆಯಂ ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದಾರೆ. ತೋಂಟದ ಸಿದ್ಧಲಿಂಗನ ಶಿಷ್ಯನಾದ ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದ್ದಾರೆ. 

ಶೂನ್ಯ ಸಿಂಹಾಸನದ ಎರಡನೆಯ ಉಪಾಧ್ಯಕ್ಷರಾದ ಜಂಗಮ ಮೂರ್ತಿ ಸಿದ್ಧಲಿಂಗ ಶಿವಯೋಗಿಗಳು ಎಡೆಯೂರಿನಲ್ಲಿ ಪಟ್ಟದ ಚಟ್ಟನದೇವರು ನಿರ್ಮಿಸಿದ ಕಲ್ಲುಮಠದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ನಿಲ್ಲುವುದಕ್ಕೆ ಮುಂಚೆ ಕಡು ವಿರಕ್ತನೂ ವಿಷಯ ನಿರ್ಲಿಪ್ತನೂ ಅಖಿಲ ಸಂಸರ್ಗ ಸಂಬಂಧ ರಹಿತನೂ ದೃಢವಿಮೋಹಾಂಭೋದ ಮಾರುತನೂ ಸದ್ಭಕ್ತ ಜಡವಿಕಸಿತ ಸೂರ್ಯನಾರ್ಯ ಜನಮಂಡನನೂ ಮೃಡಮೂರ್ತಿಯೂ ಎನಿಸಿದ ತನ್ನ ಪಟ್ಟ ಶಿಷ್ಯ ಬೋಳ ಬಸವೇಶನಿಗೆ ಶೂನ್ಯಸಿಂಹಾಸನದ ಪಟ್ಟವನ್ನು ಕಟ್ಟಿ ಬಯಲಾಗುತ್ತಾರೆ.

ಬಾಲ್ಯದಲ್ಲಿ ಸ್ಫುರಿತಾಕ್ಷರವು ತಿಳಿಯದಿದ್ದುದರಿಂದ `ನಿರಕ್ಷರ’ದ ಹೆಸರು ಸಾರ್ಥಕವಾಯಿತು. ಮುಗ್ಧತರರ ಸ್ವಭಾವದಿಂದಾಗಿ ಬೋಳನೆಂದಾಯ್ತು; ಸದ್ಭಕ್ತಿ ಸ್ವಭಾವದಿಂದ ಭಕ್ತಿ ಭಂಡಾರಿಯಾಗಿ ಬಸವ ನೆಂದಾಯ್ತು. ಈ ಮೂರರ ಮುಪ್ಪುರಿಯಿಂದ `ನಿರಕ್ಷರದ ಬೋಳ ಬಸವ’ ನೆಂಬ ಅಭಿದಾನದಿಂದ ಪಟ್ಟಾಧ್ಯಕ್ಷರಾದರು.೫

ತನ್ನ ಗುರುವರ್ಯರು ಹಮ್ಮಿಕೊಂಡಿದ್ದ ಕಾರ್ಯವನ್ನು ವ್ಯಾಪಕಗೊಳಿಸಿ ಪ್ರಚಾರ ಮಾಡಿದನು. ಇದಕ್ಕಾಗಿ ಸಪ್ತಶತ ಚರಮೂರ್ತಿಗಳು ಮತ್ತು ತ್ರಿಸಹಸ್ರ ವಿರಕ್ತರಿಗೆ ಶಾಸ್ತ್ರಬೋಧೆಯನ್ನು ಮಾಡಿ ಅವರ ಮೂಲಕ ಷಟ್ಸ್ಥಲ ಪ್ರಚಾರ ಕಾರ್ಯ ಇನ್ನೂ ವ್ಯಾಪಕವಾಗಿ ಪ್ರಸಾರವಾಗುವಂತೆ ಮಾಡಿದನು. ಅಷ್ಟಕ್ಕೇ ನಿಲ್ಲದೆ ನಾಡಿನ ನಾನಾ ಭಾಗಗಳಲ್ಲಿ ತಾನೂ ಅವರೊಂದಿಗೆ ಸಂಚರಿಸಿ ಷಟ್ಸ್ಥಲ ಬೋಧೆಯನ್ನು ಮಾಡಿ ಶೈವಸಂಪನ್ನರನ್ನು ಅಲ್ಲಲ್ಲಿ ನಿಲ್ಲಿಸಿ ವಿರತ-ಚರಮೂರ್ತಿಗಳೊಂದಿಗೆ ಮಧುಗಿರಿಗೆ ಬಂದು ಬಿಡಾರ ಮಾಡಿದ್ದಾಗ ಅಲ್ಲಿಯೇ ಅವಿರಳಾನಚಿದದಿಂದ ನಿಜೈಕ್ಯವನ್ನು ಪಡೆದನು.೬

ತನ್ನ ಗುರುಗಳಿಗಿದ್ದಂತೆ ಈತನಿಗೂ ಅನೇಕ ವಿದ್ವಾಂಸರು ಈತನ ಶಿಷ್ಯರಾಗಿದ್ದರು. ಅವರಲ್ಲಿ ಭಾವಚಿಂತಾರತ್ನ ಮತ್ತು ವೀರಶೈವಾಮೃತ ಮಹಾಪುರಾಣವನ್ನು ಬರೆದ ಎರಡನೆಯ ಮಲ್ಲಣಾರ್ಯ ಮತ್ತು ತೋಂಟದ ಸಿದ್ಧಲಿಂಗ ಶಿವಯೋಗಿಯ ಇನ್ನೊಬ್ಬ ಶಿಷ್ಯನಾದ ಚಂದ್ರಶೇಖರನಿಂದ ಪ್ರೇರಿತನಾಗಿ ಅವನ ಅಪ್ಪಣೆಯಂತೆ ಸಿದ್ದೇಶ್ವರ ಪುರಾಣವನ್ನು ಬರೆದ ಈ ಮಲ್ಲಣಾರ್ಯನ ಪುತ್ರ ಶಾಂತೇಶ ಮುಖ್ಯರಾದರು. ೧೬೫೦ರ ಸುಮಾರಿನಲ್ಲಿದ್ದ ಸಿದ್ಧನಂಜೇಶನು ತನ್ನ ಗುರುರಾಜ ಚಾರಿತ್ರದಲ್ಲಿ ಈ ಬೋಳಬಸವನನ್ನು ಸ್ತುತಿಸಿದ್ದಾನೆ.

೩. ೫. ಸಂಪಾದನೆಯ ಬೋಳಬಸವೇಶ್ವರರು(ಮದ್ದಗಿರಿ): 

   ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿಷ್ಯರಾದ ಇವರು ಮದ್ದಗಿರಿಯ ಇಮ್ಮಡಿ ಚಿಕ್ಕಭೂಪಾಲನ ಗುರುಗಳಾಗಿದ್ದರು ಎಂಬುದು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯನ್ನುಗಮನಿಸಿದಾಗ ತಿಳಿದು ಬರುತ್ತದೆ. ತೋಂಟದ ಸಿದ್ದಲಿಂಗರ ಶಿಷ್ಯ ಪರಂಪರೆಯನ್ನು ಸ್ತುತಿಸುವಾಗತೋಂಟದ ಸಿದ್ದಲಿಂಗರ ಮೊದಲಿಗ ಹಾಗೂ ನೆಚ್ಚಿನವನಾದ ಬೋಳಬಸವೇಶನನ್ನು ಹೆಸರಿಸಿದ್ದಾನೆ. ಮುಂದಿನ ಪದ್ಯಗಳಲ್ಲಿ ತೋಂಟದ ಸಿದ್ಧವೀರೇಶ, ಚೆನ್ನಮಲ್ಲಿಕಾರ್ಜುನ ಮುಂತಾದವರನ್ನು ಹೆಸರಿಸುವ ಪದ್ಯದಲ್ಲಿ ಸಿದ್ದಾಪುರ ಬೋಳಬಸವರನ್ನು ಜೊತೆಯಾಗಿ ಉಲ್ಲೇಖಿಸಿದ್ದಾನೆ.

ಭಾಳಾಕ್ಷನಪರಾವತಾರ ಮಹಿಮಾಂಬು ನಿಧಿ

ಬೋಳಬಸವೇಶ್ವರರು ಸಿದ್ಧಪುರದೊಳಗಿರ್ಪ

ವೇಳಿಯೋಳ್ ಶ್ರೀ ಚೆನ್ನಮಲ್ಲಿಕಾರ್ಜುನ ದೇವರವರ ದರ್ಶನಕ್ಕೆ ಹೋಗ

ಆಲೋಕಿಸುತ ತಾವು ಪೊದ್ದಿರ್ದ ಕಂಬಳಿಯ

ಮೇಳದಿಂ ಗದ್ದುಗೆಯ ಮಾಡಿ ಮೂರ್ತಗೊಳಿಸಿ

ಸ್ಥಲ ಸಂಪಾದನೆಯ ಸ್ವಾಮಿಗಳ್ ನೀವೆನಲ್ ಮೆರೆದ ಗುರುರಾಯ ಶರಣು.೨೨ 

ಸಂಪಾದನೆಯ ಪರ್ವತೇಶನ ಗುರುವಾದ ಚೆನ್ನಮಲ್ಲಿಕಾರ್ಜುನರ ಸಮಕಾಲೀನರಾದ ಮತ್ತೊಬ್ಬ ಸಿದ್ಧಪುರದ ಬೋಳ ಬಸವೇಶರನ್ನು ಮೇಲ್ಕಂಡ ಪದ್ಯದಲ್ಲಿ ಉಲ್ಲೇಖಿಸಿರುವುದರ ಜೊತೆಗೆ ಈ ಗ್ರಂಥದ ಸಮಾಪ್ತಿಯ ಭಾಗದ ಒಂದು ಪದ್ಯದಲ್ಲಿ ಕೃತಿರಚನೆಯ ವೇಳೆಗೆ ಕವಿಯ ಗುರು ಹಾಗೂ ಸಿದ್ಧಪುರದ ಬೋಳಬಸವೇಶರು ಲಿಂಗೈಕ್ಯರಾಗಿದ್ದರು' ಎಂಬ ಉಲ್ಲೇಖ ಇದೆ. ಸುವ್ವಿಮಲ್ಲನೆಂಬ ಕವಿಯು ಸಿದ್ದೇಶ್ವರರಸಾಂಗತ್ಯ ಎಂಬ ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯ ೫ ನೇ ಸಂಧಿ ಭಾಗದಲ್ಲಿ ತೋಂಟದ ಸಿದ್ದೇಶ್ವರರ ಚಂದ್ರಮಂಡಲ ಉತ್ಸವ, ರಥೋತ್ಸವ, ಮತ್ತು ಪರಿಷೆಯ ವಿವರಗಳಿವೆ.ತೋಂಟದ ಸಿದ್ದಲಿಂಗರ ಪರಿಷೆಗೆ ಆಗಮಿಸಿದ್ದ ವೀರಶೈವ ಮಹನೀಯರನ್ನು ಹೆಸರಿಸುವಾಗ ಬಿಜ್ಜಾವರದ ಬೋಳಬಸವೇಶರನ್ನು ಕುರಿತು ಒಂದು ಸಾಂಗತ್ಯ ಪದ್ಯದಲ್ಲಿ ಉಲ್ಲೇಖಿಸಿದ್ದಾನೆ.

'ಭಾಳದಿ ಧರಿಸಿದ ಭಸಿತ ರುದ್ರಾಕ್ಷಿಯಿಂ

ತೋಳಿನಾಧಾರ ಭಸ್ಮಾಂಗ

ಕಾಳುಗನ ಗೆದ್ದು ಕರುಣಿ ಬಿಜ್ವಾರದ

ಬೋಳಬಸವ ರಾಜರಿವರು-೨೩ 

ಸಿದ್ಧನಂಜೇಶನು ಗುರುರಾಜ ಚಾರಿತ್ರದಲ್ಲಿ ಬೋಳಬಸವೇಶ್ವರರನ್ನು ಅವರು ಮಾಡಿದ

ಎರಡು ಪವಾಡಗಳನ್ನು ಉಲ್ಲೇಖಿಸಿದ್ದಾನೆ.

ಪರಮಶಾಂತಿಯೇ ಮೂರ್ತಿವೆತ್ತಂತಿದ್ದು ಮಹಾಮಹಿಮನಾದ ಬೋಳಬಸವೇಶ್ವರನು ವಿಜ್ಞಾವರದಲ್ಲಿದ್ದು ಅಧಿಕ ಮಹಿಮೆಯನ್ನು ಮೆರೆದು ಲಿಂಗಾಭಿಷೇಕ ಉದಕವ ಮಸ್ತಕದಿರಣಾಗತರಿಗೆ ವಾಂಛಿತವಿತ್ತು ಇರಲು ಒಂದು ದಿವಸ ಒಣಗಿದತ್ತಿಯ ಮರವನ್ನು ಕರುಣದಿಂದ ನೋಡಿ ಅಕ್ಷಣವೆ ಚಿಗುರಿಸಿ ಫಲವ ತೋರಿದನು. ಕೈಲಾಸದ ಬಾಗಿಲಲ್ಲಿ ಕೈಲಾಸಕ್ಕೆ ಕರೆದೊಯ್ಯವೆಂದು ಎಲ್ಲರಿಗೂ ಹೇಳಿ ಶಿವಸಮಾಧಿಯಲ್ಲಿದ್ದ ಗೌಡನನ್ನುದ ಇಮ್ಮಡಿ ತೋಂಟದ ರಾಯನನ್ನು ಕಡೆದಿರಲು ಅಲ್ಲಿಗೆ ಹೋಗಿ ಆತನನ್ನು ಶಿವಸನ್ನಿಧಿಗೆ ಒಯ್ದು ಮೋಕ್ಷವನಿತ್ತನು.೨೪  ಎಂದು ಬೋಳಬಸವೇಶ್ವರರನ್ನು ಕುರಿತ ವಿವರ ಸಿದ್ಧನಂಜೇಶನು ಈ ಕೃತಿಯ ೧೬ನೇ ಸಂಧಿಯಲ್ಲಿ ಉಲ್ಲೇಖಿಸಿರುವ ವಿದ್ವಾಂಸರು ಅರ್ಥೈಸಿದ್ದಾರೆ, ಆದರೆ ತೋಂಟದ ಸಿದ್ದಲಿಂಗರನ್ನು ಕುರಿತ ಇತರೆ ಬೋಳಬಸವೇಶ್ವರನನ್ನು ತೋಂಟದ ಸಿದ್ದಲಿಂಗರ ಶಿಷ್ಯರಾದ ಬೋಳಬಸವೇಶರೆ ಎಂದು ಸ್ಮರಿಸುವಾಗ ಹಿಂದೆ ಅಥವಾ ಮುಂದಾಗಲಿ ತೋಂಟದ ಸಿದ್ಧಲಿಂಗರ ಹೆಸರನ್ನಾಗಲೀಹಾಗೆ ಕವಿಯು ಈ ಕೃತಿಯ ಹದಿನಾರನೆಯ ಸಂಧಿಯಲ್ಲಿ ಬೋಳಬಸವೇಶರ ಬಗೆಗೆ ಅಥವಾ ಶಿಷ್ಯ ಪರಂಪರೆಯ ಹೆಸರನ್ನಾಗಲೀ ಉಲ್ಲೇಖಿಸಿಲ್ಲ. ಇಲ್ಲಿ ಉಕ್ತವಾಗಿರುವ ಬೋಳಬಸವೇಶರು ತೋಂಟದ ಸಿದ್ಧಲಿಂಗರ ಶಿಷ್ಯರಾಗಿರದ ಬಿಜ್ಜಾವರ ಮಹಾನಾಡಪ್ರಭುಗಳ ರಾಜಗುರು ಬೋಳ ಬಸವೇಶರು ಎಂದೆನಿಸುತ್ತದೆ.೨೫ ಇಮ್ಮಡಿ ಚಿಕ್ಕಭೂಪಾಲನಅದನ್ನು ಗುರುಶಿಷ್ಯರ ಸಂಬಂಧ ಎಂಬಂತೆ 'ಗುರುರಾಜ ಚಾರಿತ್ರ'ದ ಹೇಳಿಕೆಯು ಸಾಂಗತ್ಯದಲ್ಲಿ ಬೋಳಬಸವೇಶ ಮತ್ತು ಇಮ್ಮಡಿ ಚಿಕ್ಕ ಭೂಪಾಲನ ವಿಷಯ ಇದ್ದು ಬೆಂಬಲಿಸಿದೆ. 'ಬೋಳ ಬಸವೇಶರು ಸಿದ್ಧಪುರದೊಳಗೆ ಮೂರ್ತಗೊಂಡು ಲಿಂಗವಾದರು'೨೬ ಎಂಬ ಹೇಳಿಕೆ ಮಹತ್ತರವಾದುದು ಏಕೆಂದರೆ `ನಿರಂಜನ ವಂಶರತ್ನಾಕರ' ಮತ್ತು 'ಮಹಾಲಿಂಗೇಂದ್ರವಿಜಯಗಳು' ಬೋಳಬಸವೇಶ್ವರರ ಗದ್ದುಗೆ ಮಧುಗಿರಿಯಲ್ಲಿದೆ. ಎಂದು ಹೇಳಿವೆ. ಈಗಿನ ಮಧುಗಿರಿಯಲ್ಲಿ ಬೋಳಬಸವೇಶ್ವರರ ಗದ್ದುಗೆ ಎಲ್ಲಿಯೂ ಕಂಡುಬರುವುದಿಲ್ಲ. ಈ ಎರಡು ಕೃತಿಗಳ ಹೇಳಿಕೆಯನ್ನು ಸಮರ್ಥಿಸಲು ಬಿ. ಶಿವಮೂರ್ತಿಶಾಸ್ತ್ರಿಗಳು ಸಿದ್ದಾಪುರವು ಹಿಂದಿನ ಕಾಲದಲ್ಲಿ ಮಧುಗಿರಿಯ ವಿಸ್ತರಣ ಗ್ರಾಮವಾಗಿತ್ತು. ಅಂದು ಕೊಂಡರೆ ನಿರಂಜನವಂಶರತ್ನಾಕರದ ಪ್ರಮಾಣ ಶುದ್ಧವಾಗುತ್ತದೆ. ಎಂದು ಲೇಖನವೊಂದರಲ್ಲಿ ಹೇಳಿದ್ದಾರೆ. ಈ ಹೇಳಿಕೆಯನ್ನು ಬೆಂಬಲಿಸುವಂತೆ ಈಗಲೂ ಮದ್ದಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಬೋಳಬಸವೇಶ್ವರ ಗದ್ದುಗೆ ಮತ್ತು ಬೋಳಬಸವೇಶ್ವರ ಮಠಗಳು ಇರುವುದನ್ನು ಕ್ಷೇತ್ರಕಾರ್ಯದ ನಿಮಿತ್ತ ಸಂದರ್ಶಿಸಿದಾಗ ತಿಳಿದುಬರುತ್ತದೆ.

೪.ಗುಮ್ಮಳಾಪುರದ ಸಿದ್ಧಲಿಂಗಯತಿ: ಗುಮ್ಮಳಾಪುರದ ಸಿದ್ಧಲಿಂಗಯತಿಯು ಶೂನ್ಯಸಂಪಾದನೆಯಲ್ಲಿ ತನ್ನ ಬಗೆಗೆ ` ಅನಾದಿ ಪರಶಿವ ತಾನೆ ಲೀಲಾ ಕ್ರೀಡೆಗೋಸ್ಕರ ಮರ್ತ್ಯಕ್ಕೆ ಬಿಜಯಂಗೈದ ಕರಚರಣ ಅವಯವಮಂ ಧರಿಸಿದ ತೋಂಟದ ಸಿದ್ಧೇಶ್ವರನ  ವರಪುತ್ರನಾಗಿ ಜಗಹಿತಾರ್ಥವಾಗಿ ಗುಮ್ಮಳಾಪುರದ ಸಿದ್ಧಲಿಂಗದೇವರೆಂಬ ನಾಮವಿಡಿದು ಮತ್ತು ಶ್ರೀಮದ್ದೇಶಿಕ ಚಕ್ರವರ್ತಿಯೆನಿಪಾ ಸತ್ನೀರ್ತಿಕಾಂತಂ ಬುಧಸ್ತೋಮಾಂಬೋನಿಧಿ ಪೂರ್ಣಚಂದ್ರನನಿಶಂ ಶ್ರೀ ತೋಂಟದಾರ್ಯಂಗೆ ಸತ್ಕೃತೀಯಂ ಬೆತ್ತಗದೂರ ಬೋಳಬಸವೇಶಾಚಾರ್ಯ ಕಾರುಣ್ಯದಿಂ ಭೌಮಂ ಸಿದ್ಧಲಿಂಗ ಪೇಳ್ದನೊಲವಿಂದೀ ಶೂನ್ಯಸಂಪಾದನೆಯಂ’ ಎಂದು ಹಾಗೂ ಕೃತಿಯ ಕೊನೆಯಲ್ಲಿ  ಅನಾದಿ ಪರಶಿವ ತಾನೆ ತೋಂಟದ ಸಿದ್ಧೇಶ್ವರದೇವರ ದಿವ್ಯಶ್ರೀಪಾದಕ್ಕೆ ಸಮರ್ಪಿಸಿದ ಶೂನ್ಯ ಸಂಪಾದನೆ ಎಂದು  ಹೇಳಿಕೊಂಡಿದ್ದಾನೆ.   ಜೊತೆಗೆ ಸಮಾಪ್ತಿ ಕಂದ ಪದ್ಯ 4 ರಲ್ಲಿ, ತೋಂಟದ ಸಿದ್ಧೇಶ್ವರನ ಪಾದಮೂಲದ ಬಳಿ ಕುಳಿತ ಗುಮ್ಮಳಾಪುರಾಧೀಶನಾದ ತಾನು ಮೀಟೆನಿಸುವ ವಚನಾಮೃತದೂಟವ(ಶೂನ್ಯ ಸಂಪಾದನೆಯನ್ನು) ಶರಣಜನರ ಕರ್ಣಕ್ಕಿತ್ತುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕ್ರಿ.ಶ. 1580 ರ ಎಡೆಯೂರು ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ  ಜೊತೆಗೆ ಇದ್ದ ಇತರ ವಿರತರುಗಳ ಜೊತೆ ಗುಮ್ಮಳಾಪುರದ ಸಿದ್ಧಲಿಂಗರೂ ಇದ್ದರು ಎಂಬ ವಿವರ ಹಾಗೂ ಸಿದ್ಧನಂಜೇಶನ ರಾಘವಾಂಕ ಚರಿತದಲ್ಲಿಯ,  ತುಮಕೂರಿನಲ್ಲಿ ನಡೆದ  ತೋಂಟದ ಸಿದ್ಧಲಿಂಗರ ಮೆರವಣಿಗೆಯಲ್ಲಿ ಗುಮ್ಮಳಾಪುರದ ಸಿದ್ಧಲಿಂಗನೂ ಭಾಗವಹಿಸಿದ್ದನೆಂಬ ಹೇಳಿಕೆಯು ತೋಂಟದ ಸಿದ್ಧಲಿಂಗ ಯತಿಗಳ ಪರಂಪರೆಯವನು ಎಂಬುದನ್ನು ಸ್ಥಿರೀಕರಿಸುತ್ತದೆ.  ಜೊತೆಗೆ  ತುಮಕೂರು ಜಿಲ್ಲೆಯಲ್ಲಿ ದೊರೆತ ಜಕ್ಕಣಾರ್ಯ ಸಂಕಲಿತ ಏಕೋತ್ತರ ಶತಸ್ಥಲ ಹಸ್ತಪ್ರತಿಗೆ ಸಂಬಂಧಿಸಿದ ಪುಷ್ಪಿಕೆಯ ಆದಿಯಲ್ಲಿ   

 ಶ್ರೀ ಗುಮಳಾಪುರ ಸಿದ್ಧಲಿಂಗಾಯ ನಮಃ| ಯೆಕೋತ್ತರ ಸ್ವರವಚನ| 

 ಪಿಂಡಸ್ಥಲ ರಾಗಮಧುಮಾಧವಿ ಬಿಂದು-ವಿನ್ನಾಣದೊಳಗಂದವಿಟ್ಟಿಹ..........ಎಂದು 

ಅಂತ್ಯದಲ್ಲಿ......ಹೆಬ್ಬೂರ ದೇವರು ಬರದ್ದು ಗುರುಲಿಂಗವೇ ಗತಿ, ಮತಿ, ಶುಭಮಸ್ತು, ನಿರ್ವಿಘ್ನಮಸ್ತು ಗುಮ್ಮಳಾಪುರದ ಸಿದ್ಧಲಿಂಗದೇವರ ಪಾದವೆ ಗತಿ ಮತಿ ಅಯ್ಯ.......ಗುಂಮಳಾಪುರಾಧಿಪ ಸಿದ್ಧಲಿಂಗಾಯ ನಮಃ  ಎಂದಿದೆ. ಹಾಗೆಯೇ ಅದೇ ಕಟ್ಟಿನಲ್ಲಿಯ ಕೊನೆಯ ನಾಲ್ಕುಗರಿಗಳಲ್ಲಿ ವಾರ್ತೆ ಸೋಮಣ್ಣನ `ಪಂಚೀಕರಣ ಪದಗಳು' ಪರಿವರ್ಧಿನಿಷಟ್ಪದಿಯ ಕೃತಿಯ ಆದಿಯಲ್ಲಿ ಶ್ರೀಗುರುಗುಮ್ಮಳಾಪುರ ಸಿದ್ಧಲಿಂಗಾಯ ನಮಃ ಎಂದಿದೆ.  ತುಮಕೂರು ಜಿಲ್ಲೆಯ ಈ ಹಸ್ತಪ್ರತಿ ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಶೂನ್ಯ ಸಂಪಾದನಾಕಾರ ಗುಮ್ಮಳಾಪುರ ಸಿದ್ಧಲಿಂಗಯತಿಗೂ ತೋಂಟದಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಯವನು ಎಂಬುವುದಕ್ಕೆ ಪುರಾವೆಯನ್ನು ಒದಗಿಸುತ್ತದೆ.

೫.ಗೂಳೂರು ಸಿದ್ಧವೀರಣ್ಣೊಡೆಯರು :  ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರ ಶಿಷ್ಯರಾಗಿದ್ದು, ಐದನೆಯ ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ.  ಗುಮ್ಮಳಾಪುರದ ಸಿದ್ಧಲಿಂಗರ ಪ್ರಭಾವ ತನ್ನ ಮೇಲೆ ಆಗಿರುವ ಬಗೆಗೆ ಸ್ವತಹ ಗೂಳೂರುಸಿದ್ಧವೀರಣ್ಣೊಡೆಯನೇ ಕೃತಿಯ  ಕೊನೆಯಲ್ಲಿ ಉಲ್ಲೇಖಿಸಿದ್ದಾನೆ.  ಗೂಳೂರುಸಿದ್ಧವೀರಣ್ಣೊಡೆಯನು ತನ್ನ ಕೃತಿಯ ಸಮಾಪ್ತಿ ವಾಕ್ಯದಲ್ಲಿ ಬರುವ ಗದ್ಯಭಾಗ ಮತ್ತು  ಅನಂತರ ಬರುವ ಮೂರು ವೃತ್ತ ಮತ್ತು ಕಂದಪದ್ಯಗಳಲ್ಲಿ ತನ್ನ ಕೃತಿ ಬಗ್ಗೆ ಮತ್ತು ಗುರುಪರಂಪರೆಯ ಬಗೆಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾನೆ.  ಇವರು ಬೋಳಬಸವೇಶ್ವರರಾದ ಮೇಲೆ ಅನುಕ್ರಮವಾಗಿ ಶೂನ್ಯಪೀಠದ ಗಾದಿಗೇರಿದವರು. ಇವರು ಶೂನ್ಯಸಂಪಾದನೆಯ ಪರಿಷ್ಕರಣವನ್ನು ಕೈಗೆತ್ತಿಕೊಂಡಿದ್ದು ಗಮನಾರ್ಹವಾದುದಾಗಿದೆ. ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಆಧಾರವಾಗಿಟ್ಟು ಕೊಂಡು `ಇಲ್ಲಿ ವಚನಕ್ರಮ ತಪ್ಪಿದಡೆ ನಿಮ್ಮ ಪರಿಜ್ಞಾನದಿಂದ ತಿದ್ದಿಕೊಂಬುದೆಂದು ಎನಲಾಗಿ ಆ ವಾಕ್ಯವಿಡಿದು ಗುಮ್ಮಳಾಪುರದ ಸಿದ್ಧಲಿಂಗದೇವರು, ಅಲ್ಲಿ ಸಿದ್ಧರಾಮಯ್ಯದೇವರಿಗೆ ದೀಕ್ಷಾಕ್ರಮವಿಲ್ಲದಿರಲು, ಬಸವಾದಿ ಪ್ರಮಥರ ವಚನ ಪ್ರಸಿದ್ಧವಾಗಿ ಸೇರಿಸಿದರು. ಆ ಪರಿಯಲೆ ಅನಿರ್ವಾಚ್ಯ ಪರಂಜ್ಯೋತಿಸ್ವರೂಪ ಷಟ್‍ಸ್ಥಲ ಸಂಪನ್ನ ಷಡುಲಿಂಗಾಂಗಭರಿತ,ಶರಣ ಜನಬಾಂಧವ, ಶರಣಜಲಹೃತ್ಕಮಲ ಕರ್ಣಿಕಾವಾಸ ಅನಾದಿ ಪರಶಿವನೆನಿಸುವ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳಬಸವೇಶ್ವರನು, ಆ ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯರು ಈ ಶೂನ್ಯಸಂಪಾದನೆಯಂ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ತೋಂಟದ ಸಿದ್ಧಲಿಂಗನ ಶಿಷ್ಯನಾದ ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದರೂ ಕೊನೆಯ ಕಂದ ಪದ್ಯದಲ್ಲಿ ಈತ ತನ್ನನ್ನು ` ಗುರುತೋಂಟದ ಸಿದ್ಧೇಶನ ಚರಣಾಂಬೋಜಾತಮಂ ಸ್ಥಿರೀಕೃತ ಚಿತ್ತೋತ್ಕರ ಸಿದ್ಧವೀರಯೋಗೀಶ್ವರ ಎಂದು ಕರೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಿದ್ಧವೀರಣಾರ್ಯನು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯಪರಂಪರೆಯಲ್ಲಿಯೇ ಬಂದು ಅವರ ಪ್ರಶಿಷ್ಯರಾಗಿ ಗುಮ್ಮಳಾಪುರ ಸಿದ್ಧಲಿಂಗಯತಿಗಳ ತರುವಾಯ ಶೂನ್ಯಪೀಠದ ಅಧ್ಯಕ್ಷರಾಗಿದ್ದಾರೆ. ಈತನು ತನ್ನ ಗುರುವಿನ ಹೆಸರನ್ನು ಹೇಳುವಾಗ ತೋಟದ ಸಿದ್ಧಲಿಂಗರನ್ನು ಮತ್ತು ಬೋಳಬಸವರಿಬ್ಬರನ್ನು ಪ್ರಸ್ತಾಪ ಮಾಡುತ್ತಾನೆ. ಹೀಗಾಗಿ ತೋಂಟದ ಸಿದ್ಧಲಿಂಗ ಯತಿಗಳೂ ಗುರುಗಳು ಮತ್ತು ಬೋಳಬಸವೇಶರೂ ಗುರುಗಳಾಗಿದ್ದಾರೆ.  ತೋಂಟದ ಸಿದ್ಧಲಿಂಗಯತಿಗಳು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವರು. ಇವರು ವಚನರಚನೆ ಮತ್ತು ವಚನಸಾಹಿತ್ಯ ಸಂರಕ್ಷಣೆಯ ಜೊತೆಗೆ ಶೂನ್ಯಸಂಪಾದನೆಯ ಪರಿಷ್ಕರಣ ಹೊಸದಿಕ್ಕನ್ನು ಹಿಡಿಯಲು ಕಾರಣಕರ್ತರಾದವರು. 

ಕ್ರಿ.ಶ.1603ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರ ವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ. 1603ರಲ್ಲಿ ಗೂಳೂರು ಸಿದ್ಧವೀರೇಶ್ವರ ದೇವರು ಜೀವಿಸಿದ್ದರು ಎಂಬುದು ತಿಳಿದುಬರುತ್ತವೆ.  ಇವರ ಶೂನ್ಯಸಂಪಾದನೆಯನ್ನು ವಿರಕ್ತ ತೊಂಟದಾರ್ಯ ಕ್ರಿ.ಶ,1616ರಲ್ಲಿ ಪ್ರತಿಮಾಡಿದ್ದಾರೆ. ಈ ಹಸ್ತಪ್ರತಿಯ ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯಕ್ಕೆ ಆಕರವಾಗಿದೆ. ಇವರು ಸಂಕಲಿಸಿದ್ದ ಕೃತಿ ಶೂನ್ಯಸಂಪಾದನೆ ಇದು ಕೊನೆಯ ಮತ್ತು ಶ್ರೇಷ್ಠವಾದ ಸಂಪಾದನೆ. ಹೆಸರಿನ ಸೊಗಸು, ಅನುಭವದ ಆಳ, ತಂತ್ರ ಜೋಡಣೆಯಿಂದಾಗಿ ಇದು ಪಸರಿಪ ಕನ್ನಡಕ್ಕೆ ಆದಿ ಅಂತ್ಯ ಗದ್ಯ ವಚನಗಳ ಮಿಶ್ರಣವಾದ ಇದು ಒಂದು ಬಗೆಯ ಚಂಪು ಕೃತಿಯಾಗಿದೆ. ಜಾಗತಿಕ ಸಾಹಿತ್ಯದ ಮಟ್ಟದಲ್ಲಿ ನಿಲ್ಲುವ ತೋಂಟದಾರ್ಯ ಪರಂಪರೆಯ ವಿಶಿಷ್ಟ ಕಾಣಿಕೆಯಾಗಿದೆ. ಗುಮ್ಮಳಾಪುರದ  ಸಿದ್ಧಲಿಂಗ ಯತಿ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರ ಆಲೋಚನೆ ರೂಪುಗೊಳ್ಳಲು ಸಿದ್ಧಲಿಂಗಯತಿಗಳು ಕಾರಣರಾಗಿದ್ದಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ಆಧಾರ. ವಾಸ್ತವವಾಗಿ ಅವರಿಬ್ಬರು ಇವರ ಶಿಷ್ಯರೆ. ಗುಮ್ಮಳಾಪುರ ಸಿದ್ಧಲಿಂಗಯತಿ ಅವರ ನೇರ ಶಿಷ್ಯ; ಸಿದ್ಧವೀರಣ್ಣೊಡೆಯ ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶಿಷ್ಯ ಇಬ್ಬರೂ ತೋಂಟದ ಸಿದ್ಧಲಿಂಗ ಯತಿಗಳನ್ನು ಭಕ್ತಿಯಿಂದ ಸ್ಮರಿಸಿದ್ದಾರೆ. 

೬.ಸ್ವತಂತ್ರ ಸಿದ್ಧಲಿಂಗೇಶ್ವರ : ತೋಂಟದ ಸಿದ್ಧಲಿಂಗ ಯತಿಗಳಿಗೆ ಸಿದ್ಧಲಿಂಗೇಶ್ವರ, ದೊಡ್ಡ ಸಿದ್ಧಲಿಂಗೇಶ್ವರ ಎಂಬ ಇಬ್ಬರು ಶಿಷ್ಯರು ಇದ್ದಂತೆ ತಿಳಿದು ಬರುತ್ತದೆ. ಸ್ವತಂತ್ರ ಸಿದ್ಧಲಿಂಗೇಶ್ವರರು ಇವರಲ್ಲಿ ಒಬ್ಬರಾಗಿರ ಬಹುದೆಂದು ತೋರುತ್ತದೆ.

ವಿರೂಪಾಕ್ಷ ಪಂಡಿತಾರಾಧ್ಯನು ತನ್ನ ಚೆನ್ನಬಸವ ಪುರಾಣದಲ್ಲಿ “ತೋಂಟದ ಸಿದ್ಧಲಿಂಗೇಶ್ವರ”ನ ಜೊತೆ ಸಂಚಾರ ಮಾಡಿದ ಚರ ಜಂಗಮಮೂರ್ತಿಗಳ ಒಂದು ಪಟ್ಟಿಯನ್ನು  ಕೊಟ್ಟಿದ್ದಾನೆ. ಸಿದ್ಧಲಿಂಗೇಶ್ವರ, ಕಂಬಾಳದೇವ, ಸಿದ್ಧನಂಜೇಶ್ವರ, ಚೆನ್ನದೇವ, ದೊಡ್ಡಸಿದ್ಧಲಿಂಗೇಶ್ವರ, ಕಂಕಣದೇವ, ಲಂಬಕರ್ಣದ ದೇವರು, ಸಿದ್ಧಮಲ್ಲೇಶ್ವರ, ಗುಮ್ಮಳಾಪುರದ ಶ್ರೇಷ್ಠ ಸಿದ್ಧಲಿಂಗೇಶ್ವರ, ಯಡತೊರೆ ಪುರದಗುರು, ಸಿದ್ಧವೀರಣ್ಣೊಡೆಯ, ಘನಲಿಂಗದೇವರು, ಚಿಕ್ಕಮಲ್ಲೇಶನು ತೋಂಟದ ಸಿದ್ಧಲಿಂಗೇಶ್ವರನ ಜೊತೆ ಸಂಚಾರ ಮಾಡುತ್ತಾ

ಇಂತಿವರ್ ಮೊದಲಾದ ನಿರತರೇಳ್ನೊರ್ವರುಂ

ಸಂತತಂಗೂಡಿ ಷಟ್ಥ್ಸಲಮಾರ್ಗಮಂ ಧರೆಯೊ

ಳಂತರಿಸದಂತೆ ನೆಲೆಗೊಳಿಸುತ್ತೆ ಪೂಜೆಗೊಳುತಿರದೆ ನಿಜಮುಕ್ತರಾದರು 

ಈ ರೀತಿಯಲ್ಲಿ ಇವರೇ ಮೊದಲಾದ ಏಳನೂರು ಮಂದಿ ವಿರಕ್ತರು ಸದಾಕಾಲ ಜೊತೆಯಲ್ಲಿದ್ದು ಷಟ್ಸ್ಥಲಮಾರ್ಗ ಭೂಮಿಯಲ್ಲಿ ಅಳಿಸಿಹೋಗದಂತೆ ನೆಲೆಗೊಳಿಸುತ್ತಾ ಪೂಜೆ ಮಾಡಿಕೊಳ್ಳುತ್ತ ಮುಕ್ತರಾಗುತ್ತಾರೆ.

ಪ್ರೊ.ಸಿ. ಮಹಾದೇವಪ್ಪನವರು ಚೆನ್ನಬಸವಪುರಾಣದ ಮೇಲೆ ಉಲ್ಲೇಖಿಸಿದ ಪದ್ಯದಲ್ಲಿ ಉಲ್ಲೇಖಗೊಂಡಿರುವ ಸಿದ್ಧಲಿಂಗೇಶ್ವರನೆ “ಸ್ವತಂತ್ರ ಸಿದ್ಧಲಿಂಗೇಶ್ವರ ಎಂದು ನಿರ್ಧರಿಸಿದ್ದಾರೆ. ಅವರು ಆ ರೀತಿ ನಿರ್ಧರಿಸಲು ಕಾರಣ ಮುಕ್ತ್ಯಾಂಗನ ಕಂಠಮಾಲೆ ಮತ್ತು ಜಂಗಮ ರಗಳೆಯ ಉಲ್ಲೇಖಗಳು “ಮುಕ್ತ್ಯಾಂಗನ ಕಂಠಮಾಲೆ” ಕೃತಿಯ ಪ್ರಾರಂಭದಲ್ಲಿದೆ.

ಶ್ರೀಗುರುಬಸವಲಿಂಗಾಯ ನಮಃ|ಶ್ರೀ ಗುರುವಿರೂಪಾಕ್ಷಲಿಂಗಾಯ ನಮಃ

ಸ್ವತಂತ್ರ ಸಿದ್ಧಲಿಂಗೇಶ್ವರಸ್ವಾಮಿಯವರು ನಿರೂಪಿಸಿದ ಮುಕ್ತ್ಯಾಂಗನಾಕಂಠಮಾಲೆ

ಶ್ರೀ ಗುರುಸ್ವತಂತ್ರ ಸಿದ್ಧಲಿಂಗೇಶ್ವರರಾಯ ನಮಃ೩೧

ಎಂದು ಬರೆದಿದ್ದು ತದನಂತರ ೨೧ ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳಿಗೆ ವಿಸ್ತೃತವಾದ ಟೀಕೆ ಇದೆ. 

ಡಾ. ಎಚ್.ಪಿ. ಮಲ್ಲೇದೇವರು ಅವರು ವಿರಕ್ತ ತೋಂಟದಾರ್ಯನ ಸಿದ್ಧೇಶ್ವರ ಪುರಾಣದ ಸಂಧಿ ೧೫ ಪದ್ಯ ೪೨ರಲ್ಲಿ ಉಲ್ಲೇಖಗೊಂಡ ದೊಡ್ಡಸಿದ್ದೇಶನೇ ಸ್ವತಂತ್ರ ಸಿದ್ಧಲಿಂಗೇಶ್ವರ ಇರಬೇಕು ಎಂದು ಊಹಿಸಿದ್ದರು. ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ “ಸ್ವತಂತ್ರ ಸಿದ್ಧಲಿಂಗೇಶ್ವರನ ಕೃತಿಗಳು” ಸಂಪಾದಿಸಿರುವ ಡಾ. ಎಚ್.ಪಿ. ಮಲ್ಲೇದೇವರು ಪ್ರಸ್ತಾವನೆಯಲ್ಲಿ ಸ್ವತಂತ್ರ ಸಿದ್ಧಲಿಂಗೇಶ್ವರರ ಜೀವನ ಸಾಧನೆ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಅವರ ಒಟ್ಟು ಅಭಿಪ್ರಾಯ ದೊಡ್ಡ ಸಿದ್ಧಲಿಂಗೇಶ್ವರನೆ ಸ್ವತಂತ್ರ ಸಿದ್ಧಲಿಂಗೇಶ್ವರ ಎಂದಿದ್ದಾರೆ.

ಕಾಪನಹಳ್ಳಿ ಗವಿಮಠದ ಗದ್ದುಗೆ ಪೂಜೆ ಮಾಡುವವರು ಈಗಲೂ ಸಿದ್ಧಲಿಂಗೇಶ್ವರ ಗದ್ದುಗೆ ಎಂದೇ ಕರೆಯುತ್ತಾರೆ. “ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ” ಅಂಕಿತದಲ್ಲಿ ಒಟ್ಟು ೪೩೫( ಐದು ಹೆಚ್ಚಿನ ವಚನಗಳು)  ವಚನಗಳನ್ನು ಬರೆದಿರುವುದರ ಜೊತೆಗೆ, `ಜಂಗಮರಗಳೆ’ ಹಾಗೂ ವಚನ ಸಂಕಲನರೂಪದ ೨೧ ವಚನಗಳ “ಮುಕ್ತ್ಯಾಂಗನಾ ಕಂಠಮಾಲೆ”ಗಳನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ. ವೀರಶೈವ ಸಿದ್ಧಾಂತವನ್ನು ಬೋಧಿಸುತ್ತದೆ. ಸ್ವತಂತ್ರ ಸಿದ್ಧಲಿಂಗರ ಸ್ಥಳದ ಬಗೆಗೆ ಲಿಂ.ಡಾ.ಎಚ್.ಪಿ. ಮಲ್ಲೇದೇವರು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿಯಲ್ಲಿದ್ದು ಅಲ್ಲಿಗೆ ಸಮೀಪದಲ್ಲಿನ ಗಜರಾಜಗಿರಿಯಲ್ಲಿ ಈತನ ಸಮಾಧಿಯಿದೆಯೆಂದೂ ಅಲ್ಲಿ ಪ್ರತಿವರ್ಷ ಮಾಘ ಶುದ್ಧ ಪೂರ್ಣಿಮಾ ದಿನ ಜಾತ್ರೆ ನಡೆಯುತ್ತಿರುವುದಾಗಿಯೂ ತಿಳಿದುಬರುತ್ತದೆ. 

ಕಾಪನಹಳ್ಳಿ ಗಜರಾಜಗಿರಿಯಲ್ಲಿ ಇರುವ ಸ್ವತಂತ್ರ ಸಿದ್ಧಲಿಂಗೇಶ್ವರರ ವಿಗ್ರಹ ಇಷ್ಟಲಿಂಗಾನುಷ್ಠಾನ ಭಂಗಿಯದು. ಈ ಉತ್ಸವಮೂರ್ತಿಯನ್ನು `ಜಂಗಮೋದ್ಧರಣಿ’ ಪ್ರಕಾರ ಮಾಡಲಾಗಿದೆ. ಇಂತಹ ಉತ್ಸವಮೂರ್ತಿಗಳು ಗುಬ್ಬಿ, ಎಡೆಯೂರು, ಕಗ್ಗೆರೆ, ಸಿದ್ಧಗಂಗೆ, ಹುಲಿಕಲ್ಲು ಮುಂತಾದ ಮಠ, ದೇವಾಲಯಗಳಲ್ಲಿ ಇದೆ. 

೭.ಘನಲಿಂಗ ದೇವ : ಮೋಹದ ಚನ್ನಮಲ್ಲಿಕಾರ್ಜುನ ಅಂಕಿತದ ವಚನಗಳ ಘನಲಿಂಗಿ ದೇವ ಅವರ ೬೩+೩ ವಚನಗಳು ಉಪಲಬ್ದವಿದೆ. ಈತ ಮೈಸೂರು ಜಿಲ್ಲೆಯಲ್ಲಿನ ಕಪಿಲಾ ನದಿತೀರದಲ್ಲಿರುವ ಶ್ರೀ ಸುತ್ತೂರು ವೀರ ಸಿಂಹಾಸನದ ಪೀಠಾಧಿಪತಿಯಾಗಿದ್ದರು. ವಚನವೊಂದರಲ್ಲಿ ಸುತ್ತೂರು ಸಿಂಹಾಸನದ ಪರ್ವತ ದೇವರ ಶಿಷ್ಯರು ಬಂಡಾರಿ ಬಸವೊಪ್ಪೊಡೆಯ ದೇವರು ಇತ್ಯಾದಿ ತನ್ನ ಹಿಂದಿನ ಗುರು ಪರಂಪರೆಯನ್ನು ಸ್ಮರಿಸಿದ್ದಾನೆ. ಇವರ ಶಿಷ್ಯರು ಕೂಗಲೂರ ನಂಜಯ್ಯ ದೇವರು. ಅಲ್ಲದೆ ಪರಮಾರಾಧ್ಯ ತೋಂಟದಾರ‍್ಯರು ಘನಲಿಂಗಿ ಎಂಬ ನಾಮಕರಣವನ್ನು ತನಗೆ ಮಾಡಿದಿದ್ದುದಾಗಿ ತಿಳಿಸಿದ್ದಾರೆ.೭ ವಿರೂಪಾಕ್ಷ ಪಂಡಿತರು ೧೯೮೪ರ ಚನ್ನಬಸವ ಪುರಾಣ (೬೩-೪೭)ರಲ್ಲಿ ವಿರಕ್ತ ತೋಂಟದಾರ‍್ಯ (೧೬೧೬) ಮತ್ತು ಸಿದ್ಧೇಶ್ವರ ಪುರಾಣ (೧೫೪೬)ದಲ್ಲೂ ನಿರಂಜನ ವಂಶರತ್ನಾಕರಗಳಲ್ಲಿ ಘನಲಿಂಗಿ ದೇವನೆಂದು, ತೋಂಟದಾರ‍್ಯರ ಶಿಷ್ಯ ಪರಂಪರೆಯವನೆಂದು ಉಲ್ಲೇಖಗೊಂಡಿದೆ. ತುಮಕೂರಿನಲ್ಲಿ ಸಿದ್ದಲಿಂಗ ಸ್ವಾಮಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ ಸರಳ ಜೀವಿ ಶರಣ ಮತ್ತು ವಿದ್ವಾಂಸ ಎಲ್ಲರೊಡನೆ ಸಹನೆಯಿಂದ ವರ್ತಿಸುವ ಈ ಘನಲಿಂಗಿಯವರು ಸಮುದಾಯದಲ್ಲಿ ಒಬ್ಬರು. ಅವರ ಆಗಿನ ವ್ಯಕ್ತಿತ್ವ ಚಿತ್ರಣವನ್ನು ಎಳೆ ಎಳೆಯಾಗಿ ಎಲ್ಲರಿಗೂ ಮನದಟ್ಟು ಆಗುವ ಹಾಗೆ ಆತನ ತ್ರಿಭಾವದ ತ್ರಿಕರಣವನ್ನು ಸ್ಥೂಲ ಸೂಕ್ಷ್ಮ ಕಾರಣವಾದ ಶರೀರವನ್ನು ಆತನ ವಿದ್ವತ್ ಶಕ್ತಿಯನ್ನು ವಿರಕ್ತ, ತೋಂಟದಾರ‍್ಯ ಈ ರೀತಿ ಚಿತ್ರಿಸಿದ್ದಾರೆ. `ಉರೆ ಕೃಷ್ಣಕಂಬಳದ ಪುಡೆದುತ್ತ ಮಾಂಗವಂ

ನೆರೆ ಮುಂಡಿತಂಗೆಯ್ದು ಕರತಲದ ಲಿಂಗದೊಳ್ 

ಬೆರಗುವಡೆದಿತರೇತರವನರಿಯದಿರ್ಪ ನಿಚ್ಚಳ ವಿರತʼ೮

ಘನಲಿಂಗಿ ದೇವ ತೋಂಟದ ಸಿದ್ಧಲಿಂಗ ದೇವರ ಕಿರಿಯ ಸಮಕಾಲೀನ. ಸಿದ್ಧಲಿಂಗರು ಕ್ರಿ.ಶ.೧೫೬೧ರಲ್ಲಿ ಜೀವಂತರಾಗಿದ್ದರು ಎನ್ನುವ ಅಂಶ ಶಾಂತೇಶನ ಸಿದ್ದೇಶ್ವರ ಪುರಾಣದಲ್ಲಿ ತಿಳಿದು ಬರುತ್ತದೆ. ೧೫೧೪ರಲ್ಲಿ ನಂಜನಗೂಡಿನ ೩ ಶಿಲಾಶಾಸನಗಳಲ್ಲಿ೯ ಈತನ ಪ್ರಸ್ತಾಪವಿದೆ. ಘನಲಿಂಗಿ ದೇವ ೧೬ನೇ ಶತಮಾನದ ಪೂರ್ವೋತ್ತರ ಕಾಲಮಾನದಲ್ಲಿ ಬದುಕಿ ಬಾಳಿದ್ದಾನೆ. ಈತನ ಸಮಾಧಿಯು ತೋಂಟದ ಸಿದ್ಧಲಿಂಗರು ತಪೋನುಷ್ಠಾನಗೊಂಡಿದ್ದ ಕಗ್ಗರೆಯಲ್ಲಿ ಇದೆ. ಇವರ ಅಂಕಿತ “ಘನಲಿಂಗಿ ಮೋಹದ ಚೆನ್ನ ಮಲ್ಲಿಕಾರ್ಜುನ” ಇವರ ಸಮಾಧಿಯು ಕಗ್ಗೆರೆಯಲ್ಲಿದೆ. ಸದ್ಯಕ್ಕೆ ಇವರ ೬೬ ವಚನಗಳು ಲಭ್ಯವಿವೆ.

ಗುರುನಂಜ : ಈತನು ಭಟ್ಟಭಾಸ್ಕರ ಕೃತ ಯಜುರ್ವೇದ ಭಾಷ್ಯಕ್ಕೆ ಕನ್ನಡ ಟೀಕೆಯನ್ನು ಬರೆದಿದ್ದಾನೆ. ಇವನ ಟೀಕೆ ಪ್ರೌಢವಾಗಿದೆ. ಇದಕ್ಕೆ “ರುದ್ರಭಾಷ್ಯ” ಎಂಬ ಹೆಸರಿರುವಂತೆ ತೋರಿಬರುತ್ತದೆ. “ಉಮಾಸ್ತೋತ್ರ ಷಟ್ಪದಿ”, “ಅಷ್ಟಾವರಣ ಸ್ತೋತ್ರ ಷಟ್ಪದಿ” ಎಂಬ ಎರಡು ಗ್ರಂಥಗಳು ದೊರೆಯುತ್ತವೆ. ಬಹುಶಃ ಇವು ಈ ಕವಿಯಿಂದಲೇ ಸಂಕಲಿತವಾಗಿರಬಹುದು. 

೮. ಗುಬ್ಬಿ ಮಲ್ಲಣಾರ್ಯ :

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಸ್ಥಾನ ಪಡೆದಿರುವ ತುಮಕೂರು ಜಿಲ್ಲೆಯ ಪ್ರಮುಖ ಕವಿಗಳಲ್ಲಿ ಒಬ್ಬನು. ಇವನು ಗುಬ್ಬಿಯ ಮಲ್ಲಣ್ಣನ ಮೊಮ್ಮಗ, ಈತನ ತಂದೆ ಗುರು ಭಕ್ತ, ತಾಯಿ ಸಪ್ಪೆಯಮ್ಮ, ಈತನ ಗುರು ಶಾಂತನಂಜೇಶ. “ಈತನ ಕಾಲ ಕ್ರಿ.ಶ. 1531. ಪ್ರಕಾಂಡ ಪಂಡಿತನೂ, ಬಹುಭಾಷಾ ಸಂಪನ್ನನೂ ಆಗಿದ್ದನು”.೪೪

ಬಸವ ಪುರಾಣದಲ್ಲಿ ನಿಷ್ಣಾತನಾಗಿದ್ದರಿಂದ ಬಸವ ಪುರಾಣದ ಮಲ್ಲಣಾರ್ಯ ಎಂಬ ಹೆಸರಿನಿಂದಲೇ ಕರೆಯಲ್ಪಟ್ಟ ಪ್ರಕಾಂಡ ಪಂಡಿತನೂ ಬಹುಭಾಷಾ ಸಂಪನ್ನನೂ ಆಗಿದ್ದನು. ಈತನು ೧.  ಭಾವಚಿಂತಾರತ್ನ, 2.ವೀರಶೈವಾಮೃತಮಹಾಪುರಾಣ, 3. ಪುರಾತನರ ರಗಳೆ ಕೃತಿಗಳನ್ನು ರಚಿಸಿದುದಾಗಿ ತಿಳಿದುಬಂದಿದೆ.

ತನ್ನ ಗುರು ಪರಂಪರೆಯನ್ನು ಪ್ರಸ್ತಾಪಿಸಿದ್ದಾನೆ. ಸಿದ್ಧಮಲ್ಲೇಶ ಕವಿಯು ಈತನ ದೀಕ್ಷಾ ಗುರುವಾದರೆ, ಗುಮ್ಮಳಾಪುರದ ಶಾಂತೇಶ ವಿದ್ಯಾಗುರು, ಜೊತೆಗೆ ನಾಗವಲ್ಲಿಯ ಶಿವಪೂಜೆಯಾರ್ಯ, ಸಪ್ಪೆಯ ಲಿಂಗಣಾಚಾರ್ಯ, ಶಿವಾನುಭವಿ ಹಲಗೆಯಾರ್ಯ ಮೊದಲಾದವರು ಈತನ ಕಾವ್ಯ ರಚನೆಗಳಿಗೆ ಗುರು ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಮಲ್ಲಣಾರ್ಯನು ತನ್ನ ಕಾವ್ಯಗಳಲ್ಲಿ ತನ್ನ ಪೂರ್ವಿಕರ ಹೆಸರುಗಳನ್ನು ಹಾಗೂ ಅವರ ಹಿರಿಮೆಯನ್ನು ಸ್ತುತಿಸಿದ್ದಾನೆ. ಅಮರಗುಂಡದ ಮಲ್ಲಿಕಾರ್ಜುನಾರ್ಯನ ನಿರೂಪದ ಮೇರೆಗೆ ಶೂಲವನ್ನೇರಿದ ಮಹಾಮಹೀಮನೊಬ್ಬನ ವಂಶದಲ್ಲಿ ಗುಬ್ಬಿಯ ಮಲ್ಲಣಾಚಾರ್ಯನೆಂಬುವನು ಜನಿಸುತ್ತಾನೆ. 

“ಮಲ್ಲಣಾರ್ಯನು ಭಾವಚಿಂತಾರತ್ನದ ಪ್ರಾರಂಭದಲ್ಲಿ ತನಗೆ ಪೂಜ್ಯರೆಂದು ಹೇಳಿ ಸಿದ್ಧಮಲ್ಲಿಕಾರ್ಜುನ (ಸಿದ್ಧಮಲ್ಲೇಶ), ಗೂಳುರು ಶಾಂತಿದೇವ, ಗುಮ್ಮಳಾಪುರದ ಶಾಂತೇಶ, ನಾಗವಲ್ಲಿಯ ಶಿವಪೂಜೆಯಾರ್ಯಾ, ಚಿಕ್ಕಬಸವಾಂಕ ಈ ಮೊದಲಾದ ಮಹನಿಯರನ್ನು ಸ್ತುತಿಸಿದ್ದಾನೆ”.

೧೧. ಶಾಂತೇಶ: ಸಂಸ್ಕೃತ ಭಾಷೆಯ ಪ್ರಕಾಂಡ ಪಂಡಿತರಾಗಿದ್ದರು. ತೋಂಟದ ಸಿದ್ಧಲಿಂಗ ಯತಿಗಳ ಬಗೆಗೆ ಗೌರವ ಭಾವನೆಯನ್ನು ಇಟ್ಟುಕೊಂಡು ಪರಂಪರೆಯನು ಮುಂದುವರೆಸಿಕೊಂಡು ಬಂದವನು. ಅದೇ ಮಾರ್ಗದಲ್ಲಿ ಈತನೂ ಕನ್ನಡ ಸಾಹಿತ್ಯಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾನೆ. ಈತನ ತಂದೆ ವೀರಶೈವಾಮೃತ ಪುರಾಣದಂತ ಧರ್ಮ ಗ್ರಂಥವನ್ನು ರಚಿಸಿದ್ದರೆ ಮತ್ತು ಸತ್ಯೇಂದ್ರಚೋಳನ ಕಥನ ಕಾವ್ಯ ರಚಿಸಿದ್ದ, ಮುತ್ತಾತ ವಚನ ಸಂಕಲನದ ಮೂಲಕ ಗಣಭಾಷಿತ ರತ್ನಮಾಲೆ ಕೃತಿ ರಚನೆಗಳ ಮೂಲಕ ಪ್ರಸಿದ್ಧಿಯಾಗಿದ್ದರು. ಹೀಗೆ ವೀರಶೈವವನ್ನೇ ಹಾಸಿ ಹೊದ್ದುಕೊಂಡಿದ್ದಂತಹ ಕುಟುಂಬದಲ್ಲಿ ಜನಿಸಿದ ಈತ ದಕ್ಷಿಣ ಕರ್ನಾಟಕದಲ್ಲಿ ಬಸವಾದಿ ಪ್ರಮಥರು ಸಿದ್ಧಪಡಿಸಿದ ವೀರಶೈವ ಲಿಂಗಾಯತ ಧರ್ಮವನ್ನು ಪುನರುಜ್ಜೀವನಗೊಳಿಸಲು ಹಗಲಿರುಳೂ ಶ್ರಮಿಸಿದ ತೋಂಟದ ಸಿದ್ಧಲಿಂಗಯತಿಗಳನ್ನು ಕುರಿತ ಚರಿತ್ರೆಯನ್ನು ಪುರಾಣ ಕಾವ್ಯದ ಮೂಲಕ ಹೇಳಿದ್ದಾನೆ. ಕವಿ ಶಾಂತೇಶನು ಸಿದ್ಧೇಶ್ವರ ಪುರಾಣವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ. ಇದು ಒಂದು ಸಾವಿರ ಪದ್ಯಗಳನ್ನು ಒಳಗೊಂಡಿದೆ. 

೧೨.ಕೆಸ್ತೂರ ದೇವ : ಕಾಲ ಹದಿನಾರನೆಯ ಶತಮಾನ. ಈತನು `ಗುರುಸಿದ್ಧಲಿಂಗ' ಎಂಬ ಅಂಕಿತವನ್ನು ಬಳಸಿ 

೧೦೦ ಸ್ವರ ವಚನಗಳನ್ನು ರಚಿಸಿದ್ದಾನೆ. ಈತನು ತೋಂಟದ ಸಿದ್ಧಲಿಂಗರ ಪರಂಪರೆಯವನಾಗಿದ್ದಾನೆ. ಈತನ ಸ್ಥಳ ತುಮಕೂರು ಜಿಲ್ಲೆಯ ಕೆಸ್ತೂರು ಆಗಿದೆ. ಈತನ ಸ್ವರವಚನಗಳನ್ನು ಎಂ.ಎಸ್. ಸುಂಕಾಪುರ ಸಂಪಾದಿಸಿ ೧೯೮೨ರಲ್ಲಿ ಪ್ರಕಟಿಸಿದ್ದಾರೆ.

೧೩. ವಿರಕ್ತ ತೋಂಟದಾರ್ಯ : ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದವನು. ಎಸ್. ಶಿವಣ್ಣನವರ 

ಪ್ರಕಾರ ಈತನ ಕಾಲ ಕ್ರಿ.ಶ. ೧೬೧೬. ಈತನ ಸಾಹಿತ್ಯ ದೃಷ್ಟಿ ವಿಪುಲ ಹಾಗೂ ವೈವಿದ್ಯಮಯವಾಗಿದೆ.ಸತ್ವ ಹಾಗೂ ಸಂಖ್ಯೆಯ ದೃಷ್ಟಿಯಿಂದಲೂ ಗಮನಾರ್ಹ ಎನಿಸಿವೆ. ವಿವಿಧ ವಸ್ತು ಹಾಗೂ ಛಂದೋಬಂಧಗಳಲ್ಲಿ ೨೪ ಕೃತಿಗಳನ್ನು ರಚಿಸಿದ್ದು ಪುರಾಣ, ಶತಕ, ರಗಳೆ, ನಿಘಂಟು, ನಾಮಾವಳಿ, ಟೀಕೆ, ಗದ್ಯ, ಚಂಪೂ, ಸ್ವರವಚನ, ಹಸ್ತಪ್ರತಿ ನಕಲು ಎಂದು ವಿಭಾಗಿಸಬಹುದು. ಈತನ ಸಮಾಧಿಯು ಮಧುಗಿರಿ ತಾಲ್ಲೋಕಿನ ಬೇಡತ್ತೂರಿನಲ್ಲಿರುವುದನ್ನು ಡಾ. ಬಿ. ನಂಜುಂಡ ಸ್ವಾಮಿಯವರು ಪತ್ತೆಹಚ್ಚಿದ್ದಾರೆ. 

೧. ಪುರಾಣಗಳು : ಶ್ರೀ ಸಿದ್ಧೇಶ್ವರ ಪುರಾಣ (ವಾರ್ಧಕ ಷಟ್ಪದಿ) ಪಾಲ್ಕುರಿಕೆ ಸೋಮೇಶ್ವರ ಪುರಾಣ (ವಾ.ಷ.)

೨. ಶತಕ : ನಿರಂಜನಲಿಂಗ ಶತಕ, ನಿರಂಜನ ಶತಕ, ಸಿದ್ಧಲಿಂಗೇಶ್ವರ ಶತಕ, ಸರ್ವಮಂಗಳೆ ಶತಕ 

(ಅಪ್ರಕಟಿತ). 

೩. ರಗಳೆ : ತೋಂಟದಾರ್ಯ ರಗಳೆ, ನೂತನ ಪುರಾತನರ ರಗಳೆ. 

೪. ನಿಘಂಟು : ಕರ್ನಾಟಕ ಶಬ್ದಮಂಜರಿ (ವಾರ್ಧಕ ಷಟ್ಪದಿ)

೫. ನಾಮಾವಳಿ : ಸ್ವರವಚನ : ೧. ಬಸವೇಶ್ವರನ ನೂರೆಂಟು ನಾಮ (ಕನ್ನಡ ಹಾಡು ಅಪ್ರಕಟಿತ), ೨. 

ಬಸವೇಶ್ವರನ ಸಹಸ್ರನಾಮ (ಸಂಸಪಿತ), ೩. ಶಿವ ಸಹಸ್ರನಾಮ (ಅಪ್ರಕಟಿತ), ೪. ದೇವಿ 

ಸಹಸ್ರನಾಮ, ೫. ಶರಣೆಯರ ನೂರೆಂಟು ನಾಮ, 

೬. ಪಿಂಡೋತ್ಪತ್ತಿ ಪದ (ಅಪ್ರಕಟಿತ). 

೬. ಟೀಕೆ : ಮನೋವಿಜಯ ತಾತ್ಪರ್ಯ ಚಂದ್ರಿಕೆ, ಶತಕತ್ರಯ ಟೀಕೆ, ಕೈವಲ್ಯಸಾರದ ಟೀಕೆ, 

ಪಂಚಗದ್ಯದ ಟೀಕೆ, ಶೈವ ಸಂಜೀವಿನಿ. 

೭. ಗದ್ಯ : ಅನಾದಿ ವೀರಶೈವ ಸಂಗ್ರಹ. 

೮. ಚಂಪು : ಚಿದಾನಂದ ಸಿಂಧು, ಷಟ್‌ಸ್ಥಲಜ್ಞಾನ ಚಿಂತಾಮಣಿ. 

೯. ಹಸ್ತಪ್ರತಿ ನಕಲು : ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಪ್ರತಿ ಮಾಡಿದ್ದಾನೆ.

ವಿರಕ್ತ ತೋಂಟದಾರ್ಯನು ವೀರಶೈವ ಸಿದ್ಧಾಂತ ಕ್ಷೇತ್ರಕ್ಕೆ, ಕಾವ್ಯ-ಛಂದಸ್ಸು ನಿಘಂಟು ಕ್ಷೇತ್ರಕ್ಕೆ, ಟೀಕೆ, ಕೋಶ ಕ್ಷೇತ್ರಕ್ಕೆ ಅದ್ವಿತೀಯವಾದ ಕೊಡುಗೆಯನ್ನು ಸಲ್ಲಿಸಿದ್ದಾನೆ. ದುರಾದೃಷ್ಟವಶಾತ್ ಈ ಕೃತಿಗಳ ಬಗೆಗೆ ಸರಿಯಾದ ಅಧ್ಯಯನ ನಡೆಯದ ಕಾರಣ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈತನಿಗೆ ಸರಿಯಾದ ಸ್ಥಾನ ದೊರಕದೇ ಹೋಗಿದೆ. ಹೀಗೆ ತೋಂಟದಾರ್ಯರ ಶಿಷ್ಯರಿಂದ ಶಿಷ್ಯ ಪರಂಪರೆಯವರಿಂದ ಸ್ವತಂತ್ರ ವಚನಗಳು ಹುಟ್ಟಿ ವಚನ ಪರಂಪರೆಯ ಪುನರುಜ್ಜೀವನಗೊಳ್ಳಲು ಅನುವಾಯಿತು. 

೧೪.ಸೋಮಶೇಖರ ಶಿವಯೋಗಿ (ಕ್ರಿ.ಶ.೧೮೪೩)

ಉನ್ನತ ಮಟ್ಟದ ಟೀಕಾಕಾರನೂ, ಬೆಡಗಿನ ವಚನಗಳಿಗೆ ಟೀಕೆ ಬರೆಯುವುದರಲ್ಲಿ ವಿಶಿಷ್ಟಪರಿಣತಿ ಪಾಂಡಿತ್ಯವನ್ನು ಪಡೆದವನೂ ಆದ ಸೋಮಶೇಖರ ಶಿವಯೋಗಿ ಮುರಿಗಾ ಗುರುಸಿದ್ಧನ ನೇರ ಶಿಷ್ಯನಾಗಿದ್ದಾನೆ. ಈತನ ಕಾಲವನ್ನು ಕವಿ ಚರಿತ್ರೆಕಾರರು ಸುಮಾರು ೧೭೦೦ ಎಂದು ನಿರ್ಧರಿಸಿದ್ದರು. ಆದರೆ ತೋಂಟದ ಸಿದ್ಧಲಿಂಗರ ಕಾಲ ಈ ಬದಲಾಗಿರುವುದರಿಂದ ಅವರ ಶಿಷ್ಯಪರಂಪರೆಗೆ ಸೇರಿದ ಈತ, ತೋಂಟದ ಸಿದ್ಧಲಿಂಗರಿಂದ ಎಂಟನೆಯ ತಲೆಮಾರಿನವನಾಗುತ್ತಾನೆ. ಸದ್ಯಕ್ಕೆ ತೋಂಟದ ಸಿದ್ದಲಿಂಗರ ಕಾಲ ಕ್ರಿ.ಶ. ೧೫೮೦ ಎಂದಿಟ್ಟುಕೊಂಡಿದ್ದು, ಸೋಮಶೇಖರ ಶಿವಯೋಗಿಯ ಕಾಲ ಕ್ರಿ.ಶ.೧೮೦೦ ಆಗುತ್ತದೆ. ಈ ಮಾತಿಗೆ ಪೂರಕವಾಗಿ ಕೊಡಗುಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪರ ಮಠದಲ್ಲಿರುವ ಶಾಸನದ ವಿಷಯವನ್ನು ನೋಡಬಹುದು.ಈತನು ಸ್ವತಃ ತನ್ನ ಗುರುಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ.

“ಶ್ರೀ ಮನ್ನಿರಾಳ ನಿರಾಮಯ ನಿರಂಜನ ನಿಶೂನ್ಯ ನಿಕಲ ಪರಬ್ರಹ್ಮವು ತಿಳಿದುಪ್ಪವೆ ಹೆತ್ತುಪ್ಪವಾದಹಾಂಗೆ, ಸಚ್ಚಿದಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವನ್ನು ಗರ್ಭಿಕರಿಸಿಕೊಂಡು, ಘನೀಭೂತವಾಗಿ, ಅಖಂಡಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗದ ಲೀಲಾವಿಗ್ರಹಮೂರ್ತಿಗಳಾದ ತೋಂಟದ ಸಿದ್ಧಲಿಂಗೇಶ್ವರನೆಂಬ ದೇಶಿಕ ಶಿರೋಮಣಿ ಕರುಣಪ್ರಸಾದ ಪಾತ್ರರಾದ ಬೋಳಬಸವೇಶ್ವರನು, ಅವರ ಕರುಣಾ ಪ್ರಸಾದ ಪಾತ್ರರಾದ ಗೂಳೂರಸಿದ್ಧಲಿಂಗಯ್ಯನವರು, ಅವರ ಕರುಣಾ ಪ್ರಸಾಧ ಪಾತ್ರರಾದ ಗುಮ್ಮಳಾಪುರದ ಸಿದ್ಧವೀರಯ್ಯನವರು, ಅವರ ಕರುಣಾ ಪ್ರಸಾದ ಪಾತ್ರರಾದ ಗಗನದಯ್ಯನವರು, ಅವರ ದಯಾನುಗ್ರಹಕ್ಕೆ ಯೋಗ್ಯರಾದ ಕಟ್ಟಿಗೆಹಳ್ಳಿ ಸಿದ್ಧಲಿಂಗೇಶ್ವರರು, ಅವರನುಗ್ರಹಪಾತ್ರರಾದ ಮುರಿಗಾ ಶಾಂತವೀರೇಶ್ವರನು, ಅವರಿಂದನುಗ್ರಹವ ಪಡೆದ ಮುರಿಗಾ ಗುರುಸಿದ್ಧೇಶ್ವರನು ಹೀಂಗೆ ಗುರುಸಂಪ್ರದಾಯವಿಡಿದುಬಂದ ಬಸವಾದಿ ಪ್ರಮಥಗಣಂಗಳ ವಚನಾನುಭವವನು ಬೆಸಗೊಂಡ ಸೋಮಶೇಖರ ಶಿವಯೋಗಿ81 ಎಂದು ಹೇಳಿಕೊಂಡಿದ್ದಾನೆ. 

ಇದರಿಂದ ಈತ ಶ್ರೀಮಂತ ಗುರುಪರಂಪರೆಯಲ್ಲಿ ಬಂದ ಮಹಾ ಅನುಭಾವಿ, ಜ್ಞಾನಿಯಾಗಿದ್ದನೆಂಬುದು ಸ್ಪಷ್ಟವಾಗುತ್ತದೆ. ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಈತ ಇಮ್ಮಡಿ ಮುರಿಗಾ ಗುರುಸಿದ್ಧರ ನೇರ ಶಿಷ್ಯ ಎಂದು ಖಚಿತವಾಗಿ  ಹೇಳಬಹುದು.

    ಮುಂದೆ ಸಂಪಾದನೆಯ ಗುರುಲಿಂಗದೇವ, ಕಾವ್ಯ, ವಚನ, ಶಾಸ್ತ್ರಗಳಿಗೆ ವಾಖ್ಯಾನ, ಟೀಕೆ, ಟಿಪ್ಪಣಿ ಬರೆದುವೀರಶೈವ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ‘ಸಂಪಾದನ ಸಮಯ’ ಎಂಬುದೊಂದು ಈ ಪರಂಪರೆಯಲ್ಲಿ ಹುಟ್ಟಿಕೊಂಡು ನೂರೊಂದು ವಿರಕ್ತರ ನಂತರ ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನು ರಕ್ಷಿಸುವ ಉಳಿಸುವ ಬೆಳೆಸುವ ಅದರ ಉದಾತ್ತತೆಯನ್ನು ಎತ್ತಿ ತೋರುವ ಕಾರ್ಯವನ್ನು ಸಾಂಘಿಕವಾಗಿ ತುಂಬ ಯಶಸ್ವಿಯಾಗಿ ನೆರವೇರಲು ಕಾರಣವಾಯಿತು. 

   ಇನ್ನು ಆಧ್ಯಾತ್ಮ ಕ್ಷೇತ್ರದತ್ತ ದೃಷ್ಟಿ ಹರಿಸಿದಾಗ ಅಲ್ಲಿಯೂ ಬೋಳಬಸವನ ಶಿಷ್ಯ ಪರಂಪರೆ ಅದ್ವೀತಿಯವಾದ ಕೆಲಸ ಮಾಡಿದುದು ಗಮನಕ್ಕೆ ಬರುತ್ತದೆ. ಗಗನಾರ್ಯನಿಂದ  ಮುಂದುವರೆದ ಈ ಪರಂಪರೆಯಲ್ಲಿ ಮುಂದೆ ಚಿಲಾಳ ಸಮಯ-ಮುರಿಗಾ ಸಮಯ-ಕುಮಾರ ಸಮಯ ಎಂಬ ಮೂರು ಶಾಖೆಗಳು ಹುಟ್ಟಿಕೊಂಡು ಒಂದೊಂದು ಶಾಖೆಗಳು ಸ್ವತಂತ್ರ ಪೀಠಗಳಾಗಿ ಬೆಳೆದು ಧಾರ್ಮಿಕ ಜಾಗೃತಿ, ವೀರಶೈವ ಧರ್ಮ ತತ್ವ-ಸಾಹಿತ್ಯ-ಸಿದ್ಧಾಂತಗಳ ಪ್ರಚಾರ, ತನ್ಮೂಲಕ ಮಾನವ ಕಲ್ಯಾಣವನ್ನು ನಿರಂತರವಾಗಿ ಮಾಡುತ್ತಾ ಸಾಗಿದವು. 

ತೋಂಟದ ಸಿದ್ಧಲಿಂಗ ಯತಿಗಳ ಪ್ರಶಿಷ್ಯ ಪರಂಪರೆಯ ಇತರೆ ಕವಿಗಳ ವಿವರಗಳು:

  ೧.ಗುರುಸಿದ್ಧದೇವ :

ಗುರುಸಿದ್ಧದೇವನ ವಚನಗಳ ಅಂಕಿತ, ಶ್ರೀಶೈಲ ಪರ್ವತದ ನೈರುತ್ಯ ದಿಕ್ಕಿನ ಕುಮಾರ ಪರ್ವತದ ಉತ್ತರ ದಿಕ್ಕಿನ ನಾಗರಗವಿಯೆ ಸಿಂಹಾಸನದ ಅಧಿಪತಿಯಾದ ಗುರುಸಿದ್ಧದೇವನದು ಬಹುಮುಖ ಪ್ರತಿಭೆ ಇವರು ವಚನಕಾರರಾಗಿ, ಸಂಕಲನಕಾರರಾಗಿರುವ ಇವರ ಪಾಂಡಿತ್ಯ ಅತ್ಯದ್ಭುತವಾದ ತತ್ವಜ್ಞಾನಿ. ವೀರಶೈವ ಧರ್ಮದ ಅಧ್ಯಯನ, ಆಳವಾದ ಅರಿವು ಶಬ್ದ ಮತ್ತು ಅರ್ಥಗಳಿಂದ ಕೂಡಿದ ಪ್ರತಿಭೆ, ನಿರೂಪಣೆಯನ್ನೊಳಗೊಂಡ ಅನುಭವದಿಂದ ಕೂಡಿದ್ದರು. ಇವರು ೧೬೦೦-೧೭೦೦ ಕಾಲದವರೆಂದು ಗುರುತಿಸಲಾಗಿದೆ. ಇವರು ತನ್ನ ಗುರುಪರಂಪರೆಯನ್ನು ಹೀಗೆ ಹೇಳಿ ಕೊಂಡಿರುವವರು. ಆದಿಗಣೇಶ್ವರ, ರುದ್ರಗಣೇಶ್ವರ, ಬಸವಪ್ರಭುದೇವರು, ಆದಿಲಿಂಗದೇವರು, ಚನ್ನಬಸವೇಶ್ವರ ದೇವರು, ತೋಂಟದ ಸಿದ್ಧೇಶ್ವರಸ್ವಾಮಿಗಳು, ಮರುಳಸಿದ್ಧೇಶ್ವರ, ನಿರಂಜನೇಶ್ವರ ಎಂಬುದಾಗಿ ಹೇಳಿಕೊಂಡಿವುದನ್ನು ನೋಡಿದರೆ ಇವರು ತೋಂಟದ ಸಿದ್ಧಲಿಂಗರ ಪ್ರಶಿಷ್ಯಪರಂಪರೆಗೆ ಸೇರಿದವರೆಂಬುದು ಸ್ಪಷ್ಟವಾಗುತ್ತದೆ.

ಈತನ ವಚನಗಳಲ್ಲಿ ಬರುವ ಪ್ರಮಥಗಣಂಗಳ ಸ್ವಾನುಭವ ಸೂತ್ರವೆಂದರೆ ಬಸವಾದಿ ಶರಣರ ವಚನಗಳು ಈ ೧೦೧ ವಚನಗಳು ಗುರುಸಿದ್ಧದೇವನ ವಚನಗಳೆಂದು ತಿಳಿಸಲಾಗಿದೆ. ಇಲ್ಲಿ `ಸಂಗನ ಬಸವೇಶ್ವರ’ ಎಂಬುದು ಗುರುಸಿದ್ಧದೇವನ ವಚನಗಳ ಅಂಕಿತ, `ಸಂಗನಬಸವೇಶ್ವರ’ ಎಂಬುದು ಗುರುಸಿದ್ಧದೇವನ ಶಿಷ್ಯನ ಹೆಸರು. ಅವನ ಹೆಸರನ್ನು ಸಂಭೋಧಿಸಿಯೇ ಎಲ್ಲ ವಚನಗಳನ್ನು ಹೇಳಲಾಗಿದೆ. ಅಂದು ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ನಡೆಸಿರುವ ಧಾರ್ಮಿಕ ಚರ್ಚೆಗಳ ಕುರಿತು ಪ್ರಸ್ತಾಪಿಸಿದ್ದಾನೆ. 

ಈತನು ತೋಂಟದ ಸಿದ್ದೇಶ್ವರ ನೂರೊಂದು ವಿರಕ್ತರು ಮುಂತಾದ ಮರ್ತ್ಯಲೋಕದ ಮಹಾಗಣಗಳನ್ನು ಹೇಳಿಸುವನು. ಹೀಗೆ ಗುರುಸಿದ್ಧೇವರು ವಚನಕಾರರು ಹಾಗೂ ೧೨ನೇ ಶತಮಾನದದಲ್ಲಿ ಎಲ್ಲಾ ವಿಚಾರಧಾರೆಗಳನ್ನು ಚರ್ಚಿಸಿರುವುದರಿಂದ ೧೨ ನೇಶತಮಾನದ ವಚನಕಾರರ ಪ್ರಭಾವಕ್ಕೆ ಒಳಗಾಗಿದ್ದಾರೆ. 

೨. ಘನಲಿಂಗದಯ್ಯ 

ಮಹಾಗುರುವಾದ `ಸಿದ್ದೇಶ್ವರ’ ಅಂಕಿತದಲ್ಲಿ ಘನಲಿಂಗಯ್ಯನ ಗದ್ಯಾತ್ಮಕವಾದ ದೀರ್ಘ ವಚನ ದೊರೆತಿರುವುದು. ಘನಲಿಂಗದಯ್ಯ ಎಂಬ ಹೆಸರು ಈ ವಚನಕಾರನ ಹೆಸರೇ ಅಲ್ಲವೇ ಎಂಬುದು ಅವನ ವಚನಗಳ ಕೊನೆಯಲ್ಲಿ ತಿಳಿದುಬರುತ್ತದೆ. “ ಕರ್ಪೂರದ ಗೊಂಬೆ ಬಂದು ಉರಿಯುವ ಗೊಂಬೆಯನ್ನ ಅಪ್ಪಿದಂತೆ, ಶರಣ ಬಂದು ಘನಲಿಂಗಮಂ ಅಪ್ಪದಂತೆ ಮಹಾಗುರು ಸಿದ್ದೇಶ್ವರನ ಚರಣವನ್ನು ಕರಸ್ಥಲದಲ್ಲಿ ಪಿಡಿದು ಪೂಜೆಯ ಮಾಡಲೊಡನೆ ಎನ್ನ ತನುವೆ ಪಂಚಬ್ರಹ್ಮ ಪ್ರಾಣ ಪರಬ್ರಹ್ಮವಾಯಿತು ಎಂದಿರುವುದನ್ನು ತಿಳಿದಾಗ ಈ ವಚನದ ಕರ್ತೃ ಘನಲಿಂಗದಯ್ಯ ಎಂದು ಊಹೆ ಮಾಡಲಾಗಿದೆ. ಈ ವಚನಕಾರನ ಬಗೆಗೆ ಹೆಚ್ಚು ವಿಚಾರ ತಿಳಿದು ಬಂದಿಲ್ಲವಾದರೂ, ಶರಣೂ ಬಾ ಮುಕ್ತಿಯ ಪುರಕ್ಕೆ (ಕೈಲಾಸಕ್ಕೆ) ಹೋಗುವಂತಹ ಒಂದು ಕಾಲ್ಪನಿಕ ಚಿತ್ರ ಒಟ್ಟಾರೆ ವಚನವನ್ನು ಆವರಿಸಿಕೊಂಡಿದೆ ಎಂದು ಭಾಸವಾಗಿದೆ.  

೩. ಶಂಕರ ದೇವ 

ಶಂಕರದೇವರವರು ಶರಣ ಸಂಬಂಧದ ಹಾಗೂ ವಿರಕ್ತಾಚರಣೆಯ ಭವನಗಳ ಸಂಕಲನಕಾರರು. ತೋಂಟದ ಸಿದ್ಧಲಿಂಗರವರ ವಚನಗಳ ಇವರ ವಚನಗಳಲ್ಲಿ ಕಾಣಿಸಿಕೊಂಡಿರುವುದರಿಂದ ಇವರ ಕಾಲವನ್ನು ೧೬ನೇ ಶತಮಾನ ಎಂದು ತಿಳಿಯಬಹುದು. ವಿರಕ್ತಾಚರಣೆಯ ವಚನಗಳನ್ನು ಪ್ರಥಮವಾಗಿ ಸಂಪಾದಿಸಿದವರು. ಮೈಸೂರಿನ ಪಿ.ಎಂ ಗಿರಿರಾಜು ಅವರು. ಇವರ ವಚನಗಳು ಗುರುಮಹಾತ್ಮೆ ಸ್ಥಲದಿಂದ ನಿಸ್ಸಂಗೈಕ್ಯ ಸ್ಥಲಾಂತ್ಯವಾಗಿ ೨೭ ಸ್ಥಳಗಳಿವೆ ಎಂದು ಗುರುತಿಸಿದ್ದಾರೆ. ೩೨ ಶಿವಶರಣೆಯರ ವಚನಗಳು  ಸೇರಿ ೧೭೫ ವಚನಗಳನ್ನು ಇಲ್ಲಿ ಕಾಣಬಹುದಾಗಿದೆ.

೫. ಸಂಪಾದನೆಯ ಬೋಳಬಸವ

ಇವನು ತೋಂಟದ ಸಿದ್ಧಲಿಂಗರ ಪರಂಪರೆಯಲ್ಲಿ ಬರುವ ಸಂಕಲನಕಾರ ಇವರು ಸಿದ್ಧವೀರನ ಶಿಷ್ಯರಾಗಿದ್ದವರು. ಸಂಪಾದನೆಯ ಪರ್ವತೇಶನ (೧೬೯೮) ಚಾತುರಾಚಾರ್ಯ ಚಾರಿತ್ರದಲ್ಲಿ ಸಂಪಾದನೆಯ ಚೆನ್ನಮಲ್ಲಿಕಾರ್ಜುನ, ಸಿದ್ಧಪುರದ ಬೋಳಬಸವ ಇಬ್ಬರೂ ಸಮಕಾಲೀನರು. ಇವರಿಬ್ಬರೂ ಒಬ್ಬರೇ ಗುರುವಿನಿಂದ ವಿದ್ಯೆಯನ್ನು ಕಲಿತವರೆಂದು ಉಲ್ಲೇಖಿಸಲಾಗಿದೆ. ಇವರು ಮುಂದೆ ಮಧುಗಿರಿಯ ಬಿಜ್ಜಾವರದ ಪಾಳೇಪಟ್ಟಿನ ರಾಜಗುರುವಾದನೆಂದೂ ತಿಳಿಸಲಾಗಿದೆ. ಸ್ವತಂತ್ರ ಸಿದ್ಧಲಿಂಗೇಶ್ವರರ ವಚನದ ಓಲೆಪ್ರತಿಯ ಆರಂಭದಲ್ಲಿ 'ಶ್ರೀಮದ್ಗುರು ಸಂಪಾದನೆಯ ಬೋಳಬಸವೇಶ್ವರಾಯನಮಃ' ಎಂದಿದೆ. 'ಪುರಾತನರ ವಚನಗಳು' ಕೃತಿಯ ಕೊನೆಯಲ್ಲಿ “ಶ್ರೀ ಷಟ್ಸ್ಥಲಚಕ್ರವರ್ತಿ ಸಾರ್ವಭೌಮರಪ್ಪ ಭಕ್ತಿಜ್ಞಾನ ವೈರಾಗ್ಯ ಪರಮಾನಂದೈಶ್ವರ್ಯಸಂಪನ್ನರುಮಪ್ಪ” ಸಂಪಾದನೆಯ ಬೋಳಬಸವೇಶ್ವರದೇವರು ಎನ್ನುವ ಉಲ್ಲೇಖವಿದೆ.

ಇವರು ರಚಿಸಿರುವ 'ಬಸವಸ್ತೋತ್ರದ ವಚನ' ಎನ್ನುವ ಸಂಕಲನಕೃತಿಯಲ್ಲಿ ೧೭ಮಂದಿ ಶರಣ|ಶರಣೆಯರ ೧೨೪ ವಚನಗಳಿವೆ. ಇವನ ಇನ್ನೊಂದು 'ಬಸವಸ್ತೋತ್ರದ ವಚನ ಎನ್ನುವ ಸಂಕಲನ ಕೃತಿಯಲ್ಲಿ ನಾಲ್ಕು ಮಂದಿ ಶರಣ/ಶರಣೆಯರ ೪೬ ವಚನಗಳಿವೆ. ಇವನ ಮತ್ತೊಂದು ಸಂಕಲನ ಕೃತಿಯಾದ 'ಷಟ್‌ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆ ವಚನಗಳು'ವಿನಲ್ಲಿ ೬೧ ಶರಣ/ಶರಣೆಯರ ೨೩೧ ವಚನಗಳಿವೆ. ಡಾ.ಬಿ. ನಂಜುಂಡಸ್ವಾಮಿಯವರು ಸಂಪಾದನೆಯ ಚೆನ್ನಮಲ್ಲಿಕಾರ್ಜುನನ ಸಮಕಾಲೀನ ಸಂಪಾದನೆಯ ಬೋಳಬಸವನೆಂದೂ ಇಬ್ಬರೂ ಒಬ್ಬರೇ ಗುರುವಿನಿಂದ ವಿದ್ಯೆ ಕಲಿತವರೆಂದೂ, ಸಂಪಾದನೆಯ ಬೋಳಬಸವನೇ ಮುಂದೆ ಮಧುಗಿರಿಯ ಬಿಜ್ಜಾವರದ ಪಾಳೇಪಟ್ಟಿನ ರಾಜಗುರುವಾದನೆಂದೂ, ಸಂಪಾದನೆಯ ಪರ್ವತೇಶ ಸಿದ್ಧಾಪುರದ ಬೋಳಬಸವನ ವಿಷಯವನ್ನು ಬರೆಯುವಾಗ 'ಸಂಪಾದನೆಯ' ಎಂಬ ವಿಶೇಷಣ ಸೂಚಿಸಿದ್ದಿದ್ದರೆ ಗೊಂದಲವೇ ಇರುತ್ತಿಲಿಲ್ಲವೆಂದೂ ಅಭಿಪ್ರಾಯಪಟ್ಟಿದ್ದಾರೆ.

೬. ಎಳಮಲೆಯ ಗುರುಶಾಂತದೇವ 

ಇವರ ಕಾಲ ಆರ್. ನರಸಿಂಹಾಚಾರ್ಯರ ಕರ್ನಾಟಕ ಕವಿಚರಿತೆಯಲ್ಲಿ  ೧೬೨೫ ಎಂದು ನಿರ್ಧರಿಸಿದವರು. ಆದರೆ ಇತ್ತೀಚಿನ ಹೊಸ ಶೋಧದ ಪ್ರಕಾರ ತೋಂಟದ ಸಿದ್ದಲಿಂಗನ ಕಾಲ ಕ್ರಿ.ಶ.೧೫೬೧ ಕ್ಕೆ  ಬಂದು ನಿಂತಿದೆ. ತೋಂಟದ ಸಿದ್ಧಲಿಂಗೇಶ್ವರನಿಂದ ಮೂರನೆಯ ತಲೆಮಾರಿನವನಾದ ಗುರುಶಾಂತದೇವನ ಕಾಲವನ್ನು ಈಗ ಸು. ೧೬೨೫ ಎಂದು ಹೇಳಬಹುದಾಗಿದೆ. ಅಂತರಿಕ ಆಧಾರಗಳ ಮೇಲೆ ಹೇಳುವುದಾದರೆ, ಶಾಂತೇಶನ (೧೫೩೧) ಸಿದ್ಧೇಶ್ವರಪುರಾಣದ ನಾಂದ್ಯ ಪದ್ಯಗಳನ್ನು ಸಂಕಲಿಸಿರುವ ಕಾರಣ ಇವನು ಗುಬ್ಬಿಯ ಶಾಂತೇಶನ ನಂತರದವನು. ಇವನು ಶಂಕರದೇವನ (ಸು.೧೫೮೦) ೧೦೧ ಕಂದಗಳ ಸಂಕಲಿಸಿರುವ ಕಾರಣ ಇವನು ಶಂಕರದೇವನ ನಂತರದವನು, ಗುರುಶಾಂತದೇವನು ಶೀಲವಂತಯ್ಯನ ತ್ರಿವಿದಿಗೆ ವ್ಯಾಖ್ಯಾನವನ್ನು ಬರೆದಿದ್ದು ಅವರಲ್ಲಿ ತನ್ನ ಗುರುಪರಂಪರೆಯನ್ನು ಹೀಗೆ ಹೇಳಿ ಕೊಂಡಿರುವನು.

ನಿರಂಜನ ಪರಂಜ್ಯೋತಿ ಸ್ವರೂಪಿ ತೋಂಟದ ಸಿದ್ಧಲಿಂಗಪ್ರಭು |

                  |

ಬೋಳ ಬಸವೇಶ್ವರ

                 |

ಹರತಾಳ ಚೆನ್ನಂಜೆದೇವರು

                 |

ಎಳೆಮಲೆಯ ಗುರುಶಾಂತ

ಚತುರಾಚಾರ್ಯ ಚಾರಿತ್ಯದ ಕರ್ತೃ ಸಂಪಾದನೆಯ ಪರ್ವತೇಶ್ವರನು ೧೬೭೮ ತನ್ನ ಗುರುಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ.

ತೋಂಟದ ಸಿದ್ಧಲಿಂಗ

ಬೋಳ ಬಸವೇಶ್ವರ

ಚನ್ನಾಚಾರ್ಯ(ಹರತಾಳ ಚನ್ನಂಜೆದೇವ)

ಏಳುಮಲೆಯ ಗುರುಶಾಂತದೇವ

             ಸಂಪಾದನೆಯ ಗುರುಲಿಂಗೇವ 

ತಮ್ಮ ಗುರು ಪಂಪರೆಯನ್ನು ಹೇಳುವಾಗ ಎಳೆಮಲೆಯ ಗುರುಶಾಂತ ದೇವನನ್ನು ಹೆಸರಿಸಿರುವನು. ಇವರನ್ನೇ ಎಳೆಮಲೆಯ ಗುರುಶಾಂತದೇವ, ಎಳೆಮಲೆಯ ಗುರುಶಾಂತಾಚಾರ್ಯ, ಎಳೆಮಲೆಯ ಗುರು ಶಾಂತಪಾಚಾರ್ಯ ಮುಂತಾಗಿ ಕರೆಯಲಾಗುತ್ತದೆ. ಈ ಹೆಸರುಗಳ ಪೂರ್ವಾದಲ್ಲಿ ಬರುವ ಎರಡು ವಿಶೇಷಣಗಳಲ್ಲಿ ಎಳೆಮಲೆಯ (ಇದು ಬಿಜಾಪುರದ ಜಿಲ್ಲೆಯದ್ದು) ಇಂದು ಅಲಮೇಲ ಗ್ರಾಮ ಎಂದು ಕರೆಸಿಕೊಂಡಿದೆ. `ಸಂಪಾದನೆಯ’ ಎಂಬುದು ಅವನ ಕಾಯಕವನ್ನು ತಿಳಿಸುತ್ತದೆ. ಎಳೆಮಲೆಯ ಗುರುಶಾಂತದೇವ ಕೇವಲ ಸಂಕಲನಕಾರನಾಗಿ ಕಂಡುಬರುವನು. ಅವನು ಸಂಕಲಿಸಿದ ಕೃತಿಗಳು ಈ ಕೆಳಕಂಡತಿವೆ.

೧. ಷಟ್ ಸ್ಥಲ ಸ್ತೂತ್ರದ ವಚನಗಳು (೧೨೦) 

೨. ಅಷ್ಟಾವರಣದ ವಚನಗಳು (೧೬೦)

೩. ಶರಣಸ್ತೋತ್ರದ ವಚನಗಳು (೧೧೦)

೪. ಮಿಶ್ರ ಸ್ತೋತ್ರದ ವಚನಗಳು (೧೦೮)

೫. ಕೊಂಡಗುಳಿ ಕೇಶಿರಾಜ ಮಂತ್ರ ಮಹತ್ವದ ಕಂದ (೧೧೦)

೬. ಲಿಂಗವಿಕಾಳಾವಸ್ಥೆಯ ವಚನಗಳು (೧೧೦)

೭. ಶಾಂತೇಶನ ಸಿದ್ದೇಶ್ವರ ಪುರಾಣದ ನಾಂದ್ಯ (ಭಾಮಿನಿ ಷಟ್ಪದಿಯ ೩೫ ಷಟ್ಪದಿಗಳು)

ಎಳೆಮಲೆಯ ಗುರುಶಾಂತದೇವನ ಆಸಕ್ತಿ ಸ್ತೋತ್ರ, ವಚನಗಳು ಷಟ್‌ಸ್ಥಲ ಸ್ತೋತ್ರ, ಶರಣ ಸ್ತೋತ್ರ ಮತ್ತು ಮಿಶ್ರಾಸ್ತೋತ್ರ, ಸಂಗ್ರಹದಲ್ಲಿ ಕಾಣಿಸಿಕೊಂಡಿವೆ. ಈತನು ಕೇಶಿರಾಜನ ೧೧೦ ಕಂದಪದ್ಯಗಳನ್ನು ಸಂಕಲಿಸಿರುವನು. ಇವನ ಬಗ್ಗೆ ಅನಾಮಿಕನೊಬ್ಬ ಬರೆದ ತಾರಾವಳಿಯೊಂದು ಪ್ರಕಟವಾಗಿದೆ. ಈತನ ತೋಂಟದ ಸಿದ್ಧಲಿಂಗ ಪರಂಪರೆಯವನು, ಈತನು ರಚಿಸಿರುವ ಕೃತಿಗಳು ಇಂತಿವೆ.

೧. ‘ಅಷ್ಟಾವರಣ ಸ್ತೋತ್ರದ ವಚನ’ ಒಂದು ಸಂಕಲನ- ೩೦. ಶರಣ ಶರಣೆಯರ ೧೬೧ ವಚನಗಳಿವೆ.

೨. ಮಿಶ್ರಾವರಣ ಸ್ತೋತ್ರ ವಚನ ೫೬. ಶರಣ ಶರಣೆಯರ ೧೧೮ ವಚನಗಳಿವೆ.

೨. ಲಿಂಗವಿಕಳಾವಸ್ಥೆ ವಚನ ೧೦. ಶರಣ ಶರಣೆಯರ ೧೧೦ ವಚನಗಳಿವೆ.

೩. ಶರಣಸ್ತೋತ್ರದ ವಚನಗಳು ೨೪. ಶರಣ ಶರಣೆಯರ ೧೧೦ ವಚನಗಳಿವೆ.

ಇತರ ಗ್ರಂಥಗಳು

೧. ಷಡುಸ್ಥಲ ಸ್ತೋತ್ರದ ವಚನ-೨೪, ಶರಣ ಶರಣೆಯರ ೧೨೯\೧೩೦ ವಚನಗಳಿವೆ.

೨. ಮಂತ್ರ ಮಹತ್ವದ ಕಂದ ೧೧೦. ಕೇಶಿರಾಜನ ಕಂದ ಸಂಕಲನ

೩. ಸಿದ್ದೇಶ್ವರ ಪುರಾಣದ ನಾಂದ್ಯ - ಶಾಂತೇಶ ೩೫ ಭಾಮಿನಿ ಷಟ್ಪದಿಗಳಿವೆ.

೪. ಮರುಳದೇವರ ಕಂದ ಮರಳ ದೇವನ ಸಂಕಲನ

೫. ಶಂಕರದೇವರ ಕಂದ ೧೧೧. ಕಂದಗಳ ಸಂಕಲನ

೬.    ವೀರಸಂಗಯ್ಯ

ಇವರ ಕಾಲ ಸುಮಾರು ೧೬೨೫ನೇ ಇಸವಿ ಮತ್ತು ಇವರು ಶಿವ ಮಹಿಮಾ ಸ್ತೋತ್ರ, ವಚನಗಳ ಸಂಕಲನೆಯನ್ನು ಮಾಡಿದ್ದಾರೆ. ಈ ಕೃತಿಯಲ್ಲಿ ೨೦ ವಿಭಾಗಗಳಿದ್ದು, ೨೨ ಶರಣ ಶರಣೆಯರ ೧೧೧ ವಚನಗಳಿವೆ.

೭. ಕಟ್ಟಿಗೆಹಳ್ಳಿ ಸಿದ್ಧಲಿಂಗ

ಇವರ ಕಾಲ ೧೬೨೫ನೇ ಇಸವಿ. ತೋಂಟದ ಸಿದ್ಧಲಿಂಗೇಶ್ವರನ ಪರಂಪರೆಯರಾದ ಇವರು ಶೂನ್ಯಸಿಂಹಾಸನಾಧೀಶ್ವರರಾಗಿದ್ದರು. ಇವರ ಊರು ಕಟ್ಟಿಗೆಹಳ್ಳಿ, ತಿಪಟೂರು ತಾಲ್ಲೂಕಿವ ಕಿಬ್ಬನಹಳ್ಳಿಯ ಅಡ್ಡರಸ್ತೆ ಬಳಿ ಇದೆ. ಇವರು ವ್ಯಯ ಸಂವತ್ಸರ ಆಶ್ವೇಜ ಸುದ್ಧ ಇರಲ್ಲು ಕಟ್ಟಿಗೆಹಳ್ಳಿ ದೇವರಿಗೆ ಬೈಚಣ್ಣೊಡೆಯರು ಮಹಾಲಿಂಗದೇವನ ಏಕೋತ್ತರ ಶತಸ್ಥಲ ಬರೆದು ಅರ್ಪಿಸಿದ್ದಾರೆ ಮತ್ತು ಸಾಧಾರಣ ಸಂವತ್ಸರ ಮಾರ್ಗಶಿರ ಶುದ್ಧ ಹುಣ್ಣಿಮೆ ಬಿದಿಗೆ ಶುಕ್ರವಾರ ಬಸವೇಶ್ವರ ವಚನ ಮತ್ತು ತೋಂಟದ ಸಿದ್ಧಲಿಂಗರ ಕೃತಿಗಳನ್ನು ಕಟ್ಟಿಗೆಹಳ್ಳಿ ಸ್ವಾಮಿ ಸಿದ್ಧಲಿಂಗಯ್ಯನವರಿಗೆ ಅರ್ಪಿಸಿದ್ದಾರೆ. ಇವರ ಸಮಾಧಿ ತಿಳವಳಿಯಲ್ಲಿದೆ.

'ಏಕೋತ್ತರಸಾರ'ವು ಏಕೋತ್ತರ ಶತಸ್ಥಲ ಪರಂಪರೆಯ ಒಂದು ಸಂಕಲನಗ್ರಂಥ. ಕಟ್ಟಿಗೆಹಳ್ಳಿ ಸಿದ್ಧಲಿಂಗನು ತೋಂಟದ ಸಿದ್ಧಲಿಂಗೇಶ್ವರರ (೧೫೬೧) ಶಿಷ್ಯ ಪರಂಪರೆಗೆ ಸೇರಿದವನು. ಚಿತ್ರದುರ್ಗ ಬೃಹನ್ಮಠದ ಮೂಲಕರ್ತೃಗಳಾದ ಮುರಿಗೆ ಶಾಂತವೀರಸ್ವಾಮಿಗಳು ಕಟ್ಟಿಗೆಹಳ್ಳಿ ಸಿದ್ಧಲಿಂಗರ (ಕಟ್ಟಿಗೆ ಸಂಗಮೇಶ್ವರರ) ಕರಕಮಲಸಂಜಾತರು.'ಕಟ್ಟಿಗೆ ತಾರಾವಳಿ'ಯ ಅಂತ್ಯ ಭಾಗದಲ್ಲಿ ಇಯಂ ಕಟ್ಟಿಗೆ ತಾರಾಳಿಃ ಮುರಿಗೇರಾಯ

ನಿರ್ಮಿತಾ ಸಂಗಮೇಶಾವತಾರಸ್ಯ ಸಿದ್ಧಲಿಂಗ ಜಗದ್ಗುರೋಃ |........” ಎಂದುಹೇಳಲಾಗಿದೆ (ಮುರಿಗೆ ಶಾಂತವೀರಸ್ವಾಮಿಗಳ ಕೃತಿಗಳು, ಸಂ. ಎಸ್.ಶಿವಣ್ಣ,ಪು.೨೮೨, ಶ್ರೀ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ, ೧೯೮೯).ಇವರ ಹೆಸರಿನಲ್ಲಿ ೪ ಕೃತಿಗಳು ಬಂದಿವೆ

೧. ಏಕೋತ್ತರ ಸಾರ

೨. ಮಡಿವಾಳಯ್ಯನವರ ಚರಿತ್ರೆ 

೩. ಸಂಪಾದನೆಯ ವಚನ

೪. ಸ್ವರ ವಚನಗಳು

ಏಕೋತ್ತರಸಾರದಲ್ಲಿ ಬಸವೋತ್ತರ ಯುಗದ ವಚನಕಾರರ ಸೇರ್ಪಡೆಯಾಗಿಲ್ಲ.

೧೩. ಕವಿಪವಾಡ: 

ಈತ ಬಿಜ್ಜಾವರದವನು ಇದು ಮಧುಗಿರಿ ಮಹಾನಾಡ ಪ್ರಭುಗಳ ರಾಜಧಾನಿಯಾಗಿತ್ತು. ಶರಣ ಸಾಹಿತ್ಯದ ನೆಲೆವೀಡು ಈತನ ಕಾಲವನ್ನು ಕ್ರಿ.ಶ. ಸು. 160೧ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈತ ತೋಂಟದ ಸಿದ್ಧಲಿಂಗನ ತಾರಾವಳಿಯನ್ನು ರಚಿಸಿದ್ದಾನೆ. ತಾರಾವಳಿಯ ಕೊನೆಯಲ್ಲಿ ಈತ ತನ್ನ ಹೆಸರನ್ನು ಹೇಳಿಕೊಂಡಿದ್ದಾನೆ. ಇದರಲ್ಲಿ ಪಲ್ಲವಿ ಮತ್ತು ಹನ್ನೊಂದು ನುಡಿಗಳಿವೆ. ತೆಲುಗು ಕಾಂಬೋಧಿ ರಾಗ ಎಂದು ಕವಿ ಸಷ್ಟಪಡಿಸಿದ್ದಾನೆ.

ಶಿವಕವೀಶ್ವರರ ಚರಣಾಂಘಿ ಸರಸಿಜಶೃಂಗ

ಕವಿಪವಾಡನಿಗಿಪ್ಪ ಫಲ ವರ

ಕವಿ ಪವಾಡನಿಗಿಪ್ಪ ಫಲವ

ಸುವಿಲಾಸದಿಂದೀನ ಎಡೆಯೂರ ಸ್ಥಿರ ಸದಾಶಿವ |

ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ ಇಮ್ಮಡಿ ಚಿಕ್ಕೇಂದ್ರನನ್ನು ಪವಾಡದದೇವ ಹಸ್ತಾಂಭುಜದಾತ ಎಂದು ಕರೆಯಲಾಗಿದೆ. ಆದ್ದರಿಂದ ಈತನ ಕಾಲವನ್ನು ೧6ನೇ ಶತಮಾನದ ಉತ್ತರಾರ್ಧಭಾಗ ಎನ್ನಬಹುದು. ಅಂಕಿತ ಎಡೆಯೂರ ಸದಾಶಿವ. ಈ ತಾರಾವಳಿಯು “ವೀರಶೈವ ತಾರಾವಳಿ ಸಂಪುಟ'ದಲ್ಲಿ ಪ್ರಕಟವಾಗಿದೆ.

ಈ ತಾರಾವಳಿಯಲ್ಲಿ ಕವಿ ಪವಾಡನು ತನ್ನನ್ನು ಶಿವಗಂಗೆಯ ಅರಸ ಅನುಭಾವ ಸಿದ್ಧವಲ್ಲಭ ಎಂದು ಕರೆದುಕೊಂಡಿದ್ದು ತನ್ನ ಶಿವತತ್ವ ವಚನಾಮೃತವನ್ನು ಹಲವು ರೀತಿಯಲ್ಲಿ ಓದಿದರೆ ಕೇಳಿದರೆ ಪಠಿಸಿದರೆ ಭವದ ಬಂಧನ ನೀಗಿಕೊಳ್ಳುವದು ಎಂದಿರುವನು, ಅಷ್ಟೇ ಅಲ್ಲದೆ ತನ್ನನ್ನು ತಾನು ಶಿವಕವೀಶ್ವರ ಚರಣಾಂಘಿಸರಸಿಜಶೃಂಗ ಎಂದು ಕರೆದುಕೊಂಡಿದ್ದಾನೆ. ಕವಿಯು ತನ್ನ ತಾರಾವಳಿಯ ಪಲ್ಲವಿಯಲ್ಲಿ ತನ್ನ ಗುರುವಾದ ತೋಂಟದ ಸಿದ್ಧಲಿಂಗನನ್ನು ಹೀಗೆ ಸ್ತುತಿಸಿದ್ದಾನೆ. 

ಪರಮ ಪಾವನ ಪುಣ್ಯಚರಿತ ಭಕ್ತಾನಂದ

ಭರಿತ ಭಾವಪಾಶರಹಿತಶರಣ ಜನ ಪಾಲಸದ್ಗುಣಶೀಲ ಜಯಲೋಲ

ಗುರುವೇ ತೋಂಟದ ಸಿದ್ಧಲಿಂಗ ಜಗದ

ದ್ಗುರುವೆ ತೋಂಟದ ಸಿದ್ಧಲಿಂಗ # ಪಲ್ಲವಿ |

ಈ ಮೇಲಿನ ಪಲ್ಲವಿಯಲ್ಲಿ ಕವಿ ತೋಂಟದ ಸಿದ್ಧಲಿಂಗನನ್ನು ಗುರು, ಜಗದ್ಗುರು ಎಂದು ಕರೆದಿದ್ದಾನೆ. ಇದನ್ನು ನೋಡಿದರೆ ಪ್ರಾಯಶಃ ಕವಿ ಪವಾಡನು ಸಿದ್ಧಲಿಂಗ ಯತಿಗಳ ಶಿಷ್ಯನಾಗಿರಬಹುದು. ‘ಸಿದ್ಧೇಶ್ವರ ಪವಾಡರಗಳೆ’ಯಲ್ಲಿ ಪವಾಡಕ್ಕೆ ಮಹತ್ವ ನೀಡಿ ಒಂದೊಂದು ನುಡಿಯಲ್ಲಿ ಸಿದ್ಧಲಿಂಗನ ಒಂದೊಂದು ಪವಾಡವನ್ನು ಹೇಳಲಾಗಿದೆ. ‘ಇಂತು ಎಪ್ಪತ್ತೈದು ಮುಖ್ಯವಾದಂತ ಮಹಿಮೆದೋರಿ ಚಿಂತಿತಾರ್ಥವಿತ್ತು ಜಗವ ಸಲಹಿ ಮೆರೆದ ಸಿದ್ಧಲಿಂಗ’”  ಎಂದು ಹೇಳಿ ಕೃತಿ ಕಿರಿದಾದರೂ ಕವಿ ಎಪ್ಪತ್ತೈದು ಪವಾಡಗಳನ್ನು ತುಂಬಿಸಿದ್ದಾನೆ.

ತನ್ನ ಈ ತಾರಾವಳಿಯಲ್ಲಿ ಸಿದ್ಧಲಿಂಗನ ಪವಾಡಗಳನ್ನು ಕುರಿತು ಹೇಳಿದ್ದಾನೆ.

1) ಹೊಳಲುಗುಂದದ ಕಲ್ಲೇಶ್ವರ ದೇವಾಲಯದ ಕವಾಟವನು ಮಳೆ

ಬಂದ ವೇಳೆಯಲ್ಲಿ ತೆಗೆಸಿದ್ದು,

2) ಕಣ್ಣಿಲ್ಲದವಂಗೆ ಕಣ್ಣು ಕೊಟ್ಟಿದ್ದು, 3) ಹೂವಿಗಾಗಿ ಬೇಡಿದವರಿಗೆ

ಹೂವಿನ ಮಳೆ ಸುರಿಸಿದ್ದು, ಇವುಗಳ ಪ್ರಸ್ತಾಪವಾದ ಬಳಿಕ ಫಣಿರಾಜನ ಭೀಕರತೆಯನ್ನು ಕಂಡು ಜನರು ಕಂದಿದರು, ಕುಂದಿದರು ಬೆಚ್ಚಿದರು, ಬೆದರಿದರು ಉರುಗನ ಆರ್ಯಸಿಂಧುರ ಹುಲಿ, ಕರಡಿ ಸಂದಣಿಯು ಚೆಲ್ಲಿ ಓಡಿದವು. ಆಗ ಸಿದ್ಧಲಿಂಗ ಸುಶಂಕಪಾಲ ನಾಗೇಂದ್ರನನ್ನು ಮಣಿಯುವಂತೆ ಮಾಡಿ ಅರಣ್ಯಕ್ಕೆ ಕಳುಹಿಸಿ ಅವರಿಗೆ ಅಭಯ ನೀಡಿದ ವಿಚಾರವು ವಿವರವಾಗಿ ಮೂಡಿಬಂದಿದೆ. ಹೀಗೆ ಸಿದ್ದಲಿಂಗ ಯತಿಯು ಜನಪರ ಕಾರ್ಯವನ್ನು ಪವಾಡಗಳ ಮೂಲಕ ಆತ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾನೆ.

೮. ಗುರುಶಂಕರಸ್ವಾಮಿ

ಇವರ ಕಾಲ ಸು. ೧೬೨೫ನೇ ಇಸವಿ. ಇವರು ‘ಜ್ಞಾನಷಟ್ ಸ್ಥಲ ಸಾರ’ದ ಸಂಕಲನ ಮಾಡಿದ್ದಾರೆ. ಇವರ ಸಂಕಲನದಿಂದ ಶ್ರೀ ಮುಕ್ತಿರಾಮೇಶ್ವರ ಮತ್ತು ಮನಃಪ್ರಿಯ ಚೆನ್ನಬಂಕೇಶ್ವರ ಅಂಕಿತಗಳು ಬೆಳಕಿಗೆ ಬಂದಿವೆ.ಈ ಕೃತಿಯ ಪ್ರಾರಂಭದಲ್ಲಿ ತೋಂಟದಸಿದ್ಧಲಿಂಗರ ಸ್ತುತಿ ಇದೆ.

೯. ಚನ್ನವೀರಣ್ಣೊಡೆಯ

ಇವರ ಕಾಲ ಸು. ೧೬೫೦ನೇ ಇಸವಿ. ಇವನು ವೀರಶೈವ ಕವಿ. ೨೫೦ ವಚನಗಳ ಇರುವ ಗ್ರಂಥವನ್ನು ಜಿ.ಎ. ಶಿವಲಿಂಗಯ್ಯನವರು ಸಂಪಾದಿಸಿದ್ದಾರೆ. ಇವರ ಅಜ್ಞಾತ ಕೃತಿ ‘ಚನ್ನಬಸವೇಶ್ವರ ದೇವರ ಮಿಶ್ರಷಟ್ ಸ್ಥಲದ ವಚನ’ ಸಂಕಲನವು ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ ಸರಸ್ವತಿ ಭಂಡಾರದಲ್ಲಿ ದೊರೆಯಿತು. ಇದರಲ್ಲಿ ಷಟ್‌ಸ್ಥಲಗಳಲ್ಲಿ ಒಂದೊಂದರಲ್ಲೂ ಆರರಂತೆ ಒಟ್ಟು ೩೬ ಸ್ಥಲಗಳ ವಿಭಜನೆ ಕಂಡುಬರುತ್ತವೆ. ಆದ್ದರಿಂದ ಇದನ್ನು ‘ಮಿಶ್ರ ಷಟ್ ಸ್ಥಲ’ ಎಂದು ಕರೆಯಲಾಗುತ್ತಿದೆ.

೧೦. ಚೆನ್ನವೀರಾಚಾರ್ಯ

ಇವರ ಕಾಲ ಕ್ರಿ.ಶ. ೧೬೫೦. ಇವರು ತೋಂಟದ ಸಿದ್ಧಲಿಂಗ ಪರಂಪರೆಗೆ ಸೇರಿದವರು. ಇವರು ‘ವಿಶೇಷಾನುಭವ ಷಟ್ಸ್ಥಲ’ ಮತ್ತು ‘ಶಿವಯೋಗ ಪ್ರದೀಪಿಕೆಗಳ’ ಸಂಕಲನ ಮಾಡಿದ್ದಾರೆ. ಈ ಎರಡು ಕೃತಿಗಳು ಶಿವಲಿಂಗದೇವ ಎಂಬ ಶಿಷ್ಯನಿಗೆ ಹೇಳಿದಂತೆ ವರ್ಣಿತವಾಗಿದೆ. ಇವರ ಸಂಕಲನದಿಂದ ಆನಂದ ಸಿಂಧುರಾಮೇಶ್ವರ, ಹಾಟಕೇಶ್ವರ ಲಿಂಗ ಮತ್ತು ಕಲ್ಲಯ್ಯದೇವರು ಎಂಬ ವಚನಾಂಕಿತಗಳು ಪ್ರಸಿದ್ಧಿಗೆ ಬಂದವು.

೧೧. ಜಟಾಶಂಕರ ದೇವ

ಇವರ ಕಾಲ ೧೬೫೦ನೇ ಇಸವಿಯಾಗಿದ್ದು, ಇವರು `ಚಿದ್ಭಸ್ಮ ಮಣಿ ಮಂತ್ರ ಮಹಾತ್ಮೆಯ ಸ್ಥಲದ ವಚನಗಳ ಕೃತಿಯನ್ನು ಸಂಕಲನ ಮಾಡಿದ್ದಾರೆ. ಇದರಲ್ಲಿ ತೋಂಟದ ಸಿದ್ಧಲಿಂಗರು ಹಾಗೂ ಇತರೆ ಶರಣರ ೪೪ ವಚನಗಳಿವೆ.

೧೨. ಮಹದೇವ ಯೋಗಿ

ಇವರ ಕಾಲ ೧೬೫೦ನೇ ಇಸವಿಯಾಗಿದ್ದು, ಇವರು `ತ್ರೈಲೋಕ್ಯ ಚಿಂತಾಮಣಿ’ ಕೃತಿಯ ಸಂಕಲನಕಾರ. ಈ ಕೃತಿಯು ‘ವೀರಶೈವ ಚಿಂತಾಮಣಿ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಇದರಲ್ಲಿ ತೋಂಟದ ಸಿದ್ಧಲಿಂಗರ ವಚನಗಳಿವೆ. ಅಷ್ಟಾವರಣಗಳ ಮಹತ್ವವನ್ನು ವೇದ, ಆಗಮ ಮುಂತಾದ ಸಂಸ್ಕೃತ ಕೃತಿ ಮತ್ತು ವಚನಗಳಿಂದ ಸ್ಥಾಪಿಸಲು ಹೊರಬಂತೆ ಕಾಣುತ್ತದೆ. ಈ ಕೃತಿಯು ಶಿವ-ಪಾರ್ವತಿ ಸಂವಾದದಂತಿದೆ. ೧೯ ಶಿವಶರಣ/ಶರಣೆಯರ ೨೪೩ ವಚನ ಹಾಗೂ ೮ ಸ್ಥಲಗಳಿವೆ.

೧೩. ರೇವಣ್ಣಸಿದ್ಧಸ್ವಾಮಿ

ಇವರ ಕಾಲ ಸು. ೧೭೦೦. ಇವರು ಮುರಿಗಾ ಶಾಂತವೀರಸ್ವಾಮಿಗಳ ಶಿಷ್ಯರು. ಇವರು ಬಸವಣ್ಣ ವಚನಗಳ ಟೀಕೆಯನ್ನು ಮಾಡಿದ್ದಾರೆ

೧೪. ಗುರುಸಿದ್ಧಸ್ವಾಮಿ

ಇವರ ಕಾಲ ಸು. ೧೭೦೦. ಇವರು ಸಂಕಲನ ಮಾಡಿದ ಕೃತಿ ‘ಶ್ರೀಮದ್ವೀರಶೈವ ನಿಜಾಚರಣೆ’ ಅಥವಾ ‘ಚಿದೈಶ್ವರ್ಯ ಚಿದಾಭರಣ’. ಇಲ್ಲಿ ೩೧ ವಚನಕಾರರ ೩೯೩ ವಚನ, ೯ ಹಾಡು ಮತ್ತು ೧ ವೃತ್ತ ಹಾಗೂ ೧೮೪ ಗ್ರಂಥಗಳಿವೆ. ಇಲ್ಲಿ ನೀಡಿರುವ ಗುರುಪೀಳಿಗೆ ಮಾಹಿತಿ ವಿದ್ಯಾರ್ಥಿಗಳಿಗೆ, ಜಿಜ್ಞಾಸುಗಳಿಗೆ ಉಪಕಾರಿಯಾಗಿವೆ.

೧೫. ಶಾಂತ ಬಸವೇಶ

ಇವರ ಕಾಲವೂ ಸು. ೧೭೦೦ ವರ್ಷ. ಇವರು ‘ಲಿಂಗಚಿದಮೃತ ಬೋಧೆ’ ಕೃತಿಯ ಸಂಕಲನ ಮಾಡಿದ್ದಾರೆ. ತೋಂಟದ ಸಿದ್ಧಲಿಂಗರ ವಚನಗಳನ್ನು ಉಲ್ಲೇಖಿಸಿದ್ದಾನೆ. ಈ ಕೃತಿಯಲ್ಲಿ ೩೧ ಸ್ಥಲಗಳಿದ್ದು, ೭೯ ಶಿವ ಶರಣ ಶರಣೆಯರ ೮೩೧ ವಚನಗಳಿವೆ. ಗ್ರಂಥದ ಮೊದಲಿಗೆ ಯೋಗಿನಾಥಾಂಕಿತದ ೮೯ ವಿಧಿಗಳು ಹಾಗೂ ಮಾಯಿದೇವನ ‘ಶಿವಾಧವ ಶತಕ’ದ ವೃತ್ತಗಳೂ ಉಲ್ಲೇಖಿತವಾಗಿದೆ.

೧೬. ಗುರುಶಂಕರ ಸ್ವಾಮಿ

ಇವರ ಕಾಲ ಸು. ೧೬೨೦ ನೇ ಇಸವಿ. ಇವರು ಅಂಕಲಿಸಿದ ಕೃತಿ ‘ಜ್ಞಾನಷಟ್ ಸ್ಥಲ ಸಾರ’. ಆರಂಭದಲ್ಲಿ ತೋಂಟದ ಸಿದ್ಧಲಿಂಗ ಬಗ್ಗೆ ಸ್ತುತಿ ಇರುವುದರಿಂದ ಅವರ ಪ್ರಶಿಷ್ಯರು ಎಂಬುದರಲ್ಲಿ ಸಂದೇಹವಿಲ್ಲ. ಇವರು ಆರಂಭದಲ್ಲಿ ಮತ್ತು ಸ್ಥಲಾಂತ್ಯದಲ್ಲಿ ಸ್ವವಿವರ ನೀಡಿದ್ದಾರೆ. ಇವರು ಸಿದ್ಧಲಿಂಗರ ಅಥವಾ ಅವರ ಶಿಷ್ಯ ಸಮುದಾಯದ ಯಾರೊಬ್ಬರ ವಚನಗಳನ್ನು ಉಲ್ಲೇಖಿಸದೆ. ಕೇವಲ ಬಸವ ಕಾಲದ ಶರಣರ ವಚನಗಳನ್ನಷ್ಟೇ ಆಯ್ದುಕೊಂಡಿರುವುದು ಆಶ್ಚರ್ಯವೆನಿಸುತ್ತದೆ. ಸಂಸ್ಕೃತ ಶ್ಲೋಕದ ಮೂಲಕ ಸ್ಥಲ ವಿವರಣೆ ನೀಡಲಾಗಿದೆ.

ಇವರು ವಿರಕ್ತ ಪರಂಪರೆಗೆ ಸೇರಿದ್ದರೂ ಆಚಾರ್ಯ ಪರಂಪರೆಯ ರೇಣುಕರನ್ನು ಸ್ತುತಿಸಿದ್ದಾರೆ. ಇದು ಆ ಕಾಲದ ಗುರು – ವಿರಕ್ತರ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ. ‘ಗುರುಮಹಾತ್ಮೆಯ ಸ್ಥಲ’ದಲ್ಲಿ ಇವರು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಮಡಿವಾಳ ಮಾಚಿದೇವರ ಜನನವು ಭೂಲೋಕದಲ್ಲಿ ಜೈನ, ಬೌದ್ಧ, ಚಾರ್ವಾಕ ಮುಂತಾದ ಷಡ್ದರ್ಶನಿಗಳ ಹೆಚ್ಚಳದಿಂದ ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ ಮೊದಲಾದ ಅಷ್ಟಾವರಣಗಳ ಜ್ಞಾನ ಭಕ್ತರಲ್ಲಿ ಕಡಿಮೆಯಾಗಿ ಅವರು ನರಕಕ್ಕೆ ಹೋಗಬಾರದೆಂಬ ಕಾರಣಕ್ಕೆ ಆಯಿತು ಎಂದು ಹೇಳಿದ್ದಾರೆ. ಎರಡನೆಯದಾಗಿ ಚೆನ್ನಬಸವಣ್ಣ ಸುಬ್ರಹ್ಮಣ್ಯನ ಅವತಾರ ಎಂಬುದನ್ನು ಖಂಡಿಸಿ ಷಟ್ ಸ್ಥಲ ಸ್ಥಾಪನೆಗೆ ಜನಿಸಿದರು ಎಂದಿದ್ದಾರೆ. ಮೂರನೆಯದಾಗಿ ಅಲ್ಲಮಪ್ರಭುವು ನಿರಂಜನ ಎಂಬ ಗಣೇಶ್ವರನು ಎಂಬುದನ್ನು ನಿರಾಕರಿಸಿ ಪ್ರಭುದೇವರು ಸುಜ್ಞಾನಿ-ನಿರಹಂಕಾರದ ಭಕ್ತಿಯ ಕಾರಣದಿಂದ ಜನಿಸಿದರು ಎಂದು ಉಲ್ಲೇಖಿಸಿದ್ದಾರೆ. ಮಡಿವಾಳ ಮಾಚಿದೇವರು ಕೂಡ ಶಾಪಗ್ರಸ್ಥ ರುದ್ರಾದೇವರು ಎಂಬ ಪುರಾಣ ಕತೆಯನ್ನು ನಿರಾಕರಿಸುತ್ತಾ ಪರವಾದಿಗಳ ಪರಾಜಯಕ್ಕಾಗಿ ಬಂದರು ಎಂದು ಹೇಳಿದ್ದಾರೆ.

ಇನ್ನೂ ಈ ಸಂಕಲನದ ವಚನಗಳ ಪ್ರಾಮಾಣಿಕತೆಯೂ ಕೂಡ ಸಂಶಯಾಸ್ಪದವಾಗಿದೆ ಎಂದು ವಿದ್ಯಾಶಂಕರ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಉಲ್ಲೇಖಗೊಂಡಿರುವ ಹಲವು ವಚನಗಳ ಕರ್ತೃವಿನ ಸತ್ಯಾಸತ್ಯತೆಯ ಬಗ್ಗೆ ಸಂಶಯವಿದೆ.

೧೭. ಗುರುಸಿದ್ಧದೇವ

ಇವರ ಕಾಲ ಸು. ೧೭೦೦. ಇವರ  ಸಂಕಲನ ಗ್ರಂಥ ‘ಚಿದೈಶ್ಯಚಿದಾಭರಣ’. ಇದರ ೩೯೨ನೇ ವಚನದಲ್ಲಿ ತಮ್ಮ ಗುರು ಪರಂಪರೆಯನ್ನು ವರ್ಣಿಸಿದ್ದಾರೆ. ಇವರು ಶ್ರೀ ಶೈಲ ಪರ್ವತಕ್ಕೆ ನೈರುತ್ಯ ಭಾಗದಲ್ಲಿನ ಕುಮಾರ ಪರ್ವತದ ಉತ್ತರ ದಿಕ್ಕಿನಲ್ಲಿರುವ ನಾಗರ ಗವಿಯ ಸಿಂಹಾಸನಾಧೀಶ್ವರರಾಗಿದ್ದರು. ತೋಂಟದ ಸಿದ್ಧಲಿಂಗೇಶ್ವರರ ನಂತರದ ಹನ್ನೊಂದನೆಯ ತಲೆಯ ಶಿಷ್ಯನು ಇವನಾಗಿರುವುದರಿಂದ ಇವನ ಕಾಲ ಸು. ೧೭೦೦ ಎಂದು ಹೇಳಬಹುದು. ಇದನ್ನು ಸಂಪಾದಿಸಿರುವ ಪಿ.ಎಂ. ಗಿರಿರಾಜುರವರು "ಮಿಕ್ಕಿನ ಆಚರಣೆ ಸಂಬಂಧ ವಚನಾಗಮಗಳಿಗೂ ಈ ಆಗಮಕ್ಕೂ ನಿಚ್ಚಳವಾದ ಮೆಚ್ಚಬಹುದಾದ ದೊಡ್ಡ ವ್ಯತ್ಯಾಸವೆಂದರೆ, ಗುರುಸಿದ್ಧದೇವರು ತಮ್ಮಿಂದಲೇ ರಚಿತವಾದ ಗರ್ಭಿತವಾದ ಅತ್ಯುತ್ತಮವರ್ಗದ ೧೦೧, ವಚನಗಳನ್ನು ಈ ವಚನಾಗಮಕ್ಕೆ 'ವಜ್ರಬಂಧ ವಾಗಿ ಬಳಸಿದ್ದಾರೆ ! ಈ ಎಲ್ಲ ವಚನಗಳೂ'ಸಂಗನಬಸವೇಶ್ವರ' ಎಂಬ ಶಿಷ್ಯ ಸಂಬೋಧನ ಮುದ್ರಿಕೆಯಲ್ಲಿವೆ.........ಲಿಂ.ಫ.ಗು.ಹಳಕಟ್ಟಿಯವರು ಸಂಗನ ಬಸವೇಶ್ವರರ ವಚನಗಳು' ಗ್ರಂಥವನ್ನು ಸಂಪಾದಿಸಿದ್ದಾರೆ (ಪೀಠಿಕೆ, ಪು., ೧೯೮೫). ಚಿದೈಶ್ವರ ಚಿದಾಭರಣ' ಸಂಕಲನದಲ್ಲಿ ತೋಂಟದ

ಸಿದ್ಧಲಿಂಗರ ವಚನಗಳನ್ನು ಉದಾಹರಿಸಿದ್ದಾನೆ. ಈ ಸಂಕಲನದಲ್ಲಿ ೩೧ ವಚನಕಾರಕಾರ್ತಿಯರ ೩೯೩ ವಚನ, ಹಾಡು ಭಾಮಿನಿ ಷಟ್ಟದಿ ೧೧, ೧ವೃತ್ತ ಹಾಗೂ ೧೮೪ ಗ್ರಂಥಗಳಿವೆ. ಹತ್ತು ಸ್ಥಲಗಳಲ್ಲಿ ಕೃತಿ ವಿಂಗಡಣೆಗೊಂಡಿದೆ. 'ಶ್ರೀಗುರುಲಿಂಗ ಜಂಗಮವೆಹರಹರ ಶಿವಶಿವ ಜಯಜಯ ಕರುಣಾಕರ ಮತ್ರಾಣನಾಥ ಮಹಾಶ್ರೀಗಳುಸಿದ್ಧಲಿಂಗೇಶ್ವರಾ' ಅಂಕಿತದ ೩೬ ವಚನಗಳಿವೆ ಈ ಕೃತಿಯಲ್ಲಿ ಗುರುಸಿದ್ದೇವರು ಶ್ರೀ ಗುರು ಚನ್ನಬಸವೇಶ್ವರ ದೇವರು ಸಿದ್ಧರಾಮೇಶ್ವರ ದೇವರಿಗೆ ಹೇಳಿದ ‘ಪದಮಂತ್ರಗೋಪ್ಯ’ವನ್ನು ಆಮೂಲಾಗ್ರವಾಗಿ ತಿಳಿಸಿದ್ದಾರೆ.

೧೮. ಕವಿ ಚೆನ್ನ

ಇವರ ಕಾಲದ ಬಗ್ಗೆ ನಿಖರ ಮಾಹಿತಿ ಇಲ್ಲ. ಇವರ ಕೃತಿಗಳು ‘ಮಲ್ಲೇಶನ ತಾರಾವಳಿ’ ಮತ್ತು ‘ತೋಂಟದ ಸಿದ್ಧಲಿಂಗಯತಿಯ ಸುವ್ವಿ’. ಇದೊಂದು ಒನಕೆವಾಡು ಎಂಬುದನ್ನು ಇದರ ಧಾಟಿ ಹೇಳುತ್ತದೆ. ಇವರ ಕಲ್ಪನೆಯಂತೆ ಬ್ರಹ್ಮ-ವಿಷ್ಣು-ಮಹೇಶ್ವರರ ಒಡೆಯ ತೋಂಟದ ಸಿದ್ಧಲಿಂಗ ಸಿದ್ಧಲಿಂಗೇಶನನ್ನು ಕವಿ ತನಗೆ ಕರ್ತೃ ಎಂದು ಹೇಳಿಕೊಂಡಿರುವನು.

೧೯. ಅಜ್ಞಾತ ಕವಿ

ಗುರುಶಾಂತ ದೇವರ ತಾರಾವಳಿಯನ್ನು ಅಜ್ಞಾತ ಕವಿಯೊಬ್ಬ ಬರೆದಿದ್ದು. ಇಲ್ಲಿ ಆ ಕವಿಯು ಬೇರೊಬ್ಬ ಹೆಣ್ಣುಮಗಳಿಗೆ ಎಳಮಲೆಯ ಗುರುಶಾಂತದೇವನ ಮಹಿಮೆಯನ್ನು ನಿರೂಪಿಸುತ್ತಿರುವಂತಿದೆ. ಈ ಅಜ್ಞಾತ ಕವಿಯ ಅಭಿಪ್ರಾಯದಂತೆ ಗುರುಶಾಂತದೇವನು ನರನಲ್ಲ. ಪಶುಪತಿಯೇ ಮರ್ತ್ಯದ ಲೋಪಗಳ ಸರಿಪಡಿಸಲು ಅವತರಿಸಿದನು ಎಂದು ಹೇಳಲಾಗುತ್ತಿದೆ. ಇವನ ಕಾಲ ಸಿ. ೧೭೦೦.

೨೦. ಸುವ್ವಿ ಬಸವ

ಇವರ ಕಾಲ ಸು. ೧೭೦೦. ಇವರ ಕೃತಿ ‘ನಿರುವಾಣಿ ಸ್ವಾಮಿಯವರ ತಾರಾವಳಿ’. ಇದರಲ್ಲಿ ಹದಿಮೂರು ನುಡಿಗಳಿವೆ. ಈ ತಾರಾವಳಿಯ ಆದಿಯಲ್ಲಿ ನಿರ್ವಾಣಿ ಸಿದ್ಧಲಿಂಗೇಶನ ಮಹಿಮೆ ಸ್ತುತಿ ಇದೆ. ಈ ಕೃತಿಯಲ್ಲಿ ಶಿವನಿಗೆ ಅಭೇದವಾಗಿ ನಿರ್ವಾಣಿ ಸ್ವಾಮಿಯನ್ನು ಕವಿ ವರ್ಣಿಸಿದ್ದಾನೆ. ಇವರು ‘ನಿರ್ವಾಣಿ ಸ್ವಾಮಿಯ ಶೃಂಗಾರ ತಾರಾವಳಿ’ ಗ್ರಂಥವನು ರಚಿಸಿದ್ದಾರೆಂಬ ಐತಿಹ್ಯವಿದೆ.


೨೧. ಮರುಸಿದ್ಧಲಿಂಗದೇಶಿಕ

ಇವರ ಕಾಲ-೧೭೦೦. ಇವರ ಕೃತಿ ;ಮಹಂತಿನ ತಾರಾವಳಿ’. ಇದರಲ್ಲಿ ಕವಿಯ ಬಗ್ಗೆ ಯಾವ ವಿವರಗಳಿಲ್ಲದಿದ್ದರೂ ಕೊನೆಯ ಕಂದ ಪದ್ಯದಿಂದ ಇವರೇ ಕರ್ತೃ ಎನ್ನವುದು ತಿಳಿಯುತ್ತದೆ. ಇವರು ತೋಂಟದ ಸಿದ್ಧಲಿಂಗನ ಪ್ರಶಿಷ್ಯ ಪರಂಪರೆಗೆ ಸೇರಿದವರು. ಇವರ ಕೃತಿಯಲ್ಲಿ ಓರ್ವ ಜಂಗಮನು ಶಿವನ ರೂಪದಲ್ಲಿ ಓಡಾಡುವ ಒಂದು ಅದ್ಭುತ ವರ್ಣನೆಯನ್ನು ಕಾಣಬಹುದಾಗಿದೆ.

೨೨.ಅಜ್ಞಾತ ಕವಿ

ಒಬ್ಬ ಅಜ್ಞಾತ ಕವಿಯಾದ್ದರಿಂದ ಕಾಲದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ‘ತೋಂಟದ ಸಿದ್ದೇಶ್ವರನ ಜಾತ್ರೆಯ ತಾರಾವಳಿ’ ಎಂಬ ಗ್ರಂಥ ಸಿಕ್ಕಿದೆ. ಇದರಲ್ಲಿ ಭಕ್ತರ ಹರಕೆ, ಕಾಣಿಕೆ ಮುಂತಾದವುಗಳ ವಿವರಣೆ ಇದೆ.

೨೩. ಕಂಪಿನಂಜಯ್ಯ

ಕಾಲ ಸು. ೧೬೫೦. ‘ಮುರಿಗೆಯ ಶಾಂತವೀರನ ಸ್ತುತಿರೂಪವಾದ ‘ನಾಂದ್ಯ’ವನ್ನು ಬರೆದಿರುವರು. ಇದು ವಾರ್ಧಕ ಷಟ್ಪದಿಯಲ್ಲಿ ಪ್ರಕಟವಾಗಿದೆ. ಕೆಲವರು ‘ಚೈತನ್ಯೇಶ್ವರ ವಿಜಯ’ ಕೃತಿಯೂ ಇವರದ್ದೆ ಎನ್ನುವರು. ಇವರ ನಾಂದ್ಯ ಕೃತಿಗೆ ‘ಮುರಿಗಾ’ ಮುರಿಗೆಯ ಸ್ವಾಮಿಗಳ ಸ್ತೋತ್ರದ ನಾಂದ್ಯ, ಶಾಂತವೀರೇಶ್ವರನ ಸ್ತೋತ್ರದ ನಾಂದ್ಯ ಎಂಬ ಹೆಸರುಗಳಿವೆ. ಇದರಲ್ಲಿ ೬೫ ಷಟ್ಪದಿಗಳಿವೆ. ಇವರು ‘ಮಂಗಳಜ್ಯೋತಿ’ ಅಷ್ಟಕದ ಕರ್ತೃವೂ ಹೌದು.        

೨೪. ಸಿದ್ಧಲಿಂಗ ಶಿವಾಚಾರ್ಯ

ಕಾಲ ಸು. ೧೭೦೦. ಪುರಾಣದ ದೇಶಿಕ ಮತ್ತು ಪುರಾಣದ ಸಿದ್ಧಲಿಂಗಾಚಾರ್ಯ ಎಂದೇ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಇವರ ಕೃತಿ ‘ಷಟ್ಸ್ಥಲ ಶಿವಾಯಣ’. ಎಂ.ಎಂ.ಕಲಬುರ್ಗಿಯವರು “ತೋಂಟದ ಸಿದ್ಧಲಿಂಗೇಶ್ವರರ ನೇರ ವಾರಸುದಾರಿಕೆಯನ್ನು ಮುರುಗಾ ಸಮಯದವರಿಗೆ ಹೇಳುವ ಸು. ೧೮೭೦ರ ನಿರಂಜನವಂಶ ರತ್ನಾಕರ ಮತ್ತು ಮಹಾಲಿಂಗೇಂದ್ರವಿಜಯ ಕೃತಿಗಳಿಗಿಂತ ೧೭೦ ವರ್ಷ ಪೂರ್ವದ ಅಂದರೆ ೧೭೦೦ರ ಷಟ್ಟಲ ಶಿವಾಯಣ ಹೆಚ್ಚು ವಿಶ್ವಾಸಾರ್ಹವೆಂದೇ ಹೇಳಬೇಕು”ಎಂದಿರುವರು. (ಪೀಠಿಕೆ, ಷಟ್‌ಸ್ಥಲ ಶಿವಾಯಣ, ಪು xi. ಪೂರ್ವೋಕ್ತ). ಇದನ್ನು ಮೊದಲು ಶಿವನು ಪಾರ್ವತಿಗೆ ಹೇಳಿದನು. ಅದನ್ನು ನಂದೀಶನು ಪ್ರಮಥರಿಗೆ ಉಪದೇಶಿಸಿದನು. ಅದನ್ನು ಅಲ್ಲಮಪ್ರಭು ಬಸವಣ್ಣನಿಗೆ ನಿರೂಪಿಸಿದನು. ಅದನ್ನು ಹರಪುರದ ಷಟ್ ಸ್ಥಲಯೋಗಿ  ಬಸವ ಪ್ರಭು ತನ್ನ ಶಿಷ್ಯನಿಗೆ ಬೋಧಿಸಿದನು ಮುಂತಾಗಿ  ಈ ಕೃತಿಯಲ್ಲಿ ವಿವರಿಸಲಾಗಿದೆ.

 ತೋಂಟದ ಸಿದ್ಧಲಿಂಗರ ಪ್ರಶಿಷ್ಯರುಗಳಲ್ಲಿ ಕೆಲವರು ಸಿದ್ಧಲಿಂಗರನ್ನು ಕುರಿತು ಸ್ತುತಿಸಿರುವ ಕಾವ್ಯಗಳು ೧. 

೧. ಧನಗೂರು ಷಡಕ್ಷರ ದೇವ: ಯಳಂದೂರು ಹಾಗೂ ಧನಗೂರು ಎಂಬ ಎರಡು ಮಠಾಧೀಶರಾಗಿದ್ದರು. ಕನ್ನಡ ಮತ್ತು ಸಂಸ್ಕೃತದಲ್ಲಿ ಪ್ರೌಢಿಮೆಯನ್ನು ಹೊಂದಿದ್ದ ಇವರಿಗೆ ‘ಉಭಯ ಭಾಷಾ ವಿಶಾರದ’ ಎಂಬ ಬಿರುದಿದೆ. ಇವರ ಅಂಕಿತ ‘ಶಿವಲಿಂಗ’. ಇವರು ‘ರಾಜಶೇಖರ ವಿಳಾಸ’ ‘ಶಬರ ಶಂಕರ ವಿಳಾಸ’ ಮತ್ತು ‘ಬಸವರಾಜ ವಿಜಯ’ ಗಳೆನ್ನುವ ಮೂರು ಚಂಪೂ ಕೃತಿಗಳನ್ನು ಬೆರದಿದ್ದಾರೆ. ‘ಕವಿಕರ್ಣ ರಸಾಯನ’ ಎಂಬ ಸಂಸ್ಕೃತ ಮಹಾಕಾವ್ಯದ ಕರ್ತೃವೂ ಆಗಿದ್ದಾರೆ. “ಮಹಾಕವಿ ಷಡಕ್ಷರದೇವ ಸಿದ್ಧಲಿಂಗ ಶಿವಯೋಗಿಗಳನ್ನು ಕಾವ್ಯಾರಂಭದಲ್ಲಿ ಸ್ತುತಿಸಿರುವನ್ನಲ್ಲದೆ ಸಂಸ್ಕೃತದಲ್ಲಿ ಸಿದ್ಧಲಿಂಗಸ್ತವನವೆಂಬ ಅಷ್ಟಕವನ್ನು ರಚಿಸಿರುವನು. ಅವನ್ನಿಲ್ಲಿ ಉದಾಹರಿಸಬಹುದು. 

ದುರಿತತಮಃ ಪತಂಗನಮಳಾರ್ಥವಿವೇಚನೆ ಸತ್ಪ್ರಸಂಗನೀ

ಶ್ವರಲಸದಂತರಂಗನಭವಾಗಮವಾರಿಜದಿವ್ಯ ಭೃಂಗನ

ಕ್ಷರಪರಲಿಂಗಸಂಗನತಿಶಾಂತನಿರಸ್ತಜಡಾನು ಷಂಗನೊ

ಲ್ದುರುತರ ಸಿದ್ಧಲಿಂಗಯತಿತುಂಗನೊಡರ್ಚುಗೆ ಸಜ್ಜನೇಷ್ಟಮಂ

-ರಾಜಶೇಖರವಿಳಾಸಂ(೧-೧೪)

ಶ್ರೀಕರವೀರಸಾಧು ಸಹಕಾರನುದಂಚಿತಮುಕ್ತಕಂ ಸುಪ

ದ್ಮಾಕರನುದ್ಗಮಪುರುಚಿ ಮಂಜುಲತಾನ್ವಿತನೂರ್ಜಿತಾಗಮಾ

ನೀಕನುತಂ ಮಹಾವಿರತಿ ಸಂಯುತನಾದುದಳೆಂದೆ ಸಾರ್ಥನಾ

ಮಾರಕರನಾದ ತೋಂಟದ ಗುರೂತ್ತಮನೋರ್ವನೆ ಸತ್ಫಲಪ್ರದಂ

-ವೃಷಭೇಂದ್ರ ವಿಜಯ(೧-೧೨)

ಜಗಜ್ವಾಲಪಾಲಂ ಜನಸ್ತುತ್ಯಶೀಲಂ |

ಭವಾರಣ್ಯದಾವಂ ಭೃತಸ್ವಾನುಬಾವಂ |

ಶಿವಾನಂದಕೋಶಂ ದಿನೇಶಪ್ರಕಾಶಂ |

ಮಹಾಲಿಂಗಸಂಗಂ ಭುಜೇ ಸಿದ್ಧಲಿಂಗಂ  ||೧||

ಕಲಾಸತ್ಕಾಲಾಪಂ ಕಪರ್ದಿಸ್ವರೂಪಂ |    

ಮನೋವೃತ್ತಿಶೂನ್ಯಂ ಮುನಿವಾತಮಾನ್ಯಂ |

ಸಮುಂಚದ್ಗುಣಾಂಕ ಸದಾ ನಿಷ್ಕಳಂಕಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ   ||೨||

ಪವಿತ್ರಸ್ವಗಾತ್ರಂ ಬುಧಸ್ತೋತ್ರಪಾತ್ರಂ |

ನಿವೃತ್ತಾವರೋಧಂ ನಿಸರ್ಗಾವಬೋಧಂ |

ಚಿದಾಮೋದಭಾಜಂ ಚರಾರ‍್ಯರಾಜಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ    ||೩||

ಜಿತರಾತಿವರ್ಗಂ ಗೃಹೀತಾದ್ಯಮಾರ್ಗಂ |

ತತಾಮ್ನಾಯಸಾರಂ ತಮಸ್ತೊಮದೂರಂ |

ಪರಮ್ ಷಟ್‌ಸ್ಥಲಾಂಕಂ ನಿರಾತಂಕಶಂಕಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ    ||೪||

ಶಿವಾಚಾರಪಕ್ಷಂ ಕೃಪಾಭ್ಯತ್ಕಟಾಕ್ಷಂ |

ಷಡಧ್ವಾದಿಬೀಜಂ ನತಾಮರ್ತ್ಯಭೂಜಂ |

ಪರಿತ್ಯಕ್ತರಾಗಂ ಪರಬ್ರಹ್ಮಯೋಗಂ | 

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ    ||೫||

ಪರಿವ್ರಾಡ್ವರೇಣ್ಯಂ ಗಣೇಶಾಗ್ರಗಣ್ಯಂ |

ಸದಾಸತ್ಯಭಾಪಂ ಶಿವಜ್ಞಾನಭಾಸಂ |

ಸರುದ್ರಾಕ್ಷಮಾಲಂ ಲಸದ್ಭಸ್ಮಫಾಲಂ |

ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ||೬||

ಶರಣಜನಪರಿಭವಲತಾಳಿಯಂ ಕೀಳ್ದುದು 

ಷ್ಕರಕುಜನ ಕುಜವಿತಾನಂಗಳಂ ತರಿದು ದು 

ಸ್ತರದುರಾಶಾವಾರಿಭರಿತಕಾಸಾರಮಂ ಕೆಡಿಸಿಯನೃತ ಫಲಂಗಳಂ 

ಕರಮೆ ನಾಶಂಗೆಯ್ದು ವಿಷಯಕುಸುಮಂಗಳಂ 

ಕುರಿಸದಂತೆಸಗಿ ತೋಂಟದ ರಾಯನೆನಿಸಿದ 

ಚ್ಚರಿಯ ಚರಿತಂ ಸಿದ್ಧಲಿಂಗೇಶನೆಮಗೀಗೆ ಸುರುಚಿರೇಷ್ಟಾರ್ಥಫಲಮಂ”

೨. ಕೊಟ್ಟೂರು ಬಸವೇಶ್ವರ ಚಾರಿತ್ರ  ಸಿದ್ಧಲಿಂಗರ ಬಗೆಗಿನ ಸಂಗತಿಗಳು.

ಅರೆಗಲ್ಲ ಬಸವನಿಗೆ ಅನ್ನವನುಣಿಸಿದನೆ

ಗುರುಮಠವನು ಬಿಟ್ಟು ಚರಮೂರ್ತಿಯಾದನೆ

ಗಜಚರ್ಮಾಂಬರಧರ ಗಂಗಾಧರನೆ

ಅಜ ಸುರಮುನಿ ವಂದ್ಯ ಆಧಿ ಸಿದ್ಧೇಶನೆ

ಕಾಯೊ ನಮ್ಮಯ್ಯ ಕಾಮಿತಫಲವೀಯೋ ದಮ್ಮಯ್ಯ

ಕಾ[ಮನ] ಮದಭಂಗ ಕರುಣಿ ತೋಂಟದ ಲಿಂಗ

ಜಡದೇಹಿ ನಾನು ಷಡುಸ್ಥಲ ದೃಢಮೂರ್ತಿ ನೀನು

ಬಿಡದಿರೆನ್ನಯ ಕೈಯ್ಯ ನಡಸು ಮಾರ್ಗದಿ ಜೀಯ್ಯ

ಬಡುಮನುದವನೆನ್ನ ಪ[ಲ]ಗುಣ ರನ್ನ

ಭಸಿತವುಭೂಷ ಭಾಳಾಂಬಕವೆಸೆವ ವಿಲಾಸ

ಬಸವಾದಿ ಗಣ ಮುಕ್ತ ಭಜಕಜನಾಸಕ್ತಿ

ಯೆನಿಪ ಪಾಳಿಪ ಸ್ವಾಮಿ ಸಿದ್ಧೇಶಸ್ವಾಮಿ

ನಮದಿಷ್ಟಯುಕ್ತ ರಕ್ಷಿಪುದಯ್ಯ ಎನಗೆ ನೀ ಕರ್ತೃ

ಘನ ಪರತರಸಂಗ ಮತಿಯ ಚನ್ನಂಗೆ ಲಿಂಗ

ಯೆನಿಪ ಪಾಲಿಪ ಸ್ವಾಮಿ ಸಿದ್ಧೇಶಸ್ವಾಮಿ 

ಈ ಕಾವ್ಯ ಪ್ರವಾಹದಲ್ಲಿ ಸಿದ್ಧಲಿಂಗೇಶ್ವರನ ವ್ಯಕ್ತಿತ್ವ ಸ್ಫುಟವಾಗಿ ಪಡೆಮೂಡಿದೆ.  ಅವರ ಹೆಸರನ್ನೆತ್ತಿದರೆ ಸಾಕು; ನಮ್ಮ ಕವಿಗಳು ಭಕ್ತಿಯ ನಿರ್ಭರ ಭಾವದಿಂದ ಕುಣಿದಾಡುವರು. ಷಡಕ್ಷರದೇವನಂತಹ ಮಹಾಕವಿಯ ಸ್ತುತಿಗೆ ಪಾತ್ರರಾದ ಸಿದ್ಧಲಿಂಗ ಶಿವಯೋಗಿಗಳ ವ್ಯಕ್ತಿತ್ವ ಹಾಗೂ ಅವರ ಪ್ರಭಾವ ಮುದ್ರೆಗಳನ್ನು ವರ್ಣಿಸುವ ಶಕ್ತಿ ಶಬ್ದಕ್ಕಿಲ್ಲವೆಂದು ಹೇಳಬಹುದು.


   ತೋಂಟದ ಸಿದ್ಧಲಿಂಗರ ಶಿಷ್ಯ-ಪ್ರಶಿಷ್ಯರ ಸಾಹಿತ್ಯ ಕೊಡುಗೆಯೂ ಅನುಪಮವಾಗಿದೆ. ಸಿದ್ಧಲಿಂಗರ ಪ್ರಶಿಷ್ಯರಲ್ಲಿ ಮುಖ್ಯವಾಗಿ ಮುರಿಗಾ ಶಾಂತವೀರರು, ಇಮ್ಮಡಿ ಮುರಿಗಾ ಗುರುಸಿದ್ಧರು, ಸೋಮಶೇಖರಶಿವಯೋಗಿ, ಹಾಗಲವಾಡಿ ಮುದ್ವೀರಸ್ವಾಮಿ, ಜ್ವಲಕಂಠ ಮಹಾಂತಸ್ವಾಮಿ, ಕಂಪಿನಂಜಯ್ಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಕೈಗೊಂಡವರಾಗಿದ್ದಾರೆ. ಮುರಿಗಾ ಶಾಂತವೀರರು  ಶೂನ್ಯ ಪರಂಪರೆಯ ಚಿತ್ರದುರ್ಗ ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರು, ವೀರಶೈವ ಧರ್ಮನಿಷ್ಠರು, ಕನ್ನಡ-ಸಂಸ್ಕೃತ ಉಭಯಭಾಷಾಪಂಡಿತರು, ತತ್ವಸಾಹಿತ್ಯ ಸಿದ್ಧಾಂತ ನಿಷ್ಣಾತರು, ಅನುಭಾವಿಗಳು, ಸೃಜನಶೀಲ ಕವಿಗಳು ಆಗಿದ್ದು, ಒಟ್ಟು ೧೭ ಕೃತಿಗಳನ್ನು ರಚಿಸಿದ್ದಾರೆ. ಇಮ್ಮಡಿ ಮುರಿಗಾ ಗುರುಸಿದ್ಧರು ೨೬ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನ್ನಡ ೨೩, ಸಂಸ್ಕೃತ ೩. “ಹಾಲಾಸ್ಯ ಪುರಾಣವನ್ನು ಚಂಪೂ ರೂಪದಲ್ಲಿ ರಚಿಸಿರುವ ಇವರು ಕನ್ನಡ ಸಾಹಿತ್ಯದಲ್ಲಿ ಷಡಕ್ಷರದೇವನ ತರುವಾಯದ ವೀರಶೈವ ಚಂಪೂಕವಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚಂಪೂ, ವಚನ, ಷಟ್ಟದಿ, ಚೌಪದಿ, ವೃತ್ತ, ಸ್ತೋತ್ರ, ನಾಂದ್ಯ, ತಾರಾವಳಿ, ಯಕ್ಷಗಾನ, ಕೊರವಂಜಿ ಸಾಹಿತ್ಯ, ನಿಘಂಟು ಸಾಹಿತ್ಯ, ಹೋಳಿಪದ, ಮಿಶ್ರಾರ್ಪಣ, ಪಂಚಾಶಿಕೆ, ಮಂತ್ರಗೋಪ್ಯ,  ಕರಣಹಸಿಗೆ ಹೀಗೆ ವಿವಿಧ ರೂಪಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. 

     ಇದೇ ಪರಂಪರೆಯ ಸೋಮಶೇಖರ ಶಿವಯೋಗಿ, ಈತ ಮುರುಘಾಪರಂಪರೆಯ ಪ್ರಮುಖ ಟೀಕಾಕಾರನೆನಿಸಿದ್ದಾನೆ. ಬೆಡಗಿನ ವಚನಗಳಿಗೆ ಟೀಕೆ ಬರೆಯುವುದರಲ್ಲಿ ನಿಷ್ಣಾತನಾದ ಈತ ಬಸವಣ್ಣನವರ ೩೪೭ ವಚನಗಳಿಗೆ ಹಾಗೂ ತೋಂಟದ ಸಿದ್ಧಲಿಂಗರ ೧೫೨ವಚನಗಳಿಗೆ ಟೀಕೆ ಬರೆದಿರುವನು. ಅಪಾರವಾದ ಶಾಸ್ತ್ರ ಪಾಂಡಿತ್ಯ ಪಡೆದು ವೇದ, ಉಪನಿಷತ್ತು, ಆಗಮ, ಪುರಾಣ, ತರ್ಕ, ಯೋಗ ಇತ್ಯಾದಿ ಗ್ರಂಥಗಳ ಅಧ್ಯಯನದಿಂದ ಜ್ಞಾನ ಸಂಪಾದಿಸಿದಈತ ಶಿಷ್ಟಭಾಷೆಯಲ್ಲಿ ವಚನಗಳಿಗೆ ತಾತ್ವಿಕಾರ್ಥದ ಟೀಕೆಯನ್ನು ರಚಿಸಿ ಉನ್ನತ ಮಟ್ಟದ ಟೀಕಾಕಾರನೆನಿಸಿದ್ದಾನೆ. ಹಾಗಲವಾಡಿ ಮುದ್ವೀರಸ್ವಾಮಿ, ಈತ ರಾಜಗುರು, ಅನುಭಾವಿ, ಶಿವಯೋಗಿ ಹಾಗೂ ತತ್ವಪ್ರಧಾನ ಸಾಹಿತ್ಯ ಸೃಷ್ಟಿ ಮಾಡಿದ ಉತ್ತಮ ಕವಿ ಎಂದು ಗುರುತಿಸಲ್ಪಡುತ್ತಾನೆ. ವಚನ, ಸ್ವರವಚನಗಳನ್ನು ಬರೆದಿರುವ ಈತ “ಶಿವತತ್ವ ಸುಜ್ಞಾನಪ್ರದೀಪಿಕೆ” ಎಂಬ ಪಟ್ಟದಿಕಾವ್ಯವನ್ನೂ ರಚಿಸಿದ್ದಾನೆ. ೧೩೦ಕ್ಕೂ ಹೆಚ್ಚು ಸ್ವರವಚನಗಳನ್ನು ರಚಿಸಿದ್ದಾನೆ.   ಸಿದ್ಧಲಿಂಗರ ಶಿಷ್ಯ-ಪ್ರಶಿಷ್ಯರುಗಳು ರಚಿಸಿರುವ ಸಾಹಿತ್ಯದಲ್ಲಿ, ಧಾರ್ಮಿಕ, ಐತಿಹಾಸಿಕ, ಪೌರಾಣಿಕ ಹಾಗೂ ಚಾರಿತ್ರಿಕ, ತಾತ್ವಿಕ, ಸ್ತೋತ್ರಪ್ರಧಾನವಸ್ತು ಪ್ರಮುಖವಾಗಿದ್ದು ಈ ಮೂಲಕ ವಚನಕಾರರ ಹಾಗೂ ವೀರಶೈವ ಕವಿಗಳ ದೃಷ್ಟಿ-ಧೋರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಮಕಾಲೀನ ಅರಸರ ಹಾಗೂ ಸಾಮಾಜಿಕಸಂಗತಿಗಳ ಉಲ್ಲೇಖಗಳು ಅನೇಕ ಕೃತಿಗಳಲ್ಲಿ ಅಳವಟ್ಟಿವೆ. ಸಾಹಿತ್ಯ ರಚನೆಯ ಅಭಿವ್ಯಕ್ತಿಗೆ ಮಾಧ್ಯಮವಾದ ರೂಪದ ದೃಷ್ಟಿಯಿಂದಲೂ ಮುರುಘಾ ಪರಂಪರೆಯ ಕವಿಗಳು ಸಾಕಷ್ಟು ವೈವಿಧ್ಯತೆಯನ್ನು ಮೆರೆದಿದ್ದಾರೆ. ಪಾಂಡಿತ್ಯ ಮೆರೆಯಲು ಚಂಪೂ ಹಾಗೂ ಷಟ್ಪದ ರೂಪಗಳಲ್ಲಿ ಪ್ರೌಢಕಾವ್ಯಗಳನ್ನು ರಚಿಸಿದರೆ, ಜನಮನವನ್ನು ತಟ್ಟಲು ಯಕ್ಷಗಾನ, ಜಾನಪದ ಧಾಟಿಯಲ್ಲಿ ಲಘು ಕೃತಿಗಳನ್ನು ರಚಿಸಿದ್ದಾರೆ. ವೀರಶೈವ ಧರ್ಮದ ತಾತ್ವಿಕಾಂಶಗಳನ್ನು ಪ್ರತಿಪಾದಿಸುವುದಕ್ಕಾಗಿ, ಶಿವನ ಲೀಲಾವಿಲಾಸ, ಶಿವಯೋಗದ ಸ್ವರೂಪ, ಮಹತ್ವ, ಶಿವಪಾರಮ್ಯ ಈ ಮೊದಲಾದ ಅಂಶಗಳನ್ನು ಎತ್ತಿ ಹೇಳಲು ವಚನ, ಸ್ವರವಚನ, ಕಂದ, ಷಟ್ಟದಿ, ನಾಂದ್ಯ, ಸ್ತೋತ್ರದಂತಹ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡಿದ್ದಾರೆ. ತಾರಾವಳಿ ಷಟ್ಟದಿ ರೂಪಗಳಲ್ಲಿ ಚಾರಿತ್ರಿಕ ಅಂಶಗಳನ್ನು ಅಳವಡಿಸುವ ಮೂಲಕ ತಮ್ಮ ಕೃತಿಗಳನ್ನು ಇತಿಹಾಸ ರಚನೆಗೆ ಆಕರಗಳಾಗುವಂತೆ ಮಾಡಿದ್ದಾರೆ.

 ಸಿದ್ಧಲಿಂಗರ ಶಿಷ್ಯರು ಮತ್ತು ಪ್ರಶಿಷ್ಯರು  ಧರ್ಮಯಾತ್ರೆಯ ಸಂದರ್ಭದಲ್ಲಿ ನಡೆದಾಡಿದ ಸ್ಥಳಗಳಲ್ಲಿ ಗದ್ದುಗೆಗಳು, ಮಠಗಳು ಅರಂಭವಾಗಲು ತೋಂಟದ ಸಿದ್ಧಲಿಂಗಯತಿಗಳು ಕಾರಣರಾಗಿದ್ದಾರೆಂದು ಅವರನ್ನು ಕುರಿತ, ಕಾವ್ಯ-ಪುರಾಣಗಳು ತಿಳಿಸುತ್ತವೆ. ಅವರ ಶಿಷ್ಯರುಗಳಲ್ಲಿ ಬಹಳಷ್ಟು ಮಂದಿ ವೈಚಾರಿಕ ತೀವ್ರತೆಗಿಂತ ಧಾರ್ಮಿಕ ತತ್ವಗಳ ಘನತೆಯನ್ನು ಎತ್ತಿಹಿಡಿದವರಾಗಿದ್ದು, ಅವರು ವಚನಕಾರರಾಗುವುದಕ್ಕಿಂತ ‘ಶಿವಯೋಗಿ’ಗಳಾಗಿ ಪ್ರಸಿದ್ಧರಾಗಿದ್ದಾರೆ. ಬದುಕಿದ್ದಾಗಲೇ ಪವಾಡಗಳನ್ನು ನಡೆಸಿ, ಐತಿಹ್ಯವಾಗಿ ದೈವತ್ವಕ್ಕೇರಿದವರಾಗಿದ್ದಾರೆ ಎಂಬುದು  ಅವರ ಬಗೆಗಿನ ಮಾಹಿತಿಗಳಿಂದ ತಿಳಿದು ಬರುತ್ತವೆ. ಶಿಷ್ಯ ಪರಂಪರೆಯಲ್ಲಿ ಬರುವ ಕವಿಗಳು ಉಭಯಭಾಷಾವಿಶಾರದರಾಗಿದ್ದು, ಕನ್ನಡ ಸಂಸ್ಕೃತ ಎರಡೂ ಭಾಷೆಗಳಲ್ಲಿ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಮಾರ್ಗ-ದೇಶಿ ಭಾಷೆಗಳೆರಡನ್ನೂ ಸಮನಾಗಿ ಬಳಸಿಕೊಂಡಿದ್ದಾರೆ.

೩. ಪ್ರಶಿಷ್ಯ ಪರಂಪರೆಯ ಕವಿಗಳ ಸಾಹಿತ್ಯದ ವಸ್ತು ಹೆಚ್ಚಾಗಿ ಧಾರ್ಮಿಕ, ತಾತ್ವಿಕ, ಸ್ತೋತ್ರಪ್ರಧಾನವಾಗಿದೆ ಜೊತೆಗೆ ಪೌರಾಣಿಕ, ಚಾರಿತ್ರಿಕ ವಸ್ತುವಿಗೂ ಎಡೆಕೊಡುವ ಮೂಲಕ ವಚನಕಾರರ ಹಾಗೂ ವೀರಶೈವ ಕವಿಗಳ ದೃಷ್ಟಿ-ಧೋರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

೪. ಶಿಷ್ಯ ಪ್ರಶಿಷ್ಯ ಪರಂಪರೆಯ ಸಾಹಿತ್ಯದಲ್ಲಿ ದೀರ್ಘ ಕಾವ್ಯಗಳಿಗಿಂತ ಅಧಿಕವಾಗಿ ಲಘು ಕೃತಿಗಳಿವೆ.

೫. ಈ ಪರಂಪರೆಯ ಸಾಹಿತ್ಯದಲ್ಲಿ ಬಳಕೆಯಾದ ಸಾಹಿತ್ಯ ರೂಪಗಳನ್ನು ಚಂಪೂ, ವಚನ, ಸ್ವರವಚನ, ಷಟ್ಟದಿ, ಚೌಪದಿ, ದಂಡಕ, ಕಂದ, ನಿಘಂಟು, ತಾರಾವಳಿ, ಟೀಕೆ, ಉದ್ಧರಣೆ, ನಾಂದ್ಯ, ಯಕ್ಷಗಾನ, ಕೊರವಂಜಿ ಸಾಹಿತ್ಯ ಹಾಗೂ ಹೋಳಿಪದ ಎಂದು ವಿಂಗಡಿಸಬಹುದು, ಸಿದ್ಧಲಿಂಗ ಯತಿಗಳ ಪರಂಪರೆಯಲ್ಲಿ ಬರುವ ಶಿಷ್ಯ-ಪ್ರಶಿಷ್ಯರುಗಳ ಸಾಹಿತ್ಯ ಕೇವಲ ಕೃತಿರಚನೆಗೆ ಮಾತ್ರ ಮೀಸಲಾಗದೆ, ಇಲ್ಲಿ ಬರುವ ಮಠಗಳು ಮತ್ತು ಮಠಾಧ್ಯಕ್ಷರು ಪ್ರಾಚೀನ ವೀರಶೈವ ಸಾಹಿತ್ಯ ಕೃತಿಗಳ ಹಸ್ತಪ್ರತಿಸಂಗ್ರಹ, ಹಸ್ತಪ್ರತಿ ನಕಲು, ಪ್ರತಿನಕಲು ಕಾವ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವರು. ಅಲ್ಲದೆ ಗ್ರಂಥಗಳ ಪರಿಷ್ಕರಣೆ, ಪ್ರಕಟಣೆ ಕಾವ್ಯವನ್ನು ಕೈಗೊಳ್ಳುವ ಮೂಲಕ ಅಪಾರ ವೀರಶೈವ ಸಾಹಿತ್ಯ ಬೆಳಕಿಗೆ ಬರುವಂತೆ ಮಾಡಿದ್ದಾರೆ.

    ಒಟ್ಟಾರೆ ಸಿದ್ಧಲಿಂಗ ಯತಿಗಳು ಯಾವುದೇ ಗುಡ್ಡಗವಿಯಲ್ಲಿ ಕುಳಿತು ತಪಸ್ಸನ್ನಾಚರಿಸದೆ, ಮಠಕ್ಕೆ ಮಾತ್ರ ಸೀಮಿತವಾಗಿರದೆ, ಕರ್ನಾಟಕವನ್ನಷ್ಟೆ ಯಾತ್ರೆ ಮಾಡದೆ ಹೊರರಾಜ್ಯಗಳಲ್ಲಿಯೂ ಹೋಗಿ ಧರ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿದರು. ಒಂದು ವೇಳೆ ಹಾಗೆ ಮಾಡದಿದ್ದರೆ ಸಾಹಿತ್ಯ ಸಂಸ್ಕೃತಿ ಪುನರುಜ್ಜೀವನ ಗೊಳ್ಳುತ್ತಿರಲಿಲ್ಲ. ತೋಂಟದ ಸಿದ್ಧಲಿಂಗ ಶಿವಯೋಗಿಗಳಲ್ಲಿ ವೀರಶೈವ ಧರ್ಮ ಪುನಃ ಚೇತನಗೊಳಿಸಿದ ಗುಣಗಳು ಕಂಡುಬರುತ್ತವೆ. ಎಡೆಯೂರಿನ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಬ್ಬ ಜನಸಾಮಾನ್ಯನ ಮನೆಯ ಮನದ ಪೀಠದಲ್ಲಿ ಎಡೆ ಪಡೆದವರು. ಅನೇಕ ಶಾಖಾ ಮಠಗಳನ್ನು ಸ್ಥಾಪಿಸಿ ಶಿಷ್ಯ ಕೋಟಿಯನ್ನು ನೇಮಿಸಿದವರು. ಕೊನೆಗೆ ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿ ಹೊಂದಿ ಅದನ್ನು ಜಾಗೃತ ಧರ್ಮ ಕ್ಷೇತ್ರವನ್ನಾಗಿ ಮಾಡಿದರು. ಮುಸ್ಲಿಂ ಅರಸುಗಳ ಆಡಳಿತ ಮತ್ತು ಧರ್ಮ ಭಾಷೆಗಳ ಪ್ರಭಾವ ದಟ್ಟವಾಗಿರುವಾಗಲೇ ವಚನ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿ ಮತ್ತು ವೀರಶೈವ ಧರ್ಮ ಇವುಗಳಿಗೆ ಶಕ್ತಿ ತುಂಬಿದವರು. ನಮ್ಮತನದ ಜ್ಯೋತಿಯನ್ನು ಬೆಳಗಿಸಿದವರು. ಗೋಸಲ ಪೀಠದ ಸ್ವಾಮಿಗಳಾಗಿಲ್ಲದೆ ಆ ಪೀಠ ಪರಂಪರೆಯನ್ನು ಉನ್ನತಿಗೇರಿಸಿದರು. ಗದಗ, ಡಂಬಳ, ಎಡೆಯೂರು ಮುಂತಾದ ಕಡೆ  ಶೂನ್ಯಪೀಠಗಳನ್ನು ಸ್ಥಾಪಿಸಿದವರು. ಪರವಾದಿಗಳನ್ನು ಗೆದ್ದು ಧರ್ಮ ಸ್ಥಾಪನೆ ಮಾಡಿದರು. ಮಹಾನಾಡ ಪ್ರಭುಗಳಿಗೆ ರಾಜಗುರುಗಳಾದರು. ತಮಿಳುನಾಡಿನ ಮತ್ತು ಕೇರಳದ ಪ್ರಭುಗಳ ಮೇಲೆ ಜನತೆಯ ಮೇಲೂ ದಟ್ಟ ಪ್ರಭಾವ ಹೊಂದಿದವರು ಆಗಿದ್ದಾರೆ. ಹಿಂದಿನ ಸಂಸ್ಕೃತಿಯ ಆಚಾರ-ವಿಚಾರದ ಜ್ಞಾನಕ್ಷಿತಿಜವನ್ನು ಅಂದಿನ ಜನಾಂಗಕ್ಕೆ ಸೀಮಿತಗೊಳಿಸದೇ ಮುಂದಿನ ಜನಾಂಗದವರಿಗೂ ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ನೀಡಿ ಹೋದವರು. 

ಗ್ರಂಥ ಋಣ

೧. ಷಟಸ್ಥಲ ಜ್ಞಾನಸಾರಾಮೃತ ಆರ್.ಸಿ.ಹಿರೇಮಠ,

   (ತೋಂಟದ ಸಿದ್ಧಲಿಂಗ ಶಿವಯೊಗಿವಿರಚಿತ) ವೀರಶೈವ ಅಧ್ಯಯನ ಸಂಸ್ಥೆ 

                  ಶ್ರೀಜಗದ್ಗುರುತೋಂಟದಾರ್ಯಸಂಸ್ಥಾನ ಮಠ, ಗದಗ. ೧೯೯೯ 

೨.. ವಿರಕ್ತ ತೋಂಟದಾರ್ಯವಿರಚಿತ ಸಿದ್ಧೇಶ್ವರ ಪುರಾಣ      ಸಂ:ಮೈಲಹಳ್ಳಿ  ರೇವಣ್ಣ, 

    ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಮೈಸೂರು ವಿ.ವಿ.ಮೈಸೂರು. ೨೦೦೧

೩. ಕನ್ನಡ ಸಾಹಿತ್ಯ ಚರಿತ್ರೆ ರಂ.ಶ್ರೀ.ಮುಗುಳಿ

ಪ್ರ: ಉಷಾ ಸಾಹಿತ್ಯ ಮಾಲೆ ಮೈಸೂರು. ೧೯೭೧

೪. ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ  ಸಿ.ನಾಗಭೂಷಣ, 

                 ಅಮೃತ ವರ್ಷಿಣಿ ಪ್ರಕಾಶನ, ನಂದಿಹಳ್ಳಿ. ೧೯೯೯

೫. ಶೂನ್ಯಸಂಪಾದನೆಯನ್ನು ಕುರಿತು    ಚಿದಾನಂದ ಮೂರ್ತಿ, 

  ಸ್ನೇಹ ಪ್ರಕಾಶನ, ಬೆಂಗಳೂರು. ೧೯೯೦

೬. ಶೂನ್ಯಸಂಪಾದನೆ ಒಂದು ಅವಲೋಕನ ಜಿ.ಎಸ್.ಸಿದ್ಧಲಿಂಗಯ್ಯ,

  ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೧೯೯೬

೭.. ಷಟ್‌ಸ್ಥಲ ಪ್ರಭೆ      ಆರ್.ಸಿ.ಹಿರೇಮಠ,    ಪ್ರ:ಕ.ವಿ.ವಿ., ಧಾರವಾಡ. ೧೯೬೬

೮. ಸಾಹಿತ್ಯ ಪರಿಶೋಧನೆ ಬಿ.ಆರ್.ಹಿರೇಮಠ,

   ಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು. ೧೯೯೮

೯. ಸಿ.ನಾಗಭೂಷಣ ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು  ,

   ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2000

೧೦. ಕರ್ನಾಟಕ ವೀರಶೈವ ಮಠಗಳು :  ಚಂದ್ರಶೇಖರ ನಾರಾಯಣಾಪುರ, 

    ಗೆಳೆಯ ಪ್ರಕಾಶನ,     ಚಿಕ್ಕಮಂಗಳೂರು, ೨೦೦೨

೧೧.ವೀರಣ್ಣ ರಾಜೂರ, ವಚನ ಸಂಶೋಧನ, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು,೨೦೦೪

೧೨. ನಿರಂಜನವಂಶ ರತ್ನಾಕರ ಸಂ: ಫ.ಗು. ಹಳಕಟ್ಟಿ

ಶಿವಾನುಭವ ಗ್ರಂಥಮಾಲೆ,ಬಿಜಾಪುರ. ೧೯೩೨


 ವಚನಕಾರ ಅಂಬಿಗರ ಚೌಡಯ್ಯ  

                                                                      ಡಾ.ಸಿ.ನಾಗಭೂಷಣ                                                                               

  ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು. ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ. ಸಾಹಿತಿ ಅಥವಾ ಕವಿಯಾಗಬೇಕಾದರೆ ವಿದ್ವಾಂಸನಾಗಿರಬೇಕಾಗಿಲ್ಲ. ಅರ್ಥವಾಗದ ಆಡಂಬರ ಭಾಷೆಯಲ್ಲಿ ಬರೆಯ ಬೇಕಾಗಿಲ್ಲ. ಅಂತರಂಗದನುಭವಗಳನ್ನು ತುಮುಲಗಳನ್ನು ನೇರವಾಗಿ ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲುದು ಎಂಬುದನ್ನು ತೋರಿಸಿ ಕೊಟ್ಟರು. ಜನಸಾಮಾನ್ಯರ ಆಡುಮಾತನ್ನೇ ಅಂತರಂಗದ ಸೂಕ್ಷ್ಮವಾದ,ನವುರಾದ ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಲ್ಲದೆ, ಗಹನವಾದ ಶಾಸ್ತ್ರವಿಚಾರಗಳಿಗೂ ನಿಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ ಮಾಧ್ಯಮವಾಗಿಸಿದರು. ಸ್ತ್ರೀ-ಪುರುಷರ ನಡುವಿನ ಅಂತರವನ್ನು ನಿರಾಕರಿಸಿ ವರ್ಣಭೇದ, ವರ್ಗ ಭೇದಗಳನ್ನು ಪ್ರತಿಭಟಿಸಿ ವಿಪ್ರ ಹಾಗೂ ಅಂತ್ಯಜರನ್ನು ಒಂದೇ ಎನ್ನುವ ಸಮಾನತೆಯ ಚೌಕಟ್ಟಿನಲ್ಲಿರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಚನ ಚಳುವಳಿಯು ಒದಗಿಸಿ ಕೊಟ್ಟಿತು. ಕನ್ನಡನಾಡಿನ ಹನ್ನೆರಡನೇ ಶತಮಾನದ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಶಿವಶರಣರ ಆಂದೋಲನದ ನಿಮಿತ್ತವಾಗಿ ರೂಪುಗೊಂಡ ವಚನ ಸಾಹಿತ್ಯವು ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಚಿಂತನೆಯ ಪ್ರತಿಪಾದನೆಯೂ ಆಗಿದೆ. ವಚನಕಾರರು ಶಿವಭಕ್ತರೂ ಹೌದು, ಸಮಾಜಚಿಂತಕರೂ ಹೌದು. ಏಕೆಂದರೆ ವಚನಕಾರರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಕೆಲವು ಘಟನೆಗಳು ಆ ಕಾಲದ ಸಾಮಾಜಿಕ ದಾಖಲೆಗಳಾಗಿಯೂ ಕಂಡು ಬರುತ್ತವೆ. ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದ್ದು ಭಾರತೀಯ ಭಕ್ತಿಪಂಥದ ಒಂದಂಗವಾದ ವಚನಚಳುವಳಿಯಲ್ಲೇ ಎಂಬುದು ಗಮನಾರ್ಹ ಅಂಶವಾಗಿದೆ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟಗೊಂಡಿದೆ. ಸಾಮಾನ್ಯ ಜನಸ್ತರವನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳ ಬೇಕು ಎಂಬುದು ಭಕ್ತಿಪಂಥದ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನ ಚಳುವಳಿಯು ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತ ಶಾಹಿಯ ಭೌತಿಕ ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ ಹಂತವನ್ನು ತಲುಪಿದ್ದನ್ನು ಗುರುತಿಸ ಬಹುದಾಗಿದೆ. ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ವಚನ ಚಳುವಳಿಯು ಭಾಷೆಯ ಬಳಕೆಯಲ್ಲಿ ದೇಸಿ ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಇದರ ಮುಖ್ಯ ಲಕ್ಷಣ ಎಂದರೆ ಅದರ ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಟ್ಟಿದ್ದು. ವಚನಕಾರರು ವೈದಿಕ ವ್ಯವಸ್ಥೆಯ ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ನಡೆದು ತನ್ನದೇ ಆದ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು. 

    ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಬಸವಣ್ಣನ ನೇತೃತ್ವದಲ್ಲಿ ಎಲ್ಲಾ ಶರಣರೂ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು ಅಭಿವ್ಯಕ್ತ ಪಡಿಸುವ ಧೈರ್ಯ ತೋರಿದ್ದು ಮುಖ್ಯ ಎನಿಸುತ್ತದೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು. 

    ಬಸವಾದಿ ಶರಣರ ನೇತೃತ್ವದಲ್ಲಿ ಕನ್ನಡ ನಾಡಿನಲ್ಲಿ ನಡೆದ ಆಂದೋಲನವು, ಕೇವಲ ಧಾರ‍್ಮಿಕ ಸ್ವರೂಪದ್ದಾಗಿರದೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಬದಲಾವಣೆಗಳಿಗೂ ಕಾರಣವಾಯಿತು. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ವಚನಕಾರರ ಸಾಮಾಜಿಕ ಪ್ರಜ್ಞೆ ಅತ್ಯುನ್ನತ ಮಟ್ಟದ್ದಾಗಿತ್ತು. ವಚನಕಾರರ ಸಾಮಾಜಿಕ ಪ್ರಜ್ಞೆಯಲ್ಲಿ ತಮ್ಮ ಸಮಕಾಲೀನ ಹದಗೆಟ್ಟ ಸಮಾಜವನ್ನು ಯೋಗ್ಯರೀತಿಯಲ್ಲಿ ನಡೆಯಿಸುವ ಧರ್ಮದ ಡಾಂಭಿಕತೆಯನ್ನು ಹೊಡೆದೋಡಿಸಿ ಮಾನವತೆಯನ್ನು ಎಚ್ಚರಗೊಳಿಸುವ, ಪರಂಪರಾಗತ ಶುಷ್ಕ, ಅರ್ಥಹೀನ, ಸವಕಳಿ ನಡೆ ನುಡಿಗಳನ್ನು ತಿದ್ದಿ ಸಜೀವಗೊಳಿಸುವ, ಅಂಧಾನುಕರಣೆಯಲ್ಲಿ ಮುಳುಗಿ ಹೋಗಿದ್ದ ಜನತೆಗೆ ತಮ್ಮ ತಮ್ಮ ವ್ಯಕ್ತಿ ವೈಶಿಷ್ಟ್ಯದ ಬಗೆಗೆ ಅರಿವು ಮೂಡಿಸುವ ಹಲವಾರು ಅಂಶಗಳನ್ನು ಗುರುತಿಸಬಹುದಾಗಿದೆ. ವಚನಕಾರರಿಂದ ಪ್ರವರ್ತನಗೊಂಡ ವೀರಶೈವ ಧರ್ಮವು ಕೇವಲ ಧಾರ್ಮಿಕ ಅವಶ್ಯಕತೆಯಿಂದ ರೂಪುಗೊಂಡಿದ್ದಲ್ಲ. ಅದು ಸಮಾಜೋಧಾರ್ಮಿಕ ಚಳುವಳಿಯ ಫಲಿತ. 

     ಶಿವಶರಣರ ಚಳುವಳಿಯು, ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ; ಎಲ್ಲಿ ವ್ಯಕ್ತಿಯ ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ ಪರಸ್ಪರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿತು. ಈ ಒಂದು ಮಹತ್ತರವಾದ ಜವಾಬ್ದಾರಿ ಅಂದಿನ ವಚನಕಾರರೆಲ್ಲರ ಚಿಂತನೆಯ ಮೂಸೆಯಲ್ಲಿ ಹೊರಹೊಮ್ಮಿದ ಕಾರಣ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಪಾಲುದಾರರು. ಅದರ ಮುಖ್ಯ ಉದ್ದೇಶ ಮಾತ್ರ ಬಹುಜನರ ಹಿತವನ್ನು ಸಾಧಿಸುವ ಒಂದು ಸಾಮಾಜಿಕ ಧರ್ಮವನ್ನು ರೂಪಿಸುವುದಾಗಿತ್ತು. 

       ವಚನಕಾರರಿಗೆ ಕಾಯಕದ ಮೂಲಕ ದೊರೆತ ಸ್ವಾಭಿಮಾನ ದೇವರಿಗೂ ಸವಾಲು ಹಾಕುವ ಮಟ್ಟಕ್ಕೆ ಹೋಗಿತ್ತು ಎಂದರೆ ವಚನ ಚಳುವಳಿಯ ಪರಿಣಾಮ ಎಷ್ಟೊಂದು ಅಗಾಧವಾಗಿತ್ತು ಎಂಬುದನ್ನು ಇದು ತಿಳಿಸುತ್ತದೆ. ಒಂದು ದೃಷ್ಠಿಯಲ್ಲಿ ವಚನ ಚಳುವಳಿ ಕಾಯಕಜೀವಿಗಳ ಚಳುವಳಿಯೇ ಆಗಿದೆ ಎನ್ನಬಹುದು. ಬುದ್ಧಿಯೇ ಮುಖ್ಯ ಅಂದುಕೊಂಡ ಸಮಾಜದಲ್ಲಿ ದೇಹಶ್ರಮಕ್ಕೂ ತನ್ನದೇ ಆದ ಸ್ಥಾನವಿದೆ ಎಂದು ತೋರಿಸಿಕೊಟ್ಟ ವಿಶಿಷ್ಠ ಸಂಸ್ಕೃತಿ ವಚನಕಾರರದಾಗಿದೆ ಎಂದು ಹೇಳಬಹುದು.  

    ಈ ಆಂದೋಲನದಲ್ಲಿ ಪಾಲ್ಗೊಂಡ ಶರಣರು ತಮ್ಮ ಅನಿಸಿಕೆ, ಆಲೋಚನೆ, ಚಿಂತನೆ, ಅನುಭವ,ಅನುಭಾವಗಳನ್ನು ಭಾಷೆಯಲ್ಲಿ ದಾಖಲಿಸಿದರು. ವಚನವು ಈ ದಾಖಲೆಯ ಅಭಿವ್ಯಕ್ತಿ ಮಾಧ್ಯಮವಾಯಿತು. ಸಾಮಾಜಿಕವಾದ ಅಸಮಾನತೆಗಳನ್ನು ಕುರಿತು ವಚನಕಾರರು ತೋರಿದ ಪ್ರತಿಕ್ರಿಯೆಯು ಗಮನಾರ್ಹವಾದುದಾಗಿದೆ. ಶಿವಶರಣರು ಹುಟ್ಟುಹಾಕಿದ ವಚನ ಚಳುವಳಿಯ ಮಹಾಂದೋಲನದಲ್ಲಿ ಇದ್ದುಕೊಂಡೇ ಅದರೊಳಗಿನ ಮೂಢನಂಬಿಕೆ, ಅಜ್ಞಾನ,ಆಡಂಬರಗಳನ್ನು ಕಟುವಾಗಿ ಟೀಕಿಸಿದ ವಚನಕಾರರಲ್ಲಿ ಅಂಬಿಗರ ಚೌಡಯ್ಯನು ಮೊದಲಿಗನಾಗಿದ್ದಾನೆ. ತಳಸಮುದಾಯದಿಂದ ಬಂದ ಅಂಬಿಗರ ಚೌಡಯ್ಯನಲ್ಲಿರುವ ವೈಚಾರಿಕತೆ ಅಗಾಧವಾದುದು. ಪ್ರತಿಯೊಂದನ್ನು ತನ್ನ ಚಿಂತನೆಯ ಕುಲುಮೆಯಲ್ಲಿಟ್ಟು ತಿಕ್ಕಿ ತೀಡಿ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಮನೋಭಾವದವನು. ಈತನ ಚಿಂತನಶೀಲಗುಣ ಬೆರಗನ್ನುಂಟುಮಾಡುವಷ್ಟು ಪ್ರಖರವಾಗಿದೆ. ಮೇಲು ವರ್ಗದ ಶಿವಶರಣರಂತೆ ತಮ್ಮಿಷ್ಟ ದೇವತೆಯ ಹೆಸರನ್ನು ಅಂಕಿತವನ್ನಾಗಿ ಇಟ್ಟುಕೊಳ್ಳದೇ ತಳವರ್ಗದವರು ತಮ್ಮ ವೃತ್ತಿ ಹಾಗೂ ಹೆಸರುಗಳನ್ನುವಚನಗಳ ಅಂಕಿತವಾಗಿಟ್ಟುಕೊಂಡರು. ಅಂಬಿಗರ ಚೌಡಯ್ಯನೂ ತನ್ನ ಹೆಸರನ್ನು ಅಂಕಿತವಾಗಿಟ್ಟು ಕೊಂಡದ್ದು ಗಮನಾರ್ಹವಾಗಿದೆ. ಪ್ರಗತಿಪರ ದೃಷ್ಠಿಕೋನವನ್ನು ಹೊಂದಿದ್ದ ಈತನು ವಚನ ಪರಂಪರೆಯಲ್ಲಿ ಬಂಡಾಯ ವಚನಕಾರನೆಂದೆ ಗುರುತಿಸಿಕೊಂಡಿದ್ದಾನೆ. ಅಂಬಿಗರ ಚೌಡಯ್ಯನು ಬಸವಾದಿ ಶಿವಶರಣರ ಸಮಕಾಲೀನನಾಗಿದ್ದು, ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದರು. ಶ್ರೇಷ್ಠ ಅನುಭಾವಿ; ಸಾಮಾಜಿಕ ಬದಲಾವಣೆಯ ಬಗೆಗೆ ತೀವ್ರ ಕಳಿಕಳಿಯುಳ್ಳ ಧ್ಯೇಯವಾದಿ; ಅಸತ್ಯ, ಅನ್ಯಾಯ, ಮೂಢನಂಬಿಕೆ, ಅಂಧ ಆಚಾರವಿಚಾರಗಳನ್ನು ಖಂಡಿಸುವ ನಿಷ್ಠುರವಾದಿ. ಇವು ಇವನ ವ್ಯಕ್ತಿತ್ವದ ಮೂರು ಮುಖಗಳು. ಕೆಳಸ್ತರದವನಾಗಿರುವದರಿಂದ ಶೋಷಣೆಗೆ ಒಳಗಾದ ತನ್ನವರ ಎಲ್ಲ ನೋವಿನ ದನಿಗಳ ಪರಿಚಯ ಅವನಿಗಿದೆ.

       ಬಸವಾದಿ ಪ್ರಮಥರ ಹಾಗೆ  ವಚನಕಾರ ಅಂಬಿಗರ ಚೌಡಯ್ಯನ ವೈಯಕ್ತಿಕವಾದ ವಿಷಯದ ಬಗೆಗೆ ಖಚಿತವಾದ ದಾಖಲೆಗಳು ಸಿಗುವುದಿಲ್ಲ. ಅವನ ವಚನಗಳಲ್ಲಿಯೂ ಅಂತಹ ಅಂಶಗಳ ಸುಳಿವು ಕಾಣುವುದಿಲ್ಲ. ಈತನನ್ನು ಕುರಿತು ಯಾವುದೇ ಶರಣ ಕಾವ್ಯ ಪುರಾಣಗಳು ಲಭ್ಯವಿರುವುದಿಲ್ಲ. ೧೨ನೇ ಶತಮಾದ ವಚನ ಸಾಹಿತ್ಯ ಪರಂಪರೆಯಲ್ಲಿಯೇ ಅಂಬಿಗರ ಚೌಡಯ್ಯನೊಳಗೊಂಡಂತೆ ಒಟ್ಟು ನಾಲ್ಕು ಜನ “ಚೌಡಯ್ಯ” ಎಂಬ ಹೆಸರಿನ ಶಿವಶರಣರು ದೊರಕುತ್ತಾರೆ. ಸುರಗಿಯ ಚೌಡಯ್ಯ, ಮುಸುಟಿಯ ಚೌಡಯ್ಯ, ಬಹುರೂಪಿ ಚೌಡಯ್ಯರು ಇತರ ಮೂವರು ಶರಣರಾಗಿದ್ದಾರೆ. 

  ಅಂಬಿಗರ ಚೌಡಯ್ಯ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಆಂದೋಲನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವನು. ಅವನು ನಿಸ್ಸಂಶಯವಾಗಿ ಬಸವಣ್ಣನ ಕಿರಿಯ ಸಮಕಾಲೀನ. ಚೌಡಯ್ಯ ಶೋಷಣೆಗೊಳಗಾದ ವ್ಯಕ್ತಿಗಳ ಪ್ರತಿನಿಧಿ; ಶ್ರೇಷ್ಠ ಅನುಭಾವಿ; ಸಾಮಾಜಿಕ ತೀಕ್ಷ್ಣವಿಡಂಬನಕಾರ. ಮಾನವತಾವಾದಿ. ಆದರೂ ಅವನ ಬಗೆಗೆ ನಂತರದ  ಬಹುತೇಕ ವೀರಶೈವಕವಿಗಳು ಮೌನವಹಿಸಿರುವರು. ಹರಿಹರ-ರಾಘವಾಂಕರಾಗಲಿ, ಪಾಲ್ಕುರಿಕೆ ಸೋಮನಾಥ ಭೀಮಕವಿಗಳಾಗಲಿ, ಲಕ್ಕಣ್ಣ ದಂಡೇಶ-ವಿರೂಪಾಕ್ಷ ಪಂಡಿತರಾಗಲಿ ಇವನ ಹೆಸರನ್ನು ಎಲ್ಲಿಯೂ ನೆನೆದಿಲ್ಲ, ಸಿದ್ಧನಂಜೇಶ ತನ್ನ 'ಗುರುರಾಜ ಚಾರಿತ್ರ'ದಲ್ಲಿ ಗಣಸಹಸ್ರನಾಮವನ್ನು ಹೇಳುವಾಗ ಇವನ ಹೆಸರನ್ನು ಹೇಳಿರುವನು. ತೋಂಟದಸಿದ್ದಲಿಂಗಯತಿಗಳ ಶಿಷ್ಯ ಪರಂಪರೆಯಲ್ಲಿ ಬರುವ ಘನಲಿಂಗಿದೇವನು ತನ್ನವಚನವೊಂದರಲ್ಲಿ ......ಡೋಹರ ಕಕ್ಕಯ್ಯ ಮಾದಾರಚನ್ನಯ್ಯ ಅಂಬಿಗರ ಚೌಡಯ್ಯ ಎಂದು ಉಲ್ಲೇಖಿಸಿರುವನು. ಮಹಾಲಿಂಗದೇವ ತನ್ನʻಗುರುಬೋಧಾಮೃತ'ದಲ್ಲಿ ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲಿಕ್ಕುವ ಸೊಣಗನ ಮಾಡಿ ಎನ್ನನಿರಿಸಯ್ಯ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸಿರುವನು. ಷಡಕ್ಷರಿ ತನ್ನ ಬಸವರಾಜ ವಿಜಯ'ದಲ್ಲಿ ಇವನ ಉಲ್ಲೇಖಿಸಿರುವನು. ಕಂಬಾಳ ಶಾಂತಮಲ್ಲನು (೧೬೦೦) ತನ್ನ ʻಗಣವಚನ ರತ್ನಾವಳಿ'ಯಲ್ಲಿ ಇವನ ಹೆಸರನ್ನು ಹೇಳಿರುವನು.

   ಚೌಡದಾನಪುರ, ಮೈಲಾರ, ಕೆರೆಮಲ್ಲಾಪುರ ಇತ್ಯಾದಿ ಶಾಸನಗಳು, ಶಿಶುನಾಳ ಶರೀಫನ ಶಿವದೇವ ವಿಜಯ'ಕೃತಿ-ಇವುಗಳ ಆಧಾರದ ಮೇಲೆ ಅಂಬಿಗರ ಚೌಡಯ್ಯ ೧೩ನೇ ಶತಮಾನದಲ್ಲಿದ್ದನೆಂದು ವಾದಿಸಲಾಗಿದೆ. ಅಂಬಿಗರ ಚೌಡಯ್ಯನ ಕಾಲವನ್ನು ೧೩ನೇ ಶತಮಾನವೆಂದು ಹೇಳುತ್ತಿರುವವರ ವಾದದಂತೆ ೧೩ನೇ ಶತಮಾನದ ಚೌಡದಾನಪುರದ ಶಾಸನದ ಪ್ರಕಾರ ಶಿವದೇವ ಒಡೆಯರ ಶಿಷ್ಯರಲ್ಲಿ ಅಂಬಿಗರ ಚೌಡಯ್ಯನೂ ಒಬ್ಬನು. ಚೌಡದಾನಪುರದ ಅಸ್ಪಷ್ಟ ಶಿಲಾಲೇಖದಲ್ಲಿ ಬರುವ ಮಣಂಬೆನಾಯಕನೇ ಅಂಬೆನಾಯಕನೆಂದೂ, ಈತನೇ ಅಂಬಿಗರ ಚೌಡಯ್ಯನೆಂದೂ ಊಹಿಸಲಾಗಿದೆ. ಮೈಲಾರಶಾಸನದಲ್ಲಿ ಶ್ರೀ ಶಿವದೇವರು ಮುಕ್ತಿನಾಥಲಿಂಗದಲ್ಲಿ ಉದ್ಭವಿಸಿ ಕುರುವತ್ತಿ ಶ್ರೀ ನಂದೀಶ್ವರ, ಶ್ರೀ ಮೈಲಾರಲಿಂಗ, ಶ್ರೀ ಹೊನ್ನಮ್ಮದೇವಿ, ಶಿವಲಿಂಗಧಾರಣಾದಿ ಕಾರ್ಯಗಳನ್ನು ಮಾಡಿದವರು. ಹೀಗಾಗಿ ಅಲ್ಲಿ ಬರುವ ಶಿವದೇವನ ಶಿಷ್ಯನೇ ಅಂಬಿಗರ ಚೌಡಯ್ಯನೆಂದು ವಾದಿಸಲಾಗಿದೆ. ಶಿವದೇವ ಒಡೆಯರಿಗೆ ಶರಣ ಚೌಡಯ್ಯನು ದಾನವಾಗಿ ಕೊಟ್ಟ ಪುರವೇ ಚೌಡದಾನಪುರವೆಂದು ಊಹಿಸಲಾಗಿದೆ. ಚೌಡದಾನಪುರದ ಮಣಂಬೆ ನಾಯಕನೇ ಅಂಬಿಗರಚೌಡಯ್ಯನೆಂಬುದಕ್ಕೆ ಆಧಾರ ಸಾಲದು. ಮೈಲಾರ ಹಾಗೂ ಕೆರೆಮಲ್ಲಾಪುರ ಶಾಸನಗಳಲ್ಲಿ ನಾಮಸಾಮ್ಯ ಮಾತ್ರ ಕಾಣುತ್ತದೆ. ಗುರುಗಳಾದ ಶಿವದೇವ ಒಡೆಯರಿಗೆ ಅಂಬಿಗರಚೌಡಯ್ಯನು ದಾನವಾಗಿ ಕೊಟ್ಟ ಊರೇ ಚೌಡದಾನಪುರವೆಂದು ಹೆಸರಾಯಿತು ಎಂಬ ವಾದದಲ್ಲೂ ಸತ್ಯಾಂಶವಿಲ್ಲ. ಚೌಡಯ್ಯನ ಹೆಸರಿನ ಮುಂದಿರುವ ವೃತ್ತಿವಾಚಕವು ಅವನು ದೋಣಿ ನಡೆಸುವ ಕಾಯಕದವನೆಂಬುದನ್ನು ಸೂಚಿಸುತ್ತದೆ. ಇಂತಹ ಓರ್ವಸಾಮಾನ್ಯಾತಿಸಾಮಾನ್ಯ ವ್ಯಕ್ತಿ ಒಂದು ಊರನ್ನು ದಾನವಾಗಿ ಕೊಡುವುದಕ್ಕೆ ಸಾಧ್ಯವೆ?ಅವನಿಗೆ ಒಂದು ಊರನ್ನು ದಾನವಾಗಿ ಕೊಡುವಷ್ಟು ಅಧಿಕಾರವಾದರೂ ಎಲ್ಲಿತ್ತು ?ಅವನೇನು ರಾಜನೆ? ಮಂತ್ರಿಯೇ? ಮಾಂಡಲಿಕನೇ? ಧನಿಕನೆ ? ಊರೊಂದನ್ನುದಾನವಾಗಿಕೊಡಲು. ಶಿವದೇವ ಒಡೆಯರಿಗೆ ದಾನವಾಗಿರೊಂದನ್ನು ದಾನವಾಗಿ ಕೊಟ್ಟವನು ಅಂಬಿಗರ ಚೌಡಯ್ಯನಿಗಿಂತ ಭಿನ್ನವಾದಬೇರೊಬ್ಬ ಚೌಡಯ್ಯನಿರಬಹುದೆಂಬುದನ್ನು,ಸಮಕಾಲೀನನೆಂಬುದನ್ನು ಅವನ ವಚನಗಳ ಆಂತರಿಕ ಆಧಾರದ ಮೇಲೆ ಹೇಳಬಹುದು. ಅಂಬಿಗರ ಚೌಡಯ್ಯನು ೧೨ನೇ ಶತಮಾನದಲ್ಲಿದ್ದ ಬಸವಾದಿ ಶರಣರ ಗುರುತಿಸಬಹುದು. ಪುರಾಣ ಕಥೆಗಳು ಮತ್ತು ಇದನ್ನೇ ಸತ್ಯವಾಗಿಸಲು ಕೆಲವು ಸಂಶೋಧಕರು ಮಾಡಿದ ಪ್ರಯತ್ನಗಳು ಕಾರಣವಾಗಿವೆಯಾದರೂ ಸಾಬೀತು ಪಡಿಸಲು ಅಧಿಕೃತ ಆಕರಗಳ ಕೊರತೆ ಇದೆ.  ಅಂಬಿಗರ ಚೌಡಯ್ಯನು ತೋರಿದ ಹಲವು ಪವಾಡಗಳಲ್ಲಿ ತುಂಬಿದ ಹೊಳೆಯಲ್ಲಿ ಕಲ್ಲಿನದೊಣಿಯನ್ನು ನಡೆಸಿದುದು ಒಂದಾಗಿದೆ. ಈಗಲೂ ಚೌಡದಾನಪುರದ ತುಂಗಭದ್ರ ನದಿತೀರದಲ್ಲಿ ಒಂದು ಕಲ್ಲಿನ ದೋಣಿ ಇದೆ. ಅಲ್ಲಿಯ ಜನ ಅದನ್ನೇ ಅಂಬಿಗರ ಚೌಡಯ್ಯನಡೆಸಿದ ದೋಣಿ ಎಂದು ಹೇಳುತ್ತಾ ಬಂದಿದ್ದಾರೆ. ಈಗಿನ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಚೌಡದಾನಪುರ ಅಂಬಿಗರಚೌಡಯ್ಯನ ಜನ್ಮಸ್ಥಳವಾಗಿರಬೇಕು. ಚೌಡದಾನಪುರದ ಸುತ್ತಲಿನ ಜನರ ಬಾಯಲ್ಲಿ ಉಳಿದುಬಂದಿರುವ ಕಥೆಗಳು, ಅಂಬಿಗರಚೌಡಯ್ಯ ಚೌಡದಾನಪುರದವನೇ ಎಂದು ನಂಬುವಂತೆ ಮಾಡಿವೆ. ಜನಪದರ ಈ ನಂಬಿಕೆಯನ್ನು ತಳ್ಳಿಹಾಕುವಂತೆಯೂ ಇಲ್ಲ. ಆದುದರಿಂದ ಅಂಬಿಗರ ಚೌಡಯ್ಯನ ಜನ್ಮಸ್ಥಳ ಚೌಡಯ್ಯದಾನಪುರವೆಂದು ಸದ್ಯ ಒಪ್ಪಬೇಕಾಗಿದೆ.  ಅಲ್ಲಿಯ ತುಂಗಭದ್ರ ನದಿಯಲ್ಲಿ ಕೆಲವು ಕಾಲ ಅಂಬಿಗವೃತ್ತಿಯನ್ನು ಮಾಡಿರಬಹುದು. ಗೋದಾವರಿ ನದಿತೀರದಲ್ಲಿ ಕೆಲವು ದಿನ ತಂಗಲಾಗಿ, ಒಂದು ದಿನ ವಿಪರೀತ ಮಳೆಯಾಗಿ ದಾರಿಕೆಟ್ಟು ಜನಸಂಚಾರ ಅಸ್ತವ್ಯಸ್ತವಾಗುತ್ತದೆ. ವಿಪರೀತ ಸುರಿದ ಮಳೆಯಿಂದಾಗಿ ನದಿದಾಟುವುದು ಸಾಧ್ಯವಾಗದೆ ಜನತೆ ವಿಚಲಿತವಾಗುತ್ತಾರೆ. ಇದನ್ನು ತಿಳಿದ ಚೌಡಯ್ಯ ಜನರ ಸಹಾಯದಿಂದ ಒಂದು ಹರಿಗೋಲನನ್ನು ತಂದು ಅದರ ಮುಖೇನ ಆ ಜನರನ್ನು ಹೊಳೆದಾಟಿಸುತ್ತಾನೆ. ಅಲ್ಲಿಯ ಅಂಬಿಗ ಸೇವೆಯ ಕಾರಣದಿಂದಾಗಿ ಹೋಗಿಬರುವ ಜನರ ಪ್ರೀತಿಗೆ ಗೌರವಕ್ಕೆ ಪಾತ್ರನಾಗಿ ಅಂಬಿಗರಚೌಡಯ್ಯನೆಂದೇ ಕರೆಸಿಕೊಂಡನೆಂಬ ಐತಿಹ್ಯ ಇದೆ. ಬಸವಣ್ಣನ ಪ್ರಸಿದ್ಧಿಯನ್ನು ಕೇಳಿ ಇತರ ಶರಣರಂತೆ ಕಲ್ಯಾಣಕ್ಕೆ ಬಂದಿದ್ದರಬೇಕು. 

    ಅಂಬಿಗರ ಚೌಡಯ್ಯನ ವಚನಗಳನ್ನು ಸಂಪಾದಿಸಿದ ಸಂಪಾದಕರು ಮೊದಲಿಗೆ ಲಭ್ಯವಿರುವ ವಚನಗಳ ಸಂಖ್ಯೆ ೨೭೦ ಎಂದು ಹೇಳಿದ್ದರು. “ಬಸವ ಸಮಿತಿಯ ಹಸ್ತಪ್ರತಿ ಸಂಗ್ರಹದದ ಓಲೆಪ್ರತಿ, ಮೈಸೂರಿನ ಜಿ.ಎ.ಶಿವಲಿಂಗಯ್ಯನವರ ಸಂಗ್ರಹದ ಓಲೆಪ್ರತಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಸಂಖ್ಯೆ ಬಿ.421, ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು ಆಧರಿಸಿ ಅಂಬಿಗರ ಚೌಡಯ್ಯನ 8 ಅಪ್ರಕಟಿತ ವಚನಗಳನ್ನು ಶೋಧಿಸಿ ಎಸ್.ಶಿವಣ್ಣನವರು ಪ್ರಕಟಿಸಿದ್ದಾರೆ.” ಅವುಗಳನ್ನು ಸೇರಿಸಿಕೊಂಡು ಎಂ.ಎಂ.ಕಲಬುರ್ಗಿಯವರು ಸಂಪಾದಿಸಿರುವ ಸಂಕೀರ್ಣವಚನ ಸಂಪುಟದಲ್ಲಿ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ, ೨೭೮ ಆಗಿದೆ.   ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಭಂಡಾರದ ಕ್ರ.ಸಂ.ಬಿ.೪೨೧ ರ ಹಸ್ತಪ್ರತಿಯಲ್ಲಿ ಅಂಬಿಗರ ಚೌಡಯ್ಯನ ಅಪ್ರಕಟಿತ ೦೪ ವಚನಗಳನ್ನು ಎಸ್.ಶಿವಣ್ಣನವರು ಶೋಧಿಸಿ ಪ್ರಕಟಿಸಿದ್ದಾರೆ. ಇಂದು ಈ ವಚನಗಳ ಶೋಧನೆಯಿಂದಾಗಿ ಲಭ್ಯವಿರುವ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ 2೮೨ ಕ್ಕೆ ಹೆಚ್ಚಿದೆ. ಇದರಿಂದಾಗಿ ಈತನ ಸ್ಥಾನವನ್ನು ವಚನಕಾರರ ಪರಂಪರೆಯಲ್ಲಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.

   ಅಂಬಿಗರ ಚೌಡಯ್ಯನು ತನ್ನ ವಚನಗಳಲ್ಲಿ ಸಮಕಾಲೀನ ಅನೇಕ ಶರಣರನ್ನು ಸ್ಮರಿಸಿದ್ದಾನೆ. ಬಸವಣ್ಣ ನೀಲಲೋಚನೆ, ಚೆನ್ನಬಸವಣ್ಣ, ಅಲ್ಲಮ, ಕುಂಬಾರಗುಂಡಯ್ಯ, ಶ್ವಪಚಯ್ಯ, ಸಾಮವೇದಿ, ಕೆಂಬಾವಿ ಬೋಗಣ್ಣ, ಮರುಳಶಂಕರದೇವ, ಹರಳಯ್ಯ, ಪಡಿಹಾರಿಉತ್ತಣ್ಣ, ಬಬ್ಬಿ ಬಾಚಯ್ಯ, ಚೇರಮರು, ನಂಬಿಯಣ್ಣ ಮುಂತಾದವರೆನ್ನೆಲ್ಲ ನೆನಸಿಕೊಂಡಿದ್ದಾನೆ.ಬಸವಣ್ಣನವರನ್ನು ಅತ್ಯಂತ ಮನಃಪೂರ್ವಕವಾಗಿ ನಮಿಸಿದ್ದಾನೆ. ಆ ವಚನ ಇಂತಿದೆ.

ಗುರುಲಿಂಗ ಜಂಗಮಕ್ಕೆ ಆಧಾರ ಬಸವಣ್ಣ

ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ

ಆ ಬಸವಣ್ಣನ ಶ್ರೀ ಪಾದಕ್ಕೆ ನಮೋ ನಮೋ

ಸರ್ವಾಪತ್ತಿಗಾಧಾರ ಬಸವಣ್ಣ

ಎನುತಿರ್ದಾತನಂಬಿಗ ಚೌಡಯ್ಯ

(ಸಂಕೀರ್ಣ ವಚನ ಸಂಪುಟ-೧ (ಎಂ.ಎಂ.ಕಲಬುರ್ಗಿ)ವ.ಸಂ.೧೩೫ ಪುಟ-೪೬)

ನಂಬಿಯಣ್ಣ ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯ,

ಕುಂಬಾರಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ

ಬಸವಣ್ಣ ಮಾಡಬಹುದಾದ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯ

(ಸಂಕೀರ್ಣ ವಚನ ಸಂಪುಟ-೧ (ಎಂ.ಎಂ.ಕಲಬುರ್ಗಿ)ವ.ಸಂ.೧೩೫ ಪುಟ-೫೫)

ಧನಧಾನ್ಯದಾಸೆಗೆ ಶಿವದೀಕ್ಷೆ ಕೊಡುವ ಗುರು. ಗುರುತ್ವ ಅರಿಯದ ಶಿಷ್ಯ ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮೆಚ್ಚರಯ್ಯ ಎಂದಿರುವನು. ನಮ್ಮ ಪ್ರಮಥರು ಎಂದರೆ ಬಸವಣ್ಣ ಮೊದಲಾದ ಶರಣರೇ ಹೊರತು ಬೇರೆ ಮತ್ತಾರು ಅಲ್ಲ. ಅಂಬಿಗರ ಚೌಡಯ್ಯನು ತಳಸಮುದಾಯದ ವಚನಕಾರರನ್ನು ಹೆಚ್ಚಾಗಿ ನೆನೆದಿದ್ದಾನೆ.

    ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ಒಂದು ಗುಂಪು ಉಳುವಿಯ ಕಡೆಗೆ ಹೋದುದು, ಅಲ್ಲಿ ಹಲವು ಕಾಲ ಇದ್ದುದರ ಬಗ್ಗೆ ಅಂಬಿಗರ ಚೌಡಯ್ಯನು ಬಲ್ಲವನಾಗಿದ್ದಾನೆ.

“ಎಲ್ಲ ಪ್ರಮಥರು ಇಲ್ಲಿ ಇರಬಾರದೆಂದು ಕಲ್ಯಾಣವ ಬಿಟ್ಟು

ಉಳುವಿಗೆ ಹೋಗುವಾಗ್ಗೆ ಅಳಿಯ ಬಿಜ್ಜಳನು ದಂಡೆತ್ತಿ ಬರಲು

ಅವರದಂಡು ಹಿಮ್ಮೆಟ್ಟಿಸಿ ಎಲ್ಲ ಪ್ರಮಥರು ಉಳುವಿಗೆ ಬಂದ

ಗಣಪರ್ವ ಮಾಡಿ ಕೈಲಾಸಕ್ಕೆ ಹೋದರು”

ಇಂತಹ ಸಂಗತಿಗಳನ್ನು ಮನಗಂಡಾಗ ಅಂಬಿಗರ ಚೌಡಯ್ಯನು ಕಲ್ಯಾಣ ಕ್ರಾಂತಿಯನಂತರದಲ್ಲಿ ಕೆಲವು ಕಾಲವಾದರೂ ಜೀವಿಸಿರುವ ಸಾಧ್ಯತೆಯಿದೆ. ಅಂಬಿಗರ ಚೌಡಯ್ಯನ ಪ್ರಭಾವವು ಮುಂದಿನ ಕೆಲವು ವಚನಕಾರರು ಮತ್ತು ಕವಿಗಳ ಮೇಲಾಗಿದೆ ಎಂಬುದಕ್ಕೆ

ಅವನನ್ನು ಸ್ಮರಿಸುವ ಮಾತುಗಳು ಆಧಾರವಾಗಿ ನಿಲ್ಲುತ್ತವೆ. ನಿದರ್ಶನಕ್ಕೆ,

ಘನಲಿಂಗದೇವರು ಈತನ ಕಾಲ ಕ್ರಿ.ಶ. ೧೬ನೇ ಶತಮಾನ ಆತನ ವಚನವೊಂದರಲ್ಲಿ ಅಂಬಿಗರ

ಚೌಡಯ್ಯನ ಸ್ಮರಣೆ ಮಾಡಿದ್ದಾರೆ.

“ಎನ್ನ ಮನವೊಪ್ಪಿ ಪಂಚೈವರು

ಸಾಕ್ಷಿಯಾಗಿ ನುಡಿಯುತಿಪ್ಪನಯ್ಯ ನಿಮ್ಮಾಣೆ

ಎನಗೊಂದು ಕರುಣಿಸಯ್ಯ ತಂದೆ

ಡೋಹರ ಕಕ್ಕಯ್ಯ, ಮಾದರಚೆನ್ನಯ್ಯ, ಅಂಬಿಗರಚೌಡಯ್ಯ

ಇಂತಹ ಶಿವಶರಣರ ಮನೆಯ ಬಾಗಿಲಕಾವ

ಶುನಕನ ಮಾಡಿ ಎನ್ನ ನೀ ಸಲಹಯ್ಯ”

(ಬಸವೋತ್ತರ ಯುಗದ ವಚನಕಾರರು: ವೀರಣ್ಣ ರಾಜೂರ ಪುಟ- ೬೬)

ಮಹಾಲಿಂಗದೇವ ತನ್ನ ‘ಗುರುಭೋದಾಮೃತ’ ಕೃತಿಯಲ್ಲಿ ಅಂಬಿಗರ ಚೌಡಯ್ಯನನ್ನು

ಹೀಗೆ ಸ್ತುತಿಸಿದ್ದಾನೆ.

“ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ

ಕೆಂಬಾವಿಯೊಳಗೆ ಪುರದ ಬೋಗಣ್ಣನಿಗೆ

ಸಂಭ್ರಮದೊಳೆರಗಿ ನಮಿಸುವೆನು”

“ಗುಮ್ಮಳಾಪುರದ ಸಿದ್ಧಲಿಂಗಯತಿಯು”  ತನ್ನ ಶೂನ್ಯ

ಸಂಪಾದನೆಯಲ್ಲಿ ಅಂಬಿಗರ ಚೌಡಯ್ಯನಿಗೆ ತನ್ನ ಅಭಿಪ್ರಾಯ ಹೇಳುವುದಕ್ಕೆ ಅವಕಾಶ ದೊರಕಿಸಿ

ಕೊಟ್ಟಿದ್ದಾನೆ. ಆ ಭಾಗವು ಇಂತಿದೆ;

ಇದಕ್ಕೆ ಅಂಬಿಗರ ಚೌಡಯ್ಯಗಳ ವಚನ ;

“ಪ್ರಾಣವ ಪ್ರಣವವೆಂದೆಂಬರು ;

ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ ;

ಪ್ರಾಣವು ಪ್ರಳಯಕೊಳಗು

ತಿರಿಗಿ ತಿರಿಗಿಬಪ್ಪದಕ್ಕೆ ಒಡಲಾಯಿತ್ತು ;

ಪ್ರಣವವು ಪ್ರಸನ್ನವಾಗಿಪ್ಪುದೆಂದನಂಬಿಗರ ಚೌಡಯ್ಯ

ತನುವ ಹುಸಿಮಾಡಿ ಇನ್ನೊಂದು ದಿಟವ ಮಾಡುವ

ಅಣ್ಣಂಗೆ ನಂಬುಗೆ ಇನ್ನಾವುದಯ್ಯ ?

ತನ್ನೊಳಗಿದ್ದ ಘನವ ತಾ ತಿಳಿಯಲರಿಯದೆ

ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆವೆನೆಂಬ ಅಣ್ಣ ಗಾವಿಲನೆಂಬಿಗರ ಚೌಡಯ್ಯ

(ಗುಮ್ಮಳಾಪುರದ ಸಿದ್ಧಲಿಂಗಯತಿಗಳು: ಶೂನ್ಯಸಂಪಾದನೆ ಪುಟ-೧೮೪)

  ಕಲ್ಯಾಣಕ್ಕೆ ಬಂದ ಚೌಡಯ್ಯನನ್ನು ಗಮನಿಸಿದ ಕೆಲ ಕುಹಕಿಗಳು ಬಸವಣ್ಣನವರಿಗೆ ಹೀಗೆನ್ನುತ್ತಾರೆ. ಶರಣರೆ, ಇಷ್ಟಲಿಂಗ ಧರಿಸದ ಚೌಡಯ್ಯ ಒಬ್ಬ “ಭವಿ” ಆತನಿಗೆ ಅನುಭವಮಂಟಪದಲ್ಲಿ ಅವಕಾಶ ನೀಡಬಾರದೆಂದು” ಹೇಳುತ್ತಾರೆ. ಇದನ್ನರಿತ ಚೌಡಯ್ಯ:

ನೇಮಸ್ತನೇನು ಬಲ್ಲನಯ್ಯಾ ಲಿಂಗದ ಕುರುಹ

ಸೂಳೆಯ ಮಗನೇನು ಬಲ್ಲನಯ್ಯಾ ತಂದೆಯ ಕುರುಹ!

ಇಂತಿಪ್ಪ ಅಂಗವೆ ಲಿಂಗ, ಲಿಂಗವೇ ಜಂಗಮ,

ಜಂಗಮವೇ ಲಿಂಗವೆಂದರಿಯದವನು

ಭಕ್ತನೆಂದರೆ, ಅಘೋರ ನರಕವೆಂದಾತ

ನಮ್ಮ ಅಂಬಿಗರಚೌಡಯ್ಯ ನಿಜಶರಣನು. ಚೌಡಯ್ಯನ ಇಂಥ ಕಠೋರ, ನಿಷ್ಟೂರ, ವೈಚಾರಿಕತೆಯನ್ನು ಅಲ್ಲಿನ ಶರಣ ಸಮೂಹ ಕೊಂಡಾಡುತ್ತದೆ. ಆದರೂ ಇಂತಹ ಕುಹಕಿಗಳ ಮಾತಿಗೆ ಬಲಿಯಾಗಬಾರದೆಂದು ತಾವೂ ಇಷ್ಠಲಿಂಗ ಧಾರಣ ಮಾಡುತ್ತಾರೆ. ಅಲ್ಲಿ ಕೆಲವುಕಾಲ ಅನುಭವ ಮಂಟಪದ ಚಿಂತನಾಗೋಷ್ಠಿಯಲ್ಲಿ  ಪಾಲ್ಗೊಳ್ಳುವುದರ ಜೊತೆಗೆ ಜಂಗಮ ದಾಸೋಹಗಳಲ್ಲಿ ಕೆಲಕಾಲ ತನ್ನನ್ನು ತೊಡಗಿಸಿಕೊಂಡಿದ್ದಿರ ಬೇಕು ಎಂದೆನಿಸುತ್ತದೆ. ಮುಂದೆ ಕಾಯಕ ಶ್ರದ್ಧೆಯ ಕಾರಣವಾಗಿ, ಸಮೀಪದ ಕೃಷ್ಣಾನದಿ ತೀರದಲ್ಲಿ ಒಂದು ಕುಟೀರ ನಿರ‍್ಮಿಸಿಕೊಂಡು ಅಲ್ಲಿಯೇ ನೆಲಸಿ ಅಂಬಿಗ ವೃತ್ತಿ ಕೈಗೊಳ್ಳುತ್ತಾರೆ. ಶರಣ ಚಳುವಳಿಯಲ್ಲಿ ಪಾಲ್ಗೊಂಡ ಚೌಡಯ್ಯ ಕಲ್ಯಾಣಕ್ರಾಂತಿಯ ನಂತರ ಚೌಡಯ್ಯದಾನಪುರಕ್ಕೆ ಬಂದು ಅಲ್ಲಿಯೇ ಐಕ್ಯ ಹೊಂದಿದ್ದಾನೆ  ಎಂಬ ಹೇಳಿಕೆ ಇದೆಯಾದರೂ ಸಮರ್ಥಿಸಲು ಬಲಿಷ್ಠ ಆಧಾರಗಳು ಬೇಕಾಗುತ್ತವೆ.

   ಚೌಡಯ್ಯನವರು ಜನಸಾಮಾನ್ಯರ ಬದುಕನ್ನು ನೋಡುತ್ತಾ ನಾ ಹೆಚ್ಚು, ನೀ ಹೆಚ್ಚು ಎಂದುಹೇಳಿಕೊಳ್ಳಬೇಡಿರಿ, ಏಕೆಂದರೆ ನಿಜವಾದ ಶೀಲವು ಬಾಹ್ಯಾಚಾರಗಳಲ್ಲಿಲ್ಲ. ಅದು ನೀತಿಶುದ್ಧ ಆಚರಣೆಯಲ್ಲಿದೆ. ಕುಲ ಎನ್ನುವುದು ಹುಟ್ಟಿನಿಂದ ನಿರ್ಧಾರವಾಗುವಂತಹದ್ದಲ್ಲ; ಅವರವರ ಗುಣಧರ್ಮಗಳಿಂದ ನಿರ್ಧರಿತವಾಗುವಂತಹದು ಎಂದು ಚೌಡಯ್ಯ ಅತ್ಯಂತ ಮಾರ್ಮಿಕವಾಗಿ ಹೇಳಿ ಅಂಥವರನ್ನು ಕುರಿತು ತಿರಸ್ಕಾರ ಪೂರ್ವಕವಾಗಿ ಮಾತನಾಡಿದ್ದಾನೆ.

     ಸಾಮಾಜಿಕ ಶೋಷಣೆಯ ಎಲ್ಲ ನೆಲೆಗಳ ಅರಿವಿರುವ ಅವನು ಸಹಜವಾಗಿಯೇ ಮೇಲ್ವರ್ಗದವರ ನಡಾವಳಿಯಲ್ಲಿನ ವೈರುಧ್ಯಗಳನ್ನು ಕಂಡು ಕೆರಳುವನು. ಈ ವರ್ಗದವರ ವಿರುದ್ಧ ಬಂಡಾಯವೇಳುವನು. ಈ ಮನೋಧರ‍್ಮವೇ ಅವನ ವಚನಗಳಲ್ಲಿ ಎದ್ದು ಕಾಣುವ ಪ್ರಮುಖ ಗುಣವಾಗಿರುವದರಿಂದ ಬೇರಾವ ವಚನಕಾರನಲ್ಲೂ ಕಾಣದಿರುವ ಒರಟುತನವನ್ನು ಈತನಲ್ಲಿ ಕಾಣಬಹುದಾಗಿದೆ.  ವಚನಕ್ರಾಂತಿಯ ಒಡಲೊಳಗಿಂದ ಮೂಡಿಬಂದ ಚೌಡಯ್ಯನು ಸಹಜವಾಗಿಯೇ ವೇದ, ಶಾಸ್ತ್ರ, ಪುರಾಣಗಳನ್ನು ಅಲ್ಲಗಳೆದಿದ್ದಾನೆ.

 ವೇದವನೋದಿದರೆಲ್ಲ ವಿಧಿಗೊಳಗಾದರಲ್ಲದೆ ದೇವರಿಹ ಠಾವನರಿದುದಿಲ್ಲ,

ಶಾಸ್ತ್ರವನೋದಿದವರೆಲ್ಲ ಸಂಶಯಕ್ಕೊಳಗಾದರಲ್ಲದೆ

ಸದ್ಗುರುವನರಿದುದಿಲ್ಲ 

ಈ ವಚನದಲ್ಲಿ ವೇದಾಗಮ ಪುರಾಣಗಳ ಹುಟ್ಟನ್ನೇ ಗುರುತಿಸಿ ಅವುಗಳನ್ನು ಅಣಕಿಸಿರುವುದನ್ನು ನೋಡಬಹುದು.

ನಾದದ ಬಲದಿಂ ವೇದಂಗಳಾದುವಲ್ಲದೆ

ವೇದ ಸ್ವಯಂಭುವಲ್ಲ,

ಮಾತಿನ ಬಲದಿಂದ ಶಾಸ್ತ್ರಂಗಳಾದುದಲ್ಲದೇ

ಶಾಸ್ತ್ರ ಸ್ವಯಂಭುದಲ್ಲ, ನಿಲ್ಲು . . . . . . .

ಇಂತೀ ಮಾತಿನ ಬಣಬೆಯ ಮಂದಿಟ್ಟುಕೊಂಡು

ಆತನ ಕಂಡೆಹೆನೆಂದಡೆ . . . . . .

ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ(ಸಂ.ವ.ಸಂ,೧ ವ.ಸಂ-೧೬೦)

ವೇದ, ಶಾಸ್ತ್ರ ಪುರಾಣಾದಿಗಳು ತಮ್ಮಿಂದ ತಾವೇ ಹುಟ್ಟಿದವುಗಳಲ್ಲ, ಒಂದರಿಂದ ಒಂದುಹುಟ್ಟಿದವು. ಆದ್ದರಿಂದ ಇವು ಹುರುಳಿಲ್ಲದ ಮಾತಿನ ಬಣಬೆಗಳಾಗಿವೆ. ಇಂಥವುಗಳನ್ನೇ ಸತ್ಯವೆಂದೂ ಅವುಗಳ ವರ್ಣನೆಯಿಂದಲೇ ಶಿವನ ನೆಲೆಯನ್ನು ಕಾಣಲು ಸಾಧ್ಯವೆಂದೂ ನಂಬಿದವರಿಗೆ ತಿಳಿಸಿ ಹೇಳಿದ ಪರಿ ವಿನೂತನವಾಗಿದೆ. ಕೇವಲ ವೇದ, ಶಾಸ್ತ್ರಾದಿಗಳನ್ನು ತಿರಸ್ಕರಿಸಿ ಸುಮ್ಮನಾಗದ ಚೌಡಯ್ಯ ವಾಸ್ತವ ಪ್ರಜ್ಞೆಯಲ್ಲಿ

ಅವುಗಳನ್ನು ವ್ಯಾಖ್ಯಾನಿಸಿ ಸಾಮಾನ್ಯ ಜನರ ಬದುಕು ಹಸನುಮಾಡಲು ಯತ್ನಿಸುತ್ತಾನೆ. 

 ಪುರೋಹಿತಶಾಹಿಗಳ ಮತ್ತು ಮೇಲ್ವರ್ಗದವರ ದಬ್ಬಾಳಿಕೆಗೆ ಅಂದಿನ ಕೆಳಸಮುದಾಯದಜನ ನೊಂದುಕೊಂಡಿದ್ದರು, ಬೇಸತ್ತಿದ್ದರು ಎನಿಸುತ್ತದೆ. ಅದಕ್ಕೆ ಸ್ಪಂದಿಸುವ ಚೌಡಯ್ಯ ಹೀಗೆಹೇಳುತ್ತಾನೆ.

ಕಷ್ಟದ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ

ಎತ್ತ ಹೋದವು ನಿಮ್ಮ ಶಾಸ್ತ್ರಂಗಳು ?

ಕೆತ್ತ ಮುಚ್ಚುಳು ಬೇಡಂಗಚ್ಚರಿದೆರೆವಾಗ

ಇಕ್ಕಿದ ಜನ್ನಿವಾರ ಭಿನ್ನವಾದುವು |

ಮುಕ್ಕುಳಿಸಿದುದಕವ ತಂದೆರೆದಡೆ

ಎತ್ತಲಿದ್ದವು ನಿಮ್ಮ ವೇದಂಗಳು

ನಿಮ್ಮ ವೇದದ ದುಃಖ ಬೇಡೆಂದಾತನಂಬಿಗ ಚೌಡಯ್ಯ(ಸಂ.ವ.ಸಂ,೧ ವ.ಸಂ.- ೯೨)

 ಮೇಲಿನ ವಚನದಲ್ಲಿ ಶಿವಭಕ್ತ ಶ್ರೇಷ್ಠರು ಶಿವನೊಲುಮೆ ಪಡೆದ ಎರಡು ನಿದರ್ಶಗಳನ್ನುಉಲ್ಲೇಖ ಮಾಡುವುದರ ಮುಖಾಂತರ ಅಂಬಿಗರಚೌಡಯ್ಯನು ವೈದಿಕತನವನ್ನು ಲೇವಡಿಮಾಡಿದ್ದಾನೆ. ಮೊದಲನೆಯದೆಂದರೆ ಚೋಳ ಅರಸನ ಲಾಯದ ಕೆಲಸ ಮಾಡಿಕೊಂಡಿದ್ದ ಮಾದಾರ ಚೆನ್ನಯ್ಯ ಬಸವಪೂರ್ವಯುಗದ ಮಹಾಶರಣ ಪರಮಶಿವಭಕ್ತ. ಆದರೆ ಅವನ ಜಾತಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕನಿಷ್ಟ ಸ್ತರದಲ್ಲಿದ್ದಿತ್ತು. ಅವನು ಒಂದು ಅರ್ಥದಲ್ಲಿಅಸ್ಪೃಶ್ಯನೇ ಆಗಿದ್ದನೆನ್ನಬೇಕು. ಚೋಳರಾಜನೂ ಶಿವಭಕ್ತನೇ ಆಗಿದ್ದವನು, ದಿನನಿತ್ಯವೂ ಅವನ ಅರಮನೆಗೆ ಬಂದ ಜಂಗಮ ವೇಷದ ಶಿವನು ಪ್ರಸಾದ ಸೇವಿಸಿ ಹೋಗುತ್ತಿದ್ದಂತೆ ಕತೆ ಬರುತ್ತದೆ. ಅರಸನಲ್ಲಿ ಮೃಷ್ಟಾನ್ನ ಭೋಜನವುಂಡ ಬಾಯಿ ಕೆಟ್ಟಂತಾಗಿ ಶಿವನು ಮಾದಾರ ಚೆನ್ನಯ್ಯನ ಗುಡಿಸಲಿನಲ್ಲಿ ರುಚಿ-ರುಚಿಯಾದ ಅಂಬಲಿಯುಂಡು ಸಂತೃಪ್ತಗೊಂಡನಂತೆ. ದೇವನಿಗೆ ಹುಟ್ಟಿದಜಾತಿ ಮುಖ್ಯವಲ್ಲ ಅವರು ಬದುಕಿನಲ್ಲಿ ಸಾಧಿಸಿದ ಭಕ್ತಿಯ ಸಾಧನೆ ಮಹತ್ವದ್ದು. ಇದನ್ನೇಅಂಬಿಗರ ಚೌಡಯ್ಯನು ಕಷ್ಟದ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ ಎತ್ತ ಹೋದವು ನಿಮ್ಮ ಶಾಸ್ತ್ರಂಗಳು? ಎಂಬ ಮಾತಿನಿಂದ ಸೂಚಿಸಿದ್ದಾನೆ. ಹುಟ್ಟಿನ ಜಾತಿಯನ್ನೆ ಮೂಲವಾಗಿಟ್ಟುಕೊಂಡು ಮನುಷ್ಯ ವರ್ಗದಲ್ಲಿ ಭೇದವನ್ನು ನಿರ್ಮಿಸಿದ ಶಾಸ್ತ್ರಗಳನ್ನೇ ಮುಂದು ಮಾಡಿಕೊಂಡು ಮೆರೆಯುತ್ತಿದ್ದ ವೈದಿಕರನ್ನು ಮೇಲಿನ ಘಟನೆಯನ್ನು ವಿವರಿಸಿ ಅವರ ಪೊಳ್ಳುತನವನ್ನು  ವಿಡಂಬಿಸಿದ್ದಾನೆ.

  ಎರಡನೆಯದಾಗಿ ಬೇಡರ ಕಣ್ಣಪ್ಪನ ಘಟನೆಯೊಂದನ್ನು ಈ ವಚನದಲ್ಲಿ ಬಳಸಿಕೊಳ್ಳುತ್ತಾನೆ. ಕಣ್ಣಪ್ಪ ವೃತ್ತಿಯಿಂದ ಬೇಟೆಗಾರ, ಮುಗ್ಧ, ಯಾವುದೇ ವೇದಶಾಸ್ತ್ರಗಳನ್ನು ಓದದಂತಹ ನಿರಕ್ಷರಜೀವಿ ಆದರೆ ಅವನು ಶಿವನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಿದ್ದನು. ಮಣ್ಣಿನ ಮುಚ್ಚಳದಲ್ಲಿ ಮಾಂಸವನ್ನೇ ಶಿವನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದನು. ಶಿವನ ಸನ್ನಿದಿಗೆ ತಂದಾಗ ಅದೆಲ್ಲ ರಸಭರಿತ ಫಲವಾಗುತ್ತಿತ್ತು. ಕೂಪನದಿಯ ನೀರನ್ನು ಬಾಯಿಯಲ್ಲಿ ಹಿಡಿದುಕೊಂಡು ಬಂದು ಶಿವಲಿಂಗಕ್ಕೆ ಮಜ್ಜನವೆಂದು ಲಿಂಗಪೀಠದ ಮೇಲೆ ಭಕ್ತಿಯಿಂದ ಉಗುಳುತ್ತಿದ್ದನು. ಇಂತಹ ಮಹಾ ಮುಗ್ದ ಭಕ್ತರಿಗೆ ಶಿವನು ಪ್ರತ್ಯಕ್ಷನಾಗಿ ಮುಕ್ತಿಯನ್ನು ಕರುಣಿಸಿದನೆಂದು ಪುರಾಣದ ಕಥೆ ಹೇಳುತ್ತದೆ. ಇಂತಹ ಘಟನೆ ನಡೆಯುವಾಗ ನಿಮ್ಮ ಜನಿವಾರಗಳು ಏನಾದವು? ನಿಮ್ಮ ವೇದಗಳು ಎಲ್ಲಿ ಅಡಗಿದ್ದವು? ಎಂದು ಚೌಡಯ್ಯ ಪುರೋಹಿತರನ್ನು  ಪ್ರಶ್ನಿಸಿದ್ದಾನೆ. ಚೌಡಯ್ಯನ ವಿಚಾರಗಳನ್ನು ಇಲ್ಲಿ ಗಮನಿಸಬಹುದು.

ಕುರಿಕೋಳಿಕಿರುಮೀನು ತಿಂಬವರ

ಊರೊಳಗೆ ಇರು ಎಂಬರು

ಅಮೃತಾನ್ನವ ಕರೆವ ಗೋವ ತಿಂಬವರ

ಊರಿಂದ ಹೊರಗೆ ಇರು ಎಂಬರು(ಸಂ.ವ.ಸಂ,೧ ವ.ಸಂ.-೧೦೫)

ಅಂಬಿಗರ ಚೌಡಯ್ಯನ ವೈಚಾರಿಕತೆ ಎಷ್ಟು ತೀಕ್ಷ್ಣ ಎಂಬುದಕ್ಕೆ ಸಾಕ್ಷಿಯಂತಿವೆ ಮೇಲಿನ ಮಾತುಗಳು ಕುರಿಕೋಳಿ, ಮೀನು ಮುಂತಾದ ಪ್ರಾಣಿಗಳೆಲ್ಲ ತಿಂದು, ತಾವು ಪರಿಶುದ್ಧರೆಂದು ಹೇಳಿಕೊಳ್ಳುತ್ತ ಊರೊಳಗಿರುವ ಮೇಲುಜಾತಿಯವರ ದುರಾಚಾರವನ್ನು ವಚನದ ಆರಂಭದಲ್ಲಿಯೇ ವಿಡಂಬಣೆಗೆ ಒಳಗುಮಾಡುತ್ತಾನೆ. ಹಾಗೆಯೇ ಗೋವಿನ ಮಾಂಸವ ತಿನ್ನುವವರನ್ನು ಕೀಳುಜಾತಿಯವರೆಂದು ಕರೆದು ಅವರನ್ನು ಊರಿನಿಂದ ಹೊರಗಡೆ ಇಟ್ಟಿರುವ ವೈದಿಕಧರ್ಮದ ನಿಲುವನ್ನು ಖಂಡಿಸುತ್ತಾನೆ. ಊರ ಒಳಗಡೆ ಇರುವವರು, ಅದರ ಹೊರಗೆ ಇರುವವರು, ಉಭಯರೂ ಮಾಂಸವನ್ನೇ ತಿನ್ನುತ್ತಿರುವಾಗ, ಊರೊಳಗಿರುವವರು ಮೇಲು ಹೇಗಾಗುತ್ತಾರೆ? ಹೊರಗೆ ಇರುವವರು ಕೀಳು ಹೇಗೆ ಆಗುತ್ತಾರೆ? ಎಂದು ಪ್ರಶ್ನೆ ಮಾಡುವ ಚೌಡಯ್ಯನ ದಿಟ್ಟತನ ಎದ್ದು ಕಾಣುತ್ತದೆ.

 ಕುಲವನ್ನಾಚರಿಸುವ ಲೋಕವೆಲ್ಲ ಚೌಡಯ್ಯನಿಗೆ ಬೂಟಾಟಿಕೆಯಾಗಿ ಕಂಡಿದೆ. ಅದಕ್ಕೆ ವ್ಯಗ್ರವಾಗುತ್ತಾನೆ.

ಕೀಳುಕುಲದವನೆಂದು ಹಳಿಯುವ ಕುಲಗೇಡಿಗಳನ್ನು ಕುರಿತು ಅವನು:

ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು

ನಂಬಿದರೆ ಒಂದೆ ಹುಟ್ಟಲಿ

ಕಡೆಯ ಹಾಯಿಸುವನಂಬಿಗರ ಚೌಡಯ್ಯ(ಸಂ.ವ.ಸಂ೧, ವ.ಸಂ.೭)

ಎಂದು ತನ್ನ ಶಕ್ತಿ ಸಾಮರ್ಥ್ಯವನ್ನು ಹೇಳಿಕೊಳ್ಳುವ ಮೂಲಕ ವೃತ್ತಿ ಗೌರವವನ್ನು ಸ್ವಾಭಿಮಾನದಿಂದಲೇ ಪ್ರಸ್ತಾಪಿಸಿದ್ದಾನೆ. ಆದುದರಿಂದಲೇ ಅಂಬಿಗರ ಚೌಡಯ್ಯ ತಾನುಮಾಡುವ ಕಾಯಕದ ವಿವರಗಳನ್ನು ತನ್ನ ಆತ್ಮಸಾಕ್ಷಾತ್ಕಾರದ ಅಭಿವ್ಯಕ್ತಿಗೆ ಸಂಕೇತವಾಗಿ ಬಳಕೆಮಾಡಿಕೊಂಡಿರುವುದನ್ನು ಕಾಣುತ್ತೇವೆ. ಜಾತಿ ಮತ್ತು ವೃತ್ತಿಯಿಂದ ಭೌತಿಕ ಬದುಕಿನಲ್ಲಿ ಅಂಬಿಗನಾಗಿದ್ದಂತೆ ಆಧ್ಯಾತ್ಮಲೋಕದಲ್ಲೂ ‘ಅಂಬಿಗ’ನೇ ಆಗಿರಲು ಹೆಮ್ಮೆಪಡುತ್ತಾನೆ. ಅಂಬಿಗನ ಕಾಯಕವೆಂದರೆ ಜನರನ್ನು ತುಂಬಿದ ಕೆರೆ, ಹೊಳೆಗಳನ್ನು ಹರಗೋಲಿನ ಸಹಾಯದಿಂದ ದಾಟಿಸುವುದು, ಅಂಬಿಗರ ಚೌಡಯ್ಯನು ಕೇವಲ ಭೌತಿಕವಾದ ಅಂಬಿಗ ಕಾಯಕದಲ್ಲಿಯೇ ನಿಂತವ್ಯಕ್ತಿಯಲ್ಲ. ಅವನು ಕಾಯಕ ನಿರ್ವಹಿಸುತ್ತಾ ಗುರುಲಿಂಗಜಂಗಮ ದಾಸೋಹ ಶಿವಾನುಭವಗೋಷ್ಠಿ ನಡೆಸುತ್ತಾ ನಿಜಶರಣತ್ವ ಸಿದ್ಧಿಯನ್ನು ಗಳಿಸಿಕೊಂಡವನು. ಜೊತೆಗೆ ಲೋಕವನ್ನು ಭವದ ಸಮುದ್ರದಿಂದ ದಾಟಿಸುವ ಅಂಬಿಗನೂ ಆದವನು. ಅವನು ನಿಜಜೀವನದಲ್ಲಿ ಮಾಡುವ ಕಾಯಕದ ಪರಿಯನ್ನೇ ವಚನವಾಗಿಸುತ್ತ, ಕಾಯಕದ ಪ್ರಕ್ರಿಯೆಗಳ ಮುಖವನ್ನು ಶಿವನತ್ತ ತಿರುಗಿಸುತ್ತಾನೆ.

  ದೇವಸ್ಥಾನ, ದೇವರು ಮತ್ತು ಢಾಂಬಿಕ ಭಕ್ತಿಯ ಕುರಿತು ಅಂಬಿಗರ ಚೌಡಯ್ಯ ಪ್ರತಿಭಟಿಸುತ್ತಾನೆ.

ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ

ಹೊಟ್ಟೆಯಡಿಯಾಗಿ ಬೀಳುವ, ಲೊಟ್ಟ ಮೂಳನ ಕಂಡರೆ

ಮೆಟ್ಟಿದ್ದ ಎಡ ಪಾದರಕ್ಷೆಯ ತಕ್ಕೊಂಡು

ಲಟಲಟನೆ ಹೊಡೆ ಎಂದ ಅಂಬಿಗ ಚೌಡಯ್ಯ(ಸಂ.ವ.ಸಂ.೧ ವ.ಸಂ.-೮೨)

ಮೇಲಿನ ಮಾತಿನ ಮೂಲಕ ಚೌಡಯ್ಯ ದೇಗುಲವೆಂಬ ದೇಹದಲ್ಲಿಯೆ ಕಟ್ಟಿಕೊಂಡಿರುವ‘ಲಿಂಗ’ವೆಂಬ ದೇವರನ್ನು ನಿರಾಕರಿಸಿ ದೇವಸ್ಥಾನಕ್ಕೆ ಹೋಗುವ ಡಾಂಬಿಕರಿಗೆ ಪಾದರಕ್ಷೆಯಿಂದ ಆರತಿ ಎತ್ತುತ್ತಾನೆ. ‘ಹತ್ತು ಮತ್ತರದ ಭೂಮಿ, ಭತ್ತದ ಹಯನು, ನಂದಾದೇವಿಗೆಯ ಮಾಡಿದೆವೆಂಬರ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು’ ಎಂಬ ನುಡಿ ದೇವಸ್ಥಾನಕ್ಕಾಗಿ ದಾನದತ್ತಿಯನ್ನು ಬಿಡುವ ಶ್ರೀಮಂತರನ್ನು ಕುರಿತ ಪ್ರತಿಭಟನೆಯಾಗಿದೆ.“

ಕೊರಳಿಗೆ ಕವಡಿಯ ಕಟ್ಟಿ

ನಾಯಾಗಿ ಬೊಗಳುವ ಅದಾವ ವಿಚಾರವಯ್ಯಾ ?

ಹುರಿಬೆನ್ನ ಶಿಡಿಬಾಯ ಬಿಗಿದಲ್ಲಿ

ಹಿಡಿದು ಹೋಗುವುದಾವ ವಿಚಾರವಯ್ಯ ?

ಬೇವಿನ ಉಡುಗೆಯನ್ನುಟ್ಟು ಹಡಲಿಗೆ ಹೊತ್ತು

ಉದೋ ಉದೋ ಎಂಬುದು ಅದಾವ ವಿಚಾರವಯ್ಯಾ ?

 ಮೈಲಾರನ ಭಕ್ತರು ನಾಯಿಯಂತೆ ಬೊಗಳುವುದನ್ನು, ಅಂಬಾಭವಾನಿಯ ಹಿಂಬಾಲಕರು ಕವಡಿಸರ ಕಟ್ಟಿಕೊಳ್ಳುವುದನ್ನು, ಎಲ್ಲಮ್ಮನ ಭಕ್ತರು ದೇವಿಗೆ ಹರಕೆಹೊತ್ತು ಹುಟುಗಿಯುಟ್ಟು ಬಾಯಲ್ಲಿ ಬೇವುಕಚ್ಚಿ ಹಿಡಿಯುವುದನ್ನು, ಎಲ್ಲಮ್ಮನ ಜೋಗತಿಯರು ಜಗ, ಹಡ್ಡಲಗಿ, ಕೊಡಹೊತ್ತು ಕುಣಿಯುವುದನ್ನು ಮೇಲಿನ ವಚನದಲ್ಲಿ ವಿಡಂಬಿಸಿ, ಹೀಗೆ ಮಾಡುವುದು ಅದಾವ ವಿಚಾರ ಎಂದು ಕಟು ನಿಷ್ಠೂರವಾಗಿಯೇ ಹೇಳಿದ್ದಾನೆ. ಭವಿತನಕ್ಕೆ ಹೇಸಿ ಭಕ್ತನಾದ ಮೇಲೂ ಕೊರಳಿಗೆ ಕವಡೆಯನ್ನು ಕೊಂಡು, ನಾಯಾಗಿ ಬೊಗಳುವ ಮೈಲಾರನ ಭಕ್ತರ ಆಚರಣೆಯನ್ನೂ; ಬೆನ್ನಿಗೆ ಚಾವಟಿ ಏಟು ಹೊಡೆದುಕೊಳ್ಳುವುದು, ಸಿಡಿ ಹೋಗುವುದು, ಬಾಯಿಬೀಗಹಾಕಿಕೊಳ್ಳುವುದು, ಬೇವಿನ ಉಡುಗೆ ಧರಿಸಿ ಹಡಲಿಗೆಯನ್ನು ಹೊತ್ತು ಉಧೋರೋ ಎನ್ನುವುದು-ಈ ಬಗೆಯ ಮಾರಿದೇವತೆಯ ಭಕ್ತರ ಆಚರಣೆಯನ್ನು ಚೌಡಯ್ಯ ಖಂಡಿಸಿ ಇವರನ್ನು ಶಿವದ್ರೋಹಿಗಳು ಎಂದು ಕರೆಯುವನು. ಕ್ಷುದ್ರದೈವತೋಪಾಸನೆಯೂ ಆಗಿನಸಾಮಾಜಿಕ ನೆಲೆಯಲ್ಲಿ ಪ್ರಚಲಿತವಿದ್ದಿತ್ತು. ಮೈಲಾರ, ಬೀರ, ಭೈರವ, ಧೂಳಭಕ್ತರೆನ್ನಿಸಿಕೊಂಡವರನ್ನು ಚೌಡಯ್ಯ ಚಂಡಿನಾಯಿಗಳೆಂದು ಕರೆದಿರುವನು. ಕೇತ-ಇವೇ ಮೊದಲಾದ ಚಿಕ್ಕಪುಟ್ಟ ದೈವಗಳಿಗೆ ನಮಸ್ಕರಿಸಿ ಅವುಗಳ ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ ಎಂದು ಉಪವಾಸವಿರುವ ಭಕ್ತರು ತಮ್ಮ ಈ ಆಚರಣೆ ಶಿವಾರ್ಪಿತವೆಂದು ನುಡಿಯುವುದನ್ನು ಚೌಡಯ್ಯ ಖಂಡಿಸುವನು. ಮಾತು-ಕೃತಿಗಳಿಗೆ ಹೊಂದಾಣಿಕೆಯಿಲ್ಲದೆ ಬದುಕು ನಡೆಸುವವರನ್ನು ಕಂಡು ಚೌಡಯ್ಯ ಕೆರಳುವನು ; ತನ್ನ ಹಲವು ವಚನಗಳಲ್ಲಿ ಇಂತಹ ಅಬದ್ಧರನ್ನು ತರಾಟೆಗೆ ತೆಗೆದುಕೊಂಡಿರುವನು. ಇಷ್ಟಲಿಂಗವೆ ತನಗೆ ಗತಿ ಮತಿ ಎಂದು ತಿಳಿಯದೆ ಊರ ಹೊರಗಿರುವ ದೈವಗಳುಸ್ವೀಕರಿಸುವ ಶಿವನ ಭಕ್ತರ ವರ್ತನೆಯನ್ನು 'ದೊಡ್ಡಗ್ರಾಮದ ಸೂಕರನು ಗಂಗೆಯಲ್ಲಿ ಅಧಿಕವೆಂದು ಅವನ್ನು ಪೂಜಿಸಿ ಆ ದೇವರಗಳಿಗೆ ಅರ್ಪಿಸಿದ್ದನ್ನು ಪ್ರಸಾದವೆಂದು ಮಿಂದು ಬಂದು ಅಮೇಧ್ಯವ ಭುಂಜಿಸಿದ ತೆರನಾಯಿತು' ಎಂದು ಹೋಲಿಸಿದ್ದಾನೆ.

    ಅಂಬಿಗರಚೌಡಯ್ಯ ಕೂಡ ಪ್ರಥಮವಾಗಿ ಸಮಾಜದ ಅಸ್ವಸ್ತತೆಗೆ ಕಾರಣೀಭೂತವಾದ ಅಂಶಗಳನ್ನು ಪರಿಶೀಲಿಸಿ ಕಟುವಾಗಿ ಖಂಡಿಸುತ್ತಾನೆ. ಆಮೇಲೆ ಅವುಗಳಿಗೆ ತನ್ನದೇಯಾದ ಪರಿಹಾರೋಪಾಯಗಳನ್ನು ಸೂಚಿಸುತ್ತಾನೆ. ಖಾರವಾಗಿ ಖಂಡಿಸುವಾಗ ಚೌಡಯ್ಯ ಕಠೋರವಾಗಿ ಕಂಡುಬಂದರೂ ಆಂತರ‍್ಯದಲ್ಲಿ ಮೃದು ಸ್ವಭಾವದವನು. ಸಮಾಜದ ಒಳಿತಿಗಾಗಿ ಶ್ರಮಿಸಿದ ವ್ಯಕ್ತಿ ಈತ. ಆತನ ಮಾತುಗಳು ಕಟುವೆನಿಸದರೂ ಕೂಡ ಆತನ ಕಾಳಜಿಯನ್ನು ನಿರಾಕರಿಸಲಾಗದು. ಸಮಾಜದ ಮಾರ್ಗದರ್ಶಕರು ಮತ್ತು  ಗುರುಸ್ಥಾನದಲ್ಲಿರುವ ಸ್ವಾಮೀಜಿಗಳನ್ನು ಗೌರವದಿಂದ ಕಾಣುತ್ತಾನೆ. ಆದರೆ ಡೋಂಗಿಗಳನ್ನು ಆಡಂಬರ ಮಾಡುವವರನ್ನು, ಆಷಾಢ ಭೂತಿಗಳನ್ನು ತನ್ನ ಮಾತಿನ ಮೊನೆಯಿಂದ ಚುಚ್ಚುತ್ತಾನೆ. ಕಂತೆ ತೊಟ್ಟವ ಗುರುವಲ್ಲ, ಕಾವಿ ಹೊದ್ದವ ಜಂಗಮನಲ್ಲ ಎನ್ನುತ್ತಾನೆ. ಸ್ವಾಮಿಗಳಿಗೆ ಭಕ್ತರೆಲ್ಲರೂ ಸರಿಸಮಾನರು ತಾರತಮ್ಯ ಮಾಡುವಸ್ವಾಮಿಗಳನ್ನು ಅಂಬಿಗರ ಚೌಡಯ್ಯ ಹೀಗೆ ಟೀಕಿಸುತ್ತಾನೆ.ದೇವರು ಮತ್ತು ಭಕ್ತಿಯ ಹೆಸರಿನಲ್ಲಿ ಪರೋಕ್ಷವಾಗಿ ಮೋಸಮಾಡುವ ಇವರನ್ನು ಕುರಿತು ಕಟುವಾಗಿ ವಿಡಂಬಿಸಿದ್ದಾನೆ.

ಅರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು

ಊರೆಲ್ಲರು ಕಟ್ಟಿಸಿದ ಕೆರೆಯ ನೀರ ತಂದು

ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ

ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ?

ನಾಡೆಲ್ಲಕ್ಕೊ? ಪೂಜಿಸಿದಾತಗೋ ?

ಇದ ನಾನರಿಯೇ, ನೀ ಹೇಳೆಂದನಂಬಿಗ ಚೌಡಯ್ಯ(ಸಂವ.ಸಂ. ವ.ಸಂ. -೪೩)

   ದೇಹವೇ ದೇಗುಲವಾದ ಮೇಲೆ ಈ ದೇವರ ಪೂಜೆಗೆ ಹೂಪತ್ರಿ, ಧೂಪ, ದೀಪ,ಏನೂ ಬೇಡ ನಿರ‍್ಮಲವಾದ ಮನಸ್ಸೊಂದಿದ್ದರೆ ಸಾಕು ಎಂಬುದು ಚೌಡಯ್ಯನ ನಿಲುವು. ಇದ ಬಿಟ್ಟು ಕಲ್ಲುದೇಗುಲ ಕಟ್ಟಿ ಅದರೊಳಗೆ ಕಲ್ಲುದೇವರ ಇಟ್ಟು ಬೇರೆಯವರು ಬಿತ್ತಿದ ಗಿಡದಲ್ಲಿ ಅರಳಿದ ಹೂ ಕೊಯ್ದು ಊರಿನವರ ಪರಿಶ್ರಮದಿಂದಾದ ಕೆರೆಯ ನೀರು ತಂದು ನಾಡೆಲ್ಲವೂ ನೋಡಲಿ ಎಂದು ಪೂಜಿಸಿದ ಪೂಜೆ ತೋರಿಕೆಯ ಪೂಜೆ ಆಗುತ್ತದೆ. ಹಾಗಾದರೆ ಆ ಪೂಜೆಯಫಲ ಹೂವಿಗೋ, ನೀರಿಗೊ ನೋಡಿದ ನಾಡೆಲ್ಲಕೋ ಅಥವಾ ಪೂಜಿಸಿದಾತಗೋ? ಎಂದು ಪ್ರಶ್ನಿಸಿದ್ದಾನೆ.

ಕಲ್ಲನಾಗರ ಕಂಡರೆ ಹಾಲು ಒಯ್ಯಂಬಳು

ಬದುಕಿದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬಳು

ಉಂಬ ದೇವರು ಬಂದರೆ ಇಲ್ಲವೆಂದು ಅಟ್ಟುವಳು

ಉಣ್ಣದ ಕಲ್ಲು ಪ್ರತಿಮೆಗೆ ಮುಂದಿಟ್ಟು ಉಣ್ಣು ಉಣ್ಣು ಎಂಬಳು........

ಜಡವಾದದ್ದನ್ನು ಸತ್ಕರಿಸಿ, ಜೀವವಿರುವವರ ಮೇಲೆ ದಾಳಿ ಮಾಡುವ ಡಂಭಕನ ನಡವಳಿಕೆಗೆ ಎತ್ತಿದ ಟೀಕೆಯಿದು. ಇದೇ ಭಾವ ಬಸವಣ್ಣನವರ “ಕಲ್ಲನಾಗರ ಕಂಡರೆಹಾಲನೆರೆಯೆಂಬರು” ಎಂಬ ವಚನದಲ್ಲಿ ಬಂದಿರುವುದನ್ನು ನೋಡಬಹುದು. ಬಹುಶಃಚೌಡಯ್ಯನವರು ಬಸವಣ್ಣನವರ ಈ ವಚನದಿಂದ ಪ್ರೇರಣೆ ಪಡೆದಿರಬಹುದು.

ಬಡತನಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,

ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,

ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,

ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,

ಇಂತಿ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು

ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ

ನಮ್ಮ ಅಂಬಿಗರ ಚೌಡಯ್ಯ ನಿಜಶರಣನು(ಸಂ.ವ.ಸಂ.-೧, ವ.ಸಂ.-೧೮೫)

    ಇಡೀ ಮಾನವ ಜನಾಂಗಕ್ಕೆ ಬರೆದ ಭಾಷ್ಯೆಯಾಗಿದೆ. ವಿಶ್ವದ ಎಲ್ಲ ಮಾನವರಿಗೂ ಇದು ಅನ್ವಯಿಸುತ್ತದೆ. ಸರ್ವಕಾಲಿಕ ಸತ್ಯವನ್ನು ಚೌಡಯ್ಯ ಈ ವಚನದಲ್ಲಿ ದಾಖಲಿಸಿರುವುದನ್ನು ಗುರುತಿಸಬಹುದಾಗಿದೆ. ಬಡತನದಲ್ಲಿ ಬೆಂದು ಬೇಯುತ್ತಿರುವಾಗ ಮನುಷ್ಯನು ಉಣ್ಣುವುದಕ್ಕೆ ಸಿಕ್ಕರೆ ಸಾಕೆಂದು ಹಂಬಲಿಸುತ್ತ ಊಟದ ಚಿಂತೆಯನ್ನೇ ಮಾಡುತ್ತಾನೆ. ಊಟಸಿಕ್ಕು ಒಂದಿಷ್ಟು ದಿನ ಸರಿಯಾಗಿ ಉಣಲು ತೊಡಗಿದರೆ ಅವನು ಉಡುವ ಚಿಂತೆಗೆ ತೊಡಗುತ್ತಾನೆ. ಉಡುವುದಕ್ಕೆ ಬಟ್ಟೆ-ಬರೆಗಳು ಸಿಕ್ಕವೆಂದಾದರೆ ಮಾನವ ಹಣ ಸಂಪಾದಿಸಬೇಕೆಂಬ ಚಿಂತೆಗೆತೊಡಗುತ್ತಾನೆ. ಉಂಡು ಉಟ್ಟು ಒಂದಿಷ್ಟು ಹಣವು ಸಂಚಯವಾಗುತ್ತ ನಡೆದಲ್ಲಿ ಅವನಿಗೆ ಮದುವೆಯಾಗಬೇಕೆಂಬ ಆಸೆ ಮೂಡಿ ಹೆಂಡತಿಯ ಬಗೆಗೆ ಚಿಂತಿಸಲು ಆರಂಭಿಸುತ್ತಾನೆ.ಮದುವೆಯಾಗಿ ಹೆಂಡತಿಯು ಮನೆಗೆ ಬಂದಳಾದರೆ ಮಕ್ಕಳ ಪಡೆಯುವ ಚಿಂತೆ ಶುರುವಾಗುತ್ತದೆ. ಮಕ್ಕಳಾದ ಮೇಲೆ ಬದುಕನ್ನು ಸರಿಯಾಗಿ ನಿರ್ವಹಿಸುವ ಚಿಂತೆ, ಬದುಕಿನಗಾಡಿಯು ಒಂದಿಷ್ಟು ಮುಂದೆ ಸಾಗಿಸುತ್ತಿರುವಾಗಲೇ ಅದಕ್ಕೆ ಮುಂದೆ ಒದಗಬಹುದಾದ ತೊಂದರೆ, ಆತಂಕಗಳ ಚಿಂತೆ ಕಾಡತೊಡಗುತ್ತದೆ. ಕೇಡುಗಳು ಬಯಲಾಗುವಂತೆ ಕಂಡರೂ ಈ ಮನುಷ್ಯನು ಮುಂಬರುವ ಸಾವಿನ ಬಗೆಗೆ ಚಿಂತಿಸತೊಡಗುತ್ತಾನೆ. ಹೀಗೆ ಜೀವನದುದ್ದಕ್ಕೂ ಚಿಂತೆಗಳ ಕಂತೆಯೇ ದೊಡ್ಡದಾಗುತ್ತ ಹೋಗುತ್ತದೆ. ಇಂತಹ ಲೌಕಿಕ ಚಿಂತೆಗಳ ಗದ್ದಲದಲ್ಲಿ ಮನುಷ್ಯನು ಶಿವಚಿಂತೆಯನ್ನು ಮರೆತು ಬಿಡುತ್ತಾನೆ. ಪ್ರತಿಯೊಬ್ಬನ ಸ್ಥಿತಿಯೂ ಹೀಗೆ ಆದಾಗ ಲೋಕದಲ್ಲಿ ಶಾಂತಿ ಮಾಯವಾಗುತ್ತದೆ ಎಂದು ಎಚ್ಚರಿಸಿದ್ದಾನೆ. 

    ಅಂಬಿಗರ ಚೌಡಯ್ಯ “ಈಶ ಲಾಂಛನವ ತೊಟ್ಟು ಮನ್ಮಥ ವೇಷ ಲಾಂಛನವ ತೊಡಲೇಕೆ? ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ? ಎಂದು ಹೇಳುತ್ತಾ ಮಠಾಧಿಪತಿಗಳು,ಸ್ವಾಮಿಗಳು, ಜಂಗಮರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಚುರುಕು ಮುಟ್ಟಿಸುವ, ಅಂತರಂಗಕ್ಕೆ ಕನ್ನಡಿ ಹಿಡಿಯುವ ಕಠೋರ ಈ ಮನೋಧರ್ಮದ ಹಿಂದೆ ಸಾಮಾಜಿಕ ಚಿಂತನೆಯ ಶರಣರ ಮನಸ್ಸುಗಳು ಕೆಲಸಮಾಡಿವೆ. ಹೊಳೆಯನ್ನು ಹರಿಗೋಲಿನ ನೆರವಿನಿಂದ ದಾಟುವ ಲೌಕಿಕ ಕ್ರಿಯೆಯನ್ನು ಪಾರಮಾರ್ಥದ ಅಲೌಕಿಕ ಕ್ರಿಯೆಯಾಗಿ ಹೊರಳಿಸುವ ಚೌಡಯ್ಯನ ಈ ವಚನವನ್ನು ಪರಿಭಾವಿಸಬಹುದು.

     ಸಾಮಾಜಿಕ ಚಿಂತನೆ ಚೌಡಯ್ಯನ ವಚನಗಳಲ್ಲಿ ಬಂದಿರುವಷ್ಟು ಮತ್ತಾವ ವಚನಕಾರನಲ್ಲೂ ಬಂದಿಲ್ಲ ಎನ್ನಬಹುದು. ಅವನು ಶ್ರೇಷ್ಠ ಸಾಮಾಜಿಕ ವಿಡಂಬನಕಾರನಾಗಿ ತನ್ನಸುತ್ತಣ ಸಮಾಜ ಸರಿಯಾಗಿರಬೇಕೆಂದು ಬಯಸುವವನು. ಸೂಕ್ಷ್ಮ ಸ್ವಭಾವದವನಾದ ಅವನಿಗೆ ಸಮಾಜದ ಲೋಪ-ದೋಷಗಳನ್ನು ಕಂಡಾಗ ಸಿಟ್ಟೇರುತ್ತದೆ. ಸಮಾಜದಲ್ಲಿನ ದೋಷಗಳಿಗೆ ಅದರ ಅವಿಭಾಜ್ಯ ಘಟಕವಾದ ವ್ಯಕ್ತಿಯೂ ಕಾರಣ. ವ್ಯಕ್ತಿ ಮಾನಸಿಕವಾಗಿ ಬದಲಾಗದೆ ಸಮಾಜ ಬದಲಾಗದು ಎಂಬ ಸತ್ಯ ಚೌಡಯ್ಯನಿಗೆ ತಿಳಿದಿದೆ. ಹೀಗಾಗಿ ಚೌಡಯ್ಯ ಸಮಾಜ ವ್ಯವಸ್ಥೆಯ ಬಗೆಗೆ ಟೀಕಿಸುವಾಗಲೆಲ್ಲಾ ವ್ಯಕ್ತಿ ಕೇಂದ್ರಿತನಾಗುತ್ತಾನೆ. ತನ್ನ ಸುತ್ತಣ ಸಮಾಜ, ಬದುಕು ಹಸನಾಗಬೇಕೆಂದು ಚೌಡಯ್ಯನ ಮನದಾಳದ ಆಸೆ. ತನ್ನ ಸುತ್ತಣ ಸಮಾಜದಲ್ಲಿನ ಅಜ್ಞಾನ,ಮೂಢನಂಬಿಕೆ, ಅರ್ಥವಿಹೀನ ಆಚರಣೆ, ವಂಚನೆ, ಮೋಸಗಳನ್ನು ಕಂಡಾಗ ಸಹಜವಾಗಿಯೇ ಅವನು ಸಿಡಿದೇಳುವನು. ಇವೆಲ್ಲವು ಇಲ್ಲವಾಗಬೇಕು. ಅದಕ್ಕೆ ಜನ ಮಾನಸಿಕವಾಗಿ ಸಿದ್ಧವಾಗಬೇಕು. ಬದಲಾವಣೆ ಎನ್ನುವುದು ವೈಯಕ್ತಿಕ ನೆಲೆಯಲ್ಲಾದಾಗ ಅದರ ಪರಿಣಾಮ ಸಮೂಹದ ಮೇಲೂ ಆಗುತ್ತದೆ.

ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು

ನಂಬಿದರೆ ಒಂದೆ ಹುಟ್ಟಲಿ

ಕಡೆಯ ಹಾಯಿಸುವನಂಬಿಗರ ಚೌಡಯ್ಯ,

ಅಂಬಿಗರ ಚೌಡಯ್ಯ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ದೋಣಿ ನಡೆಸುವ ಕಾಯಕದವನು. ಆತ ಜಾತಿಯಲ್ಲಿ ಶೂದ್ರ. ಜಾತಿಯನ್ನು ವೃತ್ತಿಯ ಮೂಲಕ ಗುರುತಿಸುವ, ವೃತ್ತಿಯನ್ನು ಜಾತಿಯಾಗಿ ಪರಿಗಣಿಸುವ ಪ್ರವೃತ್ತಿ ೧೨ನೇ ಶತಮಾಕ್ಕೆ ಹಿಂದಿನಿಂದಲೂ ಇದ್ದಿತು. ಜಾತಿಯಲ್ಲಿ ಶೂದ್ರನೂ ವೃತ್ತಿಯಲ್ಲಿ ಕನಿಷ್ಠನೂ ಆದ ಚೌಡಯ್ಯ ಸಾಮಾಜಿಕ ಅವಹೇಳನಕ್ಕೆ ಗುರಿಯಾಗಿದ್ದ. ಆ ನೋವಿನ ಎಳೆ ಅವನ ಈ ಮೇಲ್ಕಂಡ ವಚನದಲ್ಲಿ ವ್ಯಕ್ತಗೊಂಡಿದೆ. ಅವನಲ್ಲಿ ಬಸವಾದಿ ಶಿವಶರಣರು ಹಚ್ಚಿದ ಪ್ರತ್ಯಯದ ಕಿಚ್ಚು ಅವನನ್ನು ತಲೆಯೆತ್ತಿ ನಡೆಯುವಂತೆ ಮಾಡಿದೆ. 

ಅಂಬಿಗನು ಜಗದೊಳಗೆ ಇಂಬಿಲೋಲಾಡುವನು

ತುಂಬಿದ ಸಾಗರದೊಳಗೆ ನೋಡಯ್ಯಾ!

ನಿಂದ ದೋಣಿಯನೇರಿದಂದಿನ ಹುಟ್ಟ

ಕಂಡವರಂದನವನರಿದಾತ ತೊಳಸುತ್ತಿದ್ದನು.

ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು

ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ.

ಭವಸಾಗರವನ್ನು ದಾಟಿಸುವವನು ಪರಮಾತ್ಮ ಎನ್ನುವ ಭಕ್ತಸಮುದಾಯದ ನಂಬುಗೆ ಈ ವಚನದಲ್ಲಿ ಕೆನೆಗಟ್ಟಿದೆ. ಅಂಬಿಗನಾಗಿ ಪರಮಾತ್ಮನನ್ನು ತನ್ನ ವೃತ್ತಿಯೊಂದಿಗೆ ಸಮೀಕರಿಸುವ ಕಲಾತ್ಮಕ ಅಭಿವ್ಯಕ್ತಿ ಕ್ರಮ ತನ್ನ ವೃತ್ತಿಯನ್ನು ಸಹಜವಾಗಿ ಉದಾತ್ತಗೊಳಿಸುವ ಮೂಲಕ ಅವನ ಸ್ವಾಭಿಮಾನಕ್ಕೆ ಬಿದ್ದ ಏಟಿಗೆ ಪ್ರತಿಯಾಗಿ ಸಮಾಧಾನ ಕಂಡುಕೊಳ್ಳುವ ವಿಧಾನವಾಗಿ ತೋರುತ್ತದೆ.

   ವ್ಯಕ್ತಿಯನ್ನು ವ್ಯಕ್ತಿಯಾಗಿಯೇ ಗುರುತಿಸಬೇಕು; ಜಾತಿಯಿಂದ ಮಾಡುವ ವೃತ್ತಿಯಿಂದ ಗುರುತಿಸಬಾರದು. ದೀಕ್ಷೆಯ ಸಂಸ್ಕಾರವಾದ ಮೇಲೆ ಭಕ್ತನಿಗೆ ಜಾತಿಯೆಂಬುದಿಲ್ಲ; ವೃತ್ತಿಯು 'ಕಾಯಕ'ವಾಗಿ ಪರಿಗಣಿತವಾದ ಮೇಲೆ ಅದರಲ್ಲಿ ಮೇಲು-ಕೀಳು ಇಲ್ಲ. ವ್ಯಕ್ತಿತ್ವವೆನ್ನುವುದು ವ್ಯಕ್ತಿಯು ರೂಢಿಸಿಕೊಂಡ ಸಂಸ್ಕಾರ; ಅದು ಅವನ ಪರಿಪಕ್ವ ಜ್ಞಾನ-ತಿಳುವಳಿಕೆ-ಆಚರಣೆಗಳ ಕ್ರೋಢೀಕರಣ. ಚೌಡಯ್ಯ ಅಂಬಿಗನಾಗಿದ್ದರೂ ಶ್ರೇಷ್ಠ ಅನುಭಾವೀ ಪರಂಪರೆಯ ವಾರಸುದಾರ ಎಂದರೂ ತಪ್ಪಾಗಲಾರದು. 

ಬೇಡರಕಣ್ಣಪ್ಪ, ಜೇಡರ ದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದರಚನ್ನಯ್ಯ-ಇವರಿಗೆಲ್ಲ ರೂಢಿಗೆ (=ಸಂಪ್ರದಾಯಕ್ಕೆ) ಶಿವನು ಒಲಿದ ಪರಿಯ ನೋಡಾ! ಎಂದು ಕಟಕಿಯಾಡುವ ಚೌಡಯ್ಯ ಧರ್ಮ, ಜಾತಿಗಳನ್ನು  ಮನುಷ್ಯರು ಮಾಡಿಕೊಂಡದ್ದೇ ಹೊರತು ದೇವರು ಮಾಡಿದ್ದಲ್ಲ. ಹಾಗೆ ಮಾಡಲಿಕ್ಕೆ ಅವರೇನು ಸ್ವತಂತ್ರರೆ ? ಎಂದು ಪ್ರಶ್ನಿಸುವನು. ಅಷ್ಟೇ ಅಲ್ಲ, ಜಾತಿಯ ಕಟ್ಟುಪಾಡುಗಳನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಾಗಿ ಆಚರಣೆಗೆ ತರ ಹೊರಟರೆ ಇವನೊಡ್ಡಿದ ಠಾವಿನಲಿ ಕಲ್ಲು ಮುಳ್ಳು ಮೂಡುವವು' ಎಂದು ಎಚ್ಚರಿಸುವನು.      

      ವೀರಶೈವಧರ್ಮ ವ್ಯಾಪಕವಾಗಿ ಪ್ರಚುರಗೊಳ್ಳುತ್ತಿದ್ದ ಘಟ್ಟದಲ್ಲಿ ಆ ಧರ್ಮದ ತೆಕ್ಕೆಗೆ ಬಂದವನು ಶೂದ್ರನಾದ ಅಂಬಿಗರ ಚೌಡಯ್ಯ, ಗುರುಗಳೊಬ್ಬರಿಂದಶಾಸ್ರೋಕ್ತವಾಗಿ ದೀಕ್ಷೆಯನ್ನು ಸ್ವೀಕರಿಸಿ ಇಷ್ಟಲಿಂಗದ ಪೂಜೆಗೆ ವಿಶೇಷಸ್ಥಾನವನ್ನು ಕೊಟ್ಟ ಚೌಡಯ್ಯ ಇಷ್ಟಲಿಂಗವನ್ನು ಪಡೆದ ಮೇಲೂ ಸ್ಥಾವರಲಿಂಗದ ಆರಾಧನೆಮಾಡುವವರನ್ನು ಉಗ್ರವಾಗಿ ಟೀಕಿಸಿರುವನು :

ಕಟ್ಟಿದ ಲಿಂಗವ ಬಿಟ್ಟು ಬೆಟ್ಟದಲಿಂಗಕ್ಕೆ ಹೋಗಿ

ಹೊಟ್ಟಡಿಯಾಗಿ ಬೀಳುವ ಲೊಟ್ಟಿ ಮೂಳನ ಕಂಡಡೆ

ಮೆಟ್ಟಿದ್ದ ಎಡದ ಪಾದರಕ್ಷೆಯ ತಕ್ಕೊಂಡು

ಲಟಲಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.

 ವಚನಗಳಲ್ಲಿ ಇಷ್ಟಲಿಂಗಧರಿಸಿಯೂ ಸ್ಥಾವರಲಿಂಗ ಪೂಜೆ ಮಾಡುವವರ ಮೇಲಿನ ಅತ್ಯುಗ್ರವಾದ ರೋಷವನ್ನು ತೀಕ್ಷ್ಣ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಲಾಗಿದೆ. ಸ್ಥಾವರದ ನಿರಾಕರಣೆ ಎಷ್ಟು ತೀಕ್ಷ್ಣವಾಗಿದೆಯೆಂದರೆ ಅದು ಅವನ ಪಾಲಿಗೆ ಅಡಿಮಾಡಿ ನಟ್ಟ ಕಲ್ಲು!' ಇಬ್ಬಗೆಯ ಆಚರಣೆಯಲ್ಲಿ ತೊಡಗಿರುವವರಿಗೆ ಲಿಂಗಧಾರಣೆ ಮಾಡಿದ್ದು ಗೊಡ್ಡೆಮ್ಮೆಗೆ ಲಿಂಗವನ್ನು ಕಟ್ಟಿದಂತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುವನು. ಇಂಥವರನ್ನು ಶಿವಭಕ್ತರೆಂದು ಕರೆಯುವವರನ್ನು ಭ್ರಷ್ಟರೆಂದು ಕತ್ತೆಯ ಮೇಲೆ ಕೂರಿಸಿ ಕೆರಹಿನಟ್ಟೆಯಲ್ಲಿ ಹೊಡೆಯಬೇಕೆಂದು ಸಂಯಮ ಕಳೆದುಕೊಂಡು ತೀವ್ರವಾಗಿ ಟೀಕಿಸುವನು. ಇದು ಹಳೆಯಲಿಂಗವಂತನಿಗಿಂತ ಹೊಸದಾಗಿ ಲಿಂಗಧರಿಸಿದವನ ಉಗ್ರನಿಷ್ಠೆಯ ಇನ್ನೊಂದು ರೂಪ.

   ದೀಕ್ಷೆಯನ್ನು ಕೈಲಾಸ ಹಾಗೂ ಮರ್ತ್ಯಗಳ ನಡುವೆ ಕಟ್ಟಿದ ಸೀಮೆ (ಗಡಿ)ಕಲು ಎರಡು ಗ್ರಾಮದ ನಡುವೆ ಕಟ್ಟಿದ ಸೀಮೆಯ ಕಲ್ಲು ಎಂದು ಭಾವಿಸುವ ಅಂಬಿಗರ ಚೌಡಯ್ಯ ಭ್ರಷ್ಟ, ಗುರು ಹಾಗೂ ಭ್ರಷ್ಟ ಶಿಷ್ಯ ಇವರನ್ನು'ಅಯನರಿಯದ ಗುರು, ಭೇದಿಸಲರಿಯದ ಶಿಷ್ಯ' ಎಂದು ಕರೆದು ಲಿಂಗವನ್ನು ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ; ಇವರಿಬ್ಬರೂ ಭ್ರಷ್ಟರು

ಎಂದು ಕಟುವಾಗಿ ನುಡಿದಿರುವನು. 

   ಬಹುದೈವತೋಪಾಸನೆ ೧೨ನೇ ಶತಮಾನದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತ್ತು. ಕಂಡ ಕಂಡ ದೈವಗಳಿಗೆ ನಮಿಸುವುದಷ್ಟೇ ಅಲ್ಲ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ದೈವಗಳಿಗೆ ಮುಡಿ, ಮುಂದಲೆ ಕೊಡುವ ಪದ್ಧತಿಯಿದ್ದುದನ್ನು ಅಂಬಿಗರ ಚೌಡಯ್ಯ ತನ್ನ ಒಂದು ವಚನದಲ್ಲಿ ಉಲ್ಲೇಖಿಸಿರುವನು. ಏಕದೈವೋಪಾಸನೆ ಹಾಗೂ ಪಾತಿವ್ರತ್ಯಗಳನ್ನು ಸಮೀಕರಿಸುವ ಚೌಡಯ್ಯ ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ ಬೋಸರಿ ತೊತ್ತಿಗೆಲ್ಲಿಯದೊ ನಿಜಮುತ್ತೈದೆತನ? ಎಂದು ಪ್ರಶ್ನಿಸುವನು. 

   ಲಿಂಗವಂತನಾದ ಮೇಲೂ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದ ಭಕ್ತರು ೧೨ನೇ ಶತಮಾನದ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಮಂದಿ ಇದ್ದರು. ಅಂಥವರ ವರ್ತನೆಯನ್ನು ಬಸವಾದಿ ಶಿವಶರಣರು ತೀವ್ರವಾಗಿ ಖಂಡಿಸಿರುವರು. ಸಾತ್ವಿಕಜೀವನ ವಿಧಾನವು ಶಿವಶರಣರು ಸ್ವೀಕರಿಸಿದ ಸಂವಿಧಾನದ ಮುಖ್ಯಭಾಗ, ಚೌಡಯ್ಯ

ಹೊಸದಾಗಿ ಲಿಂಗವಂತನಾದವನು, ಹೊಸ ಜೀವನಸೂತ್ರಗಳಿಗೆ ಹೊಂದಿಕೊಳ್ಳಲಾಗದ ತನ್ನಂತೆಯೇ ಶೂದ್ರಜಗತ್ತಿನಿಂದ ಬಂದವರ ವರ್ತನೆಯನ್ನು ಆತ ತೀವ್ರವಾಗಿ ತನ್ನ ವಚನಗಳಲ್ಲಿ ಖಂಡಿಸಿರುವನು. ಅಂಬಿಗರ ಚೌಡಯ್ಯ ತನ್ನ ಸ್ವಭಾವಸಹಜವಾದ 'ಇದ್ದಂತೆ ಹೇಳುವ ಹರಿತ ನಾಲಿಗೆಯ ಸ್ವಭಾವದಿಂದಾಗಿ ಎಲ್ಲರ ಗಮನ ಸೆಳೆಯುವನು. ಹೀಗಿರುವಾಗ ನಾವು ಅವನನ್ನು ೧೨ನೇ`ಶತಮಾನದ ಶರಣರ ಪಡೆಯಲ್ಲಿ ಓರ್ವನಾಗಿ ಗುರುತಿಸದೆ, ೧೩ನೇ ಶತಮಾನದವನೆಂದು ಗುರುತಿಸಲು ಪ್ರಯತ್ನಿಸಿರುವುದು ದುರಾದೃಷ್ಟಕರ ಸಂಗತಿ.

    ದಯೆ, ಕರುಣೆಗಳು ಮಾನವೀಯತೆಯ ಬಾಹ್ಯರೂಪಗಳು. ಮಾನವೀಯತೆಯು ಇನ್ನೊಬ್ಬರ ಕಷ್ಟಕ್ಕೆ ನಾವು ಹೇಗೆ ಸ್ಪಂದಿಸುತ್ತೇವೆ ಎನ್ನುವುದನ್ನು, ಅಂಬಿಗರ ಚೌಡಯ್ಯ ನಿದರ್ಶನವೊಂದರ ಮೂಲಕ ಅದನ್ನು ಸ್ಪಷ್ಟಪಡಿಸುವನು :

ಕಟ್ಟಿಗೆಯ ಹೊರೆಯ ಹೊತ್ತು

ಬಟ್ಟೆಯಲ್ಲಿ ಬರುವ ಮಹೇಶ್ವರನ ಕಂಡು

ಆ ಹೇರಿಗೆ ತಲೆಯ ಕೊಟ್ಟವಂಗೆ ಪುಣ್ಯವಹುದು.

ಆ ಭಕ್ತನ ಕಷ್ಟ ನಿಷ್ಠುರವರಿಯದೆ

ಉದಾಸೀನಮಾಡುವ ಸಮಯಹೀನನ ಕೊರಳಲಿ

ಶಿವಲಿಂಗವ ಕಟ್ಟಿರ್ದಡೇನಯ್ಯ ?

ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ.

ಆ ಪಾಪ ನೊಸಲತುಂಬ ಮೈತುಂಬ

ವಿಭೂತಿಯನಿಟ್ಟಿರ್ದಡೇನಯ್ಯ?

ಕೊಟ್ಟಿಗೆಯ ಮೇಲಣ ಕುಂಬಳಕಾಯಂತೆ.........

  ಒಬ್ಬ ಶಿವಭಕ್ತ ಕಷ್ಟ ಪಡುತ್ತಿರುವಾಗ ಇನ್ನೊಬ್ಬ ಶಿವಭಕ್ತ ಕಷ್ಟದಲ್ಲಿರುವವನಿಗೆ ನೆರವಾಗಬೇಕು; ಹಾಗೆ ನೆರವಾದಲ್ಲಿ ಅವನಿಗೆ ಪುಣ್ಯ ಬರುತ್ತದೆನ್ನುವ ಚೌಡಯ್ಯ ನೆರವಾಗದ ಶಿವಭಕ್ತ ಇಷ್ಟಲಿಂಗ ಧರಿಸಿದ್ದರೂ ಅದು 'ಪಡುವಲಕಾಯಿಗೆ ಕಲ್ಲುಕಟ್ಟಿದಂತೆ'; ಆತ ಮೈಗೆಲ್ಲ ವಿಭೂತಿ ಧರಿಸಿದ್ದರೂ ಅದು 'ಕೊಟ್ಟಿಗೆಯ ಮೇಲಣ

ನಿಂಬಳಕಾಯಂತೆ' ವ್ಯರ್ಥ. ಇಲ್ಲಿನ ಮೊದಲಿನ ಶಬ್ದ ಚಿತ್ರದಲ್ಲಿ ಪಡವಲಕಾಯಿಗೆ" ಕಟ್ಟುವುದು ಅದು ಉದ್ದವಾಗಿ ಬೆಳೆಯಲಿ ಎಂದಷ್ಟೇ ಹೊರತು ಬೇರೇನೂ ಪ್ರಯೋಜನವಿಲ್ಲ: ಎರಡನೆಯ ಶಬ್ದ ಚಿತ್ರದಲ್ಲಿ ಕೊಟ್ಟಿಗೆಯ ಚಪ್ಪರದ ಮೇಲಿನ ಕುಂಬಕಾಯಿಗೆ ಬೂದಿ ಬಳಿದಿರುವುದು ಅದು ಹೊಳೆಯದಿರಲಿ ಬೇರೆಯವರ ದೃಷ್ಟಿ ತಾಗದಿರಲಿ ಎಂದಷ್ಟೇ ಹೊರತು ಬೇರೇನೂ ಉದ್ದೇಶವಿಲ್ಲ. ಎರಡೂ ಗ್ರಾಮೀಣವಾಗಿ ಪರಿಚಿತವಿರುವ ಸಾರ್ಥಕ ಪ್ರತಿಮೆಗಳೇ. 

 ದೇವಾಲಯದಲ್ಲಿ ದೇವರ ಪ್ರೀತ್ಯರ್ಥ ಪೂಜೆ ಮಾಡುವವರನ್ನು ನೋಡಿ :

ದೇಹಾರವ ಮಾಡುವಣ್ಣಗಳಿರಾ, ಅಣ್ಣಗಳಿರಾ

ಒಂದು ತುತ್ತು ಆಹಾರವನಿಕ್ಕಿರೆ

ದೇಹಾರಕ್ಕೆ ಆಹಾರವೇ ನಿಚ್ಚಣಿಕೆ

ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ

ಆಹಾರನಿಲ್ಲೆಂದಂಬಿಗ ಚೌಡಯ್ಯ ಎಂದು ಹೇಳುವನು. ಹಸಿದವರಿಗೆ ಅನ್ನವನ್ನಿಕ್ಕುವುದರ ಪ್ರತಿಫಲ ಕೈಲಾಸವೆನ್ನುವನು. ಚೌಡಯ್ಯನ ಮಾನವೀಯತೆ 'ದೇಹಾರಕ್ಕೆ ಆಹಾರವ ನಿಚ್ಚಣಿಕೆ ಎನ್ನುವ ಮಾತಿನಲ್ಲಿ ಅಡಗಿದೆ. ರುಬ್ಬುವಮನೆಗೆ ಹಸಿದು ಬಂದ ಅತಿಥಿಗೆ (ಜಂಗಮನಿಗೆ) ಉಣಬಡಿಸಬೇಕು. ಹಾಗೆಮಾಡಲು ಭಕ್ತನ ಬಡತನ ಅಡ್ಡಿ ಬಂದರೆ, ಶಿವಭಕ್ತರ ಮನೆಗೆ ಹೋಗಿ ಕಲ್ಲಿಗೆ ಹಾಕುವ ಒಂದು ಬೊಗಸೆಯಷ್ಟು ಪ್ರಮಾಣದ ಅಕ್ಕಿಯನ್ನು ಬೇಡಿ ತಂದು ಲಿಂಗಕ್ಕೆಂದು ಅಡುಗೆಮಾಡಿ ಅದನ್ನು ಪ್ರಸಾದರೂಪದಲ್ಲಿ ಜಂಗಮನಿಗೆ ನೀಡಿ ಅವನುಸ್ವೀಕರಿಸಿ ಬಿಟ್ಟಿದ್ದನ್ನು ಪ್ರಸಾದವಾಗಿ ತೆಗೆದುಕೊಳ್ಳುವವನಿಗೆ ಕೈಲಾಸಪ್ರಾಪ್ತಿಯಾಗುತ್ತದೆ ಎಂದು ಚೌಡಯ್ಯ ಹೇಳುವಲ್ಲಿ ವೀರಶೈವ ಧರ್ಮದ ಮಾನವೀಯತೆಯು ಅದರ ಪ್ರಸಾದ ತತ್ವದಲ್ಲಿದೆ ಎಂಬುದು ವೇದ್ಯವಾಗುತ್ತದೆ.

     ಶಿವಶರಣರು ತಮ್ಮನ್ನು ಸತಿಯಾಗಿಯೂ ಶಿವನನ್ನು ಪತಿಯಾಗಿಯೂ ಭಾವಿಸಿಕೊಂಡು ಭಕ್ತಿಯ ಅನುಸಂಧಾನವನ್ನು ಮಾಡಿರುವರು. ಉರಿಲಿಂಗದೇವ, ಗಜೇಶ ಮಸಣಯ್ಯ, ಸಿದ್ದರಾಮ, ಘನಲಿಂಗಿದೇವ ಮೊದಲಾದ ವಚನಕಾರರಲ್ಲಿಈ ಭಾವ ವಿಶಿಷ್ಟವಾಗಿ ಅಭಿವ್ಯಕ್ತಿಗೊಂಡಿದೆ. ತನ್ನ ಸಮಕಾಲೀನ ಶಿವಶರಣರ ಈ

ರೀತಿಯ ಭಕ್ತಿಯ ಅನುಸಂಧಾನವನ್ನು ಅಂಬಿಗರ ಚೌಡಯ್ಯ ಒಪ್ಪುವುದಿಲ್ಲ.

ಸಹಜವಾಗಿ ತೋರದೆ ಕೃತಕವಾಗಿ ಅವನಿಗೆ ಕಾಣಿಸಿರಬಹುದು. ಹೆಣ್ಣು ಹೆಣ್ಣಾಗಿ ಸತಿ-ಪತಿ ಭಾವವನ್ನು ಸಹಜವಾಗಿ ವ್ಯಕ್ತಪಡಿಸಬಹುದು. ಅದಕ್ಕೆ ತದ್ವಿರುದ್ಧವಾಗಿ ತನ್ನನ್ನು ಹೆಣ್ಣಾಗಿ ಪರಿಭಾವಿಸುವುದು ಅವನಿಗೆ ಸರಿತೋರಲಿಲ್ಲ, ಹೀಗಾಗಿ ಆತತ್ತ್ವವನ್ನೇ ಆತ ಮೋಸವೆನ್ನುವನು :

'ಶರಣಸತಿ ಲಿಂಗಪತಿ' ಎಂಬರು

ಶರಣ ಹೆಣ್ಣಾದ ಪರಿ ಇನ್ನೆಂತು, ಲಿಂಗ ಗಂಡಾದ ಪರಿ ಇನ್ನೆಂತು ?

ನೀರು ನೀರ ಕೂಡಿ ಬೆರೆದಲ್ಲಿ ಭೇದಿಸಿ ಬೇರೆ ಮಾಡಬಹುದೆ?

ಗಂಡು-ಹೆಣ್ಣು ಯೋಗವಾದಲ್ಲಿ

ಆತುರ ಹಿಂಗೆ ಘಟ ಬೇರಾಯಿತ್ತು. ಇದು ಕಾರಣ

'ಶರಣಸತಿ ಲಿಂಗಪತಿ' ಎಂಬ ಮಾತು

ಮೊದಲಿಗೆ ಮೋಸ ಲಾಭಕ್ಕಧೀನವುಂಟೆ ?

ಎಂದನಂಬಿಗ ಚೌಡಯ್ಯ.( ವ.ಸಂ.೨೪೫)

   ಗಂಡು-ಹೆಣ್ಣಿನ ದೇಹದ ಬೆಸುಗೆ ಕಾಮದ ಆತುರ ಹಿಂಗುವವರೆಗೆ, ದೇವ-ಜೀವರ ಹಾಗೇನು ? ನೀರು ನೀರ ಬೆರತಂತೆ ಬೆರೆದು ಬೇರಿಲ್ಲದಂತೆ. ಆದ್ದರಿಂದ  ಶರಣಸತಿ ಲಿಂಗಪತಿ ಹೋಲಿಕೆ ಸರಿಯಿಲ್ಲ ಎನ್ನುತ್ತಾನೆ ಚೌಡಯ್ಯ, ಸ್ಥಾಪಿತ| ಸಿದ್ಧಾಂತವೊಂದನ್ನು ಪ್ರಶ್ನಿಸಿರುವ ಚೌಡಯ್ಯನ ಧೈರ್ಯವನ್ನು ಮೆಚ್ಚಬೇಕು. ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದಲೇ ೧೨ನೇ ಶತಮಾನದ ಶಿವಶರಣರ ಚಳವಳಿ ಹುಟ್ಟಿಕೊಂಡದ್ದು.ಸಮಾಜೋಧಾರ್ಮಿಕ ಬದಲಾವಣೆಗೆ ಶಿವಶರಣರು ಸಾಹಿತ್ಯವನ್ನು ಸಮರ್ಥಮಾಧ್ಯಮವಾಗಿ ಬಳಸಿಕೊಂಡರು. ಅಂಬಿಗರ ಚೌಡಯ್ಯ ಶೂದ್ರನಾದ ಕಾರಣ ಮೇಲಿನವರು ಹಾಗೂ ಕೆಳಸ್ತರದ ವ್ಯಕ್ತಿಗಳ ದೌರ್ಬಲ್ಯಗಳನ್ನು, ಊಸರವಳ್ಳಿತನವನ್ನು ಚೆನ್ನಾಗಿ ಬಲ್ಲವನು, ಹೀಗಾಗಿ ಸಾಮಾಜಿಕ ನೆಲೆಯ ಈ ಎರಡು ಸ್ತರಕ್ಕೆ ಸೇರಿದವರ ವರ್ತನೆಯನ್ನು ಗೇಲಿಮಾಡುವಲ್ಲಿ, ಕಟುವಾಗಿ ಟೀಕಿಸುವಲ್ಲಿ ಅವನು ಬಳಸುವ ಭಾಷೆ ಮೃದುತ್ವವನ್ನು ಕಳೆದುಕೊಂಡು ಕಠಿಣವಾಗಿಬಿಡುತ್ತದೆ. ಬಿಡುಬೀಸಾಗಿ ಟೀಕೆ ಮಾಡುವಾಗ ವಚನ ಭಾಷೆ ತೀರಾ ಒರಟಾಗುತ್ತದೆ, ಹರಿತವಾಗುತ್ತದೆ; ಚುಚ್ಚುವ ಮೊನಚಾದ ಆಯುಧವಾಗಿ ಬಿಡುತ್ತದೆ. ತನ್ನವರು ಪರಂಪರೆಯಿಂದ ಶೋಷಣೆಗೊಳಗಾಗುತ್ತ ಬಂದ ಅವರಲ್ಲಿ ಮಾಸದ ಗಾಯವಾಗಿದೆ. ಅವನು ಹಾಗೂ ಅವನ ಸಮುದಾಯವು ಮಂಪರೆಯಿಂದ ಅನುಭವಿಸಿದ ಅವಮಾನ, ನೋವುಗಳಿಂದಾಗಿ ಮನಸ್ಸು ಮಾಸವಾಗುತ್ತದೆ. ಆಗ ಮಾತು ಬೆಂಕಿಯ ಉಂಡೆಯಾಗುತ್ತದೆ. ಉತ್ತಮ ಸವರ್ಣಿಯರು ಅವರಿಗೆ ಜ್ಞಾನದ ಹಕ್ಕನ್ನು ನಿರಾಕರಿಸಿದರು. ಅಕ್ಷರಲೋಕದಿಂದ ಅವರನ್ನು ವಂಚಿಸಿ ತಮ್ಮ ಹೊಲಗದ್ದೆಗಳಲ್ಲಿ, ಕೊಟ್ಟಿಗೆಗಳಲ್ಲಿ ಪ್ರಾಣಿಗಳಂತೆ ದುಡಿಯುವಂತೆ ಮಾಡಿದ್ದುದು ಲೋಪವಾಗಿ ಕಂಡಿದೆ. ಜ್ಞಾನ ಎಲ್ಲರ ಸೊತ್ತು. ಅದರ ಹಸಿವಿರುವವರಿಗೆ ಮರೆಯಿಲ್ಲದೆ ಅದನ್ನು ಕೊಡಬೇಕು. ಹಾಗೆ ಮಾಡದೆ ಮೇಲುವರ್ಗದವರಿಗೆ ಅನ್ಯಾಯವನ್ನು ಪ್ರಶ್ನಿಸುವನು ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಓದಿದವರನ್ನು ಮಿಟ್ಟಿಯ ಭಂಡರು, ನಿರ್ಬುದ್ದಿ ಮಾನವರು ಎಂದು ಟೀಕಿಸುವನು; ಇವರೆಲ್ಲ ಮಾತಿನ ಹಿರಿಯರು ಎಂದು ಸಂದೇಹಿಸುವ ಚೌಡಯ್ಯ ಮನ ವಚನ ಕಾಯ ಶುದ್ಧವಾಗಿರುವವರ ಹೃದಯದಲ್ಲಿ ಪರಮಾತ್ಮನನ್ನು ಕಂಡೆ ಎನ್ನುವನು. ಅರಳೆಯ ಮರನು, ವಿಷ್ಣುಕಾಂತಿ, ಬನ್ನಿ, ಮುತ್ತಕ, ತೊಳಚಿ-ಈ ಮರಗಿಡಗಳನ್ನು 'ಹರಿ ಹರಿ' ಎಂದು ನಂಬಿ ಭಾವುಕರಾಗಿ ಸುತ್ತುವ, ಪೂಜಿಸುವ, ನಮಸ್ಕರಿಸುವ ಅಜ್ಞಾನಿಗಳನ್ನು 'ಎಲ್ಲಿ ಭೋ! ಎಲ್ಲಿ ಭೋ!! ನಿಮ್ಮಹೊಡೆವಡುವ ದೈವಗಳೆಲ್ಲಾ ಗಿಡಮರವಾಗಿ ಹೋದವಲ್ಲಾ, ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ ಇವದಿರ ಗಡಣ ಬೇಡ' ಎನ್ನುವನು. ಬ್ರಹ್ಮ,ವಿಷ್ಣು, ತಸಕೋಟಿ ದೇವತೆಗಳನ್ನು ಚೌಡಯ್ಯ ದೇವರೆಂದು ಒಪ್ಪುವುದಿಲ್ಲ. ಇವರು ದೇವತೆಗಳೇ ಅಲ್ಲ, ಇವರು ಹಲವು ಕಾಲ ನಮ್ಮ ಪಕ್ಕದ ಮನೆಯಲ್ಲಿ ಹುಟ್ಟಿದರು ಎಂದು ಹುಟ್ಟನ್ನು ಎತ್ತಿ ಹೇಳುವ ಚೌಡಯ್ಯ ಇವರು ಅಯೋನಿಜರೇನಲ್ಲ, ನಾನು ಇವರನ್ನು ಒಲ್ಲೆ ಎನ್ನುವನು. ನಮ್ಮ ಪರಿಕಲ್ಪನೆಯ ದೇವರುಗಳ ಹಾಗೆ ತಾಯಿಯ ಗರ್ಭದಿಂದ ಹೊರಬಂದ ಮಾನವರು ಎನ್ನುವನು. 

  ಗಂಡಹೆಂಡಿರ ಮನಸ್ಸು ಬೇರಾದರೆ ಹಳ್ಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದಗೆ? ಎಂಬ ವಚನ ಚೌಡಯ್ಯನಲ್ಲಿ ಬಂದಿದೆ. ಅದೇ ರೀತಿ  ಆತನ ಆಲೋಚನೆಗೆ ಹೊಂದಿಕೆಯಾಗದ ತೀರ್ಥಕ್ಷೇತ್ರ ಪರ್ಯಟನದ (ಕಾಶೀ, ಮೈಲಾರ, ಶ್ರೀಶೈಲ,ರಾಚೋಟಿ) ಟೀಕೆ ಬಂದಿದೆ. ವಿಶೇಷವೆಂದರೆ, ಕಾಶಿ, ಶ್ರೀಶೈಲಗಳ ಜೊತೆಗೆ ಕರ್ನಾಟಕದ ಮೈಲಾರ ಮತ್ತು ರಾಚೋಟಿಗಳನ್ನು ತೀರ್ಥಕ್ಷೇತ್ರಗಳೆಂದು ಸಮೀಕರಿಸುವುದು; ೧೨ನೇ ಶತಮಾನಕ್ಕೆ ಇವು ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಪ್ರಸಿದ್ಧಿಯನ್ನು ಪಡೆದಿದ್ದವು. 

       ವಚನ ಸಾಹಿತ್ಯವು ಜನಸಾಮಾನ್ಯರ ನಡುವೆ ಮೂಡಿಬಂದ ದೇಸೀ ಸಾಹಿತ್ಯಜನರಿಂದ ಜನರಿಗಾಗಿ ರಚಿತವಾದ ಸಾಹಿತ್ಯ, ಹೀಗಾಗಿ ಅಲ್ಲಿ ಆಡುಭಾಷೆಯದೇ ಕಾರುಬಾರು. ತನ್ನ ಆಲೋಚನೆಗಳನ್ನು ಸ್ಪಷ್ಟಪಡಿಸಲು  ವಚನಕಾರರು ಸಮರ್ಥವಾಗಿ ಅಂಬಿಗರ ಚೌಡಯ್ಯ ಜಾತಿಯಲ್ಲಿ ಶೂದ್ರ, ವೃತ್ತಿಯಲ್ಲಿ ಅಂಬಿಗ, ಹೀಗಾಗಿ ಅವನು ಬಳಸಿಕೊಂಡದ್ದು ಉಪಮೆ, ರೂಪಕ, ಸುಭಾಷಿತದಂತಹ ನುಡಿಮುತ್ತುಗಳನ್ನು, ಪ್ರಯತ್ನಪೂರ್ವಕವಾಗಿ ಉಚ್ಚವರ್ಣಿಯರ ಭಾಷೆಯನ್ನು ಬಳಸುವುದಿಲ್ಲ. ಅವನಿಗೆ ಭಾಷೆಯೆಂಬುದು ಏತದ ನೀರಿನಂತೆ ಸಹಜವಾಗಿ ಅಭಿವ್ಯಕ್ತಿ ಪಡೆದುಕೊಳ್ಳುತ್ತದೆ.

      ವೈಚಾರಿಕ ಪ್ರವೃತ್ತಿಯ ಸಾಮಾಜಿಕ ಚಿಂತಕನ ಭಾಷೆಯಲ್ಲಿ ಅವನದೇ ಆದ ಒಂದು ಅಭಿವ್ಯಕ್ತಿ ಕ್ರಮವಿರುತ್ತದೆ. ಹೋಲಿಕೆಗಳು ಅರ್ಥಗರ್ಭಿತವಾಗಿ ಮಾತಿನ ರೂಪದಲ್ಲಿ ನಿಗಿನಿಗಿ ಹೊಳೆಯುತ್ತಿರುತ್ತವೆ. ಉದಾಹರಣೆಗೆ ಕೆಲವನ್ನಿಲ್ಲಿ ನೋಡಬಹುದು. 

ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ?”

'ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೆ?”

ರಂಭೆಯ ನೆನೆದರೆ ಕಾಮದ ಕಳವಳ ಹಿಂಗುವುದೆ?

ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ?

'ಆಶೆಯುಳ್ಳಾತ ಒಬ್ಬರ ಅಧೀನದಲ್ಲಿಪ್ಪನು, ಆಶೆಯ ಮನದ

ಕೊನೆಯನರಿದಾತ ಕೈಲಾಸದಾಚೆಯಲ್ಲಿಪ್ಪ

“ಡಾಗಿನ ಪಶುಗಳೆಲ್ಲ ಭೇದವನರಿಯಬಲ್ಲವೆ?”

ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ

ಗುಡಿ-ಇವು ಹಾಳುದೇಗುಲ ಸಮವು'

'ಬೆಲ್ಲಕ್ಕೆ ಚದುರರಸವಲ್ಲದೆ ಸಿಹಿಗೆ ಚದುರರಸವುಂಟೆ ?'

“ಅರುಹು ಕರಿಗೊಂಡಲ್ಲಿ ಕೈಯ ಕುರುಹು ಅಲ್ಲಿಯೆ ಲೋಪ

'ಯೋಗಿಯಾದಲ್ಲಿ ದೇಹಧರ್ಮವ ಮರೆದು,

ಭೋಗಿಯಾದಲ್ಲಿ ಸಂಚಿತವ ಮರೆದು,

ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು'

'ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ'

'ಓಡಲಿಂಗೆ ಹೆಣ್ಣು ಹೊನ್ನು ಮಣ್ಣು ಅಡ್ಡಬಿದ್ದು ಕೊಲುವಾಗ

ನಡೆವ ಗಂಡರುಂಟೆ ??

'ಕಳ್ಳ ಹಾದರಿಗೆ ಸೂಳೆಗಾರ ತಳವಾರರಲ್ಲಿ ಮಿಥ್ಯವಿಲ್ಲದಿರಬೇಕು'

'ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ?'

'ವೇಣು ಚಂದನದ ಯೋಗದಲ್ಲಿದ್ದಡೆ ಗಂಧ ತಾನಾಗಬಲ್ಲುದೆ ?

'ಲೋಭವೆಂಬ ಗ್ರಹಣ ಹಿಡಿದವರ ಏತರಿಂದರಲೂ

ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರವೇ ಔಷಧವು ?' ಎಂದ

'ಬ್ರಹ್ಮದ ಮಾತನಾಡಿ ಕನ್ನೆಯರ ಕಾಲದೆಸೆಯಲ್ಲಿ ಕುಳಿತು

ಪರಬೊಮ್ಮದ ಮಾತು ಅಲ್ಲಿಂದ ನಿಂದಿತ್ತು'

'ಚಿತ್ರವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿ?'

'ದೇಹಾರಕ್ಕೆ ಆಹಾರವೇ ನಿಚ್ಚಣಿಕೆ

'ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ

ನಂದಾದೀವಿಗೆಯ ಮುಡಿಸಿದ ಹಾಗೆ

'ಕಳವು ಪಾರದಾರಕ್ಕೆ ಪರಾಕುಂಟೆ? ಅದು ತನ್ನ ಒಡಲಳಿವ ಇರವು

'ಲಿಂಗತನುವಿಂಗೆ ಆತ್ಮತೇಜದ ಅಹಂಕಾರವುಂಟೆ ? ಸದ್ಯಕ್ಕಂಗೆ

ಹುಸಿ, ಕುಹಕ, ಕ್ಷಣಿಕತ್ವ, ಅಸಘಾತದಸಕವುಂಟೆ?'

ಉದಯದಲಿದ್ದು ಪತ್ರ ಪುಷ್ಪಗಳಿಗೆ ಹೋಗುವ ಅಣ್ಣಗಳು

ನೀವು ಕೇಳಿರೋ, ನೀವು ಗಿಡದ ವೈರಿಗಳೊ? ಗಿಡದ ದಾಯಾದ್ಯರೊ??

'ಕಾಸಿನ ಕಲ್ಪ ಕೈಯಲ್ಲಿ ಕೊಟ್ಟು ಹೇಸದೆ ಕೊಂದ ಗುರುವೆಂಬ

ದ್ರೋಹಿ. ಬಿಟ್ಟಡೆ ಸಮಯವಿರುದ್ಧ ಹಿಡಿದಡೆ ಜ್ಞಾನವಿರುದ್ಧ ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ ತುಪ್ಪಲೇಸಂದಡೆ ಸಪ್ಪೆಯಾಗಿ ತೋರಿತ್ತು'

“ಓದಿಸಿ ಬೋಧಿಸಿ ಇದಿರಿಂಗೆ ಹೇಳುವನ್ನಬರ ಚದುರತೆಯಲ್ಲವೆ?'

ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ ??

ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ?”

'ಕಾಲವೇಳೆಯನರಿದು ಕೂಗಿದ ಕೋಳಿಯ ಕಂಡು ಊರೆಲ್ಲರೂ

'ಮರಕ್ಕೆ ಬೇರು ನಷ್ಟದಿಂದ ಶಾಖೆನಪ್ಪ, ಪ್ರಕೃತಿ ನಷ್ಟದಿಂದ ಇಂದ್ರಿಯನಷ್ಟ

'ಜಾತಿಭ್ರಮ ನೀತಿಭ್ರಮೆ ಎಂಬ ಕರ್ಮಂಗಳ ಘಾಸಿಮಾಡಿ

... ಕಳೆಯಬಲ್ಲಡಾತ ಯೋಗಿ

ಚೌಡಯ್ಯ ಹುಟ್ಟಿನಲ್ಲಿ ಶೂದ್ರನಾದರೂ ತೀರಾ ಸ್ವಾಭಿಮಾನಿ. ಮೇಲುವರ್ಗದವರಊಸರವಳ್ಳಿತನವನ್ನು ಕಂಡಾಗ, ಮೋಸ, ವಂಚನೆಗಳನ್ನು ಕಂಡಾಗ ಅವನ ಮಾತುನಿಗಿ ನಿಗಿ ಕೆಂಡವಾಗುತ್ತದೆ. ಅವನ ಸಾಮಾಜಿಕ ಚಿಂತನೆಯಲ್ಲಿ ಸ್ವಂತಿಕೆಯಿದೆ,ಅಭಿವ್ಯಕ್ತಿಯಲ್ಲಿ ಒರಟುತನವಿದೆ. ಚೌಡಯ್ಯನು ಶೋಷಣೆಗೆ ಒಳಗಾದವರಪ್ರತಿನಿಧಿಯಾಗಿರುವುದರಿಂದ ಮಾತಿನ ವಾಚ್ಯಾರ್ಥವನ್ನು 'ಅನಾಗರಿಕ'ವೆನ್ನುವಷ್ಟುರೊಚ್ಚಿನಿಂದ ಹೇಳುವಷ್ಟು ಹರಿತ ನಾಲಗೆಯವನು. ತಪ್ಪು ಮಾಡಿದವರ ಬಗೆಗೆ ಅವನದೇಆದ ವಿಶಿಷ್ಟ ಪ್ರತಿಕ್ರಿಯೆಯಿದೆ :

 ಚೌಡಯ್ಯನ ನಿಷ್ಣುರವಾದ ಮಾತಿಗೆ ಅವನ ನೇರ ನಡಾವಳಿಯೇ ಕಾರಣ.ಅವನಲ್ಲಿ ಹೊಂದಾಣಿಕೆಯ ನಯಗಾರಿಕೆಯ ಸ್ವಭಾವವಿಲ್ಲ: ಇದ್ದುದನ್ನು ಇದ್ದಂತೆ ಹೇಳುವನೇರ ನುಡಿ, ಅವನ ಟೀಕೆಗೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಒಳಗಾಗುವರು ಭಕ್ತರುಗಳಷ್ಟೇ ಅಲ್ಲ ಗುರು-ವಿರಕ್ತರೂ ಒಳಗಾಗುವರು. ಒಟ್ಟಿನಲ್ಲಿ  ಅವನದು ಗಳಗೊಡ್ಡಿದ ಕತ್ತಿ, ಕೆಟ್ಟದ್ದನ್ನು ಕಂಡು ಕೆರಳುವ ಅವನು ಒಳಿತನ್ನು ಕಂಡಾಗ ಗೌರವಿಸುವ ಸ್ವಭಾವದವನು. 

   ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗ, ಸಾಮಾಜಿಕವಾಗಿ ನಿಕೃಷ್ಟ. ಆದರೂನ ಅಲ್ಲಿ ತುಂಬಿ ಹರಿಯುವ ಆತ್ಮವಿಶ್ವಾಸ ಆ ಪರಿಸರದಲ್ಲಿ ತೀರಾ ಅಪರೂಪ. ಅವನು ರೂಢಿಸಿಕೊಂಡ ಜ್ಞಾನ ಹಾಗೂ ದೀಕ್ಷೆಯ ಮುಖಾಂತರ ಅವನಲ್ಲಿ ಕಾಣಿಸಿಕೊಂಡ ಪರಿವರ್ತನೆ ಎರಡೂ ಅಚ್ಚರಿ ಮೂಡಿಸುವಂತಹದು. ಅವನ ಬಿಡುಬೀಸಾದ ವರ್ತನೆ ಹಾಗೂ ಅವನ ಸ್ವಂತದ್ದಾದ ಮಾತುಗಾರಿಕೆ ಅವನ ಸಮಕಾಲೀನ ವಚನಕಾರರಲ್ಲಿ ಕಾಣಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಕ್ಕೆ ಅವನ ವ್ಯಕ್ತಿತ್ವ ಅವನ ಅಭಿವ್ಯಕ್ತಿಯಲ್ಲಿ ಮೈದಾಳಿದೆ. ಶೂದ್ರವರ್ಗದ ಪ್ರತಿನಿಧಿಯಾಗಿ ತನ್ನ ರೂಕ್ಷ ವರ್ತನೆಯಿಂದ, ಅನಾಗರಿಕ ರೀತಿಯಿಂದ ಅಂಬಿಗರ ಚೌಡಯ್ಯ ಸಾಚಾ ಆಗುತ್ತಾನೆ. ಇದು ೧೨ನೆಯ ಶತಮಾನ ಬಸವಚಳವಳಿಯು ದಲಿತನೊಬ್ಬನಿಗೆ ಕೊಟ್ಟ ವಾಕ್‌ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯ, ವಿಮರ್ಶಾ ಸ್ವಾತಂತ್ರ್ಯ. ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ಎಲ್ಲಿಯೂ ಇಷ್ಟರಮಟ್ಟಿಗೆ ನಮಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸಮಾಜಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥ ಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು ಎಂಬ ವಿದ್ಯಾಶಂಕರ ಅವರ ಮಾತು ನಿಜ. ಒಟ್ಟಾರೆ ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಸಿಡಿಲು ನುಡಿಯ ಸರ್ವಜ್ಞ ಮತ್ತು  ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯರಲ್ಲಿ ಮಾತ್ರ ಎಂದು ತೋರುತ್ತದೆ.


ಪರಾಮರ್ಶನ ಗ್ರಂಥಗಳು

೧. ಅಂಬಿಗರ ಚೌಡಯ್ಯನ ವಚನಗಳು ಸಂ. ಎಸ್.ವಿದ್ಯಾಶಂಕರ

 ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೦೯

೨.ಸಂಕೀರ್ಣ ವಚನ ಸಂಪುಟ ೧(ಸಂ: ಎಂ.ಎಂ.ಕಲಬುರ್ಗಿ)

ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) 2001

೩.ಎಂ.ಚಿದಾನಂದಮೂರ್ತಿ, ಸ್ಥಾವರ-ಜಂಗಮ

 ಚಿದಾನಂದ ಸಮಗ್ರ ಸಂಪುಟ-4

 ಸ್ವಪ್ನ ಪುಸ್ತಕಾಲಯ, ಬೆಂಗಳೂರು, 2004

೪. ಬಸವರಾಜು.ಸಿ,ಕಲ್ಗುಡಿ, ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ

 ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು,2001 ( ಮೂ.ಮು)

೫. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-3

 ಸ್ವಪ್ನ ಪುಸ್ತಕಾಲಯ, ಬೆಂಗಳೂರು, 1997

೬.ಸಿ.ನಾಗಭೂಷಣ, ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

 ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2000

 ವೀರಶೈವ ಸಾಹಿತ್ಯ : ಕೆಲವು ಒಳನೋಟಗಳು

 ವಿಜೇತ ಪ್ರಕಾಶನ, ಗದಗ,2008

 ಶರಣ ಸಾಹಿತ್ಯ ದೀಪಿಕೆ,ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ,ಪು.೨೦೧೭

೭.ಬಸವರಾಜ ಸಬರದ, ವಚನಚಳುವಳಿ

 ಪಲ್ಲವಿ ಪ್ರಕಾಶನ, ಗುಲಬರ್ಗಾ,2007

೮. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.೩ ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ

೯. ಎಂ.ಚಿದಾನಂದ ಮೂರ್ತಿ , ವಚನ ಸಾಹಿತ್ಯ

  ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ





 ಬ್ಹಿ. ವಿ. ಶಿರೂರ  ಕನ್ನಡ ವಿದ್ವತ್‌ ಪರಂಪರೆಯ ವಿದ್ವತ್ತಿನ ಪ್ರತೀಕ  

                                                       ಡಾ.ಸಿ.ನಾಗಭೂಷಣ

ಡಾ. ಬಿ.ವಿ. ಶಿರೂರ ಅವರು ಆದರ್ಶ ಕನ್ನಡ ಪ್ರಾಧ್ಯಾಪಕರಾಗಿ, ಶ್ರೇಷ್ಠ ಸಂಶೋಧಕರಾಗಿ ಕಳೆದ ಮೂವತ್ತೈದು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ದುಡಿದವರು. ಸಂಶೋಧನೆ, ಹಳಗನ್ನಡ, ಹಸ್ತಪ್ರತಿ, ಶಾಸನ ಹಾಗೂ ಸಂಪಾದನ ಕ್ಷೇತ್ರಗಳಲ್ಲಿ ಕೃಷಿ ಮಾಡಿ, ಮೌಲಿಕ ಕೃತಿಗಳನ್ನು ರಚಿಸಿದವರು. ಕನ್ನಡ ವಿದ್ವತ್‌ ವಲಯದ ಕೊನೆಯ ತಲೆಮಾರಿನ ಡಾ. ಶಿರೂರ ಅವರ ಸಂಶೋಧನ ಶಿಸ್ತು, ಪರಿಶ್ರಮ ಪ್ರವೃತ್ತಿ ಅವರನ್ನು ಅಪರೂಪದ ಸಂಶೋಧಕರನ್ನಾಗಿ ಮಾಡಿವೆ.

    ಡಾ. ಬಸವರಾಜ ವೀರಭದ್ರಪ್ಪ ಶಿರೂರ ಅವರು ಕೊಪ್ಪಳ ಜಿಲ್ಲೆ ಯಲಬುರ್ಗಿ ತಾಲೂಕಿನ ಆಡೂರ ಗ್ರಾಮದವರು. ಇವರ ತಂದೆಯವರು ಅಪ್ಪಟ ಗಾಂಧಿವಾದಿಗಳೂ, ನ್ಯಾಯನಿಷ್ಠುರರೂ ಆಗಿದ್ದರು. ಸತ್ಯಾಗ್ರಹ, ಚಳುವಳಿ, ರಾಜಕಾರಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದವರು. ಆದರ್ಶ ಸಮಾಜಸೇವಕರಾಗಿದ್ದ ವೀರಭದ್ರಪ್ಪನವರ ಪ್ರೇರಣೆ ಪ್ರಭಾವಗಳು ಡಾ. ಶಿರೂರ ಅವರ ಮೇಲೆ ಗಾಢವಾಗಿ ಆಗಿರುವುದು ಕಂಡುಬರುತ್ತದೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾದ ಅಂದಾನಮ್ಮನವರು ಶಿರೂರ ಅವರ ತಾಯಿಯವರು. ಇವರ ಪುಣ್ಯಗರ್ಭದಲ್ಲಿ ಮಾರ್ಚ್ ೨, ೧೯೪೧ ರಂದು ಬಸವರಾಜ ಜನಿಸಿದರು. ಬಾಲ್ಯದಲ್ಲಿ ತಾಯಿಯವರನ್ನು ಕಳೆದುಕೊಂಡು, ಬಡತನದ ಬವಣೆಯನ್ನು ಅನುಭವಿಸಿದರು. ತುಂಬಾ ಚುರುಕಾಗಿದ್ದ ಇವರು ಗದಗ ಮತ್ತು ಆಡೂರಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಕೊಪ್ಪಳ ಮತ್ತು ಕುಕನೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪಿ.ಯು.ಸಿ. ಶಿಕ್ಷಣವನ್ನು ರಾಯಚೂರಿನಲ್ಲೂ ಪದವಿ ಶಿಕ್ಷಣವನ್ನು ಹುಬ್ಬಳ್ಳಿ-ಧಾರವಾಡಗಳಲ್ಲೂ ಪೂರೈಸಿದರು. ೧೯೬೨ರಲ್ಲಿ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ ಪಾಸು ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಎಂ.ಎ. ಅಧ್ಯಯನ ಮಾಡಿದರು. ಡಾ. ಆರ್.ಸಿ. ಹಿರೇಮಠ, ಡಾ. ಎಂ.ಎಸ್. ಸುಂಕಾಪುರ ಅವರಂಥ ವಿದ್ವತ್ತಿನ ಪ್ರಾಧ್ಯಾಪಕರ ಪ್ರಭಾವಕ್ಕೆ ಒಳಗಾದರು. ಡಾ. ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ 'ಶ್ರವಣಬೆಳಗೊಳ - ರಾಜಕೀಯ ಸಾಹಿತ್ಯಕ, ಸಾಂಸ್ಕೃತಿಕ ಮಹತ್ವ' ಎಂಬ ವಿಷಯ ಕುರಿತು ಪಿಎಚ್.ಡಿ ಸಂಶೋಧನ ಕಾರ್ಯ ಕೈಗೊಂಡರು.

ಡಾ. ಬಿ.ವಿ. ಶಿರೂರ ಅವರು ೧೯೬೫ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ವಚನವಾಲ್ಮೀಯ ವಿಭಾಗದಲ್ಲಿ ಸಹಾಯಕ ಸಂಶೋಧಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ೧೯೬೬ ರಲ್ಲಿ ನರೇಗಲ್ಲದ ಶ್ರೀ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಕೌಟುಂಬಿಕ ಜೀವನದ ತಾಪತ್ರಯಗಳ ಮಧ್ಯದಲ್ಲೂ ತಮ್ಮ ಸಂಶೋಧನ ಕಾವ್ಯವನ್ನು ಮುಂದುವರೆಸಿದರು. ೧೯೭೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದರು.

ವಿದ್ಯಾರ್ಜನೆ' ಎನ್ನುವುದು ಆಸಕ್ತರಿಗೆ ಅಧ್ಯಯನಶೀಲ ಪ್ರವೃತ್ತಿಯವರಿಗೆ ಬತ್ತದ ಹೊಳೆಯಂತೆ. ಡಾ. ಶಿರೂರ ಅವರು ಜೀವನದುದ್ದಕ್ಕೂ ಈ ಅಧ್ಯಯನಶೀಲ ಪ್ರವೃತ್ತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ನರೇಗಲ್ ಪದವಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಚಾರ್ಯರಾಗಿ, ನ್ಯಾಯಯುತವಾದ ಸೇವೆ ಸಲ್ಲಿಸಿದ್ದಾರೆ. ಆ ಶಿಕ್ಷಣ ಸಂಸ್ಥೆಯಲ್ಲಿ ಡಾ. ಶಿರೂರ ಅವರಂಥ ದಕ್ಷ, ಪ್ರಾಮಾಣಿಕ ಹಾಗೂ ಶಿಸ್ತಿನ ಪ್ರಾಧ್ಯಾಪಕರು ಇರುವುದರಿಂದ ಅದಕ್ಕೆ ಘನತೆ ಗೌರವಗಳು ಪ್ರಾಪ್ತವಾಗಿದ್ದವು. ಇವರು ಪ್ರಾಚಾರ್ಯರಾಗಿ ಸಲ್ಲಿಸಿದ ಸೇವೆ ಅನುಕರಣೀಯವಾದುದು.

     ಡಾ. ಶಿರೂರ ಅವರಲ್ಲಿಯ ಪ್ರತಿಭೆ, ಪಾಂಡಿತ್ಯ, ಶ್ರಮವಹಿಸಿ ದುಡಿಯುವ ಗುಣಗಳಿಂದಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಜೈನಸಾಹಿತ್ಯದ ಪ್ರವಾಚಕರಾಗಿ ೧೯೮೫ ರಲ್ಲಿ ಸೇರ್ಪಡೆಯಾದರು. ತಮ್ಮ ಪಾಂಡಿತ್ಯಪೂರ್ಣ ಪಾಠಬೋಧನೆಯಿಂದ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಗಳನ್ನು ಗಳಿಸಿದರು, ಸೇವಾ ಮನೋಭಾವದ ದುಡಿಮೆಯಿಂದ ಬೆಳೆಯುತ್ತಲೇ ಹೋದರು. ಈ ಅವಧಿಯಲ್ಲಿಯೇ ಮಹತ್ವಪೂರ್ಣವಾದ ಸಾಹಿತ್ಯಕ ಕೃತಿಗಳ ರಚನೆಯನ್ನು ಮಾಡಿದರು. ನಾಡಿನ ವಿದ್ವತ್ಪತ್ರಿಕೆಗಳಲ್ಲಿ ಮೌಲಿಕವಾದ ನೂರಾರು ಲೇಖನಗಳನ್ನು ಪ್ರಕಟಿಸಿದರು. ಅವರ ಸಂಶೋಧನ ಕೃತಿ, ಲೇಖನ ಹಾಗೂ ಸಂಪಾದನ ಕೃತಿಗಳನ್ನು ಕೆಳಗಿನಂತೆ ಸಮೀಕ್ಷಿಸಬಹುದು.

     ಡಾ. ಬಿ.ವಿ. ಶಿರೂರ ಅವರ ಆಸಕ್ತಿಯ ಕ್ಷೇತ್ರ ಸಂಶೋಧನೆ. ಶ್ರಮ, ಶ್ರದ್ಧೆ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಂತಹ ಗುಣಗಳಿಂದಾಗಿ ಅವರೊಬ್ಬ ಸಮರ್ಥ ಸಂಶೋಧಕರೆನಿಸಿದ್ದಾರೆ. ಸಂಶೋಧನೆ ಅವರ ಬದುಕಿನ ಒಂದು ಅಂಗವಾಗಿದೆ. ಅವರು ಡಾ. ಆರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಶ್ರವಣಬೆಳಗೊಳ-ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ, ಮಹತ್ವ' ಎಂಬ ಮಹಾಪ್ರಬಂಧಕ್ಕೆ ೧೯೭೩ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. “ಕನ್ನಡ ನಾಡಿನ ಇತಿಹಾಸವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕೆಲವೇ ಸ್ಥಳಗಳಲ್ಲಿ ಶ್ರವಣಬೆಳಗೊಳ ಸುಪ್ರಸಿದ್ಧವಾದುದು. ಇಂಥ ಸಾಂಸ್ಕೃತಿಕ ಕೇಂದ್ರವೊಂದನ್ನು ಸಮಗ್ರ ಸಂಶೋಧನಾಧ್ಯಯನಕ್ಕೆ ಒಳಪಡಿಸಿರುವ ಶಿರೂರ ಅವರ ಈ ಮಹಾಪ್ರಬಂಧ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಸಂದ ಮೌಲಿಕ ಕೊಡುಗೆ ಎನಿಸಿದೆ. ಕ್ರಿ.ಪೂ. ೩ನೆಯ ಶತಮಾನದಷ್ಟು ಹಿಂದೆಯೇ ಉತ್ತರ ಭಾರತದ ಭದ್ರಬಾಹು, ಚಂದ್ರಗುಪ್ತರನ್ನು ಶ್ರವಣಬೆಳಗೊಳ, ಕರ್ನಾಟಕದಲ್ಲಿ ಜೈನಧರ್ಮದ ಜಾಗೃತ ಕೇಂದ್ರವಾಗಿದೆ. ಶಾಸನ, ಸಾಹಿತ್ಯ ಹಾಗೂ ವಾಸ್ತು ಶಿಲ್ಪಗಳ ಆಧಾರದಿಂದ ಶ್ರವಣಬೆಳಗೊಳದ ಚಾರಿತ್ರಿಕ ಮಹತ್ವವನ್ನು ಡಾ. ಶಿರೂರ ಅವರು ಕಟ್ಟಿಕೊಟ್ಟಿದ್ದಾರೆ. ಕುಂದಕುಂದ, ಸಮಂತಭದ್ರ ಮೊದಲಾದ ಮುನಿವರ್ಯರು, ಚಾವುಂಡರಾಯ, ಗಂಗರಾಜ ಶಾಂತಲೆಯಂಥ ಶ್ರಾವಕರು, ಅವರು ರೂಪಿಸಿದ ಕೃತಿಗಳು, ಸ್ಥಾಪಿಸಿದ ಜಿನಮಂದಿರ ಹಾಗೂ ಮಂಟಪಗಳ ಅಧಾರದಿಂದ ಅಧ್ಯಯನ ಮಾಡಿದ್ದಾರೆ.

ಮಾನಸ್ತಂಬ, ಗೊಮ್ಮಟಮೂರ್ತಿ ಮೊದಲಾದವುಗಳನ್ನು ಶಾಸನ, ಸಾಹಿತ್ಯ ಕೃತಿಗಳು ಮತ್ತು ವಾಸ್ತುಶಿಲ್ಪಗಳಆಕರ್ಷಿಸಿದ ಶ್ರವಣಬೆಳೊಳವನ್ನು ರಾಜಕೀಯ ನೆಲೆಯಾಗಿಟ್ಟುಕೊಂಡು ವಿವಿಧ ಅರಸುಮನೆತನಗಳು ಮಾಡಿದ ಸಾಧನೆಗಳನ್ನು ದಾಖಲಿಸಿದ್ದಾರೆ. ಕ್ರಿ.ಪೂ. ೩ನೆಯ ಶತಮಾನದಿಂದಲೇ ಭದ್ರಬಾಹು, ಚಂದ್ರಗುಪ್ತರನ್ನು ಆಕರ್ಷಿಸಿದ ಶ್ರವಣಬೆಳೊಳ ಉತ್ತರ ಮತ್ತು ದಕ್ಷಿಣ ಭಾರತದ ಜೈನರ ಪ್ರಮುಖ ಕೇಂದ್ರವಾಗಿಪರಿಣಮಿಸಿರುವುದನ್ನು ನಿಖರವಾಗಿ ಗುರುತಿಸಿದ್ದಾರೆ. ಗಂಗ ಅರಸರ ಕಾಲವನ್ನು ಶ್ರವಣಬೆಳಗೊಳದ ಸುವರ್ಣಯುಗವೆಂದು ಕರೆಯಲಾಗುತ್ತಿದೆ. ಗಂಗರ ರಾಚಮಲ್ಲನ ಮಂತ್ರಿ ಚಾವುಂಡರಾಯ ಕೆತ್ತಿಸಿದ ಗೊಮ್ಮಟ ವಿಗ್ರಹದಿಂದಾಗಿ ಪ್ರಾಪ್ತವಾದ ಇದರ ಖ್ಯಾತಿಯನ್ನು ಬಣ್ಣಿಸಿದ್ದಾರೆ. ರಾಷ್ಟ್ರಕೂಟ ಮತ್ತು ಚಾಲುಕ್ಯ ದೊರೆಗಳು ಶ್ರವಣಬೆಳಗೊಳದೊಂದಿಗೆ ಇಟ್ಟುಕೊಂಡ ಸಂಪರ್ಕವನ್ನು ಆಧಾರಯುಕ್ತವಾಗಿ ವಿವರಿಸಿದ್ದಾರೆ. ಹೊಯ್ಸಳರ ಕಾಲದಲ್ಲಿ ಪುನಃ ಪ್ರವರ್ಧಮಾನಕ್ಕೆ ಬಂದ ಶ್ರವಣಬೆಳಗೊಳದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ವಿಷ್ಣುವರ್ಧನ ಮತ್ತು ಶಾಂತಲೆಯರ ಸಾಧನೆ-ಸಿದ್ಧಿಗಳನ್ನು ಗುರುತಿಸಿದ್ದಾರೆ. ಶ್ರವಣಬೆಳಗೊಳದ ಸಾಹಿತ್ಯಕ ವಿವರಗಳನ್ನು ಶ್ರವಣಬೆಳಗೊಳದ ಕವಿ ಸಾಹಿತ್ಯ, ಸ್ಥಳದಿಂದ ಪ್ರಭಾವಿತರಾದ ಕವಿ ಸಾಹಿತ್ಯ, ಶಾಸನ ಸಾಹಿತ್ಯ ಮತ್ತು ಶಾಸನೋಕ್ತ ಕವಿ ಸಾಹಿತ್ಯವೆಂಬ ಉಪಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಅನೇಕ ಜನ ಕವಿಗಳನ್ನು ಅವರ ಕೃತಿಗಳಲ್ಲಿ ಅಂತರ್ಗತವಾದ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಉದಾಹರಣೆಗೆ ಚಿದಾನಂದಕವಿಯ ಮುನಿವಂಶಾಭ್ಯುದಯ ಮತ್ತು ಅನಂತಕವಿಯ ಗೊಮ್ಮಟೇಶ್ವರ ಚರಿತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅವು ಬೆಳಕು ಕಾಣುವಂತೆ ಮಾಡಿದ್ದಾರೆ. ಇಲ್ಲಿಯ ಸುಮಾರು ೫೭೩ ಶಾಸನಗಳಲ್ಲಿ ಹುದುಗಿರುವ ಭದ್ರಬಾಹು, ಕುಂದಕುಂದ, ಉಮಾಸ್ವಾತಿ, ಶಿವಕೋಟಿಸೂರಿ, ಸಮಂತಭದ್ರ ಮೊದಲಾದ ಕವಿ ಕೃತಿಗಳನ್ನು ವಿಶ್ಲೇಷಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಶ್ರವಣಬೆಳೊಳ ಒಂದು ಪ್ರಮುಖ ಜೈನ ಕೇಂದ್ರವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವುದನ್ನು ಆಧಾರ ಸಹಿತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸ್ಥಳದ ಮಹತ್ವದೊಂದಿಗೆ ಕನ್ನಡಿಗರ ಜನಜೀವನ, ಧರ್ಮಸಮನ್ವಯತೆ ಮೊದಲಾದವುಗಳ ವಿವರಗಳೊಂದಿಗೆ ಅವರ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿತೋರಿದ್ದಾರೆ. ಡಾ. ಬಿ. ಶಿರೂರ ಅವರ ಈ ಸಂಶೋಧನ ಮಹಾಪ್ರಬಂಧ ಒಂದು ಸಾಂಸ್ಕೃತಿಕ ಕೇಂದ್ರವನ್ನು ಮೂಲ ವಸ್ತುವನ್ನಾಗಿಟ್ಟುಕೊಂಡು ಆಗಿರುವ ಕೆಲಸಗಳಲ್ಲಿ ಇದೇ ಮೊದಲನೆಯದು. ಇತರ ಸಾಂಸ್ಕೃತಿಕ ಕೇಂದ್ರಗಳನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಆಕರಗ್ರಂಥವಾಗಿದೆ. ಕನ್ನಡದ ವಿದ್ವತ್ಪೂರ್ಣವಾದ ಮಹಾಪ್ರಬಂಧಗಳಿಗೆ ಇದು ಮಾದರಿಯಾಗಿದೆ. ಕನ್ನಡ ಸಂಶೋಧನ ಕ್ಷೇತ್ರಕ್ಕೆ ಸಂದ ಈ ಅಪರೂಪದ ಕೊಡುಗೆಗೆ ಶ್ರವಣಬೆಳೊಳದ ಬಾಹುಬಲಿ ಪ್ರತಿಷ್ಠಾನವು ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಯಲಬುರ್ಗಿಯ ಸಿಂದರು ಡಾ. ಬಿ. ವೈ. ಶಿರೂರ ಅವರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ನೀಡಿದ ಉಪನ್ಯಾಸದ ಕಿರುಕೃತಿ. ಯಲಬುರ್ಗಿ ಸಿಂದರ ಚರಿತ್ರೆಯನ್ನು ಮೊದಲ ಬಾರಿಗೆ ಕಟ್ಟಿಕೊಡುವ ಮಹತ್ವದ ಗ್ರಂಥ. ಇದು ಆಕೃತಿಯಲ್ಲಿ ಕಿರಿದಾದರೂ ವಸ್ತು ಸಂಗ್ರಹಣೆ ದೃಷ್ಟಿಯಿಂದ ಹಿರಿದಾಗಿದೆ. ಈ ಕೃತಿಗೆ ಮೂವತ್ತೆಂಟು ಶಾಸನಗಳನ್ನು ಬಳಸಿಕೊಂಡಿರುವುದರಿಂದ ಚಾರಿತ್ರಿಕವಾಗಿ ಇದು ಮೌಲಿಕವೆನಿಸಿದೆ. ಇತಿಹಾಸ ನಿರೂಪಕನಿಗಿರಬೇಕಾದ ನಿಷ್ಪಕ್ಷಪಾತ ಗುಣ, ಪ್ರಾಮಾಣಿಕತೆ, ಡಾ. ಶಿರೂರ ಅವರಲ್ಲಿ ಮೇಳೆಸಿರುವುದರಿಂದ ಲಭ್ಯವಿರುವ ಎಲ್ಲ ಆಧಾರಗಳನ್ನು ಬಳಸಿಕೊಂಡು ವಿಷಯವನ್ನು ಚರ್ಚಿಸಿರುವ ರೀತಿ ಅನನ್ಯವಾಗಿದೆ. ಈ ಚಿಕ್ಕ ಗ್ರಂಥ ಕುರುಗೋಡ ಸಿಂದರು' ಎಂಬಂಥ ಮಹಾಪ್ರಬಂಧ ರಚನೆಗೆ ಪ್ರೇರಕವಾಗಿದೆ. ಸಿಂದವಂಶದ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಇದು ಆಕಗ್ರಂಥವಾಗಿದೆ. ಕರ್ನಾಟಕದಲ್ಲಿ ಸಂಶೋಧನಶಾಸ್ತ್ರ ಇನ್ನೂ ಬೆಳವಣಿಗೆ ಹಂತದಲ್ಲಿದೆ. ಕನ್ನಡ ಸ್ನಾತಕೋತ್ತರ ಪದವಿಯ ಅಧ್ಯಯನ ಮಾಡಿ ಸಂಶೋಧಕರಾಗಿ ಹೊರಹೊಮ್ಮಲು ಬಯಸುವವರಿಗೆ ಸಂಶೋಧನಶಾಸ್ತ್ರ'ದ ತಿಳುವಳಿಕೆ ಮಾಡಿಕೊಡಲು ಡಾ. ಎಂ. ಚಿದಾನಂದಮೂರ್ತಿಯವರ 'ಸಂಶೋಧನೆ' ಎಂಬ ಚಿಕ್ಕಪುಸ್ತಕ ಮಾತ್ರವಿತ್ತು, ಈ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಸಂಶೋಧನೆಯ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ 'ಸಂಶೋಧನ ವ್ಯಾಸಂಗ'ವೆಂಬ ಕೃತಿಯನ್ನು ಶಿರೂರ ಅವರು ೧೯೯೦ ರಲ್ಲಿ ಪ್ರಕಟಿಸಿದರು. ಈ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಸ್ಮಾರಕ ಬಹುಮಾನ ಬಂದಿರುವುದು ಇದರ ಹೆಗ್ಗಳಿಕೆಯಾಗಿದೆ. ಒಂದೇ ವರ್ಷದಲ್ಲಿ ಇದರ ಎಲ್ಲಾ ಪ್ರತಿಗಳು ತೀರಲು ಈ ಗ್ರಂಥಕ್ಕೆ ಇನ್ನು ಕೆಲವು ಮಹತ್ವದ ವಿಷಯಗಳನ್ನು ಸೇರಿಸಿ, ಪರಿಷ್ಕರಿಸಿ 'ಸಂಶೋಧನ ಸ್ವರೂಪ' ಎಂಬ ಹೆಸರಿನಲ್ಲಿ ೨೦೦೨ ರಲ್ಲಿ ಪ್ರಕಟಿಸಿದರು. ಇದು ಸಂಶೋಧನೆಯ ವಿಧಿವಿಧಾನಗಳನ್ನು ತಿಳಿಸುವ ಮಹತ್ವದ ಗ್ರಂಥವಾಯಿತು. ಸಾಹಿತ್ಯದಲ್ಲಿ ಸಂಶೋಧನೆ, ಸಂಶೋಧನೆಯ ವಿವಿಧ ರೂಪಗಳು, ಸಂಶೋಧಕನ ಅರ್ಹತೆಗಳು ಮತ್ತು ಗುಣಲಕ್ಷಣಗಳು, ವಿಷಯದ ಆಯ್ಕೆ, ಸಂಶೋಧನ ರೂಪರೇಷೆ, ವಿಷಯ ಸಂಗ್ರಹಣೆ ಮೊದಲಾದ ಸಂಗತಿಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ನಿರೂಪಿಸಿದ್ದಾರೆ. 'ಮಹಾಪ್ರಬಂಧದ ವಿನ್ಯಾಸ, ಮನೋವೈಜ್ಞಾನಿಕ ಸಂಶೋಧನೆ, ಕೇಸ್‌ಸ್ಟಡಿ, ಮಾರ್ಕ್ಸಸಿದ್ಧಾಂತ, ಬಹುಶಿಸ್ತೀಯ ಸಂಶೋಧನೆ, ಕವಿಯ ಕಾಲ, ಚರಿತ್ರೆ, ಕೃತಿಸಂಖ್ಯೆ, ರಚನಾಕ್ರಮ, ಸ್ವರೂಪಗಳ ನಿರ್ಣಯ, ಸಾರಲೇಖ, ಸಂಶೋಧನ ಪ್ರಬಂಧದ ಮೌಲ್ಯಮಾಪನ, ಅದರ ವರದಿ' ಮುಂತಾದವುಗಳನ್ನು ವಿಕೃತವಾಗಿ ಮತ್ತು ಉದಾಹರಣೆ ಸಮೇತವಾಗಿ ವಿಶ್ಲೇಷಿಸಿದ್ದಾರೆ. ಈ ಗ್ರಂಥದ ಕೊನೆಯಲ್ಲಿ ಈವರೆಗೆ ಕನ್ನಡದಲ್ಲಿ ಆದ ಸಂಶೋಧನ ಮಹಾಪ್ರಬಂಧಗಳ ಸುದೀರ್ಘ ಯಾದಿ ಕೊಟ್ಟಿರುವುದು ಸಂಶೋಧನ ಕ್ಷೇತ್ರದಲ್ಲಿ ಹೊಸದಾಗಿ ಪ್ರವೇಶ ಮಾಡುವವರಿಗೆ ಇದೊಂದು ಮಾದರಿಯ ದಿಕ್ಕೂಚಿಯಾಗಿದೆ. ಈ ಕೃತಿಯಲ್ಲಿಯ 'ಕರ್ನಾಟಕದಲ್ಲಿ ಸಂಶೋಧನೆ' ಎಂಬ ಅಧ್ಯಾಯವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹೊರ ತಂದಿರುವ 'ಶತಮಾನದ ಸಂಶೋಧನೆ' ಎಂಬ ಮಹಾಸಂಪುಟಕ್ಕೆ ಆಯ್ಕೆ ಮಾಡಿಕೊಂಡಿರುವುದು ಮತ್ತು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ 'ಸಂಶೋಧನ ಪಥ' ಗ್ರಂಥಕ್ಕೆ, ಇದರಲ್ಲಿಯ ಸಂಶೋಧನ ಪ್ರಕಾರಗಳು' ಎಂಬ ಅಧ್ಯಾಯವನ್ನು ಆರಿಸಿಕೊಂಡಿರುವುದು ಅದರ ಗುಣಾತ್ಮಕತೆಗೆ ನಿದರ್ಶನವೆನಿಸಿದೆ. ಡಾ.ಎಂ.ಎಂ. ಕಲಬುರ್ಗಿಯವರ 'ಕನ್ನಡ ಸಂಶೋಧನಾಶಾಸ್ತ್ರ' ಮತ್ತು ಡಾ. ಸಂಗಮೇಶ ಸವದತ್ತಿಮಠ ಅವರ 'ಸಂಶೋಧನಾ ಮಾರ್ಗ' ಇತ್ಯಾದಿ ಗ್ರಂಥಗಳಿದ್ದರೂ ಇದು ಸಂಶೋಧನಾಸಕ್ತರ ಮೆಚ್ಚುಗೆಗೆ ಪಾತ್ರವಾಗಿರುವುದು ವಿಶೇಷವಾದುದಾಗಿದೆ. ಡಾ. ಶಿರೂರ ಅವರು “ಸಂಶೋಧನ ಸ್ವರೂಪ' ಕೃತಿಯನ್ನು ರಚಿಸಿದ ಮೇಲೂ ಸಂಶೋಧನಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು  ರಚಿಸಿದ್ದಾರೆ. 

    ಡಾ. ಬಿ. ವಿ. ಶಿರೂರ ಅವರು ನಾಡಿನ ವಿದ್ವತ್ ಪತ್ರಿಕೆ, ಅಭಿನಂದನ ಗ್ರಂಥಗಳಿಗೆ ನೂರಾ ಐವತ್ತಕ್ಕೂ ಅಧಿಕ ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಒಂದು ನೂರು ಸಂಶೋಧನ ಲೇಖನಗಳನ್ನು ಒಳಗೊಂಡ 'ಸಂಶೋಧನ ಚತುರ್ಮುಖ'ವೆಂಬ ಬೃಹತ್ ಗ್ರಂಥವನ್ನು ಪ್ರಕಟಿಸಿದ್ದಾರೆ. ಜೈನ, ವೀರಶೈವ, ಸಂಶೋಧನ/ಗ್ರಂಥ ಸಂಪಾದನೆ/ಶಾಸನ/ಚರಿತ್ರೆ ಹಾಗೂ ಇತರ ಎಂಬ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಈ ಲೇಖನಗಳು ಹರಡಿಕೊಂಡಿವೆ. ಶ್ರವಣಬೆಳಗೊಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾಪ್ರಬಂಧದಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯಗಳನ್ನು ಇಲ್ಲಿಯ ಲೇಖನಗಳಲ್ಲಿ ಆಳವಾಗಿ ಮತ್ತು ವಿಕೃತವಾಗಿ ಪುನರ್ ರಚಿಸಿದ್ದಾರೆ. ಶ್ರವಣಬೆಳೊಳದ ಸಾಂಸ್ಕೃತಿಕ ಅಧ್ಯಯನ, ಶ್ರವಣಬೆಳೊಳ ಮತ್ತು ಗಂಗರು ಮೊದಲಾದವುಗಳನ್ನು ಹೆಸರಿಸಬಹುದು. ಶ್ರವಣಬೆಳೊಳದ ಕವಿಪರಂಪರೆ, ಶ್ರವಣಬೆಳೊಳದ ಶ್ರೀಮಠ ಮೊದಲಾದವುಗಳನ್ನೊಳಗೊಂಡ ಹದಿನಾರು ಪ್ರಬಂಧಗಳು ಅಲ್ಲದೆ ಜೈನಸಾಹಿತ್ಯಕ್ಕೆ ಸಂಬಂಧಿಸಿದ ವಿದ್ವತ್ತೂರ್ಣ ಸಂಶೋಧನ ಬರವಣಿಗೆಗಳು ಇಲ್ಲಿವೆ. ಆಕರ ಸಾಹಿತ್ಯದ ಭಾಷೆ ಮತ್ತು ಅಭಿವ್ಯಕ್ತಿಯ ಮಾಧ್ಯಮಗಳೆರಡರ ಅಡಚಣೆಯಲ್ಲಿ ತೊಳಲಾಡುತ್ತಿದ್ದ ಇತಿಹಾಸ ಅಧ್ಯಾಪಕರಿಗಿಂತಲೂ ಹೆಚ್ಚಿನ ಕೊಡು ಈ ಭಾಷಾ ಅಧ್ಯಾಪಕರಿಂದ ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿರುವುದನ್ನು ಈ ಹಿನ್ನೆಲೆಯಲ್ಲಿ ನಾವು ಎತ್ತಿ ಹೇಳಬೇಕಾಗಿದೆ. ಈ ದೃಷ್ಟಿಯಿಂದ ಡಾ. ಶಿರೂರ ಅವರ ಈ ಕೃತಿ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಒಂದು ಅಮೂಲ್ಯ ಆಕರಗ್ರಂಥವಾಗಿದೆ.

     ಡಾ. ಬಿ. ವಿ, ಶಿರೂರ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರವೆಂದರೆ ವೀರಶೈವ ವಲಯವೆಂದು ಹೇಳಬಹುದು. ಸಂಶೋಧನ ಚತುರ್ಮುಖದಲ್ಲಿ ವಚನ ಸಾಹಿತ್ಯ, ಕವಿ ಕೃತಿ, ವೀರಶೈವ ಧರ್ಮ, ವ್ಯಕ್ತಿಮಠ ಇವೇ ಮೊದಲಾದ ವಿಷಯಗಳನ್ನು ಕುರಿತು ನಲ್ವತ್ತೆರಡು ಸಂಶೋಧನ ಲೇಖನಗಳಿವೆ. ಈವರೆಗೆ ಬಸವಯುಗದ ಸಾಹಿತ್ಯಕ ಚರ್ಚೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು ಸರ್ವವಿದಿತವಾಗಿದೆ. ಆದರೆ ಬಸವೋತ್ತರ ಯುಗವನ್ನು ಉಪೇಕ್ಷಿಸಲಾಗಿದೆ. ಡಾ. ಶಿರೂರ ಅವರು ಈ ಉಪೇಕ್ಷಿತ ಕ್ಷೇತ್ರವನ್ನು ಕೇಂದ್ರವನ್ನಾಗಿಟ್ಟುಕೊಂಡು, ವೈವಿಧ್ಯಮಯವಾದ ಲೇಖನಗಳನ್ನು ರಚಿಸಿರುವುದು ಸ್ತುತ್ಯಕಾರವಾಗಿದೆ.

     ಬಸವೋತ್ತರ ಯುಗದ ಪ್ರಮುಖರಾದ ಗಣದಾಸಿ ವೀರಣ್ಣ ಕೆಸ್ತೂರದೇವ, ಬಸವಲಿಂಗದೇವರು, ಮಹಾಲಿಂಗದೇವ, ಹೇಮಗಲ್ಲ ಹಂಪ, ಹಲಗೆಯಾರ್ಯ, ಜಕ್ಕಣಾರ್ಯ, ಧೂಪದ ರಾಜೇಶ, ಗುರುಲಿಂಗವಿಭು, ಮುಪ್ಪಿನ ಷಡಕ್ಷರಿ ಮತ್ತು ದ್ಯಾಂಪುರ ಚೆನ್ನಕವಿ ಮೊದಲಾದ ಅನುಭಾವಿಗಳನ್ನು ಕುರಿತುಹೊಸ ವಿವರಗಳನ್ನು ಬೆಳಕಿಗೆ ತಂದಿದ್ದಾರೆ. ಶಿರೂರ ಅವರು ಬರೆದ 'ಬಿಜ್ಜಳನನ್ನು ಕೊಂದ ಮೊಲೆಬೊಮ್ಮಯ್ಯ ಸಂಶೋಧನ ಲೇಖನವೊಂದಕ್ಕೆ ವಿಪುಲ ಆಕರಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ವೀರಶೈವ ಮಠಗಳನ್ನು ಕುರಿತು ಕ್ಷೇತ್ರಕಾರ್ಯದ ಮೂಲಕ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ ಶಿರಹಟ್ಟಿ, ಗಂಗಾವತಿ, ಹಾಲಕೆರೆ, ಯಲಬುರ್ಗಾ ಮಠಗಳ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಡಾ. ಶಿರೂರ ಅವರು ಭಾವಾವೇಶಕ್ಕೆ ಒಳಗಾಗದೆ, ಅನ್ಯರಿಂದಾಗಿರಬಹುದಾದ ಅಲ್ಪ ತಪ್ಪುಗಳನ್ನು ಹಿಗ್ಗಿಸಿ ಬೆಳೆಸದೆ ತಮಗನಿಸಿದ್ದನ್ನು ಸಂಯಮಪೂರ್ಣ ಭಾಷೆಯಿಂದ ಅಭಿವ್ಯಕ್ತಿಗೊಳಿಸಿರುವುದು ಮೌಲ್ಯವನ್ನು ಎತ್ತಿ ತೋರಿದೆ. ಕನ್ನಡ ಸಂಶೋಧನ ಶಾಸ್ತ್ರದ ವಿವಿಧ ಆಯಾಮಗಳನ್ನು ಈ ಲೇಖನಗಳ ಮೂಲಕ ಪರಿಚಯಿಸಿದ್ದಾರೆ. ಕನ್ನಡಕ್ಕೆ ಹೊಸದೆನಿಸುವ ಸಂಶೋಧನ ಶಾಸ್ತ್ರ, ಗ್ರಂಥಸಂಪಾದನ ಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರಗಳನ್ನು ತಮ್ಮ ಅನುಭವದ ನಿದರ್ಶನಗಳ ಹಿನ್ನೆಲೆಯಲ್ಲಿ ರಚಿಸಿದ ರೀತಿ ವಿನೂತನವಾಗಿದೆ. ಅಲ್ಲದೆ ಈ ಕ್ಷೇತ್ರಗಳಲ್ಲಿ ದುಡಿದ ಕೆಲವು ಮಹನೀಯರ ಕೊಡುಗೆಗಳನ್ನು ದಾಖಲಿಸಿದ್ದಾರೆ. ಡಾ. ಆರ್. ನರಸಿಂಹಾಚಾರ್ಯ ಅವರನ್ನು ಕುರಿತ ಲೇಖನ ಸಂಶೋಧಕರೊಬ್ಬರ ಸಮಗ್ರ ವಿವರಗಳನ್ನು ಕೊಡುವ ಮಹತ್ವದ ಸಂಪ್ರಬಂಧವಾಗಿದೆ. ಈ ಲೇಖನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 'ಸಾಲುದೀಪಗಳು ನಾಲ್ಕನೆಯ ಭಾಗದಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಲೇಖನಗಳಿವೆ. ಇದರಲ್ಲಿ 'ಹೂಗಾರರು' ಎಂಬ ಸಂಶೋಧನ ಲೇಖನವೊಂದು ಡಾ. ಶಿರೂರ ಅವರು ಕೃತಿಯಲ್ಲಿ ಸೇರ್ಪಡೆಯಾಗಿದೆ. ಕಲೆಹಾಕಿದ ವಿಷಯ ಸಂಗ್ರಹ ಅಚ್ಚರಿಯನ್ನುಂಟುಮಾಡುತ್ತದೆ, ಈ ಲೇಖನ ಮಹಾಪ್ರಬಂಧದ ರಚನೆಗೆ ಆಕರವಾಗಬಲ್ಲ ವಸ್ತು ಸಾಮಗ್ರಿಯನ್ನು ಒಳಗೊಂಡಿದೆ. 

       ಡಾ. ಬಿ.ವಿ. ಶಿರೂರ ಅವರು ಗ್ರಂಥಸಂಪಾದನ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಅವರ ಸಂಪಾದನ ಕಾರ್ಯವನ್ನು ಈ ಕೆಳಗಿನಂತೆ ವರ್ಗೀಕರಿಸಿ, ಅವುಗಳಲ್ಲಿ ಪ್ರಕಟಗೊಂಡ ಸಂಶೋಧನಾತ್ಮಕ ವಿಷಯಗಳನ್ನು ಹೀಗೆ ವಿವರಿಸಬಹುದು.

೧. ಪ್ರಾಚೀನ ಕೃತಿಗಳು :

ಕನ್ನಡ ಸಂಶೋಧನೆಯ ಬಹಳ ಪ್ರಮುಖವಾದ ಒಂದು ಅಂಗವೆಂದರೆ ಗ್ರಂಥಸಂಪಾದನೆ. ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾದ ಪರಿಶ್ರಮ ಇರುವವರಿಗೆ ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶಿಸಲು ಸಾಧ್ಯ, ಹಳಗನ್ನಡ ಸಾಹಿತ್ಯ, ಸಂಸ್ಕೃತಿ, ಛಂದಸ್ಸು, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳಲ್ಲಿ ಪರಿಣತಿ ಹೊಂದಿದ ಡಾ. ಶಿರೂರ ಅವರು ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಉದಾಹರಣೆಗೆ ಅನಂತಕವಿಯ ಗೊಮ್ಮಟೇಶ್ವರ ಚರಿತ್ರೆ, ಮೊಲೈಬೊಮ್ಮಯ್ಯಗಳ ಕಾವ್ಯ, ರತ್ನಕರಂಡಕದ ಕಥೆಗಳು, ಭಿಕ್ಷಾಟನೆಚರಿತೆ, ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಪುರಾಣ ಮೊದಲಾದವು. ಡಾ. ಶಿರೂರ ಅವರು ಮೊದಲಬಾರಿಗೆ ಪ್ರಕಟಿಸಿರುವ ಸಂಪಾದನ ಕೃತಿಯೆಂದರೆ ಕವಿಯ 'ಗೊಮ್ಮಟೇಶ್ವರ ಚರಿತೆ'. ಇದು ಕನ್ನಡಸಾಹಿತ್ಯ ಪರಿಷತ್ತಿನ ಬೆಳ್ಳಿ ಬಿಟ್ಟ ಬಳ್ಳಿ ಮಾಲೆ'ಯಲ್ಲಿ ಪ್ರಕಟವಾಗಿದೆ. ಇದರ ಎರಡು ಅಸಮಗ್ರ ಹಸ್ತಪ್ರತಿಗಳನ್ನು ಇಟ್ಟುಕೊಂಡು 'ಗೊಮ್ಮಟೇಶ್ವರ ಚರಿತೆ'ಯ ಕಾವ್ಯವೊಂದನ್ನು ಪ್ರಕಟಪಡಿಸಿದ ಶ್ರೇಯಸ್ಸು ಶಿರೂರ ಅವರಿಗೆ ಸಲ್ಲುತ್ತದೆ. ಅವರು ಈ ಕಾವ್ಯದ ಪಾಠ ನಿರ್ಣಯಕ್ಕೆ ಮೂರು ಕ್ರಮಬದ್ಧವಾದ ಮಾರ್ಗಗಳನ್ನು ಅನುಸರಿಸಿದ್ದಾರೆ. ''ಸಂಪಾದಕತ್ವದ ಪಾಠಗಳನ್ನು ನೀಡುವುದು, ಜೀರ್ಣವಾದೆಡೆಗಳಲ್ಲಿ ಖಾಲಿಸ್ಥಳ ಬಿಡುವುದು ಮತ್ತು ಅರ್ಥವಾಗದ ಕಡೆ ಪ್ರಶ್ನೆ ಚಿಹ್ನೆಯನ್ನು ಹಾಕಿ ಮುನ್ನಡೆಯುವುದು.'' ಈ ಕೃತಿ ಪ್ರಕಟವಾದ ನಂತರ ಶ್ರೀ ಮಹೇಂದ್ರ ಎಂಬವರಿಗೆ ಒಂದು ಸಮಗ್ರ ಓಲೆಗರಿ ಪ್ರತಿ ಸಿಕ್ಕು ಅದರ ಸಹಾಯದಿಂದ ಈ ಕಾವ್ಯದ ಸಂಪಾದನೆಯನ್ನು ಒರೆಗೆ ಹಚ್ಚಿ ಡಾ. ಶಿರೂರ ಅವರು ಇಲ್ಲಿ ಮಾಡಿದ ಊಹೆಗಳೆಲ್ಲ ಸರಿ ಇವೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇದರಿಂದ ಶಿರೂರ ಅವರ ನಿಲುವುಗಳಿಗೆ ಖಚಿತತೆಯನ್ನು ಒದಗಿಸಿದಂತಾಗಿದೆ. ಕವಿಚರಿತೆಕಾರರು ಅನಂತಕವಿ ಶ್ರವಣಬೆಳೊಳದವನು ಎಂದು ಹೇಳಿರುವುದನ್ನು ತಳ್ಳಿಹಾಕಿ, ಈತ ಹಾಸನದವನು ಎಂದು ಶಿರೂರ ಅವರು ಹೇಳಿರುವುದು, ಮೊದಲ ಬಾರಿಗೆ ಆತನ ಸಮಗ್ರ ವಂಶಾವಳಿಯನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.ಪ್ರಸ್ತಾವನೆಯಲ್ಲಿ ಈ ಕಾವ್ಯದ ಗುಣದೋಷ, ಕಾವ್ಯದ ವಿಶೇಷತೆಗಳನ್ನು ಎತ್ತಿ ಹೇಳಿರುವುದು. ಶಬ್ದಾರ್ಥಕೋಶ, ಅನುಬಂಧದಲ್ಲಿ ವಿಷಯಾನುಕ್ರಮಣಿಕೆ ಕೊಟ್ಟಿರುವುದು, ಡಾ. ಶಿರೂರ ಅವರು ಒಬ್ಬ ಸಮರ್ಥ ಸಂಪಾದಕರೆಂಬುದು ಸ್ಪಷ್ಟವಾಗುತ್ತದೆ.

     ಡಾ. ಶಿರೂರ ಅವರು ಯಲಬುರ್ಗಿಯ ಹಿರೇಮಠದಲ್ಲಿ ತಮಗೆ ದೊರೆತ ಕಾಗದ ಪ್ರತಿಗಳ ಸಹಾಯದಿಂದ ಧೂಪದ ರಾಚೇಶನ ಮೊಟ್ಟೆ ಬೊಮ್ಮಯ್ಯಗಳ ಕಾವ್ಯವನ್ನು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಇತಿಹಾಸ, ಪುರಾಣ, ಐತಿಹ್ಯಗಳ ಆಗರವಾದ ಈ ಕಾವ್ಯದ ಆಕರಗಳನ್ನೆಲ್ಲ ಸಮಗ್ರವಾಗಿ ಶೋಧಿಸಿದ್ದಾರೆ. ಈ ಕಾವ್ಯದಲ್ಲಿ ಅಂತರ್ಗತವಾದ ಆಧಾರಗಳ ಮೂಲಕ ಬಿಜ್ಜಳನನ್ನು ಕೊಂದ ಇಬ್ಬರುವ್ಯಕ್ತಿಗಳಲ್ಲಿ ಮೊಲ್ಲೆ ಬೊಮ್ಮಯ್ಯನೂ ಒಬ್ಬ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕಾವ್ಯದ ಕರ್ತೃ ಧೂಪದರಾಚೇಶ, ಈತನ ಊರು ಯಲಬುರ್ಗಿ ತಾಲೂಕಿನ ಕಲ್ಲೂರು, ಈತನು ಸಿದ್ದೇಶನ ಶಿಷ್ಯ ಮತ್ತು ಈತನ ಕಾಲಸು. ೧೬೫೦ ಎಂದು ಸಾದರಪೂರ್ವಕವಾಗಿ ನಿರ್ಧರಿಸಿದ್ದಾರೆ. ಈ ಕಾವ್ಯಕ್ಕೆ ಬರೆದ ಇಪ್ಪತ್ತೂರು ಪುಟದ ಪ್ರಸ್ತಾವನೆ ವಿದ್ವತೂರ್ಣವಾಗಿದೆ. ಈ ಕಾವ್ಯವನ್ನು ಸಂಪಾದಿಸುವ ಮೂಲಕ ಬಿಜ್ಜಳನನ್ನು ಕೊಂದವರುಜಗದೇವ ಮತ್ತು ಮೊಲ್ಲೆಬೊಮ್ಮಯ್ಯ, ಈ ಮೊಲ್ಲೆಬೊಮ್ಮಯ್ಯನ ಊರು ಯಲಬುರ್ಗಿ ತಾಲೂಕಿನ ರಾವಣಕಿ, ಈತ ಕಲ್ಲೂರಿನ ಕಲ್ಲಿನಾಥನ ಭಕ್ತನಾಗಿದ್ದು, ಕಲ್ಯಾಣಕ್ಕೆ ಹೋಗಿ ಜಗದೇವನನ್ನು ಕೂಡಿಕೊಂಡು ಬಿಜ್ಜಳನನ್ನು ಕೊಂದದ್ದು - ಇವೇ ಮೊದಲಾದ ಸಂಗತಿಗಳನ್ನು ಮೊದಲ ಬಾರಿಗೆ ಬೆಳಕಿಗೆ ತರಲಾಗಿದೆ. ಸಂಪಾದನ ಕ್ಷೇತ್ರದ ಸಾಧನೆಯ ಕೀರ್ತಿಯನ್ನು ತಂದುಕೊಟ್ಟ ಕೃತಿ ಎಂದರೆ 'ರತ್ನಕರಂಡಕದ ಕಥೆಗಳು', ಡಾ. ಬಿ.ವಿ, ಶಿರೂರ ಅವರು ಸಂಪಾದಿಸಿರುವ ಈ ಕೃತಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (೧೯೯೩) ಮತ್ತು ಶ್ರೇಷ್ಠ ಸಂಪಾದನ ಕೃತಿಗೆ ಕೊಡಲ್ಪಡುವ ದೇವೇಂದ್ರ ಕೀರ್ತಿ ಭಟ್ಟಾರಕ ಪ್ರಶಸ್ತಿ ಪ್ರಾಪ್ತವಾಗಿವೆ.

ಡಾ. ಬಿ. ವಿ, ಶಿರೂರ ಅವರು ಅನಾಮಧೇಯ ಜೈನ ಕತೆಗಾರನೊಬ್ಬನಿಂದ ರಚನೆಯಾದ ಈ ಕೃತಿಯನ್ನು

ಸಂಪಾದಿಸಲು ಮೂರು ಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಅ, ಬ ಮತ್ತು ಕ ಪ್ರತಿಗಳಲ್ಲಿ 'ಅ' ಪ್ರತಿಯನ್ನು ಮೂಲವಾಗಿಟ್ಟುಕೊಂಡು ಇದನ್ನು ಸಂಪಾದಿಸಿದ್ದಾರೆ. ಆಯಾ ಪ್ರತಿಗಳಲ್ಲಿ ಇಲ್ಲದ ಭಾಗವನ್ನು ... ಚಿಹ್ನೆಯಿಂದಲೂ ತ್ರುಟಿತವಾಗಿರುವ ಭಾಗವನ್ನು XXX ಚಿಹ್ನೆಯಿಂದಲೂ ಹೆಚ್ಚಿನ ಭಾಗವನ್ನು ಚಿಹ್ನೆಯಿಂದಲೂ ಗುರುತಿಸಲಾಗಿದೆ' ಎಂದು ಹೇಳಿದ್ದಾರೆ. ವಿದ್ವತ್‌ವಲಯದ ಗಮನಕ್ಕೆ ಬಾರದ ಈ ಕೃತಿಯ ಶೋಧ ಚಾರಿತ್ರಿಕವಾಗಿ ತುಂಬ ಮಹತ್ವದ್ದೆನಿಸಿದೆ. ವಡ್ಡಾರಾಧನೆ ಕೃತಿಯ ನಂತರ ಜೈನ ಕಥಾಪರಂಪರೆಯಲ್ಲಿ ಈ ಕೃತಿಗೆ ವಿಶೇಷ ಸ್ಥಾನವಿದೆ. ಇದು ವಡ್ಡಾರಾಧನೆಯ ಕಾಲದ ಸುಮಾರಿನಲ್ಲಿಯೇ ರಚನೆಗೊಂಡಿರಬಹುದು ಎಂದು ಡಾ. ಶಿರೂರ ಅವರು ಊಹೆಯನ್ನು ಮಾಡಿರುವುದು ಬಹುಮಹತ್ವದ್ದೆನಿಸಿದೆ. ಈ ಕೃತಿಯಲ್ಲಿಯ ಕಥೆಗಳ ಸಾರವನ್ನು ಹೊಸಗನ್ನಡದಲ್ಲಿ ಕೊಟ್ಟಿದ್ದಾರೆ. ಕೊನೆಯಲ್ಲಿರುವ ಜೈನ ಪಾರಿಭಾಷಿಕ ಪದಕೋಶ ಈ ಕೃತಿಯ ಸಾಂಸ್ಕೃತಿಕ ಪರಿಸರ ಅಧ್ಯಯನಕ್ಕೆ ತುಂಬ ಉಪಯುಕ್ತವಾಗಿದೆ. ಡಾ. ಶಿರೂರ ಅವರು ಇಂಥ ಮಹತ್ವದ ಕೃತಿಯೊಂದನ್ನು ಶೋಧಿಸಿ ಪರಿಷ್ಕರಿಸಿ ಮೊದಲ ಬಾರಿಗೆ ಕನ್ನಡ ಸಾರಸ್ವತ ಪ್ರಪಂಚಕ್ಕೆ ಕೊಟ್ಟಿದ್ದಾರೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮುತ್ತಿನಹಾರ ಮಾಲಿಕೆಗಾಗಿ ಡಾ. ಶಿರೂರ ಅವರು ರಾಜಶೇಖರವಿಳಾಸ, ಶಬರಶಂಕರ ವಿಳಾಸ ಹಾಗೂ ಬಸವರಾಜ ವಿಳಾಸ ಈ ಮೂರು ಕೃತಿಗಳನ್ನು ಸಂಕ್ಷೇಪಿಸಿ ಷಡಕ್ಷರದೇವ ಎಂಬ ಹೆಸರಿನಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಿದ ಕಾವ್ಯಗಳ ಕಥಾವಸ್ತುವಿಗೆ ಬಾಧೆ ಬರದಂತೆ ಕಥೆಯಿಂದ ಕಥೆಗೆ ಸಹಸಂಬಂಧ ತಪ್ಪದಂತೆ ಪದ್ಯಗಳನ್ನು ಆಯ್ದುಕೊಂಡಿರುವ ಕ್ರಮ ಸಂಪಾದಕರ ಪಾಂಡಿತ್ಯಕ್ಕೆ ಷಡಕ್ಷರದೇವನ ಕೃತಿಗಳ ಮೇಲಿನ ಪ್ರಭುತ್ವಕ್ಕೆ ನಿದರ್ಶನವಾಗಿದೆ. ಈ ಕೃತಿಗೆ ಬರೆದ ಪ್ರಾಸ್ತಾವಿಕ ಮಾತುಗಳು, ಅನುಬಂಧದಲ್ಲಿ ಕೊಟ್ಟಪದ್ಯಗಳು, ಕಠಿಣಪದಗಳಿಗೆ ಅರ್ಥಕೋಶವನ್ನು ಒದಗಿಸಿರುವುದು ಓದುಗರಿಗೆ ಉಪಯುಕ್ತವಾಗಿವೆ. ಡಾ. ಬಿ.ವಿ. ಶಿರೂರ ಅವರು 'ಭಿಕ್ಷಾಟನ ಚರಿತೆ' ಯಂಥ ಚಮತ್ಕಾರಯುಕ್ತವಾದ ಹಳಗನ್ನಡ ಕೃತಿಯನ್ನು ಹೊಸಗನ್ನಡ ಗದ್ಯಾನುವಾದ ಮಾಲಿಕೆಯಲ್ಲಿ ಸರಳವಾದ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇದು ಪ್ರಕಟವಾಗಿದೆ. ಹದಿನೈದು ಪುಟಗಳ ಅಭ್ಯಾಸಪೂರ್ಣವಾದ ಪ್ರಸ್ತಾವನೆ ಇದೆ. 

ಕವಿ, ಕಾವ್ಯ, ಕಥಾಸಾರ, ಪಾತ್ರ ಚಿತ್ರಣ, ಕೃತಿ ವಿಮರ್ಶೆ ಮೊದಲಾದವುಗಳನ್ನು ಶಾಸ್ತ್ರದನ್ವಯವಾಗಿ ಮಾಡಿಕೊಟ್ಟಿದ್ದಾರೆ. ಸಂಪಾದನೆಯ ಸಣ್ಣಬರಹದ ಗುರುಬಸವರಾಜದೇವರು ಸೇರಿಸಿದ 'ಶರಣಚಾರಿತ್ರದ ವಚನಗಳು' ಎಂಬ ಕೃತಿಯನ್ನು ಡಾ. ಶಿರೂರ ಅವರು ಸಂಪಾದಿಸಿದ್ದಾರೆ. ಇದು ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನಮಠದ ವೀರಶೈವ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗಿದೆ. ಈ ಕೃತಿಯಲ್ಲಿ ಶರಣನಲ್ಲಿರಬೇಕಾದ ಗುಣವಿಶೇಷಗಳನ್ನು ವಿವರಿಸುವ ಉದ್ದೇಶ ಒಂದಾದರೆ, ಆ ಶರಣರ ವಚನಗಳ ಮೂಲಕ ಅವರವರ ವ್ಯಕ್ತಿತ್ವಗಳನ್ನು ಗುರುತಿಸುವುದು ಮತ್ತೊಂದು' ಎಂದು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಇಲ್ಲಿ ಒಟ್ಟು ೨೭೯ ವಚನಗಳಿವೆ. ಅವುಗಳಲ್ಲಿ ೧೭೦ ಹೊಸ ವಚನಗಳು ಈವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ಹಲವಾರು ಹೊಸ ಅಂಕಿತಗಳು ಇಲ್ಲಿ ದೊರೆತಿವೆ. ಇವುಗಳಿಂದ ಈ ಕೃತಿಯ ವಿಶೇಷತೆ ಹೆಚ್ಚಿದೆ ಎಂಬ ಸಂಪಾದಕರ ಮಾತುಗಳು ಗಮನಾರ್ಹವಾಗಿವೆ. ಅದೇ ರೀತಿ ನಿರಾಳ ಮಂತ್ರಗೋಪ್ಯ, ಶರಣಮುಖ ಮಂಡನೆ, ಸರ್ವಾಚಾರ ಸಾರಾಮೃತಸುಧೆ ಮೊದಲಾದ ವಚನ ಕೃತಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿರುವ ೧೫ ಸಮಗ್ರ ವಚನ ಸಂಪುಟಗಳಲ್ಲಿ ಡಾ. ಶಿರೂರ ಅವರು ಸಂಪಾದಿಸಿದ ಕೃತಿಗಳು ಎರಡು ಸಂಪುಟಗಳಿಗೆ ಆಕರವಾಗಿರುವುದನ್ನು ಇಲ್ಲಿ ಎತ್ತಿ ತೋರಬಹುದಾಗಿದೆ.

“ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಪುರಾಣ'ವನ್ನು ಡಾ. ಶಿರೂರ ಅವರು ಸಂಪಾದಿಸಿದ್ದಾರೆ. ಇದು ಪಂಡಿತ ವೈ.ನಾಗೇಶಶಾಸ್ತ್ರಿಗಳ ಕೃತಿ. ಇದನ್ನು ಆಮೂಲಾಗ್ರವಾಗಿ ಅವಲೋಕನ ಮಾಡಿ ಇದು ನಾಗೇಶಶಾಸ್ತ್ರಿಗಳೇ ಬರೆದ ಕೃತಿಯೆಂಬುದನ್ನು ನಿರ್ದಿಷ್ಟಪಡಿಸಿ ಮೊದಲ ಬಾರಿಗೆ ಪ್ರಕಟಿಸಿದ್ದು ಶಿರೂರ ಅವರ ಹೆಗ್ಗಳಿಕೆಯಾಗಿದೆ. ಇದರಲ್ಲಿ ಸಂಧಿಗಳಿಗೆ ಅನುಸಾರವಾಗಿ ಕಥಾಸಾರವನ್ನು ಕೊಟ್ಟಿದ್ದಾರೆ. ಅದರಲ್ಲಿ ನಿರೂಪಿತವಾಗಿರುವ ವೀರಶೈವ ಧರ್ಮಾಚರಣೆಗೆ ಸಂಬಂಧಿಸಿದ ಪಂಚಾಚಾರ, ಅಷ್ಟಾವರಣ, ಷಟಸ್ಥಲ ಇವುಗಳ ಪರಿಚಯ ಹಾಗೂ ಮಹತ್ವ ಅದರೊಂದಿಗೆ ಶ್ರೀ ಮಠದ ಸರ್ವಧರ್ಮ ಸಮನ್ವಯದೃಷ್ಟಿಕೋನವನ್ನು ಎತ್ತಿತೋರಿಸಿದ್ದಾರೆ.”

    ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎರಡನೆಯ ಪ್ರಶಸ್ತಿ ಪಡೆದ 'ಭಕ್ತಿರಸಸೋನೆ' ಡಾ. ಶಿರೂರ ಅವರು ಸಂಪಾದಿಸಿದ ಮತ್ತೊಂದು ಮಹತ್ವದ ಕೃತಿಯಾಗಿದೆ. ಕರ್ನಾಟಕದ ಶರಣ ಸಮುದಾಯದಲ್ಲಿ ಅಗ್ರಸ್ಥಾನ ಪಡೆದ ಬಸವಣ್ಣನವರ ಚರಿತ್ರೆಯನ್ನು ಕುರಿತು ಬರೆದ ಪಂಚಯ್ಯನ 'ಭಕ್ತಿರಸಸೋನೆ' ಒಂದು ಸಾಂಗತ್ಯ ಕೃತಿಯಾಗಿದೆ. ಬಸವಣ್ಣನವರ ಚರಿತ್ರೆಯನ್ನೊಳಗೊಂಡ ಕೆಲವು ಸಾಂಗತ್ಯ ಕೃತಿಗಳ ಮಧ್ಯದಲ್ಲಿ ಡಾ. ಶಿರೂರ ಅವರು ಪ್ರಥಮ ಬಾರಿಗೆ ಈ ಕೃತಿ ಬೆಳಕು ಕಾಣುವಂತೆ ಮಾಡಿ ಇದರ ವಿಶೇಷತೆಯನ್ನು ಗುರುತಿಸಿದ್ದಾರೆ. ಇದರ ಪ್ರಸ್ತಾವನೆಯಲ್ಲಿ ಕವಿಯ ಹೆಸರು, ಕಾಲ, ಕೃತಿ ಕುರಿತ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ''ಈ ಕೃತಿ ಅನೇಕ ಪೌರಾಣಿಕ ಚಾರಿತ್ರಿಕ ವ್ಯಕ್ತಿಗಳನ್ನೊಳಗೊಂಡಿದೆ. ಈ ಎಲ್ಲಾ ಕಥೆಗಳು ಕಥಾನಾಯಕನಾದ ಬಸವಣ್ಣನ ಚರಿತ್ರೆಗೆ ಪೂರಕವಾಗಿ ಬಂದಿರುವುದು ವಿಶೇಷವಾಗಿದೆ.'' ಸಂಪಾದಕರು ಇದರ ಕಥಾವಸ್ತುವನ್ನು ಸಂಧಿಗಳಿಗೆ ಅನುಸಾರವಾಗಿ ಕೊಟ್ಟಿದ್ದು ಅದು ಎರಡು ಪ್ರಮುಖ ಪ್ರಕಾರಗಳಲ್ಲಿ ಬಸವಣ್ಣನವರ ಚರಿತ್ರೆ ಹರಿದು ಬಂದಿರುವುದರ ವಿವರಗಳನ್ನೊಳಗೊಂಡಿದೆ. ಈ ಕಥೆಗಳ ಆಕರ, ರೂಪಾಂತರ ಮತ್ತು ಅವುಗಳ ಔಚಿತ್ಯ ಕುರಿತ ದೀರ್ಘವಾದ ಪ್ರಸ್ತಾವನೆ, ಡಾ. ಶಿರೂರ ಅವರ ವ್ಯಾಪಕ ಅಧ್ಯಯನಕ್ಕೆ ಸಂಶೋಧನ ದೃಷ್ಟಿಕೋನಕ್ಕೆ ಹಾಗೂ ಚರಿತ್ರೆಗೆ ಒದಗಿಸಿದ ನ್ಯಾಯಕ್ಕೆ ನಿದರ್ಶನವಾಗಿದೆ. 

೨. ಅಭಿನಂದನ ಗ್ರಂಥಗಳು :- ಇತ್ತೀಚೆಗೆ ಅಭಿನಂದನ ಗ್ರಂಥಗಳು ಕನ್ನಡ ಸಾಹಿತ್ಯದ ಶಾಶ್ವತ ಆಸ್ತಿಯಾಗಿ ಪರಿಣಮಿಸುತ್ತಿವೆ. ಡಾ.ಶಿರೂರ ಅವರು ಕನ್ನಡದ ಕೆಲವು ಮಹತ್ವದ ಅಭಿನಂದನ ಗ್ರಂಥಗಳ ಸಂಪಾದಕರಾಗಿ ಕಾರ ಮಾಡಿದ್ದಾರೆ. ಕನ್ನಡದ ಘನವಿದ್ವಾಂಸರಾದ ಪ್ರೊ. ಭೂಸನೂರಮಠ ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥ 'ಗೌರವ', ಇದು ಗದುಗಿನ ವೀರಶೈವ ಅಧ್ಯಯನ ಸಂಸ್ಥೆಯಿಂದ ೧೯೮೯ರಲ್ಲಿ ಪ್ರಕಟವಾಗಿದೆ. ಇದು ವ್ಯಕ್ತಿ ಸಾಹಿತ್ಯ ಮತ್ತು ವೀರಶೈವ ಲಘುಸಾಹಿತ್ಯ ಎಂಬ ಮೂರು ಸ್ಥಳಗಳಲ್ಲಿ ೬೦೭ ಪುಟಗಳ ವ್ಯಾಪ್ತಿಯನ್ನು ಹೊಂದಿದೆ ಬೃಹತ್ ಗ್ರಂಥವಾಗಿದೆ. ಪ್ರೊ. ಭೂಸನೂರಮಠ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತ ಮೌಲಿಕವಾದ ಲೇಖನಗಳನ್ನು ಮೊದಲೆರಡು ಭಾಗಗಳಲ್ಲಿ ಸಂಕಲಿಸಿದ್ದಾರೆ. ಮೂರನೆಯ ಭಾಗದಲ್ಲಿ ವೀರಶೈವ ಲಘುಸಾಹಿತ್ಯ ಪ್ರಕಾರಗಳನ್ನು ಕುರಿತ ಸಂಶೋಧನಾತ್ಮಕ ಲೇಖನಗಳಿವೆ. ಈ ಲೇಖನಗಳಿಂದ ಪ್ರೇರಣೆ ಹೊಂದಿ ಹೊಸ ಹೊಸ ಸಂಶೋಧಕರು ತಮ್ಮ ಪಿಎಚ್.ಡಿ. ಮಹಾಪ್ರಬಂಧಗಳಿಗೆ ವಿಷಯಗಳನ್ನು ಆಯ್ದುಕೊಳ್ಳುತ್ತಿರುವುದನ್ನು ನೋಡಿದರೆ ಈ ಕೃತಿಯ ಮಹತ್ವದ ಅರಿವಾಗುತ್ತದೆ. ಡಾ. ಶಿರೂರ ಅವರಂತಹ ವಿಶಿಷ್ಟ, ಸಂಶೋಧಕರು ಮಾತ್ರ ಇಂಥ ಅಲಕ್ಷಿತ ಸಾಹಿತ್ಯದೆಡೆಗೆ ಸಂಶೋಧನಾಸಕ್ತರ ಗಮನ ಸೆಳೆಯಲುಸಾಧ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಗೌರವ ಗ್ರಂಥಕ್ಕೆ ಡಾ. ಶಿರೂರ ಅವರೇ ಬರೆದ 'ಕರಣಹಸುಗೆ ಸಾಹಿತ್ಯ'ದ ಸಮಗ್ರ ವಿಶ್ಲೇಷಣೆ ಅವರ ವಿದ್ವತ್ತಿಗೆ ನಿದರ್ಶನವಾಗಿದೆ. ಈ ಲೇಖನ ಸುತ್ತೂರು

'ವೀರಶೈವ ಸಾಹಿತ್ಯ ಸಮೀಕ್ಷೆ' ಗ್ರಂಥದಲ್ಲಿ ಎಡೆಪಡೆದಿರುವುದು ಇದರ ಮಹತ್ವವನ್ನು ಹೇಳುತ್ತಿದೆ. “ಸಿದ್ದರಾಮ ಸಂಪದ' ಎಂಬ ಕೃತಿ ಯಲಬುರ್ಗಿಯ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳ ಗೌರವ ಗ್ರಂಥವು 'ವೀರಶೈವ ಅರಸರಪಟ್ಟಾಧಿಕಾರದ ಸಂದರ್ಭದಲ್ಲಿ ಡಾ. ಶಿರೂರ ಅವರ ಸಮರ್ಥ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಈ ವೀರಶೈವ ಗುರುಗಳು ಎಂಬ ಮಹತ್ವದ ವಿಷಯಗಳನ್ನೊಳಗೊಂಡಿದೆ. ಕರ್ನಾಟಕವನ್ನಾಳಿದ ಸುಮಾರು ನಲ್ವತ್ತಕ್ಕೂ ಹೆಚ್ಚು ವೀರಶೈವ ಅರಸುಮನೆತನಗಳು ಮತ್ತು ಅವುಗಳ ರಾಜಗುರುಗಳ ಚರಿತ್ರೆಯಲ್ಲಿ ೨೨ ಜನ ರಾಜಗುರುಗಳ ಇತಿಹಾಸವನ್ನು ಈ ಗ್ರಂಥದ ಮೂಲಕ ಡಾ. ಶಿರೂರ ಅವರು ಮೊದಲ ಬಾರಿಗೆ ಬೆಳಕಿಗೆ ತಂದಿದ್ದಾರೆ. ಇಲ್ಲಿ ಎಲ್ಲ ಗುರುಗಳ ಇತಿಹಾಸವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಕುರಿತು ಇನ್ನೂ ಒಂದು ಸಂಪುಟವಾಗುತ್ತದೆ. ಇದಲ್ಲದೆ ವೀರಶೈವ ಅರಸರಿಗೆ ವೀರಶೈವೇತರ ರಾಜಗುರುಗಳೂ ಇದ್ದ ಉಲ್ಲೇಖಗಳು ಇವೆ. ಇದನ್ನು ಕುರಿತು ಮತ್ತೊಂದು ಸಂಪುಟವಾಗಬಹುದು'' ಎಂಬ ಸಂಪಾದಕರ ಪ್ರಸ್ತಾವನೆಯ ಮಾತುಗಳು ಉಳಿದ ಎಲ್ಲರಾಜ ಗುರುಗಳ ಚರಿತ್ರೆಯನ್ನು ಶೋಧಿಸುವ ಸಂಶೋಧಕರಿಗೆ ದಿಕೂಚಿಯಾಗಿವೆ. ಕನ್ನಡ ಸಂಶೋಧನಕ್ಷೇತ್ರಕ್ಕೆ ಈ ಮೂಲಕ ಕೆಲ ಹೊಸ ಸಂಗತಿಗಳನ್ನು ಡಾ. ಶಿರೂರ ಅವರು ಸೇರಿಸಿದಂತಾಗಿದೆ.

 ''ಸಿದ್ದ'' ಕೃತಿಯು ಡಾ. ಶಿರೂರ ಅವರು ಸಂಪಾದಿಸಿದ ಯಲಬುರ್ಗಿ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಮತ್ತೊಂದು ವಿಶಿಷ್ಟವಾದ ಕೃತಿಯಾಗಿದೆ. 'ಸಿದ್ದ'ಕೃತಿಯು ಯಲಬುರ್ಗಿ ತಾಲೂಕಿನ ದರ್ಶನವನ್ನು ನೀಡುವುದರಿಂದ ಸರಕಾರಿ ಗೆಜೆಟಿಯರ್‌ದಂತೆ ಗಮನಾರ್ಹ ಕಾವ್ಯವನ್ನು ಮಾಡಿದೆ. ಈ ದಿಸೆಯಲ್ಲಿ ಪ್ರಸ್ತುತ ಗ್ರಂಥ ಮುಂಬರುವ ಗೌರವ ಗ್ರಂಥಗಳಿಗೆ ಒಂದು ಉತ್ತಮ ಮಾದರಿ. ಶ್ರೀ ಮಠದ ದರ್ಶನ ಮತ್ತು ಯಲಬುರ್ಗಿ ತಾಲೂಕು ದರ್ಶನ ಎಂಬ ಎರಡು ಭಾಗಗಳಿವೆ. ಮೊದಲ ಭಾಗಶ್ರೀ ಮಠದ ಮತ್ತು ಪ್ರಮುಖ ಮಹಾಸ್ವಾಮಿಗಳ ಚರಿತ್ರೆಯನ್ನು ಒಳಗೊಂಡಿದೆ. ಎರಡನೆಯ ಭಾಗದ ಪಿಎಚ್.ಡಿ. ಒಂಬತ್ತು ಲೇಖನಗಳು ಈ ತಾಲೂಕಿನ ಇತಿಹಾಸ, ವೀರಶೈವ ಮಠಗಳು, ದೇವಾಲಯಗಳು, ಸಾಹಿಗಳು, ಕಲಾವಿದರು, ಶಾಸಕರು, ನ್ಯಾಯಾಧೀಶರು, ಶಿಕ್ಷಣ ಸಂಸ್ಥೆಗಳು ಮತ್ತು ಈ ತಾಲೂಕಿನ ಪ್ರಗತಿಯ ಪಕ್ಷಿನೋಟ ವಿವರಗಳನ್ನು ಒಳಗೊಂಡಿವೆ. ಇದರಲ್ಲಿಯ ಕೆಲವು ಲೇಖನಗಳು ಮಹಾಪ್ರಬಂಧಕ್ಕೆ ಆಕರಗಳಾಗಿವೆ. ಉದಾಹರಣೆಗೆ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ಯಲಬುರ್ಗಿ ತಾಲೂಕಿನ ಕಲಾವಿದರ ಲೇಖನ 'ಯಲಬುರ್ಗಿ ತಾಲೂಕಿನ ವೃತ್ತಿ ರಂಗಭೂಮಿ' ಎಂಬ ಪಿಎಚ್.ಡಿ. ಮಹಾಪ್ರಬಂಧ ರಚನೆಗೆ ಕಾರಣವಾಗಿರುವುದು. ಡಾ. ಶಿರೂರ ಅವರ ಮಾರ್ಗದರ್ಶನದಲ್ಲಿಯೇ ಡಾ. ಕುಂಬಾರ ಅವರು ಇದನ್ನು ಸಿದ್ಧಪಡಿಸಿರುವುದನ್ನು ಸ್ಮರಿಸಬಹುದು. 'ಶಿವಸಂಗಮ' ಯಲಬುರ್ಗಿ ತಾಲೂಕಿನ ಬೆದವಟ್ಟಿಯ ಶ್ರೀ. ಷ.ಬ್ರ.ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಂಸ್ಕರಣ ಗ್ರಂಥವಾಗಿದೆ. ಈ ಗ್ರಂಥದ ಮೊದಲ ಭಾಗದಲ್ಲಿ ವಿವಿಧ ವಿದ್ವಾಂಸರು ಶ್ರೀಗಳ ವ್ಯಕ್ತಿತ್ವದರ್ಶನ ಮಾಡಿಸುವ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಅಲಕ್ಷಿತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಕನ್ನಡ ಟೀಕಾಸಾಹಿತ್ಯ' ಕುರಿತು ಇಪ್ಪತ್ತೆರಡು ಸಂಶೋಧನಾತ್ಮಕ ಲೇಖನಗಳಿವೆ. ಕನ್ನಡ ಸಾಹಿತ್ಯದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಜನ ಬೇರೆ ಬೇರೆ ಕೃತಿಗಳಿಗೆ ಬರೆದ ಟೀಕಾಕಾರರ ಪ್ರಸ್ತಾಪವಿದೆ. ಅದರಲ್ಲಿ ಈಗ ಕೇವಲ ಇಪ್ಪತ್ತೆರಡು ಜನ ಟೀಕಾಕಾರರನ್ನು ಕುರಿತು ಲೇಖನಗಳನ್ನು ಬರೆಯಿಸಲು ಸಾಧ್ಯವಾಗಿದೆ. ಮುಂದೆ ಅವಕಾಶ ಸಿಕ್ಕರೆ ಇನ್ನುಳಿದ ಟೀಕಾಕಾರರ ಬಗೆಗೂ ಬರೆಯಿಸುವ ಸಂಕಲ್ಪ' ಮಾಡಿರುವ ಸಂಪಾದಕರ ಶ್ರಮ ಮತ್ತು ಅಲಕ್ಷಿತ ಟೀಕಾಸಾಹಿತ್ಯವನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಇರುವ ಅವರ ಸಂಶೋಧನ ದೂರದೃಷ್ಟಿಯನ್ನು ಕಾಣಬಹುದಾಗಿದೆ.

ಪಠ್ಯಗಳು :

ಡಾ. ಶಿರೂರ ಅವರು ಸಂಪಾದಿಸಿದ 'ಬಸವಣ್ಣನವರ ವಚನವಾಹಿನಿ' ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಬಿ.ಎ. ಭಾಗ-೩ರ ಉಪ ಪ್ರಧಾನ ಪಠ್ಯವಾಗಿದ್ದಿತ್ತು. ಇದರಲ್ಲಿರುವ ೨೭೮ ಬಸವಣ್ಣನವರ ವಚನಗಳನ್ನು ಭಕ್ತಿ, ಆಚಾರ, ನಡೆ ನುಡಿ, ಡಾಂಭಿಕತೆ, ವಿಡಂಬನೆ, ಅಸ್ಪೃಶ್ಯತೆ, ಕಾಯಕ, ಅಂತರಂಗ ನಿರೀಕ್ಷೆ, ಅಹಂಕಾರ ನಿರಸನ ಹಾಗೂ ಶರಣರ ಸಂಗ ಎಂಬ ಉಪಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ ವಚನಗಳನ್ನು ಜೋಡಿಸಿರುವುದು ವಿದ್ಯಾರ್ಥಿಗಳ ಅಭ್ಯಾಸದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ಶೀರ್ಷಿಕೆಗಳ ಹಿನ್ನೆಲೆಯಲ್ಲಿ ಬರೆದ ಪ್ರಸ್ತಾವನೆ ಬಸವಣ್ಣನವರ ವಚನಗಳ ಅಂತರಂಗವನ್ನು ಅರಿಯಲು ನೆರವಾಗುತ್ತದೆ. ಬಸವಣ್ಣನವರ ಇತಿವೃತ್ತವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ, ಅವರಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೈಕೊಂಡ ಶಿರೂರ ಅವರ ಕಾರ ಸ್ತುತ್ಯವಾಗಿದೆ. ಕೊನೆಯಲ್ಲಿ ಒಪ್ಪೋಲೆ, ಕಠಿಣ ಪದಕೋಶ, ಸಂದರ್ಭ ವಿವರಣೆ ವಚನಗಳ ಅಕಾರಾದಿ ಹೀಗೆ ಒಂದು ಒಳ್ಳೆಯ ಪಠ್ಯ ಒಳಗೊಳ್ಳಬೇಕಾದ ಎಲ್ಲ ವಿಷಯಗಳನ್ನು 'ಬಸವಣ್ಣನವರ ವಚನವಾಹಿನಿ' ಒಳಗೊಂಡಿರುವುದು ಅದರ ವೈಶಿಷ್ಟ್ಯವೆನಿಸಿದೆ. 

    ಡಾ. ಶಿರೂರ ಅವರು ಸಂಪಾದಿಸಿದ ಇನ್ನೊಂದು ಪಠ್ಯ 'ನಳಚರಿತ್ರೆ ಸಂಗ್ರಹ' ಇದು ಬಿ.ಎ. ಭಾಗ-೧ ಕನ್ನಡ ಪ್ರಧಾನ ವಿಷಯದ ಪಠ್ಯವಾಗಿದ್ದಿತು. ನಳದಮಯಂತಿಯರ ಸ್ವಾರಸ್ಯವಾದ ಕಥಾಭಾಗವನ್ನು ಎಲ್ಲೂ ಕಥಾ ಸಂದರ್ಭ ತಪ್ಪದಂತೆ ಪದ್ಯಗಳ ಜೋಡಣೆ ಮಾಡಿದ್ದು, ಸಂಪಾದಕರ ಜಾಣೆಗೆ ಸಾಕ್ಷಿಯಾಗಿದೆ. ಒಂದು ಪಠ್ಯ ಬಹಳ ಸಣ್ಣದೂ ಇರಬಾರದು, ದೊಡ್ಡದೂ ಇರಬಾರದು. ವರ್ಷದ ಅವಧಿಯೊಳಗೆ ಓದಿ ಮುಗಿಸಬಹುದಾದ ಗಾತ್ರದ್ದು ಇರಬೇಕೆಂಬ ದೃಷ್ಟಿಯಿಂದ ರಚಿತವಾದ ಈ ಪಠ್ಯವನ್ನು ನಾನು ಬಿ.ಎ. ತರಗತಿಯಲ್ಲಿ ಓದಿರುವುದರಿಂದ ಮತ್ತು ಈ ಪಠ್ಯ ಕುರಿತು ಈಗ ಬರೆಯುವ ಸಂದರ್ಭ ಬಂದಿರುವುದರಿಂದ ಪುನಃ ಅದನ್ನು ಓದಿದಾಗ ಅದೊಂದು ಮಾದರಿ ಪಠ್ಯವಾಗಿ ನನಗೆ ತೋರುತ್ತಿದೆ. ಪ್ರಸ್ತಾವನೆಯಲ್ಲಿ ಬರೆದ ಸೊಗಸಾದ ವಿವರಣೆ, ಪಾತ್ರಗಳ ವೈಶಿಷ್ಟ್ಯ, ಇಂಥ ಕಾವ್ಯಗಳ ಓದಿನೆಡೆಗೆ ಆಸಕ್ತಿಯನ್ನುಂಟು ಮಾಡುವ ರೀತಿಯಲ್ಲಿರುವುದು ಗಮನಾರ್ಹವಾಗಿದೆ.

'ಪಂಚವಟಿ' ಬಿಎಸ್.ಸಿ. ಭಾಗ-೧ ಕ್ಕೆ ಶಿರೂರ ಅವರು ಪಠ್ಯವನ್ನಾಗಿ ರೂಪಿಸಿಕೊಟ್ಟ ಕೃತಿ. ಪಂಡಿತರ ಅಲಕ್ಷಕ್ಕೆ ಗುರಿಯಾಗಿರುವ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣದ ಪದ್ಯಗಳನ್ನು ಸಂಗ್ರಹಿಸಿ ಇಲ್ಲಿಕೊಡಲಾಗಿದೆ. 'ಪಂಚವಟಿ' ಸೀತಾಪಹರಣ ನಡೆದ ಪ್ರದೇಶವಾಗಿದ್ದು, ಅಲ್ಲಿಂದ ಇಡೀ ರಾಮಾಯಣದ

ಕತೆಗೆ ಮಹತ್ವದ ತಿರುವು ದೊರೆತಿರುವುದರಿಂದ ಈ ಹೆಸರಿನ ಔಚಿತ್ಯ ಎದ್ದು ಕಾಣುವಂತಾಗಿದೆ. ಇಲ್ಲೂ ಕೂಡಾ ಸಂದರ್ಭ ತಪ್ಪದ ಹಾಗೆ ಪದ್ಯಗಳನ್ನು ಜೋಡಿಸಿರುವ ರೀತಿ ಮೆಚ್ಚುವಂತಿದೆ. ಇದಕ್ಕೂ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನುಂಟುಮಾಡುವ ಹಾಗೆ ಬರೆದಿರುವ ಪ್ರಸ್ತಾವನೆ ಸೊಗಸಾಗಿದೆ.

ಡಾ. ಶಿರೂರ ಅವರು ಕನ್ನಡದ ಒಬ್ಬ ಸಮರ್ಥ ಸಂಶೋಧನ ಮಾರ್ಗದರ್ಶಕ (Research Guide) ರೆಂದು ಹೆಸರು ಪಡೆದವರು. ಅವರ ಬಳಿ ಪಿಎಚ್.ಡಿ. ಸಂಶೋಧನ ಅಧ್ಯಯನ ಮಾಡುವುದೇ ಒಂದು ಪ್ರತಿಷ್ಠೆಯ ವಿಷಯ. ಅವರು ಸ್ವತಃ ತಾವೂ ದುಡಿದು ವಿದ್ಯಾರ್ಥಿಗಳನ್ನೂ ದುಡಿಸಿ ಮೌಲಿಕವಾದ ಸಂಶೋಧನ ಮಹಾಪ್ರಬಂಧಗಳು ಹೊರಬರಲು ಕಾರಣಕರ್ತರಾಗಿದ್ದಾರೆ. ಆ ಮೂಲಕವೂ ಸಂಶೋಧನ ಕ್ಷೇತ್ರಕ್ಕೆ ಇವರ ಸೇವೆ ಗಮನಾರ್ಹವಾಗಿದೆ. ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಕಾರ್ಯಕೈಕೊಂಡ ಹದಿನೆಂಟು ಜನ ವಿದ್ಯಾರ್ಥಿಗಳು ಡಾಕ್ಟರೇಟ ಪದವಿ ಪಡೆದುಕೊಂಡಿದ್ದಾರೆ. ಡಾ. ಬಿ. ಎಂ. ಹೊಸಮನಿ ಅವರ “ಕರ್ನಾಟಕದ ವೇಷಗಾರರು~ ಒಂದು ಸಾಂಸ್ಕೃತಿಕ ಅಧ್ಯಯನ', ಡಾ. ಚೆನ್ನಬಸಯ್ಯ ಹಿರೇಮಠರ' ಕುರುಗೋಡು ಸಿಂದರು - ಒಂದು ಅಧ್ಯಯನ', ಡಾ. ರಾಜಶೇಖರ ಇಚ್ಚಂಗಿ ಅವರ 'ಪಾರ್ಶ್ವನಾಥಪುರಾಣ ~ ಒಂದು ತೌಲನಿಕ ಅಧ್ಯಯನ' ಡಾ. ಧನವಂತ ಹಾಜವಗೋಳ ಅವರ “ಮುಳಗುಂದ ನಾಡು ಒಂದು ಅಧ್ಯಯನ', ಡಾ. ಸರಸ್ವತಿದೇವಿ ಭಗವತಿ ಅವರ 'ಹಂಪೆ ಶಾಸನಗಳು- ಒಂದು ಅಧ್ಯಯನ' ಇವೇ ಮೊದಲಾದ ಮಹತ್ವದ ಪಿಎಚ್.ಡಿ. ಮಹಾಪ್ರಬಂಧಗಳನ್ನು ಹೆಸರಿಸಬಹುದಾಗಿದೆ. ಹನ್ನೊಂದು ಜನವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಪ್ರಬಂಧಗಳನ್ನು ರಚಿಸಿ ಎಂ. ಫಿಲ್. ಪದವಿಗಳನ್ನು ಪಡೆದಿದ್ದಾರೆ. ಹೀಗೆ ಕನ್ನಡ ಸಂಶೋಧನ ಕ್ಷೇತ್ರದ ಬೆಳವಣಿಗೆಗೆ ಅವರು ಸಲ್ಲಿಸಿದ ಸೇವೆ ಅಮೂಲ್ಯವಾದುದು. ಡಾ. ಬಿ.ವಿ. ಶಿರೂರ ಅವರದು ಮೃದು ಹೃದಯದ ಸರಳ ಸಜ್ಜನಿಕೆಯ ನಿರಾಡಂಬರ ವ್ಯಕ್ತಿತ್ವ. ಸ್ನೇಹ ಜೀವಿಗಳಾದ ಅವರು ಅಜಾತಶತ್ರುಗಳು, ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಆಕರ್ಷಿಸುವ ಆಜಾನುಬಾಹು ಅಪರೂಪದ ವ್ಯಕ್ತಿ. ಗಂಭೀರ ಓದು, ಸಂಶೋಧನ ನಿಷ್ಠೆ, ಪ್ರಾಮಾಣಿಕತೆಯ ಸ್ಪರ್ಶ, ಕರ್ತವ್ಯಪ್ರಜ್ಞೆ, ಸೇವಾ ಮನೋಭಾವ ಇವೇ ಮೊದಲಾದ ವಿಶೇಷ ಗುಣಗಳಿಂದಾಗಿ ಅವರೊಬ್ಬ ವಿಶಿಷ್ಟ ಮಾದರಿ ಸಂಶೋಧಕರೆನಿಸಿದ್ದಾರೆ. ಅವರು ಕೈಕೊಂಡ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಹಲವು ಪ್ರಶಸ್ತಿ ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಶ್ರವಣಬೆಳಗೊಳದ ಬಾಹುಬಲಿ ಪ್ರತಿಷ್ಠಾನದ ಬಹುಮಾನ, ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಪ್ರತಿಷ್ಠಾನದ ಸಂಶೋಧನ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಭಾರತ ರತ್ನವಿಶ್ವೇಶ್ವರಯ್ಯ ಪ್ರಶಸ್ತಿ, ಜಚನಿ ಪ್ರಶಸ್ತಿ, ಮುಂತಾದವು ಅವರು ಪಡೆದ ಪ್ರಮುಖ ಪ್ರಶಸ್ತಿಗಳಾಗಿವೆ. ಡಾ. ಬಿ.ವಿ. ಶಿರೂರ ಅವರ ವಿದ್ಯಾರ್ಥಿಗಳು, ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು

ಹಾಗೂ ಅಭಿಮಾನಿಗಳು “ಸಿರಿಸಂಪದ' ವೆಂಬ ಎಂಟನೂರಾ ಐವತ್ತು ಪುಟಗಳ ಅಭಿನಂದನ ಗ್ರಂಥ ಸಮರ್ಪಿಸಿ ಗೌರವಿಸಿದ್ದಾರೆ. ಅವರ ವ್ಯಕ್ತಿತ್ವ ಸಾಹಿತ್ಯ ಹಾಗೂ ಗ್ರಂಥಸಂಪಾದನ ಕ್ಷೇತ್ರದಲ್ಲಿ ದುಡಿದ ಅರವತ್ನಾಲ್ಕು ಜನ ಸಂಪಾದಕರ ಸಾಧನೆ, ಸಂಪಾದನ ಕೃತಿಗಳ ಮೌಲಿಕತೆಯನ್ನೊಳಗೊಂಡ ಬೃಹತ್ಗ್ರಂಥ ಇದಾಗಿದೆ. ಕನ್ನಡದ ಕೆಲವೇ ಕೆಲವು ಮಹತ್ವದ ಆಕರ ಗ್ರಂಥಗಳಲ್ಲಿ ಇದೂ ಒಂದಾಗಿದೆ. ಕರ್ನಾಟಕದ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕಾಲದ ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸದ ಮೇಲೆ ಹೊಸ ಬೆಳಕು ಬೀರುತ್ತ ಬಂದ ಇತಿಹಾಸ ಅಕಾಡೆಮಿಯ ೯ನೆಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಿ ಸಪ್ಟೆಂಬರ ೧೧, ೧೨ ಹಾಗೂ ೧೩, ೨೦೦೫ ರಂದು ಗುಲ್ಬರ್ಗಾ ಜಿಲ್ಲೆ ಸೇಡಂನಲ್ಲಿ ನಡೆದ ಇತಿಹಾಸ ಸಮ್ಮೇಳನದಲ್ಲಿ ಇವರನ್ನು ಗೌರವಿಸಿರುವುದು ಅಭಿಮಾನದ ಸಂಗತಿಯಾಗಿದೆ.

      ಡಾ. ಬಿ. ವಿ. ಶಿರೂರ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿಯಿಂದ ಸಂಶೋಧಕರಾದ ಇವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ದ ಮೇಜರ್ ಪ್ರಾಜೆಕ್ಟ್ ಅಡಿಯಲ್ಲಿ ಪ್ರಾಚೀನ ಕರ್ನಾಟಕದ ಶೈವ ಶಾಖೆಗಳು' ಎಂಬ ಯೋಜನೆಯನ್ನು ಪೂರೈಸಿದ್ದಾರೆ.


                                                                ಅಂಬಳೆ ವೆಂಕಟಸುಬ್ಬಯ್ಯ ಡಾ.ಸಿ.ನಾಗಭೂಷಣ   ಅಂಬಳೆ ವೆಂಕಟಸುಬ್ಬಯ್ಯನವರು ಆರ್. ನರಸಿ...