ಶುಕ್ರವಾರ, ಅಕ್ಟೋಬರ್ 10, 2025

 ಶಿವಶರಣ ವಚನಕಾರ ಆದಯ್ಯ

             ಡಾ.ಸಿ.ನಾಗಭೂಷಣ

   ಕನ್ನಡ ನಾಡಿನ ಮಧ್ಯಕಾಲೀನ ಯುಗದಲ್ಲಿ ಪುಲಿಗೆರೆಯು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಮಹತ್ವವನ್ನು ಪಡೆದುದಾಗಿದೆ. ಹನ್ನೊಂದನೆಯ ಶತಮಾನದಲ್ಲಿ ನಡೆಯಿತೆನ್ನಲಾದ ಪುಲಿಗೆರೆಯ ಸೋಮನಾಥನ ಪ್ರತಿಷ್ಠಾಪನೆಯು ವೀರಶೈವ ಧಾರ್ಮಿಕ ಚರಿತ್ರೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಘಟನೆಯ ಕೇಂದ್ರ ವ್ಯಕ್ತಿ ಶರಣ ಆದಿಶೆಟ್ಟಿ. ಶರಣ ಅದಿಶೆಟ್ಟಿಯು ವೀರಮಾಹೇಶ್ವರ ನಿಷ್ಠೆಯ ಮೂಲಕ  ಏಕದೇವನಲ್ಲಿ ಉಗ್ರ ನಂಬಿಕೆ ಇರಿಸಿ ಈಗಾಗಲೇ  ಅಸ್ತಿತ್ವದಲ್ಲಿದ್ದ ಅನ್ಯಮತಗಳ ವಿರುದ್ಧ ಹೋರಾಡಿ ಶರಣಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಿದ ಶರಣರುಗಳಲ್ಲಿ ಒಂದಾಗಿದ್ದಾನೆ. ಶರಣ ಆದಿಶೆಟ್ಟಿಯನ್ನು ಕುರಿತು( ಶಾಸನಗಳಲ್ಲಿ ಪೂರಕ ಮಾಹಿತಿಗಳು) ವೀರಶೈವ ಸಾಹಿತ್ಯದಲ್ಲಿ ಸಮಗ್ರವಾಗಿ ಮತ್ತು ಸಂಕ್ಷಿಪ್ತವಾಗಿವಿವರಗಳನ್ನೊಳಗೊಂಡ ಕಾವ್ಯ-ಪುರಾಣಗಳು ಲಭ್ಯವಿವೆ. ಉಪಲಬ್ಧವಿರುವ ಆಧಾರಗಳ ಪ್ರಕಾರ ಹರಿಹರನ ಆದಯ್ಯನ ರಗಳೆಯೇ ಆದಯ್ಯನ ಜೀವನ ವಿವರವುಳ್ಳ ಪ್ರಥಮ ಕಾವ್ಯವಾಗಿದೆ. ಆದಯ್ಯನ ಚರಿತೆ ಮೊದಲು ಕಾವ್ಯವಾಗಿ ರೂಪು ತಾಳಿದ ಹರಿಹರನ ಆದಯ್ಯನ ರಗಳೆ ಮತ್ತು ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣಮುವಿನ ಪ್ರಭಾವ, ನಂತರದ ಕಾವ್ಯಪುರಾಣಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಗಿರುವುದುಂಟು.

      ಪುಲಿಗೆರೆಯಲ್ಲಿ ಸೋಮೇಶನನ್ನು ಪ್ರತಿಷ್ಠಾಪಿಸಿದ ವ್ಯಕ್ತಿ ಯಾರು? ಆತನು ವೀರಶೈವನೇ? ಅಥವಾ ಅನ್ಯಮತೀಯನೇ? ಸೋಮೇಶ್ವರನನ್ನು ಪ್ರತಿಷ್ಠಾಪಿಸಲು ಪ್ರೇರಿತ ಪ್ರಸಂಗ ಯಾವುದು? ಇತ್ಯಾದಿಗಳ ಬಗೆಗೆ ಕಾವ್ಯಪುರಾಣಗಳಲ್ಲಿ ವಿಭಿನ್ನವಾದ ಹೇಳಿಕೆಗಳು ಉಕ್ತವಾಗಿವೆ.

ಮೊಟ್ಟ ಮೊದಲ ಬಾರಿಗೆ ಆದಯ್ಯನನ್ನು ಕುರಿತು ಕಾವ್ಯ ರಚಿಸಿದ ಹರಿಹರ ಮತ್ತು ಪಾಲ್ಕುರಿಕೆ ಸೋಮನಾಥರು ಆದಯ್ಯನ ಬಗೆಗಿದ್ದ ವಿಭಿನ್ನವಾದ ಜನವದಂತಿಗಳನ್ನು ಅನುಸರಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನ ಕೃತಿಯಲ್ಲಿ ಬಸವಣ್ಣನವರ ಜೊತೆಗೆ ಪ್ರಾಚೀನ ಮತ್ತು ಸಮಕಾಲೀನ ಶರಣರ ಉಲ್ಲೇಖ ಪೂರಕವಾಗಿ ಬಂದಿದ್ದು ಅದರಲ್ಲಿ ಆದಯ್ಯನ ಚರಿತ್ರೆಯು ಸಂಕ್ಷೇಪವಾಗಿ ನಿರೂಪಿತವಾಗಿದೆ. ಹರಿಹರ ಮತ್ತು ಪಾಲ್ಕುರಿಕೆ ಸೋಮನಾಥರು ವಿಭಿನ್ನವಾದ ಜನವದಂತಿಗಳನ್ನು ಆಲಿಸಿ ಅನುಸರಿಸಿದ್ದೇ ಈ ಗೊಂದಲಕ್ಕೆ ಕಾರಣವಾಗಿದೆ.

    ಆದಯ್ಯನ ವಿವರ ಜನಪದ ಸಾಹಿತ್ಯದ ದುಂದುಮೆ ಪದ ಪ್ರಕಾರದಲ್ಲಿದ್ದು ಉಳಿದುಕೊಂಡು ಬಂದಿದೆ. ಧಾರವಾಡ ಜಿಲ್ಲೆಯ ಕುಂದುಗೋಳ ಗ್ರಾಮದವನಾದ ಕುಂದುಗೋಳದ ಬಸವಲಿಂಗ ಕವಿಯು ಅದಯ್ಯನನ್ನು ಕುರಿತು ದುಂದುಮೆ ಪದಗಳನ್ನು ರಚಿಸಿದ್ದಾನೆ. ಆಶುಕವಿಯಾದ ಈತನು ರಚಿಸಿರುವ  ಆದಿಸೆಟ್ಟಿಯನ್ನು ಕುರಿತ ದುಂದುಮೆ ಪದಗಳನ್ನು ಎಂ.ಎಸ್. ಸುಂಕಾಪುರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಅದಯ್ಯನ ದುಂದುಮೆ ಪದದಲ್ಲಿ ಆದಯ್ಯನ ಶಿವಭಕ್ತಿ ನಿಷ್ಠೆಯೇ ಪ್ರಮುಖವಾಗಿದೆ. ಅಶುಕವಿ ಬಸವಲಿಂಗನು ಬಹುಶ: ಹರಿಹರ ಮತ್ತು ರಾಘವಾಂಕರು ರಚಿಸಿರುವ ಆದಯ್ಯನನ್ನು ಕುರಿತ ಕಾವ್ಯಗಳನ್ನು ಪುರಾಣಿಕರಿಂದ ಕೇಳಿ ತಿಳಿದಿರಬೇಕು ಎಂದೆನಿಸುತ್ತದೆ. ಆ ವಿವರವೇ ಇದರಲ್ಲಿ ಕಂಡುಬರುತ್ತದೆ. ಈ ದುಂದುಮೆ ಪದದಲ್ಲಿ ಒಟ್ಟು ೭೪ ಪದ್ಯಗಳಲ್ಲಿ ಅದಯ್ಯನ ವಿವರ ನಿರೂಪಿತವಾಗಿದೆ.

ಆದಯ್ಯನ ಜೀವನ : ಬೆಳವಣಿಗೆಯ ಘಟ್ಟಗಳು

ಆದಯ್ಯನ ಜೀವನ ಚರಿತ್ರೆಯನ್ನು ಹಂತಹಂತವಾಗಿ ವಿಭಾಗಿಸಿಕೊಂಡು ಉಪಲಬ್ಧವಿರುವ ಎಲ್ಲಾ ಸಾಮಗ್ರಿಗಳಡಿಯಲ್ಲಿ ಪರಿಶೀಲಿಸಿ ವಿಶ್ಲೇಷಿಸಿ ರೂಪಿಸಲಾಗಿದೆ.

೧. ಜನ್ಮಸ್ಥಳ: ಆದಯ್ಯನ ಜನ್ಮಸ್ಥಳ ಸೌರಾಷ್ಟ್ರ ಎಂಬುದು ರಾಘವಾಂಕನ ಸೋಮನಾಥ ಚಾರಿತ್ರದ

`ನಾನೊಲಿದು ನೆಲಸಿರ್ಪ ಸೌರಾಷ್ಟ್ರವೆಂಬ ಸು

ಸ್ಥಾನ ವುಂಟದರೊಳಗೆ ಜನಿಸು ಹೋಗೆನೆ'     (ಸ್ಥ. ೧, ಪ.ಸಂ. ೫೮)

ಎಂಬ ಹೇಳಿಯಿಂದ ವ್ಯಕ್ತವಾಗುತ್ತದೆ. 

    ಸಿದ್ಧನಂಜೇಶನು ಆದಯ್ಯನ ಜನ್ಮಸ್ಥಳವನ್ನು ಸೊರಟೂರು ಎಂದು ಹೇಳಿದ್ದು, ಸೊರಟ ಎಂಬ ಪದವನ್ನು ಸೌರಾಷ್ಟ್ರದ ತದ್ಭವದಂತೆ ಬಳಸಿದ್ದಾರೆ. ಆದಯ್ಯನು ಸೌರಾಷ್ಟ್ರದಿಂದ ಬಂದಿರುವನಾಗಿರದೆ ಕನ್ನಡ ನಾಡಿನವನೇ ಎಂದೆನಿಸುತ್ತದೆ.ಲಬ್ಧವಿರುವ ಮಿತವಾದ ಆಧಾರಗಳಿಂದ ಸಾಸಲು ಆದಯ್ಯನ ಜನ್ಮಗ್ರಾಮ ಎಂಬುದನ್ನು ತಿಳಿಯಬಹುದಾಗಿದೆ. ಸಾಸಲುವಿನಲ್ಲಿ ಸೋಮನಾಥ ದೇವಾಲಯ ಇದೆ. ಸೋಮನಾಥ ದೇವಾಲಯದ ನವರಂಗದಲ್ಲಿ ಆದಿಸೆಟ್ಟಿಯ ವಿಗ್ರಹ ಇದೆ ಎಂದು ಭೈರವೇಶ್ವರ ಕಾವ್ಯದ ಪ್ರಸ್ತಾವನೆಯಲ್ಲಿ ತಿಳಿಸಲಾಗದೆ. ಜೊತೆಗೆ Mysore Archaelogical Report £À°èAiÀÄÆ  The   someswara   temple  in  the  navaranga  Figures of Adisetti ಎಂಬ ಉಲ್ಲೇಖ ದಾಖಲಾಗಿದೆ. ಈ ಸಾಸಲು ಗ್ರಾಮ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೋಕಿನ ಕಿಕ್ಕೇರಿಗೆ ಸಮೀಪದಲ್ಲಿದೆ. ಸಾಸಲುವಿನಲ್ಲಿ ಸೋಮೇಶ್ವರ ದೇವಾಲಯ ಇದೆ. ದೇವಾಲಯವು ಚೋಳರ ಕಾಲಕ್ಕೆ ಸೇರಿದುದಾಗಿ ಕಂಡುಬರುತ್ತದೆ. ದೇವಾಲಯದ ನವರಂಗದ ಬಲಭಾಗದಲ್ಲಿ ಎರಡು ವಿಗ್ರಹಗಳು ಇದ್ದು ವಿಗ್ರಹಗಳಲ್ಲಿನ ವ್ಯಕ್ತಿಗಳನ್ನು ಆದಿಸೆಟ್ಟಿ ಮತ್ತು ಕೋರಿಸೆಟ್ಟಿ ಎಂದು ಈಗಲೂ ಕರೆಯುತ್ತಾರೆ. ಈ ವಿಗ್ರಹಗಳಲ್ಲಿಯ ವ್ಯಕ್ತಿಗಳ ಬಗೆಗೆ ಪ್ರಸ್ತಾಪಿಸಿದಾಗ ಜನರು ಹರಿಹರನ ಆದಯ್ಯನ ರಗಳೆ ಮತ್ತು ಸೋಮನಾಥ ಚಾರಿತ್ರದ ಆದಯ್ಯನ ಕಥೆಯನ್ನು ಹೋಲುವ ಆದಿಸೆಟ್ಟಿಯ ಕಥೆ ಹೇಳುತ್ತಾರೆ. ಆದಯ್ಯನಿಗೆ ಆದಿಸೆಟ್ಟಿ ಎಂಬುದು ಪರ್ಯಾಯ ಹೆಸರಾಗಿತ್ತು ಎಂಬುದನ್ನು ಈಗಾಗಲೇ ಗಮನಿಸಲಾಗಿದೆ. ಈ ಮೇಲಿನ ಹೇಳಿಕೆಯನ್ನು ಬೆಂಬಲಿಸುವಂತೆ ಆದಯ್ಯನ ವಂಶಜರು ಸಾಸಲುವಿನಲ್ಲಿ ಇದ್ದ ಬಗೆಗೆ, ಭೈರವೇಶ್ವರ ಕಾವ್ಯ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರದಲ್ಲಿ ಉಲ್ಲೇಖ ಇದೆ. ಆದಯ್ಯನ ಮೇಲಿನ ಅಭಿಮಾನದಿಂದ ಹುಲಿಗೆರೆಯಲ್ಲಿರ್ದ ಆದಯ್ಯನ ಗುರು ಸಂಪ್ರದಾಯಕ್ಕೆ ಮುಖ್ಯವಾದ ಚಿಕ್ಕಣಾರ್ಯ ಮೊದಲಾದ ಭಕ್ತರು ಆದಯ್ಯನ ಜನ್ಮಸ್ಥಳವಾದ ಸಾಸಲಿಗೆ ಅಲ್ಲಿಯ ಸೋಮೇಶ್ವರ ದೇವರ ನೋಡಬೇಕೆಂದು ಶಿವಭಕ್ತರೊಡಗೂಡಿ ಬಂದಾಗ ಆದಯ್ಯನ ವಂಶೋಜನಾದ `ಚಿಕ್ಕೊಡೆಯರು' ಬಂದು ಸ್ವಾಗತಿಸಿದರು ಎಂದಿದೆ. (ಪು. ೬೯) ಆದಯ್ಯನ ವಂಶಜರಿಗೆ ಸೌರಾಷ್ಟ್ರ ಸೋಮೇಶನು ಮನೆದೇವರು ಆಗಿದ್ದ ಎಂಬುದು ಶಿವರಾತ್ರಿಯೊಳು ಪೋಗಿ ಸೌರಾಷ್ಟ್ರಪತಿಯ ಪಾದವ ಕಂಡು ವರುಷಕೊಮ್ಮೊಮ್ಮೆಅವರು ಬರಲು (ಪು. ೭೧) ಎಂಬ ಹೇಳಿಕೆಯಿಂದ ವ್ಯಕ್ತಪಡುತ್ತದೆ. ಆದಯ್ಯನು ಸೌರಾಷ್ಟ್ರದ ಸೋಮೇಶ್ವರನನ್ನು ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಿ ಜಿನಾಲಯವನ್ನು ಶಿವಾಲಯವನ್ನಾಗಿ ಪರಿವರ್ತಿಸಿದ್ದರಿಂದ ಇವರಿಗೆ ಸೌರಾಷ್ಟ್ರ ಸೋಮನಾಥ ಒಂದು ರೀತಿಯಲ್ಲಿ ಮನೆದೇವರು ಎನಿಸಿರಬೇಕು. ವಿಶೇಷ ಸಂಗತಿ ಎಂದರೆ ಪುಲಿಗೆರೆಯ ಸೋಮೇಶ್ವರ ದೇವಾಲಯದ ದಕ್ಷಿಣ ಬಾಗಿಲ ಎಡಬದಿಯಲ್ಲಿ ಶಿಲ್ಪವೊಂದಿದ್ದು ಆ ಶಿಲ್ಪದಲ್ಲಿರುವ ವ್ಯಕ್ತಿಗಳ ಹೆಸರು ಶಿವರಾಮ ಒಡೆಯ, ಪೂಜಾರಿ ಚಿಕ್ಕಣ್ಣ ಎಂಬುದಾಗಿ ಅಲ್ಲಿಯ ಕ್ರಿ.ಶ. ೧೪ನೇ ಶತಮಾನಕ್ಕೆ ಸೇರಿದ ಶಾಸನದಲ್ಲಿ ಇದೆ. ಶಿಲ್ಪದಲ್ಲಿರುವ ಈ ಇಬ್ಬರು ವ್ಯಕ್ತಿಗಳ ಜೊತೆಗೆ ಸೋಮನಾಥದೇವರ ಚಿತ್ರವು ಇದೆ. ಶಿವರಾಮ ಒಡೆಯರು ಮತ್ತು ಚಿಕ್ಕಣ್ಣರು ಬಹುಶ ಆದಯ್ಯನ ವಂಶಜರೇ ಇರಬೇಕೆಂದು ಊಹಿಸಲು ಅವಕಾಶ ಇದೆ. ಈ ಮಿತವಾದ ಆಧಾರಗಳು ಸಾಸಲು ಆದಯ್ಯನ ಜನ್ಮಸ್ಥಳವಾಗಿದ್ದಿರ ಬಹುದು ಎಂದೆನಿಸುತ್ತದೆ.

೨. ಜನ್ಮದಾತರು :  ಆದಿಶೆಟ್ಟಿಯ ತಂದೆ ತಾಯಿಗಳು ಸೋಮನಾಥ ಚಾರಿತ್ರದ ಪ್ರಕಾರ ಪಾರದತ್ತ ಮತ್ತು ಪುಣ್ಯವತಿ ಎಂದಿದ್ದರೆ. ಆದಯ್ಯಗಳ ವಾರ್ಧೀಕ ಎನ್ನುವ   ಅಪ್ರಕಟಿತ ಕೃತಿಯಲ್ಲಿ ಅನ್ನದಾನಿ ಮತ್ತು ಮುಕ್ತಾಂಗನೆ ಎಂಬ ಹೆಸರುಗಳು ಕಂಡುಬರುತ್ತದೆ. ಹರಿಹರನ ರಗಳೆಯಲ್ಲಿ ಆದಯ್ಯನ ಮಾತಾಪಿತೃಗಳು ಶಿವಭಕ್ತರು ಎಂದಿದ್ದು, ಸಿದ್ಧನಂಜೇಶನ ಕೃತಿಯಲ್ಲೂ ಇದೇ ಹೆಸರು ವ್ಯಕ್ತಗೊಂಡಿದೆ ಉಳಿದ ಕಾವ್ಯಪುರಾಣಗಳಲ್ಲಿ ತಂದೆ ತಾಯಿಗಳ ಪ್ರಸ್ತಾಪ ಇಲ್ಲ.

೩. ಜನನ ಹಿನ್ನಲೆ : ಆದಯ್ಯನನ್ನು ಕುರಿತ ಪೂರ್ಣ ಪ್ರಮಾಣದ ಕೃತಿಗಳಲ್ಲಿ ಜನನವು ದೈವಿಕ ಹಿನ್ನೆಲೆಯಿಂದ ನಿರೂಪಿಸಲ್ಪಟ್ಟಿದೆ. ಸೋಮನಾಥ ಚಾರಿತ್ರದಲ್ಲಿ ಆದಯ್ಯನು ಸೌರಾಷ್ಟ್ರದ ಸೋಮೇಶನನ್ನು ಪುಲಿಗೆರೆಯ ಸುರಹೊನ್ನೆಯ ಬಸದಿಯಲ್ಲಿಗೆ ತಂದು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಪೂರ್ವ ಪೀಠಿಕೆಯೋಪಾದಿಯಲ್ಲಿ ಪೌರಾಣಿಕ ನೆಲೆಯ ವಿವರಗಳೊಂದಿಗೆ ಜನನದ ಹಿನ್ನೆಲೆ ವ್ಯಕ್ತವಾಗಿದೆ.

   ಪುಲಿಗೆರೆಯು ಪ್ರಾಚೀನ ಕಾಲದಿಂದ ಹನ್ನೊಂದನೇ ಶತಮಾನದ ಅಂತ್ಯದವರೆಗೆ ಜೈನಮತದ ನೆಲೆವೀಡಾಗಿದ್ದಿತು ಎಂಬುದಕ್ಕೆ ಉಪಲಬ್ಧವಿರುವ ಶಾಸನಗಳಲ್ಲಿ ಅರ್ಧದಷ್ಟು ಜೈನಮತಕ್ಕೆ ಸಂಬಂಧಪಟ್ಟಿರುವುಗಳೇ ಆಗಿವೆ. ಪುಲಿಗೆರೆ ಮೂರುನೂರು ನಾಡಿನಲ್ಲಿ ಏಳುನೂರು ಬಸದಿಗಳು ಇದ್ದವೆಂದು ತಿಳಿದು ಬರುತ್ತದೆ. ಆದಯ್ಯನ ಜನನದ ವೇಳೆ ಹುಲಿಗೆರೆಯಲ್ಲಿ ಜೈನಮತವು  ಉಚ್ಛ್ರಾಯ ಸ್ಥಿತಿಯಲ್ಲಿದ್ದಿತು ಎಂಬುದಾಗಿ ತಿಳಿದುಬರುತ್ತದೆ.

೪. ಹುಲಿಗೆರೆಗೆ ಪಯಣಿಸಲು ಪ್ರೇರಕ ಪ್ರಸಂಗ:

 ಆದಿಶೆಟ್ಟಿಯ ತಂದೆ ಪಾರದತ್ತನು,

ಪತ್ತು ಸಹಸ್ರ ಪೊಂಗಳ ನಿತ್ತಂ

ಉತ್ತಮ ವಸ್ತುಗಳಂ ಕೊಳ್ಳೆಂದಂ

ಪುಲಿಗೆರೆಯಣ್ಣಿ ಗೆರೆಗಳೊಳಗೊಳಗಂ

ನಲವಿಂ ಪಲವುಂ ಪಟ್ಟಣದೊಳಗಂ

ಪರದಾಡುವುದೆಲೆ ಕಂದ

ಎಂದು ಆತನನ್ನು ವ್ಯಾಪಾರದುದ್ದೇಶ್ಯಕ್ಕಾಗಿ ಹುಲಿಗೆರೆಗೆ ಕಳುಹಿಸುತ್ತಾನೆ ಎಂಬ ವಿವರ ಹರಿಹರನ ರಗಳೆಯಲ್ಲಿ (ಪು. ೩೧೫) ವ್ಯಕ್ತವಾಗಿದೆ.

  ಆದಯ್ಯನ ವಚನಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಆತನು ಚಿನ್ನಬೆಳ್ಳಿಗಳ ವ್ಯವಹಾರಗಳನ್ನು ಮಾಡುತ್ತಿದ್ದನೆಂಬುದು (ವ.ಸಂ. ೨೯೩ರಿಂದ೨೯೬) ತಿಳಿದು ಬರುತ್ತದೆ. ಮೇಲಿನ ವಿವರಗಳು ಆದಯ್ಯನು ವಾಣಿಜ್ಯ ನಿಮಿತ್ತದಿಂದ ಪುಲಿಗೆರೆಗೆ ಬಂದನು ಎಂಬುದನ್ನು ಉಲ್ಲೇಖಸುತ್ತವೆ. ಹರಿಹರನ ಹೇಳಿಕೆಯಲ್ಲಿ ಅಣ್ಣಿಗೇರಿ ಮತ್ತು ಪುಲಿಗೆರೆಗಳು ವಾಣಿಜ್ಯ ಕೇಂದ್ರಗಳಾಗಿದ್ದವು ಎಂಬುದು ತಿಳಿದು ಬರುತ್ತದೆ. ಶಾಸನಗಳು ಇದನ್ನು ಸಮರ್ಥಿಸುತ್ತವೆ.

೫. ಹೋಜೇಶ್ವರ ದೇವಾಲಯ:  ಆದಿಶೆಟ್ಟಿಯು ಜೈನ ಕೇಂದ್ರವಾಗಿದ್ದ ಪುಲಿಗೆರೆಗೆ ಬಂದಾಗ, ಮೊರಡಿಗಳ ನಡುವೆ ಮಂದರ ಬಕಂಗಳ ನಡುವೆಯರ ಹಂಸೆಯಿಪ್ಪಂತೆ  ಬಸದಿ ಹಲವರ ನಡುವೆ, ಇರುವ ಹೋಜೇಶ್ವರ ದೇವಾಲಯದಲ್ಲಿ ಇಳಿದು ಕೊಂಡಿದ್ದ ಎಂಬುದು ಸೋಮನಾಥ ಚಾರಿತ್ರದಲ್ಲಿ ವ್ಯಕ್ತವಾಗಿದೆ. ಹೋಜೇಶ್ವರ ದೇವಾಲಯವು ಶೈವ ಕ್ಷೇತ್ರವಾಗಿದ್ದು ಅತಿ ಪುರಾತನವೆಂದೆನಿಸಿತ್ತು. ಪ್ರಾಚೀನ ಕಾಲದಿಂದಲೂ ಹೋಜೇಶ್ವರ ದೇವಾಲಯ ಇದ್ದಿತು ಎಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖ ಇದೆ. ಇಂದಿಗೂ ಲಕ್ಷ್ಮೇಶ್ವರದಲ್ಲಿ ಹೋಜೇಶ್ವರ ದೇವಾಲಯ ಇದ್ದು ವಾಜೇಶ್ವರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ.

೬. ಪದ್ಮಾವತಿ ಪ್ರಸಂಗ :   ಪದ್ಮಾವತಿಯ ಜನನದ ಬಗೆಗೆ ಹರಿಹರನು ಪೌರಾಣಿಕ ಹಿನ್ನಲೆಯನ್ನು ಕಲ್ಪಿಸಿ `ಸುರಕನ್ಯೆ' ಎಂದಿದ್ದು, ಜೈನಳಾಗಿದ್ದರೂ ಶೈವಮತದವಳು ಎಂಬ ಭಾವನೆಯಿಟ್ಟು ಚಿತ್ರಿಸಿದ್ದಾನೆ. ಪದ್ಮಾವತಿ ತಂದೆಯು ಪಾರಿಸ ಪಂಡಿತ ಎಂದಿದ್ದು ತಾಯಿಯ ಹೆಸರಿನ ಉಲ್ಲೇಖವಿಲ್ಲ. ಆದಯ್ಯನು ಪಟ್ಟಣಮಂ ನೋಡಲ್ಪೊರ ಮಟ್ಟಂ ಮೆಲ್ಲನೆ ಪುರವೀಧಿಯೊಳಂ ಬರುತಿರೆ ಹಂಗುಳಿಗೆಯ ಮೇಲಿರ್ದ ಪದ್ಮಾವತಿಯಂ ಬೋಂಕನೆ ಕಂಡು ಸ್ನೇಹಂ ಕವಿದಾರ್ತಂ ತಲೆದೋರಿ ಮೋಹಪರವಶನಾಗುತ್ತಾನೆ. ಆದಯ್ಯ ಮತ್ತು ಪದ್ಮಾವತಿಯರ ಪ್ರಥಮ ಭೇಟಿಯ ಬಗೆಗೆ ಇಲ್ಲಿ ಯಾವುದೇ ಹಿನ್ನಲೆ ಕಂಡುಬಂದಿಲ್ಲ. ಪ್ರಥಮ ನೋಟದಲ್ಲಿಯೇ ಪರವಶನಾಗಿ ಸೋಮನಾಥನ ಸ್ಮರಣೆಯಿಂದ ರತಿಸುಖದಲ್ಲಿ ತಲ್ಲೀನರಾಗುತ್ತಾರೆ. ಅವರೀರ್ವರೂ ದಾಂಪತ್ಯ ಸುಖದಲ್ಲಿ ಮನಸಿಲ್ಲದೆ ಕಲಹಂ, ಕೋಪವಿಲ್ಲದೆ ಖಾತೆ, ಭಂಗವಿಲ್ಲದ ಸೋಲಂ, ಭಾರವಿಲ್ಲದ ಬಳಲಿಕೆ, ನಿದ್ರೆಯಿಲ್ಲದ ನಿಡುಸುಯಿ, ತಣಿವಿಲ್ಲದ ತೃಪ್ತಿ, ಅಗಲ್ಕೆಯಿಲ್ಲದ ವಿರಹಾತುವರಿಸಿದಂತಿದ್ದರು (ಪು. ೩೨ಂ). ಹರಿಹರನ ಕೃತಿಯಲ್ಲಿ ಶೈವಮತದ ಆದಯ್ಯ ಮತ್ತು ಸುರಹೊನ್ನೆ ಬಸದಿಯ ಪೂಜಾರಿಯ ಮಗಳು ಪದ್ಮಾವತಿಯರ ವಿವಾಹ ಪ್ರಸಂಗವನ್ನು ತೇಲಿಸಿ ಬಿಟ್ಟಿರುವುದು ಇಬ್ಬರೂ ಪ್ರೇಮಿಗಳಂತೆ ಚಿತ್ರಿಸಲ್ಪಟ್ಟಿದ್ದಾರೆ. ಪ್ರಮುಖ ಜೈನಬಸದಿಯ ಅರ್ಚಕರ ಮಗಳೊಬ್ಬಳು ಶರಣಮತದ ವ್ಯಕ್ತಿಯನ್ನು ಜೈನರೇ ಹೆಚ್ಚಾಗಿರುವ ಆ ಪಟ್ಟಣದಲ್ಲಿ ವಿವಾಹವಾಗುವುದು ಕಲಹಕ್ಕೆ ಎಡೆ ಮಾಡಿಕೊಟ್ಟಿರಬೇಕು ಎಂದೆನಿಸುತ್ತದೆ. ಆದಯ್ಯ ಮತ್ತು ಪದ್ಮಾವತಿರೀರ್ವರಿಗೂ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗುತ್ತದೆ ಕೆಳೆಯರೆಡೆಯಾಡಿ ಮಾತಾಡಿ ಕೂಡಿದರವರನೆಸೆವ ಸೆಜ್ಜೆಯ ಮನೆಯೊಳೆ ಉಭಯರೂ ಇದ್ದು ಗಳಿಗಿಯಿದು ಜಾವವಿದು, ದಿವಸವಿದು, ಪಕ್ಷವಿದು, ಮಾಸವೆಂದಿನಿಪ್ಪುದರಿಯದಮಮ ತಮಗೊದವಿದ  ಮಹಾ ಸುಖದೊಳೆಂದೆರಡು ತಿಂಗಳನುಭವಿಸುತ್ತಿರ್ದು ನಂತರ

ಶಶಿವದನೆ ನೀನಾರು ಮಗಳು ತಾಯ್ತಂದೆಗಳ

ಹೆಸರಾವುದಾವ ಕಾಯಕವಾವ ವರ್ಣವ

ರ್ಚಿಸುವ ದೇವತೆ ಯಾವುದೆನಿಬರೊಡ ಹುಟ್ಟಿದರು ಪೇಳಿ (ಸಂ.- ಪ.೫೬)

ಎಂದು ಕೇಳುತ್ತಾನೆ. ಇಲ್ಲೆಲ್ಲಾ ಆದಯ್ಯನು ಕಾರಣಿಕನಂತೆ ಗೋಚರಿಸದೆ ಸಾಮಾನ್ಯ ಹುಲುಮಾನವನಂತೆ ಗೋಚರಿಸಿರುವುದು ಕಂಡುಬರುತ್ತದೆ. ಆದಯ್ಯನಿಗೆ ವಿವಾಹವಾಗಿತ್ತೆಂದು ಮೊದಲು ತಿಳಿಸಿ ನಂತರ ಪದ್ಮಾವತಿಯನ್ನು ಕಂಡು ಪ್ರೇಮಾತುರದಿಂದ ವರ್ತಿಸಿದಂತೆ ಚಿತ್ರಿಸಿರುವುದು ಆದಯ್ಯನ ಘನತೆಗೆ ಕುಂದು ಎನಿಸುತ್ತದೆ. ಆದಯ್ಯ ಮತ್ತು ಪದ್ಮಾವತಿಯ ಪ್ರಣಯ ಪ್ರಸಂಗದಲ್ಲಿ ಆದಯ್ಯನ ಕಾರಣಿಕತೆಗೆ ಭಂಗ ಬರುವಂತೆ ಚಿತ್ರಿಸಿದರೂ ಇದುವೇ ಮುಂದಿನ ಆತನ ಮಹತ್ತರ ಉದ್ದೇಶ್ಯಕ್ಕೆ ಮೂಲ ಪ್ರಚೋದನೆ ಒದಗಿಸಿದೆ ಎಂಬುದನ್ನು ಮರೆಯಬಾರದು.

ಆದಯ್ಯನ ಪ್ರಶ್ನೆಗೆ ಪದ್ಮಾವತಿಯು....ಎಮ್ಮಯ್ಯ ಪಾರಿಸ ಶೆಟ್ಟಿಯೆಂದು ಪೆಸರೊಬ್ಬಳೇ ಮಗಳು ತಾನೆಸೆವರುಹ ತಮ್ಮೊಡೆಯ ಜೈನಮತ ನಮ್ಮದೆಂದಾಡಿದಳು. ವಿಷಯ ಆಲಿಸಿದ ಆದಯ್ಯನಿಗೆ ನಾಚಿಕೆಯಾಗಿ ನರಕಕ್ಕೆ ನಾಚಿದೀ ದೇಹ, ಮೋಹದಿ ಭವಿಯ ಬೆರೆಸಿದೆನು ಎಂದು ತನಗೆ ತಾನೆ ಹೇಸುತ,

ಪಿರಿದು ದುರ್ವ್ಯಸನವೇ ಪೊತ್ತು ತನಗುಂಟಂದು

ವರ ಪರಮ ಭಕ್ತಿಯಳವಡದವಂ ಗೆಂಬುದಿದು

ಪರವಾಕ್ಯ.....   (ಸಂ.- ಪ.೫೭)

ಎಂದು ವ್ಯಥೆ ಪಡುತ್ತಾನೆ.

ಒಂದೆರಡು ದಿವಸವಾ ನೆವವ ಹಿಂದಿಕ್ಕಿ ಸುಖ

ದಿಂದರು ತೂರ್ಗೆ ಪೋದಪೆನೆಂದಡ   (ಸಂ.- ಪ.೫೮)

ಆಕೆಗೆ ತಿಳಿಸಿದಾಗ ಹವ್ವನೆ ಹಾರಿ, ಕೊಂದು ಹೋಗಲ್ಲದೊಡೆ ಕೊಂಡು ಹೋಗು, ಇರಲಾರೆ ಎಂದು ಗೋಗರೆದಾಗ ಆದಯ್ಯನು ಮೃಡಭಕ್ತೆ ಯಾಗೆಂದು ಸೂಚಿಸಿದಾಗ ಮರು ಮಾತಿಲ್ಲದೆ ಒಪ್ಪುತ್ತಾಳೆ. ಆದಯ್ಯನು ಶಿವಪೌರಾಣ ಪರಿಚಿತ ಗಣಾಧೀಶರಪ್ಪ ಹೋಜೇಶ್ವರದ ಹಿರಿಯ ಮೊದಲಾಚಾರ್ಯರಿಂ ದೀಕ್ಷೆಯಂ ಕೊಡಿಸಿ ಅವಳನ್ನು ಶೈವಳನ್ನಾಗಿಸುತ್ತಾನೆ. ನಿಜಾಂಶ ತಿಳಿದ ನಂತರ ಪದ್ಮಾವತಿಯನ್ನು ಬಿಟ್ಟು ಹೋಗುವ ಮನಸ್ಸು ಮಾಡುತ್ತಾನೆಯೇ ಹೊರತು ಸ್ವೀಕರಿಸುವುದಿಲ್ಲ. ಕೊನೆಗೆ ಪದ್ಮಾವತಿಯು ಕೊಂದು ಹೋಗಲ್ಲದೊಡೆ ಕೊಂಡು ಹೋಗು ಎಂದು ಕಾಡಿದಾಗ ವಿಧಿಯಿಲ್ಲದೆ ಶಿವಭಕ್ತಳನ್ನಾಗಿಸುತ್ತಾನೆ. ಈ ಪ್ರಸಂಗದಲ್ಲಿ ಆಗಿನ ಕಾಲಕ್ಕೆ ಅನ್ಯಮತವ ಸ್ವೀಕರಿಸಲು ಹೊರಟಾಗ ಉಂಟಾಗುವ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ವಿಚಾರಿಸುವ ಅಂಶ ಮಹತ್ವ ಪೂರ್ಣದ್ದು ಎಂದೆನಿಸುತ್ತದೆ.

೭. ಮೃಡಭಕ್ತರ ಭೇಟಿಯ ಪ್ರಸಂಗ : ಹರಿಹರನ ರಗಳೆಯಲ್ಲಿ, ಆದಯ್ಯ ಪದ್ಮಾವತಿಯರು ಪುಲಿಗೆರೆಯ ಹೊರಗಣ ಭಾಗದಲ್ಲಿ ವಿನೋದದಿಂದ ಕಾಲ ಕಳೆಯುತ್ತಿರುವಾಗ `ನೀಳ್ದ ಕೆಂಜೆಡೆಯಿಂ ತಾಳ್ದ ಕುಂಡಲದಿಂ ತೊಟ್ಟು ಪುಲಿದೊಲಿವಂ ತೊಟ್ಟು ರುದ್ರಾಕ್ಷೆಯಿಂದಿಟ್ಟು ಭಸಿತದಿಂ ಹೊಳೆವ ಕಣ್ಗಳಿಂ......' ಸತ್ಯದಂತೆ ಪುಣ್ಯದಂತೆ, ಭಕ್ತಿಯಂತೆ ಬರುತಿಪ್ಪ ತಪೋಧನ ಮೂವರನ್ನು ಕಾಣುತ್ತಾನೆ.

೮. ಸೌರಾಷ್ಟ್ರದಿಂದ ಸೋಮೇಶನನ್ನು ಹುಲಿಗೆರೆಗೆ ಕರೆತಂದು ಪ್ರತಿಷ್ಠಾಪಿಸಲು ಕಾರಣಕರ್ತ ಪ್ರಸಂಗ: ಆದಯ್ಯನು ಸೌರಾಷ್ಟ್ರದಿಂದ ಸೋಮೇಶನನ್ನು ಹುಲಿಗೆರೆಯ ಸುರಹೊನ್ನೆಯ ಬಸದಿಗೆ ಕರೆತಂದು ಪ್ರತಿಷ್ಠಾಪಿಸಿ ಜೈನಬಸದಿಯನ್ನು ಶಿವಾಲಯವನ್ನಾಗಿ ರೂಪಿಸಲು ಪ್ರೇರಕ ಪ್ರಸಂಗ ಕಾವ್ಯ ಪುರಾಣಗಳಲ್ಲಿ ಭಿನ್ನತೆಯಿಂದ ಕೂಡಿದ್ದರೂ ಮೂಲ ಉದ್ದೇಶ ಒಂದೇ ಆಗಿದೆ.

ಸೋಮನಾಥ ಚಾರಿತ್ರದಲ್ಲಿ, ಶೈವರಿಗೆಂದು ಸಿದ್ಧಪಡಿಸಿದ ಬೋನಮಂ ಕೊಂಡದಕ್ಕಕ್ಕಿಯಂ ಕೊಡುವೆವೆಂದು ಬಲಾತ್ಕಾರದಿಂದ ಕೊಂಡೊಯ್ದರು ಎಂದಿದೆ. ಶೈವಗೊರವರಿಗೆ ಆದ ಅನ್ಯಾಯಕ್ಕೆ ನೊಂದು ಫಲಾಹಾರಗಳನ್ನಿತ್ತು ಸತ್ಕರಿಸಿ ಕಳುಹಿಸಿ ನಿತ್ಯನೇಮಮಂ ಮಾಡಿ ಆರೋಗಿಸದೆ ಸೆಜ್ಜೆಯ ಮನೆಯಲ್ಲಿ ಮುಸುಕಿಟ್ಟು ಮಲಗುತ್ತಾನೆ. ಪದ್ಮಾವತಿಯ ಮೇಲಿನ ಮೋಹದಿಂ ಆಕೆಯ ತಂದೆ ತಾಯಿಗಳು ಎಬ್ಬಿಸಿದಾಗ ಆದಯ್ಯನನ್ನು ತನಗಾದ ಅಪಮಾನಕ್ಕೆ,

ಇನ್ನೇತರೂಟವೇತರ ಮೀಹ ವೇತರಿರ

ವಿನ್ನೇಕೆ ಜೀವಿಸುವ ಕಕ್ಕುಲಿತೆಯಾಸೆಗಳು

ಪನ್ನಗಾಭರಣನಣುಗರು ಹಸಿದು ಬಸವಳಿದು ಬೆಂಡಾಗಿ ಹೋದರದಕೆ(ಸಂ.-ಪ.ಸಂ.೭)

 ಎಂದು ಕಾರಣವನ್ನು ತಿಳಿಸುತ್ತಾನೆ. ಅವರೀರ್ವರ ನಡುವೆ ಜೈನಶೈವಮತದ ಬಗೆಗೆ ವಾಗ್ವಾದ ನಡೆಯುತ್ತದೆ ಕೊನೆಗೆ ಪಾರಿಸ ಪಂಡಿತನು ವ್ಯಂಗ್ಯದಿಂದ,

ತನ್ನ ದೇವರನು ತಂದೆಮ್ಮ ಹುಲಿಗೆರೆಯ ಸುರ

ಹೊನ್ನೆಯ ಮಹಾಬಸದಿಯೊಳು ನಿಲಿಸಿ ಬಳಿಕಾನು ಮೊದಲಾದ ಜೈನ ಕುಲವ

ಬನ್ನಮಂ ಬಡಿಸಿ ಹಲಕೆಲಬರೊಕ್ಕಲ ನೊರಸ

ದನ್ನಬರ ಮರೆದುಣ್ಣನತಿ ಮೂರ್ಖನೆಂದು....    (ಸಂ.-ಪ.ಸಂ.೧೧೧)

ಕಟಕಿಯಾಡುತ್ತಾನೆ. ತನ್ನ ಮಾವನಾಡಿದ ವ್ಯಂಗ್ಯೋಕ್ತಿಯೇ ಆದಯ್ಯನಿಗೆ.

೧.    ಹರನಿಲ್ಲಿಗೆ ಬರಿಸುವುದು

೨.    ಹರದೂಷಕರ ನೊರಸುವುದು

೩.    ಹರಮತವನುದ್ಧರಿಸುವುದು ಈ ಮೂರು ಕಾರ್ಯಗಳನ್ನು ಕೈಗೊಳ್ಳಲು ಪ್ರೇರಕವಾಗುತ್ತದೆ.

`ತಿಂಗಳಂದಿಂಗದಾವೂರ ದೇವರೆನೆ ಸೌರಾಷ್ಟ್ರ ಮಂದಿರ ಸುಖಾಸೀನನಂ ತಹೆನು ತಾರದಿರೆ ಬಾರನೆಂದಣಕಿಸುತಿರೆ' ಶಪಥದಿಂದ ಒಂದು ತಿಂಗಳಲ್ಲಿ ತರುವನೆಂದು ಕಾರ್ಯ ತತ್ಪರನಾಗುತ್ತಾನೆ.

ಆದಯ್ಯನಿಗೆ ಸೌರಾಷ್ಟ್ರದ ಸೋಮೇಶನ ತಂದು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಲು ಒದಗಿದ ಪ್ರಚೋದನೆ ಅಷ್ಟು ಮಹತ್ವದ್ದು ಎಂದೆನಿಸುವುದಿಲ್ಲ. ಇಲ್ಲಿ ಮಾವ-ಅಳಿಯರ ವಾಗ್ವಾದ ಲೌಕಿಕ ಜಗತ್ತಿನಲ್ಲಿ ನಡೆಯುವ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಆದಯ್ಯನ ಸಮಯಾಭಿಮಾನ ಕೆರಳಿ ಉಗ್ರಭಕ್ತಿಯ ಮಹತ್ವದ ಕಾರ್ಯಕ್ಕೆ ಸಿದ್ಧನಾಗಲು ಈ ಘಟನೆ ಸಾಂಕೇತಿಕ ಕ್ರಿಯೆಯಾಗಿ ಪರಿಣಮಿಸಿದೆ. ಈ ಪ್ರಸಂಗದಲ್ಲಿ ಸಾಮಾನ್ಯನಂತೆ ಕಾಣಬರುತ್ತಿದ್ದ  ಆದಯ್ಯನನ್ನು ಮಾವನ ಕಟೂಕ್ತಿಗಳು ಘಾಸಿಗೊಳಿಸಿ ಸುಪ್ತವಾಗಿದ್ದ ಕಾರಣಿಕತನವನ್ನು ಬಡಿದೆಬ್ಬಿಸಿರುವುದನ್ನು ಕಾಣಬಹುದು.

೯. ಸೌರಾಷ್ಟ್ರದ ಸೋಮೇಶನನ್ನು ಪ್ರತಿಷ್ಠಾಪಿಸಲು ಪಡೆದ ಗಡುವಿನ ವಿವರ: ಆದಯ್ಯನು ಸೌರಾಷ್ಟ್ರದ ಸೋಮೇಶ್ವರನನ್ನು ತಂದು ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಲು ಬೇಕಾದ ಗಡುವು ಇಪ್ಪತ್ತೆಂಟು ದಿವಸವೆಂದು ಹರಿಹರನ ರಗಳೆಯಲ್ಲಿಯೂ, ಒಂದು ತಿಂಗಳೆಂದು ಸೋಮನಾಥ ಚಾರಿತ್ರದಲ್ಲಿಯೂಉಲ್ಲೇಖವಿದೆ.

. ವೃದ್ಧ ಮಾಹೇಶ್ವರ ಅಥವಾ ಪಶುಯತೀಶ್ವರ ಪ್ರಸಂಗ: 

 ಆದಿಶೆಟ್ಟಿಯು ತನ್ನ ಪ್ರತಿಜ್ಞೆಯನ್ನು ನೆರವೇರಿಸಲು ಕಾರ್ಯತತ್ಫರನಾಗಿ ದಟ್ಟಡವಿಯಲ್ಲಿ ಏಕಾಂಗಿಯಾಗಿ ಹೊರಟಾಗ ಪಶುಯತೀಶ್ವರನನ್ನು ಭೇಟಿ ಮಾಡಿದ ಉಲ್ಲೇಖ ಕಂಡುಬರುತ್ತದೆ.

ಕಡುಗಿ ಬರುತಿಪ್ಪಾದಿಮಯ್ಯನತಿ ನಿಷ್ಠೆಯಂ

ತುಡುಕಿ ನೋಡುವೆನೆಂದು ಮನದಂದು ಸೌರಾಷ್ಟ್ರ

ದೊಡೆಯ ಪಶುಪತಿಯತೀಶ್ವರ ನಾಮಮಂ ತಳೆದು (ಸಂ.೩-ಪ.೧೨೦)

ಪರೀಕ್ಷಿಸಲು ಬರುತ್ತಾನೆ.

ಏಕಾಂಗಿಯಾಗಿ ದಟ್ಟಡವಿಯಲ್ಲಿ ಬರುತ್ತಿದ್ದ ಆದಯ್ಯನ ಪೂರ್ವಾಪರಗಳನ್ನು ವಿಚಾರಿಸಿದ ಮುನಿಯು, ಜೊತೆ ಜೊತೆಯಾಗಿ ಊಟಮಾಡಲು ಹೇಳಿದಾಗ `ಸೊಕ್ಕಿರ್ದ ಹುಲಿಗೆರೆಗೆ ಸೊಡ್ಡಳನ ನೊಯಿದಲ್ಲದಿಕ್ಕೆನೊಡಲೊಳಗನ್ನ ರಸವ....' ಎಂದು ತನ್ನ ಪ್ರತಿಜ್ಞೆಯನ್ನು ಅರಹುತ್ತಾನೆ. ಅವರೀರ್ವರ ನಡುವೆ ಆ ವಿಷಯದ ಸಂಭಾಷಣೆ ನಡೆಯುತ್ತದೆ. ಇಲ್ಲಿನ ತಾರ್ಕಿಕವಾದ ಸಂಭಾಷಣೆಯು ಅರ್ಥಪೂರ್ಣವಾಗಿದೆ. ಈ ಸಂಭಾಷಣೆಯಲ್ಲಿಯ ಒಂದು ಅಂಶ ಮುಖ್ಯವಾದುದು.ಅಂಗದ ಮೇಲೆ ಶಿವಲಿಂಗ ಬಾಯಲ್ಲಿ ಶಿವಮಂತ್ರ, ಹಣೆಯಲ್ಲಿ ಭಸಿತ, ಕೊರಳಲ್ಲಿ ರುದ್ರಾಕ್ಷಿ ಇತ್ಯಾದಿಗಳ ಹೇಳಿಕೆ ಬಸವಾದಿ ಪ್ರಮಥರು ಸೂಚಿಸಿರುವ ವೀರಶೈವ ಸಿದ್ಧಾಂತದ ಜಂಗಮ ಲಿಂಗವನ್ನು ಪ್ರತಿನಿಧಿಸುತ್ತದೆ. ಈ ರೀತಿ ಇದ್ದರೂ ಯತಿಯು, ಶಿವಲಿಂಗವನ್ನು ಸ್ಥಾಪಿಸುವ ಹವ್ಯಾಸವು ನಿನಗೇತಕೆ ಎಂದು ಕೇಳಿದುದಕ್ಕೆ ಆದಯ್ಯನು ಎನ್ನ ದೇಹಾಭಿಮಾನ ನಿಮಿತ್ತಮಾಡೆ ಎನ್ನ ಸಮಯಾಭಿಮಾನದ ನಿಮಿತ್ತ ಮಾಡುತ್ತಿದ್ದೇನೆ. ಈ ರೀತಿ ಮಾಡಿದರೆ ದೋಷವಿಲ್ಲ  ಎನ್ನುತ್ತಾನೆ. ಈ ಹೇಳಿಕೆಯಲ್ಲಿ ಆದಯ್ಯನಿಗೆ ಮುಕ್ತಿಗಾಗಿ ಜಂಗಮತ್ವವಿದ್ದು ಶೈವಮತದ ಅಭಿಮಾನಕ್ಕೋಸ್ಕರ ಸ್ಥಾವರ ಲಿಂಗವನ್ನು ಪ್ರತಿಪಾದಿಸಿದ ಉದ್ದೇಶ್ಯ ಇದೆ ಎಂಬ ಅಂಶವು ಗ್ರಹೀತವಾಗಿರುವುದನ್ನು ಕಾಣಬಹುದು. ಈ ಹೇಳಿಕೆಯನ್ನು ತಕ್ಕ ಮಟ್ಟಿಗೆ ವಸ್ತುಸ್ಥಿತಿಯ ನೆಲೆಯಲ್ಲಿ ಭಾವಿಸುವುದಾದರೆ ವಚನಕಾರ ಆದಯ್ಯ ಮತ್ತು ಪುಲಿಗೆರೆಯಲ್ಲಿ ಸೌರಾಷ್ಟ್ರದ ಸೋಮೇಶನನ್ನು ತಂದು ಪ್ರತಿಷ್ಠಾಪಿಸಿದ ಆದಯ್ಯರೀರ್ವರೂ ಒಬ್ಬರೇ ಎಂದೆನಿಸುತ್ತದೆ.

ಆದಯ್ಯನ ಮಾತಿನಿಂದ ಮೆಚ್ಚಿಗೊಂಡ ಶಿವನು,

ಮಾತಿನೊಳು ನೀತಿಯೊಳು ಬುದ್ಧಿಯೊಳು ಸಿದ್ಧಿಯೊಳು

ಚಾತುರ್ಯದೊಳು ನಿಧಾನ ವಿಚಾರದೊಳು ಗುಣ

ಆತುರಿಸಿ ಕಾಡುವೆನ್ನಂಡಲೆಗೆ ಕಂಟಣಿಸ ದೀತನಲ್ಲದೆ ನಿಲುವರಾರೆಂದು......  (ಸಂ.-ಪ.ಸಂ೪೬)

ಹೊಗಳುತ್ತಾನೆ. ಈ ಪದ್ಯದಲ್ಲಿ ಆದಯ್ಯನ ವ್ಯಕ್ತಿತ್ವದ ಎಲ್ಲಾ ಮುಖಗಳ ಪರಿಚಯ ಸ್ಥೂಲವಾಗಿ ವ್ಯಕ್ತವಾಗಿದೆ ಎನ್ನಬಹುದು. ಇದಾದ ನಂತರವು ಆದಯ್ಯನ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಕಾಡಿಸುತ್ತ ಭಕ್ತವೇಷದ ಶಿವನು, ಎಲ್ಲಿಯೂ ಭಕ್ತನನ್ನು ಕಾಣದೆ ನಿನ್ನಲ್ಲಿಗೆ ಬಂದೆ, ತೆಗೆದುಕೋ ಮೊಸರೋಗರವ ಎಂದು ಅಡ್ಡಗಟ್ಟಿ ತುಡುಕಿ ಹಿಡಿದಾಗ ಒಲ್ಲೆ ಒಲ್ಲೆನುತ `ಮೃಡ ಸೋಮನಾಥನಂ ತಂದ ಬಳಿಕಲ್ಲದಿನ್ನೆಡೆಯೊಳವಡದೆನೆಗೆ ಎಂದು ಆದಯ್ಯನು ಸಾಗುವನು. ಶಿವನ ಪರೀಕ್ಷೆ ಭಕ್ತನ ಮುಂದೆ ಸೋಲನ್ನಪ್ಪಿ, ನಿಜರೂಪು ತೋರುವನು.

೧೧. ಆದಯ್ಯನ ಆಗಮನ: ಶಿವದರ್ಶನ ಪಡೆದ ಆದಯ್ಯನನ್ನು

...........ನೀ ನೀ ಮಹಾವೃಕ್ಷದ

ಅಡಿಯೊಳೊಯ್ಯನೆ ವಿಶ್ರಮಿಸೆ ನಿನ್ನ ಹುಲಿಗೆರೆಯ

ಬಡಗಣ ತಟಾಕ ದೇರಿಯ ಮೇಲೆ ಬಿಡುವನೆಂದು...    (ಸಂ-ಪ.೪)

ಹುಲಿಗೆರೆಗೆ ಕ್ಷಣಮಾತ್ರದಲ್ಲಿ ಕರೆತರುತ್ತಾನೆ ಎಂಬ ವಿವರ ಸೋಮನಾಥ ಚಾರಿತ್ರದಲ್ಲಿದೆ.

ಎಂದಿದೆ. ಹುಲಿಗೆರೆಗೆ ಬಂದಿಳಿದ ಆದಯ್ಯನನ್ನು ಪದ್ಮಾವತಿಯು ಎದುರುಗೊಂಡು ಮನೆಗೆ ಕರೆದೊಯ್ಯುತ್ತಾಳೆ.

೧೨. ಪುಲಿಗೆರೆ ಸೋಮೇಶನು ಆಗಮಿಸಿದ ದಿನ ಮತ್ತು ಕುರುಹುಗಳು: ಸೋಮನಾಥ ಚಾರಿತ್ರದಲ್ಲಿ ಶಿವನು ಪುಲಿಗೆರೆಯ ಸುರಹೊನ್ನೆಯ ಬಸದಿಯಲ್ಲಿ ಒಡಮೂಡುವುದಕ್ಕೆ ಸಮ್ಮತಿಸಿದಾಗ ಆಗಮಿಸುವ ದಿನ ಮತ್ತು ಕುರುಹುಗಳನ್ನು ಆದಯ್ಯ ಕೇಳಿದಾಗ,

`ತವೆ ಚೈತ್ರ ಶುದ್ಧ ಚಾತುರ್ದಶಿಯ ಸೋಮವಾ

ರವು ನಾಳೆ ಮಧ್ಯ ರಾತ್ರಿಯೊಳು ಬಂದೆಪ್ಪವೆನೆ

..........ಉದಯ ಸಮಯದೊಳು ಬಂದ

ಸವಣರ್ಗೆ ಕದವ ತೆರೆಯದುದೊಂದು ಹಲಕಾಲ

ನವೆವು ತಲ್ಲಿರ್ದ ಹೆಳವಂಗೆ ಕಾಲ್ಕುರುಡಂಗೆ

ನವನಯನ ಬರಲೆರಡು ನಿನ್ನಿಂದ ಕದದೆರೆದಪುದು (ಸಂ.-ಪ.೬)

ಎಂದು ಬರುವ ದಿನ ಮತ್ತು ಮೂರು ಕುರುಹಗಳನ್ನು ಹೇಳುತ್ತಾನೆ.

೧೩. ಸುರಹೊನ್ನೆ ಬಸದಿಯಲ್ಲಿ ಒಡಮೂಡಿದ ಸೋಮೇಶ್ವರ ವಿವರ: ಸೌರಾಷ್ಟ್ರದ ಸೋಮೇಶನು ಪುಲಿಗೆರೆಯ ಸುರಹೊನ್ನೆಯ ಬಸದಿಯಲ್ಲಿ ನೆಲಸಿದ ವಿವರ ಎಲ್ಲಾ ಕಾವ್ಯಪುರಾಣಗಳಲ್ಲಿ ಹಲವಾರು ಮಾರ್ಪಾಡುಗಳೊಡನೆ ಚಿತ್ರಿತವಾಗಿದ್ದರೂ ಮೂಲತಃ ಒಂದೇ ಎಂದೆನಿಸುತ್ತದೆ. ಕಾವ್ಯಗಳಲ್ಲಿ ಬಣ್ಣಿಸಿರುವ ಲಕ್ಷಣಗಳನ್ನು ಒಳಗೊಂಡಿರುವ ಸೋಮೇಶ್ವರನ ವಿಗ್ರಹ ಈಗಲೂ ಲಕ್ಷ್ಮೇಶ್ವರದಲ್ಲಿದೆ. ಆದಯ್ಯ ಅಥವಾ ಸೋಮಯ್ಯನು ಪುಲಿಗೆರೆಯ ಸುರಹೊನ್ನೆ ಬಸದಿಗೆ ಸೌರಾಷ್ಟ್ರದ ಸೋಮೇಶನನ್ನು ತಂದು ಪ್ರತಿಷ್ಠಾಪಿಸಲು ಒದಗಿದ ಪ್ರಚೋದನೆಗೆ ಕಾವ್ಯಗಳಲ್ಲಿ ವಿಭಿನ್ನವಾಗಿದ್ದರೂ ಸುರಹೊನ್ನೆ ಬಸದಿಯಲ್ಲಿ ಮೂಡಿದ ಸೋಮೇಶ್ವರ ವಿವರ ಒಂದೇ ಆಗಿದೆ.

`ಪುಲಿಗೆರೆಯ ಸೋಮೇಶ್ವರ ಮೂರ್ತಿಯಲ್ಲಿ, ನಂದಿಯ ಮೇಲೆ ಮುಂದೆ ಶಿವ ಹಿಂದೆ ಪಾರ್ವತಿ ಕುಳಿತಿದ್ದಾರೆ. ಪಾರ್ವತಿಯು ಆಧಾರವಾಗಿ ಎಡಗೈಯಿಂದ ಶಿವನನ್ನು ಅಪ್ಪಿ ಕುಳಿತಿದ್ದಾಳೆ. ಬಲಗೈಯಲ್ಲಿ ಸೀತಾಫಲವನ್ನು ಹೋಲುವ ಫಲವಿದೆ. ತಲೆ ಮುಕುಟಮಯವಾಗಿದೆ. ಕೊರಳಲ್ಲಿ ಆಭರಣಗಳು ಕೆತ್ತಲ್ಪಟ್ಟಿವೆ. ಕಿವಿಯಲ್ಲಿ ಕುಂಡಲ ಕೆತ್ತಲ್ಪಟ್ಟಿವೆ. ನಾಲ್ಕು ಕೈಗಳಿದ್ದು, ಬಲದ ಮೇಲಿನ ಹಸ್ತದಲ್ಲಿ ತ್ರಿಶೂಲ, ಕೆಳಗಿನ ಹಸ್ತದಲ್ಲಿ ಅಕ್ಷಮಾಲೆ ಇದೆ. ಎಡದ ಮೇಲಿನ ಹಸ್ತದಲ್ಲಿ ಡಮರು, ಕೆಳಗಿನ ಹಸ್ತದಲ್ಲಿ ಫಲ ಇದೆ. ಮೇಲ್ನೋಟಕ್ಕೆ ಇದು ಶಿವನ ಮೂರ್ತಿಯೇ ಎಂಬ ಸಂದೇಹ ನಮಗನ್ನಿಸಿದರೂ, ಶೈವಪುರಾಣಗಳಲ್ಲಿ ಹೇಳಿರುವ ಶಿವನ ಲಕ್ಷಣಗಳಿಗನುಗುಣವಾಗಿ ಪರಿಶೀಲಿಸಿದರೆ ಇದು ಗಿರಿಜಾ ಕಲ್ಯಾಣ ಲೀಲೆಯನ್ನುನುಸರಿಸಿ ಕೆತ್ತಿದ ಶಿವಮೂರ್ತಿ ಎಂದೆನಿಸುತ್ತದೆ.

೧೪. ಹೋರಾಟದ ಪ್ರಸಂಗ: ಹರಿಹರನ ರಗಳೆಯಲ್ಲಿ ಆದಯ್ಯನು ಪುಲಿಗೆರೆಯ ಸವಣರೊಡನೆ ಯುದ್ಧಮಾಡಿ ಸಂಹರಿಸಿದಾಗ ಸವಣರು ಶರಣಾಗಿ ಸೋಮನಾಥನಿಗೆರಗಿದರು ಎಂದಿದೆ.

೧೭. ಆದಯ್ಯನ ಜೀವಿತದ ಕೊನೆಯ ಘಟ್ಟ: ಪುಲಿಗೆರೆಯಲ್ಲಿ ವೀರಶೈವಮತದ ಪ್ರಸರಣದಲ್ಲಿ ಮಹತ್ತರ ಪಾತ್ರ ವಹಿಸಿದ ಆದಯ್ಯನ ಕೊನೆಯ ಕಾಲದ ಜೀವನದ ಬಗೆಗೆ ಸೋಮನಾಥ ಚಾರಿತ್ರದಲ್ಲಿ ಮಾತ್ರ ಉಲ್ಲೇಖವಿದೆ. ಆದಯ್ಯನು ಪುಲಿಗೆರೆಯಲ್ಲಿಯೇ ಕೆಲವು ಕಾಲ ಜೀವಿಸಿದ್ದು ಅಲ್ಲಿಯೇ ಸೋಮನಾಥ ದೇವಾಲಯದ ಬಲದ ಕಂಬದೊಳಗೆ ಐಕ್ಯನಾದನೆಂದು ತಿಳಿದು ಬರುತ್ತದೆ. ಈ ಹೇಳಿಕೆಯನ್ನು ಬೆಂಬಲಿಸುವಂತೆ ಇಂದಿಗೂ ಸೋಮನಾಥ ದೇವಾಲಯದ ಬಲದ ಕಂಬದ ಸಮೀಪದಲ್ಲಿ ಆದಯ್ಯನ ಗದ್ದುಗೆ ಕಂಡುಬರುತ್ತದೆ.

ಸೌರಾಷ್ಟ್ರದಲ್ಲಿ ಜನಿಸಿದ ಆದಯ್ಯನು ವ್ಯಾಪಾರ ನಿಮಿತ್ತವಾಗಿ ಅಣ್ಣಿಗೇರಿ, ಪುಲಿಗೆರೆಗಳಲ್ಲಿ ಪಯಣ ಕೈಗೊಂಡು, ಅನ್ಯಮತೀಯರ ಕಟೂಕ್ತಿಗಳಿಂದ ಘಾಸಿಗೊಂಡು ಸ್ವಸಮಯಾಭಿಮಾನದ ನಿಮಿತ್ತ ಶೈವಮತ ಪ್ರಸಾರದಲ್ಲಿ ಕಾರ್ಯೋನ್ಮುಖನಾಗಿ ಜಿನಮಯವಾಗಿದ್ದ ಪರಿಸರವನ್ನು ಶಿವಮಯವನ್ನಾಗಿ ರೂಪಿಸಿ ಅಲ್ಲಿಯೇ ಐಕ್ಯನಾಗಿದ್ದು ಮಹತ್ವದ ಸಂಗತಿಯಾಗಿದೆ.

 ೧೮.  (ಆದಯ್ಯ) ಸೋಮಣ್ಣನ ಕಥೆ:

ಹರಿಹರ, ರಾಘವಾಂಕರು ಆದಯ್ಯನ ರಗಳೆ, ಆದಿಸೆಟ್ಟಿಪುರಾಣ ಅಥವಾ ಸೋಮನಾಥನ ಚಾರಿತ್ರ ಇತ್ಯಾದಿಯಾಗಿ ಆದಯ್ಯ ಚರಿತ್ರೆಯನ್ನು ಕುರಿತು ಹೆಸರಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನು ಆದಯ್ಯನ ಹೆಸರಿಗೆ ಬದಲಾಗಿ ಸೋಮಯ್ಯ ಎಂದು ಹೆಸರಿಸಿ ವಿದ್ವಾಂಸರು ಆದಯ್ಯ ಬೇರೆ? ಸೋಮಯ್ಯ ಬೇರೆ? ಎಂದು ಗೊಂದಲಕ್ಕೊಳಗಾಗುವಂತೆ ಮಾಡಿದ್ದಾನೆ.

ಕಥಾಸಾರ: ಹುಳಿಗರಪುರದಲ್ಲಿ ಶೂಲಿಯ ಭಕ್ತನಾದ ಸೋಮಣ್ಣ ನೆಂಬುವನು `ತ್ರಿಕಾಲದಿ ಮಾಡುವ ಲಿಂಗ ಸ್ಪರ್ಶನದ ನೇಮವ ಹೊಂದಿ ಇರುತ್ತಿರಲು ಒಂದು ದಿವಸ ಕಣ್ಬೇನೆಯಿಂದ ಕಡು ಸಂಕಟವ ಪಡುತ ಲಿಂಗವ ಕಾಣದೆ ಊಟ ಮಾಡದೆ ಇರುತ್ತಾನೆ. ಮನೆಯಲ್ಲಿ ಈತನನ್ನು ಬಿಟ್ಟು ಳಿದವರೆಲ್ಲಾ ಜೈನರಾಗಿರುತ್ತಾರೆ. ಕಣ್ಣು ಬೇನೆಯಿಂದ ನರಳುತ್ತಿದ್ದ ಸೋಮಣ್ಣನನ್ನು ಜೈನ ಮಕ್ಕಳು `ಉಣ್ಣದೆಯಿರತೇಕೆ ಗುಡಿಯೆಡೆ ಗಾವು ಕರೆದೊಯ್ಯುವೆವು ನಿನ್ನನೀಗಲೆ ಮುದದಿ' ಎನುತ ಸುರಹೊನ್ನೆ ಬಸದಿಗೆ ಕರೆತಂದು ಮೊಕ್ಕಯ್ಯ ನಿಮ್ಮ ಮುಕಣ್ಣ ನೀತನೆ ಎನಲು ಹಸ್ತದಿಂದ ತಡವಿ ಲಿಂಗವೆಂದು ಭಾವಿಸಿ ಪೂಜಿಸಲು, ಜೈನ ಮಕ್ಕಳು, ಇನ್ನೇಳು ಸಾಕು ಜಿನ ಪ್ರಸನ್ನತೆ ಯೊಂದಿಯೊಲಿದುದ ನೀವ ನಿನ್ನೆಮ್ಮ ಬುದ್ಧಿಯ ಪಡೆದಿನ್ನು ಬದುಕು' ಎಂದು ಹೇಳುತ್ತಾರೆ. ಸೋಮಣ್ಣನು ಕೋಪದಿಂದ ಜಿನನಿಗೆ ಕೈಯನೆತ್ತುವೆನೆ' ಎನಲು ಇದು `ಶಿವನೊ' `ಜಿನನೋ' ನೋಡು ಎಂದೆನಲು ಆಗ ಸೋಮಣ್ಣ ಕಣ್ಣಲ್ಲಿ ಕಣ್ಣಿದ್ದ ಮುಸುಕನು ಬಿಚ್ಚಿ ಕಂಗಳ ತೆರೆಯ ಅಲ್ಲಿದ್ದ ಜಿನಮೂರ್ತಿ  ಛಟ ಛಟ ಎಂದು ಹೋಳಾಗಿ ಹೋಗಲು ಆ ಪ್ರತಿಮೆಯ ಮಧ್ಯಭಾಗದಲ್ಲಿ ಗೋಪತಿ ವಾಹನ ರೂಢನಾಗಿ ಸೋಮಣ್ಣನ ಭಕ್ತಿಗೆ ಮೆಚ್ಚಿ ಒಡಮೂಡಿದನು.

೧೯. ಕನ್ನಡ ಸಂಸ್ಕೃತಿಯಲ್ಲಿ ಆದಯ್ಯನ ಸ್ಮಾರಕ ಮತ್ತು ಕುರುಹುಗಳು:  ಅದಿಸೆಟ್ಟಿಯ ಐತಿಹಾಸಿಕತೆಯನ್ನು ಪ್ರತಿಬಿಂಬಿಸುವ ಸ್ಮಾರಕಗಳು ಮತ್ತು ಶಿಲ್ಪಗಳು ವೀರ ಮಾಹೇಶ್ವರ ನಿಷ್ಠೆಯನ್ನು ಮೆರೆದ ಪುಲಿಗೆರೆ ಮತ್ತು ಸಾಸಲುಗಳಲ್ಲಿ ದೊರೆತಿವೆ. ಆದಯ್ಯನು ಸೌರಾಷ್ಟ್ರದಿಂದ ತಂದು ಪ್ರತಿಷ್ಠಾಪಿಸಿದನೆನ್ನಲಾದ ಸೋಮೇಶ್ವರ ವಿಗ್ರಹ ಈಗಲೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದ ಗರ್ಭಗುಡಿ ಮತ್ತು ಹೊರಗಿನ ದೇವಾಲಯದ ಗೋಡೆಗಳ ಮೇಲೆ ಕಂಡು ಬರುತ್ತದೆ. ಆದಯ್ಯನು ಜೈನರೊಡನೆ  ಹೋರಾಡಲು ಬಳಸಿದ ಖಡ್ಗವನ್ನು ಶಿವಾಲಯದ ಸಮೀಪದಲ್ಲಿ ಇಟ್ಟಿದ್ದನೆಂದು ಅದನ್ನು ಖಡ್ಗತೀರ್ಥವೆಂದು ಈಗಲೂ ಕರೆಯುತ್ತಾರೆ. ಅದು ಇತ್ತೀಚಿಗೆ ಮುಚ್ಚಲ್ಪಟ್ಟಿದೆ. ಆದಯ್ಯನು ವ್ಯಾಪಾರ ನಿಮಿತ್ತ ಪುಲಿಗೆರೆಯ ಬಂದಾಗ ಇಳಿದು ಕೊಂಡಿದ್ದ `ಹೋಜೇಶ್ವರ' ದೇವಾಲಯ ಈಗಲೂ ಲಕ್ಷ್ಮೇಶ್ವರದಲ್ಲಿದ್ದು ವಾಜೇಶ್ವರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಪುಲಿಗೆರೆಯ ಸೋಮನಾಥ ದೇವಾಲಯದ ಮುಂಬದಿಯಲ್ಲಿರುವ ಸ್ತಂಭವು ಆದಯ್ಯನ ಐಕ್ಯ ಸ್ತಂಭವಾಗಿದೆ. ಸೋಮನಾಥ ದೇವಾಲಯದ ಬಲಭಾಗದಲ್ಲಿರುವ ಚಿಕ್ಕಗುಡಿಯು ಆದಯ್ಯನ ಗದ್ಗುಗೆಯಾಗಿದೆ. ಸಾಸಲುವಿನ ಸೋಮನಾಥ ದೇವಾಲಯದ ನವರಂಗದಲ್ಲಿ ಆದಿಸೆಟ್ಟಿಯ ವಿಗ್ರಹ ಇದೆ.

.ವಚನಗಳ ಸಮೀಕ್ಷೆ

`ಆದಯ್ಯನ ವಚನಗಳು' ಸಂಪಾದಕರ ಪ್ರಕಾರ `ಸೌರಾಷ್ಟ್ರ ಸೋಮೇಶ್ವರ' ಅಂಕಿತದಲ್ಲಿ ಉಪಲಬ್ದವಿರುವ ವಚನಗಳ ಸಂಖ್ಯೆ ಒಟ್ಟು ಮುನ್ನೂರ ತೊಂಬತ್ತೇಳು (ಸಂ: ಉತ್ತಂಗಿ ಚೆನ್ನಪ್ಪ, ಮುರುಘಾಮಠ, ಧಾರವಾಡ)

ವೀರಶೈವ ಮತದ ತತ್ವಗಳು, ಅವುಗಳ ಆಚರಣೆಯನ್ನು ಕುರಿತ ವಿಪುಲವಾದ ಸಾಮಗ್ರಿ ಆದಯ್ಯನು ವಚನಗಳಲ್ಲಿ ನಮಗೆ ದೊರಕುತ್ತದೆ.

ಅಷ್ಟಾವರಣಗಳಲ್ಲಿ ಮೊದಲನೆಯದಾದ ಗುರುವಿನ ಬಗೆಗೆ ಭಯ, ಭಕ್ತಿ, ಅಭಿಮಾನಗಳು ವ್ಯಕ್ತವಾಗಿದೆ. ಗುರುವಿನ ಶ್ರೇಷ್ಠತೆಯನ್ನು ಕುರಿತು ಒಂದು ವಚನದಲ್ಲಿ (ವ.ಸಂ. ೧೮೪) ಹೇಳಿದ್ದಾನೆ.

ಗುರುವಿನಿಂದ ಶಿಷ್ಯನು ದೀಕ್ಷೆ ಪಡೆಯುವ ಮೊದಲು ಭೂತಕಾಯದವ ನಾಗಿರುತ್ತಾನೆ. ಅಂತಹ ಭೂತಕಾಯದ ಭಕ್ತನಿಗೆ ಗುರುವು ವಿಭೂತಿಯ ಪಟ್ಟವ ಕಟ್ಟಿ ಅಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ, ಕರ್ಣದಲ್ಲಿ ಪ್ರಣವ ಪಂಚಾಕ್ಷರನೊರೆದು ಸಂಸಾರದ ಅಜ್ಞಾನ ಜಡವ ಕೆಡಸಿ ಶಿವಜ್ಞಾನಾನುಗ್ರಹವನ್ನು ಮಾಡಿ ಅಂಗತನುವನ್ನಾಗಿ ಮಾಡುತ್ತಾನೆ. ಶಿಷ್ಯನಾಗಿ ಮುಕ್ತಿಯನ್ನು ದಯಪಾಲಿಸುವವನು ಗುರು.

ಇಷ್ಟಲಿಂಗವನ್ನು ಅಂಗದಲ್ಲಿ ದೀಕ್ಷೆಯ ಸಮಯದಲ್ಲಿ ಧರಿಸುವುದರ ಬಗೆಗೆ ಮತ್ತು ಇಷ್ಟಲಿಂಗದ ಶ್ರೇಷ್ಠತೆಯ ಬಗೆಗೂ ಲ್ಲೇಖ ಇದೆ. (ವ. ಸಂ. ೬೩)

`ಕರಸ್ಥಲದಲ್ಲಿ ಲಿಂಗವಿರಲು ಆ ಹಸ್ತವೇ ಕೈಲಾಸ, ಇಷ್ಟಲಿಂಗವೇ ಶಿವನು' ಎಂದಿದ್ದಾನೆ. ಮತ್ತೊಂದೆಡೆ ಲಿಂಗವನ್ನು ಅಂಗದ ಮೇಲೆ ಧರಿಸದವನು ಭವಿ ಎಂದಿದ್ದಾನೆ.

ಲಿಂಗವನ್ನು ಕುರಿತು ಒಂದು ವಚನದಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ ಎಂದು ತ್ರಿವಿಧ ಲಿಂಗಗಳನ್ನು ಹೇಳಿ `ಗುರುವಿನ ಸಂಬಂಧದಿಂದಾದದ್ದು `ಇಷ್ಟಲಿಂಗ' ಲಿಂಗ ಸಂಬಂಧದಿಂದಾದದ್ದು ಪ್ರಾಣಲಿಂಗ, ಜಂಗಮ ಸಂಗಮದಿಂದಾದದ್ದು ತೃಪ್ತಿಲಿಂಗವೆಂದು ಹೇಳಿ ಮತ್ತೊಂದು ವಚನದಲ್ಲಿ (ವ. ಸಂ. ೭೮) ಅವುಗಳ ವ್ಯಾಖ್ಯಾನ ನೀಡಿದ್ದಾನೆ.

ಆದಯ್ಯನ ಪ್ರಕಾರ `ಪ್ರಸಾದ' ವೆಂದರೆ ಹಸಿವನ್ನು ನೀಗಿಸುವ ಅನ್ನವಲ್ಲ. ಅನ್ನವನ್ನೇ  ಪ್ರಸಾದವೆಂದು ಕೊಡುವಾತ ಶರಣರಲ್ಲ. ಕೊಂಬುವಾತ ಭಕ್ತನಲ್ಲ ಎಂದಿದ್ದು ದೈಹಿಕವಾಗಿ ಜೀವಕ್ಕೆ ಆಧಾರವಾಗಿರುವ ಅನ್ನವು `ಪ್ರಸಾದ'ವೆನಿಸಿದ್ದರೂ ಅದನ್ನು ಒಪ್ಪದೆ ಮಾನಸಿಕವಾಗಿ, ಪ್ರಸಾದವನ್ನು ಸ್ವೀಕರಿಸುವುದನ್ನು ಒಂದು ವಚನದಲ್ಲಿ (ವ.ಸಂ. ೬೪) ವಿವರಿಸಿದ್ದಾನೆ. ಸುಮಾರು ಹದಿನಾಲ್ಕು ವಚನಗಳಲ್ಲಿ ಪ್ರಸಾದದ ಬಗೆಗೆ ಲ್ಲೇಖವಿದೆ. ಪ್ರಸಾದವನ್ನು `ಶುದ್ಧ' ಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧ ಪ್ರಸಾದ ಎಂದು ತ್ರಿವಿಧ ಪ್ರಸಾದವನ್ನು ವಿವರಣೆಗಳೊಂದಿಗೆ ಹೇಳಿದ್ದಾನೆ.

ವಿಭೂತಿಯ ಬಗ್ಗೆಯೂ ಆದಯ್ಯನ ವಚನದಲ್ಲಿ ಐಲ್ಲೇಖವಿದೆ. ಶಿವತತ್ವದ ಮೂಲಾಧಾರದ ಜ್ಞಾನಶಕ್ತಿಯೇ ಚಿದ್ವಿಭೂತಿ. (ವ.ಸಂ. ೨೪) ಪಂಚ ಬ್ರಹ್ಮದಿಂದುದಯಿಸಿದ ನಂದೆ, ಭದ್ರೆ, ಸುರಭಿ, ಸುಶೀಲೆ, ಸುಮನೆ ಎಂಬ ಪಂಚಮುಖಂಗಳಿಂದ ವಿಭೂತಿ, ಭಸಿತ, ಭಸ್ಮ, ಕ್ಷರೆ, ರಕ್ಷೆ ಎಂಬ ಪಂಚನಾಮ ವಾಯಿತೆಂದು ಅದರ ವ್ಯುತ್ಪತ್ತಿಯ ಬಗೆಗೆ ಹೇಳುತ್ತಾ ಅದು ಯಾವ ರೀತಿ ಅರಿಷಡ್ವಾದಿ ಲೌಕಿಕ ಕರ್ಮಗಳನ್ನು ನಿರ್ಮೂಲನಗೊಳಿಸಿತು ಎಂದು ಅದರ ಮಹಿಮೆಯ ಬಗೆಗೆ ಹೇಳಿದ್ದಾನೆ. ವಿಭೂತಿ ತಯಾರಿಸುವ ಬಗೆಗೆ ವಿವರಣೆ ಇದೆ.

ತ್ರಿವಿಧ ದಾಸೋಹದ ಬಗೆಗೂ ಆದಯ್ಯನ ವಚನದಲ್ಲಿ (ವ.ಸಂ. ೬೪) ಐಲ್ಲೇಖ ಇದೆ. ತ್ರಿವಿಧ ದಾಸೋಹದಲ್ಲಿ ತನು ಮನ ಧನಗಳನ್ನು ಸವೆಸಬೇಕಾದ ರೀತಿಯನ್ನು ಆದಯ್ಯ ಈ ರೀತಿ ಹೇಳುತ್ತಾನೆ. ಆಚಾರಗಳನ್ನು ಅಳವಡಿಸಿಕೊಂಡು, ಕರಣಂಗಳನ್ನು ಉಡುಗಿ, ಗುರುಸೇವೆಯನ್ನು ನಡೆಸಿ ತನುವನ್ನು ಸವೆಸಬೇಕು. ವ್ರತನೇಮಗಳಿಂದ ಪಲ್ಲಟವಿಲ್ಲದೆ ಮನಸ್ಸನ್ನು ಸವೆಸಬೇಕು. ಆಶೆರೋಷಗಳಿಲ್ಲದೆ ಆದರಣೆಯಿಂದ ಜಂಗಮಕ್ಕೆ ಧನವನ್ನು ನೀಡಿ ಸವೆಸಬೇಕು.

ಷಟ್‌ಸ್ಥಲಗಳ ಬಗೆಗೆ ತನ್ನದೆ ಆದ ದೃಷ್ಟಿ ಕೋನವನ್ನು ಆದಯ್ಯನು ವಿವರಿಸಿದ್ದಾನೆ. ಷಟ್ ಸ್ಥಲಗಳ ವಿವರಣೆಯಲ್ಲಿ ಆದಯ್ಯನ ಅನುಭಾವದ ನಿಚ್ಚಳತೆ ಗುರುತಿಸಬಹುದು. 

`ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಗುರುಲಿಂಗ

ಪ್ರಸಾದಿಗೆಶಿವಲಿಂಗ, ಪ್ರಾಣಲಿಂಗಗೆ ಜಂಗಮಲಿಂಗ

ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ'

ಎಂದು ಆರು ಲಿಂಗಗಳನ್ನು ಹೇಳಿದ್ದಾನೆ.

ಆರು ಮೆಟ್ಟಿಲುಗಳ ಸ್ಥಿತಿಯಲ್ಲಿರುವ ಸಾಧಕನಿಗೆ ಒಂದೊಂದು ಹಂತದಲ್ಲಿಯೂ ಯಾವ ರೀತಿ ಶಿವನ ಸಾನಿಧ್ಯಕ್ಕೆ ಹತ್ತಿರವಾಗಿರುತ್ತಾನೆ ಎಂಬುದನ್ನು ಸೊಗಸಾದ ಉಪಮೆಯೊಡನೆ ಒಂದು ವಚನದಲ್ಲಿ ವಿವರಿಸಿದ್ದಾನೆ.

`ಬೀಜವೃಕ್ಷಯೋಗದಂತೆ ಭಕ್ತಸ್ಥಲ

ಜಲ ಮೌಕ್ತಿಕ ಯೋಗದಂತೆ ಮಾಹೇಶ್ವರ ಸ್ಥಲ

ಅನಲ ಕಾಷ್ಟಯೋಗದಂತೆ ಪ್ರಸಾದಿಸ್ಥಲ

ಕೀಟಭ್ರಮರ ಯೋಗದಂತೆ ಪ್ರಾಣಲಿಂಗಿಸ್ಥಲ

ಕರಕವಾರಿಯೋಗದಂತೆ ಶರಣಸ್ಥಲ'

ಶಿಖಿಕರ್ಪೂರ ಯೋಗದಂತೆ ಐಕ್ಯಸ್ಥಲ   (ವ. ಸಂ. ೩೫೭)

ಷಟ್‌ಸ್ಥಲಗಳ ಬಗೆಗೆ ಇಷ್ಟು ಸೈದ್ಧಾಂತಿಕ ಹಿನ್ನಲೆಯಲ್ಲಿ ನಿರೂಪಿಸಿರುವ ವಚನಕಾರರಲ್ಲಿ ಚನ್ನಬಸವಣ್ಣನವರನ್ನು ಬಿಟ್ಟರೆ ಆದಯ್ಯನೇ  ಎರಡನೆಯವನು ಎಂದೆನಿಸುತ್ತದೆ.

 ಶೈವ ಮತ್ತು ವೀರಶೈವಗಳ ಕುರಿತ ಆದಯ್ಯನ ತಾತ್ವಿಕ ನಿಲುವುಗಳು:

ಆದಯ್ಯನ ನಿಷ್ಟೆಯನ್ನು ಪರೀಕ್ಷಿಸಬೇಕೆಂದು ಕಾಡಿಸುತ್ತ ಭಕ್ತವೇಷದ ಶಿವನು , ಎಲ್ಲಿಯೂ ಭಕ್ತನನ್ನು ಕಾಣದೇ ನಿನ್ನಲ್ಲಿಗೆ ಬಂದೆ, ತಗೆದುಕೋ ಮೊಸರೋಗರವ ಎಂದು ಅಡ್ಡಗಟ್ಟಿ ತುಡಕಿಹಿಡಿದಾಗ

" ಒಲ್ಲೆ ಒಲ್ಲೇನುತ ಮೃಡ ಸೋಮನಾಥನಂ ತಂದ

ಬಳಿಕಲ್ಲದಿನ್ನೆಡೆಯೊಳವಡದೆನೆಗೆ”ಎಂದು ಆದಯ್ಯನು ಸಾಗುವನು.ಆದಯ್ಯನ ಮಾತಿನಿಂದ ಮೆಚ್ಚಿಕೊಂಡ ಶಿವನು ಹೊಗಳುತ್ತಾನೆ. ಶಿವನ ಪರೀಕ್ಷೆ ಭಕ್ತನ ಮುಂದೆ ಸೋಲನ್ನಪ್ಪಿ ನಿಜರೂಪ ತೊರುವನು.ಹೀಗೆ ಕಾವ್ಯಗಳಲ್ಲಿ ವರ್ಣಿಸಿದಂತೆ ಪಶುಯತೀಶ್ವರ ಮತ್ತುಆದಯ್ಯನ ನಡುವಿನ ಸಂಭಾಷಣೆಯ ಪ್ರಸಂಗದಲ್ಲಿನ ಶೈವ-ವೀರಶೈವ ಮತಗಳ ಸ್ವರೂಪದ ಉಲ್ಲೇಖವು ಆದಯ್ಯನವಚನಗಳ ಸಾರರೂಪ ಎಂದೆನಿಸುತ್ತದೆ.

ಶೈವ ಮತ:

ವೀರಶೈವ ಮತಕ್ಕಿಂತ ಹಿಂದಿನ ಶೈವಮತದಲ್ಲಿ ನಾಲ್ಕುಭೇದಗಳು ಇದ್ದವು ಎಂಬುದು ವಚನದಿಂದ ವ್ಯಕ್ತವಾಗುತ್ತದೆ.ಆದಯ್ಯನು ಅವುಗಳ ಹೆಸರು ಮತ್ತು ಸ್ವರೂಪವನ್ನುವಿವರಿಸಿದ್ದಾನೆ. ಶೈವಮತದ ನಾಲ್ಕು ಭೇದಗಳು ಎಂದರೆ

1.ಶುದ್ಧಶೈವ

2.ಮಿಶ್ರ ಶೈವ

3.ಪೂರ್ವ ಶೈವ

4.ಸಂಕೀರ್ಣ ಶೈವ

ಶುದ್ಧಶೈವ ಎಂತೆಂದರೆ ಒಮ್ಮೆ ಧರಿಸಿ,ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದನೆಂದು ಭವಿಯಾಗುತ್ತೊಮ್ಮೆ ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ಆರೀತಿ ಇರುವ ಭಕ್ತನ ಮತ.

ಮಿಶ್ರಶೈವ ಎಂತೆಂದರೆ ಬ್ರಹ್ಮ, ವಿಷ್ಣು, ರುದ್ರ ,ಮಾಹೇಶ್ವರರು ಒಂದೆಂದು ನುಡಿವ ದುಷ್ಕರ್ಮದ ಮತವೇ ಮಿಶ್ರಶೈವ. ಈ ಹೇಳಿಕೆ ಪ್ರಕಾರ ಆದಯ್ಯನಿಗೆ ದೇವನೊಬ್ಬ ನಾಮ ಹಲವುಎಂಬುದು ವಿರೋಧ ಎಂಬಂತೆ ಭಾಸವಾಗಿದೆ.

ಪೂರ್ವಶೈವ ಎಂತೆಂದರೆ ದೂರದಿಂದ ನಮಿಸಿ ಅರ್ಪಿಸಿ ಶೇಷವನುಣ ಕರ್ತನಲ್ಲವೆಂದು ಭಾವಿಸುವ ದೂರಸ್ಥನಹದ ಮತದವರು.

ಸಂಕಿರ್ಣ ಶೈವ ಎಂದರೆ ಹರನೇ ಹಿರಿಯನೆಂದುಹಿರಿಯರೆಲ್ಲರನ್ನು ದೇವರೆಂದು ನುಡಿದು ಕಂಡ ದೇವರಿಗೆ

ಸಾಷ್ಟಾಂಗ ಹಾಕುವ ವೇಶಿಯ ಸುತನಂತೆ ಸಂಕಿರ್ಣಕ್ಕೊಳಗಾದಮತ. ನಾವು ಸಾಮಾನ್ಯವಾಗಿ ಶೈವ ಮತಾಚರಣೆಯ ಸಿದ್ಧಾಂತಗಳೆಂದು ಹೇಳುವುದನ್ನೇ ಆದಯ್ಯನು ಇಲ್ಲಿ ಶೈವಮತ ಪ್ರಭೇದಗಳನ್ನಾಗಿ ವಿಭಾಗಿಸಿ ಹೆಸರುಗಳನ್ನು ಕೊಟ್ಟಿದ್ದಾನೆ ಎಂದೆನಿಸುತ್ತದೆ. ಇಲ್ಲಿ ಶೈವಮತದ ವಿಭಾಗಗಳಲ್ಲಿರುವ ಭಕರಂತೂ ಸ್ಥಾವರ ಲಿಂಗಾರಾಧಕರು. ಈ ಶೈವ ಮಾರ್ಗಗಳನ್ನು ಹೇಳುತ್ತ ಇವೆಲ್ಲವುಗಳಿಗಿಂತ ವೀರಶೈವವು ಶೇಷ್ಠ ವಾದದ್ದು ಎಂದು ಅದರ ಸ್ವರೂಪವನ್ನು ನಿರೂಪಿಸಿದ್ದಾನೆ.

ಶ್ರೀಗುರುವು ಶಿಷ್ಯನ ಮಲಮಾಯಾ ಮಲಿನವನ್ನು ತನ್ನ

ಕೃಪಾವಲೋಕದಿಂದಳಿದು ಲಿಂಗವನ್ನು ಶಿಷ್ಯನಂಗದ ಮೇಲೆ

ಬಿಜಯಂಗೆಯಿಸಿ ,ಕರ್ಣದ್ವಾರದಲ್ಲಿ ಪ್ರಾಣಂಗೆ ಲಿಂಗವ

ಜಪಿಸುವ ಪ್ರಣವ ಪಂಚಾಕ್ಷರಿಯನುಪದೇಶಿಸಿ

ಅಂಗಪೀಠದಲ್ಲಿರಿಸಿ ಅಭಿನ್ನ ಪ್ರಕಾರವಾದ ಪೂಜೆಯ ಮಾಡ

ಹೇಳಲು, ವೀರಶೈವನು ಅಂಗದ ಮೇಲೆ ಲಿಂಗ ಧರಿಸಿ

ಅಭಿನ್ನಭಾವದಿಂದ ಅರ್ಚನೆ ಪೂಜನ ಮಾಡುವುದೇ

ವೀರಶೈವವು. ಇದು ಆದಯ್ಯನು ವೀರಶೈವದ ಬಗ್ಗೆ ಕೊಟ್ಟ

ನಿಷ್ಪತ್ತಿಯಾಗಿದೆ.

ಮೇಲಿನ ವಿವರಣೆಯ ಪ್ರಕಾರ ಆದಯ್ಯನು ಗುರುವುಶಿಷ್ಯನಿಗೆ ಬೋಧಿಸುವ ರೀತಿಯಲ್ಲಿ ಶುದ್ಧ ಶೈವ ಮತ್ತು

ವೀರಶೈವದ ಲಕ್ಷಣಗಳಗಳನ್ನು ನಿರೂಪಿಸಿದ್ದಾನೆ. ಶುದ್ಧಶೈವವು ಸ್ಮಾವರಲಿಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿದರೆ, ವೀರಶೈವವು ಇಷ್ಟಲಿಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದೆ.

ಶುದ್ಧಶೈವಕ್ಕೆ ಲಿಂಗದ ನೆನಹು ಇಷ್ಟವಾದರೆ ವೀರಶೈವಕ್ಕೆ ಲಿಂಗದ ಸಂಗ ಶ್ರೇಷ್ಠವಾಗುತ್ತದೆ. ಇದನ್ನು ಅತ್ಯುತ್ತಮ ಉಪಮೆಯೊಡನೆ ಆದಯ್ಯನು ನಿರೂಪಿಸಿದ್ದಾನೆ.

"ಅತ್ಯಂತ ಮನೋರಮಣಪ್ಪಂತ ಪುರುಷನ ಒಲುಮೆಯಲ್ಲಿಹ

ಸ್ತ್ರೀಗೆ ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ"

ಆದಯ್ಯನ ಈ ಹೇಳಿಕೆಯಲ್ಲಿ ತಿಳಿದು ಬರುವ ಸಂಗತಿ ಎಂದರೆ ಶುದ್ಧಶೈವದಲ್ಲಿರುವ ಭಕ್ತನೇ ಮುಂದೆ ವೀರಶೈವ ಮತದ ವ್ಯಕ್ತಿಯಾಗಿ ಮಾರ್ಪಾಡು ಹೊಂದುತ್ತಾನೆ ಎಂಬುದು. ಅಂದರೆ ಮನೋರಮಣನಾದ ಪುರುಷನ ಒಲುಮೆಯಲ್ಲಿರುವ ಸ್ತ್ರೀಗೆ  ನೆನಹಿನ ಸುಖದಿಂದ ಸಂಗಸುಖ ಅತ್ಯಧಿಕವಪ್ಪಂತೆ

ಶುದ್ಧಶೈವದ ಭಕ್ತನ ಲಿಂಗದಲ್ಲಿ ಅನವರತ ನೆನಹಿನಿಂದ

ಕೂಡಿದಾಗ ಮುಂದೆ ಆತನಿಗೆ ಲಿಂಗದ ಸಂಗವನ್ನು ಬಯಸುವ

ಸುಖ ಅತ್ಯಧಿಕವಾಗುತ್ತದೆ.

ಸ್ಥಾವರಲಿಂಗ ಧ್ಯಾನಕ್ಕೂ ಮತ್ತು ಇಷ್ಟಲಿಂಗದ ಸಂಗಕ್ಕೂಇರುವ ಸಾರೂಪ್ಯವನ್ನು ಈ ರೀತಿ ವಿವರಿಸಿದ್ದಾನೆ.

ಕೀಟನು ಭ್ರಮರ ಧ್ಯಾನದಿಂದ ಭ್ರಮರ ರೂಪಾದಂತೆ

ಶೈವನು ಶಿವಧ್ಯಾನದಿಂದ ಸಾರೂಪ್ಯ ಪದವನೈದುತ್ತಾನೆ.

ಅಗ್ನಿಯ ಸಂಗವ ಮಾಡಿದ ಕರ್ಪೂರ ನಾಸ್ತಿಯಾದ ಹಾಗೆ

ವೀರಶೈವನು ಜಂಗಮಾರ್ಚನೆಯ ಮಾಡಿ ಪ್ರಾಣಲಿಂಗ

ಸಂಬಂಧದಿಂದ ಸಾಯಜ್ಯ ಪದವಿಯನ್ನು ಪಡೆಯುತ್ತಾನೆ.

 ಆದಯ್ಯನ ವಚನಗಳಲ್ಲಿ ಉಲ್ಲೇಖಿಸಿರುವ ವೀರಶೈವ ಜೊತೆಗಿನ ಶುದ್ಧಶೈವ ಎಂದು ಹೇಳಿರುವುದು ಆದಯ್ಯನ ಒಂದು ವಚನದಲ್ಲಿ ವ್ಯಕ್ತವಾಗಿರುವ ಹೇಳಿಕೆಯ ಪ್ರಕಾರ ಶುದ್ಧಶೈವರೆಂದರೆ ತಮಿಳುನಾಡಿನ ಅರವತ್ತು ಮೂರು ಮಂದಿ ಪುರಾತನರೇ ಎಂದೆನಿಸುತ್ತದೆ. ಶುದ್ಧಶೈವದ ಆಚರಣೆಯನ್ನು ವಿವರಿಸುತ್ತಾ ಶುದ್ಧಶೈವ ಸಂಪನ್ನರಪ್ಪ ಅರವತ್ತು ಮೂವರು ಅಸಂಖ್ಯಾತರು ಶಿವನಲ್ಲಿ ಚತುರ್ವಿಧ ಪದವಿಯ್ದು ಸುಖಿಯಾದರು ಎಂದಿದ್ದಾನೆ. ವಚನಕಾರರು ಶೈವಮತವನ್ನು ಖಂಡಿಸಿದ್ದರೆ ಆದಯ್ಯನಲ್ಲಿ ಮಾತ್ರ ಎಲ್ಲಿಯೂ ಶೈವಮತದ ಖಂಡನೆ ಉಗ್ರವಾಗಿ ಬಂದಿಲ್ಲ.

  ಆದಯ್ಯನು ಸತ್ಯ ನ್ಯಾಯ ನಿಷ್ಠುರಗಳನ್ನು ಎದುರಿಗಿಟ್ಟುಕೊಂಡು ಸಾಗಿದವನು. ಅಸತ್ಯ ಅನ್ಯಾಯಗಳ ವಿರುದ್ಧ ಹೋರಾಡಿದವನು. ಮುಕ್ತಿಯನ್ನು ಪಡೆಯುವ ವ್ಯಕ್ತಿಯ ಗುಣಗಳು ಯಾವ ರೀತಿ ಇರಬೇಕು ಎಂಬುದನ್ನು

`ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ

ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ

ವಿಷಯಂಗಳಲ್ಲಿ ದಾಸೀನ, ಭಾವದಲ್ಲಿ ದಿಗಂಬರನಾಗಿರಬೇಕು   (ವ. ಸಂ. ೨೯೧)

ಎಂದು ಸೊಗಸಾಗಿ ವಿವರಿಸಿದ್ದಾನೆ.

 ವಚನಗಳು ಸಮಾಜದಲ್ಲಿ ನಡೆಯುತ್ತಿದ್ದ ಕಂದಾಚಾರಗಳ ವಿರುದ್ಧ ಸೆಟೆದು ನಿಂತವುಗಳು ಎಂಬುದನ್ನು ಆದಯ್ಯನ ವಚನಗಳು ಸಮರ್ಥಿಸುತ್ತವೆ. ಈತನ ವಚನಗಳು ಅನುಭಾವವನ್ನೇ ವಿಶೇಷವಾಗಿ ಒಳಗೊಂಡಿದ್ದರೂ ಅಲ್ಪವಾಗಿ ಡಾಂಭೀಕತೆಯ ವಿಡಂಬನೆಯನ್ನು ಚಿತ್ರಿಸಿವೆ.

ಖ್ಯಾತಿಗೆ ಜೋತು ಲಾಭಕ್ಕೆ ಲೋಭಿಸಿ ಪೂಜೆಯ ಮಾಡದೆ

ರಾಜಾದ್ವಾರದಲ್ಲಿ ಸುಳಿದು ಬಳಲುವ ಹಿರಿಯರನ್ನು (ವ. ಸಂ. ೭೪)

ಆದಯ್ಯನು ಟೀಕಿಸಿದ್ದಾನೆ. ತನ್ನಲ್ಲಿಯೇ ಗುರುಲಿಂಗ ಜಂಗಮ ವಿರಲು ಅನ್ಯವಿಟ್ಟರಸುವ ಶರಣರನ್ನು

`ರಸವನುಗುಳಿ ಕಸವನಗಿವವನಂತೆ

ಕೈಯ ಪಿಂಡವ ಬಿಟ್ಟು ಒಣಕೈಯ್ಯ ಸಿಕ್ಕುವವನಂತೆ

ತಾಯೊಮೊಲೆವಾಲನೊಲ್ಲದೆ ಎರವಾಲಿಂಗೆಳಸುವವನಂತೆ  (ವ. ಸಂ. ೧೨)

ಎಂದು ಗೇಲಿ ಮಾಡಿದ್ದಾನೆ.

`ಮಾತು ಕಲಿತು ಮಂಡೆಯ ಬೋಳಿಸಿ ವೇಷಭಾಷೆಗಳಿಂ ದೇಶಕೋಶ

ಭುವನಂಗಳ ತೊಳಲಿ ಬಳಲಿ ನಿಂದರೇನಾಯಿತ್ತೋ?

ಎಂದು ಭಕ್ತದಾರಿಗಳ ಭಂಡಾಟವನ್ನು ಬಿಚ್ಚುಮನಸ್ಸಿನಿಂದ ಅಪಹಾಸ್ಯ ಮಾಡಿದ್ದಾನೆ.

ಮೋಕ್ಷ ಪ್ರಾಪ್ತಿಗೋಸ್ಕರ ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಜನರನ್ನು `ಕಂಡವರ ಕಂಡು ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಬ ಭಂಡರು' ಎಂದಿದ್ದಾನೆ. ಸಂಸಾರ ಹೇಯವನ್ನು ದೇಹದ ತಿರಸ್ಕಾರವನ್ನು ಕುರಿತು ಎರಡು ವಚನಗಳಲ್ಲಿ ನುಡಿದಿದ್ದಾನೆ. ತೀರ್ಥಯಾತ್ರೆಯ ಮಾಡಿ ಪಾಪವ ಕಳೆಯುವುದು ಆದಯ್ಯನ ಪ್ರಕಾರ ಒಂದು ಯಾತನೆ ಇದ್ದಂತೆ. ಒಬ್ಬ ಶಿವಭಕ್ತನ ದರುಶನ ಮಾಡಿದರೆ ಸಾಕು ಅನಂತ ಕರ್ಮವೆಲ್ಲ ನಾಶವಾಗುತ್ತದೆ ಎಂದಿದ್ದಾನೆ.ಆದಯ್ಯನು ಒಂದು ವಚನದಲ್ಲಿ (ವ.ಸಂ. ೧೫) ಸ್ತ್ರೀಬಾಲಹತ್ಯೆ, ಭ್ರೂಣಹತ್ಯೆ, ಬ್ರಹ್ಮಹತ್ಯೆ ಮಾಡುವ ಕರ್ಮಿಗಳಿಗೆ ಶಿವಜ್ಞಾನ ಸಲ್ಲದು ಎಂದು ಹೇಳುವಲ್ಲಿ ಈ ದುಷ್ಟಪದ್ಧತಿಗಳು ಆಗಿನ ಕಾಲಕ್ಕೆ ಇದ್ದವೆಂಬುದಾಗಿ ತಿಳಿದು ಬರುತ್ತದೆ.

 ಆದಯ್ಯನ ವಚನಗಳು ಧಾರ್ಮಿಕ ತತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಕಾವ್ಯಗುಣ ಅಲ್ಲಲ್ಲಿ ಇಣುಕಿ ಹಾಕಿದೆ. ಆದಯ್ಯನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಉಪಮೆಗಳನ್ನು ಬಳಸಿದ್ದಾನೆ. ಇದು ಆತನ ಸಾಹಿತ್ಯ ಗುಣವನ್ನು ಎತ್ತಿ ತೋರಿಸುತ್ತದೆ.

ದೇಹವನ್ನು ಕುರಿತು `ನೆಣದ ಕೊಣ, ರಕ್ತದ ಹುತ್ತ, ಕೀವಿನ ಬಾವಿ... ಎಂದು ಹೇಳುವಲ್ಲಿ ರೂಪಕ ಸಾಮರ್ಥ್ಯಗಳನ್ನು ಗಮನಿಸಬಹುದು.

   ಆದಯ್ಯನ ವಚನಗಳಲ್ಲಿ ಬಸವಾದಿ ಪ್ರಮುಖರ ವಚನಗಳಲ್ಲಿ ಕಂಡು ಬರುವ ಅಭಿವ್ಯಕ್ತಿಯ ತೀವ್ರತೆ, ಕಾವ್ಯ ಸೌಂದರ್ಯ, ಸಾಧನೆಯ ಹಂತದಲ್ಲಿರುವ ಸಾಧಕನ ತೊಳಲಾಟ ಇತ್ಯಾದಿಗಳನ್ನು ಗುರುತಿಸಲು ಸಾಧ್ಯವಿಲ್ಲ. ಒಟ್ಟಾರೆ ಆದಯ್ಯನ ವಚನಗಳಲ್ಲಿನ ಸಾಮಾಜಿಕ ಕಳಕಳಿ, ಸಾಧಕನ ತೊಳಲಾಟಗಳಿಗಿಂತ ಸಾಂಸ್ಕೃತಿಕ ಅಂಶಗಳು, ಧಾರ್ಮಿಕ ಮತ್ತು ಅನುಭಾವಗಳ ತಾತ್ವಿಕ ನಿಲುವನ್ನು ನಾವು ಕಾಣಬಹುದು.

೨೧.ವಚನಕಾರ ಆದಿಸೆಟ್ಟಿಯ ಇತರೆ ರಚನೆಗಳು:

 ಆದಯ್ಯನು ವಚನಗಳನ್ನು ರಚಿಸಿದ್ದರೂ ಅವುಗಳ ಜೊತೆಗೆ ಸಂಗೀತ ಪ್ರಧಾನವಾದ ಸ್ವರಪದಗಳನ್ನು ರಚಿಸಿದ್ದಾನೆ. ವಚನಗಳನ್ನು ಬಿಟ್ಟು ಉಳಿದ ಆತನ ರಚನೆಗಳನ್ನು ಎಂ.ಎಂ. ಕಲಬುರ್ಗಿಯವರು `ಆದಯ್ಯನ ಲಘು ಕೃತಿಗಳು' ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ ಕನ್ನಡ ಸಂಶೋಧನ ಸಂಸ್ಥೆಯ ೬೬೩ನೆಯ ಸಂಖ್ಯೆ ತಾಳೇಗರಿ ಕಟ್ಟಿನಲ್ಲಿ ಇರುವ ಆದಯ್ಯನಿಗೆ ಸಂಬಂಧಿಸಿದ ಆದಯ್ಯನ ಕಂದ, ಸ್ವರವಚನ, ಉಯ್ಯಲ ಪದ, ಮುಕ್ತಿಕ್ಷೇತ್ರದ ಪದ್ಯಗಳನ್ನು ಆದಯ್ಯನ ಲಘುಕೃತಿಗಳು ಎಂಬ ಹೆಸರಿನಿಂದ ಪ್ರಕಟಿಸಿರುವುದಾಗಿ ಸಂಪಾದಕರು ತಿಳಿಸಿದ್ದಾರೆ.

        ಶರಣ ಅದಿಸೆಟ್ಟಿಯು ವ್ಯಾಪಾರ ನಿಮಿತ್ತವಾಗಿ ಅಣ್ಣಿಗೇರಿ, ಪುಲಿಗೆರಿಗಳಲ್ಲಿ ಪಯನ ಕೈಗೊಂಡು ಅನ್ಯಮತೀಯರುಗಳ ಕಟೂಕ್ತಿಗಳಿಂದ ಘಾಸಿಗೊಂಡು ಸ್ವಸಮಯಾಭಿಮಾನದ ನಿಮಿತ್ತ ವೀರಶೈವ ಮತಪ್ರಸಾರದಲ್ಲಿ ಕಾರ್ಯತತ್ಫರನಾಗಿ ಜಿನಮಯವಾಗಿದ್ದ ಪರಿಸರವನ್ನು ಶಿವಮಯವನ್ನಾಗಿ ರೂಪಿಸಿ  ಅನ್ಯಮತಗಳಿಂದ ಶರಣಧರ್ಮಕ್ಕೆ ಉಂಟಾಗಿದ್ದ ಅಡ್ಡಿ ಅತಂಕಗಳನ್ನು ನಿವಾರಿಸಿ ಶರಣಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿದವನಾಗಿದ್ದಾನೆ.

      ಆದಯ್ಯನನ್ನು ಕುರಿತ ಕಾವ್ಯ, ಪುರಾಣ, ಪೂರಕ ಶಾಸನಗಳು ಮತ್ತು ಕ್ಷೇತ್ರಕಾರ್ಯಗಳಿಂದ ದೊರೆತ ಮಾಹಿತಿಗಳಲ್ಲಿಯ  ಜನ್ಮಸ್ಥಳ, ಜನ್ಮದಾತರ ಹೆಸರು, ಪದ್ಮಾವತಿಯ ಪ್ರಸಂಗ, ವೀರಮಾಹೇಶ್ವರ ನಿಷ್ಠೆಯನ್ನು ಮೆರೆದ ಸ್ಥಳ, ಸ್ಥಾಪಿಸಿದಸೋಮೇಶ್ವರ ವಿಗ್ರಹ ಇತ್ಯಾದಿಗಳ ಸ್ಥಳ ನಾಮಗಳು, ವ್ಯಕ್ತಿನಾಮಗಳು ಐತಿಹಾಸಿಕತೆಯ ಪ್ರತೀಕವಾಗಿದ್ದರೆ, ಜನನದ ಹಿನ್ನಲೆ, ಸೋಮೇಶ್ವರನ ಆಗಮನದ ಕುರುಹು, ಹೋರಾಟದ ಪ್ರಸಂಗ ಇತ್ಯಾದಿಗಳಲ್ಲಿ ಪವಾಡ ಮತ್ತು ದೈವಿಕ ಹಿನ್ನೆಲೆ ಮೇಳೈಸಿದ್ದರೂ ಆದಯ್ಯನು ಕೈಗೊಂಡ ಶಿವಸಮಯ ಪ್ರಸಾರದ ಸಾಂಕೇತಿಕ ಕ್ರಿಯಗಳು ಎಂದು ಗ್ರಹಿಸಬಹುದಾಗಿದೆ. ಬಸವಾದಿ ಪ್ರಮಥರಿಂದ ಪ್ರಭಾವಿತನಾಗಿ ಆದಯ್ಯನು ವಚನಗಳನ್ನುಕುರಿತು ರಚಿಸಿದ್ದರೂ ನಂತರದ ವೀರಶೈವ ಆದಯ್ಯನನ್ನು ಕವಿಗಳು ಕಾವ್ಯ-ಪುರಾಣಗಳನ್ನು ರಚಿಸಲು ಮತ್ತು ಜನತೆಗೆ ಮೆಚ್ಚಿಕೆಯಾಗಲು, ವೀರಶೈವಧರ್ಮದ ಪ್ರಸಾರಕ್ಕಾಗಿ ಕೈಗೊಂಡ ಕ್ರಿಯೆಗಳು ಮತ್ತು ನಿರ್ಮಿಸಿದ ಶಿವಾಲಯಗಳೇ" ಆಗಿವೆ. ಆದಯ್ಯನು ಆ ಕಾಲದ ಯುಗಧರ್ಮಕ್ಕೆ ಸ್ಪಂದಿಸಿದ್ದು, ಪರಮತಗಳಿಂದ ವೀರಶೈವ ಮತಕ್ಕೆ ಒದಗಿದ ಅಡ್ಡಿ ಆತಂಕಗಳನ್ನು, ವೀರ ಮಾಹೇಶ್ವರ ನಿಷ್ಠೆಯ ಮೂಲಕ ಹೋರಾಡುವುದರ ಮೂಲಕ ಶಿವಸಂಸ್ಕೃತಿಯನ್ನು ಶಿವಧರ್ಮವನ್ನು ರಕ್ಷಿಸಿರುವ ಅಪ್ರತಿಮ ಶಿವನಿಷ್ಠೆಯ ಪ್ರತೀಕವಾಗಿ ಈಗಿನ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯವು ಅಚ್ಚಳಿಯದೇ ಉಳಿದಿದೆ.

 ಪರಾಮರ್ಶನ ಗ್ರಂತಗಳು:

.ಆದಯ್ಯನ ವಚನಗಳು( ಸಂ.ಉತ್ತಂಗಿ ಚೆನ್ನಪ್ಪ) ಮುರುಘಾಮಠ

            ಧಾರವಾಡ,೧೯೫೭

. ಮಹಾಕವಿಹಂಪೆಯಹರಿಹರದೇವಕೃತನೂತನಪುರಾತನರಗಳೆಗಳು(ಸಂ.ಎಂ.ಎಸ್.ಸುಂಕಾಪುರ)

   ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,೧೯೭೬

. ಸೋಮನಾಥ ಚಾರಿತ್ರ (ಸಂ. ಆರ್.ಸಿ. ಹಿರೇಮಠ, ಎಂ.ಎಸ್. ಸುಂಕಾಪುರ)

   ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, (ದ್ವಿ.ಮು) ೧೯೬೭.

. ರಾಘವಾಂಕ ಚರಿತೆ (ಸಂ. ಸ.ಸ. ಮಾಳವಾಡ) ಮುರುಘಾಮಠ,

   ಧಾರವಾಡ,೧೯೫೪,

. ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಭಾಗ-೨ (ಸಂ. ಆರ್.ಸಿ.

ಹಿರೇಮಠ, ಎಂ.ಎಸ್‌. ಸುಂಕಾಪುರ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೬೮,

೬. ಸಂಕೀರ್ಣ ವಚನ ಸಂಪುಟ. ೧, (ಸಂ. ಎಂ.ಎಂ. ಕಲಬುರ್ಗಿ) ಕನ್ನಡ ಮತ್ತು

    ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೩,

೭. ಎಂ. ಚಿದಾನಂದಮೂರ್ತಿ: ಸಂಶೋಧನ ತರಂಗ ಭಾಗ-೧.

   ಸರಸ ಪ್ರಕಾಶನ,ಮೈಸೂರು, ೧೯೬೬,

ವಚನ ಸಾಹಿತ್ಯ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೫. 

.ಸಿ.ನಾಗಭೂಷಣಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು

                ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦

                ವೀರಶೈವಸಾಹಿತ್ಯ : ಕೆಲವು ಒಳನೋಟಗಳು

                ವಿಜೇತ ಪ್ರಕಾಶನ, ಗದಗ,೨೦೦೮

ಮುರಿಗೆ ಶಾಂತವೀರ ಸ್ವಾಮಿಗಳ ಮನುರಾಜೇಂದ್ರ ತಾರಾವಳಿ

                           ಡಾ.ಸಿ.ನಾಗಭೂಷಣ


    ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಅದರಲ್ಲಿಯೂ ವೀರಶೈವ ಲಘುಸಾಹಿತ್ಯ ಪ್ರಕಾರಗಳಲ್ಲಿ ಹೆಚ್ಚಾಗಿ ತಾರಾವಳಿ ಪ್ರಕಾರವು ಬಳಕೆಯಾಗಿದೆ. ತಾರಾವಳಿ ಎಂಬ ಪದದ ಪದಶಃ ಅರ್ಥ ಗಮನಿಸುವುದಾದರೆ ತಾರೆ ಮತ್ತು ಆವಳಿ ಎಂಬ ಎರಡು ಪದಗಳು ಸೇರಿ ತಾರಾವಳಿ ಎಂದಾಗಿದೆ. ತಾರಾವಳಿ ಎಂದರೆ ನಕ್ಷತ್ರಗಳ ಸಾಲು ಎಂದರ್ಥ. ಆಗಸದಲ್ಲಿ ಪ್ರಕಾಶಮಾನವಾಗಿ ಮಿನುಗುವ ೨೭ ನಕ್ಷತ್ರ ಮಾಲಿಕೆಗಳಂತೆ ೨೭ ನುಡಿಗಳಿಂದ ಕೂಡಿದ ವಿಶಿಷ್ಟ ಸಾಹಿತ್ಯ ಪ್ರಕಾರ ತಾರಾವಳಿ ಎಂದು ಹೇಳಬಹುದು. ʻಕೇವಲ೨೭ ಪದ್ಯಗಳಲ್ಲಿ ಓರ್ವ ಮಹಿತ ವ್ಯಕ್ತಿಯ, ಓರ್ವ ಮಹಿತಳ, ಪೂಜ್ಯ ವಸ್ತುವಿನ ಸಮಗ್ರ ವಿಚಾರವನ್ನು ಸಂಕ್ಷಿಪ್ತವಾಗಿ ಅಣಿಮುತ್ತುಗಳಂತಹ ಸುಶ್ರಾವ್ಯ ತಾಳಬದ್ಧ ಕಾವ್ಯವಾಣಿಯಲ್ಲಿ ಮೆರೆದು ಮುಗಿಸತಕ್ಕ ಸಾಹಿತ್ಯಕ್ಕೆ ʻತಾರಾವಳಿ ಸಾಹಿತ್ಯ' ಎಂದು ಕರೆಯಲಾಗಿದೆ. ಅಷ್ಟಕ ಶತಕಗಳಂತೆ ಕೇವಲ ದೇವತಾಸ್ತುತಿಗಾಗಿ ಸೋತ್ರ ರೂಪದಲ್ಲಿ ಹುಟ್ಟಿಕೊಂಡ ಇದನ್ನು ಕನ್ನಡಕ್ಕೆ ತಂದು ಹುಲುಸಾಗಿ ಬೆಳೆಸಿದ ಶ್ರೇಯಸ್ಸು ವೀರಶೈವ ಕವಿಗಳಿಗೆ ಸಲ್ಲುತ್ತದೆ. ಈ ವಿಶಿಷ್ಟ ಬಗೆಯಸಾಹಿತ್ಯ ಪ್ರಕಾರವು ಬಳಕೆಗೆ ಬಂದುದು ಪ್ರೌಢದೇವರಾಯನ ಕಾಲದಲ್ಲಿ, ಸದ್ಯದ ಮಟ್ಟಿಗೆ ತಾರಾವಳಿ ಸಾಹಿತ್ಯಕ್ಕೆ ಆದಿಕೃತಿ ಮತ್ತು ಅಗ್ರಕೃತಿ ಎಂದರೆ ನೂರೊಂದು ವಿರಕ್ತರಲ್ಲಿ ಒಬ್ಬನಾದ ಕರಸ್ಥಲ ನಾಗಿದೇವನು ರಚಿಸಿದ 'ಮಡಿವಾಳಯ್ಯನ ತಾರಾವಳಿ. ತಾರಾವಳಿ ಪ್ರಕಾರದ ಎಲ್ಲ ಲಕ್ಷಣಗಳನ್ನು ಇದು ಒಳಗೊಂಡಿದೆ. ಹೀಗೆ ೧೫ನೆಯ ಶತಮಾನದಲ್ಲಿ ಕನ್ನಡದಲ್ಲಿ ಹುಟ್ಟಿದ ತಾರಾವಳಿ ಸಾಹಿತ್ಯ ಅಲ್ಲಿಂದ ಮುಂದೆ ೧೯ನೆಯ ಶತಮಾನದವರೆಗೂ ಉಳಿದ ಲಘುಸಾಹಿತ್ಯ ಪ್ರಕಾರಗಳ ಜೊತೆಗೆ ಸರಿದೊರೆಯಾಗಿ ಬೆಳೆದು ಬಂದಿದೆ. ಅದರಲ್ಲೂ ೧೫, ೧೬, ೧೭ ಶತಮಾನಗಳು ತಾರಾವಳಿಯ ಸುಗ್ಗಿಯ ಕಾಲವೆನಿಸಿವೆ.

     ತಾರಾವಳಿ ಎಂದರೆ ಕೇವಲ ೨೭ ನುಡಿಗಳ ಸಾಹಿತ್ಯ ಪ್ರಕಾರ ಎನ್ನುವ ಸಾಂಕೇತಿಕ ಅರ್ಥವನ್ನು ಕಳೆದುಕೊಂಡು ಅದೊಂದು ಸ್ವಚ್ಚಂದ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದುದು ವ್ಯಕ್ತವಾಗುತ್ತದೆ.ತಾರಾವಳಿಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಇದೊಂದು ಹಾಡುಗಬ್ಬವಾಗಿದೆ. 

     ಇಪ್ಪತ್ತೇಳು ನುಡಿಗಳನ್ನು ಹೊಂದಿರುವ ತಾರಾವಳಿಗಳಲ್ಲಿ ಪ್ರಾರಂಭದಲ್ಲಿ ಪಲ್ಲವಿ, ಅಂತ್ಯದಲ್ಲಿ ಒಂದು ಅಥವಾ ಎರಡು ಕಂದಗಳು ಇಲ್ಲವೇ ವೃತ್ತ ಇರುತ್ತದೆ. ಆದರೆ, ಕೆಲವು ತಾರಾವಳಿಗಳು ಇದಕ್ಕೆ ಹೊರತಾಗಿವೆ ಆದಿಪ್ರಾಸ ಕಡ್ಡಾಯವಾಗಿದ್ದು ಅಂತ್ಯ ಪ್ರಾಸವು ಕೆಲವು ತಾರಾವಳಿಗಳಲ್ಲಿ ಕಂಡು ಬರುತ್ತವೆ. ಪ್ರಾಸರಹಿತವಾದ ತಾರಾವಳಿಗಳು ಕಂಡುಬಂದಿವೆ. ತಾರಾವಳಿ ಸಾಹಿತ್ಯ ವನ್ನು “ರೂಪದ ದೃಷ್ಟಿಯಿಂದ ನೋಡಿದಾಗ ಹೆಚ್ಚಿನ ತಾರಾವಳಿಗಳು ರಗಳೆಯ ನಡೆಯನ್ನು ಅನುಸರಿಸುತ್ತದೆ. ಇದೆ ಅವುಗಳ ಮೂಲ ಛಂದಸ್ಸಾಗಿದ್ದು ಮುಂದೆ ಕಂದ ತ್ರಿಪದಿ, ಷಟ್ಪದಿ, ವೃತ್ತಗಳು ಎಡೆಪಡೆದು ರೂಪ ವೈವಿಧ್ಯವನ್ನು ಸಾಧಿಸುವಂತೆ ತೋರುತ್ತದೆ. ಇವು ತಾರಾವಳಿಯ ಬಾಹ್ಯ ಲಕ್ಷಣಗಳು. ಇನ್ನು ಆಂತರಿಕ ಲಕ್ಷಣಗಳಲ್ಲಿ ತಾರಾವಳಿ ಅಳವಡಿಸಿ ಕೊಂಡ ವಸ್ತು, ಭಾಷೆ, ರಸ- ರಸಭಾವಗಳು ಸಮಾವೇಶಗೊಳ್ಳುತ್ತವೆ. ತಾರಾವಳಿಗಳ ವಸ್ತು ಹೆಚ್ಚಾಗಿ ಸ್ತುತಿ ಪರವಾದುದು. ಶಿವಶರಣರು, ಮಹಿಮಾಸ್ಥಾನ ಯಾತ್ರೆ ಇತ್ಯಾದಿ ಕುರಿತ ಸ್ತುತಿರೂಪದ ವರ್ಣನೆ ಭಕ್ತಿಶೃಂಗಾರ ರಸ ಪ್ರತಿಪಾದನೆ, ಶಿಷ್ಟ-ಜಾನಪದ ಮಿಶ್ರ, ಸರಳಭಾಷೆಯ ಬಳಕೆ- ಇವು ಇಲ್ಲಿ ಎದ್ದು ಕಾಣುತ್ತವೆ. ಕಾವ್ಯಾಂಶ ಕಡಿಮೆ; ಹಾಡುಗಬ್ಬವಾಗಿರುವುದರಿಂದ ರಾಗರಮ್ಯತೆ, ಗೇಯ ಗುಣ ಹೆಚ್ಚು” ಹೆಣೆಯುವಿಕೆ ತಾರಾವಳಿಯ ಮುಖ್ಯ ಲಕ್ಷಣ ವ್ಯಕ್ತಿ ಹೆಸರುಗಳನ್ನಾಗಲಿ, ವಸ್ತುನಾಮವನ್ನಾಗಲಿ, ಛಂದಸ್ಸಿಗನುಗುಣವಾಗಿ ಜೋಡಿಸುವುದಾಗಿದೆ. 

ವಸ್ತುವಿನ ದೃಷ್ಟಿಯಿಂದ ತಾರಾವಳಿಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು.

೧) ಸ್ತುತಿ ರೂಪದ ತಾರಾವಳಿಗಳು

೨) ಜಾತ್ರೆ, ಪೂಜೆ, ಪಲ್ಲಕ್ಕಿ ವರ್ಣನಾಪರ ತಾರಾವಳಿಗಳು

೩) ತತ್ವ ಪ್ರಧಾನ ತಾರಾವಳಿಗಳು

೪) ಐತಿಹಾಸಿಕ ಸಂಗತಿಗಳನ್ನೊಳಗೊಂಡ ತಾರಾವಳಿಗಳು

ಇವುಗಳಲ್ಲಿ ಪ್ರಮುಖವಾಗಿ ಶಿವಸ್ತುತಿ, ಗಣಸ್ತುತಿ, ಶರಣಸ್ತುತಿ, ವಿರಕ್ತರ ಸ್ತುತಿ ಎಂದು ಉಪಭಾಗಗಳನ್ನು ಕಲ್ಪಿಸಬಹುದು. ವಿರಕ್ತರ ಸ್ತುತಿಪರವಾದ ಕೃತಿಗೆ ಒಂದು ಅತ್ಯುತ್ತಮ ನಿದರ್ಶನ ಇಮ್ಮಡಿ ಮುರಿಗಾ ಗುರುಸಿದ್ಧರʻಮುರಿಗೆ ತಾರಾವಳಿ'. ತಾರಾವಳಿ ಪ್ರಕಾರದ ಎಲ್ಲ ಲಕ್ಷಣಗಳನ್ನೊಳಗೊಂಡ ಈ ಕೃತಿ ತಾರಾವಳಿ

ಸಾಹಿತ್ಯದಲ್ಲಿಯೇ ಎದ್ದು ಕಾಣುವ ವೈಶಿಷ್ಟ್ಯವನ್ನು ಪಡೆದಿದೆ. ವಚನ ರಚನೆಯಲ್ಲಿ ಬಾರದ ವಿಷಯಗಳನ್ನು ಕಥಾರೂಪದಲ್ಲಿ ಅರುಹಲು ಈ ಸಾಹಿತ್ಯ ಜನ್ಮತಳೆಯಿತು. ಶಿಷ್ಟ ಭಾಷೆಗೆ ತೀರ ಹತ್ತಿರವಾದ ವಚನಗಳು ಸರಳಗನ್ನಡವಾಗಿದ್ದವು. ಆದರೆ ತಾರಾವಳಿಗಳು ಜನಪದ ಲಯವನ್ನು ಆಡುಭಾಷೆಯೊಂದಿಗೆ ಹೇಳುವದರಿಂದ ತಾರಾವಳಿಗಳು ಹೆಚ್ಚು ಜನಾನುರಾಗಿಯಾದವು. ಸಂಕ್ಷಿಪ್ತ ದೃಷ್ಟಿಯಿಂದ ವಚನಗಳು ಜನಪ್ರಿಯವಾದರೆ ವಸ್ತುವೈವಿಧ್ಯದಿಂದ ತಾರಾವಳಿಗಳು ಜನಮನ ಗೆದ್ದವು.

      ಶೂನ್ಯಸಿಂಹಾಸನ ಪರಂಪರೆಗೆ ಸಂಬಂಧಿಸಿದ ಚಿನ್ಮೂಲಾದ್ರಿಯ (ಚಿತ್ರದುರ್ಗ) ಬೃಹನ್ಮಠವು ಶರಣ ಪರಂಪರೆಯಲ್ಲಿ ಅಗ್ರಗಣ್ಯ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದ್ದು ಶರಣ ಸಮಾಜ-ಸಂಸ್ಕೃತಿಯ ಪುರೋಭಿವೃದ್ಧಿಗಾಗಿ ಅತಿಶಯವಾದ ಸೇವೆಯನ್ನು ಸಲ್ಲಿಸುತ್ತಲಿದೆ.    ಮುರುಘಾ ಮಠ ಪರಂಪರೆಯ ಇತಿಹಾಸವನ್ನು ತಿಳಿಯುವಲ್ಲಿ ಗುರುಪೀಠದ ಇಮ್ಮಡಿ ಗುರುಸಿದ್ಧಸ್ವಾಮಿಗಳ (೧೭೨೯) 'ಮುರಿಗೆ ತಾರಾವಳಿ” ಹಾಗೂ ಅಜ್ಞಾತ ಕೃತ 'ಮುರಿಗೆ ಸ್ವಾಮಿಗಳ ಯಕ್ಷಗಾನ ಪ್ರಮುಖ ಆಕರಗಳಾಗಿವೆ. ಮುರಿಗಾ ಶಾಂತವೀರರ ಶಿಷ್ಯರಾದ ಜ್ವಲಕಂಠ ಮಹಂತಸ್ವಾಮಿಗಳ (೧೭೧೪) 'ಮಹಂತಸ್ವಾಮಿಗಳು ನಿರೂಪಿಸಿದ,ನಾಂದ್ಯ ಸೋಮಶೇಖರ ಶಿವಯೋಗಿಗಳ (೧೭೦೦) 'ಷಟ್ಟಲಜ್ಞಾನಸಾರಾಮೃತ ಬೆಡಗಿನ ವಚನ ಟೀಕೆ" ಮತ್ತು ಮಹಾದೇವನ (೧೮೬೩/೧೮೭೦) 'ಮಹಾಲಿಂಗೇಂದ್ರ ವಿಜಯ'ಗಳನ್ನು ಗಮನಿಸಬಹುದಾಗಿದೆ. ಇವಲ್ಲದೆ ಆನುಷಂಗಿಕ ಆಕರಗಳಾದ 'ಪಟ್ಟವಲ್ಲರಿ'  ಹಾಗೂ 'ನಿರಂಜನವಂಶರತ್ನಾಕರ' ಭಾಗ(೧ಮತ್ತು ಭಾಗ ೨) ಗಳನ್ನು ಗಮನಿಸಬಹುದು. ಆದಾಗ್ಯೂ ಇವುಗಳಲ್ಲಿ ಬೃಹನ್ಮಠದ ಗುರುಪರಂಪರೆಯ ನಿರೂಪಣೆಯಲ್ಲಿ ಏಕತೆಯಿಲ್ಲ.

 ಚಿತ್ರದುರ್ಗದ  ಬೃಹನ್ಮಠದ  ಸಾಹಿತ್ಯ ಇತಿಹಾಸವನ್ನು

೧. ಜಗದ್ಗುರು ವರ್ಗದ ಸಾಹಿತ್ಯ

೨. ಶಾಖಾಮಠಾಧ್ಯಕ್ಷರ ಸಾಹಿತ್ಯ

೩. ಆಶ್ರಿತಕವಿ ಸಾಹಿತ್ಯ

ಎಂದು  ವಿಭಾಗಿಸ ಬಹುದಾಗಿದೆ. ಜಗದ್ಗುರು ವರ್ಗದಲ್ಲಿ  ಬರುವ ಜಗದ್ಗುರುಪೀಠದ ಮುರಿಗಾ ಶಾಂತವೀರರು (೧೬೫೬-೧೭೦೩) ಮುರುಘಾ ಪರಂಪರೆಯ ಮೊದಲ ಮತ್ತು ಮಹತ್ವದ ಕವಿಗಳು, ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರಾದ ಶಾಂತವೀರರು.   ಚಿನ್ಮೂಲಾದ್ರಿಯ ಪ್ರಭುಪೀಠದ ಪರಂಪರೆಗೆ ಸೇರಿದ ಕಟ್ಟಿಗೆಹಳ್ಳಿ ಸಿದ್ಧಲಿಂಗರ ಕರಕಮಲಸಂಜಾತರು, ಗುರುಕುಲತಿಲಕರು, ಸುಧರ್ಮಪಾತಕರು, ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರಾದ ಶಾಂತವೀರರು ಕೇವಲ ಒಬ್ಬ ಸ್ವಾಮಿಗಳಾಗದೆ, ಪ್ರಕಾಂಡ ಪಂಡಿತರಾಗಿ, ಹಲವು ವಿಚಾರಗಳ ಜ್ಞಾನಶಕ್ತಿಯಾಗಿ ಕವಿಗಳಾಗಿ, ಸಾಹಿತ್ಯದ ಆರಾಧಕರಾಗಿ, ಸಮಾಜಸುಧಾರಕರಾಗಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದಾರೆ. ಇವರು ಕೇವಲ ಒಂದು ಮಠದ ಪೀಠಾಧಿಪತಿಗಳಾಗದೆ ಸಮಾಜ ಸುಧಾರಕರಾಗಿ, ಧರ್ಮ ಪ್ರಚಾರಕರಾಗಿ, ದಿವ್ಯಜ್ಞಾನಿಗಳಾಗಿ, ತಪಸ್ವಿಗಳಾಗಿ ಸಾಹಿತ್ಯಜ್ಞರಾಗಿ ಇದ್ದವರು. ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲಿಯೂ ಬಲ್ಲಿದರಾಗಿದ್ದರು. 

ಮುರಿಗೆ ಶಾಂತವೀರರಿಗೆ ಮುರುಗೆಯ ದೇಶಿಕ, ಮುರಿಗೆ ಗುರು, ಮುರುಗೆರಾಯ ಮೊದಲಾದ ಹೆಸರುಗಳಿವೆ. ಇಮ್ಮಡಿ ಗುರುಸಿದ್ದರು ʻಮುರಿಗೆ ತಾರಾವಳಿ' ಯಲ್ಲಿ ಒಂದೆಡೆ ಇವರನ್ನು ಮುರಿಗೆಯ ರುದ್ರರೆಂದು ಹೆಸರಿಸಿದ್ದಾರೆ. ಅಜ್ಞಾತ ಕೃತ 'ಮುರಿಗೆ ಶಾಂತವೀರೇಶ್ವರನ ಕಂದ' ವು ಇವರಿಗೆ ಕರಿಬಸವರೆಂಬ ಹೆಸರಿದ್ದ ಅಂಶವನ್ನು ಸೂಚಿಸಿದೆ. ಸೋದೆ ಸದಾಶಿವರಾಯನ ಸ್ವರವಚನದಲ್ಲಿಯೂ ಕರಿಬಸವ ಎಂಬ ಹೆಸರು ಪ್ರಸ್ತಾಪಿತವಾಗಿದೆ.

   ಮುರಿಗೆ ಶಾಂತವೀರರ ಆಕೃತಿ ಮತ್ತು ವ್ಯಕ್ತಿತ್ವದ ಬಗೆಗೆ ಇಮ್ಮಡಿ ಗುರುಸಿದ್ಧಸ್ವಾಮಿಗಳ  ಸ್ವರವಚನ  ಹಾಗೂ 'ಪಾದಸ್ತೋತ್ರ'ದಲ್ಲಿನ ಮಂಗಳಾರತಿ ರೂಪದ ಹಾಡಿನಲ್ಲಿ ಉಲ್ಲೇಖಗಳಿವೆ. ಶಾಂತವೀರರ ವ್ಯಕ್ತಿತ್ವದ ಬಗೆಗೆ ಸಂಬಂಧಿಸಿದಂತೆ, ಅವರು ಕೈಯಲ್ಲಿ ಚೂರಿ ಕೋಲ್ತಲೆ ಪಾಗು ನಡುಸುತ್ತು, ಮೈಯಲ್ಲಿ ಗುಬ್ಬಿ ಕಟ್ಟನು ಕಟ್ಟಿ ಬಿಗಿದಿದ್ದರು ಎಂದು ಹೇಳಲಾಗಿದೆ.( ಇಮ್ಮಡಿ ಮುರಿಗಾ ಸಿದ್ಧಶಿವಯೋಗಿಗಳ ಐದು ಕೃತಿಗಳು(ಸಂ.ಬಿ.ಆರ್.‌ ಹಿರೇಮಠ) ಆನಂದಪುರ-ಶಿವಮೊಗ್ಗ, ಪು.೮೧) ಅವರು ವೀರ ಶೈವಾಚಾರ ಷಟ್ಸ್ಥಲ ಬ್ರಹ್ಮಿ, ಪರಮೇಶ್ವರನವತಾರ, ಪರಸಮಯ ದೂಷಕರ ಎದೆಗೂಟ, ಷಟ್ಸ್ಥಲ ಚಕ್ರವರ್ತಿ, ಪ್ರಣಮ ಶಾಸ್ತ್ರದಿ ಜಾಣರೆಂದು ಪ್ರಕೀರ್ತಿತರಾಗಿದ್ದರು ಇತ್ಯಾದಿಯಾಗಿ ವಿವರಗಳನ್ನು ಕಾಣಬಹುದಾಗಿದೆ.ಇವರು ಮಠಾಧೀಶರಾಗಿ, ಪ್ರಕಾಂಡ ಪಂಡಿತರಾಗಿ, ಕವಿಗಳಾಗಿ, ಸಾಹಿತ್ಯದ ಸಾಧಕರಾಗಿ, ಸಮಾಜ ಸುಧಾರಕರಾಗಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ  ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದವರು.

   ಮುರಿಗೆ ಶಾಂತವೀರರ ಪ್ರಕಾಂಡ ಪಾಂಡಿತ್ಯದ ಬಗೆಗೆ, ಅವರನ್ನು ರಾಜಾಧಿರಾಜ ಕವಿಸುರಭೂಜರರು, ನಿಗಮಾಗಮ ಪೌರಾಣ ನಿಪುಣ ನೀತಿಭೂಷಣರು ಎಂದು  ಉಲ್ಲೇಖಿಸಿದ್ದಾರೆ. ಇಮ್ಮಡಿ ಗುರುಸಿದ್ಧರ ಮನದಳಲು ಕಾವ್ಯಾಭಿವ್ಯಕ್ತಿ ರೂಪದಲ್ಲಿ ಹೊರಹೊಮ್ಮಿದೆ. ಚಿಮ್ಮುಲಗಿರಿದುರ್ಗದ ದೊರೆ ಬ್ರಹ್ಮಭೂಪಾಲನಿಗೆ ಶಾಂತವೀರರು ವರವಿತ್ತ ಸಂಗತಿ ಉಕ್ತವಾಗಿದೆ. ಮುರಿಗಾ ಶಾಂತವೀರರು ನಿಗಮಾಗಮ ಪೌರಾಣ ನೀತಿಭೂಷಣರೆಂತೋ ಅಂತೆ ನವರಸಭರಿತ ಕಾವ್ಯನಾಟಕಾಲಂಕಾರ ವಿವಿಧ ಗೂಡಾರ್ಥ ಚಿತ್ರಾರ್ಥ ವಿಸ್ತಾರ ಸವೆಯದುಭಯ ವ್ಯಾಕರಣ ಮುಖ್ಯ ಸಾಹಿತ್ಯಭವನ ಭುವನ ಸ್ತ್ಯುತರಾಗಿ ಮೆರೆದವರು ಎಂದು ಸ್ತುತಿಸಲ್ಪಟ್ಟಿದ್ದಾರೆ.

ಮಹಾದೇವ ಕವಿ ತನ್ನ ಮಹಾಲಿಂಗೇಂದ್ರವಿಜಯದಲ್ಲಿ, ಅಲ್ಲಮನ ಅಪರಾವತಾರದಂತಿದ್ದ ಶಾಂತವೀರನು ಹಸ್ತದಲ್ಲಿ ವೀಣಾನಾದದೊಡನೆ ದೇಶಗಳ ಸಂಚಾರ ಮಾಡುತ್ತ ಚಿನ್ಮೂಲಗಿರಿಯ ಬಳಿಗೆ ಬಂದಾಗ ಅವರ ವೇಷದ ಬಗೆಗೆ  ಮಾಹಿತಿಯನ್ನು  ಕೊಡ ಮಾಡಿದ್ದಾನೆ. ಭಸ್ಮಧಾರಣೆ, ಕೊರಳಲ್ಲಿ ಧರಿಸಿದ ರುದ್ರಾಕ್ಷಿಮಾಲೆ, ಎಡಗೈಯಲ್ಲಿ ಹಿಡಿದಿರುವ ಕಿನ್ನರವೀಣೆ, ಜಪಿಸುವ ಪಂಚಾಕ್ಷರಿಯ ಮಂತ್ರ, ಬಲಗೈಯಲ್ಲಿ ಮುರಿಗೆಯ ಮುದ್ಗರ, ತಲೆಗೆ ಸುತ್ತಿದ ಕೇಶಾಂಬರ, ಬಿಗಿದು ಕಟ್ಟಿರುವ ಕೌಪೀನದ ಜೀಲು, ಎದೆಬೆನ್ನಿಗೆ ಮುರಿಗೆಯಾಗಿ ಹೊದ್ದ ಶಾಲು  ಈ ರೀತಿಯಾಗಿ ವ್ಯಕ್ತಿತ್ವದ ಬಗೆಗೆ ಮಾಹಿತಿಯನ್ನು ಕೊಡಮಾಡಿದ್ದಾನೆ. ( ಮಹಾಲಿಂಗೇಂದ್ರವಿಜಯ ಸಂ: ಎಲ್.‌ ಬಸವರಾಜು ಸಂ.೧೭, ಪ.ಸಂ.೬)

     ಶಾಂತವೀರರ ಸ್ವಕೀಯ ಸಂಗತಿಗಳ ಬಗೆಗೆ  ಯಾವುದೇ ಖಚಿತ ಮಾಹಿತಿಯನ್ನು ತಿಳಿಸಿರುವುದಿಲ್ಲ. ಇವರ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸಲು ಇಮ್ಮಡಿ ಮುರಿಗಾ ಗುರುಸಿದ್ಧರ ಮುರಿಗೆತಾರಾವಳಿ, ಸೋಮಶೇಖರ ಶಿವಯೋಗಿಗಳ ಷಟ್ಟಲ ಜ್ಞಾನ ಸಾರಾಮೃತದ ಬೆಡಗಿನ ವಚನಟೀಕೆ, ಅಜ್ಞಾತಕೃತ ಮುರಿಗೆಯ ಸ್ವಾಮಿಗಳ ಯಕ್ಷಗಾನ, ಜ್ವಲಕಂಠಮಹಾಂತಸ್ವಾಮಿಗಳ ನಾಂದ್ಯ, ಮಹಾದೇವನ ಮಹಲಿಂಗೇಂದ್ರ ವಿಜಯ ಮೊದಲಾದ ಕೃತಿಗಳು ಪ್ರಮುಖ ಆಕರಗಳಾಗಿ ಬಳಸಿಕೊಳ್ಳ ಬಹುದಾಗಿದೆ. 

ಮುರಿಗೆ ಶಾಂತವೀರಸ್ವಾಮಿಗಳ ಶಿಷ್ಯರ ಲಘುಕೃತಿಗಳಲ್ಲಿಯ ಇವರ  ಬಗೆಗಿನ ಉಲ್ಲೇಖಗಳು:

ಮುರಿಗೆ ಶಾಂತವೀರ ಸ್ವಾಮಿಗಳ ಬಗೆಗೆ ಸಂಬಂಧಿಸಿದ ಇತರೆ ಉಲ್ಲೇಖಗಳ ಬಗೆಗೆ ಎಸ್.ಶಿವಣ್ಣನವರು ವಿವಿಧ ಮೂಲಗಳಿಂದ ಸಂಗ್ರಹಿಸಿ ಕೊಡ ಮಾಡಿದ್ದಾರೆ. (ಎಸ್.ಶಿವಣ್ಣ: ಬಿಡುಮುತ್ತು, ಪು.೩೮೬-೩೮೮) ಕ್ರಿ. ಶ. ೧೬೭೮ ರಲ್ಲಿ ಪ್ರತಿಯಾದ 'ಸೂಕ್ತಿಸಂಗ್ರಹಟೀಕಾ' ಎಂಬ ಕೃತಿಯ ಅಂತ್ಯದಲ್ಲಿ 'ಲಿಖಿತಾ ಮುರಿಗಾ ಶಾಂತವೀರೇಶ ಶಿವಯೋಗಿ ಮುದೇ' ಎಂದಿದೆ. ವಿರೂಪಾಕ್ಷಾಂಕಿತದ 'ಹರಿಶ್ಚಂದ್ರ ಕಥೆ' ಶರಷಟ್ಟದಿ ಕೃತಿಯ ಅಂತ್ಯದ ಪುಷ್ಟಿಕಾ ಭಾಗದಲ್ಲಿ 'ಲಿಖಿತವ ಬರದರು ಮುರಿಗೆ ಶಾಂತವೀರಸ್ವಾಮಿಗಳು' ಎಂದಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ (ಮೈಸೂರು) ಸಂಗ್ರಹದಲ್ಲಿನ ಕೆ. ೧೧೫ನೆಯ ಓಲೆ ಕಟ್ಟನ್ನು 'ಶ್ರೀ ಗುರು ಶಾಂತವೀರೇಶ್ವರನ ಕೃಪಾಕಟಾಕ್ಷದಿಂದ' ಬರೆದಂತೆ ಅಂತ್ಯದಲ್ಲಿ ತಿಳಿಸಿದೆ. ಮಹಾಂತ ಸ್ವಾಮಿ ( ೧೭೧೪) ಕೃತ ಅಯ್ಯನವರ ನಾಂದ್ಯದಲ್ಲಿ, ಇವರನ್ನು ಕುರಿತು,  ಭುವನದಿ ಭವಹರನು ತಾನೊಂದು ರೂಪದಿ ಶಿವಲೋಕದಿಂದಿಳಿದ ಮುರಿಗೆಯ ಶಾಂತವೀರೇಶಾ ಎಂದು ಉಲ್ಲೇಖಿಸಿದೆ. ಕಪ್ಪಿನಂಜಯ್ಯನ ನಾಂದ್ಯದಲ್ಲಿಯೂ ಶಾಂತವೀರರ ಬಗೆಗೆ ಪ್ರಸ್ತಾಪ ಇದೆ. ಶಿವಲಿಂಗದೇವ (೧೭೦೦)-ನ ಸ್ವರವಚನದಲ್ಲಿ, ಶಾಂತವೀರಸ್ವಾಮಿಗಳನ್ನು ಮುರಿಗೆ ಕರಿಬಸವರಾಜೇಂದ್ರರೆಂದಿದೆ. ಸೋದೆ ಸದಾಶಿವರಾಜ ತಾನು ರಚಿಸಿರುವ 'ಗುರುಸಿದ್ದೇಶ್ವರ ಸ್ತೋತ್ರ'ದಲ್ಲಿ ಶಾಂತವೀರಸ್ವಾಮಿಗಳನ್ನು ಮುರಿಗೆ ಕರಿಬಸವೇಶರೆಂದು ಹೆಸರಿಸಿದ್ದಾನೆ. ಇದರಂತೆ ಅವನಿಂದ ರಚಿತವಾದ ಸ್ವರವಚನವೊಂದರಲ್ಲಿ ಕರಿಬಸವೇಶನೆಂದಿದೆ.

ಮುರಿಗೆ ಶಾಂತವೀರರ ಕಾಲ :

ಆರ್. ನರಸಿಂಹಾಚಾರ್ಯರು ಮುರಿಗೆ ಶಾಂತವೀರರ ಕಾಲದ ಬಗೆಗೆ 'ತೋಂಟದ ಸಿದ್ಧಲಿಂಗದೇವರ ಪ್ರಶಿಷ್ಯರಾದುದರಿಂದ ಇವರ ಕಾಲವು ಸುಮಾರು ೧೫೩೦ ಆಗಬಹುದು' ಎಂದಿದ್ದಾರೆ. ಅನಂತರ ಅವರೇ ಕವಿಚರಿತೆ ಸಂಪುಟದ ಪರಿಶಿಷ್ಟ ೨ ರಲ್ಲಿ 'ಸೋಮಶೇಖರ ಶಿವಯೋಗಿ (ಪು. ೫೨೭) ಕೊಟ್ಟಿರುವ ತೋಂಟದ ಸಿದ್ದಲಿಂಗನ ಶಿಷ್ಯ ಪರಂಪರೆಯ ಪ್ರಕಾರ ಮುರಿಗೆಯ ಶಾಂತವೀರರು ಆ ಗುರುವಿನಿಂದ ಆರನೆಯವನಾಗುತ್ತಾರೆ. ಇದು ನಿಜವಾಗಿದ್ದ ಪಕ್ಷದಲ್ಲಿ ಇವನ ಕಾಲವನ್ನು ಸುಮಾರು ಮೂವತ್ತು ವರುಷ ಈಚೆ ಹಾಕಬೇಕಾಗುತ್ತದೆ' ಎಂದಿದ್ದಾರೆ.(ಆರ್.‌ ನರಸಿಂಹಾಚಾರ್ಯ, ಕವಿಚರಿತೆ ಸಂ,೨, ಪು.ಸಂ.೨೧೨) ಪುನಃ ಕವಿಚರಿತೆಯ ತೃತೀಯ ಸಂಪುಟದಲ್ಲಿ(ಪು.ಸಂ.೨೧೨) ಇಮ್ಮಡಿ ಮುರಿಗೆಯಸ್ವಾಮಿಯ ಕಾಲದ ಬಗೆಗೆ ವಿವೇಚಿಸುತ್ತ 'ಕವಿಯು ಗುರುಸಿದ್ದ ತೋಂಟದ ಸಿದ್ದಲಿಂಗನ ಶಿಷ್ಯ ಪರಂಪರೆಯಲ್ಲಿ ಏಳನೆಯವರಾಗುವುದರಿಂದ ಇವರ ಕಾಲವು ಸುಮಾರು ೧೬೬೦ ಆಗಬಹುದು.... ಇದರಿಂದ ಗುರು ಮುರಿಗೆಯ ಶಾಂತವೀರ ಮುಂತಾದವರ ಕಾಲವನ್ನು ಯಥೋಚಿತವಾಗಿ ಈಚೆಗೆ ಹಾಕಬೇಕಾಗುತ್ತದೆ' ಎಂದಿದ್ದಾರೆ?” ಆದರೆ ನರಸಿಂಹಾಚಾರರು ನಿರ್ದಿಷ್ಟವಾಗಿ ಕಾಲವನ್ನು ಸೂಚಿಸಿಲ್ಲ.

   ಎಂ.ಎಸ್.ಬಸವರಾಜಯ್ಯನವರು ತಮ್ಮ ಲೇಖನವೊಂದರಲ್ಲಿ,  ಮುರಿಗೆ ಶಾಂತವೀರರ ಕಾಲದ ಬಗೆಗೆ, ಇಮ್ಮಡಿ ಮರುಘ ಗುರುಸಿದ್ಧದೇಶಿಕೇಂದ್ರರು ತಮ್ಮ ಕೃತಿಯಲ್ಲಿ ʻ ಸ್ವಭಾನು ಸಂವತ್ಸರ ಅಧಿಕ ಶ್ರಾವಣ ಶುದ್ಧ ಬಿದಿಗೆ ಸೋಮವಾರ ರಾತ್ರಿ ಮೂರುವರೆ ತಾಸಿನಲ್ಲಿ (ಅಂದರೆ ಕ್ರಿ. ಶ. ೫-೭-೧೭೦೩ ರಲ್ಲಿ) ಶ್ರೀಮುರುಘ ಶಾಂತವೀರದೇಶಿಕೇಂದ್ರರು ಶಿವಲಿಂಗದೊಳು ಬೆರದರೆಂದು ಸ್ಪಷ್ಟಪಡಿಸಿರುವರು.(ಎಂ.ಎಸ್. ಬಸವರಾಜಯ್ಯ, ಶ್ರೀ ಮುರುಘಾ ಶಾಂತವೀರದೇಶಿಕೇಂದ್ರ ಮಹಾಸ್ವಾಮಿಯವರು, ಗುರುಕುಲ, ಪು.೪೦೫)    ಈ ಹೇಳಿಕೆಯನ್ನು ಆಧರಿಸಿ, ಒಟ್ಟಿನಲ್ಲಿ ಇವರ ಜನನ ಕಾಲಮಾತ್ರ ನಮಗೆ ದೊರಕಿಲ್ಲವಾದರೂ ಶಿವಲಿಂಗ ದೊಳಗೆ ಬೆರೆತ ಕಾಲ ಸ್ಪಷ್ಟವಾಗಿ ಗೋಚರಿಸುವುದರಿಂದ, ಜನನಕಾಲ ಖಚಿತವಾಗುವವರೆಗೆ, ಇವರ ಕಾಲವನ್ನು ಸ್ಥೂಲವಾಗಿ ಕ್ರಿ. ಶ. ೧೬೫೬-೧೭೦೩ ಎಂದು ಸದ್ಯಕ್ಕೆ ನಿರ್ಧರಿಸಬಹುದು” ಎಂದಿದ್ದಾರೆ.(  ಇದನ್ನೇ ಎಸ್.ಶಿವಣ್ಣನವರು ಸ್ವೀಕರಿಸಿದ್ದಾರೆ. ಇನ್ನು ಕೆಲವು ವಿದ್ವಾಂಸರು ಕ್ರಿ.ಶ. ೧೬೪೦-೧೭೦೩ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಈ ಹೇಳಿಕೆಯನ್ನು ಪುಷ್ಠೀಕರಿಸುವ ಆಧಾರಗಳು ಲಭ್ಯವಿಲ್ಲ.

ಮುರಿಗೆ ಶಾಂತವೀರರನ್ನು ಕುರಿತ ಕೃತಿಗಳು

ಇವರನ್ನು ಕುರಿತು,ʻಮುರಿಗೆ ಸ್ವಾಮಿಗಳ ಯಕ್ಷಗಾನ, ಅಜ್ಞಾತ ಕೃತ 'ತರಳವೃತ್ತ'ಅಷ್ಟಕ ಶಾಂತವೀರಸ್ವಾಮಿಗಳ ಸ್ತುತಿ - ಮೂರು ವಾರ್ಧಕ ಷಟ್ಟದಿಗಳ ʻಗುರು ಮುರಿಗೇಂದ್ರ ಷಟ್ಟದಿ': ೨೫ ಕಂದಗಳ ಮುರಿಗೆ ಶಾಂತವೀರಸ್ವಾಮಿಗಳ ಸ್ತುತಿಯುಳ್ಳ ಟೀಕಾಸಹಿತ ಅಜ್ಞಾತಕೃತ 'ಮುರಿಗೆ ಶಾಂತವೀರೇಶ್ವರನ ಕಂದ': . ಮುರಿಗೆ ಶಾಂತವೀರರ ಅಂಕಿತನಾಮವನ್ನೇ ಸ್ವರವಚನಾಂಕಿತವಾಗಿ ಬಳಸಿಕೊಂಡು ಅಜ್ಞಾತ ಕೃತಿಕಾರನೊಬ್ಬ ರಚಿಸಿರುವ ಎರಡು ಸ್ವರ ವಚನಗಳು ಉಪಲಬ್ಧವಿವೆ.

    ಮುರುಘಾ ಸಂಪ್ರದಾಯದ ಮೂಲ ಕರ್ತೃಗಳಾದ ಮುರಿಗಾ ಶಾಂತವೀರರು ಚಿತ್ರದುರ್ಗ ಬೃಹನ್ಮಠದ ಪ್ರಥಮ ಪೀಠಾಧ್ಯಕ್ಷರು, ವೀರಶೈವ ಧರ್ಮನಿಷ್ಠರು, ಕನ್ನಡ-ಸಂಸ್ಕೃತ ಉಭಯಭಾಷಾಪಂಡಿತರು, ತತ್ವಸಾಹಿತ್ಯ ಸಿದ್ಧಾಂತ ನಿಷ್ಣಾತರು, ಅನುಭಾವಿಗಳು, ಸೃಜನಶೀಲ ಕವಿಗಳು ಆಗಿದ್ದು, ಒಟ್ಟು ಪ್ರಕಟಿತ ಮತ್ತು ಅಪ್ರಕಟಿತ ಕೃತಿಗಳನ್ನೊಳಗೊಂಡಂತೆ  ೧೭ ಕೃತಿಗಳನ್ನು ರಚಿಸಿದ್ದಾರೆ. 

ಮುರಿಗೆ ಶಾಂತವೀರ ಕೃತಿಗಳು:

ಆರ್. ನರಸಿಂಹಾಚಾರ್ಯರು ಶಾಂತವೀರರ ಹೆಸರಿನಲ್ಲಿ ಈ ಕೆಳಕಂಡ ೪ ಕೃತಿಗಳನ್ನು ಸೂಚಿಸಿದ್ದಾರೆ. 

೧. ಏಕೋನವಿಂಶತಿಪ್ರಬಂಧ

೨. ಪ್ರಭುಲಿಂಗದ ಕಂದ

೩. ವೈರಾಗ್ಯ ಷಟ್ಟದಿ

೪. ಶಿವಲಿಂಗಮಹಿಮಾ ಷಟ್ಟದಿ

ಅಲ್ಲದೆ  ಹಮ್ಮೀರ ಕಾವ್ಯ ಅಥವಾ 'ರಾಜೇಂದ್ರ ವಿಜಯ' ವನ್ನು ಮುರಿಗೆ ದೇಶಿಕನ ಕರ್ತೃತ್ವದಲ್ಲಿ ಹೆಸರಿಸಿದ್ದಾರೆ.

ಎಂ. ಎಸ್. ಬಸವರಾಜಯ್ಯನವರು ಈ ಮುಂದಿನ ಕೃತಿಗಳನ್ನು ಮುರಿಗೆಯ ಶಾಂತವೀರರದೆಂದು ಸೂಚಿಸಿದ್ದಾರೆ. 

೧. ಕಟ್ಟಿಗೆಹಳ್ಳಿಸ್ವಾಮಿಗಳ ತಾರಾವಳಿ 

೨. ನೀಲಾಂಬಿಕೆ ಲಲಿತಸ್ತೋತ್ರ 

೩. ಪಾರಿಜಾತ (ಭಾ.ಷ.)

೪. ಮನುರಾಜೇಂದ್ರನ ತಾರಾವಳಿ

೫. ಮುರಿಗೆಸ್ವಾಮಿಗಳ ಮುಕ್ತಿಪ್ರದೀಪಿಕೆ'

೬. ಮುರುಗೆಸ್ವಾಮಿಗಳ ವಚನ

೭. ಲಿಂಗಸಾವಧಾನ ಪ್ರಣವ ಸಂಬಂಧಿ ಸಮಾಧಿ ಕ್ರಿಯದ ಉದ್ದರಣೆ (ಪಟ್ಟದಿ)

(ಕವಿಚರಿತೆಕಾರರು ಈ ಕೃತಿಯನ್ನೇ 'ಮುರಿಗೆ ಸ್ವಾಮಿಗಳ ಸಮಾಧಿಕ್ರಿಯೆ' ಎಂದು ಹೆಸರಿಸಿದಂತಿದೆ.)

ಇದಲ್ಲದೆ ಮುರಿಗೆ ದೇಶಿಕನ ಹೆಸರಿನಲ್ಲಿ ಏಳು ಪದ್ಯಗಳನ್ನುಳ್ಳ (ಲಿಂ)ಗದ ಮಹಿಮೆ' ಎಂಬ ಕೃತಿ ಲಭ್ಯವಿದೆ.” 

  ಇವುಗಳಲ್ಲದೆ ಈ ಕೆಳಗಿನ ಕೃತಿಗಳೂ ಶಾಂತವೀರರು ರಚಿಸಿರ ಬಹುದೆಂದು ಜಿ.ಜಿ. ಮಂಜುನಾಥನ್‌ರವರು  ಅಭಿಪ್ರಾಯ ಪಡುತ್ತಾರೆ.  ಲಘುಕೃತಿಗಳನ್ನು ಶೋಧಿಸಿ ಸಂಪಾದಿಸಿ, ಪರಿಷ್ಕರಿಸಿ-ಪ್ರಕಟಿಸುವ ಕಾರ್ಯವು ನಡೆಯಬೇಕಾಗಿದೆ.

೧. ಶಿವಗಣ ಚಾರಿತ್ರ

3. ಶಿವಮಹತ್ವರಸಾರ ಶಿಖಾಮಣಿ ಸಂಗ್ರಹ ಶತಕ

೫. ನಂಜುಂಡ ಚಾರಿತ್ರ

೭. ಅಮ್ಮಮೈಯ ಚರಿತ

೨. ಸೌಂದರೇಶ್ವರ ಯಕ್ಷಗಾನ

೪. ಗಿರಿಜಾದೇವಿಯ ಸಂಕೀರ್ತನ

೬. ಮುಗ್ಧರ ಚಾರಿತ್ರ

೭.ಬಿಲ್ಲಮೇಶ್ವರ ತಾರಾವಳಿ     

 ಎಸ್.‌ ಶಿವಣ್ಣನವರು  ಈಗಾಗಲೇ ಬಿಡಿ ಬಿಡಿಯಾಗಿ ಬೇರೆಡೆಗಳಲ್ಲಿ ಪ್ರಕಟವಾಗಿದ್ದ ಹಮ್ಮೀರ ಕಾವ್ಯ, ಪ್ರಭುಲಿಂಗದ ಕಂದ, ಮನುರಾಜೇಂದ್ರನ  ತಾರಾವಳಿ, ಕಟ್ಟಿಗೆಯ ತಾರಾವಳಿ, ನೀಲಾಂಬಿಕ ಲಲಿತ ಪಂಚವಿಂಶತಿ, ಹಾಗೂ ಹಸ್ತಪ್ರತಿ ರೂಪದಲ್ಲಿದ್ದ ಇತರ ಲಘುಕೃತಿಗಳಾದ, ಶಬ್ದರತ್ನಾಕರ, ಏಕೋನವಿಂಶತಿ ಪದ, ಷಡ್ವಕ್ತ್ರ ಸ್ತೋತ್ರ,  ಮುರಿಗೆಸ್ವಾಮಿಗಳು ನಿರೂಪಿಸಿದ ನಾಂದ್ಯ,  ಲಘು ಕೃತಿಗಳನ್ನು   ಒಟ್ಟುಗೂಡಿಸಿ, ಮುರಿಗೆ ಶಾಂತವೀರರು  ಸ್ವಾಮಿಗಳ ಕೃತಿಗಳು  ಎಂಬ ಹೆಸರಿನಲ್ಲಿ ಸಂಪಾದಿಸಿ ಚಿತ್ರದುರ್ಗದ ಶ್ರೀ ಬೃಹನ್ಮಠ ಸಂಸ್ಥಾನದ ಮೂಲಕ  ೧೯೮೯ ರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಶಾಂತವೀರಸ್ವಾಮಿಗಳ ಒಂಬತ್ತು ಕನ್ನಡ ಕೃತಿ ಹಾಗೂ ಸಂಸ್ಕೃತದಲ್ಲಿನ ಒಂದು ಕಿರುಕೃತಿಯೂ ಇದ್ದು ಅವುಗಳ ವಿವರವಿಂತಿದೆ.

೧. ಹಮ್ಮೀರ ಕಾವ್ಯ: ಕೃತಿಗೆ 'ರಾಜೇಂದ್ರ ವಿಜಯ'ವೆಂಬ ಮತ್ತೊಂದು ಹೆಸರಿದೆ. ೯ ಪ್ರಕರಣಗಳಲ್ಲಿನ ಚಂಪೂಕೃತಿಯ ವಸ್ತು ಅಲ್ಲಮಪ್ರಭುಗಳ ಗುರುಗಳಾದ ಪಟ್ಟದಕಲ್ಲಿನ ಅನಿಮಿಷದೇವರ ಚರಿತೆ. ಇದೇ ವಿಷಯದ ಬಗೆಗೆ 'ತಾರಾವಳಿ'ಯೊಂದನ್ನು ರಚಿಸಿದ್ದಾರೆ.

೨. ಪ್ರಭುಲಿಂಗದ ಕಂದ: ೫೩ ಕಂದಗಳನ್ನುಳ್ಳ ಶಿವಯೋಗ ನಿರೂಪಣೆ ಕಂದದ ವಸ್ತು. ಪ್ರತಿ ಕಂದವೂ ಪ್ರಾಯಿಕವಾಗಿ ರಾಜಲಿಂಗ ಪ್ರಭುವೇ ಎಂದು ಮುಗಿಯುತ್ತದೆ. ಈ ಕೃತಿಗೆ ಪರ್ವತ ಶಿವಯೋಗಿಗಳ (೧೭೦೦) ಹಾಗೂ ಅಜ್ಞಾತ ಕೃತ ಟೀಕೆಗಳಿವೆ.

೩. ನೀಲಾಂಬಿಕಾ ಲಲಿತ ಪಂಚವಿಂಶತಿ: 'ನೀಲಮ್ಮನವರ ನಾಂದ್ಯ'ವೆಂಬ ಹೆಸರೂ ಇದೆ. ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆಯ ಸ್ತುತಿ ಕೃತಿವಸ್ತು. ಭಾಮಿನೀ-ವಾರ್ಧಕಗಳಲ್ಲಿನ ೨೫ ಷಟ್ಟದಿಗಳಿವೆ. ಇಲ್ಲಿನ ಕ್ರಮಾಂಕ ೧೮, ೧೯, ೨೪ ನೆಯ ವಾರ್ಧಕಗಳಿಗೆ ಅಜ್ಞಾತಕರ್ತೃ ಕೃತ ಟೀಕೆ ಇದೆ.

೪. ವೈರಾಗ್ಯ ಷಟ್ಟದಿ: ಇದು ಸಂಕಲನ ರೂಪದ ಕೃತಿಯಾಗಿದ್ದು ೧೦೧ ವಾರ್ಧಕ ಷಟ್ಟದಿಗಳಿವೆ. ಇಲ್ಲಿನ ೯೮ ಷಟ್ಟದಿಗಳು ಮುಖಬೋಳು ಸಿದ್ದರಾಮನ (೧೫೯೬) 'ಷಟ್ಸ್ಥಲ ತಿಲಕ' ದಲ್ಲಿರುವುದನ್ನು ಎಂ. ಎಸ್. ಬಸವರಾಜಯ್ಯನವರು ಗುರುತಿಸಿದ್ದಾರೆ.

೫. ಮನುರಾಜೇಂದ್ರನ ತಾರಾವಳಿ: 'ಮುರಿಗೆಯ ನಾಗರಪತಿಭರಣ' ಅಂಕಿತದಲ್ಲಿದೆ. ಪಲ್ಲವಿ, ೧೧ಪದ ಹಾಗೂ ಅಂತ್ಯದಲ್ಲಿ ೪ ಕಂದಗಳಿವೆ. ಈ ಕೃತಿಯ ವಸ್ತು 'ಹಮ್ಮೀರ ಕಾವ್ಯ'ದಲ್ಲಿನದೇ ಆಗಿದೆ.

೬. ಕಟ್ಟಿಗೆಯ ತಾರಾವಳಿ: 'ಮುರಿಗೆಯ ರಾಯ' ಅಂಕಿತದಲ್ಲಿ ಈ ಕೃತಿಯಲ್ಲಿ ಪಲ್ಲವಿ ಹಾಗೂ ೫ ಪದಗಳಿವೆ. ಕಟ್ಟಿಗೆಯ ವಿವಿಧೋಪಯೋಗಗಳ ವಿವರಣೆ ಕೃತಿಯ ವಸ್ತು. ಕಾಷ್ಠಪುರದ ಸಿದ್ಧಲಿಂಗ ಬಗೆಯ ಉಲ್ಲೇಖ ಗಮನಾರ್ಹ.

೭. ಮುರಿಗೆ ಸ್ವಾಮಿಗಳು ನಿರೂಪಿಸಿದ ನಾಂದ್ಯ: ಸಿರಿಗೆರಿಯ 'ಬೃಹನ್ಮಠ'ದ ಸಂಗ್ರಹದಲ್ಲಿ ಈ ಕೃತಿಯ ಬಗೆಗೆ 'ಮುರಿಗೆಯ ಶಾಂತವೀರಸ್ವಾಮಿಗಳು ನಿರೂಪಿಸಿದ' ಎಂದಿದೆ. ಇದು ಇಮ್ಮಡಿ ಗುರುಸಿದ್ದರ ಹೆಸರಿನಲ್ಲಿ ಈ ಹಿಂದೆ ೧೯೮೪ ರಲ್ಲಿ ಪ್ರಕಟವಾಗಿತ್ತು. ಇದರಲ್ಲಿ ೨೪ ವಾರ್ಧಕ, ಪರಿವರ್ಧಿನಿ, ಭಾಮಿನೀ ಷಟ್ಟದಿಗಳಿವೆ. ಅಜ್ಞಾತ ಕೃತ ಟೀಕೆಯೊಂದು ಲಭ್ಯವಿದೆ.

೮. ಶಬ್ದರತ್ನಾಕರ: ೧೮೮೩ ರಲ್ಲಿ ಬೆಂಗಳೂರಿನಿಂದ ತೋವಿನಕೆರೆ ರಾಯಣ್ಣ ಈ ಕೃತಿಯನ್ನು ಕರ್ತೃವಿನ ಹೆಸರಿಲ್ಲದೆ ಪ್ರಕಾಶಪಡಿಸಿದ್ದನು. ಗದುಗಿನ 'ತೋಂಟದಾರ್ಯ ಸಂಸ್ಥಾನ ಮಠದಲ್ಲಿ'ನ ಸಂಗ್ರಹದಲ್ಲಿನ 'ಶಬ್ದರತ್ನಾರಕ'ದ ಓಲೆ ಪ್ರತಿಯಲ್ಲಿ 'ಮುರಿಗೆ ಸ್ವಾಮಿಗಳು ಸೇರಿಸಿದ' ಎಂದಿದೆ. ಹೀಗಾಗಿ ಸಂಕಲನ ಪ್ರಕಾರಕ್ಕೆ ಸಂಬಂಧಿಸಿದೆ. ಕಂದಗಳಲ್ಲಿನ ಈ ಕಿರುಕೃತಿಯ ವಸ್ತು ಪದಗಳಿರುವ ನಾನಾರ್ಥಗಳನ್ನು ತಿಳಿಸುವುದೇ ಆಗಿದೆ.

೯. ಏಕೋನವಿಂಶತಿ ಪದ: ಕೃತಿಗೆ 'ಹತ್ತೊಂಬತ್ತು ಪದ'ವೆಂಬ ಹೆಸರೂ ಉಂಟು. ೨೧ ವಾರ್ಧಕ ಷಟ್ಟದಿಗಳಲ್ಲಿರುವ ಈ ಕೃತಿಯ ವಸ್ತು ವೀರಶೈವ ಸಿದ್ಧಾಂತದ ಶಾಸ್ತ್ರಭಾಗ ವಿವರಣೆ. ಕೃತಿಗೆ ಅಜ್ಞಾತ ಕರ್ತೃಕ ಟೀಕೆಯಿದೆ.

೧೦. ಷಡ್ಡಕ ಸ್ತೋತ್ರ: ಮುರಿಗೆ ಶಾಂತವೀರರ ಸಂಸ್ಕೃತ ಕೃತಿ. ೯ ವೃತ್ತಗಳಿವೆ. ಕೆಲವು ಹಸ್ತ ಪ್ರತಿಗಳಲ್ಲಿ ೭ ವೃತ್ತಗಳಿವೆ. ಈಶ್ವರನ ಆರು ಮುಖಗಳ ವರ್ಣನೆ ಸ್ತೋತ್ರದ ವಸ್ತು. 

ಒಟ್ಟಾರೆ  ಈವರೆಗಿನ ಶೋಧನೆಯಿಂದ ಮುರಿಗಾ ಶಾಂತವೀರರ ಒಟ್ಟು ೧೭ ಕೃತಿಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ೧೦ ಕೃತಿಗಳು ಪ್ರಕಟಗೊಂಡಿದ್ದು. ಉಳಿದ ೭ ಕೃತಿಗಳು ಹಸ್ತಪ್ರತಿಯಲ್ಲಿಯೇ ಉಳಿದಿವೆ.

�ಅಪ್ರಕಟಿತ ಕೃತಿಗಳು :

೧. ಪಾರಿಜಾತ

೨. ಮುರಿಗೆಸ್ವಾಮಿಗಳ ಮುಕ್ತಿ ಪ್ರದೀಪಿಕೆ

೩. ಮುರಿಗೆ ಸ್ವಾಮಿಗಳ ವಚನ (ಸ್ವರವಚನ)

೪. ಮುರಿಗೆಸ್ವಾಮಿಗಳ ಸಮಾಧಿಕ್ರಿಯೆ

೫. ಲಿಂಗಸಾವಧಾನ ಪ್ರಣವ ಸಂಬಂಧಿ ಸಮಾಧಿ ಕ್ರಿಯೆಯ ಉದ್ಧರಣೆ

೬ ಲಿಂಗದ ಮಹಿಮ

೭ ಎರ್ದೆಗೊಂತ ಪುರಾಣ

     ತಾರಾವಳಿ ಸಾಹಿತ್ಯವೆಂದರೆ ಕೇವಲ ಭಕ್ತಿಗಾಗಿ ಸೃಷ್ಟಿಗೊಂಡ ಸಾಹಿತ್ಯವಲ್ಲ.ಅಲ್ಲಿಯೂ ಐತಿಹಾಸಿಕ ಅಂಶಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ಆದರೆ ಇಲ್ಲಿ ವಸ್ತು ಐತಿಹಾಸಿಕವಾಗಿದ್ದರೂ, ವರ್ಣನೆ ಮಾತ್ರ ಅದೇರೀತಿ ಇರುತ್ತದೆ. ಅಂದರೆ ವರ್ಣನೆಗೆ ಇಲ್ಲಿಯೂ ಕೂಡಾ ಪ್ರಮುಖ ಸ್ಥಾನ ಪ್ರಾಪ್ತವಾಗಿರುತ್ತದೆ. ಯುದ್ಧವರ್ಣನೆ, ರಾಜನ ವರ್ಣನೆ, ಆ ಕಾಲದ ಸಾಮಾಜಿಕ ವರ್ಣನೆಗಳು ಇಲ್ಲಿ ಕಂಡು ಬರುತ್ತವೆ. ಇದಕ್ಕೆ ನಿದರ್ಶನವಾಗಿ ಇವರು ರಚಿಸಿರುವ  ಮನುರಾಜೇಂದ್ರ ತಾರಾವಳಿಯನ್ನು ಉದಾಹರಿಸ ಬಹುದಾಗಿದೆ. ಈ ತಾರಾವಳಿಯು  ಲಘುಕೃತಿಯಾಗಿದ್ದು,ಈಕೃತಿಯುಪ್ರಾರಂಭದಲ್ಲಿಯ,    ಸ್ತುತಿಸಲೆನ್ನಳವೆನಿಮ್ಮತಿಶಯಮಹಿಮೆ(ಯ)ಕ್ಷಿತಿವರಹಮ್ಮೀರರಾಜೇಂದ್ರತೇಜನೆ”

ಎಂಬ ಪಲ್ಲವಿಯೊಂದಿಗೆ ಪ್ರಾರಂಭವಾಗಿ ನಂತರದಲ್ಲಿ ೧೧ ನುಡಿಪದ ಹಾಗೂ ಅಂತ್ಯದಲ್ಲಿ ೪ ಕಂದಪದ್ಯಗಳನ್ನು ಒಳಗೊಂಡಿದೆ. ಈ ತಾರಾವಳಿಯು ʻಮುರಿಗೆಯ ನಾಗರಪತಿಭರಣ' ಅಂಕಿತದಲ್ಲಿದೆ. ಈ ಕೃತಿಯ ವಸ್ತು  ಇವರ ಮತ್ತೊಂದು ಚಂಪೂಕೃತಿಯಾದ 'ಹಮ್ಮೀರ ಕಾವ್ಯ'ದಲ್ಲಿನದೇ ಆಗಿದೆ. ಈಗಾಗಲೇ  ಚಂಪೂ ಸಾಹಿತ್ಯ ಪ್ರಕಾರದಲ್ಲಿ ಈ ವಸ್ತುವನ್ನು ಕುರಿತು ಕಾವ್ಯ ರಚಿಸಿದ್ದರೂ ತಾರಾವಳಿ ಸಾಹಿತ್ಯ ಪ್ರಕಾರದಲ್ಲಿ ಹಾಡುಗಬ್ಬರೂಪದಲ್ಲಿ ಮತ್ತೊಮ್ಮೆ ರಚಿಸಲು ಕಾರಣವಾದರೂ ಏನು ಎಂದೆನಿಸುತ್ತದೆ. ಬಹುಶಃ ಚಂಪೂ ರೂಪದಲ್ಲಿರುವ ಅಲ್ಲಮಪ್ರಭುಗಳ ಗುರುಗಳಾದ ಅನಿಮಿಷದೇವರ ವಿವರ ಹಾಗೂ ಅಲ್ಲಮ ಪ್ರಭುವಿನ ಲೀಲೆಗಳು ಜನಸಾಮಾನ್ಯರಿಗೆ ನಿಲುಕಲಾರವು ಎಂದು ಪರಿಗಣಿಸಿ ದೇಸಿರೂಪದಲ್ಲಿ ಜನತೆಗೆ ತಲುಪಿಸುವ ಸಲುವಾಗಿ ತಾರಾವಳಿ ರೂಪದಲ್ಲಿ  ಅದೇ ವಿಷಯವನ್ನು ರಚಿಸಿರ ಬಹುದು ಎಂದೆನಿಸುತ್ತದೆ.

    ಈ ತಾರಾವಳಿಯ ಹನ್ನೊಂದು ನುಡಿಗಳಲ್ಲಿ, ಪ್ರಣವಾವತಾರನಾದ ಶ್ರೀ ಮನುರಾಜನ ಸ್ಥೂಲ ಪರಿಚಯ, ಪ್ರಣವಾವತಾರ ಹಮ್ಮೀರರಾಜನ ಅವಿರ್ಭಾವ, ಗೌರೀ-ಹಮ್ಮೀರ ರಾಜರ ವೈಭವದ ವಿವಾಹ,  ಹಮ್ಮೀರನ ಮೇಲೆ ಚಂಡಕೋದಂಡನು ದಂಡೆತ್ತಿ ಹೋದುದು, ಹಮ್ಮೀರನು ಕೋದಂಡನ ಸೈನ್ಯವನ್ನು ನಡುಗಿಸಿದುದು, ಹಮ್ಮೀರ ಚಂಡಕೋದಂಡರು ಗೈದ ಮಹಾಯುದ್ಧ, ಹಮ್ಮೀರ ರಾಜನ ವನಮಹೋತ್ಸವ,ಕ್ರೂರ ಮೃಗಗಳ ಹಾವಳಿಯನ್ನು ತಡೆಗಟ್ಟಲು ಕಾಲ ವಿಕ್ರಮನಾಯಕನಿಗೆ ಬೇಂಟೆಯಾಡಲು ಆಜ್ಞೆಯಿತ್ತುದು, ಹಮ್ಮೀರ ರಾಜನೂ ತಾನೂ ಶಿವಸೂತ್ರವಿಡಿದು ಬೇಟೆಯಾಡುವ ವನಕ್ಕೆ ವೈಹಾಳಿ ಹೊರಟುದು, ಹಮ್ಮೀರ ರಾಜನ ಕಡು ಶಿವಲಿಂಗನಿಷ್ಠೆ ಹಾಗೂ ಉಂಟಾದ ಕಡುದಾಹ, ಲಿಂಗಸ್ಥಾನ ಹುಡುಕಲು ಚರರ ಸುತ್ತಾಟ, ಶ್ರೀ ಗುರುವೃಷಭೇಶನು ಭಕ್ತಿಗೆ ಮೆಚ್ಚಿ ಮನುರಾಜನಿಗೆ ದೀಕ್ಷೆಯಿತ್ತು ಕರಸ್ಥಲಕ್ಕೆ ಲಿಂಗವನ್ನನುಗ್ರಹಿಸಿ ಉಪದೇಶವಿತ್ತು ಬಯಲಾದುದು, ಶ್ರೀ ಗುರುವಿನಾಣತಿಯಂತೆ ಇಷ್ಟಲಿಂಗದಲ್ಲಿ ಅನುಮಿಷ ದೃಷ್ಟಿಯಿಟ್ಟು ಶಿವಯೋಗ ಮಗ್ನನಾಗಲು ಆತನ ಮೇಲೆಗುಡಿಗಟ್ಟಿ ಆ ಗುಡಿಯನ್ನು ನಿಕ್ಷೇಪಿಸಿದುದು, ಆ ನಿಕ್ಷೇಪಿಸಿದ ಗುಡಿಯಿದ್ದ ಜಾಗದಲ್ಲಿ ಗೊಗ್ಗಯ್ಯನು ಹೂದೋಟ ಮಾಡಿಕೊಂಡಿದ್ದುದು, ಪ್ರಭುವಿನ ಸಂಕ್ಷಿಪ್ತ ಪರಿಚಯ, ಅನಿಮಿಷ ಕ್ಷೇತ್ರಕ್ಕೆ ಪ್ರಭುವಿನಾಗಮನ, ಗೊಗ್ಗಯ್ಯನಿಂದ ಅಗೆಸಿ ಆ ಗುಡಿಯ ದರ್ಶನ, ಗೊಗ್ಗಯ್ಯನ ವಿಸ್ಮಯ, ಅನಿಮಿಷನ ಇಷ್ಟಲಿಂಗವನ್ನೇ ಪ್ರಭುವು ತಮ್ಮ ಕರಸ್ಥಲದಲ್ಲಿ ಧರಿಸಿ ಹೊರಟುದು, ಆಗ ಗೊಗ್ಗಯ್ಯನು ತಡೆಗಟ್ಟಿ ವಿವರ ಕೇಳಿದುದು, ಗೊಗ್ಗಯ್ಯನಿಗೆ ಶ್ರೀ ಪ್ರಭುವು ಅನಿಮಿಷ(ಮನುರಾಜನ) ವಿಚಾರವನ್ನು ವಿವರಿಸಿ ಬೋಧಿಸಿದುದು, ತನ್ನ ಗುರುವಾದ ಅನಿಮಿಷನ ಪೂರ್ವ ಚರಿತ್ರೆಯನ್ನು ಪ್ರಭುವು ವಿವರಿಸಿದುದು, ಮುಂದೆ ಗೊಗ್ಗಯ್ಯನು ಕೇಳಿದುದುಕ್ಕೆಲ್ಲಾ ಉತ್ತರವನ್ನು ಕೊಟ್ಟು, ವಿವರಿಸಿ, ಪ್ರಭುವು ತಡಮಾಡದೆ ಮುಂದಕ್ಕೆ ಪಾದ ಬೆಳಸಿದ್ದು, ಮುಕ್ತಾಯಕ್ಕನಿಗೆ ಬೋಧೆ ನೀಡಿದುದು, ಸಿದ್ಧರಾಮನಿಗೆ ಕಲ್ಯಾಣದಲ್ಲಿ ದೀಕ್ಷೆ ಕೊಡಿಸಿದುದು, ಕೊನೆಯಲ್ಲಿ ಹಮ್ಮೀರರಾಜನ ಮಹಿಮೆ ಇತ್ಯಾದಿ ವಿವರಗಳನ್ನು ಸಂಕ್ಷಿಪ್ತವಾಗಿ  ಮುರಿಗಾ ಶಾಂತವೀರರು ಈ ತಾರಾವಳಿ ಕೃತಿಯಲ್ಲಿ ವಿವರಿಸಿದ್ದಾರೆ.

    ಮುರಿಗೆಯ ಶಾಂತವೀರರ ಇನ್ನೊಂದು ಕಾವ್ಯವಾದ ಹಮ್ಮೀರ ಕಾವ್ಯದ ವಸ್ತುವನ್ನೇ ಒಳಗೊಂಡಿರುವ 'ಮನುರಾಜೇಂದ್ರ ತಾರಾವಳಿ'ಯಲ್ಲಿ ಹಮ್ಮೀರ ಬಿರುದಾಂಕಿತ ಮನುರಾಜ ಅರಸನ ಭಕ್ತಿಯ ಚರಿತ್ರೆಯನ್ನು ರೂಪಿಸಿದ್ದಾರೆ. ಈ ಕೃತಿಯಲ್ಲಿ ಮನುರಾಜೇಂದ್ರನ ಬದುಕಿನ ಮುಖ್ಯ ಘಟನಾವಳಿಯನ್ನು ಎರಡು ನೆಲೆಗಳಲ್ಲಿ ಗುರುತಿಸ ಬಹುದಾಗಿದೆ. ೧. ದ್ವಾಪರದಲ್ಲಿ ಹಮ್ಮೀರ ರಾಜನಾಗಿದ್ದ ಈ ಮಹಿಮನು ಶಿವನಲ್ಲಿ ಐಕ್ಯನಾದನು. ೨. ಅನಿಮಿಷದೇವನಾಗಿದ್ದ ಇವನ ಕರಸ್ಥಲದ ಲಿಂಗವನ್ನು ಪ್ರಭುದೇವನು ತನ್ನ ಕರಸ್ಥಲಕ್ಕೆ ತೆಗೆದುಕೊಳ್ಳಲು ಕೈಲಾಸಕ್ಕೆ ಹೋದನು, ಅಲ್ಲಿ ಗಣಕುಲದ ನಡುವೆ ಶೋಭಿಸಿದನು ಎಂದು ಹೇಳಲಾಗಿದೆ. ಅಂದರೆ ಈ ತಾರಾವಳಿಯ ಪೂರ್ವಾರ್ಧದಕತೆ ಹಮ್ಮೀರನದ್ದಾದರೆ, ನಂತರದ ಉತ್ತರಾರ್ಧದ ಕಥೆಯು ಅನಿಮಿಷನಿಂದ ಲಿಂಗವನ್ನು ಪಡೆದು ಲೋಕಸಂಚಾರ ಕೈಗೊಂಡು ಲೋಕವನ್ನುಧ್ಧರಿಸಿದ ಅಲ್ಲಮಪ್ರಭುವಿನ ಕಥೆಯಾಗುತ್ತದೆ. ಕೊನೆಯದರಲ್ಲಿ ಇದನ್ನು ಬರೆದು ಓದಿದರೆ ಪರಶಿವನಲ್ಲಿ ಬೆರೆದು ನಿತ್ಯಪದವಿಯನ್ನು ಹೊಂದುವುದು ಸತ್ಯವೆಂದಿರುವನು. ಈ ತಾರಾವಳಿಯ ಪಲ್ಲವಿಯಲ್ಲಿ ತೇಜೋವಂತನಾದ ಹಮ್ಮೀರ ರಾಜೇಂದ್ರಗೆ ನಿನ್ನ ಮಹಿಮೆಯನ್ನು ಸ್ತುತಿಸಲು ನನ್ನಿಂದ ಸಾಧ್ಯವೆ? ಎಂದು ಕವಿ ಶಾಂತವೀರನು ಉದ್ಧರಿಸಿರುವನು.       

    ಮೊದಲನೆಯ ನುಡಿಯಲ್ಲಿ ಪಟ್ಟದಕಲ್ಲೆನ್ನುವ ನಗರವನ್ನಾಳುವ ನವನಂದನರೂ, ದಶಗುಪ್ತರಾಯರೂ, ವಿಂಶತಿ ಮೌರ್ಯರಾಯರೂ, ಸಪ್ತವಿಂಶತಿರಾಜೇಂದ್ರರೂ ಮತ್ತು ವಿಂಶತಿಚಾಳುಕ್ಯರಾಯರೂ ಆಯಾ ರಾಜವಂಶೋದ್ಧಾರಕರಾಗಿ ತ್ರೈಲೋಕ್ಯ ಚೂಡಾಮಣಿರಾಯ ಹಾಗೂ ಅವನ ಪಟ್ಟದರಾಣಿ ಮಹಾದೇವಿಯಮ್ಮನೂ ನಿಷ್ಠೆಯಿಂದ ಪ್ರಸಿದ್ಧರಾಗಿರುವರು. ಆ ಪಟ್ಟದಕಲ್ಲನ್ನು ಮಹಾಶೂರನಾದ ತ್ರೈಲೋಕ್ಯ ಚೂಡಾಮಣಿ ಮಾರ್ಕಂಡೇಯ ಪುರಾಣವನ್ನು ಕೇಳಿ ಸತ್ಪುತ್ರನಿಲ್ಲದಿದ್ದರೆ ಸದ್ಗತಿಯಿಲ್ಲವೆಂದು ತಿಳಿದು'ಬಟ್ಟಬಯಲ ಪರಶಿವ'ನನ್ನು ಧ್ಯಾನಿಸಿದರು. ಶಿವನು ಅವರ ಧ್ಯಾನಕ್ಕೆ ಪ್ರತ್ಯಕ್ಷನಾಗಿ ನಿನ್ನಿಷ್ಟಾರ್ಥವನ್ನು ಕೊಡುವೆನು, ಅಯೋನಿಜನಾದ ಕಾರಣಿಕಪುತ್ರನೊಬ್ಬನನ್ನು ಅನುಗ್ರಹಿಸುವನೆಂದು ಹೇಳಿ ಅದೃಶ್ಯನಾಗುವನು. 

        ಎರಡನೆಯ ನುಡಿಯಲ್ಲಿ ತ್ರೈಲೋಕ್ಯಚೂಡಾಮಣಿ ಮತ್ತು ಮಹಾದೇವಿಯರು ಅರಮನೆಯಲ್ಲಿ ಮಂಚದಲ್ಲಿ ಸ್ಥಿರಚಿತ್ತದಿಂದ ಶಿವಯೋಗ ನಿದ್ರಾಮುದ್ರಾವಸ್ಥೆಯಲ್ಲಿರುವಾಗ ಓಂಕಾರವೇ ಸುತನಾಗಿ ಅವತರಿಸಿ ಅವರ ಮುಂದೆ ಆಡುತ್ತಿತ್ತು. ಶಿವನ ಮಾತನ್ನು ಅವರು ನೆನೆದು ದಾನಧರ್ಮಾದಿಗಳನ್ನು ಮಾಡಿ ಮಗುವನ್ನು ರತ್ನಖಚಿತವಾದ ತೊಟ್ಟಿಲಲ್ಲಿಟ್ಟು ತರುಣಿಯರೊಂದಿಗೆ ಜೋಗುಳವಾಡಿ ಧುರವೀರ ಹಮ್ಮೀರರಾಜನೆಂದು ನಾಮಕರಣ ಮಾಡಿದರು. ಬಾಲ್ಯದಲ್ಲಿಯೇ ಹಮ್ಮೀರರಾಜನು ಸಕಲ ಶಾಸ್ತ್ರಗಳನ್ನು ಆನೆ ಕುದುರೆಗಳನ್ನು ಏರುವ ಸಾಹಸವಿದ್ಯೆಯನ್ನು ಕಲಿತನು. ಮಹಾರಾಜನು ಮಗನಿಗೆ ಪಟ್ಟವನ್ನು ಕಟ್ಟಿ ಶಿವನನ್ನು ಸ್ಮರಿಸುತ್ತ ಕಾಲ ಕಳೆಯುತ್ತಿರಲು, ಹಮ್ಮೀರನ ಪ್ರಸಿದ್ಧಿಯನ್ನು ಕೇಳಿ ಪಕ್ಕದ ರಾಜ ಕಾಂಭೋಜನು ತನ್ನ ಮಗಳು ಗೌರಿಯನ್ನು ವಿವಾಹಮಾಡಿಕೊಟ್ಟನು.

   ಮೂರನೆಯ ನುಡಿಯಲ್ಲಿ ಈ ದಂಪತಿಗಳಿಗೆ ಕಾಂಭೋಜನ ಪತ್ನಿ ಹಾಗೂ ಸುತ್ತಣ ೫೬ ದೇಶಗಳ ದೊರೆಗಳ ಪತ್ನಿಯರು ಮುತ್ತಿನಾರತಿ ಬೆಳಗಿದರು. ನವದಂಪತಿಗಳನ್ನು ಮನೋಹರವಾದ ಮಂಟಪದಲ್ಲಿ ಕುಳ್ಳಿರಿಸಿ ನಾಟ್ಯವೇರ್ಪಡಿಸಿದರು. ತೆತ್ತಿಗರೂ ಆಚಾರ್ಯರೂ ಎಲ್ಲರೂ ಸೇರಿ ನೂತನ ದಂಪತಿಗಳ ನೆತ್ತಿಯ ಮೇಲೆ ಸೇಸೆ (ತಂಡು ಲಾಕ್ಷತೆ) ತಳಿದು ಶಿವ ಕೃಪೆಯಿಂದ ನಿತ್ಯರಾಗಿರೆಂದು ಹಾರೈಸಿದರು ಎಂದು ಆಶೀರ್ವದಿಸಿದರು. ಮಂತ್ರರಾಜನು ಸತ್ಯದಿಂದ ರಾಜ್ಯವನ್ನಾಳುತ್ತಲಿದ್ದನು. ಈತನ ಆಳ್ವಿಕೆಗೆ ಅಸೂಯೆಗೊಂಡ ಗರ್ವಿಷ್ಠನಾದ ಚಂಡಕೋದಂಡನು ಹಮ್ಮೀರನ ಮೇಲೆ ದಂಡೆತ್ತಿ ಹೋಗಬಯಸಿ ತನ್ನ ತಲೆಗೆ ತಾನೇ ಕತ್ತಿಯನ್ನು ಹಿಡಿದುಕೊಂಡು ಮೃತ್ಯುವನ್ನು ತಂದುಕೊಂಡನು. 

ನಾಲ್ಕನೆಯ ನುಡಿಯಲ್ಲಿ ದಿಂಡೆಯತನದಿಂದ ಚಂಡಕೋದಂಡನು ಸೇನಾಪತಿ ವೀರಜಂಭನನ್ನೂ, ಚಂದ್ರಬುದ್ಧನೆಂಬ ಮಂತ್ರಿಯನ್ನೂ, ಕೊಂಡೆಕುತರ್ಕದ ಮಂಡಲಪತಿಗಳನ್ನೂ, ಹಿಂಡುಹಿಂಡು ಮನ್ನೆಯರನ್ನೂ ಮತ್ತು ಚತುರಂಗಸೇನೆಯನ್ನೂ ತೆಗೆದುಕೊಂಡು ಹಮ್ಮೀರನಮೇಲೆ ದಾಳಿಮಾಡಲು ತುರವಿಗುಡ್ಡಕ್ಕೆ ಮುತ್ತಿಗೆ ಹಾಕಿದನು. ಈ ಮುತ್ತಿಗೆಯನ್ನು ಕಂಡವರು ತಿಳಿಸಲು, ಹಮ್ಮೀರರಾಜನು ವಿಚಾರವೆಲ್ಲವ ಕೇಳಿ, ಕನಲಿ, ಖಡ್ಗವನ್ನು ಹಿಡಿದು, ಹಲ್ಲಲ್ಲು ಕಡಿಯುತ್ತಾ ದಂಡನಾಯಕ ವಿಕ್ರಮ ಕೌಜೆಯನ್ನು ಕರೆದು, ದಂಡು ಕೂಡಿಸಿಕೊಂಡು ನಡೆಯೆಂದು ಅಣತಿಯಿತ್ತು, ತಾನೂ ಕುದುರೆಯೇರಿ ಧಾಳಿಯನ್ನು ನಿರ್ಮೂಲನಗೊಳಿಸಲು ಚಂಡನ ಹೃದಯ ತಲ್ಲಣ ಗೊಳ್ಳುವ ರೀತಿಯಲ್ಲಿ ಪ್ರತಿಧಾಳಿಗೆ ಸಿದ್ದನಾಗಿ, ಗಂಡುಗಲಿಗಳಾದ ರಾಯರಾವುತರಿಗೆ ಶಿರಸ್ತ್ರಾಣ - ಪಾಗು - ಪಟ್ಟ ಪೀತಾಂಬರ ಮುಂತಾಗಿ ಖಿಲ್ಲತ್ತುಗಳನ್ನು ಹರ್ಷದಿಂದಿತ್ತು ಮನ್ನಣೆ ಮಾಡಿದನು. ಅವರೆಲ್ಲರೂ ಹಮ್ಮೀರರಾಜರನೊಡಗೂಡಿ ದಂಡೆತ್ತಿ ನಡೆದರು. ಸಮರ ಭೇರಿಯನ್ನು ಮೊಳಗಿಸುತ್ತಾ ಚಂಡಕೋದಂಡನ ಸೈನ್ಯ ವನ್ನೂ ಆತನನ್ನೂ ಮುತ್ತಿಗೆ ಹಾಕಿ ನಡುಗಿಸಿ ಬಿಟ್ಟರು.ಹಮ್ಮೀರರಾಜನು ಚಂಡಕೋದಂಡನ ಮೇಲೆ ಸೈನ್ಯದೊಂದಿಗೆ ಏರಿಹೋದನು. ಹಮ್ಮೀರನು ಚಂಡಕೋದಂಡನನ್ನು ಸೋಲಿಸಿ, ಮರೆಹೊಕ್ಕವರನು ಬಿಟ್ಟುಮಲೆತವರನ್ನು ಸಂಹರಿಸಿ ತನ್ನ ಹಮ್ಮೀರನ ಗರಿಗೆ ಹಿಂತಿರುಗಿದನು.

 ಐದನೆಯ ನುಡಿಯಲ್ಲಿ,  ಹೀಗಿರಲು ವನಪಾಲನು ಬಂದು ಉದ್ಯಾನವನವನ್ನು ನೋಡಿ ಆನಂದಿಸಲು ದೊರೆಗೆ ಆಹ್ವಾನ ನೀಡುವನು. ಮಂಗಳವಾದ್ಯಗಳೊಂದಿಗೆ ಪತ್ನಿಸಮೇತನಾಗಿ ಉಪವನವನ್ನು ಪ್ರವೇಶಿಸಿ, ಅಲ್ಲಿನ ಕೊಳದಲ್ಲಿ ಈಜಾಡಿ ಎಲ್ಲರೂ ಸಾಕೆನ್ನಲು ಸೋಪಾನ ಹತ್ತಿ ಮಂಟಪಕ್ಕೆ ಬಂದು ಹೆಂಗಳೆಯರಿಗೆ ಪಟ್ಟಾವಳಿ ಮುಂತಾದ ಶ್ರೇಷ್ಠ ವಸ್ತುವನ್ನಿತ್ತು ಗೌರವಿಸಿ, ಶಿವಪೂಜೆಮಾಡಿ ತನ್ನ ನಗರಕ್ಕೆ ಹಿಂತಿರುಗಿ ಸುಖದಿಂದಿದ್ದನು. 

   ಆರನೆಯ ನುಡಿಯಲ್ಲಿ ಕಾಲವಿಕ್ರಮನಾಯಕನು ಬಂದು, ಕಾಡಿನಲ್ಲಿ ಕ್ರೂರ ಮೃಗಗಳ ಕಾಟದಿಂದ ಜನರು ಹೆದರಿರುವರೆಂದು ವಿನಂತಿಸುತ್ತ ಆನೆ ಸಿಂಹಗಳ ಮಸ್ತಕಸ್ಥ ಮುತ್ತು ರತ್ನಗಳನ್ನು ಮುಂದಿಟ್ಟು ಬೇಟೆಗೆ ಆಹ್ವಾನನೀಡುವನು. ಹಮ್ಮೀರನು ಅದಕ್ಕೆ ಒಪ್ಪಿಗೆ ಕೊಟ್ಟು ಶಿವಸೂತ್ರವಿಡಿದು ಬೇಟೆಯಾಡಲು ವನಕ್ಕೆ ಹೊರಟನು. ಕೂಡಲೇ ತಾನೂ ಚತುರಂಗ ಸೈನ್ಯ ಸಮೇತನಾಗಿ ಕುದುರೆಯೇರಿ ಪಟ್ಟಣದಿಂದ ವೈಹಾಳಿಗೆ ಹೊರಟು ಅವನು ವೈಹಾಳಿಯಲ್ಲಿ ಬೇಡರ ಪಡೆಯಿದ್ದ ನದೀತೀರವನ್ನು ನೋಡುತ್ತ ಬನವಸೆಗೆ ಮೂಡಣದಿಕ್ಕಿನ ಪ್ರಚುರ ಪರ್ವತ ಪ್ರದೇಶದ ತಪ್ಪಲು ಪ್ರಾಂತವನ್ನು ಪ್ರವೇಶಿಸಿದನು. ಕಾಡಿನಲ್ಲಿ ಪಯಣಿಸುವಾಗ ಬಾಯಾರಿಕೆಯಾದರೂ ಲಿಂಗಾರ್ಚನೆಗೆ ಸರಿಯಾದ ಲಿಂಗತಾಣ ದೊರೆಯದಿರಲು ಕಡುದಾಹವನ್ನು ಸಹಿಸಿಕೊಂಡನು. ಆಗ ಪರಿಚಾರಕರು ಮುಂದೆ ಬಂದು ಈ ಕಾಡಿನಲ್ಲೇಕೆ ಲಿಂಗಪೂಜಾದಿ ಸಂಕಲ್ಪವೆನ್ನುವರು. ರಾಜನು ಅವರಮೇಲೆ ಮುನಿಸುಗೊಂಡು ಶಿವಾಗಮದ ಪ್ರಕಾರ ಲಿಂಗಪೂಜೆಯಿಲ್ಲದೆ ಜಲಪಾನವನ್ನೂ ಮಾಡಲಾಗದೆನ್ನುವನು. 

    ಏಳನೆಯ ಮತ್ತು ಎಂಟನೆಯ ನುಡಿಯಲ್ಲಿ ಲಿಂಗಸ್ಥಾನವನ್ನು ಹುಡುಕಲು ಚರರು ಸುತ್ತಾಡುವರು. ಇದನ್ನು ಕೇಳಿದವರು ನಾಲ್ದೆಸೆಯಲ್ಲಿ ಲಿಂಗವಿರ್ಪ ತಾಣವನ್ನು ಪತ್ತೆಮಾಡಿ ಕೊಂಡು ಬರಲು ಸುತ್ತಿ, ಸುಳಿದಾಡಿ, ಎಲ್ಲಿಯೂ ಕಾಣದೇ ಒಡೆಯನಿಗೆ ಸತ್ಯಾಂಶವನನ್ನರುಹಿ ಚಿಂತಾಕ್ರಾಂತರಾಗಿದ್ದರು. ಅಷ್ಟರಲ್ಲಿ ಬಡಗಣ ದಿಕ್ಕಿನಲ್ಲಿ ಲಿಂಗವಿರ್ಪ ತಾಣವನ್ನು ಹುಡುಕಲು ಹೋದವರೊಳಗೋರ್ವನು ಬಂದು ಅಡ್ಡ ಬಿದ್ದು ಪ್ರಭೋ ! ಅಲ್ಲೊಂದು ಮೃಡನ ವಾಹನವಾದ ಗೂಳಿಯೊಂದಿದ್ದು, ಅದರ ಬಲದೊಡೆಯ ಮೇಲೆ ಲಿಂಗಮುದ್ರೆಯ ಗುರುತಿದೆ. ಇದನ್ನು ಬಿಟ್ಟಾವ ಲಿಂಗತಾಣಗಳೂ ಕಾಣಬರಲಿಲ್ಲ ಎಂದನು.

    ರಾಜನು ಸಡಗರದಿಂದ ಲಿಂಗಮುದ್ರೆಯಿರುವ ಗೂಳಿಯ ಬಳಿಗೆ ಹೋಗಿ ನಿಂತು ನೋಡುತ್ತಿರಲು ಆ ಗೂಳಿಯು ತನ್ನ ನಾಲಗೆಯನ್ನು ಚಾಚಿ ಅದರ ಮೇಲೆ ಲಿಂಗವನ್ನು ಮೂಡಿಸಿ ತೋರಿಸಿತು. ರಾಜನು ಅದನ್ನು ಕಣ್ಣಾರೆ ಕಂಡು ಮನವಾರೆ ಹಸ್ತವಂ ನೀಡಿ ಪೂಜಿಸುತ್ತಿರಲು ಆ ನಾಲಗೆಯನ್ನು ಹಿಂದಕ್ಕೆ ಸೆಳೆದುಕೊಂಡೊಡನೆ ರಾಯನು ಪರವಶನಾದನು.

    ವೃಷಭೇಂದ್ರನು ಆಚಾರ್ಯನಾಗಿ ಮನುರಾಜೇಂದ್ರನಿಗೆ ಶ್ರೀಗುರು ನಂದಿರಾಯನು ಶುದ್ಧ ಪ್ರದೇಶದಲ್ಲಿ ಪಂಚಕಲಶಗಳನ್ನು ಹೂಡಿ ದರ್ಭೆ-ಪತ್ರೆ-ಕರಿಕೆ-ಮಾಂದಳಿರು-ಗಾಂಧಾರಿ ನಿರ್ಗುಂಡಿ-ಗಿರಿಜೊತ ಮತ್ತು ಪಂಚ ವರ್ಣದ ಪುಷ್ಪಗಳನ್ನೆಲ್ಲಾ ಅಳವಡಿಸಿ ಕಲಶಾರ್ಚನೆ ಮಾಡಿ ಸುವರ್ಣಕಾಣಿಕೆಯಿತ್ತು. ಶಿಷ್ಯನ (ಮನುರಾಜನ) ಮಸ್ತಕದ ಮೇಲೆ ತನ್ನ ಪವಿತ್ರ ಹಸ್ತವನ್ನಿರಿಸಿ ಶಿವಪಂಚಾಕ್ಷರಿ ಮಂತ್ರವನ್ನು ಕಿವಿಯಲ್ಲಿ ಉಪದೇಶಿಸಿ ದೀಕ್ಷೆಯನ್ನಿತ್ತು ಅವನ ಕರಸ್ಥಲಕ್ಕೆ ಲಿಂಗವನ್ನು ಅನುಗ್ರಹಿಸಿ ಉಪದೇಶವಿತ್ತು ನೋಡುವುದೆಂದಾಣತಿಯಿತ್ತು ಕೂಡಲೇ  ಬಯಲಾಯಿತು. ಶ್ರೀಗುರುವಿನ ಆಜ್ಞೆಯಂತ ಅರಬಿರಿದ ಅನಿಮಿಷ ದೃಷ್ಟಿಯಿಂದ ರಾಜನು ಲಿಂಗವನ್ನು ನೋಡುತ್ತ, ಅದನ್ನು ಧ್ಯಾನದಿಂದ ಹೃದಯಕಮಲಕ್ಕೆ ಒಯ್ದು ಚಿತ್ರದಿಂದ ಅರಿದು ನಿರ್ಗುಣಪೂಜೆ ಮಾಡುತ್ತಿರುವುದನ್ನು ನೋಡಿ ಪಾದಗಳಿಗೆ ವಂದಿಸಿ ನಗರಕ್ಕೆ ತೆರಳಿ ಮತ್ತೆ ಬಂದು ಸುವರ್ಣದ ಗುಡಿಯನ್ನು ಕಟ್ಟಿ ಕೋಟಿ ಸೂರ್ಯಪ್ರಕಾಶವಾದ ಕಳಶವನ್ನು ಆ ಗುಡಿಗೇರಿಸಿ ಆ ಗುಡಿಯನ್ನು ಪೂರ್ಣವಾಗಿ ಮಣ್ಣಿನಿಂದ ಮುಚ್ಚಿದರು.  ವೃಷಭದೇವನು ಅನುಗ್ರಹಿಸಿದ ಲಿಂಗವನ್ನು ಈತನು ಅನಿಮಿಷ ದೃಷ್ಟಿಯಿಂದ ತದೇಕ ಚಿತ್ತದಿಂದ ದೃಷ್ಟಿಸಲಾರಂಭಿಸಿದ ಕೂಡಲೆ ಅನಿಮಿಷದೇವನೆಂಬ ಹೆಸರು ಪ್ರಾಪ್ತಿಯಾಗುತ್ತದೆ

 ಇಲ್ಲಿಯವರೆಗೂ ಕೇವಲ ಶಿವಭಕ್ತನಾಗಿದ್ದ ಅರಸ ಮುಂದೆ ಲಿಂಗದೀಕ್ಷೆಯಿಂದ ಲಿಂಗದೇವನಾಗಿ ಯೋಗೀಶ್ವರನಾಗುತ್ತಾನೆ. ಆ ಗುಡಿಯನ್ನು ನಿಕ್ಷೇಪಿಸಿದ ಜಾಗದಲ್ಲಿ ಗೊಗ್ಗಯ್ಯನೆಂಬ ಶರಣನೋರ್ವನು ಬಂದು ಹೂದೋಟ ಮಾಡಿಕೊಂಡು ನೆಲೆ ನಿಂತನು. ಆ ಸ್ಥಳದಲ್ಲಿ ಮುನಿಗಳನೇಕರು ತಪಸ್ಸು ಮಾಡುತ್ತಲಿದ್ದರು.

ಒಂಬತ್ತನೆಯ ನುಡಿಯಲ್ಲಿ ಪ್ರಭುದೇವರ ಬಗೆಗಿನ ವಿವರಗಳನ್ನು  ಬಹುಮಟ್ಟಿಗೆ ಚಾಮರಸನ ಪ್ರಭುಲಿಂಗಲೀಲೆಯ ವಿವರಗಳನ್ನು ಆಧರಿಸಿ ಸಂಕ್ಷಿಪ್ತವಾಗಿ ಕೊಡ ಮಾಡಿದ್ದಾರೆ. ಶಿವನ ಆಜ್ಞೆಯಂತೆ ಪ್ರಭುದೇವರು ನಿರಹಂಕಾರ-ಸುಜ್ಞಾನಿದೇವಿಯರಿಗೆ ಮಗನಾಗಿ ಅವರಿಗೆ ಸಂತೋಷವನ್ನುಂಟು ಮಾಡಿ, ಅವರ ಅನುಮತಿ ಪಡೆದು ಇಂತಪ್ಪ ಆ ತಾಣಕ್ಕೆ ಮುಕ್ಕಣ್ಣನಾಜ್ಞೆಯಿಂದ ಪ್ರಭುದೇವರು, ಬಯಸಿ ನಿರಹಂಕಾರಿ-ಸುಜ್ಞಾನಿ ದೇವಿಯರಿಗೆ ಪ್ರತ್ಯಕ್ಷ (ಮಗುವಾಗಿ) ರಾಗಿ ಸಂತಸವಿತ್ತು ಅವರ (ತಾಯ್ತಂದೆಗಳ) ಅನುಮತಿ ಪಡೆದು ಬನವಾಸಿಗೆ ಬರುವನು. ಅವನು ಅಲ್ಲಿಯ ಮಮಕಾರರಾಯನ ಮಗಳಲ್ಲಿ ಮೋಹವನ್ನುಂಟುಮಾಡಿ ಅವಳಿಗೆ ವಶನಾಗದೆ ಮಾಯಾಕೋಲಾಹಲನೆನಿಸಿ ಗೊಗ್ಗಯ್ಯನಲ್ಲಿಗೆ ಬಂದು ಆತನೊಡನೆ ಸಂಭಾಷಿಸಿ ಆತನಿಂದಲೇ ಆ ತಾಣವನ್ನು ಗುದ್ದಲಿಯಿಂದ ಆಗೆಯಿಸಲು, ತಳದಲ್ಲಿ ಝಗಝಗಿಪ ಸುವರ್ಣದ ಕಳಶವೂ ಬಳಿಕ ಗುಡಿಯೂ ಕಾಣಬಂದಿತು. ಅವನು ವಿಸ್ಮಯದಿಂದ ನೋಡುತ್ತಿರಲು ಕೂಡಲೇ ಗೊಗ್ಗಯ್ಯನು ವಿಸ್ಮಿತನಾಗಿ ಕುಳಿತು ನೋಡುತ್ತಿರುವಷ್ಟರಲ್ಲಿಯೇ ಪ್ರಭುವು ಆ ಗುಡಿಯ ಒಳಹೊಕ್ಕು, ಅಲ್ಲಿ ಶಿವಯೋಗದಲ್ಲಿದ್ದ ಅನಿಮಿಷದೇವ (ಮನು ರಾಜ)ನ ಲಿಂಗ (ಇಷ್ಟಲಿಂಗ)ವನ್ನು ತಮ್ಮ ಕರಸ್ಥಳದಲ್ಲಿ ತಳೆದು (ಧರಿಸಿ) ಹೋಗುವ ಸಮಯದಲ್ಲಿ ಗೊಗ್ಗಯ್ಯನು ಪ್ರಭುವನ್ನು ತಡೆಗಟ್ಟಿ ಅಲ್ಲಯ್ಯಾ ನಿನ್ನೀ ರೀತಿ ನೀತಿ ನಮಗೆ ಚೋದ್ಯವಾಗಿದೆ. ಈ ಸುಳುಹಿನ ಭೇದವೇನು ?ಇಲ್ಲಿರುವ ಶಿವಯೋಗಿ ಯಾರು? ಎಲ್ಲವನ್ನೂ ವಿವರವಾಗಿ ಮರೆಮಾಚದೆ ತಿಳಿಸಿ ಎಂದು ಪ್ರಾರ್ಥಿಸುವನು. ಅದಕ್ಕೆ ಪ್ರಭುವು ದ್ವಾಪರಯುಗದಲ್ಲಿ ಈತನು ಪತ್ನಿಪುತ್ರರನ್ನೂ ರಾಜ್ಯವನ್ನೂ ತ್ಯಜಿಸಿ ಬಂದು ಶಿವಯೋಗದಲ್ಲಿ ನೆಲೆಸಿದನು ಎನ್ನುವನು.

   ಹತ್ತನೆಯನುಡಿಯಲ್ಲಿ ಹೀಗೆ ರಾಜ್ಯವನ್ನಾಳಿ ಸಂಪತ್ತನ್ನು ತ್ಯಜಿಸಿ ಶಿವನಲ್ಲಿ ಏಕತ್ವವನ್ನುಪಡೆದವರುಂಟೆ? ಎಂದು ಗೊಗ್ಗಯ್ಯನು ಪ್ರಭುವನ್ನು ಕೇಳುವನು. ಅದಕ್ಕೆ ಪ್ರಭುವು ಮುನ್ನ, ಭೂಲೋಕದಲ್ಲಿ ಕಾಂಚೀನಗರದ ದೊರೆಯು ಅಂತರವಿಲ್ಲದೆ ವೈಷ್ಣವ ಮತ ಸ್ವೀಕರಿಸಿ ಹಮ್ಮಿನಿಂದಿರಲು, ಅಲ್ಲಿಗೆ ಶಿವನ ನಿರೂಪದಿಂದ ಪರಮ ನಿಶ್ಚಿಂತರಾದ ರೇವಣಸಿದ್ದರು ಆಗಮಿಸಿ ಮಹಿಮೆಗಳನ್ನು ತೋರಿ, ಕಿಕ್ಕಿರಿದ ವೈಷ್ಣವ ಮತ ವನ್ನೆಲ್ಲಾ ನಿರಾಕರಿಸಿದರು.ಅಲ್ಲದೆ ನಂದೆಣ, ಚೇರಮರಾಯ, ಪಾಂಡ್ಯರು. ನಿಡುಮಾರದೇವರು ಹಾಗೂ ಮುಂಚಿನ ಭದ್ರಾಯುರಾಜ ಸತ್ಯಸಂಧನಾದ ಸತ್ಯೇಂದ್ರ ಚೋಳಾದಿ ನವಚೋಳರೇ ಮೊದಲಾದ ಅನಂತ ಭೂಪತಿಗಳೂ ಶಿವಧರ್ಮಾಸಕ್ತರಾಗಿ ಆಳಿ ಬಾಳಿ ಹೋಗಿರುವರು. ಕೇಳು ಕೇಳು. ಆದರೆ ನಮ್ಮಿ ಗುರು (ಅನಿಮಿಷರು)ಗಳು ಅವರಂತೆ ಅಲ್ಲ, ಚಿದ್ರೂಪನು, ಶಿವನ ಸಾಕ್ಷಾತ್ಕಾರದಿಂದ ಸಂತುಷ್ಟನಾದವನು ಎಂದು ಹೇಳಿ ಪ್ರಭುವು ಮುಂದೆ ನಡೆಯುವನು.  

     ಹನ್ನೊಂದನೆಯ ನುಡಿಯಲ್ಲಿ ಅಜಗಣ್ಣನ ಅಗಲಿಕೆಗೆ ಪ್ರಲಾಪಿಸುತ್ತಿದ್ದ ಮುಕ್ತಾಯಕ್ಕಳನ್ನು ಸಮಾಧಾನಿಸಿ, ಸಿದ್ಧರಾಮನ ಹಠಯೋಗ ಹಾಗೂ ಶೈವಪೂಜೆಯನ್ನು ಬಿಡಿಸಿ, ಅವನನ್ನು ಜೊತೆಯಲ್ಲಿ ಕರೆದುಕೊಂಡು ಕಲ್ಯಾಣಕ್ಕೆ ಬಂದು ಅವನಿಗೆ ಚನ್ನಬಸವಣ್ಣನಿಂದ ದೀಕ್ಷೆಯನ್ನು ಕೊಡಿಸಿ, ಶ್ರೀಶೈಲಕ್ಕೆ ಬಂದು ಹಠಯೋಗಿ ಗೋರಕ್ಷನಿಗೆ ನಿಜವನ್ನಿತ್ತು, ಮಂಗಳವಾಡಕ್ಕೆ ಬಂದು ಅಲ್ಲಿ ಶೂನ್ಯಸಿಂಹಾಸನವನ್ನು ನಿರ್ಮಿಸಿ, ಅದನ್ನೇರಿ ಬಸವರಾಜೇಂದ್ರನ ಭಕ್ತಿಯನ್ನು ಸಂದೇಹವಿಲ್ಲದೇ ಸ್ವೀಕರಿಸಿ, ಮರುಳಶಂಕರದೇವನಿಗೆ ಐಕ್ಯ ಪದವಿಯನ್ನು ಅನುಗ್ರಹಿಸಿ, ಬಸವಣ್ಣನಿಗೆ ಇನ್ನು ಮೂರುತಿಂಗಳಿಗೆ ನೀವು ಶಿವನಲ್ಲಿ ಐಕ್ಯರಾಗುವಿರೆಂದು ಭವಿಷ್ಯ ನುಡಿಯುವನು. ಇಲ್ಲಿ ಇವರು  ಶೂನ್ಯ ಸಿಂಹಾಸನವನ್ನು ನಿರ್ಮಿಸಿದ್ದು ಮಂಗಳವಾಡದಲ್ಲಿ ಎಂದು  ಉಲ್ಲೇಖಿಸಿದ್ದಾರೆ. ಆದರೆ ಬಸವಣ್ಣನವರನ್ನು ಕುರಿತ ಇತರ ಕಾವ್ಯ ಪುರಾಣಗಳಲ್ಲಿ ವಿವರಗಳು  ಹಾಗೂ ಎಲ್ಲರೂ ತಾಳಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಶೂನ್ಯ ಸಿಂಹಾಸನವನ್ನು ನಿರ್ಮಿಸಿದ್ದು ಕಲ್ಯಾಣದಲ್ಲಿ. ಆದರೆ ಮುರಿಗಾ ಶಾಂತವೀರರು  ಯಾವ ಆಧಾರದಲ್ಲಿ ಈ ರೀತಿಯಾಗಿ ವಿಷಯವನ್ನು ಪ್ರಸ್ತಾಪಿಸಿದ್ದಾರೋ ತಿಳಿಯದು. ಬಿಜ್ಜಳರಾಯನು ಕರ್ಮಾನುಸಾರಿಯಾಗಿ ಸಾವನ್ನು ಹೊಂದಲು ಕಲ್ಯಾಣದ ಶಿವಗಣಂಗಳು ಉಳಿವೆಯಲ್ಲಿ ನಿಂತರು. ಪ್ರಭುವು ಶೀಘ್ರದಲ್ಲಿಯೇ ಕೈಲಾಸಕ್ಕೆ ನಡೆದನು. 

 ಕೊನೆಯ ನಾಲ್ಕು ಕಂದ ಪದ್ಯಗಳಲ್ಲಿ ಹಮ್ಮೀರ ರಾಜನ ಮಹಿಮೆಯನ್ನು ಸಂಕ್ಷಿಪ್ತವಾಗಿ ಕೊಡ ಮಾಡಿದ್ದಾರೆ.

ದ್ವಾಪರಯುಗದಲ್ಲಿ ಹಮ್ಮೀರ ರಾಜನು ದೇಶವನ್ನು ಆಳಿ. ಬಳಿಕ ಪರಮ ಶಿವನಲ್ಲಿ ಏಕಾರ್ಥ (ಸಮರಸ)ವಾಗಿ ಅತಿಶಯ ಮಹಿಮಾ ಸಂಪನ್ನನೆನಿಸಿದನು. ಅನಿಮಿಷದೇವರ ಇಷ್ಟಲಿಂಗ ಪಡೆದು ಪ್ರಭುದೇವನು ಕೈಲಾಸಕ್ಕೆ ಪ್ರಯಾಣ ಮಾಡಿದುದು. ಚಿನ್ಮಯನಾದ ಪ್ರಭುದೇವನು ಆಗಮಿಸಿ, ಅನಿಮಿಷದೇವರ ಲಿಂಗ (ಇಷ್ಟಲಿಂಗ) ವನ್ನು ತನ್ನ ಕರತಳದಲ್ಲಿ ವಿನಯದಿಂದ ಧರಿಸಿಕೊಂಡ ಕೂಡಲೆ ಕೈಲಾಸಕ್ಕೆ ಸುಖದೊಳ್‌ ಪೋದಂ.

'ಪೋಗಿ ಗಣಕುಲದ ಮಧ್ಯದ

ಆಗಮಕತಿದೂರ ಶಂಭು ಶಂಕರ ಶುಭಕರ

'ಯೋಗಿವರ ಕರುಣಿ ಮುರಿಗೆಯ

ನಾಗರಪತಿಭರಣ ನಿತ್ಯ ದೇವನೊಳೆಸೆದಂ'

ಈ ತಾರಾವಳಿಯನ್ನು ಬರೆಪ, ಓದುವ, ಗೌರವಿಸುವ ಹಾಗೂ ಶಿವಭಕ್ತಗಣಕ್ಕೆ ಅರ್ಥಮಾಡಿ ಹೇಳುವ ನಿಜಶರಣರೆಲ್ಲರೂ ಪರಶಿವನಲ್ಲಿ ಬೆರದು ನಿತ್ಯರಪ್ಪರು. ಇದು ಸತ್ಯವು.  ಎಂದು ಮುಕ್ತಾಯಗೊಳ್ಳುತ್ತದೆ.  ಕೊನೆಯ ಒಂದು ವೃತ್ತದಲ್ಲಿ  ಮುರಿಗಾ ಶಾಂತವೀರಾಖ್ಯ ಯೋಗಿವರ್ಯೇಣ ಸಾದರಂ ರಚಿತ ಮನುರಾಜೇಂದ್ರ ತಾರಾವಳಿಯಂ ಅರಿ ಎಂಬ ಉಲ್ಲೇಖ ಕಂಡು ಬರುತ್ತದೆ.

       ರಾಜೇಂದ್ರವಿಜಯ” ಎಂಬ ಪರ್ಯಾಯ ನಾಮವನ್ನು ಹೊಂದಿರುವ ಹಮ್ಮೀರ ಕಾವ್ಯದ ವಸ್ತುವನ್ನೇ

"ಮನುರಾಜೇಂದ್ರ ತಾರಾವಳಿ” ಒಳಗೊಂಡಿದೆ. ಇವರು ಹಮ್ಮೀರ ಚಂಪೂಕಾವ್ಯದಲ್ಲಿ ಮನುರಾಜೇಂದ್ರನ  ಚರಿತ್ರೆಯನ್ನು ೯ ಪ್ರಕರಣ ಮತ್ತು ೬೧೯ ಪದ್ಯಗಳಲ್ಲಿ ವಿಸ್ತಾರವಾಗಿ ವಿವರಿಸಿದ್ದರೆ, ಮನುರಾಜೇಂದ್ರ ತಾರಾವಳಿಯಲ್ಲಿಇದೇ ವಿವರವನ್ನು ಈಗಾಗಲೇ ಹೇಳಿರುವಂತೆ ೧೧ ನುಡಿಪದ ಹಾಗೂ ಅಂತ್ಯದಲ್ಲಿ ಅಂತ್ಯದಲ್ಲಿ ೪ ಕಂದಪದ್ಯಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಏನೇ ಇರಲಿ ಈ ಎರಡೂ ಕೃತಿಗಳು ಅಲ್ಲಮಪ್ರಭುಗಳ ಗುರುಗಳಾದ ಪಟ್ಟದಕಲ್ಲಿನ ಅನಿಮಿಷದೇವರ ಚರಿತ್ರೆಯನ್ನು ಹೇಳುತ್ತವೆ. ಪ್ರಭುದೇವರು  ಗೊಗ್ಗಯ್ಯನಿಗೆ ಈ ಮನುರಾಜೇಂದ್ರನ ಚರಿತ್ರೆಯನ್ನು ಬೋಧಿಸುತ್ತಾರೆ. ಪ್ರಣವಾವತಾರನಾದ ಶ್ರೀಮನುರಾಜನ ಸ್ಥೂಲಪರಿಚಯ, 'ಹಮ್ಮೀರ' ನಾಮಾಂಕಿತನಾದ ಈತನ ಬಾಲ್ಯ, ಯೌವ್ವನ, ಭೋಜರಾಜನ ಪುತ್ರಿ ಕಾಂತಾಗೌರಿಯೊಡನೆ ವೈಭವದ ವಿವಾಹ, ಹಮ್ಮೀರನ ಶಿವಲಿಂಗ ನಿಷ್ಠೆ, ಅವನಿಗುಂಟಾದ ಶಿವಲಿಂಗದ ಕಡುದಾಹ ಈ ಎಲ್ಲ ಅಂಶಗಳನ್ನು ಗೊಗ್ಗಯ್ಯನಿಗೆ ಪ್ರಭುದೇವರು ವಿವರಿಸಿ ಬೋಧಿಸುತ್ತಾರೆ. ಹೀಗೆ ಅನಿಮಿಷದೇವರ ಚರಿತ್ರೆಯನ್ನು ಹೇಳುವ ಮೂಲಕ“ಹಮ್ಮೀರಕಾವ್ಯ” ಹಾಗೂ “ಮನುರಾಜೇಂದ್ರ ತಾರಾವಳಿ” ಕೃತಿಗಳು ಚಾರಿತ್ರಿಕ ದೃಷ್ಟಿಯಿಂದ ತಮ್ಮದೇ ಆದ ಮಹತ್ವವನ್ನು ಪಡೆದಿವೆ. 

   ಮುರುಘಾ ಪರಂಪರೆಯ   ಮುರಿಗಾ ಶಾಂತವೀರರ ಭಾಷಾ ಪ್ರಯೋಗವನ್ನು ಗಮನಿಸಿದರೆ ಉಭಯ ಭಾಷಾ ವಿಶಾರದರಾಗಿದ್ದ ಅವರು ಮಾರ್ಗ-ದೇಶಿ ಭಾಷೆಗಳೆರಡನ್ನು ತಮ್ಮ ಕಾವ್ಯಗಳಲ್ಲಿ ಬಳಸಿಕೊಂಡಿದ್ದಾರೆ. ಚಂಪೂ, ಷಟ್ಪದಿಯಂಥ ದೀರ್ಘ ಕಾವ್ಯಗಳಲ್ಲಿ ಸಂಸ್ಕೃತ ಭಾಷೆಯ ಪ್ರಾಬಲ್ಯ ಕಂಡುಬಂದರೆ, ಸ್ತೋತ್ರರೂಪದ ಲಘುಕೃತಿಗಳಲ್ಲಿ ಪ್ರಾದೇಶಿಕ ದೇಶಿ ಭಾಷೆಯ ಸೊಗಡುಹೆಚ್ಚಾಗಿ ಕಾಣಬರುತ್ತದೆ. ಈ ಕೃತಿಯಲ್ಲಿ, ಹಾಡುಗಬ್ಬದ ರೀತಿಯ ದೇಸಿ ಪದಗಳು ಬಳಕೆಗೊಂಡಿದ್ದು ಜನಸಾಮಾನ್ಯರಿಗೂ ಅರ್ಥವಾಗುವಂತಿದೆ. ನಿದರ್ಶನಕ್ಕೆ,  ಭೇರಿಯ ಕರಡೆ, ಕಂಸಾಳೆ, ಹೆಗ್ಗಾಳೆ, ರಣಗಾಳೆಯ,  ಮಂಡಿಸಿ ನಿಂದರಾಗ, ದಂಡೆತ್ತಿ ನಡೆದರಾಗ, ಖಂಡಿಸಿ ಬಿಟ್ಟರಾಗ,  ಎರಗಿ ಕೊಂಡಾಡಿ ಪರಿಣಾಮದೊಳೋಲಾಡಿ, ಎತ್ತುವನೆಂದ ದಂಡ, ಕತ್ತಿಯ ಪಿಡಿದುಕೊಂಡ, ಮಿತ್ತುವ ತಂದುಕೊಂಡ, ಸಡಗರದಿಂದೆ ಲಾಲಿಸಿ, ಒಡನೇ ನಿರೀಕ್ಷಿಸಿ, ಈ ಬಗೆಯ ಪದಗಳು ಬಳಕೆಯಾಗಿದ್ದು, ಇವರ ದೇಸಿ ಪದಗಳ ಬಗೆಗಿನ  ಬಳಕೆಯ ಬಗೆಗೆ ವೇದ್ಯವಾಗುತ್ತದೆ. 

    ಈ ತಾರಾವಳಿ ಲಘುಕೃತಿಯು ಏಕಕಾಲದಲ್ಲಿ ಪುರಾಣದ ವಿವರಗಳನ್ನು ಚಾರಿತ್ರಿಕ ಸಂಗತಿಗಳನ್ನು ಒಳಗೊಂಡ ಶರಣ ಚರಿತ್ರೆಯಾಗಿದೆ. ಶಾಂತವೀರರ ವಿಭಿನ್ನ ಆಲೋಚನೆಯಿಂದ ಕಲ್ಪಿತವಾದ ಈ ಕೃತಿ ಹಲವು ವಿಷಯಗಳ ಸಂಗಮವಾಗಿದೆ. ಸ್ತೋತ್ರರೂಪದಲ್ಲಿರುವ ಇದು ಶಾಂತವೀರರಿಂದಲೇ ರಚನೆಗೊಂಡ ಚಂಪೂಶೈಲಿಯ ಹಮ್ಮೀರ ಕಾವ್ಯದ ವಸ್ತುವನ್ನು ಆಧರಿಸಿದೆ. ಹರಿಹರನ ರಗಳೆಯಂತೆ ಇಲ್ಲಿಯ ನಡೆಯಿದೆ. “ಈ ತಾರಾವಳಿಯಲ್ಲಿ ಬರುವ ಪ್ರಮುಖ ಅಂಶಗಳನ್ನು ನೋಡುವುದಾದರೆ, ಕರ್ನಾಟಕದ ಮಧ್ಯಭಾಗದಲ್ಲಿರುವ, ಕೋಟೆಕೊತ್ತಲಗಳಿಂದ ಆವೃತವಾಗಿರುವ ಪಟ್ಟದಕಲ್ಲು(ಶಿಲಾಪುರ)ನ್ನು ಆಳುತ್ತಿರುವವನು ತ್ರೈಲೋಕ್ಯ ಚೂಡಾಮಣಿ ಹಾಗೂ ಮಹಾದೇವಿಯರ ಉದರಸಂಜಾತನೇ ಈ ಮನುರಾಜೇಂದ್ರ. ಈತನನ್ನು ಬೇರೆ ಬೇರೆ ನಾಮಧೇಯಗಳಿಂದ  ಈ ಲಘು ಕೃತಿಯಲ್ಲಿ ಉಲ್ಲೇಖಿಸಲಾಗಿದ್ದು ಮಂತ್ರರಾಜ, ಹಮ್ಮೀರ, ರಾಜೇಂದ್ರ ಹಾಗೂ ಅನಿಮಿಷದೇವ ಇತ್ಯಾದಿಯಾಗಿ ಕರೆಯಲಾಗಿದೆ. ಪುತ್ರಾಪೇಕ್ಷೆಯ ಕಾರಣವಾಗಿ ಶರಣದಂಪತಿಗಳು ಮಾಡಿದ ತಪಸ್ಸಿನ ಫಲವಾಗಿ ಹಮ್ಮೀರ ರಾಜನ ಜನನವಾಗುತ್ತದೆ. ಈತನ ಬಾಲ್ಯ-ಯೌವ್ವನಗಳ ಸಂಗತಿಯನ್ನು ಕಾವ್ಯ ವರ್ಣಿಸುತ್ತದೆ. ಹಾಗೆಯೇ ಕಾಂಭೋಜರಾಜನ ಪುತ್ರಿ ಕಾಂತಾಗೌರಿಯೊಡನೆ ವಿವಾಹವೇರ್ಪಟ್ಟ ಪ್ರಸಂಗ, ಸತಿ-ಪತಿಗಳೊಂದಾಗಿ ಸುಖಜೀವನ ನಡೆಸುವ ಪರಿ, ರಾಜ್ಯಭಾರ ಮಾಡುವ ಕಾರ್ಯವೈಖರಿ, ಹಮ್ಮೀರನ ಎಳೆಯನ್ನು ಸಹಿಸದ ಚಂಡಕೋದಂಡನು ದಂಡೆತ್ತಿ ಬರುವ ಸನ್ನಿವೇಶ, ಇವರಿಬ್ಬರ ಯುದ್ಧಪ್ರಸಂಗ, ಚಂಡಕೋದಂಡನನ್ನು ಸದೆಬಡಿಯುವುದು, ಹಮ್ಮೀರ ಗೆದ್ದು ರಾಜಧಾನಿಗೆ ಮರಳಿಬರುವುದು, ಹಮ್ಮೀರರಾಜನ ವನಮಹೋತ್ಸವ, ಜಲಕ್ರೀಡೆ ಮುಂತಾದ ವರ್ಣನೆಗಳು ಕಾವ್ಯಸೊಬಗನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ ಮನುರಾಜನು ಶಿವಲಿಂಗನಿಷ್ಠೆಯಿಂದ ಲೌಕಿಕ ಆಸೆಗಳು ಕುಂಠಿತಗೊಂಡು ಅಲೌಕವಾದ ಪಾರಮಾರ್ಥಿಕದೆಡೆಗೆ ಸಾಗುವ ಮನೋಭಾವ, ಲಿಂಗಮುದ್ರೆಯಿರುವ ವೃಷಭನಿಂದ ಸಂಸ್ಕಾರವೆಂಬ ದೀಕ್ಷೆಯನ್ನು ಪಡೆಯುವುದು. ಆ ಅಣತಿಯಂತೆ ಪಡೆದು ಮನುರಾಜನು ಗುರುವಿನಿಂದ ಕರಸ್ಥಲಕ್ಕೆ ಅನುಗ್ರಹಿಸುವ ತಾತ್ವಿಕತೆ, ನಂದೀಶನ ಅಣತಿಯಂತೆ ಇಷ್ಟಲಿಂಗದಲ್ಲಿ ಅನಿಮಿಷ ದೃಷ್ಟಿಯಿಟ್ಟು ಶಿವಯೋಗ ಮಗ್ನನಾಗುವುದು, ಮನುರಾಜೇಂದ್ರ ಎಂಬ ಪದನಾಮದಿಂದ ಅನಿಮಿಷದೇವನಾಗಿ, ಶ್ರೇಷ್ಠ ಮುನಿಯಾಗಿ, ಭಕ್ತಿ-ಜ್ಞಾನದ ವೈರಾಗ್ಯಮೂರ್ತಿಯಾದ ಅಲ್ಲಮಪ್ರಭುವಿನ ಸಾಧನೆಗೆ  ಗುರುವಾಗಿ ಕಂಗೊಳಿಸಿದ್ದಾನೆ. ಸಾಧನೆಗೆ ಸಂಸಾರವೂ ಮುಖ್ಯ ತಾತ್ವಿಕತೆಗೆ ಧರ್ಮವೂ ಮುಖ್ಯ. ಒಂದರಲ್ಲಿ ಒಂದು ಅಡಗಿಕೊಂಡು ಹೊಸ ಅನುಭವವನ್ನು ಕೊಡುತ್ತವೆ ಎಂಬ ವಿಚಾರವನ್ನು ತಿಳಿಯಪಡಿಸಿದ್ದಾರೆ.        

    ಚಂಪೂ ಪ್ರಕಾರದಲ್ಲಿ ಮುರಿಗಾ ಶಾಂತವೀರರು ೯ ಪ್ರಕರಣ ೬೧೯ ಪದ್ಯಗಳಲ್ಲಿ ಹಮ್ಮೀರ ಕಾವ್ಯವಾಗಿ ವಿಸ್ತರಿಸಿರುವ ಈ ಕಥಾಭಿತ್ತಿಯ ತೆಳುಹಂದರದ ಕಥಾವಸ್ತುವನ್ನೇ ಇನ್ನೊಂದು ಸಾಹಿತ್ಯ ರೂಪವಾದ ಹಾಡುಗಬ್ಬದಲ್ಲಿ    'ಮನುಜೇಂದ್ರನ ತಾರಾವಳಿ'ರೂಪದಲ್ಲಿ ಮತ್ತೆ ಬಂದದ್ದು ಕುತೂಹಲಕಾರಿ ಸಂಗತಿ. ಹಮ್ಮೀರ ಕಾವ್ಯದಲ್ಲಿ  ಮುರಿಗಾ ಶಾಂತವೀರರ ಪ್ರತಿಭೆ ಚಂಪೂಕಾವ್ಯವಾಗಿ ಆ ಕಥೆಯನ್ನು ಹೇಳಬೇಕೆನ್ನುವಲ್ಲಿ ಕವಿ ಸಹಜವಾದ ಅಭಿವ್ಯಕ್ತಿಯಲ್ಲಿನ ಹೊಸತನ್ನು ಕಾಣಿಸಬೇಕೆನ್ನುವ ಆಕಾಂಕ್ಷೆಯಿದೆ. 

 ಮನುರಾಜೇಂದ್ರ ತಾರಾವಳಿಯು ' ಹಮ್ಮೀರನೆನ್ನುವ ರಾಜನ ಕಥೆಯೆನ್ನಿಸಿದ್ದು, ಅದು ಪೂರ್ಣ ಸತ್ಯವಲ್ಲ. ಕಾವ್ಯದ ಮೊದಲರ್ಧಭಾಗ ಹಮ್ಮೀರರಾಜೇಂದ್ರನ ವಿಜಯವನ್ನು ನಿರೂಪಿಸಿದರೂ ಕಾವ್ಯದ ಉತ್ತರಾರ್ಧವು ಹಮ್ಮೀರನು ಅನಿಮಿಷನಾಗಿ ಅಲ್ಲಮಪ್ರಭುವಿಗೆ ಇಷ್ಟಲಿಂಗವನ್ನು ಅನುಗ್ರಹಿಸಿದ ಕಥನವಾಗಿದೆ.ಅಲ್ಲಮಪ್ರಭುವಿನ ಜನನ, ಅವನ ದೇಶ ಪರ್ಯಟನದಲ್ಲಿ ಗೊಗ್ಗಯ್ಯ, ಮುಕ್ತಾಯಿ, ಸಿದ್ಧರಾಮ ಗೋರಕ್ಷರ ಭೇಟಿ, ಕಲ್ಯಾಣದ ಶೂನ್ಯಸಿಂಹಾಸನವನ್ನೇರಿದುದು ಬಸವಣ್ಣನಿಗೆ ಅವನಲಿಂಗೈಕ್ಯದ ಪೂರ್ವ ಸೂಚನೆ, ಬಿಜ್ಜಳನ ಮರಣ,ಶರಣರ ಉಳಿವೆಯತ್ತಲಿನ ಪ್ರಯಾಣ-ಇವುಗಳು ಬಂದಿವೆ. ಇದು ಒಂದು ರೀತಿಯಲ್ಲಿ  ಪ್ರಭುಲಿಂಗಲೀಲೆ ಮತ್ತು ಶೂನ್ಯಸಂಪಾದನೆಗಳಲ್ಲಿ ನಿರೂಪಿತವಾಗಿರುವ ಅಲ್ಲಮನ ಕಥೆಯ ಶೀರ್ಷಿಕೆಗಳಾಗಿವೆ. ಮುರಿಗಾಶಾಂತವೀರರಿಗೆ ಪ್ರಭುವಿನ ಕಥನ ನಿರೂಪಣೆಗೆ ಚಾಮರಸನ ಪ್ರಭುಲಿಂಗಲೀಲೆ, ಶೂನ್ಯಸಂಪಾದನೆ ಆಕರವಾಗಿದೆ. ಕೃತಿಯ ನಡುವೆ ರೇವಣಸಿದ್ಧೇಶ್ವರರ ಪ್ರಸ್ತಾಪವನ್ನು ತಂದು ಸೇರಿಸಿರುವುದು ಕಥಾಸಂಯೋಜನೆಯಲ್ಲಿನ ಸಡಿಲ ಬಂಧವನ್ನು ಎತ್ತಿ  ತೋರಿಸುತ್ತದೆ. ಈ ರೀತಿ ಯಾಕೆ ಮಾಡಿದರೋ ತಿಳಿಯದು.

    ಈ  ತಾರಾವಳಿಯ ಪದ್ಯದ  ಸಾಲುಗಳು ಆದಿಪ್ರಾಸವನ್ನು ಅನುಸರಿಸುವುದರ ಜೊತೆಗೆ ಜೋಗುಳಪದ, ಸುವ್ವಾಲಿಪದ ಸೋಬಾನ ಪದಗಳ ಅರ್ಥವತ್ತಾದ ಧಾಟಿಯನ್ನು ಅನುಸರಿಸುವುದರ ಮೂಲಕ ಕಾವ್ಯದ ರಮ್ಯತೆಯನ್ನು ಹೆಚ್ಚಿಸಿವೆ. ಸ್ವಾನುಭವ ಜ್ಞಾನಿಯಾದ ಅಲ್ಲಮ ತನ್ನ ಗುರು ಅನಿಮಿಷದೇವರು ಶಿವಯೋಗ ಸಮಾಧಿಯಲ್ಲಿರುವ ವಿಷಯವನ್ನು ತಿಳಿದು ಅವರ ಕರದಿಷ್ಟಲಿಂಗವನ್ನು ತನ್ನ ಇಷ್ಟಬ್ರಹ್ಮದೊಳಗೆ ಇಟ್ಟುಕೊಳ್ಳುವನು. ಸ್ನೇಹಿತನಾದ ಗೊಗ್ಗಯ್ಯನಿಗೆ ಈ ವಿಷಯವನ್ನು ತಿಳಿಯಪಡಿಸಿ ಅನೇಕ ಶಿವಭಕ್ತರ ಕಥೆಗಳನ್ನು ಹೇಳುತ್ತಾನೆ. ಈ ಎಲ್ಲಾ ಪ್ರಮುಖ ಕಥಾಗುಚ್ಛ  ಈ ತಾರಾವಳಿಯ ಒಟ್ಟಾರೆ ಆಶಯವಾಗಿದೆ.

   ಮನುರಾಜೇಂದ್ರ ತಾರಾವಳಿ, ಶಾಂತವೀರರ ವಿಭಿನ್ನ ಆಲೋಚನೆಯಿಂದ ಕಲ್ಪಿತವಾದ ಈ ಕೃತಿ ಹಲವು ವಿಷಯಗಳ ಸಂಗಮವಾಗಿದೆ. ಸ್ತೋತ್ರರೂಪದಲ್ಲಿರುವ ಇದು ಶಾಂತವೀರರಿಂದಲೇ ರಚನೆಗೊಂಡ ಚಂಪುಶೈಲಿಯ ಹಮ್ಮೀರ ಕಾವ್ಯದ ವಸ್ತುವನ್ನು ಆಧರಿಸಿದೆ. ಹರಿಹರನ ರಗಳೆಯಂತೆ ಇಲ್ಲಿಯ ನಡೆಯಿದೆ. ಇಲ್ಲಿ ಕವಿ ಸಾಧನೆಗೆ ಸಂಸಾರವೂ ಮುಖ್ಯ ತಾತ್ವಿಕತೆಗೆ ಧರ್ಮವೂ ಮುಖ್ಯ, ಒಂದರಲ್ಲಿ ಒಂದು ಆಡಗಿಕೊಂಡು ಹೊಸ ಅನುಭವವನ್ನು ಕೊಡುತ್ತವೆ ಎಂಬ ವಿಚಾರವನ್ನು ತಿಳಿಯಪಡಿಸಿದ್ದಾನೆ. ಜೋಗುಳಪದ, ಸುವ್ವಾಲಿಪದ ಸೋಬಾನಪದಗಳ ಅರ್ಥವತ್ತಾದ ಧಾಟಿಯನ್ನು ಅನುಸರಿಸುವುದರೊಂದಿಗೆ ಕಾವ್ಯದ ರಮ್ಯತೆಯನ್ನು ಹೆಚ್ಚಿಸಿವೆ. ಇಂತಹ ಚಾರಿತ್ರಿಕ ಮತ್ತು ಶರಣರ ಚರಿತ್ರೆಯ ಬಗೆಗೆ ಬೆಳಕು ಚೆಲ್ಲುವ ಮನುರಾಜೇಂದ್ರನ ತಾರಾವಳಿಯನ್ನು ಒಳಗೊಂಡಂತೆ  ಇಮ್ಮಡಿ ಮುರಿಗಾ ಶಾಂತವೀರರ ಒಟ್ಟು ಕೃತಿಗಳ ಬಗೆಗೆ   ಇನ್ನು ಮುಂದೆಯಾದರೂ ವ್ಯವಸ್ಥಿತವಾದ ಅಧ್ಯಯನ ನಡೆದು ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇವರ ಸ್ಥಾನವನ್ನು ನಿಗದಿ ಪಡಿಸುವ ಕೆಲಸವಾಗಲೆಂದು ಆಶಿಸುತ್ತೇನೆ. 

ಆಕರ ಗ್ರಂಥಗಳು:

೧. ಮುರಿಗೆ ಶಾಂತವೀರಸ್ವಾಮಿಗಳ ಕೃತಿಗಳು – ಸಂ, ಎಸ್. ಶಿವಣ್ಣ, ಶ್ರೀ ಬೃಹನ್ಮಠ ಸಂಸ್ಥಾನ, 

    ಚಿತ್ರದುರ್ಗ, ೧೯೮೯, 

೨. ಎಸ್.ಶಿವಣ್ಣ, ಬಿಡುಮುತ್ತು, ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು, ೨೦೦೪

೩. ವೀರಶೈವ ತಾರಾವಳಿ ಸಂಪುಟ – ಸಂ. ಡಾ. ವೀರಣ್ಣ ರಾಜೂರ, ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೧೯೯೪ 

೪. ಎಸ್.‌ ವಿದ್ಯಾಶಂಕರ ವೀರಶೈವ ಸಾಹಿತ್ಯ ಚರಿತ್ರೆ ಸಂಪುಟ ೪, 

  ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೧೫

೫. ಪುಷ್ಪಾ ಬಸನಗೌಡರ, ಮುರುಘಾಪರಂಪರೆಯ ಪ್ರಾಚೀನ ಸಾಹಿತ್ಯ, 

    ಶ್ರೀ ಮುರುಘಾ ಮಠ, ಚಿತ್ರದುರ್ಗ, ೨೦೧೬

೬. ಮಹಾಲಿಂಗ ಕವಿಯ ಮಹಾಲಿಂಗೇಂದ್ರ ವಿಜಯ ಸಂ. ಎಲ್.‌ ಬಸವರಾಜು

           ಶ್ರೀ ಮುರುಘಾ ಮಠ, ಚಿತ್ರದುರ್ಗ, ೧೯೭೫

                                                                                       



 


                 ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ                 ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು                 ...