ವಚನಕಾರ ಅಂಬಿಗರ ಚೌಡಯ್ಯ
ಡಾ.ಸಿ.ನಾಗಭೂಷಣ
ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು. ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ. ಸಾಹಿತಿ ಅಥವಾ ಕವಿಯಾಗಬೇಕಾದರೆ ವಿದ್ವಾಂಸನಾಗಿರಬೇಕಾಗಿಲ್ಲ. ಅರ್ಥವಾಗದ ಆಡಂಬರ ಭಾಷೆಯಲ್ಲಿ ಬರೆಯ ಬೇಕಾಗಿಲ್ಲ. ಅಂತರಂಗದನುಭವಗಳನ್ನು ತುಮುಲಗಳನ್ನು ನೇರವಾಗಿ ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲುದು ಎಂಬುದನ್ನು ತೋರಿಸಿ ಕೊಟ್ಟರು. ಜನಸಾಮಾನ್ಯರ ಆಡುಮಾತನ್ನೇ ಅಂತರಂಗದ ಸೂಕ್ಷ್ಮವಾದ,ನವುರಾದ ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಲ್ಲದೆ, ಗಹನವಾದ ಶಾಸ್ತ್ರವಿಚಾರಗಳಿಗೂ ನಿಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ ಮಾಧ್ಯಮವಾಗಿಸಿದರು. ಸ್ತ್ರೀ-ಪುರುಷರ ನಡುವಿನ ಅಂತರವನ್ನು ನಿರಾಕರಿಸಿ ವರ್ಣಭೇದ, ವರ್ಗ ಭೇದಗಳನ್ನು ಪ್ರತಿಭಟಿಸಿ ವಿಪ್ರ ಹಾಗೂ ಅಂತ್ಯಜರನ್ನು ಒಂದೇ ಎನ್ನುವ ಸಮಾನತೆಯ ಚೌಕಟ್ಟಿನಲ್ಲಿರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಚನ ಚಳುವಳಿಯು ಒದಗಿಸಿ ಕೊಟ್ಟಿತು. ಕನ್ನಡನಾಡಿನ ಹನ್ನೆರಡನೇ ಶತಮಾನದ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಶಿವಶರಣರ ಆಂದೋಲನದ ನಿಮಿತ್ತವಾಗಿ ರೂಪುಗೊಂಡ ವಚನ ಸಾಹಿತ್ಯವು ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಚಿಂತನೆಯ ಪ್ರತಿಪಾದನೆಯೂ ಆಗಿದೆ. ವಚನಕಾರರು ಶಿವಭಕ್ತರೂ ಹೌದು, ಸಮಾಜಚಿಂತಕರೂ ಹೌದು. ಏಕೆಂದರೆ ವಚನಕಾರರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಕೆಲವು ಘಟನೆಗಳು ಆ ಕಾಲದ ಸಾಮಾಜಿಕ ದಾಖಲೆಗಳಾಗಿಯೂ ಕಂಡು ಬರುತ್ತವೆ. ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದ್ದು ಭಾರತೀಯ ಭಕ್ತಿಪಂಥದ ಒಂದಂಗವಾದ ವಚನಚಳುವಳಿಯಲ್ಲೇ ಎಂಬುದು ಗಮನಾರ್ಹ ಅಂಶವಾಗಿದೆ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟಗೊಂಡಿದೆ. ಸಾಮಾನ್ಯ ಜನಸ್ತರವನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳ ಬೇಕು ಎಂಬುದು ಭಕ್ತಿಪಂಥದ ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು. ವಚನ ಚಳುವಳಿಯು ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತ ಶಾಹಿಯ ಭೌತಿಕ ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ ಹಂತವನ್ನು ತಲುಪಿದ್ದನ್ನು ಗುರುತಿಸ ಬಹುದಾಗಿದೆ. ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ವಚನ ಚಳುವಳಿಯು ಭಾಷೆಯ ಬಳಕೆಯಲ್ಲಿ ದೇಸಿ ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಇದರ ಮುಖ್ಯ ಲಕ್ಷಣ ಎಂದರೆ ಅದರ ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಟ್ಟಿದ್ದು. ವಚನಕಾರರು ವೈದಿಕ ವ್ಯವಸ್ಥೆಯ ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ನಡೆದು ತನ್ನದೇ ಆದ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು.
ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಬಸವಣ್ಣನ ನೇತೃತ್ವದಲ್ಲಿ ಎಲ್ಲಾ ಶರಣರೂ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು ಅಭಿವ್ಯಕ್ತ ಪಡಿಸುವ ಧೈರ್ಯ ತೋರಿದ್ದು ಮುಖ್ಯ ಎನಿಸುತ್ತದೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು.
ಬಸವಾದಿ ಶರಣರ ನೇತೃತ್ವದಲ್ಲಿ ಕನ್ನಡ ನಾಡಿನಲ್ಲಿ ನಡೆದ ಆಂದೋಲನವು, ಕೇವಲ ಧಾರ‍್ಮಿಕ ಸ್ವರೂಪದ್ದಾಗಿರದೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಬದಲಾವಣೆಗಳಿಗೂ ಕಾರಣವಾಯಿತು. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ವಚನಕಾರರ ಸಾಮಾಜಿಕ ಪ್ರಜ್ಞೆ ಅತ್ಯುನ್ನತ ಮಟ್ಟದ್ದಾಗಿತ್ತು. ವಚನಕಾರರ ಸಾಮಾಜಿಕ ಪ್ರಜ್ಞೆಯಲ್ಲಿ ತಮ್ಮ ಸಮಕಾಲೀನ ಹದಗೆಟ್ಟ ಸಮಾಜವನ್ನು ಯೋಗ್ಯರೀತಿಯಲ್ಲಿ ನಡೆಯಿಸುವ ಧರ್ಮದ ಡಾಂಭಿಕತೆಯನ್ನು ಹೊಡೆದೋಡಿಸಿ ಮಾನವತೆಯನ್ನು ಎಚ್ಚರಗೊಳಿಸುವ, ಪರಂಪರಾಗತ ಶುಷ್ಕ, ಅರ್ಥಹೀನ, ಸವಕಳಿ ನಡೆ ನುಡಿಗಳನ್ನು ತಿದ್ದಿ ಸಜೀವಗೊಳಿಸುವ, ಅಂಧಾನುಕರಣೆಯಲ್ಲಿ ಮುಳುಗಿ ಹೋಗಿದ್ದ ಜನತೆಗೆ ತಮ್ಮ ತಮ್ಮ ವ್ಯಕ್ತಿ ವೈಶಿಷ್ಟ್ಯದ ಬಗೆಗೆ ಅರಿವು ಮೂಡಿಸುವ ಹಲವಾರು ಅಂಶಗಳನ್ನು ಗುರುತಿಸಬಹುದಾಗಿದೆ. ವಚನಕಾರರಿಂದ ಪ್ರವರ್ತನಗೊಂಡ ವೀರಶೈವ ಧರ್ಮವು ಕೇವಲ ಧಾರ್ಮಿಕ ಅವಶ್ಯಕತೆಯಿಂದ ರೂಪುಗೊಂಡಿದ್ದಲ್ಲ. ಅದು ಸಮಾಜೋಧಾರ್ಮಿಕ ಚಳುವಳಿಯ ಫಲಿತ.
ಶಿವಶರಣರ ಚಳುವಳಿಯು, ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ; ಎಲ್ಲಿ ವ್ಯಕ್ತಿಯ ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ ಪರಸ್ಪರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿತು. ಈ ಒಂದು ಮಹತ್ತರವಾದ ಜವಾಬ್ದಾರಿ ಅಂದಿನ ವಚನಕಾರರೆಲ್ಲರ ಚಿಂತನೆಯ ಮೂಸೆಯಲ್ಲಿ ಹೊರಹೊಮ್ಮಿದ ಕಾರಣ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಪಾಲುದಾರರು. ಅದರ ಮುಖ್ಯ ಉದ್ದೇಶ ಮಾತ್ರ ಬಹುಜನರ ಹಿತವನ್ನು ಸಾಧಿಸುವ ಒಂದು ಸಾಮಾಜಿಕ ಧರ್ಮವನ್ನು ರೂಪಿಸುವುದಾಗಿತ್ತು.
ವಚನಕಾರರಿಗೆ ಕಾಯಕದ ಮೂಲಕ ದೊರೆತ ಸ್ವಾಭಿಮಾನ ದೇವರಿಗೂ ಸವಾಲು ಹಾಕುವ ಮಟ್ಟಕ್ಕೆ ಹೋಗಿತ್ತು ಎಂದರೆ ವಚನ ಚಳುವಳಿಯ ಪರಿಣಾಮ ಎಷ್ಟೊಂದು ಅಗಾಧವಾಗಿತ್ತು ಎಂಬುದನ್ನು ಇದು ತಿಳಿಸುತ್ತದೆ. ಒಂದು ದೃಷ್ಠಿಯಲ್ಲಿ ವಚನ ಚಳುವಳಿ ಕಾಯಕಜೀವಿಗಳ ಚಳುವಳಿಯೇ ಆಗಿದೆ ಎನ್ನಬಹುದು. ಬುದ್ಧಿಯೇ ಮುಖ್ಯ ಅಂದುಕೊಂಡ ಸಮಾಜದಲ್ಲಿ ದೇಹಶ್ರಮಕ್ಕೂ ತನ್ನದೇ ಆದ ಸ್ಥಾನವಿದೆ ಎಂದು ತೋರಿಸಿಕೊಟ್ಟ ವಿಶಿಷ್ಠ ಸಂಸ್ಕೃತಿ ವಚನಕಾರರದಾಗಿದೆ ಎಂದು ಹೇಳಬಹುದು.
ಈ ಆಂದೋಲನದಲ್ಲಿ ಪಾಲ್ಗೊಂಡ ಶರಣರು ತಮ್ಮ ಅನಿಸಿಕೆ, ಆಲೋಚನೆ, ಚಿಂತನೆ, ಅನುಭವ,ಅನುಭಾವಗಳನ್ನು ಭಾಷೆಯಲ್ಲಿ ದಾಖಲಿಸಿದರು. ವಚನವು ಈ ದಾಖಲೆಯ ಅಭಿವ್ಯಕ್ತಿ ಮಾಧ್ಯಮವಾಯಿತು. ಸಾಮಾಜಿಕವಾದ ಅಸಮಾನತೆಗಳನ್ನು ಕುರಿತು ವಚನಕಾರರು ತೋರಿದ ಪ್ರತಿಕ್ರಿಯೆಯು ಗಮನಾರ್ಹವಾದುದಾಗಿದೆ. ಶಿವಶರಣರು ಹುಟ್ಟುಹಾಕಿದ ವಚನ ಚಳುವಳಿಯ ಮಹಾಂದೋಲನದಲ್ಲಿ ಇದ್ದುಕೊಂಡೇ ಅದರೊಳಗಿನ ಮೂಢನಂಬಿಕೆ, ಅಜ್ಞಾನ,ಆಡಂಬರಗಳನ್ನು ಕಟುವಾಗಿ ಟೀಕಿಸಿದ ವಚನಕಾರರಲ್ಲಿ ಅಂಬಿಗರ ಚೌಡಯ್ಯನು ಮೊದಲಿಗನಾಗಿದ್ದಾನೆ. ತಳಸಮುದಾಯದಿಂದ ಬಂದ ಅಂಬಿಗರ ಚೌಡಯ್ಯನಲ್ಲಿರುವ ವೈಚಾರಿಕತೆ ಅಗಾಧವಾದುದು. ಪ್ರತಿಯೊಂದನ್ನು ತನ್ನ ಚಿಂತನೆಯ ಕುಲುಮೆಯಲ್ಲಿಟ್ಟು ತಿಕ್ಕಿ ತೀಡಿ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಮನೋಭಾವದವನು. ಈತನ ಚಿಂತನಶೀಲಗುಣ ಬೆರಗನ್ನುಂಟುಮಾಡುವಷ್ಟು ಪ್ರಖರವಾಗಿದೆ. ಮೇಲು ವರ್ಗದ ಶಿವಶರಣರಂತೆ ತಮ್ಮಿಷ್ಟ ದೇವತೆಯ ಹೆಸರನ್ನು ಅಂಕಿತವನ್ನಾಗಿ ಇಟ್ಟುಕೊಳ್ಳದೇ ತಳವರ್ಗದವರು ತಮ್ಮ ವೃತ್ತಿ ಹಾಗೂ ಹೆಸರುಗಳನ್ನುವಚನಗಳ ಅಂಕಿತವಾಗಿಟ್ಟುಕೊಂಡರು. ಅಂಬಿಗರ ಚೌಡಯ್ಯನೂ ತನ್ನ ಹೆಸರನ್ನು ಅಂಕಿತವಾಗಿಟ್ಟು ಕೊಂಡದ್ದು ಗಮನಾರ್ಹವಾಗಿದೆ. ಪ್ರಗತಿಪರ ದೃಷ್ಠಿಕೋನವನ್ನು ಹೊಂದಿದ್ದ ಈತನು ವಚನ ಪರಂಪರೆಯಲ್ಲಿ ಬಂಡಾಯ ವಚನಕಾರನೆಂದೆ ಗುರುತಿಸಿಕೊಂಡಿದ್ದಾನೆ. ಅಂಬಿಗರ ಚೌಡಯ್ಯನು ಬಸವಾದಿ ಶಿವಶರಣರ ಸಮಕಾಲೀನನಾಗಿದ್ದು, ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದರು. ಶ್ರೇಷ್ಠ ಅನುಭಾವಿ; ಸಾಮಾಜಿಕ ಬದಲಾವಣೆಯ ಬಗೆಗೆ ತೀವ್ರ ಕಳಿಕಳಿಯುಳ್ಳ ಧ್ಯೇಯವಾದಿ; ಅಸತ್ಯ, ಅನ್ಯಾಯ, ಮೂಢನಂಬಿಕೆ, ಅಂಧ ಆಚಾರವಿಚಾರಗಳನ್ನು ಖಂಡಿಸುವ ನಿಷ್ಠುರವಾದಿ. ಇವು ಇವನ ವ್ಯಕ್ತಿತ್ವದ ಮೂರು ಮುಖಗಳು. ಕೆಳಸ್ತರದವನಾಗಿರುವದರಿಂದ ಶೋಷಣೆಗೆ ಒಳಗಾದ ತನ್ನವರ ಎಲ್ಲ ನೋವಿನ ದನಿಗಳ ಪರಿಚಯ ಅವನಿಗಿದೆ.
ಬಸವಾದಿ ಪ್ರಮಥರ ಹಾಗೆ ವಚನಕಾರ ಅಂಬಿಗರ ಚೌಡಯ್ಯನ ವೈಯಕ್ತಿಕವಾದ ವಿಷಯದ ಬಗೆಗೆ ಖಚಿತವಾದ ದಾಖಲೆಗಳು ಸಿಗುವುದಿಲ್ಲ. ಅವನ ವಚನಗಳಲ್ಲಿಯೂ ಅಂತಹ ಅಂಶಗಳ ಸುಳಿವು ಕಾಣುವುದಿಲ್ಲ. ಈತನನ್ನು ಕುರಿತು ಯಾವುದೇ ಶರಣ ಕಾವ್ಯ ಪುರಾಣಗಳು ಲಭ್ಯವಿರುವುದಿಲ್ಲ. ೧೨ನೇ ಶತಮಾದ ವಚನ ಸಾಹಿತ್ಯ ಪರಂಪರೆಯಲ್ಲಿಯೇ ಅಂಬಿಗರ ಚೌಡಯ್ಯನೊಳಗೊಂಡಂತೆ ಒಟ್ಟು ನಾಲ್ಕು ಜನ “ಚೌಡಯ್ಯ” ಎಂಬ ಹೆಸರಿನ ಶಿವಶರಣರು ದೊರಕುತ್ತಾರೆ. ಸುರಗಿಯ ಚೌಡಯ್ಯ, ಮುಸುಟಿಯ ಚೌಡಯ್ಯ, ಬಹುರೂಪಿ ಚೌಡಯ್ಯರು ಇತರ ಮೂವರು ಶರಣರಾಗಿದ್ದಾರೆ.
ಅಂಬಿಗರ ಚೌಡಯ್ಯ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಆಂದೋಲನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವನು. ಅವನು ನಿಸ್ಸಂಶಯವಾಗಿ ಬಸವಣ್ಣನ ಕಿರಿಯ ಸಮಕಾಲೀನ. ಚೌಡಯ್ಯ ಶೋಷಣೆಗೊಳಗಾದ ವ್ಯಕ್ತಿಗಳ ಪ್ರತಿನಿಧಿ; ಶ್ರೇಷ್ಠ ಅನುಭಾವಿ; ಸಾಮಾಜಿಕ ತೀಕ್ಷ್ಣವಿಡಂಬನಕಾರ. ಮಾನವತಾವಾದಿ. ಆದರೂ ಅವನ ಬಗೆಗೆ ನಂತರದ ಬಹುತೇಕ ವೀರಶೈವಕವಿಗಳು ಮೌನವಹಿಸಿರುವರು. ಹರಿಹರ-ರಾಘವಾಂಕರಾಗಲಿ, ಪಾಲ್ಕುರಿಕೆ ಸೋಮನಾಥ ಭೀಮಕವಿಗಳಾಗಲಿ, ಲಕ್ಕಣ್ಣ ದಂಡೇಶ-ವಿರೂಪಾಕ್ಷ ಪಂಡಿತರಾಗಲಿ ಇವನ ಹೆಸರನ್ನು ಎಲ್ಲಿಯೂ ನೆನೆದಿಲ್ಲ, ಸಿದ್ಧನಂಜೇಶ ತನ್ನ 'ಗುರುರಾಜ ಚಾರಿತ್ರ'ದಲ್ಲಿ ಗಣಸಹಸ್ರನಾಮವನ್ನು ಹೇಳುವಾಗ ಇವನ ಹೆಸರನ್ನು ಹೇಳಿರುವನು. ತೋಂಟದಸಿದ್ದಲಿಂಗಯತಿಗಳ ಶಿಷ್ಯ ಪರಂಪರೆಯಲ್ಲಿ ಬರುವ ಘನಲಿಂಗಿದೇವನು ತನ್ನವಚನವೊಂದರಲ್ಲಿ ......ಡೋಹರ ಕಕ್ಕಯ್ಯ ಮಾದಾರಚನ್ನಯ್ಯ ಅಂಬಿಗರ ಚೌಡಯ್ಯ ಎಂದು ಉಲ್ಲೇಖಿಸಿರುವನು. ಮಹಾಲಿಂಗದೇವ ತನ್ನʻಗುರುಬೋಧಾಮೃತ'ದಲ್ಲಿ ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲಿಕ್ಕುವ ಸೊಣಗನ ಮಾಡಿ ಎನ್ನನಿರಿಸಯ್ಯ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸಿರುವನು. ಷಡಕ್ಷರಿ ತನ್ನ ಬಸವರಾಜ ವಿಜಯ'ದಲ್ಲಿ ಇವನ ಉಲ್ಲೇಖಿಸಿರುವನು. ಕಂಬಾಳ ಶಾಂತಮಲ್ಲನು (೧೬೦೦) ತನ್ನ ʻಗಣವಚನ ರತ್ನಾವಳಿ'ಯಲ್ಲಿ ಇವನ ಹೆಸರನ್ನು ಹೇಳಿರುವನು.
ಚೌಡದಾನಪುರ, ಮೈಲಾರ, ಕೆರೆಮಲ್ಲಾಪುರ ಇತ್ಯಾದಿ ಶಾಸನಗಳು, ಶಿಶುನಾಳ ಶರೀಫನ ಶಿವದೇವ ವಿಜಯ'ಕೃತಿ-ಇವುಗಳ ಆಧಾರದ ಮೇಲೆ ಅಂಬಿಗರ ಚೌಡಯ್ಯ ೧೩ನೇ ಶತಮಾನದಲ್ಲಿದ್ದನೆಂದು ವಾದಿಸಲಾಗಿದೆ. ಅಂಬಿಗರ ಚೌಡಯ್ಯನ ಕಾಲವನ್ನು ೧೩ನೇ ಶತಮಾನವೆಂದು ಹೇಳುತ್ತಿರುವವರ ವಾದದಂತೆ ೧೩ನೇ ಶತಮಾನದ ಚೌಡದಾನಪುರದ ಶಾಸನದ ಪ್ರಕಾರ ಶಿವದೇವ ಒಡೆಯರ ಶಿಷ್ಯರಲ್ಲಿ ಅಂಬಿಗರ ಚೌಡಯ್ಯನೂ ಒಬ್ಬನು. ಚೌಡದಾನಪುರದ ಅಸ್ಪಷ್ಟ ಶಿಲಾಲೇಖದಲ್ಲಿ ಬರುವ ಮಣಂಬೆನಾಯಕನೇ ಅಂಬೆನಾಯಕನೆಂದೂ, ಈತನೇ ಅಂಬಿಗರ ಚೌಡಯ್ಯನೆಂದೂ ಊಹಿಸಲಾಗಿದೆ. ಮೈಲಾರಶಾಸನದಲ್ಲಿ ಶ್ರೀ ಶಿವದೇವರು ಮುಕ್ತಿನಾಥಲಿಂಗದಲ್ಲಿ ಉದ್ಭವಿಸಿ ಕುರುವತ್ತಿ ಶ್ರೀ ನಂದೀಶ್ವರ, ಶ್ರೀ ಮೈಲಾರಲಿಂಗ, ಶ್ರೀ ಹೊನ್ನಮ್ಮದೇವಿ, ಶಿವಲಿಂಗಧಾರಣಾದಿ ಕಾರ್ಯಗಳನ್ನು ಮಾಡಿದವರು. ಹೀಗಾಗಿ ಅಲ್ಲಿ ಬರುವ ಶಿವದೇವನ ಶಿಷ್ಯನೇ ಅಂಬಿಗರ ಚೌಡಯ್ಯನೆಂದು ವಾದಿಸಲಾಗಿದೆ. ಶಿವದೇವ ಒಡೆಯರಿಗೆ ಶರಣ ಚೌಡಯ್ಯನು ದಾನವಾಗಿ ಕೊಟ್ಟ ಪುರವೇ ಚೌಡದಾನಪುರವೆಂದು ಊಹಿಸಲಾಗಿದೆ. ಚೌಡದಾನಪುರದ ಮಣಂಬೆ ನಾಯಕನೇ ಅಂಬಿಗರಚೌಡಯ್ಯನೆಂಬುದಕ್ಕೆ ಆಧಾರ ಸಾಲದು. ಮೈಲಾರ ಹಾಗೂ ಕೆರೆಮಲ್ಲಾಪುರ ಶಾಸನಗಳಲ್ಲಿ ನಾಮಸಾಮ್ಯ ಮಾತ್ರ ಕಾಣುತ್ತದೆ. ಗುರುಗಳಾದ ಶಿವದೇವ ಒಡೆಯರಿಗೆ ಅಂಬಿಗರಚೌಡಯ್ಯನು ದಾನವಾಗಿ ಕೊಟ್ಟ ಊರೇ ಚೌಡದಾನಪುರವೆಂದು ಹೆಸರಾಯಿತು ಎಂಬ ವಾದದಲ್ಲೂ ಸತ್ಯಾಂಶವಿಲ್ಲ. ಚೌಡಯ್ಯನ ಹೆಸರಿನ ಮುಂದಿರುವ ವೃತ್ತಿವಾಚಕವು ಅವನು ದೋಣಿ ನಡೆಸುವ ಕಾಯಕದವನೆಂಬುದನ್ನು ಸೂಚಿಸುತ್ತದೆ. ಇಂತಹ ಓರ್ವಸಾಮಾನ್ಯಾತಿಸಾಮಾನ್ಯ ವ್ಯಕ್ತಿ ಒಂದು ಊರನ್ನು ದಾನವಾಗಿ ಕೊಡುವುದಕ್ಕೆ ಸಾಧ್ಯವೆ?ಅವನಿಗೆ ಒಂದು ಊರನ್ನು ದಾನವಾಗಿ ಕೊಡುವಷ್ಟು ಅಧಿಕಾರವಾದರೂ ಎಲ್ಲಿತ್ತು ?ಅವನೇನು ರಾಜನೆ? ಮಂತ್ರಿಯೇ? ಮಾಂಡಲಿಕನೇ? ಧನಿಕನೆ ? ಊರೊಂದನ್ನುದಾನವಾಗಿಕೊಡಲು. ಶಿವದೇವ ಒಡೆಯರಿಗೆ ದಾನವಾಗಿರೊಂದನ್ನು ದಾನವಾಗಿ ಕೊಟ್ಟವನು ಅಂಬಿಗರ ಚೌಡಯ್ಯನಿಗಿಂತ ಭಿನ್ನವಾದಬೇರೊಬ್ಬ ಚೌಡಯ್ಯನಿರಬಹುದೆಂಬುದನ್ನು,ಸಮಕಾಲೀನನೆಂಬುದನ್ನು ಅವನ ವಚನಗಳ ಆಂತರಿಕ ಆಧಾರದ ಮೇಲೆ ಹೇಳಬಹುದು. ಅಂಬಿಗರ ಚೌಡಯ್ಯನು ೧೨ನೇ ಶತಮಾನದಲ್ಲಿದ್ದ ಬಸವಾದಿ ಶರಣರ ಗುರುತಿಸಬಹುದು. ಪುರಾಣ ಕಥೆಗಳು ಮತ್ತು ಇದನ್ನೇ ಸತ್ಯವಾಗಿಸಲು ಕೆಲವು ಸಂಶೋಧಕರು ಮಾಡಿದ ಪ್ರಯತ್ನಗಳು ಕಾರಣವಾಗಿವೆಯಾದರೂ ಸಾಬೀತು ಪಡಿಸಲು ಅಧಿಕೃತ ಆಕರಗಳ ಕೊರತೆ ಇದೆ. ಅಂಬಿಗರ ಚೌಡಯ್ಯನು ತೋರಿದ ಹಲವು ಪವಾಡಗಳಲ್ಲಿ ತುಂಬಿದ ಹೊಳೆಯಲ್ಲಿ ಕಲ್ಲಿನದೊಣಿಯನ್ನು ನಡೆಸಿದುದು ಒಂದಾಗಿದೆ. ಈಗಲೂ ಚೌಡದಾನಪುರದ ತುಂಗಭದ್ರ ನದಿತೀರದಲ್ಲಿ ಒಂದು ಕಲ್ಲಿನ ದೋಣಿ ಇದೆ. ಅಲ್ಲಿಯ ಜನ ಅದನ್ನೇ ಅಂಬಿಗರ ಚೌಡಯ್ಯನಡೆಸಿದ ದೋಣಿ ಎಂದು ಹೇಳುತ್ತಾ ಬಂದಿದ್ದಾರೆ. ಈಗಿನ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಚೌಡದಾನಪುರ ಅಂಬಿಗರಚೌಡಯ್ಯನ ಜನ್ಮಸ್ಥಳವಾಗಿರಬೇಕು. ಚೌಡದಾನಪುರದ ಸುತ್ತಲಿನ ಜನರ ಬಾಯಲ್ಲಿ ಉಳಿದುಬಂದಿರುವ ಕಥೆಗಳು, ಅಂಬಿಗರಚೌಡಯ್ಯ ಚೌಡದಾನಪುರದವನೇ ಎಂದು ನಂಬುವಂತೆ ಮಾಡಿವೆ. ಜನಪದರ ಈ ನಂಬಿಕೆಯನ್ನು ತಳ್ಳಿಹಾಕುವಂತೆಯೂ ಇಲ್ಲ. ಆದುದರಿಂದ ಅಂಬಿಗರ ಚೌಡಯ್ಯನ ಜನ್ಮಸ್ಥಳ ಚೌಡಯ್ಯದಾನಪುರವೆಂದು ಸದ್ಯ ಒಪ್ಪಬೇಕಾಗಿದೆ. ಅಲ್ಲಿಯ ತುಂಗಭದ್ರ ನದಿಯಲ್ಲಿ ಕೆಲವು ಕಾಲ ಅಂಬಿಗವೃತ್ತಿಯನ್ನು ಮಾಡಿರಬಹುದು. ಗೋದಾವರಿ ನದಿತೀರದಲ್ಲಿ ಕೆಲವು ದಿನ ತಂಗಲಾಗಿ, ಒಂದು ದಿನ ವಿಪರೀತ ಮಳೆಯಾಗಿ ದಾರಿಕೆಟ್ಟು ಜನಸಂಚಾರ ಅಸ್ತವ್ಯಸ್ತವಾಗುತ್ತದೆ. ವಿಪರೀತ ಸುರಿದ ಮಳೆಯಿಂದಾಗಿ ನದಿದಾಟುವುದು ಸಾಧ್ಯವಾಗದೆ ಜನತೆ ವಿಚಲಿತವಾಗುತ್ತಾರೆ. ಇದನ್ನು ತಿಳಿದ ಚೌಡಯ್ಯ ಜನರ ಸಹಾಯದಿಂದ ಒಂದು ಹರಿಗೋಲನನ್ನು ತಂದು ಅದರ ಮುಖೇನ ಆ ಜನರನ್ನು ಹೊಳೆದಾಟಿಸುತ್ತಾನೆ. ಅಲ್ಲಿಯ ಅಂಬಿಗ ಸೇವೆಯ ಕಾರಣದಿಂದಾಗಿ ಹೋಗಿಬರುವ ಜನರ ಪ್ರೀತಿಗೆ ಗೌರವಕ್ಕೆ ಪಾತ್ರನಾಗಿ ಅಂಬಿಗರಚೌಡಯ್ಯನೆಂದೇ ಕರೆಸಿಕೊಂಡನೆಂಬ ಐತಿಹ್ಯ ಇದೆ. ಬಸವಣ್ಣನ ಪ್ರಸಿದ್ಧಿಯನ್ನು ಕೇಳಿ ಇತರ ಶರಣರಂತೆ ಕಲ್ಯಾಣಕ್ಕೆ ಬಂದಿದ್ದರಬೇಕು.
ಅಂಬಿಗರ ಚೌಡಯ್ಯನ ವಚನಗಳನ್ನು ಸಂಪಾದಿಸಿದ ಸಂಪಾದಕರು ಮೊದಲಿಗೆ ಲಭ್ಯವಿರುವ ವಚನಗಳ ಸಂಖ್ಯೆ ೨೭೦ ಎಂದು ಹೇಳಿದ್ದರು. “ಬಸವ ಸಮಿತಿಯ ಹಸ್ತಪ್ರತಿ ಸಂಗ್ರಹದದ ಓಲೆಪ್ರತಿ, ಮೈಸೂರಿನ ಜಿ.ಎ.ಶಿವಲಿಂಗಯ್ಯನವರ ಸಂಗ್ರಹದ ಓಲೆಪ್ರತಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಸಂಖ್ಯೆ ಬಿ.421, ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು ಆಧರಿಸಿ ಅಂಬಿಗರ ಚೌಡಯ್ಯನ 8 ಅಪ್ರಕಟಿತ ವಚನಗಳನ್ನು ಶೋಧಿಸಿ ಎಸ್.ಶಿವಣ್ಣನವರು ಪ್ರಕಟಿಸಿದ್ದಾರೆ.” ಅವುಗಳನ್ನು ಸೇರಿಸಿಕೊಂಡು ಎಂ.ಎಂ.ಕಲಬುರ್ಗಿಯವರು ಸಂಪಾದಿಸಿರುವ ಸಂಕೀರ್ಣವಚನ ಸಂಪುಟದಲ್ಲಿ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ, ೨೭೮ ಆಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಭಂಡಾರದ ಕ್ರ.ಸಂ.ಬಿ.೪೨೧ ರ ಹಸ್ತಪ್ರತಿಯಲ್ಲಿ ಅಂಬಿಗರ ಚೌಡಯ್ಯನ ಅಪ್ರಕಟಿತ ೦೪ ವಚನಗಳನ್ನು ಎಸ್.ಶಿವಣ್ಣನವರು ಶೋಧಿಸಿ ಪ್ರಕಟಿಸಿದ್ದಾರೆ. ಇಂದು ಈ ವಚನಗಳ ಶೋಧನೆಯಿಂದಾಗಿ ಲಭ್ಯವಿರುವ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ 2೮೨ ಕ್ಕೆ ಹೆಚ್ಚಿದೆ. ಇದರಿಂದಾಗಿ ಈತನ ಸ್ಥಾನವನ್ನು ವಚನಕಾರರ ಪರಂಪರೆಯಲ್ಲಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.
ಅಂಬಿಗರ ಚೌಡಯ್ಯನು ತನ್ನ ವಚನಗಳಲ್ಲಿ ಸಮಕಾಲೀನ ಅನೇಕ ಶರಣರನ್ನು ಸ್ಮರಿಸಿದ್ದಾನೆ. ಬಸವಣ್ಣ ನೀಲಲೋಚನೆ, ಚೆನ್ನಬಸವಣ್ಣ, ಅಲ್ಲಮ, ಕುಂಬಾರಗುಂಡಯ್ಯ, ಶ್ವಪಚಯ್ಯ, ಸಾಮವೇದಿ, ಕೆಂಬಾವಿ ಬೋಗಣ್ಣ, ಮರುಳಶಂಕರದೇವ, ಹರಳಯ್ಯ, ಪಡಿಹಾರಿಉತ್ತಣ್ಣ, ಬಬ್ಬಿ ಬಾಚಯ್ಯ, ಚೇರಮರು, ನಂಬಿಯಣ್ಣ ಮುಂತಾದವರೆನ್ನೆಲ್ಲ ನೆನಸಿಕೊಂಡಿದ್ದಾನೆ.ಬಸವಣ್ಣನವರನ್ನು ಅತ್ಯಂತ ಮನಃಪೂರ್ವಕವಾಗಿ ನಮಿಸಿದ್ದಾನೆ. ಆ ವಚನ ಇಂತಿದೆ.
ಗುರುಲಿಂಗ ಜಂಗಮಕ್ಕೆ ಆಧಾರ ಬಸವಣ್ಣ
ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ
ಆ ಬಸವಣ್ಣನ ಶ್ರೀ ಪಾದಕ್ಕೆ ನಮೋ ನಮೋ
ಸರ್ವಾಪತ್ತಿಗಾಧಾರ ಬಸವಣ್ಣ
ಎನುತಿರ್ದಾತನಂಬಿಗ ಚೌಡಯ್ಯ
(ಸಂಕೀರ್ಣ ವಚನ ಸಂಪುಟ-೧ (ಎಂ.ಎಂ.ಕಲಬುರ್ಗಿ)ವ.ಸಂ.೧೩೫ ಪುಟ-೪೬)
ನಂಬಿಯಣ್ಣ ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯ,
ಕುಂಬಾರಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ
ಬಸವಣ್ಣ ಮಾಡಬಹುದಾದ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯ
(ಸಂಕೀರ್ಣ ವಚನ ಸಂಪುಟ-೧ (ಎಂ.ಎಂ.ಕಲಬುರ್ಗಿ)ವ.ಸಂ.೧೩೫ ಪುಟ-೫೫)
ಧನಧಾನ್ಯದಾಸೆಗೆ ಶಿವದೀಕ್ಷೆ ಕೊಡುವ ಗುರು. ಗುರುತ್ವ ಅರಿಯದ ಶಿಷ್ಯ ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮೆಚ್ಚರಯ್ಯ ಎಂದಿರುವನು. ನಮ್ಮ ಪ್ರಮಥರು ಎಂದರೆ ಬಸವಣ್ಣ ಮೊದಲಾದ ಶರಣರೇ ಹೊರತು ಬೇರೆ ಮತ್ತಾರು ಅಲ್ಲ. ಅಂಬಿಗರ ಚೌಡಯ್ಯನು ತಳಸಮುದಾಯದ ವಚನಕಾರರನ್ನು ಹೆಚ್ಚಾಗಿ ನೆನೆದಿದ್ದಾನೆ.
ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ಒಂದು ಗುಂಪು ಉಳುವಿಯ ಕಡೆಗೆ ಹೋದುದು, ಅಲ್ಲಿ ಹಲವು ಕಾಲ ಇದ್ದುದರ ಬಗ್ಗೆ ಅಂಬಿಗರ ಚೌಡಯ್ಯನು ಬಲ್ಲವನಾಗಿದ್ದಾನೆ.
“ಎಲ್ಲ ಪ್ರಮಥರು ಇಲ್ಲಿ ಇರಬಾರದೆಂದು ಕಲ್ಯಾಣವ ಬಿಟ್ಟು
ಉಳುವಿಗೆ ಹೋಗುವಾಗ್ಗೆ ಅಳಿಯ ಬಿಜ್ಜಳನು ದಂಡೆತ್ತಿ ಬರಲು
ಅವರದಂಡು ಹಿಮ್ಮೆಟ್ಟಿಸಿ ಎಲ್ಲ ಪ್ರಮಥರು ಉಳುವಿಗೆ ಬಂದ
ಗಣಪರ್ವ ಮಾಡಿ ಕೈಲಾಸಕ್ಕೆ ಹೋದರು”
ಇಂತಹ ಸಂಗತಿಗಳನ್ನು ಮನಗಂಡಾಗ ಅಂಬಿಗರ ಚೌಡಯ್ಯನು ಕಲ್ಯಾಣ ಕ್ರಾಂತಿಯನಂತರದಲ್ಲಿ ಕೆಲವು ಕಾಲವಾದರೂ ಜೀವಿಸಿರುವ ಸಾಧ್ಯತೆಯಿದೆ. ಅಂಬಿಗರ ಚೌಡಯ್ಯನ ಪ್ರಭಾವವು ಮುಂದಿನ ಕೆಲವು ವಚನಕಾರರು ಮತ್ತು ಕವಿಗಳ ಮೇಲಾಗಿದೆ ಎಂಬುದಕ್ಕೆ
ಅವನನ್ನು ಸ್ಮರಿಸುವ ಮಾತುಗಳು ಆಧಾರವಾಗಿ ನಿಲ್ಲುತ್ತವೆ. ನಿದರ್ಶನಕ್ಕೆ,
ಘನಲಿಂಗದೇವರು ಈತನ ಕಾಲ ಕ್ರಿ.ಶ. ೧೬ನೇ ಶತಮಾನ ಆತನ ವಚನವೊಂದರಲ್ಲಿ ಅಂಬಿಗರ
ಚೌಡಯ್ಯನ ಸ್ಮರಣೆ ಮಾಡಿದ್ದಾರೆ.
“ಎನ್ನ ಮನವೊಪ್ಪಿ ಪಂಚೈವರು
ಸಾಕ್ಷಿಯಾಗಿ ನುಡಿಯುತಿಪ್ಪನಯ್ಯ ನಿಮ್ಮಾಣೆ
ಎನಗೊಂದು ಕರುಣಿಸಯ್ಯ ತಂದೆ
ಡೋಹರ ಕಕ್ಕಯ್ಯ, ಮಾದರಚೆನ್ನಯ್ಯ, ಅಂಬಿಗರಚೌಡಯ್ಯ
ಇಂತಹ ಶಿವಶರಣರ ಮನೆಯ ಬಾಗಿಲಕಾವ
ಶುನಕನ ಮಾಡಿ ಎನ್ನ ನೀ ಸಲಹಯ್ಯ”
(ಬಸವೋತ್ತರ ಯುಗದ ವಚನಕಾರರು: ವೀರಣ್ಣ ರಾಜೂರ ಪುಟ- ೬೬)
ಮಹಾಲಿಂಗದೇವ ತನ್ನ ‘ಗುರುಭೋದಾಮೃತ’ ಕೃತಿಯಲ್ಲಿ ಅಂಬಿಗರ ಚೌಡಯ್ಯನನ್ನು
ಹೀಗೆ ಸ್ತುತಿಸಿದ್ದಾನೆ.
“ಕುಂಬಾರ ಗುಂಡಯ್ಯ ಅಂಬಿಗರ ಚೌಡಯ್ಯ
ಕೆಂಬಾವಿಯೊಳಗೆ ಪುರದ ಬೋಗಣ್ಣನಿಗೆ
ಸಂಭ್ರಮದೊಳೆರಗಿ ನಮಿಸುವೆನು”
“ಗುಮ್ಮಳಾಪುರದ ಸಿದ್ಧಲಿಂಗಯತಿಯು” ತನ್ನ ಶೂನ್ಯ
ಸಂಪಾದನೆಯಲ್ಲಿ ಅಂಬಿಗರ ಚೌಡಯ್ಯನಿಗೆ ತನ್ನ ಅಭಿಪ್ರಾಯ ಹೇಳುವುದಕ್ಕೆ ಅವಕಾಶ ದೊರಕಿಸಿ
ಕೊಟ್ಟಿದ್ದಾನೆ. ಆ ಭಾಗವು ಇಂತಿದೆ;
ಇದಕ್ಕೆ ಅಂಬಿಗರ ಚೌಡಯ್ಯಗಳ ವಚನ ;
“ಪ್ರಾಣವ ಪ್ರಣವವೆಂದೆಂಬರು ;
ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ ;
ಪ್ರಾಣವು ಪ್ರಳಯಕೊಳಗು
ತಿರಿಗಿ ತಿರಿಗಿಬಪ್ಪದಕ್ಕೆ ಒಡಲಾಯಿತ್ತು ;
ಪ್ರಣವವು ಪ್ರಸನ್ನವಾಗಿಪ್ಪುದೆಂದನಂಬಿಗರ ಚೌಡಯ್ಯ
ತನುವ ಹುಸಿಮಾಡಿ ಇನ್ನೊಂದು ದಿಟವ ಮಾಡುವ
ಅಣ್ಣಂಗೆ ನಂಬುಗೆ ಇನ್ನಾವುದಯ್ಯ ?
ತನ್ನೊಳಗಿದ್ದ ಘನವ ತಾ ತಿಳಿಯಲರಿಯದೆ
ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆವೆನೆಂಬ ಅಣ್ಣ ಗಾವಿಲನೆಂಬಿಗರ ಚೌಡಯ್ಯ
(ಗುಮ್ಮಳಾಪುರದ ಸಿದ್ಧಲಿಂಗಯತಿಗಳು: ಶೂನ್ಯಸಂಪಾದನೆ ಪುಟ-೧೮೪)
ಕಲ್ಯಾಣಕ್ಕೆ ಬಂದ ಚೌಡಯ್ಯನನ್ನು ಗಮನಿಸಿದ ಕೆಲ ಕುಹಕಿಗಳು ಬಸವಣ್ಣನವರಿಗೆ ಹೀಗೆನ್ನುತ್ತಾರೆ. ಶರಣರೆ, ಇಷ್ಟಲಿಂಗ ಧರಿಸದ ಚೌಡಯ್ಯ ಒಬ್ಬ “ಭವಿ” ಆತನಿಗೆ ಅನುಭವಮಂಟಪದಲ್ಲಿ ಅವಕಾಶ ನೀಡಬಾರದೆಂದು” ಹೇಳುತ್ತಾರೆ. ಇದನ್ನರಿತ ಚೌಡಯ್ಯ:
ನೇಮಸ್ತನೇನು ಬಲ್ಲನಯ್ಯಾ ಲಿಂಗದ ಕುರುಹ
ಸೂಳೆಯ ಮಗನೇನು ಬಲ್ಲನಯ್ಯಾ ತಂದೆಯ ಕುರುಹ!
ಇಂತಿಪ್ಪ ಅಂಗವೆ ಲಿಂಗ, ಲಿಂಗವೇ ಜಂಗಮ,
ಜಂಗಮವೇ ಲಿಂಗವೆಂದರಿಯದವನು
ಭಕ್ತನೆಂದರೆ, ಅಘೋರ ನರಕವೆಂದಾತ
ನಮ್ಮ ಅಂಬಿಗರಚೌಡಯ್ಯ ನಿಜಶರಣನು. ಚೌಡಯ್ಯನ ಇಂಥ ಕಠೋರ, ನಿಷ್ಟೂರ, ವೈಚಾರಿಕತೆಯನ್ನು ಅಲ್ಲಿನ ಶರಣ ಸಮೂಹ ಕೊಂಡಾಡುತ್ತದೆ. ಆದರೂ ಇಂತಹ ಕುಹಕಿಗಳ ಮಾತಿಗೆ ಬಲಿಯಾಗಬಾರದೆಂದು ತಾವೂ ಇಷ್ಠಲಿಂಗ ಧಾರಣ ಮಾಡುತ್ತಾರೆ. ಅಲ್ಲಿ ಕೆಲವುಕಾಲ ಅನುಭವ ಮಂಟಪದ ಚಿಂತನಾಗೋಷ್ಠಿಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಜಂಗಮ ದಾಸೋಹಗಳಲ್ಲಿ ಕೆಲಕಾಲ ತನ್ನನ್ನು ತೊಡಗಿಸಿಕೊಂಡಿದ್ದಿರ ಬೇಕು ಎಂದೆನಿಸುತ್ತದೆ. ಮುಂದೆ ಕಾಯಕ ಶ್ರದ್ಧೆಯ ಕಾರಣವಾಗಿ, ಸಮೀಪದ ಕೃಷ್ಣಾನದಿ ತೀರದಲ್ಲಿ ಒಂದು ಕುಟೀರ ನಿರ‍್ಮಿಸಿಕೊಂಡು ಅಲ್ಲಿಯೇ ನೆಲಸಿ ಅಂಬಿಗ ವೃತ್ತಿ ಕೈಗೊಳ್ಳುತ್ತಾರೆ. ಶರಣ ಚಳುವಳಿಯಲ್ಲಿ ಪಾಲ್ಗೊಂಡ ಚೌಡಯ್ಯ ಕಲ್ಯಾಣಕ್ರಾಂತಿಯ ನಂತರ ಚೌಡಯ್ಯದಾನಪುರಕ್ಕೆ ಬಂದು ಅಲ್ಲಿಯೇ ಐಕ್ಯ ಹೊಂದಿದ್ದಾನೆ ಎಂಬ ಹೇಳಿಕೆ ಇದೆಯಾದರೂ ಸಮರ್ಥಿಸಲು ಬಲಿಷ್ಠ ಆಧಾರಗಳು ಬೇಕಾಗುತ್ತವೆ.
ಚೌಡಯ್ಯನವರು ಜನಸಾಮಾನ್ಯರ ಬದುಕನ್ನು ನೋಡುತ್ತಾ ನಾ ಹೆಚ್ಚು, ನೀ ಹೆಚ್ಚು ಎಂದುಹೇಳಿಕೊಳ್ಳಬೇಡಿರಿ, ಏಕೆಂದರೆ ನಿಜವಾದ ಶೀಲವು ಬಾಹ್ಯಾಚಾರಗಳಲ್ಲಿಲ್ಲ. ಅದು ನೀತಿಶುದ್ಧ ಆಚರಣೆಯಲ್ಲಿದೆ. ಕುಲ ಎನ್ನುವುದು ಹುಟ್ಟಿನಿಂದ ನಿರ್ಧಾರವಾಗುವಂತಹದ್ದಲ್ಲ; ಅವರವರ ಗುಣಧರ್ಮಗಳಿಂದ ನಿರ್ಧರಿತವಾಗುವಂತಹದು ಎಂದು ಚೌಡಯ್ಯ ಅತ್ಯಂತ ಮಾರ್ಮಿಕವಾಗಿ ಹೇಳಿ ಅಂಥವರನ್ನು ಕುರಿತು ತಿರಸ್ಕಾರ ಪೂರ್ವಕವಾಗಿ ಮಾತನಾಡಿದ್ದಾನೆ.
ಸಾಮಾಜಿಕ ಶೋಷಣೆಯ ಎಲ್ಲ ನೆಲೆಗಳ ಅರಿವಿರುವ ಅವನು ಸಹಜವಾಗಿಯೇ ಮೇಲ್ವರ್ಗದವರ ನಡಾವಳಿಯಲ್ಲಿನ ವೈರುಧ್ಯಗಳನ್ನು ಕಂಡು ಕೆರಳುವನು. ಈ ವರ್ಗದವರ ವಿರುದ್ಧ ಬಂಡಾಯವೇಳುವನು. ಈ ಮನೋಧರ‍್ಮವೇ ಅವನ ವಚನಗಳಲ್ಲಿ ಎದ್ದು ಕಾಣುವ ಪ್ರಮುಖ ಗುಣವಾಗಿರುವದರಿಂದ ಬೇರಾವ ವಚನಕಾರನಲ್ಲೂ ಕಾಣದಿರುವ ಒರಟುತನವನ್ನು ಈತನಲ್ಲಿ ಕಾಣಬಹುದಾಗಿದೆ. ವಚನಕ್ರಾಂತಿಯ ಒಡಲೊಳಗಿಂದ ಮೂಡಿಬಂದ ಚೌಡಯ್ಯನು ಸಹಜವಾಗಿಯೇ ವೇದ, ಶಾಸ್ತ್ರ, ಪುರಾಣಗಳನ್ನು ಅಲ್ಲಗಳೆದಿದ್ದಾನೆ.
ವೇದವನೋದಿದರೆಲ್ಲ ವಿಧಿಗೊಳಗಾದರಲ್ಲದೆ ದೇವರಿಹ ಠಾವನರಿದುದಿಲ್ಲ,
ಶಾಸ್ತ್ರವನೋದಿದವರೆಲ್ಲ ಸಂಶಯಕ್ಕೊಳಗಾದರಲ್ಲದೆ
ಸದ್ಗುರುವನರಿದುದಿಲ್ಲ
ಈ ವಚನದಲ್ಲಿ ವೇದಾಗಮ ಪುರಾಣಗಳ ಹುಟ್ಟನ್ನೇ ಗುರುತಿಸಿ ಅವುಗಳನ್ನು ಅಣಕಿಸಿರುವುದನ್ನು ನೋಡಬಹುದು.
ನಾದದ ಬಲದಿಂ ವೇದಂಗಳಾದುವಲ್ಲದೆ
ವೇದ ಸ್ವಯಂಭುವಲ್ಲ,
ಮಾತಿನ ಬಲದಿಂದ ಶಾಸ್ತ್ರಂಗಳಾದುದಲ್ಲದೇ
ಶಾಸ್ತ್ರ ಸ್ವಯಂಭುದಲ್ಲ, ನಿಲ್ಲು . . . . . . .
ಇಂತೀ ಮಾತಿನ ಬಣಬೆಯ ಮಂದಿಟ್ಟುಕೊಂಡು
ಆತನ ಕಂಡೆಹೆನೆಂದಡೆ . . . . . .
ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ(ಸಂ.ವ.ಸಂ,೧ ವ.ಸಂ-೧೬೦)
ವೇದ, ಶಾಸ್ತ್ರ ಪುರಾಣಾದಿಗಳು ತಮ್ಮಿಂದ ತಾವೇ ಹುಟ್ಟಿದವುಗಳಲ್ಲ, ಒಂದರಿಂದ ಒಂದುಹುಟ್ಟಿದವು. ಆದ್ದರಿಂದ ಇವು ಹುರುಳಿಲ್ಲದ ಮಾತಿನ ಬಣಬೆಗಳಾಗಿವೆ. ಇಂಥವುಗಳನ್ನೇ ಸತ್ಯವೆಂದೂ ಅವುಗಳ ವರ್ಣನೆಯಿಂದಲೇ ಶಿವನ ನೆಲೆಯನ್ನು ಕಾಣಲು ಸಾಧ್ಯವೆಂದೂ ನಂಬಿದವರಿಗೆ ತಿಳಿಸಿ ಹೇಳಿದ ಪರಿ ವಿನೂತನವಾಗಿದೆ. ಕೇವಲ ವೇದ, ಶಾಸ್ತ್ರಾದಿಗಳನ್ನು ತಿರಸ್ಕರಿಸಿ ಸುಮ್ಮನಾಗದ ಚೌಡಯ್ಯ ವಾಸ್ತವ ಪ್ರಜ್ಞೆಯಲ್ಲಿ
ಅವುಗಳನ್ನು ವ್ಯಾಖ್ಯಾನಿಸಿ ಸಾಮಾನ್ಯ ಜನರ ಬದುಕು ಹಸನುಮಾಡಲು ಯತ್ನಿಸುತ್ತಾನೆ.
ಪುರೋಹಿತಶಾಹಿಗಳ ಮತ್ತು ಮೇಲ್ವರ್ಗದವರ ದಬ್ಬಾಳಿಕೆಗೆ ಅಂದಿನ ಕೆಳಸಮುದಾಯದಜನ ನೊಂದುಕೊಂಡಿದ್ದರು, ಬೇಸತ್ತಿದ್ದರು ಎನಿಸುತ್ತದೆ. ಅದಕ್ಕೆ ಸ್ಪಂದಿಸುವ ಚೌಡಯ್ಯ ಹೀಗೆಹೇಳುತ್ತಾನೆ.
ಕಷ್ಟದ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ
ಎತ್ತ ಹೋದವು ನಿಮ್ಮ ಶಾಸ್ತ್ರಂಗಳು ?
ಕೆತ್ತ ಮುಚ್ಚುಳು ಬೇಡಂಗಚ್ಚರಿದೆರೆವಾಗ
ಇಕ್ಕಿದ ಜನ್ನಿವಾರ ಭಿನ್ನವಾದುವು |
ಮುಕ್ಕುಳಿಸಿದುದಕವ ತಂದೆರೆದಡೆ
ಎತ್ತಲಿದ್ದವು ನಿಮ್ಮ ವೇದಂಗಳು
ನಿಮ್ಮ ವೇದದ ದುಃಖ ಬೇಡೆಂದಾತನಂಬಿಗ ಚೌಡಯ್ಯ(ಸಂ.ವ.ಸಂ,೧ ವ.ಸಂ.- ೯೨)
ಮೇಲಿನ ವಚನದಲ್ಲಿ ಶಿವಭಕ್ತ ಶ್ರೇಷ್ಠರು ಶಿವನೊಲುಮೆ ಪಡೆದ ಎರಡು ನಿದರ್ಶಗಳನ್ನುಉಲ್ಲೇಖ ಮಾಡುವುದರ ಮುಖಾಂತರ ಅಂಬಿಗರಚೌಡಯ್ಯನು ವೈದಿಕತನವನ್ನು ಲೇವಡಿಮಾಡಿದ್ದಾನೆ. ಮೊದಲನೆಯದೆಂದರೆ ಚೋಳ ಅರಸನ ಲಾಯದ ಕೆಲಸ ಮಾಡಿಕೊಂಡಿದ್ದ ಮಾದಾರ ಚೆನ್ನಯ್ಯ ಬಸವಪೂರ್ವಯುಗದ ಮಹಾಶರಣ ಪರಮಶಿವಭಕ್ತ. ಆದರೆ ಅವನ ಜಾತಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕನಿಷ್ಟ ಸ್ತರದಲ್ಲಿದ್ದಿತ್ತು. ಅವನು ಒಂದು ಅರ್ಥದಲ್ಲಿಅಸ್ಪೃಶ್ಯನೇ ಆಗಿದ್ದನೆನ್ನಬೇಕು. ಚೋಳರಾಜನೂ ಶಿವಭಕ್ತನೇ ಆಗಿದ್ದವನು, ದಿನನಿತ್ಯವೂ ಅವನ ಅರಮನೆಗೆ ಬಂದ ಜಂಗಮ ವೇಷದ ಶಿವನು ಪ್ರಸಾದ ಸೇವಿಸಿ ಹೋಗುತ್ತಿದ್ದಂತೆ ಕತೆ ಬರುತ್ತದೆ. ಅರಸನಲ್ಲಿ ಮೃಷ್ಟಾನ್ನ ಭೋಜನವುಂಡ ಬಾಯಿ ಕೆಟ್ಟಂತಾಗಿ ಶಿವನು ಮಾದಾರ ಚೆನ್ನಯ್ಯನ ಗುಡಿಸಲಿನಲ್ಲಿ ರುಚಿ-ರುಚಿಯಾದ ಅಂಬಲಿಯುಂಡು ಸಂತೃಪ್ತಗೊಂಡನಂತೆ. ದೇವನಿಗೆ ಹುಟ್ಟಿದಜಾತಿ ಮುಖ್ಯವಲ್ಲ ಅವರು ಬದುಕಿನಲ್ಲಿ ಸಾಧಿಸಿದ ಭಕ್ತಿಯ ಸಾಧನೆ ಮಹತ್ವದ್ದು. ಇದನ್ನೇಅಂಬಿಗರ ಚೌಡಯ್ಯನು ಕಷ್ಟದ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ ಎತ್ತ ಹೋದವು ನಿಮ್ಮ ಶಾಸ್ತ್ರಂಗಳು? ಎಂಬ ಮಾತಿನಿಂದ ಸೂಚಿಸಿದ್ದಾನೆ. ಹುಟ್ಟಿನ ಜಾತಿಯನ್ನೆ ಮೂಲವಾಗಿಟ್ಟುಕೊಂಡು ಮನುಷ್ಯ ವರ್ಗದಲ್ಲಿ ಭೇದವನ್ನು ನಿರ್ಮಿಸಿದ ಶಾಸ್ತ್ರಗಳನ್ನೇ ಮುಂದು ಮಾಡಿಕೊಂಡು ಮೆರೆಯುತ್ತಿದ್ದ ವೈದಿಕರನ್ನು ಮೇಲಿನ ಘಟನೆಯನ್ನು ವಿವರಿಸಿ ಅವರ ಪೊಳ್ಳುತನವನ್ನು ವಿಡಂಬಿಸಿದ್ದಾನೆ.
ಎರಡನೆಯದಾಗಿ ಬೇಡರ ಕಣ್ಣಪ್ಪನ ಘಟನೆಯೊಂದನ್ನು ಈ ವಚನದಲ್ಲಿ ಬಳಸಿಕೊಳ್ಳುತ್ತಾನೆ. ಕಣ್ಣಪ್ಪ ವೃತ್ತಿಯಿಂದ ಬೇಟೆಗಾರ, ಮುಗ್ಧ, ಯಾವುದೇ ವೇದಶಾಸ್ತ್ರಗಳನ್ನು ಓದದಂತಹ ನಿರಕ್ಷರಜೀವಿ ಆದರೆ ಅವನು ಶಿವನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಿದ್ದನು. ಮಣ್ಣಿನ ಮುಚ್ಚಳದಲ್ಲಿ ಮಾಂಸವನ್ನೇ ಶಿವನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದನು. ಶಿವನ ಸನ್ನಿದಿಗೆ ತಂದಾಗ ಅದೆಲ್ಲ ರಸಭರಿತ ಫಲವಾಗುತ್ತಿತ್ತು. ಕೂಪನದಿಯ ನೀರನ್ನು ಬಾಯಿಯಲ್ಲಿ ಹಿಡಿದುಕೊಂಡು ಬಂದು ಶಿವಲಿಂಗಕ್ಕೆ ಮಜ್ಜನವೆಂದು ಲಿಂಗಪೀಠದ ಮೇಲೆ ಭಕ್ತಿಯಿಂದ ಉಗುಳುತ್ತಿದ್ದನು. ಇಂತಹ ಮಹಾ ಮುಗ್ದ ಭಕ್ತರಿಗೆ ಶಿವನು ಪ್ರತ್ಯಕ್ಷನಾಗಿ ಮುಕ್ತಿಯನ್ನು ಕರುಣಿಸಿದನೆಂದು ಪುರಾಣದ ಕಥೆ ಹೇಳುತ್ತದೆ. ಇಂತಹ ಘಟನೆ ನಡೆಯುವಾಗ ನಿಮ್ಮ ಜನಿವಾರಗಳು ಏನಾದವು? ನಿಮ್ಮ ವೇದಗಳು ಎಲ್ಲಿ ಅಡಗಿದ್ದವು? ಎಂದು ಚೌಡಯ್ಯ ಪುರೋಹಿತರನ್ನು ಪ್ರಶ್ನಿಸಿದ್ದಾನೆ. ಚೌಡಯ್ಯನ ವಿಚಾರಗಳನ್ನು ಇಲ್ಲಿ ಗಮನಿಸಬಹುದು.
ಕುರಿಕೋಳಿಕಿರುಮೀನು ತಿಂಬವರ
ಊರೊಳಗೆ ಇರು ಎಂಬರು
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗೆ ಇರು ಎಂಬರು(ಸಂ.ವ.ಸಂ,೧ ವ.ಸಂ.-೧೦೫)
ಅಂಬಿಗರ ಚೌಡಯ್ಯನ ವೈಚಾರಿಕತೆ ಎಷ್ಟು ತೀಕ್ಷ್ಣ ಎಂಬುದಕ್ಕೆ ಸಾಕ್ಷಿಯಂತಿವೆ ಮೇಲಿನ ಮಾತುಗಳು ಕುರಿಕೋಳಿ, ಮೀನು ಮುಂತಾದ ಪ್ರಾಣಿಗಳೆಲ್ಲ ತಿಂದು, ತಾವು ಪರಿಶುದ್ಧರೆಂದು ಹೇಳಿಕೊಳ್ಳುತ್ತ ಊರೊಳಗಿರುವ ಮೇಲುಜಾತಿಯವರ ದುರಾಚಾರವನ್ನು ವಚನದ ಆರಂಭದಲ್ಲಿಯೇ ವಿಡಂಬಣೆಗೆ ಒಳಗುಮಾಡುತ್ತಾನೆ. ಹಾಗೆಯೇ ಗೋವಿನ ಮಾಂಸವ ತಿನ್ನುವವರನ್ನು ಕೀಳುಜಾತಿಯವರೆಂದು ಕರೆದು ಅವರನ್ನು ಊರಿನಿಂದ ಹೊರಗಡೆ ಇಟ್ಟಿರುವ ವೈದಿಕಧರ್ಮದ ನಿಲುವನ್ನು ಖಂಡಿಸುತ್ತಾನೆ. ಊರ ಒಳಗಡೆ ಇರುವವರು, ಅದರ ಹೊರಗೆ ಇರುವವರು, ಉಭಯರೂ ಮಾಂಸವನ್ನೇ ತಿನ್ನುತ್ತಿರುವಾಗ, ಊರೊಳಗಿರುವವರು ಮೇಲು ಹೇಗಾಗುತ್ತಾರೆ? ಹೊರಗೆ ಇರುವವರು ಕೀಳು ಹೇಗೆ ಆಗುತ್ತಾರೆ? ಎಂದು ಪ್ರಶ್ನೆ ಮಾಡುವ ಚೌಡಯ್ಯನ ದಿಟ್ಟತನ ಎದ್ದು ಕಾಣುತ್ತದೆ.
ಕುಲವನ್ನಾಚರಿಸುವ ಲೋಕವೆಲ್ಲ ಚೌಡಯ್ಯನಿಗೆ ಬೂಟಾಟಿಕೆಯಾಗಿ ಕಂಡಿದೆ. ಅದಕ್ಕೆ ವ್ಯಗ್ರವಾಗುತ್ತಾನೆ.
ಕೀಳುಕುಲದವನೆಂದು ಹಳಿಯುವ ಕುಲಗೇಡಿಗಳನ್ನು ಕುರಿತು ಅವನು:
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು
ನಂಬಿದರೆ ಒಂದೆ ಹುಟ್ಟಲಿ
ಕಡೆಯ ಹಾಯಿಸುವನಂಬಿಗರ ಚೌಡಯ್ಯ(ಸಂ.ವ.ಸಂ೧, ವ.ಸಂ.೭)
ಎಂದು ತನ್ನ ಶಕ್ತಿ ಸಾಮರ್ಥ್ಯವನ್ನು ಹೇಳಿಕೊಳ್ಳುವ ಮೂಲಕ ವೃತ್ತಿ ಗೌರವವನ್ನು ಸ್ವಾಭಿಮಾನದಿಂದಲೇ ಪ್ರಸ್ತಾಪಿಸಿದ್ದಾನೆ. ಆದುದರಿಂದಲೇ ಅಂಬಿಗರ ಚೌಡಯ್ಯ ತಾನುಮಾಡುವ ಕಾಯಕದ ವಿವರಗಳನ್ನು ತನ್ನ ಆತ್ಮಸಾಕ್ಷಾತ್ಕಾರದ ಅಭಿವ್ಯಕ್ತಿಗೆ ಸಂಕೇತವಾಗಿ ಬಳಕೆಮಾಡಿಕೊಂಡಿರುವುದನ್ನು ಕಾಣುತ್ತೇವೆ. ಜಾತಿ ಮತ್ತು ವೃತ್ತಿಯಿಂದ ಭೌತಿಕ ಬದುಕಿನಲ್ಲಿ ಅಂಬಿಗನಾಗಿದ್ದಂತೆ ಆಧ್ಯಾತ್ಮಲೋಕದಲ್ಲೂ ‘ಅಂಬಿಗ’ನೇ ಆಗಿರಲು ಹೆಮ್ಮೆಪಡುತ್ತಾನೆ. ಅಂಬಿಗನ ಕಾಯಕವೆಂದರೆ ಜನರನ್ನು ತುಂಬಿದ ಕೆರೆ, ಹೊಳೆಗಳನ್ನು ಹರಗೋಲಿನ ಸಹಾಯದಿಂದ ದಾಟಿಸುವುದು, ಅಂಬಿಗರ ಚೌಡಯ್ಯನು ಕೇವಲ ಭೌತಿಕವಾದ ಅಂಬಿಗ ಕಾಯಕದಲ್ಲಿಯೇ ನಿಂತವ್ಯಕ್ತಿಯಲ್ಲ. ಅವನು ಕಾಯಕ ನಿರ್ವಹಿಸುತ್ತಾ ಗುರುಲಿಂಗಜಂಗಮ ದಾಸೋಹ ಶಿವಾನುಭವಗೋಷ್ಠಿ ನಡೆಸುತ್ತಾ ನಿಜಶರಣತ್ವ ಸಿದ್ಧಿಯನ್ನು ಗಳಿಸಿಕೊಂಡವನು. ಜೊತೆಗೆ ಲೋಕವನ್ನು ಭವದ ಸಮುದ್ರದಿಂದ ದಾಟಿಸುವ ಅಂಬಿಗನೂ ಆದವನು. ಅವನು ನಿಜಜೀವನದಲ್ಲಿ ಮಾಡುವ ಕಾಯಕದ ಪರಿಯನ್ನೇ ವಚನವಾಗಿಸುತ್ತ, ಕಾಯಕದ ಪ್ರಕ್ರಿಯೆಗಳ ಮುಖವನ್ನು ಶಿವನತ್ತ ತಿರುಗಿಸುತ್ತಾನೆ.
ದೇವಸ್ಥಾನ, ದೇವರು ಮತ್ತು ಢಾಂಬಿಕ ಭಕ್ತಿಯ ಕುರಿತು ಅಂಬಿಗರ ಚೌಡಯ್ಯ ಪ್ರತಿಭಟಿಸುತ್ತಾನೆ.
ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ
ಹೊಟ್ಟೆಯಡಿಯಾಗಿ ಬೀಳುವ, ಲೊಟ್ಟ ಮೂಳನ ಕಂಡರೆ
ಮೆಟ್ಟಿದ್ದ ಎಡ ಪಾದರಕ್ಷೆಯ ತಕ್ಕೊಂಡು
ಲಟಲಟನೆ ಹೊಡೆ ಎಂದ ಅಂಬಿಗ ಚೌಡಯ್ಯ(ಸಂ.ವ.ಸಂ.೧ ವ.ಸಂ.-೮೨)
ಮೇಲಿನ ಮಾತಿನ ಮೂಲಕ ಚೌಡಯ್ಯ ದೇಗುಲವೆಂಬ ದೇಹದಲ್ಲಿಯೆ ಕಟ್ಟಿಕೊಂಡಿರುವ‘ಲಿಂಗ’ವೆಂಬ ದೇವರನ್ನು ನಿರಾಕರಿಸಿ ದೇವಸ್ಥಾನಕ್ಕೆ ಹೋಗುವ ಡಾಂಬಿಕರಿಗೆ ಪಾದರಕ್ಷೆಯಿಂದ ಆರತಿ ಎತ್ತುತ್ತಾನೆ. ‘ಹತ್ತು ಮತ್ತರದ ಭೂಮಿ, ಭತ್ತದ ಹಯನು, ನಂದಾದೇವಿಗೆಯ ಮಾಡಿದೆವೆಂಬರ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು’ ಎಂಬ ನುಡಿ ದೇವಸ್ಥಾನಕ್ಕಾಗಿ ದಾನದತ್ತಿಯನ್ನು ಬಿಡುವ ಶ್ರೀಮಂತರನ್ನು ಕುರಿತ ಪ್ರತಿಭಟನೆಯಾಗಿದೆ.“
ಕೊರಳಿಗೆ ಕವಡಿಯ ಕಟ್ಟಿ
ನಾಯಾಗಿ ಬೊಗಳುವ ಅದಾವ ವಿಚಾರವಯ್ಯಾ ?
ಹುರಿಬೆನ್ನ ಶಿಡಿಬಾಯ ಬಿಗಿದಲ್ಲಿ
ಹಿಡಿದು ಹೋಗುವುದಾವ ವಿಚಾರವಯ್ಯ ?
ಬೇವಿನ ಉಡುಗೆಯನ್ನುಟ್ಟು ಹಡಲಿಗೆ ಹೊತ್ತು
ಉದೋ ಉದೋ ಎಂಬುದು ಅದಾವ ವಿಚಾರವಯ್ಯಾ ?
ಮೈಲಾರನ ಭಕ್ತರು ನಾಯಿಯಂತೆ ಬೊಗಳುವುದನ್ನು, ಅಂಬಾಭವಾನಿಯ ಹಿಂಬಾಲಕರು ಕವಡಿಸರ ಕಟ್ಟಿಕೊಳ್ಳುವುದನ್ನು, ಎಲ್ಲಮ್ಮನ ಭಕ್ತರು ದೇವಿಗೆ ಹರಕೆಹೊತ್ತು ಹುಟುಗಿಯುಟ್ಟು ಬಾಯಲ್ಲಿ ಬೇವುಕಚ್ಚಿ ಹಿಡಿಯುವುದನ್ನು, ಎಲ್ಲಮ್ಮನ ಜೋಗತಿಯರು ಜಗ, ಹಡ್ಡಲಗಿ, ಕೊಡಹೊತ್ತು ಕುಣಿಯುವುದನ್ನು ಮೇಲಿನ ವಚನದಲ್ಲಿ ವಿಡಂಬಿಸಿ, ಹೀಗೆ ಮಾಡುವುದು ಅದಾವ ವಿಚಾರ ಎಂದು ಕಟು ನಿಷ್ಠೂರವಾಗಿಯೇ ಹೇಳಿದ್ದಾನೆ. ಭವಿತನಕ್ಕೆ ಹೇಸಿ ಭಕ್ತನಾದ ಮೇಲೂ ಕೊರಳಿಗೆ ಕವಡೆಯನ್ನು ಕೊಂಡು, ನಾಯಾಗಿ ಬೊಗಳುವ ಮೈಲಾರನ ಭಕ್ತರ ಆಚರಣೆಯನ್ನೂ; ಬೆನ್ನಿಗೆ ಚಾವಟಿ ಏಟು ಹೊಡೆದುಕೊಳ್ಳುವುದು, ಸಿಡಿ ಹೋಗುವುದು, ಬಾಯಿಬೀಗಹಾಕಿಕೊಳ್ಳುವುದು, ಬೇವಿನ ಉಡುಗೆ ಧರಿಸಿ ಹಡಲಿಗೆಯನ್ನು ಹೊತ್ತು ಉಧೋರೋ ಎನ್ನುವುದು-ಈ ಬಗೆಯ ಮಾರಿದೇವತೆಯ ಭಕ್ತರ ಆಚರಣೆಯನ್ನು ಚೌಡಯ್ಯ ಖಂಡಿಸಿ ಇವರನ್ನು ಶಿವದ್ರೋಹಿಗಳು ಎಂದು ಕರೆಯುವನು. ಕ್ಷುದ್ರದೈವತೋಪಾಸನೆಯೂ ಆಗಿನಸಾಮಾಜಿಕ ನೆಲೆಯಲ್ಲಿ ಪ್ರಚಲಿತವಿದ್ದಿತ್ತು. ಮೈಲಾರ, ಬೀರ, ಭೈರವ, ಧೂಳಭಕ್ತರೆನ್ನಿಸಿಕೊಂಡವರನ್ನು ಚೌಡಯ್ಯ ಚಂಡಿನಾಯಿಗಳೆಂದು ಕರೆದಿರುವನು. ಕೇತ-ಇವೇ ಮೊದಲಾದ ಚಿಕ್ಕಪುಟ್ಟ ದೈವಗಳಿಗೆ ನಮಸ್ಕರಿಸಿ ಅವುಗಳ ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ ಎಂದು ಉಪವಾಸವಿರುವ ಭಕ್ತರು ತಮ್ಮ ಈ ಆಚರಣೆ ಶಿವಾರ್ಪಿತವೆಂದು ನುಡಿಯುವುದನ್ನು ಚೌಡಯ್ಯ ಖಂಡಿಸುವನು. ಮಾತು-ಕೃತಿಗಳಿಗೆ ಹೊಂದಾಣಿಕೆಯಿಲ್ಲದೆ ಬದುಕು ನಡೆಸುವವರನ್ನು ಕಂಡು ಚೌಡಯ್ಯ ಕೆರಳುವನು ; ತನ್ನ ಹಲವು ವಚನಗಳಲ್ಲಿ ಇಂತಹ ಅಬದ್ಧರನ್ನು ತರಾಟೆಗೆ ತೆಗೆದುಕೊಂಡಿರುವನು. ಇಷ್ಟಲಿಂಗವೆ ತನಗೆ ಗತಿ ಮತಿ ಎಂದು ತಿಳಿಯದೆ ಊರ ಹೊರಗಿರುವ ದೈವಗಳುಸ್ವೀಕರಿಸುವ ಶಿವನ ಭಕ್ತರ ವರ್ತನೆಯನ್ನು 'ದೊಡ್ಡಗ್ರಾಮದ ಸೂಕರನು ಗಂಗೆಯಲ್ಲಿ ಅಧಿಕವೆಂದು ಅವನ್ನು ಪೂಜಿಸಿ ಆ ದೇವರಗಳಿಗೆ ಅರ್ಪಿಸಿದ್ದನ್ನು ಪ್ರಸಾದವೆಂದು ಮಿಂದು ಬಂದು ಅಮೇಧ್ಯವ ಭುಂಜಿಸಿದ ತೆರನಾಯಿತು' ಎಂದು ಹೋಲಿಸಿದ್ದಾನೆ.
ಅಂಬಿಗರಚೌಡಯ್ಯ ಕೂಡ ಪ್ರಥಮವಾಗಿ ಸಮಾಜದ ಅಸ್ವಸ್ತತೆಗೆ ಕಾರಣೀಭೂತವಾದ ಅಂಶಗಳನ್ನು ಪರಿಶೀಲಿಸಿ ಕಟುವಾಗಿ ಖಂಡಿಸುತ್ತಾನೆ. ಆಮೇಲೆ ಅವುಗಳಿಗೆ ತನ್ನದೇಯಾದ ಪರಿಹಾರೋಪಾಯಗಳನ್ನು ಸೂಚಿಸುತ್ತಾನೆ. ಖಾರವಾಗಿ ಖಂಡಿಸುವಾಗ ಚೌಡಯ್ಯ ಕಠೋರವಾಗಿ ಕಂಡುಬಂದರೂ ಆಂತರ‍್ಯದಲ್ಲಿ ಮೃದು ಸ್ವಭಾವದವನು. ಸಮಾಜದ ಒಳಿತಿಗಾಗಿ ಶ್ರಮಿಸಿದ ವ್ಯಕ್ತಿ ಈತ. ಆತನ ಮಾತುಗಳು ಕಟುವೆನಿಸದರೂ ಕೂಡ ಆತನ ಕಾಳಜಿಯನ್ನು ನಿರಾಕರಿಸಲಾಗದು. ಸಮಾಜದ ಮಾರ್ಗದರ್ಶಕರು ಮತ್ತು ಗುರುಸ್ಥಾನದಲ್ಲಿರುವ ಸ್ವಾಮೀಜಿಗಳನ್ನು ಗೌರವದಿಂದ ಕಾಣುತ್ತಾನೆ. ಆದರೆ ಡೋಂಗಿಗಳನ್ನು ಆಡಂಬರ ಮಾಡುವವರನ್ನು, ಆಷಾಢ ಭೂತಿಗಳನ್ನು ತನ್ನ ಮಾತಿನ ಮೊನೆಯಿಂದ ಚುಚ್ಚುತ್ತಾನೆ. ಕಂತೆ ತೊಟ್ಟವ ಗುರುವಲ್ಲ, ಕಾವಿ ಹೊದ್ದವ ಜಂಗಮನಲ್ಲ ಎನ್ನುತ್ತಾನೆ. ಸ್ವಾಮಿಗಳಿಗೆ ಭಕ್ತರೆಲ್ಲರೂ ಸರಿಸಮಾನರು ತಾರತಮ್ಯ ಮಾಡುವಸ್ವಾಮಿಗಳನ್ನು ಅಂಬಿಗರ ಚೌಡಯ್ಯ ಹೀಗೆ ಟೀಕಿಸುತ್ತಾನೆ.ದೇವರು ಮತ್ತು ಭಕ್ತಿಯ ಹೆಸರಿನಲ್ಲಿ ಪರೋಕ್ಷವಾಗಿ ಮೋಸಮಾಡುವ ಇವರನ್ನು ಕುರಿತು ಕಟುವಾಗಿ ವಿಡಂಬಿಸಿದ್ದಾನೆ.
ಅರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು
ಊರೆಲ್ಲರು ಕಟ್ಟಿಸಿದ ಕೆರೆಯ ನೀರ ತಂದು
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ
ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ?
ನಾಡೆಲ್ಲಕ್ಕೊ? ಪೂಜಿಸಿದಾತಗೋ ?
ಇದ ನಾನರಿಯೇ, ನೀ ಹೇಳೆಂದನಂಬಿಗ ಚೌಡಯ್ಯ(ಸಂವ.ಸಂ. ವ.ಸಂ. -೪೩)
ದೇಹವೇ ದೇಗುಲವಾದ ಮೇಲೆ ಈ ದೇವರ ಪೂಜೆಗೆ ಹೂಪತ್ರಿ, ಧೂಪ, ದೀಪ,ಏನೂ ಬೇಡ ನಿರ‍್ಮಲವಾದ ಮನಸ್ಸೊಂದಿದ್ದರೆ ಸಾಕು ಎಂಬುದು ಚೌಡಯ್ಯನ ನಿಲುವು. ಇದ ಬಿಟ್ಟು ಕಲ್ಲುದೇಗುಲ ಕಟ್ಟಿ ಅದರೊಳಗೆ ಕಲ್ಲುದೇವರ ಇಟ್ಟು ಬೇರೆಯವರು ಬಿತ್ತಿದ ಗಿಡದಲ್ಲಿ ಅರಳಿದ ಹೂ ಕೊಯ್ದು ಊರಿನವರ ಪರಿಶ್ರಮದಿಂದಾದ ಕೆರೆಯ ನೀರು ತಂದು ನಾಡೆಲ್ಲವೂ ನೋಡಲಿ ಎಂದು ಪೂಜಿಸಿದ ಪೂಜೆ ತೋರಿಕೆಯ ಪೂಜೆ ಆಗುತ್ತದೆ. ಹಾಗಾದರೆ ಆ ಪೂಜೆಯಫಲ ಹೂವಿಗೋ, ನೀರಿಗೊ ನೋಡಿದ ನಾಡೆಲ್ಲಕೋ ಅಥವಾ ಪೂಜಿಸಿದಾತಗೋ? ಎಂದು ಪ್ರಶ್ನಿಸಿದ್ದಾನೆ.
ಕಲ್ಲನಾಗರ ಕಂಡರೆ ಹಾಲು ಒಯ್ಯಂಬಳು
ಬದುಕಿದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬಳು
ಉಂಬ ದೇವರು ಬಂದರೆ ಇಲ್ಲವೆಂದು ಅಟ್ಟುವಳು
ಉಣ್ಣದ ಕಲ್ಲು ಪ್ರತಿಮೆಗೆ ಮುಂದಿಟ್ಟು ಉಣ್ಣು ಉಣ್ಣು ಎಂಬಳು........
ಜಡವಾದದ್ದನ್ನು ಸತ್ಕರಿಸಿ, ಜೀವವಿರುವವರ ಮೇಲೆ ದಾಳಿ ಮಾಡುವ ಡಂಭಕನ ನಡವಳಿಕೆಗೆ ಎತ್ತಿದ ಟೀಕೆಯಿದು. ಇದೇ ಭಾವ ಬಸವಣ್ಣನವರ “ಕಲ್ಲನಾಗರ ಕಂಡರೆಹಾಲನೆರೆಯೆಂಬರು” ಎಂಬ ವಚನದಲ್ಲಿ ಬಂದಿರುವುದನ್ನು ನೋಡಬಹುದು. ಬಹುಶಃಚೌಡಯ್ಯನವರು ಬಸವಣ್ಣನವರ ಈ ವಚನದಿಂದ ಪ್ರೇರಣೆ ಪಡೆದಿರಬಹುದು.
ಬಡತನಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತಿ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು(ಸಂ.ವ.ಸಂ.-೧, ವ.ಸಂ.-೧೮೫)
ಇಡೀ ಮಾನವ ಜನಾಂಗಕ್ಕೆ ಬರೆದ ಭಾಷ್ಯೆಯಾಗಿದೆ. ವಿಶ್ವದ ಎಲ್ಲ ಮಾನವರಿಗೂ ಇದು ಅನ್ವಯಿಸುತ್ತದೆ. ಸರ್ವಕಾಲಿಕ ಸತ್ಯವನ್ನು ಚೌಡಯ್ಯ ಈ ವಚನದಲ್ಲಿ ದಾಖಲಿಸಿರುವುದನ್ನು ಗುರುತಿಸಬಹುದಾಗಿದೆ. ಬಡತನದಲ್ಲಿ ಬೆಂದು ಬೇಯುತ್ತಿರುವಾಗ ಮನುಷ್ಯನು ಉಣ್ಣುವುದಕ್ಕೆ ಸಿಕ್ಕರೆ ಸಾಕೆಂದು ಹಂಬಲಿಸುತ್ತ ಊಟದ ಚಿಂತೆಯನ್ನೇ ಮಾಡುತ್ತಾನೆ. ಊಟಸಿಕ್ಕು ಒಂದಿಷ್ಟು ದಿನ ಸರಿಯಾಗಿ ಉಣಲು ತೊಡಗಿದರೆ ಅವನು ಉಡುವ ಚಿಂತೆಗೆ ತೊಡಗುತ್ತಾನೆ. ಉಡುವುದಕ್ಕೆ ಬಟ್ಟೆ-ಬರೆಗಳು ಸಿಕ್ಕವೆಂದಾದರೆ ಮಾನವ ಹಣ ಸಂಪಾದಿಸಬೇಕೆಂಬ ಚಿಂತೆಗೆತೊಡಗುತ್ತಾನೆ. ಉಂಡು ಉಟ್ಟು ಒಂದಿಷ್ಟು ಹಣವು ಸಂಚಯವಾಗುತ್ತ ನಡೆದಲ್ಲಿ ಅವನಿಗೆ ಮದುವೆಯಾಗಬೇಕೆಂಬ ಆಸೆ ಮೂಡಿ ಹೆಂಡತಿಯ ಬಗೆಗೆ ಚಿಂತಿಸಲು ಆರಂಭಿಸುತ್ತಾನೆ.ಮದುವೆಯಾಗಿ ಹೆಂಡತಿಯು ಮನೆಗೆ ಬಂದಳಾದರೆ ಮಕ್ಕಳ ಪಡೆಯುವ ಚಿಂತೆ ಶುರುವಾಗುತ್ತದೆ. ಮಕ್ಕಳಾದ ಮೇಲೆ ಬದುಕನ್ನು ಸರಿಯಾಗಿ ನಿರ್ವಹಿಸುವ ಚಿಂತೆ, ಬದುಕಿನಗಾಡಿಯು ಒಂದಿಷ್ಟು ಮುಂದೆ ಸಾಗಿಸುತ್ತಿರುವಾಗಲೇ ಅದಕ್ಕೆ ಮುಂದೆ ಒದಗಬಹುದಾದ ತೊಂದರೆ, ಆತಂಕಗಳ ಚಿಂತೆ ಕಾಡತೊಡಗುತ್ತದೆ. ಕೇಡುಗಳು ಬಯಲಾಗುವಂತೆ ಕಂಡರೂ ಈ ಮನುಷ್ಯನು ಮುಂಬರುವ ಸಾವಿನ ಬಗೆಗೆ ಚಿಂತಿಸತೊಡಗುತ್ತಾನೆ. ಹೀಗೆ ಜೀವನದುದ್ದಕ್ಕೂ ಚಿಂತೆಗಳ ಕಂತೆಯೇ ದೊಡ್ಡದಾಗುತ್ತ ಹೋಗುತ್ತದೆ. ಇಂತಹ ಲೌಕಿಕ ಚಿಂತೆಗಳ ಗದ್ದಲದಲ್ಲಿ ಮನುಷ್ಯನು ಶಿವಚಿಂತೆಯನ್ನು ಮರೆತು ಬಿಡುತ್ತಾನೆ. ಪ್ರತಿಯೊಬ್ಬನ ಸ್ಥಿತಿಯೂ ಹೀಗೆ ಆದಾಗ ಲೋಕದಲ್ಲಿ ಶಾಂತಿ ಮಾಯವಾಗುತ್ತದೆ ಎಂದು ಎಚ್ಚರಿಸಿದ್ದಾನೆ.
ಅಂಬಿಗರ ಚೌಡಯ್ಯ “ಈಶ ಲಾಂಛನವ ತೊಟ್ಟು ಮನ್ಮಥ ವೇಷ ಲಾಂಛನವ ತೊಡಲೇಕೆ? ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ? ಎಂದು ಹೇಳುತ್ತಾ ಮಠಾಧಿಪತಿಗಳು,ಸ್ವಾಮಿಗಳು, ಜಂಗಮರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಚುರುಕು ಮುಟ್ಟಿಸುವ, ಅಂತರಂಗಕ್ಕೆ ಕನ್ನಡಿ ಹಿಡಿಯುವ ಕಠೋರ ಈ ಮನೋಧರ್ಮದ ಹಿಂದೆ ಸಾಮಾಜಿಕ ಚಿಂತನೆಯ ಶರಣರ ಮನಸ್ಸುಗಳು ಕೆಲಸಮಾಡಿವೆ. ಹೊಳೆಯನ್ನು ಹರಿಗೋಲಿನ ನೆರವಿನಿಂದ ದಾಟುವ ಲೌಕಿಕ ಕ್ರಿಯೆಯನ್ನು ಪಾರಮಾರ್ಥದ ಅಲೌಕಿಕ ಕ್ರಿಯೆಯಾಗಿ ಹೊರಳಿಸುವ ಚೌಡಯ್ಯನ ಈ ವಚನವನ್ನು ಪರಿಭಾವಿಸಬಹುದು.
ಸಾಮಾಜಿಕ ಚಿಂತನೆ ಚೌಡಯ್ಯನ ವಚನಗಳಲ್ಲಿ ಬಂದಿರುವಷ್ಟು ಮತ್ತಾವ ವಚನಕಾರನಲ್ಲೂ ಬಂದಿಲ್ಲ ಎನ್ನಬಹುದು. ಅವನು ಶ್ರೇಷ್ಠ ಸಾಮಾಜಿಕ ವಿಡಂಬನಕಾರನಾಗಿ ತನ್ನಸುತ್ತಣ ಸಮಾಜ ಸರಿಯಾಗಿರಬೇಕೆಂದು ಬಯಸುವವನು. ಸೂಕ್ಷ್ಮ ಸ್ವಭಾವದವನಾದ ಅವನಿಗೆ ಸಮಾಜದ ಲೋಪ-ದೋಷಗಳನ್ನು ಕಂಡಾಗ ಸಿಟ್ಟೇರುತ್ತದೆ. ಸಮಾಜದಲ್ಲಿನ ದೋಷಗಳಿಗೆ ಅದರ ಅವಿಭಾಜ್ಯ ಘಟಕವಾದ ವ್ಯಕ್ತಿಯೂ ಕಾರಣ. ವ್ಯಕ್ತಿ ಮಾನಸಿಕವಾಗಿ ಬದಲಾಗದೆ ಸಮಾಜ ಬದಲಾಗದು ಎಂಬ ಸತ್ಯ ಚೌಡಯ್ಯನಿಗೆ ತಿಳಿದಿದೆ. ಹೀಗಾಗಿ ಚೌಡಯ್ಯ ಸಮಾಜ ವ್ಯವಸ್ಥೆಯ ಬಗೆಗೆ ಟೀಕಿಸುವಾಗಲೆಲ್ಲಾ ವ್ಯಕ್ತಿ ಕೇಂದ್ರಿತನಾಗುತ್ತಾನೆ. ತನ್ನ ಸುತ್ತಣ ಸಮಾಜ, ಬದುಕು ಹಸನಾಗಬೇಕೆಂದು ಚೌಡಯ್ಯನ ಮನದಾಳದ ಆಸೆ. ತನ್ನ ಸುತ್ತಣ ಸಮಾಜದಲ್ಲಿನ ಅಜ್ಞಾನ,ಮೂಢನಂಬಿಕೆ, ಅರ್ಥವಿಹೀನ ಆಚರಣೆ, ವಂಚನೆ, ಮೋಸಗಳನ್ನು ಕಂಡಾಗ ಸಹಜವಾಗಿಯೇ ಅವನು ಸಿಡಿದೇಳುವನು. ಇವೆಲ್ಲವು ಇಲ್ಲವಾಗಬೇಕು. ಅದಕ್ಕೆ ಜನ ಮಾನಸಿಕವಾಗಿ ಸಿದ್ಧವಾಗಬೇಕು. ಬದಲಾವಣೆ ಎನ್ನುವುದು ವೈಯಕ್ತಿಕ ನೆಲೆಯಲ್ಲಾದಾಗ ಅದರ ಪರಿಣಾಮ ಸಮೂಹದ ಮೇಲೂ ಆಗುತ್ತದೆ.
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು
ನಂಬಿದರೆ ಒಂದೆ ಹುಟ್ಟಲಿ
ಕಡೆಯ ಹಾಯಿಸುವನಂಬಿಗರ ಚೌಡಯ್ಯ,
ಅಂಬಿಗರ ಚೌಡಯ್ಯ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ದೋಣಿ ನಡೆಸುವ ಕಾಯಕದವನು. ಆತ ಜಾತಿಯಲ್ಲಿ ಶೂದ್ರ. ಜಾತಿಯನ್ನು ವೃತ್ತಿಯ ಮೂಲಕ ಗುರುತಿಸುವ, ವೃತ್ತಿಯನ್ನು ಜಾತಿಯಾಗಿ ಪರಿಗಣಿಸುವ ಪ್ರವೃತ್ತಿ ೧೨ನೇ ಶತಮಾಕ್ಕೆ ಹಿಂದಿನಿಂದಲೂ ಇದ್ದಿತು. ಜಾತಿಯಲ್ಲಿ ಶೂದ್ರನೂ ವೃತ್ತಿಯಲ್ಲಿ ಕನಿಷ್ಠನೂ ಆದ ಚೌಡಯ್ಯ ಸಾಮಾಜಿಕ ಅವಹೇಳನಕ್ಕೆ ಗುರಿಯಾಗಿದ್ದ. ಆ ನೋವಿನ ಎಳೆ ಅವನ ಈ ಮೇಲ್ಕಂಡ ವಚನದಲ್ಲಿ ವ್ಯಕ್ತಗೊಂಡಿದೆ. ಅವನಲ್ಲಿ ಬಸವಾದಿ ಶಿವಶರಣರು ಹಚ್ಚಿದ ಪ್ರತ್ಯಯದ ಕಿಚ್ಚು ಅವನನ್ನು ತಲೆಯೆತ್ತಿ ನಡೆಯುವಂತೆ ಮಾಡಿದೆ.
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು
ತುಂಬಿದ ಸಾಗರದೊಳಗೆ ನೋಡಯ್ಯಾ!
ನಿಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದನವನರಿದಾತ ತೊಳಸುತ್ತಿದ್ದನು.
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ.
ಭವಸಾಗರವನ್ನು ದಾಟಿಸುವವನು ಪರಮಾತ್ಮ ಎನ್ನುವ ಭಕ್ತಸಮುದಾಯದ ನಂಬುಗೆ ಈ ವಚನದಲ್ಲಿ ಕೆನೆಗಟ್ಟಿದೆ. ಅಂಬಿಗನಾಗಿ ಪರಮಾತ್ಮನನ್ನು ತನ್ನ ವೃತ್ತಿಯೊಂದಿಗೆ ಸಮೀಕರಿಸುವ ಕಲಾತ್ಮಕ ಅಭಿವ್ಯಕ್ತಿ ಕ್ರಮ ತನ್ನ ವೃತ್ತಿಯನ್ನು ಸಹಜವಾಗಿ ಉದಾತ್ತಗೊಳಿಸುವ ಮೂಲಕ ಅವನ ಸ್ವಾಭಿಮಾನಕ್ಕೆ ಬಿದ್ದ ಏಟಿಗೆ ಪ್ರತಿಯಾಗಿ ಸಮಾಧಾನ ಕಂಡುಕೊಳ್ಳುವ ವಿಧಾನವಾಗಿ ತೋರುತ್ತದೆ.
ವ್ಯಕ್ತಿಯನ್ನು ವ್ಯಕ್ತಿಯಾಗಿಯೇ ಗುರುತಿಸಬೇಕು; ಜಾತಿಯಿಂದ ಮಾಡುವ ವೃತ್ತಿಯಿಂದ ಗುರುತಿಸಬಾರದು. ದೀಕ್ಷೆಯ ಸಂಸ್ಕಾರವಾದ ಮೇಲೆ ಭಕ್ತನಿಗೆ ಜಾತಿಯೆಂಬುದಿಲ್ಲ; ವೃತ್ತಿಯು 'ಕಾಯಕ'ವಾಗಿ ಪರಿಗಣಿತವಾದ ಮೇಲೆ ಅದರಲ್ಲಿ ಮೇಲು-ಕೀಳು ಇಲ್ಲ. ವ್ಯಕ್ತಿತ್ವವೆನ್ನುವುದು ವ್ಯಕ್ತಿಯು ರೂಢಿಸಿಕೊಂಡ ಸಂಸ್ಕಾರ; ಅದು ಅವನ ಪರಿಪಕ್ವ ಜ್ಞಾನ-ತಿಳುವಳಿಕೆ-ಆಚರಣೆಗಳ ಕ್ರೋಢೀಕರಣ. ಚೌಡಯ್ಯ ಅಂಬಿಗನಾಗಿದ್ದರೂ ಶ್ರೇಷ್ಠ ಅನುಭಾವೀ ಪರಂಪರೆಯ ವಾರಸುದಾರ ಎಂದರೂ ತಪ್ಪಾಗಲಾರದು.
ಬೇಡರಕಣ್ಣಪ್ಪ, ಜೇಡರ ದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದರಚನ್ನಯ್ಯ-ಇವರಿಗೆಲ್ಲ ರೂಢಿಗೆ (=ಸಂಪ್ರದಾಯಕ್ಕೆ) ಶಿವನು ಒಲಿದ ಪರಿಯ ನೋಡಾ! ಎಂದು ಕಟಕಿಯಾಡುವ ಚೌಡಯ್ಯ ಧರ್ಮ, ಜಾತಿಗಳನ್ನು ಮನುಷ್ಯರು ಮಾಡಿಕೊಂಡದ್ದೇ ಹೊರತು ದೇವರು ಮಾಡಿದ್ದಲ್ಲ. ಹಾಗೆ ಮಾಡಲಿಕ್ಕೆ ಅವರೇನು ಸ್ವತಂತ್ರರೆ ? ಎಂದು ಪ್ರಶ್ನಿಸುವನು. ಅಷ್ಟೇ ಅಲ್ಲ, ಜಾತಿಯ ಕಟ್ಟುಪಾಡುಗಳನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಾಗಿ ಆಚರಣೆಗೆ ತರ ಹೊರಟರೆ ಇವನೊಡ್ಡಿದ ಠಾವಿನಲಿ ಕಲ್ಲು ಮುಳ್ಳು ಮೂಡುವವು' ಎಂದು ಎಚ್ಚರಿಸುವನು.
ವೀರಶೈವಧರ್ಮ ವ್ಯಾಪಕವಾಗಿ ಪ್ರಚುರಗೊಳ್ಳುತ್ತಿದ್ದ ಘಟ್ಟದಲ್ಲಿ ಆ ಧರ್ಮದ ತೆಕ್ಕೆಗೆ ಬಂದವನು ಶೂದ್ರನಾದ ಅಂಬಿಗರ ಚೌಡಯ್ಯ, ಗುರುಗಳೊಬ್ಬರಿಂದಶಾಸ್ರೋಕ್ತವಾಗಿ ದೀಕ್ಷೆಯನ್ನು ಸ್ವೀಕರಿಸಿ ಇಷ್ಟಲಿಂಗದ ಪೂಜೆಗೆ ವಿಶೇಷಸ್ಥಾನವನ್ನು ಕೊಟ್ಟ ಚೌಡಯ್ಯ ಇಷ್ಟಲಿಂಗವನ್ನು ಪಡೆದ ಮೇಲೂ ಸ್ಥಾವರಲಿಂಗದ ಆರಾಧನೆಮಾಡುವವರನ್ನು ಉಗ್ರವಾಗಿ ಟೀಕಿಸಿರುವನು :
ಕಟ್ಟಿದ ಲಿಂಗವ ಬಿಟ್ಟು ಬೆಟ್ಟದಲಿಂಗಕ್ಕೆ ಹೋಗಿ
ಹೊಟ್ಟಡಿಯಾಗಿ ಬೀಳುವ ಲೊಟ್ಟಿ ಮೂಳನ ಕಂಡಡೆ
ಮೆಟ್ಟಿದ್ದ ಎಡದ ಪಾದರಕ್ಷೆಯ ತಕ್ಕೊಂಡು
ಲಟಲಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
ವಚನಗಳಲ್ಲಿ ಇಷ್ಟಲಿಂಗಧರಿಸಿಯೂ ಸ್ಥಾವರಲಿಂಗ ಪೂಜೆ ಮಾಡುವವರ ಮೇಲಿನ ಅತ್ಯುಗ್ರವಾದ ರೋಷವನ್ನು ತೀಕ್ಷ್ಣ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಲಾಗಿದೆ. ಸ್ಥಾವರದ ನಿರಾಕರಣೆ ಎಷ್ಟು ತೀಕ್ಷ್ಣವಾಗಿದೆಯೆಂದರೆ ಅದು ಅವನ ಪಾಲಿಗೆ ಅಡಿಮಾಡಿ ನಟ್ಟ ಕಲ್ಲು!' ಇಬ್ಬಗೆಯ ಆಚರಣೆಯಲ್ಲಿ ತೊಡಗಿರುವವರಿಗೆ ಲಿಂಗಧಾರಣೆ ಮಾಡಿದ್ದು ಗೊಡ್ಡೆಮ್ಮೆಗೆ ಲಿಂಗವನ್ನು ಕಟ್ಟಿದಂತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುವನು. ಇಂಥವರನ್ನು ಶಿವಭಕ್ತರೆಂದು ಕರೆಯುವವರನ್ನು ಭ್ರಷ್ಟರೆಂದು ಕತ್ತೆಯ ಮೇಲೆ ಕೂರಿಸಿ ಕೆರಹಿನಟ್ಟೆಯಲ್ಲಿ ಹೊಡೆಯಬೇಕೆಂದು ಸಂಯಮ ಕಳೆದುಕೊಂಡು ತೀವ್ರವಾಗಿ ಟೀಕಿಸುವನು. ಇದು ಹಳೆಯಲಿಂಗವಂತನಿಗಿಂತ ಹೊಸದಾಗಿ ಲಿಂಗಧರಿಸಿದವನ ಉಗ್ರನಿಷ್ಠೆಯ ಇನ್ನೊಂದು ರೂಪ.
ದೀಕ್ಷೆಯನ್ನು ಕೈಲಾಸ ಹಾಗೂ ಮರ್ತ್ಯಗಳ ನಡುವೆ ಕಟ್ಟಿದ ಸೀಮೆ (ಗಡಿ)ಕಲು ಎರಡು ಗ್ರಾಮದ ನಡುವೆ ಕಟ್ಟಿದ ಸೀಮೆಯ ಕಲ್ಲು ಎಂದು ಭಾವಿಸುವ ಅಂಬಿಗರ ಚೌಡಯ್ಯ ಭ್ರಷ್ಟ, ಗುರು ಹಾಗೂ ಭ್ರಷ್ಟ ಶಿಷ್ಯ ಇವರನ್ನು'ಅಯನರಿಯದ ಗುರು, ಭೇದಿಸಲರಿಯದ ಶಿಷ್ಯ' ಎಂದು ಕರೆದು ಲಿಂಗವನ್ನು ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ; ಇವರಿಬ್ಬರೂ ಭ್ರಷ್ಟರು
ಎಂದು ಕಟುವಾಗಿ ನುಡಿದಿರುವನು.
ಬಹುದೈವತೋಪಾಸನೆ ೧೨ನೇ ಶತಮಾನದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತ್ತು. ಕಂಡ ಕಂಡ ದೈವಗಳಿಗೆ ನಮಿಸುವುದಷ್ಟೇ ಅಲ್ಲ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ದೈವಗಳಿಗೆ ಮುಡಿ, ಮುಂದಲೆ ಕೊಡುವ ಪದ್ಧತಿಯಿದ್ದುದನ್ನು ಅಂಬಿಗರ ಚೌಡಯ್ಯ ತನ್ನ ಒಂದು ವಚನದಲ್ಲಿ ಉಲ್ಲೇಖಿಸಿರುವನು. ಏಕದೈವೋಪಾಸನೆ ಹಾಗೂ ಪಾತಿವ್ರತ್ಯಗಳನ್ನು ಸಮೀಕರಿಸುವ ಚೌಡಯ್ಯ ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ ಬೋಸರಿ ತೊತ್ತಿಗೆಲ್ಲಿಯದೊ ನಿಜಮುತ್ತೈದೆತನ? ಎಂದು ಪ್ರಶ್ನಿಸುವನು.
ಲಿಂಗವಂತನಾದ ಮೇಲೂ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದ ಭಕ್ತರು ೧೨ನೇ ಶತಮಾನದ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಮಂದಿ ಇದ್ದರು. ಅಂಥವರ ವರ್ತನೆಯನ್ನು ಬಸವಾದಿ ಶಿವಶರಣರು ತೀವ್ರವಾಗಿ ಖಂಡಿಸಿರುವರು. ಸಾತ್ವಿಕಜೀವನ ವಿಧಾನವು ಶಿವಶರಣರು ಸ್ವೀಕರಿಸಿದ ಸಂವಿಧಾನದ ಮುಖ್ಯಭಾಗ, ಚೌಡಯ್ಯ
ಹೊಸದಾಗಿ ಲಿಂಗವಂತನಾದವನು, ಹೊಸ ಜೀವನಸೂತ್ರಗಳಿಗೆ ಹೊಂದಿಕೊಳ್ಳಲಾಗದ ತನ್ನಂತೆಯೇ ಶೂದ್ರಜಗತ್ತಿನಿಂದ ಬಂದವರ ವರ್ತನೆಯನ್ನು ಆತ ತೀವ್ರವಾಗಿ ತನ್ನ ವಚನಗಳಲ್ಲಿ ಖಂಡಿಸಿರುವನು. ಅಂಬಿಗರ ಚೌಡಯ್ಯ ತನ್ನ ಸ್ವಭಾವಸಹಜವಾದ 'ಇದ್ದಂತೆ ಹೇಳುವ ಹರಿತ ನಾಲಿಗೆಯ ಸ್ವಭಾವದಿಂದಾಗಿ ಎಲ್ಲರ ಗಮನ ಸೆಳೆಯುವನು. ಹೀಗಿರುವಾಗ ನಾವು ಅವನನ್ನು ೧೨ನೇ`ಶತಮಾನದ ಶರಣರ ಪಡೆಯಲ್ಲಿ ಓರ್ವನಾಗಿ ಗುರುತಿಸದೆ, ೧೩ನೇ ಶತಮಾನದವನೆಂದು ಗುರುತಿಸಲು ಪ್ರಯತ್ನಿಸಿರುವುದು ದುರಾದೃಷ್ಟಕರ ಸಂಗತಿ.
ದಯೆ, ಕರುಣೆಗಳು ಮಾನವೀಯತೆಯ ಬಾಹ್ಯರೂಪಗಳು. ಮಾನವೀಯತೆಯು ಇನ್ನೊಬ್ಬರ ಕಷ್ಟಕ್ಕೆ ನಾವು ಹೇಗೆ ಸ್ಪಂದಿಸುತ್ತೇವೆ ಎನ್ನುವುದನ್ನು, ಅಂಬಿಗರ ಚೌಡಯ್ಯ ನಿದರ್ಶನವೊಂದರ ಮೂಲಕ ಅದನ್ನು ಸ್ಪಷ್ಟಪಡಿಸುವನು :
ಕಟ್ಟಿಗೆಯ ಹೊರೆಯ ಹೊತ್ತು
ಬಟ್ಟೆಯಲ್ಲಿ ಬರುವ ಮಹೇಶ್ವರನ ಕಂಡು
ಆ ಹೇರಿಗೆ ತಲೆಯ ಕೊಟ್ಟವಂಗೆ ಪುಣ್ಯವಹುದು.
ಆ ಭಕ್ತನ ಕಷ್ಟ ನಿಷ್ಠುರವರಿಯದೆ
ಉದಾಸೀನಮಾಡುವ ಸಮಯಹೀನನ ಕೊರಳಲಿ
ಶಿವಲಿಂಗವ ಕಟ್ಟಿರ್ದಡೇನಯ್ಯ ?
ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ.
ಆ ಪಾಪ ನೊಸಲತುಂಬ ಮೈತುಂಬ
ವಿಭೂತಿಯನಿಟ್ಟಿರ್ದಡೇನಯ್ಯ?
ಕೊಟ್ಟಿಗೆಯ ಮೇಲಣ ಕುಂಬಳಕಾಯಂತೆ.........
ಒಬ್ಬ ಶಿವಭಕ್ತ ಕಷ್ಟ ಪಡುತ್ತಿರುವಾಗ ಇನ್ನೊಬ್ಬ ಶಿವಭಕ್ತ ಕಷ್ಟದಲ್ಲಿರುವವನಿಗೆ ನೆರವಾಗಬೇಕು; ಹಾಗೆ ನೆರವಾದಲ್ಲಿ ಅವನಿಗೆ ಪುಣ್ಯ ಬರುತ್ತದೆನ್ನುವ ಚೌಡಯ್ಯ ನೆರವಾಗದ ಶಿವಭಕ್ತ ಇಷ್ಟಲಿಂಗ ಧರಿಸಿದ್ದರೂ ಅದು 'ಪಡುವಲಕಾಯಿಗೆ ಕಲ್ಲುಕಟ್ಟಿದಂತೆ'; ಆತ ಮೈಗೆಲ್ಲ ವಿಭೂತಿ ಧರಿಸಿದ್ದರೂ ಅದು 'ಕೊಟ್ಟಿಗೆಯ ಮೇಲಣ
ನಿಂಬಳಕಾಯಂತೆ' ವ್ಯರ್ಥ. ಇಲ್ಲಿನ ಮೊದಲಿನ ಶಬ್ದ ಚಿತ್ರದಲ್ಲಿ ಪಡವಲಕಾಯಿಗೆ" ಕಟ್ಟುವುದು ಅದು ಉದ್ದವಾಗಿ ಬೆಳೆಯಲಿ ಎಂದಷ್ಟೇ ಹೊರತು ಬೇರೇನೂ ಪ್ರಯೋಜನವಿಲ್ಲ: ಎರಡನೆಯ ಶಬ್ದ ಚಿತ್ರದಲ್ಲಿ ಕೊಟ್ಟಿಗೆಯ ಚಪ್ಪರದ ಮೇಲಿನ ಕುಂಬಕಾಯಿಗೆ ಬೂದಿ ಬಳಿದಿರುವುದು ಅದು ಹೊಳೆಯದಿರಲಿ ಬೇರೆಯವರ ದೃಷ್ಟಿ ತಾಗದಿರಲಿ ಎಂದಷ್ಟೇ ಹೊರತು ಬೇರೇನೂ ಉದ್ದೇಶವಿಲ್ಲ. ಎರಡೂ ಗ್ರಾಮೀಣವಾಗಿ ಪರಿಚಿತವಿರುವ ಸಾರ್ಥಕ ಪ್ರತಿಮೆಗಳೇ.
ದೇವಾಲಯದಲ್ಲಿ ದೇವರ ಪ್ರೀತ್ಯರ್ಥ ಪೂಜೆ ಮಾಡುವವರನ್ನು ನೋಡಿ :
ದೇಹಾರವ ಮಾಡುವಣ್ಣಗಳಿರಾ, ಅಣ್ಣಗಳಿರಾ
ಒಂದು ತುತ್ತು ಆಹಾರವನಿಕ್ಕಿರೆ
ದೇಹಾರಕ್ಕೆ ಆಹಾರವೇ ನಿಚ್ಚಣಿಕೆ
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ
ಆಹಾರನಿಲ್ಲೆಂದಂಬಿಗ ಚೌಡಯ್ಯ ಎಂದು ಹೇಳುವನು. ಹಸಿದವರಿಗೆ ಅನ್ನವನ್ನಿಕ್ಕುವುದರ ಪ್ರತಿಫಲ ಕೈಲಾಸವೆನ್ನುವನು. ಚೌಡಯ್ಯನ ಮಾನವೀಯತೆ 'ದೇಹಾರಕ್ಕೆ ಆಹಾರವ ನಿಚ್ಚಣಿಕೆ ಎನ್ನುವ ಮಾತಿನಲ್ಲಿ ಅಡಗಿದೆ. ರುಬ್ಬುವಮನೆಗೆ ಹಸಿದು ಬಂದ ಅತಿಥಿಗೆ (ಜಂಗಮನಿಗೆ) ಉಣಬಡಿಸಬೇಕು. ಹಾಗೆಮಾಡಲು ಭಕ್ತನ ಬಡತನ ಅಡ್ಡಿ ಬಂದರೆ, ಶಿವಭಕ್ತರ ಮನೆಗೆ ಹೋಗಿ ಕಲ್ಲಿಗೆ ಹಾಕುವ ಒಂದು ಬೊಗಸೆಯಷ್ಟು ಪ್ರಮಾಣದ ಅಕ್ಕಿಯನ್ನು ಬೇಡಿ ತಂದು ಲಿಂಗಕ್ಕೆಂದು ಅಡುಗೆಮಾಡಿ ಅದನ್ನು ಪ್ರಸಾದರೂಪದಲ್ಲಿ ಜಂಗಮನಿಗೆ ನೀಡಿ ಅವನುಸ್ವೀಕರಿಸಿ ಬಿಟ್ಟಿದ್ದನ್ನು ಪ್ರಸಾದವಾಗಿ ತೆಗೆದುಕೊಳ್ಳುವವನಿಗೆ ಕೈಲಾಸಪ್ರಾಪ್ತಿಯಾಗುತ್ತದೆ ಎಂದು ಚೌಡಯ್ಯ ಹೇಳುವಲ್ಲಿ ವೀರಶೈವ ಧರ್ಮದ ಮಾನವೀಯತೆಯು ಅದರ ಪ್ರಸಾದ ತತ್ವದಲ್ಲಿದೆ ಎಂಬುದು ವೇದ್ಯವಾಗುತ್ತದೆ.
ಶಿವಶರಣರು ತಮ್ಮನ್ನು ಸತಿಯಾಗಿಯೂ ಶಿವನನ್ನು ಪತಿಯಾಗಿಯೂ ಭಾವಿಸಿಕೊಂಡು ಭಕ್ತಿಯ ಅನುಸಂಧಾನವನ್ನು ಮಾಡಿರುವರು. ಉರಿಲಿಂಗದೇವ, ಗಜೇಶ ಮಸಣಯ್ಯ, ಸಿದ್ದರಾಮ, ಘನಲಿಂಗಿದೇವ ಮೊದಲಾದ ವಚನಕಾರರಲ್ಲಿಈ ಭಾವ ವಿಶಿಷ್ಟವಾಗಿ ಅಭಿವ್ಯಕ್ತಿಗೊಂಡಿದೆ. ತನ್ನ ಸಮಕಾಲೀನ ಶಿವಶರಣರ ಈ
ರೀತಿಯ ಭಕ್ತಿಯ ಅನುಸಂಧಾನವನ್ನು ಅಂಬಿಗರ ಚೌಡಯ್ಯ ಒಪ್ಪುವುದಿಲ್ಲ.
ಸಹಜವಾಗಿ ತೋರದೆ ಕೃತಕವಾಗಿ ಅವನಿಗೆ ಕಾಣಿಸಿರಬಹುದು. ಹೆಣ್ಣು ಹೆಣ್ಣಾಗಿ ಸತಿ-ಪತಿ ಭಾವವನ್ನು ಸಹಜವಾಗಿ ವ್ಯಕ್ತಪಡಿಸಬಹುದು. ಅದಕ್ಕೆ ತದ್ವಿರುದ್ಧವಾಗಿ ತನ್ನನ್ನು ಹೆಣ್ಣಾಗಿ ಪರಿಭಾವಿಸುವುದು ಅವನಿಗೆ ಸರಿತೋರಲಿಲ್ಲ, ಹೀಗಾಗಿ ಆತತ್ತ್ವವನ್ನೇ ಆತ ಮೋಸವೆನ್ನುವನು :
'ಶರಣಸತಿ ಲಿಂಗಪತಿ' ಎಂಬರು
ಶರಣ ಹೆಣ್ಣಾದ ಪರಿ ಇನ್ನೆಂತು, ಲಿಂಗ ಗಂಡಾದ ಪರಿ ಇನ್ನೆಂತು ?
ನೀರು ನೀರ ಕೂಡಿ ಬೆರೆದಲ್ಲಿ ಭೇದಿಸಿ ಬೇರೆ ಮಾಡಬಹುದೆ?
ಗಂಡು-ಹೆಣ್ಣು ಯೋಗವಾದಲ್ಲಿ
ಆತುರ ಹಿಂಗೆ ಘಟ ಬೇರಾಯಿತ್ತು. ಇದು ಕಾರಣ
'ಶರಣಸತಿ ಲಿಂಗಪತಿ' ಎಂಬ ಮಾತು
ಮೊದಲಿಗೆ ಮೋಸ ಲಾಭಕ್ಕಧೀನವುಂಟೆ ?
ಎಂದನಂಬಿಗ ಚೌಡಯ್ಯ.( ವ.ಸಂ.೨೪೫)
ಗಂಡು-ಹೆಣ್ಣಿನ ದೇಹದ ಬೆಸುಗೆ ಕಾಮದ ಆತುರ ಹಿಂಗುವವರೆಗೆ, ದೇವ-ಜೀವರ ಹಾಗೇನು ? ನೀರು ನೀರ ಬೆರತಂತೆ ಬೆರೆದು ಬೇರಿಲ್ಲದಂತೆ. ಆದ್ದರಿಂದ ಶರಣಸತಿ ಲಿಂಗಪತಿ ಹೋಲಿಕೆ ಸರಿಯಿಲ್ಲ ಎನ್ನುತ್ತಾನೆ ಚೌಡಯ್ಯ, ಸ್ಥಾಪಿತ| ಸಿದ್ಧಾಂತವೊಂದನ್ನು ಪ್ರಶ್ನಿಸಿರುವ ಚೌಡಯ್ಯನ ಧೈರ್ಯವನ್ನು ಮೆಚ್ಚಬೇಕು. ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದಲೇ ೧೨ನೇ ಶತಮಾನದ ಶಿವಶರಣರ ಚಳವಳಿ ಹುಟ್ಟಿಕೊಂಡದ್ದು.ಸಮಾಜೋಧಾರ್ಮಿಕ ಬದಲಾವಣೆಗೆ ಶಿವಶರಣರು ಸಾಹಿತ್ಯವನ್ನು ಸಮರ್ಥಮಾಧ್ಯಮವಾಗಿ ಬಳಸಿಕೊಂಡರು. ಅಂಬಿಗರ ಚೌಡಯ್ಯ ಶೂದ್ರನಾದ ಕಾರಣ ಮೇಲಿನವರು ಹಾಗೂ ಕೆಳಸ್ತರದ ವ್ಯಕ್ತಿಗಳ ದೌರ್ಬಲ್ಯಗಳನ್ನು, ಊಸರವಳ್ಳಿತನವನ್ನು ಚೆನ್ನಾಗಿ ಬಲ್ಲವನು, ಹೀಗಾಗಿ ಸಾಮಾಜಿಕ ನೆಲೆಯ ಈ ಎರಡು ಸ್ತರಕ್ಕೆ ಸೇರಿದವರ ವರ್ತನೆಯನ್ನು ಗೇಲಿಮಾಡುವಲ್ಲಿ, ಕಟುವಾಗಿ ಟೀಕಿಸುವಲ್ಲಿ ಅವನು ಬಳಸುವ ಭಾಷೆ ಮೃದುತ್ವವನ್ನು ಕಳೆದುಕೊಂಡು ಕಠಿಣವಾಗಿಬಿಡುತ್ತದೆ. ಬಿಡುಬೀಸಾಗಿ ಟೀಕೆ ಮಾಡುವಾಗ ವಚನ ಭಾಷೆ ತೀರಾ ಒರಟಾಗುತ್ತದೆ, ಹರಿತವಾಗುತ್ತದೆ; ಚುಚ್ಚುವ ಮೊನಚಾದ ಆಯುಧವಾಗಿ ಬಿಡುತ್ತದೆ. ತನ್ನವರು ಪರಂಪರೆಯಿಂದ ಶೋಷಣೆಗೊಳಗಾಗುತ್ತ ಬಂದ ಅವರಲ್ಲಿ ಮಾಸದ ಗಾಯವಾಗಿದೆ. ಅವನು ಹಾಗೂ ಅವನ ಸಮುದಾಯವು ಮಂಪರೆಯಿಂದ ಅನುಭವಿಸಿದ ಅವಮಾನ, ನೋವುಗಳಿಂದಾಗಿ ಮನಸ್ಸು ಮಾಸವಾಗುತ್ತದೆ. ಆಗ ಮಾತು ಬೆಂಕಿಯ ಉಂಡೆಯಾಗುತ್ತದೆ. ಉತ್ತಮ ಸವರ್ಣಿಯರು ಅವರಿಗೆ ಜ್ಞಾನದ ಹಕ್ಕನ್ನು ನಿರಾಕರಿಸಿದರು. ಅಕ್ಷರಲೋಕದಿಂದ ಅವರನ್ನು ವಂಚಿಸಿ ತಮ್ಮ ಹೊಲಗದ್ದೆಗಳಲ್ಲಿ, ಕೊಟ್ಟಿಗೆಗಳಲ್ಲಿ ಪ್ರಾಣಿಗಳಂತೆ ದುಡಿಯುವಂತೆ ಮಾಡಿದ್ದುದು ಲೋಪವಾಗಿ ಕಂಡಿದೆ. ಜ್ಞಾನ ಎಲ್ಲರ ಸೊತ್ತು. ಅದರ ಹಸಿವಿರುವವರಿಗೆ ಮರೆಯಿಲ್ಲದೆ ಅದನ್ನು ಕೊಡಬೇಕು. ಹಾಗೆ ಮಾಡದೆ ಮೇಲುವರ್ಗದವರಿಗೆ ಅನ್ಯಾಯವನ್ನು ಪ್ರಶ್ನಿಸುವನು ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಓದಿದವರನ್ನು ಮಿಟ್ಟಿಯ ಭಂಡರು, ನಿರ್ಬುದ್ದಿ ಮಾನವರು ಎಂದು ಟೀಕಿಸುವನು; ಇವರೆಲ್ಲ ಮಾತಿನ ಹಿರಿಯರು ಎಂದು ಸಂದೇಹಿಸುವ ಚೌಡಯ್ಯ ಮನ ವಚನ ಕಾಯ ಶುದ್ಧವಾಗಿರುವವರ ಹೃದಯದಲ್ಲಿ ಪರಮಾತ್ಮನನ್ನು ಕಂಡೆ ಎನ್ನುವನು. ಅರಳೆಯ ಮರನು, ವಿಷ್ಣುಕಾಂತಿ, ಬನ್ನಿ, ಮುತ್ತಕ, ತೊಳಚಿ-ಈ ಮರಗಿಡಗಳನ್ನು 'ಹರಿ ಹರಿ' ಎಂದು ನಂಬಿ ಭಾವುಕರಾಗಿ ಸುತ್ತುವ, ಪೂಜಿಸುವ, ನಮಸ್ಕರಿಸುವ ಅಜ್ಞಾನಿಗಳನ್ನು 'ಎಲ್ಲಿ ಭೋ! ಎಲ್ಲಿ ಭೋ!! ನಿಮ್ಮಹೊಡೆವಡುವ ದೈವಗಳೆಲ್ಲಾ ಗಿಡಮರವಾಗಿ ಹೋದವಲ್ಲಾ, ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ ಇವದಿರ ಗಡಣ ಬೇಡ' ಎನ್ನುವನು. ಬ್ರಹ್ಮ,ವಿಷ್ಣು, ತಸಕೋಟಿ ದೇವತೆಗಳನ್ನು ಚೌಡಯ್ಯ ದೇವರೆಂದು ಒಪ್ಪುವುದಿಲ್ಲ. ಇವರು ದೇವತೆಗಳೇ ಅಲ್ಲ, ಇವರು ಹಲವು ಕಾಲ ನಮ್ಮ ಪಕ್ಕದ ಮನೆಯಲ್ಲಿ ಹುಟ್ಟಿದರು ಎಂದು ಹುಟ್ಟನ್ನು ಎತ್ತಿ ಹೇಳುವ ಚೌಡಯ್ಯ ಇವರು ಅಯೋನಿಜರೇನಲ್ಲ, ನಾನು ಇವರನ್ನು ಒಲ್ಲೆ ಎನ್ನುವನು. ನಮ್ಮ ಪರಿಕಲ್ಪನೆಯ ದೇವರುಗಳ ಹಾಗೆ ತಾಯಿಯ ಗರ್ಭದಿಂದ ಹೊರಬಂದ ಮಾನವರು ಎನ್ನುವನು.
ಗಂಡಹೆಂಡಿರ ಮನಸ್ಸು ಬೇರಾದರೆ ಹಳ್ಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದಗೆ? ಎಂಬ ವಚನ ಚೌಡಯ್ಯನಲ್ಲಿ ಬಂದಿದೆ. ಅದೇ ರೀತಿ ಆತನ ಆಲೋಚನೆಗೆ ಹೊಂದಿಕೆಯಾಗದ ತೀರ್ಥಕ್ಷೇತ್ರ ಪರ್ಯಟನದ (ಕಾಶೀ, ಮೈಲಾರ, ಶ್ರೀಶೈಲ,ರಾಚೋಟಿ) ಟೀಕೆ ಬಂದಿದೆ. ವಿಶೇಷವೆಂದರೆ, ಕಾಶಿ, ಶ್ರೀಶೈಲಗಳ ಜೊತೆಗೆ ಕರ್ನಾಟಕದ ಮೈಲಾರ ಮತ್ತು ರಾಚೋಟಿಗಳನ್ನು ತೀರ್ಥಕ್ಷೇತ್ರಗಳೆಂದು ಸಮೀಕರಿಸುವುದು; ೧೨ನೇ ಶತಮಾನಕ್ಕೆ ಇವು ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಪ್ರಸಿದ್ಧಿಯನ್ನು ಪಡೆದಿದ್ದವು.
ವಚನ ಸಾಹಿತ್ಯವು ಜನಸಾಮಾನ್ಯರ ನಡುವೆ ಮೂಡಿಬಂದ ದೇಸೀ ಸಾಹಿತ್ಯಜನರಿಂದ ಜನರಿಗಾಗಿ ರಚಿತವಾದ ಸಾಹಿತ್ಯ, ಹೀಗಾಗಿ ಅಲ್ಲಿ ಆಡುಭಾಷೆಯದೇ ಕಾರುಬಾರು. ತನ್ನ ಆಲೋಚನೆಗಳನ್ನು ಸ್ಪಷ್ಟಪಡಿಸಲು ವಚನಕಾರರು ಸಮರ್ಥವಾಗಿ ಅಂಬಿಗರ ಚೌಡಯ್ಯ ಜಾತಿಯಲ್ಲಿ ಶೂದ್ರ, ವೃತ್ತಿಯಲ್ಲಿ ಅಂಬಿಗ, ಹೀಗಾಗಿ ಅವನು ಬಳಸಿಕೊಂಡದ್ದು ಉಪಮೆ, ರೂಪಕ, ಸುಭಾಷಿತದಂತಹ ನುಡಿಮುತ್ತುಗಳನ್ನು, ಪ್ರಯತ್ನಪೂರ್ವಕವಾಗಿ ಉಚ್ಚವರ್ಣಿಯರ ಭಾಷೆಯನ್ನು ಬಳಸುವುದಿಲ್ಲ. ಅವನಿಗೆ ಭಾಷೆಯೆಂಬುದು ಏತದ ನೀರಿನಂತೆ ಸಹಜವಾಗಿ ಅಭಿವ್ಯಕ್ತಿ ಪಡೆದುಕೊಳ್ಳುತ್ತದೆ.
ವೈಚಾರಿಕ ಪ್ರವೃತ್ತಿಯ ಸಾಮಾಜಿಕ ಚಿಂತಕನ ಭಾಷೆಯಲ್ಲಿ ಅವನದೇ ಆದ ಒಂದು ಅಭಿವ್ಯಕ್ತಿ ಕ್ರಮವಿರುತ್ತದೆ. ಹೋಲಿಕೆಗಳು ಅರ್ಥಗರ್ಭಿತವಾಗಿ ಮಾತಿನ ರೂಪದಲ್ಲಿ ನಿಗಿನಿಗಿ ಹೊಳೆಯುತ್ತಿರುತ್ತವೆ. ಉದಾಹರಣೆಗೆ ಕೆಲವನ್ನಿಲ್ಲಿ ನೋಡಬಹುದು.
ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ?”
'ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೆ?”
ರಂಭೆಯ ನೆನೆದರೆ ಕಾಮದ ಕಳವಳ ಹಿಂಗುವುದೆ?
ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ?
'ಆಶೆಯುಳ್ಳಾತ ಒಬ್ಬರ ಅಧೀನದಲ್ಲಿಪ್ಪನು, ಆಶೆಯ ಮನದ
ಕೊನೆಯನರಿದಾತ ಕೈಲಾಸದಾಚೆಯಲ್ಲಿಪ್ಪ
“ಡಾಗಿನ ಪಶುಗಳೆಲ್ಲ ಭೇದವನರಿಯಬಲ್ಲವೆ?”
ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ
ಗುಡಿ-ಇವು ಹಾಳುದೇಗುಲ ಸಮವು'
'ಬೆಲ್ಲಕ್ಕೆ ಚದುರರಸವಲ್ಲದೆ ಸಿಹಿಗೆ ಚದುರರಸವುಂಟೆ ?'
“ಅರುಹು ಕರಿಗೊಂಡಲ್ಲಿ ಕೈಯ ಕುರುಹು ಅಲ್ಲಿಯೆ ಲೋಪ
'ಯೋಗಿಯಾದಲ್ಲಿ ದೇಹಧರ್ಮವ ಮರೆದು,
ಭೋಗಿಯಾದಲ್ಲಿ ಸಂಚಿತವ ಮರೆದು,
ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು'
'ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ'
'ಓಡಲಿಂಗೆ ಹೆಣ್ಣು ಹೊನ್ನು ಮಣ್ಣು ಅಡ್ಡಬಿದ್ದು ಕೊಲುವಾಗ
ನಡೆವ ಗಂಡರುಂಟೆ ??
'ಕಳ್ಳ ಹಾದರಿಗೆ ಸೂಳೆಗಾರ ತಳವಾರರಲ್ಲಿ ಮಿಥ್ಯವಿಲ್ಲದಿರಬೇಕು'
'ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ?'
'ವೇಣು ಚಂದನದ ಯೋಗದಲ್ಲಿದ್ದಡೆ ಗಂಧ ತಾನಾಗಬಲ್ಲುದೆ ?
'ಲೋಭವೆಂಬ ಗ್ರಹಣ ಹಿಡಿದವರ ಏತರಿಂದರಲೂ
ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರವೇ ಔಷಧವು ?' ಎಂದ
'ಬ್ರಹ್ಮದ ಮಾತನಾಡಿ ಕನ್ನೆಯರ ಕಾಲದೆಸೆಯಲ್ಲಿ ಕುಳಿತು
ಪರಬೊಮ್ಮದ ಮಾತು ಅಲ್ಲಿಂದ ನಿಂದಿತ್ತು'
'ಚಿತ್ರವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿ?'
'ದೇಹಾರಕ್ಕೆ ಆಹಾರವೇ ನಿಚ್ಚಣಿಕೆ
'ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ
ನಂದಾದೀವಿಗೆಯ ಮುಡಿಸಿದ ಹಾಗೆ
'ಕಳವು ಪಾರದಾರಕ್ಕೆ ಪರಾಕುಂಟೆ? ಅದು ತನ್ನ ಒಡಲಳಿವ ಇರವು
'ಲಿಂಗತನುವಿಂಗೆ ಆತ್ಮತೇಜದ ಅಹಂಕಾರವುಂಟೆ ? ಸದ್ಯಕ್ಕಂಗೆ
ಹುಸಿ, ಕುಹಕ, ಕ್ಷಣಿಕತ್ವ, ಅಸಘಾತದಸಕವುಂಟೆ?'
ಉದಯದಲಿದ್ದು ಪತ್ರ ಪುಷ್ಪಗಳಿಗೆ ಹೋಗುವ ಅಣ್ಣಗಳು
ನೀವು ಕೇಳಿರೋ, ನೀವು ಗಿಡದ ವೈರಿಗಳೊ? ಗಿಡದ ದಾಯಾದ್ಯರೊ??
'ಕಾಸಿನ ಕಲ್ಪ ಕೈಯಲ್ಲಿ ಕೊಟ್ಟು ಹೇಸದೆ ಕೊಂದ ಗುರುವೆಂಬ
ದ್ರೋಹಿ. ಬಿಟ್ಟಡೆ ಸಮಯವಿರುದ್ಧ ಹಿಡಿದಡೆ ಜ್ಞಾನವಿರುದ್ಧ ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ ತುಪ್ಪಲೇಸಂದಡೆ ಸಪ್ಪೆಯಾಗಿ ತೋರಿತ್ತು'
“ಓದಿಸಿ ಬೋಧಿಸಿ ಇದಿರಿಂಗೆ ಹೇಳುವನ್ನಬರ ಚದುರತೆಯಲ್ಲವೆ?'
ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ ??
ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ?”
'ಕಾಲವೇಳೆಯನರಿದು ಕೂಗಿದ ಕೋಳಿಯ ಕಂಡು ಊರೆಲ್ಲರೂ
'ಮರಕ್ಕೆ ಬೇರು ನಷ್ಟದಿಂದ ಶಾಖೆನಪ್ಪ, ಪ್ರಕೃತಿ ನಷ್ಟದಿಂದ ಇಂದ್ರಿಯನಷ್ಟ
'ಜಾತಿಭ್ರಮ ನೀತಿಭ್ರಮೆ ಎಂಬ ಕರ್ಮಂಗಳ ಘಾಸಿಮಾಡಿ
... ಕಳೆಯಬಲ್ಲಡಾತ ಯೋಗಿ
ಚೌಡಯ್ಯ ಹುಟ್ಟಿನಲ್ಲಿ ಶೂದ್ರನಾದರೂ ತೀರಾ ಸ್ವಾಭಿಮಾನಿ. ಮೇಲುವರ್ಗದವರಊಸರವಳ್ಳಿತನವನ್ನು ಕಂಡಾಗ, ಮೋಸ, ವಂಚನೆಗಳನ್ನು ಕಂಡಾಗ ಅವನ ಮಾತುನಿಗಿ ನಿಗಿ ಕೆಂಡವಾಗುತ್ತದೆ. ಅವನ ಸಾಮಾಜಿಕ ಚಿಂತನೆಯಲ್ಲಿ ಸ್ವಂತಿಕೆಯಿದೆ,ಅಭಿವ್ಯಕ್ತಿಯಲ್ಲಿ ಒರಟುತನವಿದೆ. ಚೌಡಯ್ಯನು ಶೋಷಣೆಗೆ ಒಳಗಾದವರಪ್ರತಿನಿಧಿಯಾಗಿರುವುದರಿಂದ ಮಾತಿನ ವಾಚ್ಯಾರ್ಥವನ್ನು 'ಅನಾಗರಿಕ'ವೆನ್ನುವಷ್ಟುರೊಚ್ಚಿನಿಂದ ಹೇಳುವಷ್ಟು ಹರಿತ ನಾಲಗೆಯವನು. ತಪ್ಪು ಮಾಡಿದವರ ಬಗೆಗೆ ಅವನದೇಆದ ವಿಶಿಷ್ಟ ಪ್ರತಿಕ್ರಿಯೆಯಿದೆ :
ಚೌಡಯ್ಯನ ನಿಷ್ಣುರವಾದ ಮಾತಿಗೆ ಅವನ ನೇರ ನಡಾವಳಿಯೇ ಕಾರಣ.ಅವನಲ್ಲಿ ಹೊಂದಾಣಿಕೆಯ ನಯಗಾರಿಕೆಯ ಸ್ವಭಾವವಿಲ್ಲ: ಇದ್ದುದನ್ನು ಇದ್ದಂತೆ ಹೇಳುವನೇರ ನುಡಿ, ಅವನ ಟೀಕೆಗೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಒಳಗಾಗುವರು ಭಕ್ತರುಗಳಷ್ಟೇ ಅಲ್ಲ ಗುರು-ವಿರಕ್ತರೂ ಒಳಗಾಗುವರು. ಒಟ್ಟಿನಲ್ಲಿ ಅವನದು ಗಳಗೊಡ್ಡಿದ ಕತ್ತಿ, ಕೆಟ್ಟದ್ದನ್ನು ಕಂಡು ಕೆರಳುವ ಅವನು ಒಳಿತನ್ನು ಕಂಡಾಗ ಗೌರವಿಸುವ ಸ್ವಭಾವದವನು.
ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗ, ಸಾಮಾಜಿಕವಾಗಿ ನಿಕೃಷ್ಟ. ಆದರೂನ ಅಲ್ಲಿ ತುಂಬಿ ಹರಿಯುವ ಆತ್ಮವಿಶ್ವಾಸ ಆ ಪರಿಸರದಲ್ಲಿ ತೀರಾ ಅಪರೂಪ. ಅವನು ರೂಢಿಸಿಕೊಂಡ ಜ್ಞಾನ ಹಾಗೂ ದೀಕ್ಷೆಯ ಮುಖಾಂತರ ಅವನಲ್ಲಿ ಕಾಣಿಸಿಕೊಂಡ ಪರಿವರ್ತನೆ ಎರಡೂ ಅಚ್ಚರಿ ಮೂಡಿಸುವಂತಹದು. ಅವನ ಬಿಡುಬೀಸಾದ ವರ್ತನೆ ಹಾಗೂ ಅವನ ಸ್ವಂತದ್ದಾದ ಮಾತುಗಾರಿಕೆ ಅವನ ಸಮಕಾಲೀನ ವಚನಕಾರರಲ್ಲಿ ಕಾಣಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಕ್ಕೆ ಅವನ ವ್ಯಕ್ತಿತ್ವ ಅವನ ಅಭಿವ್ಯಕ್ತಿಯಲ್ಲಿ ಮೈದಾಳಿದೆ. ಶೂದ್ರವರ್ಗದ ಪ್ರತಿನಿಧಿಯಾಗಿ ತನ್ನ ರೂಕ್ಷ ವರ್ತನೆಯಿಂದ, ಅನಾಗರಿಕ ರೀತಿಯಿಂದ ಅಂಬಿಗರ ಚೌಡಯ್ಯ ಸಾಚಾ ಆಗುತ್ತಾನೆ. ಇದು ೧೨ನೆಯ ಶತಮಾನ ಬಸವಚಳವಳಿಯು ದಲಿತನೊಬ್ಬನಿಗೆ ಕೊಟ್ಟ ವಾಕ್‌ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯ, ವಿಮರ್ಶಾ ಸ್ವಾತಂತ್ರ್ಯ. ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ಎಲ್ಲಿಯೂ ಇಷ್ಟರಮಟ್ಟಿಗೆ ನಮಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸಮಾಜಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥ ಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು ಎಂಬ ವಿದ್ಯಾಶಂಕರ ಅವರ ಮಾತು ನಿಜ. ಒಟ್ಟಾರೆ ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಸಿಡಿಲು ನುಡಿಯ ಸರ್ವಜ್ಞ ಮತ್ತು ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯರಲ್ಲಿ ಮಾತ್ರ ಎಂದು ತೋರುತ್ತದೆ.
ಪರಾಮರ್ಶನ ಗ್ರಂಥಗಳು
೧. ಅಂಬಿಗರ ಚೌಡಯ್ಯನ ವಚನಗಳು ಸಂ. ಎಸ್.ವಿದ್ಯಾಶಂಕರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೦೯
೨.ಸಂಕೀರ್ಣ ವಚನ ಸಂಪುಟ ೧(ಸಂ: ಎಂ.ಎಂ.ಕಲಬುರ್ಗಿ)
ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) 2001
೩.ಎಂ.ಚಿದಾನಂದಮೂರ್ತಿ, ಸ್ಥಾವರ-ಜಂಗಮ
ಚಿದಾನಂದ ಸಮಗ್ರ ಸಂಪುಟ-4
ಸ್ವಪ್ನ ಪುಸ್ತಕಾಲಯ, ಬೆಂಗಳೂರು, 2004
೪. ಬಸವರಾಜು.ಸಿ,ಕಲ್ಗುಡಿ, ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ
ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು,2001 ( ಮೂ.ಮು)
೫. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-3
ಸ್ವಪ್ನ ಪುಸ್ತಕಾಲಯ, ಬೆಂಗಳೂರು, 1997
೬.ಸಿ.ನಾಗಭೂಷಣ, ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2000
ವೀರಶೈವ ಸಾಹಿತ್ಯ : ಕೆಲವು ಒಳನೋಟಗಳು
ವಿಜೇತ ಪ್ರಕಾಶನ, ಗದಗ,2008
ಶರಣ ಸಾಹಿತ್ಯ ದೀಪಿಕೆ,ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ,ಪು.೨೦೧೭
೭.ಬಸವರಾಜ ಸಬರದ, ವಚನಚಳುವಳಿ
ಪಲ್ಲವಿ ಪ್ರಕಾಶನ, ಗುಲಬರ್ಗಾ,2007
೮. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.೩ ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ
೯. ಎಂ.ಚಿದಾನಂದ ಮೂರ್ತಿ , ವಚನ ಸಾಹಿತ್ಯ
ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ